Categories
ರಚನೆಗಳು

ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ

೪೮೫
ತದಿಗೆಯ ದಿವಸ
(ಶೇಷ ದೇವರನ್ನು ಕುರಿತು)
ರಂಭೆ :ನಾರೀಮಣೀ ನೀ ಕೇಳೆ ಈತ-
ನ್ಯಾರೆಂಬುದನೆನಗೆ ಪೇಳೆ
ಕ್ರೂರತನದಿ ತಾ ತೋರುವನೀಗ ಮ-
ಹೋರಗನೆನ್ನುತ ಕೋರಿಕೆ ಬರುವದು ೧
ಒಂದೆರಡು ಶಿರವಲ್ಲ ಬಹು
ಹೊಂದಿಹವು ಸಟೆಯಲ್ಲ
ಕಂಧರದಲಿ ಕಪ್ಪಂದದಿ ತೋರ್ಪವು
ಚಂದಿರಮುಖಿ ಯಾರೆಂದೆನಗರುಹೆಲೆ ೨
ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ-
ಸಾಮಾನ್ಯನೆ ಕಾಣೆ
ಭೂಮಿಯ ಪೊತ್ತ ನಿರಾಮಯನಾದ
ಸುಧೀಮನಿವನು ಜಾಣೆ ೧
ವಾಸುದೇವಗೆ ಈತ ಹಾಸಿಗೆಯವ ನಿ-
ರ್ದೋಷನಿವನು ಜಾಣೆ
ಸಾಸಿರಮುಖದ ವಿಲಾಸನಾಗಿಹ ಮಹಾ-
ಶೇಷನಿವನು ಕಾಣೆ ೨
ಅದರಿಂದಲಿ ಕೇಳ್ ತದಿಗೆಯ ದಿವಸದಿ
ಮಧುಸೂದನನಿವನ
ಅಧಿಕಾನಂದದಿ ಒದಗಿಸಿ ಬರುವನು
ಇದೆಯಿಂದಿನ ಹದನ೩
ಎಂದಿನಂತೆ ಪುರಂದರವಂದ್ಯ ಮು
ಕುಂದ ಸಾನಂದದಲಿ
ಅಂದಣವೇರಿ ಗೋವಿಂದ ಬರುವನೊಲ-
ವಿಂದತಿ ಚಂದದಲಿ ೪
ಕಂಟಕಗಳು ಎಲ್ಲುಂಟೆಂಬಂತೆ ನೃಪ-
ಕಂಠೀರವಗೈದ
ಘಂಟಾನಾದದಿ ಮಂಟಪದೊಳು ವೈ-
ಕುಂಠನು ಮಂಡಿಸಿದಾ ೫
ಕಾಂತಾಮಣಿ ಕೇಳಿಂತೀಪರಿ ಶ್ರೀ-
ಕಾಂತ ನತತಂಡ
ಸಂತವಿಸುತ ಮಹಾಂತಮಹಿಮನೇ-
ಕಾಂತಸೇವೆಯಗೊಂಡ ೬
* * *
ಪರಶಿವನನ್ನು ಕುರಿತು
ರಂಭೆ : ಯಾರಮ್ಮಾ ಮಹಾವೀರನಂತಿರುವನು
ಯಾರಮ್ಮಾ ಇವನ್ಯಾವ ಶೂರ ಯಾವ
ಊರಿಂದ ಬಂದ ಪ್ರವೀರ ಆಹಾ
ಮಾರಜನಕನ ವಿಸ್ತಾರಪೂಜೆಯ ವೇಳ್ಯ
ಧೀರನಂದದಿ ತಾ ವಿಚಾರ ಮಾಡುವನೀತ ೧
ಕರದಿ ತ್ರಿಶೂಲವ ಧರಿಸಿ ಮತ್ತೆ
ವರ ಕೃಷ್ಣಾಜಿನವನುಕರಿಸಿ ಹರಿ
ಚರಣಸನ್ನಿಧಿಗೆ ಸತ್ಕರಿಸಿ ಆಹಾ
ಜರಿಯ ದುಕೂಲವ ನಿರಿದುಟ್ಟುಕೊಂಡು ವಿ-
ಸ್ತರವಾದ ತೋಷದಿ ಮೆರದು ನಲಿವ ಕಾಣೆ ೨
ಊರ್ವಶಿ :ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ.
ಈತನೀಗ ಪೂರ್ವದೊಳಗೆ
ಭೂತನಾಥ ಸೇವೆಯೊಲಿದ
ಓತು ವಿಷ್ಣುಭಕ್ತಿಯಿಂದ
ಪೂತನಾದ ಪುಣ್ಯಪುರುಷ ಅ.ಪ.
ಊರು ಇವಗೆ ಮೊದಲು ಗಂಗಾ
ತೀರವಾಯ್ತು ವೇಣು ತಾ ವಿ-
ಚಾರದಿಂದ ಪೊದನೈ
ಉದಾರತನದಿ ರಾಮೇಶ್ವರಕೆ
ಸಾರಗ್ರಹಿತ ಮುಕ್ತಿ ಪಥವನು ಕರುಣದಿಂದ
ತೋರಿಸುವನು ವಿಷ್ಣುವೆಂದೆನುತ ಗಿರಿಯ
ನೇರಿ ಕರುಣ ವಾರಿಧಿಯ
ಪದಾರವಿಂದಸೇವೆಗೈದು
ಮಾರಪಿತನ ಭಕ್ತಿಯೊಳು ತಾ ಹೇರಿ
ನಲಿವ ಚಾರುಚರಿತ ೧
ಪರಮಪುರುಷ ಹರುಷದಿಂದೀಪುರಕೆ
ಬರುವ ಕಾಲದಲ್ಲಿ
ಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತ
ಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆ
ಚರಿಸುವ ತ್ರಿಕಾಲಪ್ರಜ್ಞನು ಇವನ ಗುಣವ-
ನರಿವರ್ಯಾರು ಮನುಜಭುಜಂಗರಲಿ
ಮಹತ್‍ಕಾರಣೀಕ
ಪುರುಷನಿವ ಮಹಾ ಬಲಾಢ್ಯ
ಕರುಣವುಳ್ಳ ವಿಷ್ಣುಭಕ್ತ ೨
ಶ್ರೀನಿವಾಸ ಕರುಣದಿಂ
ಪ್ರಧಾನಿಯೆಂದು ನಡೆಸಿಕೊಡುವ
ಏನಗೈದರೀತ ಮನದಿ ತಾನು
ತೋಷಪಟ್ಟು ಇರುವ
ಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತ
ನಾನಾ ಉಪದ್ರವಗಳ ಬಿಡಿಸುವ ಧನಿಯ ಆಜ್ಞೆ
ಏನ ದೊರಕಿತದನು ಬೇಗ ತಾನೆ
ಬಂದು ಪೇಳಿ ಜನರ
ಮಾನಿಸುತ ನಿಧಾನಗೊಳಿಸಿ
ಕ್ಷೋಣಿಯೊಳಗೆ ಕೀರ್ತಿಪಟ್ಟ ೩

೪೯೧
ಮುಕ್ಕೋಟ ದ್ವಾದಶಿಯ ದಿವಸ
(ಮಾರ್ಗಶಿರ ಶುದ್ಧ ದ್ವಾದಶಿಯ ಉತ್ಸವ)
ರಂಭೆ :ಮತಿವಂತೆ ಪೇಳೀತನ್ಯಾರೆ ದೇವ
ವ್ರತತಿಯಧಿಪನಂತೆ ನೀರೆ ತೋರ್ಪ
ಅತಿಶಯಾಗಮ ಬಗೆ ಬ್ಯಾರೆ ರತ್ನ
ದ್ಯುತಿಯಾಭರಣವ ಶೃಂಗಾರ ಆಹಾ
ಶ್ರುತಗೊಲಿಸೆನಗೆ ಆಶ್ರಿತ ರಕ್ಷಾರ್ಥಿತನ ಸಂ-
ಗತಿ ಸ್ರ‍ಮತಿ ತತಿಗಳ ಮತಿಗಗೋಚರನಂತೆ ೧
ಊರ್ವಶಿ :ಲಾಲಿಪುದೆಲೆಗೆ ಪೇಳುವೆನು ನೂತನವ
ಲೋಲ ಲೋಚನನ ನಾಟಕ ಸತ್ಕಥನವ
ಮೇಲಾಗಿ ಜಗದಿ ಶೋಭಿಪ ಶೇಷಾದ್ರಿಯಲಿ
ಬಾಲಾರ್ಕಸದೃಶನೀತನು ಇರ್ಪನಲ್ಲಿ
ನೀಲನಿಭಾಂಗನು ನೆನೆವರ ಪಾಪವ
ಘೋಲುಘಡಿಸಲೆಂದೆನುತಲಿ ಭಾರ್ಗವ
ಕೋಲಿಂದೆಸಗಿದ ಧರಣಿಗೆ ಬಂದು ಸ-
ಲೀಲೆಗಳೆಸಗುವ ಜಾಲವಿದೆಲ್ಲ ೨
ಸರಸಿಜಗಂಧಿ ಕೇಳ್ ದಿಟದಿ ತನ್ನ
ಅರಮನೆಯಿಂದ ಸದ್ವಿಧದಿ ಈರ್ವ-
ರರಸಿಯರ್ ಸಹಿತ ಮಿನಿಯದಿ ಅತಿ
ಭರದಿಂದ ಸೂರ್ಯನುದಯದಿ ಆಹಾ
ಉರುತರ ಹೇಮಪಲ್ಲಂಕಿಯೊಳಡರಿ
ತ್ವರಿತದಿ ಪೋಗುವ ಭರವಿದೆಲ್ಲಿಗೆ ಪೇಳೆ ೩
ಊರ್ವಶಿ :ಮದ್ದಾನೆಗಾತ್ರೆ ಲಾಲಿಸಿ ಕೇಳು ಮಾತ
ಬದ್ಧ ನೀ ಪೇಳ್ದ ಮನದ ಶಂಕಾವ್ರಾತ
ತಿದ್ದಿಪೆ ಕೇಳು ಮಾರ್ಗಶಿರ ಮಾಸದೊಳು
ಶುದ್ಧ ದ್ವಾದಶಿ ಸೂರ್ಯ ಉದಯ ಕಾಲದೊಳು
ಭದ್ರಭವನವನು ಪೊರಟು ವಿನೋದದಿ
ಅದ್ರಿಧರನು ಸಜ್ಜನರೊಡಗೂಡಿ ಉ-
ಪದ್ರಿತ ಪಾಪವ ಛಿದ್ರಿಪ ಸ್ನಾನಕೆ
ರೌದ್ರಿತ ರಾಮಸಮುದ್ರದ ಬಳಿಗೆ ೪
ರಂಭೆ : ಆರರೆ ಆಶ್ಚರ್ಯವಾಯ್ತೆನಗೆ ಅತಿ
ಪರಮ ಮಹಿಮೆನೆಂದ ಮೇರೆಗೆ ಘನ-
ತರ ಸ್ನಾನವೇನಿದು ಕಡೆಗೆ ವೃತ
ದಿರವೋ ಉತ್ಸವವೋ ಪೇಳೆನಗೆ ಆಹಾ
ತರುಣಿ ರನ್ನಳೆ ನಿನ್ನ ಚರಣಕ್ಕೆ ನಮಿಪೆ ಈ
ಪರಿಗಳ ಸಾಂಗದಿಂದರುಹಬೇಕೆನಗಿನ್ನು ೫
ಊರ್ವಶಿ :ಅಕುಟಿಲೆ ಬಾಲೆ ಯೌವನವಂತೆ ಕೇಳೆ
ಸಕಲಾಂತರ್ಯಾತ್ಮನೀತನು ಸತ್ಯಶೀಲೆ-
ಪ್ರಕಟ ವ್ರತವಿದಲ್ಲ ಅಂಜನಾದ್ರಿಯಲಿ
ಭಕುತವತ್ಸಲನು ಉತ್ಸವಿಸುವನಲ್ಲಿ
ವಿಕಳಹೃದಯ ನರನಿಕರಕಸಾಧ್ಯವೆಂ
ದ್ಯುಕುತದಿ ಈ ಧರೆಯಲ್ಲಿ ಪ್ರತ್ಯೇಕದಿ
ಅಖಿಳೋತ್ಸವ ಮಸ್ತಕಕಿದು ವೆಗ್ಗಳ
ಮುಕುಟೋತ್ಸವವೆಂದೆನುತಲಿ ರಚಿಸುವ ೬
ರಂಭೆ : ನಳಿನಾಕ್ಷಿ ಲಾಲಿಪುದಿನ್ನು ಸ್ನಾನ
ವೊಲವಿಂದ ಗೈದ ಮೇಲಿವನು ತನ್ನ
ರಮಣಿಯರ್ಸಹಿತಂದಣವನು ಏರಿ
ನಿಲುನಿಲುತ್ಯಾಕೆ ಬರುವನು ಆಹಾ
ಪೊಳಲೊಳಗಿಹ ಜನನಿಳಯದ ದ್ವಾರದಿ
ಕಳಕಳವೇನಿದ ತಿಳುಪೆನಗೀ ಹದ ೭
ಊರ್ವಶಿ :ಕುಂದರದನೆ ಬಾಲೆ ಚದುರೆ ಸೈ ನೀನು
ಮಿಂದು ತೋಷದಿ ಅಂದಣವನ್ನೇರಿ ತಾನು
ಇಂದೀ ಪುರದೊಳಿರ್ಪ ಜನರ ದೋಷಗಳ
ಕುಂದಿಸಲೆಂದವರವರ ದ್ವಾರದೊಳು
ನಿಂದಿರುತಲ್ಲಿಯದಲ್ಲಿ ಆರತಿಗಳ
ಚಂದದಿ ಕೊಳುತೊಲವಿಂದ ಕಾಣಿಕೆ ಜನ-
ವೃಂದದಿ ಕೊಡುತಾನಂದ ಸೌಭಾಗ್ಯವ
ಒಂದಕನಂತವ ಹೊಂದಿಸಿ ಕೊಡುವ ೮
ರಂಭೆ : ಸರಸಿಜಾನನೆ ಮತ್ತೇನಿದನು ತನ್ನ
ಅರಮನೆಯಲ್ಲಿ ಭೂದ್ವಿಜನರನು ಸರ್ವ
ಪುರಜನ ಸಹಿತೊಳಗಿವನು ನಾನಾ
ತರದಿ ಮೆರೆವ ಭೋಜನವನು ಆಹಾ-
ಕರಿಸಿ ಆಮೇಲೆ ರಾತ್ರಿಯಲಿ ಸಾಲಿನಲಿ ವಿ-
ಸ್ತರದ ಲಾಜದ ರಾಸಿಗಿರದೆ ಪೂಜಿಪುದ್ಯಾಕೆ ೯
ಊರ್ವಶಿ :ಮಂಗಲಾನನೆ ಲೇಸು ನುಡಿದೆ ಕೇಳ್ ನೀನು
ಗಂಗಾಜನಕ ತನ್ನ ಗೃಹದಿ ವಿಪ್ರರನು
ಹಿಂಗದೆ ಕರೆಸಿ ವಿಪ್ರರನೆಲ್ಲ ಬರಿಸಿ
ಸಂಗಾತದಲಿ ಆರೋಗಣೆ ಗೈದು ಮೆರೆಸಿ
ಅಂಗಣದಲಿ ರಾತ್ರೆಯಲಿ ವಿನೋದದಿ
ಕಂಗೊಳಿಸುವ ಉರಿದರಳ ಸಮೂಹಕೆ
ರಂಗಪೂಜೆಯನುತ್ತಂಗವಿಸುವ ನಿಗ-
ಮಂಗಳೊಡೆಯನು ವಿಹಂಗಮಾರೂಢ ೧೦
ರಂಭೆ : ಅಮಮ ಮತ್ತೇನಿದ ಪೇಳು ಶ್ವೇತ-
ಕುಮುದಾಪ್ತ ಠಾವಿನ ವೋಲು ಬಂದು
ಆದರಿಸಲಿದರ ಮಧ್ಯದೊಳು ತನ್ನ
ರಮಣಿಯರ್ ಸಹಿತ ತೋಷದೊಳು ಆಹಾ
ವಿಮಲವನ್ನೇರಿನ್ನೆಲ್ಲಿಗೈದುವನೆಂಬಾ-
ಗಮವ ಪೇಳೆನೆಗೆ ನೀ ನಮಿಪೆ ನಿನ್ನಂಘ್ರಿಯ ೧೧
ಊರ್ವಶಿ :ಥೋರ ಕನಕುಂಭಕುಚಭಾರೆ ಕೇಳೆ
ಶ್ರೀ ರಮಾರಮಣ ಪೂಜೆಯಗೊಂಡಾ ಮೇಲೆ
ಚಾರು ಈ ಹೂವಿನ ತೇರನೇರುತಲಿ
ಕೇರಿ ಕೇರಿಯೊಳಾರತಿಗೊಳ್ಳುತಲಿ
ಭೋರಿಡುತಿಹ ವಾದ್ಯಧ್ವನಿ ಘನತರ
ಭೇರಿ ಮೃದಂಗಾದ್ಯಖಿಳ ವಿನೋದದಿ
ಸ್ವಾರಿಗೆ ತೆರಳುವ ಕ್ರೂರ ನರರ ಆ-
ಘೋರ ಪಾಪ ಜರ್ಝರಿಸಲೆಂದು ೧೨
ರಂಭೆ : ಅರವಿಂದಾಕ್ಷಿಯೆ ಮತ್ತೇನಿದನು ತನ್ನ
ಅರಮನೆಯಿದಿರು ರಥವನು ತಾನು
ಭರದೊಳಗಿಳಿದಂದಣವನು ಏರಿ
ಮೆರೆವಾಲಯದ ಸುತ್ತುಗಳನು ಆಹಾ
ತಿರುಗುವನ್ಯಾಕೆ ಭೂದ್ವಿಜರ ಘೋಷದಿ ವಾದ್ಯ-
ಭರಿತ ಗಾಯನ ಭೇರಿ ಧ್ವನಿಗಳೇನಿದ ಪೇಳೆ ೧೩
ಊರ್ವಶಿ :ಕೃಷ್ಣಾಂಕ ವದನೆ ಕೇಳೆಲೆ ಪೇಳ್ವೆ ನಿನಗೇ
ದುಷ್ಟಮರ್ದನ ರಥವಿಳಿವುತ್ತಲಾಗೇ
ಅಷ್ಟದಿಗ್ಭಾಗದಿ ಗೃಹಸುತ್ತಿನೊಳಗೆ
ಅಷ್ಟಾವಧಾನವ ರಚಿಸುತ್ತ ಕಡೆಗೆ
ಶ್ರೇಷ್ಠನು ರತ್ನಾಸನದಿ ಗ್ರಹದಿ ಪರ
ಮೇಷ್ಟಜನಕೆ ಸಂತೋಷಾನಂದದಿ
ಸೃಷ್ಟಿಯ ಜನರ ಅನಿಷ್ಟವ ತ್ಯಜಿಸುತ
ಇಷ್ಟವನೀವ ಯಥೇಷ್ಟ ದಯಾಬ್ಧ ೧೪
ರಂಭೆ : ಅರಿತೆನಾ ಸ್ವಚ್ಛ ಚಿತ್ತದಲಿ ಇನ್ನು
ಹರಿ ಏಕರೂಪನೆನ್ನುತಲಿ ಲಕ್ಷ್ಮೀ
ಕರವೆನಿಸುವ ಕಾರ್ಕಳದಲಿ ಭಾಗ್ಯೋ-
ದಯ ದೇವಾಲಯದ ಮಧ್ಯದಲಿ ಆಹಾ
ತ್ವರಿತದಿ ನುತಿಸಿರೊ ಗುರು ನಾರಸಿಂಹ ಶ್ರೀ-
ಕರ ವೆಂಕಟೇಶನ ಚರಣಕಮಲಗಳ ೧೫

