Categories
ರಚನೆಗಳು

ಗೋವಿಂದದಾಸ

೨೯೮
ಇ. ಶ್ರೀಹರಿ ಲಕ್ಷ್ಮಿಯರು
ಅಂಗಳದೊಳಗಾಡೋ ರಂಗ ಪರಹೆಂಗಳ ಮನೆಗ್ಹೋಗ ಬ್ಯಾಡೋ ನೀಲಾಂಗ ಪ
ದಧಿ ಘೃತ ಚೋರನೆನ್ನುವರು ನಿನ್ನ ಬೆದರಿಸಿ ಜರೆವರು ಪದುಮನೇತ್ರೆಯರು ವಿಧವಿಧದಲಿ ಬಾಧಿಸುವರು ಕೊರಳ ಪದಕದ ಸರವನ್ನು ಸೆಳೆದುಕೊಳ್ಳುವರು ೧
ಕಿರುಕುಳ ….ನಿನ್ನ ಮನ ಕರಕರಿಸುವದೆನಗಿನಿತು ಕೇಳಣ್ಣ ಕರುಗಳ ಬಿಡ ಹೇಳಿ ಮುನ್ನಾ ಬಲು ಹಗರಣ ಗೈಯ್ಯುವರೆನ್ನಾ ಸಂಪನ್ನಾ ೨
ನುಡಿಯ ಲಾಲಿಸು ಮುದ್ದು ಕಂದಾ ನಿನ-ಗಿಡುವೆನಕ್ಷತೆ ವಸ್ತ್ರಾಭರಣ ಸುಗಂಧಾಕೊಡುವೆನು ದಧಿ ಘೃತದಿಂದಾ ಕಾೈದಕಡಬು ಕಜ್ಜಾಯ ಅತಿರಸವಾ ಗೋವಿಂದಾ ೩

೨೯೯
ಅಗ್ರಪೂಜೆಯ ಮಾಡಿದಾ ಧರ್ಮಜ ತಾನು ಅಗ್ರಪೂಜೆಯ ಮಾಡಿದಾ ಪ
ರಾಜರಾಜರಗೂಡಿ ರಾಜಸೂಯದಿ ಧರ್ಮ-ರಾಜನು ಹರಿಗೆ ರಾಜರ ಸಭೆಯೊಳು ಅ.ಪ
ಶುದ್ಧಾಚಮನ ಸಂಕಲ್ಪದಿ ಪಾದ ತೊಳೆದಿತ್ತ ಸದ್ಭಕ್ತಿಯಲಿ ಗಂಧಾಕ್ಷತೆ ವೇದವೇದ್ಯಗೆ ೧
ವಸನಾಭರಣ ದಿವ್ಯ ಕುಸುಮ ಧೂಪವು ದೀಪ ತೃಷೆ ನೈವೇದ್ಯವನಿತ್ತು ಕ್ಲೇಶನಾಶನಿಗಂದು ೨
ಕ್ರಮುಕವರ್ಪಿಸಿ ನೀಲಾಂಜನವೆತ್ತಿ ಧ್ಯಾನಿಸಿ ಸುಮವಿತ್ತು ಬಲವಂದು ಚಕ್ರವಿಕ್ರಮಗೆ ೩
ಪೊಡಮಟ್ಟಘ್ರ್ಯವ ಬಿಟ್ಟು ಒಡನೆ ಯಜ್ಞಾಂತದಿ ಬಿಡೆ ಬ್ರಹ್ಮಾರ್ಪಣ ಗೋವಿಂದನ ಪಾದದ್ವಂದ್ವಕೆ ೪

ಲೋಕನೀತಿ
೩೭೯
ಇಂದೀಗ ಹರಿದಿನವು ಏಕಾದಶಿಯೆಂದು ಶೋಭಿಪ ದಿನವು ಪ
ಚಂದಾದಿ ವಿಷ್ಣುಸಾಯುಜ್ಯ ಹೊಂದುವುದಕ್ಕೆ ಅಂದವಾಗಿಹ ದಿನ ಸಂದೇಹವಿಲ್ಲವು ಅ.ಪ
ಶರಧಿ ಮಥಿಸೆ ಸುಧೆಯೂ ಬರಲು ಕಂಡು ದುರುಳರೊಯ್ಯಲೂ ಹರಿಯೂ ಸರ್ವರಿಗುಪವಾಸವೆಂದು ತಾನ್ ಸೆಳೆದನು ವರವಿತ್ತ ಮಾಸಕ್ಕೆ ಎರಡೇಕಾದಶಿಯೆಂದೂ ೧
ದಶಮಿ ಒಂದಶನಾಗೈದೂ ಏಕಾದಶಿ ದಿವಸುಪವಾಸವಿರ್ದು ಕುಸುಮನಾಭನ ಪೂಜೆಗೈದು ತೀರ್ಥವಗೊಂಡುನಿಶೆಯೊಳ್ ಜಾಗರವಿದ್ದು ಹರಿಕಥೆ ಕೇಳ್ವುದೂ ೨
ವೀಳ್ಯ ಭೋಜನ ಪಾನವೂ ಈ ದಿನ ರತಿ ಕೇಳಿ ನಿದ್ರೆಯು ವಜ್ರ್ಯವೂ ಖೂಳನಾದರೆ ಯಮನಾಳೊಳ್ ಪಿಡಿದೊಯ್ದುಗೋಳುಗುಡಿಸುವ ಹೇಳಲಸಾಧ್ಯವು ೩
ಅಶನಕ್ಕೆ ಬಿಸಿ ಮಳಲು ತಿನಿಸೀ ವೀಳ್ಯ ವ್ಯಸನ ಪಾನಕೆ ಉಕ್ಕಂ ತರಸಿ ಬಾಯ್ಗೆರಸಿ ಮುಳ್ಳು ಹಾಸಿಗೆ ಮೇಲೆ ಮಲಗೆಂದು ಹೊ-ರಳಿಸಿ ಉರಿಕಂಭ ಧರಿಸೆಂಬರ್ ಸತಿ ಪುರುಷರಿಗೆ ೪
ಧ್ರ್ರುವ ಹರಿಶ್ಚಂದ್ರ ಪ್ರಹ್ಲಾದ ತನ್ನ ಭುವನ ಕಟ್ಟಳೆಯೊಳ್ ರುಕ್ಮಾಂಗದಭವಹರ ವ್ರತಗೈದು ಹರಿಪಾದ ಸೇರ್ವರು ಭುವನದಿ ಸರ್ವರಿಗ್ಯೋಗ್ಯವೀ ವ್ರತವೂ ೫
ದ್ವಾದಶಿ ವ್ರತವೆಂಬುದು ಶ್ರೇಷ್ಠವು ಬೇಗ ಸಾಧಿಸಿ ಪಾರಣೆಗೈವುದೂಮೇದಿನಿಯೊಳಂಬರೀಷ ನೀ ವ್ರತಗೈದೂಆದಿಮೂರುತಿ ಗೋವಿಂದನ ಪಾದಸೇರ್ದನೂ ೬

೩೦೦
ಈತನೀಗ ಶ್ರೀನಿವಾಸನೂ ಶ್ರೀರಂಗನೂ ಈತನೀಗ ಶ್ರೀನಿವಾಸನೂ ಪ
ಈತನೀಗ ಶ್ರೀನಿವಾಸ ಈತ ಸಕಲಾ ಲೋಕಕೀಶಈತ ಭೂತಪತಿಯ ಪ್ರೀತ ಈತ ಲಕ್ಷ್ಮೀಕಾಂತ ಖ್ಯಾತ ಅ.ಪ
ಕೌಸಲ್ಯಾತ್ಮಜಾತನೆನಿಸಿದ ಶ್ರೀ ರಾಮಚಂದ್ರ ಕೌಶಿಕನೊಳ್ ವಿದ್ಯ ಪಠಿಸಿದಾ ವೈಶ್ವಾನರನ ಸಾಕ್ಷಿಯಿಂದ ವಸುಧೆಸುತೆಯ ಒಲಿಸಿ ತಂದ ಕೀಶಬಲನ ಕೂಡಿ ಬಂದು ಆ ದಶಾಸ್ಯನನ್ನೆ ಗೆಲಿದಾ ೧
ದೇವಕೀಯ ತನಯನೆನಿಸುತಾ ಶ್ರೀಕೃಷ್ಣವನದಿಗೋವುಗಳನು ಮೇಸಿ ಚಲಿಸುತಾ ಹಾವಿನ್ಹೆಡೆಯ ತುಳಿದು ನಲಿದು ಗೋವರ್ಧನವ ಸೆಳೆದು ಬಡಿದು ಮಾವ ಕಂಸನ್ನ ಗೆಲಿದು ದೇವಿ ರುಕ್ಮಿಣಿಯನು ತಂದ ೨
ಬಕುಳದೇವಿ ದತ್ತ ಪುತ್ರನೂ ಶ್ರೀ ವೆಂಕಟೇಶ ಸುಖದಿ ತಿರುಪತಿಯೊಳು ನಿಂತನೂ ಯುಕುತಿಯಿಂದ ಪದ್ಮಾವತಿಯ ಸಕಲ ವೈಭವದಲಿ ವರಿಸಿ ಭಕುತರನ್ನ ಪೊರೆವ ಗೋವಿಂದದಾಸನೊಡೆಯನಿವನೂ ೩

೩೦೧
ಎಂಥಾ ಕಾಲವು ಬಂತು ಯಾತಕೀ ಭ್ರಾಂತು ಪಿಂತೆ ಮಾಡಿದ ಕರ್ಮ ತೀರ್ಚಬೇಕಾಯ್ತು ಪ
ಸಂತೋಷದಲಿ ಶ್ರೀಹರಿಯ ಧ್ಯಾನಿಸುತಿರೆ ಕಂತುಪಿತನು ಕಾಯಕರುಣ ಸಂಜೀವಾ ಅ.ಪ
ವಿಪ್ರಕುಲದೊಳುದಿಸಿ ಸುಧಾಮನು ತಾಪತ್ರಯವನುಭವಿಸಿ ಸರ್ಪಶಯನ ಕಾಯೆಂದೊಪ್ಪಿಸಿದವಲಕ್ಕಿಅರ್ಪಿಸಿದರೆ ತಿಂದು ವರವಿತ್ತ ಶ್ರೀಕೃಷ್ಣ ೧
ಶರಣರ ಕುಲತಿಲಕ ಪ್ರಹ್ಲಾದನು ಶಿರಿಪತಿ ಪ್ರಿಯ ಭಜಕ ಸರಿಯಲ್ಲೆನುತ ದೈತ್ಯ ಮಗನನು ಬಾಧಿಸೆ ನರಹರಿಯ ರೂಪದಿ ತರಳನ ಕಾಯ್ದ ೨
ಮಂದರಗಿರಿಧರನೂ ಧ್ರುವನಿಗೆಷ್ಟುಚಂದದ ವರವನಿತ್ತನೂ ಒಂದು ದಿನ ವ್ಯೂಹ ಸುತೃಷೆಗಳಿಲ್ಲದ ಲೋಕ ವಂದ ಸೃಜಿಸಿ ಗೋವಿಂದನೆ ಪೊರೆದಾ ೩

೨೬೯
ಎನ್ನ ಪಾಲಿಸಯ್ಯಾ ಪನ್ನಗಾಭೂಷಣ |ನಿನ್ನ ನಂಬಿದೇನೋ | ನೀಲಕಂಧರನೇ ಪ
ಕಂಡೆ ನಿನ್ನನೀಗ | ರುಂಡಮಾಲಧಾರಿ |ದಂಡಧರನ ಮುರಿದ | ಮಾರ್ಕಂಡೇಯಪಾಲ ೧
ಮಾರವೈರಿ ನೀನೆ | ಪಾರ್ವತೀಯ ವರನೇಸಾರಿ ನುತಿಪೆ ನಿನ್ನ ತ್ರಿಪುರಾರಿ ದೇವಾ ೨
ಚಂದ್ರಶೇಖರನೇ | ಗೋವಿಂದನ ಸಖನೆ |ನಂದಿವಾಹನನೆ | ಬಂದು ಮುಖವ ತೋರಿ ೩

೨೯೪
ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ಪ
ಸ್ಥಾಣುವ ಮೂರ್ತಿ ಪಾದಸೇವೆ ತಾನೆ ನಿರತ ಮಾಡುತಿಹಳೊ ಅ.ಪ
ಭೂತಗಣದ ಯೂಥವಿರಲುಸೂತಗಣನಾಥಾದ್ಯರಿರಲು ಭೂತಪತಿಯ ಚರಣ ತೊಳೆದು ತೀರ್ಥಕೊಡುತ ಬರುವಳ್ ಸಭೆಗೆ ೧
ನಾರದರು ದಿಕ್ಪಾಲರಿರಲುವಾರಿಜಾಸನ ವಿಷ್ಣುವಿರಲುಮಾರಹರನಿಗಾರತಿ ಎತ್ತಿತಾನೆ ಸಭೆಗೆ ತೋರಿಸುವಳು ೨
ವಸುಗಳ್ ಸಪ್ತ ಋಷಿಗಳಿರಲು ಅಸುರ ಶಿಕ್ಷರು ನುತಿಸುತಿರಲುಪಶುಪತಿಯ ಲೇಪಿಸಿದ ಭಸ್ಮ ಗೋವಿಂದಾದ್ಯರಿಗೆ ಪ್ರಸಾದ ಕೊಡುವಳ್ ೩

೩೮೨
ಏನು ಫಲ ಇದು ಏನು ಫಲ ಏನು ಫಲ ಇನ್ನೇನು ಫಲ ಪ
ಬೇವಿನ ಮೂಲಿಕೆ ಬೆಲ್ಲವ ಸುರಿದರೆ ಹಾವಿಗೆ ಹಾಲೆರೆದಷ್ಟೆ ಫಲ ಮಾವಿನ ಮರದಡಿ ಗಾಯನ ಹಾಡಲು ಸಾವಿನ ಮನೆಯೊಳಗತ್ತ ಫಲ೧
ಕೋಣನ ಮುಂದೆ ವೀಣೆಯ ನುಡಿಸಲುಮಾಣಿಕ್ಯ ಮರ್ಕಟಗಿತ್ತ ಫಲ ಶ್ವಾನನ ಬಾಲವ ನಳಿಗೆಯೊಳಿಟ್ಟರೆ ಹೀನ ಕುಲಜ ಮಡಿಯುಟ್ಟ ಫಲ ೨
ಮೂರ್ಖಗೆ ಬುದ್ಧಿಯ ಮಾತನು ಪೇಳಲು ಗೋರ್ಕಲ್ಲ ಮೇಲೆ ಮಳೆ ಹೊಯ್ದ ಫಲ ಊರ್ಕತಿ ಕಂಟಕನಾಗಿಹ ಮನುಜನು ನೂರ್ಕಾಲ ಬದುಕಿದರೇನು ಫಲ ೩
ಸೂಳೆಯ ಬಳಿಯಲಿ ಅಂತರ್ಯ ನುಡಿದರೆ ಗಾಳಿಗೆ ಕಸ್ತೂರಿ ಇಟ್ಟ ಫಲ ಕೋಳಿಯ ಕಾಲಿಗೆ ಗೆಜ್ಜೆಯ ಕಟ್ಟಲು ನೀಲಿಯ ನೀರೊಳು ತೊಳೆದ ಫಲ ೪
ಹಂದಿಯ ಕೊರಳಿಗೆ ಹಾರವ ಹಾಕಲುಅಂಧಗೆ ಕನ್ನಡಿ ಕೊಟ್ಟ ಫಲ ಮಂಧರಧರ ಗೋವಿಂದನೋಳ್ವೈರದಿ ಇಂದ್ರನು ಮಳೆ ಸುರಿದ ಫಲ ೫

೨೭೦
ಒಂದೇ ಕೂಗಳತೆ | ಕೈಲಾಸಕ್ಕೆ | ಒಂದೇ ಕೂಗಳತೆ ಪ
ಬಾಲ ಮಾರ್ಕಾಂಡೇಯ ಕಾಲಪಾಶದಿ ಸಿಕ್ಕಿ | ಗೋಳಿಟ್ಟು ಸ್ತುತಿಸಲಾ ನೀಲಕಂಧರನಾ ||ಶೂಲಪಾಣಿಯು ಕಲ್ಲ ಲಿಂಗದಿ ಮೈದೋರಿ |ಕಾಲನ ಮುರಿದೆತ್ತಿ | ಬಾಲನ ಸಲಹಿ ೧
ಶಿವನ ಅರ್ಧ ಪ್ರಹರದಿ ಒಲಿಸಿಕೊಳ್ಳುವೆನೆಂದು |ಪವನಾತ್ಮಜನು ಗದೆಯನಂಬರಕ್ಕೆಸೆದು ||ಭುವನದಿ ಸ್ತುತಿಸುತ್ತ ಶಿರ ಒಡ್ಡಿ ನಿಂದಿರೆ |ತವಕದಿಂದೈತಂದು ಶಿವನು ಭೀಮನ ಕಾಯ್ದ ೨
ಚರರನಟ್ಟಿದನೇ ರತ್ನಾಂಗದ ಶಿವನಿಗೆ |ಕರೆಯ ಪೋದನೇ | ಕನ್ಯನೆಂಬ ಚಂಡಾಲ ||ಬರದೋಲೆ ಕಳುಹಿಸಿ ಕೊಟ್ಟಾಳೆ ನರ್ಮದೆ |ಸ್ಮರಿಸಿದಾಕ್ಷಣ ಗೋವಿಂದನ ಸಖ ಬರುವರೇ ೩

೩೦೨
ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ಪ
ಕಂಡೀರೆ ಪಾಂಡುರಂಗನನೂ ಕಳಕೊಂಡಿರೆ ಪಾಪ ಸರ್ವವನೂ ಅಂಡಜವಾಹನನಾಗಿ
ಸಂಚರಿಸುವ ಪುಂಡರೀಕಾಕ್ಷ
ಬ್ರಹ್ಮಾಂಡ ನಾಯಕನನ್ನೂ ೧
ಎಂಟನೆ ಅವತಾರಿಯೆನಿಸಿ ದೇವಕಿ ಎಂಟನೇ ಗರ್ಭದಿ ಜನಿಸಿ ಎಂಟನೆ ಮಾಸ ಶ್ರಾವಣ ಕೃಷ್ಣಾಷ್ಟಮಿ ದಿನ ನಟ್ಟಿರುಳಿನಲಿ ಸೃಷ್ಟಿಗಿಳಿದ ಶ್ರೀಕೃಷ್ಣನ ೨
ಮಧುರಾ ಪಟ್ಟಣದಿ ಮೈದೋರಿ ಬಹು ವಿಧವಾಗಿ ಗೋಕುಲದೊಳಗಾ ದಧಿ ಘೃತ ಚೋರಕನೆಂದು ಯಶೋದೆಗೆ ಪದುಮಾಕ್ಷಿಯರು ಬಂದು ದೂರುವ ಕೃಷ್ಣನ ೩
ದನುಜೆ ಪೂತನೆಯಸುಗೊಂಡು ತನ್ನ ಜನನಿ ಗೋಪಿಗೆ ಬಾಯೊಳ್ ತೋರ್ದ ಬ್ರಹ್ಮಾಂಡವನಜಾಕ್ಷಿಯರ ಕೂಡಿ ಯಮುನಾ ತೀರದೊಳಾಡಿ ವನಿತೆಯರುಡುವ ಶೀರೆಗಳೊಯ್ದ ಕೃಷ್ಣನೇ ೪
ಗೋವಳರರಸನೆಂದೆನಿಸಿ ಶಿರಿಗೋವರ್ಧನವೆತ್ತಿ ಗೋವ್ಗಳ ಮೇಸಿ ಪಾವಕನು ಕಾಳಿಮರ್ದನ ಗೈದು ಮಾವ ಕಂಸನ ಗೆಲ್ದಮಧುರೆಯೊಳ್ ಕೃಷ್ಣನಾ ೫
ದ್ವಾರಕಾಪುರವೊಂದ ರಚಿಸಿ ಬಲವೀರರಾಮನ ದೊರೆರಾಯನೆಂದೆನಿಸಿನಾರಿಯರ್ ಹದಿನಾರು ಸಾವಿರ ವಡಗೂಡಿ ಮಾರಕೇಳಿಯೊಳ್ ಮುದ್ದು ತೋರುವ ಕೃಷ್ಣನ ೬
ಶರದ ಸೇತುವಿಗೆ ಮೈಯ್ಯಾಂತ ಉಟ್ಟ ಶೆರಗೀಗೆ ವರವ ದ್ರೌಪದಿಗೊಲಿದಿತ್ತನರನ ಸಾರಥಿಯಾಗಿ ಕುರುನೃಪರನು ಗೆಲ್ದು ಧರೆಯ ಪಟ್ಟವ ಧರ್ಮಜನಿಗಿತ್ತ ಕೃಷ್ಣನೆ ೭
ದುಷ್ಟ ನಿಗ್ರಹನೆಂಬ ಬಿರುದೂ ಭಕ್ತ ರಕ್ಷಕನೆಂದು ಮೂರ್ಲೋಕವದೆಂದೂಸೃಷ್ಟಿಯೊಳ್ ನರಜನರು ನಮಿಸಿ ಪೂಜಿಸಲೆಂದು ಬಿಟ್ಟರು ದ್ವಾರಕಾಪುರವ ರಾಮಕೃಷ್ಣರು ೮
ಹಡಗಿನ ಮೇಲೇರಿ ಬಂದೂ ನಮ್ಮ ಉಡುಪಿ ಅನಂತೇಶನಿದಿರಾಗಿ ನಿಂದೂಕಡು ಕೃಪೆಯೊಳ್ ಭಕ್ತ ಕನಕನಿಗೊಲಿದ ವೊಡೆಯ ಗೋವಿಂದ ಗೋಪಾಲಕೃಷ್ಣನ ೯

೨೭೧
ಕಂಡೆ ಕಂಡೆ ಕೈಲಾಸ ನಿಲಯನ | ಕಂಡೆ ಪಾರ್ವತಿಯ ಪ್ರಿಯ ಗಂಡನಾ ||ಕಂಡೆ ಕಂಡೆ ಕಾಲಾಗ್ನಿವಿಲಯನ | ಕಂಡೆ ಸರ್ವರೋದ್ದಂಡನಾ ಪ
ಅಂಗಜಾಂಗವನು | ಭಂಗಗೈದ ಭವ | ಭಂಗ ಹರನ ಭಸ್ಮಾಂಗನಾ || ಮಂಗಳಾಂಗ ಭೂ |
ತಂಗೊಳೊಡೆಯ ಸುರ | ಗಂಗಾಧರನ ಮಹಾಲಿಂಗನಾ ೧
ಶಂಭು ಶಿವನ ಪಾ | ದಾಂಬುಜಯುಗಳವ | ನಂಬಿದೆನಂಬರ ಕೇಶನಾ ||ಡಂಬಹರನ ದಿ | ಗಂಬರ ಮೂರ್ತಿಯ | ಸಾಂಬ ಚಿದಂಬರ ವಾಸನಾ ೨
ಪಂಚ ತುಂಡ ತ್ರಿ | ಪಂಚನೇತ್ರನಾ | ಪಂಚಭೂತಕಧಿನಾಥನಾ ||ಪಂಚಲಿಂಗ ಪಂಚಾಕ್ಷರ ಪ್ರೀಯನ | ಪಂಚಮೂರ್ತಿಯೊಳು ಖ್ಯಾತನಾ ೩
ನಂದಿಸ್ವಾರಿ ಜಾ | ಲಂಧರಾಂತಕ | ಸುಂದರಾಂಗ ಶುಭ ಶೀಲನಾ ||ಅಂಧಕಾರಿ ಗೋವಿಂದನ ದಾಸನ | ವಂದ್ಯ ಚರಣ ವಿಶಾಲನಾ ೪

೨೯೭
ಕಂಡೆನು ಪಾರ್ವತಿಯಾ | ಮೈಸೂರ | ಚಾಮುಂಡೇಶ್ವರಿಯಾ ಪ
ಕಂಡೆನು ಕರುಣದಿ ಭಕ್ತರ ಪಾಲಿಪ | ಚಂಡಿಕರಾಳಿಯ ಪುಂಡರೀಕಾಕ್ಷಿಯ ಅ
ಸುತ್ತಲು ಜ್ಯೋತಿಗಳ | ಹೊಳೆಯುವ | ಮುತ್ತಿನ ಕಾಂತಿಗಳೂ ಚ
ಕೆತ್ತಿದ ನವಮಣಿರತ್ನದಿ ಶೋಭಿಪ | ಉತ್ತಮ ಕನಕಾಭರಣ ಭವಾನಿಂ ೧
ಸಹಸ್ರಾಯುಧಭರಿತೇ | ನೀಕ್ಷಿಸೆ | ಸಹಸ್ರ ಹಸ್ತದಾತೇ | ಸಹಸ್ರರೂಪದಿ ಜಗವನು ಪಾಲಿಪ | ಸಹಸ್ರನಾಮದ್ವಯ ಸಹಸ್ರಲೋಚನೆಯ ೨
ಸಂಭ್ರಮದಲಿ ಚಂಡಾಮುಂಡರು | ಡೊಂಬಿಯೊಳ್ ಪ್ರಚಂಡಾ- |ರೆಂಬಾ ದೈತ್ಯಕದಂಬವ ಖಂಡಿಸಿ | ಕುಂಭಿನಿಗಿಳುಹಿದ ಶಾಂಭವೆ ಶಕ್ತಿಯ ೩
ರಾಜ ಕುಲಕೆ ದೀಪಾ | ಮೈಸೂರ್ | ರಾಜ ಕೃಷ್ಣ ಭೂಪಾ |ರಾಜನು ದಿನ ದಿನ ಪೂಜಿಸಿ ನಮಿಸುವ | ರಾಜ ರಾಜ ಗಿರಿರಾಜ ಕುಮಾರಿಯ ೪
ಚಂದ್ರಕೋಟಿವದನೇ | ಶೋಭಿಪ | ನಂದಕುಂದರದನೇ | ಮಂದಗಮನೆ ಗೋವಿಂದನ ಪೂಜಿಪ ಚಂದಿರಧರನರ್ಧಾಂಗಿಯ ಚರಣವ ||ಕಂಡೆನು|| ೫

೩೦೩
ಕರವ ಮುಗಿವೇ ಕಮಲನಯನ ಕರುಣದಿಂದಲಿ ಪಾಲಿಸೊ ಕರಿವರದ ಶ್ರೀ ಕಮಲನಾಭಕರೆದು ಎನ್ನನು ಮನ್ನಿಸೊ ೧
ಸ್ಮರಿಸಲರಿಯೇ ಸಿರಿಯ ರಮಣಪರಮಪಾವನ ಪಾದವಾ ಸ್ಮರನ ಜನಕ ಶರಧಿ ಶಯನಇರಿಸು ಎನ್ನೊಳು ಮೋಹವಾ ೨
ಬಂಧು ಬಳಗ ಭಾಗ್ಯ ಭೋಗ್ಯ-ದಿಂದ ಸುಖವ ಕಾಣೆನೇ ದಂದಶೋಕ ಶಮನನೇ ಗೋವಿಂದ ದಾಸನ ಪ್ರಾಣನೇ ೩

೩೦೪
ಕರವೊಡ್ಡಿ ಬೇಡುವೆನು ಕಮಲದಳನೇತ್ರಕರುಣದಲಿ ಸಲಹೆನ್ನ ಕಾಮಹರ ಮಿತ್ರ ಪ
ಕಾಯದಲಿ ಬಲವಿಲ್ಲ ಕಂಗಳಿಗೆ ಸುಖವಿಲ್ಲ ಕೈಯ್ಯೊಳಗೆ ಹಣವಿಲ್ಲ ಬಾಯಬಲವಿಲ್ಲಕಾಯವಿದು ನೀನಿಟ್ಟ ಮಾಯಪಾಶಕೆ ಸಿಕ್ಕಿ ಹೇಯವಾದುದು ಸಲಹೋ ಹೇ ಲಕ್ಷ್ಮೀರಮಣ ೧
ಕಾಲನಾಳುಗಳೆಮ್ಮ ಕಾಲಕೈಗಳ ಕಟ್ಟಿಕಾಲದಂಡದಿ ಬಡಿದು ಕಾಲನೆಡೆಗೈದೂ ಕಾಲಮೇಘದ ತೆರದಿ ಕಾಲನಂತೆ ಘರ್ಜಿಸುವ ಕಾಲದಲಿ ಕಾಯ್ವವರ ಕಾಣೆ ನಾಳಿನಲೀ ೨
ಕರಿರಾಜನನು ಕಾಯ್ದೆ ಕಂಬದಲಿ ಮೈತೋರ್ದೆಖರ ದೂಷಣ ನಿನ್ನ ಕರದಿ ಶಿರ ವರಿದೀಕರುಣದಿಂದಲಿ ದ್ರೌಪದಿಯ ಸೆರಗಿಗಕ್ಷಯವಿತ್ತೆಕರವಿಡಿದು ಸಲಹೆನ್ನ ಕಲುಶ ಸಂಹಾರಾ ೩
ಕಂದನಪರಾಧವನು ತಂದೆ ಕ್ಷಮಿಸುವ ತೆರದಿ ಕಂದು ಕುಂದುಗಳೆನ್ನೊಳಿರಲು ನೀ ಕ್ಷಮಿಸಿಕಂದನಂದದಿ ನೋಡಿ ಕಂದರ್ಪ ಜನಕನೆಚಂದದಲಿ ಸಲಹೊ ಗೋವಿಂದದಾಸನನೂ ೪

೩೦೫
ಕರುಣಾಕರ ನಿನ್ನ | ಕರವೊಡ್ಡಿ ಬೇಡುವೆ ||ಕರುಣಿಸು ವರವನ್ನು | ಖರ ಸಂಹಾರ ೧
ಕರಿರಾಜನು ನಿನ್ನ | ಕರಗುತ ಭಜಿಸಲು || ಖಗ ವಾಹನನಾಗಿ | ಕರುಣದೀ ಪೊರೆದೆ ೨
ಕಡುದಾರಿದ್ರನು | ಕಷ್ಟದಿ ಸ್ಮರಿಸಲು ||ಕರುಣದಿ ಸುಧಾಮಗೆ | ಕರೆದಿತ್ತೆ ವರವ ೩
ಕಾಲನ ದೂತರು | ಕಾಡುವ ವೇಳ್ಯದಿ ||ಕಂದನ ಕರೆಯೆಗೋ | ವಿಂದನೆ ಪೊರದೇ ೪

೨೭೨
ಕರುಣಿಸೆನಗೆ ಶಂಭೋ ಕರುಣಿಸಯ್ಯಾಶರಣಾರಂದದಿ ನಿನ್ನ ಮನದಿರವರಿಯೆನು ಕರವ ಜೋಡಿಸಿ ದೇವಾ ಚರಣಕೊಂದಿಪೆನು ಪ
ಕ್ಷೋಣಿಯೊಳ್ ಮಾರ್ಕಾಂಡೆಯಂತೆ ಪೂಜಿಸಲಾರೆಮೀನಾಕ್ಷಿಯಂತೆ ಕಾದಿ ಪರಿಸಲಾನರಿಯೇ ಬಾಣಾಸುರನಂತೆ ತಪಗೈಯ್ಯಲಾರೆ ನಾನು ರಾವಣನಂತೆ ಸಾಮಗಾನವನರಿಯೇ ೧
ಶಿರದಿ ಚಂದಿರನಂತೆ ಶೋಭಿಸಲಾರೆ ಭಕ್ತಿಸ್ಥಿರವರಿಯೆನು ಭೀಮಸೇನನಂತೆ ಉರಗನಂದದಿ ಕೊರಳಾಭರಣವಾಗಿರಲಾರೆ ಗಿರಿಜೆಯಂದದಿ ನೆರೆದು ಮುದ್ದಿಸಲರಿಯೆ ೨
ಮಂದಾಕಿನಿಯಂತೆ ಜಡೆಯಾಲಂಕರಿಸೆನುನಂದೀಶನಂತೆ ಪೊತ್ತು ತಿರುಗಾಡಲರಿಯೆ ಇಂದ್ರನಂದನನಂತೆ ಭರದಿ ಮೆಚ್ಚಿಸಲಾರೆಬಂದೆನ್ನ ಸಲಹೋ ಗೋವಿಂದನ ಸಖನೆ ೩

೩೦೬
ಕಷ್ಟದಿ ಕಾಲವ ಕಳೆವೆನು ದೇವಾ | ಪಕ್ಷಿವಾಹನ ಕಾಯೋ ಕರುಣ ಸಂಜೀವಾ ಪ
ಕೃಷ್ಣಮೂರುತಿ ಫಲುಗುಣನಿಗೆ ಭಾವ |ಸೃಷ್ಟಿಗೊಡೆಯ ಭಕ್ತಜನರನು ಪೊರೆವಾ ||
ಉಟ್ಟ ಸೀರೆಯನು ಕುರು ದುಷ್ಟನು ಸೆಳೆಯಲು |ರಕ್ಷಿಸೆನ್ನುತ ಮೊರೆಯಿಟ್ಟ ದ್ರೌಪದಿಗೆ ||ಅಕ್ಷಯವರವಿತ್ತು ಪಕ್ಷಿವಾಹನ ಕಾಯ್ದೆ |ಸೃಷ್ಟಿಗೊಡೆಯ ಶ್ರೀಕೃಷ್ಣಾವತಾರ ೧
ದಾನವಾಂತಕ ಭಕ್ತ ದೀನದಯಾಕರ |ಮಾನವ ಶರೀರ ಮನುಮಥನಯ್ಯ ||ಭಾನುನಂದನ ಫಣಿ ಬಾಣವನೆಸೆಯಲು |ಜಾಣತನದಿ ನರನ ಪ್ರಾಣವನುಳುಹಿದೆ ೨
ನಂದಗೋಪನ ಮುದ್ದು ಕಂದನ ಚರಣಕ್ಕೆ |ವಂದಿಸಿ ಕರಗಳಾನಂದದಿ ಮುಗಿವೆ ||ಇಂದಿರೆಯರಸ ಗೋವಿಂದ ಜನಾರ್ದನ |ಮಂದರ ಧರ ಅರವಿಂದ ನಯನ ದೇವಾ೩

೩೮೮
ಕಾಸು ಕನಕದಾಸೆಯಾದುದೇ | ಹರಿಗೆ | ದಾಸ ಜನರನೆಲ್ಲ ಮರೆತನೇ ಕಡೆಗೆ ಪ
ವಾಸುದೇವನು ಶ್ರೀನಿವಾಸನೆನಿಸಿಕೊಂಡು | ಶೇಷಗಿರಿಯ ಮೇಲೆ ವಾಸವಾಗಿರುವವಗೆಅ.ಪ
ಛಪ್ಪನ್ನ ದೇಶದ ಕಪ್ಪವ ತರಿಸುವ | ಒಪ್ಪಿ ಜನರ ಸರ್ವ ತಪ್ಪಪಾಲಿಸುವ |ಸರ್ಪಶಯನ ನಮ್ಮ ತಾಪತ್ರೆ ಘನವೆನಲು | ಅರ್ಪಿತವಹುದೇ ತಿಮ್ಮಪ್ಪ | ವೆಂಕಟ ಪತಿಗೆ ||ಕಾಸು|| ೧
ಶನಿವಾರ ಶನಿವಾರ ಮನೆ ಮನೆ ಭಿಕ್ಷೆಗೈದು | ಮಿನುಗುವ ಡಬ್ಬಿಯೊಳಿಟ್ಟು ಜನರು ಪೂಜಿಸೆ ನಲಿದು | ವನಜಾಕ್ಷ ನಿನಗೆಂದು ಕಣಜಕ್ಕೆ ಸುರಿಯೆ ತಂದು | ಮನುಮಥ ಪಿತಗೆ ನಮ್ಮ ನೆನಪು ಎಂತಹುದೋ ||ಕಾಸು||೨
ಗಂಧ ಚಂದನ ನಾಮತೀರ್ಥ ಪ್ರಸಾದ | ಸುಂದರ ವಾಹನ ಹರಕೆ ವಿನೋದ | ಚಂದದಿ ನೋಡಲ್ ಹರಿಯ ಧನವಿಲ್ಲದಾಗದ | ಸುಂದರಾ ಮೂರ್ತಿ ಗೋವಿಂದಗೆ ಸಾರ್ವದಾ ೩

