Categories
ದಾಸ ಶ್ರೇಷ್ಠರು

ಅಚಲಾನಂದದಾಸರು

ಸು೧೫ನೆಯ ಶತಮಾನದಲ್ಲಿದ್ದ ಹರಿದಾಸರು. ದಾಸಸಾಹಿತ್ಯದ ಮೊದಲಿಗರೆಂದೂ ಕಾಲ ೯ನೆಯ ಶತಮಾನವೆಂದೂ ಪ್ರತೀತಿ ಇತ್ತು. ಇವರ ಒಂದು ಉಗಾಭೋಗದ ‘ಕೇಳೂ ಜೀವವೆ ನೀ ಮಧ್ವಮತವನನುಸರಿಸಿ, ಶ್ರೀಲೋಲನಂಘ್ರಿಗಳ ನೆನೆದು ಸುಖಿಸೋ’ ಎಂಬ ಒಂದು ಪಾದದಲ್ಲಿ ಮಧ್ವಮತದ ಉಲ್ಲೇಖವಿದೆ. ೧೩ನೆಯ ಶತಮಾನದಲ್ಲಿ ಪ್ರಚಾರಕ್ಕೆ ಬಂದ ಮಧ್ವಮತವನ್ನು ೯ನೆಯ ಶತಮಾನದಲ್ಲಿ ಉಗಾಭೋಗಗಳಿದ್ದ ಕುರುಹುಗಳಿಲ್ಲ ವಾದ್ದರಿಂದಲೂ ಇವರ ಕಾಲ ೧೫ನೆಯ ಶತಮಾನಕ್ಕಿಂತ ಹಿಂದೆ ಹೋಗುವುದಿಲ್ಲವೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇವರು ಆಚಲಾನಂದವಿಠಲ ಎಂಬ ಅಂಕಿತವನ್ನಿಟ್ಟುಕೊಂಡು ಪದಗಳನ್ನು ರಚಿಸಿದ್ದಾರೆ. ಪಾತಕರೊಳಗೆಲ್ಲ ನಾನೆ ವೆಗ್ಗಳನಯ್ಯ, ಪ್ರಾಯಶ್ಚಿತಕ್ಕೆ ನಿನ್ನ ನಾಮವೇ ಘನಯ್ಯ, ಪಾತಕವನು ಮಾಡಿದ್ದು ನಾನು, ಪಾತಕ ಪಾವನ ಎರಡೂ ನಿನ್ನಾಧೀನ, ಪಾತಕವೆನಗಿಲ್ಲ ಪ್ರಾಯಶ್ಚಿತ್ತವೆನಗಿಲ್ಲ, ಕೇಳಯ್ಯ ದೇವ ಅಚಲಾನಂದವಿಠಲ ಎಂಬ ಒಂದು ಉಗಾಭೋಗ, ವಚನಗಳ ಶೈಲಿಯನ್ನು ನೆನಪಿಗೆ ತರುತ್ತದೆ. (ಎಚ್. ಆರ್.ಡಿ)