Categories
ರಚನೆಗಳು

ಅನ್ಯದಾಸರು

ಬಿಡಿ ರಚನೆಗಳು

399

ವೆಂಕಣ್ಣಕವಿಯ ಹಾಡುಗಳು

ಕುಣಿದಾಡೋ ಕೃಷ್ಣ ಕುಣಿದಾಡೋ | ಒಮ್ಮೆ | ಕುಣಿದಾಡೋ ಪ

ಮುದ್ದು ಮೊಗದೊಲವ ಮುಗುಳ್ನಗೆದೋರಿ | ತದ್ಧಿಮಿಕೆಂದು ಮುರಾರಿ1

ಹಸ್ತಾಂಗುಲಿ ಅಭಿನಯಗಳ ಪಟ್ಟು ನ್ಯಸ್ತದಿ ಹೆಜ್ಜೆಯನಿಟ್ಟು 2

ಗೆಜ್ಜೆ ನೂಪುರ ಘಲ್ಘಲ್ ಘಲರವದಿಂದ ತದ್ದಣಿಕೆಂದು ಮುಕುಂದ 3

ಸ್ಥಾಯಿ ಮೃದಂಗ ತಾಳದಿ ಶ್ರುತಿಗೂಡಿ ಮಾ-ಗಾಯಿ ಕುಂಡಲಗಳೋಲಾಡಿ4

ಸರಸ ಸಾಹಿತ್ಯ ಸಂ | ಗೀತ ಪ್ರೇಮಾ ಗುರುವೆಂಕಟ ಗುಣ ಧಾಮ 5

 

400

ಅಲ್ಲಲ್ಲಲ್ಲಲ್ಲಾ | ಸುಖವಿ | ನ್ನಿ ಲ್ಲಿ ಲ್ಲಿ ಲ್ಲಿ ಲ್ಲಾ ಪ

ಸುಳ್ಳು ಸಂಸಾರ ಮಾಯಾ ಭ್ರಾಂತಿಯ ಮನ | ಪೊಳ್ಳು ಇದೆಂದು ಬಲ್ಲವರಿಗೆ ನಿಜ ಅ.ಪ

ರೊಕ್ಕವು ತೀರಿದ ಕಾಲಕೆ ತನ್ನನು ಮಕ್ಕಳು ಮರಿಗಳು ಲೆಕ್ಕಕ್ಕೆ ತರುವರು 1

ಅಂಗನೆ ಮಕ್ಕಳು ಆಪ್ತರು ಬಂಧುಜ- ನಂಗಳು ಒಬ್ಬರು ಸಂಗಡ ಬರುವವರ್ 2

ವಲ್ಲಭ ಶ್ರೀಗುರು ಲಕ್ಷ್ಮೀವೆಂಕಟ- ನಲ್ಲದೆ ಬೇರೊಬ್ಬರು ಬಂಧುಗಳಾರ್ 3

 

401

ವಾಸುದೇವ ಪ್ರಭುಗಳ ರಚನೆಗಳು

ಬಾರೋ ಬೇಗ ಬಾರೋ ರಾಮ

ಬಾರೋ ನೀ ಮೊಗದೋರೋ ರಾಮ ಪ

ಅಗಣಿತ ಮಹಿಮ ರಘುಕುಲೋದ್ಧಾಮ

ನಿಗಮಾಗಮ ಪೂಜಿತ ಶ್ರೀರಾಮ 1

ಕುಜನ ಕುಠಾರೀ | ಸುಜನೋದ್ಧಾರೀ | ಭಜಕ ನಿಕರ ದುರಿತಾರಿ ರಾಮ 2

ಪಂಕಜನಯನ ವೆಂಕಟರಮಣ |ಸಂಕಟ ಹರಣ ರಮಾಪತಿ ಚರಣ 3

 

