Categories
ರಚನೆಗಳು

ಕೆಳದಿ ವೆಂಕಣ್ಣ ಕವಿ

೪೩೦
ಅದ್ರಿಸಂಭವೆ ಸರ್ವಸಂಭ್ರಮದೊಳುಭಾದ್ರಪದ ಶುದ್ಧ ತದಿಗೆಯ ದಿವಸದಿಸದ್ರಾಜಮಾರ್ಗದಿ ನಡೆತರಲುನಡೆತರೆ ಸತ್ಯಭಾಮೆ ರುಕ್ಮಿಣಿಯೊಳೀಭದ್ರೆ ಯಾರೆಂದು ನುಡಿದಳು ೧
ಕೋಟಿ ಸೂರ್ಯಕಾಂತಿಯ ನವರತ್ನ ಕಿರೀಟಾಗ್ರದಿ ಚಂದನ ರೇಖೆಯಮೀಟೆನೆ ತಳೆದು ಬಾಹವಳಾರೆ ಅಕ್ಕಕೈಟಭವೈರಿಯ ಸತಿಕೇಳೆ ಮಧುಕೈಟಭ ದಾನವರ ಗೆಲಿದ ಶಶಿಜೂಟನ ವಲ್ಲಭೆ ಶಂಕರಿ ಶಾಕಂಬರಿಯೀಕೆ ಕಾಣೆ ೨
ದುಂಡುಮುತ್ತಿನ ಸರಪಣಿ ವಜ್ರದಕುಂಡಲ ಕಿವಿಯೊಳು ಥಳಥಳಿಸಿ ಪ್ರ-ಚಂಡ ಸಿಂಹವನೇರಿ ಬಾಹವಳಾರೆ ಅಕ್ಕಪುಂಡರೀಕಾಕ್ಷನ ಸತಿ ಕೇಳೆಚಂಡಾಮುಂಡಾಸುರರನು ಗೆಲಿದು ಭೂಮಂಡಲವ ಕಾಯ್ದ ದೇವಿ ಭವಾನಿಯೀಕೆ ಕಾಣೆ ೩
ವೀರಮುದ್ರಿಕೆ ಕಂಕಣ ಕಡಗವದೋರೆ ಹಿಂಬಳೆ ದಂಡು ಮುತ್ತಿನಹಾರವ ಧರಿಸಿ ಬಾಹವಳಾರೆ ಅಕ್ಕನಾರಾಯಣನರಸಿ ನೀ ಕೇಳೆಧೀರನಿಶುಂಭನ ಗೆಲಿದಮರರ ಪರಿವಾರವ ಪೊರೆದ ಪರಶಿವೆ ಪರಮೇಶ್ವರಿ ಕಾಣೆ ೪
ಮೆರೆವೇಕಾವಳಿಗುಂಡಿನಸರಪರಿಪರಿ ಚಕ್ರಸರ ನಕ್ಷತ್ರದಸರಗಳ ಧರಿಸಿ ಬಾಹವಳಾರೆ ಅಕ್ಕಕರಿವರದನ ಅರಸಿ ನೀ ಕೇಳೆಧುರದೊಳೆ ಧೂಮ್ರಾಕ್ಷನ ವಧಿಸಿದಗಿರಿರಾಜ ಕುಮಾರಿ ಮಂಗಳಗೌರಿ ದೇವಿ ಈಕೆ ಕಾಣೆ೫
ಅಚ್ಚ ಮುತ್ತಿನ ಸರಗಳ ನಡುವೆಪಚ್ಚೆಯ ರತುನದ ಪಂಚಸರಗಳನಿಚ್ಚಳದಿ ಧರಿಸಿ ಬರುವವಳಾರೆ ಅಕ್ಕಅಚ್ಚುತನ ಅರಸಿ ನೀ ಕೇಳೆಅಚ್ಚರಿಯನೆ ಶುಂಭ ನಿಶುಂಭರಕೊಚ್ಚಿದ ರುದ್ರಾಣಿ ಶಿವೆ ಶರ್ವಾಣಿ ಈಕೆ ಕಾಣೆ ೬
ಚೆಂಗಾವಿಯ ಸೀರೆಯನುಟ್ಟುರಂಗುರತುನದೊಡ್ಯಾಣವನುಟ್ಟುಭೃಂಗಕುಂತಳನರ್ತಿಸೆ ಬಾಹಳಾರ ಅಕ್ಕಅಂಗಜನ ಮಾತೆ ನೀ ಕೇಳೆಸಂಗರದಲಿ ರಕ್ತಬೀಜನ ಗೆಲ್ದಗಂಗಾಧರನರಸಿ ಕಾಳಭುಜಂಗವೇಣಿ ಈಕೆ ಕಾಣೆ ೭
ಝಗಝಗಿಸುವ ಕುಂಕುಮರೇಖೆಮಗಮಗಿಸುವ ಮೃಗಮದ ತಿಲಕದಿಅಗಿಲುಗಂಧದೊಳೊಪ್ಪುತ ಬಾಹಳಾರೆ ಅಕ್ಕನಗಧರನಂಗನೆ ನೀ ಕೇಳೆಜಗಳದೆ ಮಹಿಷನ ಮಿಗೆ ಮರ್ದಿಸಿದಗಣಿತ ಸನ್ಮಹಿಮಾಸ್ಪದೆ ಸರ್ವೇಶ್ವರಿ ಈಕೆ ಕಾಣೆ೮
ಕೆಂದಾವರೆಯಂದವ ನಿಂದಿಪಬಂಧುರಪದದಂದುಗೆ ಕಲಿರೆನೆಕುಂದಣದ ಸರಪಣಿಯಿಟ್ಟು ಬಾಹಳಾರೆ ಅಕ್ಕಮಂದರಧರನಂಗನೆ ಕೇಳರ-ವಿಂದಜ ಸಂಕ್ರಂದನಮುಖಿ ಸುರವೃಂದವ ಪೊರೆವ ಮಾಹೇಶ್ವರಿ ಈಕೆ ಕಾಣೆ ೯
ಮರುಗ ಮಲ್ಲಿಗೆ ಸುರಗಿ ಸೇವಂತಿಗೆಪರಿಮಳಿಸುವ ಸಂಪಗೆ ಕೇದಗೆ-ಯರಳನೆ ಮುಡಿದು ಬಾಹವಳಾರೆ ಅಕ್ಕಮುರಹರನಂಗನೆ ನೀ ಕೇಳೆವರ ಕೆಳದಿಯ ಪುರದೊಳು ನೆಲಸಿದವರದ ರಾಮೇಶ್ವರನಂಗನೆ ಪಾರ್ವತಿ ಈಕೆ ಕಾಣೆ ೧೦

ಲೋಕನೀತಿಯ ಪದಗಳು
೪೪೮
ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು ೧
ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು ೨
ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು ೩
ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗ ಇಂದಿರೆ ಪರಸಿದಳು೪
ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು೫

ಸಂಪ್ರದಾಯದ ಹಾಡುಗಳು
೪೫೯
ಅವಳೊಡನೆ ಮುನಿವ ಬಗೆಯೇನೋ ಪೇಳೋ ಪ
ಸಿರಿಮುಡಿಗೆ ಸಂಪಿಗೆಯ ಕೊರಳ್ಗೆ ಕಸ್ತೂರಿಯನುವರಫಾಲದೆಡೆಗೆ ಕುಂಕುಮ ರೇಖೆಯಧರಿಸಿ ಪಾಟೀರ ಕರ್ದಮವನಂಗಕೆ ತಿವುರಿಕರದಿ ವೀಣೆಯ ಪಿಡಿದು ನಲಿದು ಪಾಡುವಳು೧
ವರರತ್ನ ಕಂಕಣವು ಬಾಹು ಭೂಷಣವಾಯ್ತುಮಿರುಪಮುದ್ರಿಕೆ ಸ್ವರ್ಣ ಕಟಕವಾಯ್ತುಕರದ ಕೊನೆಯೊಳಗೆ ದೋರೆಯವನಿಟ್ಟಳು ತನ್ನಬೆರಳ್ಗೆ ವೈಢೂರ್ಯದುಂಗುರವ ಧರಿಸಿದಳು ೨
ಸುರರ ದಾನವರ ತೌರವರನಾಕಾಶವನುಉರಗತತಿಯನು ಕುಂಭಸಂಭವನನು ಹರನಹರಸುತರ ಸುರಗಿರಿಯ ಕೋಪಿಸಿ ಕೆಳದಿಪುರದ ರಾಮೇಶ ನಿನ್ನ ಬರವ ಹಾರೈಸುವಳು ೩

ದೇವ ದೇವತೆಗಳ ಸ್ತುತಿ
೪೨೯
ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮತಾಯಿ ತಂದೆಯು ಕಲಿಸಿದ ಪೂಜೆ ಪ
ಜಾತಕರ್ಮಕೆ ನಾಮಕರಣಕೆ ಚೌಲಕೆಸಾತಿಶಯಾಕ್ಷರ ಪ್ರಾರಂಭಕೆನೂತನ ವಿದ್ಯಾರಂಭಕೆ ಮುಂಜಿಗೆಯಾತಕೂ ಶ್ರೀ ಗಣಪತಿ ಜಯ ಜಯವೆಂದೂ ೧
ಮದುವೆಗೆ ಋತುಶಾಂತಿಗೆ ಸೀಮಂತಕೆಮುದದಿಂದ ಜನನವ ಬರೆವುದಕೆಸದಮಲ ಯಜ್ಞಾರಂಭಕೆ ಸಮರಕೆಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ೨
ದಾನಕೆ ಧರ್ಮಕೆ ಪರ ಉಪಕಾರಕೆಜ್ಞಾನಮಾರ್ಗಕೆ ಗಾನಕೆ ಗೀತೆಗೆನಾನಾವಿಧ ಸುವ್ರತ ತೀರ್ಥಯಾತ್ರೆಗೆನೀನೆ ಗತಿ ಗಣಪತಿ ಜಯ ಜಯವೆಂದೂ ೩
ಕೆರೆ ಕಾಲುವೆ ಕೂಪಗಳ ವಿಸ್ತಾರಕೆಸುರಗೃಹ ರಥ ಉತ್ಸವ ಪೂಜೆಗೆಸರಸ ಸರೋವರಗಳ ನಿರ್ಮಾಣಕೆಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ ೪
ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದಗರುಡಗೆ ಅಮೃತವು ಸಿದ್ಧಿಸಿತುವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶಶಿರನ ಗೆಲಿದನೆನೆ ಗಣಪತಿ ಜಯವೆಂದೂ ೫
ದ್ವಾಪರಯುಗದಲಿ ಧರ್ಮರಾಯನು ನಿಮ್ಮನೇ ಪೂಜಿಸಿ ಕೌರವರ ಗೆಲಿದಾಭೂಪರ ಜೈಸಿ ತುರಗವ ತಂದ ಸಾಂಬನುಶ್ರೀಪತಿನುತ ಗಣಪತಿ ಜಯ ಜಯವೆಂದೂ೬
ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮಮೋಹದ ಪುತ್ರ ಪಾವನತರಗಾತ್ರವರದ ಶ್ರೀ ಗಣಪತಿ ಜಯ ಜಯ ಜಯವೆಂದೂ ೭

೪೪೯
ಇನಿಯಗೆನ್ನೊಡನೆ ಪ್ರೀತಿಯೋ ಆ ತರುಣಿಯೊಳ್‍ಘನತರ ಪ್ರೀತಿಯೊ ಪೇಳೆನೆಗೆಕನಕಾಂಗಿಯವನೆನಿಸಿದ ಚಾರಿತ್ರವನಿನಗರುಪುವೆಯದ ತಿಳಿದೆನಗುಸುರೆ ಪ
ಸುರಗಿ ಸಂಪಿಗೆ ಮಲ್ಲಿಗೆ ಜಾಜಿ ಮೊದಲಾದಪರಿಪರಿ ಪುಷ್ಪಮಾಲೆಗಳಾಕೆಗೆತರುಣಿ ಕೇಳಲ್ಲಿ ತಾ ಪುಷ್ಪದ ಸರಗಳಕರುಣದಿಂದೆನ್ನ ಬಳಿಗೆ ಕಳುಹಿದ ಮೇಲೆ ೧
ನಾನಾ ವಿಧಧ ವಿಚಿತ್ರಾಂಬರಗಳಆ ನಳಿನಾಕ್ಷಿಗೆ ಕಳುಹಿದನೆಮಾನಿನಿಯೊಂದೆ ವರ್ಣದ ವಸ್ತ್ರಗಳ ಸುಮ್ಮಾನದಿಂದೆನ್ನ ಬಳಿಗೆ ಕಳುಹಿದ ಕಾಣೆ ೨
ಏಕಾವಳಿ ಪಂಚರತ್ನದ ಸರಗಳನೇಕ ಹಾರಗಳ ಶೃಂಗಾರವಾಕೆಗೆರಾಕೇಂದುಮುಖಿ ನನಗೊಂದೆ ಹಾರವುಯಿದಶ್ರೀ ಕೆಳದಿ ರಾಮೇಶ್ವರ ತಾನೆ ಬಲ್ಲ ೩

೪೬೦
ಇನಿಯಗೆನ್ನೊಡನೆ ಮುನಿಸೋ ಪ್ರೀತಿಯೋ ಪೇಳೆವನಜಾಕ್ಷಿಯವನೆಸಗಿದುದಾ ಪೇಳ್ವೆನೆ ಪ
ಮೃಗಮದ ತಿಲಕವ ಪಣೆಗೆ ತಾನಿಡಲಿಲ್ಲಅಗಿಲುಗಂಧವ ಮೈಗೆ ತೀಡಲಿಲ್ಲ ಸೊಗಸು ಸಂಪಿಗೆ ಸರವಮುಡಿಸಿ ಝಗಝಗಿಪ ಮುತ್ತಿನ ಸರವಹಾಕದೆ ಎನ್ನ ಮುಗುಳು ಮೊಲೆಗೆಸೆಳ್ಳುಗುರಿಕ್ಕದಿದ್ದ ಮೇಲೆ೧
ಗುರುಕುಚರ್ಚಿತ ಮೃಗಮದ ಪತ್ರವ ಸೆರಗಿನಿಂದೊರಸಿದನೆಕುಂಕುಮಗಂಧವ ಭರದಿ ಲೇಪಿಸಿದನೆ ತಾನೆತಾಂಬೂಲವ ಹರುಷದಿ ಕರದಿತ್ತನೆಆಲಿಂಗಿಸಿ ಪರಮ ಸಂತೋಷದಿ ತಿರುಗಿ ನೋಡಿದನೆ ೨
ಧರಿಸಿದ ಮಿಸುನಿಯ ಆಭರಣಂಗಳ ಭರದಿಂದ ತೆಗೆದ ತಾನೆಚಿನ್ನದುಂಗುರವ ಬೆರಳಿಗೆ ನಲಿದಿಟ್ಟನೆತರುಣಿ ಬಾರೆಂದು ನಂಬುಗೆಗೊಟ್ಟನೆಶ್ರೀ ಕೆಳದಿಯ ಪುರದ ರಾಮೇಶ ಎನ್ನನೆರೆದು ಮನ್ನಿಸಿದನೆ೩

೪೩೧
ಇನ್ನಾರಿಗುಸುರುವೆನುಎನ್ನ ಸುಖದುಃಖವನುಪನ್ನಗಾಭರಣ ಶ್ರೀರಾಮೇಶಲಿಂಗ ಪ
ಸುರಪತಿಗೆ ಅಂಡವರತವು ಅಗುನಿ ಆಶ್ರಯಿಸಿದರನೆ ಭಕ್ಷಿಪನು ಯಮ ನಿಷ್ಕರುಣಿಯುನಿರುತಿ ರಾಕ್ಷಸ ವರಣ ನೀರೊಳಿಹ ವಾಯು ಸಂ-ಚರಿಪ ಭಾಗ್ಯೋನ್ಮತ್ತನಾತ್ಮಘಾತಕನು ೧
ನಾರಾಯಣಗೆ ನಿದ್ರೆ ನಾಗೇಂದ್ರಶಯನಗೇವಾರಿಜಭವಗೆ ಪ್ರಣವ ಜಪಕಾಲವುವೀರಭದ್ರನೆ ಕೋಪಿ ಪಾರ್ವತಿಯೆ ಚಂಡಿ ಮದವೇರಿ ಮುಕುಟವನು ತೂಗುವನು ಗಣವರನು ೨
ಸರಸಿಜಾಪ್ತಗೆ ಸಮಯವಿಲ್ಲ ಶಶಿ ತನ್ನೊಳಂಕುರಿಸಿದ ಕಲಂಕ ಕಳಕೊಳಲಾರನುವರ ಕೆಳದಿ ರಾಮೇಶ ನೀನೇ ಚಿತ್ತಕೆ ತಂದುಮರೆಯೊಕ್ಕವನ ನೋಡಿ ಪೊರೆಯದಿದ್ದ ಮೇಲೆ ೩

