Categories
ರಚನೆಗಳು

ಕಾಖಂಡಕಿ ಶ್ರೀ ಮಹಿಪತಿರಾಯರು

ಕೊರವಂಜಿ ಪದ
೩೪೦
ಬಾರೆ ಸತ್ಯಭಾಮೆ ತೋರೆ ನಿಮ್ಮ ಸುಹಸ್ತದ ಠೇವೆ ಧ್ರುವ
ಸರ್ಕನೆ ಬಾರವ್ವಾ ಅರಿಕ್ಯುಳ್ಳ ಗರತಿ
ಮುರುಖಿಸಬ್ಯಾಡೆನ್ನ ಕರವ ಕೊರವತಿ
ತಾರ್ಕಣ್ಯ ಬರುತಾದ ಪರಮ ಸುವಾರ್ತಿ
ತರ್ಕರಹಿತ ವಸ್ತು ಕರಕೊ ಸುಮೂರ್ತಿ ೧
ಓಯವ್ವ ಅವ್ವ ಬಾರೆ ನಮ್ಮವ್ವ
ದೈವುಳ್ಳ ಗರತಿ ನೀನವ್ವ
ದೈವ ಬರುದೆ ನಿನ್ನೊಳಗವ್ವ
ಕೈದೋರೆ ಕೈದೋರೆ ಕೈದೋರೆ ನಿಮ್ಮ ೨
ಕೈದೋರೆ ಕೈದೋರೆ ಕೈದೋರೆ ನಿಮ್ಮ
ಕೈಯ ಲಕ್ಷಣ ನೋಡಿ ಹೇಳುವೆನಮ್ಮ
ಅಯ್ಯ ಬರುತಾನೆ ಆಶೇಲಿ ನಿಮ್ಮ
ಕೈಗೊಟ್ಟು ಕೇಳೆ ನಿಜ ಗುಹ್ಯವರ್ಮ ೩
ಸುಳ್ಳು ಮಾತನಾಡಿ ಒಡಲ ಹೊರಳವಲ್ಲ
ಬಲ್ಲಷ್ಟು ಬೊಗಳುವೆ ವಿಷಯ ದಾಸ್ಯವಳಲ್ಲ
ಉಳ್ಳಷ್ಟು ಹೇಳುವೆ ಕೇಳೆ ಶಿವ ಸೊಲ್ಲ
ಹೇಳುವ ಮಾತಿದು ಘನ ಗುರು ತಾ ಬಲ್ಲ ೪
ಕೊರವಂಜಿ ಮಾತಿದು ಕಿವಿಗೊಟ್ಟು ಕೇಳಮ್ಮ
ಬರುತಾನ ಉದರಲಿ ಹುಟ್ಟಿ ಸಗುಣ ನಿಮ್ಮ
ತಾರಿಸುವ ಸ್ವಾಮಿ ಪತಿತ ಪಾವನ ನಿಮ್ಮ
ಹರಷದೋರುವ ನಿತ್ಯಾನಂದೋ ಬ್ರಹ್ಮ ೫
ಎಂದ ಮಾತನೆ ಕೇಳಿ ಬಂದಳು ಭಾವೆಮ್ಮ
ಚೆಂದ ಉಳ್ಳ ಸುರಸ ವಾಕ್ಯ ಕೇಳಿದಳೊಮ್ಮೆ
ಬಂದು ಹರುಷದಿ ಪೂರ್ಣ ಸಂದಿಸಿಟ್ಟಳು ಪ್ರೇಮ
ಒಂದೆ ನಿಜಸುಮಾತ್ಹೇಳ್ಯೆಂದಳು ನೇಮ ೬
ಎಲ್ಲಿಂದ ಬಂದೆವ್ವ ಸೊಲ್ಲ ಬೀರುತ ಶಿವ
ಬಲ್ಲ ಮಹಿಮಳೆಂದು ನಾನರಿಯೆನವ್ವ
ಇಲ್ಲೆವೆ ಕಂಡೆ ನಾ ಸೊಲ್ಲಿನ ಮಹಿಮರು
ಎಲ್ಲ ನೆಲೆನಿಭೇಳೌವ್ವ ೭
ಸರಿಯ ಬಂದರ ನಿನ್ನ ಮರಿಯೆನವ್ವ ಎಂದು
ಖರೆ ಉಳ್ಳ ಮಾತನೆ ಹೇಳೆ ನಿಜ ಒಂದು
ಹಿರಿಯರಗೀ ಮಾತು ಸರಿಯ ಬಾವ್ಹಾಂಗಿಂದು
ಬೀರವ್ವ ನಿಜಸಾರವಿಂದು ೮
ಲಕ್ಷ ಎಂಬತ್ತುನಾಲ್ಕು ಗ್ರಾಮವ ನೋಡಿ
ಲಕ್ಷಿಸುತ ಬಂದ ಲಕ್ಷಣ ನಿಜಗೂಡಿ
ಲಕ್ಷುಮಿ ಕರದೋರುತದ ನಿಮ್ಮೊಳೊಡಮೂಡಿ
ಅಕ್ಷಯಾನಂದ ಬರುತಾನೆ ಇದರಿಡಿ ೯
ಹರುಷದ ನುಡಿಗೇಳಿ ತ್ವರಿತ ಬಂದಳು ಬಾಲಿ
ಕರ ಕೊಟ್ಟಳು ಸುಶೀಲೆ ವರ ಕೃಪೆಯಲಿ
ಕೊರವಂಜಿ ಮಾತಲಿ ಅರಿತಳು ತಾ ತನ್ನಲಿ
ಪರಮಾನಂದ ಲೀಲೆ ಬೆರದಳು ಕೇಳಿ ೧೦
ನುಡಿಯುವ್ವ ಸಲಲಿತವಾದ ನಿಜವಾಕ್ಯ
ಬಡುವಂತೆ ಹರುಷವು ನೋಡಿ ತ್ರಯಲೋಕ್ಯ
ಬಡಸವ್ವ ನನಗಿಂದು ಇದೆ ನಿಜ ಮುಖ್ಯ
ಕುಡಲಿಕ್ಕೆ ನಿನಗಿದು ಶಕ್ಯ ೧೧
ಮನದಂತೆಯಾದರ ನೆನದೇನವ್ವ ನಿಮ್ಮ
ಅನುಕೂಲಾಗುವ ಪುಣ್ಯ ಪೂರ್ವಾರ್ಜಿತ ನಮ್ಮ
ಸಾನುಕೂಲಾಗುವಂತೆ ಬೇಡಿಕೊಳ್ಳಮ್ಮ
ನೆನಿ ಎಕನಾತಿ ಎಲ್ಲಮ್ಮ ೧೨
ಒಡಮೂಡಿ ಬಂದರ ಉಡಿಯ ತುಂಬೇನವ್ವ
ಜಡಿತಾಭರಣದುಡಿಗಟ್ಟೆ ನಿನಗವ್ವ
ಹಿಡಿಯದೆ ಅನುಮಾನ ನುಡಿ ನಿಜ ಸಾರವ್ವ
ಕುಡಲಿಕ್ಕೆ ನಿಧಾನದವ್ವ ೧೩
ಕೈಯ ಲಕ್ಷಣದಲಿ ಶ್ರೇಯ ತೋರುತಲ್ಯದ
ದಯ ಉಳ್ಳ ಮಹಿಮದ ಸೋಹ್ಯ ಬೀರುತಲ್ಯದ
ಭಯವಿಲ್ಲದ ಭಾಗ್ಯ ಅಚಲ ತಾನಾಗ್ಯದ
ಜಯಜಯಕಾರ ಭಾಸುತದ ೧೪
ಪುಣ್ಯ ಪ್ರಭೆಯ ಚೆನ್ನಾಗಿ ಭಾಸುತಲ್ಯದೆ
ಕಣ್ಣಿಗೆ ಸುಚಿನ್ಹ ಹೊಳವುತದೆ
ಚಿನ್ನುಮಯದ ಸುಪುತ್ಥಳಿ ಬರುತದೆ
ಬಣ್ಣ ಬಣ್ಣದ ಸುಖ ಬೀರುತದೆ ೧೫
ಅಂಗದೊಳಗ ನಿಮ್ಮ ರಂಗ ಬರುತಾನಮ್ಮ
ಕಂಗಳಿಗಿದರಿಡುತದೆ ಹರುಷವು ನಿಮ್ಮ
ಹಿಂಗಿಸುವ ಭವ ಬಂಧದ ದುಷ್ಕರ್ಮ
ಮಂಗಳಕರಾನಂದೊ ಬ್ರಹ್ಮ ೧೬
ನಿನ್ನ ಭಾಗ್ಯಕ ಸರಿ ಇಲ್ಲೆ ಸಂಜೀವನಿ
ಚೆನ್ನಾಗಿ ಕೇಳೆ ನೀ ಭಾವೆಗುಣಮಣಿ
ಧನ್ಯವಾಯಿತು ನಿನ್ನಂದೆವೆ ಯತಿಮುನಿ
ನಿನ್ನೊಳಗುಂಟು ದೇವಶಿಖಾಮಣಿ ೧೭
ಭಾವೆ ನಿನ್ನಿಂದ ಪಾವನ್ನವಾಯಿತು ಜಗ
ದೇವಾಧಿದೇವ ಮೂಡುವ ನಿನ್ನೊಳಗೀಗ
ಕಾವಕರುಣ ಪ್ರತ್ಯಕ್ಷವಾಗುವ ಯೋಗ
ಸುವಿದ್ಯ ಭಾಸುವ ದಿವ್ಯಭೋಗ ೧೮
ಉಂಡ ಊಟ ಕಂಡ ಕನಸು ಪಿಂಡಲಕ್ಷಣ್ಹೇಳುವೆ
ಮಂಡಲೊಳಗ ಮಂಡಿಸಿಹ್ಯ ಮಹಿಮೆ ನೀನಗ್ಹೇಳುವೆ
ಹಿಂಡದೈವದೊಡಿಯ ನಿನ್ನೊಡಲೊಳಗ ತಾಳುವೆ
ಪಂಡಿತರಿಗೆ ಪ್ರಿಯವಾದಾಗ್ಯ ಖಂಡನೀನೆ ಬಾಳುವೆ ೧೯
ನೀನೆ ಜಗಕ ತಾರಿಸುವ ದೈವದೋರಿಕುಡುವೆ
ನೀನೆ ಭಕ್ತಜನರ ಜನ್ಮಸಾರ್ಥಕವು ಮಾಡುವೆ
ಜ್ಞಾನಗಮ್ಯವಾದ ವಸ್ತುಹಿಡದು ನೀನೆ ಕುಡುವೆ
ನೀನೆ ಸಾಧುಜನರ ಹೃದಯಾದೊಳು ನಿತ್ಯ ಆಡುವೆ ೨೦
ಅಮ್ಮ ನಿಮ್ಮೊಳು ಘಮ್ಮನ್ಹೊಳುವ ತಮ್ಮ ಬರುತಾನ
ಯಮ್ಮ ಕೇಳೆ ತಮ್ಮನೆಲೆವಮ್ಮದೋರದೆ
ಸುಮ್ಮಾನಿಹ್ಹಾ ಸಮೀಪಲೆ
ಧಿಮ್ಮ ಹಿಡಿದ ಹಮ್ಮಿನೊಳು ಘುಮ್ಮವಾದರು ಬ್ರಹ್ಮಾದಿಗಳೆ
ನಮ್ಮ ನಿಮ್ಮದೆಂಬು ಭ್ರಮೆ ಸುಮ್ಮನ್ಯಾಕಿದೊ ಅಮ್ಮಕೇಳೆ ೨೧
ಬಯಕಿ ಲಕ್ಷಣ ನಿನ್ನ ಹೇಳ್ಹೆನವ್ವಾ ತಾಯಿ
ಮಾಯಿಕ ಗುಣ ಸುಟ್ಟು ತಿಂದೇನೆಂಬುದು ಬಾಯಿ
ಕೈಕಚ್ಚಿಲೆ ಶುದ್ದಿಲ್ಲಾದವರ ತಾಳದು ಸೋವಿ
ಐರಾವತ ಬರುತಾನ ನಿನ್ನೊಳು ಪನ್ನಂಗಶಾಯಿ ೨೨
ಬಾಹ್ಯನಿಷ್ಟರ ಕಂಡು ಬದಿಗೆ ಬರಗುಡಿ ನೀನು
ಅಹಂಭಾವಕ ಹೇಸಿ ವಾಕರಿಸುವೆ ನೀನು
ಸೋಹ್ಯ ಸೊನ್ನಿಯ ಮಾತು ಗುಹ್ಯ ಹೇಳುವೆ ನಾನು
ಸಾಹ್ಯ ಮಾಡುವ ಶ್ರೀಗುರು ತಾನು ೨೩
ಕಾಮಕ್ರೋಧ ಕರದು ತಿಂದೇನೆಂಬುದು ಬಯಕಿ
ನೇಮದಿಂದಲಿ ಮದ ಮತ್ಸರನೆ ನೂಕಿ
ಪ್ರೇಮವಿಲ್ಲದವರ ಎಂದಿಗಾದರ ಸೋಕಿ
ವರ್ಮಿಕರಿಗೆ ನೀ ಕೈಯಗುಡುವಾಕಿ ೨೪
ಆಸಿ ಎಂಬುದು ಅಟ್ಟುಅರದೇನೆಂಬುದು ಬ್ಯಾಗ
ಹುಸಿನುಡಿವೆಂಬದು ಹುರವಾದೀಗ
ಹಸನಾದ ಬಯಕೀದು ಋಷಿ ಮುನಿಗಳ ಯೋಗ
ಲೇಸು ಲೇಸು ನಿನ್ನ ಅಂತರಂಗ ೨೫
ಧನ್ಯವಾದ ರಾಜಯೋಗವ ಬಯಸುದು
ಉನ್ಮನವಾಗಿ ಊರ್ಜಿತವಾದೇನೆಂಬುದು
ಸ್ವಾನುಭವದ ಸುಖ ಸೂರ್ಯಾಡೇನೆಂಬುದು
ಭಿನ್ನ ಭೇದಕ ಕಣ್ಣ ತ್ಯರಿಯದಿದು ೨೬
ವಾಸುದೇವನ ಭಕ್ತಿ ಆಶ್ರೈಸೇನೆಂಬುದು
ಶ್ವಾಸೋಚ್ಛ್ವಾಸಕ ಒಮ್ಮೆ ಬಯಸುವುದು
ವಿಷಯ ಪ್ರಪಂಚಕ ಹೇಸಿ ತಾ ಜರೆವುದು
ಕುಸುಮನಾಭನ ಸೇವೆ ಇಚ್ಛಿಸುವದು ೨೭
ಒಮ್ಮೆ ಸರಸ್ವತಿ ಕೂಡ ಸರಸಾಡೇನೆಂಬುದು
ಒಮ್ಮೆ ಲಕ್ಷುಮಿ ಕೂಡ ಲೋಲಾಡೇನೆಂಬುದು
ಒಮ್ಮೆ ಪಾರ್ವತಿ ಕೂಡ ಪವಡೀಸೆನೆಂಬುದು
ಒಮ್ಮೆ ಏನುನೊಲ್ಲ್ಯೆನೆಂಬುದು ೨೮
ಹೇಳೇನೆಂದರೆ ನಿನ್ನ ಬಯಕಿಯ ಉಲ್ಹಾಸ
ತಿಳಿಯದಿನ್ನೊಬ್ಬರಿಗ ಗರ್ಭದ ಸುವಾಸ
ಉಲವುತದೆ ನಿನ್ನೊಳು ಸುಪ್ರಕಾಶ
ಥಳಥಳಗುಡುತಿಹ್ಯ ಬಾಲವೇಷ ೨೯
ಧನ್ಯ ಧನ್ಯ ನಿನ್ನ ಗರ್ಭಹೊಳುವ ಹೊಂಬಣ್ಣವು
ಧನ್ಯ ಧನ್ಯ ಒಡಲು ನಿನ್ನ ಪುಣ್ಯ ಪಾವನ್ನವು
ಧನ್ಯ ಧನ್ಯ ನಿನ್ನ ದರುಷಣದ ಜೀವನವು
ಧನ್ಯ ಧನ್ಯ ನಿನ್ನ ಕಂಡ ಜನರ ಜೀವಪ್ರಾಣವು ೩೦
ಭಾವೆ ನಿನ್ನಿಂದ ಖ್ಯಾತಿಪಡೆದ ಪ್ರಹ್ಲಾದನು
ದೇವ ದೇವ ಬಂದು ಸ್ತಂಭದೊಳು ಮೂಡಿದನು
ಆವಾವ ಠಾವಿನೊಳು ಬಂದು ರಕ್ಷಿಸಿದನು
ಜೀವ ಜೀವ ತಾನೆ ಅಗಿ ಪ್ರಾಣನುಳಹಿದನು ೩೧
ನಿನ್ನ ಬಲಗೊಂಡು ದ್ರೌಪದಿಯ ಖ್ಯಾತಿಪಡೆದಳು
ಪುಣ್ಯ ಉಳ್ಳ ಮಹಿಮನಂಘ್ರಿ ಕಣ್ಣಾರ ಕಂಡಳು
ಚೆನ್ನಾಗಿ ಬಂದು ಸ್ವಾಮಿ ಲಜ್ಜೆಗಾಯ್ದು ಸಭೆಯೊಳು
ಬಣ್ಣ ಬಣ್ಣ ವಸ್ತ್ರ ಪೂರಿಸಿದಾನೇಕಗಳು ೩೨
ಸ್ತುತಿಯು ಮಾಡಲು ನಿನ್ನ ಯತಿಮುನಿಗಳವಲ್ಲ
ಗತಿಯ ಪಡೆದರು ಸಕಲ ಮುನಿಜನರೆಲ್ಲ
ಅತಿ ಹರುಷವು ಕೂಡಿದರು ಜಗದೊಳಗ್ಯಲ್ಲ
ಹಿತದೋರುತಿದೆ ವಸ್ತು ಮಯವೆಲ್ಲ ೩೩
ಹೊಳೆವ ಸುಳಿವ ಚೆಲುವ ನಿನ್ನೊಳಗ ನಲುವನೆ
ಕಳವಿಲೊಯಿದ ವೇದನುಳುಹಿದವನು ಬೆಳೆವನೆ
ಇಳೆಯ ಪೂತ್ತು ಭಾರ ತಾಳಿದವನು ಉಲುವನೆ
ನೆಲವ ಗೆದ್ದ ಬಲಿಯು ನಿನ್ನೊಳಗೆ ಒಲುವನೆ ೩೪
ಸೀಳಿ ದೈತ್ಯನ ಕೊಂದ ಶೂರ ಘಮಗುಡತಾನೆ
ಅಳದು ಭೂಮಿಯ ಕೊಂಡು ಬೆಳದವ ಬರುತಾನೆ
ತಿಳಿದು ಪಿತರ ಸೂಡುಕೊಂಡವ ಬರುತಾನೆ
ಬಲುಪರಾಕ್ರಮದವ ತೋಳುತಾನೆ ೩೫
ದೇವತಿಗಳ ಶರಿ ಬಿಡಿಸಿದ ಸ್ವಾಮಿ
ತಾಂ ಸಂಚರಿಸ್ಹ್ಯಾನ ನಿನ್ನೊಳಗ
ಹಾವಿನ ಘಣಿಯ ಮೆಟ್ಟಿದ ತ್ರಿವಿಕ್ರಮ ತಾನು
ಮೂಡಿ ಬರುತಾನೆ ಬ್ಯಾಗೆ
ಪವಿತ್ರವುಳ್ಳ ಸತಿಯರಾ ವ್ರತನಳದವ
ನಗುತ ಬರುತಾನೆ ಈಗ
ರಾವುತನಾಗುವ ದೇವನೊಲಿದು
ಕೈಯಗೊಟ್ಟು ಬರುತಾನೆ ನಿನಗೆ ೩೬
ಮುದ್ದು ಮೋಹನ್ನದ ಸೊಬಗ ಬರುತಾನ
ಸಾಧೀಸಿ ಕೇಳೆ ಕಿವಿಗೊಟ್ಟು
ಶುದ್ಧಾತ್ಮರನುಕೂಲವೇದಾಂತರ ಮೂಲ
ಒದುಗುವ ತಾಂ ಇದರಿಟ್ಟು
ಸಿದ್ದರ ಸುಶೀಲ ಸಾಧು ಜನರ ಪಾಲ
ಉದಿಯವಾಗುವ ದಯವಿಟ್ಟು
ಸದ್ಬಾವ ಬೋಕ್ತ ಸಾಧಿಸಿ ಬರುತಾನವ್ವ
ಸದ್ಬಕ್ತರಿಗೆ ಕೈಯಗೊಟ್ಟು ೩೭
ಹುಟ್ಟುವ ಶಿಶುವಿನ ಘಟಣಿಯ ಬಹಳ
ಗುಟ್ಟೊಡಿಯಲು ತಾಂ ಮುಟ್ಟನು ತಾಳ
ಕಟ್ಟುವ ದೈತ್ಯರ ದಿಟ್ಟ ಮಾ ಸಾಳ
ದೃಷ್ಟಿಸಿ ನೋಡುವ ನಿಷ್ಠರ ಮೇಳ ೩೮
ಶಿಶುವಿನ ಲಕ್ಷಣ ಬಲು ಅಗಾಧ
ಪೊಸ ಪರಿ ಮಾಟವು ಋಷಿಗಳ ಬೋಧ
ಹಸು ನೀರಡಿಸರವುದು ಶ್ರೀಪಾದ
ಬಸುರಿನ ಬಯಕಿದು ಬಲುಸುಸ್ವಾದ ೩೯
ಘಮಗುಡುತದೆ ಅನಾಹತದ ಧ್ವನಿಯು
ಕ್ರಮ ತಿಳಿವದು ಸುಯೋಗದ ಮನಿಯು
ಧಿಮಿಗುಡುತದ ಆನಂದದ ಖಣಿಯು
ಭ್ರಮ ಬಿಡಿಸುವ ಘನ ಚಿಂತಾಮಣಿಯು ೪೦
ಹುಟ್ಟಿ ಬರುತಾನಿವ ಶಿಷ್ಟರ ಮನಿಲಿವ
ದುಷ್ಟ ಮರ್ದನ ದೇವ ನಿಷ್ಠರಿಗೆ ಕಾವ
ಎಷ್ಟೆಂದ್ಹೇಳಲವ್ವ ಸೃಷ್ಟಿಗಧಿಕನಿವ ಮುಟ್ಟಿ ||