೩೦೯
ಕೃಷ್ಣ ನೀನೆ ರಕ್ಷಿಸೆನ್ನ | ಪಕ್ಷಿಗಮನ | ಲಕ್ಷ್ಮೀರಮಣ ||ಸೃಷ್ಟಿಗೊಡೆಯಾ ಜಿಷ್ಣುಪ್ರೀಯ | ದುಷ್ಟ ಹನನಾ ಶಿಷ್ಟ ಸ್ಮರಣಾ ೧
ಯಮಿಕುಲಾಳಿ | ಹೃದಯನಿಲಯಾ ಕಮಲನಯನಾ ವಿಮಲಚರಣಾ || ಸುಮನಸಾದೀ | ನಮಿತ ಪಾದಂ ಕುಮುದ ಸಖನಾ ಸಮಸುವದನಾ ೨
ತಂದೆ ತಾಯೀ | ಯಂದ ಸಲಹೋ ಇಂದಿರೇಶಾ ಸುಂದರಾಸ್ಯ ||ವಂದಿಸುವೆ ಗೋವಿಂದ ನಿನಗೆ | ಸಿಂಧುವಾಸಾ ಬಂಧನಾಶಾ ||ಕೃಷ್ಣ||

೩೧೦
ಕೃಷ್ಣ ರಕ್ಷಿಸೆನ್ನ ಜಯ ಜಯ ಪಕ್ಷಿರಾಜಗಮನಾ ದುಷ್ಟಹನನ ಜಲಜಾಕ್ಷ ಜನಾರ್ದನ ಶಿಷ್ಟ ಜನರ ಮನದಿಷ್ಟ ಪ್ರದಾಯಕ ಪ
ಗೋಕುಲದೊಳು ನೆಲಸಿ ದೈತ್ಯರ-ನೇಕರನು ಮಥಿಸಿ ಲೋಕದ ಜನರಿಗೆ ರೀತಿಯ ತೋರುತ-ನೇಕರ ಮನೆ ಮನೆ ಬೆಣ್ಣೆಯ ಭುಜಿಸಿದ ೧
ದ್ವಾರಕೆಯೊಳು ನಿಂತೆ ಕೌರವ ವೀರಗಾಯುಧವಿತ್ತೆ ಸಾರಥಿಯಾಗುತೆ ಧಾರುಣಿ ಗೆಲಿಸಿದೆ ಧೀರನು ನೀ ಗೋವಿಂದನೆ ದಾಸನೆ ೨

೩೦೭
ಕೃಷ್ಣನ ನೆನೆವನೆ ಅಜ್ಞಾನಿ | ಸ್ವಾಮಿ | ಕೃಷ್ಣನ ಮರೆವನೆ ಸುಜ್ಞಾನೀ ಪ
ಕೃಷ್ಣನ ಅನುದಿನ ಸ್ಮರಣೆಗೈವನೆ | ದುಷ್ಟ |ಕೃಷ್ಣನ ಪರಿಪರಿ ಜರೆವನೆ ಶ್ರೇಷ್ಠ ಅ.ಪ
ಕೃಷ್ಣನ ಸ್ಮರಿಸೀಗ ಬದುಕಿದರುಂಟೇ |ಕೃಷ್ಣನ ನಂಬೀಗ ಜನಿಸಿದರುಂಟೇ ||
ಕೃಷ್ಣ ಸೇವೆಯ ನಿತ್ಯ ಮಾಡುವನೆ ತುಂಟ |ಕೃಷ್ಣನಾಜ್ಞೆಗೆ ತಪ್ಪಿ ನಡೆವನೆ ಬಂಟ ೧
ದುರುಳರ ಕಂಡು ತಾ ಪೊರೆವನೆ | ಕೃಷ್ಣ |ಶರಣರ ನೋಡೀಗ ಮುರಿವನೇ ಕೃಷ್ಣ ||ಮೊರೆಯಿಟ್ಟು ಕರೆದರೆ ಬಾರನೆ ಕೃಷ್ಣ | ಕರುಣದಿ ಇಷ್ಟಾರ್ಥ ಕೊಡನೇ ಶ್ರೀಕೃಷ್ಣ ೨
ಧನ್ಯನೆ ಕೃಷ್ಣನ ನೆನೆವನೆ ಪಾಪಿ |ಮೌನದಿ ಕೃಷ್ಣ ಎಂಬನೇ ಮೂಗ ಕೋಪಿ ||ಮಾನ್ಯನೇ ಕೃಷ್ಣನ ನೋಡದ ಕುರೂಪಿ | ಮುನ್ನ ಗೋವಿಂದದಾಸರಿಗೆಲ್ಲ ಗೋಪಿ ೩

೩೦೮
ಕೃಷ್ಣನಾಮಾಮೃತ ರುಚಿಕರವೆಲ್ಲವು ಶ್ರೇಷ್ಠ ಭಕ್ತರಿಗಲ್ಲದೇ ದುಷ್ಟ ಮಾನವ ಮತಿಹೀನಗೆ ಪೇಳಲು ಇಷ್ಟವಾಗಲು ಬಲ್ಲುದೇ ಪ
ಗುಡಶೈಲದಲಿ ಲಿಂಬೆ ಬೀಜ ಪ್ರತಿಷ್ಠಿಸೆ ಫಲವು ಮಧುರವಹುದೆ ಗುಡುಗು ಮೋಡಕೆ ಮಯೂರವು ಕುಣಿದಂತೆ ಕುಕ್ಕುಟ ನೋಡಿ ಕುಣಿವುದೆ ಸುಡುವಗ್ನಿಯಲಿ ಬೀಜಬಿತ್ತಿ ನೀರೆರೆದರೇ ಗಿಡವಾಗಿ ಶೋಭಿಪುದೇ ಪೊಡವಿಯೊಳಗೆ ಲಕ್ಷ್ಮೀಯೊಡೆಯನ ಚರಿತೆಯ ಮೂಢ ಮಾನವ ಬಲ್ಲನೇ ೧
ವೀಣೆಯ ನುಡಿಸುತ್ತ ಗಾಯನ ಹಾಡಲು ಕೋಣಗೆ ಹಿತವಹುದೆ ಸಾಣೆಕಲ್ಲನು ಬಿಸಿನೀರಿನೊಳಿಟ್ಟರೆ ಮೇಣದಂತಾಗುವುದೇಜಾಣತನದಿ ವೇದ ಓದಿದ ಹೊಲೆಯನು ಬ್ರಾಹ್ಮಣನೆನಿಸುವನೆ ಕ್ಷೋಣಿಯೊಳಗೆ ವಾಸುದೇವನ ಚರಿತೆಯ ಹೀನಮತಿಯು ಬಲ್ಲನೆ ೨
ಕೋಗಿಲೆ ಸಾಕಿದ ಕಾಗೆಯ ಮರಿ ತನ್ನ ರಾಗದಿ ಮೋಹಿಪುದೇ ನಾಗರಹಾವಿಗೆ ಹಾಲೆರೆದರೆ ನಿತ್ಯ ವಿಷವ ನೀಗಿಸಿಕೊಂಬುದೇ ಭೋಗದಾಸೆಯ ಸ್ತ್ರೀಗೆ ವಿಟನ ಮೇಲಲ್ಲದೇ ಯೋಗಿಯೊಳ್ ಹಿತವಹುದೇ ಸಾಗರಶಯನ ಗೋವಿಂದನ ಮಹಿಮೆಯ ಭೋಗಾಸಕ್ತನು ಬಲ್ಲನೇ ೩

೨೭೩
ಕೈ ಮುಗಿದು ಬೇಡುವೆನು ಕೈಲಾಸವಾಸಾ ||ವಹಿಲದಲಿ ಸಲಹೆನ್ನ ಈಶ ಗಿರಿಜೇಶಾ ಪ
ಅಷ್ಟ ಭಾಗ್ಯವು ನೀನೆ | ಇಷ್ಟಮಿತ್ರನು ನೀನೆ |ಹುಟ್ಟಿಸಿದ ತಾಯ್ತಂದೆ | ವಿದ್ಯೆ ಗುರು ನೀನೆ |ಸೃಷ್ಟಿ ಮೂರಕೆ ನೀನೆ ಅಧ್ಯಕ್ಷನೆನಿಸಿರುವೆ |ರಕ್ಷಿಸೆನ್ನನು ಜಟಾಜೂಟ ನಿಟಿಲಾಕ್ಷ ೧
ಮಾಯಾ ಪಾಶದಿ ಸಿಕ್ಕಿ | ಕಾಯ ಸುಖವನು ಬಯಸಿ |ಆಯ ತಪ್ಪಿದೆ ಮುಂದುಪಾಯವೇನಿದಕೆ |ಜೀಯ ನೀನೆಂದೆಂಬ | ನ್ಯಾಯವರಿಯದೆ ಕೆಟ್ಟೆ |ಕಾಯೊ ದಯದಲಿ ಮೃತ್ಯು | ಬಾಯಿಗೊಪ್ಪಿಸದೆ ೨
ಘೋರತರ ಸಂಸಾರ ಸಾಗರದಿ ಮುಳುಮುಳುಗಿ |ಕ್ರೂರ ನಕ್ರನ ಬಾಯಿಗಾಹಾರವಾದೆ |ದಾರಿಕಾಣದೆ ಬಳಲಿ ಮಾರಹರ ನಿನ್ನಂಘ್ರಿ |ಸೇರಿದೆನು ಗೋವಿಂದದಾಸನನು ಸಲಹೋ ೩

೩೧೧
ಕೋಪವಿದೇಕೆ ಗೋಪಾಲಕ | ರೂಪ ಮನದಿ | ಕಾಪಾಡು ನೀ ಕೃಪೆಯೊಳ್ ತಾಪಸರ | ಪಾಪಾರಿಯೆ ಪ
ಚದುರೆಯರ್ ವಿಧ ವಿಧ ದೂರುವದನಾಲಿಸುತ |ದಧಿಘೃತ ಕದ್ದನೆಂದು ಬೈದಳೇ ಯಶೋದೆ ನಿನ್ನ ೧
ನಾರಿಯರ ಸೀರೆಯ ಕದ್ದು | ಏರಿದಾ ಮರವನೆಂದು |ದೂರುವುದ ಕೇಳಿ ಪಿತ | ಕ್ರೂರತ್ವವ ತೋರಿದನೇ ||ಕೋಪ| ೨
ಚಂದದಿಂದ ಬಂದು ಎನ | ಗಿಂದು ದಯತೋರಿಸಯ್ಯಾ |ಸುಂದರಾಂಗ ಮೂರ್ತಿ ಗೋವಿಂದ ದಾಸರ್ವಂದಿತನೆ ೩

೩೧೨
ಕೋಲ ತರುವೆ ತಾಳೋ ನಿನಗೆ ಬಾಲ ಕೃಷ್ಣನೇ |ಪೇಳಿದ ಮಾತನು ಕೇಳು ಶೂಲಿ ಮಿತ್ರನೇ ಪ
ನಾರಿ ಜನರ ದೂರ ಕೇಳಿ ಗಾರುಗೊಂಡೆನೇ ||ಕೃಷ್ಣ||ಸೀರೆಗಳ್ಳನೆಂದು ಹೆಸರನಿಟ್ಟುಕೊಂಡೆನೇ ೧
ಸುದತಿಯರನು ಮೋಸಗೈವ ಹದನವರಿತೆನೇ ||ಕೃಷ್ಣ||ದಧಿ ಘೃತ ಚೋರನೆಂದು ಮೊದಲೆ ಕೇಳೆನೇ ೨
ಕಂಡು ಸಹಿಸಲೆಂತು ನಿನ್ನ ಭಂಡತನವನೇ ||ಕೃಷ್ಣ||ಕಂಡ ಹೆಂಗಳ ಮೇಲೆ ಬಿದ್ದು ಪುಂಡು ಮಾಳ್ಪನೇ ೩
ಅಂದು ಎನ್ನ ಉದರದಲ್ಲಿ ಬಂದು ಜನಿಸ್ಯಾನೇ ||ಕೃಷ್ಣ||ಸುಂದರ ಗೋವಿಂದನೆಂಬ ನಾಮಧರಿಸ್ಯಾನೇ ೪

ಮಂಗಳ ಪದಗಳು
೩೯೧
ಕೋಲು ಕೋಲೆನ್ನಿರೆ ರನ್ನದ ಕೋಲು ಕೋಲೆನ್ನಿರೇ ಕೋಲು ಕೋಲೆಂದು ರನ್ನದ ಕೋಲ ಧರಿಸಿ ನಿಂದು ಲೋಲಾಕ್ಷಿ ದೇವಿ ಚರಿತೆಯ ಸ್ಮರಿಸುತ್ತ ರನ್ನದಾ ಪ
ಲೋಲಾಕ್ಷಿ ದೇವಿ ಚರಿತೆ ಸ್ಮರಿಸುತ್ತ ನಲಿದಾಡಿ ಪಾಲಿಸೆ ಧರೆಗೆ ವರವ ಕರದೀಗಳ್ ರನ್ನದಾ ೧
ಆದಿದೇವಿಯು ಚತುರ್ವೇದ ಗರ್ಭನ ನಿತ್ಯ ಪಾದಸೇವೆಯ ಗೈವಳ್ ಮೋದದಿ ರನ್ನದಿ ಕೋಲು ಪಾದಸೇವೆಯ ಗೈವಳ್ ಮೋದದಿ ಮಾಧವನ ಪೂಜಿಸಿ ನಮಿಸಿ ಕ್ಷೀರಾಬ್ಧಿಯೊಳ್ ರನ್ನದಾ ೨
ಘೋರ ದಾನವರೆಲ್ಲ ಧಾರಿಣಿ ಬಾಧಿಸಲು ವಾರಿಜೋದ್ಭವ ನಾರದಾದ್ಯರು ರನ್ನದಾ ವಾರಿಜೋದ್ಭವ ನಾರದಾದ್ಯರು ದೇವಿಯೊಳು ದೂರಿಡೆ ಕೇಳಿ ಅಭಯವಿತ್ತಳು ರನ್ನದಾ ೩
ಸುರರು ದಾನವರೆಲ್ಲ ಶರಧಿಯ ಮಥಿಸಲು ಅರವಿಂದಮುಖಿ ಲಕ್ಷ್ಮಿ ಜನಿಸಿದಳೆ ರನ್ನದ ಅರವಿಂದ ಮುಖಿಲಕ್ಷ್ಮಿ ಜನಿಸಲು ನಾರಾಯಣನರಸಿಯೆಂದೆನಿಸಿ ಮೆರೆದಳು ರನ್ನದಾ ೪
ಅಘವಿನಾಶಿನಿ ಜಗದಾಂಬಿಕೆ ಕೀರವಾಣಿಸುಗುಣೆ ಸುಂದರಿ ಸುಶೀಲೆಯು ಫಣಿವೇಣಿ ನಗುವ ಮೊಗದ ಚಂದ್ರವದನೆಯು ರನ್ನದಾ ೫
ದುಷ್ಟ ನಿಗ್ರಹರೆಂದು ಸೃಷ್ಟಿಗೆ ನಡೆತಂದು ಶ್ರೇಷ್ಠಾದಿ ನೂರೊಂದು ರೂಪಾದಳ್ ರನ್ನದಾಶ್ರೇಷ್ಠಾದಿ ನೂರೊಂದು ರೂಪಾಗಿ ಶಿಕ್ಷಾ ರಕ್ಷಾ ಧ್ಯಕ್ಷಳೆನಿಸಿ ಖಡುಗ ಧರಿಸಿದಳ್ ರನ್ನದಾ ೬
ಘೋರ ಮಹಿಷನ ಸಂಹಾರಕೆಂದು ಬಂದು ಮಾರಾಂತು ರಣದಿ ದುರುಳನ ರನ್ನದಾ ಮಾರಾಂತು ರಣದಿ ದುರುಳನ ಮರ್ದಿಸಿಈರೇಳು ಜಗವಾ ಪೊರೆದಳು ರನ್ನದಾ ೭
ಶುಂಭಾ ನಿಶುಂಭ ಖಳರೆಂಬ ದೈತ್ಯರ ಗೆಲಿದು ಅಂಬುಜಾಲಯದಿ ನೆಲಸಿದಳ್ ರನ್ನದಾ ಅಂಬುಜಾಲಯದಿ ನೆಲೆಸಲು ಪೂಜಿಸಿದ ಕುಂಭಿನಿ ಸುರರಿಗೊಲಿದಾಳು ರನ್ನದಾ ೮
ಚಂಡ ಮುಂಡಕರೆಂಬ ಘೋರ ದೈತ್ಯರನೆಲ್ಲ ತುಂಡು ತುಂಡಾಗಿ ಶಿರ ಖಂಡೀಸಿ ರನ್ನದಾ ತುಂಡು ತುಂಡಾಗಿ ಶಿರ ಖಂಡೀಸಿ ಮೆರೆದಳು ಚಂಡಿ ಕರಾಳಿ ಚಾಮುಂಡಿಗೇ ರನ್ನದಾ ೯
ರಕ್ತ ಬೀಜನ ಘೋರ ಶಕ್ತಿಯ ಪರೀಕ್ಷಿಸಿ ಮುಕ್ತಿ ಪಥವ ತೋರೆ ಮಾಂಕಾಳಿ ರನ್ನದಾ ಮುಕ್ತಿ ಪಥವ ತೋರೆ ಮಾಂಕಾಳಿ ಅರ್ಚಿಸಿದ ಭಕ್ತರಿಗೊಲಿದು ನಲಿದಳ್ ರನ್ನದಾ ೧೦
ದೇವರಾಮನ ಸತಿಯಾಗಿ ಲಂಕೆಗೆ ಪೋಗಿ ರಾವಣಾದ್ಯರನೆಲ್ಲ ಕೊಲಿಸೀದಳ್ ರನ್ನದಾ ರಾವಣಾದ್ಯರನೆಲ್ಲ ಕೊಲಿಸೀದಳ್ ಸೀತೆಯು ತಾಪಾವಕನುರಿ ಹೊಕ್ಕಿ ಪೊರಟಳ್ ರನ್ನದಾ ೧೧
ಸೃಷ್ಟೀಶ ಭೀಷ್ಮಕನ ತನುಜೆ ರುಕ್ಮಿಣೀದೇವಿ ಕೃಷ್ಣಮೂರ್ತಿಗೆ ಓಲೆ ಬರೆದಾಳು ರನ್ನದಾ ಕೃಷ್ಣಮೂರ್ತಿಗೆ ಓಲೆ ಬರೆದು ಒಲಿಸಿಕೊಂಡು ಪಟ್ಟದರಸಿಯಾಗಿ ಬಾಳಿದಳು ರನ್ನದಾ ೧೨
ಮಾನಿನೀ ಮಣಿ ಪದ್ಮಾವತಿಯು ಜಲಕೇಳಿಗೈದು ಶ್ರೀನಿವಾಸನ ಕಂಡು ಸ್ಮರಿಸೀದಳ್ ರನ್ನದಾ ಶ್ರೀನಿವಾಸನ ಕಂಡು ಸ್ಮರಿಸಿ ಕಲ್ಯಾಣವೆಸಗಿ ತಾನೆ ವಿಷ್ಣುವ ಪೂಜೆಗೈದಳ್ ರನ್ನದಾ ೧೩
ನವರಾತ್ರಿ ದಿನದಲಿ ನವದುರ್ಗಿ ರೂಪಿನಲಿ ನವಗಂಧ ಕುಂಕುಮ ಚಂದನ ಪುಷ್ಪಗಳಿಂದ ನವವಿಧ ಪೂಜೆ ಕೊಂಬಳ್ ರನ್ನದಾ ೧೪
ಮಾರಿ ಪೂಜೆಯ ರಕ್ತ ಹಾರಕ್ಕೆ ಮನಗೊಂಬಾ ಕ್ರೂರಗಣಗಳೊಡ ಸೇರಿದಳ್ ರನ್ನದಾ ಕ್ರೂರಗಣಗಳೊಡ ಸೇರಿ ಧಾರುಣಿಯೊಳು ಚಾರುವರ್ಣ ಪೂಜೆ ಕೈಕೊಂಬಳ್ ರನ್ನದಾ ೧೫
ಸರ್ವಮಂಗಲ ಮಾತೆ ಸರ್ವಸಜ್ಜನ ಪ್ರೀತೆ ಸರ್ವ ಆಭರಣ ಭರಿತೇಯು ರನ್ನದಾ ಸರ್ವ ಆಭರಣ ಭರಿತೇಯು ಪೀತಾಂಬರನೆರಿಹಿಡಿದುಟ್ಟು ರನ್ನದಾ ೧೬
ಹದಿನೆಂಟು ಪೌರಾಣದಿ ಮೆರೆವ ಈ ದೇವಿ ಚರಿತೆ ಹದಿನೆಂಟು ಪದವಾಗಿ ನುಡಿಸೀದಳ್ ರನ್ನದಾ ಹದಿನೆಂಟು ಪದದಿ ತಪ್ಪಿರಲು ತಿದ್ಯೋದಿದವರ ವಿಧವಿಧ ಮನದ ಬಯಕೆ ಒದಗುವಾದೆ ರನ್ನದಾ ೧೭
ಮಂದಗಮನೆ ಧರಣಿ ಭಾರ ತಗ್ಗಿಸಿ ಬಂದು ನಿಂದಾಳು ವಿಷ್ಣು ವಕ್ಷಸ್ಥಲದಲಿ ರನ್ನದಾ ನಿಂದಿರ್ದ ವಿಷ್ಣು ವಕ್ಷಸ್ಥಲದ ರಮೆಗೆ ಗೋ ವಿಂದದಾಸನು ಸರಿಸಿ ನಮಿಸೂವೆ ರನ್ನದಾ ೧೮

೩೬೭
ಗಜಲಕ್ಷ್ಮಿ ಬಿಜಯ ಮಾಡೇ ಮೂಕಾಂಬಿಕೆ ಭಜಿಸುವೆ ವರವ ನೀಡೆ ಪ
ಅಜಸುರ ಮುಖ್ಯರು ಭಜಿಸಲು ನಿನ್ನನು ನಿಜವಾದ ವರವನಿತ್ತೆ ಜಗನ್ಮಾತೆಕುಜನರ ಮರ್ದಿಸುತೆ ವಿಜಯ ಸಾರಥಿ ಭುಜಗ ಶಯನನ ಭಜನೆಯನು ಅನುದಿನದಿ ಪಠಿಸುವ ಸುಜನ ಸಜ್ಜನಪಾಲೆ ಸದ್ಗುಣಶೀಲೆ ಮುನಿಜನಲೋಲೆ ಜಯ ಜಯ ೧
ಕೊಲ್ಲೂರ ಪುರನಿಲಯೆ ಮಹದೇವಿಯೆ ಪುಲ್ಲಲೋಚನೆ ಪಾಲಯೆ ಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವ ಚಲ್ವ ರಂಗನ ರಾಣಿಯೆ ಶ್ರೀದೇವಿಯೆ ಕುಲ್ಲ ಕುಂಕುಮ ಜಾಣಿಯೇ ಸಲ್ಲಲಿತೆ ಕಾಲಲ್ಲಿ ರಂಜಿಪ ಪಿಲ್ಲಿ ಮಿಂಚಿಕೆ(?) ಕಡಗ ಪೈಜಣ ಗೆಜ್ಜೆ ಗಲಗಲ ಎಂದು ನಲಿಯುತ ಬಾರೆ ಜಗದ ವಿಚಾರೆ ಮುಖ ತನು ತೋರೆ ಜಯ ಜಯ ೨
ಚಂದಿರ ಮುಖದ ಮನೇ ಸರ್ವೇಶ್ವರಿ ಕುಂದಕುಂಡಲರದನೇ ಮಂದಗಾಮಿನಿ ಅರವಿಂದನಯನೆ ಸುರ ಪಂಡಿತ ಗುಣ ಕರುಣಿ ನೀನಲ್ಲದೆ ಮುಂ ಸುಖವ ಕಾಣೆನೆ ಚಂದನ ನವಗಂಧ ಕುಂಕುಮ-ದಿಂದ ಶೋಭಿಪ ಕೀರವಾಣಿಯೆ ಸುಂದರಿಯೆ ಗೋವಿಂದನರಸಿಯೆ ಧರ್ಮದೇವಿಯೆ ದೈತ್ಯ ನಾಶಿನಿಯೆ ಜಯ ಜಯ ೩

೩೧೩
ಗುಟ್ಟ ಪೇಳಿದಳೊಂದು ಗುಣು ಗುಣು ಗುಣು ಎಂದು | ಗಟ್ಟಿ ಪೇಳಿದರತ್ತೆ ಬೈಯ್ಯುವಳೆಂದು ಪ
ಪಚ್ಚೆ ಮಂಚದಿ ಬಂದು ಮಲಗಿಕೊಳ್ಳೆಂದು | ನಟ್ಟಿರುಳಲಿ ಬಹೆ ಕೃಷ್ಣ ಕೇಳೆಂದು ಅ.ಪ
ಹದಿನಾರು ಸಾವಿರ ಸುದತಿಯರನು ಸೇರಿ | ಮದನ ಕೇಳಿದೊಳೆನ್ನ ಮರೆತೆಯ ಶೌರಿ | ಮದುವೆಯಾದವನೂರೊಳಿಲ್ಲ ಬಿಕಾರಿ | ಮದನ ತಾಪದಿ ಬೆಂದು ಬಳಲಿ ಬಾಯಾರಿ ೧
ಗುರುಕುಚವನು ನೋಡು ಹರುಷ ಮಾತಾಡು | ಮರುಗ ಮಲ್ಲಿಗೆ ಜಾಜಿ ಸರವ ತಂದೀಡೊ | ಕರುಪುರ ವೀಳ್ಯವ ಸವಿದು ನೀ ನೋಡು | ಪರಿಪರಿಯಲಿ ನಿನ್ನ ಕೃಪೆಯನೀಡಾಡು ೨
ಚಂದ್ರಗಾವಿಯ ಸೀರೆ ನೆರಿ ಹಿಡಿದುಟ್ಟು | ಚಂದದಿ ಕುಪ್ಪಸ ತೊಟ್ಟು ಜಡೆಬಿಟ್ಟು | ಚಂದನ ಕುಂಕುಮ ಕಸ್ತೂರಿ ಬೊಟ್ಟು | ಮಂದರ ಧರ ಗೋವಿಂದಗೆ ಚುಂಬನ ಕೊಟ್ಟು ೩

೩೧೪
ಗೋಕುಲ ಕೃಷ್ಣ ಗೋಪಿಸ್ತ್ರೀಯರ ಕೂಡೆ ||ಲೋಕ ಮೋಹನ ಲೀಲೆ ತೋರಿದನಲ್ಲಿ ||ಆ ಕನ್ಯೆಯರಿಗೆಲ್ಲ ಬೇಕಾದರೂಪ ತೋರಿ ||ಸಾಕಾರಿಯಾಗಿರೆ ಬಳಿಕೊಂದು ದಿವಸ ೧
ಸೀರೆ ಕುಪ್ಪಸ ತೊಟ್ಟು | ಹಾರ ಕಡಗವಿಟ್ಟು | ನಾರಿಯೊಬ್ಬಳು ಕ್ಷೀರ ಮಾರುತ್ತ ಬರಲೂ || ಕೇರಿ ಕೇರಿಗಳಲ್ಲಿ ಚರಿಸುತ್ತಲಿರೆ ಕಂಡು | ವಾರಿಜಾಕ್ಷನು ನಡೆತಂದು ತಾ ನಗುತ್ತ ೨
ನೀಲಕುಂತಳೆ ಗುಣಶೀಲೆ ಚಂದಿರಮುಖಿ | ಹಾಲ ಸುಂಕವ ಕೊಟ್ಟು ಪೋ | ಗವ್ವ ಚದುರೆ ||ಕೇಳಿ ಮಾನಿನಿ ಕ್ರೋಧ ತಾಳಿ ಕೃಷ್ಣನ ಕೂಡೆ | ಹಾಲ ಸುಂಕದ ಕಟ್ಟೆ ಯಾವುದಯ್ಯ ನಿನಗೆ ೩
ಎಂದು ನಿಂದಿಸಿ ಹಿಂದೆ ತಿರುಗಿ ಪೋಗಲು | ಕಂಡು |
ನಂದಕಂದನು ತಾ | ಸೆರಗ ಪಿಡಿದು ತಾ ನಿಲಿಸೆ ||ಚಂದಿರಮುಖಿ ತಾನು ಸೆಣಸಿ ಕೃಷ್ಣನೊಳ್ ಸೋತು ಕಂದಿ ಕುಂದುತ ಕೈಯ ಮುಗಿದು ಪೇಳಿದಳು ೪
ತಂದೆ ಸೆರಗ ಬಿಡು ಕಂದ ಸೆರಗ ಬಿಡು | ಇಂದೆನ್ನ ಗುರುವರ್ಯ | ಸೆರಗ ಬಿಡಯ್ಯ || ತಂದೆಯು ನಾನಲ್ಲ | ಕಂದನಾನಲ್ಲವೊ | ನಿನ್ನ | ತಂದೆಗಳಿಯನೆಂದು ಭಾವಿಸೆ ತರುಣಿ ೫
ಮಾವ ಸೆರಗ ಬಿಡು | ಭಾವ ಸೆರಗ ಬಿಡು | ಸೇವಕಿ ನಿನಗೆ ನಾ ಸೆರಗ ಬಿಡಯ್ಯ ||ಮಾವನಲ್ಲವೊ | ಕೇಳೆ ಭಾವನಲ್ಲವೊ | ನಿನ್ನ ||ಮಾವನ ಮಗನು ನಾ ಕಾಣೆಂದ ಕೃಷ್ಣಾ ೬
ವಿಧ ವಿಧದಲಿ ಮಾತನಾಡುತಾ ಕೃಷ್ಣ | ಮದನ ತಾಪವ ಹೆಚ್ಚಿಸಿದನು ಮಾನಿನಿಗೆ | ಪದುಮಾಕ್ಷಿ ಭ್ರಮೆಗೊಂಡು ಮದನ ತಾಪದಿ ನೊಂದು | ಮದನ ತಾತನನಪ್ಪಿ | ಮುದ್ದಿಸೆ ಕಂಡು ೭
ತಾಳು ತಾಳೆಲೆ ಸಖಿ ತಾಯಿ ತಂಗಿಗೆ ಸಮ | ಕೇಳು ಜಗದಿ ಪರದಾರಾಂಶ ಜನಕೆ || ಲೋಲ ಲೋಚನ ಎನ್ನ ಗೋಳು ಗುಡಿಸದೀಗ | ಆಳು ನಿನ್ನಯ ಜನನಿಗೆ ಸೊಸೆ ಎಂದು ದಯದಿ ೮
ಇಂತೆಂದು ಕೃಷ್ಣನ ಎದೆಗೆ ಕುಚವನಿತ್ತು | ಸಂತೋಷದಿಂದಲಪ್ಪೀ ಸ್ಮರಿಸುತ್ತಲಿರಲು ಕಂತುಜನಕೆ ಗೋವಿಂದಗೆ ದಾಸರೋಳೆಂತು | ಕೃಪೆಯೋ | ನಾರಿಗೊಲಿದಿಷ್ಟ ಸಲಿಸೆ ಗೋಕುಲ ೯

೩೧೫
ಗೋಪಾಲ ಶ್ರೀಕೃಷ್ಣ ಮೂರುತಿ ನೀನೇ ಕಾಪಾಡೆನ್ನನು ಜಿಷ್ಣು ಸಾರಥಿ ಪ
ತಾಪತ್ರಯದೊಳ್ ನೊಂದೆ ತಪಗೈಯ್ಯಲರಿಯೆನು ನೀ ಕೃಪೆಯೊಳನುದಿನ ರೂಪ ತೋರಿಸು ದೇವಾ ಅ.ಪ
ದೇವಕಿಯುದರದಿ ಜನಿಸಿ ಗೋಪಿ ದೇವಿಗೆ ತನಯನೆಂದೆನಿಸಿ ಜೀವ ಘಾತಕೆ ಬಂದ ಪೂತನಿಯಸು ಹೀರಿಗೋವುಗಳನು ಮೇಸಿದೆ ೧
ದೈತ್ಯರ ಕೊಂದು ಗೋವರ್ಧನವೆತ್ತಿದೇ ಕಾಮದಿ ಬಂದ ಬಾಲಕಿಯರನು ಕೂಡಿದೇ ಹಾವಿನ ಹೆಡೆಯ ಮೇಲೆ ನಲಿದು ಬಿಲ್ ಹಬ್ಬದಿ ಮಾವ ಕಂಸನ ಮುರಿದು ಕರುಣದಿ ತಾಯಿ ತಂದೆಯ ಸೆರೆಯ ಬಿಡಿಸಿದೆ ೨
ಶರಧಿ ಮಧ್ಯದಿ ಮನೆಮಾಡಿದೇ ಅಲ್ಲಿ ಭರದಿಂದಷ್ಟಮ ಸ್ತ್ರೀಯರಲಿ ಕೂಡಿದೇ ನರಮುರಶಾದ್ಯರ ಮುರಿದು ಷೋಡಶ ಸಹಸ್ರ ತರುಣಿಯರೊಡಗೂಡಿದೇ ಪಾರಿಜಾತ ತರುವ ನೀನೊಲಿದು ತಂದೆ ಪಾಂಡವರೊಳು ಭರಿತ ಕೃಪೆಯ ತೋರಿದೆ
ಧುರದಿ ಮಾಗಧ ಚೈದ್ಯ ಧರಣಿಪಾಲರ ಗೆಲ್ದು ತರುಣಿ ದ್ರೌಪದಿಗ್ವರವ ಪಾಲಿಸಿ ನರಗೆ ಸಾರಥಿಯಾದೆ ಶ್ರೀಹರೀ ೩
ಸಂಧಾನವೆಸಗಿ ಪಾಂಡವರ ಕರ -ದಿಂದ ಕೊಲ್ಲಿಸಿದೆ ಕೌರವರ ಚಂದ ಧರ್ಮರಾಯಗೆ ಪಟ್ಟ ಕಟ್ಟಿಸೀ ನಿಂದಶ್ವಮೇಧಗೈಸಿ ನೀ ಸುರಗಣ ವೃಂದ ಸಂತಸ ಬಡಿಸಿ ಯಾದವಕುಲ ಮುಗಿಲದಿಂದಲಿಸುಂದರಾಂಗವ ಬಿಟ್ಟು ಕ್ಷೀರಸಿಂಧುವಿಗೈದೆ ಚಂದದಲಿ ಗೋವಿಂದದಾಸನೆ ಬಂದು ಮಂಗಲ ಮುಖವ ತೋರಿಸೋ ೪

