Categories
ರಚನೆಗಳು

ಕಾಖಂಡಕಿ ಶ್ರೀ ಮಹಿಪತಿರಾಯರು

೩೧೨
ಸುಮ್ಮನೆ ದೊರಕೊಂಬುದೆ
ಬ್ರಹ್ಮಾನಂದದ ಮೂರ್ತಿಯ ನೇಮಿಸಿ ನೋಡದೆ ಧ್ರುವ|
ಕಣ್ಣುಗಳಾಡಗುಡದೆ ಕಣ್ಣಿನೊಳಗಿಟ್ಟುಕೊಂಡು
ಕಣ್ಣುಕಂಡುಡುಗಾಣದೆ ಘನ ಗುರುಮೂರ್ತಿಯ ೧
ಮನಗಲ್ಪನೆಗ್ಹರಿಯಗೊಡದೆ ಮನಸಿನೊಳಿಟ್ಟುಕೊಂಡು
ಮನಗುಂಡು ನೆಲಿಯುಗೊಳ್ಳದೆ ಘನಗುರು ಶ್ರೀಪಾದ ೨
ಸದ್ಗುರುದಯ ಪಡಕೊಂಡು ಸಾಧಿಸಿದಲ್ಲದೆ ಈ ಖೂನ
ಹೃದಯದಲಿ ನೆಲಿಯುಗೊಂಬನೆ ಮಹಿಪತಿಗುರುಸ್ವಾಮಿ ೩

೩೧೩
ಸುಮ್ಮನೆ ಸುರಿವದೆ ಬ್ರಹ್ಮಾನಂದದ ಸುಖ
ಒಮ್ಮನಾಗದೆ ಒಲಿಯದು ನಮ್ಮಯ್ಯನ ಕೃಪೆ ಧ್ರುವ
ಉನ್ಮನವಾಗದೆ ಸನ್ಮತದೋರದು
ಚಿನ್ಮಯಾನಂದ ಮಹಿಮೆ ಕಣ್ದೆರೆಯದು ೧
ಕಣ್ಣು ಕಂಡು ಕಾಣದೆ ಧನ್ಯವಾಗದು ಪ್ರಾಣ
ಚೆನ್ನಾಗಿ ಮಾಡಿ ಸಾಧನ ಕಣ್ಣಾರೆ ಕಂಡು ೨
ಲೇಸಾಗಿ ಭಾಸುತದೆ ಭಾಸ್ಕರಗುರು ಕೃಪೆ
ದಾಸಮಹಿಪತಿ ಮನದೊಳು ವಾಸವಾಗಿದು ೩

೭೦೧
ಸುರಿಸುವ ಸುಖ ಸಂಭ್ರಮ ಸಾರಗುಣಗರಸುವ
ಘನವದನೆ ಸುಕರುಣ
ಬೆರಸುವ ನಿಜವದನೆ ದೃಢಧ್ಯಾನ ಸ್ಮರಿಸೋ ಮನವೆ
ಸದ್ಗುರುಪಾದ ಪೂರ್ಣ ೧
ಪರಿ ಪರಿ ಸುಖದೋರುದು ನಿಜಖೂನ ಮಿರಿಮಿರಿ ಬಲು
ಮಿಂಚುದು ದಿವ್ಯಗುಣ
ಥರಥರದೋರುವುದು ಸಾರಜ್ಞಾನ ಸ್ಮರಿಸೋ ಮನವೆ
ಸದ್ಗುರುಪಾದ ಪೂರ್ಣ ೨
ಸುರಮುನಿ ಜನರಿಗಿದೆ ಜೀವಪ್ರಾಣ ಪರಮಾಮೃತಸಾರ
ನಿಜತತ್ವಜ್ಞಾನ
ಅರಿಬೇಕಿದೊಂದೆವೆ ಪ್ರತಿಕ್ಷಣ ಕ್ಷಣ ಸ್ಮರಿಸೋ ಮನವೆ
ಸದ್ಗುರುಪಾದ ಪೂರ್ಣ ೩
ಧರಿಯೊಳಿದೊಂದೆವೆ ಸಕಲಾರ್ಥ ಘನ ಹರುಷೋಕ್ತವಾಗುವ
ನಿಜ ದಿವ್ಯಸ್ಥಾನ
ಗುರುಮುಟ್ಟಿ ಗುರುವಾಗಲು ಸಾರಗುಣ ಸ್ಮರಿಸೋ
ಮನವೆ ಸದ್ಗುರುಪಾದ ಪೂರ್ಣ ೪
ಹರಿಸುವ ಮಹಾಪಾಪ ಗುರುನಾಮಗುಣ ತೆರಸುವ
ನಿಜದೃಷ್ಟಿ ಗುರುಕೃಪೆ ಜ್ಞಾನ
ಅರುವಂತೆ ಮಹಿಪತಿ ಬೆರಿಯೋ ನಿಧಾನ ಸ್ಮರಿಸೋ
ಮನವೇ ಸದ್ಗುರುವಿನ ಪಾದ ಪೂರ್ಣ ೫

೧೬೧
ಸುಲಭ ಸೇವೆ ನೋಡಿ ಶ್ರೀ ಹರಿಯ
ಖುಲ್ಲಮನುಜ ತಾ ನಿಜನೆಲಿನರಿಯ ಧ್ರುವ
ದೇಹದಂಡಿಸಲಿಕ್ಕಿಲ್ಲ ಗುಹ್ಯ ಸೇರಲಿಲ್ಲ
ಸೋಹ್ಯ ತಿಳಿದವ ಬಲ್ಲ ಗುಹ್ಯ ಗುಪ್ತವ ೧
ನೀರಮುಣಗಲಿಕ್ಕಿಲ ನಾರಿಯ ಬಿಡಲಿಲ್ಲ
ದಾರಿ ತಿಳಿದದ ಬಲ್ಲ ಹರಿಭಕ್ತಿಯ ೨
ಶೀಲ ಕೈಗೊಳ್ಳಾಲಕಿಲ್ಲ ಹಲವು ವ್ರತ ಹಿಡಿಯಲಿಲ್ಲ
ಮೂಲ ತಿಳಿದವ ಬಲ್ಲ ನೆಲೆನಿಭವ ೩
ಮನವುನ್ಮನವಮಾಡಿ ಘನಸುಖದೊಳು ಕೂಡಿ
ಜ್ಞಾನವಂದಭ್ಯಾಸಮಾಡಿ ಅನುದಿನದಲಿ ೪
ಏನೆಂದರಿಯದ ಮಹಿಪತಿಗೆ ತಾನೆ ತಾನೊಂದು
ಜ್ಞಾನ ಭೋಧಿಸಿದ ಗುರು ಸ್ವಾನುಭವದ ೫

೩೩೩
ಸುವ್ವಿ ಶ್ರೀ ಗುರುನಾಥ ಸುವ್ವಿ ಸದೋದಿತ
ಸುವ್ವಿ ಸಾಯೋಜ್ಯದೊಡೆಯನೆ
ಸಾಯೋಜ್ಯದೊಡಿಯ ಸದ್ಗುರು ನಮ್ಮಯ್ಯ
ಸುವ್ವೆಂದು ಪಾಡಿ ಸಜ್ಜನರೆಲ್ಲ ಧ್ರುವ
ಮನವ ಕಣಕವ ಮಾಡಿ ಗಣಪತಿಯ ಬಲಗೊಂಡು
ಅನುಮಾನೆಂಬೆಳ್ಳ ಚಿಗಳಿಯ
ಅನುಮಾನೆಳ್ಳ ಚಿಗಳಿ ನೆನವು ನೆನಗಡಲಿಯ
ಗಣನಾಥಗಿಟ್ಟು ಬಲಗೊಂಡು ೧
ಮನವೆಂಬ ಕಣಕವ ಘನವಾಗಿ ಕುಟ್ಟುತ
ಜ್ಞಾನ ವೈರಾಗ್ಯದೊಡಗೂಡಿ
ಒಡಗೂಡಿ ಕುಟ್ಟುತ ಪ್ರಾಣದ ಸಖಿಯರು
ಅನಂದ ಘನವ ಬಲಗೊಂಡು ೨
ನಿರ್ಗುಣಾನಂದನು ಸುಗುಣವ ತಾಳಿದ
ಅಗಣಿತಗುಣ ಪರಿಪೂರ್ಣ
ಪರಿಪೂರ್ಣವಾಗಿಹ ಅಗಮ್ಯನುಪಮ
ನಿಗಮ ಗೋಚರನ ಬಲಗೊಳ್ಳಿ ೩
ಉತ್ಪತ್ತಿ ಸ್ಥಿತಿ ಲಯ ವಿಸ್ತಾರದೋರಲು
ಮತ್ತೆ ತ್ರಿಗುಣವ ತಾಳಿದ
ತಾಳಿದ ಸತ್ವ ರಜ ತಮವು ತ್ರಿಮೂತ್ರ್ಯದ
ನಿತ್ಯ ನಿರ್ಗುಣನ ಬಲಗೊಳ್ಳಿ ೪
ಭಕ್ತರ ಹೊರಿಯಲು ಪೃಥ್ವಿಯೊಳಗಿನ್ನು
ಹತ್ತವತಾರ ಧರಿಸಿದ
ಭರಿಸಿ ಪೃಥ್ವಿಯೊಳು ಮುಕ್ತಿ ಸಾಧನವಿತ್ತು
ಪತಿತಪಾವನನ ಬಲಗೊಳ್ಳಿ ೫
ಅನಾಥಜನರ ದೈನ್ಯ ಹರಿಸಲಾಗಿ
ಆನಂದದಿಂದ ಪುಟ್ಟಿಹ್ಯ
ಪುಟ್ಟಹ್ಯಾನಂದದಿ ಘನ ಗುರುಮೂರ್ತಿಯ
ಜ್ಞಾನದಲೊಮ್ಮೆ ಬಲಗೊಳ್ಳಿ ೬
ವಸುಧಿಯೊಳು ದೃಢ ಅಸಿಯ ಕಲ್ಲನೆ ಮಾಡಿ
ಕುಸುವ ನಿಶ್ಚಯ ಒನಕಿಯ
ಕುಸುವ ನಿಶ್ಚಯದ ಒನಕಿ ಹಸ್ತದಿ ಪಿಡಿದು
ಹಸನಾಗಿ ಕಣಕ ಕುಟ್ಟುತ ೭
ಹಸನದಿಂದ ಕುಟ್ಟಿ ನಾದಿ ಉರಳಿ ಮಾಡಿ
ಮದನ ಮೋಹನಗ ಮದುವೀಗ
ಮದುವಿಯ ಮನೆಯಲ್ಲಿ ಮುದದಿ ಮೂವತ್ತಾರು
ಮೊದಲಾದ ಗುರಿಯ ಮುತ್ತೈದೇರು ೮
ಚದುರತನದಲಿ ಒದಗಿ ಮುತ್ತೈದೇರು
ಯದುಕುಲೋತ್ತಮನ ನೆನವುತ
ನೆನವುತ ಹದನದಿಂದಲಿ ಮನವಿಡುತ
ಆದಿ ತ್ರಿಮೂರ್ತಿ ಬಲಗೊಂಡು ೯
ಅಸಿಯ ಕಲ್ಲಿ ಒನಕೆ ಉಸಲಾರಗೊಡದೆ
ಹಸನಾಗಿ ಕಣಕ ಕುಟ್ಟುತ
ಕುಟ್ಟುತ ಮನವೆಂಬ ಕಣಕ ಹಸನವು ಮಾಡಿ
ವಿಶ್ವ ವ್ಯಾಪಕನ ಮದುವಿಗೆ ೧೦
ಕುಟ್ಟಿದ ಕಣಕವು ಘಟ್ಟಿಸಿಹ ಮಾಡಿ
ಒಟ್ಟಿ ಉನ್ಮನೆಯ ಮುದ್ರಿಯಲಿ
ಮುದ್ರಿಲೆ ಒಟ್ಟಲು ದಿಟ್ಟ ಮುತ್ತೈದೇರು
ಕೊಟ್ಟ ಸದ್ಗುರು ಹರುಷವ ೧೧
ಜ್ಞಾನ ವೈರಾಗ್ಯವೆಂಬ ಅನಾದಿ ಶಕ್ತ್ಯರು
ಕಣಕವ ಕುಟ್ಟಿ ದಣಿದರು
ಮನವೆಂಬ ಕಣಕದ ಉರಳೆ ಉನ್ಮನಿಲಿಟ್ಟು
ಮೌನ್ಯ ಮೋನದಲಿ ಮುಸುಕಿರೆ ೧೨
ಹಸನಾದ ಕಣಕಲಿ ಹೊಸಪರಿ ಭಕ್ಷ್ಯವು
ಹೆಸರಿಟ್ಟು ಏಸು ಪರಿಯಿಂದ
ಪರಿಯಿಂದ ಮಾಡುತ ಬೀಸೋರಿಗಿಗಳು
ವಾಸುದೇವನ ಮದುವಿಗೆ ೧೩
ಅಡಿಗಿಯ ಮಾಡಿದ ಸಡಗರ ಪೇಳಲಿ
ಪೊಡವಿಯೊಳಿನ್ನು ಅಳವಲ್ಲ
ಅಳವಲ್ಲದಡಗಿಯ ಕೂಡಿ ಮುತ್ತೈದೇರು
ಎಡಿಯು ಮಾಡಿದರು ತಡೆಯದೆ ೧೪
ತಂದೆ ನಮ್ಮೊಪ್ಪನ ಬಂದ ನಿಬ್ಬಣವು
ಒಂದೆ ಸಾಲದಲಿ ಕುಳಿತರು
ಕುಳಿತು ಸಾಧು ಜನರ ಮುಂದೆ ಎಡಿ ಮಾಡಿ
ಒಂದೊಂದು ಪರಿಯ ಬಡಿಸುತ ೧೫
ಹಪ್ಪಳ ಸೊಂಡಿಗಿ ಉಪ್ಪು ಮೆಣಸುಗಳು
ಒಪ್ಪದಿಂದ ಬಡಿಸುತ
ಬಡಿಸುತ ತಪ್ಪದೆ ಉಪ್ಪಿನೆಸರಗಳು
ಶ್ರೀಪತಿ ಪ್ರಸ್ತದೆಡಿಯಲಿ ೧೬
ಪ್ರಸ್ತದ ಎಡಿಯಲಿ ಪತ್ರ ಶಾಖೆಗಳು
ಮತ್ತೆ ಅನೇಕ ಪರಿಯಾದ
ಪರಿಯಾದ ಶಾಖವು ಸುತ್ತ ಪಂಕ್ತಿಯಲಿ
ಆತ್ಮದಿಂದ ಬಡಿಸುತ ೧೭
ಪರಮಾನ್ನಗಳ ತಂದು ಹಿರಿಯ ಮುತ್ತೈದೇರು
ಸರಿಯಾಗಿ ಎಡಿಯ ಬಡಿಸುತ್ತ
ಬಡಿಸುತ ಅನ್ನ ಪರಮಾನ್ನ ಅನುಭವದ
ಅನಂದದಿಂದ ಬಡಿಸಿದೆ ೧೮
ಮನೋ ಅನುಮಿಷದ ಎಣ್ಣೋರಿಗಿಗಳು
ಎಣಕಿಲ್ಲದಿಹ ಭಕ್ಷ್ಯವು
ಭಕ್ಷ್ಯದ ಜಿನಸ ಅನೇಕ ಪರಿಯಲಿ
ಘನದೊಲುವಿಂದ ಬಡಿಸುತ ೧ ೯
ಸಖರಿ ತುಪ್ಪವು ಭಕ್ತಿಭಾವದಲಾದ
ಅಕ್ಕತಂಗೆರು ಬಡಿಸುತ
ಬಡಿಸುತ ನಡೆದರು ಅಖರದಿಂದಲಿ
ಏಕಶಾಂತನ ಮದುವಿಗೆ ೨೦
ಮೊಸರು ಮಜ್ಜಿಗಿಯು ಸುವಾಸದಿಂದಾದ
ಲೇಸಾಗಿ ದಣಿಯಬಡಿಸಿರೆ
ಬಡಿಸಿದ ಷಡುರಸಾನ್ನವನುಂಡಿನ್ನು
ಕಡುಬೇಗ ಪ್ರೇಮ ಉಕ್ಕಿತು ೨೧
ಉಂಡುವೀಳೆಯುವ ಕೊಂಡು ಸಾಧುಸಭೆ
ಮಂಡಲದೊಳು ಪೊಗಳಿತು
ಪೊಗಳಿತಾ ಮಂಡಲದೊಳು ಪ್ರಚಂಡನ
ಮದುವಿ ಅಖಂಡ ಹರುಷದಿ ೨೨
ಗಂಧ ಕಸ್ತುರಿಯ ತಂದೆ ಗುರುಕೃಪೆಯ
ಚಂದವಾಗಿಟ್ಟು ಮೆರೆದರು
ಮೆರೆದು ಮೇದಿನಿಯೊಳು ಗುರುದಯ ಕರುಣಾದಿ
ಪರಮ ಸುಪಥವ ಪಡೆದರು ೨೩
ಮದುವಿ ಮುತ್ತೈದೇರು ಮುಕ್ತಿಸಾಧನ ಕಂಡು
ಸದಮಲ ಸುಖವ ಗೈದರು
ಸುಖಸೂರೆಕೊಂಡಿನ್ನು ಶ್ರೀಮಂತಕರದೊಳು
ಬೆರೆದು ಹರುಷವ ಪಡೆದರು೨೪
ಸರಿ ಇಲ್ಲದ ಪ್ರಸ್ತ ಧರೆಯೊಳಗಾಯಿತು
ಪರಮಾನಂದದ ಹರುಷಲಿ
ಹರುಷವ ಕಂಡಿನ್ನು ಕರುಮುಗಿದು ಮಹಿಪತಿ
ಹೃತ್ಕಮಲದಲ್ಲಿ ಸ್ತುತಿಸಿದ ೨೫
ಶ್ರೀಪತಿ ಮದುವಿಯ ಸ್ತುತಿ ಪಾಡಿದವರಿಗೆ
ಪಾತಕವಿಲ್ಲ ಭಯವಿಲ್ಲ
ಭಯವಿಲ್ಲ ಕ್ಷಿತಿಯೊಳು ಗುರುಭಕ್ತಜನರಿಗೆ
ಸಂತತ ಸುಖವ ಪಡೆವರು ೨೬

೭೦೨
ಸೂರ್ಯಾಡುವ ಬನ್ನಿ ಹರಿಯ ನಾಮಾಮೃತವ ಪೂರ್ಣ ಧ್ರುವ
ಸುರಿ ಸುರಿದು ಸಾರಾಯ ತರುತರುವಾಯ ಸೇವಿಸಿ
ಥರಥರಲಿಡುವ ಬನ್ನಿ ಸುವಾಡವ ಕೊಂಡು ೧
ಸಾರ್ಥಕ ಮಾಡುವದಿದೆ ಗುರ್ತಕ ಬಂದಿಹ ಜನಮ ತಾ ಕರ್ತು
ಸದ್ಗುರು ಮಹಿಮೆ ಪ್ರಾರ್ಥಿಸಿ ಪರಿಪೂರ್ಣ ೨
ಸವಿಸವಿ ಮಾಡಿಕೊಂಡು ಸೇವಿಸಿ ಮಹಿಪತಿ ನೋಡಿ
ಪಾವನ ಪಾದ ನಿಜಗೂಡಿ ಭವಪಾಶೀಡ್ಯಾಡಿ ೩