೩೪೫
ಬಾರೋ ನನ್ಮ ಸ್ವಾಮಿ ಗುರು ಅಂತರ್ಯಾಮಿ
ಕರುಣಸಾರ ಬೀರುತಿಹ್ಯ ಶರಣಜನಪ್ರೇಮಿ ೧
ಬೇಡಿ ನಿನ್ನ ಕೊಂಬೆ ನಿನ್ನ ನೋಡಿ ಬಲಗೊಂಬೆ
ಕಡಿಯುಗಾಣಿಸುವ ನೀನೆ ಒಡಿಯ ನನಗೆಂಬೆ ೨
ಪಾದಪೂಜೆ ಮಾಡೆ ಸಾಧಿಸಿನ್ನು ನೋಡೆ
ಭೆದಿಸನುದಿನ ನಿಜಬೋಧ ಬೆರದಾಡೆ ೩
ಕಾಣಲಿಕ್ಕೆ ಉಬ್ಬೆ ನೆನದು ನಿಮ್ಮ ಕೊಬ್ಬ್ಯ
ನಾನು ನೀನೆಂಬಹಂಭಾವ ಇದೆ ಧಬೆ ೪
ಧ್ಯಾನ ನಿತ್ಯ ಪ್ರತಿಗೆ ದೀನ ಮಹಿಪತಿಗೆ
ಭಾನುಕೋಟಿತೇಜ ನೀನೆ ಬೇಕು ಸುಭಗುತಿಗೆ ೫

೧೮
ಬಾರೋ ಬಾರೋ ಗುರುರಾಯನೆ ಧ್ರುವ
ಹೊಳೆಯನೀಸಿ ಇಳದಿ ಬಾರೊ
ಇಳಿಯ ಪೊತ್ತು ಬಳಿದಿ ಬಾರೊ
ಇಳಿಯಗೆಲಿದು ಸೀಳಿ ಕಂಭದೊಳು
ಹೊಳದಿ ಬಾರೊ ನೀನು ೧
ಅಳೆದು ಭೂಮಿ ಬಳದಿ ಬಾರೊ
ಇಳಹಿ ತಳಿಯ ತಿಳದಿ ಬಾರೊ
ಅಳಿದು ದೈತ್ಯಬಲವ ಮುರಿದು
ಕೊಳಲನೂದಿ ಬಳಲಿ ಬಾರೊ ೨
ಸುಳ್ಳ ವ್ರತನಳಿದಿ ಬಾರೊ
ಸುಳುಹಿ ತೇಜ ಹೊಳಿದಿ ಬಾರೊ
ತರಲ ಮಹಿಪತಿಯ
ಹೊರೆದು ಸಲಹುವ ಸ್ವಾಮಿ ಬಾರೊ ೩

೫೯೬
ಬಾರೋ ಬಾರೋ ಬಾರಯ್ಯ ಬಾರೊ ಸದ್ಗುರುಸ್ವಾಮಿ
ಬಾರಯ್ಯ ಬಾರೊ ಮದ್ಗುರು ಸ್ವಾಮಿ ಬಾರಯ್ಯ ಬಾರೊ ಧ್ರುವ||
ಸ್ವರೂಪಸುಖ ನಿಜವನ್ನು ತೋರೊ
ಹರುಷಾನಂದದನುಭವ ಬೀರೊ
ಗುರುತವಾಗ್ಯೆನ್ನೊಳು ನಿತ್ಯವಿರೊ
ತರಣೋಪಾಯದ ನಿಜಬೋಧ ನೀ ಸಾರೊ ೧
ಕಣ್ಣುಕೆಂಗೆಂಡುತಾವೆ ಕಾಣದೆ ನಿಮ್ಮ
ಪುಣ್ಯಚರಣ ತೋರೊ ಘನ ಪರಬ್ರಹ್ಮ
ಚಿಣ್ಣಕಿಂಕರ ಅತಿದೀನ ನಾ ನಿಮ್ಮ
ಧನ್ಯ ಧನ್ಯಗೈಸುವದೆನ್ನ ಜನುಮ ೨
ಚಾಲ್ವರುತಾವೆ ಮನೋರಥಗಳು
ಆಲೇಶ್ಯ ಮಾಡದಿರು ನೀ ಕೃಪಾಳು
ಮೇರೆದಪ್ಪಿ ಹೋಗುತಿದೆ ದಿನಗಳು
ಬಲು ಭಾಗ್ಯೊದಗಿಬಾಹುದು ನೀ ದಯಾಳು ೩
ಹಾದಿ ನೋಡುತಿದೆ ಹೃದಯ ಕಮಲ
ಸಾಧಿಸಿಬಾಹುದು ಮುನಿಜನ ಪಾಲ
ಸಾಧುಹೃದಯ ನೀನಹುದೊ ಸಿರಿಲೋಲ
ಛೇದಿಸೊ ನೀ ಬಂದು ಭವಭಯಮೂಲ ೪
ಬಾರದಿದ್ದರೆ ಪ್ರಾಣ ನಿಲ್ಲದೊ ಎನ್ನ
ಕರುಣಿಸಿಬಾಹುದು ಜಗನ್ಮೋಹನ
ತರಳ ಮಹಿಪತಿಗೆ ನೀ ಜೀವಜೀವನ
ಕರೆದು ಕರುಣ ಮಳೆಗೈಸು ಪಾವನ ೫

೧೯
ಬಾರೋ ಬಾರೋ ರಂಗಾ ಬಾರೋ ಬಾರೋ ಪ
ಮಾವನ ಮರ್ದನ ಬಾರೋ ಮಾವನ ಮಾವನೆ ಬಾರೋ |
ಮಾವನೋಳು ಕಾದಿ ಮಾವನಿತ್ತ ಮಣಿಯ ನೀನು ೧
ಮಗನ ಕಟಾಹಲಿಂದ ಮಗಳ ಪಡೆದನೆ ಬಾರೋ |
ಮಗನ ಅತ್ಮನಲಿ ಬಂದ ಮಗನ ಮಾವನ ತರಿದೆ ೨
ಮೈದುನನಾ ಧರಿಸಿದನಾ ಮೈದುನಾರಿಯಣ್ಣ ಬಾರೋ |
ಮೈದುನ ಬೋವಾ ಮಹಿಪತಿ ಪದ ಭಜಿಪರೊಡಿಯಾ ಕೃಷ್ಣ ೩

೫೪೯
ಬಿಡದಿರೊ ಎನ್ನ ಮನವೇ ಬಿಡದಿರೊ ದೃಢದಿಂದ
ಸದ್ಗುರು ಪಾದ ಧ್ರುವ
ಸಕಲಾತ್ಮನೆಂದು ಶ್ರುತಿ ಪ್ರಕಟಿಸಿ ಪೇಳುತಿದೆ
ವಿಕಟಿತಗೊಂಬುದೇನು ಕಾಕ ಬುದ್ಧಿಂದ ೧
ಚೆನ್ನಾಗಿ ಸಾರುತಿದೆ ನಾನ್ಯ:ಪಂಥವೆಂಬ ಮಂತ್ರ
ಭಿನ್ನವಿಲ್ಲದೆ ನೋಡು ನಿನ್ನೊಳಗೀಗ ೨
ಸರ್ಕನೆ ಮಾಡಿಕೊಂಬುದು ಆರ್ತಿ ಉಳ್ಳವರ ಸಂಗತಿ ಬ್ಯಾಗ
ತರ್ಕಿಸಬ್ಯಾಡಿತರ ಕೂಡ ಮರ್ಕಟ ಬುದ್ಧಿಂದ ೩
ಇಡಿದು ತುಂಬಿಹ್ಯ ವಸ್ತು ಪಡಕೋ ಗುರುಕೃಪೆಯಿಂದ
ಎಡಬಲ ನೋಡದೆ ಈಗ ಕೂಡು ನೀ ಬ್ಯಾಗೆ ೪
ಸಾಧಿಸಿ ಸದ್ಗುರು ಪಾದ ಭೇದಿಸೊ ನೀ ಬ್ರಹ್ಮಬೋಧ
ಸಾಧುಸದ್ಗೈಸುವದಾ ಸದ್ವಸ್ತುದ ೫
ಎಲ್ಲಾರೊಳಿಹ ನಮ್ಮ ಫುಲ್ಲಲೋಚನ ಶ್ರೀಕೃಷ್ಣ
ಸುಲಭವಾಗಿಹ ಬಲ್ಲವರಿಗೆ ೬
ಬಾಹ್ಯಾಂತ್ರ ಪರಿಪೂರ್ಣ ಮಹಿಪತಿ ಗುರುನಿಧಾನ
ಇಹಪರಾನಂದ ಘನ ಸಾಯೋಜ್ಯ ಘನ ೭

೫೬೮
ಬಿಡದೆ ಭಜಿಸೊ ಮನವೆ ದೃಢಭಾವದಿ ಪೂರಿಸೊ
ಒಡನೆ ನಿನ್ನೊಳು ತಿಳಿದು ಸ್ವಾಮಿ ಸದ್ಗುರುಮೂರ್ತಿ
ಶ್ರೀಪಾದಾರಾಧಿಸೊ ಧ್ರುವ
ನಿತ್ಯಾನಿತ್ಯ ಆವದೆಂದುದ್ದಿತ್ಯರ್ಥ ಶೋಧಿಸೊ
ಪಥ್ಯವಾಗುವ ಸತ್ಯಶಾಖತ್ವಪಥವ ಸಾಧಿಸೊ
ಕೃತ್ಯಾಕೃತ್ಯವಾಗುವ ನಿತ್ಯನಿಜವು ಭೇದಿಸೊ
ಉತ್ತಮೋತ್ತಮವಾದ ವಸ್ತುಮಯದೊಳು ನೀ ಸಂಧಿಸೊ ೧
ಇದೆ ನೋಡು ಹಿತವು ನಿನ್ನು ಸುಪಥಸಾಧನ
ಸಾಧಿಸಿಗೊಡುವ ಸ್ವಾಮಿ ಸದ್ಗುರು ಪತಿತಪಾವನ
ಭೇದಿಸಿ ನೋಡಲಕ್ಕೆ ನಿನ್ನೊಳಗಾಗುವದು ಉನ್ಮನ
ಸದಮಲಾನಂದ ವಸ್ತು ಪರಿಪೂರ್ಣ ತೋರುತ್ತದೆ ತಾಂ ನಿಧಾನ ೨
ಬೆರಿಯೊ ಭಾವಭಕುತಿವಿಡಿದು ಹಿಡಿಯೊ ಹರಿ ಪಾದವ
ಸುರಿಯೊ ಸಾರ ಸವಿಯೊ ಸುಖವ ಅನಭವಾಮೃತವ
ಹರಿಯೊ ಪಾಶ ಬೀಳುವ ಭವಜನ್ಮಮೃತ್ಯುವ
ನೆರಿಯೊ ಮಹಿಪತಿಸ್ವಾಮಿ ವಸ್ತು ಪರಾತ್ಪರವ ೩

೫೬೯
ಬಿಡುಮನವೆ ಬಿಡದಿಹ್ಯ ಸಂಸಾರ
ಪಡಕೊಂಬುದು ಮಾಡು ನೀ ಸುವಿಚಾರ ೧
ವಿಚಾರದೊಳಗದ ಬಲು ವಿವೇಕ
ಸೂಚಿಸಿಬಾಹುದು ಸ್ವಾತ್ಮದ ಸುಖ೨
ಸ್ವಾತ್ಮದ ಸುಖ ತಿಳಿದವ ಸ್ವತ:ಸಿದ್ಧ
ಮತ್ತೆಲ್ಲಿಹದವಗೆ ಭವಬಂಧ ೩
ಭವಬಂಧವ ತಿಳಿಯಲುಪಾಯ
ಭುವನದಲ್ಯದ ಶುಕನಳಿಕನ್ಯಾಯಾ ೪
ನ್ಯಾಯವ ತಿಳಿದರೆ ನೋಯವನೆಂದು
ಶ್ರಯ ತಿಳಿಯಲು ತಾ ಬಂಧು ೫
ಬಂಧು ಹಗೆಯು ತನಗೆ ತಾಯೆಂದು
ಸಂಧಿಸಿ ಪಾರ್ಥಗ್ಹೇಳಿದ ಹರಿ ಬಂದು ೬
ಹರಿವಾಕ್ಯವೆ ಗುರುಗುಹ್ಯದ ಗುಟ್ಟು
ಪರಮಾನಂದದ ಹೆಜ್ಜೆಯ ಮೆಟ್ಟು ೭
ಹೆಜ್ಜೆಲೆ ನಡೆವನು ಕೋಟಿಗೊಬ್ಬವನು
ಸಜ್ಜನ ಶಿರೋಮಣೆನಿಸಿಕೊಂಬುನು ೮
ಶಿರೋಮಣೆನಿಕೊಂಬುದು ಗುರುಕರುಣ
ಗುರುಚರಣಕೆ ಬ್ಯಾಗನೆಯಾಗು ಶರಣು ೯
ಶರಣ ಹೊಕ್ಕವಗೆಲ್ಲಿಹುದು ಮರಣ
ಮರಣಕ ಮರಣವ ತಂದವ ಜಾಣ ೧೦
ಜಾಣನೆ ಜನ್ಮರಹಿತ ವಾದವನು
ಜನವನ ಸಕಲ ಸಮವಗಂಡವನು ೧೧
ಸಮಗಂಡವಗಳದಿಹ್ಯ ಶ್ರಮವೆಲ್ಲಾ
ರಾಮ ವಸಿಷ್ಠರೊಳಾಡಿದ ಸೊಲ್ಲ ೧೨
ಸೊಲ್ಲಿಗೆ ಮುಟ್ಟಿದವ ಪ್ರತಿಯಿಲ್ಲ
ಎಲ್ಲರೊಳಗ ವಂದಾದವ ಬಲ್ಲ ೧೩
ಬಲ್ಲವನೆ ಬಲ್ಲನು ಬಯಲಾಟ
ಎಲ್ಲರಿಗಿದೆ ಅಗಮ್ಯದ ನೋಟ ೧೪
ನೋಟಕ ನೀಟ ಮಾಡಿದವನು ಧನ್ಯ
ನೀಟಿಲೆ ನಡೆದವ ಕೋಟಿಗೆ ಮಾನ್ಯ ೧೫
ಕೋಟಿಗೆ ಒಬ್ಬನು ತತ್ವಜ್ಞಾನಿ
ನೋಟವಗಂಡಿಹ್ಯ ಮಹಾ ಸುಜ್ಞಾನಿ ೧೬
ಸುಜ್ಞಾನಿಗೆ ಘನಮಯ ಸುಕಾಲ
ಸುಗಮ ಸುಪಥವಾಗಿಹುದನುಕೂಲ ೧೭
ಅನುಕೂಲದ ನಿಜ ಮಾತನೆ ಕೇಳು
ಅನುದಿನ ಘನಗುರು ಸೇವಿಲೆ ಬಾಳು ೧೮
ಬಾಳಿ ಬದುಕುವದು ಈ ಪರಿ ಲೇಸು
ಕಳೆವುದು ಮಿಕ್ಕಿನ ಭ್ರಾಂತಿಯ ಸೋಸು ೧೯
ಸೋಸ್ಹಿಡಿದರ ಇದೊಂದೇ ಸಾಕು
ವೇಷವದೋರುವದ್ಯಾತಕೆ ಬೇಕು ೨೦
ಬೇಕೆಂಬ ಬಯಕೆಯ ಈಡ್ಯಾಡು
ಸೋಕಿ ಶ್ರೀ ಸದ್ಗುರು ಪಾದದಿ ಕೂಡು ೨೧
ಕೂಡಿರು ಮಹಿಪತಿ ಮನವೆ ನೀ ಪೂರ್ಣ
ಪಡೆವುದಿದೇ ಸ್ವಸುಖ ಸಾಧನ ೨೨

೨೫೮
ಬಿಡೋ ಬಿಡು ಮನುಜ ಭ್ರಾಂತಿಯ
ಪಡಕೊ ನಿನ್ನೊಳು ತಿಳಿಯುವ್ಹಾಂಗ ಸದ್ಗುರು ಭಕ್ತಿಯ ಧ್ರುವ
ಬುಡದಲಿ ಫಲವಿರಲಿಕ್ಕೆ ಅಡರುವದ್ಯಾಕೊ ತುದಿಗೆ
ಪಡಬ್ಯಾಡೋ ನಾನಾ ಸಾಯಾಸ ತೊಡಕಿ ಬೀಳುವ ೧
ಕಾಶಿಗೆ ಹೋಗಬೇಕೆಂದು ಕಾಸಿನ ಚಾಲವರಿಕ್ಯಾಕ
ಆಸಿ ಅಳಿದರೊಂದೇ ಸಾಕು ಭಾಸುದು ತನ್ನೊಳಗೆ ೨
ದೇವರೆ ತಾ ದೂರಿದ್ದರೆ ಆವದೊ ನಿನ್ನ ಕಾವ ದೈವ
ಠಾವಿಕಿ ಮಾಡಿಕೊಳ್ಳೊ ಸಾವಧ ವಾಗಿ ೩
ತಿಳಿಯದಿದ್ದರೆ ಸ್ವಕೀಲು ಕೇಳಿಕೊ ಸದ್ಗುರುವಿಗೆ ನೀಟ
ಹೇಳಿಕೊಡುವ ಸ್ವಾಮಿ ಬೆಳಗ ತಾ ಝಾಡಿ ೪
ಸಾಯಾಸವಿಲ್ಲದೆ ಮಹಿಪತಿಗೆ ಶ್ರಯದೋರಿತು ಗುರುವಾಕ್ಯದಲಿ
ಆಯಿತು ಮಾಡಿದ ಗುರು ತಾಯಿತಂದೆನಗೆ ೫

೧೧೨
ಬಿರದುದಾರದು ಗೋವಿಂದ
ಅರಿತು ನೋಡಯ್ಯ ಶ್ರೀ ಹರಿ ಮುಕುಂದ ಧ್ರುವ
ಪತಿಯ ಕಣ್ಣಿನ ಮುಂದೆಳಿಯಲು ಸತಿಯ
ಗತಿಗೊತ್ತಿಹ್ಯದು ದಾರಿಗೆ ಕೊರತಿಯ (ತೆಯು?) ೧
ಒಡಿಯನ ಮುಂದೆ ಬಂಟಗಾಗಿರೆ ಕುಂದು
ಒಡನೆ ಬೀಳುದು ತೊಡಕಾರಿಗೆ ಬಂದು ೨
ನಿನ್ನವನೆನಿಸಿ ಮಹಿಪತಿಗೆ ಪೂರ್ಣ
ಇನ್ನರಹುವರೆ ಎನ್ನವಗುಣ ೩

೨೫೯
ಬೆಜ್ಜರವಿಡಿಯಲು ಗುರುಭಕ್ತಿಗೆ ತಾ ಹೆಜ್ಜೆಜ್ಜಿಗೆ ನಿಧಾನ
ಸಜ್ಜನರನುದಿನ ಕೊಡುವರು ಸುಖ ಸಾಮ್ರಾಜ್ಯದ ಸುಸನ್ಮಾನ ಧ್ರುವ
ಅಂಜಿಕೆಂಬುದು ಅಂಜನ ಕಣ್ಣಿಗೆ ಕಂಜನಾಭನ ಖೂನ
ರಂಜಕವೆಂಬುದು ಇದೇ ಭಕ್ತರಿಗೆ ನಿಜತತ್ವದ ಸಾಧನ
ರಂಜನೆದೋಲು ಒಣ ಭಂಜನೆ ತಾ ಪ್ರಾಂಜಳಾಗುರು ಜ್ಞಾನ
ಸಂಜೆ ಉದಿಯೆನ್ನದೆ ನಿರಂಜನ ಸೇವೆಯ ಮಾಡುದೆ ಪೂರ್ಣ ೧
ಭಕ್ತಿಗೆ ಸಲಿಗಿ ಕೆಲಸಕೆ ಬಾರದು ಯುಕ್ತಿವಂತರು ನೋಡಿ
ಶಕ್ತನಾದರೆ ಬಾಗಿರಬೇಕು ಅಹಂ ಭ್ರಮ ಈ ಡ್ಯಾಡಿ
ಯುಕ್ತಿಗಿದೊಂದೇ ಕೀಲು ದೃಢ ಭಕ್ತಾಶ್ರಯ ಮಾಡಿ
ಭೋಕ್ತಭಾವದ ಸದ್ಗುರುರಾಯ ತಾ ಬಾಹನು ಕೈ ಗೂಡಿ ೨
ಅಂಜಂಜಿ ನಡೆದಮ್ಯಾಲೆ ಮಹಿಪತಿ ನಿಶ್ಯಂಕ ನೀನಾಗೊ
ಗುಂಜಿನಮಣಿಯಂತ್ಯಾತಕೆ ಸಿಲುಕದೆ
ಅಂಜುವ ಭವಭಯ ನೀಗೊ
ಗುಂಜಾಗಿಹ ಕರ್ಮದ ಬಾಧಿಯೊಳು ಸಿಲಕುವದೆಲ್ಲ ಸೋಂಗೊ
ರಂಜಿಸುತಿ ಹ್ಯ ಸದ್ಗುರು ಪಾದಕೆ ನೀ ವಾಜಿಲಿ ಶರಣ್ಹೋಗೊ ೩

೩೩೧
ಬೆಡಗು ಅಗಮ್ಯವಿದು ಶ್ರೀ ಗುರುವಿನ ಬೆಡಗು ಅಗಮ್ಯವಿದು ಧ್ರುವ
ಶೂನ್ಯಾಕಾರದ ಬಾಲೆ ಗಗನವ ಹಡೆದಳು
ಏನೆಂದ್ಹೇಳಲಿ ಸೋಜಿಗೆ ಘನಲೀಲೆಯು ೧
ವ್ಯೋಮಸುಂದರಿ ಜನಿಸಿದಳು ಮಾರುತನ
ಭೀಮ ಪರಾಕ್ರಮನ ನೇಮದಿಂದಲಿ ೨
ನಿಜ ವಾಯುಕುಮಾರಿ ಜನಿಸಿದಳು ತಾನೊಂದು
ತೇಜ:ಪುಂಜದ ರೂಪವ ಮೂಜಗದೊಳು ೩
ಥಳಥಳಿಸುವ ತೇಜದ ಖನಿಯು ಹಡೆದಳು
ಜಲಮಯದ ರೂಪವ ನಲಿದಾಡುವ ೪
ನಿರಾಕಾರದ ಕೂಸು ಭೂಮಿ ಹಡೆದುದ ಕಂಡು
ಬೆರಗಾದ ಮೂಢ ಮಹಿಪತಿಯ ಗುರುಜ್ಞಾನದ ೫
ಬೆಡಗು ತೋರಿದ ಗುರು ಒಡಿಯ ಸರ್ವೋತ್ಮನು
ಪೊಡವಿಯೊಳೊಂದು ಸೋಜಿಗ ಗೂಢವಾಗಿಹ ೬
ಕೌತುಕವನು ಕಂಡು ಕೈ ಮುಗಿದು ಮಹಿಪತಿ
ತ್ರಾಹಿ ತ್ರಾಹಿ ತ್ರಾಹಿಯೆಂದ ಮನದೊಳಿನ್ನು ೭

