Categories
ರಚನೆಗಳು

ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ

೪೪೪
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ
ಚಪ್ಪರ ಶ್ರೀನಿವಾಸ ಪ.
ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ
ದರ್ಪಕತಾತನೆ ತಾ ಸಜ್ಜನಪ್ರೀತ ಅ.ಪ.
ಮಾಧವ ನಿನ್ನಯ ಮಹಿಮೆ ತಿಳಿಯದಪ-
ರಾಧವ ಮಾಡಿದೆ ದಾರಿದ್ರ್ಯದ
ಬಾಧೆಯಿಂದ ತವ ಪಾದ ದರುಶನದ
ಗಾದಿಯ ಕಾಣದಾದೆ ನಾ ದ್ರೋಹಿಯಾದೆ ೧
ತ್ರಾಣವಿರುವಾಗ ಕಾಣಿಕೆ ಹಾಕಿದೆ
ದೀನದಾರಿದ್ರ್ಯದ ಹೊತ್ತಿನಲಿ
ಮೇಣದರಿಂದಲಿ ತೆಗೆದು ತೆಗೆದು ಪಂಚ
ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ ೨
ಮಂದವಾರದಿಕ್ಕೊಂದೂಟವ ಸತ್ತ್ವ
ದಿಂದಿರುವಾಗ ನಾ ನೇಮಗೈದೆ
ಮಂದಭಾಗ್ಯ ಜ್ವರದಿಂದ ಪೀಡಿತನಾದ-
ರಿಂದೆರಡೂಟವನೂ ಮಾಡಿದೆ ನಾನು ೩
ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ
ಮಿನುಗುವ ಡಬ್ಬಿಯ ನಾ ಮಾಡಿದೆ
ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ
ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು ೪
ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ
ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ
ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ
ಗುಡ್ಡೆಯ ಮೇಲಿರುವ ಮಹಾನುಭಾವ ೫
ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು
ಮಂಡೆಯೊಳುರಿವುದು ಖಂಡಿತದಿ
ಪುಂಡರೀಕಾಕ್ಷನೆ ಕರುಣಾಮೃತರಸ
ಕುಂಡದೊಳ್ ಮೀಯಿಸಯ್ಯ ವೆಂಕಟರಾಯ ೬
ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ
ಕೆಡುಕು ಮಾಡುವುದೇನು ಜಡಜನಾಭ
ಕಡಲಶಯನ ಲಕ್ಷ್ಮೀನಾರಾಯಣ ನ-
ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ ೭

೩೬೯
ದಯಮಾಡಿ ನಡೆಸೆ ಶಾರದೆ ದಯಮಾಡಿ ನಡೆಸೆ ಪ.
ಹೃಯಾಂಗಣದಿ ಸದನವ ಮಾಡುತ
ವಿಧವಿಧ ನವರಸದುದಯದ ತನಕ ೧
ಭೃಂಗಕುಂತಳೆ ಕೃಪಾಪಾಂಗೆ ಬ್ರಹ್ಮಾಣಿ ಕು-
ರಂಗನಯನೆ ಶ್ರೀರಂಗಭಕ್ತಳೆ ೨
ಭೂರಿ ಶಾಸ್ತ್ರವಿಚಾರವ ಪಾಲಿಸೆ
ಧೀರ ಲಕ್ಷ್ಮೀನಾರಾಯಣನ ಸೊಸೆ ೩

೪೦೭
(ಬಪ್ಪನಾಡಿನ ದೇವಿಯನ್ನು ಕುರಿತು)
ದಯಮಾಡೆ ಬಾಗೆ ಶ್ರೀಪಂಚದುರ್ಗೆ ದಯಮಾಡೆ ಬಾಗೆ ಪ.
ದಯಮಾಡೆ ಕೇವಲ ಭಯವಿಹ್ವಲನಲ್ಲಿ
ದಯಸಾಗರೆ ಸೌಭಾಗ್ಯಸಂಪದವನ್ನು ಅ.ಪ.
ವೇದಾಂತವೇದ್ಯೆ ನಿಖಿಳಜಗದಾದಿವಿನೋದೆ
ಭೂಧರಾತ್ಮಜೆ ಸರ್ವಾಧಾರಶಕ್ತಿ ಕಲಾಧರೆ
ಮಧುರಬಿಂಬಾಧರೆ ನಿನ್ನಯ
ಪಾದವನು ಮರೆಹೊಕ್ಕೆ ಮನಸಿನ ಭೇದವನು
ಪರಿಹರಿಸಿ ಸರ್ವಾಪ-
ರಾಧಗಳ ಕ್ಷಮಿಸಮ್ಮ ಕೈಟಭಸೂದನನ ಸೋದರಿ ಮಹೇಶ್ವರಿ೧
ಅಂಬುಜಚರಣೆ ಮಾಧುರ್ಯೋರುರಂಭಾಸಮಾನೆ
ಗಂಭೀರೆ ಮೇರು ನಿತಂಬೆಸಿಂಹಮಧ್ಯೆ
ಲಂಬೋದರಪರಿರಂಭಕರಾಂಬುಜೆ
ಕುಂಭಿಕುಂಭಪಯೋಜೆ ಶೋಭಿಪ ಕಂಬುಕಂಠಿ
ಮುಖೇಂದುಪದ್ಮ ದ-
ಳಾಂಬಕಿ ಎನಗಿಂಬುದೋರೆ
ರೋಲಂಬಕುಂತಳೆ ಶುಂಭ ಮರ್ದಿನಿ ೨
ಸಿಂಧೂರನಯನೆ ನಿಖಿಲಾಮರವಂದಿತಚರಣೆ
ಸುಂದರಾಂಗಿ ಸುಮಗಂಧಿ ವಿಬುಧ ಮುನಿವೃಂದಸೇವಿತೆ
ನಿತ್ಯಾನಂದಪ್ರಕಾಶಿನಿ
ಅಂಧಕಾಸುರವೈರಿಹೃದಯಾನಂದ ಪಾರಾವಾರ ಪೂರ್ಣಮಿ-
ಚಂದ್ರೆ ಸದ್ಗುಣಸಾಂದ್ರೆ
ಸುರಥನರೇಂದ್ರವರದೆ ಮೃಗೇಂದ್ರವಾಹಿನಿ ೩
ರಜತಾದ್ರಿವಾಸೆ ಚಂಪಕನಾಸೆ ಸುಜದನೌಘಪೋಷೆ
ನಿಜದಿ ನಿನ್ನಯ ಪಾದಂಬುಜವ ನಂಬಿದೆ ತ್ರಿಜಗವಂದಿತೆ
ಮಹಾಗಜಗೌರಿ ಶಂಕರಿ
ತ್ರಿಜಗಜ್ಜನನಿ ಭಾವನಿ ಪಾರ್ವತಿ ಭುಜಗಭೂಷಣರಾಣಿ ಕಲುಷ-
ವ್ರಜವಿದಾರಿ ಮುನೀಂದ್ರ ಮನನೀರಜ
ದಿವಾಕರೆ ಮಾನಿತೋದ್ಧರೆ ೪
ತಪ್ಪು ಸಹಸ್ರವಿದ್ದರು ಮನದೊಳಿಪ್ಪುದಜಸ್ರ
ಸರ್ಪಶಯನ ಲಕ್ಷ್ಮೀನಾರಾಯಣಪ್ರೀತಿಯಪ್ಪಂತೆ ದಯೆ ಗೈಯೆ
ಜಗದಾದಿಮಾಯೆ
ಕಪ್ಪುಕಂಠನ ರಾಣಿ ವರಕಂದರ್ಪಧಿಕತರೂಪೆ ಸಾಧು ಪ-
ದ ಪ್ರಸಾದವ ಪಾಲಿಸೆನ್ನಲಿ ಬಪ್ಪನಾಡಿನ ಭದ್ರದಾಯಕಿ೫

೩೫೭
ದಿಟ್ಟ ಮುಖ್ಯಪ್ರಾಣನೆ ಜಗಜಟ್ಟಿ ಬಾ ಸುತ್ರಾಣನೆ
ಶ್ರೇಷ್ಠದನುಜಘರಟ್ಟ ಸುಗುಣವಿಶಿಷ್ಟ ಭಕ್ತಶಿಖಾಮಣಿ ಪ.
ವಾಯುಪುತ್ರ ವಿಚಿತ್ರ ಬಲಿಸುರರಾಯರಾಯರ ಗಂಡನೆ
ಪ್ರೀಯರಾಮಪದಾಬ್ಜಮಧುಕರ ಮಾಯಿಕದನಪ್ರಚಂಡನೆ ೧
ಶ್ರೀವರೋತ್ತಮ ಹನುಮ ಭೀಮಕೃಪಾವಲಂಬ ಮಹೋಜನೆ
ಪಾವಮಾನಿ ಪರೇಶ ಪದ್ಮಜ ಭಾವಿ ಯತಿಕುಲರಾಜನೆ ೨
ಶೂರಾಗ್ರಣಿ ಸುಗುಣಿ ಲಕ್ಷುಮಿನಾರಾಯಣದಾಸನೆ
ಭಾರತೀವದನಾರವಿಂದಕೆ ಸೂರ ನಿತ್ಯವಿಲಾಸನೆ ೩

೩೫೮
ಧನ್ಯನಾದೆನೀದಿನ ನಿನ್ನ ಕಂಡ ಕಾರಣ ಪ.
ಪನ್ನಗಾದ್ರಿವಾಸ ಸುಪ್ರಸನ್ನನಾದ್ದರಿಂದ ನಾ ಅ.ಪ.
ವ್ರತನೇಮ ಜಪ ತಪ ಹಿತಮಾದುದೈ ಸುತಪ
ಕೃತಿಪತಿ ತವ ಕೃಪಾಶತಧೃತಿಲೋಲುಪಾ ೧
ವಿದಿಭವಾದಿಗಳಿಂದ ವಿನಮಿತ ವಿಶ್ವಾನಂದ
ಪದುಮನಾಭ ಗೋವಿಂದ ಪವನನಯ್ಯ ಮುಕುಂದ೨
ಪ್ರೀಯ ತಪೋವಾಸನನೀಯುವ ದೇವರ ದಾನ
ತೋಯಜಾಕ್ಷ ಲಕ್ಷ್ಮೀನಾರಾಯಣ ಪರಾಯಣ ೩

