Categories
ರಚನೆಗಳು

ಕಾಖಂಡಕಿ ಶ್ರೀ ಮಹಿಪತಿರಾಯರು

೧೯೨
ಜಯದೇವ ಜಯದೇವ ಜಯ ವಾಸುದೇವ
ಭಾಸುವ ಭಾಸ್ಕರಕೋಟಿತೇಜನ ಮನದೈವ ಧ್ರುವ
ಪ್ರಾರ್ಥಿಸುವದರ್ತಿ ಆರ್ಥಿಯ ಘನ ಸ್ಫೂರ್ತಿ
ಸ್ಪೂರ್ತಿಗೆ ಸುಸ್ಥಾನಾಗಿಹ ನೀ ಘನಗುರು ಮೂರ್ತಿ
ಮೂರ್ತಿ ನಿಮ್ಮ ಕೀರ್ತಿ ಬೆಳಗುದು ಭಾವಾರ್ತಿ
ಅರ್ತಿ ಬೆಳಗುವ ಕಂಗಳಿಗ್ಯಾಗಿಹ ನೀ ಸಾರ್ಥಿ ೧
ಸುಗುಣ ನಿರ್ಗುಣ ನೀನೆ ಪರಿಪೂರ್ಣ
ಯೋಗಿಯ ಮಾನಸಹಂಸನಾಗುವೆ ನೀ ಪೂರ್ಣ
ಬಗೆ ಬಗೆ ಭಾಸುವ ಭಕ್ತವತ್ಸಲ ಗುಣ
ಸುಗಮಾಗೂದಕೆ ನಿಮ್ಮ ದಯ ಆಧಿಷ್ಠಾನ ೨
ಮುನಿಜನಕಾಗುವ ಖೂನ ಸ್ವಾನುಭದ ಜ್ಞಾನ
ಸನಕ ಸನಂದನ ವಂದಿತ ನೀನೆ ಅನುದಿನ
ಘನಸುಖದಾಯಕ ಸದ್ಗುರು ನೀ ನಿಧಾನ
ದೀನ ಮಹಿಪತಿ ಸ್ವಾಮಿ ನೀ ಸನಾತನ ೩

೪೨೯
ಜಾಗಿಸಬೇಕು ಜಗದ್ಗುರುವಿನ ಕೃಪೆಯಿಂದ ಧ್ರುವ
ಜಾಗಿಸದಲ್ಲದೆ ಖೂನ ಸುಗಮ ಸುಪಥದೋರದು ನಿಧಾನ
ಯೋಗಿಜನರ ನಿಜಧನ ಆಗುದು ಸ್ವಾಧೀನ ೧
ಜಾಗಿಸಿ ನೋಡಲು ಸ್ವಸುಖ ಬಗೆಬಗೆದೋರುತದೆ ಅನೇಕ
ಅಗಣಿತಗಮ್ಯಾಲೋಲಿತ ಶ್ರೀಗುರು ಕೌತುಕ ೨
ಝಗಿಝಗಿಸುವ ಜಗಜ್ಯೋತಿ ಜಾಗಿಸಿದ ಶ್ರೀ ಸದ್ಗುರುಮೂರ್ತಿ
ಸಾಗಿ ಭವನಿದ್ರೆಯವಾರ್ತಿ ನೀಗಿದ ಮಹಿಪತಿ ೩

೨೨೫
ಜಾಣತನದ ಮಾತು ಏನು ಕೆಲಸವಯ್ಯ ಖೂನ ನೋಡಿ
ಪ್ರಾಣನಾಯಕನ ತಿಳಿವುದೊಂದೆ ಜ್ಞಾನಾಭ್ಯಾಸ ಮಾಡಿ ಧ್ರುವ
ಕರಿಮಣಿ ಒಂದಿಲ್ಲದೆ ಹೆಂಗಸಿಗೆ ಸರಮುತ್ತು ಯಾಕೆ
ಸಾರ ಸಂಜೀವನಿಲ್ಲದೆ ನೂರು ಗಿಡಮೂಲಿಕೆ ಯಾಕೆ
ನೆರೆ ಇಲ್ಲದೆ ಸಾಧುಸಜ್ಜನರು ಸರ್ವಬಳಗವ್ಯಾಕೆ
ಪರಮ ತತ್ವಜ್ಞಾನ ಒಂದಿಲ್ಲದೆ ಸುರಿಯುವ ಮಾತಿನ್ಯಾಕೆ ೧
ಪ್ರಾಣವಿಲ್ಲದ ಸುಂದರವಾದ ಶರೀರ್ಯಾಕೆ
ಖೂನವಿಲ್ಲದೆ ನೂರು ಕಾಲ ಬದಕುವುವದ್ಯಾಕೆ
ಸ್ವಾನುಭವದ ಸುಖ ನೆಲೆಯುಗೊಳ್ಳದೆ ಒಣ ಡಂಭವ್ಯಾಕೆ
ತಾನಾಗಿಹ್ಯ ವಸ್ತು ದೊರಕಿಲ್ಲದೆ ನಾ ನೀನೆಂಬುದ್ಯಾಕೆ ೨
ಶ್ರೀ ಹರಿಮಹಿಮೆಯ ಸೋಹ್ಯ ತಿಳಿಯದೆ ದೇಹ್ಯವ್ಯಾಕೆ
ಗುಹ್ಯಗುರುತವಿಲ್ಲದೆ ಸಾಯಸಬಡುವದ್ಯಾಕೆ
ಸಾಹ್ಯಮಾಡುವ ಸದ್ವಸ್ತು ನೋಡದ ಕಣ್ಣು ನೋಟವ್ಯಾಕೆ
ಮಹಿಪತಿಸ್ವಾಮಿ ಸದ್ಗುರುಪಾದ ಕಾಣದ ಜನ್ಮವ್ಯಾಕೆ ೩

೪೩೧
ಜೀವ ನಿಮ್ಮದೊ ಗುರು ಭಾವ ನಿಮ್ಮದೊ
ಜೀವ ಭಾವದ ಶಿವಸೂತ್ರ ನಿಮ್ಮದೊ ಧ್ರುವ
ಕಾಯ ಮಾಯ ನಿಮ್ಮದು ಅಂತ್ರ ಬಾಹ್ಯ ನಿಮ್ಮದು
ನಿರ್ಮಿಸಿಹ್ಯ ಇದು ಉಪಾಯ ನಿಮ್ಮದು ೧
ಪೃಥ್ವಿ ಅಪ್ಪು ನಿಮ್ಮದು ತೇಜ ತತ್ತ್ವ ನಿಮ್ಮದು
ವಾಯುವಾಕಾಶವೆ ತಾ ತತ್ತ್ವನಿಮ್ಮದು ೨
ಪ್ರಾಣವೇ ನಿಮ್ಮದು ಪಾನವೇ ನಿಮ್ಮದು
ವ್ಯಾನ ಉದಾನ ಸಮಾನ ನಿಮ್ಮದು ೩
ಅಂತಃಕರಣ ನಿಮ್ಮದು ಬುದ್ದಿಮನ ನಿಮ್ಮದು
ಚಿತ್ತ ಚೈತನ್ಯ ಚೇತನ ನಿಮ್ಮದು ೪
ನುಡಿನೋಟ ನಿಮ್ಮದು ಆಟಕೂಟ ನಿಮ್ಮದು
ಕರ್ನ ಕೇಳಿಕೆಯಾಟವು ನಿಮ್ಮದು ೫
ಸ್ಥೂಲ ಸೂಕ್ಷ್ಮ ನಿಮ್ಮದು ಕಾರಣವು ನಿಮ್ಮದು
ಮಹಾ ಕಾರಣವು ಆನಂದ ನಿಮ್ಮದು೬
ಜಾಗ್ರತೆ ನಿಮ್ಮದು ಶೀಘ್ರತಿ ನಿಮ್ಮದು
ಪ್ರವೃತ್ತಿನಿವೃತ್ತಿ ಸುವ್ಯಕ್ತಿ ನಿಮ್ಮದು ೭
ಸ್ವಪ್ನಾವಸ್ಥೆ ನಿಮ್ಮದು ಸುಷಪ್ತಿ ನಿಮ್ಮದು
ಸರ್ವಾವಸ್ಥೆಗಳ ಲಕ್ಷಣ ನಿಮ್ಮದು ೮
ಅರಹು ಮರಹು ನಿಮ್ಮದು ಖೂನ ಕುರಹು ನಿಮ್ಮದು
ತಿರವು ಮುರವಿನಮಲ ಸೂತ್ರ ನಿಮ್ಮದು ೯
ಇಹಪರ ನಿಮ್ಮದು ಸಾಹ್ಯ ಸರ್ವ ನಿಮ್ಮದು
ಗುಹ್ಯ ಗುರುತ ದೋರುವ ಸೋಹ್ಯ ನಿಮ್ಮದು ೧೦
ಮಹಿಪತಿ ಜೀವ ನಿರ್ಮಿತ ಜ್ಞಾತಿ ನಿಮ್ಮದು
ಸದ್ಗತಿಗೈಸುವ ಖ್ಯಾತಿ ನಿಮ್ಮದು ೧೧

೫೪೨
ಜೋ ಜೋ ಧ್ರುವ
ದೃಷ್ಟಿಯೊಳು ಗುರುದೃಷ್ಟಾಂತ ಪುಟ್ಟಿ ದೃಷ್ಟಾಂತನುಭವ ತೊಟ್ಟಿಲ ಕಟ್ಟಿ
ನಟ್ಟನಡುಮಧ್ಯ ಜಗಜಟ್ಟಿ ತೊಟ್ಟಿಲ ತೂಗಿರೆ ಮನಮುಟ್ಟಿ ೧
ಧ್ಯಾನಧಾರಣದರಳೆಲೆ ಮಾಡಿ ಕರ್ನಕುಂಡಲ ಲಯಲಕ್ಷವಿಡಿ
ಜ್ಞಾನವೈರಾಗ್ಯ ಸರಪಳಿಮಾಡಿ ಸ್ಮರಣಿ ಹುಲಿ ಉಗುರ ಕರುಣನ ಪಾಡಿ ೨
ಚಿತ್ತ ಚಿಂತನಿ ಅಸರೀಫ ಮಾಡಿ ಭಕ್ತಿಭಾಂವ ತೋಳತಾಯಿತವಿಡಿ
ರತಿಪ್ರೇಮರತ್ನದುಂಗರಮಾಡಿ ವಸ್ತ್ರ ಶ್ರೀಗುರುಮುರ್ತಿಯ ನೋಡಿ ೩
ನಡುನಿಶ್ಚಯದುಡುದಾರ ಮಾಡಿ ಜಡಿತಾಭರಣದುಡುಗಿಯ ನೀಡಿ
ದೃಢಗೆಜ್ಜೆ ಹಾಲಗಡಗವ ಮಾಡಿ ಒಡಿಯ ಶ್ರೀ ಸರ್ವೋತ್ತಮನ ಪಾಡಿ ೪
ನಿತ್ಯ ಆನಂದಮೂರ್ತಿಯ ತೂಗಿ ಪತಿತ ಜೀವನಪಾವನ್ನವಾಗಿ
ಚಿತ್ತಮನಬುದ್ಧಿ ಏಕತ್ವವಾಗಿ ಭಕ್ತವತ್ಸಲನ ತೊಟ್ಟಿಲ ತೂಗಿ ೫
ಅದೃಷ್ಟದಲಿ ಸದೃಷ್ಟವಾಗಿ ಸದ್ಬ್ರಹ್ಮಾನಂದ ಸದ್ಗುರುಯೋಗಿ
ಸಾದೃಶ್ಯದಲಿ ಸಂತೃಪ್ತವಾಗಿ ಆದಿ ಅನಾದಿಯ ಮೂರ್ತಿಯ ತೂಗಿ ೬
ಯೋಗ ಆನಂದಭೋಗವ ಮಾಡಿ ಜಗ ಜೀವನಮೂರ್ತಿಯ ಪಾಡಿ
ಜಾಗ್ರತ ಸ್ವಪ್ನ ಸುಷುಪ್ತಿ ತತ್ವಮಾಡಿ ತೂಗಿದ ಮಹಿಪತಿ ಘನ ಕೂಡಿ ೭

೫೪೩
ಜೋ ಜೋ ಜೋ ನಿತ್ಯಾನಂದನೆ ಜೋ
ಜೋ ಸಚ್ಚಿದಾನಂದನೆ
ಜೋ ಜೋ ದೇವಕಿಕಂದನೆ ಜೋಜೋ ಬ್ರಹ್ಮಾದಿವಂದ್ಯನೆ ಧ್ರುವ
ಹುಟ್ಟಿ ಬಂದು ನಿಜದೋರಿದೆ ಖೂನ
ಮುಟ್ಟಿ ಬೀರುವ ಸುಚಿನ್ನಸಾಧನ
ಇಟ್ಟ ಕಾವಲಿ ಹಾಕಿದೆ ಮೌನ
ಮೆಟ್ಟಿಮರ್ದಿಸಿ ಬಂದೆ ಮಾವನ ೧
ಮಾಡಬಂದೆ ನೀ ಧರ್ಮಸ್ಥಾಪನಿಯ
ನೋಡಬಂದೆನಿಷ್ಟ ಜನರಾರ್ಚನಿಯ
ಆಡಬಂದೆ ನಂದಯಶೋದೆ ಮನಿಯ
ನೀಡಬಂದೆ ನಿಜಸುಖಸಾಧನಿಯ ೨
ಶಿಷ್ಟಜನರಿಗಾಗಿ ಸಹಾಕಾರಿ
ಸೃಷ್ಟಿಯೊಳು ತೋರಬಂದೆ ಶ್ರೀಹರಿ
ದುಷ್ಟ ಜನರ ಮರ್ದಿಸುವಾವತಾರಿ
ತೊಟ್ಟಿಲೊಳಾಡುತಿದ್ದ ಕಂಸಾರಿ ೩
ದೇವಾದಿಗಳ ಮಗುಟಮಣಿಯೆ
ಭಾವಿಸಲಳವಲ್ಲ ಸದ್ಗುಣಿಯೆ
ಕಾವ ದೈವ ನೀನೆ ಕೃಷ್ಣ ಕರುಣೆಯೆ
ದೇವಕಿ ಗರ್ಭನಿಧಾನದ ಖಣಿಯೆ ೪
ಬಲವಾಗಿ ಎನಗಬಂದೆ ಸರ್ವೇಶ
ಒಲಿದು ಭಾನುಕೋಟಿತೇಜಪ್ರಕಾಶ
ಫಲವ ನೀಡಿ ತೋರಬಂದೆ ಸಂತೋಷ
ಸಲಹಬಂದೆ ಮಹಿಪತಿ ಪ್ರಾಣೇಶ ೫
ಮನೋಹರ ಮಾಡುವ ನೀನೆ ಸಹಕಾರಿ
ಅನುದಿನ ಲೆವಕಲ ನೀನೆ ಮುರಾರಿ ೬
ಅನೆ ಕಾಯಲಿಪರಿ ನೀನೆ ಉದಾರಿ
ಅನಾಥರಿಗೊಲುವ ನೀನೆ ಶ್ರೀಹರಿ ೭
ಪತಿತ ಪಾವನ ಪೂರ್ಣ ನೀನೆ ನಿಶ್ಚಯ
ಹಿತದಾಯಕ ನೀನಹುದೊ ಮಹಿಪತಿಯ ೮

೨೨೭
ಜ್ಞಾನದ ನಡಿಬ್ಯಾರೆ ತತ್ವಜ್ಞಾನದ ನಡಿ ಬ್ಯಾರೆ ಧ್ರುವ
ದೇಹದಂಡನೆ ಮಾಡಿದರೇನು
ಬಾಹ್ಯಾರಂಜನೆ ದೋರಿದರೇನು ೧
ಶಬ್ದ ಜ್ಞಾನ ಸೂರಾಡಿದರೇನು
ಲಭ್ದಾ ಲಬ್ಧೇಲಾಡಿದರೇನು ೨
ರಿದ್ದಿ ಸಿದ್ದಿಯ ದೋರಿದರೇನು
ಗೆದ್ದು ಮಂತ್ರಾಂತ್ರಸೋಲಿಪರೇನು ೩
ಮಾತು ಗೀರ್ವಾಣ ಆಡಿದರೇನು
ಭೂತ ಭವಿಷ್ಯ ಹೇಳಾಡಿದರೇನು ೪
ವ್ರತ ತಪ ತೀರ್ಥಾಶ್ರೈಸಿದರೇನು
ಕೃತ ಕೋಟ್ಯಜ್ಞಾವ ಮಾಡಿದರೇನು ೫
ಯೋಗಾಯೋಗಾಚರಿಸಿದರೇನು
ಭೋಗ ತ್ಯಾಗ ಮಾಡಿದರೇನು೬
ಏನು ಸಾಧನೆ ಮಾಡಿದಫಲವೇನು
ಖೂನ ದೋರದೆ ಮಹಿಪತಿಗುರುತಾನು೭

೪೩೦
ಜ್ಞಾನದ ಬಲು ಹುಚ್ಚು ಘನ ಗುರು
ದಯದೊಲವಿನ ಮೆಚ್ಚು ಧ್ರುವ
ಮಾಡದ ಮಾಡಿಸಿತು ನೋಡಿದರೇನ ತಾಂ ನೋಡಿಸಿತು
ಕೂಡದ ಕೂಡಿಸಿತು ಬಿಡದಾಗಿಹ್ಯದ ಬಿಡಿಸಿತು ೧
ತನ್ನ ತಾನರಸಿತು ಇನ್ನೊಂದರನೆ ಮರೆಸಿತು
ಭಿನ್ನ ಭೇದ್ಹರಿಸಿತು ಚಿನ್ಮಯದ ಸುಖ ಬೆರೆಸಿತು ೨
ಕಾಣದ ಕಾಣಿಸಿತು ಉಣದೂಟನೆ ತಾ ಉಣಿಸಿತು
ಅನುಮಾನಗಳಿಸಿತು ಘನ ಮಹಿಪತಿಗೆ ನುಡಿಸಿತು ೩

೨೩೧
ಜ್ಞಾನಭ್ಯಾಸವ ಮಾಡಿ ಹೀಗೆ
ತಾನೊಲಿದು ಜ್ಞಾನ ಗುರು ಖೂನಾಗುವ್ಹಾಂಗೆ ಧ್ರುವ
ಮನದಲಿ ಬಾವ್ಹಾಂಗ ನೆನೆದಲಿ ಕಾಂಬ್ಹಾಂಗೆ
ತನುವಿನಲಿ ನಿಜಗೊಂಡು ತಾ ನೆಲೆಯಗೊಂಬ್ಹಾಂಗೆ
ಅನುದಿನನದಲ್ಯನುಭವಿಸುವ್ಹಾಂಗೆ
ಕನಗರಸಿದಲಿ ಮನೋಹರ ಮಾಡುವ್ಹಾಂಗೆ ೧
ಅರ್ವಿನಲಿರುವ್ಹಾಂಗೆ ಕುರುಹುದೋರುವ್ಹಾಂಗೆ
ಇರುವ್ಹ ನೆಲೆಗೊಂಡು ತಾನೆವೆ ಸ್ಥಿರವಾಗುವ್ಹಾಂಗೆ
ಮರವು ಮರದೀಡ್ಯಾಡುವ್ಹಾಂಗೆ
ಗುರು ಚರಣ ಕಮಲವನು ಗುರುತಾಗುವ್ಹಾಂಗೆ ೨
ಧ್ಯಾಸ ನೀಜ ಬಲುವ್ಹಾಂಗೆ ವಾಸನೆ ಪೂರಿಸುಹಾಂಗೆ
ಭಾಸ್ಕರ ಕೋಟಿ ಪ್ರಕಾಶ ಭಾಸಿಸುವ್ಹಾಂಗೆ
ಭಾಸ್ಕರ ಬಾಹ್ಯಾಂತ್ರಲಿವ್ಹಾಂಗೆ
ಲೇಸಾಗಿ ಮಹಿಪತಿ ಸ್ವಾಮಿಒಲುವ್ಹಾಂಗೆ ೩

೨೩೦
ಜ್ಞಾನವೆಂಬುದಕೇನು ಕ್ಷಣ ನಡಿಯು ಕಠಿಣ
ಅನುಭವದ ನಿಜಖೂನ ಅಗಮ್ಯ ಸ್ನಾನ ಧ್ರುವ
ಅಹಂ ಬ್ರಹ್ಮಾಸ್ಮಿ ಎಂಬ ಸೋಹ್ಯ ತಿಳುವದೆ ಗುಂಭ
ಬಾಹ್ಯ ರಂಜನದೆ ಡಂಭ ದೇಹದಾರಂಭ
ಸೋಹ್ಯ ತಿಳಿದುಕೊಂಬ ಗುಹ್ಯಗುರುತದ ಇಂಬ
ಮಹಾಮಹಿಮೆಲೆ ಉಂಬ ಸಹಸ್ರಕೊಬ್ಬ ೧
ಸಾಧಿಸುವದಾಗ ಸದ್ಗುರು ಮೂರ್ತಿ ಶ್ರೀಪಾದ
ತುದಿ ಮೊದಲಿಲ್ಲದ ಬೋಧ ಆದಿತತ್ವದ
ಭೇದಿಸದಲ್ಲದ ಭೇದ ಮದಮತ್ಸರದ ಕ್ರೋಧ
ಹಾದಿ ತಿಳಿಯದು ವಸ್ತುದ ಉದಯಸ್ತಿಲ್ಲದ ೨
ಜ್ಞಾನಕ ಜ್ಞಾನೊಡಮೂಡಿ ಖೂನಕ ಬಾವ್ಹಾಂಗ ಮಾಡಿ
ನಾ ನೀನೆಂಬುದು ಈಡಾಡಿ ಅನುಭವ ನೋಡಿ
ಮನೋನ್ಮದ ನಡಿ ಅನುದಿನವೆ ಕೊಂಡಾಡಿ
ಘನಕ ಮಹಿಪತಿ ನೀ ಕೂಡಿ ನೆನಿಯೊ ಬೆರೆದಾಡಿ ೩

೨೩೨
ತತ್ತ್ವ ತಿಳಿಯದು ಅಹಂಮತ್ವ ಅಳಿಯದನಕ ಧ್ರುವ
ದೇವ ವಿದೇಹ ಸುದೇಹಾಗದನಕ
ಸಂದೇಹ ಸಂಶಯ ಸಂಕಲ್ಪ ಹೋಗದನಕ ೧
ಪ್ರವೃತ್ತಿ ನಿವೃತ್ತಿ ಸುವೃತ್ಯಾಗಕನಕ
ಸ್ವಪ್ನ ಸುಷಪ್ತಿ ಜಾಗ್ರ್ಯತ್ಯಾಗದನಕ ೨
ದೃಷ್ಟ ಅದೃಷ್ಟ ಸದ್ರಷ್ಟಾಗದನಕ
ದುಷ್ಟನಷ್ಟಗಳ ಸಂಕಷ್ಟೋಗದನಕ ೩
ಲಬ್ಧ ಅಲಬ್ಧ ಪ್ರಾಲಬ್ಧಾಗದನಕ
ಶಬ್ಧ ನಿಶ್ಯಬ್ಧ ಸುಶಬ್ದಾಗದನಕ ೪
ಭಾವ ಅಭಾವ ಸ್ವಭಾವಾಗದನಕ
ಮಾಯ ಮೋಹದ ಮನೆಯು ಮುಕ್ಕಾಗದನಕ ೫
ಸದ್ಗುರು ದಯಕರುಣ ಕೃಪೆ ಅಗದನಕ
ಮಹಿಪತಿ ನಿನ್ನೊಳು ನೀ ಬೆರಿಯತನಕ ೬