೩೧೬
ಗೋವಿಂದ ಗೋವಿಂದ ಗೋವಿಂದಾ | ನಮೋ||ಗೋವಿಂದ ಗೋವಿಂದ ಗೋವಿಂದಾ ಪ
ಗೋವಿಂದ ಗೋಪೀಕಂದ | ಗೋವಿಂದನತಿಚಂದ | ಗೋವಿಂದ ಗುಣವೃಂದ | ಗೋವಿಂದ ಸಚ್ಚಿದಾನಂದ ೧
ಗೋವಿಂದ ಸದಾನಂದ | ಗೋವಿಂದ ಪರಮಾನಂದ | ಗೋವಿಂದ ನಲಿದುಬಂದ | ಗೋವಿಂದ ಇಂದ್ರವಂದ್ಯ ೨
ಗೋವಿಂದ ಯಾದವೇಂದ್ರ | ಗೋವಿಂದ ದಯಾಸಾಂದ್ರ |ಗೋವಿಂದ ಕುಲಚಂದ್ರ | ಗೋವಿಂದ ದಾಸನಿಂದ್ರ ೩

೨೭೪
ಗೌರೀ ವರ ಶಿವ ನಮೋ ನಮೋ | ಶಿವ | ಗೌರೀವರ ಶಿವ ನಮೋ ನಮೋ |ಈಶ ಪರಾತ್ಪರ ದೋಷನಿವಾರ | ಕಾಶೀಪುರವರವಾಸ ವಿಶ್ವೇಶ್ವರ ೧
ಕರಿಚರ್ಮಾಂಬರ ಕರುಣಾಕರ | ಸ್ಮರಿಸಲು ಸರ್ವರ ದುರಿತ ನಿವಾರ ೨
ಭಸ್ಮಾಲೇಪನ ಶಶಿಶೇಖರವೃಷಭವಾಹನ ಸ್ಮಶಾನ ಸಂಚಾರ ೩
ಸುರ ಗಂಗಾಧರ | ನರರುಂಡಮಾಲಾ | ಕರದಿ ತ್ರಿಶೂಲವು ಉರಗಕುಂಡಲ ೪
ಜಟಾಮಕುಟ ನೀಲಕಂಠೇಶ್ವರಾ |ಅಡವಿಯೊಳ್ ಕೈರಾತ ನಟನ ಶಂಕರ ೫
ಷಣ್ಮುಖ ಭೈರವ ಭೃಂಗಿ ಪ್ರಮಥ | ಗಣನಾಥ ವೀರಭದ್ರ | ನಂದಿವಂ ದಿತ ೬
ಮಂದರಧರ ಗೋವಿಂದನ ಸಖನೆ | ವಂದಿಪೆ ದಾಸನ ಪಾಲಿಸು ಶಿವನೆ ೭

೩೧೭
ಚಂಚಲಾಕ್ಷಿ ಕೇಳ್ ಪಂಚಬಾಣನ | ಮಿಂಚಿನಂಥ ಶರ ತಾಳಲಾರೆ ನಾನು | ಕಂಚುಕಿಯನು ನಿನಗೊಂಚಿಸದೀವೆನು | ಕೊಂಚ ಮುಖ ತೋರಿನ್ನು ಚಂಚಲಾಕ್ಷಿ ೧
ಜಾಣೆ ನಿನ್ನನು ಕಾಣೆದೆನ್ನಯ | ಪ್ರಾಣನಿಲ್ಲದೇನೇ || ತ್ರಾಣ ಗುಂದಿತು ಪ್ರಾಣನಾಯಕಿ | ಕಾಣೆ ನಿನ್ನ ಗಂಡನಾಣೆ || ೨
ಪಟ್ಟೆ ಸೀರೆಯನ್ನುಟ್ಟುಕೊಳ್ಳೆ ನಿನ್ನ | ತೊಟ್ಟಿಕೊಳ್ವೆ ಬಾರೆ ||ಗಟ್ಟಿಗೆ ನಿನ್ನಯ ಗುಟ್ಟನರಿತೆನು |ಗಟ್ಟಿ ಬಳೆಯ ಕೊಡುವೆ ನೀರೆ ೩
ಮಂದಗಾಮಿನಿ ಸುಂದರಾಂಗಿಯೆ | ಬಂದು ಎನ್ನ ಕೂಡೆ || ಚಂದದಿಂದ ಗೋವಿಂದನೊಡನೇ ಬೇ | ಗೊಂದು ಮಾತನಾಡೇ ||ಹ|| ೪

೩೧೮
ಚಿಂತೆ ಯಾತಕೋ | ಮನವೇ | ಶಾಂತನಾಗಿರೋ ದಿನವೇ ಶಾಂತನಾಗಿರೋಕಂತುಪಿತನ ಧ್ಯಾನ ಮಾಡು ಮುಂತೆ ಸುಖವ ತೋರಿ ಕೊಡುವ ಪ
ವಿಕ್ರಮದ ರಥದಿ ಭಕ್ತ- | ನಕ್ಕರೆಯ ಸಲಿಸಲೆಂದು | ಚಕ್ರವಿನುತನಾಗಿ ಕುಳಿತು | ಶಕ್ರಸುತನಕಾಯ್ದುದರಿತು ೧
ಬಾಲನು ಪ್ರಹ್ಲಾದ ತನ್ನ | ಪಾಲಿಸೆಂದು ಹರಿಯ ಧ್ಯಾನ | ಲೀಲೆಯಿಂದ ಮಾಡುತಿರಲು |ಶ್ರೀಲಲಾಮ ಕಾಯ್ದ ಕೇಳು ೨
ಇಂದ್ರಸುತನ ಸುತಭಿಮನ್ಯು | ಅಂದು ಚಕ್ರಬಿಂಬವನ್ನು | ಬಂದು ಮುರಿದು ಕಾದುತಿರೆ ಗೋವಿಂದ ಮುನಿದರಳಿದ ಬೇರೆ ೩

೩೭೬
ಜಯ ಜಯತು ಆದಿತ್ಯಸೋಮಗೆ ಜಯತು ಕುಜಬುಧ ಗುರುವಿಗೆ ||ಜಯ ಜಯತು ಶುಕ್ರ ಶನೀಶಗೆ ಜಯತು ಜಯತು ೧
ಶರಣು ಭಾನುವೆ ಶರಣು ಇಂದುವೆ ಶರಣು ಭೌಮ ಸೌಮ್ಯ ಬೃಹಸ್ಪತೀ | ಶರಣು ಭಾರ್ಗವ ಶರಣು ಮಂದಗೆ ಶರಣು ಸಿಂಹಿಕೆ ಸುತ ಶಿಖೀಶಗೆಶರಣು ಶರಣು ೨
ಪಾಹಿ ಭಾಸ್ಕರ ಚಂದ್ರಾಂಗಾರಕ ಪಾಹಿ ಶಶಿಸುತ ವಾಚಸ್ಪತಿ ಪಾಹಿ ದೈತ್ಯಾಚಾರ್ಯ ರವಿಸುತ ಪಾಹಿ ಗೋವಿಂದದಾಸ ನಮಿಸುವೆ ನವಗ್ರಹಾದ್ಯರಿಗೆ ನಮೋ ನಮೋ ಪಾಹಿ ೩

೩೯೨
ಜಯ ಶಂಕರ ಪರಮೇಶ ದಿಗಂಬರ ಜಯ ಗಿರಿಜೆಯ ವರ | ಸಾಂಬ ನಮೋ ಪ
ಜಯ ಕಿಂಕರ ಪರಿಪಾಲ ಪರಾತ್ಪರ ಜಯ ಭವಭಯಹರ ಶಂಭು ನಮೋ ೧
ವಾಸವ ಸುತ ಫಣಿಭೂಷಣ ನತಜನ-ಕ್ಲೇಶನಾಶ ಜಗದೀಶ ನಮೋ | ಕೇಶವ ಹಿತ ಭೂತೇಶ ಜಯತು ಕೈ-ಲಾಸ ವಾಸ ಅಘನಾಶ ನಮೋ ೨
ದಂಡಧರನ ಶಿರಖಂಡನ ಶಶಿಧರ ರುಂಡಮಾಲ ಪ್ರಚಂಡ ನಮೋ | ಖಂಡ ಪರಶು ಬ್ರಹ್ಮಾಂಡದೊಡೆಯ ಗೋ- ವಿಂದ ವಿನುತ ಚಂಡೇಶ ನಮೋ ೩

೩೭೩
ಜಯತು ಜಗನ್ಮಾತೆ ಪಾಲಿಸು ಜಯತು ಜಗದ್ಭರಿತೆ ಜಯತು ಜನಾರ್ದನ ಸ್ವಾಮಿಯ ಪ್ರೀತೆ ಜಯತು ಜನಾರ್ದನ ಮೋಹಿನಿ ಖ್ಯಾತೆ ೧
ಪಂಕಜದಳ ನೇತ್ರೆ ಜಯಜಯ ಕಿಂಕರನುತಿ ಪಾತ್ರೆ ಕಂಕಣಕರ ಭವ ಬಿಂಕ ವಿಹಾರಿಣಿಕುಂಕುಮಗಂಧಿ ಶಶಾಂಕ ಪ್ರಕಾಶಿತೆ೨
ಲೋಕೋದ್ಧಾರಿಣಿಯೇ ಭವ ಭಯ ಶೋಕ ನಿವಾರಿಣಿಯೆ ಮೂಕಾಸುರನನು ಮರ್ದಿಸಿ ಲೋಕದ ಮೂಕಾಂಬಿಕೆಯೆಂಬ ನಾಮವ ಧರಿಸಿದ ೩
ಸುಂದರಿ ಶುಭ ಸದನೇ ಸದ್ಗುಣ ಮಾದರಿ ಇಭಗಮನೆ ಕುಂದರದನೆ ಅಘವೃಂದ ನಿವಾರಿಣಿ ವಂದಿಸುವೆನು ಪೊರೆ ಗೋವಿಂದದಾಸನ ಜಯತು ೪

೩೧೯
ಜಯತು ಜಯತು ಜಯತು ಜಯಾ | ಜಯತುಮಾಧವಾ | ಜಯತು ಜಯತು ಜಯತು | ಜಯಾ | ಜಯತು ಕೇಶವಾ ೧
ಶ್ರೀಶವಿಠಲ ವಾಸುದೇವಾ | ಕ್ಲೇಶನಾಶನಾ ||ಭಾಸುರಾಂಗ ದೋಷರಹಿತ | ಈಶವಂದನಾ ೨
ಉದಧಿಶಯನ ಪದುಮನಯನ | ಜಯಯದೂವರಾ | ಮದನಜನಕ ಮಧುರ ವಚನ | ಪೊರೆಗದಾಧರ ೩
ಗರುಡಗಮನ ಉರಗಶಯನ | ನರಕಸೂದನ | ಸುರರಿಗೊಡೆಯ ಧರಣಿ ಪಾಲ ದುರಿತ ಛೇದನಾ ೪
ಇಂದಿರೇಶ ಸುಂದರಾಸ್ಯ | ಮಂದರಾಧರಾ | ವಂದಿಸುವೆನು ಚಂದದಿ ಗೋವಿಂದ ಮುರಹರಾ ೫

೨೯೬
ಜಯತು ಜಯತು ಶ್ರೀ ಗಂಗಾದೇವಿಯೆ ಜಯತು ಪಂಕಜ ಗಂಧಿಯೇ ಬಹು ಜಯತು ಶ್ವೇತಾಂಗ ರೂಪೆಯೆ ಜಯತು ವಕ್ರ ಸವಾರಿಯೆ ಜಯತು ಜಯತೂ ೧
ಪಾಹಿ ಶ್ರೀಹರಿ ಪಾದನಂದನೆ ಪಾಹಿ ಶಿವ ಶಿರವಾಸಿನಿ ಪಾಹಿ ಶ್ರೀಜಹ್ನುಮುನಿ ಹೃದಯ ಶೋಭಿತೆ ಪಾಹಿ ಧಾರುಣಿ ಪಾಲಿತೆ ಪಾಹಿ ಪಾಹಿ ೨
ಶರಣು ಭಗೀರಥ ಕುಲ ಉದ್ಧಾರಳೆ ಶರಣು ವರುಣನ ಮಾನಿನಿ ಶರಣು ಗೋವಿಂದನ ದಾಸನೊಡತಿಶರಣು ಸರ್ವ ಅಘನಾಶಿನಿ ೩

೩೮೬
ಜಯಿಸಬೇಕು | ಮನವನು | ವೈಸಬೇಕು ಪ
ಜಯಿಸಬೇಕು ಅರಿಷಡ್ವರ್ಗವನು | ವೈಸಬೇಕು ಹರಿಚರಣದಿ ಮನವ | ಸೈಸಬೇಕು ಶೀತೋಷ್ಣದ ಬಾಧೆಯ | ಲೈಸಬೇಕು ಭವದುರಿತವನೂ ೧
ಗ್ರಹಿಸಬೇಕು ತವರ್ಚನ ಮರಣಸ್ಥಿತಿ | ಕಾಯಿಸಬೇಕು ಸುಕಾರ್ಯದಲಿ | ಗೈಸಬೇಕು ಪರ ಸೇವೆಗೆ ತನುವನು | ಮೋಹಿಸಬೇಕು ಕುಲಸತಿ ಪತಿಯ ೨
ಕೊೈಸಬೇಕು ದುರ್ವಾಕ್ಯದ ರಸನೆಯ | ಸಾೈಸಬೇಕು ಋಣ ರೋಗ ಸಸಿ | ಈಸಬೇಕು ಬಡತನದಲಿ ಮಾನವಾ | ಬೈಸಬೇಕು ಗೋವಿಂದ ದಾಸರ ಸಂಗ ೩

೩೭೦
ಜಲಜಾಲಯೇ | ಜಗನ್ಮೋಹಿನಿಯೇ || ಜಲಜಾಲಯೇ ಪ
ಜಲಜ ಲೋಚನೆಯೇ | ಜಲಜಗಂಧಿನಿಯೆ | ಜಲಜನಾಭನ | ಪ್ರಿಯೇ ಜಲಜಮುಖಿಯೆ ಪೊರೆಯೆ ೧
ಸಾಮಜ ಗಮನೆ | ಕೋಮಲಾಂಗಿ ನೀನೆ | ಕೋಮಲ ಚರಣೆ | ಕೋಕಿಲ ಸುಗಾನೆ ೨
ಚಂದ್ರ ಕೋಟಿ ವದನೆ | ನಂದ ಕುಂದರದನೆ | ಬಂದು ಗೋವಿಂದನಾ | ದಾಸನ ಪಾಲಿಸು ||ಜಲಜ||||೩||
| ಜಗನ್ಮೋಹಿನಿಯೇ || ಜಲಜಾಲಯೇ ಪ
ಜಲಜ ಲೋಚನೆಯೇ | ಜಲಜಗಂಧಿನಿಯೆ | ಜಲಜನಾಭನ | ಪ್ರಿಯೇ ಜಲಜಮುಖಿಯೆ ಪೊರೆಯೆ ೧
ಸಾಮಜ ಗಮನೆ | ಕೋಮಲಾಂಗಿ ನೀನೆ | ಕೋಮಲ ಚರಣೆ | ಕೋಕಿಲ ಸುಗಾನೆ ೨
ಚಂದ್ರ ಕೋಟಿ ವದನೆ | ನಂದ ಕುಂದರದನೆ | ಬಂದು ಗೋವಿಂದನಾ | ದಾಸನ ಪಾಲಿಸು ||ಜಲಜ||||೩||

೩೨೦
ತಲ್ಲಣಗೊಳ್ಳಬೇಡಾ ಶ್ರೀಹರಿ ಎಲ್ಲಿಹನೆನಬೇಡಾ ಪ
ಕಲ್ಲ ಕಂಬದಿ ಮೈದೋರಲು ನರಹರಿಪ್ರಹ್ಲಾದನು ತಾಪತ್ರಯ ಬರೆದನೇ ಅ.ಪ
ತರಳ ಧ್ರುವನು ವನದೀ ಸ್ವಾಮಿಗೆ ಚರರನು ಕಳುಹಿದನೇ ಕರಿರಾಜನು ತಾನ್ ಕರೆಯಲು ಪೋದನೆ ಹರಿಗೆ ರುಕ್ಮಾಂಗದ ವೀಳ್ಯವಿತ್ತಿಹನೇ ೧
ಅಂಬರೀಷನು ಹರಿಗೆ ದ್ರವ್ಯವ ತುಂಬಿ ಕಳುಹಿಸಿದನೇ ಅಂಬುಜನಾಭನು ಅಹಲ್ಯೆಗೆ ತಾತನೆ ಅಂಬರದಿಂ ಶೀರೆ ಇಳಿವುದೇ ದ್ರುಪದೆಗೆ ೨
ಅಣು ಮಹತ್ತೆನಿಸಿರುವಾ ಶ್ರೀಹರಿ ಬಣಗು ಜನರ ಮುರಿವಾ ಗಣನೆಯಿಲ್ಲದೆ ಪ್ರಾಣಿಗಳನು ಸಲಹುವತ್ರಿನಯನ ಸಖನುತಾ ಮಣಿವರ ಮರೆವನೆ ೩
ಅನ್ಯ ಚಿಂತೆಗಳನ್ನು ಬಿಟ್ಟು ಪನ್ನಗಶಯನನೂ ಘನ್ನ ಭಕ್ತಿಯೊಳುರೆ ಇನ್ನಾದರೂ ನೆನೆ ಮನ್ನಿಸದಿರೆ ಗೋವಿಂದನು ದಾಸರ ೪

೩೨೧
ತೂಗಿದಳೆಶೋದಾದೇವಿ ಬಾಲಕನಾ ಸಾಗರ ಶಯನನ ಜೋಗುಳ ಹಾಡಿ ಪ
ಪುಟ್ಟಿದ್ಹನ್ನೊಂದನೆ ದಿವಸ ಶ್ರೀಕೃಷ್ಣನಾ ತೊಟ್ಟಿಲೊಳಗಿಟ್ಟು ಸಂತೋಷದಿ ಮಗನ ಅ.ಪ
ಜೋಜೋ ಸುಗುಣಶೀಲ ಗೋಪಾಲ ಜೋಜೋ ಯದುಕುಲ ಬಾಲ ಶ್ರೀಲೋಲನೆ ಎನುತಾ ೧
ರಂಗ ಕೃಪಾಂಗ ಶ್ರೀರಂಗನೆ ಜೋಜೋಅಂಗಜ ಪಿತ ನರಸಿಂಗನೆ ಜೋ ಎಂದು ೨
ನಂದನ ಕಂದನೆ ಜೋಜೋ ಗೋವಿಂದಾ ಮಂದರ ಗಿರಿಧರ ಜೋಜೋ ಎಂದೆನುತಾ ೩

೩೨೨
(ಗ್ರಾಮ ಭಾಷೆಯಲ್ಲಿ)
ದಂಗೈನಿ ಗೋಪಮ್ಮ ನಿಮ್ಮ ಮಗನೊಂಚುಮನಿಗೆ | ಹಂಗರೀಸು ಬುದ್ಧಿ ಹೇಳುಗಾಗ್ದ ಕೃಷ್ಣೈಯ್ಯಂಗೆ ||ವಂಗಲ್ಸೀ | ಕೇಣ್ಗತಾಯೆ | ಹೇಳ್ಕುತೀನಿಂಪಾದ್ದಂಗೆಂ | ರಂಗಯ್ಯಾನ ಲೂಟಿ ತಡ್ಕಂಬುಕಾತ್ತಿಲ್ಯೇ ನಮ್ ಕೈಯ್ಯಂಗೇ ಪ
ಮೋಳ್ ಬೆಕ್ಕಿನಾಂಗ ಬಂದು ನಮ್ಮ ನೆಂಗಿದ್ದೆಲ್ಲಾ | ಹಾಲ್ ಮೊಸರ್ ಕುಡ್ಕ ಹ್ವಾರ್ | ಕೊರ್ಲಾಣಿ ಸುಳ್ಳಲ್ಲಾ ||ಮಾಳ್ಗಿಲದ್ ತುಪ್ಪ ನೊಂದ್ ಚಿಪ್ಪಾರ್ ಬೆಚ್ಲಿಲ್ಲೇ | ಅಳ್ಗಿಲಿದ್ ಬೆಣ್ಣೆ ಬರ್ಚಿ | ಬಾಯ್ಮೇಲ್ ಹ್ಯಾಕ ಹೋರಲೆ ೧
ಗೊಲ್ಲರೆಣ್ಗಳ್ ಮನಿಯಂಗಿ ವೃದ್ | ಗುಲ್ಲೆ ಗುಲ್ಲ್ ತಾಯಿ | ಎಲ್ ಗಂಟಿಂ ಕೇಂಡ್ರು ಬರು ಹೈಲೇ ಹೈಲ್ | ಮುಲ್ಲಿಂದ್ ಮುಲ್ಲಿ | ಗ್ ವಾಂಜಿಲಾಡುದೆಂತ್ ಚಲ್ಲೇಚಲ್ಲ್ ||ಮೆಲ್ಲಂಕ್ಯಾಂಡ್ರ ಹೇಳುದ್ ಪೂರ ಸುಳ್ಳೇ ಸುಳ್ಳ್ ೨
ಶಣ್ಣರಂತ್ರಿ ನಿಮ್ ಮಗ ಪೂತನೀನ್ ಹ್ಯಾಂಕೊಂದ್ರು || ಶಂಣ್ ಕಾಲಂಗೆ ತೊಳ್ದಿ | ಕಿದಡ್ ಗಾಡಿನ್ಯಾಂಗೆ ಮುರದ್ರ್ | ಮಣ್ ತಿಂದ್ ಬಾಯಾಂಗೆಲ್ಲ | ಲೋಕನ್ಯಾಂಗೆ ತೋರ್ಸ್ರ್|ಕಣ್ ಮಾಯಾಕ ಮಾಡಿ | ಹಾರ್ಸರೆ ತಿರ್ಣವರ್ತನ ತೀರ್ಸರ್ ೩
ಜಿಡ್ಡಿ ಒರ್ಲಿಗ ಕಟ್ರಕಾಣಿ | ಅಡ್ದೆ ಹ್ಯಾಕ ಎಳ್ದ್ರ್ | ದಡ್ ದಡ್ ಮತ್ತಿಮರು | ಎಯ್ಡ್ ಮುರ್ದುಕೆಡ್ದ್ರು | ಕಡ್ಡಿ ದೊಣ್ಣೆ ಹಿಡ್ಕ ಆಡೋ ಮಕ್ಕಳಂತ್ರಿ ಕಾಂತ್ | ಗಡ್ಡ ಹಣ್ಣಾದ್ಯತಿಗಳ್‍ವ್ರಿಗಡ್ಡ ಬದ್ದಿಕಿ ಹೋತ್‍ರಿ ೪
ಸಿಟ್ ಗಂಡಳ್‍ಂದ್ ನನ್ನ ತೊಟ್‍ಕಾ ಮುತ್ ಕೊಟ್ರು | ಹೊಟ್ಟೆ ಮೇಲ್ ಹೊಟ್ಟೆ ಬೆಚ್ಚಿ | ಲೊಟ್ಟಿಂಗ್ ಪಟ್ಟಂಗ್ ಕುಟ್ರು | ಕೆಟ್ಟಾರ್ ಬೈದನನ ಗಂಡ | ಕೇಂಡ್ರೆ ವಿರಾಣ ಬೆಚ್ಚ್ರೆ | ಸಿಸ್ಟಿಪತಿ ಗೋವಿಂದ್ ಮೂರ್ತಿ ದಾಸರ್‍ಗೆಲ್ಲಾ ಶ್ರೇಷ್ಟ್ರ್೫

೩೨೩
ದಮ್ಮಯ್ಯ ಸೆರಗ ಬಿಡೊ | ಶ್ರೀಕೃಷ್ಣಯ್ಯ | ಕರಮುಗಿವೆ | ಸಮ್ಮತವಲ್ಲಿದು ನಿನಗೆ | ನಿನ್ನಮ್ಮನೊಳ್ ಪೇಳುವೆ ಹೀಗೆ || ಧರ್ಮವೆ ಪತಿವ್ರತ ಕರ್ಮಕೆ ಎನ್ನಯ | ಅಮ್ಮನು ಕೇಳಿದರ್ ಸುಮ್ಮನೆ ಇರುವಳೆ ೧
ಸುಮನಸರು | ತೋಷಿಪರೆ | ನಿನ್ನ ರಮಣಿಯು ತಾನ್ ಕೋಪಿಸಳೇ ||ಸಮವೆಂದೂ ಪೇಳುವನೇ | ಎನ್ನ ರಮಣನಿದ ತಾಳುವನೇ | ಭ್ರಮಿತ ಕೋಪದಿ ಎನ್ನ | ಯಮನೆಡೆಗಟ್ಟನೇ | ಸಮಯವಲ್ಲಿದು ಕೇಳ್ | ಕಮಲದಳಾಕ್ಷನೆ ೨
ಇಂದೆನ್ನ ಕುಲವೆರಡೂ | ತಾವ್ ಹೊಂದದೆ ದುರ್ಗತಿ ಜರದೂ | ನಿಂದೆಗೆ ನಾ ಗುರಿಯಾಗಿ | ಯಮಬಂಧಕೇ ಸಿಲುಕೆನೆ ಪೋಗಿ | ಇಂದೆನ್ನಯ ವ್ರತ ಕುಂದದ ತೆರದಲೀಚಂದದಿ ಪೊರೆ ಗೋವಿಂದದಾಸನ ಪ್ರಿಯಾ೩

೨೬೨
ನಂಬಿದವರಿಗೆ ಇಂಬುದೋರುವ | ಲಂಬೋದರ ಗಣನಾಯಕ ಪ
ಶಂಭು ಶಂಕರಸುತನೆ ಭಕ್ತಕುಟುಂಬಿ ವಿಘ್ನನಾಯಕ ಅ.ಪ
ಏಕದಂತ ವಿವೇಕದಾತನೆ | ಲೋಕನಾಥ ಪ್ರಖ್ಯಾತನೆ ಶೋಕಹರ ಹೇರಂಬ ಗಜಮುಖಕಾಕುಜನ ಸಂಹಾರಕನೆ ಜಯತು ಜಯತು ೧
ಕುಂಕುಮಾಂಕಿತ ದೇವದೇವನೆ | ಕಿಂಕರನ ನುತಿಪಾತ್ರನೆಶಂಕರಿಯ ಸುಕುಮಾರ ಮಧುಪುರಪಂಕಜಾದಳನೇತ್ರನೆ ಜಯತು ಜಯತು ೨
ವಿಘ್ನ ಘನ ಕಾಂತಾರಕ ನಲನೆ | ವಿಘ್ನ ಮೇಘಕೆ ಅನಿಲನೆ ವಿಘ್ನಕರ ಯಾಮಿನಿಗೆ ಭಾಸ್ಕರ ವಿಘ್ನ ಸಾಮಜ ಕೇಸರಿ ಜಯತು ಜಯತು ೩
ಗಂಧಚಂದನ ಪುಷ್ಪಫಲಗ | ಳಿಂದ ನಿನ್ನನು ಪೂಜಿಸಿವಂದಿಸುವೆ ನಿನ್ನಂಘ್ರಿ ಕಮಲಕೆ ಸಲಹೊಸಲಹೊ ಗೋವಿಂದದಾಸನ ಜಯತು ಜಯತು ೪

೩೭೭
ನಮಸ್ಕಾರ ಮಾಡುವೆನು ಭಾಸ್ಕರನಿಗೆ ನಮಸ್ಕಾರ ಮಾಡುವೆನು ಪ
ನಮಸ್ಕಾರ ಮಾಡುವೆ ಸಮವರ್ತಿ ತಾತಗೆ ಕುಮುದ ವಿರೋಧಿಗೆ ಕಮಲಮಿತ್ರನಿಗೆ ಅ.ಪ
ತಮವೆಂಬ ಯಾಮಿನಿಯ ನಿವಾರಿಸಿ ದ್ಯುಮಣಿ ಶೋಭಿಸೆ ಭೂಮಿಯ ನಮಿಸಿದ ಭಕ್ತರ ದೋಷನಾಶವಗೈದ ಅಮಿತ ಮಂಗಳದ್ವಯ ಅಯನ ಆದಿತ್ಯಗೆ ೧
ಉರಗರೂ ಗಂಧರ್ವರು ಅಪ್ಸರ ಸ್ತ್ರೀಯರಧರಣಿ ಸುರರು ಯಕ್ಷರು ಪರಿಪರಿಯಲಿ ಬಂದು ಸೇವೆಯನೆಸಗಲು ಭರದಿಂದ ಬರದಿ ಸಂಚರಿಸುವರ್ಕಗೆ ೨
ಗಾಲಿ ಒಂದರ ರಥದೀ ಬಂಧಿಸಿದಂಥ ಏಳಶ್ವಗಳ ಮಧ್ಯದೀ ಕಾಲಿಲ್ಲದರುಣನು ಸಾರಥಿಯಾಗಿರೇ ಮೂರ್ಲೋಕವನು ಸುತ್ತಿ ಬೆಳಗುವ ತರಣಿಗೆ ೩
ಮಾಸಕ್ಕೆ ಒಂದೊಂದರ ಸಂಖ್ಯೆಯೊಳ್ ರಾಶಿ ಚಕ್ರದಿ ಸಂಚಾರ ದೇಶದಿ ಪ್ರಾಣಿಗಳಾಯುಷ್ಯವ ಸೆಳೆಯುವದೋಷವರ್ಜಿತ ಕಮಳಸಾಕ್ಷಿ ಮಾರ್ತಾಂಡಗೆ ೪
ಹಿರಣ್ಯರೇತಸ್ಸು ಭಾನು ನವಗ್ರಹಾ- ದ್ಯರೊಳು ಶೋಭಿಸುತೀರ್ಪನು ಧರಣಿಗೆ ಲಕ್ಷಯೋಜನ ದೂರ ತೋರುವ ಹರ ಗೋವಿಂದ ದಾಸನೊಡೆಯ ಪ್ರಭಾಕರಗೆ ನಮಸ್ಕಾರ ೫

೩೨೪
ನಮೋ ಮಾಧವಾ | ಸುಜನ ಬಾಂಧವಾ | ನಮೋ ಕುಮುದನಯನಾ ಪ
ಸುಮನಸಾದಿ ಮುನಿನಿಕರ ನಮಿತಪದ | ಪದ್ಮಚಕ್ರಧಾರೀ ಶ್ರೀ ಶೌರೀ ||ನಮೋ ೧
ರಂಗವಿಠಲ ನೀಲಾಂಗ ಜಯತು ನರಸಿಂಗ ಸುಜನ ಸಂಗಾ ||ಅಂಗಜಪಿತ ಕಾಳಿಂಗ ಮಥನ ಸಂಗೀತ ಗಾನಲೋಲಾ ಗೋಪಾಲ ||ನಮೋ|| ೨
ಇಂದಿರೇಶ ಅರ | ವಿಂದ ಹೃದಯ ಆ- | ನಂದ ಚಂದ್ರವದನಾ ||ಸಿಂಧುಶಯನ ಭವ | ಬಂಧ ಹರಣ ಗೋವಿಂದದಾಸನ ಪ್ರೇಮೀ…….|| ನಮೋ || ೩

೩೮೭
ನರರ ವಂಚಿಸಿದನೆಂದೆಂಬ | ಪೌರುಷವೇಕೋ | ಹರಿಯ ವಂಚಿಸಲಸಾಧ್ಯವು | ನಿನಗೆ ಮರುಳೆ | ದುರುಳರೊಡನಾಟದಲಿ ದುಷ್ಟ ಕಾರ್ಯವ ಮಾಡು | ನರಕದಲಿ ಮುಳುಗಿಸುವ ಯಮನು ನೋಡು ಪ
ಮೂಢ ಮತಿ ಕೇಳ್ ನರಗೆ ನೋಡಲೆರಡೇ ಕಣ್ಣು | ಗಾಢ ನಿದ್ರೆಯೊಳದನು ಮುಚ್ಚಿ ಮಲಗುವನೂ | ಗಾಢಾಂಧಕಾರದಲಿ | ಸೊಡರ ಹೊರತು ಕಾಣದದು | ರೂಢಿಯೊಳು ಸಹಸ್ರಾಕ್ಷ | ನನು ಮೋಸಗೊಳಿಸುವಾ | ಪಾಡೇನ ಬಲ್ಲೆ ಮರುಳೇ ೧
ಎರಡೇಳು ಜಗವನ್ನು ಧರಿಸಿರುವ ಹೃದಯದಲಿ | ಗರುಡ ವಾಹನನಾಗಿ ಧರೆಯೊಳ್ ಚರಿಸುವನು | ತರಣಿ ಶಶಿನೇತ್ರನೆಂದೆನಿಸಿ ಸರ್ವವನೋಳ್ಪ | ಪರಮಾತ್ಮನಾಗಿ ಪ್ರಾಣಿಗಳ | ಹೃದಯದಲಿ | ಹರಿಯು ನೆಲೆಸಿರ್ಪ ಕೇಳು ೨
ಇಂದೋರ್ವನನು ಮೋಸಗೊಳಿಸಿದಾ ದೋಷವಿದು | ಎಂದೆಂದಿಗೂ ನಿನ್ನ ಬೆನ್ನ ಬಿಡದೂ | ನಿಂದಿಗನು ನರಜನಕೆ ಗೋವಿಂದನಿಗೆ ದ್ರೋಹೀ | ಎಂದೆನಿಸಿ ಯಮನ ಹಂಗಿಗನಾಗಬೇಡ ನಾಳೆ ೩

೩೨೫
ನಲ್ಲ ಕೃಷ್ಣನ ಬರಹೇಳಿಂದುಮುಖಿಯೇ ನಿಲ್ಲದೇ ಕರೆತಾರೆ ಪೋಗಿಂದು ಸಖಿಯೇ ಪ
ಗುಲ್ಲು ಮಾಡದೇ ನೀನು ಗುಟ್ಟಾಗಿ ಪೇಳಿನ್ನು ಸುಳ್ಳಲ್ಲ ಕಬ್ಬಿಲ್ಲನುರುಬೆ ಸೈರಿಸಲಾರೆ ಅ.ಪ
ತೊಂದರೆ ಏನಿಂದು ಪರ್ವ ದಿವಸವಲ್ಲಸುಂದರ ಮೇಷ ಸಂಕ್ರಾಂತಿ ಏನಲ್ಲಾ ||ಹಿಂದು ಮತದ ಎಳ್ಳಮಾವಾಸೆಯಲ್ಲಾ ಚಂದಿರ ಮುಖಿ ಯುಗಾದಿಯ ಪಾಡ್ಯವಲ್ಲಾ ೧
ಭಾನು ಬಿದಿಗೆ ಅಕ್ಷತ್ತದಿಗೆ ಏನಲ್ಲಾ ವಿನಾಯಕನ ಚೌತಿ ನಾಗರಪಂಚಮಿಯಲ್ಲಾ ||ಸಾನುರಾಗದ ಚಂಪಾ ಷಷ್ಠಿ ರಥಸಪ್ತಮಿ ಗೋಕುಲಾಷ್ಟಮಿಯಲ್ಲಾ ಮಹಾ ನವಮಿಯಲ್ಲ ೨
ಎತ್ತಿದ ದಶಮಿ ಪ್ರಥಮೈಕಾದಶಿಯಲ್ಲಾಉತ್ಥಾನ ದ್ವಾದಶಿ ಶನಿತ್ರಯೋದಶಿಯಲ್ಲಾ ||ಉತ್ತಮನಂತ ವ್ರತ ನೂಲಹುಣ್ಣಿಮೆಯಲ್ಲಾ ಚಿತ್ತಜನಾಟಕ್ಕೆ ಗೋವಿಂದ ಬರಲಿಲ್ಲಾ ೩