೪೩೨
ಇನ್ನೇನು ಗತಿ ಎನಗೆ ಈ ಉದರಪೋಷಣಕೆನಿನ್ನ ಸೇವೆಯನಿತ್ತು ಸಲಹೊ ರಾಮೇಶ ಪ
ಊರೂರ ತಿರುಗಿ ಭಿಕ್ಷವ ಬೇಡಲಾರೆ ನಾಂಘೋರ ವಿಷವನು ಮೊದಲೆ ಕುಡಿಯಲಾರೆನೀರ ಹೊರಲಾರೆ ಬಾಗಿಲ ಕಾಯಲಾರೆ ೧
ಧರಿಸುವರೆ ವಸ್ತ್ರವಿಲ್ಲದೆ ಲೋಕದೋಳ್ ದಿಗಂ-ಬರನಾಗಿ ನಿನ್ನಂತೆ ಚರಿಸಲಾರೆಕರಿ ವ್ಯಾಘ್ರಚರ್ಮವನು ಪೊದೆದು ವರ್ತಿಸಲಾರೆಧರೆಯರಿಯೆ ನಟನಾಗಿ ಕುಣಿದಾಡಲಾರೆ ೨
ಚಲ್ಲೆದ್ದು ಕುಂಟಣಿತನವ ರಚಿಸಲಾರೆ ನಾಮಲ್ಲಗಾಳಗವ ನಾ ಮಾಡಲಾರೆಕಲ್ಲೆದೆಯದೇಕೋ ಕೆಳದಿಯ ಪುರಾಧೀಶ್ವರನೆಫುಲ್ಲಶರಮದ ಭಂಗ ರಾಮೇಶಲಿಂಗ ೩

೪೫೦
ಎಂಥವನೆ ಆಗಲಿ ಪತಿಯೆ ಸಾಕ್ಷಾತ್ ಶಿವನುಪತಿಯಿಲ್ಲದೇ ಬೇರೆ ಗತಿಯಿಲ್ಲ ಸತಿಗೆ ಪ
ಪತಿತನಾಗಲಿ ಪಾತಕಿಯಾಗಿರಲಿಅತಿಮುದುಕನು ಪ್ರಾಯದವನಾಗಿರಲಿ ೧
ಬಡವನಾಗಲಿ ಭೂಪತಿಯಾಗಿರಲಿಕುಡುಕನಾಗಲಿ ಕಡುಗೋಪಿಯಾಗಿರಲಿ ೨
ವರ ಕೆಳದಿಯ ರಾಮೇಶ್ವರನ ಪದವನುಸ್ಮರಿಸಿದಂಥ ಗಂಡ ಬರುವನು ಮುನ್ನ ೩

೪೫೧
ಎಂಥಾ ಜಾಣೆಯೋ ಸುಪ್ರವೀಣೆಯೋ ಮುನ್ನಾಕೆಎಂಥಾ ನೋಂಪಿಯನೋಂತ ಫಲವೋಕಾಂತನ ಪರಕೀಯ ಕಾಂತೆಯೆಡೆಗ ಬಿಡ-ದಂತೆ ಸಂತಸದೊಳೇಕಾಂತ ಸುಖದೊಳಿರ್ಪ ಪ
ನುತ ಹಂಸತೂಲತಲ್ಪದೊಳು ನಾನಾ ಬಂಧಗತಿಯಲಿ ಕಾಮಕೇಳಿಯನೆಸಗಿರತಿಸುಖಪಾರವಶ್ಯದೊಳೊಂದು ವರುಷದಮಿತಿಯನು ತೃಟಿಕಾಲವೆಂದುಸುರುವಳು ತಾ ೧
ಹೆಣ್ಣು ಜನ್ಮದಿ ಹುಟ್ಟಿದುದಕೆ ಫಲವದುಕನ್ನೆಯರೊಳಗೆ ಕಟ್ಟಾಣಿಯಾಕೆಮುನ್ನೆಷ್ಟುಗಾಲ ತಪವ ಮಾಡಿ ತಾನಿಂಥಾಪುಣ್ಯವ ಪಡೆದಳಾಕೆಯ ಜನ್ಮ ಸಫಲವೋ೨
ವರುಷವಾಗಲಿ ಒಂದು ದಿನವಾದರಾಗಲಾತರುಣಿಯ ಭೋಗದಂತಿರಬೇಡವೆಇರುಳು ಹಗಲು ಕಾಣದಂತೆ ಶ್ರೀ ಕೆಳದಿಯಪುರದ ರಾಮೇಶನೊಳ್ಪರಸದೊಳಿರುವಳಿಂ ೩

೪೬೧
ಎಲ್ಲಿ ಕಲಿತೆಯೋ ಇಂಥಾ ಜಾಲೆಗಳನು ಆಲಲ್ಲೆಗಾರತಿಯ ಕೂಡಾಡಿ ಬಂತದಕೇನು ಪ
ಅವಳ ಕುರುಳಿವಳ ಮುಗುಳ್ನಗೆಯನೆ ಬಯಸುವುದುಇವಳ ನಯನಗಳವಳ ಮುದ್ದು ಮೊಗವಾಅವಳಕ್ಷಿ ಇವಳ ತೋಳ್ಗಳನೆಂದು ನಿನ್ನ ಸಖಿವಿವರಿಸಿ ಬರೆದುದ ನೀನೋಡಿದುದ ಸಖಿ ಪೇಳ್ದ ೧
ತರುಣಿ ಹಾರವನು ಮತ್ತೋರ್ವಳುಂಗುರವನುಸರ್ವಾಭರಣವ ಧರಿಸಿದಳೋರ್ವಳುಭರದಿ ಮೂವರೊಳಗಾರನು ಕಳುಹಲೆಂದು ಸಖಿಬರೆಯಲದ ನೀ ನೋಡಿಕೊಂಡುದನೆ ಸಖಿ ಪೇಳ್ದ೨
ಇನ್ನಾದರೆಯು ಪರಸತಿಯರ ಬೇಟವ ಬಿಟ್ಟುನಿನ್ನ ನಂಬಿದಳೆಂದು ಮನಕೆ ತಂದುಎನ್ನ ಕರದೊಳಗೆ ಕರವಿಟ್ಟು ಮನ್ನಿಸೋ ಕೆಳದಿಪನ್ನಗಾಭರಣ ಶ್ರೀ ರಾಮೇಶಲಿಂಗ ೩

೪೫೨
ಏತಕೆ ಮರುಳಾದೆಯೋ ಆ ಹೆಣ್ಣಿನಿ-ನ್ನೇತಕೆ ಭ್ರಮಿಸಿದೆಯೋಜಾತಿನಾಯಕಿಯರೊಳ್ಕತೆಯೆನುತಲಿ ಬಿ-ಟ್ಟ ತರುಣೀ ಸುಮ್ಮನೇತಕೆ ಮನಸೋತಿನ್ ಏತಕೆ ಪ
ರೂಪಿನೊಳಗೆ ಚಂದವೆ ಕಾಮಶಾಸ್ತ್ರ ಕ-ಲಾಪ ಬಲ್ಲವಳೇತಾ ಪತಿವ್ರತೆ ಪರರೆಲ್ಲಾ ಜಾರೆಯರೆನು-ತೀಪತಿ ಬೊಗಳುವ ಪಾಪಿ ಕುರೂಪನೀಂ ೧
ಗುಣದೊಳಗೊಳ್ಳಿದಳೇ ಕಲೆನೆಲೆಗಳಭಣಿತೆಯ ಬಲ್ಲವಳೇಎಣಿಸಿ ನೋಡಿದರೇನು ಹುರುಳಿಲ್ಲ ಚಲವಿಲ್ಲತೃಣಕಿಂತ ಕಡೆಯಾದ ಬಣಗು ಭಿಕಾರಿ ನೀಂ ೨
ಬರಲಿದಿರೇಳುವಳೆ ಪದವ ತೊಳೆದುಸೆರಗಿನಿಂದೊರಸುವಳೇತರುಣಿಯರುಗಳ ಮನಸ ಕಂಡವರುಂಟೆದುರುಳೆಯೆಂಬುದನೆಲ್ಲಾ ರಾಮೇಶ ಒಲ್ಲ ೩

೪೫೩
ಏನನಾದರೂ ಬರೆಯೋ ಎನ್ನ ಪಣೆಯೊಳಗೆನೀನಿಷ್ಟ ಬರೆಯಬೇಡವೋ ಮೂಢ ವಿಧಿಯೇ ಪ
ಬಾಲತನದಲಿ ಬಹಳ ಭಾಗ್ಯ ಸಂಪದಗಳನುಮೇಲೆ ಯೌವನ ಬರಲು ಬಡತನವನುಲೋಲಾಕ್ಷಿಯರಿಗೆ ಮರುಳಾಗಿ ಸಂಚರಿಪುದನುಹಾಲು ಅನ್ನವನಿಕ್ಕಿದವರಿಗೆ ಮುನಿವುದನು೧
ಮುಪ್ಪಿನಲಿ ಯೌವನದ ಸ್ತ್ರೀಯ ಸಂಭೋಗವನುತುಪ್ಪವಿಲ್ಲದ ಭೋಜನದ ರುಚಿಯನುಅಪ್ಪುತಿಹ ಮಕ್ಕಳಿಲ್ಲದ ಕುಸಂಸಾರವನುಕಪ್ಪುಗೊರಲನ ನೆನೆಯದೇ ದಿನವ ಕಳೆವುದನು ೨
ಪರರೊಡವೆಯನು ತಿಂದ ಶರೀರವನೆ ಪೊರೆವುದನುಪರರ ನಿಂದೆಯ ಮಾಡಿ ಬಾಳುವುದನುವರ ಕೆಳದಿ ರಾಮೇಶ ನಿನ್ನ ಪಾದಾಂಬುಜವಸ್ಮರಿಸಿದಂತನ್ಯಮತದಲ್ಲಿ ಸಂಭವಿಪುದನು ೩

೪೫೪
ಕವಿತಾರಸದ ಸೊಬಗ ಕವಿಗಳೆ ಬಲ್ಲರಲ್ಲದೆಯುವತಿಯರು ಕವಿಯ ಹೃದಯವ ಕಂಡರುಂಟೆ ಪ
ಕಾಗೆ ಬಲ್ಲುದೆ ದಿವ್ಯಚೂತಫಲರಸದಿನಿಯಗೂಗೆ ಬಲ್ಲುದೆ ಸೂರ್ಯನುದಯವನ್ನುರೋಗಿ ಬಲ್ಲನೆ ಸುಧಾರಸದ ಸುಸ್ವಾದವನುಭೋಗಿ ಬಲ್ಲನೆ ಯೋಗಮಾರ್ಗ ರೀತಿಯನು ೧
ಕಣ್ಣಿಲ್ಲದವಗೆ ಕನ್ನಡಿಯಿದ್ದು ಫಲವೇನುಹೊನ್ನಿದ್ದರೇನು ಲೋಭಿಯ ಕೈಯಲಿಹೆಣ್ಣಿದ್ದರೇನು ಪೌರುಷವಿಲ್ಲದ ನರಗೆಪುಣ್ಯಹೀನಗೆ ಕನಕಶಿಲೆಯಿದ್ದರೇನು ೨
ಗಾನರಸಮಾಧುರ್ಯವನು ಬಧಿರಬಲ್ಲನೆಆನೆ ಬಲ್ಲುದೆ ಚಂದನದ ರಸವನುಮಾಣಿಕದ ಮಾಲಿಕೆಯ ಮರ್ಕಟನು ಬಲ್ಲುದೆನೀನೊಬ್ಬ ಬಲ್ಲೆ ಕೆಳದಿ ರಾಮೇಶಲಿಂಗ ೩

೪೬೨
ಕಾಮಿನಿಯರು ನೆರದೊಂದಾಗಿಪ್ರೇಮದಿ ಧವಳಾರವ ಪಾಡಲುಶ್ರೀ ಮಹಾಲಕ್ಷ್ಮಿ ಜಯವೆಂದುಜಯವೆಂದುಶ್ರೀಕೃಷ್ಣರಾಯಗೆಹೇಮದಾರತಿಯ ಬೆಳಗಿರೆ ೧
ಸಿಂಧುರಗಮನೆಯರತಿ ಹರುಷದಲಿಚಂದದಿ ನಲಿದಾಡುತ ಪಾಡುತಇಂದಿರಾರಮಣ ಜಯವೆಂದುಜಯವೆಂದುಶ್ರೀ ಮಹಾಲಕ್ಷ್ಮಿಗೆಕುಂದಣದಾರತಿಯ ಬೆಳಗಿರೆ ೨
ಕರದ ಕಂಕಣ ಝಣಝಣರೆನಲುಗುರುತು ಚವಲುಗಾಡಲು ಮುತ್ತಿನಕೊರಳಹಾರಗಳು ಹೊಳೆಯಲುಹೊಳೆಯಲುಶ್ರೀಕೃಷ್ಣರಾಯಗೆಕುರುಜಿನಾರತಿಯ ಬೆಳಗಿರಿ೩
ಹಾರಪದಕ ಕಂಕಣದವರು ವೈ-ಯ್ಯಾರದ ಹೊಸ ಹರೆಯದಂಗನೆಯರುರಾರಾಜಿಪ ಚಂದ್ರಮುಖಿಯರುಮುಖಿಯರುಶ್ರೀ ಮಹಾಲಕ್ಷ್ಮಿಗೆಕುರುಜಿನಾರತಿಯ ಬೆಳಗಿರೆ ೪
ಕಸ್ತೂರಿ ತಿಲಕದ ಸೊಬಗಿಯರು ಸು-ವೃತ್ತಸ್ತನತಟದ ಜವ್ವನೆಯರುಆರ್ತಿಯಿಂ ಪಾಡಿ ಪೊಗಳುತಪೊಗಳುತಶ್ರೀ ಕೃಷ್ಣರಾಯಗೆಮುತ್ತಿನಾರತಿಯ ಬೆಳಗಿರೆ೫
ಬೆರಳುಂಗುರ ಥಳ ಥಳಥಳಿಸಿಸಿರಿಮೊಗದೊಳು ಕಿರಿಬೆಮರೊಗೆಯಲುಹರುಷದಿ ಪಾಡಿ ಪೊಗಳುತಪೊಗಳುತಲಿಶ್ರೀ ಮಹಾಲಕ್ಷ್ಮಿಗೇಸರಸಿಜದಾರರತಿಯ ಬೆಳಗಿರೆ ೬
ಕನ್ನಡಿಗದಪಿನ ಚದುರೆಯರು ಚೊಕ್ಕಚಿನ್ನದ ಸರಪಣಿಯಿಟ್ಟಂಗನೆಯರುಚೆನ್ನಾಗಿ ಪಾಡಿ ಪೊಗಳುತಪೊಗಳುತಕೆಳದಿಯ ಶ್ರೀ ಕೃಷ್ಣಗೆರನ್ನದಾರತಿಯ ಬೆಳಗಿರೆ ೭

೪೬೩
ಗಂಗೆಯ ಶಿರದಿ ಪೊತ್ತವಗೆಮಂಗಳಪ್ರದಗೆ ಶಂಕರಗೆಪುಂಗವರಾಜವಾಹನಗೆಮಂಗಳಾರತಿಯನೆತ್ತಿರೆ ೧
ಪಾಕಾರಿ ಪೂಜಿತಪಾದಗೆಮಾಕಾಂತನೇತ್ರಾರ್ಚಿತಗೆಶ್ರೀಕರಗೇಕೋರುದ್ರಗೆಏಕಾರತಿಯನೆತ್ತಿರೆ ೨
ಪಂಚಬಾಣನ ಗೆಲಿದವಗೆ ತ್ರಿಪಂಚನೇತ್ರಗೆ ಪಂಚಮುಖಿಗೆಪಂಚಕೃತ್ಯಾಧೀಶ್ವರಗೇಪಂಚಾರತಿಯನೆತ್ತಿರೆ೩
ಕಮಲಸಂಭವನುತಿ ಪಾತ್ರಗೆಕಮಲಾಪ್ತಕೋಪ್ತಕೋಟಿಭಾಸುರಗೆಕಮಲಾಹಿತ ಭೂಷಣಗೆಕಮಲದಾರತಿಯನೆತ್ತಿರೆ ೪
ನಾಗೇಂದ್ರಚರ್ಮಾಂಬರಗೆನಾಗೇಂದ್ರ ಹಾರಶೋಭಿತಗೆನಾಗೇಂದ್ರ ಶಯನಸನ್ನುತಗೆನಾಗಾರತಿಯನೆತ್ತಿರೆ ೫
ಸರ್ಪಕಂಕಣ ಸದಾಶಿವಗೆಮುಪ್ಪುರವನು ಗೆಲಿದವಗೆಕಪ್ಪು ಗೊರಲಗೆ ಕಾಮದಗೆಕಪ್ಪುರದಾರತಿಯನೆತ್ತಿರೆ ೬
ಜಯ ಜಯ ಕೆಳದಿ ಪುರೇಶಜಯ ಜಯ ಶ್ರೀ ಪಾರ್ವತೀಶಜಯ ಜಯ ಶ್ರೀ ರಾಮೇಶ್ವರಜಯವೆಂದಾರತಿಯನೆತ್ತಿರೆ೭