೪೯೦
ಷಷ್ಠಿಯ ದಿವಸ
(ಶ್ರೀ ವೆಂಕಟೇಶನ ಅವಭೃಥ ಸ್ನಾನ)
ರಂಭೆ :ಸಖಿಯೆ ಕೇಳೀಗ ಸಲುಗೆವಂತಳೆ
ಮುಕುತಿದಾಯಕ ಮೂಲಪುರುಷಗೆ ೧
ಭೇರಿಶಬ್ದವು ನಗಾರಿಘರ್ಜನೆ
ಮೌರಿತಾಳವು ಮೃದಂಗಶಬ್ದವು ೨
ಉದಯಕಾಲದಿ ಒದಗಿ ಭಕುತರು
ಪದುಮನಾಭನ ಪಾಡಿ ಪೊಗಳ್ವರು ೩
ಭೂರಿಮಂಗಲಕರದ ಶಬ್ದವು
ಸೇರಿ ಕಿವಿಯೊಳು ತೋರುವುದಲ್ಲೆ ೪
ನಿದ್ದೆಬಾರದು ನಿಮಿಷಮಾತ್ರಕೆ
ಎದ್ದು ಪೇಳೆಲೆ ಏಣಲೋಚನೆ ೫
ಸುಮ್ಮನೀನಿರು ಸುಳಿಯಬೇಡೆಲೆ
ಎಮ್ಮುವುದು ನಿದ್ರೆ ಏನ ಪೇಳಲಿ ೬
ಬೊಮ್ಮಸುರರಿಗು ಪೊಗಳತೀರದು
ತಿಮ್ಮರಾಯನ ಮಹಿಮೆ ದೊಡ್ಡಿತು೭
ನಿನ್ನೆ ದಿವಸದ ನಿದ್ರೆವಿಹುದೆಲೆ
ಕಣ್ಣಿಗಾಲಸ್ಯ ಕಾಂಬುವದಲ್ಲೇ ೮
ಬಣ್ಣಿಸುವದೆಲೆ ಬಹಳವಿಹುದಲೆ
ಪನ್ನಗವೇಣಿ ಪವಡಿಸೆ ನೀನು ೯
ಏಳು ಏಳಮ್ಮ ಅಲಸ್ಯವ್ಯಾತಕೆ
ಕಾಲಿಗೆರಗುವೆ ಹೇಳಬೇಕಮ್ಮ ೧೦
ಊರ್ವಶಿ :ಯಜಯ ವೆಂಕಟರಮಣ
ಜಯಜಯ ವಾಧಿಶಯನ
ಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ ೧
ಗಂಧಕಸ್ತೂರಿಪುಣುಗಚಂದನಪನ್ನೀರುಗಳ
ಹೊಂದಿಸಿ ತೋಷದಿ ಮಂದರಧರಗೆ ೨
ಆಕಾಶರಾಯನ ಮಗಳು ಹರುಷದಿಂದೊಡಗೂಡಿ
ಶ್ರೀಕರ ವೆಂಕಟಪತಿಯು ಸರಸವಾಡಿ೩
ಶ್ರೀದೇವಿ ಭೂದೇವಿ ಮಾಧವ ಸಹಿತಲಿ
ಸಾದರದಿಂದಲಿ ಸರಸವಾಡಿ೪
ಬಡನಡು ಬಳುಕುತಲಿ ಎಡಬಲದಲಿ ಸುಳಿದು
ಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ ೫
ಛಲದಿ ಪದ್ಮಾವತಿಯು ಜಲಜನಾಭನ ಮೇಲೆ
ಒಲವಿನಿಂದಲಿ ಬಂದು ಚೆಲ್ಲಿದಳಾಗ ೬
ಭರದಿ ಶ್ರೀದೇವಿಯು ಸರಸಿಜಮುಖದಲ್ಲಿ
ಪರಮ ಸುಸ್ನೇಹದಿ ಬೆರಸಿದಳಾಗ ೭
ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆ
ಮೋದದಿಂದಲಿ ಬಂದು ಚೆಲ್ಲಿದಳಾಗ ೮
ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯು
ವೃತ್ತಕುಚವ ನೋಡಿ ಚೆಲ್ಲಿದನಾಗ ೯
ಝಣಝಣಾಕೃತಿಯಿಂದ ಮಿನುಗುವಾಭರಣದ
ಧ್ವನಿಯ ತೋರುತ ಬಲು ಸರಸವಾಡಿ ೧೦
ಓಕುಳಿಯಾಡಿದ ನೀರಾನೇಕಭಕ್ತರು ಮಿಂದು
ಏಕಮಾನಸರಾಗಿ ಪೊರಟರು ಕಾಣೆ ೧೧
* * *
ಆಡಿದರೋಕುಳಿಯ ಶರಣರೆಲ್ಲ
ಆಡಿದರೋಕುಳಿಯ ಪ.
ಕಾಡುವ ಪಾಪವ ಓಜಿಸಿ ಹರಿಯೊಳ-
ಗಾಡಿ ನಿತ್ಯಸುಖ ಬೀಡಿನ ಮಧ್ಯದಿ ೧
ಅಬ್ಬರದಿಂದಲಿ ಉಬ್ಬಿ ಸಂತೋಷದಿ
ಒಬ್ಬರ ಮೈಗಿನ್ನೊಬ್ಬರು ಚೆಲ್ಲುತ ೨
ಚೆಂಡು ಬುಗರಿನೀರುಂಡೆಗಳಿಂದಲಿ
ಹಿಂಡು ಕೂಡಿ ಮುಂಕೊಂಡು ಪಿಡಿಯುವರು ೩
ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ-
ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ ೪
ರಂಭೆ : ನಾರಿ ಕೇಳೀಗ ಭೂರಿಭಕುತರು
ಶ್ರೀರಮಾಧವ ಸಹಿತ ಬಂದರು ೧
ಭಾವ ಶ್ರೀಹರಿ ಪ್ರತಿರೂಪದೋರುತ
ದೇವ ತಾನೆ ನಿದ್ರ್ವಂದ್ವನೆನ್ನುತ ೨
ಹೇಮಖಚಿತವಾದಂದಣವೇರಿ
ಪ್ರೇಮಿಯಾಗುತ ಪೊರಟು ಬರುವನು ೩
ವಲ್ಲಭೆಯರ ಕೂಡಿ ಈ ದಿನ
ಫುಲ್ಲನಾಭನು ಪೊರಟನೆತ್ತಲು ೪
ಊರ್ವಶಿ : ನಾರಿ ನೀ ಕೇಳಿದರಿಂದ ಈಗ
ಭೂರಿಭಕುತರಾನಂದ
ಶ್ರೀರಮಾಧವ ಮಿಂದ ನೀರಿನೊಳಾಡುತ್ತ
ಓರಂತೆ ತುಳಸಿಮಾಲೆಯ ಧರಿಸುತ್ತ
ಭೇರಿಡಂಕನಗಾರಿಶಬ್ದ ಗಂ-
ಭೀರದೆಸಕವ ತೋರಿಸುತ್ತ ವೈ-
ಯಾರದಿಂದಲಿ ರಾಮವಾರ್ಧಿಯ
ತೀರದೆಡೆಗೆಲೆ ಸಾರಿ ಬಂದರು ೧
ವರದಭಿಷೇಕವ ರಚಿಸಿ ಬಕು-
ತರ ಸ್ನಾನವನನುಕರಿಸಿ
ಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡು
ತ್ವರಿತದಿ ನಗರಾಂತರಕನುವಾದನು
ಬರುತ ದಿವ್ಯಾರತಿಗೊಳ್ಳುತ
ಚರಣ ಸೇರಿದ ಭಕ್ತರಿಷ್ಟವ
ನಿರುತ ಪಾಲಿಸಿ ಮೆರೆವ ಕರುಣಾ-
ಕರ ಮನೋಹರ ಗರುಡವಾಹನ ೨
ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆ
ಕರವ ಮುಗಿಯುತ್ತಕೈಯ ತೋರುತ ೧
ಪರಮಪುರುಷ ಗೋವಿಂದ ಎನುತಲಿ
ಹೊರಳುತುರಳುತ ಬರುವದೇನಿದು ೨
ಊರ್ವಶಿ :ಅಂಗದಾಯಾಸವೆಲ್ಲವನು ಪರಿ-
ಭಂಗಿಪ ಸೇವೆಯೆಂಬುದನು
ಅಂಗಜಪಿತಚರಣಂಗಳ ರಜದಲಿ೧
ಹೊಂಗಿ ಧರಿಸಿ ಲೋಟಾಂಗಣ ಎಂಬರು
ರಂಗನಾಥನ ಸೇವೆಗೈದ ಜ-
ನಂಗಳಿಗೆ ಭಯವಿಲ್ಲವದರಿಂ-
ದಂಗವಿಪ ಲೋಲೋಪ್ತಿ ಕೋಲಾ-
ಟಂಗಳನು ನೀ ನೋಡು ಸುಮನದಿ ೨
* * *
ಕೋಲು ಕೋಲೆನ್ನಿರೊ ರನ್ನದ
ಕೋಲು ಕೋಲೆನ್ನಿರೊ ಪ .
ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದ
ಲೀಲೆಗಳಿಂದ ಜನಜಾಲಗಳೆಲ್ಲರು ೧
ಗುಂಗಾಡಿತಮನನ್ನು ಕೊಂದು ವೇದವ ತಂದು
ಬಂಗಾರದೊಡಲನಿಗಿಟ್ಟನು ನಮ್ಮ ದೇವ೨
ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತು
ಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ೩
ರೂಢಿಯ ಕದ್ದನ ಓಡಿಸಿ ತನ್ನಯ
ದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ ೪
ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದು
ಬಂಗಾರಕಶ್ಯಪುವಂಗವ ಕೆಡಹಿದ ೫
ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ-
ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ ೬
ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದು
ಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ ೭
ಬೆಟ್ಟಗಳೆಲ್ಲ ತಂದೊಟ್ಟಿಸಿ ಶರಧಿಯ
ಕಟ್ಟಿ ದೈತ್ಯರ ತಲೆ ಕುಟ್ಟಿದ ನಮ್ಮ ದೇವ ೮
ಚಂಡಗೊಲ್ಲತಿಯರ ಹಿಂಡುಗಳೊಳು ಕೂಡಿ
ಉಂಡ ಪಾಲ್‍ಬೆಣ್ಣೆಯ ಪುಂಡ ಗೋಪಾಲನಮ್ಮ೯

೪೭೯
ಉತ್ಥಾನ ದ್ವಾದಶಿಯ ದಿವಸ
(ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ)
ರಂಭೆ :ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ.
ಮಾನಿನೀಮಣಿ ಈತನ್ಯಾರೆ ಕರು
ಣಾನಿಧಿಯಂತಿಹ ನೀರೆ ಹಾ ಹಾ
ಭಾನುಸಹಸ್ರ ಸಮಾನಭಾಷಿತ ಮ-
ಹಾನುಭಾವನು ಸುಪ್ರವೀಣನಾಗಿಹ ಕಾಣೆ ೧
ಭಯಭಕ್ತಿಯಿಂದಾಶ್ರಿತರು ಕಾಣಿ-
ಕೆಯನಿತ್ತು ನುತಿಸಿ ಪಾಡಿದರು ನಿರಾ-
ಮಯ ನೀನೇ ಗತಿಯೆಂದೆಲ್ಲವರು ಹಾ ಹಾ
ಭಯನಿವಾರಣ ಜಯ ಜಯವೆಂದು ನುತಿಸೆ ನಿ-
ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ ೨
ಭೂರಿ ವಿಪ್ರರ ವೇದ ಘೋಷದಿಂದ
ಸ್ವಾರಿಗೆ ಪೊರಟ ವಿಲಾಸ ಕೌಸ್ತು-
ಭಾರತ್ನ ಹಾರ ಸುಭಾಸ ಹಾ ಹಾ
ಚಾರುಕಿರೀಟಕೇಯೂರಪದಕಮುಕ್ತಾ
ಹಾರಾಲಂಕಾರ ಶೃಂಗಾರನಾಗಿರುವನು ೩
ಸೀಗುರಿ ಛತ್ರ ಚಾಮರದ ಸಮ
ವಾಗಿ ನಿಂದಿರುವ ತೋರಣದ ರಾಜ
ಭೋಗ ನಿಶಾನಿಯ ಬಿರುದ ಹಾ ಹಾ
ಮಾಗಧ ಸೂತ ಮುಖ್ಯಾದಿ ಪಾಠಕರ ಸ-
ರಾಗ ಕೈವಾರದಿ ಸಾಗಿ ಬರುವ ಕಾಣೆ೪
ಮುಂದಣದಲಿ ಶೋಭಿಸುವ ಜನ
ಸಂದಣಿಗಳ ಮಧ್ಯೆ ಮೆರೆವ ತಾರಾ
ವೃಂದೇಂದುವಂತೆ ಕಾಣಿಸುವ ಹಾಹಾ
ಕುಂದಣ ಖಚಿತವಾದಂದಣವೇರಿ ಸಾ-
ನಂದದಿ ಬರುವನು ಮಂದಹಾಸವ ಬೀರಿ ೫
ತಾಳ ಮೃದಂಗದ ರವದಿ ಶ್ರುತಿ
ವಾಲಗ ಭೇರಿ ರಭಸದಿ ಜನ
ಜಾಲ ಕೂಡಿರುವ ಮೋಹರದಿ ಹಾಹಾ
ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ-
ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ ೬
ಊರ್ವಶಿ: ಈತನೆ ಭಾಗ್ಯನಿಧಿ ನೋಡೆ ನೀ ಮುದದಿ ಪ.
ಈತನೆ ಈರೇಳು ಲೋಕದ
ದಾತ ನಾರಾಯಣ ಮಹಾ ಪುರು-
ಹೂತ ಮುಖ್ಯಾಮರ ವಿನುತ ನಿ-
ರ್ಭೀತ ನಿರ್ಗುಣ ಚೇತನಾತ್ಮಕಅ.ಪ.
ಮೀನ ರೂಪವೆತ್ತಾ ಮಂದರ ಪೊತ್ತ
ಭೂನಿತಂಬಿನಿಯ ಪ್ರೀತ
ಮಾನವಮೃಗಾಧಿಪ ತ್ರಿವಿಕ್ರಮ
ದಾನಶಾಲಿ ದಶಾನನಾರಿ ನ-
ವೀನ ವೇಣುವಿನೋದ ದೃಢ ನಿ-
ರ್ವಾಣ ಪ್ರವುಢ ದಯಾನಿಧಿ ಸಖಿ ೧
ವಾರಿಜಾಸವಾನವಂದಿತ ಶ್ರೀಪಾದಯುಗ್ಮವ
ತೋರಿಕೊಂಬುವ ಸಂತತ
ಕೇರಿಕೇರಿಯ ಮನೆಗಳಲಿ ದಿ-
ವ್ಯಾರತಿಯ ಶೃಂಗಾರ ಭಕ್ತರ-
ನಾರತದಿ ಉದ್ಧಾರಗೈಯಲು
ಸ್ವಾರಿ ಪೊರಟನು ಮಾರಜನಕನು ೨
ಮುಗುದೆ ನೀ ನೋಡಿದನು ಕಾಣಿಕೆಯ ಕ-
ಪ್ಪಗಳ ಕೊಳ್ಳುವನು ತಾನು
ಬಗೆಬಗೆಯ ಕಟ್ಟೆಯೊಳು ಮಂಡಿಸಿ
ಮಿಗಿಲು ಶರಣಾಗತರ ಮನಸಿನ
ಬಗೆಯನೆಲ್ಲವ ಸಲ್ಲಿಸಿ ಕರುಣಾ
ಳುಗಳ ದೇವನು ಕರುಣಿಸುವ ನೋಡೆ ೩
ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ
ಗಡಣ ಓಲಗಕೆ ಇಮ್ಮಡಿಯು ಜನ-
ರೊಡಗೂಡಿ ಬರುತಿಹ ನಡೆಯು ಹಾ ಹಾ
ಮೃಡ ಸರೋಜ ಸುರಗಡಣ ವಂದಿತ ಕ್ಷೀರ
ಕಡಲ ಶಯನ ಜಗದೊಡೆಯನಹುದು ಕಾಣೆ ೧
ಮದಗಜಗಮನೆ ನೀ ಪೇಳೆ ದೇವ
ಸದನವ ಪೊರಡುವ ಮೊದಲೇ ಚಂದ-
ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ
ಮುದದಿಂದ ಬಾಲಕರೊದಗಿ ಸಂತೋಷದಿ
ಚದುರತನದಿ ಪೋಗುವನು ಪೇಳೆಲೆ ನೀರೆ ೨
ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ
ಶ್ರೀರಮಾಧವನ ಲೀಲೆ
ಘೋರ ದೈತ್ಯಕುಠಾರ ಲಕ್ಷ್ಮೀ
ನಾರಾಯಣನ ಬಲಕರ ಸರೋಜದಿ
ಸೇರಿ ಕುಳಿತ ಗಂಭೀರ ದಿನಪನ
ಭೂರಿತೇಜದಿ ಮೆರೆವುದದು ತಿಳಿ ೧
ದೊರೆಯು ಬರುವನು ಎಂದು ಎಲ್ಲರಿಗೆ ಗೋ-
ಚರಿಸುವನೊಲಿದು ಇಂದು
ತರ ತರದ ಆರತಿಗಳನು ನೀವ್
ಧರಿಸಿ ನಿಂದಿರಿಯೆಂದು ಜನರಿಗೆ-
ಚ್ಚರಿಗೆಗೋಸುಗ ಮನದ ಭಯವಪ-
ಹರಿಸಿ ಬೇಗದಿ ಪೊರಟು ಬಂದುದು
ರಂಭೆ : ಸರಸಿಜನಯನೆ ನೀ ಪೇಳೆ ಸೂರ್ಯ
ಕಿರಣದಂತಿಹುದೆಲೆ ಬಾಲೆ ಸುತ್ತಿ
ಗೆರಕವಾಗಿಹುದು ಸುಶೀಲೆ ಆಹಾ
ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ-
ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ ೧
ಊರ್ವಶಿ: ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ
ದ್ವಾದಶಿಯೊಳಗೆ ಬಾಲೆ
ಮಾಧವನ ಪ್ರೀತ್ಯರ್ಥವಾಗಿ ಶು-
ಭೋದಯದಿ ಸಾಲಾಗಿ ದೀಪಾ
ರಾಧನೆಯ ಉತ್ಸಹದ ಮಹಿಮೆಯ
ಸಾದರದಿ ನೀ ನೋಡೆ ಸುಮನದಿ ೧
ನಿಗಮಾಗಮದ ಘೋಷದಿ ಸಾನಂದ ಸು-
ತ್ತುಗಳ ಬರುವ ಮೋದದಿ
ಬಗೆ ಬಗೆಯ ನರ್ತನ ಸಂಗೀತಾ
ದಿಗಳ ಲೋಲೋಪ್ತಿಯ ಮನೋಹರ
ದುಗುಮಿಗೆಯ ಪಲ್ಲಂಕಿಯೊಳು ಕಿರು ೨
ನಗೆಯ ಸೂಸುತ ನಗಧರನು ಬಹ
ಚಪಲಾಕ್ಷಿ ಕೇಳೆ ಈ ವಸಂತ ಮಂ-
ಟಪದಿ ಮಂಡಿಸಿದ ಬೇಗ
ಅಪರಿಮಿತ ಸಂಗೀತ ಗಾನ ಲೋ-
ಲುಪನು ಭಕ್ತರ ಮೇಲೆ ಕರುಣದಿ
ಕೃಪೆಯ ಬೀರಿ ನಿರುಪಮ ಮಂಗಲ
ಉಪಯಿತನು ತಾನೆನಿಸಿ ಮೆರೆವನು ೩
ಪಂಕಜಮುಖಿ ನೀ ಕೇಳೆ ಇದೆಲ್ಲವು
ವೆಂಕಟೇಶ್ವರನ ಲೀಲೆ
ಶಂಕರಾಪ್ತನು ಸಕಲ ಭಕ್ತಾ
ತಂಕವನು ಪರಿಹರಿಸಿ ಕರ ಚ
ಕ್ರಾಂಕಿತನು ವೃಂದಾವನದಿ ನಿ
ಶ್ಯಂಕದಿಂ ಪೂಜೆಯಗೊಂಡನು ೪
ಕಂತುಜನಕನಾಮೇಲೆ ಸಾದರದಿ ಗೃ-
ಹಾಂತರಗೈದ ಬಾಲೆ
ಚಿಂತಿತಾರ್ಥವನೀವ ಲಕ್ಷ್ಮೀ
ಕಾಂತ ನಾರಾಯಣನು ಭಕುತರ
ತಿಂಥಿಣಿಗೆ ಪ್ರಸಾದವಿತ್ತೇ-
ಕಾಂತ ಸೇವೆಗೆ ನಿಂತ ಮಾಧವ ೫

