Categories
ರಚನೆಗಳು

ಕಾಖಂಡಕಿ ಶ್ರೀ ಮಹಿಪತಿರಾಯರು

೨೦೨
ಅದಿತತ್ವದ ಸಾರ ತಿಳಿಯದೆ ಭೇದಾಭೇದ ವಿದ್ಯಾತಕೆ
ವೇದ ಉಪನಿಷದ್ವಾಕ್ಯವರಿಯದೆ ಗಾಧ
ಸೂಸುವದ್ಯಾತಕೆ ಹರಿಭಕುತಿಗೆ ಧ್ರುವ
ಮೂಲದಲಿ ಮನಮೈಲ ತೊಳಿಯದೆ
ಬಲಮುಣುಗುವದಿದ್ಯಾಕೆ
ಬಲುವ ಭಾವದ ಕೀಲ ತಿಳಿಯದೆ ಮಾಲಿಜಪಕೈಯಲ್ಯಾತಕೆ
ನೆಲೆಯುಗೊಳ್ಳದೆ ಮೂಲ ಮೂರ್ತಿಯ ಮ್ಯಾಲೆ
ತಲೆ ಮುಸಕ್ಯಾತಕೆ
ಹಲವು ಜನ್ಮ ಹೊಲಿಯು ತೊಳಿಯದೆ ಶೀಲಸ್ವಯಂಪಾಕ್ಯಾತಕೆ ೧
ಹರಿಯ ಚರಣಾಂಬುಜನವರಿಯದೆ ಬರಿಯ ಮಾತಿನ್ಯಾತಕೆ
ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ
ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ
ತರಣೋಪಾಯದ ಸ್ಮರಣಿ ಇಲ್ಲದೆ ತರ್ಕಭೇದಗಳ್ಯಾತಕೆ ೨
ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ
ಕಂತುಪಿತನಾರ್ಚನೆಯನರಿಯದೆ ತಂತ್ರ ಮಂತ್ರಗಳ್ಯಾತಕೆ
ಸಂತತ ಚಿಂತಾಯಕನಾ ನೆನೆಯದೆ ಮಂತ್ರಮಾಲೆಗಳ್ಯಾತಕೆ
ಪಂಥವರಿಯದೆ ಪರಮಯೋಗದಾನಂತ ವ್ರತವಿದುವ್ಯಾತಕೆ ೩
ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆವ್ಯಾತಕೆ
ಗುಹ್ಯಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ
ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡದ್ಯಾತಕೆ
ಮಹಾವಾಕ್ಯದಿತ್ಯರ್ಥವರಿಯದೆ ಸಾಯಸಬರುವದ್ಯಾತಕೆ ೪
ಭಾಗ್ಯಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ
ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥಸಾಧನ
ಭೋಗ್ಯಭೋಗದ ಸಾರ ಸುಖವಿದು ಯೋಗಿ ಮಾನಸಜೀವನ
ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೋ ಸನಾತನ ೫

೨೦೩
ಅಧ್ಯಾತ್ಮದ ವಿದ್ಯ ಅಧ್ಯಕ್ಷಾಗಬೇಕು ಸಾಧ್ಯ ಧ್ರುವ
ಕನ್ನಡಿಯೊಳಗಿನ ತಾ ಗಂಟು ಸನ್ನಿಧವಾಗುವದೆ ಕೈಗೊಟ್ಟು
ಬಣ್ಣಿಸಬ್ಯಾಡಿ ನಿಜಬಿಟ್ಟು ಕಣ್ಣಾರೆ ಕೆಟ್ಟು ೧
ಕನಸಿಲೆ ತಾ ಕಂಡಭಾಗ್ಯ ಅನುಭವಕೆ ಬಹುದೆ ಶ್ಲಾಘ್ಯ
ನೆನಸಿಕೊಂಡವ ಅಯೋಗ್ಯಜನದೊಳು ಅಶ್ಲಾಘ್ಯ ೨
ಹೊತ್ತಿಗೆಲ್ಹೇಳುವ ಪುರಾಣ ಯಾತಕೆ ಬಾಹುದು ನಿರ್ವಾಣ
ಚಿತ್ತಗಾಗುದು ಸಮಾಧಾನ ಹತ್ತಿಲಿ ನಿಜಗಾಣಾ ೩
ಮೃಗಜಲ ಭಾಸುವ ಪ್ರವಾಹ ಯುಗತಿಗೆ
ಬಾಹುದೆ ನಿರ್ವಾಹ
ಹೊಗುವರೆ ಹೊಕ್ಕರೆ ಸಹಾ ಹೋಗದು ತೃಷದಾಹ ೪
ಸಾಧನ ಮಾಡಿಕೊ ಸಾಧ್ಯಸದ್ಗುರು ಕೃಪೆಯಲಿ ನಿಜ ಅಭೇದ್ಯ
ಸಾಧಿಸೊ ಮಹಿಪತಿ ಸಧ್ಯ ಆಧ್ಯಾತ್ಮಸುವಿದ್ಯ ೫

೬೦೩
ಅನಂದವಾಯಿತು ಸ್ವಾನಂದ ಘನಸುಖ
ತನುಮನದೊಳಗೆ ತನ್ನಿಂದ ತಾನೊಲಿದು
ಖೂನದೋರಿತು ಘನ ಗುರು ಕೃಪೆ ಎನಗೆ ೧
ಸೋಮಾರ್ಕದ ಮಧ್ಯಸ್ವಾಮಿ ಸದ್ಗುರು ಪಾದ
ನಮಿಸಿ ನಿಜದೋರಿತು
ಜುಮುಜುಮುಗಟ್ಟಿ ರೋಮಾಂಚನಗಳುಬ್ಬಿ
ಬ್ರಹ್ಮಾನಂದವಾಯಿತು ೨
ನಾಮ ಸೇವಿಸಿ ಮಹಿಪತಿಗೆ ಸವಿದೋರಿತು
ಪ್ರೇಮಭಾವನೆಯೊಳಗೆ ಧಿಮಿಧಿಮಿಗುಡುತ
ಬ್ರಹ್ಮಾನಂದದ ಸುಖ ಅನುಭವಿಸಿತೆನಗೆ ೩

೫೯೭
ಅನುಭವವಿದೇ ನೋಡಿ ಆನಂದೋ ಬ್ರಹ್ಮ
ಏನೆಂದ್ಹೇಳಲಿನ್ನಾಗುವ ಸಂಭ್ರಮ ಧ್ರುವ
ಸುಖ ನೋಡಿ ನಮ್ಮ ಸ್ವಾನುಭವದ
ಸಖರಿಂದ ಮೀರಿ ಬಲು ಸುಸ್ವಾದ
ಅಖರಿಂದ ಕೇಳಿ ನಿಜ ಬೋಧಾ
ಶುಕಮುನಿ ಸೇವಿಸುದಾ ೧
ಬೆರೆದು ನೋಡಿ ಆರು ಚಕ್ರವೇರಿ
ಸುರಿಯುತಿದೆ ಸುಖ ಸಂತ್ರಾಧಾರಿ
ಭೋರ್ಗರೆಯುತಿದೆ ಅನಂತ ಪರಿ-
ದೋರಿ ಕೊಡುತಾನೆ ಶ್ರೀಹರಿ ೨

ಸುಗ್ಗಿ ಇದೇ ನೋಡಿ ಸುಜ್ಞಾನಿಗಳು
ಲಗ್ಗೆ ಮಾಡಿಕೊಳ್ಳಿ ಅದೆ ಬಲು ಬಹಳ
ಬೊಗ್ಗಿ ಉಣಬೇಕು ಇದು ಸರ್ವಕಾಲ
ಹಿಗ್ಗಿಕೊಳ್ಳೊ ಮಹಿಪತಿ ನೀ ತರಳ ೩

೫೯೮
ಅಭ್ಯಾಸವಮಾಡಿ ಅಭ್ಯಂತ್ರದೊಳಗಿಹುದು ಧ್ರುವ
ಕಣ್ಣು ಕಾಣುವದ್ಹಚ್ಚಿ ಚೆನ್ನಾಗಿ ಚಿತ್ಸ್ವರೂಪವ
ಭಿನ್ನವಿಲ್ಲದೆ ಭಾಸುವದು ಪುಣ್ಯಪ್ರಭೆಯು ೧
ಕಿವಿಯು ಕೇಳುವದ್ಹಚ್ಚಿ ಸವಿಸವಿ ಸಾರಾಯದ ಶ್ರುತಿ
ಆವಾಗ ನಿಮ್ಮೊಳಾಲಿಸಿ ಪವಿತ್ರ ಪ್ರಣವ ೨
ಘ್ರಾಣ ಗ್ರಹಿಸುವದ್ಹಚ್ಚಿ ದೇಹದೊಳಾವಾಗ ಪೂರ್ಣ
ಸೋಹ್ಯ ಸೂತ್ರವಿದು ಸೋಹ್ಯವೆಂಬುದಾ ೩
ಜೀವಕೆ ಜೀವ್ಹಾಳಚ್ಚಿ ಸುವಿದ್ಯಸೇವೆ ಸೂತ್ರದ
ಸರ್ವದಾ ಸವಿಸಾರವ ನೋಡಿ ದಿವ್ಯನಾಮದ ೪
ಭಾವಕೆ ಭಾವಿಸುವದ್ಹಚ್ಚಿ ಭವನಾಶಗೈಸುವುದಕ್ಕೆ
ಶಿವಸುಖವಿದುರಿಡುವಾಂಗೆ ಜೀವ ಜೀವದಾ ೫
ಮನಸಿಗೆ ಮನಹಚ್ಚಿ ಮನೋನ್ಮನಮಾಡಿ
ಘನಸುಖದೊಳು ಬೆರೆದಾಡಿ ಅನುಭವಿಸಿ ನೋಡಿ ೬
ಗುರುವಿಗೆ ಗುರುವೆಂದರಿದು ನರದೇಹದ ಭಾವನೆಯ ಮರೆದು
ಕರಕೊ ಮಹಿಪತಿ ಇರುಳ್ಹಗಲೆ ಸ್ಮರಿಸಿದಾಕ್ಷಣ ೭

೨೨
ಅಮ್ಮಬಾರೆ ನಮ್ಮಮ್ಮನೆ ನೀನಮ್ಮ
ಅಮ್ಮಬಾರೆ ನಮ್ಮಮ್ಮನೆ ಧ್ರುವ
ಅಮ್ಮಬಾರೆ ನಮ್ಮಮ್ಮನೆ ನೀ
ನಮ್ಮ ಬೊಮ್ಮನ ಪಡೆದಮ್ಮ ನೀ ಪರ
ಬ್ರಹ್ಮ ನೀನಹುದಮ್ಮ ನೀನಮ್ಮ
ಅಮ್ಮಬಾರೆ ನಮ್ಮಮ್ಮನೆ ೧
ಉಮ್ಮ ಸವಿದೊಮ್ಮೆ ಅಮ್ಮೆ ನಾ ನಿನ್ನ
ಸುಮ್ಮನಿರುವೆ ನಾ ಒಮ್ಮನದಲೆಮ್ಮೆ
ಇಮ್ಮನಡಿಬೇಡೆ ಅಮ್ಮೆ ನಾನ ನಿಮ್ಮ
ಒಮ್ಮೆ ಅಮ್ಮಿಯಾಲಮೃತ್ಯೆರಿ ಅಮ್ಮಾ ೨
ಒಮ್ಮೆ ದಯವೆಂಬ ಅಮ್ಮನುಣಿಸಮ್ಮಾ
ನಮ್ಮ ಕರುಣದಾ ಅಮ್ಮನುಣಿಸಮ್ಮಾ
ಒಮ್ಮೊಮ್ಮುಣಿಸ ನಮ್ಮಮ್ಮ ನೀನಮ್ಮಾ
ರಮ್ಮಿಸಿ ಮಹಿಪತಿ ಬಾಲಕಗ ನಿಮ್ಮ ೩

೨೧
ಅಮ್ಮಾ ಬಾ ನಮ್ಮಮ್ಮನೆ ಅಮ್ಮೆ ನೀಡಮ್ಮನೆ
ಬೊಮ್ಮನಾ ಪಡೆದ ಶ್ರೀ ಹರಿ ಪರಬ್ರಹ್ಮನೆ ಧ್ರುವ
ಬೇಡುವೆ ನಿಮ್ಮನೆ ಕಾಡುವೆ ಸುಮ್ಮನೆ
ಓಡ್ಯಾಡಿ ಬಂದು ಅಂಡಲಿವೆ ನಾ ತಮ್ಮನೆ ೧
ಬಯಸಿ ಬಂದೊಡೆ ನಾ ಕಾಯಬೇಕೆನ್ನನಾ
ತಾಯಿ ತಂದ್ಯೊಬ್ಬಳೆ ನೀನೆ ಸನಾತನಾ ೨
ಉಣಿಸೆ ನಾಮಮೃತ ದಣಿಸೆ ಮನೋರಥಾ
ದೀನಮಹಿಪತಿ ಜೀವ ಪ್ರಾಣಕ ಸನಾಥಾ ೩

೩೪೭
ಅರ ಹು ನೀಡೊ ನೀ ಸ್ವಾಮಿ ಶ್ರೀನಿಧೇ
ಶರಣ ರಕ್ಷಕಾಗಿರಬೇಕಿದೆ
ತರಣೋಪಾಯಕೆ ಸಾರಸುಖವಿದೆ
ಕರುಣಿಸೊ ದಯ ಗುರುಕೃಪಾನಿಞ್ಸ್ É ೧
ತ್ಯರನೆ ತಿಳಿಯದೆ ಬರಿದೆ ಭ್ರಮಿಸಿದೆ
ಕರುವ್ಹುದೋರೋ ನೀ ಸ್ಮರಣಿ ಅಹುದೆ ೨
ಸೆರಗು ಶಿಲುಕವಾ ಪರಮ ಪುಣ್ಯಿದೆ
ಕರುಣಿಸೊ ದಯ ಗುರು ಕೃಪಾನಿಧೆ ೩

೩೪೬
ಅರಹು ಅಂಜನಾಗದನಕಾ
ಪರಗತಿ ದೊರೆಯದು ಗುರುಕೃಪೆ ಆಗದನಕಾ ಧ್ರುವ
ಕಣ್ಣುಕಂಡು ಕಾಣದನಕಾ
ಅನುಮಾನ ಹೋಗದು ಉನ್ಮನವಾಗದನಕಾ
ಜ್ಞಾನ ಉದಯವಾಗದನಕಾ
ಮನ ಬೆರಿಯದು ಘನಮಯಾಶ್ಚರ್ಯವಾಗದನಕ ೧
ತನ್ನೊಳು ತಾ ತಿಳಿಯದನಕಾ
ಭಿನ್ನವಳಿಯದು ಅನುಭವ ಸುಖ ಹೊಳೆಯದನಕಾ
ನೆನವು ನೆಲೆ ಗೊಳ್ಳದನಕಾ
ಘನಪ್ರಭೆಯು ಹೊಳಿಯದು ಧ್ಯಾನ ನಿಜವಾಗದನಕ೨
ಏರಿ ತ್ರಿಪುರ ನೋಡದನಕಾ
ಗುರುಮಹಿಮೆ ತಿಳಿಯದು ತಾ ದೃಢಗೊಳ್ಳದನಕಾ
ಮುರು ಹರಿಯಗುಡದನಕಾ
ಹರಿಯದು ಜನ್ಮಗುರುಚರಣವ ನೋಡದನಕಾ ೩

೨೪
ಅರಿಕುಕೊಳ್ಳಿರೈಯ್ಯಾ ನೀವು ಹರಿಯ ನಾಮಾವೃತ
ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ಧ್ರುವ
ಒಳ್ಳೆಒಳ್ಳೆವರು ಬಂದು ಕೇಳಿರೊ ನೀವಿನ್ನು
ತಿಳದುಕೊಳ್ಳಿ ಇದಕೆ ಬೀಳುವದಿಲ್ಲಾ ಹಣಹೊನ್ನು
ಉಳ್ಳ ಬುದ್ಧಿಯಿಂದ ನೀವು ತೆರೆದುನೋಡಿ ಕಣ್ಣು
ಕೊಳಲರಿಯದವನ ಬಾಯಾಗ ಬೀಳುದು ಮಣ್ಣು ೧
ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ
ಸಮ್ಯಕ್ ಜ್ಞಾನ ಪ್ಯಾಟಿಯೊಳು ತುಂಬಿ ತುಳಕುತ್ತ
ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ
ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ ೨
ಇಹಪರ ನಾರ್ಥಕಿದೆ ಕೇಳಿರೋ ನೀವೆಲ್ಲ
ದೇಹ ಅಭಿಮಾನಿಗಿದು ಸಾದ್ಯವಾಗುವುದಿಲ್ಲ
ಸೋಹ್ಯವರಿತು ಸೂರೆಗೊಂಡು ಮಹಿಮ ತಾನೆ ಬಲ್ಲಗುಹ್ಯವಾಕ್ಯ ತಿಳಿದುನೋಡಿ ಮಹಿಪತಿ ಸೊಲ್ಲಾ ೩

೨೩
ಅರಿತು ಕೊಳ್ಳಿರೊ ಬ್ಯಾಗ ಹರಿಯ ನಾಮಮೃತ
ದೊರಕುವದಲ್ಲಿದು ನೋಡಿ ಸರ್ಕನೆ ಸರ್ವರಿಗೆಲ್ಲಾ ಧ್ರುವ
ಗುರುಕರುಣ ಕೃಪೆಯಿಂದ ಪರಮ ದಿವ್ಯಾಮೃತವು
ಸುರಿಸುರಿದು ಚಪ್ದರಿಸು ಸೂರ್ಯಾಡಿ ಸಾರಸವ ೧
ಅನುದಿನ ಸೇವಿಸುವ ಅನುಭವಿಗಳೂಟ
ಏನೆಂದು ಸುರಲಿ ನಾ ಆನಂದೋಬ್ರಹ್ಮವಾ ೨
ಎಂದಿಗೆ ಬಾಹುದು ನೋಡಿ ಸಂದಿಸಿ ಮಾನವ ಜನ್ಮ
ಚಂದ ಮಾಡಿಕೊಳ್ಳಿರೊ ಬಂದ ಕೈಯಲಿ ಬ್ಯಾಗ ೩
ಆಲಸ್ಯ ಮಾಡಬ್ಯಾಡಿ ವಾಲ್ಗೈಸಿಕೊಳ್ಳಲಿಕ್ಕೆ
ಸುಲಲಿತವಾಗಿಹುದು ತಿಳಿದುಕೊಂಬವರಿಗೆ ೪
ಇರಳ್ಹಗಲ ಪೂರ್ಣ ಸುರವುತಿಹ ಅಮೃತ
ತರಳ ಮಹಿಪತಿ ಪ್ರಾಣ ದೊರೆವ ಸಂಜೀವನ ೫

೩೪೮
ಅರುಕ್ಯುಳ್ಳ ಗುರುಪಾದವಾಶ್ರೈಸೊ ಎನ್ನ ಮನವೆ
ಎಗ್ವಾಗ್ಯನುಭವ ಸುರಕಿ ಕೊಳ್ಳೊ ಧ್ರುವ
ಮರಹುಮರದೀಡ್ಯಾಡಿ ಅರಹುವಿನೊಳರಿತು ಗೂಡಿ
ಕುರುಹ ಗುರುತುಮಾಡಿ ಸ್ಥಿರವು ಕೂಡಿ ೧
ತಿರಹು ಮರ್ಹವಿನ ಖೂನ ಅರಹು ಮರ್ಹವಿನ ಸ್ಥಾನ
ಇರಹು ಆಗೀಹ್ಯ ಘನ ಬೆರಿಯೋ ಧ್ಯಾನಾ ೨
ಜೀವ ಶಿವರಸಂದು ಠಾವಮಾಡಲು ಬಂದು
ಭವಕ ಬೀಳುವನೆಂದು ಭಾವಿಕನೆಂದು ೩
ಜಾಗ್ರನಿದ್ರಿಯ ಮಧ್ಯಮಾರ್ಗದ ಸುಖಸಾಧ್ಯ
ಅಗ್ರಗುರು ಸುವಿದ್ಯ ಶೀಘ್ರಸಾಧ್ಯ ೪
ಕೀಲು ತಿಳಿದರೆ ಸಾಕು ಜಾಲವ್ಯಾತಕೆ ಬೇಕು
ಮೂಲಗುರುಪಾದ ಮಹಿಪತಿ ನೀ ಸೋಂಕು ೫