402

ಶ್ರೀಹರೀ ಕೃಷ್ಣಮುರಾರಿ ಕೇಶವ ಚಕ್ರಧಾರಿ ಪ

ಸುಂದರ ಸುಮನಸ ವೃಂದ ಮುನಿಮಾನಸ ನಂದಗೋವರ್ಧನೋದ್ಧಾರೀ 1

ಹಂಸವಾಹನಸ್ತುತ್ಯ ಕಂಸಮಥನ ನಿತ್ಯ ಹಂಸ ಡಿಂಬಿಕ ಚಾಣೂರ ವೈರೀ2

ವಾತ ವತ್ಯ ಪ್ರಲಂಬ ಖ್ಯಾತ ಬಕಧೇನುಕ ಪೂತನಿ ಪ್ರಾಣಾಪಹಾರಿ3

ಕಂತುಪಿತ ಶ್ರೀಲಕ್ಷ್ಮೀಕಾಂತ ಕೃಷ್ಣ ಶ್ರೀಮದ- ನಂತ ಸುದರ್ಶನಧಾರೀ 4

ಸಾರಸಭವಪಿತ ಶ್ರೀ ರಮಾಧವ ಪಾರ್ಥ ಸಾರಥಿ ದುರಿತೋತ್ತಾರೀ 5

 

403

ಶೇಷಪ್ರಭುಗಳ ರಚನೆಗಳು

ಪಾಲಿಸು ಶ್ರೀಹರಿಯೇ | ಸದ್ಗುಣ | ಶೀಲ ಭಾಗ್ಯನಿಧಿಯೇ | ಶ್ರೀಲಲಾಮ ಶೇಷಾಚಲಾಧೀಶ ಶ್ರೀಲೋಲ ಬಾಲಭಾಸ್ಕರ ಸಂಕಾಶನೆ ಪ

ಕಂಡವರಿಗೆರಗಿ ದೈನ್ಯವ | ಗೊಂಡೆ ಖಿನ್ನನಾಗಿ ಭಂಡನಾಗಿ ಬಳಲಿಸಿ ಬಹು ಕಾಯವ ದಂಡಿಸಿದೆನು ರಕ್ಷಿಸೋ ಶ್ರೀಹರಿಯೇ 1

ಯಾರಿಗೆ ದೂರುವೆನು ಭಕ್ತೋ | ದ್ಧಾರನಲ್ಲವೆ ನೀನು | ಘೋರದುರಿತ ದಾರಿದ್ರ್ಯದ ವ್ಯಥೆಯ ಇ- ನ್ಯಾರಿಗೊರೆವೆ ಅದನ್ಯಾರು ಕಾವರೈ 2

ಏನಪರಾಧವ | ಗೈದೆ ನಾ -ನೇನು ಪಾಪಾತುಮನೋ | ಈಸಪರಾಧವನೆಣಿಸದೆ | ಎನ್ನಯ | ಕ್ಲೇಶವ ಪರಿಹರಿಸೋ ದಯಾನಿಧೇ 3

ಕರುಣಾ ಸಾಗರನೇ | ತ್ರಿಜಗದ್ಭರಿತ ಕೃಪಾಕರನೆ ಪರಮಾತ್ಮ ದಯಾ ಪರ ಪುರುಷೋತ್ತಮ | ಪರಂಜ್ಯೋತಿ ಪರಬ್ರಹ್ಮಸ್ವರೂಪನೆ 4

ರಂಗನಾಥನೆನ್ನ | ಕಾಯೋ ವಿ- | ಹಂಗರಾಜ ಗಮನ | ಗಂಗಾ ಜನಕ ಮಾಧವ ಕರುಣಾ-| ಪಾಂಗರಂಗ ಮಂಗಲಾಂಗ ರಕ್ಷಿಸು 5

 

404

ಹರಿಯೇ ಎನ್ನ | ಮರೆತಿರುವರೆ ಇದು ಸರಿಯೇ ಪಾಲಿಸು ನೀ ದೊರೆಯೇ | ತರಳತನದಿ ನಾ ಮರೆತೆನೆಂದು ನೀ ಜರೆದು ಬಿಟ್ಟರೆ ಮುಂದೆ ಪೊರೆವರಾರೈ ಶ್ರೀ ಪ

ಒಡೆಯ ನೀನಾಗಿ ಸಲಹುವುದೀಗ ನಿನ್ನಯ ಪದ ಜಡಜಕೆರಗುವೆ ನಾ ಬೇಗ ಕಡು ದಾರಿದ್ರ್ಯದ ಕಡಲೊಳು ಮುಳುಗಿದೆ ತಡಿಯ ಕಾಣಿಸೋ ಜಗದೊಡೆಯ ದಯದಿ ಶ್ರೀ 1

