Categories
ರಚನೆಗಳು

ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ

ಸರಸ್ವತಿ ಸ್ತುತಿ
೩೬೬
ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ-
ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ.
ಶೋಕಭಯದೂರೆ ಭಕ್ತಾನೀಕಮಂದಾರೆ ಜಗ-
ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ ೧
ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ-
ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ ೨
ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ –
ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ ೩
ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ-
ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ ೪
ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ-
ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ೫

೪೦೧
ಅಂಬಾ ನಿಖಿಳಲೋಕ ಜನನಿ ಜಗದಂಬಾ ಪ.
ನಿಖಿಳಲೋಕಸತಿ ಮುಕುತಿಪ್ರದಾಯಕಿ
ಶುಕಶೌನಕಾದಿ ವಿನುತೇ ಕಾತ್ಯಾಯಿನಿ ೧
ಆದಿಶಕ್ತಿ ದಿವಿಜಾದಿವಂದಿತೆ ಶಿವೆ
ಯಾದವೇಂದ್ರ ದಾಮೋದರಭಗಿನಿ ೨
ಕಂಬುಕಂಠಿಣಿ ಸ್ವರ್ಣಕುಂಭಯೋಧರಿ
ಅಂಬುಜಾಸನವಿನುತೆ ಕಾತ್ಯಾಯಿನಿ ೩
ಸರ್ಪವೇಣಿ ವರಬಪ್ಪ ಪುರೇಶ್ವರಿ
ಮುಪ್ಪುರನಾಶನರ್ಧಾಂಗಿ ಕಾತ್ಯಾಯಿನಿ ೪
ಸಿರಿಕಾತ್ಯಾಯಿನಿ ಗೌರಿ ಭವಾನಿ
ಹರಿ ಲಕ್ಷುಮಿನಾರಾಯಣ ಭಗಿನಿ ೫

೩೬೭
ಅಂಬಾ ಸರಸ್ವತೀ ದೇವಿ ಜಗ-
ದಂಬಾ ಸರಸ್ವತೀ ದೇವಿ ಪ.
ಅಂಭೋಜನಯನೆ ರೋ-
ಲಂಬಕುಂತಳೆ ಜಗ . . . . ಅ.ಪ.
ರುದ್ರಾದಿ ಸುರಕುಲ ಸಿದ್ಧಿಪ್ರದಾಯಕಿ
ಶುದ್ಧ ಸತ್ವಕಲಾಪೆ ಶ್ರದ್ಧಾಭಕ್ತಿಸ್ವರೂಪೆ ೧
ಮಾತ್ರಾಸ್ವರವರ್ಣಮಾನಿ ವಾಣಿ ಕಲ್ಯಾಣಿ
ಸೂತ್ರಾರ್ಥಬೋಧಿನಿ ವಿಧಾತನ ರಾಣಿ ೨
ಕ್ಷೀರಾಬ್ಧಿಶಾಯಿ ಲಕ್ಷ್ಮೀನಾರಾಯಣನ ಕರು-
ಣಾರಸಪೂರೆ ಸುವಿಚಾರೆ ಗಂಭೀರೆ೩

ಶ್ರೀ ಗಣೇಶ ಪ್ರಾರ್ಥನೆ
೩೧೦
ಅಗ್ರಪೂಜಾ ವಿಘ್ನರಾಜ
ಅಗ್ನಿಜಾಗ್ರಜ ಮಹೋಜ ಪ.
ಲಗ್ನವಾಗಲಿ ಹರಿಪದಾಬ್ಜ
ನಿಗ್ರಹೀತ ಕಾಮಬೀಜ ಅ.ಪ.
ಭಾನುತೇಜ ಭಕ್ತಿಭಾಜ
ಧ್ಯಾನಗಮ್ಯ ಮುನಿಸಮಾಜ
ದೀನಕಾಮದ ಕಲ್ಪಭೂಜ
ಗಾನಲೋಲ ಭಾವ ನಿಯಾತ್ಮಜ ೧
ಚತುರಭುಜ ಸಚ್ಚರಿತ ವಿರಜ
ಯತಿವರೇಣ್ಯಗಣ ವಿರಾಜ
ಮತಿಮತಾಂವರ ನತಬಿಡೌಜ
ಕ್ರತುಭುಜಾರ್ಚಿತಾಂಘ್ರಿ ಪಂಕಜ ೨
ರುಕುಮಿಣೀಜ ರುದ್ರಗಣವ್ರಜ
ಭಕುತ ವತ್ಸಲ ಮನೋಜ
ಮುಖಮತಂಗಜ ಮೂಷಿಕಧ್ವಜ
ಲಕುಮಿನಾರಾಯಣ ಗುಣಜ್ಞ ೩

ಲೋಕನೀತಿ
೪೬೩
ಅಚ್ಯುತಾನಂತ ಗೋವಿಂದ
ಅಕ್ಷರೊತ್ತಮ ಸದಾನಂದ ಪ.
ನಿಶ್ಚಲ ಭಕ್ತಿಯಿಂ ಮೆಚ್ಚಿಸು ಹರಿಯಂ
ನಿಶ್ಚಯ ಪೋಪುದು ಭವಬಂಧ ಅ.ಪ.
ಆಧಿವ್ಯಾಧಿಹರಣ ಕಾರಣ ಮಧು
ಸೂದನ ಸತ್ಯ ಸದ್ಗುಣವೃಂದ
ವೇದಗಮ್ಯ ಪ್ರಹ್ಲಾದ ಕ್ಷೇಮದ ಮ-
ಹೋದಧಿಶಯನ ಮುಕುಂದ ೧
ಶ್ರೀಬ್ರಹ್ಮಾದಿ ದಿವಿಜಕುಲವಂದಿತ
ಶೋಭಿತ ಪಾದಾರವಿಂದ
ಈ ಭೂಮಿಯೊಳಗೆ ಜನಿಸಿದಕೆ ಸಫಲ
ಲಾಭವೆ ಹರಿಕಥಾನಂದ ೨
ಪ್ರಾಣನಿಯಾಮಕ ಸರ್ವತ್ರ ವ್ಯಾಪ್ತ
ಧ್ಯಾನಿಸದಿರು ನೀ ಬೇರೊಂದ
ದೀನವತ್ಸಲ ಸುಮ್ಮಾನದಿ ಕಾವ ಲ-
ಕ್ಷ್ಮೀನಾರಾಯಣ ದಯದಿಂದ ೩

ಶ್ರೀಹರಿ ಸಂಕೀರ್ತನ
೩೨೩
ಅನ್ಯರಿಲ್ಲ ಗತಿ
ಅಚ್ಯುತನಾನಂತ ಶ್ರೀಪತಿ
ಅಜಪಿತ ಮಹಾಮತಿ ಪ.
ಸತ್ಯಜ್ಞಾನಾನಂತುಗುಣಸಿಂಧು
ಭಾಗವತಜನಬಂಧು ರಕ್ಷಿಸಿಂದು
ಪ್ರತ್ಯಗಾತ್ಮ ಸುಹೃತ್ತಮ ಜರಾ-
ಮೃತ್ಯುರಹಿತನೆ ಚಿತ್ತಸಾಕ್ಷಿಯೆ ೧
ವಾಸುದೇವ ದಿನೇಶಕೋಟಿಪ್ರಭ
ಪೂಜಿತವಿಬುಧ ಮೌನಿಸಭ ಪದ್ಮನಾಭ
ದಾಸಜನಹೃದಯಾಶ್ರಯಸ್ಥಿತ
ದೋಷಗಂಧವಿದೂರ ಶ್ರೀವರ ೨
ಸಕಲ ಜಗದಾಧಾರಮೂರುತಿಯೆ
ವಿಜಯರಥ ಸಾರಥಿಯೆ ಹರಿಯೆ ದೊರೆಯೆ
ಶಕಟಮರ್ದನ ಶಾಙ್ರ್ಗಧರ ಶ್ರೀ
ಲಕುಮಿನಾರಾಯಣ ನಮೋಸ್ತುತೇ ೩

ಶ್ರೀ ಸುಬ್ರಹ್ಮಣ್ಯ ಸ್ತುತಿ
೪೧೯
ಅಷ್ಟೊಂದು ಸಹಾಯ ಗೈಯಬೇಕಯ್ಯ
ಸೃಷ್ಟಿಗೀಶ ಸುಬ್ವರಾಯ ಕಾರ್ತಿಕೇಯ ಪ.
ಬುದ್ಧಿಗಿತ್ತು ಧೈರ್ಯ ಸಿದ್ಧಿಸಯ್ಯ ಕಾರ್ಯ
ಶುದ್ಧಭದ್ರಕಾಯ ರುದ್ರಾಣೀತನಯ ೧
ಮುತ್ತಿತೆಮಗೆ ಮಾಯಾ ಸತ್ತ್ವಗುಂದಿತಯ್ಯ
ಚಿತ್ತದಭಿಪ್ರಾಯವೆತ್ತ ಬಾಹುಲೇಯ ೨
ಪಾವಂಜಾಖ್ಯ ಕ್ಷೇತ್ರಾಧಿವಾಸಶ್ರೇಯ
ದೇವ ಲಕ್ಷ್ಮೀನಾರಾಯಣನ ಸುಪ್ರೀಯ೩

ವಾಯುದೇವರು
೩೫೩
ಆಂಜನೇಯ ಕುಂತೀತನಯ-
ಅಂಜನಾಭಪ್ರಿಯ ಮಧ್ವಾಖ್ಯರಾಯ ಪ.
ಮಂಜುಳಾಂಗ ಮೃತ್ಯುಂಜಯಾದಿ ಸುರ-
ರಂಜಿತಾತ್ಮ ಭಯಭಂಜನ ನಿತ್ಯ ನಿ-
ರಂಜನ ದೇವಪ್ರಭಂಜನತನಯ ಅ.ಪ.
ರಾಮರಾಯಬಂಟ ದಿತಿಸುತ-
ಸ್ತೋಮಹರಣ ತುಂಟ
ಸ್ವಾಮಿಕಾರ್ಯಮನಪ್ರೇಮನಿರಾಮಯ
ಭೀಮಪರಾಕ್ರಮಧಾಮ ಘನಾಘನ-
ಶ್ಯಾಮ ನಿಕಾಮ ಸುಧೀಮಲಲಾಮ ೧
ಚಿಂತಾಮಣಿ ರಾಮ ನೇಮ-
ವಾಂತು ಸಾರ್ವಭೌಮ
ಸಂತೋಷದಿ ಗಗನಾಂತರಪಂಥದಿಂ
ಅಂತರಿಸುತ ಮಹಾಂತೋದಧಿಯ
ಪ್ರಾಂತಕೆ ಹಾಯ್ದ ನಿಶ್ಚಿಂತ ಹನುಮಂತಾ೨
ಆಟನೋಟದಿಂದ ವನದೊಳು
ಸಾಟಿಯಾಗಿ ಬಂದ
ಮೀಟೆನಿಸುವ ಬಲು ಕಾಟಕ ದೈತ್ಯರ
ಕೂಟ ಕೆಡಹಿ ಪುರಕೋಟಿಯ ತಿಕ್ಕಿದ
ಪಾಟಲಮುಖ ಶತಕೋಟಿಶರೀರ ೩
ಅಟ್ಟಹಾಸದಿಂದ ಕಮಲದಿ
ಪುಟ್ಟಿದಾಸ್ತ್ರದಿಂದ
ಕಟ್ಟಿಕೊಳ್ಳಿಸಿ ಜಗಜಟ್ಟಿ ಖ್ಯಾತಿಯಿಂದ
ದಟ್ಟಿಸಿ ಲಂಕೆಯ ಪಟ್ಟಣವನು ಸೂರೆ-
ಸುಟ್ಟುಬಿಟ್ಟ ಕಡುದಿಟ್ಟ ಹನುಮಂತಾ ೪

ಆತ್ಮನಿವೇದನೆ
೪೩೬
ಆದಿಮೂರುತಿ ಪರಂಜ್ಯೋತಿಪಿತನೇ ದಾಶರಥಿ ಪ.
ಕಡಲಶಯನ ಯೆನ್ನ ಮೊರೆಯ ಆದರಿಸಿ ಜೀಯ
ಕೊಡು ಭಕ್ತಿಶಕ್ತಿ ಸಂಪದಸಿರಿಯ
ಕಡು ಬಾಲಕರೊಳು ಕೆಡುಕು ಮಾಡದೆ ನಡು
ಕಡೆಗಳಿಲ್ಲದ ಜಗದೊಡೆಯ ಜನಾರ್ದನ ೧
ಶತಕೋಟಿ ಬ್ರಹ್ಮಾಂಡಘಟವ ನಿರುತದಿ ಧರಿಸಿರುವ
ಪ್ರಥಮಪುರುಷ ನಿನ್ನ ಪದವ
ಕ್ಷಿತಿಯೊಳೀಕ್ಷಿಪಗೆ ಚೋದಿಗವೆನೆ ರತಿ-
ಪತಿಪಿತನೆ ಬಂದು ನಡೆಸೆನ್ನ ಮುಂದು ೨
ಕುಕ್ಷಿಯೊಳೀರೇಳು ಜಗವ ಧರಿಸಿರುವ
ಕ್ಷಯ ಗುಣದಿಂದ ಮೆರೆವ
ಲಕ್ಷ್ಮೀನಾರಾಯಣ ಲಕ್ಷ ಅವಗುಣಗಳ
ಈಕ್ಷಿಸದೆನ್ನನು ರಕ್ಷಿಸಬೇಕೆಂದು ೩

೪೬೪
ಆನಂದಾನಂದಂ ಶಿವಶಿವ ಆನಂದಾನಂದಂ ಪ.
ಅಪ್ಪ ಅಣ್ಣನೆಂದು ಕರೆದರೆ ನಮಗಿಹ
ತಪ್ಪುಗಳನು ಜಗದಪ್ಪನಿಗೊಪ್ಪಿಸುವಾನಂದಾನಂದಂ ೧
ತತ್ತ್ವವರಿತು ಹರಿಭೃತ್ಯರೊಳಾಡುತ
ಚಿತ್ತವ ಸಂತತೇಕಾತ್ಮನೊಳಿಡುವಂಥಾನಂದಾನಂದಂ ೨
ಭೂರಿ ಸಂಸಾರಕೆ ಸೇರಿದೆ ನಿತ್ಯದಿ
ಧೀರ ಲಕ್ಷ್ಮೀನಾರಾಯಣನೆಂಬುವದಾನಂದನಂದಂ ೩

೪೬೫
ಇಂಥ ಜನಗಳಿಗೆ ಎಂಥಾದ್ದು ಹರಿಕಥೆ
ಕುಂತಿಮಕ್ಕಳಿಗಾಯ್ತು ಕಾಂತಾರವಾಸ ಪ.
ಸ್ವಂತ ಧರ್ಮವ ಬಿಟ್ಟು ಆಂತನ್ಯಧರ್ಮವ
ಸಂತಾಪಕ್ಕೊಳಗಾಗಿ ಭ್ರಾಂತಿಪಟ್ಟಿಹರು ೧
ಜೀವಿಸಿ ಮೃಗದಂತೆ ಸಾವನು ಬಗೆಯದೆ
ಕೇವಲ ತಾಮಸ ಯಾವಜ್ಜೀವನವು ೨
ಸರಕಾರದ ಭಯ ಸರ್ವರಿಗಿದ್ದರು
ಸರಿಯಾಗಿ ನಡೆಯದೆ ಬರಿದೆ ಬಳಲುವರು ೩
ಬಡವರ ಬಾಯನು ಹೊಡೆದು ತಂದು ತನ್ನ
ಮಡದಿಮಕ್ಕಳಿಗುಣಬಡಿಸಿ ಮೆರೆವರೈ ೪
ಲಕ್ಷ್ಮೀನಾರಾಯಣನ ಲಕ್ಷಣಾಂಕಿತರನ್ನು
ಲಕ್ಷ್ಯಕ್ಕೆ ತಾರದ ಕುಕ್ಷಿಂಭರರು ೫