೨೦೧
ಅರ್ತರಿಯದ್ಹಾಂಗೆ ಇರಬೇಕು ಮತ್ರ್ಯದೊಳಗೆ ಧ್ರುವ
ಬಲ್ಲೆನೆಂಬ ಬಡಿವಾರ ಸಲ್ಲದು ತಾ ಅಹಂಕಾರ
ಬಲುಸೂಕ್ಷ್ಮ ಗುರುಪಾರಾವಾರ ತಿಳಿಯಲು ವಿಚಾರ ೧
ತರ್ಕತೆ ದೋರಲು ಖೂನ ಅತ್ರ್ಯುಳ್ಳವರ ನಿಧಾನ
ಸರ್ಕನೆ ತಿಳಿವದು ಖೂನ ತಾರ್ಕಣ್ಯದ ಧನ ೨
ಹಲವು ಮಾತಾಡಿದಂತೆ ಬಲುವಾ ಭಾವದೋರಿತು
ನೆಲೆಯು ಗೊಳಬೇಕು ತಿಳುವಂತೆ ಎಲಿಮರಿಕಾಯಂತೆ ೩
ಬಲ್ಲತನಕೆ ದೂರ ಸುಲಭ ಸುಜ್ಞಾನ ಸಾರಾ
ಅಲ್ಲಹುದೇನು ತಾ ವಿಚಾರ ಬಲು ತುಂಬ್ಯಾದ ಸ್ಥಿರ ೪
ಅರ್ತು ಅರಿಯದ್ಹಾಂಗಿದ್ದು ಗುರ್ತುಹೇಳದೆ ನೀ ಸದ್ದು
ಬೆರ್ತು ಮಹಿಪತಿ ನಿಜಹೊಂದು ಅರ್ಥಿ ನಿನಗೊಂದು ೫

೫೯೯
ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ
ನಿರ್ತವಾಗಿ ಪೂರ್ಣಬೆರ್ತು ಕೂಡುವಾ ಬನ್ನಿ ಗುರ್ತದಿಂದ ಧ್ರುವ
ಸೂರ್ಯನಿಲ್ಲದ ಸೂಪ್ರಕಾಶ ತುಂಬೇದ ಹೇಳಲೇನ
ತೂರ್ಯಾವಸ್ಥೆಯೊಳು ಬೆರೆದು ಕೂಡಿದ ಜ್ಞಾನಿಬಲ್ಲ ಖೂನ
ಬರಿಯ ಮಾತನಾಡಿ ಹೊರಿಯ ಹೇಳುವದಲ್ಲ ಅರುವ್ಹೆಸ್ಥಾನ
ಪರಿಯಾಯದಿಂದ ಪರಿಣಿಮಿಸಿ ನೋಡಿ ಪರಮ ಪ್ರಾಣ ೧
ಚಂದ್ರನಿಲ್ಲದೆ ಬೆಳದಿಂಗಲು ಬಿದ್ದದ ಬಲು ಬಹಳ
ಇಂದ್ರಾದಿಕರೆಲ್ಲ ಹರುಷದಿ ನೋಡುವರು ಸರ್ವಕಾಲ
ಸುಂದ್ರವಾದ ಸುವಸ್ತುವಳಗೊಂದದೆ ಅಚಲ
ಸಾಂದ್ರವಾದ ಸುಖತುಂಬಿ ತುಳುಕತದೆ ಥಳ ಥಳ ೨
ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬ್ಯಾಗ
ಸ್ವಾನುಭವದಲನುಭವಿಸುವದು ಬ್ರಹ್ಮಭೋಗ
ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ
ದೀನ ಮಹಿಪತಿಗೆ ತಾನೆತಾನಾದ ಸದ್ಗುರುವೀಗ ೩

೩೪೯
ಅಲ್ಲಿಂದಲ್ಲೆದೆಮಾ ಅಲ್ಲಿಂದಲ್ಲೆದೆ ಘನಗುರುಮಹಿಮೆ ಧ್ರುವ
ಅಲ್ಲಿಂದಲ್ಲಿದ್ದು ತಿಳಿಯದು ಲೋಕಾ ೧
ಅಲ್ಯಾವನಾದರ ಅಲ್ಲೆವೇ ತಿಳಿದಾ ೨
ಬಲ್ಲಮಹಿಮರ ಬಲಗೊಂಡು ಕೇಳಿ ೩
ಒಳಗಲ್ಲ ಹೊರಗಲ್ಲ ಒಳಿತಾಗಿ ಕೇಳಿ೪
ಕೆಳಗಲ್ಲ ಮ್ಯಾಲಲ್ಲ ತಿಳಿದುಕೊಂಡು ನೋಡಿ ೫
ಹಿಂದಲ್ಲ ಮುಂದಲ್ಲ ಸಂಧಿಸಿ ನೋಡಿ ೬
ಎಡಕಲ್ಲ ಬಲಕಲ್ಲ ಪಡಕೊಂಡು ನೋಡಿ ೭
ದೂರಲ್ಲ ಸಾರ್ಯಲ್ಲ ಅರಿತಿನ್ನು ನೋಡಿ ೮
ಬೆಡಗಿನ ಮಾತಲ್ಲ ಕಡಗಂಡು ನೋಡಿ ೯
ಸ್ಥೂಲಲ್ಲ ಸೂಕ್ಷ್ಮಲ್ಲ ಭೇದಿಸಿ ನೋಡಿ ೧೦
ಮನದಿರಗಿ ಉನ್ಮನವಾಗಲಿಕ್ಕೆ ೧೧
ಕಣ್ಣದಿರಗಿ ಕಣ್ಣ ನೋಡಲಿಕ್ಕೆ ೧೨
ಎಚ್ಚತ್ತು ಅಲ್ಲಿವೆ ಯೋಚಿಸಲಿಕ್ಕೆ ೧೩
ಅರವಿನ ಮುಂದ ಮರವಿನ ಹಿಂದ ೧೪
ಜಾಗ್ರ ನಿದ್ರಿ ಮಧ್ಯ ಅರುವಾಗಲಿಕ್ಕೆ ೧೫
ಗುರುಕೃಪೆಯಿಂದಲಿ ಗುರುತಿಟ್ಟು ನೋಡಿ೧೬
ಸಾಧಕನಾದರ ಸಾಧಿಸಬಹುದಿದು ೧೭
ಭೇದಿಸೇನೆಂದರೆ ಭೇದಿಸಬಹುದಿದು ೧೮
ಸೂರ್ಯಾಡೇನಂದರ ಸೂರ್ಯಾಡಬಹುದಿದು ೧೯
ಖೂನಹೇಳಿದ ಮ್ಯಾಲ ಜ್ಞಾನೇನಬಹುದು ೨೦
ಹೆಜ್ಜೆ ಹೇಳಿದ ಮ್ಯಾಲ ಸಜ್ಜನ ಅವನೀಗ ೨೧
ಚೆನ್ನಾಗ್ಹೇಳಿದ ಮ್ಯಾಲ ಮನ್ನಿಸಬಹುದಿದು ೨೨
ಗುರುತಹೇಳಿದ ಮ್ಯಾಲ ಗುರುಸ್ವರೂಪ ತಾಂ ೨೩
ಸರಗಹೇಳಿದ ಮ್ಯಾಲ ಶರಣೆಂಬುದಾತಗ ೨೪
ಅಲ್ಲಿಂದಲ್ಲೆಂಬುದನುಭವಾಗಬೇಕು ೨೫
ಅನುಭವದೋರಿದ ಘನಗುರು ನಮ್ಮಯ್ಯ ೨೬
ಲೇಸು ಲೇಸು ನಮ್ಮ ಭಾಸ್ಕರ ಗುರುದಯ ೨೭
ಭಾಸುತ ಭಾಸ್ಕರಕೋಟಿ ತೇಜಾದನು ೨೮
ದಾಸಮಹಿಪತಿಗೆ ಲೇಸು ಲೇಸಾಯಿತು ೨೯

೨೫
ಅಲ್ಲಿಗಲ್ಲಿಗೆ ಪುಲ್ಲನಾಭನಿಹ್ಯ ನೋಡಿ ಎಲ್ಲಿಹ
ಮಾತೆಂದೆನಬ್ಯಾಡಿ ಧ್ರುವ
ಎಲ್ಲಿ ನೋಡಿದರೆ ತಾ ಅಲ್ಲಿಗಲ್ಲಿಗಿಹ್ಯ
ಎಲ್ಲ ಕಡೆಯಲ್ಲೇಕೋಮಯವೊ
ಸುಲ್ಲಭವಾಗಿಹ್ಯಬಲ್ಲ ಜ್ಞಾನಿಗೆ ಭಾಸುತಿಹ್ಯ
ಫುಲ್ಲಲೋಚನ ಪ್ರಾಣದೊಲ್ಲಭನು ೧
ಎತ್ತ ನೋಡಿದರತ್ತ ಸುತ್ತಸುತ್ತಲಿಹ್ಯ
ನಿತ್ಯವಾಗಿಹ್ಯ ಹೃತ್ಕಮಲದಲಿ
ತುತ್ತಾಯಿತ ತಾ ಮಾಡಿ ನಿತ್ಯಸಲಹುವ
ಹತ್ತಿಲೆ ಹೊಳೆಯುತ ಚಿತ್ತದಲಿ ೨
ಹಿಂದೆನೋಡಿದಿರಿಹ ಮುಂದೇನೋಡಿದಿರಿಹ್ಯ
ಸಂಧಿಸಿಹನು ಅಂತರಾತ್ಮದಲಿ
ತಂದೆ ತಾಯಿಯು ಬಳಗಾಗಿಹ್ಯ ತಾನೆ
ಎಂದಿಗೆ ಅಗಲದೆ ಅನುದಿನದಲಿ ೩
ಜನವನದೊಳಗಿಹ್ಯ ಜನಾರ್ಧನ ತಾನು
ತನುಮನದೊಳು ಥಳಥಳಸುತಲಿ
ಅನುಮಾನವಿಲ್ಲದೆ ಅನಿಮಿಷದಲಿ ನೋಡಿ
ಆಣುರೇಣುದಲಿ ಪರಿಪೂರ್ಣನು ೪
ಸಾರಿಚಲ್ಲೆದ ಪರಬ್ರಹ್ಮಸ್ವರೂಪವಿದು
ಸೂರ್ಯಾಡಬಹುದು ಸುಜ್ಞಾನಿಗಳು
ತೋರದು ಎಂದಿಗೆ ಗುರುಕೃಪೆಯಿಲ್ಲದೆ
ತರಳಮಹಿಪತಿ ವಸ್ತುಮಯವಿದು ೫

೨೬
ಅಲ್ಲೆ ನೋಡಿದರೀಹ್ಯ ಇಲ್ಲೆ ನೋಡಿದರೀಹ್ಯ
ಎಲ್ಲಾ ಕಡೆಯಲ್ಲೇಕೋಮಯವೋ ೧
ಸುಲ್ಲಭವಾಗಿ ನಮ್ಮ ಫುಲ್ಲಲೋಚನ ಕೃಷ್ಣ
ಬಲ್ಲ ಮಹಿಮರಿಗೆ ಭಾಸುವನು ೨
ಭೇದಿಸಿ ನೋಡಿರಯ್ಯ ಸಾಧು ಜನರೆಲ್ಲ
ಮೇದಿನಿಯೊಳು ಘನತುಂಬಿಹುದು ೩
ಕಣ್ಣಾರೆ ಕಂಡೆವಯ್ಯ ಪುಣ್ಯಚರಣಮಹಿಮೆ
ಸಣ್ಣ ದೊಡ್ಡದರೊಳು ಸಾಕ್ಷಾತವೊ ೪
ನಂಬಿನಡಿಯಲಿಕೆ ಅಂಜುಜಾಕ್ಷನ ಪಾದ
ಗುಂಭಗುರುತವಾಗಿದೋರುವದು ೫
ಗುರುಕೃಪೆಯಿಂದ ನೋಡಿ ಹರುಷವಾಯಿತು ಜೀವ
ಬೆರತುಕೂಡಿತು ಸಮರಸವೊ ೬
ಬೆರೆದು ಕೊಡುವದು ಹರಿಯ ಕಟಾಕ್ಷವಿದು
ಮರುಳ ಮಂಕಗಳಿದು ಅರಿಯಾವೊ ೭
ವದಗಿ ಬಂದತಿದರಿಟ್ಟು ಸದಮಲಬ್ರಹ್ಮಸುಖಾ
ಮೊದಲಿನ ಪುಣ್ಯ ಪೂರ್ವಾರ್ಜಿತವೊ ೮
ಧನ್ಯವಾಯಿತು ಮೂಢ ಮಹಿಪತಿ ಪ್ರಾಣಜೀವ
ಮನವು ಆಯಿತು ಉನ್ಮನವೊ ೯

೩೫೦
ಅವಧೂತಾ ನೀ ಅವಗುಣಗಳ ನಿರ್ಧೂತಾ
ದೇವನಹುದೋ ಶ್ರೀನಾಥಾ ಧ್ರುವ
ಭಾವಿಸಿ ನೋಡಲು ಭಾವಕತೀತ
ಭವಹರ ಗುರು ಸಾಕ್ಷಾತ
ಪಾವನಗೈಸುವದಯ ಪ್ರಖ್ಯಾತ
ದೇವಾದಿಗಳೊಂದಿತ ೧
ಝಗಝಗಿಸುವ ಜಗಜ್ಯೋತಿ ಸ್ವರೂಪ
ಅಗಣಿಗತುಣೋಪಮೋಪ
ತ್ರಿಗುಣರಹಿತ ಚಿದ್ಛನ ಚಿದ್ರೂಪ
ಯೋಗಿಜನರ ಪಾಲಿಪ ೨
ಇಹಪರದಾತ ಮಹಿಪತಿ ಗುರುನಾಥ
ಬಾಹ್ಯಾಂತ್ರ ಸದೋದಿತ
ಮಹಾಮಹಿನು ನೀ ಆನಂದಭರಿತ
ಸಹಕಾರ ನೀ ಸತತ ೩

೬೦೦
ಅಹುದಹುದೋ ಸ್ವಾಮಿ ಅಖಿಳ ಭುವನದೊಳು ನೀನೆವೊ
ಸುಹೃದಯದಲಿ ಸಾಕ್ಷಾತ ಸದ್ಗುರು ನೀ ಸುಲಭವೋ ಧ್ರುವ
ಥಳಥಳಗುಡುತ ಕಳೆಮಳೆಗಳು ಒಳಗೆ ಹೊರಗೆ
ನಿಮ್ಮದೇ ಹೊಳಹೋ
ಭಳ ಭಳ ಭಾಸುವ ಬೆಳಗಿನ ಬೆಳಗು, ಝಳಿಸುವ
ನಿಮ್ಮದೆ ಸುಳಿವ್ಹು
ಸುಳಿ ಸುಳಿದಾಡುವ ನೆಲೆನಿಭ ನಿಜವಿದು ಒಳಿತಾಗ್ಯದೆ
ನಿಮ್ಮದೇ ಬಲವೊ
ಸಳ ಸಳ ಸುರಿಯುತ ತುಳುಕುತ ತುಂಬೇದ ಒಲವುತ
ನಿಮ್ಮ ದಯದೊಲವೊ ೧
ಘಮ ಘಮ ಸಾದನುಹಾತವು ಧಿಮಿಗುಡುತಿದೆ
ಬಲುತಾನವೋ
ಜುಮ್ಮು ಜುಮಗುಡುತಿದೆ ಝೇಂಕಾರವು ಸುಮ್ಮನೆ ಓಂಕಾರವೊ
ಝಮ್ಮನೆ ಒಮ್ಮಿತಿಗ್ಹೆಳೆನಿಸುತಿರೆ ಬ್ರಹ್ಮಾನಂದದ ಘೋಷವೋ
ಉಮ್ಮೆಸ ಬಲು ತುಂಬ್ಯೆದೆಮ್ಮೊಳು ಬರುತದೆ ಒಮ್ಮನದಲಿ
ನಿಮ್ಮದೆವೊ ೨
ನಿಗಮಗೋಚರ ನಿಜವಸ್ತು ನೀನೆ ಭಗತರಿಗೆ ಸಹಕಾರವೊ
ಅಗಣಿತಗುಣ ಪರಿಪೂರ್ಣ ನೀನೆ ಸುಗುಣ ನಿರ್ಗುಣ
ನಿಜ ನೀನೆವೋ
ಸುಗಮ ಸುಪಥ ಸಜ್ಜನರಾನಂದ ಯೋಗಿಜನರನುಕೂಲವೋ
ಬಗೆ ಬಗೆ ಸದ್ಗೈಸಿದ ಮಹಿಪತಿಗುರು, ಝಗಿಝಗಿಸುವ
ಘನ ನೀನೆವೊ ೩

೬೦೨
ಆನಂದವಾಗ್ಯೇದ ಸ್ವಾನಂದಯೋಗ
ಏನೆಂದ್ಹೇಳಲಿ ಸ್ವಾನುಭವದ ಸುಭೋಗ ಧ್ರುವ
ಸುಖಗರುತದ ಶಿಖಾಮಧ್ಯ ಸಂತ್ರಾಧಾರಿ
ಬೇಕಾದರೆ ನೋಡಿ ಷಕಚಕ್ರವೇರಿ
ಏಕೋಮಯವಾಗ್ಯದ ವಸ್ತು ಒಂದೇ ಸರಿ
ಲೋಕಪಾಲಕಸ್ವಾಮಿ ತಾ ಸಹಕಾರಿ ೧
ಜುಮ್ಮು ಜುಮ್ಮುಗುಡುತದೆ ರೋಮಾಂಚಗಳು
ಧಿಮಿ ಧಿಮಿಗುಡುತದೆ ನಾದಧ್ವನಿಗಳು
ಕ್ರಮ ತಿಳಿದರೆ ಭಾಸುತದೆ ಸುಳಹುಗಳು
ಸಂಭ್ರಮವಾದರು ಅನುಭವಿಗಳು ೨
ಕಳೆ ಮಳೆಮಿಂಚು ತುಂಬೇದ ಬಲು ಬಹಳ
ಹೊಳೆಯುತಲ್ಯದೆ ಸ್ವಸುಖದ ಕಲ್ಲೋಳ
ಝಳಝಳಿಸುತ ಜ್ಯೋತಿರ್ಮಯ ಥಳಥಳ
ತಿಳಕೊ ಮಹಿಪತಿ ಗುರುದಯದ ಸುಫಳ ೩

೬೦೧
ಆನೆ ಬಂತಿದಕೋ ಮಹಾಮದ್ದಾನೆ ಬಂತಿದಕೋ
ಸ್ವಾನಂದದಲಿ ಮೆಲ್ಲಮೆಲ್ಲನೆ ಅಡಿಗಳ
ತಾನಿಡು ತೊಲವುತಲಿ ನೋಡಮ್ಮ ಧ್ರುವ
ಕರಿಯ ಬಣ್ಣದಲೊಪ್ಪುತ
ಕಿರಿಗೂದಲು ಶಿರದಲಿ ಹೊಳೆವುತ
ಪೆರೆನೊಸಲೊಳು ಕೇಸರದ ಕಸ್ತೂರಿ ರೇಖೆ
ಕರುಣ ಭಾವದ ಕಂಗಳು ನೋಡಮ್ಮ ೧
ಝಳಝಳಿಪಂಬರದಿ ಫಣ ಫಣವೆಂಬ
ಚೆಲುವ ಗಂಟÉಯರವದಿ
ಒಲಿದು ತನ್ನಯ ನಿಜ ಶರಣರ ಅನುಮತ
ದಲಿ ನಲಿದಾಡುತಲಿ ನೋಡಮ್ಮ ೨
ದುಷ್ಟ ಜನರು ತೊಲಗಿ ಎನುತ ಮುಂದೆ
ಶಿಷ್ಟ ಜನರು ಒದಗಿ
ಅದ್ದಹಾಸದಿ ಬಂದರಿದೆ ಮಹಿಪತಿ ಜನ
ಇಷ್ಟದೈವತ ಎನಿಪ ನೋಡಮ್ಮ ೩

೨೭
ಆಲದೆಲಿಯ ಮ್ಯಾಲ ಮಲಗ್ಯುಂಗುಟ ಚಪ್ಪರಿವನು ನೀನಾರೈ
ಮೂಲರೂಪದ ನಿಜದೋರದೆ ಬಾಲಕನಾಗಿಹ ನೀನಾರೈಧ್ರುವ
ಚಲುವ ಕಂಗಳ ನೋಡದಲ್ಹೊಳವುತ ಜಲದೊಳಗಾಡುವನಾರೈ
ಕಾಲುಡಿಗಿಸಿ ಬೆನ್ನಿಲೆ ಬಲು ಕಠಿಣವ ತಾಳಿದವ ನಿನಾರೈ ೧
ಕೋರ್ಹಲ್ಲಿಲಿ ಬೇರನೆ ಅಗಳ್ಯಾಡುತ ದೋರುವ ನೀನಾರೈ
ನರಮೃಗರೂಪದಿ ತರಳಗೊಳಿದು ಭರದಲಿ ಬಂದವನಾರೈ ೨
ಒಪ್ಪಿಲಿ ಮೂರುಪಾದ ಭೂಮಿಯೊಪ್ಪಿಸಿಕೊಂಡವನಾರೈ
ಚಪ್ಪಗೊಡಲಿ ಕೈಯಲಿ ಪಿಡಕೊಂಡು ಇಪ್ಪವ ನೀನಾರೈ ೩
ಬಳ್ಳಿಹಿಡಿದು ಕಲ್ಲನೆ ಉದ್ಧರಿಸಿದ ಮಲ್ಲನು ನೀನಾರೈ
ಗೊಲ್ಲತೆಯರ ಮೋಹಿನಿ ಎಳಿದಾಡುವ ಚಲುವನು ನೀನಾರೈ ೪
ಒದಗಿ ತ್ರಿಪುರದಲಿ ಹಳಿದು ನಾರೇರ ವೃತ
ಚದುರನು ನೀನಾರೈ
ಕುದುರೆಯನೇರಿ ಹದನದಿ ತಿರವ್ಯಾಡುವ ರಾವುತನಾರೈ ೫
ಕುರುಹುದೋರದೆ ನರನಾರಿಯರ ರೂಪದಲ್ಯಾಡಿದವನಾರೈ
ಮರಳ ಮಾಡ್ಯಸುರರ ಸುರರಿಗೆ ಅಮೃತವ
ಬಡಿಸಿದವ ನೀನಾರೈ ೬
ಅಗಣಿತ ಗುಣದಲಿ ಬಗೆ ಬಗೆ ಅಡುವ ಸುಗುಣ ನೀನಾರೆ ೈ
ಝಗಝಗಿಸುವ ಜಗನ್ಮನೋಹರನಾಗ್ಯಾಡುವ ನೀನಾರೈ ೭
ಖೂನ ಕುರುಹದೋರಿದ ಭಾನುಕೋಟಿ ತೇಜನಹುದೋ ಬಾರೈ
ದೀನ ಮಹಿಪತಿ ಸನಾಥಮಾಡಿದ ದೀನೋದ್ಧಾರಹುದಹುದೈ ೮