ತರಳ ಧ್ರುವರಾಜನಿಗೊಲಿದೆ | ಅಂಬರೀಷನ | ಭರದಿ ಚಕ್ರದಿಂದಲಿ ಕಾಯ್ದ | ತರಳೆಯ ಸಭೆಯಲ್ಲಿ ದುರುಳ ಬಾಧಿಸುತಿರೆ ಭರದೊಳಕ್ಷಯವಿತ್ತುದ್ಧರಿಸಲಿಲ್ಲವೆ ಶ್ರೀ 2

ಕಷ್ಟಪಟ್ಟೆ ಭವದೊಳಾನು | ಎನ್ನ | ಮನದ-ಭೀಷ್ಟ ಪಾಲಿಸೋ ದೇವ ನೀನು ಸೃಷ್ಟಿಗೊಡೆಯ ದಯಾವೃಷ್ಟಿಯಿಂದಲಿ ಮನ-ಸಿಟ್ಟು ಸಲಹೊ ಪರಮೇಷ್ಠಿ ಜನಕ ಶ್ರೀ 3

ತಂದೆ ನೀನಲ್ಲವೆ ಜಗದೀಶ ಪಾಲಿಸು ನಿನ್ನ ಕಂದನಲ್ಲವೆ ಸರ್ವೇಶ ಹಿಂದ ಮುಂದನಾನೊಂದನರಿಯೆ ದಯ ದಿಂದ ಕಾಯೋ ಮುಚುಕುಂದವರದ ಶ್ರೀ 4

ಮಂಗಲ ಪುರವಾಸ ಶ್ರೀ ವೆಂಕಟೇಶ | ಅಂಗಜ ಜನಕ ರಮೇಶ | ಮಂಗಲಾಂಗ ನಿನ್ನಂಘ್ರಿ ಸೇವಕರ ಸು-ಸಂಗವ ಪಾಲಿಸು ಗಂಗಾಜನಕ ಶ್ರೀ 5

 

405

ಕವಿ ರಾಮಕೃಷ್ಣರ ಹಾಡುಗಳು

ಅಭಯ ಬೇಡೋ ಸುಮನ ಸುಂದರ ಶ್ರೀ ಹರಿಯ ಪ್ರಿಯ | ಅಭಯ ಬೇಡೋ ಸುಮನ ಸುಂದರ ಪ

ಅಭಯ ಬೇಡೋ ಪ್ರಿಯ ರಮಾವಿಭು ಜಗನ್ನಿವಾಸನೊಡನೆ ಉಭಯ ಸುಖವ ನೀವ ಚೆಲ್ವ ಅಂಬುಜನೇತ್ರ ಸೊಬಗನೆಂದು ಅ.ಪ

ಘೋರ ಭವದ ಪಾಶ ಮುನ್ನ ತೋರಣಿಸಿದೆ ಕೊರಳೊಳು ಚಾರು ನವಸುಭಕ್ತಿ ಮುಖ ವಿ-ಸ್ತಾರದಿಂದ ಮಾರ ಪಿತನ 1

ನೊಂದು ವಾರಣೇಂದ್ರ ತನ್ನ ದಂದುಗದಲಿ ನುತಿಸಲು | ಬಂದು ರಕ್ಷಿಸಿದ ಮುಕುಂದ ಸಿಂಧುಶಾಯಿಯೆಂದು ಹರಿಯ 2

ವಿಗಡ ದೈತ್ಯ ತರಳನನ್ನು ಅಗಣಿತದಲಿ ಬಾಧಿಸೆ ಮಗುವು ಕರೆಯೆ ಬಂದು ಕಾಯ್ದ ನಿಗಮನುತ ಪರಾಕು ಎನುತ 3

ಕಿಂಕರೌಘ ಸುಪ್ರಸನ್ನ ಸಂಕಟೌಘಧ್ವಂಸನ ವೆಂಕಟೇಶವರದ ಒಳಲಂಕೆಯಧಿಪ ಗುರು ನೃಹರಿಯ 4

 

406

ಮಂಗಳಾಂಗ ಮನ್ನಿಸು ತಪ್ಪನು ರಂಗನಾಥ ರಕ್ಷಿಸೈ ತಂದೆ ಯೆನ್ನನು ಪ

ಮಮತೆಯಿಲ್ಲದ ಮಡದಿ ಯಾತಕೆ | ರಂಗನಾಥ ಸುಮತಿಯಿಲ್ಲದ ಸುತನು ಯಾತಕೆ ಕುಮತಿಯುತರ ಸಂಗವೇಕೆ ಸಮತೆಯಿಲ್ಲದ ಬಂಧವೇಕೆ | ಅಮಿತ ನಿನ್ನ ಚರಣ ಕಮಲ ರವಿತನಾಗದ ಮನುಜನೇಕೆ1