೨೩೩
ತನ್ನ ತಾ ತಿಳಿಯುವದೆ ಜ್ಞಾನ ಮನಮುಟ್ಟು ಪೂರ್ಣ
ಚೆನ್ನಾಗಿ ಸದ್ಗುರುವಿನ ಕೇಳಿರೊ ಖೂನ ಧ್ರುವ
ತನು ಮನವಿಟ್ಟು ತಿಳಿವದೀ ಗುರುಗುಟ್ಟು
ಧನ ದ್ರವ್ಯಾರ್ಜಿತವನಿಟ್ಟು ಕೇಳಿ ಕಿವಿಗೊಟ್ಟು
ಅನುಬವದ್ಹೆಚ್ಚಿ ಮೆಟ್ಟು ಸಾಧಿಸಿ ವೈರಾಗ್ಯ ಕೊಟ್ಟು
ಖೂನಮಾಡಿಕೊ ಬೇಕಿಟ್ಟು ಅನುಮಾನ ಬಿಟ್ಟು ೧
ಗಿಳಿಯಾಡಿದಂತೆ ನುಡಿಯಾತಕ ಬಾಹುದು ನೋಡಿ
ಹೇಳ್ಯಾಡಕೊಂಬುದೀಡ್ಯಾಡಿ ಮಾತಿನ ರೂಢಿ
ತಿಳಿಯಬೇಕೊಂದು ನೋಡಿ ತತ್ತ್ವಜ್ಞಾನ ಒಡಮೂಡಿ
ಬೆಳಗಿನೊಳು ಬೆರದಾಡಿ ಘನಕ ಘನ ಕೂಡಿ ೨
ನುಡಿ ನಡಿ ಒಂದಾದರೆ ವಸ್ತು ತಾನಿಹುದು ದೂರ
ಬಿಡಲರಿಯದು ಹಾಂಗಾದರ ಎಂದಿಗಾರು ಒಡಗೂಡಿ
ನೋಡಿದರೆ ತನ್ನೊಳು ತಾಂ ನಿಜ ಖರೆ
ಬಿಡಬ್ಯಾಡೊ ಮಹಿಪತಿನ್ನಾರ ಕೂಡಿದ ಸಾರ ೩

೨೩೪
ತನ್ನನರಿಯದವ ಜ್ಞಾನದ ಮಾತಾಡಿದರೇನು
ಕಣ್ಣಿಲ್ಲದವ ಕನ್ನಡಿ ಪಿಡಿದರೇನು ಧ್ರುವ
ಧೈರ್ಯವಿಲ್ಲದವ ಕೈಯಲಿ ಶಸ್ತ್ರ ಹಿಡಿದರೇನು
ಸ್ಥೈರ್ಯವಿಲ್ಲದವ ತಪಸ್ಯಾದರೇನು
ಮರ್ಯಾದಿಲ್ಲದವ ಗುರು ಸನ್ನಿಧವಿದ್ದರೇನು
ಕಾರ್ಯಕೊದಗದ ಬಂಟ ಬಲ್ಲಿದನಾದರೇನು ೧
ಗಂಡ ನಿಲ್ಲದ ನಾರಿ ಸುಗುಣ್ಯುದ್ದಂಡಾದರೇನು
ಷಂಡ ಸಾವಿರ ಹೆಣ್ಣು ಮದುವ್ಯಾದರೇನು
ಖಂಡಿಸದೆ ಅನುಮಾನ ಪಂಡಿತನೆನಿಸಿದರೇನು
ಕಂಡು ಕಾಣದ್ಹೆಳವನ ಕೊಂಡಾಡಲೇನು ೨
ಭಾನುಕೋಟಿ ತೇಜನಂಘ್ರಿ ಗುರುತಲ್ಲದರಿವೇನು
ಅನುಭವಿಸಿ ಕೊಳ್ಳದ ನರಜನ್ಮವೇನು
ದೀನ ಮಹಿಪತಿಸ್ವಾಮಿಕಾಣದ ಕಂಗಳವೇನು
ಜ್ಞಾನ ಉಂಟುಮಾಡಿಕೊಳ್ಳದವನ ಬಾಳಿವೇನು ೩

೨೩೫
ತನ್ನೊಳು ತಿಳಿಯೊ ಪ್ರಾಣಿ ಪುಣ್ಯಸಾಧನಿ ಧ್ರುವ
ತನ್ನಿಂದಲೆ ತಾ ನೋಡುವ ಖೂನ
ಚೆನ್ನಾಗ್ಯದನುಭವ ಜ್ಞಾನ
ಸನ್ಮತ ಸುಖದೋರುವ ಚಿದ್ಫನ
ಭಿನ್ನವಿಲ್ಲದೆ ನೋಡುವದುನ್ಮನ ೧
ಮೂಲವಿಡಿದು ನಿಜ ನೋಡುವದರಿಂದ
ಮ್ಯಾಲೆ ದೋರುತಲದೆ ಬ್ರಹ್ಮಾನಂದ
ಕೀಲು ತಿಳಿದರೆ ಸದ್ಗುರು ಕೃಪೆಯಿಂದ
ಒಲಿದು ಬಾಹನು ತಾ ಮುಕುಂದ ೨
ಸೆರಗವಿಡಿದು ನೋಡುಲು ಗುರುಮುಖ
ಮೂರು ಲೋಕಕ ಬಲು ಪರಮ ವಿವೇಕ
ತರಳ ಮಹಿಪತಿ ಆತ್ಮಾನುಭವ ಸುಖ
ದೋರುತಲದೆ ತಾ ಘನ ಕೌತುಕ ೩

೨೩೬
ತಪ್ಪಲರಿಯದು ಬರೆದ ಬ್ರಹ್ಮನಿರ್ಮತವು
ಒಪ್ಪುವದು ಯತಿ ಮುನಿ ಋಷಿಯ ಸಂತತಿಯು ಧ್ರುವ
ಆನಿ ಮೊದಲಿರುವೆ ಕಡೆ ಅಣುಮಾತ್ರಾಕಾರವನು
ಮುನ್ನ ಬರೆದಂತೆ ತಾನಡೆಯುತಿಹಂದು
ಇನ್ನು ಮುತ್ತನ್ಯ ದೈವಕ ಬಯಸಿ ಬೇಡಿದರೆ
ಮುನ್ನಿಗೆ ಕೊಡಬಲ್ಲವೆ ಬಿನಗುದೈವವು ೧
ಭಿನ್ನವಿಲ್ಲದೆ ತನುವಿನೊಳು ಆನಂದ ಘನ
ಉನ್ನತ ಮಹಿಮ ಪರಿಪೂರ್ಣವಿರಲು
ಚೆನ್ನಾಗಿ ಚಿನಮಯ ಮೂರ್ತಿ ಶ್ರೀಪಾದವನು
ಅನುದಿನ ಭಜಿಸಿ ಘನ ಸುಖವ ಪಡಿಯೊ ಮನವೆ ೨
ಕಕ್ಕುಲಾತಿಯ ಬಟ್ಟು ಕಂಡವರ ಕಾಲ್ಗೆರಗಿ
ಫಕ್ಕಸಾರಿಯ ಧರ್ಮ ಜರಿಯ ಬ್ಯಾಡ
ಸಕಲ ಸಹಕಾರ ಮಹಿಪತಿಸ್ವಾಮಿ ನಿನಗಿರಲು
ಭಕುತಿ ಮುಕುತಿಯ ಉಂಟು ಮೂಢ ಜನವೆ ೩

೬೧
ತಪ್ಪು ಕ್ಷಮೆ ಮಾಡೊ ಕೃಪೆಯಿಂದ ನೋಡೊ ಧ್ರುವ
ನೀನೆ ದಯಾನಿಧಿ ನಾನೆ ಅಪರಾಧಿ
ಖೂನ ದೋರು ಹಾದಿ ಸ್ಥಾನ ನಿಜಗಾದಿ ೧
ಅನಾಥನೆಂದು ನೋಡಿ ಸುನಾಥ ಎನ್ನ ಮಾಡಿ
ಸ್ವಾನಂದ ಸುಖ ನೀಡಿ ಮನ್ನಾಥ ನಿಜಗೂಡಿ ೨
ಹೆಳಲಾರೆ ಬಹಳ ಕೇಳೋ ನೀ ದಯಾಳ
ತಾಳಿ ಎನ್ನ ತೋಳ ಬಾಳ ವಿಶ್ವಪಾಲ ೩
ಸೇವೆ ಇದೆ ನಮ್ಮ ಭಾವಿಸುದು ನಿಮ್ಮ
ಪಾವನಗೈಸು ವರ್ಮ ಸುವಿದ್ಯ ಪರಬ್ರಹ್ಮ ೪
ಬಂದ ಮ್ಯಾಲೆ ಶರಣಕುಂದಬ್ಯಾಕೊ ಪೂರ್ಣ
ಕಂದ ಮಹಿಪತಿ ಗುಣ ಚಂದಮಾಡೊ ಕರುಣ ೫

೬೨
ತಪ್ಪು ನೋಡುವರೇನೋ ಕೃಪಾಸಿಂಧು ಶ್ರೀಗುರು
ಒಪ್ಪಿಸಿಕೊಂಡರೆ ತಪ್ಪಾರಿಸುವರೆ ಧ್ರುವ
ಒಡಲಹೊಕ್ಕವರವಗುಣವ ನೋಡುವರೇನೊ
ಒಡಿಯನೆಂದವರ ತಾ ಕೈಯ್ಯ ಬಿಡುವರೆ
ಮಡದಿ ಮಕ್ಕಳೆನಿಸಿ ಕಡೆಗಣ್ಣ ನೋಡುವರೆ
ಒಡುಹುಟ್ಟಿದವರಿಗೆರಡ ಬಗೆವರೇನಯ್ಯ ೧
ಬಡವರ ಮಕ್ಕಳ ಮಡುವಿನೊಳು ಧುಮುಕಿಸಿ
ಕಡಿಯಲಿದ್ದು ನೆಲೆ ನೋಡುವರೇನಯ್ಯ
ಕುಡಗೋಲ ಕುಂಬಳ ಕೊಟ್ಟವರ ಕೈಯ್ಯ
ಒಡನೆ ಹೋಳುವದುಚಿತವೇನಯ್ಯ ೨
ಬಡವನಾಧಾರಿ ಎಂದು ನಾ ನಿಮ್ಮ
ಪೊಡವಿಯೊಳು ಶ್ರೀಪಾದ ದೃಢದಲಿ
ನೋಡು ಕರುಣಾಲೆನ್ನ ನೀಡಿ ಅಭಯ ಹಸ್ತದಿ
ಮೂಢ ಮಹಿಪತಿಗೆ ಕಡೆಗಾಣಿಸುವುದೈಯ್ಯ ೩

೬೩
ತಲೆ ಬೆಳಗಾಯಿತು ತಲೆ ಬೆಳಗಾಯಿತು
ಎನ್ನ ಬೆಳಗದೊಳು ಕೂಡಿ ಧ್ರುವ
ಹಿಂದೆ ಗೋವಿಂದನು ಮುಂದೆ ಮುಕುಂದನು
ಅಂದಿಗಿಂದಿಗೆ ಅನಿರುದ್ಧ
ತಂದೆ ತಾಯಿಯ ವೃಂದಾವನ ಪತಿಯು
ಮಂದರಧರ ಬಂಧು ಬಳಗ ೧
ಕುಂದ ನೋಡದೆ ಸಲಹುವ ಸಂಕರುಷಣಾ
ನಂದ ಮೂರುತಿ ತ್ರಿ ವಿಕ್ರಮನ
ಬಂದ ದುರಿತ ದೂರಮಾಡಿ ದಾಮೋದರ
ಚಂದ ಮಾಡುವ ಜನಾರ್ದನನು ೨
ಎಡಕ ಯಾದವ ನಾರಾಯಣ ಕೃಷ್ಣನು
ಬಲಕ ಬಾಲಮುಕುಂದ
ಎತ್ತ ನೋಡಿದರತ್ತ ಸುತ್ತ ಪುರುಷೋತ್ತಮ
ಚಿತ್ತ ಮನದೊಳು ಅಚ್ಯುತನು ೩
ಪ್ರಾಣಪತಿಕರಿಸಿಹ್ಯ ಪ್ರದ್ಯುಮ್ನ
ಆಭಯನಿತ್ತಿಹ ಪದ್ಮನಾಭ
ಸದಮಲ ಸುಖ ಮಾಧವ ಮಧುಸೂದನ
ಯದು ಕುಲೋತ್ತಮ ಶ್ರೀಧರನು ೪
ಅಷ್ಟದಿಕ್ಕಿನೊಳು ತುಂಬಿ ಹೃಷಿಕೇಶ
ದೃಷ್ಟಿಮೂರುತಿ ನರಸಿಂಹ
ದೃಷ್ಟಿಯೊಳಗೆ ಹರಿ ವಿಷ್ಣು ವಾಸುದೇವ
ಸೃಷ್ಟೇಶ ಗುರು ಕೇಶವನು ೫
ಲಕ್ಷ್ಮಿಯೊಳಗೆ ಗುರು ಲಕ್ಷುಮಿಕಾಂತನು
ರಕ್ಷಿಸುವ ಅಭೋಕ್ಷಜನು
ಉಪೇಕ್ಷವಿಲ್ಲದೆ ಹೊರೆವ ಉಪೇಂದ್ರನು
ಸಾಕ್ಷಾತ ಮೂರ್ತಿ ವಾಮನನು ೬
ತುಂಬಿದ ಬಳಗವು ಕಂಡ ಮೇದಿನಿಯೊಳು
ಕಂದ ಮಹಿಪತಿ ಸ್ತುತಿಸಿದನು
ಬಂದ ಜನ್ಮವು ಕಡೆ ಆಯಿತೆಂದು
ಮನದೊಳು ತ್ರಾಹಿ ತ್ರಾಹಿ ಎಂದ ೭

೩೩೫
ತವರು ಮನೆಯು ನನ್ನ ಸುವಿದ್ಯಪುರಲ್ಯದೆ
ಸಾವಿರಕೊಬ್ಬಗೆ ದೋರುತದೆ ಧ್ರುವ
ಸಾವಿರಕೊಬ್ಬನೆ ತಾ ಸುದೇವನೆ ಬಲ್ಲ
ಭಾವಿಸದಲ್ಲದೆ ತಿಳಿಯುವದಲ್ಲ
ಅವಿದ್ಯಪುರ ದಾಟ, ಮಂದಾಕ್ಕಾಗಲು ಎಲ್ಲ
ಆವಾಗ ತಿಳಿವುದು ಹೇಳಿದ ಸೊಲ್ಲ ೧
ಸಾವಿರ ತೆನೆಯಲೊಪ್ಪುತದೆ ಒಳಕೋಟ
ಠವಿಠವಿಸುತದೆ ನೋಡಿ ಮನಮುಟ್ಟಿ
ಅವ್ವ ಅಪ್ಪನೇ ನಮ್ಮ ಇಹಸ್ಥಾನವು ಘಟ್ಟಿ
ದೇವಾಧಿ ದೇವನೊಬ್ಬನೆ ಜಗಜಟ್ಟಿ ೨
ಬಲು ಅಭೇದ್ಯಸ್ಥಳ ತಿಳಿಯದಿನ್ನೊಬ್ಬರಿಗೆ
ನೆಲೆವಂತರಿಗೆ ತಾನು ತಿಳಿವದು ಬ್ಯಾಗೆ
ಉಲವುತದ ತುಂಬಿ ಥಳಗುಟ್ಟಿ ಹೊಳವ್ಹಾಂಗೆ
ಬಲಗೊಂಡು ಕೇಳಿ ಶ್ರೀಸದ್ಗುರುವಿಗೆ ೩
ಅಣ್ಣನೆಂಬಾತ್ಹಾನೆ ಅನಂದದಲ್ಹಾನೆ
ನೆನೆಪಿಗೊಮ್ಮೆ ಬಂದು ಸುಳವುತ್ಹಾನೆ
ಕಣ್ಣೆಲಿ ಕಟ್ಯಾನೆ ತಮ್ಮನೆಂಬತ್ಹಾನೆ
ಕ್ಷಣಕೊಮ್ಮೆ ಹೊಳೆವುವಾನೆ೪
ಅಕ್ಕನೆಂಬಾಕಿ ತಾ ಸಖರಿ ಅಗ್ಹಾಳೆ
ಅಖರದಲೆವ್ವ ಈ ಮಾತು ಕೇಳೆ
ಪ್ರಖ್ಯಾತದಲಿ ಪ್ರೀತಿಮಾಡುವ ತಂಗ್ಹ್ಯಾಳೆ
ಸುಖ ಸುರುತ್ಹಾಳೆ ಇರುಳು ಹಗಲು ೫
ಅತ್ತಿಗೆ ನಾದುನಿ ಭಾವ ಮೈದುನರೆಲ್ಲ
ಅಂತ್ಯಕವಾಗ್ಹ್ಯಾರೆ ಮನಿಯೊಳಗೆಲ್ಲ
ಸುತ್ತೇಳುವ ಬಳಗ ಉತ್ತುಮರೆನಗೆಲ್ಲ
ಹಿತದೋರುತಾರವ್ವ ಸರ್ವಾಪ್ತರೆಲ್ಲ ೬
ಸರ್ವಾಪ್ತವೆಂಬುದು ಸರ್ವೇಶನೆ ತಾನು
ಸರ್ವದಾ ಎನ್ನೊಳು ತಾ ಕಾಮಧೇನು
ಪರ್ವಕಾಲದ ಬಹಳ ಏನೆಂದ್ದೇಳಲಿ ನಾನು
ಸರ್ವಾರ್ಥ ಕೊಡುತ್ಹಾನೆ ಸರ್ವಾತ್ಮ ತಾನು ೭
ಅವ್ವ ನಮ್ಮಪ್ಪಗೆ ಸರಿ ಇಲ್ಲ ಜಗದೊಳು
ಆವ ಕಾಲಕೆ ತಾ ಇವರ ಮೇಲು
ಇವರೆಂಬುದು ಒಂದೆ ಮಾತಿನ ಸ್ವಕೀಲು
ಸವಿಸುಖಬಲ್ಲರು ಅನುಭವಿಗಳು ೮
ತೌರಮನೆಂಬುದು ಪ್ರತ್ಯೇಕಾ ತಾನಿಲ್ಲ
ಭಾವಾರ್ಥದ ಮಾತು ಕೇಳಿರೆಲ್ಲ
ಅವಗುಣನೆ ಬಿಟ್ಟು ಕೇಳಿ ಸವಿಯ ಸೊಲ್ಲ
ಪೂರ್ವಿಕರಿಗಿದೆ ಸಾರವೆಲ್ಲ ೯
ಸುದ್ದಿ ಹೇಳಿ ಕಳುಹುಲಿಕ್ಕೆ ಈ ಸಾಧನ
ಇದುವೆ ಅಯಿತು ತವರ ಮನಿ
ಬುದ್ಧಿವಂತನೆಬಲ್ಲ ಲಕ್ಷಕೊಬ್ಬ ಜ್ಞಾನಿ
ಸಿದ್ಧಿದರಿಡುವದು ಸದ್ಗುರು ಪ್ರಾರ್ಥನಿ ೧೦
ಬಳಗದೊಳು ಕೂಡಿ ಒಳಿಥಾಗ್ಯಾಯಿತು ಎನಗೆ
ಒಳ ಹೊರಗೆ ಸುಖ ಎದುರಿಟ್ಟತೀಗ
ಕುಲಕೋಟಿ ಬಳಗ ಸದ್ಗುರು ಪಾದವ್ಯನಗೆ
ಸಲಹುತಾನೆ ಸ್ವಾಮಿ ಮಹಿಪತಿಗೆ ೧೧

೬೬೬
ತಾನಸÉ ತಾನಾದೆನ್ನ ಸ್ವಾಮಿ
ಭಾನುಕೋಟಿ ಅಂತರ್ಯಾಮಿ ಧ್ರುವ
ಕಾಣಬರುತಾದೆ ನೋಡಿ
ಜ್ಞಾನವಂದಭ್ಯಾಸ ಮಾಡಿ
ಭಾನು ಭವದಲಿ ಕೂಡಿ
ನಾನು ನೀನೆಂಬುದೀಡ್ಯಾಡಿ ೧
ತಿರುಗಿ ನೋಡು ದೋರುತಾನೆ
ಅರುವಿನೊಳು ನಿಂತಾನೆ
ಸಾರಸುಖ ಬೀರುತಾನೆ
ಕೋರಿ ತಾರ್ಕಣ್ಯಾಗ್ಯಾನೆ ೨
ಧ್ಯಾನ ಮೌನಾಗ್ಯಾನೆ ತಾನೆ
ಜ್ಞಾನಗುರು ದೋರುತಾನೆ
ದೀನ ಮಹಿಪತಿಗೆ ತಾನೆ
ಖೂನ ಪರಿಪೂರ್ಣಾಗ್ಯಾನೆ ೩

*
ತಾನಾ ತಂದನಾನಾ ತಾನಾ ತಂದನಾನಾ
ತಾನಾ ತಂದನಾನಾ ತಾನಾ ತಂದನಾನಾ ಧ್ರುವ
ತಾನಾ ತಂದನಾನಾ ತಾನೆಂಬುವದರ ಖೂನ
ಏನೆಂದರಿಯ ಹೀನ ಮನುಜ ಪಾಮರ ಪೂರ್ಣ ೧
ತಾನೆಂಬುದೆ ತಾ ದೈವ ನಾನೆಂಬುದೆ ತಾ ಜೀವ
ಜ್ಞಾನದಿಂದ ತಿಳಿವ ಅನುಭವ ಆಶ್ರೈಸುವ೨
ತಾನೆ ತಂದರ ನಾನಾ ತನ್ನಿಂದವೇ ಜೀವನ
ನಾನೆಂಬುದವಗುಣ ಜನ್ಮಕಿದೆ ಸಾಧನ ೩
ತಾನೆ ತಂದರ ತಾರಕ ನಾನೆಂದರೆ ನರಕ
ಜ್ಞಾನ ಗುರುಮುಖ ಖೂನ ತಿಳಿವುದು ಸುಖ ೪
ತಾನೆಂದವ ತಾ ಬ್ರಹ್ಮ ನಾನೆಂದರ ಅಹಮ್ಮ
ಅನುಭವದಿಂದ ವರ್ಮ ಖೂನಾದರ ಸಂಭ್ರಮ ೫
ತಾನೆಂದರೆಸ ಅರ್ಕ ನಾನೆಂದರೆ ತಾ ತರ್ಕ
ಹೀನಗುಣ ಸಂಪರ್ಕ ಏನೆಂದರಿಯ ಮೂರ್ಖ ೬
ತಾನೆಂದರೆ ತಾಂ ಮಾನ್ಯ ನಾನೆಂದರಮಾನ್ಯ
ಖೂನಮಾಡಿ ತಾರ್ಕಣ್ಯ ಅನುಭವಿಸಲು ಧನ್ಯ ೭
ತಾನೆಂದರೆ ತಾ ಬಂದೆ ನಾನೆಂದು ಬಲು ನೊಂದೆ
ಅನೇಕ ಜನ್ಮದಿಂದ ದಣಿದು ನಾ ಸಾಕೆಂದೆ ೮
ತಾನೆಂಬುದು ಸುಜ್ಞಾನ ನಾನೆಂಬುದು ಅಜ್ಞಾನ
ತಾನೆಂದರೆ ಅಣುರೇಣು ನಾನೆಂದರನುಮಾನ ೯
ತಾನೆಂಬುದ ತೋರಿಸಿ ನಾನೆಂಬುದ ಮರಸಿ
ತಾನೆತಾನಾದ ಋಷಿ ಆನಂದೋಬ್ರಹ್ಮ ಸೂಸಿ ೧೦
ತಾನೆ ತಾನಾಗಿ ಒಂದೆ ಖೂನ ದೋರಿದ ತಂದೆ
ಭಾನುಕೋಟಿ ತೇಜೊಂದೆ ಪೂರ್ಣ ಮಹಿಪತಿಗೊಂದೆ೧೧

