Categories
ರಚನೆಗಳು

ಗುರು ಪ್ರಾಣೇಶ ವಿಠಲರು

೨೯೭
ಶ್ರೀ ಸತ್ಯಪರಾಯಣ ಸ್ವಾಮಿಗಳ ಸ್ತುತಿ
ಕಂಗಳು ದಣಿಯ ನೋಡೆಲೆ ಮನವೆ |ಮಂಗಳಾಂಗ ಸತ್ಯಪರಾಯಣ ಗುರುಗಳ ಪ
ಹಿಂದಿನ ಜನುಮದಿಂದ | ಬಂದ ಪಾಪಂಗಳ ||ಇಂದು ತಮ್ಮ ದರುಶನ | ದಿಂದ ಕಳದಾ ೧
ನಂದತೀರ್ಥ ಶಾಸ್ತ್ರ | ಸಿಂಧುವಿಗೆ ಪೂರ್ಣ ಚಂದ್ರಾ |ನಂದದಲೊಪ್ಪುವ ಗುಣ | ಸಾಂದ್ರರ ಪದಂಗಳ ೨
ವರಸೀತಾರಾಮ ಪದ | ಸರಸಿಜಕೆ ಮಧುಪಾ ||ಗುರುಪ್ರಾಣೇಶ ವಿಠಲಾ ನಿರಸಿಹ ಹೃದಯದಿ ೩

೨೯೫
ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ
ತಂಗಿನೀ ಕೇಳಿದ್ಯಾ ರಾಘವೇಂದ್ರಾ | ಘಂಗಳ ಕಳದು ಸುಖಂಗಳ ಕೊಡುವದು || ತಂಗಿ ನೀ ಕೇಳಿದ್ಯಾ ಪ
ಶ್ರೀ ಪೂರ್ಣಬೋಧರ ಮತಾಪಯೋಬ್ದಿಗೆ ಚಂದ್ರ |ತಾಪಸೋತ್ತಮರ ದಿವ್ಯಾಪಾರ ಮಹಿಮೆಯ ೧
ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು |ಸಂಗೀತ ಮುಖದಿ ಜನಂಗಳು ಪಾಡುವದು ೨
ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದು |ಸುವಿವೇಕ ಮನದಿಂದ ಕವಿಜನ ಪಾಡುವದು ೩
ವಂಧ್ಯಾಸ್ತ್ರೀಯರು ಬಂದು ನಿಂದು ಆರಾಧಿಸೆ |ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ ೪
ಗುರು ಪ್ರಾಣೇಶ ವಿಠಲಾ ಸರುವ ಕಾಮಿತಾರ್ಥವಾ |ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ ೫

೨೮೪
ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆ |ನಂದ ಕೊಡು ಈ ಭಕ್ತಗೆ ||ಪೊಂದಿಕೊಂಡಿಹ ನಿನ್ನನೆಂದು ನಾ ಪ್ರಾರ್ಥಿಸುವೆ ಮಂದರೋದ್ಧರ ಮುಕುಂದಾ | ನಂದಾ ಪ
ಅನವರತ ನಿನ್ನ ಧೇನಿಸುವಂತೆ ಮನವು ಬಹು ಅನುಕೂಲವಾಗಿರಲಿ |ಅನಘ ನಿನ್ನಂಘ್ರಿಗಳ ಪೂಜಿಸುವದಕೆ ಕರಗಳನುಕೂಲವಾಗಿರಲಿ ||ಅನಿಮಿಷಾರಾಧ್ಯ ನಿನ್ನ ಕೀರ್ತಿ ಪದಕೆ ಜಿಂಹೆ ಅನುಕೂಲವಾಗಿರಲಿ |ದನುಜಕುಲ ವೈರಿ ನಿನ್ನವರಡಿಗೆ ನಡಿಯೆ ಪದವನುಕೂಲವಾಗಿರಲೀ ಬರಲಿ೧
ಇವನ ಕವನಾ ಕೇಳಿ ಹರುಷಯುತರಾಗಿ ಸತ್ಕವಿಗಳೂ ತಲಿದೂಗಲಿ |ಪವನ ಮತದಲಿ ಪೇಳಿದಂತೆ ಅದನನುಸರಿಸಿ ಕವಿತೆಯು ಬಂದೊದಗಲಿ ||ನವರಾಗಗಳಿಂದೊಪ್ಪಿ ಲಘು ದೀರ್ಘ ಮೊದಲು ಮರ್ಮವ ತಿಳಿದು ಪೇಳುತಿರಲಿ |ಭುವನದೊಳಗುಳ್ಳ ಸುಜ್ಜನರು ಶೋಧಿಸಿ ಆಶುಕವಿಯೆಂದು ಕರೆಯುತಿರಲಿ | ಮೆರೆಯಲಿ ||
ಚಿರಕಾಲ ಬಾಳಿ ಬಹು ಕೀರ್ತಿಯುತನಾಗಿ ಈ ಧರಿಯೊಳಗೆ ಸುಖಿಸುತಿರಲಿಪರಮ ಭಕುತಿಯು ಪೆಚ್ಚಿ ಸೋತ್ತುಮರ ಪದಗಳಿಗೆ ಎರಗಿ ಕರುಣವ ಪಡೆಯಲಿ ||ಮರೆಯದಲೆ ಇಹಪರದಿ ಸುಖಗಳನು ಕೊಟ್ಟು ಶ್ರೀ ಹರಿಯೆ ಪೊರೆಯಂದಾಡಲಿ |ಮರುತಾಂತರ್ಯಾಮಿ ಗುರು ಪ್ರಾಣೇಶ ವಿಠಲನೆ ಶರಣ ಜನ ಕಾಮಧೇನೂ ನೀನು ೩

