Categories
ರಚನೆಗಳು

ಪ್ರದ್ಯುಮ್ನತೀರ್ಥರು

ವ್ಯಾಸರಾಜರ ಗುರುಗಳಾದ
೩೯೨
ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು ಪ
ಅಂಜಿಸೊದ್ಯಾಕಘ ಭಂಜಕನೆನಿಸಿ ನೀ
ಕಂಜನಾಭನ ಭಕ್ತಿ ಪಂಜರದೊಳಿಡದೇ ಅ.ಪ
ಹೊಂದದೀ ನರಜನ್ಮವ ಇಂದಿರೇಶನು ಎಲ್ಲ
ಹೊಂದೀ ಹೊದರಿಯದ ಮಂದಮತಿಯನು ೧
ಬಿಂಬ ಮೂಡಲು ಪ್ರತಿಬಿಂಬ ಮಾಡುವುದೆಂದು
ಶಂಬರಾರಿಯ ಪಿತನ ನಂಬದ ಢಂಬಿಯೊಳಂ
ಜಿಸೋದ್ಯಾತಕಯ್ಯಾ೨
ಶ್ರೀ ನರಹರಿಪಾದ ಧ್ಯಾನವ ಮಾಡದೆ
ಬುದ್ಧಿ ಹೀನನಾದವಗೆ ಸುಜ್ಞಾನ ಕೊಡದೆ ಸುಮ್ಮನಂ
ಜಿಸೋದ್ಯಾತಕಯ್ಯಾ ೩

ನುಡಿ-೪: ತತ್ವೇಶರೆಲ್ಲರೂ
ಮಹಾಲಕ್ಷ್ಮಿ
೩೭೭
ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ
ಸುಮ್ಮನೆ ಬಿಡುವದು ಸಮ್ಮತವೇ ನಿನಗೆ ಪ
ಹೆತ್ತ ಬಾಲರು ಮಂದಮತಿಗಳಾದರೆ ತಾಯಿ
ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ ೧
ನಿಮ್ಮ ಮಾತಿಗೆ ಹರಿ ಸಮ್ಮತನಾಗುವ
ಕುಮತಿಗಳೆಣಿಸದೆ ರಾಮ ಮೂರುತಿ ತೋರೆ೨
ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ
ನಂದ ಕಂದನ ಪಾದ ಪೊಂದಿರುವಂತೆ ಮಾಡೆ ೩
ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ
ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ ೪
ಎನ್ನಲಿರುವ ಹೀನರೋಡಿಸಿ ಬೇಗ
ಪನ್ನಗಾಚಲವಾಸ ಶ್ರೀ ನರಹರಿ ತೋರೆ ೫

ಆತ್ಮಶೋಧನೆ
೩೯೭
ಎಲ್ಲರಲ್ಲಿಹ ಲಕ್ಷ್ಮೀನಲ್ಲ ಪೊರೆಯೊ
ನಿಲ್ಲದಿಹ ಮನವ ನಿನ್ನಲ್ಲೆ ಇರಿಸೋ ಪ
ಇಲ್ಲಿ ಯಾರಿಲ್ಲೆಂದು ಮೆಲ್ಲನೆ ಪರಸತಿಯ
ಕಳ್ಳತನದಲಿ ಕೂಡಿ ಸುಳ್ಳು ಹೇಳಿ
ಎಲ್ಲ ಕಡಿ ದಿಗ್ದೇವ ತತ್ವೇಶರಲ್ಲಿರುವ
ಪುಲ್ಲನಾಭನೆ ನಿನ್ನ ವ್ಯಾಪಾರವರಿಯೆ ೧
ಅರುಣನುದಯದಲೆದ್ದು ಪರರ ವಂಚನೆಗಾಗಿ
ಹರಿವೊ ಜಲದಲಿ ಮುಳುಗಿ ಬೆರಳೆಣಿಸಿ
ಅರಿಯದೆ ದ್ರವರೂಪ ಮನರೂಪ ಮೊದಲಾದ್ದು
ಅರಿಷಟ್ಕರಿಂದ ಪರರೊಡವಿಯನು ಬಯಸುವೆನು ೨
ಅಂಗಡಿಯ ತೆರದಿ ನಾನ್ಹಿಂಡುಗೊಂಬೆಗಳ್ಹೂಡಿ
ಅಂಗ ಚಲಿಸದೆ ಮೂಗು ಹಿಂಡುತಲೆ ಕುಳಿತು
ಅಂಗಜ ಜನಕ ಶ್ರೀ ನರಹರಿಯ ಧ್ಯಾನಿಸದೆ
ಭಂಗಕೆ ಗುರಿಮಾಳ್ವ ಮಣ್ಣು ಚಿಂತೆಪೆನೊ ೩

ಭಗವಂತನ ಸಂಕೀರ್ತನೆ
೩೬೪
ಏನಿದು ರೂಪ ಶ್ರೀ ನರಹರೆ ಪ
ಏನಿದು ರೂಪವೋ ಮನಸಿಜನಯ್ಯನೇ
ನೆನಿಸಿದವರ ಹೃದ್ವನಜದೊಳ್ ಮೆರೆವುದೂ ಅ.ಪ
ಮಾರನ ಪಿತನೆಂದು ಕರೆಸಿ ಕೊಂಬುವನಿಗೆ
ಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು ೧
ಪರಮ ಶಾಂತನೆಂದು ಮೆರೆಯುವೀ ಶ್ರುತಿಯೊಳು
ಕ್ರೂರ ರೂಪದಿಂದ ನರರಿಗೆ ತೋರ್ಪುದು ೨
ವರ ವೈಜಯಂತಿಯ ಕೊರಳೊಳ್ ಧರಿಸುವಗೆ
ಕರುಳ ಹಾರವ ಧರಿಸಿ ವರ ಶಬ್ದ ಮಾಳ್ವೊದು ೩
ನಾನೇ ದೇವರು ಮತ್ತು ಅನ್ಯರಿಲ್ಲೆಂಬುವ
ಕನಕ ಕಶ್ಯಪ ಮುಖ್ಯ ದನುಜರ ಸೀಳ್ವುದು ೪
ತರಳ ಕರದಾಕ್ಷಣದಿ ವರ ವೈಕುಂಠವ ಬಿಟ್ಟು
ನರಹರಿ ಎನಿಸಿ ನೀ ಭರದಿ ಬಂದಿರುವುದು ೫

೩೯೯
ಏನು ಮಾಡಲೀ ಮನ ಮಾತು ಕೇಳದೇನು ಮಾಡಲಿ
ಶ್ರೀ ನರಹರಿಯ ನೆನೆಯದೆ ಕಂಡ ಹೀನ ವಿಷಯದಲ್ಲಿ
ಶ್ವಾನನಂತೆ ಪೋಪರೇನು ಪ
ಸಾಧು ಸಜ್ಜನರ ಬೋಧನೆಯ ಜರಿಸಿ
ಮಾಧವನೆ ನಿನ್ನ ಪಾದಕೊಯಿರಿ ಮಾಳ್ಪೊದೇನು ೧
ಕಾಯ ಬಾಂಧವರ ಮಾಯಪಾಶಕ್ಹಾಕೆ
ತೋಯಜಾಕ್ಷ ಎನ್ನ ಬಾಯ ಬಿಡಿಸೊರೈಯ್ಯ ೨
ಸೊಕ್ಕಿನಿಂದ ಗಜ ಸಿಕ್ಕಿಬಿದ್ದು ನೈಜ
ದಿಕ್ಕುಕಾಣದಂತೆ ಸಿಕ್ಕೆ ವಿಷಯದಲ್ಲಿ ೩
ತಂದು ತಂದು ಗೋವಿಂದ ನಿನ್ನಲಿಡೆ
ಸಂದುಗೊಂಡು ಬಿಡಿಸಿಕೊಂಡು ಪೋಪುದೈಯ್ಯ ೪
ದೇಹಗೇಹದಲ್ಲಿ ಸ್ನೇಹ ಇಡಿಸಿ ಕೆಡಿಸಿ
ಶ್ರೀ ಹಯವದನ ಮೋಹಪಾಶಕ್ಹಾಕೋದೇನು ೫
ಸಾಕು ಜನ್ಮ ಮುಂದೆ ವಾಕು ಕೇಳೋ ತಂದೆ
ಬೇಕು ಪಾದ ಒಂದೇ ಸಾಕಬೇಕೊ ಇಂದೆ ೬
ಹೀನಬುದ್ಧಿಬಿಡಿಸಿ ಜ್ಞಾನ ನಿನ್ನಲಿರಿಸಿ
ಗಾನಲೋಲ ಕಾಯೋ ಶ್ರೀ ನರಹರಿಯೆ ೭

೩೯೮
ಏನುಗತಿ ಏನುಗತಿ ಇನಕುಲೇಶ
ಹೀನ ವಿಷಯದಿ ಮನ ಶ್ವಾನನಂತಿಟ್ಟ ಎನಗೇನು ಪ
ಮೂರು ಗುಣಗಳಿಂದ ಮೂರು ತಾಪಗಳಿಂದ
ಮೂರು ಈರೆರಡೊಂದು ಮದಗಳಿಂದ
ಮೂರು ಐದಾರಿಂದ ಮರೆತು ತನು ಮೂಲಗಳ
ಸ್ಮರಿಸದೇ ನರಹರಿಯ ನರಕಕ್ಕೆ ಗುರಿಯಾದ ಎನಗೆ ೧
ಅತಿಥಿಗಳಿಗನ್ನ ಬಲು ಹಿತದಿ ಕೊಡದೆಲೆ ಪರ
ಸತಿಯ ಸಂಗದಿ ನೆಲಸಿ ಹಿತವ ಮರೆದು
ರತಿಪತಿಪಿತ ನಿನ್ನ ಸ್ತುತಿಸದೆ ಮತಿಗೆಟ್ಟು
ಕ್ಷಿತಿಯೊಳಗೆ ನಾನೊಬ್ಬ ಯತಿಯಂತೆ ಚರಿಪ ೨
ಇನ್ನಾದರೆನ್ನ ಪಾವನ್ನ ಮಾಡಲು ನಿನ್ನ
ಘನ್ನ ಉಪಕೃತಿ ಮರಿಯೆ ಶ್ರೀ ನರಹರಿಯೆ
ನಿನ್ನ ಪೊರತನ್ಯರನು ಮನ್ನಿಸುವರ ಕಾಣೆ
ಬೆನ್ನ ಬಿದ್ದೆನೊ ದಯವನ್ನು ಮಾಡೆಲೋ ಬೇಗ೩

ವ್ಯಾಸರಾಜರ ಗುರುಗಳಾದ
೩೯೩
ಕರವ ಪಿಡಿಯೋ ಬ್ರಹ್ಮಣ್ಯಾ ಗುರುವೇ
ಕರವ ಪಿಡಿಯೋ ಮುನ್ನ ದುರಿತ ನೋಡದಲೆನ್ನ
ಪರಮ ನಿರ್ಮಲ ಜ್ಞಾನ ತ್ವರಿತದಿಂದಿತ್ತೆನ್ನ ಪ
ದೂರದೂರದಲಿದ್ದ ನರರು ನಿಮ್ಮಯ ಚರಣ
ಸೇರಿ ಸೇವೆಯ ಮಾಡೆ ಕರುಣದಿ ಕಾಯ್ವೆ ನೀ ೧
ದಿಟ್ಟತನದಿ ಭಕ್ತಿ ಇಟ್ಟು ಸೇವಿಸಲಾಗ
ಕುಷ್ಟಾದಿ ರೋಗಗಳಟ್ಟುವೀ ಬೇಗನೆ ೨
ಪರಿ ಪರಿ ಭವದೊಳು ತಿರುಗಿಸದೆ ಎನ್ನ
ನರಹರಿ ಚರಣದ ಸ್ಮರಣೆಯನ್ನೆ ಇತ್ತು ೩