*
ತಾನಾ ತಂದನಾನಾ ತಾನಾ ತಂದನಾನಾ
ತಾನಾ ತಂದನಾನಾ ತಾನಾ ತಂದನಾನಾ ಧ್ರುವ
ಬಲ್ಲೆ ಬಲ್ಲೆನೆಂಬರು ಬಲ್ಲರಿಯದಿಹದನು
ಬಲ್ಲರೆ ನೀವಿನ್ನು ಹೇಳುವುದು ತಾನಾ ೧
ಕಣ್ಣು ಕಾಂಬುವದೇನು ಕಣ್ಣಿನೊಳಿಹುದೇನು
ಕಣ್ಣು ಕಾಂಬುವ ಗತಿ ತಿಳಿಯುವುದು ತಾನಾ ೨
ಕಿವಿಯ ಕಿವಿಯೆಂಬುದೇನು ಕಿವಿಯ ಕೇಳುವುದೇನು
ಕಿವಿಯ ಕೇಳುವ ಗತಿ ತಿಳಿಯುವದು ತಾನಾ ೩
ಮೂಗು ಮೂಗೆಂಬುದೇನು ಮೂಗಿನೊಳಾಡುವದೇನು
ಆಡುವ ಗತಿಗಳ ತಿಳಿಯುವದು ತಾನಾ ೪
ಬಾಯಿ ಬಾಯೆಂಬುದೇನು ಬಾಯಿಯೊಳ ನುಡಿವದೇನು
ಬಾಯಿ ನುಡಿವ ಗತಿ ತಿಳಿಯುವದು ತಾನಾ ೫
ದೇಹ ದೇಹೆಂಬುದೇನು ದೇಹದೊಳಿಹುದೇನು
ದೇಹದೊಳಿಹ ವಸ್ತು ತಿಳಿಯುವದು ತಾನಾ ೬
ಪ್ರಾಣವೆಂಬುದೇನು ಕರಣವೆಂಬುದೇನು
ತತ್ತ್ವವೆಂಬುದೇನು ತಿಳಿಯುವದು ತಾನಾ ೭
ಜೀವ ಅಂಬುದೇನು ಜೀವಭಾಗಗಳೇನು
ಜೀವ ಶಿವದ ಗತಿ ತಿಳಿಯುವದು ತಾನಾ ೮
ಆರುವ್ಹೆಂಬುದೇನು ಮರವ್ಹುವೆಂಬುದೇನು
ಇದರೊಳು ಖೂನ ಕುರುಹು ತಿಳಿಯುವುದು ತಾನಾ ೯
ಕನಸುವೆಂಬುದೇನು ಕನಸು ಕಾಂಬುವದೇನು
ಕನಸು ಹೇಳುವದೇನು ತಿಳಿಯುವುದು ತಾನಾ ೧೦
ಹಗಲು ಎದ್ದಿಹದೇನು ಇರಳು ಮಲಗುವದೇನು
ಇದರ ಹಗರಣವನು ತಿಳಿಯುವದು ತಾನಾ ೧೧
ಹುಟ್ಟಿ ಬಾಳುವದೇನು ಸತ್ತು ಹೋಗುವದೇನು
ಸತ್ತು ಹುಟ್ಟುವದೇನು ತಿಳಿಯುವದು ತಾನಾ ೧೨
ಹೆಣ್ಣು ಗಂಡೆಂಬುವದೇನು ಹೆಣ್ಣು ಗಂಡು ಕೂಡುವದೇನು
ಕೂಡುವದೇನೆಂದು ತಿಳಿಯುವದು ತಾನಾ ೧೩
ಅನುಭವ ಗತಿಗಳ ತಿಳಿಯಲು ಆತ್ಮದೊಳು
ತಿಳಿಯಲು ಜನ್ಮವು ಅಳಿಯುವದು ತಾನಾ ೧೪
ಆತ್ಮ ಅನುಭವವು ತಿಳಿಯುವದು ಗುರುಕೃಪೆಯು
ತಿಳಿಯಲು ಜೀವನ್ಮುಕ್ತಿಯು ತಾನಾ ೧೫
ಮಹಿಪತೆಂಬ್ಹೆಸರನು ಕರೆದರೊ ಎಂಬುವದೇನು
ಓ ಎಂಬುವದೆನಗಿನ್ನು ತಿಳಿಯಿತು ತಾನಾ ೧೬
ಇಂತು ಪರಿಯಾಯವು ತಿಳುಹಿದ ಗುರುರಾಯ
ಎನ್ನೊಳು ಭಾಸ್ಕರ ಗುರು ತಾನೆ ತಾನಾ ೧೭

೩೩೬
ತಾನಾ ತಂದನಾನಾ ತಾನಾ ತಂದನಾನಾ
ತಾನಾ ತಂದನಾನಾ ತಾನಾ ತಂದನಾನಾ ಧ್ರುವ
ತಾನೆ ತಾನಾದ ಖೂನ ತಾನೆ ದೋರುದು ಘನ
ತಾನೆ ತಾನಾಗಿ ತಾನೆಂಬುದು ಲೇಸು ನಾನಾ ೧
ತಾನಾಗದೆ ಜ್ಞಾನ ನಾನಾ ಎಂಬುದೆ ಹೀನ
ಶ್ವಾನ ಸೂಕರ ನಾನಾ ಜನುಮ ತಾಳ್ದೆಖೂನ ೨
ತಾನೆ ತಾನಾದ ಪೂರ್ಣ ಭಾನುಕೋಟಿಸುಘನ
ಖೂನ ಮಹಿಪತಿಗಿದೆ ತಾನೆ ತಾನಾದ ತಾನಾ ೩

೨೩೭
ತಾನಾರು ತನುವು ಆರು ತಿಳಿದು ನೋಡಿ ಧ್ರುವ
ತಾನಾರು ತನುವಾರು
ತನ್ನೊಳೂ ತಾನೆ ತಿಳಿದು ನೋಡಿ
ಘನ ಬ್ರಹ್ಮದೊಳು ಮನ ಬೆರೆದಾತ ಶರಣನು ೧
ಕಾಯದೊಳಿಹ್ಯ ಕಳವಳಗಳೆದು
ಮಾಯ ಮೋಹದ ಮಲಗಳ ತೊಳೆದು
ದೇಹ ವಿದೇಹವಾದಾತ ಶರಣನು ೨
ಭ್ರಾಂತಿಯ ಅಭಾವಗಡಿದು
ನೀತಿ ಸುಪಥದ ಮಾರ್ಗವ ಹಿಡಿದು
ಜ್ಯೋತಿ ಸ್ವರೂಪವ ಕಂಡಾತ ಶರಣನು ೩
ಭಾವ ಭಕ್ತಿಯ ಕೀಲವ ತಿಳಿದು
ಹ್ಯಾವ ಹೆಮ್ಮೆಯ ಮೂಲವನಳಿದು
ಜೀವ ಶಿಶುವು ತಿಳಿದಾತ ಶರಣನು೪
ಜಾತಿಯ ಕುಲಗಳ ಭೇದವ ತಿಳಿದು
ಯಾತನೆ ದೇಹದ ಸಂಗವನಳಿದು
ಮಾತಿನ ಮೂಲವ ತಿಳಿದಾತ ಶರಣನು ೫
ಸೋಹ್ಯ ಸೊನ್ನೆಯ ಸೂತ್ರವಿಡಿದು
ಲಯ ಲಕ್ಷಿಯ ಮುದ್ರೆಯ ಜಡಿದು
ದ್ಯೇಯ ಧ್ಯಾತವ ತಿಳಿದಾತ ಶರಣನು ೬
ನಾದದಿಂದ ಕಳೆಯ ಮುಟ್ಟಿ
ಸಾಧಿಸಿ ಉನ್ಮನ ಮುದ್ರೆಯ ಮೆಟ್ಟಿ
ಆದಿತತ್ವದ ಗತಿ ತಿಳಿದಾತ ಶರಣನು ೭
ಆಧಾರ ದೃಢದಿಂದ ಅರಹುತನಾಗಿ
ಮಧ್ಯ ಮುಪ್ಪರದಲಿ ಸ್ಥಿತಿವಾಗಿ
ಊಧ್ರ್ವ ಮಂಡಲಗತಿ ಬೆರೆದಾತ ಶರಣನು ೮
ಬಾಹ್ಯಾಂತ್ರ ಪರಿಪೂರ್ಣ ಘನಮಯಗಂಡು
ಸಾಯೋಜ್ಯ ಸದ್ಗತಿ ಸವಿಸುಖನುಂಡು
ಮಹಿಪತಿ ಗುರುಮನಗಂಡಾತ ಶರಣನು ೯

೬೬೫
ತಾನೆ ತಾನಾದನಮ್ಮಾ ಎನ್ನೊಳು ಘನಬ್ರಹ್ಮ ಧ್ರುವ
ಕಣ್ಣಿಲೆ ನೋಡಲಿಕ್ಕೆ ಕಣ್ಣಿನೊಳಾದನಮ್ಮ
ಕಣ್ಣಿಗೆ ಕಣ್ಣಾಗಿ ಪೂರ್ಣ ಕಾಣಿಸಿದಾನಂದೋಬ್ರಹ್ಮ
ಅಣುರೇಣುದೊಳು ವ್ಯಾಪಿಸಿ ಜನ ಮನ ದೊಳು ತುಂಬಿಹ
ತನುಮನದೊಳು ತಾನೆತಾನಮ್ಮ ೧
ಎತ್ತ ನೋಡಿದತ್ತ ಸುತ್ತ ಸೂಸುವನಮ್ಮ
ನೆತ್ತಿ ಒಳಗೆ ಪೂರ್ಣ ಮೊತ್ತವಾದ ಪರಬ್ರಹ್ಮ
ಅತ್ತಿತ್ತಗಲದೆ ಎನ್ನ ಹತ್ತಿಲಿಹ್ಯ ಅನುದಿನ ಸಂತತ
ಸದ್ಗುರು ಪೂರ್ಣ ಅಂತರಾತ್ಮದೊಳಗಿಹನಮ್ಮ ೨
ನಾನು ನಾನೆಂಬುದಿದು ಇಲ್ಲದಂತಾಯಿತು ನಮ್ಮ
ತಾನೆ ತಾನಾದ ನಿಜ ಓಮಿತ್ಯೇಕಾಕ್ಷರ ಬ್ರಹ್ಮ
ಚೆನ್ನಾಗಿ ಮಹಿಪತಿಗೆ ಸನ್ಮತಸುಖದೋರಿತುಉನ್ಮನ
ವಾಗ್ಯೆನ್ನೊಳಗೆ ಘನಸುಖ ಹೊಳೆಯಿತು ಸಂಭ್ರಮ ೩

೪೩೨
ತಾರಕುಪದೇಶವೆಂಬ ಸಾರಣಿಯ ಕೊಟ್ಟು
ಪೂರ್ವ ಕರ್ಮಗಳೆಂಬ ಕಿಲ್ಮಿಷಗಳ ತೊಳೆದು ಧ್ರುವ
ನಿಜ ಬೋಧವೆಂಬ ಚೂರ್ಣ ಕೊಟ್ಟು
ಭವಬೀಜವೆಂಬ ವ್ಯಾದಿಯ ಮೂಲನೆ ಸುಟ್ಟು
ಜ್ಞಾನಾಮೃತವೆಂಬ ಕಷಾಯದಲಿ
ಉತ್ಪತ್ತಿ ಸ್ಥಿತಿ ಲಯವೆಂಬ ತ್ರಿದೋಷವನು ಪರಿಹರಿಸಿದ
ನಮ್ಮ ಗುರು ಭವರೋಗವೈದ್ಯ ೧
ಕಾಯವೆ ಕೋವಿಯನೆ ಮಾಡಿ ಭಾವನೆಯ ಮದ್ದನೆ ತುಂಬಿ
ಸೋಹ್ಯ ಸೊನ್ನೆಯ ರಂಜನಸಿಕ್ಕಿ
ಲಯಲಕ್ಷವೆಂಬ ಗುಂಡಿನಲಿ
ಭವಪಾಶವೆಂಬ ಗುರಿಯ ಕೆಡಹಿದ
ನಮ್ಮ ಗುರುನಾಥ ಮಹಿಪತಿಯ ೨

೨೩೯
ತಿಳಿದು ನೋಡಿ ತನುವಿನೊಳು ಗುಹ್ಯ ಗುರುತವು ಪೂರ್ಣ
ಸುಳ್ಹವುದೋರಿಕೊಡುವ ನಿಜ ಸದ್ಗುರು ಕರುಣ ಧ್ರುವ
ಜೀವ ಶಿವ ದಾವ ದೆಂದಿಳಿವ್ಯಾವ ನೋಡಿ
ನಾವು ನೀವೆಂದು ಹ್ಯಾವ ಹೆಮ್ಮೆಯ ಹಿಡಿಯ ಬ್ಯಾಡಿ
ಮಾವಮಕರ ಗುಣಬಿಟ್ಟು ಭಾವ ಭಕ್ತಿ ಮಾಡಿ
ದೇವದೇವೇಶನ ದಿವ್ಯಪಾದಪದ್ಮ ಕೂಡಿ ೧
ಬಾಯ್ದೆರೆದು ಬರೆ ಭ್ರಮೆಗೆ ಸಾಯಗೊಂಬುದು ಏನು
ನ್ಯಾಯ ಜರೆದು ನೋಯಗೊಂಬುಪಾಯ ನಿನ್ನಾಧೀನ
ಮಾಯ ಮರ್ಮಪಾಯವರಿದು ಧ್ಯಾಯಿಸೊ ನಿಧಾನ
ಸೋಹ್ಯದೋರುತಿದೆ ನೋಡಿ ಸದ್ಗತಿ ಸಾಧನ ೨
ಸಾವಧಾನವೆಂದು ಶ್ರುತಿ ಸಾರುತಿದೆ ನೋಡಿ
ಗೋವಿಸುವ ವಿದ್ಯದೊಳು ಸಿಲುಕಿಬೀಳಬ್ಯಾಡಿ
ಆವ ಪರಿಯ ಭಾವ ಕಾವ ದೈವ ನೋಡಿ
ಜೀವ ಜೀವಾಗಿಹ್ಯ ಮಹಿಪತಿ ನಿಜಗೂಡಿ ೩

೨೪೦
ತಿಳಿದು ನೋಡಿ ತನುವಿನೊಳು ತಮ್ಮ ನಿಜಖೂನ
ಸುಳುಹು ದೋರಿಕುಡುವ ನೋಡಿ ನಿಜಾನಂದ ಘನ ಧ್ರುವ
ತಮ್ಮ ಶುದ್ಧಿ ತಮಗಿಲ್ಲವೊ ಹೆಮ್ಮೆ ಬಹಳ
ಘಮ್ಮ ಆದರೆ ಎಲ್ಲ ನೋಡಿ ಹೊಕ್ಕು ಮೃಗಜಲ
ನಮ್ಮ ನಿಮ್ಮದೆಂದು ಹೊಡೆದಾಡಿ ಬಿತ್ತು ಬೀಳ
ಸಮ್ಯಗ್ ಜ್ಞಾನದಿಂದ ತಿಳಿದವನೆ ವಿರಳ ೧
ತನ್ನ ತಾ ತಿಳಿದವಗೇನು ಭಿನ್ನಭೇದವಿಲ್ಲ
ಉನ್ಮನವಾಗಿ ಪೂರ್ಣ ತಿಳಿದವನೆ ಬಲ್ಲ
ಧನ್ಯವಾದ ಮಹಿಮರಿನ್ನು ಮನಿಮನಿಗೆ ಇಲ್ಲ
ಕಣ್ಣಾರೆ ಕಾಣುತಿಹ್ಯ ಗುಪ್ತಗುಹ್ಯವೆಲ್ಲ ೨
ತಿಳುಹದೋರಿಕೊಟ್ಟ ಗುರು ಎನ್ನೊಳಗೆ ಪೂರ್ಣ
ಹೊಳೆಹುತಿಹ್ಯಾನಂದ ಘನಸದ್ಗುರು ಪೂರ್ಣ
ಥಳಥಳಿಸುತಿಹದು ಸದ್ಗತಿ ಸಾಧನ
ಕಳೆದ ಮಹಿಪತಿ ನೋಡಿ ಜನನ ಮರಣ ೩

೨೪೧
ತಿಳಿದು ನೋಡೊ ನಿನ್ನೊಳಗೆ ನಿಜಬಣ್ಣ
ಬೆಳಗಿನೊಳು ಬೆಳಗುದೋರುತಿಹ್ಯ ಜಗಜೀವನ ಧ್ರುವ
ಒಳಗೆ ವಿಷ ಮ್ಯಾಲೆ ವೇಷ ಇಳೆಯೊಳ್ಯಾಕೆ ಸೋಗು
ಕಳೆದು ಕೋಪ ಅಳಿದು ತಾಪ ತಿಳಿದು ನಿಜವಾಗು ೧
ಕೈಯೊಳು ಜಪ ಮೈಯೊಳು ಕೋಪ ಬಾಯೊಳಗ್ಯಾಕ ಮಂತ್ರ
ದೇಹ್ಯೊಳಗಿಹ್ಯ ಸೋಹ್ಯವ ತಿಳಿದು ಧ್ಯಾಯಿಸೊ ಸೂತ್ರಾಂತ್ರಾ ೨
ಮುಸುಕಿನೊಳು ಹಸಕವಿಟ್ಟು ಠಸಕ ದೋರಬ್ಯಾಡೊ
ಉಸುರಿನೊಳು ಹಸನಗೊಂಡು ಮೀಸಲು ಮನಮಾಡೊ ೩
ಹಿಡಿದು ಜನ ಪಡೆದಗುಣ ಒಡನೆ ಕೂಡೊ ಸುಪಥ
ಹಿಡಿದು ಗುರುಪಾದ ಮಹಿಪತಿ ನೋಡೊ ಸ್ವಹಿತ ೪

೨೩೮
ತಿಳಿದುಕೊಳ್ಳಿ ಖೂನ ಬಲ್ತು ನಿಜ ಜ್ಞಾನ ಧ್ರುವ
ಹಾದಿ ಅದೆ ಹಿಂದಗಾಧ ಅದೆ ಮುಂದೆ
ಭೇದಿಸಿನ್ನು ತಿಳಿದುಕೊಳ್ಳಿ ಗುರುಕೃಪೆಯಿಂದ ೧
ಲಬ್ಧ ಅದೆ ಹಿಂದೆ ಶಬ್ದ ಅದೆ ಮುಂದೆ
ಲಬ್ಧವಾಗಿ ಕೇಳಿಕೊಳ್ಳಿ ಗುರುದಯದಿಂದ ೨
ಅರ್ಥ ಅದೆ ಹಿಂದೆ ಸ್ವಾರ್ಥ ಅದೆ ಮುಂದೆ
ಅರ್ತು ಇದೆ ಕೇಳಿಕೊಳ್ಳಿ ಗುರು ಜ್ಞಾನದಿಂದೆ ೩
ಗುಂಭ ಅದ ಹಿಂದೆ ಡಂಭ ಅದೆ ಮುಂದೆ
ಇಂಬು ಇದೇ ತಿಳಿದುಕೊಳ್ಳಿ ಗುರು ಜ್ಞಾನದಿಂದೆ ೪
ನೋಟ ಅದೆ ಮುಂದೆ ಕೂಟ ಅದೆ ಹಿಂದೆ
ನೀಟವಾಗಿ ಗುರುವಿಗೆ ಕೇಳಬೇಕು ಒಂದೆ ೫
ಮನವು ಅದೆ ಮುಂದೆ ಘನವು ಅದೆ ಹಿಂದೆ
ತನುವಿನೊಳು ಮಾಡಿಕೊಳ್ಳಿ ಖೂನ ನಿಜ ಒಂದೆ ೬
ದೇಹ್ಯ ಅದೆ ಮುಂದೆ ಸೋಹ್ಯ ಅದೆ ಹಿಂದೆ
ಸೋಹ್ಯ ದೋರಿಕೊಡುವ ಮಹಿಪತಿ ಗುರು ತಂದೆ೭

೪೪೫
ತಿಳಿಯದು ಶ್ರೀ ಗುರು ಮಹಿಮೆ ಧ್ರುವ
ಕ್ಷಿತಿಯೊಳು ನಿಜವೆಂದರಿಯಲಿಬಾರದು
ತೋರುವ ರೂಪದ ಮಾಟ
ನಿರ್ಮಿಸಿಹ್ಯ ಬ್ರಹ್ಮ ವಿಷ್ಣು ಮಹೇಶ ಉತ್ಪತ್ತಿ ಸ್ಥಿತಿ ಲಯದಾಟ
ಮರುಳಾಗಿ ದುರ್ಜನ ನಿಜವೆಂದ್ಹಿಡದಿಹ ಮಾಯ
ಮೋಹದ ಅವ್ಹಾಟ
ವರ್ಮವನರಿವರು ಗುರುಯೋಗ ಧರ್ಮದ
ಬ್ಯಾರಿಹ ಅನಿಮಿಷ ನೋಟ ೧
ರೂಪದ ಬೊಂಬೆಯು ತೋರಡಗುವ ಬಗೆ
ಕಂಭ ಸೂತ್ರದ ವಿಚಾರ
ನಿತ್ಯವಿಲ್ಲದನಿತ್ಯದ ಆಟವು ನಂಬಬಾರದು ಸಂಸಾರ
ನಂಬಿದವರು ಇಂಬಿಲ್ಲಿದೆ ಹೋದರು ಮಿತಿ ಇಲ್ಲದೆ ಅಪಾರ
ನಿಲುಕಡೆ ಇಲ್ಲದೆ ಸೂರ್ಯಾಡುವ ಬಗೆ ಇದು ಯಾತನೆ ಶರೀರ ೨
ಕನ್ನಡಿಯೊಳು ಹಣಹೊನ್ನವು
ಕಂಡಂತಾಗುವುದೇನು ಸಂತೋಷ
ಕನಸಿನೊಳಗೆ ಮಹಾ ದುರಿತವು
ಕಂಡಂತನುಭವಿಸುವದೇನು ಕ್ಲೇಶ
ಈ ಪರಿ ಸುಖದು:ಖ ಮಿಥ್ಯವೆಂದರಿಯದೆ ಸತ್ತು
ಹೋದರು ಶತಂ ಭೀಷ್ಮ
ಮಹಿಪತಿ ನಿನ್ನೊಳು ತಿಳಿದು ನೋಡುವದಿದು
ತೋರು ಗುರು ಜಗದೀಶ ೩

