ಕಣಜ ತಿಳಿಯಿರಿ

‘ಕಣಜ’ ಎಂದರೇನು?

 • ವಿದ್ಯುನ್ಮಾನ ಮಾಧ್ಯಮದ ಮೂಲಕ ಕನ್ನಡ ಭಾಷೆಯಲ್ಲಿ ಎಲ್ಲ ಬಗೆಯ ಅರಿವಿನ ಹರಿವುಗಳು ಮುಕ್ತವಾಗಿ ಸಿಗುವಂತೆ ಮಾಡಲು ವ್ಯವಸ್ಥಿತ ಜಾಲತಾಣ ರೂಪಿಸುವ ಯೋಜನೆ. ಇರುವ ಜ್ಞಾನದ ಸಂಗ್ರಹ, ಪರಿಷ್ಕಾರ ಮತ್ತು ಹೊಸ ಜ್ಞಾನದ ಸೃಷ್ಟಿ – ಇವು ಕಣಜದ ಸ್ಥೂಲ ಚಟುವಟಿಕೆಗಳು.

`ಕಣಜ’ವನ್ನು ರೂಪಿಸಿದವರು ಯಾರು?

 • ಕಣಜ’ವನ್ನು ಕರ್ನಾಟಕ ಸರ್ಕಾರ ಕರ್ನಾಟಕ ಜ್ಞಾನ ಆಯೋಗವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಈ ಯೋಜನೆಯನ್ನು ಪರಿಕಲ್ಪಿಸಿ, ರೂಪಿಸಿದ್ದು, ೨೦೧೫ನೆ ಸಾಲಿನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ಸಮಿತಿ ವತಿಯಿಂದ ನಿರ್ವಹಿಸಲಾಗುತ್ತಿದೆ.

`ಕಣಜ’ದ ಕಚೇರಿ ಎಲ್ಲಿದೆ? ಯೋಜನೆಯನ್ನು ನಡೆಸುತ್ತಿರುವವರು ಯಾರು?

ಕಣಜದ  ಅಧಿಕೃತ ಕಚೇರಿಯು

ಸಲಹಾ ಸಮನ್ವಯಕಾರ

ಕಣಜ ಅಂತರಜಾಲ ಕನ್ನಡ ಜ್ಞಾನಕೋಶ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಮೊದಲನೆಯ ಮಹಡಿ, ಕನ್ನಡ ಭವನ,
ಜಯಚಾಮರಾಜೇಂದ್ರ ಒಡೆಯರ್ ರಸ್ತೆ, ಬೆಂಗಳೂರು- 560 002 ಆಗಿರುತ್ತದೆ.

`ಕಣಜ’ ಯೋಜನೆಯ ಸಂಚಾಲನಾ ಸಮಿತಿ ಹೀಗಿದೆ:

 • ಅಧ್ಯಕ್ಷರು: ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
 • ಸದಸ್ಯ ಕಾರ್ಯದರ್ಶಿ- ನಿರ್ದೇಶಕರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಸದಸ್ಯರು:

 • ಹೆಚ್ಚುವರಿ ಕಾರ್ಯದರ್ಶಿ, IT-BT-S&T ಇಲಾಖೆ.
 • ಡಾ. ರಾಜಗೋಪಾಲನ್, IIIT-B
 • ಡಾ. ಎಸ್.ಕೆ.ಸ್ವಾಮಿ , KSCST, ಬೆಂಗಳೂರು.
 • ಡಾ. ಕೆ.ಚಿದಾನಂದಗೌಡ, ವಿಶ್ರಾಂತ ಕುಲಪತಿಗಳು, ಕುವೆಂಪು ವಿ.ವಿ.
 • ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಇ-ಆಡಳಿತ ಕೇಂದ್ರ.
 • ತಾಂತ್ರಿಕ ನಿರ್ದೇಶಕರು,ಎನ್.ಐ.ಸಿ-ಕರ್ನಾಟಕ.
 • ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ.

`ಕಣಜ’ದ ಸ್ಥೂಲ ಉದ್ದೇಶಗಳೇನು?

