Categories
ರಚನೆಗಳು

ಕಾಖಂಡಕಿ ಶ್ರೀ ಮಹಿಪತಿರಾಯರು

೩೭೨
ಇದೇವೆ ಪೂಜೆಯ ನೋಡಿ ಹೃದಯದಲಿ ನಿಜ ಒಡಗೂಡಿ ಧ್ರುವ
ಮೂರ್ತಿ ಎಂಬುದೇ ಅಮೂರ್ತಿ
ನಾಮಸ್ವರೂಪದ ನಿಜಗುಹ್ಯವಾರ್ತಿ
ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ ೧
ನಿತ್ಯ ನಿರ್ಗುಣ ನಿರ್ವಿಕಲ್ಪಾ ಸತ್ಯಸದ್ಗುರು ಸ್ವರೂಪಾ
ನಿತ್ಯ ನಿತ್ಯ ನಿತ್ಯರ್ಥ ಸುದೀಪಾ ತತ್ವಜ್ಞಾನ ಮನಮಂಟಪಾ ೨
ಸ್ವಾನುಭವ ಸ್ವಾದೋದಕ ಜ್ಞಾನ ಭಾಗೀರಥೀ ಅಭಿಷೇಕ
ಮೌನಮೌನ್ಯವಸ್ತ್ರಾ ಮೋಲಿಕಾ ಧಾನ್ಯವೆಂಬುದೇ ಸೇವೆ ಅನೇಕಾ ೩
ಗಂಧಾಕ್ಷತಿ ಪರಿಮಳವುಳ್ಳ ಪುಷ್ಪ ಬುದ್ಧಿಮನವಾಯಿತು ಸ್ವರೂಪಾ
ಸದ್ವಾಸನ್ಯಾಯಿತು ಧೂಪದೀಪ ಸದ್ಭಾವನೆ ನೈವೇದ್ಯಮೋಪಾ ೪
ಫಲತಾಂಬೋಲವೆ ಸದ್ಭಕ್ತಿ ಮ್ಯಾಲಭಿಭಾವನೆ ಮಂಗಳಾರ್ತಿ
ಬಾಲಕ ಮಹಿಪತಿ ನಿಜಪೂಜಿಸ್ಥಿತಿ
ಕುಲಕೋಟಿ ಉದ್ಧರಿಸುವ ಗತಿ ೫

೨೦೫
ಇದ್ದರಿರಬೇಕು ಸಂಸಾರಸುಖದಲ್ಹೀಗೆ
ಪದ್ಮಪತ್ರವು ಜಲದೊಳಗಿದ್ಹಾಂಗೆ ಧ್ರುವ
ನಡಿನಡಿಯಬೇಕ್ಹೀಂಗೆ ತಡಿಯೊಳರಿಬಿಡದ್ಹಾಂಗೆ
ನುಡಿನುಡಿಯಬೇಕು ಹರಿನುಡಿಸಿದ್ಹಾಂಗೆ
ಪಡೆದರಿದೇ ಪಡಿಯಬೇಕು ಹರಿ ಒಡಲ ಹುಗುವ್ಹಾಂಗೆ
ಅಡಿಗಡಿಗೆ ಹರಿಕೂಡಿ ಬಿಡದಗ್ಹಲದ್ಹಾಂಗೆ ೧
ಇಡಗಿ ಇಡಬೇಕ್ಹಿಂಗೆ ಇಡಗರಿಗುಡಿಸಿದ್ಹಾಂಗೆ
ತುಡಗಿ ತುಡಬೇಕ್ಹೀಂಗೆ ತುಡಮಾಡಿಸದ್ಹಾಂಗೆ
ಉಡಗಿ ಉಡಬೇಕ್ಹೀಂಗೆ ಉಡಿಗರಿಗುಡಿಸಿದ್ಹಾಂಗೆ
ಮುಡಗಿ ಮುಡಿಬೇಕ್ಹಾಂಗ್ಹರಿಗೆ ಮುಡಿಸಿದ್ಹಾಂಗೆ ೨
ಉಂಡರುಣಬೇಕ್ಹೀಂಗೆ ಉಂಡದರಿಗುಣಸಿದ್ಹಾಂಗೆ
ಕೊಂಡುದಕೋ ಹರಿಗೆ ಕೊಡಿಸಿದ್ಹಾಂಗೆ
ಮಂಡಣಿಯ ಮಾಡ್ಹೀಂಗೆ ಹರಿಗೆ ಮಂಡಿಸಿದ್ಹಾಂಗೆ
ಕೊಂಡು ಕೊಂಬುದು ಹರಿಕಂಡು ಒಲುವ್ಹಾಂಗೆ ೩
ಮಲಗಿ ಏಳುವದ್ಹೀಂಗೆ ಮಲಗರಿಗೇಳಿಸಿದ್ಹಾಂಗೆ
ತಿಳವು ತಿಳವದು ಹರಿ ತಿಳಿಸಿದ್ಹಾಂಗೆ
ಸುಳವು ಸುಳವರು ಹರಿಸುಳಸ್ಯಾಡಿದ್ಹಾಂಗೆ
ಒಲವು ಮಾಡುವದ್ಹೀಂಗೆ ಹರಿಯ ಒಲಿವಾದ್ಹಾಂಗೆ ೪
ರತಿಪಿಡಿದು ಹೀಂಗೆ ಹರಿಗತಿಯಾಗುವ್ಹಾಂಗೆ
ಅತಿಹರುಷ ಬಡು ಹರಿನೋಡುವ್ಹಾಂಗೆ
ಸಥಿಯ ಪಡೆದವುದು ಹೀಂಗರಿಯು ಸಥಿನಡಿಸಿದ್ಹಾಂಗೆ
ಸ್ತುತಿಮಾಡುವ ಮಹಿಪತಿ ಪ್ರತಿಗಾಣದ್ಹಾಂಗೆ ೫

೬೧೬
ಇನ್ನೇನಿನ್ನೇನು ಎನಗಿನ್ನು ಇನ್ನೇನಿನ್ನೇನು ಧ್ರುವ
ಎನ್ನೊಳು ಗುರು ತನ್ನ ಮರ್ಮವು ತೋರಿದ ಇನ್ನೇನಿನ್ನೇನು ೧
ಮುನ್ನಿನ ಕರ್ಮವು ನಿರ್ಮೂಲವಾಯಿತು ಇನ್ನೇನಿನ್ನೇನು ೨
ಎನ್ನೊಳು ಘನಬ್ರಹ್ಮವಸ್ತು ತಾನಾಯಿತು ಇನ್ನೇನಿನ್ನೇನು ೩
ನಾನು ನಾನೆಂಬುದು ನೆಲಿಯು ತಾನಾಯಿತು ಇನ್ನೇನಿನ್ನೇನು ೪
ಏನೆಂದು ತಿಳಿಯದ ಅನುಮಾನ ಗಳೆಯಿತು ಇನ್ನೇನಿನ್ನೇನು ೫
ಪರಮ ತತ್ವದ ಗತಿ ನೆಲೆ ನಿಭ ತೋರಿತು ಇನ್ನೇನಿನ್ನೇನು ೬
ಎನ್ನೊಳಾತ್ಮ ಖೂನ ಕುರುಹವು ತಿಳಿಯಿತು ಇನ್ನೇನಿನ್ನೇನು ೭
ಕನಸು ಮನಸು ಎಲ್ಲ ನಿನ್ನ ಸೇವೆ ಆಯಿತು ಇನ್ನೇನಿನ್ನೇನು ೮
ಹಗಲಿರುಳೆಂಬುದು ಹಗರಣವಾಯಿತು ಇನ್ನೇನಿನ್ನೇನು ೯
ಅರಹು ಮರಹಿನ ಇರುವು ತಿಳಿಯುತು ಇನ್ನೇನಿನ್ನೇನು ೧೦
ಭಾವದ ಬಂಇÀಇಲಾಟ ನಿಜವಾಗಿ ದೋರಿತು ಇನ್ನೇನಿನ್ನೇನು ೧೧
ಜೀವಶಿವನ ಗತಿ ಸೋಹ್ಯವು ತಿಳಿಯಿತು ಇನ್ನೇನಿನ್ನೇನು ೧೨
ಆಯವು ದಾಯವು ಸಾಹ್ಯವು ದೋರಿತು ಇನ್ನೇನಿನ್ನೇನು ೧೩
ಜೀವನ್ನ ಜಾತಿಯ ಕೀಲವು ತಿಳಿಯಿತು ಇನ್ನೇನಿನ್ನೇನು ೧೪
ಜನ್ಮ ಮರಣದಾ ಜಂತ್ರವು ಮುರಿಯಿತು ಇನ್ನೇನಿನ್ನೇನು ೧೫
ಸಂದೇಹ್ಯ ಸಂಕಲ್ಪ ಸೂಕ್ಷ್ಮವು ಹರಿಯಿತು ಇನ್ನೇನಿನ್ನೇನು ೧೬
ಮರಣದ ಗತಿಗಳ ಮಂತ್ರವು ತಿಳಿಯಿತು ಇನ್ನೇನಿನ್ನೇನು ೧೭
ಸುಷಮ್ನ ನಾಳದ ಸೂಕ್ಷ್ಮವು ದೋರಿತು ಇನ್ನೇನಿನ್ನೇನು ೧೮
ಇಮ್ಮನವಿದ್ದದು ಒಮ್ಮನವಾಯಿತು ಇನ್ನೇನಿನ್ನೇನು ೧೯
ಆಧಾರಚಕ್ರದ ಹಾದಿಯು ತಿಳಿಯಿತು ಇನ್ನೇನಿನ್ನೇನು ೨೦
ಸದ್ಗುರು ಕೃಪೆಯಾದಾ ಸಾಧನವಾಯಿತು ಇನ್ನೇನಿನ್ನೇನು ೨೧
ಭವಕೆ ಗುರಿಯಾಗುವ ಬಾಧೆಯ ಅಳಿಯಿತು ಇನ್ನೇನಿನ್ನೇನು ೨೨
ಅಂತರಾತ್ಮನ ಸೂತ್ರಾಂತ್ರವು ತಿಳಿಯಿತು ಇನ್ನೇನಿನ್ನೇನು ೨೩
ಮಹಿಪತಿ ಜೀವನ್ನ ಪಾವನ್ನವಾಯಿತು ಇನ್ನೇನಿನ್ನೇನು ೨೪
ಎನ್ನೊಳು ಭಾಸ್ಕರ ಗುರು ತಾನೆಯಾದನು ಇನ್ನೇನಿನ್ನೇನು ೨೫

೬೧೭
ಇಲ್ಲೆ ಉಂಟು ಮುಕುತಿ ನೋಡಿ ನೋಡಿ ಒಂದೆ ಮನದಲಿ
ಸುಲಭವಾಗಿ ದೋರುತಿಹ್ಯದು ಗುರುಕರುಣದಲಿ ಧ್ರುವ|
ಏನುಹೇಳಲಿ ಸ್ವಾನುಭವ ಸುಖದ ಸಿದ್ಧಿಯ
ಜ್ಞಾನಿಬಲ್ಲ ಭಾಸುತಿಹ್ಯ ಸ್ವಕೀಲ ಸಿದ್ಧಿಯ
ಮನವ ಬಲಿದು ಮಾಡಿಕೊಳ್ಳಿ ಜ್ಞಾನಸಿದ್ಧಿಯ
ತನುವಿನೊಳು ದೋರುತೀಹ್ಯ ಶ್ರೀಗುರು ಸುಧೆಯ ೧
ನಿಟಿಲ ಭ್ರೂಮಧ್ಯ ದಾಟಿನೋಡಿ ಮುಕ್ತಿಯ
ದಿಟವಾಗಿ ಕೂಡಿ ಪ್ರಭಯ ಜ್ಞಾನ ಶಕ್ತಿಯ
ಕುಟಿಲವಲ್ಲ ಕೇಳಿ ಮಾತು ನಿಜಯುಕ್ತಿಯ
ನಟನೆ ತನ್ನೊಳು ದೋರುವ ಗುರುಭಕ್ತಿಯ ೨
ಲೇಸು ಲೇಸಾಯಿತು ಎನಗೆ ಭಾಸ್ಕರ ಕರುಣವು
ಭಾಸುತಿಹ್ಯದು ವಾಸುದೇವನ ಪುಣ್ಯಚರಣವು
ಮೋಸವಿಲ್ಲದೆ ನೀಗಿತು ಜೀವನ ಜನ್ಮಮರಣವುದಾಸ ಮಹಿಪತಿಗಾಯಿತು ಘನಸ್ಫುರಣವು ೩

೩೭೫
ಇಲ್ಲೆವೆ ನಿಧಾನವು ಶ್ರೀಗುರುವೆ ನಿಮ್ಮಲ್ಲೆವೆ ನಿಧಾನವು
ಎಲ್ಲರಿಗಿದು ತಾ ದುರ್ಲಭವಾಗಿಹ್ಯ ಸುಲಭದಲಿ
ಒಲಿದಿಹ್ಯ ಸದ್ಗುರು ನಮಗಿಲ್ಲೆ ನಿಧಾನವು ಧ್ರುವ
ಭೇದಾಭೇದವನಳಿದು ಸದ್ಗುರುವಿನ ಪಾದ ಪದ್ಮವ ತಿಳಿದು
ವೇದಕಗೋಚರವು ಸದ್ಗತಿ ಸುಖ
ಸಾಧಿಸುವವ ಧನ್ಯನು ಶೋಧಿಸಿ ಅತ್ಮದಿ ಬೋಧೆಯಲಿ ನಿಜ
ಅದಿತತ್ವದ ಗತಿ ಭೇದಿಸಿ ತಿಳಿದವಗಿಲ್ಲಿವೆ ೧
ಖುಲ್ಲ ಮನುಜರಿಗಿದು ತಿಳಿಯದೆ ಇಲ್ಲದಂತಾಗಿಹುದು
ಎಲ್ಲಾ ದೈವದ ಮೂಲವು ಬಲ್ಲವಗಿದು ಸೊಲ್ಲಿನೊಳಗಿಹುದು
ಕಲ್ಲಿನೊಳಿಹ ದೈವಿಲ್ಲವೆ ಇಹ್ಯ
ಪ್ರಾಣದೊಲ್ಲಭ ಗುರುನೆಂದಿಲ್ಲೆವೆ ತಿಳಿದುವಗಿಲ್ಲೆವೆ ೨
ಸುತ್ತೇಳು ಸಾಗರದ ಪೃಥ್ವಿಲಿಹ್ಯ ನಿತ್ಯವುಳ್ಳ ದೈವೀತನು
ಸುತ್ತ ಸನಕಾದಿಗಳು ಮತ್ತೆ ದೇವರು
ತೆತ್ತೀಸ ಕೋಟಿಗಳು ಹತ್ತಿಲೆ ಹೊಳೆಯುತ್ತ ಚಿತ್ತದ ತುದಿಯಲಿ
ಸತ್ಯಕೈಲಾಸವೆ ಇತ್ತ ವೈಕುಂಠವು ಇಲ್ಲೆವೆ ೩
ಕಾಶಿ ರಾಮೇಶ್ವರವು ಸಕಲ ಕ್ಷೇತ್ರವಾಸವಾಗಿಲ್ಲಿಹವು
ದೋಷನಾಶನ ಕೃಷ್ಣೆಯು ಮಿಗಿಲಾದ
ಏಸು ತೀರ್ಥಗಳಿಹ್ಯವು ವಾಸವಾಗಿಹವು ಸೂಸುತ ನದಿಗಳು
ಈಶನ ಚರಣದಲಿ ಭಾಸುದು ಕಂಡವಗಿಲ್ಲೆವೆ ೪
ಚೆಂದುಳ್ಳ ದ್ವಾರಕೆಯು ಗೋಕುಲ ವೃಂದಾವನ ಕುರುಕ್ಷೇತ್ರವು
ಒಂದೊಂದೇ ಕ್ಷೇತ್ರದಲಿ ವಾಸವಾಗಿ
ನಿಂದು ಮಾಡಿದ ಪುಣ್ಯವು ಹಿಂದಿನ ಕರ್ಮವು
ಹೊಂದದೆ ಗಳಿಸುವ ಮಂದಾಕಿನಿ ನದಿಯಿಂದ ಫಲಿಲ್ಲಿವೆ ೫
ಹಿಂಡ ದೈವದೊಡೆಯನು ಅನಂತಕೋಟಿ
ಬ್ರಹ್ಮಾಂಡ ನಾಯಕನು
ಕಂಡು ಅದ್ವೈತ ಸುಖವು ಉಂಡವಗಿದು
ಪಿಂಡ ಬ್ರಹ್ಮಾಂಡೈಕ್ಯವು ಮಂಡಲದೊಳು
ಬ್ರಹ್ಮಾಂಡದಲಿಹ ಪ್ರಚಂಡ ಶ್ರೀಗುರು
ಪಿಂಡಾಂಡದಿ ಕಂಡವಗಿಲ್ಲ್ಲೆವೆ ೬
ಸಂದೇಹ ವೃತ್ತಿ ಹರಿದು ಸದಮಲಾನಂದ ಮುಕ್ತಿಯಲಿ ಬೆರೆದು
ಒಂದು ಪಥಸ್Àವನರಿದು ಜಗದೊಳು
ದ್ವಂದ್ವಗಳನೆ ಮರೆದು ಎಂದಿಗಗಲದಂತೆ
ತಂದೆ ಶ್ರೀ ಗುರುವಿನ ಹೊಂದಿ
ಶ್ರೀಪಾದವನಿಂದ ಮಹಿಪತಿಗೆ ಇಲ್ಲೆವೆ ೭

೩೭೬
ಇವ ನಮ್ಮ ದಾತ ಅವಗುಣ ಧೂತ
ಅವಗುಣ ಧೂತ ದೇವಾಧಿದೇವ ಶ್ರೀದೇವ ಅವಧೂತ ಧ್ರುವ
ಜೀವದ ಜೀವ ದೇವರ ದೇವ
ಭಾವಿಕರ ಕಾವ ಶ್ರೀ ವಾಸುದೇವ ೧
ಪ್ರಾಣಕ ಪ್ರಿಯ ಮುನಿಜನಾಶ್ರಯ
ಜ್ಞಾನಿಗಳಿಗೆ ಸಾಹ್ಯ ಅನುಕೂಲ ನಮ್ಮಯ್ಯ ೨
ಅನಾಥ ಬಂಧು ಘನಕೃಪಾಸಿಂಧು
ಅನುದಿನ ದೊರೆವ ದೀನನಾಥನೆಂದೆಂದು ೩
ಮನದ ಮಾಣಿಕ ಅಣುರೇಣುಕ ವ್ಯಾಪಕ
ಅನಂತಕೋಟಿ ಬ್ರಹ್ಮಾಂಡ ನಾಯಕ ೪
ಪರಮ ಉದಾರ ಕರುಣಾಸಾಗರ
ತರಳ ಮಹಿಪತಿಸ್ವಾಮಿ ಇಹಪರ ಸಹಕಾರ ೫

೩೧
ಇವ ನೋಡಮ್ಮ ನವನೀತಚೋರ
ದೇವದೇವ ಮಾ ಮನೋಹರ ಧ್ರುವ
ಗೋವನಿವ ಗೋಪಾಲ ಶ್ರೀಧರ
ಗೋವಿಸುವ ಇವ ದಾಮೋದರ
ಸಾವಿರ ನಾಮದೊಡೆಯ ಸಹಕಾರ
ಹಾವಿನ ಫಣಿ ಮೆಟ್ಟಿದ ವೀರ ೧
ಸಿರಿಯ ಲೋಲನಿವ ನಂದಕುಮಾರ
ಉರಗಶಯನ ಕೌಸ್ತುಭಭರ
ಪರಮ ಪುರಷ ಹರಿಯ ಸುರವರ
ಮರುಳಮಾಡಿದವ ಗೊಲ್ಲತೇರ ೨
ಬೆಣ್ಣೆ ಮೊಸರು ಕದ್ದು ವೈವನ
ಕಣ್ಣಿಲೆ ಕಟ್ಟಬೇಕು ಇವನ
ಪುಣ್ಯಯುಳ್ಳ ಯಶೋದೆ ಕಂದನ
ಬಣ್ಣಿಸೊ ಮಹಿಪತಿಗನುದಿನ ೩

೨೯
ಇವನ ಕಂಡಿರ್ಯಾ ಕಾವಕರುಣನ
ಭಾವ ಭಾವಿಸುವ ಪರಿಯಾಗುವ ದೇವನ ಧ್ರುವ
ಸಗುಣಲೀಹ್ಯನಾ ಭಕುತಿಗೊಲಿವನಾ
ಸುಗಮದಿಂದ ನಿಗಮನುಳುಹಿ ನಗವ ನೆಗೆದನಾ ೧
ಸಿರಿಯ ಲೋಲನಾ ವರಕೃಪಾಲನಾ
ಧರಿಯನುಳುಹಿ ತರಳಗೊಲಿದು ಪ್ರಿಯವಾದನಾ೨
ಪರಮಪುರುಷನಾ ಸುರವರೇಶನಾ
ವರವ ಬಲಿಗೆ ಇತ್ತು ದೋರಿದ ಭಾರ್ಗವರೂಪನಾ ೩
ಪರಮ ಆತ್ಮನಾ ಹರಿಸರ್ವೋತ್ತಮನಾ
ಸುರರ ನೆರೆಯ ಬಿಡಿಸಿ ಹೊರಟ ಪಾಂಡವಪ್ರಿಯನಾ ೪
ಹೊಳೆವ ತೇಜನಾ ಮೂಲೋಕ ಪಾವನಾ
ಹಳಿದು ವ್ರತವ ನೋಡಿ ಹಯವನೇರಿ ಸುಳಿದನಾ ೫
ಘನ ಮಹಿಮನಾ ದಯಾ ನಿಸ್ಸೀಮನಾ
ದೀನ ಮಹಿಪತಿಸ್ವಾಮಿ ಭಾನುಕೋಟೆ ದೀಪ್ತನಾ ೬