೨೪೨
ತಿಳಿಯೊ ಪ್ರಾಣಿ ತನು ಮನದೊಳಗಿಹ್ಯ
ನಿಜ ವಸ್ತುನೆ ಮುಂದುಗಾಣಿ
ಥಳ ಥಳ ಗುಡುವುತ ಹೊಳೆವುತಲ್ಯದೆ ಬಲಿಯೊ
ಸದ್ಗುರು ಸುಪ್ರಾರ್ಥನೆ ಧ್ರುವ
ಹಿಂದೆ ನಿಂದೆಂಬುದು ತಿಳಿಯಿತೆಂಬುದು
ಜನ್ಮದ ಸಂದೇಹಗಳೀತೆ
ಮುಂದೆ ಸಾದ್ಯವೆಂಬುದು ಹೊಳೆಯಿತೆ
ಒಂದಾದರ ಮಾತಿಗಿಳಿಯಿತೆ
ಹಿಂದೆ ಮುಂದಿನದು ಕತ್ತಲಳಿಯಿತೆ ನಿಂದ
ನಿಜಘನ ನೆಲೆಗೊಳ್ಳಿತೆ
ಅಂದಿಗಿಂದಿಗೆ ಬಂದ್ಹೊಳಿಯುತೊಳಿಯಿತೆ
ಹೊಂದಿತೆ ಅರಿಯದಿಹುದು ಒಳಿತೆ೧
ನಿನ್ನೊಳು ನೀ ನಿಜ ತಿಳಿಯದೆ ಖೂನ ಇನ್ನೊಬ್ಬರಿಗ್ಹೇಳುವುದೇನ
ಕನ್ನಡಿಯೊಳು ಕಾಂಬುವ ಕಾಂಚನ ಸನ್ನಿದಾಗುವದೆ ಪೂರ್ಣ
ಭಿನ್ನಭೇದವು ಹೋಗದೆ ಅನುಮಾನ ಚೆನ್ನಾಗ್ಯಾಗುವದೆ ಜ್ಞಾನ
ಧನ್ಯಗೈಸುವ ಸದ್ಗುರು ಕರುಣ ಮನ್ನಿಸಿ ಪಡಕೊ ನಿಧಾನ ೨
ಖೂನತಿಳಿಯಲಿಕ್ಹಿಡಿಯೊ ಶರಣ ಮೌನ
ಮುಗ್ದದಿ ಗುರುಪಾದ ಈಗ
ಏನೆಂದು ತಾ ತಿಳಿಯುವದು ಆಗ ಸ್ವಾನುಭವದ ಸ್ವಸುಖಭೋಗ
ಅನುದಿನ ಹೊಳೆಯುತಲಿದೆ ಸುಯೋಗ
ಅಣುರೇಣುದೊಳಗ ತಾ ಬ್ಯಾಗ
ದೀನ ಮಹಿಪತಿಗದೆ ಒಳಹೊರಗೆ ಫನ ಭಾಸುತಲ್ಯದೆ ಆವಾಗ ೩

೫೫೮
ತಿಳಿಯೊ ಮನವೆ ನಿಜವಸ್ತು ಖೂನ
ಅಳಿಯೊ ದೇಹ ನಾನೆಂಬುವಭಿಮಾನ
ಉಳುವ ಉಪಾಯ ಮಾಡೊ ನೀ ಸಾಧನ
ಹೊಳಿಯೊ ಸದ್ಗುರು ಪಾದದಲಿ ನೀ ಪೂರ್ಣ ೧
ಹುಟ್ಟಿ ಬಂದೇನು ಪುಣ್ಯ ಪುರುಷಾರ್ಥ
ಘಟ್ಟಿಗೊಳ್ಳದೆ ನಿಜ ಸುಹಿತಾರ್ಥ
ನಿಷ್ಠೆ ಹಿಡಿಯದನ ಜನ್ಮ ವ್ಯರ್ಥ
ಮುಟ್ಟಿ ತೋರುವ ಶ್ರೀ ಗುರು ಪರಮಾರ್ಥ ೨
ಗುರ್ತು ತಿಳಿಯೊ ಜನುಮಕೆ ಬಂದ ಮ್ಯಾಲೆ
ಮರೆತು ಮೈಮರೆವದೇನು ತಾ ಮೇಲೆ
ಅರ್ತು ನಡೆವದು ನಿನಗೇನು ಸೋಲು
ಕರ್ತು ಸದ್ಗುರು ಸ್ಮರಿಸೋ ಆವಾಗಲೂ ೩
ಎಲ್ಲಾರಂಥ ತಾನಲ್ಲೊ ಗುರುನಾಥ
ಸುಲ್ಲಭದಿಂದ ದೋರುವ ಸುಪಥ
ಅಲ್ಲೆ ದೋರ್ವದು ಸಕಲ ಹಿತಾರ್ಥ
ಬಲ್ಲ ಮಹಿಮರೆ ತಿಳಿವರೀ ಮಾತ ೪
ಭಾಸುತದೆ ಭಾಸ್ಕರ ಕೋಟಿ ಕಿರಣ
ಲೇಸಾಗಿ ಹೋಗೊ ಗುರುವಿಗೆ ಶರಣ
ದಾಸಮಹಿಪತಿ ಸ್ವಾಮಿ ದೀನೋದ್ಧಾರಣ
ಭಾಸಿ ಪಾಲಿಸುವ ತಾ ಸುಕರಣ ೫

೫೫೯
ತಿಳಿಯೊ ಮನವೆ ಯುಕ್ತಿಯ ಕಳಿಯೋ ನೀ
ವಿಷಯಾಸಕ್ತಿಯ ಬಲಿಯೊ ಭಕ್ತಿಯ ಧ್ರುವ
ಕಣ್ಣು ಕಾಣಿಸುವಾಗ ಪುಣ್ಯ ಪಥ ಹೊಂದು ಈಗ
ಹಣ್ಣು ಶರೀರಾಗದಾಗ ನಿನ್ನೊಳು ತಿಳಿ ಬ್ಯಾಗ ೧
ಬಲವು ದೇಹಲಿದ್ದಾಗ ಬಲಿಯೊ ಭಾವ ಭಕ್ತಿಲೀಗ
ನೆಲೆ ನಿಭಗೊಂಬುವ್ಹಾಂಗೆ ಸಲೆ ಮರೆಹೊಗು ಹೀಂಗ ೨
ಬಂದ ಕೈಯಲಿ ಬ್ಯಾಗ ಹೊಂದು ಸದ್ಗುರು ಪಾದೀಗ
ಎಂದೆಂದಗಲದ್ಹಾಂಗ ಸಂಧಿಸು ಘನ ಹೀಂಗ ೩
ಸೋಹ್ಯದೋರುವ ಕೈಯ ಧ್ಯಾಯಿಸೊ ನೀ ಶ್ರೀಹರಿಯ
ನ್ಯಾಯ ನಿನಗೆ ನಿಶ್ಚಯ ಇಹಪರಾಶ್ರಯ ೪
ಗುರುಪಾದ ಕಂಡಾಕ್ಷಣ ಎರಗೊ ಮಹಿಪತಿ ಪೂರ್ಣ
ಹರಿಯೊ ಅಹಂಭಾವಗುಣ ಬೆರಿಯೊ ನಿರ್ಗುಣ ೫

೪೪೬
ತೀರ್ಥಯಾತ್ರೆ ಎಂಬುದು ಇದೆ ನೋಡಿ
ಅರ್ತು ಸ್ವಾಮಿ ಸದ್ಗುರು ಪಾದ ಕೂಡಿ ಧ್ರುವ
ಭ್ರೂಮಧ್ಯವೆಂಬುದಿದೆ ಕಾಶಿ
ಬ್ರಹ್ಮಸುಖ ತುಳುಕುತಿದೆ ಸೂಸಿ
ನೇಮದಿಂದಲಿ ನೋಡಲು ಧ್ಯಾನಿಸಿ
ಕರ್ಮಪಾಶ ಹೋಯಿತು ಛೇದಿಸಿ ೧
ತ್ರೀವೇಣಿ ಸಂಗಮ ಸುಕ್ಷೇತ್ರ
ಜೀವ ಪ್ರಾಣ ಮಾಡಿತು ಪವಿತ್ರ
ದಿವ್ಯ ದೇಹವಾಯಿತು ಸರ್ವಗಾತ್ರ
ಭವಹಿಂಗಿ ಹೋಯಿತು ವಿಚಿತ್ರ ೨
ಭ್ರಮರ ಗುಂಫ ಎಂಬುದು ಗಯಾ
ನೇಮದಿಂದ ಕಂಡವಗ ವಿಜಯ
ಪ್ರೇಮಭಾವೆಂಬುದು ಸರ್ವಕ್ರಿಯ
ವರ್ಮದೋರಿತು ಗುರು ಪುಣ್ಯೋದಯ ೩
ಪೃಥ್ವಿ ಪರ್ಯವಣಿದೆವೆ ನೋಡಿ
ತತ್ವದೊಳೇಕತ್ವ ಸಮಗೂಡಿ
ಹಿತತ್ವವೆಂಬ ದಯ ಮಾಡಿ
ಕಥತ್ವವೆಂಬು ದೀಡಾಡಿ ೪
ಕಣ್ಣ ದೋರಿ ಬಂತೆನಗ ತಾರ್ಕಣ್ಯ
ಕಣ್ಣು ಕಂಡುಗೆಯಿತು ಧನ್ಯಧನ್ಯ
ಚಿಣ್ಣ ಮಹಿಪತಿಗಿದೆ ಸರ್ವಪುಣ್ಯ
ಇನ್ನೊಂದು ಪಥವ್ಯಾಕೆ ಅನ್ಯ ೫

೨೪೩
ತೊಡಕ ಹರವ ಮಾಡಿಕೊಳ್ಳಿರೊ ಹುಟ್ಟಿ ಬಾಹ್ವ ಮನುಜರೆಲ್ಲ ಧ್ರುವ
ನಾನು ನನ್ನದೆಂದು ಜ್ಞಾನಹೀನನಾಗಿ ಬಾಳುತಿಹ್ಯ
ಗಾಣ-ದೆತ್ತಿನಂತೆ ಮುಂದೆಗಾಣದಿಹ್ಯ ಭ್ರಮೆಯದ ೧
ಜೀವ ಶಿವ ದಾವದೆಂದು ಠಾವಿಕಿಲ್ಲ ದಿಹ್ಯದಾಗಿ
ನಾವು ನೀವು ಎಂದು ಹ್ಯಾವ ಹೊಮ್ಮಿ ಹೊಡೆದಾಡುವ ೨
ಸಂಚಿತ ಪ್ರಾರಬ್ಧ ಕ್ರಿಯಮಾಣದೊಳು ಸಿಲ್ಕಿ ಪ್ರ
ಪಂಚ ಪರಮಾರ್ಥ ದಾವದೆಂದು ಮುಂಚೆ ತಿಳಿಯದ ೩
ತನವು ತಾನೆಂದು ಘನವು ಮರೆದು ದಣಿದು ತಿರುಗುತಿಹ್ಯ
ಮನದ ಮಾಯದೊಳು ಸಿಲ್ಕಿ ತನಗೆ ತಾಂ ತಿಳಿಯದೆ ೪
ತೊಡಕು ಹರವ ಮಾಡಿಗೊಳ್ಳಿ ಪಡದು ಜ್ಞಾನಭಕ್ತಿಯಿಂದ
ಮೂಢ ಮಹಿಪತಿಯನ್ನೊಡೆಯ ಬಿಡದೆ ನೆಲೆಗೊಳ್ಳುವ್ಹಾಂಗೆ ೫

೪೩೩
ತ್ರಾಹಿ ತ್ರಾಹಿ ಎನ್ನಿರೊ ತ್ರೈಲೋಕ್ಯದೊಡಿಯಗೆ
ತ್ರಾಹಿ ತ್ರಾಹಿ ಎನ್ನಿರೊ ತಾರಕ ಬ್ರಹ್ಮಗೆ ಧ್ರುವ
ಕಾಮ ಕ್ರೋಧ ಸುಟ್ಟು ಹೋಳಿಯಾಡುವ ಬನ್ನಿರೊ
ಪ್ರೇಮ ಪ್ರೀತಿಯಿಂದ ಕುಣಿದಾಡುವ ಬನ್ನಿರೊ ೧
ಭೇದವಳಿದು ಸಾಧು ಜನರ ಕೂಡಿಕೊಂಬ ಬನ್ನಿರೊ
ಮದ ಮತ್ಸರವ ಬೂದಿ ಮಾಡಿಚೆಲ್ಲುವ ಬನ್ನಿರೊ ೨
ಏಕರಂಗವಾಗಿ ಓಕುಳ್ಯಾಡವ ಬನ್ನಿರೊ
ಜೀಕಳಿಯ ಮಾಡಿ ಮಾಯ ಮೋಹ ಎಸುವ ಬನ್ನಿರೊ ೩
ಎಲ್ಲರೊಳಗಿಹ ನಮ್ಮ ಪುಲ್ಲನಾಭ ಚಲುವನೊ
ಬಲ್ಲ ಮಹಿಮನಿಗೆ ನೆಲೆಯ ನೋಡಿ ಒಲಿವನೊ ೪
ಹೋಳಿಯಾಡಿದನು ನೋಡಿ ಇಳಿಯೊಳಗ ಮಹಿಪತಿಯು
ಕಳೆದು ಕಲ್ಪನೆ ಕೋಟಿಲಿಂದ ಗೆದ್ದ ನೋಡಿರೊ ೫

೪೩೪
ತ್ರಾಹಿ ತ್ರಾಹಿ ಗುರುನಾಥ ಎಂದು
ತ್ರಾಹಿ ದೀನನಾಥ ಎಂದು
ಸಾಹ್ಯ ಮಾಡಿಕೊಳ್ಳಿ ಬಂದು
ಸೋಹ್ಯದೋರುವ ದೀನಬಂಧು ಧ್ರುವ
ವ್ಯರ್ಥಗಳಿಯಬ್ಯಾಡಿ ಜನ್ಮ
ಗುರ್ತು ಮಾಡಿಕೊಳ್ಳಿ ನಿಮ್ಮ
ಸಾರ್ಥಕಿದೆ ಸಂತ ಧರ್ಮ
ಅರ್ತುಕೊಳ್ಳಾನಂದೊ ಬ್ರಹ್ಮ ೧
ಸಾರಿ ಚೆಲ್ಯದ ಹರಿರೂಪ
ದೋರುವ ಗರುಕುಲದೀಪ
ದೋರುತಿಹ್ಯದು ಚಿತ್‍ಸ್ವರೂಪ
ಸೂರ್ಯಾಡಬಹುದು ಸ್ವಸ್ವರೂಪ ೨
ಸ್ವಾರ್ಥ ಅತಿಹಿಡಿಯಬ್ಯಾಡಿ
ಮತ್ರ್ಯದೊಳು ಮರ್ತುಬಿಡಿ
ಕರ್ತು ಸ್ವಾಮಿಯ ಅರ್ತು ಕೂಡಿ
ಬೆರ್ತು ನಿಮ್ಮೊಳು ನಿರ್ತ ನೋಡಿ ೩
ಏನು ಹೇಳಲಿ ಹರಿಯ ಸು
ಖೂನದೋರುದು ಸಂತ ಮುಖ
ಜ್ಞಾನಿ ಬಲ್ಲೀ ಕೌತುಕ
ಧನ್ಯವಾಯಿತು ಮೂರುಲೋಕ ೪
ಹಿಡಿದು ನಿಜ ಒಂದು ಪಥ
ಪಡೆದ ಮಹಿಪತಿ ಹಿತ
ಒಡೆಯನಹುದಯ್ಯ ಈತ
ಕುಡುವ ಭುಕ್ತಿ ಮುಕ್ತಿದಾತ ೫

*
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಧ್ರುವ
ಏನೆಂದ್ಹೇಳಲಯ್ಯ ನೀವು ಮಾಡಿದುಪಕಾರ
ನಾನೇನುತ್ತೀರ್ಣಾದೇನು ಹೀನ ದೀನ ಕಿಂಕರ
ನೀನೆ ತ್ರಿಭುವನಕೆಲ್ಲ ಸುಖವಿಡುದಾರ
ಮುನಿಜನರ ಮಂದಾರ ಘನ ಸಹಕಾರ ೧
ಉಪಕಾರಕ ನೀ ಬಂದ್ಯೊ ಉಪಮೆರಹಿತ
ಉಪಾಯವದೋರಲಿಕ್ಕೆ ಕೃಪೆಯುಳ್ಳ ಸಮರ್ಥ
ತಾಪತ್ರಯ ಹರಿಸುವ ಶಕ್ತ ನೀನೆ ಶ್ರೀನಾಥ
ಈ ಪರಿಮಾಡುವರಿಲ್ಲ ಆಪ ನೀನೆ ಅನಂತ ೨
ಸಕಳಕೆ ಸಿಲುಕದ ಸುಖ ನೀಡಿದೆ ಅಯ್ಯ ನೀ
ಅಕಳಂಕ ನಿಜರೂಪ ಪ್ರಕಟಿಸಿದ ಅಯ್ಯ
ಸುಕಾಲ ಸುಭಿಕ್ಷದಿಂದ ಮಾಡಿದ್ಯೋ ನೀ ದಯ
ಅಖಿಳದೊಳು ಮಹಿಪತಿಯ ಪಿಡಿದ್ಯೊ ನೀ ಕೈಯ ೩

*
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ
ಬಾಹ್ಯಾಂತ್ರ ಪರಿಪೂರ್ಣ ನೀನೆ ಸದೋದಿತ
ಸಹಕಾರ ನಿಜವಸ್ತು ನೀನೆ ಅಖಂಡಿತ
ಗುಹ್ಯ ತಿಳಿಯದೊ ನಿನ್ನ ಸದ್ಗುರು ಸಮರ್ಥ ೧
ಸೆರಗ ಸಿಲುಕದೆಂದು ತಿರುಗಿತು ವೇದ
ಸರಸ್ವತಿ ಸ್ತುತಿಗೆ ತಾ ತೀರಲಿಲ್ಲ ಬೋಧ
ವರಣಿಸಲಿಕ್ಕೆ ಶೇಷ ತಲೆಯು ಬಾಗಿದ
ಮೊರೆ ಇಡುತಿಹುದೆಲ್ಲ ನಿನಗೆ ಗೋವಿಂದ ೨
ಋಷಿಮುನಿಗಳಿಗೆ ತಾ ಪೆಸರೊಡೆಯದು
ತುಸು ಕೊರತೆಲ್ಲ ತಾ ಪಸರಿಸಿಹ್ಯದು
ಮಸಿ ಮಣ್ಣಾಯಿತು ಲೋಕ ಹೆಸರಿಗೆ ಬಂದು
ದೆಸೆಗೆಟ್ಟಾಯಿತು ಬಹಳ ಉಸುರೊಡಿಯೆಂದು ೩
ಮಾಡದ ಮಾಡಿತು ಲೋಕ ನೋಡೊ ನಿನಗಾಗಿ
ಬಡದ ಭವಣೆಬಟ್ಟು ಹಿಡಿಯಲಿಕ್ಕೆ ಹೋಗಿ
ಕೊಡಲಿಲ್ಲ ನಿಜಗುಟ್ಟು ಇವ್ಹನೀ ಅಡಗಿ
ಬೆಡಗು ನಿನ್ನದು ಬಹಳ ಅಹದೊ ನೀ ಯೋಗಿ ೪
ಇದೆ ಮುಂದಣುವಾದ ನನ್ನದೇನು ಪಾಡು
ಸಾಧಿಸಿ ಸದ್ಗುರು ಕೃಪೆ ನೀನೆ ದಂಇÀಇಮಾಡು
ಒದಗಿ ಮಹಿಪತಿ ನೀ ದಯದಿಂದ ನೋಡು
ಸದಮಲ ಸುಖವಾದ ಸುಧಾರಸವ ಕೊಡು ೫

೪೩೫
ತ್ರಾಹಿ ತ್ರಾಹಿ ತ್ರಾಹಿ ಎನ್ನಬೇಕು ಧ್ರುವ
ಕಡ್ಡಿಮರೆಯಲ್ಯದ ನೋಡಿರೊ ಗುಡ್ಡ
ಗುಡ್ಡಕಾಣಲರಿಯದವನ ಹೆಡ್ಡ
ಹೆಡ್ಡನಾದರ ವಸ್ತುಕಾಗೇದಡ್ಡ
ಅಡ್ಡಾಗಡ್ಡೇರಿಸಿದ ಶ್ರೀಗುರುದೊಡ್ಡ ೧
ಅಡ್ಟಾಊಡೆ್ಡಂಬುಕ ಅನುಮಾನ
ಗುಡ್ಡವೆಂಬುವೆ ವಸ್ತು ತಾ ನಿಧಾನ
ವಡ್ಡಗೊಂಡಿಹುದು ಕಾಣದ ಮನ
ಅಡ್ಡಮರಿ ಬಿಡಿಸುವ ಗುರುಜ್ಞಾನ೨
ಕಡ್ಡಿಮರೆಯು ಆಗಿಹ್ಯ ತಾ ಕಾರಣ
ಅಡ್ಡ ಬಿದ್ದೆನಯ್ಯ ಗುರುವಿಗೆ ಶರಣ
ದೊಡ್ಡ ಸ್ವಾಮಿ ನಮ್ಮ ಸದ್ಗುರು ಕರುಣ
ವಡ್ಡುಗಳಿಸಿದ ಮಹಿಪತಿಗೆ ಪೂರ್ಣ ೩

೪೩೬
ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಇದೇವೆ ಕೈವಲ್ಯ ಇದೇವೆ ದೇವಾಲ್ಯ
ತ್ರಾಹಿ ತ್ರಾಹಿ ತ್ರಾಹಿ ಎಂದು ನೋಡಿಮನದ ವೈಶಾಲ್ಯ ಧ್ರುವ
ಮಹಾಮಹಿಮೆ ದೋರುವ ಇದೆ ದೇವದ್ವಾರ
ಸೋಹ್ಯದೋರಿ ಕುಡುತಿಹ ಪುಣ್ಯ ಸಹಕಾರ
ಬಾಹ್ಯಾಂತ್ರ ಭಾಸುತಿಹ ಸದ್ಗುರು ಸಹಕಾರ
ದೇಹ ಅಭಿಮಾನ ಬಿಟ್ಟು ಮಾಡಿ ಜಯ ಜಯಕಾರ ೧
ಮಾರ್ಗ ಸುಪಥವಿದೆ ನೋಡಿ ಸಾಕ್ಷಾತ್ಕಾರ
ವರ್ಗ ಷಡ್ವೆರಿಗಳ ಮಾಡಿ ಬ್ಯಾಗೆ ದೂರ
ದೀರ್ಘದಂಡ ಹಾಕಿ ಗುರುವಿಗೆ ನಮಸ್ಕಾರ
ಸ್ವರ್ಗ ಸುಖಗೊಳ್ಳಲಿಕೆ ಇದೇವೆ ಸಹಕಾರ ೨
ಸ್ವರ್ಗ ಭೂಕೈಲಾಸ ವೈಕುಂಠವಿದೆ ನೋಡೆವೈ
ಮಗ್ನವಾಗಿ ಮಹಾಗುರು ಪಾದ ಪದ್ಮಕೂಡಿ
ಯೋಗ ಇದೆ ಸುಗಮ ಸಾಧನವ ಮಾಡಿ
ಸುಜ್ಞಾನ ಸೂರೆಗೊಂಡು ಮಹಿಪತಿ ನಿಜಗೂಡಿ ೩