೪೬೪
ಗಿರಿರಾಜಕುಮಾರಿ ದೇವಿಪರಮ ಮಂಗಳಗೌರಿಪರಮ ಪಾವನೆ ಶ್ರೀಹರಿ ಸೋದರಿಸುರರಿಪು ಮಧುಕೈಟಭ ಸಂಹಾರಿಶ್ರೀಕರಿ ಗೌರಿ ಹಸೆಗೇಳು ಹಸೆಗೇಳು ೧
ಕುಂಭಸಂಭವವಿನುತೆ ದೇವೀಶಾಂಭವಿ ಶುಭಚರಿತೆಜಂಭಭೇದಿ ಮುಖ ಸುರವರಪೂಜಿತೆಕಂಬುಕಂಠಿ ಶುಭಗುಣಗಣ ಶೋಭಿತೆಲೋಕೈಕಮಾತೆಹಸೆ೨
ಸರಸಿಜದಳನಯನೆ ದೇವಿಸರಸಕುಂದರದನೆಸರ್ವಮಂಗಳೆ ಸರ್ವಾಭರಣೆಸುರಮುನಿ ಪರಿಭಾವಿತೆ ಶುಭಚರಣೆಕರಿರಾಜಗಮನೆ ಹಸೆ ೩
ಶರನಿಥಿಗಂಭೀರೆ ದೇವಿಸರಸಮೋಹನಾಕಾರೆಕರುಣಸಾಗರ ಕನಕಾಂಬರಧರೆಪರಿಪಾಲಿತ ನಿರ್ಜರ ಪರಿವಾರೆಮಣಿಮಯಹಾರೆ ಹಸೆ೪
ಪನ್ನಗನಾಭವೇಣಿ ದೇವಿಸುನ್ನತೆ ರುದ್ರಾಣಿ ಕನ್ನಡಿಗದಪಿನ ಶಿವೆ ಶರ್ವಾಣಿಲೋಕೈಕ ಜನನಿ ಹಸೆ ೫
ನಗರಧರಪರಿಪಾಲೆ ದೇವಿಸುಗುಣೆಗಾನಲೋಲೆಅಗಣಿತಮಹಿಮಾಸ್ಪದೆ ಶುಭ ಲೀಲೆಮೃಗಮದ ತಿಲಕ ವಿರಾಜಿತೆ ಪಾಲೆಕುಂಕುಮನಿಟಿಲೆ ಹಸೆ ೬
ಪಂಕಜ ಸಮಪಾಣಿ ಶ್ರೀ ಹರಿ-ಣಾಂಕವದನೆ ವಾಣಿಅಂಕಿತಮಣಿಗಣ ಭೂಷಣ ಭೂಷಣಿಶಂಕರೀ ಕೆಳದಿಪುರವಾಸಿನಿಪಾರ್ವತಿ ಕಲ್ಯಾಣಿ ಹಸೆ ೭

೪೩೩
ಗಿರಿರಾಜತನೂಜಾತೆವೇದ ವಿಖ್ಯಾತೆಪರಮಂಗಳದಾತೆ ಪದ್ಮಜಮುಖಿ ಸುರಗಣ ಪರಿಪೂಜಿತೆಶಂಕರಪ್ರೀತೆಧುರದಿ ಮಧುಕೈಟಭರ ವಧಿಸಿ ವಿ-ಸ್ತರದ ಜಲದೊಳು ಸ್ಥಿರಮೆನಲು ಭಾ-ಸುರ ಧರಿತ್ರಿಯ ನಿಲಿಸಿ ಸರ್ವಾಮರರಪೊರೆದಮರೇಂದ್ರಸನ್ನುತೆಲೋಕೈಕಮಾತೆ ೧
ನಾರದಗಾನಲೋಲೆಶ್ರೀಚಕ್ರಸಂಚಾರಿಣಿ ಶುಭಲೀಲೆದಿವ್ಯಮೌಕ್ತಿಕಹಾರೆ ಕುಂಕುಮನಿಟಿಲೆಮುಕುರಕಪೋಲೆಧೀರಸುರಪತಿಮುಖ್ಯಸುರಪರಿವಾರ ಜಯವೆಂದಾರುತಿರೆ ಜುಝೂರ (?) ಮಹಿಷಾಸುರನ ಮರ್ಧಿನಿಮೂರು ಲೋಕವ ಪೊರೆವ ಮಂಗಲೆಕಸ್ತೂರಿಫಾಲೆ ೨
ಎಸಳುಗಂಗಳ ನೀರೆಪರಾತ್ಪರೆಮಿಸುಪ ಕಂಕಣಹಾರೆಬಂದುಗೆಯ ಹೂವಿನಂತೆಸೆವಸುಶೋಣಾಧರೆಬಿಸಜಬಾಣನ ಪೊಸಮಸೆಯ ಕೂರಸಿಯೆನಲು ಮಿಸುಮಿಸುಪ ಕಂಗಡೆಎಸವ ಪೊಸವೆಳಗಿಂದ ದೆಸೆಗಳವಿಸರವನು ಪಸರಿಸುವ ಶ್ರೀಕರೇಮೋಹನಾಕಾರೇ೩
ಸುಲಲಿತ ಮಧುರವಾಣಿಮೋಹನಕರಜಲರುಹ ಸದೃಶಪಾಣಿಮಂಗಲಸೂತ್ರೋ-ಜ್ವಲೆ ಹರಿ ನೀಲವೇಣಿಸಿಂಹವಾಹಿನಿನಳನಳಿಪ ನಳಿತೋಳ ಥಳ ಥಳಥಳಿಸುವಳಿಕುಂತಳದದರಸಮಗಳದತಿಲಸುಮನಾಸಿಕದಅರಗಿಳಿನುಡಿಯರುದ್ರಾಣಿ ಗುಣಮಣಿಪರಮಕಲ್ಯಾಣಿ೪
ಸರಸಿಜದಳನಯನೆಸಾಮಜಯಾನೆ ಸರಸಮಂಗಲಸದನೆಶಂಕರಿಪೂರ್ಣೆಶರದಿಂದುನಿಭವದನೆಕೋಕಿಲಗಾನೆಪರಮಪಾವನತರ ಸು-ವರದಾನದಿಯ ತೀರದಿ ಮೆರವ ಕೆಳದಿಯಪುರದ ರಾಮೇಶ್ವರನ ವಲ್ಲಭೆಯೆನಿಸಿ ಭ-ಕ್ತರ ಪೊರೆವ ಪಾರ್ವತಿಕಲಹಂಸಗಮನೆ ಪರಮರುದ್ರಾಣಿ೫

೪೩೪
ಗಿರೀಶಮಾಮವ ಕರುಣ ಸುಧಾಬ್ಧೆಹರಶಂಕರ ಪಾವನ ವೇಷ ರಜತಾದ್ರಿವರವರ ತುಹಿನಾಂಶು ಶೇ-ಖರವಿಭೋ ಮಹೇಶ್ವರ ಪ
ಸುರತಟಿನೀಧರ ನಗಜಾಪಕಮಲಾಪತಿ ಸನ್ನುತ ಘನರೂಪಸ್ಫುರದುರಗಾಧಿಪ ಸುಕಲಾಪಸಮುದಂಚಿತ ಮಂಗಲತರರೂಪ೧
ಘನತರ ತ್ರಿಪುರ ದಹನ ಶೂರವೃಷವಾಹನ ದುರ್ಗಾರ್ಧಶರೀರಮದನಾಂತಕವಾರಿಧಿಗಂಭೀರ ೨
ಪ್ರವಿಮಲ ಮೃಗಧರ ಸರ್ವೇಶಶಮಿತಾಂಧಕ ಸಾಧಿತ ಬಹುದೋಷಾಶಶಿಕಂಧರ ಬಂಧುರ ಶುಭಕೋಶಸಾಕ್ಷಾತ್ಕೆಳದೀಶ್ವರ ರಾಮೇಶ ೩

ಅಂಕಿತ ರಹಿತ ಹಾಡುಗಳು
೪೭೧
ತುಳಸಿಯ ವೃಕ್ಷಗಳ ದಳದಳಗಳ ಮೇಲೆನೆಲಸಿಹನು ಹರಿಯು ಮುದದಿಂದಮುದದಿ ತುಲಸಿಯ ಪೂಜೆಗಳಮಾಡಬೇಕು ಸುಜನರು ೧
ತುಲಸಿಯ ಮೂಲದೆ ನದಿಗಳುತುಲಸಿಯ ದಳದೊಳೆ ಶ್ರೀಹರಿಯುತುಲಸಿಯ ಶಾಖೆಯೊಳೆ ಸುರರೆಲ್ಲಾನೆಲೆಸಿಹರು ಶ್ರೀತುಲಸಿಯಮಹಿಮೆಗೆಣೆಯುಂಟೆ ೨
ವೃಂದಾವನ ತುಲಸಿಗೆಒಂದು ಪ್ರದಕ್ಷಿಣವಚಂದದಿ ರಚಿಸಿದವರಿಗೆಭೂಮಿಯ ಸುತ್ತಿ ಬಂದಂಥಾಪುಣ್ಯ ದೊರೆವುದು ೩
ಜಲದೊಳು ಶೋಧಿಸಿದತುಲಸಿ ದಳವನೆ ಹಾಕಿಆ ಜಲವನು ಶಿರದಿ ತಳಿದರೆತಳಿದರೆ ಗಂಗಾದಿಸಲಿಲದಿ ಮಿಂದ ಸುಫಲವು೪
ಭೌಮ ಭಾರ್ಗವ ವಾರದಿಶ್ರೀ ಮಹಾಲಕ್ಷುಮಿಯುನೇಮದಿ ತುಲಸಿ ವನದೊಳುವನದೊಳಗಿರುವಳು ಧೀಮಂತರುಕೊಯ್ಯರದರಿಂದ ೫
ಇಳೆಯೊಳಗುಳ್ಳಂಥಾಹಲವು ತೀರ್ಥಗಳಿಹವುತುಲಸಿಯ ಮೂಲದೆಡೆಯಲಿಎಡೆಯಲಿ ತನ್ರ‍ಮತ್ತಿಕೆಯತಳೆವುದು ಬಲ್ಲ ಸುಜನರು ೬
ಅರುಣೋದಯದಲೆದ್ದುಸಿರಿ ತುಲಸಿಯ ದರುಶನವವಿರಚಿಪುದು ಬಲ್ಲ ಸುಜನರುಸುಜನರು ಪಾತಕಹರಿವುದು ಹರಿಯ ಕೃಪೆಯಿಂದಾ ೭
ಸಾರಿಸಿ ರಂಗವಲಿಯನೇರಗೈದಿಕ್ಕಿದನಾರಿಯರಿಗೈದೆತನವನುತನವನು ವೃಂದಾವನಶ್ರೀರಮಣಿಯಿತ್ತು ಪೊರೆವಳು ೮
ಮುತ್ತೈದೆತನವನುಪುತ್ರಸಂತಾನವನಿತ್ಯ ಸೇವೆಯನು ರಚಿಸಲುರಚಿಸಲು ತುಲಸೀದೇವಿಇತ್ತು ರಕ್ಷಿಪಳು ಕೃಪೆಯಿಂದಾ೯

೪೬೫
ದೇವಾದಿ ದೇವಗೆಭಕ್ತ ಸಂಜೀವಗೆಶ್ರೀ ವಿಘ್ನೇಶ್ವರಗೆ ಜಯವೆಂದುಜಯವೆಂದು ಪಾರ್ವತೀಪುತ್ರಗೆಪಾವನಗಾತ್ರಗೆಫಣಿಯಜ್ಞ ಸೂತ್ರಗೆಹೂವಿನಾರತಿಯ ಬೆಳಗಿರೆ ೧
ಸಿಂಧುರಗಮನೆಯರುಕುಂದಾಭರದನೆಯರುಇಂದುಶೇಖರಗೆ ಜಯವೆಂದುಜಯವೆಂದು ಇಂದ್ರಾದಿವಂದ್ಯಗೆನಿರ್ಜಿತಚಂದ್ರಗೆ ಸದ್ಗುಣಸಾಂದ್ರಗೆಕುಂದಣದಾರತಿಯ ಬೆಳಗಿರೆ ೨
ವಾರಣದವನೆಗೆಧೀರಹೇರಂಬಗೆರಾವಣಾಸುರನ ಜಯಿಸಿದಜಯಿಸಿದಶರಣ ಮಂದಾರಗೆಶರಧಿ ಗಂಭೀರಗೆಕೌಸ್ತುಭಹಾರಗೆಮೇರುವೆಯಾರತಿಯ ಬೆಳಗಿರೆ ೩
ಸುರರು ಹೂಮಳೆಗರೆಯೆತರುಣಿಯರ್ಪಾಡಲುಸುರದುಂದುಭಿ ಮೊಳಗೆ ಜಯವೆಂದುಜಯವೆಂದುಸಿಂಧುರವರ್ನಗೆಶೂರ್ಪಸುಕರ್ನಗೆಸರ್ವತ್ರಪೂರ್ಣಗೆಕುರುಜಿನಾರತಿಯ ಬೆಳಗಿರೆ ೪
ಪಂಕಜಾಂಬಿಕೆಯರುಭೋಂಕನೆ ಪಾಡಲುಶಂಕರನ ಪುತ್ರ ಜಯವೆಂದುಪಾವನವೇಷಗೆವರದ ಗಣೇಶಗೆಕುಂಕುಮದಾರತಿಯ ಬೆಳಗಿರೆ ೫
ರಮ್ಯವಾದಲತಿಗೆಯರಸವ ಪಾದಕೆ ತೊಡೆದುಕಮ್ಮೆಣ್ಣೆಯನು ಕಂಠಕನುಲೇಪಿಸಿಸುಮ್ಮಾನದಿಂದ ಪಟವಾಸ ಚೂರ್ಣವತಳಿದುನಿಮ್ಮ ಪೂಜಿಸುವೆನು ಗೌರಿದೇವಿ ೬
ವರಧೂಪದೀಪ ಪರಿಪರಿಯ ನೈವೇದ್ಯ ಭಾ-ಸುರ ಸುತಾಂಬೂಲ ಸೀಗುರಿದರ್ಪಣನಿರುಪಮ ಛತ್ರ ಚಮರಾದಿ ಸೇವೆಯನು ಸ್ವೀ-ಕರಿಸಿ ಪಾಲಿಸೆ ಎನ್ನ ಗೌರಿ ದೇವಿ ಜಯ ೭
ಇಂತು ಪರಿಪರಿಯ ರಾಜೋಪಚಾರಗಳಿಂದಸಂತತವು ನಿಮ್ಮ ಪಾದವ ಪೂಜಿಸಿನಿಂತು ಕರವನೆ ಮುಗಿದು ಧ್ಯಾನಿಸುತ ನಲಿನಲಿದುಸಂತಸದಿ ನಿಮ್ಮ ಸ್ತುತಿಸುವೆನು ಗೌರಿ ಜಯ ೮
ಮತ್ತೇಭಗಮನೆಗೆ ಮಾಹೇಂದ್ರಸನ್ನುತೆಗೆಅತ್ಯಂತ ಪರಮ ಪಾವನ ಚರಿತೆಗೆನಿತ್ಯ ಸೇವೆಯನು ಮಾಡುವರ ರಕ್ಷಿಸುವಂಥಪ್ರತ್ಯಕ್ಷಮೂರ್ತಿ ಶ್ರೀಗೌರಿ ನಿಮಗೆ ಜಯ೯
ಕಲಕೀರವಾಣಿಗೆ ಕಾಳಾಹಿವೇಣಿಗೆಕಲಧೌತಕಮಲ ಶೋಭಿತಪಾಣಿಗೆನಳಿನದಳನೇತ್ರೆಗೆ ನಾರಾಯಣೆಗೆ ನಮ್ಮ-ನೊಲಿದು ರಕ್ಷಿಸುವಂಥಾ ಶ್ರೀಗೌರಿಗೆ ಜಯ ೧೦
ಕುಂಭಸಂಭವನುತೆಗೆ ಜಂಭಾರಿಪೂಜಿತೆಗೆರಂಭಾಸುನರ್ತನಪ್ರಿಯೆಗೆ ಶಿವೆಗೆರಂಭೋರುಯುಗಳೆಗೆ ಬಿಂಬಾಧರೆಗೆ ನಮ್ಮಬೆಂಬಿಡದೆ ರಕ್ಷಿಸುವ ಗಿರಿಜಾತೆಗೆ ಜಯ ೧೧
ಮುತ್ತೈದೆತನಗಳನು ನಿತ್ಯಸಂಪದಗಳನುಉತ್ತಮಾಂಬರ ಛತ್ರಚಾರಮವನುಅತ್ಯಂತ ಪ್ರೀತಿಯಿಂದಿತ್ತು ರಕ್ಷಿಸಿ ಭಕ್ತವತ್ಸಲೆ ಶ್ರೀ ಗೌರಿದೇವಿ ತಾಯೆ೧೨
ಎಂದೆಂದು ಈ ಮನೆಗೆ ಕುಂದದೈಶ್ವರ್ಯವನುಚಂದವಾಗಿಹ ಪುತ್ರ ಪೌತ್ರರನ್ನುಸಾಂದ್ರಕೃಪೆಯಿಂದಿತ್ತು ಸಲಹೆ ಕೆಳದಿಯ ಪುರದಿನಿಂದ ಶ್ರೀ ಪಾರ್ವತಾದೇವಿ ತಾಯೆ ಜಯ ೧೩

೪೩೭
ಧ್ಯಾನವನೆ ಮಾಡಿ ನವರತ್ನ ಸಿಂಹಾಸನಸಾನಂದದಿಂದ ನಿಮಗರ್ಪಿಸುವೆನುಶ್ರೀ ನಿಧಿಯೆ ಪಾದ್ಯಾಘ್ರ್ಯ ಮಧುಪರ್ಕಗಳನು ಸು-ಮ್ಮಾನದಿಂದರ್ಪಿಸುವೆ ಗೌರಿ ದೇವಿ ಜಯ ೧
ತುಂಗಭಧ್ರಾ ಸರಸ್ವತಿ ಯಮುನೆ ಕಾವೇರಿಗಂಗಾದಿ ಶುಭತೀರ್ಥ ಸಲಿಲದಿಂದಮಂಗಲಸ್ನಾನವನೆ ರಚಿಸಿ ಜಡೆವೆಣೆದು ಕುಸುಮಂಗಳಂ ಮುಡಿಗೆ ಮುಡಿಸುವೆನಂಬಿಕೆ ೨
ಚಂದ್ರಗಾವಿಯ ಸೀರೆ ಕುಪ್ಪಸವ ತೊಡಿಸುವೆನುಚಂದದಿಂದರಿಸಿನವ ಲೇಪಿಸುವೆನುಚಂದ್ರಕಸ್ತೂರಿ ತಿಲಕ ಕುಂಕುಮದ ರೇಖೆಯನುಅಂದದಿಂದಿಡುವೆ ಶ್ರೀ ಗೌರಿ ನಿಮಗೆ೩
ಕಣ್ಣ ಕಪ್ಪಿಟ್ಟು ಕರಯುಗಕೆ ಗಂಧವ ತಿವುರಿಚಿನ್ನದಾಭರಣ ನಿಕರವನಿಡುವೆನುರನ್ನ ದುಂಗುರ ಹಾರ ಪದಕದಿಂದ ಶೃಂಗರಿಸಿನಿನ್ನ ಪದಯುಗವ ಪೂಜಿಪೆನು ಗೌರಿ ಜಯ೪
ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಯುಕರವೀರ ಚಾರು ಪುನ್ನಾಗ ಪೂಗಸಿರಿಸ ಸುರಹೊನ್ನೆ ಸಂಪಗೆ ಮೊದಲಾದ ಪೂಸರವ ಸಿರಿಮುಡಿಗೆ ಮುಡಿಸುವೆನು ಗೌರಿ ಜಯ ೫