೩೦
ಇವನಾ ಕಂಡಿರ್ಯಾ ನಮ್ಮ ನವನೀತ ಜೋರನ
ಅವನ ಕಂಡರದೇಳಿ ಹವಣಿಸಿ ಹಿಡಿದುಕೊಂಬಾ ಧ್ರುವ
ನಾಕು ಬೀದಿಯೊಳಗೆ ಸಾಕು ಸಾಕು ಮಾಡಿದ
ಸೋಂಕದೆ ಕೈಯ್ಯಗೊಡಾ ಬೇಕೆಂದಾರುಮಂದಿಗೆ ೧
ಹದಿನೆಂಟು ಸಂಧಿಯೂಳು ಶೋಧಿಸಿನೋಡಿದರೆ
ಸಾಧಿಸಿ ಬಾರನಿವ ಮದನ ಮೋಹನ ನೋಡಿ ೨
ತಾನೆ ಸಿಕ್ಕುವ್ಹಾಗೊಂದು ಮನಗೂಡಬೇಕು ತಂದು
ದೀನ ಮಹಿಪತಿ ಸ್ವಾಮಿ ಅನಕಾ ದೋರತಾ ಬಂದು ೩

೬೩೮
ಈ ಮಹಿಮೆಗೆ ಏನೆನಬಹುದು ಧ್ರುವ|
ರೂಪವಿಲ್ಲದೆ ರೂಪಾಗಿ ರೂಪಕ ಅರೂಪನಾದ
ಅಪಾ ಮೂರು ಲೋಕಕ ಚಿದ್ರೂಪನಾದ ಮೂರ್ತಿಗೆ ೧
ಸರ್ವರೊಳು ಸಾಕ್ಷವಾಗಿ ನಿರ್ವಿಕಲ್ಪ ನಿರ್ಗುಣಿ ತಾ
ನಿರ್ವಿಕಾರನಾದ ನಿರ್ಭರ ನಿರ್ವಿಶೇಷಗೆ ೨
ಭಾವಕ ಸ್ವಭಾವನಾದ ಪವಿತ್ರಪಾವನನೀತ
ಭವನಾಶಗೈಸಿದ ಮಹಿಪತಿ ಗುರುಮೂರ್ತಿಗೆ ೩

೩೮೦
ಈತ ಶ್ರೀ ಗುರುನಾಥಾ ದಾತ ತ್ರೈಲೋಕ್ಯಕೀತ ಧ್ರುವ
ದೂರ ಸಗುಣ ಸಹಕಾರ ಧೀರ ಪರಮಉದಾರ
ದುರಿತ ಸಂಹಾರ ಪರಾತ್ಪರ ಪರಾಕಾರ ೧
ಈಶ ಭವಭಯನಾಶ ಶೇಷಶಯನ ಸರ್ವೇಶ
ದೋಷಹರ ಕರುಣೀಶ ಕ್ಲೇಶನಾಶ ದೇವೇಶ ೨
ಮಾತಾ ವಿಶ್ವನಿರ್ಮಿತ ಪಿತಾಮಹನ ಪಿತ
ಈತ ಮಹಿಪತಿ ಹಿತ ನಾಥಾ ಭಕ್ತಪುನೀತ ೩

೩೭೯
ಈತ ಶ್ರೀಗುರು ಪರಬ್ರಹ್ಮನೆನ್ನಿ
ಅತೀತವಾದ ಗುಣತ್ರಯ ಪರಮಾತ್ಮನೆನ್ನಿ ಧ್ರುವ
ನಿರ್ಗುಣಾಂದನೆನ್ನಿ ನಿಗಮಗೋಚರನೆನ್ನಿ
ಅಗಣಿತಗುಣ ಪರಿಪೂರ್ಣನೆನ್ನಿ ೧
ಯೋಗಾನಂದಾತ್ಮನೆನ್ನಿ ಯೋಗಿವಂದಿತನೆನ್ನಿ
ಯೋಗಿಹೃದಯವಾಸ ಯೋಗನಿಧಾನನೆನ್ನಿ ೨
ಸಾಧುಸಹಕಾರನೆನ್ನಿ ಸದಾನಂದಾತ್ಮನೆನ್ನಿ
ಸದ್ಬ್ರಹ್ಮಾನಂದ ಸದೋದಿತನೆನ್ನಿ ೩
ಜ್ಞಾನಸಾಗರನೆನ್ನಿ ಜ್ಞಾನಾನಂದಾತ್ಮನೆನ್ನಿ
ಜ್ಞಾನಿಗಳೊಂದಿಹ ಸುಜ್ಞಾನಸ್ವರೂಪನೆನ್ನಿ ೪
ಪರಮಪುರಷನೆನ್ನಿ ಪರಮಪ್ರಕಾಶನೆನ್ನಿ
ಪರಮಾನಂದಸ್ವರೂಪ ಪರಾತ್ಪರ ಪೂರ್ಣನೆನ್ನಿ ೫
ಇಹಪರನೀತನೆನ್ನಿ ಗುಹ್ಯಗುಪಿತನೆನ್ನಿ
ಬಾಹ್ಯಾಂತ್ರಪರಿಪೂರ್ಣ ತ್ರೈಲೋಕ್ಯನಾಥನೆನ್ನಿ ೬
ಕಾವಕರುಣನೆನ್ನಿ ಭವಭಂಜನನೆನ್ನಿ
ಜೀವಸಂಜೀವ ಮಹಿಪತಿ ಗುರುಮೂರ್ತಿಯೆನ್ನಿ ೭

೩೩
ಈತನೀಗ ಕೃಷ್ಣನಾಥನು ಶ್ರೀನಾಥನು ಶ್ರೀನಾಥನಮ್ಮಾ ಧ್ರುವ
ನಂದಕುಮಾರನೀತ ನಂದಮಹಿಮನೀತ
ಕಂದರ್ಪಜನಕನೀತ ಸುಂದರವದನನೀತ ೧
ಇಂದಿರೇಶನು ಈತ ವಂದಿತ ತ್ರೈಲೋಕ್ಯನಾಥ
ಚಂದವಾಗಿ ಸುಳಿದ ಬಾಲ ಮುಕುಂದನೀತ ೨
ಗಿರಿಯ ಬೆರಳಲೆತ್ತಿದಾತ ಕರಿಯ ಸೆರೆಯ ಬಿಡಿಸಿದಾತ
ಮೊರೆಯ ಕೇಳಿ ದ್ರೌಪದಿಯ ಕರುಣಿಸಿದಾತ ೩
ಅಸುವ ಪೂತನಿ ಹೀರಿದಾತ ಕಂಸನ ಮಡುಹಿದಾತ
ವಂಶ ಕೌರವರ ತಾನು ಸಂಹರಿಸಿದಾತ ೪
ಬಾಲಕನಹುದೀತ ಮೂಲೋಕ ಪಾಲಕ ನೀತ
ಸಲಹುತಿಹ ಮಹಿಪತಿ ಮೂಲಾಗ್ರಜನೀತ ೫

೩೮೧
ಉಂಬುವ ಬನ್ನಿರೋ ಅನಂದದೂಟವ
ಹಂಬಲಿಸಿ ಸವಿದು ತುತ್ತು ಕೊಂಬ ಬನ್ನಿರೋ ಧ್ರುವ
ಬಡಿಸಿಹಿದು ನೋಡಿ ಅನೇಕ ಪರಿಯಲಿ
ಎಡಬಲಕೆ ನೋಡಲಾಗದಾನಂದ ಘನಲೀಲೆ ೧
ಇಡಿದು ತುಂಬಿದೇ ನಿಧಾನದೂಟವು
ನೋಡಲಿಕ್ಕೆ ತೃಪ್ತಿಗೈಸುತಿಹುದು ನೋಟವು ೨
ಬೇಡಿಸಿಕೊಳ್ಳದೆ ಬಡಸುತಿಹ್ಯನು
ಮೂಢ ಮಹಿಪತಿ ಒಡೆಯ ಭಾನುಕೋಟಿತೇಜನು ೩

೩೮೨
ಉಂಬುವ ಬನ್ನಿರೋ ನೀಟ ಅನುಭವದೂಟ ಧ್ರುವ
ಎಡಿಯು ಬಡಿಸಿಪೂರ್ಣ ಗೂಡಿನೊಳಿಟ್ಟಿದೆ ಖೂನ
ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ ೧
ತುತ್ತುಕೊಂಬುದು ಬ್ಯಾಗೆ ಸತ್ಸಂಗದಲಿ ನೀವೀಗ
ಅತಿಶಯಾನಂದ ಭೋಗ ಉತ್ತಮ ಯೋಗ ೨
ಕಲ್ಪನೆಂಬುದು ನೊಣ ಬೀಳಗೊಡದೆ ಜತನ
ಬಳೆದುಕೊಂಡುಂಬುವ ಜಾಣ ಕಳೆದನುಮಾನ ೩
ಸವಿಸವಿಮಾಡಿಕೊಂಡು ಸೇವಿಸುವದು ಮನಗಂಡು
ಪಾವನಾಗಬೇಕು ಉಂಡು ಸವಿಸೂರೆಗೊಂಡು ೪
ಉಂಡು ಮಹಿಪತಿ ನೋಡಿ ಕೊಂಡಾದಿಡಾನಂದಗೂಡಿ
ಮಂಡಲದೊಳಿದೇ ಮಾಡಿ ಬಿಡದೆ ಸೂರ್ಯಾಡಿ೫

೩೪
ಉತ್ತಮೋತ್ತಮ ದೈವ ನಿತ್ಯನೀನಾಗಿರಲಿಕ್ಕೆ
ಮತ್ತೆ ಅನ್ಯ ದೈವನಾರಿಸಲ್ಯಾತಕೆ ಧ್ರುವ
ಸತ್ಯಸನಾತನನೆಂದು ಶ್ರುತಿಸಾರುತಿರಲಿಕ್ಕೆ
ಚಿತ್ತ ಚಂಚಲವಾಗುವ ಸಂದೇಹವ್ಯಾತಕೆ
ಎತ್ತ ನೋಡಿದರತ್ತ ಪ್ರತ್ಯಕ್ಷ ನೀ ದೋರಲಿಕ್ಕೆ
ಮತ್ತೆ ಆವ್ಹಾನ ವಿಸರ್ಜನವ್ಯಾತಕೆ ೧
ವಾಸವಾಗಿ ಎನ್ನಾತ್ಮದೊಳು ನೀನೆ ಇರಲಿಕ್ಕೆ
ದೇಶೋದೇಶವನೆ ಶೋಧಿಸುವದ್ಯಾತಕೆ
ವಾಸುವೇವನೆ ನೀನೆ ಎನ್ನ ಈಶನಾಗಿರಲಿಕ್ಕೆ
ಸೋಶಿಲೆ ಅನೇಕ ವೇಷ ದೋರುವದ್ಯಾತಕೆ ೨
ಭಾನುಕೋಟಿತೇಜ ಎನ್ನೊಡಿಯನಾಗಿರಲಿಕ್ಕೆ
ಬಿನುಗುದೈವದ್ಹಂಗು ತಾಇನ್ನೊಂದು ಯಾತಕೆ
ಮನದ ಮಂಗಳಾಗಿ ನೀ ಮಹಿಪತಿಗೆ ಭಾಸುತಿರಲಿಕ್ಕೆ
ಅನುಭವಕ್ಕನುಮಾನ ಮಾಡುವುದ್ಯಾತಕೆ೩


ಉದಯಲೆದ್ದು ಶ್ರೀ ಗುರುವೆನ್ನಿರೊ
ಉದಧಿನಿವಾಸ ಸದ್ಗುರುವೆನ್ನಿರೊ ಧ್ರುವ
ಕರುಣಕರನೆನ್ನಿ ಗುರುಮುರಹರನ್ನೆನಿ
ಕರಿವರ ಹರಿ ಸರ್ವೋತ್ತಮನೆನ್ನಿ ೧
ಸುರಮುನಿವರನೆನ್ನಿ ಗುರುಗಿರಿಧರನೆನ್ನಿ
ನರಕೀಟಕನ ಪಾಲಿಪನೆನ್ನಿರೊ ೨
ಶರಣರಕ್ಷಕನೆನ್ನಿ ವರದಾಯಕನೆನ್ನಿ
ತ್ರ್ಯೆಲೋಕ್ಯನಾಥ ತಾರಕನೆನ್ನಿರೊ ೩
ವಿಹಂಗವಾಹನನೆನ್ನಿ ತ್ರಿ ಕಂಚಧರ(?)ನೆನ್ನಿ
ಪಾಸಾಲ(?) ಸಾಹಿತ್ಯದೇವನೆನ್ನಿ ೪
ಭಕ್ತವತ್ಸಲನೆನ್ನಿ ಮುಕ್ತಿದಾಯಕನೆನ್ನಿ
ಮಹಿಪತಿ ಗುರು ಭವನಾಶನೆನ್ನಿ ೫

೬೩೯
ಉದಯವಾಯಿತು ಹೃದಯ ಕಮಲದೊಳಗೆ ಧ್ರುವ|
ಗುರುಕರುಣಾನಂದಬೋಧ ಅರುಣೋದಯವಾಯಿತು
ಸ್ಮರಣಿಗರವು ದೊರೆಯಿತು ಹರಿಯ ಚರಣದ ೧
ಸಮ್ಯಜ್ಞಾನದ ಪ್ರಭೆ ಸಮ್ಯವಾಗಿದೋರಿತು
ತಾಮಸನಿದ್ರೆ ಹರಿಯಿತು ತಿಮಿರಾಂಧದ ೨
ಥಳಥಳಿಸುವ ರವಿಕೋಟಿ ಬೆಳಗಾಯಿತು
ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ ೩
ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಘಲ
ಉದಯವಾಯಿತದೃಷ್ಟವು ಸದೃಷ್ಟವಾಗಿ ೪
ಸದ್ಗತಿ ಸುಖವಿದು ಸದೋದಿತವಾಯಿತು
ಸಾಧಿಸಿ ಮಹಿಪತಿಗೆ ಸದ್ಗರು ಕೃಪೆಯು ೫

೪೦
ಎಂಥ ಮಗನೆ ನಿಮ್ಮ ಗೋಪಮ್ಮ ಧ್ರುವ
ಸವಿಸುಖಬಲ್ಲಿವ ನವನೀತ ಚೋರ
ಎವಿಹಾಕುತ ಬಾಹಾ ಪರನಾರಿ ಜಾರ ೧
ಎಳೆವನು ಹಾದಿ ಬೀದಿ ಯೊಳಗೆ ಸೆರಗ
ಸುಳಹು ಕಂಡಾರೆಂದರೆ ತಾ ತಿರಗ ೨
ಹಿಡಿದೇನೆಂದರೆ ಕೈಯೊಳು ಸಿಲುಕ
ಮಾಡಿ ಮಾಡದಿದ್ಹಾಂಗ ಇವ ಬಲು ಠಕ್ಕ ೩
ಹೇಳಬೇಕಿನ್ನಾರಿಗೆ ಈ ದೂರ
ತಿಳಿದುಕೊಳ್ಳಮ್ಮ ಮಗನ ವಿಚಾರ ೪
ಬಿಡ ಇವನೆಂದೂ ಪಿಡಿದವರ ಕೈಯ
ಬಿಡದೆ ಸಲಹುತಿಹ್ಯ ಮೂಢಮಹಿಪತಿಯ ೫

೫೮೬
ಎಂದೆಂದು ಎನಗೆ ನೀನೆ ಅಖಿಳದೊಳು
ಎಂದೆಂದು ಎನಗೆ ನೀನೆ
ಅಂದಿಗಿಂದಿಗೆ ಎನ್ನ ತಂದೆ ತಾಯಿಯು ನೀನೆ
ಬಂಧು ಬಳಗವು ನೀಯೆನಗೆ ಹರಿಯೆ ಧ್ರುವ|
ಸುಖಸೌಖ್ಯದಲಿ ಸದಾನಂದ ಘನ ಬೀರುತಿಹ್ಯ
ಭಗುತ ಜನರಿಗಹುದು ನೀ ಪ್ರೀಯ
ಸಕಲದೇವಾದಿಗಳ ಕೈಯಲೊಂದಿಸಿಕೊಂಬ
ಮಕುಟ ಮಣಿಯಹುದೊ ನೀ ಎನ್ನಯ್ಯ
ಲೋಕಾಧಿಲೋಕಪಾಲನೆಂದು ಶ್ರುತಿಸ್ರ‍ಮತಿ
ಪ್ರಕಟಸಾರುತವೆ ಸುಕೀರ್ತಿಯ ಅಖಿಳ ಭುವನದಲೆನ್ನ
ಸಾಕಿ ಸಲಹುವ ಸ್ವಾಮಿ ೧
ಏಕೋದೇವನೆ ನೀನದ್ವಿತೀಯ
ಶ್ರೇಯಧೇನುವಾಗಿ ಸಾರಸಗರವುತಿಹ್ಯ ಸುಖ
ದಾಯಕಹುದಯ್ಯ ನೀ ಸಾಕ್ಷಾತ
ದಯಕರುಣದಿಂದಭಯಕರ ನಿತ್ಯಸಂಗಪೂರ್ಣ
ತೋಯಜಾಕ್ಷ ನೀ ಪೂರ್ಣಪರಮ ಭಕ್ತರ ಪ್ರಾಣ
ನಾಯಕನೆ ನೀನೆ ಪ್ರಖ್ಯಾತ ಕ್ಷಯರಹಿತನೆಂದು
ಜಯವೆನಿಸಿಕೊಳುತಿಹ್ಯ
ದಯಭರಿತನಹುದುಯ್ಯ ಸದೋದಿತ ೨
ನೀನೆ ಗತಿಯೆಂದು ಧರೆಯೊಳು ಕೊಂಡಾಡುವ
ನೆನಹುತಿಹ್ಯ ನÀಹುದುಯ್ಯ ಬಾಲಕನು ನಾ ನಿನ್ನ
ಫನದೊಲವಿನಿಂದ ಪಾವನಗೈಸುತಲಿಹ್ಯ
ದೀನ ದಯಾಳು ನೀನೆ ಎನ್ನ
ಅನುದಿನದಲಾಧಾರಿ ಮುನಿಜನರ ಸಹಕಾರಿ
ನೀನಹುದಯ್ಯ ಜಗಜ್ಜೀವನ
ಮನೋಹರನ ಮಾಡುತಿಹ್ಯ ದಾಸ ಮಹಿಪತಿಸ್ವಾಮಿಭಾನುಕೋಟಿಯು ನೀನು ಪ್ರಸನ್ನ ೩

೨೦೮
ಎಚ್ಚತ್ತಿರಬೇಕು ಮಾ ಧ್ರುವ
ಎಚ್ಚತ್ತಿರಬೇಕು ನೆಚ್ಚಿ ನಿಜಘನ ೧
ರಚ್ಚಿಗೆ ಬಾರದೆ ಬಚ್ಚಿಟ್ಟು ನಿಜಘನ ೨
ಕಚ್ಚಿ ಕೈ ಬಾಯಿಲೆ ಹುಚ್ಚಿಟ್ಟು ಹೋಗದೆ ೩
ಕಚ್ಚಿಕಿಡದೆ ನೀನು ಕಾಂಚನದಾಶೆಗೆ ೪
ನೆಚ್ಚಿಕೊಂಡಿರಬ್ಯಾಡಿ ವ್ಯಚ್ಚಾಗು ಬದುಕಿಗೆ ೫
ತುಚ್ಛರ ಮಾತಿಗೆ ನೆಚ್ಚಿ ನಡಿಯದೆ ೬
ಮತ್ಸರಕೆ ನೀವು ಹುಚ್ಚಾಗಿ ಹೋಗದೆ ೭
ಅಚ್ಚಳಿಯದೆ ನೀವು ಅಚ್ಯುತ ಭಕ್ತಿಗೆ ೮
ಸಚ್ಚಿದಾನಂದನ ನಿಶ್ಚಲರಿಯಲಿಕ್ಕೆ ೯
ಎಚ್ಚರಿಸಿದ ಗುರುಪಾದ ನಿಶ್ಚೈಸಲು ೧೦
ಸೂಚಿಸಿ ಹೇಳಿದ ಗುರುದಾಸಮಹಿಪತಿ ೧೧

೨೦೯
ಎಚ್ಚರಿಲ್ಲೀ ಮನಕೆ ಯೋಚಿಸಿ ನೋಡದು ಚಿದ್ಫನಕೆ ಧ್ರುವ|
ನುಡಿದವು ಪರಮಾರ್ಥ ನಡೆಯೊಳಗಿಲ್ಲದೆ ನುಡಿದರ್ಥ
ಹಿಡಿದು ವಿಷಯದ ಸ್ವಾರ್ಥಬಡುವುದು ಶ್ರಮತಾನೆ ವ್ಯರ್ಥ ೧
ಓದುದು ವೇದಾಂತ ಭೇದಿಸಿ ತಿಳಿಯದೆ ಅದರಂತ
ವಾದ ಮಾಡುದು ಭ್ರಾಂತ ಸಾಧಿಸಿ ನೋಡದು ತನ್ನೊಳು ತಾ ೨
ಜನಕೇಳುದು ಬುದ್ದಿ ತನಗ ಮಾಡಿಕೊಳ್ಳದು ಸಿದ್ಧಿ
ಕಾಣದ್ಹೇಳುದು ಸುದ್ಧಿ ಜ್ಞಾನಕ ಬಾರದು ತಾ ತಿದ್ದಿ ೩
ತೊಟ್ಟು ಉತ್ತಮ ವೇಷ ಮುಟ್ಟಿಗಾಣದೆ ಸ್ವಪ್ರಕಾಶ
ತುಟ್ಟಿಲಿ ಜಗದೀಶ ಗುಟ್ಟಿಲಿ ಬಲಿವದು ಧನದಾಶೆ ೪
ಎಚ್ಚರಿಸಿತು ಖೂನ ನಿಶ್ಚಲ ಮಹಿಪತಿಗೆ ಗುರುಜ್ಞಾನ
ಹುಚ್ಚುಗೊಂಡಿತು ಮನ ನೆಚ್ಚಿ ನಿಜಾನಂದದ ಘನ ೫

೨೧೦
ಎದ್ದಿರ್ಯಾ ನೀವಿನ್ನೆದ್ದಿರ್ಯಾ
ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ಧ್ರುವ
ಶುದ್ಧಿ ಮೆರೆದು ಭವ ನಿದ್ರಿಯಗಳೆದು ೧
ಕಾಯ ಮಂದಿರದೊಳು | ಮಾಯ ಮುಸುಕು ತೆಗೆದು ೨
ಚೆನ್ನಾಗಿ ಮಲಗಿದ್ದ | ಜನ್ಮ ಹಾಸಿಗೆ ಬಿಟ್ಟು ೩
ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು ೪
ಎದ್ದಿದ್ದರೆ ನೀವಿನ್ನು ಶುದ್ಧ ಬದ್ಧರಾಗಿ ೫
ಮನದಲ್ಲಿ ಇನಕೋಟಿ ತೇಜನ ಕಾಣುಹಾಂಗೆ ೬
ದೀನ ಮಹಿಪತಿ ಸ್ವಾಮಿ ಮನೋಹರ ಮಾಡೊಹಾಂಗೆ ೭

