Categories
ರಚನೆಗಳು

ಕಾಖಂಡಕಿ ಶ್ರೀ ಮಹಿಪತಿರಾಯರು

೬೮೧
ಲೇಸು ಲೇಸಾಯಿತೆನ್ನ ಜನುಮ ನೋಡಿ
ವಾಸುದೇವನೆ ಬಂದು ಕೈಗೂಡಿ ಧ್ರುವ|
ಎನ್ನ ಮಾನಾಭಿಮಾನ ಆದ ಹರಿಯೆ
ಇನ್ನು ಇಂಥ ಪುಣ್ಯಕ ನೋಡಿ ಸರಿಯೆ
ಧನ್ಯಗೈಸಿದುತ್ತೀರ್ಣಾಗಲರಿಯೆ
ಇನ್ನೊಬ್ಬರಿಗೇನು ಮುಚ್ಚುಮರಿಯೆ ೧
ಕೋಟಿ ಜನ್ಮದಲಿ ಮಾಡಿದ ಸುಪುಣ್ಯ
ನಾಟಿ ಬಂತೆನ್ನೊಳಗಸು ತಾರ್ಕಣ್ಯ
ನೀಟದೋರಿತು ಘನ ಸುಚೈತನ್ಯ
ನೋಡ ನೆಲೆಗೊಂಡಾಯಿತು ಧನ್ಯ ೨
ತಾನೆ ತಾನಾದೆನ್ನೊಳು ಬಂದು ನೋಡಿ
ಭಾನುಕೋಟಿಪ್ರಕಾಶ ದಯಮಾಡಿ
ದೀನ ಮಹಿಪತಿಗೆ ಸ್ವಸುಖ ನೀಡಿ
ಮನೋಹರ ಮಾಡಿದ ಮನಗೂಡಿ೩

೪೮೨
ಲೇಸುಲೇಸಾಯಿತು ಸದ್ಗುರು ಕೃಪೆ
ಲೇಸುಲೇಸಾಯಿತು ಧ್ರುವ|
ಆದಿತತ್ವದ ಜ್ಞಾನ ಇದಿರಿಟ್ಟಿತು ಘನ ಲೇಸುಲೇಸಾಯಿತು
ಭೇದಿಸಲು ಮನೆ ಅದೆ ಆಯಿತುನ್ಮನ ೧
ಅನುಭವದ ಖೂನ ತಾನೆ ಆಯಿತು ಘನ ಲೇಸುಲೇಸಾಯಿತು
ಜ್ಞಾನಾಗಮ್ಯದ ಸ್ಥಾನ ಎನಗಿದೆ ನಿಜ ಧ್ಯಾನ ೨
ಭಾವದ ಬಯಲಾಟ ಠಾವದೋರಿತು ನೀಟ ಲೇಸುಲೇಸಾಯಿತು
ಸುವಿದ್ಯ ಗುರುನೋಟ ಸರಿಮಾಡಿತೀ ಮಾಟ ೩
ನೀಡಿದಭಯ ಹಸ್ತ ಮಾಡಿತು ಮನಸ್ವಸ್ಥ
ಗೂಢವಾಗಿಹ್ಯ ವಸ್ತಗೂಡಿತು ಸಾಭ್ಯಸ್ತ ೪
ಇಹಪರಕ ಸ್ವಾದ ಮಹಾಗುರುಪ್ರಸಾದ
ಸಾಹ್ಯಮಾಡುದೆ ಸದಾ ಮಹಿಪತಿ ಗುರುಬೋಧ ೫

೫೭೩
ವಚನ
ಮನವು ಬಿಲ್ಲನೆ ಮಾಡಿ
ತನುವು ಹೆದಿಯನೆ ಕಟ್ಟಿ
ಅನುಭವದ ಅಂಬಿನಲಿ
ಜನನ ಮರಣದ ಗುರಿಯ ಕೆಡಹಿದಾ
ಜ್ಞಾನಸಾಗರ ಗುರುನಾಥನೆಂದು
ಸ್ತುತಿಸಿದಾ ಮಹಿಪತಿಯು |

೨೭೯
ವಸ್ತು ಒಂದೆ ಅದೆ ಅನಾದಿಯಿಂದ
ಸ್ವಸ್ತ ಮಾಡಿಕೊಳ್ಳಿ ಗುರುಮುಖದಿಂದ ಧ್ರುವ
ಹೂವಿಲ್ಲದೆ ಫಲವಾಗುವ ಕಾಯಿ
ಠಾವಿಲ್ಲದೆ ಮ್ಯಾಲೆ ಮುಚ್ಯಾದೆ ಮಾಯಿ
ಭಾವಿಕರಿಗಾದೆವು ಪಾಯಿ
ಠಾವಿಕಿ ಮಾಡಿಕೊಬೇಕು ತಾಯಿ ೧
ಬೀಜಿಲ್ಲದೆ ಫಲ ನಿಜವಾಗ್ಯದೆ
ಮೂಜಗದೊಳು ರಾಜಿಸುತ್ತದೆ
ಸೂಜಿಮೊನೆಗಿಂತ ಸಣ್ಣವ್ಯಾಗದೆ
ವಾಜಿಹೀನರ ವರ್ಜಿಸುತದೆ ೨
ನೋಡೇನೆಂದರೆ ನೋಟಕತೀತ
ಹಿಡಿದೇನಂದರೆ ಸಿಕ್ಕದು ಸ್ವಸ್ಥ
ಪಡೆದುಕೊಂಡವರಿಗೈದೆ ಆಯಿತ
ಮೂಢ ಮಹಿಮತಿ ಗುರು ನಿಜಹಿತ೩

೬೮೨
ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ ಧ್ರುವ|
ತೇಜ:ಪುಂಜದ ರೂಪ ಮೂಜಗದೊಳಗಿದು ಅಪರೂಪ
ನಿಜ ನಿರ್ವಿಕಲ್ಪ ಸುಜನರ ಹೃದಯಕ ಸದ್ಛನದೀಪ ೧
ರೂಪಕ ನೆಲೆಇಲ್ಲ ವ್ಯಾಪಕವಿದು ಜಗದೊಳಗೆಲ್ಲ
ಗುಪಿತಜ್ಞಾನಿಯು ಬಲ್ಲ ಜಪತಪಕಿದು ಸಿಲ್ಕುವದಲ್ಲ ೨
ಜ್ಞಾನಕ ಸಾಹೀತ ಮುನಿಜನ ಹೃದಯದಿ ಸದೋದಿತ
ಧ್ಯಾನಕೆ ಆಯಿತು ಮನಕಾಮನವಿದು ಪೂರಿತ ೩
ಮೂರಕೆ ವಿರಹಿತ ಮೂರುಲೋಕವು ವಂದಿತ
ಪರಮ ಸಾಯೋಜ್ಯತ ತಾರಕವಸ್ತು ಸಾಕ್ಷಾತ ೪
ಬೈಲಿಗೆ ನಿರ್ಬೈಲ ಭಾವಿಕ ಬಲ್ಲನು ಇದರ್ಹೊಯಿಲ
ಮಹಿಪತಿಗನುಕೂಲ ಜೀವನ್ಮುಕ್ತಿಗೆ ಇದು ಮೂಲ ೫

೧೨೭
ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ
ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಧ್ರುವ
ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ
ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ
ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ
ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ ೧
ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ
ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ
ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ
ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ ೨
ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ
ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ
ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ
ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ ೩
ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ
ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ
ಪ್ರೀತಿ ಆದರಳಿದ ಅಮೃತ ಊಟವ್ಯಾತಕೆ
ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ ೪
ಮನವು ಸ್ಥಿರಗೊಳದ ನಿತ್ಯ ಶ್ರವಣವ್ಯಾತಕೆ
ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ
ತನುವಿನಲ್ಲಿ ಘನವು ಕಾಣದನುಭವ್ಯಾತಕೆ
ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ ೫

೬೮೩
ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೆ
ವಿಶ್ವವಂದಿತ ವಿಶ್ವನಾಥ ನೀನೆ ಧ್ರುವ
ವಿಶ್ವಾತ್ಮದಲ್ಯಾಡುವ ವಿಶ್ವಸ್ವರೂಪವು ನೀನೆ
ವಿಶ್ವ ನಿರ್ಮಿತ ವಿಶ್ವಪಾಲ ನೀನೆ
ವಿಶ್ವವುದ್ಧರಿಸುವ ವಿಶ್ವಪಾವನ್ನನೆ
ವಿಶ್ವಲಿಹ ವಿಶ್ವೇಶ್ವರ ನೀನೆ ೧
ವಿಶ್ವತೋ ಚಕ್ಚು ನೀ ವಿಶ್ವತೋ ಮುಖ ನೀನೆ
ವಿಶ್ವತೋ ಬಹು ಸಾಕ್ಷಾತ್ ನೀನೆ
ವಿಶ್ವಾಂತ್ರ ಸೂತ್ರನೆ ವಿಶ್ವಂಭರನು ನೀನೆ
ವಿಶ್ವರಹಿತ ವಿರಾಜಿತನು ನೀನೆ ೨
ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆ
ವಿಶ್ವಾನಂದ ಘನಮಹಿಮ ನೀನೆ
ವಿಶ್ವಾತ್ಮ ಹಂಸ ಮಹಿಪತಿ ಗುರುನಾಥನೆ
ವಿಶ್ವಾಸಲೋಲ ವಿಶ್ವೇಶ ನೀನೆ ೩

೧೨೮
ವೆಚ್ಚಕುಂಟು ನಮಗೆ ಅಚ್ಯುತನಾಮ ನಿಶ್ಚಯದ ಧನವು ಧ್ರುವ
ವೆಚ್ಚಮಾಡಿದರೆಂದಿಗೆ ಅಚ್ಚಳಿಯದು ನಿಶ್ಚಯದ ಬದಕು
ಬಚ್ಚಿಟ್ಟುಕೊಂಡು ನಿಜ ಎಚ್ಚರಿಕಿಂದ ನಿಶ್ಚಿಂತದಲಿ ಉಂಬೆನು ೧
ಕೊಡಲುಂಟು ಕೊಳ್ಳಲುಂಟು ಮೊಡವಿಯೊಳು ಪಡೆದ ಸಂಚಿತ ಧನವು
ಬಡತನವನು ಹಿಂಗಿಸಿತು ಒಡಿಯನಖಂಡ ಕೃಪೆಯಿಂದಲಿ ೨
ಸಾದ್ಯವಾಯಿತು ಎನಗೆ ಸದ್ಗುರು ಕೃಪೆಯಿಂದ ನಿಜಧನವು
ಬುದ್ಧಿವಂತರು ಕೇಳಿರೊ ಸಾಧನವ ಮಾಡಿ ಸಾಧಿಸೊಕೊಂಬುವದು ೩
ಕಟ್ಟಬಿಡಲಾಗುದು ವಿಟ್ಟಿ ಹ್ಯಧನಕೊಟ್ಟರೆಂದಿಗೆ ತೀರದು
ಇಟ್ಟಿಹ ತನುಮನದಲಿ ಘಟ್ಯಾಗಿ ಕೇಳಿರೊ ಈ ಮಾತವ ೪
ಅರುಹು ಅಂಜನವಿಟ್ಟಿ ತೋರಿದ ಗುರುಕರದಲಿ ಈ ಧನವು
ಹರುಷವಾಯಿತು ಎನಗೆ ಧರೆಯೊಳು ತರಳಮಹಿಪತಿಗೆ ೫

೨೮೨
ವೇದದ ಮೂಲ ಆದಿ ಅನುಕೂಲ
ಸಾಧು ಜನರ ಸದ್ಛನ ಲೋಲ ಧ್ರುವ
ಸದಾ ಸುವಿಮಲ ಇದೇವೆ ನಿಶ್ಚಲ ಸಾಧನ
ಕೀಲ ಬುಧರಕನುಕೂಲ
ಇದೇ ನಿಜ ನೋಡಿರೊ ಸಾಧಿಸಿ ಘನಸುಖಗೂಡಿರೊ ೧
ಜ್ಞಾನದಾಸರ ಧ್ಯಾನದಂತರ ಖೂನದಾ ವಿವರ ಅನುಭವಾಧಾರ
ಅನುದಿನುದಾರ ಘನದಾಸರ ಕಾಣುದು
ಕಣ್ಣಾರ ಎನ್ನ ಮನೋಹರ ೨
ಗುಹ್ಯ ಗೌಪ್ಯಸ್ಥ ಮಹಾಪ್ರಶಸ್ತ ಈಹ್ಯ ಸೌಭ್ಯಸ್ಥ ಮಹಿಮರ ತಸ್ತ
ಸ್ವಹಿತ ಸುಪ್ರಸ್ತ ಸಾಧು ಸಮಸ್ತ ಮಹಿಪತಿ
ಸುವಸ್ತ ಶ್ರೀಗುರು ಸಮರ್ಥ ೩

೨೮೩
ವೈಶ್ವದೇವೆಂಬುದು ಇದೆ ನೋಡಿ
ಶ್ವಾಸೋಚ್ಛ್ವಾಸನೆಂಬುದು ಪುಟಮಾಡಿ ಧ್ರುವ
ಬ್ರಹ್ಮಜ್ಞಾನವೆಂಬುದು ಕುಂಡಮಾಡಿ
ಕರ್ಮಕಾಷ್ಟದಗ್ನಿ ಪುಟಗೂಡಿ
ನಾಮ ದಿವ್ಯ ನೆನೆಹು ತಾ ಊದಿಬಿಡಿ
ಕಾಮಕ್ರೋಧವೆಂಬ ಧೂಮ್ರ ಹೋಗಾಡಿ ೧
ಜ್ಞಾನವೈರಾಗ್ಯೆಂಬುದು ಅಗ್ನಿ ನಾ ನೀನೆಂಬುದು
ಆಹುತಿ ಪೂರ್ಣನೀಡಿ
ಭಿನ್ನಭೇದ ಭೂತ ಬಲಿಮಾಡಿ ಮನಮೈಲಿ
ತೊಳೆದು ಶುದ್ಧಮಾಡಿ ೨
ವೈಶ್ವದೇವ ಮಹಿಪತಿಗಿದೆ ನೋಡಿ
ವಿಶ್ವದೊಳಿದೆ ನಿಜ ನಿತ್ಯಮಾಡಿ
ಹಸನಾದ ಸತ್ಕರ್ಮ ಇದೆ ನೋಡಿ
ಲೇಸುಲೇಸಾಯಿತು ಪುಣ್ಯಗೂಡಿ೩

೧೨೯
ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು
ವಿಷ್ಣುನರಿತವನೆ ವೈಷ್ಣವನು| ೧
ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ
ಯುಕ್ತಿ ತಿಳಿದವನೆ ವೈಷ್ಣವನು ೨
ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ
ಹರಿಯ ನೆನೆಯುವನೆ ವೈಷ್ಣವನು ೩
ಹರಿ:ಓಂ ತತ್ಸದಿತಿಯೆಂಬ ಹರಿವಾಕ್ಯವನು
ಅರಿತವನೆ ಪರಮ ವೈಷ್ಣವನು ೪
ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು
ಹರಿಯ ಸ್ಮರಿಸುವವನೆ ವೈಷ್ಣವನು ೫
ಪರದೆ ಇಲ್ಲದೆ ಪಾರ ಬ್ರಹ್ಮಸ್ವರೂಪನು
ಗುರುತ ಕಂಡವನೇ ಪರಮ ವೈಷ್ಣವನು೬
ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟಿ
ಅರಿತು ಬೆರೆದನೆ ಪರಮ ವೈಷ್ಣವನು ೭
ಮೂಲ ಮೂರುತಿಗ್ಯಾಗಿ ಮೇಲಗಿರಿಯನೇರುವ
ಕೀಲ ತಿಳಿದವನೆ ವೈಷ್ಣವನು ೮
ಉಂಟಾಗಿ ಇರುಳ್ಹಗಲಿ ಗಂಟ್ಹಾಕಿ ಹರಿಪಾದ
ಬಂಟನಾದವನೆ ವೈಷ್ಣವನು ೯
ಅರು ಕಂಟಕ ನೀಗಿ ಮೂರು ಬಲೆಯನು ದಾಟಿ
ಮೀರಿ ನಿಂದವನೇ ವೈಷ್ಣವನು ೧೦
ಆಶಿಯನೆ ಜರಿದು ನಿರಾಶೆಯನು ಬಲಿದು
ಹರಿದಾಸನಾದವನೆ ವೈಷ್ಣವನು ೧೧
ದ್ವಾದಶನಾದವನು ಸಾಧಿಸಿ ಕೇಳುತಲಿ
ಭೇದಿಸಿದವನೆ ವೈಷ್ಣವನು ೧೧
ಅನಿಮಿಷ ನೇತ್ರದಲಿ ಅನುದಿನ ಘನಸುಖವು
ಅನುಭವಿಸುವನೆ ವೈಷ್ಣವನು ೧೨
ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ
ಪುಷ್ಟವಾಗಿದೋರುವನೆ ವೈಷ್ಣವನು ೧೩
ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ
ಕೊಟ್ಟಾ ಗುರು ಪರಮ ವೈಷ್ಣವನು ೧೪

೨೮೦
ವ್ಯರ್ಥವಲ್ಲವೇ ಜನ್ಮವ್ಯರ್ಥವಲ್ಲವೆ
ಕರ್ತು ಸದ್ಗುರು ಪಾದ ಅರ್ತು ಬೆರೆಯದವನ ಜನ್ಮ ಧ್ರುವ
ಇಡಾ ಪಿಂಗಳೆರಡು ಥಡಿಯ ಮಧ್ಯಸುಷಮ್ನದಲಿ
ಗುಪ್ತವಾಹಿನಿಯ ಸುಸ್ನಾನ ಮಾಡದವನ೧
ಪಿಂಡ ಬ್ರಹ್ಮಾಂಡ ಭ್ರೂಮಧ್ಯ ತ್ರಿವೇಣೀಕ್ಷೇತ್ರ
ಪುಣ್ಯಸಂಗಮದ ತೀರ್ಥಯಾತ್ರೆ ಮಾಡದವನ ಜನ್ಮ ೨
ಆರು ಸೋಪಾನವೇರಿ ಮೂರು ಗೋಪುರವ ದಾಟಿ
ಮೇಲಗಿರಿಯಲಿಹ್ಯ ಮಹಿಪತಿಯ ಮೂರ್ತಿ ನೋಡದವನ ಜನ್ಮ ೩

೨೮೧
ವ್ಯಸನ ವಿಷಯದ ಘಸಣಿ ಕುಸುಕಿತಿಹ್ಯ ಉಸುರು ಮಿಸುಕದೆ
ಹಸನಗೊಂಡವ ಹರಿದಾಸ ನೆಂದ ಮಹಿಪತಿಯು ೧
ಚಿತ್ತವೃತ್ತಿ ಮಾಡಿಹ ನಿತ್ಯ ನಿಜಪಥಗೂಡಿದವರ
ಭೃತ್ಯನೆಂದ ಮಹಿಪತಿಯ ೨
ಸಣ್ಣ ದೊಡ್ಡದೆನ್ನಗುಡದಿಹ ಭಿನ್ನಭೇದವ ಮಾಡದಿಹರ
ಚಿಣ್ಣ ಕಿಂಕರನೆಂದ ಮಹಿಪತಿಯು ೩

೨೮೫
ಡಂಭ ತೋರಿದರೆ ಬಂತೆ ಇಂಬವಾಗದ ಗುಂಭಗುರುತ
ಅಂಬುಜಾಕ್ಷನ ಶ್ರೀಪಾದ ಕಾಂಬುದೇ ಪಥ ೧
ಶಬ್ದ ಜ್ಞಾನದಿಂದ ನಿಗಗೇನು ಲಬ್ಧ
ಲಬ್ಧಾ ಲಬ್ಧ ತಿಳಿಯಗೊಡುದು ನಿನ್ನ ಪ್ರಾರಬ್ಧ ಧ್ರುವ
ನೀರ ಕಡಿದರೆ ಬಂತೆ ಸಾರಸದ ನವನೀತ
ಮಾರಪೀತನಂಘ್ರಿ ಗುರುತಾಗುದೇ ಹಿತ ೨
ಹರಿವ ಮೃಗಜಲವಾಯಿತೆ ಅರಿತುಕೊಂಬಗೆ ಗಂಗಾಮೃತ
ತೋರಿ ಕುಡುದೊಂದೆ ಗುರು ಅಮೃತ ಹಸ್ತ ೩
ಕಾಜಿನ ಮಣಿ ಆದೀತೆ ರಾಜಿಸುವ ನವರತ್ನ
ನಿಜತತ್ವ ತಿಳಿಯುದೊಂದೇ ವಾಜಿಯ ಯತ್ನ ೪
ಹೊಂದಿ ಬದುಕಿರೊ ಮಹಿಪತಿ ತಂದೆಯ ಗುರುಪಾದ
ಚಂದವಿದೇ ಜನ್ಮಕಿದು ಸ್ವಾನಂದ ಬೋಧ ೫

೧೩೧
ಶರಣ ರಕ್ಷಕನಹುದೊ ಸಿರಿಯಲೋಲನೆ ಪೂರ್ಣ ಧ್ರುವ
ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ
ಅರವಿಂದ ನೇತ್ರ ಸುರಮುನಿ ಸ್ತೋತ್ರ
ಹರಿ ನಿನ್ನ ಚರಿತ್ರ ಪರಮ ಪವಿತ್ರ ೧
ವಿದುರ ವಂದಿತ ದೇವ ಬುಧಜನ ಪ್ರಾಣಜೀವ
ಯದುಕುಲೋದ್ಭವ ನೀನೆ ಶ್ರೀಮಾಧವ
ಸದಾ ಸದ್ಗೈಸುವ ಆದಿ ಕೇಶವ ೨
ಅನಂದ ಘನಲೋಲ ನೀನೆ ಸರ್ವಕಾಲ
ಅನಾಥರನುಕೂಲ ಶರಣಾಗತ ವತ್ಸಲ
ದೀನ ಮಹಿಪತಿ ಸ್ವಾಮಿ ನೀನೆ ಕೃಪಾಲ ೩

೧೩೦
ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ ಧ್ರುವ
ನಕ್ರ ಗಜೇಂದ್ರಗೆ ವಕ್ರಾಗಿ
ತ್ರಿ ವಿಕ್ರಮನೆಂದಂದು ಮೊರೆ ಇಡಲು
ಚಕ್ರದಿಂದಲಿ ನೀ ವಕ್ರನೆ ಹರಿಸಿ
ಅಕ್ರದಲೊದಗಿ ಕಾಯ್ದವ ನೀನಹುದೊ ೧
ತರಳ ಪ್ರಹ್ಲಾದನು ಮೊರೆ ಇಡುವದು ಕೇಳಿ
ಭರದಿಂದ ಸ್ಥಂಭದಲುದ್ಭವಿಸಿ
ದುರುಳದೈತ್ಯನ ಕರುಳೊನಮಾಲೆಯನ್ನು ಮಾಡಿ
ಕರುಣಿಸಿ ಭಕ್ತ ಗೊಲಿದವ ನೀನಹುದೊ ೨
ಸೆರಗಪಿಡಿದು ಸೀರೆ ಸೆಳೆವ ಸಮಯದಲಿ
ಹರಿಯೆಂದು ದ್ರೌಪದಿ ಮೊರೆ ಇಡಲು
ತ್ವರದಿಂದೊದಗಿ ಬಂದು ಪೂರಿಸಿ ವಸ್ತ್ರವ
ಧರೆಯೊಳು ಲಜ್ಜೆಗಾಯ್ದವ ನೀನಹುದೊ ೩
ಮಂಡಿಸಿರಲು ಕೌರವ ಅರಗಿನ ಮನೆ
ಪಾಂಡವರದರೊಳು ಸಿಲ್ಕಿರಲು
ಕಂಡು ನೀ ಅದರೊಳು ವಿವರವ ತೋರಿ
ಪೊರವಂಡಿಸಿದ ಪ್ರಚಂಡ ನೀನಹುದೊ ೪
ಎಸೇಸು ಭಕುತರ ಅವರಸಕ್ಕೊದಗುತ
ಲೇಸಾಗಿ ಕಾಯ್ದವ ನೀನಹುದೊ
ದಾಸ ಮಹಿಪತಿ ಮನದವಸರಕ್ಕೊದಗುತ
ಭಾಸುತಲಿಹ್ಯ ಭಾಸ್ಕರ ಕೋಟಿ ತೇಜ ೫


ಶರಣು ಶರಣು ಶರಣು ದೇವಾಧಿಗಳೊಂದಿತ
ನಹುದು ಸ್ವಾಮಿ ಗಣನಾಥ ಶರಣು ಧ್ರುವ
ಅಖಿಳ ಭವನದೊಳು ಪೂಜಿತ
ಭಕುತ ಜನಕೆ ನೀ ಸಾಕ್ಷಾತ
ಸಕಲ ವಿದ್ಯಾವರದಾತ
ಶಕುತನಹುದಯ್ಯ ಪ್ರಖ್ಯಾತ ೧
ಶುದ್ಧ ಬುದ್ಧರ ಸಹಕಾರ
ಬುದ್ಧಿನೀವ ಘನ ಉದಾರ
ರಿದ್ಧಿ ಗ್ಯಾಗೀಹ್ಯ ನೀ ಆಧಾರ
ಸಿದ್ಧಿದಾಯಕ ವಿಘ್ನಹರ ೨
ಜನಕೆ ಮಾಡುವೆ ದೋಷನಾಶ
ಅನುದಿನವೆ ಮತಿ ಪ್ರಕಾಶ
ದೀನ ಮಹಿಪತಿಯ ಮನೋಭಾವಪೂರಿತಗಣಾಧೀಶ ಶರಣು ಶರಣು ೩

೪೮೩
ಶರಣು ಶ್ರೀ ಗುರುನಾಥ ಸುರಮುನಿಜನದಾತ
ಮೂರು ಲೋಕೊಂದಿತ ಪರಮ ಹಿತ ೧
ನಿನ್ನುಪಕಾರ ಪೂರ್ಣ ಏನಾದರುತ್ತೀರ್ಣ
ನೀನೆ ದಯಾಕರುಣ ದೀನೋದ್ಧಾರಣ ೨
ಮನದ ಮಂಗಳ ನೀನು ನೆನೆವರ ಕಾಮಧೇನು
ದೀನ ಮಹಿಪತಿಗಿನ್ನು ನೀನೆ ನೀನು ೩

೪೮೪
ಶರಣು ಶ್ರೀದೇವದೇವಾದಿ ಸದ್ಗುರುನಾಥ
ಶರಣು ಸುರಮುನಿಜನರ ಪ್ರಾಣ ಜೀವನದಾತ
ಶರಣು ಪರಬ್ರಹ್ಮ ಪರಮಾನಂದ ಭರಿತ
ಶರಣು ಸಿರಿ ಅರಸ ಕರುಣಾಳು ಶ್ರೀನಾಥ ಶರಣು ೧
ವೇದ ಆಗೋಚರಾನಾದಿ ಗುರು ಅನಂತ
ಸಾಧುಜನ ಸಹಕಾರ ಸಂತತ ಸದೋದಿತ
ಸದ್ಬ್ರಹ್ಮ ಆನಂದ ಗುಣತ್ರಯ ವಿರಹಿತ
ಆದಿ ಅನಾದಿ ಅವಿನಾಶ ಗುರುನಾಥ ೨
ಭಕ್ತಜನ ಹೃದಯ ಸಂಜೀವ ಸದ್ಗುರುನಾಥ
ಶಕ್ತನಹುದಖಿಳದೊಳು ಸಕಳಾರ್ಥಪೂರಿತ
ಯುಕ್ತನಹುದಯ್ಯ ಶಕ್ತಿಯು ಗುರುಸಮರ್ಥ
ಮುಕ್ತಿದಾಯಕ ಮಹಿಪತಿ ಪ್ರಾಣನಾಥ ೩

೨೮೪
ಶುದ್ಧ ಸನ್ಮಾರ್ಗ ಸರ್ವರಿಗಿದು ಒಂದೆ
ಬುದ್ಧಿವಂತರು ತಿಳಿದರು ಇದರಿಂದೆ ೧
ಇದರಿಂದೇವೆಂಬುದು ನಿರ್ವಾಣ
ಒದರುತಲಿಹುದು ವೇದಪುರಾಣ ೨
ಪುರಾಣ ಪುಣ್ಯದ ಹಾದಿಯು ನಿಜ
ಸುರಮುನಿಗಳಿಗಿದು ಹೊಳೆವದು ಸಹಜ ೩
ಸಹಜಾನಂದದ ಸುಖಸಾಗರ
ಬಾಹ್ಯಾಂತ್ರ ಸದೋತಿತ ಸಹಕಾರ ೪
ಸಹಕಾರವು ಚಿನ್ಮಯ ಚಿದ್ರೂಪ
ಸೋಹ್ಯದೋರುವ ಶ್ರೀ ಗುರುಸ್ವರೂಪ ೫
ಸ್ವರೂಪವೆ ಸದ್ಗೈಸುವ ಹಾದಿ
ಪರಮ ವೈಷ್ಣವರ ಮೂಲಾಗ್ರದ ಆದಿ ೬
ಅಧಿವೆಂಬುದು ನಿಜನಿರ್ಧಾರ
ಸಾಧಿಸುದವರಿಗೆ ಸಾಕ್ಷಾತಾರ ೭
ಸಾಕ್ಷಾತ್ಕಾರವೆ ಮೋಕ್ಷದಮನೆಯು
ಅಕ್ಷಯ ಪದ ಅದ್ವೈತದ ಖಣಿಯ ೮
ಅದ್ವೈತವೆ ಆಧ್ಮಾತ್ಮ ಸುವಿದ್ಯ
ಸಿದ್ದಸಾಧಕರಿಗೆ ಆಗುವ ಸಾಧ್ಯ ೯
ಸಾಧ್ಯವೆಂಬುದು ನಿಜಸಿದ್ಧಾಂತ
ಭೇದಿಸಿದವರಿಗೆ ಇದು ಸನ್ಮತ ೧೦
ಸನ್ಮತವೆ ಮತ ಸರ್ವರಿಗೆಲ್ಲ
ಉನ್ಮನಲೀಹ ಮಹಾಯೋಗಿಯು ಬಲ್ಲ ೧೧
ಬಲ್ಲೆವೆಂಬುದು ಬಲು ಅಗಾಧ
ಸೊಲ್ಲಿಗೆ ಸಿಲುಕದು ಗುರುನಿಜಭೋದ ೧೨
ಬೋಧವೆ ಸದ್ಗುರುವಿನ ದಯಕರುಣ
ಸದ್ಗತಿಸುಖ ಸಾಧನದ ಸ್ಫುರಣ ೧೩
ಸ್ಫುರಣವೆ ಬ್ರಹ್ಮಾನಂದದ ಹರುಷ
ತರಣೋಪಾಯದ ಮಹಾ ಉಪದೇಶ ೧೪
ಉಪದೇಶವೆ ನಿಜ ಉಪನಿಷದ್ವಾಕ್ಯ
ಒಪ್ಪಿಡುವದು ಭೂಸ್ವರ್ಗತ್ರೈಲೋಕ್ಯ ೧೫
ತ್ರೈಲೋಕ್ಯಕೆ ಇದು ನಿಜನಿಧಾನ
ಭಯವಿಲ್ಲದ ಮಹಾಸುಖಸಾಧನ ೧೬
ಸಾಧನದಿಂದ ಸದ್ಗತಿ ಸಂಪೂರ್ಣ
ಸಾಧು ಸಜ್ಜನರಿಗೆ ಸಕಲಾಭರಣ ೧೭
ಸಕಲಾಭರಣ ಸದ್ಗುರು ನಿಜ ಅಭಯವು
ಶುಕಾದಿ ಮುನಿಗು ಕೂಡಿದ ಪ್ರಭೆಯು ೧೮
ಪ್ರಭೆಗಾಣಲು ತೋರದು ನೆಲೆನಿಭವು
ನಿಭವೆ ಮಹಾಮಂಗಳಕರ ಶುಭವು ೧೯
ಶುಭದೋರುದು ಸದ್ಗುರು ಕೃಪೆಯಿಂದ
ಭ್ರಮೆಹಾರಿತು ಮಾಯೆ ಇದರಿಂದ ೨೦
ಇದರಿಂದೆ ಇದರಿಟ್ಟಿತು ಪುಣ್ಯ
ಒದಗಿ ಕೈಗೂಡಿತು ಬಂತು ತಾರ್ಕಣ್ಯ ೨೧
ತಾರ್ಕಣ್ಯವು ಬಂತೆನ್ನೊಳು ಪೂರ್ಣ
ಸರ್ಕನೆ ದೊರೆಯಿತು ಸದ್ಗುರುಖೂನ ೨೨
ಖೂನವೆ ಎನ್ನೊಳಗಾಯಿತು ಧ್ಯಾನ
ಘನಸುಖದೋರುವ ಅನುಸಂಧಾನ ೨೩
ಅನುಸಂಧಾನವೆ ಅನುಭವಸಿದ್ದ
ಅನುಕೂಲಾದ ನಮ್ಮಯ್ಯ ಪ್ರಸಿದ್ಧ ೨೪
ಪ್ರಸಿದ್ಧವೆ ಪ್ರತ್ಯಕ್ಷ ಪ್ರಮಾಣ
ಭಾಸುತಿಹುದು ಶ್ರೀಗುರು ಶ್ರೀಚರಣ ೨೫
ಶ್ರೀಚರಣಕೆ ಎರಗಿಹ ಮಹಿಪತಿಯು
ಸೂಚನೆ ಮಾತ್ರ ಕೊಂಡಾಡಿದ ಸ್ತುತಿಯು ೨೬

೨೮೬
ಶುದ್ಧಿ ತಿಳಿಯೋ ನಿನ್ನ ಬುದ್ಧಿ ದೈವತ್ವವನ್ನ ಧ್ರುವ
ಹೊರಗೆ ನೋಡಬ್ಯಾಡ ತಿರುಗಿ ನೋಡೊ ಮೂಢ
ಸೆರಗು ಬಲುಗೂಢ ಬೆರಯೊ ನಿಜಗಾಢ ೧
ನಡೆ ಹೆಜ್ಜಿಮೆಟ್ಟಿ ಕೇಡಿಗ್ಯಾಗಿ ಕೆಟ್ಟ
ನೋಡು ಮನಮುಟ್ಟಿ ಕೂಡು ನಿಜ ಘಟ್ಟಿ ೨
ಬುದ್ಧಮುಕ್ತವೇನು ದ್ವಂದ್ವ ತಿಳಿಯೋ ನೀನು
ಹೊಂದಿಹೊಳೆವನು ತಂದೆ ಸದ್ಗುರು ತಾನು ೩
ಬುದ್ಧಿ ತಿಳಿಯದ್ಹೋಗಿ ಬಿದ್ಯೊ ಭವಕಾಗಿ
ಶುದ್ಧಿ ಹೇಳಲಾಗಿ ಸದ್ಗುರು ನಿನಗಾಗಿ ೪
ತಿಳಿದು ನಿಜಗತಿ ನೆಲೆಯಾಗೊ ಮಹಿಪತಿ
ಹೊಳೆವ ವಸ್ತುನೀತಿ ಬಲಿಯೊ ನಿಜಸ್ಥಿತಿ ೪

೨೮೭
ಶೋಧಿಸಿ ನೋಡಿರೋ ಸದಾ
ಬೋಧದ ನಿಜಬೋಧ ಧ್ರುವ
ಸಾಧಿಸಿ ನೋಡಿ ಸದ್ಗುರು ಕೃಪೆಯಿಂದ
ಸಾಧನಕೆದುರಿಡುವುದು ಆನಂದ||
ಭೇದಿಸಿ ನೋಡುವದಿದೇ ತನ್ನಿಂದ
ಆದಿ ಅನಾದಿದೇ ಸಹಜಾನಂದ ೧
ತಂದುವಿಡಿದರಂತತ್ತೆ ನೋಡಿ
ಎಂತೆಂತೀಹ್ಯ ನಿಜದಂತೆ ಗೂಡಿ
ಅಂತರಾತ್ಮದಲೆ ಅನುಭವ ಬೆರೆದಾಡಿ
ಸಂತತ ಸದಮಲ ಸುಖಸೂರ್ಯಾಡಿ ೨
ವಿಹಿತಕೆ ವಿಹಿತಾಗುವ ಸುಪಥ
ದ್ವೈತಾದ್ವೈತಕಿದೆ ರಹಿತ
ಮಹಾಮಹಿಮರ ಆನಂದಭರಿತ
ಮಹಿಪತಿ ಮನೋನ್ಮನದ ಸುವಸ್ತ ೩

೩೩೯
ಶೋಭನವೆನ್ನಿರೋ ಶೋಭನ ಬನ್ನಿರೆ
ಶೋಭನ ಬನ್ನಿ ಸವ್ಯದಿಂದ ಧ್ರುವ
ಶೋಭಾನವೆಂಬೋದು ಸೋಹಂಭಾವಗುಣ
ಅಹಂಭಾವಿಗಳು ಅರಿಯವು
ಅಹಂಭಾವಿಗಳು ಅರಿಯುವು ಅನಂಗನ
ಅಹಂಭ್ರಮೆಯು ವಿಪರೀತ ೧
ಶೋಭನವೆನ್ನಿರೇ ಸಿದ್ಧಾಂತನುಭವಿಗಳು
ಕಾಮಿ ಕಾಮಣ್ಣನ ಮದುವಿಗೆ
ಕಾಮಿ ಕಾಮಣ್ಣನ ಮದುವೀಗ ಸಕಲರು
ಪ್ರಾಣಿ ಮಾತ್ರಗಳೆಲ್ಲ ಬರಬೇಕು ೨
ಶೋಭನವೆನ್ನಿರೇ ಮದೂಣಿಗಾನಂಗಗೆ
ಕಾಮಿತದಳಗಿತ್ತಿ ಅರಸಗ
ಕಾಮಿತದಳಗಿತ್ತಿ ಅರಸ ಮೋಹನ್ನಗೆ
ನೆರೆಯಿತು ಲೋಕ ಧರೆಯೊಳು ೩
ಶೋಭನವೆನ್ನಿರೇ ಕಾಮಿ ಕಾಮಣ್ಣಗೆ
ಕಾಯದೊಳೀಹ್ಯ ಕರುಣಿಗೆ
ಕಾಯದೊಳಿದ್ದು ಮೆರೆವ ಅನಂಗನು
ಚರ್ಮದಬೊಂಬಿ ಗುರುತಾಗಿ ೪
ಶೋಭನವೆನ್ನಿರೇ ಸಜ್ಜನ ಸಾವಿತ್ರೇರು
ಆನಿ ಮೊದಲೆ ಇರುಹು ಕಡಿಗೆಲ್ಲ
ಆನಿಮೊದಲೆ ಇರುಹು ಕಡಿಗೆಲ್ಲ ಮಹಿಪತಿ
ಶೋಭಾನಯೆಂದ ಸಬೂದಿಂದ ೫

೨೮೮
ಶ್ರಯಧೇನು ಬಂತು ಮನಿಗೆ
ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ ಧ್ರುವ
ತನ್ನಿಂದ ತಾನೊಲಿದು ಚೆನ್ನಾಗಿ ತೋರ್ವಿಳಿದು
ಭಿನ್ನವಿಲ್ಲದೆ ನೋಡಿ ಹಂಬಲಿಸುತ
ಉನ್ನತೋನ್ನತ ಮೋಹ ಮೊಳಿಯೊಳಮೃತ ತುಂಬಿ
ಪುಣ್ಯಧಾರಿಂದೊರಗಿ ಭೋರಿಡುತಗಲೆರವುತಲಿ ೧
ಸುರಸ ಸಾರಾಯದನುಭವ ಬೆರಸಲಾಗಿ ತಾಂ
ವರ ಮಹಾಕೃಪೆ ಘನದೊಳವಿನಿಂದ
ಧರೆಯೊಳಾನಂದ ಸುಖ ಸಾರಿಡುತ ಪೂರ್ಣ
ಇರ್ಹುಳಗಲೆನದೆ ಸರ್ವಪತಿ ಯಿಂದ್ಹರುಷಗರೆವಾ ೨
ಬೆಳಗಿ ತನ್ನರ ಬೆಳೆಸಲಾಗಿ ಸದ್ವಸ್ತು ತಾಂ
ತಿಳಿದು ಶ್ರಯಧೇನಾಗಿ ಬಂತು ಬಳಿಗೆ
ಕಳವಳಿಸಿ ಕರುಣ ಕಟಾಕ್ಷದಿಂದಲಿ ನೋಡಿ
ಎಳೆಗರುವ ಮಹಿಪತಿಗಮೃತನುಣಿಸಿಕೊಳಲಾಗಿ ೩

೪೮೫
ಶ್ರೀ ಗುರು ಆತ್ಮರಾಮ ಸುರಮುನಿ ಸೇವಿತನಾಮ
ಸಜ್ಜನ ಹೃದಯ ವಿಶ್ರಾಮ ಶ್ರೀಹರಿ ಸರ್ವೋತ್ತಮ ೧
ದೀನೋದ್ದಾರಣ ರಾಮ ಅನಾಥ ಬಂಧು ನಿಸ್ಸೀಮ
ಅನಂತ ಗುಣಮಹಿಮ ಶ್ರೀನಾಥ ಕಲ್ಪದ್ರುಮ ೨
ಗುರುವರ ಪರಂಧಾಮ ಪತಿತಪಾವನ ನಾಮ
ಮಹಿಪತಿ ತಾರಕರಾಮ ಸದ್ಗತಿಸುಖ ವಿಶ್ರಾಮ ೩

೪೮೬
ಶ್ರೀ ಗುರುಕರುಣವು ಸೋಜಿಗವು ಕೌತುಕವು ಧ್ರುವ|
ಗುರುಹಸ್ತ ಪರುಷಸದೃಶ ನಿದರುಶದೋರುತಿಹ್ಯ
ಹರುಷ ಅಗಣಿತ ತೇಜೋಮಯ ಪ್ರಕಾಶ ಇದು
ಅನಿಮಿಷ ನೇತ್ರಲಿ ನೋಡುವದು ನೋಡುವದು
ಘನ ಮಹಿಮೆಯೊಳು ಬೆರದಾಡುವದು ಬೆರದಾಡುವದು
ತನ್ನೊಳು ತಾ ನಲಿದಾಡುವದು ನಲಿದಾಡುವದು
ಅನುಭವ ಸುಖ ಸೂರ್ಯಾಡಿ ಸದ್ಗತಿ ಮುಕ್ತಿಯನೆ ಪಡೆವದು
ಸದ್ಗುರು ಮಹಿಮೆಯ ನೋಡಿರಯ್ಯ ನೋಡಿರಯ್ಯ ಶ್ರೀಗುರುದಾಸರು ೧
ಗುರುವುಪದೇಶ ಜ್ಞಾನಪ್ರಕಾಶ ಅತಿಸಂತೋಷ
ಛೇದಿಸುವುದು ಭವಪಾಶ ಇದು ನಿದ್ರಸ್ಯ
ಕರ್ನಲಿ ಕೇಳ್ವದು ನಿದ್ರಸ್ಯ ಕರ್ನಲಿ ಕೇಳ್ವದು
ಲಯ ಲೀಲೆಯೊಳು ಆಲಿಸುವದು ಆಲಿಸುವದು
ಪರಿಪರಿ ಶ್ರುತಿಗ್ಹೇಳೆನಿಸುವದು ಹೇಳೆನಿಸುವದು
ಪತಿತಜೀವನ ಪಾವನಗೈಸುವದು ಸದ್ಗುರು
ಮಹಿಮೆಯ ತಿಳಿಯದು ತಿಳಿಯದೀ ಶ್ರೀಗುರು ದಾಸರು ೨
ಗುರು ನಿಜಬೋಧ ಬಲು ಅಗಾಧ ಪರಮ ಆಹ್ಲಾದ
ತಿಳಿದವ ಜನ್ಮಕ ವಿರಹಿತವಾದ ಇದು
ಸದ್ಭವದಲಿ ಸಾಧಿಸುವದು ಸಾಧಿಸುವದು
ಅತಿಸೂಕ್ಷ್ಮಗತಿ ಭೇದಿಸುವದು ಭೇದಿಸುವದು
ಗುರುಪಾದವೆಗತಿ ನಿಶ್ಚೈಸುವದು ನಿಶ್ಚೈಸುವದು
ಸಮ್ಯಕಜ್ಞಾನವು ಸಾಧಿಸಿ ಆತ್ಮದಿ ಜೀವನ್ಮುಕ್ತನಾಗುವದು
ಸದ್ಗುರು ಪಾದವು ಸಾಧಿಸಿ ಸಾಧಿಸಿ ಶ್ರೀಗುರುದಾಸರು ೩
ಗುರುಕೃಪೆಜ್ಞಾನನ ಅಳಿವುದಜ್ಞಾನ ತಿಳಿವದು ಯಾತನ
ಕಳೆವದು ಜನ್ಮ ಜರಾಮರಣ ಇದು
ಪೂರ್ವ ಕಲ್ಪನೆಯು ಕಲ್ಪನೆಯು
ಆತ್ಮಜ್ಞಾನದ ವರ್ತನೆಯು ವರ್ತನೆಯು
ಸಾಯಸವಳಿದು ಯತ್ನವು ಪ್ರಯತ್ನವು
ಶ್ರೀಗುರು ಭಕ್ತಿಯು ಮಾಡಿರಯ್ಯ
ಮಾಡಿರಯ್ಯ ಸದ್ಗುರುದಾಸರು ೪
ಗುರುಜ್ಞಾನ ದೀಕ್ಷಾ ಕರುಣಾ ಕಟಾಕ್ಷ ಸದ್ಗತಿಮೋಕ್ಷ
ತೋರುತಿಹ್ಯ ಗುರುತಾನೆ ಪ್ರತ್ಯಕ್ಷ ಇದು
ಭಾಸ್ಕರ ಗುರು ಕೃಪಾದೃಷ್ಟಿಯು ಅಮೃತದ ದೃಷ್ಟಿಯು
ಜೀವನ ಸಂತುಷ್ಟಿಯು ಮುರಿಯಿತು
ಮಹಿಪತಿ ಹುಟ್ಟುವ ಹೊಂದುವ ಬಟ್ಟೆಯು
ತ್ರಾಹಿ ತ್ರಾಹಿ ಗುರುನಾಥ ೫

೧೩೫
ಶ್ರೀ ಗುರುರಾಯ ನಿಮ್ಮ ಕರುಣ ಭಯಕೃದ್ಭಯ ನಾಶನ ಧ್ರುವ
ಕಂದ ಪ್ರಹ್ಲಾದಗಾಗಿ ಸಂದು ವಿಗ್ರಹದೊಳು
ಬಂದು ರಕ್ಷಿಸಿದೆ ಪ್ರಾಣ ಚೆಂದವಾಗಿ ನೀ ೧
ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ
ಉಪಾಯದಲಿ ಕಾಯಿದೆ ಅಪಾರ ಮಹಿಮೆ ೨
ಕರಿಯ ಮೊರೆಯ ಕೇಳಿ ಕರಿಯ ಬಿಡಿಸಿದೆಂದು
ಮೊರೆಯ ಹೊಕ್ಕೆ ನಾ ನಿಮಗೆ ಹರಿ ಹರಿಯೆಂದು ೩
ಸ್ಮರಿಸಿದಾಕ್ಷಣ ಬಂದು ಕರುಣದಿಂದ ನೆರೆದೆ
ಪರಿ ಪರಿಯಿಂದ ಹೊರೆದೆ ವರಮುನಿಗಳ ೪
ಶರಣು ಹೊಕ್ಕಿಹೆ ನಿಮ್ಮ ತರಳ ಮಹಿಪತಿ ಪ್ರಾಣ
ಹೊರೆದು ರಕ್ಷಿಸೊ ಎನ್ನ ಪರಮಪಾವನ ೫

೧೩೪
ಶ್ರೀ ರಾಮ ನಾಮಾ ಧ್ರುವ
ಶರಣಾಗತರಕ್ಷಕನೇಮ ಸುರ ಮುನಿಜನಪೂರಿತಕಾಮ
ಹರ ಹೃದಯಕಾಗಿಹುದು ವಿಶ್ರಾಮ ಶ್ರೀ ರಾಮನಾಮ ೧
ತರಣೋಪಾಯಕತಿ ಸುಗಮ ವರ್ತಿಸುತೀಹದಾಗಮ ನಿಗಮ
ಪುರತ್ರಯ ಪಾವನ ಮಾಡುತಿಹುದು ಪರಮ ೨
ಕರುಣಾರ್ಣವ ಕಲ್ಪದ್ರುಮ ವರಪ್ರತಾಪದಿ ನಿಸ್ಸೀಮ
ತರಳ ಮಹಿಪತಿ ಪಾವನ ಮಾಡಿತು ಜನ್ಮ ೩

೧೩೮
ಶ್ರೀ ಹರಿ ಸೇವೆಯ ಮಾಡುವ ಬನ್ನಿ
ಮಹಾ ಮಹಿಮೆಯ ಕೊಂಡಾಡು ಬನ್ನಿ
ಸಹಕಾರದ ಸುಖ ನೋಡುವ ಬನ್ನಿ
ಪರದೊಳು ನಲಿದಾಡುವ ಬನ್ನಿ ೧
ನೋಡುವ ಬನ್ನಿ ಸದ್ಗುರು ಪಾದ
ಬೇಡುವ ಬನ್ನಿ ನಿಜ ಹಿತವಾದ
ಕೂಡುವ ಬನ್ನಿ ನಿಜಬೋಧ
ಮಾಡುವ ನಿಜ ಭಕ್ತಿಯು ನವವಿಧ ೨
ಜಯ ಜಯಕಾರ ಮಾಡುವ ಬನ್ನಿ
ಕೈಮುಗಿದು ವರ ಬೇಡುವ ಬನ್ನಿ
ಮಹಿಪತಿಸ್ವಾಮಿಯ ನೋಡುವ ಬನ್ನಿ
ದಯಾನಿಧಿಯ ಕೊಂಡಾಡುವ ಬನ್ನಿ ೩

೬೮೪
ಶ್ರೀಗುರು ಶ್ರೀಪಾದದ ಸಿರಿಸುಖವಿದು ಸಾರಿ ಸವಿಲೀಲೆ ದೋರುತಿದೆ
ಸುಗಮ ಸುಪಥ ಸದ್ಗುರು ದಯಕರುಣವು ಬಗೆಬಗೆನುಭವ ಬೀರುತಿದೆ ಧ್ರುವ
ಎಳೆಬಿಸಿಲಿನ ಕಳೆ ತಳತಂದಿಹ ಘನ ತುಂಬಿ ತುಳುಕ್ಯಾಡುತಿದೆ
ಸುಳಿಸುಳಿದಾಡುವ ಹೊಳೆಯುತ ಕಳೆಮೊಳೆ ಝಳಝಳನೆ ಥಳಗುಡುತಿದೆ
ಭಳಭಳ ಭಾಸುವ ಬೆಳಗಿನ ಬಳಗಿದು ಒಳಹೊರಗೆ ಬಲು ಸೂಸುತಿದೆ
ಹೇಳಲಿನ್ನೇನದ ತಿಳಿಯಲಗಾಧವು ತನುಮನಕ್ಹರುಷಗಡುತಿದೆ ೧
ಸುರಿಸುರಿದಾಡುವ ಸಾರಸವಿಯ ಸುಧಾರಸ ಭೋರ್ಗರೆಯುತಿದೆ
ಇರುಳ್ಹಗಲೆನದ್ಯಾವಾಗನುದಿನ ಸದ್ಘನಸುರಿಮಳೆ ಧಾರಿಡುತಿದೆ
ಪಾರಿಲ್ಲದ ಪರಾತ್ಪರ ದುರ್ಗಮಿದು ಪರಮಪಾವನ ಗೈಸುತಿದೆ
ಪರಿಪರಿ ಸವಿದುಂಬುವ ಸುಜನರ ಸುಮುಖಕೆ ತಾನಿದಿರಿಡುತಿದೆ ೨
ಪ್ರಭಕೆ ಪ್ರಭಾಕರವಾಗಿಹ ಭಾಸ್ಕರಕೋಟಿ ಪ್ರಕಾಶಿಸುತಿದೆ
ಶುಭಕರವಾದ ಸದಾನು ಮಂಗಳ ನೆಲೆ ನಿಭವಾಗಿ ತೋರುತಿದೆ
ಅಭಯಕರವ ಪಡೆದವಗೆನ್ನೊಡೆಯನ ಸುಖ ಸುಲಭಗುಡುತಿದೆ
ಸಬಾಹ್ಯಾಂತ್ರದೆ ಮಹಿಪತಿ ಗುರುದಯ ಸುಭಾಸವಾಗಿ ಭಾಸುತಿದೆ ಗುರುಮಹಿಮೆ ೩

೪೯೧
ಶ್ರೀಗುರು ಸರ್ವೇಶ್ವರ ಸುಗಮ ಪಥ ಸಹಕಾರ
ನಿಗಮಗೋಚರ ನಿರ್ಧಾರ ಜಗದ್ಗುರು ಜಗದಾಧಾರ ೧
ಮುನಿಜನರಿಗೆ ಪರಮಾರ್ಥ ನೀನೆ ಸಕಲ ಹಿತಾರ್ಥ
ಘನ ದಯದಲಿ ಸಮರ್ಥ ಅನುಭವಕೆ ಸುತತ್ವಾರ್ಥ ೨
ಸಾಹ್ಯಸಾನುಕೂಲದಾಗರ ಮಹಿಮೆ ನಿನ್ನದು ಅಪಾರ
ಸ್ವಸುಖದ ಸಾಗರ ಮಹಿಪತಿಯ ಮನೋಹರ ೩

೪೯೩
ಶ್ರೀಗುರು ಸೇವೆಯ ಮಾಡಿ ಕರದಲಿ ಪರಬ್ರಹ್ಮದ
ನೆಲೆಯು ನೋಡಿ ಧ್ರುವ||
ಕರ್ಮಕ ಮಂದದಿ ಸಿಲುಕಲಿ ಬ್ಯಾಡಿ
ವರ್ಮನರುವ್ಹ ಗುರುಯೋಗ ಧರ್ಮವ ಮಾಡಿ
ನಿರ್ಮನದಲಿ ನಿಜಘನ ಬೆರೆದಾಡಿ
ನಿರ್ಮಳ ನಿಶ್ಚಳ ನಿರ್ಗುಣ ಆತ್ಮನ ಕೂಡಿ ೧
ಅನುದಿನ ಅನುಭವಾಮೃತವನು ಸೂರ್ಯಾಡಿ
ತನುಮನಧನ ಶ್ರೀಗುರುವಿನರ್ಪಣೆ ಮಾಡಿ
ಅನುಭವದಲಿ ಆತ್ಮದ ನೆಲೆನಿಭ ನೋಡಿ
ಘನಬ್ರಹ್ಮಾನಂದದ ಸುಖದಲಿ ಲೋಲ್ಯಾಡಿ೨
ಮಹಾಮಹಿಮನ ಸುಸೇವೆಯ ಮಾಡಿ
ಬಾಹ್ಯಾಂತ್ರವೆ ಭಾಸ್ಕರಮೂರ್ತಿ ಕೊಂಡಾಡಿ
ಮಹಿಪತಿ ಒಡಿಯನ ಶ್ರೀಪಾದವ ನೋಡಿ
ಇಹಪರ ಸಾಯೋಜ್ಯ ಸದ್ಗತಿ ಮುಕ್ತಿಯ ಕೂಡಿ ೩

*
ಶ್ರೀಗುರು ಸೇವೆಯ ಮಾಡಿ
ಸಾಯೋಜ್ಯ ಸದ್ಗತಿ ಕೂಡಿ ಧ್ರುವ|
ಮೂರು ರತ್ನದ ಪ್ರಭೆ ನೋಡಿ
ಮೂರು ವಟ್ಟೆಯಾ ಮುರಿಗೂಡಿ
ಆರು ಸ್ಥಳವ ಮುಟ್ಟಿನೋಡಿ
ಏರಿಸು ಪಥವನು ಕೂಡಿ ೧
ತುಟ್ಟತುದಿಯಲೇರಿ ನೋಡಿ
ಮುಟ್ಟಿ ಚಿದ್ಘನ ಬೆರೆದಾಡಿ
ನಟ್ಟನೆವೆ ಒಡಗೂಡಿ
ಗುಟ್ಟುಗುಹ್ಯ ನಿಜವು ಹೇಳಬ್ಯಾಡಿ ೨
ಮಹಿಪತಿ ನಿನ್ನೊಳು ನೋಡಿ
ಐವರೊಂದಾಗಿನ್ನು ಕೂಡಿ
ಸೇವೆ ಸದ್ಗುರು ಪಾದ ಮಾಡಿ
ಸಾಯೋಜ್ಯ ಪಥ ಬೆರೆದಾಡಿ ೩

೪೮೭
ಶ್ರೀಗುರುಕೃಪೆಯಿಂದ ದಯದಿಂದ
ನೀಗಿದೆ ನಾ ಭವಬಂಧ ೧
ಘನದಯದೊಲವಿಂದ ಒಲವಿಂದ
ತಾನೆ ತಾನಾದ ಮುಕುಂದ ೨
ಸ್ವಹಿತ ಸುಖದಿಂದ ಸುಪಥದಿಂದ
ಮಹಿಪತಿಗಾಯಿತಾನಂದ ೩

೪೮೮
ಶ್ರೀಗುರುರಾಯ ನಿಮ್ಮ ಕರುಣಲೆನ್ನ ಹೊರೆವುದು ಧ್ರುವ|
ಒಂದು ಅರಸಿ ದ್ವಂದ್ವಹರಿಸಿ ಮೂರು ಹುರಿಸಿ ಮೀರಿ ನಿಲಿಸಿ
ನಾಲ್ಕು ಮರೆಸಿ ಐದು ಜರೆಸಿ ಆರು ತೋರಿಸಿ ಎನ್ನಹೊರೆವುದು ೧

ಏಳು ಅರಸಿ ಎಂಟು ಜರಿಸಿ ಒಂಬತ್ತು ಬಲಿಸಿ ಹತ್ತು ಹರಿಸಿ
ಅರಿಸಿ ಬೆರಿಸಿ ಇರಿಸಿ ನಿಮ್ಮ ಕರುಣಕೃಪೆಯಲೆನ್ನ ಹೊರೆವುದು ೨
ಐದು ಅರಿಸಿ ಐದು ಬೆರಿಸಿ ಐದು ನಿಮ್ಮ ಚರಣಲಿರಿಸಿ
ಸುರಿಸಿ ಕರುಣ ಮಳೆಯಗರಿಸಿ ಮಹಿಪತಿ ಜನ್ಮಹರಿಸಿ ಹೊರೆವುದು ೩

೪೮೯
ಶ್ರೀಗುರುವೆ ತಾಯಿ ತಂದೆನಗ ನೀನು ಧ್ರುವ|
ತಾಯಿ ತಂದೆನಗ ನೀ ಬಾಹ್ಯಾಂತ್ರ ಪರಿಪೂರ್ಣ
ಸಾಯೋಜ್ಯ ಸದ್ಗುರುನಾಥ ನೀನೆ
ಜೀವ ಸಂಜೀವ ಸಾಕ್ಷಾತ ನೀನೆ
ಕಾವ ಕರುಣಾಳು ವರದಾತ ನೀನೆ
ಇಹಪರದೊಳು ಸಕಳಾರ್ಥ ನೀನೆ ೧
ಕರುಣ ಆನಂದದಲಿ ಹೊರೆದು ಸಲಹುವ ಮೂರ್ತಿ
ಪರಮ ಜೀವದ ಅತಿ ಮೈತ್ರ ನೀನೆ
ಸರ್ವ ಜ್ಞಾನಿಗಳ ಕುಲಗೋತ್ರ ನೀನೆ
ದ್ರವ್ಯ ಧನವನು ಸಂಚಿತಾರ್ಥ ನೀನೆ
ಪೂರ್ವಪ್ರಾಚೀನ ಪುಣ್ಯಸೂತ್ರ ನೀನೆ ೨
ಬಾಲಕನ ಮ್ಯಾಲೆ ದಯಮಾಡಿ ಪಾಲಿಸುತೀಹ್ಯ
ಕುಲಕೋಟಿ ಬಂಧುಬಳಗ ನೀನೆ
ಮೂಲಪುರಷನ ಋಷಿದೈವ ನೀನೆ
ಹಲವು ಪರಿ ಬಲವು ಇಳಯೊಳಗೆ ನೀನೆ
ಸಲಹುತಿಹ ಮಹಿಪತಿಸ್ವಾಮಿ ನೀನೆ ೩

೪೯೦
ಶ್ರೀಗುರುವೆ ಶ್ರೀದೇವದತ್ತ ಸದ್ಗುರವೆ ಶ್ರೀದೇವದತ್ತ
ಮಗ್ದುರುವೆ ಶ್ರೀದೇವದತ್ತ ಸದ್ಗತಿಸುಖ ಶ್ರೀದೇವದತ್ತ
ಅನಾಥಬಂದು ದೇವದತ್ತ ದೀನಬಂಧು ದೇವದತ್ತ
ಮುನಿಜನಪಾಲಕ ದೇವದತ್ತ ಘನಮಹಿಮೆಯು ಶ್ರೀದೇವದತ್ತ
ಬಾಹ್ಯಾಂತ್ರವೆ ಶ್ರೀದೇವದತ್ತ ಇಹಪರವೆ ಶ್ರೀದೇವದತ್ತ
ಮಹಿಪತಿಗುರುವೆ ದೇವದತ್ತ ಸಾಕಾರವೆ ಶ್ರೀದೇವದತ್ತ ೧

೪೯೨
ಶ್ರೀಗುರುಸಾಹ್ಯ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು
ಹಿಂಡದೈವದೊಡಿಯ ಪ್ರಚಂಡನ ಕಂಡೆ ಧ್ರುವ|
ದೀನಾನಾಥನ ಕಂಡೆ ದಿನೋದ್ಧಾರನ ಕಂಡೆ
ಅನಾಥಜನರ ಪ್ರತಿಪಾಲನ ಕಂಡೆ ೧
ಶರಣರಕ್ಷನ ಕಂಡೆ ವಾರಿಜಾಕ್ಷನ ಕಂಡೆ
ವರಮುನಿಜನರ ಪ್ರತ್ಯಕ್ಷನ ಕಂಡೆ ೨
ಭಕ್ತಪ್ರಿಯರ ಕಂಡೆ ಮುಕ್ತಿ ಈವನ ಕಂಡೆ
ಪತಿತಪಾವನ ಗುರುಸಂಜೀವನ ಕಂಡೆ ೩
ದೇವದೇವನ ಕಂಡೆ ಕಾವ ಕರುಣನ ಕಂಡೆ
ಮಹಿಪತಿ ತಾರಕಗುರುಭವನಾಶನ ಕಂಡೆ ೪

೧೩೨
ಶ್ರೀಧರ ನೀ ಎನ್ನಾಧಾರ
ಬುಧಜನ ಸಹಕಾರ ಮಾಮನೋಹರ ೧
ಮಾಧವ ನೀ ಎನ್ನ ಜೀವ
ಯದುಕುಲೋದ್ಭವ ನೀನೆವೆ ಎನ್ನ ದೈವ ೨
ಕೇಶವ ನೀ ಎನಗೊಲು
ದಾಸ ಮಹಿಪತಿ ಕಾವ ಶ್ರೀ ವಾಸುದೇವ ೩

೧೩೬
ಶ್ರೀರಂಗನಾಟದ ಪರಿಯ ತೋರುದು ನೋಡಚ್ಚರಿಯ
ದೇವಕಿಕಂದ ದೇವಮುಕುಂದ ಮಾವಕಂಸನ ಕೊಂದ ಧ್ರುವ
ಹಾವಿನ ಫಣಿ ಮೆಟ್ಯಾಡಿದ ಚಂದ ಕಾವನಯ್ಯ ಗೋವಿಂದ ೧
ಪೊಸಪರಿ ಆದುದು ಕುಲಶಿಖಾಮಣಿಯ
ಆಸುಹೀರಿದ ಪೂತಣಿಯ
ಶಿಸುವಾಗಿ ನಂದಯಸೋದೆಯ ಮನಿಯ
ಮೊಸರು ಹಾಲು ಬೆಣ್ಣಿಗೆ ದಣಿಯ ೨
ವಸುದೇವಾತ್ಮಜ ಪಶುಪತಿಪ್ರಿಯ
ಕುಸುಮನಾಭನೆ ಶೇಷಶಯ್ಯ
ಭಾಸ್ಕರಕೋಟಿ ಪ್ರಕಾಶ ನಮ್ಮಯ್ಯ
ಲೇಸಾಗ್ಹೊರೆವ ಮಹಿಪತಿಯ ೩

೧೩೩
ಶ್ರೀರಾಮ ರಾಮ ಧ್ರುವ
ಜಯ ಜಯಾತ್ಮಾರಾಮ ದಯಗುಣದಿ ನಿಸ್ಸೀಮ
ಮಾಯಾರಹಿತನುಪಮ ಕಾಯ ಕೃಪಾನಿಧಿ ನಮ್ಮ ೧
ಮುನಿಜನರ ಪ್ರತಿಪಾಲ ದೀನಬಂಧು ದೀನ ದಯಾಳ
ಘನಸುಖದ ಕಲ್ಲೋಳ ನೀನಹುದೈ ಅಚಲ ೨
ಕರುಣಾಬ್ಧಿ ನೀನೆ ರಾಮ ಹರಹೃದಯ ವಿಶ್ರಾಮ
ತರಳ ಮಹಿಪತಿ ನಿಮ್ಮ ಸ್ಮರಿಸುವ ಪಾದಪದ್ಮ ೩

೧೩೭
ಶ್ರೀರಾಮರಾಮನೇ ಸಾರ್ವಭೌಮ
ಪರಮಪುರುಷೋತ್ತಮಾನಂತ ಮಹಿಮ ಧ್ರುವ
ಹರ ಹೃದಯ ವಿಶ್ರಾಮ ಸುರಜನರಿಗೆ ಪ್ರೇಮ
ಕರುಣ ಸಾಗರ ಸಕಲಾತ್ಮರಾಮ ೧
ಸುರಭಿಕಲ್ಪದ್ರುಮ ಸಾರ ಸ್ವಹಿತ ನಾಮ
ಖರದೂಷಣಾರಿ ಪೂರಿತ ಕಾಮ ೨
ವರದಯದಿ ನಿಸ್ಸೀಮ ಹೊರೆವ ಶರಣರ ನೇಮ
ತರಳ ಮಹಿಪತಿ ಸ್ವಾಮಿ ಘನಮಹಿಮ ೩

೩೧೭
ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ |
ಸಂಗ ವಿಡಿಯಂಗದೊಳಗ |
ಮಂಗಳುತ್ಸಾಹ ದೋರುವರಾ ಪ
ಹರಿಪದ ಪರಾಗ ನುಂಡು |
ಹರುಷವೇರಿ ಭವಶರಧಿಗೆ |
ಹರಿಯ ಭಕುತಿ ಸೇತುಗಟ್ಟಿ |
ತೋರಿಸಿ ಜನರ ತಾರಿಸುವರ ೧
ವೇದ ಶಾಸ್ತ್ರಸಾರವಾದ |
ಬೋಧ ಸುಧೆಯ ವೆರದು ಮರದು |
ಹಾದಿದೋರಿ ಮನಕ ಗತಿಯ |
ಸಾಧನವನು ಬೀರುವರ ೨
ಹ್ಯಾವ ಹೆಮ್ಮೆ ಬಿಡಿಸಿ ಸಮ್ಮತಿ |
ಭಾವದಿಂದ ಮಹಿಪತಿ ಸ್ವಾಮಿಯಾ |
ಸಾವಧಾನದಿಂದಲಿ ಜಗತೀ |
ವಲಯದೊಳರಹಿಸುವರು ೩

೩೧೮
ಸಂತರೆನಬಹುದುದಯ್ಯ ಇಂತಿವರಿಗೆ
ಅಂತರಂಗಲಿ ಹರಿಯ ಏಕಾಂತ ಭಕ್ತರಿಗೆ ಧ್ರುವ
ಸುಖಕ ಮೈಯವ ಮರಿಯಾ ದು:ಖಗಳಿದಿರಿಡೆ ನೋಯಾ
ಚಕಿತನಾಗನು ಕುಮತಿ ವಿಕಳ ನುಡಿಗೆ ಪ್ರಕಟಸ್ತೋತ್ರಕ ಹಿಗ್ಗ
ಸಕಲರೊಳು ಹರಿಯ ವ್ಯಾಪಾರವರಿದು
ನಿರಹಂಕೃತಿಯನ್ನುಳ್ಳರಿಗೆ ೧
ವೇಷಡಂಭವಿರಲು ಕ್ಲೇಶ ಕರ್ಮಗಳಿರಲು
ಈ ಶಿರಿಯ ಸುಖದ ಮನದಾಶೆವಿರಲು
ವಾಸುದೇವನ ಪದ ಧ್ಯಾಸದನುಭವ ದಿಟ
ವೇಶ ಹರಿ ಸಂಸಾರ ಲೇಶದೋರ್ವರಿಗೆ ೨
ಪರಮ ಭಾಗವತೆನಿಸಿ ಪರರ ಮನಗಳಿಗ್ಹೋಗಿ
ಪಿರಿದು ವಿದ್ಯವ ತೋರಿ ಪೊರಿಯ ನೋಡಲಾ
ಪರಧನಕ ಕರ ವಿಕರ ಪರಸತಿಯರಿಗೆ ಕೂರವು
ಪರನಿಂದೆಗೆ ಮೂಕ ಪರವಶಾದರಿಗೆ ೩
ಹರಿಯ ನಾಮವ ನೆನಿದು ಹರಿದು ಕೀರ್ತನೆಯಲ್ಲಿ
ಹರುಷಗುಡಿಗಟ್ಟಿ ತನುಮರದು ನಿಂದು
ಬರುದೆ ಪ್ರೇಮಾಂಜಲಿಗೆ ಭರಿತ ಲೋಚನನಾಗಿ
ತರಿಸಿ ತಾರಿಸುವಂದ್ಯನ ಕರುಣವಂತರಿಗೆ ೪
ಇಂತು ದುರ್ಗಮವಿರಲು ಸಂತರಾವು ನೀವೆಂದು
ಸಿರಿತರವ ಹೋಗಿ ಜನ ಸಿಂತರಿಸುವಾ
ಭ್ರಾಂತವೇಷಕ್ಕೆ ಸಿರಿಕಾಂತ ಮೆಚ್ಚನಲ್ಲಾ
ಶಾಂತಗುಣ ಮಹಿಪತಿ ಸ್ವಂತಗೆಂದಾ ೫

೧೬೪
ಸಂಸಾರ ಚಿಂತೆ ನಮ್ಮ ಸ್ವಾಮಿ ಶ್ರೀ ಹರಿಗುಂಟು
ಸಂಸಾರಿ ಕೃಷ್ಣ ಕರುಣಿಸುವ ಇದರಿಟ್ಟು ಧ್ರುವ
ತುತ್ತಾಯತವ ಮಾಡಿ ಹೊತ್ತು ನಡೆಸುವ ಒಡಿಯ
ಮತ್ತೆ ಚಿಂತಿಸಲ್ಯಾಕೆ ಹತ್ತು ಕಡೆಯ
ಭಕ್ತವತ್ಸಲ ಸ್ವಾಮಿ ಚಿಂತ್ಯಾಕೆನ್ನೊಡಿಯ
ನಿತ್ಯ ನಡೆಸುವ ಗ್ರಾಸ ಭಕ್ತರೊಡಿಯ ೧
ಅನೆ ಮೊದಲಿರುವೆ ಕಡೆ ತಾಂ ನಡೆಸುತಿರಲಿಕ್ಕೆ
ಜನಕೊಡ್ಡಿ ಕೈಯ ನಾ ದಣಿಯಲೇಕೆ
ಅನುದಿನ ಹರಿವಾಕ್ಯ ಅನುಭವಿಸುತಿರಲಿಕ್ಕೆ
ಅನುಮಾನವಿಡಿದು ನಾ ಹೆಣಗಲ್ಯಾಕೆ ೨
ಭಾರ ವಹಿಸಿ ಕೊಂಡಿರಲು ಮಾರಪಿತ ಪರಿಪೂರ್ಣ
ಸಾರಾಂಶ ವಿತ್ತು ವರಕೃಪೆಯ ಜ್ಞಾನ
ಆರ್ಹಂಗವೆನಗ್ಯಾಕೆ ತೋರುತಿದೆ ನಿಧಾನ
ತರಳ ಮಹಿಪತಿ ಹೊರೆವ ಗುರು ಕರುಣ ೩

೧೩೯
ಸಕಲವೆನಗೆ ನೀನೆ ಶ್ರೀಹರಿಯೆ ಧ್ರುವ
ತಂದೆತಾಯಿ ಸ್ವಹಿತಾತ್ಮನು ನೀನೆ
ಬಂಧು ಬಳಗ ಸರ್ವಾತ್ಮನು ನೀನೆ ೧
ದೈವಗುರು ಕುಲಗೋತ್ರನು ನೀನೆ
ಕಾವ ಕರುಣ ಸೂತಾಂತ್ರನು ನೀನೆ ೨
ದ್ರವ್ಯ ಧನವು ಸಕಲಾಶ್ರಯ ನೀನೆ
ದಿವ್ಯಾಲಂಕೃತ ಭೂಷಣ ನೀನೆ ೩
ಭಾಸುತ ಬಾಹ್ಯಾಂತ್ರದೊಳಿಹ ನೀನೆ
ಭಾಸ್ಕರಕೋಟಿ ಸುತೇಜರೂಪನು ನೀನೆ ೪
ಮಹಿಪತಿ ಮನೋಹರ ಮೂರ್ತಿಯ ನೀನೆ
ಸಾಹ್ಯ ಸಕಲ ಸಾರ್ಥಿಯು ನೀನೆ ೫

೧೪೦
ಸಕಲವೆಲ್ಲವು ಹರಿಸೇವೆ ಎನ್ನಿ
ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ
ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ
ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ ೧
ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ
ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ ೨
ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ
ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ ೩
ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ
ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ ೪
ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ
ಬಡುವ ಹರುಷವೆಲ್ಲ ವಸ್ತುದೇ ಎನ್ನಿ ೫
ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ
ಎಡವಿ ಬೀಳುದು ಹರಿನಮವೆನ್ನಿ ೬
ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ
ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ ೭
ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ
ಮಾಡುವ ಮಾಟಗಳೆಲ್ಲ ಹರಿಯದೆನ್ನಿ ೮
ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ
ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ ೯
ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ
ತನುಮನವೆಲ್ಲಾ ಹರಿಸ್ಥಾನವೆ ಎನ್ನಿ ೧೦
ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ
ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ೧೧
ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ
ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ ೧೨
ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ
ನಾನೀನೆಂಬುದೆಲ್ಲ ಹರಿಚೇತನವೆನ್ನಿ ೧೩
ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ
ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ ೧೪
ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ
ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ ೧೫
ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ
ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ ೧೬
ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ
ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ ೧೭
ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ
ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ ೧೮
ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ
ಸಜ್ಜನರೊಡೆಯ ಗಜವರದ ಎನ್ನಿ ೧೯
ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ
ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ ೨೦
ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ
ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ ೨೧
ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ
ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ ೨೨
ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ
ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ ೨೩

೪೯೫
ಸಕಲಾಗಮ ಪೂಜಿತ ಏಕೋ ದೇವನೀತ
ಏಕಾಕ್ಷರ ಬ್ರಹ್ಮೀತ ಹಂಸನಾಥ ೧
ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ
ಪವಿತ್ರ ಪ್ರಣವನೀತ ಹಂಸನಾಥ ೨
ಯತಿ ಮುನಿವಂದಿತ ಪಿತಾಮಹನ ಪಿತ
ಅತಿಶಯಾನಂದನೀತ ಹಂಸನಾಥ ೩
ಸನ್ಮಾತ್ರ ಸದೋದಿತ ಉನ್ಮನ ವಿರಹಿತ
ಚಿನ್ಮಯನಹುದೀತ ಹಂಸನಾಥ ೪
ಮನದಮಂಗಳನೀತ ಅನುದಿನ ಸಾಕ್ಷಾತ
ಘನಗುರು ಶ್ರೀಕಾಂತ ಹಂಸನಾಥ ೫
ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ
ವಿಶ್ವಾತ್ಮನಹುದೀತ ಹಂಸನಾಥ ೬
ಇಡದು ತುಂಬಿಹನೀತ ಮೂಢಮಹಿಪತಿ ದಾತ
ಒಡಿಯನಹುದೀತ ಹಂಸನಾಥ೭

೪೯೬
ಸಕಲಾರ್ಥಕಿದೆ ಸುಖ ಸಾಧಿಸಿನ್ನು ನೋಡಿ
ಭಕುತಿ ಭಾವದಿಂದ ಸದ್ಗುರು ಸೇವೆಯ ಪೂರ್ಣಮಾಡಿ ಧ್ರುವ
ಭಾವವಿಟ್ಟು ನೋಡಿ ಖೂನ ದೇವದೇವೇಶನ
ಕಾವ ಕರುಣನೇ ತೋರುತಿಹ್ಯ ತಾ ನಿಧಾನ ೧
ನೋಟ ನಿಜಮಾಡಿ ನೋಡಿ ನೀಟ ನಿಜ ಧ್ಯಾನ
ಘಾಟ ತಿಳಿದವರಿಗಿದೆ ಗುರುಕೃಪೆಜ್ಞಾನ ೨
ಸವಿದುಣ್ಣಬೇಕು ಇದೇ ಸವಿ ಸವಿಯಿಂದ
ಆವಾಗ ಮಹಿಪತಿಗಿದೆ ನೋಡಿ ಬ್ರಹ್ಮಾನಂದ ೩

೫೫೦
ಸಚ್ಚಿದಾನಂದನ ನೆಚ್ಚಿಕೊಂಡಿರೋ ಮನವೆ ಧ್ರುವ
ಎಚ್ಚತ್ತಿರೋ ನಿನ್ನೊಳು ನಿಶ್ಚಿಂತನಾಗಿ ನೀಬಾಳು
ಅಚ್ಯುತಾನಂತ ಕೃಪಾಳೂ ನಿಶ್ಚಯದಲಿ ಕೇಳು ೧
ಕೊಟ್ಟ ಭಾಷೆಗೆ ತಪ್ಪ ಶಿಷ್ಟ ಜನರ ಪಾಲಿಪ
ದೃಷ್ಟಿಸುವ ನಿಜಸ್ವರೂಪ ಗುಟ್ಟಿನೊಳಾಪ ೨
ಹೊಂದಿ ಬದುಕಿರೋ ಪೂರ್ಣ ತಂದೆ ಸದ್ಗುರುಚರಣ
ಸಂಧಿಸೋ ಮಹಿಪತಿ ಘನವಂದಿಸಿ ಅನುದಿನ ೩

೨೮೯
ಸಜ್ಜನರ ಸಂಗ ಸ್ವಹಿತಕೆ ಸುಖಸನ್ಮತ
ಹೆಜ್ಜೆಜ್ಜಿಗೆ ದಾರಿಡುತದೆ ಅಮೃತ ಧ್ರುವ
ಗಂಗಿಯೊಳು ಮುಳಗಿ ತಾ ಮಿಂದರ್ಹೋಗದು ಪಾಪ
ಹಾಂಗೆಂದಿಗಲ್ಲ ಸಜ್ಜನರ ಪ್ರತಾಪ
ಕಂಗಳಲಿ ಕಂಡರ್ಹೋಗುವುದು ತಾಪಾಪ
ಸಂಗ ಸುಖದಲಿ ಸರ್ವಪುಣ್ಯ ಮೋಪ ೧
ಚಂದ್ರ ಶೀತಳದೊಳು ನಿಂದರ್ಹೋಗುದು ತಾಪ
ಎಂದೆಂದಿಗ್ಹಾಂಗಲ್ಲ ಸಜ್ಜನ ಸಮೀಪ
ಒಂದೆ ಮನದಲಿ ನೆನೆದರ್ಹಿಂಗಿ ಹೋಗುದು ತಾಪ
ವಂದಿಸೀದವಾ ಮೂರು ಲೋಕ ತಾಪಾ ೨
ಕಲ್ಪತರುವಿಗೆ ಕಲ್ಪಿಸಿದರ್ಹೋಗುದು ದೈನ್ಯ
ಒಲಮಿಂದ್ಹಾಗಲ್ಲ ಸದ್ಗುರು ಸುಪುಣ್ಯ
ಕಲ್ಪಿಸದೆ ಕುಡುವದಿದು ನೋಡಿ ಘನ ತಾರ್ಕಣ್ಯ
ಸಲಹುತೀಹ್ಯ ಮಹಿಪತಿಗಿದೆವೆ ಧನ್ಯ ೩

೪೯೭
ಸತತ ಸದಮಲ ಪತಿತಪಾವನ
ಅತೀತಗುಣತ್ರಯಾನಂದನ
ಶ್ರುತಿಗಗೋಚರ ಯತಿಜನಾಶ್ರಯ
ಅತಿಶಯಾನಂದಾತ್ಮನ ಭಜಿಸು ಮನವೆ ಧ್ರುವ||
ಪವಿತ್ರಪ್ರಣವ ಸುವಿದ್ಯದಾಗರ ವ್ಯಕ್ತಗುಣ ಅವಿನಾಶನ
ಘವಿಘವಿಸುವಾನಂದಮಯ ರವಿಕೋಟಿ ತೇಜಪ್ರಕಾಶನ
ಭವರಹಿತ ಗೋವಿಂದ ಗುರುಪಾವನ ಪರುಮಪುರುಷನ
ಭುವನತ್ರಯಲಿಹ್ಯ ಭಾವಭೋಕ್ತ ಸಾವಿರನಾಮ ಸರ್ವೇಶನ ೧
ಮೂಜಗದಿ ರಾಜಿಸುತಿಹ್ಯ ತೇಜೋಮಯ ಘನಸಾಂದ್ರನ
ಅಜಸುರೇಂದ್ರ ಸುಪೂಜಿತನುದಿನ ರಾಜಮಹಾರಾಜೇಂದ್ರನ
ಸುಜನ ಹೃದಯಾನಂದ ನಿಜಸುಜ್ಞಾನಾಮೃತ ಸಮುದ್ರನ
ಭಜಕ ಭಯಹರ ನಿಜ ಘನಾತ್ಮಗಜವರದ ಉಪೇಂದ್ರನ ೨
ಪರಾತ್ಪರ ಪರಿಪೂರ್ಣ ಪರಂಜ್ಯೋತಿ ಘನಸ್ವರೂಪನ
ಪರಂಬ್ರಹ್ಮ ಪರೇಶ ಸುರವರನಾಥ ಗುರುಕುಲದೀಪನ
ನಿರಾಳ ನಿರ್ವಿಶೇಷ ನಿರಾಕಾರ ನಿರ್ವಿಕಲ್ಪನ
ಕರುಣದಿಂದಲಿ ಹೊರೆವ ಮಹಿಪತಿಸ್ವಾಮಿ ಚಿತ್ಸ್ವರೂಪನ ೩

೨೯೩
ಸತ್ಯಾದ ನಡಿ ಹಿಡಿರೋ ಮನಜರು
ಸತ್ಯದಾ ನಡಿಗಿನ್ನು ಮತ್ತೊಂದು ಭಯವಿಲ್ಲ ಧ್ರುವ
ಸತ್ಯದಾನಡಿಗಿನ್ನು ಸತ್ಯ ನುಡಿಯಲು ಬೇಕು
ಸತ್ಯಂ ಸತ್ಯ ಶರಣರೆಲ್ಲಾ ಎತ್ಯಾಡಿಸುವಂತೆ
ಕೈಯಾರಕೊಂಡಿನ್ನು ಬಾಯಾರಬಾಡಿರೊ
ಮೈಯೊಳಗಿಹ ಕಾವನೈಯನ ಮರಿಯಬ್ಯಾಡಿ ೧
ಹುಸಿಯಾಡಿ ನೀವಿನ್ನು ಘಾಸಿಗೆ ಬೀಳಲಿ ಬ್ಯಾಡಿ
ವ್ಯಸನಕಾಗಿ ಬಿದ್ದು ದೆಶೆಗೆಟ್ಟು ಹೋಗಬ್ಯಾಡಿ ೨
ಅಶೆಯಕೊಟ್ಟು ನಿರಾಶಯೆ ಮಾಡಲಿಬ್ಯಾಡಿ
ಮೋಸ ಮುರಕದಿದ ಘಾಸಿ ಮಾಡಲಬ್ಯಾಡಿ ೩
ಘಟ್ಟಿಸಿ ಒಬ್ಬರ ಹೊಟ್ಟೆಹೊರಿಯಬ್ಯಾಡಿ
ಸಿಟ್ಟಿಲಿ ನೆಂಟರು ತುಟ್ಟಿಸಿ ಬಿಡಬ್ಯಾಡಿ೪
ಗುಟ್ಟಿನೊಳಿಹ ಮಾತು ತುಟ್ಟಿಗೆ ತರಬ್ಯಾಡಿ
ಹೊಟ್ಟೆಲೆ ಹಡೆದವರ ಕಟ್ಟಿಗೆ ತರಬ್ಯಾಡಿ ೫
ಲೆತ್ತಪಗಡಿ ಅಡಿ ಹೊತ್ತುಗಳಿಯಬ್ಯಾಡಿ
ತುತ್ತುಕುಡಿಯೊಳಿದ್ದಾ ಪತ್ತಬಡಲಿಬ್ಯಾಡಿ ೬
ಹರಿಹರ ಭಕ್ತಿಗೆ ಬ್ಯಾರೆ ನೋಡಲಿಬ್ಯಾಡಿ
ಗುರುಕೃಪೆ ಪಡೆದಿನ್ನು ಗುರುತಿಟ್ಟು ನೋಡಿರೋ ೭
ಅನ್ನಬೇಡಿದವ ಗಿಲ್ಲೆನ ಬ್ಯಾಡಿ
ಹೊನ್ನು ಹೆಣ್ಣಿನ ಮ್ಯಾಲೆ ಕಣ್ಣಿಟ್ಟು ಕೆಡಬ್ಯಾಡಿ ೮
ಅಂತರಾತ್ಮದ ಪರಮಾತ್ಮನ ತಿಳಕೊಳ್ಳಿ
ಸ್ವಾತ್ಮ ಸುಖದ ಸವಿ ಸೂರ್ಯಾಡಿಕೊಳಲಿಕ್ಕೆ ೯
ಸ್ವಹಿತ ಸುಖದ ಮಾತು ಸಾಧಿಸಿಕೊಳಲಿಕ್ಕೆ
ಮಹಿಪತಿ ಹೇಳಿದ ಮಾತು ಮನ್ನಿಸಿ ತಿಳಿಕೊಳ್ಳಿ ೧೦

೨೯೨
ಸತ್ಸಂಗ ಮಾಡೊ ಮನವೆ ಚಿತ್ಸುಖ ನೋಡಲಿಕೆ
ಅತಿಸೂಕ್ಷ್ಮಾನಂದ ಸುಪಥ
ಅತಿಶಯಾನಂದ ಸದ್ಗತಿ ಸುಮೋಕ್ಷದಾಯಕ
ಹಿತದೋರಿಕೊಡುವ ಸದ್ಗುರುನಾಥ ಧ್ರುವ
ತೊಡಕಿ ಮಿಡುಕಬ್ಯಾಡ ಹಡಕಿ ವಿಷಯದೊಳು ಗಡಕವಾಗಿ
ಕೆಡುಕ ಬುದ್ಧಿಯಿಂದ ಕೆಡುದೇನ ಬಡದ ಭವಣೆ ಬಟ್ಟು
ಮಡದಿ ಮಕ್ಕಳಿಗೆ ದುಡಿದು ತಂದು ಅಡಕಿದರೆ
ತಾವು ಕೊಡುವರೇನ
ಒಡಲ ಹೊರಿಯಲಿಕ್ಕೆ ಒಡದ ಮಡಕಿಯಂತೆ ದಣಿಯಲಿಲ್ಲೆ
ತುಡಿಕಿ ಹೋಗುತಿಹಾಯುಷ್ಯಕ್ಷೀಣ ಸಡತ
ಹಾಕಿ ವೈವಯಮನ
ದುಡುಕಿಯೊಳಗಾಗಬ್ಯಾಡ ಪಡಕೋ
ಬ್ಯಾಗೆ ಗುರುದಯಕರುಣ ೧
ಸಿಲ್ಕಿಮಾಯ ಮಲ್ಕಿನೊಳು ಅಳ್ಕಿ ಆಲಪರಿಯಬ್ಯಾಡ
ಬಲ್ಕಿ ಮಾಡಿಕೊಳ್ಳಿ ನೀ ಸುಜ್ಞಾನ ಕ್ಷುಲ್ಲಕ ಬುದ್ಧಿಗಾಗಿ
ಅಳ್ಕಿ ಕಲ್ಕಿ ಬ್ಯಾಡೊ ನೀನು ತಿಳ್‍ಕೊ
ನಿನ್ನ ತನುವಿನೊಳಗೆ ಖೂನ
ನುಲ್ಕಿ ಸುಟ್ಟ ಮಲ್ಕಿನಂತೆ ಜನಕಾಲಂಬ ತೋರಿ ನೀನು
ಜಲಕಮಲದಂತಿರನುದಿನ ನಿಲ್ಕಿ ನೆಲೆಗೊಂಬುದಿದು
ತಳಕು ತನ್ನೊಳಗದೆಯೆಂದು ನಾಲ್ಕುವೇದ ಸಾರುತಿದೆ ಪೂರ್ಣ೨
ವ್ಯರ್ಥಗಳಿಯ ಬ್ಯಾಡೋ ಮತ್ರ್ಯದೊಳು ನೀ ಮಾನವ ಜನ್ಮ
ಗುರ್ತುಮಾಡಿಕೊಳ್ಳೊ ಗುರುಪಾದ
ನಿರ್ತದಿಂದ ಅರ್ತು ಕೂಡಿ
ಬೆರ್ತುಭಾವಭಕ್ತಿ ಇಂದ ಕರ್ತು ನಿಜಾನಂದ ಗುರುಬೋಧ
ಥರಥರದಿ ತೋರಿ ಪೂರ್ಣ ಸಾರ್ಥಕ ಮಾಡುವದಿದು
ತೀರ್ಥಪುಣ್ಯ ಸರ್ವಕ್ಷೇತ್ರವಾದ ಅರ್ಥಿಯಿಂದವಿಡಿದು ಗುರು
ಮೂರ್ತಿಪಾದ ಮಹಿಪತಿಯ ಹಿತಾರ್ಥ
ಪಡಿಯೊ ನಿನ್ನ ಸ್ವಹಿತದ ೩

೨೯೧
ಸತ್ಸಂಗವು ಲೇಸು ಸ್ವಹಿತಕೆ ಧ್ರುವ
ನೆರಿಲವರನುದಿನ ಬಾಳುದು ಲೇಸು
ಸರಸ ಸುಮಾತನೆ ಕೇಳುದು ಲೇಸು ೧
ನೋಡಿದವರಾಚರಣೆಯ ಲೇಸು
ಮಾಡಿದವರನು ಸರಣಿಯ ಲೇಸು ೨
ಮಹಿಪತಿಗಿದೆ ಸುಖದೋರಿತು ಲೇಸು
ವಿಹಿತಕ ವಿಹಿತಾಯಿತು ಬಲುಲೇಸು ೩

೫೦೦
ಸದ್ಗುರು ಭಕ್ತಿ ಲೇಸು ಲೇಸು
ಸದ್ಭಕ್ತಿಗೊಂದು ಗುರುಕೃಪೆಯೆ ಲೇಸು ಧ್ರುವ|
ಒಂದೆ ಸುಪಥ ಲೇಸು
ಹೊಂದಿ ಬಾಳುವದು ಲೇಸು
ಇಂದೆರೇಶನ ಪಾದ ಕಾಂಬುವದೆ ಲೇಸು ೧
ನಡೆ ನುಡಿ ಒಂದೆ ಲೇಸು
ದೃಢಭಾವನೆಯು ಲೇಸು
ಪಿಡಿಯುವನು ಸಂಧಾನಧ್ಯಾತ್ಮದ ಲೇಸು ೨
ಗುರುದೈವೆಂಬುದೆ ಲೇಸು
ಅರಿತು ಬೆರೆವುದು ಲೇಸು
ಸರಕ್ಕನೆ ಸಾಧಿಸಿಕೊಂಬಾನುಭವ ಲೇಸು ೩
ಒಳಮುಖನಾಗುವದೆ ಲೇಸು
ತಿಳಿಯುವಾತನ ಮನ ಲೇಸು
ಬೆಳಗಿನೊಳಿಹ್ಯ ಬೆಳಗು ಹೊಳೆವ ಲೇಸು ೪
ತನ್ನ ತಾ ತಿಳಿವದೆ ಲೇಸು
ಉನ್ಮನವಾಗುದೆ ಲೇಸು
ಚೆನ್ನಾಗಿ ಸದ್ಗುರು ಪಾದ ನಂಬುದೆ ಲೇಸು ೫
ಅರ್ತರೆ ಗುರುವಾಕ್ಯ ಲೇಸು
ಬೆರ್ತರೆ ಗುರುಪಾದ ಲೇಸು
ನಿರ್ತದಿಂದಾಗುವ ಪೂರ್ಣ ಗುರ್ತವೆ ಲೇಸು ೬
ಗುರುಶರಣ್ಹೋಗುದೇ ಲೇಸು
ಕರುಣ ಪಡೆವದೆ ಲೇಸು
ತರಳ ಮಹಿಪತಿಗಿದೆ ಸುಖವೆ ಲೇಸು ೭

೪೯೯
ಸದ್ಗುರುನಾಥ ಸಾಧುಸೇವಿತ ಸದ್ಭಾವನೆ
ಭೋಕ್ತಸದ್ಗೈಸೋ ಅವಧೂತ ಧ್ರುವ
ಕಾಣಿಸಿ ಖೂನ ಮನದೊಳು ಪೂರ್ಣ
ಅನುಭವ ಬೀರೋ ನಿಧಾನ
ಅನಾಥ ಬಂಧು ದೀನೋದ್ಧಾರಣ ಅನುದಿನ ಕಾಯೋ ಕರುಣ ೧
ಪತಿತಪಾವನನೆಂದೊಡಿಯ ನಾ ಬಂದೆ
ಅತಿಹರುಷದಲಿಡೋ ತಂದೆ
ಸ್ತುತಿಗೋಚರ ಸದ್ವಸ್ತು ನೀ ಬಂದೆ ಸತತ
ಸುಖದಾಯಕ ನೀನೆಂದೆ ೨
ಅರುಹು ಕುರುಹು ಆಗುವ ಮನೆಮೂರ್ತಿದೋರೋ
ಶ್ರೀಗುರುವರಮೂರ್ತಿ
ಶರಣಜನರಿಗೇನ ಅಹುದೋ ನಿಸ್ವಾರ್ಥಿ ಸ್ಮರಿಸುವ ನಾಮ
ನಿಮ್ಮ ಕೀರ್ತಿ ೩
ಹಿಡಿಯಲವನಿವನೆಂದು ಸುಗುಣ ನೋಡದಿರೆನ್ನವಗುಣ
ಮಾಡಲಿಕ್ಕೆನ್ನ ಪುನೀತನ ಒಡಯನಹುದೋ ನೀ ಪೂರ್ಣ ೪
ಬಾಲಕ ನಿಜ ನಿಮ್ಮಿಂದ ಮಹಿಪತಿಯ ಪಾಲಿಸಬೇಕು ಸುದಯಾ
ನೆಲೆನಿಭದೋರಿ ಸದ್ಭಾನ ಭಕುತಿಯ
ಸಲಹೊ ಸದ್ಗುರು ನಮ್ಮಯ್ಯ ೫

೪೯೮
ಸದ್ಗುರುವಿನ ಕೃಪೆ ಸದ್ಗತಿ ಸುಖದೋರಿತು ಧ್ರುವ|
ಮಸ್ತಕದ ಮ್ಯಾಲೆ ಅಭಯ ಹಸ್ತ ತಾವಿಡಲಿಕ್ಕೆ
ಸ್ವಸ್ತಹೊಂದಿತು ಮನವು ವಸ್ತುದ ಸುಳವಿಲೆ ೧
ಕರುಣಿಸಿ ನೋಡಲಿಕ್ಕೆ ಕರಗಿಹೋಯಿತು ಮಹಾಪಾಪ
ಸೆರಗು ಸಿಲುಕಿತು ಸುಪಥ ಪರಮಾನಂದದ ೨
ಹರುಷಾನಂದವಾಯಿತು ತರಳ ಮಹಿಪತಿಗೆ
ಗುರುನಾಮಾಮೃತ ಸೇವಿಸಿ ವರಕೃಪೆಯಿಂದ ೩

೫೦೧
ಸದ್ಗುರುವಿನ ಕೈಯ ಸದ್ಗೈಸಿಕೊಂಡವಗೆ ಜಯ ಧ್ರುವ
ಭಾವ ಬಲಿದು ಶುದ್ಧ ಪವಿತ್ರವಾದ ಪ್ರಬುದ್ಧ
ಅವ ನೋಡಿ ತಾ ಸ್ವತ:ಸಿದ್ಧ ಭವದಾಟಿದ್ದ ೧
ಸದ್ಗುರು ಸುದಯದೀಕ್ಷ ಸಾಧಿಸಿತವಗೆ ಲಕ್ಷ
ಮೇದಿನಿಯೋಳಗೆ ಸುಭಿಕ್ಷ ಬೋಧಕ ಸುಪಕ್ಷ ೨
ಸದ್ಗತಿ ಸುಖಸ್ವಾದ ಸಾಧಿಸಿ ಮಹಿಪತಿ ಬೋಧ
ಹೊಂದಿ ತೋರಿತು ಸೌಖ್ಯದ ಸದ್ಗುರು ಪ್ರಸಾದ ೩

೨೯೦
ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ
ಸದ್ಬೋಧಕಿದೆ ಸಾರ ಸದ್ಗೈಸುವ ಮನೋಹರ ಧ್ರುವ
ಕಣ್ಣಿಂದ ಕಡಿಯಲಿಲ್ಲ ಚೆನ್ನಾಗೆಲೆವೆ ನೋಡಿ
ಉನ್ನಂಥ ಮಹಿಮ ಪೂರ್ಣ ತಾನೆತಾನಾಗಿಹ್ಯ ಕೂಡಿ
ಉನ್ಮನವಾಗಿ ಬ್ಯಾಗ ಘನಸುಖ ಬೆರೆದಾಡಿ
ಪುಣ್ಯಕ ಪಾರವಿಲ್ಲ ಖೂನದೋರುದಿದರಡಿ ೧
ಸದ್ಬಕ್ತಿಗಿದೇ ಕೀಲ ಸಾಧಿಸುವದೀ ವಿಚಾರ
ಸದ್ಗತಿಗಿದೆಮೂಲ ಸಾಧುಜನರ ಸಹಕಾರ
ಸಾಧಕರ ಸುಶೀಲ ಬುಧಜನರ ಮಂದಾರ
ಸದ್ಫನದ ಕಲ್ಲೋಳ ವಸ್ತುದೋರುವ ವಿವರ ೨
ಗುರುದಯದಿಂದ ನೋಡಿ ಇದೆರಿಟ್ಟುವಂತೀ ಖೂನ
ಕರುಣಾಳು ಸ್ವಾಮಿ ನಮ್ಮ ತಾನೆದೋರಿದ ಸಾಧನ
ತರಣೋಪಾಯಕ ಪೂರ್ಣ ತೋರುದಿದನು ಸಂಧಾನ
ತರಳಮಹಿಪತಿಗಿದೆ ಇಹ್ಯ ಪರಕ ನಿಧಾನ ೩

೨೯೪
ಸನ್ಮಾರ್ಗಪಿಡಿದು ಸದ್ವಸ್ತಿಯೊಳು ಬೆರೆದಿಹ
ಸದ್ಬ್ರಹ್ಮರಿಗೆ ನಮಸ್ಕಾರ ೧
ಸದ್ಗುರು ಕೃಪೆಯಿಂದ ಸದ್ಗತಿಯ ಪಡೆದಿಹ
ಸದ್ಭಕ್ತರಿಗೆ ನಮಸ್ಕಾರ ೨
ಅಧ್ಯಾತ್ಮವಿದ್ಯ ಸಾದ್ಯ ಮಾಡಿಕೊಂಡಿಹ
ಬುದ್ಧಿವಂತರಿಗೆ ನಮಸ್ಕಾರ ೩
ಸಿದ್ಧಾಂತ ಅನುಭವದ ಸಾಧನವು ಬಲಿದಿಹ
ಶುದ್ಧ ಬುದ್ಧರಿಗೆ ನಮಸ್ಕಾರ ೪
ಇದೆ ನಿಜತಿಳಿದಿಹ ಸದ್ಬೋಧದಲ್ಲಿ
ಪೂರ್ಣ ಸದ್ಭಾವಿಗಳಿಗೆ ನಮಸ್ಕಾರ ೫
ಆದಿತತ್ವದ ನೆಲೆಯು ಭೇದಿಸಿ ಬೆರೆದಿಹ
ಬುದ್ದಜನರಿಗೆ ನಮಸ್ಕಾರ ೬
ಕ್ರೋಧ ಕಳೆದು ಸದಾ ಶಾಂತಪದಹೊಂದಿದ
ಸಾಧುರಿಗೆ ನಮಸ್ಕಾರ ೭
ಭಿನ್ನ ಭೇದವನಳಿದು ತನ್ನ ತಾ ತಿಳಿದ
ಸುಜ್ಞಾನಿಗಳಿಗೆ ನಮಸ್ಕಾರ ೮
ಮೇಲ್ಗಿರಿಯೊಳಗಿಪ್ಪ ಮೂಲಮೂರ್ತಿಯ ತಿಳಿವ
ನೆಲೆವಂತರಿಗೆ ನಮಸ್ಕಾರ ೯
ಮಾಯಮೋಹವನಳಿದು ಸೋಹ್ಯ ಸೊನ್ನೆಯ ತಿಳಿದ
ಮಹಾಮಹಿಮರಿಗೆ ನಮಸ್ಕಾರ ೧೦
ಆರುಮೂರನೆ ಗೆದ್ದು ಏರಿ ತ್ರಿಪುರ ದಾಟಿ
ಮೀರಿಹರಿಗೆ ನಮಸ್ಕಾರ ೧೧
ಮನಕರಗಿ ಘನ ಬೆರೆದು ತಾನೆ ತಾನಾಗಿಹ
ಮೋನ ಮುಗ್ಧರಿಗೆ ನಮಸ್ಕಾರ ೧೨
ತತ್ವಮಸಿ ಅರ್ಥದಿತ್ಯರ್ಥವನು ತಿಳಿದಿಹ
ಮುಕ್ತಜನರಿಗೆ ನಮಸ್ಕಾರ ೧೩
ತಾನರಿತು ಸುಖಿಯಾಗಿ ಇನ್ನೊಬ್ಬರಿಗೆ
ಕಣ್ದೆರೆಸುತಿಹರಿಗೆ ನಮಸ್ಕಾರ ೧೪
ತರಳ ಮಹಿಪತಿ ಹೊರೆವ ಅರುಹು ಕುರುಹವನಿತ್ತ
ಗುರುಹಿರಿಯರಿಗೆ ನಮಸ್ಕಾರ ೧೫