೪೬೬
ನರರಿಗೆಲ್ಲಿಯ ಭವಬಂಧ ಜ್ಞಾನಿಗಳಾದನರರಿಗೆಲ್ಲಿಯ ಭವಬಂಧತರಣಿಬಿಂಬವ ತಮಮುಸುಕಲು ಬಲ್ಲುದೆಹರಹರ ಪಾಹಿ ಶಂಕರ ರಾಮೇಶ್ವರನೆಂಬ ಪ
ಸರಸಿಜಾಪ್ತನ ಕರಗಳೊಳು ಬಲುಪರಮಾಣುಗಳು ವರ್ತಿಸುವೊಲುಪರಿಪೂರ್ಣಬ್ರಹ್ಮವೊಂದರೊಳು ಬ್ರಹ್ಮಾಂಡಗಳಿರುವವನಂತ ಕೋಟಿಗಳೆಂದು ತಿಳಿದಂಥಾ೧
ಬಿಂದಿಗೆ ಬಿಲುಬಿಲೆ(?) ಗಳನಂದುನಬಂದಂತೆ ಸೃಜಿಸಿ ಮತ್ತದನುಪೊಂದಿಸುವಂತೆ ವಿಶ್ವವನು ಪುಟ್ಟಿಸಿ ಲೀಲಾಸ್ಪಂದದಿಂದಡಗಿಪನೀಶನೆಂದರಿದಂಥಾ೨
ವಿರುಪ ಕಾಂಚನಮೋರಂತೆ ನಾನಾಪರಿಯ ಆಭರಣವಾದಂತೆಪರಮಾತ್ಮನೋರ್ವನನೇಕನಾಮಂಗಳಧರಿಸಿಹ ಸರ್ವವು ಬ್ರಹ್ಮವೆಂದರಿದಂಥಾ೩
ಇರುವುದೀಲೋಕದೊಳೆರಡು ತಮ್ಮ ಸಂಗಡಬರುವುದು ಪರಲೋಕಕೆರಡುಇರುವುದನೇ ಇಟ್ಟು ಬರುವುದು ಬಯಸುತಪರಹಿತಚರಿತದಿ ನಿರುತ ವರ್ತಿಸುವಂಥ೪
ಸಾಸಿರದಳ ಕಮಲದೊಳ್ ಇಹಭಾಸುರ ಪ್ರಣವ ಪೀಠದೊಳುಈ ಸಕಲಕೆ ಸಾಕ್ಷಿಕನಾದ ಕೆಳದಿ ಪು-ರೇಶ ರಾಮೇಶನ ನಿರತ ಧ್ಯಾನಿಸುವಂಥಾ೫

೪೫೫
ನಾ ಕರೆವುದಕಿಂತತಾನಾಗಿ ಕರೆವಳ ಕಂಡರೆ ಸೊಗಸುನಾನೆ ನೀನುನೀನೇ ನಾನುಏನನುಮಾನವೋ ಬಾರೆಂದೆನುತಲಿ ಪ
ಕಣ್ಣ ಸನ್ನೆಯ ಮಾಡಿ ಕರೆವುತಬಣ್ಣಿಸಿ ಬೇಟವ ತೋರುತ್ತನಿನ್ನನಾ ಬಿಡೆನೆಂದು ನಗುತ ಮಾತಾಡುತ ೧
ನೆಂಟರಿಷ್ಟರು ಕಾಣದಂದದಿ ಬಂದುಗಂಟೆರಡನು ಸಡಲಿಸುತಲಿ ನಿಂದುಬಂಟನಾದರೆ ನೀನೆರೆಬಾರೆಂದು ೨
ಕುಂಭ ಕುಚಂಗಳ ತೋರುತ್ತತಾಂಬೂಲವ ಹಸಮಾಡುತ್ತನಂಬುಗೆ ರಾಮೇಶ್ವರನಿದಕೆನುತ ೩

೪೭೨
ನಾನೇನಂದನೆ ಭಾವಕಿ ಒಳ್ಳೆಆನಂದಮಯ ಹರಿಹರ ಮುನಿದಿತ್ತಬಾರ ಪ
ರಮಣಿ ಕುಚ ಕುಂಕುಮಾಂಕಿತ ವಕ್ಷವಾರಿಧಿಶಯನ ಶ್ರೀವಾಸವಾರ್ಚಿತನಾರದನುತ ಪಂಕಜದೈತ್ಯ ಸಂ-ಹಾರ ಶ್ರೀ ಹರಿಹರನೆಂದೆನಲ್ಲದೆಮಾರಮರ್ಧನನೆಂದೆನೆ ಮೆರೆವ ಸರ್ಪಹಾರ ಕುಂಡಲನೆಂದೆನೆ ಶೋಭಿಸುವ ವೈಯ್ಯಾರ ವಿಭೂಷಣ ಶಂಕರನೆಂದೆನಲ್ಲದೆ ೧
ಮಡದಿಯೋರ್ವಳ ನುಡಿ ಕಳ್ಳನೆಂದೆನಲ್ಲದೆ ಮಿಗೆಜಡೆದಲೆಯವನೆಂದನೆ ಪುಲಿದೊಗಲದೃಢದಿ ಹೊದ್ದಿಹನೆಂದೆನೆ ತ್ರೈಲೋಕ್ಯದೊಡೆಯ ಮುರಾರಿ ಮಹದೇವನೆಂದೆನಲ್ಲದೆಧರೆಯನಳೆದು ಕ್ಷತ್ರಿಯರ ಕೊಂದು ಶರಧಿಯನಿರದೆ ಕಟ್ಟಿದ ಕೃಷ್ಣ ಬಹುರೂಪವರಕವಿಗುರುವ ಕರದಿ ಪಿಡಿದು ರಕ್ಷಿಪಬಿರುದಿನ ರಾಯ ರಾವುತನೆಂದೆನಲ್ಲದೆ೨
ಗಿರಿಜಾರಮಣನೆಂದೆನೆ ಗುಹಾರಣ್ಯವಾಸಎರಡು ರೂಪದಲಿರುವ ಮೂರುತಿಯೆಂದೆ ನಾ ನಂಬಿದ-ವರಪೊರೆವ ಶ್ರೀಹರಿಹರಲಿಂಗನೆಂದನಲ್ಲದೆ೩

೪೩೫
ನಿನ್ನ ನಾನೇನೆಂದೆನೋ ರಾಮೇಶ್ವರನಿನ್ನ ನಾನೇನೆಂದೆನೋ ಸಕಲ ಲೋಕವನ್ನು ಪೊರೆವ ಪಾರ್ವತೀಶನೆಂದೆನಲ್ಲದೆ ಪ
ತಾರಕಾಸುರನ ಪುತ್ರರ ಬಾಧೆಯನು ತಾಳಲಾರದೆ ಹರಿಮುಖ್ಯ ನಿರ್ಜರರುಶ್ರೀರುದ್ರ ಸಲಹೆಂದು ಪಾದಕೆ ಮಕುಟವ-ನೂರೆ ಪೊರೆದ ತ್ರಿಪುರಾರಿಯೆಂದೆನಲ್ಲದೆ
ಊರ ಸುಟ್ಟವನೆಂದೆನೆ ಬಾಣನ ಪಡಿಹಾರಕನಿವನೆಂದೆನೆ ವಿಧಿ ಶಿರವ ಕೈ-ಯ್ಯಾರೆ ಕಡಿದನೆಂದೆನೆ ಭಕ್ತವತ್ಸಲವಾರಿಜಭವನುತಿಲೋಲನೆಂದೆನಲ್ಲದೆ ೧
ನಾರದಸಹಿತ ಮತ್ಯಾರು ಕಾಣದಂದದಿಓರುಗಲ್ಲರಸಿನ ಮನೆಗೆ ಪೋಗಿತೋರುವ ಭಿತ್ತಿಯ ಕೊರೆದಾತನಿಷ್ಟವಪೂರಿಸಿದನುಪಮಮಹಿಮನೆಂದೆನಲ್ಲದೆಚೋರರ ಗುರುವೆಂದೆನೆ ಪಾರ್ಥಚಾಪದಿಂ-ದೇರುವಡೆದನೆಂದೆನೆ ಬತ್ತಲೆಮದವೇರಿ ಕುಣಿದನೆಂದೆನೆ ಅರ್ಜುನಗೊಲಿದಾರಾಜಿಸುವ ಮಹಾನಟನೆಂದೆನಲ್ಲದೆ೨
ಸುರರು ದಾನವರೆಲ್ಲ ನೆರೆದು ವಾದಿಸಿ ಕ್ಷೀರಶರಧಿ ಮಥನವ ವಿರಚಿಸಲುಉರು ಹಾಲಾಹಲಮೊಗೆದುರುಹಲು ಸರ್ವರಪೊರೆದ ಶ್ರೀನೀಲಕಂಧರನೆಂದೆನಲ್ಲದೆಗರವ ಕುಡಿದನೆಂದೆನೆ ಪೆಣ್ಣಿತ್ತನಶಿರವನರಿದನೆಂದೆನೆ ಊರೂರೊಳುತಿರಿದುಗರುವನೆಂದೆನೆ ದುಷ್ಟ ಶಿಕ್ಷಕವರ ಕೆಳದಿಯ ರಾಮೇಶ್ವರನೆಂದೆನಲ್ಲದೆ೩

೪೩೬
ನಿನ್ನ ಸೇವೆಯನೊಂದನಿತ್ತು ಸಲಹೋಎನ್ನ ಮನ ನಿನ್ನಲ್ಲಿ ನಿಲುವಂತೆ ಮಾಡಿ ಪ
ಅನ್ನವನು ಬೇಡಿಕೊಂಬುವದೆಂತು ವಿಪುಳ ವಿಷವನ್ನು ಕುಡಿದಿಹ ನೀಲಕಂಠನೊಡನೆಸನ್ನುತಾಂಬರವ ಬೇಡುವುದೆಂತು ಕರಿಚರ್ಮ-ವನ್ನು ಪೊದೆದಿಹ ದಿಗಂಬರನೊಡನೆ ಶಂಭೋ ೧
ಮಿರುಗುವಾಭರಣಗಳ ಬೇಡಿಕೊಂಬುದೆಂತುಉರಗಕುಂಡಲಹಾರ ವಲಯನೊಡನೆಪರಮ ಭಾಗ್ಯವ ಬೇಡಿಕೊಂಡೆ ನಾನೆಂತು ವಿಧಿಶಿರದಿ ಭಿಕ್ಷವ ಬೇಡಿ ತಿರಿದುಂಡನೊಡನೆ ೨
ಕರಿತುರಗ ಮುಖ್ಯವಾಹನವ ಬೇಡುವುದೆಂತುನಿರುತ ಬಸವನ ಮೇಲೆ ಚರಿಪನೊಡನೆಕರುಣದಿಂದೆನಗೆ ಕೊಡಲೇನುಂಟೊ ಕೆಳದಿಪುರ-ದೆರೆಯ ರಾಮೇಶ ಶ್ರೀಕರ ಪಾರ್ವತೀಶ ೩

೪೬೭
ನಿನ್ನವಳ ಬಗೆಯ ಪೇಳುವೆನು ಕೇಳೋಮನ್ನಿಸೋ ಮಾನಿನೀಮಣಿಯನು ಕೃಪಾಳೋ ಪ
ಕನ್ನಡಿಯ ನೋಡಿದಳೋ ಕರುಳ ನೇವರಿಸಿದಳೋಚಿನ್ನದುಂಗುರವ ಬೆರಳೊಳಗಿಟ್ಟಳೋಕಣ್ಣಕಪ್ಪಿಟ್ಟು ತಿಲಕವ ತಿದ್ದಿಕೊಂಡಳೋರನ್ನದೊಡವುಗಳ ಸಖಿಯರಿಗೆ ಕರದಿತ್ತಳೋ ೧
ಜಾತಿಮುತ್ತಿನ ಸರವ ಹಾಕಿಕೊಂಡಳೋ ಕೊರಳ್ಗೆಜಾತಿಮಲ್ಲಿಗೆಯ ಮಾಲೆಯ ಮುಡಿದಳೋಪ್ರೀತಿಯಿಂ ಸಾಕಿದ ಗಿಣಿಯ ತರಿಸಿ ನೋಡಿದಳೋನೂತನದ ಚಂಗಾವಿ ಸೀರೆಯನೆ ನೆರಿದುಟ್ಟಳೋ ೨
ಚಿತ್ತಾರದ ಪಟದಲ್ಲಿ ನಿನ್ನ ರೂಪನೆ ಬರೆದುಅರ್ತಿಯಿಂ ಕೈಮುಗಿದು ನೋಡುತಿಹಳೋಹೊತ್ತುಗಳೆವುದಕೆ ಹರಣಲ್ಲಿ ಬಂದುನೆರದುಳುಹೊಚಿತ್ತಜನಮದಭಂಗ ಕೆಳದಿ ರಾಮೇಶಲಿಂಗ ೩

೪೭೩
ಪಲ್ಲಕ್ಕಿ ಸೇವೆಯವಧಾನ ಆಳಪಲ್ಲಕ್ಕಿಯಲಿ ಮಂಡಿಪುದು ಶಿವ ನಿಧಾನ ಪ
ಥಳಥಳಿಪ ಹೇಮನಿರ್ಮಿತವಜ್ರಮಯಚಕ್ರ-ಗಳ ಚಿನ್ನದಚ್ಚಿನ ಸಹಸ್ರಕಂಭಗಳ ನೆಲೆನೆಲೆಯ ರತ್ನದ ಕಲಶಕನ್ನಡಿ ಪತಾಕೆಗಳಇಳಿವಿಟ್ಟ ಮುತ್ತಿನ ಸರಗಳಾಒಳಹೊರಭವಂತಿಗಳ ಸುರಧಿಯ ಶ್ವೇತಾಶ್ವ-ಗಳ ಮನೋಹರಮಾದ ಮದನ ಕೈಗಳ ಸುಭುಜ-ವಲಯದೊಳ್ತಳದ ಪೂರುಷರ ಸರಪಂಸೆಗಳತೊಳಪಗಜಪಕ್ಷಿಯಗ್ರಗಳಾ ದೇವಲಲನೆಯರ ಚಾಮರದ ಕರದ ಚಲನೆಗಳಾ ೧
ವಂದಿಮಾಗಧರೆಲ್ಲ ಕರವೆತ್ತಿ ಪೊಗಳುತಿರೆದಾಂಧಣಧಣಾ ಎಂದು ಮೊಳಗೆ ಮಂಗಳವಾದ್ಯಚಂದ್ರಸೂರ್ಯರು ಜಗಜ್ಯೋತಿಯನುಪಿಡಿದಿರಲು ಗಂಧರ್ವತತಿ ಪಾಡುತಿರಲುಮುಂದೆ ರಂಭಾದಿ ಗಣಿಕೆಯರು ನರ್ತಿಸಲು ದೇವೇಂದ್ರ ಮುಕ್ತಾಛತ್ರಮಂ ಪಿಡಿದಿರಲು ಧನದಕುಂದಣದ ಪಾದುಕೆಯ ಪಿಡಿದಿರಲುವಾಯು ನಲವಿಂದ ಸೀಗುರಿಯ ವೀಜಿಸಲುಸುರರು ಮುಂದೆ ಜಯಜಯವೆಂದು ಓಲೈಸುತಿರಲು ೨
ಸುರರು ಹೂಮಳೆಗರೆಯೆ ಸುರದುಂದುಭಿಯು ಮೊಳಗೆಪರಮಋಷಿವರರು ವೇದಂಗಳನು ಪಠಿಸೆ ತುಂ-ಬುರನಾರದರು ವೀಣೆಯನು ಬಾಜಿಸಲು ಗಣನಿ-ಕರ ಖಡ್ಗಶರವ ಪಿಡಿದಿರಲುಸರಸಿಜೋದ್ಭವನು ನಿಮ್ಮುನ್ನತಿಯನರುಹುತಿರೆಸುರರಾಜಮಂತ್ರಿ ಸಮಯವ ಸೂಚಿಸುತಿರಲುವರಕೆಳದಿಪುರವಾಸ ರಾಮೇಶ ಜಯವೆಂದುಹರಿ ಹಸ್ತಲಾಘವನು ಕೊಡಲು ಗೌರಿಹರುಷದಿಂ ಮುಂಬಿನೊಳು ರಂಜಿಸುತ್ತಿರಲು ೩

