Categories
ರಚನೆಗಳು

ಕವಿ ಲಕ್ಷ್ಮೀಶ

ಇವೆರಡೂ ಲಕ್ಷ್ಮೀ ಸ್ತುತಿಗಳು
(ಆ) ಶ್ರೀ ಲಕ್ಷ್ಮೀಸ್ತುತಿಗಳು
೮೦
ಅಂಗನೆ ನಿನ್ನ ಮುಖದಿರುವಿಂತು ನೆರೆ
ದಿಂಗಳ ಸೋಲಿಸುವಂತೆ ತೋರುತಿದೆ ಪ
ಮಿಸುಪ ಕೆಂಪಿನೊಳಸಿತಗಳೇನೇ ಯೀ
ಎಸೆವಚ್ಚಬಿಳಿದರೊಳು ರಾಗವೇಕೇ
ಮಿಸುನಿವೋಲೆಯ ಮೇಲೆ ಮುಸುಳಿತೇ ಯೀಗ
ಪೊಸತಾವರೆಯ ಮೇಲೆ ಮಳೆ ಸೂಸಿತೇ ೧
ಅಂಬರ ಅಳಿದಿಹುದೇನೆ ಮರಿ
ದುಂಬಿಯ ಹಂಬಲು ಪೊಸತಾಗಿದೆ
ತಂಬೆಲರಳತೆಗೆ ಪೇರ್ಚಿದೆಯೇನು
ಪೊಂಬಟ್ಟೆ ಸೋಂಕಲು ಮುನ್ನ ಕಿರಿದಾದುದೇ ೨
ಬಾಲೆ ನೀಕರೆಯ ಹೋಗಿ ನೆರದೆಯೇ ಈಗ
ಮೂಲೋಕ ಮೋಹನ ಸುರಪುರವ
ಪಾಲಿಸುವ ಮಹಾಲಕ್ಷ್ಮೀಪತಿ ಬಂದು ಯೆನ್ನ
ಮೇಲಿಕ್ಕಿ ನೆರದುದಾ ಯೇನೆಂಬೆನೇ ೩

ಹರಿಯ ಅನಂತತೆಯನ್ನು
(ಇ) ಆತ್ಮನೀವೇದನೆಯ ಕೃತಿಗಳು
೮೪
ಆಕಾರವಿಲ್ಲದ ಅನಾದಿಯೊಳು ಪಂತ
ಸಾಕಾರನಾಗಿಹನು ಶ್ರೀ ಲಕ್ಷ್ಮೀಕಾಂತ ಪ
ಕುಸುಮಶರನೆ ಪೂವು ಅದರೊಳಗಿಲ್ಲ
ಎಸೆಯೆ ಕೋದಂಡ ಕಬ್ಬೈಸೆ ಧನುವಲ್ಲ
ಹೊಸ ಬಗೆಯಾಗಿ ನಾಂಟದ ಸರಳಲ್ಲ
ವಿಷಮ ವಿಗ್ರಹಕಿನ್ನು ಕೇಳ್ ಪ್ರಾಣವಿಲ್ಲ ೧
ಮುಂದುವರೆವರೆ ಮೋಹರದೊಳು ತನ್ನ
ಚಂದದಿಂದೊಪ್ಪುವಂಗವ ಕಾಣೆ ಮುನ್ನ
ಕುಂದದಕೇದಗೆಯೆಸಳಿವೆ ನೋಡು ತನ್ನ
ಸಂಧಿಸಿತೇನೊ ಚಿದ್ರೂಪ ಗುಣರನ್ನ ೨
ಸರಿಯಲ್ಲದವರೊಳು ಸಮರವ ಮಾಡಿ
ಧುರದೊಳು ಮಿಗೆ ನೊಂದೆನಯ್ಯ ಮೈ ಬಾಡಿ
ಪರಿಹರಿಸೆಲವೊ ಸುರಸತಿಯರ ಮಧ್ಯೆಕೂಡಿ
ಸುರಪುರಪತಿ ದುರಿತವಿರದೊಂದುಗೂಡಿ೩

ರಾಮನಾಮದ-ತಾರಕ
೭೮
ಆವಪರಿಯಿಂದಲಾದರೂ ರಾಮನಾಮವನು
ಆವ ಪರಿಯಲಿ ನೆನೆದು ಸುಖಿಯಾಗು ಮನವೆ ಪ
ಪಿತನಾಜ್ಞೆ ಲಕ್ಷಿಸದೆ ದೃಢದಿ ಪ್ರಹ್ಲಾದನು
ಅತಿಶಯದಿ ಹರಿಯ ಧ್ಯಾನವ ಮರೆಯದೆ
ಮತಿಗೇಡಿಯಾದ ಮಗನೆನುತ ಕುಲಗೆಡಿಸೆ ಶ್ರೀ
ಪತಿಯು ತಾ ಬಂದು ಕಾಯ್ದುದೇ ಸಾಕ್ಷಿ ೧
ದೋಷಹಿತನಾದ ದಶಶಿರನ ಒಡಹುಟ್ಟಿ
ಕೇಶವನ ಧ್ಯಾನವನು ಮರೆಯದಿರಲು
ಸಾಸಿರ ರಾಮಕಥೆಯುಳ್ಳನಕಾ ವಿ-
ಭೀಷಣಗೆ ಸಾಮ್ರಾಜ್ಯವಿತ್ತುದೇ ಸಾಕ್ಷಿ ೨
ಗಂಡರೈವರು ಸುತ್ತ ಕೆಲದಲಿರಲಾ ಸತಿಯ
ಲಂಡ ದುಶ್ಶಾಸನ ಹಿಡಿದೆಳೆಯುತಿರಲು
ಪುಂಡರೀಕಾಂಬಕನೆ ಸಲಹೆನಲು ಕರೆಯಲು
ದ್ದಂಡನಾಭನೆ ಬಂದು ಕಾಯ್ದುದೇ ಸಾಕ್ಷಿ ೩
ಯುದ್ಧಕೆ ನಡೆದಾಗ ಹಂಸಧ್ವಜಸುತನು ತನ್ನ ಬೇ
ಕಾದ ಸತಿಯ ಆಜ್ಞೆಯ ನಡೆಸಲು ಪಿತನು
ಕಾದೆಣ್ಣೆ ಕೊಪ್ಪರಿಗೆಯೊಳಗೆ ಸುಧನ್ವನ ಹಾಕೆ ಹರಿ
ಕಾಯ್ದನೆಂಬುದ ಲೋಕವರಿದುದೆ ಸಾಕ್ಷಿ ೪
ಉರ್ವಿಯೊಳು ವಿಪ್ರಜನ್ಮದಿ ಜನಿಸಿದಜಮಿಳಗೆ
ಪೂರ್ವಸಂಚಿತ ಪಾಪಶೇಷವಿರಲು
ಓರ್ವ ಸತಿಗಾಗಿ ಚಂಡಾಲತಿಯೊಳಗಾಗಿರೆ
ಗೀರ್ವಾಣಪುರಿ ಲಕ್ಷ್ಮೀಶನೊಲಿದುದೇ ಸಾಕ್ಷಿ ೫