೬೭೭
ಬೆಳಗಿನೊಳು ಬೆಳಗಾಯಿತು ನೋಡಿ ಥಳಥಳಿಸುತ ಮನದೊಳಗೆ
ಹೊಳೆಯುತ ಒಳಹೊರಗೇಕೋಮಯದಲಿ ಝಳಿ
ಝಳಿಸುತಿಹದು ಜಗದೊಳಗೆ ಧ್ರುವ
ಬೆಳಗಾಯಿತು ಎನ್ನೊಳಗೆ
ಸುಳಿವು ದೋರಿದ ಸದ್ಗುರು ಕೃಪೆಯ ಹೇಳಲಿನ್ನೇನದರ ಖೂನ
ತಿಳಿದೇನೆಂದರೆ ಎಳೆಯು ಸಿಲುಕದು ಬಲು ಸೂಕ್ಷ್ಮ ಸುಜ್ಞಾನ
ಹೇಳಿ ಕಿತ್ಯಾಡುವ ಮರುಳರಿಗೆ ತಿಳಿಯದಿದರನುಸಂಧಾನ
ಕಳೆಯದ ಕಲ್ಪನೆ ಅನುಮಾನಿಗಳಿಗೆ ತಿಳಿಯುವುದೆ ಸದ್ಗತಿ ಸಾಧನ ೧
ಬೆಳಗಿ ಬೆಳಗು ಬೆರೆದವನೆ ತಾ ಕುಲಕೋಟಿಗಳು ಧನ್ಯ
ಮಳೆಮಿಂಚಿನ ಕಳೆಕಾಂತಿಗಳಿಡುತದೋರಿದ ಸದ್ಗುರು ಪುಣ್ಯ
ಹೇಳಿಹ ಗುಹ್ಯ ವಾಕ್ಯದನುಭವ ಬಂತೆನ್ನೊಳು
ತಾರ್ಕಣ್ಯ ಬೆಳಗು ಬೈಗಿಲ್ಲದ
ಬೆಳಗಿನ ಪ್ರಭೆ ತಿಳಿದವನೆ ಮೂಲೋಕದೊಳಗೆ ಮಾನ್ಯ ೨
ಬೆಳಗಿನೊಳು ಬೆರಗಾದನು ಮಹಿಪತಿ ಅತಿ ಆಶ್ಚರ್ಯವ ನೋಡಿ
ತೊಳಲಿ ಬಳಲುವ ನಿದ್ರೆಯಗಳೆದನು ತಾ ಈ ಡ್ಯಾಡಿ
ಬೆಳಗೇ ಬೆಳಗಾಯಿತು ಘನ ಗುರುದಯ ಮನದೊಳು
ನಿಜ ಒಡಮೂಡಿ
ಬೀಳುವ ತಿಮಿರಾಂಧವ ಭವ ಪಾಶವ ಕಳೆದನು ಸದ್ಗುರು
ಪಾದವ ಕೂಡಿ೩

೫೪೧
ಬೆಳಗುವ ಬನ್ನಿ ಮಂಗಳಾರತಿಯ
ಹೊಳೆಯುವ ಶ್ರೀ ಗುರುಮೂರುತಿಯ ಧ್ರುವ ||
ಮಂಗಳಸ್ವರದಲಾರತಿ ಮಾಡುವ
ಕಂಗಳಲಿ ಕಂಡು ಸ್ವಾಮಿ ನಲಿದಾಡುವ
ಸಂಗಸುಖದ ಸವಿ ಸೂರ್ಯಾಡುವ
ಮಂಗಳೋಚ್ಚ್ರಾಯವ ಕೊಂಡಾಡುವ ೧
ಪಾಡುವ ಬನ್ನಿ ನಾಮಗಾಯನ
ಬೇಡುವದಿದೇ ಸುಖಸಾಧನವ
ನೀಡುತಲಿಹ ನಿಜನಿಧಾನವ
ಪಡೆವದಿದೊಂದು ಮುಖ್ಯ ಕಾರಣ ೨
ಬಿಡದೆ ಕೊಂಡಾಡುವ ಕೀರುತಿಯ
ಪೊಡವಿಯೊಳು ಪಾಂಡವ ಸಾರಥಿಯ
ಮಾಡುವ ಬನ್ನಿ ಸೇವೆ ಶ್ರೀಪತಿಯ
ಒಡಿಯನಹುದೆಂದು ನೀ ಮಹಿಪತಿಯ ೩

೨೬೦
ಬೇಡಿಕೋತೆ ಕೇಳಿ ನೋಡಿ ನಿಜಬಾಳಿ
ಗೂಢಗುರುತವ ಮನಗಂಡು ನೆಲೆಗೊಳ್ಳಿ ೧
ಒಂದಕೊಂದು ಮಾಡಿ ಒಂದು ಪಥಗೂಡಿ
ಹಿಂದ ಮುಂದೆ ನೋಡುವ ಸಂದೇಹವೀಡಾಡಿ ೨
ಅರ್ತುಕೊಳ್ಳಿ ಖೂನ ತ್ವರಿತ ಗುರುಜ್ಞಾನ
ಕರ್ತು ಮಹಿಪತಿಸ್ವಾಮಿದೋರುವ ನಿಧಾನ ೩

೨೬೧
ಬೇರ್ಯದ ಭಾವ ಮುಕುತಿ ಸುವರ್ಮ
ತೋರುವದೊಂದೇ ಸದ್ಗುರು ದಯಾಧರ್ಮ ಧ್ರುವ
ನೆನವಿಗೆ ನೆಲೆಗೊಳದೆ ನಿಜಧ್ಯಾನ
ಅನಕಾ ದೋರುವಾದ ಸದ್ವಸ್ತುದಾ ಖೂನಾ ೧
ಮನದಿಂದಲಿ ಮನವಾಗದೆ ಉನ್ಮನ
ತಾನಾಗುವದೆ ಸದ್ಗುರು ಕೃಪೆಜ್ಞಾನ ೨
ದೀನ ಮಹಿಪತಿಗೆ ತೋರಿ ನಿಜಗುಟ್ಟು
ಭಾನುಕೋಟಿ ತೇಜ ತಾನಾದ ಉಂಟು ೩

೧೧೩
ಭಕ್ತವತ್ಸಲನೀತ ಶಕ್ತ ಸದ್ಗುರುನಾಥ
ಸಕಲ ಸಮ್ಮತ ಏಕೋದೇವನೀತ ಧ್ರುವ
ಬಲಿಯಬಾಗಿಲ ಕಾಯ್ದು
ಒಲಿದ ಫಲುಗುಣಗೀತ
ತಲೆಗಾಯ್ದು ಪ್ರಹ್ಲಾದನ ಪ್ರಾಣಪಡದಾತ
ಸಲಹಿ ಪಾಂಡವರ ರಕ್ಷಿಸಿದಾತ ೧
ದಿಟ್ಟ ಧ್ರುವಗೊಲಿದು ನಿಜಪಟ್ಟಗಟ್ಟಿದಾತ
ನಷ್ಟಾಜಮಿಳನ ನಿಷ್ಠೆಮಾಡಿದಾತ
ಕೊಟ್ಟು ವಿಭೀಷಣಗೆ ಇಟ್ಟ ಲಂಕೆಯ ಲೀತ
ಶಿಷ್ಟಜನಪಾಲಕ ಸೃಷ್ಟೇಶ ೨
ಶಿಲೆಗೆ ಉದ್ಧರಗತಿಯ ಇಳಿಯೊಳಗೆ ಇತ್ತಾತ
ಮೂಲೋಕದೊಡೆಯ ಶ್ರೀಹರಿಯು ಈತ
ಪಾಲಿಸುವ ಮಹಿಪತಿಯ ಲೋಲಲಕ್ಷ್ಮೀಕಾಂತ
ಕುಲಕೋಟಿ ಬಂಧು ತಾ ಬಳಗವೀತ ೩

೨೬೨
ಭಕ್ತಿಗೆ ಮೂರು ಗುಣಗಳು ಬೇಕು ಯುಕ್ತಿವಂತರು ಕೇಳಿ
ಮುಕ್ತಿಶೀಲವು ತಿಳಿದು ನಿಜವಿರಕ್ತತನದಲಿ ಬಾಳಿ ಧ್ರುವ
ಪ್ರೇಮ ಪ್ರೀತಿ ರತಿ ನೇಮದಲಿ ಶ್ರೀಸ್ವಾಮಿ ಚರಣದಲಿಡಬೇಕು
ಸೌಮ್ಯ ಸಮಾಧಾನದಲಿ ತಾನಮೃತವನು ಹಿಡಿಯಬೇಕು
ರೋಮರೋಮವನು ಕೋಮಲವಾಗಿ
ನಿರ್ಮಳದಲಿ ನಡಿಬೇಕು
ಶಮೆ ದಮೆಯಲಿ ತಾ ಕ್ಷಮೆಯನು
ಪಡೆದು ಸಮದೃಷ್ಟಿಗುಡಬೇಕು ೧
ನಿತ್ಯ ನಿತ್ಯ ವಿವೇಕವು ತಿಳಿದು ಪಥ್ಯದಲಿ ನಡಿಯಬೇಕು
ಚಿತ್ತವೃತ್ತಿ ಸವೃತ್ತಿಯ ಮಾಡಿ ಸತ್ಯದಲಿ ನುಡಿಯಬೆಕು
ಉತ್ತಮೋತ್ತಮ ವಸ್ತುದ ನಿಜಸುಖ ಹೃತ್ಕಮಲದಲಿಡಬೇಕು
ಭಕ್ತಿಗೆ ಭಾವನೆ ಬಲಗೊಂಡು ವೈರಾಗ್ಯದ ಸುಖ ತೊಡಬೇಕು ೨
ಸೋಹ್ಯ ಸೋನ್ನಿಯ ಸೂತ್ರವ ತಿಳಿದು ಸ್ಥಾಯಿಕನಾಗಿರಬೇಕು
ಧ್ಯೇಯಧ್ಯಾತಧ್ಯಾನವ ತಿಳಿದು ಮಾಯದ ಮೊನೆ ಮುರಿಬೇಕು
ನ್ಯಾಯ ನೀತಿಯ ನೆಲೆನಿಭವನು ಉಪಾಯದಲಿ ಅರಿಯಬೇಕು
ಪಾಯಕನಾಗನುದಿನ ಮಹಿಪತಿ ಗುರುಪಾದದಿ ಸ್ಥಿರವಿರಬೇಕು ೩

೨೬೩
ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ
ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ
ಚಕ್ಕಮಲಕು ಭಕ್ತಿಯ ನೋಡಿ
ಉಕ್ಕಿ ದೋರುತಲ್ಯದ ಬಲಗೂಡಿ
ಸಿಕ್ಕವಲ್ಲದ ಸಾರವಸ್ತು ತಾಂ
ಮಿಕ್ಕ ಮಾನವರಿಗೆ ದಯಮಾಡಿ ೧
ಡಂಭದೋರು ವನೇಕಚಂದ
ಗುಂಭಹೇಳನು ಸರಕ್ಕನೆ ಬಂದು
ಕೊಂಬುಕೊಡುವ ಮಾತಿಗೆ ಬಂದರೆ
ನಂಬದೆ ಹೋಗುವರತ್ತತ್ತ ಹಿಂದ ೨
ಹೊಟ್ಟಿನಮ್ಯಾಲೆ ಸಾರಿಸಿದಂತೆ
ನಿಷ್ಠೆನೋಡಿ ಜನ ಮೋಹಿಸುವಂತೆ
ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು
ಮುಟ್ಟ ಭಜಿಸುವ ಗುಟ್ಟುದೋರಿದಂತೆ೩
ರಚ್ಚಿಗೆ ಬಂತು ಭಕ್ತಿ ಇದೇ ಬಹಳ
ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ
ಮತ್ಸರದೊಳಗಿದ್ದು ಸಚಲಸ್ನಾನ
ಮಾಡಿದೆವೆಂದು ಹೇಳುರು ನಿರ್ಮಲ೪
ನಗೆ ಬರುತ್ತದೆ ಭಕ್ತಿಯ ಕಂಡು
ಜಗದೊಳಗೆಲ್ಲ ಇದೇವೆ ಭಂಡು
ಸುಗಮ ಸುಪಥ ಬ್ಯಾರದೆ ಎಂದು
ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು ೫

೧೧೪
ಭಜಿಸಬಾರದೆ ಮನವೆ ಭಜಿಸಬಾರದೆ
ಭಜಿಸಲಿಕ್ಕೆ ಭಾವದಿಂದ ನಿಜವಾ ಗೊಲಿವ ಹರಿ ಮುಕುಂದ ಧ್ರುವ
ನಿಜವಬಿಟ್ಟು ದಣವದ್ಯಾಕೆ ತ್ರಿಜಗಪತಿಗೊಂದಿಸದೆ ತಾನು
ಭಜನ ಮುಖ್ಯವೆಂದು ಸುಜನರೆಲ್ಲ ಪೇಳುತಿರಲಿಕ್ಕಾಗಿ ೧
ಪ್ರೀತಿಯಿಂದರ್ಜುನ ನೋಡಿ ಗೀತೆಯಲ್ಲಿ ಶ್ರೀಕೃಷ್ಣತಾನು
ನೀತಿಹಿತವ ಭಕ್ತಿಯೋಗದಲ್ಲಿ ಸಾರತಿರಲಿಕ್ಕಾಗಿ ೨
ಪ್ರಕಟಭಾವಕೊಲಿದ ನೋಡಿ ಅಖಿಲದೊಳು ಸುಲಭದಿಂದ
ಭಕುತಿ ಸುಖವನಿತ್ತು ಸಲಹುತಿಹ್ಯ ಮಹಿಪತಿಸ್ವಾಮಿಗಿನ್ನು ೩

೧೧೫
ಭಜಿಸಿ ನೋಡಿರೋ ಭಾವಭೋಕ್ತನ
ಅಜಸುರೊಂದ್ಯ ಸುಜನಪಾಲ ತ್ರಿಜಗದಾತ್ಮನ ಧ್ರುವ
ಭಾವಕ ಸುಲಭ ಜೀವದ ನೆಲೆನಿಭ
ಕಾವಕರುಣ ದೇವನೀತ ಪ್ರಾಣವಲ್ಲಭ ೧
ರಾಜಿಸುತಿಹ್ಯನು ತೇಜೋಮಯದಲಿ
ಭಜಕ ಪ್ರಿಯನಾಗಿ ಒಲಿವ ನಿಜಸುಮನದಲಿ ೨
ಡಂಭಭಕುತಿಗೆ ಇಂಬದೋರನು
ನಂಬಿನಡೆವ ಭಕ್ತಜನರ ಮನೆಯೊಳಿಹ್ಯನು ೩
ಭಕುತಿ ಭಾವಕ ನೆಲಿಯುಗೊಂಬನು
ಮಕುಟಮಣಿ ಸುಭಾನುಕೋಟಿ ಪ್ರಕಟ ಹೊಳೆವನು ೪
ಒಂದು ಮನದಲಿ ಹೊಂದಿ ಸುಖಿಸಿರ್ಯೊ
ಎಂದೆಂದು ಬಿಡದೆ ಸಲಹುತಿಹ್ಯ ಮಹಿಪತಿ ಸ್ವಾಮಿಯ ೫

೧೧೬
ಭಜಿಸು ಮನವೆ ಭಜಿಸು ಮನವೆ
ಅಜ ಸುರ ಮುನಿ ವಂದಿತ ಪಾದ
ಪೂಜಿಸು ನಿಜಸ್ವರೂಪ ನಿತ್ಯ
ಸುಜನ ಮನೋಹರನ ೧
ಪರಮಪುರುಷ ಪರಂಜ್ಯೋತಿ
ಪಾರಾವಾರ ಹರಿಗೋಪಾಲ
ಕರುಣಾಕೃಪಾಲ ಮೂರುತಿ
ಸ್ವಾಮಿ ಸಿರಿಲೋಲನ ೨
ಅತೀತ ಗುಣಾನಂತಮಹಿಮ
ಪತಿತಪಾವನ ಪೂರ್ಣ
ಸತತ ಸದೋದಿತ ಪಾದ
ಅತಿಶಯಾನಂದನ೩
ಅವ್ಯಕ್ತ ಅವಿನಾಶ ಸು
ದಿವ್ಯ ಸುಪವಿತ್ರದಾಗರ
ಘವಘವಿಸುವ ದಿವ್ಯ ತೇಜ
ರವಿಕೋಟಿ ಕಿರಣನ ೪
ಅನಾಥಬಂಧು ಅನುದಿನ
ಅಣುರೇಣು ತೃಣಪೂರ್ಣ
ಪ್ರಾಣದೊಡೊಯ ಮಹಿಪತಿ
ದೀನದಯಾಳುನಾ ೫

೫೪೮
ಭಜಿಸೊ ಮನವೆ ಪೂರ್ಣ ನಿತ್ಯ ನಿಜ ಘನ ಸದಾ
ಅಜಸುರೊಂದಿತ ಗುರುಮೂರ್ತಿ ಪಾದ ಧ್ರುವ
ಗುರು ಮಾರ್ಗವೆ ನಿತ್ಯ ಅರಿಯಬೇಕಗತ್ಯ
ಶರಣ ಜನರಿಗೆ ಸತ್ಯ ಪರಮಪಥ್ಯ ೧
ಗುರುಭಜನಿಯ ಕೀಲು ಅರಿತರೊಂದೇ ಮೇಲು
ಸಾರಸುಪಥಸಲ್ಲು ತ್ವರಿತಗೆಲ್ಲು ೨
ಮುಕ್ತಿಗಿಂತಧಿಕ ಭಕ್ತಿ ಪರಮ ಸುಖ
ನಿತ್ಯ ಮಹಿಪತಿಗಿದೆ ಪ್ರಾಣಪದಕ ೩

೧೧೭
ಭಜಿಸೊ ಮನವೆ ಪೂರ್ಣ ಅಜಸುರೊಂದಿತ ಚರಣ
ಸುಜನ ಹೃದಯ ಪ್ರಾಣ ಗಜಭಯ ನಿವಾರಣ ೧
ಹಿಡಿಯ ಬ್ಯಾಡನುಮಾನ ಜಡಿಯೊ ನಿಜಧ್ಯಾನ
ಪಡಿಯೊ ಗುರು ಕರುಣ ಕುಡಿಯೊ ಅಮೃತ ಪೂರ್ಣ ೨
ಸಾಧಿಸಬೇಕೊಂದೇ ಮನ ಬುಧಜನರ ಜೀವನ
ಸದಮಲಾನಂದ ಸದ್ಗತಿ ಸುಖಸಾಧನ ೩
ಪಾವನಗೈಸುವದಾ ಭಾವಿಸೊ ಗುರುಪಾದ
ಜೀವಜೀವದ ಬೋಧ ಸೇವಿಸು ನಿಜ ಸುಸ್ವಾದ ೪
ತ್ಯಜಿಸಿ ತನುಮನ ದ್ವಂದ್ವ ಭಜಿಸೊ ಭಾವಾರ್ಥದಿಂದ
ಪೂಜಿಸೊ ಮಹಿಪತಿ ಆನಂದ ನಿಜಗುರು ಪಾದಾರವಿಂದ ೫

೪೬೯
ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ಧ್ರುವ
ಕ್ಲೇಶಪಾಶವು ಕತ್ತರಿಸಿ ದೋಷನಾಶವನು ಗೈಸಿ
ಪೋಷಿಸುವ ಕೇಶವ ನಿಮ್ಮ ನಾಮ ೧
ನರಕ ಘೋರದ ಘಟವೆಂಬ ನರಜನ್ಮದುರ್ಘಟ
ತಾರಿಸುವ ನಾರಾಯಣ ನಿಮ್ಮ ನಾಮ ೨
ಮದಮತ್ಸರವ ಜರಿಸಿ ಭೇದಾಭೇದವು ಹರಿಸಿ
ಸದ್ಗೈಸುತಿಹ ಮಾಧವ ನಿಮ್ಮ ನಾಮ ೩
ಗೋವಿಸಿಹ ವಿದ್ಯದ ಮಾಯಮೋಹವನಳಿಸಿ
ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ ೪
ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ
ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ ೫
ಮೊದಲು ಮೂವಿಧಿಯಗಳು ಜರಿಸಿ ಸದಮಲ ಪುಣ್ಯ
ಪದವೀವ ಮಧುಸೂದನ ನಿಮ್ಮ ನಾಮ ೬
ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ
ಭಾವಭಕ್ತೀವ ತ್ರಿವಿಕ್ರಮ ನಿಮ್ಮ ನಾಮ ೭
ವರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ
ಜನ್ಮ ತಾರಿಸುವ ವಾಮನ ನಿಮ್ಮ ನಾಮ ೮
ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ
ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ ೯
ಹರಿಸಿ ಸಂದೇಹ ಸಂಕಲ್ಪ ಬಾಧೆಯಗಳು
ಹರುಷ ಗತಿನೀವ ಹೃಷೀಕೇಶ ನಿಮ್ಮ ನಾಮ ೧೦
ಪರಬ್ರಹ್ಮದೊಳು ಬೆರಿಸಿ ಪರಮ ಪಾತಕ ಹರಿಸಿ
ಪರಮಗತಿನೀವ ಪದ್ಮನಾಭ ನಿಮ್ಮ ನಾಮ ೧೧
ದಾರಿದ್ರ್ಯ ದುರಿತ ವಿಧ್ವಂಸನಿಯ ಮಾಡಿ ಧರೆಯೊಳು
ದ್ಧರಿಸುವ ದಾಮೋದರ ನಿಮ್ಮ ನಾಮ ೧೨
ಸಕಲ ಪದವಿತ್ತ ಸುಖಸಾಧನವ ತೋರುತಿಹ್ಯ
ಅಖಿಳದೊಳು ಸಂಕುರುಷಣ ನಿಮ್ಮ ನಾಮ ೧೩
ವಾಸನೆಯು ಪೂರಿಸುತ ಭಾಷೆ ಪಾಲಿಸುತಿಹ
ಲೇಸಾಗಿ ಶ್ರೀವಾಸುದೇವ ನಿಮ್ಮ ನಾಮ ೧೪
ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ
ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ ೧೫
ಅನುಮಾನ ಪರಿಹರಿಸಿ ಅನುಭವಾಮೃತ ಸುರಿಸಿ
ಅನುಕೂಲಾಗುವ ಅನಿರುದ್ಧ ನಿಮ್ಮ ನಾಮ ೧೬
ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ
ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ ೧೭
ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ
ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ ೧೮
ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ
ಅರುವು ಕುರ್ಹುವ್ಹಿಡಿದ ನರಸಿಂಹ ನಿಮ್ಮ ನಾಮ ೧೯
ಅರ್ಚನೆಯು ಪ್ರಾರ್ಥನೆಯು ಪರಮಪೂಜೆಯನರಿಸಿ
ಅಚಲಪದವೀವ ಅಚ್ಯುತ ನಿಮ್ಮ ನಾಮ ೨೦
ಜನನ ಮರಣವನಳಿಸಿ ತನುಮದೊಳು ಬೆರಿಸಿ
ಜನುಮ ಹರಿಸುವ ಜನಾರ್ದನ ನಿಮ್ಮ ನಾಮ೨೧
ಉಪಮೆಯ ರಹಿತ ವಸ್ತುವುಪಾಯದಲಿ ತೋರಿ
ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ೨೨
ಹರಿಸಿ ಅಹಂಭಾವ ಅರಿಸಿ ಅನುಭವ ಪೂರ್ಣ
ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ ೨೩
ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ
ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ ೨೪
ವೇದ ವಿಂಶತಿ ನಾಮ ಸಾರ ಸಂಧ್ಯಾಯನದಿ
ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ ೨೫

