Categories
ವಚನಗಳು / Vachanagalu

ಸ್ವತಂತ್ರ ಸಿದ್ಧಲಿಂಗನ ವಚನಗಳು

ಅಂಗ ಲಿಂಗ ಸಂಗವರಿದ ಲಿಂಗದೇಹಿ, ತನ್ನಿಂದ
ಹಿರಿದೊಂದೂ ಇಲ್ಲವೆಂದು ತಿಳಿದು
ಆ ತಿಳಿವಿನೊಳಗಣ ತಿಳಿವು ತಾನೆ
ವಿಶ್ವಾತ್ಮಪತಿಯಾದ ಶಿವನಜ್ಞಾನವೆಂದರಿದು
ಆ ಸರ್ವಜ್ಞನಾದ ಶಿವನು
ನಿರ್ಮಲದರ್ಪಣದೊಳಗಣ ಪ್ರತಿಬಿಂಬದಂತೆ
ಯೋಗಿಯ ಮನವೆಂಬ ದರ್ಪಣದಲ್ಲಿ ತೋರುವ
ಚಿದಾಕಾಶರೂಪ ಶಿವನ
ಶರಣಜ್ಞಾನಲೋಚನದಿಂದ ಕಂಡು ಕೂಡಿ
ಎರಡಳಿದು ನಿಂದನು ನಮ್ಮ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು./1
ಅಂಗ ಲಿಂಗವೆಂಬ ಸಂದು ಸಂಶಯವಳಿದು
ಲಿಂಗಾಂಗದೈಕ್ಯವನರಿದು ಕೂಡಿದ ಶಿವಯೋಗಿಗೆ
ನಿಶ್ಚಿಂತತ್ವವೇ ಶಿವಧ್ಯಾನ;
ಸಕಲ ಕ್ರೀಗಳು ಲಯವಾದ ಇರವೇ ಶಿವಪೂಜೆ;
ಚರಾಚರವನು ವ್ಯಾಪಿಸಿ ನಿಂದ ನಿಶ್ಚಲವೇ ಪ್ರದಕ್ಷಿಣ;
ಸೋಹಂ ದಾಸೋಹಂ ಭಾವವಳಿದು
ಆ ಶಿವೋಹಂ ಭಾವ ತನ್ನಲ್ಲಿ ನಿಂದುದೇ ನಮಸ್ಕಾರ;
ಸ್ವಯ ಪರವೆಂಬ ವಿವೇಕದನುಭಾವವಡಗಿ
ನಿಂದ ಮೌನವೇ ಸ್ತೋತ್ರ;
ಬಿಂದು ನಾದಾದಿ ಉಪಾಧಿಯ ತೊಲಗಿದ ಪರಿಪೂರ್ಣ ಶಿವನಾಗಿ
ತಾ ಶಿವನಾದೆನೆಂಬ ಚಿದಹಂಭಾವವಡಗಿ
ವಿಧಿ ನಿಷೇಧಂಗಳನರಿಯದುದೇ ಮಹಾಶೀಲ;
ಸರ್ವಜ್ಞತ್ವ ನಿತ್ಯತೃಪ್ತಿ ಅನಾದಿಪ್ರಬೋಧ,
ಸ್ವತಂತ್ರ ನಿತ್ಯ ಶಕ್ತಿ ಎಂಬ
ಷಡ್ಗುಣೈಶ್ವರ್ಯ ತನಗೂ ಶಿವಂಗೂ ಸಮವಾಗಿ
ಶಿವನೊಳಗೆ ತಾನು, ತನ್ನೊಳಗೆ ಶಿವನು
ಅಡಗಿ ಸಮರಸವಾದುದೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ
ಪರಮನಿರ್ವಾಣವೆನಿಸುವುದು./2
ಅಂಗದ ಮೇಲೆ ಲಿಂಗ ಬರಲಾಗಿ, ಕಾಯದ ಗುಣವಳಿದು
ಪ್ರಸಾದಕಾಯವಾಯಿತ್ತು.
ಲಿಂಗದ ನೆನಹು ನೆಲೆಗೊಂಡು ಮನ ಹಿಂಗದಿರಲು
ಮನದ ಮೇಲೆ ಪ್ರಸಾದ ನೆಲೆಗೊಂಡಿತ್ತು.
ಲಿಂಗದಲ್ಲಿ ಪ್ರಾಣರತಿಸುಖವಾವರಿಸಿತ್ತಾಗಿ
ಪ್ರಾಣದಲ್ಲಿ ಪ್ರಸಾದ ನೆಲೆಗೊಂಡಿತ್ತು.
ಸರ್ವೆಂದ್ರಿಯಂಗಳು ಲಿಂಗದಲ್ಲಿ ಸಾವಧಾನಿಗಳಾದ ಕಾರಣ
ಇಂದ್ರಿಯಂಗಳಲ್ಲಿಯೂ ಪ್ರಸಾದವೇ ನೆಲೆಗೊಂಡಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ./3
ಅಂಗದಲ್ಲಿ ಆಯತವಾಯಿತ್ತು.
ಮನದಲ್ಲಿ ಸ್ವಾಯತವಾಯಿತ್ತು.
ಭಾವದಲ್ಲಿ ಸನ್ನಿಹಿತವಾಯಿತ್ತು.
ಆಯತವಾದುದೇ ಸ್ವಾಯತವಾಗಿ,
ಸ್ವಾಯತವಾದುದೇ ಸನ್ನಿಹಿತವಾಗಿ,
ಸನ್ನಿಹಿತ ಸಮಾಧಾನವಾಗಿ ನಿಂದುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿ./4
ಅಂಗದಲ್ಲಿ ಲಿಂಗ ಬೆರೆದು, ಲಿಂಗದಲ್ಲಿ ಅಂಗ ಬೆರೆದು
ಅಂಗ ಲಿಂಗ ಸಂಗದಿಂದ ಸಹವರ್ತಿಯಾದ
ಲಿಂಗಪ್ರಸಾದಿಯ ಇಂಗಿತವನೇನೆಂದು ಹೇಳಬಹುದು?
ಲಿಂಗ ನಡೆಯಲು ಒಡನೆ ಪ್ರಸಾದಿ ನಡೆವ
ಲಿಂಗ ನೋಡಲು ಒಡನೆ ಪ್ರಸಾದಿ ನೋಡುವ
ಲಿಂಗ ಕೇಳಲು ಒಡನೆ ಪ್ರಸಾದಿ ಕೇಳುವ
ಲಿಂಗ ಮುಟ್ಟಲು ಒಡನೆ ಪ್ರಸಾದಿ ಮುಟ್ಟುವ
ಲಿಂಗ ರುಚಿಸಲು ಒಡನೆ ಪ್ರಸಾದಿ ರುಚಿಸುವ.
ಲಿಂಗ ಘ್ರಾಣಿಸಲು ಒಡನೆ ಪ್ರಸಾದಿ ಘ್ರಾಣಿಸುವ.
ಇಂತು ಸರ್ವಭೋಗವ ಲಿಂಗದೊಡನೆ ಕೂಡಿ ಭೋಗಿಸಬಲ್ಲ,
ನಿಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಚೆನ್ನಬಸವಣ್ಣನು./5
ಅಂಗದೊಳಗೆ ಲಿಂಗವಿದೆ, ಲಿಂಗದೊಳಗೆ ಅಂಗವಿದೆ.
ಅಂಗ ಲಿಂಗ ಸಂಗದೊಳಗೆ ಪರಮ ಸುಖವಿದೆ.
ಪರಮ ಸುಖದೊಳಗೆ ಪ್ರಸಾದವಿದೆ.
ಪ್ರಸಾದದೊಳಗೆ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ನಿಮ್ಮ ಶರಣನ ನಿಲವಿದೆ./6
ಅಂಗೇಂದ್ರಿಯ ಕರಣ ಹರಣದಲ್ಲಿ ಲಿಂಗವ ಧರಿಸಿ
ಲಿಂಗಾಂಗಿಯಾದನಯ್ಯ ನಿಮ್ಮ ಶರಣ.
ಅದೆಂತೆಂದಡೆ: ಘ್ರಾಣದಲ್ಲಿ ಲಿಂಗವ ಧರಿಸಿದನಾಗಿ,
ಘ್ರಾಣ ಲಿಂಗದ ಘ್ರಾಣವಾಯಿತ್ತು.
ಜಿಹ್ವೆಯಲ್ಲಿ ಲಿಂಗವ ಧರಿಸಿದನಾಗಿ,
ಜಿಹ್ವೆ ಲಿಂಗದ ಜಿಹ್ವೆಯಾಯಿತ್ತು.
ನೇತ್ರದಲ್ಲಿ ಲಿಂಗವ ಧರಿಸಿದನಾಗಿ,
ನೇತ್ರ ಲಿಂಗದ ನೇತ್ರವಾಯಿತ್ತು.
ತ್ವಕ್ಕಿನಲ್ಲಿ ಲಿಂಗವ ಧರಿಸಿದನಾಗಿ,
ತ್ವಕ್ಕು ಲಿಂಗದ ತ್ವಕ್ಕಾಯಿತ್ತು.
ಶ್ರೋತ್ರದಲ್ಲಿ ಲಿಂಗವ ಧರಿಸಿದನಾಗಿ,
ಶ್ರೋತ್ರ ಲಿಂಗದ ಶ್ರೋತ್ರವಾಯಿತ್ತು.
ಮನದಲ್ಲಿ ಲಿಂಗವ ಧರಿಸಿದನಾಗಿ,
ಮನ ಲಿಂಗದ ಮನವಾಯಿತ್ತು.
ಸರ್ವಾಂಗದಲ್ಲಿ ಲಿಂಗವ ಧರಿಸಿದನಾಗಿ,
ಸರ್ವಾಂಗಲಿಂಗವಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣಂಗೆ./7
ಅಂಗೈಯ ಲಿಂಗದಲ್ಲಿ ಕಂಗಳು ನಟ್ಟು,
ಎವೆಹಳಚದೆ, ಮನ ಕವಲಿಡದೆ,
ಚಿತ್ರದ ರೂಹಿನ ತೆರನಂತೆ, ಲಿಂಗವ ನೋಡಿ ನೋಡಿ,
ಕಂಗಳಲಚ್ಚೊತ್ತಿ, ಮನದಲ್ಲಿ ನೆನೆನೆನೆದು
ನೆರೆವ ಲಿಂಗಸುಖ ಸಂಪನ್ನರನೆ, ಲಿಂಗವೆಂಬೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./8
ಅಂಡ ಪಿಂಡೋಪಾಧಿಗಳಿಲ್ಲದ ಅಖಂಡ ಬಯಲು,
ಖಂಡಿತವಾದ ನೆನಹಿಗೆ ನಿಲುಕದ
ಚಿದ್ರೂಪ ಪರಮಾನಂದ ಪರತತ್ವವು
ತಾನೆ ವಿಚಾರಿಸಿ ಕರಸ್ಥಲವಾಗಿ,
ಅಂಡ ಪಿಂಡಂಗಳಿಗೆ ತೆರಹ ಕೊಟ್ಟ ಮಹದಾಕಾಶರೂಪ ನಮ್ಮ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./9
ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ,
ಜೀವರಾಶಿಯ ಕಂಡಿಯಲ್ಲಿ ಹೊಕ್ಕು ಹೊರಡುವ,
ಜೀವನ ತಿಳಿಯಲರಿಯದನ್ನಕ್ಕ,
ಕಾಯದ ಜೀವದ ಸಂದ ಬಿಚ್ಚಲರಿಯದನ್ನಕ್ಕ,
ಮತ್ತೇನ ಮಾಡಿದಡೇನು ಫಲ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವನ
ಬಾಳುವೆ, ಮೃತಶರೀರದಂತೆ./10
ಅಂತರಂಗ ಶುದ್ಧವಿಲ್ಲದವರು,
ಬಹಿರಂಗದಲ್ಲಿ ಸದಾಚಾರ ಸತ್ಕಿ ್ರಯೆಯ,
ಸರ್ವಜನ ಮೆಚ್ಚುವಂತೆ ಮಾಡುತಿರ್ದರೇನು?
ಅದು ಲೋಕರಂಜನೆಯಲ್ಲದೆ ಶಿವ ಮೆಚ್ಚ.
ಶಿವಶರಣರು ಮೆಚ್ಚರು.
ಬಿತ್ತಿದ ಬೆಳೆಯನುಂಬಂತೆ, ಮಾಡಿದ ಸತ್ಕರ್ಮಫಲವನುಂಬ,
ಕೈಕೂಲಿಕಾರಂಗೆ ಮುಕ್ತಿಯುಂಟೆ?
ನಿಜಗುರು ಸ್ವತಂತ್ರಸಿದ್ಧಲೀಂಗೇಶ್ವರಾ./11
ಅಂತರಂಗ ಶುದ್ಧವಿಲ್ಲದವರೊಳಗೆ
ಅತ್ತಿಯ ಹಣ್ಣಿನಂತೆ ಕ್ಷುದ್ರ ಬಿಡಿದು ನೋಡಯ್ಯಾ.
ಅಂತರಂಗ ಶುದ್ಧವುಳ್ಳವರೊಳಗೆ
ಬಾಳೆಯ ಹಣ್ಣಿನಂತೆ ಸಂಗದಲ್ಲಿ ಇರಬಾರದು ಶರಣರು.
ಇದು ಕಾರಣ.
ಅಂತರಂಗ ಶುದ್ಧವಿಲ್ಲದವರ ಸಂಗದಲ್ಲಿ ಇರಬಾರದು ಶರಣರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./12
ಅಂತರಂಗ ಸನ್ನಿಹಿತ ಪರಂಜ್ಯೋತಿರ್ಲೆಂಗದಲ್ಲಿ
ಧ್ಯಾನನಿಷ್ಠನಾದ ಯೋಗಿ ಎಲ್ಲಾ ಕಡೆಯಲ್ಲಿ
ಪರಿಪೂರ್ಣ ಜ್ಞಾನದೃಷ್ಟಿಯಿಂದ ನೋಡಲು
ಪಶ್ಚಿಮಮುಖವಾದ ಪರತತ್ವವೆಂಬ ನಿರ್ಮಲ ದರ್ಪಣದೊಳಗೆ
ತನ್ನ ಕಂಡು, ಕಂಡೆನೆಂಬ ಚಿದಹಂಭಾವವಳಿದು ನಿಂದ ನಿಲವೇ
ನಿಜ ನಿರ್ವಾಣವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./13
ಅಂತರಂಗ ಸನ್ನಿಹಿತ ಪ್ರಾಣಲಿಂಗಕ್ಕೆ
ಕ್ಷಮೆ ಎಂಬ ಸತ್ಯೋದಕದಿಂದ ಅಭಿಷೇಕವ ಮಾಡುವೆನಯ್ಯ.
ಮನವ ನಿಲಿಸಿ ಗಂಧವನರ್ಪಿಸುವೆ.
ನಿರಹಂಕಾರವೆಂಬ ಅಕ್ಷತೆಯನಿಡುವೆ.
ವೈರಾಗ್ಯವೆಂಬ ಪುಷ್ಪವನರ್ಪಿಸಿ,
ಸತ್ಯವೆಂಬ ಆಭರಣವ ತೊಡಿಸುವೆ.
ವಿವೇಕವೆಂಬ ವಸ್ತ್ರವ ಹೊದಿಸಿ,
ಶ್ರದ್ಧೆಯೆಂಬ ಧೂಪವ ಬೀಸುವೆ.
ಮಹಾಜ್ಞಾನವೆಂಬ ದೀಪವ ಬೆಳಗಿ,
ಪ್ರಪಂಚು ಭ್ರಾಂತಳಿದ ನೈವೇದ್ಯವನೀವೆ.
ವಿಷಯಾರ್ಪಣವೆಂಬ ತಾಂಬೂಲವ ಕೊಟ್ಟು
ಈ ಪರಿಯಲ್ಲಿ ಮಾಡುವೆನಯ್ಯಾ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಪ್ರಾಣಲಿಂಗ ಪೂಜೆಯನು./14
ಅಂತರಂಗದಲ್ಲಿ ಆಡುವ ಪಕ್ಷಿಯ
ಅಂತುವನಾರು ಬಲ್ಲರು ಹೇಳ?
ಅಂತರ ಮಹದಂತರವನೊಡಗೂಡಿ
ಸ್ವತಂತ್ರನಾಗಿ ನಿಂದ ನಿಲವನು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣರಾದ ಮಹಾಂತರೇ ಬಲ್ಲರು./15
ಅಂತರಂಗದಲ್ಲಿ ಬೆಳಗುವ ಜ್ಯೋತಿರ್ಲೆಂಗವು,
ಸರ್ವಜ್ಯೋತಿವಸ್ತುಗಳಿಗೆ ಪರಮಾಶ್ರಯ ತಾನಾಗಿ,
ಒಳಹೊರಗೆ ತೆರಹಿಲ್ಲದೆ ವ್ಯಾಪಿಸಿ,
ಮನದ ನೆನಹಿನ ವಿಶ್ರಾಮಕ್ಕೆ ಸ್ಥಾನವಾದ ಜ್ಯೋತಿರ್ಲೆಂಗವ
ನೆನೆದು ಸುಖಿಯಾದೆ,
ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ./16
ಅಂತರಂಗದಲ್ಲಿದ್ದ ನಿರ್ಮಲ ಪರಂಜ್ಯೋತಿ
ಪ್ರಾಣಲಿಂಗವನರಿಯದೆ
ಬಹಿರಂಗದಲ್ಲಿ ಬಳಲುತ್ತಿದ್ದರಲ್ಲಾ!
ಒಳಗೆ ತೊಳಗಿ ಬೆಳಗಿ ತೋರುವ ಚಿದಾಕಾರ ಪರಬ್ರಹ್ಮ
ಪ್ರಾಣಲಿಂಗವನವರೆತ್ತ ಬಲ್ಲರು?
ಮಹಾನುಭಾವದಿಂದ ತಿಳಿದು ನೋಡಲು ತನ್ನಲ್ಲಿಯೇ
ತೋರುತ್ತಿದೆ.
ಹೇಳಿಹೆ ಕೇಳಿಹೆನೆಂದಡೆ ನುಡಿಗೊಳಗಾಗದು.
ತಿಳಿದುನೋಡಲು ತಾನಲ್ಲದೆ ಮತ್ತೇನೂ ಇಲ್ಲ.
ಅದೇ ಆದಿಪ್ರಾಣಮಯಲಿಂಗ.
ತಾನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./17
ಅಂದು ಆದಿಯ ಬಿಂದುವಿಲ್ಲದಂದು, ನಿಮಗೂ ನನಗೂ
ಲಿಂಗಾಂಗವೆಂಬ ಹೆಸರಿಲ್ಲದೆ ಇರ್ದೆವೆಂದು,
ಆದಿಬಿಂದು ರೂಹಿಸಿದಲ್ಲಿ ಲಿಂಗಾಂಗವೆಂಬ ಹೆಸರು ಬಂದಿತ್ತೆಂದು,
ಅಂದು ಆದಿಯಾಗಿ ನೀವಾವಾವ ಲೀಲೆಯ ಧರಿಸಿದಡೆ,
ಆ ಲೀಲೆಗೆ ನಾನಾಧಾರವಾದೆ.
ನಿಮಗೂ ನನಗೂ ಎಂದೆಂದೂ ಹೆರಹಿಂಗದ ಯೋಗ.
ಅದು ನೀವು ಬಲ್ಲಿರಿ, ನಾ ಬಲ್ಲೆನು, ನುಡಿದು ತೋರಲೇಕಿನ್ನು?
ಇಂದೆನಗೆ ತನು ಯೋಗವಾದಲ್ಲಿ ನಿಜ ಹೊರತೆ?
“ಶಿವಯೋಗಿ ಶರೀರೇ ಚ ಸದಾ ಸನ್ನಿಹಿತಶ್ಯಿವಃ’
ಎಂದುದಾಗಿ, ನಿಮಗೆ ಬೇರೆ ದೇಹವಿಲ್ಲ.
ನನ್ನ ದೇಹವೆ ನಿಮ್ಮ ದೇಹವೆಂಬುದಕ್ಕೆ ನೀವೇ ಸಾಕ್ಷಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./18
ಅಂಧಕನ ಮುಂದೆ ನೃತ್ಯ ಬಹುರೂಪವನಾಡಿದಡೇನು
ಕಂಡು ಪರಿಣಾಮಿಸಬಲ್ಲನೆ ಹೇಳಾ?
ಬಧಿರನ ಮುಂದೆ ಸಂಗೀತ ಸಾಹಿತ್ಯವನೋದಿದಡೇನು
ಕೇಳಿ ತಿಳಿದು ಪರಿಣಾಮಿಸಬಲ್ಲನೆ ಹೇಳಾ?
ಜ್ಞಾನಾನುಭಾವವಿಲ್ಲದವರು ಏನನೋದಿ ಏನ ಕೇಳಿ ಏನು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವರ ಓದು ಕೇಳಿಕೆ,
ಬಧಿರಾಂಧಕರ ಕೇಳಿಕೆ ನೋಟದಂತಾಗಿತ್ತು./19
ಅಂಬರದಲಾಡುವ ಪಕ್ಷಿ ಕೊಂಬಿನ ಮೇಲಣ ಕೋಡಗವ ನುಂಗಿ
ತುಂಬಿಯ ಒಡಲೊಳಡಗಿತ್ತು.
ತುಂಬಿ ಅಂಬರದಲಡಗಿ, ಅಂಬರ ತುಂಬಿಯಲಡಗಿ
ಎರಡು ಒಂದಾಗಿ ತುಂಬಿಯಂಬರವಿಲ್ಲದೆ ಹೋಯಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಲ್ಲಿ./20
ಅಖಿಳಾಗಮ ಶ್ರುತಿ ಪುರಾಣಂಗಳು
ವಿಭೂತಿಯನೊಲಿದು ಧರಿಸೆಂದು ಹೇಳುತ್ತಿವೆ ನೋಡಾ.
ಇದನರಿದರಿದು ಧರಿಸದಿಹ ನರನೆ ಪತಿತನೆಂದು
ಸಾರುತ್ತಿವೆ ವೇದಾಗಮಂಗಳು ನೋಡಾ.
ಪಂಚಾಕ್ಷರಿಯ ಮಂತ್ರ ಸಹಿತ
ವಿಭೂತಿಯನು, ಲಲಾಟಾದಿ ಸಮಸ್ತ
ಸ್ಥಾನಂಗಳಲ್ಲಿ ಅಲಂಕರಿಸಲು,
ಆತನ ಲಲಾಟದ ದುರ್ಲಿಖಿತವ ತೊಡೆದು,
ನಿಜಸುಖವೀವುದೆಂದು ಹೇಳುತ್ತಿವೆ ಸಕಲ ಸಂಹಿತೆಗಳು.
ಇಂತಪ್ಪ ವಿಭೂತಿಯ ಧಾರಣವನುಳಿದು,
ಮೋಕ್ಷವನೆಯ್ದಿಹೆನೆಂಬುವನ ಬುದ್ಧಿ,
ವಿಷಪಾನವ ಮಾಡಿ,
ಶರೀರಕ್ಕೆ ನಿತ್ಯತ್ವದ ಪಡೆದೆಹೆನೆಂಬವನಂತೆ.
ಇದು ಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವ ಬೆರಸುವಡೆ,
ಶ್ರೀವಿಭೂತಿಯ ಧಾರಣವೇ ಮುಖ್ಯವಯ್ಯ./21
ಅಗ್ನಿ ರಜ್ಜುವಿನಿಂದ ಕಟ್ಟುವಡೆವುದೆ?
ಸೂರ್ಯನ ಕತ್ತಲೆ, ಬಾಧಿಸಲಾಪುದೆ ಅಯ್ಯಾ?.
ಆಕಾಶವು ರಜ ಧೂಮಗಳಿಂದ, ಮಲಿನವಹುದೆ ಅಯ್ಯಾ?.
ನಿಮ್ಮನರಿದ ಶಿವಯೋಗಿಗೆ, ಸಂಸಾರ ಬಂಧಿಸಬಲ್ಲುದೆ ಹೇಳಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?/22
ಅಜ ಹರಿಗಳರಿತಕ್ಕೆ ಅಗೋಚರವಾದ ನಿಜವನರಿದು
ಸಹಜಾತ್ಮನಾದ ಶರಣಂಗೆ,
ಏಕವೆಂಬುದು ಅನೇಕವೆಂಬುದು ತೋರದೆ,
ಸ್ಥೂಲವೆಂಬುದು ಸೂಕ್ಷ್ಮವೆಂಬುದು ತೋರದೆ,
ಚರಾಚರವು ನಾಸ್ತಿಯಾಗಿ,
ಸಮಸ್ತ ಭುವನಂಗಳು
ಶೂನ್ಯವಾಗಿ ತೋರದೆ, ನಿಶೂನ್ಯವಾಗಿ ತೋರದೆ,
ಜ್ಞಾನರೂಪಾಗಿ ತೋರದೆ,
ಮತ್ತೊಂದು ರೂಪಾಗಿಯೂ ತೋರದೆ,
ಭೂಮಿ ಜಲ ಅಗ್ನಿ ಮರುದಾಕಾಶ ಚಂದ್ರ
ಸೂರ್ಯರೆಂಬವೇನೂ ತೋರದೆ,
ಸರ್ವಸಾಕ್ಷಿಯಾದ ಸಮ್ಯಗ್ಜ್ಞಾನವೊಂದೇ ಪರಿಪೂರ್ಣವಾಗಿ
ತನ್ನ ಸ್ವರೂಪಿನಿಂದ ತೋರುತ್ತಿಹುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ./23
ಅಜ್ಞಾನವೆಂಬ ಕತ್ತಲೆ ಆವರಿಸಿತ್ತಯ್ಯ ಜಗವೆಲ್ಲವ.
ಅಂಧಕಾರದ ಗುಹೆಯೊಳಗಿರ್ದವರಂತಿರ್ದರಯ್ಯ ಜೀವರೆಲ್ಲ.
ಹೊಲಬುದಪ್ಪಿ ತಿಳಿವಿಲ್ಲದೆ ಕಳವಳಗೊಳುತ್ತಿರ್ದರಯ್ಯ.
ಅಡವಿಯ ಹೊಕ್ಕ ಶಿಶುವಿನಂತೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಕರುಣವಾಗುವನ್ನಕ್ಕ,
ಬಳಲುತ್ತಿರ್ದರಯ್ಯ ಹೊಲಬರಿಯದೆ./24
ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತಾಗಿ
ಎಣಿಸಬಾರದ ಬಹಳ ಬ್ರಹ್ಮಕ್ಕೆ ಎಣೆಯಾವುದು ಹೇಳಾ?
ಅಗಣಿತನಕ್ಷಯ ಸರ್ವಜೀವ ಮನಃಪ್ರೇರಕ ಸರ್ವಗತ ಸರ್ವಜ್ಞ
ಏಕೋದೇವ ಸಂವಿತ್ ಪ್ರಕಾಶ ಪರಮೇಶ್ವರನು
ಮನವೆಂಬ ದರ್ಪಣದೊಳಗೆ, ಬಿಂದ್ವಾಕಾಶರೂಪನಾಗಿ
ಬೆಳಗಿ ತೋರುವ
ಶಿವನ ಅಂದವ ತಿಳಿದು ನೋಡಿ ಕೂಡಬಲ್ಲಾತನೆ
ಪರಮಶಿವಯೋಗಿ.
ಆತನೇ ಜನನ ಮರಣ ರಹಿತ, ಆತನೇ ಸರ್ವಜ್ಞನು,
ಆತನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ./25
ಅಣುವಿಂಗೆ ಅಣುವಾಗಿ, ಮಹತ್ತಿಂಗೆ ಮಹತ್ತಾಗಿ
ಪರಿಪೂರ್ಣವಾದ
ಪರವೆಂಬ ಪ್ರಸಾದಮೂರ್ತಿಯ ಇರವ
ಹೇಳಿಹೆನು ಕೇಳಿರಣ್ಣ.
ಮುಂದೆ ತಾರಾ ಬೀಜ, ಹಿಂದೆ ಸುನಾದ ಬೀಜ,
ಬಲದಲ್ಲಿ ಆತ್ಮ ಬೀಜ, ಎಡದಲ್ಲಿ ವಿದ್ಯಾ ಬೀಜ,
ಎಂಟರಲ್ಲಿ ಅಷ್ಟೆಶ್ವರ್ಯ, ಅಷ್ಟಶಕ್ತಿ ಬೀಜ,
ಹದಿನಾರರಲ್ಲಿ ಕಲೆ, ಕಲಾಪತಿಗಳು
ಮೂವತ್ತೆರಡರಲ್ಲಿ ವಿಕಲೆ ವಿಃಕಲಾಪತಿಗಳು.
ಇಂತೀ ತ್ರಿಮಂಡಲ ಮಧ್ಯದ ಸೂಕ್ಷ್ಮಕರ್ಣಿಕೆಯಲ್ಲಿಯೆ
ಶುದ್ಧ ಪ್ರಸಾದವನು ಮಹಾನುಭಾವರ ಸಂಗದಲ್ಲಿದ್ದರಿದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./26
ಅತ್ತಲಿತ್ತ ಹರಿವ ಮನವ ನಿಲಿಸಿ ಸ್ವಸ್ಥಾನಂಗೊಳಿಸಿ,
ತತ್ವಾನುಭಾವರಹಸ್ಯದ ಕೀಲನರಿದು,
ತತ್ವಮಸಿ ವಾಕ್ಯದ ಮೇಲಣ ಷಡುಸ್ಥಲ ಲಿಂಗವ ತಿಳಿದು,
ಆ ಲಿಂಗಕ್ಕೆ ಷಡುಸ್ಥಲಾಂಗವನಾದಿ ಮಾಡಿ,
ಆ ಲಿಂಗವನು ಲಿಂಗಮುಖವ ಮಾಡಿದುದೇ,
ಸರ್ವಾಂಗಲಿಂಗಿಯ ಮತವು.
ಈ ಗುಣವುಳ್ಳ ಷಡುಸ್ಥಲ ಲಿಂಗಾಂಗಿಯೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆ ಬೇರಿಲ್ಲ./27
ಅದ್ವೆ ತವ ಸಾಧಿಸಿ ಸರ್ವವೂ ಶಿವನೆಂಬರು ಎನಲಾಗದು.
ಸರ್ವಕ್ಕೂ ಲಯ ಗಮನವುಂಟು ಶಿವಂಗಿಲ್ಲವಾಗಿ.
ಯಂತ್ರವಾಹಕನೆಲ್ಲಿಯೂ ಪರಿಪೂರ್ಣವಾಗಿಹನೆಂದಡೆ
ಎಲ್ಲವೂ ಶಿವನಾಗಬಲ್ಲವೆ? ಆಗಲರಿಯವು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ಪದ್ಯಪತ್ರಜಲದಂತೆ ಹೊದ್ದಿಯು ಹೊದ್ದದಂತಿಹನು./28
ಅನಂತಕಾಲ ಅಗಲಿದ ನಲ್ಲನ ಕೂಡಿಹೆನೆಂಬ ಸತಿಗೆ
ಕೂಡಿದ ಬಳಿಕ ಕೂಡಿಹೆನೆಂಬ ಅವಸ್ಥೆಯುಂಟೆ ಹೇಳಾ?.
ಕ್ಷುಧೆಯಡಿಸಿದವ ಭೋಜನವ ಮಾಡಿದ ಬಳಿಕ
ಮತ್ತೆ ಭೋಜನವ ಮಾಡಿಹೆನೆಂಬ ಅವಸ್ಥೆಯುಂಟೇ ಹೇಳಾ?.
ರುುಳ ಹತ್ತಿದವ ಉದಕದಲ್ಲಿ ಮುಳುಗಿದ ಬಳಿಕ
ಮತ್ತೆ ಉದಕದಲ್ಲಿ ಮುಳುಗಿಹೆನೆಂಬ ಅವಸ್ಥೆಯುಂಟೆ ಹೇಳಾ?.
ಶಿವನ ನೆನೆನೆನೆದು ಮನ ಶಿವನಲ್ಲಿ ಲೀಯವಾದ ಬಳಿಕ
ಮತ್ತೆ ನೆನೆದಿಹೆನೆಂಬ ಅವಸ್ಥೆಯುಂಟೆ ಹೇಳಾ.
ಅನುಪಮ ನಿಜಾನುಭವ ಸಂಧಾನ ನಿಂದ ನಿಜವು ತಾನೇ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು./29
ಅನಲ ಸಂಗದಿಂದ ಕಾಷ್ಠ ಅನಲವಾದಂತೆ,
ಶಿವಸಂಸ್ಕಾರ ಸಂಪನ್ನನಾದ ಶಿವಭಕ್ತನು,
ಶಿವನಹಲ್ಲದೆ ಮಾನವನಾಗಲರಿಯನಯ್ಯ.
ಅದು ಕಾರಣ,
ಶಿವಭಕ್ತಂಗೆ ಜಾತಿಯಿಲ್ಲ ಸೂತಕವಿಲ್ಲ.
ಶಿವನೆಂತಿಹನಂತೆ ಇಹನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜಭಕ್ತನು./30
ಅನುಭಾವ ನೆಲೆಗೊಂಡಲ್ಲದೆ,
ಅಂಗ ಲಿಂಗದ ಹೊಲಬನರಿಯಬಾರದು.
ಅನುಭಾವ ನೆಲೆಗೊಂಡಲ್ಲದೆ, ಭಕ್ತಿ ವಿರಕ್ತಿ ನೆಲೆಗೊಳ್ಳದು.
ಅನುಭಾವ ನೆಲೆಗೊಂಡಲ್ಲದೆ, ಜ್ಞಾನ ಸುಜ್ಞಾನದ ನೆಲೆಯ
ಕಾಣಬಾರದು.
ಅನುಭಾವ ನೆಲೆಗೊಂಡಲ್ಲದೆ, ತಾನು ಇದಿರೆಂಬುದ ತಿಳಿದು
ತಾನು ತಾನಾಗಬಾರದು.
ಇದು ಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಅನುಭಾವದ ಅನುವಿನಲ್ಲಿಪ್ಪವ ನೀವೆಂದೆ ಕಾಂಬೆನು./31
ಅನುಭಾವವ ನುಡಿವ ಅಣ್ಣಗಳಿರಾ,
ಅನುಭಾವವೆತ್ತ ನೀವೆತ್ತ ಹೋಗಿರಣ್ಣ.
ಅನುಭಾವವೆಂಬುದು ಆತ್ಮವಿಧ್ಯೆ.
ಅನುಭಾವವೆಂಬುದು ತಾನಾರೆಂಬುದ ತೋರುವುದು.
ಅನುಭಾವವೆಂಬುದು ನಿಜನಿವಾಸದಲ್ಲಿರಿಸುವುದು.
ಇಂತಪ್ಪ ಅನುಭಾವದನುವನರಿಯದೆ ಶಾಸ್ತ್ರಜಾಲದ ಪಸರವನಿಕ್ಕಿ
ಕೊಳ್ಳದೆ ಕೊಡದೆ ವ್ಯವಹಾರವ ಮಾಡುವ ಅಣ್ಣಗಳಿರಾ,
ನೀವೆತ್ತ?, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅನುಭಾವವೆತ್ತ?/32
ಅನುಭಾವವಿಲ್ಲದ[ವನ] ಭಕ್ತಿ ಆಯುಧವಿಲ್ಲದ ವೀರನಂತೆ.
ಅನುಭಾವವಿಲ್ಲದ[ವನ] ಆಚಾರ ಕಾಲಿಲ್ಲದ ಹೆಳವನಂತೆ.
ಅನುಭಾವವಿಲ್ಲದವನ ವಿಚಾರ ಕಣ್ಣಿಲ್ಲದ ಕುರುಡನಂತೆ.
ಅನುಭಾವವಿಲ್ಲದವನ ಯೋಗ
ಬರಿಕೈಯಲ್ಲಿ ಹುಡಿಯ ಹೊಯ್ದಕೊಂಬ ಗಜಸ್ನಾನದಂತೆ.
ಭಕ್ತಿ ವಿರಕ್ತಿ ಮುಕ್ತಿಗೆ ಅನುಭಾವವೇ ಬೇಕು.
ಅನುಭಾವವಿಲ್ಲದಾತಂಗೆ ಮುಕ್ತಿಯಿಲ್ಲ ಇದು ಸತ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಸಾಕ್ಷಿಯಾಗಿ./33
ಅನುವನರಿದು ಅನುಭಾವಿಯಾದ ಕಾರಣ
ಸಮ್ಯಗ್ಜ್ಞಾನದಿಂದ ತನ್ನನರಿದು, ತನ್ನನೆ ಶಿವಭಾವವಾಗಿ ಕಂಡು
ಆ ಶಿವಭಾವದಲ್ಲಿ ತನ್ನಹೃದಯವ
ಸಮ್ಮೇಳವ ಮಾಡಿದ ಶರಣನು.
ತಾನೆ ಶಿವನ ಪರಮೈಶ್ವರ್ಯಕ್ಕೆ ಭಾಜನವಾಗಿ
ಸರ್ವಲೋಕವನು ಶಿವನೊಳಗಡಗಿಸಿದನಾಗಿ,
ಆ ಶಿವನ ತನ್ನೊಳಗಡಗಿಸಿ,
ಆ ಶಿವನಲ್ಲಿ ಮನವ ನಿಲಿಸಿ ನೆನೆವುತ್ತಿರಲು
ಆ ನೆನೆವ ಮನಸಿನ ಲಯಕ್ಕೆ ಭಾಜನವಾದಾತ ಶಿವನೆಂದರಿದನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು./34
ಅನ್ನಮಯ ಪ್ರಾಣಮಯ ಮನೋಮಯ
ವಿಜ್ಞಾನಮಯ ಆನಂದಮಯ
ಎಂಬ ಪಂಚಕೋಶ ಕೆಡುವುದಕ್ಕೆ ವಿವರ: ಸರ್ವಪದಾರ್ಥವನು ಸಾವಧಾನಮುಖದಲ್ಲಿ
ಲಿಂಗಾರ್ಪಿತ ಮಾಡಿ
ಲಿಂಗಭೋಗೋಪಭೋಗಿಯಾದಲ್ಲಿ ಅನ್ನಮಯಕೋಶ ಕೆಟ್ಟಿತ್ತು.
ಪ್ರಾಣಮಯ ಲಿಂಗಾಂಗವಾಗಿ ಲಿಂಗಪ್ರಾಣಿಯಾದಲ್ಲಿ
ಪ್ರಾಣಮಯಕೋಶ ಕೆಟ್ಟಿತ್ತು.
ಮನೋಮಧ್ಯದಲ್ಲಿ ಲಿಂಗದ ನೆನಹು ನೆಲೆಗೊಂಡು
ಮನವೆ ಲಿಂಗವಾದಲ್ಲಿ ಮನೋಮಯಕೋಶ ಕೆಟ್ಟಿತ್ತು.
ಸುಜ್ಞಾನ ಪರಿಪೂರ್ಣವಾಗಿ ಜ್ಞಾನ ಜ್ಞೇಯಂಗಳೆರಡೂ ಒಂದಾದಲ್ಲಿ
ವಿಜ್ಞಾನಮಯಕೋಶ ಕೆಟ್ಟಿತ್ತು.
ಪರಮಾನಂದ ಪದದಲ್ಲಿ ಓಲಾಡುತ್ತ ಆ ಶಿವಾನಂದದಲ್ಲಿ
ಇರಲಿಕ್ಕಾಗಿ ಆನಂದಮಯಕೋಶ ಕೆಟ್ಟಿತ್ತು.
ಇಂತೀ ಪಂಚಕೋಶ ಪ್ರಕೃತಿಗುಣ ಕೆಟ್ಟು ಲಿಂಗಗುಣ ನಿಂದುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ./35
ಅಯ್ಯಾ ಏನೂ ಏನೂ ಇಲ್ಲದಂದು,
ಆದಿಕುಳದುತ್ಪತ್ಯವಾಗದಂದು,
ಚಂದ್ರಧರ ವೃಷಭವಾಹನರಿಲ್ಲದಂದು,
ಕಾಲಸಂಹರ ತ್ರಿಪುರಸಂಹರರಿಲ್ಲದಂದು,
ಕಾಮನ ಭಸ್ಮವ ಪೂಸದಂದು ದೇವಿಯರಿಬ್ಬರಿಲ್ಲದಂದು,
ಹರಿಯ ಹತ್ತವತಾರದಲ್ಲಿ ತಾರದಂದು,
ಬ್ರಹ್ಮನ ಶಿರವ ಹರಿಯದಂದು,
ಇವಾವ ಲೀಲೆಯದೋರದಂದು,
ನಿಮಗನಂತನಾಮಂಗಳಿಲ್ಲದಂದು,
ಅಂದು ನಿಮ್ಮ ಹೆಸರೇನು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?./36
ಅಯ್ಯಾ ಘ್ರಾಣದಲ್ಲಿ ನಿಂದು ಗಂಧವ ಗ್ರಹಿಸಿ
ಗಂಧಪ್ರಸಾದವನೀವುತ್ತಿರ್ಪಿರಯ್ಯ.
ಜಿಹ್ವೆಯಲ್ಲಿ ನಿಂದು ರಸವ ಗ್ರಹಿಸಿ
ರಸಪ್ರಸಾದವನೀವುತ್ತಿರ್ಪಿರಯ್ಯ.
ನೇತ್ರದಲ್ಲಿ ನಿಂದು ರೂಪದ ಗ್ರಹಿಸಿ
ರೂಪಪ್ರಸಾದವ ನೀವುತ್ತಿರ್ಪಿರಯ್ಯ.
ತ್ವಕ್ಕಿನಲ್ಲಿ ನಿಂದು ಸ್ವರ್ಶನವ ಗ್ರಹಿಸಿ
ಸ್ಪರ್ಶನಪ್ರಸಾದವನೀವುತ್ತಿರ್ಪಿರಯ್ಯ.
ಶ್ರೋತ್ರದಲ್ಲಿ ನಿಂದು ಶಬ್ದವ ಗ್ರಹಿಸಿ
ಶಬ್ದಪ್ರಸಾದವನೀವುತ್ತಿರ್ಪಿರಯ್ಯ.
ಮನದಲ್ಲಿ ನಿಂದು ಪರಿಣಾಮವ ಗ್ರಹಿಸಿ
ಪರಿಣಾಮಪ್ರಸಾದವ ನೀವುತ್ತಿರ್ಪಿರಯ್ಯ.
ಇಂತು ಸವರ್ೆಂದ್ರಿಯಂಗಳಲ್ಲಿ ನಿಂದು, ಸರ್ವಪದಾರ್ಥವ ಗ್ರಹಿಸಿ
ಎನಗೆ ಪ್ರಸಾದವ ಕರುಣಿಸುತ್ತಿರ್ಪಿರಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./37
ಅಯ್ಯಾ ಜಡೆಯೆಡೆಯಲ್ಲಿ ಗಂಗೆಯನೇಕೆ ಧರಿಸಿದೆ?
ಕೆಲದಲ್ಲಿ ಚಂದ್ರಕಲೆಯನೇಕೆ ಸೂಡಿದೆ?
ತ್ರಿಶೂಲ ಡಮರುಗವನೇಕೆ ಹಿಡಿದೆ?
ವೃಷಭವಾಹನವೇಕೆ ಹೇಳಾ?
ಉಮೆಯ ತೊಡೆಯ ಮೇಲೇಕೇರಿಸಿದೆ?
ನಡು ನೊಸಲಲ್ಲಿ ಕಿಡಿಗಣ್ಣನೇಕೆ ತಾಳಿದೆ?
ವರದಾಭಯ ಹಸ್ತದಿಂದ ಮೃಡನೆಂಬ ಹೆಸರು ಬಂದಿತೆಂದು,
ನಿನ್ನ ಬೆಡಗಿನ ಲೀಲೆಯ ಕಂಡು,
ಭಕ್ತಿ ಕಂಪಿತನೆಂದರಿದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./38
ಅಯ್ಯಾ ನಿನ್ನ ಭಕ್ತನು ನಿನ್ನನಲ್ಲದೆ ಕೇಳನಾಗಿ,
ಆತನ ಶ್ರೋತ್ರದಲ್ಲಿ ನಿನ್ನ ಶೋತ್ರಪ್ರಸಾದವ ತುಂಬುವೆ.
ನಿನ್ನ ಭಕ್ತನು ನಿನ್ನನಲ್ಲದೆ ಸೋಂಕನಾಗಿ, ಆತನ ಕಾಯದಲ್ಲಿ
ನಿನ್ನ ಕಾಯಪ್ರಸಾದವ ತುಂಬುವೆ.
ನಿನ್ನ ಭಕ್ತನು ನಿನ್ನನಲ್ಲದೆ ಕಾಣನಾಗಿ, ಆತನ ನೇತ್ರದಲ್ಲಿ
ನಿನ್ನ ನೇತ್ರಪ್ರಸಾದವ ತುಂಬುವೆ.
ನಿನ್ನ ಭಕ್ತನು ನಿನ್ನನಲ್ಲದೆ ನುತಿಸನಾಗಿ, ಆತನ ಜಿಹ್ವೆಯಲ್ಲಿ
ನಿನ್ನ ಜಿಹ್ವಾಪ್ರಸಾದವ ತುಂಬುವೆ.
ನಿನ್ನ ಭಕ್ತನು ನಿನ್ನ ಸದ್ವಾಸನೆಯನಲ್ಲದೆ ಅರಿಯನಾಗಿ,
ಆತನ ಘ್ರಾಣದಲ್ಲಿ ನಿನ್ನ ಘ್ರಾಣಪ್ರಸಾದವ ತುಂಬುವೆ.
ಈ ಪರಿಯಲ್ಲಿ ಪ್ರಸಾದಿಗೆ ನಿನ್ನ ಪ್ರಸಾದವನಿತ್ತು ಸಲಹಿದೆಯಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./39
ಅಯ್ಯಾ ನಿಮ್ಮ ಶರಣರು ಕರ್ಮಕಾಯರಲ್ಲ,
ಜ್ಞಾನಕಾಯರು ನೋಡಯ್ಯ.
ಅದೇನು ಕಾರಣವೆಂದಡೆ: ಭಕ್ತಿಕಾರಣ ಅವತರಿಸಿದರಾಗಿ.
`ಭಕ್ತಕಾಯ ಮಮಕಾಯ’ ವೆಂದುದು ಗುರುವಚನ.
ದೇವಗೂ ಭಕ್ತಗೂ ಕಾಯ ಒಂದಾದ ಕಾರಣ,
ಕರ್ಮರಹಿತರು ನಿಮ್ಮ ಶರಣರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./40
ಅಯ್ಯಾ, ನಾನೀಜಗ ಹುಟ್ಟುವಂದು ಹುಟ್ಟಿದವನಲ್ಲ.
ನಾನೀಜಗ ಬೆಳೆವಲ್ಲಿ ಬೆಳೆದವನಲ್ಲ.
ನಾನೀಜಗವಳಿವಲ್ಲಿ ಅಳಿವವನಲ್ಲ.
ಆಗು ಹೋಗಿನ ಜಗಕ್ಕೆ ಸಾಕ್ಷಿ ಚೈತನ್ಯನು,
ನನ್ನಾಧಾರದಲ್ಲಿ ಜಗವಿದೆ.
ಈ ಜಗದುತ್ಪತ್ತಿ ಸ್ಥಿತಿಲಯಕ್ಕೆ ನಾನಾಶ್ರಯನು.
ಅಯ್ಯಾ, ನನಗೂ ನಿನಗೂ ಸಂಬಂಧವಲ್ಲದೆ
ಜಗಕ್ಕೂ ಎನಗೂ ಸಂಬಂಧವಿಲ್ಲ.
ನಾ ನಿಮ್ಮಲ್ಲಿ ಹುಟ್ಟಿದ ಕಾರಣ, ನಾ ನಿಮ್ಮಂತೆ ತೋರುವೆನು.
ಜಗ ಮಾಯೆಯಲ್ಲಿ ಹುಟ್ಟಿದ ಕಾರಣ,
ಜಗ ಮಾಯೆಯಂತೆ ತೋರುವುದು.
ಅದು ಕಾರಣ ಈ ದೇಹೇಂದ್ರಿಯಗಳು ನನ್ನವಲ್ಲ.
ನಿನ್ನವಲ್ಲವೆಂದರಿದ ಕಾರಣ ಬೇರಾದವು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./41
ಅಯ್ಯಾ, ನಿಮಗೆ ಪತ್ರೆ ಪುಷ್ಪದಿಂದ ಪೂಜೆಯ ಮಾಡುತಿರ್ದಡೇನು
ಸವರ್ೆಂದ್ರಿಯಂಗಳು ಸೋಂಕಿದವೆಲ್ಲ
ನಿಮ್ಮ ಪೂಜೆಯಾಗಿ ಮಾಡದನ್ನಕ್ಕಾ?
ಅಯ್ಯಾ, ನಿಮ್ಮ ನೆನೆವುತ್ತಿರ್ದಡೇನು
ನೆನೆವ ಮನದಲ್ಲಿ ನಿಮ್ಮ ನೆಲೆಗೊಳಿಸಿ
ಮನ ನಿಮ್ಮಲ್ಲಿ ಲೀಯವಾಗದನ್ನಕ್ಕಾ?
ಅಯ್ಯಾ ನಿಮಗೆ ಸಕಲ ಸುಯಿಧಾನವನರ್ಪಿಸುತ್ತಿರ್ದಡೇನು
ಅರ್ಪಣದೊಳಗೆ ತನ್ನ ನಿಮ್ಮಲ್ಲಿ ಅರ್ಪಿಸಿ ನಿಮ್ಮೊಳಗಾಗದನ್ನಕ್ಕಾ?
ಅದು ಕಾರಣ,
ತನುಗುಣವಿಡಿದು ಲಿಂಗವ ಮುಟ್ಟಿ ಪೂಜೆಯ ಮಾಡಿದವರೆಲ್ಲ,
ನಿಮಗೆ ಮುನ್ನವೇ ದೂರವಾದರು.
ನಾನಿದನರಿದು ಅವಿರಳ ಲಿಂಗಾರ್ಚನೆಯ ಮಾಡಿ
ನಿಮ್ಮೊಳಗಾದೆನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./42
ಅರಳಿದ ಪುಷ್ಪ ಪರಿಮಳಿಸಿದಲ್ಲದೆ ಮಾಣದು.
ಗುರುವಿನಿಂದ ಪಡೆದ ಶಿವಲಿಂಗವ ಹರುಷದಿಂದ
ನೋಡಿ ನೆನೆದಡೆ,
ಆ ಲಿಂಗ, ಕಣ್ಮನವ ವೇದಿಸಿದಲ್ಲದೆ ಮಾಣದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡುವಡೆ,
ನೋಟ ಬೇಟವೆರಡು ಅಳಿದಲ್ಲದಾಗದು./43
ಅರಿದಿಹೆನೆಂಬ ಅವಸ್ಥೆಯಿದ್ದಡೇನು? ಮತ್ತೆ
ಮರವೆಗೆ ಕಾರಣವಾದ ಸಂಸಾರದ ಕಾಯ
ಕಳವಳಕ್ಕೊಳಗಾದಡೆ ಮಾಯೆ ಮನವನೆಡೆಗೊಂಡಿತ್ತು.
ಮಾಯೆ ಮನವನೆಡೆಗೊಂಡಲ್ಲಿ ಅರಿವು ಜಾರಿತ್ತು.
ಮರಹು ಘನವಾಯಿತ್ತು. ಅರಿವುದಿನ್ನೇನು ಹೇಳಾ?.
ಕೈಯ ತುತ್ತು ಬಾಯ್ಗೆ ಬಾರದಂತಾಯ್ತು.
ಇನ್ನೆಲ್ಲಿಯದು ಲಿಂಗ? ಇನ್ನೆಲ್ಲಿಯದು ಜಂಗಮ?
ಇನ್ನೆಲ್ಲಿಯದು ಪ್ರಸಾದ?
ಅಕಟಕಟಾ ಹಾನಿಯ ಹಿಡಿದು ಹೀನವಾದರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./44
ಅರಿಯಬಾರದು ಕುರುಹಿಲ್ಲವಾಗಿ,
ಕುರುಹಿಡಿವ ಪರಿ ಇನ್ನೆಂತೋ?
ದೇಶ ಕಾಲಂಗಳಿಂದ ಹವಣಿಸಬಾರದುದ,
ಉಪಮಿಸುವ ಪರಿ ಇನ್ನೆಂತೋ?
ಶಿವ ಶರಣನೆಂಬೆರಡು ನಾಮವಳಿದೊಂದಾದ ಬಳಿಕ,
ಸ್ವಯ ಪರವೆಂಬುದನರಿಯದ ಅಪ್ರಮೇಯ ಬ್ರಹ್ಮಾದ್ಯೈತಂಗೆ
ಯೋಗ ವಿಯೋಗ ಜ್ಞಾತೃ ಜ್ಞಾನ ಜ್ಞೇಯವೆಂಬ
ವ್ಯವಹಾರವುಂಟೇ?
ಬಂಧ ಮುಕ್ತಿ, ಮಾನಾಪಮಾನ, ಸುಖ ದುಃಖ,
ಜ್ಞಾನಾಜ್ಞಾನ, ಹೆಚ್ಚು ಕುಂದುಗಳುಂಟೇ?
ಸರ್ವಾಕರ ನಿರಾಕಾರ ನಿರ್ಮಲ ಪರಬ್ರಹ್ಮವು ತಾನೇ
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./45
ಅರಿವಿನಿಂದ ಅರಿದೆನೆಂಬ ಶಿಷ್ಯನಿಲ್ಲ,
ಅರುಹಿಸುವ ಗುರು ಮುನ್ನಿಲ್ಲ.
ಅರಿವುದಿನ್ನೇನ, ಅರುಹಿಸುವುದಿನ್ನೇನ ಹೇಳಾ?
ಶ್ರೀಗುರುವಿನ ಪ್ರಸನ್ನ ಪಾದೋದಕದಲ್ಲಿ ಮುಳುಗಿ,
ಸಮರಸ ಸಂಬಂಧವಾದ ಬಳಿಕ,
ಇನ್ನು ಭೇದಭಾವವುಂಟೇ ಹೇಳಾ?
ಸೀಮೆಯಳಿದ ನಿಸ್ಸೀಮಂಗೆ ಕಾಯವಿಲ್ಲ.
ಕಾಯವಿಲ್ಲವಾಗಿ ಮಾಯವಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೇ ಬಲ್ಲಾ./46
ಅರುಣೋದಯಕ್ಕೆ ಕತ್ತಲೆ ಹರಿದು ಬೆಳಗು ಪಸರಿಸಿದಂತೆ,
ಸಮ್ಯಗ್ಜ್ಞಾನೋದಯವಾಗಿ,
ಅಜ್ಞಾನ ಬೀಜ ಮಲಸಂಸಾರ ತೊಲಗಿ,
ಪರಮಾತ್ಮ ತಾನೆಂದರಿದು,
ಆ ಅರಿದರಿವು ಕರಿಗೊಂಡು,
ಪರಶಿವನೊಡನೆ ಸಮರಸಭಾವಿಯಾದವನೆ ಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./47
ಅರೆದೆರೆದೆವೆ ದೃಷ್ಟಿಯ ನಾಸಿಕಾಗ್ರದಲ್ಲಿರಿಸಿ ನೋಡುತ್ತ,
ಹೃದಯಕಮಲದಲ್ಲಿದ್ದ ಅಚಲಲಿಂಗವ
ಒಳಗೆ ಜ್ಞಾನಲೋಚನದಿಂದ ನೋಡುತ್ತ,
ತನುಮನೇಂದ್ರಿಯ ತರಹರವಾಗಿ,
ಮನ ನಿವಾತಜ್ಯೋತಿಯಂತೆ ನಿಂದು ನಿಜವ ಕೂಡಬಲ್ಲಾತನೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸಹಜ ಯೋಗಿ./48
ಅರ್ಕನ ಉದಯಕ್ಕೆ ಕತ್ತಲೆ ಹರಿದು, ಚಕ್ಕನೆ ಬೆಳಗಾಯಿತ್ತು.
ಬೆಳಗು ಪಸರಿಸಲಾಗಿ ನಿದ್ರೆ ಹರಿದು ಎದ್ದು ಕುಳ್ಳಿರ್ದು
ಇದೆತ್ತಣ ಬೆಳಗೆಂದು ಹಿಂಬಾಗಿಲ ತೆಗೆದು ನೋಡಲು
ಒಳ ಹೊರಗೆಲ್ಲಾ ತಾನೆ ಬೆಳಗುತ್ತಿರಲು
ಆ ಬೆಳಗಿನೊಳಗೆ ನಿಂದು ಬೆಳಗುತ್ತಿದ್ದರಯ್ಯಾ.
ಬೆಳಗನ ಬೆಳಗು ಒಬ್ಭುಳಿಯಾದಂತೆ,
ಬೆಳಗು ಬೆಳಗು ಹಳಚಿದಂತೆ ಬೆಳಗುತ್ತಿದ್ದರಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣರು./49
ಅರ್ಥದಲ್ಲೇನೂ ಸುಖವಿಲ್ಲ.
ಅರ್ಥವಗಳಿಸಿ ಆತ್ಮಪುತ್ರಗರ್ಿರಿಸಬೇಡ.
ಆರಿಗಾರೂ ಇಲ್ಲ.
ಶಿವನಲ್ಲದೆ ಹಿತವರಿಲ್ಲವೆಂದರಿದು,
ಶಿವನೊಡವೆಯ ಶಿವನವರಿಗೆ ಕೊಡು ಮರುಳೆ.
ಅರ್ಥದಲ್ಲೇನೂ ಸುಖವಿಲ್ಲ.
ಅರ್ಥವನಾರ್ಜಿಸುವಲ್ಲಿ ದುಃಖ.
ಅರ್ಜಿಸಿದ ಧನವ ರಕ್ಷಿಸುವಲ್ಲಿ ದುಃಖ.
ನಾಶವಾದಡೆ ದುಃಖ, ವೆಚ್ಚವಾದಡೆ ದುಃಖ.
ಈ ಪರಿಯಲ್ಲಿ ಅರ್ಥದಿಂದ ಸದಾ ದುಃಖವಡೆವವರಿಗೆ
ಸುಖವಿಲ್ಲೆಂದರಿಯದೆ,
ಧನದರ್ಥದ ಮರವೆಯಲ್ಲಿ ಬಳಲುತ್ತಿಹ,
ಮನುಜರಿಗಿನ್ನಾವ ಗತಿಯಿಲ್ಲವಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./50
ಅವನಿಯ ಪಿಂಡವ ನುಂಗಿ, ಉದಕವ ಪಾನವ ಮಾಡಿ,
ಅಗ್ನಿಯ ಮೆಟ್ಟಿ, ವಾಯುವ ಹಿಡಿದು, ಆಕಾಶವನಡರಿ,
ಮಹಾದಾಕಾಶದ ಬಯಲೊಳಗೆ ನಿಂದು ನೋಡಲು,
ಸರ್ವಶೂನ್ಯನಿರಾಕಾರವೆಂಬ ಬಯಲು ಕಾಣಬಂದಿತ್ತು.
ಆ ಬಯಲ ಬೆರಸಿಹೆನೆಂಬ ಬಸವ, ಪ್ರಭು ಮೊದಲಾದ
ಗಣಂಗಳ ಮಹಾನುಭಾವ ಸಂಪಾದನೆಯನರಿದು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಬಯಲ ಬೆರಸಿದೆನು./51
ಅಶನಕ್ಕಾಗಿ ವನಸಕ್ಕಾಗಿ ದೆಸೆ ದೆಸೆಯಲ್ಲಿರ್ದವರೆಲ್ಲ
ನೆರೆದ ಪರಿಯ ನೋಡಾ.
ಒಬ್ಬರ ನುಡಿ ಒಬ್ಬರಿಗೆ ಸೊಗಸದ ಕಾರಣ
ಮಥನಕರ್ಕಶದಲ್ಲಿರ್ಪ ಪರಿಯ ನೋಡಾ.
ಅಯ್ಯಾ ಜೀಯಾ ದೇವರು ಎಂಬರು
ಮತ್ತೊಂದು ಮಾತ ಸೈರಿಸದೆ.
ಎಲವೊ ಎಲವೊ ಎಂದು ಕುಲವೆತ್ತಿ ನುಡಿವರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನೀ ಮಾಡಿದ ಮಾಯದ ಬಿನ್ನಾಣದ ಮರೆಯಲ್ಲಿದ್ದವರ
ಕಂಡು ನಾ ಬೆರಗಾದೆನು./52
ಆಚಾರದನುಭಾವವಿಡಿದು, ವಿಚಾರವಂತರಾಗಿ,
ಸುಜ್ಞಾನಾಚಾರದಿಂದ ಹೃದಯದ ಕಲ್ಮಷವ ಕಳೆದು,
ನಿರ್ಮಲ ಹೃದಯರಾದ ನಿತ್ಯಾನಂದಿಗಳು
ತಾವೆ ಶಿವರಹುದರಿಂದ
ಜ್ಞಾನಶೂನ್ಯದ ಭಜಿಸಿ ನಿಜಲಿಂಗೈಕ್ಯರಾಗಿಹರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು./53
ಆಚಾರವನನಾಚಾರವ ಮಾಡಿ ನುಡಿವರು.