೨. ಕವಿ ಲಕ್ಷ್ಮೀಶನ ವಸಂತ ವರ್ಣನೆಯ ಹಾಡುಗಳು
೪೯೧
ಇಂದು ಮುಖಿಯರು ಬಂದು ನೆರದು
ಕಂದರ್ಪನಯ್ಯಗೋವಿಂದ ಮುಕುಂದನೊಳು
ದ್ವಂದ್ವದಿಂದೊಲಿದು ವಸಂತವಾಡಿದರೂ ಪ
ನವರತ್ನ ಖಚಿತ ಮೋಹನದ ಮಂಟಪದಲ್ಲಿ
ನವಕುಸುಮ ಫಲಗಳನು ಕಟ್ಟಿದರು ನಲವಿನಲಿ
ನವಮೋಹನಾಂಗಿಯರು ನವರಸ ಪ್ರೌಢೆಯರು
ನವನೀತ ಚೋರನನು ನಿಲಿಸಿ
ತವ ತವಕದಿಂದ ತರುಣಿಯರೆಲ್ಲ ವೊಲವಿನಲಿ
ಕವಕವಿಸಿ ಹೊಳೆವ ಹೊನ್ನಂದುಗೆ ಘಲಿರೆನಲು
ಭವ ಭವಕೆ ಕಾಣೆ ಯೆಂದತಿ ಮನೋಪ್ರೀತಿಯಲಿ
ಪವಣರಿತು ಕುಂಕುಮವ ತಳಿದರು ಶ್ರೀಹರಿಗೆ ೧
ಕಳಹಂಸ ಗಮನೆಯರು ತಳಿರಡಿಯ ನೀರೆಯರು
ಸೆಳೆನಡುವಿನಬಲೆಯರು ಹೊಳೆವ ನಳಿದೋಳವನು
ಥಳಥಳಿಪ ಕುಚದ ಕಾಂತೆಯರು ನಳನಳಿಪ ವದನೆಯರು
ಎಳೆನಗೆಯ ಭಾವೆಯರು ಸುಳಿಗುರುಳ ನಾರಿಯರು
ಅಳವಟ್ಟ ಚಲುವೆಯರು
ನಳಿನನೇತ್ರನಿಗೆ ಕಮ್ಮಲರ ಸೂಸಿದರೂ ೨
ಪುಣುಗು ಜವ್ವಾಜಿ ಪಚ್ಚೆ ಪರಿಮಳವನೆ ತೆಯಿದು
ಘಣಿರಾಜಶಯನ ಬಾಬಾಯೆಂದು ಪ್ರೇಮದಿ
ಕುಣಿವ ಸೋಗೆಗಳ ಮುಡಿಯಂದದಬಲೆ ಬಲೆಯರೆಯಡಿ
ಗುಣನಿಧಿಯ ಹಿಡಿಯ ಬೇಕೆನುತಾ ಕ್ಷಣ ಬೇಗದಲಿ ಹಾಯ್ದು
ಗಿಣಿವಾಕಿನಲಿ ನುಡಿದು ಕ್ಷಣ ಬೇಗದಲಿ ಹಾಯಿದು
ಗಿಣಿವಾಕಿನಲಿ ನುಡಿದು ಯೆಣೆಯಿಲ್ಲ ನಿನಗೆಂದು
ಏಣಾಕ್ಷಿಯರು ತಡೆದು
ಪ್ರಣವಗೋಚರಗೆ ಚಂದನವ ಮಾಡಿದರೂ ೩
ಮುತ್ತಿನ್ಹಾರವ ತೊಟ್ಟು ರತ್ನಾಭರಣ ವಿಟ್ಟು
ಮತ್ತಗಜಗಾಮಿನಿಯರೊತ್ತಾಗಿ ಒಡಂಬಟ್ಟು
ಹತ್ತಬಿಗಿದಂಬರವನುಟ್ಟೂ ಒತ್ತರಿಸಿ ಸು
ತ್ತುವರಿಯುತ್ತ ಹಾಹಾಯೆಂದು
ಚಿತ್ತಿನಿ ಪದ್ಮಿನಿ ಶಂಖಿನಿಯರೊಂದಾಗಿ
ಚಿತ್ತಜನ ಪಿತಗೆ ಕತ್ತುರಿಯ ರಚಿಸಿದರೂ ೪
ಅಂಬುಜಾಕ್ಷಿಯರೆಲ್ಲ ಹರುಷದಿಂದನೆರದು
ಚೆಂಬೊನ್ನ[ಕಳಸ]ಗಳ ಪಿಡಿದು ಪುಳಕವ ಜಡಿದು
ಜಂಭಾರಿ ಸುರರು ಪೂಮಳೆಗರೆದು ಹಾಯೆಂದು
ಕಂಬುಧರ ನಿಲ್ಲು ನಿಲ್ಲೆಸುತಾ ಕುಂಭಿನಿಯೊಳಧಿಕ
ಸುರಪುರದ ಲಕ್ಷ್ಮೀಪತಿಯ ಬೆಂಬಿಡದೆ
ಪೊಂಬಟ್ಟೆಯಂ ಪಿಡಿದು ಸರಸದಿ
ಕುಂಭಕುಚದಿಂದಪ್ಪಿ ತಕ್ಕೈಸಿ ಮನ ಬಂದು
ಸಂಭ್ರಮದಲೋಕುಳಿಯನಾಡಿದರು ೫

ಲಕ್ಷ್ಮಿಯನ್ನು ಕುರಿತು
೮೩
ಎಂತವಗೊಲಿದು ನೆರೆದೆ ಎಲೆ ಬಾಲೆ ನೀ ಬರಿದೆ ಪ
ಕಾಂತೆಯುದರದಲಿ ತಾಳ್ದ ಕಮನಿಯೊಳ್ ಬಾಳ್ದಅ.ಪ
ಮೈಮೊಗ ಬೇರಾದವಗೆ ಮಾತೃಘಾತಕನಿಗೆ
ಬೈಯಲು ಭಾವನಕೊರಳ ಭಾವಿಸದರಿದವಗೆ
ಕೈವಿಡಿದ ಕಾಂತೆಯನು ಕಾಡಿಗಟ್ಟಿದವಗೆ
ತಮ್ಮಯ್ಯನರ್ಧಾಂಗಿಯನು ಅಣ್ಣನ ನೆರೆಸಿದವಗೆ೧
ಹದ್ದನೇರಿದವಗೆ ಹಾವಿನಮೇಲೊರಗಿದವಗೆ
ಶುದ್ಧ ಕರಡಿಯಮಗಳ ಸರಿ ಎಂದು ಆಳ್ದವಗೆ
ಮುದ್ದಾಡಿ ಮೊಲೆಯೂಡಿದವಳಸುವನೆ ಕಳೆದವಗೆ
ಕದ್ದು ಬೆಣ್ಣೆಯ ಮೆದ್ದ ಕರಿಮೈಯವಗೆ೨
ಸುರನಿಶಾಚರ ಮಧ್ಯೆ ಅರಿಯೆ ಪೆಣ್ಣಾದವಗೆ
ಸುರಪನಂದನ ಶಕಟನ ನೆರೆ ಹೊಡೆದವಗೆ
ಸುರಪುರದರಸು ಶ್ರಿ ಲಕ್ಷ್ಮೀರಮಣಗೆ ೩

(ಅ) ಶ್ರೀಹರಿಸ್ತುತಿಗಳು
೬೭
ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ
ಏಳಯ್ಯ ಪರಮ ಪಾವನ ಮುನಿಜನ ಸ್ತೋತ್ರ ಪ
ಏಳಯ್ಯ ಕರಿರಾಜವರದ ವಿಜಯಮಿತ್ರ
ಏಳು ದೇವಕಿಯ ಪುತ್ರ ಅ.ಪ
ಏಳು ಹರಿರಥ ಶತಕೋಟಿ ಪ್ರಕಾಶನೇ
ಏಳೆರಡು ಲೋಕಗಳು ಉದರದಲಿ ಧರಿಸಿದನೇ
ಏಳು ಗೂಳಿಯಕಟ್ಟಿ ಕಾಂತೆಯನು ವರಿಸಿದನೇ
ಏಳು ಮುನಿನುತ ವಂದ್ಯನೇ ಸ್ವಾಮಿ ೧
ಏಳು…(?)ಗಳೊಳು ಗಂಗೆಯನು ಪಾದದಲಿ ಪಡೆದೇ
ಏಳು ಪೆಡೆಯವನ ಮಡುಹಿನಲಿ ದೊತ್ತಳದುಳಿದೇ
ಏಳುತ್ತ ನಿಮ್ಮ ನಾಮವನೊಮ್ಮಗೆ ನಡದೇ
ಏಳು ಜನ್ಮದ ಭವಹರಾ ಸ್ವಾಮಿ ೨
ಏಳು ಜಿಹ್ವೆಯನುಳ್ಳವನ ಮುಖವಾದೆ ಮ
ತ್ತೇಳ್ಮೂರು ಸೂಳಿನಲಿ ಕ್ಷತ್ರಿಯರ ಮರ್ದಿಸಿದೇ
ಏಳು ತಾಳೆಗಳನೊಂದಂಬಿನಲಿ ಛೇದಿಸಿದೇ
ಏಳು ಸಮರನ ಕೊಲಿಸಿದೇ ಸ್ವಾಮಿ ೩
ಏಳು ಶರಧಿಯಲಿ ಪಾಲ್ಗಡಲಲ್ಲಿ ಪವಡಿಸಿದೆ
ಏಳು ವ್ಯೂಹದಲಿ ಪಾರ್ಥನ ನುಡಿಯ ಪಾಲಿಸಿದೆ
ಏಳು ದಿಕ್ಪಾಲಕರು ನಿನ್ನ ಪೊಗಳುತಲಿಹರೇ
ಏಳು ದ್ವೀಪಕ್ಕೊಡೆಯನೇ ಸ್ವಾಮಿ ೪
ಏಳು ಶಕ್ತಿದೇವತೆಯರೂಳಿಗವ ಕೇಳಿ ಹರಿ
ದೇಳೆರಡು ಲೋಕ ಹರಿ ತಾನಲ್ಲದಿಲ್ಲೆಂಬ
ಏಳಿಗೆಯ ಹಮ್ಮಿನೊಳಿದ್ದ ದಶಕಂಧರನ
ಏಳಿಸಿದೆ ಸುರಲೋಕಕೇ ಸ್ವಾಮಿ ೫
ಏಳು ಸ್ವರ ಮುಟ್ಟಿ ತುಂಬುರುನಾರದರು ಬಳಿ
ಕೇಳು ತಾಳಂಗಳಲಿ ನಿನ್ನ ಪೊಗಳುತಲಿಹರೇ
ಏಳುನಗರಕ್ಕಧಿಪವೆನಿಪ ಸುರಪುರವಾಸ
ಏಳು ಲಕ್ಷ್ಮೀನಿವಾಸ ಸ್ವಾಮಿ ೬