೨೯೬
ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು |ಸರ್ಪಶಯನನ ದೂತಾ ||ಇಪ್ಪತು ಒಂದು ಕುಭಾಷ್ಯ ಮುರಿದ | ರಾ ಮ |ತ ಪ್ರವರ್ತಕ ರಾಘವೇಂದ್ರ ಮುನಿಪ ಮಹಾ ಪ
ಪ್ರತಿ ವರುಷಕೆ ಬಂದು ಸನುತಿಸಿ ಪೋಗು ಎಂದು |ನತ ಸ್ವಪ್ನದಲಿ ನೀ ಬಂದೂ ||ಹಿತದಿಂದ ಪೇಳಲು ರತನಾಗಿ ಧನದಿ ಮ |ರತು ಬಿಟ್ಟೆ ನಿಮ್ಮನು ಯತಿಕುಲೋತ್ತಮ ಇಂಥಾ ೧
ಸ್ನಾನ ಸಂಧ್ಯಾನ ಸುಜಪತಪ ವ್ರತಹೋಮ |ಮೌನ ಮಾರ್ಗಗಳರಿಯೆ ||ಜ್ಞಾನಿಗಳಾನು ಸಂಧಾನ ಪೂರ್ವಕ ಪೂಜೆ |ಯಾನು ಮಾಡದೆ ದುಷ್ಟ ಮಾನವರೊಳಗಿದ್ದೆ ೨
ಏಸು ಜನ್ಮದಿ ಬಂದಾ ದೋಷವ ಕಳದು ವಿ |ಶೇಷ ಸುಖವ ಕೊಡುವಾ ||ಈ ಸುವಾರ್ತಿಯ ಕೇಳಿ ಮೊರೆಹೊಕ್ಕೆ ಗುರು ಪ್ರಾ ||ಣೇಶ ವಿಠಲನ ದೂತಾ ಮತಪ್ರೀತಾ ೩