೨೮
ಆವಧನ್ಯರೋ ಸುಖಿಸುವರು ಗೋಕುಲದವರು |
ಗೋವಿಂದನೊಳು ಕ್ರೀಡಿಸುವರು ಗೋಗೋವಳರು ಧ್ರುವ
ಭಾವಿಸೆ ಮಖದಲ್ಲಿದಾವ ಸಾರಾಯ ಕೊಂಬಾ |
ದೇವಗೋಪಾಲಕರ ಕರಿಸಿ | ಬುತ್ತಿಯ ತರಿಸಿ |
ಸವಿಸವಿದುಂಬುವರ ವೆರಸಿ | ಕೈಯೊಳಿರಿಸಿ |
ಅವರತನ್ನಂಜಲೆಂಬ ದೂರಿಸಿ ನಲುವಾದರಿಸಿ ೧
ಸಿರಿರಮಣಿಯ ಕೂಡ ಸರಸದಿ ಕುಚವಿಡಿದಾ |
ಕರದಿನವೀನ ತೃಣವಾ ಕಡಿದು ಕವಳವಿಡಿದು |
ಕರೆದು ಆವಿನ ಪೆಸರಾ ನುಡಿದು ಕುಡವಾವಿ ನಡೆದು |
ಕರುಣದಿ ಚಪ್ಪರಿಸುವಾ ಜಡಿದು ಮೈಯನಡದು ೨
ಅನಂದಿನ ಧ್ಯಾಯಿಸುವಾ ಮುನಿಮನದಲ್ಲಿ ಹೊಳೆಯಾ |
ಚಿನುಮಯ ಗೋಪಿಯರಾವಳಿಯಾ ಯೋದ್ಧುಳಿಯಾ |
ಅನುವಾಗಿದೋವರ್ತನಕಳಿಯಾ ವರ ಬಳಿಯಾ |
ಘನಮಹಿಪತಿ ಸ್ವಾಮಿ ನೆಲಿಯಾ ಬೊಮ್ಮತಾ ತಿಳಿಯಾ ೩

೬೧೮
ಇಂಥಾದೆಲ್ಲದೆ ತಾಂ ನೋಡಿ ಸತ್ಸಂಗದಸುಖಾ ಇಂಥಾ
ಅಂಥಿಂಥವರಿಗಿಂಥಾದೈಲ್ಲದೆ ನೋಡಿ ಧ್ರುವ
ಒಂದೊಂದುಪರಿ ಕೇಳಿಸುವ ಹ
ನ್ನೊಂದರ ಮ್ಯಾಲಿನ್ನೊಂದರ ಘೋಷ
ಧೀಂ ಧೀಂ ಧೀಂ ಧೀಂ ಧೀಂ ಧೀಂ
ಧೀಂ ಧೀಂ ಮಿಡುಗತಿಹ್ಯ ಆನಂದಸುಖ ೧
ಉದಯಾಸ್ತಿಲ್ಲದೆ ಬೆಳಗಿನ ಪ್ರಭೆಯು
ತುದಿಮೊದಲಿಲ್ಲದೆ ತುಂಬಿತು ಪೂರ್ಣ
ಬುಧಜನರನುದಿನ ಸೇವಿಸುತಿಹ್ಯ
ಸದಮಲವಾದ ಸದಾ ಸವಿಸುಖ೨
ವಿಹಿತ ವಿವೇಕದ ಅನುಭವಗೂಡಿ
ಬಾಹ್ಯಾಂತ್ರದ ಘನದೋರುತಲಿಹ್ಯ
ಸ್ವಹಿತಸುಖದ ಸುಧಾರಸಗರೆವ
ಮಹಿಪತಿಗುರು ಕರಣದ ಕೌತುಕ ೩

೬೧೯
ಇಂದಿನ ದಿನ ಸುದಿನವಿದು ನೋಡಿ
ತಂದೆ ಸದ್ಗುರು ಕೀರ್ತಿಯ ಕೊಂಡಾಡಿ ಧ್ರುವ
ಸಾರ್ಥಕವಾಯಿತು ಜನ್ಮಕ ಬಂದು
ಕರ್ತು ಸದ್ಗುರು ಕರುಣವ ಪಡೆದಿಂದು
ಮತ್ರ್ಯವು ಮಾಯಾ ನೋಹದಸಂದು
ಆರ್ಥಿ ಆಯಿತು ಮನದೊಳು ನಮಗಿಂದು ೧
ಕೇಳಿದೆವು ಹರಿನಾಮದ ಘೋಷ
ಹೊಳೆಯಿತು ಮನದೊಳು ಅತಿ ಉಲ್ಹಾಸ
ಕಳೆದೆವು ಕತ್ತಲೆ ಜ್ಞಾನದ ದೋಷ
ಬೆಳಗಾಯಿತು ಗುರುಜ್ಞಾನ ಪ್ರಕಾಶ ೨
ಸೇವಿಸಿ ಸದ್ಗುರು ನಾಮಸುರಸ
ಆಯಿತು ಮನ ಚಿದ್ಭನ ಸಮರಸ
ಹೋಯಿತು ಭವಭಯದ ತಾ ಕ್ಲೇಶ
ಮಹಿಪತಿಗಾಯಿತು ಅತಿ ಸಂತೋಷ ೩

೬೨೦
ಇಂದು ಎನ್ನ ಜನುಮ ಸಾಫಲ್ಯವಾಯಿತು |
ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ಧ್ರುವ
ಭಾನುಕೋಟಿ ತೇಜವಾಗಿ ರೂಪದೋರಿತು
ತಾನೆ ತನ್ನಿಂದೊಲಿದು ದಯವು ಬೀರಿತು
ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು
ನಾನು ನೀನು ಎಂಬ ಅಹಂಭಾವ ಹರಿಯಿತು ೧
ಎಂದು ಇಂದಿರೇಶನ ಕಾಣದ ಕಣ್ಣದೆರೆಯಿತು
ಬಂದು ಬೀಳುವ ಭವಪಾಶದ ಬಲಿಯು ಹರಿಯಿತು
ಚಂದವಾಗಿ ಸದ್ಗುರು ಕರುಣ ಮಳೆಯು ಗರೆಯಿತು
ಹೊಂದಿ ಹರುಷ ಪಡುವಾನಂದ ಪಥವು ದೋರಿತು ೨
ಭಿನ್ನವಿಲ್ಲದೆ ಸಹಸ್ರದಳದಲ್ಯಾಡುವ ಹಂಸನ
ಕಣ್ಣು ಕಂಡು ಪಾವನವಾಯಿತು ವಾಸುದೇವನ
ಎನ್ನ ಮನಸಿನಂತಾಯಿತು ಪುಣ್ಯಸಾಧನೆ
ಧನ್ಯಗೈಸಿತು ಮಹಿಪತಿ ಪ್ರಾಣಜೀವನ ೩

೬೨೧
ಇಂದು ಕಂಡೆ ಕಣ್ಣಾರೆ ನನ್ನ ಸ್ವಾಮಿಯ
ಬಂದ ಜನ್ಮಸಾಫಲ್ಯವಾಯಿತೀಗ ಧ್ರುವ
ಮುಂಬಿಗಾಗ್ಯಾವೆನ್ನೊಳು ಸುಉಲ್ಹಾಸ
ಅಂಬುಜಾಕ್ಷನ ಕಂಡೆ ಸುಪ್ರಕಾಶ
ತುಂಬಿತುಳುಕುತಲ್ಯದ ಬಲುಹರುಷ
ಇಂಬುಸಾಲದು ಬ್ರಹ್ಮಾಂಡ ಆಕಾಶ ೧
ಎನ್ನಹೃದಯ ಮಂದಿರದೊಳು ನೋಡಿ
ತನ್ನಿಂದ ತಾಂ ಬಂದನು ದಯಮಾಡಿ
ಕಣ್ಣುಪಾರಣೆಗೈಸಿದೆನ್ನ ಕೂಡಿ
ಇನ್ನು ದಣಿಯದೆನ್ನಮನ ಕೊಂಡಾಡಿ ೨
ಘನ ಸುಖದೋರುತದೆ ಎನಗಿಂದು
ಭಾನುಕೋಟಿ ಉದಯವಾದನೆಂದು
ದೀನ ಮಹಿಪತಿಸ್ವಾ,ಮಿ ಕೃಪಾಸಿಂಧು
ಮನೋಹರ ಮಾಡಿದ ತಾನೆ ಬಂದು ೩

೬೨೨
ಇಂದು ಕಂಡೆ ನಾ ಇಂದಿರಾಪತಿ
ತಂದೆ ತಾಯಿ ಗೋವಿಂದನ
ಬಂಧು ಬಳಗೆನಗೆಂದು ನಾ
ನಂದ ಕಂದ ಮುಕುಂದನ ೧
ಕಾಮಪೂರಿತ ಕಂಜಲೋಚನ
ಸ್ವಾಮಿ ಕಾವನೈಯನ
ಸಾಮಗಾಯನ ಪ್ರಿಯನ
ಸೋಮಶೇಖರ ಧ್ಯೇಯನ ೨
ಸಾನುಕೂಲ ಸಕಲಕ ಸಾಧನ
ಭಾನುಕೋಟಿ ಪ್ರಕಾಶನ
ಜ್ಞಾನಗಮ್ಯ ವಿನಾಶನ
ದೀನ ಮಹಿಪತಿ ಈಶನ ೩

೩೨
ಇಂದು ಕಾಯಲಾ ಭಕ್ತವತ್ಸಲಾ
ಬಂದು ಒದಗಿ ನಿಂದು ಭಯವ ದೂರ ಮಾಡಲಾ ಧ್ರುವ
ಮೊರಿಯು ಕೇಳೆಲಾ ಹರಿಯು ನಿಶ್ಚಲಾ
ಕರುಣದಿಂದ ಒದಗಿ ಬ್ಯಾಗ ದುರಿತ ಹರಿಸೆಲಾ ೧
ಸುಳವದೋರಲಾ ಹೊಳೆದು ವಿಠ್ಠಲಾ
ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ ೨
ತಂದಿ ನೀನೆಲಾ ತಾಯಿ ನೀನೆಲಾ
ಬಂಧುಬಳಗ ದೈವ ಕುಲಕೋಟಿ ನೀನೆಲಾ೩
ಹಿಂದೆ ಶರಣರ ಬಂದು ಕಾಯ್ದೆಲಾ
ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ ೪
ಅಂದು ಒದಗಿ ನೀ ಬಂದ ಪರಿಯಲಾ
ಇಂದು ಅಭಿಮಾನ ಕಾವ ಬಿರುದು ನಿನ್ನದಲ್ಲಾ ೫
ದೀನ ಜನರಿಗೆ ದಾತ ನೀನೆಲಾ
ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ ೬
ಪುಣ್ಯಪ್ರಭೆಯಿಂದಾ ಕಣ್ಣುದೆರಿಯಲಾ
ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ ೭

೬೨೩
ಇಂದು ಕೂಡಿದೆವು ನಿಜ
ಇಂದಿರೇಶನ ಇಂದು ಕೂಡಿದೆವು ನಿಜ ಧ್ರುವ||
ಇಂದೆ ಕೂಡಿದೆವಯ್ಯ
ತಂದೆ ಸದ್ಗುರು ನಿಮ್ಮ
ಎಂದೆಂದಗಲದ್ಹಾಂಗ ದ್ವಂದ್ವ ಶ್ರೀಪಾದ ೧
ಕಂಡು ಪಾರಣಿಗಂಡು
ಪುಣ್ಯಗೈಸಿತು ಪ್ರಾಣ
ಧನ್ಯಗೈಸಿತು ಜೀವನ ಉನ್ಮನವಾಗಿ ೨
ಇಂದು ಕೂಡಿದೆವು
ಬಂಧುಬಳಗ ನಮ್ಮ
ಕಂದ ಮಹಿಪತಿಸ್ವಾಮಿಯಾ ಸಂದಿಸಿ ಪಾದ ೩

೩೭೭
ಇಂದು ಗುರುಪೂಜಿ ಮಾಡುವ
ನಿಂದು ಮನದೊಳು ಹರುಷಪಡುವ ಧ್ರುವ
ತಂದೆ ಸದ್ಗುರುಸೇವೆ ಮಾಡುವ
ಬಂದ ಜನ್ಮದ ಹಾದಿ ಬಿಡುವ
ಒಂದೆ ಪಥ ಬ್ಯಾಗೆ ಹಿಡುವ
ಹೊಂದಿ ಸದ್ಗತಿ ಮುಕ್ತಿ ಕೊಡುವ ೧
ಬಂದು ಸಾರ್ಥಕ ಮಾಡುವ
ಇಂದಿರೇಶನ ಪಾದ ನೋಡುವ
ತಂದು ರತಿಪ್ರೇಮ ನೀಡುವ
ಒಂದು ನಾಮ ನಿಶ್ಚಯವಿಡುವ ೨
ಒಂದು ಮನದಿ ಪೂಜಿಮಾಡುವ
ಎಂದು ಬಿಡದೆ ನಾಮವ ಕೊಂಡಾಡುವ
ಇಂದು ನಲಿನಲಿದಾಡುವ
ಕಂದ ಮಹಿಪತಿಸ್ವಾಮಿ ನೋಡುವ ೩

೬೨೪
ಇಂದು ಧನ್ಯವಾಯಿತು ಜನುಮ
ಬಂದು ಕೂಡಿದ ಘನ ಮಹಿಮ ಧ್ರುವ||
ಏನು ಪುಣ್ಯ ಮಾಡಿದ್ದೆವೊ ಮೊದಲೆ
ಖೂನಗಂಡೆವೊ ಹರಿಯ ಮನದಲಿ
ಕಾಣದಿದ್ದೆವೊ ಏಸು ಜನ್ಮದಲಿ
ತಾನೆ ಒಲಿದು ಬಂದು ಸುಪ್ರಸನ್ನಲಿ ೧
ಬ್ರಹ್ಮಾದಿಕರಿಗೆ ದಾವ ದುರ್ಲಭ
ನಮ್ಮ ನೆನವಿನೊಳಾದವ ಸುಲಭ
ತಮ್ಮ ನಿಜಸುಖದ ನೆಲೆನಿಭ
ಬ್ರಹ್ಮಾನಂದ ದೋರಿದ ಪ್ರಾಣದೊಲ್ಲಭ ೨
ಖೂನದೋರಿತು ಮುನ್ನ ನಾ ಮಾಡಿದ
ಭಾನುಕೋಟಿತೇಜನ ಕೈಗೂಡಿದ
ಅನುಭವಾಮೃತಸಾರ ನೀಡಿದ
ದೀನ ಮಹಿಪತಿ ಮನೋಹರ ಮಾಡಿದ ೩

೬೨೫
ಇಂದು ಧರಿಯೊಳು ಬ್ರಹ್ಮಾನಂದವನು ತುಂಬಿ
ತುಳುಕತಿಹ್ಯಾನಂದಮಯ ಕಾಯದೊಳು ಕೌತುಕವು
ದೋರುತಿಹ್ಯ ಕರುಣಾಳು ಗುರುಮೂರ್ತಿ
ನಾದಬಿಂದು ಕಳಿಯಲಿ
ಸ್ತುತಿಸಲೆನ್ನಳವಲ್ಲ ಕ್ಷಿತಿಯೊಳು ಘನಮಹಿಮೆ
ಅತಿಹರುಷವನು ದೋರುತಿಹ್ಯ ಸದ್ಗತಿ ಸುಖವು
ಗುರು ಹಸ್ತಮಸ್ತ ಕದಿ ಕಂಡು ಜೀವನ ಮುಕ್ತನಾಗುವದು
ಗುರುದಾಸರು ೧
ಓಂಕಾರ ಮೊದಲಾದ ಶ್ರುತಿವೇದ ಘೋಷಗಳು
ಧಿಮಿಧಿಮಿಸುವ ಮಹಾಶಬ್ದಗಳು ವಾದ್ಯಗಳು
ಘೇಳೆನಿಸುವ ಶ್ರುತಿ ನಾದಗಳು ಭೇದಗಳು
ಕೇಳುವದು ನೀದೃಶ್ಯೆಲಿ
ಗರ್ಜಿಸುವ ಭೃಂಗಿಶಂಖನಾದ ಧ್ವನಿಯಗಳು
ಭೋರಿಡುವ ಭೇರಿ ಮೃದಂಗ ವೇಣಿಯಗಳು
ಚಿಣಿ ಚಿಣಿ ತಂತ್ರ ಮೊದಲಾದ ಸಂಕಾರಗಳು ಕೇಳಿ
ಪಾವನವಾದೆನು ೨
ಬೆರೆದು ನೋಡಲು ಅಂತರಾತ್ಮದೊಳು ಪ್ರಭೆಯಗಳು
ಥಳಥಳಿಸುವಾ ಮಹಾತೇಜಗಳು ಪುಂಜಗಳು
ಹೇಳಲಿನ್ನೇನದ ಹೊಳವಗಳು ಸುಳವಗಳು ನೋಡುವದು
ಅನಿಮಿಷದಲಿ
ರವಿ ಶಶಿ ತಾರೆಗಳು ಸೂಸುತಿಹ್ಯ ಕಿರಣಗಳು
ಭಾಸಿಸುವ ನಾನಾವರ್ಣಗಳು ಛಾಯಗಳು
ತುಂಬಿಹ ಬೆಳಗಿನ ಕಳೆಯಗಳು ಕಾಂತಿಗಳು ಕಂಡು
ಬೆರಗಾದೆÀನಿಂದ ೩
ವರ್ತಿಸುತ್ತಲಿಹ ಪ್ರವೃತ್ತಿ ನಿವೃತ್ತಿಗಳು
ಅಂತರಾತ್ಮದ ವಾಯುಸ್ತುತಿಯಗಳು ಗತಿಯಗಳು
ನುಡಿವ ಪ್ರಣಮ್ಯದ ಮಂತ್ರಗಳು ತಂತ್ರಗಳು
ತಿಳಿವದೀ ಪ್ರಣಮ್ಯಲಿ
ಸೂಸುತಿಹ ಶ್ವಾಸವುಚ್ಛ್ವಾಸನಿಯ ಭಾಸಿಗಳು
ಶೋಭಿಸುವ ಜೀವನದ ಮಂತ್ರ ಸರ ಮಾಲೆಗಳು
ಲೇಸುಲೇಸಾಗಿಹ ಜಪಗಳು ಜಾಗ್ರಗಳು ತಿಳಿದು
ಪಾವನವಾದೆನು ೪
ಕರದ್ವಯಂ ಮುಗಿದು ವರಗುರುಚರಣಕಮಲಕಿ
ನ್ನೆರಗಿ ಪರಮಾನಂದ ಹರುಷದಿ ಶಿರಸದಿ
ತ್ರಾಹಿ ತ್ರಾಹಿ ಎನುತ ಹೃದಯ ಕಮಲದಿ
ಶ್ರೀಗುರುಮೂರ್ತಿಯ ನೆನೆವೆನು
ಸದ್ಭಾವದಿಂದ ಸದ್ಗುರು ಪಾದಮಂಪಿಡಿದು
ಸದ್ಬ್ರಹ್ಮರಸದೊಳು ಮುಳುಗಿ ಸದ್ಭಕ್ತಿಯಲಿ
ಸದ್ಗತಿ ಸಾಧನವು ಸಾಧಿಸಿಹ್ಯ ಮಹಿಪತಿಯು ]
ಶ್ರೀ ಗುರುಕೃಪೆಯಲಿನ್ನು ೫

೬೨೭
ಇಂದು ನಮ್ಮ ಮನಿಲಿ ಬ್ರಹ್ಮಾನಂದ
ಬಂದು ಭಾವ ಪೂರಿಸಿದ ಮುಕುಂದ ಧ್ರುವ||
ಎನ್ನಮನಕೆ ಮಾಡಿದ ಮನೋಹರ
ಚೆನ್ನಾಗೊಲಿದು ದೋರಿದ ಸಹಕಾರ
ಮನ್ನಿಸೆನಗೆ ಬೀರಿದ ನಿಜಸಾರ
ಇನ್ನೊಬ್ಬರಿಗ್ಹೇಳುದಲ್ಲೀ ವಿಚಾರ ೧
ದಯದಿಂದ ಪಿಡಿದು ಎನ್ನ ಕೈಯ
ಶ್ರೇಯ ಸುಖ ನೀಡಿದ ಪ್ರಾಣಪ್ರಿಯ
ತ್ರಯ ಗುಣಾತೀತದ ಸುಖಾಶ್ರಯ
ತ್ರೈಲೋಕದೊಳೆನಗೆ ವಿಜಯ ೨
ಕಣ್ಣು ಪಾರಣಗೈಸಿದೆನ್ನ ನೋಡಿ
ಎನ್ನೊಳನುಭವಾಮೃತಸಾರ ನೀಡಿ
ಚಿಣ್ಣಮಹಿಪತಿ ಕೈವಶಗೂಡಿ
ಧನ್ಯಧನ್ಯಗೈಸಿದ ದಯಮಾಡಿ ೩