೩೮೩
ಎನಗಾಧಿಯೋ ಗುರು ಅಧಿಯೋ ಧ್ರುವ
ಒಬ್ಬಗೆ ಮತಿ ಆಧಿ ಒಬ್ಬಗೆ ಶ್ರುತಿ ಆದಿ
ಒಬ್ಬಗೆ ಶ್ರುತಿಪುರಾಣಾದಿ
ಒಬ್ಬಗೆ ಶ್ರೋತ್ರಾಧಿ ಒಬ್ಬಗೆ ಸ್ಮಾರ್ತಾಧಿ ಒಬ್ಬಗೆ ಜ್ಯೋತಿಷ್ಯದಾಧಿ
ಒಬ್ಬಗೆ ಮತದಾಧಿ ಒಬ್ಬಗೆ ವ್ರತ್ಯದಾಧಿ ಒಬ್ಬಗೆ
ಮಿತವಾಕ್ಯದಾಧಿ
ಒಬ್ಬೊಬ್ಬಗೊಂದೊಂದು ಉಂಟಾಗಿಹ್ಯದಾಧಿ ಎನಗೆ ನಿಮ್ಮ
ಶ್ರೀಪಾದದಾಧಿ ೧
ಒಬ್ಬಗೆ ವೃತ್ತಾಧಿ ಒಬ್ಬಗೆ ವಿತ್ತಾಧಿ ಒಬ್ಬಗೆ ಸ್ತುತಿಸುವದಾಧಿ
ಒಬ್ಬಗೆ ತೀರ್ಥಾಧಿ ಒಬ್ಬಗೆ ಕ್ಷೇತ್ರಾಧಿ ಒಬ್ಬಗೆ
ಯಂತ್ರ ಮಂತ್ರದಾಧಿ
ಒಬ್ಬಗೆ ಶೈವಾಧಿ ಒಬ್ಬಗೆ ಶಕ್ತ್ಯಾಧಿ ಒಬ್ಬಗಾಗಮಯುಕ್ತಿ ಆಧಿ
ಒಬ್ಬೊಬ್ಬಗೊಂದೊಂದು ಉಂಟಾಗಿಹ್ಯ ದಾಧಿಎನಗೆ ನಿಮ್ಮ
ಶ್ರೀಪಾದದಾಧಿ ೨
ಒಬ್ಬಗೆ ಹಟದಾಧಿ ಒಬ್ಬಗೆ ದಿಟದಾಧಿ ಒಬ್ಬಗೆ ತಟಕೂಪದಾಧಿ
ಒಬ್ಬಗೆ ಪಟದಾಧಿ ಬಗೆ ಪಠಣ್ಯಾದಿ ಒಬ್ಬಗೆ ಮಠಮಾನದ್ಯಾಧಿ
ಒಬ್ಬಗೆ ಕುಟಲಾಧಿ ಒಬ್ಬಗೆ ಜಟದಾಧಿ ಒಬ್ಬಗೆ ಫಟಿಸುವ ಆಧಿ
ಒಬ್ಬಬ್ಬಗೊಂದೊಂದು ಉಂಟಾಗಿ ಹ್ಯದಾಧಿ ಎನಗೆ ನಿಮ್ಮ
ಶ್ರೀಪಾದದಾಧಿ ೩
ಒಬ್ಬಗೆ ರಸದಾಧಿ ಒಬ್ಬಗೆ ಕಸದಾಧಿ ಒಬ್ಬಗೌಷಧಮಣಿ ಆಧಿ
ಒಬ್ಬಗೆ ಕೃಷದಾಧಿ ಒಬ್ಬಗೆ ದೇಶಿ ಆಧಿ ಒಬ್ಬಗೆ ಹುಸಿಹುಟ್ಟಣ್ಯಾಧಿ
ಒಬ್ಬಗೆ ವೃಷದಾಧಿ ಒಬ್ಬಗೆ ದ್ವೇಷಾಧಿ ಒಬ್ಬಗೆ ಪ್ರಶಂಸದಾಧಿ
ಒಬ್ಬೊಬ್ಬರಿದೊಂದೊಂದು ಉಂಟಾಗಿ ಹ್ಯದಾಧಿ ಎನಗೆ
ನಿಮ್ಮ ಶ್ರೀಪಾದದಾಧಿ ೪
ಮನಕೆ ಮರೆಯಾಗಿ ಜನಕ ಠವಿಸುವ ಅನೇಕಪರಿ ಲೋಕದಾಧಿ
ಖೂನಕೆ ಬಾರದೆ ಜ್ಞಾನಕೆ ತಾನೊಂದು ಅನುಭವಕಿಲ್ಲದಾಧಿ
ಅನಾಥಬಂಧು ಎನಿಸಿಕೊಂಬ ಬಿರುದಿದು ಎನಗೆ
ಉಂಟಾಗಿಹ್ಯದಾಧಿ
ಭಾನುಕೋಟಿತೇಜ ನಿಮ್ಮ ಶ್ರೀಪಾದವು ದೀನ
ಮಹಿಪತಿಗೆ ಅಧಿ ೫

೬೪೩
ಎನೊ ಎಂತೊ ತಿಳಿಯದು ತಿಳಿಯದು
ಸ್ವಾನಂದದ ಸುಖದಾಟ ಧ್ರುವ
ಒಳಗೊ ಹೊರಗೊ ಬೈಗೊ ಬೆಳಗೊ
ಕಾಳೊ ಬೆಳದಿಂಗಳವೊ
ಮಳಿಯೊ ಮಿಂಚೊ ಹೊಳವೊ ಸಳವೊ
ತಿಳಿಯದ ಕಳೆಕಾಂತಿಗಳು ೧
ಉದಿಯೊ ಅಸ್ತೊ ಆದ್ಯೊ ಅಂತ್ಯೊ
ಮಧ್ಯೋ ತಾ ತಿಳಿಯದು
ತುದಿಮೊದಲಿಲ್ಲದೆ ಸದಮಲ ಬ್ರಹ್ಮವು
ಉದಿಯವಾಗಿಹ್ಯದು ನೊಡಿ ೨
ಜೀವೋ ಭಾವೋ ಶಿವೊ ಶಕ್ತೋ
ಆವದು ತಾ ತಿಳಿಯದು
ಘವಘವಿಸುವ ಅವಿನಾಶನ ಪ್ರಭೆಯಿದು
ಮಹಿಪತಿ ವಸ್ತುಮಯವೊ ೩

೩೫
ಎನ್ನಪರಾಧವೇನು ನಿನ್ನ ಸೂತ್ರಾಡಿಸಿದ್ಹಾಂಗ ಆಡುವೆ ಹರಿ ಧ್ರುವ
ಆಡಿಸಿದರಾಡುವೆ ನೋಡಿಸಿದರೆ ನೋಡುವೆ
ಮಾಡಿಸಿದರೆ ಮಾಡುವೆ ಪ್ರೇರಿಸಿದ್ಹಾಂಗ ೧
ನಡೆಸಿದರ ನಡೆಯುವೆ ಕೂಡಿಸಿದರ ಕೂಡುವೆ
ನುಡಿಸಿದರೆ ನುಡಿಯುವೆ ಚೇತರಿಸಿದಂತೆ ೨
ಉಡಿಸಿದರೆ ಉಡುವೆ ತೊಡಿಸಿದರೆ ತೊಡುವೆ
ಇಡಿಸಿದರೆ ನಾ ಇಡುವೆ ಸರ್ವಭೂಷಣ ೩
ಹೇಳಿಸಿದರೆ ಹೇಳುವೆ ಕೇಳಿಸಿದರೆ ಕೇಳುವೆ
ಆಳಿಸಿದರೆ ಆಳುವೆ ಅನುವಾದ್ಹಾಂಗ ನೀ ೪
ಕಲಿಸಿದರೆ ಕಲಿಯುವೆ ಬಲಿಸಿದರೆ ಬಲಿಯುವೆ
ಮಲಗಿಸಿದರೆ ಮಲಗುವೆ ಸುಖಗೈಸಿದ್ಹಾಂಗ ೫
ನೇಮಿರೆ ನೀವಂದು ನಾ ಮಾಡುವದಿನ್ನೊಂದು
ನಿಮಿತ್ಯಮಾಡಿದೋರುದು ಸೋಜಿಗಿದೊಂದು ೬
ಎನ್ನ ಬಾಹ್ಯಂತ್ರ ಪೂರ್ಣ ಚನ್ನಾಗಿರೆ ನೀ ಕರುಣ
ಚಿನ್ನ ಮಹಿಪತಿಗಭಿಮಾನ ನಿನ್ನದೇ ಅನುದಿನ ೭

೩೬
ಎಲ್ಯಾಡಿ ನೀ ಬಂದ್ಯೋ ಹರಿ
ಫುಲ್ಲಲೋಚನ ಕೃಷ್ಣ ಧ್ರುವ
ಬಲಿ ಮಹಿಮರನೆಲ್ಲ ಸಂರಕ್ಷಿಸಿ ಮಲ್ಲದೈತ್ಯರ
ಹಲ್ಲು ಮುರಿದು ನೀ ಬಂದ್ಯೊ ೧
ಸುಗಮ ಸುಪಥದೋರಿ ನಿನ್ನ
ಉಗಮ ಸಾರಿ ನೀ ಬಂದ್ಯೊ
ನಿಗಮ ತಂದುಳುಹಿಸಿ ನಗ ನೆಗಹಿ ನಿಂದು
ಜಗದೋದ್ಧಾರವ ಮಾಡಿ ನೀ ಬಂದ್ಯೋ ೨
ಶರಣ ರಕ್ಷಕನಾಗಿ ನಿನ್ನ
ಕರುಣ ನೀ ಬೀರಿ ಬಂದ್ಯೋ
ತರಳಗೊಲಿದು ಧÀರಿ ಮೂರಡಿಯೆನೆ ಮಾಡಿ
ಪರಶುಧರನಾಗಿ ಆಡಿ ನೀ ಬಂದ್ಯೊ ೩
ಮೊರೆಯ ಹೊಕ್ಕವರಿಗೆ ಪದ
ಸ್ಥಿತವನಿತ್ತುನೀ ಬಂದ್ಯೊ
ಸುರರ ಸ್ಥಾಪನೆ ಮಾಡಿ ತುರುಗಳ ಕಾಯಿದು
ಪರ ನಾರೇರ ವ್ರತವಳಿದು ನೀ ಬಂದ್ಯೋ ೪
ನೀನೆ ರಾವುತನಾಗಿ ನಿನ್ನ
ಖೂನ ನೀ ದೋರಿ ಬಂದ್ಯೊ
ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜ ನೀನೆ
ನೀನಾಗೆನ್ನ ಹೊರಿಯಲು ಬಂದ್ಯೊ ೫

೩೮೪
ಎಲ್ಲಾರಿಗೆಲ್ಲಿಹದು ಫುಲ್ಲನಾಭನ ಸೇವೆ
ಸುಲಭವಲ್ಲವಿದು ದುರ್ಲಭ ಸದ್ಗುರು ಮಾರ್ಗ ಧ್ರುವ|
ಕೋಟ್ಯಾನುಕೋಟಿಗೊಬ್ಬ ಮುಟ್ಟಿ ಕಂಡಿದರಲಿ
ನೆಟ್ಟಿಸಿ ತನ್ನೊಳು ತಾ ದೃಷ್ಟಿಸಿ ಗುರುಪಾದ ೧
ಮಾತಿನಂತಲ್ಲವಿದು ಜ್ಯೋತಿರ್ಮಯದ ಸುಖ
ನೆÉೀತಿನೆÉೀತಿವೆಂಬುದು ಶ್ರುತಿ ಸಾರುತದ ವಾಕ್ಯ ೨
ಹರಡಿಸಿರಾಗದು ಮೂರುಲೋಕದೊಳಗ
ಕರುಣಿಸಿದರಾಹುದು ಗುರು ಕೃಪೆಯಿಂದ ೩
ವರ್ಮ ತಿಳಿಯದೆಂದೆಂದು ಕರ್ಮತಮಂಧರಿಗೆ
ಬ್ರಹ್ಮ ಸುಖದೋರುವ ಸ್ವಾಮಿ ಸದ್ಗುರು ಧರ್ಮ ೪
ಸೇವೆ ಸೂತ್ರನರಿಯದ ಭಾವಿ ಮಹಿಪತಿಗೆ
ಭಾವಭಕ್ತಿಯ ಕೊಟ್ಟು ಪಾವನಗೈಸಿದ ೫

೩೯
ಎಲ್ಲಿ ಶ್ರೀಹರಿ ನಾಮದ ಘೋಷ ಅಲ್ಲಿ
ಸಕಲಸುಖ ಸಂತೋಷ
ಸುಲಭದಲ್ಯಾಹುದು ಭವಭವಯದ ನಾಶ ೧
ಕರೆಸುವದಾನಂದ ಹರುಷ ಹರಿಸುವದು ಕಲಿಮಲಕಲುಷ
ಪರಿಶೋಷಿಸುವದು ಮಹಾಪಾತಕ ದೋಷ ೨
ಸ್ವಹಿತ ಸಾಧನದಸು ಉಪದೇಶ ಬಾಹ್ಯಂತ್ರ ದೋರುವ ಪ್ರಕಾಶ
ಮಹಿಪತಿಗಿದೆ ನಿತ್ಯಾನುಭವದುಲ್ಲಾಸ ೩

೩೭
ಎಲ್ಲಿಗ್ಹೋಗಿ ತಡಮಾಡಿದ್ಯೋ
ಫುಲ್ಲಲೋಚನ ಕೃಷ್ಣ ನೀ ಎಲ್ಲಡಗಿದ್ಯೊ ಧ್ರುವ
ಬಲ್ಲವರಿಗೆ ಬಲ್ಲತನದೋರ ಹೋಗಿದ್ಯೊ
ಅಲ್ಲಿ ಅವರ ಸಹಕಾರ ನೀನಾದ್ಯೊ
ಸುಲ್ಲಭವಾಗಿ ಜ್ಞಾನಕೆ ನೀ ಸಿಲುಕಿದ್ಯೋ
ಒಲ್ಲದ್ಹಾಂಗ್ಹೋಗಿ ಎಲ್ಲರಿಗಾಗಿದ್ಯೊ ೧
ಜ್ಞಾನಿಗಳಿಗೆ ಜ್ಞಾನಸಮುದ್ರ ನಾಗಿದ್ಯೊ
ಧ್ಯಾನಮಾಡುವರ ಧ್ಯಾನವೆ ಅಗಿದ್ಯೊ
ಮುನಿಜನರೊಡನೆ ಮಾನಸ ಹಂಸನಾಗಿದ್ಯೊ
ಖೂನದೋರಲು ಹೋಗಿ ನೀನೆ ಆಗಿದ್ಯೊ ೨
ಧೃಢಭಕ್ತರೊಡನೆ ಭಿಡಿಯೊಳಗಾಗಿದ್ಯೊ
ಕಡಿಗಾಗದ್ಹಾಂಗ ಕೈಯೊಳಗಾಗಿದ್ಯೊ
ಎಡಬಲಕವರೆಂದು ಬಿಡದ್ಹಾಂಗಾಗಿದ್ಯೊ
ಒಡಲ ಹೊಕ್ಕವರ ಒಡಿಯನಾಗಿದ್ಯೊ ೩
ಪ್ರೇಮ ಉಳ್ಳವರ ಪ್ರೀತಿಯೊಳಗಾಗಿದ್ಯೊ
ಸ್ವಾಮಿತನದಲಿ ಸಮೀಪನಾಗಿದ್ಯೊ
ಕಾಮ ಪೂರಿಸಲಿಕೆ ನೇಮವ ಪಿಡಿದ್ಯೊ
ಮಾಮನೋಹರ ನೀ ಸುಗಮವಾಗಿದ್ಯೊ ೪
ಇಂದು ನೆನಪಾಯಿತೆಂದು ಓಡಿ ನೀ ಬಂದ್ಯೊ
ಚಂಚವಾಗೆನ್ನೊಳಗಾದ್ಯೊ ನೀ ಬಂದ್ಯೊ
ಕಂದಮಹಿಪತಿಗನುಭವದೋರ ನೀ ಬಂದ್ಯೊ
ತಂದೆ ಸದ್ಗುರು ಅನಂದವ ತಂದ್ಯೊ ೫

೩೮
ಎಲ್ಲಿದ್ದ್ಯೊ ಹರಿ ಹೇಳಯ್ಯ
ಎಲ್ಲಿ ತಿಳಿವುತದೆ ನಿಮ್ಮಾಟದ ಸುಧ್ಯೇಯ ಧ್ರುವ
ನಾಲ್ಕಾರು ಹದಿನೆಂಟು ಮಂದಿಯ ಕೇಳಿದೆ
ಸಿಲುಕನೆಂದವರಾಡುದೆ
ಮಲಕು ಎಂಬತ್ತು ನಾಲ್ಕು ಲಕ್ಷ ನೂ ಸೋಸಿದೆ
ನಿಲುಕಿ ನಿನ್ನ ನೆಲೆ ನಿಜವು ದೋರದೆ ೧
ನಾನಾ ಮತ ನಾನಾ ಮಾರ್ಗ ಶೋಧಿಸಿದೆ
ಖೂನ ನಿನ್ನದು ತಿಳಿಯದೆ
ನಾನು ನಾನೆಂಬವರಿಗೆ ಅನುಸರಿಸಿದೆ
ನೀ ನಿಹ ಸ್ಥಳದ ಗಾಳಿಯು ಬೀಸದೆ ೨
ಬೀಳದವರ ಕಾಲುಬಿದ್ದು ನಾ ಕೇಳಿದೆ
ಸುಳಹು ನಿನ್ನದು ತೋರದೆ
ತಲೆ ಕೆಳಗನೆ ಮಾಡಿ ತಪಸವ ಮಾಡಿದೆ
ಒಲವು ನಿಮ್ಮದು ಎಂದಿಗೆ ಅಗದೆ ೩
ಬಡದ ಬವಣೆ ಬಟ್ಟು ಹುಡುಕದಾ ಹುಡುಕಿದೆ
ತುಡಕು ನಿಮ್ಮದು ತಿಳಿಯದೆ
ಒಡನೆ ಎನ್ನೊಳು ಬಂದು ಅಡಕವ ಹರಿಸಿದೆ
ಬಡವನಾಧಾರೆಂದು ಕೈ ಬಿಡದೆ ೪
ಮನೋನ್ಮನವಾಗಿ ಕಂಗಳ ತೆರೆಸಿದೆ
ಸ್ವಾನುಭವನೇ ಬೀರಿದೆ
ದೀನಮಹಿಪತಿ ಮನೋಹರಣ ಮಾಡಿದೆ
ಅನುದಿನ ಘನಸುಖದೊಳಗಿರಿಸಿದೆ ೫

ಮನಸ್ಸಿಗೆ ಉಪದೇಶ
೫೪೪
ಏನಾಯಿತೇನಾಯಿತು ಮನವೆ
ನಾನೆಂಬುದೇನಾಯಿತು ಧ್ರುವ

ಕರಿಯ ನುಂಗಿದ ಬೆಳವಲಣ್ಣಿನಂತಾಯಿತು ೧
ಅಪ್ಪಿನೊಳುಪ್ಪು ಬೆರದಂತಾಯಿತುಮನವೆ ೨
ಕಪ್ಪರವ ಸುಟ್ಟರಹಿಟ್ಟಂತಾಯಿತು ೩
ಮಹಿಪತಿಯ ಮನವೆ ಕೇಳೆನ್ನಾ ಮನವೆ ೪
ಎನ್ನೊಳು ಘನ ಬ್ರಹ್ಮತಾನಾಯಿತು ೫

೨೧೧
ಏನು ಗಳಿಸಿದ್ಯೊ ಪ್ರಾಣಿ
ಜ್ಞಾನಕ ಮಾಡಿ ನೀ ಹಾನಿ ಧ್ರುವ
ಶಬ್ಧಜ್ಞಾನದ ಅಂಗಡಿನೀ ಹಾಕಿ
ಲುಬ್ದಿಸಿದೊ ಬಲು ಪಾಕಿ
ಲಬ್ದಾಲಬ್ಧಿಯು ತಿಳಿಯದೆ ಡೊಂಕಿ
ಸ್ತಬ್ಧನಾದ್ಯೊ ವಿಶ ಸೋಂಕಿ ೧
ವಿದ್ಯಾ ವ್ಯುತ್ಪತ್ತಿ ತೋರಿ ನೀ ಬಹಳ
ಸದ್ಯಮಾಡಿದ್ಯೊ ತಾಳ ಮೇಳ
ಸಿದ್ಧಾಂತನುಭವ ನೀ ಮಾಡಿ ಹಾಳ
ಬಿದ್ಯೊ ಬಲ್ಲತನದ ಕೋಳ ೨
ಗಳಿಸುವದೇನೆಂದರಿಯದೇ ಖೂನ
ಬಾಳಿ ಬದುಕಿ ಪಡದೇನ
ಬೆಳಗು ಬೀರುತಿರೆ ಮಹಿಪತಿ ಗುರುಜ್ಞಾನ
ತಿಳಕೊಬಾರದೆ ನಿಜಖೂನ ೩