೨೬೫
ನಾಗರಾಜ ನರಸುರ ನಮಿತೇ | ಸಾಗರ ಕರುಣೀ ಸರಸ್ವತೀ ||ಕೋಗಿಲ ಗಾನವಿನೋದಿತೇ ಬೇಗನೆ ವರಗಳ ಕೊಡು ಮಾತೇ ಪ
ಶೃಂಗೇರಿ ಪುರವರ ನಿಲಯೇ | ಮಂಗಲಚರಣೆ ಶಾರದೆಯೇ |ಭೃಂಗ ಕುಂತಲೆ ಭವ ಭಂಗನಿವಾರಿಣಿ |ರಂಗನ ಸುತನರ್ಧಾಂಗಿಯೆ ರಕ್ಷಿಸು ೧
ಪುಸ್ತಕ ಹಸ್ತ ಜಗದ್ಭರಿತೇ ಉತ್ತಮಳೆಮಕುಟಾನ್ವಿತದಾತೇ |ಪೃಥ್ವಿಪಾಲ ಮನದರ್ಥಿಯ ಸಲಿಸುವ |ಸ್ವಸ್ತಿ ಶ್ರೀಮನ್ಮಥನತ್ತಿಗೆ ಶಾರದೆ ೨
ಕುಂದ ಮಂದಾರ ಪುಷ್ಪಗಳ | ಚಂದಣ ಕುಂಕುಮ ಗಂಧಂಗಳಮಂದಗಮನೆ ಅರವಿಂದನಯನೆ ಗೋವಿಂದನ ಸೊಸೆಗಾನಂದದೊಳರ್ಚಿಸಿ ೩

೩೮೧
ನಾರಾಯಣಯೆಂದರಾಗದೇ ನಿನ್ನ ಘೋರ ದುರಿತ ದೂರ ಹೋಗದೇ ವಾರಿಜನಾಭನ ವಲಿಸದೇ ನರ ಶಾರೀರದಲಿ ಬಂದು ಫಲವೇನಿದೆ ೧
ಸಾರ ಷಡ್ರಸಾನ್ನ ಭುಜಿಸುತ್ತ ಪರ ದಾರಾಂಶದಲಿ ಮನವಿರಿಸುತ್ತಾ ಕ್ರೂರಕೃತ್ಯವ ನಿತ್ಯ ಗೈಯ್ಯುತ್ತ ಯಮ-ನೂರಿಗೆ ಪೋಗುವದೇನು ಹಿತ ೨
ನಡೆವಾಗ ನುಡಿವಾಗ ಕುಡಿವಾಗ ವೀಳ್ಯ ಮಡಿವಾಗ ಕೊಡುವಾಗ ಪಡೆವಾಗ ಜಲಜನಾಭನಎಡಬಿಡದೀಗಾ ನೆನೆ ಕಡೆಗೆ ನಾಲಿಗೆ ಬಿದ್ದು ನುಡಿಯಲಾಗಾ ೩
ಈಶಣತ್ರಯದಲಿ ಸಿಲುಕುತ್ತಾ ಒಂದು ನಶಿಸೆ ತಾಡಕ ಕೃತಿ ಗೈಯುತ್ತಾ ಎಸೆವ ಮೂರು ವೈರಾಗ್ಯ ತಾಳುತ್ತಾ ಸುತ್ತು ಈಶ ತ್ರಿಮೂರ್ತಿ ೪
ಜನಿಸುತ್ತಲೇನ ತಂದಿರುವೆಯೋ ನಾಳೆ ತನುವನೀ ….. ಲೇನನೊಯ್ವೆನೊತನುಮಧ್ಯ ಭಾಗ್ಯದಿ ಮೆರೆವೆಯೋ ನಿನ್ನ ಜನುಮದ ನೆಲೆಯ ನೀನರಿವೆಯೊ ೫
ಇಂದು ಸುಕರ್ಮ ಮಾಡದೆ ನೀನು ನಾಳೆ ಎಂದರೆ ತನುವಿಗೆ ನಿಜವೇನು ಚಂದದಿ ಸ್ಮರಿಸು ಗೋವಿಂದನು ತಾನೆ ಬಂದು ದಾಸರ ನೋಡಿ ಪೊರೆವಾನು ೬

೩೨೬
ನಿನ್ನ ನೋಡಿ ಧನ್ಯನಾದೆನೊ ಶ್ರೀಕೃಷ್ಣ ದಯದಿ ಮನ್ನಿಸಯ್ಯ ಮರೆಯ ಹೊಕ್ಕೆನು ಪ
ಅನ್ನಪಾನದಿಂದ ಬೆಳೆದ ತನುವು ಸ್ಥಿರವಿದೆಂದು ನಂಬಿಮುನ್ನ ಮತಿಹೀನನಾಗಿ ನಿನ್ನ ಸ್ಮರಣೆ ಮರೆತೆ ಅ.ಪ
ಮಾಯ ಪಾಶದಲಿ ಸಿಲುಕಿದೆ ಯನ್ನನಗಲಿ ಅಳಿದ ತಾಯಿ ತಂದೆಯರಿಗೆ ಮರುಗಿದೇ ಪ್ರಿಯ ಮಡದಿ ಪರಸ್ತ್ರೀಯರಲಿ ಮೋಹವೆರಸಿ ಮರುಳನಾದೆ ಕಾಯ ಸುಖವನೆಣಿಸಿ ಸರ್ವೇ ನ್ಯಾಯ ತಪ್ಪಿ ನಡೆದೆ ಕೃಷ್ಣಾ ೧
ಹಲವು ಜನ್ಮವೆತ್ತಿ ತೊಳಲಿದೇ ತರಳನೆನಿಸಿ ಹಲವು ಜಾತಿ ಮೊಲೆಯ ಭುಜಿಸಿದೆ ಹಲವು ದೇಶಗಳನು ಸುತ್ತಿ ಹಲವು ಕ್ರೂರಕೃತ್ಯ ಗೈದೆ ತಲೆಯ ಹಿಂದೆ ಇರುವ ಮೃತ್ಯು ನೆಲೆಯನರಿಯದಿರ್ದೆ ಕೃಷ್ಣಾ ೨
ಆಶಾಪಾಶಗಳಲಿ ಸರ್ವ ದೋಷ ಮೋಸವೆಣಿಸದಾದೆ ಲೇಸ ಕಾಣೆ ಮುಂದೆ ಯಮನ ಪಾಶಕರ್ಹನಾದೆ ಕೃಷ್ಣಾ೩
ಅರಿಗಳಾರು ಮಂದಿ ದೇಹದಿ ನೆಲಸಿರ್ದು ಎನ್ನ ಮರುಳುಗೊಳಿಸೆ ಇಂದ್ರಿಯ ಸಹಾಯದಿ ನರವು ಮಾಂಸ ಅಸ್ಥಿಯಿಂದ ವಿರಚಿಸಿದ ದೇಹವಿದನು ಪರಿಪರಿಯ ಶೃಂಗರಿಸುತ ಸ್ಮರನ ತೆರದಿ ಮೆರೆದೆ ಕೃಷ್ಣಾ ೪
ಒಂದು ದಿನವು ಸುಖವ ಕಾಣೆನೂ ಈ ಜೀವನ ಸಂಬಂಧಿಗಳ್ಯಾರೆಂಬುದನರಿಯೆನೂ ಬಂಧು ನೀನೇ ಸರ್ವಪ್ರದನು ಮುಂದೆ ಜನುಮವೆತ್ತದಂತೆ ಬಂದು ಎನ್ನ ಸಲಹೋ ಗೋವಿಂದದಾಸನೊಡೆಯ ಕೃಷ್ಣಾ ೫

೩೨೭
ನಿನ್ನ ನೋಡಿ ಧನ್ಯನಾದೆನೋ ಓ ಲಕ್ಷ್ಮೀರಮಣಾ ಮನ್ನಿಸೆನ್ನ ಮರೆಯ ಹೊಕ್ಕೆನೊ ಪನ್ನಗೇಂದ್ರ ಶಯನ ನಿನ್ನ ಪಾದ ನಂಬಿದೆನ್ನ ಮನ್ನಿಸದೆ ಮರೆವರೇನೋ ಘನ್ನ ಓ ಶ್ರೀ ಕೃಷ್ಣಮೂರ್ತಿ ಪ
ಲಾಲಿಸೆನ್ನ ಮಾತನೊಂದನೂ ಶ್ರೀಕೃಷ್ಣಮೂರ್ತಿ ಪಾಲಿಸೆನ್ನ ಪ್ರೀತಿಯಿಂದಿನ್ನೂ ಬಾಲಬುದ್ಧಿಯಿಂದ ಗೈದಹಾಳುಕೃತ್ಯವನ್ನು ಮರೆತು ಕಾಲನೊಶಕೆ ಕೊಡಿಸದೆನ್ನ ಪಾಲಿಸಯ್ಯ ಲಕ್ಷ್ಮೀರಮಣ ೧
ಒಡೆಯ ನೀನೆಂದೆಂಬುದರಿಯದೆ ಓ ಲಕ್ಷ್ಮೀರಮಣ ಮಡುವ ಧುಮುಕಿದಾನೆಯಂತಾದೆ ಒಡಲ ಸುಖವೆ ಬಯಸಿಗೈವ ಪಿಡಿದ ಮಡದಿ ಮಕ್ಕಳೆಂಬ ಕಡು ಮಮತೆಯಿಂದ ನಿನ್ನ ಅಡಿಯ ಭಜಿಸದಾದೆ ಕೃಷ್ಣಾ ೨
ಮೋಸಹೋದೆನಿನಿತು ತಿಳಿಯದೇ ಶ್ರೀಕೃಷ್ಣಮೂರ್ತಿ ಗಾಸಿಯಾದೆ ಮಾಯಾಕೊಳಗಾದೆ ಆಸೆ ಪಾಶಗಳಲಿ ಸಿಕ್ಕಿ ಈಸು ಸುಖವನಿನಿತು ಕಾಣೆ ಕೇಶವಾ ಗೋವಿಂದ ನಿನ್ನ ದಾಸನೆನಿಸೆ ಲಕ್ಷ್ಮೀರಮಣ ೩

೩೨೮
ನಿನ್ನನು ನಂಬಿದೆನು ನಾ ಸುಂದರ ಗೋವಿಂದನೇ | ಪನ್ನಗಾಶಯನ ಗೋಪಿ ಕಂದನೇ | ಮುಕುಂದನೆ ದುಷ್ಟರ ಶಿಕ್ಷಿಪ ಘೋರ ಕಾಲನೆ | ರಣಶೂರನೆ | ಶಿಷ್ಟರ ರಕ್ಷಿಪ ಭಕ್ತಪಾಲನೆ ಗುಣಶೀಲನೇ ಪ
ಹೊಳೆವ ಮತ್ಸ್ಯಾವತಾರನೆನ್ನಿಸಿ ಇಳೆಯ ಭಾರವ ಕಳೆದನೆ ||ಜಲದಿ ವಾಸವ ಮಾಡಿಕೊಂಡು |ಜಲದಿನಾಲ್ದೆಸೆ ನಲಿದನೆ ೧
ಧರೆಯ ಬೆನ್ನಲಿ ಪೊತ್ತು ನೆಲಸಿದ ಕೂರ್ಮನೆ | ಸ್ರ‍ಮತಿ ಧರ್ಮನೇ ||ಶರದ ಸೇತುವೆ ಧರಿಸಿ ನಿಂದಾ | ಮರ್ಮವರಿತೇ | ಸುಶರ್ಮನೆ ೨
ರಸತಳದಿ ಕೆಸರೊಳಗೆ ಹೊರಳುವ ಹಂದಿಯೇ | ಭೂಮಿ ತಂದಿಯೇ ||ಬಸುರ ಬಗಿದಾ ಹೇಮನೇತ್ರನ ಕೊಂದೆಯೇ ಮಮ ತಂದೆಯೇ ೩
ಕಂಬದಲಿ ಮೈದೋರಿ ತರಳನ | ಪೊರೆದನೇ ನರಸಿಂಹನೇ ಕುಂಭಿನಿಯ ಬಾಧಿಸಲು ದುರುಳನ | ಕರುಳನೇ ಹರಿದೆಳದನೇ ೪
ಭೂಮಿಯಲಿ ಮೂರಡಿಯ ದಾನವ ಕೊಟ್ಟಾನೇ ಬಲಿ ಕೆಟ್ಟಾನೇ ವಾಮನನು ಎರಡಡಿಯ ತೀರಿಸಿ | ಮೆಟ್ಟುತಲಿ ವರ ಕೊಟ್ಟನೇ ೫
ಕೊರಳ ಕುತ್ತಿಯೆ ಮಾಲೆಮಾಡುತ್ತಾ ಹೆತ್ತವಳ ಕತ್ತರಿಸಿದೆ ||ಧರಣಿಪರ ಶಿರವದೆ ಭಾರ್ಗವ | ಸತ್ಯ ಭೂಮಿಯ ಸುತ್ತಿದೆ೬
ವನದಿ ರಾಮನ ಸತಿಯ ರಾವಣ ಕದ್ದನೇ ವಿಷ ಮೆದ್ದನೇ ||ವನದಿ ಕಪಿಗಳ ಕೂಡಿ ದೈತ್ಯರ ಕೊಂದನೆ ಸೀತೆಯ ತಂದನೇ ೭
ಸರಸಿಯಲಿ ಮೊರೆಯಿಡುವ ಗಜವ | ಕಾಯ್ದನೇ ಯಾದವನೇ ||ಧುರದಿ ಕಾಳಿಯ ಶಿರದಿ ನಲಿದ | ದೇವನೇ ಮಾಧವನೇ ೮
ಬತ್ತಲೆಯ ಬೌದ್ಧಾವತಾರನೆ | ಮೃತ್ಯು ತೆಕ್ಕಲ ಹೊಕ್ಕನೇ ||ಸತ್ಯ ಧರ್ಮವನರಿಯದಧರ್ಮರ | ಸೊಕ್ಕ ಮುರಿವನೆ ಪಕ್ಕನೆ ೯, ೧೦
ಕಲಿಯುಗದ ಕಡುಪಾಪಿ ನರರನು | ಕಡುಗದಿಂದಲಿ ಕಡಿದನೇ ||ಕಾಲ ಭೈರವನಂತೆ ಕಲ್ಕ್ಯನು | ಕಿಡಿಯನುಗುಳುತ ಸುಡುವನೇ ೧೧
ದಾಸಜನರನು ಪೊರೆವ ಶ್ರೀನಿವಾಸನೇ | ಜಗದೀಶನೇ | ಶೇಷಶಯನನೆಂದೆನಿಪ | ಗೋವಿಂದನೇ | ಗುಣವೃಂದನೇ ೧೨

೩೩೦
ನೀನೆ ರಕ್ಷಿಸೋ ಎನ್ನ ಓ ಶ್ರೀನಿವಾಸ ದಾನವಾಂತಕ ದೀನಪಾಲ ಲಕ್ಷ್ಮೀಶಾ ಪ
ಮೌನಿ ಹೃದಯಾ ಸುಮವಾಸಾ ಸರ್ವೇಶಾಮೌನದಿಂದಿರಲೇನೋ ಕಾಣೆ ವಿಶೇಷಾಮೌನ ಮಂತ್ರವು ಸ್ನಾನಾ ಧ್ಯಾನಾವನರಿಯೆ ದೈನ್ಯ ಭಕ್ತಿಯೊಳ್ ಬೇಡಿಕೊಂಬೆ ಶ್ರೀಹರಿಯೆ ೧
ಲೋಕನಾಥನೆ ಜವ ಶೋಕವಿಹಾರಾ ಏಕರೂಪನೆ ಸರ್ವ ಲೋಕ ಸಂಚಾರಾ ನಾಕ ಸುಖವ ನಾನು ಬಯಸುವನಲ್ಲ ಬೇಕಾದ ಸೌಭಾಗ್ಯವೆನಗಿತ್ತೆ ಎಲ್ಲಾ ೨
ಮಂದರೋದ್ಧರ ಅರವಿಂದ ಲೋಚನನೇ ಇಂದಿರೆಯರಸ ಮುಕುಂದ ಮಾಧವನೇ ವಂದಿಸೂವೆನು ದಂದಶೂಕ ಶಯನನೇ ಸುಂದರಮೂರ್ತಿ ಗೋವಿಂದದಾಸನನೇ ೩

೩೨೯
ನೀನೇ ಗತಿ ಮಾಧವಾ ದೇವರದೇವ ನೀನೇ ಗತಿಯು ನಮ್ಮ ಮಾನಾಭಿಮಾನವ ಹಾನಿಗೊಳಿಸದನುಮಾನವಿಲ್ಲದೆ ಕಾಯೋ ಪ
ಸಾಕಾರ ಸೌಭಾಗ್ಯವೂ ಸರ್ವವೂ ಸರ್ವಶೋಕಕ್ಕೆ ಕಾರಣವೂ ಬೇಕಾದ ಕಡುರಸ ಶಾಕಪಾಕದ ರೂಪಿ ಶ್ರೀಕೃಷ್ಣ ನಿನ್ನಯ ನಾಮದಿಂದಧಿಕನೆ ೧
ಸಕಲ ಸಂಭ್ರಮವು ನೀನೇ ನಿನ್ನನು ಎನ್ನ ಸಖನೆಂದು ನಂಬಿದೆನು ಸಕಲ ಚರಾಚರ ಪ್ರಾಣಿಗಳಿಗೆ ಸರ್ವ ಸುಖದುಃಖವುಣಿಸುವ ಸಕಲ ತಂತ್ರನೇ ೨
ಆದಿಮೂರುತಿಯು ನೀನೇ ಧರ್ಮಾಧರ್ಮಶೋಧಿಸುವವನು ನೀನೇ ವೇದಗಮ್ಯನೆ ಯೆನ್ನ ಖೇದಮೋದವ ನಿನ್ನಲ್ಲಿ ಪಾದಕರ್ಪಿಸಿದೆ ಗೋವಿಂದದಾಸನೆ ಕಾಯೊ ೩

೩೩೧
ಪರಿಪರಿಯಲಿ ವರ್ಣಿಸುವೆ ಕಳಾನಿಧಿಯಾ ನರಜನರು ಅರಿತವನ ಸ್ಮರಿಸಿರಯ್ಯಾ ಪ
ಕಾಲುಗಳು ಹದಿನೆಂಟು ತೋಳುಗಳು ಹತ್ತು ಕಣ್ಣಾಲಿಗಳು ಇಪ್ಪತ್ತ ಒಂದು ಸಾಲಾಗಿ ರಂಜಿಸುವ ಶಿರಸಂಗಳೀರೈದು ಮೇಲಾದ ಫಣಿಂಗಳಾರ ಹನ್ನೆರಡು ನೀಳವಾಗಿಯೆ ಹೊಳೆವ ಕೋರೆದಾಡೆಗಳೆರಡು ಗಾಳಿಯನು ಭೇದಿಸುವ ಬಾಲ ನಾಲ್ಕುಪೇಳಲೇನಿದನು ಕೇಳ್ ನಾಲಿಗೆಗಳ್ಹನ್ನೊಂದು ಮೂರ್ಲೋಕದೊಡೆಯನ ಪೀಠದಲಿ ರಂಜಿಸುವ ದೇಹವೇಳು ೧
ಧರಣಿಯೊಳಗಿನ ಪರಿವಾರದವರಿಗೆಲ್ಲ ಪರಸ್ಪರನೆ ವೈರತ್ವ ಬೆಳೆಸಿಕೊಂಡಿಹುದೂ ಉರಗ ಮೂಷಕನಿಂಗೆ ಕರಿಮುಖಗೆ ಕೇಸರಿಗೆ ಗಿರಿಜೆ ಭಾಗೀರಥಿಗೆ ಉರಿನಯನ ಚಂದ್ರನಿಗೆ ಎತ್ತು ವ್ಯಾಘ್ರನ ತೊಗಲಗೆ ಮರೆಯ ಹೊಕ್ಕರೆ ಕಾಯ್ವನರಕೇಸರಿಯ ತೆರದಿ ಕರುಣಾಳು ಭಕ್ತವತ್ಸಲ ದೇವನಾ ೨
ಬಲಿದಾಗ್ನಿ ಸಖ ಸರ್ವ ನಿಳಯದೀವಿಗೆ ವೈರಿಹಲವು ನಾಸಿಕದ ಸಂಚಾರಿಯಾ ಹಾರದಲಿ ಬೆಳೆದ ದೇಹದ ಮೇಲೆ ಮಲಗಿ ನಿದ್ರೆಯ ಗೈವ ನಳಿನ ನಿಳಯಳ ರಮಣ ಜಲಜಾಕ್ಷ ಗೋವಿಂದನನುಜೆಯರಸ ಹಲವು ಮಾತೇನು ಕೇಳ್ ತಲೆ ಮೇಲೊಂದು ಕೊಂಬಿನ ಋಷಿಯ ಪಿತನ ಚರಣಕೆ ಕೈಯ್ಯ ಮುಗಿದು ತಲೆಬಾಗಿ ೩

೨೯೨
ಪಾರ್ವತಿ ಜಗದ್ಭರಿತೇ ಮಹೇಶ್ವರಿ | ಶರ್ವನಂಗನೆ ಖ್ಯಾತೆ ಪ
ಸರ್ವ ಸ್ವತಂತ್ರೆ ಶರ್ವಾಣಿ ಕಾಳಾಹಿವೇಣಿ | ಸರ್ವಜನರ ಮದ | ಗರ್ವ ನಿವಾರಿಣಿ ಅ. ಪ
ಸೃಷ್ಟಿಪಾಲಿನಿ ಗೌರೀ ಸರ್ವೇಶ್ವರಿ | ದುಷ್ಟಮರ್ದನ ಕಾರಿ | ಇಷ್ಟದಾಯಕಿ ಭವ | ಕಷ್ಟನಿವಾರಿಣಿ ಶಿಷ್ಟಪಾಲಿನಿ ಬೆಟ್ಟದ ಕಲಿಗೆ ಭವಾನಿಯೆ ೧
ಅಘನಾಶಿನಿ ದೇವೀ ಕಾತ್ಯಾಯಿನಿ | ಸುಗುಣರ ಸಂಜೀವಿ | ನಗೆಮೊಗವನು ತೋರಿ | ಸುಗುಣನೆಂದಿನಿಸೆನ್ನ | ಅಗಲಬೇಡವೋ ತಾಯೇ ಮುಗಿವೆನು ಕರವಾ ೨
ಪರಮ ಪಾವನೆ ನಿನ್ನಾ | ಭಕ್ತಿಯೊಳೀಗಾ |ಸ್ಮರಿಸಲರಿಯೆ ಮುನ್ನಾ | ತರಳ ಷಣ್ಮುಖನಂತೆ |ಪರಸಿ ರಕ್ಷಿಸೆ ಎನ್ನ | ಭರದಿ ಗೋವಿಂದನ ದಾಸನಿಗೊಲಿದು ||ಪಾರ್ವತಿ|| ೩

೩೩೨
ಪಾಲಗಡಲ ಶಯನಾ | ಪಂಕಜನಯನ |ಪಾಲಗಡಲ ಶಯನಾ ಪ
ಫಾಲನೇತ್ರ ಪರಿ | ಶೋಭಿಪ ಭಕ್ತ | ವಿಶಾಲ ಕರುಣ ಗುಣ | ಶೀಲಸಮ್ಮೋಹನ ೧
ನೀಲಮೇಘ ನಿಭಾಂಗನೆ | ನಿರ್ಮಲಚಿತ್ತ | ಶೂಲಪಾಣಿಯ ಸಖನೆ | ಬಾಲತನದಿ ಗೋಪಬಾಲಕಿಯರ ಮನ | ದಾಲವ ಸಲಿಸಿದ ಶ್ರೀಲೋಲನೆ ಪೊರೆ ೨
ಕೋಟೀ ಸಂಖ್ಯೆಯೊಳ್ ದೈತ್ಯರ | ಘಾತಿಸಿ ನರ | ನಾಟಕದಲೀ ಭಕ್ತರ-ಆಟಪಾಟ ಸಂತೋಷದ ಕೂಟದಿ | ನಾಟಕವೆನಿಸಿದೆ | ಹರಿ ಗೋವಿಂದನೆ ||ಪಾಲ|| ೩

೨೬೩
ಪಾಲಿಸು ಗಣನಾಥ ನೀ ಎನ್ನ ಮೇಲೆ ಕೃಪೆಯ ನಿರತ ಪ
ಸ್ಥೂಲ ಶರೀರ ವಿಶಾಲ ಲೋಚನ ಸುರಜಾಲ ವಂದಿತಜಾಲ ವಂದಿತ ಗುಣಶೀಲ ಸಜ್ಜನಪಾಲ ಅ.ಪ
ಮೂಷಿಕವಾಹನನೆ ವಿಘ್ನೇಶ್ವರ ಪಾಶಾಂಕುಶಧರನೆಈಶ ನಂದನ ನಿನ್ನ ದಾಸನೆನಿಸೊ ಎನ್ನಆಸೆಯ ಸಲಿಸು ವಿಘ್ನೇಶ ವಿನಾಯಕ ೧
ಕಾಮಿತಫಲಪ್ರದನೇ ವಿನಾಯಕ ಸ್ವಾಮಿ ಶನೇಶ್ವರನೆಸಾಮಜವದನನೇ ಶ್ಯಾಮಲವರ್ಣನೇ ಕಾಮವರ್ಜಿತ ಗುಣಸ್ತೋಮ ವಂದಿತನೇ ೨
ಗಿರಿಜೆಯ ವರಸುತನೇ ಲಂಬೋದರ ಉರಗನ ಸುತ್ತಿಹನೇಕರದಿ ಮೋದಕ ಹಸ್ತ ವರ ಏಕದಂತನೆ ಶರಣು ನಿನಗೆ ಗೋವಿಂದನ ಸಖನೆ ೩

೨೭೫
ಪಾಲಿಸು ಪರಮೇಶಾ ಪಾಪವಿನಾಶಾ ಪಾಲಿಸು ಪಾರ್ವತೀಶಾಫಾಲಲೋಚನ ಫಣಿಭೂಷಣ ನತಜನಪಾಲನೆ ಪಾಪವಿಹಾರಣ ಕಾರಣ ಪ
ನಿತ್ಯ ನಿರ್ಮಲ ಚಿತ್ತನೀಕ್ಷಿಸೋ ಎನ್ನನಿತ್ಯ ತೃಪ್ತನೆ ಖ್ಯಾತ ನಿತ್ಯನಂದನೆ ನೀಲ ಕಂಧರ ಶಶಿಧರ ನಿರ್ಮಲ ರಜತಾದ್ರಿ ನಿಲಯನೆ ವಿಲಯನೆ ೧
ಅಂಬಾ ವರದೇವ ಜಯ ಜಯ ವಿಶ್ವ ಕು-ಟುಂಬಿಲ ಸದ್ಭಾವ ಲಂಬೋದರ ಗುಹಜನಕ ಸದಾಶಿವ ನಂಬಿದೆ ಸಲಹೊ ಪ್ರಸೀತ ಸತ್ಪಾತ್ರ ೨
ಆಗಮ ಶ್ರುತಿಸಾರ ಭಕ್ತರ ಭವ ರೋಗ ಶೋಕ ವಿದೂರ ಯೋಗಿಗಳ ಹೃದಯ ಸಂಚಾರನೆ ಭವಬಂಧನೀಗಿಸು ಗೋವಿಂದ ದಾಸನ ಪೋಷನೆ ೩

೩೩೩
ಪಾಲಿಸು ಭಕ್ತವತ್ಸಲನೇ ನಿನ್ನ ಬಾಲಕನಂತೆನ್ನ ಸಲಹೋ ಶ್ರೀವರನೇ ಪ
ಬಾಲ ಪ್ರಹ್ಲಾದ ಧ್ರುವನು ಚಂದ್ರಹಾಸ ಮೇಲಾದ ಮುಚುಕುಂದನಂತೆನ್ನ ಸತತ ಅ.ಪ
ಸುರರು ನಾರದರು ಕಿನ್ನರರು ಮುನಿ ವರರು ವಸಿಷ್ಠ ವಾಲ್ಮೀಕಿ ಗೌತಮರು ಗರುಡ ಗಂಧರ್ವ ಗಾಯಕ ಯಕ್ಷ ವಾಸುಕಿ ತರಣಿ ನಂದನ ಆಂಜನೇಯ ಜಾಂಬವರಂತೆ ೧
ನಳ ನಹುಷ ಸಗರಂಬರೀಷ ನಿನ್ನ ಒಲಿಸಿ ಭಗೀರಥ ಬಲಿಯು ನಾಕೇಶ ಸಲಹೆಂದು ಹರಿಶ್ಚಂದ್ರ ರುಕ್ಮಾಂಗದ ವಿಭೀಷಣಗೊಲಿದ ಧರ್ಮಜ ಪಾರ್ಥ ಕರಿರಾಜನಂತೆ ೨
ಚರಣದಿ ಅಹಲ್ಯೆಯನು ಕಾಯ್ದೆ ನೀನು ಪೊರೆದೆ ಶಬರಿಯನ್ನು ಕುಬುಜೆಯನೆನದೆ ಹರುಷದಿ ಎರಡೆಂಟು ಸಾವಿರ ತರುಣಿಯರೊಡಗೂಡಿ ಸೆರಗಿಗೆ ವರವಿತ್ತೆ ದ್ರುಪದನಂದನೆಗೆ ೩
ಸಿಂಧುಶಯನ ನಿನ್ನ ಕರುಣ ಎನ-ಗೆಂದಿಗೆ ತೋರುವೆ ಶ್ರೀಲಕ್ಷ್ಮೀರಮಣ ಮಂದರಧರ ಅರವಿಂದವದನ ಹರಿ ನಂದನ ಕಂದ ಗೋವಿಂದನೆ ದಯದಿ ೪

೨೭೬
ಪಾಲಿಸು ಲೋಕನಾಯಕನೆ ಗುಣ ಶೀಲ ಶಂಕರ ಗಂಗಾಧರನೆ ಫಾಲಲೋಚನ ಘೋರ ಕಾಲಭಯ ವಿದೂರ ನೀಲಕಂಠೇಶ್ವರನೇ ಭಕ್ತರ ಕಾವ ಬಾಲ ಚಂದಿರಧರನೇ ಪ
ನಂಬಿದ ಮುನಿಬಾಲನ ಪೊರೆಯುವನೆ ನರರರುಂಡಮಾಲೆಯ ಧರಿಸಿದ ಶೂಲಪಾಣಿಯೆ ನಿನ್ನ ಮಹಿಮೆಯ ಪೇಳುವರೆ ಪಾತಾಳಲೋಕದಸೀಳು ನಾಲಗೆಯುಳ್ಳ ಸಹಸ್ರ ಕಪಾಲಶೇಷಗೆಗಿಂತು ಸಾಧ್ಯವೇ ೧
ಉರಗ ಕುಂಡಲಧರ ರಜತಾದ್ರಿ ಗಿರಿವರ ಕರಿ ಚರ್ಮಾಂಬರಧರನೇ ಮುಕ್ತಿಯನೀವ ಪರಮೇಶ ಗುಣಕರನೇ ರಾಮನ ರಾಣಿ-ಗಿರವ ತೋರಿಸಿದವನೇ ಕಾಮನ ಕಣ್ಣ ಉರಿಯೊಳು ದಹಿಸಿದ ಕರುಣನಿಧಿ ಕೈಲಾಸದಲೀ ಸ್ಥಿರದಿ ನೆಲಸಿದ ನಿನ್ನ ಚರಣವ ಸುರರು ನರದಾನವರು ಭಜಿಸಲು ವರವನಿತಾ ತೆರದೊಳೆನ್ನನು ೨
ಒಂದಿನ ಸುಖವಿಲ್ಲ ಬಂಧು ಬಾಂಧವರಿಲ್ಲ ನಂದಿವಾಹನ ದೇವನೆ ನಿನ್ನಯ ಪಾದಕೊಂದಿಸುವೆನು ಶಿವನೆ ಎನ್ನೊಳು ಬಂದು ಪಾಲಿಸು ಪರಮೇಶನೆ ಭೀಮನಿಗಂದು ವರವಿತ್ತು ಮೆರೆಸಿದೆ ಇಂದ್ರಸುತನಿಗೆ ವನದಿ ನೀನತಿ ಚಂದದಲಿ ಶರ ಒಂದ ಪಾಲಿಸಿ ದಂದು ಕುರುಕುಲ ವೃಂದವನು ಗೋವಿಂದ ಸಾರಥಿಯಾಗಿ ಕೊಂದನು ಚಂದ್ರಧರನೇ ೩

೩೩೪
ಪಾಲಿಸು ಲೋಕಾ | ಪಾಲ ಶ್ರೀಲೋಲಾ | ಪಾಲಯಾಚ್ಯುತ ವನಮಾಲ ಗೋಪಾಲಾ ಪ
ಅಗಣಿತ ಮಹಿಮಾ | ಆಶ್ರಿತದಾತಾ |ಆಘಹರ ನಗಧರ | ಆತ್ಮಾಭಿರಾಮಾ ೧
ಶಾಂತ ಸ್ವರೂಪಾ | ನಿಶ್ಚಿಂತ ನಿರಾಮಯ | ಅಂತ್ಯರಹಿತ | ರಮಾಕಾಂತ ಪ್ರಖ್ಯಾತಾ ೨
ನಂದನ ನಂದಾ | ನಂದ ಮುಕುಂದಾ | ಸುಂದರ ಮೂರ್ತಿ | ಗೋವಿಂದದಾಸನ ವಂದ್ಯ ೩

೨೭೭
ಪಾಲಿಸೈ ಪರಮೇಶ್ವರ | ಕ-| ಪಾಲ ಲೋಚನ ಶಂಕರಾ ||ನೀಲ ಕಂಧರ ಶಶಿಧರಾ ತ್ರಿ-|ಶೂಲಪಾಣಿ ಮಹೇಶ್ವರ ೧
ದಂಡಧರ ಶಿರಖಂಡನಾ | ಬ್ರ -| ಹ್ಮಾಂಡಪತಿ ಪಂಚತುಂಡನಾ ||ಖಂಡ ಪರಶು ಪ್ರಚಂಡನಾ | ಈಗ | ಕಂಡೆ ನಾ ರುಂಡಮಾಲನಾ ೨
ಉರಗ ಕುಂಡಲಧಾರನೇ | ಭವ | ದುರಿತ ಘೋರ ವಿಹಾರನೇ ||ಶರಧಿ ಸಮ ಗಂಭೀರನೇ | ನಿನ -| ಗೆರಗುವೆನು ಪರಮೇಶನೇ ೩
ದೂತನಾಥ ತ್ರಿಲೋಚನಾ | ಪುರು – | ಹೂತವಂದ್ಯಾ ಸುಖ್ಯಾತನಾ ||ಆರ್ತರಕ್ಷಕ ದೇವನಾ | ಬಲು | ಪ್ರೀತಿಯೊಳು ನಂಬಿರ್ದೆನಾ ೪
ಚಂದ್ರಕೋಟಿ ಪ್ರಕಾಶನೇ | ಪೂ -| ರ್ಣೇಂದು ಮುಖಿ ಗಿರಿಜೇಶನೆ ||ಅಂಧಕಾಸುರ ನಾಶನೇ | ಗೋ- | ವಿಂದ ದಾಸನ ಪೋಷನೇ ||ಪಾಲಿಸೈ| | ೫

೨೯೧
ಪಾಹಿ ಪಾರ್ವತೇ | ಪಾಲಿಸೆನ್ನ ಮಾತೇ ಪ
ಪಾಹಿ ಲೋಕಭರಿತೇ | ಪಾಹಿ ಸುಗುಣ ಚರಿತೆ ||ಪಾಹಿ ಸುಂದರ ಖ್ಯಾತೆ | ಪಾಹಿ ಶಂಭು ಪ್ರೀತೆ ೧
ದೇವಿ ನಿನ್ನ ಪಾದ | ಸೇವೆಮಾಳ್ಪ ಮೋದ- |ನೀವುದೆನಗೆ ಸದಾ | ಮನ್ನಳೆ [?]೨
ನಾರದಾದಿ ವಂದ್ಯೆ ವಾರಿಜಾ ಸುಗಂಧೆಗೋವಿಂದದಾಸನ | ಪಾಲಿಸಂಬಾದೇವಿ ೩