೨೯೪
ಶ್ರೀ ಪ್ರಾಣೇಶದಾಸಾರ್ಯರ ಸ್ತುತಿ
ತೆರಳಿದರು ಪರಮ ತೋಷದಲಿ ಹರಿಪರಕೆ |ಹರಿಪ್ರೀಯರಾದ ಪ್ರಾಣೇಶದಾಸರು ತ್ವರದಿ ಪ
ನಿರುತದಲಿ ಹರಿಪೂಜೆ |ಮರಿಯದಲಿ ಮಾಡಿ ಬಲು |ಸ್ಥಿರ ಬುದ್ಧಿ ಪೂರ್ವಕದಲಿ |ಗುರುಗಳಲಿ ಸರ್ವಜ್ಞರಾಯರಿಂದಧಿಕ ಮ ||ತ್ತಿರಲುಂಟೆ ಎಂದು ತಿಳುಹಿ |ದುರುಳ ಜನರನುಸರಿಸದಲೆ ಕವಿಗಳೊಡನಾಡಿ |ಚರಿಸಿ ದೇಶಗಳಲ್ಲಿ ಮೆರೆದು ಖ್ಯಾತಿಯ ಪಡದು ೧
ಭಾಗವತ ಶ್ರೇಷ್ಟ ಜಗನ್ನಾಥ ದಾಸಾಖ್ಯರಡಿ |ಜಾಗುಮಾಡದಲರ್ಚಿಸಿ |ಭೋಗಿವರ ಶಯನ ಪ್ರಾಣೇಶವಿಠಲಾಂಕಿತವ ||ಆ ಗುರುಗಳಿಂದ ಕೊಂಡು |ರಾಗದ್ವೇಷಗಳೆಂಬ ಅರಿಗಳನು ಸಂಹರಿಸಿ |ರಾಗದಲಿ ಹರಿಕಥನ ಕವನ ರೂಪದಿ ಪೇಳಿ೨
ಪ್ರಾಣಮತವನನುಸರಿಸಿ ಆಚರಣಿಯನು ಮಾಡಿ |ಪ್ರಾಣಿಗಳಿಗೆ ತಿಳಿಸದೆ |ಕ್ಷೋಣಿಯೊಳಗಿನ್ನು ಇರಸಾಕೆಂದು ಆ |ಚಿತ್ರಭಾನು ಆಶ್ವಯುಜ ಶುದ್ಧ ಸಪ್ತಮಿಯಲಿ ||ಜ್ಞಾನಪೂರ್ವಕ ಲಯ ಚಿಂತನೆಯ ಮಾಡಿ ಗುರು |ಪ್ರಾಣೇಶ ವಿಠಲನಿದ್ದಾ ಪುರಕೆ ಜವದಿಂದ೩

೨೮೮
ಲಕ್ಷ್ಮೀದೇವಿ ಸ್ತೋತ್ರ
ದಯಮಾಡೆ ದಯಮಾಡೆ ||ಹಯಮುಖನಿಗೆ ಅತಿ ಪ್ರಿಯ ಕಮಲಾಲಯೆ ಪ
ಹೊಲಬುಗಾಣೆ ಭವ ಜಲಧಿಯೊಳಗೆ ತ್ಪರ |ಸಲಹು ನಿನ್ನ ಕರಜಲಜದಿ ಪಿಡಿದು ೧
ನಳಿನ ಭವಾದ್ಯರ ಸಲಹುವಿ ಈಪ್ಸಿತ |ಫಲವಿತ್ತು ಕರುಣದಲಿ ಮಹಲಕುಮಿ ೨
ಕ್ಷೋಣಿ ಭಣಗು ನಾನೋರ್ವನು ನಿನ್ನಯ |ಧ್ಯಾನವೆ ಪಾಲಿಸು ಮಾಣದೆ ಜವದಿಂ೩
ಶರಣು ಪೊಕ್ಕವರ ಜರಿದರೆ ನನ್ನಯ |ಬಿರುದಿಗೆ ಬಾಹದೆ ಕೊರತೆಯು ಜಾನಕಿ ೪
ಜ್ಞಾನಗಮ್ಯ ಗುರುಪ್ರಾಣೇಶ ವಿಠಲನ ಮಾನಿನಿ ಎನ್ನನು ಹೀನತೆ ಎಣಿಸದೆ ೫

