Categories
ರಚನೆಗಳು

ಅಚಲಾನಂದದಾಸರ ರಚನೆಗಳು

ಉಗಾಭೋಗಗಳು
1*
ಅಂಗುಟದಲ್ಲಿ ಹೆಣ್ಣು ಪೆತ್ತವರುಂಟೇ
ಪೊಕ್ಕುಳದಲ್ಲಿ ಗಂಡು ಪೆತ್ತವರುಂಟೇ
ಮಿಕ್ಕಾದ ದೇವರಿಗೆ ಇನಿತು ಸೊಬಗುವುಂಟೇ
ಅಚಲಾನಂದವಿಠಲರೇಯಾ
* ಈ ಉಗಾಭೋಗ ಪುರಂದರದಾಸರ ಅಂಕಿತದಲ್ಲೂ ಇದೆ.

2
ಅಂಬರದಳವು ರವಿಶಶಿಗಲ್ಲದೆ ತಳದಲ್ಲಾಡೊ ಪಕ್ಷಿ ಬಲ್ಲದೆ
ಜಲದ ಪ್ರಮಾಣವ ತಾವರೆಗಲ್ಲದೆ ದಡದ
ಮೇಲಣ ಗಿಡವು ತಾ ಬಲ್ಲದೆ
ಪುಷ್ಪದ ಪರಿಮಳ ಮಧುಕರಗಲ್ಲದೆ
ಹಾರುವ ನೊಣವು ತಾ ಬಲ್ಲದೆ
ಮಾವಿನ ಹಣ್ಣು ಅರಗಿಳಿಗಲ್ಲದೆ ಚೀರುವ ಕಾಗೆ ತಾ ಬಲ್ಲದೆ
ಊಟದ ಸವಿರುಚಿ ನಾಲಿಗೆಗಲ್ಲದೆ ಕಲಸುವ ಕೈ ತಾ ಬಲ್ಲದೆ
ಸುರತಸುಖಗಳು ಯವ್ವನರಿಗಲ್ಲದೆ
ಬಾಲಕಜನರು ತಾವು ಬಲ್ಲರೆ
ದೇವ ನಿನ್ನ ಮಹಿಮೆಯ ಸಜ್ಜನರು
ಬಲ್ಲರಲ್ಲದೆ ದುರುಳರು ಅರಿಯೋರೆ
ಭಕುತರಿಗೆ ನೀನೆ ಗತಿಯೊ ಅಚಲಾನಂದವಿಠಲ

3
ಇದಕ್ಯಾರಂಜುವರೋ ಗೋಪಾಲ
ಇದಕ್ಯಾರಂಜುವರೋ
ನಾಳೆಗೆ ಬಾಹೋ ಪಿಡುಗು ನಮಗೆ
ಇವತ್ತೆ ಬರಲಿ
ಇವತ್ತೆ ಬರುವ ಪಿಡುಗು ನಮಗೆ
ಈಗಲೇ ಬರಲಿ
ಈಗಲೇ ಬರುವ ಪಿಡುಗು ನಮ
ಗೀಕ್ಷಣಕ್ಕೆ ಬರಲಿ
ನಮಗ್ಯಾತರ ಭಯವೋ ನೀನಿರಲು
ಅಚಲಾನಂದವಿಠಲ

ತೋರಿಕೆಯ ಭಕ್ತಿಯನ್ನು ಅಲ್ಲಗಳೆಯುತ್ತದೆ

4
ಉದರ ಮಲವನ್ನು ತಾನರಿಯದೆ
ಮರಳಿ ಮರಳಿ ಸರೋವರದಿ ಮುಳುಗುವುದಕ್ಕಿಂತ
ಉದಯಾಸ್ತಮಯವಾಗಿ ನೀರೊಳಗಿದ್ದು
ಮುದಿಕಪ್ಪೆಗಳು ಮಾಡಿದ ತಂತ್ರಗಳೇನಯ್ಯ ಅಚಲಾನಂದವಿಠಲ

5
ಒಡೆಯನುಳ್ಳ ತೊತ್ತಿಗ್ಯಾತರ ಚಿಂತೆ ಎ-
ನ್ನೊಡೆಯ ದ್ವಾರಕಾವಾಸಿಯ ಛತ್ರವಿರೆ
ಇಂದಿಗೆಂಬ ಚಿಂತೆ ನಾಳೆಗೆಂಬ ಚಿಂತೆ
ನಾಡಿದ್ದಿಗೆಂಬುವ ಚಿಂತೆ ತೊತ್ತಿಗ್ಯಾತಕಯ್ಯ
ಕೇಳಯ್ಯ ಅಚಲಾನಂದವಿಠಲ