೨೬೬
ಸರಸ್ವತಿಸ್ತುತಿ
ಪಾಹಿ ಸರಸ್ವತೇ ಪಾಲಿಸೆನ್ನ ಮಾತೆ ಪ
ಪಾಹಿ ಲೋಕದಾತೇ ಪಾಹಿ ಶೋಕಘಾತೆಪಾಹಿ ಧರ್ಮ ಪ್ರೀತೆ | ಪಾಹಿ ಕರ್ಮರಹಿತೆ ೧
ಪಂಕಜೌಘಕೋಟಿ | ಸಂಕಾಶೆ ಪದ್ಮಾಕ್ಷಿಕಿಂಕರನ್ನ ರಕ್ಷಿಸಂಕದಿ ನಿರೀಕ್ಷಿಸಿ ೨ ಕುಂದಸಮರದನೇ ಮಂದಗಜಗಮನೇಚಂದದಿ ಗೋವಿಂದ | ದಾಸನೊಂದ್ಯಚರಣೆ ೩

೨೭೮
ಪಾಹಿಮಾಂ ಪರಮೇಶ ಪುರಹರ ಪಾಹಿ ಪನ್ನಗಭೂಷಣಾ |ಪಾಹಿಮಾಂ ಗಿರಿಜೇಶ ಸುರವರ ಪಾಹಿ ಕ್ಷನ್ನಘನಾಶನಾ ೧
ಪಾಲಯಂಫಾಲಾಕ್ಷ ಸಜ್ಜನಪಾಲ ಶಂಭು ಮಹೇಶ್ವರಾ |ಪಾಲಯಂ ಪಂಚಾಸ್ಯ ದುರ್ಜನಕಾಲ ಅಂಬಮನೋಹರಾ ೨
ಮಾಯಮಂ ಬೆರಸೀರ್ಪುದೆನ್ನಯ ಕಾಯದೊಳ್ ಶಶಿಶೇಖರಾ |ಪಾಯಮಂ ಇದಕರಿಯೆ ನಿನ್ನಯ ಸಹಾಯ ಕೊಡು ವಿಷಕಂಧರಾ ೩
ನಂದಿಯನೇರುತ್ತ ಭುವನಾನಂದದಲಿ ಸಂಚರಿಪನೇ | ಬಂಧಮಂ ಬಿಡಿಸೆಂಬೆ ಶಿವ ಗೋವಿಂದದಾಸನ
ಪೊರೆವೆನೆ ||ಪಾಹಿಮಾಂ| |೪

೩೭೮
ಪೂರ್ಣ ಚಂದ್ರನ ನೋಡ್ವ ಬನ್ನಿರೊಪೌರ್ಣಮಿಯ ದಿನರಾತ್ರಿಯೊಳ್ ಪ
ಕಿರಣದಲಿ ರಾಹುಕೇತು ಕಲೆಯಿರೆ ಗ್ರಹಣವೆಂಬ ಪುಣ್ಯಕಾಲವೂ ಅ.ಪ|
ಸೋಮನನು ಶಿಶುತನದಿ ರಘುಪತಿ ಕಾಮಿಸಿದ ಕೈಯಾಟಕೆ ಕಾಮಹರ ಶಿರದಲ್ಲಿ ಧರಿಸಿದ ಉಡುಗಣದ ಪತಿ ಚಂದ್ರನ ೧
ದಕ್ಷಸುತೆಯರ ವರಿಸಿ ಚಂದ್ರನು ಇಷ್ಟವಿಡೆ ರೋಹಿಣಿಯೊಳು ದಕ್ಷಶಾಪದಿ ಕೃಷ್ಣಪಕ್ಷದಿ ಕ್ಷಯಿಸಿ ಕಾಣನಮವಾಸೆಯೊಳ್ ೨
ಏರುತೇರುತ ಕಳೆಯ ತೊರೆವ ಧಾರುಣಿಗೆ ಶುಕ್ಲಪಕ್ಷದೀ ವಾರಿಧಿಗೆ ಭರತಿಳಿತ ಚಂದ್ರನು ತೋರೆ ಅಸ್ತಮ ಉದಯದೀ ೩
ಬೃಹಸ್ಪತಿಯ ಸತಿಯಿಂದ ತನಯನ ಪಡೆದು ಹೆಸರಿಡೆ ಬುಧನೆಂದೂ ಶಶಿಯ ವಂಶಕೆ ಆದಿಯಾದನು ನವಗ್ರಹಾದ್ಯರೊಳ್ ನಿಂದರೂ ೪
ಧರೆಗೆ ದ್ವಯ ಲಕ್ಷ ಯೋಜನದೊಳಿರೆ ಎರಡು ಅಯನೊಂದು ಮಾಸಕೆ ಮರವು ಹುಲು ಗಿಡ ಬಳ್ಳಿ ಪ್ರಾಣಿಯ ಅಮೃತ ಕಿರಣದಿ ಬೆಳೆಸುವ ೫
ಗ್ರಹಣ ಕಾಲದಿ ಸ್ನಾನಗೈಯುತ ದಾನ ಧರ್ಮವ ಮಾಡುತ ಮೌನದಲಿ ಗೋವಿಂದನಂಘ್ರಿಯಧ್ಯಾನಿಸಲು ಫಲವಕ್ಷಯ ೬

೩೩೫
ಪೊರೆ ದಯದಿ ಮಾಧವಾ ಕರುಣದಿ ಶ್ರೀಕೇಶವಾ ಪ
ಉರಗವಿಷ್ಟರ ಸುರಶ್ರೇಷ್ಠ ಸುಧಾಕರ ದುರಿತಹರಾ ಅ.ಪ
ಕರುಣಾಕರ ಸರಸಿಜಾಕ್ಷ ದಾಮೋದರ ಸುರತಟಿನೀ ತಾತನೆ ಕರುಣದಿ ಶ್ರೀನಾಥನೇತರಳ ಪ್ರಹ್ಲಾದನ ಪೊರೆದ ನರಸಿಂಹನೇಸ್ಮರಿಸುವೆನೇ ನರವರನೆ ಗರುಡಗಮನ ಶಂಭುಪ್ರಿಯ ೧
ಮಂದರೋದ್ಧಾರನೆ ಸಿಂಧು ಗಂಭೀರನೇ ನಂದನಂದನ ಮುಖಚಂದ್ರ ಪ್ರಕಾಶನೇ ವಂದಿಪೆನೇ ಸುಂದರನೇ ಸಿಂಧುಶಯನ ಗೋವಿಂದನೇ ೨

೨೯೦
ಪೊರೆಯೊ ಶಂಕರಾ | ಕರುಣಾ ಸಾಗರ | ದುರಿತ ಸಂಹರ | ಶಿವೆ ಮನೋಹರ ಪ
ಕರಿ ಚರ್ಮಾಂಬರ | ಪೊರೆ ದಿಗಂಬರ ||ಗರಳಕಂಧರ | ಚಂದ್ರಶೇಖರ ೧
ನಿಟಿಲ ನೇತ್ರನೆ | ಜಟಾಧಾರನೆ | ನಟ ಮಹೇಶನೇ | ಸ್ಮರಿಪೆ ನಿನ್ನನೆ ೨
ವೃಷಭವಾಹನಾ | ಭಸ್ಮಲೇಪನ | ಪಶುಪತೀಶನಾ | ನುತಿಸೋ ಅನುದಿನ೩
ಉರಗ ಕುಂಡಲ | ನರ ರುಂಡಮಾಲ |ಕರದೊಳ್ ತ್ರಿಶೂಲ | ಕೈಲಾಸ ಗಿರಿಪಾಲ ೪
ಅಂಧಕ ಗಜಾಸುರ | ರೆಂದೆಂಬ ದುರುಳರ | ಹೊಂದಿಸಿ ತ್ರಿಪುರರ | ಜಗದಿ ಮೆರೆದನೀಶ್ವರ೫
ದೇವ ದೇವೇಶನಾ | ಸೇವಿಸುತಿರೆ ಮನ | ಕಾಯ್ವನನುದಿನ | ಗೋವಿಂದದಾಸನ ೬

೨೭೯
ಫಾಲಲೋಚನೆ ನನ್ನ ಪಾಲಿಸೆಂದಿಗು ಎನ್ನಪಾಹಿ ಪಾರ್ವತಿ ರಮಣ ಪಾವನ ಚರಣ ಪಾಪನಾತ್ಮಕ ಘನ್ನ ಪಾಪ ನಿವಾರಣ ಪಾಹಿ ಪನ್ನಗಭೂಷಣ ಪಂಚಾನನ ಪ
ಅಂಬುಜೋದ್ಭವನು ತಾ ಅಮರಪೂಜಿತ ವಂದ್ಯ ಅಮಿತ ಮಂಗಲ ರೂಪನೆ ಆಶ್ರಿತದಾತ ಅಂಬರ ಕೇಶಿ ಚಿದಂಬರವಾಸನೆ ಅಗಣಿತ ಗುಣ ಮಹಿಮ ಅಂಗಜ ಭಂಗ ೧
ನಿಗಮಗೋಚರ ನೀನೆ ನೀಲಕಂಧರ ನೀನೆ ನಿರತ ನಂಬಿದೆ ನಿನ್ನನ್ನೆ ನಿಶ್ಚಲನೆ ನಿತ್ಯಾನಂದನು ನೀನೆ ನಿತ್ಯ ತೃಪ್ತನು ನೀನೆ ನಿತ್ಯ ನಿರ್ಮಲ ರೂಪನೆ ೨
ತ್ರಿಪುರ ಸಂಹಾರನೆ ತ್ರಿಜಗ ಸಂಚಾರನೆ ತ್ರಿಯಂಬಕನೆ ಶಿವನೆ ತ್ರಿನೇತ್ರನೆ ತ್ರಿಮೂರ್ತಿಗಳ ಖ್ಯಾತ ತ್ರಿಶೂಲಧಾರನೆ ತ್ರಿಗುಣಾತ್ಮಕ ಗೋವಿಂದನಾ ದಾಸನವಂದ್ಯ೩

೩೩೬
ಬಂದೆವಯ್ಯ ಶ್ರೀಕೃಷ್ಣಮೂರ್ತಿ ನಿನ್ನ ಸುಂದರ ಚರಣಾರವಿಂದ ನೋಡುವುದಕ್ಕೆ ಬಂದೆ ಪ
ಮಂದರೋದ್ಧರ ಅರವಿಂದ ನೇತ್ರಗೆ ನಮ್ಮೊ-ಳಿಂದು ಕೃಪೆಯ ತೋರಿ ಸಲಹೋ ಸಚ್ಚಿದಾನಂದ ಅ.ಪ
ಭಾವಸಂವತ್ಸರ ಪೌಷ ಬಹುಳಮವಾಸೆ ಮಹಾ ದೃಢದಿ ಸಮುದ್ರವ ಸ್ನಾನಗೈದು ಆ ವಡಭಾಂಡೇಶ್ವರದಿಂದ ಬಲರಾಮ ದೇವರ ಕಂಡು ನಾವೆರಗಿ ಕೈಮುಗಿದೀಗ ಬಂದೆ ೧
ಮಧ್ವಸರೋವರವೆಂಬ ತೀರ್ಥದಿ ಮಿಂದು ಶ್ರದ್ಧೆ ಭಕ್ತಿಯೊಳ್ ನಿನ್ನ ಕಂಡು ಬಲಬಂದು ಬದ್ಧಾಂಜಲಿಯ ನೀಡಿ ಸ್ಮರಿಸಿ ವಂದನೆಗೈದು ಉದ್ಧರಿಸೆಂದು ವರವ ಬೇಡುವದನೀಗ ಬಂದೆ ೨
ಅಷ್ಟಾವಧಾನ ಸೇವೆಯೊಳು ನಿನ್ನನು ಯತಿ ಶ್ರೇಷ್ಠರು ಪೂಜಿಸಿ ವರವ ನೀಡಿ ಕೊಟ್ಟ ಮಂತ್ರಾಕ್ಷತೆ ತೀರ್ಥ ಪ್ರಸಾದವ ಪಡೆದು ನಮ್ಮಯ ಭವಕಷ್ಟ ನೀಗುವುದಕ್ಕೆ ಬಂದೆ ೩

೩೩೭
ಬಾ ಬಾ ಬಾ ಬಾರೋ ಕೃಷ್ಣ ಬಾರೋ ಮುಖವ ತೋರೋ ಪ
ಬಾರೋ ಮುಖವ ತೋರೋ ಸರಸಾಮೃತ ಬೀರೋ ಬಾ ಬಾ ಬಾ ೧
ಸಾ ಸಾ ಸಾ ಸಾಕೋ ನಿನಗೀ ಲೋಕಮಾಯ ಮೋಹನಾ | ಲೋಕಮಾಯ ಮೋಹನಾ | ಶೋಕನೇಕ ನಾಶನಾ ೨
ಕೋ ಕೋ ಕೋ ಕೊಡಿಸೊ ನಮ್ಮ ಉಡುವ ಶೀರೆಕುಪ್ಪಸಾ |ಉಡುವ ಶೀರೆ ಕುಪ್ಪಸಾ | ಮಡದಿಯರಿಗೆ ಒಪ್ಪಿಸಾ ೩
ಅಲ್ಲ ಲ್ಲ ಲ್ಲ ಲ್ಲದಿದನೆಲ್ಲ ಗೋಪಿವಲ್ಲಭನೊಳ್ | ಎಲ್ಲ ಗೋಪಿ ವಲ್ಲಭನೊಳ್ | ಸೊಲ್ಲಿಸುವೆವು ನಿಲ್ಲದೇ ೪
ನಂದಂದನ ನಂದ ಗೋಪಿ | ಕಂದನೇ ಮುಕುಂದನೆ | ಕಂದನೇ ಮುಕುಂದನೇ | ಸುಂದರಾ ಗೋವಿಂದನೇ ೫

೩೩೮
ಬಾ ಬಾರೋ ಬಾರೋ ಬೇಗ ಬಾರೊ ಮುರವೈರಿ | ಬಾರೋ ಮುರವೈರಿ | ಬಾರೋ ಮುರವೈರಿ ತೋರೋ ದಯವ ಶೌರೀ ಪ
ನೀನಲ್ಲದಲ್ಲದೆಮ್ಮ ಇನ್ಯಾರು ಇನ್ನು ಪೊರೆವರು | ಯಾರು ಇನ್ನು ಪೊರೆವರೂ | ಯಾರು ನª À ್ಮು ಕರೆವರೂ ೧
ಕಾಯದೊಳು ಮಾಯ ತುಂಬಿ | ಪ್ರಾಯ ಮದಗರ್ವದೀ | ಪ್ರಾಯಮದಗರ್ವದೀ | ಹೇಯವಾದೆ ಸರ್ವದೀ ೨
ಬಂಧುಗಳು ಬಾಂಧವರೆಂದೆಂದು | ಮನ ಬಂದದಿ | ಎಂದು ಮನ ಬಂದದೀ | ನೊಂದೆನು ಗೋವಿಂದನೇ ೩

೨೮೦
ಬಾ ಬಾರೋ ಬೇಗ ಬಾರೋ ಶಿವಶಂಕರ ಪ
ಬಾರೋ ಶಿವಶಂಕರಾ ಬಾರೋ ಶಶಿಶೇಖರಾಅ.ಪ
ಘೋರದುರಿತ ಪಾರ ಶುಭಾಕಾರ ದಯಾಸಾಗರದಯಾಸಾಗರ ಶೂರ ಗಿರಿಜೇಶ್ವರಾ ೧
ನೀಲಲೋಹಿತಾಲಿಸೆಂದು ಬಾಲನಾ ವಾಗ್ವೊಲವನು ಬಾಲನಾ ವಾಗ್ವೊಲವನೂ ಕಾಲನೆಮ್ಮನೆಳೆವನೂ ಬಾ ಬಾ ೨
ರಜತಗಿರಿವಾಸ ಜಗದೀಶ ಗೋವಿಂದದಾಸನಾ ಈಶ ಗೋವಿಂದದಾಸನಾ ಪೋಷ ಫಣೀಂದು ಪಣಾ ೩

೩೩೯
ಬಾರೋ ಬಾ ಮನೆಗೇ ರಂಗಯ್ಯ ನೀ | ತೋರೋ ಮುಖವೆನಗೆ ಪ
ಘೋರ ಶರೀರ ಸುಂ | ದರ ಸೂಕ್ಷ್ಮಾಕಾರನೆ | ಕ್ರೂರ ದಯಾಕರ ಧೀರ ಉದಾರಿಯೆ ಅ.ಪ
ನೀಲಮೇಘ ಶ್ಯಾಮ ನಿರ್ಮಲವನ | ಮಾಲ ಪೂರ್ಣಕಾಮ |ಕಾಲ ಭಯ ವಿದೂರ | ಫಾಳನೇತ್ರನ ಮಿತ್ರ | ಪಾಲಾಬ್ಧಿವಾಸ ಶ್ರೀಲೋಲ ಗೋಪಾಲನೇ ೧
ಶೇಷಶಯನ ದೇವಾ | ಭಕ್ತರ ಭವ | ದೋಷಹರ ಸಂಜೀವಾ | ನಾಶರಹಿತ ಸರ್ವ | ಆಶವಿನಾಶನ | ಭಾಸುರಾಂಗನೆ ಜಗ | ದೀಶ ಕೇಶವಮೂರ್ತಿ ೨
ಕಾಲೊಳಂದುಗೆಯೂ | ಪೀತಾಂಬರ | ಶಾಲುಮುದ್ರಿಕೆಯೂ | ತೋಳ ಸರಿಗೆ ಬಳೆ | ವೈಜಯಂತಿಯ ಮಾಲೇ ಮೇಲಾದ ರತ್ನಕಿರೀಟಕುಂಡಲಧಾರೀ | ಗರುಡನ ಏರಿ ೩
ಶಂಕೆಯಿಲ್ಲದ ಭಕ್ತರೂ | ನಿನ್ನಯ ಸದೃ-ಶಾಂಕದಿ ಸೇವಿಪರೂ | ಶಂಖಚಕ್ರಗದಾ | ಪದ್ಮವ ಧರಿಸಿದ | ಪಂಕಜನೇತ್ರವೈ- | ಕುಂಠ ವೆಂಕಟಪತೇ ೪
ಧಾರುಣಿ ಭಾರವನೇ | ಇಳುಹಲವ | ತಾರಗಳೆತ್ತುವನೆ | ಚಾರು ಭುಜಾನ್ವಿತ | ಕೌಸ್ತುಭ ಮಣಿಹಾರ | ವಾರಿಜನಾಥ ಗೋವಿಂದದಾಸನಿಗೊಲಿದು ೫

೩೪೧
ಬಾರೋ ಬಾರೋ ಭಯನಿವಾರಣ ಕೃಷ್ಣ |ಬಾರೋ ಬಾರೋ ದಯಸಾಗರನೇ ದೇವಾ ಪ
ನಳಿನೋದರ ಮೋಹನ ಕಾಮಿತರೂಪ | ನಳಿನ ದಳಾಯತ ನಯನ ಗೋವಳರಾಯ ೧
ನಿತ್ಯಾನಂದ ನೀಲಾಂಗ ನಿರ್ಮಲಚಿತ್ತ | ಧಾತ್ರಿಜಾಂತಕ ವಾಸುದೇವ ದೇವಕಿ ಪುತ್ರ ೨
ನಂದಾನಂದ ಮುಕುಂದ ಸುಂದರ ಕಾಯ |ಇಂದಿರೆಯರಸ ಗೋವಿಂದದಾಸನ ಪ್ರೀಯ ೩

೩೪೦
ಬಾರೋ ಮನೆಗೆ ಮಾಧವಾ | ದೇವರ ದೇವ | ಬಾರೋ ಮನೆಗೆ ಮಾಧವಾ ಪ
ಬಾರೋ ಮನೆಗೆ ದಯಾ | ತೋರೋ ಎನಗೆ ಜೀಯಾ | ವಾರಿಜನಯನಾ ಓ | ಕ್ಷೀರಾಭ್ದಿ ಶಯನನೇ ||ಬಾರೋ|| ೧
ವೇದ ಗೋಚರ ನಿನ್ನಾ | ಪಾದ ನಂಬಿದ ಎನ್ನಾ | ಆದರಿಸೈ ಕರುಣೋದಯ ಮೂರುತೀ ||ಬಾರೋ|| ೨
ಸಿಂಧುವಸನದೀಶಾ | ಸುಂದರಾಂಗ ವಿಲಾಸ | ಇಂದಿರೆಯರಸ ಗೋ | ವಿಂದದಾಸನ ನಂದಾ ||ಬಾರೋ|| ೩

೨೬೪
ಬಾರೋ ವಾರಣವದನಾ ತ್ರೈಲೋಕ್ಯ ಸನ್ಮೋಹನತೋರೋ ಕಾರುಣ್ಯ ಸದಾನಂದಾ ಪ
ಮಾರಹರನ ಪರಿವಾರಕಧೀಶನೆ ನಾರಿ ಗಿರಿಜೆ ಸುಕುಮಾರನೆ ಧೀರನೆ ಅ.ಪ
ಪೊಡಮಡುವೆನು ನಿನ್ನಯಾ ಚರಣಕ್ಕೆ ದೇವಾಎಡಬಿಡದೀಗಲೆನ್ನಯಾತೊಡರ್ಕಿ ಅಡವಿಯ ಕಡಿಕಡಿದಡಸುತಕಡುಬಡವಗೆ ತಡವಿಡದ್ವರ ಕೊಡುವಂತೆ ೧
ಝಗಝಗಿಸುವ ಪೀಠದಿ ಮಂಡಿಸಿಕೊಂಡುಸೊಗಸೊ ಸಾಗಿ ಊಟದೀಬಗೆಬಗೆ ಭಕ್ಷವ ತೆಗೆತೆಗೆದು ಮೊಗೆವಂತೆಮೃಗದೃಗಯುಗವರ ನಗೆಮೊಗ ಸುಗುಣನೆ ೨
ಫಣಿಶಾಯಿ ಗೋವಿಂದನಾ ದಾಸರ ವಂದ್ಯತ್ರಿನಯನಮೂರ್ತಿ ನಂದನಾಕಣುದಣಿ ನೋಡುವೆ ಮಣಿಗಣ ಭೂಷಣಝಣಝಣ ಕುಣಿಯುತ ಗುಣಮಣಿ ಗಣಪತಿ ೩

೩೪೨
ಬುದ್ಧಿಯ ಪೇಳೇ ಗೋಪಮ್ಮ ನಿನ್ನ ಮುದ್ದು ಮಗನ ಲೂಟಿ ಘನವಾದುದಮ್ಮ ಪ
ಸದ್ದು ಇಲ್ಲದ ಹಾಗೆ ಬಂದಾನೆ ಕದ್ದು ಬೆಣ್ಣೆಯನೆಲ್ಲ ತಿಂದಾನೆ ಎದ್ದೊಮ್ಮೆ ನೋಡಿ ನಾ ಗದ್ದಲ ಮಾಡಲು ಸದ್ದು ಮಾಡದೆ ಕೃಷ್ಣ ಹದ್ದನೇರುತ ಪೋದ ೧
ಜಲಜ ಗಂಧಿನಿಯರು ಕೂಡೀ ನಾವು ಜಲದೊಳಾಡುವುದನ್ನು ನೋಡೀ ಜಲಜನಾಭನು ಮರದ ತಲೆಯ ಮೇಲ್ಕಟ್ಟಿದ ಸುಲಿದಿಟ್ಟ ಸೀರೆಯ ಬಲರಾಮನನುಜ ೨
ಹಾಲ ಮಾರಲು ಪೋದ ಮಗಳಾ ಕಂಡು ಮೇಲೆ ಬೀಳುತ ಮಾಡೆ ಜಗಳಾ ಶಾಲೆಯ ಸುಲಿದು ಬತ್ತಲೆ ನಿಲ್ಲಿಸಿದನು ಮೂರ್ಲೋಕದೊಡೆಯ ಶ್ರೀಲೋಲಗೋವಿಂದ ೩

೩೪೩
ಬೇಡುವೆ ನಿನ್ನನು ಜೋಡಿಸಿ ಕರಗಳ | ಕೂಡಲೆ ವರಗಳ | ನೀಡುವದೀಶನೆ ಪ
ನಂದನ ಕಂದ ಮುಕುಂದ ಮುರಾರೆ | ಸುಂದರ ಶುಭಕರ | ಮಂದರೋದ್ಧಾರ ೧
ಶಂಕರ ಹಿತನೇ ಪಂಕಜನಾಭನೇ | ವೆಂಕಟರಮಣನೆ | ಶಂಖಚಕ್ರಧರನೇ ೨
ಸುರನರ ಕಿನ್ನರ | ತುಂಬುರ ನಾರದರ್ | ಪರಿಪರಿಯಲಿ ನಿನ್ನ | ಸ್ಮರಿಸುತಲಿಹರೂ ೩
ಅಸುರರ ಬಾಧೆಯೊಳ್ | ಸುರರೆಲ್ಲ ಭಜಿಸಲು | ಕುಶಲದಿ ಭಕ್ತರ | ಪೊರೆದೆ | ಗೋವಿಂದನೇ ೪

೩೪೪
ಬೇಡುವೆ ವರಗಳ | ಜೋಡಿಸಿ ಕರಗಳ | ನೀಡು | ಕೃಪೆಯೊಳ ಮಾಡದೆ ಮುನಿಸುಗಳ ||ಗೋಪಾಲ||
ಬೇಡನು ಮರಗಳ ನೋಡುತ ತಪಗಳ ಮಾಡಲು ವರಗಳ | ನೀಡಿದೆ ಕರುಣದೊಳ್ ||ಶ್ರೀ ಲೋಲ|| ೧
ಜಪವನು ಮಾಡಲಾರೆ | ತಪವನು ಮಾಡಲಾರೆ | ಉಪವಾಸ ಮಾಡಲಾರೆ || ಶಪಥವ ಮಾಡಲಾರೆನು || ನಿನ್ನೊಳು ನಾನೂ || ದ್ರುಪಜೆಯುಟ್ಟ ಸೀರೆ | ಕುಪಿತಾತ್ಮ ಸೆಳೆವರೆ | ಉಪಕರಿಸಿದನ್ಯಾರೆ || ನಿಪುಣ ನೀ ದಯವ ತೋರೆ ||ಮುರಾರೆ ೨
ಹುಲು ನರ ಜನ್ಮವೆತ್ತೀ | ಹುಲುಗಾವಲೊಳು ಸುತ್ತೀ | ಹುಲು ಗೋವರ್ಧನವೆತ್ತಿ | ಹುಲುಗೈದೆ ಸುರಶಕ್ತೀ ||ಗೊಲ್ಲರೊಳ್ ಅರ್ಥೀ || ಕಲುಷವ ಬಿಡಿಸುತ್ತಿ | ಫಲ್ಗುಣ ಸಾರಥಿ | ಸಲಹೆನ್ನ ಮನದರ್ಥಿ | ಚೆಲುವ ಗೋವಿಂದ ಮೂರುತಿ | ದಾಸರೊಳ್ ಪ್ರೀತಿ ೩

೩೬೮
ಭೃಂಗಕುಂತಳೆ ಶ್ರೀರಂಗನ ಸತಿ ಸ-ರ್ವಾಂಗದಿ ಶೃಂಗಾರೆ ತುಂಗ ವಿಕ್ರಮೆ ತುರಂಗ ಗಮನೆ ಭವ ಭೃಂಗವು ನಿವಾರೆ ಪ
ಚರಣದಂದುಗೆ ನಡುಪಟ್ಟಿಯ ಉಡಿಗೆಜ್ಜೆ ಕರದಲಿ ಕಂಕಣ ಕಡಗ ಬಳೆ ಕೊರಳೊಳು ಮುತ್ತು ರತ್ನದಿ ಶೋಭಿಪ ತರತರ ಪದಕದ ಸರಮಾಲೆ ೧
ಬಾಲಚಂದ್ರನವೋಲು ದೇವಿ ಕ-ಪೋಲವು ಪೊಳೆಯುವುದು ಲೋಲಾಡುವ ಗಿಳಿವಾಲೆಯು ಕರ್ಣಕೆ ವಿ-ಶಾಲದಿ ಶೋಭಿಪುದು ೨
ಪಟ್ಟೆ ಪೀತಾಂಬರ ಉಟ್ಟು ದೇವಿ ನೆರಿ ಚೆಲ್ಲುತ ನಡೆತಂದೂ ಸೃಷ್ಟಿಯೊಳ್ ಸುಜನರ ಪಾಲಿಸಿ ಲಕ್ಷುಮೀ ಕ್ಷುಲ್ಲರ ಮುರಿದಂದು ಅರಿಸಿನ ಕುಂಕುಮ ಚಂದ್ರ ಕಸ್ತೂರಿಯು ನಯನದಿ ಕಾಡಿಗೆಯು ಶಿರದಿ ಮುಂದಲೆ ಬೊಟ್ಟು ಜಡೆಗೊಂಡೆ ಪುಷ್ಪವು ಚರಣದಿ ಮಿಂಚಿಕೆಯೂ ೩
ಹಸ್ತದಿ ಪದ್ಮಾವು ಬೆರಳೊಳು ಉಂಗುರ ತಿತ್ತಿಗೆ ಮೂಗುತಿ ಮುಖರಗಳೂ ನಿತ್ಯವು ಸ್ಮರಿಸೆ ಗೋವಿಂದನ ದಾಸನ ಅರ್ಥಿಯೊಳ್ ದೇವಿಯ ಪೊರೆಯುವಳು ೪

೩೯೪
ಮಂಗಲ ಮೂರುತಿಗೇ ನಮೋ ನಮೋ ಹರೀ ಮಂಗಲ ಚರಿತಗೆ ನಮೋ ನಮೋ ಪ
ರಂಗಾ ಕೃಪಾಂಗಾ ಶ್ರೀರಂಗಾ ನರಸಿಂಹಗೆ ಅಂಗಾ ಶೃಂಗಾರನಿಗೆ ನಮೋ ನಮೋ ಅ.ಪ
ಶೇಷಶಯನ ವಿಧೀಶ ಸುರಾರ್ಚಿತ ಕೇಶವ ತ್ರೈಜಗದೀಶ ಜಲಜನಾಭ ದಾಸರ ಸಾಸಿರ ದೋಷ ವಿನಾಶನ ಶ್ರೀಶ ಸಂದೇಶಗೆ ನಮೋ ನಮೋ ೧
ಮಾರಜನಕ ದೈತ್ಯಾರಿ ಚಕ್ರಾಂಕಿತ ಸಾರಸಾಕ್ಷ ಯತಿ ವಾರವಂದಿತ ಚರಣ ಹಾರಾ ಹೀರಾವಳಿ ಕೇಯೂರವ ಧರಿಸಿದ ಧೀರ ಉದಾರಿಗೆ ನಮೋ ನಮೋ ೨
ಮಂದರೋದ್ಧರ ಭವಬಂಧ ವಿಮೋಚನ ಇಂದಿರೆಪತಿ ಮಂದಾಕಿನಿಪಿತ ದೇವಾ ಸಿಂಧುಮಂದಿರದಲಿ ನಿಂದ ಗೋವಿಂದಗೆ ನಂದನ ಕಂದಗೆ ನಮೋ ನಮೋ ೩

೩೯೭
ಮಂಗಲಂ ಜಯ ಮಂಗಲಂ ಮಂಗಲಂ ಶುಭ ಮಂಗಲಂ ಪ
ನೀರೊಳು ಮುಳುಮುಳುಗ್ಯಾಡಿದಗೇ ಘೋರ ತಮವ ಹತ ಮಾಡಿದಗೆ ಮೂರೊಂದು ವೇದವ ತಂದವಗೆ ಧೀರಗೆ ಮತ್ಸ್ಯವತಾರನಿಗೆ ೧
ಸುರರ ಮೊರೆಯ ಕೇಳಿ ಬಂದವಗೇ ಗಿರಿಯ ಬೆನ್ನಲಿ ಪೊತ್ತು ನಿಂದವಗೆ ತ್ವರಿತದಿ ಶರಧಿಯ ಮಥಿಸಿದಗೆ ಕರುಣಾಕರನಿಗೆ ಕೂರ್ಮನಿಗೆ ೨
ಕೆರಳುತ ಕೋರೆಯ ಮಸೆದವಗೆ ಗುರುಗುರಿಸುತ ಧುರವೆಸೆದವಗೆ ದುರುಳ ಹೇಮಾಕ್ಷನ ಮಥಿಸಿದಗೆ ಧರಣಿಯ ತಂದಗೆ ವರಹನಿಗೆ ೩
ತರಳನು ಸ್ಮರಿಸಲು ಬಂದವಗೆ ಧುರದೊಳು ದೈತ್ಯನ ಕೊಂದವಗೆ ಕರುಳನು ಕಂಠದಿ ಧರಿಸಿದಗೆ ಸುರನರವಂದ್ಯಗೆ ನರಸಿಂಹಗೆ ೪
ಬಲಿಯೊಳು ದಾನವ ಬೇಡಿದಗೆ ನೆಲವನು ಈರಡಿ ಮಾಡಿದಗೆ ಛಲದಲಿ ಬಲಿಯನು ಮೆಟ್ಟಿದಗೆ ಚಲುವಗೆ ವಾಮನ ಮೂರುತಿಗೆ ೫
ಹಸ್ತದಿ ಕೊಡಲಿಯ ಪಿಡಿದವಗೆ ಪೃಥ್ವೀಪಾಲರ ಶಿರ ಕಡಿದವಗೆ ಧಾತ್ರಿಯ ವಿಪ್ರರಿಗಿತ್ತವಗೇ ಕ್ಷತ್ರಿ ವಿರೋಧಿಗೆ ಭಾರ್ಗವಗೆ ೬
ದಶರಥ ನಂದನನೆನಿಸಿದಗೆ ಶಶಿಮುಖಿ ಸೀತೆಯ ವರಿಸಿದಗೆ ದಶಶಿರ ದೈತ್ಯನ ಮಥಿಸಿದಗೆ ಕುಸುಮಾಕ್ಷನಿಗೆ ಶ್ರೀರಾಮನಿಗೆ ೭
ಮುರಲೀಧರನೆಂದೆನಿಸಿದಗೆ ದುರುಳ ಕಂಸನ ಮಥಿಸಿದಗೆ ತರಳೆ ರುಕ್ಮಿಣಿಯನು ತಂದವಗೆ ಮುರಹರ ಮೂರ್ತಿಗೆ ಕೃಷ್ಣನಿಗೆ ೮
ತ್ರಿಪುರರ ಸತಿಯರ ಒಲಿಸಿದಗೆ ತ್ರಿಪುರರ ಶಿವನಿಂಗೆಲಿಸಿದಗೆ ಕಪಟದ ಮೋಹನ ರೂಪನಿಗೆ ನಿಪುಣಗೆ ಬೌದ್ಧಾವತಾರನಿಗೆ ೯
ಹಸ್ತದಿ ಕತ್ತಿಯ ಪಿಡಿದವಗೆ ಉತ್ತುಮ ಹಯವೇರಿ ನಡೆದವಗೆ ಮಾತುಳ ಶಿರವನು ಕಡಿದವಗೆ ಉತ್ತುಮ ಮೂರ್ತಿಗೆ ಕಲ್ಕ್ಯನಿಗೆ ೧೦
ಇಂದಿರೆಯರಸಗೆ ಸುಂದರಗೆ ಸಿಂಧು ಮಂದಿರದಲಿ ನಿಂದವಗೆ ಮಂದಸ್ಮಿತ ಮುಖ ಚಂದ್ರನಿಗೆ ಗೋವಿಂದಗೆ ದಾಸನ ವಂದ್ಯನಿಗೆ ೧೧