೬೨೯
ಇಂದು ನಮ್ಮಮನಿಲ್ಯಾನಂದ
ಇಂದಿರೇಶನೆ ಬಂದ
ಸಂದಲ್ಯಾಗೇದ ಸ್ವಾನಂದ
ಸಂದಿಸಿ ತುಂಬೇದ ಸುಖ ಸಾಂದ್ರ ಧ್ರುವ||
ಅತಿಶಯಾನಂದ ಕಂದ
ಪತಿತಪಾವನ ಮುಕುಂದ
ಹಿತದೋರಲಿಕ್ಕೆ ಬಂದ
ಸತತ ಸುದಯದಿಂದ ೧
ಪುಣ್ಯದಿರಿಟ್ಟತು ಈಗ
ಎನ್ನೊಡಿಯ ಬಂದಾಗ
ಧನ್ಯಗೈಸಿದೆನಗೆ
ಚೆನ್ನಾಗಿ ಬಂದು ಮನೆಗೆ ೨
ಮನಮಂದಿರಕೆ ಬಂದ
ಅನುಕೂಲವಾಗಿ ಗೋವಿಂದ
ತಾನೆ ತಾನಾಗಿ ನಿಂದ
ಘನಗುರು ಕೃಪೆಯಿಂದ ೩
ಬಾಹ್ಯಾಂತ್ರ ಭಾಸುವ ಕ್ರಮ
ಮಹಾಗುರುವಿನ ಧರ್ಮ
ಮಹಿಪತಿಯ ಸಂಭ್ರಮ
ಇಹಪರಾನಂದೋಬ್ರಹ್ಮ ೪

೬೩೦
ಇಂದು ನಮ್ಮ ಮನಿಲ್ಯಾನಂದೋಬ್ರಹ್ಮಾ
ತಂದೆ ಸದ್ಗುರು ದಯ ಏನೆಂದ್ಹೇಳಲಿ ಸಂಭ್ರಮ ಧ್ರುವ||
ಹರುಷ ತುಂಬೇದ ಬಹಳ ತೆರವಿಲ್ಲೆಳ್ಳಷ್ಟು ಸ್ಥಳ
ಸಿರಿಯನಾಳ್ವ ದಯಾಳ ಹರಿ ಬಂದಾನೆ ಕೃಪಾಳ ೧
ಸೂಸುತಲಿ ಸಂತೋಷ ಪಸರಿಸ್ಯದ ಉಲ್ಹಾಸ
ಭಾಸುತಾನೆ ಸರ್ವೇಶ ಭಾಸ್ಕರ ಕೋಟಿ ಪ್ರಕಾಶ ೨
ಪ್ರಾಣಕಾಗೇದ ಪ್ರಸ್ತ ಮನಕಾಗೇದ ತಾಂ ಸ್ವಸ್ತ
ಸಅನುಭವದ ಸುವಸ್ತ ಖೂನಾಗಿ ಬಂದು ಸಾಭ್ಯಸ್ತ ೩
ಹೇಳಲಿಕ್ಕಳವಲ್ಲ ಹೊಳವ ಸುಖದ ಸೊಲ್ಲ
ತಿಳಿದ ಮಹಿಮೆ ಬಲ್ಲ ಸುಳವು ಸೂಕ್ಷ್ಮವೆಲ್ಲ ೪
ಕರ್ತುತಾಂ ದಯಮಾಡಿ ಅರ್ತು ಬಂದೊಡಮೂಡಿ
ಆರ್ಥಿಯಿಂದೆವೆ ನೋಡಿ ಬೆರ್ತು ಮಹಿಪತಿಕೂಡಿ ೫

೬೨೮
ಇಂದು ನಮ್ಮನಿಯಲಿ ಆನಂದ ಬಂದ ನೋಡಿ ಮುಕುಂದ
ಸಂದಣಿ ಬಲು ಘನದೊಳವಿಲಿ ತುಂಬಿದೆ ತಂದೆ
ಗುರುಕೃಪೆಯಿಂದ ಧ್ರುವ||
ಹೊಳೆಯುತ ಸುಳಿಯುತ ಉಲವುತಲ್ಯದೆ ತಾ
ಸದಮಲ ಸುಖಕಲ್ಲೋಳ
ಥಳಥಳಗುಡುತ ಮೊಳೆಮಿಂಚಿನ ಕಳೆ
ಬೆಳಗುದೋರುತಲ್ಯದೆ ಬಹಳ
ಹೇಳಲಳವಲ್ಲದು ಬಲುಸೂಕ್ಷ್ಮ ತಿಳಿದವ ತಾ ವಿರಳ
ಇಳೆಯೊಳು ನಿಜ ಆನಂದವು ದೋರಿತು ಸ್ವಾನುಭವಕ ಸುಕಾಲ ೧
ಕಣ್ಣು ಕಂಡು ಪಾರಣಿಗೈಯಿತು ತಾ ಚಿನುಮಯ
ಮಾಯವಗಂಡು
ಧನ್ಯಧನ್ಯಗೈಯಿತು ಜೀವನ ತಾ ಸನ್ಮತ ಸುಖಸವಿಗೊಂಡು
ಪುಣ್ಯರಥ ಪರಿಣಾಮದಲನುದಿನ ಮನಬೆರೆಯಿತು ನೆಲೆಗೊಂಡು
ಚೆನ್ನಾಯಿತು ಮನೋನ್ಮನದಲಿ ಘನಗುರು
ಸ್ಮರಣಿಯ ಸವಿದುಂಡು ೨
ಬಂದ ಮನೋಹರ ಮಾಡಲಿಕೆ ತಾ ಸ್ವಾಮಿ
ಸದ್ಗುರು ಎನ್ನೊಡೆಯ
ಚಂದವಾಯಿತು ಆನಂದದ ಸುಖವಿದು ಮಹಿಪತಿಗೆಡೆಯಡಿಯ
ಸಂದಹರೆವ ಜನ್ಮ ಮರಣದ ಹೇಳಿದ ತಾ ನಿಜನುಡಿಯ
ಹೊಂದಿ ಹರುಷಬಡುವಾನಂದವುದೋರುತಿದೆ ಸಿಲುಕಡಿಯ ೩

೬೨೬
ಇಂದು ನಮ್ಮನಿಲಿ ಬ್ರಹ್ಮಾನಂದ
ತಂದೆ ಸದ್ಗುರು ಸ್ವಾಮಿ ಕೃಪೆಯಿಂದ ಧ್ರುವ
ವಸ್ತುದಯ ಬೀರುವಾನಂದ ಪ್ರಸ್ತ
ಹಸ್ತ ಬಂದವರಿಗೆ ಸಾಧ್ಯಸ್ತ
ಪ್ರಸ್ತ ಉಂಟಾಗಿದೆ ನೋಡಿ ಸಮಸ್ತ
ಸ್ವಸ್ತ ಚಿತ್ತಲುಣಬೇಕು ಪ್ರಶಸ್ತ ೧
ಉಂಬುದಕನುಮಾನ ಮಾಡಬ್ಯಾಡಿ
ಕೊಂಬುದೆಲ್ಲ ಬಾಯಿದೆರೆದು ಬೇಡಿ
ತುಂಬಿತುಳುಕುತಲ್ಯಾನಂದ ನೋಡಿ
ಅಂಬುಜಾಕ್ಷನ ಸುಖಾಶ್ರಯ ಮಾಡಿ ೨
ಸ್ವಾನುಭವದ ಪ್ರಸ್ತ ಸರ್ವಕಾಲ
ತಾನೆ ತಾನಾಗಿ ದೋರುತದಚಲ
ದೀನಮಹಿಪತಿಗಾನಂದ ಸುಕಾಲ
ಭಾನುಕೋಟಿತೇಜ ದಾಸಾನುಕೂಲ ೩

೬೩೧
ಇಂದು ನೋಡುವ ಇಂದಿರಾಪತಿ ಶ್ರೀಪಾದವ
ಎಂದೆಂದು ಬಿಡದೆ ಮನದಲಿ
ತಂದೆ ಮುಕುಂದನ ಹೊಂದಿ ಭಜಿಸುವ ಧ್ರುವ
ಭಾವಭಕುತಿಗಳ ವಿಡಿವ
ಭವಬಂಧನದ ಪಾಶ ಕಡಿವ
ದಿವಾರಾತ್ರಿಯಲಿ ಹರುಷಬಡುವ
ಕಾವಕರುಣನ ಕೃಪೆಯ ಪಡೆವ ೧
ಮನಕರಗಿ ಮೈಯ್ಯಮರೆವ
ಘನಸುಖದ ಸುಸ್ಮರಣಿಯಲಿರುವ
ಆನಂದಮಯಸ್ವರೂಪದಿ ಬೆರೆಯುವ
ತನುಮನವು ಶ್ರೀಹರಿ ಗೊಪ್ಪಿಸುವ ೨
ಎರಗಿ ಏಕವಾಗಿ ನೊಡುವ
ಹರಿಚರಣದಿ ಬೆರೆದು ಕೊಡುವ
ಪರಮಗತಿ ಸಾಯೋಜ್ಯಪಡುವ
ಧರೆಯೊಳು ನಲಿ ನಲಿದಾಡುವ ೩

೬೩೨
ಇಂದು ಮಂಗಳಕರ ದೋರಿತು ಎನಗೆ ಪ
ಇಂದು ಮಂಗಳಕರ ದೋರಿತು ಎನಗೆ |
ಇಂದು ಕುಲದೀಪಕ ಬಂದನು ಮನೆಗೆ ೧
ಮಂಗಳ ಮಹಿಮಾನಂಗ ಜನಕ | ಶ್ರೀ
ರಂಗ ಬಂದನಂತರಂಗದೊಳಾಡುತ ೨
ಇಂದಿರಾಪತಿ ಬಂದನು ಸುಖಬೀರುತ |
ತಂದೆ ತಾಯಿ ಬಂಧು ಬಳಗೆನಗಾಗುತ ೩
ತುಂಬಿ ತುಳುಕುತಾನಂದದೊಲವಿಲಿ |
ಅಂಬುಜಾಕ್ಷ ಬಂದಾಮೃತಗರೆವುತ ೪
ಎಂದೆಂದೆಗನಾನಂದದ ಮೂರುತಿ |
ಕಂದ ಮಹೀಪತಿಗಾಗಿ ಬಂದನು ಸಾರಥಿ ೫

೩೭೮
ಇಂದು ಶ್ರೀ ಗುರುಪಾದಪದ್ಮ ನೋಡುವ
ಎಂದೆಂದು ಬಿಡದೆ ಭಾವಭಕ್ತಿ ಮಾಡುವ ಧ್ರುವ
ಮನವೆಂಬ ಮನಮಂಟಪವನಾಡುವ
ನೆನವು ನವರತ್ನದ ಸಿಂಹಾಸನಿಡುವ
ಜ್ಞಾನಧ್ಯಾನದಡಬಲದಿ ಪಿಡಿವ
ಅನುವಾಗಿ ಅನಿಮಿಷದಲಿ ನೋಡುವ ೧
ತನುವೆಂಬ ತಾರತಮ್ಯಭಾವ ಮಾಡುವ
ಅನುಭದಿಂದನುಪಮನ ನೋಡುವ
ಆನಂದವೆಂಬ ಅಭಿಷೇಕವ ಮಾಡುವ
ಮನೋ ಅಭೀಷ್ಟೆಯ ಸುವಸ್ತ್ರನೀಡುವ ೨
ಬುದ್ಧಿ ಭಾವನೆಯ ಗಂಧಾಕ್ಷತಿಡುವ
ಶುದ್ಧ ಸುವಾಸನೆ ಪರಿಮಳ ಮಾಡುವ
ಶಬ್ದ ಸುವಾಕ್ಯವೇ ಪುಷ್ಪವ ನೀಡುವ
ಸಿದ್ಧಾಂತವೆಂಬುದೇ ಸುಸೇವೆ ಮಾಡುವ ೩
ಪ್ರಾಣ ಪಂಚವೇ ಪಾದಪೂಜೆಯ ಮಾಡುವ
ಪುಣ್ಯಪೂರ್ವಾರ್ಜಿತ ಫಲಗಳಿಡುವ
ಅನೇಕವಾದ ಪರಿಪೂಜೆ ಮಾಡುವ
ಧನ್ಯ ಧನ್ಯವಾಗುವ ಮುಕ್ತಿಬೇಡುವ ೪
ನಿರ್ವಿಕಲ್ಪ ನಿಜಮೂರುತಿ ನೋಡುವ
ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ
ಅರುವೆಂಬ ದೀಪದಿ ಏಕಾರ್ತಿ ಮಾಡುವ
ಸರ್ವಕಾಲದಲಿ ಸಂತೋಷಬಡುವ ೫
ಜೀವ ಭಾವನೆಂಬ ನೈವೇದ್ಯವಿಡುವ
ವಿವೇಕುದಕ ಸಮರ್ಪಣೆ ಮಾಡುವ
ತ್ರಿವಿಧಗುಣವೆಂಬ ತಾಂಬೋಲನಿಡುವ
ಅವಾವಪರಿಯು ಪ್ರಾರ್ಥನೆ ಮಾಡುವ ೬
ಪಂಚತತ್ವದ ಪಂಚಾರತಿ ಮಾಡುವ
ಚಂಚಲವಿಲ್ಲದೆ ಚಿದ್ಛನ ನೋಡುವ
ಪಂಚಭೂತವೆಂಬಾರತಿ ಮಾಡುವ
ಸಂಚಿತಕ್ರಿಯ ಮಂತ್ರಪುಷ್ಪನೀಡುವ ೭
ದಿವ್ಯ ಯೋಗ ಭೋಗ ಚೌರ ಢಾಳಿಸುವ
ಅವಲೋಕನೆಯ ಬೀಸಣಿಕೆ ಬೀಸುವ
ಕಾವ ಕರುಣನ ಪಾದ ನಮಿಸುವ
ಭವಬಂಧನದ ಮೂಲ ಛೆೀದಿಸುವ ೮
ನಮ್ರತವೆಂಬ ಸಮಸ್ಕಾರ ಮಾಡುವ
ಸಂಭ್ರಮದಿಂದ ಸ್ವಸ್ವರೂಪ ನೋಡುವ
ಪ್ರೇಮಪ್ರೀತೆಂಬ ಪ್ರದಕ್ಷಿಣಿ ಮಾಡುವ
ಜನ್ಮ ಮರಣದ ಹಾದಿಯು ಬಿಡುವ ೯
ನಿರ್ಗುಣದಿಂದ ಸ್ವರೂಪ ನೋಡುವ
ನಿಗಮಗೋಚರನೆಂದು ಸ್ತುತಿ ಪಾಡುವ
ಅಗಣಿತಗುಣ ಸುಕೀರ್ತಿ ಸೂರ್ಯಾಡುವ
ಜಗದೊಳಾನಂದದಿಂದ ನಲಿದಾಡುವ ೧೦
ಅನಾಹತವೆಂಬ ಧ್ವನಿವಾದ್ಯ ಮಾಡುವ
ಅನಂದೋ ಬ್ರಹ್ಮದೊಳು ಮುಳಗ್ಯಾಡುವ
ಭಾನುಕೋಟಿತೇಜ ಪ್ರಕಾಶ ನೋಡುವ
ದೀನಮಹಿಪತಿ ಸ್ವಾಮ್ಯೆಂದು ಕೊಂಡಾಡುವ ೧೧

೬೩೩
ಇಂದು ಸುಕಾಲ ಸುಪರ್ವಕಾಲ ಧ್ರುವ
ಇಂದು ಸುಕಾಲ ಇಂದು ಸುಕಾಲ
ಇಂದು ಸುಕಾಲ ಸುಪರ್ವಕಾಲ ೧
ಇಂದು ಸುಕಾಲ ಬಂದ ಗೋಪಾಲ
ಸಂಧಿಸಿ ಮನದೊಳಗಾದನುಕೂಲ ೨
ಇಂದು ಸುದಿನ ಇಂದು ಸುದಿನ
ಚಂದವಾಯಿತು ಎನ್ನಮನ ಉನ್ಮನ೩
ನೀಡಿದ ಭಿಕ್ಷೆ ನೋಡುವ ಲಕ್ಷ
ಒಡಿಯ ಪೂರಿಸಿದ ಬೇಡುವಪೇಕ್ಷ೪
ಇಂದು ಆನಂದ ಇಂದು ಆನಂದ
ಹೊಂದಿ ಮಹಿಪತಿಗುರುಪಾದಾರವಿಂದ ೫

೬೩೪
ಇಂದು ಸುದಿನ ಶುಭದಿವಸ ನೋಡಿ
ಬಂದು ಕೂಡಿದ ಸದ್ಗುರು ದಯಮಾಡಿ ಧ್ರುವ
ಮುನ್ನ ಮಾಡಿದ ಸುಪಣ್ಯ ಒದಗಿತು
ಭಿನ್ನವಿಲ್ಲದೆ ಸುಚಿನ್ಹ ಹೊಳೆಯಿತು
ಧನ್ಯಗೈಸುವ ಸುಫಲದೋರಿತು
ಎನ್ನ ಜನುಮ ಸಾಫಲ್ಯವಾಯಿತು ೧
ಸ್ವಾಮಿ ಕಂಡೆ ಕಣ್ಣಿನೊಳಂತರಂಗ
ಬ್ರಹ್ಮಾನಂದ ಭಾಸುತದೆ ಸರ್ವಾಂಗ
ಸಮಾರಂಭದೋರುತದೆ ಸುಸಂಗ
ಒಮ್ಮಿಂದೊಮ್ಮೆ ಬಂದ ನೋಡಿ ಶ್ರೀರಂಗ ೨
ಗುಹ್ಯ ಒಡೆದು ಹೇಳಲು ಸುವಿಚಾರ
ದಯವಿಟ್ಟು ಬಂದ ನೋಡಿದರ
ಇಹಪರಕೆ ಸದ್ಗುರು ಸಹಕಾರ
ಮಹಿಪತಿಗೆ ಮಾಡಿದ ಮನೋಹರ ೩

೬೩೫
ಇಂದು ಸುದಿವಸ ನೋಡಿ ಕಂಡೆವು ಕಣ್ಣಾರೆ
ಚಂದವಾಗಿ ಗುರು ಪೂರ್ಣಮಾಡಿದ ಮನೋಹರ ಧ್ರುವ||
ಕೇಳದಾ ಕೇಳಿದೆವು ಫೇಳಿಸುವದೆನ್ನೊಳಗೆ
ಹೇಳೇನೆಂದರೆ ಬಾರದು ಸುಳವು ಇನ್ನೊಬ್ಬರಿಗೆ
ತಾಳಮೃದಂಗ ಭೇರಿ ಭೋರಿಡುತ ಒಳ ಹೊರಗೆ
ತಿಳಿದೇನಂದರದೇ ನೋಡಿ ಉಲುವು ತಾ ತನ್ನೊಳಗೆ ೧
ಕಾಣದ ಕಂಡೆವು ಖೂನ ತಾ ಕಣ್ಣಿನ ಕೊನೆಯೊಳಗೆ
ಪ್ರಾಣ ಪಾವನ್ನವಾಯಿತು ಪುಣ್ಯ ಪ್ರಭೆಯೊಳಗೆ
ಭಾನುಕೋಟಿತೇಜ ಧನ್ಯಗೈಸಿದ ಎನಗೆ
ಸ್ವಾನುಭವದ ಸುಖ ಎದುರಿಟ್ಟಿತು ಜಗದೊಳಗೆ ೨
ನುಡಿಯು ಕೇಳಿದಂಥ ನುಡಿಗೇಳಿದೆವಿಂದು
ಕಡಿಗಾಯಿತು ನೋಡಿ ಹುಟ್ಟಿಬಾಯ ಜನ್ಮಸಂದು
ವಿಡಿದು ಗುರುಪಾದ ಜನ್ಮಸಾರ್ಥಕಾಯಿತಿಂದು
ಪಡೆದ ಮಹಿಪತಿ ನಿಜಾನಂದ ವಸ್ತುವಂದು ೩