ನುಡಿ-೩ : ಭೂತರಾಜರೆಂಬೋರು
೩೯೦
ಕರುಣಿಸೊ ಶ್ರೀ ಗುರುರಾಜ
ಬರದ್ಯಾಕೆ ಎನ್ನೊಳು ದಯ ಪ
ದಯಮಾಡೊ ಶ್ರೀ ಗುರುರಾಜ
ಹಯವದನನಿಗತಿ ಪ್ರಿಯ ಅ.ಪ
ಒಲಿಸಾದೆ ವಿದ್ಯೆಗಳನ್ನು ಬಾಲತನದಿ ಬಹುಕಾಲ ಕಳೆದೆ
ಕುಲೀಲೆಗಳಲ್ಲಿ ಛಲವ್ಯಾಕೆ ಎನ್ನೊಳು ಬಲ್ಲಿ ೧
ಜ್ಞಾನರಹಿತ ಪ್ರಾಯದಿ ಮಾನಾಪೇಕ್ಷೆಯನೆ ಮಾಡಿ
ಮೌನಿ ವೇಷವನೆ ಧರಿಸಿ ಹೀನಾಚರಣೆಯಲ್ಲಿರುವೆ ೨
ಪತಿತಾಗ್ರಣಿಯು ನಾ ಬಲ್ಲಿ ಪತಿತಪಾವನ ನೀ ಬಲ್ಲೆ
ಗತಿಪದ ಮತಿಯನಿತ್ತು ರತಿಪತಿಪಿತನ ತೋರಿ೩
ಬಲ್ಲವರನು ರಕ್ಷಿಪುದು ಅಲ್ಲ ಬಿರುದು ಘನವಾದ್ದು
ಅಲ್ಪನ ಪೊರೆಯಲು ನಿನಗೆ ಒಳ್ಳೆ ಕೀರುತಿ ಬರುವುದು ೪
ಸರ್ವಜ್ಞ ನಿನಗೆ ನಾನೆಂತೋ ಉರ್ವೀಭಾರನು ನಾ ಪೇಳ್ವೆ
ಪರ್ವ ಪಂಚಕಗಳ ಕಳೆ ಶ್ರೀ ನರಹರಿಯನೆ ಪೊಂದಿಸಿ ೫

ಗಣೇಶಸ್ತುತಿ
೩೬೩
ಕರುಣಿಸೋ ಗೌರೀಕರಜ ಪ
ಕರುಣಾಳು ಕ್ಷಿಪ್ರ ಮನದ
ತರುಣಾರ್ಕ ವಸನ ಕಾಯ ಬೇಗದಿ ಅ.ಪ
ಅರಿಪಾಣಿ ಕಾಯ ಜಾತ
ಅರಿವರ್ಗಗಳಿಗೆ ವಿಘ್ನವ
ತ್ವರದಲ್ಲಿ ಇತ್ತು ಶುಭಕೆ ಮಾರ್ಗವ ೧
ನರಭಾವದಿಂದ ನಿನ್ನ
ಮರೆತರೆ ನೀನು ಎನ್ನನು
ಜರಿದರೆ ಪೊರೆವೊರ್ಯಾರೊ ನಿರುತದಿ ೨
ಮರುದಂಶ ಮಧ್ವಮುನಿಯ
ವರಶಾಸ್ತ್ರ ಪೇಳ್ವ ಬುದ್ಧಿಯ
ವರವಿತ್ತು ಬಂದ ವಿಘ್ನವ ಕಳೆಯುತ ೩
ವರಪಾಶಪಾಣಿ ಎನ್ನ
ದುರಿತಾಶಪಾಶ ಛೇದಿಸಿ
ಹರಿ ಭಕ್ತಿ ಪಾಶದಿಂದ ಬಿಗಿಯುತ ೪
ಕರಿವಕ್ತ್ರಶಂಕೆ ಎಂಬ
ಕರಿಯನ್ನು ಅಂಕುಶದಲಿ
ಮುರಿಬಿಂಕ ಶಂಕಿಸದೆ ವಿದ್ಯವ ೫
ಮುರವೈರಿ ವಾಯು ಶಂಭೂ
ಸಿರಿ ವಾಣಿ ಚಂಡಿಕಾದ್ಯರು
ನಿರುತದಿ ಇದ್ದು ವರವ ಬೀರ್ವರು ೬
ನರವಾಹ ವಾಯುಜರಿಗೆ
ಸರಿ ಎಂಬೋ ಜ್ಞಾನದಿ
ಶ್ರೀ ನರಹರಿ ಪಾದ ತೋರಿ ಬೇಗನೆ ೭

೩೯೧
ಗುರುರಾಜರ ನಂಬಿರೋ ಸಾರುವೆ ನಾ
ಸಾರುವೆ ನಾ ಸಾರುವೆ ನಾ ಪ
ಗುರು ವಾದಿರಾಜರ ಚರಣ ಸ್ಮರಣೆಯಿಂದ
ದುರಿತ ರಾಶಿಗಳೆಲ್ಲ ಪರಿಹಾರವಾಗುವುದು ಅ.ಪ
ಕರುಣಾಸಾಗರರಿವರು ಸ್ಮರಿಪರಘ ಸ್ಮರಿಸದೆ ಪರತತ್ವವರಿದು
ಬಾರಿ ಬಾರಿಗೊದಗಿದಪಾರ ಸಂಶಯ
ದೂರಗೈಸಿ ಮುರಾರಿ ಚರಣವ ತೋರ್ಪ
ಸುರರಿಗೆ ಮರುತರೆನಿಪರು ಬರುವ ಕಲ್ಪಕೆ ೧
ಗುರು ವಾದಿರಾಜರೆಂಬ ಸುರತರು
ಇರುವುದು ಸೋದಾಪುರದಿ
ಅರಿತು ನಿರುತದಿ ಪರಮ ಭಕುತಿಯಲಿ
ಸೇರಿ ಸೇವೆಯ ಮಾಳ್ವ ಸುಜನಕೆ
ಬೀರುವರು ಪುರುಷಾರ್ಥಗಳನು
ಪಾರುಗಾಣರು ಸುರರು ಮಹಿಮೆಯ ೨
ಉಪಚಾರವಲ್ಲವಿದು ಶ್ರೀಪತಿಯಾಣೆ
ಗುಪಿತದಿಂದಿವರ ಮಂತ್ರ
ಜಪಿಸಿ ಭೂತರಾಜರೆಂಬೊರು
ತಾಪಹಾರಕರಾಗಿ ಸುಜನಕೆ
ತಪವ ಮಾಳ್ವರು ರುದ್ರ ಪದವಿಗೆ
ಶ್ರೀ ನರಹರಿ ಪಾದ ಇವರಲಿ ೩

ಪಲ್ಲವಿ : ಹಯವದನ
೩೬೫
ಜಲಜಾಕ್ಷ ಯಾಚಿಸುವೆ ಚಲುವ ಚರಣ ತೋರೋ
ಸುಲಭದಿ ಹಯವದನ ಪ
[ಶಶಿಯೊಲಿರುವದರಿಧರ] ಅಕ್ಷ ಸುಬೋಧ
ಪುಸ್ತಕಧರ ವಸುಮತಿ ರಮಣನೆ ನಿನ್ನ
ಸಾಸಿರ ನಾಮದಲಿ
ಸೋಸಿಲಿ ನಾ ಪ್ರಾರ್ಥಿಸುವೆ ೧
ವರವಾದಿ ಜಯದ ವಿಮುಕ್ತಿ ಪ್ರದಾತ
ಕಾಂತಿ ಸುಬುದ್ಧಿ ಸ್ಥಿರವನೆ ಅನುದಿನ ನಿನ್ನ
ಆರೆರಡು ಅ
ಕ್ಷರದ ಮಂತ್ರವನೂ ಪ್ರೇಮದಿ ನಾ ೨
ಮುಖದೊಳ್ ಸಕಲಾಗಮ ವಿದ್ಯಾ
ಸುಘೋಷ ಮಾಡಿ ಆ ಕಮಲಜ ಭವಮುಖರಿಂದ
ಅಮೃತದಲಿ
[ಸ್ತುತಿಸಿಹ ಅಭಿಷಿಕ್ತನೆ] ನೀನೆನಿಸಿ ನರಹರೆ ೩

ವ್ಯಾಸರಾಜರ ಗುರುಗಳಾದ
೩೯೪
ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು ಪ
ಅಪ್ಪಾ ನಿನ್ನಯ ಮನಕೊಪ್ಪದೇ ಇಪ್ಪಂಥ ಅ.ಪ
ತಂದೆ ತಾಯಿಯು ನೀನೇ ಬಂಧು ಬಳಗ ನೀನೆ
ಸಂದೇಹವಿಲ್ಲವೋ ಕಂದನೆಂದೆನ್ನದಂಥ೧
ಒಂದೂ ತಿಳಿಯದಂಥ ಮಂದಮತಿಯು ನಾನು
ಛಂದದಿಂದಲಿ ಬುದ್ಧಿ ಮುಂದೆ ಹೇಳಾದಂಥ ೨
ಸಂದೇಹ ಕಳೆದಿನ್ನ ಬಂಧವಾಗಹ ಅಘ
ವೃಂದ ಕ್ಷಮಿಸಿ ಬೇಗ ಮುಂದೆ ಕರೆಯದಂಥ ೩
ದುರುಳರೆಲ್ಲರು ಸೇರಿ ಮರುಳುಗೊಳಿಸಿ ಎನ್ನ
ಕರುಣಸಾಗರ ನಿನ್ನ ಕರುಣ ಪಡೆಯದಂಥ ೪
ಶಾಂತ ಶ್ರೀ ನರಹರಿ ಪಂಥಾದಿಚರಿಸದೇ
ಭ್ರಾಂತನಾದೆ ಭವ ಕಾಂತಾರ ದಾಟಿಸದಂಥ ೫

