Categories
ರಚನೆಗಳು

ಅಚಲಾನಂದದಾಸರ ರಚನೆಗಳು

ಇದೂ ಒಂದು ಸಖ್ಯಭಾವ,

31
ಸಿರಿ ನಿನಗುಂಟೆಂದು ಗರ್ವಿಸಲಿ ಬೇಡ
ಸಿರಿ ಎನಗಿಲ್ಲೆಂದು (ಜರಿದು) ಮುನಿದು ನೋಡಲಿಬೇಡ
ಹರಿಯೆ ನಿನ್ನಂಥ ಒಡೆಯರು ಎನಗುಂಟು
ಅರುಹೊ ನಿನ್ನೊಡೆಯರ ಅಚಲಾನಂದವಿಠಲ

ಸಕಲವೂ ಶ್ರೀಹರಿಯ ಅಧೀನ;

32*
ಸುಖವಾದರೆ ತನ್ನಿಂದಾಯಿತು ಎಂಬೋದು
ದುಃಖವಾದರೆ ದೈವ ಮಾಡಿತು ಎಂಬೋದು
ದುಃಖಕೆ ತಾನ್ಯಾರೊ ಸುಖಕೆ ತಾನ್ಯಾರೊ
ಸುಖದುಃಖವೆರಡು ಶ್ರೀಹರಿಯ ಅಧೀನವೆಂದು
ಸುಖಿಯಾಗಿಹನೆ ನೆರೆ ಜಾಣ
ರುಕುಮಿಣಿಪತಿ ಅಚಲಾನಂದವಿಠಲ
* ಈ ಉಗಾಭೋಗ ಪುರಂದರವಿಠಲ ಅಂಕಿತದಲ್ಲೂ ಇದೆ.

ಜೀವನವನ್ನು ವ್ಯರ್ಥವಾಗಿ ಕಳೆದ

33
ಹಗಲು ನಿನ್ನ ನೆನೆಯಲಿಲ್ಲ ಹಸುವಿಗಳಿಂದ
ಇರುಳು ನಿನ್ನ ನೆನೆಯಲಿಲ್ಲ ವಿಷಯಗಳಿಂದ
ವ್ಯಯವಾಗಿ ಹೋಯಿತಲ್ಲ ನಿನ್ನ ನೆನೆಯಲಿಲ್ಲ
ಸಂಸಾರದೊಳು ಸುಖವಿಲ್ಲ ಕೇಳಯ್ಯ
ದೇವ ಅಚಲಾನಂದವಿಠಲ

ಸದಾಚಾರದ ಬೋಧನೆ

34
ಹರಿ ಗೋವಿಂದನೆಂದೇಳು ಹತ್ತಾವತಾರ ಪೇಳು
ಗೆರೆ ಕರದೊಳರ್ಧ ನೋಡುತ ತುಲಶಿ ಗೋಮಾಳಗಳಿಗೆರಗಿ
ನೈರುತ್ಯಕ್ಕೆ ಪೋಗಿ ತೃಣವನಿಟ್ಟು
ಗುರು ಪವಮಾನನೊಡೆಯ ಅಚಲಾನಂದವಿಠಲ
ಹರಿಯ ಚರಣಸೇವಕನಾಗಿ ಬಾಳಬೇಕು

‘ತೇನವಿನಾ ತೃಣಮಪಿ ನಚಲತಿ’

ಕೀರ್ತನೆಗಳು
35*
ಅಪರಾಧಿ ನಾನಲ್ಲ ಅಪವಾದಯನಗಿಲ್ಲಾ ಪ.
ಕಪಟನಾಟಕ ಕೃಷ್ಣ ಯನಗೆ ನೀನಪರಾಧಿ ಅ.ಪ.
ನೀನು ಆಡಿಸಲು ಜೀವಗಳನುದಿನದ ಬೊಂಬೆ
ಆನೆ ಬಲ್ಲೆನೆ ಬ್ಯಾರೆ ಪಥವನೊಂದಾ
ನೀನಿಟ್ಟ ಸೂತ್ರದಂತಿರಲು ಕೈಕಾಲುಗಳು
ನೀನು ಮುಗ್ಗಿಸಲು ಮುಗ್ಗುವ ಜೀವ ನಾನಾದೆ 1
ಒಂಬತ್ತು ಬಾಗಿಲುವುಳ್ಳ ಪಟ್ಟಣದೊಳಗೆ
ತುಂಬಿದಿಪ್ಪತ್ನಾಲ್ಕು ಮೊನೆಯಾಳ್ಗಳ
ನಂಬಿಸಿ ಕಾವಲು ನೀನು ಎನ್ನೊಳಗಿದ್ದು
ಕಂಬುದಾ (?) ಯೇರಿ ಕೊಲಿಸುವುದು ನಿನಗನ್ಯಾಯ 2
ಅಂತರಾತ್ಮಕ ನೀನು ಒಳಗಿದ್ದಾ ಬರಿ
ತಂತ್ರಿಯೆಂದೆನ್ನ ಕೊಲ್ಲಿಸುವರೇನೊ ಹೇಳೋ
ಕಂತುವಿನ ಜನಕ ಲಕ್ಷ್ಮೀರಮಣ ಕಾಯಬೇ-
ಕೆಂತೆಂದೆನ್ನ ಅಚಲಾನಂದವಿಠಲ