ಅನಾಚಾರವನಾಚಾರವ ಮಾಡಿ ನುಡಿವರು.
ಸತ್ಯವನಸತ್ಯವ ಮಾಡಿ ನುಡಿವರು.
ಅಸತ್ಯವ ಸತ್ಯವ ಮಾಡಿ ನುಡಿವರು.
ವಿಷವ ಅಮೃತವೆಂಬರು. ಅಮೃತವ ವಿಷವೆಂಬರು.
ಸಹಜವನರಿಯದ ಅಸಹಜರಿಗೆ,
ಶಿವನೊಲಿಯೆಂದಡೆ ಎಂತೊಲಿವನಯ್ಯ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನೀ ಮಾಡಿದ ಮಾಯವ ನೋಡಿ, ನಾನು ಬೆರಗಾದೆನು./54
ಆಚಾರವಿಲ್ಲದವರಿಗೆ ಜ್ಞಾನವಿಲ್ಲ.
ಜ್ಞಾನವಿಲ್ಲದವರಿಗೆ ಭಾವಶುದ್ಧವಿಲ್ಲ.
ಭಾವಶುದ್ಧವಿಲ್ಲದವರಿಗೆ ಧ್ಯಾನವಿಲ್ಲ.
ದ್ಯಾನಶುದ್ಧವಿಲ್ಲದವರಿಗೆ ಪ್ರಸಾದವಿಲ್ಲ.
ಪ್ರಸಾದವಿಲ್ಲದವರಿಗೆ ಮುಕ್ತಿಯಿಲ್ಲ.
ಇದು ಕಾರಣ,
ಆಚಾರ ಜ್ಞಾನ ಭಾವ ಧ್ಯಾನ ಉಳ್ಳವರಿಗೆ ಪ್ರಸಾದವುಂಟು.
ಪ್ರಸಾದ ಉಳ್ಳವರಿಗೆ ಮುಕ್ತಿಯುಂಟು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./55
ಆಚಾರವೆ ಭಕ್ತಂಗೆ ಅಲಂಕಾರವು.
ಆಚಾರವೆ ಭಕ್ತಂಗೆ ಸರ್ವಪೂಜ್ಯವು.
ಇಂತೀ ಆಚಾರವುಳ್ಳವನೆ ಭಕ್ತನು.
ಆಚಾರವುಳ್ಳವನೆ ಯುಕ್ತನು. ಆಚಾರವುಳ್ಳವನೆ ಮುಕ್ತನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./56
ಆಚಾರವೆಂಬ ಭಿತ್ತಿಯ ಮೇಲೆ, ವಿಚಾರವೆಂಬ ಚಿತ್ರವ ಚಿತ್ರಿಸಿ,
ಜ್ಞಾನವೆಂಬ ಕಳೆಯ ನೆಲೆಗೊಳಿಸಿ,
ಅನುಭಾವವೆಂಬ ಮಂಟಪದಲ್ಲಿ ಶರಣ ಕುಳ್ಳಿರ್ದು,
ನೆತ್ತಿಯ ನಯನವ ತೆರೆದು ನೋಡಲು,
ಆಚಾರ ವಿಚಾರದೊಳಗಡಗಿತ್ತು.
ವಿಚಾರ ಸುವಿಚಾರದೊಳಗಡಗಿತ್ತು.
ಸುವಿಚಾರ ಸುಜ್ಞಾನದೊಳಗಡಗಿತ್ತು.
ಮಹಾನುಭಾವ ಶರಣನೊಳಗಡಗಿತ್ತು.
ಶರಣನಿರ್ದ ತನ್ನ ತಾ ಆಚಾರವನುಂಗಿ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./57
ಆಜ್ಞಾಚಕ್ರದ ಮಧ್ಯಹೃದಯದಲ್ಲಿ ಭರಿತವಾಗಿ
ನಾದ ಬಿಂದು ಕಲೆಯೆಂಬ ದಿವ್ಯಪೀಠದ ಮೇಲೆ ತೋರುತ್ತ
ತನ್ನ ಕಲೆಯನ್ನೆಲ್ಲಾ ದ್ವಾರಂಗಳಲ್ಲಿ ಬೀರುತ್ತ
ಮತ್ತೆಲ್ಲವ ಮೀರಿದ ನಿರ್ಮಲ ಶಿವಲಿಂಗರೂಪು
ತಾನೆ ಪರಮ ಪದವು.
ಆ ಪರಮ ಪದವನರಿದ ನಿರ್ಮಲ ಜ್ಞಾನಿಯೇ
ನಿಜಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./58
ಆಡಿನ ಕೋಡಗದ ಕೂಟದ ಸಂಚದ ಕೀಲ ಕಳೆದು
ಆಡಿನ ಕೋಡ ಮುರಿದಡೆ ಕೋಡಗ ಕೊಂಬನೇರಿತ್ತು.
ಆ ಕೊಂಬಿನ ಕೋಡಗದ ಕೈಯಲ್ಲಿ ಮಾಣಿಕವ ಕೊಟ್ಟರೆ
ಮಾಣಿಕ ಕೋಡಗವ ನುಂಗಿತ್ತು.
ಬಳಿಕ ಆಡು ಮಾಣಿಕವ ನುಂಗಿ, ತಾನೊಂದೆಯಾಯಿತ್ತು.
ಈ ಪರಿ ಆಡು ಕೋಡಗದ ಸಂಗವ ಹಿಂಗಿಸಿ,
ನಿಜವ ಕೂಡಬಲ್ಲಾತನೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸಹಜಯೋಗಿ./59
ಆತ್ಮ ಪರಮಾತ್ಮ ಯೋಗವನರಿದೆನೆಂಬ
ಮಾತಿನ ಮೊದಲ ಜ್ಯೋತಿಯೊಳಗೆ ಆತ್ಮಜ್ಯೋತಿಯನರಿದು,
ಮಾತಿನೊಳಗಣ ಪರಮಾತ್ಮನನರಿದಂಗಲ್ಲದೆ,
ಆತ್ಮಪರಮಾತ್ಮ ಯೋಗವನರಿಯಬಾರದು.
ಆತ್ಮಪರಮಾತ್ಮ ಯೋಗವನರಿದಂಗಲ್ಲದೆ,
ಅರಿವು ಮರವೆಗಳು ನಷ್ಟವಾಗದು.
ಹಮ್ಮು ನಷ್ಟವಾ[ದುದೇ],
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಜೀವ ಪರಮರೈಕ್ಯವು./60
ಆದಿ ಅನಾದಿಯೆಂಬವಕ್ಕೆ ತಾನಾದಿಯಾದ ಕಾರಣ,
ಆದಿಪ್ರಸಾದವೆನಿಸಿತ್ತು.
ಆ ಪ್ರಸಾದವು ಭೇದಿಸಬಲ್ಲ ಪ್ರಸಾದಿಗಲ್ಲದೆ ಸಾಧ್ಯವಾಗದು.
ಸರ್ವಾಧಿಷ್ಠಾತೃ ಶಂಭುಪ್ರಸಾದದಿಂದಲ್ಲದೆ
ಸಂಸಾರ ಕೆಡದು, ಮೋಹಗ್ರಂಥಿ ಬಿಡದು.
ಅದೆಂತೆಂದಡೆ: ಸೂರ್ಯೊದಯವಾಗೆ ತಮ ಹರಿವಂತೆ,
ಪ್ರಸಾದದಿಂದ ಅನೇಕ ಜನ್ಮಶುದ್ಧ.
ನಿರಂಹಂಕಾರ ಭಾವಸಿದ್ಧಿಯೆಂದರಿದು,
ಪುರಾತನರು ಪ್ರಸಾದವ ಪಡೆದು ಮುಕ್ತರಾದರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು./61
ಆದಿ ಮಧ್ಯಾವಸಾನಂಗಳಿಂದತ್ತತ್ತಲಾದ
ಶಿವಾಂಗರೂಪ ತಾನೆಂದರಿಯದೆ,
ನಿತ್ಯ ನಿರ್ಗುಣ ನಿರವಯ ಅಗಣಿತ ಅಕ್ಷಯ ತಾನೆಂದರಿಯದೆ,
ನಿತ್ಯೋದಿತ ಸ್ವಯಂಪ್ರಕಾಶ ತಾನೆಂದರಿಯದೆ,
ಸರ್ವಗತ ಸರ್ವಜ್ಞ ಸರ್ವಶಕ್ತಿಯನುಳ್ಳ
ಪರಮಾತ್ಮ ತಾನೆಂದರಿಯದೆ,
ಮಹದಾದಿ ತತ್ತ್ವಂಗಳ ಮೇಲಿಹ
ಸಚ್ಚಿದಾನಂದರೂಪ ತಾನೆಂದರಿಯದೆ,
ಅಜ್ಞಾನದ ಬಲದಿಂದ ಅಹಂಕಾರವಶನಾಗಿ,
ನಾನು ಕರ್ತನು, ನಾನು ಭೋಕ್ತನೆಂದು ಬಗೆದು,
ಇಲ್ಲದ ಮಾಯಾ ಮೋಹರೂಪಾದ ಕರ್ಮಜನ್ಯ-
ಸಂಸಾರವ ಹೊಂದಿಸಿಕೊಂಡು, ತನ್ನ ನಿಜಸ್ವರೂಪವನರಿಯದೆ,
ಎಂದೆಂದೂ ಭವದಲ್ಲಿ ಬಳಲುತ್ತಿಹರು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./62
ಆದಿಬಿಂದು ಬೀಜವನರಿದು,
ಬಿಂದೋಪರಿ ಅನಾಹತನಾದವನರಿದು,
ಆ ಪ್ರಣವ ಸೂತ್ರವಿಡಿದು ಶಿವಧ್ಯಾನವ ಮಾಡಲು,
ಆ ಧ್ಯಾನಾಗ್ನಿಯಿಂದ, ಯೋಜನಾಂತರಶೈಲಸಮಾನಪಾಪ,
ಬೆಂದು ಹೋದುದು ನೋಡಯ್ಯಾ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ,
ನಿಜಪದವಿಯನೈದುವುು ಬಳಿಕ ನೋಡಯ್ಯಾ./63
ಆದಿಮುಕ್ತನ, ಅನಾದಿಮುಕ್ತನ, ನಾದ, ಬಿಂದು, ಕಳಾತೀತನ,
ಭೇದಿಸಬಾರದಭೇದ್ಯನ, ಅಪ್ರಮಾಣನ,
ವೇದ ಶಾಸ್ತ್ರ ಆಗಮ ಪುರಾಣಾದಿಗಳರಸಿ ಕಾಣದನಾದಿಪುರುಷನ,
ಸ್ವಯಂಪ್ರಕಾಶ ಸ್ವತಃ ಸಿದ್ಧನನೆಂತು ಅರಿವರಯ್ಯ
ಸ್ವಾನುಭಾವಸಿದ್ಧರಲ್ಲದವರು?
ಹಲವನೋದಿ ಹೇಳಿ ಕೇಳಿ ಹಲಬರೆಲ್ಲ ಹೊಲಬುಗೆಟ್ಟರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ,
ಪ್ರಸಾದವಿಲ್ಲದವರೆಲ್ಲರು ಭ್ರಾಂತರಾದರು./64
ಆದಿಯ ಪ್ರಸಾದವ ಸಾಧಿಸಬಾರದು, ಬೇಧಿಸಬಾರದು.
ನಿಮ್ಮ ಪ್ರಸಾದಿಗಲ್ಲದೆ ನೆಲೆಗೊಳಗಾಗದು.
ಚರಾಚರದಲ್ಲಿ ಅನುಶ್ರುತ ಸುಖ ಪ್ರಸಾದವ
ಭಕ್ತಿಪದಾರ್ಥವೆಂದು ರೂಹಿಸಿದ ಪರಿಯ ನೋಡಾ.
ಅರ್ಚನಮುಖದಲ್ಲಿ ಪದಾರ್ಥವೆಂದು, ಅರ್ಪಣಮುಖದಲ್ಲಿ
ಪ್ರಸಾದವೆಂದು ಕಲ್ಪಿಸಿದ ಪರಿಯ ನೋಡಾ.
ಆದಿಯಲ್ಲಿ ಪ್ರಸಾದ, ಅಂತ್ಯದಲ್ಲಿ ಪ್ರಸಾದ,
ಮಧ್ಯದಲ್ಲಿ ಒಂದು ಕ್ಷಣ
ಪದಾರ್ಥವೆಂದು ಮಾಡಿದ ಪರಿಯ ನೋಡಾ.
ಕಡೆ ಮೊದಲಿಲ್ಲದ ಪ್ರಸಾದವು
ಭಕ್ತಿಗೆ ಸಾಧ್ಯವಾದ ಪರಿಯ ನೋಡಾ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಭಕ್ತಿಪ್ರಿಯನಾದ ಕಾರಣ,
ಭಕ್ತಿಪ್ರಸಾದವ ಪಡೆದೆನಾಗಿ ಎನಗೆ ಪ್ರಸಾದ ಸಾಧ್ಯವಾಯಿತ್ತು./65
ಆದಿಯಲ್ಲಿ ನಾನು ಲಿಂಗದಲ್ಲಿ ಉದಯವಾದ ಕಾರಣ
ಎನ್ನಾದಿ ಪಿಂಡವ ತಿಳಿದೆನು.
ಆದಿ ಪಿಂಡ ಅನಾದಿ ಪಿಂಡವ ಕೂಡಿದ ಕಾರಣ
ಬಿಂದು ಪಿಂಡ ಉದಯವಾಯಿತ್ತು.
ಆ ಬಿಂದು ಪಿಂಡದಾದಿವಿಡಿದು ನೋಡಲು
ಅನಾದಿ ಶಿವತತ್ವ ದ್ವಾರದಿಂದ ಬಂದೆನೆಂದರಿದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./66
ಆದ್ಯರ ವಚನವ ಕೇಳಿ, ವೇದಾಗಮಂಗಳ ತಿಳಿದು,
ಶ್ರೀವಿಭೂತಿಯ ಧಾರಣವೆ ಮುಖ್ಯವೆಂದರಿದು ಧರಿಸಿರಣ್ಣ.
ಇಂತಿದನರಿಯದೆ,
ಶಿವದೀಕ್ಷೆಯ ಮಾಡಿದರೂ ದೀಕ್ಷೆಯ ಪಡೆದರೂ ಫಲವಿಲ್ಲ.
ಶಿವಮಂತ್ರಸ್ಮರಣೆ ತಪಯಜ್ಞಂಗಳ ಮಾಡಿದಲ್ಲಿಯೂ ಫಲವಿಲ್ಲ.
ಆತಂಗೆ ವಿದ್ಯೆಯು ದೇವತೆಗಳು ಆಗಮಜ್ಞಾನವು ಇಲ್ಲ.
`ನ ದೀಕ್ಷಾ ನ ತಪೋ ಮಂತ್ರಂ ನ ಯಜ್ಞೋ ದೇವತಾ ನ ಚ
ವಿದ್ಯಾ ನೈವಾಗಮಜ್ಞಾನಂ ಭಸ್ಮಮಾಹಾತ್ಮವರ್ಜಿತೇ’
ಎಂದುದಾಗಿ: ಇದು ಕಾರಣ, ಶ್ರೀವಿಭೂತಿಯ ಮಹಾತ್ಮೆಯನರಿದು ಧರಿಸಲು,
ಸರ್ವಸಿದ್ಧಿಯಪ್ಪುದು.
ಬಳಿಕ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಿಪ್ಪನು./67
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
ವಿಶುದ್ಧಿ ಅಜ್ಞೇಯವೆಂಬ
ಷಡಾಧಾರ ಚಕ್ರಂಗಳಲ್ಲಿ
ವರ್ಣ ದಳ ಅಕ್ಷರ ಅಧಿದೇವತೆಯರಲ್ಲಿ ಕೂಡಿ ತೋರುವ ವಸ್ತು
ಒಂದಲ್ಲದೆ ಹಲವುಂಟೆ?
ಚಕ್ರಚಕ್ರದಲ್ಲಿ ಲೆಕ್ಕಕ್ಕೆ ಒಳಗಾಗಿ, ನಾಮರೂಪಿಗೆ ಬಂದು
ಸಿಕ್ಕಿದೆಯಲ್ಲ.
ಯೋಗಿಗಳ ಮನದಲ್ಲಿ ಲಕ್ಷವಿಲ್ಲದ ನಿರ್ಲಕ್ಷ ನೀನು
ಲಕ್ಕಕ್ಕೆ ಬಂದ ಪರಿಯೇನು ಹೇಳಾ?
ಕಾಣಬಾರದ ವಸ್ತುವ ಕಾಣಿಸಿ ಹಿಡಿದರು ಶರಣರು.
ಭೇದಿಸಬಾರದ ವಸ್ತುವ ಭೇದಿಸಿ ಕಂಡರು.
ಸಾಧಿಸಬಾರದ ವಸ್ತುವ ಸಾಧಿಸಿ ಕಂಡರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು./68
ಆಧಾರದಲ್ಲಿ ಆಚಾರಲಿಂಗವ ಧರಿಸಿದನಾಗಿ
ಆಚಾರಲಿಂಗ ಭಕ್ತನಾದನಯ್ಯ ನಿಮ್ಮ ಶರಣ.
ಸ್ವಾಧಿಷ್ಠಾನದಲ್ಲಿ ಗುರುಲಿಂಗವ ಧರಿಸಿದನಾಗಿ
ಗುರುಲಿಂಗ ಭಕ್ತನಾದನಯ್ಯ ನಿಮ್ಮ ಶರಣ.
ಮಣಿಪೂರಕದಲ್ಲಿ ಶಿವಲಿಂಗವ ಧರಿಸಿದನಾಗಿ
ಶಿವಲಿಂಗ ಭಕ್ತನಾದನಯ್ಯ ನಿಮ್ಮ ಶರಣ.
ಅನಾಹತದಲ್ಲಿ ಜಂಗಮಲಿಂಗವ ಧರಿಸಿದನಾಗಿ
ಜಂಗಮಲಿಂಗ ಭಕ್ತನಾದನಯ್ಯ ನಿಮ್ಮ ಶರಣ.
ವಿಶುದ್ಧಿಯಲ್ಲಿ ಪ್ರಸಾದಲಿಂಗವ ಧರಿಸಿದನಾಗಿ
ಪ್ರಸಾದಲಿಂಗ ಭಕ್ತನಾದನಯ್ಯ ನಿಮ್ಮ ಶರಣ.
ಆಜ್ಞೇಯದಲ್ಲಿ ಮಹಾಲಿಂಗವ ಧರಿಸಿದನಾಗಿ
ಮಹಾಲಿಂಗ ಭಕ್ತನಾದನಯ್ಯ ನಿಮ್ಮ ಶರಣ.
ಇಂತು ಷಡಾಧಾರದಲ್ಲಿ ಷಡ್ವಿಧಲಿಂಗವ
ಧರಿಸಿ ಷಡುಸ್ಥಲ ಭಕ್ತನಾದನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣ./69
ಆನೆಯು ಕೋಣನೂ ಕೂಡಿ ಅಡವಿಯಲ್ಲಿ ಆಡುತ್ತಿರಲು
ಕೇಸರಿ ಬಂದು ಬೆದರಿಸಿತ್ತು.
ಕೇಸರಿಯ ಕಂಡು ಆನೆ ಅಳಿಯಿತ್ತು.
ಕೋಣ ಕೇಸರಿಯ ನುಂಗಿ ಕೇಸರಿಯಾಯಿತ್ತು.
ಉಡು ಸರ್ಪನ ಹಿಡಿದು ನುಂಗಲು
ಉಡುವಿಂಗೆ ಹೆಡೆಯಾಯಿತ್ತು.
ಆ ಉಡುವಿನ ಹೆಡೆದು ಮಾಣಿಕವ ಕಂಡು
ಅಡಗಿದ್ದ ಹದ್ದು ಹಾಯ್ದು ಆಕಾಶಕ್ಕೊಯ್ಯಿತ್ತು.
ಆ ಆಕಾಶದಲ್ಲಿ ಮಾಣಿಕದ ಬೆಳಗು ತುಂಬಲು
ಆ ಬೆಳಗ ಕಂಡು ಹಿರಿದೊಂದು ನರಿ ಕೂಗಿತ್ತು.
ಆ ಮಾಣಿಕ ನರಿಯ ನುಂಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ನಿರವಯಲಾಯಿತ್ತು./70
ಆಯುಧವೈನೂರಿದ್ದರೇನು,
ರಣರಂಗದಲ್ಲಿ ಹಗೆಯ ಗೆಲುವುದು ಒಂದೇ ಅಲಗು.
ಏನನೋದಿ ಏನಕೇಳಿದರೇನು, ತಾನಾರೆಂಬುದನರಿಯದನ್ನಕ್ಕ?
ತಾನಾರೆಂಬುದನರಿದ ಬಳಿಕ ನೀನಾನೆಂಬುದಿಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆಯಾಗಿಹನು./71
ಆರನರಿದು, ಮೂರತಿಳಿದು, ಎರಡರೊಳು ನಿಲಿಸಿ
ಎರಡನೊಂದುಮಾಡಿ ಕೂಡಿಹೆನೆಂಬುಪಮೆಯುಳ್ಳನಕ್ಕ
ಕಾಡುವುದು ಲಿಂಗೈಕ್ಯವು.
ಈ ಉಪಮೆಯಳಿದು ಅನುಪಮೆಯಾದರೆ
ಅದೇ ಮಹಾಲಿಂಗೈಕ್ಯವು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ತಾನಾದ ನಿಲವು./72
ಆರಾದರೆ ಆಗಲಿ,
ತಮ್ಮ ಕುಲ ಗೋತ್ರ ಜಾತಿ ಧರ್ಮ ಆಚಾರ ತಪ್ಪಿನಡೆದಡೆ,
ಅವರು ಅನಾಚಾರಿಗಳೆಂದು ಮುಖವ ನೋಡಲೊಲ್ಲರು ನೋಡಾ.
ಇವರಿಂದಾ ಕಡೆಯೆ ಶಿವಭಕ್ತರಾದವರು?
ಭಕ್ತರಿಗೆ ನಡೆ ನುಡಿ ಸತ್ಯ ಶುದ್ಧ ಆಚಾರವಿರಬೇಕು.
ಅಂತಲ್ಲದೆ: ಆಚಾರ ತಪ್ಪಿ ನಡೆದಡೆ, ನೀ ಮೆಚ್ಚೆಯೆಂದು ಅತಿಗಳೆವೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./73
ಆರಾಧಾರದ ಆರು ಕಮಲಂಗಳಲ್ಲಿ,
ಐವತ್ತೊಂದಕ್ಷರದ ಲಿಪಿಯ ನೋಡಿ ನೋಡಿ,
ಆರಾಧಾರವ ಮೂರಾಧಾರದಲ್ಲಿ ಕಂಡು,
ಆ ಮೂರಾಧಾರದ ಮೂಲದಲ್ಲಿ ಕೂಡಿಕೊಂಡೆನು,
ಮೂಲಕ್ಕೆ ಮೂಲಿಗನಾದ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ./74
ಆರಾಧಾರದ ನಿಚ್ಚಣಿಗೆಯನೇರಿ ನೋಡಲು
ಸೂಕ್ಷ್ಮ ಮಂದರಿಗಿರಿಯೆಂಬ ಮಹಾಪರ್ವತವ ಕಾಣಬಹುದು.
ಆ ಪರ್ವತವ ತುಟ್ಟ ತುದಿಯನೇರಿ ನೋಡಲು
ಮಹದಾಕಾಶ ಮಂಟಪವುಂಟು.
ಆ ಮಂಟಪವ ಹೊಕ್ಕಿಹೆನೆಂದು ವಿಚಾರಿಸಿ ನೋಡಲು
ಅಲ್ಲೊಂದು ಸೂಕ್ಷ್ಮದ್ವಾರವುಂಟು.
ಆ ಸೂಕ್ಷ್ಮದ್ವಾರ ಕವಾಟವ ತೆರೆದು ನೋಡಲು
ಅಲ್ಲಿ ನಿರುಪಾಧಿಕ ಜ್ಯೋತಿ ಬೆಳಗುತ್ತಿಪ್ಪುದು.
ಆ ಬೆಳಗಿನೊಳಗೆ ಅಚಲವಾಗಿ ನಿಂದು,
ಪರಿಪೂರ್ಣ ಪೂಜೆಯಾಗಿ
ತನ್ನನೆ ನಿರಾಳಲಿಂಗಕ್ಕೆ ಪೂಜೆ ಮಾಡುವಾತನೆ
ಪರಮ ನಿರ್ವಾಣಿಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./75
ಆರು ನೆಲೆ ಮಂಟಪದ ಕೋಣೆಯಲ್ಲಿ
ಆರು ಜ್ಯೋತಿಯ ಮುಟ್ಟಿಸಿ
ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ
ಆರು ಲಿಂಗದ ಪ್ರತುಮೆಯಲ್ಲಿ
ಆರು ಹಂತದ ಸೋಪಾನದಲ್ಲಿ
ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ
ಆ ದುರ್ಗದಲ್ಲಿ ಅರಸಂಗೆ
ಕಾಲಿಲ್ಲದಾಕೆಯ ಮದುವೆಯ ಮಾಡಿ
ತೂತಿಲ್ಲದ ಭೋಗಕ್ಕೆ ಕೂಡಿ
ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ.
ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ
ಶರಣನಾಚರಣೆಯನೆಂತೆಂಬೆನು.
ಇದ ಕಂಡು ನಡೆಯಲರಿಯದೆ,
ತಮ್ಮ ಮನ ಬಂದಂತೆ ನಡೆವರು.
ಶಿವಯೋಗಕ್ಕೆ ದೂರವಾದರು ನೋಡಾ.
ಹೊನ್ನ ಕಟ್ಟಿ ವಿರಕ್ತನು ಭಿಕ್ಷೆಯೆನಲಾಗದು.
ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ
ಆ ಭಕ್ತನು ಎದ್ದು ನಮಸ್ಕರಿಸಿ
ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ
ಶಿವಾರ್ಪಣವ ಮಾಡ[ಬ]ಹುದಲ್ಲದೆ.
ಇದಲ್ಲದೆ,
ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ
ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ
ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ.
ಕೋಳಿ ಒಂದು ಕುಟುಕ ಕಂಡರೆ
ತನ್ನ ಮರಿಗೆ ತೋರದುಳಿವುದೆ?
ಕಾಗೆ ಒಂದಗುಳ ಕಂಡರೆ
ತನ್ನ ಬಳಗವ ಕರೆಯದುಳಿವುದೆ?
ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ
ಜಂಗಮವ ಮರೆದವನಾದರೆ
ಸತ್ತ ದನವಿಗೆ ನರಿ ಹೋದಂತಾಯಿತ್ತು.
ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು.
ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು?
ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು
ತಮ್ಮ ನಡೆ ನುಡಿಗಳ ಬಿಡದೆ ನಡೆವುದು.
ಅದ ಕಂಡು ಕಣ್ದೆರೆದು ನೋಡಿದೆನಯ್ಯ.
ಆವ ವರ್ತನೆಯಲ್ಲಿ ತಾನಿದ್ದರೇನು?
ಆವ ಭಾವ ಹೇಂಗಿದ್ದರೇನು?
ನಮ್ಮಾಚರಣೆ ನಮಗೆ ಶುದ್ಧ.
ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ,
ಅವನಿಗೆ ಬಂಧ ದೊರಕುವದಲ್ಲದೆ
ನನಗೆ ದೊರಕದೆಂದು ತಾನು ನಿಶ್ಚೆಸಿದರೆ
ತನಗೆ ದೊರಕಬಲ್ಲದೆ?
ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ?
ಪ್ರಾಣಿಹಿಂಸೆಯ ಮಾಡುವಾತನಾದರೆಯು
ಅವನಿಗೆ ಕಲ್ಪಿತವೇತಕ್ಕೆ?
ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ
ಅವನಿಗೆ ಬಂದಿತಲ್ಲದೆ
ಗಗನದ ಮಂಟಪದ ಮೇಲೆ ಊಧ್ರ್ವಮುಖದ
ಗದ್ದುಗೆಯ ಮಾಡಿ
ಮಹಾಪ್ರಕಾಶವೆಂಬ ಬೆಳಗಂ ತೋರಿ
ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ
ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು
ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ
ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ
ನಿರ್ಮಳವೆಂಬ ಪೂಜಾರಿಯಾಗಿರ್ಪನು.
ಇದನರಿಯದೆ
ತಮ್ಮ ಮನ ಬಂದಂತೆ ಇಪ್ಪವರ
ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು
ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ?
ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ
ಅವನೊಂದಿಗೆ ಬೆರಸಿದವನಾದರು
ಅವನಿಗೆ ಪಾಪ ಸಂಭವಿಸುವುದುಂಟೇ?
ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ?
ಒರ್ವಾನೊಬ್ಬನು ಭವಿಯ ಒಡನಾಡಲು
ಅವನ ಪಾಪವು ಅವನಲ್ಲಿಪ್ಪುದಲ್ಲದೆ
ಮಿಕ್ಕಿನ ಗೃಹಕ್ಕೆ ಸಂಬಂಧವೇನು?
`ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ
ಮಾಡಲಾಗದು’ಯೆಂಬುದು ಗುರುವಚನ.
ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ
ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ.
ಇಂತೀ ಭಾವಶುದ್ಧವುಳ್ಳಾತನು
ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು.
ಶರಣ ಸಕಲವಿದ್ಯವ ಕಲಿತು ಫಲವೇನು?
ನಿಂದ್ಯನೆ ದೊರಕೊಂಡಮೇಲೆ?
ಹುಣ್ಣು ಹುಗಳು ಕೋಷ್ಠವಾಗಿರಲು,
ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ.
ಇಂದ್ರಿಯಸುಖಕ್ಕೆ ಹೋಗಿ ಬಿದ್ದು
ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು.
ತನ್ನ ಮನವು ಶುದ್ಧವಾದ ಮೇಲೆ,
ಸಕಲ ಸುಖಂಗಳು ತನಗುಂಟಲ್ಲದೆ,
ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ.
ಇದನರಿದು, ಮುಂದುಗೊಂಡು ತಿರುಗುವ,
ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./76
ಆವ ಕ್ರೀಯ ಮಾಡಿದಡೇನು?
ಉಪಾಧಿರಹಿತ ನಿರುಪಾಧಿಕ ಚಿದ್ರೂಪ
ಪರಮಾನಂದಾತ್ಮ ಶರಣನು.
ಕ್ರೀಯ ಮರೆಯಮಾಡಿಕೊಂಡಿಹನೆಂದಡೆ,
ಅದು ಪರಮಾರ್ಥವೆ?
ಚಂದ್ರಂಗೆ ಮೇಘಸಂಬಂಧವೆಂಬುದು ಕಲ್ಪನೆಯಲ್ಲದೆ,
ಅದು ಸಹಜಸಂಬಂಧವೇ? ಅಲ್ಲಲ್ಲ.
ಶರಣಂಗೆ ಕಲ್ಪನಾದೇಹವಿದ್ದು, ನಿಃಕ್ರಿಯಾವಂತನಾದ ಮಹಾತ್ಮನು
ಚಿತ್ರದೀಪದಂತೆ ತೋರುತ್ತಿಹನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು./77
ಆವ ವೇಷವ ಧರಿಸಿದಡೇನು?
ದೇಹವೆಂಬ ಹುತ್ತಿನಲ್ಲಿ, ಹುಸಿ ಎಂಬ ಸರ್ಪ,
ಸಜ್ಜನರನಟ್ಟಿ ಕಡಿದಡೆ,
ವಿಷದ ಮೂಛರ್ೆಯಿಂದ ಬಳಲುತ್ತಿರ್ದರಯ್ಯ ಸಜ್ಜನರು.
ಶಿವಜ್ಞಾನವೆಂಬ ನಿರ್ವಿಷವ ಕೊಂಡು,
`ಓಂನಮಃಶಿವಾಯ’ ಎಂಬ ಮಂತ್ರವ ಜಪಿಸಿ,
ವಿಷವಂ ಪರಿಹರಿಸಿಕೊಂಡರಯ್ಯ.
ಸರ್ಪ ಕಚ್ಚಿ ಏರಿ ಬಾಯಲ್ಲಿ ಹೋಯಿತೆಂಬಂತೆ,
ನಿಂದಕರಿಗೆ ನಿಂದಿಸಿತೆ ಬಂದಿತ್ತಲ್ಲದೆ,
ಅಲ್ಲಿ ತಮಗೊಂದಾಗಿಲ್ಲ.
ಸಜ್ಜನರು ನೊಂದ ನೋವು ಸುಮ್ಮನೆ ಹೋಹುದೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ಅವರಲ್ಲಿ ನೀವಿಪ್ಪಿರಾಗಿ?./78
ಆವಾವ ಕಾಲದಲ್ಲಿ ಆವಾವ ಪರಿಯಲ್ಲಿ ಒಂದೊಂದು ವಸ್ತುವನು
ಜ್ಞಾನಿ ಮನದಲ್ಲಿ ಭಾವಿಸದಿಹನು.
ಆತನು ಹೃದಯಾಕಾಶ ಶೂನ್ಯವಾಗಿ ನಿಸ್ತರಂಗ
ಸಹಜಾನಂದಾಂಬುಧಿಯಾದ
ಪರಮಾತ್ಮನಲ್ಲಿ ಮುಳುಗಿ ಪರಮಾತ್ಮ ತಾನಾದ ಮತ್ತೆ
ಭೇದಭಾವ ಭ್ರಮೆಯ ಸೂತಕವಳಿದು,
ಶರಣ ಸಚರಾಚರದಲ್ಲಿ ವ್ಯಾಪಕವಾಗಿಹನು.
ಅದೆಂತೆಂದಡೆ: ಗಂಗೆಯ ಉದಕದಲ್ಲಿ ಬಿಂಬಿಸಿದ ಸೂರ್ಯನು
ಮೃತ್ಕಾಂಚನ ಘಟಂಗಳ ಉದಕಮಧ್ಯದಲ್ಲಿಯೂ ಬಿಂಬಿಸುವಂತೆ
ಹಿರಿದು ಕಿರಿದು ಉತ್ತಮ ಮಧ್ಯಮಾಧಮವೆನ್ನದೆ
ಸರ್ವಾಂತರ್ಯಾಮಿಯಾಗಿಹನು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆ ತಾನಾಗಿ./79
ಆವಾವ ಘಟವ ಧರಿಸಿ ಜೀವಿಸುವ ಜೀವರಿಗೆ,
ಬೇರೆ ಬೇರೆ ಅವಕವಕೆ ತಕ್ಕ ವಿಷಯಜ್ಞಾನವ ಕೊಟ್ಟು
ಸಲಹುವ ದೇವನ ಮರೆದು,
ಹುಲುದೈವವ ಹಿಡಿದು ಹುಲ್ಲಿಂದ ಕಡೆಯಾದರು ಅಕಟಕಟಾ!
ಹೆತ್ತು ಮೊಲೆಯೂಡಿ ಸಲಹುವ ತಾಯ ಮರೆದು,
ತೊತ್ತಿನ ಕಾಲಿಗೆ ಬೀಳುವ ವ್ಯರ್ಥಜೀವರ ನೋಡಾ.
ನಿತ್ಯ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಕರ್ತನನರಿಯದೆ
ಅನ್ಯದೈವವ ಭಜಿಸುವ ಕುನ್ನಿಗಳನೇನೆಂಬೆನು?/80
ಆವಾವ ಜಾತಿ ಯೋನಿಗಳಲ್ಲಿ ಹುಟ್ಟಿದ ಪ್ರಾಣಿಗಳು
ಆ ಜಾತಿಯಂತಹವಲ್ಲದೆ ಮತ್ತೊಂದು ಜಾತಿಯಹವೆ ಹೇಳಾ.
“ಯಥಾ ಬೀಜಸ್ತಥಾ ವೃಕ್ಷಃ’ ಎಂಬ ನ್ಯಾಯದಂತೆ,
ಲಿಂಗದಿಂದೊಗೆದ ಶರಣ ಲಿಂಗವಹನಲ್ಲದೆ,
ಮಾನವನಾಗಲರಿಯನೆಂಬುದಕ್ಕೆ ಗುರುವಚನವೇ ಪ್ರಮಾಣು.
ಇಂತಿದನರಿಯದೆ,
ನಾನು ಮಾನವನು ದೇಹಿ ಸಂಸಾರಬದ್ಧನು ಎಂಬವಂಗೆ,
ಎಂದೆಂದು ಮುಕ್ತಿಯಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾನವನಲ್ಲ./81
ಆವಾವ ದೇಹ ತೊಟ್ಟರೂ ದೇಹಕ್ಕೆ ತಕ್ಕ ಸಂಸಾರ ಬಿಡದು.
ಆಧ್ಯಾತ್ಮಿಕ ಅಧಿದೈವಿಕ, ಅಧಿಭೌತಿಕವೆಂಬ, ತಾಪತ್ರಯಾಗ್ನಿಯಲ್ಲಿ
ಬೇಯದೆ ಮಾಬರೆ?
ಹಿಂದೆ ಮಾಡಿದ ಕರ್ಮ ಪೀಡಿಸದೆ ಬಿಡುವುದೆ?
ಸುಖಲೇಶವ ಕಾಣದೆ ಬಳಲುತ್ತಿದೆ ಜಗವೆಲ್ಲ.
ಇದನರಿದು ಮಲಕೋಶ ಶರೀರ ಸಂಸಾರವ
ಹೇಸಿ ಬಿಡು ಮರುಳೆ.
ಮುಂದೆ ನಿನಗೆ ನಿಜಪದವಹುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸುಖಿಯಪ್ಪೆ ಮರುಳೆ./82
ಆವಾವ ಪರಿಯಲ್ಲಿ ಭಾವಿಸುತ್ತಿಹ ಕರಣದ ವ್ಯಾಕುಲವಡಗಿ
ಮನವು ಏಕಾಂತವಾಗಿ ನಿಂದ ಯೋಗಿ,
ಜ್ಞಾನಸತಿಯ ಸಂಗದಲ್ಲಿರಲು
ಆತಂಗೆ ಸರ್ವಲೋಕವು
ಆ ಲೋಕದ ಭೋಗಂಗಳೆಲ್ಲಾ ತಡೆದಿಹವಾಗಿ
ಆ ಯೋಗಿ ತನಗೆ ಪ್ರಿಯಳಾದ ಚಿತ್ಕಾಂತೆಯನು, ತನ್ನನು ಕಾಣದೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ತಾನು ತಾನಾಗಿಹನು./83
ಆವಾವ ಭಾಷಾಂಗವ ತೊಟ್ಟರೂ
ಆ ಭಾಷಾಂಗಕ್ಕೆ ತಕ್ಕ ಗತಿ ಭಾಷೆಯಿರಬೇಕು.
ಶಿವಲಾಂಛನಧಾರಿಯಾದಡೆ,
ಆ ಲಾಂಛನಕ್ಕೆ ತಕ್ಕ ನಡೆ ನುಡಿ ಇರಬೇಕು.
ಅದೆಂತೆಂದಡೆ: ಕಾಯದ ಕಳವಳವ ಗೆಲಿದು,
ಮಾಯಾಪ್ರಪಂಚ ಮಿಥ್ಯವೆಂದರಿದು,
ಕ್ಷಮೆ ದಮೆ ಶಾಂತಿ ದಯೆ ಜ್ಞಾನ ವೈರಾಗ್ಯ
ಮುಂತಾಗಿ ಸುಳಿಯಬೇಕು.
ಲಿಂಗಮೋಹಿಯಾಗಿದ್ದಲ್ಲದೆ, ಉಳಿದ ಉದ್ದೇಶದ ಸುಳುಹೆಲ್ಲಾ
ಬಿರುಗಾಳಿಯ ಸುಳುಹಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./84
ಆವಾವ ಲೋಕದಲ್ಲಿರ್ದರೂ, ಆವಾವ ಪ್ರಕಾರದಲ್ಲಿ
ಅವರವರಿಗೆ ತಕ್ಕ ಸಂಸಾರ ಬಿಡದು.
ಹಿರಿದಿಂಗೆ ಹಿರಿದಾಗಿ, ಕಿರಿದಿಂಗೆ ಕಿರಿದಾಗಿ, ಕಾಡಿತ್ತು ಮಾಯೆ.
ಘಟಸಂಸಾರಿಗಳಿಗೆಲ್ಲ ಘಟಭಾರವ ಹೊರಿಸಿ ಕಾಡಿತ್ತು ಮಾಯೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಮಾಯೆಯ ಬಲುಹಿಂಗೆ ನಾನು ಬೆರಗಾದೆನು./85
ಆಶೆಯೆಂಬ ಶೃಂಖಲೆಯಿಂದ
ಬಂಧವಡೆದವರು ಆರಾದರೂ ಆಗಲಿ
ತೊಳಲಿ ಬಳಲುತ್ತಿಹರು ನೋಡಾ.
ಆಶೆಯೆಂಬ ಶೃಂಖಲವ ಮುರಿದ ನಿರಾಶಕರು
ಆವ ಧಾವತಿಯಿಂದಲೂ ಬಳಲದೆ ಸುಖವಿಹರು ನೋಡಾ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಆಶೆಯುಳ್ಳಾತನೆ ಮಾಯೆಯುಳ್ಳವನು.
ನಿರಾಶೆಯುಳ್ಳವನೆ ನಿಮ್ಮವನು./86
ಆಸನ ಬಂಧವ ಮಾಡಿ,
ನಾಸಿಕಾಗ್ರದಲ್ಲಿ ದೃಷ್ಟಿಯನಿರಿಸಿ
ಸೂಸಲೀಯದೆ ಮನವ, ಬೀಸರ ಹೋಗದೆ ಪವನ[ನ]
ಓಸರಿಸಲೀಯದೆ ಬಿಂದುವ, ಊಧ್ರ್ವಕ್ಕೆತ್ತಿ
ಇಂತೀ ತ್ರಿವಿಧವನೊಂದೇ ಠಾವಿನಲ್ಲಿ ಬಲಿದು ನಿಲಿಸಿ
ಸಾಸಿರದಳಕಮಲದ ನಾದಾತ್ಮಲಿಂಗದಲ್ಲಿ ಮನ ಲೀಯವಾದಡೆ
ಅದೇ ಪರಮ ರಾಜಯೋಗವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೈದುವಡೆ./87
ಆಸೆಯೆಂಬ ವೇಶಿ ಆರನಾದರೂ ತನ್ನತ್ತ ಕರೆವಳು.
ಈ ಆಸೆಯೆಂಬವಳು ಆರನಾದರೆಯೂ ಘಾಸಿಮಾಡಿ,
ತನು ಮನವ ವ್ರಯವ ಮಾಡುವಳು.
ಈ ಆಸೆಯೆಂಬ ವೇಶ್ಯೆಗೆ ಒತ್ತೆಯ ಕೊಡದ
ನಿರಾಶಿಗಳೆಂಬುವರನಾರನೂ ಕಾಣೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./88
ಆಸೆಯೆಂಬ ಸ್ತ್ರೀಗೆ ಮನಸೋತವರೆಲ್ಲಾ
ಕೆಟ್ಟ ಕೇಡನೇನೆಂಬೆನಯ್ಯ?
ಯತಿಗಳಾಗಲಿ ವೇದಾಧ್ಯಾಯಿಗಳಾಗಲಿ ವ್ರತಿಗಳಾಗಲಿ
ಸರ್ವವಿದ್ಯಾಕಲಾವಂತರಾಗಲಿ ನರರೊಳಗಾಗಲಿ ಸುರರೊಳಗಾಗಲಿ
ಇವರೆಲ್ಲರ, ಧನವುಳ್ಳವರ ಬಾಗಿಲ ಕಾಯಿಸಿದಳು ನೋಡ.
ಇವಳಿಗಾರಾರು ಮರುಳಾಗದಿರರು?
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನ ಶರಣರಲ್ಲದವರ,
ಕಿವಿಯ ಹಿ[ಂಡಿ] ಕುಣಿಸಿದಳು ನೋಡಾ./89
ಆಸ್ತಿ ಜಾಯತೇ ವಿಪರಿಣಮತೇ ವಿವರ್ಧತೇ
ಅಪಕ್ಷೀಯತೇ ವಿನಶೃತಿ ಎಂಬ ಷಡ್ಭಾವವಿಕಾರಂಗಳು
ಕೆಡುವುದಕ್ಕೆ ವಿವರವೆಂತೆಂದಡೆ;
ಶ್ರೀಗುರುವಿನ ಕೃಪಾಗರ್ಭದ ಮಧ್ಯದಲ್ಲಿರ್ದವ
ನಾನಹುದೆಂದರಿದಾಗವೆ
ಅಸ್ತಿ ಎಂಬ ವಿಕಾರ ಕೆಟ್ಟಿತ್ತು.
ಗುರುಕರದಲ್ಲಿ ಜನಿಸಿದೆನಾಗಿ
ನಾ ಮಾಯಾಯೋನಿಜನವಲ್ಲವೆಂದು ಅರಿದಾಗವೆ
ಜಾಯತೇ ಎಂಬ ವಿಕಾರ ಕೆಟ್ಟಿತ್ತು.
ಗುರುವಿನ ಸದ್ಭಾವಜಾತಲಿಂಗವನಂಗದಲ್ಲಿ ಧರಿಸಿ
ಪರಮಪರಿಣಾಮದಲ್ಲಿ ಪರಿಣಮಿಸುತ್ತಿರ್ದ ಕಾರಣ
ವಿಪರಿಣಮತೇ ಎಂಬ ವಿಕಾರ ಕೆಟ್ಟಿತ್ತು.
ಗುರುವಿನ ಆಚಾರ ಜ್ಞಾನಮಾರ್ಗದಲ್ಲಿ
ಆಚರಿಸಿ ಬೆಳೆವುತ್ತಿದ್ದ ಕಾರಣ
ವಿವರ್ಧತೇ ಎಂಬ ವಿಕಾರ ಕೆಟ್ಟಿತ್ತು.
ದೇಹೇಂದ್ರಿಯಾದಿಗಳೆಲ್ಲ ಲಿಂಗದಲ್ಲಿ ಅಡಗಿ ಶಿಥಿಲವಾಗಲು
ಅಪಕ್ಷೀಯತೇ ಎಂಬ ವಿಕಾರ ಕೆಟ್ಟಿತ್ತು.
ಲಿಂಗಾಂಗದ ಐಕ್ಯವನರಿದು ಲಿಂಗದಲ್ಲಿ ಲೀಯವಾಗಲು
ವಿನಶ್ಯತಿ ಎಂಬ ವಿಕಾರ ಕೆಟ್ಟಿತ್ತು.
ಇಂತೀ `ಲಿಂಗಸಂಗದಿಂದ ಷಡ್ಭಾವವಿಕಾರಂಗಳಳಿದು
ನಿಮ್ಮವಿಕಾರವೆಡೆಗೊಂಡಿತ್ತು’
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಭಕ್ತಂಗೆ./90
ಇಂದಿಗೆಂತು ನಾಳಿಂಗೆಂತೆಂದು, ಬೆಂದ ಒಡಲಿಗೆ ಚಿಂತಿಸಿ,
ಭ್ರಮೆಗೊಂಡು ಬಳಲಬೇಡ ಮರುಳೇ.
ಎಂಬತ್ತುನಾಲ್ಕುಲಕ್ಷ ಯೋನಿಯೊಳಗಾದ ಸಮಸ್ತ ಜೀವರಿಗೆ,
ಭೋಗವನೂ, ಭೋಗವಿಷಯಜ್ಞಾನವನೂ, ಕೊಟ್ಟು ಸಲಹುವ
ದೇವನು, ತನ್ನ ಸಲಹಲಾರನೆ?
ಇದನರಿದು ಮತ್ತೇಕೆ ಚಿಂತಿಸುವೆ ಮರುಳೇ?
ಹುಟ್ಟಿಸಿದ ದೇವನು ರಕ್ಷಿಸುವನಲ್ಲದೆ ಮಾಣನೆಂಬುದನರಿಯ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ಕರುಣಿ ಕೃಪಾಳುವೆಂಬುದನರಿಯ ಮರುಳೇ./91
ಇಂದು ಭಾನುವನೊಂದುಗೂಡಿಸಿ,
ಬಿಂದು ನಾದವನೊಂದುಮಾಡಿ,
ಅವರಲ್ಲಿ ತಂದಿರಿಸಿದ ಜೀವ ಪ್ರಾಣಂಗಳನು.
ಅವರೊಳಗೆ ಕರಣೇಂದ್ರಿಯಗಳ ಹುರಿಗೊಳಿಸಿ,
ನಾಡಿ ಚಕ್ರಂಗಳಿಂದ ಜಂತ್ರವ ಹೂಡಿ ನಿಲಿಸಿ,
ತಾಯಿ ಉಂಡ ಅನ್ನರಸವ ನಾಭಿಸೂತ್ರದಲ್ಲಿ ಶಿಶುವಿಗೆ ಊಡಿಸಿ,
ಜೀವಿಸಿದ ಶಿಶುವ ಯೋನಿಮುಖದಿಂ ಹೊರವಡಿಸಿ,
ತಾಯಿಯ ಸ್ತನದಲ್ಲಿ ಅಮೃತವ ತುಂಬಿ ಊಡಿಸಿ,
ಸಲಹುವ ದೇವನ ಮರೆವ ಜೀವರಿಗೆ ಇನ್ನಾವಗತಿಯೂ ಇಲ್ಲಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./92
ಇಂಬಾದ ಬ್ರಹ್ಮದಲ್ಲಿ ತುಂಬಿದ ಜಗವೆಲ್ಲಾ ಸಂಭ್ರಮಿಸುತ್ತದೆ
ಸಂಸಾರದಲ್ಲಿ.
ಕುಂಭದೊಳಗಣ ಸುಧೆಯನುಂಬ ಭೇದವನರಿಯದೆ
ಸುಂಬಳಗುರಿಯಂತಾದವು ಜಗವೆಲ್ಲವು.
ಒಂಭತ್ತುನಾಳದೊಳಗಣ ಮಧ್ಯನಾಳದ ಬೆಂಬಳಿಯಲ್ಲಿ
ಎಯ್ದಿದಾತಗೆ ಸುಧೆ ಸಾಧ್ಯವು.
ತೊಂಬತ್ತಾರು ಅಂಗುಲ ದೇಹವೆಲ್ಲವನೂ ತುಂಬುವುದು.
ಮತ್ತಂತು ಆ ಸುಧೆಯನು ಹಂಬಲಿಸಲೇಕೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ,
ಹಂಬಲವನು ಬಿಡದಿರ್ದಡಾತ ಯೋಗಿ.
ಸ್ವತಂತ್ರ ಸಿದ್ಧಲಿಂಗ/93
ಇದ ಮಾಡಬಹುದೆಂಬ, ಇದ ಮಾಡಬಾರದೆಂಬ
ಪುಣ್ಯ ಪಾಪ ರೂಪಾದ, ವಿಧಿ ನಿಷೇಧಂಗಳಿಂದಾದ,
ಶುಭಾಶುಭಂಗಳನು ಮೀರಿದ,
ಭಕ್ತಿ ಮುಕ್ತಿಗಳೆರಡೂ ಲಿಂಗಾರ್ಪಿತವಾಗಿ,
ತಾ ಲಿಂಗದೊಳಗಡಗಿದ ಬಳಿಕ,
ಪುಣ್ಯ ಪಾಪದ ಫಲಭೋಗಂಗಳು ತನಗೆ ಮುನ್ನವೇ ಇಲ್ಲ,
ಇಂತಪ್ಪ ಸ್ವತಂತ್ರ ಶರಣನೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ./94
ಇಬ್ಬರು ಮೂವರು ದೇವರೆಂದು ತಬ್ಬಿಬ್ಬುಗೊಂಡು ನುಡಿಯಬೇಡ.
ಒಬ್ಬನೇ ದೇವ ಕಾಣಿರಣ್ಣ.
“ಸರ್ವಸ್ಮಾದಧಿಕೋರುದ್ರಃ ಪರಮಾತ್ಮಾ ಸದಾಶಿವಃ
ಇತಿ ಯತ್ಮ ನಿಶ್ಚಿತಾ ಧೀಃ ಸ ವೈ ಮಾಹೇಶ್ವರಃ ಸ್ಮೃತಃ||’
ಎಂದವಾಗಮಂಗಳು.
`ಶಿವನೇಕೋ ದೇವ’ನೆಂದು ಸಾರುತ್ತಿವೆ ಶ್ರುತಿ ಪುರಾಣಂಗಳು.
ಇದು ಕಾರಣ,
ಶಿವನಲ್ಲದೆ ದೈವವಿಲ್ಲೆಂದರಿದ ಮಾಹೇಶ್ವರನ ಹೃದಯ
ನಿವಾಸವಾಗಿಪ್ಪ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./95
ಈಶವೇಷವ ಧರಿಸಿದಡೇನು ವೇಷಕ್ಕೆ ಈಶನಂಜಿ ಒಲಿವನೇ?
ಹೊರವೇಷ ಚೆನ್ನಾಗಿತ್ತಲ್ಲದೆ ಒಳಗೆ ಅರಿವಿಲ್ಲದ ವೇಷವೇನು?
ಗ್ರಾಸಕ್ಕೆ ಭಾಜನವಾಯಿತ್ತಲ್ಲದೆ ಲಿಂಗಕ್ಕೆ ಭಾಜನವಾದುದಿಲ್ಲ.
ಮತ್ತೆಂತೆಂದಡೆ: ಅರಿವು ಆಚಾರ ಅನುಭಾವ ಭಕ್ತಿ ವಿರಕ್ತಿ
ನೆಲೆಗೊಂಡಿಪ್ಪ ರೂಪಿನಲ್ಲಿ ಶಿವನೊಲಿದಿರ್ಪನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./96
ಉದಯಾಸ್ತಮಯವೆಂಬೆರಡಿಲ್ಲದ ಚಿದಾದಿತ್ಯನ ಬೆಳಗು
ಮೂರುಲೋಕವ ಬೆಳಗಲು
ಅಜ್ಞಾನವೆಂಬ ಕತ್ತಲೆ ಹರಿದು, ಬೆಳಗೇ ಅವರಿಸಿತ್ತು.
ಆ ಬೆಳಗಿನೊಳಗಣ ಬೆಳಗು ತಾನೆಂದರಿದ ಕಾರಣ
ಬೆಳಗು ಬೆಳಗ ಹಳಚಿ ಎರಡೊಂದಾದ
ಘನವನೇನೆಂದುಪಮಿಸುವೆನು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅವಿರಳ ಲಿಂಗೈಕ್ಯವನು./97
ಉರಗನ ಫಣಾಮಣಿಯ ಬೆಳಗನರಿ ಕಂಡಾ.
ಉರವಣಿಸಿ ಮೇಲಕ್ಕೆ ಹಾರುವ ಹದ್ದಿನ ಪರಿಯನರಿ ಕಂಡಾ.
ಸರಸ್ವತಿ ಸಿರಿಯೊಡನೇಕಾಂತದಲ್ಲಿಹ ಪರಿಯನರಿ ಕಂಡಾ.
ಹರಿಯಜರುದ್ರರ ಕರ್ಮವನಳಿದ ಪರಿಯನರಿ ಕಂಡಾ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ತಾನೆಂದರಿ ಕಂಡಾ./98
ಊದ್ರ್ವಮುಖವಾದ, ಅನಂತೇಶನೆಂಬ ವಾಸುಕಿಯ
ಶಿರದ ಮೇಲಿಹ ಅಷ್ಟದಳಾಬ್ಜಮಧ್ಯದಲ್ಲಿ,
ಒಪ್ಪುತ್ತಿಹ ಶುದ್ಧವಿದ್ಯೆಯೇ ಪೀಠವಾದ
ಶಿವಲಿಂಗವೊಂದರಲ್ಲಿ, ದೃಢಭಕ್ತಿಯುಳ್ಳಾತನ ದೇಹವೇ
ಲಿಂಗದೇಹವು.
ಆ ಚಿದ್ರೂಪನಾದ ಪರಮ ಸ್ವರೂಪನ ಮೂರ್ತಿ
ತಾನೇ ಇಷ್ಟಲಿಂಗವು.
ಆ ಇಷ್ಟಲಿಂಗದಲ್ಲಿ ದೇಹವನಡಗಿಸಿದ ಮಹಾತ್ಮನ
ಮನ ಬುದ್ಧಿ ಅಹಂಕಾರ ಇಂದ್ರಿಯಾದಿ ಗುಣಂಗಳು
ಜನನಾದಿ ವಿಕಾರಂಗಳ ಹೊದ್ದವಾಗಿ, ಆತ ನಿರ್ದೆಹಿ,
ನಿಜಗುರು ಸ್ವತಂತ್ರಲಿಂಗೇಶ್ವರನ ಶರಣನುಪಮಾತೀತನು./99
ಊಧ್ರ್ವಮುಖಮೂಲ ಅಧೋಶಾಖೆಯಾದ
ವೃಕ್ಷದ ಮೂಲದಲ್ಲಿ ಒಬ್ಬ ಯೋಗಿಯಿದಾನೆ.
ಆ ಯೋಗಿಯ ಕೈಯಲ್ಲೊಂದು ಅಮೃತವ ಫಲವ ನೋಡಾ.
ಆ ಫಲವ ಮೆದ್ದವರೆಲ್ಲ ಅಮರರಾದುದ ಕಂಡು
ನಾನು ಬೆರಗಾದೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./100
ಊರ ಮೇಗಡೆಯಲೊಂದು ನರಿ ಕೂಗಿಡಲು
ಹರಡಿದ್ದವರೆಲ್ಲ ನೆರೆದು,
ಇದೆಲ್ಲಿಯ ಕೂಗೆಂದು ವಿಚಾರಿಸಹೋದರೆ,
ನೆರದವರನೆಲ್ಲರ ನರಿ ನುಂಗಲು, ಊರು ಹಾಳಾಯಿತ್ತು.
ಹಾಳೂರೊಳಗಿದ್ದರಸು, ಪರಿವಾರವನರಸಲೆಂದು ಹೋದರೆ,
ಆ ಅರಸನ ನುಂಗಿತ್ತು.
ಆ ಅರಸನ ವಾಹನವ ನುಂಗಿ, ತನಗಾರೂ ಸರಿಯಿಲ್ಲವೆಂದು
ಮೂರು ಮೊನೆಯ ಗಿರಿಯನೇರಿ ಬಟ್ಟಬಯಲಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./101
ಊರೊಂದೆಸೆ, ಕಾಡೊಂದೆಸೆ.
ನರರೊಂದೆಸೆ, ಸುರರೊಂದೆಸೆ,
ಹಗಲೊಂದೆಸೆ, ಇರುಳೊಂದೆಸೆ.
ಪುಣ್ಯವೊಂದೆಸೆ, ಪಾಪವೊಂದೆಸೆ.
ಜ್ಞಾನವೊಂದೆಸೆ, ಅಜ್ಞಾನವೊಂದೆಸೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮಶರಣರೊಂದೆಸೆ, ಲೋಕವೊಂದೆಸೆ./102
ಎತ್ತನೇರಿ ನಡೆಸುವ ಅಣ್ಣಗಳಿರ,
ಎತ್ತಿನವರೆಡು ಹಿಂಗಾಲು ಮುರಿದು,
ಮುಂಗಾಲಲ್ಲಿ ನಡೆಸಬೇಕು.
ಕೋಡೆರಡ ಕಿತ್ತುಹಾಕಿ ಬೋಳುಮಾಡಿ,
ಹುಲ್ಲು ನೀರಿಲ್ಲದ ಮೇಹ ಹಾಕಿ ಸಲಹಬೇಕು.
ಎತ್ತಿನಿಚ್ಚೆಯಲ್ಲಿ ಹೋಗದೆ, ಕಿರುವಟ್ಟೆಯ ಬಿಟ್ಟು,
ಹೆಬ್ಬಟ್ಟೆಯಲ್ಲಿ ನಡೆಸಬೇಕು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನತ್ತ,
ಅಭಿಮುಖವಾಗಿ ನಡೆಸಬೇಕು ಕೇಳಿರಣ್ಣ./103
ಎನ್ನ ಶ್ರೀಗುರು ಮಾಡಿದ ಕರುಣಕಿನ್ನಾವುದು ಕಡೆ,
ಏನೆಂದುಪಮಿಸುವೆನಯ್ಯ?
ಕಾಣಬಾರದ ಲಿಂಗವ ಕಾಣಿಸಿ ಕೊಟ್ಟನೆನ್ನ ಕರದಲ್ಲಿ.
ತಿಳಿಯಬಾರದ ಜ್ಞಾನವ ತಿಳಿಸಿ, ಮನದಲ್ಲಿ ನೆಲೆಗೊಳಿಸಿದ.
ಒಳಹೊರಗೆ ತಳವೆಳಗು ಮಾಡಿ,
ಆಚಾರವನುಗೊಳಿಸಿ ಅಂಗದಲ್ಲಿ ಸ್ಥಾಪಿಸಿ
ಹಿಂದ ಮರೆಸಿ, ಮುಂದ ತೋರಿದನಯ್ಯಾ.