ಕಣ್ಣು ಇಲ್ಲದ ರೂಪು ಯಾಕೆ | ರಂಗನಾಥ ಹೊನ್ನು ಇಲ್ಲದ ಬಾಳು ಯಾತಕೆ | ಮುನ್ನ ಮೂಗು ಇಲ್ಲದ ಮೊಗವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು 2

ದಾನವಿಲ್ಲದ ಧನವಿದೇತಕೆ | ರಂಗನಾಥ e್ಞÁನವಿಲ್ಲದ ವಿದ್ಯೆ ಯಾತಕೆ ಆಣೆಯಿಲ್ಲದ ಅರಸು ತಾನು ಅಡವಿಪಾಲು ಆದರೇನು ದೀನಬಂಧು ನಿನ್ನ ನಂಬದ ಮಾನಹೀನ ಮನುಜನೇಕೆ 3

ಮಕ್ಕಳಿಲ್ಲದ ಮನೆಯು ಯಾತಕೆ | ರಂಗನಾಥ ಅಕ್ಕರಿಲ್ಲದ ಊಟ ಯಾತಕೆ ಸೊಕ್ಕಿ ನಡೆವ ಬಂಟನೇಕೆ ಮಿಕ್ಕು ಮೀರ್ವ ಶಿಷ್ಯನೇಕೆ ರಕ್ಕಸಾರಿ ನಿನ್ನ ಸೇರದ ಸೊಕ್ಕು ನರ ಜನ್ಮವೇಕೆ ? 4

ಸಾಕು ಸಾಕು ದೀನನಾದೆನು ರಂಗನಾಥ ಸಾಕು ಸಾಕೈ ಬೇಗ ಯೆನ್ನನು ಕಾಕು ಮಾಡಿಯೆ ವೈಕುಂಠ ನಗರದೊಡೆಯ ನಾರಸಿಂಹ ಏಕಭಕ್ತಿಯಿಂದಲಿರುವೆ ಏಕೆ ಕೈಯ ಬಿಡುವೆ ದೊರೆಯೆ 5

 

407

ವಾಸುದೇವ ಶ್ಯಾನುಭಾಗರ ಕೃತಿಗಳು

ತಾಳಲೆಂತೈ ಹರಿಯೆ | ಭವಬಾಧೆ ರಮಾಕಾಂತ ಅನಂತ ಗುಣವಂತ ರಕ್ಷಿಸು ಪ

ವರಘೋರ ದುರಿತ ಪಾರಾವಾರ ದಯಾಸಾರ ಉದಾರ ಎನ್ನ ಪಾರಗಾಣಿಸು 1

ಕಾವರಾರೈ ನೀನುಳಿದಿಹ ಪರದಿಕೃಪೆದೋರೈ ನೀ ಬಾರೈ ನಿನ್ನೊಳು ಸೇರೈಸಿ ಮನ 2

ವಾಸುದೇವ ರಮೇಶ ದೀನಬಂಧು ಜಗಜ್ಜೀವ ಕೇಶವ ಎನ್ನದಾವ ಪಾಲಿಸು 3

 

408

ಬಪ್ಪ ಶುಭಾಶುಭ ತಪ್ಪದಾದರೆ ನಿನ್ನಿಂ-ದಪ್ಪುದೇನಪ್ಪ ಹರಿ ಪ

ಬಂದಾಪತ್ತ ನೀಗುತ್ತಾ | ನಂದ ಪ್ರಾಪ್ತಿಸಲು ಗೋ-ವಿಂದ ನಿನ್ನ ಸೇರ್ವುದು 1

ಮುದ್ದಿನ ವರಲಿಪಿ ತಿದ್ದಿ ಕಾಯ್ದುದರಿಂದ ಹೊದ್ದಿ ನಾನಿದ್ದೆ ನಿನ್ನ 2

ಕೈಯ ಮುಗಿವೆ ಜಗ | ದಯ್ಯ ದಮ್ಮಯ್ಯ ಪಾಲಿಸೈಯ ನೀ ಸೈಯೆನಿಸಿ 3

ಪ್ರಾರಬ್ಧ ಫಲ ಮೀರ | ಬಾರದೆಂಬರಿವಿಂ-ದೂರ ನೀ ತಪ್ಪಿಸುವೆ 4

ವಾಸುದೇವ ರಮೇಶ | ದೋಷ ಕ್ಷಮಿಸಿ ತವ ದಾಸನ ರಕ್ಷಿಸಯ್ಯ 5

 