೩೯೫
ಮಂಗಳ ಜಯಜಯತೂ ಜಯತು ಜಯ ಮಂಗಳ ಶುಭ ಜಯತು ಪ
ವಾರಿಜೋದ್ಭವನಿಗೆ ವಾಣಿ ಶಾರದೆಗೆ ನಾರಾಯಣನಿಗೆ ನಾರಿ ಲಕ್ಷುಮೀಗೆ ಮಾರ ಸಂಹಾರನಿಗೆ ಪಾರ್ವತೀ ದೇವಿಗೆ ನಾರೀ ರನ್ನೆಯರ್ ಹೂವಿನಾರತಿ ಬೆಳಗೆ ೧
ಸೃಷ್ಟಿಕರ್ತಗೆ ಸರ್ವ ಅಕ್ಷರದಾಯಿನಿಗೆ ರಕ್ಷಣ ಮೂರ್ತಿಗೆ ಅಕ್ಷಯಾಶ್ರಿತೆಗೆ ಶಿಕ್ಷೆ ರಕ್ಷಃ ದೇವಿ ಸೃಷ್ಟಿ ಸಂಹಾರಗೆ ಅಕ್ಷತೆಯಿಟ್ಟು ಸ್ತ್ರೀಯರ್ ಆರತಿ ಬೆಳಗೆ ೨
ವರಹಂಸ ಗಮನಗೆ ಮಯೂರ ವಾಹನಗೆ ಗರುಡ ಗಮನಗೆ ಮದಕರಿ ಧ್ವಜಿಗೆ ವೃಷಭವಾಹನನಿಗೆ ವರಸಿಂಹ ವಾಹಿನಿಗೆ ಸರಸಿಜಾಕ್ಷಿಯರ್ ಮುತ್ತಿನಾರತಿ ಬೆಳಗೆ ೩
ಕಮಂಡಲುಧಾರಿಗೆ ವರವೀಣಾಪಾಣಿಗೆ ಕೌಮೋದಕಿಧರಗೆ ಕಮಲ ಸುಮಕರಗೆ ಡಮರು ತ್ರಿಶೂಲಧರಗೆ ತೋಮರ ಪಾಣಿಗೆ ಕೋಮಲಾಂಗಿಯರ್ ಕುಂಕುಮದಾರತಿ ಬೆಳಗೆ೪
ಅಂಬುಜಾಸನಗೆ ಶುಂಭ ಸಂಹಾರಳಿಗೆ ಕುಂಭ ಕರ್ಣಾಂತಕಗೆ ಮಹಿಷಮರ್ದಿನಿಗೆ ಸಂಭ್ರಮ ತ್ರಿಪುರಾರಿ ಚಂಡ ಮುಂಡಾರ್ದಿನಿಗೆ ಅಂಬುಜಾಕ್ಷಿಯರ್ ಸಂಭ್ರಮದಾರತಿ ಬೆಳಗೆ ೫
ಚಂದದಿ ಬ್ರಹ್ಮಗೆ ಚಂದಿರವದನೆಗೆ ಸುಂದರ ಮೂರ್ತಿಗೆ ಇಂದಿರೆಗೆ ಅಂದದ ಶಿವನಿಗೆ ಅರವಿಂದನೇತ್ರೆಗೆ ವಂದಿಸಿ ಗೋವಿಂದದಾಸನಾರತಿ ಬೆಳಗೆ ೬

೩೪೫
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿ ಶಿರವನೇರಿ ತಾಂಡವವಾಡಿದಾ ಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟು ಶಿರದಿ ಚರಣ ಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ ೧
ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದ ಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿ ಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ ೨
ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿ ಬಂಧಿಸಿಟ್ಟು ಮಾನಗಳೆವೆಯಾ ನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆ ನಂದಗೋಪಿ ಕಂದ ಗೋವಿಂದದಾಸವಂದ್ಯ ೩

೩೪೬
ಮರೆತನೇನೇ ರಂಗ ಸ್ತ್ರೀಯರಸುರತದ ಸುಖಸಂಗ ಪ
ಪರಿಪರಿ ವಿಧದಲಿ ಸರಸವನಾಡುತ ಗುರುಕುಚ ಎದೆಗಿರಿಸಿ ಮುದ್ದಿಸುವುದ ಅ.ಪ
ಗೋವರ್ಧನವೆತ್ತಿ ವನದೊಳು ಗೋವ್ಗಳೊಡನೆ ಸುತ್ತಿ ಹಾವನು ಭಂಗಿಸಿ ಮಾವನ ಮರ್ದಿಸಿ ಕಾಯದಿ ಘನತರ ನೋವಾಗಿದೆಯೆಂದು ೧
ಭಕ್ತ ಜನರಿಗೊಲಿದು ದೈತ್ಯರ ಶಕ್ತಿಯಿಂದಲಿ ಗೆಲಿದು ಭಕ್ತರಂದದಿ ವೀರಕ್ತಿಯ ತಳೆದನೆ ನಕ್ತ ನಡತೆಗೆನ್ನ ಶಕ್ತಿ ಕುಂದಿಹುದೆಂದೂ ೨
ಎಣಿಕೆಯಿಲ್ಲದ ನಾರೀ ಜನರೊಳು ಸೆಣಸಿ ರಮಿಸಿದ ಶೌರಿ ದಣಿದು ಮನದಿ ಗೋವಿಂದನ ದಾಸರ ಮನೆಯ ಸೇರ್ದನೆ ಮನುಮಥನನು ಜರೆಯುತ ೩

೩೪೭
ಮಾರ್ತಾಂಡ ಕುಲದೀಶ ದಶರಥನುದರದಿ ಪುತ್ರನಾಗಿಯೆ ಜನಿಸಿ ರಾಘವ ವಿಶ್ವಾಮಿತ್ರರೆಜ್ಞವ ಪಾಲಿಸಿ ತಾಟಕೀ ಮುಖ್ಯ ಧೂರ್ತ ದೈತ್ಯರ ಮಥಿಸಿ ಅಹಲ್ಯೆದೇವಿಯ ಪಾಲಿಸಿ ಅರ್ಥಿಯಲಿ ವಿಥಿಲೇಖೆಗೆ ಗಮಿಸುತ ಪೃಥ್ವಿಜಾತೆಯನೊಲಿಸಿ ಮಾರ್ಗದಿ ಕಾರ್ತವೀರ್ಯಾಂತಕನ ಭಂಗಿಸಿ ತ್ವರಿತದಿಂದಯೋಧ್ಯೆಗೈಸಿದ ರಾಮಸೀತೆಗೆ ಮುತ್ತಿನಾರತೀಯ ಬೆಳಗೀರೆ ಶೋಭಾನೆ ೧
ಮಲತಾಯಿ ಕೈಕೆಯ ಮಾತಿಗೋಸುಗ ಪೋಗಿ ನೆಲಸಿದನಾರಣ್ಯದಿ ಪೋಗಿ ಮೃಗ ರಾಮ ತರಲು ಪೋಗಲು ಭರದಿ ಸೀತೆಯ ರಾವಣೇಶನೊಯ್ಯಲು ಮಾಯದೀ ರಾಮಲಕ್ಷ್ಮಣರ ವನದಿ ಚಲಿಸುತಲಿ ಕಪಿವರರ ಸ್ನೇಹದಿ ಜಲಧಿ ಬಂಧಿಸಿ ರಾವಣಾದ್ಯರ ಗೆಲಿದು ಶರಣಗೆ ಪಟ್ಟಗಟ್ಟುತ ಲಲನೆಸಹ ನಡೆತಂದಯೋಧ್ಯೆಗೆ ರಾಮಸೀತೆಗೆ ಹರಳಿನಾರತೀಯಾ ಬೆಳಗೀರೇ ಶೋಭಾನೆ ೨
ಚಂದದಿ ಧರಣಿಯ ಪಾಲಿಸುತಿರೆ ರಾಮನೊಂದಪವಾದವ ಕೇಳಿ ಸೀತೆಯ ಘೋರಾರಣ್ಯದಿ ಬಿಡಲು ಪೇಳಿ ಗರ್ಭಿಣಿ ಸೀತೆ ಬಂದ್ವಾಲ್ಮೀಕಿಯರೊಳು ಬಾಳಿ ಪಡೆದು ಲವಕುಶರನಲ್ಲಿ ಚಂದದಲಿ ಪಾಲಿಸುತಿರೆ ಗೋವಿಂದನೆಜ್ಞಾಶ್ವವನು ಬಂಧಿಸಿ ಬಂದು ಕಲಹದಿ ನಿಜವನರಿತಾ ನಂದನರ ಕರೆತಂದಯೋಧ್ಯೆಗೆ ರಾಮಸೀತೆಗೆ ಕುಂದಣದಾರತೀಯಾ ಬೆಳಗೀರೆ ಶೋಭಾನೆ ೩

೩೯೦
ಯಾಕಿಂತು ಬಳಲುವೆಯೊ | ಈ ಕಷ್ಟಗಳಲೀಗ | ಲೋಕ ಮಾತೆಯ ಭಜಿಸಿ | ಸುಖಿಯಾಗು ಮನವೆ | ಸಾಕು ಸುಡು ಸಂಸಾರ | ಬಿಡು ಮನವೆ ಅಹಂಕಾರ | ಇಂದ್ರಿಗಳಿಗುಪಚಾರಗೈದು ಬಂದೆ ೧
ನೋಡು ದೇವಿಯ ಚರಣ | ಮಾಡು ದೇವಿಯ ಪೂಜೆ | ಓಡು ದೇವಿಯ ಸ್ಥಳಕೆ | ನೀಡು ದೇವಿಗೆ ಫಲ ಪುಷ್ಪ ನೈವೇದ್ಯ | ಹಾಡು ದೇವಿಯ ಚರಿತೆ || ಆಡು ದೇವಿಯ ಮುಂದೆ |ಬೇಡು ದೇವಿಯೊಳ್ ಮುಕ್ತಿ | ಕೂಡು ದೇವಿಯ ಭಕ್ತ ಜನರ ತಂಡಾ೨
ಕೇಳು ದೇವಿಯ ಕಥೆಯ | ಪೇಳು ದೇವಿಯೊಳ್ ಸ್ಥಿತಿಯ | ಗೋಳು ದೇವಿಗೆ ತಿಳಿಸಿ | ಬೀಳು ದೇವಿಯ ಪಾದದ್ವಯಗಳಲ್ಲಿ ||ಬಾಳು ದೇವಿಯ ಕೃಪೆಯೊಳ್ | ತಾಳು ದೇವಿಯ ವ್ರತವ | ನಾಳೆ ದೇವಿಯ ಸೇರಿ | ಆಳು ದೇವಿಯು ಕೊಟ್ಟ ಸೌಭಾಗ್ಯ ಪದವಿ ೩
ದೇವಿ ಪದ ತೀರ್ಥ ಕುಡಿ | ದೇವಿ ಪ್ರಸಾದ ಪಡಿ | ದೇವಿ ಚರಣವನು ಹಿಡಿ | ದೇವಿ ಮೂರ್ತಿಗೆ ಪ್ರದಕ್ಷಿಣೆಯ ಮಾಡಿ || ದೇವಿ ನಿರ್ಮಾಲ್ಯ ಮುಡಿ | ದೇವಿ ಗಂಧ ಮೈಗೆ ಬಡಿ | ದೇವಿ ಸೇವೆ ಮಾಡು | ದೇವಿ ನೆವೇದ್ಯ ಉಣಲಿಷ್ಟಪಡು ನೀನು೪
ಮನೆಯು ನಿನ್ನದು ದೇವಿ | ಧನವು ನಿನ್ನದು ದೇವಿ | ತನಯ ನಿನ್ನವ ದೇವಿ | ತನುಮನವು ನಿನ್ನದೆಂದರ್ಪಿಸಲು ದೇವಿ || ದಿನ ದಿನವು ದೇವಿ ನಿನ್ನ | ಘನದಿಮನ್ನಿಸುವಳೈ | ಅನುಮಾನ ಬೇಡ | ಗೋವಿಂದದಾಸನ ಒಡತೀ | ಶ್ರೀ ಲಕ್ಷ್ಮೀದೇವಿ ೫

೩೬೯
ಯಾಕಿಂತು ಮನಸೋತೆ ಏ ರುಕ್ಮಿಣೀದೇವಿ ಲೇಖನವ ಬರೆದು ನೀನಾ ಕೃಷ್ಣಗೆ ಪ
ಲೋಕಮಾನ್ಯಳೆ ನೀನು ಬೇಕಾಗಿ ಮರುಳಾದೆ ಈ ಕೃಷ್ಣ ಯಾದವರ ಕುಲಕೆ ತಿಲಕ ಅ.ಪ
ಜನಿಸಿದನು ಮಧುರೆಯೊಳು ದೇವಕಿಯ ಜಠರದಲಿ ತನಯನೆನಿಸಿದ ಗೋಪಿಗಿವನು ಗೋಕುಲದಿ ದನುಜೆ ಪೂತನಿಯಳ ಮೊಲೆಯುಂಡು ತೇಗಿದನು ಮನೆ ಮನೆಯ ಪಾಲ್ಮೊಸರು ಕದ್ದು ಮೆದ್ದಾ ೧
ತುರುವ ಕಾಯ್ದನ ವನದಿ ತಿರಿಯ ಬುತ್ತಿಯನುಂಡ ಶಿರಕೊರಳಿಗಾಭರಣ ನವಿಲ್ಗರಿಯ ತುಂಡು ತರಳತನದಲಿ ಹಲವು ತರುಣಿಯರ ವ್ರತವಳಿದ ಕರಿಯನಿವ ಸ್ತ್ರೀಯರುಡುವ ಸೀರೆ ಕದ್ದೊಯ್ದ ೨
ನಂದಗೋಕುಲದಿ ಸಾಕಿದ ಸ್ತ್ರೀಯರನು ಬಿಟ್ಟು ಬಂದು ಮಧುರೆಯೊಳು ಮಾತುಳನ ಮರ್ದಿಸಿದಾ ಚಂದವೆ ಆ ಕುಬುಜೆ ಡೊಂಕ ತಿದ್ದಿಯೆ ನೆರೆದ ಸಿಂಧು ಮಧ್ಯದಿಂದ ಗೋವಿಂದ ಮಾಗದಗಂಜಿ ೩

೩೪೮
ಯಾದವ ಯದುಕುಲ ಬಾಲನೆ ಬಾರೋ ಮಾಧವ ಮದನಗೋಪಾಲನೆ ಬಾರೋ ಪ
ಸಾಧುಗಳೊಡೆಯ ಯಶೋದೆ ನಂದನೆ ಬಾರೋಶ್ರೀಧರ ಸುಗುಣ ಶರೀರನೆ ಬಾರೋ ಅ.ಪ
ಮನೆಮನೆಯೊಳು ಮೊಸರ ಕಡೆವರು ಬಾರೋ ವನಜಾಕ್ಷಿಯರು ಬೆಣ್ಣೆ ಕೊಡುವರು ಬಾರೋ ತನಯರೊಡನೆ ಚಂಡಿನಾಟವಾಡಲು ಬಾರೋ ಕೊನೆ ಬೆರಳೊಳು ಪಿಡಿದ ಕೊಳಲನೂದುತ ಬಾರೋ ೧
ಸುರರು ನಾರದರೆಲ್ಲ ಸ್ಮರಿಸುವರ್ ಬಾರೋ ಕರವ ಮುಗಿವೆ ನಿನ್ನ ಚರಣಕ್ಕೆ ಬಾರೋ ನರನ ಸಾರಥಿ ಕೃಷ್ಣ ಹರುಷದಿ ಬಾರೋ ೨
ಪಾಂಡುಪುತ್ರರ ಪಾಲ ಪಾಹಿಯೆಂಬೆನು ಬಾರೋ ಕಂಡು ರಕ್ಷಿಸೋ ಎನ್ನ ಕಮಲ ನಯನ ಬಾರೋ ಪಂಡರೀಪುರವಾಸ ಚಂಡವಿಕ್ರಮ ಬಾರೋ ಅಂಡಜವಾಹನ ಮಾರ್ತಾಂಡನಂತಿಳಿದು ಬಾರೋ ೩
ಗಂಧಚಂದನ ಪುಷ್ಪದಿಂದ ಪೂಜಿಪೆ ಬಾರೋ ಸುಂದರ ಚಿನುಮಯ ಮೂರ್ತಿಯೆ ಬಾರೋ ಮಂದರಧರ ಮದನ ಜನಕನೆ ಬಾರೋ ಇಂದಿರೆಯರಸ ಗೋವಿಂದನೆ ಬಾರೋ ೪

೩೪೯
ಯಾರೆನ್ನ ಕಾಯುವರು | ಶ್ರೀಹರಿಯೆ | ಹರಿಯೇ | ನೀ ದೂರ ಮಾಡುವರೇ ಪ
ಘೋರ ಪಾತಕವೆಂಬೀ | ಶಾರೀರವನು ಪೊತ್ತು | ಪಾರಗಾಣದ ದುಃಖಕರ್ಹನಾದೆನು ಹರಿಯೆ ೧
ಜೀವದಂತ್ಯದಿ ಯಮನೀವ ಪಾಶವ ಕಡಿದು ಕಾಯುವರಿಲ್ಲ | ದಯಾಕರ ಮೂರುತಿ ೨
ಕಾಸು ಕನಕವಿರಲಾಸೆ ಮಾಡುವರೆಲ್ಲ | ದೇಶ ಬಿಕ್ಷುಕನಾದ | ರೀಸು ಮೆಚ್ಚುವರಿಲ್ಲ ೩
ಬಂಧು ಬಳಗವೆಂಬುದೊಂದು | ಸಂಸಾರದಿ | ಬಂದು ನೋಯುವೆನು | ಗೋವಿಂದ ನೀನಲ್ಲದೆ ೪

೨೮೦
ಯಾವ ಭಯವು ನಮಗೆ | ಶಂಕರ ದೇವನೊಲಿದು ಕಡೆಗೆ ಪ
ಸಾವಧಾನದಿ ಸರ್ವಭಕ್ತ ಜನರ ಕಾವ | ದೇವ ದೇವೇಶ ಸರ್ವೇಶ ನೀನೊಲಿದರೆ ಅಪ
ದುರಿತದ ಭಯವೇನಲೇ | ಶಂಕರ ನಿನ್ನ | ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ ೧
ಚೋರರ ಭಯವೇನೂ | ದಧಿಘೃತ | ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ | ಘೋರ ರಕ್ಕಸರೆನೆ | ತ್ರಿಪುರಸಂಹಾರ೨
ಮೃಗ ಪಕ್ಷಿ ಭಯವೆನಲೇ | ಸತಿ ಸುತ ಸಖ | ಖಗ ಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ ೩
ವಸನಕ್ಕೆ ಚರ್ಮಾಂಬರನೂ | ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ | ಅಂಗ ಶೃಂಗಾರಕೆ | ಭಸ್ಮಲೇಪನನೂ ೪
ಪೊಗಳಲಳವೇ ನಿನ್ನಾ | ಮಹೇಶ್ವರ | ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ | ಹಗಲಿರುಳೆನ್ನದೆ ಪೊರೆಯೋ ಮಹಾದೇವ ೫

೩೫೦
ಯಾವಾಗ ಬರುವನಂತೆ ನಿನ್ನಯ ರಮಣ-ಗ್ಯಾವ ರೂಪವೊ ಕಾಂತೆ ಪ
ದೇವರ ದೇವನಂತೆ ಜೀವಿಗಳೊಡೆಯನಂತೆ ಭಾವಜನಯ್ಯನಂತೆ ದೇವಿ ನಿನ್ನದು ಕಾಂತೆ ಅ.ಪ
ನೀರೊಳಗಿರುವನಂತೆ ಬೆನ್ನೊಳು ಘೋರ ಭಾರವ ತಾಳ್ದನಂತೆ ಕೋಟೆಯೊಳಗೆ ಕ್ರೂರದೈತ್ಯನ ಸೀಳ್ದನಂತೆ ಸಾರಿ ಕಂಬದಿ ಕರುಳ ಹಾರ ಧರಿಸಿರ್ದನಂತೆ ೧
ಬಡವ ಬ್ರಾಹ್ಮಣನಂತೆ ಹಡೆದವಳನ್ನು ಕಡಿದ ಮಹಾವೀರನಂತೆ ಅಡವಿಯೊಳ್ ಕೋಡಗ ಬಲದೊಡನಿರ್ಪಂತೆ ಪೊಡವಿಯೊಳ್ ನರನ ಬಂಡಿ ಹೊಡೆಯುವನಂತೆ ೨
ಬತ್ತಲೆಯಿರುವನಂತೆ ಅಲ್ಲಲ್ಲಿ ತೇಜಿ ಹತ್ತಿ ಸುತ್ತಾಡುವನಂತೆ ಕುತ್ತಿಗೆ ಮೇಲಣ ಕುದುರೆಯ ಮುಖವಂತೆ ಉತ್ತಮನಂತೆ ಶ್ರೀನಿವಾಸ ಗೋವಿಂದನಂತೆ ೩

೩೫೧
ರಾಮನಾಥಸ್ವಾಮಿ ಪಾಲಿಸೋ | ರಘುನಾಥಸ್ವಾಮಿ ಪಾಲಿಸೊ ಪ
ಪಾಮರನಾದೆನ್ನಪರಾಧವ | ಪ್ರೇಮದಿ ಪಾಲಿಸಿಕೊಳ್ಳೋ ದೇವಾಚ
ಭೂಮಿಜೆ ಸೀತೆಗೆ | ಪ್ರೇಮನೆಂದೆನಿಸಿದ ೧
ನಿನ್ನನು ನಂಬಿದ ನಾಥನನೂ | ಮನ್ನಿಸದಿರೆ ಕೇಳ್ವರ್ಯಾರೋ ಇನ್ನೂ || ಸನ್ನುತ ಗುಣಾಕರನೆನ್ನುವ ಬಿರುದನು | ಎನ್ನೊಳು ತೋರಿಸೊ ರಾಮ ನೀನೂ ೨
ಎಂದಿಗೆ ನಿನ್ನಯ ಪಾದವನೂ | ಪೊಂದುವ ಸುಖವನು ಪೇಳೋ ನೀನೂ |ಮಂದರಧರ ಗೋವಿಂದನೆ ನಿನ್ನಯ | ಸುಂದರ ಚರಣಕೆ ನಮಿಸುವೆನೂ ೩

೨೮೨
ಲೇಸ ಪಾಲಿಸು ಜಗದೀಶನೆ ದಯದಿ | ದೋಷರಹಿತ ಪರಮೇಶನೆ ಮುದದಿ ಪ
ದಾಸ ಜನರ ಮನದಾಸೆಯ ಸಲಿಸುವ |ಸಾಸಿರ ನಾಮ ಸರ್ವೇಶ ಶ್ರೀಶಂಕರ ಅ.ಪ
ಕಾಮ ವ್ಯಾಮೋಹ ಮದಾಂಧಕಾರವು ಬಂದುಪ್ರೇಮದಿ ನಿನ್ನನು ಭಜಿಸಲು ಬಿಡದೂ |ಕಾಮಹರನೆ ಕಾಯೋ ಕಾಮಿತಾರ್ಥವನಿತ್ತು |ಪ್ರೇಮ ಗಿರಿಜಾರಮಣ |ಸೋಮಶೇಖರ ನಿನ್ನ ಲೇಸ ಪಾಲಿಸು ೧
ಫಾಲಲೋಚನ ಭವ | ಭಾರ ನಿವಾರಣ |ಶೂಲಪಾಣಿಯೆ ಮುನಿ ಜಾಲ ಸಂರಕ್ಷಣ |ಮಹಾಲಿಂಗೇಶನೆ | ಭಕ್ತಪಾಲಕನೆಂಬುವ | ಮೂಲ ಚರಿತ್ರವ ಕೇಳಿ ಬಂದೆನು ದೇವಾ ೨
ಹಿಂದೆ ಮಾರ್ಕಾಂಡೇಯ ಮುನಿವರ ನಿನ್ನನು | ಚಂದದಿ ಪೂಜಿಸಿ ವಲಿಸಲಾ ಯಮನೂ | ಬಂದು ಪಾಶವ ಕೊರಳ ಸಂದಿನೋಳ್ ಸೇರಿಸ- | ಲಂದು ಮೈದೋರಿ ಗೋವಿಂದಸಖ ನೀ ಕಾಯ್ದೆ ೩

೩೫೨
ವಂದಿಪೆ ಶ್ರೀವರನೇ | ಸುಂದರನೇ | ವಂದಿಪೆ ಶ್ರೀವರನೇ ಪ
ಆಶ ಪಾಶಕ್ಲೇಶವ ಬಿಡಿಸೈ | ದಾಸಗೆ ದಯತೋರಿ ೧
ಧೀರನೆ ಶೂರನೆ | ವೇದೋದ್ಧಾರನೆ | ತೋರಿಸೊ ಮುಖವನ್ನೆ ೨
ಶೋಕ ಮೋಹಾನೇಕದಿ ಬಳಲಿದೆ | ನೀ ಕೃಪೆ ತೋರಿನ್ನು ೩
ನಂದನ ಕಂದ ಗೋವಿಂದನ ಪಾಲಿಸು ಚಂದದಿ ಮೈದೋರಿ ೪

೩೯೩
ವನದೊಳಗತ್ರಿಯ ಮುನಿವರ ತರುಣಿ ಘನ ಪತಿವ್ರತೆಯೆಂದೆನಿಸಿದಳಾ ರಮಣಿ ಮನವ ಶೋಧಿಸೆ ಬಂದ ತ್ರಿಮೂರ್ತಿಗಳ ಕಂಡು ಅನಸೂಯೆ ತನಯರೆಂದೆನಿಸಿ ತೂಗಿದಳೂ ಜೋ ಜೋ ೧
ಜೋಜೋ ಸತ್ಯಲೋಕೇಶ ಬ್ರಹ್ಮನಿಗೆ ಜೋಜೋ ಹತ್ತಾವತಾರ ವಿಷ್ಣುವಿಗೆ ಜೋಜೋ ಮೃತ್ಯುಂಜಯ ಮೂರ್ತಿ ಶಂಕರಗೆ ಜೋ ಎಂದು ಸ್ತನಪಾನ ಗೈಸಿ ತೂಗಿದಳೂ ಜೋಜೋ ೨
ಸೃಷ್ಟಿಕರ್ತನೆ ಜೋಜೋ ಹಂಸವಾಹನನೆ ಸೃಷ್ಟಿಪಾಲನೆ ಗರುಡವಾಹನನೆ ನಿಟಿಲನೇತ್ರನೆ ಜೋಜೋ ನಂದಿವಾಹನನೆಂದು ರನ್ನ ತೊಟ್ಟಿಲೊಳಿಟ್ಟು ಪಾಡಿ ತೂಗಿದಳೂ ಜೋಜೋ ೩
ವಾರಿಜಾಸನೆ ಜೋಜೋ ವಾಣೀಶ ಜೋಜೋ ಸಾರಸಾಕ್ಷನೆ ಜೋಜೋ ಸಿರಿಯರಸ ಜೋಜೋ ಮಾರವೈರಿಯೆ ಜೋಜೋ ಗೌರೀಶ ಜೋಜೋ ಮೂರು ಮೂರ್ತಿಯೆ ಜೋಯೆಂದೆನುತ ತೂಗಿದಳೂ ಜೋಜೋ ೪
ಸುಂದರ ಮೂರ್ತಿ ಚತುರಾನನ ಜೋಜೋ ಸಿಂಧುಪುರೀಶ ಗೋವಿಂದನೆ ಜೋಜೋಚಂದಿರಧರ ನೀಲ ಕಂಧರ ಜೋಯೆಂದು ಚಂದದಿಂದನುಸೂಯೆ ಪಾಡಿ ತೂಗಿದಳೂ ಜೋಜೋ ೫

೩೫೩
ವಾಸುದೇವ ಜಯಜಯ ವಾಸುದೇವ ಪ
ವಾಸುದೇವ ಜಲಜಾಸನ ವಂದಿತ ಕೇಶವ ನತಜನ ಪೋಷ ಜನಾರ್ದನ ಅ.ಪ
ಶ್ರೀನಿವಾಸ ಜಯಜಯ ಶ್ರೀನಿವಾಸ ಶ್ರೀನಿವಾಸ ಒಲಿ ಸಾನುರಾಗದಲಿ ಮಾನವೇಂದ್ರ ಅನುಮಾನಿಸದೆನ್ನಲಿ ೧
ವೆಂಕಟೇಶ ಜಯಜಯ ವೆಂಕಟೇಶಾ ವೆಂಕಟೇಶ ಭವಬಿಂಕ ವಿನಾಶ ಶಂಕರ ಸಖ ಶಶಾಂಕ ಪ್ರಕಾಶನೆ ೨
ಪದ್ಮನಾಭಾ ಜಯಜಯ ಪದ್ಮನಾಭಾ ಪದ್ಮನಾಭ ಪೊರೆ ಪದ್ಮನಯನ ಹರೇ ಪದ್ಮೋದ್ಭವನುತ ಪದ್ಮ ಮಾಲಾಧರ ೩
ಇಂದಿರೇಶಾ ಜಯಜಯ ಇಂದಿರೇಶಾ ಇಂದಿರೇಶ ಗುಣವೃಂದ ಜಗನ್ಮಯ ಸಿಂಧುಶಯನ ಗೋವಿಂದದಾಸ ಪ್ರಿಯ ೪

೩೫೪
ವಿಠ್ಠಲನಾಮ ಸ್ಮರಣೆಯನನುದಿನ ಬಿಟ್ಟಿರಲಾಗದು ಮನವೇ ಪ
ದುಷ್ಟ ವಚನವನು ಜಿಹ್ವೆಯೊಳೆಂದಿಗುಪಠಿಸಲು ಬೇಡವೋ ಮನವೇ ಅ.ಪ
ಧಾರುಣಿಯೊಳು ನರ ಶಾರೀರದಿ ಬಂದು ಕ್ರೂರ ಕೃತ್ಯಗಳ ಮಾಡದಿರುಘೋರ ಪಾಪಿ ಅಜಾಮಿಳನನು ಕಾಯ್ದಾ ನಾರಾಯಣನನು ಮರೆಯದಿರೂ೧
ತಿಳಿದು ತಿಳಿದು ನೀ ಮರುಳನಾಗದಿರು ಕಲಿ ಸಂಸಾರದಿ ಸುಖವಿಲ್ಲಾ ಹಳುವದಿ ಧ್ರುವನಿಗೆ ಒಲಿದ ಮಹಾತ್ಮನ ಸ್ಮರಿಸೈ ಕುಶಲದ ಮಾತಲ್ಲಾ ೨
ಕಾಲನ ಬಾಧೆಗೆ ಸಿಲುಕುವ ಕಾರ್ಯವ ಮೇಲು ಉಲ್ಲಾಸದಿಂದೆಸಗದಿರೂ ಬಾಲ ಪ್ರಹ್ಲಾದನ ಪಾಲ ನರಸಿಂಹನ ಲೀಲೆಯೊಳಾದರು ಮರೆಯದಿರೂ ೩
ದುಃಖ ಸಂತೋಷಕೆ ಹಿಗ್ಗದೆ ಕುಗ್ಗದೆ ರಕ್ಕಸ ವೈರಿಯ ಧೇನಿಪರೆ ದುಃಖಿಸೆ ದ್ರೌಪದಿ ಸೆರಗಿಗಕ್ಷಯವಿತ್ತರುಕ್ಮಿಣಿಯರಸನು ಪೊರೆವ ಖರೆ ೪
ವ್ರತನಿಷ್ಠೆಗಳೆಂಬ ನೇಮವಿದ್ಯಾತಕೊವ್ಯಥೆಯೊಂದೆದೆಯೊಳಗಿರುತಿರಲು ರತಿಪತಿಪಿತ ಗೋವಿಂದನ ಧ್ಯಾನದಿ ನುತಿಸಲು ಸುಲಭ ಸಾಯುಜ್ಯಗಳೂ ೫

೨೮೩
ವೀರಭದ್ರೇಶ್ವರನೆ ಪಾಲಿಸು ನಮಸ್ಕಾರವ ಗೈಯುವೆನೆ ಪ
ಫೋರ ಶರೀರನೆ ಧೀರನೆ ಶೂರನೆ ಕ್ರೂರ ಖಡುಗಧಾರಿ ತುರಗ ಸವಾರಿಯೆ ಅ.ಪ
ರುದ್ರ ರೌದ್ರಾವತಾರ ಚಿತೆಯೊಳಂದು ಉದ್ಭವಿಸಿದ ವೀರ-ಭದ್ರ ಶರೀರ ಕೆರಳ್ದ ಲೋಚನಾಕಾರ ಊಧ್ರ್ವ ದೇಶಾನ್ವಿತ ಸಮುದ್ರ ಸಾಹಸಿಯೆ ೧
ಮಣಿಮಯ ಭೂಷಣನೇ ತೋರುವೆ ಘೋರ ಘಣಿ ಘಣಿ ನಾದವನೇಕುಣಿಯುವ ಕೂಗುವ ಭೂತಗಣದ ಸಂದಣಿ ಸೇರಿ ತ್ರಿನಯನಾಜ್ಞೆಯ ತಾಳ್ದು ಧರಣಿಗೆ ನಡೆತಂದ ೨
ದಕ್ಷಾಧ್ವರ ಹರನೇ ಕ್ರೋಧದಿ ಕ್ರೂರ ದಕ್ಷನ ಮುರಿದವನೇ ಸೃಷ್ಟಿ ಪಾಲಕ ಭಗನಕ್ಷಿಯ ಕೀಳಿಸಿ ದುಷ್ಟ ಪೊಷನದಂತ …. ಸೃಷ್ಟಿಗುರುಳಿಸಿದಾ ೩
ಪಾದೇಮಠದ ಪುರದೀ ನೆಲಸಿದೆ ಬಂದು ಸಾಧು ಜನರ ಪೊರೆದೆ ಆದಿಮೂರುತಿ ಗೋವಿಂದನ ದಾಸನ ಆಧರಿಸೈ ಕರುಣೋದಯ ಮೂರುತಿ ೪

೩೭೧
ವೃಂದಾವನ ದೇವಿ ನಮೋ ನಮೋ ಗುಣ | ವೃಂದೆ ಸುಂದರಿ ಲೋಕಮಾತೆ ನಮೋ ನಮೋ ||ಬಂದು ಸೇವಿಸಿ ನಿನಗುದಕವ ನೆರೆಯಲು ಇಂದು ನಾವು ಮಾಡಿದ ಪಾಪ ಹೋಗುವುದೂ ಪ
ಚಂದದಿಂದಲಿ ನಮ್ಮ ಕುಲದವರಿಗೆಲ್ಲಸುಂದರ ವೈಕುಂಠ ಪದವೀವಳೇ ೧
ಹನ್ನೆರಡು ಪ್ರದಕ್ಷಿಣೆ ಬಂದು ವಂದನೆ ಮಾಡಿ ಚೆನ್ನಾಗಿ ಸ್ಮರಿಸೆ ಕಂಡು ಪರಸುವಳೆ | ಘನತರ ಭಕ್ತಿಯೊಳ್ ಬಂದು ಕೈ ಮುಗಿದವರನ್ನುಪನ್ನಂಗಶಯನ ಸ್ವಾಮಿ ಕರೆದೊಯ್ಯುವನೂ ೨
ಭವ ಭವದಲಿಗೈದ ದೋಷನಿವಾರಿಸಿ ಭವ ಭಂಗ ಬಿಡಿಸೆನಗೊಲಿದು ತಾಯೆ | ದಯದಿ ಗೋವಿಂದನ ದಾಸನೆನಿಸೆಂದೆಂನ್ನ | ಭುವನ ಮೂರರೊಳ್ ಖ್ಯಾತಿ ಪಡೆದವಳೆ ೩