೧೧೯
ಭಾಮೆ ನೀ ತಂದು ತೋರೆ ದೇವ
ದೇವೆನಿಸುವ ಶ್ರೀ ಹರಿ ವಾಸುದೇವನ ಧ್ರುವ
ಬ್ರಹ್ಮಾದಿ ವಂದ್ಯನ ಹೊಮ್ಮುಕುಟದವನ
ರಮ್ಯದೋರುವ ಜಗನ್ಮೋಹನನ
ಘಮ್ಮನೆ ಹೊಳಿವ ಕತ್ತುರಿ ತಿಳಕನ
ಸುಮ್ಮನೆ ಸುಸ್ವರದಿ ಕೊಳಲೂದುವನ ೧
ಹದ್ದೆ ಅಡುವನ ಮುದ್ದು ಮಾತಿನವನ
ಗೆದ್ದು ಸಿದ್ದಿಯ ಮಣಿತಂದವನ
ತಿದ್ದಿ ಕುಬಜಿಗೊಲಿದು ಶುದ್ಧಮಾಡಿದವನ
ಉದ್ಧವಪ್ರಿಯ ಶ್ರೀ ಆದಿಕೇಶವನ ೨
ಸುಂದರ ವದನನ ಸಾಂದ್ರಸುಖದವನ
ಕಂದರ್ಪಕೋಟಿ ಸುಲಾವಣ್ಯನ
ಎಂದೆಂದು ಕರುಣನ ಇಂದಿರೆ ರಮಣನ
ಬಂದು ಮಹಿಪತಿ ಮನೋಹರ ಮಾಡುವನ೩

೫೭೧
ಭಾವ ನೆಲೆಗೊಳ್ಳಿ ಸಾಧಿಸಿ ದೃಢದಲ್ಲಿ
ದೈವ ಪ್ರಕಟಾಗಿ ಒಲಿವುದು ಘನದಲಿ ಧ್ರುವ
ಮಾಡಿ ಚಿತ್ತಶುದ್ಧ ನೋಡಿ ಸ್ವತ:ಸಿದ್ಧ
ಗೂಢ ಗುಪ್ತ ಘನ ಕೈಗೂಡಿ ತಾಂ ಪ್ರಸಿದ್ದ ೧
ನಡಿಯ ಪಡಕೊಳ್ಳಿ ಸದ್ಗುರು ದಯದಲಿ
ಕಡೆದು ಹೋಗುವದು ಭವಪಾಶ ಮನದಲಿ ೨
ಭಾವಕತಿ ಪ್ರಿಯ ಭಾನುಕೋಟಿ ಉದಯ
ಪಾವನ್ನಗೈಸುತಿಹ ನೋಡಿ ಮೂಢ ಮಹಿಪತಿಯ ೩

೫೭೦
ಭಾವದ ಬಯಲಾಟ ಭಾವಿಕ ಬಲ್ಲನಿದರ ನೋಟ ಧ್ರುವ
ತೋರಿ ಕೊಡುವುದಲ್ಲ ತೋರಿಸಿ ತಾ ಕೊಂಬುವದಲ್ಲ
ತೋರಿಕೆಗೆರಡಿಲ್ಲ ತೋರಿ ತೋರದದರೊಳಾಡುವದೆಲ್ಲ ೧
ಬಯಲಿಗೆ ನಿರ್ಬೈಲು ಬಯಲಿಲಿದ್ದವ ಬಲ್ಲಿದರ್ಹೋಯಿಲು
ಶ್ರೇಯ ಸುಖದ ಕೀಲು ಜೈಸಿಹ ಮನದವಗಿದು ಮೇಲು ೨
ಜ್ಞಾನರಹಿತ ಕೂಟ ಮನೋನ್ಮಕಾಗಿಹ್ಯ ಮುಗುಟ
ಘನಗುರು ದಯನೋಟ ಅನುದಿನ ಮಹಿಪತಿ ಸುಖದೂಟ೩

೧೧೮
ಭಾವಭಕ್ತಿಗೊಲಿವ ತಾಂ ಶ್ರೀಹರಿ
ಕಾವ ಕರುಣದಲಿ ಪರೋಪರಿ ಧ್ರುವ
ಕಂದ ಪ್ರಹ್ಲಾದನ ಸದ್ಭಾವಕಾಗಿ
ಸಂಧಿಸೊದಗಿ ಬಂದ ನರಸಿಂಹನಾಗಿ
ತಂದೆ ತಾಯಿ ಬಂಧು ಸಮಸ್ತವಾಗಿ
ಬಂದು ರಕ್ಷಿಸಿದ ಪ್ರತ್ಯಕ್ಷವಾಗಿ ೧
ಭಾವದಿಂದ ದ್ರೌಪದಿಗಾಗ್ಯಧ್ಯಕ್ಷ
ಠಾವಠಾವಿಲಿ ಕಾಯಿದೆ ಪ್ರತ್ಯಕ್ಷ
ಭುವನದೊಳಾಗಿ ಪಾಂಡವಪಕ್ಷ
ಜೀವ ಪ್ರಾಣಾಗಿ ಮಾಡಿದ ಸಂರಕ್ಷ ೨
ಭಾವದಿಂದಾಗುವ ಭಕ್ತರಾಧೀನ
ದೇವೋತ್ತಮದ ಬಿಟ್ಟು ಹಿರಿಯತನ
ದಾವದೊಂದೇಕಾಗಿ ತಾಂ ಸಾವಧಾನ
ಈವ್ಹಾಭಕ್ತರ ಮನಿಲ್ಯನುದಿನ ೩
ಭಾವದಿಂದುದಿಸುವ ಸ್ವಯಂಭಾನು
ಭಾವಿಕರಿಗಾಗುವ ಶ್ರಯಧೇನು
ಭಾವದಿಂದಾಗುವ ಸಫಲ ತಾನು
ಭಾವದಿಂದ ಭಾವ ಪೂರಿಸಿದನು ೪
ಭಾವವೆಂಬಂಜನ ಕಣ್ಣಿಲೂಡಿ
ಭಾವದಲುಂಬುದನು ಒಡಮೂಡಿ
ಭಾವದಿಂದ ಮಹಿಪತಿ ಕೈಯಗೂಡಿ
ಜೀವ ಪಾವನ್ನಗೈಸÀುತಿಹ್ಯ ನೋಡಿ ೫

೬೭೮
ಭಾಸುತ ಬಂದ ನೋಡಿ ಭಾಸ್ಕರಕೋಟಿ ತೇಜ
ಲೇಸು ಲೇಸಾಯಿತೆನ್ನ ಮನದೊಳಗೆ ಧ್ರುವ
ಹೊಳೆಯುತ ಸುಳಿಯುತ ಥಳಥಳಗುಡುತ
ಒಲಿಯುತ ಬಂದ ನೋಡಿ ಎನ್ನೊಳಗೆ ೧
ಕರುಣ ಕವಚವ ತೊಟ್ಟು ವರಮುನಿಗಳ ಪ್ರಾಣ
ಹರುಷ ಬೀರುತ ಬಂದ ತ್ವರಿತಿಲ್ಲಿಗೆ ೨
ದೀನ ದಯಾಳು ಎನ್ನ ಅನಾಥ ಬಂಧು ಸ್ವಾಮಿ
ಸನಾಥ ಮಾಡಲಿ ಬಂದ ಮಹಿಪತಿಗೆ ೩

೪೭೦
ಭಾಸ್ಕರ ಗುರು ನಮ್ಮ ಪಕ್ಷ ಭಾಸುತಿಹ ಪ್ರತ್ಯಕ್ಷ ಧ್ರುವ
ಪೂರಿಸಿ ಮನದಾಪೇಕ್ಷ ಬೀರಿದ ಕರುಣಾಕಟಾಕ್ಷ
ತೋರಿದ ನಿಜಲಯ ಲಕ್ಷ ಅರುಹಿದ ಅನುಭವ ಸಾಕ್ಷ ೧
ಮಾಡಿಜ್ಞಾನ ಸುದೀಕ್ಷ ನೀಡಿದ ನಿಜ ಸುಭಿಕ್ಷ
ದÀೃಢಭಕ್ತರ ಕಲ್ಪವೃಕ್ಷ ಒಡೆಯನಹುದು ಸಂರಕ್ಷ ೨
ಮೂಢ ಮಹಿಪತಿಪಕ್ಷ ಬಿಡದೆ ಮಾಡುವ ಸಂರಕ್ಷ
ನೋಡುವ ಪುಂಡರೀಕಾಕ್ಷ ಕುಡುವ ಸದ್ಗತಿ ಸುಮೋಕ್ಷ ೩

೪೭೧
ಭಾಸ್ಕರ ಗುರುವರ ಮಗುಟ ವಿಶ್ವದೊಳೊಬ್ಬನೆ ಪ್ರಗಟ
ಭಾಸ್ಕರ ಗುರು ದಯನೋಟ ರಸಕಾಯ ಸವಿದುಂಬೂಟ ಧ್ರುವ
ಭಾಸ್ಕರ ಗುರು ನಿಜದಯ ಲೇಸುದೋರುವ ವಿಜಯ
ಭಾಸ್ಕರ ಗುರು ಅಭಯ ಹಸನಾದ ಪುಣ್ಯೋದಯ ೧
ಭಾಸ್ಕರ ಕರುಣಾಕಟಾಕ್ಷ ಭಾಸುದು ಘನಪ್ರತ್ಯಕ್ಷ
ಭಾಸ್ಕರ ಗುರು ನಿಜ ಭಿಕ್ಷ ಹಸನಾಗಿ ಮಾಡುವಾ ಸಂರಕ್ಷ ೨
ಭಾಸ್ಕರ ಗುರು ನಿಜಬೋಧ ಭಾಸುವ ಘನಸರ್ವದಾ
ಭಾಸ್ಕರ ಗುರು ಪ್ರಸಾದ ಸ್ವಸುಖದೋರುವ ಸಂವಿಸ್ವಾದ(?) ೩
ಭಾಸ್ಕರ ಗುರು ಉಪದೇಶ ಭಾಸಲು ಬಲು ಸಂತೋಷ
ಭಾಸ್ಕರ ಗುರುವರೇಶ ಈಶನಹುದೊ ಸರ್ವೇಶ ೪
ಭಾಸ್ಕರ ಗುರುಕೃಪೆ ಜ್ಞಾನ ಲೇಸಾಗಿ ತೋರುವದುನ್ಮನ
ಭಾಸ್ಕರ ಗುರುದಯ ಕರುಣ ದಾಸ ಮಹಿಪತಿಗಾಭರಣ೫

೪೭೨
ಭಾಸ್ಕರ ಗುರುವಿನ ಭಾಸನುದಿನವಿರೆ ಆಶಿನ್ನೊಬ್ಬರದ್ಯಾಕೆ
ಲೇಸಾಗಿಹ್ಯ ಘನದಯದಾಸೈನಗಿರೆ ನಾಸ್ತ್ಯೆನಗೆಂಬುವದ್ಯಾಕೆ ಧ್ರುವ|
ಸೂಸುತ ನಿಜ ನಿಧಾನದ ರಾಶಿರೆ ಕಾಸಿನ ಕಳವಳಿಕ್ಯಾಕೆ
ಭಾಸುತ ಬಾಹ್ಯಾಂತ್ರದಲಿರೆ ಘನಮಯ ದೇಶ್ಯಾಂತ್ರಡುರುವದ್ಯಾಕೆ
ವಾಸವಾಗ್ಹೆಜ್ಜೆಜ್ಜಿಗೆ ಗುರುವಿನ ಆಶ್ರಿನ್ನೊಬ್ಬರದ್ಯಾಕೆ
ಗ್ರಾಸಕೆದುರಿಡುತಿರೆ ಎನ್ನೊಡೆಯ ಸೋಸಿಲೆ ಬಯಸುವದ್ಯಾಕೆ ೧
ಗುರುದೈವೇ ಗುರುತಾಗಿರಲು ತಾ ಪರದೈವಗಳಿನ್ಯಾಕೆ
ಶಿರದಲಿ ಗುರು ಶಿಖಾಮಣಿ ಇರಲು ಶರಣು ಇನ್ನೊಬ್ಬರಿಗ್ಯಾಕೆ
ಕರುಣಾಮೃತ ಸುರರಸ ಮಳೆಗರೆವುತಲಿರೆ ಪರರಂಡಲೆವದ್ಯಾಕೆ
ಇರುಳ್ಹಗಲೆ ಗುರುದಯ ಕವಚೆನಗಿರೆ ದುರಿತಭವ ಭಯವ್ಯಾಕೆ ೨
ಇಹ್ಯಪರಕೆ ಗುರು ನಾಮವೆನಗಿರಲು ಸಾಹ್ಯಮನುಜರದ್ಯಾಕೆ
ಸಹಕಾರವೆ ಸದ್ಗುರು ಮೂರ್ತಿರಲು ಸಾಯಾಸವೆನಗ್ಯಾಕೆ
ಮಹಿಪತಿಸ್ವಾಮಿ ಶ್ರೀಪತಿ ಸಮರ್ಥಿರೆ ದುರ್ಮತಿಗಳ ಹಂಗ್ಯಾಕೆ
ಸಹಿತ ಗುರು ತಾಯಿತಂದೆನಗಿರೆ ಬಾಹ್ಯವಿಹಿತದವನ್ಯಾಕೆ ೩

೬೭೯
ಭಾಸ್ಕರಗುರುದಯ ಭಾಸುತದೆ ವಿಜಯ ಧ್ರುವ
ಕಂಗಳಿಗೆದುರಿಟ್ಟಾನಂದ ಮಂಗಳಕರದೋರುತಲ್ಯದೆ ಚೆಂದ
ಸಂಗ ತೋರಿತು ನಿಜವಂದ ಹಿಂಗಿಸಿ ಭವಬಂಧ ೧
ಮನಸಿಗೆ ತೋರಿತು ಊರ್ಜಿತ ನೆನೆವಿಗೆ ಕೈಗೊಟ್ಟಿತು ಆಯತ
ಜನವನದೊಳುಗುದಿತಾ ಘನವೆ ಸಾಕ್ಷಾತ ೨
ಸೋಹ್ಯದೋರಿ ಸಮರಸ ಸಾಹ್ಯಮಾಡಿದ ಸರ್ವೇಶಮಹಿಪತಿಗಿದೆ ಸಂತೋಷ ಇಹಪರ ಉಲ್ಲಾಸ ೩

೫೭೨
ಭೇದಿಸಿ ನೋಡು ಮನವೆ ನಿಜ ಅನುದಿನ ಸಾಧಿಸಿ
ಘನ ತನ್ನೊಳಗೆ
ತುದಿಮೊದಲಿಲ್ಲದ ಸದಮಲ ಬ್ರಹ್ಮವು ಸಂಧಿಸಿ
ತುಂಬಿಹದು ನಿನ್ನೊಳಗೆ ದ್ರುವ
ಓದಿ ಕೇಳಿ ಮರುಳಾದ್ಯೊ ಮನವೆ ಸಾಧಿಸಲಿಲ್ಲ ಸ್ವರೂಪ
ವೇದವೋದಿ ವಿವದಕೆ ನೀನು ಸಾಧಿಸಿದೊ ಬಲುಕೋಪ
ಭೇದವಿಡಿದು ಬಾಧೆಗೆ ಗುರಿಯಾಗಿ ಆದಿ ನಿನಗೆ ನೀ ಪಾಪ
ಹಾದಿದೋರಿಕೊಡುವನು ಸದ್ಬೋಧಿಸಿ ಮೇದಿನಿಯೊಳು
ಘನಗುರು ಕುಲದೀಪ ೧
ದೇಹದ ಒಳಗಿನ ದೇವರ ತಿಳಿಯದೆ ಬಾಹ್ಯ ರಂಜನಗೆದೆರದ್ಯೊ
ಸೋಹ್ಯವರಿಯದೆ ಶ್ರೀಹರಿ ಭಕ್ತಿಯ ಅಹಂಭಾವದಿ ಮೆರೆದ್ಯೊ
ದೇಹಾಭಿಮಾನದಲಿ ಸೋಹಂಭಾವದ ವಾರ್ತೆಯ ಜರಿದ್ಯೊ
ಸಾಹ್ಯ ಮಾಡುವ ಶ್ರೀ ಗುರುಮೂರ್ತಿಯ ಧ್ಯಾಯಿಸುವ
ಸವಿ ಸುಖವನು ಮರೆದ್ಯೊ ೨
ಕನಸುದೋರುವ ಜನ ಪ್ರಪಂಚವ ನೆನೆಸಿ ಬಯಸುವದ್ಯಾಕೆ
ಖೂನ ತಿಳಿಯದೆ ಸತ್ತು ಹುಟ್ಟಿ ಜನಿಸಿ ಬಾಹುದು ಯಾಕೆÉ
ಹೀನಯೋನಿಯ ಮುಖದಲಿ ಬೀಳುವ ದಣುವಿಕಿ ನಿನಗಿದು ಬೇಕೆ
ಸೆಣಶ್ಯಾಡುವ ಕಾಮಾಟಿಕೆ ಅನುದಿನ ಅನುಭವಿಸಲು
ನಿನಗಿದು ತಾ ಸಾಕೆ ೩
ಹಾದಿತಪ್ಪಿ ನಡೆವದು ವೇದಾಂತದ ಇದು ನಿನಗುಚಿತೆ
ಸಾಧು ಸಜ್ಜನರನುಸರಿಸದೆ ತಾ ಇಹುದೊಂದು ಸ್ವಹಿತೆ
ಬೋಧಿಸಿ ಗತಿಗೈದಿಸುವ ಗುರುವಾಕ್ಯವು ಅದು ತಾ
ಗಾದಿಯ ಮಾತೆ
ನಾದಬಿಂದು ಕಳೆಯೊಳು ನಿಜ ತಿಳಿಯದೆ ಮೇದಿನಿಯೊಳು
ಬಂದುದು ಪುರುಷಾರ್ಥೆ ೪
ಶರಣ್ಹೊಕ್ಕರ ಕರುಣಿಸಿ ನೋಡುವ ಎರಡಿಲ್ಲದೆ ಗುರುನಾಥ
ಕರವಿಡಿದು ಪಾರನೆ ದಾಟಿಸುವಾ ಸುರಮುನಿಜನ ಸೇವಿತ
ತರಣೋಪಾಯದ ಸಾಧನದೋರುವ ತರಳ ಮಹಿಪತಿ ದಾತ
ಸರಿಗಾಣೆನು ವರ ಗುರುದಯ ಕರುಣಕೆ ಎರಗೋ
ಮನವೆ ನಿನಗಿದು ಸುಪಥ ೫

೨೬೪
ಭ್ರಮಮೂಲಮಿದಂ ಜಗತು ನೇಮದ ನಿಜಮಾತು ಧ್ರುವ
ಭ್ರಮೆಯಿಂದಲಿ ಭ್ರಮಣ್ಹತ್ಯದ ನೋಡಿ
ಭ್ರಮೆ ನೆಲೆಗೊಳಿಸದು ಮನ ಸ್ಥಿರಮಾಡಿ
ಭ್ರಮಿಸೇದನೇಕ ಜನ್ಮ ತಿರುಗಾಡಿ
ಭ್ರಮಿಯಲಿ ಬಾರದು ನಿಜ ಕೈಗೊಡಿ ೧
ಭ್ರಮೆಯಕ ಭ್ರಮೆ ಹತ್ತೇದ ಬಲು ಬಹಳ
ಭ್ರಮಯು ಮಾಡೇದ ಸಂಸಾರದ ಮೇಳ
ಭ್ರಮೆ ಇಲ್ಲದ್ಯಾತಕೆ ಏನ್ಹೇಳ
ನೇಮದಿ ಹೊಳೆವುದು ವಸ್ತು ಅಚಲ ೨
ನಾ ನೀನೆಂಬುದು ಭ್ರಮೆಯದ ಮೂಲ
ಅನುದಿನ ಬೆನ್ನಟ್ಟಿದೆ ಬಹುಕಾಲ
ಖೂನಕೆ ಬಾರದೆ ಆತ್ಮಾನುಕೂಲ
ತಾನೆ ಮುಸುಕ್ಯದೆ ಭ್ರಮಿ ಸಕಲ ೩
ನಿಶ್ಚಲವಾಗದೆ ಜ್ಞಾನದ ಉಗಮವು
ಹೆಚ್ಚು ಕುಂದಿಗೆ ಹೊಡೆದಾಡುದು ಭ್ರಮೆಯು
ಹುಚ್ಚುಮಾಡೇದ ವಿಷಯ ಭ್ರಮೆಯು
ಎಚ್ಚರಿಸುವ ಸದ್ಗುರು ದಯಕ್ರಮವು ೪
ನಾ ಮವನಿಷ್ಟರೊಳಾಡಿದ ಮಾತು
ನಿಮಿಷಾರ್ಧದಲಿ ಭ್ರಮೆಯಗಳೆಯಿತು
ಸ್ವಾಮಿಸದ್ಗುರು ಕೃಪೆಯಲಿ ತಿಳದೀತು
ನೇಮಿಸಿ ತಿಳಿಕೊ ಮಹಿಪತಿನಿವಾಂತು ೫