೩೮೦
ನಂಬಿದೆ ನಾಗರಾಜ ಹರಿಯ ಪಾ-
ದಾಂಭೋಜಭಕ್ತಿಭಾಜ ಪ.
ಶಂಭುಶಕ್ರಾದ್ಯರು ಹಂಬಲಿಪರು ನಿನ್ನ
ತುಂಬಿದ ಜೀವಕದಂಬಾಭಿಮಾನಿಯೆ ಅ.ಪ.
ಸಾವಿರ ಜಿಹ್ವೆಯೊಳು ಹರಿಯ ಸ್ತುತಿ
ಗೈವೆ ನಿರತ ಕೃಪಾಳು
ಶ್ರೀವಾಸುದೇವನ ಕರುಣ ನಿನ್ನಲ್ಲೆಷ್ಟು
ದೇವೇಶನಾದರು ಯಾವನು ಬಣ್ಣಿಪ
ಶ್ರೀವಧೂವರನ ಕಮಲಪದ ರಾ-
ಜೀವ ಸೌಂದರ್ಯವನು ತನ್ನಯ
ಸಾವಿರಾಕ್ಷಿಗಳಿಂದ ಕಾಣುತ
ಕೇವಲಾನಂದಾಬ್ಧಿ ಮಗ್ನನೆ ೧
ಶಿರವೊಂದರಲಿ ಬ್ರಹ್ಮಾಂಡ ಸಾಸವೆಯಂತೆ
ಧರಿಸಿದೆ ಸುಪ್ರಚಂಡ
ವರ ರಘುರಾಮನಾವರಜ ಲಕ್ಷ್ಮಣನಾದೆ
ಹರಿ ಕೃಷ್ಣರಾಯನ ಪಿರಿಯನಾಗಿ ಅವ-
ತರಿಸಿ ಭೂಭಾರವನುರೆ ಸಂ-
ಹರಿಸಿ ವೇದ ಪುರಾಣ ತತ್ತ್ವವ
ಶರಣಜನರಿಗೆ ಬೋಧಿಸುವ ಮಹಾ
ಕರುಣಿ ಕಮಲಾಕಾಂತನ ಭಕ್ತನೆ ೨
ಲಕ್ಷ್ಮೀನಾರಾಯಣನ ನಿದ್ರಾಸ್ಪದ
ರಕ್ಷಿಸು ಕೃಪೆಯಿಂದೆನ್ನ
ಸಾಕ್ಷಾದಚಲರೂಪ ನಿನ್ನೊಳು ನೆಲಸಿದ
ಪಕ್ಷಿವಾಹನ ಜಗದಧ್ಯಕ್ಷ ಶ್ರೀನಿವಾಸ
ಮೋಕ್ಷ ಮಾರ್ಗಪ್ರದರ್ಶಿ ಸತತ ಮು-
ಮುಕ್ಷು ಜನಮನಹರ್ಷ ನಿರ್ಜರ-
ಪಕ್ಷ ಸುಫಲಪ್ರದ ಸದಾ ನಿರ-
ಪೇಕ್ಷ ಗುರುವರ ರಾಕ್ಷಸಾಂತಕ ೩

೩೧೫
ನಂಬಿದೆ ನಿನ್ನ ಗಣೇಶ ಜಗ-
ದಂಬಿಕಾತನಯ ವಿಶ್ವಂಭರದಾಸ ಪ.
ಲಂಬೋದರ ವಿಘ್ನೇಶ ಶರ-
ಣೆಂಬುದು ಸುರನಿಕುರುಂಬ ಮಹೇಶ ಅ.ಪ.
ತರುಣಾದಿತ್ಯಪ್ರಕಾಶ ನಿನ್ನ
ಶರಣಾಗತನಾದೆ ಮೋಹನ ವೇಷ
ಸುರುಚಿರ ಮಣಿಗಣ ಭೂಷ ಜಗ
ದ್ಗುರುವೆ ಗುಹಾಗ್ರಜ ಪೊರೆಯೋ ನಿರ್ದೋಷ ೧
ಸಂತಜನರ ಮನೋವಾಸ ಮೋಹ
ಭ್ರಾಂತಿಯಜ್ಞಾನಧ್ವಾಂತವಿನಾಶ
ಶಾಂತಹೃದಯ ಸುಗುಣೋಲ್ಲಾಸ ಏಕ
ದಂತ ದಯಾಸಾಗರ ದೀನಪೋಷ ೨
ಲಕ್ಷ್ಮೀನಾರಾಯಣನೆ ವ್ಯಾಸ ಗುರು
ಶಿಕ್ಷಿತ ಸುಜ್ಞಾನ ತೇಜೋವಿಲಾಸ
ಅಕ್ಷರ ಬ್ರಹ್ಮೋಪದೇಶವಿತ್ತು
ರಕ್ಷಿಸು ದನುಜಾರಣ್ಯ ಹುತಾಶ ೩

೩೧೪
ನಂಬಿದೆ ನಿನ್ನ ಶಾಂಭವೀಸುತ
ಲಂಬೋದರ ಗುರುವರ ಧವಳಾಂಬರಾವೃತ ಪ.
ವಿಘ್ನಭಂಜನ ವಿಶ್ವರಂಜನ
ಮಗ್ನಗೈಸಬೇಡ ಭವದಿ ನಿರ್ಗತಾಂಜನ ೧
ಭಾರ ಯಾರದು ವಿಘ್ನಹಾರಿಸುವದು
ಭಾರತಾರ್ಥ ಭಾಸ್ಕರಾಚಾರ್ಯ ನಿನ್ನದು ೨
ರಕ್ಷಣೀಯನೆ ಮುಮಕ್ಷುಪ್ರಿಯನೆ
ಲಕ್ಷ್ಮೀನಾರಾಯಣಾಂಘ್ರಿ ಲಕ್ಷಿತಾತ್ಮನೆ೩

೪೦೮
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-
ರಂಭಸೂತ್ರಳೆ ಇಂಬುದೋರಿನ್ನು ಪ.
ಅಂಬುಜಾಂಬಕಿ ಶುಂಭಮರ್ದಿನಿ
ಕಂಬುಗ್ರೀವೆ ಹೇರಂಬ ಜನನಿ ಶೋ-
ಣಾಂಬರಾವೃತೆ ಶಂಭುಪ್ರಿಯೆ ದಯಾ-
ಲಂಬೆ ಸುರನಿಕುರುಂಬಸನ್ನುತೆ ಅ.ಪ.
ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-
ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-
ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-
ಗಾರೆ ರಿಪುಸಂಹಾರೆ ತುಂಬುರು
ನಾರದಾದಿಮುನೀಂದ್ರ ನುತಚರ-
ಣಾರವಿಂದೆ ಮಯೂರಗಾಮಿನಿ
ಸೂರಿಜನ ಸುಮನೋರಥಪ್ರದೆ೧
ಮೂಲರೂಪೆ ದಯಾಲವಾಲೆ
ವಿಶಾಲಸುಗುಣಯುತೆ ಮುನಿಜನ-
ಲೋಲತರುಣಮರಾಳೆ ಸಚ್ಚರಿತೆ ನವಮಣಿ
ಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-
ಬಾಲೆ ನೀಲತಮಾಲವರ್ಣೆ ಕ-
ರಾಳಸುರಗಿ ಕಪಾಲಧರೆ ಸುಜ-
ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ ೨
ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-
ವಾಕರಾಭೆ ಪರಾಕು ಶರಣಜನೈಕಹಿತದಾತೆ ಸುರನರ-
ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-
ವಾಕುಕಾಯದಿಂದ ಗೈದಾ
ನೇಕ ದುರಿತವ ದೂರಗೈದು ರ-
ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ೩
ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-
ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-
ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-
ಲ್ಲಾಸೆ ಯೋಗೀಶಾಶಯಸ್ಥಿತೆ
ವಾಸವಾರ್ಚಿತೆ ಶ್ರೀಸರಸ್ವತಿ
ದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ೪
ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-
ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-
ವಾಮಭಾಗ ಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯ
ಶ್ರೀಮಹಾಲಕ್ಷ್ಮಿ ನಾರಾಯಣಿ
ರಾಮನಾಮಾಸಕ್ತೆ ಕವಿಜನ-
ಸ್ತೋಮಕೃತ ಪರಿಣಾಮೆ ಭೌಮೆ ಪುಲೋಮಜಾರ್ಚಿತೆ
ಸೋಮಶೇಖರಿ ೫