೬೮
ಏಳಯ್ಯ ರಾಕ್ಷಸಾಂತಕ ದನುಜಸಂಹಾರ ಪ
ಏಳಯ್ಯ ರಾಜೀವನಯನ ನವನೀತಚೋರ
ಏಳು ಲಕ್ಷ್ಮೀಮನೋಹರ ಹರಿಯೆ ಅ.ಪ
ದಿನಪನುದಯಂಗೆಯ್ಯೆ ದಿಕ್ಪಾಲಕರ್ನೆರೆಯೆ
ಕನಕಭೂಷಣದ ಕಾಂತೆಯರು ಆರತಿಪಿಡಿಯೆ
ಅನುಪಮಗೆ ಜಯವೆಂದು ಬಂದು ನಿಂದೈದಾರೆ
ಇನಕುಲನೆ ನಲಿದುಪ್ಪವಡಿಸು ಶ್ರೀಹರಿಯೇ ೧
ಪ್ರಹ್ಲಾದ ನಾರದರು ವಾಸಿಷ್ಠ ವಿಶ್ವಾಮಿತ್ರರು
ಮಹಮುನಿಗಳತ್ರಿ ಭಾರದ್ವಾಜ ಜಮದಗ್ನಿ ಗೌತಮರು
ಬಹುವಿಧದಿ ಕಶ್ಯಪರು ಹನುಮಂತ ತುಂಬುರರು
ಹರುಷದಿ ಪಾಡುತ್ತಲೈದಾರೆ ಇನಕುಲನೆ ನಲಿದು ೨
ದೇವಗಂಗೆಯಕೊಂಡು ದೇವರ್ಕಳೈದಿದರು
ದೇವತಾವಳಿ ಬಂದು ದೇವ ಜಯವೆನುತಿಹರು
ದೇವಪುರದಲಿ ನಿಂದ ದೇವಕಿಯ ವರಕಂದ
ದೇವ ಲಕ್ಷ್ಮೀಪತಿಯ ದೇವ ನೀನೇಳೈ ಹರಿಯೇ ೩

೭೦
ಕಮಲಕಮಲಾಧರನೆ ಕಮಲಭವ ವಂದಿತನೆ
ಕಮಲ (?) ನುತನೇ ಕಮಲಶತ ಹಿತಕರನೆ ಪ
ಕಮಲಬಾಣನ ಪಿತನೇ ಕಮಲದಳ ಲೋಚನನೇ
ಕಮನೀಯನುಪ್ಪವಡಿಸಾ ಹರಿಯೇ ಅ.ಪ
ಸಲಹಲೀ ಲೋಕಗಳ ಬಹುವೆನಿಪ ದಾನವರ
ಗೆಲಿದು ಪಾಲ್ಗಡಲ ನಡುವಲದ ನೆಲೆವನೆಯ
ತಲೆವಣಿಯ ಕಾಂತಿಗಳ ಮಿಗೆ ಜ್ವಲಿಪ ಬೆಳಗುಗಳಿಂದ
ನಲಿದು ಫಣಿಮಂಚದೊಳಗೆ
ಮಲಗುವಾಸುಗಳ ಮೇಲೊಲಿದು ಕಾಂತೆಯರೊಡನೆ
ಲಲಿತ ಸಂಕುಳದಿಂ ಕಲಿತ ಮೋಹವ ಮೆರೆಯೆ
ಫಲಿತ ಪುಳಕಗಳು ಮಿಗೆ ಬಲಿದ ನಿದ್ರೆಗಳ ಶ್ರೀಲಲನೇಶನುಪ್ಪವಡಿಸ೧
ಪರಿಯುತಿದೆ ತಂಬೆಲರು ಹರವುತಿದೆ ತಮರಾಸಿ
ಸರಿಯುತಿದೆ ಉರುಗಣಂ ಬಿರಿಯುತಿದೆ ಅರೆಮುಗುಳು
ಪೊರೆಯುತಿದೆ ಲತೆಯ ಸಿರಿ ಮುರಿಯುತಿದೆ ಶರಧಿಯೇಳ್ಗೇ ಉದಯಕೆ
ಕರೆಯುತಿದೆ ಗಿಳಿವಿಂಡು ಕೊರುಗುತಿವೆ ಕೋಕಗ
ಳ್ಮೊರೆಯುತಿದೆ ದಿವಿಜಹರೆ ಸುರಿಯುತಿದೆ ಅರಳ ಮಳೆ
ಗರೆಯುತಿದೆ ಕೋರಕಂ ವೋಲಗಕೆ ಕರುಣಾಳು ಉಪ್ಪವಡಿಸಾ ೨
ತೋರುತಿದೆ ಇನಬಿಂಬ ದೂರುತಿದೆ ಕುಮುದ ಸೊಂ
ಪೇರುತಿದೆ ವನರುಹಂ ಬೀರುತಿದೆ ಕಡು ಚೆಲ್ವ
ಸೋರುತಿದೆ ಮಕರಂದ ತೋರುತಿದೆ ತನಿಗಂಪ ಪಾರುತಿವೆÉ ಭ್ರಮರಂಗಳೂ
ಸಾರುತಿದೆ ತಾಮ್ರಶಿಖಿ ಜಾರುತಿದೆ ಶಶಿನಭದಿ
ಕಾರುತಿವೆ ಹಿಮಶಿಲೆಗಳಾರುತಿದೆಯೈಕಿಲುರು
ಚೀರುತಿವೆ ಪಕ್ಷಿಗಳು ಮೀರುತಿವೆ ಜನರವಂ ಪೂರ್ಣಧನು ಉಪ್ಪವಡಿಸಾ೩
ಆಡುವರೆ ನರ್ತನವ ಪಾಡುವರೆ ಗಾನಗಳ
ನೀಡುವರೆ ಪನ್ನೀರ ತೀಡುವರೆ ಸುರಭಿಗಳ
ಮಾಡುವರೆ ಸಿಂಗರವ ಪೂಡುವರೆ ಹಾರಗಳನೂ
ಕೋಡುವರೆ ಕಾಣಿಕೆಯ ಬೇಡುವರೆ ಸಂಪದವ
ಸೂಡುವರೆ ಕುಸುಮಗಳ ನೋಡುವರೆ ಸಮಯಗಳ
ಓಡುವರೆ ಊಳಿಗಕೆ ಕೂಡಿಹರು ಬಾಗಿಲೊಳು
ಗಾಡಿಮಿಗಲುಪ್ಪವಡಿಸಾ ೪
ದೇವ ಸಂಸ್ತುತಲೀಲ ದೇವ ಮುನಿನುತ ಶೀಲ
ದೇವತತಿಗನುಕೂಲ ದೇವರಿಪುವನಜಾಲ
ದೇವ ಪತಿಸುತಪಾಲ ದೇವಕೀವರ ಬಾಲ ದೇವಕುಸುಮಗಳ ಮೂಲ
ದೇವನದಿಜಾಪಾಲ ದೇವ ನಿಗಮದ ಮೂಲ
ದೇವ ತನುರುಚಿಲೀಲ ದೇವ ರವಿಸಮ ಚೇಲ
ದೇವ ಗುಣಗಣಜಾಲ ದೇವಪುರಿ ಶ್ರೀಲೋಲ ದೇವ ನಲಿದುಪ್ಪವಡಿಸಾ ೫

ಇವೆರಡೂ ಲಕ್ಷ್ಮೀ ಸ್ತುತಿಗಳು
೮೧*
ಗಾಡಿಯೆತ್ತಲಿಂದ ಬಂದುದೇ ಮಾತ
ನಾಡಲರಿಯದಿಪ್ಪ ಹೊಚ್ಚಹೊಸ ಹರೆಯದ ಮುಗುದೆಗೀ ಪ
ಬಳುಕೆ ಸಿಂಹಮಧ್ಯ ಬಟ್ಟ ಮೊಲೆಗಳದುರೆ ತೋರವಾದ
ಬಳಲುಮುಡಿಯೊಳಲರು ಒಯ್ಯನಿಳೆಯೊಳುದುರಲೂ
ಜಲಜಮುಖದಿ ಬೆವರುದೋರೆ ವಲಯತೋರಹಾರ ಉರದಿ
ಘಲಿರು ಘಲಿರನುಲಿವ ಕುಲುಕಿ ಕುಲಕಿ ನಡೆವ ಯೀ ೧
ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಿ ಲಜ್ಜೆ
ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸೆ
ಸಸಿನೆ ತಿದ್ದಿ ಉರದಿ ಜರಿವ ವಸನವನ್ನು ಸಂತವಿಸುತ
ಉಸುರಿಲಿಂದ ಗಂಧವನ್ನು ಎಸಸಿಬಿಡುವ ನಡೆವ ಯೀ ೨
ಕರವನೊಯ್ಯನೊಲಿದು ರೋಜಗಿರಿಯ ಮೇಲೆ ಬಾಲಚಂದ್ರ
ನಿರಲುಸೆರಗಮರೆಯಮಾಡಿ ಮರಳಿಮರಳಿನೋಡುತಾ
ಸ್ಮರನತಾತ ಸುರನಗರ ದೆರೆಯ ಲಕ್ಷ್ಮಿಯರಸನೊಡನೆ
ನೆರೆದಪರಿಯ ಸಿರಿಯ ಗರುವಗಮನದಾ ಯೀ ೩