ನುಡಿ-೪: ವೇದಾಭಿಮಾನಿಯಾದ
ಸರಸ್ವತಿ-ಭಾರತಿ
೩೭೯
ದೇವಿ ಸರಸ್ವತಿ ನಿತ್ಯ ಕಾವುದೆಮ್ಮನು ಪ
ದೇವಿ ಸರಸ್ವತಿ ನಿತ್ಯ ಸೇವಿಪ ಮನುಜರಘ
ಪಾವಿತರನ್ನ ಮಾಡುವಿ ನೋವ ಕೊಡದಲೆ ಕಾಯೇ ಅ.ಪ
ಪದ್ಮನಾಭನ ನಾಭಿ ಪದ್ಮಜನ ಸಹ ಹೃ
ತ್ಪದ್ಮದೊಳಗೆ ನೆಲಸಿ ಛದ್ಮವ ಕಳೆಯೆ ನಿರುತ ೧
ಮಾರಮಣನ ದಿವ್ಯ ಚರಣ ಸರೋಜವ
ತೋರಿ ಕರುಣವ ಮಾಡೆ ವಾರಿಜಾಸನನ ರಾಣಿ೨
ಲಕುಮೀ ನಾರಾಯಣನ ಸುಕುಮಾರ ಚತುರ್ಮುಖ
ನ್ವಾಕಿಗಾಗಿ ಬ್ರಾಹ್ಮೀ ಎನಿಸಿ ಸಾಕುವಿ ಲೋಕವ ಕಾಯೆ ೩
ಮಾಯಪತಿ ವಾಸುದೇವ ಕಾಯಜ ಕಾಲ ಪುರುಷರ್ಗೆ
ಗಾಯಿತ್ರಿ ಸಾವಿತ್ರಿಯಾಗಿ ತೋಯಜಾಸನ ವಿಹಾರಿ ೪
ಶಂಕರ ಸನ್ನುತ ಜಯಾ ಸಂಕರುಷಣನ್ನ ಪಾದ
ಕಿಂಕರನ್ನ ಮಾಡಿ ಎನ್ನ ಸಂಕಟ ಪರಿಹಾರ ಮಾಡೆ ೫
ಕೃತಿಪತಿ ಪ್ರದ್ಯುಮ್ನನ ಸುತೆ ನುತಿಪೆನು ಸದಾ
ಖ್ಯಾತಿಯನ್ನಿತ್ತನ್ಯಥಾ ಖ್ಯಾತಿಯ ಕಳೆಯೆ ಮಾತೆ ೬
ಶಾಂತಿಪತಿ ಅನಿರುದ್ಧನಾಂತುದಿಸಿ ವಿರಂಚಿ
ಕಾಂತೆ ದುರಿತ ತರಿದು ಶಾಂತ ಮನಸನು ಕೊಡೆ೭
ವಾಣಿ ವೀಣಾಪಾಣಿಯೇ ಕಾಣಿಸನುದಿನವೆನಗೆ
ಫಣಿ ಮೃಡ ಇಂದ್ರಮುಖ ಗಣರಾರಾಧಿತಳೇ ತಾಯೆ ೮
ಹೀನಗುಣವೆಣಿಸದೆ ಜ್ಞಾನ ಭಕ್ತಿ ವೈರಾಗ್ಯವ
ಸಾನುರಾಗದಲಿ ಇತ್ತು ಶ್ರೀ ನರಹರಿಯ ತೋರೆ ೯

೪೦೧
ನಾನೇನು ಮಾಡಲಯ್ಯ ಎನ್ನಯ ಮನ ನಿನ್ನ
ಧ್ಯಾನಿಸಲೊಲ್ಲದೂ ಪ
ಶ್ರೀನಿವಾಸನ ದಯ ಕಾಣುವೋಧ್ಹ್ಯಾಂಗಿನ್ನು
ನೀನೆ ದಯಮಾಡೋ ಗುರು ರಾಘವೇಂದ್ರ ಅ.ಪ
ಕೀರ್ತಿಸದೆ ನಿನ್ನ ವ್ಯರ್ಥ ಚಿಂತೆಯ ಮಾಡಿ
ಪಾರ್ಥಸಾರಥಿ ಮಾರ್ಗಕ್ಹೊರ್ತಾದೆ
ನಾ ಮರ್ತೆ ನಿಜಸೌಖ್ಯವನು ಬೆರ್ತೆ ಅನ್ಯರ ಸತಿಯ
ಸಾರ್ಥಕಾಗದೇ ಪೋಯಿತೆನ್ನ ಆಯು ೧

ಮಾಂಸದಾಸೆಗೆ ಮೀನು ಹಿಂಸೆಪಡುತಿರುವಂತೆ
ಸಂಸಾರದಲಿ ಸಿಕ್ಕೆ ಕಂಸಾರಿ ಪ್ರಿಯ
ಹಂಸರೊಂದಿತ ಎನ್ನ ಸಂಶಯವ ಪರಿಹರಿಸಿ
ಸಂಶಾಂತ ಮತಿ ನೀಡೋ ಸಂಶಯ ದೂರನೇ ೨
ಎಷ್ಟು ಪೇಳಲಿ ಎನ್ನ ದುಷ್ಟ ಕರ್ಮಗಳನ್ನು
ಜೇಷ್ಟ ದೂತನೆ ಎನ್ನ ಕಷ್ಟ ಬಿಡಿಸೋ
ವೃಷ್ಣಿಸಖಪ್ರಿಯ ಮನ ತೃಷ್ಣಗಳನೆ ಕಳೆದು
ಶ್ರೇಷ್ಠಾ ನರಹರಿ ಚರಣಾಭೀಷ್ಟವ ನೀಡೋ ೩

೩೬೬
ನಿನಗೆ ನಾ ಬ್ಯಾಡಾದನೆ ಘನಕೃಷ್ಣ
ಮಾನಿನಿಯ ಕಿಂತ ಕೊನೆಯೆ ಪ
ಎನ್ನ ಕಣ್ಣಿಗೆ ತೋರದೆ
ಬೆನ್ನಲ್ಲಿ ಮಾನಿನಿಗೆ ನೀ ತೋರಿದ್ಯಾ
ಮನ್ನಿಸುವ ನಿತ್ಯದಲಿ
ಮುನ್ನ ನಿನಗೆ ನಾ ದ್ವೇಷಿಯಲ್ಲವೋ ೧
ಒಳಗೆ ನೀನಿರುವಿ ಎಂದೂ
ತಿಳಿದು ಬಲು ತೊಳಲಿ ಶರಣು ಬಂದರೆ
ಪೊಳೆಯದಲೆ ಮನಸಿನೊಳಗೆ
ಕೊಳಲು ಕರೆ ಬಾಲೇಗೆ ನೀ ತೋರಿದ್ಯಾ ೨
ಸುಳ್ಳು ಇದು ಎಂದ್ಹೇಳಲು
ಸಲ್ಲದೆಲೊ ಕಳ್ಳ ನೀನೆಂದು ಬಂದೆ
ಪುಲ್ಲನಾಭನೆ ತೋರೆಲೊ
ಮಲ್ಲನೆ ಗಲ್ಲ ಪಿಡಿದು ಮುದ್ದಿಪೆ ೩
ನೀರದಸಮ ಕಾಂತಿಯ
ನಾರಿಮಣಿ ಬೀರಿದಳೊ ಶ್ರೀಕೃಷ್ಣನೆ
ಕರುಣಸಾಗರನೆಂಬೊದು
ಮರೆತು ನೀ ದೂರ್ಹೋಗಿ ನಿಲ್ವರೇನೊ ೪
ಮೂರು ವಯಸೆಂದ್ಹೇಳರೊ
ಚಾರುತರಾಭರಣ ಇಟ್ಟಿಹನೆಂಬುರೊ
ಈ ರೀತಿ ಅಬಲೆಯರು
ನಿರುತದಲಿ ಧರೆಯೊಳಗೆ ಪೇಳ್ವುದರಿಯಾ೫
ಎಂದಿಗಾದರು ನಿನ್ನನು
ಪೊಂದದೆಲೆ ಇಂದಿರಾಧವ ಬಿಡುವನೆ
ತಂದೆ ಶ್ರೀ ಮಧ್ವರಾಯ
ಛಂದದಲಿ ಮುಂದೆ ತಂದೆಳೆವ ನಿನ್ನ ೬
ನೀ ಬಿಟ್ಟರೇ ಕೆಡುವೆನೆ
ಶ್ರೀ ಭೀಮನೊಬ್ಬ ಬಲ ಸಾಕೆಲೊ
ಅಪಾರ ದೈವ ನಿನ್ನ
ಕೊಬ್ಬುತ ತಬ್ಬಿ ನಾ ನಿನ್ನೊಲಿಸುವೆ೭
ಮಾನದಿಂದಲಿ ತೋರೆಲೊ
ನಿನಗಿದು ಘನತೆಯಲ್ಲವೊ ಜೀಯನೆ
ಎನ್ನ ಪಿತ ಹನುಮರಾಯ ನಿನ್ನಲ್ಲಿ
ಮುನ್ನ ಮಾಡ್ದುಪಕೃತಿ ಮರೆತೆಯಾ೮
ಇನಿತು ವಂಚಿಸಿ ಪೋದರೆ
ನಾ ನಿನ್ನ ಹೀನ ಗುಣದವನೆನ್ನುವೆ
ಮನ್ನಿಸಿ ಸಲಹೋ ಬ್ಯಾಗ
ಶ್ರೀ ನರಹರಿಯೆ ನಾ ಭಿನ್ನೈಸುವೆ೯

ಪಲ್ಲವಿ : ಪಂಚಮುಖಿ ಪ್ರಾಣ
ವಾಯುದೇವರು
೩೭೮
ನಿನ್ನ ನಂಬಿ ಬಂದೆ ಪಂಚಮುಖಿ ಪ್ರಾಣ
ಅನ್ಯ ಹಂಬಲ ಬಿಡಿಸಿ ಬಿಂಬ ಮೂರುತಿ ತೋರೋ ಪ
ಹಿಂದೆ ತ್ರೇತಾಯುಗದಿ ರಾಮನಾಜ್ಞೆಯ ಹೊಂದಿ
ಸಿಂಧು ದಾಟಿ ಸೀತೆಗೆರಗಿ ನಿಂದು
ಸುಂದರ ರಾಮ ಮುದ್ರಿಕೆಯಿತ್ತು ಲೀಲೆಯಲಿ
ಕೊಂದ ರಕ್ಕಸ ಪುರವನನಲಗೆ ಇತ್ತೆ ೧
ಬಂಡಿ ಅನ್ನವನುಂಡು ಭಂಡ ಬಕನಾ ಕೊಂದು
ಹಿಂಡು ನೃಪರಾ ಜರಿದು ಕೊಂಡು ದ್ರೌಪದಿಯಾ
ಮಂದಮತಿಗಳನಳಿದು ತಂದಿ ಸೌಂಗಂಧಿಕವ
ಪುಂಡ ಕೀಚಕರಳಿದ ಪಾಂಡವಪ್ರಿಯದೂತ ೨
ಮೋದತೀರ್ಥರೆನಿಸಿ ವಾದಿಗಳ ನಿಗ್ರಹಿಸಿ
ಬೋಧಿಸಿ ಸುಜನರಿಗೆ ಮಾಧವನ ಗುಣವ
ಸಾಧು ವಂದಿತ ಬಾದರಾಯಣರು ಇರುತಿರುವ
ಬದರಿಯಲ್ಲಿರುವಿ ಶ್ರೀ ನರಹರಿಯ ತೋರೋ ೩