409

ಬಂಗ್ಲೆ ನಾರಾಯಣ ಕಾಮತರ ರಚನೆಗಳು

ಪಾಲಿಸೈ ತ್ರಿಶೂಲಿಯೆ ಮುದದಿಂ | ಕಲಿಕಾಲ ರುದ್ರನೆ ಪಾಲಿಸೈ ತ್ರಿಶೂಲಿಯೆ ಮುದದಿಂ ಪ

ವಂದಿಸುವೆನಯ್ಯ ಇಂದುಧರ ದಯಾ ಸಿಂಧು ಎನ್ನಯ ಬಂಧು ಬಿಡಿಸೈಯ |ಅಂದು ಪಾಲ ಮುದ ಚಂದ ನಿಂತ ಧರೀ ಆಪ -ದ್ಧಂಧುವೆ ನೀ ಬೇಗ ಬಂದೀಗಲೆನ್ನನು 1

ವ್ಯೋಮಕೇಶ ನಿನ್ನ ನಾಮವನನು ದಿನ ನಾ ಮರೆಯೆ ಗುಣ ಧಾಮ ಮುನಿಜನ ಸ್ತೋಮವಂದ್ಯ ಬಿಲ್ಲ ಪ್ರೇಮಿಯೆ ರಿಪು ಕುಲ ಭೀಮ ವಿರೂಪಾಕ್ಷ ಕಾಮಾರಿ ನಂಬಿದೆ 2

ಕ್ಲೇಶಹರ ಜಗದೀಶನು ತುರಗ ನಾಶ ಭೂಷಗಣೇಶ ಪನ್ನಗ ಶೇಷಶಾಯಿ ವೆಂಕಟೇಶವಿಠಲ ಪ್ರಿಯರೀ ದಾಸರ ಕಾಯ್ವೆ ಕೈಲಾಸ ನಿವಾಸನೆ 3

 

410

ಕಂಡುದನು ಪೇಳ್ವೆ ಬ್ರಹ್ಮಾಂಡ ನಾಯಕನೆ | ಕೊಂಡೆಯವಿದಲ್ಲ ಗ್ರಹಕುಂಡಲವ ಶೋಧಿಸುತ ಪ

ಜಲಜಾಕ್ಷ ನಿನ್ನ ನಾಮಕೆ ಶ್ರವಣ ತಾರೆ ಕೋ- ಮಲ ಮಕರ ಲಗ್ನ ರಾಶಿಯು ಮಕರವು | ಸತಿ ಲಗ್ನದಲ್ಲಿರ್ಪ ಜಲ ತಾರಕೇಂದು ದಶೆ ಯಲಿ ನಿನಗೆ ಜಲದೊಳಾವಾಸವಾಯಿತು ಹರಿಯೆ 1

ಮನುಮಥನ ತಾತ ಕೇಳಿನಸುತನು ನಾಲ್ಕನೆಯ ಮನೆಯೊಳಿರುವನು ಲಗ್ನಕಧಿಪನೆನಿಸಿ ಮನದಿ ಯೋಚಿಸಲಿಕಾ ಶನಿದಶೆಯೊಳಾ ಕುಧರ ವನು ಪೊತ್ತು ದಣಿದೆನೀವ ನಿಧಿಯೊಳು ಹರಿಯೆ2

ಮಂಗಳನೆ ಸುಖಕಧಿಪ ಮಂಗಳನು ಸಿಂಗರದಿ ಸಿಂಗರಾಶಿಯೊಳು ತಾ ಕಂಗೊಳಿಸುತ ತುಂಗವಿಕ್ರಮನವನೆ ಸಂಘಟಿಸಿದನು ವನದಿ ಹಿಂಗದೆ ಬೇರು ಮೆಲುವಂಗವನು ಹರಿಯೆ 3