ಲಕ್ಷ್ಮಿಯನ್ನು ಕುರಿತು
೮೨
ಜಯ ಜಯ ಕೃಪಾಂಬುಧಿಯೆ ಜಯ ಸುಗುಣ ಶರನಿಧಿಯೆ
ಜಯತು ಸಂಶ್ರುತನಿಧಿಯೆ ವಿಮಳ ಸುಧಿಯೇ ಪ
ಜಯ ಸಮಸ್ತೋಪಧಿಯೆ ಜಯ ಸರ್ವಧೀಮತೆಯೇ
ಜಯ ಜಯತು ಸಲಹೆನ್ನ ಸೌಭಾಗ್ಯ ನಿಧಿಯೆ ಅ.ಪ
ಶ್ರುತಿ ನುತಿ ಪ್ರಖ್ಯಾತೆ ನತ ನಿರ್ಜಿತ ವ್ರಾತೆ
ಸತತ ಸತ್ಸಮಿತೆ ವರಸೌಖ್ಯಪ್ರದಾತೇ
ರತಿಪತಿಪಿತ ಪ್ರೀತೆ ರತುನಕರ ಸಂಜಾತೆ
ನುತಿಸಲೆನ್ನಳವೆ ನಿನ್ನನು ಲೋಕಮಾತೆ ೧
ವಿಗಡವಿಶ್ರುತ ಮಾಯೆ ತ್ರಿಗುಣಾನ್ವಿತ ವಿದಾಯೆ
ನಿಗಮ ನಿರುತೋಪಾಯೆ ನಿತ್ಯೆ ನಿರಪಾಯೆ
ಜಗನ್ಮೋಹನೆ ಕಾಯೆ ಅಗಣಿತೋಪಮದಾಯೆ
ಪೊಗಳಲೆನ್ನಳವೆ ನಿನ್ನನು ಲೋಕಮಾತೆ೨
ಪರಮ ಶಕ್ತಿಗುಣಾಢ್ಯೆ ನಿರುತಾಗಮಾವೇದ್ಯೆ
ಸ್ಮರನ ಪೆತ್ತತಿ ಚೋದ್ಯೆ ಸೌಖ್ಯ ಪ್ರದಾದ್ಯೆ
ಸುರನಗರದಧಿನಾಥ ವರಲಕ್ಷ್ಮೀಕಾಂತನಾ
ಅರಸಿ ಸಿರಿಮಾಲಕ್ಷ್ಮಿ ಭವರೋಗ ವೈದ್ಯೇ ೩

೪೯೨
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ
ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ
ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ
ಕೆಲವ ಕೋಗಿಲೆಯ ವಿಹಗಾಳಿಗಳ್
ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ
ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ
ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ
ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ
ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ
ಸಲೆ ಪ್ರಹುಡೆ ಕೆಳನಲಿದು ಸಂತಸದೀ ೧
ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ
ಕುಂದರದನೆಯರು ಅರವಿಂದ ನೇತ್ರೆಯರು ಗೋ
ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ
ದುಂದುಭಿಗಳುಲಿಯೆ ಸುರವೃಂದ[ವಾದ]ರದಿ
ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ
ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ
ಕಂದರ್ಪಜನಕನನು ಸಂದಣಿಸಿ ತಮತಮಗೆ
ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ ೨
ಪದುಮಗಂಧಿಯರು ಸನ್ರ‍ಮದು ಕೀರವಾಣಿಯರು
ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ
ಮದದ ಮದ್ದಾನೆಯರು ಸುದತಿಯರು ಸೌಂದರ್ಯ
ಪದಪು ಗಾತಿಯರು ಬಂದೊದಗಿ ಮೂದಲಿಸಿ
ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ
ನದ ಬಲೆಯನು ಬೀಸೆನುತ ಯುವತಿಯರುಗಳು
ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ
ಎದೆಗೆಡಿಸಿ ನವಪರಿಮಳದಿ ಮುಸುಕಿದರೂ ೩
ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ
ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ
ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ
ವೆಡೆಬಿಡದೆ ಕೋಮಲೆಯರೊಡನೆ ತವದಕಲೀ
ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ
ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ
ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ ೪
ತೊರೆದು ಮುಂಬರಿಯೆ ಯೌವನದ ಪೀತಾಂ
ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ
ಕರದಂಗುಳಿಗಳಿಂದ ಕುರುಳ ನೇವರಿಸುತಾ
ತುರದ ತರುಣಿಯರು ಶ್ರೀಹರಿಯ ತರುಬಿದರೂ
ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ
ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು
ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ
ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ ೫

೭೯
ದೇವ ನೀನಹುದೋ ದೇವರದೇವ ನೀನಹುದೋ ಪ
ದೇವ ರಿಪುವನದಾವ ದುರಿತಾಖ್ಯನಾವ ನಮಿತರ
ಕಾವ ಕರುಣಸಂಜೀವ ಜಿತಪೂರ್ಣಕಾಮ ಅ.ಪ
ದೇವಕಿಯಲ್ಲವತರಿಸಿ ಗೋಕುಲವನ್ನು
ಪಾವನವನ್ನು ಮಾಡಿ ಮಡುಹಿ ಮಾವನ ಮಧು-
ರಾವನಿಯನುಗ್ರಸೇನಗಿತ್ತು ದೈತ್ಯಾಳಿಯ ಸವರಿ
ಜೀವ ಸಖನಾಗಿ ಪಾಂಡವರಿಗೆ, ಪಾರ್ಥ
ಸೇವೆಯಲಿ ಸಂದು ಕೀಲಿಸಿ ಕೌರವರನ್ನು
ಭೂವರನ ಹಯಮೇಧಕೊಲಿದು ಬಂದಾ ೧
ಧರ್ಮರಾಜನ ಯಜ್ಞತುರಗ ರಕ್ಷೆಗೆ ಕೃತ-
ವರ್ಮಜರು ಕೂಡಿ ನಡಸಿ ನೀಲಾಂಕನ
ಮರ್ಮವರಿತು ಸೋಲಿಸಿ ಹಂಸಧ್ವಜರನ್ನು ಮಾಮಳಿದಡರಿ
ಕರ್ಮವಶದಿಂದ ಬಭ್ರುವಾಹನನ ಕೈಯ
ದುರ್ಮರಣವಾದ ವಿಜಯ ಕರ್ಣರನು
ಪೆರ್ಮೆಯಿಂದಸುವಿತ್ತು ಹೊರೆದ ನಿತ್ಯ ನಿರ್ಮಳಿಕನಹುದೊ ೨
ಮುಂತೆ ನಡೆದರ್ಜುನಿಯ ಗೂಡಿ ತಾಮ್ರಧ್ವ
ಜಂ ತುಡುಕಿ ಬರೆ ದ್ವಿಜನಾಗಿ ಶಿಖಿ
ಕೇತುವನು ಬೇಡಿ ವೀರವರ್ಮನ ಗೆಲಿದು ಕುಳೀಂದ್ರಗೊಲಿದು
ದಂತಿಪುರಕೆ ಬಂದರಸನ ಹಯಮೇಧ-
ಮಂ ಪಾಲಿಸಿ ತ್ರಿಜಗವನು ಪಾಂಡವರಿ-
ಗಿತ್ತೊಲಿದು ಸುರಪುರವ ಪೊರೆವ ಲಕ್ಷ್ಮೀಕಾಂತ ನೀನಹುದೋ ೩