* ಈ ಕೀರ್ತನೆ ಅಲ್ಪ ಸ್ವಲ್ಪ ಪಾಠ ವ್ಯತ್ಯಾಸದೊಡನೆ ಪುರಂದರ ವಿಠಲ ಅಂಕಿತದಲ್ಲೂ ಇದೆ.

ಹನುಮ-ಭೀಮ-ಮಧ್ವ

36
ಈಡುಗಾಣೆನಯ್ಯ ಜಗದೊಳಗೆ ಪ.
ಬೇಡಿದಭೀಷ್ಟಗಳ ಕೊಡುವ ಹನುಮ
ಭೀಮ ಮಧ್ವರಾಯ ಅ.ಪ.
ಅಷ್ಟದಿಕ್ಕಲಿ ಭೂಪರಾಳಿದ ದುಷ್ಟರಾವಣನ್ನ ಪುರವ
ದೃಷ್ಟಿಸಿ ನೋಡಿ ಸಮರದಲಿ ಪ್ರಹಾರವನೆ ಕೊಡಲು
ಕಷ್ಟದಿ ಮೂಛ್ರ್ಯಕೃತನಾಗಿಯೆದೆ ಹಿಟ್ಟಾಗಿಸನಂತಕಂದಿಸಿಯೆ
ಕಂಗೆಟ್ಟು ಹತ್ತು ದಿಸೆಗೆ ಓಡಿಸಿದ್ಯೊ
ದಿಟ್ಟನಾಗಿ ನಿರಂತರದಿ ಹನುಮಾ 1
ನಾರದ ಅಯೋಧ್ಯದಿ ಪೇಳಲು ಶ್ರೀ ರಾವಣ ಸೈನ್ಯಗಳ ಓಡಿಸಿ
ವಾರಿಧಿಗಳ ದಾಟಿ ಬೇಗ ನೂರುತಲೆ ಅಸುರನ ಪಟ್ಟಣದ
ದ್ವಾರ ಬಂಧಿಸಿ ಸಕಲದ್ವೀಪದಲ್ಲಿದ್ದ ಕ್ರೂರ ಅಸುರನ್ನ ಕಾಲಲೊದ್ದು
ವರ ವಿಭೀಷಣ ಸುಗ್ರೀವರ ಪುಚ್ಛದಲಿ
ತರುಬಿದಿಯೊ ಸಮರ್ಥ ಹನುಮಾ 2
ರುದ್ರ ಬ್ರಹ್ಮರ ವರದಲವಧ್ಯನಾದ ಜರಾಸಂಧನಾ
ಅಧ್ವರ್ಯದಲಿ ಪಶುವಂದದೀ ಮರ್ದಿಸಿ ದುಷ್ಟ
ಖಳರ ಸೀಳಿದ್ಯೊ
ಖೇದರಾದ ನೃಪರ ಬಿಡಿಸಿದೆ ಅಧ್ವರ್ಯನಾಗಿಯಾಗದಿ
ನಿಂದೆ ಯುದ್ಧದಲಿ
ದುರ್ಯೋಧನನ ಕೊಂದ ಪ್ರಸಿದ್ಧ ಭೀಮರಾಯ ನಿಮಗೆ3
ವಾದಿಗಜಕೆ ಮೃಗೇಂದ್ರ ವಾದಿವಾರುಧಿ ಬಡಿವ ಮಾಯಾ
ವಾದಿ ಪರ್ವತಕೆ ವಜ್ರ ಭೇದ ಮತಾಂಬುಧಿಗೆ ಚಂದ್ರ
ಮೋದತೀರ್ಥಾನಂದಗೆ ಕೃಷ್ಣಾ ಅಷ್ಟವಾಳುಕ ಮುಷ್ಟಿ ತಂದೆ
ಸಾಧುಜನರಿಗೆ ತತ್ವಬೋಧಿಸಿದೆ
ಮೇದಿನಿಯೊಳು ಮಧ್ವರಾಯ ನಿಮಗೆ 4
ಇಂದುಮುಖಿ ಸೀತೆಗೆ ಮುದ್ರಿಕೆಯನಿತ್ತು
ವಂದಿಸಿ ರಾಮಕಥೆಯ ಪೇಳಿದೆ
ಅಂದು ರೋಮಕೋಟಿ ಶಿವರಮಾಡಿ ಪುರುಷಮೃಗವನೆ
ತಂದೆ ಚಂದದಿಂ ಮಣಿಮಂತನ ಕೊಂದು ಸೌಗಂಧಿಕವ
ತಂದೆ ನಂದತೀರ್ಥರಾದ ಅಚಲಾನಂದ ವಿಠಲನ ದಾಸ ನಿಮಗೆ5