ಪಲ್ಲವಿ : ಭಾರತಿ : ಇವಳು ಕೃತಿ
೩೮೦
ನಿರುತದಿ ಭಜಿಪೆನಾ ಭರತನ ರಾಣಿಯೇ ಭಾರತಿಯೇ ಪ
ಗುರುವರಂತರ್ಗತ ಹರಿಭಕ್ತಿ ಪಾಲಿಸೇ ಭಾರತಿಯೇ ಅ.ಪ
ಕಾವೋದು ಬಾಲನ ಸೇವೆ ನೀಕರಿಸದೆ ಭಾರತಿಯೇ
ಶಿವಮುಖ ಸುರ ಸಂಸ್ತವಕೆ ಸುಪ್ರೀತಳೆ ಭಾರತಿಯೇ ೧
ಕಾಳೀದ್ರೌಪದಿ ಶಿವಕನ್ಯಳೆಂದೆನಿಸಿ ಭಾರತಿಯೇ
ನಳನಂದಿನಿ ಮನ ಕೊಳೆಯ ತೊಳೆಯಬೇಕೇ ಭಾರತಿಯೇ ೨
ವಂದಿಪೆ ನಿನಗಿಂದ್ರೇಶನಳೆಂದೆನಿಸಿದಿ ಭಾರತಿಯೇ
ಕಂದನ ಕುಂದುಗಳೊಂದೆಣಿಸದೆ ಕಾಯೇ ಭಾರತಿಯೇ ೩
ಕಾಲಾಭಿಮಾನಿಯೆ ಶೈಲಜೆ ಶ್ಯಾಮಲ ಭಾರತಿಯೇ
ಪೋಲೋಮಿ ಉಷರಿಂದ ವಾಲಗ ಕೈಕೊಂಬೆ ಭಾರತಿಯೇ ೪
ಹರಿಯ ಹಿರಿಯ ಸೊಸಿ ಪರಮ ಪದಕೆ ಬರುವಿ ಭಾರತಿಯೇ
ಕರುಣಾದಿ ಭಾರತಾದ್ಯರ್ಥವರುಹೆ ನಿತ್ಯಾ ಭಾರತಿಯೇ ೫
ಸನಕಾದಿ ಯೋಗಿ ವಿನುತ ಚರಣಳೆ ಎನ್ನ ಭಾರತಿಯೇ
ಹೀನ ಬುದ್ಧಿಯ ಕಳಿ ಜ್ಞಾನಮಾರ್ಗವ ತೋರೆ ಭಾರತಿಯೇ೬
ಮಾನಾಭಿಮಾನ ನಿನ್ನಾಧೀನ ಎನಗೆ ನೀ ಭಾರತಿಯೇ
ಶ್ರೀ ನರಹರಿ ಪಾದ ಮನದಿ ತೋರಿಸೇ ನಿತ್ಯಾ ಭಾರತಿಯೇ ೭

ಉತ್ತರಾಧಿಮಠದ
೩೮೪
ನಿರುತದಿಂದಿಳೆಯೊಳು ಅರಸಿ ನೋಡಲು ಕಾಣೆ
ಗುರು ಸತ್ಯಜ್ಞಾನರಿಗೆ ಪ
ಸರಿ ಇಲ್ಲಿವರ ಚರಣಕಮಲವ ನಿತ್ಯ
ಆರಾಧಿಪರ ದುರಿತ ಹರಿಪರ ಅ.ಪ
ಸತ್ಯ ಜ್ಞಾನ ಗುರೋ ನೀ ಗತಿ ಎಂದವರ
ನಿತ್ಯದಿ ಬಿಡದೆ ಕಾಯ್ವ
ಅತ್ಯಾದರದಿ ಮಧ್ವಮತ ಸ್ಥಾಪಕರಾಗಿ
ಮಿಥ್ಯಾ ಜ್ಞಾನಗಳಳಿದ | ಮೆರೆದ ೧
ಸತ್ಯಧೀರರಿಂದ ಯತ್ಯಾಶ್ರಮ ಪಡೆದು
ರತ್ಯಾದಿ ವಿಷಯವ ಬಿಟ್ಟು
ಯತ್ಯಾಶ್ರಮೋಕ್ತ ಕೋಪತ್ಯಾಗಾದಿಗಳನು
ವ್ಯತ್ಯಾಸಿಲ್ಲದೆ ನಡೆಸಿ | ಶೋಭಿಸಿ೨
ಗುರು ಆರಾಧನಿ ದಿನ ತೀರ್ಥವ ಕೊಡುತಿರೆ
ವರ ಸುವಾಸಿನಿ ಒಬ್ಬಳೂ
ಕರವ ನೀಡಲು ಬಂದು ಅರಿತು ವಿಧವತ್ವ
ನೆರಪೇಳ್ದರಪರೋಕ್ಷದಿ | ಭೂತಳದಿ ೩
ಮರುದಿನ ಆರೋಗಣೆಯ ಸಮಯದಿ ಮಳೆ
ಭರದಿಂದ ಸುರಿಯುತ್ತಿರೆ
ಮೊರೆಯಿಡೆ ಎಡಬಲದವರು ಅದನು ಕೇಳೆ
ದೂರಸ್ಥಳಿಹಳೆಂದ್ಹೇಳಿರು | ಪಂಕ್ತಿಯಲಿ ೪
ಈ ರೀತಿಯಿಂದಲಿ ತೋರಿಸಿ ಮಹಿಮೆಯ
ಇರಿಸೆ ಮಂತ್ರಿಸಿ ಫಲವ
ಭರದಿ ಸುರಿವ ಮಳೆ ತ್ವರಿತದಿ ನಿಲ್ಲಲು
ಅರಿತು ವಿಚಾರಿಸಲು | ನಿಜವಿರಲು೫
ನಿವೃತ್ತಿ ಸಂಗಮದಿ ಅವನಿಜೆ ಪತಿ ಪೂಜೆ
ಸಾವಧಾನದಿ ಮಾಡಲು
ಇವರ ಮನೋಧಾರಡ್ಯ ಜವದಿ ಜಯಾಮುನಿ
ಅವನಿಗರುಹಬೇಕೆಂದು | ತಾ ಬಂದು ೬
ಬರುತಿರೆ ಉರಗಾಕಾರದಿಂದಲಿ ಬಂದು
ಅರಿಯದ ಜನರು ಕೂಗೆ
ಮಾರಮಣನ ಧ್ಯಾನ ಜರಿಯದೆ ಅವರಿಗೆ
ತೋರಿದರಭಯವನು | ವಿಚಿತ್ರವನು ೭
ಭೂವೈಕುಂಠದಿ ವಿಶ್ವರೂಪದರ್ಶನಕ್ಹೋಗೆ
ಮಾರ್ಗವ ಕೊಡದಿರಲು
ಭಾವದಿ ಧ್ಯಾನಿಸೆ ಶ್ರೀ ವಲ್ಲಭನಾಮ
ಧರಿಸದೀರಾಧರಿಸೇ | ಧರಿಸಿ ೮
ಈ ವಿಧ ಮಹಿಮೆಯ ತೋರಿಸಿ ಜಗದೊಳು
ಗೋದಾತೀರದಿ ಶೋಭಿಪ
ಅವನಿಪ ಮಹೇಂದ್ರ ಭುವನ ಶ್ರೀ ನರ
ಹರಿ ನಿನ್ನ ಮಾಘಸಿತದಿ | ಸ್ಮರಿಸಿದ೯

೩೯೫
ಪಾಲಿಸು ಗುರುವರ್ಯ ಜಯಾರ್ಯ ಪ
ಶ್ರಿಮದಾನಂದತೀರ್ಥರ ಕಂದ
ಶ್ರೀಮದಕ್ಷೋಭ್ಯರ ಕಂದ ಯತೀಂದ್ರ ೧
ಪೂರ್ಣಬೋಧ ತೀರ್ಥಾರ್ಣ ವಿಹಾರಿ
ಸ್ವರ್ಣ ಪಾತ್ರ ಸುಧಾಕಾರಿ ಉದಾರಿ೨
ಶ್ರೀ ನರಹರಿ ಧ್ಯಾನವಿಚಾರಿ
ಮೌನಿ ಗುಣಗಣಧಾರಿ ಉದ್ಧಾರಿ೩

೩೬೮
ಪಾಲಿಸೆನ್ನ ವೇಲಾಪುರ ಚೆನ್ನ ಪ
ಪಾಲಿಸು ಕರುಣಾ ನಿಲಯನೆಂದು ನಾ
ಕೇಳಿ ಬಂದೆ ಬಹು ಸುಂದರಕಾಯ ಅ.ಪ
ಪರಮ ಶಂಖ ಅರಿ ಮುದದಿ ಗದಾಧರ
ಪದಪದುಮದಿ ಮನ ಒದಗಿಸಿ ಬೇಗ ೧
ಪೀತಾಂಬರ ಶ್ರೀವತ್ಸ ಕೌಸ್ತುಭದಿ
ಅತಿಶೋಭಿಪನೀ ಸ್ತುತಿಗೊಲಿಯುತಲಿ ೨
ಚನ್ನಕೇಶವ ಬಿನ್ನೈಸುವೆನೋ
ಬೆನ್ನ ಬಿಡದಲಿ ಮನ್ನಿಸಿ ತ್ವರದಿ ೩
ಕಂದನ ಕುಂದುಗಳೊಂದೆಣಿಸಲೆ
ಬಂದು ಚಿಂತನಕೆ ಇಂದಿರೆರಮಣ ೪
ಮೀನಕೇತುಪಿತ ಶ್ರೀ ನರಹರಿಯೆ
ಜ್ಞಾನ ಭಕುತಿಯಿತ್ತು ಮೌನದಿಂದ ನೀ೫

ನುಡಿ-೨ : ಕೆಟ್ಟ ಮಾತು ನುಡಿದ ಚೈದ್ಯಗೆ
೩೬೭
ಪಾಲಿಸೆಮ್ಮನು ತ್ರಿಜಗ ಪಾಲಿಸುವನೆ ಎಲ್ಲ ಸುಖವನಿತ್ತು ಉದಧಿ
ಆಲಯ ಶರಣ್ಯ ವಿಟ್ಠಲ ಪ
ಹೃದಯಕಮಲ ಮಧ್ಯದಲಿ ಮುದದಿ ಖಗವನೇರಿ ಚರಿಪ
ಯದುಕುಲಾಬ್ಧಿ ಜಾತ ಚಂದ್ರ ವಿಧಿಶಿವಾದಿ ಉಡುಗಣಾರ್ಚಿತ ೧
ದಿಟ್ಟಭಕ್ತ ಕೊಟ್ಟ ಇಟ್ಟಗೀ ಮೆಟ್ಟಿನಿಂತಿ ಸಿಟ್ಟು ಇಲ್ಲದೆ
ಹೊಟ್ಟೆ ಮನೆಯ ಮಾಡಿಕೊಟ್ಟಿ ಕೆಟ್ಟಮಾತು ನುಡಿದ ಚೈದ್ಯಗೆ ೨
ಕರಗಳನ್ನೆ ಕಟಿಯಲಿಟ್ಟು ಶರಣುಬಂದ ಭಕ್ತಗೆ ಭವ
ಪರಿಮಿತಿಯ ತೋರಿ ನಿರುತ ಪೊರೆಯುವಂಥ ಕರುಣನಿಧಿಯೇ ೩
ಪುಂಡರೀಕ ವರದನೆಂದು ಹಿಂಡುಭಕ್ತರು ಪೊಗಳುತಿಹರೊ
ಅಂಡಜಧ್ವಜ ನಿನ್ನಪಾದ ಪುಂಡರೀಕ ತೋರಿಸಿನ್ನು ೪
ಶ್ರೀ ನರಹರಿಯೆ ನಿನ್ನ ಗಾನ ಮಾಡಲೆಷ್ಟು ಸಾಮ
ಗಾನಕೆ ನಿಲುಕದ ಮಹಿಮ ಜ್ಞಾನ ಭಕ್ತಿ ಇತ್ತು ಬೇಗ ೫