೩೩೪
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ
ನಿಷ್ಠರುದೋರದಂತಾದರು ಮಾ ಧ್ರುವ
ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು
ನಿಷ್ಠರಿಗಾಟ್ಲಿ ತಂದರು ಮಾ
ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ
ಬಟ್ಟೆಗ್ಯಳದಿನ್ನು ತಾಹರು ಮಾ
ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು
ನೆಟ್ಟ ನೇರಿಷ್ಟ ನೇಮಿಸುರು ಮಾ
ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ
ದಿಟ್ಟತನದಿ ಪ್ರಾಣಕೊಂಬರು ಮಾ ೧
ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು
ಕುಟ್ಟಿ ಅವನಬಾಯಿ ಹಾರರು ಮಾ
ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು
ನೆಟ್ಟನೆ ಘಾಸಿಮಾಡರು ಮಾ
ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು
ನಷ್ಟತನದಿ ಹೊಟ್ಟೆ ಹೊರುವರು ಮಾ
ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು
ಹೆಟ್ಟಿ ಅವನ ಮುಂದೆ ನಡೆಸುರು ಮಾ ೨
ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು
ಇದ್ದು ಇಲ್ಲದಂತಾದರು ಮಾ
ಮಂದಮತಿಗಳು ಅಂದಣವೇರಿನ್ನು
ಬುದ್ಧಿವಂತರೀಗ್ಹೀನತಂದರು ಮಾ
ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ
ಕ್ಷುದ್ರತನದಿ ಕೆಡುತಿಹರು ಮಾ
ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು
ಇದ್ದರೆ ಬುದ್ಧಿಹೀನರು ಮಾ ೩
ಉಳಿಯಮುಟ್ಟಿದ ದೈವ ಉಳಿಯದೇ ಹೋದವು
ಉಳಿಗಾಲ ವಿಲ್ಲದಂತಾಯಿತು ಮಾ
ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು
ಕಳ್ಳರೆ ಸಾಜರು ಆದರು ಮಾ
ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ
ಸುಳ್ಳರು ನಿಜನುಡಿವೆಂಬುರು ಮಾ
ಉಳ್ಳವರು ಖಳಬುದ್ಧಿ ಕೈಕೊಂಡು
ಇಳೆಯೊಳು ಧರ್ಮವ ಜರೆದರು ಮಾ ೪
ಸಾಧುಸಜ್ಜನರೆಲ್ಲ ಭೇದವ ಅಡಗಿಸಿ
ಮೇಧಿನಿಯಲು ಗುಪ್ತರಾದರು ಮಾ
ಇದ್ದರ ಘನಸುಖ ಸಿದ್ಧರ ನೆರೆಯಲಿ
ಬುದ್ಧಿಹೀನರು ತಾವು ಅರಿಯರು ಮಾ
ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ
ಸತ್ ಶಿಷ್ಯಮಹಿಪತಿ ತಿಳಿದನು ಮಾ
ಎಂದಿಗೆ ಬೇಡಿನ್ನು ದುರ್ಜನರ ಸಂಗವು
ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ ೫

೫೨೦
ಸೇವಿಸುವ ಬನ್ನಿರೋ ಭಾವಿಕರೆಲ್ಲ
ಸವಿಸುಖವಾದ ಸದ್ಗುರುವಿನ ಸೊಲ್ಲ ಧ್ರುವ|
ಉಂಬುವರಿಗ್ಯೆದ ತುಂಬಿ ಬಡಿಸ್ಯದ
ಕೊಂಬವರಿಗೆ ಸಂಭ್ರಮವಾಗ್ಯದ ೧
ಅರ್ತವರಿಗ್ಯದ ಅರ್ಥಿ ತಾನಾಗ್ಯದ
ಕರ್ತು ಸದ್ಗುರು ಕೃಪೆ ಪಡೆದವಗದ ೨
ಸವಿಸವಿದುಂಬುವ ಭಾವಿಸಿಕೊಂಬುವಆವಾಗ ಮಹಿಪತಿಸ್ವಾಮಿ ನೆನೆವ ೩

೧೬೩
ಸೇವೆ ಸುಖವೋ ಶ್ರೀ ಹರಿಸೇವೆ ಸುಖವೊ
ಸೇವೆ ಗಿಂದಧಿಕ ಸುಖ ಸಾಯೋಜ್ಯಮುಕುತಿಪದದೊಳಿಲ್ಲ ಧ್ರುವ
ಇಂದುಕುಲದೀಪಕನ ಎಂದೆಂದು ಬಿಡದೆ ಭಾವಲಿಟ್ಟು
ತಂದಿ ತಾಯಿ ಬಂಧುಬಳಗನಾದ ಮೂರ್ತಿ ಸ್ಮರಿಸುವ ೧
ವಾಸವಾಗಿ ಆತ್ಮಲೀಹ ಭಾಸ್ಕರಕೋಟಿತೇಜಪೂರ್ಣನ
ದಾಸನಾಗಿ ವಾಸುದೇವನ ಪಾದಕಮಲಾರಾಧಿಸುವ ೨
ವಿಹಿತಕಿಂತ ವಿಹಿತದೋರಿ ಕುಡುವ ಸ್ವಹಿತವೆಂದು
ಮಹಿಪತಿ ಸ್ವಾಮಿ ಸಾರ್ವಭೌಮನ
ಕೀರ್ತಿಯನೆ ಕೊಂಡಾಡುತಿಹ್ಯ೩

೧೬೨
ಸೇವೆಮಾಡಿ ಹರಿಯ ನವವಿಧಪರಿಯ ಧ್ರುವ
ಭಾವ ಭಕ್ತಿಯ ಮಾಡಿ ಸುವಿದ್ಯ ಪಥ ಕೂಡಿ
ಗೋವಿಂದನಾಮ ಪಾಡಿ ಅವಿದ್ಯುಪಾಧೀಡ್ಯಾಡಿ ೧
ಯುಕ್ತಿಗೆ ವಿವೇಕ ಭಕ್ತ ಸಂರಕ್ಷಕ
ಮುಕ್ತಿಗಿಂದಧಿಕ ಭಕ್ತಿನಿಜಸುಖ ೨
ಸೇವೆಸುಖ ಹರಿಯ ಮಹಿಪತಿ ದೊರೆಯ
ಸೇವಿಸಲೀಪರಿಯ ಭವನಾಶ ಖರಿಯ ೩

೫೨೧
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು
ನಿಜಗುಹ್ಯದ ಮಾತು ಗುರುತವಾಗಿ ಹ್ಯ ಸಾಧು ಬಲ್ಲ ಖೂನ ಧ್ರುವ|
ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು
ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು
ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು
ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು ೧
ಹರಿಯದ ಹರಯಿತು ಮುರಿಯದ ಮುರಿಯಿತು
ಹುರಿಯಲೊಂದು
ಮರೆಯದ ಮರೆಯಿತು ಅರಿಯದ
ಅರಿಯಿತು ಅರಿವಿಲೊಂದು
ಸುರಿಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು
ಜರಿಯದ ಜರಿಯಿತು ಬೆರಿಯದೆ ಬೆರಿಯಿತು ಕುರಿವಿಲೊಂದು ೨
ಜಾರದ ಜಾರಿತು ಮೀರದ ಮೀರಿತು ಹಾರಲೊಂದು
ತೋರದ ತೋರಿತು ಸೇರದ ಸೇರಿತು ಸಾರಲೊಂದು
ಬೀರದ ಬೀರಿತು ಸಾರಸದೋರಿತು ಕರದಲೊಂದು
ತರಳ ಮಹಿಪತಿಗ್ಹರುಷವಾಯಿತು ಗುರುಕರುಣಲಿಂದು ೩

೫೦೨
ಸ್ಮರಿಸಿರೋ ಗುರು ಏಕಶಾಂತನ ಹರಿಹರ ಬ್ರಹ್ಮಗುರು
ಸರ್ವೋತ್ತಮನ
ಪರಮ ಪುರುಷ ಪರಮಾತ್ಮನ ವರ ಶಿರೋಮಣಿ
ಪುರುಷೋತ್ತಮನ ೧
ನೀರೊಳೀಸಿದ ಮಹಾಧೀರನ ಭಾರವ
ಬೆನ್ನಿಲಿಪೊತ್ತ ಗಂಭೀರನ
ಧರೆಯ ಗೆಲಿದ ಮಹಾಶೂರನ ವರವಿತ್ತ ಉಗ್ರಾವತಾರನ ೨
ಧರೆಯ ಬೇಡಿದ ಬ್ರಾಹ್ಮಣೋತ್ತಮನ ಪರಶುಪಿಡಿದ ಪರಾಕ್ರಮನ
ಸ್ಥಿರ ಪದವಿತ್ತ ದೇವೋತ್ತಮನ ಗಿರಿಯನೆತ್ತಿದ ಮಹಾಮಹಿಮನ ೩
ತ್ರಿಪುರವ ಗುಪಿತ ಪೊಕ್ಕಿದ್ದನ ಅಪರಂಪಾರ ಮಹಿಮಾನಂದನ
ಒಪ್ಪುವ ತೇಜಿನೇರಿದ್ದನ ಕಪಟನಾಟಕ ಪ್ರಸಿದ್ಧನ ೪
ಭಕ್ತವತ್ಸಲ ಭವನಾಶನ ಮುಕ್ತಿದಾಯಕ ದೇವ ದೇವೇಶನ
ಮಹಿಪತಿ ಆತ್ಮ ಪ್ರಾಣೇಶನ ಗುರು ಭಾನುಕೋಟಿ ಪ್ರಕಾಶನ ೫

೧೪೬
ಸ್ಮರಿಸು ಮನವೆ ಶ್ರೀಹರಿಯಚರಣ ಕಮಲಯುಗವರಿಯಾ
ಮೂರುಲೋಕದ ನಿಜಧೊರಿಯ ಮರೆಯದಿರು ನರಹರಿಯ ಧ್ರುವ
ತಂತು ಪಿಡಿದನುದಿನ ಚಿಂತಿಸೊ ಕಂತಿಪಿತನ
ನಿತ್ಯ ನಿಜಾನಂದ ಘನ ಸಂತತ ನೆರಿಯ ಪೂರ್ಣ ೧
ಕರ್ತು ಶ್ರೀ ಸದ್ಗುರುವಿನ ಗುರ್ತುಮಾಡಿಕೊ ನಿಧಾನ
ನಿತ್ಯ ನಿಜಾನುಸಂಧಾನ ಪ್ರಾರ್ಥಿಸೋ ಪರಮಾತ್ಮನ ೨
ಇಹ್ಯ ಪರಾನಂದಘನ ಬಾಹ್ಯಾಂತ್ರ ಸದೋದಿತನ
ಧ್ಯಾಯಿಸೋ ನೀ ಪರಿಪೂರ್ಣ ಮಹಿಪತಿ ಪ್ರಾಣನಾಥನ ೩

೧೪೭
ಸ್ಮರಿಸು ಮನವೆ ಸ್ಮರಿಸು ಮನವೆ
ಹರಿಯ ಚರಣ ಕಮಲವ ಪೂರ್ಣ
ಶರಣ ಜನರನಾ ಹೊರೆದು ರಕ್ಷಿಸುವ ಉರಗಶಯನನಾ ೧
ಇರುಳ ಹಗಲ ಸೆರಗವಿಡಿದು
ಅರಿತು ಸ್ಮರಿಸು ಬೆರಿಸಿ ಚಿತ್ತವ
ಕರೆವ ಕಾಮಧೇನುವಾಗಿ ಹೊರೆವ ಕಪ್ಪುತರುವಿನ ೨
ಬಿಡದೆ ಸ್ಮರಿಸು ಗೂಡಿನೊಳಗೆ
ಪೊಡವಿಧರನ ಪಾದ ಪೂರ್ಣ
ಕುಡುವ ಭಕ್ತಿ ಮುಕ್ತಿದಾತ ಮಹಿಪತಿಯ ಒಡಿಯನ ೩

೧೪೫
ಸ್ಮರಿಸುಮನವೆ ನೀ ದೇವಕಿ ಕಂದನ ಧ್ರುವ
ಶರಣರ ಪಾಲನ ಕುರುಳರ ನಾಶನ ೧
ಉರಗಶಯನನ ಗರುಡವಾಹನನ ೨
ಸಿರಿಯ ಲೋಲನ ಪರಮ ಪಾವನನ ೩
ಸುರರಾಜವಂದ್ಯನ ಕರಿರಾಜಪ್ರಿಯನ ೪
ಗಿರಿಯನೆತ್ತಿದನ ತುರುಗಳಗಾಯದ್ದವನ ೫
ಹರಿನಾಮ ಧ್ಯೇಯನ ಸಾರ ಸಂಜೀವನ ೬
ದಾರಿದ್ರ್ಯ ಭಂಜನ ದುರಿತ ನಿವಾರಣ ೭
ಸರ್ವಾರ್ಥಕಾರಣ ಹರುಷದ ಜೀವನ ೮
ಪರಿಪೂರ್ಣವಿಹನ ಪೂರಿತ ಕಾಮನ ೯
ಗುರುಶಿರೋರತ್ನನ ಕರುಣಲೋಚನ ೧೦
ಸ್ಮರಿಸು ಮನವೆ ನೀ ಮಹಿಪತಿ ಈಶನ ೧೧

೧೪೯
ಸ್ಮರಿಸೊ ಮನವೆ ಸಿರಿಲೋಲ ಶ್ರೀ ಕೃಷ್ಣನ
ಸ್ಮರಿಸಲೊದಗುವ ಸ್ವಾಮಿ ಶ್ರೀ ವಿಷ್ಣುವಿನ ಧ್ರುವ
ಸ್ಮರಿಸಿ ಕರಿರಾಜ ಸೆರೆಯಿಂದ ಬಿಡಲಿಲ್ಲವೆ
ದುರಿತವನು ಗೆದ್ದರುಷಬಡಲಿಲ್ಲವೆ ೧
ಸ್ಮರಿಸಿ ಪ್ರಹ್ಲಾದನ ಪ್ರಾಣುಳಿಯಲಿಲ್ಲವೆ
ಪರಿ ಪರಿ ಹರಿ ಮಹಿಮೆ ತಿಳಿಯಲಿಲ್ಲವೆ೨
ಸ್ಮರಿಸಿ ದ್ರೌಪದಿ ಅಪತ್ತುಗಳಿಲಿಲ್ಲವೆ
ಮೊರೆಯಗೇಳಿ ಕೃಷ್ಣ ಸುಳಿಯಲಿಲ್ಲವೆ ೩
ಸ್ಮರಿಸಿ ಪಾಂಡವ ಸತ್ವವು ನಡೆಲಿಲ್ಲವೆ
ಅರಗಿನ ಮನೆಯೊಳು ಉಳಿಲಿಲ್ಲವೆ ೪
ಸ್ಮರಿಸು ಮಹಿಪತಿ ಮನವ ನಿಜಗೊಲಿಲ್ಲವೆ
ಗುರು ಚರಣ ಸ್ಮರಿಸಿ ನೆಲೆಗೊಳಲಿಲ್ಲವೆ೫

೧೫೦
ಸ್ಮರಿಸೊ ಮನವೆ ಹರಿಯ ಧರೆಯೊಳು
ಸಿರಿಯನಾಳುವ ದೊರೆಯ
ಅರಿತು ಚರಣ ಕಮಲ್ಹೊಕ್ಯುಗು ಮೊರೆಯ
ಮರೆಯದೆ ಮುರಾರಿಯ ೧
ಕರುಣದಾಯಕನೀತ ಶರಣಜನರ ಸುಶೋಭಿತ
ವರಮುನಿಗಳ ಹೃದಯ ಸದೋದಿತ ಹರಿಯ ಸಾಕ್ಷಾತ ೨
ನಂಬಿದವರ ಕಾವ ಬಿಂಬಿಸುವ ಮನದೊಳಗೀವ
ಹಂಬಲಿಸುವರ ಜೀವನದ ಜೀವ ಇಂಬು ಅಗಿಹ್ಯ ದೈವ ೩
ದೇಶಿಕರಿಗೆ ದೇವ ವಸುದೇವಸುತ ವಾಸುದೇವ
ಲೇಸಾಗಿ ಸುಭಕ್ತರ ಪಾಲಿಸುವ ಈಶ ಶ್ರೀಕೇಶವ ೪
ದೃಢ ಭಕ್ತರಿಗೊಲಿವ ಮೂಢ ಮಹಿಪತಿ ಮನದೈವ
ಪಿಡಿದು ಕೈಯ ಕಡೆಗಾಣಿಸುವ ಬಿಡದೆ ಸಲಹುವ ೫

೧೪೮
ಸ್ಮರಿಸೊ ಮನವೇ ಹರಿಯ ನರಹರಿಯ
ಅರಸಾಗ್ಯಾಳುವ ಸಿರಿಯ ಧ್ರುವ
ಕರಿಯ ಕೇಳಿದ ಮೊರಿಯ
ನೀನರಿಯ ಸುರರ ಬಿಡಿಸಿದ ಸರಿಯ
ಧರೆಯೊಳಗಿದು ಖರಿಯ
ಯುಗಮೊರಿಯ ಹೊರೆವನು ತಾ ಪರೋಪರಿಯ ೧
ಸರ್ವದೈವಕೆ ಹಿರಿಯ
ಮುರ ಅರಿಯ ಹರ ಹೃದಯದಲಿ ಪರಿಯ
ಸ್ಮರಿಸುವದೀ ಪರಿಯ
ದುರಿತಾರ್ಯಾ ( ದುರಿತ ನಿವಾರ್ಯಾ)
ಕರುಣಕಿಲ್ಲೀತನ ಸರಿಯ ೨
ಸೆರಗವಿಡಿದು ಹರಿಯ
ಪರಿಪರಿಯ ಅರಿಯೋ ನವವಿಧ ಪರಿಯ
ಶರಣಾಗತರ ಸಿರಿಯ
ಸುರವರ್ಯಾ ತರಳಮಹಿಪತಿ ದೊರೆಯ ೩

೬೮೭
ಸ್ವಯಂ ಭಾನು ಉದಯವಾದ ನೋಡಿ
ದಯಕರುಣಾನಂದದ ಕೃಪೆಮಾಡಿ ಧ್ರುವ
ರವಿಕೋಟಿತೇಜನೆ ಬಂದ ಮೂಡಿ
ಭವಭ್ರಮದ ಕತ್ತಲ್ಹೋಯಿತೋಡಿ
ದೇವದೇವೋತ್ತಮನ ಪ್ರಭೆ ಕೂಡಿ
ದಿವಾರಾತ್ರಿಲ್ಲದಾಯಿತು ನೋಡಿ ೧
ಜ್ಞಾನ ಗಮ್ಯವಾಗಿದ್ದ ಸುವಸ್ತ
ಕಾಣಬಾವ್ಹಾಯಿತು ಮನಸ್ವಸ್ತ
ಮನದಿಂದೆವೆ ಆಯಿತು ಮನಸ್ವಸ್ತ
ಘನಮಯವೆ ತೋರಿತು ಸಮಸ್ತ ೨
ತಾನೆ ತನ್ನಿಂದುದಯವಾದ ಪೂರ್ಣ
ನಾನಾವೆಂಬುದ್ಹೋಯಿತನುಮಾನ
ಆನೇಕಲಿದೋರಿತು ಇದೆ ಖೂನ
ದೀನ ಮಹಿಪತಿ ಸ್ವಹಿತ ಸುಧನ ೩