ಇದು ದಶಾವತಾರ ವರ್ಣನೆಯ
೭೬
ನಮೋ ನಮೋ ನಾರದವಂದ್ಯ
ನಮೋ ನಮೋ ನಿಗಮನಿಕರವೇದ್ಯ ಪ
ನಮೋ ವರದಾಧಿಪ ಸುರಪುರ ಲಕ್ಷ್ಮೀಶ
ಭವಭಯರೋಗವೈದ್ಯ ಅ.ಪ
ಹರಿಚರನಾಗಿ ವೇದವ ತಂದೆ ಹರಿಪತಿಯನು ಮೇಲಾಂತು ನಿಂದೆ
ಹರಿನಯನನ ಕೊಂದೆ ಹರಿಯ ರೂಪಾದೆ ನೀ ಹರಿಪದಕಡಿಯನಿಟ್ಟೆ
ಹರಿವಂಶಜರನೆಲ್ಲರ ತರಿದೆ ಹರಿವಾಹಿನಿಯ ನೀನಾಳ್ದೆ
ಹರಿಸುತಗೊಲಿದು ಹೆಂಗಳ ವ್ರತಕೆಡಿಸಿದೆ ಹರಿವಾಹನ ಜಯತು ೧
ಶಿವವಾಹನ ಧ್ವಜರೂಪ ಶಿವಧರನೆನಿಪ ಯುಗ ಪ್ರತಾಪ
ಶಿವಭಕ್ತನ ಕೊಂದೆ ಶಿವನ ರೂಪಾದೆ ನೀಂ ಪದಕಡಿಯನಿಟ್ಟೆ
ಶಿವವೈರಿಯ ರಿಪುವೆನಿಸಿದೆ ಶಿವನ ಬಿಲ್ಲನು ಬಾಗಿಸಿ ಮುರಿದೆ
ಶಿವನ ತುಳಿದೆ ನೀ ಶಿವನಿಗೆ ಸಖನಾದೆ ಶಿವವಾಹನ ಜಯತು೨
ಸುರಜ್ಯೇಷ್ಠನಿಗೆ ಶ್ರುತಿಯನಿತ್ತೆ ಸುರರಿಗೆ ಸುಧೆಯನು ಕರೆದೆರೆದೆ
ಸುರನಗವರ್ಣ ಹಿರಣ್ಯಾಕ್ಷನ ಕೊಂದೆ ಸುರಸಿಂಧುವಪಡೆದೆ
ಸುರಭಿಯ ನೆವದಿ ಭೂಪರನೆಲ್ಲ ತರಿದೆ ಸುರರಿಪು ದಶವದನನ ತರಿದೆ
ಸುರನಗವರ್ಣ ಸರ್ವಜ್ಞ ಹಯಾರೂಢ ಸುರಪುರ ಲಕ್ಷ್ಮೀಶ ೩

ನಾಗಶಯನ
೭೧
ನಾಗವೇಣಿಯೆ ಕರೆದು ತಾರೆ ನಾಗಶಯನನಾ ಪ
ನಗಧರ ಪ್ರಿಯನೆನಿಪ ನಾಗವರದನಾ ಅ.ಪ
ಜಲವಪೊಕ್ಕು ತಮ ನಲಿದ ಜಲರುಹಾಕ್ಷನಾ
ಜಲಧಿ ಮಥನವನ್ನು ಗೈದ ಚೆಲುವರರಸನಾ ೧
ಧರಣಿಪೊಯ್ದ ಖಳನ ಸೀಳ್ದ ನಳಿನನಾಭನಾ
ಭರದಿ ಹೊಳೆವ ಕಂಬದಲ್ಲಿ ತರಳಗೊಲಿದನಾ ೨
ಧರಣಿ ಈರಡಿಯ ಮಾಡಿ ಸುರರ ಪೊರೆದನಾ
ಧರಣಿಪಾಲಕುಲವ ತರಿದ ಪರಶುರಾಮನಾ ೩
ಧರಣಿಸುತೆಯನೊಯ್ದ ಖಳನ ಶಿರವನರಿದನಾ
ತರಳತನದಿ ವೊರಳನೆಳೆದ ತರಳ ಕೃಷ್ಣನಾ ೪
ತರುಣಿಯರ ವ್ರತವನಳಿದು ಪುರವಗೆಲಿದನಾ
ಹರುಷದಿಂದ ತುರಗವೇರಿ ನಲಿವ ಸುಗುಣನಾ ೫
ಸುರಪುರದಿ ನಲಿವಿನಿಂದ ನೆರೆದು ನಿಂದನಾ
ಶರಣರಕ್ಷ ಲಕ್ಷ್ಮಿಯರಸ ಪರಮಪುರುಷನಾ ೬

೪೯೩
ನೆರೆ ಪ್ರಚಂಡ ಬರತಕದ
ನಿರಗೊಡದ ಮನ್ಮಥನ ಪರಿಯನೆಲ್ಲ ಕೇಳು ಕೆಳದಿ
ಸುರಪುರದ ಕರಿವರದ
ಗರುಹಿದಡೆ ಮುತ್ತಿನ ಸರದ ಹಾರವ ನೀವೆ ಕೆಳದೀ ಪ
ಸಸಿ ಬಿಂಬ ದೆಸೆ ತುಂಬಿ
ಪಸರಿಸಿತೆಂಬುದನು ಪಿಕ ಕುಸುಮಾಂಬರಗೆ ಪೇಳೆ ಕೆಳದೀ
ಮಸರೆಳೆಯದಸು ಬಿಳಿ
ಯೆಸಳು ಕೇದಗೆಯಲರ ಹಸಮಾಡಿದನು ನಲಿದು ಕೇಳದಿ ೧
ಅಸಿನನೆಯ ಹೊಸಮನೆಯ
ಬಿಸುಗಣೆಯೆಂದಳೆಸೆಯೆಮಣಿಸಲುತರಹರಿಸುವುದುಕೆಳದಿ
ಬಿಸಜಾಕ್ಷನ
ನುಶಿಕ್ಷಣದಿ ತನು ಉಚ್ಚಿಕಡುಸುಡುತಲಿದೆ ನೀ ಸಾಕ್ಷಿ ಕೆಳದೀ ೨
ತಂಬೆಲರ ಮುಂಬೆಲರ
ಪಂಬೆಲರನುಳಿದು ಮರಿ-
ದುಂಬಿಗಳ ಸಂಭ್ರಮದಿ ಕೇಳದ ಕೆಳದೀ
ಬೆಂಬಿಡದೆ ಇಂಬುಗೊಂಡಂಬುಜಾಸ್ತ್ರವ ತುಡುಕಿ ೩
ಪೊಂಬಲಕೆ ಕೊಳಗಾದೆ ಕೆಳದೀ
ಶಂಭು ಪಣೆ ಯೆಂಬುವಗೆ
ಕುಂಬಿನಿಯೊಳೇ ಮಣಿಹ-
ದೆಂಬುದನು ಕೊಡಬಹುದೆ ಕೆಳದೀ ೪
ನಂಬಿದಳು ಕಂಬನಿಯ ತುಂಬಿರಲು ಸಖಿಯರೊಳು
ಗಾಂಭೀರ್ಯತನವಹುದೇ ಕೆಳದಿ
ಕಂತುಶರವಂತಿರದೆಂತೊರೆಯಬಹುದೆನಗೆ
ಚಿಂತೆ ತಲ್ಲಣ ಕೆಳದೀ ೫
ದಂತಿ ನಡೆಯಂತೆ ಬೆಡಗಿಂತವಳ ಕಾಣೆ ಗುಣ
ವಂತೆ ವಿಧಾನ್ಯಾಯದಲಿ
ಸಂತೈಸಿ ಯೆನ್ನ ನೆರೆವಂತೆ ಸುರಪುರದ ಲಕ್ಷ್ಮೀ
ಕಾಂತನಿಗೆ ಬಿನ್ನಯಿಸು ಕೆಳದೀ ೬

೪೯೪
ಪಂಥವ್ಯಾಕೋ ಗುಣವಂತ ಸಖಿಯೊಳಿನ್ನು ಪುಷ್ಪಾವ-
ಸಂತ ಆಡಿದೊರೆಯೆ ಶ್ರೀಮಂತ ದೇವನೂರಲಿ
ನಿಂತ ಲಕ್ಷ್ಮೀಯ ಕಾಂತ ಪ
ರೂಢಿಯೊಳಗೆ ನೀನಾಡಿ ಪೆಣ್ಣಲ್ಲವೆಂದು
ನೋಡಿ ಸವಿಮಾತನಾಡಿ ಗಾಡಿಕಾರೆಯರ ಒಡ-
ಗೂಡಿ ಬಲ್ಮೊಲೆಗೆ ಕೈಯನೀಡಿ ಸುರತದೊಳು
ಕೂಡಿ ಮೋಹವ ಮಾಡಿ ||೧||
ಎಲ್ಲರಂತೆ ನಾ ತರುಣಿಯಲ್ಲ ಬಣ್ಣನೆ ಮಾತು
ಒಲ್ಲ ಅವಳು ಮೊದಲೆ ಅಲ್ಲಿ
ಇಲ್ಲದೆ ಪೂವಿಲ್ಲ ಇನ್ನಷ್ಟು ದಯವಿಲ್ಲ ಶ್ರೀ
ವಲ್ಲಭ ನಿನಗೀ ನಿತ್ತವಲ್ಲ ೨
ಜಾರವಿದ್ಯದಿ ನೇಮಗಾರ ಯೆನ್ನಯ ಮಾತ
ಮೀರದೆ ಕೃಪೆ ಬಂದು ಸರಸಗುಣ ವಿ-
ಚಾರವರಿತು ವೈಯಾರ ಪೊರೆದೆಯೇ ದೇವ-
ನೂರ ವಿಹಾರ ಲಕ್ಷ್ಮೀಮನೋಹರ ಮೋಹನಾಕಾರ೩

೪೯೫
ಬಾರಯ್ಯ ಬೇಗ ಭಾವಜನಯ್ಯ ನಿನಗೊಲಿದ
ನಾರಿಯರುಗಳ ಲಾಲಿಸೋ ಪ
ಇಂದೀವರಾಯತಾಕ್ಷಿಯೊಳು ತಾ ಮುನಿದಿರಲು
ಕಂದರ್ಪಣೆರಾಯ ಕೇಳಿ ತನ್ನ
ಚಂದಿರನು ದಳಪತಿಗೆ ನೇಮವನು ಕೊಟ್ಟು ನಲ-
ವಿಂದ ಗಿಳಿತೇರನೇರಿ ಬರಲೂ
ಮುಂದೆ ಉಗ್ಘಡದ ಕೋಗಿಲೆ ಪಾಡಿ ರಭಸ-
ದಿಂದ ವಾದ್ಯಗಳು ಮೊಳಗೇ
ಸಂದಣಿಸಿ ಝೇಂಕಾರಗೈದ ಭ್ರಮರಾಳಿಗಳ
ವೃಂದದವರನೆಂತು ಬಣ್ಣಿಸುವರೆನ್ನಳವಲ್ಲ ೧
ಅಗ್ಗದ ವಸಂತ ಮಾರುತರು
ಒಗ್ಗಿ ನಲಿದಾಡುತ್ತ ಬರಲು
ವೆಗ್ಗಳ ಸುಗಂಧ ಪರಿಮಳದ ಪೂವಲರುಗಳ
ಒಗ್ಗಿನಲಿ ಕೂಡೆ ಬರಲೂ ತನ್ನ
ಕಗ್ಗೊಲೆಗೆ ದಾಳಿಯಿಟ್ಟುದು ಕಾಮ ಪುಸಿಯಲ್ಲ
ದಗ್ಗಡೆಯ ಮಾಡುವುದುಚಿತವೆ ನಿನ್ನ ಸಖಿಯಳನೂ ೨
ಈ ತೆರದೊಳಿಹ ಪ ಕೊಳುವಳ್ ಕಳ
ರಳ್ತೆ ಸಂಜೆ ಭಟರೊಗ್ಗಿನಲಿ ಭಾರಿಯಾಗಿ ಲಲೂ
ಮತ್ತೆ ಕೆಂದಳಿರ ಸಂಪಗೆಯ ಕಿಡಿಯಲರುಗಳು
ಒತ್ತಿ ಸೂಸುತ್ತ ಬರಲೂ ತನ್ನ
ಬತ್ತಳಿಕೆಯೊಳಗೊಂದು ಕೂರಲಗ ತೆಗೆ
ದಿತ್ತು ಅವಳ ಕುಸುಮಾಂಗಕೆ ಎಸೆಯಲು ಕಂಡು
ವೃತ್ತ ಕುಚದಬಲೆಯಳ ಮನ್ನಿಸದೆ ಸುರಪುರದ
ಸುತ ಲಕ್ಷ್ಮೀಶನಹುದೆ ಭಳಿರೇ ೩

ಸುಂದರವಾದ ಗೀತೆ
೭೨
ಭಜಿಸಿರೋ ಮನದಣಿಯ ಸುಜನಾಬ್ಜ ದಿನಮಣಿಯ
ಭುಜಗಾರಿಗಮನ ತಿಂಥಿಣಿಯ ಸತ್ಕಣಿಯ ಪ
ರಜನೀಕರ ಗುಣಶ್ರೇಣಿ ಅಜಭವ ಸುರಾಗ್ರಣಿಯ
ತ್ರಿಜಗಮೋಹನ ಮಣಿಯ ಸೊಬಗಿನ ಕಣಿಯ ಅ.ಪ
ಪೊಳೆವ ಮಕುಟದ ಫಣಿಯ ತಿಲಕದಲಿ ರಂಜಿಸುವ
ಪ್ರಣವ ಗೋಚರ ಸುಧಾಮಯದ ಕದಪಿನಲಿ
ತೊಳಪ ಕುಂಡಲದ ನಾಸಿಕದ ಮೂಗುತಿಯೆಸೆಯೆ
ಸುಲಿಪಲ್ಲ ನಗೆಮೊಗದ ಸುಲಭಸೌಂದರÀನ ೧
ಪದಕ ಮಣಿಮಯ ಮೌಕ್ತಿಕದ ಹಾರ ತ್ರಿಸರ ಕಂ
ಧರ ವೈಜಯಂತಿಯೊಲವಿನ ಬಾವುಲಿ
ಮುದದ ಕಂಕಣ ಕರದ ಮುದ್ರೆಯೆಸೆವಾ ಬೆರಳ
ಗದೆ ಸುದರ್ಶನ ಕಂಬು ಮದನಶರಧನು ೨
ಉರದ ಪೊಂಬಣ್ಣದಂಬರ ತರಣಿ ಶತಕೋಟಿ
ಕಿರಣತತಿ ಕುಮುದ ವರ್ಣದ ತನುರುಚಿಯಾ
ಹರಸುರೇಶ್ವರ ವಿರಿಂಚ್ಯಾದಿ ವಂದಿತಚರಣ
ಸರಸಿರುಹ ವರದೇವಪುರದ ಸಿರಿವರನ ೩

೪೯೬
ಮೃಗಮೋಹಿನಿಯೊಡನೇಕೋ ಪಂಥ ಪ
ಕಾಂತ ಸಿರಿಕಾಂತ ಸುರನಗರಾಧಿಪ ಅ-
ನಂತ ಗುಣವಂತ ದೇವಾ ಎನ್ನ ಸಲಹೊ ಅ.ಪ
ಸುಲಲಿತ ಲತಾಂಗಿ ನಿನ್ನೊಲುಮೆಯಲ್ಲಿ ನೆರೆಹೊಂಗಿ-
ಸಲೆ ಮನವ ಮಾಡಿ| ನಿನ್ನಗಲಿ ಬಾಯಾರಿ
ಬಲು ವಿರಹದಾಸರಿನ ಬೇಸರಿನಲ್ಲಿ ಯಿಂ_
ತಳಿದವಳ ಕಾಯೊ ಸಿರಿಧಾಮ ಗುಣಧಾಮ ೧
ಕಳಕಳಿಪ ನೋಟ ಕಾತರಿಪ ವಿರಹದ ಹೂಟ
ಅಳಲು ಮನ ಅಳಿನಿದ್ರೆ ನಿನಗಾಲಯ ಮುದ್ರೆ
ಅಳಿದುಳಿಸು ಲಜ್ಜೆಗೇಡುಗಳ ಪಾಡುಗಳ ಇಂ-
ತುಳಿದವಳ ಕಾಯೊ ಸಿರಿಧಾಮ ಗುಣಧಾಮ ೨
ಮೂರಾರವಸ್ಥೆಗಳ ನೀರಿಕಡೆಯನವಸ್ಥೆ
ಮಾತಿರುವಳೆ ಬಾಲೆ ನಿನಗೆದ್ದ ಮೇಲೆ
ನಾರಿಯೆಡೆಗೈದರಲೆಗಲಿಪ್ಪಿ ಬಿಗಿದಪ್ಪಿ ಸೊಗಸೇ
ತೋರಿಸಿದನಮರ ಪುರಿಪಾಲ ಸಿರಿಲೋಲ ೩

ಶರಣಾಗತಿಯ ತತ್ವವನ್ನು
೭೩
ಶರಣಾಗು ಸಂಪೂರ್ಣ ಶರಣಾಗು ಜಿತಾರ್ಣ
ಕರುಣಾಮೃತಾಕೀರ್ಣ ಕರ ನೀಲವರ್ಣ ಪ
ಅತಸೀ ಕುಸುಮಗಾತ್ರ ಅರವಿಂದ ನೇತ್ರ
ಚತುರಾಸ್ಯನುತ ಚಿತ್ರ ಚಾರು ಚರಿತ್ರ
ಧೃತ ಗೋವರ್ಧನ ಗೋತ್ರ ದಿವಿಜೇಂದ್ರ ಸ್ತೋತ್ರ
ಶತಯಾಗಸುತಮಿತ್ರ ಸೌಪರ್ಣಯಾತ್ರ ೧
ಸ್ಮರಕೋಟಿ ಲಾವಣ್ಯ ಪುರಜಿದ್ವರೇಣ್ಯ
ಪುರುಹೂತಾದಿ ಶರಣ್ಯ ಪುರುಷಾಗ್ರಗಣ್ಯ
ದುರಿತಾಪಹರೇಣ್ಯ ದಾನ ಸಾದ್ಗುಣ್ಯ
ಪರಿಣತ ಲಾವಣ್ಯ ಪರಮಕಾರುಣ್ಯ ೨
ಕಮಲರಮ್ಯವಿಲಾಸ ಕೌಸ್ತುಭೋದ್ಭಾಸ
ಕಮನೀಯ ಸುವಿಭೂಪ ಕರಪೀತವಾಸ
ಅಮಿತೇಂದು ರುಚಿಹಾಸ ಆದಿಶೇಷೋಲ್ಲಾಸ
ಸುಮನಸಪುರವಾಸ ಪಾಹಿ ಲಕ್ಷ್ಮೀಶಾ ೩