ಶ್ರೀಗುರು, ಕರುಣಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./104
ಎರವಿನ ಬದುಕು ಸ್ಥಿರವಲ್ಲ.
ಅಭ್ರಛಾಯದಂತೆ ನಿಮುಷದಲ್ಲಿ ತೋರಿಯಡಗಲು,
ಈ ಸಂಸಾರದಲ್ಲೇನು ಲೇಸು ಕಂಡು ನಚ್ಚುವೆ? ನಚ್ಚದಿರು.
ನಚ್ಚಿದವರ ಕೆಟ್ಟ ಕೇಡಿಂಗೆ ಕಡೆಯಿಲ್ಲ.
ಬರಿಯ ಬಯಲ ಭ್ರಮೆ ಸಟೆಯ ಸಂಸಾರ.
ಇದರಲ್ಲೇನೂ ಲೇಸಿಲ್ಲವೆಂದರಿದು ದೃಢವಿಡಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶ್ರೀಚರಣವನು./105
ಎಲುವಿಲ್ಲದ ನಾಲಗೆಯ ಪಡೆದೆವೆಂದು,
ಹಲವು ಪರಿಯಲುಲಿವರಯ್ಯ ಮಾಯಾಮಲಿನ ದೇಹಿಗಳು.
ಜಗದೀಶನವರ ಕೆಡಹದೆ ಮಾಣ್ಬನೆ
ಅಘೋರ ಸಂಸಾರ ಕಗ್ಗೆಸರೊಳಗೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ತನ್ನಲ್ಲಿ ಭಕ್ತಿಯಿಲ್ಲದವರ?./106
ಎಲೆ ಅಯ್ಯಾ, ನೀವು ನಿರಾಕಾರವಾಗಿದರ್ಿರಾಗಿ,
ಆ ನಿರಾಕಾರವೆ ಪಂಚಮದಲ್ಲಿ ನಿಂದಡೆ ನಾದ ತೋರಿತ್ತು.
ಆ ನಾದದಲ್ಲಿ ಬಿಂದು ತೋರಿತ್ತು.
ಆ ನಾದ ಬಿಂದುಗಳನೊಡೆದು ಮೂಡಿ,
ನಿರುಪಾಧಿಕ ಜ್ಯೋತಿಯಂತೆ ಸಕಲ ನಿಃಕಲ ರೂಪಾದಿರಯ್ಯ.
ರವಿಕೋಟಿ ತೇಜ ಪರಿಪೂರ್ಣ ಮೂಲಚೈತನ್ಯ ರೂಪು
ನೀವು ಕಂಡಯ್ಯ.
ಭೇದಿಸಬಾರದಭೇದ್ಯ ಸಾಧಿಸಬಾರದಸಾಧ್ಯ ನೀವು ಕಂಡಯ್ಯ.
ನಿಮ್ಮ ಸಹಜದ ನಿಲವನಾರು ಬಲ್ಲರು?
ನಿಮ್ಮಿಂದ ನೀವೇ ರೂಪಾದಿರಯ್ಯ.
ನಿಮ್ಮ ಪರಿಣಾಮಪದದಲ್ಲೊಂದನಂತಕಾಲವಿದರ್ಿರಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./107
ಎಲೆ ಶಿವನೆ, ನಾ ನಿಮ್ಮನೊಂದೆ ಬೇಡಿಕೊಂಬೆನು:
ನಿಮ್ಮ ಶರಣರ ಮೂರ್ತಿಯ ಕಂಡಡೆ,
ನೀವೆಂದೆ ಕಾಬಂತೆ ಮಾಡಯ್ಯಾ.
ನಿಮ್ಮ ಶರಣರ ನುಡಿಯ ಕೇಳಿದಡೆ,
ನಿಮ್ಮ ನುಡಿಯೆಂದು ನಂಬುವಂತೆ ಮಾಡಯ್ಯಾ.
ನಿಮ್ಮ ಶರಣರ ಸುಖವೆಲ್ಲ,
ನಿಮ್ಮ ಸುಖವೆಂದು ತಿಳಿವಂತೆ ಮಾಡಯ್ಯಾ.
ನಿಮ್ಮ ಶರಣರಾಡಿತೆಲ್ಲ,
ನಿಮ್ಮ ಲೀಲೆಯೆಂದರಿವಂತೆ ಮಾಡಯ್ಯಾ ಎನಗೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./108
ಎಲೆಯುದುರಿದ ವೃಕ್ಷ ಉಲಿಯಬಲ್ಲುದೆ?
ಜಲವರತ ತಟಾಕ ಗೊರೆಗೊಳಬಲ್ಲುದೆ?
ಸಲೆ ಶಿವನನರಿದು ತಾ ಶಿವನೊಳು ಕೂಡಿ ಮಾಡುವ ಕ್ರೀ
ಫಲವ ಕೊಡಬಲ್ಲುದೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾಡುವ ಕ್ರೀ,
ಹುರಿದ ಬೀಜದಂತೆ./109
ಎಲ್ಲೆಲ್ಲಿ ನೋಡಿದಡಲ್ಲಲ್ಲಿ ನೀನೆ ದೇವ.
ಪಿಂಡಾಂಡಂಗಳೊಳಗೆಲ್ಲ ನೀನೆ ದೇವ.
ಮಹದಾಕಾಶರೂಪ ನಿರುಪಾಧಿಕ ಪರಂಜ್ಯೋತಿ ನೀನೆ ದೇವ.
ಉಪಮಾತೀತ ವಾಙ್ಮನಕ್ಕಗೋಚರ ನೀನೆ ದೇವ.
ಸ್ವಾನುಭೂತಿ ಸ್ವರೂಪ ಶರಣಜನ ಮನೋವಲ್ಲಭ ನೀನೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./110
ಏನ ಮಾಡುವೆನಯ್ಯ?
ಈ ಮನವೆಂಬ ಮರ್ಕಟನ ಸಂಗದಿಂದ,
ಮರ್ಕಟವಿಧಿಯಾಯಿತ್ತಯ್ಯ.
ತನುವೆಂಬ ವೃಕ್ಷದಲ್ಲಿ ಇಂದ್ರಿಯಂಗಳೆಂಬ ಶಾಖೋಪಶಾಖೆಗಳಿಗೆ
ಲಂಘಿಸುತ್ತಿದೆ ನೋಡಯ್ಯ.
ಸಜ್ಜನರಿಗೆ ದುರ್ಜನರ ಸಂಗದಿಂದ
ದುರ್ಜನಿಕೆ ಬಂದಂತಾಯಿತ್ತಯ್ಯ.
ಈ ಮನದ ಮರ್ಕಟತನವ ಮಾಣಿಸಿ
ನಿಮ್ಮಲ್ಲಿ ಕಟ್ಟಿ ಬಂಧವಾಗಿರಿಸೀಮನವ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./111
ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ
ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ?
ಚಿನ್ನದ ತೊಡಹದ ತಾಮ್ರದಂತೆ ಒಳಗೆ ಕಾಳಿಕೆ ಬಿಡದು.
ನುಣ್ಣಗೆ ಬಣ್ಣಗೆ ನುಡಿವ ಅಣ್ಣಗಳೆಲ್ಲರು
ಕಣ್ಣು ಕಾಣದೇ ಕಾಡಬಿದ್ದರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮನರಿಯದ ಅಂಧಕರೆಲ್ಲರು./112
ಏನೆಂದರಿಯರು, ಎಂತೆಂದರಿಯರು,
ಹಗರಣದ ಹಬ್ಬಕ್ಕೆ ಜಗದ ಜನರೆಲ್ಲ ನೆರೆದು,
ಗೊಂದಣಗೊಳುತ್ತಿದ್ದರಲ್ಲ.
ತ್ರಿಭಂಗಿಯ ತಿಂದು, ಅದು ತಲೆಗೇರಿ
ಗುರುವೆಂದರಿಯರು, ಲಿಂಗವೆಂದರಿಯರು,
ಜಂಗಮವೆಂದರಿಯರು.
ಶಿವ ಶಿವಾ, ಮಾಯಾಜಾಲದಲ್ಲಿ ಸಿಕ್ಕಿದ ಮರುಳು ಜನರು,
ಮುಕ್ಕಣ್ಣನಿಕ್ಕಿದ ಛತ್ರದಲುಂಡು ಸೊಕ್ಕಿ,
ಸಲಹುವ ಕರ್ತನನರಿಯದವರಿಗೆನ್ನೆತ್ತಣ ಮುಕ್ತಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?./113
ಏಳುಜನ್ಮದಲ್ಲಿ ಮಾಡಿದ ಪಾಪ,
ಎಂತು ಕೆಡುವುದೆಂದು ಚಿಂತಿಸಬೇಡ.
ಭಾಳದಲ್ಲಿ ಭಸಿತವನಿಟ್ಟು,
ಲಾಲನೆಯಿಂದ ಭಾಳಲೋಚನನ ನೋಡಿದಾಕ್ಷಣ,
ಏಳುಜನ್ಮದ ಪಾಪಂಗಳು ಹರಿದು ಹೋಹವು ನೋಡಿರಣ್ಣ.
ಕೀಳು ಮೇಲಹನು. ಮೇಲೆ ಶಿವಲೋಕವಹುದು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಸನ್ನಿಧಿಯಲ್ಲಿ
ಸುಖವಹುದು ಕೇಳಿರಣ್ಣಾ./114
ಏಳುನೆಲೆಯಲ್ಲಿ ಹೂಳಿದ ನಿಧಾನವ ಸಾಧಿಸಹೋದರೆ
ಸಾಧಕನನದು ನುಂಗಿತ್ತು ನೋಡಾ.
ಸಾಧಿಸಹೋದ ಕಲಿಗಳೆಲ್ಲಾ ನಿಧಾನವ ಸಾಧಿಸಹೋಗಿ
ತಾವೆ ನಿಧಾನಕ್ಕೆ ಬಲಿಯಾದರು.
ಬಲ್ಲಿದರೆಲ್ಲರ ನುಂಗಿ, ಬಡವರನುಳುಹಿತ್ತು.
ಇಂತಪ್ಪ ನಿಧಾನವ ಕಂಡರಿಯೆವು, ಕೇಳಿ ಅರಿಯೆವು ಎಂದು
ಸಾಧಕನೊಡನಿದ್ದ ಸಾಹಸಿಗಳೆಲ್ಲಾ ಬೆರಗಾಗಿ ನಿಂದರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ನಿಧಾನವ ಸಾಧಿಸಿ,
ನಾನು ಬದುಕಿದೆನು./115
ಒಡಲೆಂಬ ಗುಡಿಯೊಳಗೆ
ಒಡೆದು ಮೂಡಿದ ಲಿಂಗವಿರ್ದೆಡೆಯ
ನೋಡಲೆಂದು ಹೋದರೆ
ನೋಡುವ ನೋಟವೆಲ್ಲ ತಾನೆಯಾಗಿತ್ತು.
ಈ ಬೆಡಗು ಬಿನ್ನಾಣದ ಲಿಂಗವ ತುಡುಕಿ ಹಿಡಿದು ಕೊಳಬಲ್ಲಾತ
ಮೃಡನಲ್ಲದೆ ಮಾನವನಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ತಾನೇ ಬೇರಿಲ್ಲ./116
ಒಳಗೆ ಹೊರಗಾಯಿತ್ತು, ಹೊರಗೆ ಒಳಗಾಯಿತ್ತು.
ತಿಳಿದು ನೋಡಲು ಒಳಹೊರಗೆಂಬುದಿಲ್ಲ ನೋಡಾ.
ಒಳ ಹೊರಗು ಕೂಡಿದ ತ್ರಿಮಂಡಲದ
ಬೆಡಗಿನ ತಾವರೆಯ ಒಳಗೆ
ಥಳಥಳಿಸುವ ದಿವ್ಯಪೀಠದ ಮೇಲೆ ಹೊಳೆವ ಲಿಂಗವದು.
ಒಳ ಹೊರಗು ಬೆಳಗುತಿಪ್ಪ ಶುದ್ಧ ಜ್ಯೋತಿ ನೋಡಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲುವು ತಾನೆ ನೋಡಾ./117
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಭಕ್ತನು.
ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ಮಾಹೇಶ್ವರನು.
ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ಪ್ರಸಾದಿ.
ಉರಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಪ್ರಾಣಲಿಂಗಿ.
ಕಂಠಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಶರಣ.
ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಐಕ್ಯ.
ಇಂತೀ ಷಡುಸ್ಥಲದವರೆಲ್ಲ ಲಿಂಗವ ಧರಿಸಿ,
ನಿತ್ಯ ಲಿಂಗಾಂಗ ಸಂಬಂಧಿಗಳಾಗಿ,
ಲಿಂಗಾವಧಾನಿಗಳಾಗಿರ್ದರಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣರು./118
ಕಣ್ಣು ಕಾಲು ಎರಡುಳ್ಳವ ದೂರ ಎಯ್ದುವನಲ್ಲದೆ,
ಕಣ್ಣು ಕಾಲೆರಡರೊಳಗೊಂದಿಲ್ಲದವನು,
ದೂರವೈಯ್ದಲರಿಯನೆಂಬಂತೆ,
ಜ್ಞಾನರಹಿರತನಾಗಿ ಕ್ರೀಯನೆಷ್ಟು ಮಾಡಿದಡೇನು?
ಅದು ಕಣ್ಣಿಲ್ಲದವನ ನಡೆಯಂತೆ.
ಕ್ರೀರಹಿತವಾಗಿ ಜ್ಞಾನಿಯಾದಡೇನು?
ಅದು ಕಾಲಿಲ್ಲದವನ ಇರವಿನಂತೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿಜವ ಬೆರಸುವಡೆ,
ಜ್ಞಾನವೂ ಕ್ರೀಯೂ ಎರಡೂ ಬೇಕು./119
ಕತ್ತಲೆಯ ಮನೆಯ ಹೊಕ್ಕು ತೊಳಲುವ ವ್ಯರ್ಥ
ಜೀವರನೇನೆಂಬೆ ನೋಡಾ.
ಅರ್ತಿಕಾರಿಕೆಗೆ ಬಲುಗುಂಡ ಹೊತ್ತು ಬಳಲುವಂತೆ
ಬಳಲುತೈದಾರೆ ನೋಡಾ.
ಶಿವಜ್ಞಾನವಿಲ್ಲದೆ ದೇಹಭಾರವ ಹೊತ್ತು ಗತಿಗೆಡುತೈದಾರೆ.
ಮುನ್ನ ಮಾಡಿದ ಕರ್ಮ, ಬೆನ್ನಲ್ಲಿ ಮನೆಯ ಹೊರುವಂತಾಯಿತ್ತು.
ಇನ್ನಾದರೂ ಅರಿದು ನಡೆಯಲು,
ಬೆನ್ನ ಹತ್ತಿದ ಮನೆಯ ತೊ[ಲ]ಗೆ ನೂಂಕಿ ತನ್ನತ್ತ ತೆಗೆದುಕೊಂಬನು
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./120
ಕನ್ನವ ಸವೆವ ಕನ್ನಗತ್ತಿಗೆ ಕನ್ನ ಸವೆಯಿತ್ತೆ ಕೈ ತಟ್ಟಿತೆಂಬಂತೆ,
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು,
ಬಳಲುವಣ್ಣಗಳ ಬಾಯ ಟೊಣೆದು,
ಇವು ಮೂರು ತನ್ನಿಂದ ಬಲ್ಲಿದರಲ್ಲಿಗೆ ಹೋಗದೆ ಮಾಣವು.
ಇವರಲ್ಲಿ ಬನ್ನಬಟ್ಟು ಬಳಲುವ
ಕರ್ಮಿಗಳಿಗಿನ್ನೆಲ್ಲಿಯ ಮುಕ್ತಿಯಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./121
ಕಮಲನಾಳದ ಸೂತ್ರ ಸಮವಾಗಿ ನಿಂದಲ್ಲಿ
ಒಂದಾಶ್ಚರ್ಯದ ರೂಪದೆ.
ಅದ ನೋಡಿ ಘನವ ಕೂಡುವ ಪರಿಯೆಂತೋ?
ಅದ ಕೂಡಿಹೆನೆಂದಡೆ, ತಾನಿಲ್ಲದೆ ಕೂಡಬೇಕು
ಕೂಡದ ಕೂಟವನುಸುರಲೆಡದೆರಹುಂಟೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ[ದ] ಬಳಿಕ
ತಾನು ತಾನಾಗಿರಬೇಕು./122
ಕರಣದ ಕಲ್ಮಷ ಹರಿಯಿತ್ತಾಗಿ ನಿರ್ಮಲತನುವಾಯಿತ್ತು.
ಆ ನಿರ್ಮಲತನುವಿನಲ್ಲಿ ಶಿವಪ್ರಸಾದವೆಡೆಗೊಂಡಿತ್ತಾಗಿ
ಭಕ್ತಿಪಿಂಡವಾಯಿತ್ತು.
ಆ ಭಕ್ತಿಪಿಂಡದಲ್ಲಿ ನೀವಿಪ್ಪಿರಾಗಿ ಶರಣಂಗೆ ಪಿಂಡನಾಮವಾಯಿತ್ತು.
ಅದು ಕಾರಣ ಶರಣಂಗೂ ನಮಗೂ
ಒಂದೆ ಭಕ್ತಿಪಿಂಡವಾಯಿತ್ತು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./123
ಕರ್ಣಂಗಳು ಕೇಳಿದ ಶಬ್ದದಿಂದಾದ ಸುಖವನು,
ನೇತ್ರಂಗಳು ನೋಡಿದ ರೂಪಿನಿಂದಾದ ಸುಖವನು,
ರಸನೆ ಸವಿದ ರಸದಿಂದಾದ ಸುಖವನು,
ವಾಸಿಸುವ ಘ್ರಾಣದಿಂದರಿವ ಗಂಧಸುಖವನು,
ಮುಟ್ಟುವ ತ್ವಕ್ಕಿನಿಂದಾದ ಸ್ಪರ್ಶಸುಖವನು,
ಅರ್ಪಿತದ ಮಾಡಿ ಅನುಭವಿಸುವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದಿಯು./124
ಕರ್ಮರಹಿತನಾದ ನಿರ್ಮಲ ನಿತ್ಯಂಗೆ ಮಾಯಾ ಭ್ರಮೆಯಿಲ್ಲ.
ಮಾಯಾಭ್ರಮೆಯಿಲ್ಲವಾಗಿ ಮನದ ಸಂಕಲ್ಪ ವಿಕಲ್ಪವಿಲ್ಲ.
ಮನದ ಸಂಕಲ್ಪ ವಿಕಲ್ಪವಿಲ್ಲವಾಗಿ ವಿಷಯಾಭಿಮಾನವಿಲ್ಲ.
ವಿಷಯಾಭಿಮಾನವಿಲ್ಲವಾಗಿ
ಪಂಚೇಂದ್ರಿಯಂಗಳ ವ್ಯಾಪಾರವಿಲ್ಲ.
ಪಂಚೇಂದ್ರಿಯಂಗಳ ವ್ಯಾಪಾರವಿಲ್ಲವಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ನಿರ್ದೆಹಿ./125
ಕರ್ಮವ ನುಂಗಿತ್ತು ಹಾಹೆ, ಹಾಹೆಯ ನುಂಗಿತ್ತು ರಜ್ಜು,
ರಜ್ಜುವ ನುಂಗಿತ್ತು ವಿದ್ಯೆ, ವಿದ್ಯೆಯ ನುಂಗಿತ್ತು ಕಳೆ,
ಕಳೆಯ ನುಂಗಿತ್ತು ಬೆಳಗು, ಬೆಳಗ ನುಂಗಿತ್ತು ನಾದ,
ನಾದವ ನುಂಗಿತ್ತು ಶೂನ್ಯ, ಶೂನ್ಯವ ನುಂಗಿತ್ತು ಮಹಾಶೂನ್ಯ,
ಮಹಾಶೂನ್ಯವ ನುಂಗಿತ್ತು ನಿರಾಳ.
ಆ ನಿರಾಳದಲ್ಲಿ ನಿಂದು ನಿಶ್ಚಿಂತವಾಸಿಯಾಗಿದ್ದೆನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮಲ್ಲಿ ಅವಿರಳನಾಗಿ./126
ಕಾಡೊಳಗಣ ಹುಲುಗಿಣಿಯ ಹಿಡಿತಂದು,
`ಓಂ ನಮಃಶಿವಾಯ, ಹರಹರ ಶಿವಶಿವ’
ಎಂದು ಓದಿಸಿದಡೆ ಓದದೇ?
ನಿಚ್ಚ ನಿಚ್ಚ ನರಾರಣ್ಯದೊಳಗಿದ್ದ ಮನುಷ್ಯರ ಹಿಡಿತಂದು,
ಹಿರಿದು ಪರಿಯಲ್ಲಿ ಉಪದೇಶವ ಮಾಡಿ,
ಶಿವಮಂತ್ರೋಪದೇಶವ ಹೇಳಿದಡೆ,
ಅದ ಮರೆದು, ಕಾಳ್ನುಡಿಯ ನುಡಿವವರು,
ಹುಲುಗಿಣಿಯಿಂದ ಕಷ್ಟ ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./127
ಕಾದಬಲ್ಲೆವೆಂಬವರೆಲ್ಲ ಕಲಿವೀರಭಟರಹರೆ?
ಇರಿಯದ ವೀರತ್ವ ಮೆರೆಯಬಲ್ಲುದೆ ಹೇಳಾ?
ನಿಜವನರಿಯದೆ ಬರಿಮಾತನಾಡುವರೆಲ್ಲ ಜ್ಞಾನಿಗಳಹರೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿದು,
ಮಾಯೆಯ ಗೆಲ್ಲಬಲ್ಲಾತನೆ ಕಲಿವೀರನು./128
ಕಾಬೂದೊಂದು ಜ್ಞಾನ, ಕಾಣಿಸಿಕೊಂಬುದೊಂದು ಜ್ಞೇಯವೆಂದು
ವಿವರಿಸಿ ನುಡಿಯಬಹುದೇ?
ಇಂದು ಭಾನು ದೀಪಂಗಳು
ತಮ್ಮ ಬೆಳಗಿನಿಂದ ತಮ್ಮನರುಹಿಸಿಕೊಂಬಂತೆ.
ಜ್ಞಾನ ಜ್ಞೇಯಂಗಳ ಪರಿಯೆಂದರಿದಾತನರಿವು,
“ನಿಜ ಅಖಂಡಾನಂದ ಸಂವಿತ್ ಸ್ವರೂಪಂ ಬ್ರಹ್ಮ ಕೇವಲಂ’
ಎಂದುದಾಗಿ,
ಲಿಂಗಾಂಗ ಸಂಬಂಧ ಸಕೀಲವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಬಲ್ಲ./129
ಕಾಯದ ಕರದಲ್ಲಿ ಲಿಂಗವ ಧರಿಸಿ,
ಲಿಂಗಾರ್ಚನೆಯ ಮನಮುಟ್ಟಿ ಮಾಡುತ್ತಿದ್ದಡೆ,
ಮನ ಲಿಂಗದಲ್ಲಿ ತರಹರವಾಯಿತ್ತು.
ಮತ್ತೆ, ಮನದ ಮೇಲೆ ಲಿಂಗ ನೆಲೆಗೊಂಡಿತ್ತು.
ಮನದ ಮೇಲಣ ಲಿಂಗವ, ಭಾವ ಭಾವಿಸಿ, ಭಾವ ಬಲಿದಲ್ಲಿ,
ಭಾವದ ಕೊನೆಯಲ್ಲಿ ನಿಂದಿತ್ತಾಗಿ,
ಭಾವ ಬಯಲಾಗಿ ನಿಭರ್ಾವವಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣಂಗೆ./130
ಕಾಯದ ಕಳವಳವ ಗೆಲಲರಿಯದವರು,
ಮಾಯಾಪಾಶದಲ್ಲಿ ಬಂಧವಡೆದ ಸಂಸಾರಿಗಳಹರಲ್ಲದೆ
ಅವರು ಜ್ಞಾನಿಗಳಾಗಲರಿಯರು.
ಅವರಿಗಿನ್ನೆಂದಿಂಗೆ ಮುಕ್ತಿಯಹುದೋ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?./131
ಕಾಯದ ಸ್ಥಿತಿಗತಿಯನರಿದು, ಕಾಯವ ಶೋಧಿಸಿ
ಮುಂದೆ ಸಾಧಿಸಿಕೊಳ್ಳಿರಣ್ಣ.
ದೇಹಮಧ್ಯದಾಧಾರಪರ ಪ್ರಕೃತಿಯಲ್ಲಿ
ಪ್ರಾಣವಾಯು ಹುಟ್ಟಿ, ಅಲ್ಲಿಂದ
ಲಂಬಿಕಾಸ್ಥಾನವ ತಾಗಿ, ಸಕಾರಾಂತವಾಗಿ
ನಿವೃತ್ತಿ ಪ್ರವೃತ್ತಿಯಾಗಿ ಚರಿಸುವುದು.
ಅಲ್ಲಿ ಇಪ್ಪತ್ತೊಂದುಸಾವಿರದ ಆರುನೂರು ಜೀವಜಪವ
ಜಪಿಸುವುದು, ಗುರೂಪದೇಶದಿಂದರಿದಡೆ
ಅಂತ್ಯವಾದಿಯಾಗಿ ಆದಿಯಂತ್ಯವಾಗಿ
ಆ ಜಪವು ದಹರಾಕಾಶದ ನಾದಾತ್ಮ ಲಿಂಗದಲ್ಲಿ ಕೂಡುವುದೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಮಂತ್ರಯೋಗವು./132
ಕಾಯವೆಂಬ ಪಟ್ಟಣಕ್ಕೆ ಅಕಾಯನಿತ್ಯನೆಂಬರಸು
ಕ್ಷಮೆ ದಮೆ ತಿತಿಕ್ಷೆ ಶಾಂತಿ ಉಪರತಿ ಸುಮನ
ನಿರಹಂಕಾರಗಳೆಂಬ ಪರಿವಾರ.
ಆ ಪಟ್ಟಣದ ಹೊರ ಒಳಯಕ್ಕೆ ಒಂಬತ್ತು ಬಾಗಿಲು.
ಮಧ್ಯ ಒಳಯಕ್ಕೆ ನಾಲ್ಕು ಬಾಗಿಲು.
ಆ ಅರಸಿನರಮನೆಯ ಸ್ವಯಂಭುನಾಥನ
ಗರ್ಭಗೃಹಕ್ಕೆ ಎರಡು ಬಾಗಿಲು.
ಮೇಲುಶಿಖರದಲೊಂದು ಬಾಗಿಲು ಉರಿಯನುಗುಳುವರು.
ಆ ಪಟ್ಟಣದ ಅರಸು ಸ್ವಯಂಭುನಾಥನಿಗೆ
ನಿತ್ಯ ನೇಮವ ಮಾಡಲೆಂದು ಗರ್ಭಗೃಹವ ಹೊಗಲೊಡನೆ
ಆತನ ಕೈವಿಡಿದು ಉಭಯ ಬಾಗಿಲ ಹೊಕ್ಕು ಹೋಗಿ
ಉಭಯ ನಿರ್ವಯಲಾದ ನಿಲವನುಪಮಿಸಬಹುದೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ
ಒಂದಾದ ಲಿಂಗೈಕ್ಯವನು?/133
ಕಾರ್ಯಕಾರಣವಾದ ತತ್ತ್ವವಿತತ್ತ್ವಂಗಳೆಲ್ಲ
ತೋರಿಯಡಗುವ ಇಂದ್ರಚಾಪದಂತೆ,
ಸಾವಯ ನಿರವಯವಾಗಿ,
ಉಂಟಿಲ್ಲವೆಂಬ ರೂಪು ನಿರೂಪುಗಳೆಲ್ಲ
ಅಜ್ಞಾನವಶದಿಂದ ತೋರುತ್ತಿಹವಾಗಿ
ಅಂತಪ್ಪ ಅಜ್ಞಾನದ ಬಲುಹಿಂದ,
ನಾನು ನನ್ನದೆಂಬ ಅಹಂಕಾರ ಮಮಕಾರ
ಮೊದಲಾದವೆಲ್ಲವೂ ತೋರುತ್ತಿಹವು.
ಇಂತಪ್ಪ ಅಹಂಕಾರ ಮಮಕಾರ ಮೊದಲಾದವೆಲ್ಲವ
ನೇತಿಗಳೆವುದೇ ಬ್ರಹ್ಮಜ್ಞಾನವು.
ಅಂತಪ್ಪ ಬ್ರಹ್ಮಜ್ಞಾನಿಯಾದ ಶರಣನಲ್ಲಿ
ಏನೂ ತೋರಿಕೆಯಿಲ್ಲದೆ ಜ್ಞಾನ ಜ್ಞೇಯಂಗಳೇಕವಾಗಿ,
ಜ್ಞಾನ ನಿಃಪತಿಯಾದುದೇ ಲಿಂಗೈಕ್ಯವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./134
ಕಾಲ ಕೈಯೊಳಗಿರಿಸಿ ನಡೆವಾತನ ನಡೆ ಶುದ್ಧ.
ಕೈಯ ಕಣ್ಣೊಳಗಿರಿಸಿ ನೋಡುತ್ತಿಪ್ಪಾತನ ನೋಟ ಶುದ್ಧ.
ಆ ಕಣ್ಣ ಮನದೊಳಗಿರಿಸಿ ನೆನೆವುತ್ತಿಪ್ಪಾತನ ಮನ ಶುದ್ಧ,
ಆ ಮನವ ಭಾವದೊಳಗಿರಿಸಿ ಭಾವಿಸುತ್ತಿಪ್ಪಾತನ ಭಾವ ಶುದ್ಧ.
ಆ ಭಾವವು ನಿರ್ಭಾವವನೆಯ್ದಿ ನಿರವಯಲಾದರೆ,
ಆತ ಸ್ವತಂತ್ರ ಶರಣ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ,
ಒಂದಾದ ಲಿಂಗೈಕ್ಯನು./135
ಕಾಲೋಚಿತವಾಗಿ ಅರ್ಪಿತಕ್ಕೆ ಬಂದ ಭೂತಜಾತಪದಾರ್ಥಂಗಳನು,
ಕಾಯದ ಕರದಲ್ಲಿ ಮುಟ್ಟಿ, ಅರ್ಪಿಸುವ ಅರ್ಪಣವನರಿದು,
ಇಂದ್ರಿಯಂಗಳ ಮುಖದಲ್ಲಿ ಮುಟ್ಟದೆ,
ಅರ್ಪಿಸುವ ಅರ್ಪಣವರಿದು,
ಇಷ್ಟಲಿಂಗಕ್ಕೆ ರೂಪು, ಪ್ರಾಣಲಿಂಗಕ್ಕೆ ರುಚಿಯನಿತ್ತು ಕೊಂಬ,
ಅನುಪಮ ಪ್ರಸಾದಿಯನುಪಮಿಸಬಹುದೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?/136
ಕಾಶಿಯಲ್ಲಿ ಗೋವಧೆಯ ಮಾಡಿ ಗುರುಕರುಣವ ಪಡೆದು
ಪರವನರಿಯಬಲ್ಲಾತನೇ ಯೋಗಿ.
ತ್ರಿವೇಣಿಸಂಗಮದಲ್ಲಿ ಮಂಡೋದರಿಯ ಕೊಂದು,
ಮನನ ತ್ರಾಣಮಂತ್ರವನನುಸಂಧಾನಿಸಬಲ್ಲಾತನೇ ಯೋಗಿ.
ಶ್ರೀಶೈಲದಲ್ಲಿ ಶಿವಸ್ತುತಿಯ ಕೇಳಿ, ಹಯವ ಹತಮಾಡಿ,
ಮನವಳಿದಿರಬಲ್ಲಾತನೇ ಯೋಗಿ.
ಪ್ರಯಾಗದಲ್ಲಿ ಉರಗನ ಕೊಂದು,
ಘಣಾಮಣಿಯ ಸೆಳೆದುಕೊಂಡು,
ಆ ಮಣಿಯ ಬೆಳಗಿನೊಳಗೆ ಸುಳಿದಾಡಬಲ್ಲಾತನೇ ಯೋಗಿ.
ಕೇದಾರದಲ್ಲಿ ಮತ್ಸ ್ಯವ ಕೊಂದು, ಮರಣವ ಗೆಲಿದು,
ಪರಮ ಪದದಲ್ಲಿರಬಲ್ಲಾತನೇ ಯೋಗಿ.
ಇಂತೀ ಪುಣ್ಯಕ್ಷೇತ್ರಂಗಳಲ್ಲಿ ಮಾಡಬಾರದುದ ಮಾಡಿ,
ನೋಡಬಾರದುದ ನೋಡಿ, ಕೇಳಬಾರದುದ ಕೇಳಿ,
ಶಿವನೊಲಿಸಿ ಶಿವನೊಳಗಾದರು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣರು./137
ಕಾಷ್ಠದ ಮೇಲೊಂದು ಕಾಷ್ಠವನಿರಿಸಿ
ಹಿಡಿದು ಮಥನವ ಮಾಡಲು
ಆ ಮಥನದಿಂದುದ್ಭವಿಸಿದಗ್ನಿ ಆ ಕಾಷ್ಠವ ವೇಷ್ಟಿಸಿ,
ತನ್ನ ಸ್ಫುರಣೆಯಿಂದ ಉಷ್ಣಿಸುವಂತೆ
ಶಿವಶರಣರ ಅನುಭಾವಮಥನದಿಂದ ಮಹಾಜ್ಞಾನೋದಯವಾಗಿ
ಕರ್ಪೂರದ ಗಿರಿಯನುರಿಕೊಂಡು ನಿರಂಶಿಕವಾಗಿ
ಉಭಯ ನಿರ್ವಯಲಾದಂತೆ ಲಿಂಗಾಂಗದೈಕ್ಯವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./138
ಕಾಷ್ಠದಲ್ಲಿ ಹುಟ್ಟಿದ ಅಗ್ನಿ, ಕಾಷ್ಠವ ದಹಿಸಿ,
ತಾನೊಡನೆ ಲೀಯವಾದಂತೆ,
ಭಾವದಲ್ಲಿ ಶಿವಾನಂದಭಾವ ಹುಟ್ಟಿ ಭಾವ ನಿಃಪತಿಯಾಯಿತ್ತು.
ಭಾವ ನಿಃಪತಿಯಾಗಲು, ಭಾವ್ಯ ಭಾವ ಭಾವಕವೆಂಬುದಿಲ್ಲದೆ
ತಮ್ಮಲ್ಲಿ ತಾವೆ ಲೀಯವಾದವು.
ಇಂತಾದ ಬಳಿಕ ಭಾವಿಸಲೇನುಂಟು ಹೇಳಾ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ,
ಭಾವಾತೀತನೆಂದು ಶ್ರುತಿ ಸಾರುತ್ತಿರಲಿನ್ನು
ಭಾವಿಸಲೇನುಂಟು ಹೇಳಾ?./139
ಕಿಚ್ಚಿನೊಳಗೆ ಕಿಚ್ಚು ಹುಟ್ಟಿ ಉರಿವುತ್ತಿದ್ದಿತ್ತು.
ಕಿಚ್ಚ ಕಾಯ ಹೋದವರ ಹಚ್ಚಡ ಬೆಂದು ಬತ್ತಲೆಯಾದರು.
ಆ ಕಿಚ್ಚು ಗ್ರಾಮವ ಸುತ್ತಿ ದಳ್ಳುರಿಗೊಳಲು
ಗ್ರಾಮದವರು ಗ್ರಾಮದಾಸೆಯ ಬಿಟ್ಟು ಹೋದರು.
ಗ್ರಾಮಕ್ಕಿನ್ನು ಮರಳಿ ಬಾರವೆಂದು ನೇಮವ ಮಾಡಿಕೊಂಡರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಗ್ರಾಮಕ್ಕಾಗಿ
ಬೇಗ ಹೋದರು./140
ಕುಂಭಿನಿಯ ಘಟಪುರುಷನು ಅಂಬರದ ರಂಭೆಗೆ
ಬೇಟವ ಮಾಡಿದಡೆ ಕುಂಭಿನಿಯ ಘಟ ಬಯಲಾಯಿತ್ತು.
ಪುರುಷ ರಂಭೆಯ ಕೂಡಿದ ಕಾರಣ ಸಂಭ್ರಮವಳಿಯಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ
ಬಳಿಕ ಲಿಂಗೈಕ್ಯಂಗೆ ಇಂಬಾಯಿತ್ತು./141
ಕುರುಡ ಕನ್ನಡಿಯ ಹಿಡಿದಡೇನು?
ತನ್ನ ಮುಖವ ತಾ ಕಾಣಲರಿಯದಂತೆ.
ಜ್ಞಾನವಿಲ್ಲದವನ ಕೈಯಲ್ಲಿ ಲಿಂಗವಿದ್ದಡೇನು?
ಆ ಲಿಂಗದಲ್ಲಿ ತನ್ನ ನಿಜವ ತಾ ಕಾಣಲರಿಯ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅರಿಯದವರು
ಲಿಂಗವ ಹಿಡಿದಡೇನು ವ್ಯರ್ಥ ಕಾಣಿರಣ್ಣ./142
ಕೆಲರೊಳ್ಳಿದನೆಂಬರು, ಕೆಲರು ಹೊಲ್ಲನೆಂಬರು
ಆರಾರ ತಿಳಿವ ಭ್ರಾಂತಿಯನಾರು ತಿಳಿಯಬಹುದಯ್ಯ?
ಇದು ಕಾರಣ,
ಹಲವು ಸುಕರ್ಮ ದುಃಕರ್ಮಂಗಳ ಬುದ್ಧಿಭೇದದಿಂದ
ನುಡಿದರೆಂದರೆ, ತಾನವರಂತಹನೆ ಜ್ಞಾನಿಯಾದ ಶರಣನು?
ತನ್ನ ಪರಿಯನಾರಿಗೂ ತೋರದೆ ಜಗದ ಕಣ್ಣಿಂಗೆ
ಮರೆಯಾಗಿ ಸುಳಿವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು./143
ಕೊಡುವಾತ ನಾನಲ್ಲ.
ಕೊಡುವಾತನೂ ಕೊಂಬಾತನೂ ಶಿವನೆಂದರಿದು,
ಜಂಗಮಮುಖದಲ್ಲಿ ಲಿಂಗಾರ್ಪಿತವಹುದೆಂದು,
ಕೊಟ್ಟ ಭಕ್ತನೊಳಗೆ ಜಂಗಮವಡಗಿ,
ಭಕ್ತಜಂಗಮ ಒಂದಾದ ಮಾಟ
ಭವದೋಟ ಲಿಂಗದ ಕೂಟ.
ಈ ತೆರನನರಿದು ಮಾಡುವ ಭಕ್ತನೇ ದೇವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./144
ಕೋಳಿ ಕೂಗಿದಡೆ ಹಾವು ಹೆಡೆ ಎತ್ತಿತ್ತು.
ಊರೊಳಗಣವರ ಉಲುಹು ಅಡಗಿತ್ತು.
ಮೇರು ಮಂದಿರದ ಆವು ಕರೆಯಿತ್ತು.
ಅಮರಗಣಂಗಳೆಲ್ಲಾ ಅಮೃತವನುಂಡು ತೃಪ್ತರಾದರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣಂಗೆ,
ಪರಮ ಪರಿಣಾಮ ಪದವಿ ದೊರಕೊಂಡಿತ್ತು./145
ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣ
ಈ ಷಡೂರ್ಮಿಗಳು,
ಕೆಡುವುದಕೊಂದು ವಿವರವ ಹೇಳಿಹೆ ಕೇಳಿರಯ್ಯ.
ಅಂಗದಾಪ್ಯಾಯನವಳಿದು, ಲಿಂಗದಾಪ್ಯಾಯನ ಉಳಿದಡೆ
ಕ್ಷುತ್ತು ಕೆಟ್ಟುದು.
ಪಾದೋದಕವೆಂಬ ಪರಮಾನಂದಜಲವನೀಂಟಿದಲ್ಲಿ
ಪಿಪಾಸೆ ಕೆಟ್ಟುದು.
ಲಿಂಗಪೂಜೆಪರದಲ್ಲಿ ಗದ್ಗದುಕೆಗಳು ಪುಟ್ಟಿ
ಆನಂದಾಶ್ರುಗಳು ಸೂಸಿದಲ್ಲಿ
ಶೋಕ ಕೆಟ್ಟುದು.
ಲಿಂಗ ಮೋಹಿಯಾಗಿ, ದೇಹ ಮೋಹವ ಮರೆದಲ್ಲಿ,
ಮೋಹ ಕೆಟ್ಟದು.
ಶಿವಲಿಂಗದಲ್ಲಿ ಕರಗಿ ಕೊರಗಿ, ಸರ್ವ ಕರಣೇಂದ್ರಿಯಂಗಳು
ಲಿಂಗದಲ್ಲಿ ಲೀಯ್ಯವಾಗಿ, ಶಿಥಿಲತ್ವವನೆಯ್ದಿದಲ್ಲಿ,
ಜರೆ ಕೆಟ್ಟುದು.
ಮಹಾಲಿಂಗದಲ್ಲಿ ತಾನೆಂಬುದಳಿದು ಲಿಂಗೈಕ್ಯವಾದಲ್ಲಿ,
ಮರಣ ಕೆಟ್ಟುದು.
ಇಂತೀ ಷಡೂರ್ಮಿಗಳನು ಈ ಪರಿ
ಲಿಂಗಾವಧಾನದಲ್ಲಿ ಕೆಡಿಹಸಿದಾತನೆ, ಭಕ್ತನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./146
ಖಂಡಿತಜ್ಞಾನವಳಿದು, ಅಖಂಡಿತಜ್ಞಾನಸ್ವರೂಪವಾದುದೇ ತೃಪ್ತಿ.
ಅಂಥ ತೃಪ್ತಿಯ ಅಮೃತಸೇವೆನೆಯಿಂದ ತೃಪ್ತನಾದ ಪ್ರಸಾದಿ.
ಶರಣಂಗೆ ಅಂತರಂಗ ಬಹಿರಂಗವೆಂಬುಭಯಾಂಗವಿಲ್ಲದ
ಮಹಾನಂದರೂಪಪ್ರಸಾದಿ ದಶದಿಗ್ಭರಿತನಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ, ಬೆಳಗುತ್ತಿಹನು./147
ಖಂಡಿತವಿಲ್ಲದ ಅಖಂಡಿತರೂಪ ನೀನು ಕಂಡಾ ಎಲೆ ಅಯ್ಯಾ.
ಮಂಡಲತ್ರಯದ ಮಧ್ಯದಲ್ಲಿ ನಿಂದು ಖಂಡಿತನೆಂಬ ಹಾಂಗೆ
ತೋರುತ್ತಿದ್ದೆಯಯ್ಯಾ.
ನಿನ್ನ ಬೆಡಗ ನಾ ಬಲ್ಲೆ.
ಖಂಡಪತ್ರದಲ್ಲಿ ತೋರುವ ಚಂಡಕಿರಣದಂತೆ ತೋರಿದೆಯಾಗಿ,
ಎನ್ನ ಕಂಗಳ ಕೊನೆಯಲ್ಲಿ ನಿಂದು ನೋಡುವಾತ ನೀನೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./148
ಖೇಚರದ ಗಮನವ ಖೇಚರರಲ್ಲದೆ
ಭೂಚರರು ಬಲ್ಲರೆ ಅಯ್ಯಾ?
ಸವಿವಾಲು ಸಕ್ಕರೆಯ ಸವಿಯ ಸವಿದ ಭೋಗಿಯಲ್ಲದೆ
ರೋಗಿ ಬಲ್ಲನೆ ಅಯ್ಯಾ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಲಿಂಗಾಂಗದ ಲಿಂಗ ಸಹಗಮನಿಯ ಹೃದಯವ
ಲಿಂಗಾಂಗಿಯಲ್ಲದೆ ಅಂಗಜೀವಿಗಳು ಬಲ್ಲರೆ ಅಯ್ಯಾ?./149
ಗಂಡಿಂಗೆ ಹೆಣ್ಣುರೂಪಾಗಿ ಕಾಡಿತ್ತು ಮಾಯೆ.
ಹೆಣ್ಣಿಂಗೆ ಗಂಡುರೂಪಾಗಿ ಕಾಡಿತ್ತು ಮಾಯೆ.
ಆ ಹೆಣ್ಣು ಗಂಡಿಗೆ ಸುತರೂಪಾಗಿ ಕಾಡಿತ್ತು ಮಾಯೆ.
ಮಣ್ಣು ಹೆಣ್ಣು ಹೊನ್ನಾಗಿ ಕಾಡಿತ್ತು ಮಾಯೆ.
ಈ ತೂಳದ ಮೇಳದ ಜಗವನಾಳಿಗೊಂಡಿತ್ತು ಮಾಯೆ.
ಈ ಮಾಯೆ ಎಲ್ಲರ ಮೋಹಿಸಿ ಹಲ್ಲು ಕಿತ್ತು ತರಕಟ ಕಾಡಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣರಲ್ಲದವರ ಹುಲ್ಲಿಂದ ಕಡೆ ಮಾಡಿತ್ತು ಮಾಯೆ./150
ಗರುಡನ ಗರಿಯ ಮುರಿದು, ಉರಗನ ಸಪ್ತ ಡೊಂಕ ತಿದ್ದಿ,
ಅಷ್ಟಪ್ರಕೃತಿ ಗುಣವ ನಷ್ಟವ ಮಾಡಿ,
ಕುಂಡಲಿಯನಂಡಲೆದು, ಬಲಿದೆತ್ತಿ ಮದ್ಯಮಾರ್ಗದಲ್ಲಿ ನಡೆಸಿ,
ಊಧ್ರ್ವಸ್ಥಾನದಲ್ಲಿ ನಿಲಿಸಿದಡೆ, ಒಂದು ಮಾತು ಕೇಳಬಹುದು.
ಆ ಮಾತಿನ ಬೆಂಬಳಿಯಲ್ಲಿ; ಜ್ಯೋತಿರ್ಲೆಂಗವ ಕಂಡು ಕೂಡಿದರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು./151
ಗಿರಿ ತರು ಗುಹೆ ಮಹಾವಿಪಿನ ಸರೋವರದಲ್ಲಿ
ಹಿರಿದುಗ್ರತಪವ ಮಾಡುತ್ತ
ಪವನಾಹಾರ, ಪಣರ್ಾಹಾರ, ಜಲಾಹಾರ, ಘಳಾಹಾರ
ನಿರಾಹಾರದಲ್ಲಿದ್ದಡೇನು?
ತನು ಮನ ರೂಪವಾದ ಮಾಯೆ ಕಾಡದೆ ಬಿಡುವಳೆ?
ತನುವಿನಲ್ಲಿ ವ್ಯಾಪಾರ ಮನದಲ್ಲಿ ವ್ಯಾಕುಲವಾಗಿ
ಕಾಡದೆ ಬಿಡುವಳೆ?
ಈ ಮಾಯೆಯ ಗೆಲುವುದಕ್ಕೊಂದುಪಾಯವ ಕಾಬುದು.
ಅದೆಂತೆಂದಡೆ,
ಕಂಗಳ ಕೊನೆಯಲ್ಲಿ ಲಿಂಗದ ನೋಟ.
ಮನದ ಕೊನೆಯಲ್ಲಿ ಲಿಂಗದ ನೆನಹು.
ಜಿಹ್ವೆಯ ಕೊನೆಯಲ್ಲಿ ಶಿವಮಂತ್ರ.
ಭಾವದ ಕೊನೆಯಲ್ಲಿ ಶಿವಾನುಭಾವ ನೆಲೆಗೊಂಡಡೆ,
ಅಂಗದ ಅವಯವಂಗಳೆಲ್ಲ ಲಿಂಗದ ಅವಯವಂಗಳಾಗಿ,
ಕೀಟಭ್ರಮರನಂತೆ ತಾನೇ ಶಿವನಹನು.
ಇಂತಪ್ಪ ಲಿಂಗಾನುಭಾವಿ ಲಿಂಗಸಂಗಿಗೆ ಅಂಗವಿಲ್ಲ.
ಅಂಗವಿಲ್ಲದ ನಿತ್ಯ ನಿರ್ಮಲಂಗೆ,
ಮಾಯಾಮಲಿನ ಮುನ್ನವೆ ಹೊದ್ದದಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./152
ಗುರು ಲಿಂಗ ಜಂಗಮ ಪ್ರಸಾದವೆಂಬ
ಚತುರ್ವಿಧದ ಏಕರಸವೇ ಪಾದೋದಕವೆನಿಸುವುದು.
ಆ ಪಾದೋದಕ ರೂಪಾದಾತನೇ ಭಕ್ತನು.
ಆ ಭಕ್ತನೊಳಗೆ ಅಡಗಿ ತೋರುವ
ಗುರುಲಿಂಗ ಜಂಗಮ ಪ್ರಸಾದಕ್ಕೆ ಆ ಭಕ್ತನೆ ಆಧಾರ.
ಆ ಭಕ್ತಂಗೆ ಚತುರ್ವಿಧವೊಂದಾದ ಲಿಂಗವೇ ಆಧಾರ.
ಇಂತು ಒಂದನೊಂದು ಬಿಡದೆ
ಒಂದಕೊಂದಾಧಾರ ಆಧೇಯವಾಗಿಹುದೆ,
ಲಿಂಗಭಕ್ತನ ಇರವು ತಾನೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./153
ಗುರು ಶಿಷ್ಯ ಭಾವದಿಂದ, ಪ್ರಶ್ನೋತ್ತರವಾಗಿ ಕೇಳುವಾತ ಶಿಷ್ಯನು,
ಜ್ಞಾನದ್ವಾರದಿಂದ ಹೇಳುವಾತ ಗುರು.
ಪೂರ್ವಪಕ್ಷಭೇದದಿಂದ ಶರೀರಾದಿ ಸಮಸ್ತ ಲೋಕವನು ತೋರಿಸಿ,
ಉತ್ತರಪಕ್ಷದರಿವಿನ ಭೇದದಿಂದ
ಶರೀರಾದಿ ವಿಶ್ವರು ಲಿಂಗದಲ್ಲಿ ಲೀಯವಾದ ನಿಲವ
ತೋರಿದ ಗುರು
ಸರ್ವಾಚಾರಜ್ಞಾನಸಾರ ಪರಾಯಣ ಶಿವನು ಭೂತಸಂಯುಕ್ತನು.
ಶಿಷ್ಯನ ಸಂಶಯವ ಛೇದಿಸಿ, ನಿಜವ ತೋರಿದ
ಆ ಗುರುವಿನ ಶ್ರೀಪಾದಕ್ಕೆ,
ನಮೋ ನಮೋ ಎಂಬೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./154
ಗುರು ಶಿಷ್ಯನ ಕೊಂದು ಶಿಷ್ಯನಾದನು.
ಶಿಷ್ಯ ಹೋಗಿ ಮರಳಿ ಗುರುವ ಕೊಂದು ಗುರುವಾದನು.
ಗುರು ಶಿಷ್ಯರೊಬ್ಬರನೊಬ್ಬರು ಕೊಂದು ಇಬ್ಬರೂ ಸತ್ತರು.
ಇವರಿಬ್ಬರೂ ಸತ್ತ ಠಾವದೊಬ್ಬರಿಗೂ ಕಾಣಬಾರದು,
ಸತ್ತ ಸಾವ ಕಂಡೆಹೆನೆಂದು ಉಟ್ಟುದನಳಿದು ಬತ್ತಲೆ ಹೋಗಿ
ತಲೆವಾಗಿಲ ತೆಗೆದು ನೋಡಲು
ಇವರಿಬ್ಬರೂ ಒಬ್ಬನೊಳಗಳಿದು ಒಬ್ಬನೈದಾನೆ.
ಇಂತಿವರಿಬ್ಬರೂ ಸತ್ತ ಸಾವನಾರಿಗೂ ಅರಿಯಬಾರದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಕರುಣವುಳ್ಳವರಿಗಲ್ಲದೆ./155
ಗುರುತತ್ತ್ವವನರಿದು ಆ ಶ್ರೀಗುರುವಿನಿಂದ ಶಿವದೀಕ್ಷೆಯಾದ
ಪರಮಾದ್ವೆ ತಶಿಷ್ಯನು
ಆ ಜ್ಞಾನಗುರುವಿನ ಆನಂದೈಕ್ಯ ಪಾದೋದಕವ ಕೊಂಡು
ಪಾದೋದಕ ರೂಪವಾದ ಶಿಷ್ಯನಲ್ಲಿ ಗುರುವಡಗಿ,
ಗುರುವಿನಲ್ಲಿ ಶಿಷ್ಯನಡಗಿ, ಗುರುಶಿಷ್ಯರೊಂದಾದ
ಘನವನುಪಮಿಸಬಹುದೆ?,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಏಕರಸವಾದುದನು./156
ಗುರುದೇವನೆ ಮಹಾದೇವನು, ಗುರುದೇವನೇ ಪರಶಿವನು.
ನಿಃಕಲಪರವಸ್ತು ಗುರುವಾಗಿ, ಸಕಲರೂಪಾದ ನೋಡಯ್ಯಾ.
ಮಹಾಜ್ಞಾನನಿಧಿ, ಶಿಷ್ಯಾನುಗ್ರಹ ಕಾರಣವಾಗಿ.
“ಯಶ್ಯಿವಸ್ಸಗುರುಜ್ಞರ್ೆಯೋ ಯೋಗ ಗುರುಸ್ಸಶ್ಯಿವಃ ಸ್ಮೃತಃ’
ಎಂದುದಾಗಿ
ಪರಶಿವ ತಾನೆ ಗುರುರೂಪಾಗಿ ವರ್ತಿಸುತ್ತಿದ್ದ ನೋಡಯ್ಯಾ,
ಮಹಾಕರುಣಾಮೂರ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./157
ಗುರುಮುಖವಿಲ್ಲದೆ ತಾನೆ ಆಯಿತ್ತೆಂಬರು.
ಆ ಗುರುವು ಹಿಡಿದಲ್ಲದೆ ಅವುದು ಇಲ್ಲ ನೋಡಾ.
ಶಿವನಿಂದಲಾಯಿತ್ತು ಎಂಬ ನುಡಿಯನಾಲಿಸಲಾಗದು,
ತಾ ಮಾಡಿದ ದೋಷವನು.
ತನ್ನ ಮನವಿಕಾರಕ್ಕೆ ತಾ ಹೋಗಿ
ಶಿವನ ಹಳಿವುದಕ್ಕೆ ಸಂಬಂಧವೇನು?
ಮಹಾಜ್ಞಾನಿಯಾಗಿ ಪೂರ್ವದಲ್ಲಿ ತಾ ಪಡೆದುದು
ತನಗೆ ತಪ್ಪುವದೆ?
ಭಾವ ಕರದಲ್ಲಿ ಮನ ಹುಟ್ಟಿದ ಮೇಲೆ
ಗುರುವೆಯಾಗಿ ಚರಿಸುವಲ್ಲಿ
ಆತಂಗೆ ಕೊರತೆ ಬರಲು
ಆತನ ಅಂತು ಇಂತು ಎಂದು ಜರೆಯಲೇತಕ್ಕೆ?
ಸಂಬಂಧವನು ಆರೂ ಮೀರಲಾಗದು ನೋಡಾ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ./158
ಗುರುಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು.
ಇಷ್ಟಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು.
ಜಂಗಮಲಿಂಗ ಪ್ರಸಾದವನು ಸೇವಿಸುವಲ್ಲಿ ಏಕರತಿಯಾಗಿರಬೇಕು.
ಗುರು ಲಿಂಗ ಜಂಗಮದ ಈ ತ್ರಿವಿಧಪ್ರಸಾದವ ಸೇವಿಸುವಲ್ಲಿ
ಏಕರತಿಯಾಗಿರಬೇಕು.
ಅಂತಲ್ಲದೆ, ಅನ್ಯಲಿಂಗ ಪ್ರಸಾದವ ಕೊಳಲಾಗದು.
ಅದೇನು ಕಾರಣವೆಂದಡೆ: ವೀರಶೈವ ತನ್ನ ಇಷ್ಟಲಿಂಗಕ್ಕೆ ಕೊಟ್ಟು ಕೊಂಬ
ಕ್ರಿಯೆಗೆ ಬಾರದಾಗಿ.
ಭಕ್ತಾಂಗಕೋಟಿಗಳಲ್ಲಿ ಬೇರೆ ಬೇರೆ ಲಿಂಗ ತೋರಿತ್ತೆಂದಡೆ
ಅದು ಬೇರಾಗಬಲ್ಲುದೆ?
ಹಲವು ಘಟ ಜಲಗಳಲ್ಲಿ ಚಂದ್ರನೊಬ್ಬ ತೋರಿದಂತೆ
ಇಂತೀ ಪರಿಯಲ್ಲಿ ಎಸೆವುದು.
ಬಹುಲಿಂಗಭಾವಂಗಳೆಂದಡೆ ಬೇರಾಗಬಲ್ಲುದೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಅಂಗ ಹಲವಾದಡೇನು
ಅಲ್ಲಿ ತೋರುವುದೊಂದೇ ವಸ್ತು./159
ಗುರುವ ತಲೆಯಲ್ಲಿ ಹೊತ್ತು ನಡೆವ ಶಿಷ್ಯನಲ್ಲಿ ಗುರುವಡಗಿ
ಶಿಷ್ಯ ಗುರುವಾದ ಪರಿಯ ಬಲ್ಲವರಾರಯ್ಯಾ?
ಗುರುವಿನ ಗುರುತ್ವ ಶಿಷ್ಯಂಗಾಯಿತ್ತು,
ಶಿಷ್ಯನ ಶಿಷ್ಯತ್ವ ಎಲ್ಲಿ ಹೋಯಿತ್ತೆಂದರಿಯಬಾರದು.
ಗುರುವಿಲ್ಲದ ಶಿಷ್ಯಂಗೆ ಪರವಿಲ್ಲ.
ಪರವಿಲ್ಲದ ಶಿಷ್ಯ ಸ್ವಯಂವಾಗನೆಂಬುದ
ನಿಮ್ಮ ಶರಣರ ಅನುಭಾವದಲ್ಲಿ ಕಂಡೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./160
ಗುರುವ ನರಭಾವದಲ್ಲಿ ಕಂಡಡೆ, ನರಕ ತಪ್ಪದು ನೋಡಯ್ಯಾ.
ಗುರುವ ಹರಭಾವದಲ್ಲಿ ಕಂಡಡೆ, ಮೋಕ್ಷ ತಪ್ಪದು ನೋಡಯ್ಯಾ.
ಗುರುಪೂಜೆಯೆ ಹರಪೂಜೆಯೆಂದರಿದು,
ಗುರುಪೂಜೆಯ ಮಾಡಿದಡೆ,
ಹರಪೂಜೆ ತಪ್ಪದು ನೋಡಯ್ಯ.
ಗುರುವಿನ ಒಲುಮೆಯೇ ಹರನ ಒಲುಮೆ.
ಇದು ಸತ್ಯ. ನೀನೇ ಬಲ್ಲೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಭಕ್ತನ, ಗುರುಭಕ್ತಿಯಿದು./161
ಗುರುವ ನಿಂದಿಸಿದವನು ಲಿಂಗವ ನಿಂದಿಸಿದವ.
ಲಿಂಗವ ನಿಂದಿಸಿದವನು ಜಂಗಮವ ನಿಂದಿಸಿದವ.
ಜಂಗಮವ ನಿಂದಿಸಿದವನು ಲಿಂಗವ ನಿಂದಿಸಿದವ.
ಗುರುವ ನಿಂದಿಸಿದವನು ಜಂಗಮವ ನಿಂದಿಸಿದವ.
ಜಂಗಮವ ನಿಂದಿಸಿವನು ಲಿಂಗವ ನಿಂದಿಸಿದವ.
ಗುರುವ ನಿಂದಿಸಿದವ.
ಪರವಸ್ತುವೊಂದೇ ಗುರು ಲಿಂಗ ಜಂಗಮವೆಂಬ
ನಾಮ ಪಡೆಯಿತ್ತೆಂದಡೆ ಬೇರಾಗಬಲ್ಲುದೆ?