೬೩೬
ಇಂದು ಹೊಳೆವುತದೆ ಸುಚಿನ್ಹಬೋಧ
ತಂದಿ ಕಂಡೆವೇನೊ ಸದ್ಗುರು ಶ್ರೀಪಾದ ಧ್ರುವ||
ಪ್ರಾಣದೊಡಿಯ ಬಾವ್ಹಾಂಗನೇನೊ
ಪೂರ್ಣಕ್ಷಣಕೊಮ್ಮಾಗುತದೆ ಸುಶಕುನ
ಕಣ್ಹುಬ್ಬಾರುತದೆ ಬಲದೆನ್ನ
ಚೆನ್ನಾಗ್ಯಾಗಮ್ಮ ತಾನೇನೊ ಸುಪ್ರಸನ್ನ ೧
ತೋಳಭುಜಹಾರುತದೆ ಬಲುಬಹಳ
ವ್ಯಾಳ್ಯಕೊದಗಿಬಂದೆನೇನೊ ದಯಾಳ
ಸುಳವುದೋರುತದೆ ನಿಶ್ಚಳ
ಸುಳಿದೊಮ್ಮೆ ಬಂದನೇನೊ ಕೃಪಾಳ ೨
ಬುದ್ಧಿ ಮನಸಿಗಾಗುತದೆ ವಿಕಾಸ
ಸಿದ್ಧಿಸೋರುವ್ಹಾಗಾದೆ ಪ್ರಕಾಶ
ಸದ್ಯ ಹೃದಯವಾಗುತದೆ ಉಲ್ಹಾಸ
ಸಾಧ್ಯವಾಗುವ್ಹಾಂಗ್ಹಾನೇನೊ ತಾ ಸರ್ವೇಶ ೩
ಪ್ರೇಮ ಉಕ್ಕಿಬರುದೆನ್ನೊಳಗೆ
ಸ್ವಾಮಿದರುಷಣಾದೀತೇನೊ ತಾ ಈಗ
ರೋಮರೋಮವು ಬಿಡದೆ ಎನಗೆ
ಬ್ರಹ್ಮಾನಂದ ಭಾಸುತದೇನೊ ಬ್ಯಾಗ ೪
ಖೂನದೋರಿಬರುತದೆನಗೊಂದು
ಭಾನುಕೋಟಿ ತೇಜ ತಾ ಬಾವ್ಹಾಂಗಿಂದು
ದೀನ ಮಹಿಪತಿಗುರು ಕೃಪಾಸಿಂಧುಮನೋಹರ ಮಾಡುವ್ಹಾಂಗ್ಹಾನೆ ಬಂದು ೫

೬೩೭
ಇಂದೆನ್ನ ಜನ್ಮ ಪಾವನವಾಯಿತು
ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ ಧ್ರುವ||
ಅರ್ಕ ಮಂಡಲಗಳು ರವಿಶಶಿ ಕಿರಣವು
ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ
ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ
ಪ್ರಕಾಶವನು ಕಂಡಾಂಧತ್ವಗಳದಿನ್ನು ೧
ಓಂಕಾರ ಮೊದಲಾದ ದ್ವಾದಶ ನಾದದಾ
ಭೇದದಾ ಘೋಷವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ
ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ
ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು ೨
ಇಪ್ಪತ್ತೊಂದು ಸಾವಿರ ಆರುನೂರದಾ
ಜಪವನ್ನು ತಿಳಿದು ಪ್ರಣಮ್ಯಲೆನ್ನ
ಸುಷಮ್ನದೊಳು ಪ್ರಾಣೇಶ ಮೂರ್ತಿ ನಿಮ್ಮ
ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು ೩
ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯನಾಮಾಮೃತವ
ನುಡಿದು ಪಯಸ್ವನೀ ಜಿಹ್ವೆಲೆನ್ನ
ಸ್ಮರಣಿ ಚಿಂತನೆಯೊಳು ಸ್ಥುರಣ ಮೂರ್ತಿ ನಿಮ್ಮ
ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು ೪
ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ
ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ
ಏಕೋದೇವ ಈತ ವಿಶ್ವಾತ್ಮ ಹಂಸನೆಂದು
ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು ೫
ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿದೋರಿ
ನಿಜ ಬೋಧಾಮೃತ ಬೆರೆದು ತಾರಿಸಲೆನ್ನ
ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು
ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು ೬
ಭಾಸ್ಕರಸ್ವಾಮಿಯ ಕರುಣಾಳು ಮೂರ್ತಿಯ
ಮೂಢ ಮಹಿಪತಿಯ ಕೃಪಾಂಬುಧಿಯು
ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ
ಧನ್ಯನಾದೆನು ಸತಿಪತಿ ಸಹಿತವಾಗಿನ್ನು ೭

೩೫೩
ಇಕ್ಕೊ ಇಲ್ಲೆ ನೋಡಿ ಸಿಕ್ಕುತ್ತದೆ ನಿಜಗೂಡಿ ಧ್ರುವ
ತಿಳಿಯಲು ತನ್ನ ಅಳುವುದು ಭಿನ್ನ
ಒಳಹೊರಗದೆ ಪ್ರಸನ್ನ
ಬೆಳಗು ಅಭಿನ್ನ ಹೊಳೆವದು
ಸುಳಹು ಸದ್ಗುರು ಪಾವನ್ನ ೧
ತನ್ನೊಳು ತಿಳಿದವನೆ ತಾನುಳಿದ
ಉನ್ಮನಿವಸ್ತಿಯೊಳಳಿದಾ
ಮುನ್ನಿನ ಕರ್ಮವ ನಿಲ್ಲದೆದೊಳದಾ
ಚನ್ನಾಗವೆ ಭವಗಳೆದಾ ೨
ಇದು ನಿಜ ಖೂನ ಸಾಧಿಸು ಜ್ಞಾನ
ಬುಧ ಜನರ ಸುಪ್ರಾಣ
ಭೇದಿಸು ಮಹಿಪತಿ ನಿನ್ನೊಳು ಪೂರ್ಣ
ಇದೇ ಸದ್ಗುರು ಕರುಣ೩

೬೦೪
ಇಕ್ಕೊ ಇಲ್ಲೆ ಸಿಕ್ಕಿದ ಶ್ರೀಗುರು ಪರಬ್ರಹ್ಮ
ತೆಕ್ಕಿಸಿಕೊಂಬುವ ಬನ್ನಿ ಅಖರದಿ ನಮ್ಮ ಧ್ರುವ||
ಎಂದಿಗೆ ಬಿಡಬಾರದಿನ್ನು ತಂದೆ ನಮ್ಮಪ್ಪನ
ಹೊಂದಿ ಸುಖಿಯಾಗಬೇಕು ಭಕ್ತಪಾಲಿಪನ
ವಂದಿಸಬೇಕಿಂದು ಸಹಸ್ರಳದಲಿಪ್ಪನ
ಸಂದೇಹವಿಲ್ಲದೆ ನೋಡಿ ಸ್ವರ್ಗಕೆ ಸೋಪಾನ ೧
ಹರುಷವಾಯಿತು ಎನಗೆ ಧರೆಯೊಳಿಂದು ನೋಡಿ
ಕರುಣಾಳು ಗುರುಮೂರ್ತಿಯ ಸ್ತುತಿಸ್ತವನ ಪಾಡಿ
ಎರಡಿಲ್ಲದೆ ಶ್ರೀಚರಣ ವರಕೃಪೆಯ ಬೇಡಿ
ಶಿರಸಾ ನಮಿಸಿದೆ ಗರ್ವಾಂಹಕಾರ ಈಡ್ಯಾಡಿ೨
ಲೇಸುಲೇಸಾಯಿತು ನಮ್ಮ ವಾಸುದೇವನ ಕಂಡು
ಭಾಸ್ಕರಕೋಟಿ ತೇಜನ ಸ್ಮರಣಿಯ ಸವಿಯುಂಡು
ವಾಸನೆ ತೃಪ್ತ್ಯಾಯಿತು ಶ್ರೀಯೀಶನಾ ಮನಗಂಡು
ದಾಸಮಹಿಪತಿಗಾನಂದವಾಯಿತು ಸದ್ಗತಿ ಸೂರೆಗೊಂಡು ೩

೬೦೫
ಇಕ್ಕೊ ಇಲ್ಲೆ ಹರಿ ಇದ್ದಾನೆ |
ಸಿಕ್ಕುವಾ ಸದ್ಗುರು ಕರುಣದಲಿ ಧ್ರುವ||
ಆದಿ ಅನಾದಿಯ ಹಾದಿ ವಿಡಿದು |
ಸಾಧಿಸಿ ನೋಡಿರಯ್ಯ ಸಜ್ಜನರು |
ವೇದಾಂತದ ಸುಸಾರವಿದು |
ಭೇದಿಸಿದವರಿಗೆ ಭಿನ್ನವಿಲ್ಲ ೧
ತನ್ನೊಳಗಾಗಿರಲಿಕ್ಕೆ ಭಿನ್ನವ್ಯಾಕೆ |
ಚೆನ್ನಾಗಿ ನೋಡುವದು ಉನ್ಮನದಲಿ |
ಇನ್ನೊಬ್ಬರಿಗೆ ತಾ ತಿಳಿಯದು |
ಧನ್ಯವಾದರು ಅನುಭವಿಗಳು೨
ಸೆರಗು ಸಿಲ್ಕಲಿಲ್ಲ ನಾಲ್ಕರಲಿ |
ಅರಹು ಆಗಲಿಲ್ಲ ಆರರಲಿ |
ಪೂರಿಸಲಿಲ್ಲ ಭಾವ ಮೂರಾಗಲಿ |
ತೋರಿದ ಸದ್ಗುರು ಎನ್ನೊಳಗೆ ೩
ಮೋಸಹೋಯಿತು ಜಗ ವೇಷದಲಿ |
ವಾಸತಿಳಿಯದೆ ವಾಸುದೇವನ |
ಕಾಸಿನ ಆಶೆಗೆ ದಾಸರಾಗಿ |
ಘಾಸಿ ಆಯಿತು ಭವಪಾಶದಲಿ ೪
ಸಣ್ಣದೊಡ್ಡದರೊಳು ಸಾಕ್ಷವಾಗಿ |
ಬಣ್ಣ ಬಣ್ಣದಲಿ ತಾ ಭಾಸುತಿಹ್ಯ |
ಕಣ್ಣಾರೆ ಕಂಡು ಗುರು ಕೃಪೆಯಿಂದ |
ಧನ್ಯವಾದ ಮೂಢ ಮಹಿಪತಿಯು ೫

೬೦೬
ಇಕ್ಕೊ ಇಲ್ಲೆ ಹಾನೆ ಅಖಂಡವಾಗಿ ಸದ್ಗುರು ನಮ್ಮ
ಅಕ್ಕಿಸಿಕೋಬೇಕು ಗುಕ್ಕಿ ತನ್ನೊಳು ತಾ ಗುಹ್ಯವರ್ಮ ಧ್ರುವ||
ಹೇಳಬಾರದು ಇನ್ನೊಬ್ಬರಗೀ ಮಾತು ಬಹಳ ಗೂಢ
ತಿಳಿದ ಮಹಿಪನೀವಾ ಲಕ್ಷಕೋಟಿಗೆ ಒಬ್ಬ ಪ್ರೌಢ
ಒಳಗುಟ್ಟಿನ ಕೀಲು ತಿಳಿಯಲಿಕ್ಕೆ ಮಾಡಿ ಮನದೃಢ
ಸುಳಹು ಕಂಡಮ್ಯಾಲೆ ಪ್ರಾಣಹೋದರೆ ಒಬ್ಬನು ಬಿಡಾ ೧
ದೂರಿಲ್ಲ ದೂರಿಲ್ಲ ತಿಳಿಕೊಳ್ಳಿ ಪೂರ್ಣ ಅರಿತು ಬ್ಯಾಗ
ತಿರುಗಿನೋಡಲು ತನ್ನೊಳು ದೋರುತಿದೆ ಬ್ರಹ್ಮಯೋಗ
ಸಾರವೇ ಸುಖಗರವುತದೆ ನೋಡಿರೋ ರಾಜಯೋಗ
ಪರದೆ ಇಲ್ಲದೆ ಗುರುತದೋರುವಾ ನೋಡಿ ಕಣ್ಣಾರೆ ಈಗ ೨
ಗುರುಕೃಪೆಯಿಂದ ಗುರುತಕ ದೂರಿಲ್ಲ ಕೊಳ್ಳಿ ಖೂನ
ಒಳಹೊರಗೆ ತುಂಬಿತುಳುಕುತದೆ ತಾನೆ ನಿಧಾನ
ತರಳ ಮಹಿಪತಿ ಸ್ವಾಮಿ ನೋಡಲಿಕ್ಕೆದ ಒಂದೆ ಸಾಧನ
ಸ್ವರೂಪರಿಯಲಿಕ್ಕೆ ಆಗುತ್ತದೆ ಬಲುಬ್ಯಾಗಲುನ್ಮನ ೩

೩೫೪
ಇಕ್ಕೊ ಇಲ್ಲೆ ಹಾನೆ ಸಕಲ ಪಾಲಕ ತಾನೆ
ಭಕುತಿ ನಿಜವಾಗಲಿಕೆ ಪ್ರಕಟವಾಗತಾನೆ ಧ್ರುವ
ನೋಡೇನೆಂದರೆ ಬನ್ನಿ ದೃಢಭಾವಕೆ ತನ್ನಿ
ಒಡನೆ ತನ್ನೊಳು ನೋಡಲಿಕ್ಕೆ ಜಯಜಯವೆನ್ನಿ ೧
ಪಡೆದುಕೊಳ್ಳಿ ಖೂನವಿಡಿದು ಗುರುಜ್ಞಾನ
ಬಿಡದೆ ಭಾಸುತಾನೆ ಒಡಿಯ ನೋಡಿ ನಿಜಸ್ಥಾನ ೨
ಹಿಡಿಯಬೇಕು ಬ್ಯಾಗ ಜಡಿದು ಮನಯೋಗ
ಕುಡುವಾ ಮಹಿಪತಿ ಗುರು ಸ್ವಾನುಭವಭೋಗ ೩

೩೫೨
ಇಕ್ಕೊ ಇಲ್ಲೆವೆ ಅದ ನಿಜಧನಾ
ತಕ್ಕೊಂಬುದು ಬಲುಕಠಿಣ ಧ್ರುವ
ಅದಕೊಂದದ ಉಪಾಯ ನೋಡಿ
ಸದ್ಗುರುಪಾದಕ ಮನಗೂಡಿ
ಒದಗಿ ಬಾಹುದು ತಾಂ ಕೈಗೂಡಿ
ಇದೇ ಸಾಧಿಸಿ ಸುಖ ಸೂರ್ಯಾಡಿ ೧
ಎಡಬಲಕ ತಾಂ ತುಂಬೇದ
ದೃಢಮನಕ ತಾಂ ಸಿದ್ಧದ
ಮೂಢಜನರಿಗಿದೇ ದೂರದ
ನೋಡೇನೆಂದರ ಬಲು ಸಾರ್ಯದ ೨
ಗುರುಪಾದಲ್ಯದ ಧನಸಮಸ್ತ
ಅರಿತುಕೊಂಬುದು ಮನಮಾಡಿ ಸ್ವಸ್ಥ
ತರಳಮಹಿಪತಿಗಿದೆ ಸುಪ್ರಸ್ತ
ಗುರುನಾಥನೆ ತಾಂ ಸುವಸ್ತಾ ೩

೩೫೧
ಇಕ್ಕೊ ಇಲ್ಲೆಹಾನೆ ಅಖಂಡ ಗುರುತಾನೆ
ಬೇಕಯೆಂದವರಿಗೆ ಪೂರ್ಣ ಸಿಕ್ಕುತಾನೆ ಧ್ರುವ
ಅರವ್ಹಿನ ಮುಂಧಾನೆ ಮರವ್ಹಿನ ಹಿಂಧಾನೆ
ಕುರಹು ತಿಳಿದರೆ ತಾನೆ ಸ್ಥಿರವಾಗ್ಯಾನೆ ೧
ಗುರುತ ಕಂಡವಘಾನೆ ಗುರುಸ್ವರೂಪಧ್ಯಾನೆ
ಗುರುಕೃಪ್ಯಾದವಘಾನೆ ಗುರುತಾನೆ ೨
ಅಣುರೇಣುದೊಳಘಾನೆ ಜನವನ ತುಂಬ್ಯಾನೆ
ಅನುಭವಕ ತಾನೆ ಖೂನಾಘ್ಯಾನೆ ೩
ಮನದ ಕೊನಿಲಿಹಾನೆ ಘನವೆ ಘನವಾಘ್ಯಾನೆ
ದೀನ ಮಹಿಪತಿ ಸ್ವಾಮಿ ತಾನೆ ತಾನೆ೪

೬೦೭
ಇಕ್ಕೊ ಘನಪರಬ್ರಹ್ಮದ ಬೆಳಗಿದು
ಶುಕಾದಿ ಮುನಿಗಳು ಸೇವಿಸುವದು ಧ್ರುವ||
ಝಗಝಗಿಸುವ ಜಗಂಜ್ಯೋತಿಪ್ರಭೆಯಿದು
ಅಗಣಿತವರ್ಣ ಅನೇಕವಿದು
ಬಗೆಬಗೆಯಿಂದಲಿ ಹೊಳೆಯತಲಿಹುದು ಧಗಧಗಸುವ
ತೇಜಃಪುಂಜವಿದು ೧
ತುದಿಮೊದಲಿಲ್ಲದೆ ಸದಮಲ ಬ್ರಹ್ಮಿದು ಮೇದಿನಿಯೊಳು
ತಾ ತುಂಬಿಹುದು
ಉದಯಾಸ್ತಮಾನಗಳಿಲ್ಲದ ಬೆಳಗಿದು ಸದೋದಿತವಾದ
ಸುಬೋಧವಿದು ೨
ಅಸಿಪದಲಕ್ಷಣ ಅಸಾಧ್ಯಯೋಗಿದು ಪಾಶಬದ್ಧಕರಿಗೆ ಭಾಸಿಸದು
ಲೇಸಾಗಿ ಮಹಿಪತಿ ಸಾಧಿಸಿದು ಭಾಸ್ಕರಕೋಟಿ ಪ್ರಕಾಶವಿದು ೩

೬೦೮
ಇಕ್ಕೊ ನಮ್ಮಸ್ವಾಮಿ ಸಕಲಾಂತರ್ಯಾಮಿ
ಪ್ರಕಟ ಸಹಸ್ರನಾಮಿ ಭಕ್ತಜನ ಪ್ರೇಮಿ ಧ್ರುವ||
ಒಳಗೆ ನೋಡಿ ನಿಮ್ಮ ಹೊಳೆವ ಪರಬ್ರಹ್ಮ
ತಿಳಿಯಲಿಕ್ಕೆ ನೋಡಿವರ್ಮ ಅಳಿಯಬೇಕು ಹಮ್ಮ ೧
ಸ್ವಸ್ತ ಮನಮಾಡಿ ವಸ್ತು ಇದೇ ನೋಡಿ
ಅಸ್ತವ್ಯಸ್ತ ಬ್ಯಾಡಿ ಸಾಭ್ಯಸ್ತ ನಿಜಗೂಡಿ ೨
ಬಿಟ್ಟು ನಿಜಖೂನ ಕೆಟ್ಟು ಹೋಗುದೇನ
ಗುಟ್ಟು ಮಹಿಪತಿಗಿದೆ ಮುಟ್ಟಿ ಗುರುಜ್ಞಾನ ೩

೨೦೪
ಇಟ್ಹಾಂಗಿರಬೇಕು ಮಾಂ
ಇಟ್ಹಾಂಗಿರಬೇಕು ಸೃಷ್ಟೀಶ ನಮ್ಮ ಧ್ರುವ
ಸಕಳವೆಲ್ಲ ಹರಿ ಸೂತ್ರವು ಇರಲಿಕ್ಕೆ |
ವಿಕಳಿತಗೊಂಬುವದ್ಯಾಕೆ ಮಾಂ |
ಅಖಿಳ ಭುವನಕೆಲ್ಲ ಸಾಕಿ ಸ – |
ಹಕಾರ ನೊಬ್ಬ ಶ್ರೀಪತಿಯ ಮಾಂ | ೧
ಯಂತ್ರಜೀವ ತಂತ್ರ ಶಿವ ಇರಲಿಕ್ಕೆ ಸ್ವ |
ತಂತ್ರವೆ ನಾನೆಂಬುದ್ಯಾತಕೆ ಮಾಂ |
ಚಿತ್ರ ವಿಚಿತ್ರವು ದೋರುವ ಸೂತ್ರವು |
ಕರ್ತು ಸದ್ಗುರು ಸುತಂತ್ರವು ಮಾಂ ೨
ಅಂತ್ರ ಬಾಹ್ಯ ವ್ಯಾಪಕನಾಗಿರಲಿಕ್ಕೆ |
ತಂತ್ರ ಮಂತ್ರಗಳ್ಯಾತಕೆ ಮಾಂ |
ಜಂತ್ರ ಮಾಡಿ ಜನ್ಮ ಮರಣದ ತಿರಿಹುವಾ |
ಗಂತ್ರವು ಎಂದಿಗೆ ತಿಳಿಯದು ಮಾಂ ೩
ಇಟ್ಹಾಂಗ ಇರಬೇಕು ಕೊಟ್ಹಾಂಗ ಕೊಂಡಿನ್ನು |
ತುಟ್ಟಿಲೆ ಮಿಸುಕದೆ ಗುಟ್ಟಿಲೆ ಮಾಂ |
ಹೊಟ್ಟಿಗಾಗಿ ಅಷ್ಟು ಸಾಯಾಸ |
ಬಟ್ಟರೆ ಸಾರುಸದೇ ಅಟ್ಟಿಸುವದು ಮಾಂ ೪
ಇಟ್ಹಾಂಗ ಇರೋ ಮಹಿಪತಿ ಸೃಷ್ಟಿಯೊಳಿನ್ನು |
ಘಟ್ಟಿಗೊಂಡ ಗುರುಪಾದವು ಮಾಂ |
ಮುಟ್ಟಿ ಮುದ್ರಿಸಿ ಕೃಪಾದೃಷ್ಟಿಲೆ ಹೊರೆವನು |
ಕೊಟ್ಟು ನಿನಗೆ ಸ್ವಾನುಭವವು ಮಾಂ ೫