ಸ್ವಯಂ ಭಾನು ಉದಯವಾದ ನೋಡಿ
ಶ್ರೇಯ ಸುಖ ಬೀರುತ ಸದೋದಿತ ಮೂಡಿ ಧ್ರುವ|
ಪೂರ್ವ ಪುಣ್ಯಾಚಲದಿ ಉದಯವಾದ
ತೋರ್ವ ಭವಬಂಧವೆಂಬ ಕಗ್ಗತ್ತಲೆ ಹರಿಸಿದ ೧
ಹೃದಯ ಕಮಲವಾಯಿತು ಸುವಿಕಾಸ
ದ್ವ್ವಿಧಾ ಭಾವೆಂಬ ಚಕ್ರವಾ ಕೊಂದಾಯಿತು ಹರುಷ ೨
ಸಂಚಿತ ಪ್ರಾಲಬ್ಧ ಕ್ರಿಯಮಾಣ
ವಂಚನಿಲ್ಲದಾಯಿತು ಸಮರ್ಪಣ ಆಘ್ರ್ಯದಾನ ೩
ಮಹಿಪತಿಗಾಯಿತು ಆನಂದೋದಯ
ಸ್ವಹಿತದೋರಲು ಬಂದೆನಗೆ ತತ್ವೋಪಾಯ ೪

೬೯೦
ಸ್ವಸುಖ ನೋಡಿ ಸದ್ಗುರು ಕೃಪೆಯಿಂದ
ವಿಶ್ವತೋಮುಖ ತೋರುವ ತಾಂ ಗೋವಿಂದ ಧ್ರುವ|
ಏನೆಂದ್ಹೇಳಲಯ್ಯ ಅನುಭವದ ಮಾತು
ಖೂನಾಗ್ಯಾದೊಂದೇ ಶಾಶ್ವತ
ಆನಂದೋಭರಿತ ಸ್ವಾನಂದ ಸುಖ
ತಾನೆ ಆಗ್ಯದೆ ಸನ್ಮತ ಘನಬೆರೆದು ನೋಡುವದೀ ಸುಪಥ ೧
ಮಲಕಿನ ಮನುಜರು ಮನವಿಡಬಲ್ಲರೇ
ನಾಲ್ಕು ವೇದ ಸಾರುದಕ
ಒಮ್ಮೆಯಾದರ ನಿಲುಕಿಸಿ ನಿಜ ನೋಡಿದರಸಾಧ್ಯ
ಬೆಳಕೆ ಆಗ್ಯದ ನೋಡಿ ತಿಳಿಕೊಂಡರೆ ೨
ಗುರುವಿನಿಂದಧಿಕಿಲ್ಲ ಅರಿತುಕೊಳ್ಳಿರೊ ಖೂನ
ಪರಮಗತಿಯ ಸಾಧನ
ಸುತತ್ವ ಜ್ಞಾನ ಬೆರೆದು ಮಹಿಪತಿ ಪೂರ್ಣ
ಸದ್ಗುರು ಚರಣಕೆರಗಿ ಮನ ಪಡೆವದೀ ದಯಕರುಣಾ ೩

೬೮೯
ಸ್ವಸ್ತ ಮಾಡಿಕೊಳ್ಳಬೇಕು ವಸ್ತು ತನ್ನೊಳಾಗದ
ಹಸ್ತ ನೀಡಲಿಕ್ಕೆ ಸ್ವಾಮಿ ವಿಸ್ತರಿಸಿ ತೋರುತದೆ ಧ್ರುವ|
ಸಾವಧಾನವಾಗಲಿಕ್ಕೆ ಸಾಧಿಸಿ ಬರುತದೆ
ಭಾವ ಬಲಿದು ನೋಡಲಿಕ್ಕೆ ಕಣ್ಣಮುಂದೆ ಭಾಸುತದೆ
ನಿವಾತ ಕೂಡಲಿಕ್ಕೆ ತಾನೆ ತಾನಾಗ್ಯದೆ
ಆವಾಗ ನೋಡಿ ನಿಜ ಠವಠವಿಸುತದೆ ೧
ಆರೇರಿವೆರದು ನೋಡಿ ಗುರುವಾಕ್ಯ ಮಿರಬ್ಯಾಡಿ
ಮೂರಾರು ಜರೆದು ಬಿಡಿ ಬರಿ ಡಂಭದೋರಬ್ಯಾಡಿ
ಸಾರವೆ ಆದೆ ನೋಡಿ ಗುರುಸೇವೆ ಪೂರ್ಣಮಾಡಿ
ದೂರ ಹೋಗಿ ನೋಡಬ್ಯಾಡಿ ತಿರುಗಿ ನಿಮ್ಮೊಳು ನೋಡಿ೨
ಇದ್ದಲ್ಲೆ ಅದ ಪೂರ್ಣ ಸದ್ಗುರು ಕರುಣ
ಬಿದ್ದಲ್ಲೆ ಬಿದ್ದು ಘನ ಸತ್ಯವಾದ ನಿಜಘನ
ಬುದ್ಧಿವಂತರ ಮನ ಗೆದ್ದು ಅಯಿತುನ್ಮನ
ಸಿದ್ಧರ ನಿಜಸ್ಥಾನ ಶುದ್ಧ ಮಹಿಪತಿ ಸುಪ್ರಾಣ ೩

೨೯೬
ಸ್ವಹಿತ ಸುಪಥ ಸಾಧನ ಪಡೆದು ಸ್ವಸುಖಗೂಡಿರೊ
ವಿಹಿತ ಮರೆದು ವಿಭ್ರಮಾಚರಿಸಬ್ಯಾಡಿರೋ ಧ್ರುವ
ತಾನು ದಾರಿಗೆ ತನಗೆ ದಾರು ತಿಳಿದು ನೋಡಿರೊ
ಜ್ಞಾನ ಹೀನರಾಗಿ ಗರ್ವ ಹಿಡಿಯಬ್ಯಾಡಿರೊ
ಸ್ವಾನುಭವಾಮೃತವನ್ನುಂಡು ಸವಿ ಸೂರ್ಯಾಡಿರೊ
ನಾನು ನೀನು ಎಂಬ ಬಿನಗುಭ್ರಮ ಈಡ್ಯಾಡಿರೊ ೧
ಮನದ ಕೊನಿಯಲಿದ್ದ ಘನದಾಶ್ರಯವು ಮಾಡಿರೊ
ತನುವು ಲಂಪಟ್ಹಿಡಿದು ತನ್ನ ಮರಿಯಬ್ಯಾಡಿರೊ
ಜನುಮ ಸಫಲವಾಗುವ ಸುಜಾಗ್ರತಿಯ ಪಡೆಯಿರೊ
ನೆನವು ನೆಲೆಯಗೊಂಡು ನಿಜದಾಶ್ರಯದಲಿ ನಡೆಯಿರೊ೨
ಮರ್ತು ಮೈಯ ವ್ಯರ್ಥ ದಿನವಗಳಿಯಬ್ಯಾಡಿರೊ
ನಿರ್ತದಿಂದ ಅರ್ತ ಭಾವದರ್ಥಿ ನೋಡಿರೊ
ಕರ್ತು ಭಾನುಕೋಟಿತೇಜನ ಗುರ್ತು ಮಾಡಿರೊ
ಅರ್ತು ಮಹಿಪತಿ ಸ್ವಾಮಿಪಾದ ಬೆರ್ತುಕೂಡಿರೊ ೩

೬೯೬
ಸ್ವಾನಂದದ ಘನಸುಖ ಏನೆಂದ್ಹೇಳಲಿ ಕೌತುಕ ಧ್ರುವ|
ಬಲಗೊಂಡದೆ ಬ್ರಹ್ಮಭಾವ ನೆಲಗೊಂಡದೆ ಸರ್ವದ
ಬಲುದೋರುತದೆ ಸುಸ್ವಾದ ಸುಲಭ ಸದ್ಗುರು ಪ್ರಸಾದ ೧
ತಾನಾಗ್ಯದೆ ತಾರ್ಕಣ್ಯಸ್ವಾನುಭವದ ಸುಪುಣ್ಯ
ಮುನಿಜನರೆ ಧನ್ಯಧನ್ಯ ಅಣುರೇಣುಕ ತಾ ಮಾನ್ಯ ೨
ಮನೋನ್ಮನದಾಶ್ರಯ ಭಾನುಕೋಟಿ ಉದಯ
ದೀನ ಮಹಿಪತಿಗಿದೆ ಸಾಹ್ಯ ಅನುದಿನಿದೇ ಉಚ್ಛ್ರಾಯ ೩

*
ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ ಧ್ರುವ|
ಒಡೆದು ಹೇಳುವದಲ್ಲ ಹಿಡಿದು ತಾ ಕೊಡಲಿಕ್ಕಿಲ್ಲ
ಪಡೆದುಕೊಂಡವನೆ ಬಲ್ಲ ಗೂಡಿನ ಸೊಲ್ಲ ೧
ಸಕ್ಕರಿ ಸವಿದಂತೆ ಮೂಕ ಪ್ರಕಟಿಸೇನೆಂದರೆ ಸುಖ
ಯುಕುತಿಗೆ ಬಾರದು ನಿಶ್ಸಂಕ ಸುಖ ಅಲೌಕಿಕ ೨
ಮುನಿಜನರ ಹೆಜ್ಜೆಮೆಟ್ಟು ಏನೆಂದ್ಹೇಳಲಿ ನಾ ಗುಟ್ಟು
ಅನುದಿನ ಮಹಿಪತಿ ಗುಟ್ಟು ಘನ ಕೈ ಗೊಟ್ಟು ೩

೬೯೯
ಸ್ವಾನುಭವದ ಸುಖ ಸಾಧಿಸಿ ನೋಡಿರೋ ನೇಮದಿಂದ
ಘನ ಗುರು ಕೃಪೆಯಿಂದ ಅನುಭವಿಸಲು ಬ್ರಹ್ಮಾನಂದ ಧ್ರುವ|
ಶಿಖಾಮಧ್ಯದಲಿ ಪೂರ್ಣ ಸುಖಗರವುತಲ್ಯದೆ ಸಂತ್ರಾಧಾರಿ
ಸಕಲವೆಲ್ಲಕೆ ಸನ್ಮತವಾಗಿ ತೋರುವದೊಂದೇ ಪರಿ
ಶುಕಾದಿ ಮುನಿಗಳು ಪ್ರಕಟಿಸಿ ಹೇಳಿಹರು ಖೂನದೋರಿ
ಬೇಕಾದರೆ ಇದು ನೋಡಬೇಕು ಷಡುಚಕ್ರವೇರಿ ೧
ಸಾಮಾನ್ಯವಲ್ಲವಿದು ಸಹಸ್ರ ಕೋಟಿಗೊಬ್ಬ ಬಲ್ಲ ಖೂನ
ಕಾಮಾಂಧದೊಳಗಿದ್ದ ಮನುಜ ಪ್ರಾಣಿಗಳು ಬಲ್ಲವೇನ
ತಾಮಸಿಗಳಿಗಿದು ತಾರ್ಕಣ್ಯವಾಗುವದಲ್ಲ ಗಮ್ಯಸ್ಥಾನ
ಸ್ವಾಮಿ ಸದ್ಗುರು ದಯಮಾಡಿದರಹುದು ಸಮ್ಯಗಜ್ಞಾನ ೨
ಶಿರೋರತ್ನವಾಗಿ ವಂದಿಸಿಕೊಂಬುವದಿದೆಲ್ಲಕೆ ಪೂಜ್ಯ
ಹರುಷಗೈಸುವ ಪುಣ್ಯ ಪರಮ ಭಕ್ತರಿಗಿದೆವೆ ಸಾಯೋಜ್ಯ
ತರಳ ಮಹಿಪತಿಗಿದೆ ಸ್ವ ಸುಖದೋರುವ ಸುಸಾಮ್ರಾಜ್ಯ
ಶಿರದಲಿ ಕರವಿಟ್ಟು ತೋರಿದ ಗುರು ಭಾನುಕೋಟಿತೇಜ ೩

೬೯೮
ಸ್ವಾನುಭವದ ಸುಖ ಸಾಧಿಸಿ ನೋಡಿ
ತಾನಾಗದೇ ನಿಜಗೂಡಿ ಸ್ವಾನುಭವ ಧ್ರುವ|
ಮನದ ಕೊನಿಯಲ್ಯದ ಘನಸುಖದಾಟ
ಅನುಭವಕಿದು ಬಲು ನೀಟ
ಖೂನದೋರುವ ಘನ ಗುರುದಯ ನೋಟ
ಮುನಿಜನಕಾಗುವ ಪ್ರಗಟ ೧
ಸುರಿಯುತಲ್ಯದ ಸುಖ ಸಂತ್ರಾಧಾರಿ
ಇರುಳ ಹಗಲದೀ ಪರಿ
ಹರುಷಗೈಸುತ ಅನುದಿನ ನಿಜಸಾರಿ
ತೋರುತಲ್ಯದ ಘನ ಬೀರಿ ೨
ಸ್ವಹಿತ ಸಾಧನಕಿದು ಸವಿಸಾರ
ಮಹಾನುಭವದಾಗರ
ಮಹಿಪತಿಗಿದು ಮಾಡುವ ಮನೋಹರ
ಇಹಪರ ಘನ ಸಹಕಾರ ೩

೧೫೨
ಸ್ವಾಮಿ ತಪ್ಪಾರಿಸುವರೆ ನೀ ನಮ್ಮ
ಸುಮ್ಮನುಂಡಾಡುವ ಬಾಲಕ ನಿಮ್ಮ
ಅಮ್ಮ ಅಪ್ಪನೆಂದಾಡುದೆ ನಾ ತಮ್ಮ
ಕಂ ಕಿಮೆಂದಾಡಕರಿಯೆ ನಾವಮ್ಮ ೧
ಓದಿ ತಿಳಿಯಲರಿಯೆ ಶಾಸ್ತ್ರವೇದ
ಭೇದಿಸಲರಿಯೆ ನಾ ನಿಮ್ಮ ಬೋಧ
ಹಾದಿ ತಿಳಿಯುದೆ ಬಲು ತಾ ಅಗಾಧ
ಇದೆ ಪಾಲಿಸಬೇಕಯ್ಯ ಸುಪ್ರಸಾದ೨
ಭಕ್ತಿ ಮಾಡಲರಿಯೆ ನಿಮ್ಮ ದೃಢ
ಯುಕ್ತಿ ತಿಳಿಯಲರಿಯದೆ ನಾ ಮೂಢ
ಶಕ್ತಿ ಸಾಮಥ್ರ್ಯನ್ನೊಳು ನೋಡಬ್ಯಾಡ
ಯುಕ್ತಾಯುಕ್ತ ನೋಡದಿರು ಎನ್ನ ಕೂಡ೩
ಪತಿತಪಾವನನೆಂಬ ನಿನ್ನ ಬಿರುದು
ಎತ್ತ ಓಡಿಹೋಗಬಲ್ಲದದು
ಚಿತ್ತ ನೆಲೆಗೊಂಡು ಬಂದು ನಿಮ್ಮ ಬೆರೆದು
ಮತ್ತ ಒರೆದು ನೋಡುವದಿದೆ ಅರೆದು ೪
ಶರಣ ಹೊಕ್ಕ ಮ್ಯಾಲೆಲ್ಲಿಹುದೈಯ ಮರಣ
ಚರಣಕಮಲಕ್ಕೊಪ್ಪಿಸಿಹೆ ನಾ ಹರುಣ
ಅರಿತು ಮಾಡುವ ನಿಮ್ಮ ದಯ ಕರುಣ
ತರಳ ಮಹಿಪತಿ ನಿಮ್ಮಣುಗ ಪೂರ್ಣ ೫

೫೧೦
ಸ್ವಾಮಿ ನಮ್ಮ ದೇವದತ್ತ ಬ್ರಹ್ಮಾನಂದ ಅವಧೂತ
ಸಮಸ್ತಜನದಾತ ಬ್ರಹ್ಮಾದಿಗಳೊಂದಿತ ಧ್ರುವ|
ಕುಡಲಿಕ್ಕೆ ತಾ ಉದಾರಿ ಬಲು ದೊಡ್ಡ ಉಪಕಾರಿ
ಕಡೆಗಾಣಿಸುವ ಧೊರಿ ನಿಜ ನೀಡುತಿಹ್ಯ ಸಾರಿ
ಬಡವರಿಗೆ ಆಧಾರಿ ಭಕ್ತಜನ ಸಹಕಾರಿ
ಬೇಡುವದೊಂದೇ ಪರಿ ಮಾಡುತಿಹ್ಯ ಮನೋಹರಿ ೧
ಬೀರುತಿಹ್ಯ ನಿಜನೋಡಿ ಕರದಲ್ಲಭಯ ನೀಡಿ
ಗುರುತಿಟ್ಟಿದೆ ಸೂರ್ಯಾಡಿ ಶರಣರು ನಿಜಗೂಡಿ
ಅರುವ್ಹೆ ಅಂಜನ ಮಾಡಿ ಕುರುವ್ಹೆದೋರುದಿದರಡಿ
ಧರೆಯೊಳಿದೆ ಕೊಂಡಾಡಿ ಗುರುನಾಥನೆಂದು ಪಾಡಿ ೨
ಅನಾಥ ಬಂಧುನೀತ ದೀನದಯಾಳು ಸಾಕ್ಷಾತ
ಅನುದಿನದೆ ಪ್ರಖ್ಯಾತ ಘನಗುರು ಶ್ರೀನಾಥ
ಮನೋಭಾವ ಪೂರಿತ ಎನಗುಳ್ಳ ದೇವದತ್ತ
ದೀನ ಮಹಿಪತಿ ದಾತ ಭಾನುಕೋಟಿ ಉದಿತ ೩

೧೫೪
ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ
ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ಧ್ರುವ
ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ
ಸ್ವಾಮಿ ನಿಮ್ಮ ಭಯ ನಮ್ಮ ಪುಣ್ಯೋದಯ ೧
ಸ್ವಾಮಿ ನಿಮ್ಮ ಖೂನ ನಿಜಸ್ಥಾನ
ಸ್ವಾಮಿ ನಿಮ್ಮ ಜ್ಞಾನ ನಿಜಧ್ಯಾನ ೨
ಸ್ವಾಮಿ ನಿಮ್ಮ ನೋಟ ನಮ್ಮ ಮನದೂಟ
ಸ್ವಾಮಿ ನಿಮ್ಮ ಮಾಟ ನಮ್ಮ ಸುಖದಾಟ ೩
ಸ್ವಾಮಿ ನಿಮ್ಮ ನಾಮ ನಮ್ಮ ಅತಿಪ್ರೇಮ
ಸ್ವಾಮಿ ನಿಮ್ಮ ನೇಮ ನಮ್ಮ ನಿಜಾಶ್ರಮ ೪
ಸ್ವಾಮಿ ನಿಮ್ಮ ಸೋಹ್ಯ ನಮ್ಮ ನಿಜಾಶ್ರಯ
ಸ್ವಾಮಿ ನಿಮ್ಮ ಸಾಹ್ಯ ಮಹಿಪತಿ ಮನೋತ್ರಾಹ್ಯ ೫

