Categories
ರಚನೆಗಳು

ಅಚಲಾನಂದದಾಸರ ರಚನೆಗಳು

‘ಸರ್ವವೂ ನೀನೇ’ – ಎಂದು ಶ್ರೀಹರಿಯ

21
ಫಣಿಯಂ ಮೆಟ್ಟಿ ತುಳಿದನೆಂತೆಂಬರೊ
ಫಣಿಯೆಂತು ತಾಳಿತೊ ದೇವ ನಿಮ್ಮ
ಫಣಿಯು ಬ್ಯಾರಿಲ್ಲ ನೀನೆ ಫಣಿಯು (?)
ಪ್ರಣವಮೂರುತಿ ಅಚಲಾನಂದವಿಠಲ

22
ಬೆಟ್ಟದಂಥ ದುರಿತವು ಸುತ್ತು ಮುತ್ತು ಕವಿದಾಗ
ಕೃಷ್ಣನಾಮಕಿಡಿ ಬಿದ್ದು ದುರಿತ ಬೆಂದುದ ಕಂಡೆ
ಎಲೆ ಎಲೆ ದುರಿತವೆ ತಿರುಗಿ ನೋಡದೆ ಪೋಗು
ಜನನ ಮೃತ್ಯುವಿನ ದೂತರಿಗೆ ಗಂಟಲಗಾಣ
ದಾತರದಾತ ಅಚಲಾನಂದವಿಠಲ
ಎನ್ನೊಡೆಯ ಕಂಡರೆ ನಿನ್ನ ಶಿರವ ಚೆಂಡಾಡುವ

23*
ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗಬಲ್ಲದೆ
ಅಲ್ಲದ ಮನುಜಂಗೆ ಅಸಮ ತತ್ವಂಗಳು
ಹಲವು ಪೇಳಿದರೇನು ಕೆಲವು ಕೇಳಿದರೇನು
ಕೊಳಲ ದನಿಗೆ ಸರ್ಪ ತಲೆದೂಗುವಂತೆ
ಎನ್ನೊಡೆಯ ಕೇಳು ಅಚಲಾನಂದವಿಠಲರೇಯ
* ಈ ಉಗಾಭೋಗ ಪುರಂದರವಿಠಲ ಅಂಕಿತದಲ್ಲೂ ದೊರೆತಿದೆ.

ಹನುಮನ ದಾಸ್ಯದಂತೆ ತಮ್ಮ

24
ಮನ ವಚನ ಕಾಯದಿಂದ ಅನ್ಯವನರಿಯದ
ಹನುಮಂತನವೊಲು ನಿನ್ನ ದಾಸನೆಂದೆನಿಸಯ್ಯ
ಎನ್ನಂದದ ಕೃಪಣಂಗೆ ಕೃಪಾಕರ ನಿನ್ನ ದಾಸನೆಂದೆನಿಸಯ್ಯ
ಉನ್ನಂತ ಭಕುತಿಯನಿತ್ತೆನ್ನನನುದಿನ
ನಿನ್ನವನೆನಿಸಚಲಾನಂದ ವಿಠಲ

ಹರಿಸೇವೆಯಿಲ್ಲದ ಬಾಳು

25
ಮರವಿದ್ದರೆ ಫಲವೇನು ನೆರಳಿಲ್ಲದನಕ
ವರತಿ ಇದ್ದರೆ ಫಲವೇನು ನೀರಿಲ್ಲದನಕ
ಧನವಿದ್ದರೆ ಫಲವೇನು ಮನವಿಲ್ಲದನಕ
ಏನಿದ್ದರೆ ಫಲವೇನು e್ಞÁನವಿಲ್ಲದನಕ
**
ಕೋಳಿಗೆ ಹೊನ್ನ ಪಂಜರವಿನ್ಯಾಕೊ
ಬೋಳಿಗೆ ಇನ್ಯಾತಕೊ ಜಾಜಿ ಮಲ್ಲಿಗೆ ದಂಡೆ
ಆಳಿಲ್ಲದವನ ಅರಸುತನವ್ಯಾಕೆ
ಮಾಳಿಗೆ ಮನೆಯು ಡೊಂಬಗಿನ್ಯಾಕೊ
ಕೇಳೆಲೊ ಅಚಲಾನಂದವಿಠಲ ನಿನ್ನ
ಊಳಿಗವಿಲ್ಲದ ಬಾಳುವೆ ಇನ್ಯಾಕೆ
* ಇಲ್ಲಿಂದ ಮುಂದಿನ ಭಾಗ ಪುರಂದರ ವಿಠಲ ಅಂಕಿತದಲ್ಲೂ ಇದೆ.

