Categories
ರಚನೆಗಳು

ಚನ್ನಪಟ್ಟಣದ ಅಹೋಬಲದಾಸರು

(ಊ) ಲೋಕನೀತಿ ತತ್ವ ಕೃತಿಗಳು
೨೯೮
ಅನುಭವವಿಲ್ಲದೇ ಅರಸಿದಡಾಹುದೇ ಆ ಹರಿದರುಶನವೂ ಪ
ಮನುಮುನಿಯಾಗಲೀ ಮಾನ್ನವರಾಗಲೀ
ಸನಮುಖರಾಗಲೀ ಸಾಧುಗಳಾಗಲೀ ೧
ಅರಸು ತಾನಾಗಲೀ ಆಣಯತನಾಗಲಿ
ಸುರಮಣಿ ಸೋಲಿಪ ಸುಂದರನಾಗಲಿ ೨
ಪಂಡಿತನಾಗಲೀ ಪಾಮರನಾಗಲೀ
ಅಂಡಜಗಮನನಾಗಲೀ ಶ್ರೀಗುರುವೆ ತುಲಶೀರಾಮಾ ೩

ಪುರಂದರದಾಸರ ಕೃತಿಯಂತೆ
೨೪೪
ಅಮ್ಮನಿಮ್ಮ ಮನೆಗಳಲ್ಲಿ ನಮ್ಮ ಕಂದನ ಕಾಣರೇನೆ ಪ
ಸುಮ್ಮನೆ ಮಲಗಿರುಯೆಂದು ಗಮ್ಮನೆ ನಾ ನೀರಿಗೋದೆ
ಈಮಹೀಪಾಲ ಶ್ರೀರಂಗಾ ಗಮ್ಯವಾಗಿ ಹೋದ ಕಣೇ ೧
ನಿದ್ರೆಯ ಮಾಡುತ್ತಲಿದ್ದೂ ಕದ್ದು ಪೋದಾ ನಮ್ಮ ರಂಗಾ
ಇದ್ದ ಮಾತಂತಿರಲಿ ಎನ್ನ ಮುದ್ದು ಕಂದಾ ಪೋದಾಕಾಣೆ ೨
ಕದ್ದು ಬೆಣ್ಣೆ ಮೆದ್ದನೆಂದು ಸುದ್ದಿಯತಂದಾನು ಗುರುವೂ
ಗೆದ್ದು ತುಲಶಿರಾಮಾದಾಸಾರಿದ್ದು ಪೋದಾರಂತೆ ಕಣೇ ೩

೨೯೯
ಅರಿತರೆ ಮನುಜ ನೀನಹುದಣ್ಣಾ ನಿಜ
ದರಿವುಯಿಲ್ಲದೆ ಹ್ಯಾಂಗಹುದಣ್ಣಾ ಪ
ಪರಮನಪ್ಪಣೆ ಹಿಂಗಿಹುದಣ್ಣಾ ಇದ
ನರಿಯದೆ ಕೆಡುವೆ ನೀನಹುದಣ್ಣಾ ಅ.ಪ
ಸಪ್ತ ಸಮುದ್ರವ ನಡೆಯಣ್ಣಾ ನಿನ
ಶಕ್ತಿಗೆ ಬಂದರೆ ಹೊಡೆಯಣ್ಣಾ
ಗುಪ್ತದೆ ನಾಮವ ನುಡಿಯಣ್ಣಾ ಪ್ರಾ
ಣಾಪ್ತನ ಕಂಡು ನೀ ಹಿಡಿಯಣ್ಣಾ ೧
ಅಂಗಪುರೀಯೆನಬಹುದಣ್ಣಾ ಜಯ
ಮಂಗಳ ನಾಯಕನಹುದಣ್ಣಾ
ಜಂಗಮಗುರು ಹರಿತುಲಶಿರಾಮ ನಿಜ
ಲಿಂಗನೆ ತಾನಹುದಹುದಣ್ಣ ೨

೩೦೦
ಇಂತಾ ಸಾಟಿಗಳೆಷ್ಟೊ ಜಗದೊಳಗಿಂತಾ ಸಪ್ಪಳೆಷ್ಟೊ ಪ
ಅಂತರವರಿಯದೆ ಅಧಮನು ತಾನಾ
ಗಿಂತಿದರೊಳು ಬೊಗಳುವ ಕಂತೆ ಅ.ಪ
ಕುಂತರೆ ನಿಂತರೆ ಸುಜನರ ದೂಷಿಸೆ
ಅಂತಕನಿಗೆ ಸಿಲ್ಕುವೆಯಹುದೊ
ಪಂಥವಿಲ್ಲ ಪರೀಕ್ಷಿಸಿ ನೋಡೆಲೊ
ಸಂತೆಯೊಳಗೆ ನೀಮಾಡುವ ಡಂಬದ ೧
ಮಸ್ತಿಯೊಳಾಡಲು ಮಥನಿಪುದಹುದೆಲೊ
ದುಸ್ತರವೆಲೊ ದುರಿತಾಂಬುಧಿಯು
ನಿಸ್ತರಂಗನಿಗೆ ನಿಜಸುಖವೆನ್ನುತ
ಶಿಸ್ತೊಡೆಯುವನಂಥಡಿಯನು ಅರಿಯದ ೨
ಆಗದು ಅನುಭವ ನೀಗದು ಕತ್ತಲೆ
ಹ್ಯಾಗೆಂಬುವ ಸಂಶಯ ನಿನಗೇ
ನಾಗರೀಯೆ ನಿಜ ತುಲಸೀ ರಾಮ
ಮದ್ಗುರುವಿ ನಪ್ಪಣೆಯ ಬಿಟ್ಟಿರೆ ಬೊಗಳುವ ೩

೨೪೨
ಇಂದಿರಾಪತಿ ನಿನ್ನ ಸುಂದರ ಚರಣವ ನಾ
ನೆಂದೆಗೆ ಕಾಣುವೆನೋ ಶ್ರೀಮಂದರೋದ್ಧರನೇ ಪ
ಹಿಂದೆ ಸುಜನರೂ ಪದವಿಹೊಂದಲಿಲ್ಲವೇ ಇದ
ಕ್ಕೊಂದುಪಾಯವೇನೊ ನಿನ್ನ ಕಂದನಲ್ಲವೇ ೧
ಬಂದು ಈ ಪರಿ ನಾನೊಂದಿಪೆನೆಲೊ ನೀ
ಬಂದು ಮುಖವ ತೋರಲು ಎನಗೊಂದೆ ಸಾಕೆಲೊ ೨
ಸುಜನರೊಡನೆಯೇ ಕೂಡಿಭಜನೆ ಮಾಡಿದೇ ನೀ
ನಿಜ ಕಲ್ಯಾಣಪುರದ ಒಡೆಯನೆಂದು ಬೇಡಿದೇ೩
ದಾಸದಾಸನು ಶೇಷಾದ್ರಿವಾಸನೇ ನನ್ನ
ದೋಷರಹಿತಗುರುವು ತುಲಸೀರಾಮದಾಸನೇ ೪

೫. ಅಹೋಬಲದಾಸರ ತೆಲುಗು-ಹಿಂದಿಮಿಶ್ರಿತ ಕೃತಿಗಳು
೫೦೨
ಇದು ಕೇಳಿ ಭಕತಜನ ಭಗವಂತನು
ತಾನು ಹೇಳಿದನರ್ಜುನಗೇ ಪ
ಅದು ಭೂಲಗಯೋ ಮಾ ಕಾಲಕಠಿನ
ಷಡ್ವೈರಿ ವಿಸರ್ಜನೆಗೆ ಅ.ಪ
ಅಪದಾರ್ಥವನ್ನಡಿಯೆನೊಂದಿಪೆ-
ಕೋಪಮು ವಿಡಿಚಿತಿಳಿ ಸಮಜ ತಾ
ವೊಯಾಪರ್‍ವರ್ದಿಗಾರನೆ ಬಲುಕುಟಿ
ನಾಪನ್‍ವಳಿಯೊ ಭಲಾ ೧
ಸತ್ವರಜೋಗುಣ ತಾಮಸರೂಪಿದು
ಮತ್ವರಿತದಿ ನೋಡೊ ಯೀ
ತತ್ವದ ಅರ್ಥವಳಿದವನಿಪ್ಪಡುಗು
ಭಜನೆಯ ಮಾಡೋ ೨
ವಿಜಯಪುರೀವರ ಅಜಪಿತನಹುದಲೊ
ಭುಜಗಾಸನೆಧೀರಾ ಸಮಜತಾಕೇ
ಳಜ ಮಹರಾಜನೆ ನಿಡಿಜಗುರು ತುಲಸಿ-
ದ್ವಿಜ ಮಣಿ ಆಧಾರಾ ೩

೩೦೧
ಎಂತಾ ಗರತೀಯ ಕಂಡೆ ಇ
ನ್ನಿಂತಾವಳೀ ಜಗದೊಳುಂಟೇನೆ ರಮಣೀ ಪ
ಪಂಥವು ಮಾಡಲು ಪರರು ಕಾಣದ ಹಾಗೆ
ನಿಂತಾಗೆ ನುಂಗಿದಳು ಕಂತೆ ಕಬ್ಬಾ ಅ.ಪ
ಗರತಿಯು ತಾನಲ್ಲ ಗೌಡಿಯ ತಾನಲ್ಲ
ಗುರುತೇಳುತದೆ ನೀವೆದ್ದರೆ ಕೇಳಿರೈ
ಸರಿತಾಯಿ ಪರಿಯುತ್ತೆ ವರಗಂಡನಿಗೆ ಮೋಸ
ಕರಿಯುತ್ತಳಿಹ ಪ್ರಖ್ಯಾತ ನಳ್ಳಿಯೊಳು ೧
ಆದಿಲಿ ಹೊಗ ಪರಬೀದಿಯೊಳು ತಾನೆಂತೂ
ವಾದಿಸಿ ಅವರೊಳು ಭೇದವಿಡಿದೆ
ಕಾದಿರುವೆ ನಿನಗಾಗಿ ಕಾಮನಯ್ಯನೆ ಬಾರೊ
ವೇದಗೋಚರ ಗುರು ಶ್ರೀತುಲಸೀರಾಮಾ೨

(೧) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು)
೨೯೨
ಎಂದಿಗೆ ತೀರಿದೆ ಸುಂದರನಾಯಕಿ
ಅಂಗಜ ಬಾಣದ ಅತುರವನ್ನೂ ಪ
ಚಂದ್ರಮುಖಿಯೇ ನೀ ನಾದಿನ ಹೇಳಲ್
ಬಂದೆನುನಾನಹುದೇ ಭಾವಕರನ್ನೇ
ಕುಂದುಗಳನೀಪರಿ ಉಸುರುವೆ ಉಚಿತವೆ
ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ ೧
ಬಲ್ಲೆನು ನಿನ್ನಂ ಭಾವದ ಸೊಲ್ಲಂ
ಬೆಲ್ಲದ ಮಾತನಾಡಿ ಕಳುಹಿಪೆನೇಂ
ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು
ಸಲ್ಲಿದೆ ಸುಂಕವ ಸಮ್ಮತಿಯಿಂದಾ ೨
ಮಾರನು ಬಂದೂ ಮನದೊಳು ನಿಂದೂ
ದಾರಿಯನು ತಪ್ಪಿಸಿ ಧಣಿಸುವ ಕಾಣೆ
ಓರದೆ ಕೋರಿದ ಕಾರ್ಯವ
ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ ೩
ಈ ಸುಖಸಂಪದ ಈಶ್ವರ ಬಲ್ಲಂ
ಆಸೆಯ ತೋರಿ ನೀ ಮೋಸವಗೆಯ್ವೆ
ದಾಸನು ವಂದಿಪ ಸುಖತೋರಿದೆ
ದೇಶಿಕನಲೆ ತುಲಸಿರಾಮಾ ೪

(ಉ) ಆತ್ಮನಿವೇದನಾ ಕೃತಿಗಳು
೨೬೮
ಎಂದಿಗೊ ಕಂದನ ಪಾಲಿಸುವದು ಇನ್ನೆಂದಿಗೊ ಪ
ಅಂದಿನಿಂದಲಿ ನಿನ್ನ ಸುಂದರ ಸೇವೆಗೆ
ಬಂದು ಬೇಡುವೇನೋ ಮುಕುಂದ ಮಾಧವಾ ೧
ಸಾಧು ಸಜ್ಜನರೊಳು ಭೇದವಳಿದು ನಿಜ
ಪಾದವ ಕಾಣುವ ಬೋಧೆ ಆನಂದ ೨
ವಾರವಾರ್ಚಿತ ಹರಿ ದಾಸ ತುಲಸಿರಾಮಾ
ದೇಸಿಕ ನಿನ್ನ ನಿಜ ದಾಸನಾಗುವುದು೩

೩೦೨
ಏಕಾದಶಿದಿವಸ ನಮ್ಮ
ಶ್ರೀಕೇಶವ ನಾಮವ ಭಜಿಸುವವರಿಗೆ ಪ
ಬೇಕಾದವರೀ ವ್ರತವನಾಚರಿಸೆ
ಆ ಕಾಲಾಂತಗೆ ಅಗಣಿತವಾಗಿಹುದು೧
ಭಕ್ತನು ರುಕ್ಮಾಂಗದ ಮಹರಾಯನೂ
ಮುಕ್ತಿಗೆ ಮಾಡಿದ ಶುಭಕರದಿನವಿದು ೨
ಸುಜನರ ಗೋಷ್ಠಿಯೊಳ್ ರಾತ್ರಿಯೊಳಾ
ಭುಜಗ ಶಯನನಂ ಭಜಿಸಲ್ಕೂಡಿದ ೩
ಕಲಿಯೋಳು ಕಾಣುವ ಅಸ್ಮದ್ದೇಶಿಕ
ರೊಲುಮೆಯ ತುಳಶೀ ರಾಮನು ತೋರಿದ ೪

೨೬೯
ಏನು ಬರೆದೆಯೊ ಬ್ರಹ್ಮನೆ
ನನ್ನಣೆಯಲರಿಯದು ಸುಮ್ಮನೇ ಪ
ನೋನವನು ಹೋಗಾಡಿ ಜನರೊಳು
ಹೀನವಾಗುವ ಹಾಂಗೆ ಹಣೆಯೊಳು ಅ.ಪ
ಹಿಂದೆ ಮಾಡಿದ ಕರ್ಮವು ಯಿದ
ಕ್ಕೊಂದು ಪಾಯದ ಮರ್ಮವೂ
ತಂದೆ ನೀನೆನಗಿಂದು ತೋರಲು
ನಿಂದು ಭಜಿಸುವೆ ಮಂದರೋದ್ಧರ ೧
ಪಾಪಗಳ ಹರನ್ಯಾರೆಲೊ
ಭೂಪದಶ ಅವತರಾನೇ
ಕೋಪಮಾಡದೆ ದಾಸಮಾಡಿದ |
ಪಾಪಗಳ ಪರಹರಿಸೊ ಬೇಗದಿ ೨
ಸಾಕುಮಾಡೆಲೊ ಶ್ರೀಹರಿ
ಲೋಕನಾಯಕ ಭವಹಾರೀ
ಕಾಕು ಬುದ್ಧಿಗಳನ್ನು ಬಿಡಿಸಲು
ಏಕ ಮನದೊಳು ನೆನೆವೆ ನಿಮ್ಮನೂ ೩
ಗುರುವು ತುಲಸೀರಾಮನೇ ಪರನು
ಗುರುವೆ ತ್ರಾಹಿತ ಪ್ರೇಮನೆ
ಧರೆಯೊಳಧಿಕ ಚೆನ್ನಪುರಿಯಾ
ದೊರೆಯ ಲಕ್ಷ್ಮೀನಾರಾಯಣಾ ೪

೩೦೩
ಏನೆ ನಾರಿ ಕನಸುತೋರಿ ಹಾರಿತಲ್ಲೆ ಪ
ಮಾರನಯ್ಯನಿಲ್ಲಿ ಬಂದೂ ನನ್ನ
ಫೋರ ಪಾತಕವ ಕೊಂದೂ ಒಳ್ಳೆ
ನಾರಿಸೂರೆ ಆಟ ತೋರಿ ಪೋದಕಾಣೆ
ತಾರೆಬೆಳಕಿನ ಚಂದಾ ಅ.ಪ
ಇಂದಿರಾಪತಿ ತಾ ಮಂದಹಾಸದೊಳು
ಕುಂದರದನೆಯ ಕೂಡಿ ನನ್ನ
ನಿಂದೆ ತಂದ ಸರಿಮಾಡಿ ಕಳ್ಳ
ಬಂದು ಪೋದ ಕರತಂದು ತೋರೆಮತ್ತೆ
ನಿಂದು ಭಜನೆಯ ಮಾಡಿ ೧
ಬಾರೊ ಧೀರ ಅಂದ್ರೆ ನೀರ ಆಟದೊಳು
ತೋರಿ ಮಾಡಿದನು ಮೋಸಾ ಭವ
ದೂರನಾದ ವೆಂಕಟೇಶಾ ರಂಗ
ದಾರಿಕಾಣೆ ಕಂಡು ತೋರೋ ನಿನ್ನ ಪಾದ
ಗುರುವು ತುಲಸಿ ರಾಮದಾಸ ೨

೩೦೪
ಏನೋ ಒಂದಿಹುದೂ ಕೋಠಿಬಾಳುವ ನುಂಗಿಹುದೂ ಪ
ದೀನನಾಗಿ ಗುರುಧ್ಯಾನಮಾಡಿ ಆಸೆಯೋಳಿ ಬಹು
ಮಾನದಿ ಕಾಣುವದೇನೋ ಅ.ಪ
ನಮ್ಮೊಳಿರುತಿಹುದು ಅದು
ನಮ್ಮಯನಮ್ಮೊಳಿರುತಿಹುದೂ
ಹಮ್ಮುಗಳೆಂಬುವ ಹೆಮ್ಮೆಯನಳಿಯಲು
ಸುಮ್ಮನೆಗಮ್ಮನೆ ಕಾಣಬರುತ್ತಿಹುದೇನೊ ೧
ಅದಕಿನ್ನೆಣೆಯಿಲ್ಲಾ
ಅದನು ಗುರುಸೇವಕ ಬಲ್ಲಾ
ಮದನಜನಕ ಶ್ರೀ ತುಲಸೀರಾಮನ
ಪದ ಭಜನೆಯೊಳು ಉದಯಿಸಿ ತಾನೇ ೨

೫೦೩
ಏರ ರಂಗಕಿಷನ್ ದಾರಿ ಚೂಪರಾ
ವೇರ ದಿಕ್ಕುಗಾನ ಮೇರೇ ಮಾರ ಸುಂದರ ಪ
ಮೊರೆ ಗಾಣರೆ ವಶವೊ ಮಾರಜನಕನೇ ಅ
ಘೋರ ಪಾತಕವನು ಕಳೆಯೊ ಸುಜನ ಭಜಕನೆ ೧
ರಾರಯನುಚು ಮೇರೆ ಮೂಮೆ-
ಕರಿಯಲೇದೆರಾ ಕೋರ ಅನುಚು
ತೇರೆ ಚರಣ-ಲೇದು ಕಾದುರಾ ೨
ಓಡಿಬನ್ನಿ ಸುಜನರೆಲ್ಲ ಭಜನೆ
ಮಾಡುವಾ ಈ ತ್ರಿಜಗ ಪೂಜಿತನೆಂಬೊ
ಅಜನಪಿತನಗೂಡುವಾ ೩
ಧರೆಯೊಳಧಿಕ ಮಧುರ ನಗರ
ಪುರಿಯವಾಸನೇ ಯನ್ನ ಭವವಿನಾಶನೇ
ಕೋಟಿ ರವಿಪ್ರಕಾಶನೆ ನಿನ್ನ ಚರಣ
ಗುರುವು ತುಲಶಿರಾಮದಾಸನೇ ೪

೩೦೫
ಓ ದಯಾನಿಧೇ ನೀ ದಯಮಾಡೋ
ಓಂಕಾರ ಪ್ರಣವ ಮೊದಲೋ ಪ
ಬೀದಿ ಪದಗಳ ಪೂಜ್ಯಮಾಗಲಿ
ಸಾಧು ಜನ ಹೃದಯಾಂತರಸ್ಧಿತಿ೧
ರಾಧೆಯರಸ ಪರಾತ್ಪರನೆ ಜಾಯ
ವೇದನಿಜ ವೇದಾಂತರಸ್ಥಿತಿ೨
ಕೋಲುಪೇಟೆ ಪುರೀಶ ತುಲಸಿ
ಮೂಲವಿಗ್ರಹದ ನಾದ ಕಾರಣ ೩

೨೪೫
ಓಡಿಬಾರೊ ರಂಗನಾಥ ಪ್ರಿಯಾ ಪ
ನೋಡೀ ಕೂಡೀ ಆಡೀ ಪಾಡುವೆ ಅ.ಪ
ಮಾಡಬಾರದೆಲ್ಲ ಮಾಡಿ ಬಂದೆ ಬಂದೆ
[ಓಡಿಬಂದು] ನಿಂದೆ ಕಂದಾ ತಂದೆಯೆ ೧
ಏತಕೆನ್ನ ಮೇಲೆ ಇಷ್ಟು ಕೋಪ ಕೋಪಾ
[ಆರ್ತರ] ಪಾಲಿಸ ಭೂಪಾ ಶ್ರೀಶನೆ೨
ಗುರುವು ತುಲಸಿರಾಮ ದಾಸಪ್ರೇಮಾ ಪ್ರೇಮಾ
[ವರ] ಕಾಮೀ ನಾಮ ಶ್ಯಾಮನೆ ೩

೩೦೬
ಓದಲೇಕೋ ಬರಿದೆ ಓದಲ್ಯಾಕೋ ಪ
ಆದಿ ಮಧ್ಯ ಅಂತ್ಯವೆಂಬೊ
ನಾದಬಿಂದು ಕಳೆಯನು ಅರಿಯದೆ ಅ.ಪ
ಏಳಬೇಕೋ ನಾರಿಯಾಳಬೇಕೋ
ಏಳು ಎಂಟು ಆತ್ಮವಿಚಾರ
ತಾಳಿ ತತ್ವ ಜ್ಞಾನವನ್ನು
ನೀಲಜ್ಯೋತಿಯನ್ನು ಕಾಣದೆ
ಜಾಲಾಮಾನಿನಿಯರೊಳು ಬೆರೆದೂ ೧
ಓದಬೇಕೋ ಓದದ್ದೋದಬೇಕೊ
ಓದಿತಾವೊಂದಕ್ಷರವನ್ನು
ಪಾದಸೇವೆಯನ್ನು ಕೊಟ್ಟಾ
ಭೋಧಾಚಾರ್ಯನೆಂಬೊ ತುಲಸೀ
ಆದಿಪ್ರಣವವನ್ನು ಬಿಟ್ಟುವೋದಲೇಕೊ ೨

೨೯೩
ಕನಸು ಕಂಡೆನು ಕೇಳೇ ಪ್ರಾಣ ಸಖೀ ಒಳ್ಳೆ ಪ
ಕನಸು ಕಂಡೆನು ಕೇಳು ಘನತರ ಸುಖದೊಳೂ
ಮನದೊಳಗನುದಿನ ನೆನೆಸೇ ಸಖಿಅ.ಪ
ಎಳೆಯ ಚಂದ್ರನ ಚೆಲ್ವ ಪೊಳೆವ ಬೆಳಕಿನೊಳು
ಝಳಿಪಾ ಚೆಂದುಟಿಯಂ ತಿಳಿವೇ ಸಖಿ ೧
ವಾಸವಾರ್ಚಿತ ಹರಿದಾಸ ತುಲಸಿರಾಮಾ
ದೇಶಿಕನಾದಾನು ತಾನಹುದೇ ಸಖಿ ಅಸ್ಮದ್ದೇಶಿಕನಾದಾನು ೨
ಯಾತರ ಸುಖ ಬರಿ ಮಾತಿನೊಳಿಗೆ ಜಾಣೆ
ಪ್ರಿತಿಯಿಲ್ಲದೆಲೇ ತಾಮಾತರಮಳಿವುದೇನೇ ೩
ಬರಿಯ ಮಾತಿನೊಳೆನ್ನಾ ಬೆರಗು ಮಾಡಲಿಬೇಡಾ
ಸುರತಕೇಳಿಗೆ ಬಂದೂ ಸರಸವನಾಡೆಲೆ ೪
ವಾಸವನುತ ಹರಿ ದಾಸತುಲಸಿರಾಮಾ
ಆಸೆಯ ತೋರಿಯೀಪರಿಯೋಳ್ ಮೋಸಗೈವುದು ಸರಿಯೆ ೫