೧೫೫
ಸ್ವಾಮಿ ನೀ ಎನಗಿರೆ ಧೀನಬಂಧು
ಭ್ರಮೆಗೊಂಬ ಸಾಯಾಸವ್ಯಾಕಿನ್ನೊಂದು ಧ್ರುವ
ನೀನಿರಲು ನಿಧಾನದ ಸುರಾಶಿ
ಹೆಣ್ಣು ಹೊನ್ನಿಗಿಡುವುದ್ಯಾಕಾಶಿ
ಅನುಭವಿಸುತಿರೆ ನೀ ಕೊಟ್ಟ ಭಾಸಿ
ಅನುಮಾನಿಸಲ್ಯಾಕೆ ಭ್ರಮಿಸಿ ೧
ಎನ್ನ ಸ್ವಹಿತಕಿರಲು ನೀನೆ ಸಾಹ್ಯ
ಇನ್ನೊಬ್ಬರಿಗೆದೆರುವದ್ಯಾಕೆ ಬಾಯಿ
ಚೆನ್ನಾಗಿದೆ ನೀನೆ ಎನಗಾಯುರ್ದಾಯ
ಇನ್ನೊಂದಕ ಯೋಚಿಸಲ್ಯಾಕುಪಾಯ ೨
ನೀನಾಗಿರೆ ಕಾಮಧೇನು ಕಲ್ಪವೃಕ್ಷ
ನನಗಿನ್ನೊಂದ್ಹಿಡಿಯಲ್ಯಾಕಪೇಕ್ಷ
ಭಾನುಕೋಟಿತೇಜವೆನಗೆ ಅಪೇಕ್ಷ
ಅನುದಿನ ಮಹಿಪತಿಗೆ ಸುಭಿಕ್ಷ ೩

೧೫೬
ಸ್ವಾಮಿ ನೀನಹುದೋ ಶ್ರೀಗುರು ಸಾರ್ವಭೌಮ
ನೇಮದಿಂದಲಿ ಹೊರೆವ ದಯಗುಣನಿಸ್ಸೀಮ ಧ್ರುವ
ಜಗತ್ರಯಕ ಜೀವಭಗತ ಜನಕಾವ
ಸುಗಮ ಸುಪಥವೀವ ಸುಗುಣ ಶ್ರೀದೇವ ೧
ಅನಾಥನಾಥ ಮುನಿಜನರ ದಾತ
ದೀನದಯಾಳು ನೀನಹುದು ಶ್ರೀನಾಥ೨
ನಿಜದಾಸರ ಪಕ್ಷ ಸುಜನರ ಸಂರಕ್ಷ
ಗಜವರ ಸಮೋಕ್ಷ ಭಜಕರಿಗೆ ಸುಭಿಕ್ಷ ೩
ತೇಜೋಮಯ ಸಾಂದ್ರ ನಿಜಸುಖ ಸಮುದ್ರ
ರಾಜಾಧಿರಾಜ ಮಹಾ ರಾಜರಾಜೇಂದ್ರ ೪
ಶರಣಜನಪಾಲ ಸಿರಿಯ ಸುಖಲೋಲ
ತಗಳ ಮಹಿಪತಿ ಸ್ವಾಮಿ ನೀನಹುದೊ ಕೃಪಾಲ ೫

೧೫೭
ಸ್ವಾಮಿ ನೀನೆ ಸಕಲಾಧಾರ ಸದ್ಗುರುದಾರ ಧ್ರುವ
ಅಣುರೇಣು ಪರಿಪೂರ್ಣ ನೀನೆ ಶ್ರೀನಾರಾಯಣ
ತನುಮನಕರಣ ಪ್ರಾಣದೊಳು ವ್ಯಾಪಕ
ಗುಣಜನಮನ ಸ್ಥಾನದೊಳು ನಿಜಾಧಿಷ್ಠಾನ
ನಾನಾ ಪರಿಯ ಖೂನ ನೀನೆ ಚೈತನ್ಯ ಘನ ೧
ಪಾರಾವಾರ ದೂರ ಸುರಜನರ ಮಂದಾರ
ಕರುಣಾಕರ ಸ್ಥಿರ ಪರಮ ಜ್ಞಾನ ಗಂಭೀರ
ಕರಿವರ ಶೂರ ದುರುಳ ಜನ ಸಂಹಾರ
ತರಣೋಪಾಯದ ಸಾರ ಗುರು ನೀನೆ ಸಾಕಾರ ೨
ಅನಾಥನಾಥ ದಾತ ನೀನೆ ವಿಶ್ವವಂದಿತ
ಗುಣಾತೀತ ಸ್ವತ:ಮುನಿಜನರ ಸ್ವಹಿತ
ಅನುಭವಾಮೃತಾಚ್ಚುತ ಅನುದಿನ ಸದೋದಿತ
ಭಾನುಕೋಟಿತೇಜ ತಾ ದೀನ ಮಹಿಪತಿ ದಾತ ೩

೧೫೩
ಸ್ವಾಮಿ ನೀನೆ ಸಾರ್ವಭೌಮ ಶ್ರೀ ರಘುರಾಮ
ಸೋಮಶೇಖರ ಪ್ರಿಯ ದಿವ್ಯ ನಿನ್ನ ನಾಮ ಧ್ರುವ
ಕಾಕುಸ್ಥತಿಲಕ ಕಾರುಣ್ಯನಿಧಿ ಕೃಪಾಲ
ಪ್ರಕಟ ಪ್ರಖ್ಯಾತಲಿಹ ಸತ್ಯಶೀಲ
ನಾಕಜರ ಸೆರೆಬಿಡಿಸ್ಯಾದೆ ಸಾನುಕೂಲ
ಸಕಲ ಸುಖದೀವ ಮೂಲೋಕಪಾಲ ೧
ಖರದೂಷಣಾರಿ ಶರಣಾಗತರ ಸಹಕಾರಿ
ಸರ್ವರಾಧಾರಿ ಕೋದಂಡ ಧಾರಿ
ದುರಿತ ದುಷ್ರ‍ಕತ ದುರುಳ ದುಷ್ಟ ಜನಸಂಹಾರಿ
ವರಪೂರ್ಣವೀವ ಪರಮ ಉದಾರಿ ೨
ಅನುದಿನದಲಿ ನಿನ್ನ ನಡಿನುಡಿಗಳೊಂದವೆ ನೇಮ
ಅನಂತಗುಣ ಪೂರ್ಣಾನಂದ ಮಹಮಹಿಮ
ದೀನ ಮಹಿಪತಿ ಅತ್ಮಾರಾಮ ಪೂರಿತ ಕಾಮ
ಭಾನುಕೋಟಿ ತೇಜ ಘನದಯ ನಿಸ್ಸೀಮ ೩

೧೫೮
ಸ್ವಾಮಿ ನೀನೆ ಸ್ವಹಿತ ಗುರುನಾಥ
ಬ್ರಹ್ಮಾನಂದ ಸದ್ಘನ ಸದೋದಿತ ಧ್ರುವ
ನೀನಹದೋ ಬಡವನಾಧಾರಿ
ಸಾನುಕೂಲ ನೀನೆವೆ ಪರೋಪರಿ
ಅನುದಿನದಲಿ ನೀ ಸಹಕಾರಿ
ಮನೋಹರ ಮೂರುತಿ ನೀ ಶ್ರೀ ಹರಿ ೧
ದಯಗುಣಕೆ ನಿಮ್ಮ ನಾ ಸರಿಗಾಣೆ
ತಾಯಿ ತಂದೆ ಸಕಲ ಬಂಧು ನೀನೆ
ತ್ರೈಲೋಕ್ಯವಂದ್ಯ ನೀ ದೇವನೆ
ಶ್ರೇಯ ಸುಖದಾಯಕ ಎನ್ನ ನೀನೆ ೨
ಶ್ರುತಿ ಸಾರುತಲ್ಯದ ನಿಮ್ಮ ಖ್ಯಾತಿ
ಸ್ತುತಿ ಮಾಡಲೇನು ನಾ ಮಂದಮತಿ
ಅತಿ ದೀನ ನಾ ನಿಮ್ಮ ಮಹಿಪತಿ
ಪ್ರತಿಪಾಲಕಹುದೋ ನೀ ಶ್ರೀಪತಿ ೩

೫೧೧
ಸ್ವಾಮಿ ಶ್ರೀಗುರುವಿರಲಿಕ್ಕೆ ಸಾಯಸವೆನಗಿನ್ಯಾಕೆ
ಗುರುನಾಮ ನಿಧಾನಿರಲಿಕ್ಕೆ ನನಗಿಲ್ಲೆಂಬುವದ್ಯಾಕೆ ಧ್ರುವ|
ಅನಾಥ ಬಂಧು ಅನುದಿನ ಎನಗಿರೆ ಅನುಕೂಲದ ಚಿಂತ್ಯಾಕೆ
ತನುಮನದೊಳು ತಾನೆತಾನಿರಲು ಅನುಮಾನಿಸಲಿನ್ಯಾಕೆ ೧
ದಾತನೊಬ್ಬ ಶ್ರೀನಾಥೆನಗಿರಲು ಯಾತಕೆ ಪರರ ದುರಾಸೆ
ಮಾತುಮಾತಿಗೆ ತೋರುವ ಸದ್ಗುರು ತೇಜೋಪುಣ್ಯದ ರಾಶಿ ೨
ಲೇಸಾಗೆನಗಿರೆ ಭಾಸ್ಕರ ಗುರುದಯೆ ವೇಷದೋರುವದಿನ್ಯಾಕೆ
ದಾಸ ಮಹಿಪತಿಗ್ಯನುದಿನ ಭಾಸುತಲಿರೆ ಕಾಸಿನ ಕಳವಳಿಕ್ಯಾಕೆ ೩

೫೧೨
ಸ್ವಾಮಿ ಸಗುಣ ನಿರ್ಗುಣ ಬಾರಯ್ಯ
ಬ್ರಹ್ಮಾನಂದ ಸುಖವು ದೋರಯ್ಯ ಧ್ರುವ|
ಕಣ್ಣು ಬಡೆಯುತದೆ ನಿಮ್ಮ ನೋಡೇನೆಂದು
ಪುಣ್ಯಚರಣ ಸುಪ್ರಭೆದೋರೋ ನೀ ಬಂದು
ಧನ್ಯಧನ್ಯಗೈಸುವದೋ ಕೃಪಾಸಿಂಧು
ಎನ್ನೊಡೆಯ ನೀನಹುದೋ ದೀನಬಂಧು ೧
ಅನುದಿನ ಸುಸೇವೆ ನಿಮ್ಮ ಮಾಡೇನೋ
ಕ್ಷಣಕ್ಕೊಮ್ಮೆ ಸ್ವರೂಪ ನಾನೋಡೇನೋ
ಘನ ಸುಖದೊಳು ನಾ ಬೆರೆದಾಡೇನೋ
ನೆನೆವಂಥ ದಾಸರ ನಿಮ್ಮ ಕೂಡೇನೋ ೨
ಹೃದಯದೊಳು ನಿಜವಾಗಬೇಕಿಗ
ಸದಾಸರ್ವದಾ ಮಾಡೋ ಏನ್ನೊಳೀವ್ಹಾಂಗ
ಪಾದಪದ್ಮಕ್ಯೋಗ್ಯ ಮಾಡೋ ಮಹಿಪತಿಗೆ
ಇದೆ ಪುಣ್ಯ ನೋಡಯ್ಯ ಕುಲಕೋಟಿಗೆ ೩

೫೧೩
ಸ್ವಾಮಿ ಸದ್ಗುರು ಘನಕೃಪೆಮಾಡೋ ನಿಮ್ಮ
ಕರುಣಲೆನ್ನ ನೋಡೋ
ಒಮ್ಮೆ ಶಿರದಲಭಯ ಪೂರ್ಣನೀಡೋ
ಬ್ರಹ್ಮಾನಂದಸುಖದೊಳಗಿಡೋ ೧
ಬಲು ಸೋಸಿದೆ ಜನ್ಮ ನಾ ಬಹಳ ಚಾಲವರಿದು
ತಾಳಿದೆ ಕ್ರಿಮಿಕುಲ
ನಿಲುಕಡೆ ಹೊಂದಲಿಲ್ಲೊಂದು ಸ್ಥಳ ಪಾಲಿಸಿನ್ನಾರೆ
ನೀ ದಯಾಳ ೨
ಹೇಳಬೇಕು ದುಃಖಾರಿನ್ನ ಮುಂದೆ ತೊಳಲಿ ಬಳಲಿ
ಜನ್ಮದಿ ನೊಂದು ಬಂದೆ
ತಿಳಿಯಲಿಲ್ಲವೋ ನಿಜ ಅಂದಿಗಿಂದೆ ಸುಳಹುದೋರೋ
ಇನ್ನಾದರೆ ತಂದೆ ೩
ತಪ್ಪು ಕ್ಷಮೆಯ ಮಾಡೋ ಸ್ವಾಮಿ ನಮ್ಮ ಪಾಪಿ
ದುರಾಚಾರಿಯು ನಾ ಪರಮ
ತಾಪತ್ರಯ ಖಂಡಿಸುವ ದಯ ನಿಮ್ಮ ಕೃಪೆಯುಳ್ಳ
ನೀ ಘನಮಹಿಮ ೪
ಕೊಡುಯೆನಗೆ ಸಜ್ಜನರ ಸಹವಾಸ ಅಡಿಗಡಿಗೆ
ಹೊರಿಯೋ ಸರ್ವೇಶ
ನೀಡೋ ನಿಮ್ಮ ಜ್ಞಾನುಪದೇಶ ಮಾಡೋ ಮಹಿಪತಿ
ಭವಭಯನಾಶ ೫

೫೧೪
ಸ್ವಾಮಿ ಸದ್ಗುರುದಯವೆ ತಾ ನಿಜ
ನೇಮ ಫ್ರಿಗಿದೇವೆ ಹಿತಗುಜ
ಸಮಸ್ತ ಜನರಿಗಿದೆ ಸುಬೀಜ
ಪ್ರೇಮವಿಟ್ಟವರಿಗ್ಹೊಳೆವದು ಸಹಜ ೧
ಗುರು ಉಪಾಸನೆ ಎಲ್ಲಕೆ ಮೇಲು
ಸುರಜನರಿಗಿದೊಂದೇ ಕೀಲು
ಅರಿತವರಿಗೆ ಮುಕ್ತಿ ಬಾಗಿಲು
ತ್ಯರ ತಿಳಿಯದವರಿಗಿದೇ ಸೋಲು ೨
ನಂಬಿ ನಡೆಯಬೇಕು ಸದ್ಗುರುಪಾದ
ಇಂದುದೋರಿಕೊಡುವದು ಸುಬೋಧ
ಗುಂಭಗುರುತಾಗಿದೋರುದು ಸ್ವಾದ
ಹಂಬಲಿಸಿಕೊಳಬೇಕು ಸುಪ್ರಸಾದ ೩
ಗುರುಮಾರ್ಗವೆಂಬುದೆ ಸಾಕ್ಷಾತ್ಕಾರ
ಸೂರೆಗೊಂಡು ಮ್ಯಾಲೆ ಸುಖಸಾಗರ
ಮರುಳ ಬಲ್ಲವೇನಿದರ ವಿಚಾರ
ಶರಣಜನರಿಗಿದೇ ಸಹಕಾರ ೪
ಗುರುಕೃಪೆಯಾದವಗೆ ಪ್ರಾಂಜಳ
ಸಾರಾಯ ಕೊಂಬುವನೆ ತಾ ವಿರಳ
ಅರಿಯೋ ಮಹಿಪತಿ ನಿನ್ನೊಳು ಸಕಳ
ಹರುಷವಾಗೆದಿಂತು ಈ ಸುಖಕಲ್ಲೋಳ ೫

೫೧೫
ಸ್ವಾಮಿ ಸದ್ಗುರುವೆ ನಿಮ್ಮ ದಯದಕ್ಷಿ ಸುಭಿಕ್ಷ ದ್ರುವ
ನಿಮ್ಮ ಅಭಯ ಹಸ್ತ ಬ್ರಹ್ಮಾನಂದದ ಸುಪ್ರಸ್ತ
ನಮ್ಮ ಜೀವಕೆ ಪ್ರಶಸ್ತ ನಿಮ್ಮಿಂದೆ ಸ್ವಸ್ತ ೧
ನಿಮ್ಮ ದಯಕರುಣ ಸಮ್ಯಜ್ಞಾನದ ಸ್ಫುರಣ
ನಮ್ಮ ಜನ್ಮದುದ್ಧರಣ ನಿಮ್ಮಿಂದ ಪೂರ್ಣ ೨
ಸಾಹ್ಯಮಾಡುವ ನಿಮ್ಮ ಬಾಹ್ಯಾಂತ್ರದಲಿ ಸಂಭ್ರಮ
ಮಹಿಪತಿಗಾನಂದೋ ಬ್ರಹ್ಮ ಇಹಪರ ಸುಪ್ರೇಮ ೩

೫೧೬
ಸ್ವಾಮಿ ಸದ್ಗುರುವೆ ನಿಮ್ಮ ಪಾದಕಮಲಕೆರಗುವೆ ಧ್ರುವ
ಹಿಂಡುದೈವಕೆ ಪ್ರಚಂಡಮೂರ್ತಿ
ಕೊಂಡಾಡುವ ನಿಮ್ಮ ಅಖಂಡ ಕೀರ್ತಿ ೧
ಭಾವಭೋಕ್ತ ದೇವೋತ್ತಮ
ಸೇವಿಸುವೆ ನಿಮ್ಮ ದಿವ್ಯನಾಮ ೨
ಜಯ ಜಯ ಆನಂದ ಕಂದ
ಧ್ಯಾಯಿಸುವೆ ನಿಮ್ಮ ಪಾದಾರವಿಂದ ೩
ದಯಾಸಿಂಧು ದೇವ ದೇವ
ಕಾಯೋ ಮಹಿಪತಿ ಪ್ರಾಣಜೀವ ೪

೧೫೯
ಸ್ವಾಮಿ ಸೀತಾರಾಮ ಪತಿತ ಪಾವನ ನಾಮ ಧ್ರುವ
ಅಮಿತವಾದ ಗುಣ ನಿರ್ಮಳಾಚರಣಿ
ಕಮಲಭವಾರ್ಚಿತ ಕಾರ್ಮುಕಪಾಣಿ
ನೇಮದಿಂದಾಡುವ ಅಮೃತವಾಣಿ ೧
ಸಮಸ್ತ ಹೃದಯಾಂತ್ರ ವಿಮಲಸುಚರಿತ್ರ
ಸುಮನ ಸುಗಾತ್ರ ಅಮರಜ ನೇತ್ರ
ಸೋಮಶೇಖರಪ್ರಿಯ ಪುಣ್ಯಪವಿತ್ರ ೨
ಸಾಹ್ಯಸಹಕಾರ ಬಾಹ್ಯಾಂತ್ರ ಸ್ಥಿರ
ಸ್ವಹಿತದಾಗರ ಮಹಿಪತಿ ಮನೋಹರ
ಮಹಾಮಹಿಯನ್ನುಳ್ಳನಹುದೋ ಉದಾರ ೩