ದಾಸರು ಇಲ್ಲಿ ತಮ್ಮ ಮಧ್ವಮತ

37
ಕೇಳು ಜೀವನವೆ ನೀ ಮಧ್ವಮತವನುಸರಿಸಿ
ಶ್ರೀಲೋಲನಂಘ್ರಿಯನು ನೆನೆದು ಸುಖಿಸೊ ಪ.
ನರನಾಗಿ ಪುಟ್ಟುವುದು ದುರ್ಲಭವೆಲವೊ ಭೂ-
ಸುರಕುಲದಿ ಜನಿಸುವುದು ಬಹು ದುರ್ಲಭ
ಪರಮ ಸುಕೃತವದೇನು ಫಲಿಸಿತೊ ನಿನಗೀಗ
ದೊರಕಿದೀ ಜನುಮವನು ಸಫಲ ಮಾಡೊ 1
ಅರಘಳಿಗೆ ಮಾತ್ರವೆ ಪೊತ್ತು ಪೋಗಲು ಆಯು
ಕೊರತೆಂದು ತಿಳಿ ನಿನ್ನ ಕ್ಲುಪ್ತದೊಳಗೆ
ಮರಳುತನದಲಿ ಬರಿದೆ ದಿನಗಳಿಯಬ್ಯಾಡೆಲವೊ
ಸ್ಥಿರವಲ್ಲ ಈ ದೇಹ ಸ್ವಪ್ನಸಮವೊ 2
ದುರುಳರೊಡನಾಡಿ ದುರ್ವಿಷಯ ಲಂಪಟನಾಗಿ
ನರಕಯಾತನೆಗೆ ಗುರಿಯಾಗದಿರೆಲೊ
ಎರಡುದಿನದೋಡ್ಯಾಟ ಇರಬಂದುದಲ್ಲವಿದು
ಪರಗತಿಗೆ ಸಾಧನ ಮಾಡಿಕೊಳ್ಳೊ 3
ಹೋಗುತಿವೆ ಹೋಗುತಿವೆ ದಿವಸ ವ್ಯರ್ಥವಾಗಿ
ಹೀಗೆ ಮೈಮರೆದಿಹುದು ನಿನಗೊಳ್ಳಿತೆ
ಬ್ಯಾಗ ಹರಿಯನು ಭಜಿಸು ಬಾ ಈ ಮಾತಲ್ಲ ನೀ
ಹೋಗಿನೋಡಲು ಯಮನ ಬಾಧೆ ಬಿರುಸೊ4
ಏನ ಹೇಳಲಿ ನಿನ್ನ ಮಂದಮತಿಯನು ಹಿಂದೆ
ಶ್ವಾನಸೂಕರ ಮೊದಲಾದ ನೀಚ-
ಯೋನಿಗಳೊಳಗೆ ಬಂದು ಅಂದದನು ಕ್ರಮಿಸಿದವನು
ಆ ನೋವನಾಗಲೆ ಮರೆದಿಯಲ್ಲೊ 5
ಮುನ್ನ ದುಷ್ಕರ್ಮವ ಮಾಡಿದ ಪ್ರಾಣಿಗಳು
ಉನ್ನತ ನೀಚ ದೇಹಗಳ ಧರಿಸಿ
ಬನ್ನಬಡುತಿಹುದು ನೀ ನೋಡಿ ನೋಡಿ ಮತ್ತೆ
ದುರ್ನಡತೆಯನು ಮಾಡಲುದ್ಯೋಗಿಪೆ 6
ಎಂಬತ್ತು ನಾಲ್ಕು ಲಕ್ಷ ಯೋನಿಗಳೊಳಗೆ
ಕುಂಭಿಣಿಯೊಳಗೆ ತಿರುತಿರುಗಿ ಪಾಪ
ಉಂಬುದನುಚಿತವೆಂದು ಮನ ಹೇಸಿ ವಾಕರಿಸಿ
ನಂಬುನಾರಾಯಣನ ಇನ್ನಾದರೂ 7
ಜನನಿಯ ಗರ್ಭವಾಸ ದುಃಖ ಅತಿಶಯವೊ
ಜನನ ಮರಣದ ದುಃಖ ಬಲು ಅಧಿಕವೊ
ಘನ ನರಕದಾ ದುಃಖ ಪೇಳಲೊಶವಲ್ಲ ನಿನ-
ಗಿನಿತಾದರೂ ನಾಚಿಕಿಲ್ಲವೇನೊ 8