೩೦೭
ಕನ್ನೆ ಪ್ರಾಯದ ಹೆಣ್ಣು ಕಾಣಿರೊ [ಅ
ದನ್ನ] ಕಂಡು ಪರಲೋಕ ಸೂರೆಯ ಮಾಡಿರೊ ಪ
ಸನ್ನೆಯು ತೋರುವ ಗುರುಗಳಿಗೆರಗೂ ಪ್ರ
ಸನ್ನಳಾಗುತ್ತಿಹ ಕಡುಚೆಲ್ವೆಯೀನಮ್ಮಾ ಅ.ಪ
ಬ್ರಹ್ಮನ ಮಗನಾಗಿ ಹೇತ್ತಳು ಪರ
ಬ್ರಹ್ಮವೆ ತಾನಾಗಿ ನಿಂತಳು
ಸಂಹಾರ ಉತ್ಪತ್ತಿ ಪೋಷಕತ್ವದೊಳೊಳ್ಳೆ
ಸಿಂಹಾಸನದೊಳಗಿರುತಾಳೆ ೧
ಕಾಮಾದಿಗಳನೆಲ್ಲ ನೀಗಿಯೂ ಗುರು
ನೇಮದೊಳು ತಲೆ ಬಾಗಿಯೂ
ಆ ಮಹಾ ಜ್ಯೋತಿ ಬೆಳಕಿನೊಳಿರುವಾ
ಈ ಮಹ ಮೋಕ್ಷಕಾಮಿನಿಯೆಂಬುವ ಕನ್ನೆ ೨
ವನಗೂಡುವಂದಾವ ಕಾಣಿರೋ ನಿಮ್ಮ
ಮನದೊಳು ನಿಚ್ಚಯ ಮಾಡಿರೋ
ಘನಗುರು ತುಲಸೀರಾಮದಾಸನೂ
ಅನುಮತಿಕೊಂಡಿಹ ಕಡುಚೇಲ್ವೆ ಯೀನಮ್ಮಾ ೩

೨೭೦
ಕರುಣ ಬರುವದೆಂದಿಗೂ ಶ್ರೀರಾಮಚಂದ್ರಾ ಪ
ದುರಿತ ಶರಧಿಯೊನೊತ್ತರಿಸಿ ನಿನ್ನಯಾ ದಿವ್ಯ
ಚರಣ ಸೇವೆಯೊಳಿರಿಸಿ ಪಾಲಿಸೋ ದೇವ೧
ಈಷಣತ್ರಯವೆನ್ನಾ ಆಶೆಪಡಿಸುತಿದೆ
ಮೋಸಗೊಳಿಸದಿರೊ ಶ್ರೀಶ ಶ್ರೀನಿವಾಸಾ ೨
ಪರಮ ತತ್ವಾಧಿಕಾರಿ ಸುರಮುನಿಸುತಾ ಶೌರಿ
ಗುರುವು ತುಲಶಿರಾಮಾ
ದೊರೆಯ ನಂಬಿದೆನೆಲ್ಲೋ ಕರುಣ ೩

೫೦೪
ಕರುಣಾಕರ ದೇವಾ ಶೀತಾ ಚರನೋಕೆ ಕೇಶವಾ ಪ
ಪಾತಕಾರಿ ವೋಂ ಪ್ರಸನ್ನಹನುಮನೆ ಪ್ರೀತಿಯೊಳಿರಿಸೆನ್ನಂ
ಆತುರದಿಂದಾ ರಾಮಣನರಿಯದೆ
ನುತಿಸುವನಾ ನಿನ್ನಂ ಶರಣಂ ೧
ಲಂಕಾಪುರದೀ ಕಿಂಕಿಣಿಧಾರಿ ಲಂಕಿಣಿಕೆ ಸಂಹಾರಿ
ಕುಂಕುಮಾಂಕಿತ ವಾಹನ ಬೋಲೆ
ಹೌರ ಬ್ರಹ್ಮಚಾರಿ ಶರಣ ಕರು ೨
ಪರಾಂಧಮ ತುಮ ಪ್ರಹ್ಲಾದಾರ್ಚಿತ ಪರಂದೇಹಿ ಸನ್ನಾಸಿ
ಗುರುಂದೇಹಿ ಶ್ರೀನಿರ್ಗುಣ ತುಲಸಿ |
ಗೀರ್ವಾಣಭಾಷಿ | ಶರಣಂ ೩

೨೭೨
ಕರುಣಿ ಬಾರದೇಕೋ ನಿನ್ನ ಕಂದನ ಮ್ಯಾಲೆ ಪ
ಶರಣು ನಿನ್ನ ಚರಣ ಸೇವೆಯೊಳಿರಿಸೊಯೆನ್ನನೂ ಅ.ಪ
ಅರುಹುಯೆಂಬೋದೆನ್ನಾ ಮನದೊಳ್ ಇರಿಸಿ ಪಾಲಿಸೈ ೧
ತರವೆ ನಿನ್ನ ಕರದೊಳಿಂದು ಬಿರುದು ಹೋಲಿಸೈ ೨
ಪರಮಗುರುವು ತುಲಶಿರಾಮ ಧೊರೆಯೊಳಿರುವೆನೈ ೩
ಇರಿಸಿ ಪಾಲಿಸೆಂದು ಬಂದು ಮೊರೆಯ ನಿಟ್ಟನೈ ೪

೨೭೧
ಕರುಣೆ ಬಾರದೇಕೊ ಕಂಜಜನಯ್ಯಾ ಪ
ಶರಣು ಮಾಡುವೆ ತರುಣೀವರದನೇ ಅ.ಪ
ಅರುಹೆಗೆ ಬಾರಾದಾ ದುರಿತಾಶರದಲಿರುವೆ
ಕರವನೆ ನೀಡೆಲೊ ರಂಗಾ ನಿನಗಿದು ತರವೆ ನೋಡೆಲೊ ೧
ದಾಸವಾರ್ಚಿತಾ ಮಮದೇಶ್ವಿಕ್ಕ ತುಲಶೀರಾಮಾ
ದಾಸನಾದೆನೊ ಪೋಷಿಸೊ ಪರದೇವಾ ದಾಸನಾದೆನೊ ೨

೩೦೮
ಕಲಿಧರ್ಮಮಾಡುತಿದ್ದ ಜಂಗಮಲಿಂಗಾ
ಶಿವಪೂಜೆ ಮಾಡುತಿದ್ದ ಪ
ಅಲ್ಲಿಗಲ್ಲಿಗೆ ಜಾಣ ಬಲ್ಲೆನೈವರಕೂಟ
ಎಲ್ಲೆಲ್ಲಿ ನೋಡಲಿ ಕುಳ್ಳಯೆಂಬೆರುಮಾನೇರು
ನಿಲ್ಲಾರು ನಿಜದಿಂದ ಬಲ್ಲವರದು ಕೇಳಿ
ಕಳ್ಳಾರು ಕದಿವರಲ್ಲ ಜಂಗಮಲಿಂಗ ಸುಳ್ಳು ಹೇಳುವದಿಲ್ಲವೂ ೧
ಯೆದುಶೈಲದೊಳು ಹೋಗಿ ಯಾಚಿಸೆಲ್ಲರ ಕಂಡೂ
ಹದಿನೇಳು ತತ್ವಂಗಳಂಗಮಾಯಿತು ಯೆಂದು
ಸುದಿಗಿರಿಭ್ರುಕುಟಿಗೆ ಜೀವತನುವ ತಂದೂ
ಮದನಜನಕನೇಳಿದಾ ೨
ನಾದಬಿಂದುವಿದೆಂಬೊ ನಾಡಿಕೊನೆಯೊಳು ನಿಂದೂ
ವಾದಿಭೀಕರ ಮಾದ ವಜ್ರದುಂಗುರವೆಂದು
ಬೋಧಾಯನದೊಳಿಹುದಾದಿ ತತ್ವವಿದೆಂದೂ
ಸಾಧನೆಯನು ಮಾಡಿದಾ ಜಂಗಮಲಿಂಗಾ ವೇದಾವದನಮಾದುದ೩
ಅಂಡಪಿಂಡವಿದೆ ಬ್ರಹ್ಮಾಂಡವಾಗಿಹುದೆಂದೂ
ಕಂಡ ಪುಸ್ತಕವೆಲ್ಲಾ ಕಾಣಿಕೆಯನು ಮಾಡಿ
ಕುಂಡಲಪುರದೊಳಿದ್ದ ಜಂಗಮಲಿಂಗಾ
ಶಿವಪೂಜೆ ಮಾಡುತಿದ್ದಾ ೪
ಕನಕಾಪುರೀಶ ತನುಮನಕಗೋಚರವಾದಾ-
ಗಣಿತಾವೇಶನುಯೆಂದು ಗುಣಿಸುತಿರಲು ವೇದ
ಅಣಿದು ಬರಲು ಗುರುವು ತುಲಸಿರಾಮನೆಯಾದ
ಘಣಿಶಾಯಿ ಪರತತ್ವವು ಜಂಗಮಲಿಂಗ೫

೫೦೬
ಕಲಿಯುಗ ನಿಜ ಆದತಾರೊ ಭಯೊ
ಶ್ರೀವೆಂಕಟರಮಣ ಬಿರಾಚೆ ಹೊ ಪ
ಫಲಮಿಚ್ಚುಟತಾ-ನಡಗಿನ ವರಮುನು-
ಕರಕಂಕಣಸೆ ಬತಾವೆ ಹೋಕಲಿ ಅ.ಪ
ರಾಧಕುಹೇವಿಪರೀತಕಹೇಕ್ಯ ನುಪಯೋಗಿಂಚುಟನಾತರಮಾ
ಇಪುಡೀ ಪೊರವಿನಿ ವುಪಕಾರಿಂಚುಟು-
ನೆಪಮಾತ್ರಮುಯಿದಿನೀವರಮಾ ೧
ದಾಸನುಜಂದಿನ ಪಾಶಭವಂಬುಲ |
ನಾಶನಜೇಯುಟಕು ಮಹೋಜೀ
ಘಾಸಿಚುಡಾವೋ ಗುರು
ತುಲಸಿದಾಸಪ್ರಸಾದೇ ಹಮಹೋಜೀ ೨

೨೭೩
ಕಾಯಬೇಕೋ ಶಂಕರೇಶ್ವರ ನೀನೆನ್ನನೂ ದೇವಾ ಪ
ಮಾಯಧಾರಿಪ್ರೀಯನಹುದೋ ಕಾಯಜಾಂತಕನೇ
ಆಯತಾರ್ಥವನ್ನು ತೋರೋ ಪಾರ್ವತೀಶನೆ ದೇವನೆ ೧
ಇಂತುದಿನವು ಗಳಿಸಿಯಿರುವ ಅಂತು ದು:ಖಕ್ಕೆ
ಪಂತವ್ಯಾಕೊ ಪಾಲಿಸೆನ್ನೊಳಂತರಂಗಮಂ ಶಂಭೂ ೨
ದಾಸ ತುಲಸಿರಾಮ ನಿನ್ನ ದಾಸನಾದೆನೂ
ದೋಷ ರಹಿತನ ಮಾಡೆನ್ನ ಮೋಸಹೋದೆನೂ-ಗುರುವೇ ೩

೩೦೯
ಕಾಲಮಹಿಮೆ ಕೇಳಿ ಜಗದಾಲೋಚನೆ ತಾಳೀ ಪ
ಕೀಳು ಖೂಳರಿಗೆ ಮೇಲು ಹಾಸಿಗೆ ಮಂಚ
ಬಾಲಾಜಿ ಭಜನೆ ಜನಕೆ ಜೋಳಿಗೆ ಯೀ ಪ್ರಪಂಚಾ ೧
ಉತ್ತಮಪುರುಷರಿಗೆಲ್ಲ ತುತ್ತಿಗೆ ಮಾನಹೋಗಿ
ಹೆತ್ತವ್ವೆ ಹೋಗೆ ಕಳ್ಳ ಚಿತ್ತರ್ಗೆ ಮಂಚಾ ತೂಗೆ ೨
ಡಂಬಾಚಾರಿಗಳಿಗೆಲ್ಲಾ ಕೊಂಬು ಕುದುರೆಯಗಾಡಿ
ಶಂಬೂನುತರೂ ಪಾಪಿಗಾಡಿಗಳ ಹಿಂದೆ ವೋಡೆ ೩
ನಿಚ್ಚಾ ಮುತ್ತೈದೆರ್ಗೆಲ್ಲಾ ಅಂಜಿಕೆ ಅರುಶನವಿಲ್ಲಾ
ಬಿಚ್ಚಾಲೆಯಿಲ್ಲದ ರಂಡೇರ್ಹೆಚ್ಚಿ ಹೀಗಾಯಿತಲ್ಲ ೪
ದೋಷರಹಿತ ಹರಿದಾಸ ತುಲಸೀರಾಮಾ
ದೇಶಿಕಾ ತನ್ನ ನಿಜದಾಸಾನ ಮಾಡಿಕೊಂಡಾ ೫

೩೧೦
ಕೇಳಿದಾಗಲೇ ಹೇಳಬಹುದೇನೋ ಬ್ರಹ್ಮಾನುಭವಮಿದು ಪ
ಹಾಳುವಾದವಲಾ ವಿಚಾರಿಸಲೇಳು ವ್ಯಸನಕೆ ಸಿಲ್ಕಿ ಕುಣಿಯುವ ಅ.ಪ
ಖೂಳ ಕಪಟರಿಗೆಂತು ಅನುಭವಶಾಲಿಗಾಗಿಹ ಪರತರಾನ್ವಯ
ಸುಳ್ಳಮಳ್ಳರಿಗಾಗದಹುದಣ್ಣ ವೇದಾಂತಸಾರಸ
ಮೂಲ ಪ್ರಣವ ವಿಚಾರಕಹುದಣ್ಣ ಯಾರಾದಡಾಗಲೀ
ತಾಳಿನೋಡಿದಡಾಗಬಹುದಣ್ಣ
ನೀಲಜ್ಯೋತಿಯ ಕಾಣದೆ ಬರಿ ಶೂಲ ಶೀಲಕೆ ಸಿಲ್ಕಿ ಕುಣಿಯುತ
ಆಲಿಸೆಂದು ನಮಸ್ಕರಿಸುತಿಹ ಜಾವಿದ್ಯದ ಪೋಲಿ ಜನಗಳು ೧
ಪಾರಮಾರ್ಥ ವಿಚಾರ ಕಾಣಣ್ಣ
ಪಂಡಿತರಿಗೇನದು
ಕಂಡು ತಿಳಿಯಣ್ಣ ದೂರವಿಲ್ಲವು
ಅಂಡದೊಳಗಿಹ ಪಿಂಡವೇ ಬ್ರಹ್ಮಾಂಡ ವೇದಾಂತಾರ್ಥ ಸಮ್ಮತಿ
ಭಂಡರಿಗೆ ಬಹುಭಾಷೆಗಹುದೇನ
ಕುಂಡಲೀಪುರ ತತ್ಪ್ರಯಾಣವು ೨
ಓದಿ ವಿಕ್ರಯವನ್ನು ಮಾಡ್ಯಾರು ಓಂಕಾರ ಬೀಜದ
ಹಾದಿಯನು ತಾವು ಕಾಣದೋಡ್ಯಾರೊ ರಾ
ಜಾಧಿರಾಜರೂ ಕಾವಿ ಜಗಳವ ಕುಂತು ನೋಡ್ಯಾರು
ವೇದಾಂತಿಗಳೂ ನಿಜ ಜ್ಞಾನಪುತ್ಥಳಿಯನ್ನು ಕಂಡ್ಯಾರು
ಆದಿಮಧ್ಯಾಂತಗಳರಿಯದ ವಾದಿಗಳಿಗೆಂತಕ್ಕು ತತ್ವದ
ಶೋಧಿಸಿದು ನೋಡಲ್ಕೆ ನಿಜಗುರು
ಬೋಧೆಯೊಳಗಿಹುದು ಆದಿತತ್ವವು ೩
ಕವಿಗಳೆಷ್ಟೋ ಕಷ್ಟಪಟ್ಯಾರು ಅವಸಾನಕರಂ
ಭವದ ಬಲೆಯೊಳು ಕಟ್ಟಿಕುಟ್ಯಾರು ಆಗಲ್ಲಿ ಸುಜನರು ಜ್ಞಾ
ನವೈರಾಗ್ಯವನು ಕೊಟ್ಯಾರು
ಶಿವನು ತಾನೆಂತೆಂಬ ಅದ್ವೈತವನು ಆಡಲ್ಕಡಕಲಹುದೇ
ಭುವನದೊಳು ಪಂಚಾಕ್ಷರೋ ನಿಜತ್ರಿಣೆಯಸತಿ ಮೋಕ್ಷೆಚ್ಛೆ ಕವಚಂ೪
ನಾಗನಗರಿಪುರೀಶ ಕಾಣಣ್ಣ ಆಧ್ಯಾತ್ಮದನುಭವ
ಕಾಗಿ ನಿನ್ನೊಳ ಹುಡುಕಬೇಕಣ್ಣ ಹಂಸಾಶ್ರಯದಿ ನಿನ್ನೊ
ಳಗಿದೆಲ್ಲವು ಹುಡುಕಿ ನೋಡಣ್ಣ
ಆಗ ಭೋಗವನಳಿದ ಮದ್ಗುರು
ಭೋಗಿಶಯನ ಶ್ರೀ ತುಲಸೀರಾಮನ
ರಾಗವಿರಹಿತನಾಗಿ ಭಜಿಸಿದಡಾಗ ನಿನ್ನೊಳಗಂಕುರಿಪುದ ೫

(ಅ) ಶ್ರೀಹರಿ ಸ್ತುತಿಗಳು
೨೩೧
ಕ್ಷೀರ ಪುರಾಧೀಶನೆ ಸರೋಜದಳ ಮುಖ
ನಾರಿಯರೂಪನು ತಾಳ್ದನೇದೇವಾ ಪ
ಅಗಣಿತಾವತಾರಾ ಆದಿಸುಧೀರಾ
ಮತ್ಸುಗುಣಾಂಕನೆ ವೈಷ್ಣವಕುಲ ಶೇಖರಾ
ಬಗೆ ಬಗೆ ಯಾದೀಪರಿ ಹಗರಣವೇನೂ
ನಗೆ ಮುಖ ಮಾಗಿಹ ನಾರಾಯಣದೇವಾ ೧
ತತ್ವವಿದೆಂಬೊ ಠಾವನುಗಾಣೆ
ತತ್ವವಿದೆಂದೆನಗೆ ನೀಂಕೃಪೆಮಾಡೈ
ತತ್ವ ವಿಚಾರದೊಳು ತಾಮಸ ಹೋಗಿ
ಸತ್ವಗುಣಾಧಿಕನೆಂದೆನಿಸೆನ್ನಾ ೨
ಆಶ್ರಿತ ಪಾಲಾ ಅಂತಕ ಶೂಲಾ
ದಾಸಜನಾರ್ಚಿತ ದೇವಸುಶೀಲಾ
ದಾಸರು ವಂದಿಪೆ ದಾಹವ ನಿಂಗಿಸೋ
ದೇಶಿಕ ತುಲಶೀರಾಮದಾಸನೆ ದೇವಾ ೩

೨೬೪
೨. ಈಶ್ವರ
ಗಂಗಾಧರ ನಂಜುಂಡನೆ ಲಿಂಗಾ ಭವ ಭಂಗ
ಗಂಗೋತ್ತಮಾಂಗಾ ಸಶುಭಾಂಗಾ ಎಚ್ಚರಿಕೆ ಪ
ಶಂಕರ ಶಿವ ಮಹದೇವನೆ ಕಿಂಕರ ಜನಪಾಲಾ
ವೆಂಕಟರಮಣಾಸಖ ನಿಜಾಂಕುಶ ನಿಜಲೋಲಾ ೧
ವೇದನುತಪಾದಾ ಪರವಾದಿ ನಿಜಬೋಧ
ಸಾಧುಮಣಿ ಕರುಣಿಸೊ ನಿನ್ನ ಸೇವಕನು ನಾನಾದೆ ೩
ಫಣಿಭೂಷನೆ ಪರಿಪಾಲಿಸೋ ತ್ರಿಣೆಯಾ ಕರಶೂಲಾ
ಗಣಪತಿಪಿತ ಅಣುದೈ ನೀತ್ರಿಗತ್ವರಿಪಾಲಾ ೩
ಇಂಕೀ ಪರಿನಿಂತಾ ಪರಚಿಂತೆಯೊಳಿರುವಂತೆ
ಸಂತೋಷವಗೈಸಿದ ಶಿವಗುರು ತುಲಶೀನೀನಂತೆ ೪

(ಈ) ಸರ್ವದೇವತಾ ಸ್ತುತಿಗಳು
೧. ವಿನಾಯಕ
೨೬೧
ಗಜಮುಖನೇ ಮಾಂಪಾಲಯ ಗೌರೀತನಯಾ ಪ
ಭುಜಗಾಪವೀತನೆ ದ್ವಿಜಗಣನಾಥನೆ
ಅಜಿಮಹಾರಾಜನೆಂದು ಭಜಿಸುವೆನೆಲ್ಲೋ ದೇವ ೧
ತ್ರಿಗುಣಾ ವಿರಾಜಿತ ತ್ರಿಶರ ವಿನೋದಿತಾ
ಜಗದೊಡೆಯನೇ ಬಾರೊ ಮೃಗವದನದವನ್ಯಾರೊ ೨
ಕೋಲೂಪುರೀಶನೆ ಬಾಲಗಣೇಶನೇ
ಕಾಲವೈರಿಯೆ ಬಾರೊ ತುಲಶೀರಾಮ ತಾನ್ಯಾರೋ ೩

೨೬೨
ಗಜವದನಾ ಸುಂದರವದನನೆ ವೋ ಪ
ಭುಜಗಬಂಧನಪಾದಾ ಭಜಿಪೆನಹುದೊ ರಾಜಾ ಅ.ಪ
ಗೌರೀನಂದನ ಸರ್ವಸಿದ್ಧಿ ಪ್ರದಾಯಕ
ಶೌರೀ ಮೂಷಕವಾಹನ ಕುಶಲ ಅಂತಕದೇವ ೧
ದೇವಿಜನಿತ ಪುತ್ರಾಭಾವ ಲಂಬೋದರನೇ
ಪಾವನಂಘ್ರಿಯ ತೋರೋ ಪಾಶ ಅಂಕುಶ ಹಸ್ತಾ ೨
ಅಸುರಸಿಂಧುಕನರಿದೂ ವಸುಧೆ ಬಾಧಿಸುತಿರೆ
ನಶಿದು ಹೋಗಲಿಯೆಂದ ನಾರಾಯಣನೆ ದೇವಾ ೩
ಬಾಲನಾಗಿರೆ ಚೆಲ್ವ ಬಾಲೆಯೀಶ್ವರಿಯೊಳೊ
ಲಾಲಿಯಿಂದನು ಕಂಡು ಫಾಲಲೋಚನ ಶಂಭೋ ೪
ನಮಿಸುವ ಪ್ರಮಧಾರಿಗಮಿತ ಫಲವನೀವಾ
ಕಮಲಜಪಿತನಾದದಾ ಕಾಣುವರಿಗೆ ಬ್ರಹ್ಮ೫
ತತ್ವ ವಿದ್ಯ ವಿನೋದಾ ನಿತ್ಯ ಮಂಗಳನಾಮ
ಪ್ರತ್ಯಕ್ಷಮಾದಾ ಮದ್ಗುರುವೇ ತುಲಸೀರಾಮಾ ೬

೨೬೩
ಗಣಪಾ ನೀ ಪಾಲಿಸೊ ಗಜಮುಖನೆ ವೋ ಪ
ತ್ರಿಣಿಯಸತಿ ಗಿರಿಜಾಸುತನೆ ಕೇಳ್
ಮನುಮುನಿ ಸನಕಾದಿ ವಂದಿತ
ಅಣಿದು ನೀ ರಕ್ಷಿಸಲು ನಿನಗಿ
ನ್ನೆಣೆಯುಗಾಣೆನು ಸರ್ವಸಿದ್ಧಿ ವೋ ೧
ವೇದಶಾಸ್ತ್ರ ಪುರಾಣ ವಿದ್ವ
ಕ್ಕಾದಿ ರೂಪನೆ ದಿವ್ಯಪ್ರಣನಾ
ನಾದರೂಪನೆ ಸರ್ವಮಂಗಳ
ಸಾಧು ಶಿಖರನೆ ಸರ್ವಸಿದ್ಧಿ ವೋ ೨
ಏಕದಂತನೆ ಷಣ್ಮುಖಾಗ್ರಜ
ವಾಕ್ಕು ಶುದ್ಧಿಯೊಳಾಡಿಸೆನ್ನನೂ
ಬೇಕು ನಿನ್ನಯ ಕರುಣಯಿತರವು ೩
ವಾಸವಾರ್ಚಿತ ಶ್ರೀಗುರು ಹಿರಿ
ದಾಸ ತುಲಸೀರಾಮ ನಿನ್ನಯ
ದೋಷ ಅಂತಕನಾಮ ಯತಿಗಣ
ಪ್ರಾಸು ಹೊಂದಿಸೊ ಯೀಶಪುತ್ರನೇ ೪

೨೬೫
ಗಿರಿಜಾಪತಿ ಮಾಂ ಪರಿಪಾಲನೆ ವೋ ಪ
ಧರೆಜನರೊಳು ಬಂದ ದುರತಾಂತಕನೆ ಶಂಭೋ ಅ.ಪ
ಭವದೂರನೆ ಓಂ ಶಿವ ಶಂಕರನೆ
ತವಪಾದನ ತೋರೋ ಭುವನೇಶ್ವರಗೌರೀಶ ೧
ಮದನಾರಿಯೊ ನೀಂ ಮಧುಸೂದನನೇ
ಬುಧಜನವಿನುತಾ ತತ್ಪದ ಭಜನೆಯೊಳಗಿರಿಸೊ ೨
ಪರಮಾರ್ಯನೆ ಶ್ರೀ ತುಲಸಿರಾಮಾ
ಗುರುವೇನ್ನಮಃ ಪರಮೋಪಾಯಾ ೩

(ಏ) ವಿಶೇಷ ಸಂದರ್ಭದ ಹಾಡುಗಳು
೩೪೨
(೧) ಶ್ರೀ ಶೃಂಗೇರಿ ಸ್ವಾಮಿಗಳ ಜಯತಿಯ ಮೆರವಣೆಗೆ
ಗುರುವೆ ಪೂಜಿಪೆ ನಿಮ್ಮಯ ಚರಣಗಳನೂ ಪ
ಪರಮತತ್ವ ವಿಚಾರ ಪಾವನ ಸತ್ಯ ಸಹಜಾನಂದ ನಿಜಪದ
ದರುಹಿನೊಳಗೆನ್ನನಿರಿಸಿ ಪಾಲಿಸೊ ದುರಿತದೂತವಿಚಾರ ಶ್ರೀಮದ್ಗುರು ಅ.ಪ
ಶ್ರೀಸರಸ್ವತಿಸುಪ್ರಸನ್ನ ವಿಶೇಷ ದಿವ್ಯಪಾದಾಬ್ಜ ಕುಶಲನೆ
ಬೇಸರಾಂತಕಮಾದ ಶಾಸ್ತ್ರಾಭ್ಯಾಸ ನಿಜಸನ್ಯಾಸಿ ಕಾರಣ ೧
ವೇದನಾಲ್ಕು ಪ್ರಣವ ಪ್ರಸಾದ ವಿದ್ಯ ಸಬೋಧದಾಯಕ
ಆದಿಗುರು ಶೃಂಗೇರಿಮಠವೆಂದೋದಿಹೇಳುವುದಾದ ಕಾರಣ ೨
ರಾಜಪೂಜ್ಯನೆ ಸಹಜನಿಜಯತಿ
ರಾಜಸೋಮಿ ಜಗದ್ಗುರು ಜಯ ಆದಿ
ಬೀಜಸಪೂಜ ದೈವಸಮಾಜ ಸತ್ಯಸಭೋಜ ಕಾರಣ ೩
ರಾಜ ರಾಜ ಸಮಾಜದೊಳು ದುರ್ಬೀಜ ವಸ್ತುಗಳಿಡಲು ನಿಜಯತಿ
ರಾಜಧಾನಿಗೆ ರಮ್ಯವಾದ ಸುವಸ್ತು ಪುಷ್ಪಗಳಾದಕಾರಣ ೪
ಕುಂಪಿಣೀಧೊರೆಯ ನೀನೆ ಪರಮಪದನೆಂದೊಗಳಿ
ಇಂಪಾದ ಸವಾರಿಯೆದುರಿಗೆ ದಂಪತಿಗಳಡಿಯಾದ ಕಾರಣ ೫
ಎಲ್ಲ ದೇಶದ ರಾಜರೆಲ್ಲರು ಬಲ್ಲ ಗುರು ನೀನೆಂದು ನಿಮಗತಿ
ಬಿಲ್ಲು ಬಾಣಗಳಿತ್ತು ಗುರುತುಗಳುಳ, ಸತ್ಯಸಮಾಜಭೋಜನೆ ೬
ಆನೆಕುದುರೆಗಳೆತ್ತಲೆತ್ತಲು ಮತ್ತೆ ಮುತ್ತಿನ ತೊಂಪೆ ವೈಭವ
ಏನು ಸಂಭ್ರಮದಿಂದ ಬಂದೆಯೊ ಭಾನುಕೋಟಿಪ್ರಕಾಶ ಕಾರಣ ೭
ವೀರಶೈಯ್ಯಾಚಾರ ರತ್ನ ತಿರಿವುಮುತ್ತಿನಹಾರ ನಿರ್ಗುಣ
ಧೀರ ತತ್ವವಿಚಾರ ಕಲ್ಮಷದೂರ ಅದ್ವಯಸಾರ ಕಾರಣ೮
ಗೌರ್ನಮೆಂಟಿನೊಳಿತ್ತ ಸತ್ಯಾ ಮುಖ್ಯ ಜನರಲ್ ಬಾವುಟಗಳೂ
ಶೌರಿ ತಮ್ಮ ಸವಾರಿಯೊಳಗದು ಫಾರಮೆಂಟಿನನೊಳಿರುವ ಕಾರಣ೯
ಪಾದಸೇವೆಗೆ ಬರುವ ಭಕ್ತರ ಪಾಪಅಂತಕ ಪರಮಹಂಸನೆ
ದೀಪವಿಲ್ಲದ ಬೆಳಕು ತಮ್ಮೊಳಗಾ ಪಯೋನಿಧಿ ಕಂಡ ಕಾರಣ೧೦
ದಿಕ್ಕು ದೇಶದಿ ನಿಬಿಡಮಾಗಿದೆ ನಿಮ್ಮ ನಾಮಜಯಂತಿಯುತ್ಸವ
ಮುಕ್ತಿಯಂಬೆನಗೀವ ನಿಜಪದ ಮೋಕ್ಷದಾಯಕನಾದ ಕಾರಣ೧೧
ಎಲ್ಲಿಗೋದಡೆ ಅಲ್ಲೆ ಶ್ರೀ ಕೈವಲ್ಯ ಪರಶಿವನೆಂಬೊ ನಿಶ್ಚಯ
ಬಲ್ಲೆನೆಂಬುವ ಭಾಗ್ಯವಂ ಜನಕಿಲ್ಲಿ ಕೊಟ್ಟಕಾರಣ ೧೨
ವಿಜಯನಗರಕ್ಕೈದ ಸಂಪದ ಅಜನು ಪೊಗಳಲ್ ತೋರಿಸಾಕ್ಷಾತ್
ದ್ವಿಜಪ್ರಜಾವತಿ ನಿಮ್ಮಭಜಿಸುವೆ ನಿಜಗುರು ನೀನಾದ ಕಾರಣ ೧೩
ಸೀಮೆ ಭೂಮಿಯ ಜನಗಳೆಲ್ಲರು ಕಾಮಿತಾರ್ಥವ ಬೇಡುತಿರ್ಪರು
ಸ್ವಾಮಿಯಹುದೋ ಜಗದ್ಗುರು ಶೃಂಗೇರಿಮಠದೊಳಗಿರುವಕಾರಣ ೧೪
ವೀರಕಂಕಣ ಧೀರ ತತ್ವವಿಚಾರ ಶುಭಕರ ಧೀರನಹುದೆಲೊ
ದಾರಿತೋರಿದ ಗುರುವು ತುಲಸೀಹಾರ ಕಂಟಕದೂರ೧೫

೫೦೫
ಗೋವಿಂದ ಗೋವಿಂದಾ ನಾವಾಡನಿ ನಮ್ಮಿತಿ ನೇನು ಪ
ನೀಪಾ ನೀಯಪಕೃತುಲಕು
ನೀವೇಮಿ ಬ್ರೋವುನನ್ನು ಗೋವಿಂದ ಅ.ಪ
ಧರಿಜೂಪಧೊರ ನೀವನಿ ಸ್ಮರಿಯಿಂಚಿನಾಮನಮುನ
ಕರಿರಾಜವರದಾ ನಾ ದುರಿತಮು
ದ್ರುಂಚಿ ಬ್ರೋವು ಗೋವಿಂದ ೧
ಕರುಣಿಂಚು ಗುರುರಂಗ ಪರಲೋಕತರವುಗಾನ
ಮರುಗೈನ ಕಾಮಿಂಚಿತಿ ತರಮೇರಕಾವಕುನ್ನ ೨
ಪಾಟಿಂಚ ನೀ ನಾಟಿವ್ವರು ಯೋಟವುನ ತುಲಸಿರಾಮಾ
ಪೀಠಂಬುವ ಗರ್ಚೆನಗುರು ಆಟಂಕಮುನಿಲ್ಪಿಬ್ರೋವು ೩

೩೧೧
ಜನನ ಮರಣ ಎರಡು ಇಲ್ಲವೊ ತಾ ತಿಳಿದ ಮೇಲೆ ಪ
ಮನದೊಳಿರುವ ಮಮತೆ ಅಳಿದು ಘನವಿವೇಕವಾಗಿ ಕಾಣುವ
ಇನಕುಲೇಶನನ್ನು ಬಿಡದೆಅನುರಾಗದೊಳು ಭಜಿಸಿದವಗೆ ಅ.ಪ
ಆರುಮೂರು ಮೀರಿ ನೋಡೆಲೈ ಅಲ್ಲಿರುವ
ತಾರಕದಾರಿ ಪ್ರಣವ ಸಾರುತಿದೆ ನೋಡೈ
ಘೋರ ಕತ್ತಲೆಯನರಿದು ಮಾರಜನಕನನ್ನು ನೆನೆದು
ಏರಿ ಶಿಖರದೊಳಗೆಯಿರುವ ತೇರು ಕಂಡುಬಂದಬಳಿಕ ೧
ದಾನವಾರಿಯನ್ನು ಕಾಣೆಲೊ ಶ್ರೀಪರಮ ಚರಿತ
ಗಾನಲೋಲನನ್ನು ಕಾಣೆಲೈ
ಭಾನುಕೋಟಿರೂಪನಹುದು ಗುರುವು ತುಲಸಿರಾಮದಾಸ
ದೀನರಕ್ಷಕನೆಂದು ಭಜನೆ ಮಾಡಿಕೊಂಡು ಬಂದಬಳಿಕ ೨

೨೫೦
ಜನನಿ ಜಾನಕೀ ನೀದಯಮಾಡೇ
ಜಗದೀಶ್ವರ ನಾಯಕೀ ಪ
ಫಣಿವಿಲಾಸನ ಪ್ರೀಯೆ ಭಜಕರ
ಮನವಿಗಳ ನೀಕಾಯೆ ತಾಯಳೇ
ಪ್ರಣವರೂಪಳೆ ಪ್ರಣಮಿಸುವೆ
ತ್ರಿಣಯಸಖನಾರಾಣಿ ಸುಂದರೀ ೧
ಸರ್ವತಂತ್ರಳೆ ಸಾಕ್ಷರೂಪಿಣಿ
ದುರ್ಮದಾಂತಕಿ ದುಃಖದೂರಳೆ
ನಿರ್ವಿಕಲೆ ಗೀರ್ವಾಣೆ ಶುಭಕರಿ
ಉರ್ವಿಪಾಲಿಕಳಾದ ಸೀತೆಯ ೨
ಆದಿಶಕ್ತಿ ಅನಂತರೂಪಳೆ
ವೇದಮಾನಿನಿ ವಾದಿಭೀಕರಿ
ಪಾದಸೇವ ಕನಿಷ್ಟಮೊದಗಿಸೆ
ಭೂಧರಗೆ ನಿಜರಾಣಿ ವೈಭವೆ ೩
ರಂಗನಾಯಕಿ ರಾಧೆ ಶ್ರೀ ಜಯ
ಮಂಗಳಾಂಗಿ ಸಮೋದೆ ನಿಚ್ಚಲೆ
ಜಂಗಮಾರ್ಚಿತ ಗುರುವು ತುಳಸೀ
ಬೆಂಗಳೂರೊಳಗಿರುವ ಕಾರಣ೪

೩೩೫
ಜಯ ಮಂಗಳ ನಿತ್ಯ ಶುಭಮಂಗಳ ಪ
ಶ್ರೀರಂಗನಾಥನಿಗೆ ಮೂರಂಗವೇಷನಿಗೆ
ಮಾರಾರಿಸಖನೆಂಬ ಮದನಪಿತಗೆ
ನೂರೆಂಟುತಿರುಪತಿಗೆ ಕಾರಣನು ನಿಜದಿವ್ಯ
ವೀರವೈಷ್ಣವನೆಂಬೊ ಮಹಾರಾಜಗೆ ೧
ನೀಲಕಂಠನಪ್ರಿಯಗೆ ಮೇಲುಕೋಟೆಯ ಧೊರೆಗೆ
ಏಳುಸುತ್ತಿನ ಕೋಟೆಯೊಳಗಿರುವಗೇ
ಕಾಳೆಕೊಂಬುಧ್ವನಿಯ ಕೇಳುವಾನಂದನಿಗೆ
ವಾಲಿಯನು ಕೊಂದಂತ ವೋಂಕಾರಗೆ ೨
ಶಂಕರಪ್ರಿಯನಿಗೆ ಶ್ರೀಪಂಕಜಾಕ್ಷನಿಗೆ
ಕುಂಕುಮಾಂಕಿತ ಪಕ್ಷಿವಾಹನನಿಗೆ
ಕಂಕಣವು ಕರದೊಳಗೆ ಕಟ್ಟಿ ವೊ ಶ್ರೀಗುರು
[ವಂಕ]ತುಲಸಿರಾಮದಾಸ ಪೋಷಿತನಿಗೆ ೩

೩೧೨
ತಿಳಿದು ಕೊಳ್ಳಿರಿ ಜಾಣರೆಲ್ಲಾ ಅಹಂ
ಅಳಿದು ನಿಂತಿರುವಂತ ಸತ್ಯಾತ್ಮ ಬಲ್ಲಾ ಪ
ಆದ್ಯಂತ ವಿಸ್ತಾರಮೆಲ್ಲಾ ಇದನು ಕೇ
ಳೀದರ್ಜುನÀಗೇಳಿದ ಕಳ್ಳಗೊಲ್ಲ ಅ.ಪ
ಎಂಟಾರುಗಳ ನೀನು ಕಂಡೂ ಅಲ್ಲಿ
ಟಂಟಣಿಸುವದೇನನುಭವದಿ ನೀನುಂಡೂ
ತುಂಟರೈವರಕಡೆಗೊಂಡು ಜ್ಞಾನ
ಮಂಟಪದೊಳಗೆ ಆಡುವ ಬಾರೊ ಚೆಂಡೂ ೧
ನಾರದಾದಿಗಳೆಲ್ಲ ಬಂದೂ ಆಹ
ಮೀರಿದ ಶ್ರೀರಂಗಧಾಮನೊಳು ನಿಂದೂ
ಸಾರಿದರು ನಿಜನಾಮವೆಂದೂ ಇದನು
ಯಾರಾದರು ಭಜಿಸಿ ಗೋಪ್ಯದೊಳಗೆಂದು ೨
ಪರದೊಳಗೆ ನೀ ಬೆರೆದಾಡೊ ಸತ್ಯ
ಶರಣರಿಗೊಲಿವ ಹರಿಯಹುದಿದು ನೋಡೋ
ನರಹರಿ ಭಜನೆಯ ಮಾಡು ನನ್ನ
ಗುರುವೆ ತುಲಸಿ ನಿನ್ನೊಳಿಹುದೈನೆ ನೋಡೋ ೩

೩೧೩
ತಿಳಿಯೊ ನಿನ್ನ ಕರ್ಮದ ಕಂತೆಯ
ನಳಿಯೊ ವೊ ಮಾಯಾ ಜೀವಾ ಪ
ಕಳವಳಿಸುತ ನಿನ ಕುಲಹಂಕಾರವ
ನಳಿದಿರೆ ಯಾಗುವುದಲ್ಲದೆಯಹುದೇ ಅ.ಪ
ಮಾನಾ ಅವಮಾನ ಶವಸಮಾನಾ
ಈ ನರಕುರಿಗಳು ನಿನಗೇನು ಹೊರಿಕಾರ ಪರಬೊಮ್ಮ
ದಾನವಾರಿಯನು ಧ್ಯಾನಿಸತಿರೇ ಸು
ಜ್ಞಾನದೊಳಗೆ ತಾನಿಲ್ಲದೆ ಘನವಾ ೧
ನೋಡಿ ಹೋದೆಲ್ಲೋ ಮರೆತಂತಾಡಿ ಓ ಮಾಯ ಜೀವಾ
ಮೂಢ ಬುದ್ಧಿಗಳೇ ನೀ ಸಮನಾಡೀ
ಆಡಬಾರದಂತಾಟಗಳಾಡುವೆ
ಈಡಾಗಿಹುದಿದು ಮುಂದಿನ ಜನ್ಮಕೆ೨
ಯಾಕೋ ಸದ್ಗುರುವಿನ ವರಕೃಪೆ ಬೇಕೋ ಓ ಮಾಯಾ ಜೀವ
ನೂಕೋ ಎಂಟಾರರೊಳಗೆ ನೀ ಜೋಕೆ
ಠಾಕೂರನು ಶ್ರೀ ತುಲಸಿರಾಮನು
ಏಕಾನಂದನಕಂದನೊಳಿಹಪರ ೩

೨೫೬
(೩) ತುಳಸಿರಾಮದಾಸರು
ದಯಮಾಡಬಾರದೇಕೊ ದಾಸನೊಳೆ ನೀ ಪ
ಭಯ ವೇನಿಹುದೊ ನಿನ್ನ ಭಜಕನಾದ ಮ್ಯಾಲೆ
ದಯ ಸಾಕ್ಷಿಯೊಳು ಜಗತ್ರಯ ಪೂಜ್ಯವಂತ ೧
ಸಾಧು ಶಿಖರನೆ ಬಾರೊ ಸಕಲಾಂತರವತೋರೊ
ಪಾದ ಸೇವಕನು ನಾನಾದಮೇಲೆ ನಿಂತು ನೀ ೨
ನಿತ್ಯೋತ್ಸವನೇ ದೇವಾ ನೀನೆ ಮಹಾನುಭಾವಾ
ಪ್ರತ್ಯಕ್ಷಮಾದ ಮದ್ಗುರುವೇ ತುಲಸೀರಾಮಾ ೩

೩೧೪
ದುಗ್ಗಾಣಿಯು ದೊಡ್ಡದಲ್ಲಾ ನಿನ್ನ
ಪೆಗ್ಗೆಗೆ ಯವಇನಾಳು ಹೊರಿಸ್ಯಾರು ಕಲ್ಲಾ ಪ
ಬಗ್ಗಿಸಿ ಆರೆಂಟು ನುಗ್ಗಿ ನೋಡಿ ಬರುವ
ಪೆಗ್ಗೆಯನಳಿದವರ ಅಗ್ಗದಿಂದಾಡಿದರು ಅ.ಪ
ಒಂದೆರಡು ಮೂರೆಂಬ ಅಂದವು ಗುರುವಿನೊಳು
ಚಂದದಿಂ ಕೇಳಿಕೊಳ್ಳೆಲೊ ಮಂಕುಜೀವಿ
ಮುಂದೀಗ ಬರುವಂಥ ದುಂದುಗಾರರ ಕಂಡು
ಕೊಂದುಹಾಕಲು ಚಂದ್ರಾಯುಧವ ಹಿಡಿದವಗೆ ೧
ಒಂಬತ್ತು ಗೇಟಿನಾ ಮೋಟದೊಳು ನೋಡಯ್ಯ
ಅಂಬಿಹರುಳುವಂತ ದುಂಬಿಗಳ ಕಾಟಾ
ಅಂಬಾರಿಯೇರಲು ನಂಬೀಗೆ ಕೊಟ್ಟಿರ್ಪ
ಶಂಭುನುತ ಶ್ರೀ ತುಲಸಿ ಕಂಬವ ಹಿಡಿದವಗೆ೨

೩೧೫
ದೂರಿಗೊಳಗಹುದೇನೆಲೊ ಬರಿ
ದೂರಿಗೊಳಗಹುದೇನೆಲೊ ಹರಿಧ್ಯಾನವನು ನೀ ಮಾಡದೇ ಪ
ಅಪರೂಪ ಜನ್ಮವು ಬಂದಿದೆ
ಕಪಿಚೇಷ್ಟೆಗಳು ನಿನ್ನ ಹೊಂದಿದೆ
ವಿಪರೀತಕಹುದೆ ಸುದರ್ಶನ
ಜಪ ಶಾಸ್ತ್ರದೊಳು ಹೀಗೆಂದಿದೆ ೧
ಕಟಪತನಗಳದ್ಯಾತಕೋ ಯಿದು
ತ್ರಿಪುಟಿಯೊಳಗದು ನೀತಿಕೋರ
ನ ಪರನಾಗಲಿದ್ಯಾಕೊ ನೋಡದ
ಗುಪಿತದಿಂದಲಿ ಭಜಿಸದೆ ೨
ನಾನು ನನ್ನದು ಎಂಬುವೇ ಅಲ್ಲಿ
ಗೇನು ಬಂದರು ತಿಂಬುವೇ
ಹಾನಿಗೊಳಗಾಗಿ ನಮ್ಮಯ
ಶ್ರೀನಿವಾಸನ ಭಜಿಸದೆ ೩
ಎಂಟುಗೇಣಿನ ದೇಹವು ಅದು
[ಕುಂಟು]ಸೋಹಮಸ್ಮಿಯ ಭಾವವು
ಕಂಟಕಾಂತಕ ತಲಸಿಮದ್ಗುರು
ವುಂಟು ನಿನ್ನೊಳಗರಿಯದೆ ೪

೨೭೪
ದೇವ ನೀ ದಯಮಾಡಿ ಕರುಣಿಪುದೂ ಪ
ಮಮದುರಿತಹರಣ ಜೀಯ ಅ.ಪ
ಮಾವ ಕಂಸ ಕಾಲ ಪಾವಕಾಸನನೇ
ದೇವ ಪ್ರತ್ಯಂಗನದ್ಯಾರೊ ತೋರೋ
ಸಾವಧಾನ ಸರ್ವಾತ್ಮಕ ತ್ರಿಗುಣನೆಬಾರೊ
ಬಾವ ಜಾರಿ ಸಖ ಭಜಕ ಜನ ವಿಹತ
ಸರ್ವಜನರಿಗಾದರದಿ ಸಂಪದವು
ನೀವ ಸುಂದರನೆ ನಿಜಪರ ಬ್ರಹ್ಮನೆ ೧
ಪ್ರಣವನಾದ ಪಂಡಿತಜನ ಶಿಖರನೆ
ಫಣಿಪಾಸನ ಹರಿಯೆ ಧೊರೆಯೆ
ಅಣಿದು ಬರುವ ದುರ್ನಡೆಗಳ ಕಡಿಯದೆ
ಯೆಣಿಪುದು ನಿನಗಿದು ಸರಿಯೇ
ತ್ರಿಣೆಯೆಸಖನೆ ತ್ರಿಗುಣೇಶನೆ ಕೇಶವ
ಅಣಿದು ಬಾರೊ ದಯಕೋರೆಲೊ ಮಹಾ ೨
ಭುಜಗಶಯನ ನಿಜಗಜವರನೆ
ದ್ವಿಜಗಣ ಮಣಿಯಹುದೋ
ಅಜ ಮಹರಾಜನೆ ದು:ಖವ ನೀ
ತ್ಯಜಿಸಬೇಕಹುದಹುದೋ
ವಿಜಯಸಾರಥಿಯೆ ನಿಜ ಭಗವಂತನೆ
ಸುಜನರೊಡನೆ ಸುಖಿಸುವದೆನಗದು ಕೊಡೊ ೩
ನಿಗಮವಿನುತ ನಿಖಿಲಾಂಡಕೋಟಿ ಬ್ರಹ್ಮಾಂಡ
ಜಗದಾದಿ ನಾಯಕ ಕನ್ಯಾರೊ ಬಾರೊ
ಸುಗುಣರೂಪ ಸಾಕ್ಷಾತ್ ಪರಮಪದ ತೋರೋ
ಅಗಣ ಸಹಜ ಮತ್ಕುಗುಣ ಕಾಲನೆ ಕಲಿ
ಯುಗ ನಾಯಕ ನಮ್ಮ ತುಲಶಿರಾಮ
ನೆಗುರು ಮಂಗಳಪುರಿಧಾಮಾ ೪

೨೩೨
ದೇವಾ ನೀ ಪಾಲಿಪುದೂ ಓ ಹರಿಯೆ ಹರಿಯೆ ಪ
ಮಾವಕಂಸನಕೊಂದ ಮದನ ಜನಕ ರಂಗಾ
ಪಾವನಾಂಗನೆ ನಿಜಸೇವೆಯೊಳಿರಿಸೆಂದೂ ೧
ದಾರುಧಿ ಭೀಕರನ್ಯಾರೊ ವೈಷ್ಣವೋತ್ತಮ ಬಾರೊ
ಸಾಧುಶಿಖರನಾರೊ ಸತ್ವರೂಪನು ತೋರೊ ೨
ಧರಣೀನಾಗನಗರಿ ಕರುಣವಾರುಧಿಯಾದಾ
ಗುರುವೆ ತುಳಶೀರಾಮ ಪರಮಾತ್ಮನೆ ನೀ ಬಾರೊ ೩