೧೬೫
ಹಣ್ಣು ಕೊಳ್ಳಿರೋ ಪುಣ್ಯವಂತರು ಹಣ್ಣು ಕೊಳ್ಳಿರೋ
ಹಣ್ಣು ಕೊಳ್ಳಿರಯ್ಯಾನ್ನಂತ ಗುಣಮಹಿಮೆಯುಳ್ಳ ಧ್ರುವ
ಹಣ್ಣು ಬಂದದೆ ನೋಡ್ಯಾನಂದೋ ಬ್ರಹ್ಮಾಪಾಟಿಯಿಂದ
ಕಣ್ದೆರದು ಕೊಂಡವರು ಧನ್ಯ ಧನ್ಯರೊ ೧
ಹಣ್ಣಿಗೊಂದು ಹೆಸರು ಇಲ್ಲ ಇನ್ನೊಂದು ಕೊಸರು ಇಲ್ಲ
ಚೆನ್ನಾಗಿ ಉನ್ಮನವಾಗಿ ಹಣ್ಣ ೨
ಅಣ್ಣಗಳ ಬಂದು ಕಣ್ಣುಗೆಟ್ಟು ಹೋಗಬ್ಯಾಡಿ
ಸಣ್ಣ ದೊಡ್ಡರೊಳಗಿಹ್ಯ ಹಣ್ಣ ೩
ಉತ್ತುಮರುದ್ದೇಶವಾಗಿ ಮತ್ತೆ ಹತ್ತುಭಾರೆ
ತುತ್ತಿಗೊಮ್ಮೆ ಬಾಯಿದೆರೆವ ಹಣ್ಣು ೪
ಬಿತ್ತಿಬೆಳೆದ ಫಲವಲ್ಲ ಹೊತ್ತುಮಾರುವದಲ್ಲ
ಚಿತ್ತದೊಳಗ್ಹತ್ತಿಲಿಹ ಹಣ್ಣು ೫
ನಾಲ್ಕು ಮಂದಿ ತಿಳಿಯದೆ ಹೋಕಹೋದರಾರು ಮಂದಿ
ಪುಕ್ಕಸಾಟಿ ದಣಿದರ್ಹದಿನೆಂಟು ಮಂದಿ ಕಾಣಿರೋ ೬
ಹಣ್ಣು ಕೊಂಡು ಮಹಿಪತಿಯ ಪುಣ್ಯ ಪೂರ್ವಾಜಿತ
ತಾನೆಧನ್ಯ ಧನ್ಯವಾದ ಗುರುಕೃಪೆಯಿಂದ ಕಾಣಿರೋ ೭

೫೮೩
ಹತ್ತಿಲಿಹ ವಸ್ತುನೋಡೊ ಮನವೆ
ನಿತ್ಯ ನಿಜನಿರ್ಗುಣವ ಕೂಡೊ ಮನವೆ ಧ್ರುವ|
ಅತ್ತಲಿತ್ತಲಾಗದಿರು ಮನವೆ
ಚಿತ್ತ ಚಂಚಲ ಮಾಡದಿರೆನ್ನ ಮನವೆ
ಉತ್ತುಮ ಸುಪಥ ನೋಡು ಮನವೆ
ನೆತ್ತಿಯೊಳಿಹ ಸುವಸ್ತು ಕೂಡೊ ಮನವೆ ೧
ಹೋಕಹೋಗದಂತೆ ಎನ್ನ ಮನವೆ
ಏಕರಸವಾಗಿ ಕೂಡೊ ಎನ್ನ ಮನವೆ
ನಾಲ್ಕು ಶೂನ್ಯವ ಮೆಟ್ಟಿ ನೋಡು ಮನವೆ
ಜೋಕೆಯಿಂದ ಜ್ಯೋತಿರ್ಮಯ ಕೂಡೊ ಮನವೆ ೨
ಧನ್ಯವಿದು ರಾಜಯೋಗಮನವೆ
ಭಿನ್ನವಿಲ್ಲದೆ ಬೆರೆದು ಕೂಡೊ ಮನವೆ
ಚೆನ್ನಾಗಿ ಚಿನ್ಮಯ ನೋಡು ಮನವೆ
ಅನ್ಯಪಥವಿನ್ಯಾತಕ ನೋಡು ಮನವೆ ೩
ಗರ್ವಗುಣ ಹಿಡಿಯದಿರು ಮನವೆ
ನಿರ್ವಿಕಲ್ಪನ ತಿಳಿದು ನೋಡು ಮನವೆ
ಪೂರ್ವಪುಣ್ಯಹಾದಿ ಇದು ಮನವೆ
ಸರ್ವರೊಳು ವಸ್ತುಮಯ ಒಂದೆ ಮನವೆ ೪
ದೃಷ್ಟಿಸಿ ಆತ್ಮನ ನೋಡು ಮನವೆ
ಪುಷ್ಟವಾಗಿ ಘನದೋರುವದು ಮನವೆ
ಭ್ರಷ್ಟವಾಗಿ ಬಾಳಬ್ಯಾಡ ಮನವೆ
ನಿಷ್ಠನಾಗಿ ನಿಜನೆಲೆಯಗೊಳ್ಳ ಮನವೆ ೫
ಏರಿ ಆರುಚಕ್ರ ನೋಡು ಮನವೆ
ಪರಮಾನಂದ ಸುಪಥ ಕೂಡೊ ಮನವೆ
ಆರು ಅರಿಯದ ಹಾದಿ ಮನವೆ
ತೋರಿಕೊಡುವ ಸದ್ಗುರು ಎನ್ನ ಮನವೆ ೬
ಹರಿಭಕ್ತಿಯೊಳಗಿರು ಮನವೆ
ಸಿರಿ ಸದ್ಗತಿ ಸುಖವ ಕೂಡೊ ಮನವೆ
ಗುರುವಾಕ್ಯ ನಂಬಿ ನಡೆ ಮನವೆ
ಪರಲೋಕಕ್ಕೆ ಸೋಪಾನವಿದು ಮನವೆ ೭
ಪರದ್ರವ್ಯಗಲ್ಪದಿರು ಮನವೆ
ಪರಸತಿಯ ನೋಡದಿರೆನ್ನ ಮನವೆ
ಪರರ ನಿಂದ್ಯ ಮಾಡದಿರು ಮನವೆ
ದಾರಿ ಹೋಗದಿರು ದುಷ್ಟರ ನೀ ಮನವೆ ೮
ಸಜ್ಜನರ ಸಂಗ ಮಾಡೊ ಮನವೆ
ಹೆಜ್ಜೆವಿಡಿದು ಪರಲೋಕ ಕೂಡೊ ಮನವೆ
ಭೆಜ್ಜರಿಕೆ ಹಿಡಿಯೊ ಎನ್ನ ಮನವೆ
ದುರ್ಜನರ ಸಂಗ ಮಾಡಬ್ಯಾಡೊ ಮನವೆ ೯
ಕಂಗಳ ತೆರೆದು ನೋಡು ಮನವೆ
ಮಂಗಳಾತ್ಮನ ಶ್ರೀಪಾದ ಕೂಡೊ ಮನವೆ
ಹಿಂಗದಂತೆ ಕೂಡೊ ಬ್ಯಾಗೆ ಮನವೆ
ಗಂಗೆಯೊಳು ಜಲಬೆರೆದಂತೆ ಮನವೆ ೧೦
ಭೇದ ಬುದ್ಧಿಯ ಮಾಡಬ್ಯಾಡ ಮನವೆ
ಸಾಧುಸಂತರ ಸುಬೋಧ ಕೇಳು ಮನವೆ
ಭೇದಿಸಿ ತಿಳಿದುನೋಡು ಮನವೆ
ಸದಮಲ ಬ್ರಹ್ಮ ಸೂಸುತಿದೆ ಮನವೆ ೧೧
ಯುಕ್ತಿ ನಿನಗಿದು ನೋಡು ಮನವೆ
ಭಕ್ತವತ್ಸಲ ಸ್ಮರಿಸು ಮನವೆ
ಮುಕ್ತಿಯಿಂದಧಿಕಸುಖ ಮನವೆ
ಭಕ್ತಿರಸದೊಳು ಮುಳಗ್ಯಾಡು ಮನವೆ ೧೨
ಲೇಸು ಲೇಸು ಮಹಿಪತಿ ಸು ಮನವೆ
ದಾಸನಾಗಿರುವ ವಾಸುದೇವನ ಮನವೆ
ಭಾಸಿ ಪಾಲಿಪನ ಕೂಡೊ ಎನ್ನ ಮನವೆ
ಭಾಸ್ಕರ ಮೂರ್ತಿಯ ನೋಡು ಮನವೆ ೧೩

೭೦೩
ಹಬ್ಬವೆನಗಿಂದು ಧರೆಯೊಳು ನೋಡಿ
ಇಬ್ಬರೊಂದಾದ ನೆಲೆನಿಜಗೂಡಿ
ಉಬ್ಬಿ ಉನ್ಮನವಾಗಿ ಎನ್ನೊಳು
ಕೊಬ್ಬಿದೆನು ಘನಸುಖ ಬೆರದಾಡಿ ೧
ಉಬ್ಬಸೆನಗಿನ್ನು ಹಿಂಗಿತು ನೋಡಿ
ಹಬ್ಬದೂಟದ ಸವಿರಸಗೂಡಿ
ಹಬ್ಬಿಹವಣಿಸಿ ಬೀಳುವ
ಗರ್ಭಪಾಶವನೆಗಳೆದೆನು ಈಡ್ಯಾಡಿ ೨
ಹಬ್ಬವಾಯಿತು ಮಹಿಪತಿಗಿಂದು
ಒಬ್ಬನಿಜವಾದ ಗುರು ಕೃಪಾಸಿಂಧು
ಹಬ್ಬಹರುಷದಿ ನೆಲೆನಿಭಗೊಂಡಿನ್ನು
ಶೋಭಿಸಿತು ಶುಭಕರ ದಿವಸಿಂದು ೩

೧೬೬
ಹರಿ ನಂಬಿದವರಿಗೆ ಸರಿಯೆ ಜಗದೊಳು
ಹರಿದಾಸಾದವಗೆ ಸಕಲ ಮಾನ್ಯವಗೆ ಧ್ರುವ
ಹರಿ ಜ್ಞಾನವುಳ್ಳವಗೆ ದಣಿವಿಕೆಲ್ಲಿಹದವಗೆ
ಹರಿಧ್ಯಾನ ಉಳ್ಳವಗೆ ತಾಂ ದುರಿತವೆಲ್ಲಿಹದವಗೆ ೧
ಹರಿನಾಮ ಉಳ್ಳವಿಗೆ ನಾಸ್ತಿಕವೆಲ್ಲಿಹದವಗೆ
ಹರಿ ದಯುಳ್ಳವಗೆ ದನ್ಯವೆಲ್ಲಿಹದವಗೆ ೨
ಹರಿಯ ಭಾವಿಕರಿಗೆ ಭವವುಂಟೆ ಅವಗೆ
ಹರಿ ಭಕ್ತಿಯುಳ್ಳವಗೆ ತಾ ಭಯ ವೆಲ್ಲಿಹದವಗೆ ೩
ಹರಿದಾಸರದಾಸಾದ ಮಹಿಪತಿಗೆ ಸರಿಯುಂಟೆ
ಪೂರ್ವಪುಣ್ಯದ ಫಲಶ್ರುತಿಗೆ ೪

೧೬೮
ಹರಿ ನಿನ್ನ ಭಕುತಿಗುನ್ಮತ ಬಿಡಬೇಕು
ಗುರು ಹೇಳುವ ಮಾತು ಕೈಗೂಡಬೇಕು ಧ್ರುವ
ಕಾಮೋನ್ಮತ್ತಗೆಲ್ಲಿಹದೊ ನಿಜಭಕ್ತಿ
ನೇಮ ಉಂಟೆ ಪರಾಮರಿಸುವ ಶಕ್ತಿ
ಕೋಮಲತಿಯರ ಕಂಡು ಕಳವಳಾದ್ಯುಕ್ತಿ
ಪಾಮರಗಳಿಗೆಲ್ಲಿಹ್ಯದೊ ವಿರಕ್ತಿ ೧
ಧನೋನ್ಮತ್ತಗೆಲ್ಲಿಹುದೊ ನಿಜಧ್ಯಾನ
ಕಾಣನೆಂದಿಗೆ ಕಣ್ದೆರದು ತಾ ಖೂನ
ಹೆಣ್ಣು ಹೊನ್ನಿನ ಮ್ಯಾಲೆ ಇಟ್ಟಿಹ ಜೀವ ಪ್ರಾಣ
ಹೀನ ಮನುಜರಿಗೆಲ್ಲಿಹುದೊ ಸುಜ್ಞಾನ ೨
ಉನ್ಮತ ಹೋದರೆ ಸನ್ಮತದಿಂದ
ತನ್ಯಯಾಗುವರು ಸದ್ಘನ ಕೃಪೆಯಿಂದ
ಉನ್ಮನಾಗುವಂತೆ ನೋಡೋ ಮುಕುಂದ
ಚಿಣ್ಣ ಮಹಿಪತಿಗೆ ಸದ್ಬೋಧ ಆನಂದ ೩

೧೭೭
ಹರಿ ಹರಿ ಎನ್ನಿ ಸಿರಿಲೋಲ ಎನ್ನಿ ಧ್ರುವ
ಹರಿ ಹರಿ ಎನ್ನಿ ಹರಿ ಹರಿ ಎನ್ನಿ
ಹರಿ ಎಂದು ಮನದೊಳು ಸ್ಮರಿಸುವ ಬನ್ನಿ ೧
ಹರಿ ಎಂದು ಪಡೆದ ಪ್ರಹ್ಲಾದ ಪ್ರತ್ಯಕ್ಷ
ಹರಿ ಎಂದು ಪಾಂಡವರಿಗಾದ ಸುಪಕ್ಷ ೨
ಹರಿ ಎಂದು ಉಪಮನ್ಯು ಪಡೆದ ಸುಕಾಲ
ಹರಿ ಎಂದು ಧ್ರುವ ಏರಿದ ಅಢÀಳ ೩
ಹರಿ ಎಂದು ಮುನಿಜನರಾದರು ಧನ್ಯ
ಹರಿ ಎಂದವರಿಗೆ ಸರ್ವವು ಮಾನ್ಯ ೪
ಹರಿ ಹರಿ ಎಂದು ಕೊಂಡಾಡುವ ಬನ್ನಿ
ಹರಿ ಮಹಿಪತಿ ಗುರು ತಾಯಿ ತಂದ್ಯೆನ್ನಿ ೫

೧೮೧
ಹರಿ ಹರಿ ಹರಿ ಹರಿ ಹರಿಯೆಂದೆನ್ನಿ
ಹರಿಸ್ಮರಣೆ ಪೂರಣ ಕರತನ್ನಿ ಧ್ರುವ
ಕರತನ್ನಿರೊ ವರಗುರು ಕೃಪೆಯಿಂದ
ಗುರುವರ ಮೂರುತಿ ಕರುಣಾನಂದ ೧
ಕರುಣಿಸಿ ನೋಡಲು ಬಾಹುದು ಪುಣ್ಯ
ಶರಣ ಜನರಿಗಿದು ತಾರ್ಕಣ್ಯ ೨
ತಾರ್ಕಣ್ಯಂಬುದು ತರ್ಕರಹಿತ
ಸರ್ಕನೆ ತಿಳಿವದು ತನ್ನೊಳು ಗುರುತ ೩
ಗುರ್ತವಾಗಲು ನಿಜ ಹಿತಾರ್ಥ
ಅರ್ತವಗಿದು ಸ್ವಸುಖ ಪರಮಾರ್ಥ ೪
ಪರಮಾರ್ಥವು ಪರಗತಿ ಸಾಧನ
ಪರಲೋಕಕೆ ಐದುವ ಸೊಪಾನ ೫
ಸೋಪಾನವೆ ಸುಲ್ಲಭ ಸುಪಥ
ಉಪಾಯದಲಿ ತಿಳಿಯಲು ಸ್ವಹಿತ ೬
ಸ್ವಹಿತ ಮಾರಿಕೊಂಬುದೇ ಸುಖ
ಸಾಹ್ಯ ಮಾಡುವ ಶ್ರೀ ಗುರುಕುಲತಿಲಕಾ ೭
ಶ್ರೀಗುರು ಸೇವೆಯ ಮಾಡಿರೊ ಬ್ಯಾಗ
ಜಗದೊಳಗಿದು ಮಹಾ ಪುಣ್ಯದ ಯೋಗ ೮
ಯೋಗವೆ ಮಹಾ ನಿಜ ಭಕ್ತರ ಪ್ರಾಣ
ಸುಗಮ ಸುಪಥ ಸದ್ಗತಿ ಸಾಧನ ೯
ಸಾಧನ ಪಡೆವದು ಗುರುದಯ ಕರುಣ
ಸದಮಲ ಸುಖ ಸುಜ್ಞಾನದ ಸ್ಪುರಣ೧೦
ಸ್ಪುರಣ ಸುಫಲಿತ ಸುಜನರ ಹೃದಯ
ಸುರ ಮುನಿ ಜನರಾನಂದದ ಉದಯ ೧೧
ಉದಯವಾಯಿತು ಮಹಿಪತಿ ಮನದೊಳಗೆ
ಸದೋದಿತವಾಯಿತು ಗುರುಕೃಪೆಲೆನಗೆ ೧೨
ಎನ್ನೊಳು ದೋರಿತಾನಂದದಲಹರಿ
ತನ್ನಿಂದಲಿ ತಾನೊಲಿದ ಶ್ರೀ ಹರಿ ೧೩

೧೮೦
ಹರಿ ಹರಿ ಹರಿ ಹರಿ ಹರಿಯೆನಬೇಕು
ಹರಿ ಸ್ಮರಣೆಯೋಳನುದಿನವಿರಬೇಕು ಧ್ರುವ
ಹರಿಯೇ ಶ್ರೀ ಪರಬ್ರಹ್ಮೆನಬೇಕು
ಹರಿ ಪರಂದೈವೆವೆಂದರಿಬೇಕು
ಹರಿಯೇ ತಾ ಮನದೈವೆನಬೇಕು
ಹರಿ ಋಷಿ ಮುನಿಕುಲಗೋತ್ರೆನಬೇಕು ೧
ಹರಿಯೇ ತಾಯಿತಂದೆನಬೇಕು
ಹರಿಯೇ ನಿಜ ಬಂಧುಬಳಗೆನಬೇಕು
ಹರಿಯೇ ಆಪ್ತ ಮೈತ್ರೆನಬೇಕು
ಹರಿಕುಲಕೋಟೀ ಬಳಗೆನಬೇಕು ೨
ಹರಿಯೇ ಸಲಹುವ ದೊರೆಯನಬೇಕು
ಹರಿ ಸುಖ ಸೌಖ್ಯದ ಸಿರಿಯೆನಬೇಕು
ಹರಿ ನಾಮವೆ ಧನದ್ರವ್ಯೆನಬೇಕು
ಹರಿಸ್ಮರಣೆಯು ಸಂಪದವೆನಬೇಕು ೩
ಹರಿದಾಸರ ಸಂಗದಲಿರಬೇಕು
ಹರಿಭಕ್ತರ ಅನುಸರಿಸಿರಬೇಕು
ಹರಿಚರಣದಿ ರತಿಮನವಿಡಬೇಕು
ಹರಿ ನಿಜರೂಪವ ನೋಡಲಿಬೇಕು ೪
ಹರಿ ಮಹಿಮೆಯ ಕೊಂಡಾಡಲಿಬೇಕು
ಹರಿಸ್ತುತಿಸ್ತವನ ಪಾಡಲಿಬೇಕು
ಹರಿತಾರಕ ಪರಬ್ರಹ್ಮೆನಬೇಕು
ಹರಿ ಸರುವೋತ್ತಮ ಸ್ವಾಮೆನಬೇಕು ೫
ಹರಿಯೇ ಸಕಲ ತಾ ಧರ್ಮನಬೇಕು
ಹರಿ ಸರ್ವಮಯ ಪುಣ್ಯಕ್ಷೇತ್ರೆನಬೇಕು
ಹರಿಯೇ ಇಹಪರ ಪೂರ್ಣೆನಬೇಕು
ಹರಿ ಸದೋದಿತ ಸಹಕಾರೆನಬೇಕು ೬
ಹರಿ ಬಾಹ್ಯಾಂತರೇಕೋಮಯವೆನಬೇಕು
ಹರಿ ಸಕಲವು ವ್ಯಾಪಕವೆನಬೇಕು
ಹರಿಯೇ ಶ್ರೀ ಪರಮಾತ್ಮೆನಬೇಕು
ಹರಿ ಮಹಿಪತಿ ಸದ್ಗತಿಯೆನಬೇಕು ೭