೨೧೨
ಏನು ಸಾಧಿಸುವದೇನರಿದು
ಜ್ಞಾನಗಮ್ಯ ಗುರುಮಾರ್ಗದೊರೆಯಲರಿಯದು ಧ್ರುವ
ನೀತಿಶಾಸ್ತ್ರವನೋದಿ ಪಂಡಿತನಾಗಲಿಬಹುದು
ಶ್ರುತಿ ಸ್ರ‍ಮತಿಗಳ ತಿಳಿದು ತರ್ಕಸ್ಯಾಡಲಿಬಹುದು
ಅತಿ ಬಲ್ಲತನದಿ ಯತಿಯನಿಸಿಕೊಳ್ಳಲಿಬಹುದು
ಕ್ಷಿತಿಯೊಳು ಮೆರೆಯಲಿಬಹುದು
ಸುತತ್ವ ಜ್ಞಾನಖೂನ ದೊರೆಯಲರಿಯದು ೧
ಗೃಹತ್ಯಾಗಮಾಡಿ ಸಂನ್ಯಾಸಿ ಅಗಲಿಬಹುದು
ದೇಹ ದಂಡಿಸಿ ವನವಾಸಿಯಾಗಲಿಬಹುದು
ಗುಹ್ಯಗೊಪೆಯಲಿ ಸೇರಿ ತಪಸಿಯೆನಿಸಲಿಬಹುದು
ಬಾಹ್ಯನಿಷ್ಠೆಯದೋರಬಹುದು
ಸೋಹ್ಯ ಸದ್ಗುರುಮಾರ್ಗ ದೊರೆಯಲರಿಯದು ೨
ಹಲವು ಕುಟಿಲದ ವಿದ್ಯವನು ಸಾಧಿಸಲಿಬಹುದು
ಜಲದೊಳಗೆ ಮುಳಗಿ ಮಂತ್ರವನು ಜಪಿಸಲಿಬಹುದು
ಸೀಲಿ ಸಾಲ್ವಳಿಯ ಸುಶಕುನ ಪೇಳಲಿಬಹುದು
ಮ್ಯಾಲೆ ಜನರಂಜಿಸಲಿಬಹುದು
ಮೂಲ ಮುಕ್ತಿ ಕೀಲ ತಿಳಿಯಲರಿಯದು ೩
ಪೃಥ್ವಿಯನೆ ತಿರುಗಿ ಬಹುಭಾಷೆಯಾಡಲಿಬಹುದು
ಮತಿವಂತನಾಗಿ ಕವಿತ್ವಮಾಡಲಿಬಹುದು
ಗೀತರಾಗವು ಜಂತ್ರದೊಳು ನುಡಿಸಲಿಬಹುದು
ಚದುರಂಗ ಪಗಡ್ಯಾಡಿ ಗೆಲಬಹುದು
ಮತ್ತ ಮನ ಬೆರೆವ ಘನಸುಖವು ದೊರೆಯಲರಿಯದು ೪
ಶೂರತನದಲಿ ಪರಾಕ್ರಮ ಹಿಡಿಯಲಿಬಹುದು
ಧೀರಗುಣದಲಿ ಮಹಾಧೀರನೆನಿಸಲಿಬಹುದು
ನೂರ್ಬಲದ ಪೌರುಷಲಿ ರಾಜ್ಯನಾಳಲಿಬಹುದು
ಸಿರಿಸೌಖ್ಯದೊಳಿರಲಿಬಹುದು
ಸಾರ ಸುಜ್ಞಾನಸುಖ ದೊರೆಯಲರಿಯದು ೫
ಪರ್ವತಾಗ್ರದಲೇರಿ ಧರೆಗೆರಗಲಿಬಹುದು
ಹರಿವ ನದಿಯನೆ ಹಾರಿ ಹೋಗಲಿಬಹುದು
ಮೊರೆವುತಿಹ್ಯ ಸರ್ಪದಾ ವಿಷವು ಧರಿಸಲಿಬಹುದು
ಕ್ರೂರ ಮೃಗದೊಳು ತಿರುಗ್ಯಾಡಬಹುದು
ಪರಮ ಜ್ಞಾನ ವೈರಾಗ್ಯ ಪಥ ದೊರೆಯಲರಿಯದು ೬
ಪೊಡವಿಯೊಳು ಹವಲು ವಿದ್ಯವ ಸಾಧಿಸಲುಬಹುದು
ಬಡದ ಬವಣಿಯ ಬಟ್ಟು ನಾಡ ಶೋಧಿಸಬಹುದು
ಗೂಢ ವಿದ್ಯದ ಮಾತು ಆಡಿ ತೋರಿಸಬಹುದು
ಹಿಡಿದು ಮೌನವ ಕೂಡಬಹುದು
ಮೂಢಮಹಿಪತಿ ಒಡಿಯನ ಕೃಪೆ ಪಡೆವದೆ ದುರ್ಲಭವು ೭

೫೫೨
ಏನು ಹೇಳಲಿ ನಿನಗ ಮನವೇ ನಾ ಇನ್ನೇನು ಹೇಳಲಿ ನಿನಗೆ
ಶ್ರೀನಾಥನಂಘ್ರಿಯ ನೀನೋಲೈಸದಿಹುದೇನೋ ಪ

ಮನುಷ್ಯದೇಹ ಧರಿಸಿ ಸದ್ಗತಿಯ |
ಜ್ಞಾನದಾರಿ ತ್ಯಜಿಸಿ ನೀ ಭಕುತಿ ಸುಖ |
ಖೂನವಿಲ್ಲದೆ ಚರಿಸಿ |
ಏನೂ ಇಲ್ಲದೆ ವಿದ್ಯಾ ಮಾಟಕ ಭ್ರಮಿಸಿಹುದೇನಾ ೧
ವಿಷಯ ಸುಖ ಹರಿದು ಸಂಸಾರದಿ |
ನಿಶಿದಿನದಲಿ ಸವೆದು ತಾಪತ್ರಯ |
ಘಸಣಿಯೊಳಗ ಕುದಿದು |
ಪಶುವಿನ ಪರಿಯಲಿ ಯಚ್ಚರ ಮರೆದಿಹುದೇನಾ ೨
ಇನ್ನಾರೆ ಹಿತವರಿಯೋ ಸದ್ಗುರುವಿನ |
ಮನ್ನಿಸಿ ಗತಿ ಪಡಿಯೋ ಹರಿಯ ನಾಮವಾ |
ಚನ್ನಾಗಿ ನಂಬಿ ನಡಿಯೋ |
ಸನ್ನುತ ಮಹಿಪತಿ ಬೋಧಾಮೃತ ಸವಿಯದೇನಾ ೩

೩೮೫
ಏನುಂಟೇನಿಲ್ಲ ಗುರುಕೃಪೆಯಿಂದ
ತನುಮನಿಟ್ಟದೇ ಪಡಕೊಂಬುದು ಚಂದ ಧ್ರುವ|
ಸುಖ ಸುರುತದೆ ನೋಡಿ ಬಲುಬ್ರಹ್ಮಾನಂದ
ಪ್ರಕಟಸಲಿಕ್ಕೆ ಬಾರದು ಮುಖದಿಂದ
ಸಕಲವೆಲ್ಲಕೆ ಮೇಲು ತಿಳಿಯಬೇಕಿದೊಂದೆ
ಶುಕಾದಿ ಮುನಿಗಳದಾರಿದರಿಂದೆ ೧
ಸಿದ್ಧ ಬುದ್ಧ್ದರಿಗೆ ಸಾದ್ಯವದೆ ಸಿದ್ಧ ನೋಡಿ
ಬುದ್ಧಿವಂತರಿಗೆ ಒಲಿದುಬಾಹುದು ಕೈಗೂಡಿ
ಸನ್ಮಾರ್ಗ ಸುಪಥವಿದೆ ಸದ್ಗುರು ಸೇವೆಮಾಡಿ
ಸದ್ಭ್ಬಾವದಿಂದಲಿ ಸ್ವಸುಖವೆ ಸೂರ್ಯಾಡಿ ೨
ಭಾಸ್ಕರ ಗುರುದಯದವಗಿನ್ನೇನು
ಭಾಸುತೀಹ್ಯದಾವಗಿನ್ನು ನಿಜಕಾಮಧೇನು
ವಿಶ್ವದೊಳಗವನೊಬ್ಬ ಸಿದ್ಧತಾನು
ದಾಸಮಹಿಪತಿಗಿದೇ ಅಭಿನವಧೇನು ೩

೩೮೬
ಏನೆಂದರಿಬೇಕೀ ಆಟಾ ಘನಗುರು ಮಾಡಿದ ಮಾಟ
ಅನುಮಾನಳಿಸಿದ ನೋಟ ಅನುಭವಕಾಯಿತು ನೀಟ ಧ್ರುವ

ರಂಜಕ ಬಲುಕೊಂಡಿತು ನೋಡಿ ಅಂಜಿಕಿ ಭವಭಯ ಈಡ್ಯಾಡಿ
ಪ್ರಾಂಜಲ ಸದ್ಗುರು ದಯಮಾಡಿ ಅಂಜನ ಹಚ್ಚಿದ ದುವುಡಿ ೧
ಕಾಣದ ಕಂಡೆವು ಕಣ್ಣಿಲಿ ಖೂನಕ ಬಾರದು ಘನಲೀಲೆ
ಜಾಣರು ಬಲ್ಲರು ಮನದಲಿ ನೆನದರು ತಾಂ ವರಿಕಿಲೆ ೨
ಆಶ್ವರ್ಯವು ತಾನಾಗ್ಯದೆ ನಿಶ್ಚಯದೋರುತಲ್ಯದೆ
ಪಶ್ಚಿಮಕೆ ಭಾಸುತದೆ ಸ್ವಚ್ಛವು ನೋಡಿದರದೆ ೩
ರಚ್ಚಿಗೆ ತಾಂ ಬಾಹುದೆಲ್ಲ ಮುಚ್ಚಿಟ್ಟಡೆ ಬಾಳು ಸವಿಬೆಲ್ಲ
ಅಚ್ಚಳಿಯದ ಭಕ್ತನೆ ಬಲ್ಲ ನೆಚ್ಚಿದ ಮಹಿಪತಿ ಸೊಲ್ಲ೪

೩೮೭
ಏನೆಂದು ಬಣ್ಣಿಸುವೆನು ಗುರುವಿನ ನಾನು |
ತಾನಂದವರಿಗಿನ್ನು ಸ್ವಾನಂದ ಸುಖವ ನೀಡುವಾ ಪ
ತಾಯಿಯಂಬೆನೆ ಮೋಹದೀ | ಬಾಲಕ ಧೃವನಾ |
ತಾಯಿಗಾಯ್ದಳೆ, ಸ್ನೇಹದಿ ಜನಕನೆಂಬೆÉನೆ |
ನ್ಯಾಯದಿ ಪ್ರಲ್ಹಾದನ ಜನಕ ಕಾಯ್ದನೆ ನೋಡಮ್ಮಾ ೧
ಬಂಧುಯಂಬೆನೆ ಜಗದೊಳು ವಿಭೀಷಣನ್ನಾ |
ಬಂದು ಕಾಯ್ದನೆ, ಇಳೆಯೊಳು ಆಪ್ತನೆಂಬೆÉನೆ |
ಸದು ವಿಗ್ರಹದಿ ಗಜೇಂದ್ರರ ನಾಪ್ತರು ಕಾಯ್ದರೇ ೨
ಇಂತು ಸಂಬಂಧ ಸ್ನೇಹದಾ | ಸಾಸಿರ ಮಡಿಯಾ |
ಸಂತತ ಕೃಪೆಯಾ ಬೀರಿದಾ | ಮಹಿಪತಿ ಕಾಯಾ |
ಪಂಥವರಿಯದಾ ಪರಮ ಭ್ರಾಂತನಾನು | ದ್ಧರಿಸಿದ ನೆನ್ನಾ ೩

೨೧೩
ಏನೆಂದುಸರಲಿ ನಾ ನೆರೆ ಸಂತರಾ |
ಸ್ವಾನುಭವಗಳನುವಾಗೀ
ಮಾನಿಸಿರೋಳುಸಲೆ ಮಾನಿಸ ಸ್ಥಿತಿಯಲಿ
ತಾನಿಹ ಉನ್ಮನಿಯಾಗಿ ಪ
ಕಾಮವು ಹರಿಪದ ತಾಮರಸವ ನಿ |
ಷ್ಕಾಮದ ಭಕುತಿಗಳಲ್ಲಿ |
ಆ ಮಹಾ ಕೋಪವು ಈ ಮನಸಿನ ಗುಣ |
ನೇಮಿಸಿ ಶೀಕ್ಷಿಸುವಲ್ಲಿ |
ಆ ಮೋಹ ಲೋಭವು ಯಾಮವಳಿಯದಾ |
ನಾಮ ಕೀರ್ತನೆಯಲ್ಲಿ |
ತಾ ಮರೆಯದ ಅತಿ ವ್ಯಾಮೋಹ ತನ್ನಯ |
ಪ್ರೇಮದ ಕಿಂಕರರಲ್ಲಿ ೧
ಮದವತಿ ಇಂದ್ರಾದಿ ಪದಗಳ ಸಿದ್ದಿಗೆ |
ಳಿದಿರಡೆ ಕಣ್ಣೆತ್ತೆ ಲೆಕ್ಕಿಸರು |
ವದಗಿಹ ಮತ್ಸರ ಕುದಿವಹಂಕಾರದ |
ಮೊದಲಿಗೆ ತಲೆಯತ್ತಿಸಗುಡರು |
ಇದರೊಳು ಸುಖದು:ಖ ಉದಿಸಲು ಹರಿಯಾ |
ಜ್ಞದೆಗತಿಗಡ ಸಮಗಂಡಿಹರು |
ಉದಕದಲಿ ಕಮಲದ ಎಲೆಯಂದದಿ |
ಚದುರತೆಯಿಂದಲಿ ವರ್ತಿಪರು ೨
ಜಲದೊಳು ಕಬ್ಬಿಣಸಲೆ ಮುದ್ದಿಯ ನೆರೆ |
ನಿಲಿಸದೆ ನಿಲ್ಲದೆ ಮುಣಗುವದು |
ಇಳೆಯೊಳಗದೆ ತಿದ್ದಲು ಪಾತ್ರೆಯಾ ಪರಿ |
ನಳನಳಿಸುತ ತೇಲುತಲಿಹುದು |
ಕಳೆವರ ವೃತ್ತಿಯ ಕಳೆ ಸುವೃತ್ತಿಯ ಮಾಡಿ |
ಬೆಳಗಿನ ಘನದೊಳು ಮನ ಬೆರೆದು |
ನಲವರು ಮಹಿಪತಿ ವಲುಮೆಯ ಪಡೆಯದ |
ಹುಲು ಮನುಜರಿಗಿದು ಭೇದಿಸದು ೩

೬೪೦
ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ
ಸ್ವಾನಂದ ಸುಖಸದೋದಿತ ಸುಸಾಧನ ಧ್ರುವ|
ಘಮಿಘಮಿಸುವ ರವಿಕೋಟಿತೇಜನ
ಠವಿಠವಿಸುದ ಕಂಡೆ ದಿವ್ಯಸ್ವರೂಪನ
ಸವಿಸವಿ ಸುರುವ ಸುಖಸಂಬ್ರಹ್ಮನನು
ಸೇವಿಸುವದು ಕಂಡೆ ಶುಕಮುನಿಜನ ೧
ಥಳಥಳಿಸುವ ತೇಜೋಮಯ ನಿಧಾನ
ಝಳಝಳಿಸುದು ಕಂಡೆ ಹೊಳೆವ ಪ್ರಕಾಶನ
ಒಳಹೊರಗೊಂದೇಪರಿ ಭಾಸುವ ಗುಣ
ಹೇಳಲಿನ್ನೇನದ ಸುಳವ್ಹು ಸೂಕ್ಷ್ಮನ ೨
ಸಣ್ಣದೊಡ್ಡಾರೊಳಿಹ್ಯ ವಸ್ತುನಿರ್ಗುಣ
ಬಣ್ಣಬಣ್ಣದಿ ಕಂಡ ಗುರುಸ್ವರೂಪನ
ಕಣ್ಣಾರೆ ಕಂಡೆ ಸದ್ಗುರು ಚರಣ
ಧನ್ಯಧನ್ಯವಾಯಿತು ಮಹಿಪತಿ ಜೀವನ ೩

೬೪೧
ಏನೆಂದ್ಹೇಳಲಿ ಸ್ವಾನಂದ ಘನ ಸುಖವು ಧ್ರುವ|
ಮಾತಿನಂತಲ್ಲ ಜ್ಯೋತಿರ್ಮಯದ ಸುಖ
ನೇತಿ ನೆÉೀತಿವೆಂಬುದು ಶ್ರುತಿವಚನ ೧
ಹೋಲಿಕೆಯ ಮಾತಿಗಿದು ಕೇಳು ಸಿಲುಕುವುದಿಲ್ಲ
ಮೂಲ ತಿಳಿದವನೆ ಬಲ್ಲ ಮ್ಯಾಲೆ ಮಂದಿರದ ೨
ಅರವು ಅಂಜನೆ ಇಟ್ಟ ಗುರು ಕೃಪೆಯಿಂದ ನಿಜ
ಗುರುತು ಕಂಡವನೆ ಬಲ್ಲ ಹರಿಮಹಿಮೆಯ ೩
ಸ್ವಾನುಭವದ ಸುಖಜ್ಞಾನಿಗಳಿಗಲ್ಲದೆ
ನೀನು ನಾನೆಂಬವರಿಗೆ ಖೂನ ತಿಳಿಯದು ೪
ಮನಕರಿಗಿ ಮಹಿಪತಿ ಘನ ಬೆರೆದ ಗುರುತ
ಏನೋ ಎಂತೋ ತಿಳಿ ಮಾತ ಆನಂದಭರಿತ ೫

೬೪೨
ಏನೆಂದ್ಹೇಳಲಿ ಸ್ವಾನಂದ ಮಹಿಮೆಯು
ಏನೆಂದ್ಹೇಳಲಿ ಮಾ ಧ್ರುವ|
ವೇದಲ್ಲ ವಾದಲ್ಲ ಭೇದಮಾಡುವದಲ್ಲ
ಸಾಧಕರಿಗೆ ತಾ ಸಿಲುಕುದುಮಾ
ಓದಲ್ಲ ಶೋಧಲ್ಲ ಗಾದಿಯ ಮಾತಲ್ಲ
ಭೇದಿಸಿದರೆ ತಾನು ತಿಳಿವದು ಮಾ ೧
ಧ್ಯಾನಲ್ಲ ಮೋನಲ್ಲ ಸ್ನಾನ ಸಂಧ್ಯಾನಲ್ಲ
ಜ್ಞಾನಹೀನರಿಗಿದು ತಿಳಿಯದು ಮಾ
ನಾನಲ್ಲ ನೀನಲ್ಲ ನಾನುಡಿದ ಮಾತಲ್ಲ
ಅನುಭವ ಸಿದ್ಧನು ಬಲ್ಲನು ಮಾ ೨
ಸೇವಲ್ಲ ಸೂತ್ರಲ್ಲ ಬಾಹ್ಯನೋಟಿಕೆ ಅಲ್ಲ
ಮಹಿಪತಿ ನಿನ್ನೊಳು ತಿಳಿವದು ಮಾ
ಕೌತುಕವನು ಕಂಡು ಮಹಾ ಗುರುಕೃಪೆಯಿಂದ
ಸಾಯೋಜ್ಯ ಸದ್ಗತಿ ಪಡೆವದು ಮಾ ೩

*
ಏನೋ ಮನವೇ ನೀಹೀಂಗಾದಿ ಧ್ರುವ||
ಏನೋ ಮನವೇ ನೀ ಹೀಂಗಾದಿ |
ಸ್ವಾನಂದ ಸುಖ ತಿಳಿಯದೆ ಬಳದಿ |
ಮಾನುಭವರ ವಿಡಿನಿಜ ಹಾದಿ |
ಜ್ಞಾನದಲಳಿಯೋ ಭವ ವ್ಯಾಧಿ ೧
ಮಂದ ಮತಿತನ ಬಿಡು ಗುಣದಾ |
ಹೊಂದೋ ಸದ್ಗುರುವಿನ ಪಾದಾ |
ಛಂದದಿ ಪಡಿಯೋ ನಿಜ ಬೋಧಾ |
ಸಂದೇಹ ಬಿಡಿಸೆಚ್ಚರಿಸುವದಾ೨
ಹೊಗೆ ಅಗ್ನಿಯ ಮುಸುಕಿಹ ಪರಿಯಾ |
ಜನದೊಳು ವಿವೇಕದ ಮಾಯಾ |
ಬಿಗಿದಾವರಿಸಿಹುದು ನೋಯಾ |
ಬ್ಯಾಗನೆ ತಿಳಿ ಗೆಲುವ ಉಪಾಯಾ ೩
ಮುಂದ ಹಾಕಿದ ಹೆಜ್ಜೆಯನು |
ಹಿಂದಕ ತಿರುಗಿಸದಿರು ನೀನು |
ನಿಂದಿಸಲೊಂದಿಸಲಾರೇನು |
ಮುಂದಗಿಡದೆ ಬೆರಿ ವಸ್ತವನು ೪
ನಿನ್ನ ಸುದ್ದಿಯು ತಾ ನಿನಗಿಲ್ಲಾ |
ಇನ್ನಾರೆ ತಿಳಿತನು ಸ್ಥಿರವಲ್ಲಾ |
ಮುನ್ನಿನ ಪರಿಕೆಡುವುದು ಸಲ್ಲಾ |
ಮನ್ನಿಸು ಮಹಿಪತಿ ಜನ ಸೊಲ್ಲಾ ೫

೬೪೪
ಏಸು ಜನ್ಮದಲೇನು ಪುಣ್ಯಮಾಡಿದೆವೊ
ಲೇಸಾಗಿನ್ನು ಸ್ವಾಮಿ ನಿಮ್ಮನ ಕಂಡೆವೊ ಧ್ರುವ|
ಸಾಧನವೆಂಥಾದೆಂಬುದು ನಾವಿನ್ನರಿಯೆವೊ
ನಿಮ್ಮ ದರುಶನದಲಿ ಪಾವನಾದೆವೊ
ಇದೆ ಸಕಲ ಸಾಧನದ ಸುಫಲವೊ
ಸ್ವಾಮಿ ನಿಮ್ಮ ದಯಕ ಸಾನುಕೂಲವೊ ೧
ಮನೋಹರ ಮೋಹನಮೂರ್ತಿ ಕಂಡೆವೊ
ಕೃಷ್ಣ ನಿಮ್ಮನ ಬಿಗಿದಪ್ಪಿಕೊಂಡೆವೊ
ನಾನಾಸವಿಯ ನೆಲೆಗಳೂಟ ಉಂಡೆವೊ
ಎಂದೂ ಬಿಡದೆ ಹೃದಯಲಿಟ್ಟುಕೊಂಡೆವೊ ೨
ಹೆಣ್ಣು ಪ್ರಾಣಿಗಳು ನಾವೇನು ಬಲ್ಲ್ಲಿವೊ
ನಿಮ್ಮ ವಿನಾ ಇನ್ನೊಂದು ನಾವೊಲ್ಲಿವೊ
ಚನ್ನಾಗೊಲಿದ ಭಾನುಕೋಟಿ ನಮ್ಮಲ್ಲಿವೊ
ಚಿಣ್ಣಮಹಿಪತಿಗಿದೆ ಸಾಫಲ್ಯವೊ ೩

೫೪೫
ಏಳುತಲೆದ್ದು ಮನವೆ ನೀ ವಲೀ ನಿಜಖೂನ
ಕುಲಕೋಟಿ ಉದ್ಧರಿಸುವ ನೆಲೆನಿಭ ಸ್ಥಾನ
ಬೆಳಗಾಗಲಿಕ್ಕೇರಿತು ನೀ ಒಳಿತಾಗಿ ಪೂರ್ಣ
ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ ೧
ಒಳಮುಖನಾಗರಿಯೋ ನೀ ಸುಲಲಿತ ಜ್ಞಾನ
ಅಲೇಶ ಮಾಡದೆ ನೀ ಬ್ಯಾಗ ಬಲಿ ನಿಜಧ್ಯಾನ
ಥಳಥಳಗುಡುತಲ್ಯದ ಒಳಿತಾಗಿ ಪೂರ್ಣ
ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ ೨
ತೊಳಿಬೇಕೆಲೊ ಮನದ ಹೀನ ಮಲಿನಗುಣ
ಕಳಿಬೇಕು ನೋಡುಳಿದ ಕರ್ಮ ತಮಂಧತನ
ಕಳೆಕಾಂತಿಯುಳ್ಳ ಕರುಣಾರ್ಣವ ಸ್ವಾಮಿ ಪೂರ್ಣ
ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ ೩
ಸಲೆ ಮೊರೆಹೊಕ್ಕು ನೀ ಸದಾಬಲಿ ಭಕ್ತಿ ಪೂರ್ಣ
ನೆಲೆಗೊಂಡಿರೊ ಅನುದಿನ ಸದ್ವಸ್ತು ಶರಣ
ಸಕಳ ಸುರವುತಲ್ಯದೆ ಬಲ್ಲ ಸ್ವಾಮಿ ಕರುಣ
ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ ೪
ಇಳೆಯೊಳಿದೆ ಸಕಲಪುಣ್ಯಶಿರೋನಿಧಾನ
ಘಳಿಸುವದೊಂದೆ ಸುಫಳಿತ ಸುದಿವ್ಯ ಘನ
ತಿಳಿಯೊ ಸುಮನವೆ ಮಹಿಪತಿಸ್ವಾಮಿ ಪೂರ್ಣ
ಒಲುವಾಂಗೆ ಮಾಡು ಗುರುಮೂರ್ತಿಗೆ ಸುನಮನ ೫

೨೧೫
ಒಂದು ಪಥವ ಹೊಂದಲರಿಯರೀ ಮನುಜರು
ಇಂದಿರೇಶನ ಪಾದವ ಕಾಣದೆ ಕೆಡುವರು ಧ್ರುವ
ಒಂದರೆ ಘಳಗಿ ನಾನೆವೆ ಮಾಡಿದೆನೆಂಬರು
ಒಂದರೆ ಘಳಗಿ ಪ್ರಾಚೀನವೆಂಬರು
ಒಂದರೆ ಘಳಗಿ ಈಶ್ವರ ಸೂತ್ರವೆಂಬರು
ಒಂದರೆ ಘಳಗಿ ತಾ ಏನೋ ಎಂತೆಂಬರು ೧
ಒಮ್ಮೆ ಜಾಗೃತಿಯೊಳಿದೇ ನಿಜವೆಂಬರು
ಒಮ್ಮೆ ಸ್ವಪ್ನದೊಳಿದೇ ಖರೆ ಎಂಬರು
ಒಮ್ಮೆ ಸುಷುಪ್ತ್ತಿಯೊಳಿದೇ ಸತ್ಯವೆಂಬರು
ಒಮ್ಮೆ ಇದರ ಶುದ್ಧಿ ತಿಳಿಯದಂತಿಹರು ೨
ಒಂದು ತಿಳಿದರ ಸಕಲವು ಒಂದಾಗಿ ದೋರುವದು
ಒಂದರೊಳಗ ಸಕಳ ದೊರೆಕೊಂಬುದು
ಒಂದಾಗಿ ಸಲಹುವ ಮಹಿಪತಿ ಸ್ವಾಮಿಯ
ತಂದೆ ಸದ್ಗುರು ಭಾಸ್ಕರ ಕೋಟಿ ತೇಜನು ೩

೨೧೬
ಒಂದೆ ಸುಪಥವೆ ಲೇಸು ಸದ್ಗುರು ಭಕುತಿಗೆ ಧ್ರುವ|
ಪಿಡಿದರೆ ದೃಢ ಗುರುಭಕುತಿ ಸಾಕು
ಷಡದರುಷಣ ಗೂಢವ್ಯಾತಕೆ ಬೇಕು
ನಡಿನುಡಿಯಲಿ ನಿಜ ಭೇದಿಸಬೇಕು
ಪಡಕೊಂಡರೆ ಬಾಹುದು ಘನಥೋಕ ೧
ಒಂದರಿಯದೆ ನಿಜದೋರುದು ಖೂನ
ಸಂದಿಸಿ ಬೆರೆವುದು ಮನ ಚಿದ್ಛನ
ತಂದೆ ಸದ್ಗುರು ದಯದನುಸಂಧಾನ
ಎಂದೆಂದಿಗೆ ಅದ ತಾ ನಿಧಾನ ೨
ಒಂದಾಗುದೆ ನಿಜಗುರು ದಯಕರುಣ
ವಂದಿಸಿ ನೋಡಬೇಕಿದೆ ಘನಸ್ಫುರಣ
ಹೊಂದಿ ಬದುಕಿರೊ ಮಹಿಪತಿಗುರುಚರಣ
ಚಂದವಿದೆ ಇಹಪರ ಭೂಷಣ ೩

೫೯೦
ಒಡಿಯ ನೀನಹುದೊ ಎನ್ನ ಬಡವನಾಧಾರಿ ನೀನು ಧ್ರುವ|
ಪೊಡವಿಯೊಳಗೆ ಎನ್ನ ಬಿಣದೆ ಸಲಹುತಿಹ್ಯ
ಅಡಿಗಡಿಗೆ ತಂದು ನೀ ಪಡಿಯ ನಡೆಸುವ ಸ್ವಾಮಿ ೧
ಪಿಡಿದು ಎನ್ನ ನೀ ಕೈಯ ಕಡೆಗಾಣಿಸುವಿ ಪೂರ್ಣ
ಬಿಡಿಸಿ ಧಾವತಿಯಿಂದ ಕೊಡುವಿ ತಂದು ನಿಧಾನ ೨
ಕೊಂಡಾಡಲಳವೆ ನಿನ್ನ ಮಂಡಲದೊಳು ಕೀರ್ತಿ
ಪಿಂಡ ಬ್ರಹ್ಮಾಂಡ ಪರಿಪೂರ್ಣವಾಗಿಹ ದೇಹ ೩
ಕೊಳದೆ ಸೇವೆಯ ನಿನ್ನ ಅಳೆದು ನಡೆಸುವ ಪಡೆಯ
ಪಾಲಕನಹುದೊ ಎನ್ನ ಮೂಲೋಕದೊಡಿಯನೆ ೪
ನಿತ್ಯನಿಜವಾಗ್ಯಾಗ ಹೊತ್ತು ನಡೆಸುವ ಪಡೆಯ
ಭೃತ್ಯರ ನಿಜ ಭೃತ್ಯ ನಿಜ ದಾಸಮಹಿಪತಿಗಿನ್ನು ೫

೫೮೭
ಒಡಿಯನಹುದೊ ಎನ್ನ ನೀ ಎನ್ನ
ಪಿಡಿದಿಹ ಕೈಯಲ್ಲಿ ನಿನ್ನ ಧ್ರುವ||
ನೋಡದವಗುಣನ್ನ ಅವಗುಣನ್ನ
ಮಾಡುವೆ ನೀ ಪಾವನ
ನೀಡುವೆ ಪಡೆದೆನ್ನ ಪಡೆದೆನ್ನ
ಕೂಡು ದಯದಲಿ ಸಂಪನ್ನ ೧
ಭಿನ್ನವಿಲ್ಲದೆ ನೀಯೆನ್ನ ನೀಯೆನ್ನ
ಚನ್ನಾಗ್ಯಾದೆ ಪ್ರಸನ್ನ
ಉನ್ನತಗುಣ ನಿನ್ನ ನಿನ್ನ
ಚಿನ್ಮಯದ ಚಂದ್ರನ್ನ ೨
ಬಿರುದಿನ ಪ್ರಖ್ಯಾತ ಪ್ರಖ್ಯಾತ
ಬಿರುದು ಪ್ರಾಣನಾಥ
ತರಳ ಮಹಿಪತಿದಾತ ಸುದಾತ
ಗುರುಶಿರೋಮಣಿ ಸಾಕ್ಷಾತ ೩

೫೮೮
ಒಡಿಯನಹುದೋ ನೀ ನಮ್ಮ ಪಿಡಿದಿಹೆ ಪಾದ ನಾ ನಿಮ್ಮ ಧ್ರುವ||
ಮಹಾಮಹಿಮೆ ನೀ ದಾನತಹುದೋ ಶ್ರೀ ಅವಧೂತ
ಗುಹ್ಯಗುಪಿತ ಶ್ರೀನಾಥ ಸುಹೃದಯದಲಿ ಸಾಕ್ಷಾತ ೧
ಅನಾಥರ ಸಹಕಾರ ಮುನಿಜನರ ಮಂದಾರ
ಘನಗುರು ಜ್ಞಾನಾಸಾಗರ ದೀನಜನರ ಉದ್ಧಾರ ೨
ಮಹಾಗುರು ನಿಜನಿಧಾನ ಬಾಹ್ಯಾಂತ್ರದಲಿ ಪರಿಪೂರ್ಣ
ಮಹಿಪತಿ ಜೀವನಪ್ರಾಣ ಇಹ್ಯಪರ ನೀ ಭೂಷಣ೩

೫೮೯
ಒಡಿಯನೆಂದು ನಿಮ್ಮ ವಿಡದಿರೆ ಪಾದವ
ಬಡತನ ವ್ಯಾತಕೆ ನಮಗೆ
ಕಡೆಗಣ್ಣ ನೋಡಿದಿದ್ದರೆ ನಿಮ್ಮ ಭೂಷಣ
ಬಿಡುವವ ನಾನಲ್ಲ ನಿಮಗೆ ೧
ಪಿಡಿದು ಪಾದವ ನಿಮ್ಮ ಬಡವನೆಂದೆನಿಸಲು
ಜಡನುಡಿ ನಿಮಗೆ ನಿಮಗೆ ಭೂಷಣವೆ
ಬಿಡುಬಿಡು ಭಕ್ತವತ್ಸಲನೆಂಬ ಬಿರುದವ
ಒಡಲ ಹೊರೆವ ದೊಂದಿರದವಗೆ ೨
ಬಡವನಾಧಾರವೆಂದು ಕೊಂಡಾಡುತಿರಲಿನ್ನು
ಬಡಿವಾರ ವ್ಯಾತಕ್ಕೆ ನಿಮಗೆ
ನುಡಿ ಮಾತಿನಂತಲ್ಲ ಪೊಡಿವಿಯೊಳಗಿದು
ಬಿಡುವಾಂಗಿಲ್ಲ ನಮ್ಮ ನಿಮಗೆ ೩
ಪಿಡಿದ ಪಾದವ ನಿಮ್ಮ ಬಿಡೆನೆಂಬ ದೃಢವಿದು
ಒಡೆಯ ಕೇಳಿನ್ನಿ ಮಾತು
ಬಿಡಿಸಿಕೊಂಡರೆ ನಿಮ್ಮ ಬಿಡುವರಾರಿನ್ನು
ನೋಡು ತಿಳಿದು ಗುರುನಾಥ೪
ಅಡಿಗಳ ಕುಡಿಯೊಳುವಿಡಿದು ನಾ ನಿಮ್ಮನು
ಬಡುವೆ ಸದ್ಗತಿ ಹರುಷವನು
ಮೂಢಮಹಿಪತಿಗಿನ್ನು ಬ್ಯಾರೆ ಗತಿಯ ಕಾಣಿ
ಒಡೆಯ ನಿಮ್ಮಪಾದಪದ್ಮದಾಣಿ ೫

೨೧೪
ಒಳ್ಯಾವರ ಕೇಳಿ ಉಳುವ ಉಪಾಯದ ಮಾತು ಧ್ರುವ
ಒಳ್ಯಾವರಿಹರು ಗುಪ್ತದಲಿ ಉಳ್ಳಷ್ಟಿಹ್ಯ
ನಿಜ ಕಂಡು ಸುಖದಲಿ
ಹೇಳ್ಯಾಡಿಕೊಳ್ಳುದು ಜಗದಲಿ ತಿಳಿದು ಮನದಲಿ ೧
ತಳ್ಳಿಗೆ ತಳ್ಯದೆ ಭವತಳ್ಳಿ ತಿಳಿಯದವನೆ
ಪಾಮರ ಹೊಡಹುಳ್ಳಿ
ಉಳ್ಳವರ ಪಾದಕೆ ಬಲಗೊಳ್ಳಿ ಕಳೆದುಹೋಗುದು ತಳ್ಳಿ ೨
ಸುಲಲಿತವಾಗೇದ ಸುಜ್ಞಾನ ನೆಲೆಯಗೊಂಬುವ
ಮಹಿಪತಿ ಸ್ವಧನ
ಹೊಳೆವುತದೆ ಸದ್ಗುರುಕರುಣ ಬಲಗೊಂಬುದು ಪೂರ್ಣ ೩

*
ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ
ಕೋಲು ಶ್ರೀಹರಿಯ ಬಲಗೊಂಬೆ ಕೋಲೆ ಧ್ರುವ
ಶಿಕ್ಷಿಸಿ ನಿಗಮ ಚೋರ ರಾಕ್ಷಸನ ಕೊಂದು
ರಕ್ಷಿಸಿ ವೇದವನುಳುಹಿದ ಕೋಲೆ
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ಮಚ್ಛಾವತಾರನ ಬಲಗೊಂಬೆ ಕೋಲೆ ೧
ಧರ್ಮ ನಡೆಯಲಾಗಿ ವರ್ಮವ ತಾಳಿದ
ಕರ್ಮಹರ ಶ್ರೀ ಮೂರ್ತಿಯ ಕೋಲೆ
ಕರ್ಮಹರ ಶ್ರೀಮೂರ್ತಿಯ ಧರೆಯ ಪೊತ್ತ
ಕೂರ್ಮಾವತಾರನ ಬಲಗೊಂಬೆ ಕೋಲೆ ೨
ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ
ಹೋರಿ ಹೊಯ್ದಾಡಿದ ನರಹರಿ ಕೋಲೆ
ಹೋರಿ ಹೊಯ್ದಾಡಿದ ನರಹರಿ ಧರೆಯ ಗೆದ್ದ
ವರಹಾವತಾರನ ಬಲಗೊಂಬೆ ಕೋಲೆ೩
ತರಳ ಪ್ರಲ್ಹಾದನಿಗಾಗಿ ದುರುಳ ದೈತ್ಯನ ಕೊಂದು
ಕರುಳು ವನಮಾಲೆಯ ಧರಿಸಿದ ಕೋಲೆ
ಕರುಳು ವನಮಾಲೆಯ ಧರಿಸಿದಾ ಹರಿ
ನರಸಿಂಹಾವತಾರನ ಬಲಗೊಂಬೆ ಕೋಲೆ ೪
ನೇಮಿಸಿ ಮೂರು ಪಾದ ಭೂಮಿಯ ಬೇಡಿ
ಹೆಮ್ಮೆಯ ತಾ ಪರಿಹರಿಸಿದ ಕೋಲೆ
ಹೆಮ್ಮೆಯ ತಾ ಪರಿಹರಿಸಿದ ಬ್ರಾಹ್ಮಣನಾಗಿ
ವಾಮನಾವತಾರನ ಬಲಗೊಂಗೆ ಕೋಲೆ ೫
ಆಜ್ಞೆಯ ಮೀರದೆ ಅಗ್ರಜಳ ಶಿರ
ಶೀಘ್ರದಿಂದಲಿ ಇಳುಹಿದ ಕೋಲೆ
ಶೀಘ್ರದಿಂದಲೆ ಇಳುಹಿದ ಶಿರವನು
ಭಾರ್ಗವ ರಾಮನ ಬಲಗೊಂಬೆ ಕೋಲೆ ೬
ಕಾಮದಿ ಸೀತೆಯನೊಯ್ದ ತಾಮಸದವನ ಕೊಂದು
ನೇಮ ಸ್ಥಾಪಿಸಿದ ಇಳೆಯೊಳು ಕೋಲೆ
ನೇಮ ಸ್ಥಾಪಿಸಿದ ಇಳೆಯೊಳು
ರಾಮಾವತಾರನ ಬಲಗೊಂಬೆ ಕೋಲೆ ೭
ದುಷ್ಟ ದೈತ್ಯರನೆಲ್ಲ ಕುಟ್ಟಿ ಮಡುಹಿದ
ನೆಟ್ಟನೆ ಗಿರಿಯನೆತ್ತಿದ ಕೋಲೆ
ನೆಟ್ಟನೆ ಗಿರಿಯನೆತ್ತಿದ ಬೊಟ್ಟಿಲೆ
ಕೃಷ್ಣಾವತಾರನ ಬಲಗೊಂಬೆ ಕೋಲೆ ೮
ಕದ್ದು ತ್ರಿಪುರವ ಪೊಕ್ಕು ಇದ್ದ ಸತಿಯರ ವ್ರತ
ಸಿದ್ದಿಯ ತಾನು ಅಳಿದನು ಕೋಲೆ
ಸಿದ್ದಿಯ ತಾನು ಅಳಿದನು ಬುದ್ದಿಯಲಿ
ಭೌದ್ದಾವತಾರನ ಬಲಗೊಂಬೆ ಕೋಲೆ ೯
ಮಲ್ಲ ಮಾನ್ಯರನೆಲ್ಲ ಹಲ್ಲು ಮುರಿಯಲಾಗಿ
ನಲ್ಲ ತೇಜಿಯನೇರಿದ ಕೋಲೆ
ನಲ್ಲ ತೇಜಿಯ ನೇರಿದ ಬಲ್ಲಿಹನಾಗಿ
ಕಲ್ಕ್ಯಾವತಾರನ ಬಲಗೊಂಬೆ ಕೋಲೆ ೧೦
ವಸ್ತು ಪರಾತ್ಪರ ವಿಸ್ತಾರ ತೋರಲಾಗಿ
ಹತ್ತಾವತಾರ ಧರಿಸಿದ ಕೋಲೆ
ಹತ್ತಾವತಾರ ಧರಿಸಿದ ಮಹಿಪತಿಯ
ಅಂತರಾತ್ಮನ ಬಲಗೊಂಬೆ ಕೋಲೆ ೧೧

೬೫೩
ಕಂಡರ ಕಾಣಬೇಕು ಮಂಡಲ ದೊಡೆಯನ
ತುಂಡ ಮುಂಡಾಗ್ಹೋಗುದು ಖಂಡಿ ತಾಗ್ಯನುಮಾನ ಧ್ರುವ||
ಕಾಣುವದೊಂದೆ ಖೂನ ಜ್ಞಾನಾಗಬೇಕು ಪೂರ್ಣ
ಸ್ವಾನುಭವದ ಸ್ಥಾನ ತಾನೆ ಗುರು ನಿಧಾನ ೧
ಸಾಧಿಸಲಿಕ್ಕ್ಯುಪಾಯ ಇದೆ ಸದ್ಗುರು ಕೈಯ
ಬೋಧಿಸುವ ನಮ್ಮಯ್ಯ ಆದಿತತ್ವದ್ಹಾದಿಯ ೨
ತನ್ನಿಂದ ತಾನೆ ಎಂದು ಕಣ್ಣಿನೊಳಾದ ಸಿಂದು
ಧನ್ಯಗೈಸಿದ ಮಹಿಪತಿ ಗುರು ಕೃಪಾಸಿಂಧು೩

೬೦
ಕಂಡಿರ್ಯಾ ನೀವು ಕಂಡಿರ್ಯಾ ಮಂಡಲದೊಳು ನಿಜ ಕಂಡಿರ್ಯಾ ಧ್ರುವ||
ಮಂಡೆಯ ಮರೆಯಲ್ಯ ಖಂಡವಾಗಿಹುದು ೧
ಪಿಂಡಬ್ರಹ್ಮಾಂಡಕೆ ಭೇದದೋರದಿದು ೨
ಹಿಂಡದೈವಕ ತಾಪ್ರಚಂಡನಾಗಿಹುದು ೩
ಕಂಡವರಾಶ್ರಯ ಪಂಡಿತರಿಗೆ ಪ್ರಿಯ ೪
ಕಂಡವರಕಂಡು ಕೂಡಿಕೊಂಬುದಿದು ೫
ನೋಡಿದವರ ಕೂಡ ನೋಟಮಾಳಾಹುದು೬
ಮೂಢ ಮಹಿಪತಿ ಪ್ರಾಣದೊಡೆಯನಾಗಿಹ್ಯ ನಿಜ ೭

೬೫೪
ಕಂಡು ಕಾಣಬೇಕು ಪಿಂಡ ಬ್ರಹ್ಮಾಂಡದೊಡೆಯನ ಧ್ರುವ||
ಹಿಂದು ಮಾತಾಡಿನ್ನೇನು ಕಂಡು ಕಾಣುವದೇ ಖೂನ
ಮಂದಿಯ ಮರೆಯಲಿಹ್ಯ ಮಂಡಲೇಶನ ೧
ಷಡರಸನ್ನದ ಖೂನ ಬಡಿಸಿಟ್ಟದೆ ನಿಧಾನ
ಒಡಲು ತುಂಬಿದ ಪೂರ್ಣ ಒಡಂಬಡದು ಪ್ರಾಣ ೨
ದಿಂಡಿಲಿಟ್ಟದೆ ವಸ್ತ್ರ ಥಂಡಥಂಡಾದ ವಿಚಿತ್ರ
ಕೊಂಡು ತೊಡುದಲ್ಲದೆ ಗಾತ್ರ ಬಡದು ಸಂತೃಪ್ತಿ ೩
ಸಂದುಕದಲ್ಲಿಟ್ಟದೆ ವಸ್ತು ಸುಂದರವಾದ ಸಮಸ್ತ
ಸಂಧಿ ಸಿಡದೆ ಸಾಭ್ಯಸ್ತ ಹೊಡೆದು ಮನ ಸ್ವಸ್ತ ೪
ಗಂಟಿಲಿಟ್ಟದೆ ಧನ ಕಂಟಲೆ ತುಂಬಿ ನಿಧಾನ
ಕೊಟ್ಟು ಕೊಂಡಾದರೆ ಪೂರ್ಣಕಟ್ಟಿದು ಕಾಮನ ೫
ಕೂಪಲ್ಯಾದೆ ಉದಕ ಅಪೂರ್ವದ ಅಮೋಲಕ
ಅರ್ಪಿಸಿಕೊಳ್ಳದನಕ ತೃಪ್ತಿಹೊಂದದು ಲೋಕ ೬
ಕಂಡು ಕಾಣದೆ ಮನ ಖಂಡಿಸಿತು ಅನುಮಾನ
ಕೊಂಡಾಡು ಮಹಿಪತಿ ಪೂರ್ಣ ಉಂಡುಟ್ಟು ಘನ ೭

೬೫೫
ಕಂಡು ಕಾಣಿರೊ ಕಾಣಿಸುವನ
ಕಂಡು ಕಾಣಿಸುವನ ಖೂನ
ಖಂಡ ಮಾಡುವದಿದೆ ಸುಜ್ಞಾನ ಧ್ರುವ
ಕಾಣಿಸುವನ ಕಾಣದೆ ಖೂನ ಜಾಣತನದಲ್ಹೇಳುವದೇನ
ಜ್ಞಾನಗಮ್ಯವಾದ ಸ್ಥಾನ ಮನೋನ್ಮನದಲಿ ನೋಡಿ ನಿಧಾನ ೧
ಸ್ವಾನು ಭವದ ಸುರಸನೋಟ ಧ್ಯಾನಧಾರಣಕಿದೆ ನೀಟ
ಅನುದಿನದಲ್ಯಾನಂದ ಆಟ ಮುನಿಜನರ ಸುಕಾಲದೂಟ ೨
ನೋಡುವ ನೋಟ ನಿಜ ಮಾಡಿ ಮೂಢÀ ಮಹಿಪತಿ
ಸ್ವಾಮಿಯ ನೋಡಿ
ಒಡನೆ ಬಾಹ ಕೈಗೂಡಿ ನೋಡುದರೊಳು ತಾನೆ ಒಡಮೂಡಿ ೩

೬೫೬
ಕಂಡು ಕಾಣುವನ ಕಂಡು ಕಾಣಿ ಖೂನ
ಕಂಡ ಮ್ಯಾಲ ಖಂಡ ಮಾಡಿಕೊಂಬುದೆ ಸುಜ್ಞಾನ ಧ್ರುವ
ಕಾಣುವನು ಕಾಣಿಯೇನಾಗಿದೊ ಪ್ರಾಣಿ
ಕಾಣದೆ ಹೋದರನೇಕ ಜನ್ಮ ನಾನಾಯೋನಿ ೧
ಕಾಣುವನ ಸ್ಥಾನ ಕಾಣದಿಹುದೇನ
ಜ್ಞಾನಗುರುವಿನ ಕೈಯ ಕೇಳಿಕೊ ನೀ ಖೂನ ೨
ಕಂಡು ಕಾಂಬುವನ ಅಖಂಡ ಮಾಡೋಧ್ಯಾನ
ಪಿಂಡ ಬ್ರಹ್ಮಾಂಡಕ್ಕೆ ಇದೆ ವಸ್ತು ನಿಜಘನ ೩
ಕಾಣುವನ ಕೂಡಿ ಸ್ವಾನುಭವ ಮಾಡಿ
ದೀನ ಮಹಿಪತಿಗಿದೆ ಘನ ಸುಖನೋಡಿ೪

೬೫೭
ಕಂಡು ಕೌತುಕ ಕಾಯದೊಳಗಿನಾಶ್ರಯ ಸಾಧನ
ಕೊಂಡಾಡಲೆಷ್ಟೆಂದು ನಾ ಧ್ರುವ
ಏಳು ಮೂರೆರಡು ನಾದಗಳು ಪರಿಪರಿಗಳುಕೇಳಬರುತಲ್ಯದ
ತಾಳಮೃದಂಗ ಭೇರಿಗಳು ಸುಫೋಷಗಳು ಕೇಳಗುಡುತಲ್ಯದ ೧
ಒಳಗೆ ಕಂಡೆ ನಾ ರಾಶಿ ಬೆಳಗಿನ ಮಳೆ ಮಿಂಚಿನ
ತಳದ್ಹಿಡಿದು ತುಂಬೇದ
ಕಳೆಕಾಂತಿ ರವಿಕೋಟಿ ಕಿರಣ ತೇಜ:ಸ್ಪುರಣ ಥಳಥಳಗುಡುತ್ಯದ ೨
ಮಂಗಳಕರದಾನಂದೋದಯ ಮಹದಾಶ್ರಯ
ರಂಗಮಯದೋರುತ್ಯದ
ಅಂಗದೊಳಗೆ ಮಹಿಪತಿಯ ಸುಸಾರಥಿಯ
ಸಂಗಸುಖ ಬೀರುತ್ಯದ ೩

೨೨೦
ಕಂಡುಕೊಳ್ಳಿರೋ ಸುಖ ಸ್ವಾತ್ಮವ
ಕಂಡುಕೊಳ್ಳಿರೋ ಧ್ರುವ
ಕಣ್ಣಿಟ್ಟರ ತಾಂ ಕಾಣಿಸುತದೆ
ಚೆನ್ನಾಗನುಭವಕಿದಿರಿಡುತದೆ ೧
ಮನವಿಟ್ಟರಲನುಗೂಡುತಲ್ಯದೆ
ನೆನೆದರೆ ನಿಜಘನ ನೀಡುತಲ್ಯದೆ ೨
ಲಯವಿಟ್ಟರ ದಯಬೀರುತಲ್ಯದೆ
ಶ್ರಯ ಸುಖ ಸುರಮಳೆಗರೆಯತಲ್ಯದೆ ೩
ಭಾವಕ ಅತಿಸುಲಭವಾಗ್ಯದೆ
ಆವಾಗ ತಾನೆಲೆ ನಿಭವಾಗ್ಯದೆ ೪
ಮಹಿಪತಿ ಮನೋಹರ ಮಾಡುತಲ್ಯದೆ
ಬಾಹ್ಯಾಂತ್ರವು ತಾನೆವೆ ಆಗ್ಯದೆ ೫

೬೫೮
ಕಂಡೆ ಕಂಗಳಲೆನ್ನ ಮಂಗಳಾತ್ಮನ ಕಂಡೆ
ಕಂಡೆ ಮಂಗಳಾಂಗ ಶ್ರೀ ಗುರುರಂಗನ ಕಂಡೆ ಧ್ರುವ|
ಬಾಲ ಲೀಲೆ ತೋರಿದ ನೀಲವರ್ಣನ ಕಂಡೆ
ಪಾಲಗಡಲಲಿಹ್ಯ ಗೋಪಾಲನ ಕಂಡೆ
ಮೂಲರೂಪದಲಿ ಫಲ್ಗುಣಗೊಲಿದನ ಕಂಡೆ
ಕುಲಕೋಟಿ ಬಂಧುವಾದ ಬಳಗನ ಕಂಡೆ ೧
ಕೊಳಲನೂದುವ ಮೂರ್ತಿ ನಳಿನನಾಭವ ಕಂಡೆ
ಥಳಥಳಿಸುವ ಪಾದ ಹೊಳೆವನ ಕಂಡೆ
ಕಳ್ಳ ಮೊಸರ ಬೆಣ್ಣೆ ಮೆಲುವ ಚೆಲುವನ ಕಂಡೆ
ಇಳೆಯೊಳು ಗೋಕುಲದಿ ಸುಳಿದನ ಕಂಡೆ ೨
ಕಿರೀಟ ಕುಂಡಲಕರ್ಣ ಕೌಸ್ತುಭಧರನ ಕಂಡೆ
ಪರಿಪರಿ ಭೂಷಣ ಸರ್ವಾಂಗನ ಕಂಡೆ
ಗರುಡ ವಾಹನ ಸ್ವಾಮಿ ಉರಗಶಯನ ಕಂಡೆ
ಸಿರಿಯ ಲೋಲಲಿಹ ಸರ್ವೋತ್ತಮನ ಕಂಡೆ ೩
ವಿದುರವಂದಿತ ದೇವ ಮದನ ಮೋಹನನ ಕಂಡೆ
ಆದಿ ಅವಿನಾಶ ಶ್ರೀಧರನ ಕಂಡೆ
ಯದುಕುಲೋತ್ತಮ ಮಧುಸೂದನನ ಕಂಡೆ
ಸಾಧು ಹೃದಯ ಪ್ರಾಣ ಶ್ರೀಮಾಧವನ ಕಂಡೆ ೪
ತುರುಗಳ ಕಾಯ್ದ ಶ್ರೀಹರಿ ಗಿರಿಧರನ ಕಂಡೆ
ಮುರಹರನೆನಿಸಿದ ಸುರಾಧೀಶನ ಕಂಡೆ
ಕರಿಯ ವರದಾಯಕ ಹರಿ ದಯಾಳುನ ಕಂಡೆ
ನರಹರಿ ಶ್ರೀನಾರಾಯಣನ ಕಂಡೆ ೫
ದುಷ್ಟಮರ್ದನ ದೂರ ವಿಷ್ಣುದೇವನ ಕಂಡೆ
ಶಿಷ್ಟ ಜನ ಪಾಲಕ ಸೃಷ್ಟೀಶನ ಕಂಡೆ
ದೃಷ್ಟಿಯೊಳು ಸುಳಿದು ದೃಷ್ಟಾಂತಾದವನ ಕಂಡೆ
ಕಷ್ಟ ಪರಿಹರಿವ ಶ್ರೀಕೃಷ್ಣನ ಕಂಡೆ ೬
ಗುರು ಶಿರೋಮಣಿ ತ್ರೈಲೋಕ್ಯನಾಥನ ಕಂಡೆ
ಪರಮಭಕ್ತರ ಸಂಜೀವನ ಕಂಡೆ
ಶರಣ ರಕ್ಷಕ ನಮ್ಮ ಕರುಣ ಸಿಂಧುನ ಕಂಡೆ
ತರಳ ಮಹಿಪತಿ ಪ್ರಾಣಹೊರೆವ ಕಂಡೆ ೭

೬೫೯
ಕಂಡೆ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು
ಹಿಂಡ ದೈವದೊಡೆಯ ಪ್ರಚಂಡನ ಕಂಡೆ ಧ್ರುವ||
ದೀನನಾಥನ ಕಂಡೆ ದೀನೋದ್ಧಾರನ ಕಂಡೆ
ಅನಾಥಜನರ ಪ್ರತಿಪಾಲನ ಕಂಡೆ ೧
ಶರಣ ರಕ್ಷಕನ ಕಂಡೆ ವಾರಿಜಾಕ್ಷನ ಕಂಡೆ
ವರಮುನಿ ಜನರಾ ಪ್ರತ್ಯಕ್ಷನ ಕಂಡೆ ೨
ಭಕ್ತ ಪ್ರಿಯನ ಕಂಡೆ ಮುಕ್ತಿಯೀವನ ಕಂಡೆ
ಪತಿತ ಪಾವನ ಗುರು ಸಂಜೀವನ ಕಂಡೆ ೩
ದೇವದೇವನ ಕಂಡೆ ಕಾವ ಕರುಣನ ಕಂಡೆ
ಮಹಿಪತಿ ತಾರಕ ಗುರು ಭವನಾಶನ ಕಂಡೆ ೪

೩೨೨
ಕಂಡೆ ನಾನೊಂದು ಕೌತುಕವ ಧ್ರುವ
ಆಯಿ ಅಜ್ಜನ ನುಂಗಿದ ಕಂಡೆ
ನಾಯಿ ಲಜ್ಜೆಯ ಹಿಡಿದುದ ಕಂಡೆ
ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ
ಪ್ರದಕ್ಷÀಣೆ ಮಾಡುದು ಕಂಡೆ ೧
ಇರುವೆ ವಿಷ್ಣುನ ನುಂಗಿದ ಕಂಡೆ
ನರಿಯು ರಾಜ್ಯನಾಳುದ ಕಂಡೆ
ಅರಿಯು ಮರಿಯ ನುಂಗಿದ ಕಂಡೆ
ಕುರಿಯಿಂದ ಪರಲೋಕಯೆಯ್ದಿದು ಕಂಡೆ ೨
ಇಲಿಯು ಯುಕ್ತಿಯದೋರುದು ಕಂಡೆ
ಹುಲಿಯು ಭಕ್ತಿಯು ಮಾಡುದು ಕಂಡೆ
ಇಳೆಯೊಳು ಮಹಿಪತಿ ಕಳೆವರದೊಳಿನ್ನು
ಮುಕ್ತಿ ಸಾಧನದೊಂದು ಬೆಡಗವು ಕಂಡೆ ೩

ಕಂಡೆ ನಾನೊಂದು ಕೌತುಕವ ಧ್ರುವ
ಭೂಮಿಯ ವೇದನೋದುದ ಕಂಡೆ ರಾಗಭೆÉೀದ ಮಾಡುದಕಂಡೆ
ಸ್ತೋತ್ರ ಮಂತ್ರಸ್ತುತಿಗಳು ಮೊದಲಾದ ಗೀತ ಪ್ರಭಂಧವು
ಪಾಡುದು ನಾಕಂಡೆ ೧
ಆಕಾಶ ಮಾತುಕೇಳುದು ಕಂಡೆ ಪುರಾಣ ದೃಷ್ಟಿಸುವದು ಕಂಡೆ
ಶಬ್ದ ಭೇದಗ್ರಹಿಸುದು ಕಂಡೆ ಪುಣ್ಯ ಶ್ರವಣವು ಕೇಳುದುಕಂಡೆ ೨
ನೀರೆ ಆಕಾರ ಮಾಡದುಕಂಡ್ಯ ನಾಕ್ಲಜ್ಯ
ಖಣಿಯವಾದುದು ಕಂಡೆ
ಎಂಬತ್ತನಾಲ್ಕು ಲಕ್ಷಯೋನಿಗಳ
ನಿರ್ಮಿತವಾಗಿಹ ರೂಪವ ಕಂಡೆ ೩
ಅಗ್ನಿ ದೃಷ್ಟಿಸುವದು ಕಂಡೆ ಸೃಷ್ಟಿನೆಲ್ಲ ನೋಡುವದು ಕಂಡೆ
ತೀರ್ಥಯಾತ್ರೆಯ ಕ್ಷೇತ್ರವ ಮಹಿಮೆಯ
ದೈವದ್ಯಾವರ ನೋಡುದು ಕಂಡೆ ೪
ಗಾಳಿ ಘ್ರಾಣಿಸುವದು ಕಂಡೆ ಪರಿಪರಿವಾಸನೆ ಕೊಂಬುದುಕಂಡೆ
ಅಜಪಾಗತಿಗಳ ಪಾಣ ಪ್ರಣಮ್ಯದ
ಬೀಜಾಕ್ಷರವು ನುಡಿವದು ಕಂಡೆ ೫
ಬೆರಗಾಗಿ ಮನಗುರು ಕೌತುಕವನಕಂಡು
ಎರಗಿತು ಪುಣ್ಯಶ್ರೀ ಚರಣದಲಿ
ಕರಗಿತು ಗರ್ವಾಹಂಕಾರದ ಬೀಜವು ತ್ರಾಹಿ
ತ್ರಾಹಿಯೆಂದು ಪೊಡವಿಯಲಿ ೬
ಬೆಡಗವ ಕಂಡಿನ್ನು ಮಹಿಪತಿ ತನ್ನೊಳು
ಬೆರಗಾದನು ಗುರುಕರುಣದಲಿ
ವರಗುರುಭಾಸ್ಕರ ಮೂರ್ತಿಯ ಕೃಪೆಯಲಿ
ಬೆಡಗವ ಕಂಡಿನ್ನು ಬೆರದಾದೆನಯ್ಯ ೭

೬೬೦
ಕಂಡೆ ನಾನೊಂದು ಸುವಸ್ತ
ಮಂಡಲದೊಳು ಸದ್ಗುರು ದಯದಲಿ ಸಾಭ್ಯಸ್ತ ಧ್ರುವ
ನೆನವಿನ ಕೊನೆಯಲಿ ಅನುವಾಗಿ ದೋರತದೆ
ಘನ ದೀಪ್ತಿಯಲಿ ಬೀರುತಿದೆ ಮನದ ಮುಗುಟ ೧
ಪ್ರಣವನ ಮೂಲಾಗ್ರಹಲಿ ಪರಿಪೂರ್ಣತಾನಾಗೆದ
ಘನವೆ ಘನವಾಗ್ಹೊಳೆಯುತದೆ ಪ್ರಾಣಪದಕ ೨
ಮಹಿಪತಿ ಬಾಹ್ಯಾಂತ್ರದೊಳು ವಸ್ತು ವಿರಾಜಿಸುತದೆ
ಮಹಿಮರೆ ಬಲ್ಲರೀಸುಖ ನಾಮಾಮೃತದ ಸ್ವಾನುಭವದ ೩

೬೬೧
ಕಂಡೆ ನಿಂದಾನಂದೋಬ್ರಹ್ಮನ ಮಂಡಲೇಶನ ಧ್ರುವ
ಪಿಂಡ ಬ್ರಹ್ಮಾಂಡ ತಂಡಕ ಜಡದ
ಖಂಡಿತವಾಗ ಸುಪಂಡಿತರಾತ್ಮನ ೧
ಸನ್ಮಾರ್ಗ ಸದ್ಗತಿ ಸಾಧನ ಸದ್ಗುರು ನಿಧಾನ
ಸದ್ಬ್ರಹ್ಮಾಕರ ಸದ್ವಾಸನೆ ಪೂರಿಸಿ ಸದ್ಗೈಸುವ ಸದ್ಭಾವ ಬೋಕ್ತನ ೨
ಸೂಸುತದೆನ್ನೊಳಗೆ ಖೂನ ವಾಸುದೇವನ ಲೇಸಿನ
ನಿಜಸುಖ ಭಾಸುವ
ಮಹಿಪತಿಗೋಸುಗ ಭಾಸ್ಕರ ಕೋಟಿ ಪ್ರಕಾಶನ ಕಂಡೆ ೩

೬೬೨
ಕಂಡೆನು ಕೌತುಕ ಮಂಡಲದೊಳಗೊಂದು ಹೊಯ್ಯಂದ
ಡಂಗುರವ ಮಂಡಿಯ ಮಸಿಯಲಖಂಡಿತವಾಗ್ಯದೆ ಧ್ರುವ
ಖೋಯೆಂದು ಕೂಗುತ ಕಾಯದೊಳಗದೆ
ಮಾಯದ ಮರೆಯಲುಪಾಯ ಮುಚ್ಚಿದ ನೋಡಿ ೧
ಝೇಂ ಝೇಂ ಝೇಂ ಝೇಂ ಝೇಂಕರಿಸುತದೆ
ಕಂಜನಾಭನ ಕರುಣಾನಂದನೋಡಿರ್ಯೊ ೨
ಘೇಳೆನಿಸುತದ ತಾಳಮೃದಂಗವು
ಒಳಹೊರಗಿದು ಧಿಮಿಗುಡುತದ ೩
ಅನುಹಾತ ಧ್ವನಿಅನುಭವ ನೋಡಿರೋ
ಅನುದಿನ ಸಾಧಿಸಿ ಘನ ಬೆರದಾಡಿರೊ ೪
ಆನಂದೊಬ್ರಹ್ಮದ ಆಟವಿದುನೋಡಿ
ಏನೆಂದ್ಹೇಳಲಿ ಸ್ವಾನುಭವದ ಸುಖ ೫
ತುಂಬಿತುಳುಕುತದೆ ಅಂಬುಜಾಕ್ಷನ ಮಹಿಮೆ
ಕುಂಭಿನಿಯೊಳು ನಿಜ ಗಂಭಗುರುತ ನೋಡಿ ೬
ಸಾಧಿಸಿ ನೋಡಿರೊ ಶ್ರೀ ಸದ್ಗುರು ಶ್ರೀಪಾದ
ಗಾದಿಯ ಮಾತಲ್ಲ ಭೇದಿಸಿ ನೋಡದು ೭
ಶುಕಾದಿ ಮುನಿಗಳ ಸುಖಾಶ್ರಯವಿದು
ಏಕಾಕ್ಷರ ಬ್ರಹ್ಮ ಏಕೋಚಿತ್ತದಿ ೮
ಮೊತ್ತರಾಗಿ ತನ್ನ ನೆತ್ತಿಯೊಳಗಿದೆ
ಉತ್ತಮರ ಸುತ್ತ ಮುತ್ತ ಸೂಸುತದ೯
ಗುರು ಕೃಪೆಯಿಲ್ಲದೆ ಗುರುತವಾಗದಿದು
ಬರೆ ಮಾತಿನ ಮಾಲೆಗೆ ಸೆರಗ ಸಿಲುಕದಿದು ೧೦
ಗುರುತವಿಟ್ಟು ಗುರುವಿನ ಮಹಿಮೆಯ
ತರಳ ಮಹಿಪತಿ ನಿನ್ನೊಳು ನೋಡೆಂದು ೧೧

೩೨೪
ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ ಧ್ರುವ
ಅಜ ನುಂಗಿತು ಗಜನ ವಾಜಿ ನುಂಗಿತು ಈ ಮೂಜಗವ
ರಾಜ್ಯನುಂಗಿತು ಪ್ರಜರ ಸಂಜೀವ ನುಂಗಿತು ಸಂಜೀವ ೧
ಇಲಿಯು ನುಂಗಿತು ಮೊಲವ ಹಲ್ಲಿ ನುಂಗಿತು ಹಲವು ಕುಲವ
ಜಲ ನುಂಗಿತು ಜಲವ ಹುಲಿ ನುಂಗಿತು ಈ ಮಾರ್ಜಲವ ೨
ಅರಿಯು ನುಂಗಿತು ಮರವ ನೊರಜು ನುಂಗಿತು ಗಿರಿ ಪರ್ವತವ
ಇರಹು ನುಂಗಿತು ಸರ್ವ ಬೆರಗಾಯಿತು ಮಹಿಪತಿ ಜೀವ ೩