೩೭೨
ವೃಂದಾವನ ಲಕ್ಷ್ಮಿ ಜಯಜಯತೂ ಸುಂದರಿ ಸುಗುಣೆ ಸುಶೀಲೆ ಜಯತು ಜಯ ಪ
ಕ್ಷೀರಾಬ್ಧಿ ಮಥಿಸಲು ಸುಧೆ ಹುಟ್ಟಿ ಬರಲೂ ನಾರಾಯಣ ಹರುಷಾಶ್ರು ಸುರಿಸಲೂ ಧಾರಿಣಿಯೊಳಗದು ಗಿಡವಾಗಿ ಶೋಭಿಸೆ ನಾರಿ ಲಕ್ಷುಮಿಯಂಗ ತುಳಸಿಯೆಂದೂ ೧
ಆಲಯದಿಪ್ಪತ್ತೆಂಟು ಹೆಜ್ಜೆ ಈಶಾನ್ಯದಿ ಏಳುದಳಿದ ತುಳಸಿಗಿಡವ ಮೂಲದಿ ನವರತ್ನವಿಟ್ಟು ಪ್ರತಿಷ್ಠಿಸೆ ಪಾಲಿಸೆ ವಿಷ್ಣು ತಾನಲ್ಲಿರುವೆನೆಂದು ೨
ಧಾತ್ರಿನೆಲ್ಲಿಯು ವಾಣಿ ಗಿರಿಜೆಯರಂಶದಿ ಪೃಥಿವಿಯೊಳಿರೆ ಕಂಡು ತುಳಸಿಯಂಕದಲಿ ಅರ್ತಿಯಿಂದಲಿ ನಟ್ಟು ಪೂಜೆಯನೆಸಗಲು ಪ್ರೀತಿಸಿ ಬ್ರಹ್ಮ ವಿಷ್ಣು ರುದ್ರರೆ ವರವೀವರು ೩
ಬೃಂದೆ ಜಲಂಧರನರಸಿ ಪತಿವ್ರತೆ- ಯಂದಿರೆ ವಿಷ್ಣುವೊಲಿಸಿ ದುರುಳರ ಗೆಲಿಸೆ ಬೃಂದೆ ವರವ ಬೇಡಿ ಸಹಗಮನವಾದ ಸ್ಥಳ ನಿಂದಾನು ವಿಷ್ಣು ತುಳಸಿಯೊಳ್ ೪
ಕಾರ್ತೀಕ ದಾಮೋದರನೆನಿಸಿ ಪ್ರೀತಿಯಿಂದಲಿ ತುಳಸಿಯಲಿ ತಾ ನೆಲಸಿ ಘೃತದಿ ಜ್ಯೋತಿಯನಿಟ್ಟು ಪೂಜಿಸಿದವರಿಗೆ ಅತಿಶಯ ವರವಿತ್ತು ಸ್ವಾಮಿ ಪರಸುವನು ೫
ಕಟ್ಟಿ ಗೋಮಯದಿ ಬಳಿದೂ ಹಿಟ್ಟಲಿ ರಂಗೋಲಿ ಬರೆದೂ ನೀರೆರೆದು ಶ್ರೇಷ್ಠದಿ ತೀರ್ಥವಗೊಂಡು ನಿರ್ಮಾಲ್ಯ ಧರಿಸಲು ಅಕ್ಷಯ ವರವಿತ್ತು ದೇವಿ ಮನ್ನಿಪಳೂ ೬
ವಿಷ್ಣು ಪಾದದಿ ತುಳಸಿ ದಳದಿಂದರ್ಚಿಸಲು ಇಷ್ಟ ಪಡುವ ವಾಸುದೇವನು ತಾನು ಇಷ್ಟದಿ ತುಳಸಿ ಚರಿತೆ ನಿತ್ಯದಿ ಪಠಿಸಲು ಇಷ್ಟಾರ್ಥ ವರವೀವ ಗೋವಿಂದದಾಸರಿಗೆ ೭

೨೮೪
ಶಂಕರ ಶಂಭು ಮಹೇಶ ದಿಗಂಬರ | ಕಿಂಕರನುತಿಪಾತ್ರಾ || ಸತ್ಪಾತ್ರಾ ||ಶಂಕರ ಅಂಬಾ ಮನೋಹರ ಶುಭಕರ ವೆಂಕಟಪತಿಮಿತ್ರಾ | ವಿಚಿತ್ರಾ ೧
ನಿತ್ಯಾನಂದ ನಿರಾಮಯ ನಿರುಪಮ |ಮೃತ್ಯುಂಜಯ ಮೂರ್ತಿ || ಸುಮೂರ್ತಿ ||ನಿತ್ಯತೃಪ್ತ ನಿರಾಶ್ರಯ ನಿರ್ಮಲ | ಸತ್ಯಂ ಜಯಕೀರ್ತಿ | ಸುಕೀರ್ತಿ ೨
ಹಿಮಕರ ಶೈಲ ನಿವಾಸ ಸುರಾಸುರ | ನಮಿತ ಶೋಕಹಾರೀ ||ಉದಾರಿ||ಪ್ರಮಥಾಧಿಪ ಪರಮೇಶ ಪರಾತ್ಪರ | ಡಮರು ಬಾಲಧಾರಿ | ಪುರಾರಿ ೩
ಚಂದಿರಧರ ಅಘವೃಂದ ವಿನಾಶನ | ವಂದಿಸುವೆನು ದೇವಾ || ಮಹದೇವಾ ||ಮಂದರಧರ ಗೋವಿಂದನ ದಾಸಗೆ | ಚಂದದಿ ವರವೀವಾ | ಸಂಜೀವಾ ೪

೨೮೫
ಶಂಭೋ ಶಂಕರ ಶೈಮಿನಿ ಪತಿಹರ | ಅಂಬಾವರನೆ ತ್ರಿಯಂಬಕ ಪಾಹೀ ||ಲಂಬೋದರ ಗುಹಜನಕ ಸದಾಶಿವ | ಸಾಂಬ ಮಹೇಶ ದಿಗಂಬರ ಪಾಹೀ ೧
ನೀಲಗ್ರೀವ ಬಿಲೇಶಯ ಭೂಷಣ | ಫಾಲಾನಮನ ತ್ರಿಶೂಲಿಯೇ ಪಾಹಿ ||ಕಾಲಾಕಾ¯ ಕಪಾಲಧರನೆ ಗಣ- | ಜಾಲ ನಮಿತ ಗುಣಶೀಲನೆ ಪಾಹೀ ೨
ಮಂದಾಕಿನಿ ಧರ ಸುಂದರ ಶುಭಕರ |ಚಂದಿರಾ ಶೇಖರ | ಪಶುಪತೇ ಪಾಹೀ ||ಅಂಧಕ ರಿಪು ಗೋವಿಂದದಾಸನ ಪ್ರಿಯ |ನಂದಿವಾಹನ ನಿನಗೊಂದಿಪೆ ಪಾಹೀ೩

೨೮೬
ಶಂಭೋ ಶಿವ ಶಂಕರಾ | ಮಹೇಶ್ವರ ||ಶಂಭೋ | ಶಿವ ಶಂಫ್ Àರ ಪ
ಶಂಭು ಮಹೇಶ್ವರ | ಅಂಬಾಮನೋಹರ
ನಂಬಿದವರ ಕಾಯ್ವ | ಸಾಂಬ ದಿಗಂಬರ ೧
ನೀಲಕಂಧರ ವರ | ಬಾಲಚಂದಿರಧರ ||ಫಾಲಲೋಚನ ರುಂಡ | ಮಾಲಾಕಾಲನಕಾಲ ||ಅಂಧಕಾಸುರ ಹರ | ಮಂದಾಕಿನಿಧರ ||ನಂದಿ ಸವಾರ ಗೋ | ವಿಂದ ದಾಸವಂದ್ಯ ೩

೩೫೫
ಶರಣನಾದೆ ನಾನು ನಿನಗೆ | ಕರುಣ ದೇವನೇ | ತರಳನನ್ನು ಕಾಯೋ ದಯದಿ | ಪರಮಪುರುಷನೇ ಪ
ಸ್ನಾನ ದಾನ ಮೌನ ಮಂತ್ರ | ನಾನು ಅರಿಯೆನೆ | ಧ್ಯಾನ ದಾನ ತಿಳಿಯೆ ಸಲಹೊ | ಶ್ರೀನಿವಾಸನೆ ೧
ತರಳ ಧ್ರುವನ ತೆರದಿ ನಿನ್ನ | ಸ್ಮರಿಸಲರಿಯೆನೇ | ಗರುಡನಂತೆ ಹೊತ್ತು ಧರೆಂಇÀಇ | ಚರಿಸಲಾರೆನೆ ೨
ಚಂದ್ರಧರನ ಸಖನೆ ಕಾಯೋ ಇಂದಿರೇಶನೇ | ಸುಂದರ ಗೋವಿಂದ ದಯದಿ | ಕರವ ಮುಗಿವೆನೆ ೩

೨೮೭
ಶರಣು ಮಂಜುನಾಥಾ | ಪಾಲಿಸು || ಶರಣ ಜನರ ಪ್ರೀತಾ ||ಮರೆಯದೆ ನಿನ್ನಯ ಚರಣವ ನಂಬಿದ | ತರಳನ ಮೇಲ್ ದಯವಿರಿಸೈ ಜಯ ಜಯ ೧
ಧರ್ಮಾಧರ್ಮವನೂ ಶೋಧಿಪ | ಧರ್ಮದೇವ ನೀನು ||ಧರ್ಮ ಸುಕರ್ಮದ ಮರ್ಮವನರಿಯುತಾ ||ಧರ್ಮಸ್ಥಳದಲಿ ನೆಲಸಿದೆ ಜಯ ಜಯ ೨
ಕಪ್ಪ ಕಾಣಿಕೆಗಳನೂ | ದಿನ ದಿನ ತಪ್ಪದೆ ತರಿಸುವನೂ ||ಸರ್ಪಧರನೆ ನಿನ್ನಪ್ಪಣೆಯಿಂದ | ಣ್ಣಪ್ಪನು ನರರನು -ಒಪ್ಪಿಸಿ ಜಯ ಜಯ ೩
ದುಷ್ಟ ಜನರು ಬರಿದೇ | ಕೊಡುತಿಹ | ಕಷ್ಟವ ನಿನಗೊರೆದೇ |ಸೃಷ್ಟಿಪಾಲ ಯನ್ನ ರಕ್ಷಿಸಬೇಹುದು | ಕೆಟ್ಟೆನಯ್ಯಾ ನಿಟಿಲಾಕ್ಷನೆ ಜಯ ಜಯ ೪
ಚಂದ್ರಧರನೆ ಕಾಯೋ | ಕರುಣಾ-||ನಂದ ವರವನೀಯೋಮಂದರಧರ ಗೋ|ವಿಂದದಾಸನನಿಂದು | ಚಂದದಿ ಪಾಲಿಸು | ವಂದಿಪೆ ಜಯ ಜಯ ೫

೨೯೫
ಶರಣು ಶರಣು ಶರ್ವಾಣಿಯೆ ಈಕ್ಷಿಸು ಶರಣು ಶರ್ವನ ರಾಣಿ ಕಲ್ಯಾಣೀಶರಣು ಶರಣು ಸರ್ವೇಶ್ವರಿ ರಕ್ಷಿಸುಶರಣ ಜನರ ಶ್ರೇಣಿ ಫಣಿವೇಣಿ ಪ
ಹಿಮಕರ ಶೈಲ ಕುಮಾರಿ ಸುರಾಸುರನಮಿತೆ ಉಮಾದೇವಿ ಮಹದೇವಿ ಪ್ರಮಥಾಧಿಪೆ ಕೌಮಾರಿ ಪರಾತ್ಪರೆ ವಿಮಲೆ ಕೋಮಲಾಂಗಿ ಶ್ವೇತಾಂಗಿ ೧
ವೈರಿ ಕಳೌಘ ವಿಹಾರಿಣಿ ಪೂರಿಣಿ ಗೌರಿ ಸೋದರಿ ನೀನೆ ಪ್ರವೀಣೆಸೈರಣೆ ಸುರ್ಜಿತೆ ತೋರುವ ಕಾರಣೆ ಗೌರೀ ಗಗನವಾಣೀ ಶುಕವಾಣಿ ೨
ಮಂದಸ್ಮಿತ ಮುಖ ಚಂದ್ರಕೋಟಿ ಸಂಕಾಶೆ ವಿಶ್ವರೂಪೆ ಜಿತಪಾಪೆ ಸುಂದರಾಂಗಿ ಗೋವಿಂದದಾಸನ ಹೃನ್ಮಂದಿರ ಸುಮವಾಸೆ ಸಂತೋಷೆ ೩

೩೫೬
ಶರಣು ಶ್ರೀನಿವಾಸ | ಪಾಲಿಸು | ಶರಣ ಜನರ ಪೋಷಾರಿ ಪ
ಕರುಣದಿ ನಿನ್ನಯ ಚರಣವ ನಂಬಿದ | ಶರಣನ ಭವ ಭಯ ದುರಿತವ ಕಳೆಯುವ ಅ.ಪ
ನಂಬಿದವರ ಪೊರೆವಾ | ಭಕ್ತ ಕು | ಟುಂಬಿ ವಾಸುದೇವಾ | ಕಂಬು ಕಂಧರ ಕಮ | ಲಾಂಭಕ ಶ್ರೀವರ ಶಂಭು ಸಖನೆ | ಶುಕ್ಲಾಂಬರಧರ ಹರಿ ||ಶರಣು|| ೧
ಪದ್ಮನಾಭ ಎನ್ನ | ಪಾಲಿಸು | ಪದ್ಮಾವತಿರಮಣಾ | ಪದ್ಮನಯನ ಮುಖ | ಪದ್ಮವ ತೋರಿಸು ಪದ್ಮೋದ್ಭವನುತ | ಪದ್ಮಮಾಲಾಧರ ||ಶರಣು|| ೨
ತಿರುಪತಿ ಗಿರಿವಾಸಾ | ಕಾಣಿಕೆ | ಬರಲತಿ ಸಂತೋಷಾ | ಪರಿಪರಿ ವಿಧದಲಿ | ಹರಕೆಯ ತರಿಸುವ |ಉರಗ ಶಯನ ಗೋ | ವಿಂದನೆ ಶ್ರೀಹರಿ ||ಶರಣು|| ೩

೨೬೭
ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ಮಹೇಶ್ವರಿಘೋರ ಮಹಿಷಿ ನಿಶುಂಭ ಮರ್ದಿನಿಧೀರ ಚಂಡಮುಂಡಾರ್ದನಿ ಜಯತು ಜಯತೂ ಪ
ಜ್ವಾಲಿನೀ ಅಕ್ಷಾರ ಮಾಲಿನೀ ನೀಲಕುಂತಳೆ ಭಾರ್ಗವೀಶೂಲಿನೀ ಹರಿಲೋಲೆ ನೀಗುಣಶೀಲೆ ಗಾಯನ ರಾಣಿ ಜಯತು ಜಯತೂ ೧
ವಾರಿಜಾಲಯೆ ವೀಣಾಪಾಣಿಯೇಮಾರಹರನ ಅರ್ಧಾಂಗಿಯೇಕ್ಷೀರಸಾಗರ ಕನ್ಯೆ ಗಿರಿಸುತೆ ಕೀರವಾಣಿ ಸರಸ್ವತೀ ಜಯತು ಜಯತೂ ೨
ರಮೆಯೆ ರಕ್ಷಿಸು ಉಮೆಯೆ ಪಾಲಿಸು ಕಮಲಸಂಭವನರಸಿಯೆಅಮಿತ ಮಂಗಲೆ ಅಮರ ದೈವವೆಕಮಲಮುಖಿ ವಾಗ್ದೇವಿಯೆ ಜಯತು ಜಯತೂ ೩
ಕರವ ಮುಗಿವೆ ಸ್ಮರಿಸಿ ನಿನ್ನನುಶಿರವ ಚಾಚುವೆ ಚರಣಕೆ ಕರುಣದಲಿ ಗೋವಿಂದದಾಸನ ಪರಸಿ ರಕ್ಷಿಸಬೇಹುದು ಜಯತು ಜಯತೂ ೪

೨೬೮
ಶಾರದೆ ಜಗದ್ಭರಿತೆ ಸರಸ್ವತೆ || ಸಾರ ಸದ್ಗುಣಚರಿತೆ ವಾರಿಜೋದ್ಭವನ ಪಾದಾರವಿಂದಾರ್ಚಿತೆ | ತೋರೆ ದಯವ | ಕೀರವಾಣಿ ಕಲ್ಯಾಣಿಯೆ ||ಶುಭಕರೆ ಶುಭವದನೇ ಸರ್ವೇಶ್ವರಿ | ಪ್ರಭಾಕರ ಪ್ರಭಾವದನೆ ಪ
ಇಭರಾಜಗಮನೆ | ಸದ್ಬುದ್ಧಿಪ್ರದಾಯಿನಿ | ಅಭಯನೀಯುತಲೆನ್ನ | ಸಲಹು ಸ್ತ್ರೀಸಭಾಶೋಭೆ ೧
ತಾಯೆ ಮಯೂರ ವಾಹಿನೀ | ಜಯ ಜಯ ಜಗ -| ನ್ಮಾಯೆ ಮೋಹನ ರೂಪಿಣೀ ||ತೋಯಜ ಕುಸುಮದಳಾಯತ | ಲೋಚನೆ | ಕಾಯೇ ದಯದಿ ಭವ ಹೇಯವಿದಾರಿಣಿ ೨
ನೀತೆ ಪರಮಪುನೀತೆ | ಪಾಲಿಸು ಲೋಕ | ಮಾತೆ ಪಾವನ ಚರಿತೆ |ದಾತೆ ತ್ರಿಲೋಕ | ವಿಖ್ಯಾತೆ ಬ್ರಹ್ಮನ ಪ್ರೀತೆ ಆತ್ಮರಕ್ಷಿಣಿ | ಗೋವಿಂದದಾಸನ ಮಾತೆ ೩

೨೮೮
ಶಿವ ಶಂಬೋ ಶಂಕರಾ | ಶಿವ ಸೋಮಶೇಖರಾ | ಶಿವನೆ ಗಂಗಾಧರ | ಶಿವ ಗೌರೀವರ | ಶಿವ ಚರ್ಮಾಂಬರ | ಶಿವ ಭವ ಭಯಹರ ೧
ಶಿವ ನೀಲಕಂಧರಾ | ಶಿವಕಾಲಾ ಸಂಹರಾ | ಶಿವನೇ ಜಟಾಧರ | ಶಿವ ರಜತೇಶ್ವರ | ಶಿವ ಶೂಲಾಧರ | ಶಿವನಿಗೆ ಶಿರ ಸರ೨
ಶಿವ ಭಸ್ಮಾಲೇಪನಾ | ಶಿವ ವೃಷಭ ವಾಹನಾ | ಶಿವ ಫಣಿಭೂಷಣ ಶಿವಗೆ ತ್ರಿಲೋಚನ | ಶಿವ ಗೋವಿಂದನ | ಶಿವ ದಾಸರ ಪ್ರಿಯಾ ೩

ಅ. ಗಣಪತಿ ಸರಸ್ವತಿಯರು
೨೬೧
ಶ್ರೀ ಗಣನಾಥನಿಗೆ | ಶಾರದಾಂಬಿಕೆಗೆಶ್ರೀ ಗೌರಿ ಭೂದೇವಿ ಶ್ರೀದೇವಿಗೆ | ಶ್ರೀ ಗುರು ಮಹಾವಿಷ್ಣು ಬ್ರಹ್ಮರುದ್ರಾದ್ಯರಿಗೆಸಿರಿಚರಣ ಪಂಕಜಗೆ ನಮಿಸಿ ನುತಿಸುವೆನು ೧
ಅಷ್ಟ ದಿಕ್ಪಾಲರಿಗೆ ಶಿಷ್ಯಮರುದ್ಗಣಗಳಿಗೆ ಅಷ್ಟವಸು ಸಪ್ತಋಷಿ ನವಗ್ರಹಾದ್ಯರಿಗೆ | ಶ್ರೇಷ್ಠ ಹನುಮಂತನಿಗೆ ಕನಕಾದಿ ದಾಸರಿಗೆಸೃಷ್ಟಿಯೊಳು ಕವಿಜನಕೆ ಕೈಮುಗಿವೆನು ೨
ವಿಪ್ರಕುಲ ಸಂಜಾತ ಮಯ್ಯೂರ ಮಡಿಪುರದೊ-ಳಿಪ್ಪ ವೆಂಕಟರಾಯ ಗೋಳೇರ ಸುಕುಮಾರ |ಸರ್ಪಶಯನನ ದಾಸ ಗೋವಿಂದನೆಂಬವನುಜಲ್ವಿಸಿಯೆ ವಿರಚಿಸಿದೆನೀ ಕೃತಿಯನು ೩
ಯತಿಗಣ ಪ್ರಾಸ ವಿಷಮಾಕ್ಷರಗಳೊಂದರಿಯೆಕೃತ ದೋಷ ರಾಗ ಲಯ ಭೇದವನು ತಿಳಿಯೆ |ಪೃಥುವಿಯೊಳು ಕವಿಗಳಂತಗ್ಗಳನು ನಾನಲ್ಲಅತಿಶಯದ ನ್ಯೂನತೆಯ ಬಲ್ಲ ಶ್ರೀನಲ್ಲ ೪
ತಪ್ಪು ಸಾವಿರವಿರಲು ತಿದ್ದಿ ಬಲ್ಲವರಿದನು ಒಪ್ಪುವಂದದಿ ಜಗದಿ | ಮೆರೆಸಿ ವಾಚಕರುಸರ್ಪಶಯನನ ಕೃಪೆಗೆ ಪಾತ್ರರಾಗುತ ನೀವುಕ್ಷಿಪ್ರದಲಿ ಗೋವಿಂದದಾಸನನು ಪರಸಿ ಮನ್ನಿಪುದು ೫

೩೫೮
ಶ್ರೀ ರಮಾಧವಾ ನಮಿಸುವೆ ದೇವಾ ಪ
ವಾರಿಜೋದ್ಭವನುತ ಸಾರಸ ಗುಣಯುತ ಸಾರಿ ನುತಿಪೆ ದಯದೋರಿ ಸಲಹು ಹರೀ ಅ.ಪ
ತೋರುವಾ ಸುಂದರ ಶಾಂತಾಕಾರವಾ ಸ್ಥೂಲ ಸೂಕ್ಷ್ಮ ಶರೀರವಾ ತಪಯೋಗಿ ಹೃದಯ ಸುಮಾ ಸಾರವಾ ನೀ ಮೆರೆವಾ ಸಾರಸಾಂಘ್ರಿಯುಗವಾಸದ್ಗುಣಸಾರ ಮಿಶ್ರಿತ ಕರವಾ ಸುಮನಸ ವಾರವಂದ್ಯ ಚರಣಾರವಿಂದವನು ತೋರಿಸಲಹು ದಯಾರಸ ಮೂರುತಿ ೧
ಶಂಕವಾ ಉದಿದತಿ ಭಕ್ತಕಳಂಕವಾ ಮುರಿದತಿ ದುರುಳರ ಬಿಂಕವಾ ಭಕ್ತಜನರ ಸದೃಶಾಂಕವಾ ಸೇರುವಾ ಪಂಕಜಾಸನ ಪಿತನೇ ಪಾಲಿಸು ಶಂಕರಗತಿಹಿತನೇ ಭವಭಯ ಬಿಂಕವ ಬಿಡಿಸೈ ಪಂಕಜ-ಕರಯುತ ವೆಂಕಟೇಶ ಸರ್ವಾಂಕಿತ ರೂಪನೆ ೨
ಸುಂದರಾ ವನಮಾಲ ಶೋಭಾ ಕಂದರಾ ಮುಖಪದ್ಮಾಕಾರ ಚಂದಿರಾ ಸದ್ಧರ್ಮ ಶಾಸ್ತ್ರಸ್ರ‍ಮತಿಮಂದಿರಾ ವೇದೋದ್ಧಾರಾ ಚಂದ್ರ ಸೂರ್ಯ ನಯನಾ ಕರುಣಾನಂದ ವಿಮಲಚರಣಾ ಮುನಿಜನವೃಂದ ವಂದ್ಯ ಚರಣಾರವಿಂದವನು ಬಂದು ತೋರಿಸಿ ಗೋವಿಂದದಾಸನ ಪೊರೆ ೩

೩೫೯
ಶ್ರೀ ರಮಾರಮಣಂ | ಸರಸಿಜ ನಯನಂ ||ಕ್ಷೀರವಾರಿಧಿ ಶಯನಂ ಪ
ಮಾರಜನಕ ಮುರವೈರಿ ಜನಾರ್ದನ | ತೋರಿಸಲಹು ದಶಾವತಾರ ಹರೀ ||ಶ್ರೀರಾಮ|| ಅ.ಪ
ಪೊಳವ ನಾರುವ ಮೈಯ್ಯಾ | ತಳೆದು ತೋರುವ ಕೈಯಾ || ಬಲಿದ ಕೋರೆಯ ಬಾಯಿ | ಗಳದ ಕರುಳ ಮಾಲೆಯ | ಚೆಲುವ ಬ್ರಹ್ಮಚಾರಿ || ಪಡೆದಳ ಕಡಿದು ಪಿತಗೆ ತೋರಿ || ಇಳೆಯಧಿಪತಿ | ಗೋವಳರರಸನು | ಬತ್ತಲೆಯಲಿ ನೆಲಸಿದ ಕಡುಗಲಿ ಮೂರುತಿ ಶ್ರೀರಾಮಾ ೧
ಘೋರತಮಾ ಸುರಾರಿ | ಭಾರಮಂದರೋದ್ಧಾರಿ | ಧಾರಿಣೀ ಚೋರವೈರಿ | ಸಾರೀ ಮನವ ಕೇಸರೀ || ಮೂರಡಿ ಧರೆ ಬೇಡಿ ಧರಣಿಪ | ವೀರರೊಳ್ ಹಗೆಮಾಡಿ | ವಾರಿಧಿ ಬಂಧಿಸಿ | ತೀರಿಸಿ ಕಂಸನ | ನಾರಿಯರೊಡಗೂಡಿ |
ಏರಿದೆ ತುರಗವಾ ೨
ವೇದೋದ್ಧಾರವ ಗೈದೆ | ಭೇದದಿ ಸುಧೆಯೆರೆದೆ || ಮೇದಿನಿಯನು ತಂದೆ | ಪ್ರಹಲ್ಲಾದಗೊಲಿದೇ ||ಕಾದೆ ಬಲಿಯೊಳ್ ದ್ವಾರ | ವಿಬುಧರ ಆದರಿಸಿದೆ ವೀರ | ಮೇದಿನಿಸುತೆ ಚೋರಾಂತಕ ಯದುಪತಿ | ಸಾಧು ವಂದಿತ |
ಮ್ಲೇಂಛಾರಿ ಗೋವಿಂದನೇ ೩

೩೬೦
ಶ್ರೀ ವಿಠಲ ಹೃಷಿಕೇಶನೆ ನತಜನ ಪೋಷ ವಾಸುಕೀಶಯನ ಪ
ವಾಸವನುತ ರಜಿತೇಶ ನಮಿತಪದ ಕ್ಲೇಶಹರಣ ಜಗದೀಶ ಜನಾರ್ದನ ಅ.ಪ
ನೀರೊಳಿಳಿದು ಮತ್ಸ್ಯಾವತಾರದಿಂದಲಿ ನಲಿದು ಘೋರ ತಮನ ಗೆಲಿದು ಚಾರುವೇದವ ತಂದೆ ಧೀರ ಕಮಠನಾದಿ ಕೇಸರಿಯಾಕಾರವನೇ ತಾಳಿ ಸಾರಿ ಕಂಬದಿ ಮೈದೋರುತ ತರಳಗೆ ಧೀರನ ಸೀಳಿದೆ ನಾರ ಮೃಗೇಶನೆ ೧
ಬಲಿಯೊಳ್ ದಾನವ ಬೇಡಿ ನೆಲನ ಈರಡಿ ಮಾಡಿ ಛಲದಿ ಬಂಧಿಸಿ ಬಲಿಯ ತಲೆಯ ಮೆಟ್ಟಿದೆ ವಾಮನಾ ಛಲದ ಭಾರ್ಗವ ರಾಮ ಧರಣಿಜೆಗೊಲಿದನೆ ರಘುರಾಮ ಕೊಳಲನುಡಿಸಿ ಗೋವುಗಳೊಡನಾಡಿದೆನಳಿನನಯನ ಶ್ರೀಕೃಷ್ಣ ಮುರಾಂತಕ ೨
ತ್ರಿಪುರನ ಸತಿಯರ ವ್ರತವ ಪರಿಹರಿಸಿದ ಕಪಟ ಮೋಹನ ರೂಪ ನಿಪುಣಾ ಬೌದ್ಧಾವತಾರ ಕಪಟದೀ ಹಯವೇರಿ ಬಂದಾ ನಿಪುಣ ಕಲ್ಕ್ಯಾವತಾರೀ ಗುಪಿತದಿ ಸರ್ವಾ ವ್ಯಾಪಕನೆನಿಸಿದೆ ಕಪಟನಾಟಕ ಗೋವಿಂದದಾಸನ ಪ್ರಿಯಾ ೩

೩೫೭
ಶ್ರೀಧರಾ ಸುಶೀಲ | ಸುಜನ ಪಾಲ ಪಾಹಿಮಾಂ | ನಮೋ ನಮಃ | ಶ್ರೀಧರಾ ಸುಶೀಲ ಸುಜನ ಪಾಲ ಪಾಹಿಮಾಂ ಪ
ಮಾಧವ ಮಹಿಮ ಸಾಧು ಸಜ್ಜನ ಪ್ರೇಮ | ಮೋದ ವಿನೋದಾ ಸುಪಾದಕೆ ನಮೋ ನಮಃ ೧
ನಾಶನ ಕರ್ತ ವಿನಾಶನ ಚರಿತ | ದಾಸವಿಶೇಷ | ಸರ್ವೇಶನೇ ನಮೋ ನಮಃ ೨
ಶಂಕರ ಸಖನೆ ಶ್ರೀ ವೆಂಕಟರಮಣ | ಶಂಖ ಚಕ್ರಾಂಕ ಸರ್ವಾಂಕಿತ ನಮೋ ನಮಃ ೩
ಚಂದ್ರ ಸಮಾನ್ವಿತ ನಂದಗೋಪಿಯಸುತ | ನಂದ ಮುಕುಂದ ಗೋವಿಂದನೇ ನಮೋ ನಮಃ ೪

೩೮೯
ಸಂತೋಷ ಕಂಡ್ರೀ ಸ್ವಾಮಿ ಸಂತೋಷ ಕಂಡ್ರೀ ಪ
ಚಿಂತೆ ಚಿಂತೆ ಬಿಟ್ಟೀ ಶಾಂತದೂತನಾಗಿ ಕಂತುಪಿತನ ಚಿಂತಿಸುವಗೆ ಸಂತೋಷ ಕಂಡ್ರೀ ೧
ಕೆಟ್ಟ ದುಷ್ಟ ಕಾರ್ಯ ಮಾಡೀ ಕಷ್ಟ ನಷ್ಟಗಳಿಗೆ ಸಿಕ್ಕಿ ಹೊಟ್ಟೆ ಹೊರೆವ ದುಷ್ಟಗೆಲ್ಲ ಸಂತೋಷ ಕಂಡ್ರಿ ೨
ಆಶಾಪಾಶ ತ್ಯಜಿಸಿ ಹಲವು ಲೇಸು ಶ್ರೇಯ ಕಾಯಗೈದ ಈಶನಂಘ್ರಿ ದಾಸರಿಗೆ ಸಂತೋಷ ಕಂಡ್ರಿ ೩
ತರುಣಿ ತರುಣರಿದ್ದರೇನು ಧರಣಿಗರನಾದರೇನು ಹರಿಯ ಕರುಣವಿಲ್ಲದುಂಟೇ ಸಂತೋಷ ಕಂಡ್ರೀ ೪
ಕಾಯದಲ್ಲಿ ಮೋಹ ತೊರೆದು ಜೀಯ ಕೃಷ್ಣರಾಯನೆಂದು ನ್ಯಾಯವಂತ ಜೀವರೀಗೆ ಸಂತೋಷ ಕಂಡ್ರೀ ೫
ಯುಕ್ತಾಯುಕ್ತ ಯೋಚಿಸದೆ ಪಕ್ತ ಕಾಮಸಕ್ತನಾದ ರಕ್ತಮದದ ಶಕ್ತಗಿಹುದೆ ಸಂತೋಷ ಕಂಡ್ರಿ ೬
ತಂದೆ ತಾಯಿ ನೀನೆಂದೆಂಬ ಬಂಧು ಬಳಗ ನೀನೆಂದೆಂಬ ಗೋವಿಂದನಾ ದಾಸರ್ಗೆಲ್ಲ ಸಂತೋಷ ಕಂಡ್ರೀ ೭

೩೮೫
ಸಾಕ್ ನಿನ್ನ ಸಂಸಾರವೂ ಓ ಮನವೇ ಯಾಕ್ ನಿನಗೀ ವ್ಯಾಪಾರವೂ ಪ
ಬೇಕ್ ಬೇಕಾದುದ ತಂದು ಹಾಕಿದುದೆಲ್ಲವ ತಿಂದು ಕಾಗೆ-ಯಂತೆ ಕೂಗುವರು ಜೋಕೆ ಜೋಕೆ ಪೋಕ ಮನವೇ ಅ.ಪ
ಯಜಮಾನ್ನೆ ಸಿಕ್ಕೀತೆಂದು ಪೌರುಷವ್ಯಾಕೋ ಅಜಪಟ್ಟಕ್ಕೊಡೆಯನೆಂದು ಟ್ರೆಜರಿ ಖಜಾನಿ ಕೀಲಿಕೈಸಿಕ್ಕಿತೆನುತ್ಹಿಗ್ಗಿ ಸುಜನ ಸಜ್ಜನರ ಮನ್ನಿಸದ ನಿ-ನ್ನೆಜಮಾನ್ಕೆ ಸುಡುವುದು ಮನವೇ ೧
ಹೊಟ್ಟೆಗೂ ಸಮ ತಿನ್ನದೇ ಒಳ್ಳೆಯದೊಂದು ಬಟ್ಟೆ ಸಹ ಹೊದೆದುಕೊಳ್ಳದೆ ಕಷ್ಟ ಪಟ್ಟು ಹಣ ಗಳಿಸಿಟ್ಟು ಮರುಗದೆ ದುಷ್ಟ ಮಕ್ಕಳು ಜುಗಾರಾಡಿ ಕಳೆದರೆಂದುಕೆಟ್ಟ ಪಾಪಿ ಮನವೇ ೨
ಋಣ ರೂಪಸಂಸಾರಕೇ ನಿನಗೆ ಕೈಲಿ ಹಣ ಇಲ್ದೀ ವ್ಯಾಪಾರ್ಯಾಕೆ ಗುಣವಿಲ್ಲದ್ಹೆಂಡತಿ ಬಿನವಿಲ್ದ ನೆಂಟರು ಬಣಗು ಮಕ್ಕಳಿಗಾಗಿ ದಣಿವುದ್ಯಾತಕೊ ವ್ಯರ್ಥ ಹೆಣದತ್ತ ಮನವೇಬಂಧು ಬಾಂಧವರೆಲ್ಲರೂ ಸಂಪದವಿರೆ ಬಂದು ಸೇವಿಸಿ ಹೊಗಳ್ವರು ಇಂದು ನೀ ಗತಿಹೀನನೆನಿಸಲು ಜಗಳವ ಸಂಧಿಸಬೇಕಾಗಿ ನಿಂದಿಸುವರು ಹಿಂದಿನಿಂದಲಿ ಪರಿಪರಿ ಮಂಗಬುದ್ಧಿ ಮನವೇ ೩
ಯಾರಿಗೋಸುಗ ಬಂದಿಲ್ಲಿ ದಣಿವೆ ಸಂಗ- ಡ್ಯಾರೂ ಬರುವರ್ ಕಡೆಯಲಿ ಯಾರು ಯಮನ ಶಿಕ್ಷೆ ತಡೆವೆನೆಂಬರು ಪೇಳ್ ವಾರಿಜನಾಭ ಗೋವಿಂದನಲ್ಲದೆ ಮುಂದೆ ಯಾರಿಗ್ಯಾರುಳಿಂಬ್ಹೇಳು ಮನವೇ ೪