ವಾರಿಜಾಸನ ಪಿತನೆ ಕ್ರೂರಕ್ಷೇತ್ರದಿ ರಾಹು ಸಾರಿರ್ಪ ರಾಶಿ ವೃಶ್ಚಿಕವೆನಿಸಲು | ಕಾರುಣಿಕನವನ ದಶೆಯಾರಂಭದಲಿ ನಿನಗೆ ಘೋರ ರೂಪವ ತಾಳಲಾಯ್ತು ನರಹರಿಯೆ 4

ಮಂದರೋದ್ಧರ ಕೇಳು ಚಂದಿರನ ರಾಶಿಗಾ ನಂದದಧಿಪತಿ ಸೂರ್ಯನಂದನನು ತಾ ನಿಂದು ಮೇಷದೊಳತ್ರಿಕಂದನ ನಿರೀಕ್ಷಿಸಲು ಬಂದುದೈ ಭಿಕ್ಷೆಯದರಿಂದ ನಿನಗೆಲೆ ಹರಿಯೆ 5

ಅಂಬುಜಾನನ ಕೇಳು ಒಂಭತ್ತರಧಿಪ ಶಶಿ- ಸಂಭವನು ಪಾಪದಿಂ ತುಂಬಿರ್ಪನು | ಸಂಭವಿಸಲವನ ದಶೆಯಿಂದ ನೀ ಕ್ಷತ್ರಿಯ ಕ-ದಂಬ ಮರ್ದಿಸಿ ಧರ್ಮಮಂ ಬಿಟ್ಟೆ ಹರಿಯೆ 6

ಸಿರಿಯರಸ ಕೇಳಿನ್ನು ದುರಿತ ಸ್ಥಾನಾಧಿಪತಿ ಗುರುವೇಳನೆಯ ಮನೆಯೊಳಿರುವನದರಿಂ | ಹಿರಿಯರುಪದೇಶದಿಂದಿರದೆ ಭಾರ್ಯೆಯನಗಲಿ ಚರಿಸಿದೆಯರಣ್ಯದೊಳಗಿರುತ ನೀ ಹರಿಯೆ 7

ಘೋರಪಾಪವಿನಾಶ ನಾರಿರಾಶಿಯ ನವಮ-ಕಾ ರವಿಯು ಸಾರಿ ನಿಂದಿರ್ಪನದರಿಂ | ಚೋರವ್ಯಾಪಾರ ಪರನಾರಿಯರ ಕೂಡೆ ವ್ಯಭಿ-ಚಾರ ನಿನಗಾಯಿತು ರಮಾರಮಣ ಹರಿಯೇ 8

ಜಾತಮೃತಿರಹಿತ ತವ ಜಾತಕದಿ ತೋರುತಿಹ ಕೇತು ಕೈವಲ್ಯ ತಾರಕನಾಥನು | ಪೂತ ಬುದ್ಧಿಸ್ಥಾನ ವಾದನದರಿಂಲಿಂ ಭೂತಲದಿ ಸ್ಥಾಪಿಸಿದೆ ನೂತನ ಮತವ ಹರಿಯೇ 9

ಪಾರವರ್ಜಿತ ಕವಿಯು ಸಾರಿರ್ದ ದಶಮದೊಳ್-ಗಾರವ ನೆನೆಯುಂಟು ಧೀರನೆನಿಸಿ | ಭೂರಿಮ್ಲೇಂಛರನು ಸಂಹಾರ ಗೈಯುತ ತೇಜಿಯೇರಿ ಮೆರೆಯುತ್ತಿರುವ ನಾರಾಯಣ ಹರಿಯೆ 10

 

411

ಬೋಳಾರ ವಾಸುದೇವಯ್ಯನ ಹಾಡುಗಳು

ನಂಬಿದೆ ನಾ ತವಪದವ | ಯೆನ | ಗಿಂಬನು ಪಾಲಿಸು ದೇವ ಪ

ಅಂಬುಧಿಶಯನ ಚಿದಂಬರ ಮುರಹರ ಬೆಂಬಿಡದೆನ್ನ ವಿಶ್ವಂಭರ ಸಲಹೈ 1

ಬಳಲಿದೆನೈ ಭವದಿಂದ | ಮಿಗೆ ತೊಳಲಿದೇ

ಬೇಸರದಿಂದ ಕಳವಳಿಸುವೆನೀ ಕೊಳಕು ಸಂಸಾರದಿ ನಳಿನಾಕ್ಷನೆ ಸುಖಗೊಳಿಸಿ ಪೊರೆವುದೈ 2

ದುಷ್ಟರ ಸಂಗದಿ ಕೂಡಿ ಸಂ | ಕಷ್ಟ ವಿದೈ ದಯಮಾಡಿ ಸೃಷ್ಟಿಗೊಡೆಯನೆನ್ನಿಷ್ಟವ ನೀಯುತ ಶಿಷ್ಟನ ಕಾಯೋ ವಸಿಷ್ಠವಿನುತ ಪದ 3

ದಣಿದೆನು ದಾರಿದ್ರ್ಯದಿಂದ | ನೆರ | ವಣಿಗೆಯಗೈವರಿಲ್ಲ ಗುಣನಿಧಿ ತವ ದಯವೊಣಗಿದ ಮಾತ್ರಕೆತೃಣ ಸಮವೆನ್ನನಾರೆಣಿಕೆಯ ಗೈವರು 4

ದೇವನೆ ನಿನ್ನಡಿಯುಗದ ಸ | ದ್ಭಾವನೆಯ -ನೀಯೊ ಸದಾ | ಕಾವವ ನೀನೆಂದೋವಿನು -ತಿನುವೆನು ಶ್ರೀವಾಸುದೇವ ದಾಮೋದರ ವಿಠಲ 5

 

412

ಶ್ರೀಮುರವೈರಿಣಿ ಮಂಗಲಂ ಜಯ ಮಂಗಲಂ ಪ

ವೇದ ವ್ಯಾಪಕನಿಗೆ | ಸಾಧುಗಳೊಡೆಯಗೆ | ರಾಧೆಯೊಲ್ಲಭ ಜಗದಾದಿ ನಾಯಕನಿಗೆ 1

ಸಾರಸನಾಭಗೆ ನಾರದ ವಿನುತಗೆ ಮಾರಕಜನಕನಿಗೆ ಶ್ರೀರಾಮಚಂದ್ರಗೆ 2

ಸಾಮಜವರದಗೆ ಕಾಮಿತದಾತಗೆ ಭೀಮ ವಿಕ್ರಮಿ ರಂಗ ಧಾಮ ಮುಕುಂದಗೆ 3

ಭಾವಿಕೋದ್ಧಾರಗೆ ದೇವಕೀತನಯಗೆ ಶ್ರೀವಾಸುದೇವ ದಾಮೋದರ ಶೌರಿಗೆ 4

 

ಪಲಿಮಾರು ಮಠದ ಶ್ರೀರಘುವರ್ಯರ ಕೃತಿಗಳು

413

ರುಗ್ಮಭೂಷಣ ಪಾಲಿಸೆನ್ನನು ತಿಗ್ಮಕಿರಣ ಶತಪ್ರಭಾ ರುಗ್ಮಿಣೀ ಪವನಾರ್ಚಸತ್ಪದ ಯುಗ್ಮ ಉಡುಪಿನ ಕೃಷ್ಣನೇ 1

ದ್ವಾರಕಾಪುರದಲ್ಲಿ ದೇವಕಿ ಸರಸ ಬಾಲಕ ಲೀಲೆಯಾ ತೋರು ಎನುತಲಿ ದಧಿಯ ಮಥಿಸಲು ಕರುಣಿ ಬಾಲ್ಯವ ತೋರಿದೆ2

ತೊಡೆಯನೇರಿ ಸ್ತನ್ಯಪಾನವ ಮಾಡಿ ಮೋದವ ತಾಯಿಗೆ ಕೊಡುತ ಕಡೆಗೋಲ್ ನೇಣು ಸಹಿತಲಿ ಪ್ರೌಢ ನೀನಪಹರಿಸಿದೆ 3

ಮೊಸರು ಭಾಂಡವನೊಡೆದು ಬೆಣ್ಣೆಯನಸುನಗುತಲೀ ಭಕ್ಷಿಸೀ ಶೇಷಶಯನನೆ ನೀನು ಕುಣಿಯೆ ಸಂ- ತೋಷಪಟ್ಟಳು ದೇವಕಿ4

ದೂರದಿಂದಲೆ ಕಂಡು ರುಕ್ಮಿಣಿ ಹರುಷದಲಿ ಶಿಶುರೂಪವ ತರಳರೂಪವ ನೀನು ಪುನರಪಿ ತೋರೆಲೊ ಸತಿ ನುಡಿದಳು 5