ಕಾರ್ಕಳದ ವೆಂಕಟರಮಣದೇವರ ಲಕ್ಷದೀಪೋತ್ಸವ
೪೭೮
ಪೀಠಿಕೆ
ಉತ್ತಮರು ಕೇಳಿರೈ ಉಲ್ಲಾಸದಿಂದ ವರ-
ಪೃಥ್ವಿಯೊಳು ಮೂಲಕಾಪುರದೊಳಗಿಹ ವಿಶ್ವಾ
ಮಿತ್ರ ಗೋತ್ರಜ ಶಿವದ್ವಿಜ ಧನಂಜಯ
ಪ್ರವರವೆತ್ತ ವೆಂಕಟಕೃಷ್ಣನ
ಪುತ್ರ ಲಕ್ಷ್ಮೀನಾರಾಯಣನು ಹರಿಪದಕಮಲ
ಚಿತ್ತದೊಳ್ ಧ್ಯಾನಿಸುತ ಪೇಳ್ದನೀ ಕಾವ್ಯಮಂ
ಉತ್ತಮವಿದಲ್ಲೆನುತ ಉಲ್ಲಂಘಿಸದೆ ಯಿದ
ಪ್ರವರ್ತಿಸುವುದೆಲ್ಲ ಜನರು ೧
ಧರೆಯೊಳುತ್ತಮವೆನಿಪ ವರ ಕಾರ್ಕಳಾಖ್ಯ ಪುರ-
ದರಸ ಶ್ರೀವೆಂಕಟೇಶ್ವರನ ಲೀಲಾಭಿವಿ
ಸ್ತರದ ದೀಪೋತ್ಸವದ ಪರಿವಿಲಾಸಕ ಕಾವ್ಯರಚನಾಗುಣಗಳಿಂದ
ಸುರನಾರಿಯರು ಪೇಳ್ದ ಸಂವಾದ ತೆರನಂತೆ
ವಿರಚಿಸಿದೆನೀ ಕೃತಿಯ ದೋಷವಿದ್ದರೆ ತಿದ್ದಿ
ಉರು ಮತ್ಸರಾದಿಗಳ ವರ್ಜಿಸುತ ನಿತ್ಯದೊಳ್ ಮೆರೆಸುವದು
ಸರ್ವ ಜನರು ೨
ಶ್ರೀ ವಿಷ್ಣುನಿಗಮಾರ್ಗಮಾರ್ಚಿತ ಪದಂ ಪೀತಾಂಬರಾಲಂಕೃತಂ
ದೇವಾದಿ ಪ್ರಮುಖೈಃ ಮಹಾಮುನಿ ಜನೈಃ
ಸೇವ್ಯಂ ಸದಾ ತತ್‍ಪದಂ
ಭೂವ್ಯೋಮಾದಿ ಸಮಸ್ತ ತತ್ತ್ವಭರಿತಂ
ದೂರ್ವಾದಲಶ್ಯಾಮಲಂ
ಶ್ರೀವತ್ಸಾಂಕಮುದಾರ ಮಂಗಲಕರಂ ಶ್ರೀ ಶ್ರೀನಿವಾಸಂ ಭಜೇ ೩
ಆದಿಗುರು ವೇದವ್ಯಾಸರನು ವಂದಿಸುತ
ಸಾದರದಿ ಮಧ್ವಯತಿವರರರ ನುತಿಸುತ
ಭೂದಿವಿಜರಿಂಗೆರಗಿ ಬಳಿಕ ಕೂರ್ಮೆಯೊಳು
ಮಾಧವನ ರಾಣಿ ಲಕ್ಷ್ಮಿಯನು ಮನಸಿನೊಳು ೧
ಧ್ಯಾನಿಸುತ ಏಕದಂತನ ಪದವ ಭಜಿಸಿ
ಮಾನದಿಂ ಶಾರದೆಯನೊಲವ ಸಂಗ್ರಹಿಸಿ
ಶ್ರೀನಿವಾಸನ ಪುಣ್ಯಚರಿತೆಯನನುಸರಿಸಿ
ನಾನಾ ಲೀಲೆಗಳನು ಕಾವ್ಯರಚನೆಯಲಿ ನಾನೊರೆವೆ ೨
ಪರಮ ಪುರುಷನು ಪ್ರಥಮ ದಿನದಿ ಕಟ್ಟೆಯಲಿ
ವರಪೂಜೆಗೊಂಡು ಮಂಟಪದಿ ವಿನಯದಲಿ
ಚರಣವನು ತೋರಿ ಹನುಮ ಗರುಡನಲಿ
ಪರಿವಿಲಾಸಕರ ಸೇವೆಗೊಂಡು ಕರುಣದಲಿ ೩
ಭೋಗಿಪತಿಯಲಿ ಮಂಡಿಸಿದ ಲೀಲೆಗಳನು
ನಾಗತೀರ್ಥದ ಗಂಭೀರೊತ್ಸಾಹಗಳನು
ಭಾಗವತ ಯೋಗವನು ಭೋಜನಾಧಿಕವ
ಭಾಗ್ಯೋದಯದ ಚೂರ್ಣೋತ್ಸವದ ವಿಲಾಸಕವನು ೪
ಶ್ರೀ ನಾರಾಯಣನ ಕರುಣದಲಿ ವೇಣುಮತಿ ಪ್ರಾಸಯತಿಗಳ
ಯುಕ್ತಿಯೆಲ್ಲ ನಾನರಿಯೆ ದೋಷವಿದ್ದರೂ ತಿದ್ದಿ ಬಲ್ಲಭಿ
ಮಾನನಿಧಿಗಳನು ಮೆರೆಸುವದು ಭೂತಳದೊಳು
ಶ್ರೀನಿವಾಸನು ಪಾಲಿಸುವನು ನಿತ್ಯದೊಳು೫

೪೮೮
ಊರ್ವಶಿ :ಬಂದ ಕಾಣೆ ಗೋವಿಂದ ಕ್ಷೀರ-
ಸಿಂಧುಶಯನ ವನದಿಂದ
ಇಂದಿರೇಶ ಮುದದಿಂದ ಮೌನಿಮುನಿ-
ವೃಂದದಿಂದ ಸ್ತುತಿವಂದನೆಗೊಳ್ಳುತ ೧
ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು
ಕಾಸಿಗೆ ಮಾರುವ ರೊಟ್ಟಿ
ದಾಸರ ಕೂಡಿ ಜಗಜಟ್ಟಿ ಬಹು
ದೇಶವ ತಿರುಗುವ ಶೆಟ್ಟಿ
ದೂಷಣಾರಿ ಪಾದಾಶ್ರಿತಜನರಭಿ-
ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ೨
ದೊಡ್ಡವನೈ ಮಹಾರಾಯ ಹಳೆ
ದುಡ್ಡಿಗೆ ನೀಡುವ ಕೈಯ
ಅಡ್ಡಿಗೈದರೆ ಬಿಡನಯ್ಯ ಇವ
ಬಡ್ಡಿಕೇಳುವ ತಿಮ್ಮಯ್ಯ
ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ
ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ ೩
ತಿರುಪತಿಗೆ ಪ್ರತಿಯಾಗಿ ಪಡು
ತಿರುಪತಿಯೆಂದಿಹ ಯೋಗಿ
ಮೆರಸುವನೈ ಸ್ಥಿರವಾಗಿ ಶ್ರೀ
ವರ ವೆಂಕಟ ಲೇಸಾಗಿ
ಶರಣರು ಏನೆಂದು ಸಂತೋಷಿಪ
ಕರುಣಾಕರ ಚಪ್ಪರ ಶ್ರೀನಿವಾಸನು ೪
ಈ ಪರಿಯಲಿ ಒಲಿದಿಪ್ಪಾ ಬಹು
ವ್ಯಾಪಾರಿ ತಿಮ್ಮಪ್ಪಾ
ಕಾಪಟ್ಯರಿಗೆ ತಾನೊಪ್ಪನಮ್ಮ
ಗೋಪಾಲಕ ಜಗದಪ್ಪ
ಶ್ರೀಪರಮಾತ್ಮ ನಾನಾಪರಿ ವಿಭವದಿ
ಗೋಪುರದಲಿ ತಾ ವ್ಯಾಪಿಸಿ ನಿಂದನು ೫
ರಂಭೆ : ನಾರೀವರ್ಯಾರಮ್ಮ ನೋಡಲು
ಸಾರಹೃದಯರಮ್ಮ
ತೋರಣಛತ್ರಚಾಮರ ಬಿರುದುಗಳಿಂದ
ಭೂರಿ ವಿಭವದಿಂದ ಸಾರಿಬರುವರಮ್ಮ ೧
ಕರದಿ ಕಲಶವಿಹುದು ಶಾಲಿನ
ನಿರಿ ಮುಂದಿರುತಿಹುದು
ಬೆರಳಿನೊಳುಂಗುರು ವರ ದ್ವಾದಶನಾಮ
ಧರಿಸಿ ಸಮಂತ್ರೋಚ್ಚರಿಸುತ ಬರುವರು ೨
ಮಂದಿಗಳೊಡ್ಡಿನಲಿ ಬರುವರು
ಮಂದಸ್ಮಿತದಲಿ
ಚಂದದಿ ಜನಗಳ ಸಂದಣಿ ಮಧ್ಯದಿ
ಇಂದಿರೆಯರಸನ ಧ್ಯಾನದಿ ಬರುವರು ೩
ಹಿಂಗದೆ ಬರುತಿಲ್ಲಿ ಮನಸಿನ
ಇಂಗಿತವರಿತಿಲ್ಲಿ
ಬಂಗಾರದ ಭೂಷಣಸಮುದಾಯದಿ
ಅಂಗಜಪಿತನಿಗೆ ಶೃಂಗಾರಗೈವರು ೪
ಊರ್ವಶಿ :ಕಾಂತೆ ಕೇಳ್ ನಾನೆಂತು ವರ್ಣಿಸಲಿ
ವಿಪ್ರೋತ್ತಮರ ಗುಣ-
ಕೆಂತು ಸೈರಣೆಯಾಂತು ನಾನಿರಲಿ
ಚಿಂತಿತಾರ್ಥವನೀವ ಲಕ್ಷ್ಮೀ-
ಕಾಂತ ಶ್ರೀನಿವಾಸನಂಘ್ರಿಯ
ಸಂತಸದಿ ಪೂಜಾದಿ ಸತತಿ-
ಯಾಂತಕೊಂಡಿಹೇಕಾಂತಭಕ್ತರು ೧
ಒಂದು ಭಾಗ ಪುರಾಣಿಕರು ತಾವೆಂದು
ಕೀರ್ತಿಯನು ಧರಿಸಿ ಮ-
ತ್ತೊಂದು ಭಾಗದಿ ಜೋಯಿಸರು
ತಾವೆಂದು ಧರ್ಮವನು ಪಾಲಿಸಿ
ಸಿಂಧುಶಯನನ ಚಾರುಚರಣ-
ದ್ವಂದ್ವಕಾನತರಾಗಿ ಲೋಕದಿ
ವಂದ್ಯರೆನಿಸಿಯಾನಂದ ಪರರಿವ-
ರೆಂದು ಶ್ರೀಗೋವಿಂದ ನಡೆಸುವ ೨
ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ
ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ
ವಾದಗೈವ ಕುವಾದಿಗಳ ಮನ-
ಭೇದಿಸುತ ನಿಜವಾದ ಮಾರ್ಗವ
ಶೋಧನೆಗೆ ತಾವೈದಿಸುವ ಮಹಾ
ಸಾಧುಗಳಿಂದ ದೃಢವಾದ ಮಾತಿದು ೩
ಅಂಬುಜಾಕ್ಷಿಯೇನೆಂಬೆ
ಮೇಗರೆಡಂಭಮಾತಲ್ಲ ಧನಿಯ ಕು-
ಟುಂಬವೆನುತಲಿ ತುಂಬ ಕೀರ್ತಿಯ
ಗೊಂಬರೆ ಎಲ್ಲ ಸಂತಸ
ಸಂಭ್ರಮದಿ ವೇದ್ಯಾಂಬುನಿಧಿಯಲಿ
ತುಂಬಿರುವರೀ ಕುಂಭಿನಿಯೊಳು ಜ-
ಸಂಬಡುವುದು ವಾಸಿಷ್ಠಗೋತ್ರಜ-
ರೆಂಬ ವಿಪ್ರಕದಂಬಪೂಜ್ಯರು೪
ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ
ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ೧
ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ
ಆಲೋಚಿಸಲರಿದಾ ಕಮಲಾಲೋಲನ
ಮಹಾಲೀಲೆ ೨
ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ
ಮೂರ್ಲೋಕದೊಳಗೆ ಇಂಥ
ಲೀಲೆಯ ನಾನರಿಯೆ ೩
ಫಾಲೇಂದು ಕುಂದದ ವರ್ಣಕೋಲು ಚಾಮರಗಳ
ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು೪
ಚಂಡವೈಶ್ವಾನರನ ತೇಜಾಖಂಡದಿಂದೋರಂತೆ
ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ೫
ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ
ಆದಿನಾರಾಯಣ ಮದುಸೂದನನೆ ಮುದದಿ ೬
ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು
ನಾದಿನಿ ಕೇಳಿದರ ಪರಿಯನೀ ದಯದಿಂದುಸುರು ೭
ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ-
ದೇವನಾಗಮನವೆಲ್ಲನೂ
ದೀವಟಿಗೆ ಸೇವೆಯೆಂದು ಪೇಳುವರು
ಭಾವುಕರು ಮನದೊಳಂದು ೧
ಕೇಳಿದರೆ ಆಲ
ಸಾಯನವನು ಸುರಿದು
ಆಯತವನು ವರ್ಣಿಸುವಡೆ ಬಾಯಿಯು
ಸಾವಿರ ಸಾಲದು
ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ ೩
ಜಯಜಯ ಭಕ್ತಸುಪೋಷಣ ಜಯಜಯ
ದೈತ್ಯವಿನಾಶನ
ಜಯಜಯ ಜಾಹ್ನವಿತಾತ ಜಯಜಯ ಜಗದಾತ
ಜಯಜಯ ರವಿಶತತೇಜ ಜಯಜಯ
ಆಶ್ರಿತ ಸುರಭೂಜ
ಜಯಜಯ ನಾದದಿಯೇರ್ದ ನಿರ್ಭಯ
ತೋರುತ ಒಲಿದು ೪
* * *
ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ-
ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ ೧
ಸೇವೆಯ ಕೈಕೊಳ್ಳು ಎನುತಡ್ಡಬಿದ್ದರು ನೋಡೆ ತಂಗಿ ಭಕ್ತಿ
ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ ೨
ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ-
ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ ೩
ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ-
ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ ೪
ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ
ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ೫
ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ-
ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ ೬
ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ-
ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ೭
ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ-
ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ ೮
ಚಿತ್ತೈಸಿದನಿಲ್ಲಿ ನಿತ್ಯ ಉತ್ಸಹಲೋಲ ನೋಡೆ ತಂಗಿ ಭಕ್ತ-
ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ೯
ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ
ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ೧೦
ಯಾವಾಗಲು ಬರುವವನಲ್ಲ ಧನಿಯೆಂದು
ನೋಡೆ ತಂಗಿ ನಮ್ಮ
ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ೧೧
ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ-
ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ೧೨
ಭೂರಿ ಕದಳಿ ಚೂತ ಪನಸ ಫಲಗಳನ್ನು
ನೋಡೆ ತಂಗಿ ಮಹಾ-
ಮೇರುವಿಗೆಣೆಯಾದ ಮೇರ್ವೆಶೃಂಗಾರವ ನೋಡೆ ತಂಗಿ ೧೩
ಸುತ್ತುಮುತ್ತಲು ಝಲ್ಲಿಗಳಾನಂದವ ನೋಡೆ ತಂಗಿ ಅದ-
ರೊತ್ತಿಲಿರುವ ಪಲ್ಲವ ಪೂಗಳ ಮಾಲೆ ನೋಡೆ ತಂಗಿ೧೪
ಮೇಲೆ ಕಟ್ಟಿರುವ ಪತಾಕೆನಿಶಾನಿಯ ನೋಡೆ ತಂಗಿ ಸಾಲು-
ಸಾಲಿನ ಅಂಕಣದೊಳಗಿಹ ಬೊಂಬೆಯ ನೋಡೆ ತಂಗಿ೧೫
ಬಾಣಬಿರುಸು ಜೇನುಂಡೆಯ ಶಬ್ದವ ನೋಡೆ ತಂಗಿ ವೀಣಾ-
ವೇಣು ಸುಗಾನ ಸಂಗೀತ ಮನೋಹರ ನೋಡೆ ತಂಗಿ೧೬
ತಾಳಮೃದಂಗ ಸುಸ್ವರ ರಂಜಿತದಿಂದ ನೋಡೆ ತಂಗಿ ಗಣಿ-
ಕಾಲತಾಂಗಿಯರ ಗಾಯನದಭಿನಯನ್ನು ನೋಡೆ ತಂಗಿ ೧೭
ಕಾಲುಂಗುರ ಗೆಜ್ಜೆಗಳ ಕಟ್ಟಿ ಕುಣಿವರು ನೋಡೆ ತಂಗಿ ತಮ್ಮ
ಮೇಲುದನೋಸರಿಸುತ್ತ ಮೋಹಿಸುವರು ನೋಡೆ ತಂಗಿ೧೮
ಕಂತುಪಿತನು ಇಲ್ಲಿ ನಿಂತನು ವಿಭವದಿ ನೋಡೆ ತಂಗಿ ತದ-
ನಂತರದಲಿ ಆರತಿಯನುಗೊಂಡನು ನೋಡೆ ತಂಗಿ೧೯
ಭೂತಪದೊಳಗೀ ನೂತನವೆಲ್ಲುಂಟು ನೋಡೆ ತಂಗಿ ಹರಿ-
ಪ್ರೀತರಾಗಿರುವನಾಥರ ಸೇವೆಯ ನೋಡೆ ತಂಗಿ ೨೦
ವೇದೋದ್ಧಾರಕ ನಿನ್ನ ಪಾದವೇ ಗತಿಯೆಂದು