೨೮೨
ದಯಾನಿಧೆ ದಯ ಮಾಡಬೇಕು |ದಯ ಮಾಡಬೇಕು ಎನ್ನಯ ದೋಷಾವೆಣಿಸದೆ |ಹಯಮುಖ ಲೋಕಾತ್ರಯ ವ್ಯಾಪ್ತ ಪರಮಾಪ್ತ ಪ
ನಿನ್ನ ನಂಬಿದ ಭುಕುತರನ್ನ ಚೆನ್ನಾಗಿ ಕಾಯ್ದಾ |ಘನ್ನಾ ಕೀರುತಿ ಕೇಳಿ ಮನ್ನಾದಿ ನಮಿಸುವೆ ಬನ್ನಾ ಬಡಿಸದೆ ಸಂಪನ್ನ ಗುಣಾರ್ಣವ ೧
ಮಾನಿ ಮಾನದನೇ ದ್ರೌಪದಿ ಅಭಿಮಾನ ರಕ್ಷಕನೆ |ಭಾನು ಜನಕ ಮುಖ್ಯಪ್ರಾಣ ವಂದಿತಾಂಘ್ರಿ |ನೀನೊಲಿಯದಿರೆ ಸುಜ್ಞಾನ ಮಾರ್ಗವ ಕಾಣೆ ೨
ಹರಿಕೋಟಿ ತೇಜಾ ಕಾಮಿತ ಕಲ್ಪಿತರು ಮಹರಾಜಾ |ಸುರ ನದಿ ಜನಕ ಅಸುರ ಶೀಕ್ಷಾ ಕಮಲಾಕ್ಷ |ಕರುಣಿ ಕಪಿಲ ವ್ಯಾಸಾ ಗುರು ಪ್ರಾಣೇಶ ವಿಠಲಾ ೩

೨೯೧
ಪವನಾ ಸಂಭೂತಾ ಒಲಿದೂತವಕಾದಿ ಕಾಯಬೇಕೂ |ಇವನಾರೋ ಎಂದೂ ದಾಸಿನಾ | ಮಾಡದಲೆ ಎನ್ನಾ ಪ
ಹರಿವೇಷಧರನೆ ನರ |ಹರಿಭಕುತರ ಪೊರೆಯುವದಕ್ಕೇ ||ಹರಿಯಂತೆ ಒದಗುವೆಯೋ ನೀನೂ | ಹರಿದಾಸ ನಾನೂ ೧
ಕಪಿಪಾ ಕಪಿಯಾಜ್ಞದಂತೇ |ಕಪಿಲನ್ನ ಪತ್ನಿಯನ್ನೂ ||ಕಪಿಗಳು ಹುಡುಕಿ ಮಿಡುಕಲು | ಕಾಯ್ದೆ ಆವಾಗಲೂ ೨
ಅಜಸುತನ ಶಾಪದಿಂದ |ಅಜಗರನಾದ ವನಪಾದ ||ರಜದೀ ಪೂನೀತನ ಮಾಡಿದನೇ | ಅಜಪದವಿಗೆ ಬಹನೇ೩
ಕಲಿಯುಗದಿ ಕವಿಗಳೆಲ್ಲಾ |ಕಲಿಯಾ ಬಾಧೆಗೆ ಬಳಲಿ |ಕಲಿವೈರಿ ಮುನಿಯೆಂದೆನಿಸಿದೇ | ಕಲಿಮಲವಾ ಕಳೆದೆ ೪
ಗುರು ಪ್ರಾಣೇಶ ವಿಠಲಾ |ಗುರುವರನೆಂಬೊ ಜ್ಞಾನಾ ||ಗುರು ಮಧ್ವರಾಯಾ ಕರುಣಿಸೋ | ಗುರುಮತಿಯನು ಬಿಡಿಸೋ ೫

೨೮೦
ಶ್ರೀ ದೇವರ ಸ್ತೋತ್ರ
ಪಾಹಿ ಪಂಢರಿರಾಯಾ | ಮಾಂ |ಪಾಹಿ ಪಾಂಡವ ಪ್ರೀಯಾ ಪ
ಹಿಂದೆ ನಾನು ನಿನ್ನಾ | ದರುಶನ |ಕೆಂದು ಬಂದು ಘನ್ನಾ ||ನಂದದಿ ನಿಂದವನಾ | ರಕ್ಕಿಸಿಮುಂದೆ ನಲಿದೆ ಚೆನ್ನಾ ೧
ಅಷ್ಟೆ ಮಾತ್ರ ಸಾಕು | ದುರಿತಗ |ಳಟ್ಟಿ ಕಾಯಬೇಕು ||ಮಟ್ಟು ಮಾಡಬೇಕು | ವಿಷಯಗ |ಳಟ್ಟಿ ಹಾಕಿ- ನೂಕು ೨
ಮರುತ ಮತದೊಳಿಟ್ಟು | ನಿನ್ನನು |ಸ್ಮರಿಪ ಭಾಗ್ಯಕೊಟ್ಟು ||ಗುರು ಪ್ರಾಣೇಶ ವಿಠಲ | ನಿನ್ನವನೆಂದುಕರ ಪಿಡಿದು ಕರೆಯೋ ೩