೪೩೮
ಪಾಲಯಮಾಂ ಪರಮೇಶಚಿತಕಾಲಿ ಸಂತತಮಂಬಿಕೇಶಭೂರಿಲೀಲ ಶಂಕರವಿಯತ್ಕೇಶಕರುಣಾಲಯಹೃತಪಶುಪಾಶಧೃತಶೂಲ ವಿಶಾಲ ಕಪಾಲ ಕರಾಲಕಂ-ಕಾಲಿಕಾಕೂಲ (?) ವಿಲೋಲಾಸ್ಥಿಮಾಲಾ ಪ
ವಾರಣಾಸುರ ಚರ್ಮಚೇಲಸುರವಾರಸೇವಿತ ಗಾನಲೋಲಭಕ್ತಾಧಾರ ಸಕಲ ಜಗನ್ಮೂಲನಿರ್ವಿಕಾರ ಮೃಕಂಡು ಕಸಾಲಹಾರ ಹೀರ ಮಂದಾರ ಪಟೀರ ನೀಹಾರಗೋಕ್ಷೀರ ಕರ್ಪೂರ ಸುಧಾರಸಗೌರ೧
ವ್ಯೋಮತರಂಗಿಣೀಜೂಟಜಿತಕಾಮಪಾಲಿತ ಸರ್ವಖೇಟವಿತತಾಮಲಾಂಬರ ಪುಷ್ಪವಾಟರಘುರಾಮಪೂಜಿತ ಪಾದಪೀಠಪೂರ್ಣಕಾಮಾತಿಧಾಮಾಭಿರಾಮ ನಿಸ್ಸೀಮಸುತ್ರಾಮ ಮುಖ್ಯಾಮರಸ್ತೋಮಲಲಾಮ ೨
ಗೋಪತಿರಾಜಿತುರಂಗಘೋರಪಾಪಾಂಧಕಾರಪತಂಗದಿವ್ಯತಾಪಸಹೃದಯಾಬ್ಜಭೃಂಗವಿಶ್ವವ್ಯಾಪಕನಿಗಮಾಂತರಂಗಯಾಮಿನಿಪಕಲಾಪಾದ್ರಿಚಾಪರಮಾಪತಿರೂಪನಿರ್ಲೇಪ ಕೆಳದಿ ರಾಮೇಶ ಚಿದ್ರೂಪ ೩

೪೭೪
ಪಾಲಿಸೆನ್ನನು ಪದ್ಮಪತ್ರ ವಿಶಾಲಲೋಚನೆ ಜಾಹ್ನವಿಶೈಲಜಾತಾಭಗಿನಿಮಂಗಳೆ ಮೂಲಮಂತ್ರ ಸ್ವರೂಪಿಣಿ ಪ
ಹರನ ಜಡೆಯಿಂದಿಳಿದು ಬ್ರಹ್ಮನ ಕರದ ಪಾತ್ರೆಯೊಳ್ನೆಲೆಸಿದೆಸುರರ ಸಂರಕ್ಷಿಸಲು ಭರದಿಂ ಸ್ವರ್ಗಲೋಕವ ಸಾರಿದೆಧರೆಯ ಭಾರವ ತೊಳೆಯಲಲ್ಲಿಂ ಭರದಿ ಸುರಗಿರಿಗೈದಿದೆಹರುಷದಲಿ ಹಿಮಗಿರಿಯ ಶೃಂಗದಿ ಪರಿದು ಪಾವನ ಮಾಡಿದೆ೧
ವರ ಭಗೀರಥ ತರಲು ಕಾಶಿಯ ಪುರವರದಿ ನೀ ನೆಲಸಿದೆಥರಥರದ ಪ್ರಾಕಾರ ಮಣಿಗೋಪುರದ ಸಾಲೊಳಗೊಪ್ಪಿದೆನರರು ಮಾಡಿದ ಪಾಪರಾಶಿಯ ತೊಳೆದು ಪಿತೃಗಳ ಸಲಹಿದೆಹರಿಗೊಲಿದು ಮಣಿಕರ್ಣಿಕಾಖ್ಯೆಯ ಧರಿಸಿ ಜಗದೊಳು ತೋರಿದೆ ೨
ಮುತ್ತಿನಾರತಿ ಎತ್ತಿ ನಲಿವುದ ಉತ್ತಮದ ಬಾಗಿನವನುಮತ್ತಕಾಶಿನಿಯರಿಗೆ ಕೊಡುತಲಿ ಅರ್ತಿಯಿಂ ಶೋಭನವನುಚಿತ್ತಶುದ್ಧದಿ ಪಾಡಿ ಪೊಗಳಿ ಸಮೃತ್ತೆ ಜಾಹ್ನವಿ ನಮ್ಮನುಅರ್ತಿಯಿಂ ಸಲಹೆಂಬ ಸ್ತ್ರೀಯರ ಮೊತ್ತವನು ನಾ ಕಂಡೆನು ೩
ಚಾರುಮಣಿ ಕೋಟೀರಕುಂಡಲಿ ಹಾರಮಣಿಮಯ ನೂಪುರೆವೀರಮುದ್ರಿಕೆ ಕಡಗ ಕಂಕಣದಿಂದಲೊಪ್ಪುವ ಶ್ರೀಕರೆಹಾರ ಪದಕ ಸಮೂಹ ಕಾಂಚೀದಾಮ ವೈಭವ ಭಾಸುರೆಭೂರಿ ಮರಕತ ರತ್ನಮಾಲ್ಯ ಕೇಯೂರ ಭೂಷಣ ಭಾಸ್ವರೆ ೪
ಆಣಿ ಮುತ್ತಿನ ಮೂಗುತಿಯು ಕಟ್ಟಾಣಿ ಗುಂಡಿನ ಸರಗಳುಮಾಣಿಕವು ಬಿಗಿದಿರ್ದ ರಾಗಟೆ ಚೌರಿ ಪೊಸ ಬಾವಲಿಗಳುಕ್ಷೋಣಿ ಗತಿಶಯವಾದ ಮುತ್ತಿನ ಮಲಕು ಮೋಹನ ಸರಗಳು ಕಲ್ಯಾಣಿ ಗಂಗಾದೇವಿಗೆಸೆದವು ಪರಿಪರಿಯ ಭೂಷಣಗಳು ೫
ಕಾಲಸರಪಣಿ ಉಂಗುರವು ಅಣಿವೆಟ್ಟು ಪಿಲ್ಲಿಯ ಸಾಲ್ಗಳುಮೇಲೆನಿಪ ವೊಡ್ಯಾಣ ಕಿಂಕಿಣಿ ಗೆಜ್ಜೆಮೊಗ್ಗೆಯ ಸರಗಳುತೋಳಬಳೆ ಭುಜಕೀರ್ತಿ ಹಿಂಬಳೆ ಚಳಕೆಮಣಿದೋರೆಗಳು (?)ಮೇಲೆ ರಂಜಿಪ ನಿಮ್ಮ ನೋಡಿ ಕೃತಾರ್ಥವಾಯ್ತೀಕಂಗಳು ೬
ಗಂಗೆ ಲಿಂಗಮಯಾಂಗೆ ಶುಭತರಂಗೆ ಜಾಹ್ನವಿ ನಿರ್ಮಲೆರಂಗದುದ್ಘತರಂಗ ಶ್ರೀಕರ ಪಾವನೀಕೃತ ಭೂತಲೆಭಂಗಿತಾಮಯಸಂಘೆ ಮಂಗಲಸೂತ್ರಯುತ ಕಂಠೋಜ್ವಲೆಮಂಗಲಾತ್ಮಿಕೆ ಮಹಿತೆ ಕರುಣಾಪಾಂಗೆ ಶರದಿಂದೂಜ್ವಲೆ ೭

೪೩೯
ಬಟ್ಟ ಮುತ್ತಿನ ಸರವ ಕೊರಳೊಳಿಟ್ಟು ನೋಡುತಪುಟ್ಟ ಪುಟ್ಟ ಪಾದದಿಂದ ದಟ್ಟಡಿಯನಿಕ್ಕುತಅಟ್ಟಟ್ಟು ಕರೆದರೆ ಬಾರದೆ ಅಂಬೆಗಾಲನಿಕ್ಕಿ ಕೊಡವುತತಿಗೂಳುಗುಳೆಂದು ಮುಟ್ಟಿ ನಲಿದಾಡುತ ತಟ್ಟೆಗೆ ಮುಚ್ಚಿಗೆಯೆಂದುತಟ್ಟನೆ ಕೈಯನಿಡುತ ಪುಟ್ಟಮಕ್ಕಳೊಡನೆ ಚಂಡಾಡಿನಲಿದಾಡುವ ದಿಟ್ಟರಂಗಯ್ಯ ೧
ರನ್ನ ದುಂಗುರ ಪದಕ ತಾಳಿಯನ್ನು ಹಾಕುವೆಸಣ್ಣ ಮಕ್ಕಳ ಕೂಡೆಲ್ಲಾ ಚಿನ್ನಿಕೋಲನಾಡುತಕನ್ನೆವೆಣ್ಣುಗಳ ಕಂಡು ಕಣ್ಣ ಸನ್ನೆ ಮಾಡುತಕಣ್ಣಮುಚ್ಚಾಲೆ ಆಟವ ಆಡಿ ನಲಿದಾಡುತ ತಾಹೊನ್ನ ಹಿಡಿ ಹೊನ್ನಾಟವನಾಡುತ ಶ್ರೀರಂಗಧಾಮ ಪನ್ನಗಶಯನ ೨
ಕಾಲಿನಂದುಗೆ ಘಲಿರೆನೆ ನಳಿತೋಳನಾಡುತಬಾಲೆಯರ ಕೂಡೆ ಬಹು ಲೀಲೆಯ ಮಾತಾಡುತಶಾಲೆಗಳ ಸೆಳದು ಮರದ ಮೇಲೆ ಕುಳಿತು ನೋಡುತಹಾಲು ಬೆಣ್ಣೆ ಕಳ್ಳನೆಂಬ ದೂರುಗಳ ಕೇಳುತಲೋಲಾಕ್ಷಿಯರೊಳನಿಂಥಾ ಜಾಲಿಗಳ ಮಾಡುವ ಬಾಲಗೋಪಾಲ೩
ಕಂಡು ನಿನ್ನನು ಪ್ರೇಮದೊಳಪ್ಪಿಕೊಂಡು ನೋಡುವೆಹಿಂಡು ಬೊಗರಿಲಿತ್ತಲಿಗ್ಗೆ ಚಂಡ ಕೊಡುವೆ ಬಾರಯ್ಯಭಂಡಿಯನೊದದ ಪಾದಪದುಮವನ್ನೇ ತಾರಯ್ಯಗುಂಡುವಾನಿಟ್ಟ ನಳಿ ತೋಳನೊಮ್ಮೆ ತೋರಯ್ಯಪುಂಡಲೀಕಾಕ್ಷಿಯರು ನಿನ್ನ ಕಂಡರೆ ಸೇರರೂ ಕೃಷ್ಣ೪
ಕರದ ಕಂಕಣ ಝಣರೆನಲು ಮುಂಗುರಳ ತಿದ್ದುತಕರದ ಕಂಬಾಲಿನೆಲ್ಲವ ಸುರಿದು ಸೂರೆ ಮಾಡುತತರುಣಿಯರು ನೋಡಲವರ ಪುರುಷರಂತೆ ತೋರುತಸರಸವಾಕಿನಿಂದಲವರ ಮರುಳು ಮಾಡಿ ಕರವುತಸರಿಯ ಮಕ್ಕಳೊಡನೆ ಜೊಲ್ಲು ಸುರಿಸುತ ಮಾತಾಡುವಂಥಾ ಸರಸಗೋಪಾಲ ೫
ಮರುಗ ಮಲ್ಲಿಗೆ ಸಂಪಗೆಯ ಪೂಸರವ ಮುಡಿಸುವೆಕೊರಳ ಮುತ್ತಿನ ಸರವ ನಿನಗೆ ಕರದು ಕೊಡುವೆಬಾರಯ್ಯ ಅರಳೆಲೆ ಮಾಗಾಯನಿಟ್ಟ ಸಿರಿಮುಖವತೋರಯ್ಯ ಪರನಾರಿಯರೊಡನಿಂಪಾಸರ ಛಂದವೇನಯ್ಯಪುರದ ನಾರಿಯರ ಕೂಡೆ ಸರಸವನಾಡು ಉಡುಪಿಪುರದ ಶ್ರೀಕೃಷ್ಣ ೬
ಚರಣಕೆ ಅಂದುಗೆ ಗೆಜ್ಜೆ ಸರವನಿಡುವೆ ತಾಯಿಟ್ಟುಕೊರಳಿಗೆ ಮರಿಯುಗುರು ಸರ್ಪಣಿ ಸರವನೆ ಹಾಕುವೆ ಕೆಳದಿಪುರ ಶ್ರೀಕೃಷ್ಣ

೪೪೦
ಬಿಲ್ವಪತ್ರೆಯ ಪೂಜೆಗೊಲಿವನು ಜಗದ್‍ವಲ್ಲಭನಾದ ರಾಮೇಶ್ವರನು ಪ
ಕೋಟಿ ಕನ್ಯಾದಾನವ ಮಾಡಿದ ಫಲಕೋಟಿ ತುರಗದಾನದ ಫಲವುಕೋಟಿ ಸಂಖ್ಯಾ ಗಜದಾನದ ಫಲ ಶಶಿಜೂಟಗೊಂದೆ ಬಿಲ್ವಪತ್ರೆಯೇರಿಸಿದರೆ ೧
ಕೋಟಿ ಗಂಗಾಸ್ನಾನವ ಮಾಡಿದ ಫಲಕೋಟಿ ಪ್ರಯಾಗ ಸ್ನಾನದ ಫಲವುಕೋಟಿ ಗೋದಾನದ ಫಲ ಬರುವುದು ಶಶಿಜೂಟಗೊಂದೆ ಬಿಲ್ವಪತ್ರೆಯೇರಿಸಿದರೆ೨
ಲಕ್ಷ ಪಂಚಾಕ್ಷರಿ ಜಪವ ಮಾಡಿದ ಫಲಲಕ್ಷಭೂಮಿಯ ಪ್ರದಕ್ಷಿಣ ಫಲವುಲಕ್ಷಾಶ್ವಮೇಧಯಾಗವ ಮಾಡಿದ ಫಲತ್ರ್ಯಕ್ಷಗೊಂದೆ ಬಿಲ್ವಪತ್ರೆಯೇರಿಸಿದರೆ ೩
ವೇದಪುರಾಣವ ಪಠಿಸಿದ ಫಲ ಸರ್ವಮೇದಿನಿ ದಾನವನಿತ್ತ ಫಲವುಭೂದಿವಿಜರ ಸಂರಕ್ಷಿಸಿದ ಫಲ ಶ್ರೀಮಾದೇವಗೇಕ ಬಿಲ್ವವನೇರಿಸಿದರೆ೪
ಸೋಮವಾರದ ದಿನ ನೇಮದಿಂದಲಿ ಬಹುಕೋಮಲ ಬಿಲ್ವಪತ್ರೆಗಳ ತಂದುಶ್ರೀ ಮಹಾದೇವಗರ್ಪಿಸಿದಂಥ ಭಕ್ತರ್ಗೆರಾಮೇಶಲಿಂಗ ಮುಕ್ತಿಯನೀವನು ೫

೪೭೬
ಮಂಗಲಂ ಜಯಮಂಗಲಂತ್ರಿಜಗಂಗಳ ಪೊರೆವ ಶ್ರೀಮೂಕಾಂಬೆಗೆ ಪ
ಗೌರಿಗೆ ಗುಹಜನನಿಗೆ ಗಿರಿಜಾತೆಗೆಧೀರಮಹಿಷ ದೈತ್ಯಮರ್ದಿನಿಗೆಕಾರುಣ್ಯನಿಧಿಗೆ ಕಾಮಿತಫಲದಾತೆಗೆನಾರದನುತೆಗೆ ನಾರಾಯಣಿಗೆ ೧
ಶರದಿಂದುಮುಖಿಗೆ ಶಂಕರಿಗೆ ಶರ್ವಾಣಿಗೆದುರಿತ ದಾರಿದ್ರ್ಯಹರ್ತೆಗೆ ದುರ್ಗಿಗೆಪರಮೇಶ್ವರಿಗೆ ಪಾವನಚರಿತೆಗೆ ಶುಭಕರಿಗೆ ಸಮಸ್ತಮಂತ್ರೇಶ್ವರಿಗೆ ೨
ರಾಜಶೇಖರಿಗೆ ರಾಜೀವನೇತ್ರಗೆ ರಕ್ತಬೀಜ ಶಾಸಿನಿಗೆ ಭುವನಮಾತೆಗೆತೇಜೋಮಯಿಗೆ ತರಣಿಕೋಟಿ ಭಾಷೆಗೆಶ್ರೀ ಜನಾರ್ದನನ ಸಹೋದರಿಗೆ ೩
ಕಾಳಿಗೆ ಕಾಮರೂಪಿಣಿಗೆ ಕೌಮಾರಿಗೆಕಾಳರಾತ್ರಿಗೆ ಕಾತ್ಯಾಯನಿಗೆವ್ಯಾಳಭೂಷಿಣಿಗೆ ಯೋಗಿನಿಗೆ ರುದ್ರಾಣಿಗೆಭಾಳನೇತ್ರೆಗೆ ಭಯಹಾರಿಣಿಗೆ೪
ಚಂಡಿಗೆ ಚಕ್ರಪಾಣಿಗೆ ಚಾತುರ್ಭುಜೆಗೆಮುಂಡಿಗೆ ಧೂಮ್ರಲೋಚನಹತ್ರ್ರೆಗೆಚಂಡಮುಂಡಾಸುರರಸುರಣರಂಗದಿದಿಂಡುದರಿಂದ ಸರ್ವಮಂಗಲೆಗೆ೫