೪೮೦
ತ್ರಯೋದಶಿಯ ದಿವಸ
ಊರ್ವಶಿ: ನೋಡೆ ಇಂದಿನ ಉತ್ಸಹದತಿ
ಲೀಲೆ ಪೇಳುವದೇನೆ ಬಾಲೆ
ಆಡಲಾಶ್ಚರ್ಯವು ತೋರುವದಲ್ಲೆ
ಪರಮಾತ್ಮನ ಲೀಲೆ
ಮೂಡ ಗಿರೀಶನು ಪಾಡಿಲ್ಲದ ಪ್ರಭೆ
ಗೂಡಿದ ಮಂಟಪಕ್ಕೇರಿದ ವಿಸ್ತರ ೧
ಅಷ್ಟ ಮೂಲೆಗಳಿಂದಲಿ ಶೋಭಿಸುವ
ಕುಂದಣ ಪೂರಿತವಾ-
ದಷ್ಟ ಕಂಬದ ಶೃಂಗಾರದಿಂದಿರುವ
ಹೇಮದ ಬಂದಿತವ-
ದಷ್ಟಸಿಂಹದ ರೂಪಿನ ನೂತನವ
ಪ್ರಜ್ವಲದಿಂದಿರುವ
ಶ್ರೇಷ್ಠವಾಗಿಹ ನಾಗರಹೆಡೆವದನದಿ
ಇಷ್ಟದಿ ನೇತಾಡುವ ಸರಮಾಲೆಯ ೨
ಉತ್ತಮ ವೃಕ್ಷಲತಾಳಿಗಳಿಂದ
ಶುಕಪಿಕ ಮುಂತಾಗಿಹ
ಚಿತ್ತಾರ ವಿಚಿತ್ರ ವಿಲಾಸಕದಿಂದ
ಧ್ರುವಮಂಡಲ ಪರಿಯಲಿ
ವೃತ್ತಾಕಾರದಿ ನವಕಲಶಾನಂದ
ನೋಡುವರತಿ ಚಂದ
ಸುತ್ತಲು ಶೋಭಿಪ ಮುತ್ತಿನ ಬಿಂತಿಯ
ಪೊತ್ತು ವಿನೂತನವೆತ್ತಿದ ವಿಸ್ತರ ೩
ಚಾತುರ್ ಪುರುಷಾರ್ಥಗಳೋಲಗಿಪಂತೆ
ಮಿನುಗುವದೋರಂತೆ
ಶ್ವೇತದ್ವೀಪನಂತನ ಪುರವೆಂಬಂತೆ
ಕಾಣುವದೆಲೆ ಕಾಂತೆ
ಭೂತಳದೊಳು ನೂತನವೆಂಬಂತೆ
ಕಾಣೆನು ಇದರಂತೆ
ಚಾತುಷ್ಕಂಬದೊಳೂತು ನಡುವೆಯಿಹ
ಕೌತುಕವಾಗಿಹನಾಥರದಾತನ ೪
ಕೊಂಬು ನಿಸ್ಸಾಳಗಳ ಭರದಿಂದ
ಬರುವನು ಗೋವಿಂದ
ಹಂಬಲಿಸುವ ಭಕ್ತರ ಮುದದಿಂದ
ಪೊರೆಯುವದಿದು ಚಂದ
ಕೊಂಬ ಕಾಣಿಕೆಗಳ ಸಂಭ್ರಮದಿಂದ
ಭಕ್ತರ ಕೈಯಿಂದ
ಪೊಂಬಣ್ಣದ ದಿವ್ಯಾರತಿ ಕೊಳ್ಳುತ
ಇಂಬಾಗಿಹ ಕರುಣಾಂಬುಧಿ ಭರಿತ ೫
ಆಮೇಲೆ ಪಲ್ಲಂಕಿಯನೇರಿದನು
ವೇದವ ಲಾಲಿಪನು
ಪ್ರೇಮನಾಗುತ ಸಂಗೀತಗಳನು
ಕೇಳುತ ಸುತ್ತುವನು
ತಾ ಮಮಕಾರದಿ ಬರುವನು ಮೇಣು
ಕೋಮಲಕಾಯವ ಸಂತತ ಮಂಡಿಸಿ
ಸಾಮಗಾನ ಲೋಲೋಪ್ತಿಯೊಳಿರುವನು ೬
ಕಾಂತೇ ತದನಂತರ ಪೂಜೆಯಗೊಂಡ
ಭಕ್ತರ ಸಮುದಾಯಕೆ
ಸಂತೋಷ ಬೀರುತ ಭವಭಯಖಂಡ
ತದನಂತರ ಗೈದೇ-
ಕಾಂತ ಸೇವೆಯ ತಾ ಕೈಕೊಂಡ
ಸಂತಸದಲಿ ಶ್ರೀಕಾಂತನು ಭಕುತರ
ಚಿಂತಿತವೆಲ್ಲ ನಿರಂತರ ಕೊಡುವನು ೭

೪೮೯
ವನಭೋಜನ
ಊರ್ವಶಿ:ಇದೀಗ ಮನವು ಇಂದಿರಾಕ್ಷಿ ಇದೀಗ ಮನವು ಪ.
ಮಧುಸೂದನ ತನ್ನ ಸದನದಿಂದಲಿ ಒಮ್ಮೆ
ಒದಗಿ ಪಯಣಗೈದು ಪದುಳದಿ ಮಂಡಿಪ ೧
ವಾಸುದೇವ ತಂಪಾಶುಗದಿಂದಾ-
ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ ೨
ಭಾಗವತರು ಅನುರಾಗದಿ ಕೂಡಿ ಸ-
ರಾಗದಿ ಯೋಗಾರೋಗಣೆಮಾಡುವದೀಗ ೩
ಧಾತ್ರಿ ಉತ್ಪನ್ನ ಸತ್ಪಾತ್ರ ವಿಯೋಗ ಸು-
ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ ೪
ತರುಗುಲ್ಮಾವಳಿ ಸುರಮುನಿಗಳು ಕಾಣೆ
ಉರು ಪಾಷಾಣವೆಲ್ಲವು ಸಚ್ಚರಿತವು ೫
ರಂಭೆ : ಪೋಗಿ ಬರುವ ವನಕ್ಕಾಗಿ
ನಾಗವೇಣಿ ಲೇಸಾಗಿ ಬೇಗ ನಾವು ಪ.
ಭಾಗವತಾದಿ ಸಮಾಗಮವಾದರೆ
ಭಾಗ್ಯವಂತೆಯರ್ನಾವಾಗಿ ೧
ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು
ಹರಿಪ್ರಸಾದವೆಂದು ಸಾಗಿ ಬೇಗ ೨
ನಾರಿ ನಿನ್ನ ಉಪಕಾರ ಮರೆಯೆ ನಾ
ಭೂರಿ ಪುಣ್ಯವಶಳಾಗಿ ೩
ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ
ಶ್ರೀನಿವಾಸನ ಭೇಟಿಗಾಗಿ ೪
ಊರ್ವಶಿ :ಅಭಿಷೇಕವನು ಗೈದರಾಗ ಮನಸಿಗನುರಾಗ ಪ.
ವಿಭುಧೋತ್ತಮರೆಲ್ಲರು ಕೂಡುತ್ತ
ಶುಭ ಋಗ್ವೇದೋಕ್ತದಿ ನಲಿಯುತ್ತ ಅ.ಪ.
ಕ್ಷೀರಾರ್ಣವದೊಳಗಾಳಿದವಂಗೆ
ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ
ನೀರಜನಾಭನ ನಿಖಿಲ ಚರಾಚರ
ಪೂರಿತ ಕಲ್ಮಷದೊರಗೆ ಕ್ಷೀರದ೧
ಚದುರತನದಿ ಗೊಲ್ಲರೊಳಾಡಿದಗೆ
ದಧಿಪಾಲ್ ಬೆಣ್ಣೆಯ ಸವಿದುಂಡವಗೆ
ಮದನಜನಕ ಮಹಿಮಾಂಬುಧಿ ಕರುಣಾ-
ಸ್ಪದ ಸತ್ಯಾತ್ಮ ಸನಾಥಗೆ ದಧಿಯ ೨
ಶ್ರುತಿಸ್ರ‍ಮತಿತತಿನುತ ರತಿಪತಿಪಿತಗೆ
ಅತುಲಿತಗುಣ ಸೂನೃತಭಾಷಿತಗೆ
ದಿತಿಸುತಹತ ಶೋಭಿತ ಮೂರುತಿ ಶಾ-
ಶ್ವತವಾಶ್ರಿತ ವಾಂಛಿತಗೆ ಘೃತವ ೩
ಮಧುಸೂದನ ಮಂದರಗಿರಿಧರೆಗೆ
ಮೃದುವಾಕ್ಯಗೆ ಮಂಗಲಾಂಗನಿಗೆ
ಪದಮಳಾಕ್ಷ ಪರಾತ್ಪರವಸ್ತು ನೀ-
ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ ೪
ಕರುಣಾಕರ ಕಮಲಜತಾತನಿಗೆ
ದುರುಳ ಸುಬಾಹು ತಾಟಕಿ ಮರ್ದನಗೆ
ನರಕಾಂತಕ ನಾರಾಯಣ ಸಕಲಾ-
ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ ೫
ಎಳೆತುಳಸೀವನಮಾಲಾಧರಗೆ
ಫಲದಾಯಕ ಪರಬ್ರಹ್ಮರೂಪನಿಗೆ
ಕಲುಷರಹಿತ ನಿರ್ಮಲಚಾರಿತ್ರ್ಯ ನಿ-
ಶ್ಚಲಿತಾನಂದ ನಿತ್ಯನಿಗಳ ನೀರಿನ ೬
ಕನಕಾಂಬರಧರ ಶೋಭತನಿಂಗೆ
ಮನಕಾನಂದವ ಪಡಿಸುವನಿಂಗೆ
ಚಿನಮಯ ಪರಿಪೂರ್ಣ ವಿಶ್ವಂಭರ
ಜನಕಜಾ ವರನಿಗೆ ಕನಕಾನನೀಕದ ೭
* * *
ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆ ಪ.
ಶಿರದೊಳು ರತ್ನಕಿರೀಟದ ಝಳಕ
ಮೆರೆವ ಲಲಾಟದಿ ಕಸ್ತೂರಿತಿಲಕ
ವರ ಕರ್ಣಕುಂಡಲಗಳ ಮಯಕನಕ
ಚೆಲುವ ಚರಾಚರಭರಿತಜ ಜನಕ೧
ಕಂಬುಕಂಠದಿ ಕೌಸ್ತುಭವನಮಾಲ
ಇಂಬಾಗಿಹ ಭೂಷಣ ಶುಭಲೋಲ
ಸಂಭ್ರಮಿಸುವ ಮೋಹನ ಗುಣಶೀಲ
ಅಂಬುಜನಾಭಾಶ್ರಿತಜನಪಾಲ ೨
ಶಂಖಸುದರ್ಶನಗದಾಪದ್ಮ ಧಾರಿ
ಕಂಕಣವೇಣುವಡ್ಯಾಣವಿಹಾರಿ
ಬಿಂಕದ ಬಿರುದಾಂಕಿತ ಕಂಸಾರಿ
ಶಂಕೆಯಿಲ್ಲದ ಭೂಷಣಾಲಂಕಾರಿ ೩
ಎಡಬಲದಲಿ ಮಡದಿಯರ ವಿಲಾಸ
ಕಡುಬೆಡಗಿನ ಪೀತಾಂಬರಭೂಷ
ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ
ಒಡೆಯ ಶ್ರೀನಾರಾಯಣ ಸರ್ವೇಶ ೪
ಈ ರೀತಿಯಲಿ ಶೃಂಗಾರನಾಗುತ್ತ
ಭೂರಿಭಕ್ತರ ಕಣ್ಮನಕೆ ತೋರುತ್ತ
ನಾರದಾದಿ ಮುನಿವರ ಗೋಚರದ
ಚಾರುಚರಣವನು ತೋರಿಸಿ ಪೊರೆದ ೫
* * *
ಆರೋಗಣೆಯ ಗೈದನು ಶ್ರೀರಂಗ
ಸಾರಸವಾದ ಸಮಸ್ತ ವಸ್ತುಗಳ ಪ.
ಧೂಪದೀಪನೈವೇದ್ಯವಿಧಾನ
ಶ್ರೀಪರಮಾತ್ಮ ಮಂಗಲಗುಣಪೂರ್ಣ ೧
ಸುರತರುವಿನ ಸೌಭಾಗ್ಯದ ತೆರನ
ಮರಕತಮಯ ಹರಿವಾಣದೊಳಿದನ ೨
ಭಕುತರ ಸೌಖ್ಯವಿನ್ನೇನೆಂಬುವೆನು
ಶಕುತ ಶ್ರೀಮಾಧವ ನಿರತ ತೋರುವನು ೩
* * *
ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ
ಗಾರತಿ ಶ್ರೀನಿವಾಸಂ ಪ.
ಮಂಗಲಾಂಗ ನರಸಿಂಗ ಮನೋಹರ
ರಂಗರಾಯ ಶ್ರೀಗಂಗಾಜನಕಗೆ ೧
ಮಾಧವ ಮಧುಹರ ಮೋದಭರಿತ ಜಗ-
ದಾಧಾರ ವೇಣುನಾದವಿನೋದಗೆ ೨
ನಿತ್ಯನಿರಂಜನ ಸತ್ಯಸ್ವರೂಪಗೆ
ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ೩
ಊರ್ವಶಿ :ಭೋಜನವ ಗೈದರು ಶರಣರೆಲ್ಲ
ಭೋಜನವ ಗೈದರು ಪ.
ಮೂಜಗತ್ಪತಿಯ ಪ್ರಸಾದಪ್ರತಾಪದಿ
ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ೧
ಬಗೆಬಗೆ ಷಡುರಸದ ಭಕ್ಷ್ಯಗಳ
ಜಿಹ್ವೆಗೆ ರುಚಿಕರವಪ್ಪುದ
ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ
ತೆಗೆದು ಸಂತೋಷ ಬೆಡಗುಗಳ ತೋರುತ್ತ ೨
ಉಪ್ಪು ಉಪ್ಪಿನಕಾಯಿಯು ಸಾಸಿವೆ ತೋವೆ
ಹಪ್ಪಳ ಸಂಡಿಗೆಯು
ತಪ್ಪು ಒಗರ ಶಾಲ್ಯನ್ನಗಳೆಲ್ಲವ
ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ ೩
ಪಾಯಸ ಪರಮಾನ್ನವು ಘಾರಿಗೆಯು ರಸಾಯನ
ಹೋಳಿಗೆಯು
ಕಾಯದ ಜಡಗಳು ಮಾಯಕವಾದವು
ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು ೪
ಸುರರು ಉರಗ ಸಿದ್ಧರು ಗರುಡ ಗಂಧರ್ವರು
ಮಾನವರೆಲ್ಲರೂ
ದೊರೆಯ ಪ್ರಸಾದವು ದೊರಕಿತು ಎನುತ ವಿ-
ಸ್ತರವಾದ ತೋಷದಿ ಭರದಿಂದೊದಗುತಲಿ ೫
ಹ್ಯಾಗೆಂದು ವರ್ಣಿಸಲಿ ಭಕ್ತರ ಸುಖ
ಭೋಗವಿನ್ನಂತೆಯಿಲ್ಲಿ
ರೋಗ ದುರಿತವೆಲ್ಲ ನೀಗಿತು ಎನುತನು-
ರಾಗದಿ ಸವಿದುಂಡು ತೇಗಿದರೆಲ್ಲರು ೬
ಜಲಜಲೋಚನೆ ನೀ ಕೇಳೆ ನಮ್ಮಯ
ಪುಣ್ಯ-ಫಲದಿಂದ ದೊರಕಿತಲ್ಲೇ
ನಲವಿಂದಾನತರು ಕೈ ತೊಳೆದ ನೀರಿನೊಳಿದ್ದ
ಜಲಜಂತು ಸಹವು ನಿರ್ಮಲಿನವಾದವು ಕಾಣೆ ೭
ಚಾಂಡಾಲ ಜನರೆಲ್ಲರು ಭಕ್ತರ ಶೇಷ ಉಂಡು
ಪಾವನವಾದರು
ಹಿಂಡು ಪಕ್ಷಿಗಳು ಉದ್ದಂಡ ಮೃಗಗಳೆಲ್ಲ

೪೩೭
ಎಂದಿಗೆ ದೊರಕುವನೋ ಶ್ರೀಕೃಷ್ಣನು
ಎಂದಿಗೆ ದೊರಕುವನೋ ಪ.
ಎಂದಿಗೆ ದೊರಕುವ ಸುಂದರ ಪುರುಷನು
ಒಂದು ಗಳಿಗೆ ಯುಗ ಒಂದಾಗಿ ಕಳೆದೆನು ಅ.ಪ.
ಸರಿರಾತ್ರಿ ವೇಳ್ಯದಲಿ ಮೆಲ್ಲನೆ ಒಂದು
ಸರಸವಾಡುತಲಿ
ಪರಿಪರಿ ವಿಧದಲಿ ಸ್ಮರನ ಕಲೆಯ ತೋರಿ
ವಿರಹಗೊಳಿಸಿ ನಾಳೆ ಬರುವೆನೆನ್ನುತ ಪೋದ ೧
ಪಂಕಜನಿಭಚರಣ ಕೌಸ್ತುಭ ರತ್ನಾ-
ಲಂಕೃತ ಶುಭಗ್ರೀವನ
ಶಂಕರಾರ್ಚಿತನು ಮೀನಾಂಕಜನಕ ನಿಷ್ಕ-
ಲಂಕ ಮಹಿಮನು ಶ್ರೀವೆಂಕಟರಮಣನು ೨
ಅಂಗಜಕೋಟಿರೂಪ ಪರಮ ಸದಯಾ-
ಪಾಂಗನಿರತ ನಿರ್ಲೇಪ
ಮಂಗಲ ಚರಿತ ಭುಜಂಗಶಯನ ನರ-
ಸಿಂಗ ವರದ ಮಾತಂಗ ಶ್ರೀರಂಗನು೩
ಚಂದಿರಶತವದನ ಶೋಭಿಪ ನವ
ಕುಂದ ಕುಟ್ಮಲರದನ
ಸಿಂಧುಶಯನ ಮುಚುಕುಂದಾಪ್ತ ಸಚ್ಚಿದಾ-
ನಂದ ಗೋವಿಂದ ಮುಕುಂದ ನಂದನಕಂದ೪
ಅಕ್ಷರಾರ್ಚಿತ ದೇವನು ಶರಣ ಜನ
ಪಕ್ಷ ಪರಾತ್ಪರನು
ಪಕ್ಷೀಂದ್ರ ತುರಗ ಪದ್ಮಾಕ್ಷ ತ್ರಿಲೋಕ ವಿ-
ಲಕ್ಷಣಮೂರ್ತಿ ಶ್ರೀಲಕ್ಷ್ಮೀನಾರಾಯಣ ೫