೪೩೯
ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಕೈಯ ಮುಗಿದೊಮ್ಮೆ | ಕೈ …
ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಮನದಲಿನ್ನೊಮ್ಮೆ ಧ್ರುವ
ಪುಣ್ಯಕ್ಷೇತ್ರವಹುದಿದು ಸಾರವಾಡಗ್ರಾಮ | ಸಾ…
ಕಣ್ಣಾರೆ ಕಂಡು ಯಾತ್ರೆಗೆ ಬಾಹುದು ಬ್ರಹ್ಮಸ್ತೋಮ | ಬಾ…
ಸಣ್ಣ ದೊಡ್ಡವರಿಗೆಲ್ಲ ಭಾಸುದು ಸಂಭ್ರಮ | ಭಾ…
ದಣಿವು ಹಿಂಗಿ ದೋರುತಿಹುದು ಆನಂದೊಬ್ರಹ್ಮ ೧
ಧರೆಯೊಳಧಿಕವಾದ ಕ್ಷೇತ್ರವಿದೆ ಕಾಶಿ | ಕ್ಷೇ…
ಹರಿಯುತಿಹುದು ನೋಡಿ ಜ್ಞಾನ ಗಂಗೆಯು ಸೂಸಿ | ಜ್ಞಾ…
ಸ್ಮರಣಿಯಿಂದ ಹರಿ ಸೇವ್ಯಾಹುದು ಪಾಪದರಾಶಿ | ಪಾ…
ಗುರು ವಿಶ್ವೇಶ್ವರ ತಾರಿಸುತಿಹ ಕರುಣಿಸಿ ೨
ಸರ್ವ ತೀರ್ಥ ಮಿಂದ ಫಲ ಬಾಹುದಿಲ್ಲೆ ನೋಡಿ | ಬಾ…
ಪೂರ್ವ ಕರ್ಮಾದಿಗಳೆಲ್ಲ ಹೋದವಿಲ್ಲೆ ನೋಡಿ | ಹೋ…
ಸರ್ವರು ಅರಿತು ನೀವು ಇದೆ ಯಾತ್ರೆಯ ಮಾಡಿ | ಇ…
ನಿರ್ವಾಣ ಪರ್ವಣೀಯ ಫಲ ಬಾಹುದು ಕೈಗೂಡಿ೩
ಪುಣ್ಯಗೈದ ವಿಶ್ವನಾಥ ಸತಿಸಹಗೂಡಿ | ಸ…
ಜನುಮಾಂತ್ರದ ದೋಷಗಳದಿಲ್ಲೆ ನೋಡಿ | ಗ…
ಘನ ಸುಖ ಪಡೆದುನುಮಾನ ಈಡ್ಯಾಡಿ | ಈ…
ವರ್ಣಿಸಲಾಗುದು ಸ್ತುತಿ ಸ್ತವನ ಪಾಡಿ ೪
ಮನವಿಟ್ಟು ಕೇಳಿ ಸ್ತುತಿ ಭಾವ ಭಕ್ತಿಯಿಂದ | ಭಾ…
ಪುಣ್ಯಗೈತೆನ್ನ ಜೀವ ಅನುಭವದಿಂದ | ಅ…
ಉನ್ಮನವಾಗಿ ದೋರಿತು ಬ್ರಹ್ಮಾನಂದ | ದೋ…
ಧನ್ಯವಾದ ಮಹಿಪತಿ ಗುರು ಕೃಪೆಯಿಂದ ೫

೪೪೨
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಶ್ರೀಗುರುನಾಥ ತ್ರಾಹಿ
ತ್ರಾಹಿ ಎಂದವನಪರಾಧ ನೋಡದೆ ನೀ ಕಾಯಿ ಧ್ರುವ
ಪತಿತಪಾವನೆಂಬ ಬಿರುದು ನಿನಗೆ ಎಚ್ಚರಿಲ್ಲೆ
ಪ್ರತಿದಿನ ಮೊರೆ ಇಡಲಿಕ್ಕೆ ಮತ್ತಿದೆ ಸೋಜಿಗವಲ್ಲೆ
ಅತಿ ಸೂಕ್ಷ್ಮ ಸುಪಥವರಿಯಲಿಕ್ಕೆ ನಾ ಏನು ಬಲ್ಲೆ
ಹಿತದಾಯಕ ನನ್ನ ದೀನ ದಯಾಳು ನೀನೆವೆ ಅಲ್ಲೆ ೧
ತಪ್ಪಿಲ್ಲದೆ ನಿನ್ನ ಮೊರೆಯ ಹೋಗುವರೇನೊ ಏ ಶ್ರೀಪತಿ
ಒಪ್ಪಿಸಿಕೊಳ್ಳದಿದ್ದರಹುದೆ ಜಗದೊಳು ನಿನ್ನ ಖ್ಯಾತಿ
ಕೃಪೆಯುಳ್ಳ ಸ್ವಾಮಿ ನಿನ್ನದೆ ಸಕಲ ಸಹಕಾರ ಸ್ಥಿತಿ
ಅಪರಾಧ ಕ್ಷಮೆ ಮಾಡಿ ಸಲಹಬೇಕೆನ್ನ ಶ್ರೀಗುರುಮೂರ್ತಿ ೨
ಅನಾಥ ಬಂಧು ನೀ ಎಂದಾಡುತಿರಲಿ ಅನಾದಿಯಿಂದ
ನ್ಯೂನಾರಿಸದೆ ಬಾರÀದೆ ಬಿರುದಿಗೆ ತಾ ಕುಂದು
ಅನುದಿನ ಅನುಕೂಲ ಮುನಿಜನರಿಗೆ ನೀ ಬ್ರಹ್ಮಾನಂದ
ದೀನ ಮಹಿಪತಿ ಸ್ವಾಮಿ ಭಾನುಕೋಟಿತೇಜ ನೀ ಪ್ರಸಿದ್ಧ ೩

೪೩೮
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ
ತ್ರಾಹಿ ತಾರಕಬ್ರಹ್ಮ ಸಾಯೋಜ್ಯತ
ತ್ರಾಹಿ ಅನಾಥ ಬಂಧು ಸಾಕ್ಷಾತ
ತ್ರಾಹಿ ದೀನಾನಾಥ ತ್ರಾಹಿ ತ್ರಾಹಿ ೧
ಮಾಡಲರಿಯೆ ನಾನಿಮ್ಮ ನಿಜಸ್ತುತಿ
ಹಿಡಿಯಲರಿಯೆ ದೃಢ ಸದ್ಭಕ್ತಿ
ಪೊಡವಿಯೊಳು ನಾ ಮೂಢಮಂದಮತಿ
ಕೂಡಿಕೊಂಬೊ ದಯಮಾಡೋ ಶ್ರೀಪತಿ ೨
ಮೊದಲಿಗಾಡುವ ಬಾಲಕವೃತ್ತಿ
ತೊದಲುನುಡಿ ತಾಯಿಗತಿ ಪ್ರೀತಿ
ಇದೆ ಪರಿಯಲೊಪ್ಪಿಸಿಕೊಂಬ ಸ್ತುತಿ
ಮೇದಿನಿಯೊಳು ನಿಮ್ಮ ಖ್ಯಾತಿ ೩
ಆಡಿಸಿದಂತೆ ಆಡುವೆ ನಾ ನುಡಿ
ನಡೆಸಿಕೊಂಬುದು ಸನ್ಮತ ಮಾಡಿ
ಕೊಡುವಂತೆ ಮಾನ್ಯ ಸಂತರೊಡಗುಡಿ
ಮಾಡೊ ದಯ ನಿಮ್ಮಭಯನೀಡಿ ೪
ತ್ರಾಹಿ ತ್ರಾಹಿಯೆಂಬೆ ತನು ಮನರ್ಪಿಸಿ
ತ್ರಾಹಿಯೆಂಬೆ ಶಿರಸಾಷ್ಟಾಂಗ ನಮಿಸಿ
ತ್ರಾಹಿಯೆಂಬೆ ಮನದೊಳು ಸ್ಮರಿಸಿ
ಕಾಯೊ ಮಹಿಪತಿಯ ಕರುಣಿಸಿ ೫

೪೩೭
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿಯೆನ್ನಿರೊ
ತ್ರಾಹಿ ತಾರಕ ಬ್ರಹ್ಮಗೆನ್ನಿರೊ ಧ್ರುವ
ತ್ರಾಹಿ ಮಚ್ಚ ಕೂರ್ಮಾವತಾರಗೆನ್ನಿರೊ
ತ್ರಾಹಿ ವರಹ ನರಸಿಂಹಗೆನ್ನಿರೊ
ತ್ರಾಹಿ ವಾಮನ ಭಾರ್ಗವಗೆನ್ನಿರೊ
ತ್ರಾಹಿ ರಾಮಕೃಷ್ಣ ಗೋಪಾಲಗೆನ್ನಿರೊ ೧
ತ್ರಾಹಿ ಭೌದ್ಧ ಕಲ್ಕ್ಯಾವತಾರಗೆನ್ನಿರೊ
ತ್ರಾಹಿ ಸಗುಣ ನಿರ್ಗುಣಗೆನ್ನಿರೊ
ತ್ರಾಹಿ ವಟಪತ್ರಶಯನಗೆನ್ನಿರೊ
ತ್ರಾಹಿ ತ್ರೈಲೋಕ್ಯ ವಂದಿತಗೆನ್ನಿರೊ೨
ತ್ರಾಹಿ ಹರಿಹರ ವಿರಂಚಿಗೆನ್ನಿರೊ
ತ್ರಾಹಿ ಸುರವರ ನಿರಂಜನಗೆನ್ನಿರೊ
ತ್ರಾಹಿ ಭಕ್ತಜನ ಸಹಕಾರಗೆನ್ನಿರೊ
ತ್ರಾಹಿ ಮಹಿಪತಿ ಪಾಲಗೆನ್ನಿರೊ ೩

೪೪೩
ತ್ರಾಹಿ ತ್ರಾಹಿ ಶ್ರೀಗುರು ಅವಧೂತ
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಸದ್ಗುರು ದೀನನಾಥ ಧ್ರುವ
ತಪ್ಪು ಕ್ಷಮೆಯ ಮಾಡೊನೀ ಸ್ವಾಮಿ ನಮ್ಮ
ಕೃಪಾಸಿಂಧು ಸದ್ಗುರು ಪರಬ್ರಹ್ಮ
ಪಾಪಿ ದುರಾಚಾರಿಯು ನಾಪರಮ
ಕೃಪೆಯಿಂದ ಕಾವದು ದಯನಿಮ್ಮ ೧
ಗುಣದೋಷ ನೋಡದಿರೊ ಶ್ರೀಹರಿ
ಘನ ದುರಿತ ಕೋಟಿಗಳ ಸಂಹಾರಿ
ನೀನಹುದೊ ಬಡವನಾಧಾರಿ
ಅನುದಿನ ಕಾಯೊ ನೀ ಪರೋಪರಿ ೨
ಒಮ್ಮೆ ಬಂಧನವ ಬಿಡಿಸೊ
ಸಮ್ಯಕ ಜ್ಞಾನ ಸಾರದೊಳು ಕೂಡಿಸೊ
ನಿಮ್ಮದಾಸ ಮಹಿಪತಿಯೆಂದೆನಿಸೊ
ಬ್ರಹ್ಮಾನಂದದೊಳು ನಲಿದಾಡಿಸೊ ೩

೪೪೪
ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ
ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ
ತ್ರಾಹಿ ಶ್ರೀನಾಥ ಕರುಣಿಸೆನ್ನನು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ
ತ್ರಾಹಿ ಅನಾಥಜನ ಬಂಧು ನೀ ಸಾಕ್ಷಾತ
ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು ೧
ಹಿಂದೆ ಅನೇಕ ಜನ್ಮವನು ಸೋಸಿ
ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ
ಕಂದಿ ಕುಂದಿದೆ ಗರ್ಭಪಾಶದೊಳು
ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ
ಮುಂದಗಾಣದೆ ಕುರುಡನಂತಾದೆ ಧರೆಯೊಳು
ಬಂದೆ ಶ್ರೀಗುರು ಪಾದವನ್ನರಿಯದೆ ೨
ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು
ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ
ಇಂದೆನ್ನ ಜೀವ ಪಾವನವಾಯಿತು
ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ
ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು
ತಂದೆ ಶ್ರೀಗುರು ಚರಣದರುಶನದಲಿ ೩
ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ
ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ
ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ
ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ
ವಾಸುದೇವನು ತ್ರೈಲೋಕ್ಯ ತಾರಕಮಣಿಯೆ
ಭಾಸಿ ಪಾಲಿಪ ಭವನಾಶ ಮಣಿಯೆ ೪
ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ
ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ
ಹೊರೆದು ಸಲಹುವದೆನ್ನ ಇಹಪರವನು
ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ
ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ
ತ್ರಾಹಿ ತ್ರಾಹಿಯೆಂಬೆನು ಮನದಲಿ ೫

೪೪೭
ಥಳ ಗುಟ್ಟೊಳುತೊಬ್ಬಳೆವಾಗೆದ ತಾ
ವಳಗುಟ್ಟಲೆ ದಟ್ಟದ ಬೆಳಗು ತಾಂ
ತಿಳಿಗೊಟ್ಟರೆ ಸದ್ಗುರು ಭಾಸುದು ತಾ
ಕಳೆಮುಟ್ಟಿದು ನೋಡಲು ಶಾಶ್ವತ ೧
ಅರಿಯೊ ಸುರಿಯೊ ಪರಮಾಮೃತ
ಬೆರಿಯೊ ಗುರುವೆಂದು ನೀ ಸುಗುರುತಾ
ಜರಿಯೊ ಮರಿಯೊ ಮದಗರ್ವನೆ ತಾ
ನೆರಿಯೊ ಗುರುಪಾದಕೆ ನೀ ತ್ವರಿತ ೨
ತಿಳಿ ಸರ್ಕನೆ ನಿನ್ನೊಳು ಬ್ಯಾಗ ತಾ
ಅಳಿ ತರ್ಕದ ಮಾತಿನ ಗರ್ವನೆ ತಾ
ತೊಳಿ ನರ್ಕಕೆ ಬೀಳುವ ತಾಮಸ ತಾ
ಸುಳಿ ಗರ್ಕನೆ ಸದ್ಗುರು ಪಾದದಿ ತಾ ೩
ಬಿಡು ಮರ್ಕಟ ಬುದ್ಧಿಯ ಭಾವನೆ ತಾ
ಕೂಡು ಸರ್ಕನೆ ಸುಮ್ಮನೆ ಗುರುವಿಗೆ ತಾ
ಸುಡು ನರ್ಕಕೆ ಬೀಳುವ ಪಾಶವ ತಾ
ತೊಡು ಮರ್ಕಟವಾದ ಸದ್ಗುಣ ತಾ ೪
ಹಿಡಿಯೊ ಪಡಿಯೊ ದೃಢಭಾವನೆ ತಾ
ಜಡಿಯೊ ಒಡನೆ ಗುರುಪಾದನಿ ತಾ
ಕಡಿಯೊ ಬಿಡದೆ ಭವಬಂಧನ ತಾ
ಕುಡಿಯೊ ರಸಸಾರವ ಅಮೃತ ೫
ನಡಿಯೊ ನುಡಿದಂತೆನೆ ಸನ್ನಮತ
ಹಿಡಿಯೊ ಪಡೆದಂತೆನೆ ಪಾದವ ತಾ
ಇಡದಂತೆನೆ ತುಂಬೆದ ಸದ್ಘನ ತಾ
ಕಡೆಗಾಂಬುದು ನೋಡಿದು ಶಾಶ್ವತಾ ೬
ತಿಳಿಯೊ ಬಳಿಯೊ ಒಳಗುಟ್ಟನೆ ತಾ
ಹೊಳಿಯೊ ಸುಳಿಯೊ ನೆಲಿಗೊಂಡಿದು ತಾ
ಕಳಿಯೊ ಅಳಿಯೊ ಅನುಮಾನವ ತಾ
ಕಳೆಕಾಂತಿಯ ನಿನ್ನೊಳು ತುಂಬ್ಯದ ತಾ ೭
ಒಳಗುಟ್ಟನೆ ಸಾಧಿಸಿ ನೋಡುವು ದೆಲ್ಲಾ
ಥಳಗುಟ್ಟುದು ಸಾಸಿರ ಪದ್ಮ ದಳ
ನೆಲೆಗೊಂಡರೆ ವಾಗುವ ತಾ ಸಫಲಾ
ತಿಳಕೊಂಬುದು ಸದ್ಗುರು ಸ್ವಾಮಿ ಬಲ ೮
ಬಿಡಬಾರದು ಸಂಗತಿ ಸಜ್ಜನರ
ಹಿಡಿಬೇಕಿದು ಒಂದೇ ನೋಡಿ ಸ್ಥರ
ಅಡಿ ಇಟ್ಟನೆ ಬಾಹುದು ಪುಣ್ಣಿದರಾ
ಪಡಕೊಂಡರೆ ಅಹುದು ಇಹಪರ ೯
ತಡಮಾಡದೆ ನೋಡುವುದೀ ಸುಪಥ
ಪಡಿಬೇಕಿದು ಒಂದೇ ಸುಸ್ವಹಿತ
ಒಡಗೂಡದೆ ಬಾರದು ಕೈಗೂಡಿ ತಾ
ಎಡಬಲಕೆ ತುಂಬಿದೆ ತುಳುಕುತ ೧೦
ದೃಢಭಕ್ತಿಗೆ ಜಾಗರ ತಾ
ಎಡಿಎಡಿಗೆ ಸಂದಿಸಿ ತುಂಬಿದೆ ತಾ
ಬಡಿಸಿಟ್ಟೆದ ಭಾಗ್ಯದ ನಿಧಿಯು ತಾ
ಪಡಕೊಳ್ಳೆಲೊ ಮಹಿಪತಿ ಪೂರ್ಣಹಿತ೧೧

೪೪೮
ದತ್ತ ದತ್ತೆನ್ನಲು ಹತ್ತಿ ತಾಂ ಬಾಹನು
ಚಿತ್ತದೊಳಾಗುವಾ ಮತ್ತ ಶಾಶ್ವತನು
ದತ್ತ ಉಳ್ಳವನ ಹತ್ತಿಲೇ ಈಹನು
ವೃತ್ತಿ ಒಂದಾದರೆ ಹಸ್ತಗುಡುವನು ೧
ಎತ್ತ ನೋಡಿದರೆ ಮೊತ್ತವಾಗಿಹ ತಾಂ
ಉತ್ತಮೊತ್ತಮತಾನೆತ್ತುತಾ ಈತಾ
ಅತ್ತಲಿತ್ತಾಗದೆ ಹತ್ತಿಲೆ ಸೂಸುತ
ಮುತ್ತಿನಂತಿಹ್ವನು ನೆಲಿಲೆ ಭಾಸುತಾ ೨
ದತ್ತನೆಂದೆನ್ನಲು ಕತ್ತಲೆಣ್ಯೋಗುದು
ಮೃತ್ಯು ಅಂಜುತಲಿ ಭೃತ್ಯನಾಗಿಹುದು
ದತ್ತನಿಂದಧಿಕ ಮತ್ತು ತಾಂ ಒಂದು
ಉತ್ತಮರಿಗೆ ತಾ ಸತ್ಯ ಭಾಸುದು ೩
ಒತ್ತಿ ಉನ್ಮನಿಯಾವಸ್ಥಿ ಯೊಳಾಡುವದು
ಸ್ವಸ್ತಮನಾದರೆ ವಸ್ತು ಕೈಗೂಡುದು
ಬಿತ್ತಿ ಮನ ಗುರುಭಕ್ತಿ ಮಾಡುವದು
ದತ್ತ ತನ್ನೊಳು ತಾನೆವೆ ಭಾಸುವದು ೪
ದತ್ತ ದತ್ತೆಂದು ತಾ ಅರ್ತ ಮಹಿಪತಿಯ
ಬೆರ್ತ ನೋಡಿದ ಮನವು ಸುಮೂರ್ತಿಯು
ಮರ್ತದೊಳಿದುವೆ ಸುಖವಿಶ್ರಾಂತಿಯು
ಮರ್ತುಹೊಗುವದು ಮಾಯದ ಭ್ರಾಂತಿಯು ೫

೪೪೯
ದತ್ತ ನಮ್ಮನಿ ದೈವ ಚಿತ್ತಮನದೊಳಗಿಹ್ಯ
ಎತ್ತ ಹೋದರು ನಮ್ಮ ಹತ್ತಿಲಿಹನೊ ೧
ಸುತ್ತ ಸೂಸುತಲಿಹ್ಯ ನಿತ್ಯ ನಿಜ ಘನವಾಗಿ
ಹೃತ್ಕಮಲದೊಳು ತಾಂ ಮುತ್ತಿನಂತೆ ೨
ಗುತ್ತಳಿದು ಒಳಗ ತಾಂ ಪುಥ್ಥಳಿಯು ಹೊಳೆವ ಪರಿ
ಮೊತ್ತವಾಗಿಹ್ಯ ಪೂರ್ಣ ನೆತ್ತಿವೊಳಗ ೩
ದತ್ತವುಳ್ಳವನಿಗೆ ಹತ್ತಿಸಂಗಡ ಬಾಹ
ವಿತ್ತ ಒಡಿವ್ಯಾಗೆ ತಾಂ ಕರ್ತುನಮ್ಮ ೪
ದತ್ತಗಿಂದಧಿಕ ಮತ್ತೊಂದು ದೈವವು ಕಾಣೆ
ಪೃಥ್ವಿಯೊಳು ಮಹಿಪತಿವಸ್ತು ಒಂದೆ ೫