೪೭೫
ಮಂಜುಳಾ ಪಾಶಾಂಕುಶದ ರಂಜಿತವರ ಬಾಹುದಂಡಮಂಜುಳಹಾರ ಕೇಯೂರಾದಿಭೂಷಮೌಂಜಿ ಕೃಷ್ಣಾಜಿನಧರನಿತ್ಯತೋಷಕಂಜ ಬಾಂಧವ ಶತರೂಪಿಸಂಕಾಶಕುಂಜರವದನಾ ಹಸೆಗೇಳು ೧
ದೇವದಾನವ ಮತ್ರ್ಯಪನ್ನಗಸೇವಿತ ಪಾದ ಪಯೋಜರಾವಣಾಸುರಗರ್ವಹರ ಗಾನಲೋಲಪಾವನತರಸುರಕಾರ್ಯಾನುಕೂಲಗ್ರಾವತನೂಜೆಯ ಪ್ರೇಮದ ಬಾಲಶ್ರೀ ವಿಘ್ನರಾಜ ಹಸೆಗೇಳು ೨
ತಾಮರಸಾಂಬಕ ಸೂರ್ಯ ಸು-ತ್ರಾಮಾಚ್ಯುತ ಚಂದ್ರ ವಂದ್ಯಹೇಮಾದ್ರಿಸನ್ನಿಭ ಕೋಮಲಗಾತ್ರರಾಮಣೀಯಕ ಕಾಂಚನಯಜ್ಞ ಸೂತ್ರಸೋಮಶೇಖರನ ಸಮ್ಮೋಹದ ಪುತ್ರಶ್ರೀಮದ್ಗಣೇಶ ಹಸೆಗೇಳು ೩
ಕಾಮಕರ್ಮಾತೀತ ಸನ್ಮುನಿಜಾಲ ಮಾನಸರಾಜಹಂಸಬಾಲಾರ್ಕಶತರೂಪಿಕಾಂತಿ ಶರೀರಸ್ಥೂಲಕಂಧರ ದುಃಖದುರಿತವಿದೂರಫಾಲಲೋಚನ ಚಂದ್ರಗರ್ವಾಪಹಾರಬಾಲವಟುರೂಪ ಹಸೇಗೇಳು೪
ಸಂತತ ಬಹುವಿಧಲೀಲಾಸಂತತ ಮುದಿತಾದ್ರಿಬಾಲಾಅಂತರಹಿತ ಶುಭಗುಣಗಣಸಾಂದ್ರದಂತದೀಧಿತಿನಿರ್ಜಿತಶರಶ್ಚಂದ್ರಕಾಂತವಿಗ್ರಹವಿಪದದ್ರಿಮಹೇಂದ್ರಚಿಂತಿತಾರ್ಥಪ್ರದನೇ ಹಸೆಗೇಳು ೫

೪೫೬
ಮನವೇ ಸುಮ್ಮನೆ ಇರಬೇಡ ಅರೆನಿಮಿಷವಾದರುಮನವೇ ಸುಮ್ಮನೆ ಇರಬೇಡಪ
ಕನಸಿನಂತಿಹ ಸಂಸಾರವ ನೆಚ್ಚಿಘನತರ ಪಾಪಕೆ ಗುರಿಯಾಗಬೇಡ ಅ
ರೊಕ್ಕದಾಸೆಯ ಬಿಡಬೇಕು ಸ್ತ್ರೀ ಮೋಹಕೆಸಿಕ್ಕದೆ ನಡಕೊಳಬೇಕುಅಕ್ಕರು ದೇಹದೊಳಿರದಿರಬೇಕುಶಕ್ತಿಯ ಮೀರಿ ಧರ್ಮವ ಮಾಡಬೇಕುಮುಕ್ಕಣ್ಣ ಹರನ ಪೂಜಿಸಬೇಕುಮುಕ್ತಿ ಮಾರ್ಗವ ಪಡಕೊಳಬೇಕು ೧
ಸರ್ವನಿಸ್ರ‍ಪಹನಾಗಬೇಕು ಸಂಸಾರದಿಚರಿಸುತಲೂ ಇರಬೇಕುಗುರುಹಿರಿಯರ ಕಂಡು ನಡೆಯಲು ಬೇಕುಪರರ ನಿಂದಿಸಿ ನುಡಿಯದೆ ಇರಬೇಕುಬರೆ ಸುಖ ದುಃಖವು ಸಮಗಾಣಬೇಕುಇರುಳು ಹಗಲು ಶಿವ ಶಿವ ಎನ್ನಬೇಕು೨
ತನ್ನ ತಾನೆ ತಿಳಿಯಬೇಕು ತೋರುವ ಲೋಕವನ್ನು ದೃಶ್ಯವೆಂದಿರಬೇಕುತನ್ನಂತೆ ಸಕಲರ ನೋಡಲು ಬೇಕುಮಾನ್ಯರ ಕಂಡರೆ ಮನ್ನಿಸಬೇಕುಅನ್ಯನಾದರು ಹಿತವನೆ ಮಾಡಬೇಕುಪ್ರಸನ್ನ ರಾಮೇಶನನೆನಹಿರಬೇಕು ೩
ವಣಗಿದ ಕಂಭದೊಳೊಗೆದುಬಣಗು ದಾನವನ ಗೆಲಿದುಕುಣಿಕುಣಿದಾಡಿದೆಯಂತೆ ಯಾಕಯ್ಯ ಶ್ರೀಕೃಷ್ಣಸೆಣಸಿದ ರಾಕ್ಷಸನ ಗೆಲಿದುವಿನಯದೆ ಪ್ರಹ್ಲಾದಗೊಲಿದುಅಣಿಯರ ಲೋಕವ ಕಾಯ್ದೆ ಎಲೆಸತ್ಯಭಾಮೆ ೪
ಬಲು ಚಂದವಾಯಿತಯ್ಯ ಲೋಕಾ-ವಳಿಯೊಳು ದೊಡ್ಡವನಯ್ಯಬಲಿಯ ಕೂಡೆ ದಾನವ ಬೇಡುವರೆ ಕೃಷ್ಣಬಲಿಯ ದಾನವನ್ನೇ ಬೇಡಿಇಳೆಯ ಮೂರಡಿಯ ಮಾಡಿಸಲಹಿದೆ ಸರ್ವಸುರರ ಎಲೆ ಸತ್ಯಭಾಮೆ ೫
ಧರಣೀಪಾಲಕರ ಗೆಲಿದಗರ್ವವಿರಲಿ ಹೆತ್ತತಾಯಶಿರವನರಿದ ದುರುಳರುಂಟೆ ಹೇಳಯ್ಯ ಕೃಷ್ಣಗುರುವಚನವನ್ನು ಮೀರೆನರಕಲೋಕವೆಂದು ಕಾಯಶಿರವನರಿದು ಮರಳಿ ಪಡೆದ ಎಲೆ ಸತ್ಯಭಾಮೆ೬
ಮೂರು ಲೋಕವರಿಯೆ ಸೀತಾನಾರಿಯ ಕಳೆದುಕೊಂಡುಊರೂರ ತಿರುಗಿದೆಯಂತೆ ಯಾಕಯ್ಯಾ ಕೃಷ್ಣನೀರೊಳು ಸೇತುವ ನಿಲಿಸಿವೀರ ರಾವಣನ ಜಯಿಸಿವಾರಿಜಾಕ್ಷಿಯ ತಂದೆನೆ ಎಲೆ ಸತ್ಯಭಾಮೆ ೭
ದುರುಳ ಪರಮಹಂಸರಂತೆಕರದಿ ನೇಗಿಲ ಹಿಡಿದೆಶರಖಡ್ಗಗಳಿಲ್ಲವೇನೋ ಶ್ರೀಕೃಷ್ಣರಾಯಸುರರಿಪು ಪ್ರಲಂಬಾದಿಗಳಶಿರವನರಿದು ಜೈಸಿದಂಥಾಗುರುತಿನ ಆಯುಧ ಕಾಣೆ ಎಲೆ ಸತ್ಯಭಾಮೆ೮
ಮಂದಿಯ ಮುಂದೆ ಬತ್ತಲೆನಿಂದು ಓಡಾಡಿದೆಯಂತೆಚಂದವಾಯ್ತು ನಿನ್ನ ನಡತೆ ಹೇಳೆಲೋ ಕೃಷ್ಣಹಿಂದೆ ತ್ರಿಪುರದ ನಾರೀವೃಂದವ ಮೋಹಿಸಿ ಸರ್ವವೃಂದಾರಕರ ಪೊರದೆ ಎಲೆ ಸತ್ಯಭಾಮೆ ೯
ದೊರೆತನವು ನಿನ್ನದೆಂದುಧರಣೀದೇವತೆಯು ಬಂದುಮೊರೆಯಿಟ್ಟಳದೇಕೋ ಪೇಳೋ ಶ್ರೀಕೃಷ್ಣರಾಯತುರಗವನೇರಿ ಖಡ್ಗವಧರಿಸಿ ಯವನ ಸೈನ್ಯವನ್ನುಮುರಿದು ಧರೆಯ ಪೊರೆದೆ ಕಾಣೆ ಎಲೆ ಸತ್ಯಭಾಮೆ ೧೦
ಇಂತು ಕೇಳ್ದ ಸತ್ಯಭಾಮಾಕಾಂತೆಯ ಮಾತಿಗೆ ಮೆಚ್ಚಿಕಾಂತೆಯರೊಳು ಕಟ್ಟಾಣಿ ಬಾರೆಂದು ಕರೆದುಕಂತುಜನಕ ಕೆಳದಿಪುರದಕಾಂತ ಗೋಪಾಲಕೃಷ್ಣನುಸಂತಸವ ಮಾಡಿದನಿನ್ನೆಂತು ಪೇಳ್ವೆನೆ೧೧

೪೫೭
ಯಾಕಿಷ್ಟು ದಯವಿಲ್ಲ ಎನ್ನಮೇಲೆನೀ ಕರುಣಿಸಿದರಾಗದ ಕಾರ್ಯವುಂಟೆ ಪ
ಬಾಲೆಗೊಲಿದು ಹಾಲಕುಡಿದವನೆಂದೆನೆಸೂಳೆಯ ಮನೆಗೆ ನಾ ಹೋಗೆಂದೆನೆಲೋಲಾಕ್ಷಿಯ ಕುಚದೊಳೆ ಮಾತಾಡೆಂದೆನೆಚೋಳನಂತೆ ಹೊನ್ನ ಮಳೆಯ ಕರೆಯೆಂದೆನೆ೧
ಊರುಗಲ್ಲೊಳು ಕನ್ನವ ಕೊಯಿದನೆಂದನೆಊರನೆ ಕೈಲಾಸಕ್ಕೊಯಿಯೆಂದೆನೆಕ್ರೂರ ಬಾಣನ ಬಾಗಿಲ ಕಾಯ್ದನೆಂದೆನೆನೀರ ಮಂಡೆಯೊಳು ಪೊತ್ತವನೆಂದು ಪೇಳ್ದೆನೆ ೨
ಮಲ್ಲಗಾಳಗವನು ಮಾಡಿದನೆಂದೆನೆಬಿಲ್ಲಿನಿಂ ಬಡಿಸಿಕೊಂಡವನೆಂದೆನೆಎಲ್ಲರರಿಯೇ ತಿರಿದುಂಡವನೆಂದನೆಕಲ್ಲುಮನವೇ ಕೆಳದಿರಾಮೇಶ್ವರಲಿಂಗ ೩

೪೭೭
ಯಾದವರಾಯ ಮಾರಬೇಕು ಮೊಸರಾಬಾರೆ ಗೊಲ್ಲ ಮೊಸರು ಮೊಸರೆನುತಲಿ ಮೇಲು-ಗೇರಿಗೆ ಬರುತಿರೆ ಕಂಡು ನೀಲವರ್ಣದ ಗೋವಳಸೆರಗು ಪಿಡಿದು ಲತಾಂಗಿಯ ತಡೆದಾ ೧
ಮೊಸರ ಮಾರಬಂದವಳಲಿ ಸೆಣಸದಿರುಶಶಿನೀರೆ ಎಲ್ಲೆಂದಡತನವೆ ಬೇಡ ಈವಸುಧೆಯೊಳರಸಿಲ್ಲವೆ ನೀ ದೂರಸಾರಲೋಪಶುಗಾಹಿ ಬಿಡು ಎನ್ನ ೨
ಲಂಡತನವು ನಮ್ಮೊಡನೆ ಕೊಳ್ಳವು ಹೋಗುಕಂಡ ಕಂಡವರಿಗಂಜುವುದ ಬಿಟ್ಟು ನನ್ನದಂಡೆಯ ಪಿಡಿಯದಿರೋ ನಾ ಸಸಾರಲ್ಲೊಗಂಡನುಳ್ಳವಳು ಕಾಣೋ ೩
ಉಟ್ಟ ಸೀರೆಯ ಪಿಡಿದೆಳೆಯದಿರೆಲವೋಪಟ್ಟಣ ಕೊಡೆಯರಿಲ್ಲವೆ ಹೇಳಾಪಟ್ಟಗಟ್ಟಿತೆ ನಿನಗೆ ನಾ ಹೇಳುವೆಕಟ್ಟೆಯ ತಳವಾರಗೆ ೪
ಶಂಕಶೂರರುಹನ ಪಂಕಜಗಜನಿಮ್ಮಡೊಂಕ ದುರುಬಿಗೆ ಅಂಜುವಳಲ್ಲಬೋಂಕನೆ ಒಳಗಾದರೆ ಕಡೆಗೆ ನಮ್ಮಮಂಕುಮಾಡಿತು ಗೋವಳಾ ೫
ಇತ್ತಿತ್ತ ಬಾರೆಲೆ ಸಖಿಮುತ್ತಿನ ಹಾರವನೀವೆ ಎನ್ನಒತ್ತಾರೆ ಕುಳಿತರೆ ಪದಕವನೀವೆ ಎನ್ನಅರ್ತಿಯ ಸಲಿಸಿದರೆ ನಾ ನಿನಗೆಮುತ್ತಿನೋಲೆಯನೀವೆನೆ೬
ಅಣಿ ಮುತ್ತಿನ ಕಂಠಮಾಲೆಯ ನಿನಗೀವೆಜಾಣಿಗೊಲ್ಲತಿ ಬಾಲೆ ಎಲೆ ಬಾಲೆ ನಿನ್ನಜಾಣ ಜಡೆ ಲಕ್ಷ್ಮೀನಾರಾಯಣನ ನೆನೆವುತ೭

೪೬೮
ರತಿಸಮಯಕೈದುತಿಹ ಸತಿರಚಿಸಿದುದ ಪೇಳ್ವೆಮತಿವಂತೆ ಅದರ ಭಾವವ ತಿಳಿದು ಪೇಳೆ ಪ
ಕರಯುಗದಿ ವಜ್ರಮಯ ಕಂಕಣವ ಧರಿಸಿದಳುಅರಗಿಣಿಯ ನವಿಲ ಸೆರೆಯನು ಬಿಟ್ಟಳುಭರದಿ ಸಾಕಿ (ಸೆನಗಳ ?) ಕರೆದು ಕಳುಹಿದಳುಸರಸದಿಂ ದೀಪವನೆ ಮರೆಯೊಳಿರಿಸಿದಳು ೧
ಯುವತಿ ಕೇಳ್ನಸುಗುತ ಕರ್ಣದೊಳೆ ಧರಿಸಿರ್ದಕುವಲಯವ ತೆಗೆದು ದೂರದೊಳಿಟ್ಟಳುತವೆ ಮಲ್ಲಿಕಾಮಂದಹಾಸವನೆ ಬೀರಿದಳುನವಮಣಿಹಾರವನೆ ಕೊರಳ್ಗೆ ಧರಿಸಿದಳು ೨
ಸುರತ ಸಮಯದೊಳೆ ದಶದಿಕ್ಕುಗಳ ನೋಡಿದಳುತರಣಿ ಶಶಿಗತಿಯ ಸಮಗಾಣಿಸಿದಳುಪರಮಸುಖಸಾಮ್ರಾಜ್ಯ ಭಾರ ಪಸರಿಸಲಾಗವರ ಕೆಳದಿ ರಾಮೇಶನಡಿಯ ಸ್ಮರಿಸಿದಳು ೩

೪೪೧
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ
ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ ೧
ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ೨
ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ ೩

೪೬೯
ವನಿತೆ ನೀನು ಕರೆದು ತಾರೆ ರಾಮೇಶನುಮುನಿಸಿದನೆ ನೀರೆ ಪ
ಹಂಬಲಿಸುತಿದೆ ಮನ ಹೇಗೆ ನಾ ತಾಳಲೆರಂಬಿಸಿ ಪೊರೆದವನಕುಂಭ ಕುಚದ ಮೇಲೆ ಕೂರುಗುರಿನ ಬರೆಯಂಬ ಶಶಿಯ ನೇಮಗಾರನ ೧
ಎನ್ನ ಮೇಲಿನಿತು ತಪ್ಪನಾದರೆ ತೋರಿಭಿನ್ನವಿಸುವುದು ಆಕನ್ನೆಯೋರ್ವಳ ಕೂಡುತಮುನ್ನಿನ ಲೇಸನು ತೋರದೆ ಎನ್ನ ಮರೆತ೨
ಧರೆಯೋಳತ್ಯಧಿಕವೆಂದು ಕೆಳದಿಪುರದರಸುತನದಲೆ ನಿಂದುವರದನದಿಯ ತೀರವಾಸ ಶ್ರೀ ರಾಮೇಶನೆರದುಳುವಿದ ಲೇಸ ನಟನೆಯಿಂದ ಮಹೇಶ ೩