೪೮೪
ಬಿದಿಗೆಯ ದಿವಸ
(ಹನುಮಂತನನ್ನು ಕುರಿತು)
ರಂಭೆ:ಕಮಲದಳಾಕ್ಷಿ ಪೇಳೆಲೆ ಈತನ್ಯಾರೆ
ಸಮನಸನಾಗಿ ತೋರುವನಲ್ಲೆ ನೀರೆ ಪ.
ಧನ್ಯನಾಗಿರುವ ದೊರೆಯ ಧರಿಸುತ್ತ
ಚೆನ್ನಿಗನಾಗಿ ತೋರುವನಲ್ಲೆ ಈತ೧
ಪಟ್ಟೆಕಂಬಿಯ ನಿರುದುಟ್ಟುಕೊಂಡಿರುವ
ಕಟ್ಟಿದುತ್ತರೀಯ ಭೂಷಣದಿಂದ ಮೆರೆವ ೨
ಸೋಮಾರ್ಕಶಿಖಿಯಂತಿರುವುದು ತ್ರಿನಾಮ
ರಾಮಣೀಯಕ ಮನೋಹರ ಪೂರ್ಣಕಾಮ ೩
ವೀರವೈಷ್ಣವ ಮುದ್ದು ಮೋಹನಕಾಯ
ಭೂರಿಭೂಷಣಭುಜಬಲ ಹರಿಪ್ರಿಯ೪
ರೂಪ ನೋಡಲು ಕಾಮರೂಪನಂತಿರುವ
ಚಾಪಲ ಪ್ರೌಢ ಚಿದ್ರೂಪನಂತಿರುವ ೫
ಬಾಲವ ನೆಗಹಿ ಕಾಲೂರಿ ಶೋಭಿಸುವ
ನೀಲದುಂಗುರದ ಹಸ್ತವ ನೀಡಿ ಮೆರೆವ ೬
ಗೆಜ್ಜೆ ಕಾಲುಂಗರ ಪದಕ ಕಟ್ಟಾಣಿ
ಸಜ್ಜನನಾಗಿ ತೋರುವನು ನಿಧಾನಿ ೭
ಊರ್ವಶಿ : ತರುಣಿ ಕೇಳೀತನೆ ದೊರೆ ಮುಖ್ಯಪ್ರಾಣ
ವರ ನಿಗಮಾಗಮ ಶಾಸ್ತ್ರಪ್ರವೀಣ೧
ಮಾಯವಾದಿಗಳ ಮಾರ್ಗವ ಖಂಡಿಸಿದ
ವಾಯುಕುಮಾರ ವಂದಿತ ಜನವರದ
ರಂಭೆ : ದಿಟವಾಯ್ತು ಪೇಳ್ದ ಮಾತಾದರು ಜಾಣೆ
ಚಟುಳ ಹನುಮನ ಉತ್ಕಟರೂಪ ಕಾಣೆ ೧
ವಾಮನನಾದ ಕಾರಣವೇನೆ ಪೇಳೆ
ನಾ ಮನಸೋತೆ ಎಂತುಂಟೊ ಹರಿಲೀಲೆ೨
ಊರ್ವಶಿ : ನಾಗವೇಣಿ ನೀ ಕೇಳೆ ನಾಗವೈರಿಯೊಳು
ಸಾಗಿತು ಸೇವೆಯೆಂಬುದು ಮನಸಿನೊಳು೧
ವಾದವ ಮಾಡಿ ವಿನೋದದಿ ಹರಿಯ
ಪಾದಸೇವೆಗೆ ಮನನಾದ ಕೇಳಿದೆಯೊ ೨
ವೀರ ವೇಷವನಿದ ಕಂಡು ಶ್ರೀಹರಿಯ
ದೂರವಾದನೋ ಎಂದು ಮನದೊಳು ನಿಜವು ೩
ತೋರಲು ಬೇಗದಿ ದೊರೆ ಹನುಮಂತ
ಭೂರಿಭೂಷಣ ಸುಂದರ ರೂಪವಾಂತ೪
ಇಂದಿನ ಸೇವೆಯೆನ್ನಿಂದತಿ ದಯದಿ
ಮಂದರಧರಿಸಿಕೊಳ್ವುದು ಎಂದು ಭರದಿ೫
ಒಯ್ಯನೆ ಪೇಳುತ್ತ ವಯ್ಯಾರದಿಂದ
ಕೈಯನು ನೀಡಿ ಸಾನಂದದಿ ಬಂದ ೬
ಕಂತುಪಿತನು ಹನುಮಂತ ಮಾನಸಕೆ
ಸಂತಸ ತಾಳಿ ಆನಂತನು ದಿಟಕೆ ೭
ಏರುತ ಹನುಮನ ಭೂರಿ ವೈಭವದಿ
ಸ್ವಾರಿಯು ಪೊರಟ ಸಾಕಾರವ ಮುದದಿ ೮
ತೋರಿಸಿ ಭಕ್ತರ ಘೋರ ದುರಿತವ
ಸೂರೆಗೊಳ್ಳುವನು ವಿಚಾರಿಸಿ ನಿಜವ ೯
ಹದನವಿದೀಗೆಲೆ ಬಿದಿಗೆಯ ದಿನದಿ
ಮದನಜನಕನು ಮೈದೋರುವ ಮುದದಿ೧೦
ಪ್ರತಿದಿನದಂತೆ ಶ್ರೀಪತಿ ದಯದಿಂದ
ಅತಿಶಯ ಮಂಟಪದೊಳು ನಲವಿಂದ೧೧
ಎಂತು ನಾ ವರ್ಣಿಪೆ ಕಂತುಜನಕನ
ಅಂತ್ಯರಹಿತ ಗುಣಾನಂಮಹಿಮನ ೧೨
ಏಕಾಂತದಿ ಲೋಕೈಕನಾಯಕನು
ಶ್ರೀಕರವಾಗಿ ನಿಂದನು ನಿತ್ಯಸುಖನು ೧೩
* * *
ರಂಭೆ : ಇವನತಿಜಾಣನಮ್ಮಾ ಇವನ್ಯಾರಮ್ಮಾ ಪ.
ಇವನತಿಜಾಣ ಲಕ್ಷ್ಮೀಧವನಿಗಿಂತಲು ಮುಂದೆ
ತವಕದಿ ಬರುವತ್ತಿತ್ತವರನ್ನು ನೋಡದೆ ೧
ಅಂದಣವೇರಿ ಮತ್ತೊಂದ ತಾ ನೋಡದೆ
ಒಂದೇ ಮನದಿ ಬೇಗ ಮುಂದೆ ಬರುವನಮ್ಮಾ ೨
ಬಾಲಬ್ರಹ್ಮಚಾರಿ ಶಿಲೆಯಂತಿರುವನು
ಅಲೋಚಿಸಲಿವ ಮೂಲಪುರುಷನಮ್ಮಾ ೩
ಪುಟ್ಟನಾದರು ಜಗಜಟ್ಟಿಯಂತಿರುವನು
ದಿಟ್ಟನಿವನವನ ಮುಟ್ಟಿ ನೋಡಮ್ಮ ೪
ಊರ್ವಶಿ : ನಾರೀ ಇವನೀಗ ಹೊಂತಕಾರಿ ಲೋಕಕ್ಕಾಧಾರಿಪ.
ಕೊಬ್ಬಿದ ದೈತ್ಯರಿಗೀತನೆ ಕಾಲ
ಹಬ್ಬುವದಾತ್ಮಕ್ಕೀತನೆ ಮೂಲ
ಉಬ್ಬುವ ಹರಿಯೆಂದರೆ ಮೈಯೆಲ್ಲ
ಒಬ್ಬನಿಗಾದರೂ ಬಗ್ಗುವನಲ್ಲ ೧
ಎಲ್ಲಿರುವನು ಹರಿ ಅಲ್ಲಿಹನೀತ
ಬಲ್ಲಿದ ನಾರಾಯಣಗಿವ ದೂತ
ಖುಲ್ಲರ ಮನಕತಿ ಝಲ್ಲೆನುವಾತ
ಸುಲ್ಲಭನೆಯಿವ ಮುಂದಿನ ಧಾತ ೨
ಭೇದವಿಲ್ಲೆಂಬುದವರಿಗೆಯಿವ ತುಂಟ
ಮೇದಿನಿ ಬಾಧಕರಿಗೆ ಯಿವ ಕಂಟ
ಆದಿ ಮೂರುತಿ ಕೇಶವನಿಗೆ ಬಂಟ
ಮಾಧವಭಕ್ತರಿಗೀತನೆ ನೆಂಟ ೩
ದುರಿತಾರಣ್ಯದಹನ ನಿರ್ಲೇಪ
ವರ ವೆಂಕಟಪತಿಯಿದಿರೊಳಗಿಪ್ಪ
ಪರಮಾತ್ಮನ ಪರತತ್ತ್ವ ಸ್ವರೂಪ
ಮರೆಮಾತೇನಿವ ದೊರೆ ಹನುಮಪ್ಪ ೪

೪೮೭
ಪಂಚಮಿಯ ದಿನ
ರಂಭೆಸ್ :ಏನಿದು ಇಂದಿನ ವಿಭವ ನಮ್ಮ
ಶ್ರೀನಿವಾಸನ ಮಹಾತ್ಮವ
ಮಾನಿನಿ ರನ್ನೆ ನೀ ಪೇಳೆ ಭಕ್ತಾ-
ಧೀನದ ಚರಣದ ಲೀಲೆ
ಭಾನು ಉದಯದಲಿ ವೀಣಾದಿ ಸು-
ಗಾನ ವಾದ್ಯ ನಾನಾವಿಧ ರಭಸದಿ ೧
ಎತ್ತಲು ನೋಡಿದಡತ್ತ ಜನ-
ಮೊತ್ತವಿಲಾಸವಿದೆತ್ತ
ಚಿತ್ತದಿ ನಲಿನಲಿದಾಡಿ ತೋಷ-
ವೆತ್ತಿರುವನು ಒಟ್ಟುಗೂಡಿ
ಸುತ್ತುಮುತ್ತು ಒತ್ತೊತ್ತಿಲಿಹರು ವಿ-
ಪ್ರೋತ್ತಮ ಶ್ರೀಹರಿಭಕ್ತರ ಮಯವಿದು ೨
ಚಾಮರ ಛತ್ರ ಸಿಗುರಿಯು ಜನ-
ಸ್ತೋಮ ಪತಾಕೆ ತೋರಣವು
ಹೇಮದ ಕಂಚುಕಿ ಈಟಿ ಗುಣ-
ಧಾಮನ ಬಿರುದುಗಳ್ ಕೋಟಿ
ಆ ಮಹಾಭೇರಿ ಪಟಹ ನಿಸ್ಸಾಳಕ
ಸಾಮಗಾನ ಸಾಮ್ರಾಜ್ಯವೋಲಿಹುದು೩
ಬಾಲರು ವೃದ್ಧ ಯೌವನರು\ಜನ-
ಜಾಲವೆಲ್ಲರು ಕೂಡಿಹರು
ಲೋಲ ಸ್ರೀಮುಂದ್ರಾಂಕಿತದಿ ಬಹು ವಿ-
ಶಾಲ ದ್ವಾದಶನಾಮ ಮುದದಿ
ಆಲಯದೊಳಗಿಹ ಬಾಲಕಿಯರು ಸಹ
ಸಾಲಂಕೃತ ಸಮ್ಮೇಳದಿ ನಲಿವರು ೪
ಒಂದು ಭಾಗದಿ ವೇದಘೋಷ ಮ-
ತ್ತೊಂದು ಭಾಗದಿ ಜನಘೋಷ
ಇಂದಿನ ದಿನದತಿಚೋದ್ಯ ಏ-
ನೆಂದು ವರ್ಣಿಸುವದಸಾಧ್ಯ
ಚಂದಿರಮುಖಿ ಯಾರೆಂದೆನಗುಸುರೆಲೆ
ಮಂದರಧರ ಗೋವಿಂದನ ಮಹಿಮೆಯ ೫
ಊರ್ವಶಿ :ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ
ಪೇಳಲೇನದಾ ಮೂರ್ಲೋಕದೊಳಗೀ ವಿ-
ಶಾಲವ ನಾ ಕಾಣೆ ಪ.
ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ
ರಾಜೀವನಾಭನ ಪೂಜಾವಿನೋದದಿ
ರಾಜವದನೆ ವನಭೋಜನದಿಂದಿನ ೧
ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ
ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ
ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು ೨
ಇಂದಿನ ದಿನದಂದವ
ನೂತನವೆಂದು ನೀ ಪೇಳುವಿ
ಚಂದಿರ ಮುಖಿ ಜನಸಂದಣಿಗಳು ಮಹಾ
ಮಂದಿ ಓಲೈಸುವರಿಂದು ಮುಕುಂದನ ೩
ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆ ಪ.
ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ
ಕಾಣುವ ಯೋಗಭೋಗ ೧
ಎನಗತಿ ಮನವು ನಿನಗತಿ ಛಲವು
ಜನುಮಾಂತರ ಪುಣ್ಯವೈಸೆ ನೀ ೨
ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ
ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾ ಪ.
ಅನವರತದಿಂದ ಬರುವ ಪುರುಷನಲ್ಲ
ಮೀನಕೇತನ ಶತರೂಪ ಕಾಣೆ ೧
ನೂತನ ಪುರುಷನಿವನ್ಯಾರೆಂದರಿಯೆನಮ್ಮಾ
ಶಾತಕುಂಭದ ಮಂಟಪವೇರಿ ಬರುವನಮ್ಮಾ ೨
ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ
ತರತರ ರತ್ನವರದ ಬಾಯೊಳಿರುವದಮ್ಮಾ ೩
ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ
ಪರಮ ಪುರುಷನಂತೆ ತೋರುವನು ಅಮ್ಮಾ ೪
ಬಾಲಾರ್ಕನಂತೆ ಮುಖ ಪ್ರಜ್ವಲಿಪುದು
ನೀಲಮಾಣಿಕ್ಯ ಕಾಂತಿಯ ಸೋಲಿಪುದು ೫
ಮೂರ್ಲೋಕದೊಳಗೆ ಸರಿಯುಪಮೆ
ತೋರಲರಿಯೆ
ಕಾಲಿಗೆರಗುವೆನು ಪೇಳಬೇಕು ಸಖಿಯೆ ೬
ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ
ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ ೭
ವರರತ್ನಖಚಿತದಾಭರಣದಿಂದ ಮೆರೆವ
ಚರಣ ಸರೋಜದೊಳು ರೇಖೆಯಿಂ ಶೋಭಿಸುವ೮
ವಲ್ಲಭೆಯರ ಸಹಿತುಲ್ಲಾಸದಿ ಬರುವ
ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ ೯
ಬಲ್ಲಿದ ಪುರುಷನಿವನೆಲ್ಲಿಂದ ಬಂದ
ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ ೧೦
ಊರ್ವಶಿ :ನೋಡು ನಿತ್ಯಾನಂದಕರನ
ಮೂಡಗಿರಿಯಿಂದೋಡಿ ಬಂದನ ನೋಡೆ ಪ.
ಛಪ್ಪನ್ನೈವತ್ತಾರು ದೇಶ
ಕಪ್ಪಕಾಣಿಕೆಗೊಂಬ ತೋಷ
ಸರ್ಪಶೈಲ ರಾಜವಾಸ
ಚಪ್ಪರ ಶ್ರೀ ಶ್ರೀನಿವಾಸ ೧
ತಿರುಗುತ್ತಿಪ್ಪಾ ತಿರುಮಲೇಶ
ಶರಣ ರಾಮನ ಭಕ್ತಿಪಾಶ
ದುರುಳಿನಲಿ ನಿಂದಿರ್ಪಶ್ರೀಶ
ತರಿಸುವನು ಕಾಣಿಕೆ ವಿಲಾಸ ೨
ಪಟ್ಟದರಸನಾದ ದೇವ
ಸೃಷ್ಟಿಯಾಳುವಜಾನುಭಾವ
ದೃಷ್ಟಿಗೋಚರವಾಗಿ ಕಾಯ್ವ
ಇಷ್ಟವೆಲ್ಲವ ಸಲಿಸಿ ಕೊಡುವ ೩
ಊರ್ವಶಿ :ಬಂದ ಗೋವಿಂದ ಸಾನಂದದಿ ಭಕ್ತರ
ವೃಂದ ನೆರಹಿ ವನಕೆ
ಅಂದಣವೇರಿ ಮುಕುಂದನೊಲವಿನಲಿ
ಕುಂದಣ ಮಂಟಪವೇರಿ ಮತ್ತೊಬ್ಬನು
ಸಂದರುಶನವಂ ನೀಡುತ ಯಿಬ್ಬರು
ಒಂದಾಗುತ್ತಾನಂದವ ಬೀರುತ್ತ ೧
ಅಕ್ಕ ನೀ ನೋಡು ಬಹುಮಾನದಿ
ಸಿಕ್ಕಿದಿ ಬಿರುದು ಪೊತ್ತಾ
ತೆಕ್ಕೆಪಕ್ಕೆಯ ವಿಲಾಸ ಮನಸಿನೊಳು
ಉಕ್ಕುವದತಿ ತೋಷ
ಇಕ್ಕೆಲದಲಿ ಬೀಸುವ ಚಾಮರಗಳ ವಕ್ಕಣಿಸುವ
ಸ್ತುತಿಪಾಠಕ ಜನಗಳ
ಮಿಕ್ಕಿ ನೊಡುವ ನೋಟಕೆ ಮನಸಿನೊಳು
ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ ೨
ಛತ್ರ ಚಾಮರ ತೋರಣ ಪತಾಕೆ
ಪವಿತ್ರ ನಿಶಾನಿಧಾರಣಾ
ಸುತ್ರಾಮಾರ್ಚಿತ ಚರಣಭಕ್ತರನು
ಪವಿತ್ರಗೈಯುವ ಕಾರಣ
ಮಿತ್ರಮಂಡಳವನು ಮೀರಿ ಪೊಳೆವುತಿಹ
ರತ್ನಖಚಿತ ಮಂಟಪದಲಿ ಮಂಡಿಸಿ
ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ
ಕೀರ್ತಿಯ ಧರಿಸಿ ಜಗತ್ರಯಪಾವನ ೩
ವಾಲಗಶ್ರುತಿ ಭೇರಿ ಡಿಂಡಿಮ
ನಿಸ್ಸಾಳ ಪಟಹ ಭೂರಿ
ತಾಳ ಮೃದಂಗ ರವದಿಂದ
ಜನ ಜಾಲ ಕೂಡಿರುವ
ಮೇಳವಿಸುತ್ತನುಕೂಲಿಸಿ ಬಹು ಬಿರು
ದಾಳಿಗೆ ಸಂಭ್ರಮದೇಳಿಗೆಯಿಂದಲಿ
ಕೋಲು ಪಿಡಿದು ಓಹೋಯೆಂಬಂಥ ವಿ-
ಶಾಲ ಭಕ್ತರ ಮೇಲು ಸಂತೋಷದಿ ೪
ದೇಶದೇಶದ ಜನರು ನಾನಾ ವಿಧ
ಭಾಷೆ ಪ್ರವರ್ತಕರು
ಆಶಾಪಾಶರು ಪಾತಕಮಾನಸ-
ರೀ ಸಮಯದಿ ಶ್ರೀನಿವಾಸನೆ ಎಮ್ಮಯ
ದೋಷಗಳೆಲ್ಲವ ನಾಸಿಸು ಯೆನುತಭಿ-
ಲಾಷೆಯ ಜನಗಳ ಪೈಸರದಿಂದಲಿ೫
ವೇದಶಾಸ್ತ್ರಪೌರಾಣಪ್ರಜ್ಞರು ತರ್ಕವಾದಿ
ಪಾಠಕ ಜಾಣ
ಸಾಧು ಕುಶಲದಿ ವಿದ್ಯಾಪ್ರವೀಣವಿನೋದ ಸಿದ್ಧ-
ಸಾಧ್ಯ ಸಾದರದಿಂದ ಸರಸಕವಿ ವಾಗೀಂ-
ದ್ರಾದಿ ಗೀರ್ವಾಣ ಸಮುದಾಯದಿಂದ ಕೃ-
ಪೋದಯ ತೋರುತ್ತಾದಿಮೂರುತಿ ಜಯ-
ನಾದದಿ ಭಕ್ತರ ಮೋದ ಪಡಿಸುತ್ತಾ ೬
ರಂಭೆ : ನಾರಿ ಕೇಳೆ ಶ್ರೀರಮಾಧವ
ಸ್ವಾರಿ ಪೊರಟ ಕಾರಣ ಪೇಳೆ