ಸಾರಿ ಪೇಳುವೆನೀಗ ಪುಟ್ಟಿ ಬೆಳೆದಳಿವ ಸಂ-
ಸಾರ ಸುಖವಲ್ಲ ಮಹ ದುಃಖಪುಂಜ
ಘೋರ ಸಂತಾಪಕ್ಕೆ ಕಡೆಮೊದಲಿಲ್ಲವೊ
ವಾರಿಜಾಂಬಕನ ಮರೆಯೊಕ್ಕು ಬದುಕೊ 9
ಹಿಂದೆ ಬಹುಜನುಮದಲಿ ಬಂದು ಬಳಲಿದ ಬವಣೆ
ಒಂದೊಂದು ನೆನೆಸಿಕೊಳಲತಿ ಕಷ್ಟವೊ
ಮುಂದಾದರು ಸರಿ ಎಚ್ಚೆತ್ತು ಬಿಡದೆ ಗೋ-
ವಿಂದನ ಪದಾಂಬುಜವ ಧ್ಯಾನ ಮಾಡೊ 10
ಮಾರಿ ಇಲ್ಲಿದೆಯೆಂದು ಕೇಳುತಲಿ ಪೋಗಿ ನೀ
ಭೂರಿ ಭಯಕೊಳಗಹದು ನೀತಿಯಲ್ಲ
ದೂರ ತಿಳಿದು ನೋಡಿ ದುರ್ಮಾರ್ಗವನು ಜರಿದು
ಸೇರಿ ಸಜ್ಜನರ ಸುಪಥವ ಪಡೆಯೊ 11
ನಿನ್ನಯ ಸ್ವರೂಪಕ್ಕೆ ಹೀಗಾಗುವುದೆಂದು
ಪುಣ್ಯವನೆ ಗಳಿಸಿಕೊ ಬ್ಯಾಗ ನೀನು
ಇನ್ನು ಈ ಧರೆಯಲ್ಲಿ ಬಿಟ್ಟು ಹೋಗುವ ದೇಹ-
ವನ್ನು ಪೋಷಿಸಿಕೊಂಡು ಹಿಗ್ಗಬೇಡ 12
ವನಿತೆಸುತರನು ಪೊರೆಯಬೇಕೆಂಬ ಬುದ್ಧಿಯಲಿ
ಧನದಾಸೆಯಿಂದಲಗಣಿತ ಪಾಪವ
ಕ್ಷಣದೊಳಗೆ ಸಂಪಾದಿಸಿಕೊಂಬೆ ಎಲೊ ಮೂಢ
ನಿನಗಿವರು ಕೊನೆಗೆ ಸಂಗಡ ಬರುವರೆ 13
ಕೆಡಬ್ಯಾಡ ವ್ಯರ್ಥಮೋಹಕೆ ಸಿಲುಕಿ ಜವನವರು
ಪಿಡಿದೊಯ್ದು ಕಡಿದಿರಿದು ಕೊಲ್ಲುವಾಗ
ಬಿಡಿಸುವವರಾರಿಲ್ಲ ಈಗಳೆ ಮುಂದರಿತು
ಕಡಲಶಯನನ ಪೊಂದಿ ಮುಕುತಿ ಪಡೆಯೊ 14
ಈಗಲೇನೊ ಇನ್ನು ಕ್ಷಣಕೇನು ಬಪ್ಪುದೊ
ನೀ ಗರುತರಿಯದಲೆ ಹಿತ
ರಾಗದಲಿ ಸರ್ವವನು ಎನ್ನದೆಂದಾಡದಿರು
ನಾಗಾರಿಗಮನನಾಧೀನವೆನ್ನೊ 15
ನೀ ಮಗುಳೆ ಮಹಿಯೊಳಗೆ ಕಂಡುಕಂಡುದ ಬಯಸಿ
ಭ್ರಾಮಕರ ನುಡಿಗೇಳಿ ಭ್ರಾಂತಿಗೊಳದೆ
ಕಾಮಾದಿಗಳ ತ್ಯಜಿಸಿ ಸತ್ಕರ್ಮವನು ಮಾಡಿ
ಶ್ರೀಮನೋ ಹರನಿಗರ್ಪಣೆಯ ಮಾಡೊ16
ಏನುಧಾವತಿಗೊಳಲೇನೇನು ಫಲವಿಲ್ಲ
ಮಾನವಜನುಮ ಜೊಳ್ಳು ಮಾಡಬ್ಯಾಡ
ಆನಂದತೀರ್ಥರ ಪಾದಕಮಲವ ಪೊಂದಿ ಅಚ-
ಲಾನಂದವಿಠಲನ್ನ ನೀನೊಲಿಸಿಕೊ 17

ಸಂಸಾರದಲ್ಲಿ ಜೀವಿ ಅನುಭವಿಸುವ

38
ನಾನಾ ಯೋನಿಗಳೊಳು ಹೀನಜನ್ಮದಿ ಬಂದು
ನಾನು ತಿರುಗಲಾರೆನೊ ಗೋಪಾಲ ಪ.
ಶ್ರೀನಿವಾಸ ನಿನ್ನ ಸೇರಿದ ಬಳಿಕ
ಉದಾಸೀನ ಮಾಳ್ಪರೇನೋ ಗೋಪಾಲ ಅ.ಪ.
ತಂದೆಯ ಉದರದಿ ತ್ರೈಮಾಸವು ಶುಕ್ಲ
ಇಂದ್ರಿಯದೊಳಿದ್ದೆನೊ ಗೋಪಾಲ
ಅಂದಾಗ ಜನನಿಯ ಜಠರದಿ ಶೋಣಿತದಿಂದ
ಪಿಂಡವಾದೆನೊ ಗೋಪಾಲ
ಕುಂದದೆ ಮಾಸ ನಾಲ್ಕಯಿದಾಗಲ ವಯವಂಗಳಿಂದ
ಬೆಳೆವುತಿದ್ದೆನೊ ಗೋಪಾಲ 1
ನರದ ಸಂಕೋಲೆ ಮಾಸುಚೀಲದ ಬಲೆಯೊಳು
ನರಳಿ ಕೋಟಲೆಗೊಂಡೆನೊ ಗೋಪಾಲ
ಪರಿಪರಿಯಲಿ ಇಂತು ಪಾಪ ಪುಣ್ಯಗಳೆಂತು
ಹಿರಿದು ಚಿಂತಿಸಿದೆನೊ ಗೋಪಾಲ
ನೆರೆ ಅಷ್ಟ ಮಾಸವು ಕ್ಷೀರ ಶೀತೋಷ್ಣದಿ ಕರೆ
ಕಷ್ಟಬಡುತಿದ್ದೆನೊ ಗೋಪಾಲ
ಇರುತಿರೆ ನವಮಾಸ ಘಳಿಗೆ ವಾಯು
ಸಂದ ಧರೆಗೆ ಪತನವಾದೆನೊ ಗೋಪಾಲ2
ಮಾಸು ಮಲವು ಸಹ ಮೊರದಿ ಮಲಗಿ ನೊಣದ
ಘಾಸಿಯೊಳೊರಲುವೆನೊ ಗೋಪಾಲ
ಹೇಸದೆ ಹಸಿದು ಬೆರಳು ಬಾಯೊಳಗಿಟ್ಟು
ಘಾಸಿಸಿ ದುಃಖಿಪೆನೊ ಗೋಪಾಲ
ಪುಟ್ಟಿಸಲು ಮಾತೆ ದುರ್ಬಲವೆನುತಲಿ
ಬ್ಯಾಸತ್ತು ಒರಲುವೆನೊ ಗೋಪಾಲ
ಈಸು ಬವಣೆಯಿಂದಾ ನರ್ಕದ ಒಳಗಿಂದ
ಶ್ವಾಸ ಎತ್ತಿದೆನೊ ಗೋಪಾಲ 3
ಬಾಲತನದಿ ಬಹುವಿಧದಾಟವ ತೋರಿ
ಮೇಲನರಿಯದಿದ್ದೆನೊ ಗೋಪಾಲ
ಲೀಲೆಯೊಳು ತುರುವಿಂಡು ಮೃಗಪಕ್ಷಿ
ಮಾರ್ಜಾಲ ಘಾತಕನಾಗಿದ್ದೆನೊ ಗೋಪಾಲ
ಖೂಳತನದಿ ದುಷ್ಕøತ್ಯವ ಮಾಡಲು
ಕೂಳಿಗೀಡಾಗಿದ್ದೆನೊ ಗೋಪಾಲ
ಹೇಳಬಾರದ ಪಾಪವ ಮಾಡಿ ನರಕದ
ಪಾಳೆಯಕೀಡಾದೆನೊ ಗೋಪಾಲ 4
ಹೀಗಿರುತಿರೆ ಮುಂಜಿ ಮದುವೆ ನಾಳೆಲ್ಲವು
ಆಗಿ ಬಾಳುತಲಿದ್ದೆನೊ ಗೋಪಾಲ
ಸೋಗೆಗಣ್ಣಿನ ಸುದತಿಯರ ಕಂಡು e್ಞÁನ
ನೀಗಿ ಬಾಳುತಿದ್ದೆನೊ ಗೋಪಾಲ
ರೋಗವಿಲ್ಲದೆ ನರಳುವನಂತೆ ಕಾಮನ
ಬಾಧೆಗೆ ಬೆಂಡಾದೆನೊ ಗೋಪಾಲ
ಆಗಲು ಪುತ್ರ ಬಾಂಧವರಿಗೋಸ್ಕರ ಭವ-
ಸಾಗರ ಎತ್ತಿದೆನೊ ಗೋಪಾಲ 5
ಬಾಲ್ಯಯೌವನವಳಿದು ಜರೆ ಒದಗಿ ನಾನು
ಮೇಲೇನರಿಯದಿದ್ದೆನೊ ಗೋಪಾಲ
ಕಾಲು ಕೈಗಳು ಕುಗ್ಗಿ ಕಣ್ಣುಗಳು ಭಯವಡಗಿ
ಬೀಳುತೇಳುತಲಿದ್ದೆನೊ ಗೋಪಾಲ
ನಾಲಿಗೆ ಉಡುಗಿ ನರಗಳೆಲ್ಲವು ಸಡಲಿ ಕೋಳು
ಹೋದಂತಿದ್ದೆನೊ ಗೋಪಾಲ
ಹಾಳುಗೋಡೆಗೆ ತಲೆಯನು ಕೊಟ್ಟು ಕಾದುವ
ಗೂಳಿಯಂದದಲಿದ್ದೆನೊ ಗೋಪಾಲ 6
ಹುಟ್ಟಿದಾಗಲೆ ಸತ್ತನೆಂಬರಾ ಬೈದುಂಡುಟ್ಟು
ಬಾಳುತಲಿದ್ದೆನೊ ಗೋಪಾಲ
ಮಟ್ಟ ತಗ್ಗಲು ಸತಿಸುತ ಸಹಜಾತ
ಗಿಷ್ಟನೆನಿಸಿಕೊಂಡೆನೋ
ಬಿಟ್ಟ ಪ್ರಾಣವ ಕಡೆಗ್ಹೋಗಲು ಪೆಣನೆಂದು
ಮುಟ್ಟರೆನಿಸಿಕೊಂಡೆನೊ ಗೋಪಾಲ
ಕೆಟ್ಟಡವಿಯ ಹದ್ದು ಕಾಗೆಗೆ ದೇಹವ
ಕೊಟ್ಟು ತಿನಿಸಿದೆನೊ ಗೋಪಾಲ7
ಹಾದಿವಿಡಿದು ವೈತರಣದೊಳು ಮುಳುಗಿ
ವೇದನೆಗೊಳುತಿದ್ದೆನೊ ಗೋಪಾಲ
ಕಾದಕಾವಲಿ ಉಕ್ಕಿನಕಂಬ ಕೀವಿನ ಸ್ವೇದ
ಕೊಂಡದಿ ಬಿದ್ದೆನೊ ಗೋಪಾಲ
ಭೇದವಿಲ್ಲದೆ ಪರ್ವತ ಪ್ರೇತ ಗುಹ್ಯ ಮೊದಲಾದ
ಯಾತನೆಗೊಳಗಾದೆ ಗೋಪಾಲ
ಸಾಧಿಸಿ ಹಿರಿಯರೊಳು ಮೀರಿ ನಡೆಯೆ ಯಮ
ಬಾಧೆಯೊಳು ಒರಲುವೆನೊ ಗೋಪಾಲ 8
ಇಷ್ಟಂತು ಕಳೆಯಲಾರೆನೊ ನರಕದೊಳೆಂದು
ನಿನ್ನ ನೆನೆಯದಿದ್ದೆನೊ ಗೋಪಾಲ
ನಷ್ಟದೇಹವ ನೆಚ್ಚಿ ನರರ ಕೊಂಡಾಡುತ
ದುಷ್ಟಬುದ್ಧಿಯೊಳಿದ್ದೆನೊ ಗೋಪಾಲ
ಅಷ್ಟರೊಳಗೆ ನಿನ್ನ ದಾಸರೊಳಾಡಲು
ಶ್ರೇಷ್ಠಜನ್ಮದಿ ಬಂದೆನೊ ಗೋಪಾಲ
ಸೃಷ್ಟಿಯೊಳು ತುರುಗೇರಿ ಗುರು ಅಚಲಾನಂದವಿಠಲ
ಸಲಹೆಂದೆನೋ ಗೋಪಾಲ 9