೩೬೯
ಪಿಡಿದೆತ್ತೊ ಕೈಯ್ಯಾ ಕೃಷ್ಣಯ್ಯ ಪ
ಪಿಡಿದೆತ್ತೊ ಕೈಯ್ಯಾ ಪಾಲ್ಗಡಲೊಡೆಯನೆ ಭವ
ಕಡಲಿನೊಳಗೆ ಬಿದ್ದು ಬಾಯ್ಬಿಡುವೆ ಬೇಗದಿ ಬಂದು ಅ.ಪ
ತಾವರೆನಾಭಾ ಕಾವದÀು | ಎನ್ನ ಜೀವನಲಾಭಾ
ಶ್ರೀವ್ಯಾಸಮುನಿಗೊಲಿದವ | ನೆಂದರಿತು ಬಂದೆ
ಶ್ರೀವೇಣುಗೋಪಾಲಕೃಷ್ಣ | ಗೋವಳರೊಡೆಯ
ಭಾವ ಭಕುತಿಗಳೊಂದನರಿಯೆನು
ಹೇವವಿಲ್ಲದೆ ದಿನವ ಕಳೆದೆನು
ಸಾವಧಾನವ ಮಾಡಲಾಗದು
ಶ್ರೀವರನೇ ನವವಿಧ ಭಕುತಿ ನೀಡುತ ೧
ಅನುಮಾನವ್ಯಾಕೆ | ನೀನೆ ಗತಿ ಎನುವೆನು ಬಲ್ಲಿ
ಅನುದಿನ ಸೇವಿಪೆ ಅನಘನೆ | ಎನ್ನಘ ಗಣನೆ ಮಾಡದೆ ಮುನ್ನ
ಅನುವಾಗಿ ಪಾಲಿಸೊ
ಮಾನವೇದ್ಯನೆ ಮನದಿ ನಿರ
ತನುದಿನದಿ ನಿನ್ನಯ ಧ್ಯಾನವಿತ್ತು
ಮನೋವಿಷಾದವನಳಿಯೆ ನಿನ್ನನು
ಮರೆಯೆನುಪಕೃತಿ ಸತತ ಸ್ಮರಿಸುವೆ ೨
ಶ್ರೀ ನರಹರಿಯೆ ಭಕುತಜನ | ವನಜದಿನಮಣಿಯೆ
ಸಾನುರಾಗದಿ ಕೇಳ್ವೆ | ಹನುಮನ ಮತದಲ್ಲಿ
ಅನುಚಾದ ಜ್ಞಾನವ | ಕನಸಿನಲಿ ಮನಸಿನಲಿ
ಜನನಿ ಜನಕ ತನುಜೆ ವನಿತೆಯಾ
ತನುವಿನಲಿ ನೆಲೆಸಿರುವ ಭ್ರಾಂತಿಯ
ಹೀನಗೈಸಿ ಮನೋಭಿಲಾಷೆಯ
ಕೊನೆಗಾಣ್ಸುವ ಭಾರ ನಿನ್ನದು ೩

೩೭೦
ಪೊರೆಯಬೇಕೋ ಎನ್ನ ಶ್ರೀ ನರ
ಹರಿಯೆ ಕೇಳೋ ಮುನ್ನಾ ಪ
ನೀ ಪೊರೆಯದಿರಲು ಈ ಪೊಡವಿಯೊಳಗೆ
ಕಾಪಾಡುವರನು ಕಾಣೆ ನಿನ್ನಾಣೆ ಮನ್ನಣೆಯಲಿ ಅ.ಪ
ನೀರ ಪೊಕ್ಕರು ಬಿಡೆನೋ ಬೆನ್ನಲಿ
ಭಾರ ಪೊತ್ತರು ಬಿಡೆನೋ
ಕೋರೆಯ ಬೆಳೆಸಿ ನೀ ಘೋರ ರೂಪನಾಗಿ
ತಿರುಕನೆಂದು ಪೇಳಲು ಬಿಡೆನೋ ೧
ಕೊಡಲಿ ಪಿಡಿಯೆ ಬಿಡೆನೋ ನೀ ಘನ
ಅಡವಿ ಸೇರಲು ಬಿಡೆನೋ
ತುಡುಗನಂದದಿ ಪಾಲ್ಗಡಿಗೆ ಒಡೆದು ಸಲೆ
ಉಡುಗಿ ಜರಿದು ತುರುಗೇರಲು ಬಿಡೆನೋ ೨
ಪಾಪಿ ಎಂದು ಎನ್ನ ಜರಿಯದೆ
ಕಾಪಾಡೆಲೊ ಘನ್ನ
ಶ್ರೀ ನರಹರಿಯ ನಾಮಕೆ ಪೋಪದ
ಪಾಪಗಳುಂಟೆ ಜಾಲವ ಮಾಡದೆ ೩

ಗುರುಸ್ತುತಿ
೩೮೩
ಪ್ರೇಮದಿಂದೊಂದಿಸುವೆ ಗುರುವೃಂದಕೇ
ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು ಪ
ಸತಿಯ ಬೇಡುವನಲ್ಲ ಸುತರ ಬೇಡುವನಲ್ಲ
ಅತಿಶಯದ ಭಾಗ್ಯವನು ಕೇಳ್ವನಲ್ಲ
ರತಿಪತಿ ಆಟವನು ಖಂಡಿಸಿ ಬೇಗದಲಿ
ಮತಿ ತಪ್ಪಲೆನಗೆ ದುರ್ವಿಷಯದೊಳಗೆಂದು ೧
ಶಕ್ತಿ ಬೇಡುವನಲ್ಲ ಯುಕ್ತಿ ಬೇಡುವನಲ್ಲ
ಭುಕ್ತಿ ಎನಗಿಲ್ಲೆಂದು ಕೇಳ್ವನಲ್ಲ
ಮುಕ್ತಿದಾಯಕ ನಮ್ಮ ವಿಟ್ಠಲನ ಚರಣದಲಿ
ಭಕ್ತಿ ದೃಢವಾಗೆನಗಿತ್ತು ರಕ್ಷಿಸಲೆಂದು ೨
ಮಾನ ಬೇಡುವನಲ್ಲ ದಾನ ಬೇಡುವನಲ್ಲ
ಹೀನತನ ಬ್ಯಾಡೆಂದು ಕೇಳ್ವನಲ್ಲ
ಮಾನನಿಧೀಶ ನಮ್ಮ ಶ್ರೀ ನರಹರಿಯ ಚರಣವನು
ಕಾಣಿಸುವ ಜ್ಞಾನವನು ದಾನಮಾಡಲಿ ಎಂದು೩

೩೯೬
ಬಾದರಾಯಣ ಮದದಿ ಮರೆತೆನೊ
ಸದಯದಿಂ ಮುದ ಪಾಲಿಸೊ ಪ
ಬೋಧ ಮೂರುತೆ ಭಕ್ತರಾ ನುಡಿ
ಸಾದರದಿ ನೀನಾಲಿಸೋ ಅ.ಪ
ವೇದಭಾಗವ ಮಾಡಿ ವೇದವ್ಯಾಸನೆಂದೆನಿಸಿದಿ
ಸದಮಲಾಭಾವದಲಿ ನಿನ್ನಯ ಪಾದಕಮಲವ ತೋರಿದಿ ೧
ಮೋದ ಚಿನ್ಮಯ ಗಾತ್ರ ಎನ್ನಯ ಖೇದ ಭಾವವನೋಡಿಸೊ
ಮೋದತೀರ್ಥ ಹೃದಾಬ್ಜ ಮಂದಿರ ಸಾಧು ಸಂಗವ ಮಾಡಿಸೋ ೨
ತರ್ಕಮುಧ್ರಾಧರನೆ ಎನ್ನ ಕುತರ್ಕ ಬುದ್ಧಿಯನೋಡಿಸೋ
ಅರ್ಕಸನ್ನಿಭ ಬ್ರಹ್ಮ ಸುತರ್ಕ ಮಾರ್ಗವ ಬೋಧಿಸೋ ೩
ಅಭಯಪ್ರದಕರ ಎನ್ನಭವ ಭಯ ತ್ರಿಭುವನೇಶ್ವರ ಓಡಿಸೀ
ಇಭವರದ ಮಧ್ವೇಶ ಸಂತತ ಸಭೆಯ ಸಹನೀ ತೋರೆಲೊ೪
ಯೋಗ ಪೀಠನೆ ನೀಗಿಸೆನ್ನಯ ಭೋಗಬುದ್ಧಿಯ ಸರ್ವದಾ
ಯೋಗಿಕುಲವರ ಬಾಗಿ ನಮಿಸುವೆ ಯೋಗಮಾರ್ಗವ ತೋರಿಸೊ೫
ಮಾ ಕಮಲಜ ಭವೇಂದ್ರವಂದಿತ ಮಾಕಳತ್ರ ನಮೋಸ್ತುತೇ
ಯಾಕೆ ಎನ್ನಲಿ ನಿರ್ದಯವು ನೀ ಸಾಕಲಾರದ ಪಾಪಿಯೇ ೬
ಸನ್ನುತಿಸಿ ನಾ ನಿನ್ನ ಬೇಡುವೆ ಸನ್ನುತಾಂಘ್ರಿಯ ಸೇವೆಯಾ
ಸನ್ಮುನೀವರ ಶ್ರೀ ನರಹರೆ ದಾಸದಾಸರ ದಾಸ್ಯವಾ ೭

ಪಾರ್ವತಿ
೩೮೨
ಬೀರೆ ಸನ್ಮತಿಯ
ಪಾರ್ವತಿ ಬೀರೆ ಸನ್ಮತಿಯ ಪ
ಪೋರನಲ್ಲಪಾರ ದೊಷ
ದೂರಗೈಯುತ ಮಾರನೈಯ್ಯನ
ಚಾರು ಮೂರುತಿ ತೋರಿ ನಿರುತ
ಸಾರಸಾಕ್ಷಿ ಗಾರು ಮಾಡದೆ ೧
ಕ್ಷೋಣಿಯಲ್ಲಿ ಪ್ರಾಣಮತವ
ಜ್ಞಾನದಿಂದಲಿ ಗಾನಮಾಡುವ
ದಾನವಿತ್ತು ಸಾನುರಾಗದಿ
ದಾನವಾಂತಕ ಕಾಣುವಂತೆ ೨
ಕಾಮಹರನ ವಾಮಭಾಗದಿ
ಪ್ರೇಮದೀರುವ ಭಾಮಾಮಣಿಯೆ
ಕಾಮಮಾರ್ಗಣ ಧಾಮಕೆಡೆಹಿ
ಶ್ರೀ ನರಹರಿ ನಾಮಸುಖವ ೩