೧೭೯
ಹರಿ ಹರಿ ಹರಿಯೆನ್ನಿ ಹರಿಯ ನೆನವಿಗೊಮ್ಮೆ ತನ್ನಿ ಧ್ರುವ
ಹಿಡಿದು ನಿಜ ಒಂದು ¥ಥ ಪಡೆಯಬೇಕು ಸ್ವಹಿತ
ನೋಡಿ ಗೂಢಿನೂಳು ಗುರುತ ಕೊಡುವ ನೋಡಿ ಗುರುನಾಥ
ಒಡಯನಹುದಯ್ಯನೀತ ಪೊಡವಿಯೊಳು ಶ್ರೀನಾಥ
ಮಾಡಿ ಭಕ್ತಿ ಏಕಚಿತ್ತ ಕೂಡಿ ಜ್ಞಾನಸನ್ಮತ ೧
ಹಿಡಿದು ನೀವು ಗುರುಪಾದ ಮಾಡಬ್ಯಾಡಿ ಭೇದ
ಕಡಿಯಬೇಕು ಕಾಮಕ್ರೋಧ ಕೂಡಿ ನಿಜಸುಭೋದ
ನೋಡಿ ಸ್ವಾನುಭವದ ಬೋಧ ಗೂಢಗುಪ್ತವಾಗಿಹ್ಯದ
ಕೊಂಡಾಡುತಿಹ್ಯ ವೇದ ಬಿಡದೆ ಮಹಿಮೆ ನಿರ್ಗುಣದ ೨
ನಾವು ನೀವುವೆಂಬ ನುಡಿ ಗೋವಿಸುವದೀಡ್ಯಾಡಿ
ಹ್ಯಾವ ಹೆಮ್ಮೆಹಿಡಿಯಬ್ಯಾಡಿ ಭಾವ ಬಲಿದು ಪೂರ್ಣ ನೋಡಿ
ಕಾವ ಕರುಣನ ಕೂಡಿ ಭವಬಂಧನ ನೀಗಿ ಬಿಡಿ
ಪಾವನ್ನವಾದ ನೋಡಿ ಮಹಿಪತಿ ನಿಜಗೂಡಿ ೩

೧೭೮
ಹರಿ ಹರಿಯೆಂದು ನೆನೆಯೋ
ಮರಿಯದೆ ಮನುಜ ಧ್ರುವ
ನಡೆಯುತ ನುಡಿಯುತ ನಡೆ ನುಡಿಯೊಳಗೆ
ಪೊಡವಿಧರನ ಮಹಿಮೆಯ ಕೊಂಡಾಡುತ
ಇಡವುತ ತೊಡವುತ ಮುಡವುತ ಮನದೊಳು
ಬಿಡದೆ ಸ್ಮರಸೊ ನೀ ಅಡಿ ಗಡಿಗೊಮ್ಮೆ ೧
ಉಣುತ ಉಡುತನ್ನೋದಕ ಕೊಳುತ
ವನಿತಯರೊಡಗೂಡಿ ಘನಸುಖ ಪಡೆಯುತ
ಅನಭದಿಂದಾನಂದದಿ ನೆನೆಯೋ
ತನುಮನದೊಳು ನೀ ಕ್ಷಣಕ್ಷಣಕೊಮ್ಮೆ ೨
ಏಳುತ ಕೂಡುತ ಮಲಗುತ ನೆನೆಯೋ
ಹಲವು ಪರಿಲಿ ಶ್ರೀ ಹರಿ ಸರ್ವೋತ್ತಮ
ನೆಲೆಗೊಂಡಿರೋ ಮಹಿಪತಿ ನಿಜನಾಮವ
ಸಲಹುತ ಸ್ವಾಮಿ ಶ್ರೀಗುರು ಶ್ರೀಪತಿಯ ೩

೧೬೭
ಹರಿನಾಮ ಘೋಷ ಧ್ರುವ
ಎಲ್ಲಿ ಶ್ರೀಹರಿನಾಮ ಘೋಷ
ಅಲ್ಲಿ ಸಕಲ ಸುಖ ಸಂತೋಷ
ಸುಲಭಲಿಹುದು ಭವಭಯದ ನಾಶ
ಹರಿನಾಮ ಘೋಷ ೧
ಹರಸುವದಾನಂದದ ಹರುಷ
ಹರಿಸುವದು ಕಲಿಮಲ ಕಲುಷ
ತ್ವರಿತೋಡಿಸುವದು ಮಹಾಪಾತಕ ದೋಷ
ಹರಿನಾಮ ಘೋಷ ೨
ಸ್ವಹಿತ ಸಾಧನದ ಸುಉಪದೇಶ
ಬಾಹ್ಯಾಂತರದೋರುವ ಪ್ರಕಾಶ
ಮಹಿಪತಿಗಿದೆ ನಿತ್ಯವನುಭವದುಲ್ಹಾಸ
ಹರಿನಾಮ ಘೋಷ ೩

೧೬೯
ಹರಿಭಕುತರ ದರುಶನವು ಅತಿಹರುಷವು ಧ್ರುವ
ಹರಿ ನೆನೆವರಾ ನೆರಿಯು ನಿಧಾನದಾ ಕೆರೆಯು
ಹರಿ ಸ್ಮರಿಸುವರ ಮರಿಯು ವಜ್ರವರಿಯು
ಹರಿ ಭಜಿಸುವರ ಸರಿಯು ನಿಜಘನಾತ್ಮದ ಝರಿಯು
ಹರಿ ಮಹಿಪರ ಕರಿಯು ಪರಮಾನಂದದ ತೆರಿಯು ೧
ಹರಿಶರಣರ ನುಡಿಯು ಕರುಣದಮೃತಧ್ವನಿಯು
ಹರಿಯದಾಸರ ನಡೆಯು ನಿಲಕಡೆಯು
ಹರಿಭಕ್ತರಿದ್ದೆಡೆಯು ಪುಣ್ಯಕ್ಷೇತ್ರದ ತಡಿಯು
ಹರಿಮಹಿಮರ ಕಡಿಯು ಕ್ಯಾದಿಗ್ಹೊಡಿಯು ೨
ಹರಿಭಕ್ತರ ಸಂಗ ಸ್ನಾನಗಂಗ ತುಂಗ
ಹರಿಮಹಿಮರ ಅಂಗ ಅಂತರಂಗ
ಹರಿಪರಮಾನಂದ ಗುರು ಕರುಣಾಕೃಪಾಂಗ
ತರಳ ಮಹಿಪತಿ ಭವಭಯವು ಭಂಗ ೩

೧೭೦
ಹರಿಯನರಿಯದ ಜನುಮ ಧೆರೆಯೊಳಗಧಮಾಧಮ
ಹರಿಯ ನೆನೆಯದ ನರನು ಪಾಮರನು ಧ್ರುವ
ಹರಿಗೆ ನಮಿಸದ ಸಿರವು ತೋರುವ ಬೆಚ್ಚಿನ ತೆರವು
ಹರಿಗೆ ವಂದಿಸದ್ಹಣಿಯು ಹುಳಕ ಮಣಿಯು
ಹರಿಗೆ ಮುಗಿಯದ ಕೈಯು ಮುರುಕ ಕೀಲಿಯ ಕೈಯು
ಹರಿ(ಯ) ಕೊಂಡಾಡುವ ನಾಲಿಗೆ ಒಡಕ ಸೊಲಿಗೆಯ ೧
ಹರಿಯ ಸ್ತುತಿಸದ ಮುಖ ಚೀರುವ ಚಿಮ್ಮಡಿಯ ಮುಖವು
ಹರಿಕಥೆ ಕೇಳದ ಕಿವಿಯು ಹಾಳುಗವಿಯು
ಹರಿಯ ನೋಡದ ಕಣ್ಣು ತೋರುವ ನವಲ್ಗರಿಗಣ್ಣು
ಹರಿಯ ಆರಾಧಿಸದ ಮನವು ಹೀನತನವು ೨
ಹರಿಯ ಸೇವೆಗೊದಗದ ಕಾಲು ಮುರುಕ ಹೊರಸಿನ ಕಾಲು
ಹರಿಗೆ ಮಾಡದ ಭಕ್ತಿ ಮೂಢ ಯುಕ್ತಿ
ಹರಿಯೆ ಶ್ರೀಗುರುವೆಂದು ಗುರುವೆ ಪರದೈವವೆಂದು
ಸಲೆಮೊರೆಹೊಕ್ಕಿಹ ಮೂಢ ಮಹಿಪತಿಯ ೩

೧೭೧
ಹರಿಯನರಿಯದಿಹ್ಯ ನರಜನ್ಮಾವ್ಯಾಕೆ
ಪರಬ್ರಹ್ಮವರಿಯದ ಬರೆ ಬ್ರಾಹ್ಮಣವ್ಯಾಕೆ ಧ್ರುವ
ಹರಿಃ ಓಂ ತತ್ಸದಿತಿಯೆಂಬ ಶ್ರೀ ಹರಿ ವಾಕ್ಯವರಿಯದೆ
ಬರುದೆ ಶ್ರೀ ಹರಿ ಶ್ರೀ ಹರಿಯಂದೊದರುವದ್ಯಾಕೆ ೧
ಏಕಾಂಶೇನ ಸ್ಥಿತೋ ಜಗತ ಎಂಬ ವಾಕ್ಯವರಿಯದೆ
ನಾಲ್ಕಾರು ವೇದಶಾಸ್ತ್ರವೋದಿ ಕೇಳುವದ್ಯಾಕೆ ೨
ಯದಾದಿತ್ಯ ಗತಂ ತೇಜೋ ಜಗದ್ಭಾಸಯತೇಖಿಳಂ
ಎಂಬ ವಾಕ್ಯವರಿಯದೆ
ಹದಿನೆಂಟು ಪುರಾಣ ಕೇಳಿ ಹೇಳುವದ್ಯಾಕೆ ೩
ಮಮೈವಾಂಶೋ ಜೀವಲೋಕೇ ಜೀವಭೂತ:ಸನಾತನ ಎಂಬ
ವಾಕ್ಯವರಿಯದೆ ನಾನಾವ್ರತಾಚಾರ ಸಂನ್ಯಾಸ ಕೈಕೊಂಬುದ್ಯಾಕೆ ೪
ಸುದರ್ಶನ ಮಹಾಜ್ವಾಲಾ ಕೋಟಿಸೂರ್ಯ ಸಮಪ್ರಭ ಎಂಬ
ವಾಕ್ಯವರಿಯದೆ ಸೀಳಿ ಸುದರ್ಶನಗಳ ಪೂಜಿ ಮಾಡುವದ್ಯಾಕೆ ೫
ಮಂತ್ರ ಪ್ರಣಮ್ಯವರಿಯದೆ ತಂತ್ರ ಮಂತ್ರಸರವ್ಯಾಕೆ
ಅಂತರಾತ್ಮವರಿಯದೆ ತರ್ಕಭೇದಗಳ್ಯಾಕೆ ೬
ವಿಶ್ವವ್ಯಾಪಕ ಗುರು ಭಾಸ್ಕರಮೂರ್ತಿ ಶ್ರೀಪಾದ
ವಿಡದಿಹ ಮಹಿಪತಿಗೆ ಭವಪಾಶದಂಜಿಕಿನ್ಯಾಕೆ ೭

೫೨೨
ಹರಿಯಲರಿಯದು ಜನ್ಮ ಗುರುಪಾದವರಿಯದೆ ಧ್ರುವ|
ಬಯಲು ಭಾವಿಸಿ ನಿರ್ಬೈಲ ನೆಲೆಗೊಳ್ಳದೆ
ಭಾವಭಕ್ತಿಯ ಕೀಲು ಹೊಯಿಲು ತಿಳಿಯದೆ ೧
ರವಿ ಶಶಿಯನೊಡಗೊಡಿ ಶಿವಸುಖವ ತಿಳಿಯದೆ
ಜೀವಶಿವದ ಸೂತ್ರ ಸೋಹ್ಯ ಹೊಳಿಯದೆ ೨
ಆಧಾರವಂ ಬಲಿದು ಆರೇರಿ ಬೇರಿಯದೆ
ಮಹಿಪತಿ ನಿನ್ನೊಳು ಗುರುಗತಿ ಅರಿಯದೆ ೩

೧೭೨
ಹರಿಯೆಂದು ಮನವೆ ನೀ ಸ್ಮರಿಸೋ ದೃಢದಿಂದ
ಸ್ಮರಿಸಿದಾಕ್ಷಣ ಬಂದು ಒದಗುವ ಗೋವಿಂದ
ಕರುಣದಿಂದಲಿ ನೋಡಿ ಹಿಂಗಿಸುವ ಭವಬಂಧ
ಪರಮದಯಾನಿಧಿಯು ಶ್ರೀಹರಿ ಮುಕುಂದ ೧
ಸ್ಮರಿಸಿದಾಕ್ಷಣ ಪುಣ್ಯಗತಿಗೈದಜಾಮಳ
ಮರೆಯದೆ ಸ್ಮರಿಸಿದ ಧ್ರುವ ಯೈದಿದಢಳ
ಹರಿಯೆಂದು ಪ್ರಹ್ಲಾದ ಪುಣ್ಯಗೈದ ಸಬಳ
ಸ್ಮರಿಸಿದವರ ಕಾವ ಶ್ರೀಹರಿ ಗೋಪಾಲ ೨
ಹರಿಸಿದ ಗಜ ಭಯ ಸ್ಮರಿಸಿದಾಕ್ಷಣ
ಮೊರೆ ಇಟ್ಟು ದ್ರೌಪದಿಗಾಯಿದಭಿಮಾನ
ಸ್ಮರಿಸಿದ ಪಾಂಡವರ ರಕ್ಷಿಸಿದ ಪ್ರಾಣ
ಪರಮಭಕ್ತರ ಜೀವ ಶ್ರೀಹರಿ ನಾರಾಯಣ ೩
ಹರಿನಾಮದಿಂದಾಯಿತು ಅಹಲ್ಯೋದ್ಧಾರಣ
ಸ್ಮರಣೆ ಸಕಲವೆಲ್ಲ ತರಿಸಿತು ಪೂರ್ಣ
ಸುರಮುನಿಜನರಿಗೆ ಇದೇ ನಿಜಭೂಷಣ
ಪರಮ ವೈಷ್ಣವರಿಗೆ ಇದೇ ಜೀವ ಪ್ರಾಣ ೪
ಹರಿಯೆಂದು ನೆನಿಯೋ ನೀ ಗುರು ಕೃಪೆಯಿಂದ
ಸ್ಮರಿಸೊ ಮನವೆ ದೃಢಭಾವ ಭಕ್ತಿಯಿಂದ
ತರಳ ಮಹಿಪತಿಗಿದೆ ನಿತ್ಯ ನಿಜಾನಂದ
ತೋರುವ ಶ್ರೀಹರಿನಾಮ ಸುಖ ಸದಾನಂದ ೫

೧೭೩
ಹರಿಯೇ ಎನ್ನ ಪ್ರಾಣಧೊರಿಯೆ ಹರಿಯೆ ಧ್ರುವ
ಕರುಣಾನಂದ ಪೂರ್ಣ ವರಮುನಿಗಳ ಪ್ರಾಣ
ಶರಣಜನರಾಭರಣ ಹರಿ ನಿಮ್ಮ ಚರಣ ೧
ದಾರಿದ್ರ್ಯ ಭಂಜನ ದುರಿತ ವಿಧ್ವಂಸನ
ಪರಮಸು ಸಾಧನ ಹರಿ ನಿಮ್ಮ ಕರುಣ ೨
ಶಿರದಲಿಟ್ಟು ಆಭಯ ಹೊರಿಯೊ ಮಹಿಪತಿಯ
ಕರುಣಿಸಿ ನಿಮ್ಮದಯ ಹರಿಯೊ ಭವಭಯ ೩

೧೭೪
ಹರಿಯೇ ಶ್ರೀಗುರು ನಮ್ಮ ಹರಿಯೇ ಸದ್ಗುರು ನಮ್ಮ
ಹರಿಯೇ ಮದ್ಗುರು ಪರಾತ್ಪರ ಪೂರ್ಣನು ಧ್ರುವ
ಹರಿಯೇ ಗುರುವೆಂದೆನಿಸಿ ಗುರವೆ ಹರಿ ಎಂದೆನಿಸಿ
ಕರಸಿಕೊಂಡವನೊಬ್ಬನೆ ಪರಬ್ರಹ್ಮನು
ಹರಿಗುರು ಎರಡು ನಮಕ ಭೇಧ ಮಾಡುತಿಹ್ಯ
ನರಮನುಜಾಗಾಗುವದು ದುರ್ಗತಿಯ ೧
ಒಂದು ವಸ್ತುವೆ ತಾನನೇಕ ನಾಮವ ಧರಿಸಿ
ಸಂದಿಸಿ ಹ್ಯಾ ನಂದ ರೂಪದೊಳಗೆ
ಮಂದಮತಿಗಳ ವಿವರ ಮರ್ಮವನು ಅರಿಯದೆ
ದ್ವಂದ್ವ ಭೇದದಿ ಗಾಢಸುತ್ತಿಹರು ೨
ಹರಿಯೇ ಶ್ರೀಗುರುವಾಗಿ ಗುರುವೆ ಶ್ರೀಹರಿಯಾಗಿ
ತೋರಿದನೇಕೋಮಯವಾಗಿ ಎನಗೆ
ತರಳ ಮಹಿಪತಿ ಸಬಾಹ್ಯಾಂತ್ರ ಪರಿಪೂರ್ಣದಲಿ
ಗುರುತವಾದನು ಹರಿಯೇ ಸಾಕ್ಷತನು ೩

೧೭೫
ಹರಿಯೇ ಸುಜನರ ಸಿರಿಯೆ ಸ್ಮರಿಸುವರ ದೊರಿಯೆ
ಹೊರಿಯೋ ನರಹರಿಯೆ ಧ್ರುವ
ಕರುಣಾಗುರು ಜ್ಞಾನಸ್ಫುರಣ
ಪರಮಪುಣ್ಯಚರಣ ಶರಣರಾಭರಣ ೧
ದೂರ ಧರ್ಮದ ಸಹಾಕರ
ಕರ್ಮ ಪರಿಹಾರ ನಿರ್ಮಳಾಕಾರ ೨
ಧೀರ ಪರಮ ಉದಾರ
ಕರುಣಾಸಾಗರ ಗುರು ಮುರಹರ ೩
ಅರುಣ ಘನಕೋಟಿ ಕಿರಣ
ದೀನ ಉದ್ಧರಣ ಆನಂದಪೂರ್ಣ ೪
ದೇವ ದೇವ ಸಂಜೀವ
ಭಾವಿಕರ ಕಾವ ಶ್ರೀವಾಸುದೇವ ೫
ಮಾತಾ ಮಹಿಪತಿಯ ಪಿತ
ದಾತ ನೀನೆ ಶ್ರೀನಾಥ ೬