೪೫೦
ದತ್ತವಧೂತ ಶ್ರೀ ಗುರು ಸಾಕ್ಷಾತ
ನಿತ್ಯವಾಗಿಹ್ಯ ನಿಜ ನಿರ್ಗುಣನೀತ ಪ
ನಿರ್ಗುಣ ನಿಶ್ಚಲ ಗಗನಾಕಾರ
ಸುಗುಣದಲಿ ತಾನೆ ಸಹಕಾರ ೧
ಸಹಕಾರನಹುದು ಸದ್ಗುರುನಾಥ
ಬಾಹ್ಯಾಂತ್ರದಲಿ ತಾನೆ ಪ್ರಖ್ಯಾತ ೨
ಪ್ರಖ್ಯಾತನಹುದು ತ್ರಿಗುಣರಹಿತ
ಮುಖ್ಯಮುನಿಗಳಿಗೆ ಮೋಕ್ಷ ಸುದಾತ ೩
ದಾತನಹುದು ತ್ರೈಲೋಕ್ಯದೊಳೀತ
ಈತನೆ ವಿಶ್ವದೊಳಗೆ ದೈವತ ೪
ದೈವತನಹುದು ದೇವಾದಿಗಳಾತ್ಮ
ಭವಹರ ಮೂರ್ತಿ ಶ್ರೀಹರಿ ಸರ್ವಾತ್ಮ ೫
ಹರಿ ಸರ್ವಾತ್ಮನಾಗಿಹ ನಿಜಪೂರ್ಣ
ಪರಿಪರಿ ಆಗುವ ಅಗಣಿತಗುಣ ೬
ಅಗಣಿತಗುಣ ಅಗಾಧ ಅಪಾರ
ನಿಗಮಗೋಚರ ನಿರುಮಪ ನಿರ್ಧಾರ ೭
ನಿರ್ಧಾರನು ನಿಜನಿಷ್ಟರಪ್ರಾಣ
ಸಾಧಕರಿಗೆ ಸದ್ಗತಿ ಸಾಧನ ೮
ಸಾಧನದೊಡೆಯನಹುದು ಶಾಶ್ವತ
ಆದಿದೇವ ಸಕಲಾಗಮ ಪೂಜಿತ ೯
ಪೂಜಿತ ಬ್ರಹ್ಮಾದಿಗಳ ಕೈಯ
ಮೂಜಗದೊಳು ರಾಜಿಸುತಿಹ ೧೦
ರಾಜಿಸುತಿಹ ತಾ ರಾಜರಾಜೇಂದ್ರ
ಸುಜನರ ದೃಷ್ಟಿಯೊಳಿಡದಿಹ ಸಾಂದ್ರ ೧೧
ಸಾಂದ್ರವಾಗಿಹನು ಸಾರ್ವಭೌಮ
ಇಂದ್ರಾಧಿಕÀರೊಂದಿತ ಮಹಿಮ ೧೨
ಮಹಿಮನಹುದು ಮುನಿಜನ ಮಂದಾರ
ಧ್ಯಾಯಿಸುವರ ನಿಜ ಸಾಕ್ಷಾತಾರ ೧೩
ಸಾಕ್ಷಾತಾರ ಶ್ರೀಗುರು ಜಗದೀಶ
ಮೋಕ್ಷಾಧಿಕರಿಗಳಾತ್ಮ ಉಲ್ಹಾಸ ೧೪
ಉಲ್ಹಾಸವೆ ನಿಜ ವಸ್ತುವೆ ತಾನು
ಕಲ್ಪದ್ರುಮ ನಿಜ ಕಾಮಧೇನು ೧೫
ಕಾಮಧೇನುವಾಗಿ ರಕ್ಷಿಸುವ
ಬ್ರಹ್ಮನಿಷ್ಠರ ಹೃದಯದಲಿ ಭಾಸಿಸುವ ೧೬
ಭಾಸುವ ಭಾಸ್ಕರಕೋಟಿ ಪ್ರಕಾಶ
ಋಷಿ ಮುನಿಗಳ ನಿಜಮಾನಸ ಹಂಸ ೧೭
ಹಂಸನಾಗಿ ವಿಶ್ವಂಭರಿತ
ಸೂಸುವ ಸರ್ವಾಂತ್ರಲಿ ಅನಂತ ೧೮
ಅನಂತ ಕೋಟಿ ಬ್ರಹ್ಮಾಂಡನಾಯಕ
ಅನುಭವಿಗಳಿಗೆ ದೋರುವ ಕೌತುಕ ೧೯
ಕೌತುಕದೋರಿದ ಕರುಣದಲ್ಯನಗೆ
ಜೀವಪಾವನಗೈಸಿದ ಜಗದೊಳಗೆ ೨೦
ಜಗದೊಳು ಸ್ತುತಿಸುವೆನು ಅನುದಿನ
ಶ್ರೀಗುರು ದತ್ತವಧೂತ ಪೂರ್ಣ ೨೧
ಪೂರ್ಣ ಸ್ಮರಿಸುವೆನು ಮನದೊಳು ನೋಡಿ
ಪುಣ್ಯ ಪ್ರಭೆಯ ನಿಜಘನ ಒಡಗೂಡಿ೨೨
ಒಡಗೂಡಿದ ನಿಜಾನಂದದ ಗತಿಯು
ಕ್ಷಿತಿಯೊಳು ಕೊಂಡಾಡಿದ ಮಹಿಪತಿಯು ೨೩

೨೪೫
ದಾವ ಪಡೆದ ಸ್ವಹಿತ ಅವನೆ ಉಪಾಧಿ ರಹಿತ ಧ್ರುವ
ಆಶ್ರೈಸಿಹ್ಯ ದಾವನು ಶ್ರಯಧೇನು
ನಾಸ್ತಿಕ್ಯವಗೆಲ್ಲಿಹುದು ತಾನು ೧
ಇವ್ಹದಾವನು ಸುರತರುವಿನ ಬಲಿ(ಳಿ?) ಯು
ಅವಗೆಲ್ಲಿಹುದುದರದ ಕಳವಳಿಯು ೨
ಸುರನದಿಯಲ್ಲಿ ದಾವನ ಸಹವಾಸ
ಧರೆಯೊಳಗವಗೆಲ್ಲಿಹ ಮಹಾ ದೋಷ ೩
ರವಿ ಪ್ರಭೆಯೊಳು ದಾವನಿಹನು ಕೂಡಿ
ಅವಗೆಗೆಲ್ಲಿಯ ಕಗ್ಗತ್ತಲೆ ನೋಡಿ ೪
ದಾವ ಮಹಿಪತಿ ಗುರು ಪಾದ್ಹೊಂದಿಹ್ಯ
ಅವಗೆಲ್ಲಿಹದು ತಾ ಭವಬಂಧ ೫

೨೪೪
ದಾವಗಿಲ್ಲ ಖೂನ ತನ್ನೊಳಗ
ಅವಗೆಲ್ಲಿಯ ಜ್ಞಾನ ಜಗದೊಳಗ ಧ್ರುವ
ತಿಳಿದುಕೊಳ್ಳದವ ಆತ್ಮವಿಚಾರ
ಕಳೆದು ಕೊಂಡವನೆ ಹಿತ ಅಪಾರ
ಒಳಗದಾಂವ ನೋಡ ನಿರಂತರ
ಹೊಳಿಯದವಗ ಎಂದು ವಸ್ತುದಾಧಾರ ೧
ದಾವಗಿಲ್ಲ ಖೂನ ಗುರುಮುಖ
ಅವನೆ ತಾಳಿ ಬಾಹ್ವ ಜನ್ಮ ಅನೇಕ
ಭಾವಿಸದು ದಾವಗಿನ್ನ ವಿವೇಕ
ಅವಗೆಲ್ಲಿಹದು ನೋಡಿ ಸ್ವಸುಖ ೨
ಖೂನ ತನ್ನ ತಿಳಿವದು ತ್ವರಿತ
ಅನುಭವಕಿದೆ ತಾಮ ಸನ್ಮತ
ದೀನ ಮಹಿಪತಿಗೆ ಸ್ವಹಿತ
ಭಾನು ಕೋಟೆ ತೇಜನಾದ ಉದಿತ ೩

೪೫೧
ದಾವನು ಗುರುಸಹವಾಸಿ
ಅವನಿದ್ದದ್ದೇ ಸ್ಥಳ ಕಾಶಿ ಧ್ರುವ
ಕೂಡಿದವರ ತ್ರಿತಾಪಭಂಗಾ
ರೂಢಿಗೆ ಮೆರೆವಳು ಜ್ಞಾನಗಂಗಾ
ಮೂಡಿಹ ಆತ್ಮಜ್ಯೋತಿ ಲಿಂಗಾ
ಕಂಡಿಹ ಗುಣರಾಸೀ ೧
ವಿವರಿಸಿ ತಾರಕಮಂತ್ರದ ನೆಲಿಯಾ
ಕಿವಿಯೊಳು ಹೇಳಲು ಗುರುರಾಯಾ
ಅವನಿಗಿನ್ನೆಲ್ಲಿಯದು ಭವ ಭಯಾ
ಸ್ವಾನಂದವ ಬೆರೆಸೀ೨
ಜನದಲಿ ನಾನಾ ಸಾಧನ ಜರಿದು
ಮನದಲಿ ಒಂದೇ ನಿಷ್ಠಿಯ ಹಿಡಿದು
ಅನುಮಾನದ ಸಿದ್ಧಾಂತಗಳದು
ಸದ್ಭಾವನೆ ಒಲಿಸೀ ೩
ಪ್ರೇಮಿಯ ನಿಜಸುಖ ಪ್ರೇಮಿಕ ಬಲ್ಲಾ
ಈ ಮನುಜರಿಗಿದು ಭೇದಿಸುದಲ್ಲಾ
ಶ್ರೀ ಮಹಿಪತಿ ಬೋಧಿಸಿದನು ಸೊಲ್ಲಾಪೂರಿಸಿ ಮನದಾಸಿ ೪

೬೪
ದಾಸನಾದೆನಯ್ಯ ನಿಮ್ಮ ಏಸು ಜನ್ನಕೆ
ವಾಸನೆ ಪರಿದ್ಯೋ ಶ್ರೀ ಹರಿ ಎನ್ನ ಜೀವಕೆ ಧ್ರುವ
ಒಂದು ಮೊದಲಿಗಲ್ಲದೆ ಅನೇಕ ಜನ್ಮ ಜನಿಸಿ ಬಂದು
ನೊಂದು ಬೆಂದು ಕಂದಿ ಕಳದೆನಯ್ಯ ಭಕ್ತ ವತ್ಸಲ ೧
ವರ್ಮ ತಿಳಿಯಗೊಡದೆ ಎನ್ನ ಕವರ್ಇಪಾಶ ಕಟ್ಟಿ ಕೊರಳ
ನಿರ್ಮಿಸಿ ನಿರ್ಮಿಸಿ ತಂದ್ಯೊ ನಿರ್ಮಳಾನಂತಾತ್ಮನೆ ೨
ತಪ್ಪಿಲ್ಲದೆ ತಪ್ಪು ಹೊರಸಿ ಕೊಂಡಾಡಿದಯ್ಯ
ಒಪ್ಪು ನಿಮಗಿದು ಕಪಟನಾಟಕ ಶ್ರೀ ಕೃಷ್ಣನೆ ೩
ಎನ್ನ ಹೃದಯದೊಳಗಿದ್ದು ಭಿನ್ನಭೇದ ಮಾಡಿದೈಯ್ಯ
ಇನ್ನಾರ ಮುಂದುಸುರಲಾಗದೊ ಶ್ರೀ ಕಾಂತನೆ ೪
ಹೆಜ್ಜೆವಿಡಿದು ಬಂದ ನಿಜ ದಾಸ ಮಹಿಪತಿಗಿನ್ನು
ಸಜ್ಜನರಿಗೀವ ಪದವ ಕೊಟ್ಟು ಕಾಯೊ ಕರುಣನೆ ೫

೬೫
ದೀನ ದಯಾಳು ನೀನೆವೆ ನಮ್ಮ ಅನಾಥನಾಥಾ
ನಂದೊ ಬ್ರಹ್ಮನಂತುಗಾಣನುಪಮ ಧ್ರುವ
ಪರಮಾನಂದ ಪರಮ ಪಾವನ
ಶರಣ ಜನರಾಭರಣಾಗಿ ಹ್ಯ
ಕರುಣ ಸಾಗರ ಪೂರ್ಣನೆ ೧
ಅವ್ಯಕ್ತನಹುದೊ ವಿರಕ್ತ
ಶಕ್ತನಹುದೊ ಭಕ್ತವತ್ಸಲ
ಭೋಕ್ತರ ಮುಕ್ತಿದಾಯಕ ೨
ಭೇದಾತೀತ ಸದೋದಿತ ಪೂರ್ಣ
ಸಾಧುಹೃದಯನಿವೇದ ಪೂಜಿತ
ಅದಿದೇವ ಸದಾತ್ಮನೆ ೩
ವರ ಮುನಿಗಳ ಹರುಷವುದಯ
ತರಳ ಮಹಿಪತಿಯ ಹೊರೆವ
ಅನುದಿನ ಹರಿಯು ಪರಮ ದಯಾನಿಧೆ ೪

೬೬
ದೀನ ಬಂಧು ದೀನ ದಯಾಳ
ದೀನಾನಾಥ ನೀನೆವೆ ಕೃಪಾಲ ಧ್ರುವ
ಮನೋಹರ ಮಾಡುವ ನೀನೆ ಸಹಕಾರಿ
ಅನುದಿನ ಲೆವಕಲ (?) ನೀನೆ ಮುರಾರಿ೧
ಅನೇಕಾಯಲಿ (?) ಪರಿ ನೀನೆ ಉದಾರಿ
ಅನಾಥರಿಗೊಲುವ ನೀನೆ ಶ್ರೀ ಹರಿ ೨
ಪತಿತಪಾವನ ಪೂರ್ಣ ನೀನೆ ನಿಶ್ಚಯ
ಹಿತದಾಯಕ ನೀನಹುದೊ ಮಹಿಪತಿಯ ೩

೩೨೬
ದೃಷ್ಟ ಅದೃಷ್ಟದ ಬಲವು ನೊಡಿ ವಿಸ್ತಾರ ಸೃಷ್ಟಿಯಲಿ
ಮುಟ್ಟಿ ಮುದ್ರಿಸಿದ ವಾಕ್ಯಂಗಳು ಕೇಳಿ ಆತ್ಮನಿಷ್ಠ ಜನರು ೧
ದೃಷ್ಟಿ ಪುರುಷನ ಸೈನ್ಯಗಳು ಕೇಳಿ ಚಿತ್ತದಲಿ ಮಾನವರು
ಅಜ್ಞಾನವೆಂಬಾಶ ಗತಿಯು ಮಾಯಾಮೋಹಕವೆಂಬ ಸುತರು ೨
ವೀರರು ಕಾಮಕ್ರೋಧಗಳು ಮದ ಮತ್ಸರರು ಬಂಟ ಜನರು
ಪ್ರಪಂಚ ಸೈನ್ಯಾಧಿಪತಿ ಸುಖ ದು:ಖದಳ ಭಾರಗಳು೩
ಚಂಚಲವಂಚಲಶ್ವಗಳು ಅಹಂ ಮಮತಾ ಗಜಗಳು
ಅವಸ್ಥೆಗಳು ಕಾಲಾಳುಗಳು ಮನ್ನೆವಾರರು ಕರಣಗಳು೪
ಶೂರತನದ ಪರಾಕ್ರಮರು
ಮೆರೆಯುತಿಹರು ಪಂಚೇಂದ್ರಿಯಗಳು
ಸೂಸುತಲಿಹ ಬೇಹಿನವರು ಮೊದಲಾದ ದಶವಾಯುಗಳು ೫
ಸುತ್ತಲಿಹ ಪರಿವಾರಗಳು ಸಪ್ತವ್ಯಸನ ಭೂಷಣಂಗಳು
ಪಂಚಾಗ್ನಿಗಳು ಪಂಜಿನವರು ಅಷ್ಟಮದವು ಕಾವಲಿಗಳು ೬
ಮೂರು ಪರಿಯ ತ್ರಿಗುಣಗಳು ಸೈನ್ಯದ ಪಾರುಪತ್ಯದವರು
ಜಾಗ್ರಸ್ವಪ್ನ ಸುಷುಪ್ತಿಗಳು ಛತ್ರ ಚಾಮರ ಭೂಷಣಗಳು ೭
ಸಪ್ತಧಾತುದ ಸುಖಾಸನವು ಪಂಚಾತ್ಮಗಳು ನಿಶ್ಯಾನಿಗಳು
ತಾಮಸವೆಂಬ ಭೇರಿಗಳು ಅಹಂಕಾರವು ಕಹಳೆಗಳು ೮
ಅವಿದ್ಯ ಮೊದಲಾದ್ಯುದಮಿದಾರ ರಚಿಸಿದ ಸಾಲಂಗಡಿಯ
ಪರಿ ಪರಿ ಚಂದ ಚಂದದಲಿ ಇಳಿದಿಹ ಸೈನ್ಯ ಭಾರಗಳು ೯
ಜನನ ಮರಣದ ಮಂಟಪವು ಕಟ್ಟಿಹರು ವಿಸ್ತಾರದಲಿ
ಚಿಂತಿ ಮುಪ್ಪಳಿಯು ಭ್ರಾಂತಿಗಳಲಿ ಸ್ಥಿತಿ ಸ್ಥಳಲಿಹ ದ್ವಾರಗಳು ೧೦
ಆಶಾಪ್ಯಾಟಿಯ ಬಲಾಶ್ರಯದಲಿಳದಿಹ
ದುರ್ಮೋಹ ಬಲದಲಿ
ತನುವೆಂಬ ದುರ್ಗಬಲದಲಿ ಕದನ ಮಾಡುವರನುದಿನದಲಿ ೧೧
ಇನ್ನು ಅದೃಷ್ಟದ ಬಲವು ಕೇಳಿ ಚೆನ್ನಾಗಿ ಮನದಲಿ
ಸಮ್ಯಜ್ಞಾನೆಂಬಾಶಗತಿಯ ಜ್ಞಾನ ವೈರಾಗ್ಯಸುತರು ೧೨
ಶಮೆದಮೆವೆಂಬ ವೀರರುಗಳು ಭಾವಭಕ್ತಿಯ ಬಂಟ ಜನರು
ನಿಜ ಬೋಧ ಸೈನ್ಯಾಧಿಪತಿಯ ದೃಢ ನಿಶ್ಚಯ ದಳ ಭಾರಗಳು ೧೩
ನಿರ್ಮಳ ನಿಶ್ಚಳಶ್ವಗಳು ವಿವೇಕವೆಂಬ ಗಜಗಳು
ವಿಚಾರವೆ ಕಾಲಾಳುಗಳು ಹಟದಿಟ ಮಗುಟ ವರ್ಧನರು ೧೪
ಶೂರತನದ ಪ್ರರಾಕ್ರಮರು ಸ್ಮರಣೆ ಚಿಂತನೆ ಧ್ಯಾನಗಳು
ಸೂಸುತಲಿಹ ಬೇಹಿನವರು ಯೋಚನೆ ಅವಲೋಕನೆಗಳು ೧೫
ಸುತ್ತಲಿಹ ಪರಿವಾರಗಳು ರತಿಪ್ರೇಮ ಸದ್ಭಾವನೆಗಳು
ಲಯ ಲಕ್ಷ್ಯಗಳು ಪಂಜಿನವರು ಮೌನ್ಯ ಮೋನವೆ ಕಾವಲಿಗಳು ೧೬
ನಾದ ಬಿಂದು ಕಳೆಯಗಳು ಸೈನ್ಯದ ಪಾರುಪತ್ಯವರು
ಅನಿಮಿಷ ಛತ್ರ ಚಾಮರವು ಏಕಾಕಾರವೆ ನಿಶ್ಯಾನಿಗಳು ೧೭
ಅನುಭವ ಸುಖಾಸನಗಳು ತೂರ್ಯಾವಸ್ಥೆಯ ಭೂಷಣಗಳು
ಆನಂದಮಯವೆ ಭೇರಿಗಳು ನಿಶ್ಚಿಂತವೆ ಕಹಳೆಗಳು ೧೮
ಸುಜ್ಞಾನದ ಮೊದಲಾದ ಅಂಗಡಿಯು ಇಳಿದಿಹ ಸಾಲವರಿಯಲಿ
ಚಂದ ಚಂದ ಶೃಂಗಾರದಲಿ ಇಳಿದಿಹ ಸೈನ್ಯ ಭಾರಗಳು ೧೯
ಸದ್ಗತಿ ಮುಕ್ತಿ ಮಂಟಪವು ಹೊಳೆಯುತಿಹದು ಸ್ಯೆನ್ಯದೊಳಲಿ
ಯೋಗ ಭೋಗದ ಮಹಾ ದ್ವಾರಗಳು
ಶೋಭಿಸುವದು ಶೃಂಗಾರದಲಿ ೨೦
ನಿರಾಶವೆಂಬ ಪ್ಯಾಟಿಯಲಿ ಇಳಿದಿಹದು ಸಂತೋಷದಲಿ
ದೃಷ್ಟಿ ಪುರುಷನ ಅಟ್ಟಲೆಯ ಕೇಳಿ ನಡೆಯಿತು ಮಾರ್ಬಲವು ೨೧
ಧಿಮಿ ಧಿಮಿಗುಡುತ ನಾದ ಮಾಡಿದರಾನಂದಲ
ಗ್ಹೇಳೆನಿಸುತ್ತ ಕಹಳೆಗಳು ಭೋರ್ಗರೆಯುತಲಿ ನಡೆದರು ೨೨
ಮನೋಯೋಗವೆಂಬ ಮಾರ್ಗದಲಿ
ನಡೆವರು ಅತಿಶಯ ಶೀಘ್ರದಲಿ
ಬಾಣ ಬಾಣಗಳು ಮಾಡುತಲಿ ದಣಿದಣಿಸುತಲಿ ನಡೆದರು ೨೩
ತುಂಬಿದ ಸೈನ್ಯ ಭಾರಗಳು ಉಬ್ಬು ಕೊಬ್ಬಿ ನಡೆದವು
ನಗುತ ಗೆಲವಿಂದಶ್ವಗಳು ಏರಿ ಹಾರಿಸುತ ನಡೆದರು ೨೪
ಹಟ ದಿಟ ಮಗುಟ ವರ್ಧನರು ನಡೆದರು ಅತಿ ಹರುಷದಲಿ
ಕಾಲಾಳುಗಳು ಮುಂದೆ ಮಾಡಿ ನಡೆಯಿತು ದಳ ಭಾರಗಳು ೨೫
ಶೂರತನದ ಪರಾಕ್ರಮರು ಮುಂದಾಗಿ ಬ್ಯಾಗೆ ನಡೆದರು
ಅಬ್ಬರಿಸುತಲಿ ಮಾರ್ಬಲವು ನಡೆಯಿತವರ ಸೈನ್ಯ ಮ್ಯಾಲೆ ೨೬
ವಿವೇಕವೆಂಬ ಗಜಗಳು ವಾಲ್ಯಾಡುತಲಿ ನಡೆದರು
ರಗಡಿಸುತ ಡೋಲಿಸುತಲಿ ನಡೆದರು ಪರಚಕ್ರ ಮ್ಯಾಲೆ ೨೭
ನಡೆವ ಮಾರ್ಬಲದ ಧೂಳಿಗಳು ಮುಸುಕಿತು ಸುವಾಸನೆಗಳು
ಗರ್ಜಿಸುವ ಧ್ವನಿಗೇಳಿ ಹೆದರಿತು ಶತ್ರು ಮಾರ್ಬಲವು ೨೮
ಕಂಡು ದೃಷ್ಟರ ಸೈನ್ಯದವರು ಸಿದ್ದವಾದರು ಸಮಸ್ತದಲಿ
ತಮ್ಮ ತಮ್ಮೊಳು ಹಾಕ್ಯಾಡುತಲಿ ನಡೆದುಬಂದರು ಸನ್ಮುಖಕೆ ೨೯
ಚಿಂತಿಸುತಲಿ ಪರಾಕ್ರಮರು ಬಂದರು ವೀರ ಕಾಳಗಕೆ
ಕಾಳಿ ಭೇರಿಗಳು ಬಾರಿಸುತ ಬಂದರು ಮಹಾಜನರು ೩೦
ಕೂಗಿ ಚೀರುತ ಒದರುತಲಿ ಬಂದು ನಿಂದರು ಪರಾಕ್ರಮರು
ಅಹಂ ಮಮತಾ ಗಜಗಳು ನಡೆದು ಬಂದವು ಎದುರಾಗ ೩೧
ಕಾಲಾಳು ಸಹ ಕೂಡಿಕೊಂಡು ರಚಿಸಿ ಬಂದರಶ್ವಗಳು
ಧೂಳಿ ಹಾರುತ ದುರ್ವಾಸನೆಯು ಬಂದು
ಕೂಡಿತು ಉಭಯ ದಳವು ೩೨
ಸುವಾಸನೆ ಧೂಳಿಯೊಳಗೆ ಅಡಗಿತು ದುರ್ವಾಸನೆಯು
ಅಹಂ ಮಮತಾ ಗಜಗಳು ಕಂಡು ಓಡಿದವು ಹಿಂದಾಗಿ೩೩
ಬೆನ್ನಟ್ಟಿ ವಿವೇಕ ಗಜವು ಹೊಡೆದು ಕೆಡವಿದವು ಧರೆಗೆ
ಅವಸ್ಥೆಗಳು ಕಾಲಾಳುಗಳು ಜಗಳ ಮಾಡಿದವು ನಿಮಿಷವು ೩೪
ವಿಚಾರ ಕಾಲಾಳು ಮುಂದೆ ಓಡಿದರು ದೆಸೆದೆಸೆಗೆ
ಚಂಚಳವೆಂಚಳಶ್ವಗಳು ಏರಿ ಬಂದರು ರಾವುತರು ೩೫
ಯುದ್ದಮಾಡಿದರರಗಳಿಗೆಯು ಶುದ್ಧಿ ಇಲ್ಲದೆ ಓಡಿದರು
ನಿರ್ಮಳ ನಿಶ್ಚಳಶ್ವಗಳು ಏರಿ ಬೆನ್ನಟ್ಟಿ ನಡೆದರು ೩೬
ಚಂಚಳ ವೆಂಚಳಶ್ವಗಳ್ಹರಿಗಡೆದರು ಕಾಲು ಬಲ
ರಾಹುತರ ಸಹವಾಗಿ ಕಡೆದೊಟ್ಟಿದರು ಶಿರಸವನು ೩೭
ವೀರರು ಕಾಮಕ್ರೋಧಗಳು ಬಂದರು ಅತಿಶಯಉಗ್ರದಲಿ
ಶಮೆ ದಮೆ ವೀರಗಳೊಡನೆ ಕಾದಿ ಮಡಿದರು ಆ ಕ್ಷಣದಲಿ ೩೮
ಮದ ಮತ್ಸರರು ಬಂಟ ಜನರು ಬಂದರು ಸಿಟ್ಟು ಕೋಪದಲಿ
ಭಾವ ಭಕ್ತಿಯ ಬಂಟರೊಡನೆ ಕಾದಿ ಕಾಲಾಳು ಮಡಿದರು ೩೯
ಪ್ರಪಂಚ ಸೈನ್ಯಾಧಿಪತಿಯ ಕೈಸೆರೆಯಲಿ ಹಿಡಿದರು
ನಿಜ ಬೋಧ ಸೈನ್ಯಾಧಿಪತಿಯು ನಾದಘೋಷವು ಮಾಡಿಸಿದನು ೪೦
ಉಲ್ಹಾಸವೆಂಬ ಸರವರಿಯು ಹಚ್ಚಿಸಿದರು ಸೈನ್ಯದೊಳಲ್ಲಿ
ದಯ ಕರುಣ ಭಾಂಡಾರಗಳು ಒಡೆದು ಧರ್ಮ ಮಾಡಿದರು ೪೧
ಪಂಚೇಂದ್ರಿಯಗಳ ಪರಾಕ್ರಮರ ಹಿಡಿದು ಕಟ್ಟಿದರು ಪಾಶದಲಿ
ಸ್ಮರಣಿ ಚಿಂತನೆ ಪರಾಕ್ರಮರು ಉಬ್ಬಿದರು ಹರುಷದಲಿ ೪೨
ದಶವಾಯುಗಳ ಬೇಹಿನವರ ಹಿಡಿದು ಬಂಧನವ ಮಾಡಿದರು
ಅವಲೋಕನೆ ಬೇಹಿನವರ ಸದ್ಬ್ರಹ್ಮದಲಿ ಸುಖಿಸಿದರು ೪೩
ಸಪ್ತವ್ಯಸನ ಪರಿವಾರಗಳು ರತಿಪ್ರೇಮರೊಡನೆ ಕೂಡಿದರು
ಪಂಚಾಗ್ನಿಗಳು ಪಂಜಿನವರು ಪಂಚ ಪಾಲದಿ ಅಡಗಿದರು ೪೪
ಲಯ ಲಕ್ಷಗಳು ಪಂಜಿನವರು ಸಂಜೀವದಂತೆ ಹೊಳೆವರು
ಅಷ್ಟಮದವು ಕಾವಲಿಗಳು ಅಡಗಿದವು ಸ್ಥಳ ಸ್ಥಳಲಿ ೪೫
ಮೌನ್ಯ ಮೋನವೆ ಕಾವಲೆಗಳು ತಾವೆ ತಾವಾಗಿ ದೋರಿದರು
ತ್ರಿಗುಣರ ಪಾರುಪತ್ಯದವರು ಒಂದು ಸ್ಥಳದಲಿರಿಸಿದರು ೪೬
ನಾದ ಬಿಂದು ಕಳೆಯಗಳು ಮುಟ್ಟಿ ಪಾರುಪತ್ಯ ಮಾಡುವರು
ಶತ್ರುರಾಘನ ಭೂಷಣಗಳು ಸೆಳೆದುಕೊಂಡರು ಗಳಿಗೆಯೊಳು ೪೭
ಅವಿದ್ಯ ಮೊದಲಾದಾಗದರಿಂದ ಚೋಳಿಯು ಮಾಡಿದರು
ಜನನ ಮರಣದ ಮಂಪಟವು ಸುಟ್ಟು ಸಂಹಾರ ಮಾಡಿದರು ೪೮
ಚಿಂತೆ ಭ್ರಾಂತಿಯ ದ್ವಾರಗಳು ಕಿತ್ತಿ ಬೀಸಾಟಿದರು
ಆಶಾಪ್ಯಾಟಿಗೆ ಧಾಳಿನಿಕ್ಕಿ ಲೂಟಿಸಿದರು ನಿಮಿಷದಲಿ ೪೯
ತನು ದುರ್ಗ ವಶಮಾಡಿಕೊಂಡು ಇಳಿಯಿತು ಸೈನ್ಯ ಸುಖದಲಿ
ಸದ್ಗತಿ ಮುಕ್ತಿ ಮಂಟಪವು ಕೊಟ್ಟರು ಅಚಲದಲಿ ೫೦
ಯೋಗ ಭೋಗದ ದ್ವಾರದಿಂದ ನಡೆದರು ಮಹಾ ಭಕ್ತಜನರು
ಮನ್ನೆವಾರರು ಕರಣಗಳು ಅಭಯವ ಕೊಂಡು ನಡೆದರು ೫೧
ಅಜ್ಞಾನವೆಂಬಾಶಾಗತಿಯು ಮುಕ್ತವಾದಳು ಸುಜ್ಞಾನಞ್
ಮಾಯ ಮೋಹವೆಂಬ ಸುತರು
ಮಾಯವಾದರು ವೈರಾಗ್ಯದಲಿ೫೨
ದೃಷ್ಟ ಪುರುಷನ ತಂದಿನ್ನು ಇಟ್ಟುಕೊಂಡರು ತಮ್ಮೊಳಲಿ
ತನು ದುರ್ಗ ವಶಮಾಡಿಕೊಂಡು ಮುಂದೆನಡೆದರಾನಂದದಲಿ ೫೩
ಅಧಾರ ಪುರ ಬೆನ್ನಮಾಡಿ ನಡೆದರು ಬ್ರಹ್ಮಾಂಡಪುರಕೆ
ವಿಘ್ನಹರನ ಬಲಗೊಂಡು ಮ್ಯಾಲೆ ಮಣಿಪುರಕೆ ನಡೆದರು ೫೪
ಅನಾಹತಪುರ ದಾಟಿ ಮುಂದೆ ನಡೆದರು ವಿಶುದ್ಧ ಪುರಕೆ
ಸ್ಥಳ ಸ್ಥಳ ಹರುಷ ನೋಡುತಲಿ ನಡೆದರಗ್ನಿ ಚಕ್ರಪುರಕೆ ೫೫
ಮ್ಯಾಲಿಹ ಬ್ರಹ್ಮಾಂಡ ಪುರವು ಹೊಳೆಯುತಿಹದು ಪರಿಪರಿಲಿ
ಸಹಸ್ರದಳ ಕಮಲಗಲು ಥಳಥಳಿಸುವದದರೊಳು ೫೬
ಘನ ಬೆಳಗಿನ ಪ್ರಭೆಯುಗಳು ಹೊಳಯುತಿಹುದು ಕಿರಣಗಳು
ಹರಿ ಬ್ರಹ್ಮಾದಿಗಳು ವಂದಿಸುವ ಸ್ಥಳ ನೋಡಿ ಗುರು ಕರುಣದಲಿ ೫೭
ಪಿಂಡ ಬ್ರಹ್ಮಾಂಡೈಕ್ಯಪುರದಿ ಒಳಗಿಹ ಹಂಸಾತ್ಮಗತಿಯು
ಸಹಸ್ರ ರವಿಕೋಟಿ ತೇಜ ಭಾಸುವಾ ವಸ್ತುಗತಿಯು ೫೮
ಭಾಸ್ಕರ ಗುರು ಶ್ರೀಪತಿಯು ವಿಶ್ವ ವ್ಯಾಪಕನೆಂಬ ಸ್ಥಿತಿಯು
ಸಾರಿ ದೂರುತಲಿದೆ ಶ್ರುತಿಯು ಘನ
ಮಹಿಮಾನಂದ ಸ್ಫೂರ್ತಿಯು ೫೯
ದೃಷ್ಟಾದೃಷ್ಟಗತಿಯು ದೋರಿದ ಗುರು ಸದೃಷ್ಟದಲಿ
ಗುರು ಕರುಣದ ಕಟಾಕ್ಷದಲಿ ಬೆರೆಯಿತು ಮನ ಹರುಷದಲಿ ೬೦
ಕಂಡು ಮಹಿಪತಿಯ ಜೀವನವು ಧನ್ಯವಾಯಿತು ದೃಷ್ಟದಲಿ
ಪರಮಾನಂದ ಸುಪಥದಲಿ ಜೀವನ ಮುಕ್ತ್ಯದರಲ್ಲಿ ೬೧

೬೯
ದೇವ ನೀನಹುದೈ ಭುವನತ್ರಯದ ಜೀವ
ಭಾವಿಕರಿಗೆ ಕಾವ ಶ್ರೀ ವಾಸುದೇವ ಧ್ರುವ
ದೇವಕಿಯ ಕಂದ ದೈತ್ಯಾರಿ ಶ್ರೀ ಗೋವಿಂದ
ಮಾವ ಕಂಸನ ಕೊಂದ ಮಾಧವ ಮುಕುಂದ ೧
ಮದನ ಮೋಹನಮೂರ್ತಿ ಯದುಕುಲೋದ್ಭವ ಕೀರ್ತಿ
ಆದಿ ಪಾಂಡವ ಸಾರ್ಥಿ ಬುಧಜನರ ಸ್ಪೂರ್ತಿ ೨
ಶರಣ ಜನರಾಭಣ ಸಿರಿಲೋಲನೆ ಪೂರ್ಣ
ತರಳ ಮಹಿಪತಿಸ್ವಾಮಿ ಘನಕರಣ ೩

೪೫೩
ದೇವ ನೀನಹುದೋ ನಮ್ಮ ಸ್ವಾಮಿ ಅವಧೂತ
ಸ್ವಾಮಿ ಅವಧೂತ
ಕಾವ ಕರುಣನೆ ಪೂರ್ಣ ನೀನೆ ಸದೋದಿತ ಧ್ರುವ
ಕರುಣ ದಯದ ಹುದಯ್ಯ ನೀಆಧಾರ
ಶರಣ ಜನರಿಗಹುದಯ್ಯ ನೀಆಧಾರ
ತಾರಿಸುವ ಸ್ವಾಮಿ ಅಹುದಯ್ಯ ನೀ ನಿರ್ಧಾರ
ಪರಮ ದಯಾನಿಧಿ ನೀ ಸುಜ್ಞಾನದ ಸಾಗರ ೧
ಅನಾಥನಾಥನಹುದೊ ಪೂರ್ಣ ದೀನಾನಾಥ
ಸನಾಥ ಮಾಡುತಿಹ್ಯ ಶ್ರೀಸದ್ಗುರು ನೀ ಸಾಕ್ಷಾತ
ಅನಾದಿ ನಿಜವಸ್ತು ಅಹುದಯ್ಯ ನೀ ಪ್ರಖ್ಯಾತ
ಮುನಿ ಜನರಿಗೆ ನೀ ಆನಂದ ಸುಪಥ ೨
ದೇಶಿಕರ ದೇವನಹುದಯ್ಯ ಕೃಪಾಕರ
ಲೇಸು ಲೇಸಾಗೆನ್ನ ಪಾಲಿಸುವ ನೀ ದಾತಾರ
ಭಾಸುತಿಹ ಭಾನುಕೋಟಿತೇಜ ಮನೋಹರ
ದಾಸ ಮಹಿಪತಿ ಗುರು ನೀನೆ ಸಹಕಾರ ೩

೨೦
ದೇವ ಬಂದ ದೇವಕಿ ಕಂದ ಧ್ರುವ
ದೇವ ಬಂದ ದೇವತಿಗಳ ಪ್ರಿಯ
ಭುವನತ್ರಯಕಾಗಿಹ್ಯಾಶ್ರಯ ೧
ಮಾಮನೋಹರ ಮಾಧವ ಮುರಾರಿ
ಸಾಮಜ ವರದ ಸದಾ ಸಹಕಾರಿ ೨
ಉರಗ ಶಯನ ಹರಿಕರುಣಾನಂಞ್
ಗರಡುವಾಹನ ಗೋಪಾಲ ಗೋವಿಂದ ೩
ಸರ್ವಾನಂದ ಶ್ರೀ ಹರಿ ಸಿರಿಲೋಲ
ಸಾರ್ವಭೌಮ ಸದಾ ಕೃಪಾಲ ೪
ಲೇಸಿಲೆ ಹೊರೆವ ಮಹಿಪತಿ ಪ್ರಾಣೇಶ
ಭಾಸ್ಕರ ಕೋಟಿ ಸುತೇಜ ಪ್ರಕಾಶ ೫

೬೮
ದೇವನಹುದೊ ದೇವಾಧಿದೇವ
ಕಾವಕರುಣ ಶ್ರೀ ವಾಸುದೇವ
ಭಾವಿಕರಿಗೆ ಜೀವಕೆ ಜೀವ ಧ್ರುವ
ಸಾಮಜಪ್ರಿಯ ಸುರಲೋಕಪಾಲ
ಕಾಮಪೂರಿತ ನೀ ಸಿರಿಸಖಲೋಲ
ಸಾಮಗಾಯನಪ್ರಿಯ ಸದೋದಿತ
ಸ್ವಾಮಿನಹುದೊ ನೀನೆವೆ ಗೋಪಾಲ ೧
ಅಕ್ಷಯ ಪದ ಅವಿನಾಶ ಪೂರ್ಣ
ಪಕ್ಷಿವಾಹನ ಉರಗಶಯನ
ಪಕ್ಷಪಾಂಡವಹುದೊ ಪರಿಪೂರ್ಣ
ಲಕ್ಷುಮಿಗೆ ನೀ ಜೀವನಪ್ರಾಣ ೨
ದಾತನಹುದೊ ದೀನದಯಾಳ
ಶಕ್ತಸಮರ್ಥ ನೀನೆ ಕೃಪಾಲ
ಭಕ್ತವತ್ಸಲನಹುದೊ ಮಹಿಪತಿ ಸ್ವಾಮಿ
ಪತಿತಪಾವನ ನೀನವೆ ಅಚಲ ೩

೪೫೨
ದೇವನೀತ ಅವಧೂತ ಜೀವ ಜೀವ ಭಾವಭೋಕ್ತ
ಕಾವ ದೈವ ಪ್ರಾಣನಾಥ ದೇವಾಧಿದೇವನೆ ಈತ ೧
ಶ್ರೀದೇವ ದೇವ ನಿರ್ವಿಕಲ್ಪ ನಿರಾಕಾರ ನಿರ್ವಿಶೇಹ ನಿರಂತರ
ಸರ್ವಸಾಕ್ಷಿ ಸರ್ವಾಧಾರ ಸರ್ವಾತೀತ ಸರ್ವೇಶ್ವರ ೨
ಸಾಧುಜನರ ಹೃದಯ ಸದೋದಿತಾನಂದೋದಯ
ಆದಿ ಅನಾದಿ ನಿಶ್ಚಯ ಇದೆ ಇದೆ ವಸ್ತುಮಯ ೩
ಪತಿತಪಾವನ ಪೂರ್ಣ ಅತಿಶಯಾನಂದಗುಣ
ಭಕ್ತಜನರುದ್ಧರÀಣ ಸತತ ಸುಖನಿಧಾನ ೪
ಜ್ಞಾನಗಮ್ಯ ಗುಣಾತೀತ ಅನಾಥಬಂಧು ಗುರುನಾಥ
ಭಾನುಕೋಟಿ ತೇಜನೀತ ದೀನಮಹೀಪತಿ ದಾತ ೫

೭೦
ದೇವಾಧಿ ದೇವನೀತ ಜೀವ ಪ್ರಾಣನಾಥ
ಕಾವ ಕರುಣನೀತ ಹಂಸನಾಥ ೧
ದೇಶಿಕರ ದೇವ ಭಾಸಿ ಪಾಲಿಸುವ
ವಾಸನೆ ಪೂರಿಸುವ ವಾಸುದೇವ ೨
ಸ್ಮರಿಸುವರ ಜೀವ ಹರಿ ಪರಂ ದೈವ
ಪರಮ ಭಕ್ತರಿಗೀವ ಹರುಷವ ೩
ಸಾಧು ಹೃದಯವಾಸ ಸದಮಲಾನಂದ ಘೋಷ
ಸದೋದಿತ ಪ್ರಕಾಶ ಯಾದವೇಶ ೪
ಇಹಪರ ಸಾಹ್ಯನೀತ ಬಾಹ್ಯಾಂತ್ರ ಸದೋದಿತ
ಮಹಿಪತಿ ಪ್ರಾಣನಾಥ ಅವಧೂತ ೫

೭೨
ದೇವಾಧಿದೇವ ನೀನಹುದು ಸಾಕ್ಷಾತ
ಭಾವಿಸುವರಾತ್ಮ ಭಜಕರ ಪ್ರಾಣದಾತ ಧ್ರುವ
ನಿಜ ನಿರ್ವಿಕಾರ ಸುಜನ ಮನೋಹರ
ಮೂಜಗ ಆಧಾರ ಭಜಕ ಭಯಹರ ೧
ಕರುಣಸಾಗರ ಪರಮ ಉದಾರ
ಸುರಜನ ಸಹಕಾರ ದುರಿತ ಸಂಹಾರ ೨
ಬಾಹ್ಯಂತ್ರಲಿವ್ಹ ಇಹಪರ ಕಾವ
ಮಹಿಪತಿಯ ರಕ್ಷಿಸುವ ಶ್ರೀ ದೇವ ದೇವ ೩

೭೩
ದೇವಾಧಿದೇವ ನೀನಹುದೊ ಶ್ರೀಹರಿ
ಕಾವಕರುಣ ನೀನೆ ಮುರಾರಿ ಧ್ರುವ
ಕಮಲಭವಾರ್ಜಿತ ಕಾರುಣ್ಯ ಶೀಲ
ವಿಮಲ ವಿರಾಜಿತ ಮದನಗೋಪಾಲ ೧
ಕನಕಾಂಬರಧರ ಕಸ್ತೂರಿತಿಲಕ
ಸನಕಾದಿವಂದ್ಯ ಶರಣ ರಕ್ಷಕ ೨
ಅಮಿತ ಪರಾಕ್ರಮ ಅಗಣಿತ ಮಹಿಮ
ಅವರುಜ ನೇತ್ರ ನೀನಹುದೊ ನಿಸ್ಸೀಮ ೩
ಮುನಿಜನ ಪಾಲಕ ಮಾಮನೋಹರ
ಘನಸುಖದಾಯಕ ಸು ಜನ ಸಹಕಾರ ೪
ಭಾನುಕೋಟಿತೇಜ ನೀನೆ ಸುಹೃದಯ
ದೀನದಯಾಳು ನೀನಹುದೊ ಮಹಿಪತಿಯ ೫

೧೨
ದೇವಾಧಿದೇವ ಶ್ರೀದೇವ ನಿರಂಜನ ಈಶ ಬಾರೊ
ಕಾವ ಕರುಣ ಭವಭಂಜನ ಗುರು ಆತ್ಮ ಹಂಸ ಬಾರೊ ಧ್ರುವ
ಅಗಣಿತ ಗುಣ ಅಗಾಧ ಅಪಾರಾಗಮ್ಯ ಬಾರೊ
ನಿಗಮಗೋಚರ ನಿತ್ಯ ನಿರ್ಗುಣಾನಂದನುಪಮ್ಯ ಬಾರೊ
ಯೋಗಿ ಜನರ ಹೃದಯ ಮುನಿಮನೋರಮ್ಯ ಬಾರೊ
ಜಗದೊಳು ಭಕ್ತಜನರಿಗೆ ಪೂರಿತಕಾಮ್ಯ ಬಾರೊ ೧
ಝಗಿಝಗಿಸುವ ಜಗಜ್ಯೋತಿ ಜಗನ್ಮೋಹನ ಬಾರೊ
ಧಗಿ ಧಗಿಸುವ ತೇಜ ಹೊಳೆವ ಪುತ್ಥಳಿಯ ಚಿನ್ನ ಬಾರೊ
ಮಘ ಮಘ ಮಿಂಚುವ ಮಗುಟಮಣಿ ಗುಣರನ್ನ ಬಾರೊ
ಬಗೆಬಗೆಯಿಂದ ಸದ್ಗೈಸುವ ಪತಿತಪಾವನ್ನ ಬಾರೊ ೨
ಋಷಿ ಮುನಿವಂದಿತ ಸಾಧು ಜನ ಹೃದಯ ಬಾರೊ
ವಾಸವಾಗಿ ಸರ್ವ ಅಂತ್ರಯಾಮಿಲಿಹ ಗುಹ್ಯ ಬಾರೊ
ಭಾಸ್ಕರ ಕೋಟಿ ಸುತೇಜ ಪ್ರಕಾಶ ನಮ್ಮಯ್ಯ ಬಾರೊ
ದಾಸ ಮಹಿಪತಿಯ ರಕ್ಷಿಸುವ ಪ್ರಾಣ ಪ್ರಿಯ ಬಾರೊ ೩

೧೩
ದೇವಾಧಿದೇವ ಶ್ರೀದೇವ ಶಿಖಾಮಣಿ ಬಾರೋ ಬಾರೊ
ಪಾವನ ಗೈಸುವ ಪರಮ ದಯಾಕರುಣ ಬಾರೊ ಬಾರೊ ಧ್ರುವ
ಮಂದರಧರ ಮಾಧವ ಶ್ರೀಹರಿ ಮುಕುಂದ ಬಾರೊ
ಸುಂದರ ವದನನೆ ನಂದ ಯಶೋದೆಯ ಕಂದ ಬಾರೊ
ಕಂದರ್ಪ ಕೋಟಿ ಲಾವಣ್ಯದಲೊಪ್ಪುವಾನಂದ ಬಾರೊ
ವಂದಿತ ತ್ರೈಲೋಕ್ಯ ಇಂದಿರಾಪತಿ ದೀನಬಂಧು ಬಾರೊ ೧
ಗರುಡವಾಹನ ಗೋವಿಂದ ಗೋಪಾಲ ಶ್ರೀಕೃಷ್ಣ ಬಾರೊ
ಸರಸಿಜೋದ್ಭವನುತ ಸಿರಿಯ ಲೋಲನೆ ಪರಿಪೂರ್ಣ ಬಾರೊ
ಶರಣರಕ್ಷಕ ಸದಾ ಸಾಮಜವರದ ಸದ್ಗುಣ ಬಾರೊ
ವರ ಶಿರೋಮಣಿ ಮುನಿಜನರ ಸ್ವಹಿತ ಸುಭೂಷಣ ಬಾರೊ ೨
ಅನಾಥರನುಕೂಲಾಗುವ ಘನದಾಗರ ಬಾರೊ
ಅನುಭವಿಗಳ ಅನುಭವದ ಸುಖಸಾಗರ ಬಾರೊ
ಭಾನುಕೋಟಿತೇಜ ಭಕ್ತಜನ ಸಹಕಾರ ಬಾರೊ
ದೀನಮಹಿಪತಿ ಸ್ವಾಮಿ ನೀನೆ ಎನ್ನ ಮನೋಹರ ಬಾರೊ ೩