೩೫೫
ಇದು ಪರಬ್ರಹ್ಮದ ನೆಲೆಯು ಇಹಪರವೆಂಡನು ಗೆಲು
ವದು ಗುರು ಕರುಣಾನಂದದ ಬೆಳಗಹುದಹುದು ಧ್ರುವ||
ಆದಿ ಅನಾದಿಯಾ ಹಾದಿಬ್ಯಾರಿದು ಗಾದಿಯ
ಮಾತಿಗೆ ದೊರೆಯದಿದು
ಸಾಧಿಸಿ ಸಾಧಿಸಿ ಅನುದಿನ ತನ್ನೊಳು
ಭೇದಿಸದಲ್ಲದೆ ಕಾಣಿಸದು
ಕಾಂಬುವ ಕಾಣಿಕಿ ತನ್ನೊಳು ಕಂಡರೆ
ಮುನ್ನಬಾರನು ಕಾಣಿಕಿಗೆಂದು
ಕಾಣುವ ಕಾಣಿಕಿ ಗುರುಜ್ಞಾನಗಳಿಲ್ಲದೆ ನರಗುರಿಗಳಿಗಿದು
ಅಳವಹುದೆ ೧
ಯೋಗದ ಆಟವು ಬ್ಯಾಗನೆ ತಿಳಿಯದು
ಸದ್ಗತಿಮೋಕ್ಷವು ಮಾರಗವು
ಸಾಭ್ಯಸ್ತವಾಗದೆ ಸಾಕ್ಷಾತ್ಕಾರದಿ ಪ್ರತ್ಯಕ್ಷ ಪ್ರಮಾಣವಿವು
ಇದು ಎಂದಿಗೆ ತಿಳಿಯದು ಭೇದಕನಲ್ಲದೆ ಸೋಹ್ಯ ಸೊನ್ನೆಯ
ಅತಿಸೂಕ್ಷ್ಮವು ನೆಲೆನಿಭ ನಿಜವಿದು
ಮತಿಹೀನರಿಗಿದು ಅಳವಹುದೆ ೨
ನಿತ್ಯಯತಿರಾಯ ಶ್ರೀಗುರು ಭಾಸ್ಕರಮುನಿ
ಲೋಲ್ಯಾಡುವ ನಿಜ ಮಂದಿರವು
ಮಂಡಿಯಾ ಮರೆಯಲಿ ಕಂಡಿಹ್ಯ ಮಹಿಪತಿ
ಭೂಮಂಡಲದೊಡೆಯನ ಚರಣಕಮಲವಿದು
ಮುಟ್ಟ ಕಂಡಿಹ್ಯ ಬ್ರಹ್ಮನಂದದ ನೆಲೆ ಕರುಣಾಳು
ಒಡಿಯನ ಕೃಪಾದೃಷ್ಟಿಯಿದು
ಅತಿ ಅನಂದದಿ ಕರವ ಮುಗಿದು ಬೇಡಿಕೊಂಬೆನು
ಮನದೊಳು ತ್ರಾಹಿ ತ್ರಾಹಿ ಎನುತಲಿನ್ನು ೩

೩೫೬
ಇದು ಬಲು ಸುಖದಾಟ ಸಾಧಿಸಿ ನೋಡಿರೋ ನೀಟ ಧ್ರುವ
ಕರ್ಮಕಮಂಧವಿಲ್ಲ ವರ್ಮ ತಿಳಿದವ ಬಲ್ಲ
ಧರ್ಮ ಗುರುವಿನ ಸರಿ ಇಲ್ಲ ನಿರ್ಮಲ ನಿಜವೆಲ್ಲ ೧
ಅನುಭವಕನುಭವದ ಅನಂದೋ ಬ್ರಹ್ಮದ ಬೋಧ
ಏನೇಂದ್ಹೇಳಲಿ ಸುಸ್ವಾದ ತಾನೆ ತಾನಾದ ೨
ಸಾಧಿಸಿದಲ್ಲದೆ ಖೂನ ಇದರಿಟ್ಟು ಮಹಿಪತಿ ಪೂರ್ಣ
ಒದಗಿ ಕೈಗೂಡದು ಧನ ಸದ್ಗುರು ಚರಣ೩

೬೦೯
ಇದು ಬಲು ಸೂಕ್ಷ್ಮ ಸದ್ಗತಿ ಸುಖಸಾಧನ ಧ್ರುವ|
ಬಯಲಿಗೆ ನಿರ್ಬಯಲಾಗೇದ ಗುಹ್ಯಗೂಢಕೆ ಮೀರ್ಯದ
ಸೋಹ್ಯಸೊನ್ನಿದತ್ತಲದೆ ಕೈಯೊಳು ಸಿಲುಕದ ೧
ಧ್ಯಾನಮೋನಕ ದೂರ ಏನೆಂದ್ಹೇಳಲಿ ವಿಚಾರ
ಅನಂತಗುಣ ಅಪಾರ ಘನ ಪರಾತ್ಪರ ೨
ಕಣ್ಣಿನೊಳದೆ ಖೂನ ಧನ್ಯಗೈಸುವ ನಿಧಾನ
ಚಿಣ್ಣ ಮಹಿಪತಿಗೆ ಪ್ರಾಣ ಆನಂದ ಘನ ೩

೬೧೦
ಇದೇ ಇದೇ ಘನಸುಖಾ
ಸಾಧಿಸಿ ಗುರುಮುಖಾ ಧ್ರುವ|

ಅಂಜದಾಲಿಸಿ ಕೇಳಿ ಪ್ರಾಂಜಳಾಗ್ಯದೆ
ಝಂ ಝಂ ಝಂ ಝಂ ಝಂ ಝಂ ಝೆಂಕರಿಸುತಲ್ಯದೆ ೧
ಒಂದೊಂದು ಪರಿಲ್ಯಾನಂದವುದೋರುತಲ್ಯದೆ
ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂಮಿಡುಗುತದೆ ೨
ಮನೋಹರಾಗುವ ಅನುಭವದೋರುತದೆ
ದೀನ ಮಹಿಪತಿಗೆ ಪಾವನಗೈಸುತದೆ ೩

೬೧೧
ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ
ಉದಯಾಸ್ತಮಾನವಿಲ್ಲದೆ ಸದೋದಿತ ಭಾಸುತಿದೆ ಧ್ರುವ|
ವಸ್ತುವಿದೆ ನಿತ್ಯವಾದ ಅತ್ತ್ಯೋತ್ತಮಾನಂದಬೋಧ
ಎತ್ತ ನೋಡಿದರತ್ತ ಹತ್ತಿಲೆ ಸೂಸುತಲ್ಯದೆ ೧
ಸತ್ಯಸದಾನಂದೋಬ್ರಹ್ಮ ನಿತ್ಯತೃಪ್ತ ನಿರುಪಮ
ಅತ್ತಿತ್ತಲಾಗದೆ ಪೂರ್ಣಮತ್ತವಾಗ್ಯೆನ್ನೊಳಗದೆ ೨
ಏಕೋಮಯವಿದೆ ಸಹಜ ಪ್ರಕಟ ಗುಪಿತ ನಿಜ
ಸಕಲಾಗಮ ಪೂರಿತ ಶುಕಾದಿಗಳೂ ಸೇವಿತ ೩
ಸರ್ವಸಾಕ್ಷಿ ಸರ್ವಾಧಾರ ಸರ್ವರೊಳು ಸರ್ವೇಶ್ವರ
ಸರ್ವಮಿದಂ ಖಲುಬ್ರಹ್ಮವೆಂದು ಶ್ರುತಿ ಸಾರುತಿದೆ ೪
ಇಹಪರ ಪರಿಪೂರ್ಣ ಮಹಾಗುರು ನಿರಂಜನ
ಮಹಿಪತಿ ಬಾಹ್ಯಾಂತ್ರದೊಳು ಸಹಕಾರ ಸಾಕ್ಷಾತ್ಮವಿದೆ ೫

*

ಇದೇ ಇದೇ ಬ್ರಹ್ಮಮಯ ಸದಮಲಾನಂದೋದಯ
ಸಾಧುಜನ ಹೃದಯ ಸದ್ಗುರು ದಯ ನಿಶ್ಚಯ ಧ್ರುವ|
ಸಾರಿಚಲ್ಲೆದ ಪೂರ್ಣ ಹರಿಯ ಸುಖ ನಿಧಾನ
ಸುರಮುನಿಗಳ ಪ್ರಾಣ ಶರಣಜನರಾಭರಣ ೧
ಬಣ್ಣಬಣ್ಣಭಾಸುವ ಪುಣ್ಯಶ್ಲೋಕರಾಜೀವ
ಸಣ್ಣ ದೊಡ್ಡದಲ್ಲೀವ್ಹ ಕಣ್ಣಿಗೆ ಕಾಣಿಸುವ ೨
ಗುಹ್ಯಕೆ ಗುಹ್ಯವಾದ ಮಹಾಮಹಿಮೆಯ ಬೋಧ
ಮಹಿಪತಿ ಸದ್ಗೈಸಿದ ಮಹಾಗುರು ಸುಪ್ರಸಾದ ೩

೬೧೩
ಇದೇ ಇದೇ ವಸ್ತು ಸನಾತನ ಒಂದೆ
ಆದಿ ಅನಾದಿಯಾಧಾರಿದರಿಂದೆ ಧ್ರುವ|
ವೇದವಂದಿತ ವಸ್ತುವಿಮಲಾ
ಸಾಧುಜನರ ಸಾಧನೆಗನುಕೂಲಾ ೧
ಜ್ಞಾನವಿಜ್ಞಾನದ ನಿಜಸಾರಾ
ಅನುಭವಕನುಭವಾಗುವ ಸುಆಗರಾ ೨
ಸಗುಣ ನಿರ್ಗುಣಕಿದೆ ಮೂಲ
ಭಕ್ತಜನರು ಮಾಡುವುದು ಪ್ರತಿಪಾಲಾ ೩
ದೇವಾದಿಗಳು ಮಾಡುವರಿದೇ ಧ್ಯಾನಾ
ಭವಹರ ಗುರುಮೂರುತಿ ನಿಧಾನಾ ೪
ಇಹಪರ ಸುಖದೋರುದಿದೆ ನೀಟ
ಮಹಿಪತಿಸ್ವಾಮಿ ಶ್ರೀಗುರು ಮಣಿಮುಗುಟ೫

೬೧೪
ಇದೇ ಇದೇ ಸದ್ವಸ್ತು ನಮ್ಮ ಇದೇ ಇದೇ ಧ್ರುವ|
ನಿಗಮ ತಂದುಳುಹಿದ ಸುಗಮ ಸುವಸ್ತು ಇದೆ
ಜಗವು ಬೆನ್ನಿಲೆ ಪೊತ್ತು ನೆಗದದಿದೆ ೧
ಧೀರತನವನುದೋರಿ ಧಾರುಣಿಗೆದ್ದದು ಇದೆ
ನರಮೃಗನಾದ ನಿಜವಸ್ತುವಿದೆ ೨
ಮೇದಿನಿ ಅಳೆದು ಮೂರುಪಾದವ ಬೇಡಿದದಿದೆ
ಸಾಧಿಸಿ ಸಾಸಾರ್ಜುನನ ಮರ್ದಿಸಿದಿದೆ ೩
ರಾಕ್ಷಸರನೆಲ್ಲ ಕೊಂದು ಶಿಕ್ಷೆಯುಗೈಸಿದಿದೆ
ಪಕ್ಷಪಾಂಡವರಿಗ್ಯಾಗಿ ರಕ್ಷಿಸಿದಿದೆ೪
ಬತ್ತಲೆ ಸುಳಿದು ಸತಿಯರ ವೃತವಳಿದುದಿದೆ
ಉತ್ತಮ ತೇಜಿನೇರುವ ರಾವುತನಿದೆ ೫
ಸಗುಣ ನಿರ್ಗುಣನಾದ ಜಗಜ್ಜೀವನವಿದೆ
ಅಗಣಿತಗುಣಗಮ್ಯ ಗೋಚರಿವಿದೆ ೬
ವಿಶ್ವತೋಮುಖನಾದ ವಿಶ್ವತೋಬಾಹುವಿದೆ
ವಿಶ್ವತೋಚಕ್ಷು ವಿಶ್ವರೂಪವಿದೆ ೭
ಮುನಿಗಳ ಪ್ರಿಯವಸ್ತು ಪರಾತ್ಪರವಿದೆ
ವಾಸವಾಗಿ ವಿಶ್ವದೊಳು ಭಾಸುವದಿದೆ ೮

ಲೇಸಾಗಿ ಪಾಲಿಸುತಿಹ್ಯ ದಾಸ ಮಹಿಪತಿಗಿದೆ
ಭಾಸ್ಕರ ಕೋಟಿ ಪ್ರಕಾಶ ವಸ್ತುವಿದೆ ೯

೬೧೫
ಇದೇ ಕೈವಲ್ಯ ಘನ ಸದಾನಂದೋ ಬ್ರಹ್ಮಸದ್ಗುರು
ಕೃಪೆಯ ಸುಜ್ಞಾನ
ಸದ್ಬ್ರಹ್ಮಾನಂದ ಸುಖ ಸದೋದಿತವಾಗಿಹ್ಯ
ಸಾಧುಜನರ ನಿಜಸ್ಥಾನ
ಉದಯಾಸ್ತಮಾನಗಳಿಲ್ಲದಾನಂದ ಪ್ರಭೆ ಸದ್ಗೈಸುತಿಹ ನಿಜಧ್ಯಾನ
ವೇದಾಂತದ ಸುಪಥ ಸಾರಸವಿದು ಸಾಧಿಸಿ ನೋಡಿ ಅನುದಿನ ೧
ಮಿರಿಮಿರಿ ಮಿಂಚುವ ಪರಿಪರಿ ಭಾಸುವ
ವರ್ಣದೋರುವದನೇಕ
ಥರಥರದಲಿ ತುಂಬಿ ಸಾಂದ್ರವಾಗಿದೋರುವ
ವರಮುನಿಗಳಿಗೆ ಕೌತುಕ
ಸುರಿಸುರಿದು ಸುರಿವ ಸೂರ್ಯಕೋಟಿ ಕಿರಣ
ಪರಿಪೂರ್ಣಗಿಹ್ಯ ಮೂರು ಲೋಕ
ತರುತರುವಾಯದಲಿ ತನುಮನದೊಳಗೆ
ದೋರುತಿಹದು ಬ್ರಹ್ಮಸುಖ ೨
ಕಣ್ಣಿಗೆ ಕಾಣಿಸಿ ಪುಣ್ಯಗೈಸುತಿಹುದು
ಎನ್ನೊಳಗಾನಂದ ಭರಿತ
ಏನೆಂದ್ಹೇಳಲಿ ಅನುಭವವಾನಂದಸುಖ
ಜನವನದೊಳು ತಾ ಸಾಕ್ಷಾತ
ಚೆನ್ನಾಗಿ ಗುರುಕೃಪೆಯಿಂದ ನೋಡಲಿಕ್ಕಾಗಿ
ತನ್ನೊಳಗದೆ ತಾ ಸ್ವಹಿತ
ಧನ್ಯಗೈಸಿತು ಮೂಢಮಹಿಪತಿ ಪ್ರಾಣ ಜೀವ
ಕೈವಲ್ಯನಿಧಿ ಗುರುನಾಥ ೩

೩೬೦
ಇದೇ ಜ್ಞಾನವೊ ಇದೇ ಮಾನವೊ ಧ್ರುವ
ಕೇಳಿ ಕೇಳಿ ಕೇಳಿ ಕೇಳುವ ಮಾತಿದು
ಕೇಳಿದಂತೆ ನೀವು ಬಾಳಿ
ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ
ಮೊಳೆ ಅಂಕುರನೆ ಸೀಳಿ
ತಾಳದಲಿನ್ನೊಂದು ಬೆಳಸ್ಯಾಡುವ ಯುಕ್ತಿ
ಒಳಿತಾಗಿದೆ ಪೂರ್ಣ ಕೇಳಿ
ಕಳೆದ ದುಸ್ಸಂಗವು ಕೇಳುವನಾದರೆ
ತಿಳಿಸಿಕೊಡುವನು ಗುರು ಹೇಳಿ ೧
ಸೂಟಿ ತಿಳಿದು ನಿಜಧಾಟಿಗೆ ಬಂದರೆ
ಕೋಟಿಗವನೇ ಒಬ್ಬ ಜ್ಞಾನಿ
ನೀಟಾಗಿಹ್ಯ ಘನಕೂಟವು ತಿಳಿದರೆ
ನೋಟದಲ್ಲವ ಬಲು ತ್ರಾಣಿ
ನೋಟದಲ್ಲಿಹುದು ತ್ರಾಟಿವ ಬಲ್ಲನೆ
ಬೂಟಕ ದೇಹಾಭಿಮಾನಿ
ನಾಟಿ ಮನದೊಳು ಮಾಟಿಸಿಕೊಂಬುದು
ಘಟಿಸಿತಿದೆ ಸಾಧನ ೨
ನೆನೆಯಲಿಕ್ಕೆ ಮನ ಘನಬೆರದಾಡುವ
ಖೂನಾಗುವದಿದೆ ರಾಜಯೋಗ
ಅನುಭವಿಗಳಿಗೆ ಅನುಕೂಲವಾಗಿನ್ನು
ಅನುವಾಗಿದೋರುದು ಬ್ಯಾಗ
ಭಾನುಕೋಟಿತೇಜ ತಾನೆತಾನಾದನು
ಎನ್ನ ಮನದೊಳು ಈಗ
ದೀನ ಮಹಿಪತಿಗೆ ಸನಾಥಮಾಡುವ
ಸ್ವಾನುಭವದ ಬ್ರಹ್ಮಭೋಗ ೩

೩೫೯
ಇದೇ ದೇವ ಪೂಜಿಯು ನೋಡಿ
ಹೃದಯದಲಿ ನಿಜ ಒಡಗೂಡಿ ಧ್ರುವ
ಮೂರ್ತಿಎಂಬುದೆ ಅಮೂರ್ತಿ
ನಾಮರೂಪ ನಿಜ ಗುಹ್ಯವಾರ್ತಿ
ವ್ಯೋಮಾಕಾರದ ಮನೆಮೂರ್ತಿ
ಸ್ವಾಮಿ ಸದ್ಗುರುವಿನ ಕೀರ್ತಿ ೧
ನಿತ್ಯನಿರ್ಗುಣ ನಿರ್ವಿಕಲ್ಪ
ಸತ್ಯಸದ್ಗುರು ಸ್ವರೂಪ
ನಿತ್ಯ ನಿತ್ಯದಿತ್ಯರ್ಥ ಸುದೀಪ
ತತ್ವಜ್ಞಾನ ಮನಮಂಟಪ ೨
ಸ್ವಾನುಭವ ಸ್ವಾದೋದಕ
ಜ್ಞಾನ ಭಾಗೀರಥಿ ಅಭಿಷೇಕ
ಮೌನ ಮೌನ್ಯ ವಸ್ತ್ರಾಮೋಲಿಕ
ಧಾನ್ಯವೆಂಬುದೆ ಸೇವಿ ಅನೇಕ ೩
ಗಂಧಾಕ್ಷತಿ ಪರಿಮಳ ಫಲಪುಷ್ಪ
ಬುದ್ಧಿ ಮನವಾಯಿತು ಸ್ವರೂಪ
ಸದ್ವಾಸನ್ಯಾಯಿತು ಧೂಪ ದೀಪ
ಸದ್ಭಾವನೆ ನೈವೇದ್ಯ ಮೋಪ ೪
ಫಲತಾಂಬೂಲವೆ ಸದ್ಭಕ್ತಿ
ಮೂಲಜೀವ ಭಾವನೆ ಮಂಗಳಾರ್ತಿ
ಬಾಲಕ ಮಹಿಪತಿ ನಿಜಪೂಜಿಸ್ಥಿತಿ
ಕುಲಕೋಟಿ ಉದ್ಧರಿಸುವ ಗತಿ ೫

೩೬೧
ಇದೇ ನಮ್ಮ ವೃತ್ತಿ ಸದ್ಗುರುಭಾವಭಕ್ತಿ ಧ್ರುವ
ಇದೇ ನಮ್ಮ ಮನೆಯ ಸದ್ಗುರು ಸ್ಮರಣಿಯ
ಇದೇ ನಮ್ಮ ವರ್ತನೆಯು ಸದ್ಗುರು ಪ್ರಾರ್ಥನೆಯು ೧
ಇದೇ ನಮ್ಮ ಗ್ರಾಮ ಸದ್ಗುರು ದಿವ್ಯನಾಮ
ಇದೇ ನಮ್ಮ ಸ್ತೋಮ ಸದ್ಗುರು ಆತ್ಮಾರಾಮ ೨
ಇದೇ ನಮ್ಮ ಭೂಮಿ ಸದ್ಗುರು ಘನಸ್ವಾಮಿ
ಇದೇ ನಮ್ಮ ಸೀಮಿ ಸದ್ಗುರು ಅಂತರ್ಯಾಮಿ ೩
ಇದೇ ನಮ್ಮ ದೇಶ ಸದ್ಗರು ಉಪದೇಶ
ಇದೇ ನಮ್ಮಭ್ಯಾಸ ಸದ್ಗುರು ಜಗದೀಶ ೪
ಇದೇ ನಮ್ಮ ವಾಸ ಸದ್ಗುರು ಸಮರಸ
ಇದೇ ನಮ್ಮ ಗ್ರಾಸ ಸದ್ಗುರು ಪ್ರೇಮರಸ ೫
ಇದೇ ನಮ್ಮ ವ್ಯವಸನ ಸದ್ಗುರು ನಿಜಧ್ಯಾಸ
ಇದೇ ನಮ್ಮ ಆಶೆ ಸದ್ಗುರು ಸುಪ್ರಕಾಶ೬
ಇದೇ ನಮ್ಮಾಶ್ರಮ ಸದ್ಗುರು ನಿಜದ್ಯಾಸ
ಇದೇ ನಮ್ಮುದ್ದಿಮೆ ಸದ್ಗುರು ಸಮಾಗಮ ೭
ಇದೇ ನಮ್ಮ ಭಾಗ್ಯ ಸದ್ಗತಿ ಸುವೈರಾಗ್ಯ
ಇದೇ ನಮ್ಮ ಶ್ರಾಧ್ಯ ಸದ್ಗುರು ಪಾದಯೋಗ್ಯ ೮
ಇದೇ ನಮ್ಮ ಕುಲವು ಸದ್ಗುರು ದಯದೊಲವು
ಇದೇ ನಮ್ಮ ಬಲವು ಸದ್ಗುರು ದಯಜಲವು ೯
ಇದೇ ನಮ್ಮಾಭರಣ ಸದ್ಗುರು ದಯ ಕರುಣ
ಇದೇ ದ್ರವ್ಯ ಧನ ಸದ್ಗತಿ ಸಾಧನ ೧೦
ಇದೇ ನಮ್ಮ ಕಾಯ ಸದ್ಗುರುವಿನುಪಾಯ
ಇದೇ ನಮ್ಮ ಮಾಯ ಸದ್ಗುರುವಿನ ಅಭಯ ೧೧
ಇದೇ ನಮ್ಮ ಪ್ರಾಣ ಸದ್ಗುರು ಚರಣ
ಇದೇ ನಮ್ಮ ತ್ರಾಣ ಸದ್ಗುರು ದರುಶನ ೧೨
ಇದೇ ನಮ್ಮ ಜೀವ ಸದ್ಗುರು ವಾಸುದೇವ
ಇದೇ ನಮ್ಮ ದೇವ ಸದ್ಗುರು ಅತ್ಮಲೀವ್ಹ ೧೩
ಇದೇ ನಮ್ಮ ನಾಮ ಸದ್ಗುರು ಸದೋತ್ತಮ
ಇದೇ ನಮ್ಮ ನೇಮ ಸದ್ಗುರು ಸರ್ವೋತ್ತಮ ೧೪
ಇದೇ ನಮ್ಮ ಕ್ಷೇತ್ರ ಸದ್ಗುರು ಬಾಹ್ಯಂತ್ರ
ಇದೇ ನಮ್ಮ ಗಾತ್ರ ಸದ್ಗುರು ಘನಸೂತ್ರ ೧೫
ಇದೇ ನಮ್ಮ ತೀರ್ಥ ಸದ್ಗುರು ಸಹಿತಾರ್ಥ
ಇದೇ ನಮ್ಮ ಸ್ವಾರ್ಥ ಸದ್ಗುರು ಪರಮಾರ್ಥ ೧೬
ಇದೇ ನಮ್ಮ ಮತ ಸದ್ಗುರು ಸುಸನ್ಮತ
ಇದೇ ನಮ್ಮ ಪಥ ಸದ್ಗುರುಮಾರ್ಗ ದ್ವೈತ ೧೭
ಇದೇ ನಮ್ಮ ವೇದ ಸದ್ಗುರು ಶ್ರೀಪಾದ
ಇದೇ ನಮ್ಮ ಸ್ವಾದ ಸದ್ಗುರು ನಿಜಬೋಧ ೧೮
ಇದೇ ನಮ್ಮ ಗೋತ್ರ ಸದ್ಗುರು ಸರ್ವಾಂತ್ರ
ಇದೇ ನಮ್ಮ ಸೂತ್ರ ಸದ್ಗುರು ಚರಿತ್ರ ೧೯
ಇದೇ ಸದ್ಯ ಸ್ನಾನ ಸದ್ಗುರು ಕೃಪೆ ಜ್ಞಾನ
ಇದೇ ಧ್ಯಾನ ಮೌನ ಸದ್ಗುರು ನಿಜಖೂನ ೨೦
ಇದೇ ಜಪತಪ ಸದ್ಗುರು ಸ್ವಸ್ವಸೂಪ
ಇದೇ ವೃತ್ತುದ್ಯೋಪ ಸದ್ಗುರು ಸುಸಾಕ್ಷೇಪ ೨೧
ಇದೇ ನಿಮ್ಮ ನಿಷ್ಠಿ ಸದ್ಗುರು ಕೃಪಾದೃಷ್ಟಿ
ಇದೇ ನಮ್ಮಾಭೀಷ್ಠಿ ಸದ್ಗುರು ದಯಾದೃಷ್ಟಿ ೨೨
ಇದೇ ಪೂಜ್ಯಧ್ಯಕ ಸದ್ಗುರು ಪ್ರತ್ಯಕ್ಷ
ಇದೇವೆ ಸಂರಕ್ಷ ಸದ್ಗುರು ಕಟಾಕ್ಷ ೨೩
ಇದೇ ನಮ್ಮ ಊಟ ಸದ್ಗುರು ದಯನೋಟ
ಇದೇ ನಮ್ಮ ಆಟ ಸದ್ಗುರು ಪಾದಕೂಟ ೨೪
ಮಾತೃಪಿತೃ ನಮ್ಮ ಸದ್ಗುರು ಪರಬ್ರಹ್ಮ
ಭ್ರಾತೃಭಗಿನೀ ನಮ್ಮ ಸದ್ಗುರು ಪಾದಪದ್ಮ ೨೫
ಇದೇ ಬಂಧು ಬಳಗ ಸದ್ಗುರುವೆ ಎನ್ನೊಳಗೆ
ಇದೇ ಸರ್ವಯೋಗ ಬ್ರಹ್ಮಾನಂದ ಭೋಗ೨೬
ಇದೇ ಸರ್ವಸೌಖ್ಯ ಮಹಿಪತಿ ಗುರುವಾಕ್ಯ
ಇದೇ ನಿಜ ಮುಖ್ಯ ಸದ್ಗತಿಗಿದೆ ಐಕ್ಯ ೨೭

೩೬೨
ಇದೇ ನಮ್ಮ ಶ್ರೀ ಹರಿ ಕೀರ್ತನಿ
ಸಾಧು ಸಜ್ಜನರ ಮೃತಸಂಜೀವನಿ
ಸದ್ಗೈಸುವ ದಿವ್ಯ ಸುಸಾಧನಿ
ಸದ್ಗುರು ಸುಮೂರ್ತಿ ಪ್ರಾರ್ಥನಿ ಧ್ರುವ
ಶಮದಮವೆಂಬೆರಡು ತಾಳಗೂಡಿ
ಪ್ರೇಮ ಭಾವನೆ ಧ್ರುಪದಿಗಳ ಮಾಡಿ
ಸಮರಸವೆ ಮೃದಂಗವಿದು ನೋಡಿ
ಸಮದೃಷ್ಟಿಲಿವೆ ನಾಮ ಕೊಂಡಾಡಿ ೧
ಸಾವಧಾನವೆಂಬ ನಿರೋಪಣಿ
ನಿವಾಂತ ಕೇಳು ವಿಚಾರಣಿ
ಈ ವಾಕ್ಯಬಲ್ಲ ಲಕ್ಷಕೊಬ್ಬ ಜ್ಞಾನಿ
ಭಾವ ಬಲ್ಲುದೆ ಮುಖ್ಯ ಸಾಧನಿ ೨
ಮನಸ್ವಸ್ತ ಮಾಡಿ ನೀವಿನ್ನು ಕೇಳಿ
ಅನುಮಾನ ಬಿಟ್ಟಿ ಇಕ್ಕಿ ಚಪ್ಪಾಳಿ
ಗನಗುರು ಪಾದದಲ್ಯೊಮ್ಮೆ ಹೊರಳಿ
ಹಣಿಗ್ಹಚ್ಚಿಕೊಂಬಾ ಗುರುಪಾದಧೂಳಿ ೩
ಚಿತ್ತ ಚಂಚಲಾಗ ಬಾರದು ನೋಡಿ
ವಸ್ತು ಬಾಹುದು ಬ್ಯಾಗೆ ಕೈಗೂಡಿ
ಮಿಥ್ಯಾ ಪ್ರಪಂಚ ಈಡ್ಯಾಡಿ
ನಿತ್ಯ ನಿರ್ಗುಣಾನಂದ ಸ್ತುತಿಪಾಡಿ ೪
ಪುಣ್ಯಕೀರ್ತನೆ ಕೇಳಿ ಸಂಭ್ರಮ
ಧನ್ಯ ಧನ್ಯ ಕೇಳಿದವರ ಜನ್ಮ
ಕಣ್ಣಾರೆ ಕಾಂಬುವ ನಿಜವರ್ಮ
ಚಿಣ್ಣ ಮಹಿಪತಿಗಾನಂದೋ ಬ್ರಹ್ಮ ೫

೩೬೩
ಇದೇ ನಿತ್ಯನಮಸ್ಕಾರ ನೋಡಿ ಗುರುಚರಣಕೆ ಮನಗೂಡಿ ಧ್ರುವ
ಬಿಡದಿಹುದೇ ಸತ್ಸಂಗಾ
ನೋಡಿ ಇದೇವೆ ಶಿರಸಾಷ್ಟಾಂಗಾ
ಕಡದ್ಹೋಯಿತು ಭವದುಸ್ಸಂಗಾ
ದೃಢಮಾಡಿ ಅಂತರಂಗಾ೧
ನಮೃತಲಿಹುದೆ ನಮನಾ
ಪ್ರೇಮಭಾವೆಂಬುದು ಪ್ರದಕ್ಷಿಣಾ
ನೇಮದಿಂದ ನಡೆದವರು ದಿನಾ
ಬ್ರಹ್ಮಾನಂದದೋರುವ ಸಾಧನ ೨
ಗುರ್ವಿನಂಘ್ರಿಗೆ ಎಡೆಮಾಡಿ
ಅರ್ವಿನೊಳಾದ ಮಹಿಪತಿ ನೋಡಿ
ಗರ್ವ ಪುಣ್ಯೆಂಬುದು ಈಡ್ಯಾಡಿ
ಸರ್ವಪಾಪ ಹೋಯಿತು ನೋಡಿ ೩

೩೬೪
ಇದೇ ನೋಡಿ ನಿಜ ಉಪಾಯ
ಸದಮಲ ಸುಖದಾಶದಾಶ್ರಯ ಧ್ರುವ||
ಸಾಧನವಿಲ್ಲಿದೆ ಶ್ರೇಯಸುಖ ಬ್ಯಾರದೆ ಕೇಳತಿಸೂಕ್ಷ್ಮ ಮಾತು
ಭೇದಿಸಿ ನೋಡೇನೆಂದರೆ ತಿಳಿದೀತು ಸಾಧಿಸಿ ಕೈಗೊಟ್ಟಿತು ೧
ಗೋವಗೋಂತಲ್ಲದೆ ಬ್ಯಾರೆದೆ ಘನ ಭಾವಿಸದೆ ನಿಜಖೂನಾ
ಸಾವಧವಾದವಗಿದೇನಿಧಾನ ಭವಹರ ಗುರುಕರುಣಾ ೨
ತಾನೆಂಬುದರೊಳು ತಾನೆತಾನಾಗೇದ ಭಾನುಕೋಟಿ ಉದಿತ
ದೀನ ಮಹಿಪತಿಸ್ವಾಮಿಯು ಸಾಕ್ಷಾತಾನಂದ ಘನಭರಿತಾ ೩

೩೭೧
ಇದೇ ನೋಡಿ ಸುಭಕ್ತಿ ಸಾಧು ಜನರ ಸುಯುಕ್ತಿ
ಸಾಧಿಸಿ ನೋಡಿ ಸುವೃತ್ತಿ ಭೇದಿಸಿಕೂಡಿ ಸುಮುಕ್ತಿ ಧ್ರುವ
ಹಿಡಿದು ಸಾರುವ ಶ್ರುತಿ ನಿಜಗೂಡಿ
ಗೂಡಿನೊಳಗೆ ಬೆರೆದಾಡಿ
ಇಡಾಪಿಂಗಳ ನಾಡಿ ನಡುವಾವಿನ
ಜಾಡೆ ಹಿಡಿದು ಘನಗೂಡಿ ೧
ಏರಿನೋಡಲು ಆರು ಚಕ್ರತಾಂ
ದೋರುತದೆ ಸುಪಥ
ತಿರುಗಿನೋಡಲು ತನ್ನೊಳು ತಾ
ಸುರುವುತದೆ ಅಮೃತ ೨
ಹಿಡಿದು ಗುರುಪಾದಾರವಿಂದ
ಪಡೆದ ಮಹಿಪತಿ ಅನಂದ
ಗೂಢ ಗುರುತವಾಯಿತು ಬಲು ಚಂದ
ಕಡಿದ್ಹೋಯಿತು ಭವಬಂಧ ೩

೩೭೦
ಇದೇ ನೋಡಿ ಸ್ವತಶುದ್ಧ ವಇಡಿ
ಸದಾ ಸರ್ವದಾ ಇದೇ ಮಾಡಿ ಧ್ರುವ
ಅರಹು ಎಂಬುದೆ ಮಡಿ ಉಡಿ
ಮರಹು ಮೈಲಗಿ ಮುಟ್ಟಬ್ಯಾಡಿ
ಗುರುಸ್ಮರಣೆ ನಿಷ್ಠೆಯೊಳುಗೂಡಿ
ಪರಬ್ರಹ್ಮ ಸ್ವರೂಪದ ನೋಡಿ ೧
ಕಾಮಕ್ರೋಧದ ಸ್ವರ್ಶವ ಬ್ಯಾಡಿ
ನೇಮನಿತ್ಯ ಇದನೇ ಮಾಡಿ
ಶಮದಮೆಂಬುದು ಕೈಗೂಡಿ
ಪ್ರೇಮಭಾವ ಭಕ್ತಿಯ ಮಾಡಿ ೨
ಮಿಥ್ಯಾ ಭೂತಕ ಮಡಿಮಾಡಬ್ಯಾಡಿ
ಚಿತ್ತಚಿದ್ಛನ ಸಮರಸ ನೋಡಿ
ನಿತ್ಯ ಮಹಿಪತಿಗಿದೆ ಮಡಿ ನೋಡಿ
ಸತ್ಯ ಸನಾತನ ಪದಕೂಡಿ

೩೬೫
ಇದೇ ನೋಡಿರೋ ನಮ್ಮ ಊಟ ಮೇದಿನೊಯೊಳು ಪ್ರಗಟ ಧ್ರುವ
ಪ್ರೇಮ ತಟ್ಟಿ ಬಟ್ಟಲು ತಳಗಿ ಕಾಮಕ್ರೋಧ ಸುಟ್ಟುಬೆಳಗಿ
ನಾಮಸಾರಘೃತದೊಳು ಮುಳಗಿ
ನೇಮದಿಂದ ಬಡಸುವಾದಡಗಿ ೧
ಪಂಚಭಕ್ಷ ಪರಮಾನ್ನಾಮುಂಚೆ ಬಡಸುವದು ಗುರುವಚನ
ಮುಂಚೆದೋರಿತು ಮೃಷ್ಟಾನ್ನ ಸಂಚಿತ ಪುಣ್ಯಸಾಧನ ೨
ತತ್ವಸಾರದೊಂದೇ ತುತ್ತು ಅತಿಹರುಷಗೊಂಡಿತು
ನಿತ್ಯತೃಪ್ತಹೊಂದಿತು ಹಿತ ಮಹಿಪತಿಗಾಯಿತು ೩

೩೬೬
ಇದೇ ನೋಡಿರೋ ನಿಜನೋಡಿರೋ ಧ್ರುವ
ನೋಡಿನೋಡಿ ನೋಡಿ ನೋಡುದರೊಳು ಕೂಡಿ
ನೋಡುವದೇನೆಂದು ನೋಡಿ
ನೋಡಿದ ಮ್ಯಾಲಿನ್ನು ಮೂಡಿಬಂದರ ಘನ
ನೋಡುವದೇ ಖೂನ ಮಾಡಿ
ಮಾಡಿದ ಮಾಟವು ಕೂಡಿಬಂದರೆ ಕೈಯ
ನಾಡಗೂಡ ಹೇಳಬ್ಯಾಡಿ
ಗೂಢ ಗುಹ್ಯದ ಮಾತು ಒಡೆದು ಹೇಳುವದಲ್ಲಾ
ನೋಡಿ ನಿಮ್ಮೊಳು ಬೆರೆದಾಡಿ ೧
ಓದಿದರೋದಬೇಕಿದೊಂದೇ ಅಕ್ಷರ
ಭೇದಿಸುವಂತೆ ಬ್ರಹ್ಮಾಂಡ
ಇದೇ ಸಾಧಿಸಿನ್ನು ಮೂಲವ ತಿಳಿಯದೆ
ಓದುವದ್ಯಾಕೆ ಉದ್ದಂಡ
ಹಾದಿ ತಿಳಿಯದಿದ್ದರೆ ಹೇಳಿಕೊಡುವನು
ಸದ್ಗುರು ಘನಪ್ರಪಂಚ
ಭೋದಿಸಿ ಬ್ರಹ್ಮಾನುಸಂಧಾನದ ಸುಖ
ಉದಯ ಮಾಡುವ ಅಖಂಡ ೨
ನಾನ್ಯ ಪಂಥವೆಂಬ ಮಂತ್ರದನುಭವ
ಚನ್ನಾಗ್ಯಾಗಬೇಕು ಖೂನ
ಇನ್ನೊಂದು ಬ್ಯಾರೆಂಬ ಭಿನ್ನವಳಿದ ಮ್ಯಾಲೆ
ತನ್ನೊಳಾಯಿತು ಸಮ್ಯಕಜ್ಞಾನ
ಧನ್ಯ ಧನ್ಯ ಧನ್ಯ ಧನ್ಯಗೈಸುವದಿದು
ಕಣ್ಣಾರೆ ಕಾಂಬೊ ಸಾಧನ
ಉನ್ಮತವಾಗದೆ ಸನ್ಮತದೋರದು
ಇನ್ನೊಬ್ಬರ ಕೇಳುವದೇನ ೩
ಸರ್ವಮಿದಂ ಖಲು ಬ್ರಹ್ಮವೆಂಬುವ ಮಾತು
ದೋರ್ವಾಂಗೆ ನೆಲೆಗೊಳಬೇಕು
ಸರ್ವ ಸಾಕ್ಷಿ ಸರ್ವಾಧಾರವು ತಿಳಿಯದೆ
ಗರ್ವಿತಲ್ಯಾಡುವ ಮಾತು ಹೋತು
ಗುರ್ವಿನಂಘ್ರಿಗಿನ್ನು ಗುರುತವ ಕೇಳದೆ
ಮವ್ರ್ಹಿನೊಳೀಹುದು ಮುಸುಕು
ನಿರ್ವಿಕಲ್ಪನ ನಿಜ ಸ್ಮರಿಸುವಾಂಗೆ ಕಣ್ಣ
ದೆರ್ವದಿದೊಂದೇ ಸಾಕು ೪
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎಂದು
ಗುರುವಿಗೆ ಕೇಳಿ ನಿಜ ವಂದ
ದೇಹದ ಒಳಗಿಹ್ಯ ದ್ಯಾವರ ತಿಳಿದರ
ಜನ್ಮಕೆ ಬಂದುದು ಚಂದ
ಸೋಹ್ಯ ಸೊನ್ನೆಯ ಗುಹ್ಯವ ತಿಳಿದರ
ಹೋಗುದು ಭವ ಮೂಲದಿಂದ
ಬಾಹ್ಯಾಂತ್ರ ಪರಿಪೂರ್ಣ ಭಾಸುತಲ್ಯದೆ
ಮಹಿಪತಿಗಿದೆ ಬ್ರಹ್ಮಾನಂದ ೫