೪೬೭
ನಂಬಿರೈ ಕರುಣಾಂಬುಧಿ ಕೋಮಲ ಕಂಬುಕಂಧರ ಹರಿಯ ಪ.
ಯೋಗಿಮನಮುದ ರಾಗ ಮೂರುತಿಯ ದೊರೆಯ
ಪಾಲಿತ ಕೌಂತೇಯ
ಭಾಗವತ ತನಕಾಗಿ ತಾ ದಯವಗೈದ ಭರದಿಂದ ತೋರ್ವ
ಯೋಗ ಮಾಯಾಧೀಶ ಸತ್ಸಕಲಾಗಮಾರ್ಚಿತ
ಭೋಗಿಶಯನ ಸ-
ರಾಗಕಪ್ಪನಿಯೋಗಿಸುವರೆ ಮಹಾಗಿರಿಯಿಂದಲಿ ಸಾಗಿ ಬಂದನ ೧
ಮಂದವಾರದಿ ಮಿಂದು ಮಡಿಗಳನು ಉಟ್ಟು ಕಾಣಿಕೆಯನಿಟ್ಟು
ಮಂದರಾಧರ ನೀನೆ ಗತಿಯೆಂದು ಬಂದು ಕೈಮುಗಿದು ನಿಂದು
ವಂದಿಸುತ ಬಲ ಬಂದು ಚರಣದ್ವಂದ್ವಸೇವೆಯ ಕುಂದದರ್ಚಿಸಿ
ದಂದುಗವ ಬಿಡಿಸೆಂದು ಪೇಳ್ದರೆ ಮಂದಹಾಸಾನಂದವೀವನು ೨
ಕಾಸುವೀಸದ ಬಡ್ಡಿ ಭಾಷೆಯನು ಬಿಡನು ನಮ್ಮೊಡೆಯನು
ದೇಶದೇಶದಿ ಕಷ್ಟ ತರಿಸುವನು ತಾನು ಭಕ್ತರ ಕಾಯುವನು
ಘಾಸಿಯಾಗದೆ ಧನಿಯ ಹಣವನು
ಸೂಸಿ ಕರುಣಾರಾಸ ರಾಜ್ಯದ
ವಾಸವಾಗಿಹ ಒಕ್ಕಲಿಗರೆಂಬೀ ಸುಮನದಿಂ ಕೇಶವನ ಪದವ ೩
ಕಷ್ಟವಿಲ್ಲದೆ ಇಷ್ಟ ದೊರಕುವದು ನೆನೆದು
ಸುಖದಿಂ ಬಾಳುವದು
ದೃಷ್ಟಿಯಿಂದಲಿ ನೋಡು ನಮ್ಮ ದೊರೆಯ ಹರಿಯ
ಪರಿಯ ನೀನರಿಯಾ
ಸಿಟ್ಟುಮಾಡುವ ಸ್ವಾಮಿ
ನಿನ್ನೊಳಗಿಟ್ಟುಕೊಂಡರೆ ಕೆಟ್ಟು ಹೋಗುವಿ
ಒಟ್ಟುಗೂಡಿಸಿ ತಟ್ಟನೆಲ್ಲ ಮುಂದಿಟ್ಟುಯಿರೆ ಕೈಗೊಟ್ಟು ಕಾಯುವ ೪
ಮಾನನಿಧಿ ಭಕ್ತರನು ಮನ್ನಿಸುವ ನಲಿವ ಕರುಣವ ಗೈವ
ಭಾನುಕೋಟಿಪ್ರಕಾಶದಿಂದಿರುವ ಮೆರೆವ ಮಹಾನುಭಾವ
ಏನನೆಂಬೆನು ಆದಿ ಶ್ರೀಲಕ್ಷ್ಮೀನಾರಾಯಣ ತಾನೆ ಕಾರ್ಕಳ
ಸ್ಥಾನ ರಾಜಧಾನಿಯಲಿ ಮೆರೆವನನವರತದಿ ಶ್ರೀನಿವಾಸನ ೫

೩೧೬
ನಮೋ ನಮಸ್ತೇ ಉಮಾತನಯ ಕುಮಾರಾಗ್ರಜ ಪ.
ಅಮೋಘ ಶಮದಮಾದಿಗುಣ
ಸಮೂಹ ಗತವಿಮೋಹ ಸದಾ ಅ.ಪ.
ಭಾರತವ ಬಾದರಾಯಣನು ಪೇಳಿದಂತೆ ಬರೆದೆ ಭಾರತವ
ಮಾರಜ ಭ್ರಮೆಯ ದೂರಗೈದ ಸುವಿ-
ಚಾರಧೀರ ಸುರವಾರವಿನುತ ಪದ ೧
ವಂದಿಸುವೆ ವೃಂದಾರಕೇಂದ್ರ ಯೋಗೀಂದ್ರ
ತವಚರಣಕೆ ವಂದಿಸುವೆ
ವೃಂದಾರ ಮಂದಾರ ಚಂದನಚರ್ಚಿತ
ಚಂದ್ರಚೂಡ ಮನೋನಂದ ಮೂರುತಿಯೆ ೨
ಸುಕ್ಷೇಮವ ಸುಜನ ಪಕ್ಷಪಾವನ
ಮುಮುಕ್ಷುಜನಪ್ರಿಯ ಸುಕ್ಷೇಮದ
ಲಕ್ಷ್ಮೀನಾರಾಯಣ ಲಕ್ಷಿತಾತ್ಮನೆ ವಿ-
ಪಕ್ಷರಕ್ಷೋಗಣಶಿಕ್ಷ ಸೂಕ್ಷ್ಮ ಮತೆ ೩

೩೯೮
ನಮೋ ನಮೋ ಕಾಲಭೈರವ ಹರಿಯ ಚರಣ-
ಸಮೀಪದೊಳಗಿದ್ದು ಮೆರೆವ ಪ.
ಸಮೀಚೀನಜ್ಞಾನಭಕ್ತ-
ಸಮೂಹವ ಕಾವ ಲಕ್ಷ್ಮೀ-
ರಮಣನ ಕಾರ್ಯಮಂತ್ರಿ-
ಯು ಮಾಧವನ ಸಮಾನಬಲ ಅ.ಪ.
ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ-
ಮುಟ್ಟಿ ಭಜಿಪ ವೈರಿಮರ್ದನ
ಸೃಷ್ಟಿ ಮೂರರಲ್ಲಿ ಕೀರ್ತಿ-
ಪಟ್ಟ ದಿಟ್ಟ ಧೀರ ಪರಮ
ನಿಷ್ಠ ಪುಷ್ಪ ತುಷ್ಟಿಪ್ರದ ಬ-
ಲಿಷ್ಠ ಶ್ರೇಷ್ಠ ಭೂತಪತಿಯೆ ೧
ಶ್ರೀನಿವಾಸನಾಜ್ಞೆ ಮೀರದೆ ನಡೆಸುವದೆ ಪ್ರ-
ಧಾನ ಕಾರ್ಯ ನಿನ್ನದೆಂಬುದೆ
ತಾನು ಕಿಂಚಿದರಿತು ಸನ್ನಿ-
ಧಾನವನ್ನೋಲೈಸಿ ಬಂದೆ
ದೀನಬಂಧು ಸುಗುಣಸಿಂಧು
ಮಾನತ್ರಾಣವಿತ್ತು ಸಲಹೊ ೨
ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆ
ಸ್ವಂತ ಬಂದು ಮಾಡು ರಕ್ಷಣೆ
ಅಂತ್ಯಕಾಲದಲ್ಲಿ ಹರಿಯ
ಚಿಂತನೆಗೆ ವಿಘ್ನ ಬಾರ-
ದಂತೆ ಕಾವ ಮಹಾ ತೇಜೋ-
ವಂತ ಹೊಂಕಾರಿ ಸೂರಿ ೩
ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟ
ಪಾಲಿಸುವ ಚಂದ್ರಶೇಖರ
ಖೂಳ ಜನರ ಗರ್ವಮುರಿವ
ಶೂಲಪಾಣಿ ಸುಗುಣಶ್ರೇಣಿ
ಮೂಲಪತಿಯ ಪಾದಪದ್ಮ
ಮೂಲದೊಳಗೆ ನಲಿವ ಚೆಲುವ ೪
ತೋರಿಕೊಳ್ಳದೆ ಭೂರಿ ಮಹಿಮೆಯ ಭಕ್ತರಿಂಗಾ-
ಧಾರವಾಗಿ ರಾಜಿಸಿರುವೆಯ
ಧೀರ ಲಕ್ಷ್ಮೀನಾರಾಯಣನ
ಸೇರಿದಾನತರ್ಗೆ ಮಂ-
ದಾರ ಮಹೋದಾರ ಗಂ-
ಭೀರ ಧೀರ ಚಾರುಚರಿತ ೫

೪೩೫(ಅ)
ನಮೋ ಯತಿಕುಲಶಿಖಾಮಣಿಯೆ ಸುಗುಣನಿಧಿಯೆ
ಮತಿಮತಾಂವರ ಮಾನಿನೇ ಪ.
ಭುವನೇಂದ್ರತೀರ್ಥ ಯತಿಪ್ರವರಕರಸಂಜಾತ
ಸುವಿವೇಕಿ ವರದೇಂದ್ರಕರಸಂಭವಾಯ
ಅವಿಕಳಾನಂದ ವೈಷ್ಣವನಿವಹ ಗೀರ್ವಾಣ ತ-
ರವ ಸುಕೃತೇಂದ್ರ ಸದ್ಗುರುವೆ ನಮೋಸ್ತುತೇ೧
ಕಾಶೀಮಠಾದಿಪತಿಯೇ ಸುಸನ್ಯಾಸಿ
ಯೇ ಸ(ತ್ತ್ವ) ಗುಣಭೂಷಾಯ ತೇ
ವ್ಯಾಸ ರಘುಪತಿಚರಣದಾಸವತ್ಪೂಜಕ ವಿ-
ಶೇಷ ಭಕ್ತಿಜ್ಞಾನಶಾಲಿನೇ ತುಭ್ಯಂ೨
ಆಜಾನುಬಾಹುವೇ ಗೌಡಸಾರಸ್ವತ ಮ-
ಹಾಜನಸಮಾಜಮಂಡಲವಾಸಿನೇ
ರಾಜೀವನಯನಾಯ ನಮಿತಜನನಿಕರ ಸುರ
ಭೂಜಾಯ ಭೂರಿ ರವಿತೇಜಸ್ವಿನೇ ೩
ತುಷ್ಟಾಯ ಭಾಗವತನಿಷ್ಟಾಯ ದ್ವಿಜಕುಲವ
ರಿಷ್ಠಾಯ ಷಡ್ವರ್ಗಜಿಷ್ಣವೇ ತುಭ್ಯಂ
ದುಷ್ಟ ಜನ ದೂರಾಯ ಧೀರಾಯ ಭಕ್ತದ-
ತ್ತೇಷ್ಟಾಯ ಮಹತೇ ಸಹಿಷ್ಣವೇ ಮಹತೇ ೪
ಬ್ರಹ್ಮಚರ್ಯಾದಿ ವ್ರತಧರ್ಮಾತ್ಮನೇ ವಿಹಿತ
ಕರ್ಮಣೇ ಸುಕೃತೇಂದ್ರ ಶರ್ಮಣೇ ತುಭ್ಯಂ
ಬ್ರಹ್ಮಪಿತ ಲಕ್ಷ್ಮೀನಾರಾಯಣಾಂಘ್ರಿಧೃತಿ ಸು-
ನಿರ್ಮಲಾಂತಃಕರಣ ಕರುಣನೀರಧಯೇ ೫