೪೭೮
ವೃಂದಾವನಕೈತಂದನು ಆ-ನಂದದಿಂ ಕ್ಷೀರಾಬ್ಧಿಯಿಂದ ಶ್ರೀಕೃಷ್ಣನು ಪ
ತೆತ್ತೀಸರೂಪಿ ದೇವತೆಗಳೋಲೈಸಲುಮುತ್ತಿನ ಚಾಮರಗಳನಿಕ್ಕಲುಮುತ್ತೈದೆಯರೆಲ್ಲಾ ಧವಳವ ಪಾಡಲುಅರ್ಥಿಯಿಂದಿಂದಿರೆ ಸಹಿತ ಶ್ರೀಕೃಷ್ಣನು ೧
ದ್ವಾರಾವತಿಯಿದ್ದು ಕ್ಷೀರಸಾಗರವಿದ್ದುಸಾರತರ ಶ್ವೇತದ್ವೀಪವಿರ್ದುಶ್ರೀ ವೃಂದಾವನ ಸುಖಮಂದಿರವೆನುತಲಿಕ್ಷೀರಸಾಗರವಾಸಿಯಾದ ಶ್ರೀಕೃಷ್ಣನು ೨
ನಂದಗೋಕುಲವಿದ್ದು ಮಂದರಗಿರಿಯಿದ್ದುಚಂದವಾದ ವೈಕುಂಠಲೋಕವಿದ್ದುವೃಂದಾವನಪತಿಸುಖ ಗೃಹವೆನುತಲಿಇಂದಿರಾದೇವಿಯಿಂ ಸಹಿತ ಶ್ರೀಕೃಷ್ಣನು೩
ಸುರದುಂದುಭಿ ದಂಧಣರೆಂದು ಮೊಳಗಲುಸುರರು ಹೂವಿನ ಮಳೆಯನು ಕರೆಯತರುಣ ತುಲಸಿಮಾಲೆಯಲುಗಲಿಂದಿರೆ ಸಹಗರುಡನ ಹೆಗಲಿನಿಂದಿಳಿದು ಶ್ರೀಕೃಷ್ಣನು೪
ಉರದ ಕೌಸ್ತುಭರತ್ನ ಥಳಥಳಥಳಿಸಲುಕೊರಳ ವೈಜಯಂತಿಯ ಸರವಲುಗೆಸರಸಿಜ ಭವಮುಖ್ಯ ಸುರರೋಲೈಸಲುಪರಮ ಸಂಭ್ರಮದಿಂದ ಶ್ರೀಕೃಷ್ಣರಾಯನು೫

೪೪೨
ಶಿವಮಂತ್ರವ ಜಪಿಸೋ ಮೂಢಶಿವಮಂತ್ರವ ಜಪಿಸೋಶಿವನೇ ನೀನಾಗುವೆಯೆಂದು ನಂಬುತ ಪ
ಸ್ನಾನ ಬೇಡ ಸಂಧ್ಯಾಕರ್ಮವು ಬೇಡಧ್ಯಾನ ಬೇಡ ಧಾರಣೆ ಬೇಡಮೌನ ಬೇಡ ಮಣಿಮಾಲಿಕೆ ಬೇಡಧ್ಯಾನ ಬೇಡ ಪಶುವಧೆಗಳು ಬೇಡ ೧
ದೇಶಕಾಲ ಪಾತ್ರವ ನೋಡಬೇಡಕಾಷಾಯಾಂಬರ ಧಾರಣೆ ಬೇಡಭಾಸುರ ಜಡೆಯನು ಬೆಳೆಸಲು ಬೇಡಈ ಶರೀರವನೆ ದಂಡಿಸಬೇಡ ೨
ಕಾಲನ ದೂತರು ಎಳೆಯದ ಮುನ್ನನಾಲಿಗೆ ತನ್ನಾಧೀನವಾಗಿರುವಾಗಏಳುಕೋಟೆ ಮಂತ್ರಕೆ ಮಣಿಯಾದ ವಿ-ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು ೩

೪೪೩
ಶ್ರೀ ಕಲ್ಯಾಣಿ ಸುಗುಣಮಣಿ ಗಿರಿಜೆ ಪ-ರಾಕೆ ಬಾಗಿಲ ತೆಗೆಯೆಸಾಕು ನೀನಾರು ನಿನ್ನಯ ನಾಮವನು ಪ-ರಾಕು ಮಾಡದೆ ಪೇಳಯ್ಯ ೧
ಕಾಮಿನಿಯರೊಳು ಕಟ್ಟಾಣಿ ಪಾರ್ವತಿ ಕೇಳೆಕೌಮಾರಿ ಕಾಣೆ ಜಾಣೆಕೌಮಾರಿಯಾದರೊಳ್ಳಿತು ನಡೆ ಋಷಿಗಳಸ್ತೋಮದ ವನಕಾಗಿ ೨
ಕಾಳ ಪನ್ನಗವೇಣಿ ಕಲಕೀರವಾಣಿಕೇಳೆ ಶೂಲಿ ಕಾಣೆಲೆ ಕೋಮಲೆಶೂಲಿ ನೀನಾದರೊಳ್ಳಿತು ನಡೆ ವೈದ್ಯರಜಾಲವಿದ್ದೆಡೆಗಾಗಿ೩
ನೀಲಕುಂತಳೆ ನಿಗಮಾಗಮನುತೆ ಕೇಳೆನೀಲಕಂಠನು ಕಾಣೆನೀಲಕಂಠನು ನೀನಾದರೆ ತರುಗಳ ಮೇಲೆಕುಳ್ಳಿರು ಪೋಗಯ್ಯ೪
ಏಣಾಕ್ಷಿ ಸೊಬಗಿನ ಸೋನೆ ಕೋಕಿಲಗಾನೆಸ್ಥಾಣು ನಾನೆಲೆ ಜಾಣೆನೀನಾದರೊಳ್ಳಿತು ನಡೆ ವಿಪಿನಸ್ಥಾಣದೊಳಿರು ಪೋಗಯ್ಯ೫
ಎಸಳುಗಂಗಳ ಬಾಲೆ ಎಸವ ಮೋಹನಮಾಲೆಪಶುಪತಿ ಕಾಣೆ ಕೋಮಲೆಪಶುಪತಿಯಾದರೊಳ್ಳಿತು ನಡೆಗೋಗಳವಿಸರವ ಕಾವುದಕೆ ೬
ಜಾತಿನಾಯಕಿ ಕೇಳೆ ನೂತನವೇತಕೆಭೂತೇಶ ಕಾಣೆ ಜಾಣೆಭೂತೇಶನಾದರೊಳ್ಳಿತು ನಡೆ ಭೂತವ್ರಾತದ ವನಕಾಗಿ೭
ಮಿಂಚಿನ ಗೊಂಚಲ ಮುಂಚಿ ಪಳಂಚುವಚಂಚಲನೇತ್ರಯುಗೆಅಂಚಿತಮಾದ ವಿಪಂಚಿಯ ಸ್ವರವ ಪಳಂಚುವಿಂಚರದಬಲೆ ೮
ಕರಗಿಸಿ ಕರುವಿಟ್ಟೆರದ ಚಿನ್ನದ ಬೊಂಬೆಸುರುಚಿಕರ ಸುನಿತಂಬೆಪರಿಪೂರ್ಣ ಶರದಿಂದುವದನೆ ಕುಂದರದನೆವರಸುಗುಣಾವಲಂಬೆ ೯
ಕುಂಕುಮರೇಖಾಲಂಕೃತೆ ಪರತರೆಪಂಕಜಸಮಪಾಣಿಶಂಕರಿ ಪಾಪಭಯಂಕರಿ ಸರ್ವವಶಂಕರಿ ಶುಭವಾಣಿ೧೦
ಚಂಡಮುಂಡಾಸುರಖಂಡನ ಪಂಡಿತೆಮಂಡಲತ್ರಯನಿಲಯೆಮಂಡಿತ ನವರತ್ನಖಚಿತ ಮಹೋಜ್ವಲಕುಂಡಲೆ ಮಣಿವಲಯೆ ೧೧
ವರದಾನದಿಯ ತೀರವಾಸ ಶ್ರೀ ಕೆಳದಿಯಪುರದ ರಾಮೇಶ ಕಾಣೆಪುರದ ರಾಮೇಶನಾದರೆ ನೆರೆಬಾಯೆಂದುಕರೆದಳು ಗಿರಿಜಾತೆ೧೨
ಗಿರಿಜಾ ಶಂಕರರ ಸಂವಾದದ ಪದಗಳಬರೆದೋದಿ ಕೇಳ್ದರಿಗೆಪರಮ ಸೌಭಾಗ್ಯ ಸಂತಾನಗಳನು ಕೊಟ್ಟುಪೊರೆವನು ರಾಮೇಶ೧೩

೪೪೬
ಶ್ರೀ ಗಣಪತಿಗೆ ವಂದಿಸಿ ಕೆಳದಿಯ ಪುರದಭೋಗಮಂದಿರ ರಾಮೇಶ್ವರನ ರಂಭೋಗಮಂದಿರ ರಾಮೇಶ್ವರನ ಸನ್ನುತಿಸುತರಾಗದಿ ಪಾಡಿ ಪೊಗಳುವೆ ರಂ೧
ವಾಣಿ ಪುಸ್ತಕ ವೀಣಾಪಾಣಿ ಪನ್ನಗನಿಭವೇಣಿ ಕಲ್ಯಾಣಿ ಶುಕ ರಂ-ವಾಣಿ ಶುಕವಾಣಿ ಬೊಮ್ಮನರಾಣಿ ಸನ್ಮತಿಯ ಕರುಣಿಸು ರಂ ೨
ಧೃವ ಅಟ್ಠ ರೂಪಕ ಏಕತಾಳವು ಝಂಪೆತ್ರಿವಡೆ ತಾಳಗಳೊಡಂಬಡಲು ರಂ-ತ್ರಿವಡೆ ತಾಳಗಳೊಡಂಬಡೆ ಹೊಸ ಹರೆಯದಯುವತಿಯರೊಲಿದು ಹಾಡಿದರು ರಂ ೩
ಗಂಗಾಧರ ಜಯ ಗೌರೀಪ್ರಿಯ ಜಯಅಂಗಜಹರ ಜಯವೆನುತ ರಂ-ಜಯವೆನುತಲಂಗನೆಯರುಪೊಂಗೋಲ ಪೊಯಿದು ಪಾಡಿದರು ರಂ ೪
ಕಪ್ಪುಗೊರಳ ಜಯ ಸರ್ಪಭೂಷಣ ಜಯಮುಪ್ಪುರವನು ಜಯಿಸಿದವನೆ ರಂ-ಜಯಿಸಿದನೆ ಜಯವೆಂದುಒಪ್ಪದೆ ಪಾಡುತಾಡಿದರೆ ರಂ೫
ದಿಮಿದಿಮಿ ದಿಮಿಕೀಟ ತಕಕಿಟನ ಕಕಿಟಕ್ರಮದಿ ನರ್ತಿಸುತಬಲೆಯರು ರಂ-ಅಬಲೆಯರು ಚಿನ್ನದ ಕೋಲಪ್ರಮುದದೊಳಾಡುತೊಪ್ಪಿದರು ರಂ೬
ಅಚ್ಚ ಮುತ್ತಿನ ನಿಚ್ಚಳ ಸುಲಿಪಲ್ಲಒಚ್ಚೇರೆಗಣ್ಣು ಬಾಲೆಯರು ರಂ-ಬಾಲೆಯರು ಸಂಭ್ರಮದಿ ಮೈಮೆಚ್ಚುತ ಕೋಲನಾಡಿದರು ರಂ ೭
ಭೃಂಗ ಕುಂತಳದ ಮತಂಗಜ ಗಮನದರಂಗುದುಟಿಯ ರಮಣೆಯರು ರಂರಮಣಿಯರು ಸೊಬಗನಾಂತುಹೆಂಗಳು ಪಾಡುತೊಪ್ಪಿದರು ರಂ೮
ಜಲಜಗಂಧದ ನಳಿತೋಳ್ಗಳ ರಿಂಕಿದನೆಲೆಮೊಲೆಗಳ ತುಂಬಿಗುರುಳ ರಂಕರುಳ ಪದ್ಮಿನಿಯರುಚಳಕದಿ ಪಾಡುತಾಡಿದರು ರಂ೯
ಪೊಂಬೊಗರಿಯ ತೆರದಿ ತುಂಬಿದ ಕುಚಗಳಬಿಂಬಾಧರದ ಕಂಬುಗಳದ ರಂಬಿಂಬಾಧರದ ಕಂಬುಗಳದ ಪದ್ಮಿನಿಯರುಸಂಭ್ರಮದಿಂದ ಪಾಡಿದರು೧೦
ತೆಳುವಸುರಿನ ಕೊಬ್ಬಿದ ಕುಚಯುಗಳದಕಲಹಂಸಗತಿಯ ಮೋಹನದ ರಂಮೋಹನದ ಚಿತ್ತಿನಿಯರುಒಲಪಿನಂ ಪಾಡುತಾಡಿದರು ರಂ೧೧
ಚಿನ್ನದ ಲತೆಯಂತೆ ಚೆನ್ನಾಗಿ ಬಳುಕುವಸನ್ನುತಾಂಗದ ಶಂಖರವದ ರಂರವದ ಶಂಖಿನಿಯರುಚೆನ್ನಾಗಿ ಪಾಡುತಾಡಿದರು ರಂ ೧೨
ಅಪಳ್ಗಣ್ಣ ಮಂದಗತಿಯ ಮದಗಂಧದಶರೀರದ ಕೊಬ್ಬಿದ ಕೊರಳ ರಂಕೊರಳಿನ ಹಸ್ತಿನಿ(ಯರು)ತರುಣಿಯರೊಲಿದು ಪಾಡಿದರು ರಂ ೧೩
ಸಿರಿಮೊಗದೊಳು ಬೆಮರೊಗೆಯೆ ಮೇಲುದುಜಾರೆ ಕರದ ಕಂಕಣ ಝಣರೆನಲು ರಂಕರದ ಕಂಕಣ ಝಣಝಣಝಣಝಣರೆನೆತರಳೆಯರ್ಪಾಡುತಾಡಿದರು ರಂ೧೪
ದುಂಡುಮುತ್ತಿನ ಹಾರವಲುಗಲು ವಜ್ರದಕುಂಡಲಗಳು ನರ್ತಿಸಲು ರಂನರ್ತಿಸಲಂಗನೆಯರತಂಡ ಸಂಭ್ರಮದೊಳಾಡಿದರು ರಂ ೧೫
ಕರುಣಸಾಗರ ಜಯ ಕರಿಚರ್ಮಾಂಬರ ಜಯವರದ ರಾಮೇಶ ಜಯವೆಂದು ರಂ-ವರದ ರಾಮೇಶ್ವರ ಪಾರ್ವತಿ ಜಯವೆಂದುಹರುಷದಿ ಕೋಲನಾಡಿದರು ೧೬

೪೪೫
ಶ್ರೀ ಗಣಪತಿಯ ಪದಾಬ್ಜಕೆ ನಮಿಸಿರಾಗದಿಂದಲಿ ಶಾರದೆಯ ಸ್ಮರಿಸಿನಾಗಭೂಷಣ ಪದಾಬ್ಜಯುಗಕೆ ತಲೆವಾಗಿ ಬಾಲೆಯರಾಶೀರ್ವಾದದ ಪದಗಳರಾಗದಿ ಪಾಡಿ ಪೊಗಳುವೆ ೧
ಸಾಲಿ ಸೀರೆಯನುಟ್ಟು ಸರಮುತ್ತ ಕಟ್ಟುಬಾಲಕಿಯರೊಳು ಕಟ್ಟಾಣಿ ನೀನಾಗುಮೇಲೆನೀ ಅಷ್ಟಪುತ್ರರನು ಪಡೆದು ಸುಖಿಬಾಳು ಸ್ತ್ರೀಯರಿಗೆಲ್ಲಾ ದೊರೆಯಾಗಿರು ಶ್ರೀ ಮೈಲಾರಲಿಂಗನ ಕೃಪೆಯಿಂದಾ೨
ಪಲ್ಲಕ್ಕಿಯ ಸಾನಂದದೊಳೇರುಹಲ್ಲಣಿಸಿದ ಕರಿತುರಗವನೇರುಎಲ್ಲಾಭರಣವನಿಟ್ಟು ಸುಖದಿ ಪ್ರಾಣದೊಲ್ಲಭಸಹಿತ ಸಂತೋಷದೊಳಿರು ಶ್ರೀಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ ೩
ಚಂದ್ರಕಸ್ತುರಿಯ ತಿಲಕಗಳನಿಟ್ಟುಚಂದದಿ ಕುಂಕುಮ ರೇಖೆಯನಿಟ್ಟುಇಂದೀವರನೇತ್ರಕೆ ಕಪ್ಪಿಟ್ಟು ಆಚಂದ್ರಾರ್ಕವು ಸುಖಬಾಳು ಶೃಂಗೇರಿಯಚಂದ್ರಮೌಳೀಶನ ಕೃಪೆಯಿಂದಾ೪
ಅರಿಶಿನ ಚೂರ್ಣವನು ಲೇಪಿಸುತಪರಿಮಳಗಂಧವ ಪಸರಿಸಿಕೊಳುತಕರಿಯಮಣಿಯ ಮುತ್ತಿನ ಸರಗಳನಿಟ್ಟುಪರಮಸಂತೋಷದೊಳಿರು ಶ್ರೀ ಹಂಪೆಯವಿರೂಪಾಕ್ಷನ ಕೃಪೆಯಿಂದ ೫
ಪರಿಮಳಿಸುವ ಪುಷ್ಪಸರಗಳ ಮುಡಿದುಗುರುಹಿರಿಯರ ಆಶೀರ್ವಾದವ ಪಡೆದುಹರುಷದಿ ಪುತ್ರಪೌತ್ರರ ಸಲಹುತ ಪತಿಚರಣಸೇವೆಯ ಮಾಡಿ ಸುಖಮಿರು ಕುಕ್ಕೆಯವರ ಸುಬ್ರಹ್ಮಣ್ಯನ ಕೃಪೆಯಿಂದ ೬
ಸರಸ್ವತಿಯಂತೆ ವಿದ್ಯಾವಂತೆಯಾಗುಸಿರಿಯಂತೆ ಸೌಭಾಗ್ಯವಂತೆ ನೀನಾಗುಅರುಂಧತಿಯಂತೆ ಪತಿವ್ರತೆಯಾಗುತಪರಮಾನಂದದೊಳಿರು ಶ್ರೀ ಕೆಳದಿಯಪುರದ ರಾಮೇಶನ ಕೃಪೆಯಿಂದ ೭