೩೭೪
ಸೀತೆ ಲೋಕಮಾತೆ ರಾಮನ ಪ್ರೀತೇ ಭೂಮಿಜಾತೇ ಪಾತಕ ಹರೆ ಸರ್ವಾರ್ಥಸಿದ್ಧಿಕರೆ ಖ್ಯಾತಿವಂತೆ ಸುನೀತೆ ಸುರಾರ್ಚಿತೆ ಪ
ತಾಯೆ ಮಹಾಮಾಯೆ ರಾಮನ ಛಾಯೆ ವಿಮಲ ಕಾಯೆ ತೋಯಜಾಕ್ಷಿ ನಿನ್ನ ಸೇವೆಯ ಮಾಡಲು ವಾಯುತನಯನಂತರ್ಯೆನುಪಾಯವ ೧
ಸಂಗರ ಕಾರಿಣಿಯೆ ರಾಮನ ಅಂಗನೆ ಗುಣಮಣಿಯೇ ಭೃಂಗ ಕುಂತಳೆ ಭವಭಂಗನಿವಾರಿಣಿ ಹಿಂಗದೆನ್ನ ಪೊರೆ ಹೇಮಾಂಗಿ ಶೃಂಗಾರಿಯೆ ೨
ಚಂದ್ರವದನೆ ದೇವೀ ರಾಮಚಂದ್ರನ ಸಂಜೀವೀ ಸಿಂಧುಬಂಧನ ಗೋವಿಂದನ ದಾಸಗೆ ಬಂದು ಮೊಗವ ತೋರಿ ಚಂದದಿ ಪಾಲಿಸೆ ೩

೩೮೩
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆ ಸುಮ್ಮನೆ ಶಿವನಿಂದ್ಯ ಗೈವಿರಿ ಪ
ಬ್ರಹ್ಮ ಸುಜ್ಞಾನದಿ ಹರಿಹರರಾರೆಂಬ ಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾ ಅ.ಪ
ಗರುಡವಾಹನನು ಶ್ರೀವರನು ನೋಡಿ ಉರಗಭೂಷಣನು ಗೌರೀಶ್ವರಗೂ ಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ ೧
ಸ್ಮರನ ತಾತನು ನಾರಾಯಣನು ಕೇಳಿ ಸ್ಮರನ ವೈರಿಯು ತ್ರಿಗಣೇಶ್ವರನು ಹರಿನಿಂದನೆ ಶಿವ ಶಿರದಿ ತಾನ್ ಧರಿಸಿದ ಹರನ ಲಿಂಗವ ನಿತ್ಯ ಪೂಜಿಸಿ ನಮಿಸುವಾ ೨
ಕ್ಷೀರಾಬ್ಧಿ ವಿಷ್ಣುಗೆ ಸತಿ ಗೃಹವೊ ಶಿವನ ನಾರೀ ಮಂದಿರ ಹಿಮಾಲಯವೂ ನಾರೀ ರಮೆಯ ಹೃದಯದಿ ಧರಿಸಿದ ವಿಷ್ಣು ಮಾರನಂತಕ ಉಮೆಗಿತ್ತನರ್ಧಾಂಗವ ೩
ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣ ಗೊಲಿದು ದ್ವಾರದಿ ನಿಂತ ಹರನೂ ಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣು ಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ ೪
ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾ ನಿರ್ವಾಣಿ ಬೌದ್ಧನು ಶರ್ವ ದಿಗಂಬರ ಹರಿಯು ಜಾರನು ಜಗಪೀಠ ಶಂಕರಗೆಂದು ೫
ರುದ್ರಾಕ್ಷಿ ಭಸ್ಮಲೇಪನವು ಶಿವಗೆ ಮುದ್ರೆಯು ತುಳಸಿಮಣಿ ಸರವು ಊಧ್ರ್ವ ಪೌಂಡ್ರಕ ಗೋಪಿ ಕೃಷ್ಣಾಜಿನಾಸನ ರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು ೬
ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯ ಮೂರ್ತಿಯೊಳ್ ಸಮದೆ ಯೋಚಿಸದೇ ವ್ಯರ್ಥ ಕೆಡುವಿರಿ ಗೋವಿಂದನ ದಾಸರು ಸ್ವಾರ್ಥವಾಗದು ಕಾರ್ಯ ಹರನ ಭಕ್ತರು ಕೇಳಿ ೭

೨೯೩
ಸುರತಟನೀಧರನರಸೀ | ಪೊರೆ ಪಾರ್ವತಿ ದೇವಿಯೇ | ಕರುಣಾಕರೇ ದುರಿತಹರೇ | ಶರಣರ ಸಂಜೀವಿಯೆ ೧
ಕಂಕಣಕರೆ ಕುಂಕುಮಧರೆ | ಪಂಕಜದಳ ನೇತ್ರೆಯೆ | ಶಂಕರಿ ಭವಬಿಂಕಹರೇ | ಕಿಂಕರನುತಿ ಪಾತ್ರೆಯೇ ೨
ಚಂಡಿಯೆ ಚಾಮುಂಡಿಯೇ | ಪ್ರಚಂಡಿಯೆ ಓಂಕಾರಿಯೆ | ಚಂಡನ ಖಳಮುಂಡನ ಶಿರÀ | ಖಂಡನೆ ಹ್ರೀಂಕಾರಿಯೇ ೩
ಜ್ವಾಲಿನಿ ಮಹಮಾಲಿನಿ ದಯೇ | ಶೀಲೆ ನೀ ಶರ್ವಾಣಿಯೆ | ಕಾಳಿನಿ ಮಹಾ ಕಾಳಿನಿ ರಣ | ಶೂಲಿನೀ ರುದ್ರಾಣಿಯೆ ೪
ಸುಂದರಿ ಗುಣಮಂಜರಿ ಪೂರ್ಣೇಂದು ಸಂಕಾಶಿಯೇ | ಚಂದದಿ ಗೋವಿಂದನ ದಾಸ | ವಂದಿತೆ ಅಘನಾಶಿಯೆ ೫

೨೮೯
ಸ್ಥಾಣು ಮಹೇಶ್ವರ ತ್ರಿನಯನ ||ಶಂಕರ||ಮಾಣದೆ ಸಲಹೋ ರುದ್ರಾಣಿ ಮನೋಹರ ಪ
ಪೂರ್ಣ ಕೃಪೆಯೊಳ್ ನಿನ್ನ | ಶರಣನೆಂದೆನಿಸೆನ್ನ ಅ
ಬಾಣನಿಗೊಲಿದಾತಣ್ಗದಿರನಿಶೇಖರ |ಭೂತನಾಥನೆ ಭವ | ಭೀತಿವಿನಾಶನೆ | ಪಾತಕಹರಸುರ | ವ್ರಾತಾನಮಿತನೆ ಚ
ಭೂತಳದೊಳಗೆ ಸರ್ವಾರ್ಥರಕ್ಷಕನೆಂದು | ಖ್ಯಾತಿಯ ತಳೆದ ಕಾತ್ಯಾಯನಿ ರಮಣಾ ೧
ರುದ್ರಚಮಕಗಳಿಂದ | ಲಭಿಷೇಕವಗೈದು | ಶ್ರದ್ಧೆಯೊಳರ್ಚಿಸಲಾರೇ | ಪತ್ರೆಯ ಕೊಯ್ದು |ರುದ್ರಾಕ್ಷಿಯು ಭಸ್ಮಲೇಪನ ಧರಿಸುತ | ಪ್ರದೋಷದ ವ್ರತವರಿಯೆನ್ನುದ್ಧರಿಸೊ ೨
ಸುಗುಣ ಶರಧಿ ಲಿಂಗ | ಪೂಜೆ ವಿನೋದಿತ | ಮೃಗದ ನೆವದಿ ಪಾರ್ಥಗೊಲಿದ ಕೈರಾತ |ಜಗದೀಶ್ವರನೆ ಗೋವಿಂದನ ಸಖ ನಿನ್ನ | ಮೊಗವ ತೋರಿಸು ದಾಸಗೊಲಿದು ನೀ ದಯದಿ ೩

೩೬೧
ಸ್ವಲ್ಪ ತಾಳು ಸಂಜೆಯಾಗಲಿ ಶ್ರೀಕೃಷ್ಣ ಕೇಳು ಕಂಜಸಖನು ಕಡಲಿಗಿಳಿದು ಮಂಜುಮುಸುಕಲಿ ಪ
ಹಾದಿ ಬೀದಿಯೆಂಬುದಿಲ್ಲ ಹಗಲುರಾತ್ರಿ ಭೇದವಿಲ್ಲ ಯಾದವೋತ್ತಮ ಕೇಳುಸೊಲ್ಲ ಬಾಧೆಗೊಳಿಸಬೇಡ ನಲ್ಲ ೧
ಕಂಡು ಜನರು ನಗರೆ ಲಜ್ಜೆ ಭಂಡನೆಯ ಕೈಯ ಪಟ್ಟಿ ಪಂಢರೀಶ ಪಾಂಡುರಂಗ ಅಂಡಜವಾಹನ ಕೇಳು ೨
ನೀರ ಮುಳುಗಿ ಬೆನ್ನ ಮೇಲೆ ಭಾರನೆರಹಿದಂತ ನಿನ್ನ ಧೀರತನವ ತೋರು ಕಡೆಗೆ ಮಾರಕೇಳಿಯೊಳಗೆ ಕೃಷ್ಣ ೩
ಚಂದ್ರಾತಳಿಗೆ ಬಿಡದೆ ಏಳು ದಿನದೊಳಂದು ರಮಿಸಿದಂತೆ ಇಂದು ಎನ್ನ ಹರುಷಗೊಳಿಸು ಸುಂದರ ಗೋವಿಂದ ದಯದಿ ೪

೩೮೦
ಹಂಗಿಗನಾಗಬೇಡಾ | ಏ ಮನವೇ | ಹಂಗಿಗನಾಗಬೇಡಾ | ಆ ಯಮನಿಗೆ ಹಂಗಿಗನಾಗಬೇಡಾ ಪ
ಕಾಮಕ್ರೋಧವು ಲೋಭಮದ ಮಾತ್ಸರ್ಯಗಳೆಂಬ | ವ್ಯಾಮೋಹಾದಿಗಳಿಗೆ ಸಿಲುಕಿ ಸುಮ್ಮನೆ ನೀನು ೧
ಪರದಾರಾಂಶದಿ ಮನ | ವಿರಿಸಿ ಕಾಮಾದಿ ವ್ಯರ್ಥ | ಗುರುಹಿರಿಯರ ಜರೆ | ದಾಡಿ ಗರ್ವದಿ ನೀನು ೨
ಸತಿಸುತರೆಂದೆಂಬ | ಮೋಹಪಾಶಕೆ ಸಿಕ್ಕಿ | ಅತಿಥಿ ಸತ್ಕಾರ ಮಾಡದೆ | ಲೋಭತ್ವದಿ ನೀನು ೩
ಧರಣಿ ದಾನಾದಿಗಳ | ತನು ಶಕ್ತಿ ಮದದಿಂದ | ಪರರಿಗೆ ಕೇಡನ್ನೆ ಬಗೆವ ಮತ್ಸರದಿ ನೀ ೪
ನೆಂಟರಿಷ್ಟರು ಸರ್ವ | ಮಂದಿ ಸೇವಕರೆಂದು | ತುಂಟತನದಿ ಗೋ | ವಿಂದನಾ ಪಾದಮರತು ನೀ ೫

೩೭೫
ಹನುಮಂತನ ಸ್ತುತಿ
ಅಂಜನಾಸಂಜಾತ ಮುಖ್ಯ -ಪ್ರಾಣನೇ ಹನುಮಂತನೇ ಪ್ರಾಣನೇ ಹನುಮಂತನೇ ಪ್ರಾಣನೇ ಹನುಮಂತನೇ ಬಹು ಬಲವಂತನೇ ಪ
ರಾಘವನಾಜ್ಞೆಯ ತಾಳ್ದು ಸಾಗರವ ದಾಟಿದನೇ | ಸಾಗರವ ದಾಟಿದನೇ ಬೇಗ ಲಂಕಿಣಿ ಗೆಲ್ದನೇ ಚ
ಬೇಗ ಲಂಕಿಣಿ ಗೆಲ್ದನೇ | ಪೋಗಿ ಲಂಕೆಯೊಳ್ ತಿರಿದನೇ ೧
ಧರಣಿಸುತೆಯನು ಹುಡುಕಿ ಕಾಣದೆ | ಪುರವನೊಯ್ಯುವೆನೆಂದನೆ | ಪುರವನೊಯ್ಯುವೆನೆಂದನೆ | ಮರಳಿ ಸೀತೆಯ ಕಂಡನೇ | ಮರಳಿ ಸೀತೆಯ ಕಂಡನೇ | ಯೆರಗಿ ಉಂಗುರವಿತ್ತನೇ ೨
ಚೂಡಕವ ಕೈಗೊಂಡು ಬರಲಾ | ನೋಡಿ ಬನವನು ಮುರಿದನೇ | ನೋಡಿ ಬನವನು ಮುರಿದನೇ ಖೋಡಿ ದೈತ್ಯರ ಗೆಲಿದನೇ | ಖೋಡಿ ದೈತ್ಯರ ಗೆಲಿದನೇ | ಕೈಗೂಡಿ ಸುಮ್ಮನೆ ಕುಳಿತನೆ ೩
ಪುರವನೆಲ್ಲವ ಸುಟ್ಟು ದಹಿಸುತ | ತಿರುಗಿ ರಾಮನ ಕಂಡನೇ | ತಿರುಗಿ ರಾಮನ ಕಂಡನೇ | ಚೂಡಕವ ಕೈಗಿತ್ತನೇ | ಚೂಡಕವ ಕೈಗಿತ್ತನೇ | ಗೋವಿಂದ ದಾಸನ ಪೊರೆವನೆ ೪

೩೬೨
ಹರಿ ಹರಿ ಧ್ಯಾನಿಸೊ ಲಕ್ಷ್ಮೀವರನ ಧ್ಯಾನಿಸೊ ಪ
ಉರಗಶಯನನಾಗಿ ಘೋರ ಶರಧಿಯನ್ನು ಮಧಿಸಿರುವ ಸುರರಿಗಮೃತವೆರೆದ ನಮ್ಮ ಗರುಡಗಮನ ತಾನು ಅ.ಪ
ದಂಡಧರಗೆ ಸಿಲುಕಿ ನರಕ ಕೊಂಡದಲ್ಲಿ ಮುಳುಗಲ್ಯಾಕೆ ಪುಂಡರೀಕನಯನ ಪಾಂಡುರಂಗನೆನ್ನದೇ ಶುಂಡಲಾಪುರಾದಿ ಪಾಲ ಪಾಂಡುಪುತ್ರ ಧರ್ಮರಾಯ ಕಂಡು ನಮಿಸಿ ಪೂಜೆಗೈದ ಅಂಡಜವಾಹನನೆಂದು ೧
ಬಾಯಬಡಿಕನಾಗಿ ಸರ್ವ ನ್ಯಾಯ ತಪ್ಪಿ ಮಾತನಾಡಿ ಕಾಯ ಬೆಳೆಸಿ ತಿರುಗಿ ಬಂದೆ ಸಾಯಲಾ ಕಥೆ ವಾಯುತನಯ ವಂದ್ಯ ಚರಣ ಕಾಯಜ ಛೆಂದೆರಗಿದವಗೆ ಆಯುಧವರೇಣ್ಯ ಸರ್ವಸಹಾಯವ ಮಾಡುವಾ ೨
ಕಂದ ಅಬಲ ವೃದ್ಧರೆಂದು ಬಂಧು ಜನರು ಭಾಗ ಕಿರಿದು ಕಂದು ಕುಂದು ರೋಗಿ ಸ್ತ್ರೀಯರೆಂದು ಭೇದವೊ ಇಂದಿರೇಶಗಿಲ್ಲ ನರರು ಒಂದೇ ಮನದಿ ಧ್ಯಾನಿಸಿದರೆ ಸುಂದರಾಂಗ ಮೂರ್ತಿ ಗೋವಿಂದ ಪೊರೆಯುವಾ ೩

೩೯೮
ಹರಿನಾಮವೆ ಜಯ ಮಂಗಳವು | ಶ್ರೀ ಹರಿನಾಮವೆ ಶುಭ ಮಂಗಳವು ||ಹರಿ ನಾಮವ ದಿನ ಸ್ಮರಿಸುವ ಸುಜನರ-ದುರಿತ ರಾಶಿಗಳೆಲ್ಲ ತರಿಯುವ ಮಾಧವ ೧
ಉರಗಶಯನ ವರ ಪರಮೇಶನ ಸಖ | ಗರುಡ ಗಮನ ಸಿರಿಯರಸನೆಂದೆನಿಸಿದ ಹರಿ೨
ನಾರದಮುನಿ ಹರಿನಾರಾಯಣನೆಂದು | ಭಾರಿ ಭಜನೆ ಗೈವ | ಮಾರಜನಕನೆಂಬ ಹರಿ ೩
ಅಜಾಮಿಳನಂತ್ಯದಿ | ಭುಜಗಶಯನನೆಂದು | ಭಜಿಸಲು ಸಲಹಿದ ವಿಜಯ ಸಾರಥಿಯಾದ ಹರಿ ೪
ಸರಸಿಯೊಳ್ ಮೊರೆಯಿಟ್ಟು | ಮರುಗುವ ಗಜವನು | ಗರುಡನ ಹೆಗಲೇರಿ ಪಿಡಿದು ರಕ್ಷಿಸಿದಂಥ ೫
ಶೇಷಗಿರಿಯ ಮೇಲೆ ವಾಸವಾಗಿರುತಿಹ | ದಾಸ ಜನರ ಪ್ರಿಯ | ದೋಷರಹಿತನೆಂಬ ೬
ವೃಂದಾವನದೊಳಾ | ನಂದದೊಳಾಡುವ | ಸುಂದರ ಕರ ಗೋವಿಂದನೆಂದಿನಿಸಿದ ಹರಿ೭

೩೬೩
ಹಲವನು ಯೋಚಿಸಲೇನು ಫಲ ಬರಿ | ಜಲವನು ಮಥಿಸಲಿನ್ನೇನು ಫಲ ||ಕುಲಜನು ಶೂದ್ರನ ಲಲನೆಯ ಕೂಡುತ | ಸಲಿಲದಿ ಮುಳುಗಿದರೇನು ಫಲ || ಜಲಜಾಕ್ಷನ ಪದದೊಲುಮೆಯಿಲ್ಲದೆ ನರ | ಬಲಯುತ ತಾನೆನಲೇನು ಫಲ ೧
ಪರಸತಿ ಪರಧನದಾಸೆಯೊಳಿರ್ಪನು | ಸುರನದಿ ಮುಳುಗಿದರೇನು ಫಲ ||ಪರಮಾತ್ಮನ ತಮ್ಮ ಹೃದಯದಿ ಕಾಣದೇ |ಧರೆಯಲ್ಲರಸಿದರೇನು ಫಲ ೨
ಕಾಣದೆ ಕುಣಿಯೊಳು ಬಿದ್ದಾನೆಯು ಬಲು | ತ್ರಾಣಿಯಂತಾದರಿನ್ನೇನು ಫಲ ||ಕ್ಷೋಣಿಯೊಳಗೆ ಹರಿದಾಸರ ಜರೆಯುತ | ಜ್ಞಾನಿಯು ತಾನೆನಲೇನು ಫಲ ೩
ಧೂರ್ತತನದಿ ಹಣ ಗಳಿಸುತ ಲೋಭದಿ ಸ್ವಾರ್ಥವೆಂದೆನಿಸಿದರೇನು ಫಲ ||ಪಾತ್ರಾಪಾತ್ರವನೆಣಿಸದೆ ದಾನವ | ಅರ್ತಿಯೊಳೆಸಗಿದರೇನು ಫಲ೪
ಪತಿಯನು ವಂಚಿಸಿ ರೂಪ ಮಾರುವ ಸತಿ | ವ್ರತಗಳ ಮಾಡಿದರೇನು ಫಲ || ರತಿಪತಿಪಿತ ಗೋವಿಂದನ ನೆನೆಯದೆ | ಗತಿಯನು ಬಯಸಿದರೇನು ಫಲ ೫

೩೬೪
ಹಲವು ಬ್ರಾಹ್ಮಣ ಮಂದಿಗಳಿಗಶನವನಿಕ್ಕಿಸಲಹುವೆಯನುದಿನ ತಳೆದು ಖ್ಯಾತಿಯನು ೧
ನಳಿನ ನೇತ್ರನೆ ನಿನ್ನ ಪಾದದರ್ಶನದಿಂದ ಹಲವು ಜನ್ಮದ ದೋಷ ನಾಶವಾಯ್ತದೆಂದು ೨
ಅನ್ನಬ್ರಹ್ಮನು ಉಡುಪಿ ಕೃಷ್ಣನೆಂದೆನಿಸಿದೆ ಸ್ವರ್ಣಬ್ರಹ್ಮನು ತಿರುಪತಿ ಶ್ರೀನಿವಾಸ ೩
ನಾದಬ್ರಹ್ಮನು ಪಂಢರೇಶ ವಿಠಲರಾಯ-ನೆನ್ನಿಸಿ ಮೆರೆವ ಗೋವಿಂದದಾಸರ ಪ್ರೀತ್ಯ ೪

೩೬೫
ಹಸೆಗೆ ಬಾರೊ ಕುಸುಮನಯನ ಕುಶಲದಿಂದಲಿ ಬೇಗನೆ ಶಶಿಮುಖಿಯರ್ ಕರೆವರು ನಿನ್ನ ವಸುಧೆಪಾಲ ರಾಮನೊ ಪ
ಅಸಮ ವೀರನನೆ ಗೆಲಿದು ಪಶುಪತಿಯ ಬಿಲ್ಲ ಮುರಿದು ಕುಸುಮ ಬಾಲೆ ಕೊರಳೊಳ್ ಧರಿಸಿ ವಸುಧೆ ಸುತೆಯ ಕರವ ಪಿಡಿದು ೧
ಕುಶಲದೀ ನಗುನಗುತಾ ಪಸರಿಸುವಿ ಮಂಟಪಕೆ ಹಸೆಗೆ ಧರಣಿ ಪಾಲರ್ ಲಜ್ಜೆವೆರಸಿ ಮೆರೆವ ಕೀರ್ತಿ ವಿಬುಧರೊಲಿಸೆದುರುಳ ದೈತ್ಯ ಕ್ರೋಧವರಿಸಿ ಸುರರುರಗದಲ್ಲಿ ನಿಂದು ಹರುಷದಿ ಸುಮ ವರ್ಷವನ್ನು ಕರೆಯುವರೈ ಸರಸದೀ ೨
ಜನಕರಾಯ ಹರುಷದಿಂದ ಜನಕೆ ಓಲೆ ಬರೆಯೆ ಕಂಡು ಘನದಿ ದಿಬ್ಬಣ ಕೂಡಿ ಬಂದ ಜನಕ ಜನನಿಯರಿಗೆ ನಮಿಸಿಅನುನಯದಿಂ ಮನ ಓಲೈಸಿ ದನುಜಾಂತಕ ಗೋವಿಂದನೇ ೩

೩೬೬
ಹಿಂದಿಲ್ಲಾ ಇನ್ನು ಮುಂದಿಲ್ಲಾ | ಹಿಂದಿಲ್ಲಾ ಮುಂದಿಲ್ಲಾ | ಒಂದಿನ ಸುಖವಿಲ್ಲಾ ಪ
ನಂದ ಗೋಪನ ಮುದ್ದು | ಕಂದ ನೀನಲ್ಲದೆ ಅ.ಪ
ಉಡುವರಿವೆ ಇಲ್ಲಾ ಉಂಬರನ್ನವು ಇಲ್ಲ | ನಡೆವರೆ ಮುಂದೆ ದಾರಿಯು ಕಾಣೆನಲ್ಲ || ಪೊಡವಿ ಪಾಲಕ ಶ್ರೀಕೃಷ್ಣ ನೀನಲ್ಲದೇ | ಬಡವನ ಬಾರೆಂದು ಕರೆದು ಮನ್ನಿಪರಿಲ್ಲ ೧
ಕಾಸು ಕೈಯೊಳಗಿಲ್ಲ | ಆಸೆ ದೇಹದೊಳಿಲ್ಲ || ದೇಶ ದೇಶವ ಸುತ್ತಿ ಬಳಲಿದೆನಲ್ಲಾ || ಭಾಸುರಾಂಗನೆ ಶ್ರೀನಿವಾಸ ನೀನಲ್ಲದೇ | ಲೇಸನೆಣಿಸುವರ ಕಾಣೆ ರುಕ್ಮಿಣಿನಲ್ಲ ೨
ಸತಿಸುತರೆನಗಿಲ್ಲ | ಗತಿ ಮುಂದೆ ಶಿವ ಬಲ್ಲ ||ಹಿತದಿಂದಲಿರಲೊಂದು ಮನೆ ತನಗಿಲ್ಲ || ಪೃಥವಿ ಪಾಲಕ ಸೀತಾರಾಮ ನೀನಲ್ಲದೇ | ಹಿತವ ಬಯಸುವರ ಕಾಣೆ ಜಗದ ನಲ್ಲ ೩
ತಂದೆ ತಾಯಿಗಳಿಲ್ಲ | ಬಂಧು ಬಳಗವಿಲ್ಲ | ಒಂದು ವಿದ್ಯವ ನಾನು | ಕಲಿತವನಲ್ಲಾ || ಇಂದಿರೆಯರಸ ಗೋವಿಂದ ನೀನಲ್ಲದೇ | ಬಂದ ಭಾಗ್ಯಗಳೊಂದು ನಿಜವಾದುದಲ್ಲಾ ೪

೩೮೪
ಹೆಸರು ತಂದಿರ್ಯಾ ಭಿಕ್ಷಕೆ | ಹೆಸರು ತಂದಿರ್ಯಾ ಪ
ಅಸಮವೀರರೆಂಬ ಹೆಸರು | ಕುಶಲಗಾರರೆಂಬ ಹೆಸರುಶಶಿಯಂತೆ ಶೋಭಿಸುವ ಶಿಶುವು | ಕುಲಕೆ ಯೋಗ್ಯನೆಂಬ ಹೆಸರು ||ಹೆಸರು|| ೧
ದಾನಶೀಲರೆಂಬ ಹೆಸರು | ಮಾನವಂತರೆಂಬ ಹೆಸರು | ಸಾನುರಾಗದಲ್ಲೂ ಆತ್ಮ | ಜ್ಞಾನಿಗಳೆಂದೆಂಬ ಹೆಸರು ೨
ಹಿರಿಯ ಮನೆತನದ ಹೆಸರು | ಗುರುಗಳಾ ಭಕ್ತಿಯಲಿ ಹೆಸರು | ಪರಮ ಭಾಗವತರ ತೆರದಿ | ಹರಿಯ ಶರಣರೆಂಬ ಹೆಸರು ೩
ಪುತ್ರವತಿಯರೆಂಬ ಹೆಸರು | ಸತ್ಯಶೀಲೆಯರೆಂಬ ಹೆಸರು | ಪತಿಯ ಸೇವೆಯಲ್ಲಿ ನಿರತ | ಪತಿವ್ರತೇಯರೆಂಬ ಹೆಸರು೪
ಸತ್ಯಸಂಧರೆಂಬ ಹೆಸರು | ತತ್ವಜ್ಞರೆಂದೆಂಬ ಹೆಸರು | ಚಿತ್ತ ಶುದ್ಧರೆನಿಸಿ | ಗೋವಿಂದಾನ | ದಾಸರೆಂಬ ಹೆಸರು ೫

ನಮಸ್ಕಾರ ಮಾಡುವೆನು
೩೭೭
ನಮಸ್ಕಾರ ಮಾಡುವೆನು ಭಾಸ್ಕರನಿಗೆ ನಮಸ್ಕಾರ ಮಾಡುವೆನು ಪ
ನಮಸ್ಕಾರ ಮಾಡುವೆ ಸಮವರ್ತಿ ತಾತಗೆ ಕುಮುದ ವಿರೋಧಿಗೆ ಕಮಲಮಿತ್ರನಿಗೆ ಅ.ಪ
ತಮವೆಂಬ ಯಾಮಿನಿಯ ನಿವಾರಿಸಿ ದ್ಯುಮಣಿ ಶೋಭಿಸೆ ಭೂಮಿಯ ನಮಿಸಿದ ಭಕ್ತರ ದೋಷನಾಶವಗೈದ ಅಮಿತ ಮಂಗಳದ್ವಯ ಅಯನ ಆದಿತ್ಯಗೆ ೧
ಉರಗರೂ ಗಂಧರ್ವರು ಅಪ್ಸರ ಸ್ತ್ರೀಯರಧರಣಿ ಸುರರು ಯಕ್ಷರು ಪರಿಪರಿಯಲಿ ಬಂದು ಸೇವೆಯನೆಸಗಲು ಭರದಿಂದ ಬರದಿ ಸಂಚರಿಸುವರ್ಕಗೆ ೨
ಗಾಲಿ ಒಂದರ ರಥದೀ ಬಂಧಿಸಿದಂಥ ಏಳಶ್ವಗಳ ಮಧ್ಯದೀ ಕಾಲಿಲ್ಲದರುಣನು ಸಾರಥಿಯಾಗಿರೇ ಮೂರ್ಲೋಕವನು ಸುತ್ತಿ ಬೆಳಗುವ ತರಣಿಗೆ ೩
ಮಾಸಕ್ಕೆ ಒಂದೊಂದರ ಸಂಖ್ಯೆಯೊಳ್ ರಾಶಿ ಚಕ್ರದಿ ಸಂಚಾರ ದೇಶದಿ ಪ್ರಾಣಿಗಳಾಯುಷ್ಯವ ಸೆಳೆಯುವದೋಷವರ್ಜಿತ ಕಮಳಸಾಕ್ಷಿ ಮಾರ್ತಾಂಡಗೆ ೪
ಹಿರಣ್ಯರೇತಸ್ಸು ಭಾನು ನವಗ್ರಹಾ- ದ್ಯರೊಳು ಶೋಭಿಸುತೀರ್ಪನು ಧರಣಿಗೆ ಲಕ್ಷಯೋಜನ ದೂರ ತೋರುವ ಹರ ಗೋವಿಂದ ದಾಸನೊಡೆಯ ಪ್ರಭಾಕರಗೆ ನಮಸ್ಕಾರ ೫

ಹಾಡಿನ ಹೆಸರು :ನಮಸ್ಕಾರ ಮಾಡುವೆನು
ಹಾಡಿದವರ ಹೆಸರು :ಕಮಲಾ ಜಿ. ಎಸ್., ರಾಜಲಕ್ಷ್ಮಿ ಜಿ. ಎಸ್.
ರಾಗ :ಸೌರಾಷ್ಟ್ರ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಿಜಯರಾಘವನ್ ಬಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನೀನೇ ಗತಿ ಮಾಧವಾ
೩೨೯
ನೀನೇ ಗತಿ ಮಾಧವಾ ದೇವರದೇವ ನೀನೇ ಗತಿಯು ನಮ್ಮ ಮಾನಾಭಿಮಾನವ ಹಾನಿಗೊಳಿಸದನುಮಾನವಿಲ್ಲದೆ ಕಾಯೋ ಪ
ಸಾಕಾರ ಸೌಭಾಗ್ಯವೂ ಸರ್ವವೂ ಸರ್ವಶೋಕಕ್ಕೆ ಕಾರಣವೂ ಬೇಕಾದ ಕಡುರಸ ಶಾಕಪಾಕದ ರೂಪಿ ಶ್ರೀಕೃಷ್ಣ ನಿನ್ನಯ ನಾಮದಿಂದಧಿಕನೆ ೧
ಸಕಲ ಸಂಭ್ರಮವು ನೀನೇ ನಿನ್ನನು ಎನ್ನ ಸಖನೆಂದು ನಂಬಿದೆನು ಸಕಲ ಚರಾಚರ ಪ್ರಾಣಿಗಳಿಗೆ ಸರ್ವ ಸುಖದುಃಖವುಣಿಸುವ ಸಕಲ ತಂತ್ರನೇ ೨
ಆದಿಮೂರುತಿಯು ನೀನೇ ಧರ್ಮಾಧರ್ಮಶೋಧಿಸುವವನು ನೀನೇ ವೇದಗಮ್ಯನೆ ಯೆನ್ನ ಖೇದಮೋದವ ನಿನ್ನಲ್ಲಿ ಪಾದಕರ್ಪಿಸಿದೆ ಗೋವಿಂದದಾಸನೆ ಕಾಯೊ ೩

ಹಾಡಿನ ಹೆಸರು :ನೀನೇ ಗತಿ ಮಾಧವಾ
ಹಾಡಿದವರ ಹೆಸರು :ನಿತಿನ್ ರಘುವೀರ್
ರಾಗ :ಬಿಲಾಸ್‍ಖಾನಿ ತೋಡಿ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಗೋಡ್ಖಿಂಡಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಯಾರೆನ್ನ ಕಾಯುವರು
೩೪೯
ಯಾರೆನ್ನ ಕಾಯುವರು | ಶ್ರೀಹರಿಯೆ | ಹರಿಯೇ | ನೀ ದೂರ ಮಾಡುವರೇ ಪ
ಘೋರ ಪಾತಕವೆಂಬೀ | ಶಾರೀರವನು ಪೊತ್ತು | ಪಾರಗಾಣದ ದುಃಖಕರ್ಹನಾದೆನು ಹರಿಯೆ ೧
ಜೀವದಂತ್ಯದಿ ಯಮನೀವ ಪಾಶವ ಕಡಿದು ಕಾಯುವರಿಲ್ಲ | ದಯಾಕರ ಮೂರುತಿ ೨
ಕಾಸು ಕನಕವಿರಲಾಸೆ ಮಾಡುವರೆಲ್ಲ | ದೇಶ ಬಿಕ್ಷುಕನಾದ | ರೀಸು ಮೆಚ್ಚುವರಿಲ್ಲ ೩
ಬಂಧು ಬಳಗವೆಂಬುದೊಂದು | ಸಂಸಾರದಿ | ಬಂದು ನೋಯುವೆನು | ಗೋವಿಂದ ನೀನಲ್ಲದೆ ೪

ಹಾಡಿನ ಹೆಸರು :ಯಾರೆನ್ನ ಕಾಯುವರು
ಹಾಡಿದವರ ಹೆಸರು :ಶ್ರೀಕಾಂತ ಕುಲಕರ್ಣಿ
ರಾಗ :ಹಂಸಕಿಂಕಿಣಿ
ತಾಳ :ಜಪ್‍ತಾಲ್
ಸಂಗೀತ ನಿರ್ದೇಶಕರು :ವೆಂಕಟೇಶ ಗೋಡ್ಖಿಂಡಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