೭೧
ದೇವಾಧಿದೇವನೀತನೆ ಸಾಕ್ಷಾತ ಕಾವ ಕರುಣ ಗುರುನಾಥ ಧ್ರುವ
ಈತ ತ್ರಿಗುಣಾತೀತ ಪಿತಾಮಹನು ಪಿತ ದಾತ
ಸುರಲೋಕನಾಥ
ಶ್ರುತಿಸ್ರ‍ಮತಿ ಸನ್ಮತ ಯತಿಜನವಂದಿತ ಪತಿತಪಾವನನಹುದೀತ ೧
ಚಿನ್ಮಯ ಚಿದ್ರೂಪ ಜನವನದೊಳಗಿರ್ಪ
ಆನಂದೊ ಬ್ರಹ್ಮಸ್ವರೂಪ
ಮುನಿಜನ ಪಾಲಿಪ ಘನ ಕರುಣಾಕೃಪ
ಅನುದಿನ ಭಯಪಾಲಿಸ ೨
ಗುಹ್ಯಗುಪಿತನೀತ ಮಹಿಮಾನಂದ
ಶ್ರೀನಾಥ ಮಹಾಮಹಿಮರ
ಸ್ವಹಿತ ಸಾಹ್ಯ ಸದೋದಿತ ಬಾಹ್ಯಂತ್ರ ಸಾಕ್ಷಾತ
ಮಹಿಪತಿಗುರು ಪ್ರಾಣನಾಥ ೩

೭೪
ದೇಶಿಕರಿಗೆ ದೇವ ನೀನಹುದಯ್ಯ
ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ಧ್ರುವ
ಅನಾಥನಾಥ ನೀನೆ ಸಾನುಕೂಲ
ಅನುದಿನ ಮಾಡುವೆ ನೀ ಪ್ರತಿಪಾಲ ೧
ಅಣುರೇಣುಕ ಸಾಹ್ಯ ಮಾಡುವ ಸ್ವಾಮಿ
ನ್ಯೂನ ನೋಡದೆ ತಪ್ಪು ಮಾಡುವಿ ಕ್ಷಮೆ ೨
ನೀನೆ ಸಕಲಕೆಲ್ಲ ಸಲಹುವ ದಾತ
ಜನವನದೊಳು ಘನಗುರು ಸಾಕ್ಷಾತ ೩
ದೇವಾದೀದೇವ ಶ್ರೀದೇವ ಅವಧೂತ
ಭವ ಹರ ಗುರು ನೀನೆ ಸದೋದಿತ ೪
ದೀನಮಹಿಪತಿ ಸ್ವಾಮ್ಯಹುದೋ ಕೃಪಾಲ
ಭಾನುಕೋಟಿತೇಜ ನೀನೆ ಅಚಲ ೫

೨೪೬
ದೇಹದ ಒಳಗಿಹ್ಯ ದೇವರ ತಿಳಿದಿಹ ಆತನೆ ದೇಹಾತೀತನು ಮಾ ೧
ತನ್ನೊಳು ಪರಬ್ರಹ್ಮ ವಸ್ತುವನರಿದಿಹ
ಆತನೇ ಶ್ರೀಹರಿಭಕ್ತನು ಮಾ೨
ಅಂಗದೊಳಗೆ ಪ್ರಾಣ ಲಿಂಗವು ತಿಳಿದಿಹ ಆತನೆ
ಲಿಂಗವಂತನು ಮಾ೩
ಷಟಸ್ಥಳ ಶೋಧಿಸಿ ಸಾಧಿಸಿ ತಿಳದಿಹ ಆತನೆ ಶೀಲವಂತನು ಮಾ ೪
ಶುದ್ಧಾತ್ಮ ಶಿವತತ್ವ ಸೂತ್ರವ ತಿಳದಿಹ ಆತನೆ ಶಿವಭಕ್ತನು ಮಾ ೫
ಷಡಚಕ್ರ ಕಳೆಗಳ ನೆಲೆಗಳ ತಿಳದಿಹ ಆತನೆ
ದೃಢ ನಿರ್ವಾಣೆಯು ಮಾ ೬
ಬ್ರಹ್ಮಾಂಡ ಧುಮುಕಿ ಪಿಂಡಾಂಡ ತಿಳದಿಹ
ಆತನೆ ಮಹಾಪಂಡಿತನು ಮಾ ೭
ಪರಾಪಶ್ಯಂತಿ ಮಧ್ಯಮ ವೈಖರಿ ತಿಳದಿಹ
ಆತನೆ ಆಚಾರ ನಿಷ್ಠನು ಮಾ ೮
ಐದು ತತ್ವದ ಗತಿಗಳ ತಿಳದಿಹ ಆತನೆ ಮಹಾ ವೈದಿಕನು ಮಾ ೯
ಪಂಚ ಮುದ್ರೆಯ ಸ್ಥಾನವು ತಿಳದಿಹ ಆತನೆ ಸುಬ್ರಾಹ್ಮಣನು ಮಾ ೧೦
ಅರುವಿನ ಖೂನ ಮರೆವವು ತಿಳದಿಹ ಆತನೆ
ಗುರುವೆಂದರುವದು ಮಾ ೧೧
ಹಸುವಿ ನಿದ್ರಿಗಳು ಶಮೆದಮೆವಾಗಿಹ
ಆತನೆ ಸಿದ್ದ ಶರಣನು ಮಾ ೧೨
ನೋಡುವ ನೋಟವು ಪರುಷವು ಆಗಿಹ
ಆತನೆ ಮಹಾ ಸತ್ಪುರುಷನು ಮಾಟ ೧೩
ಕರದಲಿ ಪರಬ್ರಹ್ಮ ನೆಲೆಯನು ತಿಳದಿಹ
ಆತನೆ ವರಗುರು ಮೂರ್ತಿಯು ಮಾ ೧೪
ಉತ್ಪತ್ತಿ ಸ್ಥಿತಿಲಯ ತಾರಿಸುತಿಹನು ಆತನೆ
ಅವತಾರ ಮಹಿಮನು ಮಾ ೧೫
ನಾದ ಬಿಂದು ಕಳೆ ಸಾಧಿಸಿದೋರವ
ಆತನೆ ಸಾಧು ಸಂತನು ಮಾ ೧೬
ಸದ್ಗತಿ ಮುಕ್ತಿಯು ಸಾಧಿಸಿದೋರುವ ಆತನೆ
ಸದ್ಗುರು ಮೂರ್ತಿಯು ಮಾ ೧೭
ಈಸುಪರಿಯಲಿಹ ಸರಿಗೊಪ್ಪು ತಿಹ್ಯ ಆತನೆ
ಮಹಾ ಜ್ಞಾನಿಪುರುಷನು ಮಾ ೧೮
ಮಿಕ್ಕ ಲೋಕಕವಿನ್ನು ಹುರುಳಿಲ್ಲದಿಹರು
ಮರುಳಮಂಕ ಮನುಜರು ಮಾ ೧೯
ಗುರುವಿಗೆ ನರನಲ್ಲವೆಂದು ತಾ ತಿಳದಿಹ
ಆತನೆ ಶ್ರೀ ಗುರುದಾಸನು ಮಾ ೨೦
ಭಾಸ್ಕರಮೂರ್ತಿ ಶ್ರೀಪಾದವು ತಿಳದಿಹ
ಮಹಿಪತಿ ಭವನಾಶವಾಯಿತು ಮಾ ೨೧

೨೪೭
ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ
ಚೇತಿಸಿ ಬ್ಯಾರಿಹ ವಸ್ತುಗಾಣಿ ಧ್ರುವ
ದ್ವೈತ ಎನಲಿಕ್ಕೆ ತಾಂ ಆದೆವೆ ಅದ್ವೈತ ಅ-
ದ್ವೈತ ಎನಲಿಕ್ಕೆ ಅದೆನೆ ತಾಂ ದ್ವೈತ ೧
ಹಿಂದು ಮುಂದಾಗಿ ಆಡಿಸುತಿಹ್ಯ ನಿಜಖೂನ
ಎಂದಿಗಾದರು ತಿಳಿಯಗುಡದು ಪೂರ್ಣ ೨
ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು
ನೇತಿ ನೇತೆಂದು ಸಾರುತಿದೆ ಶ್ರುತಿ ಇದಕೆ ತಿಳಿಕೊ ೩
ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ, ಅ
ದ್ವೈತನೆಂದವನೆ ತಾಮ ಪರಮ ಸ್ಮಾರ್ತನಲ್ಲ ೪
ಸ್ಮಾರ್ತ ವೈಷ್ಣವ ಮತ ಗುರು ಮಧ್ವಮುನಿಬಲ್ಲ
ಅರ್ತು ಸ್ಥಾಪಿಸುವದು ಮನುಜಗಲ್ಲ ೫
ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ
ದೋರುವರೆ ತರ್ಕಸ್ಯಾಡುವ ಸೊಲ್ಲ ೬
ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು
ಚಿತ್ತ ಶುದ್ದಾಗಿ ಮಹಿಪತಿಯ ಮುಟ್ಟು ೭

೨೪೮
ಧನಲಂಪಟಗೆ ಎಲ್ಲಿಹುದು ಗುರುಕೃಪೆಯ ಜ್ಞಾನ
ತನುಲಂಪಟಗೆ ಎಲ್ಲಿಹುದು ತನ್ನೊಳು ಖೂನ ಧ್ರುವ
ವಿಷಯಲಂಪಟಗೆ ಎಲ್ಲಿಹುದು ತಾ ವಿರಕ್ತಿಯು
ದೆಸೆಗೆಟ್ಟವಗೆ ಎಲ್ಲಿಹುದು ಯುಕ್ತಿಯು
ಮುಸುಕಿದ ಮಾಯದವಗೆಲ್ಲಿಹುದು ಮುಕ್ತಿಯು
ಹುಸಿಯಾಡುವವಗೆಲ್ಲಿಹುದು ಋಷಿಭಕ್ತಿಯು ೧
ಮರುಳಗುಂಟೆ ಅರಿವು ರಾಜಸನ್ಮಾನದ
ತರಳಗುಂಟೆ ಭಯವು ಘಟಸರ್ಪದ
ಎರಳೆಗುಂಟೆ ಖೂನ ಮೃಗಜಲವೆಂಬುವದ
ಸೋರೆಗುಂಟೆ ಮಾತು ಚಾರ್ತುಯದ ೨
ಕನಸು ಕಾಂಬವಗೆ ಎಲ್ಲಿಹುದು ತಾನಿಹ ಸ್ಥಾನ
ಮನದಿಚ್ಛೆಯಿದ್ದವಗೆ ಎಲ್ಲಿ ಧ್ಯಾನ
ದೀನಮಹಿಪತಿ ಸ್ವಾಮಿ ಕಾಣದವಗೆಲ್ಲಿ ಘನ
ಅನುಭವಿಸಿಕೊಳದೆ ಜನ್ಮಕೆ ಬಂದಿದೇನ ೩

೬೬೭
ಧನ್ಯ ಧನ್ಯವಾಯಿತು ಎನ್ನ ಜನುಮ
ತನ್ನಿಂದ ತಾನೊಲಿದ ಘನ ಮಹಿಮ
ಎನ್ನೊಳಗೆ ದೋರಿತಾನಂದೊ ಬ್ರಹ್ಮ
ಕಣ್ಣಾರೆ ಕಂಡೆನು ಸದ್ಗುರು ಧರ್ಮ ೧
ಬ್ರಹ್ಮಸುಖ ಹೊಳೆಯಿತು ಸಾಧುಸಂಗ
ಚುಮು ಚುಮು ಕೊಡುತಿದೆಕೊ ಸರ್ವಾಂಗ
ಧಿಮಿ ಧಿಮಿಗುಡುತ ತಾಲ ಮೃದಂಗ
ಸಮಾರಂಭವಾಯಿತು ಬಾಹ್ಯಂತರಂಗ ೨
ಎದುರಿಟ್ಟು ಬಂತು ಪುಣ್ಯ ಪೂರ್ವಾರ್ಜಿತ
ಒದಗಿ ಕೈಗೂಡಿತೆನಗೆ ತ್ವರಿತ
ಸಾಧಿಸಿತು ಮಹಿಪತಿಯ ಮನೋರಥ
ಸದ್ಗುರು ಕೃಪೆಯಾಯಿತು ತಾ ಸದೋದಿತ ೩

೬೬೯
ಧನ್ಯ ಸತ್ಸಂಗ ಎನ್ನೊಳು ಹೊಳೆಯಿತು ಘನಲಿಂಗ ಧ್ರುವ
ನೋಡಿದವನ ನೋಟ ಮಾಡಿತೆನ್ನೊಳು ಜೀವ ಶಿವಕೂಟ
ನೀಡಿದಾಭಯದೂಟ ಗೂಢಗುರುತವಾಯಿತು ನೀಟ ೧
ಹೇಳಿದವನ ಮಾತು ಹೊಳೆಯುವ ಸುಪ್ಪಾಣಿಯ ಮುತ್ತು
ತಿಳಿಯಿತೆನ್ನೊಳು ವಸ್ತು ಅಳಿಯಿತು ಜನ್ಮ ಮೃತ್ಯು ೨
ಸತ್ಸಂಗವ ಕೂಡಿ ಪತಿತಪಾವನವಾದನು ನೋಡಿ
ಕ್ಷಿತಿಯೊಳು ನಿಜಗೂಡಿ ಗತಿಪಡೆದನು ಮಹಿಪತಿ ನೋಡಿ ೩

೬೬೮
ಧನ್ಯವಾಯಿತು ಜೀವವಿಂದು
ಚೆನ್ನಾಗಿ ಪೂರ್ಣ ದಿವಸಕೆ ನಡೆದು ನಾ ಬಂದು ಧ್ರುವ
ಹೇಳಲಾಗದು ಈ ಹರುಷ ಇಳಿಯೊಳು ತಾ
ತೋರುತಿಹುದು ಸಂತೋಷ
ಮಳಿಮಿಂಚಿನ ಪ್ರಕಾಶ ಹೊಳೆಯುತಿಹುದು
ಮನದೊಳತಿವುಲ್ಹಾಸ ೧
ಕಣ್ಣಾರೆ ಕಂಡೆವು ನಿಧಾನ ಭಿನ್ನವಿಲ್ಲದೆ ಭಾಸ್ಕರ ಗುರುಚರಣ
ಆನಂದೋ ಘನಸ್ಪುರಣ ಮನಬೆರೆದು
ಮುಕ್ತವಾಯಿತು ಜೀವನ ೨
ಭಾವಿಸಿ ಭಕ್ತರಿಯ ನೋಡಿ ಅವಿನಾಶನ
ಪುಣ್ಯಚರಣ ಸೇವೆಮಾಡಿ
ಜೀವಭಾವನೆ ಈಡ್ಯಾಡಿ ಪಾವನವಾದ ಮಹಿಪತಿ ಗುರು ಪಾದ ಕೂಡಿ ೩

೭೫
ಧರ್ಮ ದೊಡ್ಡದಯ್ಯ ನಿಮ್ಮ ಸ್ವಾಮಿ ಸದ್ಗುರುರಾಯ
ಬ್ರಹ್ಮಾನಂದ ವಸ್ತು ನೀನೆ ಸಮಸ್ತ ಜನಪ್ರಿಯ ಧ್ರುವ
ಮೊರೆಯನಿಟ್ಟ ಧ್ರುವಗೆ ನೀನು ಕೊಟ್ಟ್ಯೋ ಪದ ಆಢಳ
ಕರಿಯ ಮೊರೆಯ ಕೇಳಿ ನೀನು ಸೆರಿಯ ಬಿಡಿಸಿದ್ಯೊ ದಯಾಳು
ಶರಣು ಹೊಕ್ಕ ತರಳಗಿನ್ನು ಪಡದ್ಯೊ ಪ್ರಾಣ ನಿಶ್ಚಳ
ಸ್ಮರಣೆಗೊದಗಿ ಬಂದ್ಯೊ ಪಾಂಡವರಿಗೆ ತಾತ್ಕಾಳ ೧
ಮೊರೆಯನಿಟ್ಟ ದ್ರೌಪದಿಗೆ ವಸ್ತ್ರ ಪೂರಿಸಿದ್ಯೊ ಪೂರ್ಣ
ಧರೆಯೊಳು ಶಿಲೆಯಾಗಿದ್ದ ಸತಿಗೆ ಮಾಡಿದ್ಯೊ ಉದ್ದರಣ
ಪರಿ ಪರಿ ಹೊರೆವ ಪೂರ್ಣ ಭಕ್ತರ ಪ್ರಾಣ
ವರ್ಣಿಸಲಾಗದೊ ನಿಮ್ಮ ದಯವೃತ್ತಿ ನಿಜಗುಣ ೨
ದೇಶಿಕರ ದೇವ ನೀನೆ ವಾಸುದೇವ ನಿಶ್ಚಯ
ಭಾಸ್ಕರ ಕೋಟಿ ತೇಜ ಭಾಸುತಿಹ ನಿಮ್ಮ ದಯ
ಲೇಸಾಗಿ ಪಾಲಿಸೊ ಪೂರ್ಣ ದಾಸ ಮಹಿಪತಿಯ
ವಿಶ್ವದೊಳಾನಂದದಿಂದ ರಕ್ಷಿಸುವ ನಿಮ್ಮ ಭಯ ೩

೪೫೪
ಧರ್ಮಕೊಬ್ಬ ದಾತ ನೀನೆ ಸ್ವಾಮಿ ಶ್ರೀಗುರುನಾಥ
ವರ್ಮ ತೋರಿಕೊಡುವ ನಿಮ್ಮ ಧರ್ಮಗುಣ ಪ್ರಖ್ಯಾತ ಧ್ರುವ
ಧರೆಯೊಳು ಸರಿಯಗಾಣೆ ಗುರುಧರ್ಮದಿಂದಧಿಕ
ಕರುಣಿಸಿ ಆನಂದದಿಂದ ತೋರುತಿಹ್ಯ ಬ್ರಹ್ಮಸುಖ
ವರಮುನಿಗಳ ಪ್ರಿಯ ಶರಣಜನಪಾಲಕ
ಪರಮ ಸುಪಥದೋರಿ ಹೊರೆವ ಪೂರ್ಣತಾರಕ ೧
ಬಡವನಾಧಾರಿ ನೀನು ಒಡಿಯನಹುದೊ ನಿಶ್ಚಯ
ಕೊಡುವ ಭಕ್ತಿ ಮುಕ್ತಿದಾತ ದೃಢಭಕ್ತರಾಶ್ರಯ
ಒಡಲ ಹೊಕ್ಕಿಹೆ ನಿಮ್ಮ ಕಡೆಯಗಾಣಿಸೊ ನಮ್ಮಯ್ಯ
ಪಿಡಿದು ನೀ ಎನ್ನ ಕೈಯ ಕೊಡು ತೋರಿ ನಿಮ್ಮ ಸೊಹ್ಯ ೨
ಪೊಡವಿಯೊಳು ಕ್ಷಮೆ ಎನಗೆ ಕೊಡು ಕರುಣಾಕಟಾಕ್ಷ
ನೋಡಿ ನಿಮ್ಮ ದಯದಿಂದ ನೀಡೊ ನಿಜ ಸುಭಿಕ್ಷ
ಬಿಡದೆ ಎಂದೆಂದು ನೀನು ಮಾಡೊ ಸಂರಕ್ಷ
ಮೂಢ ಮಹಿಪತಿಗಿನ್ನು ಪೂರಿಸೊ ಮನದಪೇಕ್ಷ ೩

೪೫೫
ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ
ಧುಮ್ಮಸಾಲೆನ್ನಿ ಸದ್ಗುರುವಿನ ಬಳಗವೆ ಧ್ರುವ
ಗುರುವಿನ ಬಳಗವೆಂದು ಗುರುತುವಿಟ್ಟು ನೋಡಿರ್ಯೋ
ಅರುಹಿನೊಳು ಮುಣಗಿ ಪರಮಸುಖ ಸೂರ್ಯಾಡಿರ್ಯೋ
ಗರ್ವಿನಾಹರಿಗೆ ಬಿಟ್ಟು ಹರಿದುಹೋಗ ಬ್ಯಾಡಿರ್ಯೋ
ಪರ್ವಣಿದೆ ಗುರುಕರುಣ ಪಡೆದು ಪೂರ್ಣಕೂಡಿರ್ಯೋ ೧
ಧುಮ್ಮಸಾಲೆನ್ನಿರ್ಯೋ ಬೆರದು ಬ್ರಹ್ಮ ಸುಖವ
ಸಮ್ಯಜ್ಞಾನದಿಂದ ದೂರಮಾಡಿ ಭವದು:ಖವ
ನಿಮ್ಮ ನಿಮ್ಮೊಳು ನೋಡಿ ಘನ ಕೌತುಕವ
ಹ್ಯಮ್ಮಿಯೊಳಗಾಗಿ ನೀವು ಹೋಗಬ್ಯಾಡಿ ಹೋಕುವ ೨
ಕಣ್ಣದ್ಯರದು ನೋಡಿರ್ಯೊ ಚಿನ್ನುಮಯ ರೂಪವ
ಭಿನ್ನವೆಲ್ಲದ್ಯದೆ ತನ್ನೊಳು ಸಮೀಪವ
ಪುಣ್ಯ ಹಾನಿ ಮಾಡಿಕೊಂಡು ಹಿಡಯಬ್ಯಾಡಿ ಕೋಪವ
ಕಣ್ಣ ದ್ಯರಸಿಕುಡುವ ಹಚ್ಚಿ ಗುರು ತಾನ ದೀಪವ ೩
ನಮ್ಮ ನಿಮ್ಮ ದ್ಯಾವರೆಂದು ಹೊಯಿದಾಡಬ್ಯಾಡಿರ್ಯೋ
ಬೊಮ್ಮನ ಪಡದ ಪರಬ್ರಹ್ಮನೊಬ್ಬ ನೋಡಿರ್ಯೋ
ಇಮ್ಮನಕ ಹೋಗದೆ ಒಮ್ಮನವ ಮಾಡಿರ್ಯೋ
ಸುಮ್ಮನೆ ಸುವಿದ್ಯದೊಳು ಬೆರದು ನಿಜಗೂಡಿರ್ಯೋ ೪
ಸುಗ್ಗಿಯೋ ಸುಗ್ಗಿಯೋ ಸುಜ್ಞಾನದ ಲಗ್ಗಿಯೋ
ಭಾಗ್ಯವಿದೆ ನೋಡಿ ಭಕ್ತಿ ಜ್ಞಾನ ವೈರಾಗ್ಯಯೋ
ಬಗ್ಗಿ ನಡವ ಸಾಧುಸಂತ ಜನರಿಗಿದು ಯೋಗ್ಯಯೋ
ಹಿಗ್ಗಿ ಹರುಷಪಡುವ ಮಹಿಪತಿಯ ನಿಜ ಸ್ರಾಘ್ಯಯೋ ೫

Leave a Reply

Your email address will not be published. Required fields are marked *