೪೭೦
ಶ್ರೀ ಮಹಾದೇವದೇವಗೆಸೋಮಶೇಖರನಿಗೆವಾಮಾಂಕದೊಳು ಪಾರ್ವತಿಯಪ್ರೇಮದಿಂದ ತಾಳ್ದವಗೆಹೇಮದಾರತಿಯ ಬೆಳಗಿರೆ ೧
ಮಾರಮರ್ದನಗೆ ತ್ರಿಪು-ರಾರಿಗೆ ಶ್ರೀಕರನಿಗೆಶಾರದೆ ಲಕ್ಷ್ಮಿಯರು ವೈ-ಯಾರದಿಂದ ಪಾಡುತಮೇರುವೆಯಾರತಿಯ ಬೆಳಗಿರೆ ೨
ಕರುಣಾಸಾಗರಗೆ ಶ್ರೀ-ಕರಗೆ ಸರ್ವೇಶಗೆಪರಮ ಪಾವನಗೆಪಾರ್ವತಿಗೆ ವನಿತೆಯರುಕುರುಜಿನಾರತಿಯ ಬೆಳಗಿರೆ ೩
ದೇವದುಂದುಭಿ ಮೊಳಗೆದೇವತೆಗಳೆಲ್ಲಾ ನೆರೆದುಹೂವಿನ ಮಳೆಗರೆಯೆಭಾವಕಿಯರು ಮಾದೇವಗೆಹೂವಿನಾರತಿಯ ಬೆಳಗಿರೆ ೪
ಪಂಕಜಾಕ್ಷಿಯರು ಕೂಡಿಭೋಂಕನೆ ಗಾನವ ಪಾಡಿಕಂಕಣ ಕಡಗ ಝಣ ಝಣರೆನೆ ಶ್ರೀರಾಮೇಶಗೆಕುಂಕುಮದಾರತಿಯ ಬೆಳಗಿರೆ೫

೪೪೪
ಶ್ರೀಕಾಂತ ಬಿನ್ನಹ ಸರ್ವಲೋಕೈಕ ರಕ್ಷಕನಾಗಿಯಾಕೆ ನೀರಪೊಕ್ಕೆಯಯ್ಯಾ ಶ್ರೀಕೃಷ್ಣರಾಯಭೀಕರತಮನ ಕೊಂದುಶ್ರೀಕರವೇದವ ತಂದುಲೋಕೇಶನಿಗಿತ್ತೆ ಕಾಣೆ ಎಲೆ ಸತ್ಯಭಾಮೆ ೧
ಮಾರಜನಕನ ಕೌಸ್ತುಭಹಾರ ಕೇಳು ಕಠಿಣ ಶ-ರೀರವ ಪಡದೆ ಯಾಕೆ ಶ್ರೀಕೃಷ್ಣರಾಯನೀರೊಳು ಧಾರಿಣಿ ಮುಳುಗೆಚಾರು ಕೂರ್ಮಾಕಾರದಿಂದಭೂರಮಣಿಯ ಪೊರೆದೆ ಎಲೆ ಸತ್ಯಭಾಮೆ೨
ಧಾರಿಣಿಯ ಮಣ್ಣನಗೆದುಬೇರಮೆದ್ದು ಕಠಿಣ ಕಾಂ-ತಾರವ ಸೇರಿದೆ ಯಾಕೆ ಶ್ರೀಕೃಷ್ಣರಾಯಕ್ರೂರದಾಡೆಯಗ್ರದಿ ವೈ-ಯಾರದಿ ಭೂಮಿಯನೆತ್ತಿಮೂರು ಲೋಕವ ಪೊರದೆ ಎಲೆ ಸತ್ಯಭಾಮೆ ೩

೪೭೯
ಶ್ರೀಗಣಪತಿಗೆರಗಿ ಶಾರದೆಯನುರಾಗದಿಂದಲಿ ಸ್ಮರಿಸಿ ಶ್ರೀಗಿರಿಜಾತೆಯಲೋಕೈಕ ಮಾತೆಯ ಬೇಗದಿ ಹಸೆಗೆ ಕರೆದ ಸುಪದಂಗಳಾ ರಾಗದಿ ಪಾಡಿ ಪೊಗಳುವೆ ೧
ಮಿಸುನಿಯ ಮಂಟಪದಿ ರಾರಾಜಿಪಪೊಸಪಸೆವಣೆಯನಿಟ್ಟು ಪೊಸದೇವಾಂಗವ ಮೇಲೆಪಸರಿಸಿ ಹಾಕುತ ಶಶಿಮುಖಿಯರು ನೆರೆದೊಂದಾಗಿ ಪಾಡುತ ಕುಶಲದಿ ಹಸೆಗೆ ಕರೆದರು ೨
ಕಡೆಯಾಣಿಯ ಚಿನ್ನದ ಜಗಜ್ಯೋತಿಯಎಡಬಲದೊಳಗಿಟ್ಟು ಉಡುರಾಜಮುಖಿಯರುಮೃಗರಾಜಕಟಿಯರು ಕಡುಬೆಡಗಿಂದಪಾಡುತ ನಲಿದಾಡುತ ಮೃಡನರಸಿಯ ಹಸೆಗೆ ಕರೆದರು ೩
ಚಿನ್ನದಪಿಲ್ಲಿಮಿಂಚು ಉಂಗುರಗಳುರನ್ನದಲ್ಲಣಿವೆಟ್ಟು ಉನ್ನತವಾದ ಕಾಲ್ಗಡಗಸರ್ಪಣಿಗೆಜ್ಜೆಯನ್ನು ತಳೆದ ಪಾದಪದುಮದಿಂದೊಮೈವ ಪೂರ್ಣೇಂದು ಮುಖಿಯರು || ಹ ೪
ವರರತ್ನಖಚಿತವಾದ ಗೆಜ್ಜೆಮೊಗ್ಗೆಯಸರವೊಡ್ಯಾಣವು ಡಾಬು ಮಿರುಪಮಂಡೆಳೆಯುಡುದಾರ ಕಿಂಕಿಣಿಗಳ ಸರಫಲಿರೆನೆ ಚೆಂಗಾವಿಸೀರೆಯನುಟ್ಟು ಗಿರಿರಾಜತನುಜೆ || ಹ ೫
ಚಳಿಕೆ ಹಿಂಬಳೆದೊರೆಯ ಚೂಡಾಕಟ್ಟುಬಳೆಕಂಕಣ ಕಡಗ ಪೊಳೆವ ಮುಂಗೈಯಮುರಾರಿ ಮುತ್ತಿನದಂಡೆ ಥಳಥಳಿಸುವಬೆರಳುಂಗುರಗಳನಿಟ್ಟು ಲಲಿತಾಂಗಿ ಬೇಗ | ಹಸೆಗೇಳು ೬
ವರನಕ್ಷತ್ರದ ಸರವು ಏಕಾವಳಿ ಸರಗುಂಡಿನಸರವು ಮಿರುಪಬಿಲ್ಸರ ಚಳ್ಯಸರ ಚಕ್ರಸರಗೋಧಿಸರ ಮೋಹನಮುತ್ತಿನ ಸರಗಳನಿಟ್ಟವರಕಂಬುಕಂಠಿ ಬೇಗ | ಹಸೆಗೇಳು ೭
ಅಣಿ ಮುತ್ತಿನ ಮೂಗುತಿ ಐದೆಳೆಯ ಕ-ಟ್ಟಾಣಿ ಕಾಶಿಯ ತಾಳಿ ಮಾಣಿಕಮಯಬತಿಮಲಕು ಅಡ್ಡಿಕೆ ಮಲಕಾಣಿ ಮುತ್ತಿನಬಟ್ಟುಮಲಕು ಸರಿಗೆಯಿಟ್ಟ ಏಣಾಕ್ಷಿ ಬೇಗ | ಹ ೮
ತೊಳಪ ಮುತ್ತಿನಮಾಲೆ ಸರ್ಪಣಿಯಂಥಳಥಳಿಪ ವಜ್ರದವಾಲೆ ಚಳತುಂಬು ಮೀನ ಬಾ-ವಲಿ ಹಂಸೆಗಿಳಿಯ ಬಾವಲಿಯು ಹೊನ್ನೂಲುಕುಪ್ಪಿನವೆಂಟ್ಟೆಯವಿಟ್ಟ ಕಲಹಂಸಗಮನೆ | ಹ೯

೪೫೮
ಸುಖವಾದರುಬರಲಿಈ ಕ್ಷಣ ದುಃಖವಾದರು ಬರಲಿಅಕಲಂಕ ಚರಿತನು ಸಕಲರಕ್ಷಕನು ಮಕರಾಂಕರಿಪು ಶಿವಸುಖನಾಗಿರುತಿರೆ ಪ
ಬಾಳಬಲ್ಲವನೆನಲಿಮೂರ್ಖನು ಖೂಳನು ಇವನೆನಲಿಕಾಲಕಾಲ ಕರುಣಾಲವಾಲನನೀಲಕಂಠನ ನಾಮ ನಾಲಗೆಯಲ್ಲಿರೆ೧
ನಿಂದಿಸಿದವರುಗಳುಗುರುಗಳು ಬಂಧು ಬಾಂಧವರವರುಸಿಂಧುರ ಬಂಧುರ ಚರ್ಮಾಂಬರನ-ರ್ಧೇಂದುಮೌಳಿ ತಾ ಬಂದು ರಕ್ಷಿಸುತಿರೆ ೨
ದೊರೆ ಮುನಿದರದೇನುಮತ್ರ್ಯು ಜರೆದು ನುಡಿದರೇನುಸುರರು ದಾನವರು ಮುನಿದರಂಜುವೆನೆವರ ಕೆಳದಿಯ ರಾಮೇಶ್ವರನು ರಕ್ಷಿಸುತಿಹರೆ ೩

೪೮೦
ಸೂಳೆವೆಂಗಳ ನಂಬಬೇಡಅವರ ಖೇಳಮೇಳವ ಬಿಡೋ ಮೂಢಬಲು ಜಾಲಗಾತಿಯರ ಬಲೆಗೆ ಸಿಕ್ಕದಿರುಯಮನಾಳೆ ಮುಡಿಸುವನೆ ಬಿಡುಬಿಡುಗಾಡ ಪ
ಸುರತಸುಖವ ತೋರಿಸುವರುಮನೆಯೊಳಿರುವ ಧನವ ತರಿಸುವರುಪರಪುರುಷನಿದಿರು ಮಾಡುವರುಧನ ಬರಿದಾಗೆ ತಪ್ಪು ಹೊರಿಸುವರುಕಡೆಗೆ ತಿರಿದು ತಾರಂದು ಕೈಯಲಿ ತೂತುಗರಟವಕರೆದು ಕೊಡುವರು ಬೈವರು ದೂರುವರು೧
ಗುರುಹಿರಿಯರ ತೊರೆಸುವರುಮನೆಯೊಳಿರುವ ಮಕ್ಕಳ ಮರಸುವರುಧನ ಬರುವತನಕ ನೋಡುವರುಬಾರದಿರೆ ಛಿ ಹೋಗೆಂದು ದೂಡುವರು ಗಂಧಪರಿಮಳ ತಿಲಕ ತಾಂಬೂಲ ಕ್ರಮುಕದೊಳುಮರುಳು ಮದ್ದಿಕ್ಕಿ ಕೈವಶವ ಮಾಡುವರು೨
ಹೆಂಡತಿಯನು ತೊರಸುವರುಕಂಡ ಕಂಡ ಪುರುಷರ ಕೂಡುವರುಮಂಡೆಗೆ ಮದ್ದನೂಡುವರು ಕಡೆಗೆಭಂಡಾಟವ ಮಾಡುವರು………..(ಅಸಮಗ್ರ)

೪೪೭
ಹೂವ ಕೊಡೆ ದೇವಿ ಹೂವ ಕೊಡೆಯಾವಾಗಲೂ ನಿಮ್ಮ ಸಿರಿಮುಡಿಯೊಳಗಿರ್ಪ ಪ ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿಪರಿ ಪರಿ ಧೂಪ ಧೂಮಗಳನಿಕ್ಕಿಪರಿಮಳಿಸುವ ಸಂಪಿಗೆಯ ಪೂಸರವ ಸಿಂ-ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ ೧
ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸರಸಿಜ ಮೊದಲಾದ ಕುಸುಮದಿಂದಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪಅರಳಿದ ಮಲ್ಲಿಗೆ ಹೂವ ಕಂಡೆ ಹೂವ ೨
ವ್ಯೋಮಗಂಗೆಯೊಳಿಂದ ಹೇಮಕಾಮರಸವಕಾಮಿನಿಯರು ಕೊಯ್‍ತಂದದನುಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ ೩
ಮುತ್ತಿನ ಲಹರಿಯ ರತ್ನದ ರಾಗಟೆಯಸುತ್ತ ಮುತ್ತಲೂ ರಾರಾಜಿಸುವಪುತ್ಥಳಿಯ ಚಿನ್ನದಂತೆ ಘಮಘಮಿಸುವಉತ್ತಮವಾದ ಸುವರ್ಣದ ಕೇದಗೆ ಹೂವ ೪
ಜಾತಿ ರತ್ನದ ನಡುವೆ ಜ್ಯೋತಿಯ ತೆರನಂತೆನೂತನವೆನಿಸಿ ಪ್ರಜ್ವಲಿಸುತಿಹಶಾತಕುಂಭದ ಚೌರಿಯ ಮೇಲೆ ಮುಡಿಸಿದಜಾತಿಮಲ್ಲಿಗೆ ಸಂಪಿಗೆ ಸೇವಂತಿಗೆ ಹೂವ ೫
ಇಂದೀವರದಳನಯನೆ ಶುಭಪ್ರದೆಇಂದು ನಿಭಾನನೆ ಹೂವ ಕೊಡೆಮಂದಗಮನೆ ನಿಮ್ಮ ತುರುಬಿನೊಳೊಪ್ಪುವಮಂದಾರದ ಮೋಹನ ಮಾಲಿಕೆಯೆಂಬ ಹೂವ ೬
ಚಂದ್ರಗಾವಿಯ ಸೀರೆ ಚೆಲುವ ಮುತ್ತಿನಸರದಿಂದಲೆಸೆವ ದೇವಿಹೂವ ಕೊಡೆಮುಂದಲೆ ಮುತ್ತಿನ ಸರದ ಮೇಲೊಪ್ಪುವಬಂಧುರಪೂಗಪುನ್ನಾಗ ಪಾರಿಜಾತದ ಹೂವ ೭
ದೇವಿ ನಿಮ್ಮನು ಪೂಜೆಗೈದು ಮೆಚ್ಚಿಸಬಲ್ಲನಾವನೀ ಧರೆಯೊಳುಹೂವ ಕೊಡೆಪಾವನಾತ್ಮಕಿಯ ಪರಾಕ ಮಾಡದೆ ವರ-ವೀವ ಸಮಯವಿದು ಹೂವ ಕೊಡೆ ಹೂವ ೮
ಮುತ್ತೈದೆತನವನು ನಿತ್ಯ ಸೌಭಾಗ್ಯವಉತ್ತಮ ಧನಕನಕಾಂಬರವಪುತ್ರ ಸಂತಾನವ ಕೊಡುವೆನೆನುತ ಕರ-ವೆತ್ತಿ ಅಭಯವಿತ್ತು ಹೂವ ಕೊಡೆ ಹೂವ ೯
ಎಂದೆಂದೂ ಈ ಮನೆಗೆ ಕುಂದದ ಭಾಗ್ಯವಚಂದವಾಗಿಹ ಛತ್ರಚಾಮರವಚಂದ್ರ ಸೂರ್ಯರ ಪೋಲ್ವ ನಂದನರನುದಯ-ದಿಂದಲಿ ಕೊಟ್ಟು ರಕ್ಷಿಪನೆಂದು ಸೂಡಿದ ಹೂವ೧೦
ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮ ಪಟ್ಟದ ರಾಣಿ ಪಾರ್ವತಿ ನಿಮ್ಮಯಸಿರಿಮುಡಿಯೊಳಗಿರ್ಪ ಹೂವ ಕೊಡೆ ಹೂವ ೧೧

ರಾಮ ರಾಮ ಎಂಬ ನಾಮ
೪೪೧
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ
ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ ೧
ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ೨
ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ ೩

ಹಾಡಿನ ಹೆಸರು :ರಾಮ ರಾಮ ಎಂಬ ನಾಮ
ಹಾಡಿದವರ ಹೆಸರು :ರಮಾ ಪಿ.
ಸಂಗೀತ ನಿರ್ದೇಶಕರು :ವಸಂತಾ ಪಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *