Categories
ರಚನೆಗಳು

ಕಾಖಂಡಕಿ ಶ್ರೀ ಮಹಿಪತಿರಾಯರು

೧೦೩
ನಂದಕಂದ ಬಾಲಮುಕುಂದ ನಂದಕಂದ ಧ್ರುವ
ನಂದಕಂದಾ ನಂದ ಘನ ನಿ
ದ್ರ್ವಂದ್ವ ನಿರ್ಗುಣ ನಿಜಸ್ವರೂಪ ೧
ವಿದುರವಂದ್ಯ ವಿರಾಜಿತರೂಪ
ಮದನಮೋಹನ ಮಾಮನೋಹರ ೨
ಮುರಹರ ಮಾಧವ ಕರುಣಾಕರ ಗುರು
ಶ್ರೀವರ ಪೂರ್ಣ ಸದಾ ಸಹಕಾರಿ ೩
ಶರಣರಕ್ಷಕ ಸುಜನರ ಪಾಲಕ
ಸರಸಿಜೋದ್ಭವನುತ ಶ್ರೀ ಹರಿ ೪
ಶ್ರೇಯ ಸುಖದಾಯಕ ಸದೋದಿತ ಸಾಂದ್ರ
ಮಹಿಪತಿ ಸ್ವಾಮಿ ಸದ್ಭನ ಚಿದ್ರೂಪ ೫

೫೬೭
ನಂಬಬಾರದೆ ಮನವೆ ನಂಬಬಾರದೆ
ನಂಬಿದವರ ಕಾವ ದೈವ ಅಂಬುಜಾಕ್ಷನೀತನೆಂದು ಧ್ರುವ
ನಂಬಿದ ಪ್ರಲ್ಹಾದಗ ತಾಂ ಸ್ತಂಭದೊಳು ಮೂಡಿ ಬಂದು
ಹಂಬಲಿಸಿ ದಲ್ಲ್ಯೊದಗಿ ಇಂಬವಾದನೀತನೆಂದು ೧
ನಾಮ ನಂಬಬಾರದೆ ನೀ ಕಾಮಧೇನುವೆಂದು ಪೂರ್ಣ
ನೇಮದಿಂದ ಸಲಹುತಿಹ್ಯ ಸ್ವಾಮಿ ಸರ್ವೋತ್ತಮನೆಂದು ೨
ದೀನ ಮಹಿಪತಿಸ್ವಾಮಿ ಭಾನುಕೋಟಿತೇಜಪೂರ್ಣ
ಮನದಪೇಕ್ಷೆ ಪೂರೈಸುವ ಘನಸುಖದಾಯಕನೆಂದು ೩

೧೦೪
ನಂಬಿ ನೋಡಿರೋ ಅಂಬುಜಾಕ್ಷನ
ಗುಂಭಗುರುತ ಹಂಬಲಿಸದೆ ಇಂಬುದೋರುದು ಧ್ರುವ
ಒಂದು ಮಾಡಿ ಬಂದ ಮ್ಯಾಲ ಎಂದು
ಬಿಡದೆ ವಂದಿಸಿ ನೋಡಿ
ಇಂದಿರೇಶನ ಹೊಂದಿ ನಿಜವು
ಸಂಧಿಸಿದರೆ ಭಿನ್ನವಿಲ್ಲದೆ ನೋಡಿ
ಚೆನ್ನಾಗಿ ಕೂಡಿಕೊಂಬ ಧನ್ಯಗೈಸಿ ಜೀವ
ಪ್ರಾಣ ಪಾವನ ಮಾಡುವ ೧
ಅಂತು ಇಂತು ಎಂತು ಎನದೆ ತಂತುವಿಡಿದು ಕಂತು ಪಿತನ
ಅಂತರಂಗದಿ ಸಂತತವಾಗಿ ಚಿಂತಿಸಿದರೆ ನಿತ್ಯ ಯೋಗಕ್ಷೇಮ
ತಾ ಹೊತ್ತು ನಡೆಸುವ ಹತ್ತಿಲೆ
ತಂದು ತಪ್ಪದೆ ತುತ್ತು ಮಾಡ್ಯುಣಿಸುವ ೨
ಸಣ್ಣ ದೊಡ್ಡದೆನ್ನ ಗುಡದೆ ಕಣ್ಣದೆರಿಸಿ ಚಿನ್ನುಮಯದ
ಬಣ್ಣ ಭಾಸುತ ಪುಣ್ಯಮಹಿಮೆ ಕಾಣಿಸುವದು ವಾಸನೆ ಪೂರಿಸಿದ
ವಾಸುದೇವ ನಿಶ್ಚಯ ಲೇಸಾಗಿ
ಪಾಲಿಸುತಿಹ್ಯ ದಾಸ ಮಹಿಪತಿಯ ೩

೪೫೬
ನಗುರೋರಧಿಕಂ ನಗುರೋರಧಿಕಂ ನಗುರೋರಧಿಕೆಂಬುದೆ ಪಂಥ
ಬಗೆದನುಭವ ಜಗದೊಳು ನೆಲೆಗೊಂಬುದಿದೊಂದೆ ಪಂಥ
ನಿಗಮಗಳಿಗೆ ಸುಗಮಾಗಿ ತೋರುವ
ಜಗದೋದ್ದಾರಕ ಸದ್ಗುರು ಪಥ ೧
ಪತಿತ ಪಾವನ ಬಿರುದನೆ ಖರೆ ಮಾಡುವದಿದೊಂದೆ ಪಥ
ಯತಿ ಮುನಿಜನ ಮನೋಹರ ಮಾಡುವದಿದೊಂದೆ ಪಥ
ಅತಿಶಯಾನಂದನುಪಮವಾಗಿಹ ನಿಜ
ಸತ್ಯ ಸನಾತನ ಗುರುಪಥ ೨
ಅನಾಥನಾಥನಾಗ್ಯನುಭವ ತೋರುವದಿದೊಂದೆ ಪಥ
ಅಣು ರೇಣುಕ ಪರಿಪೂರ್ಣವಾಗಿಹದಿದೊಂದೆ ಪಥ
ದೀನ ಮಹಿಪತಿಗೆ ಸನಾಥ ಮಾಡುವ
ಭಾನುಕೋಟಿ ಪ್ರಕಾಶಿಸುವದೊಂದೆ ಪಥ ೩

೭೬
ನಡಿ ನೋಡುವ ಮನವೆ ಹರಿಯ ಧ್ರುವ
ಬೇಡಿಕೊಂಬುವೆ ಜೀವದ ಧೊರಿಯ
ಕೂಡಿಕೊಂಬುವ ಪ್ರಾಣದ ಸಿರಿಯ ೧
ಇಡಾಪಿಂಗಳ ಮಧ್ಯ ನಡುವ
ಜಾಡೆ ಪಿಡಿದು ಕೂಡಿಕೊಂಬುವ ೨
ದೃಢ ಪಿಡಿದು ಷಡಚಕ್ರ ಸೋಪಾನವೇರಿ
ಗೂಢವಾಗಿ ಹ್ಯ ನಿಜನೋಡುವ ೩
ಬ್ರಹ್ಮಾನಂದ ಸುಖಸಾಮ್ರಾಜ್ಯವಾಗಿಹ್ಯ
ನಿರ್ಮನದಲಿ ಬೆರೆದಾಡುವ ೪
ಸಹಸ್ರದಳದಲಿ ಹ್ಯ ಮಹಿಪತಿಸ್ವಾಮಿಯ
ಸೋಹ್ಯ ತಿಳಿದು ಸುಖದಲಿರುವ ೫

೭೭
ನಡಿರೆ ನಡಿರೆ ನೋಡುವ ಶ್ರೀ ಕೃಷ್ಣನ
ನಡಿರೆ ನಡಿರೆ ನೋಡುವ ಧ್ರುವ
ನಡಿರೆ ನೋಡುವ ಬನ್ನಿ ತುಡುಗ ಶ್ರೀ ಕೃಷ್ಣನ
ಅಡಿಗಳಾಶ್ರೀಯ ಹಿಡುವ ಮಂಡಲದೊಳು೧
ತುಡಗತನದಿ ಬಂದು ಕದಿವ ಬೆಣ್ಣೆಯ ಮೆದ್ದು
ಒಡನೆ ಗೋಪೆರ ಕಾಡಿದ ನೋಡಮ್ಮ೨
ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ
ತಡಿಯದೆ ಧುಮುಕಿದ ಮಡುವಿನೊಳು ೩
ಕ್ರೀಡಿಸಿ ಗೋಪೆರ ಉಡಿಗಿ ಸೆಳೆದುಕೊಂಡು
ಒಡನೆ ಗಿಡನೇರಿದ ನೋಡಮ್ಮ ೪
ಮಾಡದ ಮಾಡಿ ತಾ ಬಿಡದೆ ಬೇಡಿಸಿಕೊಂಡು
ಒಡನೆ ಉಡಿಗಿ ನೀಡಿದ ನೋಡಮ್ಮ ೫
ಬಡವರಿಗಳವಲ್ಲ ಪೊಡವಿಯೊಳಗಿದು
ಆಡಿದಾನಂದದಾಟ ನೋಡಮ್ಮ ೬
ಹಿಡಿಯ ಹೋಗಲು ಮೂಢ ಮಹಿಪತಿಯ ನೋಡಿ
ಒಡಲ ಹೊಕ್ಕು ಕೂಡಿದ ಒಡಿಯನಮ್ಮ ೭

೬೭೦
ನಮಗೊಬ್ಹಾನೆ ತಾ ಜೀವಜೀವದ ಗೆಳೆಯ ಧ್ರುವ
ಸುತ್ತಿ ಸೂಸ್ಯಾಡುತ್ಹಾನೆ ನೆತ್ತಿಯೊಳಗೆ ತುಂಬ್ಯಾನೆ
ತುತ್ತುಮಾಡಿ ಉಣಿಸುತ್ಹಾನೆ ಹತ್ತಿಲೆ ತಾ ಹಾನೆ ೧
ಹೊಟ್ಟೆಲೆನ್ನ ಹಿಡಿದಾನೆ ಘಟ್ಯಾಗಿ ರಕ್ಷಿಸುತಾನೆ
ದೃಷ್ಟಿಸಿ ನೋಡುತ್ಹಾನೆ ಗುಟ್ಟಿನೊಳ್ಹಾನೆ ೨
ತಾನೆ ಸೋತು ಬರುತ್ಹಾನೆ ಎನಗುಳ್ಳ ಸದ್ಗುರು ನಾಥ್ಹಾನೆ
ಕನಗರಸಿದಾಗೊಮ್ಹಾನೆ ಮನದೊಳು ನಿಂದ್ಹಾನೆ ೩
ಮಾಯದ ಸುಖ ಮರಿಸ್ಯಾನೆ ತಾಯಿ ತಂದೆ ತಾನಗ್ಹ್ಯಾನೆ
ಸಾಹ್ಯ ಬಲು ಮಾಡುತ್ಹಾನೆ ಭವಭಯ ಬಿಡಿಸ್ಹ್ಯಾನೆ ೪
ಮನ್ನಿಸಿ ದಯ ಬೀರುತ್ಹಾನೆ ಧನ್ಯ ಪ್ರಾಣಗೈಸುತ್ಹಾನೆ
ಚಿಣ್ಣ ಮಹಿಪತಿಯ ಗುರು ತಾನೆ ಕಣ್ಣಿನೊಳ್ಹಾನೆ ೫

೪೫೮
ನಮೋ ನಮೋ ಎಂದು ನಾ ಮಾಡುವೆ ಘನ
ಮಹಿಮನಿಗೆ ನಮಸ್ಕಾರ
ಬ್ರಹ್ಮಾನಂದದಿ ಸಮರಸವಾದ ಸಪ್ರೇಮಿಗೆ ನಮಸ್ಕಾರ
ಕಾಮಕ್ರೋಧಗಳೆಂದು ನಿಷ್ಕಾಮದಿ ನೇಮದಲಿಹಗೆ ನಮಸ್ಕಾರ
ಶಮೆದಮೆದಲಿ ಸಮದೃಷ್ಟಿಗೂಡಿಹ ಸ್ವಾಮಿ ಸೇವಿಗೆ ನಮಸ್ಕಾರ ೧
ಆಶಿ ತಿಳಿದು ನಿರಾಶೆಯೊಳಿಹ ಉದಾಸಿಗೆ ನಮಸ್ಕಾರ
ಮೋಸ ಹೋಗದೆ ವ್ಯಸನ ವಿಷಯಕೆ
ಸುಮಿಲೊಂತಕಗೆ ನಮಸ್ಕಾರ
ಹುಸಿ ನುಡಿ ಮಿಸುಕದೆ ಹಸನಾಗಿಹ ಸುಭಾಸಿಗೆ ನಮಸ್ಕಾರ
ಸೂಸಿ ತುಳುಕದೆ ಕಾಸಿನಾಶೆಗೆ ಹರಿದಾಸರಿಗೆ ನಮಸ್ಕಾರ ೨
ಹೆಚ್ಚು ಕುಂದನೆ ರಚ್ಚಿಗೆ ತಾರದ ಸ್ವಚ್ಛಲಿಹಗೆ ನಮಸ್ಕಾರ
ಕಚ್ಚಿ ಕೈ ಬಾಯಿಲಿ ಹುಚ್ಚಾಗದ ನಿಶ್ಚಲೇಂದ್ರಿಗೆ ನಮಸ್ಕಾರ
ಮತ್ಸರಳಿದು ನಿರ್ಮತ್ಸರೊಳಿಹ ಸುನಿಶ್ಚಿತನಿಗೆ ನಮಸ್ಕಾರ
ಮೆಚ್ಚಿ ಘನದೊಳು ಇಚ್ಛೆಲಿಹ ಮಹಾ ಎಚ್ಚರಿಗೆ ನಮಸ್ಕಾರ ೩
ನಾ ನೀನೆಂಬುವ ನುಡಿ ನೀಗಿನ ಅನುಭವಿನಗೆ ನಮಸ್ಕಾರ
ಖೂನ ತಿಳಿದಿಹ ಸ್ವಾನುಭವದ ಸುಜ್ಞಾನಿಗೆ ನಮಸ್ಕಾರ
ತಾನೆ ತಾನಾಗಿಹ ಘನದೊಳು ನಿರಾಶನಿಗೆ ನಮಸ್ಕಾರ
ಮೌನದಲಿ ನಿಜಸ್ಥಾನದಲಿರುವ ಸುದಾನಿಗೆ ನಮಸ್ಕಾರ ೪
ಗರ್ವವಳಿದು ಸರ್ವವೇ ನಿಜ ತಿಳಿದ ನಿಗರ್ವಗೆ ನಮಸ್ಕಾರ
ತೋರ್ವ ಕರದೊಳು ಅರ್ವನುಭವನಿರ್ವಾಣಿಗೆ ನಮಸ್ಕಾರ
ನಿರ್ವಾಹದ ಸುಪರ್ವಾಣಿಯ ಫಲ ಇರ್ವನಿಗೆ ನಮಸ್ಕಾರ
ಸರ್ವಸುಖ ಸುರಿಸಿದ ಮಹಿಪತಿ ಶ್ರೀಗುರುವಿಗೆ ನಮಸ್ಕಾರ ೫


ನಮೋ ನಮೋ ನಾ ಮಾಡುವೆ
ಬ್ರಹ್ಮ ಸುಖದಲಿ ನಲಿದಾಡುವೆ ಧ್ರುವ
ನಮೋ ಶ್ರೀ ಗಣನಾಯಕನಿಗೆ ನಮೋ ನಮೋ ಶ್ರೀ ಸರಸ್ವತಿಗೆ
ನಮೋ ಶ್ರೀ ಮಾತಾಪಿತರಿಗೆ ನಮೋ ನಮೋ ಸ್ವಹಿತರಿಗೆ ನಮೋ ನಮೋ ೧
ನಮೋ ಶ್ರೀ ಗುರುವಿಗೆ ನಮೋ ನಮೋ ನಮೋ ಸದ್ಗುರುವಿಗೆ ನಮೋ
ದೇವಾಧಿದೇವಗೆ ನಮೋ ನಮೋ ನಮೋ ಶ್ರೀ ಸ್ವಾಮಿಗೆ ನಮೋ ನಮೋ ೨
ನಮೋ ಋಷಿಕುಲದೈವಕೆ ನಮೋ ನಮೋಸ್ತು ಇಷ್ಟದೈವಕೆ ನಮೋ
ಸುವೇದ ಶಾಸ್ತ್ರಕೆ ನಮೋ ನಮೋ ಪುರಾಣ ಮಹಿಮಗೆ ನಮೋ ನಮೋ ೩
ನಮೋ ಗಾಯತ್ರಿ ದೇವತೆಗೆ ನಮೋ ನಮೋ ಸೂತ್ರಾಂತ್ರಿಗೆ ನಮೋ
ನಮೋ ಸುಸಂಪ್ರದಾಯಕೆ ನಮೋ ನಮೋ ಸುಪಥಕೆ ನಮೋ ನಮೋ ೪
ನಮೋ ಬ್ರಹ್ಮ ವಿಷ್ಣು ರುದ್ರಗೆ ನಮೋ ನಮೋ ಸುಸರ್ವ ದೈವಕೆ ನಮೋ
ನಮೋ ದಶಾವತಾರಕೆ ನಮೋ ನಮೋ ಅನೇಕ ರೂಪಕೆ ನಮೋ ನಮೋ ೫
ನಮೋ ಶ್ರೀ ಮಹಾಲಕ್ಷ್ಮಿಗೆ ನಮೋ ನಮೋ ಸುಸರ್ವ ಶಕ್ತಿಗೆ ನಮೋ
ನಮೋ ದೇವತೆಗಳಿಗೆ ನಮೋ ನಮೋ ಋಷಿ ಮುನಿಗಳಿಗೆ ನಮೋ ನಮೋ ೬
ನಮೋ ಶುಕಾದಿ ಮುನಿಗಳಿಗೆ ನಮೋ ನಮೋ ಸುಭಾಗವತರಿಗೆ ನಮೋ
ನಮೋ ಸಿದ್ಧ ಶರಣರಿಗೆ ನಮೋ ನಮೋ ಸದಭಕ್ತರಿಗೆ ನಮೋ ನಮೋ ೭
ನಮೋ ಸುಜ್ಞಾನಿಗಳಿಗೆ ನಮೋ ನಮೋ ಸುಮಹಿಮರಿಗೆ ನಮೋ
ನಮೋ ಸತ್ಕವಿಗಳಿಗೆ ನಮೋ ನಮೋ ಸುತೀರ್ಥಕ್ಷೇತ್ರಕ್ಕೆ ನಮೋ ನಮೋ ೮
ನಮೋ ಸಕಲ ಆಶ್ರಮಕೆ ನಮೋ ನಮೋ ಸುಪುಣ್ಯಶ್ಲೋಕರಿಗೆ ನಮೋ
ನಮೋ ಶ್ರೀ ಹರಿದಾಸರಿಗೆ ನಮೋ ಸಜ್ಜನರಿಗೆ ನಮೋ ನಮೋ ೯
ನಮೋ ಬ್ರಹ್ಮಾಂಡ ನಾಯಕರಿಗೆ ನಮೋ ನಮೋ ತ್ರೈಲೋಕ್ಯನಾಥಗೆ ನಮೋ
ನಮೋ ವಿಶ್ವಬಾಲಕಗೆ ನಮೋ ನಮೋ ಸರ್ವೋತ್ಮಗೆ ನಮೋ ನಮೋ ೧೦
ನಮೋ ತಾರಕ ದಿವ್ಯಮೂರ್ತಿಗೆ ನಮೋ ನಮೋ ಸುಕರುಣಿಗೆ ನಮೋ
ನಮೋ ಮಹಿಪತಿಗೆ ವಸ್ತುಗತಿಗೆ ನಮೋ ನಮೋ ಭಕ್ತವತ್ಸಲಗೆ ನಮೋ ೧೧

೭೮
ನಮ್ಮ ಕುಲದೈವೀತ ಬೊಮ್ಮನ ಪಡೆದಾತ
ಸಾಮಗಾಯನ ಪ್ರೀತ ಸ್ವಾಮಿನೀತ ಧ್ರುವ
ವೇದ ಉದ್ಧರನೀತ ಮೇದಿನಿಯ ಪೊತ್ತಾತ
ಸಾಧುಜನ ವಂದಿತ ಸದ್ವಸ್ತುನೀತ ೧
ಧಾರುಣಿಯ ಗೆದ್ದಾತ ತರಳಗೊಲಿದಹನೀತ
ವರಮುನಿಗಳ ದಾತ ಕರುಣಿ ಈತ ೨
ಮೂರು ಪಾದಳಿದಾತ ಪರಶುಧರನಹುದೀತ
ಸುರಜನರ ಪೂಜಿತ ಸರ್ವೋತ್ಮನೀತ ೩
ಪವನಸುತಗೊಲಿದಾತ ಮಾವನ ಮಡುಹಿದಾತ
ಭುವನತ್ರಯಲೀತ ದೇವನೀತ ೪
ಬೆತ್ತಲೆಯು ಸುಳಿದಾತ ಉತ್ತಮ ಹಯವನೇರಿದಾತ
ಭಕ್ತರಿಗೆ ಹೊರೆವಾತ ಶಕ್ತನೀತ ೫
ಅಣುರೇಣುದೊಳೀತ ಅನುಕೂಲವಾದಾತ
ಆನಂದೋ ಬ್ರಹ್ಮ ಅನಂತನೀತ ೬
ಮಹಾಮಹಿಮನಹುದೀತ ಬಾಹ್ಯಾಂತ್ರಪೂರಿತ
ಮಹಿಪತಿಯ ಸಾಕ್ಷಾತ ವಸ್ತುನೀತ ೭

೭೯
ನಮ್ಮ ದೈವ ದೇವನೀತನು ಧ್ರುವ
ನಮ್ಮ ದೈವ ದೇವನೀತ ನಮ್ಮ ಜೀವ ಪ್ರಾಣದಾತ
ನಮ್ಮ ಕಾವ ಕರುಣ ಶ್ರೀದೇವನೀತ ನೋಡಿರೊ ೧
ನಿರ್ವಿಕಲ್ಪ ನಿರ್ಗುಣೀತ ನಿರ್ವಿಕಾರ ನಿಷ್ಟ್ರತೀತ
ನಿರ್ವಿಶೇಷನಾದ ನಿರಾಳನೀತ ನೋಡಿರೊ ೨
ನಿತ್ಯ ಏಕಶ್ಯಾಂತನೀತ ನಿತ್ಯನಿರಂಜನೀತ
ನಿತ್ಯನಿಜ ಮಹಿಪತಿಯ ವಸ್ತುಗತಿಯ ನೋಡಿರೊ ೩

೨೪೯
ನಮ್ಮ ನಿಮ್ಮಗೊಂದಾದ ಮಾತು
ಸುಮ್ಮನವೆ ಕೇಳೊ ನಿವಾಂತು
ಬ್ರಹ್ಮಾದಿಗಳು ಹೋದರು ಸೋತು
ಒಮ್ಮನಾದರೆ ತಿಳಿವದಂತು ೧
ಬಿಟ್ಟು ಕೊಡೊ ನಿನ್ನ ಬಾಜಿ
ಗಂಟುಹಾಕಿಹೆ ಬಲು ಗಜಿಬಿಜಿ
ಮುಟ್ಟಲಾರದು ಮೊನೆ ಸಣ್ಣ ಸೂಜಿ
ಗುಟ್ಟು ಹೇಳೊ ಸದ್ಗುರು ದೇವಾಜಿ ೨
ನಮ್ಮ ನಿಮ್ಮಳಗ್ಯಾಕೆ ತೊಡಕು
ಇಮ್ಮನಾದರೆ ಹುಟ್ಟಿತು ಒಡಕು
ಹಮ್ಮು ಎನ್ನೊಳಗಿಲ್ಲ ನೀ ಹುಡುಕು
ಸುಮ್ಮನ್ಯಾಕಿದು ಶ್ರಮೆಯ ತಿಡುಕು ೩
ಗುರು ಹೇಳಿದ ಮಾತಿಗೆ ಮುಟ್ಟಿ
ತೋರಿ ಕೊಡಬೇಕು ನೀನೆ ಗಟ್ಟಿ
ಅರಿತ ಮ್ಯಾಲೆ ಮಿಸುಕನು ತುಟ್ಟಿ
ಖರೆ ಮಾಡಿಕೊ ಜಗಜಟ್ಟಿ ೪
ಒಂದು ಮಾತು ಎಂಬುದು ಬಲ್ಲಿ
ಸಂದ ಸಂದೇಹ್ಯಾರಿಸೊ ನೀ ಇಲ್ಲಿ
ಕಂದ ಮಹಿಪತಿ ಮನದಲ್ಲಿ
ಚಂದವಾಗಿರೊ ನೀನೆವೆ ಅಲ್ಲಿ ೫

೮೦
ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳನ ಧ್ರುವ
ಅಪ್ಪನ ಕಂಡೆನಗೆ ತಾ ಅಪಾರ ಸಂತೋಷವಾಯಿತು
ಅಪ್ಪಿಕೊಂಬ್ಹಾಗೆ ಎನಗೆ ಅರ್ಪಿಸಿ ಪ್ರಾಣವ ೧
ತುಂಬಿ ತುಳುಕಿತಾನಂದ ಗುಂಭಗುರುತ ಕಂಡಿನ್ನು
ಕುಂಭಿನಿಯೊಳಗೆ ಪೂರ್ಣ ಅಂಬುಜಾಕ್ಷನ ೨
ಗುಪ್ತಲಿದ್ದ ಧನ ತಾ ಪ್ರಾಪ್ತ ವ್ಯಾನಂತವಾಯಿತು
ತಪ್ಪದೆ ಮಹಿಪತಿಗೆ ತೃಪ್ತಿ ಹೊಂದಿತು ೩

೮೧
ನಮ್ಮಮ್ಮನ ಕಂಡೆ ಬೊಮ್ಮನ ಪಡೆದಿಹಳ ಧ್ರುವ
ಅಮ್ಮನ ಕಂಡೆನಗೆ ಸುಅಮೃತ ಪಾನವಾಯಿತು
ಸಂಭ್ರಮದಿಂದಲೆನಗೆ ಬ್ರಹ್ಮಾಂಡದೊಳು ೧
ಅಹ್ಲಾದವಾಯಿತಿಂದು ಫುಲ್ಲಲೋಚನೆಯ ಕಂಡು
ಉಲ್ಲಾಸ ತುಂಬಿತೆನಗೆ ಮೂಲೋಕದೊಳು ೨
ಮಾತೃ ಪಿತೃವೆಂಬುದು ಸೂತ್ರಧಾರಿ ತಾನೊಬ್ಬಳೆ
ಅಂತ್ರ ಬಾಹ್ಯದಲೆನಗೆ ಪುತ್ರ ಮಹಿಪತಿಗೆ ೩

೪೫೭
ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ
ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ
ಸುಮ್ಮನಿರುವೆ ಕಂಡು ಸಂತತ ಚರಣ
ಒಮ್ಮನದಿಂದೆ ತೃಪ್ತ್ಯಾಯಿತು ಜೀವನ ೧
ಸದ್ಭೋಧದನ್ನ ನೀಡಲು ಓಡಿಬಂದೆ
ಸದ್ಗುರುವೆ ಒಡೆಯ ನೀನಹುದೆಂದೆ
ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ
ಬುದ್ಧಿವಂತರು ಬೆನ್ನಟ್ಟಿ ಹೋಗೆ ಹಿಂದೆ ೨
ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು
ಕೇಳಿಕೊಂಡಿಹೆ ಗುಹ್ಯ ವಾಕ್ಯದ ಹೆಜ್ಜೆ ಮೆಟ್ಟು
ಸುಳವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು
ತಿಳದ್ಹಾಕಿಹನಾ ನಿಮ್ಮ ಪಾದರಕ್ಷಕೆ ಗಂಟು ೩
ಬಾಗಿಲಕಾಯಿಕೊಂಡು ಬಿದ್ದಿಹ್ಯ ನಿಮ್ಮ ಶ್ವಾನ
ಹಗಲಿರುಳು ನಾ ನಿಮ್ಮ ಬೊಗುಳವೆ ನಿಜಗುಣ
ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ
ಸುಗುಮದಿಂದ ದೊರೆಯಿತು ನಿಜ ಸ್ಥಾನ ೪
ಹಿಡಿದು ಕಚ್ಚಿಹೆ ನಿಮ್ಮ ಪಾದರಕ್ಷ ಸಂಪೂರ್ಣ
ಬಿಡೆ ಎಂದೆಂದು ನಾ ಹೋದರೆ ಜೀವ ಪ್ರಾಣ
ಪಿಡಿದು ಮಾಡುವೆ ನಾ ಜತನ
ಮೂಢ ಮಹಿಪತಿಗಿದೆ ಸುಖಸಾಧನ ೫

೫೬೦
ನಾಚಿಕಿಲ್ಲೆ ಮನವೆ ಲೋಚಿ ಬಿಟ್ಟ ದನವೆ
ಊಚ ನೀಚಕಾಗಿ ಹೊಡೆದಾಡುದಿನ್ನು ಗುಣವೆ ೧
ಹೇಸಿಕಿಲ್ಲೆಂಬುದು ವಿಷಯದೊಳು ನಿಂದು
ವ್ಯಸನಕಾಗಿ ಫಸಿಗೆ ಬೀಳುವದೆ ನಿನ್ನ ಕುಂದು ೨
ಜನಿಸಿ ಯೋನಿಯಮುಖ ಏನು ಕಂಡ್ಯೊ ಸುಖ
ಶ್ವಾನಸೂಕರದ ಜನ್ಮ ತಾಳಿದಿ ಅನೇಕ ೩
ಶುದ್ಧಿ ಇಲ್ಲ ನಿನಗೆ ಬಿಟ್ಟು ಭವ ಬವಣಿಗೆ
ಬುದ್ಧಿ ಇದೆ ಶರಣುಹೋಗು ಸದ್ಗುರುವಿಗೆ ೪
ಪಿಡಿದು ಗುರುಪಾದ ಪಡಿಯೊ ನಿಜಬೋಧ
ಮೂಢ ಮಹಿಪತಿ ನಿನಗಿದೆ ಸುಪ್ರಸಾದ ೫

೪೫೯
ನಾದದ ಮನಿಯು ತಿಳಿಯದೆ ಬಾರದು ಸಾಧಿಸಿ ಸದ್ಗತಿ ಸುಖ
ಭೇದಿಸಿ ತಿಳಿದರೆ ಬೋಧದಿ ಮನವು ಎದುರಿಡುವದು ಧ್ರುವ
ಅನುದಿನ ಸಾಧಿಸಿಕೊಳ್ಳದೆ ತಿಳಿಯದು ತನುವಿನೊಳಿಹ ಪ್ರಣಮವು
ಮುನಿಜನಗಳಿಗಿದೆ ಸಾಧನ ಮುಖ್ಯವು ಸ್ವಾನಂದದ ಸುಖಧನವು
ಏನ ಬಲ್ಲವು ಖೂನದ ಮಾತು ಹೀನ ಮರುಳ ಜನವು
ತಾನೆ ತಾನಾಗಿಹುದು ಓಮಿತ್ಯೇಕಾಕ್ಷರದ ಘನವು ೧
ಧಿಮಿ ಧಿಮಿಗುಡುತಿಹುದು ತನ್ನೊಳು ಬಲು ತಾಳ ಭೇರಿ ಮೃದಂಗ
ಬ್ರಹ್ಮಾನಂದದ ಸುಖದೋರುವದು ಮೇದಿನಿಯೊಳು ಸತ್ಸಂಗ
ಒಮ್ಮನನಾದರೆ ಸಾಧಿಸಿಬಹುದು ಸುಮ್ಮನೆ ಪ್ರಾಣಲಿಂಗ
ಘಮ ಘಮಗುಡುತಿಹುದು ಘನ ಮಹಿಮೆಯು ಕೇಳುವದಂತರಂಗ ೨
ಸಾಧಿಸಿ ಕೇಳಿದ ಮಹಿಪತಿ ಅನುದಿನ ತನ್ನೊಳು ಧಿಮ ಧಿಮಾಟ
ಹಾದಿ ತೋರಿಕೊಟ್ಟಿತು ಅಧ್ಯಾತ್ಮದ ಸದ್ಗುರುವಿನ ದಯನೋಟ
ನಾದದ ಮನೆಯು ಭೇದಿಸಿದವರಿಗೆ ಇದು ಬಲು ಸುಪಥ ನೀಟ
ಸಾಧಕರಿಗೆ ತಾ ಸಾಕ್ಷಾತ್ಕಾರವು ಇದೆ ತೋರುವದು ಮಣಿಮುಕುಟ ೩

೮೨
ನಾರಾಯಣ ನರಹರಿ ನಾರದಪ್ರಿಯ
ನರಸುರಮುನಿ ವರದಾಯಕ ಧ್ರುವ
ವೇದ ಕದ್ದೊಯ್ದವನ ಮರ್ದಿಸಲಿಕ್ಕೆ
ಸಾಧಿಸಿ ಬಂದ್ಯೊ ಮಚ್ಛರೂಪನೆ
ಮಾಧವ ನೀ ಬಂದು ಕೂರ್ಮನಾಗಿ ನಿಂದು
ಮೇದಿನಿಯ ಭಾರವ ತಾಳಿದೆ ೧
ಧರೆಯ ಕದ್ದಸುರನ ಕೋರದಾಡಿಂದ ಸೀಳಿ
ವರಾಹರೂಪಬಂದು ದೋರಿದೆ
ಹಿರಣ್ಯಕಶ್ಯಪ ವಿದಾರಣ ಮಾಡಿ ನೀ
ತರಳ ಪ್ರಲ್ಹಾದನ ರಕ್ಷಿಸಿದೆ ೨
ಬ್ರಾಹ್ಮಣನಾಗಿ ಬಂದು ಬಲಿಯ ಮನೆಯ ಮುಂದೆ
ವಾಮನ ರೂಪವದೋರಿದೆ
ನೇಮದಿಂದಲಿ ಪಿತನಾಜ್ಞೆಯ ನಡೆಸಲು
ಸ್ವಾಮಿ ಭಾರ್ಗವರೂಪ ತಾಳಿದೆ ೩
ದೇವತೆಗಳ ಸ್ಥಾಪಿಸಲಿಕ್ಕೆ ಬಂದು ದೈತ್ಯ
ರಾವಣನ ಕೊಂದ್ಯೊ ಶ್ರೀರಾಮ ನೀ
ದೇವಕಿ ಉದರದಲಿ ಜನಿಸಿ ಬಂದು ಕೃಷ್ಣ
ಗೋವಳರನ್ನು ಪ್ರತಿಪಾಲಿಸಿದೆ ೪
ಪತಿವ್ರತೆಗಳ ವ್ರತ ಅಳಿಯಲಿಕ್ಕಾಗಿ ಬಂದು
ಸುಳಹುದೋರಿದೂ ಬೌದ್ದ್ಯರೂಪನೆ
ಹತ್ತಿ ಕುದರಿಯ ಒತ್ತಿ ಆಳಲಿಕ್ಕೆ
ಮತ್ತೆ ಬಂದೆಯ ಕಲ್ಕಿರೂಪನೆ ೫
ಹತ್ತವತಾರ ಧರಿಸಿ ಬಂದು ಕ್ಷಿತಿಯೊಳ
ಪತಿತರ ಪಾವನಗೈಸಿದೆ
ಭಕ್ತಜನರುದ್ದರಿಸಲಿಕ್ಕೆ ಬಂದು
ಶಕ್ತಿಪರಾಕ್ರಮದೋರಿದೆ ೬
ಸಾವಿರ ನಾಮದೊಡೆಯ ಸ್ವಾಮಿ ನೀ ಬಂದು
ಭಾವಿಸುವರೊಡನೆ ಕೂಡಿದೆ
ಭವಭಂಧನ ತಾರಿಸಿ ಮಹಿಪತಿಯ ಪ್ರಾಣ
ಪಾವನ ನೀ ಮಾಡಿದೆ ೭

೮೩
ನಿಗಮ ಗೋಚರಾನಂತ ಮಹಿಮ ಶ್ರೀದೇವ
ಸಗುಣ ನಿರ್ಗುಣನಾಗಿ ತೋರುವ
ಸುಗಮಲಿಹ್ಯ ಸುಖದಾಯಕ ಧ್ರುವ
ಅಗಣಿತ ಗುಣಗಮ್ಯನುಪಮ ಶ್ರೀನಾಥ
ನಿಗಮ ತಂದು ನೀ ಪ್ರಕಟದೋರಿದೆ ನಗವು ಬೆನ್ನಿಲಿ ತಾಳಿದೆ
ಮಗುಟ ಮಣಿ ಮುಕುಂದ ಮಾಧವ
ಶ್ರೀ ಕಾಂತ ಜಗವನುಳಹಿದೆ
ನೆಗಹಿದಾಡಿಲೆ ಭಗತಗೊಲಿದು ನೀ ಕಾಯಿದೆ ೧
ಹರಿ ಸರ್ವೋತ್ತಮ ಪರಮಪುರಷ ಶ್ರೀ ವೇಷ
ಧರಿ ಮೂರಡಿ ಮಾಡಿದೆ ನೀ ಪರಶುಧರನಾಗ್ಯಾಡಿದೆ
ಪರಿಪರ್ಯಾಡುವಾ ನಂದಸ್ವರೂಪ ಶ್ರೀಧರ
ಶರಣ ರಕ್ಷಕನಾಗಿ ನೇಮದಿ ತುರುಗಳನ ನೀ ಕಾಯಿದೆ ೨
ಕರುಣಸಾಗರ ಸಾಮಜ ಪ್ರಿಯ ಶ್ರೀನಿಧೆ
ಬರಿಯ ಬತ್ತಲೆಯಾಗಿ ಸುಳಿದು ನೀ ಏರಿ
ಹಯವನು ತೋರುವೆ
ಸರಸಿಜೋಧ್ಬವನುತ ಸಿರಿಲೋಲ ಎನ್ನಯ
ತರಳ ಮಹಿಪತಿ ಹೊರಿಯೊ ಅನುದಿನ
ಸೂರ್ಯಕೋಟಿ ಪ್ರಕಾಶನೆ ೩

೮೪
ನಿಗಮನುಳುಹಿಸಿ ನಗನೆಗದಿಹಗೆ
ಜಗದೋದ್ದಾರ ಸುಭಗತ ಪ್ರಿಯಗೆ
ಸುಗಮ ಧರಿ ಮೂರಡಿಯ ಮಾಡಿ ಸುಗೊಡಲ ಪಿಡಿದಿಹಗೆ
ಬಗೆದು ಜಲಿಧಿಲಿ ಸೇತು ಗಟ್ಟಿದ
ಖಗವಾಹನ ಯದುಕುಲ ಲಲಾಮಗೆ
ಜಗಮೋಹಿಸುವ ಬೌದ್ಯಕಲ್ಕಿಗೆ ಶರಣು ಸುಶರಣು ೧
ಸಿರಿಯನಾಳುವ ದೊರಿಯೆ ನಿನ್ನ
ಮರೆಯ ಹೊಕ್ಕಿಹ ಚರಣಕಮಲ
ಸರಿಯ ಬಂದ್ಹಾಂಗೆನ್ನ ಹೊರವದು ನಿನ್ನ ದಯ ಘನವು
ಬಿರುದು ನಿನ್ನದು ಸಾರುತಿಹುದು
ಕರಿಯ ವರದಾನಂದ ಮೂರುತಿ
ಸುರಿಸಿ ಕರುಣಾಮೃತವುಗರೆವುದು ತರಳ ಮಹಿಪತಿಗೆ ೨
ಮನದ ಮಂಗಳ ಮೂರ್ತಿ ಸದ್ಗುರು
ನೆನೆವರನುದಿನ ಸಾರ್ಥ ಸದ್ಗುರು
ಜನವನದೊಳನುಕೂಲ ಸದ್ಗುರು ತಾನು ತಾಂ ಎನಗೆ
ಅನುಭವಾಮೃತ ಸಾರ ನೀಡುತ
ತನುಮನದೊಳನುವಾಗಿ ಸಲಹುವ
ದೀನಮಹಿಪತಿ ಸ್ವಾಮಿ ಭಾನುಕೋಟಿ ತೇಜನಿಗೆ ೩
ಶರಣಜನಾರಾಭರಣವಾಗಿಹ
ಕರುಣಸಾಗರ ಮೂರ್ತಿ ಸದ್ಗುರು
ತರಣೋಪಾಯದ ಸಾರಸುಖವಿರುವ ನಿಜದಾತ
ಪರಮಪಾವನ ಗೈಸುತಿಹ
ವರ ಶಿರೋಮಣಿ ಭಕ್ತವತ್ಸಲ
ಚರಣ ಸ್ಮರಣಿಲೆ ಪೊರೆವದನುದಿನ ತರಳ ಮಹಿಪತಿಗೆ ೪
ನೋಡದೆನ್ನವಗುಣದ ದೋಷವ
ಮಾಡುವದು ಸದ್ಗುರು ದಯ ಘನ
ನೀಡುವುದು ನಿಜ ಸಾರಸುಖವನು ಕರುಣದೊಲವಿಂದ
ಬೇಡುವÀದು ನಿನ್ನಲ್ಲಿ ಪೂರಣ
ಪ್ರೌಢ ಘನಗುರುಸಾರ್ವಭೌಮನೆ
ಮೂಢ ಮಹಿಪತಿ ರಕ್ಷಿಸನುದಿನ ಸರ್ವಕಾಲದಲಿ ೫
ಸ್ವಾಮಿ ಸದ್ಗುರು ಸಾರ್ವಭೌಮನೆ
ಕಾಮ ಪೂರಿತ ಕಂಜನಾಭನೆ
ಸಾಮ ಗಾಯನ ಪ್ರಿಯ ಸಲವ್ಹೆನ್ನಯ ಶ್ರೀ ನಿಧಿಯೆ
ಮಾಮನೋಹರ ಮನ್ನಿಸೆನ್ನ ನೀ
ನೇಮದಿಂದಲಿ ಹೊರೆವದನುದಿನ
ಕಾಮಧೇನಾಗಿಹ ಕರುಣದಿ ದೀನಮಹಿಪತಿಗೆ ೬
ಮಂದಮತಿಯ ನೀ ಕುಂದ ನೋಡದೆ
ಬಂದು ಸಲಹೆನ್ನಯ್ಯ ಪೂರ್ಣನೆ
ಇಂದಿರಾವಲ್ಲಭನೆ ತಂದಿ ತಾಯಿ ನೀ ಎನಗೆ
ಬಂಧು ಬಳಗೆಂದೆಂದು ನಿನ್ನನೆ
ಹೊಂದಿ ಕೊಂಡಾಡುವ ಮೂಢ ನಾ
ಬಂದ ಜನ್ಮವು ಚಂದಮಾಡು ನೀ ಕಂದ ಮಹಿಪತಿಗೆ ೭
ದೀನಬಂದು ದಯಾಬ್ಧಿ ಸದ್ಗುರು
ಭಾನುಕೋಟಿ ತೇಜಪೂರ್ಣನೆ
ನ್ಯೂನ ನೋಡದೆ ಪಾಲಿಸೆನ್ನ ನೀ ಘನಕರುಣದಲಿ
ನೀನೆ ತಾಯಿತಂದೆಗೆ
ನೀನೆ ಬಂಧುಬಳಗ ಪೂರಣ
ನೀನೆ ನೀನಾಗ್ಹೊರೆವದನುದಿನ ದೀನಮಹಿಪತಿಗೆ ೮

೪೬೦
ನಿಜ ಗುಹ್ಯದ ಮಾತು ಸುಜನರಿಗಲ್ಲದೆ ತಿಳಿಯದು ಧ್ರುವ
ಕಣ್ಣಿಗೆ ಕಣ್ಹೇಳುವ ಮಾತು
ಪುಣ್ಯವಂತರಿಗಿದೆ ಹೊಳೆದೀತು
ಇನ್ನೊಬ್ಬರಿಗೇನು ತಿಳಿದೀತು ಚಿನ್ಮಯದ ವಸ್ತು ೧
ನೀತಿಗೆ ನಿಜವಾಗಿಹ್ಯ ಮುಗುಟ
ಮಾತಿಗೆ ಮುಟ್ಟದವನೆ ಬಲು ನಿಗಟ
ಮತಿಹೀನರಿಗಿದೇ ಒಗಟ ಯತಿಜನರಿಗೆ ಪ್ರಗಟ ೨
ಸೋಹ್ಯ ಸೊನ್ನೆಯ ಮಾತನೆ ಕೇಳಿಕೊ
ಗುಹ್ಯ ಹೇಳುವ ಗುರು ಬಳಕೊ
ಮಹಿಪತಿ ನಿನ್ನೊಳು ನೀ ತಿಳಕೊ ಸಿದ್ಧದ ಬಲು ಬೆಳಕೊ ೩

೨೫೦
ನಿನ್ನ ನೀ ತಿಳಿದು ನೋಡೊ ಪ್ರಾಣಿ ಧ್ರುವ
ನಿನ್ನ ನೀ ತಿಳಿಯೊ ನೀ
ಭಿನ್ನಬೇದವಳಿದು
ಚೆನ್ನಾಗ್ಯನುಭವದಲಿ ಉನ್ಮನವಾಗಿ ೧
ನಾನಾರು ಎಂದು ನೀ
ಖೂನ ತಿಳಿದು ನೋಡೊ
ಘನ ಗುರು ಕೃಪೆಯಿಂದಲಿ ತನುವಿನೊಳು ೨
ಎಲ್ಲಿಂದ ಬಂದ್ಯೊ ನೀ
ಎಲ್ಲಿಗ್ಹೋಗುವಿ ಮುಂದೆ
ಇಲ್ಲೆವೇ ತಿಳಿದು ನೋಡೊ ಸುಲಭದಿಂದ ೩
ಬಂದೆ ನಾ ತಂದೆ ನಾ
ಬಂದು ಘಳಿಸಿದೆ ನಾ
ಹೊಂದಿಕಿ ಹೊಲಬು ನೋಡೊ ಸಂಧಿಸಿ ಘನ ೪
ನಡೆದೆ ನಾ ನುಡಿದೆ ನಾ
ಹಿಡಿದೆ ನಾ ಪಡೆದೆ ನಾ
ಒಡನೆ ನಿನ್ನೊಳು ನೀ ನೋಡೊ ಪಿಡಿದು ನಿಜ ೫
ತಾನೇನು ತನುವೇನು
ತನ್ನೊಳಗಿಹುದೇನು
ಮನಮುಟ್ಟಿ ಘನವ ನೋಡೊ ಚಿನ್ನುಮಯನ ೬
ಏನುಂಟು ಏನಿಲ್ಲ
ಅನಿಮಿಷದಲಿ ನೋಡೊ
ಘನಕ ಘನವ ಬೆರೆದು ಸನ್ಮತವಾಗಿ ೭
ಮರ ಹುಟ್ಟಿ ಮರಬಿದ್ದ
ತೆರನಾಗದಿರೊ ನೀನು
ಎರಗೊ ಶ್ರೀಗುರುಪಾದಕ ಕರಿಗಿ ಮನ ೮
ಎಡಬಲ ನೋಡದೆ
ಪಿಡಿದು ಸದ್ಗುರು ಪಾದ
ಕೂಡೊ ಮಹಿಪತಿ ಬೋಧ ನೋಡಿ ನಿನ್ನೊಳು೯

೨೫೧
ನಿನ್ನ ನೀ ತಿಳಿಯೋ ಮೂಢ ಭೇದಿಸಿ ಗೂಢ
ಧನ್ಯಗೈಸುವ ಪ್ರೌಢ ಸದ್ಗುರು ದೃಢ ಧ್ರುವ
ಬಂದು ಬಂದು ಹೋಪಾದೇನ ಸಾಧಿಸಿದಲ್ಲದೆ ಖೂನ
ಸಂಧಿಸಿ ಬೀಳುವುದು ಹೀನ ಜನ್ಮಕೆ ನಾನಾ
ಹೊಂದು ಮನವೆ ನೀ ಪೂರ್ಣ ಸದ್ಗತಿ ಸುಖ ಸಾಧನ
ಎಂದೆಂದಿಗಾದ ನಿಧಾನ ಸಾಂದ್ರ ಸದ್ಘನ ೧
ಮುತ್ತಿನಂಥ ಸುಜನ್ಮ ವ್ಯರ್ಥಗಳೆವುದಧರ್ಮ
ಹತ್ತಿಲ್ಯಾದಾನಂದೋ ಬ್ರಹ್ಮ ತಿಳಿಯೋ ನೀವರ್ಮ
ಚೆನ್ನೊಬ್ಬಳೆ ಮಾಡೊಮ್ಮ ಕಿತ್ತಿಬಿಸ್ಯಾಡೊ ದುಷ್ಕರ್ಮ
ಎತ್ತ ನೋಡಲು ಸಂಭ್ರಮ ಸದ್ಗುರು ಧರ್ಮ ೨
ತನ್ನ ತಿಳಿದು ನೋಡೊ ಭಿನ್ನ ಭೇದವೆಂಬುದೀಡ್ಯಾಡೊ
ಸನ್ಮತ ಸುಖ ಸೂರ್ಯಾಡೊ ಅನುಮಾನ ಬಿಡೊ
ನಿನ್ನೊಳೂ ಮಹಿಪತಿ ನೋಡೊ ಅನುಭವನೇ ಕೊಂಡಾಡೊ
ಉನ್ಮತವಾಗಿ ನೀ ಕೂಡೊ ಘನ ಬೆರೆದಾಡೊ ೩

೫೬೧
ನಿನ್ನವ ನಾನು ಎನ್ನಯ್ಯ ನೀನು
ನಿನ್ನಿಂದೆನಾನಾ ಎಂದೆಂಬೆ ನಾನು ಧ್ರುವ
ನಿನ್ನೊಳು ದಾವ ನಾನು ಎನ್ನೊಳಗಿಹೆ ನೀನು
ನಿನ್ನಿಂದೆ ಜೀವಿಸುವನಾಗಿಹೆನು ೧
ನನ್ನವಿಡಿದು ನಾನು ಎನ್ನ ಬಾಹ್ಯಾಂತ್ರ ನೀನು
ಎನ್ನ ಸಕಲ ಸಾಹ್ಯ ಸೂತ್ರ ನೀನು ೨
ಎನ್ನ ಪ್ರೇರಕ ನೀನು ನಿನ್ನ ಪ್ರೀತ್ಯರ್ಥ ನಾನು
ನಿನ್ನಿಂದಾದೆ ಪವಿತ್ರ ಪಾತ್ರ ನಾನು ೩
ನೀನೆ ಸ್ವಯಂ ಭಾನು ನಿನ್ನಿಂದುದಯ ನಾನು
ನಿನ್ನಿಂದಾದ ಮಹಿಗೆ ಪತಿಯೇ ನೀನು ೪

೨೫೨
ನಿನ್ನೊಳು ನೀನೆ ನಿನ್ನೊಳು ನೀನೆ
ನಿನ್ನೊಳು ನೀನೆ ನೋಡಿ ಪೂರ್ಣ
ಚನ್ನಾಗೇನಾರೆ ಮಾಡು ಪ್ರಾಣಿ ಧ್ರುವ
ಕಾಯಕ ವಾಚಕ ಮಾನಸದಿಂದ
ಸ್ಥಾಯಿಕನಾಗಿ ನೋಡಿ ಸ್ಥಾಯಿಕನಾಗಿ ನೋಡಿ
ಮಾಯಿಕಗುಣದೋರುದು ಬಿಟ್ಟು
ನಾಯಕನಾಗಿ ಕುಡು ಪ್ರಾಣಿ ೧
ಸೆರಗ ಬಿಟ್ಟು ಮರಗಬ್ಯಾಡ
ಕರಗಿ ಮನ ಕೂರು ಕರಗಿ ಮನ ಕೂಡು
ಎರಗಿ ಗುರು ಪಾದಕ್ಕಿನ್ನು
ತಿರುಗಿ ನಿನ್ನ ನೋಡು ಪ್ರಾಣಿ ೨
ಮರೆವು ಮಾಯ ಮುಸುಕ ಬಿಟ್ಟು
ಅರುವಿನೊಳು ಕೂಡು ಅರುವಿನೊಳು ಕೂಡು
ತರಳ ಮಹಿಪತಿ ನಿನ್ನ
ಗುರುತು ನಿಜ ಮಾಡು ಪ್ರಾಣಿ ೩

೫೬೨
ನಿನ್ನೊಳು ನೋಡಾನಂದವ ಎನ್ನ ಮನವೆ
ಚೆನ್ನಾಗಿ ಚಿನ್ಮಯವ
ಇನ್ನೊಂದಿಹವೆಂಬನ್ಯ ಪಥವಳಿದು
ಉನ್ಮನಿಯೊಳು ಘನಸುಖ ಅನುಭವಿಸುತ ಧ್ರುವ
ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ
ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ
ತುಂಗ ವಿಕ್ರಮನ ಸಂಗ ಸುಖವನರಿದು
ಹಿಂಗದೆ ಅನುದಿನ ಇಂಗಿತವಾಗಿ ನೀ
ಗಂಗೆಯೊಳು ಜಲ ಬೆರೆದಾ ಸುಸಂಗದಿ ೧
ನಾನು ನಾನೆಂಬದಳಿದು ನಿನ್ನೊಳು ನೀನೆ
ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು
ತಾನೆ ತಾನಾಗಿ ತನುವಿನೊಳು ತೋರುವದು
ಘನಗುರುವಚನಾನುಭವದಲಿ ಸೇವಿಸಿ
ಸ್ವಾನುಭವದ ಸುಖದಲಿ ಲೋಲ್ಯಾಡುತ ೨
ಮರೆದು ಮಾಯದ ಮಾಟವ ಅರಿತು ನೋಡು
ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ
ತಾರಕಗುರು ಸಾರುವ ಕರುಣ ನೋಟವ
ಅರವಿನೊಳಿರು ಮಹಿಪತಿ ಗುರುಪಾದದಿ
ಪರಮಾನಂದದಿ ಸುಖ ಸೂರ್ಯಾಡುತ ೩

೪೬೧
ನಿಮ್ಮಿಂದ ಗುರು ಪರಮ ಕಲ್ಯಾಣವು
ನಿಮ್ಮಿಂದಲೆನಗೆ ಘನ ಪರಿಪೂರ್ಣವು ದ್ರುವ
ಹುರಿದು ಭವಬೀಜ ಧರೆಯೊಳುದಯ ಕರುಣದಲಿ
ಪರಮ ಆನಂದ ಸುಖ ಮಳೆಯಗರೆದು
ಕರ್ಮ ಪಾಶಗಳೆಂಬ ಕರಿಕಿ ಬೇರವು ಕಿತ್ತಿ
ಹರಗಿ ಬಿತ್ತಲು ನಾಮ ತಾರಕುಪದೇಶದಲಿ ೧
ವರ ಪ್ರತಾಪದ ಬೆಳೆಯು ತುಂಬಿ ತುಳುಕುವ ಸಿರಿಯು
ಸರ್ವಮಯವೆಂಬ ತೆನೆಗಳು ತುಂಬಿ
ಏರಿ ಸುಷಮ್ನನಾಳದ ಮಂಚಿಕಿಯ ಮೆಟ್ಟಿ
ಪರಿಪರಿ ಅವಸ್ಥೆ ಹಕ್ಕಿಗಳು ಹಾರಿಸಲಾಗಿ ೨
ಮುರಿದು ಭೇದಾಭೇದವೆಂಬ ಗೂಡಲೊಟ್ಟಿ
ಅರಿವು ಕಣದಲಿ ಥರಥರದಲಿಕ್ಕಿ
ಜ್ಞಾನ ವೈರಾಗ್ಯವೆಂಬೆರಡೆತ್ತುಗಳ ಹೂಡಿ
ಸರ್ವಗುಣ ತೆನೆ ತೆಗೆದು ತುಳಿದು ರಾಸಿಮಾಡಿಸಲಾಗಿ ೩
ಸರ್ವಮಯವೆಂಬ ರಾಶಿಯು ಒಬ್ಬುಳಿಯ ಮಾಡಿ
ತೂರಿ ತರ್ಕ ಭಾಸ ಗಳೆದು
ಮಿಥ್ಯಾಪ್ರಪಂಚವೆಂಬ ಕಾಳವು ಕಡೆಮಾಡಿ
ಸಫಲ ಸಹಕಾರದಲಿ ಸುಗ್ಗಿ ಮಾಡಿಸಲಾಗಿ ೪
ಏಕೋ ಬ್ರಹ್ಮದ ಗತಿ ನಿಧಾನ ರಾಶಿಯುದೋರಿ
ಜನ್ಮ ಮರಣವು ಕೊಯಿಲಿಯ ಸುಟ್ಟು ಉರುಹಿ
ಸದ್ಗತಿ ಮುಕ್ತಿ ಸುಕಾಲ ಸಾಧನವಿತ್ತು
ಮೂಢ ಮಹಿಪತಿ ಪ್ರಾಣ ಸದ್ಗೈಸಲಾಗಿನ್ನು ೫

೮೫
ನಿಲ್ಲೊ ನಿಲ್ಲೊ ನವನೀತ ಚೋರ
ಎಲ್ಲರ ಭುಲ್ಲೈಸಿದಿ ನಂದಕುಮಾರ ಧ್ರುವ
ಪರಿಪರಿ ಅಡಿಸಿದಿ ನೀ ಪರನಾರಿಜಾರ
ಮರುಳು ಮಾಡಿದಿ ನಮ್ಮ ಗೊಲ್ಲತೇರ
ಕರಗೂಡುತಲಿ ತಿಂದ್ಯೋ ನೀ ಪಾಲ್ಮೊಸರ
ಆರಿಗೆ ಹೇಳಬೇಕು ನಿನ್ನ ದೂರ ೧
ಮಾಡದ ಮಾಡಿದಿ ನೀ ಮನಬಂದ್ಹಾಂಗೆ
ಪಡೆದು ಲೋಕದಲುಸುರಗುಡದ್ಹಾಂಗೆ
ಹಿಡಿದೇನಂದರ ನೀ ಕೈಗೂಡಿ ಬ್ಯಾಗೆ
ತುಡುಗತನ ಮಾಡಿದಿ ನಿನಗಕ್ಕು ಹಾಂಗೆ ೨
ಬಿಡಲರಿ ಯೆವು ನಿನ್ನ ತಿಳಿಕೊ ವಿಚಾರ
ಮಾಡಲಿಕ್ಕಾಗದು ಇದಕೆ ತಾ ಪರಿಹಾರ
ಹಿಡಿದೇವು ನಿನ್ನಾಟ ಕಂಡು ಕಣ್ಣಾರ
ಮೂಢ ಮಹಿಪತಿಗಾಯಿತು ತಾ ಮನೋಹರ ೩

೮೬
ನೀನಹುದೊ ಎನ್ನ ಸ್ವಾಮಿ ಧ್ರುವ
ಅನಾಥ ಬಂದು ನೀ ಜ್ಞಾನ ಶಿಖಾಮಣಿ
ಧ್ಯಾನಕ ಸಾಧನಿ ನೀನೆ ಎನ್ನ ಗುರುಮುನಿ ೧
ಜೀವಕ ಜೀವ ನೀ ಭಾವಕ ಭಾವ ನೀ
ದೇವಾಧಿದೇವ ನೀ ಕಾವ ನೀನೆ ಕರುಣಿ ನೀ ೨
ಬಾಹ್ಯಾಂತ್ರ ಪೂರ್ಣ ನೀ ಇಹಪರದಾತ ನೀ
ಮಹಿಗೆ ಮಹೀಪತಿ ನೀ ಸಾಹ್ಯಮಾಡೊ ಸಗುಣಿ ನೀ ೩

೮೮
ನೀನಹುದೊ ನಮ್ಮೊಡಿಯ
ಘನ ಗುರು ನಾ ನಿಮ್ಮ ಕಂಡೆ ಅಯ್ಯ ಧ್ರುವ
ನಾ ನಿಮ್ಮ ಪರಿವಾರ ನಾ ನಿಮ್ಮ ಕಿಂಕರ ನೀ ನಮ್ಮ ಸಹಕಾರ
ನೀ ನಮ್ಮ ಪರಿವಾರ ನಾ ನಿಮ್ಮ ಪಡಿಹಾರ ನೀ
ನಮ್ಮ ಬಡಿವಾರ ೧
ನಾ ನಿಮ್ಮ ಬಾಲಕ ನೀ ನಮ್ಮ ಪಾಲಕ
ನಾ ನಿಮ್ಮ ಸೇವಕ ನೀ ನಮ್ಮ ರಕ್ಷಕ ೨
ನಾ ನಿಮ್ಮ ಉದ್ಧೇಶ ನೀ ನಮ್ಮ ಪ್ರಾಣೇಶ
ನಾ ನಿಮ್ಮ ಸಹವಾಸ ನೀ ನಮ್ಮ ಅಭ್ಯಾಸ ೩
ನಾ ನಿಮ್ಮ ಅಣುಗ ನೀ ನಮ್ಮ ಸರ್ವಾಂಗ
ನಾ ನಿಮ್ಮ ಬಳಗ ನೀ ನಮ್ಮ ಬಳಗ ೪
ನಾ ನಿಮ್ಮ ಶರಣ ನೀ ನಮ್ಮ ಕರುಣ
ನಾ ನಿಮ್ಮ ನಿರ್ಗುಣ ನೀ ನಮ್ಮ ಭೂಷಣ ೫
ನಾ ನಿಮ್ಮ ನಿರ್ಮಿತ ನೀ ನಮ್ಮ ಸಹಿತ
ನಾ ನಿಮ್ಮ ಆಶ್ರಿತ ನೀ ನಮ್ಮ ಸುದಾತ ೬
ನಾ ನಿಮ್ಮ ಅಂಕಿತವೃತ್ತಿ ನಿಮ್ಮ ನಮ್ಮ ವಸ್ತುಗತಿ
ನಾ ನಿಮ್ಮ ಮಹಿಪತಿ ನೀ ನಮ್ಮ ಶ್ರೀಪತಿ ೭

೮೭
ನೀನಹುದೋ ಘನ ಮಹಿಮ ಮುನಿಜನರೊಡಿಯ ಪೂರ್ಣ
ದೀನದಯಾಳು ನೀನೆ ಹರಿಯೆ ೧
ಪತಿತಪಾವನನೆಂದು ಶ್ರುತಿ ಸಾರುವರು ಕೇಳಿ
ಅತಿ ಹರುಷದಲಿ ಬಂದೆನೊ ಹರಿಯೆ ೨
ಮತಿ ಹೀನನವಗುಣವ ಕ್ಷಿತಿಯೊಳು ನೀ ನೋಡದೆ
ಪಥವಗೊಳಿಸುವದು ಎನಗೆ ಹರಿಯೆ ೩
ಮರೆಯ ಹೊಕ್ಕಿಹೆ ನಿಮ್ಮ ಚರಣಕಮಲಕೆ ಪೂರ್ಣ
ಕರುಣದ ಅಭಯ ತೋರೊ ಎನಗೆ ಹರಿಯೆ ೪
ಅರಿಯೆ ನಾ ನಿಮ್ಮ ವಿನಾ ಬ್ಯಾರೆ ಇನ್ನೊಂದು ಪಥ
ಶಿರವ ನಮಿಸಿಹೆನೊ ನಿಮಗೆ ಹರಿಯೆ ೫
ಶರಣಾಗತರ ಹೊರೆವ ಬಿರದು ನಿಮ್ಮದು ಪೂರ್ಣ
ಸಾರುವದು ತಿಳಿದುಕೊಳ್ಳೊ ಹರಿಯೆ ೬
ಬಿಡಲರಿಯೆ ನಾ ನಿಮ್ಮ ಪಿಡಿದು ಶ್ರೀಪಾದವನು
ನೋಡಿ ದಯಮಾಡೊ ಎನಗೆ ಹರಿಯೆ ೭
ಬ್ಯಾರೆ ಗತಿ ಕಾಣೆ ನಿಮ್ಮ ಚರಣಕಮಲದಾಣೆ
ಸಿರಿ ಸಕಲಪದವು ನೀನೆ ಹರಿಯೆ ೮
ಭಿನ್ನವಿಲ್ಲದೆ ನೋಡಿ ಚೆನ್ನಾಗಿ ಮಹಿಪತಿಯ
ಧನ್ಯಗೈಸೊ ಪ್ರಾಣವ ಹರಿಯೆ ೯

೮೯
ನೀನಹುದೋ ಶ್ರೀ ಹರಿ
ಮುನಿಜನರ ಸಹಕಾರಿ
ಅನಾಥರಿಗಾಧಾರಿ
ನೀನೆವೆ ಪರೋಪರಿ ಧ್ರುವ
ಪತಿತ ಪಾವನ ಪೂರ್ಣ
ಅತಿಶಯಾನಂದ ಸುಗುಣ
ಸತತ ಸುಪಥ ನಿಧಾನ
ಯತಿ ಜನರ ಭೂಷಣ೧
ಬಡವರ ನೀ ಸೌಭಾಗ್ಯ
ಪಡೆದವರಿಗೆ ನಿಜ ಶ್ಲಾಘ್ಯ
ದೃಢ ಭಕ್ತರಿಗೆ ಯೋಗ್ಯ
ಕುಡುವದೇ ಸುವೈರಾಗ್ಯ ೨
ಭಾಸ್ಕರ ಕೋಟಿ ಲಾವಣ್ಯ
ಭಾಸುತಿಹ್ಯ ತಾರ್ಕಣ್ಯ
ದಾಸ ಮಹಿಪತಿ ಜನ್ಮ ಧನ್ಯ
ಲೇಸುಗೈಸಿದಿ ನಿನ್ನ ಪುಣ್ಯ ೩

೯೦
ನೀನಾರೊ ನಿನ್ನ ಪೆಸರೇನೊ
ನಿಗಮ ತಂದುಸುವುಸಿ ಜಗದೊಳಗೆ ಧ್ರುವ
ನಗ ಬೆನ್ನೆಲಿ ತಾಳಿದ ನೀನಾರೋ
ಜಗವ ಕದ್ದೊಯಿದಸುರನ ನೀ ಕೊಂಡು
ಬಗೆದು ತರಳಗೊಲಿದವ ನೀನಾರೊ ೧
ಧರಣಿ ನೀ ಮೂರಡಿಯನೆ ಮಾಡಿ
ಹಿರಿಯಳ ಶಿರ ಹರಿಗಡಿದವನಾರೊ
ಪರ ದೇವತೆಗಳ ಸೆರೆಯ ಬಿಡಿಸಿ
ತುರುಗಳಗಾಯ್ದ ಗೋವಳ ನೀನಾರೊ ೨
ನಾರಿಯರ ವ್ರತಗಳನೆ ಹಳಿದು
ಏರಿ ಹಯವನು ಸುಳಿವವನಾರೊ
ತರಳ ಮಹಿಪತಿ ಮನೋಹರವ ಮಾಡಿ
ಗುರುತುತೋರಿದ ಗುರು ಮಹಿಮ ನೀ ಬಾರೊ ೩

೯೧
ನೀನೆ ಎನಗಾಗಿ ಬಂದು ನೀನೆ ನೀನಾಗೆನಗಿಂದು ಧ್ರುವ
ಅಪ್ಪನಾಗೆನಗೆ ನೀ ಬಂದು ತಪ್ಪು ಕ್ಷಮೆ ಮಾಡಿದಿಂದು
ಒಪ್ಪಿಸಿಕೊಳಲೆನ್ನ ಬಂದು ಅಪ್ಪಳಿಸಿದೆ(?) ಜನ್ಮವಿಂದು ೧
ಅಮ್ಮನಾಗೆನಗೆ ನೀ ಬಂದು ರಂಬಿಸಿದೆ ಎನಗಿಂದು
ಸಮ್ಯಜ್ಞಾನದಲಿ ನೀ ಬಂದು ಸುಮ್ಮನÉದೋರಿದೆನಗಿಂದು ೨
ಅಣ್ಣನಾಗೆನಗೆ ನೀ ಬಂದು ಕಣ್ಣಿನೊಳಗೆ ಸುಳಿದಿಂದು
ಸುಗುಣ ಸಹಕಾರದಲಿ ಬಂದು ಪುಣ್ಯಚರಣದೋರಿದಿಂದು ೩
ಅಕ್ಕನಾಗೆನಗೆ ನೀ ಬಂದು ಅಕ್ಕಿದೆ ಆತ್ಮದಲಿಂದು
ಸಾಕಿ ಸಲಹಲೆನ್ನ ಬಂದು ಸಿಕ್ಕಿದಕ್ಕಿದೆ ಎನಗಿಂದು ೪
ತಮ್ಮನಾಗೆನಗೆ ನೀ ಬಂದು ತಮ್ಮೊಳರ್ಪಿಸಿಕೊಂಡೆ ಇಂದು
ತಮ್ಮ ನಿಜವಾದಾರ(?) ಬಂದು ತನುವಿನೊಳಗೆ ಸುಳಿದಿಂದು ೫
ತಂಗಿಯಾಗೆನಗೆ ನೀ ಬಂದು ಹಿಂಗಿಸಿದೆ ಭವವಿಂದು
ಸಂಗ ಸುಖವದೋರ ಬಂದು ಅಂತರಂಗದಿ ಸುಳಿದಿಂದು ೬
ಈಸು ಪರಿಯಲೆನಗಿಂದು ಆಶೆಪೂರಿಸಿದೆನಗಿಂದು
ಭಾಸ್ಕರ ಗುರುವಾಗಿ ಬಂದು ಭಾಸಿ ಪಾಲಿಸಿದೆನಗಿಂದು ೭

೯೨
ನೀನೆ ಎನಗಾಧಾರಿ ಶ್ರೀಹರಿ
ನೀನೆ ಎನಗಾಧಾರಿ ಧ್ರುವ
ಸಕಲ ಸುಖವ ಬೀರುವ ಉದಾರಿ
ಭಕುತ ವತ್ಸಲ ಮುಕುಂದ ಮುರಾರಿ ೧
ಅಂತರ್ಬಾಹ್ಯದ ಲೀಹ ನರಹರಿ
ಕಂತುಪಿತನೆ ಪೀತಾಂಬರಧಾರಿ ೨
ಹಿತದಾಯಕ ನೀನೆವೆ ಪರೋಪರಿ
ಪತಿತಪಾವನ ಮಹಿಪತಿ ಸಹಕಾರಿ ೩

೯೩
ನೀನೆ ದಯಾನಿಧಿಯು ಶ್ರೀ ಗುರುರಾಯ
ನೀನೆ ದಯಾನಿಧಿಯು ಧ್ರುವ
ಕರುಣದಿ ಕುಂತಿಯ ಪುತ್ರರಿಗೆ ಒಲಿದು
ಕಾಳ ನಿರ್ಮಿಸಿ ಕೌರವರಳಿದು
ಉಳಿಯದೆ ಇಳೆಯೊಳು ವಂಶವ ಸವರಿದ
ಶೇಷಶಯನ ಶ್ರೀ ಕೇಶವ ನೀನೆ ೧
ನರಗೊಲಿದು ನರಕಾಸುರನ ಮರ್ದಿಸಿ
ನಾರಗನೆಂದಜಮಿಳನ ನೀ ತಾರಿಸಿ
ನಾರದಗೊಲಿದು ನಾಟ್ಯವನಾಡಿದ
ನರಹರಿಯು ನಾರಾಯಣ ನೀನೆ ೨
ವೇದವ ಕದ್ದೊಯಿದಸುರನ ಸೀಳಿ
ಮಚ್ಛವತಾರದ ರೂಪವ ತಾಳಿ
ಮಾವನ ಕೊಂದ ಮಾನ್ಯರ ಮಡುಹಿದ
ಮೈದುನಗೊಲಿದ ಶ್ರೀ ಮಾಧವ ನೀನೆ ೩
ಗೋಕುಲದಲಿ ಪುಟ್ಟಿ ಧರೆಯೊಳು
ಬೆರಳಲಿ ಗೋವರ್ಧನ ಗಿರಿಯನೆತ್ತಿ
ಗೋಕುಲ ಕಾಯ್ದಿ ಗೋಪಿಯರಿಗೊಲಿದ
ಗೋಪಾಲಕೃಷ್ಣ ಗೋವಿಂದನು ನೀನೆ೪
ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ
ಕಷ್ಟವ ಪರಿಹರಿಸಿದ
ಶಿಷ್ಟ ವಿಭೀಷಣಗೊಲಿದು
ಪಟ್ಟವಗಟ್ಟವು ವಿಷ್ಣವು ನೀನೆ ೫
ಮದನನೊಲಿದು ಕಾಳಿಂಗನ ತುಳಿದು
ಕದನದಲಿ ಬಾಣಾಸುರನಳಿದು
ಮೇದಿನಿಯೊಳು ಮರೆ ಇಲ್ಲದೆ ದೈತ್ಯರ
ಮರ್ದಿಸಿದ ಮಧುಸೂದನನು ನೀನೆ ೬
ತ್ರಿಪುರವನಳಿದು ತ್ರಿಗುಣವ ತಾಳಿದ
ತೆತ್ತೀಸ ಕೋಟಿ ದೇವರುಗಳಿಗಾಳಿದ
ಅಕ್ರೂರಗೊಲಿದು ಚರಿತ್ರವದೋರಿದ
ತ್ರಿಜಗಪತಿ ತ್ರಿವಿಕ್ರಮ ನೀನೆ೭
ವಾಲಿಯನಳಿದು ವಾಲ್ಮೀಕಿಗೊಲಿದು
ಬಲಿಚಕ್ರನ ಮುನಿಮುಂದಲಿ ಸುಳಿದು
ಬ್ರಾಹ್ಮಣನಾಗಿ ದಾನವ ಬೇಡಿದ
ಮಾನ್ನವಗೊಲಿದ ಶ್ರೀ ವಾಮನ ನೀನೆ ೮
ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ
ಸ್ಥಳದಲಿ ಶ್ರೀ ಮಹಾಲಕ್ಷ್ಮಿಯ ಧರಿಸಿದ
ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ
ಶ್ರೀದೇವಿಗೊಲಿದಿಹ ಶ್ರೀಧರ ನೀನೆ ೯
ದಾಸರ ಕ್ಲೇಶಕಿಲ್ಮಿಷಗಳ ತೊಳೆದು
ಅಂಬರಿಷ ರುಕ್ಮಾಂಗದಗೊಲಿದು
ಶುಕ ಶೌನಕ ಪರಾಶರ ಮುನಿಗಳಿಗೆ
ಹರುಷನಿತ್ತ ಹೃಷಿಕೇಶನು ನೀನೆ ೧೦
ಕ್ಷಿತಿಯೊಳು ದೃಢ ಪತಿವ್ರತೆಗೊಲಿದು
ಯತಿ ಮುನಿಗಳಿಗಿನ್ನು ಗತಿಗಳನಿತ್ತು
ಪತಿತರ ತಾರಿಸಿ ಪಾವನಗೈಸಿದ
ಪರಂಜ್ಯೋತಿ ಪದ್ಮನಾಭನು ನೀನೆ ೧೧
ದೇವಕಿಗೊಲಿದು ಸ್ಥಾಪಿಸಿ ಧರೆಯೊಳು
ದ್ವಾರಕಿಯಲಿ ನಿಜ ಲೀಲೆಯು ತೋರಿದ
ದಾರಿದ್ರ್ಯಭಂಜನ ದುರಿತ ವಿಧ್ವಂಸನ
ದೇವಕಿ ಪುತ್ರ ದಾಮೋದರ ನೀನೆ ೧೨
ಸಿದ್ದ ಶರಣರಿಗೊಲಿದ ಸದ್ಗತಿ
ಸುಖಸಾಧನ ಸಹದೇವಗದೋರಿದ
ಸಂಭ್ರಮದಿ ಸುಧಾಮಗ ಒಲಿದು
ಸಂತೋಷವನಿತ್ತ ಸಂಕರುಷಣ ನೀನೆ ೧೩
ವಸುಧಿಯೊಳು ಭಸ್ಮಾಸುರನ ಮರ್ದಿಸಿ
ಭಾಷೆಯನಿತ್ತು ಭಕ್ತರ ಪಾಲಿಸಿ
ಋಷಿ ವೇದವ್ಯಾಸಗೊಲಿದಾತನು
ವಸುದೇವಸುತ ವಾಸುದೇವನು ನೀನೆ ೧೪
ವಿದುರುದ್ಧವ ಗರುಡಗೊಲಿದು
ಭೃಗುಮುನಿ ಕಪಿಲ ಯೋಗೇಂದ್ರನ ಸಲಹಿದ
ಸ್ಥಿರಪದವಿತ್ತರೊಂದು ಮಂದಿಗೆ
ಪ್ರಸನ್ನವಾದ ಪ್ರದ್ಯುಮ್ನನು ನೀನೆ ೧೫
ಸೀತಾ ಸುದ್ದಿಯ ತಂದವಗೊಲಿದು
ಹತ್ತು ತಲೆಗಳ ಇದ್ದವನಳಿದು
ಕದ್ದುಬೆಣ್ಣೆಯ ಮುದ್ದೆಯ ಮೆದ್ದು
ಉದ್ದವಗೊಲಿದ ಅನಿರುದ್ಧನು ನೀನೆ ೧೬
ಸೋಕಿಸಿ ಪೂತಣಿಯ ಕಾಯವು ಹೀರಿದ
ಭಕ್ತ ಪುಂಡಲೀಕನ ಸಲಹಿದ
ಭಕ್ತಿಗೆ ಒಲಿದು ಮುಕ್ತಿಯನಿತ್ತ
ಪರಮ ಪರುಷ ಪುರುಷೋತ್ತಮನು ನೀನೆ ೧೭
ಅಕ್ಷಯವೆಂದು ರಕ್ಷಿಸಿ ಸಭೆಯೊಳು
ದ್ರೌಪದಿ ಕರುಣಕಟಾಕ್ಷದಿ ಸಲಹಿದ
ಭಕ್ತವತ್ಸಲನಾಗಿ ಗಜೇಂದ್ರಗೆ
ಮೋಕ್ಷವನಿತ್ತ ಅಧೋಕ್ಷಜ ನೀನೆ ೧೮
ನರನಾರಿಯು ನಾಂಟೀಶರನಾಗಿ
ನಖಮುಖದಲಿ ಹಿರಣ್ಯಕನ ಸೀಳಿ
ಭಕ್ತಪ್ರಹ್ಲಾದಗ ಒಲಿದು ಸ್ತಂಭದಿ
ಪ್ರಕಟಿಸಿದ ನರಸಿಂಹನು ನೀನೆ ೧೯
ಅನಿಳ ಸ್ನೇಹಿತ ಅಜಗ್ನಾನಗ ಒಲಿದು
ಅಹಲ್ಯಾ ಶಾಪ ವಿಮೋಚನ ಮಾಡಿದ
ನೆಚ್ಚಿದ ಧ್ರುವನ ನಿಜ ಭಕ್ತಿಗೆ ಒಲಿದು
ಅಚಲ ಪದವಿತ್ತುಚ್ಯುತ ನೀನೆ ೨೦
ಜಗದೊಳು ಭಕ್ತಜನರಿಗೆ ಒಲಿದು
ಜಾಹ್ನವಿ ನಿರ್ಮಿಸಿ ಜನಕನ ಸಲಹಿದ
ಸಾಧು ಸಜ್ಜನ ಮುನಿ ಸಂಜೀವನ
ಜಾನಕೀಪತಿ ಜನಾರ್ಧನನು ನೀನೆ ೨೧
ಅಂಗದಗೊಲಿದಾನಂದವನಿತ್ತು
ಕುಂದದೆ ಕರೆದುಪಮನ್ಯುನ ಸಲಹಿದ
ದಿನಕರ ಚಂದ್ರ ಕಳಿಯಗಳಿತ್ತು
ಇಂದ್ರಗೆ ಒಲಿದ ಉಪೇಂದ್ರನು ನೀನೆ ೨೨
ಹಯವದನದವತಾರವ ಧರಿಸಿ
ಧರೆಯೊಳು ಭಕ್ತನ ಜನ್ಮವು ಹರಿಸಿ
ಹರಿಶ್ಚಂದ್ರನ ಕ್ಲೇಶವು ಪರಿಹರಿಸಿದ
ಸುರಮುನಿಗೊಲಿದ ಶ್ರೀ ಹರಿಯು ನೀನೆ ೨೩
ಕಾಳಿ ಮಥನವು ಮಾಡಿ ಕರುಣದಿ
ಸುರರಿಗೆ ಅಮೃತವನಿತ್ತು ಸಲಹಿದ
ಕಲ್ಕ್ಯಾವತಾರದ ಲೀಲೆಯ ತೋರಿದ
ಕಪಟ ನಾಟಕ ಶ್ರೀ ಕೃಷ್ಣನು ನೀನೆ ೨೪
ಸಂಧ್ಯಾನದ ಸಾಹಾಯವನಿತ್ತು
ಕಾಯದಿ ಸದ್ಗತಿ ಸಾಧನದೋರಿದ
ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯ
ಪರಮ ದಯಾನಿಧಿಯು ನೀನೆ ೨೫

೯೪
ನೀನೆ ನಮ್ಮ ಕಾವ ಕರುಣನು ಶ್ರೀನಾಥ ಪೂರ್ಣ
ನೀನೆ ನಮ್ಮ ಕಾವ ಕರುಣನು ಧ್ರುವ
ನೀನೆ ನಮ್ಮ ಕಾವ ಕರುಣ ಭಾನುಕೋಟಿತೇಜಪೂರ್ಣ
ದೀನಜನರ ದಾತ ಶ್ರೀನಾಥ ಸದ್ಗುರುರಾಯ ರನ್ನ ೧
ನೇಮದಿಂದ ಭೋರ್ಗರೆವ ನಾಮ ನಿಮ್ಮ ಕಾಮಧೇನು
ಕಾಮ್ಯ ಪೂರಿಸುವ ನಿಮ್ಮ ಕರುಣ ಕಲ್ಪವೃಕ್ಷವಯ್ಯ ೨
ಹೇಮರೌಪ್ಯ ರತ್ನವಾದ ದಯವೆ ನಿಮ್ಮ ನವನಿಧಿಯ
ನಿಮ್ಮ ಅಭಯಪೂರ್ಣವೆನಗೆ ಅಷ್ಟಮ ಸಿದ್ಧಿವಯ್ಯ೩
ಅಖಿಳ ಭುವನದೊಳಗೆ ನಿಮ್ಮ ಸಾಹ್ಯ ಸಂಜೀವ ನಮಗೆ
ಸೌಖ್ಯನಿತ್ತು ಹೊರೆವ ನಿಮ್ಮ ಸ್ಮರಣೆ ಚಿಂತಾಮಣಿಯ ೪
ಕುಂದ ನೋಡದೆ ಸಲುಹುತಿಹ್ಯ
ತಂದೆಯಹುದೊ ಮಹಿಪತಿಯ
ಚೆಂದಮಾಡುವ ಬಂದು ಜನ್ಮ ಬಂಧು ಬಳಗೆ ನೀನೆ ಅಯ್ಯ ೫

೯೫
ನೀನೆ ನಮ್ಮ ಕುಲದೈವ ಅನುದಿನಾರಾಧಿಸುವ
ಮುನಿಜನರೊಂದಿಸುವ ಘನಗುರು ದೇವಾದಿ ಶ್ರೀದೇವ ೧
ಮೂಢ ಅಜ್ಞಾನಿ ನಾ ಮಂದಮತಿ
ಮಾಡಲರಿಯೆ ನಿಮ್ಮ ನಿಜಭಕ್ತಿ
ನೋಡದೆ ನೀ ನ್ಯೂನಪೂರ್ಣ ಸ್ಥಿತಿ
ಕೂಡಿಕೊಳ್ಳಯ್ಯ ಸೇವೆ ಶ್ರೀಪತಿ ೨
ನಿಮ್ಮ ವಿನಾ ಅರಿಯೆ ಅನ್ಯಪಥ ಈ
ಮಾತಿಗಿಲ್ಲವೊ ಅನ್ಯಥಾ
ಸ್ವಾಮಿ ನೀನೆವೆ ನಮ್ಮ ದೈವತ ಬ್ರಹ್ಮಾದಿಗಳಿಗೆ ಸನ್ನತ ೩
ಅಯ್ಯ ನಿಜಬಾಲಕ ನಾ ನಿಮ್ಮ ತಾಯಿತಂದೆಯು ನೀನೆ ನಮ್ಮ
ದಯಾಸಿಂಧು ಸದ್ಗುರು ಪರಬ್ರಹ್ಮ
ಸಾಹ್ಯಮಾಡುವ ಸರ್ವೋತ್ತಮ ೪
ದೈವ ನೀನಹುದೊ ಸಾಕ್ಷಾತ ಕೈವಲ್ಯನಿಧಿಯು ಶ್ರೀನಾಥ
ಭಾವಿಸುವರ ಭಾವಪೂರಿತ ಮಹಿಪತಿಯ ಪ್ರಾಣನಾಥ ೫

೧೧
ನೀನೆ ಪರಮ ಪಾವನಿ ನಿರಂಜನಿ
ನೀನೆ ಪರಮ ಪಾವನಿ ಧ್ರುವ
ಆದಿನಾರಾಯಣಿ ಸಾಧುಜನವಂದಿನಿ
ಸದಾನಂದರೂಪಿಣಿ ಸದ್ಗತಿ ಸುಖದಾಯಿಣಿ ೧
ಲಕ್ಷುಮಿ ರೂಪಿಣಿ ಸಾಕ್ಷಾತ್ಕಾರಿಣಿ
ರಕ್ಷರಕ್ಷಾತ್ಮಿಣಿ ಅಕ್ಷಯಪದದಾಯಿಣಿ ೨
ಅನಾಥರಕ್ಷಿಣಿ ದೀನೋದ್ದಾರಿನೀ
ಅನಂತಾನಂತಗುಣಿ ಮುನಿಜನ ಭೂಷಣಿ ೩
ದಾರಿದ್ರ್ಯಭಂಜನಿ ದುರಿತವಿಧ್ವಂಸಿನಿ
ಪರಮಸಂಜೀವಿನಿ ಸುರಮುನಿರಂಜನಿ ೪
ಸ್ವಾಮಿ ಶ್ರೀ ಗುರುವಿಣೆ ಬ್ರಹ್ಮಾನಂದ ರೂಪಿಣಿ
ಮಹಿಪತಿಕುಲಸ್ವಾಮಿಣಿ ನೀನೆ ಪರಮಪಾವನಿ ೫

೯೬
ನೀನೆ ರಕ್ಷಿಸೊ ಎನ್ನ ಪೂರ್ಣ ನೀ ಸ್ವಾನುಭವಸುಖದಾಯಕ
ಅನುದಿನಪಾಲಕ ಅನಾಥಜನ ನೀ ರಕ್ಷಕ ೧
ನ್ಯೂನಪೂರ್ಣಕಾಗುತಿಹ್ಯ ನಿಜದೀನಬಂಧು ಶಾಶ್ವತ
ಘನ ದಯ ಸದೋದಿತ ನೀನೆಮ್ಮ ಸುಸ್ವಹಿತ ೨
ತಂದೆತಾಯಿಯು ನೀನೆ ಸದ್ಗುರು ಬಂಧುಬಳಗ ಸನಾತನ
ಸಾಂದ್ರ ಸದ್ಘನ ಕರುಣ ಕಂಡ ಮಹಿಪತಿ
ಭೂಷಣ ನೀನೆ ಪಾಲಿಸೊ ೩

೯೭
ನೀನೆ ಸಕಲವೆನ್ನ ಸ್ವಾಮಿ ಶ್ರೀ ಹರಿಯೆ
ದೀನ ದಯಾಳು ನೀನೆವೆ ನಿಜಧೊರಿಯೆ ಧ್ರುವ
ತಂದೆ ತಾಯಿಯು ನೀನೆ ಬಂಧುಬಳಗ ನೀನೆ
ಹೊಂದಿಕಿ ಹೊಲಬು ನೀ ಎನ್ನ ನೀನೆ
ಎಂದೆಂದು ಸಲಹುವಾನಂದ ಮೂರುತಿ ನೀನೆ
ಕುಂದ ನೋಡದಿಹ್ಯ ಮಂದರಧರ ನೀನೆ ೧
ಕುಲದೈವವು ನೀನೆ ಮೂಲಪುರಷ ನೀನೆ
ಒಲಿವ ಭಾಗ್ಯದ ಫಲಶ್ರುತಿಯು ನೀನೆ
ಸಾಲವಳಿಯು ನೀನೆ ಹಲವು ಭೂಷಣ ನೀನೆ
ಕುಲಕೋಟಿ ಬಳಗಾದ ಭಕ್ತವತ್ಸಲ ನೀನೆ ೨
ಧನದ್ರವ್ಯಾರ್ಜಿತ ನೀನೆ ಘನಸೌಖ್ಯಾಕರ ನೀನೆ
ಅನುದಿನಲಿಗನುಕೂಲ ನೀನೆ
ದೀನ ಮಹಿಪತಿಸ್ವಾಮಿ ಭಾನುಕೋಟಿ ತೇಜನೆ
ಮನೋಹರ ಮಾಡುವ ಮಹಾಮಹಿಮ ನೀನೆ ೩

೨೫೩
ನುಡಿ ಜ್ಞಾನದ ಮಾತು ಒಡನೆ ನಂಬುದ್ಹೇತು
ನಡಿ ಜ್ಞಾನದ ಮಾತು ಕಡೆಗಾಣಿಸಿತು ಧ್ರುವ
ನುಡಿಯ ಒಡಲೊಳಗಿಟ್ಟು ನಡಿಯೊಳಗ ನುಡಿದೋರಿ
ಕೊಡುವರಿಗ್ಯದೆ ಘನಮಹಿಮೆ ನೋಡಿ
ನುಡಿದಂತೆ ನಡೆದರೆ ನಡೆನುಡಿ ಆಗುವದು
ನುಡಿ ಅಡಿ ತೋರುವರಿಗೆಲ್ಲಿ ನಡೆನುಡಿ ೧
ನಡೆಯೊಳಗ ನುಡಿಯದೆ ಪಡೆದುಕೊಂಬವ ಬಲ್ಲ
ಒಡನೆ ಸದ್ಗುರು ದಯದೊಲವಿಲಿದ್ದು
ನಡೆನುಡಿ ನಿಜವಾಗಲರಿಯದೆ ನಾಡೊಳಗೆ
ಅಡಿಗಡಿಗೆ ಹೇಳ್ಯಾಡು ಮಾತೆ ಬರದು೨
ನುಡಿವುದೆ ವೇದಾಂತ ನಡೆವುದೆ ಸಿದ್ಧಾಂತ
ನಡೆನುಡಿಗೆ ಸಾಕ್ಷ ಶ್ರೀದೇವದತ್ತ
ನುಡಿಗೆ ನಿಜ ನೆಲೆದೋರಿ ನಡಿಗೆ ನಿಲುಕಡೆ ಮಾಡಿ
ಕೊಡುವನೊಬ್ಬನೆ ಮಹಿಪತಿ ಗುರು ಸಮರ್ಥ ೩

೨೫೪
ನುಡಿದಂತೆ ನಡಿಯಬೇಕು
ಪಿಡಿದು ಸುಪಥ ಧ್ರುವ
ಸಾಧಿಸಿ ತಿಳಿಯದೆ ತನ್ನೊಳು ಖೂನ
ಬೋಧಿಸಿ ಹೇಳುದು ಇನ್ನೊಬ್ಬರಿಗೇನ
ಅದಿತತ್ವದ ಗತಿಯ ನಿಜಸ್ಥಾನ
ಭೇದಿಸುವುದು ಸದ್ಗುರು ಕೃಪೆ ಜ್ಞಾನ ೧
ನಡೆನುಡಿ ಒಂದಾದರೆ ಬಲು ಮೇಲು
ದೃಢಭಕ್ತಿಗೆ ಒಂದಿದೆ ತಾ ಕೀಲು
ಪಡೆವದು ಮನಮಾಡಿ ಮೀಸಲು
ಬಿಡದೆ ಮಾಡುವ ಗುರು ದಯ ಕೃಪಾಳು ೨
ಹೇಳಿಕಿಗಿದೆ ಬಿದ್ದದೆ ಬಲುಜನ
ತಿಳುಹಿಸಿಕೊಡಲಿಕ್ಕಿಲ್ಲದೆ ಜ್ಞಾನ
ತಿಳಿವು ತಿಳಿದರೆ ತನ್ನೊಳು ನಿಧಾನ
ಹೊಳವ ಮಹಿಪತಿ ಗುರು ನಿಜ ಚಿದ್ಘನ ೩

೯೮
ನೆನವಿಗೊಮ್ಮೆ ಹರಿನಾಮಘೋಷ ಮಾಡಿ
ಜನುಮ ಸಾರ್ಥಕಾಗುವುದು ಪೂರ್ಣ ನೋಡಿ ಧ್ರುವ
ಜನವನ ದೊಳು ಹರಿಯ ಕೊಂಡಾಡಿ
ಅನುಮಾನ ಹಿಡಿದು ಕೆಡಬ್ಯಾಡಿರೊ
ನೆನವಿಗೊಮ್ಮೆ ನಾಮಘೋಷವ ಮಾಡಿ
ನೆನವಿನೊಳು ನೀವು ಘನ ಬೆರದಾಡಿರೊ ೧
ಹರಿಯ ನಾಮ ನೆನವುತಿಕ್ಕಿ ಚಪ್ಪಾಳಿ
ದೂರಮಾಡಿ ಮನದ ಚಿಂತೆ ಮುಮ್ಮಳಿ
ಸಾರಿ ದೂರುತಿದೆ ವೇದ ಪೂರ್ಣ ಕೇಳಿ
ಅರಿತು ಹರಿಯ ನಾಮ ನೀವು ಬಲಗೊಳ್ಳಿರೊ ೨
ಹರಿನಾಮಕಾಗಬ್ಯಾಡಿ ವಿಮುಖ
ಅರಿತು ಮಾಡಿಕೊಳ್ಳಿ ಪ್ರಾಣಪದಕ
ತರಳ ಮಹಿಪತಿಯ ತಾರಕ
ತೋರುತಿಹ್ಯ ದು ಬ್ರಹ್ಮಸುಖವೊ ೩

೯೯
ನೆನಿಯಬಾರದೆ ಮನವೆ ಹರಿಯ ನಾಮವ
ನೆನವು ಸೆಲೆಗೊಳ್ಳಲಿಕ್ಕೆ ಘನಪದವನೀವ ಸ್ವಾಮಿ ಧ್ರುವ
ಅಂತು ಇಂತು ಎಂತು ಎನದೆ ತಂತು ಪಿಡಿದು ತನುವಿನೊಳು
ಅಂತರಾತ್ಮ ಕಂತುಪಿತನ ಸಂತತ ಪಿಡಿದು ಪಾದ ೧
ಶ್ರವಣ ಕೀರ್ತನೆ ಮೊದಲಾದ ನವವಿಧ ಭಕುತಿಯಿಂದ
ಸವಿದು ಸವಿದು ಸವಿದುಂಬ ಸಾರವಾದ ದಿವ್ಯನಾಮ ೨
ಧನ್ಯ ಧನ್ಯನಾಗೊ ಮನವೆ ನೆನೆದು ಪತಿತಪಾವನನಾಮ
ಪುಣ್ಯಗತಿಯನೀವ ಮಹಿಪತಿಯ
ಧನ್ಯಗುರುವಿನ ದಿವ್ಯನಾಮ ೩

೫೪೭
ನೆನೆ ಕಂಡ್ಯ ಮನವೆ ಸದ್ಗುರು ದಿವ್ಯಪಾದ
ಖೂನ ತೋರುವದಿದೆ ನಿಜಬೋಧ ದ್ರುವ
ನೆನೆಯಬೇಕೊಂದೆ ಭಾವದಿಂದೆ
ತಾನೆತಾನಾಗುವ ಗುರು ತಾಯಿತಂದೆ ೧
ಘನ ಸುಖ ಕೊಡುವ ಅನುಭವದಲಿಡುವ
ಜನನ ಮರಣದ ಬಾಧಿಯ ಮೂಲಗಡೆವ ೨
ಗುರುವಿಂದಧಿಕ ಬ್ಯಾರಿಲ್ಲ ಸುಖ
ತಿರುಗಿ ನೋಡಲು ತನ್ನೊಳಾದ ತಾ ಕೌತುಕ ೩
ಇದೆ ನಿಜಬೋಧ ಸ್ವಸುಖದ
ಭೇದಿಸಿದವರಿಗಿದೆ ಸುಪ್ರಸಾದ ೪
ಗುರುತಾ ತೋರುವ ಸುರಿಮಳೆಗರೆವ
ತರಳ ಮಹಿಪತಿಸ್ವಾಮಿ ಅನುದಿನ ಹೊರೆವ೫


ನೆನೆದು ನಮಿಸುವೆ ನಾನು ವಾರಂವಾರ ಪ
ನೆನೆದು ನಮಿಸುವೆ ನಾನನುದಿನ ಹರಿಪದ
ವನಜ ಮಧುಪರಾದ ಅನುಭವ ಶರಣರ ಅ.ಪ
ಆದಿಮೂರುತಿತ್ರಯ ಮಧ್ವಮುನಿರೇಯ
ಬೋಧಕ ಪದ್ಮನಾಭ ನರಹರಿ ಧ್ಯಾನ
ಮಾಧವಾಕ್ಷೋಭ್ಯರ ಮಹಾ ಜಯತೀರ್ಥರಾ
ರಾಧಕ ವಿದ್ಯಾದಿರಾಜ ಕವಿನಿಧಿ
ಸಾದರ ವಾಗೀಂದ್ರ ಶಾಂತ ರಾಮಚಂದ್ರ
ಸಾಧು ವಿದ್ಯಾನಿಧಿಯರ ರಘುನಾಥ
ಮೇದಿನಿ ರಘುವರ್ಯರ ರಘೋತ್ತಮ
ವೇದವ್ಯಾಸಾರ್ಯರ ವಾರಂವಾರ ೧
ಇತ್ತ ವಿದ್ಯಾಧೀಶ ಈ ವೇದನಿಧಿ ಘೋಷ
ಸತ್ಯವ್ರತರ ನಾಮ ಸತ್ಯನಿಧಿಯ ನೇಮ
ಸತ್ಯನಾಥಾಖ್ಯಾತ ಸತ್ಯಾಭಿನವ ತೀರ್ಥ
ಮತ್ತಿಳೆಯೊಳಗಿರ್ಪ ಮನಕೆ ಸೂಚಿಸಿ ಬಪ್ಪ
ಕೃತ್ಯಮ್ ಸುಜ್ಞಾನ ಕೃಷ್ಣದ್ವೈಪಾಯನ
ಇತ್ಯಧಿಕ ಸರ್ವರ ಜನದಲಿ
ಅತ್ಯಧಿಕ ಮೀರ್ವರಾ ಪುರುಷಾರ್ಥ
ಉತ್ತಮ ಪದಲಿರುವರಾ ವಾರಂ ವಾರ ೨
ಶರಣೆಂದು ಆದ್ಯರ ಸಕಲ ಪ್ರಸಿದ್ಧರ
ಸಿರಿಪಾದ ಪ್ರಿಯರ ಶುಭ ವ್ಯಾಸರಾಯರ
ವರ ಹಯಗ್ರೀವ ಜಗವರಿತ ವಾದಿರಾಜ
ಪುರಂದರದಾಸ ಪುತ್ರರಾ ವರ ಮಧ್ವರಾ
ನೆರೆ ತಾಳ ಪಾಕರ ನುತ ಮತಿ ಕನಕರ
ಹರಿಭಕ್ತಿ ಉಲ್ಹಾಸರ ಬಂಡೆರಂಗ
ನರಿತಿಹ ನಿಜದಾಸರ ಮಹಿಪತಿ
ಗುರುಶರಣರ ತೋಷರ ವಾರಂ ವಾರ ೩

೧೦೦
ನೆರೆನಂಬು ಮನವೆ ಹರಿಯ ಸಿರಿಯನಾಳುವ ದೊರಿಯ ಧ್ರುವ
ಸ್ಮರಿಸಿದಾಕ್ಷಣ ಕರಿಯ ಸೆರೆಯಬಿಡಿಸಿದನರಿಯ
ಮರಿಯದೆ ಜಗದೊಳು ಹರಿಯ
ಚರಣಕಮಲಯುಗ್ಮಮರಿಯ ೧
ಧರಿಯೊಳು ದ್ರೌಪದಿ ಮೊರಿಯ ಹರಿ ಕೇಳಿದ ನೀನರಿಯ
ಅರಿತು ನಡೆವನೀ ಪರಿಯ ಸಾರುತಿದೆ ಶ್ರುತಿ ಖರಿಯ ೨
ಅರವಿನೊಳು ಮನ ಹರಿಯ ತೋರುವ ಘನ ಅಶ್ಚರ್ಯ
ತರಳ ಮಹಿಪತಿದೊರಿಯ ನೆರೆನಂಬಿರೊ ಈ ಪರಿಯ ೩

೫೬೩
ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ
ನೆಲೆಯಗೊಳ್ಳಿರಯ್ಯ ನೀವು ಬಲಿದು ಭಾವಭಕ್ತಿಯಿಂದ ಧ್ರುವ
ಹಲವು ಮಾತಾಡಿ ನಿಮ್ಮ ಕುಲವ ಚಲವವೆಂದು ಎನಿಸಬ್ಯಾಡಿ
ಹೊಲಬು ತಿಳಿದು ನಿಮ್ಮ ನೆಲೆಯನಿಭವನರಿತು ನೋಡಿರೊ ೧
ಗುಟ್ಟು ತಿಳಿಯಲರಿಯದೆ ಬೊಟ್ಟೆಣಿಸಿ ದಣಿಯಬ್ಯಾಡಿ
ಮಟ್ಟಮಾಡಿ ಮನವ ನಿಜಗಟ್ಟಿಗೊಳ್ಳಿರೊ ೨
ನಿಲವು ತಿಳಿದು ನೆಲಯಗೊಂಡು ಇಳಿಯೊಳಗೆ ಮಹಿಪತಿಯು
ಒಲಿದು ದಯಮಾಡಿ ಸಲಹುತಿಹ ಗುರು ಕಾಣಿರೊ ೩

೧೦೧
ನೋಡಬಾರದೆ ಹರಿಯ ಮನವೆ ಧ್ರುವ
ಸುಲಲಿತವಾಗಿ ಸುಲ್ಲಭವಾಗ್ಹಾನೆ
ನೆಲೆ ನಿಭವಾಗಿ ತನ್ನೊಳು ತುಂಬ್ಹಾನೆ ೧
ಹೃದಯಕಮಲದೊಳು (ಕರೆಗುಡು)ತ್ಹಾನೆ
ಸದೋದಿತ ಸವಿಸುಖ ಬೀರುತಲ್ಹಾನೆ ೨
ಹಲವು ಪರಿಯಲಿ ತಾ ಸಲಹುತಲ್ಹಾನೆ
ಕುಲಕೋಟಿ ಬಂಧು ಬಳಗಾಗ್ಹಾನೆ ೩
ಕಣ್ಣಿನ ಮುಂದೆವೆ ತಾನೆ ಕಟ್ಹಾನೆ
ಬಣ್ಣ ಬಣ್ಣದಲಿ ತಾ ಭಾಸುತಲ್ಹಾನೆ ೪
ಸ್ವಹಿತ ಸುಖದ ಸುಮೂರುತಿ ಆಗ್ಹಾನೆ
ಮಹಿಪತಿಯೊಳು ಶ್ರೀಪತಿ ಆಗ್ಹಾನೆ ೫

೪೬೩
ನೋಡಿ ನಿಜಸುಖ ಕೂಡಿ ಗುರುಮುಖ ಧ್ರುವ
ವ್ಯರ್ಥವ್ಯಾಕೆ ಡಂಭ ಆರ್ತು ನಾಡಿಗುಂಭ
ಗುರ್ತುಮಾಡಿಕೊಡುವ ಪೂರ್ಣ ಗುರು ನಿರಾಲಂಬ ೧
ಜ್ಞಾನ ನಿಜಗೂಢ ಏನುಬಲ್ಲ ಮೂಢ
ಸ್ವಾನುಭವಕಾಗಿ ನೀವು ಮಾಡಿ ಮನದೃಢ ೨
ತೋರುತಿದೆ ಖೂನ ಪರಮ ಸೂಕ್ಷ್ಮ ಜ್ಞಾನ
ತರಳ ಮಹಿಪತಿ ನಿಜಾನಂದ ಸುಖಧನ ೩

೬೭೧
ನೋಡಿ ನಿಮ್ಮೊಳು ನಿಜಾನಂದಬೋಧ
ಕೂಡಿ ಕರುಣಾಸಿಂಧು ಶ್ರೀಗುರುಪಾದ ಧ್ರುವ
ಇಡಾ ಪಿಂಗಳ ಮಧ್ಯ ನೋಡಿ ಈಗ
ನಾಡಿ ಸುಷಮ್ಮವಿಡಿದು ಕೂಡಿ ಬ್ಯಾಗ
ನೋಡಬಲ್ಲಿದೆ ಬ್ರಹ್ಮಾನಂದ ಭೋಗ
ಗೂಢವಿದ್ಯವಿದು ತಾ ರಾಜಯೋಗ
ಒಡನೆ ತಿಳಿಯುವದಲ್ಲ ಷಡಚಕ್ರ ಭೇದವಲ್ಲ
ಬಡವರಿಗಳವಲ್ಲ ಗೂಢಿನ ಸೊಲ್ಲ ೧
ಪಿಡಿದು ಮನಮಾಡಿ ದೃಢನಿಶ್ಚಯ
ಬಿಡದೆ ಭೇದಿಸಿನೋಡಿ ಸುಜ್ಞಾನೋದಯ
ಇಡದು ತುಂಬ್ಯದೆ ವಸ್ತು ಜ್ಯೋತಿರ್ಮಯ
ಪಡೆದುಕೊಳ್ಳಿರೊ ಗುರು ಕರುಣ ದಯ
ಮನ ಉನ್ಮನ ಮಾಡಿ ಘನಸುಖದೊಳು ಕೂಡಿ
ಅನಿಮಷದಲಿ ನೋಡಿ ಅನುದಿನ ನಲಿದಾಡಿ ೨
ಮೂರುಗುಣರಹಿತ ಮೂಲರೂಪ
ತೋರುತಿಹ್ಯದು ನಿಜ ನಿರ್ವಿಕಲ್ಪ
ತರಳ ಮಹಿಪತಿ ಪ್ರಾಣ ಪಾಲಿಪ
ಹೊರೆದು ಸಲಹುವ ಗುರುಕಲದೀಪ
ಭಾವಿಕರಿಗೆ ಜೀವ ಕಾವ ಕರುಣದೇವ
ಸರ್ವರೊಳಗೀವ್ಹ ಶ್ರೀ ವಾಸುದೇವ ೩

೪೬೪
ನೋಡಿ ನೋಡಿ ನಿಮ್ಮೊಳು ನಿಜಘನವ ಧ್ರುವ
ಆಧಾರ ದೃಢದಿಂದ ಆರು ಸ್ಥಳವ ಮುಟ್ಟಿ
ಆದಿ ಅನಾದಿಯ ಪಥವು ನೋಡಿ ೧
ಭೂಚರ ಖೇಚರಚಾಚರ ಗೋಚರ
ಅಲಕ್ಷ ಮುದ್ರೆಯ ಸ್ಥಾನ ನೋಡಿ ೨
ಪರಾಪಶ್ಯಂತಿಯು ಮಧ್ಯಮ ವೈಖರಿ
ವೇದಾಂತಾಕರದ ಸಾರ ನೋಡಿ೩
ಪಂಚತತ್ವದ ಗತಿ ಪಂಚಪ್ರಾಣವದ ಸ್ಥಿತಿ
ಪಂಚಕರುಣಾಕೃತಿ ಗತಿ ನೋಡಿ ೪
ಸ್ಥೂಲ ಸೂಕ್ಷ್ಮಕಾರಣ ಮಹಾಕಾರಣ ನೋಡಿ
ಆನಂದಗತಿಯಲಿ ಬೆರೆದಾಡಿ ೫
ಅಕ್ಷರ ಕ್ಷರವು ಶಬ್ದನಿಶಬ್ದವು ಶೂನ್ಯ ಮಹಾ
ಶೂನ್ಯ ನಿಶ್ಯೂನ್ಯ ನೋಡಿ ೬
ಮಹಿಪತಿಸ್ವಾಮಿ ಶ್ರೀಗುರು ಸರ್ವೋತ್ತಮ ನೋಡಿ
ಆನಂದಗತಿಯಲಿ ಬೆರೆದಾಡಿ ೭

೬೭೨
ನೋಡಿ ನೋಡಿ ನೋಡುದರೊಳಗೆ
ನೋಡಿದ ನೋಟ ಸದ್ಭನವಾಗುವ್ಹಾಂಗ ಧ್ರುವ
ಮನದಿಂದಲಿ ಮನನೋಡುವ ಯೋಗ
ಘನಸುಖ ತೋರುವದಿದೆ ಬ್ರಹ್ಮಭೋಗ ೧
ಕಣ್ಣಿನಿಂದಲಿ ಕಣ್ಣುದೆರುವ್ಹಾಂಗ ಮಾಡಿ
ಚನ್ನಾಗಿ ಉದಯವಾಗುದು ಘನ ಮೂಡಿ ೨
ಭಾವ ಬಲಿದು ನೋಡುವುದು ಬಲುಚೆಂದ
ಆವಾಗ ಮಹಿಪತಿಗಿದೆ ಬ್ರಹ್ಮಾನಂದ ೩

೬೭೪
ನೋಡಿ ಶ್ರೀ ಹರಿಪೂಜಿ ಮಾಡುದು
ಬಿಡಿ ಮನಕೃತ ವಾಜಿ ಧ್ರುವ
ಮಂಗಳಕರಸುಖ
ಕಂಗಳಗಿದಿರಿಡುತದನೇಕ
ಮುಂಸಗುಡಿಯಲಿ ಮೂಡಿ
ರಂಗದೋರುವ ಘನಕೌತುಕ ೧
ತಾಳ ಮೃದಂಗ ಘನ ಭೇರಿ
ಫಳಗುಡುತದೆ ಪರೋಪರಿ
ತಿಳಿದವನಧಿಕಾರಿ
ಕೇಳಲ್ಹೋಗುದು ಭವಭಯ ಹಾರಿ ೨
ಹೇಳಲೆನ್ನಳವಲ್ಲ
ಹೊಳೆವುತಿಹುದು ಮೂಜಗವೆಲ್ಲ
ಕೇಳಿ ಸವಿಯ ಸೊಲ್ಲ
ತಿಳಿದ ಮಹಿಮ ತಾನೆ ಬಲ್ಲ ೩
ಅಜಪ ಸುಜಪ ಮಂತ್ರ
ರಾಜಿಸುತಿಹುದು ಬಾಹ್ಯಾಂತ್ರ
ತ್ರಿಜಗ ಮಾಡುವ ಪವಿತ್ರ
ಸುಜನ ನೋಡುವ ಸುಚರಿತ್ರ ೪
ಸ್ವಹಿತ ಸುಖದ ಸಾರ
ಶ್ರೀಹರಿಪೂಜಿ ನಿರಂತರ
ಮಹಿಪತಿ ಮನೋಹರ
ಸಾಹ್ಯ ಸಕಲಕಿದೆ ಸಹಕಾರ ೫

೪೬೨
ನೋಡಿದರೆ ತನ್ನೊಳಗದೆ ಗೂಢವಾಗದೆ ಧ್ರುವ
ಸೋಹ್ಯ ತಿಳಿಯಗೊಡದೆ ಮಾಯ ಮರಿ ಆಗ್ಯದೆ
ಕಾಯದೊಳಗೆ ತಾನಾದೆ ಗುಹ್ಯವಾಗ್ಯದೆ ೧
ಅಡಿ ಮೇಲು ತಿಳಿಯದೆ ಬಿಡದೆ ಸೂಸುತಲ್ಯದೆ
ಹಿಡಿದೇನೆಂದರೆ ಬಾರದು ಇಡದು ತುಂಬ್ಯದೆ ೨
ತೋರಿಕೆ ತೋರಿಸದೆ ಪರಿಪೂರ್ಣ ತಾನಾಗ್ಯದೆ
ಮೂರುಗುಣಕೆ ಮೀರ್ಯದೆ ಬ್ಯಾರೆ ತಾನದೆ ೩
ಕರುಣಿಸಿ ನೋಡುತದೆ ಕರೆದರೋ ಎನುತದೆ
ಬ್ಯಾರೆ ನಿರಾಶೆವಾಗ್ಹಾದೆ ಹೊರೆಯುತಲ್ಯದೆ ೪
ನೀಲವರ್ಣದೊಳದೆ ಥಳಥಳಗುಡುತದೆ
ಮ್ಯಾಲೆ ಮಂದಿರದೊಳದೆ ಲೋಲ್ಯಾಡುತದೆ ೫
ಗುರುತ ಕಂಡವಗದೆ ಗುರುಸ್ವರೂಪವಾಗ್ಯದೆ
ಗುರು ಕೃಪೆ ಆದವಂಗದೆ ಸಾರಿ ಚಲ್ಯದೆ ೬
ಲೇಸಾಗಿ ಭಾಸುತದೆ ವಾಸನೆ ಪೂರಿಸುತದೆ
ದಾಸ ಮಹಿಪತಿಯೊಳದೆ ವಾಸವಾಗ್ಯದೆ ೭

೩೨೭
ನೋಡಿರೋ ನಿಜ ನೋಡಿರೋ
ನೋಡಲು ಗುರುಸೇವೆ ಮಾಡಿರೋ ಧ್ರುವ
ನೋಡದರೊಳಗೊಂದಡಗ್ಯಾದೆ
ಅಡಗಿದಕೊಂದು ಮನೆ ಮಾಡ್ಯಾದೆ
ಮಾಡಿದರೊಳಗೊಂದು ಮೂಡ್ಯಾದೆ
ಮೂಡಿದಕೊಂದು ಗೂಢವಾಗ್ಯಾದೆ ೧
ಆಡುವೆರಡು ಮಧ್ಯಾನಾಡ್ಯಾದೆ
ನಾಡಿ ಮಧ್ಯೊಂದು ಕೂಡಿಹದ್ಯಾದೆ
ಕೂಡಿದ ಹಾದಿಗೊಂದು ಮಾಡ್ಯಾದೆ
ಮಾಡಿದಕೊಂದು ಕೈ ಗೂಡ್ಯಾದೆ ೨
ಮುಂದ ನೋಡಲು ಹಿಂದವಾಗ್ಯಾದೆ
ಹಿಂದನೋಡಲು ಮಂದವಾಗ್ಯಾದೆ
ಹಿಂದ ಮುಂದ ತಾನೆ ತುಂಬ್ಯಾದೆ
ಕಂದ ಮಹಿಪತಿಗಾನಂದಾಗ್ಯಾದೆ ೩

೩೨೮
ನೋಡಿರೋ ನಿಜನೋಡಿರೊ
ಬಿಡದೆ ಸದ್ಗುರುಪಾದ ಕೂಡಿರೋ ಧ್ರುವ
ಇಡಿದು ತುಂಬೆದ ವಸ್ತು ಅಡಿಮೇಲು ತಿಳಿಯದೆ ೧
ಗೂಢವಾಗಿದೆ ನೋಡಿ ಗೂಡಿನೊಳಗೆನಿಮ್ಮ ೨
ಎಡಬಲ ನೋಡದೆ ಪಿಡಿದು ಸದ್ಗುರು ಪಾದ ೩
ಇಡಾ ಪಿಂಗಳ ಮಧ್ಯನಾಡಿ ಪಿಡಿದು ನೀವು ೪
ಬೇಡಿದ ಪದವೀವ ಮಹಿಪತಿ ಒಡೆಯನ ೫

೬೭೩
ನೋಡಿರೋ ನೋಡಿರೋ ಸ್ವಾಮಿ ಶ್ರೀಪಾದ
ಗೂಢಗುರುತವಾಗ್ಯದ ನಿಜಬೋಧ ಧ್ರುವ
ಕಣ್ಣಿನೊಳಗದ ಕಾಣುಗುಡುತಿದೆ
ಕಣ್ಣೆ ಕಣ್ಣೆಗೆ ಕಾಣಿಸುತಿದೆ ೧
ಝಗಝಗಿಸುತಿದೆ ಥಳಥಳಿಸುತಿದೆ
ಬಗೆ ಬಗೆ ಭಾಸುತ ಹೊಳೆಯುತಲಿದೆ ೨
ಕೇಳಬರುತದೆ ಹೇಳಗುಡುತದೆ
ತಾಳ ಮೃದಂಗವು ಭೋರಿಡುತದೆ ೩
ಏನೆಂದ್ಹೇಳಲಿ ಸ್ವಾನಂದ ಲೀಲೆ
ಸ್ವಾನುಭವದಸುಖ ಆಲಿಸಿ ಕೇಳಿ ೪
ಮಾಯಾಕಾರಗಿದು ಕೈಯಲಿಗೂಡದು
ಮಹಿಪತಿ ಸ್ವಾಮಿದಯಕೆ ಒದಗುವದು ೫

೫೬೪
ನೋಡು ನಿನ್ನೊಳು ನಿನ್ನುಗಮ ಮನವೆ ಧ್ರುವ
ನೋಡು ಒಡನೆ ಖೂನ
ಬಿಡದೆ ಸಾರುತದೆ ನಿಗಮಾ
ದೃಢ ಭಾವದಲಿ ಪಡೆದು ಸದ್ಗುರು ದಯ
ವಿಡಿದು ಸೆರಗ ಕುಡುವದಿದು ಸುಗಮ ೧
ಉಗಮಸ್ಥಾನದ ಉದ್ಭವ ತಿಳಿಯದೆ
ಬಿಗಿದ್ಹೆಮ್ಮಿಲಿಹುದ್ಯಾಕೆ
ಬಗೆ ಬಗೆ ಸಾಧನ ಶ್ರಮಗೊಂಡು
ಜಗಜಾಲದಿ ಭ್ರಮಿಸುವುದಿದೇಕೆ ೨
ನಿರ್ಮಳ ನಿಶ್ಚಳ ನಿಜಘನವರಿತು
ಕರ್ಮ ಬಂಧನವ ಗೆಲಿಯಾ
ಮರ್ಮಿಲಿ ಮಹಿಪತಿ ಗುರುಯೋಗಧರ್ಮದಿ
ನಿರ್ಮನದಲಿ ನಿಜಗೂಡ ಮನವೇ ೩

೫೬೫
ನೋಡು ಮನವೆ ನಿನ್ನೊಳಾಡುವ ಹಂಸ
ಇಡಾಪಿಂಗಳ ಮಧ್ಯನಾಡಿವಿಡಿದು ಧ್ರುವ
ಆಧಾರವಂ ಬಲಿದು ಸ್ವಾಧಿಷ್ಠಾನವ ದಾಟಿ
ಹಾದಿವಿಡಿದು ನೋಡು ಮಣಿಪುರದ
ಒದಗಿ ಕುಡುವ ಅನಾಹತ ಹೃದಯಸ್ಥಾನವ
ಸಾಧಿಸಿ ನೋಡುವದು ವಿಶುದ್ಧವ ೧
ಭೇದಿಸಿ ನೋಡುವದಾಜ್ಞಾಚಕ್ರ ದ್ವಿದಳ
ಸಾಧಿಸುವದು ಸುಖ ಸಾಧುಜನ
ಅಧರದಲಿಹ್ಯ ತಾ ಆಧಿಷ್ಠಾನವ ನೋಡು
ಆಧಿಪತಿ ಆಗಿಹಾಧೀನ ದೈವವ ೨
ಮ್ಯಾಲಿಹ್ಯ ಬ್ರಹ್ಮಾಂಡ ಸಹಸ್ರದಳ ಕಮಲ
ಹೊಳೆಯುತಿಹ ಭಾಸ್ಕರ ಪ್ರಭೆಯ ಕೂಡಿ
ಮೂಲಸ್ಥಾನದ ನಿಜ ನೆಲೆ ನಿಭವ ನೋಡುವ
ಬಾಲಕನೊಡೆಯ ಮಹಿಪತಿ ಸ್ವಾಮಿಯ ೩

೫೬೬
ನೋಡು ಮನವೆ ನಿನ್ನೊಳಾತ್ಮನ ನೋಡು ಮನವೆ ಧ್ರುವ
ಸಾಧುಸಂಗವ ನೀ ಮಾಡಿ ಭೇದ ಬುದ್ಧಿಯ ಹೋಗಾಡಿ
ಆದಿತತ್ವವ ನೀ ನೋಡಿ ಸದಮಲಾನಂದ ಕೂಡಿ೧
ಕಾಮಕ್ರೋಧವ ಕಳೆದು ಮಮತಾ ಮಾಯವನಳಿದು
ತಾಮಸ ತಾಪ ತೊಳೆದು ಶಮದಮಾದಿ ತಿಳಿದು ೨
ನಾನು ನೀನೆಂಬುದು ನೀಗಿ ಜ್ಞಾನದಿಂದ ಗುಪ್ತನಾಗಿ
ಭಾನುಕೋಟಿತೇಜನಂಘ್ರಿ ಬೆರೆದು ನಿಶ್ಚಿಂತನಾಗಿ ೩
ಅವಿದ್ಯುಪಾಧಿಯ ಜರಿದು ಮೂವಿಧ ಮದ ಮುರಿದು
ಪವಿತ್ರ ಪ್ರಣವರಿದು ಸುವಿದ್ಯ ಸುಖಬೆರೆದು ೪
ಬಾಹ್ಯಾಂತ್ರದೊಳಿಹ ಪೂರ್ಣ ಮಹಾಗುರುನಿರಂಜನ
ಇಹ ಪರತ್ರ ಸಾಧನ ಮಹಿಪತಿ ಅಂತರಾತ್ಮನ ೫

೧೦೨
ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ
ನೀಡಿ ಪ್ರೇಮ ಪ್ರೀತಿಯ ಮಾಡುವ ಬನ್ನಿರೊ
ಭಕ್ತಿಯ ದೃಢಯುಕ್ತಿಯ ೧
ದೇವದೇವನ ಪೂರ್ಣ ನೋಡುವ
ಸೇವೆಮಾಡುವ ಸರ್ವದಾ ಕೊಂಡಾಡುವ
ನವವಿಧ ಭಕ್ತಿಯ ಮಾಡುವ ಭಾವವಿಡುವ ೨
ತನು ಮನಧನ ಅರ್ಪಿಸಿ ಬಿಡುವ
ಮನಗೂಡುವ ಪ್ರಾಣಾಯಾಮ ಮಾಡುವ
ಅನುದಿನ ಸಾಧಿಸಿ ನೋಡುವ ಘನಗೂಡುವ ೩
ಇಡಾಪಿಂಗಳ ಮಧ್ಯ ನೋಡುವ
ನಡೆವಿಡುವ ನಡುಹಾದಿಗೂಡುವ
ಒಡನೆ ಸ್ವಸುಖ ಪಡೆವ ಗೂಢ ನೋಡುವ ೪
ಸವಿಸುಖಸಾರ ಸುರುತದೆ
ದ್ರವಿಸುತದೆ ಠವಠವಿಸುತದೆ
ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ ೫
ಏನೆಂದನಬೇಕನುಭವ
ಖೂನದೋರುವ ಘನ ಮಳೆಗರೆವ
ಸ್ವಾನುಭವದಲಿ ಸೇವಿಸುವ ಅನುಸರಿಸುವ ೬
ಜಾಗಿಸುತ್ತದೆ ವಸ್ತುಮಯ
ಬಗೆಬಗೆಯ ಯೋಗ ಇದೆ ನಿಶ್ಚಯ
ಸುಗಮಸಾಧನ ಮಹಿಪತಿಯ ಸುಜ್ಞಾನೋದಯ ೭

೩೨೯
ನೋಡುವ ಬನ್ನಿರೋ ನೋಡುವ ನೋಟ
ನೋಡುದರೊಳಗಡಗೆದ ಘನ ನೀಟ ಧ್ರುವ
ಅರವ್ಹಿನ ಮುಂದದ ಮರವ್ಹಿನ ಹಿಂದದ
ಕುರುಹು ತಿಳಿದರತಾ ಇರಹು ಅಗ್ಯದೆ ೧
ಎರಡಕ ಬ್ಯಾರ್ಯದ ಮೂರಕ ಮಿರ್ಯದ
ಗುರುಕೃಪೆ ಅದರೆ ಸಾರೆ ತಾನ್ಯದ ೨
ಬಾಹ್ಯಕ ದೂರ ಗುಹ್ಯಕ ಗೂಢದ
ಮಹಿಪತಿ ಮನದೊಳು ಘನವಾಗ್ಯದ ೩

೪೬೫
ಪಡಕೊ ನಿಜಗುರುತಾ ನಿಜಗುರುತಾ
ಪಡೆವದಿದೆ ನಿಜ ನೀ ಗುರುತಾ ಧ್ರುವ
ಸಾಧಿಸಿ ಗುರು ಗುರುತಾ, ಸಾಧಿಸಿ ಗುರು ಗುರುತಾ
ಅದೇ ತುಂಬೇದ ಜಗಭರಿತಾ ೧
ಮನ್ನಿಸೆ ತಿಳಿ ತ್ವರಿತಾ ಮನ್ನಿಸಿ ತಿಳಿತ್ವರಿತಾ
ನಿನ್ನದಲ್ಲಿದು ಹೊರತಾ ೨
ತರಣೋಪಾಯದ ವರತಾ ತರಣೋಪಾಯದ ವರತಾ
ಗುರುಕರುಣದ ದಯಗರತಾ ೩
ಪರಮ ಜ್ಞಾನಾಮೃತಾ ಪರಮ ಜ್ಞಾನಾಮೃತಾ
ತರಳ ಮಹಿಪತಿ ಮನೋಹರಾ ೪

೧೦೬
ಪತಿತಪಾವನ ಪರಮದಯಾಳು ಶ್ರೀನಾಥ
ಅತಿಶಯಾನಂದಾತ್ಮ ಸದ್ಗುರು ಭಕ್ತಹೃತ್ಕಮಲಾಂಕಿತ ಧ್ರುವ
ನಿತ್ಯಾನಂದ ನಿಜಗುಣ ನಿರ್ಗುಣರೂಪ ಶ್ರೀದೇವ
ಉತ್ತಮೋತ್ತಮ ಸತ್ಯಶಾಶ್ವತ ಭಕ್ತಜನ ಉದ್ಧಾರಕ
ಯತಿಜನಾಶ್ರಯಾನಂತಮಹಿಮ ಕೃಪಾಲ
ಶ್ರುತಿಗಗೋಚರ ಅತೀತ ತ್ರಿಗುಣ ಸತತ ಸುಪಥದಾಯಕ ೧
ಅಚ್ಯುತಾನಂತ ಮುಚುಕುಂದವರದ ಮುಕುಂದ
ನಿಶ್ಚಯಾನಂದೈಕ್ಯ ನಿರ್ಗುಣ ನಿಶ್ಚಲಾತ್ಮ ಕನುಪಮ
ಸಚ್ಚಿದಾನಂದ ಸದ್ಗುಣ ಸಾಂದ್ರ ಸರ್ವಾತ್ಮ
ಮಚ್ಛ ಕೂರ್ಮಾನಂತರೂಪ ಭಕ್ತವತ್ಸಲ ಶ್ರೀಧರ ೨
ಅಕ್ಷಯದ ಅವಿನಾಶ ಪೂರ್ಣ ಅಚ್ಯುತ ಪಕ್ಷಪಾಂಡವ
ಪಕ್ಷಿವಾಹನ ರಕ್ಷರಕ್ಷ ಜನಾರ್ದನ
ಮೋಕ್ಷದಾಯಕ ಕರಿರಾಜವರದ ಕೇಶವಾಲಕ್ಷ ನಿಜ ಸು-
ಬಿಕ್ಷ ಮಹಿಪತಿಗಿತ್ತು ಕಾಯೋ ಲಕ್ಷ್ಮೀಪತೆ೩

೧೦೫
ಪತಿತಪಾವನಹುದೋ ಸ್ವಾಮಿ ಧ್ರುವ
ಯತಿಮುನಿಜನವನ ಅತಿಶಯಾನಂದ ನೀ
ಶ್ರುತಿಗಗೋಚರನಹುದೋ ಸ್ವಾಮಿ ೧
ಕ್ಷಿತಿಯೊಳು ಗೌತಮ ಸತಿಯಳುದ್ಧರಿಸಿದ
ಅತಿ ದಯಾಳನಹುದೋ ಸ್ವಾಮಿ ೨
ನಷ್ಟಾ ಜಮಿಳನ ದೃಷ್ಟಿಸಿ ನೋಡಿನ್ನು
ಶಿಷ್ಟತನವ ಮಾಡಿದ್ಯೋ ಪ್ರಾಣಿ ೩
ಎಷ್ಟೆಂದು ಪೊಗಳಲಿ ಸೃಷ್ಟಿಯೊಳಗೆ ನಿಮ್ಮ
ದುಷ್ಟಮರ್ದನನಹುದೋ ಸ್ವಾಮಿ ೪
ಅತಿ ಮಂದಮತಿ ಮಹಿಪತಿಗೆ ಸದ್ಗೈಸಿನ್ನು
ಪತಿತಪಾವನ ಮಾಡಿದ್ಯೋ ಸ್ವಾಮಿ ೫

೫೨೫
ಪರ ಅಕ್ಷರವ ಧ್ರುವ
ಕ್ಷರ ಅಕ್ಷರವ ಸೆÉರಗ ಪಿಡಿಯೋ
ಗುರು ಮುಖದಲಿ ನೀ ಪೂರ್ಣ
ಪರಮಾನಂದ ಸುಖದೋರುವ ಬಗೆ
ಅರಿಯೋ ಕೂಟ ಸ್ಥಳದಲಿ ಪ್ರಾಣಿ ೧
ರೇಚಕ ಪೂರ್ವಕದನುಭವ ತಿಳಿದು
ಯೋಚಿಸಿ ನೋಡಲಿಂದ
ಸೂಚಿಸಿ ತಾನೆ ಭಾಸುವ ಕ್ರಮವಿದು
ಅಚರಿಸೋ ಅನುಭವದಲಿ ಪ್ರಾಣಿ ೨
ಕ್ಷರ ಅಕ್ಷರವ ತಿಳಿಯದೆ ಬರೆವಾ
ಅಕ್ಷರದಾ ಖೂನ್ಯಾಕ
ಎರಡೇ ಮಾತಿನ ಅರಿವೇ ಅದರೆ
ಪರಲೋಕಕ್ಕೆ ಸೋಪಾನವಿದು ಪ್ರಾಣಿ ೩
ಇದೇ ಹೇಳಿದ ಗೀತೆಯಲ್ಲಿ
ಶ್ರೀಕೃಷ್ಣನೆ ತಾಂ ಅರ್ಜುನಗೆ
ಇದರಿಟ್ಟಿದು ಘನಸುಖ ಆ ಮಹಿಮನೆ
ಇದರಿಂದಲಿ ತಿಳಿವದು ನೀ ಪ್ರಾಣಿ ೪
ಇಡಾ ಪಿಂಗಳ ನಾಡಿ ನಡುವಿದು
ಸಾಧಿಸಿ ಮಾತಿನ ಖೂನ
ಎಡಬಲ ನೋಡದೆ ಪಡಕೋ ಮಹಿಪತಿ
ಒಡನೆ ನಿನ್ನೊಳು ನಿಧಾನ ೫

೧೦೭
ಪರಮ ಸಂಜೀವನವು ಗುರು ನಿಮ್ಮನಾಮ
ಸರುಮುನಿಯು ಸೇವಿಸುವ ದಿವ್ಯನಾಮ ಧ್ರುವ
ಕರಿಯ ಮೊರೆಯನು ಕೇಳಿ ದುರಿತ ಹರಿಸಿದ ನಾಮ
ಮೊರೆಯ ಹೊಕ್ಕವರ ಸ್ಥಿರ ಹೊರೆವ ನಾಮ
ತರಳ ಪ್ರಲ್ಹಾದನವಸರಕೆ ಒಲಿದಿಹ ನಾಮ
ಸ್ಮರಿಸುವರ ವಜ್ರಪಂಜರ ನಿಮ್ಮ ನಾಮ ೧
ಧರೆಯೊಳಗೆ ದ್ರೌಪದಿಯ ಸ್ಮರಣಿಗೊದಗಿದ ನಾಮ
ಕರುಣದಿಂದಭಿಮಾನಗಾಯ್ದ ನಾಮ
ದಾರಿದ್ರ್ಯವನು ಸುಧಾಮನಿಗಿಂಗಿಸಿದ ನಾಮ
ಸಿರಿ ಸಂಪತ್ತವು ಅಯಿತೀ ನಾಮ ೨
ಹರುಷಕರವಿತ್ತು ಉಪಮನ್ಯಗೊಲಿದ ನಾಮ
ಕ್ಷೀರಸಾಗರದ ನಾಮ
ಶರಣುಹೊಕ್ಕವರ ಪರಿಪರಿ ಕಾಯ್ದ ನಾಮ
ಧೀರ ಧ್ರುವಗಚಳ ಪದವಿತ್ತ ನಾಮ೩
ಕರೆದು ನಾರಗ ನೆಂದವನ ತಾರಿಸಿದ ನಾಮ
ಪರಮಪಾತಕ ಪರಿಹರಿಸಿದ ನಾಮ
ವರ ಮುನಿಜನರ ತೃಪ್ತಿಗೈಸುವ ನಾಮ
ಪರಮ ಭಕ್ತರ ಪ್ರಾಣಪ್ರಿಯ ನಾಮ ೪
ದುರಿತ ದಾರಿದ್ರ್ಯ ವಿಧ್ವಂಸಗೈಸುವ ನಾಮ
ಕರುಣಸಾಗರ ಪರಿಪೂರ್ಣ ನಾಮ
ನರಕೀಟಕ ಮಹಿಪತಿಯ ತಾರಕ ನಾಮ
ಪರಮ ಸಾಯೋಜ್ಯ ಗುರು ದಿವ್ಯ ನಾಮ ೫

೬೭೫
ಪರಮೇಶ್ವರ ಪೂರ್ಣ ತುಂಬ್ಯಾನ ಪರಾಮರಿಸಿ ನಿಮ್ಮೊಳಗೆ
ಪರದೆ ಇಲ್ಲದೆ ಪರವಸ್ತುದೋರುವ ಕರುಣಿಸಿ ನಿಮಿಷದೊಳಗೆ
ಕರವಿಡಿದು ಪಾರನೆ ದಾಟಿಸುತಿಹ ಸ್ವಾಮಿ ಸದ್ಗುರು ಜಗದೊಳಗೆ
ಎರಡಿಲ್ಲದೆ ಗುರುಚರಣಕ ಮನಬೆರೆದನುಭವಿಸುವದಾವಾಗೆ ತ್ರಾಹಿ ತ್ರಾಹಿ ೧
ನೋಡದೆ ತನ್ನೊಳು ಗೂಢವಾಗಿಹ್ಯ ನಿಜಮಾಡುವದೆಲ್ಲ ಡಾಂಭಿಕ
ಮೋಡದ ಮುಸುಕಿದು ಮಾಡಿದ ಮಾಟವು ಮಾಡದು ತಾ ನಿಜಸುಖ
ಕೂಡಲು ಪುಣ್ಯೊದಗ್ಯಾಗಲು ಗುರುಕೃಪೆ ನೋಡುದು ಕೌತುಕ
ನೀಡುವ ನಿಜ ಘನಕಾಟದನುಭವ ಗೂಡಿನೊಳನೇದಾ ತ್ರಾಹಿ ತ್ರಾಹಿ ೨
ಪೂಜಿಸಬೇಕು ಮೂಜಗದೊಡಿಯನ ಮನ ರಾಜಿಸುತಿಹ್ಯ ಶ್ರೀಪಾದ
ವಾಜಿ ವಂದನೆಮಾಡಿ ಅನುದಿನ ತಾ ಸೇವಿಸಬೇಕು ಸುಬೋಧ
ಮಾಜದೆ ಗುರುಚರಣಕ್ಕೆ ತನುಮನಧನ ಭಜಿಸಬೇಕು ಸರ್ವದಾ
ನಿಜ ಘನದೋರಿತು ಮಹಿಪತಿಗಿದು ತಾ ರಾಜಯೋಗಪ್ರಸಾದ ತ್ರಾಹಿ ತ್ರಾಹಿ ೩

೧೦೮
ಪಾಲಿಸಯ್ಯ ಪೂರ್ಣ ಲೋಲ ಲಕ್ಷುಮಿರಮಣ ಧ್ರುವ
ಮುನಿವರ ಪಾಲಕ
ಘನ ಸುಖದಾಯಕ
ಕನಕಾಂಬರಧರ ಕಸ್ತೂರಿ ತಿಲಕ
ಅನಾಥ ಬಂಧು ಅರ್ತ ರಕ್ಷಕ ೧
ಸಮಸ್ತಕೆ ನೀ ದಾತ
ವಿಮಳ ವಿರಾಜಿತ
ಕಮನೀಯಾನನ ಕಮಲ ಸಂಭವಸುತ
ಸೋಮಜು ವರಪ್ರಿಯ ಕಾಮಪೂರಿತ ೨
ಅನಂಗಜನಕ ಅಣುರೇಣುವ್ಯಾಪಕ
ದೀನ ಮಹಿಪತಿಗೆ
ನೀ ಬೀರೊ ಸ್ವಾನಂದಸುಖ
ಅನಂತಕೋಟಿ ಬ್ರಹ್ಮಾಂಡನಾಯಕ ೩

೧೦೯
ಪಾಲಿಸೊ ದೇವ ಮೂಲೋಕ ಕಾವ
ಎಲ್ಲರೊಳ ಗೀವ ಶ್ರೀ ಲಕ್ಷುಮಿಯ ಜೀವ ಧ್ರುವ
ಮುನಿಜನ ಪಾಲ ಘನಸುಖಲೋಲ
ಅನಾಥರನುಕೂಲ ದೀನದಯಾಳ ೧
ಕರುಣಾಸಾಗರ ಪರಮ ಉದಾರ
ಸುರಜನ ಸಹಕಾರ ದುರಿತ ಸಂಹಾರ ೨
ಸಿರಿಲೋಲ ಭೂಷಣ ಹರಿನಾರಾಯಣ
ತರಳ ಮಹಿಪತಿ ಪ್ರಾಣ ಹೊರಿಯೋ ನೀ ಪೂರ್ಣ ೩

೪೬೭
ಪೂಜಿ ಮಾಡುವ ಬನ್ನಿರೊ ಗುರುಪಾದ
ಪೂಜಿ ಮಾಡುವ ಬನ್ನಿರೊ ಧ್ರುವ
ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ
ನಿರ್ಮಳವೆಂಬ ಸುವಸ್ತ್ರದಿಂದಲಿ ದಿವ್ಯ ಪೂಜಿಯ ಮಾಡುವ ಬನ್ನಿರೊ ೧
ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಡುವ
ಸದ್ಭಾವ ಪರಿಮಳಪುಷ್ಪದಿಂದಲಿ ದಿವ್ಯ ಪೂಜಿ ಮಾಡುವ ಬನ್ನಿರೊ ೨
ಅರವ್ಹೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ
ಪರಮಾನಂದ ಹರುಷ ನೋಡುತ ನಿಜ ನಲಿದಾಡುವ ಬನ್ನಿರೊ ೩
ಭಕ್ತವತ್ಸಲ ಮೂರ್ತಿಗೆ ಸುಖದು:ಖ ಧೂಪಾರತಿ ಮಾಡುವ
ಏಕೋಚಿತ್ತವೆಂಬ ಏಕಾರತಿಯಿಂದ ಪೂಜಿ ಮಾಡುವ ಬನ್ನಿರೊ ೪
ನೆನವು ನೈವೇದ್ಯದಲಿ ಮನ ಬುದ್ಧಿ ತಾಂಬೂಲವ ನೀಡುವ
ಪ್ರಾಣ ಮಹಿಪತಿಯ ಪಂಚಾರತಿಯಿಂದ ಪೂಜಿ ಮಾಡುವ ಬನ್ನಿರೊ ೫

೬೭೬
ಪೂಜಿಮಾಡುವ ಬನ್ನಿ ರಾಜತೇಜೋನಿಧಿಯ
ರಾಜಾಧಿರಾಜ ಮಹಾರಾಜ ಗುರುಮೂರ್ತಿಯ ಧ್ರುವ
ಮನವೆ ಸುಮನಮಾಡಿ ಘನಗುರು ಪಾದಲಿಡಿ
ಅನುಭವದಿಂದ ನೋಡಿ ಅನುದಿನವೆ ಕೊಂಡಾಡಿ ೧
ಷೋಡಶೋಪಚಾರ ಮಾಡಿ ದೃಢ ವಿಚಾರ
ನೋಡಿ ಮನೋಹರ ಒಡಿಯನೆ ಸಹಕಾರ ೨
ಕಣ್ಣಿನೊಳಿಟ್ಟು ಖೂನ ಪುಣ್ಯನೋಡಿ ನಿಧಾನ
ಚಿಣ್ಣಮಹಿಪತಿಪ್ರಾಣ ಧನ್ಯಗೈಸುವ ಸಾಧನ ೩

೨೫೫
ಪ್ರಾಣಿ ದಿನ ಮೋಸಗಳೆಯಬ್ಯಾಡ ಧ್ರುವ
ವಂದಿಸದೆ ಸಾಧು ಸಜ್ಜನರ ಶ್ರೀಪಾದವನು
ಬರುದೆ ಶೋಧವಿಯ ನೀ ಮಾಡಬ್ಯಾಡ
ಅರಿಯದ ಧಮರಸಂಗ ಕೂಡಬ್ಯಾಡ
ಪರನಿಂದೆ ದೂಷಣೆಯ ಮಾಡಬ್ಯಾಡ
ಗುರುಹಿರಿಯರ ಮಾತು ಮೀರಬ್ಯಾಡ ೧
ಏನೆಂದು ತಿಳಿಯದೆ ಜ್ಞಾನಿಗಳ ಮಹಿಮೆಯನು
ಅಜ್ಞಾನತನದಲಿ ಉಳಬ್ಯಾಡ
ಹೀನ ಗುಣದಲಿ ನೀ ಬಾಳಬ್ಯಾಡ
ಅನ್ಯಾಯತನವೆ ನೀ ಕೇಳಬ್ಯಾಡ
ನಿನ್ನ ಸ್ತುತಿ ನೀನೆವೆ ಹೇಳಬ್ಯಾಡ ೨
ನಿನ್ನೊಳು ನಿನ್ನ ಸ್ಥಿತಿಗಳನು ತಿಳಿಯದೆ
ಮುನ್ನಿನವರ ಕುಂದ ನೀ ನೋಡಬ್ಯಾಡ
ನಾನೆ ದೊಡ್ಡವನೆಂದು ಆಡಬ್ಯಾಡ
ಮಹಿಪತಿ ನೀ ದಗಿಯ ಬೀಳಬ್ಯಾಡ
ಗುರು ಆಜ್ಞೆಯಿಂದ ಕಡಿಗ್ಯಾಗಬ್ಯಾಡ ಪ್ರಾಣಿ ೩

೪೬೬
ಪ್ರೀತಿಡುವುದು ಘನವಸ್ತು ಶ್ರೀಸದ್ಗುರುಪಾದದಲಿ ಧ್ರುವ
ಮನವಿಟ್ಟರೆ ಬಾಹುದು ಘನವು ನೆನವಿಗೆ ಅನುಕೂಲದ ನಿಜಧನವು
ಮುನಿಜನರಿಗಿದೆ ಸಾಧನವು ಅನುಭವದಾ ಗುಣವು ೧
ಭಾವಿಟ್ಟರೆ ಬಾಹನು ನೋಡಿ ದೇವಾಧಿದೇವನೆ ತಾ ಮೂಡಿ
ಠವಿಠವಿಸುವ ದಯಮಾಡಿ ಈವ್ಹನು ಕೈಗೂಡಿ೨

ರತಿಪ್ರೇಮನೆ ಇಟ್ಟುನೋಡಿ ಕ್ಷಿತಿಯೊಳು ಮಹಿಪತಿ ಗುರು ನಿಜಗೂಡಿ
ಹಿತದೋರುವ ತನ್ನೊಳು ಒಡಮೂಡಿ ಅತಿಹರುಷದಿಗೂಡಿ ೩

೩೩೦
ಫುಗಡಿ ಹಾಕಿ ಹೀಂಗ ಸುಗಮದಿಂದ ಬ್ಯಾಗ
ತ್ರಿಗುಣ ತಿಗಡತನ ಬಿಟ್ಟು ಮಿಗಿಲಮಿರುವ್ಹಾಂಗ ಧ್ರುವ
ಬಿಗಿದ ಗಚ್ಚಿಕಟ್ಟಿ ಜಗದೊಳ್ಹಾಕಿ ಫುಗಡಿ
ಬಗೆದು ಸಾಧುಸಂಗದೊಳಾಡಿದಾಕಿ ಸುಗಡಿ
ಇಗಡತನ ಬಿಟ್ಟು ನೀಗಿ ನಿಜಗೂಡಿ
ದುಗುಡ ಭಾವೆಲ್ಲ ಬಿಟ್ಟು ಫುಗಡಿ ಫೂಯೆಂದಾಡಿ ೧
ದೇಹ ಭಾವಮರೆದು ಫುಗಡಿ ಹಾಕಿ ಬ್ಯಾಗೆ
ಗುಹ್ಯಗೂಢವಿದೆ ನೋಡಿ ರಾಜಯೋಗ
ಸೋಹ್ಯದೋರಿಗೊಡುವ ಸದ್ಗುರು ನಿನ್ನೊಳೀಗ
ಬಾಹ್ಯಾಂತ್ರದೊಳು ಭಾಸುತಿಹ್ಯ ಬ್ರಹ್ಮಭೋಗ ೨
ಫುಗಡಿ ಇದೇ ನೋಡಿ ಯೋಗಸಾಧನ ಮಾಡಿ
ಹುಗುವರಿಯನೇ ಹೋಕು ಜಗದ್ಗುರುವಿನ ಕೂಡಿ
ಜಗದೀಶನ ಮಹಿಮೆ ಬಗೆಬಗೆಯ ಕೊಂಡಾಡಿ
ಸುಗಮಸಾಧನವೆಂದು ಮಹಿಪತಿ ಬೆರೆದ ಕೂಡಿ ೩

೨೫೬
ಬರುದೆ ಭ್ರಮೆಯಗೊಂಡ್ಯೊ ಮರುಳ ಮನುಜ ನೀನು ಧ್ರುವ
ಎರವ್ಹಿನ ಮನೆಯೊಳು ಮರಹು ಮರೆಯಗೊಂಡು
ಗರವು ಹಿಡಿದು ನಿನ್ನ ಕುರುಹು ತಿಳಿಯಲಿಲ್ಲ
ಹರೆದು ಭ್ರಾಂತಿಗೆ ಬಿದ್ದು ಸೊರಗಿ ದಣಿದೆಲ್ಲ ೧
ಏನು ಮರುಳಗೊಂಡ್ಯೊ ಹೀನಯೋನಿಯ ಮುಖಕೆ
ಕಾನನದೊಳು ಪೊಕ್ಕು ಖೂನ ತಿಳಿಯದೆ ನಿನ್ನ
ಜನುಮಜನುಮ ಬಂದ್ಯೊ ಜ್ಞಾನಶೂನ್ಯದಲಿ ೨
ನಾನು ನನ್ನದು ಎಂದು ಏನು ಗಳಿಸಿಕೊಂಡ್ಯೊ
ಸ್ವಾನುಭವದ ಸುಖ ಅನುಭವಿಸದೆ ಹೋಗಿ
ಸ್ವಾನ ಸೂಕರಯೋನಿ ಮುಖಸೋಸಿದೆಲ್ಲ ೩
ಹೊನ್ನು ಹೆಣ್ಣಿನ ಸವಿಯು ಬಣ್ಣಿಸಿ ನೀ ಬಯಸಿದಲ್ಲ
ಮಣ್ಣೇ ಮಾಣಿಕವೆಂದು ದಣ್ಣನೆ ದಣುವರೆ
ಕಣ್ಣಗೆಟ್ಟರೆ ಬ್ಯಾಡೊ ತನ್ನೊಳರಿಯದೆ ೪
ಮುತ್ತಿನಂಥ ಜನುಮ ವ್ಯರ್ಥಗಳಿಯಬ್ಯಾಡ
ಅರ್ತು ಸದ್ಗುರು ಪಾದ ಬೆರ್ತು ಮಹಿಪತಿ ಪೂರ್ಣ
ಸಾರ್ಥಕ ಮಾಡಿಕೊಳ್ಳೊ ಗುರುತುವರಿತು ನೀ ೫

೨೫೭
ಬಲಗೊಳ್ಳಿರೊ ಭಾವ ಭಕ್ತಿಯಿಂದ ನೆಲೆಯಗೊಂಡು
ಮೂಲವಿಡಿದು ನಿಜಮೂಲ ಮೂರ್ತಿಯ ಬಲಗೊಳ್ಳಿ ೧
ಏರಿ ನೋಡಿ ಅರುಚಕ್ರದಾಟಿ ತೋರುತಿಹ್ಯ
ಪೂರ್ಣಾನಂದ ಶ್ರೀ ಗುರುಮೂರ್ತಿಯ ಬಲಗೊಳ್ಳಿ ೨
ಸೆರಗವಿಡಿದು ನೋಡಿ ಕರಗಿಮನ ಅರವಿನೊಳು
ಬೆರೆದು ಕೂಡಿ ಹರಿ ಪರಬ್ರಹ್ಮನ ಬಲಗೊಳ್ಳಿ ೩
ಆಸಿಯನೆ ಜರೆದು ನಿರಾಸಿಯಲ್ಲಿ ಧ್ಯಾಸವಿಡಿದು
ಲೇಸಾಗಿ ಕೂಡಿರೊ ವಾಸುದೇವನ ಬಲಗೊಳ್ಳಿ ೪
ಮೂರು ಗುಣಕೆ ಮೀರಿ ತೋರಿತಿಹ್ಯ ನಿರ್ಗುಣನ
ನೆರೆದು ಕೂಡಿ ನಿಜ ನಿರುಪಮನ ಬಲಗೊಳ್ಳಿ ೫
ಸಹಸ್ರದಳಮಂಟಪದೊಳು ಸೋಹ್ಯವರಿತು
ಸಾಯಸದಿಂದ ಶ್ರೀಹರಿಯ ಬಲಗೊಳ್ಳಿ ೬
ತಾನೆ ತಾನಾಗಿಹ್ಯ ತನುವಿನೊಳು ಆನಂದೋಬ್ರಹ್ಮ-
ಜ್ಞಾನದಿಂದ ನೋಡಿ ಜ್ಞಾನಸಾಗರನ ಬಲಗೊಳ್ಳಿ ೭
ಮನವಿಡಿದು ಮಾಡಿರೊ ಧ್ಯಾನ ಮೌನ ಅನುದಿನ
ಅನುಕೂಲಾಗುವ ಅನಂತ ಗುಣನ ಬಲಗೊಳ್ಳಿ ೮
ಕಣ್ದೆರೆದು ನೋಡಿ ತನ್ನೊಳಗೆ ತಾನೆ ತಿಳಿದು
ತನುಮನರ್ಪಿಸಿ ಗುರುಮೂರ್ತಿಯ ಬ¯ಗೊಳ್ಳಿ ೯
ಗುರು ಕರುಣದೊಲವಿಂದ ಪಡೆದು ಪೂರ್ಣ
ಹರಿಯು ಸುಖ ಸೂರ್ಯಾಡಿ ಪರಮ ಅನಂದ ಸುಪಥ ೧೦
ಅರ್ತುಕೂಡಿದ ನೋಡಿ ಅರ್ತಿಯಿಂದ ಮಹಿಪತಿಯ
ಬೆರ್ತುಕೂಡಿದ ಮನ ಕರ್ತುಗುರುವಿನ ಬಲಗೊಳ್ಳಿ ೧೧

೧೧೧
ಬಲು ದೊಡ್ಡಸ್ವಾಮಿ ಮೂಲೋಕದೊಡಿಯ ನಮ್ಮ ಧ್ರುವ
ಅನಂತಕೋಟಿ ಬ್ರಹ್ಮಾಂಡ ಅನುದಿನನಾಳುತ ಪ್ರಚಂಡ
ತಾನೆ ಆಗ್ಯಾನೆ ಅಖಂಡ ಘನಗುರು ಮಾರ್ತಾಂಡ ೧
ದಿಟ್ಟ ಧ್ರುವಗೆ ಅಚಲಪದದಲಿಟ್ಟ ದೃಷ್ಟಿಸಿ
ವಿಭೀಷಣಗೆ ಸ್ಥಿರಕೊಟ್ಟ
ದುಷ್ಟರ ಜನರ ಕುಟ್ಟಿ ನಿಷ್ಠುರ ನಿಜಶ್ರೇಷ್ಠ ೨
ಕೊಟ್ಟರೆ ಕೊಡುವ ಸೂರ್ಯಾಡಿ
ಶಿಷ್ಟರಜನರಿಗಭಯವ ನಿಜನೋಡಿ
ಮುಟ್ಟಿ ಮುದ್ರಿಸಿ ದಯಮಾಡಿ ಪೃಷ್ಠದಲಿ ನೋಡಿ ೩
ಇತ್ತ ಭಾಷೆಗೆ ತಾ ಎಂದಿಗೆ ತಪ್ಪ ತುತ್ತುತುತ್ತಿಗೆ
ಗ್ರಾಸವು ತಂದಿಪ್ಪ
ಚಿತ್ಪ್ರಕಾಶದ ಸ್ವರೂಪ ಭಕ್ತರ ಪಾಲಿಪ ೪
ನೇಮಿಸಿ ಮಹಿಪತಿಗೆ ಶ್ಲಾಘ್ಯ
ನಾಮದೊಲವಿಲೆ ತನುನಿಜಭಾಗ್ಯ
ಸ್ವಾಮಿಸೇವೆಗೆ ಮಾಡಿದ ಯೋಗ್ಯ ಪ್ರೇಮದಂತಾಭೋಗ್ಯ ೫

೧೧೦
ಬಲುದೊಡ್ಡ ಧೊರಿ ದೊರಕಿದೆನಗೊಬ್ಬ ನೋಡಿ
ಸಲಹುತಿಹ್ಯ ಸಕಲಾರ್ಥ ಸಾರಾಯ ನೀಡಿ ಧ್ರುವ
ದೊರೆಗಳಾದವರಿಗೆಲ್ಲ ಈತನೆ ದೊರೆಯು
ಚರಣಸೇವೆಯಲ್ಲಿಹಳು ಅಖಂಡ ಸಿರಿಯು
ಸುರಮುನಿಜನರ ಪಾಲಿಸುತಿಹ್ಯ ಪರೋಪರಿಯು
ಸರಿಸಿಜೋದ್ಭವನುತಗಿಲ್ಲ ಸರಿಯು ೧
ಅನಂತಕೋಟಿ ಬ್ರಹ್ಮಾಂಡ ನಾಯಕನೆಂದು
ಅನಂತಸಿದ್ಧಿ ವಾಲ್ಗೈಸುತಿಹವು
ಅನಂತಗುಣ ಪರಿಪೂರ್ಣ ಶ್ರೀ ಹರಿಯೆಂದು
ಅನಂತಶ್ರುತಿ ಸ್ರ‍ಮತಿ ಸಾರುತಿಹ್ಯವು ೨
ಅನೆಮೊದಲಿರುವೆÉ ಕಡೆ ಅನುದಿನಾಹಾರವಿತ್ತು
ಜನವನವಿಜನದಿ ರಕ್ಷಿಸುತಿಹನು
ದೀನ ಮಹಿಪತಿಸ್ವಾಮಿ ಭಾನುಕೋಟಿತೇಜ
ತಾನೆ ತಾನಾಗೆನಗೆ ಸಲಹುತಿಹ್ಯನು ೩

೪೬೮
ಬಲುಸೂಕ್ಷ್ಮ ಗುರು ಗೂಢವಿದ್ಯ
ನೆಲೆವಂತಗಿದು ನಿಜವಾಗುದು ಸಾಧ್ಯ ಧ್ರುವ
ಕಣ್ಣಿನ ಕೊನೆ ಮುಟ್ಟಿನೋಡಿ ನಿಜಖೂನ
ಉನ್ಮನವಾಗಿ ಬೆರೆದಾಡುವ ನಿಜಸ್ಥಾನ
ಚೆನ್ನಾಗ್ಯಾದಾನಂದ ಘನ
ಭಿನ್ನವಿಲ್ಲದೆ ಮಾಡಿ ನಿಜಗುರು ಧ್ಯಾನ ೧
ಜಾಗ್ರ ನಿದ್ರೆಯ ಮಧ್ಯ ಅರವಿನೊಳು ನಿಜಗೂಡಿ
ಶೀಘ್ರ ಸಿದ್ಧಾಂತನುಭವಿಸಿ ತಾಂ ನಿಜಮಾಡಿ
ಅಗ್ರ ಗುರುಪಾದವನು ಕೂಡಿ
ಸುಗ್ರಾಸ ಶುಕ ಮುನಿಗಳಿಗಿದೆ ನೋಡಿ ೨
ಶಿರದಲಿ ಕರವಿಟ್ಟು ನೋಡಿ ನಿಜವರ್ಮ
ಹರಿಸಿ ಅನೇಕ ಜನ್ಮಾಂತರದ ದುಷ್ಕರ್ಮ
ತರಳಮಹಿಪತಿಗಿದೆ ಸುಬ್ರಹ್ಮ
ಗುರು ಭಾಸ್ಕರಸ್ವಾಮಿ ಶ್ರೀಪಾದ ಧರ್ಮ ೩

೩೪೧
ಬಾಟ ಪಕಡೊ ಸೀದಾ | ನ ಘಡೆ ತೇಥೆ ಬಾಧಾ
ಇದುವೆ ಗುರು ನಿಜಬೋಧ | ಸ್ವಸುಖ ಸಮ್ಮತವಾದಾ ಧ್ರುವ
ಬಂದಗೀ ಕರ್ತಾ ಕರಕೇ ಝೂಟಾ |
ತಿಳಿಯದು ನಿಜ ಘನದಾಟಾ
ಮರ್ಮನ ಕಳತಾ ಕರಣೀ ಖೋಟಾ
ಕೇಳಿ ಶ್ರೀ ಗುರುವಿಗೆ ನೀಟಾ ೧
ಜಾನಭೂಜಕರ ಚಲನಾ ಭಾಯಿ
ಲಕ್ಷ ಲಾವುನೀ ಗುರುಪಾಯೀ
ಇದು ಎಲ್ಲರಿಗೆ ದೋರುದೇನಯ್ಯ
ಹೇ ಸಮಝೆ ವಿರಲಾ ಕೋಯೀ೨
ತಿಳಿದು ನೋಡಿ ಶ್ರೀ ಗುರುಕೃಪೆಯಿಂದಾ
ಹುವಾ ಖುದಾಕಾ ಬಂದಾ
ಮಹಿಪತಿಗಾಯಿತು ಬಲು ಆನಂದಾ
ಹರೀ ಮ್ಹಣಾ ಗೋವಿಂದಾ ೩

ಗುರುಸ್ತುತಿ
೩೪೪
ಬಾರಯ್ಯ ಗುಣನಿಧಿಯೆ ಗುರುಭಾನುಕೋಟ್ಯುದಯ ಧ್ರುವ
ಗುರುವರ ಶಿರೋಮಣಿಯೆ ಕರುಣಾನಂದ ಖಣಿಯೆ
ಶರಣರಕ್ಷಕ ಸದ್ಗುಣಿಯೆ ಸುರತರು ಚಿಂತಾಮಣಿಯೆ ೧
ಸುಗಣನಹುದೋ ನಿರ್ಗುಣಿಯೆ ಸುಗಮ
ಸುಪಥದ ಸಾಧನಿಯೆ
ಭಕ್ತಜನಭೂಷಣಿಯೆ ಜಗತ್ರಯ ಜೀವನಿಯೆ ೨
ಮಹಾನುಭವದ ಜಾಗ್ರತಿಯೆ ಮಹಿಮರ ಘನ ಸ್ಫೂರುತಿಯೆ
ಮಹಿಪತಿ ಸ್ವಾಮಿ ಶ್ರೀಪತಿಯೆ ಸಹಕಾರ ಸುಮೂರುತಿಯೆ ೩

೫೯೪
ಬಾರಯ್ಯ ಗುರು ಸ್ವಾಮಿ ಶ್ರೀಸದ್ಗುರು ಎನ್ನ ಮನೋಮಂದಿರಕೆ
ಕರುಣಾನಂದದ ಸುಖ ಬೀರುತ ಬಾರೈ ಆತ್ಮಾನುಭವಕೆ ಧ್ರುವ
ಕಣ್ಣು ಹಾರುತಿದೆ ಬಲದೆನ್ನ ಖೂನದೋರವ್ಹಾಂಗಿಂದು
ಚೆನ್ನಾಗ್ಹೊಳಿಯುತಿ ಸುಚಿಹ್ನ ನೀನೊಲಿಯವ್ಹಾಂಗೆ ಬಂದು
ಎನ್ನೋಳೀವ್ಹಾಂಗ ಸನಾತನ ಪಾಲಿಸಿದೆನಗೊಂದು
ಧನ್ಯಗೈಸುವ ದಯಾಳು ನೀನಹುದೊ ಕೃಪಾಸಿಂಧು ೧
ಏನೊಂದರಿಯೆ ಒಂದು ಸಾಧನ ಧ್ಯಾನಮೌನ ಹ್ಯಾಗೆಂದು
ಖೂನಬಲ್ಲೆನೊ ನಿಮ್ಮ ಬಿರುದಿನ ದೀನನಾಥ ನೀ ಎಂದು
ನ್ಯೂನಾರಿಸದೆನ್ನೊಳಗಿನ ನೀನೆ ಅನಾಥಬಂಧು
ಎನಗುಳ್ಳ ಸ್ವಾಮಿ ಸದೋದಿತ ನೀನಹುದೊ ಎಂದೆಂದು ೨
ತಾಯಿ ಶಿಶುಸ್ತನಪಾನಕೆ ಬಾಯಿಯೊಳಗಿಡುವ್ಹಾಂಗ
ಸಾಯಾಸವಿಲ್ಲದೀಪರಿ ದಯಮಾಡುವದೆನಗೆ
ಶ್ರೇಯಸುಖದಾಯಕೊಬ್ಬನು ನೀನೆ ಭಾನುಕೋಟಿ ಎನಗೆ
ತಾಯಿತಂದೆ ಎನಗೆ ಅನುದಿನ ದೀನಮಹಿಪತಿಗೆ ೩

೧೪
ಬಾರಯ್ಯ ಗುರುದೇವರಾಯ ಶ್ರೀ
ಹರಿಯೆ ನಮ್ಮಯ್ಯ ಗುರು ಭಕ್ತಜನ ಪ್ರಿಯ ಧ್ರುವ
ನೀರೊಳು ಪೂಕ್ಕು ನಿಗಮನ ತಂದಿ ಬಾರಯ್ಯ
ಧರಿಯ ಬೆನ್ನಿಲಿ ಪೊತ್ತು ನಿಂದಿ ನೀ ಬಾರಯ್ಯ
ಧಾರುಣಿಯ ಗೆದ್ದು ಹಿರಣ್ಯಕನ ಕೊಂದಿ ಬಾರಯ್ಯ
ತರಳಗೆ ಒಲಿದ ಬಾರಯ್ಯ ಶ್ರೀ ಹರಿ
ಎಂದೆನಯ್ಯ ಗುರುತಂದೆಬಾರಯ್ಯ ೧
ಮೂರು ಪಾದವನಳಿದುಕೊಂಡಿ ನೀ ಬಾರಯ್ಯ
ಹರಿಗಡಿದು ಸಾಸಾರ್ಜುನನ ಕೊಂದಿ ಬಾರಯ್ಯ
ಶಿರಗಳನೆ ಚೆಂಡಾಡಿ
ಸಿರಿ ತಂದಿ ಬಾರಯ್ಯ ಗಿರಿಯೆನೆತ್ತಿ ನಿಂದಿ ಬಾರಯ್ಯ ಶ್ರೀ
ಹರಿ ಮುಕುಂದಯ್ಯ ಗೋವಿಂದ ಬಾರಯ್ಯ ೨
ಬರಿಯ ಬೆತ್ತಲೆ ಆಗಿ ವ್ರತವಳಿದಿ ಬಾರಯ್ಯ
ಏರಿ ಕುದುರಿಯನೆ ರಾವುತನಾದಿ ಬಾರಯ್ಯ ಪರಮಭಕ್ತರನು
ಹೊರಿಯಲಿ ಬಂದಿ ಬಾರಯ್ಯ ಪರಿಪರಿ ರೂಪವಾದಯ್ಯ
ತರಳ ಮಹಿಪತಿ ಪ್ರಾಣದೊಡೆಯ ಬಾರಯ್ಯ ೩

೧೫
ಬಾರಯ್ಯ ಬಾರಯ್ಯ ಬಾರೊ ಶ್ರೀ ಹರಿಯೆ
ಬಾರಯ್ಯ ಗುರು ಶಿರೋಮಣಿಯೆ ೧
ಮಚ್ಛನಹುದು ಗುರು ಸಚ್ಚಿದಾನಂದನೆ
ಅಚ್ಯುತಾನಂತ ನೀ ಬಾರಯ್ಯ ೨
ಕೂರ್ಮನಹುದು ಗುರು ಧರ್ಮ ಸಹಕಾರನೆ
ನಿರ್ಮಳಾನಂದ ನೀ ಬಾರಯ್ಯ ೩
ವರಾಹನಹುದು ಗುರು ವಾರಿಜನೇತ್ರನೆ
ವರಮುನಿಹೃದಯ ನೀ ಬಾರಯ್ಯ ೪
ನರಸಿಂಹನಹುದು ಗುರು ನರಹರಿಯೆ
ನಾರಾಯಣನೆ ನೀನು ಬಾರಯ್ಯ ೫
ವಾಮನಹುದು ನೀ ಬ್ರಾಹ್ಮಣೋತ್ತಮನೆ
ಬ್ರಹ್ಮಾನಂದ ಶ್ರೀ ಗುರು ಬಾರಯ್ಯ ೬
ಭಾರ್ಗವರಾಮನಹುದು ಪರಾಕ್ರಮನೆ
ಪರಮಪುರಷ ಗುರು ಬಾರಯ್ಯ ೭
ರಾಮನಹುದು ಗುರು ಕಾಮ ನೀ ಪೂರಿತ
ಸಾಮಗಾಯನ ಪ್ರಿಯ ಬಾರಯ್ಯ ೮
ಕೃಷ್ಣನಹುದೊ ಗುರುವಿಷ್ಣು ಪರಮಾತ್ಮನೆ
ದೃಷ್ಟ ಮೂರುತಿ ನೀನು ಬಾರಯ್ಯ ೯
ಬೌದ್ಧನಹುದು ಗುರು ವೇದಾಂತಮಹಿಮನೆ
ಸಿದ್ಧಶಿಖಾಮಣಿ ಬಾರಯ್ಯ ೧೦
ಕಲಿಕ್ಯವತಾರನಹುದು ಮೂಢನಾತ್ಮನೆ
ಬಾಲಮುಕಂದ ನೀ ಬಾರಯ್ಯ ೧೧

೫೯೫
ಬಾರಯ್ಯ ಬಾರೊ ಗುರುರಾಯ ತೋರಯ್ಯ ನಿಜಪ್ರಭೆಯ
ಬೀರಿಸಯ್ಯ ನಿಮ್ಮದಯಕರುಣಿಸಯ್ಯಾನಂದೋದಯ ಧ್ರುವ||
ಕಣ್ಣು ಒರೆಯುತಿದೆ ಇಂದು ಪುಣ್ಯಚರಣ ನೋಡೇನೆಂದು
ಮನ್ನಿಸಯ್ಯ ಕೃಪಾಸಿಂಧು ಧನ್ಯಗೈಸಯ್ಯ ನೀ ಬಂದು ೧
ಮನವು ನೆನವುತದೆ ನಿಮ್ಮ ಅನುವಾಗಿ ನೋಡೇನೊಮ್ಮೆ
ಕನಗರಿಸೇಳುತ್ತದೆ ನಿಮ್ಮ ಅನುಕೂಲಾಗಾನಂದೋಬ್ರಹ್ಮ ೨
ನೆವನಗೊಂಡಿದೆನ್ನಪ್ರಾಣ ಹವಣಿಸಿ ನೋಡಲು ಖೂನ
ಭಾವಿಸುತಿದೆ ಜೀವನ ದೈವಾಗಿಬಾರಯ್ಯ ಪೂರ್ಣ ೩
ಕಂದ ನಿಮ್ಮ ಮಹಿಪತೆಂದು ಬಂದು ಕೂಡೊ ಹೃದಯಲಿಂದು
ತಂದೆ ತಾಯಿ ನೀನೆ ಬಂಧು ಎಂದೆಂದಗಲದಿರೊ ಬಂದು ೪

೧೬
ಬಾರಯ್ಯ ಭಕ್ತವತ್ಸಲ ಬಾರೋ ಶ್ರೀ
ಹರಿ ಗೋಪಾಲ ಸಿರಿಸುಖಲೋಲ ಧ್ರುವ
ಸಾಮಗಾಯನ ಪ್ರಿಯ ಸಮಸ್ತಲೋಕದ ಶ್ರೇಯ
ನೇಮಿಸಿ ಬೀರೊ ದಯ ಸ್ವಾಮಿ ನಮ್ಮಯ್ಯ ೧
ಅನಾಥರನುಕೂಲ ಮುನಿಜನ ಪ್ರತಿಪಾಲ
ಘನಸುಖದ ಕಲ್ಲೋಳ ದೀನದಯಾಳ ೨
ಮನಮಂದಿರದೊಳು ಅನುವಾಗಿ ಬಂದು ಬಾಳು
ದೀನಮಹಿಪತಿಗಾಳು ಘನವಾಗಿ ಕೇಳು ೩

೧೭
ಬಾರಯ್ಯ ಭಕ್ತವತ್ಸಲ ಶ್ರೀ
ಗುರು ಮುದ್ದುಕೃಷ್ಣ ಮದನಗೋಪಾಲ ಧ್ರುವ
ಯಾದವಕುಲತಿಲಕ ಶ್ರೀದೇವದೇವ
ಸಾಧುಜನರ ಪಾಲಕ
ಉದ್ಧವ ಪ್ರಾಣಪೋಷಕ
ಆದಿಕೇಶವ ಸದಮಲ ಸುಖದಾಯಕ ೧
ಇಂದೀವರದಳನಯನ ನಂದಕುಮಾರ
ಸುಂದರ ಶುಭವದನ
ಮಾಧವ ಮಧುಸೂದನ
ಮಂದರಧರ ವೃಂದ ಗೋಕುಲೋದ್ಧರಣ ೨
ಮುರಹರ ಸಂಕರುಷಣ ಉರಗಶಯನ
ತೋರಯ್ಯ ನಿಮ್ಮ ಚರಣ
ಬಾರಯ್ಯ ನಾರಾಯಣ
ಗರುಡವಾಹನ ಹೊರೆಯಾ ಮಹಿಪತಿ ಪ್ರಾಣ ೩

Leave a Reply

Your email address will not be published. Required fields are marked *