೧೭೬
ಹರಿರೇವ ಪರೋ ಹರಿದೇವ ಗುರೋ
ಹರಿಯೇ ಗುರುವೆಂದರವ್ಹಿರೋ ಧ್ರುವ
ಗುರುಮಧ್ವಪರ್ಹೇಳಿದ ನಿಜಕೀಲು
ಅರಿತುಕೊಂಬುವಾದಿದೆವೆ ಮೇಲು
ಪರಮ ಭಗತರನುಭವದ ಬಾಗಿಲು
ಪರಗತಿ ಸಾಧನಕಿದೆ ಮಿಗಿಲು ೧
ಹರಿಗುರುವೆರಡಾಗಿ ತೋರಿತು ನಾಮವು
ಅರಿಯಲರಿಯದವಾಗಿದೆ ಭ್ರಮವು
ತೋರುವದೊಂದೇ ಸಜ್ಜನರಿಗಿದೇ ನೇಮವು
ಅರಿಕ್ಯುಳ್ಳವರಿಗಿದೇ ಕ್ರಮವು ೨
ಹರಿಗುರು ಒಂದಾಗಿ ತೋರಿತು ನಿಜಘನ
ತರಳ ಮಹಿಪತಿಸ್ವಾಮಿಯ ಕರುಣ
ಗುರುಭಾನುಕೋಟಿತೇಜನೆ ಪರಿಪೂರ್ಣ
ತೋರುವದೊಂದಾಗಿದೆ ನಿಜಖೂನ ೩

೩೧೪
ಹರಿಹರಿ ಎನ್ನಿ ಹರಿವದು ಪಾಪ ಧರೆಯೊಳು ಧರೆಯೊಳು
ಕರಮುಗಿದು ಗುರುವಿಗೆ ಕೇಳುವುದು ಬಲುಮೇಲು ಧ್ರುವ
ಮೂಢಗೆ ಉಪಾಯ ಹೇಳಿದರೆ ತಿಳುವದೆ ತಿಳುವದೆ
ಖೋಡಿಗೆ ಸುಲಕ್ಷಣದ ಮಾತು ಹೊಳೆವದೆ ೧
ಮೋಡಿನ ಮುಸುಕಿನಲಿ ಸೂರ್ಯನ
ಬಿಸಲು ಬೀಳುದೆ ಬೀಳುದೆ
ಗೂಢ ಗುರುವಿನ ಮಾತಿದು ನಾಡಿಗೆ ತಿಳುವದೆ ೨
ವಿಷ ಕಚ್ಚಿದ ಮನಕೆ ಸುಘನ ಭಾಸುದೆ ಭಾಸುದೆ
ತುಸು ಝರಿ ಇಲ್ಲದೆ ಬಾವಿಲಿ ನೀರು ಸೂಸುದೆ ಸೂಸುದೆ ೩
ಹಸಗೆಟ್ಟಹ್ಯ ಕುಕ್ಕಡಿನೂಲ್ಹಾಸಿಗೆ ಬಾಹುದೆ ಬಾಹುದೆ
ಕಸಕಡ್ಡಿಲ್ಲದ ಮುಗಿಲೆಂದಿಗೆ ತಾ ಮಾಸುದೆ ೪
ಮೀಸಲ ಮನ ಒಂದಾದರೆ ಸಾಕು ತಿಳಿಕೊಳ್ಳಿ ತಿಳಿಕೊಳ್ಳಿ
ಭಾಸ್ಕರ ಗುರುರಾಯನ ಶ್ರೀಪಾದಕೆ ಬಲಗೊಳ್ಳಿ ಬಲಗೊಳ್ಳಿ ೫
ಲೇಸಿನ ನಿಜಸುಖ ನೆರೆಗೊಳ್ಳು ಮಹಿಪತಿ ನಿನ್ನಲ್ಲಿ ನಿನ್ನಲ್ಲಿ
ಹೇಸಿ ಮುಖದೋರದೆ ಹೋಗುವುದು ಭವದ ತಳ್ಳಿ ೬

೫೮೧
ಹಸಗೀಡಾಗದಿರು ಮನವೆ
ವಿಷಯವಾಸನೆ ಕೂಡ ಧ್ರುವ
ಸತ್ಯವೆಂದೆನಬ್ಯಾಡ ದೃಶ್ಯ ಮಿಥ್ಯಾಮಾಯದ ಮೋಡ
ನಿತ್ಯಾನಿತ್ಯವಿವೇಕವಿಚಾರದ ಸತ್ಯ ಸುಪಥ ಕೂಡೊ
ನಿತ್ಯವಾಗಿಹದ ಸತ್ಯ ಸುಪಥ ಕೂಡೊ ೧
ಹೊನ್ನು ಹೆಣ್ಣಿನ ಕೂಡ ನೀ ದಣ್ಣನೆ ದಣಿಬ್ಯಾಡ
ಸುಣ್ಣ ಸಾರಿಸಿ ಮ್ಯಾಲೆ ಬಣ್ಣದೋರುವದಕ್ಕೆ ಕಣ್ಣಗೆಟ್ಟಿರಬ್ಯಾಡ
ಮಣ್ಣೆÀಂದರಿಯದೆ ಕಣ್ಣಗೆಟ್ಟಿರಬ್ಯಾಡ ೨
ಗುಹ್ಯಗೂಢವ ತಿಳಿಯೊ ನಾ ದೇಹವೆಂಬುದನಳಿಯೊ
ಮಹಿಪತಿ ನಿನ್ನೊಳು ಮಹಾಗುರುಕೃಪೆಯಿಂದ ಸೋಹ್ಯ
ತಿಳಿದು ನೋಡೊ
ಶ್ರೀ ಹರಿಯ ಮಹಿಮೆ ಸೋಹ್ಯ ತಿಳಿದು ನೋಡೊ ೩

೩೧೫
ಹಸ್ತ ಪ್ರಕ್ಷಾಲ್ಯೆಂಬುದು ಇದೆ ನೋಡಿ
ನಿತ್ಯಾನಿತ್ಯ ವಿಚಾರಮಾಡಿ ಧ್ರುವ
ವಿವೇಕವೆಂಬುದೆ ಉದಕ ಪವಿತ್ರಮಾಡಿತು ಮೂರು ಲೋಕ
ಭವದೆಂಜಲ ಹೋಯಿತು ನಿಸ್ತುಕ ಪಾವನಗೈಸಿತು ಸ್ವಸುಖ ೧
ಕೈಬಾಯಿ ತೊಳಿಯಿತು ನಿರ್ಮಳ ಭಯ
ಹೋಯಿತು ಭ್ರಾಂತಿ ವಿಕಳ
ದಯೆ ಮಾಡಿದು ಗುರು ನಿಶ್ಚಲ
ಶ್ರಯದೋರಿತು ಸಾಯೋಜ್ಯ ಢಾಳ ೨
ಎಂಜಲ ಹೋಯಿತು ಭವ ಭಯಪೂರ್ಣ
ಅಂಜಿಕ್ಯಾರಿಸಿತು ಗುರುಜ್ಞಾನ
ಪ್ರಾಂಜಲಾಯಿತು ಪರಮ ಸಾಧನ ನಿಜ
ಮಹಿಪತಿಗಿದೆ ಭೂಷಣ ೩

೩೧೬
ಹಿಂಗದಿದು ಭವ ಲಿಂಗದೇಹ ಭಂಗಾಗದೆ ಧ್ರುವ
ಮಾಯಮೂಲಳಿಯದೆ ಮನಮೈತೊಳಿಯದೆ
ದೇಹಭಾವಳಿದು ಸಂದೇಹಗಳಿಯದೆ ೧
ಆಶೆಯನು ಕಳಿಯದೆ ವಾಸನೆಯ ತೊಳಿಯದೆ
ಸೂಸುತಿಹ್ಯ ವ್ಯಸನ ವ್ಯಾಸಂಗವಳಿಯದೆ ೨
ಗರ್ವಗುಣವಳಿಯದೆ ನಿರ್ವಿಗುಣ ಹೊಳಿಯದೆ
ಮಹಿಪತಿಯ ಸರ್ವಮಯವಸ್ತು ತಿಳಿಯದೆ ೩

೫೮೨
ಹಿಂದಕೆ ತಿರುಗಿ ನೋಡು ಮನವೆ ಹೊಂದಿಕಿ ಹೊಲಬು ನಿನ್ನ
ಅಂಧಕನಾಗಿರದೆ ನೀ ಪೂರ್ಣ ಹೊಂದೋ
ಸದ್ಗುರುವಿನ ಶ್ರೀಚರಣ ಧ್ರುವ|
ಮುಂದೆ ಮುಂದಕೆ ನೋಡುತ ಬಂದು ಹಿಂದಿನ
ಹೊಲಬು ಮರೆದ್ಯೊ
ಎಂದೆಂದಿಗೆ ಆಗಲದ ಸದ್ವಸ್ತು ಸಂಧಿಸಿಹುದು ಜರೆದ್ಯೊ
ಕುಂದಿ ಕುಂದಿ ಕಳೆವ ವಿಷಯಕೆ ಸಂಧಿಸಿ ಬಾಯ್ದೆರದ್ಯೊ
ಬಂದು ಬಂದು ಭವಪಾಶಕೆ ಸಿಲ್ಕಿ ಬೆಂದು ಒಡಲನೆ ಹೊರೆದ್ಯೊ ೧
ತಿರುಗಿ ನೋಡಲು ತನ್ನೊಳಗೆ ತಾ ತೋರುತ ಅದೆ ಕೌತುಕ
ಏರಿ ನೋಡಲು ಆರುಚಕ್ರ ಸುರಿಯುತಿದೆ ಸವಿಸುಖ
ಪರಿಪರಿ ಭಾಸುತಿಯಹುದು ಪರಬ್ರಹ್ಮದ ಗತಿ ಹರುಷಾನೇಕ
ಅರಿತು ಕೂಡುವ ಬೆರೆದು ಪರಾತ್ಪರದೋರುತಿಹ್ಯ ಸದ್ಗುರುಮುಖ ೨
ಸೆರಗವಿಡಿದು ಸಾರುವ ಶ್ರುತಿಯ ತಿರುಗಿನೋಡು ನಿನ್ನೊಳಗೆ
ಮರಳಿ ಹುಟ್ಟಿ ಬಾರನೀ ಜನ್ಮಕೆ ಸ್ಥಿರಹೊಂದುವಿ ಗತಿಯೊಳಗೆ
ತರಳ ಮಹಿಪತಿ ಮನವೆ ನಿನಗಿದು ಗುರುಕರುಣದೆ ಘನ ಬೆಳಗೆ
ಶರಣ ಜನರಾನಂದದ ಗತಿಯು ತೋರುತಿಹುದು ಘನ ತನ್ನೊಳಗೆ ೩

೧೮೨
ಹಿಡಿಯಬೇಕು ಶ್ರೀ ಕೃಷ್ಣನ ತುಡುಗತನವ ಧ್ರುವ
ಕಡಿಯಗುಡದೆ ವೈವನು ಕೆನಿಮೊಸರ
ತುಡುಗತನವನು ಮಾಡುವ ಬಲು ಹೆಸರ
ಅಡಗಿಹ ಠಾವನೆ ತಾನುಸರ ಮಾಡಿ ತಾ ಕುಸರ ೧
ಬಿಡಬಾರದು ಕಣ್ಣಿಲೆ ಕಟ್ಟಿ
ಬಿಡಿಸಿಕೊಂಬುವ ಇವ ಬಲು ಜಗಜೆಟ್ಟಿ
ಅಡಗಿಸಿಕೊಬೇಕು ಘಟ್ಟಿವಿಡಿದು ಮನಮುಟ್ಟಿ ೨
ಸಾಧಿಸಿ ಸದ್ಗುರುದಯ ಕರುಣದಲಿ
ಭೇದಿಸಿ ಹಿಡಿಯೊ ಮಹಿಪತಿ ಸುಮನದಲಿ
ಒದಗಿಟ್ಟುಕೊ ನೀ ಹೃದಯದಲಿ ಇದೇ ನೋಡನುದಿನಲಿ ೩

೫೨೩
ಹಿಡಿಯಬ್ಯಾಡಿ ಮೌನ ಪಡೆದುಕೊಳ್ಳಿ ಖೂನ
ಒಡೆದು ಹೇಳುತಾನೆ ನೋಡಿ ಸದ್ಗುರು ನಿಧಾನ ೧
ಅಹಂಭಾವಬಿಟ್ಟು ಸೋಹ್ಯ ಕೇಳಿ ಗುಟ್ಟು
ದೇಹ ಅಭಿಮಾನ ಸುಟ್ಟು ಜಯಸಿ ರತಿವಿಟ್ಟು ೨
ಮಾಡಿ ಗುರುಭಕ್ತಿ ನೋಡಿ ಗತಿಮುಕ್ತಿ
ಕೊಡುವ ಮಹಿಪತಿ ಸ್ವಾಮಿ ಸದ್ಗತಿ ಸುಯುಕ್ತಿ ೩

೫೨೪
ಹೊಂದಬೇಕು ನಿಜನೋಡಿ ತಂದೆ ಗುರುನಾಥ
ಒಂದು ಮನದಲಿ ಕಿವಿಗೊಟ್ಟು ಕೇಳಿ ಬೋಧ ಧ್ರುವ
ಪರಧನ ಪರಸತಿಯರ ಬಿಟ್ಟರೆ ಸಾಕು ಹೇಸಿ
ತೋರುವುದು ತನ್ನೊಳು ಪ್ರತ್ಯಕ್ಷ ವಾರಣಾಸಿ
ಸುರಿಮಳೆಗರೆವುದು ಹೆಜ್ಜೆಜ್ಜಿಗೆ ಪುಣ್ಯದ ರಾಶಿ
ಅರಿತು ಏಕರಸವಾಗಿ ಸದ್ಗುರು ಸ್ಮರಿಸಿ ೧
ಜನ್ಮಕೆ ಬಂದ ಮ್ಯಾಲೆ ಪುಣ್ಯಪಥ ಸಾಧಿಸಿ
ಸನ್ಮತ ಸುಖಸಾರದೊಳು ಮನಭೇದಿಸಿ
ಉನ್ಮನವಾಗಿ ಜೀವನ ಸದ್ಗತಿಗೈದಿಸಿ
ಜನ್ಮಕೆ ಬೀಳುವ ಭವಬಂಧನ ಛೇದಿಸಿ ೨
ಸಾಯಾಸದಿಂದ ಸಾಧಿಸಬೇಕು ಸಾಧುಸಂಗ
ಗುಹ್ಯಗುರುತ ನೋಡಲಿಬೇಕು ಅಂತರಂಗ
ಬಾಹ್ಯಾಂತ್ರದೋರುತಿದೆ ಸದ್ಗುರು ಪ್ರಾಣಲಿಂಗ
ಮಹಿಪತಿಗಾಯಿತು ನೋಡಿ ಭವ ಭಯ ಭಂಗ ೩

೧೮೩
ಹೊಂದಿ ಬದುಕಿರೋ ಮನವೆ ಇಂದಿರೇಶನ
ಎಂದೆಂದಗಲದೆ ದ್ವಂದ್ವ ಶ್ರೀಪಾದವ ಹೊಂದಿ
ಸುಖಿಯಾಗೋ ತಂದೆ ಸರ್ವೇಶನ ಧ್ರುವ
ಮುಚ್ಚಿಕೊಂಡು ಮುಕುತಿ ಸಾಧನ
ಹುಚ್ಚುಗೊಂಡು ಸಚ್ಚಿದಾನಂದನ
ಬಚ್ಚಿಟ್ಟುಕೊಂಡು ನಿಜ
ನೆಚ್ಚಿಕೊಂಡಿರೋ ನೀ ಅಚ್ಯುತಾನಂತನ ೧
ಹರಿಚರಣ ಕಮಲವ ಕಂಡು
ಹರಿನಿಜಧ್ಯಾನ ನೆಲೆಗೊಂಡು
ಹರಿಕರುಣವ ಪಡಕೊಂಡು
ಹರಿನಾಮಾಮೃತ ಸವಿದುಂಡು ೨
ಶ್ರೀಹರಿಸೇವೆ ಮಾಡಿಕೊಂಡು
ಇಹಪರ ಸುಖ ಸೂರೆಗೊಂಡು
ಬಾಹ್ಯಾಂತ್ರಪೂರ್ಣ ಮನಗಂಡು
ಮಹಿಪತಿ ಸ್ವಾಮಿ ವಾಲ್ವೈಸಿಕೊಂಡು ೩

೧೮೪
ಹೊಂದಿ ಸುಖಿಸು ಹರಿಯ ಪಾದಾ ಧ್ರುವ
ನಾನಾ ಪುಣ್ಯ ನಿದಾನದಿ ಧರೆಯೊಳು |
ಮಾನವ ಜನುಮಕ ನೀನೀಗ ಬಂದು |
ಶ್ವಾನ ಶೂಕರ ಪರಿ ತಾ ನಿಜವರಿಯದೆ |
ಜ್ಞಾನ ಶೂನ್ಯನಾಗೇ-ನಿಹುದಣ್ಣಾ ೧
ಹಿಡಿವರೇ ಭ್ರಾಂತಿಯ ಜಡಿವರೆ ಮತಿಯ |
ನುಡಿವರೇ ಪುಸಿಯನು ಬಿಡುವರೆ ಸತ್ಯವ |
ಇಡುವರೆ ದುರ್ಗಣ ಸಿಡುವರೆ ಬೋಧಕ |
ಕೆಡುವರೆ ಮರವಿಲಿ ಬಿಡುವರೆ ವ್ಯರ್ಥಾ ೨
ಮೂರು ದಿನದ ಸಂಸಾರದೊಳಗ | ಕಂ |
ಸಾರಿಯ ಭಕ್ತಿಯ ಸೇರಿ |
ಪಾರವ-ಗೊಂಬುದು ಸಾರ ಸ್ವಹಿತ ಸಹ |
ಕಾರಿ ಮಹಿಪತಿ ಸಾರಿದ ಬೋಧಾ೩

೫೮೪
ಹೊಂದು ಮನವೆ ಹೊಂದೆನ್ನ ಮನವೆ
ಒಂದು ಪಥ ಬ್ಯಾಗ ಸೇರೆನ್ನ ಮನವೆ ಧ್ರುವ|
ಮೂರೊಂದು ಪಾಲಾಗದಿರೆನ್ನ ಮನವೆ
ಮೂರೆರಡು ಬಟ್ಯಾಗದಿರು ಮನವೆ ೧
ಮೂರು ಆರು ಪರಿ ಆಗದಿರೆನ್ನ ಮನವೆ
ಮೂರೆರಡರಲಿ ಅಡರದಿರು ಮನವೆ ೨
ಮೂರು ಸೆರಗ ಹಿಡಿದರೆನ್ನ ಮನವೆ
ಮೂರರೊಳಗೆ ತೊಳಲದಿರು ಮನವೆ ೩
ಮೂರು ಬಟ್ಟೆಗಳನ್ನು ಮರಿಯೆನ್ನ ಮನವೆ
ಮಹಿಪತಿ ಗುರುಪಾದ ಪೊರಿ ಎನ್ನ ಮನ ೪

೧೫೧
ಸಾರ್ವಭೌಮ ನೀರಾಮ ಶರಣರಕ್ಷಕ ನೇಮ ಧ್ರುವ
ಸೀತಾಮನೋಹರ ಸೇತುಗಟ್ಟಿದ ಶೂರ
ಹತ್ತು ತಲಿಯವನ ಮಾಡಿದೊ ಸಂಹಾರ
ಖ್ಯಾತಿಗೆ ತಂದ್ಯೊ ವಿಭೀಣಗೆ ಸ್ಥಿರ ೧
ಕುಡುವೆ ನೀ ವರಪೂರ್ಣ ದೃಢ ಭಕ್ತರ ಪ್ರಾಣ
ಆಡುದೊಂದೆ ವಚನ ಬಿಡುವದೊಂದೆ ಬಾಣ
ಜಡವಾಗಿದ್ದ ಶಿಲೆಯೆ ಮಾಡಿದ್ಯುದ್ದರಣ ೨
ಸಮಸ್ತ ಜನಪ್ರಿಯ ಸೋಮಶೇಖರ ಧೇಯ್ಯ
ನಾಮ ಸ್ಮರಿಸುವರಿಗಿಹೆ ಹೃದಯ
ಸ್ವಾಮಿ ನೀನಹುದೊ ದಾಸ ಮಹಿಪತಿಯ ೩