೨೫೭
ಧೀರ ಭವದೂರಾ ಸುಕುಮಾರಾ ಮುಖತೋರೋ ಜೀಯಾ ಪ
ನಾರಾಯಣ ಕೇಶವ ಹರೀ ರಂಗ ನರರೂಪನೆ ಕರುಣಾಕರ ಅ.ಪ
ಶರಣಾಗತ ಪರಿಪಾಲಿತ ಶರಣೆಂದೆನೊ ಸುರಮುನಿಹಿತ
ಉರಗಾಸನ ಓಂಕಾರನೆ ನರಸಿಂಹನೆ ಪರಬ್ರಹ್ಮನೆ ೧
ಕಾಮಾದಿಗಳ ಸಮರ ಸಹಿ ಪ್ರೇಮಾತಿಶಯ ಕೃಪಾಳೊ
ನಾಮಾಮೃತ ಮಾಲಪಾಲನೆ ಮಹರಾಯನೆ ಮದವಾರಣ೨
ಅಂಗಜಹತನಾಶಿವನುತ ಮಂಗಳ ಜಯ ತುಲಶೀರಾಮಾ
ತಿಂಗಳಥರ ವಿನತಾಗುರಿ ಮಂಗಳಪುರಿ ಜಂಗಮವರ ೩

ಧ್ಯಾನಧಾರಣ ನಾಗಬೇಕಂತೆ ಪ್ರಪಂಚದೊಳಗೆ
ದೀನ ನಾನಾದೊಡೆ ಮುಖ್ಯ ಸಾಕಂತೆ ಪ
ಪ್ರಾಣ ಪಾನ ಸಮಾನ ವ್ಯಾನವು
ದಾನ ಹೀಗೆಂದೆಂಬೊ ಪಂಚಕ
ನೀನೆ ನಿನ್ನೊಳು ಹುಡುಕಿ ದಿವ್ಯ
ಜ್ಞಾನಗುರುಗಳು ತೋರಿಸಿದು ನಿಜ ೧
ಆಗ ನೀನದು ಕಾಣಬಹುದಂತೇ ಆಧ್ಯಾತ್ಮ ಸತ್ಯವು
ಯೋಗವೆ ನಿಜ ತಾಳಿಯಹುದಂತೆ
ಭಾಗವತಗಿದು ಮುಖ್ಯವೆನ್ನುತ
ಬಾಗಿ ನಡೆವ ಅವಿಜ್ಞನಿಗೆ ಅದು
ಭೋಗಿ ಭೂಷಣ ಸರ್ವಸಾಕ್ಷಿಸರಾಗ
ಮುದ್ರೆ ಸಮಾಧಿಹೊಂದುವ ೨
ಸ್ಮರಣೆ ನಿಂತೊಡೆ ಧ್ಯಾನಸಾಕಂತೇ ಅಭಯ ಪ್ರಸಿದ್ಧವು
ಕರಣ ನಿಗ್ರಹ ನಿನಗೆ ಬಹುದಂತೇ
ಧರಣಿ ಮದ್ಗುರು ತುಲಸಿರಾಮರ
ದಾಸರಪ್ಪಣೆ ಗುಳುಹಲಾತನ
ಚರಣ ಸೇವೆಯೊಳಿರುತಿಹುದೆ ನಿಜಪರಮ ಪದವಿದು ಸತ್ಯನಿತ್ಯವು ೩

೨೭೫
ನಂದಿವಾಹನ ಸಖನೆ ಯೆಂದಿಗೆ ನೋಡುವೆ ನಿನ್ನಾ ಪ
ಅರಿಗೆನಿನ್ನಾಚಾರ್ಯರಪ್ಪಣೆ ಹೊಂದಿಸುಖಿಸುತಿರುವೆನೊನಂದಿ ಅ.ಪ
ರಂಗನಾಯಕನೆ ಬಾರೊ ರಾಕ್ಷಸಾಂತಕನಲ್ಲವೆ
ಮಂಗಳಾಂಗ ಮಾತನಾಡೊ ಮಾಯಧಾರಿ ಕೇಶವ ೧
ಸಾಟಿಯೇನಹುದೊ ಹರಿ ಸಾಧು ಶಿಖರನಲ್ಲವೆ
ಆಟವಾಡುವ ಬಾಲನನ್ನು ಕರುಣದಿ ಕಾಯಲಿಲ್ಲವೆ೨
ಕೋಲುಪ್ಯಾಟಿಯೊಳು ನಿನ್ನ ಕೋರಿ ಕೊಸರಿ ಕೂಗುವೆ
ಮೂಲಗುರುವು ತುಲಶಿರಾಮಾ ದಾಸರ ಸೇವಕನಾಗುವೆ
ಹರಿದಾಸರ ಸೇವಕನಾಗುವೇ ೩

೩೧೬
ನಂಬಿಗೆಯೆ ಕಾರಣವು ತಿಳಿಯೊ ಇದ
ನುಂಬದೇ ಹಸಿವಲ್ಲೊ ಚೀ ಮಂಕುಮರುಳೇ ಪ
ಕಂಬದೊಳು ಬಂದವನ ಬೆಂಬಿಡದವನಿಗಿತ್ತು
ಜಂಭವÀನರಡಿದ ವಿಶ್ವಂಭರನು ಮೂಢಾ ೧
ಅಲ್ಲವೆಂದೆನಿಸದೆ ನಿಲ್ಲು ಗುರುಪಾದ
ಬಲ್ಲ ಬೆಡಗಿನ ಬೆಳಕು ಅಲ್ಲಿ ಕಾಣುವೆ ೨
ಅರಮನೆಯೊಳಿರುತಿಹ ವುರುಗನನು ತೋರಿದಾ
ಪರಮಗುರು ಶ್ರೀ ತುಳಶಿರಾಮದಾಸನನು ಯೀತ ೩

(ಎ) ಸಂಪ್ರದಾಯದ ಹಾಡುಗಳು
೩೩೮
ನಕ್ಷತ್ರದಾರತಿ ಬೆಳಗೀರೇ ಜಗ
ದ್ರಕ್ಷ ಕೃಪಾನಿಧೇ ಪಕ್ಷಿವಾಹನಗೆ ಪ
ಅಕ್ಷಿಗಳೆರಡರ ಮಧ್ಯದಿ ತಾ ನಿಜ
ಪಕ್ಷಿಯು ತಾನಾಗಿ ಪ್ರಜ್ವಲಿಪಾ
ಯಕ್ಷರಕ್ಷಕ ಸರ್ವಶಿಕ್ಷಾ ದಯಾಕರ
ಲಕ್ಷ್ಮೀಪತಿಯಾದ ಮೋಕ್ಷದಾಯಕಗೇ ೧
ಆದಿರೂಪನಿಗೆ ಆಧ್ಯಾತ್ಮನಾದವನಿಗೆ
ವೇದರೂಪನಿಗೆ ವೇದಾಂತನಿಗೆ
ಸಾಧುಶಿಖರನಾದ ಸರ್ವಸ್ವತಂತ್ರಗೆ
ನಾದಬಿಂದು ಕಳೆಯೊಳಾಡುತಿರುವವಗೆ ೨
ಅಖಿಳಾಂಡಕೋಟಿ ಬ್ರಹ್ಮಾಂಡನಾಯಕನಿಗೆ
ಪ್ರಕಟಿತಮಾಗಿಹ ಪರತತ್ವಗೆ
ಚಿಕಟಾಯಿಸಿದ ನಮ್ಮ ಗುರುವು ತುಲಸಿರಾಯಾ
ಸಖನಾದ ಶಿವಗೆ ಶಂಕರಗೆ ಶ್ರೀಹರಿಗೆ ೩

೨೭೮
ನನ್ನ ಕರ್ಮವು ಬಂದು ಇನ್ನು ಬಾಧಿಸುತಿರೆ
ಅನ್ಯರೇನ ಮಾಡುವರೈ ಪ
ಕನ್ನೆ ಶಿರೋಮಣಿ ದ್ರೌಪತಿ ವರದನೆ
ಎನ್ನ ಪಾಲಿಸೊವೋ ಪ್ರಸನ್ನ ರಂಗನಾಥ ಅ.ಪ
ಭಿಕ್ಷಕ್ಕೆ ಬಂದಾಗ ಲಕ್ಷ್ಯವಿಡದೆ ಹೋಗಿ
ಸಾಕ್ಷಿಯ ನಾಕಂಡೆನೈ
ಪಕ್ಷಿ ವಾಹನನೆ ನೀರಕ್ಷಿಸಬೇಕಯ್ಯ
ಸಾಕ್ಷಾತನೆಂತೆಂಬೊ ಮೋಕ್ಷಾಧಿಕಾರಿಯೆ ೧
ದಾಸದಾಸರನ್ನು ಮೋಸಗೊಳಿಸಿ ನಾಂ
ದೋಷಕ್ಕೆ ಗುರಿಯಾದೆನೈ
ಆಶೆಯ ಬಿಡಿಸಯ್ಯಾ ಶ್ರೀ ವೆಂಕಟರಮಣ
ದೋಷರಹಿತ ಗುರುವು ದಾಸ ತುಲಸೀರಾಮ ೨

೨೭೯
ನನ್ನ ಗುರು ಯೆಂತಪ್ಪ ದೊಡ್ಡವನೋ
[ಘನ್ನ] ಸೀತಾಮನೋಹರ ಪ
ನಿನ್ನೆಯೆನಗೊದಗಿದ ದು:ಖದಿ
ಬನ್ನಬಡಿಸುವದಾಗಿ ಅಳುತಿರೆ
ಚನ್ನಕೇಶವನಾಗಿ ತಾನೆ ಪ್ರ
ಸನ್ನನಾದ ಮಹಾತ್ಮ ಜಯಜಯ೧
ಭಗವದಾಜ್ಞೆಯನನುಗೊಳಿಸದಲೆ
ಕುಗುಣ ಕುಚಿತದೊಳಿರಲು ಬಂದದ
ಸಿಗಿದು ಹೊಡೆದು ಬಿಸಾಡಿದಾ ನಮ್ಮ
ಸಗುಣ ಸಾಕ್ಷಾತ್ಕಾರ ನಿರ್ಗುಣ೨
ದುರ್ಗುಣವು ದುಸ್ಸಂಗ ದುವ್ರ್ಯಾವಾರದೊಳು
ದುರ್ಗತಿಕುಮತಿ ನಾನಧಿಕನಾಗಿರೆ
ಸ್ವರ್ಗನಾಯಕ ಬಂದುಮೆನ್ನುಪ
ಸರ್ಗಮಳಿದ ಮಹಾನುಭಾವಾ ೩
ಅರಿಯದರಿಲಿಕೆ ಅರಿಗಳಾರನೂ
ಹರಿಯೆ ತಾನಾಗೈದು ತೋರಿದ
ಪರಮಗುರು ಶ್ರೀ ತುಲಸಿರಾಮನ
ಚರಣ ಸೇವಕನಾದೆನಹುದೆಲೊ ೪

ಗುರು ತುಳಸಿರಾಮದಾಸರನ್ನು
೨೫೮
ನಮಃ ಓನ್ನಮಃ ಮಮದೇಶಿಕ ತಿರುವಡಿಗಳೆ ಶರಣಂ ಪ
ಅಪರಂಪರವನ್ನು ತೋರೆಲೊ
ಶ್ರೀ ಪರಾತ್ಪರನೆ ಭಾಪದನಿಸರಿ
ಕೋಪವ್ಯಾತಕೆ ಸಲಹೊ ಮುನಿಕುಲ
ದೀಪ ನೀನಹುದಯ್ಯ ಅಡಿಯೇನ್ನಮಃ ೧
ಮಾನವಗುಣ ಮಕುಟಮಹುದೈ
ಓನ್ನಮೊ ನಾರಾಯಣನೆ
ಸಾನಿಧಾಪ ಮದಾಪದದಿ ಸರಿ
ಶ್ರೀನಿವಾಸ ದಯಾಳೊ ಅಡಿಯೇನ್ ನಮಃ ೨
ವಾಸವಾರ್ಚಿತ ಶ್ರೀಗುರು ಹರಿ
ದಾಸ ತುಲಶಿರಾಮ ನನ್ನಯ
ದೋಷಗಳೆದೀಗೆನ್ನ ಆ ನಿಜ
ಶೇಷಭೂತನ ಮಾಡೊ ಅಡಿಯೇನ್ ನಮಃ ೩

೨೭೭
ನರಹರಿಯೆ ಪಾಲಿಸೈ ಪ
ನರಹರಿಯೆ ಪಾಲಿಸೈ ಕರಿವರದನೆ ಕಲುಷಾಂತಕವರ ಅ.ಪ
ಕರಚರಣಗಳೆರಡರ ಪರಮೊದಗಿರೆ
ಹರಿಹರಿ ನಿನಗಿದ ನೊರೆವೆಹುದೊ ೧
ಭಜಿಪ ಭಜಕ ನಿಜದ್ವಿಜಗುಣಮಣಿ ಹಯಧ
ಭುಜಗ ಶಯನ ರಂಗ ವಿಜಯ ಸಾರಥಿ ೨
ಸಿರಿಧರ ಮುರಹರ ಮುನಿಜನ ಭಯ ಹರ
ಕರುಣ ತುಲಸೀರಾಮಾ ಗುರುವೆ ತಾನಾದ ೩

ಅತ್ಯಂತ ಸರಳವಾದ ಅತ್ಮನಿವೇದನಾ ಸ್ತುತಿ
೨೭೬
ನರಹರಿಯೆನಬಾರದೇ ನಾಲಿಗೆಯೊಳೂ ಪ
ಕರ ಶಂಕು ಚಕ್ರ ಶ್ರೀಧರ ನಾರಾಯಣನೊಳ
ಗಿರಲಿಕ್ಕೇನು ದೊರಕಾದೆ ನಾಲಿಗೆಯೊಳು೧
ದಶರಥ ಸುತನಾಗಿ ವಸುಧೆ ಪಾಲಕನಾದಾ
ಅಸಮೆನಂದೆನ ಭಾರದೆ ನಾಲಿಗೆಯೊಳೂ ೨
ಕಾಮಜನಕ ರಂಗಾ ಪ್ರೇಮದಿಂದಲಿ ಕಾಯ್ವೊ
ಸ್ವಾಮಿಯೆಂದೆನೆಬಾರದೆ ನಾಲಿಗೆಯೊಳು೩
ಭರತ ಪುರೀಶ ಮತ್ಪರ ಮಾರ್ಯನೊಳು ಬಂದೂ
ಬೆರೆಯಲೆನ್ನುತ ಸಾರಿದೆ ನಾಲಿಗೆಯೊಳು ೪

೨೮೦
ನಾ ನಿಮ್ಮ ದಾಸನಯ್ಯಾ ಸೀತಾರಾಮಾ ಪ
ನಾನು ನಿಮ್ಮಯದಾಸನಹುದೊ
ನೀನು ಯೀಜಗದೀಶನಹುದೊ
ಭಾನು ಕೋಟಿ ಪ್ರಕಾಶನೇ ಸಂಗೀತ
ಗಾನ ವಿನೋದರಂಗಾ ೧
ಮತಿಹೀನ ನಾನಾದೆನೈ ಶಾಶ್ವತನಾ ಸ
ದ್ಗತಿಯ ನೋಡದೆ ಹೋದೆನೈ
ಹಿತವ ಪಾಲಿಸಬೇಕೊ ವೋ ಶ್ರೀ
ಪತಿತಪಾವನ ರಂಗನಾಯಕ
ಸತಿ ಶಿರೋಮಣಿ ಪರಮಸೀತಾ
ಪತಿಯೆ ನಾನಿನ್ನ ಸುತನು ಕಾಣೈ ೨
ಕಂದಯ್ಯಗಾರುಗತಿ ನಿನ್ನಯ ಚಲ್ವ
ಚಂದಗಾದವೆ ಶೃತೀ
ಹಿಂದೆ ಮಾಡಿದ ಕೊಲೆಗಳಂ ಬೆನ್ನ
ಮುಂದೆ ಬಾರದಂತದ ಹರಿಯೋ
ಇಂದಿರೇಶ ಮುಕುಂದ ಪರಮಾ
ನಂದ ತುಲಸೀರಾಮ ದೇಶಿಕಾ ೩

೨೮೧
ನಾರದನು ನಮರರಶಿಕರ ನಂದನಂದನೆ
ಕೋರಿದೆನು ನಾ ಸುಗುಣ ಭಜನ ಗೋಪಿ ಕಂದನೇ ಪ
ಬಾರದೆನಾ ಮನಸು ದುಷ್ರ‍ಕತ ಮೀರಲಾಪುದೇ
ತೋರಿಸೆನ್ನ ಸ್ಮರಣೆ ಸುಕೃತ ದೋರಲಾಪುದೇ
ದಾಸ ತುಲಶಿರಾಮ ನಿನ್ನ ದಾಸನಾದೆನೋ
ದೋಷರಹಿತನ ಮಾಡೆನ್ನ ಮೋಸಹೋದೆನೋ ೧

೨೩೯
ನಾರಾಯಣ ನರಹರಿ ಪರಮಾತ್ಮ ನೀ ಪಾಲಿಸೋ ಪ
ಆರು ಮೂರಾರೊಳೆನ್ನ ಬಿಡಿಸೊ ಪಾರುಗಾಣಿಸೋ ಮುನ್ನಾ
ಕೋರಿದೆನು ಪರ ತೋರೋ ನಿಜ ನರಹರಿ ೧
ಬಾಲಪ್ರಹ್ಲಾದನಾರ್ತನಾಗಿ ಶ್ರೀಲೋಲನೆಂದು
ಕರೆಯೆ ಕಂಬದಿ ಬೇಗಾ
ನೀಲಮೇಘಶ್ಯಾಮನೆನಿಸಿದ ನರಹರಿ ೨
ಧರಣಿಗಧಿಪ ಮದ್ಗುರುವು ತುಲಸೀರಾಮದಾಸನೆನ್ನುತ ಬಂದೆ
[ವರದ] ಪಾರಾ ಮಹಿಮ ಪರಾತ್ಪರ ನರಹರಿ ೩

ಅಹೋಬಲದಾಸರಿಗೆ
೨೩೩
ನಾರಾಯಣ ಯತಿವರ
ವಾರುಧಿಶಯನ ಪಾರಮಹಿಮ ವೋ ನಾರಾಯಣಪ
ಮಾರಜನಕ ಮರೆತೋರಣ
ದಾರಿಗಾಣೆ ಧವಳನಯನಾ
ಮೀರಿಬರುವ ದುರಿತಗಳನು
ದೂರಿದ ಮಾರಿದೆ ಯಾರದು ಕೇಳವೋ ೧
ಪರಮಪದ ನಿವಾಸನ್ಯಾರೊ
ಸುರಮುನೀಂದ್ರ ಸುಖವ ಬೀಳೊ
ತರವಹುದೆ ನೋಡಿಲ್ಲಾಡಿರಲು
ಬರದೆ ಬರದೆ ಬಿರುದೆ ವರದ೨
ವಾಸವಾದಿ ವಿನುತಹರಿಯೆ
ದಾಸ ತುಲಶಿರಾಮನಾದೆ
ಈಶ ರೂಪ ಮಂಗಳಪುರಿಯ
ವಾಸನೆ ನಾನಿನದಾಸನು ಪೋಷಿಸೋ ೩

(ಆ) ಲಕ್ಷ್ಮೀಸ್ತುತಿಗಳು
೨೪೮
ನಾರಿಮಣಿಯೆ ನಿನ್ನಾಣೆ ನಾಕಾಣೆ ಕರತಂದು
ತೊರೆ ಚೆಲ್ವ ರಂಗನಾ ಪ
ಕರತಂದು ತೋರೆ ಮುದ್ದು ರಂಗನಾ
ಕರತಂದು ತೋರೆ ಮಧ್ಯರಂಗನಾ ಅ.ಪ
ಪಾರವಾರನೆಂಬ ಧೀರ ಭವದೂರನೊ
ಬಾರದ ಮನಸೆನ್ನ ಸೂರೆಗೊಳ್ಳುತಿದೇ ೧
ಮೀರಿದ ಹದ್ದಿಗೆ ಹಾರಿಬಂದಾ ಗಿಣಿಯು
ದಾರಿಯ ತಪ್ಪಿ ಹಿಂತಿರುಗಿದಂತೆ
ಮಾರನಯ್ಯನ ಪಾದತೋರಿ ಪೋಗಿಯು ತಾ
ತೇರಮೇಲೇರಿದ ಸಾರುವ ಬಾರೆ ೨
ಉರಗೇಂದ್ರಶಯನನೆ ಸರಿಗಾಣೆ ರಮಣಿ ಶ್ರೀ
ಗುರುವು ತುಲಶೀರಾಮದಾಸರೆಂದು
ನರಗೆ ಸಾರಥಿಯಾಗಿ ಮೆರೆವ ಶ್ರೀ ಪರಮಾತ್ಮ
ನಿರುತಿಹ ನೀನೋಗಿ ಕರತಾರೆ ಕಾಮಿನೀ ೩

೨೯೪
ನಿನಗಿದುಸರಿಯೆ ನನ್ನ ದೊರೆಯೆ ಪ
ದಯಮಾಡೋ ದಾನವಾಂತಕನೆ ಅ.ಪ
ಮಾಯಾಧಾರಿಯೇ ನಿನ್ನಂ ಬಲ್ಲೆನೇಳೆಲೋ ಜಾಣಾ
ಪ್ರೀಯರಿಲ್ಲದೆ ನನ್ನ ಪ್ರಾಣಮಳಿವೋದು೧
ಬರಿಯ ಮಾತಿನೊಳೆನ್ನಂ ಬೆರಗುಮಾಡಲಿ ಬೇಡಾ
ಸುರತಕೇಳಿಗಾಗಿ ಬರಮಾಡಿದೆನು ನಿನ್ನ ೨
ವಾಸವಾರ್ಚಿತ ಹರಿ ದಾಸಾ ತುಲಶೀರಾಮಾ
ಆಶೆಯ ತೋರಿ ನೀ ಮೋಸಗೈದುದು೩

೩೧೭
ನಿನ್ನೊಳಗಿರಿಸೆನ್ನ ಚಿತ್ತ ಚೆಲ್ವ
ಪನ್ನಗಶಯನ ಶ್ರೀ ಆದಿರಂಗಯ್ಯ ಪ
ಪರನನ್ನೊಳಗೆ ನಾ ಕಂಡು ನಿನ್ನೊಳಗೆ ನಾನೈಕ್ಯ
ಇನ್ನೆಂದಿಗಾಗುವುದೊ ಇನಕುಲದ ಮಣಿಯೆ ೧
ಎಂಟಾರರೊಳಗೆನ್ನ ಅಂಟಲೆಸಗೊಡಬೇಡ
ಭಂಟನಾಗಿರು ವೈಕುಂಠನಾಯಕನೆ ೨
ಕಾಕುಲದ ಕತ್ತಲೆಗೆ ನೂಕದಿರು ನೀಯೆನ್ನ
ಏಕನಾಯಕನೆ ಕೇಳಿದು ಸತ್ಯಸಿದ್ಧಂ ೩
ದೇಶಿಕಾಯೇನಮಃ ದಾಸನಗಿರುತಿರುವೆ
ದೋಷರಹಿತಾಗುರುವು ಶ್ರೀತುಲಶಿರಾಮಾ ೪

ಶ್ರೀಹರಿ ಏಕನಿಷ್ಠೆಯನ್ನು
೨೮೨
ನೀ ಕೈಯ ಬಿಟ್ಟರಿನ್ಯಾತಕೆನಗೀ ಸುಖ
ಗೋಕುಲಗಣನಾಯಕ ಪ
ಲೋಕೈಕ ನಾಥನೆಂದಾ ರೈಉಸುರಿದ ಮುನಿಯ
ಯಾಕೀ ಪರಿಯೊಳೆನ್ನ ಕಾಕುಮಾಡುವೆರಂಗಾ
ಸಾಕು ಸರ್ವಧರ್ಮದಿ ಸ್ನೇಹವ
ನೂಕಿ ನಿಮ್ಮಾಶ್ರಯವ ಮಾಡೈ ಎಂದಿಹ
ವ್ಯಾಕುಲಾಂತ ಪರಾತ್ಮ ಸತ್ಯ ಸ
ಲೊಕ ಸರ್ವಸಯೇಕ ಭೀಮಾ ೧
ಸಮಾಜದೀ ಭೀತಿಯಿಂದ ಮಿತ ದು:ಖವನುಂಡೆ
ನಮಿಸುವೆನೋ ಶ್ರೀ ಹರಿ
ಸುಮನ ಸತ್ಯ ಸಮಾಜ ಭೌಮನೆ
ಭ್ರಮರ ಕೀಟನ್ಯಾಯ ಸಹಜನೆ
ಅಮರಗುಣ ಕಟಕಾಮಣಿಯೆ ಸ
ದ್ವಿಮಲ ಚರಿತ ವಿಶಾಲ ಭೂಪಾ೨
ಕಿಂತುಭವದ್ಧರ್ಶನೇನಆಹಂಬೆಲ್ಲ
ಕಥಯಾಮಿಕಾಲಾಂತಕೋ
ಅಂತರಂಗವಿಚಾರ ಅಗುಣದೂರ
ಚಕ್ರಸುಧಾರ ತ್ವರಿತದಿ
ಕಂತು ಜನಕನೆ ಪಾಲಿಸೆನ್ನು
ಪಂಥವೇತಕೊ ಪರಮಜೀಯಾ ೩

ಅಷ್ಟ ಪ್ರಣವಗಳೂ ಪ್ರತಿಷ್ಠಿಸಿ ಪರತತ್ವ
ದೃಷ್ಟಿ ಗೋಚರನಾಗ¯
ಕಷ್ಟವಳಿ ಕಪಟಾಂತಕನೆ
ಭ್ರಷ್ಟಸಂಗವ ಬಿಡಿಸಿ ಪಾಲಿಸೊ ವಿ
ಶಿಷ್ಟಾದ್ವೈತನೆ ಕೃಷ್ಣನಾಮನೆ
ಸೃಷ್ಟಿ ಶ್ರೀಗುರು[ತುಳಸಿ]ಕುಲ ಶ್ರೀರಾಮಾ ೪

೨೯೫
ನೀರನಾ ಕರತಾರೆ ನಾರಿಮಣಿಯೇ ಪ
ಸೂರೆ ಹೋಗ್ತಾನೆ ಜೀವಾ ಆರಿಗುಸುರಲಿ ಬೇಗಾ ಅ.ಪ
ಬರುವೆನೆಂದು ಪೋಗಿ ಬಾರನೇತಕೆ ಸಖಾ
ಕರತಾರೆ ಕಾಮಿಸಿ ಸುರತಾವನಾಡುವಾ ೧
ಮಾರನಯ್ಯನಾಣೆ ತೀರಿತೆನ್ನ ಪ್ರೀತಿ
ದೂರಕ್ಕೋದನೂ ಗಂಡಾ ಬಾರದೇಕೆ ಪೋದನೆ ೨

೩೧೮
ನುಡಿಯು ನುಡಿದಾ ನೆಡೆಯು ಬಾರದೂ
ಜಗದೊಳಗೆ ತತ್ವದ ಪ
ನುಡಿಯು ನಡಿದಾ ನೆಡೆಯು ಬಂದರೆ
ಗುಡಿಗಳಿಗೆ ತಾನೋಗಲ್ಯಾತಕೆ
ಪೊಡವಿಗೀಶನು ಶಿವನು ತನ್ನೊಳ
ಗಡಗಿಯಿರಲಿದನರಿಯದವರಿಗೆ ೧
ಎದ್ದು ಹೋಗಲು ದಾರಿಯೊಳಗೊಂದು ತಾ ಹಿಂದೆ ಮಾಡಿದ
ಬುದ್ಧಿ ಕರ್ಮದಂತೆ ಮತ್ತೊಂದು
ಉದ್ದವಾಗಲುಕಡೆಗೆಜಗದೊಳುಹದ್ದುಕಾಗೆಯ ಜನ್ಮವಲ್ಲದೆ
ಮುದ್ದೆಮಾತೇನಯ್ಯ ಸ್ತ್ರೀಪರಸಿದ್ಧಸಾಧ್ಯರಿಗಾದ ಈ ನಿಜ೨
ಆದ ಬೆಳೆಯನ್ನಳತೆ ಮಾಡೆಲೊ ಯೀ ದೇಹತತ್ವದ
ಶೋಧನೆಯೊಳು ಕುಳಿತು ನೋಡೆಲೈ
ವೇದಗೋಚರನಾದ ಜಗದೇಕಾದಿಗುರುವು ತುಲಸಿರಾಮನ
ಪಾದ ಭಜನೆಯೊಳಿರಲು ಕಾಣುವ ಬೋಧೆಯಾತ್ಮರಿಗಾದ ಈ ನಿಜ೩

೩೧೯
ಪತಿಯಿಂದಲೆ ಸದ್ಗಿತಿಯೆಂಬುವಳು
ಅತಿಮತಿಯೆನ್ನುವಳು ನಮ್ಮ ಶ್ರೀದೇವಿ ಪ
ಕ್ಷಿತಿಯೊಳು ತನ್ನಯ ಪತಿಯೊಳು ಸಲ್ಲದೆ
ಇತರವನೆಣಿಪಳೆ ಮೂದೇವಿ ಅ.ಪ
ಗಂಡನು ಪುಂಡನು ಕುರುಡನು ಕುಂಟನು
ಕಂಡಿರುವಳಲಾ ಶ್ರೀದೇವಿ
ಮಿಂಡರಿಗೊಲಿಯುವ
ಭಂಡಾಂಗನೆಯಂ ಕಲಹಿಪಳೆ ಮೂದೇವಿ ೧
ಅತ್ತೆಮಾವನ ಹೇಳಿಕೆಗೆ ಪ್ರ
ತ್ಯುತ್ತರಳಲ್ಲ ಶ್ರೀದೇವಿ
ಕತ್ತೆಯಂತೆ ತಾ ಬಗಳುವ ಕಳ್ಳ
ಚಿತ್ತಿನಿ ಹವುದೆಲೊ ಮೂದೇವಿ ೨
ಅರಿಸಿನ ಕುಂಕುಮ ಹಣೆಯೊಳಗಿಡುವಳು ಅಡಿಯಾ
ಗಿರುವಳು ಶ್ರೀದೇವಿ ಅನು-
ಕರಿಸಲು ಬಾರದೆ ಕಳವಳಗೊಳುವಳು
ಕರಠೆಕಮಾನಳು ಮೂದೇವೀ ೩
ಶಿರಬಾಗಿ ತನ್ನರಸನ ಸೇವೆಯ
ಹರುಷದೊಳಿರುಪವಳೆ ಶ್ರೀದೇವೀ
ಕರಸಲು ಬಾರದೆ ಕಳವಳಗೊಳುವಳು
ಕರಟಕ ತನುವಳು ಮೂದೇವೀ ೪
ಇರುವ ಅತಿಥಿ ಅಭ್ಯಾಗತಗಳಿಗುಪ
ಚರಿಸುವಳೆ ನಮ್ಮ ಶ್ರೀದೇವಿ
ಗುರುವು ತುಲಶಿರಾಮಯೆಂದೆನ್ನುತ ಭಜಿಸದೆ
ಯಿರುವಳೆ ಮೂದೇವೀ ೫

೨೪೩
ಪರಮಾತ್ಮನೆ ನೀ ಪಾಲಿಸೊ
ನರರೂಪ ಮುರವೈರಿ ಪ
ಸುಂದರನಾಥನೆ ಸುಜನ ಸಂಪ್ರೀತನೆ
ಕಂದನ ಕಾಯೊ ಮಮ ಸಿಂಧುಶಯನನೆ ೧
ಸಿರಿಧರನ್ಯಾರೆಲೊ ದುರಿತವದೋರೆಲೊ
ನರಹರಿಯಾದ ನಮ್ಮ ನಾರಾಯಣ ಬಾರೊ ೨
ಫಣಿಯನ್ಯಾರೆಲೊ ಯೆಣಸಲು ನೀನೆಲೊ
ಪ್ರಣವರೂಪನೆ ನಿಜ ಗುಣಮಣಿಯಾರೆಲೊ ೩
ಈಶನದಾರೆಲೊ ಹಾಸನದೊಡೆಯನೇ
ದೇಶಿಕ ತುಲಶಿ ನಿನ್ನದಾಸನು ನಾನಾದೇ ೪

೨೩೪
ಪರಮಾತ್ಮನೇ ಪಾಲಿಸೊ ಬೇಗ ನೀ ಪ
ಕರಸುದರ್ಶನನೆ ನೀರಜಾರಿಪ್ರಿಯ
ನಾರಸಿಂಹನ್ಯಾರೊ ನಾಗಶಯನ ಬಾರೊ ೧
ಅಂತರಾತ್ಮನ್ಯಾರೋ ಇಂತು ಬೇಗ ಬಾರೊ
ಕಂತುಜನಕನ್ಯಾರೋ ಕಾಮನಯ್ಯ ಬಾರೊ ೨
ಆದಿರೂಪನ್ಯಾರೊ ಅಚ್ಚುತ ನೀ ಬಾರೊ
ವಾದಿಭೀಕರನಾದಾ ವೆಂಕಟೇಶನೆಂಬೊ ೩
ವಾಸವ ವಿನುತಾ ಹಾಸನದೊಳಿಪ್ಪ
ದೇಶಿಕಾ ನೀ ತುಲಶೀರಾಮದಾಸನಾದ ೪

೨೮೩
ಪಶುಗಳ ಒಡನಾಡಿ ಪಾಮರನು ನಾನಾದೆ
ಪಶುಪತಿಯೆ ನೀ ಬೇಗ ಬಾರೈ ಪ
ಎಸೆವ ಆ ಸಮಯನುಣ್ಣಲೋಸುವನೊ ನಾನಿನ್ನು
ಶಿಶು ಹಾದು ನಿಜ ಸುಖವು ತೋರೈ ಅ.ಪ
ಕಚ್ಚಿ ಕೈಬಾಯಿ ನಿಮ್ಮಿಚ್ಚೆಯಾಗಿರುತಿಹುದೂ
ಸಚ್ಚಿದಾನಂದಾತ್ಮ ನೋಡೈ
ಉಚ್ಚರಿಸುವಾದಿ ವ್ಯಾಸಚ್ಚರಿತ ನಾಮವನೂ
ಅಚ್ಚಳಿಯದಿರದಂತೆ ನೋಡೈ ೧
ತೃಷೆಯ ನೀಗಿಸಲಿಂತಾ ಹೊಸಪರಿಯ ಬಿನ್ನಹುವು
ಹಸುವಿಗಾಧಾರವನು ತೋರೈ
ಪುಸಿಯದಿರು ನೀನಿದಕೆ ಬಿಸನಾಡದಿರುಯೆನ್ನಾ
ನೊಸಲ ತಿಲಕವೆ ವೋಡಿಬಾರೈ ೨

೨೪೦
ಪಾಲಿಸೆನ್ನನೂ ರಾಮ ಪಂಥವ್ಯಾತಕೋ ಪ
ಕಾಲವೈರಿ ಕಪಟನಾಟಕ | ಆಲಿಸೆನ್ನ ಬಿನ್ನಪವಂ
ಚಾಲನೆ ಶ್ರೀಲೋಲನೇ ನೀಂ ಅ.ಪ
ರಕ್ಷಕಾಮಣಿ ಸಾಧುಜನ ರಕ್ಷಾಮಣಿ
ಅಕ್ಷಯ ಸುಜನರಾಶ್ರಿತÀ ನಿನ್ನ
ಭಿಕ್ಷವನಾಂಬೇಡುವೆನೈ
ಪಕ್ಷಿವಾಹನ ಜಗದಧ್ಯಕ್ಷನೇ ಸೀತಾರಾಮ ೧
ಪಂಡಿತಾಮಣಿ ಜ್ಞಾನಕುಂಡಲಿನಗರೀಶ ನೀ
ನಂಡಜ ವಾಹನನಹುದೊ
ಪಂಡರಿಪುರನಾಯಕ ಚಾ
ಮುಂಡಿ ವರದಾಯಕ ನೀಂ [ಶ್ರೀರಾಮ] ೨
ದಾಸರಕ್ಷಕ ಶ್ರೀಹರಿ ಆಶ್ರಿತಜನಪೋಷಾ
ಶಾಶ್ವತ ಜನಭಾಷಾ
ಭಾಸ್ಕರಕೋಟಿ ತೇಜಾ
ಈಶ್ವರ ಮತ್‍ಗುರು ತುಲಶೀರಾಮಾ ೩

೨೪೬
ಪಾಲಿಸೋ ರಂಗಾ ಲೋಲಕೃಪಾಂಗ ಪ
ಬಾಲನ ಮೊರೆಯನು ಕೇಳೊ ಶುಭಾಂಗಾ ಅ.ಪ
ಮಾಡಿದಪಾಪ ಓಡಿಸೊ ಭೂಪಾ
ಬೇಡಿಕೆ ನಿನ್ನಯ ಪಾದವ [ತೋರೋ]ಶ್ರೀಶಾ ೧
ಕೇಶವನ್ಯಾರೊ ಪೋಷಕಧೀರಾ
ದಾಸನು ವಂದಿಪೆ ಶ್ರೀಶನು ಬಾರೊ ೨
ಕಾಮಿತನಾಮಾ ಶ್ಯಾಮಾ ಸುಧಾಮಾ
ಕೋಮಲರೂಪನೆ ನೀನಿಡು ಪ್ರೇಮಾ ೩
ಪೋಷಿಸು ಮುನ್ನ ದೇವ ಎನ್ನ
ದೋಷರಹಿತಗುರು [ತುಲಸಿ]ದಾಸ ಪ್ರಸನ್ನ ೪

೩೨೦
ಪಾವನಪಾದವ ಭಜಿಸೆಲೊ ಮನುಜ ನೀ ಪ
ದೇವರದೇವಾ ನಿನ್ನ ಸೇವೆಯೊಳಿರಿಸೆಂದು ಅ.ಪ
ಶ್ರುತಿಪಥವನುಗೂಡಿ ಸುಖದು:ಖ ದೂರಮಾಡಿ
ಮತಿಗೆ ಮಂಗಳವೂ ಸದ್ಗತಿಗೆ ಕಾರಣಮಾದ ೧
ಧರೆಯೊಳು ರಾಜಿಪ ಗುರುವೆ ಗಿರೀಶನೆಂದು
ಧರಣಿ ತುಲಸೀರಾಮ ಗುರುವೆ ತಾನಾದ ೨

೩೨೧
ಪ್ರಥಮಾಕ್ಷರನೆ ದೇವಾ ಮಹಾನುಭಾವಾ ಪ
ಶ್ರುತಿವದನದೊಳ್ ಗೀತ ಪದವೆ
ಸದ್ಗತಿಗೆ ಕಾರಣ ಸಿದ್ಧ ಮೆನ್ನುತ
ಪಥವ ಗೈದು ಪರಂಪರವ ತಾ
ಸ್ವತಹನಾಗಿಯು ಪ್ರಜ್ವಲಿಸುತಿಹ ೧
ಆದಿರೂಪ ಅನಾದಿಕಾರಣ
ವೇದವೇದಾಂತತಿ ಪರತರ
ಪಾದಸೇವೆಯ ಕೊಟ್ಟು ನನಗೆ ನೀ
ಬೋಧಿಸೆಂದೆಂತೆನು ಪ್ರಣವಾ ೨
ಸಾಕ್ಷಿರೂಪದ ತಾಳ ಸರ್ವ
ಶಿಕ್ಷೆ ರಕ್ಷೆಗೆ ಅಕ್ಷಗೊಳಿಸಿದ
ಮೋಕ್ಷದಾಯಕನೆಂದು ಭಜಿಸಲು
ಸೂಕ್ಷ್ಮದ್ವಾರದಿ ಹೊಳೆವ ನಿಜಪದ ೩
ನಂದಿಯನು ಮುಂದೈಸಿ ಪ್ರಮಥ
ವೃಂದ ಮಧ್ಯದೊಳೆಸೆವ ಶುಭಕರ
ಚಂದಪಾದವ ತೋರಿ ಕರುಣಿಸೊ
ಚಂದ್ರಧರ ಚಾಂಪೇಯವದನನೆ ೪
ಅಂಗವಿಲ್ಲದೆ ಪೆಸುಸರುತಾಳಿ ನೀ
ಲಿಂಗ ಮುಖವಾಗಿರುವ ಸೊಬಗನೂ
ಮಂಗಳಾತ್ಮಕ ತೋರೊ ಕಲುಷ ಪ
ತಂಗ ವೋಂಕಾರೇಶ್ವರನೇ ವೋಂ ೫
ಕೊಡಗನಾಳಿದ ನಿಲಯದ ಮುಂ
ಗುಡಿಯೊಳಿಹ ನಿಷ್ಕಲ ನಿರಂಜನ
ಒಡೆಯ ಮದ್ಗುರು ತುಲಶಿರಾಮನ
ಅಡಿಗಳಿಗಡಿಯಾದೆನೀಗಾ ೬

೨೫೯
ಬಂದರ್ನೋಡೀ ಸುಂದರ್ತುಲಶೀರಾಮದಾಸರ್ಬಂದರು ಪ
ಅಂದದೆಮ್ಮಾಕಂದರ್ಪಾಲಿಸೆಂದರ್ ತಾವೇ ಚಂದಾದಿಂದಾ
ಇಂದ್ರರ್ಪದವಿಗಾಗಿ ಬೇಗಾ ೧
ಭಕ್ತಿ ಮುಕ್ತಿ ಯೆರಡಕ್ಕೊಂದೆಯುಕ್ತಿ ತೋರಿ ಮತ್ತೆ ತಾನ್
ಭಕ್ತಿಜ್ಞಾನ ಯೇತನ್ಮಧ್ಯೆ ಹೊಕ್ಕಿ ಶಕ್ತರಾಗಿ ಬೇಗಾ ೨
ಆಟಾಪಟಾವೆಂಬಳ ಕಳ್ಳ ಬೂಟಕಂಗಳನ್ನು ಬಿಡಿಸಿ
ಸಾಟಿಯಾಗದ ತ್ರಿಕೂಟಮೆಂಬಟರಾರ್ಭಟಾ ತೋರಲ್ ಬೇಗಾ೩
ಪಕ್ಷೇಂದ್ರನೇರಿ ಬಂದ ಯಕ್ಷರಕ್ಷನಾಗಿ ನಿಂದಾ
ಸಾಕ್ಷಿ ಕೇಳುವಂತಾ ಅಡಿಯರ್ಗಾಕ್ಷಣವೆ ಮೋಕ್ಷ ತೋರಲ್ ೪
ಆಶಪಾಶವೆಂಬೊದನ್ನು ನಾಶಮಾಡೊ ಈಶನಾಮಾ
ದಾಸನಾದವರ್ಗೆ ಸಾಶಿರಾಂಗಾವಾಗಿ ಬೇಗಾ ೫

೨೪೯
ಬಂದು ಪಾಲಿಸೆನ್ನ ರಮಾಸಿಂಧುಜೆ ಶ್ರೀರಾಮ
ಚಂದ್ರ ಸಖೀಮಣಿಯೆ ಇಂದು ಭಜಿಪೆ ನಿಮ್ಮ ಪ
ಕಂದನೆಂದು ಮನಕೆ ತಾರದಿರಲು
ಅಂದವೆ ನಿರ್ಬಂಧವೆ ಸಾಕು
ಚಂದಾಯ್ತು ನನ್ನ ಮನಸು
ನೊಂದೋಯ್ತು ನೀ ಬೇಗ ೧
ಕಾಮಿನಿಯೇ ನೀ ಕಾಮಜನನೀ
ಆ ಮಹಾ ಪ್ರಸಿದ್ದರಾಧೆ
ಸ್ವಾಮಿಭಕ್ತಪ್ರೇಮಿ
ಧೀಮಣಿ ಭಕ್ತಚಿಂತಾಮಣಿ ನೀ ಬೇಗ ೨
ನಿಮ್ಮ ಕಂದನಾಶ್ರಯಿಸಲು
ಸುಮ್ಮನಿರುವದೇನುಚಿತವೇ
ಅಮ್ಮ [ತುಳಸಿ] ಗುರು ಸಮ್ಮುಖ
ನೀ ಮೊಖ [ತೋರಿ] ಬೇಗ ೩

೨೯೬
ಬಲ್ಲೆನೇಳೊ ನಲ್ಲ ನಿನ್ನ ಬೆಲ್ಲಮಾತುಗಳನ್ನಾ ಪ
ಅಲ್ಲ ಆಡಿದುದ್ದ ಆದೋದಮ್ಯಾ
ಲೆಲ್ಲಿದು ಬರಿ ಸೊಲ್ಲದು ಬಿಡು ಅ.ಪ
ಭಾಷೆನಿತ್ತೆ ಬರಸೆಂದೂ ಮೋಸಗಯ್ವಯ್ಯೋ ರಂಗಾ
ಆಶೆಯಂ ತೀರಿಸೆನ್ನಯ ನಿಜ ಭೂಸುರಗಣ ಭಾಸುರಮಣಿ ೧
ಸುರತಕೇಳಿ ಸುಖದೊಳೆನ್ನಂ ಮರೆತು ಪೋದೆಯೊರಾಮಾ
ಅರಿತೆನೇಳೊ ಚರಿತವನ್ನಾ ನಿರುತದಿ ಬರೆ ಗುರುತದು ಸರಿ ೨
ಬೆರಗು ಮಾಡಿದಿರೆನ್ನ ಸ್ವಾಮಿ ಸೆರಗೊಡ್ಡಿದೆನೊ ದೇವಾ
ಸುರಗಿರೀವರ ತುಲಶಿರಾಮ ನೀ ಸರಗೂರಿನ ಗುರುಕಾರನೆ ೩

೨೮೭
ಬಾ ಬಾರೊ ನೀಬಾರೊ ರಂಗಯ್ಯ ಓಡಿ ಪ
ಬಾರೊ ರಂಗಯ್ಯ ಓಡಿ ತೋರೊ ಕೃಪೆಯ ಮಾಡಿ
ದಾರಿಯ ಕಾಣೆ ಭವದೂರ ಧೀರ ಬೇಗ ೧
ತನಯನು ಅಗಲಿರೆ ಮನಕೆ ನೀ ತೆರೆದರೆ
ಅನುಚಿತವಲ್ಲ ವೇನೊ ಇನಕುಲಚಂದ್ರ ಬೇಗ೨
ಸುರುಪತಿ ವಿನುತನೆ ಧರಸತಿಗೆ ನತನೆ
ಗುರುವು ತುಲಶೀರಾಮಾ ಧೊರೆಯೆ ಸರಿಯೆ ಬೇಗ ೩

೨೩೫
ಬಾರೊ ಬಾರೊ ಭಜಕರ ಪೋಷನೆ ಪ
ವಾರಿಶಯನ ಮಮ ಘೋರ ದುರಿತಹರ
ನಾರಾಯಣ ನಿನ್ನ ನಂಬಿದೆ ನೀ ಬೇಗಾ೧
ಭಜಕರ ಪೋಷನೆ ಭಜನ ವಿಲಾಸನೆ
ನಿಜಮಣಿಯಾದ ನಮ್ಮ ವಿಜಯಸಾರಥಿಯೆ ನೀ ೨
ಸಾಧುಜನರ ನುತಾ ಸರ್ವಶರಣ್ಯನೆ
ಮಾಧವನೆ ನೀ ಬಾರೋ ಮದನಜನಕ ೩
ವಾಸವನುತ ಹರಿ ಹಾನಸದೊಡೆಯನೆ
ದೇಶಿಕ ತುಲಸಿ ನಿನ್ನ ದಾಸಾನು ನಾನಾದೆ ೪

೨೬೦
ಬಾರೋ ಭವದೂರಾ ರಂಗಾ ನಾರಾಯಣಪ
ಆ ರಾವಣ ಭೀಕರ ಜಯ ಸರೋಜದಳಾಂಗ ಅ.ಪ
ಚರಣಶ್ರಿತ ಪರಿಪಾಲಿತ ಮರಳೀಧರ ದೇವ
ಪರಮಾತ್ಮನೆ ಪಾಂಡವಮಣಿ ತರವೇ ನಿರುತರಕೇಂದ್ರ ೧
ಉಭಯ ವೇದಾಂತಾರ್ಯನೆ ಅಭಯಾಕರ ಶೌರೀ
ಅಭಿಮಾನಯೇನದು ಕಾರಣ ಶುಭದಾಯಕನಾಗಿ ಬೇಗಾ ೨
ಪರತಂತ್ರನೆ ಪಾಪಾಂತಕ ನರವೇಷ ಭಾಷೆ
ಸುರನಾಯಕವಿನುತನಾಗುರು ಭರತಾಗ್ರಜ ತುಲಶೀರಾಮಾ೩

೩೩೯
ಬಾಲಚಂದ್ರನ ರೂಪಾ ಭಯನಿವಾರಣ ನೋಡೋ
ಬಾಲೆಯರೆಲ್ಲರು ಬಂದು ಕಾದಿರುವಾ
ಲೊಲಾನವನ್ನು ಕಂಡು ಹೇಳಲು ನಾ ಬಂದೆ
ಆಲಯಕ್ಕೆ ನೀ ಬಾ ಹಸೆಗೇಳೋ ಸೋಬಾನೆ ೧
ಪನ್ನಂಗಶಯನ ಬಾರೊ ಚನ್ನಕೇಶವನಲ್ಲ
ದಿನ್ನು ಬೇಕಾದ ಹೆಸರನ್ನು ಪಡೆದಿರುವೆ
ಕನ್ನೆ ಸೀತೆಗೆ ಕೊಟ್ಟ ಹೊನ್ನವುಂಗರ ಕೊಡುವೆ
ಬಿನ್ನಾಣದಿಂದ ಹಸೆಗೇಳೋ ಸೋಬಾನೆ ೨
ಸುದತಿಯರೈವರು ಕದಳಿಹುವ್ವಿನ ಪೀಠ
ಹದಮಾಡಿ ಕುಂತಿರುವರದೆ ಹೇಳಬಂದೆ
ಮದನ ಜನಕ ಹಸೆಗೊದಗಿ ಅಲ್ಲಿನ ದಿವ್ಯ
ಚದುರತನವನೋಡೊ ಹಸೆಗೇಳೋ ಸೋಬಾನೆ ೩
ಋಷಿಗಳೆಲ್ಲರು ಜ್ಞಾನದೋಯ ಹಾಸನದೊಳೂ
ದಶರೂಪನೆ ಬಾರೆಂದು ಭಾವಿಸುತಿರುವಾ
ಬಿಸಜಾಕ್ಷಿವರದನೆ ಗುರುವು ತುಲಸಿರಾಮಾ
ಪಶುಪತಿಯಾದೆಯಾ ಹಸೆಗೇಳೋ ಸೋಬಾನೆ ೪

೩೪೩
(೨) ತುಳಸಿರಾಮದಾಸರ ಅಂತಿಮ ಯಾತ್ರೆ
ಬೆಂಗಳೂರಿಗೆ ಹೋಗಿ ಬಂದರೂ ಮೈಸೂರಿಂದಾ ಪ
ಬೆಂಗಳೂರಿಗೆ ಹೋಗಿಬಂದ ಜಂಗಮನು ತಾನಾಗಿ ನಿಂದಾ
ಕಂಗಳೆರಡರ ಮಧ್ಯ ತಾ ನಿಜ ಲಿಂಗನಾಗಿ ಕಾಣಬಂದಾ ಅ.ಪ
ಬಿದಿಗೆ ಪಾಡ್ಯವ ಮಾಡಿ ನೋಡೆಂದಾ ಬಂದಾಗ ಬರದಾ
ವಿಧಿಯ ಬರಹವ ತೊಡೆದುಕೊಂಡೆಂದ
ಕದಿವ ಕಳ್ಳರ ಕಂಡುಹಿಡಿದು ಮದನಪಿತನಾ
ಯುಧದಿ ಹೊಡೆದೂ ನದಿಯ ಸ್ನಾನವ ಮಾಡಿ ನಿಜ
ಪದವಿ ತೋರಿದ ನಮ್ಮ ದೇಶಿಕ ೧
ಸೃಷ್ಟಿ ತದಿಗೆಯೊಳಿರಲು ಬೇಡೆಂದಾ ಅಲ್ಲಾಗ ತನ್ನ
ಇಷ್ಟದೈವದ ಪೂಜೆ ಮಾಡೆಂದಾ
ದೃಷ್ಟಿಗೋಚರಮಾದ ಗುರುವು
ಸೃಷ್ಟಿಗಧಿಕಾ ತುಲಶಿರಾಮನ
ಇಷ್ಟದಿಂದಲಿ ಭಜಿಸಿನೋಡಲು ಸ್ಪಷ್ಟನಾಗಿ ಕಾಣುತೈತೆ ೨

(ಇ) ಆಳ್ವಾರಾಚಾರ್ಯ ಸ್ತುತಿಗಳು
೨೫೧
(೧) ರಾಮಾನುಜರು
ಬೋಧಾಚಾರ್ಯನೆ ದಯಮಾಡೊ ಒಳ್ಳೆ
ನಾದ ಮೂರರೊಳೆನ್ನೊಳು ನೀ ಕಂಡುಬಾರೊ ಪ
ಆದಿ ಆನಾದಿಯ ಭೇದವೇನದು ತೋರಿ
ನಾದಬಿಂದು ಕಳೆಯೊಳ್ ನೀ ಕಂಡುಬಾರೊ ೧
ಮಂತ್ರಜ್ಷಾನ ರಹಸ್ಯದಂತರಸ್ಥಿತಿಯನ್ನು
ಪಂತಗೊಳಿಸಿ ಕೊಟ್ಟ ಪರಮದೇಶಿಕನೆ ೨
ಮೂಲ ಪ್ರಣವ ಬ್ರಹ್ಮ ಬಾಲ ಬ್ರಹ್ಮಚಾರೀ
ಕೋಲೂಪ್ಯಾಟಕಾ ಮಾಂ ಪಾಲ ತುಲಶಿರಾಮಾ ೩

೨೩೬
ಭಕ್ತ ಜನೋದ್ಧಾರನ್ಯಾರೋ ದೇವನ್ಯಾರೋ ಪ
ನಿಜಮುಕ್ತಿ ದಾಯಕನೆ ಕೇಶವ ಪಾದತೋರೋ ಅ.ಪ
ಭಕ್ತಿ ಜ್ಞಾನ ವಿಚಾರಕೆನ್ನನು
ಹೊಕ್ತಿಗೊಳಿಸೆಂತೆಂದು ಬೇಡುವೆ
ಶಕ್ತಿರೂಪನು ತಾಳಿ ತಿರುಗಿ ವಿ
ರಕ್ತನಾದಾಂತ ಪರಾತ್ಮನೆ ೧
ಬಾಲಕೃಷ್ಣನೆ ಬಾರೊ ಭಕ್ತನು
ಶೀಲ ಗೋಕುಲಪಾಲ ಶ್ರೀಹರಿ
ಆಲಿಸೆನ್ನಯ ಬಿನ್ನಪದ ನಿಜ
ನೀಲಮೇಘಶ್ಯಾಮ ರಂಗಾ ೨
ಧರಣಿ ಚೆನ್ನಪುರೀಶ ನಿಮ್ಮಯ
ಚರಣ[ಧೂಳಿಯ]ಕುರುಹು ತೋರಿದ
ಗುರುವು ತುಲಶೀರಾಮನೆ ನಿಜ
ಪರಮತತ್ವವಿಲಾಸ ದೇವ ೩

೨೪೭
ಭರತಪುರೀಶನೆ ಭಾಗ್ಯ ಸುಭಾಷನೇ ಪ
ದುರಿತವಿನಾಶನೆ ದು:ಖರ ಪೋಷನೆ
ಪರಮ ವಿಲಾಸನೇ ಅ.ಪ
ಪಾಮರನಾನೂ ಶ್ಯಾಮಲ ನೀನೂ
ಕಾಮಿತ ಫಲವರ ಕೋಮಲರೂಪನೆ
ಸಾಮಜಾವರ ರಂಗಾ ೧
ಧರಣಿಜನನಾಥ ದಾತಾ ವಿದೂತಾ
ಗುರುವರ ಶರಣರ ಪರಮಾಧಿಕಾರಿ
ಕರುಣಬಾರದೇಕೊ ಭರತಪುರೀಶನೆ ೨

೩೨೨
ಭವ ಭಯಾದಿಗಳ ಮದ್ದು ನಮ್ಮ ಗುರು ತಂದರು ತಾವೆದ್ದು ಪ
ಫಲವೇನು ನೀನಿದ್ದು ನಮ್ಮ ಜನ್ಮಗಳಿಲ್ಲಿಗೆ ರದ್ದು ಅ.ಪ
ಪಥ್ಯವನಿಟ್ಟು ನೋಡೋ ಈ
ಸತ್ಯ ಮಾರ್ಗದೊಳನಾಡೋ ನಮ್ಮಾ
ಹತ್ತವತಾರನಗೂಡೋ ನಿನ್ನ
ಪಿತ್ತದ ರೋಗೀಡಾಡೋ ೧
ಮಾತ್ರೆಯ ಕೊಟ್ಟನು ವೈದ್ಯಾ ಸ
ತ್ಪಾತ್ರರಿಗೆಯಿದು ಸಾಧ್ಯ ಗುರು ತುಲ
ಶೀರಾಮನೆ ಚೋದ್ಯಾ ಅಲ್ಲಿ
ದೊರಕಿತು ಮನಸಿನ ಭಾಗ್ಯ ೨

೩೨೩
ಭುವನದೊಳಗೆ ಒಬ್ಬ ಶಿವಯೋಗಿನಾ ಕಂಡೆ
ಅವತರಿಸಿರುವನದ್ಯಾರಮ್ಮಾ ಪ
ನವದಾರಿಯನು ತುಂಬಿ ನಡುನಾಡಿಯೊಳಗಾಡೊ
ಪವನರೂಪನ ಬೇಗ ತೋರಮ್ಮಾ ಅ.ಪ
ಉಪಜೀವಿಯನು ಕಂಡು ಉಷ್ಣಶೀತವನಳಿದು
ತಪಸು ಮಾಡುವನ್ಯಾರದೇಳಮ್ಮಾ
ಅಪಮೃತ್ಯುವನು ಕಂಡು ಆನಂದವನು ಬಿಟ್ಟಾ
ವಿಪರೀತವೇನಿದು ಹೇಳಮ್ಮಾ ೧
ಬುದ್ಧಿ ಮನಸು ಚಿತ್ತ ಅದ್ವಯವನು ಮಾಡಿ
ಇದ್ದನಹುದು ಆತಾ ಕಾಣಮ್ಮಾ
ಮದ್ಗುರುವಾದ ಶ್ರೀ ತುಲಶಿರಾಮದಾಸ
ಬುದ್ಧಿಯ ಪರೀಕ್ಷಿತ ಕಾಣಮ್ಮಾ ೨

೩೪೦
ಮಂಗಳಾರತಿ ನಮ್ಮ ರಂಗನಾಥನಿಗೆ
ಜಂಗಮಾರ್ಚಿತಪಾದ ಕಲುಷವಿಭಂಗರಂಗನಿಗೆ ಪ
ಜಾಜಿಯ ಪುಷ್ಪಂಗಳಂ ದಿವ್ಯ ಸ
ಭಾಜ ಭಜಂತ್ರಿಗಳಿಂ
ಮೂಜಗದೊಯನೆ ಮುಕ್ತಿಕೃಪಾಕರ
ಶ್ರೀಜಯವೆನ್ನುತಲಿ ೧
ವಾರುಧಿ ಶಯನನಿಗೆ ದಿವ್ಯ ಸು
ಚಾರುಸನಯನಗೆ ನಮ್ಮ
ನಾರಿಯರೆಲ್ಲರು ನಮಿಸುವ ಲಕ್ಷ್ಮೀ
ನಾರಾಯಣನಿಗೆ ೨
ಸುರಗಣಮಣಿ ನುತಗೆ
ರಾಧಾರುಕ್ಮಿಣಿ ಜಯಪತಿಗೆ ಸಂತೆ
ಸರಗೂರೊಳಗಿಹ ನಮ್ಮಯ ಶ್ರೀ
ಗುರು ತುಳಸೀರಾಮನಿಗೆ ೩

೩೪೧
ಮಂಗಳಾರತಿಯು ನಮ್ಮ ಲಿಂಗವಿನುತಗೇ ನಮ್ಮ ಪ
ಅಂಗನೆಯರೆಲ್ಲ ಕೂಡಿ ಅಚ್ಯುತಾಯೈ ನಮಃ ಎನ್ನಿ ಅ.ಪ
ವೇದಕಾದಿಪ್ರಣವವೆಂದು ಬೋಧಿಸಿದನುಶಿವನುಉಮೆಗೆ
ನಾದಬಿಂದುಕಳೆಯಗೂಡಿನ ನಾರಾಯಣನಿಗೆ ಮಂಗಳಂ ೧
ಸುರರೂ ನರರೂ ಮುಖ್ಯಮಾದಾ ಗರುಡ ವಿಶ್ವಕ್ಸೇನರೆಲ್ಲ
ಪರಮತತ್ವಮಹುದಿದೆಂದು ಯಿರುವೋತದ್ವಿಪಾದಗಳಿಗೆ೨
ನಿರ್ವಿಕಲ್ಪ ನಿಶ್ಚಲಾತ್ಮ ಸರ್ವಲೋಕಸಾಕ್ಷಿಭೂತ
ಗರ್ವಕಲನುಯೆಂಬೊ ನಾಮ ಉರ್ವಿಯೊಳಗೆ ವಹಿಸಿರುವಗೆ ೩
ನಿತ್ಯಪೂರ್ಣ ಬ್ರಹ್ಮತಾನೆ ಸತ್ಯರೂಪ ಸಗುಣದೀಪ
ತತ್ವಗುರುವು ತುಲಶಿರಾಮ ಚಿತ್ಸುಖಾಂಶ ಶಿವಪ್ರಿಯನಿಗೆ ೪

೨೫೨
ಮರತಿರಲಾರೆ ನಿಮ್ಮನೂ ಹರಿಯೇ ಧೊರೆಯೆ ಪ
ಸುರಮುನಿವರನುತ ಕರಿವರ ಸುಚರಿತ
ಕರುಣಿಸಿ ಕಾಯೊ ಮಮದುರಿತಹರಣ ವೆಂಕಟ್ರಾಮಾನುಜ ೧
ಅಸುರವೈರಿಯೊ ಹರಿ ಕುಸುಮ ಶರೀರ ಭಾವಾ
ಪಶುಪತಿಪ್ರಿಯಸೇವೆ ತೃಷೆಯ ನೀಗಿಸೊ ವೆಂಕಟ್ರಾಮಾನುಜ೨
ಭರತಪುರೀಶನ್ಯಾರೊ ನಿಜ ಸುರತವ ತೋರೋ
ಗುರುವು ತುಲಶಿರಾಮ ದೊರೆಯೆ ಸರಿಯೊ ವೆಂಕಟ್ರಾಮಾನುಜಾ ೩

೩೨೪
ಮಾಡಬೇಕೆಲೋ ಭಜನೆ ಮಾಡಬೇಕೆಲೊ ಪ
ಮಾಡಬೇಕು ಭಜನೆ ಮನದಿ
ಕೂಡಬೇಕು ಪ್ರಣವ ಘನದೀ
ಈಡ ಪಿಂಗಳ ಯಿದರೊಳಗಿರುವ
ನಾಡಿ ಭೇದಗಳನು ತಿಳಿದೂ ೧
ಆರು ಮೂರುಯೆಂಬೊ ದಾರಿ
ಮೀರಿನೋಡುಯಿರುವ ಶಿಖರ
ತೋರಿಯಾಡುವಂಥಾ ಘಂಟೆ
ಭೇರಿನಾದಗಳನು ತಿಳಿದೂ ೨
ವರದ ರಂಗನಿರುವನರಿಯೊ
ಧರಣಿ ಕನಕಪುರಿಯ ಕೋಟೆ
ಗುರುವು ತುಲಶೀರಾಮದಾಸ
ರರಿತುಯಿತ್ತ ಚರಣ ಭಜನೆ ೩

೨೯೭
ಮಾತನಾಡೆ ಜಾಣೆ ಮಾಯೆ ನೀ ಪ್ರವೀಣೆ ಪ
ಯಾತಕೆಂಬುದೇನೇ ಯೆನ್ನೊಳ್ ಸಾಮಜನಯನೆ ಅ.ಪ
ಮಾನಿನೀಯಳಲ್ಲೆ ಮನೆಸನಿದ್ಯಾಕದೊಲ್ಲೆ
ಜಾಣೆ ನಿನ್ನ ಬಲ್ಲೆ ಬಾಣ ತಾಕೀತಲ್ಲೆ ೧
ನಾಯಕೀಯಳ್ಯಾರೆ ನನ್ನೊಳ್ ನೀ ವೈಯಾರೇ
ಮಾಯಧಾರಿ ತುಲಸಿ ಕಾಯಜಾರಿ ಸಖನೊಳ್ ೨

೨೩೭
ಮಾಧವಮಧುಸೂದನೆನಿಪಪಾದಭಜನೆಯಮಾಡುವೇ
ಸಾಧು ಶಿಖರನೆ ಸರ್ವತಂತ್ರನೇ ಬೋಧಿಸೆನುತಾ ಬೇಡುವೇ ಪ
ವಾರಿಧಿಶಯನ ಪಾರಮಹಿಮ ಪರಾತ್ಪರ ಪಾಪವಿದೂರನೇ ಅ.ಪ
ಆತೊಡರ್ಚಿತುವೋತಡಂತಿಸೂ ಭೂತಪಕ್ಷದಯಾನಿಧೆ
ಭೀತಿಗೊಳಿಸದಿರೆನ್ನ ನೀನೆ ಅನಾಥರಕ್ಷ ಕೃಪಾನಿಧೇ ೧
ನೀನೆ ಕಲುಷವಿಖಂಡ ನಿಶ್ಚಲ ನೀನೆ ವೇದಾಂತಾರ್ಯನೂ
ಶ್ರೀನಿವಾಸದಯಾನಿಧೆ ಜಗದಾನುಭವತತ್ತೂರ್ಯನೂ ೨
ದೇಶಿಕನೆ ತ್ವದ್ದಾಸನಾಡೆಯ ಆಶೆಯಳಿದೀಗೆರಿನನೂ
ಪಾಶರಹಿತನ ಮಾಡೊಯೆನುತಲಿ ಪಾಡುವೆನಾ ನಿನಗೆನ್ನನೂ ೩
ನಿತ್ಯಪೂರ್ಣನೆ ಸತ್ವಗುಣಮಣಿ ಚಿತ್ಸುಖಾಂಶ ಚಿದಂಬರಾ
ತತ್ವಮೆನಗೆ ಪ್ರಸಾದಿಸಿದ ಶ್ರೀತುಲಶಿರಾಮ ದಿಗಂಬರಾ ೪

(ಋ) ಕ್ಷೇತ್ರವರ್ಣನೆ
೩೩೪
(೧) ಮೇಲುಕೋಟೆ
ಯತಿರಾಜ ಸಂಪತ್ಕುಮಾರಾ ಸ
ತ್ರ‍ಕತದೊಳಗಿರಿಸೆನ್ನ ಧೀರಾ ಪ
ಸತತ ಶ್ರೀಮದ್ವೈಷ್ಣವರನಾ
ನುತಿಸುವಾನಂದ ದೊಳಗಿರಿಸೈ
ಪತಿತಪಾವನ ಕಂಕಣಾಧ್ರುತ
ಕ್ಷಿತಿಯ ಪಾಲ ಮಹಾನುಭಾವನೆ ೧
ನೋಡಲಿಚ್ಚೈಸಿ ನಾಂ ಬಂದೆ ನನ್ನ
ಮೂಢಾಕೃತದೊಳು ನಿಂದೆ
ಕೇಡುಗಳು ಬಂದೆನ್ನ ವಿಧ ವಿಧ ಬಾಧೆ
ಪಡಿಸುತ್ತಿರುವದಿದೆಕೊ
ನೋಡಿ ಸುಜನರ ಕೂಡಿ ಭಜನೆಯ
ಮಾಡುವೆನು ಶ್ರೀಮಾಧವಾಗ್ರಣಿ ೨
ತುಲಶಿಮಣಿಹಾರ ಲೀಲಾ ಸ
ತ್ಫಲತಂತ್ರ ದಾಸಾನುಕೂಲಾ
ಕಾಲಕಲನಹುದೊ ಶ್ರೀಮನ್
ಬಾಲಬ್ರಹ್ಮಚಾರಿ ಮದ್ಗುರು
ಮೇಲುಕೋಟೆಯೊಳಿರುವೊ ನಿಜವರ
ಲೀಲಾಮಾನುಷವಿಗ್ರಹನೆ ನಿಜ
ಯತಿರಾಜ ಸಂಪತ್ಕುಮಾರಾ ೩

೨೫೪
ಯತಿಸಾರ್ವಭೌಮಾ ಸದ್ಗುರು ಸ್ವಾಮಿ ಪ
ಮತಿಗೆ ಮಂಗಳವಾದ ಗೋಪ್ಯ
ಸ್ಥಿತಿಯು ನಿನಗರುಹುಲದರಿಂ
ನುತಿಪೆನಾನಿಮ್ಮಡಿಗಳನು ಕೇಳ್
ಪ್ರತಿವಾದಿಭಯಂಕರನೆ ಶ್ರೀ ೧
ಅಂತರಾಪುರಿಯೊಳಗೆ ತಾನೆ ಅ
ನಂತ ರೂಪಗಳನ್ನು ತೋರಲೂ
ನಿಂತು ನೋಡಿದೆನಹುದೊ ಮುಕ್ತಿ
ಕಾಂತೆಯೆಂಬೊ ರಮಾಂಶಳನು ಶ್ರೀ ೨
ಉಭಯ ವೇದಾಂತಾರ್ಯನಾಗಿಯು
ಅಭಯ ದಾನವನಿತ್ತ ಸೋಹಂ
ಪ್ರಭುವೆ ತಾನಾಗಿರುವಾ ನಿಜಕಳೆ
ವಿಭುವೆ ಜಯ ಜಯ ಶುಭಕರನೆ ಶ್ರೀ ೩

೩೨೫
ಯಾಕಣ್ಣಾ ಏನು ಬೇಕಣ್ಣಾ ಬಿಡು
ಝೋಕಣ್ಣಾ ಜಗ ಸಾಕಣ್ಣಾ ಪ
ಆಕಣ್ಣಿನೊಳಗೇನು ಠೀಕಣ್ಣಾ ಇದು
ಪಾರ್ವತಿಗುಸುರಿದ ಮೂಕಣ್ಣಾಅ.ಪ
ಅಂತವನುತ್ತು ಎಡೆಯಾಡು ನಿ
ಶ್ಚಿಂತೆಯೊಳಿಹ ಸತ್ಯಗುರಿನೋಡು
ಪಂಥವು ಮಾಡುವ ಯೆಂಟಾರುಮಂದಿಗ
ಳಂತೆ ನೀ ಹೊಗದೆ ಚಿಂತಾಮಣಿಯಾಗೂ ೧
ಮಂಗಳಪುರಿವಾಸನಾಗುವೆ ನಿಜ
ರಂಗಮಂಟಪಕೆ ನೀಹೋಗುವೆ
ಜಂಗಮ ಗುರುಜಾಣಾಲಿಂಗ ತುಲಶೀರಾಮಾ
ಮಂಗಳಮೂರುತಿ ಹಿಮಗಿರಿವರನಿಹ ೨

೩೨೬
ಯಾತಕೊ ಭಯ ಭೀತಿ ಚಪಲತೆಯು ನಿನ
ಗ್ಯಾತಕೊ ಮೂಢಮಾನವ ಪ
ಪಾತಕವಳಿ ಗುರುನಾಥನ ಕೃಪೆಯೊಳು
ಭೂತಳದತಿಶಯದಾತನು ಕಾಣುವಾ ಅ.ಪ
ಈತರದಿ ನೀ ಬಾರದಿರುವಿಯಲ ಮೂಢಮಾನವ
ರಾತ್ರಿ ಬೆಳಕಿನೊಳೇಕವಾಗೋ ಭಲಾಸಿ
ಶೀತೆಯ ಕೊಂಡೊಯ್ದಾತನ ತಮ್ಮಗೆ
ಪ್ರೀತಿಲಿ ಸ್ಥಿರಪದವಿತ್ತನು ಚೀ ಚೀ ನಿನಗ್ಯಾತಕೋ ೧
ಯಾತ್ರೆ ಮಾಡೆಲೊ ಕ್ಷೇತ್ರವನ್ನರಿತು ಮೂಢಮಾನವ
ಸೂತ್ರ ಪಿಡಿದಲ್ಲಿ ಪಾತ್ರನಾಗೆಲೊ
ಧಾತ್ರಿಯೊಳು ತುಲಶೀರಾಮನು ಮಾತ್ರ ತಾ ನಿಜ
ಧೋತ್ರವ ತೊಡಿಸುವ ಯಾತಕೊ ೨

೩೩೭
(೩) ನದಿಗಳು
ಯಾತ್ರೆ ಮಾಡಿಕೊಂಡೈದೆ ಜಾಹ್ನವಿಗೆ ಹೋಗಿ ತೀರ್ಥ ಪ
ಸೂತ್ರಧಾರಿ ತಾನಿಹ ದಿವ್ಯ ಕ್ಷೇತ್ರೋದ್ಭವೆ ಶ್ರೀ ಕಾವೇರಿ
ಧಾತ್ರಿಪಾವನೆಜಯಮಂಗಳೆನೇತ್ರೋಂ ಮಧ್ಯಾ ಭಾಗೀರಥಿ ೧
ಹರಿಪಾದ ರಜೋರಿ ಝೇಂಕಾರಿ ತರಂಗಧಾರಿ
ಗಿರಿಜಾರ ಗುಹಾವಿಹಾರಿತರುಣಿ ಜಯ ಭಾಗಮಂಡಲೆ ೨
ಗಂಗೆ ಮತ್ಕಲುಷಾಭಂಗ ಸ್ವರ್ಗಸೋಪಾನಸಂಗ
ಮಂಗಳಾಂಗಿಯೆ ತರಳತರಂಗೆ ಯೆನ್ನುತಾ ಕಂಚೀ ೩
ಲಲನೆ ನಿನ್ನಯ ಸುದರುಶನ ಫಲಿಸಿದಾಕ್ಷಣವೆ ದು:ಖ
ಮಳಿದುಹೋಗುವ ಚಂದಾ ಕಲಿತು ಗುರುಮುಖದಿಂ ಕಾಶೀ೪
ಮದನಾರಿಮೌಳಿಯ ತಂ ಘೃತಂಪೂರ್ಣ ಅಸ್ಮಾದಯನೀ
ಮದಾಚಾರ್ಯನೆ ಶ್ರೀ ತುಲಶೀಮಧುರಾಮೃತ ಸುರಿಯುವ ದ್ವಾರಕಾ೫

೩೪೪
(೩) ರೇವಣ್ಣ ಸಿದ್ದೇಶ್ವರ ಯತಿಗಳು ಬೆಂಗಳೂರು ಭೇಟಿ
ಯೋಗಿಶೇಖರನಾಗಿ ಬೆಳಗುವ ಜಗದೊಳಗೆ ತಾ ನಿಜ ಪ
ನಾಗಭೂಷಣನಡಿಗಳಂ ಪಿಡಿದಾಗ ಹೊಂದಿದನದ್ವಯಂ ಪದ
ಜೋಗಿ ಜಂಗಮದೊಡೆಯ ನಮ್ಮಯ ರೇವಣಾಶಿದ್ಧೇಶ್ವರನೆ ೧
ಕಾನನಾಲಯದೊಳಗೆ ವಿಕಸಿಪ ಜ್ಞಾನಿ
ತಾನಿಹ ಶೈವಗಿರಿಯೊಳು
ಭಾನುಕೋಟಿ ಪ್ರಕಾಶ ಸತ್ಯ ಸು
ದೀನಜನಮಂದಾರ ಮುನಿಮಹ ೨
ಅಂತರಾತ್ಮನೊಳಿಂತು ಹೊಂದಿಪ
ರೆಂತು ಲೋಕೋಪಕಾರ ರಾಗಿಯು
ಅಂತು ದಯಮಾಡಿರುವ ನೋಡಿ ಅ
ನಂತ ಮಹಿಮನೆ ರುದ್ರಮುನಿ ೩
ವತ್ಸರಕೆ ಬಂದುತ್ಸವದೊಳೀ
ತತ್ಸ್ವರೂಪನು ತೋರಿ ಭುವನಕೆ
ಸತ್ಸಹಾಯಕನಾದ ನಮ್ಮಯ
ಮತ್ಸ್ಯಮೂರುತಿ ಪ್ರಿಯನೆ ಮುನಿಮಹಾ ೪
ವರ್ಗಮೂರನು ಭರ್ಗಗರ್ಪಿಸಿ
ತಿರ್ಗಿ ಲೋಕಕೆ ಬಾರದಂದದಿ
ಅಘ್ರ್ಯಮಾದನುಭವದಿ ನೋಡಲು
ಸ್ವರ್ಗಲೋಕದೊಳಿರುವ ಮುನಿಮಹಾ ೫
ಭವದಿ ವಿಪಿನವು ಭಸ್ಮಗೊಳಿಸಲು
ಭುವನದೊಳಗವತರಿಸಿಯಿರುತಿಹ
ಸುಮನ ಸತ್ಯಸಮಾಜ ಭೋಜನೆ ತಾ
ನಿವನೆನೆ ಹೊಳೆವ ಮುನಿಮಹಾ ೬
ಬರುವ ಭಕ್ತರಿಗಾಗಿ ತನ್ನೊಳ
ಗಿರುವ ಪರತತ್ವವನು ಭಕ್ತರ
ಕರದುಕೊಡುವುದು ಕಂಡುಕೊಳ್ಳಿರೊ
ತರುಣಿಮಣಿಯನು ಧರಸಿ ಧರೆಯೊಳು ೭
ಪಂಚಲಿಂಗಕನಾದಿಯಾಗಿಹ
ಪ್ರಣವಲಿಂಗದೊಳೈಕ್ಯಮಾಗುವ
ಸಂಚು ತೋರಿದ ಗುರುವು ತುಲಸೀ
ಕಂಚಿವರದನ ಪ್ರೀಯನಾಗಿಯು ೮

೩೩೬
(೨) ಸರಗೂರು
ರಂಗನಾಥನೇ ವೋ ರಂಗನಾಥನೇ ಪ
ಅಂಗಜಕೋಟೀರನೆ ತಿಂಗಳಥರ
ಜಂಗಮಂದಿರ ಮಂಗಳ ಹರಿ ಮಾಧವನೇ ೧
ದೇವರದೇವಾ ನೀನಹುದೊ ಭೂವರನಹ
ಶ್ರೀವರ ದಾಮೋದರ ನಿಜದೇವ ರಂಗನಾಥ ೨
ಶರಣರನ್ನು ಪೊರೆಯುವ ತರುಣೀಮಣಿ
ಕರುಣಾಕರ ಶರಣೆಂದೆನು ಸರಗೂರಿನ ರಂಗಾ ೩
ವಂದಿಪೆ ಶ್ರೀ ತುಲಶಿರಾಮಾ ಸುಂದರಗಿರಿ
ಯೆಂದಿಗೊ ನೀ ಬಾರೆಂದಿಪುದು ಮಂದರಧರ ೪

೨೬೭
೩. ಪಾರ್ವತಿ
ರಾಜರಾಜೇಶ್ವರಿ ವೀರಮಹೇಶ್ವರಿ
ಭೈರವಿ ದುರ್ಗಾಂಬಿಕೆ ಪ
ಅಜಸುರ ಮುನಿಜನ ಭಜ ಭೋಜಾರ್ಚಿತೆ
ಕುಜನ ಹಾರಿಣೆ ಕೇಳು ಭಜನೆ ಮಾಡುವೆ ೧
ಶ್ರೀ ಸರ್ವೇಶ್ವರಿ ಶಂಕರಿ ನುತಜನ
ಭೂಷಿತೆ ನಿಜವರ ಭಾಷಿತೆ ಕೇಳು ೨
ಧಾರುಣಿ ಗೌರಿ ರಮಾ ಸಿಂಹಾಸಿನಿ
ಕಾರಣ ದೇಶಿಕ ತುಳಶಿಮಣಿ ೩

೨೮೫
ರಾಧೆಯ ರದನ್ಯಾರೆಲೊ ರಾಜೀವಲೋಚನ ಪ
ಪಾದಸೇವೆಯೊಳಿರಿಸಿ ಸಲಹೊ ವೇದಸೂಚನಾ ಅ.ಪ
ಕರಣನಾಲ್ಕರಿರಹು ನೋಡೆಂದರುಹಬೇಕಲೈ
ಹರುಣಕೋಠಿ ಕಳೆಯೊಳಿರಿಸಲೆನಗೆ ಸಾಕೆಲೈ೧
ಪಾರಮಾರ್ಥದೊಳೆನ್ನಿರಿಸೊ ಪಂಡಿತಾಮಣಿ
ದಾರಿಗುರುವು ತುಲಶಿರಾಮ ನೀನೆಮ್ಮ ಧಣಿ ೨

೨೮೬
ರಾಮ ರಾವಣಧೂಮ ನಿಸ್ಸೀಮಾ ವೊ ಪ
ಸ್ವಾಮಿ ನಿಮ್ಮ ಪದಾಬ್ಜ ಸೇವೆಗೆ
ತಾಮಸವುತ್ತೇನು ಕರುಣಿಸೋ
ಕಾಮಿತಾರ್ಥಗಳೀವಸಗುಣ
ನಾಮ ಸರ್ವಸಭೀಮಾ ಸೀತಾರಾಮಾ ೧
ನಿನ್ನ ಧ್ಯಾನದೊಳಿರುವ ಸಂಭ್ರಮ
ಮೆನ್ನ ಮನಕದು ಫಲಿಸುಲೋಸುಗ
ಚೆನ್ನಕೇಶವನೆಂದು ಭಜಿಸುವೆ
ಪನ್ನಗಾಧಿಪಶಾಯಿ ಸೀತಾ ೨
ನಿತರ ಚಿಂತೆಯ ನಳಿಸಿದಾ ನಿಜ
ಯತಿ ಜನೋದ್ದಾರ ಯಕ್ಷರಕ್ಷಕ
ಪತಿತಪಾವನಾದ ಮದ್ಗುರು
ಸತಿ ಶಿರೋಮಣಿಯಾದ ಸೀತಾ ೩

೩೨೭
ರಾಮನಾಮವ ಪಾಡೆಲೊ ಮನುಜಾ ಪ
ರಾಮನಾಮವ ಪಾಡಿ ಈ ಸಭೆಯೆಲ್ಲಾ ನೋಡಿ
ಕಾಮಾಕಲಭಿಮಾನನು ಕಾಮಿನಿಗೇಳಿದ ಸೀತಾ ೧
ಸಾಧಿಸಿದಾರೊಳು ನೀ ಸಂಭ್ರಮವಾಗೊ ಯೆಲೊ
ಶೋಧಿಸಿ ನಿನ್ನೊಳು ನಿಜಸಾಧನ ಕೇಳುವ ಸೀತಾ ೨
ಇಂತೀ ಪರಿಯೊಳು ಮಹದಂತರವಿಹುದಿದಾ
ಹಂತವರ ಕಂಡು ನೀ ವೇದಾಂತದೊಳು ನಿಂದು ೩
ಭರತಪುರೀಶನನ್ನು ಮರೆತರಾಗುವುದುಂಟೆ
ಅರಿತು ನೋಡಿಕೊಂಡು ನೀ ಪರಮತತ್ವವಿದೆಂದು ೪

೨೪೧
ರಾಮರಾಮ ರಾಮರಾಮ ರಘುಕುಲಾಬ್ಧಿಸೋಮ ಪ
ಪರವಾದಿಭೀಕರ ವೈಷ್ಣವಾಸ್ತ್ರಧಾರಿಯಸುರಧೂಮಾ ಅ.ಪ
ಕಾರ್ಯಕಾರಣಕಿಂತು ತ್ರಿಗುಣಧರಿಸಿಕೊಂಡದೇವಾ
ಆರ್ಯನಾಗಿ ಬಂದಿರುವೆಯೊ ನೀನೆ ಮಹಾನುಭಾವ ರಘುರಾಮ ೧
ಪ್ರಣವರೂಪ ಪಕ್ಷಿಗಮನ ತ್ರಿಣೆಯ ಸಖನದ್ಯಾರೊ
ಫಣಿವಿಯಾಸನೆ ನೀನೆನ್ನ ಹೃದಯದಲ್ಲಿ ಕಂಡುಬಾರೊ ೨
ವೀರರಾಜನಗರದೊಡೆಯ ಹರಿಯೆ ನಿನ್ನ ನೋಡುವೆ
ದಾರಿಗೈಸಿದ ಶ್ರೀಗುರುವು ತುಳಶಿಭಜನೆಯ ಮಾಡುವೆ ೩

೨೮೭
ವೆಂಕಟರಮಣನೆ ಸಂಕಟಹರಣನೆ
ಶಂಖ ಚಕ್ರ ಪೀತಾಂಬರನೆ ಪ
ಪಂಕಜನಾಭನೆ ಪರಮಗೋವಿಂದನೆ
ಲಂಕೆ ವಿಭೀಷಣ ನಿಗಿತ್ತವನೇ ಅ.ಪ
ಹಿಂದನ ಕರ್ಮದಿನೊಂದೆನು ನಿನ್ನಯ
ಕಂದನಮೊರೆಯನು ಲಾಲಿಪುದೂ
ಬಂದಿಸಿ ಭವಗಳ ಹೊಂದಿಸೊ ನಿಜಪುರ
ಚಂದದೆ ಕ್ಷಿತಿಯೊಳ್ ಪಾಲಿಪುದೂ ೧
ಘಾಸಿ ಬಿಡಿಸಿ ನಿಜದಾಸನ ಮಾಡೆಲೊ
ಈಶನೆ ಕೇಶವ ಮೂರಿತಯೇ
ಆಸೆಯ ತೀರಿಸಬೇಕೈಯಾ ಭವ
ನಾಶನೆ ಪಾರ್ಥವ ಸಾರಥಿಯೆ ೨
ಪರಿಪರಿ ಭವಗಳ ಹರಿಯುವನೆನ್ನುತಾ
ಕರದೊಳು ಕಂಕಣ ಕಟ್ಟಿರುವೇ
ಮೊರೆ ಬಿದ್ದೆನು ಶ್ರೀ ತುಲಸೀರಾಮನ
ಸ್ಮರಣೆಯ ಹೃದಯದೊಳಿಟ್ಟರುವೆ ೩

೨೫೫
(೨) ವೇದಾಂತದೇಶಿಕರು
ವೇದಾಂತ ಗುರು ಸಾರ್ವಭೌಮ ಜ್ಞಾನ
ಬೋಧಾನುಕೂಲ ನಿಸ್ಸೀಮ ಪ
ಆದಿನೋಡು ಅನಾದಿಯೆನ್ನುತ
ಬೋಧೆಗೊಳಿಸುಪದೇಶ ಮಾಡಿದ
ಸಾಧುಶಿಖರನೆ ಸರ್ವತಂತ್ರನೆ
ವಾದಭೀಕರ ವೈಷ್ಣವೋ ನಿಜ ೧
ದ್ವಿದಳ ದಾಸನ ಕೈದಸಿದ ನಿಜ
ಪದವಿನೋಡೆಂದೆನುತ ಮನಸನು
ಕದಿವ ಕಳ್ಳರ ಕೊಂದು ಹಿಡಿಯೆಂ
ದೊದಗಿತ್ತನು ಮೊದಲಿನಕ್ಷರಾ೨
ಮೂರು ಬಿಡು ನೀ ಮೂರು ಹಿಡಿ ಕೇ
ಳಾರು ಚಕ್ರವ ದಾಂಟಿ ತ್ರಿಕುಟಿಯ
ಸೇರಿ ಸಂಪದವಾರಿಯೊಳಗದ್ದು
ತೋರಿದ ಪರಮಾತ್ಮ ಪರತರ ೩
ಎಂಟು ಹಾರಿಸಿ ಎಂಟುಲಿಪಿಯನು
ಗಂಟು ಮಾಡೆಂದೆನುತ ನನ್ನೊಳ
ಗುಂಟುಮಾಡಿಯು ತೋರಿದ ವೈ
ಕುಂಠನಾಥನ ನನ್ನೊಳಗ ನಿಜ ೪
ಶುದ್ಧ ಹಂಸನ ಮಾಡಿ ನನಗಾ
ಚಿದ್ವಿವೇಕದ ಕವಚ ತೊಡಿಸಿದ
ಸತ್ಸ್ವರೂಪಾಚಾರ್ಯನಹುದೆಲೊ
ಮದ್ಗುರುವೆ ಶ್ರೀ ತುಲಶೀರಾಮಾ ೫

೨೩೮
ವೇದಾಂತಸಾರಂ ಸುದೀರಂ ಪ
ಮಾಧವ ರೂಪನೆ ಮಂಗಳ ಜಯ ಹರಿ ಅ.ಪ
ಪಾವನ ಪಾದಂ ದೇವಾ ಸಭಾವಂ
ಗೋವರ್ಧನಗಿರಿಧರ ಯತಿ [ಜನವಾ]ರಿಜಭೋಜಂ೧
ಚಂದ್ರಪುರೀಶಂ ಚಕ್ರಧರೇಶಂ
ಇಂದ್ರಸುರಾರ್ಚಿತ ಪದವಿನೋದಂ ನಾದಂ೨
ವರದರಾಜಾ ಅಭಯ ವೈಷ್ಣವರೂಪಂ
ಪರಮಗುರುವು ತುಲಶೀಮಣಿದೀಪ ಭೂಪಂ೩

೨೮೮
ಶರಣೆಂಬೆನೋ ಪರಮಾತ್ಮನೆ ನೀ ಕರುಣಿಸೆನ್ನನು ಪ
ಶರಣಾಶ್ರಯ ಹಿತಾಯ ಸತ್ಯ ಸುಗುಣಿಯನಿನ್ನು ಅ.ಪ
ಪರಮಾನಿನಿಯರ ಸಂಗದೊಳಗೆ ಯಿರಿಪುವುದೂ ಮನ
ನರಸಿಂಹನಾಮ ಖಡ್ಗವೀಯೊ ಬೇಡ್ವೆ ನಾನದನಾ ೧
ಸಕಲಾರ್ಥಮೆನಗೆ ಅರುಹಿ ಕಾಯೊ ಸರ್ವಾರ್ಥ ಫಲಪ್ರದಂ
ಸುಕೃತಾರ್ಯ ಸೇವೆಯೊಳಿರಿಸಿ ಸಲಹೊಸರ್ವಸ್ಯಾತ್ಪರಂ೨

೨೬೬
ಶಿವನೆ ನಿಮ್ಮ ಚರಣವನ್ನು ಭುವನದೊಳಗೆ ತೋರಿ ನನ್ನ
ಭವಗಳನು ಖಂಡಿಸೆಂದು ಬಂದು ಬೇಡಿದೆ ಪ
ಅರುಹಿನೊಳಗೆ ಇರಿಸಿಯೆನ್ನ ಮರವೆಯನ್ನು ಅಳಿಸೊಮುನ್ನಾ
ಪರಮ ನೀನೆಯಾಗಿಯಾ ನಿಜದರುಹ ತೋರಿಸೈ ೧
ಅಣುವಿನೊಳಗೆ ಅಣುವೆಯಾದ ಪ್ರಣವ ಜ್ಯೋತಿಯನ್ನು ತೋರೊ
ತ್ರಿಣೆಯ ನೀನೆಯಾದಡೆ ನಾಂ ಪ್ರಣಿತನಾಗುವೇ ೨
ಮೂರು ಐದರಿವುಗಳನ್ನು ಮೀರಿಹೋಗುವಂಥ ಮನವಾ
ನಾರಿಕೈಯೊಳ್ ಕೋಟ್ಯಾತಕಿಂತು ನಟಿಸುತಿರುವಿಯೋ ೩
ಪಾರುಗಾಣಿಸಯ್ಯ ನೀ ಸಂಸಾರ ಶರಧಿಯನ್ನು ಶಂಭು
ಕೋರಿಕೆ ಈಡೇರಿಸಯ್ಯ ಅಪಾರಲಿಂಗವೇ ೪
ಪರಮ ತತ್ವೋಕ್ತಾಧಿಕಾರಿ ಸುರಮುನೀಂದ್ರಾಕಾಶಪತಿ
ಗುರುವು ತುಲಶಿರಾಮನೆ ತ್ವಚ್ಚರಣ ಶರಣಯ್ಯ೫

೩೨೮
ಶುಕ್ರವಾರ ಕೇಶವನ ಭಜನೆ ಮಾಡಬೇಕೊ ನಮ್ಮ
ಚಕ್ರಧಾರಿಯನ್ನು ಬಿಡದೆ ನೋಡಬೇಕೊ ಪ
ಚಕ್ರಧಾರಿಯಾಗಿ ಸಕಲ ಚಕ್ರವರ್ತಿಗಳನು ಗೆದ್ದ ಆ
ಕ್ರುರಗೆ ತಾ ವರನಿತ್ತು ನಿತ್ಯಾನಂದ ತ್ರಿವಿಕ್ರಮನನ್ನು ಅ.ಪ
ಅಪ್ರಾಕೃತಮಾದ ವೈಕುಂಠನಾಥ ರಂಗಾ ಜಯ ಜಯ
ಕ್ಷಿಪ್ರದಿಂದಾ ಭಕ್ತರಿಗೊಲಿಯುವಡೋಪಪತ್ರಂಗಾ
ಅಪ್ರಮೇಯ ಅಚಲನಾನು ಆರೂಢರಿಗಾಧೀನವಿದಹುದೊ
ನಿತ್ಯಾನಂದನೆ ಮುರಳೀಧರ ಗೋಪಾಲ ಜನಾರ್ದನ ಸತ್ಯಬ್ರಹ್ಮವೋ ೧
ದಾಸದಾಸರಿಗೆ ದಾಸನಾಗಬೇಕೊ ಕೆಟ್ಟ
ವೇಷ ಭಾಷೆ ದುರ್ದೋಷಗಳು ವೋಗಬೇಕೊ
ಬ್ಯಾಸರಾಂತಕಮಾದ ಶ್ರೀಮದ್ದೇಶಿಕಾ ಶ್ರೀತುಲಸಿರಾಮಾ
ನಾಸಿಕಾಗ್ರನಿವಾಸನೆಂದು ನಂಬಿ ನಾರಾಯಣನಂ ಬಿಡದೆ ೨

೨೫೩
ಶ್ರೀಮತೇ ಶ್ರೀ ಭಾಷ್ಯಕರಾಯನೇ
[ಮಾಮವ] ದೇವಾ ಕರುಣಿಸು ಮಹರಾಯನೇ ಪ
ಮಂತ್ರ ರಹಸ್ಯದಿ ಜ್ಞಾನ ತ್ರಯಂಗಳ
ನಿಂತು ನೀ ಕೃಪೆ ಮಾಡಿದೇ ಅ.ಪ
ಪರಿತೋಷದಿಂ ಬಂದು ಸಕಲಾನು ಭವನಾಗಿ
[ವರ]ತತ್ವದುಯ್ಯಾಲನಾಡಿದೆ
ಭರಗೈದು ಬಂದಿಲ್ಲಿ
ಪರತತ್ವವನು ಗೂಡಿದೇ ೧
ಸಿರಿಮಾತೇ [ಮೂಲಕ]
ಹರಿಯಾಜ್ಞೆಯನುಗೊಂಡು
ಪರಮಭಕ್ತರಿಗೆಲ್ಲಾ ಪ್ರತ್ಯಕ್ಷವಾದಂಥಾ
ಪರಮಪದವಿ ಮಾಡಿದೇ ೨
ಯದುಶೈಲವಾಸದೊಳಧಮರಾದವರಿಗೆ
ಸುಧೆಯ ಸುರಿದು ತೋರಿದೆ
ಸದುಪಾಯದಿಂ ಬಂದು ಸರ್ವಸ್ವತಂತ್ರದೊ
ಳಿದು ನೋಡೆನುತ ಸಾರಿದೆ ೩
ಪರಕಾಲಗುರು ಸರ್ವತಿರುಮಳಿಶಯ್ಯಾಳ್ವಾರೆಂ
ಬೆರುಮಾನರಡಿಯಾದೆನೈ
ಗುರುಕುಲದೊಳಗೆನ್ನ ಕರೆದಿತ್ತ ಹರಿನಾಮ
ನುಡಿಯದೆ ನಾ ಹೋದೆನೈ ೪
ಅದ್ವೈತ ಕುಲವನ್ನು ಪರಿಶೋಧಿಸಿ ಬಿಟ್ಟು ಶ್ರೀ
ಮದ್ರಾಮಾನುಜಾಚಾರ್ಯನೇ
ಮದ್ಗುರುವಾದ ಶ್ರೀತುಲಶೀರಾಮದಾಸ
[ರೈ ದಾಸಕುಲತೂರ್ಯರೈ] ೪

೩೨೯
ಸತ್ಸಂಗದೊಳಗಿರಿಸೋ ಮಮದೇವ ಆಹ
ಮತ್ಸರ್ವವ್ಯಾಪೀಶ ತ್ರಿಗುಣಪ್ರಭಾವಾ ಪ
ನಿಸ್ಸಂಗ ನಿರ್ಮೋಹ ನಿಶ್ಚಲಾತ್ಮಕ ಪಾದ
ತತ್ಸೇವೆಯೊಳಗಿರಿಸೊ ಕರುಣ ಪ್ರಭಾವಾ ೧
ಅಧಮರಾಶ್ರಯದೊಳಗೆ ಅಧಿಕನಾಗಿರುತಿರುವೆ
ಇದು ಬಿಡಿಸಿಯೆ ಪರಮಪದದೊಳಗೆ ಯಿರುವಾ ೨
ನಿಜಪದಾಶ್ರಯನ ಮಾಡೊ ಭುಜಗಾಸನನೆ ರಂಗಾ
ಭಜನೆಯೊಳಗಿರುತಿರಿಸು ಶ್ರೀ ತುಲಶಿರಾಮಾ ೩

೩೩೦
ಸಮಾಧಿಯೊಳು ನೋಡೊ ನಮ್ಮವ
ರಮಾಪತಿ ನಿನ್ನೊಳಗಿರುತಿಹನೂ ಪ
ನಮಾಮಿ ನಾರಾಯಣಂ ಬಿಡದೆ
ಮಮೇಕ ಶರಣಂಬೆನ್ನುತಲೀ
ಉಮಾಪತಿ ಗುಣ ನೀನಹುದೆನುತ ೧
ಪರಂಧಾಮನೊಳು ಬೆರೆದಿರು ಕಂಡ್ಯಾ
ನಿರಂತರಮಭ್ಯಾಸದೊಳೂ
ಗುರುಂದೇಹಿಯೆಂದೆನ್ನುತ ಅನುದಿನ ೨
ವಾಣಿಯ ಪತಿ ಗುಣಹಾರಾ ತ್ರಿ
ಗುಣಾಕಾರಾ ಅಸ್ಮದ್ದೇಶಿಕನೂ
ಕಾಣಿರಿ ತುಲಸೀರಾಮನೆ ನಿರ್ಗುಣ ೩

೨೮೯
ಸಾಕೆಲೊ ಶ್ರೀರಂಗನಾಥ ಲೋಕದಾಟವೂ ಪ
ಬೇಕು ನಿನ್ನಪಾದ ಭಜನೆಯೇಕದಾಟವೂ ಅ.ಪ
ಕಾಕು ಮನುಜರೊಡನೆಯೆನ್ನಾ ನೂಕಲ್ಯಾತಕೋ ನೀ
ನೇಕನಾಥನೆಂಬೊ ಬಿರುದು ಬೇಕು ಮಾಡಿಕೊಳ್ಳೊ ೧
ಅಂಧಕಾರವಾಧೀತಲ್ಲೋ ಚೆಂದವೇನೆಲೊ ನಾ
ನೊಂದೆನಲ್ಲೋ ಬಂದು ಕಾಯೊ ಇಂದಿರಾಪತಿ೨
ಆರುಗಿರಿಯ ದಳದ ತುದಿಯೊಳಿರುವೊ ಶ್ರೀಗುರು
ದಾರಿ ತೋರೋ ತುಲಶೀರಾಮ ದಾಸದಾಸನೂ ೩

೩೩೧
ಸಾಧು ನೀನಾಗೆಲೊ ಸ್ವಾಮಿ ತಾ ಕಾಣುವಾ ಪ
ನಾದಬಿಂದುಕಳೆ ಶೋಧಿಸಿ ಮೇದಿನಿ ಅ.ಪ
ಎಂದಿಗೆ ನಂದಿ ನಾನೊಂದುವೆನೆಂದು ನೀ
ಸಂದೇಹ ಸಂವರಿಪನೊಲಿದು ತಾ ೧
ತಾನಾದರೆ ತನ್ನದೇನು ಜಾಣ ತಾ ನೋಡುತಂ
ಪ್ರಾಣನಾಥ ನೀನೆಂದಾಡುತಂ ಪಾಡುತ ೨
ವಿಶ್ವದೊಳು ರಾಜಿಪ ಸಸ್ವರೂಪಾ ಗುರು
ಅಸ್ಮದಾರ್ಯ ತುಲಸಿರಾಮದಾಸನಿತ್ತ ೩

೨೯೦
ಸೀತಾಪತೇ ರಘುನಾಥ ದಯಾಳೋ ಪ
ಆ ತೆರ ಚರನೂಕೈ ಪ್ರೀತಿಯೊಳಿರಿಸೈ
ಮಾತಾಪಿತ ಸರ್ವ ಭೂತಾನಿ ಅರಸೈ ೧
ಪಾಮರ ಹೊಕ್ಕಿಹ ಮಾಯಾ ನೀ ನೋಡೈ
ಕಾಮಜನಕ ರಂಗಾ ಬೇಗೆನ್ನ ಕೂಡೈ ೨
ದಾಸ ತುಲಶೀರಾಮಾ ದೇಶಿಕ ತುಮಜೀ
ನೇಷಾ ಪ್ರಸಾದೇ ತದ್ವಾಶೀಯಾಹಮ ಜೀ ೩

೩೩೨
ಸ್ಮರಣೆ ಮಾತ್ರದಿ ಸ್ವತಂತ್ರ ದೊರಕುವುದು
ಜಗದೊಳಗೆ ಶ್ರೀಹರಿ ಸ್ಮರಣೆ ಪ
ಸ್ಮರಣೆ ಮಾತ್ರ ಸ್ವತಂತ್ರವೆಂದರೆ
ಪರಮ ಭಗವದ್ಗೀತೆ ಅಪ್ಪಣೆ
ಕರುಣಾಸಾಗರ ದಧಿಯಚೋರನೂ
ಶರಣುಪಾರ್ಥಗೆ ಅರುಹು ಮಾಡಿಹ ೧
ಸುಲಭದಿಂದಲಿ ಶ್ರವಣಮನನಾಗೀ ಜಗದೊಳಗೆ ನಿನಗೆ
ಫಲಿತವಾಗೊ ನಿಧಿ ಧ್ಯಾನಾಗೀ
ಕೊಲುಮೆತಿತ್ತಿಯನೂದಲಾಗುವ
ಫಲವು ಕಂಡು ಕಾಣದಿರುವೆಯೊ ಕಲೆಯ ತೊಟ್ಟನು ನೀ
ಗಲಾ ಪರಸುಳುಹಿನೊಳಗೆ ಹೊಕ್ಕಿ ಮಾಡೊ ೨
ಬೆಂಗಳೂರಿಗೆ ಪೋಗಿ ನಿಂದಲ್ಲಿ ವೋ ಮಾಯಜೀವಾ
ಮಂಗಳಾಂಗ ಶುಭಾಂಗಣದಲ್ಲಿ
ತಂಗಿ ತಾನೆ ನಿಮಿಷ ನಿಮಿಷಕೆ
ಸಂಗಮೇಶ್ವರನಾಗಿ ನಿಜದಾ
ಬಂಗೆಲೆಯೊಳಗಿರುವ ತುಲಶೀರಾಮತಾ ನಿಜಲೀಗನೇಳಿದ ೩

೩೩೩
ಹರಿಹರ ಬ್ರಹ್ಮನೆ ನಾನಾಂತಿ ನಿಜದಲು
ಹೊಂದಿಲ್ಲದೆ ನೀ ಕುಂತೀ ಪ
ಪರಮನು ಕೇಳಿದರೇನಂತೀ ಕೆಟ್ಟ
ನರಕದೊಳಗೆ ಯಮಬಾದಂತೀ ಅ.ಪ
ಅಜನನು ಬೆರೆಯಲು ಬೇಕಂತೀ ಆದು
ಭಜನೆಗೆ ಬಾರದು ಯಾಕಂತೀ
ನಿಜವೊಂದಿಲ್ಲದೆ ನೀಕುಂತೀ ಆದ
ಭಜಿಸಿ ನೋಡದೆ ಸುಮ್ಮನ್ಯಾಕ್ಕುಂತೀ ೧
ಸಾಧನೆ ಮಾಡುವೆ ಹೀಗಂತೀ ನಿಜ
ಬೋಧೆಯಿಲ್ಲದೆ ಯಾಕೀ ಭ್ರಾಂತೀ
ಭೇದಿಸುವನು ಸೂರ್ಯನಕಾಂತಿ ನಿಜ
[ದಿಂದ]ತುಲಸಿರಾಮನೆ ಗುರು ವೇದಾಂತಿ ೨

೨೯೧
ಹಿಡಿಹಿಡಿಕೈಯ್ಯ ಬಿಡಲೇತಕೆ ಕೇಳೊ ಜೀಯಾ ಪ
ಒಡೆಯನಲ್ಲವೆ ನಿನ್ನ ಅಡಿಗಳೆರಡಕ್ಕೆನ್ನ
ಮುಡಿಯನಿಡುವೆನೆಲ್ಲೊ ಸುಡಲಿ ಜನ್ಮವು ಬಿಡದೆ ೧
ಆದಿರೂಪನೆ ಬಾರೊ ಅಚ್ಚುತಾದಿಯ ತೋರೋ
ಶ್ರೀಧರ ನಾರಾಯಣನೆ ಬೋಧಿಸಬೇಕೋ ಬಿಡದೆ ೨
ವಾಸವಾನುತ ಹರಿದಾಸ ತುಲಸಿರಾಮ
ದೇಶಿಕನಾದ ಪರಮಾತ್ಮನೆನಾ ಕೈ ಬಿಡದೆ ೩

ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಕಂದನ
೨೪೪
ಅಮ್ಮನಿಮ್ಮ ಮನೆಗಳಲ್ಲಿ ನಮ್ಮ ಕಂದನ ಕಾಣರೇನೆ ಪ
ಸುಮ್ಮನೆ ಮಲಗಿರುಯೆಂದು ಗಮ್ಮನೆ ನಾ ನೀರಿಗೋದೆ
ಈಮಹೀಪಾಲ ಶ್ರೀರಂಗಾ ಗಮ್ಯವಾಗಿ ಹೋದ ಕಣೇ ೧
ನಿದ್ರೆಯ ಮಾಡುತ್ತಲಿದ್ದೂ ಕದ್ದು ಪೋದಾ ನಮ್ಮ ರಂಗಾ
ಇದ್ದ ಮಾತಂತಿರಲಿ ಎನ್ನ ಮುದ್ದು ಕಂದಾ ಪೋದಾಕಾಣೆ ೨
ಕದ್ದು ಬೆಣ್ಣೆ ಮೆದ್ದನೆಂದು ಸುದ್ದಿಯತಂದಾನು ಗುರುವೂ
ಗೆದ್ದು ತುಲಶಿರಾಮಾದಾಸಾರಿದ್ದು ಪೋದಾರಂತೆ ಕಣೇ ೩

ಹಾಡಿನ ಹೆಸರು :ಅಮ್ಮಾ ನಿಮ್ಮ ಮನೆಗಳಲ್ಲಿ ನಮ್ಮ ಕಂದನ
ಹಾಡಿದವರ ಹೆಸರು :ಶೈಲಜಾ ಶ್ರೀರಾಮ್ ಭಟ್
ರಾಗ :ಮಧುವಂತಿ
ತಾಳ :ರೂಪಕ ತಾಳ
ಸಂಗೀತ ನಿರ್ದೇಶಕರು :ಶ್ರೀಲತಾ ಆರ್. ಎನ್.
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

ಎಂದಿಗೊ ಕಂದನ ಪಾಲಿಸುವದು
(ಉ) ಆತ್ಮನಿವೇದನಾ ಕೃತಿಗಳು
೨೬೮
ಎಂದಿಗೊ ಕಂದನ ಪಾಲಿಸುವದು ಇನ್ನೆಂದಿಗೊ ಪ
ಅಂದಿನಿಂದಲಿ ನಿನ್ನ ಸುಂದರ ಸೇವೆಗೆ
ಬಂದು ಬೇಡುವೇನೋ ಮುಕುಂದ ಮಾಧವಾ ೧
ಸಾಧು ಸಜ್ಜನರೊಳು ಭೇದವಳಿದು ನಿಜ
ಪಾದವ ಕಾಣುವ ಬೋಧೆ ಆನಂದ ೨
ವಾರವಾರ್ಚಿತ ಹರಿ ದಾಸ ತುಲಸಿರಾಮಾ
ದೇಸಿಕ ನಿನ್ನ ನಿಜ ದಾಸನಾಗುವುದು೩

ಹಾಡಿನ ಹೆಸರು :ಎಂದಿಗೊ ಕಂದನ ಪಾಲಿಸುವದು
ಹಾಡಿದವರ ಹೆಸರು :ರಿತೀಶ ಪದ್ಮನಾಭ
ರಾಗ :ಕೇದಾರ
ತಾಳ :ಜಪ್‍ತಾಲ್
ಸಂಗೀತ ನಿರ್ದೇಶಕರು :ಶಕುಂತಲಾ ನರಸಿಂಹನ್
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏನು ಬರೆದೆಯೊ ಬ್ರಹ್ಮನೆ
೨೬೯
ಏನು ಬರೆದೆಯೊ ಬ್ರಹ್ಮನೆ
ನನ್ನಣೆಯಲರಿಯದು ಸುಮ್ಮನೇ ಪ
ನೋನವನು ಹೋಗಾಡಿ ಜನರೊಳು
ಹೀನವಾಗುವ ಹಾಂಗೆ ಹಣೆಯೊಳು ಅ.ಪ
ಹಿಂದೆ ಮಾಡಿದ ಕರ್ಮವು ಯಿದ
ಕ್ಕೊಂದು ಪಾಯದ ಮರ್ಮವೂ
ತಂದೆ ನೀನೆನಗಿಂದು ತೋರಲು
ನಿಂದು ಭಜಿಸುವೆ ಮಂದರೋದ್ಧರ ೧
ಪಾಪಗಳ ಹರನ್ಯಾರೆಲೊ
ಭೂಪದಶ ಅವತರಾನೇ
ಕೋಪಮಾಡದೆ ದಾಸಮಾಡಿದ |
ಪಾಪಗಳ ಪರಹರಿಸೊ ಬೇಗದಿ ೨
ಸಾಕುಮಾಡೆಲೊ ಶ್ರೀಹರಿ
ಲೋಕನಾಯಕ ಭವಹಾರೀ
ಕಾಕು ಬುದ್ಧಿಗಳನ್ನು ಬಿಡಿಸಲು
ಏಕ ಮನದೊಳು ನೆನೆವೆ ನಿಮ್ಮನೂ ೩
ಗುರುವು ತುಲಸೀರಾಮನೇ ಪರನು
ಗುರುವೆ ತ್ರಾಹಿತ ಪ್ರೇಮನೆ
ಧರೆಯೊಳಧಿಕ ಚೆನ್ನಪುರಿಯಾ
ದೊರೆಯ ಲಕ್ಷ್ಮೀನಾರಾಯಣಾ ೪

ಹಾಡಿನ ಹೆಸರು :ಏನು ಬರೆದೆಯೊ ಬ್ರಹ್ಮನೆ
ಹಾಡಿದವರ ಹೆಸರು :ವೀಣಾ ವಾಸುದೇವ, ನಳಿನಿ ಕಾಮತ್
ರಾಗ :ಶುದ್ಧಸಾರಂಗ
ತಾಳ :ಮಿಶ್ರ ಛಾಪು ತಾಳ
ಸಂಗೀತ ನಿರ್ದೇಶಕರು :ಕಾವೇರಿ ಶ್ರೀಧರ್
ಸ್ಟುಡಿಯೋ : ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಗಂಗಾಧರ ನಂಜುಂಡನೆ ಲಿಂಗಾ
೨೬೪
೨. ಈಶ್ವರ
ಗಂಗಾಧರ ನಂಜುಂಡನೆ ಲಿಂಗಾ ಭವ ಭಂಗ
ಗಂಗೋತ್ತಮಾಂಗಾ ಸಶುಭಾಂಗಾ ಎಚ್ಚರಿಕೆ ಪ
ಶಂಕರ ಶಿವ ಮಹದೇವನೆ ಕಿಂಕರ ಜನಪಾಲಾ
ವೆಂಕಟರಮಣಾಸಖ ನಿಜಾಂಕುಶ ನಿಜಲೋಲಾ ೧
ವೇದನುತಪಾದಾ ಪರವಾದಿ ನಿಜಬೋಧ
ಸಾಧುಮಣಿ ಕರುಣಿಸೊ ನಿನ್ನ ಸೇವಕನು ನಾನಾದೆ ೩
ಫಣಿಭೂಷನೆ ಪರಿಪಾಲಿಸೋ ತ್ರಿಣೆಯಾ ಕರಶೂಲಾ
ಗಣಪತಿಪಿತ ಅಣುದೈ ನೀತ್ರಿಗತ್ವರಿಪಾಲಾ ೩
ಇಂಕೀ ಪರಿನಿಂತಾ ಪರಚಿಂತೆಯೊಳಿರುವಂತೆ
ಸಂತೋಷವಗೈಸಿದ ಶಿವಗುರು ತುಲಶೀನೀನಂತೆ ೪

ಹಾಡಿನ ಹೆಸರು :ಗಂಗಾಧರ ನಂಜುಂಡನೆ ಲಿಂಗಾ
ಹಾಡಿದವರ ಹೆಸರು :ಅರ್ಚನಾ ಉಡುಪ
ರಾಗ :ದುರ್ಗಾ
ತಾಳ :ಕೆಹರವ ತಾಳ
ಸಂಗೀತ ನಿರ್ದೇಶಕರು :ಶಕುಂತಲಾ ನರಸಿಂಹನ್
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಜನನಿ ಜಾನಕೀ ನೀದಯಮಾಡೇ
೨೫೦
ಜನನಿ ಜಾನಕೀ ನೀದಯಮಾಡೇ
ಜಗದೀಶ್ವರ ನಾಯಕೀ ಪ
ಫಣಿವಿಲಾಸನ ಪ್ರೀಯೆ ಭಜಕರ
ಮನವಿಗಳ ನೀಕಾಯೆ ತಾಯಳೇ
ಪ್ರಣವರೂಪಳೆ ಪ್ರಣಮಿಸುವೆ
ತ್ರಿಣಯಸಖನಾರಾಣಿ ಸುಂದರೀ ೧
ಸರ್ವತಂತ್ರಳೆ ಸಾಕ್ಷರೂಪಿಣಿ
ದುರ್ಮದಾಂತಕಿ ದುಃಖದೂರಳೆ
ನಿರ್ವಿಕಲೆ ಗೀರ್ವಾಣೆ ಶುಭಕರಿ
ಉರ್ವಿಪಾಲಿಕಳಾದ ಸೀತೆಯ ೨
ಆದಿಶಕ್ತಿ ಅನಂತರೂಪಳೆ
ವೇದಮಾನಿನಿ ವಾದಿಭೀಕರಿ
ಪಾದಸೇವ ಕನಿಷ್ಟಮೊದಗಿಸೆ
ಭೂಧರಗೆ ನಿಜರಾಣಿ ವೈಭವೆ ೩
ರಂಗನಾಯಕಿ ರಾಧೆ ಶ್ರೀ ಜಯ
ಮಂಗಳಾಂಗಿ ಸಮೋದೆ ನಿಚ್ಚಲೆ
ಜಂಗಮಾರ್ಚಿತ ಗುರುವು ತುಳಸೀ
ಬೆಂಗಳೂರೊಳಗಿರುವ ಕಾರಣ೪

ಹಾಡಿನ ಹೆಸರು : ಜನನಿ ಜಾನಕೀ ನೀದಯಮಾಡೇ
ಹಾಡಿದವರ ಹೆಸರು :ಕವಿತಾ ಅರುದ್ರ
ರಾಗ :ಜನ ಸಮ್ಮೋದಿನಿ
ತಾಳ :ರೂಪಕ ತಾಳ
ಸಂಗೀತ ನಿರ್ದೇಶಕರು :ಶಕುಂತಲಾ ನರಸಿಂಹನ್
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ದುಗ್ಗಾಣಿಯು ದೊಡ್ಡದಲ್ಲಾ
೩೧೪
ದುಗ್ಗಾಣಿಯು ದೊಡ್ಡದಲ್ಲಾ ನಿನ್ನ
ಪೆಗ್ಗೆಗೆ ಯವಇನಾಳು ಹೊರಿಸ್ಯಾರು ಕಲ್ಲಾ ಪ
ಬಗ್ಗಿಸಿ ಆರೆಂಟು ನುಗ್ಗಿ ನೋಡಿ ಬರುವ
ಪೆಗ್ಗೆಯನಳಿದವರ ಅಗ್ಗದಿಂದಾಡಿದರು ಅ.ಪ
ಒಂದೆರಡು ಮೂರೆಂಬ ಅಂದವು ಗುರುವಿನೊಳು
ಚಂದದಿಂ ಕೇಳಿಕೊಳ್ಳೆಲೊ ಮಂಕುಜೀವಿ
ಮುಂದೀಗ ಬರುವಂಥ ದುಂದುಗಾರರ ಕಂಡು
ಕೊಂದುಹಾಕಲು ಚಂದ್ರಾಯುಧವ ಹಿಡಿದವಗೆ ೧
ಒಂಬತ್ತು ಗೇಟಿನಾ ಮೋಟದೊಳು ನೋಡಯ್ಯ
ಅಂಬಿಹರುಳುವಂತ ದುಂಬಿಗಳ ಕಾಟಾ
ಅಂಬಾರಿಯೇರಲು ನಂಬೀಗೆ ಕೊಟ್ಟಿರ್ಪ
ಶಂಭುನುತ ಶ್ರೀ ತುಲಸಿ ಕಂಬವ ಹಿಡಿದವಗೆ೨

ಹಾಡಿನ ಹೆಸರು :ದುಗ್ಗಾಣಿಯು ದೊಡ್ಡದಲ್ಲಾ
ಹಾಡಿದವರ ಹೆಸರು :ನಾಗಚಂದ್ರಿಕ
ರಾಗ :ನೀಲಮಣಿ
ತಾಳ :ಖಂಡಛಾಪು ತಾಳ
ಶೈಲಿ :ಖಂಡಚಾಪು
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಧ್ಯಾನಧಾರಣನಾಗಬೇಕಂತೆ
ಧ್ಯಾನಧಾರಣ ನಾಗಬೇಕಂತೆ ಪ್ರಪಂಚದೊಳಗೆ
ದೀನ ನಾನಾದೊಡೆ ಮುಖ್ಯ ಸಾಕಂತೆ ಪ
ಪ್ರಾಣ ಪಾನ ಸಮಾನ ವ್ಯಾನವು
ದಾನ ಹೀಗೆಂದೆಂಬೊ ಪಂಚಕ
ನೀನೆ ನಿನ್ನೊಳು ಹುಡುಕಿ ದಿವ್ಯ
ಜ್ಞಾನಗುರುಗಳು ತೋರಿಸಿದು ನಿಜ ೧
ಆಗ ನೀನದು ಕಾಣಬಹುದಂತೇ ಆಧ್ಯಾತ್ಮ ಸತ್ಯವು
ಯೋಗವೆ ನಿಜ ತಾಳಿಯಹುದಂತೆ
ಭಾಗವತಗಿದು ಮುಖ್ಯವೆನ್ನುತ
ಬಾಗಿ ನಡೆವ ಅವಿಜ್ಞನಿಗೆ ಅದು
ಭೋಗಿ ಭೂಷಣ ಸರ್ವಸಾಕ್ಷಿಸರಾಗ
ಮುದ್ರೆ ಸಮಾಧಿಹೊಂದುವ ೨
ಸ್ಮರಣೆ ನಿಂತೊಡೆ ಧ್ಯಾನಸಾಕಂತೇ ಅಭಯ ಪ್ರಸಿದ್ಧವು
ಕರಣ ನಿಗ್ರಹ ನಿನಗೆ ಬಹುದಂತೇ
ಧರಣಿ ಮದ್ಗುರು ತುಲಸಿರಾಮರ
ದಾಸರಪ್ಪಣೆ ಗುಳುಹಲಾತನ
ಚರಣ ಸೇವೆಯೊಳಿರುತಿಹುದೆ ನಿಜಪರಮ ಪದವಿದು ಸತ್ಯನಿತ್ಯವು ೩

ಹಾಡಿನ ಹೆಸರು :ಧ್ಯಾನಧಾರಣನಾಗಬೇಕಂತೆ
ಹಾಡಿದವರ ಹೆಸರು :ಫಯಾಜ್ ಖಾನ್
ಸಂಗೀತ ನಿರ್ದೇಶಕರು :ಪ್ರವೀಣ್ ಗೋಡ್ಖಿಂಡಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನಿನ್ನೊಳಗಿರಿಸೆನ್ನ ಚಿತ್ತ ಚೆಲ್ವ
೩೧೭
ನಿನ್ನೊಳಗಿರಿಸೆನ್ನ ಚಿತ್ತ ಚೆಲ್ವ
ಪನ್ನಗಶಯನ ಶ್ರೀ ಆದಿರಂಗಯ್ಯ ಪ
ಪರನನ್ನೊಳಗೆ ನಾ ಕಂಡು ನಿನ್ನೊಳಗೆ ನಾನೈಕ್ಯ
ಇನ್ನೆಂದಿಗಾಗುವುದೊ ಇನಕುಲದ ಮಣಿಯೆ ೧
ಎಂಟಾರರೊಳಗೆನ್ನ ಅಂಟಲೆಸಗೊಡಬೇಡ
ಭಂಟನಾಗಿರು ವೈಕುಂಠನಾಯಕನೆ ೨
ಕಾಕುಲದ ಕತ್ತಲೆಗೆ ನೂಕದಿರು ನೀಯೆನ್ನ
ಏಕನಾಯಕನೆ ಕೇಳಿದು ಸತ್ಯಸಿದ್ಧಂ ೩
ದೇಶಿಕಾಯೇನಮಃ ದಾಸನಗಿರುತಿರುವೆ
ದೋಷರಹಿತಾಗುರುವು ಶ್ರೀತುಲಶಿರಾಮಾ ೪

ಹಾಡಿನ ಹೆಸರು :ನಿನ್ನೊಳಗಿರಿಸೆನ್ನ ಚಿತ್ತ ಚೆಲ್ವ
ಹಾಡಿದವರ ಹೆಸರು :ಶ್ರೀಶುಕ
ಸಂಗೀತ ನಿರ್ದೇಶಕರು :ವಸಂತಾ ಪಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸಾಕೆಲೊ ಶ್ರೀರಂಗನಾಥ ಲೋಕದಾಟವೂ
೨೮೯
ಸಾಕೆಲೊ ಶ್ರೀರಂಗನಾಥ ಲೋಕದಾಟವೂ ಪ
ಬೇಕು ನಿನ್ನಪಾದ ಭಜನೆಯೇಕದಾಟವೂ ಅ.ಪ
ಕಾಕು ಮನುಜರೊಡನೆಯೆನ್ನಾ ನೂಕಲ್ಯಾತಕೋ ನೀ
ನೇಕನಾಥನೆಂಬೊ ಬಿರುದು ಬೇಕು ಮಾಡಿಕೊಳ್ಳೊ ೧
ಅಂಧಕಾರವಾಧೀತಲ್ಲೋ ಚೆಂದವೇನೆಲೊ ನಾ
ನೊಂದೆನಲ್ಲೋ ಬಂದು ಕಾಯೊ ಇಂದಿರಾಪತಿ೨
ಆರುಗಿರಿಯ ದಳದ ತುದಿಯೊಳಿರುವೊ ಶ್ರೀಗುರು
ದಾರಿ ತೋರೋ ತುಲಶೀರಾಮ ದಾಸದಾಸನೂ ೩

ಹಾಡಿನ ಹೆಸರು :ಸಾಕೆಲೊ ಶ್ರೀರಂಗನಾಥ ಲೋಕದಾಟವೂ
ಹಾಡಿದವರ ಹೆಸರು :ಶ್ರೀನಾಥ ಶೆಣೈ
ರಾಗ :ಮಧುಕೌಂಸ್
ತಾಳ :ಮಿಶ್ರ ಛಾಪು ತಾಳ
ಸಂಗೀತ ನಿರ್ದೇಶಕರು :ಕಾವೇರಿ ಶ್ರೀಧರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