ಈಚೆಗೆ ದೊರೆತ ಹಾಡುಗಳು
೫೦೬
ನರಹರಿಯ ನೋಡಿರೈ
ಸರಸಿಜನಾಭನ ನಿರುಕಿಸಲೀಕ್ಷಣ ಪ.
ಮನದಣಿಯಾ ನೋಡಿರೈ
ಮನಮೊರೆಯಾ ಬೇಡಿರೈ ಅ.ಪ.
ತರಳ ಪ್ರಲ್ಹಾದನ ಮೊರೆಯನು ಕೇಳಿ
ಭರದಿಂ ನರಮೃಗ ರೂಪವ ತಾಳಿ
ದುರುಳ ಹಿರಣ್ಯಕಶ್ಯಪನನು ಸೀಳಿದ
ಪರಿಯ ನೋಡಿರೈ ೧
ಭವಪಿತ ಭವನುತ ಭವತಾಡರಹಿತ
ಭವನಾಮಾಂಕಿತ ಭವಭವ ವಂದಿತ
ನವ ಮನ್ಮಥ ಶತಧೃತನ ಮೃತನೊಳ
ಮಿತ ಸಿರಿಯಾ ಬೇಡಿರೈ ೨
ಸುರನರ ಕಿನ್ನರನುತ ವಿಶ್ವಂಭರ
ಮುರಹರ ವಂದಿತ ವಳಲಂಕಾಪುರ
ವರ ಲಕ್ಷ್ಮೀನಾರಾಯಣ ನರ ಕೇ-
ಸರಿಯಾ ನೋಡಿರೈ ೩

೩೭೦
ನಲಿದಾಡಿದಳ್ ನಳಿನಾಂಬಕಿ
ಒಲಿದೆಮ್ಮನು ಸಲಹಲೋಸುಗ ಪ.
ಸುಲಲಿತ ವೀಣಾಪಾಣಿ
ಜಲಜೋದ್ಭವರ ಮಣಿ ಸುಗುಣಿ ಅ.ಪ.
ಕೃತೀಶಸುತೆ ಕೃಪಾನ್ವಿತೆ
ಶ್ರುತಿಸಮ್ಮತಗೀತೆ
ಪ್ರತಿರಹಿತೆ ಸತಿಪೂಜಿತೆ
ರತಿಯಾಮಿತ ಶೋಭಿತಳೆ ಧೃತಿ ಸಂಭೃತೆ ಮತಿದಾಯಕಿ೧
ಇಭೇಂದ್ರಗಮೆ ವಿಧುಮಂಡಲ-
ನಿಭಮುಖಿ ಶಿಖಿಯಾನೆ
ಅಭಯಪ್ರದೆ ಅಖಿಳೇಶ್ವರಿ
ಸುಭಜೆ ಶುಭದೆ ವಿಬುಧೆ ಅಭವೆ ಸದ್‍ವಿಭವಾಸ್ಪದೆ ೨
ಪರಾಂಬರಿಸು ಪದಾಶ್ರಿತನ
ಪ್ರಭಾಕರಶತಾಭೆ
ಹರಿ ಲಕ್ಷ್ಮೀನಾರಾಯಣ-
ಶರಣೆ ರತುನಾಭರಣೆ ಕರುಣಾರಸವರುಣಾಲಯೆ೩

೩೭೧
ನಲಿನಲಿದು ಬಾ ತ್ರಿಜಗದಾಂಬೆ ಪ.
ಮಾನಸದೊಳು ಸುಜ್ಞಾನಬೋಧಳಾಗಿ
ಆತನದೇವಕದಂಬೆ ಅ.ಪ.
ವಿದ್ಯಾ ಬುದ್ಧಿ ವಿನಯ ಮಂಗಳಗಳ
ಸಾಧ್ವಿ ನಿನ್ನಲಿ ಬೇಡಿಕೊಂಬೆ೧
ನಲಿದೆನ್ನಯ ಜಿಹ್ವಾಗ್ರದಿ ನೆಲಸುತ
ಸುಲಭದೋರೆಯೆ ಸುಲಲಿತವ ಶಿವೆ ೨
ಧೀರ ಲಕ್ಷ್ಮೀನಾರಾಯಣಾಶ್ರಿತೆ-
ಪರಮೇಷ್ಠಿಪರಿರಂಭೆ೩

೩೮೮
ನಿನ್ನ ಸೇರಿದೆ ಮಹಾಲಿಂಗ ಎನ-
ಗಿನ್ಯಾರು ಗತಿ ಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗ ಪ.
ನಿನ್ನಂತೆ ಕೊಡುವ ಉದಾರ ತ್ರಿಭು-
ವನ್ನದೊಳಿಲ್ಲದಕ್ಯಾವ ವಿಚಾರ
ಮುನ್ನ ಮಾರ್ಕಾಂಡೇಯ ಮುನಿಯ ಭಯ
ವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ೧
ಸರ್ವಾಪರಾಧವ ಕ್ಷಮಿಸು ಮಹಾ-
ಗರ್ವಿತರಾಶ್ರಯಕ್ಕೊಲ್ಲದು ಮನಸು
ಶರ್ವರೀಶಭೂಷ ನಿನ್ನ ಹೊರ-
ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ ೨
ಅಂತರಂಗದ ದಯದಿಂದ ಯುದ್ಧ-
ಮಂ ತೊಡಗಿದೆ ಪಾರ್ಥನೊಳತಿಚಂದ
ಪಂಥದ ನೆಲೆಯನ್ನು ತಿಳಿದು ಸರ್ವ-
ಮಂತ್ರಾಸ್ತ್ರಗಳನಿತ್ತೆಯೊ ಭಕ್ತಗೊಲಿದು
ದೊಡ್ಡದು ನಿನ್ನ ಬಿರುದು ೩
ಸಿದ್ಧಿಸು ಸರ್ವಸಂಕಲ್ಪ ಅಡ್ಡ-
ಬಿದ್ದು ಬೇಡುವೆ ನಿನಗ್ಯಾವದನಲ್ಪ
ಬುದ್ಧಿಯ ನಿರ್ಮಲಮಾಡು ನಿನ್ನ
ಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು ೪
ಅಂಜಿಕೆ ಬಿಡಿಸಯ್ಯ ಹರನೆ ಪಾ-
ವಂಜಾಖ್ಯವರಸುಕ್ಷೇತ್ರಮಂದಿರನೆ
ಸಂಜೀವನ ತ್ರಿಯಂಬಕನೆ ನವ-
ಕಂಜಾಕ್ಷ ಲಕ್ಷುಮಿನಾರಾಯಣಸಖನೆ
ಸಲಹೊ ಪಂಚಮುಖನೆ ೫

೪೬೯
ನಿರ್ಭಯವಾಗಲಿ ಯೋಗಿ ಜಿತಭೋಗಿ ಪ.
ಲಭ್ಯಸುಕೃತವಿರಭ್ಯುದಯವಾಗಿ ಅ.ಪ.
ಸತ್ಯಜ್ಞಾನ ಸುವಿರಕ್ತಿ ಹರಿಭಕ್ತಿ
ಚಿತ್ತದೊಳಿದ್ದರೆ ನಿತ್ಯಾಸಕ್ತಿ೧
ಹೊದ್ದಿದನಿವನು ಬ್ರಾಹ್ಮಣನು ನಮ್ಮವನು
ಇದ್ದರೆ ಪುಣ್ಯವು ಶುದ್ಧಾಂತಃಕರಣನು ೨
ರಕ್ಷಿಸುವದು ನಿನ್ನ ಭಾರ ಸರ್ವಾಧಾರ
ಲಕ್ಷ್ಮೀನಾರಾಯಣ ಲಕ್ಷ ನಮಸ್ಕಾರ೩

೪೬೮
ನ್ಯಾಯದ ನುಡಿ ನರಲೀಲೆಗಿದು ಬಲ್ಲವರಲಿ ಸಲ್ಲದು
ನ್ಯಾಯದ ನುಡಿ ನರಲೀಲೆಗಿದು ಪ.
ಮಾಯಾತೀತ ಮನೋಭವತಾತ ಪ
ರಾಯಣ ತವ ಗುಣ ನಾನೆಂತರಿವೆನು ಅ.ಪ.
ಬಲಿಯನು ಮೆಟ್ಟಿದ ಬಾಂಬೊಳೆ ಪುಟ್ಟಿದ ಪಾದ ಶ್ರೀದ
ಚೆಲುವೆ ರಮಾಕರನಳಿನಾಶ್ರಯಕರಮಾದ
ಜಲಜಭವಾದಿ ಸುರಾಳಿಗಳರ್ಚಿಪ
ಸುಲಲಿತ ತವ ಪದದೊಲವೆಂತರಿವೆನು ೧
ಶರಣಾಗತಜನ ದುರಿತನಿವಾರಣ ನೀನು ಇನ್ನೇನು
ತರುಣೀಮಣಿಯಳ ಸೆರೆಯನು ಬಿಡಿಸುವದಿನ್ನು
ಕರುಣಾಕರ ನಿನ್ನ ಸ್ಮರಿಸುವಳನುದಿನ
ಸ್ಥಿರಚರ ಜೀವಾಂತರ ಪರಿಪೂರ್ಣನೆ ೨
ಆಕ್ಷೇಪಿಸದಿರು ರಕ್ಷಿಸು ರಘುಕುಲಚಂದ್ರ ರಾಜೇಂದ್ರ
ಲಕ್ಷ್ಮೀನಾರಾಯಣ ಸದ್ಗುಣ ಗಣಸಾಂದ್ರ
ಈಕ್ಷಿಸು ಕರುಣಾಕಟಾಕ್ಷದಿ ಪೂರ್ವದ
ಲಕ್ಷಣ ಹೊಂದಲಿ ಲಕ್ಷ್ಮಣಾಗ್ರಜನೆ ೩

೪೦೯
ಪರಮೇಶ್ವರಿ ಪಾರ್ವತಿಸತಿ
ವರದೆ ಶ್ರೀವನದುರ್ಗಾ ಪ.
ತರುಣಾರುಣಶತಕೋಟಿ
ಕರುಣಾನನೆ ಮಾಂ ಪಾಹಿ ಅ.ಪ.
ಜಗದ್ಭರಿತೆ ಜನಾರ್ದನಿ
ಜಗದೇಕ ಶರಣ್ಯೆ
ನಿಗಮಾಗಮಶಿರೋರತುನೆ
ಮಿಗೆ ಕೈಯುಗಮಂ ಮುಗಿವೆಯಗಜೆ ಶ್ರೀಜಗದಂಬಿಕೆ ೧
ಸದಾನಂದೆ ಸರೋಜಾಕ್ಷಿ
ಸದಾವಳಿಸನ್ನುತೆ
ತ್ರಿದಶಾರ್ಚಿತೆ ತ್ರಿಗುಣಾತ್ಮಕಿ
ಸದಯೆ ಹೃದಯೆ ಮುದದಿಂ ಪದನಂಬಿದೆ ಪದುಮಾಲಯೆ ೨
ವಿರಾಜಿಸುವ ವಿಶ್ವೋತ್ತಮ
ವರಚಿತ್ರಪುರೇಶ್ವರಿ
ಹರಿಲಕ್ಷ್ಮೀನಾರಾಯಣಿ
ಕರುಣಾಭರಣೆ ಶರಣೋದ್ಧರಣೆ ಶ್ರೀಚರಣಾಂಬುಜೆ ೩

೪೫೦
ಪಾಲಿಸಯ್ಯಾ ಫಣಿಗಿರಿವಾಸಜೀಯಾ ಪ.
ಪಾಲಿಸೈ ಪಾಲಾಬ್ಧಿಶಾಯಿ ಸುಳೀನೀರದನಿಭಶರೀರ ಶ್ರೀ
ಲೋಲ ಮೋಹನಲೀಲ ದುರ್ಜನ
ಕಾಲ ಕಾಮಿತಫಲಪ್ರದಾಯಕ ಅ.ಪ.
ಮುನ್ನ ಮಾಡಿದ ಕರ್ಮದಿಂದಲಿ ಬನ್ನಪಟ್ಟೆನು ಶ್ರೀಹರಿ
ಇನ್ನು ನಿನ್ನಯ ಚರಣಯುಗವನು ನಿರ್ಣಯದಿ ನಂಬಿದ ಪರಿ
ಉನ್ನತೋನ್ನತವಪ್ಪ ತೆರದಲಿ ಮನ್ನಿಪುದು ನೀ ಕೃಪೆದೋರಿ
ಬನ್ನ ಪಡುವುದು ಸಾಕು ಸಂತತ ನಿನ್ನನೆ ನೆರೆನಂಬಿದೆನು ಹರಿ ೧
ವಾತಪಿತ್ತಕಫಾದಿ ರೋಗದ ವ್ರಾತದಿಂದ ಬಲು ನೊಂದೆನು
ಧಾತುಬಲವತಿ ತಗ್ಗಿ ಉಷ್ಣೋಪೇತದಿಂದಲಿ ಬೆಂದೆನು
ಚಾತುರ್ಥಿಕ ಜ್ವರಾತಿಶಯದಲಿ ಶೀತಸ್ಥಾನದಿ ನಿಂದೆನು
ಈ ತೆರದ ಕಷ್ಟಗಳು ಬಾರದ ರೀತಿಯಲಿ ಪರಿಹರಿಸು ಸಂತತ ೨
ನಿನ್ನನೆ ಮರೆಹೋಗುವ ತೆರದಲಿ ನಿನ್ನ ಸ್ಮರಣೆಯ ಮಾಡುವ
ನಿನ್ನ ಭಕ್ತರ ಮೇಳದಲಿ ಸಂಪನ್ನನಾಗುತ ಕೂಡುವ
ನಿನ್ನ ಮೂರ್ತಿಯ ನೊಡುವದು ಮತ್ತೆನ್ನ ಕಾಮಿತ ಬೇಡುವ
ನಿನ್ನನೇ ಧ್ಯಾನಿಸುವ ಮತಿಸಂಪನ್ನವನು ನೀನಿತ್ತು ಕರುಣದಿ ೩
ವೀರ ವೈಷ್ಣವ ಮಾರ್ಗದೊಳು ಸಂಚಾರ ಮಾಡುವ ತೆರದಲಿ
ಮಾರುತಿಯ ಚರಣಾರವಿಂದದದಿ ಸೇರಿ ನಿನ್ನನು ಧರೆಯಲಿ
ಭೂರಿ ಮಹಿಮೆಯ ವರ್ಣಿಸುವ ಸಾಕಾರ ಮತಿಯನು ಎನ್ನಲಿ
ಪ್ರೇರಿಸುತ ಕರುಣಾರಸಾಮೃತ ಬೀರಿ ಭೀತಿಯ ಪರಿಹರಿಸುತ್ತಲಿ೪
ಕೊಂಚ ಧನವನು ಕೊಟ್ಟು ಎನಗೆ ಪ್ರಪಂಚವಹ ಗೃಹ ಗೈದಿಸಿ
ಮುಂಚೆಮಾಡಿದ ಪಾಪವನು ನಿರ್ಲಚದಿಂದಲೆ ಛೇದಿಸಿ
ವಂಚಿಸುವ ಬಂಧುಗಳ ಮನವನು
ಮಿಂಚಿಯೆನ್ನೊಳು ಮೋದಿಸಿ
ಪಂಚಬಾಣನ ಪಿತನೆ ಮಂಗಳ ವಾಂಛಿತವನೆನಗಿತ್ತು ವಿಭವದಿ೫
ಕಷ್ಟದಲಿ ನಿನ್ನ ಧ್ಯಾನ ಬಾರದು ತುಷ್ಟಿಯಲಿ ನಾ ಧ್ಯಾನಿಪೆ
ಇಷ್ಟವೇ ನೀನಿತ್ತೆಯಾದರೆ ಕಷ್ಟಗಳ ನಾ ದೂಷಿಪೆ
ಶ್ರೇಷ್ಠ ಕಾರ್ಕಳ ಪುರದಿ ಭಕ್ತರ ಒಟ್ಟುಗೂಡುತ ತೋಷಿಪೆ
ಭ್ರಷ್ಟಲೋಭದ ಬಂಧುಗಳು ಎನ್ನೊಳಿಷ್ಟವಾಗುವ ತೆರದಿ ದ್ರವ್ಯವ೬
ಕಾಲಭೈರವ ಪೇಳಿದಂದದಿ ನಾಲಿಗೆಯೊಳು ತಪ್ಪು ನೋಡದೆ
ಪಾಲಿಸುತ ಇಷ್ಟಾರ್ಥವನು ಕೈ ಮೇಳವಿಸು ತಪ್ಪು ನೋಡದೆ
ನೀಲಗಿರಿ ಸಮನಾಗಿ ಕಾರ್ಕಳದಾಲಯವ ನೀ ಮಾಡಿದೆ
ಲೋಲ ಲಕ್ಷ್ಮೀನಾರಾಯಣಾಶ್ರಿತಪಾಲ
ಪಡುತಿರುಪತಿ ಪುರೇಶನೆ ೭

೪೭೦
ಪಾಲಿಸು ನಮ್ಮನು ಪರಬ್ರಹ್ಮ ಶ್ರೀ-
ಲೋಲಾನಂತ ಗುಣಾಲಯನೇ ಪ.
ನೀಲಾಭ್ರದಾಭ ಕಾಲನಿಯಾಮಕ
ಮೂಲೇಶ ಪುರುಷ ಮೂರ್ಲೋಕಾಧಿಪ ಅ.ಪ.
ಉತ್ತಮ ಗುಣಗಳು ಬತ್ತಿಪೋದುವೈ
ದೈತ್ಯರ ಗುಣವು ಪ್ರವರ್ಧಿಪುದು
ಚಿತ್ತಸಾಕ್ಷಿ ತವ ಭಕ್ತಿಕಥಾಮೃತ
ನಿತ್ಯ ನಿತ್ಯ ಸವಿಸುತ್ತ ಹಿಂಬಾಲಿಸೆ೧
ಭಾಗವತ ಜನರ ಯೋಗಕ್ಷೇಮ ಸಂ
ಯೋಗೋದ್ಯೋಗಿ ನೀನಾಗಿರಲು
ಕೂಗುವಾಸುರರ ಕೂಡೆ ಕೂಡಿಸದೆ
ಭೋಗಿಶಯನ ಭವರೋಗಭೇಷಜನೆ ೨
ಪಾವನಕರ ನಾಮಾವಳಿ ವರ್ಣಿಪ
ಸೇವಕ ಜನರ ಸಂಭಾವಿಸುವ
ಕೇವಳಾನಂದ ಠೀವಿಯ ಪಾಲಿಸು
ಶ್ರೀವಾಸುದೇವ ದೇವಕೀತನಯ] ೩
ಶುದ್ಧತಮೋಗುಣಬದ್ಧ ದೈತ್ಯ ಪ್ರ-
ಸಿದ್ಧರಾಗಿಹರು ಮದ್ಯಪರು
ಬುದ್ಧಿಜ್ಞಾನ ಸಮೃದ್ಧಿ ಭಕ್ತಿಯಿಂ-
ದುದ್ಧರಿಸೈ ಗುರು ಮಧ್ವವಲ್ಲಭನೆ ೪
ಕೇಶವಾಚ್ಯುತ ಪರೇಶ ಹೃದ್ಗುಹನಿ-
ವಾಸ ವಾಸವಾದ್ಯಮರನುತ
ಶ್ರೀಶ ಶ್ರೀವೆಂಕಟೇಶ ಭಕ್ತಜನ
ರಾಶ್ರಯಸ್ಥಿತ ದಿನೇಶ ಶತಪ್ರಭ ೫
ಮಂಗಲ ಜಗದೋತ್ತುಂಗರಂಗ ಮಾ
ತಂಗವರದ ನೀಲಾಂಗ ನಮೋ
ಅಂಗಜಪಿತ ಲಕ್ಷ್ಮೀನಾರಾಯಣ
ಸಂಗೀತಪ್ರಿಯ ವಿಹಂಗ ತುರಂಗನೆ೬

೪೫೧
ಪಾಲಿಸು ಪರಮಪಾವನ ಪದ್ಮಾವತೀರಮಣ
ಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.
ನೀಲನಿಭಾಂಗನಿಖಿಲಸುರ ಮುನಿಜನಜಾಲಪಾಲ
ಪಾಹಿಪಾರ್ಥಸಾರಥಿ ಅ.ಪ.
ಮದನಜನಕ ಮಹಿಮಾಂಬುಧಿ ನಿನ್ನ
ಪದಕಮಲವ ನಾ ಸ್ಮರಿಸದೆ ಎನ್ನ
ಮದಮುಖತನವನು ಒದರುವದೆನ್ನ
ಪದುಮನಾಭ ರಕ್ಷಿಸು ನೀ ಮುನ್ನ
ಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧ
ಉದುಭವಿಸುವುದು ನಿಜವೇ ಭಕ್ತವಾತ್ಸಲ್ಯ
ಇದಕೆ ನೀ ಊನ ತರುವೆ ಸಾಕು ಈ ಮರವೆ
ಒದಗಿಸು ಸರ್ವಮನಸಿನೊಳ್ ಪುದು-
ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-
ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತ
ಮಧುಸೂದನ ಮಂದರಗಿರಿಧರ ನೀ-
ರದ ನಿಭ ನಿರ್ಮಲ ನಿಜರೂಪ ಗುಣ
ಸದನಾಚ್ಯುತ ರವಿಕುಲದೀಪ ನಿರ-
ವಧಿ ಆನಂದ ರಸಾಲಾಪ
ಬುಧಜನೋಪಲಾಲಿತ ಲೀಲಾಯತ
ಉದಧಿಶಾಯಿ ಮಾನದ ಮಧುಸೂದನ ೧
ನಾಮಸ್ಮರಣೆಯೆ ನರಕೋದ್ಧಾರ
ನೇಮವಿಲ್ಲೆಂಬುದು ನಿನ್ನ ವಿಚಾರ
ಸಾಮಾರ್ಥದ ಗುಣಕೆಲ್ಲನುಸಾರ
ಪಾಮರ ಮನಕಿದು ಈ ಗುಣಭಾರ
ಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿ
ಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬ
ಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊ
ಸಾಮಗಾನಲೋಲ ಸುಜನ
ಸ್ತೋಮ ಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬ
ತಾಮಸ ಪರಿಹರಿಸಿ ಜ್ಞಾನೋದಯದ ಸದಾನಂದ
ಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆ
ನೀ ಮಾಡುವುದೆಲ್ಲವು ಸಹಜ ಗುಣ
ಧಾಮಾಶ್ರಿತ ನಿರ್ಜರಭೂಜ ಸುಜನ
ಸ್ತೋಮಾರ್ಕಾಮಿತ ವಿಭ್ರಾಜ
ಶ್ರೀಮಚ್ಛೇಷಾಚಲ ಮಂದಿರ ಸು-
ತ್ರಾಮಾರ್ಚಿತ ಸದ್ರಾಮ ಶ್ರೀರಾಮ ೨
ಉಡುವ ಸೀರೆಯ ಸೆಳೆಯಲು ದ್ರುಪಜೆಯ
ಕೊಡಲಿಲ್ಲವೆ ಬಹುವಸನ ಸಂತತಿಯ
ಹಿಡಿಯವಲಕ್ಕಿಗೆ ದ್ವಾರಕ ಪತಿಯ
ಕಡು ಸರಾಗವಾಯ್ತಿಂದಿನ ಪರಿಯ
ಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನ
ಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟ
ಕೊಡು ದಯವಿಟ್ಟು ಮುದದಿ ಕರುಣಾವುದಧಿ
ಕಡುಲೋಭಿತನ ಬಿಡು ಮಹರಾಯ
ಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತ ಕರ್ಮ
ವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯ
ಒಡೆಯ ಶ್ರೀ ಲಕ್ಷ್ಮೀನಾರಾಯಣ
ನಡುನೀರೊಳು ಕೈಬಿಡುವೆಯ ನೀ
ತೊಡಕೊಂಡ ಬಿರುದೇನಯ್ಯ ಈ
ಕಡು ಕೃಪಣತನ ಸಾಕಯ್ಯ
ಪೊಡವಿಯೊಳಗೆ ಪಡುತಿರುಪತಿಯೆಂಬ
ದೃಢಕಾರ್ಕಳದೊಡೆಯ ಶ್ರೀನಿವಾಸನೆ೩

೩೫೯
(ಮಂಗಳೂರಿನ ಪ್ರಾಣದೇವರನ್ನು ನೆನೆದು)
ಪಾಲಿಸೆನ್ನ ಪಾವಮಾನಿ ಪಾವನಾತ್ಮ ಸುಜ್ಞಾನಿ ಪ.
ಮೂರ್ಲೋಕದ ಸಚರಾಚರಜಾಲದಂತರಂಗ ಕರುಣಿ ಅ.ಪ.
ಮೂರವತಾರವ ಗೈದು ಮುರಾರಿಯ ಪೂಜಿಸಿದೆ
ಪಾರಮೇಷ್ಠಿಪದ ಪೊಂದಿದೆ ಭಾರತಿಮನೋಹರ ೧
ಪಾರಗಾಣರು ನಿನ್ನ ಮಹಿಮೆ ಫಾಲನಯನಾದಿಗಳು
ಕ್ರೂರಕರ್ಮಿಗಳೇನರಿವರು ಶ್ರೀರಾಮಶರಣ್ಯ ೨
ಪುರಹೂತಾದ್ಯಮರಾರ್ಚಿತ ಪೂರ್ವಮಧ್ವಂಸ
ಅರಿವರ್ಗಗಳತಿಕ್ರಮವ ಧಿಕ್ಕರಿಸೈ ಸುಜ್ಞಾನವಿತ್ತು ೩
ಸರ್ವಾಪರಾಧಗಳನು ಸಾಧುವರದ ಕ್ಷಮಿಸು
ಗರ್ವಹಂಕಾರವೀಯದೆ ಗಜವರದನ ಭಕ್ತಿಯಿತ್ತು೪
ಕರಣೀಕಾಗ್ರಣಿ ಮಂಗಲಪುರವರ ಪ್ರಾಣೇಶ
ವರ ಲಕ್ಷ್ಮೀನಾರಾಯಣ ಶರಣಾಗತರೀಶ ೫

೩೯೯
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತ
ಕಾಲಭೈರವ ನುತಿಪೆ ನಾ ಸತತ
ಕಾಲಕಲ್ಪಿತ ಲೀಲೆಯರಿತು ಸು-
ಶೀಲತನವನು ಮೆರೆಯಲೋಸುಗ
ಸ್ಥೂಲಸೂಕ್ಷ್ಮಾಕೃತಿಯ ಧರಿಸಿದ
ಮೂಲಿಕಾ ಶ್ರೀನಿವಾಸ ಭೈರವ ೧
ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ-
ವೀರ ಶ್ರೀರಾಮನ ಸೇತು ನೋಡುತ್ತ
ಧರೆಯ ಸಂಚರಿಸುತ್ತ ಬರುತಿರೆ
ಮಿರುಪ ಶೇಷಾಚಲ ನಿರೀಕ್ಷಿಸಿ
ಭರದಿ ಗಿರಿಮೇಲಡರಿ ಶ್ರೀಶನ
ಚರಣಕಾನತನಾಗಿ ಸ್ತುತಿಸಿದೆ ೨
ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿ
ಇರಿಸಿ ಮೆರೆಸಿದೆ ಕೀರ್ತಿಕರವಲ್ಲಿ
ತ್ವರಿತದಿಂ ನೀನೆಲ್ಲ ದೇಶದ
ಪರಿಪರಿಯ ಕಾಣಿಕೆಯ ತರಿಸುತ
ಹರಿಯ ದರುಶನಗೈವ ಮೊದಲೆ
ಹರುಷದಿಂದಲಿ ಪೂಜೆಗೊಂಬುವೆ ೩
ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿ
ಧರಿಸಿ ಮೃದುತರವಾದ ವಾಕ್ಯದಲಿ
ಕರೆಸಿ ಒಬ್ಬೊಬ್ಬರ ವಿಚಾರಿಸಿ
ಸರಸದಿಂದಲಿ ಪೊಗಳಿಕೊಳ್ಳುತ
ನರರ್ಗೆ ಸೋಂಕಿದೆ ಭೂತಪ್ರೇತದ
ಭಯಗಳನು ಪರಿಹರಿಸಿ ಪಾಲಿಪೆ ೪
ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪ
ಖ್ಯಾತ ವೆಂಕಟಪತಿಗೆ ಸಖಿಯಷ್ಪ
ಖ್ಯಾತಿಯಿಂ ದೊರೆಯಿದಿರಿನಲಿ ಸಂ-
ನಿಧಿಸನ್ನುತನಾಗಿ ಮೆರೆದಿಹೆ
ಓತು ಕರುಣದೊಳೊಲಿದು ಪಾಲಿಪ
ದಾತ ಲಕ್ಷ್ಮೀನಾರಾಯಣಾಪ್ತನೆ ೫

೪೫೨
ಪಾಲಿಸೊಲಿದು ಲಕ್ಷ್ಮೀಲೋಲ ವೆಂಕಟಪತಿ
ಪಾಲಾಬ್ಧಿಶಯನ ಕೃಪಾಳು ಪರೇಶ ಪ.
ಆಲಸ್ಯವಜ್ಞಾನಜಾಲ ಪರಿಹರಿಸು
ನೀಲನೀರದನಿಭ ಕಾಲನಿಯಾಮಕ ಅ.ಪ.
ಪ್ರೇರಕ ಪ್ರೇರ್ಯನು ಮೂರು ವಿಧ ಜೀವರಾ-
ಧಾರಾಧೇಯಾಪಾರ ಮಹಿಮನೆ
ಸಾರಭೋಕ್ತ್ರವೆಯೆನ್ನ ಘೋರ ದುರಿತಭಯ
ದೂರಮಾಡುತ ಭಕ್ತಿ ಸಾರವನೀಯುತ೧
ಪಾಪಾತ್ಮಕರೊಳು ಭೂಪಾಲಕನು ನಾ
ಕಾಪಾಡೆನ್ನನು ಗೋಪಾಲ ವಿಠಲ
ಶ್ರೀಪದದಾಸ್ಯವ ನೀ ಪಾಲಿಸು ಭವ
ತಾಪಪ್ರಭಂಜನ ಹೇ ಪರಮಾತ್ಮನೆ ೨
ಶ್ರೇಷ್ಠರ ಸಂಗವ ಕೊಟ್ಟೆನ್ನ ರಕ್ಷಿಸು
ಕಷ್ಟಪಟ್ಟೆನು ಬಹಳ ಸೃಷ್ಟಿಗೊಡೆಯನೆ
ಮುಷ್ಟಿಕಾರಿಯೆ ಎನ್ನಿಷ್ಟ ಬಾಂಧವ ನೀನೆ
ಕೃಷ್ಣಗೋವಿಂದನೆ ಬೆಟ್ಟದೊಡೆಯ ಹರಿ ೩
ಆಶೆಗೆ ಸಿಕ್ಕಿ ಹರಿದಾಸನೆಂದೆನಿಸಿದೆ
ದೋಷಸಮುದ್ರದೊಳೀಜಾಡುವೆನು
ಕೇಶವ ತವಪದ ದಾಸಜನರ ಸಹ
ವಾಸವ ಕೊಡು ಮಹಾಶೇಷಪರಿಯಂಕನೆ ೪
ಛತ್ರಪುರೈಕಛತ್ರಾಧಿಪ ನಿನ್ನ
ಪ್ರಾರ್ಥಿಸುವೆನು ಪರಮಾರ್ಥಹೃದಯದಿ
ಕರ್ತ ಲಕ್ಷ್ಮೀನಾರಾಯಣ ಗುಣನಿಧಿ ಶ್ರೀ
ವತ್ಸವಕ್ಷಸ್ಥಲ ಕೌಸ್ತುಭಾಭರಣನೆ ೫

೩೮೯
(ಮೂಲ್ಕಿಯ ಮಹಾಲಿಂಗೇಶನನ್ನು ನೆನೆದು)
ಪಿಡಿಯೆನ್ನ ಕೈಯ ಜಗನ್ಮಯ
ಪಿಡಿಯೆನ್ನ ಕೈಯಪ .
ಪಿಡಿಯೆನ್ನ ಕೈಯ ನಿನ್ನಡಿದಾವರೆಯಲ್ಲಿ
ದೃಢವಾದ ಮನವ ಬೆಂಬಿಡದೆನಗೀಯಯ್ಯ ಅ.ಪ.
ಪಾಮರಮತಿಯ ಪಾಪಾತ್ಮರ ಸೀಮಾಧಿಪತಿಯ
ಕಾಮುಕಪರದಾರಭ್ರಾಮಕತಾಮಸ-
ಧಾಮನ ಕಪಟವಿಶ್ರಾಮ ಕುಧೀಮನ
ವ್ಯೋಮಕೇಶ ಭಗತ್ಪದಾಶ್ರಿತನ ಮಮಕಾರದಲಿ ಪಾಲಿಸು
ಹೈಮವತಿಪತಿ ಕಾಮಹರ ಸುತ್ರಾಮವಂದಿತ ಸೋಮಶೇಖರ೧
ದುಷ್ಟದುರ್ಜನನ ದುರಾಚಾರ ಭ್ರಷ್ಟಜೀವನನ
ಮೆಟ್ಟಿದ ನೆಲಮುನಿಯುವನ ಕೃತಘ್ನ ಕ-
ನಿಷ್ಟಕಾಯುಷ್ಯದ ಘಟ್ಟಿಚೇತನನೆನ್ನ
ತಟ್ಟನೆ ದಯವಿಟ್ಟು ಸರ್ವಾಭೀಷ್ಟದಾಯಕನಾಗಿ ಕರುಣಾ-
ದೃಷ್ಟಿಯಿಂದಲಿ ನೋಡು ಸನ್ಮನವಿಷ್ಟರಸ್ಥ ಶಿವಾಷ್ಟಮೂರುತಿ೨
ಸತ್ಯಬಾಹಿರನ ಪ್ರಪಂಚ ಪ್ರ-ವೃತ್ತಿಯೊಳಿಹನ
ಅತ್ಯಂತ ಪಾಪಿ ಕುಚಿತ್ತ ಮದಾಂಧನು-
ನ್ಮತ್ತ ಮಾತಂಗವಿರಕ್ತಿವಿಹೀನನ
ಎತ್ತಿ ಎನ್ನತ್ತಿತ್ತ ನೋಡದೆ ಮತ್ತೆ ಕಾವ ಸಮರ್ಥರಾರೈ
ಸತ್ತ್ವನಿಧಿಸುರಮೊತ್ತ ಪೂಜಿತ ಮೃತ್ಯುಹರ ಶ್ರೀಕೃತ್ತಿವಾಸನೆ ೩
ಎಣಿಸಲು ಬೇಡ ಎನ್ನಪರಾಧ ಗಣಿತಕ್ಕೆ ಕೂಡ
ಗುಣಗಣನಿಧಿ ಲಕ್ಷ್ಮೀನಾರಾಯಣಸಖ
ದಣಿಯಲೊಲ್ಲೆ ದಯಮಾಡೆನಗೀಗಲೆ
ಫಣಿಪಕುಂಡಲ ಪಾರ್ವತೀಪತಿ ಪ್ರಣತಜನಮಂದಾರ ನಿರ್ಮಲ
ಪ್ರಣವರೂಪನೆ ಮೌಕ್ತಿಕಾಪುರ ಮಣಿಮಹಾಲಿಂಗೇಶ ಬೇಗನೆ೪

೫೦೭
ಪೊರೆಯುವುದೆಮ್ಮನು ನರಹರಿ ನೀನು
ಸ್ಮರಿಪೆವು ತವ ಪದಸರಸಿಜಗಳನು ಪ.
ತರಳ ಪ್ರಹ್ಲಾದನು ಮೊರೆಯಿಟ್ಟು ತಾನು
ಕರೆಯಲಾಕ್ಷಣ ಬಂದೆ ತ್ವರಿತದಿ ನೀನು ೧
ದುರುಳ ಹಿರಣ್ಯಕಸುರನನು ಸೀಳಿ
ಸುರರನ್ನು ಸಲಹಿದೆ ಕರುಣವ ತಾಳಿ ೨
ಮಿತ್ರ ಮಂಡಳಿ ಶತಪತ್ರಕೆ ನೀನು
ಮಿತ್ರನಂತೆಸಗು ವಿಮಿತ್ರತೆಯನ್ನು ೩
ಕಾರುಣ್ಯಾಮೃತವಾರಿಧೇ ಮೂರ್ತೇ
ವರ ಲಕ್ಷುಮಿನಾರಾಯಣ ಸತ್ಕೀರ್ತೇ ೪

೪೫೪
ಪೋಗಿ ಬರುವೆನು ಎನ್ನ ಮನೆಗೆ ಜಗದೀಶ
ಭಾಗವತಪ್ರಿಯ ಭಾಗೀರಥೀಜನಕ ಪ.
ವರುಷವರುಷಕೆ ನಿನ್ನ ದರುಶನವನಿತ್ತೆನ್ನ
ಕರುಣಿಸೈ ಶೇಷಾದ್ರಿವರ ಶ್ರೀನಿವಾಸ
ದುರಿತ ಕೋಟಿಗಳ ಸಂಹರಿಸಿ ನಿನ್ನಯ ಕರುಣಾ
ವರ ಪ್ರಸಾದವನೀಯೊ ಜನ ಮೆಚ್ಚುವಂತೆ೧
ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿ
ನಿಯಮತಿಯೀಯೊ ನೀರಜನಾಭನೆ
ದಯಮಾಡೊ ತವ ಪಾದಸೇವೆಯನ್ನಿತ್ತೆನಗೆ
ಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ೨
ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾ
ಧೀನ ನೀನೆಂಬ ಬಿರುದುಂಟಾದಡೆ
ಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನ
ಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ ೩

೩೬೦
ಪ್ರಾಣನಾಥ ನಮಾಮಿ ಸಾಷ್ಟಾಂಗ
ಪಾತುಮಾಂ ಪವಮಾನಿ ಕೃಪಾಂಗ ಪ.
ದಾತಾರ ರಘುನಾಥದೂತ ವಿಖ್ಯಾತ
ಸೀತಾಮಾತಾಪದಾಬ್ಜ ಪ್ರಣೀತಾ-
ನೇಕವಾನರಯೂಥ ಸುಶೀಲ
ಭೂತಳ ಭೂರಿಜೀವನಪಾಲ ೧
ಆಂಜನೇಯ ಸುರಂಜನ ಮೂರ್ತಿ
ಕಂಜನಾಭದಾಶ್ರಯವರ್ತಿ
ಭಂಜನಾಸುರನಿಕರ ನಿರ್ಲೇಪ
ರಂಜನಾತ್ಮ ನಿರಂಜನರೂಪ೨
ಕರಕೃತಾಂಜಲಿಮನೋಹರ ಶುಭಕಾಯ
ವರ ಲಕ್ಷ್ಮೀನಾರಾಯಣ ಪ್ರೀಯ
ಪರಮ ಪಾವನ ನೇತ್ರಾವತಿ ನದೀತೀರ
ವರ ಮಣಿಪುರಮುಖ್ಯ ಪ್ರಾಣ ಸಾಕಾರ ೩

೪೫೩
ಪ್ರಾಣಾಂತರ್ಗತಪ್ರಾಣ ಅಣು
ರೇಣುಚರಾಚರಪೂರ್ಣ ಪ.
ಕಾಣೆನು ನಿನ್ನ ಸಮಾನ ಮಾನದ ಪು-
ರಾಣಪುರುಷ ಸುತ್ರಾಣ ವರೇಣ್ಯಅ.ಪ.
ಪಂಕಜನಾಭ ಶ್ರೀವೆಂಕಟರಮಣನೆ
ಕಿಂಕರಜನಮನಃಪ್ರೇಮದನೆ
ಶಂಕರಾದಿ ಸುರಸಂಕುಲ ಸೇವಿತ
ಶಂಖ ಸುದರ್ಶನ ಗದಾಬ್ಜಹಸ್ತನೆ ೧
ಪಾಪಿಯು ನಾ ನೀ ಪಾಪಹ ಪಾವನ
ರೂಪ ಪರಾತ್ಪರ ಗೋಪಾಲ
ಕಾಪಾಡೆಮ್ಮ ಸಮೀಪಗನಾಗಿ ಜ-
ಯಾಪತಿ ಗೋಪತಿ ಶ್ರೀಪತಿ ನೀ ಗತಿ೨
ಚಟುಳ ನೇತ್ರಾವತಿತಟ ನಿಕಟ ಪ್ರಕಟ
ವಟಪುರವರ ವೆಂಕಟಧಾಮ
ವಟುವಾಮನ ಲಕ್ಷ್ಮೀನಾರಾಯಣ
ಪಟುವೀರ್ಯ ತಮಃಪಟಲನಿವಾರಣ೩