೪೬೬
ಎಲ್ಲಾಪರಾಧವೈಯ್ಯಾ ಹರಿಪ್ರೀತಿ
ಯಿಲ್ಲದಿಹ ಕರ್ಮಗಳು ಝಲ್ಲರಿಯ ಛಾಯಾ ಪ.
ಸಾಧುಲಿಂಗವ ಧರಿಸಿ ವೇದ ವೇದಾಂತ ಸ-
ದ್ಬೋಧೆಯನು ಕೇಳಿದರು ಪೇಳಿದರು ಸುಪವಿತ್ರ
ಮೇದಿನಿಯ ಸರ್ವತೀರ್ಥಸ್ನಾನ ಮಾಡಿದರು
ಓದಿದರು ಸರ್ವಶಾಸ್ತ್ರ
ಸಾಧಿಸುತ ಕಾಮ ಕ್ರೋಧಾದಿಗಳ ಜೈಸಿ ವನ
ಕೈದಿ ತಪಗೈದರು ಮಹಾದಾನಿಯಾದರು ವಿ-
ರಾಧವಧ ಪಂಡಿತನ ಪಾದಕರ್ಪಣ ವಿನಹ
ಬಾಧಿಸದೆ ಬಿಡದು ಜನ್ಮ ೧
ಹರಿಯೆ ಸರ್ವೋತ್ತಮ ಚರಚರಾತ್ಮಕ ಜಗ-
ದ್ಗುರುತಮ ಮಹಾಮಹಿಮ ಕರುಣಾರ್ಣವನ ನಾಮ
ಸ್ಮರಣೆಯಿಲ್ಲದೆ ಮಾಳ್ಪ ಪರಿಪರಿಯ ಕರ್ಮಗಳು
ನರಕ ಸ್ವರ್ಗದ ಭ್ರಮಣವು
ಸ್ಥಿರವೆಂದು ನಂಬಿ ದುಸ್ತರ ಭವಾರ್ಣವದಿ ಮುಳುಗಿ
ತಿರುತಿರುಗಿ ಜನ್ಮಮಂ ಧರಿಸಿ ಬಹುದುಃಖ ಸಾ
ಗರದಿ ತೇಲಾಡುವುದನರಿಯದತಿ ದುರ್ಮೋಹ
ಸೆರೆಯೊಳಗೆ ಬಿದ್ದ ಮೇಲೆ ೨
ಸರ್ವತಂತ್ರಸ್ವತಂತ್ರ ಸರ್ವತ್ರ ವ್ಯಾಪ್ತ ಸುರ
ಸಾರ್ವಭೌಮಸುನಾಮ ಸಾಮಗಾನಪ್ರೇಮ
ದೂರ್ವಾದಳಶ್ಯಾಮ ದುರ್ಗಾರಮಣ ಜಗವ
ನಿರ್ವಹಿಸಿಕೊಂಡಿರುವನು
ಗರ್ವದಿಂ ತಾ ಕರ್ತುವೆಂದಹಂಕರಿಸಿ ಜಗ
ಕೊರ್ವನೆ ಹೃಷೀಕೇಶ ಕೇಶವ ದೈತ್ಯ
ಪರ್ವತಕುಲಿಶ ಲಕ್ಷ್ಮೀನಾರಾಯಣನ ಭಕ್ತಿ
ಪೂರ್ವಕವೆ ನಿರಪರಾಧ ೩

೪೦೨
ಎಲ್ಲಿಗೆ ಗಮನವಿದು ದುರ್ಗಾಂಬಿಕೆ
ಎಲ್ಲಿಗೆ ಗಮನವಿದು ಪ.
ಎಲ್ಲಿ ಗಮನ ಹರವಲ್ಲಭೆ ನೀ ದಯ-
ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ.
ಚಂಡಿಕೆ ಮಹಮ್ಮಾಯೆ ದೇವಿ ಪ್ರ-
ಚಂಡ ಲೋಕತಾಯೆ
ಖಂಡಪರಶುಪ್ರಿಯೆ ಅಖಿಲ ಭೂ-
ಮಂಡಲಕಧಿಪತಿಯೆ
ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ-
ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ೧
ನಿಲ್ಲು ನಿಲ್ಲು ಜನನಿ ಬಾಲಕ-
ನಲ್ಲವೆ ಹೇ ಕರುಣಿ
ಪುಲ್ಲನಯನೆ ತ್ರಿಗುಣಿ ದಯವಿನಿ-
ತಿಲ್ಲವೆ ನಾರಾಯಣಿ
ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ
ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ ೨
ದಾರಿ ಯಾವುದಮ್ಮ ಮುಕ್ತಿಯ
ದಾರಿ ತೋರಿಸಮ್ಮ
ಸೇರಿದೆ ನಾ ನಿಮ್ಮ ಭವಾಬ್ಧಿಯ
ಪಾರುಗಾಣಿಸಮ್ಮ
ಚಾರುನಿಗಮ ಶಿರಭೋರೆನಿಪ ವಿಚಾರ-
ಸಾರವಿತ್ತು ದಯಪಾಲಿಸು ಶುಭವರ೩
ಕಷ್ಟದುರಿತ ಭಯವ ತಾ ಬಡಿ-
ದಟ್ಟಿ ಭಕ್ತಕುಲದ
ಶ್ರೇಷ್ಠತನದಿ ಪೊರೆವ ತನ್ನ
ಇಚ್ಛೆಯ ಕೈಗೊಳುವ
ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ
ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ೪

೩೫೪
ಎಲ್ಲಿರುವೇನೋ ಮಾರುತಿ ಸುವ್ರತಿ
ಎಲ್ಲಿರುವನೇನೋ ಮಾರುತಿ ಪ.
ಎಲ್ಲಾ ಕಡೆಯಲ್ಲಿ ವ್ಯಾಪ್ತಿ
ಯುಳ್ಳವ ಭಾರತೀಪತಿ ಅ.ಪ.
ನಿತ್ಯ ರಾಮಪದೈಕಾಸಕ್ತಿ-
ಚಿತ್ತನು ಸದಾ ಜಾಗರ್ತಿ
ಧೂರ್ತರಿಪುದಲ್ಲಣ ಜೀ-
ವೋತ್ತಮ ವಿಚಿತ್ರಗತಿ ೧
ಪ್ರಾಣಸಮಾನ ಸಂಪ್ರೀತಿ
ಜ್ಞಾನಪೂರ್ವಕ ಸದ್ಭಕ್ತಿ-
ವಾನ ವಾನರೇಂದ್ರ ಸುಪ-
ರ್ವಾಣಕುಲಚಕ್ರವರ್ತಿ ೨
ಲಕ್ಷುಮಿನಾರಾಯಣನ
ಪಕ್ಟ್ರೆಕಧೃತಿ ಸುಮತಿ
ಅಕ್ಷೀಣ ತ್ರಾಣದ ನಿರ-
ಪೇಕ್ಷ ಲಕ್ಷಣಮೂರುತಿ ೩

೪೩೮
ಎಷ್ಟೋ ಅಪರಾಧಿ ಯಾವುದು
ಬಟ್ಟೆಯೋ ಕರುಣಾಬ್ಧಿ ಪ.
ದುಷ್ಟರಾರು ಜನ ಒಟ್ಟುಗೂಡಿ ಎನ್ನ
ಮೆಟ್ಟಿ ಕುಟ್ಟಿ ಪುಂಡಿಗುಟ್ಟುವರೈ ಹರಿ ಅ.ಪ.
ಲೇಶ ಪುಣ್ಯವಿಲ್ಲ ಪಾಪದ
ರಾಶಿ ಬೆಳೆಯಿತಲ್ಲ
ಆಶಾವಶ ಹರಿದಾಸನೆಂದೆನಿಸಿದೆ
ದೂಷಣ ಜನರ ಶಭಾಸಿಗೆ ಮೆಚ್ಚಿದೆ ೧
ಕುಲಕಲ್ಮಷ ಬಹಳ ದೇಹದಿ
ನೆಲೆಸಿತು ಶ್ರೀಲೋಲ
ಜಲಜನಾಭ ನಿನ್ನೊಲುಮೆಯೆ ಮುಖ್ಯವು
ಕುಲಕೆಟ್ಟ ಅಜಮಿಳ ಪಾವನನಾದ ೨
ಹೀನರೈವರ ಸಂಗದಿಂದಲೆ
ಹಾನಿಯಾದೆನೊ ರಂಗ
ಪ್ರಾಣವು ನಿನ್ನಾಧೀನವಾದ ಮೇಲೆ
ನೀನೆ ಗತಿ ಲಕ್ಷ್ಮೀನಾರಾಯಣ೩

೩೨೪
ಏನಂತೆನ್ನಲಿ ಎನ್ನನುತಾಪ
ನೀನಾದ್ದರಿಂದೆಂಬೆ ಗೈಯದೆ ಲೋಪ ಪ.
ಕಣ್ಣೆದುರಾದ ಕಂದರ್ಪಲಾವಣ್ಯ
ಸನ್ನುತ ಸಕಲ ಲೋಕೈಕಶರಣ್ಯ
ಬಣ್ಣಿಸಲರಿದು ಸರ್ವೋನ್ನತ ಮಹಿಮ
ಪುಣ್ಯಪುರುಷ ಸುಪ್ರಸನ್ನ ಕೇಳಮ್ಮ ೧
ಕೆಂದಾವರೆಯಂತೆ ಚೆಂದುಳ್ಳ ಚರಣ
ಸೌಂದರ್ಯಸಾರ ಪೀತಾಂಬರಾವರಣ
ವಂದನೀಯ ಪೂರ್ಣಾನಂದ ಮುಕುಂದ
ಸಂದೇಹವಿಲ್ಲ ತೋರಿದನು ಗೋವಿಂದ ೨
ಶಂಕ ಚಕ್ರ ಗದಾ ಪಂಕಜಪಾಣಿ
ಶಂಕರನುತ ಶ್ರೀವತ್ಸಾಂಕಿತ ಜನನಿ
ಬಿಂಕದ ಕೌಸ್ತುಭಾಲಂಕೃತಗ್ರೀವ
ವೆಂಕಟೇಶ ನಿಷ್ಕಳಂಕ ಕೇಳವ್ವ ೩
ಚಂದ್ರಶತಾನನ ಕುಂದಸುಹಾಸ
ಇಂದಿರಾ ಹೃದಯಾನಂದ ಪರೇಶ
ಸುಂದರ ನಳಿನದಳಾಯತನಯನ
ಮಂದರಧಾರ ಧರಾಧರಶಯನ ೪
ಲಕ್ಷ್ಮೀನಾರಾಯಣ ಸುಕ್ಷೇಮಧಾಮ
ಅಕ್ಷರಾರ್ಚಿತ ನೀಲನೀರದಶ್ಯಾಮ
ಪಕ್ಷೀಂದ್ರವಾಹನ ಪಾವನಚರಿತ
ಸಾಕ್ಷಿರೂಪ ಸಚ್ಚಿದಾನಂದಭರಿತ ೫

೪೩೯
ಏನು ದುಷ್ರ‍ಕತ ಫಲವೋ ಸ್ವಾಮಿ
ಶ್ರೀನಿವಾಸನೆ ಪೇಳೋ ಪ.
ಏನು ಕಾರಣ ಭವಕಾನನದೊಳು ಬಲು
ಹಾನಿಯಾಗಿ ಅವಮಾನ ತೋರುವದಿದು ಅ.ಪ.
ಹಂಬಲವೂ ಹಿರಿದಾಯ್ತು ಎನ್ನ
ನಂಬಿಕೆಯೂ ಕಿರಿದಾಯ್ತು
ಸಂಭ್ರಮವಲ್ಲ ಕುಟುಂಬಿಗೆರೆನ್ನಯ
ಹಂಬಲಿಸರು ನಾನೆಂಬುವದೇನಿದು ೧
ಹಣವಿಲ್ಲಾ ಕೈಯೊಳಗೆ ಸ-
ದ್ಗುಣವಿಲ್ಲಾ ಮನದೊಳಗೆ
ಜನಿತಾರಭ್ಯದಿ ತನುಸುಖವಿಲ್ಲೈ
ಘನದಾಯಾಸವ ಅನುಭವಿಸುವದಾಯ್ತು ೨
ಪೋದರೆಲ್ಲ್ಯಾದರು ಅಪ-
ವಾದವ ಪೇಳ್ವರು ಜನರು
ಆದರವಿಲ್ಲೈ ಶ್ರೀಧರ ತವ ಚರ-
ಣಾಧಾರವೆ ಇನ್ನಾದರೂ ಕೃಪೆಯಿಡು ೩
ಗೋಚರವಿಲ್ಲೆಲೊ ರಂಗ ಎನ್ನ
ಪ್ರಾಚೀನದ ಪರಿಭಂಗ
ನಾಚಿಕೆ ತೋರದ ಯಾಚಕತನವ-
ನ್ನಾಚರಿಸುವ ಕಾಲೋಚಿತ ಬಂದುದು ೪
ಸೇರಿದೆನೆಲೊ ರಂಗ ಕೃಪೆ
ದೋರೆನ್ನೊಳ್ ನರಸಿಂಗ
ಭಾರವೆ ನಿನ್ನ ಮೈದೋರಿ ರಕ್ಷಿಸುವುದು
ನಾರದನುತ ಲಕ್ಷ್ಮೀನಾರಾಯಣ ಗುರು ೫

೩೨೫
ಏನು ಪುಣ್ಯವೋ ಯಶೋದೆಯ
ಪರೀಕ್ಷಿತರಾಯ
ಯಾವ ಪುಣ್ಯವೋ ಯಶೋದೆಯ ಪ.
ಚೆನ್ನಕೇಶವನ್ನ ತನ್ನ
ಚಿಣ್ಣನೆಂದು ಮುದ್ದಿಸಿ
ಬಣ್ಣಿಸಿ ಮೊಲೆಯನುಣ್ಣಿಸಿ
ಚಿನ್ನದ ತೊಟ್ಟಿಲೊಳಿಟ್ಟು ತೂಗುವ೧
ಅಗಣಿತ ಬ್ರಹ್ಮಾಂಡಗಳ ತ-
ನ್ನುದರದೊಳಡಗಿಸಿದನ
ಮುಗುಳುನಗೆಯ ಮೊಗವ ನೋಡಿ
ಮಗನೆಂದಾಡಿ ಪೊಗಳಿ ಪಾಡುವ೨
ಲಕ್ಷ್ಮೀನಾರಾಯಣನ ಪ್ರ-
ತ್ಯಕ್ಷ ಬಾಲಲೀಲೆಯ
ಚಕ್ಷುದಣಿಯೆ ನೋಡುತನ್ಯ-
ಪೇಕ್ಷೆಯಿಲ್ಲದಿಹಳೊ ಅಹೋ ೩

೪೨೦
ಏಳಯ್ಯ ಸುಬ್ರಹ್ಮಣ್ಯ ಬೆಳಗಾಯಿ-
ತೇಳಯ್ಯ ಸುಬ್ರಹ್ಮಣ್ಯ
ಕೋಳಿ ಕೂಗುವದು ವನಜಾಳಿಸೌರಭ್ಯ ತಂ-
ಗಾಳಿ ಬೀಸುವದು ಕರುಣಾಳು ತವಚರಣವ-
ನ್ನೋಲಗಿಸಲುದಯಗಿರಿಮೇಲುಪ್ಪರಿಗೆಯೇರ್ದ
ಕೀಲಾಲಜಾಪ್ತನೀಗ
ಕಾಲಕಾಲದಿ ಭಕ್ತಜಾಲವನು ಜಯಗೊಳಿಸಿ
ಪಾಲಿಸುವ ಪಾರ್ವತೀಬಾಲ ಭಾಸ್ಕರತೇಜ
ಸಾಲು ಕೃತಾಂಗ ಗುಣಶೀಲನಿಧಿ ಸೇನಾನಿ
ಲೋಲಲೋಚನೆಯ ಸಹಿತ ೧
ಇಂದು ಸಂಕ್ರಮಣ ದಿನ ಬಂದಿಹರು ಭಕ್ತಜನ-
ವೃಂದ ಕಾಣಿಕೆ ಕಪ್ಪ ತಂದು ನಿಂದಿಹರು ಬಲ-
ವಂದು ವಂದಿಸಿ ತಮಗೆ ಬಂದ ಭಯ ಪರಿಹರಿಸೆ ತಂದೆ
ಸಲಹೆಂದು ಸ್ತುತಿಸೆ
ಕಂದರ್ಪಸಾಹಸ್ರ ಸೌಂದರ್ಯ ಮೂರ್ತಿಯನು
ಚಂದದಿಂ ಕಾಣುವಾನಂದ ಮಾನಸರು ಗೋ-
ವಿಂದ ನಾಮಸ್ಮರಣೆಯಿಂದ ಪಾವನಗೈವ
ಸ್ಕಂದ ಕರುಣಾಸಿಂಧುವೆ ೨
ಪೃಥ್ವಿಯೊಳಗುತ್ತಮ ಪವಿತ್ರ ಪಾವಂಜಾಖ್ಯ
ಕ್ಷೇತ್ರಾಧಿವಾಸ ಲೋಕತ್ರಯ ವಿಭೂಷಣ ಪ-
ರತ್ರೈಕಸಾಧನ ಮಹತ್ತಪ ಮಹೇಷ್ವಾಸ
ಕಾರ್ತಿಕೇಯ ನಮೋಸ್ತುತೇ
ಭೃತ್ಯವತ್ಸಲ ಭವಭಯಾಬ್ಧಿಕುಂಭಜ ಭಜಕ-
ಪ್ರೋತ್ಸಾಹ ಪಾವನಚರಿತ್ರ ಸುತ್ರಾಮನುತ
ಕರ್ತ ಲಕ್ಷ್ಮೀನಾರಾಯಣಪರಾಯಣನೆ
ಮೃತ್ಯುಂಜಯನೆ ಪುತ್ರನೆ೩