೩೪೨
ಸಮಜೊ ಭಾಯಿ ಸಕುನಾ ಚಾರೊ ಖುದಾಕಾ
ತೆಲಗು ಕನ್ನಡ ತುರಕಾರೆ ವಂದೇ ಸುಖ ಧ್ರುವ
ದೇಖೋ ಭಾಯಿ ದಿಸತಾ ತುಮನಾ
ನಜರೋಮೆ ನಜರೋಮೆ
ತನ್ನೊಳಗದೆ ಅತಿಸೂಕ್ಷ್ಮವಾಗಿ ತಿಳಕೋಮೆ ತಿಳಕೋಮೆ
ಸದ್ಗುರು ವಚನ ಶೋಧುನಿ ಪಾಹಾ ಸಪ್ರೇಮ ಸಪ್ರೇಮ
ಚುಡುವಯ್ಯ ಉನ್ನದಿ ಪೂರ್ಣ ಘನ ಮಹಿಮೆ ೧
ಫ್ಯಾರೆ ವಳಖೂನಿ ಸಾರಾಸಾರಾ ನಿವಡೂನಿ ನಿವಡೂನಿ
ನಜರ ಹುಜರ ದೇಖೋ ಯಾರಾ ಹೈಗನೀ ಹೈಗನಿ
ಜನ್ಮಕ ಬಂದು ಮಾಡುವದೆ ಸಾಧನೀ ಸಾಧನೀ
ಮಂಚಿ ಉನ್ನದಿ ನಕಳೆ ಸದ್ಗುರು ಪಾವುನಿ ೨
ಎಲ್ಲಾ ಒಂದೇ ಮಾತಿನ ಸೊಗಸು ಸಿವನಾಟಾ ಸಿವನಾಟಾ
ಆಪಸಮೆ ಆಪ ಲಢನಾ ಸಬ ಝೂಟಾ ಸಬ ಝೂಟಾ
ಚೆಪ್ಪೆವೈಯ್ಯ ಎಂದರ ಹೇಳುವ ಗುರು ನೀಠಾ ಗುರುನೀಠಾ
ಆನಂದ ಆಹೆ ತುಜ ಮಹಿಪತಿ ಸುಖ ಮೋಠಾ ೩

೧೪೪
ಸರಸಿಜೋದ್ಭವನುತ ಸಿರಿಲೋಲ
ಹರಿ ಸರ್ವರೊಳಿಹ ಶ್ರೀ ಗೋಪಾಲ
ಶರಣಾಗತವತ್ಸಲ ಕರುಣಾನಿಧಿ ಕೃಪಾಲ
ಸುರಜನ ಸಾನುಕೂಲ ವರಮುನಿಪಾಲ ೧
ಮಾಮನೋಹರ ಮಾರಪಿತನೀತ
ಕಾಮಪೂರಿತ ವಿಮಲ ಚರಿತ
ಸಾಮಗಾಯನಪ್ರಿಯ ಸೋಮಶೇಖರ ಧೇಯ
ಸಾಮಜ ವರದ ಸಮಸ್ತಹೃದಯ ೨
ಸಾಹ್ಯಸಕಲಕೆ ಸನ್ನಿಧನೀತ
ಇಹ ಸರ್ವಾನಂದ ಸರ್ವಭರಿತ ಸ್ವಹಿತ ಸುಖದಾತ
ಬಾಹ್ಯಾಂತ್ರ ಸದೋದಿತ
ಮಹಿಪತಿ ಪ್ರಾಣನಾಥ ಶ್ರೀಹರಿ ಸಾಕ್ಷಾತ ೩

೧೪೨
ಸರ್ವ ಸಹಕಾರಿ ಶ್ರೀಹರಿ ಸರ್ವ ಸಹಕಾರಿ ಧ್ರುವ
ಸುರಜನ ಪಾಲ ಸಕಲಕಾಧಾರಿ
ಪರಮ ಪುರುಷ ಪೀತಾಂಬರಧಾರಿ ೧
ಶರಣ ರಕ್ಷಕ ಸುದಯದಲ್ಯುದಾರಿ
ಗರಡು ವಾಹನ ಮುಕುಂದ ಮುರಾರಿ೨
ತೋರುವ ನಿತ್ಯಾನಂದದ ಲಹರಿ
ಬೀರುವ ಸುಖ ಸಾಧನೆ ಪರೋಪರಿ ೩
ಕರುಣದಾಕ ಮಹಿಪತಿ ಸಹಕಾರಿ
ಸಿರಿಯನಾಳುವ ಸ್ವಾಮಿಯು ನರಹರಿ೪

೧೪೧
ಸರ್ವದಾ ಕಾವ ದೈವ ನೀ ಶ್ರೀಹರಿ ಸರ್ವದಾ ಕಾವ ದೈವ ನೀ ಧ್ರುವ
ಶರಣಾಗತ ವತ್ಸಲ ಕರುಣಾನಿಧಿ ಅಚಲ ೧
ಭಾವಕ ನೀ ಸುಲಭ ಜೀವ ಪ್ರಾಣದೊಲ್ಲಭ ೨
ದೀನಬಂಧು ಶಾಶ್ವತ ಅನುದಿನ ಸದೋದಿತ ೩
ಅನುಕೂಲದ ಸಾಧನಿ ಭಾನುಕೋಟಿ ತೇಜ ೪
ಸ್ವಹಿತ ಸುಖದಾಯಕ ಮಹಿಪತಿ ಪ್ರಾಣನಾಯಕ೫

೨೯೫
ಸರ್ವರೆಗೆಲ್ಲ್ಯದ ಸ್ವಸುಖ ಧ್ರುವ
ಭ್ರಮದೋರುವದೆಲ್ಲ ಅರಿದವಗಾದ
ಸಮದೃಷ್ಟಿಯ ನೆಲೆಗೊಂಡವಗಾದ ೧
ವಿತ್ತ ವಿಷಯದಾಶಳಿದವಗಾದ
ಚಿತ್ತ ಸ್ವಚ್ಛವು ಸ್ಥಿರಗೊಂಡವಗಾದ ೨
ಸ್ವಹಿತ ಸಾಧನವು ಸಾಧಿಸಿದವಗಾದ
ಮಹಿಪತಿ ಗುರುದಯಪಡೆದವಗಾದ ೩

೧೪೩
ಸರ್ವೋತ್ತಮ ಸರ್ವಜೀವನ ಪ್ರಾಣ
ಸರ್ವೋತ್ತಮ ಪರಿಪೂರ್ಣ ಸರ್ವೋತ್ತಮ ಧ್ರುವ
ಸತ್ಯಜ್ಞಾನ ಅನಂತ ಬ್ರಹ್ಮ
ಶ್ರುತಿ ಸಾರುತಲ್ಯದೆ ನೇಮ
ಮತ್ಪಾತಕ ಹಿಡಿವುದು ಬರಿ ಭ್ರಮೆ
ನಿತ್ಯನಾಗಿರೋ ಘನಮಹಿಮ ೧
ಸರ್ವೋತ್ತಮ ಶ್ರೀ ಹರಿ ಸಾಕ್ಷಾತ
ಪೂರ್ವಾಪರ ಪ್ರಖ್ಯಾತ
ದೋರ್ವನು ತಾ ಘನಮಯ ಸದೋದಿತ
ಸರ್ವಾನಂದಭರಿತ ೨
ವಾಸುದೇವನೊಬ್ಬನೆ ಸರ್ವೇಶ
ಭಾಸ್ಕರಕೋಟಿ ಪ್ರಕಾಶ
ಭಾಸುತಲೀಹ್ಯ ವರ ಗುರುದೇವೇಶ
ದಾಸ ಮಹಿಪತಿ ಪ್ರಾಣೇಶ ೩

ದೇವತಾಸ್ತುತಿ

ಸರ್ವೋತ್ತಮನ ಸ್ತುತಿಗೆ ಸರಿಬೆಸದಕ್ಷರದೆಣಿಕ್ಯಾಕ ಧ್ರುವ
ಯತಿ ಫಲ ಗಣ ಪ್ರಾಸವ್ಯಾಕೆ ಸ್ತುತಿಸ್ತವನ ಕೊಂಡಾಡಲಿಕ್ಕೆ
ಹಿತದೋರದು ಮಿತಿ ಮಾಡಲಿಕ್ಕೆ ಅತಿ ಶೋಧಿಸಲಿಕ್ಕೆ ೧
ಮುತ್ತಿಗೆ ಬುದ್ಯುಶದೆಂದು ಉತ್ತಮರಪೆಕ್ಷರೆಂದೆಂದು
ನೆತ್ತಿಲಿಟ್ಟು ಕೊಂಬರು ಬಂದು ಅತಿ ಪ್ರೀತಿಲೆ ನಿಂದು ೨
ಅತಿ ಸಾರಸ ಮಳೆಗರೆಯುತಿರಲು ಸತತ ಸುಪಥ ಸ್ವಾನಂದದ ಸರಳು
ಮತಿ ಹೀನರು ಬಲ್ಲರೇನದರೊಳು ಮಾತಿನ ಮರಳು ೩
ನದಿ ಋಷಿ ಮೂಲೆತ್ತಲು ಕೇಳಿ ಸಾಧಿಸಿ ಬೀಳ್ವದು ಬಾಯಲಿ ಧೂಳಿ
ಭೇದಾ ಭೇದವು ಮಾಡದೆ ಬಾಳಿ ಇದೇ ಪರಿ ಸ್ತುತಿಯಲಿ ೪
ತಪ್ಪು ಕಡಿಯ ನೋಡದೆ ಎನ್ನೊಡೆಯ ಒಪ್ಪಿಸಿಕೊಂಬ ಮಹಿಪತಿ ಸ್ತುತಿನುಡಿದು
ಅಪ್ಪವ್ವನುತಾ ಎನ್ನ ಕಡಿಯ ತಪ್ಪನೆ ತುಸು ಹಿಡಿಯ ೫

೬೮೫
ಸವಿಸವಿದುಣಬೇಕು ಸುವಿದ್ಯಸಾರದೂಟ ಧ್ರುವ

ಊಟಕೆ ಬ್ಯಾಸರಿಕಿಲ್ಲ ನೋಟದ ಸವಿಸಾರಾಯದ ಬೆಲ್ಲ
ಕೋಟಿಗೊಬ್ಬವನೆ ಬಲ್ಲ ನೀಟಾಗಿದೆಲ್ಲ ೧
ಉಂಡು ತೇಗಿತು ಬಲು ಮುನಿಗಳು ವೃಂದ
ಮಂಡಲದೊಳು ಸವಿಸುಖದಾನಂದ
ಕೊಂಡಾಡಲಿಕ್ಕಿದೆ ಬಂದ ಖಂಡಿತ ಭವಬಂಧ ೨
ತುತ್ತು ತುತ್ತಿಗೆ ತೋರುದು ಸಾರಸ ನಿತ್ಯ
ಮಹಿಪತಿಗೆ ಬಲು ಉಲ್ಲಾಸ
ಹತ್ತಿಲ್ಯದೆ ಬ್ರಹ್ಮರಸ ವಸ್ತುವದೆ ವಿಲಾಸ ೩

೬೮೬
ಸವಿಸುಖ ಕಂಡೆ ಸುವಿದ್ಯ ಬ್ರಹ್ಮರಸವ ಧ್ರುವ
ಅಧ್ಯಾತ್ಮಾನಂದದೂಟ ಸಿದ್ಧಾಂತನುಭವದಿಂದ
ಬದ್ಧವಾಗಿ ಸೇವಸಿದ ಇದು ಏಕಾಗ್ರ ೧
ಉಂಡು ಹರುಷವಾಯಿತು ಮಂಡಲದೊಳಗಿಂದು
ಕಂಡು ಆನಂದ ಸುಖವ ಪಿಂಡಾಂಡದೊಳು ೨
ಸುರಸ ಸಾರಾಯದೂಟ ಪರಿಪರಿ ಸವಿದಿನ್ನುಹರುಷವಾಯಿತು ಎನಗೆ ತರಳ ಮಹಿಪತಿಗೆ ೩

೨೯೭
ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ಧ್ರುವ
ವಿದ್ಯಾ ವ್ಯುತ್ಪತ್ತಿ ಬೀರಿದರೇನು
ರಿದ್ಧಿಸಿದ್ಧಿಯುದೋರಿದರೇನು ೧
ಜಪತಪ ಮೌನಾಶ್ರಯಿಸಿದರೇನು
ಉಪವಾಸದಿ ಗೊಪೆ ಸೇರಿದರೇನು ೨
ದೇಶದ್ವೀಪಾಂತರ ತಿರುಗಿದರೇನು
ವೇಷ ವೈರಾಗ್ಯವ ತೋರಿದರೇನು ೩
ಭಾನುಕೋಟಿತೇಜ ಒಲಿಯದೆ ತಾನು
ಅನೇಕ ಸಾಧನಲ್ಯಾಗುವದೇನು ೪
ದೀನ ಮಹಿಪತಿಸ್ವಾಮಿಯಾಶ್ರಯಧೇನು
ಮನವರ್ತದೆ ಕೈಯಗೊಡುವ ತಾನು ೫

೨೯೮
ಸಾಧನಿದೇ ಸುಗಮಾ ಇದೇ ಸುಗಮಾ
ಸತ್ಸಂಗದಿಹುದು ನೇಮ ಧ್ರುವ
ಸಾಧು ಸಮಾಗಮ ಸಮಾಗಮ
ಛೇದಿಸುವದು ಭವಭ್ರಮ ೧
ತರಣೋಪಾಯಿದು ಒಂದೆ ಇದು ಒಂದೆ
ನಿರ್ಣೈಸದೆ ಮೊದಲಿಂದೆ ೨
ಸಾಧನಿದೆ ಸ್ವಹಿತ ಇದೆ ಸ್ವಹಿತ
ಸುಧಿಗಡದಿಹ ನವನೀತ ೩
ಸರಿ ಈ ಸಾಧನಕಿಲ್ಲ ಸಾಧನಕಿಲ್ಲ
ಗುರು ಶರಣಾಗತ ಬಲ್ಲ ೪
ಸಾಧನದಿ ಸುವಸ್ತ ಸುವಸ್ತ
ಸಾಧಿಸಿತು ಮಹಿಪತಿಗೆ ಸಾಭ್ಯಸ್ತ ೫

೨೯೯
ಸಾಧಿಸದೆ ಹೊಳೆಯ
ಹೃದಯದೊಳಿಹ್ಯ ಗೆಳಿಯ ಧ್ರುವ
ಸಾಧಿಸಬೇಕೊಂದು ಪಾಲ
ಭೇದಿಸಿ ನೋಡುವದ್ಹತ್ತುಪಾಲ
ಎದುರಿಡುವಂತೆ ಗೋಪಾಲ
ಬುಧಜನ ಪ್ರತಿಪಾಲ ೧
ಸಾಧನವೆಂಬುದೆ ಸುಪಥ
ಬೋಧವೆ ಸದ್ಗುರುಮಾರ್ಗ ಸ್ವಹಿತ
ಸದಮಲಾನಂದಭರಿತ
ಇದೇ ಶಾಶ್ವತ ೨
ಸಾಧಿಸಿ ಸದ್ಗುರು ಕೃಪೆಯಿಂದ
ಭೇದಿಸು ಮಹಿಪತಿ ನಿನಗಿಂದು ಚೆಂದ
ಹೃದಯದೊಳ್ಹಾನ ಮುಕುಂದಬದಿಯಲಿ ಗೋವಿಂದ ೩

೫೦೩
ಸಾಧಿಸಿ ಗುರುಗುಟ್ಟು ಭೇದಿಸಿ ಮನವಿಟ್ಟು ವೇದಕೆ ನಿಲುಕದ
ಹಾದಿಯದೋರುವ ಸದ್ಗುರು ದಯಗೊಟ್ಟು ಧ್ರುವ

ಮಾತಿಲೆ ಆಡುವ ಜ್ಞಾನ ಯಾತಕ ಬಾಹುದೇನ
ಆತ್ಮಕದೋರುವ ನಿಜಖೂನ ಪ್ರತ್ಯೇಕವಾದ ಸ್ಥಾನ ೧
ಮಾತೆ ಆಗೇದ ಮುಂದೆ ರೀತ್ಯಡಗೇದ ಹಿಂದೆ
ನೀತಿಯ ತೋರುವ ಗುರುತಂದೆ ಜ್ಯೋತಿಸ್ವರೂಪೊಂದೆ ೨
ತಾಯಿತವಾಗೆದ ಗುಟ್ಟು ಧ್ಯಾಯಿಸಿ ರೀತಿ ಇಟ್ಟು
ಆಯಿತು ನಿಜಗುಣ ಬಿಟ್ಟು ಹೋಯಿತು ಜನ ಕೆಟ್ಟು ೩
ಗುಟ್ಟು ಕೇಳಿ ಪೂರ್ಣ ಮುಟ್ಟಿ ಮಾಡಿ ಮನ
ಇಟ್ಟುಕೋ ಮಹಿಪತಿಗುರುಬೋಧ ನಿಜಧನ ೪

೫೦೭
ಸಾಧಿಸಿ ನೋಡಿ ನಿಜ ಖೂನ
ಸದ್ಗುರು ಕೃಪೆಯಿಂದ ಸ್ವಸುಖದ ನಿಧಾನ ಧ್ರುವ
ಸಹಜಾವಸ್ಥೆಗೆ ಬಂದು ನೋಡಿ
ಸಹಜ ಸದ್ವಸ್ತು ಬಾಹುದು ತಾನೆ ಕೈಗೂಡಿ
ದೇಹ ದಂಡನೆಂಬುದು ಬ್ಯಾಡಿ
ಸಾಹ್ಯಮಾಡುವ ಗುರುಸೇವೆ ಪೂರ್ಣಮಾಡಿ ೧
ಸಾಧನವೆಂಬುದೆ ಸಾಕ್ಷೇಪ
ಭೇದಿಸಿ ನೋಡಲಿಕ್ಕಿದುವೆ ವಸ್ತು ತಾಂ ಸಮೀಪ
ಆದಿ ಅನಾದಿ ಸ್ವರೂಪ
ಸಾಧಿಸಿದವನೆ ತಾ ಮೂರುಲೋಕ ಆಪ ೨
ಎಲ್ಲಕ್ಕೆ ಮೇಲು ಗುರುಭಕ್ತಿ
ಅಲ್ಲೆಸಲ್ಲದು ಮತ್ತೆ ಮುಂದೆ ಬೇಕೆಂಬ ಉಕ್ತಿ
ಇಲ್ಲೆ ತಿಳಿಕೋ ನೀ ಮಹಿಪತಿ
ಸುಲಭದಿಂದ ಸಾಧಿಸಿಕೊಂಡು ನಿಜಯುಕ್ತಿ ೩

೫೦೮
ಸಾಧಿಸಿ ನೋಡಿ ಸುಖ ಭೇದಿಸ್ಯನುದಿನ
ಬೋಧ ನಿಜವಾದ ಸದೋದಿತ ಗುರು ಜ್ಞಾನ ಧ್ರುವ
ಭಾವನೆ ನೆಲೆಗೊಂಡು ನಿಮ್ಮ ಭಕ್ತಿ ನಿಜ ಮಾಡಿ
ದೈವ ಪ್ರಗಟಾಗಿ ಒಲಿವದು ನಿಜನೋಡಿ ೧
ಸ್ವಸ್ತ ಮನವಾಗಲಿಕ್ಕೆ ವಸ್ತು ಅಲ್ಲೆ ನೋಡಿ
ಅಸ್ತ ಉದಯವಿಲ್ಲದೆ ಸಾಭ್ಯಸ್ತ ನಿಜಗೂಡಿ ೨
ಲೇಸು ಲೇಸಾಯಿತು ನೋಡಿ ಭಾಸುತೀಹ್ಯಸುಖ
ದಾಸ ಮಹಿಪತಿಗಿದೆ ನೋಡಿ ಗುರು ಮುಖ ೩

೫೦೪
ಸಾಧಿಸಿದೇ ಖೂನ ಸದಾಸದ್ಗುರು ಕೃಪೆ ಜ್ಞಾನ
ಛೇದಿಸಲನುಮಾನ ಶೋಧಿಸ್ಯನುದಿನ
ಭೇದಿಸಿ ನೋಡಿ ಸದೋದಿತಾತ್ಮಜ್ಞಾನ ೧
ಹೇಳಿ ಕುಡುವದಲ್ಲ ಕೇಳಿ ಕೊಂಬುವುದಲ್ಲ
ಹೇಳುವ ಮಾತಿನೊಳಿಲ್ಲ ಕೇಳುವ ಕಿವಿಯೊಳಿಲ್ಲ
ತಿಳಿವಿನೊಳಿಹ ನಿಜಗುಟ್ಟು ತಿಳಿದವಬಲ್ಲ ೨
ಸೋಹ್ಯ ಸೂತ್ರದ ಖೂನ ದೇಹಾತೀತನು ಬಲ್ಲನೆ ಪೂರ್ಣ
ಗುಹ್ಯ ಗೊಪ್ಪದ ಧನ ಮಹಾನುಭವದ ಸ್ಥಾನ
ಮಹಿಪತಿ ಮನೋನ್ಮನಲೀಯ ನಿಧಾನ ೩

೫೦೫
ಸಾಧಿಸಿದೇ ನೋಡಿ ಪೂರ್ಣ ಆದಿ ತತ್ವದ ಸುಸ್ಥಾನ
ಭೇದಿಸುವದನುದಿನ ಸದಾನಂದ ಗುರುಜ್ಞಾನ ಧ್ರುವ|
ಮಾತಿನಂತಲ್ಲವಿದು ಸ್ವಾತ್ಮಸುಖದ ಸಾಧನ
ಶ್ರುತಿಗಗೋಚರ ನೋಡಿ ಪ್ರತ್ಯೇಕದನುಸಂಧಾನ
ಅತಿಗುಹ್ಯಗೂಢವಿದು ಹಿತೋಪಾಯದ ಖೂನ
ರತಿಗೊಟ್ಟುನೋಡಿ ಪ್ರತ್ಯಕ್ಷ ಇಹ್ಯ ನಿಧಾನ ೧
ನಡಿನೋಟ ನೀಟಮಾಡಿ ಪಡಕೊಳ್ಳದೆ ಸ್ವಹಿತ
ನುಡಿಆಟದೋರಬ್ಯಾಡಿ ಕೂಡಿ ಸುಜ್ಞಾನÀಸನ್ಮತ
ಬಡಬ್ಯಾಡಿ ನಾನಾಶ್ರಮವಿಡಿಯದೆ ಸುಗಮ ತಾ
ಇಡಿದು ತುಂಬೇದ ಸಾಂದ್ರ ನೋಡಿ ಅನಂದೋಭರಿತ ೨
ಸಾಧನಕಿದೇ ಮುಖ್ಯ ಸಾಧಿಸಿದೆ ಗುರುದಯ
ಇದಕಿಲ್ಲ್ಲಿನ್ನೊಂದಧಿಕ ಬುಧಜನರ ಉಪಾಯ
ಅದರಿಂದೊಲುವ ತಾನು ಸದ್ಗುರು ಭಾನುಕೋಟ್ಯುದಯ
ಸದ್ಗೈಸಿ ಮಹಿಪತಿಯ ಸದೋದಿತ ಉದಯ ೩

೫೦೬
ಸಾಧಿಸಿನ್ನು ನೋಡಿ ಸದ್ಗುರು ಪಾದ ಕೂಡಿ
ಸಾಧು ಸಂಗ ಮಾಡಿ ಭೇದಾಭೇದೀಡ್ಯಾಡಿ ಧ್ರುವ|
ಮರಹು ಮರಿಯ ನೀಗಿ ಅರವ್ಹಿನೊಳಗಾಗಿ
ಕುರುಹ್ಹದೋರಿಕೊಡುವ ಗುರು ಬ್ರಹ್ಮಾನಂದಯೋಗಿ ೧
ತಿರುಗಿನೋಡಿ ನಿಮ್ಮ ಅರಿತು ನಿಜವರ್ಮ
ಪಾರಗೆಲಿಸುವದಿದು ಗುರುಪಾದ ಧರ್ಮ ೨
ಕಣ್ದೆರೆದು ನೋಡಿ ತನ್ನೊಳು ಬೆರೆದಾಡಿ
ಧನ್ಯವಾದ ಮಹಿಪತಿ ಗುರುಪಾದ ಕೂಡಿ೩

೩೦೧
ಸಾಧು ಸಮಾಗಮ ಸಾಧನಕುತ್ತಮೋತ್ತಮ
ಸಾಧಿಸಿದವ ಸಕಲಕ ನಿಸ್ಸೀಮ ಧ್ರುವ|
ಸಾಧು ಸುದರುಶನ ಸದಮಲಾನಂದ ಪೂರ್ಣ
ಸದಾ ಸದ್ಗೈಸುವ ಸುಖಸಾಧನ ೧
ಸಾಧು ಸಂಭಾಷಣ ಸುಧಾರಸ ಪ್ರಾಶನ
ಸದೋದಿತ ಸಹಿತ ಭೂಷಣ೨
ಸಾಧು ಸುಸೇವೆಯಿಂದ ಸಾಧಿಸಿ ಬಹ ಗೋವಿಂದ
ಸದಾ ಸಕಾಲದಲಿ ಮಹಿಪತಿಗಾನಂದ ೩

೩೦೨
ಸಾಧು ಸಹವಾಸ ಸದಮಲಾನಂದ ಸಂತೋಷ ಧ್ರುವ
ಇದ್ದರಿರಬೇಕು ನೋಡಿ ಅಧ್ಯಕ್ಷರಾಶ್ರಯ ನಿಜಗೂಡಿ
ಸಿದ್ಧಿ ಬಾಹುದು ಎದುರಿಡಿ ಇದ್ದದ್ದೆ ಕೈಗೂಡಿ ೧
ಬಿಡಬಾರದು ಎಂದಿಗೆ ನೋಡಿ ಒಡಲು ಹೊಕ್ಕರವನೆ ಕೂಡಿ
ಪಡೆದು ಸ್ವಸುಖ ಸೂರ್ಯಾಡಿ ದೃಢಭಾವನೆ ಮಾಡಿ ೨
ಸಾಧಿಸಿ ಮಹಿಪತಿ ನಿಜ ಭೇದಿಸಿ ನೋಡನುಭವದ ಬೀಜ
ಆದಿ ಅನಾದಿ ಸಹಜಬೋಧದ ನಿಜಗುಜ ೩

೩೦೩
ಸಾಧು ಸ್ವರೂಪ ಸಾದು ಸ್ವರೂಪ
ಸಾಧಿಸಿದವ ಕುಲದೀಪ ಧ್ರುವ
ಸ್ವರೂಪ ನಿಜಗೌಪ್ಯ ಸರ್ವರಿಗಿದು ಅಪ್ರಾಪ್ಯ ೧
ನಡಿನುಡಿ ಬಲು ಗೂಢ ಪಡೆದವ ತಾ ಘನ ಪ್ರೌಢ ೨
ದುರ್ಲಭ ದರುಶನ ಸುಲಭಲ್ಯಾಗದು ಖೂನ ೩
ಸ್ವಹಿತ ಸಾಧು ದಯ ಮಹಿಪತಿಗಾಯಿತು ಉದಯ ೪

೩೦೦
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು
ಭೇದಿಸದಲ್ಲದೆ ಹೊಳೆಯದಿದು ಧ್ರುವ
ತೆಂಗಿನ ಫಲದಂತವರ ಸಂಗದಸುಖ
ಹಿಂಗದಂತನುದಿನ ಅನುಭವಿಸುವದಲ್ಲದೆ ೧
ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ
ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ ೨
ಅಂತರಾತ್ಮದ ಸುಖ ಮಹಾತ್ಮರಗಲ್ಲದೆ
ಮೂಢಾತ್ಮರಿಗಿದು ಎಲ್ಲಿಹುದು ೩
ಸಾಧು ಸಂತರ ನಿಜದಾಸ ಮಹಿಪತಿಗಿನ್ನು
ಸಾಧು ಸಂಗತಿ ಜೀವನ್ಮುಕ್ತಿಯು ೪

೩೦೪
ಸಾಯಾಸದಿಂದ ಸಾಧಿಸಬೇಕು ಸತ್ಸಂಗ
ಮಾಯಿಕಬುದ್ಧಿ ಬಿಟ್ಟು ನೋಡಿ ಅಂತರಂಗ ಧ್ರುವ
ಆಯಿತವಾಗಿ ತೋರುತಾನೆ ಶ್ರೀರಂಗ
ಸಾಯದಲ್ಯಾಗುತದೆ ನೋಡಿ ಭವಭಂಗ ೧
ಹಿಡಿದರೆ ಹಿಡಿಯಬೇಕೊಂದೆ ಸಾಧು ಸಹವಾಸ
ಪಡೆದರೆ ಪಡೆಯಬೇಕೊಂದೆ ತಾ ನಿಜಧ್ಯಾಸ
ನಡಿನುಡಿ ಒಂದೆ ಆಗುವುದೆ ಅಪ್ರಯಾಸ
ತಡಿಯದೆ ಮಾಡಬೇಕೊಂದೆ ನಿಜಾಭ್ಯಾಸ ೨
ಅನೇಕ ಪುಣ್ಯ ಒದಗಿತು ಸತ್ಸಂಗದಾಗ
ದಿನಕರಕೋಟಿ ಹೊಳೆವುದು ಮನದೊಳಗೆ ಬ್ಯಾಗ
ತನುಮನವಿಟ್ಟು ಕೇಳಿ ಗುರುಪಾದಕೀಗ
ಘನಸುಖದಾಯಕ ಮಹಿಪತಿಯ ಸದ್ಗುರುವಿಗೆ ೩

೬೯೩
ಸಾರಿ ಚೆಲ್ಯದ ನೋಡಿ ಹರಿರೂಪದ ಮಹಿಮ ಧ್ರುವ|
ತುಂಬಿ ತುಳುಕುತದೆ ಕುಂಭಿನಿಯೊಳು ಪೂರ್ಣ
ಇಂಬುದೋರುತಲ್ಯದೇ ಡಿಂಬಿನೊಳಗೆ ತನ್ನ
ಹಂಬಲಿಸಿ ನೋಡಿರ್ಯೋ ಗುಂಭ ಗುರುತವ ೧
ಬಳೆದುಕೊಂಬುವಂತೆ ಹೊಳೆವುತದೆಲ್ಲ ಕಡಿಯ
ಥಳಥಳಗುಡುತ ಸುಳುವು ತೋರುತಲ್ಯದೆ
ಝಳಝಳಿಸುವ ಪ್ರಭೆ ಮಳೆಮಿಂಚುಗಳು ೨
ಇಡಿದು ತುಂಬೇದ ನೋಡಿ ಅಡಿಗಡಿಗಾನಂದದಲಿ
ಅಡಿಮೇಲು ತಿಳಿಯದೆ ಎಡಬಲದೊಳಾದ
ಮೂಢ ಮಹಿಪತಿ ಪ್ರಾಣ ಬಿಡದೆ ಸಲಹುತ ೩

೬೯೨
ಸಾರಿ ಚೆಲ್ಯದೆ ನೋಡಿ ಶ್ರೀಹರಿರೂಪ ತೋರುತಿಹ್ಯ
ಗುರುಪರಮ ಸ್ವರೂಪ ಧ್ರುವ|
ಇಡದು ತುಂಬೇದ ನೋಡಿ ಎಡಬಲ ಪೂರ್ಣ
ಬಿಡದೆ ಸೂಸುತಲ್ಯದೆ ಜಡಿದು ನಿಧಾನ ೧
ಸಂಧಿಸಿಹದು ನೋಡಿ ಹಿಂದೆಮುಂದೆಲ್ಲ
ಒಂದು ಮನದಿ ನೋಡಿ ಬಂದು ನೀವೆಲ್ಲ ೨
ಬೆಳದುಕೊಂಬುವಂತೆ ಹೊಳೆಯುತವಲ್ಲ
ಸುಳುಹು ಶ್ರೀ ಕೃಷ್ಣನ ತಿಳುವವರಿಲ್ಲ ೩
ಕಣ್ಣುಗೆಟ್ಟಿರಬ್ಯಾಡಿ ಕಾಣದೆ ಖೂನ ತ
ನ್ನೊಳಗದೆ ನೋಡಿ ಸಾನ್ನಿಧ್ಯಪೂರ್ಣ ೪
ಭಾಸುತಲ್ಯದೆ ಭಾಸ್ಕರಕೋಟಿ ತೇಜ
ದಾಸ ಮಹಿಪತಿ ಪ್ರಾಣದೊಡಿಯ ಸಹಜ ೫

೬೯೧
ಸಾರಿ ಚೆಲ್ಯದೆ ನೋಡಿಹಸ್ವರೂಪ ತೋರುವ ಗುರುದೀಪ ಧ್ರುವ|
ಒಳಹೊರಗಿದು ಥಳಥಳಿಸುತಲಿಹುದು
ಮೊಳೆಮಿಂಚಿನಕಳೆ ಝಳಝಳಿಸುತ ನಿಜ
ಹೊಳೆಯುತಿಹುದು ಇಳೆಯೊಳಗಿಂದು ತಾ
ಬೆಳಗಿನೊಳಿಹ ಘನ ಬೆಳಗಿನ ಪ್ರಭೆಯು ೧
ಅನುಮಾನವಿಲ್ಲದೆ ಅನುದಿನ ನೋಡಿ
ಜನವನದೊಳು ಘನ ತುಂಬಿ ತುಳುಕುವದು
ಮುನಿಜನ ನೋಡುವಾನಂದದ ಸುಖವಿದು
ಘನಪರಬ್ರಹ್ಮಾನಂದದ ಬೆಳಗು ೨
ಕಣ್ಣಿಗೆ ಕಾಣಿಸುತಿಹುದು ನೋಡಿ
ಭಿನ್ನವಿಲ್ಲದೆ ಅಣುರೇಣುದೊಳೆಲ್ಲ
ಧನ್ಯಗೈಸಿತು ಮಹಿಪತಿ ಜೀವನವಿದು
ತನ್ನಿಂದಲಿ ತಾನೆ ತಾನೊಲಿದು ೩

೬೯೪
ಸಾವಧಾನವಾಗಿ ನೋಡಿ ನಿಜ
ಭಾವಬಲಿದು ನೋಡಲಿಕ್ಯದೆ ವಸ್ತು ಸಹಜ ಧ್ರುವ
ಹತ್ತಿಲಿದೆ ತಾ ಸರ್ವಕಾಲ
ಚಿತ್ತೊಂದೆ ಮಾಡಿ ನೋಡು ಗುರುಪಾದ ಕಮಲ
ನೆತ್ತಿಯೊಳಗದೆ ನಿಶ್ಚಲ
ಉತ್ತಮೋತ್ತವಾದ ಸದ್ವಸ್ತು ಅನುಕೂಲ ೧
ಅತ್ತಿತ್ತಲೆ ನೋಡಲಾಗದು
ಮೊತ್ತವಾಗಿ ಸುಬ್ರಹ್ಮ ತುಂಬಿ ತುಳುಕುವದು
ಸುತ್ತೆ ಸೂಸ್ಯಾಡುತಲಿಹುದು
ಮತ್ತೆ ಉನ್ಮನವಾಗಿ ತನ್ನೊಳು ತಾ ನೋಡುವದು ೨
ಸಾರವೆ ಅದೆ ಸತ್ಯನೋಡಿ
ದೂರೆಂಬ ಮಿಥ್ಯ ಭ್ರಾಂತನೆ ಈಡಾಡಿ
ಗುರುಕೃಪೆಯಿಂದ ನಿಜಗೂಡಿ
ತರಳ ಮಹಿಪತಿ ಹರುಷಗೈದ ಬೆರೆದಾಡಿ ೩

೬೯೫
ಸಾವಧಾನವಾಗಿ ನೋಡಿ ಶ್ರೀ ವಾಸುದೇವನ ದ್ರುವ
ಭಾವ ಬಲಿದು ಪೂರ್ಣ ದೇವದೇವೇಶನ ಖೂನ
ಆವಾಗ ನೋಡಿ ಚರಣ ಸೇವಿಸಿ ನಿಧಾನ ೧
ಕಣ್ಣಮುಂದೆ ಕಟ್ಯಾನೆ ಭಿನ್ನವಿಲ್ಲದೆ ತುಂಬ್ಯಾನೆ
ಸಣ್ಣ ದೊಡ್ಡರೊಳಗ್ಹಾನೆ ಕಾಣಿಸುತಲ್ಹ್ಯಾನೆ ೨
ಚಿತ್ತಮನೊಂದು ಮಾಡಿ ಹತ್ತಿಲಿ ಸಾಭ್ಯಸ್ತ ನೋಡಿ
ವಸ್ತು ಮಹಿಪತಿಯ ಕೊಂಡಾಡಿ ನಿತ್ಯ ನಿಜಗೂಡಿ ೩

೫೦೯
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ
ಭಾವ ಭಕ್ತಿಯಿಂದ ಬೆರೆಯೊ ನೀನು ಬ್ರಹ್ಮಾನಂದ ಬೋಧ ಧ್ರುವ|
ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ
ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ
ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ
ಪರಮ ಸುಪಥವಿದೆ ವರಮುನಿಗಳಾನಂದ ೧
ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ
ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ
ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ
ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ ೨
ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ
ಸುವಿದ್ಯ ಸುಖವಿದು ಸಾಧಿಸು ಅನುದಿನ
ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ
ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ ೩

೩೦೬
ಸಾವಧಾನವೆಂದು ಶ್ರುತಿಸಾರುತಿದೆಕೊ ಸಾವಧಾನ
ಸಾವಧಾನಾಗಿ ಸಾಧಿಸಿ ಶ್ರೀಹರಿ ಸ್ವರೂಪಜ್ಞಾನ ಧ್ರುವ
ಕಾಯದ ಕಳವಳ ಕಂಗೆಡಿಸದೆ ಮುನ್ನೆ ಸಾವಧಾನ
ಮಾಯಮೋಹದ ಭ್ರಮೆದೋರದ ಮುನ್ನೆ ಸಾವಧಾನ ೧
ಕಾಮಕ್ರೋಧ ತನ್ನ ನೇಮಗೆಡಿಸಿದ್ಹಾಂಗ ಸಾವಧಾನ
ತಾಮಸದೊಳು ಕೂಡಿ ತರ್ಕಸ್ಯಾಡದ್ಹಾಂಗ ಸಾವಧಾನ ೨
ಆಸನ ವ್ಯಸನ ಕೂಡಿ ಹಸನ ಕೆಡದ್ಹಾಂಗ ಸಾವಧಾನ
ವಿಷಯ ವಿಭ್ರಮದೊಳು ವಶವಗುಡದ್ಹಾಂಗ ಸಾವಧಾನ ೩
ನಿದ್ರಿವೆಂಬುದು ತನ್ನ ಬುದ್ಧಿಗೆಡಿಸದ್ಹಾಂಗ ಸಾವಧಾನ
ಸದ್ಯ ತಾನಾರೆಂದು ಶುದ್ಧಿ ತಿಳುವ್ಹಾಂಗ ಸಾವಧಾನ ೪
ಸ್ವಹಿತ ಸದ್ಗುರು ಪಾದ ರಕ್ಷಿಸುವದರಲಿ ಸಾವಧಾನ
ವಿಹಿತಿದೆ ಮಹಿಪತಿ ಶ್ರಮಪಡುವ ನಿತ್ಯ ಸಾವಧಾನ ೫

೩೦೫
ಸಾವಧಾನವೆಂದು ಶ್ರುತಿಸಾರುತಿದೆಕೋ
ಭಾವದಿಂದಲಿ ಮನವೆ ನೀ ಎಚ್ಚತ್ತುಕೋ ಧ್ರುವ
ಭವದ ನಿದ್ರಿಗಳೆದು ಸಾವದಾನವಾಗೋ
ನಿವಾಂತ ಕೂಡಲಿಕ್ಯದ ಬಲು ಬೆಳಗೋ
ವಿವೇಕವೆಂಬ ಸ್ಮರಣೆ ಇದೆ ನಿನಗೋ
ಭವಹರ ಗುರುವಿಗೆ ಶರಣಯುಗೋ ೧
ಮುಚ್ಚಿದ ಮಾಯದ ಮುಸಕ್ಹಾರಿಸುವದೆ ಜ್ಞಾನ
ಎಚ್ಚತ್ತಮ್ಯಾಲಿದೆ ಖೂನ ಸುವಸ್ತು ಧ್ಯಾನ
ಅಚ್ಯುತಾನಂತನ ಕಾಂಬುದನುಸಂಧಾನ
ಅಚಲವೆಲ್ಲಕ್ಕಿದೆ ಸುಪಥಸಾಧನ ೨
ಬೆಳಗಿನ ಬೆಳಗಿದೆ ಬಲು ನಿಶ್ಚಲ
ಒಳಗೆ ಹೊರಗೆ ತೋರುವ ಆನಂದ ಕಲ್ಲೋಳ
ಹೊಳೆವ ಮಹಿಪತಿಸ್ವಾಮಿ ಪ್ರಭೆಯು ಬಹಳ
ಬೆಳಗಾಯಿತು ಗುರುದಯ ಪ್ರಬಳ ೩

೫೧೭
ಸಿಕ್ಕಬೇಕು ಗುರುಪಾದ ಸಿಕ್ಕಬೇಕು
ಸಿಕ್ಕಿದ ಬಳಿಕಲಿ ದಕ್ಕಬೇಕು ೧
ಮುಕ್ಕಬೇಕು ಗುರು ನಾ ಮುಕ್ಕಬೇಕು
ಮುಕ್ಕಿದ ಬಳಿಕಲಿ ಅಕ್ಕಬೇಕು ೨
ಉಕ್ಕಬೇಕು ಘನಸ್ಫುರಣ ಉಕ್ಕಬೇಕು
ಉಕ್ಕಲು ಮಹಿಪತಿಗುಕ್ಕಬೇಕು ೩

೭೦೦
ಸಿಕ್ಕಿತೆನಗೊಂದು ಸುವಸ್ತ ಮುಖ್ಯದಂತಸ್ಥ
ಅಕ್ಕಿ ಮನಕ್ಕಾಯಿತು ಸ್ವಸ್ತ ದಕ್ಕಿ ಪ್ರಶಸ್ತ ೧
ಕಟ್ಟ ಇಡುವದಲ್ಲ ಬಿಟ್ಟರೆ ಹೋಗುವದಲ್ಲ
ಮುಟ್ಟಿದರೆ ಬಿಡುವುದಿಲ್ಲ ಗುಟ್ಟು ಕೇಳೆಲ್ಲ ೨
ಮುಚ್ಚುಮರಿಲಿಹುದಲ್ಲ ಬಚ್ಚಿಟ್ಟು ಕೊಂಬಂಥದಲ್ಲ
ನೆಚ್ಚಿದ ಮಹಿಮನೆ ಬಲ್ಲ ಆಶ್ಚರ್ಯವಲ್ಲ ೩
ಭಾನುಕೋಟಿ ತೇಜನಾಗಿ ಘನದಯದಲೊದಗಿ
ತಾನೆ ಸಿಕ್ಕಿತ್ಯೆನಗಾಗಿ ಸಾನುಕೂಲಾಗಿ೪
ಮಿಹಿತದ ಅಗರ ಸ್ವಹಿತ ಸುಖಸಾಗರ
ಮಹಿಪತಿಯ ಮನೋಹರ ಸಹಕಾರ ೫

೧೬೦
ಸಿಕ್ಕಿದೆಲ್ಲೊ ಕೃಷ್ಣ ನೀನು
ಸಿಕ್ಕಿದೆಲ್ಲೊ ನಮ್ಮ ಕೈಯ ಹೊಕ್ಕು ಮುನಿಯ
ಹಕ್ಕಿಯೊಳಾದ್ಯೊ ತೆಕ್ಕಿಯ ಪುಕ್ಕಸಾಟಿಯ ೧
ಬಿಟ್ಟರ ಗೊಲ್ಲತೇರಲ್ಲೊ ಕಟ್ಟಿದ ಸೊಲ್ಲೊ
ಮುಟ್ಟಿ ಬಿಡುವವರಲ್ಲೊ ಘಟ್ಯಾಗಿ ನಿಲ್ಲೊ ೨
ನಾವು ಬಲ್ಲೆವು ನಿನ್ನಾಟ ಎವಿ ಹಾಕುನೋಟಿ
ಹವಣಿಸಿ ಹಿಡಿದೆವೊ ನೀಟ ಭಾವಿಸಿ ಈ ಮಾಟ ೩
|ಬಲ್ಲತನವದೋರಿದೊ ಇಲ್ಲಿ ಮರುಳಾದ್ಯೊ
ನಿಲ್ಲೊ ನಮ್ಮೊಳು ನೀನಾದ್ಯೊ ಎಲ್ಲಿಗೆ ಹೋದ್ಯೊ ೪
ವಶವಾಗಲಿಕ್ಕ ನಮಗ ವಸುಧಿಯೊಳಗ
ಯಶೋದೆ ಹಡೆದಳು ತಾ ಈಗ ಲೇಸಾಗಿ ನಿನಗ ೫
ನಾವು ಹಿಡಿದೇವೆಂಬುವ ಮಾತ ಪೂರ್ವಾರ್ಜಿತ
ನೆವನ ಮಾಡಿತೊ ನವನೀತ ಸವಿದೋರಿ ಹಿತ ೬
ಭಾನುಕೋಟಿ ಸು ಉದಯ ಮುನಿಜನರಾಶ್ರಯ
ನೀನಾಗಿ ಸಿಕ್ಕಿದ್ಯೊ ಕೈಯ ದೀನ ಮಹಿಪತಿಯ ೭

೫೧೮
ಸಿದ್ದ ಇದೆ ನೋಡಿ ಸದ್ಗುರು ಪಾದ ಕೂಡಿ ಧ್ರುವ|
ವಾದ ಮಾಡಬ್ಯಾಡಿ ಸದ್ಬೋಧ ಇದೆ ನೋಡಿ
ಭೇದ ಬುದ್ಧೀ ಡ್ಯಾಡಿ ಹಾದಿ ಇದೆ ಕೂಡಿ ೧
ನಂಬಿ ಗುರುಪಾದ ಇಂಬು ನಿಜವಾದ
ಗುಂಭಗುರುತಾದಾರಂಭದೋರುವದ ೨
ಹಿಡಿದು ನಿಜ ವರ್ಮ ಪಡಿಯಬೇಕು ಧರ್ಮ
ಜಡಿದು ಪರಬ್ರಹ್ಮ ಕಡೆವದು ದುಷ್ಕರ್ಮ ೩
ಗುರುವೆ ನರನೆಂದು ಮರೆದುಬಿಡಿ ಸಂದು
ಅರಿತು ನಿಜವೆಂದು ಬೆರೆತು ಕೂಡಿಬಂದು ೪
ಇದೆ ಸ್ವತ:ಸಿದ್ಧ ಸದ್ಗುರು ಕೃಪೆಯಿಂದ
ಸದ್ಗೈಸುವಾನಂದ ಇದೆ ಮಹಿಪತ್ಯೆಂದ ೫

೩೪೩
ಸಿದ್ಧ ನೋಡಿರೋ ಸಾಕ್ಷಾತ್ಕಾರವ ಧ್ರುವ
ಸಾಧುಕಾ ದಸ್ತ ಪಂಜ ಲೇಣಾ
ಸಾಧುಕೆ ಸಂಗ ಕರನಾ ಸಾಧ್ಯವಾಗದು
ಸದ್ಗುರು ಕರುಣಾನಿ ಧರಿಯೊ ಜಾಣಾ ೧
ಬಾಹ್ಯಾಂತ್ರಿ ಜೋ ಪಾಹೆ ಗೋವಿಂದಾ
ಇಹಪರ ಅವಗಾನಂದಾ ದೇಹಭ್ರಾಂತಿಗೆ
ಸಿಲಕದೆಂದಾ ವಹೀ ಖುದಾಕಾ ಬಂದಾ ೨
ಪಾಕದಿಲ್ಲಾ ಸುಜೀರ ಕರಣಾ
ಯಕೀನ ಸಾಬೀತ ರಾಹಾಣಾ
ಟಾಕ ತ್ಯಾಭವ ಮೀ ತೂ ಪಣಾ ಐಕ್ಯವಿದು ಭೂಷಣಾ ೩
ನಿಸದಿನ ಕರಿಮಕ ಹೊಯಾರಾ
ವಾಸುದೇವ ಸಾಹಕಾರಾ ವಿಶ್ವವ್ಯಾಪಕಾ
ಮ್ಹಣುನಿ ಸ್ಮರಾ ಲೇಸು ಅವನ ಸಂಸಾರಾ ೪
ಮೂವಿಧ ಪರಿಯಲಿ ಹೇಳಿದ ಭಾಷಾ
ಮಹಾಗುರುವಿನ ಉಪದೇಶಾ ಮಹಿಪತಿಗಾಯಿತು
ಅತಿ ಸಂತೋಷಾ ಜೀವಕ ಭವ ಭಯ ನಾಶಾ ೫

೩೩೨
ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು
ಬುದ್ಧಿವಂತರು ಬಲ್ಲರಾಧ್ಯಾತ್ಮ ಸುಖವು ಧ್ರುವ
ಕಾಲಿಲ್ಲದಾಕಳವು ಬಾಲಮುಖದಲಿ ಬಂದು
ಕಾಳರೂಪದ ಹುಲಿಯನೆ ನುಂಗಿತು
ಮೇಲವರಿಯಲಿ ಬಂದು ಜಲದೊಳಗಿನ ಕಪ್ಪೆ
ಮೂಲ ಸರ್ಪದ ಹೆಡೆಯ ನುಂಗಿದದು ನೋಡಿ ೧
ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು
ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು
ನಾಲಿಗಿಲ್ಲದ ಮೊಲವು ನಿಲುಕಿ ಜಪವ ಹಾಕಿ
ಭಲೆ ಶ್ವಾನನ ಗಂಟಲ್ಹಿಡದಿಹುದು ನೋಡಿ೨
ದಿವ್ಯ ಯೋಗದ ಮಾತು ಕಿವಿ ಇಲ್ಲದವಕೇಳಿ
ಕಣ್ಣಿಲ್ಲದವ ಕಂಡು ಬೆರಗಾದನು
ಕೌತುಕವು ಕಂಡು ಮಹಿಪತಿಯು ತನ್ನೊಳು
ತಾನು ತ್ರಾಹಿ ತ್ರಾಹಿಯಿಂದ ಮನದೊಳು ೩

೩೦೭
ಸುಗ್ಗಿ ಮಾಡುವ ಬನ್ನಿ ಸುಜ್ಞಾನದ ಧ್ರುವ
ಬೆಳೆದ ಘನಸುಖ ಬೇಕಾದ್ಹಾಂಗೆ
ತಿಳಿದವರುಂಡುಟ್ಟು ದೇಗುವ್ಹಾಂಗೆ ೧
ಬಯಸುವ ಬಯಕಿಗೆ ಉಂಟಾಗ್ಯದೆ
ಶ್ರೇಯಸುಖ ರಾಶಿರಾಶಿಯು ಒಟ್ಟೈದೆ ೨
ಸಾರುತ ಶ್ರುತಿ ಸವಿಪೊಗಳುತಲ್ಯದೆ
ಬೀರುತ ಜನಮಯ ಸಾರಿ ಚೆಲ್ಯದೆ ೪
ದೀನ ಮಹಿಪತಿಗಾನಂದವ್ಯಾಗದೆಮನದಿರಗಿ ಉನ್ಮನವಾಗ್ಯನೆ ೫

೫೧೯
ಸುಗ್ಗಿ ಸುಕಾಲಾಯಿತು ಜಗದೊಳಗೆ
ಅಗ್ಗಳತ್ಯಾಯಿತು ಗುರುದಯಲೆನಗೆ ಧ್ರುವ|
ಭಕ್ತಿ ಭೂಮಿಯು ಕೈಗೊಟ್ಟಿತು ಪೂರ್ಣ
ತತ್ವೋಪದೇಶ ತಿಳಿಯಿತು ನಿಧಾನ
ಭಕ್ತರಿಗಿದರಿಡುವದು ಅನುದಿನ
ಮುಕ್ತಿಯ ಫಲ ಮುನಿಜನರಾಭಣ ೧
ಮಳೆಗರಿಯಿತು ಮಹಾಗುರುದಯ ಕರುಣ
ಬೆಳೆಬೆಳೆಯಿತು ಮಹಾ ಸುಜ್ಞಾನದ ಸ್ಫುರಣ
ತಿಳಿಯಿತು ಬರವಿದು ಭವಬಂಧನ
ಕಳೆಯಿತು ಕಾಂಕ್ಷೆ ಹುಟ್ಟುವ ಹೊಂದುಣ೨
ಮನೋಹರವಾಯಿತು ಗುರುಕೃಪೆಯಿಂದ
ಜನವನದೊಳು ಕಾಣಿಸಿದ ಗೋವಿಂದ
ಅನುಭವ ಸುಖವಿದು ಬ್ರಹ್ಮಾನಂದ
ಘನಸುಖಪಡೆದ ಮಹಿಪತಿ ಇದರಿಂದ ೩

೩೦೮
ಸುಮ್ಮನಹುದು ನೋಡಿ ಸ್ವಾತ್ಮ ಸುಖದನುಭವ
ಹಮ್ಮಳಿದು ತನ್ನೊಳು ತಾ ತಿಳಿಯದನಕ ಧ್ರುವ
ಏನು ಕೇಳಿದರೇನು ಏನು ಹೇಳಿದರೇನು
ಖೂನದೋರದು ತಾನು ಸ್ವಾನುಭವದ
ನಾನೆಂಬುದೆನಲಿಕ್ಕೆ ಏನು ಮಾಡಿದರೇನು
ಜ್ಞಾನ ಗಮ್ಯವಸ್ತು ತಾನೊಲಿಯದನಕ ೧
ಕನಸು ಮನಸಿನ ಕಲಿಯು ಕಲಿತು ಕೆಟ್ಟಿರಲಿಕ್ಕೆ
ಅನುಮಾನಗಳಿಯದಪಭ್ರಂಶಗಳಿಗೆ
ಅನುದಿನದಲಾಶ್ರಯಿಸಿ ಘನಗುರು ಶ್ರೀಪಾದವನು
ನೆನೆನೆನೆದು ಸುಖವು ನೆಲೆಗೊಳ್ಳದನಕ ೨
ಮಹಾ ಮಹಿಮೆಯುಳ್ಳ ಗುರುದಯ ಪಡಕೊಂಡು
ಮನೋಜಯಸುದಲ್ಲದೆ ಘನಮಯ ಹೊಳೆಯದು
ಮಹಿಪತಿಯ ಸ್ವಾಮಿ ಸದ್ಗುರು ಭಾನುಕೋಟಿ ತೇಜ
ಬಾಹ್ಯಾಂತ್ರ ಪರಿಪೂರ್ಣ ತಾನಾಗದನಕ ೩

೩೦೯
ಸುಮ್ಮನಹುದೆ ಬ್ರಹ್ಮಾನಂದದ ಸುಖವು ಧ್ರುವ
ಮನವಿರಲು ಮಡದಿಯ ಮ್ಯಾಲೆ
ಘನಗುಡುವದೆ ನೆನದಾಗಲಿ
ಖೂನದೋರುದು ಆವಾಗಲಿ ಜನರಂಜನಿ ಶೀಲೆ ೧
ತನುವುತನ್ನಲ್ಲಿರಕ್ಕೆ ಪೂರ್ಣ ಘನಗುರುವಿಗೆ ತಾ ಅರ್ಪಿಸಿತೇನ
ಜನಮಾಡುವುದು ಈ ಸಾಧನ ಅನುಮಾನದ ಖೂನ ೨
ಧನವಿಟ್ಟಿ ಹತಾನೆ ಗೌಪ್ಯದಲಿ ಅನುದಿನ ಹೊರಳ ಗುರು
ಪಾದದಲಿ ನೀನೆ ಗತಿ ಎಂದೆನುತಲಿ ನೆನೆವನು ಬಾಯಲಿ ೩
ಗುರುಗುಣಕೆ ಮೂರ್ಹಾದ್ಹೊಚ್ಚಿರಲಿ ತೋರಬಲ್ಲುದೆ ಸುಜ್ಞಾ
ನದ ಕೀಲಿ ಬರಿಯ ಮಾತಿನ ಭಕ್ತಿಲಿ ಅರವಾಗುವದೆ ನೆಲಿ ೪
ಠಕ್ಕ ತನಕೆ ಸಿಲ್ಕುದೆ ಸದ್ವಸ್ತು ಲೆಕ್ಕವಿಲ್ಲದೆ ಅಮೋಲಿಕ
ಮಾತಿಲ್ಯಾಕೋ ಮಹಿಪತಿ ಭಾವವಿತ್ತು ಅಕ್ಕಿಸಿದೋ ಬೆರ್ತು ೫

೩೧೧
ಸುಮ್ಮನಿರಬೇಕು ಸುಜ್ಞಾನಿ ಜಗದೊಳಗೆ
ಹಂಸೋಹಂ ಭಾವದ ಉಸಿರೊಡಿಯದ್ಹಾಂಗೆ ಧ್ರುವ
ಎಲ್ಲದೋರ್ವದು ಮರೆದು ಎಲ್ಲರೊಳಗೆಹದರಿದು
ಎಲ್ಲರೊಳಗೆಲ್ಲ ತಾನಾಗಬೇಕು
ಎಲ್ಲರೊಳು ತಾನಾಗಿ ಎಲ್ಲ ತನ್ನೊಳಗಾಗಿ
ಬೆಲ್ಲ ಸವಿದ ಮೂಕನಂತಾಗಬೇಕು ೧
ಬಲ್ಲವತವನು ನೀಡಿ ಬಲ್ಲನೆತಾನಾಗಿ
ಬಲ್ಲರಿಯೆನೆಂಬುದನು ಈಡ್ಯಾಡಬೇಕು
ಬಲ್ಲರಿಯದೊಳಗಿದ್ದನೆಲ್ಲ ತಿಳಿಕೊಳ್ಳಬೇಕು
ಸೊಲ್ಲಿಲ್ಹೇಳುವ ಸೊಬಗ ಬೀರದಿರಬೇಕು ೨
ಸೋಹ್ಯ ಸೂತ್ರವ ತಿಳಿದು ಬಾಹ್ಯ ರಂಜನಿ ಮರೆದು
ದೇಹ ವಿದೇಹದಲ್ಲಿ ಬಾಳಬೇಕು
ಮಹಿಗೆ ಮಹಿಪತಿಯಾಗಿ ಸ್ವಹಿತ ಸದ್ಗುರುನಾದ
ಶ್ರೀಹರಿ ಗುರುತನುಂಡು ಸುಖದಲಿ ಸುಖಿಸಬೇಕು ೩

೩೧೦
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ
ಪರಬ್ರಹ್ಮನೊಲು ಕೂಡಿ ಧ್ರುವ
ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ
ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ
ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ
ನಿತ್ಯ ನಿಜಾನಂದ ಸುಪಥವು ಗೂಡಿ ೧
ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ
ನಿತ್ಯ ಸಾರ್ಥಕದ ಸಾಧನವ ಮಾಡಿ
ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ
ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ ೨
ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ
ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ
ಭಾನುಕೋಟಿ ತೇಜ ದೀನದಯಾಳು ತಾಂ
ನೆನೆವರಿಗನುಕೂಲವಾಗುತಿಹ್ಯ ಈಗ ೩

Leave a Reply

Your email address will not be published. Required fields are marked *