೩೪೨
(ಮೂಲ್ಕಿಯ ನರಸಿಂಹ ದೇವರು)
ರಕ್ಷಿಸು ಮನದಾಪೇಕ್ಷೆಯ ಸಲಿಸುತ ಲಕ್ಷ್ಮೀನರಹರಿ ರಾಕ್ಷಸವೈರಿ ಪ.
ಅಕ್ಷಮ ದುಶ್ಯೀಲ ದುವ್ರ್ಯಾಪಾರದಿ ಕುಕ್ಷಿಂಭರನೆಂದುಪೇಕ್ಷೆಯ ಮಾಡದೆ ಅ.ಪ.
ಉಭಯ ಶುಚಿತ್ವವು ಊರ್ಜಿತವೆನೆ ಜಗ- ದ್ವಿಭು ವಿಶ್ವಂಭರ ವಿಬುಧಾರಾದ್ಯ ಶುಭಮತಿ ಸಂಸ್ಥಿತಿಯಭಯವ ಪಾಲಿಸೊ ತ್ರಿಭುವನಮೋಹನ ಪ್ರಭು ನೀನನುದಿನ ೧
ತಂದೆಯ ಮುನಿಸಿನ ಕಂದನ ಸಲಹುತ ಸಿಂಧುಶಯನ ನಿತ್ಯಾನಂದ ಗುಣಾಬ್ಧೇ ಹಿಂದಣ ಪಾಪವು ಮುಂದೆಸಗದ ರೀತಿ ಮಂದರಾದ್ರಿಧರ ಮಾಮವ ದಯಾಕರ ೨
ಪಾಪಾತ್ಮರಲಿ ಭೂಪಾಲಕನು ನಾ ಶ್ರೀಪತಿ ಕರುಣದಿ ಕಾಪಾಡುವುದು ಗೋಪೀರಂಜನ ಗೋದ್ವಿಜರಕ್ಷಣ ಕಾಪುರುಷರ ಭಯ ನೀ ಪರಿಹರಿಸಯ್ಯ ೩
ಸರ್ವೇಂದ್ರಿಯ ಬಲ ತುಷ್ಟಿ ಪುಷ್ಟಿಯಿತ್ತು ಸರ್ವಾಂತರ್ಯದೊಳಿರುವನೆ ಸಲಹೊ ದುರ್ವಾರಾಮಿತ ದುರ್ವಿಷಯದಿ ಬೇ- ಸರ್ವೇನು ಪನ್ನಗಪರ್ವತವಾಸನೇ ೪
ಶರಣಾಗತನಾಗಿ ಸೆರಗೊಡ್ಡಿ ಬೇಡುವೆ ವರ ಮೂಲಿಕಪುರ ದೊರೆಯೇ ಹರಿ ಲಕ್ಷ್ಮೀನಾರಾಯಣ ತ್ರಿಜಗ ದ್ಭರಿತ ಉತ್ಪ್ರೇರಕ ಸ್ಥಿರಭಕ್ತಿಯನಿತ್ತು ೫

೪೧೪
ರಕ್ಷಿಸು ಮಹಮಾಯೆ ಕರುಣ ಕ-
ಟಾಕ್ಷದಿಂದಲಿ ತಾಯೆ ಪ.
ದಾಕ್ಷಾಯಿಣಿ ದೈತ್ಯಾಂತಕಿ ವರ ನಿಟಿ-
ಲಾಕ್ಷನ ರಾಮಿ ನಿರೀಕ್ಷಿಸು ಜನನೀ ಅ.ಪ.
ವಾಸವಮುಖವಿನುತೆ ರವಿಸಂ-
ಕಾಶೆ ಸುಗುಣಯೂಥೇ
ಭಾಸುರಮಣಿಗಣಭೂಷೆ ತ್ರಿಲೋಕಾ-
ಧೀಶೆ ಭಕ್ತಜನಪೋಷೆ ಪರೇಶೆ ೧
ಗುಹಗಣಪರಮಾತೆ ದುರಿತಾ-
ಪಹೆ ದುರ್ಜನ ಘಾತೆ
ಬಹುಕಾಮಿತಪ್ರದೆ ಭಜಕಜನೋರ್ಜಿತೆ
ಮಹಿತೆ ಯೋಗಿಹೃದ್ಗುಹನಿವಾಸಿನಿಯೆ ೨
ಶುಂಭಾಸುರಮಥಿನಿ ಸುರನಿಕು-
ರುಂಬಾರ್ಚಿತೆ ಸುಮನಿ
ರಂಭಾದಿಸುರನಿತಂಬಿನೀ ಜನಕ-
ದಂಬಸೇವಿತಪದಾಂಬುಜೆ ಗಿರಿಜೆ ೩
ಅಷ್ಟಾಯುಧಪಾಣಿ ಸದಾಸಂ-
ತುಷ್ಟೆ ಸರಸವಾಣಿ
ಸೃಷ್ಟಿಲಯೋದಯಕಾರಿಣಿ ರುದ್ರನ
ಪಟ್ಟದ ರಾಣಿ ಪರಾಕು ಕಲ್ಯಾಣಿ ೪
ನೇತ್ರಾವತಿ ತಟದ ವಟಪುರ-
ಕ್ಷೇತ್ರಮಂದಿರೆ ಶುಭದಾ
ಸುತ್ರಾಣಿ ಲಕ್ಷ್ಮೀನಾರಾಯಣಿ ಸ-
ರ್ವತ್ರ ಭರಿತೆ ಲೋಕತ್ರಯನಾಯಕಿ ೫

೪೫೯
ರಕ್ಷಿಸು ಶ್ರೀ ಲಕ್ಷ್ಮೀವೆಂಕಟರಮಣ ರಾಕ್ಷಸ ಸಂಹರಣ
ಪಕ್ಷೀಂದ್ರವಾಹನ ವಾಸುಕಿಶಯನ ವಾರಿಜದಳನಯನ ಪ.
ತ್ರ್ಯಕ್ಷಾದಿ ವಿಬುಧಪಕ್ಷ ಪರಾತ್ಪರ
ಸುಕ್ಷೇಮನಿಧಿ ಕೃಪೇಕ್ಷಣದಿಂ ಸದಾ ಅ.ಪ.
ವೇದಬಾಹಿರರಾಗಿ ಖಲರು ಬಹು ಬಾಧಿಸುವರು
ಸಾಧನೆಯೆಲ್ಲ ಕೆಡಿಸುವರು ರಿಪುಗಳಾರ್ವರು
ಆದಿಮೂರ್ತಿ ತವಪಾದಾಶ್ರಯ ಸು-
ಬೋಧಾಮೃತರಸ ಸ್ವಾದುಗೊಳಿಸುತಲಿ ೧
ಸರ್ವಾಪರಾಧಂಗಳ ನೀ ಕ್ಷಮಿಸು ಸುಜನರನುದ್ಧರಿಸು
ಪೂರ್ವಾರ್ಜಿತ ಪಾಪಂಗಳ ಪರಿಹರಿಸು ಸದ್ಭಕ್ತಿಯೊಳಿರಿಸು
ಸರ್ವತ್ರ ವ್ಯಾಪ್ತ ಸಂತಕೃತ ಸ್ತೋತ್ರ
ದುರ್ವಾರ ದುರಿತ ದುರ್ಗನಿಗ್ರಹನೆ ೨
ಸತ್ಯಾತ್ಮ ಪಾವನ ಪಂಕಜನಾಭ ನೀಲಾಭ್ರದಾಭ
ಸತ್ವಾದಿಗುಣವರ್ಜಿತ ಮಹಾಶೋಭ ಶರಣಾಗತ ಸುಲಭ
ಚಿತ್ತವಾಸ ಶ್ರೀವತ್ಸಾಂಕಿತ ಪರ-
ಮಾರ್ಥಬೋಧ ಮಹತ್ತತ್ತ್ವನಿಯಾಮಕ ೩
ಪವಮಾನಾಂತರ್ಗತ ಪಾಪ ವಿನಾಶ ಪೊರೆಯೊ ಜಗದೀಶ
ಅವಿಕಾರ ಲೀಲಾನಂತವಿಲಾಸ ಶತಸೂರ್ಯ ಪ್ರಕಾಶ
ಕವಿಜನಾನಂದಭವನ ಭವಭಯಾ-
ರ್ಣವ ಬಾಡಬ ಮಾಧವ ಮಧುಸೂದನ ೪
ಚಿತ್ರಾಖ್ಯಪುರಮಂದಿರ ಸುಖರೂಪ ಯಾದವ ಕುಲದೀಪ
ಕರ್ತಾಕಾರಯಿತ ಸುಗುಣಕಲಾಪ ಪರಮ ಪ್ರತಾಪ
ಸುತ್ರಾಣ ಲಕ್ಷ್ಮೀನಾರಾಯಣ ಪರ
ವಸ್ತು ಶಾಶ್ವತ ಪವಿತ್ರ ಚರಿತ್ರ ೫

೪೭೨
ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ಪ.
ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲು
ಭಂಗವ ಪಡುವುದ್ಯಾಕೆ
ಮಂಗಲದಾತ ನರಸಿಂಗನ ನಾಮವ
ಹಿಂಗದೆ ನೆನೆದರಿಷ್ಟಂಗಳ ಕೊಡುವ ೧
ಉಪವಾಸ ಮಾಡಲ್ಯಾಕೆ ಕಪಟದೊಳು
ಗುಪಿತದಿ ಕುಳ್ಳಲ್ಯಾಕೆ
ಉಪಮೆರಹಿತ ಶ್ರೀಪತಿ ಕೃಷ್ಣರಾಯನ
ಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ ೨
ಧ್ರುವನು ಸದ್ಗತಿ ಪಡೆದ ಕರುಣದಿಂದ
ಪವಮಾನಿಗೆ ಒಲಿದ
ಭುವನ ಈರಡಿ ಮಾಡಿ ಬಲಿಯನ್ನು ಸಲಹಿದ
ಬವರದೊಳಗೆ ದಾನವರನ್ನು ಮಡುಹಿದ ೩
ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತು
ತೀರ್ಥಸ್ನಾನಗಳ್ಯಾತಕೋ
ಕರ್ತು ಮಾಧವ ಶತಪತ್ರನಾಭನ ಸಂ-
ಕೀರ್ತನಾದಿಗಳೆ ಪರತ್ರಸಾಧನವಲ್ಲೊ ೪
ಭೂರಿಯಾಯಾಸವ್ಯಾಕೋ ಬರಿದೆ ಸಂ-
ಸಾರವ ನಂಬಲ್ಯಾಕೋ
ಮಾರಾರಿಸಖ ಲಕ್ಷ್ಮೀನಾರಾಯಣನನ್ನು
ಸೇರಿ ಭಜಿಪರ ಉದ್ಧಾರಮಾಡುವ ಶ್ರೀ ೫

೩೬೨
ರಾಮಾನಾಮಾಮೃತಪಾನಸುಖಧಾಮನು ಮುಖ್ಯಪ್ರಾಣ
ಸೋಮಶೇಖರಮುಖ್ಯಾಮರಸಂಕುಲಸ್ವಾಮಿ ಮಹಾಸುತ್ರಾಣ ೧
ಯಾವತ್ಕಾಲ ಕಳೇವರದೊಳನಿಲ ತಾವದ್ಧರಿಸನ್ನಿಧಾನ
ದೇವಬ್ರಹ್ಮ ಸುಜನಾವಳಿಸುಖದ ಮಹಾಪ್ರಭು ಪವಮಾನ ೨
ಲಕ್ಷ್ಮಣಪ್ರಾಣದಾತಾರ ನಿಭೃತಮೋಕ್ಷಹೃದಯ ಪರಿಪೂರ್ಣ
ಲಕ್ಷ್ಮೀನಾರಾಯಣಾಂಘ್ರಿಭಕ್ತಿದಕ್ಷ ಲೋಕೈಕಧುರೀಣ೩

ದೇವ -ದೇವತಾ ಸ್ತುತಿ
ಬ್ರಹ್ಮದೇವರು
೩೫೨
ವಂದಿಸುವೆ ಜಗದ್ಗುರುವೆ ಮಂದಜಾಸನ ಬ್ರಹ್ಮ
ನಂದಿವಾಹನಶೇಷಗರುಡರ ತಂದೆ ಸುಗುಣೋದ್ದಾಮ ಪ.
ಚತುರವದನ ಶ್ರೀಹರಿಯ ಪ್ರಥಮ ಪುತ್ರ ವಿಧಾತ್ರ
ಸತತ ಭಕ್ತಿಯೋಗೀಶಿರೋರತುನ ವಾಣೀಕಳತ್ರ
ನೂರುಕಲ್ಪ ತಪವಗೈದ ಸಾರಋಜುಗಣೇಶ
ಪಾರಮಾರ್ಥಜ್ಞಾನನಿಧಿ ಗಂಭೀರ ಸತ್ತ್ವವಿಲಾಸ೨
ಶ್ರೀ ಲಕ್ಷ್ಮೀನಾರಾಯಣನ ದಾಸಜನವರೇಣ್ಯ
ವಾಸವಾದಿ ನಿರ್ಜರೌಘಪೋಷಕಾಗ್ರಗಣ್ಯ ೩