೪೨೧
ಓಂ ನಮೋ ನಮಃ ಕುಲಸ್ವಾಮಿ ಬಿನ್ನಪ ಲಾಲಿಸು ಪ್ರೇಮಿ
ಮನ್ನಿಸೆಮ್ಮ ಭಕ್ತ ಸುಪ್ರಸನ್ನ ಮೂರುತಿ ಪ.
ವಹ್ನಿಜಠರಸಂಸ್ಥಿತ ಸ್ವರ್ನದೀಗರ್ಭಸಂಭೃತ
ಪನ್ನಂಗಭೂಷಣನ ವೀರ್ಯೋತ್ಪನ್ನ ಸಂಪನ್ನ ೧
ತಾರಕಾದಿದೈತ್ಯಾಂತಕ ವೀರವೈಷ್ಣವರ ತಿಲಕ
ಸೇರಿದವರ ಪೊರೆವ ಕರುಣಾವಾರಿ ರಾಶಿಯೇ೨
ಶಿವಕುಮಾರಾಶ್ರಿತಮಂದಾರ ದಿವಿ ಭುವಿ ವಿಖ್ಯಾತ ಶೂರ
ನವವಿಧ ಹರಿಭಕ್ತಿಯಂ ಬೇಡುವೆನು ನೀಡಯ್ಯಾ ೩
ಸ್ಥಾನಿಕಾಖ್ಯವಿಪ್ರರಿಂದ ಅನವರತ ಪೂಜೆಗೊಂಬ
ದೀನಜನವತ್ಸಲ ಭವಾನಿಪುತ್ರನೆ ೪
ಭೂವಳಯದಲ್ಲಿ ಮೆರೆವ ಪಾವಂಜಾಖ್ಯ ಪುರನಿವಾಸ
ದೇವಲಕ್ಷ್ಮೀನಾರಾಯಣನ ಸೇವಕೋತ್ತಮ ೫

೪೪೦
ಓಡದಿರು ಓಡದಿರು ಖೋಡಿ ಮನವೆ
ಮೂಢತನದಲಿ ಬರುವ ಕೇಡುಗಳನರಿದರಿದು ಪ.
ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು
ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು
ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ
ಬೀಸುವನು ಬೇಡನೊಬ್ಬನು ಬಲೆಯನಿಕದಕೊ೧
ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು
ಒತ್ತಿ ಮೋಹದಿ ವಹಿಸಿಕೊಂಡಿರುವಳು
ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ
ತುತ್ತಾಗ ಎನುತ ಬಾಯ್ ತೆರೆದಿರುವಳು ೨
ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು
ಹಂಗಿಗನು ನೀನಾಗಿ ಬೇಡ ಅವರ
ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ
ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ ೩
ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ
ಏಳು ಮೆಟ್ಟಲ ದಾಂಟಿ ಲೋಲತನದಿ
ಅಲದೆಲೆ ಮಂಚದಲಿ ಲೋಲನಾಗಿಹನ ಪದ
ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ ೪
ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು
ಭೂರಿ ಮಾಯಾಭ್ರಾಂತಿಗೊಳಗಾಗದೆ
ಕಾರಣಿಕ ಲಕ್ಷ್ಮೀನಾರಾಯಣನ ಪಾದ
ವಾರಿಜದಿ ನಲಿದು ಸುಖಿಯಾಗು ನೀ ಮನವೆ ೫

೩೨೬
ಕಂಡಳು ಶ್ರೀ ಹರಿಯ ಶತಮಾ-
ರ್ತಾಂಡ ತೇಜೋನಿಧಿಯ ಪ.
ಪುಂಡರೀಕಾಂಬಕನ ಪೂರ್ಣಾ-
ಖಂಡ ಜಗನ್ಮಯನ ಅ.ಪ.
ಶಂಖಚಕ್ರಾಂಕಿತನ ಧ್ವಜವ-
ಜ್ರಾಂಕುಶಪದಯುಗನ
ಶಂಕರಹಿತಕರನ ಕೌಸ್ತುಭಾ-
ಲಂಕೃತಕಂಧರನ ೧
ಮಕರಕುಂಡಲಧರನ ಸಜ್ಜನ
ನಿಕರೇಷ್ಟಪ್ರದನ
ಪ್ರಕೃತಿನಿಯಾಮಕನ ಸತ್ಯಾ-
ತ್ಮಕ ಪೀತಾಂಬರನ ೨
ಅಕ್ಷಿಗೋಚರನ ಭಕ್ತರ
ಪಕ್ಷದೊಳಿರುತಿಹನ
ಪಕ್ಷೀಂದ್ರವಾಹನನ ಶ್ರೀಹರಿ
ಲಕ್ಷ್ಮೀನಾರಾಯಣನ೩

೪೦೩
(ಕಟೀಲಿನ ದುರ್ಗೆಯನ್ನು ಕುರಿತು)
ಕಟೀಲ್ ದೇವರ್ ಕಟೀಲ್ ದೇವರ್ ಕಟೀಲ್ ದೇವರ್ಯಾರು ಪ.
ಸರ್ವಶಿಷ್ಟರಿಷ್ಟಕೊಟ್ಟು ಕಾವ ಬೆಟ್ಟದೊಡೆಯನ ಪಟ್ಟದರಸಿ ಅ.ಪ.
ಸೃಷ್ಟಿಯೊಳುತ್ರ‍ಕಷ್ಟ ತೇಜಪಟು ಭಕ್ತಜನರ ಮನದ
ಕಷ್ಟವ ಪರಿಹರಿಸಿ ಪೊರೆವ ಕೃಷ್ಣನ ಒಡಹುಟ್ಟಿದವಳು ೧
ದುಷ್ಟ ಕಂಸನ ಶಿರವ ಮೆಟ್ಟಿ ಜಿಗಿದ ವಿವಿಧ ಲೋಕಾ-
ರಿಷ್ಟ ಶಾಂತಿಪ್ರದಳು ಪರಮ ನಿಷ್ಠಳು ಬಲಿಷ್ಠಳಿವಳು ೨
ಅಷ್ಟಸಿದ್ಧಿದೇ ಪ್ರಸಿದ್ಧೆ ಜಿಷ್ಣುವಿನುತೆ ಭೂತ ಹೃದಯಾ-
ವಿಷ್ಟೆ ನವನಿಧಿಷ್ಟೆ ಪುಷ್ಟೆ ಶ್ರೇಷ್ಠೆ ಸುಗುಣವರಿಷ್ಠಳಿವಳು ೩
ಮುಷ್ಟಿಕಾರಿಯ ಚರಣ ಬಿಟ್ಟವರ ಭವಪಾಶದಿಂ
ಕಟ್ಟುವಳು ಹರಿದಾಸರ್ಗಾದೃಷ್ಟ ಸುಖದ ವೃಷ್ಟಿ ಸುರಿವ ೪
ದಿಟ್ಟ ಲಕ್ಷ್ಮೀನಾರಾಯಣನ ಮುಟ್ಟಿ ಭಜಿಸುವವರ ಕರುಣಾ-
ದೃಷ್ಟಿಯಿಂದ ನೋಡಿ ಮನೋಭೀಷ್ಟವೀವ ಹೃಷ್ಟರೂಪೆ ೫

೩೨೭
ಕರುಣಾಕರ ಪರಮೇಶ್ವರ
ಗುರುತಮ ಕಲ್ಯಾಣಧಾಮ ಪ.
ಸುರುಚಿರ ಪೀತಾಂಬರಧರ
ನರಕೇಸರಿ ಕರಿವರವರದ ನಮೋ ನಮಃ ಅ.ಪ.
ಮಂದರಧರ ಮಧುಸೂದನ
ವೃಂದಾವನಸಂಚರಣ
ಚಂದ್ರಕೋಟಿಸದೃಶಾನನ
ವಂದನೀಯ ನಂದಕುಮಾರವ್ರಜೇಶ್ವರ ೧
ಭುಜಗಶಯನ ಭೂತಭಾವನ
ಭಜಕಜನೋದ್ಧರಣನಿಪುಣ
ಕುಜನಜನಾರಣ್ಯದಹನ
ಪ್ರಜಾನಂದನ ದ್ವಿಜವರ ವಾಹನ ಮೋಹನ೨
ಮಾತರಿಶ್ವಸಖ ಲೋಕೈಕ
ನಾಥ ಲಕ್ಷ್ಮೀನಾರಾಯಣ
ವೀತಭಯ ವಿಧಾತ ರುಕ್ಮಿಣೀ-
ಪ್ರೀತ ತ್ರಿಗುಣಾತೀತನೆ ಫಲ್ಗುಣಸೂತನೆ ೩

೩೮೨
ಕರುಣಾಕರ ಶಂಕರ ಸ್ವಾಮಿ ಪರಾಕು ಸಜ್ಜನಪ್ರೇಮಿ ಪ.
ಕರುಣಾಕರ ಕೋಟಿದಿವಾಕರ ಪೂರ್ಣ ಸುಧಾ-
ಕರ ಮಕುಟಲಲಾಮ ಅ.ಪ.
ಭೋಗೀಂದ್ರ ಫಣಾಮಣಿಮಂಡನ ಸ-
ದ್ಯೋಗೀಂದ್ರ ಮನೋವಿಶ್ರಾಮಿ
ಭಾಗೀರಥಿ ಸುತರಂಗೊತ್ತುಂಗ ಮಹಾ
ಸಾಗರ ತೇ ನೌಮಿ ೧
ಕೇವಲ ಪಾಪಿ ಸದಾವ್ರತಹೀನನ
ಕಾವುದು ಗೋಪತಿಗಾಮಿ
ನೀನೊಲಿದರೆ ಮತ್ತಾವುದು ಭಯ ಮಹಾ-
ದೇವ ವಶೀಕೃತಕಾಮಿ ೨
ಲಕ್ಷ್ಮೀನಾರಾಯಣದಾಸಾರ್ಯ ಮ-
ಹೋಕ್ಷಧ್ವಜ ಸುರಸುಕ್ಷೇಮಿ
ದಕ್ಷಾಧ್ವರಹರ ವರಪರಮೇಶ ಮು-
ಮುಕ್ಷುಜನಾಂತರ್ಯಾಮಿ ೩

೩೮೩
ಕಾಪಾಡಬೇಕು ಮಹಾಲಿಂಗ ಸುರೋತ್ತುಂಗ
ಶ್ರೀಪತಿಚರಣಾರವಿಂದಸದ್ಭಂಗ ಪ.
ತಾಪತ್ರಯಾಗ್ನಿಯೊಳ್ಬೆಂದೆ ಬಲು ನೊಂದೆ
ಆಪತ್ತುಗಳ ಪರಿಹರಿಸೆನ್ನ ತಂದೆ ೧
ಅಜ್ಞಾನವನು ದೂರಮಾಡು ದಯದಿ ನೋಡು
ಸುಜ್ಞಾನ ಹರಿಭಕ್ತಿ ಶ್ರದ್ಧೆಯ ನೀಡು ೨
ಪಾವಂಜೆ ಕ್ಷೇತ್ರಾಭರಣ ದೀನೋದ್ಧರಣ
ದೇವ ಲಕ್ಷ್ಮೀನಾರಾಯಣಪದಶರಣ೩

೪೨೩
(ಕೊಕ್ರಾಡಿ ಸುಬ್ರಹ್ಮಣ್ಯ)
ಕಾಯೊ ಸುಬ್ರಹ್ಮಣ್ಯ ಸಜ್ಜನ-
ಪ್ರೀಯ ಸುರವೇಣ್ಯ ಪ.
ತೋಯಜಾಕ್ಷ ನಿಖಿಲಾಮರಸೇವಿತ
ಶ್ರೇಯಸ್ಕರಫಲದಾಯಕ ಶಂಕರ ಅ.ಪ.
ನಿತ್ಯಾನಂದಕರ ನಿಜಾಶ್ರಿತ-
ವತ್ಸಲ ರಣಶೂರ
ಕೃತ್ತಿವಾಸಸುತ ದೈತ್ಯಾಂತಕ ರಿಪು-
ಮತ್ತಗಜೇಂದ್ರಮೃಗೋತ್ತಮ ಸಂತತ ೧
ನಿಗಮಾಗಮವಿನುತ ನೀರಜ-
ದೃಗಯುಗ ಸಚ್ಚರಿತ
ಅಗಜಾಲಿಂಗನ ಅಘಕುಲನಾಶನ
ಸುಗುಣಾಂಬುಧಿ ತ್ರೈಜಗದೋದ್ಧಾರಕ ೨
ಅಂಬುಧಿಗಂಭೀರ ಧೀರ ತ್ರೀ-
ಯಂಬಕ ಸುಕುಮಾರ
ತುಂಬುರು ನಾರದಯೋಗಿಸಭಾಂಗಣ-
ಸಂಭಾವಿತ ಚರಣಾಂಬುಜಯುಗಳ ೩
ಅಂಗಜ ಶತರೂಪ ಸಮರೋ-
ತ್ತುಂಗಸುಪ್ರತಾಪ
ಗಂಗಾಸುತ ವೇದಾಂಗಪಾರಜ್ಞ
ಮಂಗಲಚರಿತ ವಿಹಂಗಾರೂಢಾ ೪
ಶಕ್ರಾರಾತಿಹರ ತ್ರಿಜಗ-
ಚ್ಚಕ್ರಾನಂದಕರ
ಚಕ್ರಾಂಕಿತ ಶ್ರೀಲಕ್ಷ್ಮೀನಾರಾಯಣ-
ವಿಕ್ರಮಸಿಂಹ ಕೊಕ್ರಾಡಿ ಪುರೇಶ್ವರ೫
ಪಾವಂಜೆಯ ಸುಬ್ರಹ್ಮಣ್ಯ

೪೨೨
ಕಾರ್ತಿಕೇಯ ಮಹಾಸೇನ ನಿಜ
ಭೃತ್ಯರೊಳಾಗು ಪ್ರಸನ್ನ ಪ.
ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ-
ನಿತ್ತು ಕಾಯೊ ಷಡ್ವದನ ಅ.ಪ.
ತಂದೆ ತಾಯಿ ಕುಲಸ್ವಾಮಿ ಹರಿ-
ಯೆಂದು ಭಜಿಸುವೆನು ಪ್ರೇಮಿ
ಸ್ಕಂದನಾಮಕ ನೀನಂತರ್ಯಾಮಿ
ಸುಂದರ ಮಯೂರಗಾಮಿ ೧
ಪಾರ್ವತಿ ಶಿವಸಂಜಾತ ಪರಿ-
ಪಾಲಿತ ಸುಜನವ್ರಾತ
ಸರ್ವಗೀರ್ವಾಣ ಸೇನಾಧ್ಯಕ್ಷ
ಸರ್ವೋತ್ತಮ ಹರಿಪಕ್ಷ೨
ತಾರಕದ್ಯೆತ್ಯಸಂಹಾರ ಸುವಿ-
ಚಾರೈಕಪರಾಧಾರ
ಪ್ರಾರಂಭಗೈದ ಕಾರ್ಯ ಸಫಲಿಪುದು
ಭಾರ ನಿನ್ನದು ರಣಧೀರ ೩
ಪಾವಂಜಪುರನಿವಾಸ ನಃ
ಪಾತು ಶಿವಗಣಾಧೀಶ
ದೇವ ಲಕ್ಷ್ಮೀನಾರಾಯಣದಾಸ
ಪಾವನಚರಿತ ವಿಲಾಸ ೪

ಕಾಲಭೈರವ ಸ್ತುತಿ
೩೯೭
ಕಾಲಭೈರವ ಸ್ವಾಮಿಯೆ ಭಕ್ತಜನ-
ರಾಳಿಗೆ ಸುಪ್ರೇಮಿಯೆ ಪ.
ಮೂರ್ಲೋಕದೊಳು ಹರಿಲೀಲೆ ಕೊಂಡಾಡುವ
ಶೀಲರ ಕಾವ ಕೃಪಾಳುವೆ ಜಯ ಜಯಅ.ಪ.
ರುದ್ರನಾಮಕ ಹರಿಯ ಪಾದಭಕ್ತಿ-
ಮುದ್ರಾಂಕಿತ ನೀನಯ್ಯ
ಬುದ್ಧಿಜ್ಞಾನ ಸಂಸಿದ್ಧಿಸುತೆಮ್ಮನು
ಉದ್ಧರಿಸುವ ಸುಪ್ರಸಿದ್ಧ ಮಹಿಮ ನಿನ್ನ
ಹೊಂದಿದೆನು ಶಾಂತೀರಮಣನನಿ-
ರುದ್ಧನಂಘ್ರಿಸರೋಜ ಸ್ಮರಣೆ ಸ-
ಮೃದ್ಧಿಯನು ನೀನಿತ್ತು ಒಳಹೊರ-
ಗಿದ್ದು ಕಾಯೊ ಸುಭದ್ರದಾಯಕ ೧
ಕಾಮಕ್ರೋಧ ಮುಂತಾದ ವೈರಿಜನ-
ಸ್ತೋಮದಿಂದ ಬಹಳ ಬಾಧಾ
ಶ್ರೀಮನೋರಮನ ಸುನಾಮಸ್ಮರಣೆಯನ್ನು
ಪ್ರೇಮದಿಂದಿತ್ತು ಸುಕ್ಷೇಮದಿಂ ಪೊರೆಯೆಂದು
ವ್ಯೋಮಕೇಶನೆ ಧೀಮತಾಂವರ
ಸೋಮಧರ ಸುತ್ರಾಮವಂದಿತ
ತಾಮರಸಸಖ ತೇಜ ಸುಜನರ
ಕಾಮಧೇನು ಮನೋಮಯನೆ ಜಯ ೨
ಲಕ್ಷ್ಮೀನಾರಾಯಣನ ದಾಸಾರ್ಯ ಫಾ-
ಲಾಕ್ಷ ಮಹೇಶಾನ
ಸೂಕ್ಷ್ಮಸ್ಥೂಲದೊಳ್ಪರೀಕ್ಷಕನಾಗಿ ವಿ-
ಪಕ್ಷದವರನು ಶಿಕ್ಷಿಸಿ ಶಿಷ್ಟರ
ರಕ್ಷಿಸುವ ಸದಯಾದ್ರ್ರಹೃದಯ ಮು-
ಮುಕ್ಷುಪ್ರಿಯ ಗುರುವರ್ಯ ಲೋಕಾ-
ಧ್ಯಕ್ಷ ದಕ್ಷಮುಖಾಂತರ ಕರು-
ಣೇಕ್ಷಣದಲಿ ನಿರೀಕ್ಷಿಸೆಮ್ಮನು ೩