ಆನಂದವಾಗೈದ ಸ್ವಾನಂದಯೋಗ
೬೦೨
ಆನಂದವಾಗ್ಯೇದ ಸ್ವಾನಂದಯೋಗ
ಏನೆಂದ್ಹೇಳಲಿ ಸ್ವಾನುಭವದ ಸುಭೋಗ ಧ್ರುವ|
ಸುಖಗರುತದ ಶಿಖಾಮಧ್ಯ ಸಂತ್ರಾಧಾರಿ
ಬೇಕಾದರೆ ನೋಡಿ ಷಕಚಕ್ರವೇರಿ
ಏಕೋಮಯವಾಗ್ಯದ ವಸ್ತು ಒಂದೇ ಸರಿ
ಲೋಕಪಾಲಕಸ್ವಾಮಿ ತಾ ಸಹಕಾರಿ ೧
ಜುಮ್ಮು ಜುಮ್ಮುಗುಡುತದೆ ರೋಮಾಂಚಗಳು
ಧಿಮಿ ಧಿಮಿಗುಡುತದೆ ನಾದಧ್ವನಿಗಳು
ಕ್ರಮ ತಿಳಿದರೆ ಭಾಸುತದೆ ಸುಳಹುಗಳು
ಸಂಭ್ರಮವಾದರು ಅನುಭವಿಗಳು ೨
ಕಳೆ ಮಳೆಮಿಂಚು ತುಂಬೇದ ಬಲು ಬಹಳ
ಹೊಳೆಯುತಲ್ಯದೆ ಸ್ವಸುಖದ ಕಲ್ಲೋಳ
ಝಳಝಳಿಸುತ ಜ್ಯೋತಿರ್ಮಯ ಥಳಥಳ
ತಿಳಕೊ ಮಹಿಪತಿ ಗುರುದಯದ ಸುಫಳ ೩

ಹಾಡಿನ ಹೆಸರು :ಆನಂದವಾಗೈದ ಸ್ವಾನಂದಯೋಗ
ಹಾಡಿದವರ ಹೆಸರು :ಗಣೇಶ್ ದೇಸಾಯಿ
ಸಂಗೀತ ನಿರ್ದೇಶಕರು :ಪ್ರಸಾದ್ ಎನ್. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಇಂದು ನಮ್ಮ ಮನಿಲ್ಯಾನಂದ
೬೨೯
ಇಂದು ನಮ್ಮಮನಿಲ್ಯಾನಂದ
ಇಂದಿರೇಶನೆ ಬಂದ
ಸಂದಲ್ಯಾಗೇದ ಸ್ವಾನಂದ
ಸಂದಿಸಿ ತುಂಬೇದ ಸುಖ ಸಾಂದ್ರ ಧ್ರುವ|
ಅತಿಶಯಾನಂದ ಕಂದ
ಪತಿತಪಾವನ ಮುಕುಂದ
ಹಿತದೋರಲಿಕ್ಕೆ ಬಂದ
ಸತತ ಸುದಯದಿಂದ ೧
ಪುಣ್ಯದಿರಿಟ್ಟತು ಈಗ
ಎನ್ನೊಡಿಯ ಬಂದಾಗ
ಧನ್ಯಗೈಸಿದೆನಗೆ
ಚೆನ್ನಾಗಿ ಬಂದು ಮನೆಗೆ ೨
ಮನಮಂದಿರಕೆ ಬಂದ
ಅನುಕೂಲವಾಗಿ ಗೋವಿಂದ
ತಾನೆ ತಾನಾಗಿ ನಿಂದ
ಘನಗುರು ಕೃಪೆಯಿಂದ ೩
ಬಾಹ್ಯಾಂತ್ರ ಭಾಸುವ ಕ್ರಮ
ಮಹಾಗುರುವಿನ ಧರ್ಮ
ಮಹಿಪತಿಯ ಸಂಭ್ರಮ
ಇಹಪರಾನಂದೋಬ್ರಹ್ಮ ೪

ಹಾಡಿನ ಹೆಸರು :ಇಂದು ನಮ್ಮ ಮನಿಲ್ಯಾನಂದ
ಹಾಡಿದವರ ಹೆಸರು :ಸುಮಿತ್ರ್ರಾ ಬಿ. ಕೆ. ಮತ್ತು ವೃಂದ:
ಸಂಗೀತ ನಿರ್ದೇಶಕರು :ಸುಮಿತ್ರಾ ಬಿ. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಎದ್ದಿರ್ಯಾ ನೀವಿನ್ನೆದ್ದಿರ್ಯಾ
೨೧೦
ಎದ್ದಿರ್ಯಾ ನೀವಿನ್ನೆದ್ದಿರ್ಯಾ
ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ಧ್ರುವ
ಶುದ್ಧಿ ಮೆರೆದು ಭವ ನಿದ್ರಿಯಗಳೆದು ೧
ಕಾಯ ಮಂದಿರದೊಳು | ಮಾಯ ಮುಸುಕು ತೆಗೆದು ೨
ಚೆನ್ನಾಗಿ ಮಲಗಿದ್ದ | ಜನ್ಮ ಹಾಸಿಗೆ ಬಿಟ್ಟು ೩
ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು ೪
ಎದ್ದಿದ್ದರೆ ನೀವಿನ್ನು ಶುದ್ಧ ಬದ್ಧರಾಗಿ ೫
ಮನದಲ್ಲಿ ಇನಕೋಟಿ ತೇಜನ ಕಾಣುಹಾಂಗೆ ೬
ದೀನ ಮಹಿಪತಿ ಸ್ವಾಮಿ ಮನೋಹರ ಮಾಡೊಹಾಂಗೆ ೭

ಹಾಡಿನ ಹೆಸರು :ಎದ್ದಿರ್ಯಾ ನೀವಿನ್ನೆದ್ದಿರ್ಯಾ
ಹಾಡಿದವರ ಹೆಸರು :ಸುಮಿತ್ರ್ರಾ ಬಿ. ಕೆ. ಮತ್ತು ವೃಂದ
ಸಂಗೀತ ನಿರ್ದೇಶಕರು :ಸುಮಿತ್ರಾ ಬಿ. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಒಂದು ಪಥವ ಹೊಂದಲರಿಯರೀ
೨೧೫
ಒಂದು ಪಥವ ಹೊಂದಲರಿಯರೀ ಮನುಜರು
ಇಂದಿರೇಶನ ಪಾದವ ಕಾಣದೆ ಕೆಡುವರು ಧ್ರುವ
ಒಂದರೆ ಘಳಗಿ ನಾನೆವೆ ಮಾಡಿದೆನೆಂಬರು
ಒಂದರೆ ಘಳಗಿ ಪ್ರಾಚೀನವೆಂಬರು
ಒಂದರೆ ಘಳಗಿ ಈಶ್ವರ ಸೂತ್ರವೆಂಬರು
ಒಂದರೆ ಘಳಗಿ ತಾ ಏನೋ ಎಂತೆಂಬರು ೧
ಒಮ್ಮೆ ಜಾಗೃತಿಯೊಳಿದೇ ನಿಜವೆಂಬರು
ಒಮ್ಮೆ ಸ್ವಪ್ನದೊಳಿದೇ ಖರೆ ಎಂಬರು
ಒಮ್ಮೆ ಸುಷುಪ್ತ್ತಿಯೊಳಿದೇ ಸತ್ಯವೆಂಬರು
ಒಮ್ಮೆ ಇದರ ಶುದ್ಧಿ ತಿಳಿಯದಂತಿಹರು ೨
ಒಂದು ತಿಳಿದರ ಸಕಲವು ಒಂದಾಗಿ ದೋರುವದು
ಒಂದರೊಳಗ ಸಕಳ ದೊರೆಕೊಂಬುದು
ಒಂದಾಗಿ ಸಲಹುವ ಮಹಿಪತಿ ಸ್ವಾಮಿಯ
ತಂದೆ ಸದ್ಗುರು ಭಾಸ್ಕರ ಕೋಟಿ ತೇಜನು ೩

ಹಾಡಿನ ಹೆಸರು :ಒಂದು ಪಥವ ಹೊಂದಲರಿಯರೀ
ಹಾಡಿದವರ ಹೆಸರು :ಮುದ್ದುಕೃಷ್ಣ ವೈ. ಕೆ.
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ್, ಬೆಂಗಳೂರು

ನಿರ್ಗಮನ

ಕಾಮಧೇನುಗರವು ತಲ್ಯದೆ ನಮ್ಮ
೬೫೨
ಕಾಮಧೇನುಗರವುತಲ್ಯದೆ ನಮ್ಮ ಮನಿಯಲಿ ನೋಡಿ
ಬ್ರಹ್ಮಾನಂದದೋರುತದೆ ಪರಮಾಮೃತ ಸೂರ್ಯಾಡಿಧ್ರುವ|
ಭೋರ್ಗರೆವುತಲ್ಯದೆ ಇರುಳ ಹಗಲಿ ತಾ ಕರಕೊಳ್ಳಲಿ ವಶವಲ್ಲ
ಮುರುವಿಡದೆ ಸುರಿವುತಲ್ಯದೆ ಅಮೃತ ದುರುಳರಿಗಿದು ಅರಿಕಿಲ್ಲ
ಸುರಿ ಸುರಿದು ಸಾರಾಯ ಚಪ್ಪರಿದನುಭವ ನಿಜಸುಖ ತಾ ಬಲ್ಲ
ಸುರಮುನಿಜನರಾನಂದದಿ ಸೇವಿಸಿ ಅರಹುತರಾದರು ಎಲ್ಲ ೧
ಕಾಸಿ ಕಡಿಯದೇ ಭಾಸುತಲ್ಯದೆ ಲೇಸಾಗಿ ನವನೀತ
ಮೋಸಹೋಗದನುಸರಿಸಿಕೊಂಬುದು ವಸುಧಿಯೊಳಗೆ ತ್ವರಿತ
ಹಸನಾಗುವ ಹೊಸಪರಿಯಲಿ ಸೇವಿಸಿ
ಋಷಿಮುನಿಗಳು ಸ್ವಹಿತ
ತುಸುಕೊರತಿಲ್ಲದೆ ಪಸರಿಸಿ ತುಂಬೆದ ವಿಶ್ವದೊಳಗೆ ಸನ್ಮತ೨
ಕೈಗೊಟ್ಟಿತು ಕರಕೊಳ್ಳಲಿ ಅನುದಿನ ಮಹಿಪತಿಗಿದು ನಿಜ ನೋಡಿ
ಮಯಿ ಮರೆದನುಸಾರಾಯನ ಸೇವಿಸಿ
ಮಹಾಮಹಿಮೆಯ ಸವಿಗೂಡಿ
ದಯಮಾಡಿದ ಮಹಾಗುರು ಭಾಸ್ಕರಮುನಿ
ಶಿರದಲಭಯವ ನೀಡಿ
ಇಹಪರದೊಳು ಗುರುನಾಮವೆ ಕಾಮಧೇನುವಿದೆ ಕೊಂಡಾಡಿ ೩

ಹಾಡಿನ ಹೆಸರು :ಕಾಮಧೇನುಗರವು ತಲ್ಯದೆ ನಮ್ಮ
ಸಂಗೀತ ನಿರ್ದೇಶಕರು :ಶ್ರೀಲತಾ ಆರ್. ಎನ್.
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

ತಾನಾರು ತನುವು ಆರು ತಿಳಿದು ನೋಡಿ
೨೩೭
ತಾನಾರು ತನುವು ಆರು ತಿಳಿದು ನೋಡಿ ಧ್ರುವ
ತಾನಾರು ತನುವಾರು
ತನ್ನೊಳೂ ತಾನೆ ತಿಳಿದು ನೋಡಿ
ಘನ ಬ್ರಹ್ಮದೊಳು ಮನ ಬೆರೆದಾತ ಶರಣನು ೧
ಕಾಯದೊಳಿಹ್ಯ ಕಳವಳಗಳೆದು
ಮಾಯ ಮೋಹದ ಮಲಗಳ ತೊಳೆದು
ದೇಹ ವಿದೇಹವಾದಾತ ಶರಣನು ೨
ಭ್ರಾಂತಿಯ ಅಭಾವಗಡಿದು
ನೀತಿ ಸುಪಥದ ಮಾರ್ಗವ ಹಿಡಿದು
ಜ್ಯೋತಿ ಸ್ವರೂಪವ ಕಂಡಾತ ಶರಣನು ೩
ಭಾವ ಭಕ್ತಿಯ ಕೀಲವ ತಿಳಿದು
ಹ್ಯಾವ ಹೆಮ್ಮೆಯ ಮೂಲವನಳಿದು
ಜೀವ ಶಿಶುವು ತಿಳಿದಾತ ಶರಣನು೪
ಜಾತಿಯ ಕುಲಗಳ ಭೇದವ ತಿಳಿದು
ಯಾತನೆ ದೇಹದ ಸಂಗವನಳಿದು
ಮಾತಿನ ಮೂಲವ ತಿಳಿದಾತ ಶರಣನು ೫
ಸೋಹ್ಯ ಸೊನ್ನೆಯ ಸೂತ್ರವಿಡಿದು
ಲಯ ಲಕ್ಷಿಯ ಮುದ್ರೆಯ ಜಡಿದು
ದ್ಯೇಯ ಧ್ಯಾತವ ತಿಳಿದಾತ ಶರಣನು ೬
ನಾದದಿಂದ ಕಳೆಯ ಮುಟ್ಟಿ
ಸಾಧಿಸಿ ಉನ್ಮನ ಮುದ್ರೆಯ ಮೆಟ್ಟಿ
ಆದಿತತ್ವದ ಗತಿ ತಿಳಿದಾತ ಶರಣನು ೭
ಆಧಾರ ದೃಢದಿಂದ ಅರಹುತನಾಗಿ
ಮಧ್ಯ ಮುಪ್ಪರದಲಿ ಸ್ಥಿತಿವಾಗಿ
ಊಧ್ರ್ವ ಮಂಡಲಗತಿ ಬೆರೆದಾತ ಶರಣನು ೮
ಬಾಹ್ಯಾಂತ್ರ ಪರಿಪೂರ್ಣ ಘನಮಯಗಂಡು
ಸಾಯೋಜ್ಯ ಸದ್ಗತಿ ಸವಿಸುಖನುಂಡು
ಮಹಿಪತಿ ಗುರುಮನಗಂಡಾತ ಶರಣನು ೯

ಹಾಡಿನ ಹೆಸರು :ತಾನಾರು ತನುವು ಆರು ತಿಳಿದು ನೋಡಿ
ಹಾಡಿದವರ ಹೆಸರು :ಗಣೇಶ್ ದೇಸಾಯಿ
ಸಂಗೀತ ನಿರ್ದೇಶಕರು :ಪ್ರಸಾದ್ ಎನ್. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನೀನಾರೊ ನಿನ್ನ ಪೆಸರೇನೊ
೯೦
ನೀನಾರೊ ನಿನ್ನ ಪೆಸರೇನೊ
ನಿಗಮ ತಂದುಸುವುಸಿ ಜಗದೊಳಗೆ ಧ್ರುವ
ನಗ ಬೆನ್ನೆಲಿ ತಾಳಿದ ನೀನಾರೋ
ಜಗವ ಕದ್ದೊಯಿದಸುರನ ನೀ ಕೊಂಡು
ಬಗೆದು ತರಳಗೊಲಿದವ ನೀನಾರೊ ೧
ಧರಣಿ ನೀ ಮೂರಡಿಯನೆ ಮಾಡಿ
ಹಿರಿಯಳ ಶಿರ ಹರಿಗಡಿದವನಾರೊ
ಪರ ದೇವತೆಗಳ ಸೆರೆಯ ಬಿಡಿಸಿ
ತುರುಗಳಗಾಯ್ದ ಗೋವಳ ನೀನಾರೊ ೨
ನಾರಿಯರ ವ್ರತಗಳನೆ ಹಳಿದು
ಏರಿ ಹಯವನು ಸುಳಿವವನಾರೊ
ತರಳ ಮಹಿಪತಿ ಮನೋಹರವ ಮಾಡಿ
ಗುರುತುತೋರಿದ ಗುರು ಮಹಿಮ ನೀ ಬಾರೊ ೩

ಹಾಡಿನ ಹೆಸರು :ನೀನಾರೊ ನಿನ್ನ ಪೆಸರೇನೊ
ಹಾಡಿದವರ ಹೆಸರು :ಪುತ್ತೂರು ನರಸಿಂಹ ನಾಯಕ್
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನೀನೆ ಎನಗಾಧಾರಿ ಶ್ರೀಹರಿ
೯೨
ನೀನೆ ಎನಗಾಧಾರಿ ಶ್ರೀಹರಿ
ನೀನೆ ಎನಗಾಧಾರಿ ಧ್ರುವ
ಸಕಲ ಸುಖವ ಬೀರುವ ಉದಾರಿ
ಭಕುತ ವತ್ಸಲ ಮುಕುಂದ ಮುರಾರಿ ೧
ಅಂತರ್ಬಾಹ್ಯದ ಲೀಹ ನರಹರಿ
ಕಂತುಪಿತನೆ ಪೀತಾಂಬರಧಾರಿ ೨
ಹಿತದಾಯಕ ನೀನೆವೆ ಪರೋಪರಿ
ಪತಿತಪಾವನ ಮಹಿಪತಿ ಸಹಕಾರಿ೩

ಹಾಡಿನ ಹೆಸರು :ನೀನೆ ಎನಗಾಧಾರಿ ಶ್ರೀಹರಿ
ಹಾಡಿದವರ ಹೆಸರು :ಗಣೇಶ್ ದೇಸಾಯಿ
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸಕಲವೆನಗೆ ನೀನೆ ಶ್ರೀಹರಿಯೆ
೧೩೯
ಸಕಲವೆನಗೆ ನೀನೆ ಶ್ರೀಹರಿಯೆ ಧ್ರುವ
ತಂದೆತಾಯಿ ಸ್ವಹಿತಾತ್ಮನು ನೀನೆ
ಬಂಧು ಬಳಗ ಸರ್ವಾತ್ಮನು ನೀನೆ ೧
ದೈವಗುರು ಕುಲಗೋತ್ರನು ನೀನೆ
ಕಾವ ಕರುಣ ಸೂತಾಂತ್ರನು ನೀನೆ ೨
ದ್ರವ್ಯ ಧನವು ಸಕಲಾಶ್ರಯ ನೀನೆ
ದಿವ್ಯಾಲಂಕೃತ ಭೂಷಣ ನೀನೆ ೩
ಭಾಸುತ ಬಾಹ್ಯಾಂತ್ರದೊಳಿಹ ನೀನೆ
ಭಾಸ್ಕರಕೋಟಿ ಸುತೇಜರೂಪನು ನೀನೆ ೪
ಮಹಿಪತಿ ಮನೋಹರ ಮೂರ್ತಿಯ ನೀನೆ
ಸಾಹ್ಯ ಸಕಲ ಸಾರ್ಥಿಯು ನೀನೆ ೫

ಹಾಡಿನ ಹೆಸರು :ಸಕಲವೆನಗೆ ನೀನೆ ಶ್ರೀಹರಿಯೆ
ಹಾಡಿದವರ ಹೆಸರು :ವಿನಯ್ ಶರ್ಮ, ಶಶಿಧರ್
ಸಂಗೀತ ನಿರ್ದೇಶಕರು :ಶಂಕರ್ ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *