Categories
ರಚನೆಗಳು

ಅಂಬಾಬಾಯಿಯ ರಚನೆಗಳು

ಗಣಪತಿ
1
ಗಜಮುಖ ನಿನ್ನನು ಭಜಿಸುವೆ ಸತತದಿ
ನಿಜಮತಿಯನೆ ನೀಡೊ |ಪ|
ಭುಜಗ ಭೂಷಣಸುತ ರಜತಮ ಕಳೆಯುತ
ಗಜವರದನ ತೋರೊ |ಅ.ಪ.|
ಮೋದಕಪ್ರಿಯನೆ ಆದರದಲಿ ನಿನ್ನ
ಪಾದಕೆ ಎರಗುವೆನೊ
ನೀ ದಯದಲಿ ಹರಿ ವಿಶ್ವರೂಪವ ನಿನ್ನ
ಹೃದಯದಿ ತೋರೋ |1|
ಸೊಂಡಿಲ ಗಣಪನೆ ಹಿಂಡು ದೈವಗಳಿಗೆ
ಇಂದು ಪ್ರಥಮ ನೀನೆ
ಕಂಡಮಾತ್ರ ನಿನ್ನ ವಿಘ್ನಗಳೆಲ್ಲವು
ಬೆಂಡಾಗುವುದಿನ್ನೆ |2|
ಅಂಬರದಭಿಮಾನಿಯೆ ಸತತದಿ ಹರಿ
ಹಂಬಲ ನೀ ನೀಡೋ
ಕುಂಭಿಣೀಶ ಗೋಪಾಲಕೃಷ್ಣ
ವಿಠ್ಠಲನ ಮನದಿ ತೋರೋ |3|

ಶ್ರೀ ಹರಿ
2
ಅಕ್ಕೋರಂಗ ನೋಡೆ ಇಕ್ಕೋ ಕೃಷ್ಣನೋಡೆ
ತಕ್ಕಥೈ ಎಂದೀಗೆ ಸಿಕ್ಕಿದ ನಮ್ಮ ಕೈಗೆ |ಪ|
ಕುರುಳು ಕುಂತಳದಿಂದ ಕಸ್ತುರಿ ತಿಲುಕ ಚಂದ
ಪರಮ ಪುರುಷ ಬಂದ ನೀಲ ವರ್ಣ ನಂದ |1|
ಮುಗುಳು ನಗೆಯ ಕಾಂತಿ ಚಂದ್ರನುದಯ ಭ್ರಾಂತಿ
ಸೊಗಸು ನೋಡಲೆ ಕಾಂತೆ ಸೆಳೆವ ಮನವ ಶಾಂತೆ |2|
ಬಾರೋ ಬಾ ಗೋಪಾಲಕೃಷ್ಣವಿಠ್ಠಲ ಜಾಲ
ತೋರುವ ನೋಡೆ ಬಾಲೆ ಸೇರೋಣ ಬಾ ಸುಶೀಲೆ |3|

ಆನಂದ ನಿಲಯರು
3
ಆನಂದಾದ್ರಿ ಕ್ಷೇತ್ರದಲ್ಲಿ
ಆನಂದವ ಕಂಡೆ |ಪ|
ಆನಂದ ಕಂದನ ಗುಣಗಳ
ಆನಂದನಿಲಯರು ಪೇಳಲು |ಅ.ಪ|
ಆನಂದವಾಯಿತು ಮನಕೆ
ಆನಂದಗೋಕುಲದೊಡೆಯನು
ಆನಂದತೀರ್ಥರ ಕರದಲಿ
ಆನಂದ ಸೇವೆಯ ಕೊಳುತಿರೆ |1|
ಆನಂದಾದ್ರಿ ಶಿಖರದಲ್ಲಿ
ಸ್ವಾನಂದ ಸೂಚನೆ ತೋರಲು
ಏನೆಂದು ಬಣ್ಣಿಸಲಿನ್ನು
ಸ್ವಾನಂದರು ಶ್ರೀ ಗುರು ದಯದಿ |2|
ಆನೆಂದರೆ ಶಿಕ್ಷಿಸುವನು ಹರಿ
ನೀನೆಂದರೆ ರಕ್ಷಿಸುವನು ದೊರಿ
ಆನಂದವನ ತರುವಂತೆ
ಆನಂದಭೀಷ್ಟವ ಕೊಡುವ |3|
ಆನಂದ ಜ್ಞಾನಪೂರ್ಣ
ಆನಂದ ನಿತ್ಯರೂಪ
ಆನಂದ ಗುಣಪೂರ್ಣ ನಿ-
ತ್ಯಾನಂದ ಭಕ್ತರಿಗೀವ |4|
ಗೋಪಾಲಕೃಷ್ಣವಿಠಲ
ನೀ ಪರಮದೈವವೆನಲು
ತಾಪವ ಭವಹರಿಸಿ
ಕಾಪಾಡೊ ಹರಿಯ ಲೀಲೆ |5|

4
ಇತ್ತೆ ಏತಕ್ಕೆ ಈ ನರಜನ್ಮವ
ಸತ್ಯ ಸಂಕಲ್ಪ ಹರಿ ಎನ್ನ ಬಳಲಿಸುವುದಕೆ |ಪ|
ಬಂಧುಬಳಗವ ಕಾಣೆ ಇಂದಿರೇಶನೆ ಭವದಿ
ಬೆಂದು ನೊಂದೆನೊ ನಾನು ಸಿಂಧುಶಯನ
ಬಂದ ಭಯಗಳ ಬಿಡಿಸಿ ನೀನೆ ಪಾಲಿಸದಿರಲು
ಮಂದಮತಿಗೆ ಇನ್ನು ಮುಂದೆ ಗತಿ ಏನೊ |1|
ಕಾಣದಲೆ ನಿನ್ನನು ಕಾತರಿಸುತಿದೆ ಮನವು
ತ್ರಾಣಗೆಡುತಲಿ ಇಹುದೊ ಇಂದ್ರಿಯಗಳೆಲ್ಲ
ಪ್ರಾಣಪದಕನೆ ಸ್ವಾಮಿ ಶ್ರೀನಿವಾಸನೆ ದೇವ
ಜಾಣತನವಿದು ಸರಿಯೆ ಫಣಿಶಾಯಿಶಯನ |2|
ಸಾಧನದ ಬಗೆಯರಿಯೆ ಸರ್ವಾಂತರ್ಯಾಮಿಯೆ
ಮಾಧವನೆ ಕರುಣದಲಿ ಕಾಯಬೇಕೊ
ಹಾದಿ ತೋರದೊ ಮುಂದೆ ಮುಂದಿನಾ ಸ್ಥಿತಿಯರಿಯೆ
ಛೇದಿಸೊ ಅಜ್ಞಾನನ ಹೇ ದಯಾನಿಧಿಯೆ |3|
ಸರ್ವನಿಯಾಮಕನೆ ಸರ್ವಾಂತರ್ಯಾಮಿಯೆ
ಸರ್ವರನು ಪೊರೆಯುವನೆ ಸರ್ವರಾಧೀಶ
ಸರ್ವಕಾಲದಿ ಎನ್ನ ಹೃದಯದಲಿ ನೀ ತೋರೊ
ಸರ್ವ ಸಾಕ್ಷಿಯೆ ಸತತ ಆನಂದವೀಯೊ |4|
ಆನಂದಗಿರಿನಿಲಯ ಆನಂದಕಂದನೆ
ಆನಂದ ಗೋಪಾಲಕೃಷ್ಣವಿಠ್ಠಲಾ
ಆನಂದನಿಲಯ ಶ್ರೀ ಗುರುಗಳಂತರ್ಯಾಮಿ
ನೀನಿಂದು ಸರ್ವತ್ರ ಕಾಯಬೇಕಯ್ಯ |5|

(ಪಲ್ಲವಿ) ಪವಮಾನ ಪಿತ
5
ಇವನೆ ಪ್ರಹ್ಲಾದನಿಂದಲಿ ಉಪಾಸ್ಯ
ಪವಮಾನ ಪಿತ ಭಕ್ತವರದ ಲಕ್ಷ್ಮೀಶ |ಪ|
ವಲಯಕಾರದಿ ಶೇಷ ಛತ್ತರಿಯಾಗಿ
ಹಲ ಮುಸಲ ಧರಿಸಿ ಎಡದಲಿ ವಾರುಣೀ
ಬಲದಲ್ಲಿ ಶಂಬುಕ ವರ್ಣನೆಂಬ ಪುತ್ರನ ಸಹಿತ
ನಲಿದು ಸೇರಿಸೆ ಇಂಥ ಆಸನದಿ ಕುಳಿತಾ |1|
ಯೋಗಾಸನವನ್ಹಾಕಿ ಎಡತೊಡೆಯ ಮೇಲ್ ಸಿರಿಯು
ಆಗಮನುತ ಬಲದ ತೊಡೆಯಲ್ಲಿ ವಾಯು
ಭೋಗ ರೂಪನು ಸರ್ವ ಆಭರಣ ಶೃಂಗಾರ
ಸಾಗರಾತ್ಮಜೆ ಪತಿಯು ಧರಿಸಿ ಮೆರೆವಂಥಾ |2|
ಶಿರದಿ ನವರತ್ನ ಮಕುಟವು ಫಣೆಯು ತಿಲಕವೂ
ಮೆರೆವನೇತ್ರದ್ವಯವು ಕರ್ಣ ಕುಂಡಲವೂ
ಹಿರಿಯ ನಾಸಿಕ ಗಲ್ಲ ತೆರದ ಬಾಯ್‍ದಾಡೆಗಳು
ದುರುಳರಿಗೆ ಘೋರ ವರಭಕ್ತರಿಗೆ ಅಭಯ |3|
ಕಂಠ ಕೌಸ್ತುಭಮಣಿಯು ಶ್ರೀವತ್ಸ ತುಳಸಿ ಸರ
ಜಂಟಿ ಮುತ್ತಿನ ವೈಜಯಂತಿ ಹಾರಾ
ಎಂಟು ಕರ ಶಂಖ ಚಕ್ರವು ಪದ್ಮ ಗದೆ ಅಭಯ
ವಂಟಿ ಕರಶಿರಿ ಭುಜದಿ ದ್ವಯ ಯೋಗ ಚಿಹ್ನೆ |4|
ಕರದಿ ಕಂಕಣಗಳೂ ಉರ ಉದರ ಶೃಂಗಾರ
ಅರವಿಂದ ಪೊಕ್ಕಳಲಿ ಬ್ರಹ್ಮ ಮೆರೆಯೇ
ಮಿರುಗುವೋ ಮಕುಟ ಉಟ್ಟಿರುವ ನಡು ಕಿರುಗೆಜ್ಜೆ
ಕರಿಸೊಂಡಲಿನ ತೊಡೆಯು ಸುರವರದ ಚರಣಾ |5|
ಚರಣದಾಭರಣ ಸಾಲ್ಯೆರಳನಖ ಕಾಂತಿಗಳು
ತರಳರವಿ ವರ್ಣ ಕೋಮಲ ಪಾದ ಪದುಮಾ
ನರದೇಹ ಮೃಗ ಮುಖವು ನರಮೃಗಾಕೃತಿರೂಪ
ತರಳ ಪ್ರಹ್ಲಾದನಲಿ ಕರುಣಾರ್ದ ದೃಷ್ಟಿ |6|
ಎಡತೊಡೆಯಲಿ ಸಿರಿಯು ಬಲಕರದಿ ಪದುಮವ ಪಿಡಿದು
ಎಡತೊಡೆಯ ಮೇಲೆ ಮದನನ ಕುಳ್ಳಿರಿಸುತಾ
ಎಡದಿ ರತಿಯನು ಮದನ ಇರಿಸಿ ಹೂ ಬಾಣವನು
ಪಿಡಿದು ರತಿ ಪದುಮ ಕರದಿಂದ ಶೋಭಿಸಲೂ |7|
ಹರಿಗೆ ಬಲತೊಡೆಯಲಿದ್ದಂಥ ವಾಯುವು ತನ್ನ
ಅರಸಿ ಭಾರತಿಯ ಎಡತೊಡೆಯಲಿಟ್ಟೂ
ತರಳ ವಿಷ್ವಕ್ಸೇನನನು ಬಲದ ತೊಡೆಯಲ್ಲಿ
ಇರಿಸಿಕೊಂಡತುಲ ಸಂತಸದಿಂದ ಮೆರೆಯೇ |8|
ಚತುರ ಹಸ್ತನು ವಾಯು ಎಡಗೈಲಿ ಪಿಡಿದು ಗದೆ
ಹಿತದಿ ಬಲಗೈಯ್ಯ ಭಕ್ತರಿಗಭಯ ತೋರ್ವ
ಅತಿಭಕ್ತಿಯಿಂದುಭಯಕರ ಅಂಜಲಿಯ ಮಾಡಿ
ರತಿ ಪತಿ ಪಿತನ ಕರುಣವ ಭಿಕ್ಷೆ ಬೇಡುವಾ9
ನಾಭಿಯಲಿ ಬ್ರಹ್ಮ ಉದ್ಭವಿಸಿ ಹಸ್ತದಿ ವೇದ
ಶೋಭಿಸಲು ಎಡತೊಡೆಯ ಮೇಲೆ ವಾಣೀ
ಆಭರಣ ಶೃಂಗರದಿ ವೀಣೆ ಪುಸ್ತಕ ಧರಿಸಿ
ವೈಭವದಿ ದೇವ ಮುನಿ ಎಡೆ ತೊಡೆಯೊಳಿರಲೂ |10|
ಬ್ರಹ್ಮ ಬಲತೊಡೆಯಲ್ಲಿ ಪಂಚಮುಖ ರುದ್ರನ್ನ
ಸುಮ್ಮಾನದಿಂದ ಕುಳ್ಳಿರಿಸಿಕೊಂಡಿರಲೂ
ಬ್ರಹ್ಮಸುತ ಕರದಿ ಆಯುಧ ಗೌರಿ ಎಡದಲ್ಲಿ
ಷಣ್ಮುಖನ ಬಲ ತೊಡೆಯಲ್ಲಿಟ್ಟು ಮೆರೆಯೇ |11|
ಗೌರಿಗಣಪನ ತನ್ನ ತೊಡೆಯೊಳಿಟ್ಟಿರಲು
ಈ ರೀತಿಯಿಂದ ಪರಿವಾರ ಸಹಿತಾ
ಶೌರಿ ಮೆರೆಯುವ ದಿವ್ಯ ಅದ್ಭುತಾಕೃತಿ ನೃಹರಿ
ಭಾರತಿಯ ಪತಿ ಮನದಿ ತೊರೆ ಭಕ್ತರಿಗೆ |12|
ಕಾಲನಾಮಕ ಗರುಡ ಬಾಲೆ ಸೌಪರ್ಣಿ
ಲೀಲೆಯಿಂದಲಿ ಕೂಡಿ ಸಮ್ಮುಖದಿ ನಿಂದೂ
ಓಲಗವ ಕೊಡುತ ಹರಿಗನುಕೂಲನಾಗಿರುವ
ಲೀಲ ಮಾನುಷ ಇಂಥ ವೈಭವದಿ ಮೆರೆವಾ |13|
ಇಂತೆಸೆವ ಹರಿ ಎದುರು ನಿಂತು ಪ್ರಹ್ಲಾದ ಗುಣ
ವಂತೆ ಸಾಧ್ವೀ ಸಾಧುಮತಿ ಸತಿಯ ಸಹಿತಾ
ಅಂತರಂಗದಿ ಚಿಂತಿಸುತ ಅಂಜಲಿಯ ಕರದಿ
ಶಾಂತಮನದಲಿ ಸುಖಿಸಿ ಆನಂದಿಸುವನೂ |14|
ವರಭಕ್ತ ಪ್ರಹ್ಲಾದ ವರದನ್ನ ಈ ರೂಪ
ನರರು ಚಿಂತಿಸಲಳವೆ ಚರಿಪ ಭಕ್ತಿಯಲೀ
ಪರಮ ಉತ್ಸಾರಕರನೊಂದೊಂದು ಅಂಶದಲಿ
ವರ ಭಕ್ತರಲಿ ನೆಲಸೆ ಚಿಂತನೆಗೆ ನಿಲುವಾ |15|
ಪರಿವಾರ ಆಭರಣ ಆಯುಧಗಳಿಂ ಮೆರೆವ
ನರಹರಿಯ ಈ ರೂಪ ನಿರುತ ಸ್ಮರಿಸೇ
ಗುರುವರದ ಕರಿಗಿರೀ ಯೋಗ ಭೋಗಾ ನೃಹರಿ
ಕರುಣಿಸುವ ಮುಕ್ತಿ ಗೋಪಾಲಕೃಷ್ಣವಿಠಲಾ |16|

6
ಉದ್ಧಾರ ಮಾಡಯ್ಯ ಉಡುಪಿ ನಿಲಯ
ಹೃದ್ವನಜದಲಿ ನೆಲಸಿ ಅನುಗಾಲ ನಿನ ತೋರಿ |ಪ|
ಬಂದೆ ಬಹುದೂರದಲಿ ನಿಂದೆ ತವಚರಣದಡಿ
ತಂದೆ ಮುದ್ದುಮೋಹನ ಗುರುಕರುಣದಿಂದ
ಕುಂದುಗಳನೆಣಿಸದೆಲೆ ಸಿಂಧುಶಯನನೆ
ಹೃದಯ ಮಂದಿರದಿ ಮನೆ ಮಾಡು ಸುಂದರಾತ್ಮನೇ 1
ಜನ್ಮಜನ್ಮಾಂತರದ ಅಜ್ಞಾನಗಳ ಕಳೆದು
ಕರ್ಮಸಾಸಿರ ಕಡಿದು ಕರುಣದಿಂದ
ರಮೆಯರಸನೆ ನಿನ್ನ ಅನುಗಾಲ ಸ್ಮರಿಪಂಥ
ಸನ್ಮಾರ್ಗವನೆ ತೋರೊ ಸರ್ವಲೋಕೇಶ 2
ಜಪತಪಗಳೊಂದರಿಯೆ ವ್ರತ ನೇಮಗಳ ಕಾಣೆ
ಉಪವಾಸದುಪಟಳವು ಗತಿ ತೋರದೆನಗೆ
ಗುಪಿತಮಾರ್ಗದಿ ನಿನ್ನ ನಾಮಾಮೃತವನುಣಿಸಿ
ಅಪಹಾಸಗೊಳಿಸದಲೆ ಆದರಿಸೊ ಜೀಯ 3
ಬೇಡಲೇನನು ನಿನ್ನ ಕಾಡಲೇತಕೆ ನಾನು
ನೀಡುವ ದಾತ ನೀ ಸರ್ವಜ್ಞನಿರಲು
ಮಾಡುವೆನು ಸಾಷ್ಟಾಂಗ ಬೇಡುವೆನು ಪದದಾಸ್ಯ
ನೋಡು ಕರುಣಾದೃಷ್ಟಿಯಿಂದೆನ್ನ ಕಡೆಗೆ 4
ಅಂತರಂಗದಲಿಪ್ಪ ಸರ್ವಾಂತರಾತ್ಮಕನೆ
ಚಿಂತನೆಗೆ ನೆಲೆತೋರು ಚಿನ್ಮಯಾತ್ಮಕನೆ
ಕಂತುಪಿತ ಗೋಪಾಲಕೃಷ್ಣವಿಠ್ಠಲನೆ ಸಿರಿ
ಕಾಂತ ಕಾಪಾಡು ಕಡು ಕರುಣಿ ಮಧ್ವೇಶ 5

7
ಎಷ್ಟು ಪುಣ್ಯ ಮಾಡಿ ಇಲ್ಲಿ ಇಟ್ಟಿಗೆ ನೆಲಸಿತೋ
ವಿಠ್ಠಲನ್ನ ಚರಣ ಶಿರದಿ ಮೆಟ್ಟಿಸಿ ಕೊಂಡಿತೋ ಪ.
ಭಕ್ತನಾದ ಪುಂಡಲೀಕನ ಕರಕೆ ಸೋಕಿತೋ
ಚಿತ್ತಧೃಡನು ಎಸೆಯೆ ರಂಗನ ಪಾದಕೆರಗಿತೋ 1
ಹರಿಯೆ ಎನ್ನ ಶಿರವ ಮೆಟ್ಟೆಂದ್ಹರಿಕೆ ಮಾಡಿತೋ
ಪರಮ ಪುರುಷ ಬಂದು ನಿಲ್ಲೆ ಖ್ಯಾತಿ ಪೊಂದಿತೋ 2
ಒಲಿದು ಮೆಟ್ಟಿದಂಥ ಪಾದ ಶಿರದಿ ಪೊತ್ತಿತೋ
ಇಳೆಯನಳೆದ ಪಾದ ಇಲ್ಲಿ ಅಡಿಗಿಸಿಕೊಂಡಿತೋ 3
ಗೋಕುಲದಲಿ ಮೆರೆದ ಪಾದ ಸೋಕಿಸಿಕೊಂಡಿತೋ
ನಾಕ ಜನರು ವಂದಿಪ ಪಾದ ನನ್ನದೆಂದಿತೋ 4
ಯಮುನ ದಡದಿ ಸುಳಿದ ಪಾದಯತ್ನದಿ ಪೊಂದಿತೋ
ರಮೆಯು ಸೇವಿಪಂಥ ಪಾದ ರಜವ ಧರಿಸಿತೋ 5
ಬಂಧ ಬಿಡಿಸುವಂಥ ಪದದಿ ಬಂಧಿಸಿಕೊಂಡಿತೋ
ಸುಂದರ ಸುಕೋಮಲನ ಪಾದ ಸೂಕ್ಷ್ಮದಿ ಪೊತ್ತಿತೋ 6
ಪೊಗಳಲೊಶವು ಅಲ್ಲದ ಪಾದ ಘಳಿಗೆ ಬಿಡದಾಯ್ತೋ
ಜಗದಲಿಟ್ಟಿಗೆ ನಿಲಯನೆಂಬೊ ಲಾಭ ಹೊಂದಿತೋ 7
ನಂದ ಕಂದ ಬಂದನೆಂದು ನಲಿದು ನಿಂತಿತೋ
ಇಂದಿರೇಶ ಪೋಗದಿರೆಂದು ಇಲ್ಲೆ ಹಿಡಿದಿತೋ 8
ಪಾಪ ಕಳೆದು ಪಾವನ್ನದಲಿ ಮುಕ್ತಿ ಪೊಂದಿತೋ
ಗೋಪಾಲಕೃಷ್ಣವಿಠ್ಠಲನ ಚರಣ ಸೇರಿತೋ 9

(ನು. 4) ಇದರಲ್ಲಿ ದಶಾವತಾರದ ಉಲ್ಲೇಖ
8
ಎಷ್ಟು ಕೂಗಲು ದಯ | ಪುಟ್ಟಲಿಲ್ಲವೊ ನಿನಗೆ
ಬೆಟ್ಟದೊಡೆಯ ಹರಿಯೆ ಪ.
ಸಿಟ್ಟೇಕೆ ಎನ್ನೊಳು ಕೃಷ್ಣಮೂರುತಿ ನಿನಗೆ
ಬಿಟ್ಟರೆ ನೀ ಎನ್ನ ಸೃಷ್ಟಿಯೊಳಾರುಂಟೊ ಅ.ಪ.
ಪರಮ ಪಾತಕಿಯೆಂದು | ತೊರೆದರೆ ನೀ ಎನ್ನ
ಮೊರೆಬೀಳಲಿನ್ನಾರಿಗೆ
ಕರೆಕರೆಗೊಳಿಪುದು ತರವಲ್ಲ ಕೇಳಿನ್ನು
ಕರುಣಾಮೂರುತಿ ಎಂಬೊ ಬಿರುದು ಪೊತ್ತಿಲ್ಲವೆ
ಸರಿಯೆ ನಿನಗಿದು ಕೊರಗಿಸುವುದು
ಜರಿದು ಬಳಲುವೆ ಧರೆಯೊಳೀಗ ನಾ
ಸುರರ ರಕ್ಷಕ ಪರಮಪಾವನ
ಕರವ ಮುಗಿವೆ ದರುಶನವ ನೀಡೊ 1
ನೀನಲ್ಲದೆ ಇನ್ನು | ನಾನಾರ ಭಜಿಸಲೊ
ಗಾನವಿಲೋಲ ಹರಿ
ಕಾನನದೊಳು ಕಣ್ಣು ಕಾಣದಂತಾಗಿದೆ
ಧ್ಯಾನಕೆ ಸಿಲುಕದೆ ನೀನೆನ್ನ ಕಾಡುವೆ
ಮಾನ ಪ್ರಾಣ ಶರೀರ ನಿನ್ನದೊ
ನಾನು ಅನ್ಯರ ಭಜಿಸಲಾರೆನೊ
ಹೀನಬುದ್ಧಿಯ ಬಿಡಿಸಿ ಗುರುಗಳ
ಧ್ಯಾನವೆನಗಿತ್ತು ನೀನು ಕಾಯೊ 2
ಅನ್ನಪಾನವ ಬಿಟ್ಟು | ನಿನ್ನನು ಸ್ತುತಿಸಲು
ಇನ್ನು ಕರುಣವಿಲ್ಲವೆ
ಇನ್ನು ಸೈರಿಸಲಾರೆ ಘನ್ನ ಮಹಿಮನೆ ದುಃಖ
ನಿನ್ನ ಮನಸು ಕರಗಲಿನ್ನೇನಗೈಯ್ಯಲೊ
ಎನ್ನ ಯತ್ನವು ವ್ಯರ್ಥವಾಯಿತು
ಇನ್ನು ನೀ ದಯೆಗೆಯ್ಯಬೇಕೊ
ಮುನ್ನ ಮಾಡಿದ ತಪ್ಪನೆಣಿಸದೆ
ಎನ್ನ ದೃಷ್ಟಿಗೆ ನಿನ್ನ ತೋರೊ 3
ಸುತನ ಮೊರೆಯನೆ ಕೇಳಿ | ಹಿತದಿ ವೇದವನಿತ್ತೆ
ಮಥಿಸಿ ಶರಧಿ ಅಮೃತ ಸುರರಿಗಿತ್ತೆ
ಕ್ಷಿತಿಯ ಬಾಧೆಯ ಬಿಡಿಸಿ ಸುತನ ಬಾಧಿಸೊವೊನ
ಹತಮಾಡಿ ಇಂದ್ರಗೆ ಗತಿಸಿದ ಪದವಿತ್ತೆ
ಕ್ಷಿತಿಯನಾಳ್ವರ ಹತವಗೈಸಿದೆ
ಕ್ಷಿತಿಸುತೆಯ ಪ್ರೇಮದಲಿ ತಂದೆ
ಹಿತದಿ ಪಾಂಡವ ಸುತರ ಕಾಯ್ದೆ
ವ್ರತವ ಕೆಡಿಸಿ ಕಲಿಹತವಗೈದೆ 4
ಇಂತು ಎಲ್ಲರ ಕಾಯ್ದ | ಕಂತು ಜನಕನೆ ನಿನಗೆ
ನ್ನಂತರ ತಿಳಿಯದೇನೋ
ಸಂತತ ಗೋಪಾಲಕೃಷ್ಣವಿಠ್ಠಲ ನಿನ್ನ
ಶಾಂತರೂಪವ ಎನ್ನ ಅಂತರಂಗದಿ ತೋರೊ
ಚಿಂತಿತಾರ್ಥ ಪಂಥಗಾರನೆ
ಎಂತು ದಿನಗಳು ಸಂದು ಹೋದುವೊ
ಇಂತು ನಿರ್ದಯವೇಕೊ ಇನ್ನು
ಸಂತತಾನಂದನಂತಶಯನ 5

(ನು. 4) ಕಾರ್ಯಕಾರಣ ಕರ್ತ
9
ಎಲ್ಲಿ ಪೋದೆಯೊ ಕೃಷ್ಣ ಸೊಲ್ಲು ಕೇಳುತ ಈಗ
ಮೆಲ್ಲನೆ ಎನ್ನ ಮನದಲ್ಲಿ ನಿಲ್ಲೊ ಪ.
ಪುಲ್ಲಲೋಚನ ದೇವ ಎಲ್ಲಿಗು ಪೋಗದೆ
ಉಲ್ಲಾಸಪಡಿಸುತ ನಿಲ್ಲೊ ಹೃದಯದಲಿ ಅ.ಪ.
ಸ್ಥಾವರ ಜಂಗಮ ವ್ಯಾಪ್ತನಾಗಿಹ ದೇವ
ದೇವ ಎನ್ನ ಮನದಿ ನಿಲುವುದು ಘನವೆ
ಶ್ರೀವರ ನೀನೀಗ ಕಾವನೆಂದರಿತಿರೆ
ಸಾವಕಾಶವಿದೇಕೆ ಭಾವಜನಯ್ಯನೆ 1
ಇಷ್ಟು ದಿನವು ನಿನ್ನ ಮುಟ್ಟಿ ಪೂಜಿಸಲಿಲ್ಲ
ಸಿಟ್ಟೇನೊ ನಿನಗಿದರ ಗುಟ್ಟು ತಿಳಿಯದೆ
ಬಿಟ್ಟುಬಿಡು ಈ ಬಿಂಕ ಕೊಟ್ಟು ಅಭಯ ಸಲಹೊ
ಇಷ್ಟ ಸ್ಥಾನದಿ ನಿನ್ನ ಮುಟ್ಟಿ ಪೂಜಿಸಿರುವೆ 2
ಸರಿಯಲ್ಲ ನಿನಗಿದು ಕರೆದರೆ ಭಕ್ತರು
ತ್ವರಿತದಿಂದಲಿ ಬರುವ ಬಿರುದಿಲ್ಲೆ ನನಗೆ
ಸರಿ ಬಂದರೆ ಬಾರೊ ಬಾರದಿದ್ದರೆ ಬಿಡೊ
ಅರಿತು ನಿನ್ನಯ ನಾಮ ಅರುಹುವ ಮತಿ ನೀಡೊ 3
ಕಾರ್ಯಕಾರಣಕರ್ತ ಪ್ರೇರ್ಯಪ್ರೇರಕರೂಪ
ಉರ್ವಿಗೊಡೆಯ ಸರ್ವ ನಿರ್ವಾಹಕ
ಗರ್ವರಹಿತಳ ಮಾಡಿ ಸರ್ವದಾ ಪೊರೆದರೆ
ಸರ್ವಾಧಿಪತಿಯೆಂದು ಸಾರ್ವೆನೊ ನಾನಿಂದು 4
ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತನೊಬ್ಬನೆ ನೀನು
ಶ್ರೇಷ್ಠನಾಗಿರುವೆಯಾ ಸರ್ವರಿಗೆ
ಬಿಟ್ಟಿರುವೆಯೊ ಜಗದ ಅಷ್ಟೂ ವಸ್ತುಗಳಿಂದ
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲದೇವ 5

10
ಎಂಥಾ ಮಹಿಮನಿವನೆ ಗೋಪಾಲಕೃಷ್ಣ
ಎಂಥ ಮಹಿಮನಿವನೆ ಪ.
ಎಂಥಾ ಮಹಿಮನಿವನಂತ ಕಂಡವರಿಲ್ಲ
ಕಂತು ಜನಕ ಸರ್ವರಂತರಂಗದೊಳಿಪ್ಪ ಅ.ಪ.
ಕರಚರಣಗಳಿಲ್ಲದೆ ಇದ್ದರು | ಮುದುರಿ
ಘುರುಘುರುಗುಟ್ಟುತಿಹುದೆ
ವರಕಂಬೋದ್ಭವ ವಟು ಪರಿಶು | ಧರಿಸಿರುವನ
ಚರಿಸಿ ಮಾವನ ಕೊಂದ ನಿರ್ವಾಣ ಹಯವೇರಿ
ಶರಧಿಯೊಳಾಡಿ ಗಿರಿಯಡಿ ಓಡಿ
ಧರೆಯನು ತೋಡಿ ಕರಳೀಡ್ಯಾಡಿ
ಕರವ ನೀಡಿ ಭಾರ್ಗವ ದಶರಥ ಸುತ
ನರಸಖ ಅಂಬರ ತೊರೆದ ರಾವುತ 1
ಮನುವಿಗೊಲಿದು ಮಂದರ | ಬೆಂಡಂತೆ ಧರಿಸಿ
ವನಿತೆಯ ತಂದನೀ ಧೀರ
ಘನಗರ್ಜನೆಯು ಗಂಗಾಜನಕ | ಜಮದಗ್ನಿಸುತ
ವನಚಾರಿ ತುರುಪಾಲ ವನಿತೆರೊಂಚಕ ಕಲ್ಕಿ
ಜನಿಸಿ ಜಲದಿ ಬೆನ್ನಲಿ ಗಿರಿಕೋರೆ
ಘನ ಹೊಸಲಾಸನ ತಿರಿದನುಜನ
ತರಿದ ಮಾತೆ ಕಪಿವೆರಸಿ ವೃಂದಾವನ
ಚರಿಸಿ ದಿಗಂಬರ ಹರಿ ಏರಿದನೆ 2
ಸುತನಿಗಾಗಮವಿತ್ತನೆ | ಕ್ಷಿತಿಧರಧಾರಿ
ಸುತನ ಮೂಗಿನೊಳ್ ಬಂದನೆ
ಸುತವಾಕ್ಯ ಸತ್ಯವೆನಿಸಿ ಅತಿ ಕುಬ್ಜ ಕ್ಷಿತಿಯನಿತ್ತು
ವ್ರತಧಾರಿ ವಸನ ಚೋರ ವ್ರತಭಂಗ ಏರಿ ತುರಂಗ
ಸತಿಯನೆ ಪೊರೆದ ಸತಿಯಂತಾದ
ಸತಿಯಳ ಸಂಗ ಸತಿಗರಿದಂಗ
ಸತಿಯ ಬೇಡಿ ನೀಡಿ ಸತಿಯ ಕೂಡಿ ಜಾರ
ಸತಿಯರ ಕೆಡಿಸುತ ಸತಿ ಹೆಗಲೇರಿದ 3
ವಾಸ ಜಲದಿ ಮೈ ಚಿಪ್ಪು | ಯಜ್ಞ ಸ್ವರೂಪ
ವೇಷ ಮಾನವ ಮೃಗರೂಪು
ಆಸೆಬಡಕ ಮಾತೆ ದ್ವೇಷ ವನದಿ ವಾಸ
ಪೋಷ ಪಾಂಡವ ಜಿನ ಮೋಸ ವಾಜಿ ಮೇಲ್ವಾಸ
ನಾಸಿಕ ಶೃಂಗ ನಗಪೋತ್ತಂಗ
ಭೂಸತಿ ಸಂಗ ಮಾನವ ಸಿಂಗ
ಮೋಸ ನೃಪರ ದ್ವೇಷ ಪೋಷಿ ಯಜ್ಞವೃಂದ
ವಾಸಿ ಘಾಸಿವ್ರತ ಕಲಿಮುಖ ದ್ವೇಷಿ 4
ಕಾಪಾಡಿ ವೇದ ಅಮೃತ ಭೂಸತಿಯ ಪೊರೆದು
ಪಾಪಿ ಕರುಳ್ಬಗೆದ ಜಲಪಿತ
ಭೂಪರ ಕಾಡಿ ರಘುಭೂಪ ಸೋದರತಾಪ
ಗೋಪ್ಯಕಲ್ಯಂತಕಾಲ ಗೋಪಾಲಕೃಷ್ಣವಿಠ್ಠಲ
ಆಪಜವಾಸ ಆ ಪೃಥ್ವೀಶ
ಆ ಪುತ್ರಪೋಷ ಆ ಪದ ಸರಿತ
ಕೋಪಿ ಲಂಕೆ ಪುರತಾಪಿ ಗೋಪಿಕಾ
ವ್ಯಾಪಿ ಮಾನಹೀನ ಘೋಟಕವಹನ 5