ರುದ್ರ
೩೮೧
ಬೇಡಿಕೊಂಬೆ ಮೃಡಹರ ಭವ ಶಂಭೋ ಪ
ಬೇಡಿಕೊಂಬೆ ನಿನ್ನಡಿಗಳಿಗೆರಗಿ ನಾ
ಕಡಲ ಕುವರಿಯ ಒಡೆಯನಲಿ ಮನ ಅ.ಪ
ಮನಕಾರಣವಲ್ಲವೊ ಅನಲಾಕ್ಷನೇ
ಹೀನ ಸುಕರ್ಮಕೆ ಪ್ರೇರಣೆ ಹೊರತು ೧
ಮೃತ್ಯುಂಜಯ ಮುಪ್ಪುರಹರ ದೇವನೆ
ಅತ್ಯಪರಾಧಗಳೆತ್ತೆಣಿಸದಿರೈ ೨

ಶ್ರೀ ನರಹರಿಯಾಸುತನ ಕುವರನೇ
ಅನುದಿನದಲಿ ಮನ ದೋಷಗಳಳಿಯ್ಯೆ ೩

೪೦೨
ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ ಪ
ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರ
ಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ ಅ.ಪ
ನರರ ಸಂದಣಿಯಲಿ ವಿರತಿ ಮಾತಾಡಿಸಿ
ಮಾರನಾಟದಿ ಮನವೆರಗುವಂದದಿ ಮಾಡಿ ೧
ಕಾಷಾಯ ದಂಡಿ ವೇಷವ ಧರಿಸಿ ಮುನ್ನ
ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸಿದೆನ್ನ ೨
ಸೀಲರಂದಲಿ ಜಪಮಾಲೆ ಕೈಯಲಿ ಪಿಡಿಸಿ
ಕಾಳಿಮರ್ಧನ ದೇವ ಮಲಿನ ಮನವನಿತ್ತು ೩
ಕರವಶವನೆ ಮಾಡಿ ಸರಸದಿಂದ ಕಲೆಹಾಕಿ
ಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ೪
ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ
ಶರಪಂಜರದಿ ಬಿಗಿದು ಚರಣ ತೋರಿಸದೆಲೆ ೫
ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ
ಒದಗಿಸೆನ್ನಲಿ ದೂರನಾದಿಯ ಹೇ ಮಾಧವ ೬
ಪತಿತಾಗ್ರಣಿಯು ನಾನು ಪತಿತ ಪಾವನ ನೀನು
ಸತತ ನಿನ್ನಯ ಸಂಸ್ರ‍ಮತಿಯ ನೀಡದಲೆನ್ನ ೭
ದ್ವಿಜ ಅಜಮಿಳ ನಿಜನಾಮದಿಂದಲಿ
ಸುಜನನೆಂದೆನಿಸಿದ್ದು ನಿಜತೋರದಲೆನ್ನ ೮
ಹೀನರೊಳೆನ್ನೆಂಥ ಹೀನ ಜನರ ಕಾಣೆ
ಸಾನುರಾಗದಿ ಕಾಯೊ ಶ್ರೀ ನರಹರಿಯೆ ೯

ಉತ್ತರಾಧಿಮಠದ
ಮಂಗಳಂ ಜಯ ಜಯ ಮಂಗಳಂ ಪ
ಪರಮಾಸನದಲಿ ಕುಳಿತವಗೆ
ಪರತತ್ವವ ತಾ ತಿಳಿದವಗೆ
ಕರುಣದಿಂದ ದುರಿತಾವಳಿಗಳನು
ಸ್ಮರಿಸಿದ ಮಾತ್ರದಿ ಪರಿಹರಿಸುವಗೆ ೧
ಪೊಡವಿಯಲಿ ಶೋಭಿಸುವವಗೆ
ಕಡಲಶಯನನ ಭಕ್ತನಿಗೆ
ಅಡಿಗಳ ಬಿಡದೆ ಭಜಿಪ ಸುಜನರಿಗೆಲ್ಲ
ಕಡುತರ ಜ್ಞಾನವ ನೀಡುವಗೆ ೨
ಸತ್ಯಧೀರರ ಕುವರನಿಗೆ
ಸತ್ಯಜ್ಞಾನನೆಂದೆನಿಸುವಗೆ
ಅತ್ಯಾದರದಿಂದ ರಾಮನ ಧ್ಯಾನಿಸಿ
ಪ್ರತ್ಯಕ್ಷವ ಕರೆಸಿರುವವಗೆ ೩
ಕಾಮಕ್ರೋಧವ ಬಿಟ್ಟವಗೆ
ಪ್ರೇಮ ಆಶೆಗಳ ಸುಟ್ಟವಗೆ
ಧೂಮಕೇತು ಸಖ ಸೂನುವಾಹನನ
ನೇಮದಿಂದ ಆರಾಧಿಪಗೆ ೪
ದಂಡ ಕಮಂಡಲ ಪಿಡಿದವಗೆ
ಪಂಡಿತರಿಂದತಿ ಪೂಜಿತಗೆ
ಕೊಂಡಾಡಿದರ್ಯಮ ದಂಡನೆ ತಪ್ಪಿಸಿ
ಶೊಂಡನಾದ ನರಹರಿ ತೋರ್ಪಗೆ ೫

ತತ್ವಚಿಂತನೆ
೪೦೬
ಮತವೆಂದರೆ ಮಧ್ವ ಮತವೇ ಮತವು
ಶ್ರುತಿ ಸ್ರ‍ಮತಿ ತತಿಗೆ ಸಮ್ಮತವಾದುದರಿಂದ ಪ
ಮಧುವೆಂದರಾನಂದ ಒದಗಿ ಬರುವುದು ಸತ್ಯ
ಮಧುವೈರಿ ಒಲಿದು ಪಾದವ ತೋರುವ
ಸದಮಲ ಭಾವದಲಿ ಮೇದಿನಿಯೊಳಗಿನ್ನು
ಮದಮತ್ಸರಿಲ್ಲದೆಲೆ ಮುದದಿಯೋಚಿಸಲಾಗಿ ೧
ವ ವರ್ಣವೆಂದರೆ ಶ್ರೀ ವರನ ಜ್ಞಾನವು
ಪವನಪಿತ ತಾ ಒಲಿದು ಈವನದನು
ಹೇವವಿಲ್ಲದೆ ಶುದ್ಧ ಭಾವದಿಂದಾಚರಿಸೆ
ಭವ ದೂರಗೈಸಿ ಪಾವನಮಾಳ್ಪೊದದರಿಂದ ೨
ಮತವೆಂದರೆ ನಮ್ಮ ರತಿ ಪತಿ ಪಿತಭಾವ
ಸತತ ಸಮ್ಮತಿಯಿತ್ತು ಖತಿಯಳಿವದೈ
ಕ್ಷಿತಿಯೊಳಗೆ ಪಿತ ಶ್ರೀ ನರಹರಿಯ ಪದಪದುಮ
ಅತಿ ತೀವ್ರದಲಿ ತೋರಿ ಖ್ಯಾತಿ ತಂದೀವುದಕೆ ೩

೩೭೧
ಮರೆತು ಇರುವರೆ ಸರ್ವಜ್ಞನೆನಿಸಿ ಪ
ಮರೆತು ಇರುವರೇನೋ ಕರುಣಾ
ವಾರಿಧಿ ನರಹರಿಯೆ ಬಾಲನ
ದುರುಳತನಗಳೆಣಿಸಿದೊಡೆ ನೀ
ಕರೆದು ಮುಂದಕೆ ಪೊರೆವರ್ಯಾರು ೧
ಕಲ್ಲು ಕೊಟ್ಟ ಬಿಲ್ಲಿಲಿಟ್ಟ
ಕ್ಷುಲ್ಲಕ ಮಾತಾಡಿ ಬಿಟ್ಟ
ಕಳ್ಳ ಸುಳ್ಳ ಜಾರನೆಂದ
ಗೊಲ್ಲತಿಯರನೆಲ್ಲ ಪೊರೆದಿ ೨
ತರಳ ನಿನ್ನ ಪೂಜಿಸಲಾರದೆ
ಕರವ ಶಿರದಿ ಇರಿಸೆ ಕೂತು
ಕರದಿ ಗುಂಜವಿರಿಸಿ ಸಿರಿಯ
ಮರೆತು ಇರುವವರಂತೆ ೩
ವರ ಸುಮೌನೀಗಣಕೆ ಬಲ ನಾ
ನರಿಯಿರೆಂದು ಬೀರಿ ಚರಣ
ಚರಣದರ ಮನೆಯೊಳಿರಿಸಿ ಪೊರೆವಿ
ತರಳನ ನೀ ಜರಿವರೇನೊ ೪
ಧರಣಿಯೊಳಗೆ ಇರುವ ಕ್ಷೇತ್ರದಿ
ವರ ಸುಕ್ಷೇತ್ರವಿದೆಂದು
ಅರುಹಿ ಬರುವ ಸಜ್ಜನರನು ಪೊರೆವಿ
ಭಾರ ನಾನೊಬ್ಬನೇ ಪೇಳೋ ೫
ಶ್ರೀ ನರಹರಿಯೆ ಇನಿತು
ಜ್ಞಾನ ಶೂನ್ಯನ ಮಾಡಿ
ನಿನ್ನ ಕಾಣಿಸುವರೊಡನೆ
ಕಾಣುವ ಬಗೆಗಾಣೆನೋ ಮಾಧವ ೬

ಈ ಕೀರ್ತನೆಯಲ್ಲಿ ವ್ಯಾಸರಾಜರು
೩೭೨
ಮುದ್ದು ಸುರಿಯುತಾನೆ ನೋಡಿ ಕೃಷ್ಣ ಪ
ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ
ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ ಅ.ಪ
ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ
ಸಾವೇರಿ ಮೊದಲಾದ ರಾಗವ ಪಾಡುತ೧
ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು
ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ ೨
ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ
ಮುಕುಟ ಶಿರಶ್ಚಕ್ರ ಶೋಭಿತಮುಖ ೩
ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ
ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ ೪
ಶ್ರೀ ನರಹರಿಯು ತಾ ನೆನೆಯುವರಿಗೆ
ಭವ ಕಾನನದ ಭಯದ ಮನ ಶಂಕಿಸದಿರೆಂದು೫

೩೭೩
ಮುರಳಿ ಧ್ವನಿಯ ಮಾಡೋ ಮುರಾರೇ ಪ
ಮುರುಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲ
ಹರುಷದಿಂದಲಿ ಭವ ಶರಧಿ ದಾಟುವರೈ ಅ.ಪ
ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟು
ಕಾಮಜನಕ ಗುಣಧಾಮ ಶ್ರೀ ಕೃಷ್ಣಾ ೧
ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದ
ಆವು ಮೆಚ್ಚುವಂತೆ ಸಾವಧಾನದಿಂದ ೨
ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿ
ಪ್ರೇಮದಿಂದೊಪ್ಪುತ ಶ್ರೀ ಮನೋರಮನೆ ೩
ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗ
ನಳಿನಮುಖಿಯರನ್ನು ಒಲಿಸುತಲೊಮ್ಮೆ ೪
ವನಜಸಂಭವಪಿತ ಶೀ ನರಹರಿಯೆ
ಕನಸಿನಂದದಿ ಜಗವರಿತು ನೆನೆಯುವಂತೆ ೫

೩೭೪
ರಾಮಚಂದ್ರ ಪ್ರೇಮದಿ ಬಾ ಜನಕ ಪ
ಕೋಮಲಾಂಗನೆ
ಕಾಮಿತದಾತನೆ ಕರುಣಾವಾರಿಧಿ ರಾಮ ೧
ಸಾರಸಾಕ್ಷನೆ
ತೋರಿಸು ಚರಣವ ಪೂರೈಸೆನ್ನ ಮನ ಸುರಾಮ ೨
ಶ್ರೀನಿವಾಸನೆ
ಶ್ರೀ ನರಹರೆ ಭವ ಕಾನನಾನಲಹನುಪಮ ೩

ತಮಗೆ ಸಂನ್ಯಾಸದೀಕ್ಷೆ
೩೮೭
ಲಕ್ಷ್ಮೀಪ್ರಿಯರ ಚರಣ ಭಜನೆ
ನಿರುತದಿಂದ ಮಾಡುವ ಪ
ಲಕ್ಷ್ಮೀಪತಿಯ ಕರುಣ ಪಡೆದು
ಹರುಷದಿ ನಾವ್ ಬದುಕುವ ಅ.ಪ
ಸದ್ಪೈಷ್ಣವ ಕುಮುದಕಾಭಿ
ವೃದ್ಧಿ ತರುವ ಗೋಸುಗ
ಮಧ್ವ ಮತಾಬ್ಧಿಯಲ್ಲಿ
ಉದ್ಭವಿಸಿದ ಚಂದ್ರರ ೧
ವ್ಯಾಸಮುನಿಗೆ ಒಲಿದ ಕೃಷ್ಣನ
ಸೋಸಿನಿಂದ ಪೂಜಿಸಿ
ವ್ಯಾಸಸೂತ್ರ ಭಾಷ್ಯ ಉಪ
ನ್ಯಾಸ ಮಾಡಿ ಮರೆವರ ೨
ದೀನ ಜನರ ವೃಂದಕೆ ಸುರ
ಧೇನು ಎನಿಪ
ಮುನಿವರ ಶ್ರೀ ನರಹರಿಗೆ ತಾವು
ಅನುಗರಾಗಿ ಇರುವರ ೩

೩೮೯
ವಾದೀಂದ್ರ ಗುರುರಾಜ ನಿನ್ನ
ಪಾದವ ತೋರಿಸಯ್ಯಾ
ವಾದೀಂದ್ರ ಗುರು ನಿನ್ನ ಪಾದವ ನಂಬಿದೆ
ಮೋದವÀ ಕೊಡುವುದು ಮದಗಳೋಡಿಸಿ ಪ
ಉಪೇಂದ್ರ ಕರಕಮಲಜಾತ ಪಾಪಗಳೋಡಿಸಯ್ಯ
ಪಾಪರಾಶಿಯ ಸುಟ್ಟು ದ್ರೌಪದೀವರದನ
ಕೃಪೆಯಾಗುವಂತೆ ಮಾಡೋ ಶ್ರೀಪತಿ ಪ್ರಿಯನೆ ೧
ಮೂಲರಾಮರ ಪಾದಪದುಮದಿ ಅಳಿಯಂತಿಪ್ಪ ಧೀರ
ಶೀಲಾದಿ ಗುಣವಿತ್ತು ಶ್ರೀ ಲೋಲನಂಘ್ರಿಯ
ಮಲಿನ ಮನವ ಕಳದು ಪೊಳೆಯುವಂತೆ ಮಾಡೋ೨
ತುಂಗಾ ತೀರದೊಳಿದ್ದು ನಿತ್ಯ ಭಂಗಗಳೋಡಿಸುವಿ
ಶೃಂಗಾರ ತುಳಸಿಯ ಮಂಗಳ್ಹಾರವ ಧರಿಸಿ
ತುಂಗಮಹಿಮ ನರಸಿಂಗ ಮೂರುತಿ ತೋರೊ ೩

ಇದು ಉತ್ತರಾಧಿಮಠದ
೩೮೮
ಸತ್ಯಧರ್ಮ ಸದ್ಗುರುವರ ರಕ್ಷಿಸು ಪ
ಭೃತ್ಯ ನೀನಾಗೆಂದು ಕೃತ್ಯ ವಿಪರ್ಯಯ ವೆತ್ತಣಿಸದೆ ಕೃತಕೃತ್ಯನ ಮಾಡಿಂದು ಅ.ಪ
ಸತ್ಯವರರ ವರ ಕುವರನೆ ನೀನತ್ಯುತ್ತಮ ಸುಖ ಚಿನ್ನ
ಯತ್ಯಾಶ್ರಮ ಸದ್ಧರ್ಮಾಚರಣದಿ ನಿತ್ಯಾರ್ಜಿತ ರಾಮ
ಭೃತ್ಯಜನಕೆ ಸದ್ಬುದ್ಧಿ ಬೋಧಿಸಿ ಕೃತಕೃತ್ಯರ ಮಾಡುತಲಿ
ಕೃತ್ಯದಿಂದ ಗುರುವಿದತ್ತ ಸುನಾಮ ಯಥಾರ್ಥಪಡಿಸಿ
ಕ್ಷಿತಿಗುತ್ತಮನೆಸಿದ ೧
ಭದ್ರಾತೀರನೆ ಇತ್ತು ಸುಭದ್ರಗಳ್ ನಿದ್ರಾರಹಿತರಿಗೆ
ಆದ್ರಾಂತಃಕರುಣನೆ ಸೌಹಾರ್ದದಿ ಭದ್ರಾರಮಣನಲಿ
ಕಾದ್ರ್ರವೇಯ ಭೂಷಣನಂದದಿ ನೀ ಭದ್ರಾದೇವಿಯನು
ಛಿದ್ರರಹಿತ ಶಿಲೆ ಮಧ್ಯದಿ ಪಡೆದು ಸುಭದ್ರಾಪತಿ ಸಖ
ಮುದ್ರಾಧರನೆ ೨
ಶ್ರೀ ನರಹರಿ ಪದ ನೀನನುದಿನದಲಿ ಧ್ಯಾನಮಾಡುತ ಬಾಹ್ಯ
ಜ್ಞಾನವಿಲ್ಲದೆ ಅನುಮಾನ ವಿಪರ್ಯಯ ಹೀನಗೈಸಿ ಸಾಕ್ಷಿ
ಮಾನದಿಂದ ಕೊಟ್ಯಾರ್ಭುದ ರವಿಪ್ರಭೆ ಕಾಣುತ
ಪ್ರತಿಮುಖವೋಲ್
ಏನು ಇದಕೆ ಅನುಮಾನವಿಲ್ಲ ಹಂ ಮನಿಯವನೆನ್ನುವೆ ನೀ
ಸರಿಲಿಂಗರೂಪಧರ೩

೩೭೬
ಸತ್ಯನಾರಾಯಣನ ಪಾದ ಭಕ್ತಿಯಿಂದ ಭಜಿಸು ಮನವೆ
ಅರ್ಥಿಯಿಂದ ಪೂಜಿಪರಿಗೆ ವಿತ್ತಾದಿಗಳಿತ್ತು ಕಾಯ್ವ ಪ
ಹಿಂದೆ ನಾರದರಿಂದಿರೇಶಗೆ ವಂದಿಸಿ ಬೆಸಗೊಳಲು
ಛಂದದಿಂದಲಿ ಸಿಂಧುಶಯನ ಬಂಧಮೋಚಕವೆಂದು ಪೇಳಿದ ೧
ತಿಳಿದು ನಾರದರಿಳೆಯೊಳರುಹೇ ಕಲಿತು ಜನಗಳಲ್ಲಾರಂಭಾ
ಫಲ ಗೋಧುಮಚೂರ್ಣ ಶರ್ಕರ
ಪಾಲು ಘೃತಾದಿಗಳಿಂದ ಪೂಜಿತ ೨
ದ್ವಿಜವಣಿಕ್ ಭೂಭುಜರು ನಿಜಭಕುತಿಯಿಂದ ಯ್ಯಜಿಸೆ
ಕುಜನಮರ್ಧನ ಶ್ರೀ ನರಹರಿ
ಸೋಜಿಗವನ್ನೇ ತೋರಿದುದರಿಯ ೩

೩೭೫
ಸರಸಿಜನೇತ್ರ ನಿನ್ನಲೀಗ ಸ್ಮರಿಸುವೆ ಬೇಗದಿ ಬಾ ಪ
ಸಿರಿ ಪಂಕಜಪೀಠರ ಸ್ತೋತ್ರವನು ಸರಸಾಗಿ ನೀ
ಪರಿಗ್ರಹಿಸಿ ಇರುತಿರ್ಪ ಹರೇ ೧
ಮುರಲೀಧರ ಶ್ರೀ ಅರಿಪಂಕಜವ
ಕರದೊಳಗೆ ತಿರುಗಿಸುತ ವರಗಾನಿಸುವಾ ೨
ಮರುಛ್ರೀಕರು ಈ ತರುವಾಗಿಹರು
ಚರಣವ ಚರಣವ ಶ್ರೀ ನರಹರಿಯ ನೆರೆ ಚೀಪುತಲಿ * ೩

ಉತ್ತರಾಧಿಮಠದ
೩೮೬
ಸ್ಮರಿಸು ಸ್ಮರಿಸು ಮನವೇ ಗುರುರಾಯರ ಪ

ಸ್ಮರಿಸು ಸ್ಮರಿಸು ಬಿಡದೆ ಸ್ಮರಿಸು ನೀ ಗುರು ಸತ್ಯ
ಜ್ಞಾನತೀರ್ಥರ ಪದವ ಸಾರುವೆ
ಬೇಡಿದ್ದು ಕೊಡುವೆನೆಂಬುವರನು ಅ.ಪ
ಸಂಶಯ ಪಡಬ್ಯಾಡವೋ ಇದಕೆ ನಾ ನಿ
ಸ್ಸಂಶಯದಿಂದ ಪೇಳುವೆ
ಸಂಶಯಾತಕೆ ಋಷಿ ವಂಶೀಕ ರಾವಣನ
ಧ್ವಂಸ ಮಾಡಿದ ರಾಮನ ಸಂಸೇವಿಪರ ನೀ ೧
ಶಾಪಾನುಗ್ರಹ ಶಕ್ತರೂ ಇವರು
ಕಾಮಕ್ರೋಧವ ಬಿಟ್ಟವರೂ
ತಾಪತ್ರಯಗಳಳಿದು ಪಾಪಗಳೋಡಿಸಿ
ಕಾಪಾಡುವೆನೆಂದು ಜಗದಿ ಮೆರೆದವರ ೨
ಗುರುಕರುಣಾಬಲದಿ ಶ್ರೀಹರಿನಪರೋಕ್ಷಿಗೈಸಿದ
ಧೀರರ ದುರ್ವಾದಿಗಳ ಮುರಿದು ಗುರು ಮಧ್ವರಾಯರ
ಪರಮ ಪ್ರೀತಿಯ ಪಡೆದ ನರಹರಿ ಪ್ರಿಯರ ೩

೪೦೩
ಹೀಂಗಾಯಿತ್ಹೀಂಗಾಯಿತೆ ಎನ್ನಯ ಬಾಳು ಪ
ಗಂಗಾಜನಕ ಪಾಂಡುರಂಗ ಮೂರುತಿಯನು
ಹಿಂಗದೆ ಭಜಿಸದೆ ಅಂಗಜನ್ವಶನಾದೆ ೧
ಕಂತು ಜನಕ ಲಕ್ಷ್ಮೀಕಾಂತ ಮೂರುತಿಯನ್ನು
ಚಿಂತಿಸದೆ ವಿಷಯ ಚಿಂತನೆಯಲ್ಲಿರುವೆ ೨
ಡಂಭಕತನದಿ ಬಲು ಹಿಂಡು ಜನರ ಮುಂದೆ
ಸಂಭಾವಿತನಂದದಿ ಶುಂಭ ನಾ ಮೆರೆದೆನೊ ೩
ಅಂಗನೆಯರ ಅಂಗಸಂಗ ಬಯಸಿ ಅಂತ
ರಂಗದಿ ಕುಳಿತು ಬಹು ಸಂಗತಿ ಕಲ್ಪಿಸಿದೆ ೪
ನಾನು ಪೇಳುವುದೇ ಸನ್ಮಾನ್ಯವೆಂದುಸುರಿ ನಾ
ಮಾನಿನಿಯರ ಕೂಡಿ ಶ್ವಾನನಂದದಿ ಬಾಳ್ವೆ ೫
ಬಿಡಿಸೋ ಬಿಡಿಸೋ ಹರಿ ಕೇಡು ಬುದ್ಧಿಗಳನ್ನು
ಈಡು ನಿನಗಿಲ್ಲೆಂಬೊ ದೃಢಮನಸನೆ ಕೊಡೊ ೬
ಘನತೆ ನಿನಗಲ್ಲವೊ ದೀನರ ಬಳಲಿಪುದು
ಮಾನದಿಂದಲಿ ಕಾಯೊ ಶ್ರೀ ನರಹರಿಯೇ೭

೪೦೪
ಹುಚ್ಚು ಹಿಡಿದಿದೆ ಎನಗೆ ಹುಚ್ಚು ಹಿಡಿದಿದೆ ಪ
ತುಚ್ಛ ವಿಷಯವೆಂಬುವಂಥ ಅಚ್ಚಮದ್ದು ನೆತ್ತಿಗೇರಿಅ.ಪ
ಹಿರಿಯರರಿಯೆ ಕಿರಿಯರರಿಯೆ ಹರಿಯ ಸ್ಮರಣೆ ಮಾಡಲರಿಯೆ
ನಾರಿಯರ ಪರಿಚಯದಿ ಆರು ಪುರುಷರೊಡನೆ ಇರುವೆ ೧
ಇದ್ದರಿದ್ದೆ ಎದ್ದರೆದ್ದೆ ಇದ್ದ ಸುದ್ದಿ ಪೇಳಲರಿಯೆ
ಕದ್ದ ಕಳ್ಳನಂತೆ ಇದ್ದು ಬುದ್ಧಿ ಹೊದ್ದಿಕಿ ಬಿಟ್ಟಿರುವೆ ೨
ಹೀನಗುಣಗಳೇನು ಪೇಳಲಿ ಶ್ರೀ ನರಹರಿಯೆ ನೀನೆ ಬಲ್ಲಿ
ಮಾನವಂತರು ಜ್ಞಾನವಿತ್ತು ಅಜ್ಞಾನ ವಿಷಯ ಹಾನಿ ಮಾಡಿರಿ೩

೪೦೫
ಹ್ಯಾಂಗಾದರು ಎನ್ನ ನೀ ರಕ್ಷಿಸ ಬೇಕೋ
ಸಾಗರಶಯನ ಕೃಷ್ಣಾ ಪ
ಭಾಗವತರ ಸಂಗ ಬೇಗದಿಂದಲಿ ಇತ್ತು
ಹೋಗಲಾಡಿಸು ಭವವ ಶ್ರೀ ಕೃಷ್ಣ ಅ.ಪ
ಬಾಲೇರ ಸಲುವಾಗಿ ಕೀಳು ಜನರಲ್ಲಿ
ಶೀಲ ಜರಿದು ಯಾಚಿಸಿ
ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆ
ಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ ೧
ಅಂಗಜನಾಟಕೆ ಹಗಲಿರುಳೆನ್ನದೆ ಪರ
ಅಂಗನೆರ ಕೂಡಿ
ಮಂಗಳಮಹಿಮ ತುರಂಗ ವದನ ದೇವ
ಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ ೨
ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆ
ಕಾರುಣ್ಯದಲಿ ಭಕ್ತನ
ಅರಿಷಟ್ಕರನೆ ಕೊಂದು ಕರಿವರದನೆ ಘೋರ
ನರಕಕ್ಕೆ ಭಯ ತಪ್ಪಿಸೋ ಶ್ರೀಕೃಷ್ಣ ೩

೪೦೦
ನರಹರಿಯೆ ಪಾಲಿಸೊ ಮುನ್ನ
ತರಳ ಪ್ರಹ್ಲಾದನಂತೆನ್ನ ದುರಾಸೆ ಬಿಡಿಸಿ ನಿನ್ನ
ಚರಣದಲ್ಲಿ ಮನ ನಿರುತದಿ ನಿಲ್ಲಿಸಿ ಕರುಣವ ತೋರೋ ಪ
ತರಳತ್ವದಿ ಬಹು ದುರುಳತನದಿ ದಿನ
ತೆರಳಿತು ಅರಿಯದೆ ದೇಹಂಭಾವದಲ್ಲಿ೧
ಗುರುಕುಲವಾಸದಿ ಸರಿಯಾಗಿರದೆ
ಬರಿದೆ ಕಾಲ ಚರಿಸಿತು ಕ್ರೀಡೆಯಲಿ ೨
ಬರಲು ಯೌವ್ವನವು ಪರಸತಿಯಲಿ ಮನ
ನಿರುತದಿಂದಿರಸಿ ನಾ ಗರುವದಿ ಮೆರೆದೆ ೩
ಅನುದಿನದಲಿ ನವನವ ವಿಷಯದಿ
ಮನ ಕುಣಿ ಕುಣಿದು ಓಡುವುದಯ್ಯ ಹರಿಯೆ೪
ಶ್ರೀ ನರಹರಿಯೆ ಇನಿತು ಘಾಸಿಸುವುದು
ಘನತೆಯೆ ನಿನಗಿದು ವನಜ ಕುವರನಯ್ಯ ೫

ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ
ಮಹಾಲಕ್ಷ್ಮಿ
೩೭೭
ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ
ಸುಮ್ಮನೆ ಬಿಡುವದು ಸಮ್ಮತವೇ ನಿನಗೆ ಪ
ಹೆತ್ತ ಬಾಲರು ಮಂದಮತಿಗಳಾದರೆ ತಾಯಿ
ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ ೧
ನಿಮ್ಮ ಮಾತಿಗೆ ಹರಿ ಸಮ್ಮತನಾಗುವ
ಕುಮತಿಗಳೆಣಿಸದೆ ರಾಮ ಮೂರುತಿ ತೋರೆ೨
ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ
ನಂದ ಕಂದನ ಪಾದ ಪೊಂದಿರುವಂತೆ ಮಾಡೆ ೩
ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ
ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ ೪
ಎನ್ನಲಿರುವ ಹೀನರೋಡಿಸಿ ಬೇಗ
ಪನ್ನಗಾಚಲವಾಸ ಶ್ರೀ ನರಹರಿ ತೋರೆ ೫

ಹಾಡಿನ ಹೆಸರು :ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ
ಹಾಡಿದವರ ಹೆಸರು :ಶಮಿತಾ ಮಲ್ನಾಡ್
ರಾಗ :ಶುಭಪಂತುವರಾಳಿ
ತಾಳ :ತ್ರಿಶ್ರ್ರನಡೆ ಏಕ ತಾಳ
ಸಂಗೀತ ನಿರ್ದೇಶಕರು :ರಾಜು ಅನಂತಸ್ವಾಮಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಪೊರೆಯಬೇಕೋ ಎನ್ನ ಶ್ರೀ ನರ
೩೭೦
ಪೊರೆಯಬೇಕೋ ಎನ್ನ ಶ್ರೀ ನರ
ಹರಿಯೆ ಕೇಳೋ ಮುನ್ನಾ ಪ
ನೀ ಪೊರೆಯದಿರಲು ಈ ಪೊಡವಿಯೊಳಗೆ
ಕಾಪಾಡುವರನು ಕಾಣೆ ನಿನ್ನಾಣೆ ಮನ್ನಣೆಯಲಿ ಅ.ಪ
ನೀರ ಪೊಕ್ಕರು ಬಿಡೆನೋ ಬೆನ್ನಲಿ
ಭಾರ ಪೊತ್ತರು ಬಿಡೆನೋ
ಕೋರೆಯ ಬೆಳೆಸಿ ನೀ ಘೋರ ರೂಪನಾಗಿ
ತಿರುಕನೆಂದು ಪೇಳಲು ಬಿಡೆನೋ ೧
ಕೊಡಲಿ ಪಿಡಿಯೆ ಬಿಡೆನೋ ನೀ ಘನ
ಅಡವಿ ಸೇರಲು ಬಿಡೆನೋ
ತುಡುಗನಂದದಿ ಪಾಲ್ಗಡಿಗೆ ಒಡೆದು ಸಲೆ
ಉಡುಗಿ ಜರಿದು ತುರುಗೇರಲು ಬಿಡೆನೋ ೨
ಪಾಪಿ ಎಂದು ಎನ್ನ ಜರಿಯದೆ
ಕಾಪಾಡೆಲೊ ಘನ್ನ
ಶ್ರೀ ನರಹರಿಯ ನಾಮಕೆ ಪೋಪದ
ಪಾಪಗಳುಂಟೆ ಜಾಲವ ಮಾಡದೆ ೩

ಹಾಡಿನ ಹೆಸರು :ಪೊರೆಯಬೇಕೋ ಎನ್ನ ಶ್ರೀ ನರ
ಹಾಡಿದವರ ಹೆಸರು :ವಸುಂಧರ ಶಾಂತಾರಾಮ್
ರಾಗ :ಸರಸ್ವತಿ
ತಾಳ :ಮಿಶ್ರಗತಿ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು :ಸತ್ಯವತಿ ಟಿ. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಮುದ್ದು ಸುರಿಯುತಾನೆ ನೋಡಿ
೩೭೨
ಮುದ್ದು ಸುರಿಯುತಾನೆ ನೋಡಿ ಕೃಷ್ಣ ಪ
ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ
ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ ಅ.ಪ
ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ
ಸಾವೇರಿ ಮೊದಲಾದ ರಾಗವ ಪಾಡುತ೧
ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು
ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ ೨
ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ
ಮುಕುಟ ಶಿರಶ್ಚಕ್ರ ಶೋಭಿತಮುಖ ೩
ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ
ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ ೪
ಶ್ರೀ ನರಹರಿಯು ತಾ ನೆನೆಯುವರಿಗೆ
ಭವ ಕಾನನದ ಭಯದ ಮನ ಶಂಕಿಸದಿರೆಂದು೫

ಹಾಡಿನ ಹೆಸರು :ಮುದ್ದು ಸುರಿಯುತಾನೆ ನೋಡಿ
ಹಾಡಿದವರ ಹೆಸರು :ನಾಗಚಂದ್ರಿಕ
ರಾಗ :ಬಿಲಾಸ್‍ಖಾನಿ ತೋಡಿ
ತಾಳ :ತ್ರಿಶ್ರ್ರನಡೆ ಏಕ ತಾಳ
ಸಂಗೀತ ನಿರ್ದೇಶಕರು :ರಾಜು ಅನಂತಸ್ವಾಮಿ
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