೩೬೭
ಇದೇ ನೋಡಿರೋ ಸಂಧ್ಯಾನ ಸದಾ ಆತ್ಮಾನುಸಂಧಾನ ಧ್ರುವ|
ತಿಳಿಯದೆನಗೆ ತ್ರಿಕಾಲಾ ಹೊಳವುತಿಹ್ಯದು ಸೂರ್ಯಅಚಲಾ
ಕಾಳವ್ಯಾಳ್ಯಲ್ಲಿದಕ ಸಮೂಲಾ
ಇಳೆಯೊಳಾಯಿತು ಧರ್ಮಾನುಕೂಲ ೧
ಚಂಚಲೆಂಬುದೆ ಅಚಮನ ಮುಂಚೆ ಸಂಧ್ಯಾನಕಿದೆ ಸಾಧನ
ಸಂಚಿತ ಪ್ರಾಲಬ್ಧಕ್ರಿಯಮಾಣಾ
ವಂಚÀನಿಲ್ಲದಾಯಿತು ಅಘ್ರ್ಯದಾನಾ ೨
ಪರಮೇಷ್ಠಿ ಪರಬ್ರಹ್ಮಋಷಿಃ ಅರಿತು ಪ್ರಣಮ್ಯ ಸಾಧಿಸಿ
ತಿರುಗಿನೋಡಿಘನ ಸ್ಮರಿಸಿ ಕರಿಗಿ ಹೋಯಿತು ಪಾಪದ ರಾಶಿ ೩
ಆ ಹಪವೆ ಗಾಯತ್ರಿಮಂತ್ರ ಬೀಜಾಕ್ಷರವಿದು ಪವಿತ್ರ
ರಾಜಿಸುತಿಹ್ಯದು ಸರ್ವಾಂತರಾ ನಿಜಗುಹ್ಯ ಋಷಿಮುನಿಗೋತ್ರ ೪
ಸದೋದಿತ ಗುರುಭೋಧಪೂರ್ಣ ಇದಕಿಲ್ಲ ಉದಯಾಸ್ತಮಾನ
ಇದೇ ಮಹಿಪತಿ ಸಂಧ್ಯಾನ ಸದಾ ನಿತ್ಯಾನುಂಸಂಧಾನ ೫

೩೬೯
ಇದೇ ನೋಡಿರೋ ಸುಜ್ಞಾನ
ಸದ್ಬೋಧದಲಿಹುದು ಮನಾ ಧ್ರುವ
ಜ್ಞಾನವೆಂಬುದೇ ಪುಣ್ಯನದಿ ಮನ ನಿರ್ಮಲಮಾಡುದು ನಾದಿ
ನಾನ್ಯಃ ಮನವೆಂಬುದು ಓದಿ
ಖೂನದೋರುದು ಸುಪಥದ ಹಾದಿ ೧
ಜ್ಞಾನ ಭಾಗೀರಥೀ ಸ್ನಾನಮಾಡಿ
ಮನಮೈಲ ಹೋಯಿತು ನೋಡಿ
ಘನಪುಣ್ಯೊದಗಿತು ಕೈಗೂಡಿ ಅನುದಿನ ಮನ ಮುಳಗ್ಯಾಡಿ ೨
ನಿತ್ಯಮಹಿಪತಿಗಿದೆ ಸುಸ್ನಾನ ನಿತ್ಯ ಸದ್ಗುರು ನಿಜಧ್ಯಾನ
ಉತ್ತಮೋತ್ತಮಿದೆ ಸಾಧನ ಹಿತದೋರುತಿದೆ ನಿಧ್ಯಾನ ೩

೩೬೮
ಇದೇ ನೋಡಿರೋ ಸ್ವಯಂಪಾಕ ಸದಮಲಾನಂದಸುಖ ದ್ರುವ
ಶುದ್ಧ ಮಾಡಿ ಹೃದಯಸ್ಥಳ ಇದು ಏಕಾಗ್ರ ನಿರ್ಮಳಾ
ಸಾಧ್ಯಗೊಂಡು ಮನಾನುಕೂಲ ಸಿದ್ಧಿ ಇದೇವೇ ಸುಶೀಲಾ ೧
ಭಕ್ತಿವೈರಾಗ್ಯೊಲಿಹೂಡಿ ನಿತ್ಯಜ್ಞಾನಾಗ್ನಿ ಒಡಗೂಡಿ
ತತ್ವ ಪಂಚಪಾತ್ರೆಯಮಾಡಿ ಸತ್ಯಸಂಕಲ್ಪ ಇದೇ ನೋಡಿ೨
ಸಕಲ ಸಾಮುಗ್ರಿಯ ಸಂಚಿತಾ ಪಕ್ವಆಯಿತು ಆಯಿತು
ಮುಖ್ಯಮಹಿಪತಿಗಿದೆ ಸ್ವಹಿತಾ ಸುಖದೋರಿದ ಗುರುನಾಥಾ ೩

ಸಂಕೀರ್ಣ
೩೧೯
ಇದೇ ವೀಳ್ಯ ಅಡಕ್ಯೆಂಬುದು ನೋಡಿ
ಹದನಿಸಿ ನಾಲ್ಕುಗುಣ ಚೂರ್ಣಮಾಡಿ ಧ್ರುವ
ಅಡಕೆಂಬದನುಮಾನಪೂಟ
ಒಡೆದ ಹೋಳು ಮಾಡಿ ಚೊಕಷ್ಟ
ಮಡಿಚಿಮ್ಮನೆಂಬುದು ವೀಳ್ಯ ನೀಟ
ತೊಡೆದು ಅಹಂ ಸುಣ್ಣ ಖಾರಟಾ ೧
ಗುರುವರ್ಮ ಕಾಚೆಂಬುದು ಪೂರ್ಣ
ಸುರಮುನಿ ಜನರ ನಿಧಾನ
ತೋರುತಿಹ್ಯದೊಂದೆ ನಿಜ ಖೂನ
ಕರಗಿಹೋಯಿತು ಮೂರೊಂದು ವರ್ಣ ೨
ವೀಳ್ಯ ಮಾಡಲು ಮರ್ದನ
ಕಳದ್ಹೋಯಿತು ಅದರವಗುಣ
ಕಳೆ ಹೆಚ್ಚಿತು ರಂಗ ಸಗುಣ
ಥಳಿಥಳಿಸುವ ಜ್ಞಾನ ಸುಬಣ್ಣ ೩
ನುಂಗಿ ತಾಂಬೂಲ ರಸ ಹಲವಂಗ
ಹಿಂಗಿ ಹೋಯಿತು ಭವಭಯಭಂಗ
ಕಂಗಳದ್ಯರಿಯತು ಅಂತರಂಗ
ರಂಗದೋರಿತ್ಯನ್ನೊಳು ಸತ್ಸಂಗ ೪
ವೀಳ್ಯ ಅಡಕಿ ಮಹಿಪತಿಗೆ ನೋಡಿ
ತಿಳದವರಿದೆ ನಿಜಪೂರ್ಣ ಮಾಡಿ
ಕಳೆದು ಕಲ್ಪನಿ ಕೊನೆ ಆಗ್ಯೀಡ್ಯಾಡಿ
ಇಳಿಯೊಳಗಿದೆ ಸವಿ ಸುಖಗೂಡಿ ೫

೩೭೩
ಇದೇ ಸಂಧಿಸಿ ಧರ್ಮ ಭೇದಸಿ ಗುರುವರ್ಮ
ಶೋಧಿಸಿ ನೋಡಲಿಕ್ಕೆ ಛೆೀದಿಸಿಹೋಗುದು ಭವಕರ್ಮ ಧ್ರುವ
ಕಾಣಾದ ಕಾಣಬ್ಯಾಡಿ ಕಾಣಿಸುವದು ನೋಡಿ
ಕಾಣಿಸಿ ಕಾಣಗೊಡದಿಹ್ಯದ ಖೂನ ನಿಜಮಾಡಿ ೧
ದೋರದ ನೋಡಬ್ಯಾಡಿ ದೋರಿಸುವದು ನೋಡಿ
ದೋರಿಸಿದೋರಗುಡದಿಹುದ ಖೂನ ನಿಜಮಾಡಿ ೨
ಕೇಳದ ಕೇಳಬ್ಯಾಡಿ ಕೇಳಿಸುವದ ನೋಡಿ
ಕೇಳಿಸಿ ಕೇಳೆಗೊಡದಿಹುದ ಖೂನ ನಿಜಮಾಡಿ ೩
ಆಡದ ನೋಡಬ್ಯಾಡಿ ಅಡಿಸುವದ ನೋಡಿ
ಅಡಿಸಿ ಆಟ ನೋಡಗೂಡದ ಖೂನ ನಿಜಮಾಡಿ ೪
ನುಡದ ನೋಡಬ್ಯಾಡಿ ನುಡಿಸುವದ ನೋಡಿ
ನುಡಿಸಿ ನುಡಿ ತಿಳಿಯಗುಡದ ಖೂನ ನಿಜಮಾಡಿ ೫
ಮಾಡದ ನೋಡಬ್ಯಾಡ ಮಾಡಿಸೂವದ ನೋಡಿ
ಮಾಡಿಸಿ ಮಾಡದೋರಗುಡದ ಖೂನ ನಿಜಮಾಡಿ ೬
ತಿಳುಹದ ನೋಡಬ್ಯಾಡಿ ತಿಳುಹಿಕುಡದ ನೋಡಿ
ತಿಳುವಿಸುವದ ತಿಳುವದೆ ಮಹಿಪತಿವಸ್ತ ನೋಡಿ೭

೩೭೪
ಇದೇ ಸಾಧಿಸಿನೋಡಿ ಮನ ಉನ್ಮನÀಮಾಡಿ ಘನಸುಖ
ಭೇಧಿಸಿದರ ಭಾಸುತದೆ ತನ್ನೊಳು ತಾನೆ ಕೌತುಕಧ್ರುವ
ಸರ್ವಮಿದಂ ಖಲು ಬ್ರಹ್ಮವೆಂಬುವ ಮಾತು ಇದು
ನೋಡಿ ನೋಡಿ ಖೂನ
ಅರುಹು ಇಲ್ಲದೆ ಜನದೊಳು ಬರುದೆ ಹೇಳ್ಯಾಡುದೇನ
ನಿರ್ವಿಕಲ್ಪನ ನಿಜನೆಲೆನಿಭವರಿತು ನೋಡಿ ಸ್ಥಾನ
ಸರ್ವಸಾಕ್ಷಿ ಸರ್ವಾತೀತವೆಂಬ ವಸ್ತು ನೋಡಿ ಪೂರ್ಣ ೧
ಕಣ್ಣಿನ ಕೊನೆ ಮುಟ್ಟಿ ಕರಗಿ ಮನವು ನೋಡಿ ಪೂರ್ಣ ಬೊಧ
ಸಣ್ಣ ದೊಡ್ಡವರೊಳಗಿದೆ ಒಂದು ಸಾರುತಿದೆ ವೇದ
ಧನ್ಯ ಧನ್ಯಗೈಸುವ ನಿಜ ಪುಣ್ಯ ಗುರುಪಾದ
ಚನ್ನಾಗ್ಯನುಭವದಿಂದ ನೋಡಲಿಕ್ಯಾಗದು ಸ್ವಾದ ೨
ಸುರಿಮಳಿಗರೆವುತಲ್ಯದೆ ಸ್ವಸುಖದಾನಂದೊ ಬ್ರಹ್ಮ
ತೆರೆತಿಳಿಯಲಿಕ್ಕೆ ಗುರು ಶರಣ ಹೋಗಬೇಕು ಇದೇ ವರ್ಮ
ಹರುಷಗೈಸಿದ ನೋಡಿ ಪತಿತಪಾವನ ಸದ್ಗುರು ನಮ್ಮ
ತರಳ ಮಹಿಪತಿಗಿದೆ ನಿತ್ಯಭಿನವದ ನೋಡಿ ಸಂಭ್ರಮ ೩

೨೦೭
ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ
ವೇದಾಂತದ ಸುಸಾರಬೋಧವ್ಹೇಳಿದ ವಸ್ತು ಭಗವದ್ಗೀತಾ
ತುದಿಮೊದಲಿಲ್ಲದ ಸದಮಲಬ್ರಹ್ಮವು
ಸಂದಿಸೀಹ್ಯದು ಸದೋದಿತ
ಭೇದಿಸಿ ನೋಡಲು ತನ್ನೊಳಗ ತಾಂ ದೋರುತಿದೆ ಸಿದ್ದಾಂತ ೧
ಮಮೈವಾಂಶೋ ಜೀವಲೋಕೇ ಜೀವಭೂತ ಸನಾತನಃ
ಸ್ವಾಮಿ ಹೇಳಿದ್ದ ತಿಳಿಯಲಿಕ್ಕೆ ಆತ್ಮಾನುಸಂಧಾನದ ಖೂನ
ನೇಮದಿಂದಲಿ ಹೇಳಿದ ಮಾತಿಗೆ ಮುಟ್ಟಿದನೊಬ್ಬರ್ಜುನ
ನಾಮರೂಪವಿಲ್ಲದ ವಸ್ತುವೆ ತಾಂ
ತುಂಬೇದ ವಿಶ್ವದಿ ಪರಿಪೂರ್ಣ ೨
ಏಕಾಂಶೇನ ಸ್ಥಿತೋ ಜಗತ ವೆಂಬ ವಾಕ್ಯದನುಭವ
ಏಕೋಮಯವಾಗಿಹ್ಯ ಘನಸುಖವಿದು
ಸೇವಿಸಿದೊಬ್ಬ ಶುಕದೇವ
ನಾಲ್ಕುಶೂನ್ಯವು ಮೆಟ್ಟಿನೋಡಲು ಭಾಸುತಿದೆ ಸುಮನದೈವ
ಅಖಿಳ ಭುವನಕೇಕಾಕ್ಷರ ಬ್ರಹ್ಮವು ತಾನೆ
ತಾನಾಗೀ ಹ್ಯದು ಜೀವ ೩
ಯೋ ಮಾಮೇವಂ ಅಸಂಮೂಢೋ
ಜಾನಾತಿ ಪುರುಷೋತ್ತಮಂ
ಸಮರಸವಾಗಿ ನೋಡದವನೆ ತಾಂ
ಮನುಷ್ಯರೊಳಗಧಮಾಧಮಾ
ಕ್ರಮತಿಳಿದವನೆ ಪರಮಯೋಗಿ ಆತನೇ ಉತ್ತಮೋತ್ತಮಾ
ಶ್ರಮಬಡಿಸದ ಸತ್ಯಸುಖ ಸಾಧನವಿದು
ತಾಂ ಕೇಳಿ ನಿಜಾಧ್ಯಾತ್ಮಾ ೪
‘ ಹರಿಃ ಓಂ ತತ್ಸದಿತಿ ‘ ವೆಂಬ ನಿಜ ತಿಳಯಬೇಕಿದೆ ಮುಖ್ಯ
ಅರಿತಮ್ಯಾಲ್ಯಾತಕ ತಾಂ ತಿಳವದು
ಏಳುನೂರು ಶ್ಲೋಕದವಾಕ್ಯ
ತ್ವರ ತಾಂ ತಿಳಿಯದು ಒಂದೇ ಮಾತಿನ ಬ್ರಹ್ಮಾದಿಕರಿಗಾಟಕ್ಯ
ಸೆರಗುಸಿಲುಕಿ ತನ್ನೊಳು ಗುರುದಯದಲಿ
ತರಳಮಹಿಪತಿಗಿದೆ ಸೌಖ್ಯ ೫

೩೫೮
ಇದೇವೆ ಗುರು ಘನ ಮಹಿಮೆ ಧ್ರುವ
ಅಧ್ಯಾತ್ಮದಾನಂದದ ನೆಲೆನಿಭ ಮಹಾತ್ಮರು ಬಲ್ಲರು ಖೂನ
ಸಂತತ ಸದಮಲ ಸದ್ಗುರುವಿನ ಕೃಪೆ
ಹೊಳೆಯುತಿಹ್ಯದು ಅನುದಿನ
ಚಿಂತಾಯಕ ಗುರು ಘನ ಪ್ರತಾಪವು ತುಂಬಿಹ್ಯದು ಪರಿಪೂರ್ಣ
ಶುದ್ಧಾಂತ್ಮದ ಸೂತ್ರಾಂತ್ರದ ಗತಿಗಳ ಮೂಢಾತ್ಮರು ಬಲ್ಲವೇನ ೧
ಮಹಾನುಭವಗತಿಸುಖ ಅನುಭವಿಸುವ
ಮಹಿಮರು ಮನಿಮನಿಗಿಲ್ಲ
ಮಹಿಮಾನಂದದನು ಸಂಧಾನ ಪರಮವಿರಕ್ತನೇ ಬಲ್ಲ
ಜೀವನ್ಮುಕ್ತಾಗುವ ಗತಿ ಮಾರ್ಗವು ಎಂದಿಗೆ ದೊರೆವದಿದೆಲ್ಲ
ಪೂರ್ವಕಲ್ಪನೆಯಲ್ಲ ಮಿಕ್ಕಿನಾ ನರಗುರಿಗಳಿಗಿದು ಇಲ್ಲ ೨
ಹುರಳಿಲ್ಲದ ಕರ್ಮಾಚರಣೆಯೊಳು ಮರುಳಾದರು ಜನವೆಲ್ಲ
ಪರಮಾನಂದದ ಗತಿ ಸಾಯೋಜ್ಯವು
ಸರ್ವರಿಗಾವುದಲ್ಲ ಪೂರ್ವಾ
ಪಾರ ಮಹಾಗುರು ಯೋಗಮಾರ್ಗವು ಸ್ತುತಿಸಲೆನಗಳವಲ್ಲ
ನರಕೀಟಕ ಮಹಿಪತಿ ತಾರಕ ಗುರುದೋರುತಿಹ್ಯ
ಸರ್ವಮಯವೆಲ್ಲ ೩

೩೫೭
ಇದೇವೆ ಗುರುಕೃಪೆಯದಾಟಗಳು ಧ್ರುವ
ತನುವಿನೊಳು ಘನಕೌತುಕದೋರುವ
ಮನಯೋಗದ ಗೋಲ್ಹಾಟಗಳು
ಅನುಭವದಾಟವು ಅನುದಿನ ನೋಡುವ
ಅನಿಮಿಷ ನಯನದ ನೋಟಗಳು
ಅನಂದಮಯ ಘನತುಂಬಿ ತುಳುಕುತಿಹ್ಯ
ಜ್ಞಾನ ಸಮುದ್ರದ ಲೋಟಗಳು
ಏನೇಂದ್ಹೇಳಲಿ ಸ್ವಾನಂದದ ಸುಖ ಅನಂದೋಬ್ರಹ್ಮದ ಆಟಗಳು ೧
ಫೇಳೆನಿಸುವ ಶ್ರುತಿ ಆಲಿಸುವದಿದು ಸೋಹ್ಯ
ಸೊನ್ನೆಯ ಸೂಟಿಗಳು
ತಾಳಮೃಂದಗವು ಭೇರಿಡುತಿಹ್ಯ ಕೇಳುವ ಧಿಮಿಧಿಮಿಟಗಳು
ತಲ್ಲೀನದಿ ಶ್ರುತಿಘೋಷಾಲಿಸುವನೀದೃಶ್ಯದ ಉದಾಟಗಳು
ಹೇಳಲಿಬಾರದು ನಾದೋಧ್ವನಿಗಳು
ತಿಳಿಯಲು ಬಲು ಆವ್ಹಾಟಗಳು ೨
ಭಾವಬಯಲಾಟದ ನಿಜಸುಖವಿದು
ಬಲ್ಲವೇನು ನರಕೀಟಗಳು
ಭವಬಂಧÀನ ನಿರ್ಮೂಲವು ಮಾಡುವ
ದೇವದೇವೋತ್ಮನ ನೋಟಗಳು
ದಯಕರುಣದಿ ಜೀವನ ¸ದ್ಗೈಸುವ ಭವನಾಶನ ಕೃಪಾದೃಷ್ಟಿಗಳು
ಪಾವನ್ನವಾಯಿತು ಮಹಿಪತಿ ಜನ್ಮವು
ಧನ್ಯಧನ್ಯ ಕುಲಕೋಟಿಗಳು ೩

೨೦೬
ಇದೇವೆ ನಿಜನೋಡಿ ನಮ್ಮ ನೇಮನಿತ್ಯ
ಸಾಧು ಜನರಿಗೆ ನಡೆವದು ಸತ್ಯ ಧ್ರುವ
ನಿತ್ಯಭಾಗೀರಥಿ ಪ್ರಾತ:ಸ್ನಾನ ವಸ್ತು
ಅನುಸಂಧಾನ ತ್ರಿಕಾಲ ಸಂಧ್ಯಾನ
ಪ್ರತ್ಯಕ್ಷವಾದುದೆ ತನ್ನ ಧ್ಯಾನಜ್ಞಾನ ನಿತ್ಯ
ನಿತ್ಯದಿತ್ಯರ್ಥದ ನಿಜಸುಷ್ಠಾನ ೧
ಭಾವ ಬಲುವದೆ ದೇವತಾರ್ಚನೆಯು
ದೇವದೇವೇಶನಾರಾಧನೆಯು
ದಿವಾರಾತ್ರಿ ಹರಿಯ ಸ್ಮರಣಿ ಪ್ರಾರ್ಥನೆಯು
ಭುವನತ್ರಯದಲಿದೆ ಸರ್ವಸಾಧನೆಯು ೨
ವರ್ಮದೋರಿದ ಗುರು ಎನ್ನೊಳಗೆ
ಕರ್ಮಹರಿಸಿದ ನಿಮಿಷದೊಳಗೆ
ಧರ್ಮಜಾಗಿಸಿಕೊಟ್ಟ ಜಗದೊಳಗೆ
ಬ್ರಹ್ಮಾನಂದವಾಯಿತು ಮಹಿಪತಿಗೆ೩

Leave a Reply

Your email address will not be published. Required fields are marked *