ಈ ಮರ್ಮವನರಿಯದವಂಗೆ ಗುರು ಲಿಂಗ ಜಂಗಮವಿಲ್ಲವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./162
ಗುರುವ ಬೆಸಗೊಳಹೋದಡೆ,
ಗುರುವೆನ್ನಂತರಂಗವನರಿದು,
ಜೀವ ಪರಮರ ಏಕವ ಮಾಡಿ ತೋರಿ,
ಕಾಯದ ಕಂಗಳಲ್ಲಿರಿಸಿ,
ಮನವ ಕೊನೆಯಲ್ಲಿ ನೆಲೆಗೊಳಿಸಿ,
ಸರ್ವಾಂಗದಲ್ಲಿಯೂ, ಲಿಂಗಸಂಬಂಧವ ಮಾಡಿ ತೋರಿದನಯ್ಯಾ,
ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./163
ಗುರುವನರಿದು ಗುರುಭಕ್ತಿಯ ಮಾಡಿ,
ಲಿಂಗವನರಿದು ಲಿಂಗಭಕ್ತಿಯ ಮಾಡಿ,
ಜಂಗಮವನರಿದು ಜಂಗಮಭಕ್ತಿಯ ಮಾಡಿ,
ತ್ರಿವಿಧವನು ಒಂದೆಂದು ಕಂಡು,
ತ್ರಿವಿಧ ಭಕ್ತಿಸಂಪನ್ನರಾದವರ ಭಕ್ತರೆಂಬೆನು,
ಅಲ್ಲದವರ ಉದರ ಪೋಷಕರೆಂಬೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./164
ಗುರುವೆಂದರಿಯರು, ಲಿಂಗವೆಂದರಿಯರು, ಜಂಗಮವೆಂದರಿಯರು.
ಹಿಂದೊಂದನಾಡುವರು, ಮುಂದೊಂದನಾಡುವರು.
ಮತ್ತೆ,
ನಂಬದೆ, ಭಕ್ತರಂತೆ, ಪಾದೋದಕ ಪ್ರಸಾದಕ್ಕೆ ಕೈಯ್ಯನಾನುವರು.
ಈಶ ವೇಷವ ತೊಟ್ಟ, ವೇಷಧಾರಕರು, ತಾವೆ, ಭಕ್ತರೆಂಬರು.
ಇವರು, ಮಾಯಾಪಾಶದಲ್ಲಿ, ಘಾಸಿಯಾಗದೆ ಮಾಣ್ಬರೇ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದ ಜಾತ್ಯಂಧಕರು./165
ಗುರುವೆನೆ ಲಿಂಗವೆಂದರಿದ ಕಾರಣ, ಗುರುವ ಲಿಂಗದಲ್ಲಿ ಕಂಡೆ.
ಲಿಂಗವನೆ ಜಂಗಮವೆಂದರಿದ ಕಾರಣ
ಲಿಂಗವ ಜಂಗಮದಲ್ಲಿ ಕಂಡೆ.
ಜಂಗಮವನೆ ನಾನೆಂದರಿದ ಕಾರಣ, ಜಂಗಮವ ನನ್ನಲ್ಲಿ ಕಂಡೆ.
ನನ್ನನೆ ನಿನ್ನಲ್ಲಿ ಅರಿದ ಕಾರಣ, ನನ್ನ ನಿನ್ನಲ್ಲಿ ಕಂಡೆ.
ಈ ಪರಿಯಿಂದ ಗುರು ಲಿಂಗ ಜಂಗಮ ಸಹಿತ,
ನಾ ನಿನ್ನೊಳಗಾದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./166
ಗುರುವೇ ನಮೋ ನಮೋ.
ಶರಣಾಗತರಕ್ಷಕ ಗುರುವೇ ನಮೋ ನಮೋ.
ಕೀಡಿ ಕುಂಡಲಿಯ ಉಪದೇಶದಂತೆ,
ಎನ್ನ ನಿಮ್ಮಂತೆ ಮಾಡಿದ ಗುರುವೇ ನಮೋ ನಮೋ.
ನಿತ್ಯ ಪರಮೈಶ್ವರ್ಯದ ಮುಕ್ತಿರಾಜ್ಯವ
ಕೊಟ್ಟ ಗುರುವೇ ನಮೋ ನಮೋ.
ಸಕಲವನೆನ್ನೊಳಗಿರಿಸಿ, ಸಕಲದೊಳಹೊರಗೆ
ಎನ್ನ ವ್ಯಾಪಕವ ಮಾಡಿ ತೋರಿದ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಗುರುವೇ ನಮೋ ನಮೋ./167
ಗುರುಹಸ್ತಸರೋಜಗರ್ಭ ಮಧ್ಯದಲ್ಲಿ ಹುಟ್ಟಿದ
ಶಿಷ್ಯನೆಂಬ ಸತಿಯು,
ಗುರುವಿನ ಸದ್ಭಾವಗರ್ಭ ಮಧ್ಯದಲ್ಲಿ ಹುಟ್ಟಿದ
ಲಿಂಗವೆಂಬ ಪತಿಯು,
ಸಹೋದರ ಸಂಬಂಧದಿಂದರ್ದರಾಗಿ,
ಶರಣಸತಿ, ಲಿಂಗಪತಿಯಾದ ಪರಿಹೊಸತು.
ಇದು ವಿಪರೀತ ನೋಡ.
ಸತಿಪತಿಗಳಿಬ್ಬರೂ ಹೆತ್ತವರ ಕೊಂದು, ತಾವು ಸತ್ತರು.
ಇವರು ಮೂವರು ಸತ್ತ ಠಾವನರಿದೆನೆಂದಡೆ ಆರಿಗೂ ಅಸದಳ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಅವರು ಸತ್ತ ಠಾವ ನೀವೇ ಬಲ್ಲಿರಿ./168
ಘಟಮಠೋಪಾಧಿಯೊಡನೆ ಕೂಡಿ, ಆಕಾಶವಿದ್ದಿತ್ತೆಂದೊಡೆ
ಆ ಘಟಮಠದಂತೆ ಖಂಡಿತವಹುದೆ ಅಖಂಡಬಯಲು?
ಪಿಂಡದೊಳಗಾತ್ಮನಿದ್ದನೆಂದೊಡೆ,
ಆ ಪಿಂಡದಂತೆ ಖಂಡಿತನಹನೆ?
ಪರಿಪೂರ್ಣ ಪರಂಜ್ಯೋತಿ ಪರಮಾತ್ಮನು
ಷಟ್ತ್ರಂಶತ್ ತತ್ತ್ವಂಗಳಿಂದ ಕೂಡಿದ
ಜ್ಞಾನಪಿಂಡದೊಳಗೆ, ಹೃದಯಕಮಲಸಿಂಹಾಸನದ ಮೇಲೆ
ಮೂರ್ತಿಗೊಂಡಿದ್ದನಯ್ಯಾ.
ಜಲದೊಳಗೆ ಹೊಳೆವಾಗಸದಂತೆ, ಮನದೊಳಗೆ ಮನರೂಪನಾಗಿ
ಬೆಳಗುತ್ತಿದ್ದನಯ್ಯ ಪರಶಿವನು.
ಇಂತಾದ ಕಾರಣ, ಸಪ್ತಧಾತು ಸಮೇತವಾದ ಶರಣನ
ಕಾಯವೇ ಕೈಲಾಸವಾಯಿತ್ತು, ಮನ ಸಿಂಹಾಸನವಾಯಿತ್ತು.
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಂಗೆ./169
ಘ್ರಾಣ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು.
ಜಿಹ್ವೆ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು.
ನೇತ್ರ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು.
ತ್ವಕ್ಕು ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು.
ಶ್ರೋತ್ರ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು.
ಮನ ಮುಟ್ಟದ ಮುನ್ನ ನಿಮಗರ್ಪಿತವಾಯಿತ್ತು.
ಇಂತು ಸವರ್ೆಂದ್ರಿಯಂಗಳು ಮುಟ್ಟದ ಮುನ್ನ
ನಿಮಗರ್ಪಿತವಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./170
ಘ್ರಾಣಕ್ಕೂ ಗುದಕ್ಕೂ ಪೃಥ್ವಿ ಎಂಬ ಮಹಾಭೂತ.
ಅಲ್ಲಿ ನಿವೃತ್ತಿ ಎಂಬ ಕಲೆಯಿಹುದು.
ಆ ಕಲೆಯಲ್ಲಿ, ಕ್ರಿಯಾಶಕ್ತಿಯುಕ್ತವಾದ
ಆಚಾರಲಿಂಗವ ಧರಿಸಿದಾತ ಭಕ್ತನು.
ಜಿಹ್ವೆಗೂ ಗುಹ್ಯಕ್ಕೂ ಅಪ್ಪು ಎಂಬ ಮಹಾಭೂತ.
ಅಲ್ಲಿ ಪ್ರತಿಷ್ಠೆ ಎಂಬ ಕಲೆಯಿಹುದು.
ಆ ಕಲೆಯಲ್ಲಿ, ಜ್ಞಾನಶಕ್ತಿಯುಕ್ತವಾದ
ಗುರುಲಿಂಗವ ಧರಿಸಿದಾತ ಮಾಹೇಶ್ವರನು.
ನೇತ್ರಕ್ಕೂ ಪಾದಕ್ಕೂ ಅಗ್ನಿ ಎಂಬ ಮಹಾಭೂತ.
ಅಲ್ಲಿ ವಿದ್ಯೆ ಎಂಬ ಕಲೆಯಿಹುದು.
ಆ ಕಲೆಯಲ್ಲಿ, ಇಚ್ಛಾಶಕ್ತಿಯುಕ್ತವಾದ
ಶಿವಲಿಂಗವ ಧರಿಸಿಕೊಂಡಾತ ಪ್ರಸಾದಿ.
ತ್ವಕ್ಕಿಗೂ ಪಾಣಿಗೂ ವಾಯುವೆಂಬ ಮಹಾಭೂತ.
ಅಲ್ಲಿ ಶಾಂತಿ ಎಂಬ ಕಲೆಯಿಹುದು.
ಆ ಕಲೆಯಲ್ಲಿ, ಆದಿಶಕ್ತಿಯುಕ್ತವಾದ
ಜಂಗಮಲಿಂಗವ ಧರಿಸಿಕೊಂಡಾತ ಪ್ರಾಣಲಿಂಗಿ.
ಶ್ರೋತ್ರಕ್ಕೂ ವಾಕ್ಕಿಗೂ ಆಕಾಶ ಎಂಬ ಮಹಾಭೂತ.
ಅಲ್ಲಿ ಶಾಂತ್ಯತೀತ ಎಂಬ ಕಲೆಯಿಹುದು.
ಆ ಕಲೆಯಲ್ಲಿ, ಪರಾಶಕ್ತಿಯುಕ್ತವಾದ
ಪ್ರಸಾದಲಿಂಗವ ಧರಿಸಿಕೊಂಡಾತ ಶರಣನು.
ಆತ್ಮಾಂಗಕ್ಕೆ ಮನ ಎಂಬ ಮಹಾಭೂತ.
ಅಲ್ಲಿ ಶಾಂತ್ಯತೀತೋತ್ತರ ಎಂಬ ಕಲೆಯಿಹುದು.
ಆ ಕಲೆಯಲ್ಲಿ, ಚಿಚ್ಛಕ್ತಿಯುಕ್ತವಾದ
ಮಹಾಲಿಂಗವ ಧರಿಸಿಕೊಂಡಾತ ಐಕ್ಯನು.
ಇಂತೀ ಷಡುಸ್ಥಲಭಕ್ತರು ಷಡ್ವಿಧಲಿಂಗವ ಧರಿಸಿ
ನಿರಾಳಲಿಂಗಾರ್ಚನೆಯ ಮಾಡುತ್ತಿಹರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಪ್ರಭುವೇ./171
ಚಂದ್ರ ಚಂದ್ರಿಕೆಯಂತೆ, ಅಗ್ನಿ ಉಷ್ಣದಂತೆ,
ರತ್ನ ಕಾಂತಿಯಂತೆ,
ಬ್ರಹ್ಮವ ಬಿಡದೆ ತೋರುವ ಬ್ರಹ್ಮಶಕ್ತಿ
ಬ್ರಹ್ಮದ ಅಂತಃಕರಣವಾದ ಕಾರಣ
ವಿಶ್ವಭಾಜನವೆನಿಸಿತ್ತು.
ಬೀಜದಲ್ಲಿ ವೃಕ್ಷ ಪತ್ರೆ ಫಲಂಗಳು ತೋರುವಂತೆ,
ಬ್ರಹ್ಮದ ಹೃದಯಬೀಜದಲ್ಲಿ ವಿಶ್ವವು ತೋರುವುದಾಗಿ,
ಆ ವಿಶ್ವಭಾಜನವಾದ ಚಿತ್ತೇ ತನ್ನ ಸ್ವರೂಪವೆಂದು
ಕಂಡ ಜೀವನ್ಮುಕ್ತಂಗೆ
ವಿಧಿ-ನಿಷೇಧ, ಸಂಕಲ್ಪ- ವಿಕಲ್ಪ, ಪ್ರಕೃತಿ-ವಿಕೃತಿ ಮೊದಲಾದ
ಜಗದ್ವಾಪಾರವೆಂಬುದೇನೂ ಇಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣ ನಿಮ್ಮ ಕೂಡಿ ನಿಮ್ಮಂತಹನು./172
ಚಂದ್ರಕಾಂತದ ಶಿಲೆಯಲ್ಲಿ ಉದಕವೊಸರದಿಪ್ಪಂತೆ,
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿ ಸ್ಫುರಿಸದಿಪ್ಪಂತೆ,
ಬೀಜದೊಳಗಣ ವೃಕ್ಷ ಅಂಕುರಿಸದಿಪ್ಪಂತೆ,
ಇಪ್ಪನಯ್ಯ ಶಿವನು ಪಿಂಡದೊಳಗೆ ಪಿಂಡರೂಪಾಗಿ.
ಈ ಪರಿಯಲ್ಲಿ ಗೋಪ್ಯವಾಗಿರ್ದೆನ್ನಲ್ಲಿ ಕಾಣಿಸಿಕೊಳ್ಳದಿದ್ದರ್ಿರಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./173
ಚಂದ್ರನಿಲ್ಲದ ರಾತ್ರಿ, ಸೂರ್ಯನಿಲ್ಲದ ದಿವಸವೇತಕ್ಕೆ ಬಾತೆ?
ಅಂತರಂಗ ಸನ್ನಿಹಿತವಾದ ಪರಶಿವನೆಂಬ ಗುರುವಿಲ್ಲದವನ,
ಅರಿವು ಆಚಾರ ಕ್ರಿಯೆ ಭಕ್ತಿ ವಿರಕ್ತಿ ಏತಕ್ಕೆ ಬಾತೆ?
ಇದು ಕಾರಣ,
ಸ್ವಾನುಭಾವಿ ಗುರುವಿನ ಅನುವಿನಲ್ಲಿದ್ದು ಆಚರಿಸುವ,
ಭಕ್ತನ ಆಚಾರ ಶುದ್ಧ, ಆತನ ಭಕ್ತಿ ಜ್ಞಾನ ವೈರಾಗ್ಯ ಶುದ್ಧ.
ಆತನೇ ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./174
ಚಂದ್ರಸೂರ್ಯರ ಹಿಡಿದೆಳೆತಂದು
ಒಂದೇ ಠಾವಿನಲ್ಲಿ ಬಂಧಿಸಿ, ನಿಲಿಸಿದೆ.
ಸಂದಿಗೊಂದಿಯ ಹೋಗಲೀಯದೆ
ಒಂದೇ ಠಾವಿನಲ್ಲಿ ನಿಲಿಸಿದೆನು.
ಚಂದ್ರಸೂರ್ಯರು ಒಂದಾಗಿ ಮಹಾ ಮಾರ್ಗದಲ್ಲಿ ನಡೆದರಯ್ಯ.
ಬಂಧಿಸಿದ ಮೇಲಣ ಕದಹು ತೆರಹಿತ್ತು.
ಇಂದ್ರನ ವಾಹನವಳಿಯಿತ್ತು.
ಮುಂದೆ ಹೋಗಿ ಹೊಕ್ಕೆನು ಕೈಲಾಸವ.
ಅಲ್ಲಿರ್ದ ಅಮರಗಣಂಗಳು, ಉಘೇ ಎನಲು ಕೇಳಿ
ತ್ರಿಬಂಧದ ಕೀಲು ಕಳೆಯಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ತನ್ನೊಳಗೆನ್ನನು ಇಂಬಿಟ್ಟುಕೊಂಡನು./175
ಚಿತ್ತೆಂಬ ಬಿತ್ತು ಬಲಿದು ಕಲೆಯಂಕುರಿಸಿದಲ್ಲಿ, ನಿಮಗೆ
ತ್ರಿವಿಧನಾಮ ಸೂಚನೆಯಾಯಿತ್ತು.
ನಿಮ್ಮ ನಾಮದ ಬೆಂಬಳಿಯಲ್ಲಿ ನಿಮ್ಮ ಶಕ್ತಿ.
ಇಚ್ಛಾ ಜ್ಞಾನ ಕ್ರಿಯಾಶಕ್ತಿ ರೂಪಾದ ನಾನಾಶಕ್ತಿ ಭೇದವಾಗಿ,
ಅಂದು ನಿಮಗೆ ಚಂದ್ರಧರಾದಿ ಸ್ಥಾಣು ಕಡೆಯಾದ
ನಾನಾ ಲೀಲೆಗಳಾದವು.
ಆ ನಿಮ್ಮಿಬ್ಬರಿಂದ ರುದ್ರಾವತಾರಗಳಾದವು.
ನಿಮ್ಮ ಬೆರಗಿನ ಲೀಲೆಯ ಬಲ್ಲವರಾರಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?./176
ಚೌಪೀಠದ ಮಂಟಪದಲ್ಲಿ ಗುರು ಕುಳ್ಳಿರ್ದು,
ದ್ವಿದಳಮಂಟಪದಲ್ಲಿರ್ದ ಶಿಷ್ಯಂಗೆ,
ತ್ರಿಕೂಟಸ್ಥಾನದ ಲಿಂಗವನುಪದೇಶಿಸಿ ತೋರಿ,
ಗುರುಲಿಂಗದೊಳಗಾದನು.
ಇದು ಕರಚೋದ್ಯ ನೋಡಾ.
ಶಿಷ್ಯ ಲಿಂಗವ ಗ್ರಹಿಸಿ ಲಿಂಗವಾದ ಪರಿಯನು
ಇತರರ್ಗರಿಯಬಹುದೇ?,
ಜ್ಞಾನೋಪದೇಶದ ಬಗೆಯನು,
ನಿಜಗುರು ಸಿದ್ಧಲಿಂಗೇಶ್ವರ ನಿಮ್ಮ ಶರಣ ಬಲ್ಲನು./177
ಜಂಬೂದ್ವೀಪದ ಮಧ್ಯದಲ್ಲಿ ಹುಟ್ಟಿ ಬೆಳೆದ ವಂಶದ
ಏಕವಿಂಶತಿಗ್ರಂಥಿಯ ಕೊರೆದು
ಮೇಲಕ್ಕೆ ಹೋದ ಅಗ್ನಿಯ ಒಡಲೊಳಗೆ
ಈರೇಳು ಲೋಕವ ನುಂಗಿದ ತುಂಬಿಯ ಅಂಗಕ್ಕಳಿವಿಲ್ಲದೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ಬಯಲಾಯಿತ್ತು./178
ಜಗದ ಪ್ರಾಣಿಗಳಂತೆ ಉಳಿವವರಿಗೆ,
ಜಗದೀಶನ ಮಂತ್ರವೆಂತು ನೆಲಗೊಂಬುದಯ್ಯ?
“ಯಥಾ ಮನಸ್ತಥಾವಚನಂ’ ಎಂದುದಾಗಿ.
ಹೇಗೆ ಮನ ಹಾಗೆ ವಚನ ತಪ್ಪದು.
ಅದು ಕಾರಣ,
ಮನದಲ್ಲಿ ನಿಮ್ಮ ನೆನಹು ನೆಲೆಗೊಂಡವಂಗೆ,
ನುಡಿಯೊಡನೆ ಮಂತ್ರ ನೆಲೆಸಿಪ್ಪುದು ಸತ್ಯ. ನೀನೆ ಬಲ್ಲೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./179
ಜಗದಗಲದ ಮಾಯಾಜಾಲವ ಹಿಡಿದು
ಕಾಲನೆಂಬ ಜಾಲಗಾರ ಜಾಲವ ಬೀಸಿದ ನೋಡಯ್ಯ.
ಆ ಜಾಲಕ್ಕೆ ಹೊರಗಾದವರನೊಬ್ಬರನೂ ಕಾಣೆ.
ಬಲ್ಲಬಲ್ಲಿದರೆಂಬುವರೆಲ್ಲರ ಬಲೆಯ ಕಲ್ಲಿಯೊಳಗೆ ತುಂಬಿದ ಕಾಲ.
ಆ ಕಾಲನ ಬಲೆಯೊಳಗೆ ಸಿಕ್ಕಿ ಬೀಳುವೆಗೊಳುತಿದೆ ಜಗವೆಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ತನ್ನವರಿಗೆ ತಾ ಮೇಲಾರೈಕೆಯಾಗಿಹನು./180
ಜಗದಗಲದಲ್ಲಿ ಮುಸುಕಿದ ಕತ್ತಲೆ, ದೀವಿಗೆಯ ಬೆಳಗಿಂಗೆ
ಹರಿವುದೆ ಸೂರ್ಯನ ಬೆಳಗಿಂಗಲ್ಲದೆ?
ಇದು ಕಾರಣ,
ಕಾಯವಂತರೆಲ್ಲ ಮಾಯಾಭ್ರಮೆಗೊಳಗಾದರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮನರಿದಾತ ನಿಮ್ಮೊಳಗಾದನು./181
ಜಗಭರಿತ ಶಿವನೆಂದು ನೆಗಳಿ ಹೊಗಳಿತಿವೆ ವೇದಂಗಳೆಲ್ಲ.
`ಏಕಮೇವಾದ್ವಿತೀಯ’ ಎಂದು ಹೊಗಳುತಿವೆ ವೇದಂಗಳೆಲ್ಲ.
`ವಿಶ್ವತಃ ಪಾದ ಪಾಣಿ, ವಿಶ್ವತೋಮುಖ
ವಿಶ್ವತಃ ಶ್ರೋತ್ರ’ ಎಂದು ಹೊಗಳುತಿವೆ ವೇದಂಗಳೆಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
ಶರಣಭರಿತ ಲಿಂಗ ಲಿಂಗಭರಿತ ಶರಣನೆಂದು,
ಹೊಗಳಲರಿಯದೆ ನಿಂದುವು ವೇದಂಗಳೆಲ್ಲ./182
ಜಪ ತಪ ನಿತ್ಯ ನೇಮ ವ್ರತ ಶೀಲಂಗಳೆಂಬ
ಸವರ್ೊಪಾಯಂಗಳಿಂದ
ಶಿವನ ಸಾಧಿಸಿ ಭೇದಿಸಿ ಕಂಡೆಹೆವೆಂಬ
ಉಪಾಯಸಾಧಕರು ನೀವು ಕೇಳಿ.
ಆ ಉಪಾಯಂಗಳನೂ ಶಿವಪ್ರಸನ್ನಿಕೆಯಿಂದ ಪಡೆದು
ಶುದ್ಧ ಸಂಸಾರಿಗಳಾದ ಜ್ಞಾನಿಗಳು ಸ್ವಯಂಪ್ರಕಾಶವಾಗಿಯು
ವಿಶ್ವಪ್ರಕಾಶನಾದ `ಸತ್ಯಜ್ಞಾನಮನಂತಂ ಬ್ರಹ್ಮ’ವೆಂಬ
ಲಕ್ಷಣವುಳ್ಳ ಪರಿಪೂರ್ಣ ಪರಶಿವನ
ಜ್ಞೇಯಸ್ವರೂಪದಿಂದರಿದವರು
ಜೀವನ್ಮುಕರಾಗಿ ವರ್ತಿಸುತ್ತಿಹರು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./183
ಜಾಗ್ರತ್ ಸ್ವಪ್ನ ಸುಷುಪ್ತಿ ಎಂಬ ತ್ರಿವಿಧಾವಸ್ಥೆಯೊಳಗೆ,
ತುರ್ಯ ತುರ್ಯಾತೀತ ಸಹಜಾವಸ್ಥೆ ಎಂಬ
ಮೂರು ಕೂಡಿ ಯೋಗಿಸುವ ಯೋಗಿಗೆ,
ಸಾಲಂಬ ನಿರಾಲಂಬದೊಳಗೆ ಅಡಗಿ
ಆ ನಿರಾಲಾಂಬದ ನಿಶ್ಚಿಂತ ನಿವಾಸದಲ್ಲಿ
ಆತ್ಮ ಪರಮಾತ್ಮರೊಂದಾದ ಬಳಿಕ
ಅನಂತ ಸಚರಾಚರ ಒಂದು ಕಿಂಚಿತ್ತು.
ಚತುರ್ಮುಖ ಇಂದ್ರ ವಿಷ್ಣುವೆಂಬವರ ಪದ ಒಂದು ಕಿಂಚಿತ್ತು.
ಇನ್ನುಳಿದವರ ಹೇಳಲಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ ಹಿರಿದೊಂದಿಲ್ಲ./184
ಜಾವ ಘಳಿಗೆಯ ನೇಮದ ಪೂಜೆಯ ನೇಮಕರೆಲ್ಲ,
ಫಲದಾಯಕರಾಗಿ ಹೋದರು.
ಲಿಂಗಭಕ್ತ ಕಾಲ ನೇಮದ ಪೂಜಾ ಫಲದಾಯಕನೆ ಅಲ್ಲಲ್ಲ.
ಲಿಂಗಭಕ್ತ ಮಾಡುವ ಪೂಜೆ ನಿರ್ಮಾಲ್ಯವಾಗದು,
ತಾ ಸಹಿತ ಲಿಂಗಕ್ಕೆ ಪೂಜೆಯಹನಾಗಿ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ನಿಜಭಕ್ತ ಮಾಡುವ ಪೂಜೆಯ ಕ್ರಮವಿದು./185
ಜಾಳು ಮಾತೆಂದಡೆ ನಲಿದು ನಲಿದು ನುಡಿವರು.
ಕಾಳುಗೆಲಸವೆಂದಡೆ ನಲಿದು ನಲಿದು ಮಾಡುವರು.
ಶ್ರೀಗುರು ಸೇವೆಯೆಂದಡೆ, ನಿತ್ಯ ಲಿಂಗಾರ್ಚನೆಯೆಂದಡೆ,
ಮತ್ತೆ ಪಂಚಾಕ್ಷರಿಜಪವೆಂದಡೆ, ಅಳಲುವರು, ಬಳಲುವರು.
ಇಂತಪ್ಪ ದುರುಳರಿಗೆ, ದುಃಖವೆ ಪ್ರಾಪ್ತಿಯಲ್ಲದೆ,
ನಿಜಸುಖವೆಂಬುದಿಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ಅವರ ಬಾರದ ಭವದಲ್ಲಿ ಬರಿಸದೆ ಮಾಣ್ಬನೇ?/186
ಜ್ಞಾತೃ ಜ್ಞಾನ ಜ್ಞೇಯ ಮೂರೊಂದಾದುದೇ
ಜೀವ ಪರಮರೈಕ್ಯವಯ್ಯ.
ಆ ಜೀವ ಪರಮರೈಕ್ಯವಾದುದೆ ಮನ ಲೀಯ.
ಮನ ಲೀಯವಾದ ಬಳಿಕ ಇನ್ನು ಧ್ಯಾನಿಸಲುಂಟೆ?
ಅರಿಯಲುಂಟೆ ಹೇಳ?
ಬಾಹ್ಯಾಭ್ಯಂತರ ಇಂದ್ರಿಯದ ಮನದ ವಿಕಾರವಳಿದು
ಅವಿದ್ಯಾವಾಸನೆಯಡಗಿ, ಅಹಂಕಾರ ಉಡುಗಿದ
ಜೀವನ್ಮುಕ್ತಂಗೆ ಸರ್ವಶೂನ್ಯವಾಗಿ,
ಸಮುದ್ರಮಧ್ಯದ ತುಂಬಿದ ಕೊಡದಂತೆ ಇದ್ದನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು./187
ಜ್ಞಾನವಿಲ್ಲದವಂಗೆ ಆಚಾರವಿಲ್ಲ.
ಆಚಾರವಿಲ್ಲದವಂಗೆ ಭಕ್ತಿಯಲ್ಲ.
ಭಕ್ತಿಯಿಲ್ಲದವಂಗೆ ವಿರಕ್ತಿಯಿಲ್ಲ.
ವಿರಕ್ತಿಯಿಲ್ಲದವಂಗೆ ಮುಕ್ತಿಯಿಲ್ಲ.
ಇದು ಕಾರಣ,
ಜ್ಞಾನ ವಿಚಾರ ಭಕ್ತಿ ವಿರಕ್ತಿ ಉಳ್ಳವಂಗೆ ಮುಕ್ತಿಯುಂಟು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./188
ಜ್ಞಾನಾನಂದ ಪರಬ್ರಹ್ಮವೆ ಲಿಂಗವೆಂದು ಅರಿದ ಅರಿವು
ತಾನೇ ತನ್ನಲ್ಲಿ ವಿಶ್ರಮಿಸಿ,
ತೆರಹಿಲ್ಲದೆ ಅವಿರಳ ಸಂಬಂಧವಾದ ಲಿಂಗವ ಭಾವಿಸಲುಂಟೇ?
ಅರಿಯಲುಂಟೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ
ನಿತ್ಯ ನಿರಾಳದ ಕುರುಹಿಡಿಯಲುಂಟೆ ಹೇಳಾ?/189
ಜ್ಞಾನಿಯ ನಡೆ ನುಡಿ ಅಜ್ಞಾನಿಗೆ ಸೊಗಸದು.
ಅಜ್ಞಾನಿಯ ನಡೆ ನುಡಿ ಜ್ಞಾನಿಗೆ ಸೊಗಸದು.
ದಿವಾ ರಾತ್ರಿಗಳಂತೆ ಒಂದಕ್ಕೊಂದಾಗದು.
ಅರಿವಿನಿಂದ ಉದಯಿಸಿದ ಶರಣನು ಮೆರೆಯಬೇಕೆಂದು
ಮರಹಿಂದ ಹುಟ್ಟಿದ ಮಾನವನಿದಿರ ಮಾಡಿದೆಯಲ್ಲಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./190
ತಟಿದಂಕುರದಂತೆ ಕ್ಷಣದಲ್ಲಿ ತೋರಿಯಡಗುವ ಸಂಸಾರ.
ಇದರಲ್ಲೇನು ಲೇಸಕಂಡು,
ನಿತ್ಯಾನಂದ ಚಿದಾತ್ಮಸುಖವ ಬಿಡುವೆ?
ಈ ಸಂಸಾರ ಸ್ಥಿರವಲ್ಲ.
ಬೇಗ ಗುರು ಚರಣವ ದೃಢವಿಡಿ.
ಕಾಬೆ, ಮುಂದೆ ನೀನು ಕೈವಲ್ಯವ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಹ ಸೌಖ್ಯವನು./191
ತತ್ತಿಯೊಳಗಣ ಪಕ್ಷಿಯಂತೆ, ಎತ್ತಲೆಂದರಿಯದೆ
ಅಜ್ಞಾನದ ಕತ್ತಲೆಯೊಳಗೆ ಸಿಕ್ಕಿ ದುಃಖಗೊಳುತ್ತಿಹರೆಲ್ಲರು.
ದಿವಾ ರಾತ್ರಿ ಇಂತು ದುಃಖವನನುಭವಿಸುತ್ತ,
ಕಾಯುವ ಹೊತ್ತು ಬಳಲುವ ಜೀವರುಗಳು,
ತಾವಾರೆಂದರಿಯದೆ ನೋವುತ್ತ ಬೇವುತ್ತ
ಸಾವುತ್ತಿರ್ಪರವರಿಗಿನ್ನೆಂದಿಂಗೆ ಮುಕ್ತಿಯಹುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?./192
ತತ್ತ್ವ ಮೂವತ್ತಾರರಿಂದತ್ತತ್ತ ಪರಕ್ಕೆ ಪರವಾದ
ಗುರುವಿನ ಅಂಗ ತಾನೆ
ಸಕಲ ನಿಃಕಲರೂಪಾದ ಲಿಂಗವು.
ಅದು ತಾನೆ ಮತ್ತೆ ಸಕಲಾಂಗವೆನಿಸುವ ಜಂಗಮವು.
ಆ ಜಂಗಮವು ತಾನೆ ಗುರುವಿನ ನಿಃಕಲಾಂಗವು.
ಆ ಶ್ರೀಗುರುವಿನ ಕಳೆಯಿಂದ ಹುಟ್ಟಿದ
ನಿಜಸುಖವೇ ಪ್ರಸಾದಲಿಂಗವು,
ಇಂತು ಗುರು ಲಿಂಗ ಜಂಗಮವೆನಿಸುವ
ಶುದ್ಧ ಸಿದ್ಧ ಪ್ರಸಿದ್ಧ ಲಿಂಗಕಳೆಗಳಿಂದತಿಶಯವಾಗಿ ಬೆಳಗುವ
ಶರಣ ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./193
ತನು ಮನ ಪ್ರಾಣವ ಲಿಂಗಕ್ಕರ್ಪಿಸಿ ತಾನೆ
ಲಿಂಗದೊಳಗಡಗಿದ ಪ್ರಸಾದಿ.
ಪ್ರಸಾದಿಯೊಳಗೆ ಲಿಂಗವಡಗಿ, ಪ್ರಸಾದವೇ ತಾನಾದ ಪ್ರಸಾದಿಗೆ
ಪರಮಪ್ರಸಾದಿಯೆಂಬುದು ಕರತಳಾಮಳಕದಂತೆ
ತೋರುತ್ತಿಹುದಾಗಿ
ಶಿವ ಶಿವಾ, ಪ್ರಸಾದಿಯ ಘನವನೇನೆಂದುಪಮಿಸಬಹುದು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀನೆ ಬಲ್ಲೆ, ನಾನರಿಯೆನು./194
ತನು ಮುಂತಾದ ಕ್ರೀಯಿಂದ ಗುರುಭಕ್ತನಹುದಯ್ಯ.
ಮನ ಮುಂತಾದ ಕ್ರೀಯಿಂದ ಲಿಂಗಭಕ್ತನಹುದಯ್ಯ.
ಧನ ಮುಂತಾದ ಕ್ರೀಯಿಂದ ಜಂಗಮಭಕ್ತನಹುದಯ್ಯ.
ಇಂತು ತನು ಮನ ಧನವ, ಗುರು ಲಿಂಗ ಜಂಗಮಕ್ಕೆ ಕೊಟ್ಟು
ತಾ ನಿಲರ್ೆಪಿಯಾದನಯ್ಯ ನಿಮ್ಮ ಭಕ್ತನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./195
ತನುವಿಂಗೆ ತನುರೂಪಾಗಿ ತನುವಿಂಗಾಧಾರವಾದೆ.
ಮನಕ್ಕೆ ಮನರೂಪಾಗಿ ಮನಕ್ಕೆ ನೆನಹಿನ ಶಕ್ತಿಯನಿತ್ತು
ಮನಕ್ಕಾಧಾರವಾದೆ.
ಪ್ರಾಣಕ್ಕೆ ಪ್ರಾಣರೂಪಾಗಿ. ಪ್ರಾಣಕ್ಕಾಧಾರವಾದೆ.
ಎನ್ನಂಗೆ ಮನ ಪ್ರಾಣದಲ್ಲಿ ನೀವೆ ನಿಂದು,
ಸರ್ವಕರಣಂಗಳ ನಿಮ್ಮವ ಮಾಡಿಕೊಂಡ ಕಾರಣ
ಎನ್ನ ಪ್ರಾಣ ನಿಮ್ಮಲ್ಲಿ ಆಡಗಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./196
ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ,
ಅರಿವಿಂಗೆ ಅರಿವಾಗಿ, ತೆರಹಿಲ್ಲದಿರ್ದ ಘನವ,
ಒಮ್ಮೆ ಆಹ್ವಾನಿಸಿ ನೆನೆದು, ಒಮ್ಮೆ ವಿಸರ್ಜಿಸಿ
ಬಿಟ್ಟಿಹೆನೆಂದಡೆ ತನ್ನಳವೇ?
ಪರಿಪೂರ್ಣ ಪರಶಿವನು, ಆರಾರ ಭಾವಕಲ್ಪನೆ
ಹೇಗೆ ಹೇಗೆತೋರಿತೆಂದಡೆ
ತೋರಿದಂತೆ, ಖಂಡಿತನಹನೇ ಆಗಲರಿಯನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./197
ತನುವೆಂಬ ಭೂಮಿಯ ಮೇಲೆ,
ಶೃಂಗಾರದ ಇಂದ್ರಕೂಟಗಿರಿಯೆಂಬ ಕೈಲಾಸದಲ್ಲಿ
ಉತ್ತರ ದಕ್ಷಿಣ ಪಶ್ಚಿಮದಳದ
ಆತ್ಮ ಶಕ್ತಿ ಬಿಂದು ನಾದಗಳ ಮಧ್ಯದಲ್ಲಿ
ಶೂನ್ಯಸಿಂಹಾಸನವೆಂಬ ಸುಜ್ಞಾನಪೀಠದ ಮೇಲೆ
ನೀವು ಮೂರ್ತಿಗೊಂಡಿಹಿರಾಗಿ ಕಂಡು ಹರುಷಿತನಾದೆನು.
ಸೂರ್ಯಮಂಡಲದ ದ್ವಾತ್ರಿಂಶದಳದ ರುದ್ರರು ರುದ್ರಶಕ್ತಿಯರು
ನಿಮ್ಮನೋಲೈಸುತ್ತಿಹರು.
ಚಂದ್ರಮಂಡಲದ ಷೋಡಶದಳದ ರುದ್ರರು ರುದ್ರಶಕ್ತಿಯರು
ನಿಮ್ಮನೋಲೈಸುತ್ತಿಹರು.
ಅಗ್ನಿಮಂಡಲದ ಅಷ್ಟದಳದ ರುದ್ರರು ರುದ್ರಶಕ್ತಿಯರು
ನಿಮ್ಮನೋಲೈಸುತ್ತಿಹರು.
ಈ ಪರಿಯಿಂದ ದೇವರದೇವನ
ಓಲಗವನೇನೆಂದು ಹೇಳುವೆನು.
ಮತ್ತೆ ಭೇರಿ ಮೃದಂಗ ನಾಗಸರ ಕೊಳಲು ವೀಣೆ ಕಹಳೆ ಘಂಟೆ
ಶಂಖನಾದ ನಾನಾ ಬಹುವಿಧದ ಕೇಳಿಕೆಯ ಅವಸರದಲ್ಲಿ
ರಾಜಿಸುವ ರಾಜಯೋಗದ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣರಾದ ರಾಜಯೋಗಿಗಳೇ ಬಲ್ಲರು./198
ತನ್ನಲ್ಲಿ ತಾನು ಪ್ರತ್ಯಕ್ಷಾನುಭಾವದಿಂದ ತಿಳಿದುನೋಡಿ,
ಆ ತಿಳಿದ ತಿಳಿವಿನೊಳಗೆ, ಲಿಂಗದ ನಿಜವ ಕಂಡು
ಕಾಂಬ ಜ್ಞಾನ ತಾನೆಂದರಿದು,
ಕಾಂಬುದು ಕಾಣಿಸಿಕೊಂಬು[ದು] ಎರಡೊಂದಾದ ನಿಲವು ತಾನೆ
ನಿಮ್ಮ ನಿಲುವು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./199
ತನ್ನಲ್ಲಿ ಸುಗುಣವ ಸಂಪಾದಿಸ ಹೋಹುದೀ ಮನವು.
ಇ[ತರ] ದುರ್ಗುಣವ ಸಂಪಾದಿಸ ಹೋಹುದೀ ಮನವು.
ಇಂತೀ ಮನವಿದು ನಗೆಗೆಡೆಯ ಮಾಡಿ ಕಾಡಿತ್ತು.
ಈ ಮನವ ನಿಲಿಸುವರೆನ್ನಳವಲ್ಲ.
ಅಗಡೆತ್ತು ಹಗ್ಗವ ಹರಿದುಕೊಂಡಂತಾಯಿತ್ತು.
ಸದ್ಬೋಧೆಯೆಂಬ ಮೇವ ಕೊಟ್ಟು
ಈ ಮನವ ತಿದ್ದಯ್ಯಾ ನಿಮ್ಮ ಧರ್ಮ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./200
ತನ್ನೊಳಡಗಿಹ ಅನಂತಕೋಟಿ ಬ್ರಹ್ಮಾಂಡಗಳಿಗೆ
ಉತ್ಪತ್ತಿ ಸ್ಥಿತಿ ಲಯಾಶ್ರಯವಾದ
ಮಹಾ ಚಿದ್ಭಾಂಡವೇ ತನ್ನಿರವೆಂದರಿದ ಕಾರಣ
ಸರ್ವತತ್ತ್ವ ಸಾಕ್ಷಿಣಿ ವಿಶ್ವಪ್ರಕಾಶ ಪರಾಶಕ್ತಿರೂಪ ವಿಶ್ವತೋಮುಖ
ಚಿದಾತ್ಮಕ ಪರಮಾನಂದಮಯ ತಾನೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು./201
ತಪ ಸತ್ಕಿ ್ರ ಜಪ ಧ್ಯಾನ ಜ್ಞಾನಂಗಳಿಂದ ಮಾಡುವ ಭಕ್ತಿಗೆ
ಶಿವನೊಲಿವ. ಶಿವಶರಣರೊಲಿವರಯ್ಯ.
ಹಿಂದೆ ಭವನಾಶ, ಮುಂದೆ ಕೈವಲ್ಯವಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./202
ತಪವೆತ್ತ? ಹೆರರ ಕೇಡಿಂಗೆ ಬಗೆವುದೆತ್ತ?
ಜಪವೆತ್ತ? ಶರಣರ ಮೇಲೆ ಅನೃತವ ನುಡಿವುದೆತ್ತ?
ಪಂಚಾಚಾರವೆತ್ತ? ಪಾತಕಕ್ಕೆ ಮನಬಗೆವುದೆತ್ತ?
ಇಂತೀ ಹೊರಬಳಿಕೆಯ,
ಲೋಕರಂಜನೆಯಲ್ಲಿರ್ಪವರಿಗೆ ನಾನಂಜುವೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀನಂಜಿ, ದೂರದಲೋಡುವೆ./203
ತರಗೆಲೆಯ ಮೆದ್ದು ತಪವಿದ್ದರೂ ಬಿಡದು ಮಾಯೆ.
ಗಾಳಿಯನಾಹಾರವ ಕೊಂಡು,
ಗುಹೆಯ ಹೊಕ್ಕಡೆಯೂ ಬಿಡದು ಮಾಯೆ.
ತನುವಿನಲ್ಲಿ ವ್ಯಾಪಾರ, ಮನದಲ್ಲಿ ವ್ಯಾಕುಳವಾಗಿ
ಕಾಡಿತ್ತು ಮಾಯೆ.
ಆವಾವ ಪರಿಯಲ್ಲಿಯೂ ಘಾತಿಸಿ ಕೊಲುತ್ತಿದೆ ಮಾಯೆ.
ಈ ಪರಿಯ ಬಾಧೆಯಲ್ಲಿ ಬಳಲುತ್ತಿದೆ ಜಗವೆಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ
ನಿನ್ನವರನು ಈ ಮಾಯಾಸಂಸಾರದ ಬಾಧೆಯಲ್ಲಿ,
ಬಳಲದಂತೆ ಮಾಡಯ್ಯ ನಿಮ್ಮ ಧರ್ಮ./204
ತಾನು ಲಿಂಗಾವಧಾನಿಯಾಗಿ,
ಪದಾರ್ಥ ತನ್ನಂಗವ ಸೋಂಕದ ಮುನ್ನ,
ಪದಾರ್ಥದ ಪೂರ್ವಾಶ್ರಯವ ಕಳೆದು, ಲಿಂಗಮುಖವ ಮಾಡಿ,
ತನು ಮನ ಪ್ರಾಣ ಪ್ರಸಾದ ಸಂತೃಪ್ತಿಯನೆಯ್ದಿ,
ಪ್ರಸಾದಸುಖಾಬ್ಧಿಯೊಳೋಲಾಡುತ್ತ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದ ಸಂಪತ್ತಿನಲ್ಲಿಹನು./205
ತಾನೆಂಬುದನರಿಯ, ಪರವೆಂಬುದನರಿಯ,
ಸ್ವಯ ಪರ ತನ್ನೊಳಗಡಗಿ ತಾನೆ ಪರಿಪೂರ್ಣನಾಗಿ,
ವಿಶ್ವಾಧಿಪತಿಯಾದ ಅಖಂಡ ಸಂವಿಧಾಕರ
ಪರಬ್ರಹ್ಮವು ತಾನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣನು./206
ತಾನೇ ಲಿಂಗವೆಂದರಿದು, ಮತ್ತೆ ಬೇರೆ ಲಿಂಗವಿದೆಂದು
ಕಲ್ಪಿಸಿ ರೂಹಿಸಿ ಭಾವಿಸಿ ನೋಡಲು
ಅದು ಭಾವಸಂಕಲ್ಪವಲ್ಲದೆ ನಿಜವಲ್ಲ.
ಶುಕ್ತಿಯಲ್ಲಿ ರಜತಭಾವ ತೋರಿತ್ತೆಂದಡೆ, ಅದು ಸಹಜವೇ?
ಇದು ಭಾವಸಂಕಲ್ಪವೆಂದರಿದಾಗವೆ ಭಾವ ನಿಃಪನ್ನವಾಗಿ
ಪರಿಪೂರ್ಣ ಬೋಧಪರಾನಂದರೂಪ ತಾನೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೆ,
ಲಿಂಗವಲ್ಲದೆ ಬೇರೆ ಲಿಂಗವಿಲ್ಲ./207
ತಾಲು ಮೂಲ ದ್ವಾದಶಾಂತದ ಮೇಲಣ ಚಿತ್ಕಲಾ ಸೂರ್ಯನು
ನೆತ್ತಿಯ ಮಧ್ಯಮಂಡಲದಲ್ಲಿ ನಿಂದು,
ಉದಯಾಸ್ತಮಯವಿಲ್ಲದೆ ಬೆಳಗಲು,
ಮೂರು ಲೋಕದ ಕತ್ತಲೆ ಹರಿದು ಹೋಯಿತ್ತು ನೋಡಾ.
ಆ ಮೂರು ಲೋಕದ ಕಳ್ಳರೆಲ್ಲಾ ಬೆಳ್ಳರಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನ
ಬೆಂಬಳಿಯಲ್ಲಿಯೆ ಲಿಂಗವನಾರಾಧಿಸುತ್ತಿರ್ದರು./208
ತಾಳಮರದ ಮೇಲಣ ಕೋಡಗ, ತಾಳರಸವ ಕೊಂಡು
ದೆಸೆದೆಸೆಯ ಶಾಖೆಗಳಿಗೆ ಲಂಘಿಸಿ, ಹರಿದಾಡುತ್ತಿದ್ದಿತು ನೋಡಾ.
ಹರಿದಾಡುವ ಕೋಡಗವ ಹಿಡಿದು ಕಂಬದಲ್ಲಿ ಕಟ್ಟಿದರೆ,
ಕಂಬದ ತುದಿಯ ಮಣಿಯನೇರಿ,
ನಿಂದು ನೋಡುತ್ತಿದ್ದಿತ್ತು ನೋಡಾ.
ಕಂಬ ಮುರಿದು ವಣಿ ಬಯಲಾಯಿತ್ತು, ಕೋಡಗವಳಿಯಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣನ ಮುಂದೆ./209
ತಿರುಳು ಕರಗಿದ ಬೀಜ ಮರಳಿ ಹುಟ್ಟಬಲ್ಲುದೆ ಅಯ್ಯಾ?
ತೊಟ್ಟ ಬಿಟ್ಟ ಹಣ್ಣ ಮರಳಿ ತೊಟ್ಟ ಹತ್ತುವುದೆ ಅಯ್ಯಾ?
ನೆಟ್ಟನೆ ಪ್ರಾಣಲಿಂಗದ ನಿಜವನರಿದವ ಮರಳಿ ಹುಟ್ಟಬಲ್ಲನೆ ಹೇಳಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?/210
ತುಂಬಿ, ಇಂಬಿನ ತುಂಬಿ, ಕಾಯ ತುಂಬಿ, ಕರಣ ತುಂಬಿ,
ಈರೇಳು ಭುವನವ ತುಂಬಿ,
ತುಂಬಿ ಪರಿಮಳವನುಂಡು ಅಂಬರದಲ್ಲಿ ನಿಂದಿತ್ತು.
ಸಂಭ್ರಮ ನಿಂದಿತ್ತು.
ಮಹಾಘನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ
ತುಂಬಿ ತುಳುಕದಂತೆ ಇದ್ದಿತ್ತು./211
ತುದಿ ಮೊದಲಾಯಿತ್ತು. ಮೊದಲೇ ತುದಿಯಾಯಿತ್ತು.
ತುದಿ ಮೊದಲೆಂಬವೆರಡಿಲ್ಲದೆ ಹೋಯಿತ್ತು.
ಮುನ್ನೆಂತಿದ್ದುದಂತೆ ಆಯಿತ್ತು. ಸಹಜದ ನಿಲವು ಉದಯಸಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ./212
ತೆರಹಿಲ್ಲದ ಕುರುಹಿಲ್ಲದ ಅರಿವಿಗಗೋಚರವಾದ
ಮಹಾಪ್ರಸಾದವ ಕೊಂಡು, ತಾ ಪ್ರಸಾದವರೂಪನಾದ ಬಳಿಕ,
ಮುಖ್ಯಲಕ್ಷ್ಯಾರ್ಥ ಮೊದಲಾದ ಸರ್ವಾಲಂಬನ ಉಂಟೇ?
ಇಲ್ಲವಾಗಿ.
ಮನವಾತ್ಮಜ್ಯೋತಿಯಲಡಗಿ, ಜ್ಞಾನ ಜ್ಞೇಯಂಗಳೇಕವಾದ ಬಳಿಕ,
ಮಾತೃಮೇಯ ಪ್ರಮಾಣಾದಿ ವ್ಯವಹಾರಗಳುಂಟೇ? ಇಲ್ಲವಾಗಿ.
ಇದು ಕಾರಣ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ಶರಣ ನಿಶ್ಚಿಂತ ನಿವಾಸಿ./213
ತೋರಿಯಡಗುವ ಮೇಘಾಡಂಬರದಂತೆ, ತನುವಿನ ತೋರಿಕೆ.
ಹೀಗೆಂದರಿದು ನಿತ್ಯತ್ವವ ಪಡೆದಹಂಗೆ,
ಮತ್ತೇಕೆ ಈ ದೇಹವ ಮಮಕರಿಸುವೆ?
ಆವಾಗ ಬಿಟ್ಟು ಹೋಹುದೆಂದರಿಯಬಾರದು.
ದೇವ ದಾನವ ಮಾನವರೊಳಗಾದವರೆಲ್ಲ ಅಳಿದು,
ಹೋಹುದ ಕಂಡು ಕೇಳಿ,
ಮತ್ತೆ ತನುವಿನಾಸೆಯೇಕೆ ಬಿಡು. ವಿರಕ್ತನಾಗು ಮರುಳೆ.
ಕಾಯಜವೈರಿಯ ಪಾದವ ಬಿಡದಿರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು
ನಿನ್ನ, ತನ್ನತ್ತಲೊಯ್ವನು./214
ತ್ರಾಸಿನ ತೂಕದಂತೆ, ಅಂಗ ಲಿಂಗ ಸಮವಾಗಿ,
ಬಿಲುಗಾರನೆಸುಗೆಯ ಬಾಣದ ಕೂಡೆ ಕಾಣಿಸುವ ಘಾಯದಂತೆ,
ಹೂಣಿಸಿದರ್ಪಿತಸಂಧಾನವೆಸವುತ್ತ,
ಅಕ್ಷರದೊಡನೆ ತೋರುವ ಶಬ್ದದಂತೆ,
ಅಂಗ ಲಿಂಗೈಕ್ಯವನರಿದಾಂತಗೆ ಅನರ್ಪಿತವೆಂಬುದುಂಟೇ? ಇಲ್ಲ.
ಆತ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗೆ,
ಅಡಗಿ ಅರ್ಪಿಸುವ ಸುಯಿಧಾನಿ ತಾನು./215
ದಯದಿಂದ ನೋಡಿ ಬಹು ವಿಚಾರವುಂಟು.
ಷಟ್ಸ್ಥಲಬ್ರಹ್ಮಚಾರಿ ತಾನು ಸಂಕಲ್ಪವನೇತಕ್ಕೆ ಮಾಡುವದು?
ಗುರುವು ಹಿಡಿದು ಲಿಂಗವಾಯಿತ್ತು.
ಲಿಂಗ ಹಿಡಿದು ಜಂಗವಾಯಿತ್ತು.
ಜಂಗಮವು ಹಿಡಿದು ಪಾದೋದಕ ಪ್ರಸಾದವಾಯಿತ್ತು.
ಇದನರಿಯದೆ ಭಿನ್ನಭೇದವ ಮಾಡಲಾಗದು.
ಜಂಗಮನ ಕೊಂದವನಾದರು,
ಲಿಂಗವ ಭಿನ್ನವ ಮಾಡಿದವನಾದರು,
ಅವನ ಕಂಡು ಮನಸ್ಸಿನಲ್ಲಿ ನಿಂದಿಸಿದರೆ ವಿರಕ್ತನೆಂಬ
ಭಾವನೆಯಿಲ್ಲ.
ಭಕ್ತನ ಮಠವೆಂದು ಹೋದಲ್ಲಿ,
ಆ ಭಕ್ತನು ಎದ್ದು ನಮಸ್ಕರಿಸಿ,
ತನ್ನ ದಾಸಿಯರ ಕರದು `ಪಾದಾರ್ಚನೆಯ ಮಾಡು’ ಎಂದರೆ
ಆ ಪಾದಾರ್ಚನೆಯ ಮಾಡಿದ ಫಲವು
ಅರಿಗೆ ಮೋಕ್ಷವಾಗುವದು?
ಆ ತೊತ್ತಿನ ಬಸುರಲ್ಲಿ ಬಪ್ಪುದು ತಪ್ಪದು.
ತಾನು ವಿರಕ್ತನಾದ ಮೇಲೆ,
ಲಿಂಗವಿದ್ದವರಲ್ಲಿ ಲಿಂಗಾರ್ಪಿತವ ಬೇಡಲೇತಕ್ಕೆ?
ತಾ ಬಿರಿದ ಕಟ್ಟಿ ಆಚರಿಸುವ ಶರಣನು
ತನಗೆ ಸಮಾಚಾರ ಸಮನಾಗದಲ್ಲಿ
ಹೊನ್ನ ಹಿಡಿದು ಬಡ್ಡಿ ವ್ಯವಹಾರವ ಮಾಡಿದ
ಜಂಗಮದಲ್ಲಿ ತೆಗೆದುಕೊಳ್ಳಲಾಗದು.
ಆ ಜಂಗಮವು ತ್ರಿವಿಧ ಪದಾರ್ಥದಲ್ಲಿದ್ದರೇನು?
ವಂಚನೆಯಿಲ್ಲದೆ ಸವದರೆ ಆತ ಮುಟ್ಟಿದರೊಳಗಿಲ್ಲ.
ಆತನ ಅಂತು ಇಂತು ಎನ್ನಲಾಗದು ಶರಣರಾಚರಣೆ.
ಶರಣ ತಾ ಬಿರಿದ ಕಟ್ಟಿ ಆಚರಿಸಿದಲ್ಲಿ
ತನ್ನಾಚರಣೆಗೆ ಕೊರತೆ ಬಂದರೆ
ಬಂದಿತ್ತೆಂಬ ಹೇಹ ಬೇಡ.
ಬಂದಾಗ ನರಳಿ,
ಬಾರದಾಗ ಸದಾಚಾರದಲ್ಲಿರ್ಪುದೆ ಶರಣನಾಚರಣೆ.
ಗುರು ಮೋಕ್ಷವಾಗಿಯಿಪ್ಪಾತನು
ಪಾಪಕ್ಕೆ ಸಂಬಂಧವಾಗಲು
ಆತನ ಕಂಡು ಮನದಲ್ಲಿವ ದ್ರೋಹಿಯೆಂದರೆ
ನನ್ನ ಬಿರಿದಿಂಗೆ ಕೊರತೆಯದಾಗುವುದಲ್ಲದೆ
ವಿರಕ್ತನೆಂಬ ಭಾವವೆನಗಿಲ್ಲ ನೋಡಾ.
ಮುಂದೆ ಕ್ರಿಯಾಚರಣೆ.
ವಿರಕ್ತನ ನಡೆಯೆಂತೆಂದೊಡೆ
ಭಕ್ತಿಸ್ಥಲ ಸಂಬಂಧವಾದ ಭಕ್ತಂಗೆ
ಕ್ರೀಯವ ಕೊಡುವ ಆಚರಣೆಯೆಂತೆಂದೊಡೆ
ಆತ ತೆಗೆದು ಕೊಂಬ ಆಚರಣೆಯೆಂತೆಂದೊಡೆ
ಪಾದಾರ್ಚನೆಯ ಮಾಡಿದಲ್ಲಿ ಪಾದತೀರ್ಥ ಕೊಡುವರು.
ಅನ್ನವ ನೀಡಿದ ಹಂಗಿನಲ್ಲಿ ಪ್ರಸಾದವಂ ಕೊಡುವವರು.
ಮುಯ್ಯಿಂಗೆ ಮುಯ್ಯನಿತ್ತುದಲ್ಲದೆ
ಮುಕ್ತಿಯೆಂಬುದು ಅವುದು ಹೇಳ?
ಭಕ್ತನಾಚಾರಣೆಯೆಂತೆಂದೊಡೆ-
ಆ ಗೃಹಕ್ಕೆ ಹೋದಲ್ಲಿ ತಾ ಲಿಂಗಪೂಜೆಯ ಮಾಡುತ್ತಿರ್ದರಾದರು
ತಾಯೆದ್ದು ಬಂದು ನಮಸ್ಕರಿಸುವದೆ ಭಕ್ತನ ಮಾರ್ಗ.
ಎನ್ನೊಳಗೆ ಲಿಂಗವು ಜಂಗಮವು ಉಂಟೆಂಬ
ಅವಿಚಾರದ ನುಡಿಯ ಕೇಳಲಾಗದು.
ಮುಂದೆ ಭಕ್ತನು ಜಂಗಮದ ಪಾದವ ಹಿಡಿದಲ್ಲಿ
ಪುಷ್ಪ ವಿಭೂತಿಯಿರಲು ಅಗ್ಛಣಿಯಿಲ್ಲದಿರಲು ಮರ್ಲೆದ್ವು
ವ್ರತಸ್ಥಪಾದವ ಬಿಡಲಾಗದು.
ಬಿಟ್ಟನಾದರೆ ಪಾದತೀರ್ಥಕ್ಕೆ ದೂರವಾಯಿತ್ತು.
ಲೋಕಾಚಾರದ ಭಕ್ತರು ಪಾದವ ಹಿಡಿಯಲು,
ಪುಷ್ಪ ವಿಭೂತಿಯಿರಲು ಅಗ್ಘಣಿಯಿಲ್ಲದಿರಲು
ಆ ಪಾದಕ್ಕೆ ನಮಸ್ಕಾರವ ಮಾಡಿ
ಪಾದವಂ ಬಿಟ್ಟು ಮತ್ತೆ ಹೋಗಿ
ಅಗ್ಘಣಿಯಂ ತಂದು ಪಾದತೀರ್ಥವಂ ಪಡೆದು
ಸಲಿಸುವುದು ಭಕ್ತನಾಚರಣೆ.
ಜಂಗಮದೇವರ ಕರತಂದು
ವ್ರತಸ್ಥನ ಪಾದತೀರ್ಥವಂ ಪಡೆದಲ್ಲಿ
ಆ ಆ ದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು
ಆ ದೇವರು ಮಜ್ಜನವ ನೀಡಿದ ಸ್ಥಾನ
ಅವರು ಮೂರ್ತಿಮಾಡಿರ್ದ ಸ್ಥಾನವ ನೋಡಿ
ಆ ವ್ರತಸ್ಥನು ಪ್ರಾಣವ ಕೊಡುವುದು.
ಭಕ್ತನು ಜಂಗಮವ ಕರಕೊಂಡು ಬಂದು
ಪಾದತೀರ್ಥಮಂ ಪಡೆದು
ಆ ಜಂಗಮದೇವನ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು
ಅವರು ಮಜ್ಜನವ ನೀಡಿದ ಸ್ಥಾನದಲ್ಲಿ
ಮೂರ್ತಿಗೊಂಡಿರ್ದ ಸ್ಥಾನದಲ್ಲಿ ಪರಾಂಬರಿಸಿ
ಆ ಲಿಂಗವು ಸಿಕ್ಕಿದರೆ ಕ್ರೀಯವ
ಜಂಗಮವು ಭಕ್ತರು ಸಲಿಸುವುದು,
ಇಲ್ಲದಿದ್ದರೆ ಆ ಭಕ್ತರು ತೆಗೆದು ಕೊಂಬುದು.
ಆ ಜಂಗಮವು ತೆಗೆದು ಕೊಳಲಾಗದು.
ಇದು ಸಕಲ ಶರಣರಿಗೆ ಸನ್ಮತ.
ಸಂಕಲ್ಪವ ಮಾಡಲಾಗದು
ಮುಂದೆ ಮಾರ್ಗಕ್ಕೆ ತಾನು ನಡೆದಲ್ಲಿ
ತನಗೆ ಮಾರ್ಗ ತಪ್ಪದು.
ತನಗೆವೊ[ಂ]ದು ವೇಳೆ ಲಿಂಗವು ಭಿನ್ನ ಭಿನ್ನವಾಗಲು
ಅದನು ಸಕಲ ಸಮಸ್ತಮೂರ್ತಿಗಳು ತಿಳಿದು ನೋಡಲು
ಅದರಲ್ಲಿ ಭಿನ್ನ ಭಿನ್ನವಾಗದೆಯಿರಲು
ಪರಾಂಬರಿಸಿ ಎಲ್ಲಾ ಮಾಹೇಶ್ವರರು ಎದ್ದು ಬಂದು
ಅದರೊಳಗೆ ಸಂಕಲ್ಪವಿಲ್ಲವೆಂದು
ನಮಸ್ಕಾರವ ಮಾಡುವುದು.
ಲಿಂಗವು ಭಿನ್ನವಾಗಲು
`ನಿಮ್ಮ ಗುರುಮಠಪೂರ್ವಕ್ಕೆ ಹೋಗಿ’ಯೆಂದು ಹೇಳಲು,
`ನಾನೊಲ್ಲೆ, ನಿಮ್ಮ ಪಾದದಲ್ಲಿಯೇಕಾರ್ಥವ
ಮಾಡಿಕೊಳ್ಳಿ’ಯೆಂದು ಹೇಳಲು,
ಆ ದೇವರ ಅಡ್ಡಬೀಳಿಸಿಕೊಂಡು
ವಸ್ತು ಹೋಗುವ ಪರಿಯಂತರದಲ್ಲಿ ಕಾದಿರುವುದು.
ಅಥ[ವ] ಒಂದು ವೇಳೆ ಮೋಸ ಬಂದರೆ
ಅಲ್ಲಿರ್ಪ ಭಕ್ತ ಮಾಹೇಶ್ವರರ ಬಿಡುವುದು.
ಧರ್ಮಾಧರ್ಮದಲ್ಲಿ ವಿಚಾರಿಸದೆ
ಆ ಭಕ್ತನು ಜಂಗಮ ಮುಟ್ಟಿದ ಗದ್ದುಗೆಯಲ್ಲಿ ಮೂರ್ತಿಮಾಡಿ
`ಪ್ರಸಾದಕ್ಕೆ ಶರಣಾರ್ಥಿ’ಯೆನಲು
ನೀಡಲಾಗದೆಂಬುದು ಆಚರಣೆ.
ಆದ ನೀಡಿಯಿಟ್ಟರು ಮುಗಿವಲ್ಲಿ ಭಕ್ತನ ಪ್ರಸಾದ ಹೆಚ್ಚಾದರೆ
`ಅಯ್ಯೋ ನನ್ನ ಪ್ರಸಾದ ಹೆಚ್ಚಾಯಿ’ತೆಂದು ಹೇಳಿದರೆ
ಆ ಪ್ರಸಾದವನು ನೀಡಿಸಿ ಕೊಂಬ ಜಂಗಮಕ್ಕೆ ಆಚರಣೆ ಸಲ್ಲದು.
ವ್ಯಾಪಾರವ ಕೊಟ್ಟು ವ್ಯಾಪಾರವನೊಪ್ಪಿಸಿಕೊಂಡರೆ
ನಾವು ಪ್ರಸಾದವ ತೆಗೆದುಕೊಂಬುದು ಆಚರಣೆ.
ಹೊನ್ನು ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ
ಅವನ ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ
ಅವನ ಪ್ರಸಾದವನು ತೆಗೆದುಕೊಂಬುದು
ಇದು ಜಂಗಮದಾಚರಣೆ.
ಗುರುದೀಕ್ಷೆಯಿಲ್ಲದವನು
ಲಿಂಗಪೂಜೆಯ ಮಾಡಿದರೆ
ಪಾದೋದಕ ಪ್ರಸಾದವ ಕೊಂಡರೆ
ಸಹಜವಲ್ಲದೆ ಸಾಧ್ಯವಾಗದು.
ಬಿಟ್ಟರಾದರೆ ಅವರಿಗೆ ಮೋಕ್ಷವಿಲ್ಲವು.
ಜಂಗಮವು ಆವ ವರ್ತನೆಯಲ್ಲಿ ನಡಕೊಂಡರು
[ಆಸ]ತ್ತು `ಬೇಡ ಹೋಗಿ’ಯೆಂದರೆ
`ನಾನು ಅರಿಯದೆ ಮಾಡಿದೆ’ನೆಂದರೆ
ಅವನನೊಪ್ಪಿಕೊಂಬುದು
ಇದಕ್ಕೆ ಕಲ್ಪಿತ ಪಾಪಪುಣ್ಯಕ್ಕೆ ಒಳಗಾದವರು
ಷಟ್ಸ್ಥಲಕ್ಕೆ ಮಾತ್ರ ಆಗದು.
ಭಕ್ತಂಗೆ ಪ್ರಸಾದವ ಕೊಡುವ ಆಚರಣೆಯೆಂತೆಂದೊಡೆ-
ದೀಕ್ಷೆಯಿಲ್ಲದೆ ಶಿವಭಕ್ತನ ಗೃಹಕ್ಕೆ ಹೋಗಿ
`ಭಿಕ್ಷೆ’ಯೆಂದೆನಾದರೆ, ಜಿಹ್ವೆಯ ಮುಕ್ಕುಳಿಸಿದರೆ ಪಾತಕ ನೋಡ.
ಗುರುವಚನ ಪ್ರಮಾಣದಲ್ಲಿ
ನಾನು ಗುರುಮುಖವ ಹಿಡಿದಲ್ಲಿ
ಶಿವಮಂತ್ರಸ್ಮರಣೆಯನು ಶಿವಾನುಭಾವಿಗಳ ಸ್ಥಾನದಲ್ಲಿ
ಬೆಸಗೊಂಬುದೆ ಶುದ್ಧವಾಯಿತ್ತು.
ಇಲ್ಲದಿದ್ದರೆ ಶುದ್ಧವಿಲ್ಲವು.
ಶಿವಶರಣನ ಜ್ಞಾನವೆಂತೆಂದೊಡೆ
ನೀರಮೇಲಣ ತೆಪ್ಪದಂತಿರಬೇಕು,
ಕ್ಷೀರದೊಳಗಣ ಘೃತದಂತಿರಬೇಕು,
ಕೆಸರಿನೊಳಗಣ ತಾವರೆ ಪ್ರಜ್ವಲಿಸಿದಂತಿರಬೇಕು.
ಲಿಂಗದೊಳಗೊಡವೆರದರೆ
ಆರು ಆರಿಗೆಯು ಕಾಣದಂತೆ ನೋಡಾ.
ಅಂದಳದೊಳಗೆ ಹೋಗುವನ ಹಜ್ಜೆಯ ಕಂಡವರಾರು ಹೇಳ?
ಮಾತಿನಲ್ಲಿ ಮಹಾಜ್ಞಾನಿಗಳೆಂದರೊಪ್ಪುವರೆ?
ಮಹಾಲಿಂಗದ ಬೆಳಗಿನಲ್ಲಿ,
ತನ್ನ ನಡೆಯನೊಡವೆರದಿಪ್ಪ ಮಹಿಮಂಗೆ
ದುಃಖವಿಲ್ಲ ನೋಡ ಭಕ್ತಿಸ್ಥಲವಾದುದು.
ಭಕ್ತನ ಮಾರ್ಗವೆಂತೆಂದೊಡೆ-
ತನ್ನ ಗೃಹಕ್ಕೆ ಜಂಗಮವು ಹೋದಲ್ಲಿ ಶುದ್ಧವಲ್ಲದೆ
ಇದನರಿಯದೆ ಕಾಡದೈವಕ್ಕೆಲ್ಲ ಹರಕೆಯ ಮಾಡಿ
ಆ ದೈವದ ಹೆಸರಿನಲ್ಲಿ ಜಂಗಮವ ಕರೆತಂದು
ಉಣಲಿಕ್ಕಿದೆನಾದರೆ ಕಾರಿದ ಕೂಳಿಗಿಂದ ಕನಿಷ್ಠ ಕಾಣಾ.
ಅನ್ಯ ದೈವದ ಪೂಜೆಯಿಲ್ಲದಾತನೆ ಶಿವಭಕ್ತ ನೋಡಾ.
ತನ್ನ ಗುರುವು ಹಸ್ತಕ ಸಂಯೋಗವ ಮಾಡಿ,
ಲಿಂಗವ ಧರಿಸಿದ ಬಳಿಕ ಲಿಂಗವಲ್ಲದೆ ಅನ್ಯಪೂಜೆಯೇತಕ್ಕೆ?
ಇದನ್ಲರ್ವಿದರಿದು ಮಾಡಿದನಾದರೆ
ಪಾತಕವಲ್ಲದೆ ಮತ್ತಿಲ್ಲ ನೋಡಾ.
ಮೋಕ್ಷವೆಂಬುದೆಂದಿಗೂ ಇಲ್ಲ ನೋಡಾ.
ಹುಟ್ಟುಗೆಟ್ಟು ಬಟ್ಟಬಯಲಾದವನಿಗೆ ದುಃಖವುಂಟೆ?.
ಲಿಂಗದಲ್ಲಿ ನಿರ್ಭಯಲಾದವಂಗೆ ಸಂಕಲ್ಪವುಂಟೆ?.
ಮಹಾಜ್ಞಾನಿಗೆ ಕತ್ತಲೆಯುಂಟೆ?.
ಮಹಾಪ್ರಸಾದಿಗೆ ಸಂಕಲ್ಪಮುಂಟೆ?.
ಜ್ಞಾನಿಗಳಿಗೆನ್ನವರು ತನ್ನವರೆಂಬ ಭೇದಮುಂಟೆ?.
ಸದ್ಭಕ್ತಿಯುಳ್ಳಾತನು ತನ್ನ ಲಿಂಗವ ಪೂಜಿಸಿ
ಅನ್ಯರಮನೆಯಲ್ಲಿ ಭೋಗದಲ್ಲಿದ್ದನಾದರೆ
ಶ್ವಾನನ ಬಸುರಲ್ಲಿ ಬರುವು[ದು] ತಪ್ಪದು,
ಅರೆಭಕ್ತರಾದವರ ಗೃಹದಲ್ಲಿ ಹೋಗಿ ಅನ್ನವ ಮುಟ್ಟಿದರಾದರೆ,
ಅವನಿಗೆ ಗುರುವಿಲ್ಲ.
ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ನೋಡಾ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ./216
ದಶದಿಕ್ಕುಗಳಿಂದ ರೂಹಿಸಬಾರದಾಗಿ,
ಕಾಲಂಗಳಿಂದ ಕಲ್ಪಿಸಬಾರದು.
ಕಾಲಂಗಳಿಂದ ಕಲ್ಪಿಸಬಾರದಂಥ
ಅಖಂಡ ಚಿನ್ಮಾತ್ರ ಸ್ವರೂಪನಾದ ಶಿವನ
ಸ್ವಾನುಭಾವಜ್ಞಾನದಿಂ ಸಾಧಿಸಿ ಕಂಡ
ಶಾಂತ ಸ್ವಯಂಜ್ಯೋತ ಸ್ವರೂಪನಾದ ಶರಣ.
ಅಂಗಸಂಗವಿಲ್ಲದೆ ನಿಸ್ಸಂಗಿಯಾದ ಕಾರಣ ಉಪಮಿಸಬಾರದು.
ಕಡೆ ಮೊದಲಿಲ್ಲದಾಕಾಶವು ಖೇಚರಾದಿಗಳಿಂದ ಲೇಪವಿಲ್ಲದಂತೆ
ನಿತ್ಯ ನಿಜ ಜೈತನ್ಯಾಕಾರ ರೂಪನಾಗಿಹನು,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು./217
ದೇವಂಗೂ ಭಕ್ತಂಗೂ ದೇಹವೊಂದೇ ಪ್ರಾಣವೊಂದೇ
ಕರಣವೊಂದೇ ಇಂದ್ರಿಯಂಗಳೊಂದೇ ಆಗಿ
ಬಿಡದೆ ಕೂಡಿ ಸಮಭೋಗವಾಗಿ ಭೋಗಿಸಿ
ಸಮರಸ ಸುಖದಲ್ಲಿರ್ದುದನಂತಿಂತೆಂದುಪಮಿಸಬಹುದೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ,
ದೇವ ಭಕ್ತನ ಸಮ ಭೋಗವನು./218
ದೇವಾ, ನಿನ್ನ ಭಕ್ತನು ಶ್ರೋತ್ರಮುಖದಲ್ಲಿ
ಶಬ್ದ ಪದಾರ್ಥವ ನಿನಗೆ ಕೊಡುವನು.
ಆತಂಗೆ ನೀನು ಶಬ್ದಪ್ರಸಾದವ ಕೊಡುವೆ.
ತನ್ನ ತ್ವಕ್ಕಿನ ಮುಖದಲ್ಲಿ ಸ್ಪರ್ಶನಪದಾರ್ಥವ ನಿನಗೆ ಕೊಡುವನು.
ಆತಂಗೆ ನೀನು ಸ್ಪರ್ಶನ ಪ್ರಸಾದವ ಕೊಡುವೆ.
ನೇತ್ರಮುಖದಲ್ಲಿ ರೂಪುಪದಾರ್ಥವ ನಿನಗೆ ಕೊಡುವನು.
ಆತಂಗೆ ನೀನು ರೂಪುಪ್ರಸಾದವ ಕೊಡುವೆ.
ಜಿಹ್ವೆಯ ಮುಖದಲ್ಲಿ ರಸಪದಾರ್ಥವ ನಿನಗೆ ಕೊಡುವನು.
ಆತಂಗೆ ನೀನು ರುಚಿಪ್ರಸಾದವ ಕೊಡುವೆ.
ಘ್ರಾಣಮುಖದಲ್ಲಿ ಗಂಧಪದಾರ್ಥವ ನಿನಗೆ ಕೊಡುವನು.
ಆತಂಗೆ ನೀನು ಗಂಧಪ್ರಸಾದವ ಕೊಡುವೆ.
ಇಂತು ಭಕ್ತ ನಿನಗೆ ಸರ್ವಪದಾರ್ಥವ ಕೊಟ್ಟರೆ
ನೀನು ಪ್ರಸಾದವ ಕೊಡುವೆ.
“ಭಕ್ತಕಾಯ ಮಮಕಾಯಃ’ ವೆಂಬ ನಿನ್ನ ವಚನ ದಿಟವಾಗೆ,
ನೀನು ಪ್ರಸಾದಿಯನರಿದು ಸಲಹುತ್ತಿಪ್ಪೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./219
ದೇಹವೆಂಬ ಹುತ್ತಿನೊಳಗೆ, ನಿದ್ರೆಯೆಂಬ ಕಾಳೋರಗನೆದ್ದು
ಕಡಿಯಲು ಮೂಛರ್ಿತರಾದರಯ್ಯ,
ದೇವದಾನವ ಮಾನವರೊಳಗಾದೆಲ್ಲಾ ಜೀವರು.
ಆವಾಗ ಬಂದು ಕಡಿದೀತೆಂದು ಕಾಣಬಾರದು.
ದಿವಾ ರಾತ್ರಿಯೆನ್ನದೆ ಬಂದು ಕಡಿಯಲೊಡನೆ
ವಿಷ ಹತ್ತಿ ಸತ್ತವರಿಗೆಣೆಯೆಂಬಂತೆ
ಜೀವನ್ಮೃತರಾದರಯ್ಯ.
ಶಿವಜ್ಞಾನವೆಂಬ ನಿರ್ವಿಷವ ಕಾಣದೆ
ನಿದ್ರಾಸರ್ಪನ ಬಾಯಿಗೀಡಾದರು ಕಾಣಾ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ./220
ದೇಹವೆಂಬುದೊಂದು ನಡುಮನೆಗೆ,
ಕಾಲುಗಳೆರಡು ಕಂಭ ಕಂಡಯ್ಯ.
ಬೆನ್ನೆಲು ಬೆಮ್ಮರ ಎಲುಗಳು.
ನರದ ಕಟ್ಟು ಚರ್ಮದ ಹೊದಕೆ.
ಒಂದು ಮಠಕ್ಕೆ ಒಂಬತ್ತು ಬಾಗಿಲು.
ಆದಾರಿಯಾಗೆ ಹೋಹ ಬಾಹರಿಗೆ ಲೆಕ್ಕವಿಲ್ಲ.
ಒಡೆಯರಿಲ್ಲದ ಮನೆಯಂತೆ
ಆವಾಗ ಕೆಡುವದೆಂದರಿಯಬಾರದು.
ಬಿಡು ಮನೆಯಾಸೆಯ. ಬೇಗ ವಿರಕ್ತನಾಗು ಮರುಳೆ.
ಪಡೆವೆ ಮುಂದೆ ಮುಕ್ತಿಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾಹ ಸೌಖ್ಯವನು./221
ಧರೆ ಜಲ ಅಗ್ನಿ ವಾಯು ಅಂಬರವಿಲ್ಲದಂದು,
ಅಂತರಂತರ ಪದಿನಾಲ್ಕುಭವನ ನೆಲೆಗೊಳ್ಳದಂದು,
ದಿವಾ ರಾತ್ರಿ ಚಂದ್ರ ಸೂರ್ಯ ನಕ್ಷತ್ರ ಗ್ರಹರಾಶಿಗಳಿಲ್ಲದಂದು,
ಅಷ್ಟದಿಕ್ಕು ಅಷ್ಟಕುಲಪರ್ವತಗಳಿಲ್ಲದಂದು,
ಸಪ್ತಸಮುದ್ರಂಗಳು ಸಪ್ತದ್ವೀಪಂಗಳಿಲ್ಲದಂದು,
ಮಹಾಮೇರುವ ನವಖಂಡಪೃಥ್ವಿಯ ಮಧ್ಯದಲ್ಲಿ ಸ್ಥಾಪಿಸದಂದು,
ಸಿಡಿಲು ಮಿಂಚು ಚಳಿ ಮಳೆಗಳಿಲ್ಲದಂದು,
ನರ ಸುರ ತಿರ್ಯಗ್ಜಾತಿಗಳು ಸ್ಥಾವರ ಜಂಗಮಾತ್ಮಕವಾದ
ಸಮಸ್ತ ಪ್ರಪಂಚ ಪಸರಿಸದಂದು,
ನೀನೊಬ್ಬನೆ ಇರ್ದೆಯಲ್ಲಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./222
ಧ್ಯಾತೃ, ಧ್ಯಾನ ಧ್ಯೇಯವೆಂಬ ತ್ರಿವಿಧದ ಭೇದವನರಿದು,
ಪದಮಂತ್ರವಾಕ್ಯ ಪಿಂಡಸ್ವಾತ್ಮ ಚಿಂತನರೂಪ
ಸರ್ವ ಚಿದ್ರೂಪ ರೂಪಾತೀತ ನಿರಂಜನ ಧ್ಯಾನ
ಚತುರ್ವಿಧವನರಿದೊಂದುಮಾಡೆ,
ಧ್ಯಾತೃ ಧ್ಯಾನದೊಳಗಡಗಿ, ಧ್ಯಾನ ಧ್ಯೇಯದೊಳಗಡಗಿ,
ಧ್ಯೇಯವು ತನ್ನಲ್ಲಿ ತಾನೇ ವಿಶ್ರಮಿಸಿ ನಿಂದಿತ್ತಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./223
ನಡುರಂಗದ ಜ್ಯೋತಿ ಕವಲುವಟ್ಟೆಯಲ್ಲಿ ಕುಡಿವರಿದು
ಎಡಬಲದಲ್ಲಿ ಬೆಳಗುವ ಪರಿಯ ನೋಡಾ.
ಒಳ ಹೊರಗೆ ತಾನೊಂದೆಯಾಗಿ ಪರಿಪೂರ್ಣಬೆಳಗು ಪಸರಿಸಿ
ಬೆಳಗುವ ಪರಿಯ ನೋಡಾ.
ಅಖಂಡಾದ್ವಯ ವಿಶ್ವತೋಚಕ್ಷುಮಯವಾಗಿ ಬೆಳಗುವ
ಪರಿಯ ನೋಡಾ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಪರಂಜ್ಯೋತಿ,
ಬೆಳಗುವ ಪರಿಯ ನೋಡಾ./224
ನಡೆವ ಗತಿಗಳಲ್ಲಿ ನಿಮ್ಮ ಕೂಡಿ ನಡೆವೆನಯ್ಯ.
ಹಿಡಿವಲ್ಲಿ ಬಿಡುವಲ್ಲಿ ನಿಮ್ಮ ಕೂಡಿ ಹಿಡಿವೆನು ಬಿಡುವೆನಯ್ಯ,
ನುಡಿವಲ್ಲಿ ನಿಮ್ಮ ಕೂಡಿ ನುಡಿವೆನು.
ಒಡಲಿಂದ್ರಿಯಂಗಳೆಲ್ಲ ನಿಮ್ಮವಾಗಿ ಎನಗೊಂದೊಡೆತನವಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಾನು ನಿಮ್ಮೊಳಗಾಗಿ./225
ನಡೆವ ಬಟ್ಟೆಯ ಬಿಡಿಸಿ,
ನಡೆಯದೆ ಬಟ್ಟೆಯಲ್ಲಿ ನಡೆವಂತೆ ಮಾಡಿದನಯ್ಯ.
ನೋಡುವ ನೋಟವ ಬಿಡಿಸಿ,
ನೋಡುದುದ ನೋಡುವಂತೆ ಮಾಡಿದನಯ್ಯ.
ಕೇಳುವುದ ಕೇಳಲೀಯದೆ ಬಿಡಿಸಿ,
ಕೇಳುದದ ಕೇಳುವಂತೆ ಮಾಡಿದನಯ್ಯ.
ಕೂಡಬಾರದ ಘನವ ಕೂಡುವಂತೆ ಮಾಡಿ
ಪರಮಸುಖದೊಳಗಿರಿಸಿದನಯ್ಯಾ,
ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./226
ನನ್ನಿಂದರಿದೆನೆಂಬೆನೆ ನನ್ನಿಂದರಿದವನಲ್ಲ.
ನಿನ್ನಿಂದರಿದೆನೆಂಬೆನೆ ನಿನ್ನಿಂದರಿದವನಲ್ಲ.
ಅದೇನು ಕಾರಣವೆಂದಡೆ,
ಕಣ್ಣ ಬೆಳಗು ಸೂರ್ಯನ ಬೆಳಗು ಕೂಡಿ ಕಾಂಬಂತೆ,
ನನ್ನ ನಿನ್ನರಿವಿನ ಸಂಬಂಧದ ಬೆಂಬಳಿಯಲ್ಲಿ ಅರಿದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./227
ನರ ಸುರ ಮುನಿಗಳೊಳಗಲ್ಲ ಶರಣ.
ಜಾತಿ ಕುಲ ಗೋತ್ರವೆಂಬವರೊಳಗಲ್ಲ ಶರಣ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣನ ಪರಿ ಆವಲೋಕದೊಳಗೂ ಇಲ್ಲ./228
ನಾ ಬಲ್ಲೆ ತಾಬಲ್ಲೆನೆಂಬುವರೆಲ್ಲ
ಅಲ್ಲ ಅಹುದೆಂಬ ಗೆಲ್ಲ ಸೋಲದ ಮಾತ ಕಲಿತು ಆಡುವರಲ್ಲದೆ
ಅದನಾರು ಮೆಚ್ಚುವರು?
ಕಾಲೂರಿ ಒಂದೆರಡು ಯೋಜನ ನಡೆಯಬಹುದಲ್ಲದೆ
ತಲೆಯೂರಿ ನಡೆಯಬಹುದೆ?
ನೆಲೆಯರಿಯದ ಮಾತ ಹಲವ ನುಡಿದಡೇನು ಫಲ?
ನೆಲಯರಿದ ಮಾತೊಂದೆ ಸಾಲದೆ?
ಹಲವು ದೇವರೆಂದು ಹೊಲಬುಗೆಟ್ಟು ನುಡಿವರು.
ಕುಲಸ್ವಾಮಿ ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಬ್ಬನೆ,
ದೇವರೆಂದರಿದೆಡೆ ಸಾಲದೆ?/229
ನಾನು ನಾನೆಂಬ ಅಹಂಭಾವವಳಿದು,
ಜ್ಞಾನಾನಂದಮಯ ತಾನಾದಬಳಿಕ,
ತನ್ನಿಂದನ್ಯವಾದುದೊಂದಿಲ್ಲವಾಗಿ,
ಕಾಣಲೊಂದಿಲ್ಲ, ಕೇಳಲೊಂದಿಲ್ಲ, ಅರಿಯಲೊಂದಿಲ್ಲ.
ಅನಾದಿ ಅವಿದ್ಯಾಮೂಲ ಮಾಯಾಜಾಲ
ಚರಾಚರ ನಾಸ್ತಿಯಾಯಿತ್ತು.
ಇನ್ನೇನ ಹೇಳಲುಂಟು ನಿಜಲಿಂಗೈಕ್ಯಂಗೆ?
ವಿಷಯಾವಿಷಯಂಗಳೆಂಬ ಉಭಯಭಾವವಡಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿಹನು./230
ನಾನು ಭಕ್ತನಪ್ಪೆನಯ್ಯ ನಿಮ್ಮ ಶ್ರೀ ಚರಣಸೇವಕನಾಗಿ,
ನಾನು ಯುಕ್ತನಪ್ಪೆನಯ್ಯ `ಯತ್ರ ಮಾಹೇಶ್ವರಸ್ತತ್ರ ಶಿವಃ’ ಎಂಬ
ವಿಶ್ವಾಸದನುಭಾವಿಯಾಗಿ.
ನಾನು ಮುಕ್ತನಪ್ಪೆನಯ್ಯ ಮನ ಪ್ರಾಣ ನಿಮ್ಮಲ್ಲಿ ನಿಂದು
ನಾನೆಂಬುದಿಲ್ಲವಾಗಿ.
ಇಂತು ತನುವಿನಲ್ಲಿ ಹೊರೆಯಿಲ್ಲದೆ, ಮನದಲ್ಲಿ ವ್ಯಾಕುಲವಿಲ್ಲದೆ,
ಪ್ರಾಣದಲ್ಲಿ ಹಮ್ಮಿಲ್ಲದೆ, ತನು ಮನ ಪ್ರಾಣ ನಿಮ್ಮಲ್ಲಿ ಸಂದಿಪ್ಪ
ನಿಚ್ಚಟ ಭಕ್ತನಾಗಿಪ್ಪೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮಲ್ಲಿ./231
ನಾನು ಹಿರಿಯ, ತಾನು ಹಿರಿಯರೆಂಬವರೆಲ್ಲ ಹಿರಿಯರೇ?
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ-
ದೊಳಗಿಪ್ಪವರೆಲ್ಲಾ ಹಿರಿಯರೇ?
ಆಟಮಟ ಕುಟಿಲ ಕುಹಕ ಪಿಸುಣತನದಲ್ಲಿಪ್ಪವರೆಲ್ಲಾ ಹಿರಿಯರೇ?
ಸರ್ಪ ಸಾವಿರ ಕಾಲ ಇರ್ದಡೇನು, ವಿಷಬಿಡುವುದೇ?
ಹಾವುಮೆಕ್ಕೆಯು ಹಣ್ಣಾದಡೇನು, ಮಧುರವಪ್ಪುದೇ?
ಅರಿಷಡ್ವರ್ಗದುರವಣಿಗೊಳಗಾದಡಾತ ಹಿರಿಯನೇ?
ಸಮತೆ ಸಮಾಧಾನ ತುಂಬಿ ತುಳುಕದೆ,
ಸುಜ್ಞಾನಭರಿತವಾದಡಾತ ಹಿರಿಯನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದೆ
ಬರುಮಾತಿನಲ್ಲಿ ಹಿರಿಯನೆಂದಡೆ
ನಾಚಿತ್ತೆನ್ನ ಮನವು./232
ನಾನೆಲ್ಲಿಂದ ಬಂದೆ?
ಎನಗೆ ಈ ದೇಹ ಬಂದ ಪರಿಯಾವುದು?
ಇನ್ನು ಮುಂದೆ ಎಯ್ದುವ ಗತಿಯಾವುದು?
ಎಂಬ ನಿತ್ಯಾನಿತ್ಯವಿಚಾರ ಹುಟ್ಟದವರಿಗೆ ಎಂದೆಂದಿಗು
ಬಳಲಿಕೆ ಬಿಡದು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನೀವು ಬರಿಸಿದ ಭವಾಂತರದಲ್ಲಿ ಬರುತಿಹರಾಗಿ,
ನಾನು ಕಂಡು ಮರಗುತಿದ್ದೆನು./233
ನಾಲ್ಕು ಬಾಗಿಲು ಕೂಡಿದ ಠಾವಿನಲ್ಲಿ
ತ್ರಿಮಂಡಲದ ಮಧ್ಯದ ಚತುರ್ದಳದ ನಡುವಣ
ಚತುರ್ಪಿಠಸಿಂಹಾಸನದ ಮೇಲೆ ಮೂರ್ತಿಗೊಂಡು
ನೋಡುವ ಬೆಡಗಿನ ಪುರುಷನ ತುಡುಕಿ ಹಿಡಿದು ನೆರೆಯಬಲ್ಲರೆ,
ಆತ ಸರ್ವನಿರ್ವಾಣಿ, ಸಕಲ ನಿಃಕಲಾತ್ಮಕನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೆ ಬೇರಿಲ್ಲ./234
ನಿಚ್ಚ ನಿಚ್ಚ ಲಿಂಗಪೂಜೆಯ ಮಾಡಿ,
ನಿಚ್ಚ ನಿಚ್ಚ ಜಂಗಮಕ್ಕೆ ಶರಣೆಂದು, ಜಂಗಮಪೂಜೆಯ ಮಾಡಿ,
ನಿಚ್ಚ ನಿಚ್ಚ ಪಾದೋದಕ ಪ್ರಸಾದವ ಕೊಂಡು,
ಮತ್ತೆ, ಆ ಜಂಗಮವ ಧಿಕ್ಕರಿಸಿ ನುಡಿದು,
ಹುಸಿಯಟಮಟವನಾರೋಪಿಸಿ,
ಜಂಗಮದ ಕೈಗೆ, ನಾಲಗೆಗೆ ಶಿಕ್ಷೆಯ ಮಾಡಬೇಕೆಂಬವರಿಗೆ
ಗುರುವುಂಟೆ? ಲಿಂಗವುಂಟೆ? ಜಂಗಮವುಂಟೆ?
ಪಾದೋದಕ ಪ್ರಸಾದವುಂಟೆ? ಇಲ್ಲವಾಗಿ.
ಅವರಿಗೆ ಪೂಜಾಫಲ ಮುನ್ನವೆಯಿಲ್ಲವಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./235
ನಿಚ್ಚ ಸಾವಿರ ನೋಂಪಿಯ ನೋಂತು,
ಒಂದು ದಿನ ಹಾದರವನಾಡಿದರೆ,
ಆ ನೋಂಪಿಯು ತನಗೆ ಫಲಿಸುವುದೇ ಅಯ್ಯಾ?
ಹಲವು ಕಾಲ ಗುರು ಲಿಂಗ ಜಂಗಮವನಚರ್ಿಸಿ ಆರಾಧಿಸುತ್ತ,
ಒಮ್ಮೆಯಾದರು ದೂಷಣೆಯ ಮಾಡಿದಡೆ,
ಆ ಪೂಜಾಫಲ ತಮಗೆ ಸಿದ್ಧಿಸುವುದೇ? ಸಿದ್ಧಿಸದಾಗಿ.
ಅನೇಕ ಆಯಾಸದಲ್ಲಿ ಗಳಿಸಿದ ಧನವ,
ನಿಮಿಷದಲ್ಲಿ ಅರಸು ದಂಡವ ಕೊಂಡಂತಾಯಿತ್ತು ಇವರ ಭಕ್ತಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಒಲವಿಲ್ಲದ ಕಾರಣ./236
ನಿಜವನರಿದು ನಿರ್ಮಲಜ್ಞಾನಿಯಾದ ಕರ್ಮರಹಿತ ಶಿವಯೋಗಿ
ಕರ್ಮಕಾಯನಲ್ಲ. ಕರ್ಮಭೋಗಿಯಲ್ಲ.
ಕರ್ಮಾಧೀನನು ತಾ ಮುನ್ನವೆ ಅಲ್ಲ.
ಅದೆಂತೆಂದಡೆ,
ಪರಿಪಕ್ಷವಾದ ಹಣ್ಣು ರಸ ತುಂಬಿ ತೊಟ್ಟು ಕಳೆದ ಬಳಿಕ,
ಮರಳಿ ವೃಕ್ಷವನಡರಿ, ತೊಟ್ಟು ಹತ್ತುವುದೇ ಹೇಳ?
ಆಗಾಮಿ ಪರಿಪಕ್ವವಾಗಿ ಸಂಚಿತವಾಯಿತ್ತು.
ಸಂಚಿತ ಪರಿಪಕ್ವವಾಗಿ ಪ್ರಾರಬ್ಧವಾಯಿತ್ತು.
ಪ್ರಾರಬ್ಧ ಪರಿಪಕ್ವವಾಗಲು ತ್ರಿವಿಧ ಕರ್ಮನಾಸ್ತಿಯಾಯಿತ್ತು.
ಇದ್ದು ಕರ್ಮವುಂಟೆ? ಇಲ್ಲವಾಗಿ.
“ಯಥಾ ವೃಕ್ಷಫಲಂ ವೃಕ್ಷಾತ್ ಪತನಂ ಲಭತೇ ಸ್ವತಃ|
ತಥಾ ಸರ್ವಾಣಿ ಕರ್ಮಾಣಿ ಪತಂತಿ ಶಿವಯೋಗಿನಾಂ’
ಎಂದುದಾಗಿ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು ಕರ್ಮರಹಿತರು./237
ನಿತ್ಯಾನಂದ ನಿಜದಾಕಾರದ
ಪರಮ ನಿರ್ಮಲ ಲಿಂಗತೇಜದೊಳಗೆ
ಮನವಳಿದು ಲೀಯವಾದ ಮತ್ತೆ ತಾನೆಂಬುದಿಲ್ಲ.
ಅನಾದಿ ಅವಿದ್ಯವ ಮೀರಿ ನಿಂದ
ಪರಮಾನಂದ ಜ್ಞಾನಪಾದೋದಕ ರೂಪು
ತಾನೆಯಲ್ಲದೆ ಅನ್ಯವಿಲ್ಲ.
ಇದು ಕಾರಣ, ಅರಿವುದೊಂದಿಲ್ಲ ಅರುಹಿಸಿಕೊಂಬುದೊಂದಿಲ್ಲ.
ಅರಿವ ಅರುಹಿಸಿಕೊಂಬುವ ಈ ಉಭಯ ಒಂದಾದ ನಿಲವೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬೆನು./238
ನಿತ್ಯಾನಂದ ಸಂವಿದಾಕಾರ
ಜ್ಯೋತಿರ್ಲೆಂಗಮೂರ್ತಿಯಾದ ಶಿವನು
ಜಲ ಗಂಧ ಅಕ್ಷತೆ ಪತ್ರೆ ಪುಷ್ಪ ಧೂಪ ದೀಪ
ನೈವೇದ್ಯ ತಾಂಬೂಲಂಗಳಿಂದ
ಪೂಜೆ ಮಾಡುವ ಪೂಜಕರ ಭಾವಕ್ಕೆ ನಿಲುಕವನಲ್ಲ ನೋಡಾ.
ಮತ್ತೆಂತೆಂದಡೆ: ಭಾವವ ಬಲಿದು ನೆನಹ ನೇತಿಗೊಳಿಸಿ,
ಜ್ಞಾನಪೂಜೆಯ ಮಾಡುವ ಮಹಂತರಿಗೆ ಸಿಲ್ಕುವ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./239
ನಿತ್ಯಾನಿತ್ಯವಿಚಾರವಿಡಿದು ನೋಡಿದಡೆ,
ಭೂಮಿ ಜಲ ಅನಲ ಮರುತ ಆಕಾಶವೆಂಬ ಭೌತಿಕಂಗಳು
ತಾನಲ್ಲವೆಂದರಿದು,
ಕರಣೇಂದ್ರಿಯ ವಿಷಯಂಗಳ ಹೊತ್ತಾಡುವ ಜಡದೇಹ
ಮೃತ್ತಿಕೆಯ ಪುತ್ಥಳಿಯಂತೆ ಇಹಕಾರಣ
ಆ ದೇಹ ತಾನಲ್ಲವೆಂದರಿದು,
ಭವಭೀತಿ ಆಮಯ ಅರಿಗಳಾರ ಕೂಡಿಹ ಜೀವನು
ತಾನಲ್ಲವೆಂದರಿದು, ಇಹಪರವೆಂಬ ಇದ್ದೆಸೆಯ ಹೊದ್ದದೆ,
ತನುಗುಣವಳಿದು ಮನೋವಿಕಾರ ಮಾಣ್ದು,
ಮಾಯೋಪಾಧಿಕನಲ್ಲದ ನಿತ್ಯ ಸದೋದಿತ
ಚಿದ್ಘನ ಪರಿಪೂರ್ಣ ಬೋಧಪ್ರಭು ಜಗದಾದಿಮೂರ್ತಿ,
ವಾಙ್ಮನಕ್ಕಭೇದ್ಯ ಶಿವಾಂಶಿಕ ಪರಮಾತ್ಮ ತಾನೆಂದರಿದು,
ಆ ಮಹಾಘನ ಶಿವಲಿಂಗದೊಳವಿರಳನಾಗಿ
ಶಿವಜ್ಞಾನಾನುಭಾವದಿಂದ ಶಿವನೊಳಗೆ
ಅನನ್ಯನುಭಾವಿಯಾಗಿಹಾತನೆ ಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./240
ನಿಮ್ಮ ಪೂಜೆಯ ಮಾಡುವೆನೆಂತಯ್ಯ
ಪೂಜಾದ್ರವ್ಯ ಸತ್ಕೀಯೆಯೊಳಗೆ ನೀವಿಪ್ಪಿರೆಂದರಿದು.
ನಿಮ್ಮ ಸ್ತೋತ್ರದ ಮಾಡುವೆನೆಂತಯ್ಯ
ನೀವು ಅಕ್ಷರಾತ್ಮಕರೆಂದರಿದು.
ನಿಮ್ಮ ಜಪಿಸುವೆನೆಂತಯ್ಯ
ನೀವು ಅನಾಹತಮೂಲಮತ್ರ ಸ್ವರೂಪರೆಂದರಿದು.
ನಿಮ್ಮ ಧ್ಯಾನಿಸುವೆನೆಂತಯ್ಯ
ನೆನೆವ ಮನದ ಕೊನೆಯ ಮೇಲೆ ನೀವಿಪ್ಪಿರೆಂದರಿದು.
ನಿಮ್ಮ ಅರಿವುತಿಪ್ಪೆನೆಂತಯ್ಯ
ಅರಿವಿಂಗೆ ಅರಿವಾಗಿ ನೀವಿಪ್ಪಿರೆಂದೆದರಿದು.
ಇಂತು ಎನ್ನ ನಾನರಿದ ಬಳಿಕ
ಪೂಜಾಸ್ತೋತ್ರ ಜಪ ಧ್ಯಾನ ಅರಿವೆಲ್ಲವು ನೀವೆಯಾದ ಮತ್ತೆ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮಗೆ ಮಾಡುವ ಸತ್ಕಿ ್ರಯೆಯೊಂದೂ ಇಲ್ಲ./241
ನಿರಾಳದಿಂದ ಸಹಜವಾಯಿತ್ತು.
ಸಹಜದಿಂದ ಸೃಷ್ಟಿಯಾಯಿತ್ತು.
ಸೃಷ್ಟಿಯಿಂದ ಸಂಸಾರವಾಯಿತ್ತು.
ಸಂಸಾರದಿಂದ ಅಜ್ಞಾನವಾಯಿತ್ತು.
ಆಜ್ಞಾನದಿಂದ ಬಳಲುವ ಜೀವರ,
ಬಳಲಿಕೆಯ ತೊಲಗಿಸಲು ಜ್ಞಾನವಾಯಿತ್ತು.
ಜ್ಞಾನದಿಂದಲಾಯಿತ್ತು ಗುರುಕರುಣ.
ಗುರುಕರುಣದಿಂದಲಾಯಿತ್ತು ಸುಮನ.
ಸುಮನದಿಂದಲಾಯಿತ್ತು ಶಿವಧ್ಯಾನ.
ಶಿವಧ್ಯಾನದಿಂದಲಾಯಿತ್ತು ನಿರ್ದೆಹ
ನಿರ್ದೆಹದಿಂದಲಾಯಿತ್ತು ಸಾಯುಜ್ಯ.
ಸಾಯುಜ್ಯದಿಂದಲಾಯಿತ್ತು ಸರ್ವಶೂನ್ಯ.
ಆ ಸರ್ವಶೂನ್ಯದಲ್ಲೊಡಗೂಡಿ ನಿಂದಾತಂಗೆ,
ಮರಳಿ ಜನ್ಮ ಉಂಟೆ ಹೇಳಾ?,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./242
ನೀರು ನೀರು ಕೂಡಿ, ಕ್ಷೀರ ಕ್ಷೀರವ ಕೂಡಿ,
ಅಗ್ನಿ ಅಗ್ನಿಯ ಕೂಡಿದಂತೆ.
ತನ್ನೊಳಗೆ ಶಿವನು, ಶಿವನೊಳಗೆ ತಾನು ಅಡಗಿ ಏಕವಾದ ಮತ್ತೆ,
ತಾ ಶಿವನಾದೆನೆಂಬ ಅಹಂಭಾವವಿಲ್ಲ ನೋಡಯ್ಯಾ.
ಸರ್ವಾತ್ಮರೆಂಬ ಪರತತ್ವ ತಾನಾದ ಮತ್ತೆ,
ಭೇದಾಭೇದ ಶಂಕೆಯೆಂಬುದು ಏನೂ ಇಲ್ಲ ನೋಡಯ್ಯಾ.
ನಿತ್ಯ ನಿರ್ವಿಕಾರ ನಿಸ್ಸೀಮ ವ್ಯೋಮಾತೀತ
ನಿರ್ವಿಕಲ್ಪ ನಿಜ ತಾನಾದ ಮತ್ತೆ,
ಭೂಮ್ಯಾದಿ ಭೂತ ಗ್ರಹ ನಕ್ಷತ್ರ ದೇವ ಮನುಷ್ಯ
ತಿರ್ಯಗ್ಜಾತಿಗಳೆಂಬವೇನೂ ಇಲ್ಲ ನೋಡಾ.
ಸತ್ತು ಚಿತ್ತು ಆನಂದಲಕ್ಷಣವಿದೆಂಬ ಜ್ಞಾನಶೂನ್ಯವಾಗಿ
ಶಬ್ದಮುಗ್ಧವಾದ ಮತ್ತೆ
ಪರಬ್ರಹ್ಮಅಪರಬ್ರಹ್ಮವೆಂಬ ನಾಮವು ಇಲ್ಲ.
ತಾನಲ್ಲದೆ ಮತ್ತೇನೂ ಇಲ್ಲ ನೋಡಾ.
“ಜಲೇ ಜಲಮಿವ ನ್ಯಸ್ತಂ ವಹ್ನೌ ವಹ್ನಿರಿವಾರ್ಪಿತಃ
ಪರಬ್ರಹ್ಮಣಿ ಲೀನಾತ್ಮನ ವಿಭಾಗೇನ ದೃಶ್ಯತೇ’
ಇಂತೆಂದುದಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾದ ಲಿಂಗೈಕ್ಯನಿರವು./243
ನೀರು ನೇಣಾದಿ ದುರ್ಮರಣದಲ್ಲಿ ಹೋದರುಯೆಂಬ,
ನುಡಿಗಳನು ಮಾನವರುಯೆಂದರೆ,
ಅವರ ಸೊಲ್ಲ ಕೇಳಲಾಗದು.
ಶಿವ ಕಳುಹಿಸಿದೊಡೆ ಬಹುದಲ್ಲದೆ ತನ್ನಿಚ್ಛೆಯಲ್ಲಿ ಬರುವದುಂಟೆ?
ಇದ ಕಿವಿಗೊಟ್ಟು ಕೇಳುವ ಪಾತಕರ ನುಡಿಯ ಕೇಳಲಾಗದು.
ಆ ಶಿವನು ಕಳುಹಿಸಿದರೆ ಬಹುದಲ್ಲದೆ,
ತನ್ನಿಚ್ಛೆಯಲ್ಲಿವೊಂ[ದಿ] ಬರುವುದುಂಟೆ?,
ಇದ ಕೇಳಲಾಗದು ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ./244
ನುಡಿಯೊಳಗೆ ಸತ್ಯ, ಹೃದಯದಲ್ಲಿ ಯುಕ್ತಿ.
ಅರುವಿನಲ್ಲಿ ವಿರಕ್ತಿ ದೊರಕೊಂಡರೆ,
ಅಂತವರಲ್ಲಿಯೇ ಭಕ್ತಿ ದೊರಕೊಂಬುದು.
ಆ ಭಕ್ತಿ, ತಾನೆ ಮುಕ್ತಿ ಮಾತೆಯಾದ ಕಾರಣ
ಭಕ್ತಿಯಿಂದ ಶಿವನಲ್ಲಿ ನಿರ್ಮಲ ಚಿತ್ತವನಿರಿಸಿ ನೆನೆವುದು,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ./245
ನೆಲವಿಲ್ಲದಲ್ಲಿಯ ಉದಕವ ತಂದು,
ಗಿಡವಿಲ್ಲದಲ್ಲಿಯ ಪುಷ್ಟವ ತಂದು,
ಒಡಲಿಲ್ಲದ ಲಿಂಗಕ್ಕೆ, ಕಡೆಮೊದಲಿಲ್ಲದೆ ಪೂಜೆಯ ಮಾಡುವೆನು,
ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಂಗೆ./246
ಪಂಚೇಂದ್ರಿಯವೆಂಬ ಹೆಡೆಯನುಳ್ಳ ಸಂಸಾರಸರ್ಪ ದಷ್ಟವಾಗಲು,
ಪಂಚವಿಷಯವೆಂಬ ವಿಷ ಹತ್ತಿ, ಮೂಛರ್ಾಗತರಾದರೆಲ್ಲ
ಸಮಸ್ತ ಲೋಕದವರೆಲ್ಲ.
ಸರ್ವರ ಕಚ್ಚಿ ಕೂಡಿಯಾಡುವ ಸರ್ಪನ ಬಾಯ,
ಕಟ್ಟಲರಿಯದೆ ಮರಣವಾದರಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನರಿಯದವರೆಲ್ಲ./247
ಪಕ್ವ ಫಲದಲ್ಲಿಹ ಸ್ವಾದುವಿನಂತೆ,
ತುಪ್ಪದಲ್ಲಿಹ ಕಂಪಿನಂತೆ, ಚಿನ್ನದಲ್ಲಿಹ ಬಣ್ಣದಂತೆ,
ಅಲ್ಲಿಯೆ ಹುಟ್ಟಿ ಅಲ್ಲಿಯೆ ತೋರುವಂತೆ,
ಎನ್ನಂತರಂಗದಲ್ಲಿರ್ದು ತೋರುತ್ತಿಹ ನಿಮ್ಮ ನಿಜವನು,
ನಿಮ್ಮಿಂದರಿದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./248
ಪದಾರ್ಥದ ಪೂರ್ವವ ಕಳೆದಲ್ಲದೆ ಹಿಡಿಯಬಾರದು.
ಮುಟ್ಟಿ ಕೊಡಬಾರದು. ಮುಟ್ಟದೆ ಕೊಡಬಾರದು.
ಅಂದೆಂತೆಂದೆಡೆ: ತನ್ನ ಹಸ್ತದೊಳಗೆ ಲಿಂಗದ ಹಸ್ತವ ಕೂಡಿ
ಮುಟ್ಟದೆ ಮುಟ್ಟಿಸುವ ಕ್ರಮವನರಿದು ಕೊಡಬೇಕು.
ರುಚಿಗಳ ತಾನರಿದು ಕೊಡಬಾರದು.
ತಾನರಿಯದೆ ಕೊಡಬಾರದು.
ಅದೆಂತೆಂದಡೆ: ತನ್ನ ಜಿಹ್ವೆಯಲ್ಲಿ ಲಿಂಗದ ಜಿಹ್ವೆಯ ಕೂಡಿ ರುಚಿಗಳನರ್ಪಿಸುವ
ಕ್ರಮವನರಿದು ಕೊಡಬೇಕು.
ಅನರ್ಪಿತವ ಸೋಂಕಬಾರದು.
ಅರ್ಪಿತಕ್ಕೆ ಬಂದುದ ನೂಕಬಾರದು.
ಇಂತಿವರ ವಿಚಾರವನರಿದು ಅರ್ಪಿಸಿ
ಪ್ರಸಾದವ ಭೋಗಿಸುವಾತನೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಸರ್ವ ಸುಯಿಧಾನಿ./249
ಪದಾರ್ಥವನರ್ಪಿಸಿ ಪ್ರಸಾದವ ಪಡೆದೆವೆಂದೆಂಬರು
ನಾವಿದನರಿಯೆವು.
ಪದಾರ್ಥವಾವುದು ಪ್ರಸಾದವಾವುದೆಂದರಿಯರು.
ಪದಾರ್ಥವೆ ಆತ್ಮನು. ಪ್ರಸಾದವೇ ಪರವಸ್ತುವು.
ಪದಾರ್ಥವ ಪರಮಸ್ತುವಿನಲ್ಲಿ ಅರ್ಪಿಸಿ,
ಪದಾರ್ಥಭಾವವಿಲ್ಲದೆ ಪ್ರಸಾದಭಾವವಾದುದೆ,
ಪ್ರಸಾದವ ಪಡೆದುದು
ಈ ಭೇದವನರಿಯದೆ,
ಪರದ್ರವ್ಯವಾದ ಸಕಲ ಪದಾರ್ಥವನರ್ಪಿಸಿ,
ಪ್ರಸಾದವ ಪಡೆದೆವೆಂಬ
ಭ್ರಾಂತಬಾಲಕರಿಂದ ಬಿಟ್ಟು ಬಾಲಕರುಂಟೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?/250
ಪರಮಾತ್ಮಲಿಂಗದಲ್ಲಿ ಅರ್ಪಿತವಾಗಿ
ಉಚ್ಚರಿಸಿ ಕೊಂಬುದೊಂದಕ್ಷರದ ನೆಲೆಯನರಿದು
ಪ್ರಾಣವ ಲಿಂಗಕ್ಕೆ ಅರ್ಪಿತವ ಮಾಡಿ
ಅಂಗವ ಲಿಂಗಕ್ಕೆ ಅರ್ಪಿತವ ಮಾಡಿದಡೆ
ಅತಂಗೆ ರುಜೆ ಕರ್ಮ ಮರಣಂಗಳಿಲ್ಲ.
ಆತನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ,
ಸರ್ವಾರ್ಪಿತ ಸಾವಧಾನ ಪ್ರಸಾದಭೋಗಿಯೆನಿಸುವನು./251
ಪರಮೇಶ್ವರನ ಪರಮೈಶ್ವರ್ಯವೆನಿಪ, ನಿತ್ಯ ನಿಜವಾದ
ವಿಭೂತಿಯನು, ಭಕ್ತಿಯಿಂದೊಲಿದು ಧರಿಸಲು,
ನಿತ್ಯರಪ್ಪರು ನೋಡಿರೇ.
ಮುನ್ನ ಜಮದಗ್ನಿ ಕಶ್ಯಪ ಅಗಸ್ತ್ಯ ಮೊದಲಾದ ಋಷಿಗಳು,
ಸಮಸ್ತ ದೇವತೆಗಳು, ಮೂರು ಮೂರು ಬಾರಿ,
ಆಯುಷ್ಯವ ಪಡದೆರೆಂದು ವೇದಗಳು ಸಾರುತ್ತಿವೆ.
`ತ್ರಿಯಾಯುಷಂ ಜಮದಗ್ನೇ:ಕಶ್ಯಪಸ್ಯ ತ್ರಿಯಾಯುಷಂ
ಅಗಹಸ್ತ್ಯಸ್ಯ ತ್ರಿಯಾಯುಷಂ ಯುದ್ದೇವಾನಾಂ ತ್ರಿಯಾಯುಷಂ
ತನ್ಮೇ ಅಸ್ತು ತ್ರಿಯಾಯುಷಂ’ ಎಂದುವು ಶ್ರುತಿಗಳು.
ಇದನರಿದು ಧರಿಸಿರೇ,
ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಬಲ್ಲಡೆ./252
ಪರಿಶುದ್ಧ ಮನದಿಂದ ಲಿಂಗವ ಧರಿಸಿ,
ನಿಯಮ ವ್ರತ ಶೀಲ ಧರ್ಮದಲ್ಲಿ ನಿರತನಾದ ಭಕ್ತನ,
ಅಂಗವೆಂಬ ಅರಮನೆಯಲ್ಲಿಹ ಲಿಂಗಕ್ಕೆ
ಮನವೆ ಮಂಚ, ನೆನಹೆ ಹಾಸುಗೆ,
ಅನುಭಾವವೆ ಒರಗು, ಶಾಂತಿಯೆ ಆಲವಟ್ಟವು,
ಸಮತೆಯೆ ಸಂತೋಷವಾಗಿ,
ಸದ್ಭಕ್ತನ ಹೃದಯ ಸಿಂಹಾನಸದಲ್ಲಿ ಮೂರ್ತಿಗೊಂಡಿಪ್ಪನಯ್ಯಾ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./253
ಪಿಂಡ ಪಿಂಡವೆಂದೇನು?
ತನು ಪಿಂಡವೆ? ಮನ ಪಿಂಡವೆ? ವಾಯು ಪಿಂಡವೆ? ಅಲ್ಲ: ಆದಿ ಪಿಂಡವಿಡಿದು ಬಂದ ಜ್ಞಾನಪಿಂಡವೆ ಪಿಂಡ.
ಅದನರಿಯಲಿಲ್ಲ.
ಅದು ಕ್ಷೀರದೊಳಗಣ ಅಜ್ಯದಂತೆ.
ಪಾಷಾಣದೊಳಗಣ ಪಾವಕದಂತೆ ಅಡಗಿಪರ್ುದಾಗಿ.
ಅಂತಪ್ಪ ನಿರ್ಮಲ ಪಿಂಡ ನಿಮ್ಮ ಶರಣಂಗಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./254
ಪೂರ್ವಜನ್ಮದಲ್ಲಿ ಮಾಡಿದ ಕರ್ಮ,
ಈಗಿನ ಜನ್ಮದಲ್ಲಿ ಭೋಗಿಸಲಿಕ್ಕೀಡಾಯಿತ್ತು.
ಈಗ ಮಾಡಿದ ಕರ್ಮ,
ಮುಂದಕ್ಕೆ ಬಿತ್ತಿದ ಬೆಳೆಯನುಂಬಂತೆ ಬಪರ್ುದು ತಪ್ಪದು.
ಈ ಕರ್ಮವುಳ್ಳನ್ನಕ್ಕ ಆರಿಗಾದರೂ ಬಳಲಿಕೆ ಬಿಡದು.
ಈ ಕರ್ಮ ಹರಿದಂದಿಗೆ ನಿಮ್ಮ ಕಾಂಬರು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./255
ಪೂರ್ವದ್ವಾರಮಂ ಬಂಧಿಸಿ ಅಧೋದ್ವಾರವ ಬಲಿದು
ಊಧ್ರ್ವದ್ವಾರವ ತೆಗೆದು ಎವೆ ಹಳಚದೆ ಒಳಗೆ
ನಿಮ್ಮ ನೋಡುತ್ತಿದ್ದೆನಯ್ಯಾ.
ಬಂದುದ ಹೋದುದನರಿಯದೆ ನಿಮ್ಮ ನೋಡುತ್ತಿದ್ದೆನಯ್ಯಾ.
ಮನ ನಿಂದುದು ನಿಮ್ಮಲ್ಲಿ.
ಹೆರೆಹಿಂಗದ ಪರಮ ಸುಖ ದೊರೆಕೊಂಡಿತ್ತು.
ಇನ್ನಂಜೆನಂಜೆ ಜನನ ಮರಣವೆರಡೂ ಹೊರಗಾದವು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ,
ನಿಜಸುಖ ಸಮನಿಸಿತ್ತಾಗಿ./256
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮನೆಂಬ
ಅಷ್ಟತನುಗಳಲ್ಲಿ, ಶಿವನಧಿಷ್ಠಾತೃವಾದನೆಂದಡೆ
ಅಷ್ಟತನುಗಳು ಶಿವನಾಗಲರಿಯವು.
ಮತ್ತೆ, ಶಿವನ ಬಿಟ್ಟು ಬೇರೆ ತೋರಲರಿಯವು.
ಅಷ್ಟತನುಗಳೆಲ್ಲ ಸೋಪಾಧಿಕವಲ್ಲದೆ ನಿಜತನುವಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಂಗೆ.
ಅಷ್ಟತನುಮೂರ್ತಿಯೆಂಬುದುಪಚಾರವು./257
ಪೃಥ್ವಿಯ ಬೀಜ ಅಪ್ಪುವ ಕೂಡಿ, ಅಗ್ನಿಯಲ್ಲಿ ಮೊಳೆದೋರಿತ್ತು.
ವಾಯುವಿನಲ್ಲಿ ಶಾಖೆದೋರಿ, ಆಕಾಶದಲ್ಲಿ ಪಲ್ಲವಿಸಿತ್ತು.
ಮಹದಾಕಾಶದಲ್ಲಿ ಫಲದೋರಿ, ಶೂನ್ಯದಲ್ಲಿ ಹಣ್ಣಾಯಿತ್ತು.
ಅದು ನಿರಾಳದಲ್ಲಿ ರಸತುಂಬಿ, ನಿರ್ವಯಲಲ್ಲಿ ತೊಟ್ಟು ಬಿಟ್ಟಿತ್ತು.
ಆ ಹಣ್ಣ ಪ್ರಭುದೇವರಾರೋಗಿಸಿದರಾಗಿ ನಿರ್ವಯಲಾದರು.
ಆ ಪ್ರಭುದೇವರಾರೋಗಿಸಿ ಮಿಕ್ಕ ಪ್ರಸಾದವ
ಬಸವಣ್ಣ ಮೊದಲಾದಸಂಖ್ಯಾತ ಮಹಾಗಣಂಗಳು
ಸ್ವೀಕರಿಸಿದರಾಗಿ ಶಿವನೊಳಗಾದರು.
ನಾನು ಮಹಾಗಣಂಗಳ ಪ್ರಸಾದವನಾರೋಗಿಸಿದೆನಾಗಿ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ತನ್ನೊಳಗೆನ್ನನಿಂಬಿಟ್ಟುಕೊಂಡನು./258
ಪ್ರಕಾಶದ್ವಾರ ಗಂಧದ್ವಾರ ಶಬ್ದದ್ವಾರವೆಂಬ
ಅರುದ್ವಾರ ಕೂಡಿದ ಠಾವಿನಲ್ಲಿ,
ನಾದ ಬಿಂದು ಕಲೆಯೆಂಬ ಸಿಂಹಾಸನದ ಮೇಲೆ
ಮೂರ್ತಿಗೊಂಡು,
ಶಬ್ದ ರೂಪು ಗಂಧಂಗಳ ಗ್ರಹಿಸುವಾತ
ನೀನಲ್ಲದೆ ಮತ್ತಾರು ಹೇಳಾ?
ಗಳದಲ್ಲಿ ನಿಂದು ಷಡುರಸ್ನಾನದ ರುಚಿಯ
ಜಿಹ್ವೆಯಲ್ಲಿ ಸ್ವಾದಿಸುವಾತ ನೀನಲ್ಲದೆ ಮತ್ತಾರು ಹೇಳಾ?
ಸರ್ವಾಂಗದಲ್ಲಿ ನಿಂದು, ತ್ವಗಿಂದ್ರಿಯ ಮುಖದಲ್ಲಿ
ಸ್ಪರ್ಶನವ ತಳೆದುಕೊಂಬಾತ ನೀನಲ್ಲದೆ ಮತ್ತಾರು ಹೇಳಾ?
ಮನವೆಂಬ ಮುಖದಲ್ಲಿ ನಿಂದು ಪರಿಣಾಮವನನುಭವಿಸುವಾತ
ನೀನಲ್ಲದೆ ಮತ್ತಾರು ಹೇಳಾ?
ಸರ್ವಾವಯವಂಗಳಲ್ಲಿ ಸರ್ವಮುಖವಾಗಿ ಭೋಗಿಸಿ
ಪ್ರಸಾದವ ಕರುಣಿಸಿದ ಕೃಪಾಮೂರ್ತಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನೀನಲ್ಲದೆ ಮತ್ತಾರು ಹೇಳಾ?/259
ಪ್ರಸಾದ ಪ್ರಸಾದವೆಂದೆಂಬರು,
ಪ್ರಸದಾದಾದಿಕುಳವನಾರು ಬಲ್ಲರು?
ಪ್ರಸಾದವೆಂಬುದು ಅತಕ್ರ್ಯ ಅಪ್ರಮಾಣವು.
ಗುರುವಿನಲ್ಲಿ ಶುದ್ಧಪ್ರಸಾದವೆನಿಸಿತ್ತು.
ಲಿಂಗದಲ್ಲಿ ಸಿದ್ಧಪ್ರಸಾದವೆನಿಸಿತ್ತು.
ಜಂಗಮದಲ್ಲಿ ಪ್ರಸಿದ್ಧಪ್ರಸಾದವೆನಿಸಿತ್ತು.
ಇಂತೀ ತ್ರಿವಿಧಮುಖವೊಂದೇ ಪ್ರಸಾದವಾಗಿ ತೋರಿ ಮತ್ತೆ
ವಿಶ್ವದೊಳಗೆ ವಿಶ್ವತೋಮುಖವಾಗಿ ಪ್ರಕಾಶಿಸುತ್ತ,
ಎನ್ನಂತರಂಗದಲ್ಲಿ ಬೆಳಗುವ ಮಹಾಪ್ರಸಾದವು
ಎನ್ನ ಸರ್ವಾಂಗಮಯವಾಗಿ ತೋರುತ್ತಿದೆ.
ಶಿವ! ಶಿವಾ!! ನಿಮ್ಮ ಪ್ರಸಾದದ
ಮಹಿಮೆಯನೇನೆಂದುಪಮಿಸುವೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./260
ಪ್ರಸಾದವ ಬಯಸಿ ಪರವನರಿದೆನೆಂಬವಂಗೆ,
ಬೇರೆ ಮತ್ತೆ ಸಾಧಿಸಿ ಅರಿದೆನೆಂಬ ಬಳಲಿಕೆಯದೇಕೇ?
ಜಂಗಮವೆ ಲಿಂಗವೆಂದು ನಂಬಿ ಪೂಜೆಯ ಮಾಡಲು,
ಅದು ತಾನೆ, ಲಿಂಗಪೂಜೆ ನೋಡಾ.
ಆ ಜಂಗಮ ಭಕ್ತಿಯಿಂದ
ಪ್ರಸಾದ ಸಾಧ್ಯವಹುದು. ಮುಂದೆ ಪರವನರಿವ.
ಇದು ಕಾರಣ,
ಜಂಗಮಭಕ್ತಿಯೇ ವಿಶೇಷ, ಇದು ತಪ್ಪದು,
ನಿಜಗುರು ಸ್ವತಂತ್ರಲಿಂಗೇಶ್ವರನ ನಂಬಿ ನಿಜವನೈದುವಂಗೆ./261
ಪ್ರಸಾದವನು ಪ್ರಸಾದಿಯನು ಪದಾರ್ಥದ ಭೇದವನು
ಅರಿವುದರಿದು ನೋಡಾ.
ಮುನ್ನಾದಿಯ ಪ್ರಸಾದವು ಅರ್ಪಣಕ್ಕೆ ಬಂದಲ್ಲಿ
ಉಪಚಾರದಿಂದ ಪದಾರ್ಥವೆನಿಸಿತ್ತು.
ಅರ್ಪಣದ ಮೇಲೆ ಪ್ರಸಾದವೆನಿಸಿತ್ತು.
ಈ ಪ್ರಸಾದದಾದಿ ಕುಳವ ಬಲ್ಲಡೆ, ಆತ ಪ್ರಸಾದಿ.
ಪ್ರಸಾದಿಯ ಬಿಟ್ಟು ಪ್ರಸಾದವಿಲ್ಲ, ಪ್ರಸಾದ ಬಿಟ್ಟು ಪ್ರಸಾದಿಯಿಲ್ಲ.
ಪ್ರಸಾದವೂ ಪ್ರಸಾದಿಯೂ ಕೂಡಿ ಸೋಂಕದ ಪದಾರ್ಥವಿಲ್ಲ.
ಇದು ಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದಿಯ ಪ್ರಸಾದದಿಂದ,
ಮೂರು ಲೋಕವೆಲ್ಲಾ ಜೀವಿಸಿತ್ತಾಗಿ,
ಅಂತಪ್ಪ ಪ್ರಸಾದಿಗೆ ನಮೋ ನಮೋ ಎನುತ್ತಿರ್ದೆನು./262
ಪ್ರಾಣಲಿಂಗೈಕ್ಯವಾದ ಬಳಿಕ ವಿಧಿ ನಿಷೇಧ, ಪುಣ್ಯ ಪಾಪ
ಮಾನ ಅಪಮಾನ, ಹೆಚ್ಚು ಕುಂದುಗಳೆಂಬವೇನೂ ಇಲ್ಲ.
ಆತನಿರವು ಬೆಂದ ಪಟದಂತೆ, ಬಯಲ ಚಿತ್ರಿಸಿದ ರೂಹಿನಂತೆ,
ತನ್ನ ತೋರದೆ ತಾನೇ ಶಿವನಾಗಿ ನಿಂದ,
ನಿಜಗುರು ಸ್ವತಂತ್ರಸಿದ್ಧಲಂಗೇಶ್ವರ ನಿಮ್ಮ ಶರಣನು./263
ಪ್ರಾಣಾಪಾನಸಂಘಟದಿಂದ ಪ್ರಾಣನ ಗುಣವಳಿದು
ಪ್ರಾಣಮಯಲಿಂಗವಾದ ಪ್ರಾಣಲಿಂಗಕ್ಕೆ ಸಮತೆಯೇ ಸ್ನಾನೋದಕ.
ಪರಿಪೂರ್ಣಭಾವವೇ ವಸ್ತ್ರ ಶಕ್ತಿಗಳೇ ಯಜ್ಞಸೂತ್ರ.
ವಿದ್ಯೆಯೇ ಸುಗಂಧ. ಭೂತದಯೆಯೇ ಅಕ್ಷತೆ.
ಪಂಚ ವಿಷಯಂಗಳೇ ಪುಷ್ಟ. ಅಂತಕರಣಂಗಳೇ ಧೂಪ.
ಪಂಚೇಂದ್ರಿಯಂಗಳೇ ದೀಪ.
ಸುಖದುಃಖಶೂನ್ಯವಾದ ಆತ್ಮಕಳೆಯೇ ನೈವೇದ್ಯ.
ಗುಣತ್ರಯಂಗಳೇ ತಾಂಬೂಲ.
ಪ್ರಾಣಸಮರ್ಪಣವೇ ನಮಸ್ಕಾರವು.
ಶಾಂತಿಯೇ ಪುಷ್ಪಾಂಜಲಿಯಾಗಿ,
ಈ ಪರಿಯಿಂದ,
ಪ್ರಾಣಲಿಂಗಪೂಜೆಯ ಮಾಡಬಲ್ಲಾತನೇ ಪ್ರಾಣಲಿಂಗಿ.
ಆತನೇ ನಿಜಾನುಭಾವಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ನಿರ್ಮಳ ಜ್ಞಾನಿ./264
ಬಂದುದ ಕಿರಿದು ಮಾಡಿ ಬಾರದುದ ಹಿರಿದು ಮಾಡಿ
ಆವಾಗ ಚಿಂತಿಸಿ ಬಳಲುತ್ತಿ[ಹಿ]ರೇಕೆ?
ಇರುಹೆ ಅರುದಿಂಗಳ ದವಸವ ಕೂಡಹಾಕುವಂತೆ
ತಾ ಕಿರಿದಾದರೂ ಆಸೆ ಹಿರಿದಾಯಿತ್ತು.
ಸ್ಥೂಲಕಾಯವಾದ ಮದಗಜಕ್ಕೇನು,
ಮುಂದಕ್ಕೆ ಬೇಕೆಂಬ ಆಸೆಯುಂಟೆ? ಇಲ್ಲ.
ಇರುಹೆಯ ಆನೆಯ ಅಂತರವ ನೋಡಿರಣ್ಣ.
ಅರಿದು ಸಲಹುವ ಶಿವನಿದ್ದ ಹಾಗೆ
ಬರಿದೆ ಆಸೆಯಿಂದಲೇಕೆ ಸಾವಿರಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾಧೀನವನರಿಯದೆ?./265
ಬಡಕಲ ಪಶುವಿಂಗೆ ಬಲುದಂಡಿಯ ಕಟ್ಟಿದರೆ
ಎಳೆದೆಳೆದು ಸಾವಂತೆ,
ಸಾವುತ್ತಿದೆ ನೋಡ.
ಅಜ್ಞಾನ ಜಡಜೀವರು ದೇಹವೆಂಬ ದಂಡಿಯ ಕಟ್ಟಿಸಿಕೊಂಡು,
ಬಿಡಲುಪಾಯುವ ಕಾಣದೆ, ಹೊತ್ತು ತೊಳಲುತ್ತಿದ್ದರಲ್ಲ,
ಜನ್ಮಜನ್ಮಾಂತರದಲ್ಲಿ.
ಶಿವಭಕ್ತಿಯೆಂಬ ಸಜ್ಜನಿಕೆ ಬಂದರೀದೇಹವೆಂಬ
ದಂಡಿಯ ಬಿಡಿಸುವ[ನ]ಯ್ಯಾ,
ಕರುಣಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./266
ಬಯಲಲ್ಲಿ ಹುಟ್ಟಿದ ಶಿಶುವಿಂಗೆ,
ಬಯಲ ತಾಯಿ ಬಂದು ಮೊಲೆಯ ಕೊಟ್ಟರೆ,
ಬಯಲಮೃತವನುಂಡು ತೃಪ್ತಿಯಾಗೆ,
ಬಯಲು ಸ್ವಯಂವೆಂದರಿದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಬಯಲೊಳಗೆ,
ಬಯಲಾಯಿತ್ತು ಶಿಶು ನೋಡಾ./267
ಬಳ್ಳಿಯಲಡಗಿ ಕೋಟರದಲ್ಲಿ ತೋರುವ ತಾವರೆಯ ಬೀಜದಂತೆ,
ನೀನು ಎನ್ನಂತರಂಗದಲ್ಲಡಗಿರ್ದ ಕಾರಣ,
ಅಲ್ಲೆ ತೋರುವೆ ಎಲೆ ಅಯ್ಯ.
ರನ್ನದ ಕಾಂತಿಯಂತೆ, ಎನ್ನೊಳಗಡಗಿರ್ದು ಮೈದೋರದ ಭೇದವ,
ನಿಮ್ಮಲ್ಲಿ ಕಂಡೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./268
ಬಿಂದು ನಾದವನೊಂದು ರೂಪು ಮಾಡಿ
ಮನವ ಸಂಧಿಸಿ ಬಂಧಿಸಿ ನಿಲಿಸಿ
ಇಂದ್ರಿಯಂಗಳನೇಕಮುಖವ ಮಾಡಿ
ಚಂದ್ರ ಸೂರ್ಯರನೊಂದು ಮಾರ್ಗದಲ್ಲಿ ನಡೆಸಿ
ಚೌದಳಮಧ್ಯದ ಜ್ಞಾನಪೀಠದಲ್ಲಿರ್ದ ಅಮೃತಲಿಂಗವ ಕಂಡು
ಕೂಡುವ ಬೆಡಗಿನ ಯೋಗವ ನಿಮ್ಮ ಶರಣರಲ್ಲದೆ
ಉಳಿದ ಭವರೋಗಿಗಳೆತ್ತ ಬಲ್ಲರಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?/269
ಬಿಸಜತಂತುವಿನ ಶೃಂಖಲದಿಂದ,
ಮದಗಜ ಬಂಧವೊಡೆಯಬಲ್ಲುದೆ?
ತರಗೆಲೆ ಮುಸುಕಿದಡೆ, ದಾವಾನಲ ಕೆಡಬಲ್ಲುದೆ?
ಮಂಜಿನ ಪೌಜು ಸೂರ್ಯನ ಮುತ್ತಬಲ್ಲುದೆ?
ನಿಮ್ಮನರಿದಾತಂಗೆ, ಪುಣ್ಯ ಪಾಪ ಕರ್ಮ ಲೇಪಿಸಬಲ್ಲವೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./270
ಬೀಜದಿಂದ ಅಂಕುರ ತೋರಿದ ಬಳಿಕ
ಬೀಜ ನಾಶವಪ್ಪುದು ನೋಡಯ್ಯ.
ಪುಷ್ಟದಿಂದ ಫಲ ತೋರಿದ ಬಳಿಕ
ಪುಷ್ಟ ನಾಶವಪ್ಪುದು ನೋಡಯ್ಯ.
ಸತ್ಕರ್ಮದಿಂದ ತತ್ತ್ವ ವ್ಯಕ್ತವಾದ ಬಳಿಕ
ಕರ್ಮ ನಾಶವಪ್ಪುದು ನೋಡಯ್ಯ.
ಈ ಪರಿಯಿಂದ ಅಂಕುರ ಫಲದಂತೆ,
ತಮ್ಮಲ್ಲಿ ತನ್ಮಯವಾಗಿರ್ದ ತತ್ತ್ವವ ತಾವರಿಯದೆ,
ಹಲವು ಶಾಸ್ತ್ರವನೋದಿ ತಿಳಿವಿಲ್ಲದ ಮೂಢರೆಲ್ಲ
ಹೊಲಬುಗೆಟ್ಟು ಹೋದರಲ್ಲ.
ಅದೆಂತೆಂದಡೆ: ಗೋಪ ಕಕ್ಷೆಯಲ್ಲಿ ಛಾಗದ ಮರಿಯನಿಟ್ಟು
ಮರಿಯ ಕಾಣೆನೆಂದು ಬಾವಿಯ ನಿಲಿಕಿ ನೋಡೆ
ಬಾವಿಯ ನೀರೊಳಗೆ ಮರಿಯ ಬಿಂಬವ ಕಂಡು
ಬಾವಿಯ ್ಲಲ್ವಿ ಬೀಳುವ ಗೋಪನಂತೆ,
ಉಭಯಕುಚಮಧ್ಯಕೋಟರದಲ್ಲಿ ನಿದ್ರೆಗೆಯ್ವುತಿರ್ದ
ಸುತನ ಮರೆದು, ಸುತನ ಕಾಣೆನೆಂದು ರೋದನವ
ಮಾಡುವ ಮೂಢಸ್ತ್ರೀಯಂತೆ,
ತಮ್ಮಲ್ಲಿದ್ದ ನಿಜತತ್ತ್ವವ ತಾವರಿಯದವರು
ಆತ್ಮಾರ್ಥವಾಗಿ ಕೆಟ್ಟು ವ್ಯರ್ಥರಾದರೆಲ್ಲಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./271
ಬೆಳಗು ಬರಲು ಕತ್ತಲೆ ಹರಿಯಿತ್ತು.
ಸುಳಿಗಾಳಿ ಸುಸರವಾಯಿತ್ತು.
ಇಳೆ ಜಲ ವಹ್ನಿಯೊಳಗಡಗಿತ್ತು.
ಮೇಲೆ ಮಳೆಗಾಲ ಘನವಾಯಿತ್ತು.
ಅರಳಿದ ಪುಷ್ಪದೊಳಗೆ ಘಳಿಲನೆ ಮೂರ್ತಿಗೊಂಡನೊಬ್ಬ ಶರಣ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ
ಲಿಂಗದೊಳಗಾದನು ಶರಣನು./272
ಬ್ರಹ್ಮ ವಿಷ್ಣು ಇಂದ್ರಾದಿ ದಿಕ್ಪಾಲಕರ ಪದವೆಲ್ಲ
ತೃಣವತ್ತಾಯಿತ್ತು ಲಿಂಗಪದದ ಮುಂದೆ.
ಯಕ್ಷ ಗಂಧರ್ವಾದಿಗಳ ಪದವೆಲ್ಲ
ತೃಣವತ್ತಾಯಿತ್ತು ಲಿಂಗಪದದ ಮುಂದೆ.
ಇನ್ನುಳಿದ ಪದವಂತಿರಲಿ,
ರುದ್ರಪದ ಪ್ರಮಥಪದ ಘನವೆಂಬೆನೇ?
ಕ್ಷಣಿಕವಾದವು ಲಿಂಗಪದದ ಮುಂದೆ.
ಇದು ಕಾರಣ
ಲಿಂಗಪದಕ್ಕಿಂಥ ಇನ್ನಾವುದೂ ಘನವಿಲ್ಲೆಂದರಿದು
ಲಿಂಗಪದದಲ್ಲಿದ್ದ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು./273
ಬ್ರಹ್ಮ ವಿಷ್ಣುಗಳಿಗಗೋಚರ ಪ್ರಸಾದವು.
ಸಿದ್ಧ ಗಂಧರ್ವರಿಗಸಾಧ್ಯ ಪ್ರಸಾದವು.
ನರಸುರ ಮನುಮುನಿಗಳಿಗಭೇದ್ಯ ಪ್ರಸಾದವು.
ವಿಶ್ವದೊಳು ಪರಿಪೂರ್ಣವಾಗಿ,
ವಿಶ್ವಕ್ಕಿತೀತವೆನಿಸಿದ ಪರಮ ಪ್ರಸಾದವು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮಶರಣಂಗೆ ಸಾಧ್ಯ, ಉಳಿದವರಿಗಸಾಧ್ಯವು./274
ಬ್ರಹ್ಮಕಲ್ಪಿತವಾದ ತ್ರಿಪುರನುರುಹಬೇಕೆಂದು,
ಪರಮೇಶ್ವರನು ತ್ರಿಯಕ್ಷಿಯಿಂದ ನೋಡುತ್ತಿರಲು,
ಆ ಮೂರು ನೇತ್ರಂಗಳಿಂದ ಉದಕದ ಬಿಂದುಗಳು,
ಭೂಮಿಯ ಮೇಲೆ ಪತನವಾಗಲು,
ಸರ್ವಾನುಗ್ರಹಾರ್ಥವಾಗಿ, ರುದ್ರಾಕ್ಷಿಯ ವೃಕ್ಷಂಗಳು
ಹುಟ್ಟಿದವಂದು ನೋಡಾ.
ಆ ರುದ್ರಾಕ್ಷಿಯ ವೃಕ್ಷದ ಬೀಜಂಗಳ ಧರಿಸಿದವರು, ಸ್ಮರಿಸಿದವರು,
ಕೊಂಡಾಡಿದವರು, ರುದ್ರಾಕ್ಷಿಯಲ್ಲಿ ಜಪವ ಮಾಡಿದವರು,
ಕೈವಲ್ಯವನಿತೆಗೆ ವಲ್ಲಭರಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ
ಸುಖದಿಹರು ನೋಡಾ./275
ಬ್ರಹ್ಮನಾಳಾಗ್ರದ ಸಹಸ್ರದಳಕಮಲ ಕರ್ಣಿಕಾಮಧ್ಯದೊಳು,
ದ್ಯುಮಣಿ ಶಶಿ ಶಿಖಿ ಕೋಟಿಬೆಳಗ ಮೀರಿ ತೋರುವ
ಪರಂಜ್ಯೋತಿಯನು,
ಸುಮನ ಸುಜ್ಞಾನ ಸದ್ಭಾವನೆಗಳಿಂದ ನೆನೆನೆನೆದು,
ಅರಿದರಿದು ಭಾವಿಸಿ ಭಾವಿಸಿ,
ಶಿವಸುಖಾನಂದದೊಳಗೋಲಾಡುತ್ತ,
ಶಿವಸುಖ ಸಹಸ್ರಮಡಿಯಾಗಿ ಮುಸುಕಿ,
ತಾನಲ್ಲದೆ ನಾನೆಂಬುದಕ್ಕೆ ತೆರಹುಗೊಡದೆ ನಿಂದಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ,
ತಾನು ತಾನಾದ ಶರಣನ ಏನ ಹೇಳಬಹುದು?/276
ಬ್ರಹ್ಮಸ್ಥಾನದ ಬಳಿಯ ಸಹಸ್ರದಳಕಮಲ ಮಧ್ಯದಲ್ಲಿ
ಸೂಕ್ಷ್ಮರಂಧ್ರವೆಂಬ ಒಂದು ಕೈಲಾಸದ್ವಾರವುಂಟು.
ಆ ದ್ವಾರಕವಾಟವ ತೆಗೆದು ನೋಡಲು
ಕೋಟಿ ಚಂದ್ರಪ್ರಕಾಶದ ದಿವ್ಯಪೀಠದ ಮೇಲೆ
ಮೂರ್ತಿಗೊಂಡಿದ್ದ ಶಿವನ ಕಂಡು
ಆ ನೋಡಿದ ನೋಟವಲ್ಲಿಯೆ ಸಿಕ್ಕಿ
ಬಾವವಚ್ಚೊತ್ತಿ, ಸರ್ವಕರಣಂಗಳು ನಿವೃತ್ತಿಯಾಗಿ
ಮನ ಉನ್ಮನಿಯಲ್ಲಿ ನಿಂದು
ಸಮರಸ ಸಮಾಧಿಯಲ್ಲಿ ಇದ್ದನಯ್ಯಾ ನಿಮ್ಮ ಶರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./277
ಬ್ರಹ್ಮಾದಿ ದೇವತೆಗಳೇನು ಮುಕ್ತಿ ದಾನಶೀಲರೇ? ಅಲ್ಲ.
ಮಾಯಾಪಾಶದಲ್ಲಿ ಬದ್ಧರಾದವರೆಲ್ಲ ಮುಕ್ತಿ ದಾನಶೀಲರಹರೇ?
ಮುಕ್ತಿ ದಾನಶೀಲ ಶಿವನೊಬ್ಬನಲ್ಲದಿಲ್ಲವೆಂದು
ನಂಬಿ ದೃಢವಿಡಿವುದು.
ಹಲವ ಹಂಬಲಿಸಿ ಬಳಲಲೇಕೆ?.
ಶ್ರೀಗುರುವಚನವ ತಿಳಿದು ನೋಡಿ ನೆನೆದು ಸುಖಿಯಹುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಮುಕ್ತಿ ದಾನಶೀಲನ./278
ಬ್ರಾಹ್ಮಣ ಮೂರ್ಖ ಪಂಡಿತ ಬ್ರಹ್ಮಚಾರಿ ಗೃಹಸ್ಥ
ವಾನಪ್ರಸ್ಥ ಯತಿಯಾದಡಾಗಲಿ,
ಶ್ರೀರುದ್ರಾಕ್ಷಿಯನೊಲಿದು ಧರಿಸುವುದು ಕಾಣಿರಣ್ಣ.
ಮತ್ತೆ, ಜಪಕಾಲದಲ್ಲಿ, ತಪಕಾಲದಲ್ಲಿ, ದೇವಪೂಜೆಯಲ್ಲಿ,
ಶ್ರೀರುದ್ರಾಕ್ಷಿಯನೊಲಿದು ಧರಿಸುವುದು ಕಾಣಿರಣ್ಣ.
ಈ ಶ್ರೀಮಹಾ ರುದ್ರಾಕ್ಷಿಯನೊಲಿದು ಧರಿಸಿದ ಮಹಾತ್ಮನು,
ಹೆಜ್ಜೆ ಹೆಜ್ಜೆಗೆ ಅಶ್ವಮೇಧಶತಯಾಗದ ಫಲವ ಪಡೆದು,
ಬಳಿಕ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ,
ಸುಖದಿಹನು ಕಾಣಿರಣ್ಣಾ./279
ಭಕ್ತಂಗೆ ವ್ರತವಾರರಲ್ಲಿ ತದ್ಗತವಾಗಿಹುದೆ ಭಕ್ತಿ.
ಅದೆಂತೆಂದಡೆ
ಗುರುವೇ ಶಿವನೆಂದರಿದು,
ಗುರುವಾಜ್ಞೆಯ ಪಾಲಿಸುವುದೇ ಗುರುವ್ರತ.
ಗುರುಮುಖದಲ್ಲಿ ಬಂದ ಲಿಂಗದ ಪೂಜೆಯಲ್ಲಿ,
ನಿಯತಾತ್ಮನಾಗಿ ಭಾವ ಸಮೇತವಾದುದು ಲಿಂಗವ್ರತ.
ಜಂಗಮವೇ ಮಹಾಲಿಂಗವೆಂದರಿದು,
ಪೂಜಾದಿ ಕ್ರಿಯೆಯಿಂದ ಧನವನರ್ಪಿಸುವುದೇ ಚರವ್ರತ.
ಗುರು ಲಿಂಗ ಜಂಗಮದ
ಪ್ರಸಾದ ಸೇವನಾನುಭವವೇ ಪ್ರಸಾದವ್ರತ.
ಲೋಕಪಾವನವಾದ ಶ್ರೀಗುರುಪಾದಾಂಬ್ಲುಜ್ವವ,
ಸ್ನಾನಪಾನಾದಿಗಳಿಂದಾಚರಿಸುವುದೇ ಪಾದೋದಕವ್ರತ.
ಗುರು ಲಿಂಗ ಜಂಗಮ ಪಾದೋದಕ ಪ್ರಸಾದದಲ್ಲಿ
ತಲ್ಲೀನವಾದ ಭಕ್ತಿಯೇ ಭಾಕ್ತಿಕವ್ರತ.
ಇಂತೀ ಷಡ್ವಿಧವ್ರತವನರಿದಾಚರಿಸುತ್ತಿಪರ್ಾತನೇ ಸದ್ಭಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./280
ಭಕ್ತನ ಕಾಯವೆ ಶಿವನ ಕಾಯ, ಶಿವನ ಕಾಯವೆ ಭಕ್ತನ ಕಾಯ.
ಶಿವ ಶಿವ, ಭಕ್ತ ಬೇರೆಯೆ? ಶಿವ ಬೇರೆಯೆ? ಒಂದೆ ಕಾಣಿರಯ್ಯ.
ಅದೆಂತೆಂದಡೆ.
`ಭಕ್ತ ದೇಹಿಕ ದೇವ, ದೇಹಿಕ ಭಕ್ತ’
ಎಂದು ಶ್ರುತಿ ಹೊಗಳುವ ಕಾರಣ,
ಭಕ್ತಂಗೂ ದೇವಂಗೂ ಕಾಯವೊಂದೆ, ಪ್ರಾಣವೊಂದೇ.
ಎರಡೆಂಬ ಪರಿಭಾಷೆಯ ನುಡಿಯಲಾಗದು ಭಕ್ತರಾದವರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./281
ಭಕ್ತನಾದಡೆ ಇಂದ್ರಿಯಂಗಳ ಭಕ್ತರ ಮಾಡಿ,
ತನುಗುಣಂಗಳ ಭಕ್ತರ ಮಾಡಿ,
ಅಂತಃಕರಣಂಗಳ ಭಕ್ತರ ಮಾಡಿ,
ಅವಸ್ಥಾತ್ರಯಂಗಳನು ಅರ್ಪಿತವ ಮಾಡಿ,
ತಾನು ಲಿಂಗಾರ್ಪಿತನಾಗಿ, ಪ್ರಸಾದಗರ್ಭದಲ್ಲಿ
ಭರಿತನಾದ ಪ್ರಸಾದಿಗೆ ಬೇರಾಶ್ರಯವಿಲ್ಲ.
ತಾನೇ ಚಿದ್ರೂಪನು, ಭಾವಸುಖ ಸ್ವರೂಪನು,
ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./282
ಭಕ್ತಸ್ಥಲ ಬಸವಣ್ಣಂಗಾಯಿತ್ತು.
ಮಾಹೇಶ್ವರಸ್ಥಲ ಮಡಿವಾಳಂಗಾಯಿತ್ತು.
ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು.
ಪ್ರಾಣಲಿಂಗಿಸ್ಥಲ ಸಿದ್ಧರಾಮಯ್ಯಂಗಾಯಿತ್ತು.
ಶರಣಸ್ಥಲ ಪ್ರಭುದೇವರಿಗಾಯಿತ್ತು.
ಐಕ್ಯಸ್ಥಲ ಅಜಗಣ್ಣಂಗಾಯಿತ್ತು.
ಎನಗಿನ್ನಾವ ಸ್ಥಲವೂ ಇಲ್ಲವೆಂದು ನಾನಿರಲು,
ಇಂತಿವರೆಲ್ಲಾ ಷಡುಸ್ಥಲ ಪ್ರಸಾದವನಿತ್ತರಾಗಿ,
ನಾನು ಮುಕ್ತನಾದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./283
ಭಕ್ತಿ ಜ್ಞಾನ ವೈರಾಗ್ಯದಿಂದಲ್ಲದೆ ಮುಕ್ತಿಯನೈದಬಾರದು.
ಭಕ್ತಿ ಜ್ಞಾನ ವೈರಾಗ್ಯವೇ ಮುಕ್ತಿಮಾರ್ಗಕ್ಕೆ ತ್ರಿವಿಧ ಸೋಪಾನ.
ಭಕ್ತಿ ಜ್ಞಾನ ವೈರಾಗ್ಯವಿಲ್ಲದೆ ತ್ರಿಪದವ ದಾಂಟಬಾರದು.
ಭಕ್ತಿ ಜ್ಞಾನ ವೈರಾಗ್ಯವಾವುದೆಂದಡೆ: ಗುರು ಲಿಂಗ ಜಂಗಮದಲ್ಲಿ
ತನುವಂಚನೆ ಮನವಂಚನೆ ಧನವಂಚನೆಯಿಲ್ಲದೆ,
ತ್ರಿವಿಧವನೂ ವಿಶ್ವಾಸದೊಡಗೂಡಿ ಕೂಡುವುದೇ ಭಕ್ತಿ.
ತನ್ನ ಸ್ವರೂಪವನರಿದು ಶಿವಸ್ವರೂಪವನರಿದು
ಶಿವನ ತನ್ನ ಐಕ್ಯವನರಿವುದೇ ಜ್ಞಾನ.
ಮಾಯಾಪ್ರಪಂಚು ಮಿಥ್ಯವೆಂದರಿದು ಇಹಪರದ
ಭೋಗಂಗಳ ಹೇಯೋಪಾಯದಿಂದ ತೊಲಗಿಸುವುದೇ ವೈರಾಗ್ಯ.
ಇದು ಕಾರಣ,
ಭಕ್ತಿ ಜ್ಞಾನ ವೈರಾಗ್ಯವುಳ್ಳವನೇ ಸದ್ಯೋನ್ಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./284
ಭಕ್ತಿಯ ಭಾವನಿಷ್ಠೆ ನಿಬ್ಬೆರಸಲಾಗಿ
ಶಿವನ ತನ್ನ ವಶವ ಮಾಡಿತ್ತು ಭಕ್ತಿ.
ಶಿವನ ನಡೆಸಿತ್ತು ಭಕ್ತಿ. ನುಡಿಸಿತ್ತು ಭಕ್ತಿ.
ಶಿವನನುಣಿಸಿ ಊಡಿಸಿ ತೊಡಿಸಿತ್ತು ಭಕ್ತಿ.
ಶಿವನ ಹಾಡಿಸಿ, ಕುಣಿದಾಡಿಸಿತ್ತು ಭಕ್ತಿ.
ಇಂತಲ್ಲದೆ ವಿರಕ್ತಿಯಿಲ್ಲ. ಜ್ಞಾನವಿಲ್ಲ.
ಇದು ಕಾರಣ,
ಭಕ್ತಿಯೇ ಮುಕ್ತಿಯ ಜನನಿ, ತಾನೆ ಬೇರಿಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೆಯ್ದುವಡೆ,
ಭಕ್ತಿಯಿಂದಲ್ಲದಾಗದು./285
ಭಾವಲಯವಾದ ಮತ್ತೆ, ಇನ್ನು ಭಾವಿಸಲೇನುಂಟು ಹೇಳಾ,
ಸಮ್ಯಗ್ಜ್ಞಾನಿಯಾದ ಮಹಾತ್ಮ ನಿರ್ಲೆಪಕಂಗೆ.
ಕಾರ್ಯ ಕಾರಣವೆಂಬವೆಲ್ಲ ಶೂನ್ಯವಾದವು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಲಿಂಗೈಕ್ಯಂಗೆ./286
ಭಾವಿಸಬಾರದ ಪ್ರಸಾದವ ರೂಹಿಸಬಾರದು.
ರೂಹಿಸಬಾರದ ಪ್ರಸಾದವ ಸಾಧಿಸಬಾರದು,
ಸಾಧಿಸಬಾರದ ಪ್ರಸಾದವ ಸಾಧಿಸಿ ಕಂಡೆಹೆನೆಂದು
ನರ ಸುರ ಮನು ಮುನಿಗಳು, ಜಪ ತಪ
ಹೋಮ ನಿತ್ಯನೇಮಂಗಳಿಂದರಿಸಿ
ತೊಳಲಿ ಬಳಲುತ್ತಿದ್ದರಲ್ಲಾ.
ಕಾಯವಂತರೆಲ್ಲರೂ ಕಳವಳಿಸುತ್ತಿದ್ದರು.
ಆ ಮಹಾಪ್ರಸಾದವು ಮುನ್ನಾದಿಯ
ಶರಣಂಗಲ್ಲದೆ ಸಾಧ್ಯವಾಗದು.
ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ
ಮಹಾಪ್ರಸಾದವು,
ಮಹಾಪ್ರಸಾದಿಗೆ ಸಾಧ್ಯ, ಉಳಿದವರಿಗಸಾಧ್ಯವು./287
ಭಾವಿಸಿಹೆನೆಂಬ ಭಾವಕರಿಗೆ ಭಾವಭೇದವುಂಟು.
ಆವಾವ ಪರಿಯಲ್ಲಿ ಭಾವಿಸಿದಡೇನು?
ಶಿವಭಾವ ನೆಲೆಗೊಂಡುದೆ ಭಾವ.
ಗುರುಬೋಧೆಯಿಂದ ಪರವನರಿದೆನೆಂಬವರಿಗೆ
ಆತ್ಮಸ್ವರೂಪವನರಿದಲ್ಲದಾಗದು.
ಆತ್ಮಸ್ವರೂಪವೆಂಬುವದು ಅಖಂಡ ಬ್ರಹ್ಮ.
ಸರ್ವಭೂತಾಂತಃಕರಣಾಶ್ರಿತ, ನಿಸ್ಸಂಗಕರ್ಮ ನಿಯಂತ್ರಿತ,
ಸರ್ವವ್ಯಾಪಿ, ನಿತ್ಯನಿರಂಜನ ಸಂವಿತ್ಸ್ವರೂಪ,
ಇಂತಪ್ಪ ಆತ್ಮನ ನೆಲೆಯನರಿದಾತನೇ ಮುಕ್ತನು.
ಅರಿಯದಾತನೇ ಬದ್ಧನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ./288
ಭಾವಿಸುವ ಭಾವದ ವಿಕಾರವಳಿದು, ನಿರ್ಭಾವ ನೆಲೆಗೊಂಡು
ಚಿದಾಕಾಶರೂಪನಾದ ಶರಣಂಗೆ ಭಾವವಿಲ್ಲ.
ಭಾವವಿಲ್ಲವಾಗಿ ಮನವಿಲ್ಲ.
ಮನವಿಲ್ಲವಾಗಿ ನೆನೆಯಲಿಲ್ಲ.
ನೆನೆಯಲಿಲ್ಲದನುಪಮ ಸುಖಸಾರಾಯ ಶರಣ
ಸರಿತ್ ಸಮುದ್ರವ ಕೂಡಿ ತೆರೆಯಡಗಿ ನಿಂದಂತೆ
ಭಾವವಳಿದು ನಿಂದುದೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಲಿಂಗೈಕ್ಯವು./289
ಭೂತಪಂಚಕಕಾಯವ ಕಳೆದು
ಗುರು ಶಿವಮಂತ್ರಕಾಯವ ಮಾಡಿ ಶಿವಜಾತನಾದ ಬಳಿಕ
ಜಾತಿಸೂಚಕ ವಣಾಶ್ರಮವಿಲ್ಲವಾಗಿ, ದೇಹಾಭಿಮಾನವಿಲ್ಲ.
ದೇಹಾಭಿಮಾನವಿಲ್ಲವಾಗಿ ಜಂಗಮದಲೈಕ್ಯನು.
ಆ ಸಮ್ಯಜ್ಞಾನ ಜಂಗಮ ಲಿಂಗೈಕ್ಯಂಗೆ
ಲಿಂಗಾಚಾರವಲ್ಲದೆ ಲೋಕಾಚಾರವಿಲ್ಲ.
ಆತಂಗೆ ಸರ್ವವೂ ಲಿಂಗಮಯವಾಗಿ ತೋರುತ್ತಿಹುದಾಗಿ
ಆ ಮಹಾತ್ಮನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ವರ್ತಿಸುತ್ತಿಹನು./290
ಭೂಮಿ ಜಲ ಅಗ್ನಿ ಮರುತ ಆಕಾಶವೆಂಬವೆಲ್ಲ,
ಶ್ರೀವಿಭೂತಿಯವಾಗಿ ತೋರುತ್ತಿವೆ, ಶಿವ ಶಿವಾ.
ಮನ ಚಕ್ಷುರಾದಿ ಇಂದ್ರಿಯಂಗಳೆಲ್ಲವು
ಶ್ರೀ ವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ.
ಚಂದ್ರ ಆದಿತ್ಯ ಸರ್ವದೇವತಾರೂಪವೆಲ್ಲ
ಶ್ರೀ ವಿಭೂತಿಮಯವಾಗಿ ತೋರುತ್ತಿವೆ, ಶಿವ ಶಿವಾ.
ಈ ಪರಿಯಿಂದ ತೋರಿ, ವ್ಯಾಪಕವಾಗಿ ಬೆಳಗುವ,
ಪರಂಜ್ಯೋತಿ ಸ್ವರೂಪ ವಿಭೂತಿಯೆಂದು,
ಒಲಿದು ಧರಿಸಿದವನೇ ಜೀವನ್ಮುಕ್ತನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./291
ಭೂಮಿಯ ಮೇಲಣ ಅಗ್ನಿ, ಆಕಾಶವನಡರಿದಡೆ
ಆಕಾಶದ ಜಲ ಉಕ್ಕಿ ಭೂಮಿಯೆಲ್ಲ ಜಲಮಯವಾಗಿತ್ತು.
ಅಲ್ಲಿದ್ದವರೆಲ್ಲ ಅಮೃತಮಯವಾಗಿ
ಮಹಾಲಿಂಗ ಸೇವೆಯ ಮಾಡಿ ಪ್ರಸಾದವ ಪಡೆದು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಡನೆ ಲಿಂಗಲೀಯವಾದರು./292
ಮನ ಮನವ ಬೆರೆಸಿ, ಸ್ನೇಹ ಬಲಿದ ಬಳಿಕ,
ನಿನ್ನ ನೆನವುತ್ತಿಪ್ಪೆ ನಾನು, ನನ್ನ ನೆನೆವುತ್ತಿಪ್ಪೆ ನೀನು.
ನನಗೂ ನಿನಗೂ ಏನೂ ಹೊರೆಯಿಲ್ಲ.
ಇದ ನೀ ಬಲ್ಲೆ, ನಾ ಬಲ್ಲೆ,
ನಿನ್ನನಗಲದಿಪ್ಪೆ ನಾನು, ನನ್ನನಗಲದಿಪ್ಪೆ ನೀನು,
ಚಿನ್ನ ಬಣ್ಣದಂತೆ ಇಪ್ಪೆವಾಗಿ ಇನ್ನು ಭಿನ್ನವುಂಟೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./293
ಮನದಲ್ಲಿ ತೋರುವ ನಾನಾ ತೋರಿಕೆಯ ಚಿಂತೆಯಳಿದು
ನಿಶ್ಚಿಂತನಾದ ಶಿವಯೋಗಿ,
ಏನೊಂದನೂ ಮನದಲ್ಲಿ ಚಿಂತಿಸದೆ ಉದಾಸೀನಪರವಾಗಿ
ಶಿವಶಕ್ತ್ಯಾತ್ಯಕವಾದ ಈ ವಿಶ್ವವನು
ಜ್ಞಾನಸ್ಥಾನದಲ್ಲಿ ಲಯವನೈದಿಸಿ
ಆ ನಿರಾಲಂಬಜ್ಞಾನದಲ್ಲಿ ಮನೋಲಯವಾದ ಶರಣಂಗೆ
ಹೊರಗೊಳಗು ಊಧ್ರ್ವಾಧೋಮಧ್ಯವೆಂಬವೇನೂ ತೋರದೆ
ಎಲ್ಲವೂ ತನ್ನಾಕಾರವಾಗಿ
ನಿರಾಕಾರ ಸ್ವಸಂವೇದ್ಯ ಪರತತ್ತ್ವ ತಾನೆಯಾಗಿಹನು’
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು./294
ಮನವಿದು ಕ್ಷಣದೊಳಗೆ
ಹೋಗದ ಠಾವಿಗೆ ಹೋದಂತೆ ನೆನೆವುತ್ತಿದೆ.
ಬಾರದ ಠಾವಿಂಗೆ ಬಂದಂತೆ ನೆನೆವುತ್ತಿದೆ.
ಕಾಣದುದ ಕಂಡಂತೆ ನೆನೆವುತ್ತಿದೆ.
ಕೇಳದುದ ಕೇಳಿದಂತೆ ನೆನೆವುತ್ತಿದೆ.
ಕ್ಷಣದೊಳಗೆ ದಶದಿಕ್ಕಿಗೈಯುತ್ತಿದೆ.
ಶತಮರ್ಕಟವಿಧಿ ಬಂದು ಮನಕ್ಕಾದರೆ
ಇದನೆಂತು ತಾಳಬಹುದಯ್ಯ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಈ ಮನವ ಸೆರೆಯಿಟ್ಟಾಳಯ್ಯಾ ನಿಮ್ಮ ಧರ್ಮ ಬೇಡಿಕೊಂಬೆ./295
ಮನವಿದೊಮ್ಮೆ ಪ್ರಪಂಚದತ್ತ ಹರಿವುದು.
ಒಮ್ಮೆ ಪರಮಾರ್ಥದತ್ತ ತಿರುಗುವುದು.
ಒಂದ ಹಿಡಿಸಿ, ಒಂದ ಬಿಡಿಸುವುದು.
ಇಂತೀ ಸಂದೇಹವನಿಕ್ಕಿ ದಂದುಗಗೊಳಿಸಿ
ಮುಂದುಗೆಡಿಸಿ ಕಾಡುತ್ತಿದೆ.
ಈ ಮನದ ಮರುಳತನವ ಬಿಡಿಸಿ, ನಿಮ್ಮ ಶ್ರೀಪಾದದಲ್ಲಿರಿಸೆನ್ನ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./296
ಮನೋವಾಕ್ಕಾಯದಿಂದ ಹುಟ್ಟಿದ ಕರ್ಮ
ತೊಟ್ಟನೆ ತೊಳಲಿಸಿ ಬಳಲಿಸಿದಲ್ಲದೆ ಬಿಡದು.
ಕರ್ಮವ ಮೀರಿ ನಡೆವ ಬಲ್ಲಿದರನಾರನೂ ಕಾಣೆ.
ಬೊಮ್ಮವಾದಿಗಳೆಲ್ಲ ಕರ್ಮಕ್ಕೀಡಾದರು.
ಕರ್ಮವು ಅಜ ಹರಿಗಳ ಬಾರದ ಭವದಲ್ಲಿ ಬರಿಸಿತ್ತು.
ಕಾಣದ ದುಃಖವ ಕಾಣಿಸಿತ್ತು. ಇನ್ನುಳಿದವರ ಹೇಳಲೇನುಂಟು?.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಆಧೀನವಿಡಿದು
ಕಾಡುವ ಕರ್ಮದ ಬಲುಹ ನೋಡಾ./297
ಮರ ಮೊದಲಿಗೆ ಬೀಳಲು
ಕೊನೆ ಎಲೆ ಹೂವು ಕಾಯಿಗಳನಿರಿಸಿ ತಾ ಬೀಳದು ನೋಡಾ.
ಯೋಗಿಯ ಮನವಳಿಯಲು ಮನವಿಡಿದಿಹ ಇಂದ್ರಿಯ ವಿಷಯ
ಪ್ರಾಣಂಗಳು ಮನದೊಡನೆ ಅಳಿವವಲ್ಲದೆ ಉಳಿಯವು ನೋಡಾ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡುವರೆ
ಮನವಳಿದು ಕೂಡುವುದು ನೋಡಾ./298
ಮರಹೆಂಬ ಕತ್ತಲೆಯೊಳಗೆ ತ್ರಿಜಗದ ಪ್ರಾಣಿಗಳೆಲ್ಲ
ಹಿಂದುಗಾಣದೆ ಮುಂದುಗಾಣದೆ ಗೊಂದಣಗೊಳ್ಳುತ್ತಿರ್ದರಲ್ಲ.
ತಂದಿಕ್ಕಿದೆ ಬಲು ಮರವೆಯ ಶಿವನೇ, ನಿನ್ನ ಕಾಣದಂತೆ.
ಈ ಅಂಧಕಾರದಲ್ಲಿರ್ದ ಪ್ರಾಣಿಗಳಿಗಿನ್ನೆಂದಿಂಗೆ
ಮುಕ್ತಿಯಹುದೊ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?./299
ಮರಹೆಂಬುದಾವರಿಸಿದವರಾರಾದಡಾಗಲಿ,
ದೇವ ದಾನವ ಮಾನವರೊಳಗಾದವರಾರಾದರೂ,
ಮಾಡಬಾರದ ಕರ್ಮವ ಮಾಡಿ, ಬಾರದ ಭವದಲಿ ಬಂದು
ಉಣ್ಣದ ಅಪೇಯವ ಉಂಡು, ಕುಡಿದು
ಕಾಣದ ದುಃಖವ ಕಂಡು
ಸಾಯದ ನಾಯ ಸಾವ ಸತ್ತು ಹೋಹರಿಗೆ ಕಡೆಯಿಲ್ಲ.
ಶಿವ ಶಿವ ಮಹಾದೇವ,
ನೀನು ಮಾಡಿದ ಬಿನ್ನಾಣದ ಮರವೆಯ ಕಂಡು
ನಾನು ಬೆರಗಾದೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./300
ಮರುಳು ಮಾಯೆಯ ಹುರುಳಗೆಡಿಸಿ,
ಅಂತಕನ ಹಲ್ಲ ಕಿತ್ತು,
ವಿಧಿಲಿಖಿತವ ತೊಡೆವುದು ವಿಭೂತಿ.
ಪರಮಜ್ಞಾನದ ಸಿರಿಯನಿತ್ತು,
ಭವವ ಪರಿವುದು ವಿಭೂತಿ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿಜಪದದಲ್ಲಿರಿಸುವುದು, ವಿಭೂತಿಯಯ್ಯ./301
ಮಹಾಕರ್ತನು ತನ್ನ ಶಕ್ತಿಯ ವಿನೋದಕ್ಕೀ ಜಗವ ನಿರ್ಮಿಸಿದ
ಅನಂತ ಲೋಕಂಗಳನು.
ಚಂದ್ರಸೂರ್ಯ ನಕ್ಷತ್ರ ಸಿಡಿಲು ಮಿಂಚುಗಳನು.
ತತ್ತ್ವ ವಿತತ್ತ್ವ ಕಾಲ ಕರ್ಮ ಪ್ರಳಯಂಗಳನು.
ಹೆಣ್ಣು ಗಂಡು ಜಾತಿ ವಿಜಾತಿಗಳಾದ ನರಸುರ ತಿರ್ಯಗ್ಜಾತಿ
ಸ್ಥಲ ಭೋಗಾಯುಷ್ಯ ನಿದ್ರೆ ಮೊದಲಾದ ಸಮಸ್ತ ಪ್ರಪಂಚುಗಳನು.
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳನು,
ಹುಟ್ಟಿಸಿದ ತನ್ನ ವಿನೋದಕ್ಕೆ,
ಮಂತ್ರವಾಹಕನು ಮಾಡಿದ ಕಟ್ಟಳೆ,
ಯಾರಿಗೂ ತಿಳಿಯಬಾರದು ನೋಡಾ,
ಸರ್ವಾತ್ಮರು ಮಲಪಾಶದಿಂದ ಬಂಧಿಸಿಕೊಂಬ ಪಶುಗಳಾದರು,
ತಾ ಪಶುಪತಿಯಾದ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./302
ಮಾತಾಪಿತರುಗಳಿಲ್ಲದ ಸಹೋದರ ಬಂಧುಗಳಿಲ್ಲದ,
ಕುಲಗೋತ್ರಗಳಿಲ್ಲದ ಅಜಾತನು ನೀವು ಕಂಡಯ್ಯ.
ಉಪಮಿಸಬಾರದ ಉಪಮಾತೀತನು,
ನಿಮ್ಮ ಹೆಸರುಗೊಂಬವರಾರು ಇಲ್ಲ ಕಂಡಯ್ಯ.
ಅಸಮಾಕ್ಷ ಅಪ್ರತಿಮ ಶಿವನೆ, ನೀವು ನೆನಯಲಾಗಿ,
ನಾದಬಿಂದುಕಳೆಗಳಂಕುರಿತವಾದವು ಕಂಡಯ್ಯ.
ನಿಮ್ಮ ಚಾರಿತ್ರ ನಿಮಗೆ ಸಹಜವಾಗಿದೆ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ./303
ಮಾತಿನ ಪಸರದ ವ್ಯವಹಾರದೊಳಗೆ ಸಿಕ್ಕಿ,
ನೂಕು ತಾಕುಗೊಳುತ್ತಿರ್ಪವಂಗೆ ಮಹದ ಮಾತೇಕೆ?
ಕೊರಳುದ್ದಕ್ಕೆ ಹೂಳಿಸಿಕೊಂಡು, ಮುಗಿಲುದ್ದಕ್ಕೆ
ನೆಗೆದೆಹೆನೆಂಬವನ ಹಾಗೆ.
ಶಿವನ ಜೋಕೆಯನರಿಯದೇ ಮಾತನಾಡುವ ಮಾತೆಲ್ಲವು,
ಮಾತಿನಮಾಲೆಯಲ್ಲದೆ, ಅಲ್ಲಿ ನಿಜವಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ಅವರೆಲ್ಲ ಭೂಭಾರಕರಾದರು./304
ಮಿಂಚಿನ ರವೆಯಂತೆ ಎನ್ನಂತರಂಗದಲ್ಲಿ ತೋರುವೆ, ಅಡಗುವೆ,
ಇದೇನು ವಿಗಡ ಚರಿತ್ರೆ?
ಒಳಗೆ ತೊಳಗಿ, ಬೆಳಗಿ ಬೆಳಗದಂತಿಹೆ.
ಸದೋದಿತನೆಂದು ಶ್ರುತಿ ಸಾರುತ್ತಿರಲು,
ತೋರಿಯಡಗುವುದು ನಿನಗೆ ಸಹಜವಲ್ಲಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./305
ಮುನ್ನಲುಳ್ಳ ಕರ್ಮ ಬೆನ್ನ ಬಿಡದು ನೋಡ.
ಜಾತಿ ವಿಜಾತಿಗಳಲ್ಲಿ ತೀವಿ
ಭೋಗಕ್ಕೆ ಸಾಧನವಾದ ಪರಿಯ ನೋಡ.
ಅಲ್ಲಿಯೆ ಮತ್ತೆ ಮತ್ತೆ ಪುಣ್ಯ ಪಾಪವ ಮಾಡಿ,
ಸ್ವರ್ಗನರಕವನೈದುವ ಕರ್ಮಿಗಳು, ಕಣ್ಣುಗೆಟ್ಟು ಮುಂದುಗಾಣದೆ
ಪುಣ್ಯ ಪಾಪವ ಬೆನ್ನಲ್ಲಿ ಕಟ್ಟಿ,
ರಾಟಾಳದಂತೆ ತನುವ ತೊಡುತ್ತ ಬಿಡುತ್ತ ತಿರುಗುತ್ತಿಹರಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದ
ಕರ್ಮಿಗಳ ನೋಡಾ./306
ಮೂರಾಧಾರ ಮಧ್ಯದಲ್ಲಿ ಹುಟ್ಟಿದ ಪ್ರಾಣಾಪಾನಂಗಳು
ಆವಲ್ಲಿ ಮನ ಸಹಿತ ಲಯವಾದವೊ
ಆ ಲಯ ಕಾರಣವಾದುದು ಪ್ರಾಣಲಿಂಗ.
ಆ ಪ್ರಾಣಲಿಂಗದ ನೆಲೆಯನರಿಯದೆ ಏನ ಮಾಡಿದಡೂ
ಫಲದಾಯಕ ಭಕ್ತಿಯಲ್ಲದೆ ಮುಕ್ತಿಯಿಲ್ಲ.
ಇದು ಕಾರಣ.
ಪ್ರಾಣಲಿಂಗವನರಿದು, ಮನ ಶಕ್ತಿ ಸಂಯೋಗವ ಮಾಡಿ
ಮುಕ್ತರಹುದಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./307
ಮೂರು ಮಂಡಲದಲ್ಲಿ ತೋರುವ ಜ್ಯೋತಿಯದು
ಆರು ದ್ವಾರಂಗಳಲ್ಲಿ ಬೆಳಗುತ್ತಿಹುದು.
ಆರು ಸ್ಥಾನದ ಆರು ಪೀಠಂಗಳಲ್ಲಿ ತೋರಿ ಮೀರಿಹುದು.
ಬ್ರಹ್ಮರಂಧ್ರದೊಳಗೆ ಆರಕ್ಕೆ ಆರಾಗಿ ಮೀರಿದುದ
ಕೂಡಿದವನಾರೂಢಯೋಗಿ ತಾನೇ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನಲ್ಲಿ
ಬೇರಿಲ್ಲದಿಪ್ಪ ಪರಮಯೋಗಿ./308
ಮೂರುಮುಖದಗ್ನಿಯೆದ್ದು ಮೂರುಲೋಕವ ಸುಡುತ್ತಿರಲು
ಅಗ್ನಿಯ ಕೆಡಿಸಬಲ್ಲ ಬಲ್ಲಿದನಾರನು ಕಾಣೆ.
ಆ ಅಗ್ನಿಯ ಸ್ತಂಭನವ ಮಾಡಲರಿಯದೆ,
ಬಲ್ಲಿದರೆಲ್ಲ ದಳ್ಳುರಿಗೊಳಗಾದರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ,
ಅಕ್ಷರ ಪಂಚಕಮಂತ್ರವ ಜಪಿಸಿ,
ಅಗ್ನಿಸ್ತಂಭನವ ಮಾಡಿದನು./309
ಮೂರ್ಖನಾಗಲಿ, ಪಂಡಿತನಾಗಲಿ,
ಬ್ರಹ್ಮಚಾರಿಯಾಗಲಿ, ಗೃಹಸ್ಥನಾಗಲಿ,
ವಾನಪ್ರಸ್ಥನಾಗಲಿ, ಯತಿಯಾಗಲಿ,
ಶ್ರೀ ವಿಭೂತಿಯನೊಲಿದು ಧರಿಸಿದಾತನೆ ಧನ್ಯನು.
ಆತನೇ ಸರ್ವಾಪತ್ತುಗಳ ತೊಲಗ ನೂಂಕಿ,
ಸಮಸ್ತ ಪಾತಕೋಪಪಾತಕಂಗಳು ತೊಲಗಿ,
ಶುದ್ಧಾತ್ಮನಹನಯ್ಯ.
“ತ್ರಿಪುಂಡ್ರಂ ಭಸ್ಮನಾ ಕರೋತಿ ಯೋ ವಿದ್ವಾನ್
ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋ ವಿದ್ವಾನ್
ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋ ಯತಿರ್ವಾ
ಸಮಸ್ತಪಾತಕೋ ಪಾತಕೇಭ್ಯಃ ಪೂತೋ ಭವತಿ’
ಎಂದು ಶ್ರುತಿ ಸಾರುತ್ತಿರೆ
ಇಂತಪ್ಪ ಶ್ರೀ ವಿಭೂತಿಯನರಿದು ಧರಿಸಿ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ,
ಕೂಡಿರಣ್ಣಾ./310
ಮೂಲಮಂತ್ರಾತ್ಮಸ್ವರೂಪದಿಂದ
ಸಹಸ್ರಾದಿತ್ಯ ತೇಜೋರೂಪಾಗಿ ಬೆಳಗುತ್ತಿಹ
ದೇವರದೇವನಾದ ಮಹಾದೇವನ, ಅನಂತ ಶಕ್ತಿವಂತನ,
ವಿಶ್ವಾತ್ಮನಾದ ನಾದಾತ್ಮ ಶಿವನ,
ಸದಾ ಸವಾಂಗವು ಕರ್ಣಂಗಳಾಗಿ ಕೇಳಿ ಕೇಳಿ, ಮನ ಮಚ್ಚಿ
ಆ ಪರಮಜ್ಞಾನಾನಂದರೂಪನ ನೆನೆನೆನೆದು,
ಮರಳಿ ಮರಳಿ ಸರ್ವಾಂಗದಲ್ಲಿ ಸೋಂಕಿ ಸೋಂಕಿ,
ಎನ್ನ ಕರಣೇಂದ್ರಿಯಗಳೆಲ್ಲವು ಲಿಂಗಾಕಾರವಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಡಗಿದವು./311
ಮೃತ್ ಕಾಷ್ಠ ಷಾಷಾಣಂಗಳಿಂದಲಾದವೆಲ್ಲ ಲಿಂಗವೇ?
ಲೋಹ ಬೆಳ್ಳಿ ತಾಮ್ರ ಸುವರ್ಣದಿಂದಲಾದನ್ನೆಲ್ಲ ಲಿಂಗವೇ?
ಅಲಲ್ಲ.್ಲ
ಅಲ್ಲಿ ಭಾವಿಸುವ ಮನದ ಕೊನೆಯ ಮೊನೆಯಮೇಲೆ ಬೆಳಗುವ
ನಿಜ ಬೋಧಾರೂಪು ಲಿಂಗವಲ್ಲದೆ, ಇವೆಲ್ಲ ಲಿಂಗವೇ?
ತಿಳಿದು ನೋಡಲು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು
ತಾನೇ ಲಿಂಗವು./312
ಮೇಘ ಮರೆಯಾಗಿ ಚಂದ್ರನಿದ್ದನೆಂದಡೆ
ಆ ಚಂದ್ರಂಗೆ ಕಳೆ ಕುಂದುವುದೇ ಅಯ್ಯಾ?.
ದೇಹದ ಮರೆವಿಡಿದು ಶರಣನಿದ್ದನೆಂದಡೆ
ಆತನ ಮಹಿಮಾಗುಣ ಕೆಡುವುದೇ ಅಯ್ಯಾ?.
ಗಿಡದ ಮೇಲಣ ಪಕ್ಷಿಯಂತೆ, ಪದ್ಮಪತ್ರದ ಜಲದಂತೆ,
ದೇಹಸಂಗದಲ್ಲಿದ್ದೂ ಇಲ್ಲದಿಹನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಶರಣನಿರವಿನ ಪರಿ ಇಂತುಟು./313
ಮೋಹ ಮದ ರಾಗ ವಿಷಾದ ತಾಪ ಶೋಕ ವೈಚಿಂತ್ಯವೆಂಬ
ಸಪ್ತಮಲವಾವರಿಸೆ ಮತ್ತರಾಗಿ, ತಮ್ಮ ತಾವರಿಯದೆ,
ಕಣ್ಣಿಗಜ್ಞಾನತಿಮಿರ ಕವಿದು, ಮುಂದುಗಾಣದವರು
ಶಿವನನವರೆತ್ತ ಬಲ್ಲರು?
ಗೃಹ ಕ್ಷೇತ್ರ ಸತಿ ಸುತಾದಿ ಪಾಶಂಗಳಲ್ಲಿ ಬಿಗಿವಡೆದ ಪಶುಗಳು
ಶಿವನನವರೆತ್ತ ಬಲ್ಲರು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು,
ತಾನವರನೆತ್ತಲೆಂದರಿಯನು./314
ಯೋಗತಾಣವನರಿದು ಯೋಗಿಸಿಹೆನೆಂಬ ಯೋಗಿಗಳಿಗೆ
ಯೋಗದ ಕ್ರಮವ ಹೇಳಿಹೆವು ಕೇಳಿರಯ್ಯಾ.
ಸುಷುಮ್ನೆಯ ನಾಲ್ದೆಸೆಯಲ್ಲಿ, ಆತ್ಮಕಲೆ ವಿದ್ಯಾಕಲೆ ನಾದಕಲೆ
ಬಿಂದುಕಲೆಗಳನರಿಯಬೇಕು.
ಆ ಕಲೆ ನಾಲ್ಕು ಸುತ್ತಿ, ಅಗ್ನಿಕಲೆಗಳ ಹತ್ತಿನರಿವುದು.
ಪಿಂಗಳೆಯಲ್ಲಿ ಭಾನುಕಲೆಗಳ ಹನ್ನೆರಡನರಿವುದು.
ಇಡೆಯಲ್ಲಿ ಚಂದ್ರಕಲೆಗಳು ಹದಿನಾರು
ಕ್ಷಯ ವೃದ್ಧಿಯಾಗಿ ನಡೆವುದನರಿವುದು.
ಈ ಮೂವತ್ತೆಂಟು ಕಲೆಗಳ ಕೂಡಿಹ ಚಂದ್ರಸೂರ್ಯಾಗ್ನಿಗಳ
ಮಧ್ಯದಲ್ಲಿ ತತ್ವಮೂರು ಕೂಡೆ ಬೆಳಗುವ
ಪರಜ್ಯೋತಿರ್ಲೆಂಗವನರಿದು ಯೋಗಿಸಿ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬಳಿಕ
ಕೂಡುವುದು ಕಾಣಿರಣ್ಣಾ./315
ಯೋಗದ ನೆಲೆಯನರಿದೆನೆಂಬವರಿಗೆ ಹೇಳಿಹೆವು ಕೇಳಿರೇ.
ಪೃಥ್ವಿ, ಅಪ್ಪುಗಳೆರಡ ಆಧಾರಗೊಳಿಸಿ,
ಅಗ್ನಿ ವಾಯುಗಳೆರಡ ಅಂಬರಸ್ಥಾನಕ್ಕೊಯ್ದು,
ಆತ್ಮ ಆಕಾಶವೆರಡ ಅನುಭಾವ ಮುಖಕ್ಕೆ ತಂದು,
ಮನದೆ ಅನುಮಾನವಳಿದು, ನೆನಹು ನಿಶ್ಚಲವಾಗಿ,
ಒಳಗೆ ಜ್ಯೋರ್ತಿಲಿಂಗವ ನೋಡುತ್ತ,
ಹೊರಗೆ ಎರಡು ಹುಬ್ಬಿನ ನಡುವೆ ಉಭಯ ಲೋಚನವಿರಿಸಿ,
ಹಿಂದು ಮುಂದನೆಣಿಸದೆ ಸಂದೇಹವಿಲ್ಲದೆ
ಖೇಚರಿಯನಾಚರಿಸಲು,
ಲೋಚನ ಮೂರುಳ್ಳ ಶಿವ ತಾನಹನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ಶಿವಯೋಗಿ./316
ಯೋಗದ ಲಾಗನರಿದು ಯೋಗಿಸಿಹೆನೆಂಬ
ಯೋಗಿಗಳು ನೀವು ಕೇಳಿ.
ನೆಲವಾಗಿಲ ಮುಚ್ಚಿ, ಜಲವಾಗಿಲ ಮುಚ್ಚಿ, ತಲೆವಾಗಿಲ ತೆಗೆದು
ಗಗನಗಿರಿಯ ಪೂರ್ವಪಶ್ಚಿಮ ಉತ್ತರ ದಕ್ಷಿಣದ ನಡುವೆ
ಉರಿವ ಅಗ್ನಿಯ ಕಂಡು,
ಆ ಅಗ್ನಿಯ ಮೇಲೆ ಸ್ವರನಾಲ್ಕರ
ಕೀಲುಕೂಟದ ಸಂಚಯವ ಕಂಡು,
ಆ ಸಂಚಯದಲ್ಲಿ ಆಮೃತಸ್ವರವ ಹಿಡಿದು ಕೂಡುವುದೇ
ಪರಮಶಿವಯೋಗ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅದೇ ಪರಮನಿರ್ವಾಣ./317
ರೂಪಾರ್ಪಣಕ್ಕೆ ಅಂಗವೇ ಆದಿ.
ಆ ಪ್ರಸಾದಾಂಗಕ್ಕೆ ಪ್ರಾಣವೇ ಆದಿ.
ಆ ಪ್ರಾಣಾಂಗವೇ ರುಚಿಯರ್ಪಣಕ್ಕಾದಿ.
ರೂಪು ರುಚಿ ಉಭಯಾರ್ಪಣದ ಸುಖವೇ ಭಾವಾಪರ್ಣವು.
ಅಂಗ ಪ್ರಾಣ ಭಾವಂಗಳಲ್ಲಿ, ರೂಪ ರುಚಿ ತೃಪ್ತಿಯನರಿದು
ಕೊಟ್ಟು ಕೊಂಬಾತಂಗೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿತ್ಯ ಪ್ರಸಾದ ದೊರೆಕೊಂಬುದು./318
ರೂಪು ಕುರೂಪು ವಿಕಾರಂಗಳು
ಮುಕುರವ ನೋಡುವರ ಗುಣವಲ್ಲದೆ
ಮುಕುರಕ್ಕೆ ವಿಕಾರಗುಣವುಂಟೆ?
ಪಾಪಿಗಳು ಕೋಪಿಗಳು ಪರಿಭ್ರಷ್ಟರು
ಅಸತ್ಯರು ಅಜ್ಞಾನಿಗಳು
ಸಂಸಾರಿಗಳು ದುರ್ವಿಕಾರಿಗಳು ಲಂಡರು ಕೊಂಡೆಯರು
ಕುಚಿತ್ತರು ಅನ್ಯಾಯಕಾರಿಗಳು
ತಮ್ಮತಮ್ಮ ಗುಣದಂತೆ ತಿಳಿದು ನೋಡಿ ಮಾಡಿದರು,
ಬಿತ್ತಿದ ಬೆಳೆಯನುಂಬಂತೆ.
ನಿಂದಿಸಿದವರು ಪಾಪದ ಫಲವನನುಭವಿಸುವರು.
ಸ್ತುತಿಸಿದವರು ಪುಣ್ಯದ ಫಲವನನುಭವಿಸುವರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಸತ್ಯಶರಣ
ನಿತ್ಯಮುಕ್ತಂಗೆ, ನಿಂದೆ ಸ್ತುತಿಯೆಂಬೆರಡೂ ಇಲ್ಲ./319
ರೂಪು ಕುರೂಪುಗಳನು,
ಲಿಂಗ ನೋಡಿದಡೆ ನೋಡುವನು,
ಲಿಂಗ ನೂಕಿದಡೆ ತಾ ನೂಕುವನು.
ಶಬ್ದಾಪಶಬ್ದಂಗಳನು
ಲಿಂಗ ಕೇಳಿದಡೆ ಕೇಳುವನು, ಲಿಂಗ ತಾ ನೂಕಿದಡೆ ನೂಕುವನು.
ಸುರಸ ಕುರಸಂಗಳನು
ಲಿಂಗ ಸವಿದಡೆ ಸವಿವನು, ಲಿಂಗ ನೂಕಿದಡೆ ತಾ ನೂಕುವನು.
ಗಂಧ ದುರ್ಗಂಧಗಳನು
ಲಿಂಗ ವಾಸಿಸಿದಡೆ ವಾಸಿಸುವ, ಲಿಂಗ ನೂಕಿದಡೆ ತಾ ನೂಕುವನು.
ಮೃದು ಕಠಿಣ ಶೀತೋಷ್ಣಂಗಳನು ಲಿಂಗ ಸೋಂಕಿದಡೆ ಸೋಂಕುವನು.
ಲಿಂಗ ನೂಕಿದಡೆ ತಾ ನೂಕುವನು.
ಲಿಂಗಮಧ್ಯಪ್ರಸಾದಿಯಾದ ಕಾರಣ
ಲಿಂಗದೊಡನೆ ಕೂಡಿ ಅರಿದು ಭೋಗಿಸಿ ಸುಖಿಸುವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ./320
ರೂಪು ಲಿಂಗವೋ ನಿರೂಪು ಲಿಂಗವೋ ಎಂಬುದ
ವಿವರಿಸಿ ತಿಳಿದು ನೋಡೆ,
ರೂಪು ಲಿಂಗದಲ್ಲಿ ತ್ರಿಭುವನಾಧಾರವಾದ
ಶಿವ ಕಲಾ ರೂಪ ಚೈತನ್ಯ.
ನಿರೂಪಲಿಂಗವ ಭಾವಿಸಿ, ಧ್ಯಾನಪೂಜೆಯ ಮಾಡಿ;
ಕೋಟಿ ಸೂರ್ಯ ಪ್ರಕಾಶ ಚಿದ್ರೂಪ ಶಿವಲಿಂಗವ
ನೆನಹಿನ ಕೊನೆಯ ಮೇಲಿರಿಸಿ ನೆನೆದು ನಿತ್ಯ ತೃಪ್ತನಾದ
ಪರಾನಂದರೂಪ ಶಿವಯೋಗಿಯ ಯೋಗನಿದ್ರಾಮುದ್ರೆಯಲ್ಲಿ
ತಾನಿದಿರೆಂಬುದ ಮರೆದು ಭಿನ್ನವಿಲ್ಲದೆ ಶಿವಸುಖದೊಳಗಿಹನು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು./321
ಲಿಂಗ ಬೇರೆ, ಶರಣ ಬೇರೆಂದು ಹಂಗಿಸಿ ನುಡಿಯಲಾಗದು.
ಲಿಂಗ ಬೇರೆ, ಶರಣ ಬೇರೆಯೇ? ಶಿವಶಿವ ಒಂದೇ ಕಾಣಿರಣ್ಣ.
ಸುವರ್ಣ ಆಭರಣವಾಯಿತ್ತೆಂದಡೆ,
ಅದು ನಾಮ ರೂಪಭೇದವಲ್ಲದೆ ವಸ್ತುಭೇದವಲ್ಲ.
ಭಕ್ತಿಯ ವೈಭವದಿಂದ ಶರಣ ಸಕಾಯನಾಗಿ ಅವತರಿಸಿದೆನೆಂದಡೆ
ಬೇರಾಗಬಲ್ಲನೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗವೆಂದಡೂ
ಶರಣನೆಂದಡೂ ಒಂದೇ ಕಾಣಿರಣ್ಣಾ./322
ಲಿಂಗಕ್ಷೇತ್ರವೆಂಬ ಪವಿತ್ರಸ್ಥಲದಲ್ಲಿ,
ಪ್ರಸಾದಿ ಭಕ್ತಿ ಬೀಜದ ಬಿತ್ತಿ
ಶುದ್ಧ ಪದಾರ್ಥವ ಬೆಳೆದು,
ಆ ಪದಾರ್ಥವ ಲಿಂಗಾರ್ಪಿತವ ಮಾಡಿ
ಆ ಪ್ರಸಾದವ ತಾನಿಲ್ಲದೆ ಭೋಗಿಸಿ ನಿತ್ಯಸುಖಿಯಾದನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ./323
ಲಿಂಗದ ಕಲೆಯನರಿದಲ್ಲದೆ ಭಕ್ತಿ ವಿರಕ್ತಿಯೆಂಬವು
ದೊರಕೊಳ್ಳವು ನೋಡಾ.
ಲಿಂಗದ ಕಲೆಯನರಿದಲ್ಲದೆ ಜ್ಞಾನ ಆನಂದವು
ದೊರಕೊಳ್ಳವು ನೋಡಾ.
ಲಿಂಗದ ಕಲೆಯನರಿದಲ್ಲದೆ ಕ್ಷಮೆ ದಮೆ
ಸಮತೆ ಸದಾಚಾರಂಗಳು
ದೊರಕೊಳ್ಳವು ನೋಡಾ.
ಲಿಂಗದ ಕಲೆಯನರಿದಲ್ಲದೆ ಸದ್ಗುಣಗಣ ವಿನಯ ಮೃದುವಚನ
ದೊರಕೊಳ್ಳವು ನೋಡಾ.
ಇಂತನಂತ ಗುಣವಿಲ್ಲದಡೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಲಿಂಗವನರಿದುದಕ್ಕೆ,
ಚಿಹ್ನವಲ್ಲ ನೋಡಾ./324
ಲಿಂಗದಲ್ಲಿ ಪ್ರಾಣವನಿರಿಸಿ, ಪ್ರಾಣದಲ್ಲಿ ಲಿಂಗವನಿರಿಸಿ
ನೆನೆವುತ್ತಿದ್ದ ಕಾರಣ, ಪ್ರಾಣ ಲಿಂಗವಾಯಿತ್ತು.
ಆ ಲಿಂಗ ಸರ್ವಕರಣಂಗಳ ವೇಧಿಸಿ, ಕರಣಂಗಳು
ಲಿಂಗ ಕಿರಣಂಗಳಾದ ಕಾರಣ
ಒಳಗೆ ಕರತಳಾಮಳಕದಂತೆ ಲಿಂಗ ನೆಲೆಗೊಂಡಿತ್ತಾಗಿ
ಹೊರಗೇನೆಂದೂ ಅರಿಯನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀವು ಪ್ರಾಣಲಿಂಗವಾಗಿ./325
ಲಿಂಗದಲ್ಲಿ ಲೀಯವಾದ ಪರಮಾನಂದ ಸ್ವರೂಪಂಗೆ ಕಾಯವಿಲ್ಲ,
ಕಾಯವಿಲ್ಲಾಗಿ ಕರ್ಮವಿಲ್ಲ.
ಆದೆಂತೆಂದಡೆ: ಕಾರ್ಯವಿಲ್ಲದ ಕುಲಾಲಚಕ್ರಭ್ರಮಣದಂತೆ,
ದೇಹವಿಡಿದು ಚರಿಸಿದನೆಂದಡೆ ದೇಹಿಯೆನಬಹುದೇ ಶರಣನಾ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು ತಾನೆ ಬೇರಿಲ್ಲಾ./326
ಲಿಂಗನಿಷ್ಠಾಭರಿತನಾದ ಕಾರಣ ಅಂಗಗುಣವಳಿದು
ಕಂಗಳು ಲಿಂಗದಲ್ಲಿ ಲೀಯವಾದವಾಗಿ
ಅಂಗಜನ ಭಯವಿಲ್ಲ.
ಲಿಂಗವೆಂಬಂತೆ ಇಹನಾಗಿ, ಕಾಲನ ಭಯವಿಲ್ಲ.
ಇಹಪರವೆಂಬೆರಡರ ದೆಸೆಯ ಹೊದ್ದನಾಗಿ
ಮಾಯಾಭಯವಿಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮಶರಣನ ಚಾರಿತ್ರ ಆವ ಲೋಕದೊಳಗೂ ಇಲ್ಲ./327
ಲಿಂಗಭಕ್ತನ ಇಂದ್ರಿಯಂಗಳು, ಲಿಂಗ ಸನ್ನಿಹಿತವಾಗಿ
ಲಿಂಗಾರ್ಚನೆಯ ಮಾಡಿ ಲಿಂಗಾವಧಾನಿಗಳಾಗಿ
ಲಿಂಗಗರ್ಭಸದನದಲ್ಲಿ ಅಡಗಿ, ಮತ್ತಲ್ಲಿಯೆ ಉದಿಸಿ
ಲಿಂಗಸೇವೆಯ ಮಾಡಿ, ಪ್ರಸಾದವ ಪಡೆದು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬಿಡದೆ ವರ್ತಿಸುತ್ತಿಹವು./328
ಲಿಂಗವ ನೆರೆಯರಿದು ನಿಷ್ಠೆ ನಿಬ್ಬೆರಸಿದ ಬಳಿಕ
ಅಹಂಕಾರ ಮಮಕಾರಂಗಳುಂಟೆ?
ಪಂಚಕ್ಲೇಶಂಗಳು ಮದ ಮತ್ಸರಗಳುಂಟೆ?
ಕ್ರಾಮ ಕ್ರೋಧಂಗಳು ತಾಮಸಗುಣಂಗಳುಂಟೆ?
ಲಿಂಗದಂಗವೆ ಅಂಗವಾದ ಲಿಂಗದೇಹಿಗೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./329
ಲಿಂಗವ ನೋಡಲೆಂದು ಅಂಗವಿಸಹೋದರೆ
ಆ ಲಿಂಗ ತನ್ನತ್ತ ಪಶ್ಚಿಮಮುಖವಾಗಿ ನೋಡುತ್ತಿರೆ
ತಾ ಪೂರ್ವಮುಖವಾಗಿ ನೋಡಲು
ಮಹಾಶ್ಚರ್ಯದ ರೂಪಾಗಿ ಕಾಣಿಸುತ್ತದೆ ನೋಡಾ.
ಉದಕದೊಳಗಣ ಜ್ಯೋತಿಯದು ಉದಯಬಿಂದು
ರತ್ನದಂತೆ ತೋರುತ್ತದೆ ನೋಡಾ.
ಪೂರ್ಣಚಂದ್ರನಂತೆ ಅಮೃತಮಯ ಮಂಗಲಸ್ವರೂಪ
ಪರಮಾನಂದ ನೋಡಾ.
“ಯಥಾಪೋ ಜ್ಯೋತಿರಾಕಾರಂ ಬ್ರಹ್ಮಾಮೃತ ಶಿವಾತ್ಮಕಂ’
ಎಂದುದಾಗಿ
ಎನ್ನಲೋಚನಾಗ್ರದಲ್ಲಿ ಬೆಳಗುವ
ಪರಬ್ರಹ್ಮವನು ನೆನೆದು ಸುಖಿಯಾದೆನು,
ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ/330
ಲಿಂಗವ ಸ್ಥೂಲವೆಂಬರು ಕೆಲವರು, ಲಿಂಗ ಸ್ಥೂಲವಲ್ಲ.
ಲಿಂಗವ ಸೂಕ್ಷ ್ಮವೆಂಬರು ಕೆಲವರು, ಲಿಂಗ ಸೂಕ್ಷ ್ಮವಲ್ಲ.
ಸ್ಥೂಲ ಸೂಕ್ಷ ್ಮದ ವೇಲಣ ಜ್ಞಾನ ರೂಪು
ಪರಮಾನಂದ ಪರಬ್ರಹ್ಮವೇ ಲಿಂಗವೆಂದರಿದ ಅರಿವು
ಅಖಂಡ ರೂಪು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು, ತಾನೇ ಬೇರಿಲ್ಲ./331
ಲಿಂಗವೆಂಬುದು ಸರ್ವಕಾರಣ ಪರಮ ನಿರ್ಮಲ.
ಲಿಂಗವೆಂಬುದು ಸಚ್ಚಿದಾನಂದ ನಿತ್ಯಪರಿಪೂರ್ಣ.
ಲಿಂಗವೆಂಬುದು ಸರ್ವಲೋಕೋತ್ಪತ್ತಿಗೆ ಮೂಲಕಾರಣ.
ಲಿಂಗವೆಂಬುದು ಜನ್ಮವಾರಿಧಿಯ ದಾಂಟಿಸುವ ಭೈತ್ರವು.
ಲಿಂಗವೆಂಬುದು ಶರಣರ ಹೃದಯದಲ್ಲಿ ಬೆಳಗುವ
ಜ್ಯೋತಿರ್ಮಯ ಲಿಂಗವು.
ಇಂತೀ ಲಿಂಗದ ಮರ್ಮವನರಿದವನೇ ಅರಿದವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./332
ಲಿಂಗವೇ ತಾನಾಗಿ, ತಾನೇ ಲಿಂಗವಾಗಿ
ಲಿಂಗಲೀಯವಾದ ಲಿಂಗೈಕ್ಯಂಗೆ
ವಿಶ್ವಮೋಹಿನಿ ಶಕ್ತಿ ಮೋಹಕವಿಲ್ಲದೆ ಹೋಯಿತ್ತು.
ಇನ್ನು ಶಬ್ದ್ದಾದಿ ವಿಷಯೇಂದ್ರಿಯಂಗಳು
ವಿಷಯಭೋಗಂಗಳು ಇಲ್ಲದೆ ಹೋದವು.
ಭಾನುತೇಜೋಜಾಲ ಭಾನುವಿನೊಳಡಗಿದಂತೆ
ಸರ್ವ ಕರಣಂಗಳು ತನ್ನೊಳಗಡಗಿ
ತಾನೆ ಉಳಿದ ಉಳುಮೆ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು ತಾನೆ ಮತ್ತಿಲ್ಲ./333
ಲಿಂಗವೇದಿಯಾದ ಶರಣಂಗೆ,
ಕಂಗಳ ಕೊನೆಯಿಂದ ನೋಡಿದ ಸರ್ವಲೋಕವೆಲ್ಲ
ಚಿದಾಕಾಶಮಯವಾಗಿ ತೋರುವುದಲ್ಲದೆ,
ಮತ್ತೊಂದು ಪರಿಯಾಗಿ ತೋರದು ನೋಡಾ.
ಆ ಶರಣನು ಬ್ರಹ್ಮಜ್ಞಾನವೇ ಜೋಡಾಗಿ ದುಃಖರಹಿತನು.
ಆ ಅಜಡರೂಪ ನಿಜಯೋಗಿಯ
ಜ್ಞಾನವು ಸುಷುಪ್ತಿಯನೈದಿತ್ತಾಗಿ,
ಆಕಾಶದ ಕುಸುಮದಂತೆ, ತನುವಿಲ್ಲದ ಘನರೂಪನು.
ಮನವೆಂಬ ಅಣುವ ನುಂಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪದದಲ್ಲಿ
ಪ್ರವೇಶವಾಗಿಹನು./334
ವಾಹನವನೇರುವಾಗ ದಾರವ ಹಿಡಿದು ನಡೆಸಲು
ವಾಹಕನಿಚ್ಛೆಯಲ್ಲಿ ನಡೆವುದು ವಾಹನ.
ಹಾಗೆ ದೇಹಧರ್ಮದಿಚ್ಛೆಯಲ್ಲಿ ಹೋಗದೆ
ತನ್ನ ವಶಕ್ಕೆ ತಂದು ನಡೆಸಬೇಕು ಭಕ್ತನಾದಡೆ.
ಅಂತಲ್ಲದೆ
ದೇಹಧರ್ಮ ತನ್ನಿಚ್ಚೆಗೆ ಬಾರದೆಂಬವ,
ದೇಹಭಾರವ ಹೊತ್ತು ತೊಳಲುವ ಭೂಭಾರಕನಲ್ಲದೆ,
ಆತ ಭಕ್ತನಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./335
ವೇದ ಶಾಸ್ತ್ರ ಆಗಮ ವಿಜ್ಞಾನ ತರ್ಕ ವ್ಯಾಕರಣಾದಿಗಳ ಕಲಿತು
ಬಲ್ಲವರೆನಿಸಿಕೊಂಡರೇನು?
ಪ್ರಾಣಲಿಂಗದ ನೆಲೆಯನರಿದ ಯೋಗಿಯ ಮುಂದೆ
ಇವರೆಲ್ಲ ಮೂಢರಲ್ಲದೆ ಬಲ್ಲವರಲ್ಲ.
ಅದೇನು ಕಾರಣವೆಂದಡೆ: ಅವರು ಸ್ವಾನುಭಾವಜ್ಞಾನಾನುಭಾವಿಗಳಲ್ಲವಾದ ಕಾರಣ.
ಇಂತಿವರು ಒಂದು ಕೋಟಿ ಶಾಸ್ತ್ರಜ್ಞರಾದರೂ
ಸಮ್ಯಜ್ಞಾನಿಯಾದ ಒಬ್ಬ ಶರಣಂಗೆ ಸರಿಯಲ್ಲ.
ಇದು ಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೇ ಶಿವನೆನಬೇಕು./336
ವೇಷವ ಧರಿಸಿ, ಭಾಷೆಯ ಕಲಿತು, ದೇಶವ ಸುತ್ತಿ ಬಳಲಬೇಡ.
ಜಗದೀಶನ ಪಾದವನೊಲಿದು ಪೂಜಿಸಿರಣ್ಣಾ.
ಸವಿಯೂಟದಾಸೆಗೆ ಮನವೆಳಸಬೇಡ.
ಪರಮೇಶನ ಪಾದವ ನೆನೆದು ಸುಖಿಸಿರಣ್ಣಾ.
ತರ್ಕಶಾಸ್ತ್ರ ಆಗಮ ಮಾಯಾಜಾಲದ ಹರಟೆಗೆ ಹೊಗದೆ,
ಮೂಲಮಂತ್ರ[ವ] ಮರೆಯದೆ ಸ್ಮರಿಸಿರಣ್ಣಾ.
ಸಂಸಾರಿಗಳ ಸಂಗದೊಳಗೆ ಇರಬೇಡ.
ಸದ್ಭಾವರ ಸಂಗದೊಳಗಿರ್ದು ನಿತ್ಯವ ಸಾಧಿಸಿಕೊಳ್ಳಿರಣ್ಣಾ.
ಪರರ ಯಾಚಿಸಿ ತನುವ ಹೊರೆಯಬೇಡ.
ಶಿವನಿಕ್ಕಿದ ಭಿಕ್ಷೆಯೊಳಗಿದ್ದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಿರಣ್ಣಾ./337
ಶಬ್ದವನು ಕಿವಿಗಳು ಬಲ್ಲವೆ? ಅರಿಯವು.
ಅಲ್ಲಿದ್ದ ಆಕಾಶ ತಾ ಬಲ್ಲುದೆ? ಅರಿಯದು.
ಸ್ಪರ್ಶನವ ತ್ವಕ್ಕು ಬಲ್ಲುದೆ? ಅರಿಯದು.
ಅಲ್ಲಿದ್ದ ವಾಯು ತಾ ಬಲ್ಲುದೆ? ಅರಿಯದು.
ರೂಪನು ಕಣ್ಣು ಬಲ್ಲುದೆ? ಅರಿಯದು.
ಅಲ್ಲಿದ್ದ ಅಗ್ನಿ ತಾ ಬಲ್ಲುದೆ? ಅರಿಯದು.
ಸ್ವಾದವನು ನಾಲಿಗೆ ಬಲ್ಲುದೆ? ಅರಿಯದು.
ಅಲ್ಲಿದ್ದ ಅಪ್ಪು ತಾ ಬಲ್ಲುದೆ? ಅರಿಯದು.
ಗಂಧವನು ಘ್ರಾಣ ಬಲ್ಲುದೆ? ಅರಿಯದು.
ಅವರಲ್ಲಿ ನಿಂದು, ವಿಷಯಂಗಳನು
ಭಕ್ತನ ಇಂದ್ರಿಯಂಗಳೊಡನೆ ಕೂಡಿ ಅರಿವಾತ ನೀನೇ.
ನೀನೆ ಭಕ್ತವತ್ಸಲ, ದಯಾನಿಧಿ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./338
ಶಮೆ ದಮೆ ವಿವೇಕ ವೈರಾಗ್ಯ ಪರಿಪೂರ್ಣಭಾವ ಶಾಂತಿ
ಕಾರುಣ್ಯ ಶ್ರದ್ಧೆ ಸತ್ಯ ಸದ್ಭಕ್ತಿ ಶಿವಜ್ಞಾನ ಶಿವಾನಂದ
ಉದಯವಾದ ಮಹಾಭಕ್ತನ ಹೃದಯದಲ್ಲಿ ಶಿವನಿಪ್ಪ.
ಆತನ ದರ್ಶನ ಸ್ಪರ್ಶನ ಸಂಭಾಷಣೆಯಿಂದ
ಕೇವಲ ಮುಕ್ತಿಯುಪ್ಪುದು ತಪ್ಪದಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./339
ಶರಣ ಸಕಾಯನೆಂಬೆನೆ ಸಕಾಯನಲ್ಲ.
ಅಕಾಯನೆಂಬೆನೆ ಅಕಾಯನಲ್ಲ.
ಅದೇನು ಕಾರಣವೆಂದಡೆ;
ಶಿವಕಾಯವಾದ ನಿಜಬೋಧವೆ ಕಾಯವಾದ ಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು,
ಪರಕಾಯರೂಪನು./340
ಶರಣನ ಶರೀರವ ಸೋಂಕಿದ
ರವಿ ತನ್ನ ಮಂಡಲವ ಬಿಟ್ಟು
ಶಿವಸಾಮೀಪ್ಯವ ಪಡೆಯದಿಪ್ಪನೆ ಅಯ್ಯಾ?
ನರಜನ್ಮದಲ್ಲಿ ಹುಟ್ಟಿದವನು ಗುರುಹಸ್ತ ಸೋಂಕಿದ ಬಳಿಕ,
ಹರನಾಗದಿಪ್ಪನೆ ಅಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?/341
ಶರಣನ ಸರ್ವಭಾವಂಗಳು
ಶಿವಜ್ಞಾನದಲ್ಲಿ ಅಡಗಿ, ಶಿವರೂಪದಿಂದ ತೋರುತ್ತಿಹವಾಗಿ,
ಸಂಕಲ್ಪ ವಿಕಲ್ಪವಳಿದು ತೃಪ್ತಿ ಸಂಕೋಚಗಳಡಗಿ,
ಘನಕ್ಕೆ ಘನ ತಾನಾದ ಶಿವ ತಾನಾಗಿ,
ಶಿವ ತಾನಾದನೆಂಬ ಭಾವವಿಲ್ಲದ ಸಹಜ ಸ್ವರೂಪನೇ ತೃಪ್ತನು.
ಅಂಥ ತೃಪ್ತಂಗೆ ಅರಿಯಲು ಮರೆಯಲು ಒಂದಿಲ್ಲದೆ
ಘನಪರಿಣಾಮಿಯಾಗಿಹನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು./342
ಶರಣನ ಸರ್ವಾಂಗವು ಲಿಂಗದಂಗವು.
ಶರಣ ನಡೆವ ಗತಿ ಲಿಂಗದ ಗತಿ.
ಶರಣ ನುಡಿದ ನುಡಿ ಲಿಂಗದ ನುಡಿ.
ಶರಣನಿದ್ದ ಸ್ವಭಾವದಿರವೆ ಲಿಂಗದಿರವು.
ಶರಣನಿದ್ದ ತೋರುವ ಜಾಗ್ರತ್ ಸ್ವಪ್ನಂಗಳೆಲ್ಲ
ಲಿಂಗವಿಡಿದು ತೋರುವುವು.
ಇದು ಕಾರಣ, ಜ್ಞಾನಿಯಲ್ಲಿ ತೋರುವ ಕ್ರಿಯೆಗಳು
ಫಲದಾಯಕ ಕ್ರಿಯೆಗಳಲ್ಲ.
ಅದೆಂತೆಂದಡೆ,
ಘೃತ ಸೋಂಕಿದ ರಸನೆಗೆ ಘೃತ ಲೇಪವಿಲ್ಲದಂತೆ,
ಶರಣಂಗೆ ಕರ್ಮಲೇಪವಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಸ್ವತಂತ್ರ./343
ಶರಣನ ಸುಜ್ಞಾನಾಗ್ನಿಯಿಂದ, ಸಂಸಾರಬೀಜ ರೂಪವಾದ
ಅಹಂಕಾರಾಂಕುರವು ಸುಟ್ಟು, ಮಾಯಾವಾಸನೆಯಳಿದು,
ಮಾನಸೇಂದ್ರಿಯ ಜೀವಶಕ್ತಿಗಳಿಲ್ಲದ ಮೂರ್ತಿಯೇ
ಚಿಲ್ಲಿಂಗಕ್ಕಾಶ್ರಯವಾದುದಾಗಿ,
ಚಿನ್ಮೂರ್ತಿಯಾದ ಶರಣನ ಜ್ಞಾನದಲ್ಲಿ,
ಸಕಲ ಪ್ರಪಂಚುಗಳೆಲ್ಲ ಅಡಗಿದವಾಗಿ, ಆ ಶರಣನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು
ತಾನೇ ಆಗಿಹನು./344
ಶರಣಮಧ್ಯಲಿಂಗ, ಲಿಂಗ ಮಧ್ಯಶರಣನಾದ ಮತ್ತೆ,
ಇನ್ನು ಪರವೆಂದು ಅಪರವೆಂದು
ಪ್ರತಿಯಿಡುವ ಜ್ಞಾನವುಂಟೇ ಹೇಳಾ?
ಅಹಂಭಾವ ಶೂನ್ಯವಾಗಿ ಭಾವಾಭಾವಲಯವಾದ ಮತ್ತೆ
ಇನ್ನು ಭಾವಿಸಲೇನುಂಟು ಹೇಳಾ,
ಸಮ್ಯಗ್ಜ್ಞಾನಿಯಾದ ಮಹಾತ್ಮ ನಿರ್ಲೆಪಕಂಗೆ?
ಕಾಯ ಕರಣವೆಂಬುವೆಲ್ಲ ಶೂನ್ಯವಾದವು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಲಿಂಗೈಕ್ಯಂಗೆ./345
ಶಾಂತ ಸೂಕ್ಷ್ಮ ಸರ್ವಜೀವ ಮನಃಪ್ರೇರಕ[ಸ್ವ]ನಾಥ
ನಿತ್ಯ ಚಿನ್ಮಾತ್ರನಾದ ಶಿವಂಗೆ
ಒಂದೂ ಸದೃಶವಿಲ್ಲದೆ ಹೆಸರಿಡಬಾರದಂಥ
ಕುರುಹಿಲ್ಲದ, ಮರಹಿಲ್ಲದ, ಬಹಳ ಬ್ರಹ್ಮವೆನಿಸುವ ಶಿವನು
ತನ್ನ ಶರಣರ ಸರ್ವಾಂಗಭರಿತನಾಗಿಹನು,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./346
ಶಿರ ಮುಖ ಹೃದಯ ಪಾದ ಬಾಹುಗಳೆಲ್ಲ
ಶಿವನ ಅವಯವಂಗಳಾದವು.
ಶ್ರೋತ್ರ ತ್ವಕ್ ನೇತ್ರ ಜಿಹ್ವೆ ಘ್ರಾಣವೆಂಬವೆಲ್ಲ
ಶಿವನ ಇಂದ್ರಿಯಂಗಳಾದವು.
ಮನ ಬುದ್ಧಿ ಚಿತ್ತ ಅಹಂಕಾರಗಳೆಲ್ಲಾ ಶಿವನ ಕರಣಂಗಳಾದವು.
ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬವುಗಳಲ್ಲಿ
ಶಿವನ ಚೈತನ್ಯವಿದ್ದುದಾಗಿ
ಒಳಗಿದ್ದ ಚೇತನವು ನೀವೇ.
ಒಳಗೆ ನೀವು, ಹೊರಗೆ ನೀವು:ನಾನೆಂಬುದಿಲ್ಲ.
ನಾನೇನ ಮಾಡಿತ್ತೆಲ್ಲಾ ನಿಮ್ಮ ವಿನೋದ.
ಎನ್ನ ಸರ್ವ ಭೋಗವೆಲ್ಲ ನಿಮ್ಮ ಭೋಗವಯ್ಯ.
ಕತರ್ೃತ್ವ ನಿಮ್ಮದಾಗಿ, ಎನಗೆ ಕತರ್ೃತ್ವವಿಲ್ಲ.
ನಾ ನಿಮ್ಮೊಳಗು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./347
ಶಿರದೊಳಗೆ ಶಿರ, ಕರದೊಳಗೆ ಕರ,
ಕರಣದೊಳಗೆ ಕರಣ, ಕಂಗಳೊಳಗೆ ಕಂಗಳು,
ಕರ್ಣದೊಳಗೆ ಕರ್ಣ, ಘ್ರಾಣದೊಳಗೆ ಘ್ರಾಣ,
ಜಿಹ್ವೆಯೊಳಗೆ ಜಿಹ್ವೆ, ದೇಹದೊಳಗೆ ದೇಹ,
ಪಾದದೊಳಗೆ ಪಾದ ಕೂಡಿ, ಶರಣರೊಡನಾಡುವ
ನಿಮ್ಮ ಬೆಡಗಿನ ಲೀಲೆಯನಾರು ಬಲ್ಲರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರಲ್ಲದೆ?./348
ಶಿವ ತನ್ನ ಶಕ್ತಿಯಿಂದ ಜಗವನಧಿಷ್ಠಿಸಿ ತೊಲಗದೆ,
ಆಚಲವಾಗಿ ಜಗವ ಸೋಂಕಿದ್ದು ತಾನಾ ಜಗದಂತಲ್ಲದೆ,
ತನ್ನ ಶಕ್ತಿಯಿಂದ ಪರಮನಿರ್ಮಲನಾಗಿ,
ಜಗದಂತರ್ಯಾಮಿಯಾದ
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./349
ಶಿವ ತಾನೆಂಬ ವಿವೇಕವಿಲ್ಲದೆ, ಶಿವನಲ್ಲಿ ತಾನಡಗಿ,
ತನ್ನಲ್ಲಿ ಶಿವನಡಗಿ, ತಾನು ತಾನೇಕವಾದಾತಂಗೆ
ಸಂದು ಸಂಶಯಂಗಳುಂಟೆ?
ತೃಪ್ತಿ ಸಂಕೋಚವೆಂಬವಡಗಿದ ಬಳಿಕ
ಮತ್ತೆ ಘನಕ್ಕೆ ಘನವಾದೆನೆಂಬ ನೆನಹುಂಟೆ?
ನಿಜವೆಂತಿಪ್ಪುದಂತಿಪ್ಪನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಲಿಂಗೈಕ್ಯನು./350
ಶಿವಕಥನಂಗಳ ಕೇಳಿ ಕೇಳಿ ಸಂತೋಷಿಸಿ,
ಶಿವಕೀರ್ತನೆಗಳ ಮಾಡಿ ಮಾಡಿ,
ದಣಿವಿಲ್ಲದೆ ಶಿವನ ನೆನೆನೆನೆದು,
ಶಿವಸೇವೆಯ ಮಾಡುತ್ತ,
ಶಿವಪೂಜೆಯನೋಜೆಯಲ್ಲಿ ವಿಸ್ತರಿಸಿ,
ಶಿವಶರಣೆಂದು ಶಿವನೊಡವೆಯ ಶಿವನವರಿಗರ್ಪಿಸಿ,
ಶಿವನೆ ತಾನಾದ, ಭವರಹಿತ ಭಕ್ತನ ನೋಡಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./351
ಶಿವಜ್ಞಾನಸಂಪನ್ನನಾದ ಶರಣಂಗೆ ಹಿರಿದೊಂದಾಶ್ಚರ್ಯವು
ತೋರದಾಗಿ, ಅದೇನು ಕಾರಣವೆಂದಡೆ: ಆತನ ಮನ ಲಿಂಗದಲ್ಲಿ ಲೀಯವಾದ ಕಾರಣ.
ಸೂರ್ಯಂಗೆ ಶೀತರುಚಿಗಳು ತೋರಿದರೂ,
ಚಂದ್ರನಿಗೆ ಉಷ್ಣರುಚಿಗಳು ತೋರಿದರೂ,
ಅಗ್ನಿ ತಲೆಕೆಳಕಾಗಿ ಉರಿದಡೆಯೂ,
ತೋರುವ ನಾನಾ ಆಶ್ಚರ್ಯಂಗಳೆಲ್ಲ
ಮಾಯಾವಿಲಾಸವೆಂದರಿದ ಶರಣಂಗೆ
ಒಂದಾಶ್ಚರ್ಯವೂ ತೋರದಾಗಿ ಆತ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಅರಿವಿನೊಳಗಡಗಿದನು./352
ಶಿವಜ್ಞಾನೋದಯವಾದ ಭಕ್ತನ ಪೂರ್ವಾಶ್ರಯವಳಿದು
ಭಕ್ತನಾಗಬೇಕೆಂಬಿರಿ.
ಭವಿಗೆ ಪೂರ್ವಾಶ್ರಯವಲ್ಲದೆ ಭಕ್ತಂಗೆ ಪೂರ್ವಾಶ್ರಯವುಂಟೆ?
ಇಲ್ಲವಾಗಿ.
“ಅಜ್ಞಾನಂ ಪೂರ್ವಮಿತ್ಯಾಕಹುರ್ಭವೋಖನಾದಿಸ್ಥಲಾಶ್ರಯಃ|
ಸರ್ವಂ ನಿರಸಿತವ್ಯಂ ಚ ಪ್ರಯತ್ನೇನ ವಿಪಶ್ಚಿತಾ’
ಎಂದುದಾಗಿ,
ಮಲ ಮಾಯಾ ಸಂಸಾರದಲ್ಲಿ ಮರಳಿ ಮರಳಿ ಬಪ್ಪಾತನೆ ಭವಿ.
ಸಂಸಾರವಳಿದು, ನಿಜವುಳಿದು
ಗುರು ಲಿಂಗ ಜಂಗಮಕ್ಕೆ ಮಾಡುವ ಭಕ್ತಂಗೆ ಭವವಿಲ್ಲ.
ಆತನು ಜೀವನ್ಮುಕನಾಗಿಹನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./353
ಶಿವಧ್ಯಾನದ ಕಡೆಯಲ್ಲಿ ಒಪ್ಪಿ ತೋರುವ ಸಂವಿತ್ತಿನ ತೃಪ್ತಿಯಂದ
ತನ್ನ ಮರೆದ ಶರಣನು
ಪರಮ ಪ್ರಕಾಶರೂಪನಾದ ಶಿವನ ಕೂಡಿ
ಸರ್ವಜೀವರ ಹೃದಯದಲ್ಲಿದ್ದು,
ಅವಕ್ಕೆ ಅರಿವ ಅರುಹಿಸಿ ಕೊಡುತ್ತ
ಎಲ್ಲ ಕಡೆಯಲ್ಲಿ ಸುಖರಾಶಿಯಾದ ಚೈತನ್ಯಸ್ವರೂಪ
ಪರಬ್ರಹ್ಮವೇ ತಾನಾಗಿಹನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು./354
ಶಿವನ ಶಿವಪ್ರಸಾದಿಯ ಉಭಯಸಂಬಂಧ
ಸಹಭೋಗವೆಂತೆಂದೊಡೆ: ಶಿವ ತನ್ನ ನೇತ್ರಂಗಳನು ಪ್ರಸಾದಿಯ ನೇತ್ರದಲ್ಲಿ ಕೂಡಿ
ರೂಪವನರಿವನು.
ಶಿವ ತನ್ನ ಶ್ರೋತ್ರಂಗಳನು ಪ್ರಸಾದಿಯ ಶ್ರೋತ್ರದಲ್ಲಿ ಕೂಡಿ
ಶಬ್ದವನರಿವನು.
ಶಿವ ತನ್ನ ಘ್ರಾಣವನು ಪ್ರಸಾದಿಯ ಘ್ರಾಣದಲ್ಲಿ ಕೂಡಿ
ಗಂಧವನರಿವನು.
ಶಿವ ತನ್ನ ಜಿಹ್ವೆಯನು ಪ್ರಸಾದಿಯ ಜಿಹ್ವೆಯಲ್ಲಿ ಕೂಡಿ
ರಸವನರಿವನು.
ಶಿವ ತನ್ನ ಅಂಗವನು ಪ್ರಸಾದಿಯ ಅಂಗದಲ್ಲಿ ಕೂಡಿ
ಸ್ಪರ್ಶವನರಿವನು.
ಶಿವ ತಾನು ಬೇರೆ ಭೋಗಿಸಲೊಲ್ಲದೆ, ಪ್ರಸಾದಿಯ ಹೊಕ್ಕು
ಭೋಗಿಸುವನಾಗಿ,
ಸೋಹಂ ಎನ್ನದೆ ದೈತಾದ್ವೆತವ ಮೀರಿದ
ಪ್ರಸಾದಿ ಸಂಗನಬಸವಣ್ಣನ
ಸುಖಾತಿಶಯವನೇನೆಂದುಪಮಿಸುವೆನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./355
ಶಿವನು ಸರ್ವಗತನಾಗಿ ಎಲ್ಲಿಯು ಇಹನೆಂದಡೆ
ಎಲ್ಲವು ಶಿವನೇ? ಅಲ್ಲ.
ಮತ್ತೆಲ್ಲಿಹೆನೆಂದಡೆ: ನಿರ್ಮಲಚಿತ್ತರಾದ ಸದ್ವಿವೇಕಿಗಳಲ್ಲಿ,
ನಿತ್ಯ ಸಂತೋಷಿಗಳಾದ ನಿರಾಶಾಭರಿತರಲ್ಲಿ.
“ಯಾ ತೇ ರುದ್ರ ಶಿವಾತನೂರಘೋರಾಪಾಪಕಾಶಿನೀ…’
ಎಂದುದಾಗಿ,
ನಿರ್ಮಲ ಪರಮ ಮಾಹೇಶ್ವರರ ಹೃದಯದಲ್ಲಿ
ಅತಿಪ್ರೇಮದಿಂದಿಹನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./356
ಶಿವನೆ ತಾನೆನಗೆ ಗುರುವಾಗಿ ಬಂದು,
ಎನ್ನ ಸಂಸಾರಸಾಗರವ ದಾಂಟಿಸಿ,
ಅಖಂಡ ಪರಮ ಚೈತನ್ಯ ಶಿವಲಿಂಗವ
ವಿಶ್ವದೊಳಗೆಲ್ಲಿಯೂ ಕಾಬಂತೆ ತೋರಿಸಿ,
ವಿಶ್ವವ ಲಿಂಗದೊಳಗೆ ತೋರಿ,
ಲಿಂಗವೆನ್ನಂಗದೊಳಹೊರಗೆ ತೋರಿ,
ಅಂಗವ ಲಿಂಗದೊಳಗಿರಿಸಿ, ರಕ್ಷಿಸಿದನಯ್ಯನೆನ್ನ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./357
ಶಿವನೆಂದರಿದವಂಗೆ ತಾನೆಂಬುದಿಲ್ಲಾಗಿ
ತನಗೊಂದನ್ಯವಿಲ್ಲ.
ಘನದಿರವು ಇಂಬಾಗಿ ಚರಾಚರವು ತನ್ನಲ್ಲಿ ಅಡಗಿದಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಲಿಂಗವಾಗಿರ್ದನು./358
ಶಿವಪ್ರಸಾದವನಲ್ಲದೆ ಕೊಳ್ಳನಾ ಭಕ್ತನು.
ಶಿವನಿರ್ಮಾಲ್ಯವನಲ್ಲದೆ ಗ್ರಹಿಸನಾ ಭಕ್ತನು.
ಶಿವನನಲ್ಲದೆ ನೆನೆಯನಾ ಭಕ್ತನು.
ಶಿವಕಾರ್ಯವನಲ್ಲದೆ ಮಾಡನಾ ಭಕ್ತನು.
ಶಿವನವರನಲ್ಲದೆ ನಂಬನಾ ಭಕ್ತನು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಭಕ್ತನ ಚಾರಿತ್ರವಿದು./359
ಶಿವಪ್ರಸಾದಸಂಪತ್ತು ದೊರಕೊಂಡಾತಂಗೆ
ಶಿವಭಾವವಲ್ಲದೆ ಅನ್ಯಭಾವ ಉಂಟೆ ಹೇಳಾ?
ವಿಶ್ವನೊಳಡಗಿ ತೋರುವ ವಿಶ್ವ ಜಗಜ್ಜಾಲವು
ಒಮ್ಮೆ ತೋರುವದು, ಒಮ್ಮೆ ಅಡಗುವದು.
ಅದರಂತೆ ತೋರದೆ ಅಡಗದೆ ಉಳುಮೆಯಾದ
ಅಂಥ ಪ್ರಸಾದವನು ಅನುಭವಿಸಿದ ಶಿವಪ್ರಸಾದಿಗೆ
ಭೇದದ ಅರಿವು ನಿಃಪತಿಯಾಗಿ ಅಭೇದಜ್ಞಾನ ಸಿದ್ಧವಾಯಿತ್ತು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ./360
ಶಿವಭಕ್ತರ ನಡೆ ಶುದ್ಧ, ನುಡಿ ಶುದ್ಧ.
ಶಿವಭಕ್ತರ ನೋಟ ಶುದ್ಧ. ಮಾಟ ಶುದ್ಧ.
ಶಿವಭಕ್ತರ ನೆನಹು ಶುದ್ಧ. ಪ್ರಾಣ ಶುದ್ಧ.
ಇದು ಕಾರಣ,
ಶಿವಭಕ್ತರನೆ ಶಿವನೆಂದು ನಂಬುವುದು.
ನಂಬಿದವರು ಶಿವನಪ್ಪುದು ತಪ್ಪದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./361
ಶಿವಭಕ್ತರಾದವರು, ಅಂಗದ ಮೇಲಣ ಲಿಂಗಕ್ಕೆ,
ಅನ್ನ ಉದಕ ಗಂಧ ಪುಷ್ಪ ತಾಂಬೂಲ ವಸ್ತ್ರ
ಮೊದಲಾದವ ಕೊಟ್ಟು ಕೊಳಲೇಬೇಕು.
“ರುದ್ರಭುಕ್ತಾನ್ನಂ ಭಕ್ಷಯೇತ್ ರುದ್ರಪೀತಂ ಜಲಂ ಪಿಬೇತ್
ರುದ್ರಾಘ್ರಾತಂ ಸದಾ ಜಿಘ್ರೇತ್’ -ಎಂದುದಾಗಿ,
ಶಿವಂಗೆ ಕೊಡದೆ ಕೊಂಡಡೆ ಅದು ಭಕ್ತಪಥವಲ್ಲ.
ಆತಂಗೆ ಪ್ರಸಾದವಿಲ್ಲ.
ವಿಶ್ವಾಸವಿಲ್ಲದವರ ಶಿವನೊಲ್ಲನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./362
ಶಿವಭಕ್ತಿತತ್ಪರನಾದ ಮಹಿಮನು
ವಿಷಯಭ್ರಮೆ ಪುರುಷ ಪ್ರಯತ್ನವನು ಬಿಟ್ಟಾಗವೆ,
ಆಗಾಮಿಕರ್ಮ ನಾಶವಾಯಿತ್ತು.
ಸಂಚಿತಕರ್ಮ ವಿಷಯಾಸಕ್ತಂಗೆ ಪ್ರಾರಬ್ಧವೆನಿಸುವುದು.
ಶಿವಧ್ಯಾನೈಕ ಚಿತ್ತಂಗೆ ಸಂಚಿತಕರ್ಮವಿಲ್ಲ.
ಅದೇನು ಕಾರಣವೆಂದಡೆ: ಶಿವಜ್ಞಾನಾಗ್ನಿಯಿಂದ ಅದು ಬೆಂದು ಹೋಹುದಾಗಿ.
ಇಚ್ಛಾಪ್ರಾರಬ್ಧ ಅನಿಚ್ಛಾಪ್ರಾರಬ್ಧವೆಂದು ಪ್ರಾರಬ್ಧವೆರಡಾಗಿಹುದು.
“ಪ್ರಾರಬ್ಧಕರ್ಮಣಾಂ ಭೋಗಾದೇವ ಕ್ಷಯಃ’ ಎಂದುದಾಗಿ,
ಅದು ಭೋಗಿಸಿದಲ್ಲದೆ ತೀರದು.
ಅನಿಚ್ಛಾಪ್ರಾರಬ್ಧದಿಂದ ಮುಂದೆ ಸುಖವಹುದು.
ಇಚ್ಛಾಪ್ರಾರಬ್ಧದಿಂದ ದುಃಖವಹುದಾಗಿ,
ಆ ದುಃಖದಿಂದ ಸಂಸಾರವೃಕ್ಷ ಬೇರುವರಿವುದು.
ಸಂಸಾರ, ವಿರಕ್ತಂಗೆ ಹುರಿದ ಬೀಜದಂತೆ
ಅಂಕುರ ನಷ್ಟವಾಗಿಹುದು.
ಆತ ಶಿವನೊಡನೆ ಕೂಡಿ ಭೋಗಿಸುವನಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ನಿಜವನೆಯ್ದುವನು./363
ಶಿವಭಕ್ತಿಯುಳ್ಳವರಿಗೆ, ಪುಣ್ಯವಿಲ್ಲ. ಪಾಪವಿಲ್ಲ.
ಸ್ವರ್ಗವಿಲ್ಲ. ನರಕವಿಲ್ಲ.
ಅದೆಂತೆಂದಡೆ,
ಚಂಡೇಶ ಶಿವಭಕ್ತ ತಂದೆಯ ಕೊಂದರೆ ಬಂದಿತ್ತೆ ಪಾಪ,
ಎಯ್ದಿದನೆ ನರಕ? ಇಲ್ಲವಾಗಿ.
ಚಂಡೇಶ ಸಿದ್ಧರಾಮ[ರಿ]ಗೊಲಿದು, ಶಿವ ತನ್ನೊಳಗಿರಿಸನೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು?/364
ಶಿವಯೋಗಿ ಸುಳಿದ ಸುಳುಹು ಜಗತ್ಪಾವನ.
ಮೆಟ್ಟಿದ ಧರೆಯೆಲ್ಲ ಪವಿತ್ರ.
ನಿಮಿಷವಿರ್ದಾಸ್ಥಲವೆಲ್ಲ ಅವಿಮುಕ್ತಿಕ್ಷೇತ್ರ.
ಹೊಕ್ಕ ಜಲವೆಲ್ಲ ಪುಣ್ಯತೀರ್ಥಂಗಳು.
ಏರಿದ ಬೆಟ್ಟವೆಲ್ಲ ಶ್ರೀ ಪರ್ವತ.
ಕೃಪೆಯಿಂದ ನೋಡಿದ ಜನರೆಲ್ಲ ಸಾಲೋಕ್ಯರು.
ಒಡೆನೆ ಸಂಭಾಷಣೆಯ ಮಾಡಿದವರೆಲ್ಲ ಸದ್ಯೋನ್ಮುಕ್ತರು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಸುಳುಹಿನ ಘನತೆಯನುಪಮಿಸಬಾರದು./365
ಶಿವಲಿಂಗ ಪೂಜೆಯಿಂದ ಭಕ್ತಿ ದೊರಕೊಂಬುದು,
ಮುಕ್ತಿ ದೊರಕೊಂಬುದು.
ಶಿವಲಿಂಗಪೂಜೆಗೆ ಸರಿಯೊಂದಿಲ್ಲವೆಂದು,
ಪುರಾತನರು ಶಿವಲಿಂಗಪೂಜೆಯ ಮಾಡಿ ಶಿವನೊಳಗಾದರು.
ಇದನರಿದು ಮತ್ತೇಕೆ ಮರೆವಿರಿ, ಮರುಳು ಮಾನವರುಗಳಿರ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ಪೂಜೆಯ ಮಾಡಿ ಬದುಕಿರಣ್ಣಾ./366
ಶಿವಶರಣನ ಶಿರ ಮೊದಲು ಪಾದ ಕಡೆಯಾದವೆಲ್ಲವು
ಅಮೃತಮಯವಾಗಿಹವು ನೋಡಾ.
ನರಚರ್ಮಾಂಬರವ ಹೊದ್ದಿಹ ಶರಣನ
ಒಳಗು ಹೊರಗೆಂಬವೆಲ್ಲ ಮೋಕ್ಷರೂಪವಾಗಿಹವು ನೋಡಾ.
ಆ ಶರಣನ ಮತ್ರ್ಯರೂಪನೆಂದು ತಿಳಿಯಬಾರದು.
ಆತ ಚಿದ್ರೂಪಾಕಾರ ಪರಮಾತ್ಮನು ತಾನೇ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂದೇ ತಿಳಿವುದು./367
ಶುದ್ಧ ಸಿದ್ಧಾಸನದಲ್ಲಿ ಕುಳ್ಳಿರ್ದು ಅಧರ್ಾವಲೋಕನದಿಂದ
ನಾಸಿಕಾಗ್ರದಲ್ಲಿ ಪ್ರಸಾದವ ಕಂಡುಂಡು,
ಮುಕ್ತಿವನಿತೆಗೆ ಬೇಟವ ಮಾಡಿದಡೆ
ಬೇಟಕ್ಕೆ ಮರುಳಾಗಿ ಕೂಡಿದಳಯ್ಯಾ.
ಆರು ವನಿತೆಯರ ವಂಚಿಸಿ ಕೂಡಿದಳು, ಆರು ಒಗೆತನ ಕೆಟ್ಟಿತ್ತು.
ಪುರುಷ ಸ್ತ್ರೀಯೊಳಗಡಗಿ, ಸ್ತ್ರೀ ಪುರುಷನೊಳಗಡಗಿ
ಇಬ್ಬರೆನಿಸದೆ ಒಬ್ಬರಾದುದನು ಏನೆಂದುಪಮಿಸಬಹುದು
ನಿರ್ವಿಕಲ್ಪಯೋಗವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆ ತಾನಾದ ಘನವನು?./368
ಶುದ್ಧಾನ್ನಪಾನಾದಿಗಳನು ಮಂತ್ರಭಸ್ಮದಿಂದ ಪವಿತ್ರವ ಮಾಡಿ,
ಪತಿಭಕ್ತ್ತಿಯಿಂದ ಲಿಂಗಮುಖಕ್ಕೆ ಸಮರ್ಪಿಸಿ, ತಾ ಸ್ವಾದಿಸುವದು.
ತನ್ನ ರಸನೆಯ ಲಿಂಗದ ರಸನೆಯೆಂದು ಸವಿದು,
ಪ್ರಸಾದತೃಪ್ತಿಯ ಪಡೆದಾತನೆ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ನಿತ್ಯಸುಖಿಯಾದಾತನು./369
ಶೂನ್ಯ ಮಹಾಶೂನ್ಯವಿಲ್ಲದಲ್ಲಿಂದತ್ತತ್ತ,
ನಾದ ಬಿಂದು ಕಳೆಗಳಿಲ್ಲದಲ್ಲಿಂದತ್ತತ್ತ,
ಸದಾಶಿವ ಈಶ್ವರ ವಿದ್ಯೇಶ್ವರರೆಂಬ ಗಣೇಶ್ವರರಿಲ್ಲದಲ್ಲಿಂದತ್ತತ್ತ,
ಗಂಗಾವಾಲುಕಸಮಾರುದ್ರರುಗಳಿಲ್ಲದಲ್ಲಿಂದತ್ತತ್ತ,
ಬ್ರಹ್ಮ ವಿಷ್ಣು ಇಂದ್ರಾದಿ ದಿಕ್ಪಾಲಕರಿಲ್ಲದಲ್ಲಿಂದತ್ತತ್ತ,
ಕಾಲ ಕರ್ಮ ಪ್ರಳಯಂಗಳಿಲ್ಲದಲ್ಲಿಂದತ್ತತ್ತ ಅತ್ತತ್ತ,
ಮುನ್ನ ನಿಮ್ಮ ನಿಜದಲ್ಲಿ ನೀವೇ ಇದರ್ಿರಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./370
ಶ್ರೀ ಗುರುವಿನ ಮಂತ್ರೋಪದೇಶವು
ಶಬ್ದ ಪ್ರಸಾದಕ್ಕಾಶ್ರಯವಾಯಿತ್ತು.
ಶ್ರೀ ಗುರುವಿನ ಹಸ್ತ ಮಸ್ತಕ ಸಂಯೋಗವು
ಸ್ಪರ್ಶನಪ್ರಸಾದಕ್ಕಾಶ್ರಯವಾಯಿತ್ತು.
ಶ್ರೀ ಗುರುವಿನ ಕೃಪಾವಲೋಕನವು
ಅವಲೋಕನಪ್ರಸಾದಕ್ಕಾಶ್ರಯವಾಯಿತ್ತು.
ಶ್ರೀಗುರುವಿನ ನಿರ್ಮಾಲ್ಯ ಗಂಧವು
ಸದ್ಗುಣಗಂಧಪ್ರಸಾದಕ್ಕಾಶ್ರಯವಾಯಿತ್ತು.
ಇಂತಪ್ಪ ಶ್ರೀಗುರುವಿನ ಪ್ರಸಾದವ ಪಡೆದಾತಂಗೆ
ಭವಮಾಲೆಯುಂಟೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?./371
ಶ್ರೀ ವಿಭೂತಿಯ, ರುದ್ರಾಕ್ಷಿಯ ಧರಿಸಿ,
ಲಿಂಗನಿಷ್ಠಾಪರನಾಗಿ ಲಿಂಗಾರ್ಚನೆಯ ಮಾಡಿ,
ಸಕಲಪದಾರ್ಥವ ಲಿಂಗಕ್ಕೆ ಕೊಟ್ಟು, ಲಿಂಗಪ್ರಸಾದವ ಕೊಂಡು,
ಲಿಂಗಸುಖ ಸಂಪನ್ನರಾದ ಲಿಂಗಭೋಗೋಪಭೋಗಿಗಳಲ್ಲಿ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಸದಾ ಸನ್ನಿಹಿತನು./372
ಶ್ರೀ ವಿಭೂತಿಯನೊಲಿದು ಧರಿಸಲು,
ಸಕಲದುರಿತವ ನಿವಾರಣವ ಮಾಡಿ,
ಘನಸುಖವ ಕೊಡುವುದು ನೋಡಾ.
ಪ್ರಣವದ ಬೆಳಗು, ಪಂಚಾಕ್ಷರಿಯ ಕಳೆ,
ಪರಮನಂಗಚ್ಛವಿ ಶ್ರೀವಿಭೂತಿ ನೋಡಾ.
ಶಾಂತಿಯ ನೆಲೆವನೆ, ಸರ್ವರಕ್ಷೆಯ ತವರೆನಿಸಿ,
ಸಮಸ್ತ ಕಾಮಿತ ಸುಖವೀವುದು ಶ್ರೀವಿಭೂತಿ ನೋಡಾ.
ಭೂತ ಪ್ರೇತ ಪಿಶಾಚ ಬ್ರಹ್ಮರಾಕ್ಷಸ ಅಪಸ್ಮಾರ ಬಾಧೆಯ ಬಿಡಿಸಿ
ನಿಜಸುಖವಿತ್ತು ಸಲಹುವುದು ಶ್ರೀ ವಿಭೂತಿ ನೋಡಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾದ,
ವಿಭೂತಿ ನೋಡಾ./373
ಶ್ರೀಗುರು ಕರುಣಿಸಿ, ಅಂಗದ ಮೇಲೆ
ಲಿಂಗವ ಧರಿಸಿದ ಕಾರಣ,
ಸರ್ವಾಂಗವು ಲಿಂಗವಾಯಿತ್ತು.
ಅದೆಂತೆಂದಡೆ: ಅಗ್ನಿಯಿಂದ ತಪ್ತವಾದ ಲೋಹದ ಪುತ್ಥಳಿಯಂತೆ,
ಒಳಗೂ ಹೊರಗೂ ಏಕವಾಗಿ ಲಿಂಗವೆ ಬೆಳಗುತಿರ್ದ ಕಾರಣ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮಶರಣ ಸರ್ವಾಂಗಲಿಂಗಿಯಾದನು./374
ಶ್ರೀಗುರುಕರುಣ ಕಟಾಕ್ಷಮಾತ್ರದಿಂದ ಶಿವಲಿಂಗದ ಒಲುಮೆ.
ಆ ಶಿವಲಿಂಗದ ಒಲುಮೆಗೆ ಗುರುಕರುಣವೇ ಮುಖ್ಯ.
ಅದು ಕಾರಣ, ಗುರುಪೂಜೆಯ ಮಾಡಿ,
ಗುರು ಕೃಪೆಯನೆ ಪಡೆದಿಹುದಯ್ಯ.
ಉಪಮಿಸಬಾರದ ಮಹಾದೇವನು,
ಪ್ರತ್ಯಕ್ಷವಾಗಿ, ಗುರುರೂಪಿಂದ ಇಹನೆಂದರಿದು,
ಗುರುಭಕ್ತಿಯನೆ ಮಾಡುವುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./375
ಶ್ರೀಗುರುಕರುಣವ ಪಡೆಯಲೆಂದು ಹೋದಡೆ,
ಗುರುವೆನ್ನ ಕಾಯವ ಶುದ್ಧವ ಮಾಡಿ,
ಕಾಯದಲ್ಲಿ ಮಂತ್ರವನಿರಿಸಿ, ಮಂತ್ರಕಾಯನ ಮಾಡಿದನು.
ಜೀವವ ಶುದ್ಧವ ಮಾಡಿ, ಜೀವದಲ್ಲಿ ಲಿಂಗವನಿರಿಸಿ,
ಲಿಂಗಪ್ರಾಣಿಯ ಮಾಡಿದನು.
ಶಿವಮಂತ್ರ ವಾಚ್ಯ ವಾಚಕ ಸಂಬಂಧವಾದ ಕಾರಣ,
ಕಾಯವೇ ಜ್ಞಾನಕಾಯವಾಯಿತ್ತು, ಜೀವ ಶಿವನಾಯಿತ್ತು.
ಇಂತು ಶ್ರೀಗುರುವಿನ ಕಾರುಣ್ಯದಿಂದ ನಾನು ಬದುಕಿದೆನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./376
ಶ್ರೀಗುರುವಿನ ಉಪದೇಶದಿಂದ ಲಿಂಗವನರಿದು,
ಆ ಲಿಂಗವನೆ ನೋಡುತ್ತಿರಲು,
ಆ ಲಿಂಗದೊಳಗೆ ತನ್ನ ಕಂಡು, ನೋಡುವ ನೋಟವ ಬಿಟ್ಟು
ತನ್ನ ಸಮ್ಯಗ್ಜ್ಞಾನದಲ್ಲಿ ಸುಖವಿದ್ದು,
ಆ ಸಮ್ಯಗ್ಜ್ಞಾನವೊಂದೇ ತನ್ನ ರೂಪಾಗಿ ಉಳ್ಳ ಮತ್ತೆ
ಅರಿಯಲು ಮರೆಯಲಿಲ್ಲವೆ ತೆರಹಿಲ್ಲದಿಹನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾದ ಲಿಂಗೈಕ್ಯನು./377
ಶ್ರೀಗುರುಸದ್ಭಾವಜಾತಲಿಂಗವು
ಶಿವಕಲೆ ಸಂಪೂರ್ಣವಾಗಿ ಕರಸ್ಥಲದಲ್ಲಿ ಮೂರ್ತಿಗೊಂಡಿರಲು,
ಕಂಗಳಲ್ಲಿ ನೋಡಿ, ಮನದಲ್ಲಿ ನೆನೆದು,
ಸುಖಿಯಹುದಲ್ಲದೆ ಬೇರೆ ಆಹ್ವಾನಿಸಲುಂಟೇ ಬರುಕಾಯನಂತೆ?
ಹಾಲಹಳ್ಳ ಹರಿವುತ್ತಿರಲು ಅದ ಬಿಟ್ಟು,
ಓರೆಯಾವಿನ ಬೆನ್ನ ಬಳಿಯಲಿ ಹರಿಯಲುಂಟೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತನ್ನಲ್ಲಿದ್ದುದನರಿಯದೆ
ಬೇರರಸಿ ಬಳಲುವರೆಲ್ಲರು ಭ್ರಮಿತರು./378
ಶ್ರೋತ್ರೇಂದ್ರಿಯವನು ಆ ಇಂದ್ರಿಯದೊಡನೆ
ಕೂಡಿದ ಆಕಾಶವನು,
ತ್ವಗಿಂದ್ರಿಯವನು ಆ ಇಂದ್ರಿಯದೊಡನೆ ಕೂಡಿದ ವಾಯುವನು,
ನೇತ್ರೇಂದ್ರಿಯವನು ಈ ಇಂದ್ರಿಯದೊಡನೆ ಕೂಡಿದ ಅಗ್ನಿಯನು,
ಜಿಹ್ವೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿಹ ಅಪ್ಪುವನು,
ನಾಸಿಕೇಂದ್ರಿಯವನು ಆ ಇಂದ್ರಿಯದೊಡನೆ ಕೂಡಿಹ ಪೃಥ್ವಿಯನು,
ಈ ಭೂತಂಗಳು ಕೂಡಿ, ಸಕಲೇಂದ್ರಿಯ ಶಬ್ದಾದಿ
ವಿಷಯಾರ್ಪಣವ ಮಾಡಿ, ಪ್ರಸಾದವ ಪಡೆದರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮಪ್ರಸಾದಿಗಳು./379
ಷಡಧ್ವಾಶ್ರಯವಾವ ಪರಬಿಂದುಸ್ಥಾನದ ಮೇಲಿರ್ದ
ಷಡುಸ್ಥಲಮೂಲವಾದ ಪರಶಿವತತ್ವದೊಳು,
ಷಡುಸ್ಥಲಲಿಂಗಾಂಗ ಜನಿಸಿ ತೋರಿತೆಂದಡೆ
ಅಂಗ ಲಿಂಗಕ್ಕೆ ಭೇದವುಂಟೆ? ಇಲ್ಲದಾಗಿ.
ಬೀಜಾಂಕುರದಂತೆ ಒಂದ ಬಿಟ್ಟು ಒಂದು ತೋರದು.
ಇಂತಪ್ಪ ಲಿಂಗಾಂಗ ಸಂಬಂಧ ಸಕೀಲವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣ ಬಲ್ಲನು./380
ಸಂಚಿತ ಪ್ರಾರಬ್ಧ ಆಗಾಮಿ ಎಂಬ ಕರ್ಮಂಗಳು
ಬೆನ್ನ ಬಿಡವು ನೋಡಾ.
ಆರನಾದರೂ ಮೂಗರಮಾಡಿ ಕಾಡಿ ಕೊಲುತ್ತಿಹವು ನೋಡ.
ಹಿಂದೆ ಮಾಡಿದ ಕರ್ಮ ಬಿಡೆಂದಡೆ ಬಿಡುವುದೆ?
ಮುಂದೆ ಉಂಡಲ್ಲದೆ ತೀರದು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಕಡೆಗಣ್ಣಲ್ಲಿ ನೋಡವನ್ನಕ್ಕ, ಕರ್ಮ ಉಂಡು ತೀರುವುದು./381
ಸಂಸಾರ ವಿಷಯರಸವೆಂಬ ಕಾಳಕೂಟ ಹಾಲಹಲವಿಷವ
ಕೊಂಡವರಾರಾದರೂ ಜೀವಿಸಿದವರುಂಟೆ? ಇಲ್ಲವಾಗಿ.
ಎಲ್ಲರೂ ಸಂಸಾರ ವಿಷಯರಸದಲ್ಲಿ ಸಾವುತ್ತೆ ದಾರೆ.
ಆ ವಿಷಯದ ಗಾಳಿ ಸೋಂಕಿ ಬಳಲುತ್ತಿದ್ದೇನಯ್ಯ.
ನಿಮ್ಮ ಕೃಪಾಪ್ರಸಾದವೆಂಬ ನಿರ್ವಿಷವ ಕೊಟ್ಟು ರಕ್ಷಿಸಯ್ಯ ಎನ್ನ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./382
ಸಂಸಾರ ಸೌಖ್ಯವಲ್ಲ, ಸಂಸಾರ ಸೌಖ್ಯವಲ್ಲ.
ಇಹಲೋಕ ಪರಲೋಕ ಸೌಖ್ಯವಲ್ಲ, ಸ್ಥಿರವಲ್ಲ.
ಗೃಹಪಾಶ, ಕ್ಷೇತ್ರಭ್ರಮೆ ಬಳಸಿ ಬಳಸಿ ಬರುತ್ತಿದೆ,
ಬಿಡು ಬಿಡು ವಾಂಛೆಯ, ಆಗ ಹುಟ್ಟಿ ಬೇಗ ಸಾವವರ ಕಂಡು
ಮತ್ತೇಕೆ ಸಂಸಾರದಾಸೆ?
ನಿನ್ನ ದೇಹ ಸ್ಥಿರವಲ್ಲ. ನೀ ಬಂದುದನರಿದು
ಹೋಹ ಗತಿಪಥವ ತೆರಹುಮಾಡು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಹರೆ./383
ಸಂಸಾರಕ್ಕೆ ಹೇಸಿ,
ಗುರುವನರಸಿಕೊಂಡು ಬಂದು ಶಿಷ್ಯನ ಕಣ್ಣ ಮುಂದೆ,
ಪರಶಿವನು ಗುರುವಾಗಿ ಪ್ರತ್ಯಕ್ಷನಾದನಯ್ಯ.
ಆ ಗುರುವೆ ಕಂಡು, ಸಾಷ್ಟಾಂಗವೆರಗಿ ಬಿನ್ನೆ ಸಲು,
ಶ್ರೀಗುರು ಶಿಷ್ಯನಾದಿಯನರಿದು, ಈತ ನನ್ನವನೆಂದು ಕರುಣ ಹುಟ್ಟಿ,
ಅಣವಾದಿ ಮಲತ್ರಯಂಗಳ ದೋಷವ ಕಳೆದು,
ಶುದ್ಧಾತ್ಮನ ಮಾಡಿ, ವಿಭೂತಿಯ ಪಟ್ಟವ ಕಟ್ಟಿ,
ಪಂಚಕಳಶೋದಕದಿಂದಭಿಷೇಕವ ಮಾಡಿ,
ಪಂಚಾಕ್ಷರಿಯನುಪದೇಶಿಸಿ,
ಅಂಗದ ಮೇಲೆ ಲಿಂಗವ ಧರಿಸಿದನಯ್ಯ.
ಇಂತಾದ ಬಳಿಕ,
ಕಾಯವೇ ಶಿವಕಾಯವಾಗಿ, ಪ್ರಾಣವೇ ಪರಶಿವನಾಯಿತ್ತು.
ಇಂತು, ಶ್ರೀಗುರುವಿನುಪದೇಶದಿಂದ ಸದ್ಯೋನ್ಮುಕ್ತನಾದೆನಯ್ಯಾ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ./384
ಸಂಸಾರದ ಸುಖವೆತ್ತ ನಿಮ್ಮ ನಿಜ ಸುಖವೆತ್ತ?
ಕತ್ತಲೆಯೆತ್ತ ಬೆಳಗೆತ್ತ?
ಎನ್ನಂತರಂಗದೊಳಗಿರ್ದು ತೋರುವೆ ಅಡಗುವೆ
ಇದೇನು ಗಾರುಡಿಗತನ ನಿನಗೆ?.
ಸವಿವಾಲು ಸಕ್ಕರೆಯನುಣ ಕಲಸಿ, ಬೇವನುಣಿಸಿಹೆನೆಂದಡೆ
ಅದು ಹಿತವಹುದೆ?
ನಿನ್ನ ನಿಜಸುಖದ ಸವಿಗಲಿಸಿ,
ಸಂಸಾರಸುಖವನುಣಿಸಿಹೆನೆಂದರದು ಮನಕೊಂಬುದೆ?.
ಎನ್ನೊಡನೆ ವಿನೋದವೆ ನಿನಗೆ? ಬೇಡ ಬೇಡ.
ಎನ್ನ ನೀನರಿದು ಸಲಹು,
ನಿನಗೆ ಎನ್ನಾಣೆಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./385
ಸಂಸಾರವೆಂಬ ಘೋರಾರಣ್ಯದೊಳಗೊಬ್ಬಳು,
ಜಗವ ನುಂಗಿ ಉಗುಳುವ ಬಲು ರಕ್ಕಸಿಯಿದ್ದಾಳೆ.
ಗಜ ವ್ಯಾಘ್ರ ಕ್ರೂರ ಮೃಗಂಗಳ ಭಯ ಘನ.
ಹುಲ್ಲ ಬಿಲ್ಲಿನವ, ಕೈಯ ಹಗ್ಗದವ ಇವರಿಬ್ಬರು ಬಲುವ್ಯಾಧರು
ಕಣುವೆಯ ಕಟ್ಟಿ ಐದಾರೆ ಆ ಕಡೆಗಡಿಯಿಡದಿರಣ್ಣ.
ಭಕ್ತಿಗ್ರಾಮದತ್ತ ನಡೆಯಿರಣ್ಣ. ಎಡರಾಪತ್ತುಗಳಿಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಭಕ್ತಿಗ್ರಾಮದಲ್ಲಿ./386
ಸಂಸಾರವೆಂಬ ಮಹಾಘೋರಾರಣ್ಯದಲ್ಲಿ
ಹೊಲಬುಗೆಟ್ಟು, ನೆಲೆಯ ಕಾಣದೆ ಹೋದರು.
ನಿಜದ ಹೊಲಬುದಪ್ಪಿ ಬಳಲುತ್ತಿದ್ದಾರೆ ನೋಡಯ್ಯ.
ಇರುಳುಹಗಲೆನ್ನದೆ ಸಂಸಾರದಲ್ಲಿ ಸಾವುತ್ತಿದ್ದಾರೆ ನೋಡಯ್ಯ.
ಇಂತಪ್ಪ ಸಂಸಾರಾರಣ್ಯದಲ್ಲಿ,
ಹೊಲಬುಗೆಟ್ಟು ನೆಲೆಯ ಕಾಣದೆ ಹೋದರು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮನರಿಯದೆ./387
ಸಂಸಾರವೆಂಬ ಮಹಾವ್ಯಾಧಿ ಬಾಧಿಸಿ, ನಡೆವೆಣನ ಮಾಡಿ
ಕಾಡುತ್ತಿದೆ ನೋಡಯ್ಯ.
ಮುಂದೆ ಸತ್ಪಥದಲ್ಲಡಿಯಿಡಲು ಶಕ್ತಿಯಿಲ್ಲದವನ ಮಾಡಿ,
ಕಾಡುತ್ತಿದೆ ನೋಡಯ್ಯ.
ಶಿವನೆ ನಿನ್ನ ನಾ ಬೇಡಿಕೊಂಬೆನು.
ನೀನೇ ಶ್ರೀಗುರುವೆಂಬ ವೈದ್ಯನಾಗಿ ಬಂದು,
ಕೃಪಾಪ್ರಸಾದವೆಂಬ ಮದ್ದ ಕೊಟ್ಟು,
ಪಂಚಾಕ್ಷರಿಯೆಂಬ ಪಥ್ಯವನೆರೆದು,
ಸಂಸಾರವೆಂಬ ವ್ಯಾಧಿಯ ಮಾಣಿಸಯ್ಯ ನಿಮ್ಮ ಧರ್ಮ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./388
ಸಂಸಾರವೆಂಬ ವಿಷವೃಕ್ಷಕ್ಕೆ ಪಂಚೇಂದ್ರಿಯಂಗಳೆ ಶಾಖೆಗಳು.
ಪಂಚಕ್ಲೇಶಂಗಳೆ ಫಲಂಗಳು, ಪಂಚವಿಷಯಂಗಳೆ ರಸವು.
ಈ ಫಲವ ಬಯಸಿ, ಮೆದ್ದವರೆಲ್ಲಾ ಮರಣಕ್ಕೊಳಗಾದರು.
ಅದನರಿದು ಆ ಫಲವ ನಾನು ಮುಟ್ಟೆನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./389
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಪರಂಜ್ಯೋತಿಯೊಡಗೂಡಿ
ಅರಿದಿರ್ದಾತಂಗೆ,
ಸರ್ವ ವಿಷಯಜ್ಞಾನವಿಲ್ಲ, ದೇವತಿರ್ಯಙ್ಮನುಷ್ಯಾದಿ
ವ್ಯವಹಾರ ವಿಕಲ್ಪವಿಲ್ಲ,
ಮಾಯಾಭ್ರಾಂತಿ ಲಯವಾಯಿತ್ತಾಗಿ.
ಸುಜ್ಞಾನ ಸುಷುಪ್ತಿಯನೆಯ್ದಿ ಶಿವ ತಾನಾದ ಅವಿರಳ ಪ್ರಸಾದಿಗೆ
ಇಹಪರವೆಂಬುದಿಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿಹನು./390
ಸತ್ಯಸದಾಚಾರವಂತರು, ಮುನ್ನ ರುದ್ರಾಕ್ಷಿಯ ಧರಿಸಿ,
ಮುಕ್ತಿಯನೈದಿದರು ನೋಡಯ್ಯ.
ಇದನರಿದು,
ಮುಕ್ತಿಯಬೀಜವೆನಿಪ ರುದ್ರಾಕ್ಷಿಯ ಧರಿಸಿದರಯ್ಯ.
ದರ್ಶನ ಸ್ವರ್ಷನದಿಂದ ಪಾಪನಾಶನ ಕಾಣಿರಯ್ಯ.
ರುದ್ರನ ಐದುಮುಖವಾದ ರುದ್ರಾಕ್ಷಿ,
ರುದ್ರನ ಮುದ್ರೆಯೆಂದರಿದು ಧರಿಸಿದರಯ್ಯ.
ರುದ್ರಾಕ್ಷಿಯ ಧರಿಸಿದವರು ರುದ್ರರಪ್ಪರು, ತಪ್ಪದು ಕಾಣಿರಯ್ಯ.
ಇಂತಿದನರಿದು,
ಶಿಖೆ ಮಸ್ತಕ ಕಂಠ ಕರ್ಣ ಹೃದಯ ಬಾಹು ಮಣಿಬಂಧಗಳಲ್ಲಿ
ಅಕ್ಷಮಾಲೆಯಾಗಿ ಧರಿಸಿದವರೆ ರುದ್ರರು.
ಆ ರುದ್ರಾಕ್ಷಿಯ ಧರಿಸಿದ ರುದ್ರರ,
ದರ್ಶನ ಸ್ವರ್ಶನ ಸಂಭಾಷಣೆಯಿಂದ ಸರ್ವಪಾಪಕ್ಷಯವಾಗಿ,
ಕೇವಲ ಮುಕ್ತಿಯಪ್ಪುದು ತಪ್ಪದಯ್ಯ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಬೆರಸಬೇಕಾದಡೆ,
ಶ್ರೀರುದ್ರಾಕ್ಷಿಯನೊಲಿದು ಧರಿಸಿರಯ್ಯ./391
ಸತ್ವ ರಜ ತಮದ ಮೇಲೆ ನಿಂದು ಬೆಳಗುವ ಜ್ಯೋತಿಯ ಬೆಳಗು
ಕತ್ತಲೆಯ ಗೃಹದೊಳಹೂರಗೆ ತಾನೆ ಬೆಳಗುತಿದೆ ನೋಡಾ.
ಆ ಬೆಳಗಿನ ಬೆಂಬಳಿಯ ತಿಳಿವಿಂದ ತಿಳಿದು ನೋಡಲು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬೆಳಗಲ್ಲದೆ,
ಮತ್ತೊಂದು ಬೆಳಗಿಲ್ಲ ನೋಡಾ./392
ಸದಾಚಾರವನಾಚರಿಸುವ ಸತ್ಕಿ ್ರಯಾಚಾರ ಸಂಪನ್ನಂಗೆ,
ಸಮ್ಯಗ್ಜ್ಞಾನ ಉದಯವಹುದು.
ಆ ಸಮ್ಯಗ್ಜ್ಞಾನೋದಯದಿಂದ, ತನ್ನ ತಾನರಿದು,
ತಾನೆ ಶಿವನಲ್ಲದೆ, ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೆಯ್ದುವಡೆ,
ಸದಾಚಾರವೇ ಮುಖ್ಯವಯ್ಯ./393
ಸಪ್ತದ್ರವ್ಯಂಗಳು ಎಡೆಯಿಲ್ಲದೆ ಹೋದುವು.
ಅಷ್ಟಮದಂಗಳು ನಷ್ಟವಾದುವು.
ಅರಿಷಡ್ವರ್ಗದುರವಣಿ ತರಹರಿಸಲಾರದೆ ಹೋದವು.
ಪಂಚೇಂದ್ರಿಯಂಗಳ ವಂಚನೆ ಬರತವು.
ಕಮರ್ೆಂದ್ರಿಯಂಗಳ ವ್ಯಾಪಾರ ನಿಂದವು.
ಕಾಮನ ಬಾಣ ಬತ್ತಳಿಕೆಯಲ್ಲಿ ಹಾಯ್ದುವು.
ಕಾಲನ ಅಧಿಕಾರ ನಿಂದಿತ್ತು
ಮಾಯೆ ಮುಂದುಗೆಟ್ಟು ಮುಖವಿಡಲಮ್ಮದೆ ಹೋಯಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರ ಮುಂದೆ./394
ಸಮತೆಯೆಂಬ ಕಂಥೆಯ ಧರಿಸಿ
ಕ್ಷಮೆಯೆಂಬ ಭಸ್ಮಧಾರಣವನಳವಡಿಸಿ
ಸರ್ವಜೀವದಯಾಪರವೆಂಬ ಕಮಂಡಲವ ತಳೆದುಕೊಂಡು
ಸುಜ್ಞಾನವೆಂಬ ದಂಡವ ಹಿಡಿದು
ವೈರಾಗ್ಯವೆಂಬ ಭಿಕ್ಷಾಪಾತ್ರೆ ಸಹಿತ,
ಭಕ್ತಿ ಭಿಕ್ಷವ ಬೇಡ ಬಂದನಯ್ಯ.
ಸತ್ಯ ಶರಣರಾದ ಭಕ್ತರನರಸುತ್ತ.
ಭಕ್ತಿ ಭಿಕ್ಷವ ಬೇಡ ಬಂದನಯ್ಯ.
ಕಾಯದ ಕಳವಳವ ಕಳೆದು,
ಜೀವನೋಪಾಯವಿಲ್ಲದೆ, ಸುಳಿವನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಭಕ್ತಿ ಕಾರಣವಾಗಿ./395
ಸರ್ವ ಕ್ರೀಯ ಲಯಸ್ಥಾನವಾದ ಭಾವಭರಿತ ಲಿಂಗವ
ಭಾವ ಭಾವಿಸುತ, ಭಾವ ಲಯವಾಯಿತ್ತು ನೋಡಾ.
ಇನ್ನು ಭಾವಿಸಲುಂಟೆ ಹೇಳಾ ಮಹಾಘನವ?
ಭಾವ ನಿರ್ಭಾವದ ನಿಜವು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು./396
ಸರ್ವ ಶಾಸ್ತ್ರೋಪಾಧಿಯಿಂದ ಬೇರೊಂದನಾಶ್ರೈಸಿ
ಅರಿದಿಹೆನೆಂಬ ಉಪಮೆಯಳಿದು,
ಸ್ವಾನುಭವಸಿದ್ಧಿಯಿಂದ ತನ್ನ ಸ್ವರೂಪವ ತಾನರಿದು
ಅರಿದೆನೆಂಬ ಅರಿವಿನ ಮರವೆಯ ಕಳೆದು,
ವರ್ಣಾಶ್ರಮಂಗಳಾಚಾರಂಗಳ ಮೀರಿದ ಶಿವಯೋಗಿಯೇ
ವೇದವಿತ್ತಮನು, ವೇದವಿತ್ತಮನು.
ಆತನೆಲ್ಲರ ಅಜ್ಞಾನವ ತೊಳೆದು ನಿಜಮುಕ್ತರ ಮಾಡುವ
ಕರುಣಾಕರನು.
ಆ ಮಹಾತ್ಮನೇ ಸರ್ವಪ್ರಪಂಚಿನ
ಉತ್ಪತ್ತಿ ಸ್ಥಿತಿ ಲಯಂಗಳಿಗೆ ಕಾರಣನಾದಾತನು.
ಆ ಯೋಗಿ ಶರಣನೇ ಸಚ್ಚಿದಾನಂದ
ಪರಮ ಸಾಯುಜ್ಯರೂಪನು.
ಆ ಮಹಾಪುರುಷನೇ ಸಾಲೋಕ್ಯಾದಿ ಸಮಸ್ತ ಮುಕ್ತಿಯ
ಕೊಡುವಾತನೂ ಆಗಿ,
ಪರಿಪೂರ್ಣ ಭಾವದಿಂದ
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರನಾಗಿ ತೋರುತ್ತಿಹನು./397
ಸರ್ವಾಂಗವು ಲಿಂಗಸಂಗವಾಗಿ, ಲಿಂಗ ಸರ್ವಾಂಗಸಂಗವಾಗಿ,
ಪ್ರಾಣ ಲಿಂಗದಲ್ಲಿ ಸಂಗವಾಗಿ, ಲಿಂಗ ಪ್ರಾಣದಲ್ಲಿ ಸಂಗವಾಗಿ,
ಸಕಲೇಂದ್ರಿಯಂಗಳು ಲಿಂಗಸಂಗವಾಗಿ,
ಲಿಂಗ ಸಕಲೇಂದ್ರಿಯಂಗಳಲ್ಲಿ ಸಂಗವಾಗಿ,
ಮನ ಲಿಂಗಸನ್ನಿಹಿತವಾಗಿ, ಲಿಂಗ ಮನಸನ್ನಿಹಿತವಾಗಿ,
ಸಮರಸ ಸದ್ಭಾವಿಯಾದ ಶರಣನೆ ಲಿಂಗವು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./398
ಸವರ್ೆಂದ್ರಿಯಂಗಳಲ್ಲಿ ಸರ್ವಮುಖವಾಗಿ ಬಂದ ಪದಾರ್ಥದ
ಪೂರ್ವಾಶ್ರಯವ ಕಳೆದು, ಅವಧಾನದಿಂದ ಕೊಂಬಾತ
ನೀನಾದ ಕಾರಣ,
ನಾನು ಅರಿದುಕೊಡಬೇಕೆಂಬ ಅವಧಾನವೆನಗಿಲ್ಲಯ್ಯಾ.
ಅದೇನು ಕಾರಣವೆಂದಡೆ: ಎನ್ನಂಗ ಮನ ಪ್ರಾಣ ಇಂದ್ರಿಯಂಗಳು ನಿನ್ನವಾಗಿ.
ಅಲ್ಲಿ ಅರಿದು ಭೋಗಿಸುವ ಭೋಗಮೂರ್ತಿ ನೀನೆಯಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./399
ಸಿತ ಕೆಂಪು ಕೃಷ್ಣವೆಂಬ ಮೂರರ ಮೇಲೆ,
ಅತಿಶಯವಾಗಿ ಬೆಳಗುವ ಶಿವಲಿಂಗವ,
ಅನುದಿನ ಮನವಿಲ್ಲದ ಮನದಲ್ಲಿ ನೆನೆದು ಸುಖಿಯಾದೆನು,
ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಾ./400
ಸುಖ ದುಃಖ ಮೋಹದೊಡಲುಗೊಂಡು ಹುಟ್ಟಿತ್ತೀ ಜಗವೆಲ್ಲ.
ಆ ಜಗದಂತೆ ಶಿವಭಕ್ತನಾದಡೆ,
ಅದರ ಕುಂದೇನು? ತನ್ನ ಹೆಚ್ಚೇನು?
ಜಗವು ಮಾಯೆಯಂತೆ:ಅದ ಬೇರೆ ಮಾಡೆ.
ತಾ ಶಿವನಂತೆ ಇದ್ದವನ ಇರವು ಶುದ್ಧ.
ಜಗದೀಶನವರೊಳಗೆ ತೆರಹಿಲ್ಲದಿಪ್ಪ:ಇದು ಸತ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./401
ಸುಜ್ಞಾನವೆಂಬ ಹಡಗನೇರಿದ ಗುರು
ತನ್ನನಾಶ್ರಯಿಸಿದ ಶಿಷ್ಯನ
ಸಂಸಾರವೆಂಬ ಮಹಾಪಾಪಸಮುದ್ರವ ದಾಂಟಿಸಿ, ತಡಿಗೆ ಸೇರಿಸಿ
ಮುಕ್ತಿಯೆಂಬ ಗ್ರಾಮಕ್ಕೆ ಎಯ್ದುವ
ಭಕ್ತಿಮಾರ್ಗವ ತೋರಿಸುವನಲ್ಲದೆ,
ಸುಜ್ಞಾನಿಯಲ್ಲದ ಗುರು, ತನ್ನನಾಶ್ರಯಿಸಿದ ಶಿಷ್ಯನ
ಸಂಸಾರ ಸಮುದ್ರದ ದಾಂಟಿಸಲರಿಯ.
ಅದೆಂತೆಂದಡೆ: ಅರೆಗಲ್ಲು ಅರೆಗಲ್ಲ ನದಿಯ ದಾಂಟಿಸಲರಿಯದಂತೆ.
ಇದು ಕಾರಣ,
ಸುಜ್ಞಾನಗುರುವಿನ ಪಾದವ ಹಿಡಿದು
ಸಂಸಾರಸಮುದ್ರವ ದಾಂಟಿಸಬಲ್ಲಡಾತನೇ ಧನ್ಯನು ಕಾಣಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ./402
ಸುವಿಚಾರದರಿವು ಕಣ್ದೆರೆದು,
ನಿರ್ಮಲತ್ವ ನಿರಹಂಕಾರ, ಅನಪೇಕ್ಷೆ ಅಕಾಮ ಮತಿಯಾಗಿ,
ನಿರ್ಮಲಾಚಾರದಿಂದ ಶಿವನ ಭಜಿಸಿ,
ಪರಮಾನಂದರೂಪನಾಗಿ ಶಿವಪದವ ನೆಮ್ಮಿ,
ಇತರವನರಿಯದ ಶಿವನಿಷ್ಠನ ನೋಡಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./403
ಸೂರ್ಯನ ಕರಜಾಲಂಗಳು ಸೂರ್ಯೊದಯವಾದಲ್ಲಿ ಹುಟ್ಟಿ,
ಸೂರ್ಯನು ಅಸ್ತಮಿಸಲು ಕೂಡ ಅಡಗುವಂತೆ,
ಮನೋವಿಕಾರದಿಂದ ಲೋಕವೆಲ್ಲವೂ ತೋರಿ,
ಮನ ಲಯವಾದೊಡನೆ ಆ ಲೋಕವೆಲ್ಲವೂ ಅಡಗಿ,
ಜ್ಞಾನತತ್ತ್ವವೊಂದೇ ತನ್ನ ಸ್ವರೂಪವಾಗಿ ಉಳಿದಿಹ ಯೋಗಿಗೆ
ಮುಂದೆ ಅರಿಯಬೇಕಾದುದೊಂದೂ ಇಲ್ಲವಯ್ಯಾ.
ಉಳಿದ ಉಳುಮೆ ಜ್ಞಾನರೂಪಾಗಿ ನಿಂದಿತಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೇ./404
ಸೂರ್ಯೊದಯವಾಗೆ ತಿಮಿರ ಉಂಟೆ ಹೇಳಾ?
ಪರುಷವೇಧಿಯ ಸಾಧಿಸಿದವಂಗೆ ದಾರಿದ್ರ್ಯ ಉಂಟೆ ಹೇಳಾ?
ಶಿವಜ್ಞಾನಸಂಪನ್ನನಾದ ಜ್ಯೋತಿರ್ಮಯಲಿಂಗಿಗೆ ಅಂಗವುಂಟೇ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾದವಂಗೆ./405
ಸೇವ್ಯಗುರುವಿನ ಮಹಾಪ್ರಸಾದವನನುಭವಿಸಿ,
ತಾನೇ ಗುರುತತ್ತ್ವವಾದ ಮಹಾಪ್ರಸಾದಿಗೆ,
ಬೇರೆ ಜ್ಞಾನವುಂಟೇ?
ಅಪರಿಚ್ಛಿನ್ನ ವಾಙ್ಮನಕ್ಕಗೋಚರ ಪರಾನಂದರೂಪ
ನಿತ್ಯ ತೃಪ್ತ ನಿಜಮುಕ್ತನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು./406
ಸ್ಥಾವರ ಜಂಗಮಾತ್ಮಕವಾದ ಸಮಸ್ತ ಲೋಕವನು
ಸುಜ್ಞಾನವಿಚಾರವಿಡಿದು ಗ್ರಹಿಸಿ,
ತಾನು ಗ್ರಹಿಸಿದ ಲೋಕವು, ಸೂತ್ರದಲ್ಲಿಯ ಮಣಿಗಣದಂತೆ
ಶಿವನಾಧಾರವಾಗಿಹೆನೆಂದರಿದು,
ಅಂಥಾ ಲೋಕಾಧಾರವಾದ ಶಿವನ ನಿರ್ಮಲ ಸಾತ್ವಿಕಗುಣಿಗಳಾದ
ಶಿವಜ್ಞಾನಿಗಳು ಕಂಡು ಸಮಾಧಿನಿಷ್ಠರಾಗಿಹರು,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣರು./407
ಸ್ಥೂಲ ಸೂಕ್ಷ್ಮ ಕಾರಣವೆಂಬ ತನುತ್ರಯವ ವಿಭಾಗಿಸಿ ಕಳೆದು
ಆ ತನುತ್ರಯದಿಂದ ಜೀವತ್ರಯವನು ಹಿಂಗಿಸಿ ಒಂದು ಮಾಡಿ
ನಿಜಾಂಗರೂಪನಾದ ಪರಮಾತ್ಮನಲ್ಲಿ ಕೂಡಿ
ಅಂಗ ಲಿಂಗ ಸಂಗರೂಪಾದ ಪರಮಾತ್ಮನೆ ಪರವೆಂದರಿದು
ಪರಮಾತ್ಮನೆ ಘನವೆಂದರಿದು, ಪರಮಾತ್ಮನೆ ತಾನೆಂದರಿದು
ಲಿಂಗಾಂಗಸಂಗವಾದ ಷಡುಸ್ಥಲವನಂಗೀಕರಿಸಿ
ಅನುದಿನ ಎಡೆಬಿಡುವಿಲ್ಲದೆ ಶಿವಾನುಭಾವಿಯಾಗಿ
ಶಿವಲಿಂಗನ ಭಜಿಸುವವನೆ ಮುಕ್ತನು.
ಉಳಿದವರೆಲ್ಲಾ ಬದ್ಧರಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./408
ಸ್ಫಟಿಕದ ಘಟದಂತೆ ಒಳಹೊರಗೆ ಒಂದೆ ಪರಿ ನೋಡಾ.
ಶರಣಂಗೆ ಅಂತರಂಗ ಬಹಿರಂಗವೆಂದೆನಲುಂಟೆ?
ಕಾದ ಕಬ್ಬುನದ ಘಟ್ಟಿಯಂತೆ ಶರಣನ ಸರ್ವಾಂಗವೆಲ್ಲ
ಲಿಂಗವಾವರಿಸಿ ಲಿಂಗವಾಯಿತ್ತಾಗಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣ
ಲಿಂಗಸಂಗಿಯೇ ಅಂಗಸಂಗಿಯೆಂದು ತಿಳಿಯಬಾರದು./409
ಸ್ವಯಂ ಜ್ಯೋತಿರ್ಲೆಂಗ ಸಂಗದಿಂದ
ಆತ್ಮನು ಜ್ಯೋತಿರ್ಲೆಂಗ ಸ್ವರೂಪವಾದನು.
ಮನವು ಜ್ಯೋತಿರ್ಲೆಂಗ ಸಂಗದಿಂದ
ಜ್ಯೋತಿ ಸ್ವರೂಪವಾಗಿ ಶಿವನ ನೆನವುತ್ತಿಹುದು.
ಜ್ಯೋತಿರ್ಲೆಂಗ ಸಂಗದಿಂದ ಚಕ್ಷು
ಜ್ಯೋತಿ ಸ್ವರೂಪವಾಗಿ ಶಿವಲಿಂಗವೆ ಕಾಣುತ್ತಿಹುದು.
ಇಂದ್ರಿಯಂಗಳು ಜ್ಯೋತಿರ್ಲೆಂಗ ಸಂಗದಿಂದ
ಜ್ಯೋತಿ ಸ್ವರೂಪವಾಗಿ ಲಿಂಗದೊಡನೆ ವರ್ತಿಸುತ್ತಿಹವು.
ಶರಣನೊಳಹೊರಗೊಡಗೂಡಿತೋರುವ
ಜ್ಯೋತಿರ್ಲೆಂಗ ಸ್ವರೂಪ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./410
ಸ್ವರ್ಗ ಮತ್ರ್ಯ ಪಾತಾಳವೆಂಬ ಮೂರುಲೋಕದ
ಒಳಗೂ ಹೊರಗೂ ಶಿವನು ಭರಿತನಾಗಿರ್ದನೆಂದಡೆ,
ಆ ಮೂರುಲೋಕದ ಪ್ರಾಣಿಗಳೆಲ್ಲಾ ಶಿವಪದವನೆಯ್ದೆ ಬಲ್ಲರೇ?
ಎಯ್ದಲರಿಯರಾಗಿ.
ಅದೇನು ಕಾರಣವೆಂದಡೆ,
ಶ್ರೀಗುರುದರ್ಶನದಿಂದಲ್ಲದೆ ಎಯ್ದಬಾರದಾಗಿ.
ಅದು ಕಾರಣ ಗುರುಕೃಪಾ ನಿರೀಕ್ಷಣೆಯಿಂದವೆ
ಪರಮಮುಕ್ತಿಯಪ್ಪುದು ತಪ್ಪದಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./411
ಸ್ವಸ್ಥ ಸಿದ್ಧಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಂಪಿಸದೆ
ನೆಟ್ಟೆಲುವ ನೆಟ್ಟನೆ ಮಾಡಿ
ಅಧೋಮುಖಗಮನವಾಯುವ ಊಧ್ರ್ವಮುಖವ ಮಾಡಿ,
ಆಧಾರವಂ ಬಲಿದು ಪ್ರಾಣವಾಯುವ ಪಾನವ ಮಾಡಿ
ಆರುವೆರಳಿನಿಂ ಆರುದ್ವಾರವನೊತ್ತಲು
ಶಶಿ ರವಿ ಬಿಂಬಗಳ ಮಸುಳಿಪ
ನಾದ ಬಿಂದು ತೇಜವು ಕೂಡಿ ಮೂರ್ತಿಯಾಗಿ
ಥಳಥಳಿಸಿ ಹೊಳೆವ ಲಿಂಗದ ಬೆಳಗಿನೊಳಗೆ ಮನವಳಿದಾತನೆ
ಉನ್ಮನಿವನಿತೆಗೆ ವಲ್ಲಭನೆನಿಸುವ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ಪರಮಯೋಗಿ./412
ಹಗಲಿರುಳ ನುಂಗಿದರೆ ಉದಯಾಸ್ತಮಾನ ನಿಂದಿತ್ತು.
ಸಾಕಾರವ ನಿರಾಕಾರ ನುಂಗಿ ಏಕವಾಯಿತ್ತು.
ಲೋಕಲೌಕಿಕವೆಂಬುದಿಲ್ಲದೆ ಏಕವಾಯಿತ್ತು.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆನ್ನಲಿಲ್ಲದೆ ಏಕವಾಯಿತ್ತು./413
ಹಣೆಗಣ್ಣು ಕೊರಳಕಪ್ಪು ಫಣಿಕುಂಡಲ ದಶಭುಜ ಉಡುಪತಿಯ
ಜಡೆಯ ನಡುವಿನ ಗಂಗೆಯ ಉಡಿಯ ಪುಲಿಚರ್ಮವ
ತೊಡಿಗೆಯ ಕರೋಟಿಮಾಲೆಯ ಹಿಡಿದ ಕಂಕಾಳದಂಡವ,
ಇವನಡಗಿಸಿ ಮೃಡ ಶರಣನಾಮವಿಡಿದು ಚರಿಸಿದನೆಂಬ
ದೃಢಭಕ್ತಿಯಿಲ್ಲದವರಿಗೆ ಶಿವನೊಲಿಯೆಂದರೆಂತೊಲಿವ
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./414
ಹದಿನಾಲ್ಕು ಭುವನದಲ್ಲಿ ಮನೋವೇದ್ಯವಾಗಿ,
ಅಲ್ಲಿಂದತ್ತತ್ತ ಮೀರಿದ ಘನದಲ್ಲಿ ಕೂಡಿದ ಶಿವಯೋಗಿಗೆ
ಪ್ರಳಯವಿಲ್ಲ.
ಅದೇನು ಕಾರಣವೆಂದಡೆ: ಆತನರಿವು ಅಖಂಡವಾಗಿ ಬೆಳಗುತ್ತಿರುವ ಕಾರಣ.
ಜಲಾಗ್ನಿ ಪ್ರಳಯಂಗಳಾದಡೂ
ಮರುತಾದಿತ್ಯರ ಪ್ರಳಯಂಗಳಾದಡೂ
ಶಿವನ ನೆನಹಿಂದ ಮನವು ಶಿವಮಯವಾಗಿ
ಮನವಿಲ್ಲದ ಮುಕ್ತಂಗೆ ಕೇಡು ಮುನ್ನಿಲ್ಲ ಆತ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ,
ನಿತ್ಯನಾಗಿಹನು./415
ಹರ ಹರ ಶಿವ ಶಿವ ಪ್ರಸಾದದ ಘನವ,
ಪ್ರಸಾದಿಯ ಘನವನೇನೆಂದುಪಮಿಸುವೆನು?
ಪ್ರಸಾದವಿಲ್ಲದೆ ಪ್ರಸಾದಿಯಿಲ್ಲ. ಪ್ರಸಾದಿಯಿಲ್ಲದೆ ಪ್ರಸಾದವಿಲ್ಲ.
ಶಿವ ಶಿವ ಒಂದನೊಂದು ಬಿಡದೆ ಎರಡೊಂದಾಗಿ ಕೂಡಿ
ಬೆಳಗುವ ಪರಿಯ ನೋಡಾ!
ಪ್ರಸಾದವು ಪ್ರಸಾದಿಯ ಗ್ರಹಿಸಿ ಪ್ರಸಾದಿಯಾಯಿತ್ತು.
ಪ್ರಸಾದಿಯೂ ಪ್ರಸಾದವ ಗ್ರಹಿಸಿ ಪ್ರಸಾದವಾ-
ದಿರವನೇನೆಂಬೆನು?.
ಇಂತು ಒಂದರೊಳಗೊಂದು ಕೂಡಿ ಎರಡೊಂದಾದ
ಘನವನುಪಮಿಸಬಾರದು.
ವಾಙ್ಮನಕ್ಕತೀತವಾದ ನಿಲವನು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ತಾನೆ ಬಲ್ಲಾ./416
ಹರಗಣಂಗಳೆಲ್ಲ ನರಗಣಂಗಳಾಗಿ
ಒಬ್ಬರ ಆಗಿಂಗೆ ನೆರೆದು ಒಬ್ಬರ ಚೇಗಿಂಗೆ ನೆರೆದು ನುಡಿವರು.
ಒಬ್ಬರು ಒಳ್ಳಿಹರು, ಒಬ್ಬರು ಹೊಲ್ಲಹರು ಎಂದು ತಮತಮಗೆಲ್ಲ
ನುಡಿವರು, ಇದೇನು ಪಂಚಾಕ್ಷರಿ ಮಂತ್ರವೇ?
ಇದೇನು ಮಹಾನುಭಾವದ ನುಡಿಯೇ?
ಹೊತ್ತು ಹೋಕಿನ ಮಾತ ಕಲಿತವರೆಲ್ಲ,
ಮೃತ್ಯುವಿನ ಬಾಯತುತ್ತಾದುದ ಕಂಡು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಮ್ಮ ಶರಣ ನೋಡಿ ನಗುತಿರ್ದನು./417
ಹರಿವ ಮನ ವಾಯುವನೊಂದು ಹುರಿಯ ಮಾಡಿ
ಮನವ ಸ್ಥಿರಗೊಳಿಸಿ,
ಸಗುಣ ಧ್ಯಾನದಲ್ಲಿ ಮನ ಸವೆದು, ನಿರ್ಗುಣದಲ್ಲಿ ನಿಂದು,
ಆ ನಿರ್ಗುಣ ಧ್ಯಾನ ಬಲಿದು, ಸಗುಣ ನಿರ್ಗುಣದಲ್ಲಿ ಅಡಗಿ
ಆ ನಿರ್ಗುಣವಾದ ನಿಜದಲ್ಲಿ ಮನೋಲಯವಾದುದೇ
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಲ್ಲಿ ಪರಮ ರಾಜಯೋಗವು./418
ಹರಿವ ಹರಿಯ ನಿಲಸಿ, ಉರಗನ ನಿದ್ರೆಯ ಕೆಡಿಸಿ,
ಸರೋವರದ ಕಮಲದೊಳಗಣ
ಉದಕವ ಕುಡಿಯಬಲ್ಲರೆ ಯೋಗ.
ಅರಮನೆಯೊಳಗಣ ಅರಗಿಳಿಯ
ಹರಮಂತ್ರವನೋದಿಸಬಲ್ಲರೆ ಯೋಗ.
ಅರಸು ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ
ಹೊರೆಯಿಲ್ಲದೆ ಕೂಡಬಲ್ಲರೆ ಅದು ಪರಮಯೋಗ./419
ಹಲವು ಕಾಲದಿಂದಗಿದಗಿದು ತಿಂದು,
ಸವಿಗಲಿತ ಮಾಯಾರಕ್ಕಸಿ ಬಿಡೆಂದರೆ ಬಿಡುವಳೆ?
ಇವಳ ಬಾಧೆಯ ಗೆಲಿವರೊಂದುಪಾಯವ
ಕಾಬುದು ಕಾಣಿರಯ್ಯ.
ಎಲ್ಲ ದೇವರಿಗೆ ಬಲ್ಲಿದ ಪರಶಿವನ ಮರೆಯ ಹೊಕ್ಕು
ಇವಳ ಬಾಯ ಟೊಣೆವುದಯ್ಯ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಬೆರಸಬೇಕಾದಡೆ./420
ಹಲವು ತೃಣ ಕಾಷ್ಠಗಳಲ್ಲಿ ಅಗ್ನಿ ಬೆರದಿರ್ದಂತೆ,
ಹಲವು ಘಟಜಲದಲ್ಲಿ ಸೂರ್ಯ ಬಿಂಬಿಸುತ್ತಿರ್ದಂತೆ,
ಇಪ್ಪನಯ್ಯ ಶಿವನು ಸಕಲ ಜೀವರ ಹೃದಯದಲ್ಲಿ.
ಬೆರಸಿಯೂ ಬೆರಸದಂತಿಪ್ಪನಯ್ಯಾ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./421
ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ.
ದೇವರುದೇವರೆಂದರೇನು? ಒಮ್ಮರ ದೇವರೇ?
ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ,
ಉಳಿದವರೆಲ್ಲ ದೇವರೆ?
ಬ್ರಹ್ಮ ದೇವರೆಂಬಿರೇ? ಬ್ರಹ್ಮನ ಶಿರವ ಹರ ಚಿವುಟಿದ.
ವಿಷ್ಣು ದೇವರೆಂಬಿರೇ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ.
ಇಂದ್ರ ದೇವರೆಂಬಿರೇ? ಇಂದ್ರನ ಮೈಯೆಲ್ಲಾ ಭಗವಾಗಿ
ನಿಂದೆಗೊಳಗಾದ.
ಚಂದ್ರ ದೇವರೆಂಬಿರೇ? ಕುಂದ ಹೆಚ್ಚ ತಾಳಿ ಕ್ಷಣಿಕನಾದ.
ಸೂರ್ಯ ದೇವರೆಂಬಿರೇ? ಸೂರ್ಯ ಕುಷ್ಠರೋಗದಿಂದ ಭ್ರಷ್ಟಾದ.
ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ.
“ಸರ್ವದೇವ ಪಿತಾ ಶಂಭುಃ ಭಗರ್ೊಃ ದೇವಸ್ಯ ಧೀಮಹಿ’
ಎಂದುದಾಗಿ,
ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ
ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು./422
ಹಲವು ಬಣ್ಣದ ಮೃಗದ ನೆಲೆಯನರಿದೆವೆಂದು
ಹಲಬರು ತಲೆವಾಲಗೆಟ್ಟರು ನೋಡಾ.
ಬಣ್ಣವ ಬೇರುಮಾಡಿದವಂಗಲ್ಲದೆ,
ಮೃಗದ ನೆಲೆಯ ಕಾಣಬಾರದು.
ಮೃಗದ ನೆಲೆಯ ಕಂಡರೇನು,
ಆ ಮರ್ಕಟನ ಕಾಟ ಬೆನ್ನ ಬಿಡದು.
ಆ ಮರ್ಕಟನ ಹಿಡಿದು
ಶೂಲಕ್ಕೆ ಹಾಕಿದ ಬಳಿಕ ನಿಶ್ಚಿಂತೆಯಹುದು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಜ ಪದವನೆಯ್ದುವಂಗೆ./423
ಹಲವು ಮಾತಕಲಿತ ಉಲಿಗಿತಿ ಸೂಳೆಯ ಹಾಂಗೆ,
ಉಲಿವರ ಕಂಡಡೆ ನಿಃಕಪಟಿ ಒಳ್ಳಿದನೆಂಬರು.
ಪಾಪಕ್ಕಂಜಿ ಸತ್ಯವನ್ನಾಡಿದಡೆ ಈತನ
ಒಳಗೆಣಿಸರು ಅತಿ ಕಪಟಿಯೆಂಬರು.
ದುರ್ಜನರ ಮುಂದೆ ಸಜ್ಜನಿಕೆ ಮೆರವುದೆ?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನೀ ಮಾಡಿದ ಮಾಹೇಂದ್ರಜಾಲದ ಮಾಯಕೆ
ನಾನು ಬೆರಗಾದೆನು./424
ಹಾವಾಡಿಗ ಹಾವನಾಡಿಸುವಲ್ಲಿ, ತನ್ನ ಕಾಯ್ದುಕೊಂಡು,
ಹಾವನಾಡಿಸುವಂತೆ,
ಆವ ಮಾತನಾಡಿದಡೂ, ತನ್ನ ಕಾಯ್ದು ಆಡಬೇಕು.
ಅದೆಂತೆಂದಡೆ,
ತನ್ನ ವಚನವೆ ತನಗೆ ಹಗೆಯಹುದಾಗಿ.
ಅನ್ನಿಗರಿಂದ ಬಂದಿತ್ತೆನ್ನಬೇಡ.
ಅಳಿವುದು ಉಳಿವುದು ತನ್ನ ವಚನದಲ್ಲಿಯೆ ಅದೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಹಗೆಯು ಕೆಳೆಯು ತನ್ನ ವಚನವೇ, ಬೇರಿಲ್ಲ./425
ಹಿಂದು ಮುಂದಣ ಮನದ ಸಂಕಲ್ಪ ವಿಕಲ್ಪವಳಿದು,
ರೂಪಜ್ಞಾನ ನಿರೂಪಜ್ಞಾನವೆಂಬುವೇನೂ ತೋರದೆ,
ಜ್ಞಾನ ಜ್ಞೇಯ ಧ್ಯಾನ ಧ್ಯೇಯ ಲಕ್ಷ್ಯಾಲಕ್ಷ್ಯ ದೃಶ್ಯಗಳೆಂಬ
ವಿಚಾರವಳಿದ ಜೀವನ್ಮುಕ್ತಂಗೆ
ಅರಿಯಲೊಂದಿಲ್ಲ, ಮರೆಯಲೊಂದಿಲ್ಲ,
ತೆರೆಯಡಗಿದ ಅಂಬುನಿಧಿಯಂತೆ ನಿಶ್ಚಿಂತನಾಗಿದ್ದನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾಗಿ./426
ಹುಟ್ಟು ಹೊಂದೆಂಬುದಿಲ್ಲದ ದೇವಾ, ನಿಮ್ಮಿಂದ ನೀವೆ
ಶೂನ್ಯದಲ್ಲಿ ನಿಂದು ಸ್ವಯಂಭುವಾದಿರಲ್ಲ.
ಬೀಜ ವೃಕ್ಷದಂತೆ ಸಾಕಾರ ನಿರಾಕಾರವು ನೀವೆಯಾದಿರಲ್ಲ.
ಸಕಲವೆಲ್ಲಕ್ಕೆ ಮೂಲಿಗರಾದಿರಲ್ಲ.
ನಿಮ್ಮ ನಿಜವ ನೀವೇ ಅರಿವುತ್ತಿದರ್ಿರಲ್ಲ.
ನಿಮ್ಮ ಮಹಿಮೆಯ ನೀವೇ ಬಲ್ಲಿರಿ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./427
ಹುರಿದ ಬೀಜದಂತೆ, ಬೆಂದ ನುಲಿಯಂತೆ,
ಹಿಂದಣಂಗ ಉಂಟೆ ಹೇಳಾ?
ಸಮ್ಯಗ್ ಜ್ಞಾನಾಗ್ನಿಯಲ್ಲಿ ದಗ್ಧವಾದ ಜನ್ಮ ಬೀಜವನುಳ್ಳ ಶರಣನು,
ಶಿವಕಾಯವನಾಶ್ರಯಿಸಿ ಶಿವ ತಾನಾಗಿಹನಲ್ಲದೆ,
ತನಗೆ ಬೇರೆ ಕಾಯವಿಲ್ಲ. ತಾನೆಂಬುದು ಮುನ್ನವೇ ಇಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗವೇ ಅಂಗವಾದಂಗೆ./428
ಹುಲ್ಲಹೊರೆಯೊಳಗೊಂದು ಕಿಚ್ಚು ಹುಟ್ಟಿ ಸುಡುವುದ ಕಂಡೆ.
ಹುಲ್ಲ ಮೇವ ಎರಳೆಯ ಕೋಡು ಮುರಿದು
ಅಡವಿಯಲ್ಲಿ ಬಿಟ್ಟುದ ಕಂಡೆ.
ಬಲ್ಲಿದ ಬಲೆಗಾರನ ಬಲೆಯ ನೇಣು ಹರಿದು,
ಬಲೆಯ ಬಿಟ್ಟುಹೋದುದ ಕಂಡೆ.
ಅಟ್ಟೆಯ ಬಿಟ್ಟು ತಲೆ ಆಕಾಶವನಡರಿತ್ತ ಕಂಡೆ.
ದೂರ ದಾರಿ ಸಾರೆಯಾದುದ ಕಂಡೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣ,
ಹುಟ್ಟು ಮುರಿದು ಬಟ್ಟಬಯಲಾದುದ ಕಂಡೆ./429
ಹುಸಿಯಿಲ್ಲದ ಶಿಷ್ಯನು,
ಮರಹಿಲ್ಲದ ಗುರುವಿನ ಪಾದವ ಹಿಡಿದಡೆ,
ಕುರುಹಿಲ್ಲದ ಲಿಂಗವ ಕೊಡಲಿಕ್ಕಾಗಿ,
ತೆರಹಿಲ್ಲದಪ್ಪಲೊಡನೆ ಬರಿದಾದವು ತನುಮನಪ್ರಾಣಂಗಳೆಲ್ಲವು.
ಈ ಬೆಡಗಿನುಪದೇಶವ ಪಡೆದ ಶಿಷ್ಯನಲ್ಲಿ, ಗುರುವಡಗಿ
ಗುರು ಶಿಷ್ಯನಾಗಿ, ಎರಡೂ ಒಂದಾದ
ಪರಿಯನೇನೆಂದುಪಮಿಸುವೆನಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲೊಂದಾದ ಗುರುಶಿಷ್ಯರ?./430
ಹೇಡಿಮನದ ಸಖತ್ವದಿಂದೇನಾಗದಯ್ಯ?
ಇಹಪರದ ವೈರಾಗ್ಯವ ಕೆಡಿಸಿ ಹೇಡಿಗೊಳಿಸಿತ್ತು.
ಮುಂದಕ್ಕೊಂದಡಿಯಿಡಲೀಯದೆ ಹಿಂದಕ್ಕೆ ಹಿಡಿದೆಳೆವುತ್ತಿದೆ.
ಈ ಮನಕ್ಕೆ ಜ್ಞಾನಶಾಸ್ತ್ರವ ಕೊಟ್ಟು ಕಲಿಮಾಡಿ
ಸನ್ನಿಧಿಯಲ್ಲಿ ನಿಮ್ಮಾಳಾಗಿರಿಸಿಕೊಳ್ಳಯ್ಯಾ ಈ ಮನವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./431
ಹೊತ್ತುಳ್ಳಲ್ಲಿ ಅಗ್ಛವಣಿ ಪತ್ರೆ ಪುಷ್ಪವ ತಂದು,
ಅರ್ಥಿಯಲ್ಲಿ ಶಿವಲಿಂಗಪೂಜೆಯ ಮಾಡಲು,
ಎತ್ತಿದ ಮಣಿಮಕುಟದ ಮೊತ್ತದ ಗಣಂಗಳ ನಡುವೆ,
ಮೃತ್ಯುಂಜಯನೊಯ್ದಿರಿಸುವನವರ,
ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ./432
ಹೊನ್ನು ಹೆಣ್ಣು ಮಣ್ಣು ತನಗೆ ಸಂಬಂಧವೆಂದು ಹೇಳಿಕೊಂಬರು
ತನಗೆ ಸಂಬಂಧವೇನು?
ಬ್ರಹ್ಮಚಾರಿಯಾದ ಮೇಲೆ[ಬಿ]ಡದಾಚರಿಸಿದರೆ.
ಮುಕ್ತಿಸ್ಥಲ ದೂರವಾಯಿತ್ತು.
ಅದು ಇದ್ದರೇನು? ಪರೋಪಕಾರವಿರಬೇಕು.
ಜಂಗಮಕ್ಕೆ ಹೆಣ್ಣಿನಲ್ಲಿ ಸಿಕ್ಕಿದರೆ
ಅವರಿಗೆ ಹಿಂದಣ ಸಂಬಂಧವಿದ್ದ ಕಾರಣ ದೊರಕಿತ್ತು.
ಆವ ನಡೆಯಲ್ಲಿ ನಡೆದರೇನು?
ಕಂಡು ಮನದಲ್ಲಿ ಜರಿದೆನಾದರೆ ಜಂಗಮವೆನಗಿಲ್ಲ.
ಪಾದೋದಕ ಪ್ರಸಾದಕ್ಕೆ ದೂರವಾಯಿತ್ತು.
ನಿಮ್ಮನರಿದು ನಡೆದಾತಂಗೆ ಸಾಧನೆಯಾಗುವುದಲ್ಲದೆ,
ಬೆಳಗಿನ ಕತ್ತಲೆಯ ಕಂಡು ಕತ್ತಲೆಯಾಯಿತ್ತೆಂದು,
ದೀಪವ ಮುಟ್ಟಿಸಲೆಂದು,
ತನ್ನೊಳಗಿರ್ದ ಜೋತಿಯ ಬೆಳಗಮಾಡಿ,
ಜ್ಞಾನವನುದ್ಧರಿಸಿರ್ಪ ಶರಣನ ಹೆಜ್ಜೆಯ ತಿಳಿವರೆ? ನೋಡಾ,
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ./433
ಹೊನ್ನು ಹೆಣ್ಣು ಮಣ್ಣೆಂಬ ಸೊಕ್ಕನಿಕ್ಕಿ ಸಿಕ್ಕಿಸಿ
ಕೆಡಹಿದನಯ್ಯಾ ಜೀವರ, ಮುಕ್ಕಣ್ಣ ಶಿವನು.
ಕಾಲನಿಗೊಪ್ಪಿಸಿ ಜಗವ ಠಕ್ಕಿಸಿ ಮಿಕ್ಕು ಮೀರಿ ಹೋದನಯ್ಯ,
ಶಿವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು./434