೩೨೫
ಕಂಡೆನು ನಾನೊಂದು ಕೌತುಕ ಕಲಿಯುಗದೊಳಗೊಂದು ಧ್ರುವ
ಮೈಯೊಳಗಿಹುದು ಕೈಯೊಳಗೆಂದಿಗೆ ಸಿಲುಕದು
ಮಾಯಕದೂರಿದು ದೇಹವಿದೇಹಿಗೆ ಸಾರೆ ಇಂದು ೧
ವೇದಕ ನಿಲುಕದು ಸಾಧಕರಿಗೆ ತಾ ಸಿಲ್ಕುವದು
ಭೇದಿಸಿದರೆ ಹೊಳೆವುದು ಸಾಧು ಜನರಿಗೆ ತಿಳಿವುದು ೨
ಭಾವಕ ಸುಲಭದೇವಾದಿಗಳಿಗೆ ದುರ್ಲಭ
ಜೀವರ ನೆಲೆನಿಭü ಮಹಿಪತಿ ಪ್ರಾಣದೊಲ್ಲಭ ೩

೫೯೨
ಕಂಡೆವಯ್ಯ ಗುರುನಿಮ್ಮ ಶ್ರೀಪಾದ
ಸಂದಿಸಿತು ಎನ್ನ ಭೇದಾಭೇದ
ಮಂಡಲದೊಳಾಯಿತಯ್ಯ ಸುಬೋಧ
ಕೊಂಡಾಡುವೆ ಕೀರ್ತಿ ಅಖಂಡವಾದ ೧
ಸ್ಮರಿಸುವೆ ನಿಮ್ಮ ಕ್ಷಣ ಕ್ಷಣ
ಸ್ಮರಿಸುವೆ ನಿಮ್ಮ ಶ್ರೀಚರಣ
ಸ್ಮರಿಸುವೆ ನಿಮ್ಮ ಸಗುಣ ನಿರ್ಗುಣ
ಸ್ಮರಿಸುವೆ ನಿಮ್ಮನಾ ಅನುದಿನ ೨
ಸ್ಮರಿಸದೆ ನಿಮ್ಮ ಸ್ವರೂಪ ನಿರ್ವಾಣ
ಅರಘಳಿಗಿರಲಾರದೆನ್ನ ಪ್ರಾಣ
ಅರಿಯೆ ನಾ ಅನ್ಯ ಪಥ ನಿಮ್ಮ ವಿನಾ
ಮೊರೆ ಹೊಕ್ಕಿದೆ ನಾ ಪರಿಪೂರ್ಣ ೩
ಆವಾವ ಪರಿಯಲಿನಿಮ್ಮ ಕೀರ್ತಿ
ದಿವಾರಾತ್ರೆಯಲಿ ಕೇಳುವ ಸುವಾರ್ತಿ
ಭಾವಿಸುವೆ ನಿಮ್ಮ ನಿಜಾನಂದ ಮೂರ್ತಿ
ಜೀವನ ಮಾಡುವೆÀ ನಾ ಮಂಗಳಾರ್ತಿ ೪
ಬಾಹ್ಯಾಂತ್ರ ನಿಮ್ಮ ಧ್ಯಾನಿಸುವೆ ನಿತ್ಯಾ
ಮಹಾಗುರು ನಿಮ್ಮ ಕೃಪೆವಿದು ಸತ್ಯ
ಗುಹ್ಯ ಮಹಾವಾಕ್ಯವಾಯಿತು ಪಥ್ಯ
ಮಹಿಪತಿ ಆದ ನೋಡಿ ತಾ ಕೃತಕೃತ್ಯ ೫

೬೬೩
ಕಂಡೆವಯ್ಯ ನಿಮ್ಮ ಗುರುಪುಣ್ಯ ಚರಣಮಹಿಮೆ
ಮಂಡಲದೊಳು ಗುರುಕೃಪೆಯಿಂದ ದ್ರುವ|
ಕಣ್ಣಮುಚ್ಚಿದರೆ ತಾ ಕಣ್ಣನೊಳಗದೆ
ಕಣ್ದೆರದರೆ ಕಾಣಿಸುತದೆ
ಸಣ್ಣ ದೊಡ್ಡದರೊಳು ತುಂಬಿತುಳುಕುತದೆ
ಬಣ್ಣ ಬಣ್ಣದಲೆ ಭಾಸುತಲ್ಯದೆ ೧
ಆಲಿಸಿಕೇಳಲು ಹೇಳಗುಡುತಲ್ಯದೆ
ತಾಳಮೃದಂಗ ಭೇರಿ ಭೋರಿಡುತ
ಒಳಹೊರಗೆ ಧಿಮಿಧಿಮಿಗೊಡುತಲ್ಯದೆ
ಹೇಳಲಿನ್ನೇನು ಕೌತುಕವ ೨
ಸುಳಿ ಸುಳಿದಾಡುತಹೊಳೆಯುತ ಎನ್ನೊಳಗೆ
ಥಳಥಳಿಸುವ ತೇಜ:ಪುಂಜವಿದು
ಮಳೆಮಿಂಚಿನ ಪರಿ ಕಳೆದೋರುತಲ್ಯದೆ
ಝಳಝಳಿಸುತ ಎನ್ನ ಮನದೊಳಗೆ ೩
ತುತ್ತಾಯಿತಾ ಮಾಡಿನಿತ್ಯ ಸಲುಹುತದೆ
ಎತ್ತಹೋದರೆ ತನ್ನಹತ್ತಿಲ್ಯದೆ
ದತ್ತವುಳ್ಳವಗೆ ತಾ ಪ್ರತ್ಯಕ್ಷವಾಗ್ಯದೆ
ಮೊತ್ತವಾಗ್ಯದೆ ತನ್ನ ನೆತ್ತಿಯೊಳಗೆ ೪
ಧನ್ಯಗೈಸಿತು ಎನ್ನ ಪ್ರಾಣ ಜೀವನವಿದು
ಚೆನ್ನಾಗಿ ಪೂರ್ಣ ಗುರುಕೃಪೆಯಿಂದ
ಕಣ್ಣಾರೆ ಕಂಡೆ ಭಾನು ಕೋಟಿಪ್ರಕಾಶ
ನಿಮ್ಮ ಧನ್ಯಧನ್ಯವಾದ ಮಹಿಪತಿಯು ೫

೬೬೪
ಕಂಡೆವು ಗುರುದಿವ್ಯ ಶ್ರೀ ಸುಚರಣ
ಮಂಡಲದೊಳಾಯಿತು ಸುಭೂಷಣ ಧ್ರುವ|
ಇದೆ ನಿಜ ಪುಣ್ಯ ಪೂರ್ವಾರ್ಜಿತ
ಇದರಿಟ್ಟು ಬಂತೆನಗಾಯಿತು
ಒದಗಿ ಕೈಗೂಡಿತು ತ್ವರಿತ
ಹೃದಯಲೆನ್ನಾಯಿತು ಉದಿತ ೧
ಕಣ್ಣಾರೆ ಕಂಡೆವು ನಿಜ ಧನ
ಜನುಮವೆನ್ನಾಯಿತು ಪಾವನ
ಎನ್ನೊಳು ದೋರಿತಾನಂದ ಘನ
ಧನ್ಯ ಧನ್ಯವಾಯಿತು ಜೀವನ ೨
ಲೇಸು ಲೇಸಾಯಿತಯ್ಯ ನೋಡಿ
ಭಾವಿಸಿದ ಸದ್ಗುರು ದಯಮಾಡಿ
ವಾಸನೆ ಪೂರಿಸಿತು ಇಲ್ಲೆ ನೋಡಿ
ದಾಸಮಹಿಪತಿ ನಿಜಗೂಡಿ ೩

೪೩
ಕಡುಣಸಯ್ಯ ಗುರುವರೇಶ ಪರಮಪುರುಷ ಹರಿಸರ್ವೇಶ ಧ್ರುವ
ನೋಡದಿರಯ್ಯ ಭಿನ್ನಭೇದ ಮಾಡೊ ದಯ ಸುಜ್ಞಾನಬೋಧ
ನೀಡೊ ನಿಮ್ಮ ನಿಜಪ್ರಸಾದ ಕೊಡುವದನುಭವಾಮೃತಸ್ವಾದ ೧
ಸರಿಯಗಾಣೆ ಹರಿಯೆ ನಿಮ್ಮ ಸಿರಿಯಲೋಲಾನಂದ ಬ್ರಹ್ಮ
ಕರಿಯವರದ ದಯನಿಸ್ಸೀಮ ಮೊರಿಯಗೇಳಿ ಘನಮಹಿಮ ೨
ಕರುಣ ದಯದಲಿ ನೀ ಪೂರ್ಣ ಶರಣಜನರ ಸುಭೂಷಣ
ಹೊರೆದು ಸಲಹೊ ಸ್ವಾಮಿ ಪೂರ್ಣ ತರಳ
ಮಹಿಪತಿಯ ಪ್ರಾಣ ೩

೩೮೮
ಕಡೆವ ಬನ್ನಿ ಸಡಗರದಿಂದ ಘುಡಘುಡಿಸಿ
ದೃಢವೆಂಬುದು ಕಡುಕಂಬನೆ ಮಾಡಿ ನಡನಡಿಸಿ
ನುಡಿ ನಿಜ ವಡನೆ ಪಡಗವ ತಂದು ಜಡದಿಡಸಿ ಜಡದಿಡಸಿ
ಹುಡುಕಿ ತೆಗೆದಡಕುವ ನವನೀತ ಗಡಬಡಿಸಿ ಗಡಬಡಿಸಿ ೧
ಮೀಸಲಮನ ಕೆನೆ ಮೊಸರನೆ ಮಾಡಿ ಶೋಧಿಸಿ ಶೋಧಿಸಿ
ವಾಸನೆ ಮೊಸರ ಕರುಣಿಕುಸಕಿರಿದು ಮರ್ದಿನಿ ಮರ್ದಿನಿ
ಮೋಸಹೋಗದೆ ದುರಾಶದ ಕಿಲ್ಮಿಷ ಝಾಡಿಸಿ ಝಾಡಿಸಿ
ಧ್ಯಾನ ಬಲಿದು ಸುವಾಸನೆಕಳಲ ಕಡೆವದಾರಂಭಿಸಿ ೨
ನಾಮದಿವ್ಯಮಂತ್ರÀವ ಕಟ್ಟಿ ವಿಷಮ ಬಿಡಿಸಿ ವಿಷಮಬಿಡಿಸಿ
ನೇಮದಿಂದ ಸುಪ್ರೇಮದರವಿಗಿ ಘಮಗುಡಿಸಿ ಘಮಗುಡಿಸಿ
ಶಮೆದಮೆವೆಂಬ್ಹಗ್ಗನೆ ಸಮವಿಡಿದು ಧಿಮಿಗುಡಿಸಿ ಧಿಮಿಗುಡಿಸಿ
ಶ್ರಮಜನ್ಮದಹರುವ ಕ್ರಮಗೊಂಡಾಹಂಬಿಡಿಸಿ ೩
ನಾವು ನೀವೆಂಬ ಹೊಲೆಗುಡತಿಯನ್ಯರೆ ಬಿಡಿಸಿನ್ಯರೆಬಿಡಿಸಿ
ಸಾವಧಾನದಲಿ ಅನುಭವಾಮೃತ ನಿಜಕುಡಿಸಿ ನಿಜಕುಡಿಸಿ
ಭಾವದಲಿ ಸದ್ಗುರುದಯ ನವನೀತ ಝಲ್ಲಿಸಿ ಝಲ್ಲಿಸಿ
ಸವಿಸವಿಗೊಂಡು ಸುವಿದ್ಯಸಾರಾಯವ ಅನುಭವಿಸಿ ೪
ಕಡವು ಕುಶಲಿ ಒಬ್ಬಳೇ ಬಲುನಿಜಜ್ಞಾನಶಕ್ತಿ ಶಕ್ತಿ
ಒಡಗೂಡಲು ನಿಜಬಾಹುದು ಕೈಗೂಡಿ ಸದ್ಗತಿ ಸದ್ಗತಿ
ಪಡಕೊಂಡರು ಇದರಿಂದಲಿ ಮುನಿಜನ ವಿಶ್ರಾಂತಿ ವಿಶ್ರಾಂತಿ
ಕೊಂಡಾಡಿದ ಅನುಭವಸ್ತುತಿ ಮೂಢಮಹಿಪತಿ ೫

೬೪೬
ಕಣ್ಣ ಹಬ್ಬವಾಯಿತು ಎನಗಿಂದು
ಧನ್ಯಧನ್ಯಗೈಸಿದ ದೀನಬಂಧು ಧ್ರುವ|
ತುಂಬಿತುಳುಕುತಲ್ಯದ ಬ್ರಹ್ಮಾನಂದ
ಹಂಬಲಿಟ್ಟು ನೋಡನುಭವದಿಂದ
ಗುಂಭಗುರತವಾಗದೇ ನಿಜಾನಂದ
ನಂಬಿ ನಡಿಯಲಿಕ್ಕಿದೆ ಬಲು ಚಂದ ೧
ಕಣ್ಣು ಮುಟ್ಟಿನೋಡಲು ಖೂನಗೊಟ್ಟು
ಪುಣ್ಯ ಹೊಳೆಯುತಲ್ಯದೆ ಎದುರಿಟ್ಟು
ಎನ್ನ ಮ್ಯಾಲೆ ಸದ್ಗುರು ದಯವಿಟ್ಟು
ಚಿನ್ನುಮಯದೋರಿದ ನಿಜಗುಟ್ಟು ೨
ಹೇಳಲಿನ್ನೇನದನುಭವಸುಖಾ
ಥಳಥಳಗುಡುತದೆ ಕೌತುಕಾ
ಕೇಳಿಕೋ ಬೇಕಿದುವೆ ಗುರುಮುಖಾ
ಹೇಳಿಕುಡುವ ಮಹಿಪತಿಗುರು ಥೋಕಾ ೩

೬೪೫
ಕಣ್ಣಹಬ್ಬವಾಯಿತು ಇಂದು ಆನಂದ ಬ್ರಹ್ಮದಾಟವು
ಕಣ್ಣಿಲೆ ಕಂಡಿತು ಧ್ರುವ|
ಕಣ್ಣಿಗೆ ಕಾಣಿಸದಿನ್ನೊಂದು ಕಣ್ಣಿನೊಳಗೆ ಕಣ್ಣಿ
ಆಯಿತು ವಸ್ತು ಒಂದು
ಕಣ್ಣಿಗೆ ಕಣ್ಣು ಕಾಣಬಂದು ಕಾಣಿಸಿ ನಿಜಪುಣ್ಯಗೈಸಿತು ಎನಗಿಂದು ೧
ಕಣ್ಣಿನೊಳುದೋರಿತು ಖೂನ ಭಿನ್ನವಿಲ್ಲದೆ
ಹೊಳೆಯುತಿಹ್ಯದು ನಿಜಘನ
ಕಣ್ಣಿಗಾಯಿತು ನಿಜಧ್ಯಾನ ಕಣ್ಣಿಗೆ ಕಣ್ಣು
ನೋಡಲಿಕ್ಕಾಯಿತುನ್ಮನ ೨
ಕಣ್ಣಿಗೆ ಕಣ್ಣೀಭಾವವಾದ ಕಣ್ಣಿನೊಳಗೆ ಚೆನ್ನಾಗಿ
ಕಣ್ಣುಗುರುತಾದ
ಕಣ್ಣೀಉಂಡಿತು ಸವಿಸ್ವಾದ ಚಿಣ್ಣಮಹಿಪತಿಗಾಯಿತು
ಪೂರ್ಣಗುರುಬೋಧ ೩

೬೪೭
ಕಣ್ಣಾರೆ ಕಂಡೆ ಕೈವಲ್ಯ ಮನದ ವೈಶಾಲ್ಯ ಧ್ರುವ|
ಅದ್ವೈತಾಗಮ್ಯಗೋಚರನದ್ವಿತೀಯ
ಅಧ್ಯಾತ್ಮ ವಿದ್ಯದಾಗರ ಸಿದ್ಧರಪ್ರಿಯ
ಸದ್ಗತಿ ಸುಖಸಾಗರ ಸದ್ಗುಣಾಲಯ
ಬುಧಜನರ ಸಹಕಾರ ಬೋಧ ಪೂರ್ಣೋದಯ ೧
ಆದಿತ್ಯಕೋಟಿ ಪ್ರಕಾಶ ಸದೋದಿತ
ಸಾಧು ಹೃದಯನಿವಾಸ ಭೇದಾತೀತ
ಶುದ್ಧಾತ್ಮ ಸುಖಸಂತೋಷ ಸದಾ ಸುಶಾಂತ
ಸದಮಲಾನಂದಘೋಷ ಆದಿದೇವ ಸಾಕ್ಷಾತ೨
ಕೈವಲ್ಯನಿಧಿ ನಿಶ್ಚಯ ದೇವಾಧಿದೇವ
ಅವಿನಾಶ ಪದ ಅಕ್ಷಯ ಶ್ರೀವಾಸುದೇವ
ಭವಾತ್ಮ ಭಜಕಹೃದಯ ಸರ್ವರೊಳಿ ಹ್ಯ
ಬಾಹ್ಯಾಂತ್ರ ಭಾಸುತಿಹ್ಯ ಮಹಿಪತಿ ಮನದೈವ ೩

೬೪೮
ಕಣ್ಣಾರೆ ಕಂಡೆವಯ್ಯಾ ಕಣ್ಣಾರೆ ನಾ ಧ್ರುವ
ಕಣ್ಣಾರೆ ಕಂಡೆ ಹರಿಯ ಎನ್ನ ಪ್ರಾಣಧೊರಿಯ
ಧನ್ಯಗೈಸಿದ ಪರಿಯ ಏನೆಂದ್ಹೇಳಲಯ್ಯ ೧
ಕಾಣಲಿಕ್ಕೆನ್ನಮನ ತಾನೆ ಆಯಿತು
ಸ್ವಾನುಭವದ ಖೂನ ಜನಕ್ಹೇಳಲೇನು ೨
ಆಡೇನಂದರ ಅಮಾತು ನಾಡಿಗೇನು ತಿಳದೀತು
ಪಡೆದವಗೆ ದೋರಿತು ಬಿಡದ್ಹಾಂಗಾದೀತು ೩
ಗುರುಕರುಣ ಕಟಾಕ್ಷ ಗುರುತಾಗ್ಯದ್ಯನ್ನಪೇಕ್ಷಾ
ಇರುಳ್ಹಗಲೆ ದೋರುವದಧ್ಯಕ್ಷ ೪
ಎನಗದೆ ಬ್ರಹ್ಮಾನಂದ ಭಾನುಕೋಟಿ ತೇಜನಿಂದ
ದೀನಮಹಿಪತಿ ಬಂದ ಅನುಭವ ಆನಂದ ೫

೬೫೦
ಕಣ್ಣಾರೆ ಕಂಡೆವಿಂದು ಪುಣ್ಯತೇಜೋರಾಶಿಯ
ಬಣ್ಣಬಣ್ಣದಲಿ ಭಾಸುವ ಪ್ರಭೆಯ ಧ್ರುವ|
ಹೇಳಲಿಕ್ಕೆ ಬಾರದು ಹೊಳೆವ ಪ್ರಕಾಶವು
ಥಳಥಳಿಸುತಿಹುದು ಒಳಹೊರಗೆ
ಝಳಿಝಳಿಸುತಿಹದು ಮೊಳೆಮಿಂಚಿನ ಪರಿ
ಸುಳವ್ಹುದೋರಿತು ಕಳೆವರದೊಳಗೆ ೧
ಒದಗಿಬಂತಿದಿರಿಟ್ಟು ಮೊದಲಿನ ಪುಣ್ಯದ ಫಲ
ಸಾಧಿಸಿ ಕಂಡೆ ಸುಖಸದೋದಿತವ
ಹಾದಿ ಸಿಲ್ಕಿತು ನೋಡಿ ಆದಿ ಅನಾದಿಯ
ಭೇದಿಸಿತು ಮನಸು ನಿಜಬೋಧವ ೨
ಭಾವ ಬಲಿದು ನೋಡಿ ದೇವಾಧಿದೇವನ
ಸುವಿದ್ಯ ಸುರಸವ ಸವಿಸವಿದು
ಪಾವನ್ನವಾಯಿತು ಮಹಿಪತಿ ಜೀವನವು
ಕಾವಕರುಣ ಗುರುದಯದಿಂದ೩

೬೪೯
ಕಣ್ಣಾರೆ ಕಂಡೆವು ಚಿನ್ಮಯದ ರೂಪ ಕಣ್ಣಾರೆ ಕಂಡೆವು ಮಾ ಧ್ರುವ
ಕಣ್ಣೊಳಗಿಹುದು ಕಾಣಿಸಿಕೊಳ್ಳುದು ಕಣ್ಣಿಗೆ ಕಣ್ಣಾಗಿ
ದೋರುವದು ಮಾ
ಕಣ್ಣಿನೊಳಗಿನ್ನು ಕಣ್ಣಾರೆ ಕಾಣುವ ಜಾಣರಿಗೆ
ಪೂರ್ಣಗೈಸುವದು ಮಾ ೧
ಕೇಳಿಕೀಲಿಹುದು ಕೇಳಿಸಗೊಡದು ಕೇಳಿಕೆಯೆ
ತಾನಾಗಿಹುದು ಮಾ
ಕೇಳಿಕೆಯೊಳಿನ್ನು ಕೇಳಲು ಕಿವಿಗೊಟ್ಟು ಫೇಳಿನಿಸುತ
ಘೋಷಗೈವದು ಮಾ ೨
ಆಡುತ ಮಾಡುತ ಆಡಗುತಲಿಹುದು ಗೂಢಗುಹ್ಯವಾಗಿ
ದೋರುದು ಮಾ
ನೋಡೇನೆಂದರೆ ತನ್ನ ಗೂಡಿನೊಳಗದೆ ಹಿಡದೇನೆಂದರೆ
ಕೈಗೂಡದು ಮಾ ೩
ಥಳಥಳಗುಡುತ ಹೊಳೆವುತಲಿಹುದು ಸುಳವು ತನ್ನ
ತಿಳಿಯಗೊಡದು ಮಾ
ಒಲಿದೇನೆಂದರೆ ತನ್ನ ನೆಲೆನಭ ದೋರುತ ಒಳಹೊರಗೆ
ತಾನೆ ಭಾಸುದು ಮಾ ೪
ಉತ್ತಮರೊಳಗೆ ಅತ್ಯಂತವಾಗಿನ್ನು ಅತ್ತಿತ್ತಲಾಗದೆ ಇಹುದು ಮಾ
ನಿತ್ಯ ನಿಜವಾದ ವಸ್ತು ಮಹಿಪತಿ
ಹೃತ್ಕಮಲದೊಳು ಕಂಡೆನು ಮಾ ೫