೧೯೩
ಮಂಗಳ ಜಯಮಂಗಳ ಶುಭ
ಮಂಗಳ ಶ್ರೀ ಗುರುಮೂರ್ತಿಗೆ ಧ್ರುವ
ವೇದೋದ್ಧಾರ ಶ್ರೀಮತ್ಸ್ಯಗೆ ಮಂಗಳ
ಮೇದಿನಿಯ ಪೊತ್ತ ಕೂರ್ಮಗೆ ಮಂಗಳ
ಕಾದಿ ಗೆದ್ದ ಶ್ರೀವರಾಹಗೆ ಮಂಗಳ
ಒದಗಿ ಮೂಡಿದ ನರಸಿಂಹಗೆ ಮಂಗಳ ೧
ಧರಿಯೆ ದಾನವಕೊಂಡ ವಾಮನಗೆ ಮಂಗಳ
ಶೂರ ಪರಶುರಾಮಗೆ ಮಂಗಳ
ಶರಣ ರಕ್ಷಕ ಶ್ರೀರಾಮಗೆ ಮಂಗಳ
ಸಿರಿಯನಾಳುವ ಶ್ರೀಕೃಷ್ಣಗೆ ಮಂಗಳ ೨
ಗುಹ್ಯ ಗೋಪ್ಯದಲಿಹ ಬೌದ್ದಗೆ ಮಂಗಳ
ಹಯವನೇರಿದ ಕಲ್ಕಿಗೆ ಮಂಗಳ
ಜಯ ಜಯ ಮಹಿಪತಿಸ್ವಾಮಿಗೆ ಮಂಗಳ
ದಯುವುಳ್ಳ ಶ್ರೀದೇವಿದೇವಗೆಮಂಗಳ೩

೧೯೪
ಮಂಗಳ ಮಂಗಳ ಜಯಮಂಗಳ ಶುಭ
ಮಂಗಳ ಸ್ವಾಮಿಸರ್ವೋತ್ತಮಗೆ ಸಹಸ್ರಮಂಗಳ
ದೇವದೇವೋತ್ತಮಗೆ ಧ್ರುವ
ಕೇಶವ ನಾರಾಯಣಗೆ ಮಂಗಳ
ವಾಸುದೇವ ವಾಮನಗೆ ಮಂಗಳ
ಹೃಷೀಕೇಶ ಪುರುಷೋತ್ತಮಗೆ ಮಂಗಳ
ವಸುದೇವಸುತ ಶ್ರೀಕೃಷ್ಣಗೆ ಮಂಗಳ ೧
ಅಚ್ಯುತ ಜನಾರ್ಧನಗೆ ಮಂಗಳ
ಮತ್ಸ್ಯಕೂರ್ಮ ವರಾಹಿಗೆ ಮಂಗಳ
ಸಚ್ಚಿದಾನಂದ ಶ್ರೀಧರಗೆ ಮಂಗಳ
ಮುಚುಕುಂದವರದ ವಿಷ್ಣುಗೆ ಮಂಗಳ೨
ಮಾಧವ ಮಧುಸೂದನಗೆ ಮಂಗಳ
ಸಾಧು ಹೃದಯುವಾಸಗೆ ಮಂಗಳ
ಅಧೋಕ್ಷಜ ಅನಿರುದ್ಧಗೆ ಮಂಗಳ
ಪದ್ಮನಾಭ ಪ್ರದ್ಯುಮ್ನಗೆ ಮಂಗಳ ೩
ಗರುಡವಾಹನ ಗೋವಿಂದಗೆ ಮಂಗಳ
ಉರಗಶಯನ ಉಪೇಂದ್ರಗೆ ಮಂಗಳ
ಹರಿ ದಾಮೋದರ ಸಂಕರುಷಣಿಗೆ ಮಂಗಳ
ನಾರಸಿಂಹ ತ್ರಿವಿಕ್ರಮಗೆ ಮಂಗಳ ೪
ಪರಮ ಪಾವನ ಭಾರ್ಗವಗೆ ಮಂಗಳ
ಕರುಣಾಕರ ಶ್ರೀ ರಾಮಗೆ ಮಂಗಳ
ಧರಿಯೊಳು ಭೌದ್ಧ ಕಲ್ಕಿಗೆ ಮಂಗಳ
ತರಳ ಮಹಿಪತಿಸ್ವಾಮಿಗೆ ಮಂಗಳ ೫

೨೦೦
ಮಂಗಳ ಮಂಗಳ ಜಯಮಂಗಳ ಶುಭಮಂಗಳ
ಸುರಗುರು ಮೂರುತಿಗೆ ಸಹಸ್ರ ಮಂಗಳ ಶ್ರೀನಿಧಿ ಶ್ರೀಪತಿಗೆ ಧ್ರುವ
ವಿದುರವಂದಿತ ವಿಶ್ವಪಾಲಗ ಮಂಗಳ
ಬುಧಜನ ಸಹಕಾರಗ ಮಂಗಳ
ಯದುಕುಲೋತ್ತಮ ಶ್ರೀಧರಗ ಮಂಗಳ
ಮದನಮೋಹನ ಮೂರುತಿಗೆ ಮಂಗಳ ೧
ಕಸ್ತುರಿಯ ತಿಲಕ ಕಾರುಣ್ಯಗ ಮಂಗಳ
ಮಸ್ತಕಲಿಹ್ಯ ಮಣಿಮುಗಟಗ ಮಂಗಳ
ಕೌಸ್ತುಭಧರ ಭೂಷಣಗ ಮಂಗಳ
ಹಸ್ತಿಗೊಲಿದು ಸುವಸ್ತುಗ ಮಂಗಳ ೨
ಭಾಸ್ಕರಕೋಟಿ ಪ್ರಕಾಶಗ ಮಂಗಳ
ಭಾಸುವ ಭಾವಭೋಕ್ತಗ ಮಂಗಳ
ವಾಸವಾಗಿ ಹ್ಯ ಸದೋದಿತಗ ಮಂಗಳ
ದಾಸ ಮಹಿಪತಿ ಸ್ವಾಮಿಗ ಮಂಗಳ ೩

೧೯೯
ಮಂಗಳ ಮೂರುತಿ ಅದಿಕೇಶವ ನಾರಾಯಣ
ಮಾಧವ ಗೋವಿಂದ ವಿಷ್ಣು ಮಧುಸೂದನ ಧ್ರುವ
ನೇಮದಿಂದುದಿಸಿದೆ ವಾಮನ ತ್ರಿವಿಕ್ರಮ
ಸಾಮಗಾಯನ ಪ್ರಿಯಾನಂದೋಬ್ರಹ್ಮ
ದಾಮೋದರ ಸಂಕರುಷಣಾದೆ ಪುರುಷೋತ್ತಮ
ಸ್ವಾಮಿ ನೀನೆ ವಾಸುದೇವ ನಮ್ಮ ೧
ಸದ್ಗುಣ ಬೀರುವ ಹೃಷೀಕೇಶ ಶ್ರೀಧರ ಪೂರ್ಣ
ಪ್ರದ್ಯುಮ್ನ ಅನಿರುದ್ಧಾನಂದ ಗುಣ
ಪದ್ಮನಾಭನು ನೀನೆ ಅಚ್ಯುತ ಜನಾರ್ದನ
ಸಿದ್ಧ ಸಿದ್ಧಕ ಪ್ರಿಯಾನಂದ ಘನ ೨
ಅಧೋಕ್ಷಜ ನೃಸಿಂಹ ಉಪೇಂದ್ರ ಶ್ರೀಹರಿ ಕೃಷ್ಣ
ಹೃದಯದಲಿ ಕೊಂಡಾಡುದನುದಿನ
ಸದಾ ಪ್ರಸನ್ನ ಮಹಿಪತಿಗೀ ನಾಮ ಗುಣ
ಸದೋದಿತಾದನು ಭಾನುಕೋಟಿಪೂರ್ಣ ೩

೧೯೫
ಮಂಗಳಾರತಿ ಮಾಡಿ ಭಾವದಿಂದ
ಮಂಗಳ ಮಹಿಮನಾದ ದೇವಾದಿ ಶ್ರೀದೇವಗೆ ಧ್ರುವ
ಮಾಡಿ ಏಕೋ ಭಾವದಿಂದ
ನೋಡಿರೋ ಬ್ರಹ್ಮಾನಂದ ೧
ಕಂಗಳದೆರೆದು ನೋಡಿ
ಮಂಗಳಾರತಿ ಪಾಡಿ ೨
ಆರ್ತ ಭಾವದಾರತಿ
ಅರ್ತು ಮಾಡಿ ನಿತ್ಯಪ್ರತಿ ೩
ಸೇವೆ ಇದೆ ಬಲು ಸುಖ
ಪಾವನೆಗೈಸುವ ಕೌತುಕ ೪
ದೀನ ಮಹಿಪತಿ ಸ್ವಾಮಿ
ಭಾನುಕೋಟಿ ತೇಜಗಿನ್ನು ೫

೧೯೬
ಮಂಗಳಾರತಿ ಮಾಡಿ ಮಂಗಳ ಮಹಿಮಾನಂಗಜನಕ ಹರಿ
ತುಂಗವಿಕ್ರಮಗೆ ಮಂಗಳಾರತಿಯ ಧ್ರುವ
ಅಗಣಿತಗುಣ ಅಗಮ್ಯಗೋಚರ
ಸುಗಮದಲಾಡುವ ನಿಗಮೋದ್ಧಾರಗೆ ೧
ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ
ಭಗತವತ್ಸಲ ಸ್ವಾಮಿ ನಗಧರಗೆ ೨
ಜಗತಿಯ ಕದ್ದೊಯ್ದ ಸುರನ ಸೀಳಿದ
ಜಗದೋತ್ತಮನಾದ ಜಗದೋದ್ಧಾರಗೆ ೩
ದುರುಳದೈತ್ಯನ ಬೆರಳುಗುರಿಲಿ ಸೀಳಿದ
ತರಳ ಪ್ರಹ್ಲಾದಗೊಲಿದ ನರಹರಿಗೆ ೪
ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು
ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ ೫
ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ
ಪರಮಪುರುಷನಾಗಿಹ ತಪೋನಿಧಿಗೆ ೬
ದೇವತಿಗಳ ಸೆರೆಯ ಬಿಡಿಸಿದ ದೇವನು
ಪಾವನಮೂರುತಿ ಅಹಲ್ಯೋದ್ದಾರಗೆ ೭
ಇÀುದುಕುಲತಿಲಕ ವಿದುರವಂದಿತನಾದ
ಬುಧಜನಪಾಲ ಮದನಮೋಹನಗೆ ೮
ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ
ಹೊಳೆವದೋರಿದ ಚಲುವಿಲಿ ಮಹಾಮುನಿಗೆ ೯
ಮುದ್ದು ತೇಜಯನೇರಿ ತಿದ್ದಿ ರಾವುತನಾದ
ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ ೧೦

೧೨೦
ಮದನಮೋಹನ ಮಾಧವ ಮುರಾರಿ
ವಿದುರವಂದ್ಯ ಸದಾನಂದ ಶ್ರೀಹರಿ ಧ್ರುವ
ಗೋಪವೇಷಧರ ಗೋಪ ಕೀಶೋರ
ಗೋಪೀಜನ ಮುಖಚಂದ್ರ ಚಕೋರ ೧
ಯದುಕುಲತಿಲಕ ವಿರಾಜಿತ ಪೂರ್ಣ
ಸದೋದಿತ ಸುಖಸಾಂದ್ರ ಸದ್ಗುಣ ೨
ಭಾಸ್ಕರಕೋಟಿ ತೇಜ ಮಾಮನೋಹರ
ದಾಸ ಮಹಿಪತಿ ಸ್ವಾಮಿ ಸಕಲ ಸಹಕಾರ ೩

೧೨೧
ಮದನಮೋಹನ ಮಾಮನೋಹರ ಶ್ರೀದೇವ
ಸಾಧುಪಾಲನಕಾಗಿ ಬಂದು ಮೇದಿನಿಯ ಭಾರಿಳುಹಿದೆ ಧ್ರುವ
ಬಂದು ಯದುಕುಲದಲಿ ಜನಿಸಿದೆ ಶ್ರೀ ಕೃಷ್ಣನು
ತಿಂದು ಮೊಲಿಯನು ಕೊಂದು
ಪೂತಣಿ ನಂದಗೋಕುಲಲ್ಯಾಡಿದೆ
ಮಂದರಧರ ಸುಂದರರೂಪ ಮುಕುಂದ
ವೃಂದಗೋಪರ ನಂದದಲಿ ಕೂಡಿ ಚಂದ ಚಂದದಲ್ಯಾಡಿದೆ೧
ದೇವಕೀ ಕಂದ ದೇವಾಧಿದೇವ ಗೋವಿಂದ
ಹಾವನ್ಹಿಡಿದಿ ನೀ ಮೆಟ್ಟಿ ಫಣಿಯಲಿ ಮಾವನ ಮರ್ದಿಸಿದೆ
ಸಾವಿರನಾಮ ಪಡೆದ ನೀ ಪೂರ್ಣ ಶ್ರೀಹರಿ
ದೇವ ಇಂದ್ರನು ಮಳಿಯಗರೆ ಗೋವರ್ಧನವ ನೀನೆತ್ತಿದೆ ೨
ವಿದುರವಂದ್ಯ ಸದಾ ಪಾಂಡವಪಕ್ಷ ಶ್ರೀಧರ
ಹೆದರದೀಹ್ಯ ದುರುಯೋಧನನ ನೀ ಕದನ
ನಿರ್ಮಿಸಿ ಮಡುಹಿದೆ
ಬುಧಜನಪ್ರಿಯ ಶ್ರೀ ವಾಸುದೇವ ನಮ್ಮಯ್ಯ
ಸಾಧಿಸ್ಯನುದಿನ ಸಲಹುತಿಹ್ಯ
ಮಹಿಪತಿಯ ಘನಸುಖದಾಯಕ ೩

೨೬೭
ಮನ ಬಲಿಯದನಕ ಅನುಕೂಲಾಗದನುಭವ ಧ್ರುವ
ಮನವೇ ಮರೆಯ ಮಾಡೇದೆ ನೆನವಿಗೆ ತಾಂ ತಂದು ತೋರದೆ
ಹೆಣ್ಣ ಹೊನ್ನದಾಶೆ ಹಚ್ಚ್ಯಾದೆ ಘನತನಗರಸದೆ ೧
ಹುಚ್ಚಮಾಡಿಬಿಟ್ಟದೆ ಎಚ್ಚರ ಎಡಿಯಗೊಡದೆ
ಕಚ್ಚಿ ವಿಷಯಕೆ ಬಿದ್ದದೆ ಬೆಚ್ಚಿ ಬೆದರದೆ ೨
ಮನಸಿಗೆ ಮನಸಿನಿಂದ ಅನುಭವವಾಗಬೇಕಾನಂದ
ಘನ ಗುರುವಿನ ಕೃಪೆಯಿಂದ ಮನ ಬಲಿವುದು ಚೆಂದ ೩
ಮನೋನ್ಮನವಾಗಿ ತಾ ಘನ ಬೆರೆದು ಸ್ವಹಿತ
ಜ್ಞಾನಕಿದೇ ತಾ ಸನ್ಮತ ಮುನಿಜನರ ಸುಪಥ ೪
ಮನಬಲಿದು ನೀ ನೋಡೋ ಘನಸುಖ ಮಹಿಪತಿಗೊಡೊ
ಅನುಭವಾಮೃತ ಸೂರ್ಯಾಡೊ ಅನುಮಾನೀಡ್ಯಾಡೊ ೫

೨೬೫
ಮನಗೊಂಡವರಲ್ಲಿ ಘನಗೊಳ್ಳಿ ಜ್ಞಾನಾಗಮ್ಯದ ಧ್ರುವ
ಮನಗಂಡವರೆಲ್ಲದ ನಿಜಖೂನ
ಮುನಿಜನರಾರಾಧಿಸುವ ನಿಧಾನ
ಅನಿಮಿಷದಲಿ ನೋಡುವ ತ್ರಾಣ ಉನ್ಮನಲಿಹ ಧನ ೧
ಜಾಣನೇ ಮಾಡಿಕೊಂಬನು ಪರೀಕ್ಷೆ ಸ್ವಾನುಭವದಲಿ ಪ್ರತ್ಯಕ್ಷ
ಅನುದಿನದಲಿಹುದ ದಕ್ಷ ಘನಗುರು ಕಟಾಕ್ಷ ೨
ಮನಗಂಡಾತನೆ ಘನಗುರು ನಮ್ಮ ದೀನ
ಮಹಿಪತಿಸ್ವಾಮಿಯು ಪರಬ್ರಹ್ಮ
ಖೂನಮಾಡವಗಿದು ಸಂಭ್ರಮ ಅನಂದೋಬ್ರಹ್ಮ ೩

೨೬೬
ಮನದಿಂದಲಿ ಮನನೋಡಿ
ಮನವರಿತು ಘನ ಕೂಡಿ ಧ್ರುವ
ಮನಸಿನಿಂದ ತಾ ನೋಡುವ ಖೂನ
ಮನ ಮರೆಯಲದೆ ನಿಧಾನ
ಮನವರಿಯದೆ ಇಹುದ್ಯಾತರ ಜ್ಞಾನ
ಮನವೇ ಸ್ವಹಿತ ಕಾರಣ ೧
ಮನದ ಕೊನಿಯಲಿದೆ ಘನಸುಖದಾಟ
ಅನುದಿನ ನೋಡುದು ನೀಟ
ಸ್ವಾನುಭವದಲಿದು ನೋಡುವ ನೋಟ
ಮುನಿಜನರ ಸುಖದೂಟ ೨
ಮನೋನ್ಮನದೊಳಗದೆ ಘನಸ್ಫೂರ್ತಿ
ಜ್ಞಾನಕಿದೆ ಮನೆ ವಾರ್ತಿ
ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ
ಮನಕಾಗಿಹ ತಾಂ ಸಾರ್ಥಿ ೩

೨೬೮
ಮನಮರಿಯಲಿದ್ದವಗೆಲ್ಲಿಹುದು ಆತ್ಮದ ಖೂನ
ತನುವನಾಗಿದ್ದವಗೆಲ್ಲಿಹುದು ಜ್ಞಾನ ಧ್ರುವ
ನಿಗಮ ಓದಿದರೇನು ಅಗಮ ಹೇಳಿದರೇನು
ಬಗೆ ಬಗೆ ವೇಷ ಜಗದೊಳುದೋರಿದರೇನು ೧
ಮಠವು ಮಾಡಿದರೇನು ಅಡವಿ ಸಾರಿದರೇನು
ಸಠೆ ಮಾಡಿ ಸಂಸಾರ ಹಟವಿಡಿದರೇನು ೨
ನಿಗದಿ ಹಾಕಿದರೇನು ಗಗನಕ್ಹಾರಿದರೇನು
ಮಿಗಿಲಾಗಿದೋರಿ ಬಗವಿಯ ಪೊದ್ದರೇನು ೩
ಗುಹ್ಯ ಸೇರಿದರೇನು ಬಾಹ್ಯ ಮೆರೆದರೇನು
ದೇಹ ದಂಡಿಸಿ ಹರವ ತೊರೆದರೇನು ೪
ಮನಕೆ ಮೀರಿಹ್ಯ ಸ್ಥಾನ ಘನಸುಖದಧಿಷ್ಠಾನ
ದೀನಮಹಿಪತಿ ನೀ ಸಾಧಿಸೊ ಗುರುಜ್ಞಾನ ೫

೨೬೯
ಮನಮುಟ್ಟಿ ಮಾಡುವದೆ ಭಕ್ತಿಗಳು
ಶ್ರುತದೃಷ್ಟನು ಮನದಿಂದ ಮಾಡುವ ನೇಮನಿತ್ಯಗಳು
ವಿವೇಕವು ಅಗಮ ಪುರಾಣ ವಿಚಾರವೆ
ಮಹಾ ಧರ್ಮಶಾಸ್ತ್ರಗಳು
ಸನ್ಮತವೆ ಮತವೆಂದರಿದಿಹ ಮಹಾ ಯೋಗೇಶ್ವರ
ಯತಿ ಕುಲದೀಪಗಳು ೧
ಇಡಾಪಿಂಗಳ ಸುಷಮ್ನದಿ ಭ್ರೂಮಧ್ಯ
ತ್ರಿವೇಣಿ ಸಂಗಮ ಸ್ನಾನಗಳು
ಶ್ರೀ ಗುರು ಸ್ವಸ್ವರೂಪದಿ ಬೆರೆದಿಹ
ಮಹಾದಿವ್ಯ ಮಡಿಯಗಳು
ದ್ವಾದಶನಾದದ ಶ್ರುತಿ ಮೊದಲಾದವು
ಇಟ್ಟಿಹ ದ್ವಾದಶ ನಾಮಗಳು
ಪಂಚಮುದ್ರೆಯ ಸ್ಥಾನವು ಆತ್ಮದಿ
ಮನಗಂಡಿಹದೇ ಶ್ರೀಮುದ್ರೆಗಳು ೨
ಸ್ವಾನುಭವದಿಂದಲಿ ಸದ್ಗುರುವಿನ
ಸ್ಮರಣೆಯೊಳಿಹುದೆ ಸಂಧ್ಯಾನಗಳು
ಇಪ್ಪತ್ತೊಂದು ಸಾವಿರದಾರುನೂರು ಪ್ರಣಮ್ಯವೆ
ಜಪಸರ ಮಾಲೆಗಳು
ಗುರುವಾಕ್ಯವು ನಂಬಿಹ ವಿಶ್ವಾಸವು
ಜಪತಪ ಧ್ಯಾನವೆ ಮೌನಗಳು
ನಿರ್ಧಾರದಿ ಗುರುಪಾದ ನಿಶ್ಚೈಸಿಹ ವ್ರತ ಆಚಾರವೇ ನಿಷ್ಠೆಗಳು ೩
ತನುವಿನೊಳು ಘನದವಲೋಕನೆ
ಮಾಡುವುದೇ ದೇವಪೂಜೆಗಳು
ಅಂತ:ಕರಣದಿ ಗುರುಚರಣದ ಅಭಿಷೇಕಜ್ಞಾನ
ಭಾಗೀರಥಿ ತೀರ್ಥಗಳು
ನೆನವಿನ ಸಂಪುಷ್ಟದಿ ಘನಮೂರ್ತಿಯ
ಚಿತ್ತಚಿಂತನದಿ ದಿವ್ಯ ವಸ್ತ್ರಗಳು
ಬುದ್ಧಿ ಭೇದ ನಿನು(?) ಗಂಧಾಕ್ಷತೆಯ ಪ್ರೇಮವೆ
ಪರಿಮಳಪುಷ್ಪಗಳು ೪
ಅನಿಮಿಷ ನೇತ್ರದಿ ನೋಡುವ ಘನ ಚಿತ್ಪ್ರಕಾಶವೆ ಸದಾನಂದದ
ದೀಪಗಳು ಅಹಂಕಾರವು ಧೂಪಾರ್ತಿಯ
ಮೊದಲಾದ ಸತ್ವರಜತಮ
ಏಕಾರ್ತಿಗಳು ಸದ್ಭಾವನಿ ತಾಂಬೂಲಗಳಿಂದಲಿ ರತಿಮನ ಘನ
ನೈವೇದ್ಯಗಳು ಸುವಾಸನಿ ಕರ್ಪೂರಗಳಿಂದಲಿ
ಮಂಗಳಾರ್ಚನಿ ಪಂಚ ಪ್ರಕಾಶಗಳು ೫
ಪಂಚತತ್ವದ ಮಹಾ ಮಂಟಪದೊಳು
ಶ್ರೀಗುರು ಸೇವೆ ಸತ್ಕಾರಗಳು
ಜಯ ಲಕ್ಷ್ಮಿಯ ಷೋಡಶ ಉಪಚಾರಗಳಿಂದಲಿ ಮಹಾದಿವ್ಯ
ಪೂಜೆಗಳು ತಲ್ಲೀನವು ಅಗಿಹ ಗುರುಪಾದದಿ ಪ್ರದಕ್ಷಿಣೆವೆ
ನಮಸ್ಕಾರಗಳು ಉತ್ಪತ್ತಿ ಸ್ಥಿತಿಲಯ ತಾರಿಸಿದ
ಗುರುನಾಮವೇ ಸದ್ಗತಿ ಮುಕ್ತಿಗಳು ೬
ಆತ್ಮಾನುಭವ ಗುರುದಾಸರಿಗಲ್ಲದೆ ಬಲ್ಲವೇನು ಪಶುಪ್ರಾಣಿಗಳು
ದಿವಾರಾತ್ರಿಯಲಾನಂದ ಸದೋದಿತದೋರುತಿಹ
ಸಾಕ್ಷಾತ್ಕಾರಗಳು
ಈ ಪರಿಯಲಿ ಮಹಿಪತಿ ಬಾಹ್ಯಾಂತ್ರವು ವಸ್ತುಗತಿ
ಭಾಸ್ಕರ ಸ್ವಾಮಿಗಳು
ಏಕೋದೇವನು ಏಕೋಭಕ್ತಿಯು ತ್ರಾಹಿ ತ್ರಾಹಿ
ತ್ರಾಹಿ ಜೀವನಮುಕ್ತಿಗಳು ೭