೨೮೧
ಪೊರಿಯ ಬೇಕೆಲಾ |ಮರಿ ನೀನು ಛಲಾ ಪ
ಏಸು ಜನ್ಮದಿ ನಿನ್ನ ದಾಸನೆನಿಸಿದೆ | ಉ |ದಾಸ ಮಾಡದೆ ಮಹಿದಾಸ ಎನ್ನನು ನೀ ೧
ನಿನ್ನನೆ ಮರೆವುದು ಎನ್ನ ಸ್ವಧರ್ಮವು |ನಿನ್ನ ಘನ್ನತಿಗಿದು ಸನ್ನು ಮತವೆ ಹರಿ ೨
ಸರುವಜ್ಞ ನೀನೆಂದೂ ಒರೆದವು ಶೃತಿಗಳು |ಮರೆವುದುಚಿತವೇನೊ ಗುರು ಪ್ರಾಣೇಶ ವಿಠಲಾ ೩

೨೮೯
ಮಂಗಳಂ ಮಂಗಳಂ | ಜಯ | ಮಂಗಳಶ್ರೀ ಶ್ರೀನಿವಾಸನರ್ಧಾಂಗಿ ಪ
ಭೃಗುಕಾಲಿಲೊದಿಯಲು | ಅಗಲಿ ಬಂದಳು ಎಂಬೋ ||ಬಗೆ ತೋರಿ ಮೋಹಿಸಿ ಇಗಡ ಜನರ ನಾ || ಮಂಗಳಂ ೧
ಪರಮ ಧಾರ್ಮಿಕನಾದ | ವರನಾರಾಯಣ ಋಷಿ ಗೊರವಿತ್ತು ನಡೆತಂದೆ | ಮೆರೆವ ಸನ್ನತಿಗೆ || ಮಂಗಳಂ೨
ಕೋಲಾಸುರನ ಕೊಂದು | ಪಾಲಿಸಿ ಪುರವನ್ನು |ಶೀಲೆ ಚಂದ್ರಾದೇವಿ ಆಳಿದಗೊಲಿದೆ || ಮಂಗಳಂ ೩
ಆತ ತಕ್ಷಣದಲಿ | ಶ್ವೇತುರಾಯನ ಕೊಂದು |ಮಾತು ಲಾಲಿಸಿ ಅವನ ಪಾತಕ ಕಳದೆ || ಮಂಗಳಂ ೪
ಗುರುಪ್ರಾಣೇಶ ವಿಠಲಾ | ಇರುವ ನೀನಿದ್ದಲ್ಲಿಎರವಿಲ್ಲೀ ಮಾತಿಗೆ ಸುರರ ಸಮ್ಮತವೂ || ಮಂಗಳಂ ೫

೨೯೩
ರುದ್ರದೇವರ ಸ್ತುತಿ
ಮಹದೇವಾ ಮಹದೇವಾ |ಕಾಯೋ ಮಹದೇವ ಎನ್ನನೀ ||ನೋಯಗೊಡದೆ ತ್ವರ |ಪಾವನ ಮಾಡಿ ಪ
ಅಸಮ ರಕ್ಕಸಗೆ |ವಶವಾಗೆ ವನನುಬಿಸಜಾಕ್ಷಗೆ ಒಪ್ಪಿಸಿ |ಕೊಲಿಸಿದನೇ೧
ನಂಜುಂಡರಗಿಸಿ |ದಂಜನೆ ಕುವರ ಪ್ರ ||ಭಂಜನ ಸುತನಾನಂಜುವೆನೀಗಾ ೨
ಸೂಸುವ ಭವಶರ |ದೀಸದೆ ಗುರು ಪ್ರಾ ||ಣೇಶ ವಿಠ್ಠಲನ |ದಾಸ ಮುಣುಗುವೆ ೩