 • ಇದು ಕನ್ನಡ ಭಾಷೆಯಲ್ಲಿ ಯಾವುದೇ ಮಾಹಿತಿಗೆ ಅಧಿಕೃತ ಮೂಲವಾಗುತ್ತದೆ. ಜ್ಞಾನಸಮಾಜದ ಸೃಷ್ಟಿಯ ದಿಕ್ಕಿನಲ್ಲಿ ಇದೊಂದು ಹೆಜ್ಜೆ.
 • ವಿವಿಧ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಮಾಹಿತಿಗಳನ್ನು ಪಡೆದು ಅವುಗಳನ್ನು ಸಾರ್ವಜನಿಕ ಬಳಕೆಗಾಗಿ ಕನ್ನಡ ಭಾಷೆಯಲ್ಲಿ, ವಿದ್ಯುನ್ಮಾನ ರೂಪದಲ್ಲಿ, ವಿಶ್ವವ್ಯಾಪಿ ಜಾಲತಾಣದಲ್ಲಿ(www.kanaja.karnataka.gov.in) ಪ್ರಕಟಿಸುವುದು.
 • ಮಾಹಿತಿಗಳು ಆದಷ್ಟೂ ಅಧಿಕೃತವೂ, ಖಚಿತವೂ, ಸಂರ್ಣವೂ, ಗುಣಮಟ್ಟದ್ದೂ ಆಗಿರುವಂತೆ ತಜ್ಞರ ನೆರವನ್ನು ಪಡೆದು ಎಲ್ಲ ಮಾಹಿತಿಗಳನ್ನೂ ಪರಾಮರ್ಶೆಗೆ  ಒಳಪಡಿಸಿಯೇ ಪ್ರಕಟಿಸುವುದು.
 • ಪಠ್ಯ, ಚಿತ್ರ, ಧ್ವನಿ ಮತ್ತು ಚಲನಚಿತ್ರ – ಹೀಗೆ ಬಹುಮಾಧ್ಯಮಗಳಲ್ಲಿ ಕನ್ನಡ ಮಾಹಿತಿಯನ್ನು ಪ್ರಕಟಿಸಲು ಬೇಕಾದ ಎಲ್ಲ ಮಾಹಿತಿ ಸಂಗ್ರಹ ಮತ್ತು ತಂತ್ರಜ್ಞಾನದ ಕ್ರಮಗಳನ್ನೂ ಕೈಗೊಳ್ಳುವುದು.
 • ದೃಷ್ಟಿಸವಾಲು ಎದುರಿಸುತ್ತಿರುವವರಿಗೂ (ಅಂಧತ್ವ) `ಕಣಜ’ದಿಂದ ಮಾಹಿತಿ ಪಡೆಯುವುದಕ್ಕೆ ಬೇಕಾದ ಸಾಧನಗಳನ್ನು ಅಳವಡಿಸಿಕೊಳ್ಳುವುದು.
 • ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನತೆ, ಉನ್ನತ ಶಿಕ್ಷಣ ಪಡೆದವರು ಅಥವಾ ಕನಿಷ್ಟ ಶಿಕ್ಷಣ ಪಡೆದವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕ ಸೇವಾನಿರತರು, ವೃತ್ತಿಪರರು ಮತ್ತು ಮನೆಕಾರ್ಯಗಳಲ್ಲಿ ನಿರತರಾಗಿರುವವರು – ಹೀಗೆ ಎಲ್ಲ ಸ್ಥರದ ಜನರಿಗೂ ಮಾಹಿತಿಯು ದಕ್ಕುವಂತೆ ಶ್ರಮಿಸುವುದು.
 • ಪ್ರತಿಯೊಂದೂ ಮಾಹಿತಿಯನ್ನು ತತ್ಸಾಮಯಿಕವಾಗಿ ಸಿರಿವಂತಗೊಳಿಸಿ, ಸದಾಕಾಲವೂ ಸರಿಯಾದ ಮತ್ತು ಸಮಕಾಲೀನವಾದ ಮಾಹಿತಿ ದೊರಕುವಂತೆ ಮಾಡುವುದು.
 • ಅರಿವಿನ ದಾಖಲೆಗಳ ಪ್ರಕಟಣೆಯ ಜೊತೆಗೇ ವಿವಿಧ ಜ್ಞಾನಪ್ರವಾಹಗಳ ಸಂರಕ್ಷಣೆಗೆ ಶ್ರಮಿಸುವುದು.

`ಕಣಜ’ದಿಂದ ಏನು ಲಾಭ? ಯಾರಿಗೆ ಅನುಕೂಲ?

 • ಕನ್ನಡದ ಬಳಕೆಯನ್ನು ಹೆಚ್ಚಿಸುವ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತವಾಗುತ್ತದೆ.
 • ಕನ್ನಡ ಭಾಷೆ ಮತ್ತು ಸಂಸ್ಕೃತಿ ಜಾಗತಿಕ ಮಟ್ಟಕ್ಕೇರಲು ಸಹಕಾರಿಯಾಗುತ್ತದೆ.
 • ಕಲಿಕೆ ಮತ್ತು ಶೈಕ್ಷಣಿಕ ಉದ್ದೇಶಗಳಿಗೆ ಬಹುಕಾಲದಿಂದ ಇರುವ ಮಾಹಿತಿ ಸಾಮಗ್ರಿಯ ಕೊರತೆ ನೀಗುತ್ತದೆ.
 • ಕನ್ನಡದ ಎಲ್ಲ ಕ್ಷೇತ್ರಗಳ ಬರಹಗಾರರು ಅನುಕೂಲಕರ ಮಾಧ್ಯಮದಲ್ಲಿ ಬರೆದು ಜಾಗತಿಕ ಓದು ವರ್ಗವನ್ನು ತಲುಪುತ್ತಾರೆ.
 • ಕಣಜವು ಎಲ್ಲರಿಗಾಗಿಯೇ ರೂಪುಗೊಳ್ಳಲಿದೆ, ವಿಶೇಷವಾಗಿ ಕನ್ನಡದಲ್ಲಿ ಮಾಹಿತಿಯನ್ನು ಬಯಸುವ, ಕನ್ನಡ ಭಾಷೆಯಲ್ಲಿ ವ್ಯವಹರಿಸುವ, ಕನ್ನಡ ಭಾಷೆ ಮಾತ್ರ ಗೊತ್ತಿರುವ ಹಾಗೂ ಬೇರೆ ಭಾಷೆ/ಭಾಷೆಗಳು ಗೊತ್ತಿದ್ದರೂ ಕನ್ನಡದಲ್ಲಿ ಹೊಸ ಹೊಸ ಅರಿವನ್ನು ಹುಡುಕುತ್ತಿರುವವರಿಗೆ ಉಪಯುಕ್ತ. ಅಲ್ಲದೇ ಇದು ಶಾಲಾ / ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಜನತೆ, ರೈತರು, ಗೃಹಿಣಿಯರು, ಸಂಶೋಧಕರು ಮತ್ತು ವಿವಿಧ ವಿಷಯಗಳಲ್ಲಿ ಆಸಕ್ತಿ ಇರುವ ಜನರು ಬಳಸುವ ಮಾಹಿತಿ ಕಣಜವಾಗಿರಲ್ಲಿ.

‘ಕಣಜ’ದಲ್ಲಿ ಮಾಹಿತಿ ಸಂಗ್ರಹ ಹೇಗೆ ನಡೆಯುತ್ತದೆ?

 • ವಿವಿಧ ವಿಶ್ವವಿದ್ಯಾಲಯಗಳು, ಅಧ್ಯಯನ ಸಂಸ್ಥೆಗಳನ್ನು ವಿನಂತಿಸಿಕೊಂಡು ಈಗಾಗಲೇ ಸಿದ್ಧಪಡಿಸಿದ ಮಾಹಿತಿಗಳನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿ ಪ್ರಕಟಿಸಲಾಗುವುದು. ಇದಕ್ಕಾಗಿ ಸೂಕ್ತ ಸಾಂಸ್ಥಿಕ  ಒಪ್ಪಂದಗಳನ್ನು ಮಾಡಿಕೊಳ್ಳಲಾಗುವುದು.
 • ವಿವಿಧ ಸಾಹಿತಿಗಳು, ಲೇಖಕರು, ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳನ್ನು ಅವರ ಸಮ್ಮತಿ ಪಡೆದು ಪ್ರಕಟಿಸಲಾಗುವುದು.
 • ಪ್ರಸಕ್ತ ಕಾಲಮಾನಕ್ಕೆ ಬೇಕಾದ ಸಂಗತಿಗಳ ಬಗ್ಗೆ  ಕನ್ನಡದಲ್ಲಿ ಲೇಖನಗಳನ್ನು ಬರೆಸಿ ಪ್ರಕಟಿಸಲಾಗುವುದು. ಸ್ವಾತಂತ್ರ  ಲೇಖನಗಳಲ್ಲದೆ ಅನುವಾದಿತ ಕೃತಿಗಳನ್ನೂ ಸಂಗ್ರಹಿಸಲಾಗುವುದು.
 • ಸಾರ್ವಜನಿಕರು ಜಾಲತಾಣದಲ್ಲೇ ತಮ್ಮ ಲೇಖನಗಳನ್ನು, ಪ್ರತಿಕ್ರಿಯೆಗಳನ್ನು ಬರೆಯುವುದಕ್ಕೆ ಸಾಧನಗಳನ್ನು ಒದಗಿಸಿ ಸಾರ್ವಜನಿಕ ಭಾಗಿತ್ವವನ್ನು ಹೆಚ್ಚಿಸಲಾಗುವುದು.
 • ಐತಿಹಾಸಿಕ ಮತ್ತು ಅಧ್ಯಯನದ ಮಹತ್ವವನ್ನು ಹೊಂದಿರುವ, ಕನ್ನಡ ಸಂಸ್ಕೃತಿ – ಪರಂಪರೆಯನ್ನು ಬಿಂಬಿಸುವ  ಎಲ್ಲ ಬಹುಮಾಧ್ಯಮ ಮಾಹಿತಿಗಳನ್ನು ಸಂಗ್ರಹಿಸಲಾಗುವುದು.
 • ಜಗತ್ತಿನ ಆಗುಹೋಗುಗಳನ್ನು ಗಮನಿಸುತ್ತಿರುವ ಆಸಕ್ತರಿಂದ ವಿಷಯ ವಸ್ತುಗಳನ್ನು ಕನ್ನಡ ಭಾಷೆಯಲ್ಲಿ ನಿರೂಪಿಸಿ ಪ್ರಕಟಿಸುವುದು.

`ಕಣಜ’ಕ್ಕೆ ಬರೆದರೆ ಸಂಭಾವನೆ ಇದೆಯೆ?

 • ಎಲ್ಲ ಮೂಲಗಳಿಂದ  ಉದಾರವಾಗಿ, ಉಚಿತವಾಗಿ ಮತ್ತು ಮುಕ್ತವಾಗಿ ಮಾಹಿತಿಯನ್ನು ಕೊಡುಗೆಯಾಗಿ ಪಡೆಯುವುದು `ಕಣಜ’ದ ಆದ್ಯತೆಯಾಗಿದೆ.
 • ಸರ್ಕಾರದ ಹಣಕಾಸಿನ ನೆರವಿನ ಪ್ರಮಾಣವನ್ನು ಅವಲಂಬಿಸಿ ಗೌರವಧನವನ್ನು ನೀಡುವುದಕ್ಕೆ `ಕಣಜ’ವು ಬದ್ಧವಾಗಿದೆ. ಸರ್ಕಾರದ ನೆರವು ಪಡೆಯುತ್ತಿರುವ  ಸಂಸ್ಥೆಗಳು ಮಾಹಿತಿಯನ್ನು ಉಚಿತವಾಗಿ ಹಂಚಿಕೊಳ್ಳಬೇಕೆಂಬುದು `ಕಣಜ’ದ ಒತ್ತಾಸೆ. ಸೂಚಿತ ಅನುವಾದದ ಮತ್ತು ಸ್ವತಂತ್ರ ಬರವಣಿಗೆಯ ಸಂದರ್ಭಗಳಲ್ಲಿ ಗೌರವ ಸಂಭಾವನೆ ಖಚಿತ.

`ಕಣಜ’ದಿಂದ ಸಮಾಜಕ್ಕೆ ಆಗುವ ಉಪಯೋಗಗಳೇನು?

 • `ಕಣಜ’ವು ವಿಶ್ವವ್ಯಾಪಿ  ಜಾಲತಾಣದಲ್ಲಿ, ಸರ್ವರೂ ಬಳಸಬಹುದಾದ ಯೂನಿಕೋಡ್ ಭಾಷಾವ್ಯವಸ್ಥೆಯಲ್ಲಿ ಸಿಗುವುದರಿಂದ ಕನ್ನಡ ಬಲ್ಲ ಯಾರಾದರೂ ಈ ಮಾಹಿತಿಯನ್ನು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಲು ಬಳಸಬಹುದು.
 • ಈ ಮಾಹಿತಿಗಳನ್ನು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಲಿಕೆಗಾಗಿ ಮುಕ್ತವಾಗಿ ಬಳಸಿಕೊಳ್ಳಬಹುದು.
 • ಎಲ್ಲರಿಗೂ ಖರೀದಿಸಲಾಗದ, ಎಲ್ಲೆಡೆಯೂ ಸಿಗಲಾರದ ಪುಸ್ತಕಗಳಿಂದಲೂ ಮಾಹಿತಿಯು ವ್ಯವಸ್ಥಿತವಾಗಿ ಸಿಗಬೇಕೆಂಬುದು ಕಣಜದ ಆಶಯ. ಯಾವುದೇ ಮಾಹಿತಿಯನ್ನೂ ಪದ ಅಥವಾ ಪದಸಮೂಹವನ್ನು ಬಳಸಿ ತತ್ಕ್ಷಣವೇ ಹುಡುಕಬಹುದು.
 • ಮಾಹಿತಿಗಳು ವಿಷಯ ಪರಿಣತರಿಂದ ಪರೀಕರಣೆ, ಪರಾಮರ್ಶೆಗೆ ಒಳಗಾಗಿಯೇ ಪ್ರಕಟವಾಗುವುದರಿಂದ ಎಲ್ಲ ಮಾಹಿತಿಗೂ ಒಂದು ಪ್ರಮಾಣದ ಅಧಿಕೃತತೆ ಹೊಂದಿರುತ್ತವೆ.
 • `ಕಣಜ’ದ ಮಾಹಿತಿಗಳನ್ನು ಸದಾಕಾಲವೂ ತತ್ಸಾಮಯಿಕಗೊಳಿಸುವ ಉದ್ದೇಶವಿದೆ. ಇದರಿಂದಾಗಿ  ಪುಸ್ತಕಗಳಲ್ಲಿ ಮಾಡಲಾಗದ ತತ್ ಕ್ಷಣದ ಬದಲಾವಣೆಗಳನ್ನು, ತಿದ್ದುಪಡಿಗಳನ್ನು, ಹೊಸ ಬೆಳವಣಿಗೆಗಳನ್ನು `ಕಣಜ’ದಲ್ಲಿ ಪಡೆಯಬಹುದು.
 • ಇಂದಿನ ಮತ್ತು ಮುಂದಿನ ಪೀಳಿಗೆಯ ಜನರು ಮಾಹಿತಿ ಮತ್ತು ತಂತ್ರಜ್ಞಾನ ಆಧಾರಿತ ಬದುಕನ್ನು ಹೆಚ್ಚು ಅವಲಂಬಿಸುತ್ತಾರೆ ಎಂಬುದು ಈಗಿನ ಬೆಳವಣಿಗೆಗಳಿಂದ ಗೊತ್ತಾಗುತ್ತದೆ. ಮುಂದಿನ ಶತಮಾನಗಳಲ್ಲಿ ಕನ್ನಡವು ಗಣಕ ವ್ಯವವಸ್ಥೆಯಲ್ಲಿ ಹಬ್ಬುವುದಕ್ಕೆ `ಕಣಜ’ವು ಮೊದಲ ಹೆಜ್ಜೆಯಾಗಿದೆ.
 • ದೇಶ ವಿದೇಶಗಳಲ್ಲಿರುವ ಕನ್ನಡದ ಕುಟುಂಬಗಳು ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸುವುದಕ್ಕೆ, ಕನ್ನಡ ಸಂಸ್ಕೃತಿ – ಪರಂಪರೆಯನ್ನು ಅನುಸರಿಸುವುದಕ್ಕೆ `ಕಣಜ’ವು ನೆರವಾಗುವ ನಿರೀಕ್ಷೆ ನಮ್ಮದು.

`ಕಣಜ’ದ ಮಾಹಿತಿಗಳ ದುರ್ಬಳಕೆ ಆಗುವುದಿಲ್ಲವೆ?

 • ಸಾರ್ವಜನಿಕರು ತಮ್ಮ ಹಸನಾದ ಬದುಕಿಗಾಗಿ `ಕಣಜ’ದ ಮಾಹಿತಿಗಳನ್ನು ಸದ್ಬಳಕೆ ಮಾಡುತ್ತಾರೆ ಎಂಬ ನಂಬುಗೆಯು `ಕಣಜ’ದ್ದು. ಒಂದುವೇಳೆ `ಕಣಜ’ದ ಮಾಹಿತಿಗಳನ್ನು ವಾಣಿಜ್ಯಕ ಉದ್ದೇಶಗಳಿಗೆ, ಲಾಭಕ್ಕಾಗಿ ಬಳಸಿದ್ದೇ ಆದರೆ ಅದು `ಕಣಜ’ವನ್ನು ರೂಪಿಸಿ ಪ್ರಕಟಿಸಲಿರುವ ಹಕ್ಕುಸ್ವಾಮ್ಯದ  ಹೇಳಿಕೆಯ ಉಲ್ಲಂಘನೆಯಾಗುತ್ತದೆ. ಯಾವುದೇ ದುರುದ್ದೇಶದ ಬಳಕೆಯನ್ನು ಸಾರ್ವಜನಿಕರೇ ಗುರುತಿಸಿ ತಡೆಯಬಹುದಾಗಿದೆ.
 • `ಕಣಜ’ದಲ್ಲಿ ಪ್ರಕಟವಾಗುವ ಬರಹಗಳ ಹಕ್ಕುಸ್ವಾಮ್ಯವು ಸಾಮಾನ್ಯವಾಗಿ ಈಗಿನ ಹಕ್ಕುಸ್ವಾಮ್ಯ ಕಾಯ್ದೆಗಳನ್ನು ಅನುಸರಿಸಿಯೇ ಇರುತ್ತದೆ. ಈ ಹಕ್ಕುಸ್ವಾಮ್ಯದ ಹೇಳಿಕೆಯು ಭಾರತೀಯ ಸನ್ನಿವೇಶಗಳಿಗೆ, ಭಾರತೀಯ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ರೂಪಿಸಿರುವ ಹೇಳಿಕೆಯಾಗಿರುತ್ತದೆ. ಈ  ದಾಖಲೆಯನ್ನು ಈಗ ರೂಪಿಸಲಾಗುತ್ತಿದೆ.

`ಕಣಜ’ ಕ್ಕೆ ಲೇಖನ ಕಳಿಸಲು ಏನು ಮಾಡಬೇಕು?

 • ನೀವು ಯಾವ ವಿಷಯದ ಮೇಲೆ ಲೇಖನ ಬರೆಯುತ್ತಿದ್ದೀರಿ ಎಂಬುದನ್ನು `ಕಣಜ’ದ ನಿರ್ವಾಹಕರಿಗೆ kanaja[at]karnataka[dot]gov[dot]in ಈ ಮಿಂಚಂಚೆಯ (ಇ-ಮೈಲ್) ಮೂಲಕ ತಿಳಿಸಿ. ಅಥವಾ `ಕಣಜ’ದ ಕಚೇರಿಗೆ (ನಿಮ್ಮ ದೂರವಾಣಿ ಸಂಖ್ಯೆ, ಅಂಚೆ ವಿಳಾಸ ಸೇರಿಸಿ) ಪತ್ರ ಬರೆದು ವಿಚಾರಿಸಿ ಮುಂದುವರೆಯಿರಿ.
 • `ಕಣಜ’ದಲ್ಲಿ ಇರುವ ಮಾಹಿತಿಗಳ ಬಗ್ಗೆ ನೀವು ತಿದ್ದುಪಡಿ, ಹೆಚ್ಚುವರಿ ಮಾಹಿತಿ ಕಳಿಸುವುದಿದ್ದರೆ `ಕಣಜ’ದಲ್ಲೇ ನೀಡಲಾಗುವ ಹಿಮ್ಮಾಹಿತಿ (Feed back) ವ್ಯವಸ್ಥೆಯನ್ನು ಬಳಸಿ; ಅಥವಾ ಪತ್ರ ಬರೆಯಿರಿ.
 • ನಿಮ್ಮಲ್ಲಿ ಅಪೂರ್ವವಾದ, ಕನ್ನಡ ಸಂಸ್ಕೃತಿ – ಪರಂಪರೆಗೆ ಸಂಬಂಧಿಸಿದ ದಾಖಲೆಯಿದ್ದರೆ ಅದರ ಮಾಹಿತಿ ಕೊಡಿ.
 • ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿ (ರೈತರು, ವಿದ್ಯಾರ್ಥಿಗಳು, ವಕೀಲರು, ಇಂಜಿನಿಯರುಗಳು. ಕರಕುಶಲ ವೃತ್ತಿಯವರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು.. ಹೀಗೆ) ನಿಮ್ಮ ಬದುಕಿನ, ವೃತ್ತಿಯ ಅನುಭವಗಳನ್ನು ಕಳಿಸಿಕೊಡಬಹುದು.
 • ನೀವು ಕಳಿಸಿದ ಯಾವುದೇ ಮಾಹಿತಿಯನ್ನು ಸೂಕ್ತ ಪರಾಮರ್ಶೆಯ ನಂತರ ಸಂಪಾದಿಸಿ ಪ್ರಕಟಿಸುವ ಅಥವಾ ನಿರಾಕರಿಸುವ ಸಂಪೂರ್ಣ ಸ್ವಾತಂತ್ರ್ಯವು `ಕಣಜ’ ಸಂಪಾದಕೀಯ ತಂಡಕ್ಕೆ ಇರುತ್ತದೆ.

`ಕಣಜ’ದ ಸಂಪಾದನಾ ಕಾರ್ಯದಲ್ಲಿ ಭಾಗವಹಿಸಬಹುದೆ?

 • ನೀವು ಯಾವುದೇ ವಿಷಯದ ತಜ್ಞರಾಗಿದ್ದರೆ `ಕಣಜ’ದ ಸಂಪಾದಕೀಯ ತಂಡದಲ್ಲಿ, ಬರಹಗಾರರ ತಂಡದಲ್ಲಿ ಒಬ್ಬರಾಗಿ ಸೇವೆ ನೀಡಲು ಅವಕಾಶವಿರುತ್ತದೆ. 
 • `ಕಣಜ’ಕ್ಕೆ ಬರುವ ಲೇಖನಗಳನ್ನು ಕಣಜದ ಬರವಣಿಗೆಯ ಶಿಷ್ಟತೆಗೆ ಅನುಗುಣವಾಗಿ ಸಂಪಾದಿಸುವ ಕೆಲಸದಲ್ಲೂ ನೀವು ಭಾಗವಹಿಸಬಹುದು (ಈ ಶಿಷ್ಟತೆಯನ್ನು ಈಗ ರೂಪಿಸಲಾಗುತ್ತಿದೆ).

ಬರಹದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವುದು, ಸಮಾಜದ ಒಳಿತಿನ ಬಗ್ಗೆ ವಿಧಾಯಕವಾಗಿ ಚರ್ಚಿಸುವುದು  ಆದ್ಯತೆಯಾಗಬೇಕು; ವೈಯಕ್ತಿಕ ಪ್ರಶಂಸೆಯಾಗಲೀ, ನಿಂದನೆಯಾಗಲೀ ಇರಕೂಡದು. ಬರವಣಿಗೆಯಲ್ಲಿ ಸೌಜನ್ಯ, ವಿನಯ ಮತ್ತು ಈ ವಿಶ್ವದ  ಎಲ್ಲ ಜೀವಿಗಳ ಬದುಕಿನ ಬಗೆಗೆ ಗೌರವ – ಪ್ರೀತಿ ಇರಬೇಕು.ನಿಮ್ಮ ಸದ್ಭಾವನೆಗಳನ್ನು `ಕಣಜ’ವು ಗೌರವಿಸುತ್ತದೆ. ಆದರೆ  `ಕಣಜ’ವು ಕೆಲವು ಶೈಲಿಸೂತ್ರಗಳ ಚೌಕಟ್ಟಿನಲ್ಲೇ ಮಾಹಿತಿಯನ್ನು ಪ್ರಕಟಿಸುತ್ತದೆ. ನಿಮ್ಮ ಬರಹಗಳು ಈ ಸ್ಥೂಲ ಶೈಲಿಯನ್ನು ಅನುಸರಿಸಬೇಕು ಎಂಬುದು ನಮ್ಮ  ಅಪೇಕ್ಷೆಯಾಗಿದೆ:

ಹಾಗಾದರೆ ನನಗೆ ಇಷ್ಟ ಅನ್ನಿಸಿದ್ದನ್ನೆಲ್ಲ ಬರೆದು ಕಳಿಸಬಹುದೆ?

 • ಬರಹವು ಆದಷ್ಟೂ ವಸ್ತುನಿಷ್ಠರಾಗಿರಬೇಕೇ ಹೊರತು ಯಾವುದೋ ಒಂದು ಪ್ರತಿಪಾದನೆಯನ್ನು ಪರ-ವಿರೋಧವಾಗಿ ಮಂಡಿಸುವ ದಾಖಲೆಯ ರೀತಿ ಇರಬಾರದು. ಅಲ್ಲದೆ ಯಾವುದೇ ಮತ – ಜಾತಿ – ಪಂಥ – ಲಿಂಗಗಳ ಕುರಿತ ಭಾವನಾತ್ಮಕ ಸಂಗತಿಗಳನ್ನು ಹೊಂದಿರಬಾರದು. ಒಟ್ಟಿನಲ್ಲಿ ಬರಹವು ನಿರ್ಲಿಪ್ತವಾಗಬೇಕು ಎಂದಲ್ಲ;  ಆಲಿಪ್ತವಾಗಿರಬೇಕು. ವೈಚಾರಿಕ ಬರೆಹಗಳಿಷ್ಟೇ ಆದ್ಯತೆ.

ಗಣಕದಲ್ಲಿ ತಯಾರಾಗಿರುವ ಲೇಖನವನ್ನು ಕಳಿಸಬಹುದೆ?

 • ಗಣಕವನ್ನು ಬಳಸಿ ಅಕ್ಷರ ಜೋಡಿಸಿದ ಲೇಖನಗಳನ್ನು ಕಳುಹಿಸಿದರೆ ತುಂಬಾ ಒಳ್ಳೆಯದು. ಅಂಥ ಲೇಖನಗಳನ್ನು ನೀವು `ಕಣಜ’ದ ಮಿಂಚಂಚೆ (ಇ-ಮೈಲ್) ಬಳಸಿ, ಕಾಗದದ ಅಂಚೆ ಮೂಲಕ ಕಳಿಸಬಹುದು. ಗಣಕದಲ್ಲಿ ನೀವು ಬರಹ, ನುಡಿ, ಯೂನಿಕೋಡ್ ವಿಧಾನಗಳಲ್ಲಿ ಕಳಿಸಿದರೆ ಅನುಕೂಲ.

ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಬೇಕಾದ ಮತ್ತು ನಿಮ್ಮ ಬರಹಗಳನ್ನು ಕಳಿಸಬೇಕಾದ ವಿಳಾಸ:

‘ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶ
ಇ-ಕನ್ನಡ ವಿಭಾಗ, ಒಂದನೆಯ ಮಹಡಿ
ಕನ್ನಡ ಭವನ, ಜೆ.ಸಿ.ರಸ್ತೆ,
ಬೆಂಗಳೂರು- 560 002
ದೂರವಾಣಿ 080-22227478