೩೪೩
(ಬಂಟ್ವಾಳದ ವೆಂಕಟೇಶ ದೇವರನ್ನು ನೆನೆದು)
ವಂದಿಸುವೆನು ಶ್ರೀನಿವಾಸ ಶ್ರೀ ವೆಂಕಟೇಶ ವಂದಾರುನಿಚಯಮಂದಾರ ಸದಾ- ಪ.
ನಂದೈಕನಿಧಿವಿಲಾಸ ಚಂದ್ರಾದಿತ್ಯಸಹಸ್ರಪ್ರಕಾಶ ಹೊಂದಿದೆ ನಿನ್ನ ಪರೇಶ ಶ್ರೀ ವೆಂಕಟೇಶ ೧
ಶಾಂತಾತ್ಮನಿಯಮ ಸಂತಾಪಪ್ರಶಮ ಸಂತಜನಮನೋಲ್ಲಾಸ ಭ್ರಾಂತಿಜ್ಞಾನವಿತಾನವಿನಾಶ ಚಿಂತನೀಯ ನಿರ್ವಿಶೇಷ ಶ್ರೀ ವೆಂಕಟೇಶ ೨
ಶ್ರೀಧರಾಚ್ಯುತ ಸುಮೇಧನಾಮಕ ಪ- ಯೋಧಿಶಯನ ಪರಮೇಶ ವೇದಾಂತವೇದ್ಯ ನಿತ್ಯ ನಿರ್ದೋಷ ಸಾಧು ಕೌಸ್ತುಭಮಣಿಭೂಷ ಶ್ರೀ ವೆಂಕಟೇಶ ೩
ನೀರಜನಾಭ ನೀಲಾಭ್ರದಾಭ ಶ್ರೀರಾಮ ತ್ರಿದಶಗಣಪೋಷ ಪ್ರಾರಬ್ಧಕರ್ಮ ಬೋಧೋದ್ಭಾಸಾ- ಪಾರಮಹಿಮ ಜಗದೀಶ ಶ್ರೀ ವೆಂಕಟೇಶ ೪
ನೇತ್ರಾವತಿ ಸುಪವಿತ್ರಚಿತ್ರಸು- ಕ್ಷೇತ್ರ ವಟಪುರನಿವಾಸ ಕರ್ತ ಲಕ್ಷ್ಮೀನಾರಾಯಣನೀತ ಪಾರ್ಥಸಾರಥಿ ಪೃಥಗೀಶ ಶ್ರೀ ವೆಂಕಟೇಶ ೫

೩೨೦
ವಂದೇ ಶ್ರೀ ಗೌರಿನಂದನ ಸುರನರ
ವೃಂದವಂದಿತಚರಣ ಗಜಾನನ ಪ.
ಶಂಕರೋಲ್ಲಾಸ ಪಾಶಾಂಕುಶಧರ ಕರ
ಪಂಕಜ ಸುವಿರಾಜ ರವಿತೇಜ ೧
ಜಂಭಾರಿಸಂನುತ ಜಾಹ್ನವೀಧರಸುತ
ಲಂಬೋದರ ಸುಂದರ ಕೃಪಾಕರ ೨
ಸುಕ್ಷೇಮಧಾಮ ಶ್ರೀ ಲಕ್ಷ್ಮೀನಾರಾಯಣನಪಕ್ಷೈಕಪಾವನ ಸುಧೀಷಣ ೩

೪೯೭
ವರವ ಕೊಡೆ ತಾಯೆ ವರವ ಕೊಡೆ ಪ.
ಶರಧಿಯ ಕನ್ನೆ ನೀ ಕೇಳೈ ಸಂಪನ್ನಳೆ
ಸೆರಗೊಡ್ಡಿ ಬೇಡುವೆನಮ್ಮ ವರವ ಕೊಡೆ
ನೆರೆ ನಂಬಿದೆನು ನಿನ್ನ ಚರಣಕಮಲವನು
ಪರಿಹರಿಸೆಮ್ಮ ದಾರಿದ್ರ್ಯ ಕಷ್ಟವ ತಾಯೆ೧
ಹೊಳೆವಂಥ ಅರಸಿನ ಹೊಳೆವ ಕರಿಯ ಮಣಿ
ಸ್ಥಿರವಾಗಿ ಕಟ್ಟುವಂಥ ವರವ ಕೊಡೆ
ತಾಳೋಲೆ ಹೊನ್ನೋಲೆ ತೊಳೆದೊಯ್ದ ಬಿಚ್ಚೋಲೆ
ಯಾವಾಗಲಿರುವಂಥ ವರವ ಕೊಡೆ೨
ಬಾಗಿಲ ತೋರಣ ಮದುವೆ ಮುಂಜಿ ನಾಮಕರಣ
ಯಾವಾಗಲಾಗುವಂಥ ವರವ ಕೊಡೆ
ಬಂಧುಬಳಗ ಹೆಚ್ಚಿ ಹೆಸರುಳ್ಳ ಮನೆ ಕಟ್ಟಿ
ಉಂಡಿಟ್ಟಿಡುವಂಥ ವರವ ಕೊಡೆ ೩
ಹಾಲ ಕರೆಯುವ ಮೇಲಾದ ಸರಳೆಮ್ಮೆ
ಸಾಲಾಗಿ ಕಟ್ಟುವಂಥ ವರವ ಕೊಡೆ
ಕಂಡಕಂಡವರಿಗೆ ಕರೆದು ಮೃಷ್ಟಾನ್ನವ
ತಿಳಿ ನೀರು ಕೊಡುವಂಥ ವರವ ಕೊಡೆ ೪
ಲಕ್ಷ್ಮೀನಾರಾಯಣನ ವಕ್ಷಸ್ಥಳದಲ್ಲಿ
ಲಕ್ಷ್ಮಣವಾಗಿರುವಂಥ ಮಹಾಲಕ್ಷ್ಮಿ
ಅಷ್ಟೈಶ್ವರ್ಯವು ಪುತ್ರಸಂತಾನವ
ಕೊಟ್ಟು ರಕ್ಷಿಸುವವಮ್ಮ ವರವ ಕೊಡೆ ೫

೪೨೭
ವಲ್ಲೀದೇವಿಯ ವಲ್ಲಭನೆ
ಬಲ್ಲಿದ ಭಕ್ತರ ಸುಲ್ಲಭನೆ ಪ.
ಸಲ್ಲಲಿತ ಪಾದಪಲ್ಲವ ಭಜಿಸುವ-
ರೆಲ್ಲರ ಮನಸಿನೊಳುಲ್ಲಸನೆ ಅ.ಪ.
ವೃಂದಾರಕಮುನಿವಂದಿತನೆ
ಕಂದರ್ಪಾಮಿತಸುಂದರನೆ
ಸ್ಕಂದನೆ ಸಚ್ಚಿದಾನಂದನೆ ಪಾರ್ವತೀ-
ನಂದನ ಸದ್ಗುಣಮಂದಿರನೆ ೧
ತಾರಕದೈತ್ಯ ಸಂಹಾರಕನೆ
ಸೇರಿದ ಭಕ್ತೋದ್ಧಾರಕನೆ
ಮಾರಾರಿಯ ಸುಕುಮಾರನೆ ಧೀರನೆ
ಚಾರು ಮಯೂರ ತುರಂಗಮನೆ ೨
ಲಕ್ಷುಮಿನಾರಾಯಣ ಪ್ರಿಯನೆ
ರಕ್ಕಸರಿಂಗತಿದುಃಖದನೆ
ಕುಕ್ಕುಟವಜ್ರಾಭಯಶಕ್ತಿಹಸ್ತನೆ
ಪ್ರಖ್ಯಾತ ಪಾವಂಜಾಖ್ಯ ಪುರವರನೆ ೩

೩೭೩
ವಾಣಿ ವರದೆ ಶಾರದೆ
ನಿನ್ನ ಚರಣವ ಸೇರಿದೆ ಪ.
ಎನ್ನ ನಾಲಿಗೆಯೊಳ್ನೆಲಸು
ಹರಿಲೀಲೆಯನ್ನು ನುಡಿಸು೧
ಅತಿರೋಹಿತ ವಿಜ್ಞಾನಿ
ವೇದವ್ಯೂ ಹಕಭಿಮಾನಿ ೨
ಲಕ್ಷ್ಮೀನಾರಾಯಣನ ಸೊಸೆ
ಸರ್ವಾಧಾರ ಭಕ್ತಿವಿಲಾಸೆ ೩

೩೧೯
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ.
ವಾರಿಜಾಕ್ಷ ವರಗುಣಾಕರ
ವಾರಿಜಾಕ್ಷಿ ವರದಾಯಕ ಸನ್ನುತ
ನಾರದಾದಿ ಮುನಿವಂದಿತ ಪದಯುಗ ಅ.ಪ.
ಸುಂದರಾಂಗ ಸುಕಲಾನ್ವಿತ ನಿಭಚರಣ
ಕಟಿಶೋಭಿತ ವ್ಯಾಳಸ-
ಬಂಧನಾಬ್ಧಿ ಶತಕೋಟಿಸದೃಶ ಕಿರಣ
ಚಂದನಾಂಗಾರ್ಚಿತ ಸುಮನೋಹರ
ಮಂದಹಾಸ ಮಹಿಮಾಂಬುಧಿಚಂದಿರ೧
ಕಂಬುಗ್ರೀವ ಕಮನೀಯ ಕರಾಂಬುರುಹ
ಪಾಶಾಂಕುಶಧರ ವರ
ಶಂಬರಾರಿಜಿತುತನಯ ಮಧುರಗೇಹ
ಜಂಭಭೇದಿವಂದಿತ ಅತ್ರಿವಂದಿತ
ಲಂಬೋದರ ವಿಘ್ನಾಂಬುಧಿ ಕುಂಭಜ ೨
ಚಾರುಭಾರ ಕನ್ಯಾಪುರವರ ನಿಲಯ
ಮೃಕಂಡುಜದ ಮುನಿವರ
ಸಾರಮಂತ್ರಸ್ಥಾಪಿತ ಮಂಗಲ ಕೆರೆಯ
ವರಕಪಿತ್ಥಫಲೋರಸಭುಂಜಿತ
ಧೀರ ಲಕ್ಷ್ಮೀ ನಾರಾಯಣಸಖಸುತ ೩

೩೪೪
ವೆಂಕಟರಮಣ ವೇದಾಂತಕೋಟಿವಂದ್ಯ
ಶಂಕರಪ್ರಿಯ ಪತಿ ಏಳೆನ್ನುತ ಪ.
ಪಂಕಜಮುಖಿ ಪದ್ಮಾವತಿ ಸರ್ವಾ-
ಲಂಕಾರದ ನಿದ್ದೆ ಸಾಕೆನ್ನುತ ಅ.ಪ.
ಮಂಗಲಚರಿತ ಭುಜಂಗಶಯನ ನಿ-
ನ್ನಂಗದಾಯಾಸವ ಪರಿಹರಿಸಿ
ಪೊಂಗಲಶದಿ ಉಷ್ಣೋದಕ ಗಂಧ ತೈಲಾ-
ಭ್ಯಂಗಮಾಡುವರೇಳು ಶೃಂಗಾರದ ಮೂರ್ತಿ ೧
ದಧಿಯ ಪೃಥುಕದಲಿ ಹದಗೈದು ಮಧುರದಿ
ಮಧುಸೂದನ ನಿನ್ನ ಪದದ ಮುಂದೆ
ಸದ್ ಹೃದಯರು ತಂದಿಹರು ಸಮರ್ಪಿಸೆ
ಮದಜನಕ ನಿನ್ನ ಓಲೈಸುವರಯ್ಯ ೨
ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿ
ಚೆನ್ನಾದ ಗೋಕ್ಷೀರವನ್ನು ತಂದು
ಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-
ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ ೩
ವಿಧವಿಧ ಷಡುರಸಭರಿತ ಮನೋಹರ
ಸುಧೆಗೆಯಿಮ್ಮಡಿ ಮಧುರತ್ವದಲಿ
ಮೃದುವಾದ ಉದ್ದಿನ ದೋಸೆಯ ಸವಿಯೆಂದು
ಪದುಮನಾಭನೆ ನಿನ್ನ ಹಾರೈಸುವರಯ್ಯ ೪
ಸಕ್ಕರೆ ಕದಳಿ ಉತ್ತಮ ಫಲಗಳ ತಂದು
ರಕ್ಕಸವೈರಿಯೆ ನಿನ್ನ ಮುಂದೆ
ಚೊಕ್ಕಟವಾಗಿಡೆ ಲೆಕ್ಕ ಲೇಖನಗಳ
ಒಕ್ಕಣಿಪರು ವಾಸುದೇವ ನೀನೇಳಯ್ಯ ೫
ಸಾರಹೃದಯ ಗೌಡಸಾರಸ್ವತ ವಿಪ್ರ
ಭೂರಿ ವೇದಾದಿ ಮಂತ್ರದ ಘೋಷದಿ
ಶ್ರೀರಮಣನೆ ದಯೆದೋರೆಂದು ಕರ್ಪೂರ-
ದಾರತಿಯನು ಪಿಡಿದಿಹರು ಶ್ರೀಹರಿಯೇ೬
ಭಾಗವತರು ಬಂದು ಬಾಗಿಲೊಳಗೆ ನಿಂದು
ಭೋಗಿಶಯನ ಶರಣಾದೆನೆಂದು
ಜಾಗರದಲಿ ಮದ್ದಳ ತಾಳರಭಸದಿ
ರೇಗುಪ್ತಿರಾಗ ಸಂಗೀತ ಪಾಡುವರಯ್ಯ ೭
ಕರುಣಾಸಾಗರ ನಿನ್ನ ಚರಣದ ಸೇವೆಯ
ಕರುಣಿಸೆಂದೆನುತಾಶ್ರಿತ ಜನರು
ಕರವ ಮುಗಿದು ಕಮಲಾಕ್ಷ ನಿನ್ನಯ ಪಾದ-
ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ ೮
ನಾನಾ ಜನರು ಬಂದು ಕಾಣಿಕೆ ಕಪ್ಪವ
ಶ್ರೀನಿವಾಸನೆ ನಿನ್ನ ಪದಕೆ ಒಪ್ಪಿ
ದಾನವಾಂತಕ ನಿನ್ನ ದಯವೊಂದೆ ಸಾಕೆಂದು
ಧ್ಯಾನಮಾಳ್ಪರು ದಯಮಾಡೆಂದು ಹರಿಯೇ ೯
ನೀನೆ ಗತಿಯೆಂದು ನಿನ್ನ ನಂಬಿಹರು ಲ-
ಕ್ಷ್ಮೀನಾರಾಯಣ ಪುರುಷೋತ್ತಮನೆ
ಮಾನದಿ ಭಕ್ತರ ಸಲಹಯ್ಯ ಸಂತತ
ಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ ೧೦

೩೯೩
ಶಂಕರ ಗುರುವರ ಮಹದೇವ ಭವ-
ಸಂಕಟ ಪರಿಹರಿಸಯ್ಯ ಶಿವ ಪ.
ಸಂಕಲ್ಪ ವಿಕಲ್ಪಮನೋನಿಯಾಮಕ
ಕಿಂಕರಜನಸಂಜೀವ ಅ.ಪ.
ಭಾಗವತರರಸ ಭಾಗೀರಥೀಧರ
ಬಾಗುವೆ ಶಿರ ಶರಣಾಗುವೆ ಹರ
ಶ್ರೀ ಗೌರೀವರ ಯೋಗಿಜನೋದ್ಧರ
ಸಾಗರಗುಣಗಂಭೀರ ೧
ರಾಯ ಲಕ್ಷ್ಮೀನಾರಾಯಣ ಭಕ್ತಿಪ-
ರಾಯಣ ತ್ರಿನಯನ ಪುರಹನ
ಕಾಯಜಮಥನ ಮುನೀಂದ್ರ ಸಿದ್ಧಜನ-
ಗೇಯಸ್ವರೂಪೇಶಾನ ೨

೩೯೪
ಶಂಕರ ಶಿವಶಂಕರ ಶಿವಶಂಕರ ಶಿವಶಂಕರ
ಕಿಂಕರೇಷ್ಟಪ್ರಧಾನಶೀಲ ವೃಷಾಂಕ ಮಹಲಿಂಗೇಶ್ವರ ಪ.
ವ್ಯೋಮಕೇಶ ಭವಾಬ್ಧಿತಾರಕ ರಾಮನಾಮೋಪಾಸಕ
ಸಾಮಜಾಜಿನವಸನಮಂಡನ ಸ್ವಾಮಿ ತ್ರಿಜಗನ್ನಾಯಕ
ಭೀಮಬಲ ಸುತ್ರಾಮಮುಖ ಸುರಸ್ತೋಮ ವಿನುತಪದಾಂಬುಜ
ಸೋಮಸೂರ್ಯಾನಲಯನ ನಿಸ್ಸೀಮ ಮಹಿಮ ಮಹಾಭುಜ ೧
ಭಜಕಜನಸೌಭಾಗ್ಯದಾಯಕ ವಿಜಯಪಾಶುಪತಾಸ್ತ್ರದ
ಭುಜಗಭೂಷಣ ಭುವನಪೋಷಣ ರಜತಗಿರಿಶಿಖರಾಸ್ಪದ
ವೃಜಿನಹಾಮಲ ಸ್ಫಟಿಕಸನ್ನಿಭ ಕುಜನವಿಪಿನದವಾನಲ
ವಿಜಿತಕಾಮ ವಿರಾಗಿಯೋಗಿ ವ್ರಜಕುಟುಂಬ ಮಹಾಬಲ ೨
ನೀಲಕಂಠ ನಿರಾಮಯಾಭಯಶೂಲಧರ ಸುಮನೋಹರ
ಶೈಲರಾಜಸುತಾಧರಾಮೃತಲೋಲ ಲೋಕಧುರಂಧರ
ಕಾಲಕಾಲ ಕಪಾಲಧರ ಕರುಣಾಲವಾಲ ಮಹೇಶ್ವರ
ಪಾಲಿತಾಖಿಳಸಿದ್ಧ ಮುನಿಜನಜಾಲ ಜಾಹ್ನವಿಶೇಖರ೩
ಕೃತ್ತಿವಾಸ ಗಿರೀಶ ಶ್ರುತಿತತ್ತ್ವಾರ್ಥಬೋಧ ಗುಣೋದಯ
ದೈತ್ಯಮೋಹಕ ಶಾಸ್ತ್ರಕೃತ್ಪ್ರಮಥೋತ್ತಮ ವಿರತಾಶ್ರಯ
ಸತ್ಯಸಂಕಲ್ಪಾನುಸಾರ ನಿವೃತ್ತಿಮಾರ್ಗ ಪ್ರವರ್ತಕ
ಮೃತ್ಯುಹರ ಹರ ಮೃಡ ನಮೋಸ್ತು
ನಮೋಽಸ್ತು ಸುಮನನಿಯಾಮಕ ೪
ಪಂಡಿತೋತ್ತಮ ಪವನಶಿಷ್ಯ ಮೃಕಂಡುತನಯಭಯಾಪಹ
ಚಂಡಿಕಾಧವ ಶಿವ ದಯಾರ್ಣವ ಖಂಡಪರಶು ಸುರಾರಿಹ
ಚಂಡಭಾನುಶತಪ್ರಕಾಶಾಖಂಡವೈರಾಗ್ಯಾಧಿಪ
ಕುಂಡಲೀಂದ್ರ ಪದಾರ್ಹನಗ ಕೋದಂಡವಿದೃಶ ಮಹಾನ್‍ತಪ ೫
ಮಂಗಲಪ್ರದ ದಕ್ಷಕೃತಮುಖಭಂಗ ಭಾಗವತೋತ್ತಮ
ಜಂಗಮಸ್ಥಾವರಹೃದಿಸ್ಥ ಶುಭಾಂಗ ಸತ್ಯಪರಾಕ್ರಮ
ಲಿಂಗಮಯ ಜಯಜಯತು ಗಿರಿಜಾಲಿಂಗಿತಾಂಗ ಸದೋದಿತ
ಸಂಗರಹಿತಾಚ್ಯುತಕಥಾಮೃತ ಭೃಂಗವತ್ಸೇವನರತ೬
ಭರ್ಗ ಭಾರ್ಗವ ಋಷಿಪ್ರತಿಷ್ಠಿತ ಸ್ವರ್ಗಮೋಕ್ಷ ಫಲಪ್ರದ
ನಿರ್ಗತಾಖಿಲದುರಿತ ಭೂಸುರವರ್ಗಪಾಲನಕೋವಿದ
ದುರ್ಘಟಿತಧುರಧೀರ ಭವಸಂಸರ್ಗದೂರ ಸನಾತನ
ನಿರ್ಗುಣೈಕಧ್ಯಾನಪರ ಸನ್ಮಾರ್ಗಭಕ್ತಿನಿಕೇತನ ೭
ಚಾರುಪಾವಂಜಾಖ್ಯಕ್ಷೇತ್ರಾಧಾರದಾಂತದಯಾಕರ
ನೀರಜಾಸನತನಯ ಲಕ್ಷ್ಮೀನಾರಾಯಣಕಿಂಕರ
ವಾರಿನಿಧಿಗಂಬೀರ ದೀನೋದ್ಧಾರ ಧಾರ್ಮಿಕಜನಹಿತ
ವಾರಣಾಸ್ಯಕುಮಾರಗುರು ಗೌರೀರಮಣ ಸುದೃಢವ್ರತ ೮

೪೧೫
ಶಂಕರಿ ಸರ್ವೇಶ್ವರಿ ಮೃಗಾಲಂಕಶೇಖರಿ ಜಯ ಜಯ ಪ.
ಶಾಂಭವಿದೇವಿ ಸುರಕದಂಬಸಂಜೀವಿ
ಅಂಬುಜಾಯತಾಕ್ಷಿ ಖಲಶುಂಭಮರ್ದಿನಿ ೧
ಬುದ್ಧಿದೇವತೆ ಸುರಸಿದ್ಧಸನ್ನುತೆ
ಅದ್ರಿಜಾತೆ ರುದ್ರಪ್ರೀತೆ ಶುದ್ಧ ಭಾಗವತೆ ೨
ಧ್ಯೇಯರೂಪಿಣಿ ಮಹಾದೇವ ಮೋಹಿನಿ
ಶ್ರೀಯಶೋದೆ ಲಕ್ಷ್ಮೀನಾರಾಯಣಭಗಿನಿ ೩
(ಕುಮಟಾದಲ್ಲಿಯ ಶಾಂತೇರಿ ಕಾಮಾಕ್ಷಿ)

೩೯೫
ಶರಣಾಗತನಾದೆನು ಶಂಕರ ನಿನ್ನ
ಚರಣವ ಮರೆಹೊಕ್ಕೆನು ಪ.
ಕರುಣಿಸೈ ಕರಿವದನಜನಕಾ-
ವರಕದಂಬಪೂಜ್ಯ ಗಿರಿವರ-
ಶರಸದಾನಂದೈಕವಿಗ್ರಹ
ದುರಿತಧ್ವಾಂತವಿದೂರ ದಿನಕರ ಅ.ಪ.
ಹಸ್ತಿವಾಹನವಂದಿತ ವಿಧುಮಂಡಲ-
ಮಸ್ತಕ ಗುಣನಂದಿತ
ಸ್ವಸ್ತಿದಾಯಕ ಸಾವಇಗಾನಪ್ರ-
ಶಸ್ತ ಪಾವನಚರಿತ ಮುನಿಹೃದ-
ಯಸ್ಥಧನಪತಿಮಿತ್ರ ಪರತರ-
ವಸ್ತು ಗುರುವರ ಶಾಸ್ತಾವೇಶ್ವರ ೧
ಮಂದಾಕಿನೀ ಮಕುಟ ಶಿವ ಶಿವ ನಿತ್ಯಾ-
ನಂದಮ್ನಾಯ ಕೂಟ
ಚಂದ್ರಸೂರ್ಯಾಗ್ನಿತ್ರಿಲೋಚನ
ಸಿಂಧುರಾಸುರಮಥನ ಸ್ಥಿರಚರ-
ವಂದಿತಾಂಘ್ರಿಸರೋಜ ಉದಿತಾ-
ರ್ಕೇಂದುಶತನಿಭ ನಂದಿವಾಹನ ೨
ನೀಲಕಂಧರ ಸುಂದರ ಸದ್ಗುಣವರು-
ಣಾಲಯ ಪರಮೇಶ್ವರ
ಕಾಲ ಕಾಲ ಕಪಾಲಧರ ಮುನಿ-
ಪಾಲ ಪದ್ಮಜವಂದಿತಾಮಲ-
ಲೀಲ ಡಮರು ತ್ರಿಶೂಲಪಾಣಿ ವಿ-
ಶಾಲಮತಿವರ ಭಾಳಲೋಚನ ೩
ಮಾರಸುಂದರ ಸಂಕರ ಶ್ರೀಲಕ್ಷ್ಮೀ-
ನಾರಾಯಣಕಿಂಕರ
ಮಾರಹರ ಮಹನೀಯ ಶ್ರುತಿಸ್ರ‍ಮತಿ-
ಸಾರ ವಿಗತಾಮಯ ಮಹೋನ್ನತ
ವೀರ ರಾವಣಮದನಿಭಂಜನ
ಚಾರುತರವರಭಾರ ಪುರಹರ ೪

೪೧೬
ಶಾಂತೇರಿ ಕಾಮಾಕ್ಷಿ ತಾಯೇ ಅ-
ನಂತಪರಾಧವ ಕ್ಷಮಿಸು ಮಹಮಾಯೇ ಪ.
ಸರ್ವಭೂತಹೃದಯಕಮಲ ನಿವಾಸಿನಿ
ಶರ್ವರೀಶಭೂಷೆ ಸಲಹು ಜಗದೀಶೆ ೧
ಮೂಲ ಪ್ರಕೃತಿ ನೀನೆ ಮುನಿದು ನಿಂತರೆನ್ನ
ಪಾಲಿಸುವವರ್ಯಾರು ಪರಮ ಪಾವನ್ನೆ ೨
ನಿನ್ನಾಧೀನವು ನಿಖಿಲ ಬ್ರಹ್ಮಾಂಡವು
ಮನ್ನಿಸು ಮಹಾದೇವಿ ಭಕ್ತಸಂಜೀವಿ೩
ಗೋವೆಯಿಂದ ಬಂದೆ ಗೋವಿಂದಭಗಿನಿ
ಸೇವಕಜನರಿಂದ ಸೇವೆ ಕೈಕೊಂಬೆ ೪
ಪೃಥ್ವಿಗುತ್ತಮ ಕುಮಟಕ್ಷೇತ್ರನಿವಾಸಿನಿ
ಕರ್ತ ಲಕ್ಷ್ಮೀನಾರಾಯಣೀಕಲ್ಯಾಣಿ ೫

೪೧೭
ಶಾಂತೇರಿ ಕಾಮಾಕ್ಷಿ ಲಕ್ಷ್ಮೀಕಾಂತನ ಸೋದರಿ
ಸಂತಜನರ ಭಯನಿವಾರಿ ಕಂತುಸಹಸ್ರ ಸುಂದರಿ ಪ.
ಬಂಗಧಿ ದೇವಿ ಸುಪ್ರಸಿದ್ಧೆ ಮಹೇಶ್ವರಿ
ಶುದ್ಧ ಶ್ರೀಹರಿಭಕ್ತಿಜ್ಞಾನ ಶ್ರದ್ಧೆಯ ನೀಡಮ್ಮ ಶಂಕರಿ೧
ಪಂಚಾಸ್ಯನಾರಿ ಪಾವನೆ ಕಾಂಚನಾಭೆ ಗೌರಿ
ಪಂಚ ಮಹಾಪಾಪವಿದಾರಿ ಪಾಹಿಮಾಂ ಶ್ರೀವಿಶ್ವಂಭರಿ೨
ಸುಕ್ಷೇತ್ರ ಕುಮಟಾಖ್ಯ ನಗರಾಧ್ಯಕ್ಷೆ- ದೇವಿ ಭವಾನಿ
ತ್ರೈಕ್ಷನ ರಾಣಿ ಕಲ್ಯಾಣಿ ಲಕ್ಷ್ಮೀನಾರಾಯಣಿ ೩

೩೭೪
ಶಾರದೆ ಸರ್ವ ವಿಶಾರದೆ ಶ್ರೀ ಪ.
ಋಜುಗಣಸ್ಥೆ ಪಂಕಜಭರಮಣಿ
ತ್ರಿಜಗಜ್ಜನನಿ ಸುಖವಾರಿಧೆ ೧
ವಾಗಭಿಮಾನಿ ವಾಣಿ ಫಣಿವೇಣಿ
ಯೋಗಿನಿ ಜ್ಞಾನಸೌಭಾಗ್ಯದೆ ೨
ಪ್ರಿಯ ಲಕ್ಷ್ಮೀನಾರಾಯಣಕಿಂಕರಿ
ಶ್ರೇಯಸ್ಕರಿ ಸದ್ಭೂರಿದೆ ೩

೩೪೫
ಶ್ಯಾಮಸುಂದರ ಶ್ರೀಮಾಧವ
ಕಾಮಿಸುವಳಾ ಕಾಮಿನಿಯು ಪ.
ಭಾಮಾಮಣಿಯು ನಿನ್ನನೀಕ್ಷಿಸದೆ
ಯಾಮಯಾಮಕೆ ತಾಮಸಗೊಂಬಳುಅ.ಪ.
ಚಂದನಾದಿ ಸೌಗಂಧಕುಸುಮ ವಿಷ-
ದಂದವೆಣಿಸುವಳು ಚಂದ್ರಮುಖಿ
ಮಂದಾನಿಲ ಮಕರಂದ ಪಾನರಸ-
ವೊಂದನೊಲ್ಲಳ ಪ್ರಿಯಸಖಿ
ನಂದನ ಕಂದನೆ ವಂದನೆ ವಲ್ಲಭಗೈವಳು ೧
ಹಾರ ಹೀರ ಬಂಗಾರ ಭೂಷಣವ
ಭಾರವೆಂದು ಶೃಂಗರಿಸಳು
ಕೀರಕೀಕಿ ಪಿಕ ಚೀರುಸ್ವನ ಶರ-
ಧಾರೆಯೆಂದು ತಾ ಸೈರಿಸಳು
ಕಾರುಣ್ಯವಾರಿಧೆ ಬಾರದೆ ಬಾಯಾರಿರುವಳು ೨
ಮೀನಧ್ವಜನುರುಬಾಣದುರುಬೆಗೆ
ಕ್ಷೀಣವಾಗಿಹಳು ಮೀನಾಕ್ಷಿ
ಭಾನುತೇಜ ಲಕ್ಷ್ಮೀನಾರಾಯಣ
ಧ್ಯಾನಿಸುವಳು ನಿನ್ನ ಪ್ರಾಣಸಖಿ
ಮಾನಾಭಿಮಾನಾಧೀನವನಿನ್ನೊಳಗಿಟ್ಟಿಹಳು ೩

೩೨೧
(ಮಂಗಳೂರಿನ ಗಣೇಶನನ್ನು ನೆನೆದು)
ಶ್ರೀ ಗಜವಕ್ತ್ರ ಪವಿತ್ರ ನಮೋ ಮನುಮಥಜಿತಸುತನಯ ಪ.
ಬಾಗುವೆ ಶಿರ ಶರಣೌಘಶರಣ್ಯ ಸು-
ರೌಘಸನ್ನುತ ಮಹಾಗುಮ ಸಾಗರ ಅ.ಪ.
ಸಿದ್ಧಸಮೂಹಾರಾಧ್ಯ ಪದದ್ವಯ ಶೋಭ ಸೂರ್ಯಾಭ
ಶುದ್ಧಾತ್ಮ ಫಣಿಪಬದ್ಧ ಕಟಿ ವಿಗತಲೋಭ
ಹೃದ್ಯಜನದುರಿತಭಿದ್ಯ ವಿನಾಯಕ
ವಿದ್ಯಾದಿ ಸಕಲ ಬುದ್ಧಿಪ್ರದಾಯಕ೧
ಏಕದಂತ ಚಾಮೀಕರ ಖಚಿತ ವಿಭೂಷ ಗಣೇಶ
ಪಾಕಹ ಪ್ರಮುಖ ದಿವೌಕಸಪೂಜ್ಯ ವಿಲಾಸ
ಶೋಕರಹಿತ ನಿವ್ರ್ಯಾಕುಲ ಮಾನಸ
ಲೇಖಕಾಗ್ರಣಿ ಪರಾಕೆನ್ನ ಬಿನ್ನಪ ೨
ವರಮಂಗಲಪುರ ಶರಭಗಣೇಶ್ವರ ಧೀರ ಉದಾರ
ಸುರುಚಿರ ಶುಕ್ಲಾಂಬರಧರ ವಿಘ್ನವಿದಾರ
ಹರಿ ಲಕ್ಷ್ಮೀನಾರಾಯಣಶರಣರ
ಗುರು ಗುಹಾಗ್ರಜ ಮನೋಹರ ಸುಚರಿತ ೩

೩೬೩
ಶ್ರೀ ಸೀತಾಪತಿದಾಸವರ್ಯ ಜೀ-
ವೇಶ ನಿಜ ವಿಲಾಸ ಪ.
ಭಾಸುರ ಮಣಿಗಣಭೂಷಣ ದಿತಿಸುತ-
ಭೀಷಣ ಸಜ್ಜನಪೋಷಣ ಕಪಿವರ ಅ.ಪ.
ಕಂಜಸಖೋಪಮ ಕಮಲಾನನಾನತ
ಸಂಜೀವನ ಹನುಮಾ
ಮಂಜುಳ ವಜ್ರಶರೀರ ವೀರ ಹರಿ-
ರಂಜನಾಂಜನಾಸುತ ಸದ್ಗುಣಯುತ೧
ನಿಗಮಾಗಮ ಪಾರಂಗತ ರಾಮಾ-
ನುಗ ಪಾವನರೂಪ
ಭಗವಜ್ಜನ ಭಾಗ್ಯೋದಯ ಭಾರತಿ
ದೃಗುಚಕೋರಚಂದ್ರಮ ತ್ರಿಗುಣಾತ್ಮಕ ೨
ಅಜಪದನಿಯತ ಭೂಭುಜಪತಿ ಪಾಂಡುತ-
ನುಜ ಸುರವ್ರಜವಿನುತ
ಕುಜನಧ್ವಾಂತನೀರಜಸಖ ಗರುಡ-
ಧ್ವಜಶರಣ್ಯ ಶಾಶ್ವತ ತ್ರಿಜಗನ್ಮಯ ೩
ವರಕಾರ್ಕಳಪುರ ಗುರು ವೆಂಕಟಪತಿ
ಚರಣಾಗ್ರೇ ವಿರಾಜ
ಹರಿ ಲಕ್ಷ್ಮೀನಾರಾಯಣ ನಿಜಪದ
ಶರಣಭರಣಯುತ ಕರುಣಾಕರ ೪

೩೪೬
(ಕಾರ್ಕಳದ ವೆಂಕಟೇಶನನ್ನು ನೆನೆದು)
ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲ ಪಾಹಿ ಪ.
ಭಾನುಕೋಟಿ ಸಮಾನ ಭಾಸಿತ ದಾನವ ವಿಪಿನ ನ-
ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ.
ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದ
ದಾಸಜನರಭಿಲಾಷೆಯನು ಸಂತೋಷದಿ ಕೊಡಲು-
ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತ
ಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯ
ರಾಸಿಗಳಿಸಿ ಜಗದೀಶ ಪರೇಶ ಮ-
ಹೇಶವಿನುತ ನಿರ್ದೋಷ ಜಗನ್ಮಯ ೧
ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ-
ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ-
ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ-
ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ-
ಮೂರ್ತಿಧರಿಸಿ ಜನರರ್ತಿಯ ಸಲಿಸುವ
ಚಿತ್ತಜಜನಕ ಸರ್ವೋತ್ತಮ ನಿರುಪಮ ೨
ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ-
ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ-
ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭು
ವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ-
ದಾಂಕಿತ ದನುಜಭಯಂಕರ ವರ ನಿರ-
ಹಂಕರ ನಿಜದ ನಿಷ್ಕಳಂಕಚರಿತ್ರ ೩
ಮಂದರಾಧರ ಮಾಪತೇ ಮುಖಚಂದಿರ ಮೌನಿ
ವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ-
ಸಿಂಧುಶಯನ ಮುಕುಂದ ಕಂಬುಕಂಧರ ಶೋಭಿಪ
ಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತ
ಮಂದಹಾಸ ಮುಚುಕುಂದವರದ ಗೋ-
ವಿಂದ ಸಚ್ಚಿದಾನಂದ ಉಪೇಂದ್ರ ೪
ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟ
ಧೀರಕಾರ್ಕಳಸಾರನಗರಾಧಿಕಾರನೆ ಭೂಸುರ-
ಭೂರಿವೇದಪುರಾಣಘೋಷಾದಿಹಾರನೆ ಸಂತತ
ಚಾರು ಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮ
ದಾರುಣೀಸುರರಿಂದನವರತ ಮಂಗ-
ಲಾರತಿಗೊಂಬ ಲಕ್ಷ್ಮೀನಾರಾಯಣ ಹರಿ ೫

೩೫೧
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ)
ಶ್ರೀನಿವಾಸಾಯ ನಮೋ ಪ.
ಶ್ರೀನಿವಾಸಾಯ ಶತಭಾನುಪ್ರಕಾಶಾಯ
ಶ್ರೀನಿವಾಸಾಯ ನಿಜ ಭಕ್ತಜನಪೋಷಾಯ
ಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ.
ದೋಷಗಂಧವಿದೂರ ಕೇಶಿಮುಖದಾನವ ವಿ-
ನಾಶವಿಧಿಭವಸುಖನಿವಾಸ ವಾಸುಕಿಶಯನ
ವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷ
ದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ-
ಭೂಷ ಭೂತಾತ್ಮ ಭವಪಾಶಹರ ಪರತರ ದ-
ಯಾ ಸಮುದ್ರ ವಿನಿದ್ರ ಭೂಶಯನ ಭೂರಿಪ್ರದ
ಕೇಶವಾಯ ನಮೋನಮಃ೧
ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶ
ಸಾರಭೋಕ್ರ‍ತಸ್ವತಂತ್ರ ಚಾರುಷಡ್ಗುಣಭರಿತ
ನಾರದಾದಿಮುನೀಂದ್ರವಾರ ಸನ್ನುತ ಪಾದನೀರರುಹದ್ವಂದ್ವನೆ
ವಾರಿಜಾಸನಮುಖ್ಯ ಸುರರು ತಿಳಿಯರು ನಿನ್ನ
ಭೂರಿಮಹಿಮೆಗಳ ಸಾಕಾರವನು ಬಣ್ಣಿಸುವ
ಧೀರನಾವನು ಮಹಾ ವೀರ ವಿಶ್ವಾಧಾರ
ನಾರಾಯಣಾಯ ನಮೋ ೨
ವೇದವೇದ್ಯನೆ ದುರಿತಶೋಧನೆ ದೈತ್ಯಗಣ-
ಛೇದಕನೆ ಸುರಸುಪ್ರಸಾದಕನೆ ಭಕ್ತಜನ-
ಮೋದದಾಯಕ ಸ್ವಗತ ಭೇದವರ್ಜಿತ
ಸಮಾನಾಧಿಕ್ಯರಹಿತ ಸತತ
ಆದಿತ್ಯ ಶತಕೋಟಿತೇಜೋವಿರಾಜ ಮಹ-
ದಾದಿಕಾರಣ ಮಧುವಿರೋಧಿ ಮಂಗಲಸುಖಾಂ-
ಬೋಧಿ ಪದ್ಮಾಲಯವಿನೋದಿ ರಾಧಾರಮಣ
ಮಾಧವಾಯ ನಮೋನಮಃ ೩
ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು-
ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ-
ನಂದ ಭರಿತ ಕಾಳಿಂದೀರಮಣ ರಾಮಚಂದ್ರ ಸನ್ನುತ ಮಹೇಂದ್ರ
ವಂದಾರುಜನತ್ರಿದಶಮಂದಾರ ಕೋಮಲಿತ
ವೃಂದಾವನವಿಹಾರ ಕಂದರ್ಪಜನಕ ಬಾ-
ಳೇಂದುಶೇಖರಸಖ ಸನಂದನಾರ್ಚಿತ ಶ್ರೀಗೋವಿಂದಾಯ
ತುಭ್ಯಂ ನಮಃ ೪
ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷ
ಮುಷ್ಟಿಕಾಸುರವೈರಿ ಮುನಿಜನಮನೋಹಾರಿ
ಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇ
ಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆ
ತುಷ್ಟಿಯನು ನೀನಿತ್ತು ಸಲಹೊ ಸಾಮಜವರದ
ಬೆಟ್ಟದೊಡೆಯನೆ ಕೃಪಾದೃಷ್ಟಿಯಿಂದಲಿ ನೋಡು ವಿಷ್ಣವೇ
ತುಭ್ಯಂ ನಮೋ ೫
ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತ
ಬುಧಜನಪ್ರಿಯ ಭೂತಭಾವನ ಜಗನ್ನಾಥ
ಪದುಮಾಕ್ಷ ಪಾಂಡವಪ್ರತಿಷ್ಠಾಪನಾಚಾರ್ಯ
ಮದನಕೋಟಿಸ್ವರೂಪ
ವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ-
ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸ
ವಿಧುಮಂಡಲಸ್ಥ ಸದ್‍ಹೃದಯಪಂಕಜವಾಸ
ಮಧುಸೂದನಾಯ ನಮೋ ೬
ಅಕ್ರೂರವರದ ಸದತಿಕ್ರಮರ ಗೆಲಿದ ಹಯ-
ವಕ್ತ್ರ ವೈಕುಂಠಾಖ್ಯ ಪುರವಾಸ ಜಗದೀಶ
ಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನು
ಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ-
ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿ
ನಕ್ರಮದಹರನಾದ ಬ್ರಹ್ಮ ಗಂಗಾಪಿತ
ತ್ರಿವಿಕ್ರಮಾಯ ನಮೋನಮಃ೭
ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು-
ದಾಮಸಖ ಪರಿಪೂರ್ಣಕಾಮ ಕೈರವದಳ-
ಶ್ಯಾಮ ಕಲ್ಯಾಣ ನಿಸ್ಸೀಮ ಮಹಿಮನೆ
ಸುಜನಸ್ತೋಮಸುರಕಾಮಧೇನು
ಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ-
ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ-
ರಾಮ ವಿಷ್ವಕ್ಸೇನ ವಿಶ್ವತೈಜಸ
ಪ್ರಾಜ್ಞ ವಾಮನಾಯ ನಮೋನಮಃ ೮
ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ-
ರಾಧಭಂಜನ ಭವಾಂಬೋಧಿಕುಂಭಜ ಭಜಕ-
ರಾದವರನುದ್ಧರಿಪ ಬೋಧರೂಪನೆ
ಚತುಷ್ಟಾದ ಪಾವನಚರಿತನೆ
ಗಾಧಿಜಾಧ್ವರಪಾಲ ಗರುಡಧ್ವಜ ದಯಾಳು
ನಾದಬಿಂದು ಕಲಾತೀತ ರುಕ್ಮಿಣಿನಾಥ
ಬಾದರಾಯಣನೆ ನಿರುಪಾಧಿ ಮಾಯಾತೀತ
ಶ್ರೀಧರಾಯ ನಮೋನಮಃ ೯
ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ-
ಕಾಶ ಪಾಲಿತನಿಖಿಳಭೂಸುರವ್ರಜ ಮಂದ-
ಹಾಸಮುಖ ನವಕುಂದಭಾಸರದನವಿರಾಜ
ದೂಷಣಾದ್ಯ ಸುರಹರನೆ
ಈಶಪತಿಸೇವ್ಯಾಂಬರೀಶನೃಪವರದ ಪರ-
ಮೇಶ ಕೋವಳಪೀತವಾಸ ಕರ್ದಮಶುಕಪ-
ರಾಶರಾದ್ಯಮಿತಯೋಗೀಶರಕ್ಷಕ
ಹೃಷೀಕೇಶಾಯ ತುಭ್ಯಂ ನಮೋ ೧೦
ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲ
ಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ-
ಸಿದ್ಧ ಪೂಜ್ಯ ಪುಂಡರೀಕದಳಾಕ್ಷ ಬುದ್ಧ ಬುಧಜನಸುಲಭ
ಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇ
ತದ್ವೀಪವೈಕುಂಠಮಂದಿರತ್ರಯ ಸಾಧು-
ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ೧೧
ಸಾಮಗಾನವಿನೋದ ಸಾಧುಜನಸುಖಬೋಧ
ಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತ
ವ್ಯೋಮಯಾನವರೂಥ ಓಂಕಾರಭರಿತ ರಘುರಾಮ
ಸಮರಂಗ ಭೀಮ
ನಾಮಧಾರಕರ ಪರಿಣಾಮರೂಪಕ ಸುಜನ-
ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣ
ಭೌಮಪುರುಷೋತ್ತಮ ನಿಯಾಮಕನೆ ರಕ್ಷಿಸೈ
ದಾಮೋದರಾಯ ನಮೋ ೧೨
ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯ
ವೆಂಕಟಾಚಲಸದಾಲಂಕಾರ ಶೇಷಪರಿ-
ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗ
ಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತ
ಓಂಕಾರನಿಧನ ಸಾಮಕಭಕ್ತರಾನೇಕ
ಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ೧೩
ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದು
ಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯ
ಸೂಸಿಬಹ ಸಂಸಾರಸಾಗರದಿ ಮುಳುಗಿದೆನು
ನೀ ಸಲಹೊ ದೇವದೇವ
ಭೂ ಸಲಿಲ ಪಾವಕಾಕಾಶಾದಿ ಭೂತಾಧಿ-
ವಾಸ ರಾಕ್ಷಸವನಹುತಾಶ ನಾನಾ ರೂಪ-
ವೇಷಧಾರಕ ನರಾವೇಶ ಪಾಲಿಸು ಎನ್ನ
ವಾಸುದೇವಾಯ ನಮೋ ೧೪
ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲ
ವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರ
ಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನ
ರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ-
ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ-
ಬದ್ಧ ಕಮನೀಯ ರೂಪ ಸುತಪದುರಾಪ
ಪ್ರದ್ಯುಮ್ನಾಯ ತುಭ್ಯಂ ನಮಃ ೧೫
ಉದ್ಧವಾದಿ ಸಮಸ್ತ ಭಾಗವತಜನಕಮಲ-
ಮಧ್ಯಚರರಾಜಹಂಸಾಯ ಮಾನಸದ
ಶ್ರದ್ಧೆಯಂ ಕೊಟ್ಟು ರಕ್ಷಿಸು ಧೊರೆಯೆ
ಶ್ರೀಹರಿಯೆ ವೈದ್ಯನಾಥವಿಧಾತನೆ
ಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ-
ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆ
ಹೊದ್ದಿದೆನು ಮೈದೋರು ಚಿನುಮಯಾತ್ಮಕನೆ
ಅನಿರುದ್ಧಾಯ ತುಭ್ಯಂ ನಮಃ ೧೬
ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾ
ಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷ
ಪರತರಾವ್ಯಯಲೋಕಭರಿತ
ಮಂಗಲರಿತ ಗುರುತಮ ಗುಣಧ್ಯಕ್ಷನೆ
ಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದ
ಶರಭಂಗ ಮುನಿಪಾಲ ಶಮಿತದಾನವಜಾಲ
ಧುರವಿಜಯ ವಿಜಯಮೈದುನ ಕೃಷ್ಣ ರಕ್ಷಿಸೈ
ಪುರುಷೋತ್ತಮಾಯನ್ನಮೋ ೧೭
ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್-
ವಿಶ್ವತೋಮುಖ ವಿಶ್ವತೋಬಾಹು ಕರುಣಾಕ-
ಟಾಕ್ಷದಿಂ ನೋಡೆನ್ನಮ್ಯಾಲೆ
ದಯಮಾಡು ಶ್ರೀವಕ್ಷಸ್ಥಲನಿವಾಸನೆ
ಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ-
ಮೋಕ್ಷದಾಯಕ ಯಜ್ಞಮೂರ್ತಿ ರೂಪತ್ರಯ ಮ-
ಹೋಕ್ಷಧ್ವಜನಂ ಮೋಹಿಸಿದ ಮೋಹಕಲ್ಪ
ಅಧೋಕ್ಷಜಾಯ ನಮೋನಮಃ ೧೮
ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು-
ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ-
ಹಾರವಕುಲಿಶ ಶತಕೋಟಿಸದೃಶನ
ಶಿರಪ್ರಕರಧೀರ ಪ್ರಹ್ಲಾದಾಭಿವರದ
ಭೂರೀಕರರೂಪ ಭೂಮಕೀರ್ತಿಕಲಾಪ
ಸಾರವಜ್ರಸ್ತಂಭದಿಂ ಬಂದ ನಂದ ಸುಕು-
ಮಾರ ಮಾರ್ಕಾಂಡೇಯವರದ ಲೋಕಶರಣ್ಯ
ನಾರಸಿಂಹಾಯ ನಮೋ ೧೯
ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತ
ಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ-
ನ್ನಿಚ್ಛೆಯಿಂದಲಿ ಜಗವ ಪಾಲಿಸುವ
ನಿರ್ಮಿಸುವ ಆಶ್ಚರ್ಯಕೃತ ಸಲೀಲ
ಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯ
ಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ-
ಕಚ್ಛಪನೆ ಕಾಳೀಯಮರ್ದನಮಹಿತ
ಶ್ರೀಮದಚ್ಯುತಾಯ ನಮೋನಮಃ ೨೦
ಚೈದ್ಯಮಥನ ಮನೋಜ್ಞಶುದ್ಧಾತ್ಮ ಸರ್ವಜ್ಞ
ಯುದ್ಧದಲಿ ಸೈಂಧವನ ಶಿರವ ಕೆಡಹಿಸಿ ಜಯವ
ಹೊದ್ದಿಸಿದ ಪಾರ್ಥನಿಂಗೆ
ಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ-
ವಿದ್ದ ಮಾನಸವ ಪಾದದ್ವಯದೊಳಿರಿಸೈ ದ-
ಯಾದ್ರ್ರಚಿತ್ತ ಸ್ವಭಕ್ತಸಂಸಾರಿ ಕಾಯೆ
ಜನಾರ್ದನಾಯ ನಮೋನಮಃ ೨೧
ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದ
ನಂದಗೋಪನ ಕಂದನೆನಿಸಿ ಬಾಲಕತನದ
ಚಂದಮಂ ತೋರಿಸಿದ ಕುಬುಜೆಗಂಧಕೆ ಒಲಿದ
ಸುಂದರೀರಮಣ ಜಯತು
ತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ-
ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ-
ನಿಂದಾದಿ ದೋಷಗಳ ಮಾಡಿ ಬಳಲುತ್ತಿಹರ್
ಉಪೇಂದ್ರಾಯ ತುಭ್ಯಂ ನಮಃ ೨೨
ಸ್ಥಿರಚರಾತ್ಮಕ ಧೇನುಚರ ದೇವಕೀಜಠರ-
ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥ
ಪರಮತೇಜೋಮಯ ಪುರಾಣಪುರುಷೇಶ್ವರನೆ
ದುರಿತದೂರ ಗಭೀರನೆ
ನಿರತಿಶಯ ನಿಜನಿರ್ವಿಕಲ್ಪ ಕಲ್ಪಾಂತಸಾ-
ಗರದಿ ವಟಪತ್ರಪುಟಶಯನ ಪುಣ್ಯಶ್ರವಣ
ಪುರುಷನಾಮಕ ಪುಷ್ಕರಾಕ್ಷ ಶ್ರೀಕರನೆ ಜಯ
ಹರಯೇ ನಮೋನಮಸ್ತೇ ೨೩
ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ-
ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ-
ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾ
ದುಷ್ಟ ನರಕಾದಿದಾನವರ ಮರ್ದಿಸಿದ ಜಗ-
ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ-
ಶ್ರೇಷ್ಠನಂ ಘಾತಿಸಿದ ರಾಮಾನುಜನೆ
ಹರೇ ಕೃಷ್ಣಾಯ ತುಭ್ಯಂ ನಮಃ ೨೪
ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆ
ಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ-
ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜ
ಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು-
ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ-
ಶಿಕ್ಷಕ ಪರೀಕ್ಷಕನೆ ಪವನವಾಹನಲಕ್ಷ್ಮೀನಾರಾಯಣಾಯ ನಮೋ೨೫

೩೮೧
ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ-
ನಾಮ ಸರ್ವಾಂತರ್ಯಾಮಿ ಪ.
ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ-
ಸ್ತೋಮವಂದಿತ ಭೀಮಬಲ ಗುಣ-
ಧಾಮ ವರನಿಸ್ಸೀಮ ಮಹಿಮನೆ ಅ.ಪ.
ಅಂತರ್ಬಹಿವ್ರ್ಯಾಪ್ತನೆ ಸತತ ರಮಾ-
ಕಾಂತಗೆ ಪರಮಾಪ್ತನೆ
ಚಿಂತಿಪ ಭಕ್ತರ ಚಿಂತಾಮಣಿ ನಿ-
ಶ್ಚಿಂತನೊಂದೆ ಶಿರದಿ ಸಾಸವೆ-
ಯಂತೆ ಲೋಕವನಾಂತುಕೊಂಡಿಹೆ ೧
ರಾಮನ ಸೇವೆಗಾಗಿ ಲಕ್ಷ್ಮಣನೆಂಬ
ನಾಮವ ತಾಳ್ದ ಯೋಗಿ
ಯಾಮಿನೀಚರರ ನಿರ್ನಾಮಗೈದ ವೀರಲ-
ಲಾಮ ನಿರ್ಜಿತಕಾಮ ಸಜ್ಜನ-
ಪ್ರೇಮ ಭೌಮ ನಿರಾಮಯನೆ ಜಯ ೨
ಸಂಕರ್ಷಣ ಸುಗುಣಾ-ಭರಣ ನಿ-
ಶ್ಯಂಕ ವೈರಿಭೀಷಣ
ಶಂಕರಾದಿಸುರಸಂಕುಲನುತಪಾದ-
ಪಂಕಜನೆ ತಾಟಂಕಗೋಪಾ-
ಲಂಕೃತಾಂಗ ಶುಭಂಕರನೆ ಜಯ ೩
ಸಾರತತ್ತ್ವಬೋಧನೆ ಶರಣುಜನ
ವಾರಿಧಿಚಂದ್ರಮನೆ
ಘೋರಭವಾರ್ಣವತಾರಕನಮಲ ಪಾ-
ದಾರವಿಂದದ ಸೌಂದರ್ಯ ನಿಜ
ಭೂರಿ ನೇತ್ರಗಳಿಂದ ಕಾಣುವೆ ೪
ಮಂಜುಳ ನಗರೇಶನೆ ಭಕ್ತಭಯ-
ಭಂಜನ ಸುವಿಲಾಸನೆ
ಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ-
ಪುಂಜ ಭಗವದ್ಭಕ್ತಜನಮನೋ-
ರಂಜನಾತ್ಮ ನಿರಂಜನನೆ ಜಯ ೫