೨೮೭
ಉಪದೇಶಪರ ಪದ
ಯಾಯಾ ವರವ ನೀಡಿ ಶ್ರೀ |ಮಾಯಾ ರಮಣನ ಭಕುತರಿಗೆ ಪ
ಅರುಣೋದಯ ಕಾಲದಲೆದ್ದು ಶ್ರೀ |ಹರಿಸ್ಮರಣೆ ಮಾಡುತಲಿದ್ದು ||ಕರಚರಣಾದ್ಯವಯವ ಶುದ್ಧಿ |ವಿರಚಿಸಿ ನಿರ್ಮಲ ಮನವಿ ೧
ಆದ್ಯಂತ ಗುರುವಾದ |ಮಧ್ವರಾಯರ ಮತವಪೊದ್ದಿದ ಭಗವದ್ದಾಸರು ಬಂದರೆಇದ್ದಿಲ್ಲವು ಎಂದೆನ ಬ್ಯಾಡಿ೨
ಘನ ಮಹಿಮ ನಾರಾಯಣನು ಇವ |ರನು ಕರತಂದಿಹನೆಂದರಿದೂ ||ಮನದಲಿ ಯೋಚಿಸಿ |ಸನುಮಾನವನು ಪಡುತಲಿ ೩
ಯಾಚನೆ ಮಾಡುವರೆಲ್ಲಾ ಬಲು |ನಾಚಿಕೆ ಉಳ್ಳವರೆಂದು ||ಖೇಚರ ವಾಹನ ಪ್ರಿಯರು ಶು- |ದ್ಧಾಚರಣೆಯವರೆಂದು ೪
ನರರಂತೆ ಇವರಲ್ಲಗುರು ಪ್ರಾಣೇಶ ವಿಠಲನಂಘ್ರಿ ||ಸರಸೀಜ ಧೇನಿಸುತ ಯಮ್ಮರ ಸುತ ಬಂದಿಹರೆಂದೂ ೫

೨೯೨
ಸರಸ್ವತಿದೇವಿ ಸ್ತುತಿ
ವಾಣಿ ಬ್ರಹ್ಮನರಾಣಿಜಾಣೆ ಸು | ಶುಕ ವಾಣಿ ಪ
ಪ್ರೀಯಳೇ ಹರಿಯಾ |ನವ ವಿಧದಿ ಭಜಿಸುವಾ ||ಕವಿಗಳೊಳಿಡಬೇಕು | ನಿನ್ನನೇ ಒಂದರಿಯಬೇಕು೧
ವೀಣಾಪಾಣಿಯೆ ಪಿತನಾ |ಧ್ಯಾನಾದೊಳಿರಿಸೆನ್ನ |ಹೀನಾ ವೈಷಿಕಗಳನ |ನಾನೊಲ್ಲೆನನುಗಾಲಾ ೨
ಗುರುಪ್ರಾಣೇಶವಿಠ್ಠಲಾ |ತ್ವರಿತಾ ತಾನೊಲಿವಂತೆ ||ವರಮತಿಯನಿತ್ತೆಮ್ಮ |ಪೊರಿಯಲಿ ಬೇಕಮ್ಮಾ೩

೧೯೦
ಶ್ರೀ ವಾಯುದೇವರ ಸ್ತುತಿ
ಶ್ರೀಮದಾನಂದ ತೀರ್ಥರೆಂಬ |ಅರ್ಥೀಯ ಪೆಸರುಳ್ಳ |ಗುರುಮಧ್ವಮುನಿರಾಯ |ಏನೆಂಬೆ ನಾನಿನ್ನ ಕರುಣಕೆ ಎಣೆಗಾಣೆ ಪ
ಬ್ಯಾಸರದೆ ಸರ್ವರಲ್ಲಿ |ಶ್ವಾಸ ಜಪಗಳ ಮಾಡಿಗುಂ ||ಶ್ರೀಶಗರ್ಪಿಸುತ ಹರಿ |ದಾಸರನ್ನು ಪಾಲಿಸಿದೆ ೧
ಅಂದು ಹನುಮಂತನಾಗಿಬಂದು ಸುಗ್ರೀವಗೆ ಗುರುಂ ||ಅಂದವಾದ ಪದವಿತ್ತಾ |ನಂದವನು ಬಡಿಸಿದೆ ಗುರುಂ ೨
ಕುಂತಿಯ ಕುಮಾರನಾಗಿ |ಹಂತ ಕೌರವರನ ಕೊಂದಿ ಗುರುಂ ||ಅಂತು ಪುಣ್ಯವ ಶ್ರೀ |ಕಂತು ಪಿತಗರ್ಪಿಸಿದೆಯೋ ೩
ಅದ್ವೈತರನು ಕಾದಿ |ಗೆದ್ದು ನಿನ ಭಕ್ತರಿಗೆ ಗುರುಮಧ್ವಮುನಿರಾಯ ||ಶುದ್ಧ ತಾತ್ಪರ್ಯ ವಾಕ್ಯ |ಪದ್ಧತಿಯ ತಿಳಿಸಿದಿ ಗುರುಂ ೪
ಗುರುಪ್ರಾಣೇಶ ವಿಠಲಾಪರನೆಂದು ಡಂಗುರವ ಗುರುಂ ||ಸಾರಿಸಿ ಸಜ್ಜನರನ್ನು |ಹರಿಲೋಕ ಸೇರಿಸಿದಿ ಗುರುಂ ೫