೫೭೪
ಮನವೆ ಎಂದೆಂದಿಗೆ ಬಿಡಬ್ಯಾಡ ಹೊಂದಿ
ನಿಜವತಂದೆ ಗುರುಕೃಪೆಯಿಂದ
ವಂದಿಸಿ ಸದಮಲ ಬ್ರಹ್ಮಾನಂದವ ಸಂಧಿಸಿ
ಸುಖಿಯಾಗಿರೊ ಮನವೆ ೧
ದೊರ್ಕದು ಎಂದಿಗೆ ಮೂರ್ಖರಿಗಿದು ತಾ ತರ್ಕರಹಿತ ಪರವಸ್ತು
ಗರ್ಕನೆ ತಿರುಗಿ ಸರ್ಕನೆ ನೋಡಿ ಅರಿಕ್ಯುಳ್ಳವಗರ್ಜಿತ ನಿಜಧನವು ೨
ಸಾಧಿಸಿ ಜನ್ಮಾಂತರದ ಪುಣ್ಯವು ಒದಗಿ ಬಂತಿದಿರಾಗಿ
ಬೊಧಕ ಮಹಿಪತಿ ಗುರು ಶ್ರೀಪಾದವು
ಭೇದಿಸಿ ಬೆರಿ ಚೆನ್ನಾಗಿ ಮನವೆ ೩

೫೭೫
ಮನವೆ ನೋಡೋ ನಿನ್ನೊಳಗಿಹ್ಯ ನಿಜವ ಪಡಿದೊ ಕೂಡೋ
ಒಡನೆ ಸದ್ಗುರು ಶ್ರೀಪಾದ ಗೂಢವಾಗಿಹ ಧನ
ಗೂಡಿನೊಳರಿಯದೆ ನಾಡಗೊಡವೆ ನಿನಗ್ಯಾಕೊ ಮನವೆ ಧ್ರುವ
ಗೂಢವಾಗಿಹ ಭಕ್ತಿ ನಾಡಿಗೆ ಹೇಳದೆ ನೋಡಿ ನಿನ್ನೊಳು ಸುಖಿಯಾಗೊ
ನಡೆನುಡಿ ವಂದನೆಮಾಡಿ ದೃಢದಲಿ ಬಿಡದೆ ಸುಪಥವ ನೀ ಕೂಡೊ ಮನವೆ ೧
ಮನ ಕರಗಿ ಘನ ಸಮರಸವಾಗೊ ತನುವಿನ ಕಳವಳಗಳೆದು
ಉನ್ಮನವಾಗದೆ ಅನುದಿನ ಜಗದೊಳು ಜನರಂಜನೆ ತೋರಿದ ಫಲವೇನು ೨
ತನ್ಮಯ ತಾರಕ ಬ್ರಹ್ಮಾನಂದವು ಭಿನ್ನವಿಲ್ಲದೇ ನೀ ನೋಡೊ
ಉನ್ಮತ್ತರಿಗೆ ತಾ ದೊರೆಯದು ಎಂದಿಗೆ ಸನ್ಮತ ಸುಖಸಾರವಿದು ಮನವೆ ೩
ಅಲ್ಪದೆ ಮಹಿಪತಿ ಮನವೆ ಆಶಾಪಾಶಕೆ ಸಿಲುಕಿಲಿಬ್ಯಾಡೊ
ಕಲ್ಪನೆ ಕೋಟಿಲೆಗ್ಹೊಂದದೆ ನಿರ್ವಿಕಲ್ಪ ಸಮಾಧಿಯ ಕೂಡೊ ಮನವೆ ೪

೪೭೩
ಮನವೆ ಶ್ರೀಗುರು ಪಾದವ ನಂಬು
ನಿನಗಲ್ಯಾಹುದು ಘನ ಸುಖದಿಂಬು ೧
ಇಂಬಾಗಿಹುದು ಅನುದಿನ ನೋಡಾ
ನಂಬದೆ ನಿಜವನು ನೀ ಕೆಡಬ್ಯಾಡ ೨
ಬ್ಯಾಡೆಂಬುದು ಈ ಮಾತನೆ ಕೇಳು
ಬೇಡದೆ ಬಯಸದೆ ನಿಜದಲಿ ಬಾಳು ೩
ಬಾಳುವದೀಪರಿ ಜನದಲಿ ಲೇಸು
ತಿಳಿಯದೆ ಬಯಸುವದ್ಯಾತಕೆ ಸೋಸು ೪
ಸೋಸ್ಹಿಡಿದರ ಬೇಕಾಹುದು ಜನ್ಮ
ಸೋಸಿಲಿ ಹುಟ್ಟುದು ಆಸಿಯ ಕರ್ಮ ೫
ಕರ್ಮವೇ ತಾ ಮಾಡುದು ಭವ ಬಂಧ
ಮರ್ಮವ ತಿಳಿಯದವನೆ ತಾ ಅಂಧ ೬
ಅಂಧಗ ತಿಳಿಯದು ಆತ್ಮದ ಗೂಢ
ಸಂಧಿಸಿ ಬೀಳಲು ವಿಷದಲಿ ಮೂಢ ೭
ಮೂಢಗೆಲ್ಲಿಹ್ಯ ಆತ್ಮದ ವಿಚಾರ
ನೋಡುವ ನೋಟವು ಇದು ಬಲುದೂರ ೮
ದೂರಕೇ ನೀ ದೂರಾಗಿಬ್ಯಾಡ
ಅರಿಯಲು ತನ್ನೊಳು ಸಾರವೆ ನೋಡಾ ೯
ನೋಡುವುದಿದು ಗುರುಜ್ಞಾನದ ಗುಟ್ಟು
ಆಡಿದ ಅನುಭವ ಮಾತಿಗೆ ಮುಟ್ಟು ೧೦
ಮುಟ್ಟಿದ ಖೂನವು ಮಿಸುಕಲಿ ಬ್ಯಾಡ
ಘಟ್ಯಾಗಿ ನಿಜಘನ ಬೆರೆ ಗಾಢಾ ೧೧
ಗಾಢಾಗಿಹುದು ನಿಜಗುರು ಜ್ಞಾನ
ಮಾಡುವ ಧ್ಯಾನಕೆ ಅನುಸಂಧಾನ ೧೨
ಅನುಸಂಧಾನದ ಅನುಭವ ಸುಖ
ಉನ್ಮನದಲಿ ತಿಳಿವುದು ಗುರುಮುಖ ೧೩
ಗುರು ಮುಖದಲಿ ಬೆಳಗಾಹುದು ಪೂರ್ಣ
ಬೀರುವ ಪ್ರಭೆ ಸದ್ಗುರು ಕರುಣ ೧೪
ಕರುಣದ ಸಾಗರ ಗುರುವರ ಮೂರ್ತಿ
ಇರುಳ್ಹಗಲೆ ಕೊಂಡಾಡುವೆ ಕೀರ್ತಿ ೧೫
ಕೀರ್ತಿಯ ಕೊಂಡಾಡುವನೀ ಮಹಿಪತಿ
ಸಾರ್ಥಕವಿದು ಅನುಭವ ಮನೆಮೂರ್ತಿ ೧೬

೫೭೬
ಮನವೇನೆಂಬುದನರಿಯೋ ಮನುಜ
ಮನ ವೇನೆಂಬುದನು ಧ್ರುವ
ಮನವೇನೆಂಬುದನನುಭವಕೆ ತಂದು
ಖೂನದಲಿಡದೆ ಜ್ಞಾನದಲಿ
ನಾನಾ ಶಾಸ್ತ್ರವ ಓದಿ ನೀ ಅನುದಿನ
ಏನು ಘಳಿಸಿದ್ಯೊ ಮರುಳ ಮನುಜ೧
ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ
ಪ್ರತ್ಯೇಕರವನು ತೋರುತಲಿ
ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ
ಚಿತ್ತ ಭ್ರಮಿಸುದು ದಾವುದೊ ಮನುಜ ೨
ಏಕೋ ವಿಷ್ಣು ವೆಂದೆನಿಸಿ ಮುಖದಲಿ
ಪೋಕ ದೈವಕೆ ಬಾಯದೆರೆಸುತಲಿ
ನಾಕುವೇದವ ಬಲ್ಲವನೆಂದೆನಿಸಿ
ವಿಕಳಿಸುತಿಹ್ಯದು ದಾವುದೊ ಮನುಜ ೩
ಉತ್ತಮೊತ್ತಮರ ಕಂಡಾಕ್ಷಣ ಹರುಷದಿ
ನಿತ್ಯಿರಬೇಕೀ ಸಹವಾಸವೆನಿಸಿ
ಮತ್ತೊಂದರಘಳಿ ಗಾಲಸ್ಯವ ತೋರಿ
ಒತ್ತಿ ಆಳುವದು ದಾವುದೊ ಮನುಜ ೪
ಪಾಪವ ಮಾಡಬಾರದು ಎಂದೆನಿಸಿ
ವ್ಯಾಪಿಸಿಗೊಡದೆ ಕಾಣದನಕ
ಉಪಾಯದಲಿ ಅಪಸ್ವಾರ್ಥವು ಇದಿರಡೆ
ಅಪಹರಿಸುವದು ದಾವುದೊ ಮನುಜ ೫
ಪ್ರಾಚೀನವೆ ತಾಂ ನಿಜವೆಂದರುಹಿಸಿ
ಆಚರಣೆಯ ಬ್ಯಾರೆ ತೋರುತಲಿ
ನೀಚ ಊಚ ಹೊಡೆದಾಡಿಸುತ
ನಾಚಿಸುತಿಹುದು ದಾವೊದೊ ಮನುಜ ೬
ಸಗುಣ ನಿರ್ಗುಣ ಬ್ಯಾರೆರಡನೆ ತೋರಿ
ಬಗೆ ಬಗೆ ಸಾಧನ ತೋರಿಸುತ
ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ
ತೋರುವುದು ದಾವುದೊ ಮನುಜ ೭
ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ
ಅನುದಿನ ಜಪವನು ಮಾಡಿಸುತ
ಘನವಾಗಿಹÀ ಅನುಭವ ಸುಖದಾಟದ
ಖೂನ ದೋರಿಸುದು ದಾವುದೊ ಮನುಜ ೮
ಮರವಿಗೆ ತಾನೆ ಅರಿವೇ ಕೊಟ್ಟು
ಅರಿವು ಮರವಿನೊಳಾಡಿಸುತ
ತಿರಿವು ಮರವಿನಂಕುರದ ಕುರ್ಹುವಿನ
ಇರಹು ತೋರಿಸುದು ದಾವುದೊ ಮನುಜ ೯
ಮನವಿನ ಮೂಲವು ತಿಳಿವದು
ಭಾನುಕೋಟಿ ಪ್ರಕಾಶನ ಕರುಣದಲಿ
ನಾನು ನಾನೆಂಬವರಿಗೆ ಇದರ
ಖೂನ ಲೇಶ ತಿಳಿಯದೊ ಮನುಜ ೧೦
ಹರಿಯೆ ಗುರುವೆಂದರುಹಿಸಿ ಆತ್ಮಲಿ
ಶರಣಹೋಗುವ ಭಾವನೆದೋರಿ
ತರಳಮಹಿಪತಿ ಗುರುದಯ ಪಡಕೊಂಡಿಂದು
ಯೋಗ್ಯನಾಗುವದಿದೊಂದೆ ಮನುಜ ೧೧

೫೭೭
ಮನಸಿಗೆ ಬಂತು ತಾ ಘನ ಗುರುಮೂರ್ತಿ ಶ್ರೀಪಾದ ಧ್ರುವ
ಕನಸಿಲೆ ಕಾಣದ ಕುರುಹು ಮನಸಿಗೆ ಬಂತೆನ್ನೊಳು ತಾ ಪೂರ್ಣ
ಏನೆಂದ್ಹೇಳಲಿ ಸೂಕ್ಷ್ಮ ಅನುಭವದ ಖೂನ ೧
ಮನಸಿಗೆ ಬಾರದೆ ಹೋಗಿ ಜನಸಿತು ನಾನಾ ಯೋನಿಲೆನ್ನ
ಏನೋ ಎಂತೋ ತಿಳಿಯದು ಅನಂದ ಘನ ೨
ಮನಸಿಗೆ ಬಂದ ತಾ ವಸ್ತು ಜನವನದೊಳು ತಾ ತುಂ ಬ್ಯಾದೆ
ಅನುಕೂಲವಾಯಿತು ಎನಗೆ ದೀನ ಮಹಿಪತಿಗೆ ೩

೫೭೮
ಮನಸಿನ ಮಾಯವೆ ಗೂಢದೋರದು ನಿಜ ಗೂಢ ಧ್ರುವ
ಮರವಿನೊಳಾಡಲು ಆಯಿತು ಮನವು
ಅರಿವಿನೊಳಾಡಲು ತೋರಿತುನ್ಮನವು
ಅರಹು ಮರುಹ ಎರಡನೆ ಮೀರಿದರೆ
ಆಯಿತು ತನ್ನೊಳು ತಾನೆ ಚಿದ್ಘನವು ೧
ಅರುಹಿತು ಸ್ಥೂಲಕೆ ಜಾಗ್ರತಿಯಾಗಿ
ಬ್ಯಾರೆದೋರಿತು ಸ್ವಪ್ನ ಸೂಕ್ಷ್ಮಕೆ ಹೋಗಿ
ಕಾರಣದಲಿ ಸಷುಪ್ತಿಯು ಆಗಿ
ತೋರಿತು ತಾನೆ ಮೂರು ಪರಿಯಾಗಿ ೨
ದೊರಕುದು ಬ್ರಹ್ಮಾಧಿಕರಿಗೆ ಖೂನ
ಮರುಳ ಮಾಡ್ಹೆಚ್ಚಿತು ವಿಷಯದ ಧ್ಯಾನ
ಕರುಣಿಸಿದರೆ ಸದ್ಗುರು ನಿಧಾನಾ
ತರಳ ಮಹಿಪತಿಗಾಯಿತುನ್ಮನ ೩

೪೭೪
ಮನಸಿಲೆ ಮನ ನೋಡಿ ಘನ ಗುರುವಿನ ಸೇವೆಯ ಮಾಡಿ ಧ್ರುವ
ಮನದಲಿ ತಿಳಿಯದೆ ಮನಮೂಲ ಜನದೊಳು ತೋರುದ್ಯಾತಕೆ ಶೀಲ
ಅನುಭವಾಗದೆ ಜ್ಞಾನದ ಕೀಲ ಜನ ಶೀಲದೆ ಶೂಲ ೧
ಮನದಿಂದಲಿ ಮನವಾಗದೆ ಸ್ವಸ್ತ ಘನಕೈಗೂಡುವದೆ ಸಾಭ್ಯಸ್ತ
ಅನಕಾ ಮಾಡುವದಸ್ತವ್ಯಸ್ತ ಖೂನಾಗದು ವಸ್ತ ೨
ಮನ ಉನ್ಮನವಾಗಲು ಪೂರ್ಣ ಖೂನವಾಗದು ಮಹಿಪತಿ ಗುರುಚರಣ
ಭಾನುಕೋಟಿತೇಜನ ಕರುಣ ದೀನ ಉದ್ಧರಣ ೩

೫೭೯
ಮನಾ ಮನಾ ಘನಾ ಘನಾ
ಎನುತಿದೆ ಲೋಕರಿಯದೆ ಖೂನ ಧ್ರುವ
ಮನದಾವದು ಎಂದರಿಯದೆ ಖೂನ
ಘನದಾವವೆಂದರಿಯದು ಧ್ಯಾನ
ಧ್ಯಾನ ಮೋನ ಯಾತಕದೇನ
ಅನುಭವರಿಯದೆ ಮರುಳಜನ ೧
ಮೂಲದಲಿಡದೆ ಠಾವಿಲಿ ಮನ
ಜ್ಯಾಲವ್ಯಾತಕೆ ಬರೇ ಮಾತಿನ
ಕೀಲ ತಿಳಿಯದೆ ಸದ್ಗುರು ಜ್ಞಾನ
ನೆಲಿಯುಗೊಂಬುದೆ ನಿಜಸಾಧನ ೨
ಮನದಲಿ ಮನಸಿನ ತಿಳಿವದು ಬಿಟ್ಟು
ಜನವನ ತಿರುಗುದೆ ಕೆಟ್ಟು
ಮನೋನ್ಮನದೊಳಗಿದೆ ಘನಗುಟ್ಟುದೀನ ಮಹಿಪತಿ ಗುರು ದಯಲುಂಟು೩

೨೭೦
ಮನೋಮಲಹರವಾಗುದು ಗುರು ಬೋಧದಿಂದ
ತನ್ನ ತಾಂ ತಿಳಿಯಲು ಶುದ್ಧ ಬುಧ ಆಹಿರಿ ಧ್ರುವ
ಅಂತರಂಗವು ನೋಡಿ ಜರೆವದು ಬಹಿರವಿ
ಬೆರೆದು ನೋಡಿಲು ಘನವಸಂತವು
ಗುರುಹಸ್ತ ಸ್ಪರ್ಶದಿಂದಲಿ ಕಲ್ಯಾಣ
ಅರಿಯಲಾತ್ಮಾನುಭವ ಮುಕ್ತಿಗೆ ದಾರಿಯಯ್ಯ ೧
ಸಾಧನವ ಮಾಡಿ ಸದ್ಗತಿಯಕಾಂಬೋದವು
ಧನ್ಯ ಧನ್ಯವಾಹುದು ಜ್ಞಾನುಪದೇಶಲಿ
ತಿಳಿಯಲಗಾಧ ಬಳಿಲಿ ಶ್ರೀಗುರುವಿನ ಸಕಲಾಭರಣ
ಇದೇ ಸದ್ಗುರು ಕೃಪೆಯಯ್ಯ೨
ಧ್ಯಾಯಿಸುವ ಆತ್ಮಾರಾಮ ಕ್ರಿಯವರಿದು
ಪಯಸ್ವನಿ ಜಿಹ್ವದಲಿ ಗುರುಸ್ಮರಣೆಯು ನಾಟಿ
ಗುರುಪಾದ ಹೃದಯದಲಿ ಸಾಳಂಗವನು ಮಾಡಿ
ಪಾವನ್ನವಾದ ಮಹಿಪತಿ ಗುರುವಿನ ಪಾಡಿ೩

೪೭೫
ಮರತರ ತಾ ಮರವಲ್ಲದು ನೋಡಲು |
ಅರತರತಾ ಅರವಲ್ಲದು ನಿಜದೊಳು |
ಅರಹು ಮರದಲಿ ಎರಡನೇ ಮೀರಿಹ |
ಘನದರುವೇ ತಾನಾಗಿ |
ಕುರುವಿನೊಳಿರುವಾಗಿಹ ಸ್ವಾನಂದದಿ |
ತೆರವಿಲ್ಲದೆ ಸಲೆ ತುಂಬಿತುಳುಕುತಿಹ |
ಪರವೆಂದೆನಿಸಿದ ಶರಣ ರಕ್ಷಕ | ಗುರುಮಹಿಪತಿ ಜಯ ಜಯತು ೧
ತೋರುವ ದೃಶ್ಯವ ಕಾಂಬುವ ನಯನಕ |
ಸಾರಿಯಮನವನು ನೋಡುವ ಬುದ್ಧಿಗೆ |
ಮೀರಿಹ ನಿತ್ಯ ನಿರಂಜನ ವಸ್ತುವೆ | ವಿಶ್ವ ಭರಿತನೆಂದು ||
ಸಾರುವ ಶೃತಿಯಿಂದಾತ್ಮ ಪ್ರಚೀತಿಯ |
ಸೇರಿಸಿಭಜನೆಯ ಕ್ರಮವನರಸಿ ಭವ |
ವಾರಿಸಿ ಚಿತ್ಸುಖಲಿರಿಸಿದ ಮಹಿಪತಿ | ಸದ್ಗುರು ಜಯ ಜಯತು ೨
ಮೊದಲಿಗೆ ಜಯದಾರ್ಜ ಲಕ್ಷಣವನು |
ಹೃದಯದಿ ನೆಲೆಗೊಳಿಸಿ |
ಇದರದರಿಸಿ ಭವದ್ಹೆದರಿಕೆÉ ಹಾರಿಸಿ |
ಸದಮಲ ಬ್ರಹ್ಮನ ಕಳೆಯನು ತೋರಿಸಿ |
ಮುದದಲಿ ಭಕ್ತರ ವಾಲಿಪ ಮಹಿಪತಿ | ಗುರುಮೂರ್ತಿಗೆ ಶರಣು ೩
ಆಡುವ ರೇಚಕ ಪೂರ್ವಕ ನಂದಿಯ |
ಜೋಡಿಸಿ ಯರಡನೆ ಮೆರೆವಸುಷಮ್ನಿಯ |
ನಾಡಿಯ ರತಿಕರ ಹೂಡುತ ಮೆಲ್ಲನೆ |
ನಿಜವಇನ ಸಾರಥಿಯಾ |
ಕೂಡಿಸಿ ಹರುಷದ ತೇರಿ ನಡಸುತ ಸ |
ಫಾಡಿರೆಯಿಂದಲಿ ಮೇಲ್ಗಿರಿಯಾತ್ರೆಯ |
ಮಾಡಿವಿಲಾಸದ ಲಾಡಿದ ಮಹಿಪತಿ | ಗುರುಮೂರ್ತಿಗೆ ಶರಣ ೪