ಯತಿ ವರ್ಣನೆ
೪೩೪
ಕಾಶೀಮಠದ ಶ್ರೀ ಭುವನೇಂದ್ರರ ಸ್ತುತಿ
ಕಂಡು ಕೃತಾರ್ಥನಾದೆ ಭುವನೇಂದ್ರರಂಘ್ರಿಯ
ಕಂಡು ಕೃತಾರ್ಥನಾದೆ ಪ.
ಕಂಡು ಕೃತಾರ್ಥನಾದೆ ಭೂ-
ಮಂಡಲದಿ ಪೆಸರ್ಗೊಂಡು ಮೆರೆದಿಹ
ಪುಂಡರೀಕದಳಾಕ್ಷ ಸತತಾ-
ಖಂಡಸುಖ ಮಾರ್ತಾಂಡತೇಜರ ಅ.ಪ.
ವಾರಿರುಹಭವಾಂಡದ ಭೂಮಧ್ಯ ವಿ-
ಸ್ತಾರಜಂಬೂದ್ವೀಪದ ನವಖಂಡದೊಳ್
ಸಾರಭರತಖಂಡದÀ ಹಿಮಗಿರಿಯ ಪಾಶ್ರ್ವದ
ತೋರ್ಪ ವಿಂಧ್ಯಾಚಲದ ಮಧ್ಯ ಭಾ-
ಗೀರಥಿಯ ಪಶ್ಚಿಮ ಭೂಭಾಗದ
ತೀರ ಕಾಶೀಮಠಸಂಸ್ಥಾನ ವಿ-
ಚಾರಶಾಸ್ತ್ರವಿಶಾರದರ ಪದ ೧
ವರ ರಾಜೇಂದ್ರ ಯತೀಂದ್ರರ ಕರಸಂಜಾ-
ತರ ಗುರುಸುರೇಂದ್ರರ ಕರಕಮಲಮಧ್ಯದಿ
ಧರಿಸಿರ್ದ ವಿಭುದೇಂದ್ರರ ಸರೋರುಹ
ಕರಸಂಜಾತ ಮಹಾನುಭಾವರ
ಕರುಣನಿಧಿ ಕಮನೀಯ ಸದ್ಗುಣ
ಭರಿತ ಶ್ರೀಭುವನೇಂದ್ರರಂಘ್ರಿಯ ೨
ಸುಂದರಮುಖಶೋಭೆಯ ಪೂರ್ಣಮಿ ಶುಭ
ಚಂದ್ರಸನ್ನಿಭಕಾಂತಿಯ ಶೋಭಿಪ ನವ
ಕುಂದರದನ್ತಪಂಕ್ತಿಯ ತಿಲಕದ ಛಾಯ
ಮಂದಹಾಸಾನಂದ ಪುರಜನ
ವೃಂದಪೂಜಿತಪಾದಪದ್ಮ
ದ್ವಂದ್ವ ಸತತಾನಂದ ಸದ್ಗುಣ
ಇಂದ್ರ ಶ್ರೀಭುವನೇಂದ್ರರಂಘ್ರಿಯ ೩
ಶೃಂಗಾರರಸತೇಜರ ಯಮನಿಯಮಾದ್ಯ
ಷ್ಟಾಂಗಯೋಗಸರ್ವಜ್ಞರ ಪಾಪಾತ್ಮರ
ಕಂಗಳಿಗಗೋಚರ ಸತ್ಯಾವತಾರ
ಮಂಗಳಾತ್ಮಕಸಂಗ ಸುಮಮನಸ
ರಂಗ ಸಾಧ್ಯವೇದಾಂಕ ಕರುಣಾ
ಪಾಂಗ ವಿಬುಧೋತ್ತುಂಗ ಅಂಗಜ
ಭಂಗ ಶ್ರೀಯತಿಪುಂಗವರ ಪದ ೪
ಎಷ್ಟೆಂದು ನಾ ಪೇಳಲಿ ಸದ್ಗುರುವರ-
ರಿಷ್ಟಕೆ ತೋಷ ತಾಳಲಿ ದಾರಿದ್ರ್ಯದ
ಕಷ್ಟವೆಲ್ಲ ಪರಿಹರಿಸಲಿ ದಯವಿರಲಿ ಎನ್ನಲಿ
ಶ್ರೇಷ್ಠ ಗೌಡಸಾರಸ್ವತ ಸ-
ಮಷ್ಟಿ ಕೊಂಕಣದೇಶವಿಪ್ರ ವಿ-
ಶಿಷ್ಟ ಒಡೆತನ ಪಟ್ಟವಾಳುವ
ಶ್ರೇಷ್ಠಯತಿವರರಂಘ್ರಿಕಮಲವ ೫
ಆಶೆಯೊಂದುಂಟೆನಗೆ ಕಾವ್ಯವ ಓದ್ಯ-
ಭ್ಯಾಸಗೈಯುವದು ಮಿಗೆ ಸನ್ನಿಧಾನದಿ
ಪೋಷಿಸಿ ಎನ್ನ ಹೀಗೆ ರಕ್ಷಿಸಲು ಕಡೆಗೆ
ಏಸು ಧನ್ಯನು ನಾನು ಕರುಣಾ
ರಾಶಿ ಸಜ್ಜನಪೋಷಿ ನಿಗಮ ವಿ-
ಲಾಸರಂಘ್ರಿಗೆ ದಾಸದಾಸರ
ದಾಸ ನಾನು ದಯಾಶರಧಿಯರ ೬
ಸತತ ಸದ್ಯತಿಧರ್ಮದ ಪರಿಪಾಲಿಸಿ
ಕ್ಷಿತಿಗತಿ ಪ್ರತಿವಾಸವನಂತೆಸೆವುತಾ
ಮಿತ ಭಾಗ್ಯಸಂಪದವ ವಿಖ್ಯಾತವ
ರತಿಪತಿಯ ಪಿತ ಕ್ರುತುಪಾಲಿತ ಸೂ-
ನೃತಭಾಷಿತ ಲಕ್ಷ್ಮೀನಾರಾಯಣ
ಸತತ ವೇದವ್ಯಾಸ ಶ್ರೀರಘು
ಪತೀಚರಣಪೂಜಿತರ ಪದವನು ೭

೩೨೮
ಕೇಶವ ನಾರಾಯಣ ಮಧುಸೂದನ ವಾಸುದೇವ ಶ್ರೀ ಗೋವಿಂದ
ವಾಸವನುತ ಜಗದೀಶ ಪರೇಶಾಂಬರೀಶ
ವರದ ಶ್ರೀ ಗೋವಿಂದ ೧
ಭೋಗಿಶಯನ ಭವರೋಗವೈದ್ಯ ನಿಗಮಾಗಮ
ಪಾಲಕ ಗೋವಿಂದ
ಸಾಗರಗೃಹ ಶರಣಾಗತವಾಂಛಿತ ಭಾಗವತಪ್ರಿಯ ಗೋವಿಂದ ೨
ಕಾರಣದೈತ್ಯಸಂಹಾರಣ ಮಂದರೋದ್ಧಾರಣ
ಮಾಧವ ಗೋವಿಂದ
ಪ್ರೇರಣ ಕರ್ತುವಿಚಾರಣ ಭಕ್ತೋದ್ಧಾರಣ ಶ್ರೀಹರಿ ಗೋವಿಂದ೩
ಖಂಡಪರಶು ಸುರತಂಡವಿನುತ
ಭೂಮಂಡಲನಾಯಕ ಗೋವಿಂದ
ಅಂಡಪಿಂಡಾಂಡಖಿಳಾಂಡಕೊಡೆಯ
ಕರದಂಡದಳಾಕ್ಷ ಶ್ರೀ ಗೋವಿಂದ೪
ತುಂಗವಿಕ್ರಮ ಸಮರಾಂಗಣಜಿತ ನರಸಿಂಗ
ನಮೋ ನಮೋ ಗೋವಿಂದ
ಮಂಗಲ ರಂಗ ವಿಹಂಗತುರಂಗ
ಮತಂಗವರದ ಶ್ರೀ ಗೋವಿಂದ ೫
ಶಕ್ರಾರ್ಚಿತ ವಟುವಾಕೃತಿಧರ ಕರಚಕ್ರಾಂಕಿತ ಹರಿ ಗೋವಿಂದ
ಅಕ್ರೂರವರದ ಅಖಿಳಪ್ರದ ತ್ರಿವಿಕ್ರಮರಾಯ ಶ್ರೀ ಗೋವಿಂದ ೬
ಉಗ್ರಕುಠಾರ ನೃಪಾಗ್ರಣಿವಿಪಿ£
ಶ್ರೀ ಭಾರ್ಗವರಾಮ ಶ್ರೀ ಗೋವಿಂದ
ಅಗ್ರಗಣ್ಯ ಶುಭವಿಗ್ರಹ ನೃಪಕುಲವರ್ಗವಿದಾರಣ ಗೋವಿಂದ೭
ಸೀತಾಪತೇ ಜಗನ್ನಾಥ ಕೃಪಾಕರ
ನೂತನ ಲೀಲ ಶ್ರೀ ಗೋವಿಂದ
ವಾತಜವರದ ಸಾಕೇತಾಧಿಕ ನಿರ್ಭೀತ ಶ್ರೀ ರಾಮ ಗೋವಿಂದ ೮
ನೀಲನಿಭಾಂಗ ವಿಶಾಲನಯನ
ಕರುಣಾಲಯದೇವ ಶ್ರೀ ಗೋವಿಂದ
ಬಾಲಲೀಲ ಗೋಪಾಲ ಸುಶೀಲ
ಕುಚೇಲವರದ ಶ್ರೀ ಗೋವಿಂದ೯
ಅದ್ವಯ ಸುಖಪದ ಸಿದ್ಧನಿರಾಮಯ
ಬುದ್ಧಾಕೃತಿಧರ ಗೋವಿಂದ
ಶುದ್ಧಾತ್ಮಕ ಭವವೈದ್ಯ ವಿಬುಧಾರಾದ್ಯಚರಣ ಶ್ರೀ ಗೋವಿಂದ ೧೦
ವಾಜಿಯನೇರ್ದ ಕೃಪಾಜಲನಿಧಿ
ಸುರರಾಜಾಧಿರಾಜ ಶ್ರೀ ಗೋವಿಂದ
ಮೂಜಗಪತಿ ಕುಜನ ಜನಹರ ವಿಭ್ರಾಜಿತ
ಪ್ರೌಢ ಶ್ರೀ ಗೋವಿಂದ೧೧
ಕಪ್ಪಕಾಣಿಕೆ ತನಗೊಪ್ಪಿಸಿಕೊಂಬ
ಶ್ರೀ ಕಪ್ಪುಗೊರಳಪ್ರಿಯ ಗೋವಿಂದ
ಸರ್ಪಾಚಲದಿಂದೊಪ್ಪಿಲ್ಲಿಯೆ ನೆಲಸಿಪ್ಪ ತಿಮ್ಮಪ್ಪ ಶ್ರೀ ಗೋವಿಂದ ೧೨
ತಾನೆ ಭಕ್ತರ ಸನ್ಮಾನದಿ ಸಲಹಲು ತಾನೆತಂದ ಶ್ರೀ ಗೋವಿಂದ
ಮಾನಿತ ಕಾರ್ಕಳ ಶ್ರೀನಿವಾಸ
ಲಕ್ಷ್ಮೀನಾರಾಯಣ ಹರಿ ಗೋವಿಂದ೧೩

೪೨೪
ಕೈಯ ಮುಗಿವೆ ಗುರುರಾಯ ಶರಣು ಜಗ-
ದಯ್ಯನೆ ಬಾಹುಲೇಯ ಪ.
ಒಯ್ಯನೆ ಬಿನ್ನಪ ಗೈಯುವೆ ಕರುಣಾಳು
ಧೈರ್ಯ ಸಾಹಸ ಗುಣಧುರ್ಯನೆ ಜಯ ಜಯ ಅ.ಪ.
ವ್ಯರ್ಥ ಜನ್ಮವಾಯಿತು ಹರಿಯ ಸ್ಮರಣೆ
ಗೊತ್ತು ಇಲ್ಲದೆ ಹೋಯಿತು
ಉತ್ತಮೋತ್ತಮ ಗುಣವ ಪಾಲಿಸು
ಭಕ್ತವತ್ಸಲ ಭಯನಿವಾರಣ
ಸತ್ಯಮಾರ್ಗದಿ ನಡೆಸು ಶಂಕರ-
ಪುತ್ರ ಪುಣ್ಯಚರಿತ್ರಭರ್ತನೆ ೧
ತಾಮಸಗುಣಗಳು ಪರಿಹರಿಸು ನಿ-
ಸ್ಸೀಮ ಮಹಿಮನೆ ನೀನು
ಶ್ರೀ ಮನೋರಮನಿಷ್ಠೆ ಸಜ್ಜನ-
ಸ್ತೋಮಸಂಗವನಿತ್ತು ದುರ್ಜನ-
ಸೀಮೆಯೊಳು ಪೊಕ್ಕಿಸದಿರೆನ್ನ ಸು-
ಧಾ ಮಯೂಖಾಸ್ಯನೆ ಮಹೇಶನೆ ೨
ಭೂಮಿಗಧಿಕವೆನಿಪ ಪಾವಂಜಾಖ್ಯ
ಗ್ರಾಮಾಧಿಪತಿ ನಿಷ್ಪಾಪ
ಕಾಮಾರ್ಥವನೀವ ಯೋಗಿ ಲ-
ಲಾಮ ಲಕ್ಷ್ಮೀನಾರಾಯಣನ ಮ-
ಹಾಮಹಿಮೆಯನು ಪೊಗಳಿ ಹಿಗ್ಗುವ
ಕೋಮಲಾಂಗ ಸುಮಂಗಲಪ್ರದ ೩

೩೮೬
ಕೈಯ ಮುಗಿವೆನು ಮಹಾಲಿಂಗ ಜಗ-
ದೈಯನೆ ವೃಷಭತುರಂಗ ಪ.
ಧೈರ್ಯಸಾಹಸ ಸಮುದ್ರ ರುದ್ರ ಸುರ-
ವರ್ಯನೆ ಸದಯಾಪಾಂಗ ಅ.ಪ.
ಕೆಂಡಗಣ್ಣಿನ ಪರಶಿವನೆ ಸುಪ್ರ-
ಚಂಡ ಚಂಡಿಕಾಧವನೆ
ಮಂಡೆಯೊಳಗೆ ಭಾಗೀರಥಿಯ ತಾಳ್ದ
ಕಂಡಪರಶು ಪಾವನನೆ ೧
ಚಂದ್ರಕಲಾಧರ ಹರನೆ ಗೋ-
ವಿಂದನ ವರ ಕಿಂಕರನೆ
ಸುಂದರ ಶುದ್ಧಸ್ಫಟಿಕಶರೀರನೆ
ವೃಂದಾರಕ ಮುನಿವೃಂದವಂದಿತನೆ೨
ಪಾವಂಜೆ ಕ್ಷೇತ್ರವಾಸ ಪರಿ-
ಪಾಲಿಸು ಫಣಿಪತಿಭೂಷ
ದೇವ ಲಕ್ಷ್ಮೀನಾರಾಯಣದಾಸನ
ಕಾವ ಕಲ್ಮಷವಿನಾಶ ೩

ಶೇಷದೇವರು
೩೭೯
ಖಗರಾಜ ಮಹೋಜ ಸತ್ತ್ವಧಾಮ
ಭಕ್ತಿಭಾವ ರವಿತೇಜ ಜಿತಕಾಮ ಪ.
ನಿಗಮಾಗಮಯೋಗತತ್ತ್ವ ಪ್ರಾಜ್ಞ
ಮಹಾಭಾಗ ನಾಗಾಂತಕ ಮನೋಜ್ಞ ೧
ಸಾಮಗಾನಪ್ರವೀಣ ವೈನತೇಯ
ಹರಿಧ್ಯಾನೈಕತಾನ ಶುಭಕಾಯ ೨
ವರಲಕ್ಷ್ಮೀನಾರಾಯಣನ ವರೂಥ
ಹರಿಪಕ್ಷ್ಯೆಕದೀಕ್ಷ ಪ್ರಖ್ಯಾತ೩

೩೧೧
ಗಣನಾಥ ನಿನ್ನ ನೆನೆವೆ ಗುರುವೆ
ಗಣನಾಥ ನಿನ್ನ ನೆನೆವೆ ಪ.
ಪ್ರಣತಾರ್ತಿ ಭವಭಂಜನ ನಿರಂಜನ
ಗುಣ ಪಾರಾವಾರ ತ್ರಿನಯನ ಕುಮಾರ೧
ಘನಯೊಗಸಾಧ್ಯ ಜ್ಞಾನ ವಿದ್ಯಾ
ಮಣಿಗಣಭೂಷಣ ಭೂರಿದ ೨
ಇನತೇಜ ಗಜಾನನ ಲಕ್ಷ್ಮೀನಾರಾ-
ಯಣಕಿಂಕರ ಫಣಿಪಾಲಂಕಾರ ೩