೨೮೬
ಶ್ರೀಹರಿ ಸ್ಮರಣೆಯ ಮಾಡೋ ಸ್ವಾಮಿ || ಶ್ರೀ ಹರಿ |ಕುಹಕರ ಸಂಗಕೆ ಬ್ಯಾಡೋ ಪ್ರಾಣಿ ಪ
ಉರಿಹಸ್ತ ವರಕೊಟ್ಟು ಹರನು ಬಳಲಿದಾಗತ್ಪರದಿಂದವನ ಪೊರೆದ ಸುರನ ಸಂಹರಿಸಿದ೧
ದಿತಿಜರ ಬಾಧೆಗೆ ಶತಮಖ ಪ್ರಾರ್ಥಿಸಲಮೃತವ ಕರದು ಅಹಿತರನು ವಂಚಿಸಿದ ೨
ತರಳ ಪ್ರಹ್ಲಾದ ಕರ್ಬುರ ದೈತನ ಬಾಧಿಗೆ ಹರಿಯೆಂದೊರಲವನ ಪೊರೆದು ದೈತ್ಯನ ತರಿದ೩
ಶಿಷ್ಟೇಷ್ಟಪ್ರದ ಪರಮೇಷ್ಟಿ ಜನಕನಲ್ಲಿಅಷ್ಟೆ ಕರ್ತೃತ್ವವಿರಲು ಇಷ್ಟ್ಯಾಕ ಬಳಲುವಿ ೪
ಗುರು ಮಧ್ವಾಂತರ್ಗತ ಗುರು ಪ್ರಾಣೇಶ ವಿಠಲ ವಿಠಲಾಸುರ ಮುಖ್ಯರಳಿದು ತನ್ನ ಶರಣ ಜನರ ಪೊರೆದಾ ೫

೨೮೩
ಸುಖದ ಸುಂದರ ವಿಠಲರಾಯಾ | ಈ |ಭüಕುತಗೆ ವಿಜ್ಞಾನ ಕೊಡು ಜೀಯಾ ಪ
ಸುಖತೀರ್ಥ ಶಾಸ್ತ್ರ ಸಮ್ಮತವಾಗಿ | ಈ |ಸುಕವನಕ್ಕೆ ವಾಕ್ಯವದಾಗಲಿ ||ಸಕಲ ಜನರು ಕೇಳಿ ಪಾಡಲಿ | ಇದು |ಮುಕುತಿಗೆ ಸತ್ಪಥವಾಗಲಿ ೧
ಆಯುರಾರೋಗ್ಯವು ಪೆಚ್ಚಲಿ | ಕೇಳಿ |ಮಾಯಾವಾದಿಗಳು ಬಾಯ್ಮುಚ್ಚಲಿ ||ಶ್ರೇಯಸ್ಸು ಬಂದು ಕೈಗೂಡಲಿ || ಶ್ರೀ ||ವಾಯುದೇವನು ಪ್ರೀತನಾಗಲಿ ೨
ಗುರು ಪ್ರಾಣೇಶ ವಿಠ್ಠಲ ನೀನೂ | ತ್ಪರ |ಕರ ಪಿಡಿ ಶರಣರ ಸುರಧೇನು ||ಮರತವನಲ್ಲವೊ ನಿನ್ನನು | ಈ |ಬಿರುದು ನಿನ್ನದು ಕರ ಮುಗಿವೆನೊ ೩