೪೬೦
ಶ್ರೀರಮಾಧವಾಶ್ರೀತಜನಪಾಲಿತ
ಮಾರಕೋಟಿರೂಪ ವಾರಿಧಿಶಯನ
ಮುರಾರಿ ಕೇಶವ ಶ್ರೀಮ-
ನ್ನಾರಾಯಣ ನೀರಜದಳಲೋಚನ ಪ.
ಮಾನುಷತ್ವವಾಂತ ಸಮಯದಿ
ಹೀನ ಭೋಗದ ಚಿಂತೆ ನಾನು
ನೀನೆಂಬಾಭಿಮಾನದಿ ಮನಸು ನಿ-
ಧಾನವಿಲ್ಲದೆ ಅನುಮಾನದಿಂದಿಹುದೈ
ಏನು ಕಾರಣ ಹೃದಯನಳಿದೊಳು
ನೀನೆ ನೆಲಸಿಕೊಂಡೀ ನರಯೋನಿಗೆ
ನೀನೆ ಬರಿಸಿಯವಮಾನ ಬಡಿಸುವದು
ಊನವಲ್ಲವೆ ಪದದಾಣೆ ಸತ್ಯವಿದು ೧
ಬಾಲಕತನದೊಳಗೆ ಕಾವ್ಯದ
ಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನ
ಬಾಲಭೂಷಿತಂಗಳ ಕೇಳೈ
ಶ್ರೀಲಕ್ಷ್ಮೀಲೋಲ ವೆಂಕಟರಾಯ
ಕಾಲಕಾಲಪ್ರಿಯ ಪಾಲಿಸೊಲಿದು ಕರು-
ಣಾಲವಾಲ ನತಪಾಲಶೀಲ ಮುನಿ
ಜಾಲವಂದ್ಯ ವನಮಾಲದಾರಿ ಜಗ
ಮೂಲಸ್ವರೂಪ ವಿಶಾಲ ಗುಣಾರ್ಣವ ೨
ಹಿಂದಾದುದನರಿಯೆ ಇದರಿಂ
ಮುಂದಾಗುವುದು ತಿಳಿಯೆ ಹಿಂದು
ಮುಂದಿಲ್ಲದೆ ಬಂಧನದೊಳು ಬಲು
ನೊಂದೆನೈ ನಿನಗಿದು ಚಂದವೆ ಶ್ರೀಹರಿ
ತಂದೆ ತಾಯಿ ಬಂದು ಬಾಂಧವ ಬಳಗ ನೀ
ನೆಂದು ನಿನ್ನಯ ಪದದ್ವಂದ್ವವ ಭಜಿಪಾ
ನಂದಸುಜ್ಞಾನದಿಂದೆಂದಿಗೂ ಸುಖ
ದಿಂದಿರುವಂದದಿ ತಂದೆ ನೀ ಪಾಲಿಸು ೩
ಧಾರಿಣಿಗಧಿಕವಾದ ಮೆರೆವ ಕು
ಮಾರಧಾರೆಯ ತಟದ ಚಾರುನೇತ್ರಾವತಿ
ತೀರ ಪಶ್ಚಿಮ ಭಾಗ ಸಾರಿ
ತೋರುವ ವಟಪುರದೊಳು ನೆಲಸಿಹ
ವೀರ ವೆಂಕಟಪತಿ ವಾರಿಜನಾಭ ಖ-
ರಾರಿ ತ್ರಿದಶಗಣವಾರವಂದ್ಯ ಭಾ-
ಗೀರಥೀಪಿತ ದುರಿತಾರಿ ದೈತ್ಯಸಂ-
ಹಾರಿ ಶ್ರೀಲಕ್ಷ್ಮೀನಾರಾಯಣ ಹರಿ ೪

೩೪೭
ಶ್ರೀರಾಮ ಜಯರಾಮ ಜಯತು
ಜಯತು ಸೀತಾರಾಮ ರಾಮ ಚರ-
ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮ
ಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ-
ಣಾರಿ ನೀನಲ್ಲದೆ ಯಾರಿಲ್ಲ ಗತಿ ಜಯ ರಾಮ ರಾಮ ೧
ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ-
ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮ
ಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ-
ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ ೨
ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ-
ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮ
ನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ-
ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ ೩
ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ-
ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮ
ಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ-
ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ ೪
ಮುಖ್ಯ ಸಚಿವ ಮಹಾ ಮುಖ್ಯಪ್ರಾಣನು
ಸೀತಾರಾಮ ರಾಮ ದುಷ್ಟ-
ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮ
ಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ-
ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ ೫
ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ-
ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮ
ವಾಸವ ಮುಖ್ಯ ವಿಬುಧಾಸುರನುತ
ಸೀತಾರಾಮ ರಾಮ ಸಾಧು-
ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ ೬
ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ-
ಜ್ಞಾನ ಭಕ್ತಿಭಾಗ್ಯ ನೀನಿತ್ತು ಪೊರೆ ಜಯ ರಾಮ ರಾಮ
ಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ-
ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ ೭
ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವ
ಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮ
ಬತ್ತಿಹೋಗಲಿ ಮೋಹದುತ್ತುಂಗಾರ್ಣವ
ಸೀತಾರಾಮ ರಾಮ ಪರ-
ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ ೮
ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವ
ಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮ
ಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ-
ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ ೯
ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷ
ಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮ
ದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ-
ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ ೧೦
ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ-
ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮ
ಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ-
ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ ೧೧
ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ-
ಸನ್ನ ನಿನ್ನ ಸ್ಮರಣೆಯನಿತ್ತು ಪೊರೆ ಜಯ ರಾಮ ರಾಮ
ಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣು
ಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ ೧೨
ನಿತ್ಯ ನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ-
ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮ
ಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ-
ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ೧೩
ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು-
ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮ
ಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ-
ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ ೧೪
ಅಕುಟಿಲ ಗುಣಗಳ ಪ್ರಕಟಿಸೆನ್ನೊಳು
ಸೀತಾರಾಮ ರಾಮ ವಾಯು-
ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮ
ಲಕ್ಷುಮಿನಾರಾಯಣ ತ್ರಿಕಣಕುದ್ಧಾಮನೆ
ಸೀತಾರಾಮ ರಾಮ ಬ್ರಹ್ಮಾ-
ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ೧೫

೪೧೮
ಸರಸೀರುಹಾಂಬಕಿ ನಿನ್ನ ಪಾದ-
ಸರಸಿಜಗಳ ಸ್ಮರಿಸುವೆ ಪೊರೆಯೆನ್ನ ಪ.
ಕಾಳಾಹಿವೇಣಿ ಕಲಕೀರವಾಣಿ
ಫಾಲಾಕ್ಷನ ರಾಣಿ ಪರಮಕಲ್ಯಾಣಿ ೧
ಕಣ್ಮಯಜಾತೆ ಹಿರಣ್ಮಯ ಖ್ಯಾತೆ
ಕಣ್ಮುಖ ವರಕರಿ ಷಣ್ಮುಖಮಾತೆ ೨
ಕಣ್ಮನದಣಿಯೆ ಕೊಂಡಾಡುವೆ ಪಾಡುವೆ
ಮನ್ಮನೋರಥದಾಯೆ ಚಿನ್ಮಯೆ ಚೆಲುವೆ ೩
ಕಂಬುಕಂಧರಿ ನಿನ್ನ ನಂಬಿದೆ ಶಂಕರಿ
ಕುಂಭಪಯೋಧರಿ ಶಂಭುಮನೋಹರಿ ೪
ಸಿರಿ ಕಾತ್ಯಾಯಿನಿ ಗೌರಿ ಭವಾನಿ
ಹರಿಸರ್ವೋತ್ತಮ ಲಕ್ಷ್ಮೀನಾರಾಯಣ ಭಗಿನಿ ೫

೩೭೫
ಸರಸ್ವತಿ ದೇಹಿ ಸನ್ಮತಿ ಪ.
ವಿಧಿಸತಿ ಸುವ್ರತಿ ಶ್ರೀಮತಿ ಭಾರತಿಅ.ಪ.
ನಿಗಮವೇದ್ಯನನು ನಿತ್ಯ ಪೊಗಳುತಿ
ಜಗದೀಶ್ವರಿ ಜಲಜಾಯತನೇತ್ರಿ
ಭಗವತಿ ಪವಿತ್ರಿ ಸಾವಿತ್ರಿ ಗಾಯತ್ರಿ
ಸರಸ್ವತಿ ದೇಹಿ ಸನ್ಮತಿ೧
ಶರ್ವೇಂದ್ರಪೂರ್ವ ಗೀರ್ವಾಣತತಿ
ಸರ್ವದಾಚರಿಸುವುದು ತವ ಸ್ತುತಿ
ಸದ್ಭಕ್ತಿ ವಿರಕ್ತಿ ತ್ರಿಶಕ್ತಿ ದೇವಕಿ
ಸರಸ್ವತಿ ದೇಹಿ ಸನ್ಮತಿ ೨
ಲಕ್ಷ್ಮೀನಾರಾಯಣನ ಮೂರುತಿ
ಲಕ್ಷಿಸಿ ಮನದೊಳಾನಂದದೊಳಿರುತಿ
ಗುಣವತಿ ಸುಗತಿ ಸುಧೃತಿ ವಿಧಾತ್ರಿ
ಸರಸ್ವತಿ ದೇಹಿ ಸನ್ಮತಿ ೩

೩೪೯
ಸರ್ವ ಸ್ವತಂತ್ರನು ಹರಿ ನಿಜವಾದ ದಾರಿ ಪ.
ಸರ್ವಜೀವ ಹೃದಯಾಕಾಶ ವಿಧಿ ಶರ್ಮಾದಿ ಸುರ ಕೈವಾರಿ
ಸರ್ವ ನಾಮಕ ಸದೋದಿತ ಶೌರಿ ಸರ್ವ ವಿಭೂತಿ ವಿಹಾರಿ ೧
ಸತ್ಪಾದಿಗುಣ ಪ್ರವರ್ತನಕಾರಿ ಸುಹೃತ್ತಮ ದುರಿತಾಪಹಾರಿ
ತತ್ವೇಶ ನಿಚಯಸ್ತುತ್ಯ ಮುರಾರಿ ಸತ್ಯಾತ್ಮಕ ನಿರ್ವಿಕಾರಿ ೨
ಲಕ್ಷ್ಮೀನಾರಾಯಣ ನಿರ್ಗುಣ ಸುವಿಲಕ್ಷಣ ದೀನೋದ್ಧಾರಿ
ಮೋಕ್ಷಾಶ್ರಯ ಕಲಿಕಲುಶನಿವಾರಿಸಾಕ್ಷಿರೂಪ ಗಿರಿಧಾರಿ ೩

೩೬೪
ಸಾಮಧಾನವು ಸಾಮಧಾನ ಪವಮಾನ
ಶ್ರೀಮನ್ಮಹಾಸುಗುಣಧಾಮ ಸುತ್ರಾಣ ಪ.
ಲೋಕ ಮುಳುಗುವದು ನೀನೀ ಕೆಲಸಮಂಗೈಯೆ
ಸಾಕುವವರ್ಯಾರು ಜಗದೇಕವೀರ
ಶ್ರೀಕಾಂತಸುಪ್ರೀತ ಶೋಕಮೋಹವಿಧೂತ
ಸಾಕು ಬಿಡು ಸೈರಿಸು ಪರಾಕು ಮುಖ್ಯಪ್ರಾಣ ೧
ಜಗಕೆ ನೀನಾಧರ ಜನ್ಮ ಮೃತಿಭಯದೂರ
ಚಾಗಮಾಗಮವಿಚಾರ ನಿತ್ಯಶೂರ
ಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆ
ಮಗುಚಬೇಡೈ ಧರೆಯ ಮುಗಿವೆ ನಾ ಕೈಯ ೨

೪೬೧
ಸಾಯಬೇಕೊಂದು ದಿನ ಎಲೆ ಮನ ಪ.
ಮಾಯಾಮಮತೆಯ ಜಾಯಾದಿಗಳ ಸ-
ಹಾಯವಿದ್ಧರೀ ಕಾಯವ ತೊರೆದು ೧
ಎಷ್ಟು ಬದುಕಿದು ಗಟ್ಟ್ಯಾಗಿದ್ದರೂ
ಪಟ್ಟವಾಳಿದರು ಬಿಟ್ಟೆಲ್ಲವನು ೨
ಕರ್ತ ಲಕ್ಷ್ಮೀನಾರಾಯಣನ ಪಾದ
ಭಕ್ತಿಸಾಧನೆಯೊಳ್ ನಿತ್ಯನಾಗಿರು ೩

೩೪೮
ಸಾರ ಸಾರ ಸಾರ ಹರಿಯಪಾರ ಮಹಿಮ ನಾಮ
ಘೋರಸಂಸಾರಾಬ್ಧಿಶೀಘ್ರೋತ್ತಾರನೌಕಾಧಾಮ ೧
ವಿಧಿಭವಾದ್ಯಮರೌಘ ಧ್ಯಾನಾಸ್ಪದ ಕಲ್ವದ್ರುಮ
ಪರಮಾಖಿಲ ಭಕ್ತಭವಯಕುಧರವಜ್ರೋಪಮ ೨
ಭಕ್ತಿ ಜ್ಞಾನ ವೈರಾಗ್ಯ ಭಾಗ್ಯ ನಿವೃತ್ತಿ ಸುಖ ನಿಸ್ಸೀಮ
ಕರ್ತ ಲಕ್ಷ್ಮೀನಾರಾಯಣನ ಭೃತ್ಯವರ್ಗಕ್ಷೇಮ೩

೩೨೨
ಸಿದ್ಧಿದಾಯಕ ವಿಘ್ನರಾಜ ಸುಪ್ರ
ಸಿದ್ಧ ಮಹಿಮಯೋಗಿಹೃದ್ಯ ರವಿತೇಜ ಪ.
ಬಾದರಾಯಣ ಸುಪ್ರಸಾದ ಸತ್ಪಾತ್ರ
ಶ್ರೀಧರೋಪಾಸನಶೀಲ ಸುಪವಿತ್ರ ೧
ಭೋಗೀಂದ್ರಭೂಷಣ ನಾಗೇಂದ್ರವದನ
ಭಾಗವತರ ಭಾಗ್ಯಸದನ ಜಿತಮದನ ೨
ಸರ್ವಾಪರಾಧವ ಗುರುವರ್ಯ ಕ್ಷಮಿಸಯ್ಯ
ಸರ್ವೋತ್ತಮ ಲಕ್ಷ್ಮೀನಾರಾಯಣಪ್ರಿಯ೩

೪೨೮
ಸುಬ್ಬರಾಯ ಸುಜನಪ್ರಿಯ ಕರ್ಬುರಾಂತಕ
ನಿರ್ಭಯವನು ಪಾಲಿಸಯ್ಯ ನಿರ್ಗತಮಾಯ ಪ.
ಗೌರೀಕುಮಾರ ಪಾರಾವಾರಗಭೀರ
ಮಾರನವತಾರ ತಾರಕಾರಿ ಶ್ರೀಕರ ೧
ಪಂಕಜಾಕ್ಷ ಪಾಹಿಮಾಂ ಶ್ರೀಶಂಕರಾತ್ಮಜ
ಕುಂಕುಮಾರುಣವರ್ಣ ಪೂರ್ಣಾಲಂಕೃತ ವಿರಜ ೨
ಪೃಥ್ವಿಗುತ್ತಮ ಪಾವಂಜಾಖ್ಯ ಕ್ಷೇತ್ರಮಂದಿರ
ಕರ್ತ ಲಕ್ಷ್ಮೀನಾರಾಯಣಭೃತ್ಯ ಸುಂದರ ೩

೪೨೯
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆ
ನಿರ್ಭಯವ ಪಾಲಿಸು ಪ್ರೇಮಿ ಪ.
ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-
ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕ ಅ.ಪ.
ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದ
ಸೇವೆಗಾಲಸ್ಯವ ಮಾಳ್ಪರು
ಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-
ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ ೧
ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-
ರಿಂದ ಪೂಜೆಗೊಳೈ ಷಣ್ಮುಖ
ವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷ
ಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ ೨
ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶ
ಕೇವಲ ವಿಜ್ಞಾನಪ್ರಕಾಶ
ಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-
ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ ೩

೪೩೦
ಸ್ಕಂದಗುರು ಸ್ಕಂದಗುರು ಸುರ-
ವೃಂದ ಮುನಿಜನರು ವಂದಿಪರು ಪ.
ಮಂದರಧರ ಗೋವಿಂದನ ಶರಣರ
ಸಂದೋಹಕಾವ ವೃಂದಾರಕತರು ಅ.ಪ.
ತಾಮಸರು ದ್ವೇಷ ಬೇಡುವರು
ಕಾಮಿತ ಕೇಳ್ವರು ರಾಜಸರು
ಸ್ವಾಮಿ ಶ್ರೀಹರಿಯ ಭಕ್ತಿಜ್ಞಾನವ
ಪ್ರೇಮದಿ ಕೇಳ್ವರು ಸಾತ್ವಿಕರು ೧
ವಿಘ್ನಹರನು ನಿನ್ನಗ್ರಜನು ವಿಬು-
ಧಾಗ್ರಣಿಯೆನಿಸುವೆಯೊ ನೀನು
ಉಗ್ರ ತ್ರಿಯಂಬಕತಾತನು ಖ್ಯಾತನು
ದುರ್ಗಾದೇವಿಯೆ ಜನನಿ ನಿರುಪಮಳು ೨
ತಾರಕಾಂತಕ ನಿಶ್ಯೋಕ ಲಕ್ಷ್ಮೀ-
ನಾರಾಯಣನಿಗೆ ಸಖ
ಭೂರಿನಿಗಮಾರ್ಥಸಾರ ಕೋವಿದನೆ
ಧೀರನೆ ವೀರ ಮಹಾರಣಶೂರನೆ ೩

೩೫೦
ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ ಪ.
ಕರುಣಾಕರ ನಿಜ ಶರಣ ರಕ್ಷಾಮಣಿ ತರಣಿಕೋಟಿಭಾಸುರ ಶ್ರೀನಾರಾಯಣನ ೧
ಕಾಲನವರ ಕಂಡು ಬಾಲನ ಕರೆದಗೆ ಸಾಲೋಕ್ಯವಿತ್ತ ಶ್ರೀನಾರಾಯಣನ ೨
ತರಳ ಪ್ರಹ್ಲಾದನು ಕರೆಯೆ ಕಂಬದಿ ಬಂದು ನರಮೃಗೇಂದ್ರನಾಗಿ ಪೊರೆದ ನಾರಾಯಣನ೩
ಮಾತೆಯ ಸವತಿಯ ಮಾತಿಗಾಗಿ ಬಂ- ದಾತನ ಕಾಯ್ದ ಶ್ರೀನಾಥ ನಾರಾಯಣನ ೪
ಮೊಸಳೆಯ ಬಾಧೆಗೆ ಹಸಿದು ಕೂಗಲಾಗಿ ಬಸವಳಿದಿಹನ ರಕ್ಷಿಸಿದ ನಾರಾಯಣನ ೫
ಕಾದೆಣ್ಣೆಯೊಳು ಕರುಣೋದಯದಿ ಸುಧನ್ವ- ಗಾದರಿಸಿ ರಕ್ಷಿಸಿದಾದಿನಾರಾಯಣನ ೬
ಮಾರಜನಕ ರಮಾರಮಣ ಲಕ್ಷ್ಮೀ- ನಾರಾಯಣನ ಪಾದಾರವಿಂದಯುಗ ೭