೩೧೨
ಗಣಪತಿ ಸುರಚಕ್ರವರ್ತಿ ಪ.
ಮಹಧೃತಿ ಯತಿವರಕೃತಸ್ತುತಿ
ಅತಿಶಯ ಭಕುತಿರತಿಗೆ ನೀ ಗತಿ ಅ.ಪ.
ಪ್ರಾಣನಾಥ ಲಕ್ಷ್ಮೀನಾರಾಯಣ
ಧ್ಯಾನೈಕಪರಮೂರ್ತಿ
ಪರಾರ್ಥಸ್ರ‍ಮತಿ ದೀನಾರ್ತಿನ
ಹರಣ ರವಿಶತದ್ಯುತಿ೧

೩೫೫
ಗುರು ಮುಖ್ಯಪ್ರಾಣದರಸನೆ ನೀ ಎನ್ನ
ಕರುಣಿಸು ಕೃಪೆಯಿರಿಸು ಪ.
ಸ್ಥಿರಚರದಲಿ ನಿತ್ಯ ಪರಿಪೂರ್ಣನಾಗುತ
ಪರಮಾತ್ಮನ ಮತಕನುಸರಿಸಿ
ಧರೆಗೆ ಭಾರವಾದ ದುರುಳರ ವಧೆಗೈದ
ಮರುತಾತ್ಮಜ ಮನೋಹರ ಮೂರುತಿಯಾದ ೧
ರಾಮನಪ್ಪಣೆಯಿಂದ ಆ ಮಹಾಂಬೋಧಿಯ
ಭೀಮ ವಿಕ್ರಮನುರೆ ದಾಂಟಿ ಬಂದು
ರಾಮಣೀಯಕರವಾದ ರಾಮಮುದ್ರಿಕೆಯನ್ನು
ತಾ ಮಣಿಯುತ ಸೀತಾ ಮಾನಿನಿಗಿತ್ತ ೨
ಆ ಮಹಾಲಕ್ಷ್ಮಿಯ ನೇಮವ ಕೈಗೊಂಡು
ತಾಮಸಿಚರರ ನಿರ್ನಾಮಗೈದು
ಹೇಮಲಂಕೆಯನುರೆ ಹೋಮವಗೈಯುತ
ರಾಮನ ಪದಕೆ ಚೂಡಾಮಣಿ ತಂದಿತ್ತ ೩
ಕ್ರೂರ ಕೌರವಕುಲ ಘೋರ ಕಾನನಕೆ ಕು-
ಠಾರನಾಗುತಲಿ ಸಂಹಾರಗೈದು
ವಾರಿಜಾಕ್ಷನ ಕೃಪೆಯಿಂದ ಮಾಗಧನನ್ನು
ಚೀರಿದ ಕುಂತಿಕುಮಾರ ಮೂರ್ಲೋಕದ ೪
ಹರಿ ಸರ್ವೋತ್ತಮನೆಂದು ಧರೆಗೆ ಸಾರುತ ಬಂದು
ವರ ವೈಷ್ಣವಮತ ಸ್ಥಿರವ ಮಾಡಿ
ಧರಣಿಯೊಳಗೆ ತಾತ್ವರ್ಯನಿರ್ಣಯವೆಂಬ
ಪರಮ ಗ್ರಂಥವಗೈದ ಗುರು ಮಧ್ವಾಚಾರ್ಯನೆ ೫
ಇಂತೀ ಮೂರವತಾರವಾಂತು ದಾನವರಿಂಗೆ
ಸಂತಾಪಗೈದ ಮಹಾತುಮನೆ
ಚಿಂತಿತಾರ್ಥವನೀವ ಚಿಂತಾಮಣಿ ಎಂದು
ಸಂತತ ಭಜಿಪೆನು ಶಾಂತ ಹುನುಮಂತನೆ ೬
ಶ್ರೀ ರಾಘವ ಲಕ್ಷ್ಮೀನಾರಾಯಣನ ಪಾದ-
ಚಾರಕನಾದ ಗಂಭೀರನಿಗೆ
ನೀರಜಾಂಡದೊಳಾರು ಸಮಾನರು
ಕ್ಷಿರಸಾಗರಶಯನ ನೀನೊಬ್ಬನಲ್ಲದೆ ೭

೩೮೪
ಗೋಕರ್ಣೇಶಂ ಗೌರೀಶಂ ವಂದೇ ನತಜನಭಯನಾಶಂ ಪ.
ಪಾಕಹ ಮದನದಿವಾಕರಪ್ರಮುಖ ದಿ-
ವೌಕಸಕೃತ ಜಯಜಯಘೋಷಂ ಅ.ಪ.
ಕರ್ಪೂರಕ್ಷೀರಗೌರಾಂಗಂ
ಕಲ್ಯಾಣನಿಧಿಂ ನಿಸ್ಸಂಗಂ
ದರ್ಪಕದರ್ಪಹರಂ ತಮುದಾರಂ
ಸರ್ಪಫಣಾಮಣಿಹಾರಂ ಘೋರಂ ೧
ಲಕ್ಷ್ಮೀನಾರಾಯಣಸಖಂ ಸುರಾ-
ಧ್ಯಕ್ಷಂ ಶಿವಂ ವಿಗತಶೋಕಂ
ದಕ್ಷಾಧ್ವರವಿಧ್ವಂಸನಚತುರಂ
ಮೋಕ್ಷಜ್ಞಾನದಂ ಸಮ್ಮೋಹಭಿದಂ೨

೪೦೪
ಗೋಕುಲಕ್ಹೋಗು ನೀ ಶೋಕವಿನಾಶಿನಿ
ಲೋಕೇಶ ಪಾರ್ವತಿ ಶ್ರೀಕರೆ ಶ್ರೀಮತಿ ಪ.
ದೇವಕೀಗರ್ಭದ ಕೇವಲೆಂಟಂಶದ
ದೇವಶೇಷಾಖ್ಯನ ದೇವಿಗೈ ದರ್ಶನ ೧
ವಸುದೇವನ ರಾಣಿ ಶಶಿಮುಖಿ ರೋಹಿಣಿ
ಬಸುರೊಳಗಿಡು ನೀ ಬಿಸರುಹಲೋಚನಿ೨
ಸುಂದರಿ ದೇವಕೀ ಕಂದನಾಗುವೆ ಸುಮುಖಿ
ನಂದನ ನಂದಿನಿಯೆಂದೆನಿಸು ಭವಾನಿ ೩
ಜಗದಂಬಿಕೆ ಜಯೆ ಸುಗುಣೆ ವೈಷ್ಣವಿ ವಿಜಯೆ
ಜಗದೊಳು ನಿನ್ನ ಪೂಜೆ ಅಗಲದ ಗೈವರಗಜೆ ೪
ಲಕುಮಿನಾರಾಯಣನ ಯುಕುತಿಯಂತಾಕ್ಷಣ
ಸುಖದೆ ಗೈದಳು ಶಿವಸಖಿ ತಾನೆಲ್ಲವ ೫

೩೧೩
ಗೌರಿನಂದನ ಗಜವಂದನ ಗೌರಿನಂದನ
ಶೌರಿ ಕರುಣಾಭರಣ ಸೂರಿ ವಿಘ್ನಹರಣ ಪ.
ಯೋಗಿವರ್ಯ ಗುರುವೆ ಬಾಗಿ ಬಿನ್ನವಿಸುವೆ
ಭಾಗವತರ ಸಂಗವಾಗಲಂತರಂಗ ೧
ಲೋಕೈಕಶರಣ್ಯ ಲೇಖಕಾಗ್ರಗಣ್ಯ
ಏಕದಂತ ಶಾಂತ ಶ್ರೀಕರ ನಿಶ್ಚಿಂತ ೨
ಅನಘ ಲಕ್ಷ್ಮೀನಾರಾಯಣ ಪದಾಬ್ಜಭ್ರಮರ
ಪ್ರಣತಕಲ್ಪಭೂಜ ಪಾಹಿ ವಿಘ್ನರಾಜ ೩

೪೯೩
ಗೌರೀಕರಪಂಜರಕೀರ ಜೋ ಜೋ
ಶೌರಿ ದಯಾರಸಪೂರನೆ ಜೋ ಜೋ
ಧೀರ ಮುಕ್ಕಣ್ಣ ಕುಮಾರನೆ ಜೋ ಜೋ
ದಾರಿದ್ರ್ಯ ದುಃಖ ಪ್ರಭಂಜನ ಜೋ ಜೋ ೧
ಸಾವಿರನಯನ ತುರಂಗನೆ ಜೋ ಜೋ
ದೇವರಾಜಸಂಭಾವಿತ ಜೋ ಜೋ
ತಾವರೆನಯನ ಸನ್ಮೋಹನ ಜೋ ಜೋ
ಸೇವಕವಿಬುಧಸಂಜೀವನ ಜೋ ಜೋ ೨
ಪೃಥ್ವಿಯೊಳ್ವಾವಂಜೆ ಕ್ಷೇತ್ರಾಧಿವಾಸ
ಕರ್ತ ಲಕ್ಷ್ಮೀನಾರಾಯಣಪಾದ ದಾಸ
ಭೃತ್ಯವರ್ಗವ ಕಾವ ಭವಹರ ಜೋ ಜೋ
ಕಾರ್ತಿಕೇಯ ಕೃತಕೃತ್ಯನೆ ಜೋ ಜೋ ೩

೪೦೫
ಜನನಿ ರುದ್ರಾಣಿ ರಕ್ಷಿಸು ಎನ್ನ
ಜಗದೀಶನ ರಾಣಿ ಪ.
ವನಜಭವಸುರಮುನಿಕುಲಾರ್ಚಿತೆ
ಕನಕವರ್ಣಶರೀರೆ ಕಮಲಾ-
ನನೆ ಕರುಣಾಸಾಗರೆ ನಮಜ್ಜನ-
ಮನಮುದಾಕರೆ ಮಾನಿತೋದ್ಧರೆ ಅ.ಪ.
ಆದಿಕೃತಾಯುಗದಿ ಪ್ರತಿಷ್ಠಿತ-
ಳಾದೆ ಧರಾತಳದಿ
ಆದಿತೇಯರ ಬಾಧಿಸುವ ದಿತಿ-
ಜಾಧಮರ ಭೇದಿಸಿದೆ ಸಜ್ಜನ-
ರಾದವರ ಮನ್ನಿಸಿದೆ ತ್ರೈಜಗ-
ದಾದಿಮಾಯೆ ವಿನೋದರೂಪಿಣಿ ೧
ಖಂಡ ಪರಶುಪ್ರೀತೆ ನಿಖಿಲಬ್ರ-
ಹ್ಮಾಂಡೋದರಭರಿತೆ
ಚಂಡಮುಂಡವೇತಂಡದಳನೋ-
ದ್ದಂಡಸಿಂಹೆ ಅಖಂಡಲಾರ್ಚಿತೆ
ಪಾಂಡುತನುಜ ಕೋದಂಡ ವಿತರಣೆ
ಚಂಡಿಕೇ ಕರದಂಡಲೋಚನಿ ೨
ಸಿಂಧೂರ ಸಮಯಾನೆ ಸರಸ ಗುಣ-
ವೃಂದೆ ಕೋಕಿಲಗಾನೆ
ಸುಂದರಾಂಗಿ ಮೃಗೇಂದ್ರವಾಹಿನಿ
ಚಂದ್ರಚೂಡಮನೋಜ್ಞೆ ಸತತಾ-
ನಂದಪೂರ್ಣೆ ಮುನೀಂದ್ರನುತೆ ಸುಮ-
ಗಂಧಿ ಗೌರಿ ಶಿವೇ ಭವಾನಿ೩
ಲಂಬೋದರಮಾತೆ ಲಲಿತ ಜಗ-
ದಂಬಿಕೆ ಗಿರಿಜಾತೆ
ಕಂಬುಕಂಠಿ ಕಾದಂಬನೀಕು-
ರುಂಬಜಿತಧಮ್ಮಿಲ್ಲೆ ತವ ಪಾ-
ದಾಂಬುಜವ ನಾ ನಂಬಿದೆನು ಎನ-
ಗಿಂಬು ಪಾಲಿಸೆ ಶುಂಭಮರ್ದಿನಿ ೪
ಘನವೇಣುಪುರವಾಸೆ ಸರ್ವಾರ್ಥದಾ-
ಯಿನಿ ತ್ರೈಜಗದೀಶೆ
ಸನಕನುತೆ ಶ್ರೀಲಕ್ಷುಮಿನಾರಾ-
ಯಣಭಗಿನಿ ಶ್ರೀಮಹಿಷಮರ್ದಿನಿ
ಮನಮಥಾಮಿತರೂಪೆ ಕಾತ್ಯಾ-
ಯಿನಿ ನಿರಾಮಯೆ ಮಂಜುಭಾಷಿಣಿ ೫

೪೯೯
ಜನನೀ ತ್ರಿಜಗತಿ ಜನಾರ್ದನೀ ಜನನೀ
ಜಯತು ಶ್ರೀಪದ್ಮಾವತೀ ಪ.
ಗುಣಗಣಾರ್ಣವೆ ವಿಶ್ವಪೂಜಿತ
ಜನನಮರಣವಿದೂರೆ ಪದ್ಮಾಸನೆ
ಸನಾಥೆ ಸದಾ ಸುಮಂಗಲೆ
ಘನಗಗನಭೂಪಾಲನಂದಿನಿ ಅ.ಪ.
ಶ್ರೀನಿವಾಸನ ರಾಣಿ ಸರ್ವಾರ್ಥ ನಿ-
ದಾನಾಂಬುಜಪಾಣಿ
ಭಾನುಕೋಟಿಸಮಾನ ತೇಜೆ ಸ-
ದಾನುರಾಗಪ್ರದಾನೆ ವಿಬುಧ-
ಶ್ರೇಣಿನುತೆ ಮಹದಾದಿಮಾಯಾ-
ಮಾನಿ ಮಾಧವಮನವಿಲಾಸಿನಿ ೧
ಸುಂದರಿ ಸುಮನೋಹರಿ ಸುಜ್ಞಾನಾ-
ನಂದೆ ಸಿಂಧುಕುವರಿ
ಚಂದ್ರವದನೆ ಚರಾಚರಾತ್ಮಕಿ
ವಂದನೀಯೆ ಪರೇಶಪರಮಾ-
ನಂದರೂಪೆ ಸನತ್ಸುಜಾತ ಸ-
ನಂದನಾದಿಮುನೀಂದ್ರವಂದಿತೆ ೨
ಅಂಬೆ ಶ್ರೀಹರಿಪ್ರೀತೆ
ಶಂಭುಸಂಭಾವಿತೆ ತ್ರಿಲೋಕಾ-
ರಂಭಸೂತ್ರೆ ಪವಿತ್ರೆ ವಿಶ್ವಕು-
ಟುಂಬೆ ಕಮಲಯನೇತ್ರೆ ಸಾಧ್ವೀಕ-
ದಂಬಮಸ್ತಕಮಣಿಪ್ರಭಾಶಿನಿ ೩
ಪದ್ಮ ಸರೋವಾಸಿನೀ ಪಾವನಹೃ
ತ್ಪದ್ಮನಿತ್ಯಭಾಸಿನಿ
ಪದ್ಮನವಕ್ರೀಡಾವಿಲಾಸಿನಿ ಮ-
ಹನ್ಮನೋಧ್ಯಾನಾಧಿರೂಢೆ ಸು-
ಪದ್ಮಹಸ್ತೆ ನಮಸ್ತೆ ಪಾವನೆ
ಪದ್ಮನಾಭನರಮಣಿ ಕರುಣಿ ೪
ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ-
ಕರೆ ಕಾಳಾಹಿವೇಣಿ
ಧರೆಯೊಳುತ್ತಮ ಕಾರ್ಕಳದಿ ಸು-
ಸ್ಥಿರನಿವಸವ ಗೈದೆ ಕರುಣಾ-
ಶರಧಿ ಭಕ್ತರ ಪ್ರಾರ್ಥನೆಯ ಸ್ವೀ-
ಕರಿಸಿ ಪೊರೆವಿಷ್ಟಾರ್ಥದಾಯಿನಿ ೫

೩೮೫
ಜಯ ಜಯ ಮೃತ್ಯುಂಜಯ ಜಗದಾಶ್ರಯ
ಭಯಹರ ವಿಗತಾಮಯ ಶಿವ ಸದಯ ಪ.
ಭಾಗವತೋತ್ತಮ ಭಾಸುರಕಾಯ
ಭಾಗೀರಥೀಧರ ಭಗವತೀಪ್ರಿಯ೧
ಅಗಜಾಲಿಂಗನ ಸುಗುಣನಿಕಾಯ
ಮೃಗಧರಚೂಡ ಮುನಿಜನಗೇಯ ೨
ಲಕ್ಷ್ಮೀನಾರಾಯಣಪರಾಯಣ
ರಕ್ಷಿಸು ತ್ರಿಜಗಾಧ್ಯಕ್ಷ ಸುಶ್ರೇಯ ೩

೩೮೭
ಜಯ ಜಯ ಶ್ರೀ ಮಹಾಲಿಂಗ ಗೋಪತುರಂಗ
ಜಯ ಜಯ ಶ್ರೀ ಮಹಾಲಿಂಗ ಪ.
ಜಯರಹಿತಾಚ್ಯುತಪ್ರಿಯ ಬುಧಾರ್ಚಿತ
ದಯಾಸಾಗರ ಭಸಿತಾಂಗ
ನಯನತ್ರಯ ನಮಿತಾಮರಸಂಘಾ-
ಮಯಹರ ಗಂಗೋತ್ತುಮಾಂಗ ೧
ಭೂತೇಶ ಭೂರಿಭೂತಹೃದಿಸ್ಥಿತ
ಭೂಷಣೀಕೃತಭುಜಂಗ
ಪೂತಾತ್ಮ ಪರಮಜ್ಞಾನತರಂಗ
ಪಾತಕತಿಮಿರಪತಂಗ ೨
ಲಂಬೋದರಗುಹಪ್ರಮುಖಪ್ರಮಥನಿಕು-
ರುಂಬಾಶ್ರಿತ ಜಿತಸಂಗ
ಗಂಭೀರಗುಮಕದಂಬೋತ್ತುಂಗ-
ಸಂಭೃತ ಹಸ್ತಕುರಂಗ೩
ಸೋಮಶೇಖರ ಮಹಾಮಹಿಮ ವಿಜಿತ-
ಕಾಮ ಕಲಿಕಲುಷಭಂಗ
ರಾಮನಾಮ ಸ್ಮರಣಾಂತರಂಗ
ವಾಮಾಂಕಾಸ್ಥಿತ ಪಿಂಗ ೪
ದೇವ ಲಕ್ಷ್ಮೀನಾರಾಯಣ ಪದರಾ-
ಜೀವನಿರತ ವನಭೃಂಗ
ಪಾವಂಜಾಖ್ಯ ಗಿರೀಶ ಶುಭಾಂಗ
ಕೇವಲ ಸದಯಾಪಾಂಗ ೫