ವಿತತ ವೈಭವ ಈ ಪರಿಯಲಿಪ್ರತಿಮೆಯನ್ನೇ ಮಾಡಿಸಿ ಸತತ ಪೂಜೆಯ ಮಾಳ್ಪರೀ ಅತಿ ಪ್ರೀತಿಯಿಂದಲಿ ಕೊಡು ಎನಗೆ 6

ರಮಣಿ ಈ ಪರಿ ಪೇಳೆ ವಿಶ್ವ-ಕರ್ಮನಿಂದಾ ಮಾಡಿಸಿ ಕಮಲನಾಭನು ಇತ್ತು(ದ್ದು) ಅದರಲಿ ವಿಮಲ ಪೂಜೆಯ ಕೊಂಡನು 7

ವೀರ ನಿನ್ನವತಾರ ಕಾರ್ಯವು ಪರಿಸಮಾಪ್ತವು ಆಗಲು ಸುರಪನಂದನು ತತ್ಪ್ರತಿಮೆಯ ಶರಧಿ ತೀರದಲಿತ್ತನು8

ನಾವೆಯಲ್ಲಿ ಗೋಪಿಚಂದನ ಸಂವೃತಾರ್ಚಯು ಬರುತಿರೆ ನಾವೆಯೊಡೆಯಲು ಮಧ್ವಮುನಿಪನು ಭಾವದಿಂದಲೆ ತಂದನು 9

ಅವರರೊಡೆಯ ಶ್ರೀ ಮರುತಪತಿತತ್ ಪ್ರತಿಷ್ಠೆಯ ವಿರಚಿಸಿ ಕುಮುದ ಬಂಧು ಕ್ಷೇತ್ರದಲಿ ನಿ-ನ್ನಮಿತ ಪೂಜೆಯ ಮಾಡಿದ 10

ನನ್ನ ಹಿರಿಯರ ಪುಣ್ಯ ಫಲಿಸಲು ನಿನ್ನ ಪೂಜೆಯ ಮಾಡುತಧನ್ಯನಾದೆನು ಮುಕ್ತಿ ಕರಗತ ಎನ್ನಗಾಯಿತು ಕೃಷ್ಣನೇ 11

ಮಧ್ವಪೂಜಿತ ರಕ್ಷಿಸೆನ್ನನು ಸಾಧ್ವಸೋಝ್ಝಿತ ಸದ್ಗುಣ ಸಾಧ್ವಲಂಕೃತ ವೇಷ ಮುಕ್ತಿ ಪ-ದಾಬ್ಜನೇ ರಘುತಿಲಕನೇ 12

 

414

ಕೇಳು ಕೇಳೆಲೆ ಗೋಪಿ ನಿನ್ನಯ ಬಾಲಕೃಷ್ಣನ ಚೇಷ್ಟೆಯ | ತಾಳಾಲಾರೆನು ನೀನು ಕರೆದು ಪೇಳದಿದ್ದರೆ ಬುದ್ಧಿಯ 1

ಮನೆಮನೆಗಳ ಪೊಕ್ಕು ಪೊಕ್ಕು ಪಾನ ಮಾಡುವ ಬಾಲನು | ಮಾನಿನೀಯರು ಕಂಡು ತಡೆದರೆ ಸ್ತನವ ಪಿಡಿದು ಮುದ್ದಿಪ 2

ಬೆಳಕು ಇಲ್ಲದ ಎಡೆಯಲ್ಲಿದ್ದರು ಹೊಳೆವನೇ ಸುರಧೀಪತಿ | ಉಳಿಯದಂತೆ ಕದ್ದು ಮೆದ್ದವ ಬಾಲನೆಂಬುದು ಉಚಿತವೆ 3

ಪರರ ನಷ್ಟವು ಲಾಭವೀತಗೆ ಪರರ ಪೀಡೆಯು ಲೀಲೆಯು | ಪರರು ಈ ಪರಿ ತನ್ನನೆಂದರೆ ಪರಮ ಹರುಷವ ಮಾಡುವ 4

ಎಲ್ಲರಂತವನಲ್ಲ ದೇವನು ಒಲ್ಲದೇ ಮನಚಿತ್ತವು | ನಲ್ಲ ಈ ಮಣಿ ಏನು ಮಹಿಮೆಯ ಬಲ್ಲನೇ ರಘುತಿಲಕನೇ 5