೨೭೧
ಮಾಡಬಾರದು ನೋಡಿ ಕೇಡಿಗರ ಸಂಗ
ಬೇಡಿ ಕಾಡದೆ ಬಾಹುದಭಿಮಾನ ಭಂಗ ಧ್ರುವ
ಹೊಟ್ಟೆಯನು ಹೊಕ್ಕು ಕಟ್ಟಿಗೆ ತಂದು ನಿಲಿಸ ುವರು
ಗುಟ್ಟಲೀಹ ಮಾತು ತುಟ್ಟಿಗೆ ತಾಹರು
ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳ ತಾಹರು
ನಟ್ಟಸ್ನೇಹದ ಬಳಕಿ ತುಟ್ಟಿಸುವರು ೧
ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ
ಅಲ್ಲಹುದು ಮಾಡಿ ಗೆಲವಿಸಿಕೊಂಬರು
ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ
ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ ೨
ಏನನಾದರೆ ಕೊಟ್ಟು ಹೀನಮನುಜರ ಸಂಗ
ಮಾನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗೆ
ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ
ನೆನವರ ನೆರೆಲಿದ್ದು ಸುಖಿಸುವುದು ಲೇಸು ೩

೪೭೬
ಮಾಡಿ ಗುರುಧ್ಯಾನ ನೋಡಿ ನಿಜಸ್ಥಾನ ಧ್ರುವ
ಹೋಗ ಹೋಗಬ್ಯಾಡಿ ಏಕವಾಗಿ ನೋಡಿ
ಜೋಕೆಯಿಂದ ಕೂಡಿ ಸುಖವು ಸೂರ್ಯಾಡಿ ೧
ನೋಡಿ ನಿಮ್ಮ ಖೂನ ಕೂಡಿ ಸಮ್ಯಜ್ಞಾನ
ಗೂಢ ಗುಹ್ಯ ಧನ ಮಾಡಿರೊ ಜತನ ೨
ಮಾಡಿ ಗುರುಸ್ತುತಿ ಮೂಢ ಮಹಿಪತಿ
ನೋಡಿ ನಿಜವ್ಯಕ್ತಿ ಪಡೆದ ಸದ್ಗತಿ೩

೨೭೨
ಮಾಡಿ ನೀವು ಸತ್ಸಂಗ
ನೋಡಿ ಘನ ಅಂತರಂಗ ಧ್ರುವ
ಸಾರಿದೂರಲಿಕ್ಕೆ ವೇದ
ಅರರಿವದೆನಗಗಾಧ
ದಾರಿದೋರಿಕುಡು ಬೋಧ
ಗುರುಪ್ರಸಾದ ೧
ಬದಿಲಿರಲಿಕ್ಕೆ ಖೂನ
ಇದಕ್ಯಾಕುದ್ದರಿ ಜ್ಞಾನ
ಛೇದಿಸಿ ಅನುಮಾನ
ಭೇದಿಸಿರೊ ಪೂರ್ಣ ೨
ಹಿಡಿಯಲಿಕ್ಕೆ ಸತ್ಸಂಗ
ಓಡಿಬಾವ್ಹಾ ಶ್ರೀರಂಗ
ಮಾಡಿ ಭವಭಯಭಂಗ
ನೋಡುವ ಕೃಪಾಂಗ೩
ಎಲ್ಲಕ್ಕೆ ಶಿಖಾಮಣಿ
ಸುಲಭ ಈ ಸಾಧನಿ
ಸೊಲ್ಲಿಗೆ ಮುಟ್ಟಿದ ಪ್ರಾಣಿ
ಬಲ್ಲವ ಸುಜ್ಞಾನಿ ೪
ಪಿಡಿದು ಸತ್ಸಂಗತಿ
ಕಡಿದು ಹೋಯಿತು ಭ್ರಾಂತಿ
ಪಡೆದ ಸುಖ ವಿಶ್ರಾಂತಿ
ಮೂಢ ಮಹಿಪತಿ ೫

೨೭೩
ಮಾಡಿ ಸಾಧುಸಂಗ ನೋಡಿ ಅಂತರಂಗ ಧ್ರುವ
ಕೇಳಿ ಎನ್ನಮಾತ ಹೇಳುವೆ ನಾ ಹಿತ
ಅಳಿಯದಾರ್ಜಿತ ತ್ವರಿತ ೧
ಕೂಡಿ ಪಥ ಬ್ಯಾಗ ಗೂಢ ರಾಜಯೋಗ
ಮಡಬ್ಯಾಡಿ ಸೋಂಗ ನೋಡಿ ಬ್ರಹ್ಮಭೋಗ೨
ಠಕ್ಕಠವಳಿ ಅಲ್ಲ ಸುಖಸಾಧು ಬಲ್ಲ
ಮಿಕ್ಕವರಿಗೆಲ್ಲ ಸಿಕ್ಕುದು ತಾನಲ್ಲ ೩
ಒಮ್ಮನ ಮಾಡಿ ನಿಮ್ಮೊಳಗ ನೋಡಿ
ಬ್ರಹ್ಮರಸ ಕೂಡಿ ಸುಮ್ಮನೆ ಸೂರ್ಯಾಡಿ ೪
ಇಹ್ಯಪರ ಪೂರ್ಣದಯಾಳು ನಿಧಾನ
ಮಹಿಪತಿ ಪ್ರಾಣ ಗುರು ಶ್ರೀಚರಣ ೫

೫೮೦
ಮಾಡು ಮನವೆ ಸದ್ಭಕ್ತಿ
ನೋಡು ನಿನ್ನೊಳು ಸುಮುಕ್ತಿ ಧ್ರುವ
ನೀಡಿ ತನುಮನ ಧನ
ಕೂಡು ನೀ ಸದ್ಗುರುವಿನ
ನೋಡು ನಿನ್ನೊಳಗೆ ಖೂನ
ಗೂಢ ನಿಜಧನ ೧
ಪಿಡಿದು ಸದ್ಗುರು ಪಾದ
ಬಿಡದೆ ನೋಡು ನೀ ಸದಾ
ತಡೆದು ಕಾಮಕ್ರೋಧ
ಪಡಿಯೋ ಸುಬೋಧ ೨
ಕೂಡಿ ಸದ್ಗುರು ಸುಪಥ
ನೋಡು ನೀ ಸದೋದಿತ
ಮೂಢ ಮಹಿಪತಿ ಮನವೆ
ನಿನ್ನ ಸ್ವಹಿತ ೩

೨೭೪
ಮಾತಿನಂತಲ್ಲನುಭವ ಜ್ಞಾನ ಮರುಳಜನ ಬಲ್ಲವೇನ
ಯತಿಮುನಿಗಳು ಸಾಧಿಸುವ ಖೂನ ಮನೋನ್ಮನದ ಸಾಧನ ಧ್ರುವ
ನುಡಿಜ್ಞಾನಾಡಿ ತೋರಬಹುದು ನಾಡ ಲೋಕದೊಳೆಲ್ಲ
ನಡಿಜ್ಞಾನದೆ ದುರ್ಲಭವದು ಆಡಿ ದೋರಲಿಕ್ಕಿಲ್ಲ
ಗೂಢ ಗುಹ್ಯ ನಿಜಬೋಧಿದು ಒಡೆದ್ಹೇಳುವದಲ್ಲ
ಒಡನೆ ಸದ್ಗುರು ಘನ ದಯದಲಿದು ಪಡೆದವನೆ ತಾಂ ಬಲ್ಲ ೧
ಕಲಿತಾಡುವ ಮಾತಿಗೆ ಸಿಲುಕದ ಮೂಲವಸ್ತುದ ಖೂನ
ನೆಲೆನಿಭವೆ ತಾ ಅಗಮ್ಯಿದು ಬಲು ಸೂಕ್ಷ್ಮಸ್ಥಾನ
ಬಲಿಯದೆ ರೇಚಕ ಪೂರ್ವಿದು ನೆಲೆಗೊಳ್ಳುದು ಸಾಧನ
ನಿಲಕಡ್ಯಾಗದೆ ಕುಂಭಕಲಿದು ಬಲಿಯದು ಗುರುಜ್ಞಾನ ೨
ಸ್ವಾನುಭವ ಸುಖ ಸಾಧಿಸಿ ಅನುದಿನದಿ ನೋಡಿ
ಮನಗೆದ್ದು ಜನಕೆ ಮೋಹಿಸುವ ಅನುಭವ ಹೇಳಬ್ಯಾಡಿ
ಭಾನುಕೋಟಿತೇಜನೊಲಿದು ತಾ ಖೂನಾಗುವ್ಹಾಂಗ ಮಾಡಿ
ದೀನ ಮಹಿಪತಿ ಸ್ವಾಮಿ ಮನಗಂಡು ಮನೋಹರ ಕೊಂಡಾಡಿ ೩

೨೭೫
ಮಾತು ಬಿಡಬೇಕು ನೀತಿ ಹಿಡಿಬೇಕು
ಪ್ರೀತಿಯಿಂದಧ್ಯಾತ್ಮ ನಿಜಸ್ಥಿತಿಗೂಡಬೇಕು ಧ್ರುವ
ಕೋಟಿ ಮಾತಾದೇನು ಕೋಟಿಲಿದ್ದಾವೇನು
ನೋಟ ನೆಲೆಗೊಳದ ಶಾಸ್ತ್ರಪಾಠ ಮಾಡಿನ್ನೇನು ೧
ಪಡಿಯದೆ ಸಂಜೀವ ಗಿಡಮೂಲವ್ಯಾತಕೆ ಸರ್ವ
ನಡಿಯು ಜ್ಞಾನವರಿಯದಿಹ ನುಡಿಯಾತಕೆ ಬೀರ್ವ ೨
ನಡೆನುಡಿ ಒಂದೇ ಮಾಡಿ ದೃಢ ಭಾವನೆ ಕೂಡಿ
ಒಡನೆ ಬಾಹ್ವ ಮಹಿಪತಿ ಒಡಿಯ ಕೈಗೂಡಿ೩

೨೭೬
ಮಾತು ಸವಿಯೋ ಅವರ ಮಾತು ಸವಿಯೋ
ಮಾತಿಲಾತ್ಮಾನುಭವದ ಸ್ಥಿತಿಯಗೂಡಿಸುವರ ಧ್ರುವ
ನಿತ್ಯಾನಿತ್ಯದಿತ್ಯರ್ಥದ ತತ್ವಾರ್ಥಸಾರಾಯ ಬೀರಿ
ಸತ್ಯ ಸನಾತನದ ಸುಪಥವಗೂಡಿಸುವರ ೧
ಚಿತ್ತ ಶುದ್ದವನೆ ಮಾಡಿ ಮತ್ತವಾದ ಪರಬ್ರಹ್ಮಯ
ಎತ್ತ ನೋಡಿದರತ್ತ ಪ್ರತ್ಯಕ್ಷ ತೋರಿಸುವರ ೨
ಸ್ವಾನುಭವಾಮೃತವನು ಜ್ಞಾನಾಂಜನದುಲುಣಿಸಿ
ತಾನೆ ತಾನಾದ ದೀನ ಮಹಿಪತಿ ಸ್ವಾಮಿಯ ೩


ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ
ಅಂಜುವ ಭವದುರಿತ ಹಿಂಗಿಸುವನು ಧ್ರುವ
ಕೇಶವೆಂದೆನಲು ತಾ ಕ್ಲೇಶ ಪರಿಹರಿಸುವನು
ನಾಶಗೈಸುವ ಭವ ನಾರಾಯಣೆನಲು
ಮೀಸಲು ಮನದಲೊಮ್ಮೊ ಮಾಧವೆಂದೆನಲು
ತಾ ಭಾವಿಸುವ ಹೃದಯದೊಳು ಗೋವಿಂದನು
ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ
ದೋಷ ಛೇದಿಸುವ ಮಧುಸೂದನೆನಲು
ಲೇಸುಗೈಸುವ ಜನುಮ ವಾಮನೆನಲು ೧
ಸಿರಿ ಸಕಲ ಪದವೀವ ಶ್ರೀಧರಂದೆನಲು ತಾ
ಹರುಷಗತಿನೀವ ಹೃಷೀ ಕೇಶನೆನಲು
ಪರಮ ಪಾತಕ ದೂರ ಪದ್ಮಾನಾಭೆಂದೆನಲು
ದಾರಿದ್ರ ಭಂಜನ ದಾಮೋದರೆನಲು
ಸುರಿಸುವ ಅಮೃತವ ಸಂಕರುಷಣೆಂದೆನಲು
ಹೊರೆವ ಧರೆಯೊಳು ವಾಸುದೇವೆನಲು
ಪರಿಪರಿಯ ಸಲುಹುವ ಪ್ರದ್ಯುಮ್ನನೆಂದೆನಲು
ಅರಹುಗತಿನೀವ ಅನಿರುದ್ದನೆನಲು ೨
ಪೂರಿಸುವ ಭಾವ ಪರುಷೋತ್ತಮೆಂದೆನಲು ತಾ
ತಾರಿಸುವ ಜನುಮ ಅಧೋಕ್ಷಜೆನಲು
ನರಜನ್ಮುದ್ಧರಿಸುವ ನಾರಸಿಂಹೆಂದೆನಲು
ಕರುಣ ದಯ ಬೀರುವ ಅಚ್ಯುತನೆನಲು
ಜರಿಸುವ ದುವ್ರ್ಯಸನ ಜನಾರ್ದನೆನಲು
ಊರ್ಜಿತಾಗುವುದು ಉಪೇಂದ್ರ ಎನಲು
ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು
ಕರುಣದಿಂದದೊಗುವ ಗುರುಕೃಷ್ಣನು ೩

೬೮೦
ಮುಖ ಶುದ್ಧಿ ಇದೇವೆ ನೋಡಿ ಏಕೋ
ವಿಷ್ಣುವೆಂಬುದು ಕೊಂಡಾಡಿ ಧ್ರುವ
ಜಿಹ್ವೆಗೊಂಡಿತು ಸುಸ್ವಾದ ದಿವ್ಯನಾಮ ಸುರಸ್ವಾದ
ಭವನಾಶಗೈಸಿತು ಗುರುಬೋಧ ಸವಿದೋರಿತು ಗುರುಪ್ರಸಾದ ೧
ಸ್ವಾನುಭವದ ಸವಿಸುಖ ಏನೆಂದ್ಹೇಳಲಿ ಕೌತುಕ
ಮನಕಾಯಿತು ಹರುಷ ಅನೇಕ ಧನ್ಯ ಧನ್ಯಗೈಯಿತು ಜಿಹ್ವೆಮುಖ ೨
ಮುಖ ಶುದ್ಧಿ ಮಹಿಪತಿಗಿದೆ ನೋಡಿ ಏಕೋಚಿತ್ತ ಸುಸ್ಮರಣಿಯ ಮಾಡಿ
ಸುಖದೋರಿತು ಘನಬೆರೆದಾಡಿ ಅಖಿಳದೊಳಗಿದೆ ನಿತ್ಯ ಮಾಡಿ೩

೪೭೭
ಮುಖ್ಯಬೇಕು ಗುರುಭಕ್ತಿಗೆ ತಾ ಸದ್ಭಾವನೆ ಸಪ್ರೇಮ
ಸಿಕ್ಕಿ ಬಾಹ್ವ ಸಾಧಿಸಿ ತನ್ನೊಳು ಶ್ರೀಗುರುಸರ್ವೋತ್ತಮ ಧ್ರುವ
ಸೋಹ್ಯ ತಿಳಿದರೆ ಸಾಧಿಸಿಬಾಹುದು ಶ್ರೀಗುರುವಿನ ಶ್ರೀಪಾದ
ದೇಹ ನಾನಲ್ಲೆಂಬು ಭಾವನಿ ಬಲಿವುದು ತಾ ಸರ್ವದಾ
ಗುಹ್ಯಮಾತು ಗುರುತಕೆ ಬಾಹುದು ಸದ್ಗುರು ಸುಪ್ರಸಾದ
ಬಾಹ್ಯಾಂತ್ರದೊಳು ತಾನೆ ತಾನಾಗುವ ಬೋಧ ೧
ಕೀಲು ತಿಳಿದರೆ ಕಿವಿ ಸಂದಿಲ್ಯಾದೆ ಮೂಲಮಂತರದ ಖೂನ
ಕೂಲವಾದರೆ ಗುರುದಯದಿಂದಲಿ ಕೇಳಿಸುವದು ಪೂರ್ಣ
ಮ್ಯಾಲೆ ಮಂದಿರದೊಳು ತಾ ತುಂಬೇದ ಥಳಥಳಿಸುವ ವಿಧಾನ
ಶೀಲ ಸುಪಥ ಸಾಧಿಸಿ ಸದ್ಗತಿ ಸಾಧನ ೨
ಟೂಕಿ ಬ್ಯಾರ್ಯಾದೆ ಏಕೋಭಾವದಿ ಕೇಳಿರೊ ನೀವೆಲ್ಲ
ಹೋಕು ಹೋಗಿ ಹುಡುಕಿದರೆ ತಾ ಎಂದಿಗೆ ತೋರುವದಲ್ಲ
ನಾಲ್ಕು ಶೂನ್ಯ ಮೆಟ್ಟಿನೋಡೇಕಾಕ್ಷರ ತಾ ಸವಿಸೊಲ್ಲ
ಜೋಕೆಯಿಂದ ಜಾಗಿಸಿಕೊಡುವಾ ಮಹಿಪತಿಗುರು ಮಹಾಮಲ್ಲ ೩

೨೭೭
ಮುತ್ತು ಕೊಳ್ಳಿರೋ ಉತ್ತುಮರೆಲ್ಲ ಧ್ರುವ
ಜ್ಞಾನ ಸಮುದ್ರಲಿನ್ನು ಧ್ಯಾನವೆಂಬ ಸಿಂಪಿನೊಳು
ಘನಗುರುಕರುಣದ ಮಳಿಯಾದ ಮುತ್ತು ಕೊಳ್ಳಿರೋ ೧
ಪಿಂಡ ಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು
ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ ೨
ಸಾಧುಸಜ್ಜನರೆಂಬ ಮುತ್ತಿನ ಜೋಹರೇರ ಕೈಯ
ನಿಜಹಸ್ತಸ್ಪರ್ಶವಾದು ನೀವು ಮುತ್ತು ಕೊಳ್ಳಿರೋ ೩
ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ
ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ ೪
ತನುಮನಧನವನರ್ಪಿಸಿಕೊಂಡಿಹ ಮುತ್ತು
ಮಹಿಪತಿ ಇಹರಪವಸ್ತು ಮುತ್ತು ಕೊಳ್ಳಿರೋ ೫

೨೭೮
ಮೈಹೋಳು ನೀ ಬಂದು ಮೈಯ ಮರಿಯ ಬ್ಯಾಡವೋ
ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ಧ್ರುವ
ಮಾಯಾ ಮೋಹದೊಳು ಸಿಲ್ಕಿ ದೇಹ್ಯ ಭ್ರಮೆಯಗೊಂಡು
ಕಾಯ ಸೌಖ್ಯಕೆ ಬಾಯಿದೆರಿಯಬ್ಯಾಡವೋ ೧
ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಪರಿಯಲಿನ್ನು
ಕಣ್ಣು ಗೆಟ್ಟು ಕರುಡನಂತೆ ದಣಿಯಬ್ಯಾಡವೋ ೨
ನಾನು ನೀನು ಎಂಬ ಭಾವ ಮಹಿಪತಿಗಳೆದು
ಭಾನುಕೋಟಿತೇಜನಂಘ್ರಿ ಬೆರೆದು ಮನಕೂಡವೂ ೩

೪೭೮
ಯಥಾದೇವೊ ತಥಾ ಗುರೌ
ಶ್ರುತಿ ಹೇಳಿದ ಸನ್ಮತಲಿರ್ಯೊ ಧ್ರುವ
ವೃಥಾ ಅಭಾವ ನೀ ಹಿಡುವರೆ
ಸ್ವತ:ಸಿದ್ಧವ ತಾಂ ಬಿಡುವರೆ
ಸತ್ಸಂಗದಲಿ ನೋಡಿನ್ನಾರೆ
ಚಿತ್ಸುಖ ಹೊಳೆವರು ಕಣ್ಣಾರೆ ೧
ಮುಗಿಲಿಗೆ ಮತ್ತೆ ಮುಗಿಲುಂಟೆ
ಹಗಲಿಗೆ ಹಗಲಾಗುದುಂಟೆ
ಜಗ ಇಹುದಕೆ ಜಗಮುಂಟೆ
ಹೀಗಾದ ಮ್ಯಾಲೆ ವಸ್ತು ಎರಡುಂಟೆ ೨
ಅನುಭವಕಿದರಿಟ್ಟು ಬಾಹುದು
ಖೂನ ಹೇಳವ್ಯಾವು ನೋಡು ವೇದ
ದೀನ ಮಹಿಪತಿಗಿದೆ ಬೋಧ
ಭಾನುಕೋಟಿತೇಜನೊಂದೇ ತಾನಾದ ೩