೨೮೫
ಸುವ್ವಿ ಪದ
ಪಂಚಶರ ಪಿತನೆ ಅಹಿಮಂಚದಲಿ ಮಲಗಿಹನೆ |ಪಂಚಾನನಾದಿ ಸುರವಂದ್ಯ | ಸುರವಂದ್ಯ ದುರಿತಾರಿ |ಪಂಚಾಸ್ಯ ವದನ ಸಲಹೆಮ್ಮ ೧
ಅಂಬುಜಾಸನ ವಾಯು ಶಂಭುಸುರಮುಖ ಪೂಜ್ಯ |ಅಂಬುಜಾನಾಭಿ ಅರ್ಕಾಭಾ | ಅರ್ಕಾಭಾ ಎನ್ನ ಕು- |ಟುಂಬ ಸಲಹುವದೊ ನರಸಿಂಹ ೨
ಘೋರ ದುರಿತಗಳ ಪರಿಹಾರ ಮಾಳ್ಪರ ಕಾಣೆ |ನಾರಸಿಂಹನೆ ನಿನ್ನ ವ್ಯತಿರಿಕ್ತ | ವ್ಯತಿರಿಕ್ತ |ಕಾರುಣ್ಯಸಿಂಧು ಸಂಸಾರಾಬ್ಧಿಯಿಂದ ಕಡೆಗೆತ್ತೊ ೩
ಕಲಿಕಲುಷದಿಂ ಮನಸು ಮಲಿನವಾಗಿದೆ ದೇವಉಳಿವ ಬಗಿ ಕಾಣೆ ಕಲಿಕಾಲ | ಕಲಿಕಾಲ ಕರುಣ |ದಲಿ ಸಲಹುವದು ನೀನೆ ಬಲ್ಲಿ ೪
ನೀನೊಲಿದು ಕೊಟ್ಟದ್ದು ಏನಾದರೂ ಇರಲಿ |ಸಾನುರಾಗದಲಿ ಸವಿವಂಥ | ಸವಿವಂಥ ಮತಿ | ಇತ್ತು ಗುರು ಪ್ರಾಣೇಶ ವಿಠಲಾ ಪೊರಿಯಮ್ಮಾ೫

ತಂಗಿನೀ ಕೇಳಿದ್ಯಾ ರಾಘವೇಂದ್ರಾ
೨೯೫
ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ
ತಂಗಿನೀ ಕೇಳಿದ್ಯಾ ರಾಘವೇಂದ್ರಾ | ಘಂಗಳ ಕಳದು ಸುಖಂಗಳ ಕೊಡುವದು || ತಂಗಿ ನೀ ಕೇಳಿದ್ಯಾ ಪ
ಶ್ರೀ ಪೂರ್ಣಬೋಧರ ಮತಾಪಯೋಬ್ದಿಗೆ ಚಂದ್ರ |ತಾಪಸೋತ್ತಮರ ದಿವ್ಯಾಪಾರ ಮಹಿಮೆಯ ೧
ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು |ಸಂಗೀತ ಮುಖದಿ ಜನಂಗಳು ಪಾಡುವದು ೨
ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದು |ಸುವಿವೇಕ ಮನದಿಂದ ಕವಿಜನ ಪಾಡುವದು ೩
ವಂಧ್ಯಾಸ್ತ್ರೀಯರು ಬಂದು ನಿಂದು ಆರಾಧಿಸೆ |ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ ೪
ಗುರು ಪ್ರಾಣೇಶ ವಿಠಲಾ ಸರುವ ಕಾಮಿತಾರ್ಥವಾ |ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ ೫

ಹಾಡಿನ ಹೆಸರು :ತಂಗಿನೀ ಕೇಳಿದ್ಯಾ ರಾಘವೇಂದ್ರಾ
ಹಾಡಿದವರ ಹೆಸರು :ಸುಪ್ರಿಯ ಆಚಾರ್ಯ
ರಾಗ :ಕಮಾಚ್
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಪಿಚ್ಚಳ್ಳಿ ಶ್ರೀನಿವಾಸ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