೭೭
ಶರಣುಹೊಕ್ಕೆನು ಕರುಣಾಂಬುಧಿಯೇ ಕಾಯೊ ಪ
ಸುರಪುರ ನಿಲಯ ಲಕ್ಷ್ಮೀಪತಿಯೇ ಅ.ಪ
ಪುಂಡುದಾನವರ ಶಿರವನೆ ಛೇದಿಸಿ ಮುಂ
ಕೊಂಡಸುರ ದಶಾನನನಾ
ದಿಂಡುದರಿದು ರಕ್ಕಸರ ಸಂಹರಿಸಿ
ಖಂಡ ವಿಭೀಷಣಗುದ್ದಂಡಪದವಿಯ ಇತ್ತನೆಂದು ೧
ಸುರಪನ ವರ ತನುಜನ ರಥದೊಳು ನಿಂದು
ಕರುಣದಿಂದಲೆ ತುರಗವ ಪೊಡೆಯೆ
ಕುರುಕುಲ ಚತುರ್ಬಲವ ಸಂಹರಿಸಿಯೆ
ಉರಗಶರವು ಬರೆ ನರನ ಕಾಯ್ದನೆಂದು ೨
ನರಮೃಗರೂಪಿನಲಿ ಹಿರಣ್ಯಕಶಿಪುವಿನ
ಉರವ ಬಗೆದು ಶರಣನ ಪೊರೆಯೆ
ಸುರಪುರವಾಸನೆ ಶ್ರೀಲಕ್ಷ್ಮೀ ಅರಸನೆ
ದುರುಳ ನೆಗಳ ಕೊಂದು ಕರಿಯ ಕಾಯ್ದನೆಂದು ೩

ಇದು ಪಾದಾದಿಕೇಶಪರ್ಯಂತಕ್ಕೆ
೭೪
ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ
ಶ್ರೀಕಾಂತ ಮಂಗಳ ಮೂರುತಿ ವರದೇವಾ ಪ
ಶ್ರೀಮಣಿಮೌಳಿ ಮಸ್ತಕದ ಕಸ್ತುರಿಯ ಲ
ಲಾಮವೆಸೆವ ವರ ಫಣಿಯಾ
ಭ್ರೂಮಧ್ಯದೊಳೆಳೆವರೆಯಂತೊಪ್ಪುವ
ನಾಮದ ಪಿರಿನೊಸಲಾ೧
ತಾಮರಸಾಯತನೇತ್ರದಾನತಸು
ಕ್ಷೇಮಾಂಕುರದ ನೋಟದ
ಚಾಮೀಕರ ಕುಟ್ಮಲ ನಾಸಿಕದಭಿ
ರಾಮ ಸುಮೌಕ್ತಿಕದಾ೨
ಮಾ ಮನೋಹರ ಚುಬುಕಾಗ್ರದ ನವಪಲ್ಲ
ವಾ ಮಿಳಿತಾಧರದ
ಸೋಮವದನದೆಳನಗೆಯೂ ಪೊಳೆವಟ್ಟ
ಕೌಮುದಿಯಾ ಸೊಗಸಿನಾ ೩
ರಾಮಣೀಯಕವದನ ಮಕರಕುಂಡಲದ ಸು
ರಾಮಯದ ಕದಪಿನ
ಕಾಮನೀಯ ಕಂಬುಕಂಠದ ಸಿರಿತುಳ
ಸೀ ಮಂದಾರಮಾಲೆಯ ೪
ಜೀಮೂತ ಸವಿಯನೆ ರಂಜಿಪ ಸು
ಶ್ಯಾಮಲ ರುಚಿರಾಂಗದ
ಕೌಮೋದಕಿ ಖಡ್ಗ ಕಮಲ ಕಂಬು ನಿ
ಸ್ಸೀಮ ಚಕ್ರಾಯುಧಂಗಳಾ ೫
ಶ್ರೀಮೆರೆವುರದ ಶ್ರೀವತ್ಸಕೌಸ್ತುಭ ದಿ
ವ್ಯಾಮೋದ ಗಂಧ ಲೇಪದ
ಸೌಮಾನಜಂ ತಾಳ್ದುಪವೀತದ ಮಣಿ
ಸ್ತೋಮಾಭರಣಂಗಳಾ ೬
ಸಾಮಾಜಿಕರ ಸನ್ನಿಭ ರಂಜನದು
ದ್ದಾಮ ಸುಬಾಹುಗಳಾ
ನೇಮಿತಾಂಗದ ತೋಳಬಂದಿ ಕಂಕಣಮುಂ
ಗೈಮುರಾರಿ ಮುದ್ರೆಯಾ ೭
ಐಮೊಗದಹಿಯ ತೆರದ ಕರಕಮಲದ
ಸೈಮಿರುಪಂಗುಲಿಗಳಾ
ರೋಮಾವಳಿಯ ಪೊಳೆವ ಪೊಡೆವಲರ ಪಿ
ತಾಮಹಮುದಿತ ನಾಭಿಯಾ ೮
ಹೇಮಾಂಬರದಸಿಮಧ್ಯದ ಕಾಂಚೀ
ಧಾಮದ ಕಟಿತಟದ
ಪ್ರೇಮಿತ ಊರುಗಳ ಸಜಾನುಗಳ ಮುದದಿಂ ತಾಳ್ದ
ವಾಮಜಂಫೆಯ ತೊಡರಿನ ಪೊಂಗೆಜ್ಜೆಗಳ೯
ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ
ಶೋ ಮಹಿಮೆಯ ಚೆಲ್ವಿನಾ
ಪ್ರೇಮದೊಳಾನತರಂ ಸಲಹುವ ಸುರಪುರ ಮ –
ಹಾಮಾತೆ ಲಕ್ಷ್ಮೀಪತಿ ಪಾದಪದ್ಮದ ೧೦

೮೬
ಶ್ರೀದೇವಿ ಬಲಗಡೆಯೊಳು ಮಂಡಿಸಿದ ಭೂದೇವಿ ಎಡಗಡೆಯೊಳು
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ
ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ
ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ ೧
ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು
ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ ೨
ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ
[ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ೩
ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ
ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ ೪
ವೇದಚೋರನ ತರಿದು ಆದಿಮೂರುತಿ ವರದನ ವಿ-
ನೋದದಿ ತೂಗಿದರು ರವಿಸೌಂದರಿಯನಾಡಿದ ೫
ಬಾಲಕನ ಕಾಯ್ದಬಳಿಕ ಧರೆಯನಭವ ಕಾಲಿನೊಳೆಳೆದ ದೇವ
ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ ೬
ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ
ವಾರಿಧಿ ಕೃಷ್ಣನ ತೂಗಿದರು ವರಸತಿಯರು ೭
ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ
ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ ೮
ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ
ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು೯
ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ
ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು ೧೦
ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ
ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು ೧೧
ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ
ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು ೧೨
ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ
ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ ೧೩
ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ
ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ ೧೪

೮೫
ಶ್ರೀರಮೆಯನಾಥ ನಿನ್ನಂಘ್ರಿಗಳ ಸೇರಿದನ
ದೂರ ಮಾಡಿರುವುದುಚಿತವೆ ಪ
ವಾರಿಜಾಂಬಕ ಎನ್ನ ಕ್ರೂರಚಿಂತೆಯ ಹರಿಸಿ
ಬೇಡಿದುಪ್ಪವನೀವುದೂ ಅ.ಪ
ವ್ರತಶೀಲನಾಗಿ ಭೂಪತಿ ಅಂಬರೀಷನ
ಅತಿಶಯದಿ ಪೊಗಳುತಿರಲೂ
ಯತಿರಾಜ ದೂರ್ವಾಸನಡೆತಂದು ದ್ವಾದಶಿಯ
ತಿಥಿಯೊಳನ್ನವ ಬೇಡಲು
ಪೃಥಿವೀಶ ಕೊಟ್ಟನೆನೆ ದ್ವಾದಶಿಯ ಪಾರಣೆಯ
ಮಿತಿ ಮೀರಿ ಪೋಗುತಿರಲೂ
ಕಥನದಿಂ ಶ್ರೀತುಳಸಿಯನು ಭುಂಜಿಸಲು ಕೋಪಿಸಲಾಗ
ನತಜನಾಶ್ರಯ ನೀನು ಪೊರೆದೆ ಅಹುದು ೧
ಮುಂದನರಿಯದೆ ಯಮನಂದನಂ ದ್ಯೂತಮಂ
ಅಂದು ಕೌರವನೊಳಾಡೆ
ಮಂದಮತಿಯಾಗಿ ಸೋಲಲು ನಾರಿಯನು ಆ ಸಭೆಗೆ
ತಂದು ಮಾನಭಂಗವನೆ ಮಾಡೆ
ಇಂದುಮುಖಿಯುಟ್ಟ ಸೀರೆ ಅಕ್ಷಯ
ವೆಂದು ನಂದಕುಮಾರ ಸಲಹೇ ೨
ಎನ್ನಳವೆ ನಿನ್ನಯ ಮಹಿಮೆಯನು ಪೊಗಳುವಡೆ ಯ
ಪರ್ಣವಾಹನರೊಡನೇ
ಮನ್ಮಥನ ಶತಕೋಟಿ ಲಾವಣ್ಯ ಯದುಕುಲಾಮ
ರಾರ್ಣವಕೆ ಚಂದ್ರ ನೀನೇ
ಸನ್ನುತನಾದೆ ಸುರಪುರದ ಲಕ್ಷ್ಮೀವರನೆ
ಮನ್ನಿಪುದು ಶರಣಪ್ರಿಯನೆ
ಭಿನ್ನವಿಲ್ಲದೆ ನೀಂ ದಾಸಾನುದಾಸರನು ಪ್ರ
ಸನ್ನನಾಗಿಯೆ ಸಲಹು ಇಂದು ಬಂದು೩

ಇದೊಂದು ಉದಯರಾಗ
೭೫
ಸಚ್ಚಿದಾನಂದಮಯಗೆಚ್ಚರಿಕೆ ಪ
ನಿಶ್ಚಯದ ನಿರುಪಮಂಗೆಚ್ಚರಿಕೆ
ಅಚ್ಚರಿಯ ಸಚ್ಚಿತ್ರಂಗೆಚ್ಚರಿಕೆ ಅ.ಪ
ಕಾಂತೆಯರ ಮನೆಗೆ ಶ್ರೀಕಾಂತ ಪೊರಮಡುತಿಹನು
ಕಾಂತೆಯರು ಕಟ್ಟುಮೆಟ್ಟದವೊಲೆಚ್ಚರಿಕೆ ೧
ಸಂಚಿತಾಭರಣಗಳ ಮಿಂಚುಗುರುಚರಣಗಳ
ಕುಂಚ ಕಾಳಂಜಿಯವರೆಲ್ಲವೆಚ್ಚರಿಕೆ ೨
ನೀಡೆಸೆವ ಸೆಳ್ಳುಗುರು ಮೂಡುತಿಹ ಮೊಲೆಹೊಗರು
ಆಡಿಸುವ ಹಡಪದವರೀಗ ಎಚ್ಚರಿಕೆ ೩
ಬಿಂಬಾಧರಂ ಪೊಳೆಯೆ ಕಂಬುಕಂಠವು ಹೊಳೆಯೆ
ಪೊಂಬಾಳ ದೀವಿಗೆಯ ಜನರು ಎಚ್ಚರಿಕೆ ೪
ಚೆನ್ನಸಿರಿಯರಮನೆಯ ಚಿನ್ನವಾಗಿಲ ಕೊನೆಯ
ರನ್ನದೋರಣ ತಡಿಯವರೆಚ್ಚರಿಕೆ ೫
ಇಂದಿರಾದೇವಿಯರ ಮಂದಿರದ ಬೀದಿಯೊಳು
ಸಂದಣಿಯಲತಿ ಜತನವಿರಲಿ ಯೆಚ್ಚರಿಕೆ ೬
ದೇವಿಯರ ಮನೆಗೆ ವಿವಾಹ ತಾಬೇಡಿ ಬಂದ
ದೇವಪುರ ಲಕ್ಷ್ಮೀಶಗೆಚ್ಚರಿಕೆ ೭

೪೯೭
ಸುವ್ವಲಾಲೆ ಸುವ್ವಿ ಸುವ್ವಲಾಲೆ
ಸುವ್ವಿ ಕಮಲ ಭವನ ಪಿತನೆ ಸುವ್ವಿ ಅಮರಸುತನ ಸಖನೆ ಪ
ಸುವ್ವಿ ಉಮೆಯ ಪತಿಯಸಖನೆ
ಸುವ್ವಿರಮೆಯ ಪತಿಯಚ್ಯುತನೆ ಅ.ಪ
ಚಂದ್ರಕಾಂತದೊರಳ ಕಡೆದು
ಇಂದ್ರನೀಲ ಹೊನಿಗೆ ವಿಡಿದು
ಸಾಂದ್ರ ಕುಂತಳೆಯರು ನೆರದು ಸರಸಮಿಗೆ
ಯಿಂದ ನಲಿದು ಸುವ್ವಿಲಾಲೆ ೧
ಸೇರಿಸಿದ್ದ ಸೆರಗು ಜಾರೆ
ವೋರೆದುರುಬ ಹೊಗರು ಮೀರೆ
ಸಾರೆ ಕಸ್ತೂರಿ ಪರಿಮಳವಿರೆ
ಸರಸಗುಣದಿಂದ ಮಿತ್ರೆ ೨
ಹರಿಣಲೋಚನೆಯರು ಕೂಡಿ
ಹರುಷಮಿಗೆ ನಲಿದಾಡಿ
ಧರೆಯೊಳಮರ ಪುರಿಯ ನೋಡಿ
ಧೊರೆಯು ಲಕ್ಷ್ಮೀಪತಿಯ ಪಾಡಿ ೩

ಏಳಯ್ಯ ಕಾರುಣ್ಯನಿಧಿ
(ಅ) ಶ್ರೀಹರಿಸ್ತುತಿಗಳು
೬೭
ಏಳಯ್ಯ ಕಾರುಣ್ಯನಿಧಿ ಕಮಲದಳ ನೇತ್ರ
ಏಳಯ್ಯ ಪರಮ ಪಾವನ ಮುನಿಜನ ಸ್ತೋತ್ರ ಪ
ಏಳಯ್ಯ ಕರಿರಾಜವರದ ವಿಜಯಮಿತ್ರ
ಏಳು ದೇವಕಿಯ ಪುತ್ರ ಅ.ಪ
ಏಳು ಹರಿರಥ ಶತಕೋಟಿ ಪ್ರಕಾಶನೇ
ಏಳೆರಡು ಲೋಕಗಳು ಉದರದಲಿ ಧರಿಸಿದನೇ
ಏಳು ಗೂಳಿಯಕಟ್ಟಿ ಕಾಂತೆಯನು ವರಿಸಿದನೇ
ಏಳು ಮುನಿನುತ ವಂದ್ಯನೇ ಸ್ವಾಮಿ ೧
ಏಳು…(?)ಗಳೊಳು ಗಂಗೆಯನು ಪಾದದಲಿ ಪಡೆದೇ
ಏಳು ಪೆಡೆಯವನ ಮಡುಹಿನಲಿ ದೊತ್ತಳದುಳಿದೇ
ಏಳುತ್ತ ನಿಮ್ಮ ನಾಮವನೊಮ್ಮಗೆ ನಡದೇ
ಏಳು ಜನ್ಮದ ಭವಹರಾ ಸ್ವಾಮಿ ೨
ಏಳು ಜಿಹ್ವೆಯನುಳ್ಳವನ ಮುಖವಾದೆ ಮ
ತ್ತೇಳ್ಮೂರು ಸೂಳಿನಲಿ ಕ್ಷತ್ರಿಯರ ಮರ್ದಿಸಿದೇ
ಏಳು ತಾಳೆಗಳನೊಂದಂಬಿನಲಿ ಛೇದಿಸಿದೇ
ಏಳು ಸಮರನ ಕೊಲಿಸಿದೇ ಸ್ವಾಮಿ ೩
ಏಳು ಶರಧಿಯಲಿ ಪಾಲ್ಗಡಲಲ್ಲಿ ಪವಡಿಸಿದೆ
ಏಳು ವ್ಯೂಹದಲಿ ಪಾರ್ಥನ ನುಡಿಯ ಪಾಲಿಸಿದೆ
ಏಳು ದಿಕ್ಪಾಲಕರು ನಿನ್ನ ಪೊಗಳುತಲಿಹರೇ
ಏಳು ದ್ವೀಪಕ್ಕೊಡೆಯನೇ ಸ್ವಾಮಿ ೪
ಏಳು ಶಕ್ತಿದೇವತೆಯರೂಳಿಗವ ಕೇಳಿ ಹರಿ
ದೇಳೆರಡು ಲೋಕ ಹರಿ ತಾನಲ್ಲದಿಲ್ಲೆಂಬ
ಏಳಿಗೆಯ ಹಮ್ಮಿನೊಳಿದ್ದ ದಶಕಂಧರನ
ಏಳಿಸಿದೆ ಸುರಲೋಕಕೇ ಸ್ವಾಮಿ ೫
ಏಳು ಸ್ವರ ಮುಟ್ಟಿ ತುಂಬುರುನಾರದರು ಬಳಿ
ಕೇಳು ತಾಳಂಗಳಲಿ ನಿನ್ನ ಪೊಗಳುತಲಿಹರೇ
ಏಳುನಗರಕ್ಕಧಿಪವೆನಿಪ ಸುರಪುರವಾಸ
ಏಳು ಲಕ್ಷ್ಮೀನಿವಾಸ ಸ್ವಾಮಿ ೬

ಹಾಡಿನ ಹೆಸರು :ಏಳಯ್ಯ ಕಾರುಣ್ಯನಿಧಿ
ಹಾಡಿದವರ ಹೆಸರು :ಪದ್ಮನಾಭ ಆರ್. ಕೆ.
ರಾಗ :ಭೌಳಿ
ತಾಳ :ಖಂಡಛಾಪು ತಾಳ
ಸಂಗೀತ ನಿರ್ದೇಶಕರು :ರಮಾ ಟಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