6
ಒಬ್ಬರನೊಬ್ಬರು ಮರೆ ಹೊಗುವರೆ ದೇವ
ಮರೆಹೊಕ್ಕರೆ ಕಾವುದಲ್ಲದೆ
ಅಲ್ಲಿ ಗುಣಾವಗುಣವನ್ನು ದುರಾಚಾರವನು
ಮರೆಹೊಕ್ಕವರಲರಸುವರುಂಟೆ
ದುಷ್ಟಭೀತನಾಗಿ ದುರಾಚಾರಿಯಾಗಿ
ಮರೆಹೊಕ್ಕೆ ಕಾವುದಚಲಾನಂದ ವಿಠಲ

7
ಕಣ್ಣಲ್ಲಿ ನೀರಿಲ್ಲ ಮನದೊಳಕ್ಕರವಿಲ್ಲ
ಅತ್ತೆ ಸತ್ತರೆ ಸೊಸೆ ಅಳುವಳಂತೆ
ಅತ್ತೆ ಅತ್ತೆ ಅತ್ತೆಂದತ್ತೆ ಅತ್ತೆ ಸತ್ತರೆ
ಎನಗೆ – ಹುಚ್ಚು ಹೋಯಿತು
ಅತ್ತೆ ಸತ್ತರೆ ಎನಗೆ ಬುದ್ಧಿಯಾಯಿತು
ಅತ್ತೆ ಅತ್ತೆ ರಾಮಕೃಷ್ಣರ ಭಕ್ತಿಯಿಲ್ಲದವಗೆ
ಇದೇ ಪಾಡು ಕೇಳಯ್ಯ ದೇವ ಅಚಲಾನಂದವಿಠಲ

ಕುಹಕ ಮನಸ್ಸಿನವನಿಗೆ ದೀಕ್ಷೆಯಿತ್ತರೆ

8
ಕುಂಬಳ ಕಾಯಿಗೆ ಕಬ್ಬಿಣದ ಕಟ್ಟನು ಹಾಕಿದರೆ
ಅಳಿವಲ್ಲದೆ ಮತ್ತೆ ಉಳಿಯಬಲ್ಲದೆ ದೇವ
ಅಳಿಮನದವರಿಗೆ ದೀಕ್ಷೆಯಿತ್ತರೆ, ದೀಕ್ಷೆ ದೀಕ್ಷೆಯಂತೆ
ತಾನು ತನ್ನಂತೆ ಕೇಳಯ್ಯ ದೇವ ಅಚಲಾನಂದವಿಠಲ

9
ಕೃಷ್ಣಾಂಜನವಾದರೆ e್ಞÁನಸಿದ್ಧಿ
ವ್ಯಾಘ್ರಾಂಜನ ಮೋಕ್ಷವಯ್ಯ
ನಿಷ್ಠೆಯಿಂದಲಿ ಕಂಬಳಾಸನದಿ ಬಾಹ
ಧರಣಿಯಲ್ಲಿ ದುಃಖ ಅಷ್ಟೈಶ್ವರ್ಯ ನೀಗುವುದು
ದೂರ್ವಾ ಕಷ್ಟ ರೋಗ ಪಾಷಾಣದಲ್ಲಿ
ಇರದಾಪಥಿಯ ಅಚಲಾನಂದವಿಠಲ

10
ಕೆಟ್ಟೆನೆಂದೆನಲ್ಯಾಕೊ ಕ್ಲೇಶವ ಪಡಲ್ಯಾಕೊ
ಹೊಟ್ಟೆಗೋಸುಗ ಪರರ ಕಷ್ಟಪಡಿಸಲ್ಯಾಕೊ
ಕೊಟ್ಟರುಣಲುಂಟು ಕೊಡದಿದ್ದರೇನುಂಟು
ಸೃಷ್ಟಿ ಮಾಡಿದ ದೇವರು ಹುಲ್ಲುಮೇಯಿಸುವನೆ
ಕೇಳಯ್ಯ ದೇವ ಅಚಲಾನಂದವಿಠಲ