೧೨೨
ಯಾಕೆ ಬಾರನೇ ರಂಗಯ್ಯ ಯಾಕೆ ಬಾರನೇ |
ಲೋಕವೀರೇಳು ವ್ಯಾಪಕ ಸುಖವವಿರಲು ಮನೆಗೆ ಧ್ರುವ
ಸ್ಮರನ ಬಾಣದ ಮೊನಿಗೆ | ಗುರಿಯಮಾಡಿ ತಾಯೆನೆಗೆ |
ಸಾರುವರೇ ಎನ್ನಗಲಿ ತರಳೆಯಂದರುವುತಲಿ ೧
ಕಡೆಗೆ ಕರುಣಾಳು ನಮ್ಮ ವಡಿಯಾನೊಳೂ ತಪ್ಪಿಲ್ಲಮ್ಮಾ |
ಪೊಡವಿಲೆ ಪೆಣ್ಣೊಡಲೆ ವಿಡಿಯಬಾರದು ಬಾಲೆ ೨
ಎನ್ನ ಮನಾ ಎನೊಲ್ಲದು ಕಣ್ಣಿಗೆ ನಿದ್ರೆಬಾರದು |
ಇನ್ನು ಬಾರದೇನೆದಯಾ ಸನ್ನುತ ಮಹಿಪತಿ ಪ್ರೀಯಾ ೩

೧೨೩
ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ
ಏಕಾಕಾರದಲೆನ್ನ ಹೊರಿಯಲಾರೇನಯ್ಯ ಧ್ರುವ
ನೀರ ಥೆರಿಯ ಕಡಿದು ಹೃದಯದಕರ ಚರಣದಿ
ಭರದಿ ಮುಣಗಿ ನೀರ ನಡಿಗಿ ದಣದೇನಯ್ಯ ೧
ವಾರಿಧಿಮಥನದಿ ಮೇರುಪರ್ವತವನ್ನು
ಭಾರ ಬೆನ್ನಲಿ ಪೊತ್ತು ಬೆವರಿ ದಣಿದೇನಯ್ಯ೨
ಧರಿಯ ಕದ್ದಸುರನ ಕೋರೆದಾಡಿಂದ ಸೀಳಿ
ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ ೩
ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ
ಕರಳೊನಮಾಲಿಯ ಧರಿಸಿ ದಣಿದೇನಯ್ಯ ೪
ಧರಿಯು ಮೂರಡಿ ಮಾಡಿ ಎರೆದು ದಾನವ ಬೇಡಿ
ನರನ ಪಾತಾಳಕೊತ್ತಿ ಬಳೆದು ದಣಿದೇಯನಯ್ಯ ೫
ಹಿರಿಯಳ ಶಿರವನು ಹರಿದು ಕತ್ತರಿಸಿನ್ನು
ಕರದಲ್ಲಿ ಪರಶುವ ಪಿಡದು ದಣಿದೇನಯ್ಯ ೬
ಶಿರಗಳ ಚೆಂಡಾಡಿ ರಾವಣೀಂದ್ರ ಜಿತನ
ಶರದಿ ಕುಂಭಕರ್ಣನ ಎಚ್ಚದು ದಣಿದೇನಯ್ಯ ೭
ಷತುರುಗಳ ಕಾಯಿದು ಉರುಗನ ತುಳದಿನ್ನು
ಗಿರಿಯ ಬೆರಳಲೆತ್ತಿ ತೋರಿ ದಣಿದೇನಯ್ಯ ೮
ಬರಿಯ ಬತ್ತಲೆ ಅಗಿ ಅರಿಯದೆ ತ್ರಿಪುರವ
ಸೇರಿ ನಾರೇರ ವ್ರತವಳಿದು ದಣಿದೇನಯ್ಯ ೯
ಏರಿ ಕುದುರಿಯ ತಿರುಹು ರಾಹುತನಾಗಿ
ಪರಿ ಪರಿ ರೂಪವ ತಾಳಿ ದಣಿದೇನಯ್ಯ ೧೦
ಸರ್ವಾಪರಧವು ಕ್ಷಮೆಯಿಂದ ಮಹಿಪತಿಯ
ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ ೧೧

೫೯೩
ಯುಕ್ತಿಯಿಂದ ಭಕ್ತಿ ಮಾಡಲಿಕ್ಕೆ ಶಕ್ತನಲ್ಲ ನಾ
ಮುಕ್ತಿಯೋಗ್ಯ ಮಾಡೊ ಭಾವಭೋಕ್ತ ಕೃಪಾನಿಧೆ ಧ್ರುವ
ಧ್ಯಾನ ಮೌನ ಸ್ನಾನ ಸಂಧ್ಯಾಖೂನ ಗುರುತು ಅರಿಯೆ ನಾ
ನ್ಯೂನ ಪೂರ್ಣ ನೋಡದೆನ್ನ ರಕ್ಷಿಸೋ ದಯಾನಿಧೆ ೧
ಹೀನ ದೀನ ಜ್ಞಾನಶೂನ್ಯ ದಾನ ಧರ್ಮ ಅರಿಯೆ ನಾ
ನೀನೆ ಕಾಯಬೇಕು ಎನ್ನ ಕರುಣಾ ಕೃಪಾನಿಧೆ ೨
ದುರುಳ ದುರ್ವಾಸನೆಯ ದುರಾಚಾರಿ ದುರಾತ್ಮ ನಾ
ತರಣೋಪಾಯ ದೋರಿಸೆನ್ನ ಹೊರಿಯೊ ದಯಾನಿಧೆ ೩
ಅರುಹು ಕುರುಹು ನರಿಯ ದೀಹ್ಯ ಮರುಳಮಂಕ ತರಳನಾ
ಕರವ ಪಿಡಿಯ ಧರೆಯೊಳಿನ್ನು ತಾರಿಸೊ ದಯಾನಿಧೆ ೪
ಆಶಾಪಾಶದೊಳು ವಾಸವಾದ ದೋಷ ರಾಶಿ ನಾ
ಭಾಸಿ ಪಾಲಿಸು ಪುಣ್ಯ ಪ್ರಕಾಶಿಸೊ ದಯಾನಿಧೆ ೫
ಏಸು ಜನ್ಮ ಮೋಸಹೋಗಿ ಘಾಸಿಯಾದ ಜೀವ ನಾ
ದಾಸರೊಡನೆ ಕೂಡಿಸೊ ಭಾಸ್ಕರ ದಯಾನಿಧೆ ೬

ಯೋಗದರ್ಶನ
೫೮೫
ಎಂತುಗೂಡುವದೊ ನಿಜ ಹರಿಯೆ ಧ್ರುವ
ನಿದ್ರ್ವಂದ್ವದಲಿದ್ದ ಒಂದೆ ವಸ್ತುವೆ ನೀನು
ದ್ವಂದ್ವಾಭೇದದ ಸಂದೇಹಿ ನಾನು
ಅಂದಿಗಿಂದಿಗೆ ಪೂರ್ಣ ಎಂದೆಂದಿಗೆ ನೀನು
ಹೊಂದಲರಿಯದಾ ತಿಮಿರಾಂಧ ನಾನು ಹರಿ ೧
ನಿಃಪ್ರಪಂಚದ ನಿರ್ಮಳ ನಿರ್ಗುಣನು ನೀನು
ಪ್ರಾಪಂಚಿಕ ಪರಮ ನಾನು
ಕೃಪೆಯುಳ್ಳ ಕರುಣಾಕಾರ ಪರಿಪೂರ್ಣ ನೀನು
ಕಪಟ ಕುಟಿಲಲಿಹ ಪ್ರಾಣಿ ನಾನು ಹರಿ ೨
ಮಹಿಗೆ ಪತಿಯಾದ ಸ್ವಾಮಿ ಶ್ರೀಪತಿ ನೀನು
ಸೋಹ್ಯ ತಿಳಿಯದಾ ಮಂದಮತಿ ನಾನು
ಸಾಹ್ಯ ಮಾಡುವ ಸಹಕಾರ ಸದ್ಗತಿ ನೀನು
ಮಹಾಮಹಿಮೆಯುಳ್ಳ ಮೂರುತಿ ನೀನು ೩

೧೨೪
ರಕ್ಷಿಸೊ ಸ್ವಾಮಿ ನೀ ಪಕ್ಷಿ ಸುವಾಹನ
ಭಿಕ್ಷೆ ಸುನೀಡೊ ನೀ ಲಕ್ಷ ಸುಸಾಧನ
ಅಕ್ಷಯಾನಂದ ನೀ ಲಕ್ಷುಮಿ ಜೀವನ
ಪಕ್ಷ ನೀ ಪ್ರಾಣಕ ಈಕ್ಷಿಸಿದವನ ೧
ಸೃಷ್ಟಿಗಧಿಕ ನೀ ವಿಷ್ಣು ಜನಾರ್ಧನ
ಕಷ್ಟ ನೀ ಹಿಂಗಿಸೊ ದುಷ್ಟರ ಮರ್ದನ
ಶಿಷ್ಟರ ಪಾಲಕ ಶ್ರೇಷ್ಠ ನಾರಾಯಣ
ದೃಷ್ಟಿಸಿ ನೋಡೊ ನೀ ಕೃಷ್ಣ ಕೃಪಾಘನ೨
ಈಶನೆಂದರಿಯದೆ ದೋಷದ ರಾಶಿ ನಾ
ವಾಸನೆ ಪೂರಿಸೊ ದಾಸರ ದಾಸ ನಾ
ಏಸು ತಾ ಜನ್ಮಕೆ ಬಂದು ಸೂಸಿದೆನೊ
ಹೇಸಿತು ಜೀವನ ಸ್ಮರಿಸಬೇಕೆಂದು ನಾ ೩
ನಿಮ್ಮನೆ ನೋಡಬೇಕೆಂದು ಬಂದೆ ನಾ
ಘಮ್ಮನೆ ಪೂರಿಸೊ ಭಾವನೆ ಕಂದನ
ತಮ್ಮನೆ ಬೇಡಿಕೊಂಬುದು ತಾ ವಂದನ
ಅಮ್ಮ ನಮ್ಮಪ್ಪನೆ ಬಂಧು ನೀ ಎಂದೆ ನಾ ೪
ಕಾಣದ ಪಾಮರ ಹೀನ ಸೂಕರ
ಏನು ತಾ ಬಲ್ಲದು ಲೂನದ ಸೂಕರ
ನೀನೆ ದಯಾನಿಧೆ ಜ್ಞಾನದ ಸಾಗರ
ನ್ಯೂನ ನೋಡದೆ ತಾರಿಸೊ ಶ್ರೀಧರ ೫
ಪಾರ ನೀ ಗೆಲಿಸೊ ದ್ವಾರಕಿನಾಥನೆ
ಸಾರಿ ನೀ ಬೋಧವ ತಾರಿಸೊ ದಾತನೆ
ತೋರಿ ನೀ ಪಾದವ ಬೀರು ಸ್ವಹಿತನೆ
ಸಿರಿ ಲೋಲನೆ ನೀಕರುಣಿಸಿ ಮಾತನೆ ೬
ಪಾಲಿಸೊ ಪ್ರಾಣವ ಬಾಲಮುಕುಂದನೆ
ಲಾಲನೆ ನೋಡು ಗೋಪಾಲ ಗೋವಿಂದನೆ
ತ್ಯಕ್ತ ನಾ ತಾಳು ನೀ ಸಚ್ಚಿದಾನಂದನೆ
ಕೀಲನೆ ಹೇಳು ನೀ ಭಕ್ತಿಯ ವಂದನೆ ೭
ದೇವರ ದೇವನೆ ಕಾವ ಕರುಣನೆ
ಜೀವದ ಜೀವ ನೀ ಸ್ವಾಮಿ ಸರ್ವೇಶನೆ
ಭಾವದ ಭಾವ ನೀ ಸಾವಿರ ನಾಮನೆ
ಸೇವೆಗೆ ಯೋಗ್ಯನ ಮಾಡು ಸರ್ವೋತ್ಮನೆ ೮
ಹಿಂಡ ದೈವಕೆ ಪ್ರಚಂಡ ಪರೇಶನೆ
ಗಂಡು ಹೆಣ್ಣಿಗೆ ತಾ ಒಬ್ಬ ಸರ್ವೇಶನೆ
ಮಂಡಿ ಮರೆಯಲಿಹನೆ ಮಹೇಶನೆ
ಕಂಡುಕಾಂಬ ಸುಖದೋರು ದೇವನೆ ೯
ವೇದಕ ನಿಲ್ಕದಾಭೇದ್ಯ ಪುರುಷನೆ
ಸ್ವಾದಕೆ ಸಿಲ್ಕದ ಸಾರ ಸುರಸನೆ
ಅದಿಗಿಂದತ್ತಲ್ಯಾನಾದಿ ನಿರ್ವಿಶೇಷನೆ
ಹಾದಿದೋರಿಕೊಡೊ ಭಕ್ತಿಗೊಂದೀಶನೆ ೧೦
ಮಹಿಪತಿಗೆ ನೀ ಸ್ವಾಮಿ ಶ್ರೀನಾಥನೆ
ಬಾಹ್ಯ ಅಂತ್ರಕೆ ನೀನೆವೆ ಸುದಾತನೆ
ಸೋಹ್ಯದೋರಿಕೊಡೊ ಸಾಹ್ಯವುಳ್ಳಾತನೆ
ತ್ರಾಹಿಯಂದವನ ಮಾಡು ಸನಾಥನೆ ೧೧

೧೨೬
ರಾಮ ಸಲಹಯ್ಯ ಪುಣ್ಯನಾಮ ಶ್ರೀ ರಾಘವೇಂದ್ರ
ಪೂರಿತಕಾಮ ನೇಮ ಶ್ಯಾಮ ಪರಮಗುಣ ರತ್ನಧಾಮ ಧ್ರುವ
ವನಜಾಂತಕ ಕುಂದರದನ ಅನುಪಮ ಸುಂದರವದನ
ರಣದಲಿ ಜಿತದಶವದನ ಅನಂತ ಮದನಲಾವಣ್ಯ ಸದನ ೧
ಕರುಣ ಶರಣ ಭರಣ ಭರಣ ಧರಣೋದ್ಧಾರಣ
ಸ್ಪುರಣ ಕಿರಣದೊರಣ ಚರಣ ಅರುಣಾಂಬುಜಾಲಯರಮಣ ೨
ವೀರಗುಣಗಂಭೀರ ಕ್ರೂರಾಸುರ ಸಂಹಾರ
ಶೂರ ಜನ್ಮವಿದೂರ ಮಹಿಪತಿ ಧೀರ ಕೃಷ್ಣೊಡಿಯ ಉದಾರ ೩

೧೨೫
ರಾಮರಾಮೆನ್ನಿರೋ ಮುಖ್ಯ ತಾ ಕಾರಣ
ನೇಮದಿಂದಾಯಿತು ಅಹಲ್ಯೋದ್ದರಣ
ರೋಮರೋಮಕೆ ತಾ ಪ್ರೇಮ ಬಾಹಗುಣ
ನಾಮಸ್ಮರಿಸಿ ದಶರಥಾತ್ಮಜನ ೧
ಒಮ್ಮೆ ಸ್ಮರಿಸಿರೊ ರಾಮರಾಮೆಂದು ತಾ
ಸುಮ್ಮನೆ ಬಾಹುದು ಸಾರದ ಅಮೃತ
ತಮ್ಮನ ಜೀವ ಪಡೆದ ಸಂಜೀವ ತಾ
ಝಮ್ಮನೆ ಹಾದಿಮಾಡಿತು ಸಮುದ್ರ ತಾ ೨
ರಾಮರಾಮೆನ್ನಲು ಸಾಮರಾಜ್ಯಹುದು
ನೇಮದಿಂದೆನ್ನಿರೊ ಶ್ರಮ ನೀಗೋಗುದು
ನಾಮ ಕೊಂಡಾಡಲು ರಾಮನಂತಾಹುದು
ಸುಮ್ಮನೆಯಾದರೆ ತಾಮಸ ಬಾಹುದು ೩
ರಾಮರಾಮೆಂದರೆ ಬ್ರಹ್ಮರಾಕ್ಷಸ ತಾ
ಸುಮ್ಮನೆ ಒಡಿಹೋಗುದು ತಾತ್ಕಾಲತಾ
ನಾಮ ಸೇವಿಸಲು ಸುಮ್ಮಲ್ಹೊಳೆದು ತಾ
ಝಮ್ಮನೆ ಬಾಹುದು ಭಾಗ್ಯ ಕೈಕೊಟ್ಟು ತಾ ೪
ರಾಮನಾಮವೆ ತಾ ಪಾಪಕೆ ತಾ
ನಾಮ ತೇಲಿಸಿತು ನೀರೊಳು ಪರ್ವತ
ನೇಮದಿಂದಾದರ ಭಕ್ತರರಹುತಾ
ಸೀಮಿ ಕೈಕೊಟ್ಟಿತು ಭಕ್ತಗೆ ಶಾಶ್ವತ ೫
ನಾಮವೆ ಕಪಿಕುಲವ ತಾರಿಸಿತು
ಸೋಮಶೇಖರಗೆ ತಾನೆ ಪ್ರಿಯಾಯಿತು
ಗ್ರಾಮನಂದಿಯಲಿ ನೇಮಪೂರಿಸಿತು
ರೋಮರೋಮೆಲ್ಲ ಭರತಗ ಸುಖವಾಯಿತು ೬
ಸ್ವಾಮಿ ಶ್ರೀರಾಮನಾಮ ಸುಅಮೃತ
ಕಾಮಪೂರಿಸುವ ಕಾಮಧೇನುವೆ ತಾ
ನೇಮದಿಂದಾಗುವ ಮಹಿಪತಿಗಿಂತ
ರಾಮರಾಜ್ಯವೆ ಎನ್ನೊಳಗಾಗೆದ ತಾ ೭

೪೭೯
ಲೇಸು ಲೇಸಾಯಿತು ಇಂದು ನೋಡಿ
ಭಾಸ್ಕರ ಪುಣ್ಯ ಪ್ರಭೆಯ ಕೂಡಿ ಧ್ರುವ |
ಪುಣ್ಯ ಎದುರಿಟ್ಟು ಬಂದು ಮುಂದೆ
ಕಣ್ಣಾರೆ ಕಂಡು ತ್ರಾಹಿ ಎಂದೆ
ಸಣ್ಣ ದೊಡ್ಡದರೊಳು ವಸ್ತು ಒಂದೆ
ಬಣ್ಣ ಬಣ್ಣಾ ಗೀಹ್ಯದರಿಂದೆ ೧
ಹೇಳಬಾರದಯ್ಯ ನಿಜವರ್ಮ
ಕೇಳಿ ಶ್ರೀಸದ್ಗುರು ಪಾದಧರ್ಮ
ಅಳಿಯಿತು ನೋಡಿ ಪೂರ್ವ ಕರ್ಮ
ಹೊಳಿಯಿತೆನ್ನೊಳು ಘನ ಬ್ರಹ್ಮ ೨
ಸೋಹ್ಯ ದೋರಿ ಕೊಟ್ಟೆನಗಿಂದು
ಮಹಿಪತಿಸ್ವಾಮಿ ತಾನೆ ಬಂದು
ಈಹ್ಯಪರ ಪೂರ್ಣ ಕೃಪಾಸಿಂಧು
ಸಾಹ್ಯ ಮಾಡುತೀಹ್ಯ ದೀನ ಬಂಧು ೩

೪೮೦
ಲೇಸು ಲೇಸಾಯಿತು ನೋಡಿ ಭಾಸ್ಕರನ ಕೂಡಿ ಧ್ರುವ|
ಲೇಸು ಲೇಸಾಯಿತು ನೋಡಿ ಸ್ವಸುಖಗೂಡಿ
ಆಶೆ ಪೂರಿಸಿದ ನೋಡಿ ಭಾಸಿ ನೀಡಿ ೧
ಶಿರದಲಿ ಅಭಯನಿಟ್ಟ ಹರುಷವ ಕೊಟ್ಟ
ಹರಿದು ಭವಜೀವ ಸುಟ್ಟ ಸ್ಮರಣಿಯೊಳಿಟ್ಟ ೨
ಮಾಯದ ಮೊನೆ ಮುರಿದ ಭಯ ಹರಿದ
ಸಾಯೋಜ್ಯಪದ ತೋರಿದ ದಯ ಬೀರಿದ ೩
ಸದ್ವಾಕ್ಯವೆ ಬೋಧಿಸಿದ ಸದ್ಗುಣದ
ಸದ್ಭಾವ ಭಕ್ತಿ ತೋರಿದ ಸದ್ಗೈಸಿದ ೪
ಅನುಭವ ಸುಖದೋರಿದ ಸ್ವಾನುಭವದ
ಮನವಿಗ್ಯೆನುಕೂಲಾದ ತಾನೆ ತಾನಾದ ೫
ಸವಿಸುಖವನುಣಿಸಿದ ಸುವಿದ್ಯದ
ರವಿ ಕೋಟಿ ಪ್ರಭೆಯ ತೋರಿದ ಅವಿನಾಶದ ೬
ತರಳ ಮಹಿಪತಿ ಪ್ರಾಣ ಗುರುನಿಧಾನ
ಹರುಷಗೈಸಿದ ಜೀವನ ಪರಮಪಾವನ ೭

೪೮೧
ಲೇಸು ಲೇಸಾಯಿತು ಭಾಸ್ಕರ ಗುರು ಕೃಪೆ
ಲೇಸು ಲೇಸಾಯಿತು ಮಾ ಧ್ರುವ|
ಹಸ್ತವಿಡಲು ಎನ್ನ ಮಸ್ತಕದ ಮೇಲೆ
ಸ್ವಸ್ತಹೊಂದಿತು ಮನ ನಿಶ್ಚಯಲಿ
ವಿಸ್ತಾರದೋರುವ ವಸ್ತು ಇದೆಯೆಂದು
ವಿಸ್ತರಿಸೆನಗಿನ್ನು ದೋರಿತು ಮಾ ೧
ಸೋಂಕಲು ಶ್ರೀಗುರುಪಾದ ಎನಗಿನ್ನು
ಬೇಕಾದ ಸವಿ ಸುಖಗೊಟ್ಟಿತು ಮಾ
ಸಕಲೋತ್ತಮನಾದ ಏಕಾಕ್ಷರ ಬ್ರಹ್ಮ
ಏಕೋಮಯವಾಗಿದೋರಿತು ಮಾ ೨
ನೀಡಲು ನಿಜ ಸುಜ್ಞಾನದ ಭಿಕ್ಷೆಯು
ಓಡಿತು ಭವ ದುಷ್ಕಾಳವು ಮಾ
ಕೂಡಿತು ಸಮರಸವಾಗಿ ಮಹಿಪತಿ ಜೀವ
ಒಡಿಯನ ಚರಣದಂಗುಷ್ಠದಲಿ ಮಾ ೩

Leave a Reply

Your email address will not be published. Required fields are marked *