೪೯೮
ಜಯ ಜಯ ಶ್ರೀಹರಿಪ್ರಿಯೆ ಮಹಾ-
ಭಯಹರೆ ಜಗದಾಶ್ರಯೆ
ಲಯವರ್ಜಿತ ನಿತ್ಯಾತ್ಮೆ ಚಿನ್ಮಯೆ
ಜಯಶೀಲೆ ನಿರಾಮಯೆ ೧
ನಿತ್ಯಮುಕ್ತಿ ನಿರ್ವಿಕಾರೆ ನಿಜ-
ಭೃತ್ಯನಿಚಯ ಮಂದಾರೆ
ಪ್ರತ್ಯಗಾತ್ಮ ಹರಿಭಕ್ತಿರಸಪೂರೆ
ಸತ್ವಾದಿಗುಣವಿದೂರೆ ೨
ಲಕ್ಷ್ಮೀನಾರಾಯಣಿ ಹರಿ-
ವಕ್ಷಸ್ಥಲವಾಸಿನಿ
ಅಕ್ಷರರೂಪಿಣಿ ಬ್ರಹ್ಮಾಂಡಜನನಿ
ಸುಕ್ಷೇಮಪ್ರದಾಯಿನಿ ೩

೩೫೬
ಜಯ ಜಯಜಗತ್ಪ್ರಾಣತ್ರಾಣ ಜನನ ಮರಣಕ್ಲೇಶಹರಣ
ಜಯ ಪಾವನ ದಿವ್ಯಚರಣ ಪ.
ಸರ್ವದೇವತಾಗ್ರಗಣ್ಯ ಸರ್ವಜೀವೋತ್ತಮ ಶರಣ್ಯ
ಪೂರ್ವಾಮರಪುರದಹನ ಪೂರ್ಣಗುಣಗಣ ೧
ವೈಷ್ಣವ ಜನ ಶಿರೋರತುನ ವಿಶ್ವಾಂತರ್ಗತಭಾವನ
ತೀಕ್ಷ್ಣಮನೋದುಷ್ಟದಮನ ಶಿಷ್ಟಜೀವನ ೨
ಭಕುತಿಜ್ಞಾನನಿಧಿ ಕಲ್ಯಾಣ ಭಜಕಜನಭವಾಬ್ಧಿತರಣ
ಲಕುಮಿನಾರಾಯಣಶರಣ ಬಕವಿದಾರಣ ೩

೩೬೮
ಜಯಜನನೀ ಶಾರದೆ ಜನನಮೃತಿಭಯಭಿದೆ ಪ.
ನಯವಿದೆ ತ್ರಿಜಗನ್ಮಯೆ ವೀಣಾವಿನೋದೆ ಅ.ಪ.
ಭಕ್ತಿಜ್ಞಾನ ಮಾನದೆ ಭಗವತ್ಪ್ರಾಪ್ತ ಪ್ರಸಾದೆ
ಮುಕ್ತಿಶಕ್ತಿಪ್ರದೆ ನಿಜ ಭೃತ್ಯವತ್ಸಲೆ ಪ್ರಬುದ್ಧೆ ೧
ವೇದಾರ್ಥತತ್ವಪ್ರಬೋಧೆ ಆದಿತೇಯಾನತಪದೆ
ಶ್ರೀಧರೆ ಸದಾನಂದೆ ಸಾಧು ಸೌಭಾಗ್ಯನಿಧೆ ೨
ಅನಘ ಲಕ್ಷುಮಿನಾರಾಯಣನ ಭಕ್ತ ಪ್ರಹ್ಲಾದ
ಸನಕನುತೆ ಸನ್ನುತೆ ಘನಪಾಪಾಪಹ್ನುತೆ೩

೪೦೬
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ.
ದಯಾಸಾಗರೆ ದಾರಿದ್ರ್ಯದುಃಖ ಭವ-
ಭಯನಾಶಿನಿ ಮಣಿಮಯಕೃತಭೂಷಿಣಿ ಅ.ಪ.
ಗಜವದನನ ಮಾತೆ ಸುಜನ-
ವ್ರಜಸತ್ಫಲದಾತೆ
ಕುಜನಭಂಜನಿ ನಿರಂಜನಿ ಶೈಲಾ-
ತ್ಮಜೆ ಮಹೋಜೆ ನೀರಜದಳಲೋಚನಿ ೧
ಇಂದ್ರಾದ್ಯಮರನುತೆ ಪೂರ್ಣಾ
ನಂದೆ ನಂದಜಾತೆ
ಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ-
ಗೇಂದ್ರವಾಹಿನಿ ಮದಾಂಧರಿಪು ಮಥನಿ ೨
ಅಂಗಜಶತರೂಪೆ ಸದಯಾ-
ಪಾಂಗೆ ಸುಪ್ರತಾಪೆ
ಗಂಗಾಧರವಾಮಾಂಗಶೋಭೆ ಸಾ-
ರಂಗನೇತ್ರೆ ಶ್ರೀರಂಗಸಹೋದರಿ ೩
ದಾಸಜನರ ಪೋಷೆ ರವಿಸಂ-
ಕಾಶೆ ತ್ರಿಜಗದೀಶೆ
ವಾಸುದೇವನ ಸ್ಮರಣಾಸಕ್ತಿಯ ಕೊಡು
ಭಾಸುರಜ್ಞಾನಪ್ರಕಾಶವಿಲಾಸಿನಿ೪
ಸೌಖ್ಯವು ಭಕ್ತರ್ಗೆ ಸಲಿಸಲು
ಸೌಖ್ಯವು ನೀ ಭರ್ಗೆ
ಲಕ್ಕುಮಿನಾರಾಯಣನ ಭಗಿನಿ ನಿ-
ರ್ದುಃಖಪ್ರದಕಟಿಲಾಖ್ಯಪುರೇಶ್ವರಿ ೫

೪೪೨
ಜಯತು ಜಯತು ಜಯತೆಂಬೆನು ವಿಠಲ
ಭಯನಿವಾರಣ ನಿರಾಮಯ ನೀನೆ ವಿಠಲ ಪ.
ಮನವೆನ್ನ ಮಾತ ಕೇಳದು ಕಾಣೊ ವಿಠಲ
ಮನಸಿಜನಾಯಸ ಘನವಾಯ್ತು ವಿಠಲ
ನಿನಗಲ್ಲದಪಕೀರ್ತಿಯೆನಗೇನು ವಿಠಲ
ತನುಮನದೊಳಗನುದಿನವಿರು ವಿಠಲ ೧
ಕದನ ಮುಖದಿ ಗೆಲುವುದ ಕಾಣೆ ವಿಠಲ
ಮದನ ಮುಖ್ಯಾದಿ ವೈರಿಗಳೊಳು ವಿಠಲ
ವಿಧವಿಧದಿಂದ ಕಷ್ಟಪಟ್ಟೆನು ವಿಠಲ
ಇದಕೇನುಪಾಯ ತೋರಿಸಿ ಕಾಯೋ ವಿಠಲ ೨
ಹುಟ್ಟಿದೆ ನಾನಾ ಯೋನಿಗಳೊಳು ವಿಠಲ
ಸುಟ್ಟ ಬೀಜದ ವೋಲ್ ಫಲವಿಲ್ಲ ವಿಠಲ
ಇಷ್ಟಾರ್ಥಗಳನಿತ್ತು ಸಲಹಯ್ಯ ವಿಠಲ
ಇಷ್ಟಕ್ಕೆ ನೀ ಮನ ಮಾಡಯ್ಯ ವಿಠಲ ೩
ಬಂಗಾರ ಭಂಡಾರ ಬಯಸೆನು ವಿಠಲ
ಮಂಗಲ ಕೊಡು ಯೆನ್ನ ಬುದ್ಧಿಗೆ ವಿಠಲ
ರಂಗ ರಂಗನೆಂಬ ನಾಮದಿ ವಿಠಲ
ಭಂಗವ ಪರಿಹರಿಸಯ್ಯ ನೀ ವಿಠಲ ೪
ಏನು ಬಂದರೂ ಬರಲೆಂದಿಗು ವಿಠಲ
ಮಾನಾವಮಾನ ನಿನ್ನದು ಕಾಣೊ ವಿಠಲ
ನಾನು ನಿನ್ನವನೆಂದು ಸಲಹಯ್ಯ ವಿಠಲ
ಲಕ್ಷ್ಮೀನಾರಾಯಣ ನೀನೆ ತಂದೆ ಕೇಳ್ ವಿಠಲ ೫

ಮಂಗಳ ಪದಗಳು
೪೯೨
ಜಯದೇವ ಜಯದೇವ ಜಯ ಸುಬ್ರಹ್ಮಣ್ಯ
ಆರತಿ ಮಾಡುವೆ ನಿನಗೆ ವರೇಣ್ಯ ಪ.
ಅರಳಿದ ಕಮಲಸನ್ನಿಭಶುಭಚರಣ-
ವರ ಪಂಚಾನನ ಪೋಲ್ವ ಕಟಿಕಾಂಚ್ಯಾಭರಣ
ಉರುಶಕ್ತಿಕುಕ್ಕುಟಾಭಯವಜ್ರಹಸ್ತ
ಶರಣಾಗತಜನದ ರಿತವಿಧ್ವಸ್ತ ೧
ಬಲಮುರಿಶಂಖದಂತಿಹ ಚೆಲ್ವಗ್ರೀವ
ಸುಲಲಿತಮಾಣಿಕ್ಯಹಾರದಿಂ ಪೊಳೆವ
ನಲಿವ ಕರ್ಣಕುಂಡಲಗಳ ಶೋಭ
ಜ್ವಲಿತಕಿರೀಟಮಸ್ತಕ ಸೂರ್ಯಾಭ ೨
ಈ ಕ್ಷಿತಿಯೊಳಗೆ ಪಾವಂಜೇತಿ ನಾಮ
ಸುಕ್ಷೇತ್ರವಾಸ ಸುಜನಜನಪ್ರೇಮ
ಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರ
ರಾಕ್ಷಸಾರಣ್ಯದಹನವೀತಿಹೋತ್ರ ೩

೪೯೬
ಜೋ ಜೋ ಜಾನಕಿ ಜೊ ಚಂದಿರ ಮುಖಿ
ಮಾಂಗಲ್ಯದಾಯಕಿ ಮಾಡೇ ನಿದ್ರೆ ಜೋ ಜೋ ೧
ಆದಿಮಾಯಳೆ ವೇದವೇದ್ಯಳೆ
ಆದಿತೇಯನುತೆ ಭೂಮಿಜಾತೆ ೨
ಮೃಗಮದಗಂಧಿನಿ ಮಾಧುರ್ಯಭಾಷಿಣಿ
ಮಗಳೆ ಜಾನಕಿಯೆ ಕಂಬುಕಂಧರಿಯೇ ೩
ಕಂಜಲೋಚನಿ ಕಂಜಭವಜನನಿ
ಕುಂಜರಗಮನಿ ಸಂಜೀವನಿ೪
ವಾರಿಜನೇತ್ರೆ ವಾಸುವಸ್ತೋತ್ರೆ
ಮಾರಜನನಿ ಲಕ್ಷ್ಮೀನಾರಾಯಣಿ ೫

೫೦೫
ಡಿಂಗುಡಿಂಗಾಯ್ತು ಶ್ರೀಹರಿಸೇವೆ ಪ.
ರಂಗರಾಯನ ಚರಣಂಗಳ ಸೇವಿಪ
ಡಿಂಗರಿಗೆಲ್ಲ ಸುಮಂಗಲವಾಯ್ತು೧
ಎಲ್ಲಿ ಪೋದರು ಭಯವಿಲ್ಲದ ತೆರನಾಯ್ತು
ಫುಲ್ಲನಾಭನ ದಯದಲ್ಲಿದ್ದ ಕಾರಣ೨
ಬದ್ಧವಾಗಿಹ ದಾರಿದ್ರಾವಸ್ಥೆಯ
ಛಿದ್ರಿಸಿ ಹರಿದಯವಿದ್ದ ಕಾರಣದಿಂದ ೩
ಏನಾರಾಗಲಿ ಎಂತಾದರಿನ್ನೇನು
ಶ್ರೀನಿವಾಸನು ದಯ ತಾನೆ ಗೈದರಿಂದ ೪
ಮಾರಜನಕ ಲಕ್ಷ್ಮೀನಾರಾಯಣನೊಳು
ತೂರಿಯಾನಂದಕೆ ಸೇರಿದ್ದ ಕಾರಣ೫

೪೪೩
ತಪ್ಪ ಪಾಲಿಸಯ್ಯ ತಿಮ್ಮಯ್ಯ
ತಪ್ಪ ಪಾಲಿಸಯ್ಯ ಪ.
ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳು
ಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆ ಅ.ಪ.
ಜಲಜನಾಭ ನಿನ್ನ ಮಹಿಮೆಯ
ನೆಲೆಯನರಿಯದೆನ್ನ ಮನವದು
ನೆಲೆಯಿಲ್ಲದ ಭವಜಲಧಿಯೊಳಾಡುತ್ತ
ಲಲನಾ ವಿಷಯದ ಬಲೆಗೆ ಮೋಹಿಸಿ ಮನ
ಸಿಲುಕಿ ಮಲಿನವಾಯ್ತು ತತ್ವದ
ನೆಲೆಯನರಿಯದಾಯ್ತು ಹೀಗೆನ್ನುತ
ಕಳೆದುಹೋಯ್ತು ವಿಂಶತಿ ವತ್ಸರಗಳು
ತೊಳಲಿ ಸಕಲ ಭವದೊಳಗಾರ್ಜಿತವಹ ೧
ಹಾಳು ಮನವು ಕೂಡಿ ನಾನಾ
ಚಾಳಿ ಮಾಳ್ಪುದಾಡಿ ಬುದ್ಧಿಯ
ಪೇಳಿದಷ್ಟು ದುಶ್ಯೀಲವೆ ಮಾಳ್ಪುದು
ತಾಳೆಂದರೆ ಒಂದು ವೇಳೆಗೆ ಸುಮತಿಯ
ಆಲೋಚನೆಯೊಳಗೆ ಬಿದ್ದರೆ
ಮೇಲಿಲ್ಲವು ಕ್ಷಣಕೆ ತನ್ನಯ
ಶೀಲವನೆ ಸ್ವೀಕರಿಸುತಿರುವುದು
ಪೇಳಲೇನು ಕರುಣಾಳು ನೀ ಯೆನ್ನಯ ೨
ನಾನಾ ಕಷ್ಟಪಟ್ಟೆ ಇನ್ನಾದರು
ಮಾನಿಸಬೇಕಷ್ಟೆ ಎನ್ನೊಳು
ಊನ ಗ್ರಹಿಸಿ ಅನುಮಾನ ಸಾಧಿಸಿದರೆ
ನಾನೆಂಬುವದೇನು ಸ್ವತಂತ್ರವ
ಕಾಣೆನು ಎನ್ನೊಳಗೆ ಸಂತತ
ನೀನೇ ಗತಿಯೆನಗೆ ಇದಕನು-
ಮಾನವಿಲ್ಲ ಪಾದಾನತಜನರಾ
ಧೀನನೆಂಬ ಬಿರುದಾನಬೇಕಾದರೆ ೩
ಅಪರಾಧಿಯೆ ನಾನು ಹೇಗೈ
ಅಖಿಲಾತ್ಮನು ನೀನು ಹೃದಯದಿ
ಕೃಪೆಯ ಬೀರಿ ತೋರಿಪ ಪರಮಾತ್ಮನೆ
ಚಪಲನಾಗಿ ಎನ್ನುಪಮೆಗೆಯೊಡ್ಡಿದೆ
ಸಫಲವಾಯ್ತು ಎನಗೆ ಕೀರ್ತಿಯು
ಅಪಕೀರ್ತಿಯು ನಿನಗೆ ಪಾದವ
ಜಪಿಸುವಂತೆ ಕರುಣಿಪುದಿನ್ನಾದರೂ
ಕಪಟವಾಯ್ತೆ ಸರೀಸೃಪಗಿರಿರಾಜನೆ ೪
ದೂಷಣಾರಿ ನಿನ್ನ ಪಾದದ
ದಾಸಗೈಯ್ಯೊ ಎನ್ನ ಎನ್ನೊಳು
ದೋಷವಿಲ್ಲ ಜಗದೀಶ ಜನಾರ್ದನ
ದಾಶರಥಿಯ ಕರುಣಾಶರಧಿಯೊಳಗೆ
ಈಸಾಡಿದ ದಾಸ ಕಾರ್ಕಳಾ
ಧೀಶ ಶ್ರೀನಿವಾಸ ರವಿಶತ
ಭಾಸ ಶ್ರೀಲಕ್ಷ್ಮೀನಾರಾಯಣ ಸ
ರ್ವೇಶ ಭಕ್ತಜನಪೋಷ ನೀಯೆನ್ನಯ ೫