೩೮೯
ಕಣ್ಣಿಲಿ ನೋಡಿರೋ ಸಾಕ್ಷ
ಘನಗುರು ಪ್ರತ್ಯಕ್ಷ ಧ್ರುವ
ಕಣ್ಣಿನೊಳದೆ ನಿಜ ವಸ್ತದ ಖೂನ
ಪುಣ್ಯವಂತನೆ ಬಲ್ಲನುಸಂಧಾನ
ಧನ್ಯಗೈಸುವದನುಭವದ ಖೂನ
ತನ್ನೊಳಗದೆ ಗುರು ಆತ್ಮಜ್ಞಾನ ೧
ಕಣ್ಣಿನ ಹಿಂದಾಡುತಲದೆ ಮನ
ಕಣ್ಣಿಗೆ ಕಣ್ಣು ನೋಡಲುನ್ಮನ
ಕಣ್ಣಿನೊಳಾಡುತಲದೆ ಚಿದ್ಛನ
ಅಣುರೇಣುಕ ತಾ ಇದೆ ಪರಿಪೂರ್ಣ ೨
ಕಣ್ಣಿನೊಳಾಡುವ ಭಾಸ್ಕರ ಕರುಣ
ಭಿನ್ನವಿಲ್ಲದೆ ಚೆನ್ನಾಗ್ಯನುದಿನ
ಚಿನ್ನ ಮಹಿಪತಿಗೆ ನೋಡೇವ ಧ್ಯಾನ
ಧನ್ಯಗೈಸುವ ತಾ ದೀನೋದ್ಧರಣ ೩

೩೯೦
ಕಣ್ಣೇಲ್ಹೇಳುವ ಗುರು ಮಾತು
ಇನ್ನೊಬ್ಬರಿಗೆ ಇದು ಏನು ತಿಳಿದೀತು ಧ್ರುವ
ವೇದಾಂತಕಿದು ಸನ್ಮತಗೂಡುವ ಮಾತು
ಸಾಧುಜನರಿಗೆ ಸಾಕ್ಷಿಯಾಗಿ ದೋರುವ ಮಾತು
ಸಾಧನಕೆ ಸಾಧಿಸುವ ಮಾತು
ಬೋಧಿಸಿದವಗೆ ಬಲವಾಗುವ ಮಾತು ೧
ಕೋಟಿ ಜನ್ಮದಾ ಪುಣ್ಯವಂತಗಿದಿರಿಡುವ ಮಾತು
ನೋಟ ನಿಜವಾದವಗೆ ನೀಟವಾಗಿಹ ಮಾತು
ಸೂಟಿಗಿದೆ ಘನಕೂಟ ಮಾತು
ನಾಟಿಮನದೊಳು ಮಥಿüಸುವ ಮಾತು ೨
ದ್ವೈತ ಅದ್ವೈತಕ ಆಧಾರವಾಗುವ ಮಾತು
ತ್ರಯಗುಣಕ ಮೀರಿ ಮಿಗಿಲಾಗಿ ದೋರುವ ಮಾತು
ಮಹಿಪತಿಯ ಗುರುಗೂಢ ಮಾತು
ತ್ರಯಲೋಕಕಿದೆ ತಾರಿಸುವ ಮಾತು ೩

೬೫೧
ಕಪಟನಾಟಕನೀತ ಕೃಪಾಸಿಂಧು ಸಾಕ್ಷಾತ ಧ್ರುವ
ಸಗುಣ ಸುಪಥ ದೋರಿ ನಿರ್ಗುಣನಾಗಿಹ ಶ್ರೀಹರಿ
ಅಗಣಿತ ಗುಣದೋರುವ ಅನೇಕಾಪರಿ ಜಗದೊಳು ಮುರಾರಿ ೧
ಹಿಡಿದೇನೆಂದರೆ ಸಿಲುಕ ಗೂಡಿನೊಳಗೆ ಮಾಡಿಹ್ಯ ಮಲಕ
ನೋಡೇನೆಂದರೆ ಭಕ್ತಿಗೆ ನಿಲುಕ ಒಡಿಯ ಗೋಪಾಲಕ ೨
ಕುಲಗಳ್ಳಗೆ ಕೊಡುವ ಮ್ಯಾಲೆ ಹುಯಲು ತಾ ಮಾಡುವ
ಮೂಲೋಕದೊಳು ನೆಲೆಯು ತಿಳಿಯಗೊಡದೆ ಇರುವ
ಬಲುಖಳ ದೈವ ೩
ಭಾಷೆ ಕೊಟ್ಟರೆ ತಪ್ಪ ಋಷಿ ಮುನಿಗಳ ಪಾಲಿಪ
ಭಾಸುತ ಭಕ್ತರ ಹೃದಯದೊಳಗಿಪ್ಪ ಭಾಸ್ಕರ ಸ್ವರೂಪ ೪
ಗುಹ್ಯ ಆಗೋಚರ ಸೋಹ್ಯ ತಿಳಿಯಲು ಸಾಕ್ಷಾತ್ಕಾರ
ಮಹಿಪತಿ ಸ್ವಾಮಿ ಶ್ರೀರು ಗುರು ಬಾಹ್ಯಾಂತರ
ಇಹಪರ ಸಹಕಾರ ೫

೩೯೧
ಕರವ ಮುಗಿದು ಗುರುವಿನ ನೀ ಅರಿಯೊ ಸುಹಿತಾರ್ಥಿಯ
ನೆರೆಯೊ ದೀರ್ಘದಂಡಹಾಕಿ ತರಣೋಪಾಯ ಮೂರ್ತಿಯ
ಬೆರಿಯೋ ಕುರುವ್ಹ ತಿಳಿವ ಪರಮಭಕ್ತಿ ಮನೆಮೂರ್ತಿಯ
ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ ೧
ಕರೆವ ಮಳೆಯು ಕರುಣಿಸಿನ್ನು ಪರಮದಯ ವೃತ್ತಿಯ
ಶರಣ್ಹೋಕ್ಕಾಶ್ರೈಸೊ ನೀನು ತ್ವರಿತ ಶ್ರೀಪತಿಯ
ಮರಿಯದೆ ಕೊಂಡಾಡಬೇಕು ಧರೆಯೊಳಿದೆ ಕೀರ್ತಿಯ
ಸ್ಮರಿಸೊ ಮನವೆ ಚರಣಕಮಲ ಪೂರ್ಣ ಗುರುಮೂರ್ತಿಯ ೨
ಯರಕವಾಗಿ ಸರಕನಿನ್ನು ನೀನು ಕರಕೊ ದೃಢಭಕ್ತಿಯಾ
ಅರಕಕೋಟಿ ತೇಜನಂಘ್ರಿ ಹರಿಕಿಸೊ ನೀ ಪೂರ್ತಿಯಾ
ಗರಕನೆವೆ ಅರಿಕೆಮಾಡಿಕೊಂಡು ಸುಸಂಗತಿಯ
ತರಕೈಸಿಕೊಳ್ಳು ಶ್ರೀಪಾದ ಪೂರ್ಣಗುರುಮೂರ್ತಿಯ ೩
ಏರು ಅರು ಚಕ್ರ ನೋಡಿ ತಾರಿಸುವ ಸ್ಥಿತಿಯ
ಅರವೆ ಅರವೆ ಆಗಿ ದೋರುತದೆ ಸುಜಾಗ್ರತಿಯ
ಎರಗಿ ಹರುಷದಿಂದ ಪಡೆಯೊ ಪರಮ ವಿಶ್ರಾಂತಿಯ
ಸ್ಮರಿಸೊಮನವೆ ಚರಣಕಮಲ ಪೂರ್ಣ ಗುರುಮೂರ್ತಿಯ ೪
ಸುರರ ವಂದ್ಯ ಪರಮಭೇದ್ಯ ಅರಿಯಾ ಪರಗತಿಯ
ಸಾರತಿಹ ಶ್ರುತಿವಾಕ್ಯ ಕೇಳೊ ಇಟ್ಟು ಪ್ರೀತಿಯ
ತ್ಯರನೆ ತಿಳುಹಿಸಿಕೊಟ್ಟ ಗುರುವಿಗೆ ನಿತ್ಯಪ್ರತಿಯ
ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ ೫
ಗುರುಮೂತ್ರ್ಯಾಭೇದ್ಯವೆಂಬ ಗುರುತಕೇಳೋ ಅರ್ಥಿಯ
ಕುರಹು ದೋರಿಕೊಟ್ಟ ಗುರುವಿಗೆ ನೀ ಮಾಡೊ ಸ್ತುತಿಯ
ಮರೆದುಬಿಡೊ ತರಳತನದ ಹರುವಾ ನಿನ್ನಭ್ರಾಂತಿಯ
ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ೬
ತರತರದಿ ಸಾಂದ್ರವಾಗಿ ದೋರುತಿಹ ದೀಪ್ತಿಯ
ಪ್ರಾರ್ಥಿಸಬೇಕೊಂದೆ ಸರ್ವಕಾಲ ವಸ್ತುಗತಿಯ
ಪರಿಪರಿಸುಖ ದೋರುವ ಕರುಣಾನಂದ ಯತಿಯ
ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ ೭
ಸರ್ವಸುಖದೋರ್ವದೊಂದೆ ಸರ್ವಫÀಲ ಶ್ರುತಿಯ
ಸರ್ವದಾವೆಂಬುವದು ನವರತ್ನಮಾಲೆ ಸ್ತುತಿಯ
ಪೂರ್ವಕರ್ಮ ಹರಿಸುವ ಸದ್ಗುರು ಸಾಮಥ್ರ್ಯಯ
ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ ೮
ಶರಣಜನರಾಭರಣವಿದೆ ಅರಿಯಬೇಕೀವಾರ್ತೆಯ
ತರಳ ಮಹಿಪತಿ ನೀ ಮಾಡೊ ಇರುಳ ಹಗಲ ಆರ್ಥಿಯ
ಕರವ ಪಿಡಿದು ಪಾರಗೆಲಿಸುವ ನಿನ್ನ ಸಾರ್ಥಿಯ
ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ ೯

೩೯೨
ಕರುಣಸಾಗರ ವರಮುನಿಗಳ ಪ್ರಾಣ
ಶರಣಜನರಾಭರಣ ನಮ್ಮ ಶ್ರೀ ಗುರುನಾಥ ೧
ಮೂರುಮೂರುತಿನೀತ ಮೂರು ಲೋಕ ವಂದಿತ
ಮೂರುಗುಣರಹಿತ ನಮ್ಮ ಶ್ರೀಗುರುನಾಥ ೨
ನಂಬಿದವರ ಕಾವ ಹಂಬಲಿಸುವ ಜೀವ
ಅಂಬುಜಾಕ್ಷನೆ ಶ್ರೀದೇವ ನಮ್ಮ ಶ್ರೀ ಗುರುನಾಥ ೩
ಭಕ್ತವತ್ಸಲನೀತ ಭಕ್ತರ ಭಾವಪೂರಿತ
ಶಕ್ತನಹುದಯ್ಯನೀತ ನಮ್ಮ ಶ್ರೀ ಗುರುನಾಥ೪
ಇಹಪರ ನಮಗೀತ, ಸಾಹ್ಯದಲಿ ಸಮರ್ಥ
ಮಹಿಪತಿ ಪ್ರಾಣನಾಥ ನಮ್ಮ ಶ್ರೀ ಗುರುನಾಥ ೫

೪೧
ಕರುಣಸಾಗರನಹುದೊ ಶರಣ ಜನರ ಪ್ರಿಯ ಧ್ರುವ
ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ
ದುರಿತ ಬಂದಡರಿದಾವಸರದೊಳು ನೀ
ಪರಿಹರಿಸಿದ್ಯೊ ಶ್ರಮ ಪರಮ ದಯಾಳು ೧
ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೊ ಪೂರ್ಣ
ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ
ಪರಪರಗಾಯಿದ್ಯೊ ತರಳ ಪ್ರಹ್ಲಾದನ ೨
ಧರ್ಮಪತ್ನಿಯ ಸೆರಗೆ ಭರದಿಂದೆಳೆಯುವ ಸಮಯ
ಸ್ಮರಣಿ ಒದಗಿ ಬಂದೊ ಪರಿಪರಿ ವಸ್ತುವ
ಪೂರಿಸಿದ್ಯೊ ಶ್ರೀ ಹರಿ ಕೃಷ್ಣ ಕೃಪಾಳು ೩
ಅರಗಿನ ಮನೆಯೊಳು ಮರೆ ಮೋಸ ಮಾಡಿರಲು
ದೋರಿ ವಿವರದಿಂದ ಪೊರೆವೊಂದಿಸಿದ್ಯೊ ಸ್ವಾಮಿ
ಶರಣಾಗತವತ್ಸಲ ಪಾಂಡವಪ್ರಿಯ ೪
ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ
ಬಾಲಕ ಮಹಿಪತಿಯ ಪಾಲಕ ನೀನಹುದೊ
ಮೂಲೋಕದೊಡೆಯ ಶ್ರೀ ಹರಿ ದಯಾಳ ೫

೫೪೬
ಕರುಣಾ ಸಾಗರ ಬಿರುದ
ತರಣೋಪಾಯದೋರುದ
ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ ೧
ದುರಿತ ನೀಗಿಸುವ
ತ್ವರಿತ ಪುಣ್ಯಗೈಸುದ
ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ ೨
ಹರುಷನಾಗಿ ಸೂಸುದ
ಗುರುತವಾಗಿ ಭಾಸುದ
ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ ೩
ಅರಹುಪೂರ್ಣನೀಡುವ
ಕುರುಹುಮಾಡಿ ಕೂಡುದ
ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ ೪
ಹರಿಯ ತಂದುಗುಡುದ
ಸಿರಿಯ ಸೌಖ್ಯಲಿಡುದ
ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ ೫
ಸಾರಸೇವಿಸುವದ
ಗುರುಪಾದಾರವಿಂದ
ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ ೬
ಬೆರೆದು ಘನಗೂಡುದ
ಹರುಷ ಮಹಿಪತಿಗ್ಯಾಗುದ
ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ ೭

೪೨
ಕರುಣಾಕರನೀತ ಕರಿಭಯ ಹರಿದಾತ
ಹರಿಪರಂದೈವೀತ ಗುರುನಾಥ ಧ್ರುವ
ಮೂರುಗುಣರಹಿತ ಮೂರುಲೋಕ ವಂದಿತ
ಮುರಹರನಹುದೀತ ಗುರುನಾಥ ೧
ಸುರಜನ ಪೂಜಿತ ಪರಮಾನಂದಭರಿತ
ತಾರಕನಹುದೀತ ಗುರುನಾಥ ೨
ಪತಿತಪಾವನೀತ ಪಿತಾಮಹನ ಪಿತ
ದಾತನಹುದೀತ ಗುರುನಾಥ ೩
ಅನಾಥ ಬಂಧುನೀತ ಅನುದಿನ ಸಾಕ್ಷಾತ
ದೀನದಯಾಳುನೀತ ಗುರುನಾಥ ೪
ಭಕ್ತವತ್ಸಲನೀತ ಶಕ್ತಸದ್ಗುರುನಾಥ
ಮುಕ್ತಿದಾಯಕನೀತ ಗುರುನಾಥ ೫
ಜನವನದೊಳಗೀತ ಮನೋಭಾವಪೂರಿತ
ಆನಂದೋ ಬ್ರಹ್ಮನೀತ ಗುರುನಾಥ೬
ಗುಹ್ಯಕೆ ಗುಹ್ಯನೀತ ಬಾಹ್ಯಂತ್ರ ಸದೋದಿತ
ಮಹಾಮಹಿಮನೀತ ಗುರುನಾಥ ೭
ಇಹಪರ ನಮಗೀತ ಮಹಿಪತಿ ಪ್ರಾಣನಾಥ
ಸಹಾಕರನಹುದೀತ ಗುರುನಾಥ ೮

೩೯೩
ಕರುಣಿಸಿ ಗುರುದಯ ಮಾಡೊ ಶಿರದಲ್ಲ
ಭಯ ನಿಜ ನೋಡೊ ಧ್ರುವ
ನೋಡದೆ ನೀ ಗುಣದೋಷ ಮಾಡೊ ಸದ್ಗುರು ಉಪದೇಶ
ಕಡಿವದು ಭವಭಯಪಾಶ ಕೊಡುವದಾನಂದದ ಹರುಷ ೧
ಉಪಾಯದ ಗುಣವರಿಯ ಸುಪಥದೋರು ಶ್ರೀಹರಿಯೆ
ಉಪಕಾರವು ನಾ ಮರೆಯೆ ಕೃಪೆಯುಳ್ಳ ನೀ ಧೊರಿಯೆ ೨
ಕರುಣಾನಂದದ ಮಳೆಗರಿಯೊ
ತರಣೋಪಾಯದ ಸುಖಬೆರಿಯೊ
ಮೂರುಗುಣದ ಬಲಿ ಹರಿಯೊ ತರಳ
ಮಹಿಪತಿಯ ನೀ ಹೊರಿಯೊ ೩

೪೪
ಕರುಣಿಸೊ ಕರುಣಿಸೊ ಗುರುವೆಂಕಟೇಶ
ಕರುಣಿಸೆನ್ನ ನೀ ನೋಡೊ ಪರಮ ಪುರುಷ ಧ್ರುವ
ಬಿನ್ನಹವ ಪಾಲಿಸೊ ಚಿನುಮಯ ರೂಪ
ಉನ್ನತ ಮಹಿಮ ನೀ ಘನ್ನ ಗುರು ಕೃಪ ೧
ಅನಾಥ ಬಂಧು ನೀ ಶರಣ ರಕ್ಷಕ
ಅನಂತ ಕೋಟಿ ಬ್ರಹ್ಮಾಂಡ ನಾಯಕ ೨
ಅಶೆಪೂರಿತ ವಾಸುದೇವ ಚಿದ್ರೂಪ
ದೇಶಿಕರದೇವ ಭಾಸಿ ಪಾಲಿಪ ೩
ವಂದಿತ ತ್ರೈಲೋಕ್ಯ ವೇದಾಂತ ಮಹಿಮ
ಇಂದಿರಾಪತಿ ಘನಗುರುಬ್ರಹ್ಮ ೪
ಶ್ರೀನಾಥ ನೀನಲ್ಲದೆ ನನಗಾರು ಇಲ್ಲ
ನೀನೆ ಸಕಲಪೂರ್ಣ ಭಕ್ತವತ್ಸಲ ೫
ಮತಿಹೀನನವಗುಣ ನೋಡದಿರೆನ್ನ
ಕ್ಷಿತಿಯೊಳು ಸದ್ಗೈಸೊ ಪತಿತಪಾವನ ೬
ದೀನನಾಥ ನೀ ಬಂದು ಮನದೊಳು ನಿಂದು
ಮನ್ನಿಸಿ ದಯಬೀರೊ ಘನಕೃಪಾಸಿಂಧು೭
ವಿಶ್ವವ್ಯಾಪಕ ಸಾಧುಹೃದಯನಿವಾಸ
ದಾಸ ಮಹಿಪತಿ ಪ್ರಾಣ ಹೊರಿಯೊ ಪ್ರಾಣೇಶ ೮

೩೯೪
ಕರುಣಿಸೊ ಗುರು ಎನಗೆ
ಅರಘಳಿಗಿ ನೀ ಎನ್ನ ಹೃದಯದಿಂದಲಗದ್ಹಾಂಗೆ ಧ್ರುವ
ಕಣ್ಣಿನೊಳಗ ನಿನ್ನ ಕಾಣದಿದ್ದರೆ ಪೂರ್ಣ
ಪ್ರಾಣನಿಲ್ಲದೊ ನಿಮಿಷಾರ್ಧದಲಿ
ಕ್ಷಣಕ್ಷಣಕ್ಕೊದಗಿ ನೀ ಖೂನದೋರದಿದ್ದರೆ
ತನು ವಿಕಳಿತವಾಗಿ ಕ್ಷೀಣಹೊಂದುವದೊ ೧
ಬೇಡುವದೊಂದೆ ನಾ ಬಿಡದೆ ನಿಜರೂಪ
ಪೊಡವಿಯೊಳಗೆ ದೃಢ ನಿಶ್ಚಯಲಿ
ಎಡಬಲವು ನೋಡದೆ ಒಡಲ ಹೊಕ್ಕಿದೆ ನಿನ್ನ
ಕಡೆಗಾಣಿಸುವದೆನ್ನೊಡೆಯನೆ ಪಿಡಿದು ಕೈಯ ೨
ಸುತ್ತಸೂಸುತಲಿನ್ನು ಚಿತ್ತದಿಂದಗಲದೆ
ನಿತ್ಯವಾಗಿರೊ ನೀ ಹೃತ್ಕಮಲದಲಿ
ಹೆತ್ತ ತಾಯಿಯೋಪಾದಿ ತುತ್ತುತುತ್ತಿಗೆ ಒಮ್ಮೆ
ಹತ್ತಿಲಿದ್ದು ಸಂತತ ಸಲಹೊ ಮಹಿಪತಿಗೆ ೩

೩೯೫
ಕರುಣಿಸೊ ಗುರು ಎನಗೆ ಸ್ಮರಿಸು ಹಾಂಗೆ
ದೋರು ನಿಮ್ಮರುಹ ಬ್ಯಾಗೆ ಗುರುತಲೀಗೆ ೧
ನಿನ್ನವನೆ ಎಂದೆನಿಸೊ ಭಿನ್ನ ಹರಿಸೊ
ಎನ್ನ ದಯದಿ ಪಾಲೆಸೋ ಧನ್ಯಗೈಸೊ ೨
ಅನುದಿನದಿ ಕಾಯೊ ನೀ ಬಂದು ಅನಾಥ ಬಂಧು
ದೀನಾನಾಥ ನೀ ಎಂದೆಂದು ಘನ ಕೃಪಾಸಿಂಧು ೩
ಭಕ್ತ ಜನರನುಕೂಲ ಭೋಕ್ತಸಕಲ
ಶಕ್ತ ನೀನಹದೊ ಕೃಪಾಲ ಬಕ್ತ ವತ್ಸಲ ೪
ಅನುಭವಸುಖ ಬೀರಿಸೊ ಖೂನದೋರಿಸೊ
ದೀನ ಮಹಿಪತಿ ತಾರಿಸೊ ಘನಸುರಿಸೊ ೫

Leave a Reply

Your email address will not be published. Required fields are marked *