ಪರಸತಿಯರ ವ್ಯಾಮೋಹವನ್ನು ಬಿಡು

39*
ನೋಡಿದರೆ ನೋಡು ಮಾತಾಡು ತಾಯಿಗಳೆಂದು
ನೋಡಿ ಭ್ರಮಿಸಲು ಬೇಡ ಪರಸತಿಯರ ಪ.
ದಾರಿಯೊಳು ಭಯವೆಂದು ಚೋರರೊಳು ಪೋಗುವರೆ
ಗೇರುಬೀಜದ ತೈಲ ಲೇಪಿಸುವರೆ
ಅರಣ್ಯ ಮಧ್ಯದಲಿ ಮೃಗವಿರಲು ತುರಗವೆಂ
ದೇರುವರೆ ಪರಸತಿಯ ಪಾಪಿ ಮನವೆ 1
ಹಸಿಯ ಯಕ್ಕೆಯಕಾಯಿ ನಸುಗುನ್ನಿ ತುರುಚೆಯನು
ತೃಷೆಗೆ ಮೆಲುವರೆ ವ್ಯಸನ ದೋರಿತೆಂದು
ವಿಷವ ಸೇವಿಸಿದಂತೆ ನೋಡಿ ನೀ ಪರಸತಿಯ
ವಿಷಯಕೆಳಸುವುದೇಕೆ ಪಾಪಿ ಮನವೆ 2
ಪ್ರೀತಿಯಿಂದಲಿ ಸತಿಯ ಮನೆಗಾಗಿ ಯಿಂದ್ರನತಿ
ಕಾತುರದಿ ಪೋಗಿ ಮೈತೂತಾದನು
ಸೀತೆಗೋಸುಗವಾಗಿ ರಾವಣನು ತಾ ಕೆಟ್ಟ
ಸೋತು ದ್ರೌಪದಿಗೆ ಕೀಚಕ ಕೆಟ್ಟನು 3
********4
ಕೆಟ್ಟವರದೃಷ್ಟವಿನ್ನೆಷ್ಟು ಹೇಳಿದರೇನು
ಬಿಟ್ಟು ಬಿಡುವರೆ ತಮ್ಮ ಕೆಟ್ಟ ಗುಣವ
ಕಟ್ಟಿನೊಳಗಿಟ್ಟು ಉತ್ಕøಷ್ಟ ಜನಗಳ ಸಂಗ
ಕೊಟ್ಟು ಸಲಹಯ್ಯ ಅಚಲಾನಂದವಿಠಲ 5

* ನುಡಿ 4 ಸಿಕ್ಕಿಲ್ಲ