26
ಮುಗುಳುನಗೆಯ ನಗುತ ಈತನೇ ಜಗಕೆ
ಈತನೇ ಪರಗತಿಗೆ
ಈತನೇ ಸಕಲವೆಂಬುದು ಸನ್ಮಾರ್ಗ
ಅಜಾತ ನೀನೆಂದು ಸೋತು ಶರಣುಹೋಗುವ
ವಿಧಾತರ ಕಂಡು ಅಚಲಾನಂದವಿಠಲ ನಗುವ
ಈತನೇ ಜಗಕೆ ಈತನೇ ಪರಗತಿಗೆ

ಋಷಿ ಮುನಿಗಳಿಗೆ ಉಪನಿಷತ್ತುಗಳಿಗೆ

27
ಮುನಿಗಳು ಮನದಲ್ಲಿ ನುತಿಸಲರಿಯದ
ಮಹಾಮಹಿಮ ನಿನ್ನ
ಉಪನಿಷತ್ತುಗಳು ತುತಿಸಲರಿಯದ
ಮಹಾಮಹಿಮ ನಿನ್ನ
ಸಕಲ ಕ್ರತುರಾಸಿಗಳು ತುತಿಸಲರಿಯದ
ಮಹಾ ಮಹಿಮ ನಿನ್ನ
ಎತ್ತಿಕೊಂಡು ಜೋಗುಳ್ಹಾಡುವ
ಮೊಲೆಯೂಡುವ ಮೊಗನೋಡುವ
ಗೋಪಿದೇವಿ ಪುಣ್ಯವೆಂಥಾದ್ದೊ ಅಚಲಾನಂದವಿಠಲ

ಇಲ್ಲಿ, ಶ್ರೀ ಪಾದರಾಜರು, ವ್ಯಾಸರಾಯರು

28
ವರ ಧ್ರುವನವತಾರವೆ ಶ್ರೀಪಾದರಾಯರು
ರಂಗವಿಠಲನೌಪಾಸಕರು
ತರಳ ಪ್ರಹ್ಲಾದನವತಾರವೆ ವ್ಯಾಸರಾಯರು
ಶ್ರೀಕೃಷ್ಣನೌಪಾಸಕರು
ನಾರದರವತಾರವೆ ಪುರಂದರದಾಸರು
ವಿಠಲನೌಪಾಸಕರು
ಇವರು ಮೂವರು ನರರೆಂದು ತಿಳಿವರೆ
ನರಕವಾಸಿಗರಯ್ಯ ಅಚಲಾನಂದವಿಠಲ

29
ವಿಷಯವುಳ್ಳವನಿಗೆ ವಿವೇಕವಿಲ್ಲ
ಹಸಿವೆ ಅರಿತು ಉಂಬನಿಗೆ ರೋಗವಿಲ್ಲ
ಲೋಭಿಗೆ ತನ್ನವರೆಂಬೋರಿಲ್ಲ
ಚ್ಯುತ ಶೀಲಗುಣಗೆ ಸತ್ಯವಿಲ್ಲ
ಕೇಳಯ್ಯ ದೇವ ಅಚಲಾನಂದವಿಠಲ
ನಿನ್ನ ನೆನೆಯದವ ಪಾಮರನಯ್ಯ

ಹರಿಸರ್ವೋತ್ತಮನೆಂಬ ದಾಸರ

30
ಶಿಲೆಯ ಕುಸುಮದಲ್ಲಿ ಪರಿಮಳವುಂಟೆ
ಬೆಲೆವೆಣ್ಣಿನೊಲುಮೆಗೆ ನೆಲೆಯುಂಟೆ ಎಲೆದೇವ
ಎಲವದ ಮರನಲ್ಲಿ ತನಿವಣ್ಣ ಮೆಲಲುಂಟೆ
ಹಲವು ದೈವವ ನಂಬಿ ಫಲವುಂಟೆ ಎಲೊ ದೇವ
ಹಲವು ಮಾತ್ಯಾಕೆ ಅಚಲಾನಂದವಿಠಲನನೊಲಿದು
ಪೂಜಿಸದಂಗೆ ಮುಕುತ್ಯುಂಟೆ ಎಲೆದೇವ