೪೧೦
ಫಣಿವೇಣಿ ಶುಕಪಾಣಿ ವನಜಾಕ್ಷಿ ರುಕ್ಮಿಣಿ ಪ.
ಈರೇಳುಲೋಕದ ಮಾತೆ ಭೂಲೋಲಭೀಷ್ಮ ಕಜಾತೆ
ಗುಣಶೀಲೆ ಗುಣಾತೀತೆ ತ್ರಿದಶಾಲಿಸನ್ನುತೆ ೧
ಶ್ರೀವಾಸುದೇವನ ರಾಣಿ ಲೋಕೇಶಮುಖ್ಯರ ಜನನಿ
ಸುಪ್ರಕಾಶಿನಿ ಕಲ್ಯಾಣಿ ಕಲಹಂಸಗಾಮಿನಿ ೨
ಸುವಿಲಕ್ಷಣೈಕನಿಧಾನಿ ಮೀನಾಕ್ಷಿ ಪಲ್ಲವಪಾಣಿ
ಸುಕ್ಷೇಮಸುಖದಾಯಿನಿ ಲಕ್ಷ್ಮೀನಾರಾಯಣಿ ೩

೪೩೩
ಬಂದನು ಸರದಾರ ಸರದಾರ
ಅಂಧಕರಿಪು ಸುಕುಮಾರ ಪ.
ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರ
ಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ೧
ವಲ್ಲೀದೇವಿಮನೋಹಾರ ಒಲ್ಲದಜನಕತಿದೂರ
ಬಲ್ಲವವೇದವೇದಾಂತದ ಸಾರ ಖುಲ್ಲದನುಜ ಸಂಹಾರ ೨
ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರ
ಲಕ್ಷ್ಮೀನಾರಾಯಣನ ಕಿಂಕರ ರಕ್ಷಿಸು ನಮಿತಕುಬೇರ ೩

೪೩೫
ಬಂದೆ ಭಗವತ್ಪಾದಯುಗಾರ
ವಿಂದಕೆ ಮಿಳಿಂದನಾಗಿ
ವಂದನೀಯರೆ ಯತಿಕುಲಾಬ್ಧಿ
ಚಂದ್ರರ ಭುವನೇಂದ್ರತೀರ್ಥರೆ ೧
ಪರಮ ಪಾವನ ಭುವನೇಂದ್ರರ
ಕರಸಂಜಾತ ವರದೇಂದ್ರರ
ಕರಸರೋರುಹಭವರೆ ಮಹಾ
ಕರುಣಾಂತಃಕರಣ ಧೀರರೆ ೨
ಸುಮತೀಂದ್ರಾದಿ ಯತೀಂದ್ರರ
ವಿಮಲ ಹೃದಯಕಮಲಭಾಸ್ಕರ
ಅಮಮ ನಿಮ್ಮ ಕಾಂಬ ಯೋಗ
ಅಮಿತ ಸುಕೃತ ಭೋಗಪೂಗ೩
ಪೂರ್ಣಪ್ರಜ್ಞಾಚಾರ್ಯವರ್ಯ
ಸನ್ನುತ ಮತಧೈರ್ಯ ಧುರ್ಯ
ಧನ್ಯನಾದೆನು ನಾನಿಂದು
ಸನ್ನಿಧಾನವನು ಕಂಡೆನು ೪
ಶ್ರೀಶ ಲಕ್ಷ್ಮೀನಾರಾಯಣ
ವ್ಯಾಸ ರಘುಪತಿಯ ಚರಣೋ-
ಪಾಸಕರೆ ಪಾವನರೆ
ಕಾಶೀವಇಠಾಧೀಶ್ವರರೆ ೫

೪೫೫
ಬಾ ದೀನವತ್ಸಲ ಲಕ್ಷ್ಮೀನಿವಾಸ ಶ್ರೀವೆಂಕಟೇಶ
ಮಾಧವ ಮಧುರಿಪು ಮಾನುಷವೇಷ ಶರಣಾಗತಪೋಷ ಪ.
ವೇದಾಗಮ್ಯ ದಯೋದಧಿ ಗೈದಪ-
ರಾಧ ಕ್ಷಮಿಸಿ ಸುಗುಣೋದಯನಾಗುತ ಅ.ಪ.
ಅನಾಥ ಜನರ ಕಾಮಧೇನು ಕಾಯೊ ಎಮ್ಮನು
ದಾನವಕಾನನಕಲ್ಪಕೃಶಾನು ಸರ್ವೋತ್ತಮ ನೀನು
ಆನತಜನ ಸುತ್ರಾಣಿಸುವಂತೆ ಪ್ರ-
ದಾನಿಯಂತೆ ಶತಭಾನು ಪ್ರಕಾಶದಿ ೧
ಕೋಟಿ ಬ್ರಹ್ಮಾಂಡವ ಕಾಯುವ ಮಹಿಮ ಸದ್ಗುಣಗಣಧಾಮ
ಹಾಟಕವಸನ ಕೈರವಶ್ಯಾಮ ಮುನಿಮನವಿಶ್ರಾಮ
ಕಾಟಕ ಮನಸಿನ ಮಾಟವ ನಿಲ್ಲಿಸಿ
ಘೋಟಕಾಸ್ಯ ನರನಾಟಕಧಾರಿ ೨
ಸೇನಾನಾಯಕನಿಲ್ಲದ ಸೇನೆ ಕಂಡರೆ ತಾನೆ
ಭೂನಾಥಗಿಲ್ಲವೇನು ಬೇನೆ ಉಂಟೆಂಬುದು ನೀನೆ
ಕಾಣಿಸದೆಮ್ಮಲಿ ಮೌನವ ಮಾಳ್ಪರೆ
ದೀನಜನರ ದುಮ್ಮಾನಗೊಳಿಸುವರೆ ೩
ಹಿಂದೆಮ್ಮ ಕಾಯ್ದವ ನೀನೆ ಹರಿ ಸುರನರ ಕೈವಾರಿ
ಮಂದಜ್ಞಾನಿಗಳ ತಪ್ಪನು ಮಾರಿ ಮೂರ್ಲೋಕೋದ್ಧಾರಿ
ಹೊಂದಿದವರಿಗೆಂದೆಂದಿಗು ಬಿಡನೆಂ-
ಬಂದವ ತೋರಿ ಆನಂದವ ಬೀರುತ ೪
ಸರ್ಪಾದ್ರಿಯಿಂದ ಓಡಿಬಂದ ಕಾರ್ಕಳದೊಳು ನಿಂದ
ಚಪ್ಪರ ಶ್ರೀನಿವಾಸ ಮುಕುಂದ ಪರಿಪೂರ್ಣಾನಂದ
ಒಪ್ಪಿಸಿದೆಮ್ಮಭಿಪ್ರಾಯವ ತಿ-
ಮ್ಮಪ್ಪ ಲಕ್ಷ್ಮೀನಾರಾಯಣ ಸಲಿಸಲು೫

೩೩೯
ಬಾ ಬಾ ಬಾ ಹರಿಯೇ ಮೂರ್ಲೋಕದ ದೊರೆಯೇ ಪ.
ಸರ್ವೋತ್ತಮ ಸರ್ವಾಂತರ್ಯಾಮಕ ಸರ್ವಾಧಾರ ಪ್ರವೀರ ಶೂರವರ ೧ ನಿತ್ಯಮುಕ್ತ ಪರಿಪೂರ್ಣಗುಣಾರ್ಣವ ಸತ್ಯನಿಯಾಮಕ ಸತ್ಯವಾದರೆ ತ್ವರೆ ೨ ರೂಪತ್ರಯ ಭವತಾಪಶಮನ ಸ- ದ್ವ್ಯಾಪಕ ಸ್ಥಾಪಕ ಶ್ರೀ ಪುರುಷೋತ್ತಮ ೩ ಭಜಕರ ಭಾಗ್ಯನಿಧಿಯು ನೀನೆಂಬುದು ನಿಜವಾಗಿರೆ ಶ್ರೀ ರುಜುಗಣೇಶಪತಿ೪ ಶ್ರೀಲಕ್ಷ್ಮೀನಾರಾಯಣ ನಿರ್ಗುಣ ಮೂಲೇಶ ಮುಕುಂದ ಮುನೀಂದ್ರವಂದಿತ ೫

೩೭೨
ಬಾರಮ್ಮ ಸರಸ್ವತಿ ಬಾ ದ್ರುಹಿಣಯುವತಿ
ಬಾ ನಿರ್ಮಲಮತಿ ತೋರಿ ಭಾರತಿ ಪ.
ಅಜನ ಪಟ್ಟದ ರಾಣಿ ಭುಜಗ ಸದೃಶ ವೇಣಿ
ಭಜಕರ ಚಿಂತಾಮಣಿ ಕೀರವಾಣಿ ೧
ವೇದಾಂತರಂಗಿಣಿ ನಾದಸ್ವರೂಪಿಣಿ
ಪ್ರಾದುರ್ಭವಳಾಗು ಸಾಧ್ವೀಕಲ್ಯಾಣಿ ೨
ಅಕ್ಷಯ ಸುಖಭಾಷೆ ಆಶ್ರಿತಕಜನಪೋಷೆ
ಲಕ್ಷ್ಮೀನಾರಾಯಣನ ಸೊಸೆ ಸುವಿಲಾಸೆ ೩

೪೩೨
ಬಾರೋ ಬಾರೋ ಮನುಕುಲಗುರುಗುಹಾ
ಸೇರಿದಾನತರ್ಗೆ ಚಾರುಸುರಭೂರುಹ ಪ.
ಮಾನಾಭಿಮಾನ ನಮ್ಮದು ನಿನ್ನಾಧೀನ
ದೀನಜನರ ಸುರಧೇನು ಮಹಾಸೇನ ೧
ಶಕ್ತಿ ಕುಕ್ಕುಟವಜ್ರಾಭಯ ಚತುರ್ಭುಜನೆ
ಭಕ್ತಿಜ್ಞಾನವನೀಯೋ ಶಂಕರಾತ್ಮಜನೆ ೨
ಲಕ್ಷ್ಮೀನಾರಾಯಣನ ಧ್ಯಾನಾಭರಣ
ಸುಕ್ಷೇತ್ರಪಾವಂಜಾಧ್ಯಕ್ಷ ರವಿಕಿರಣ ೩

೩೩೮
ಬಾರೋ ವೆಂಕಟಗಿರಿನಾಥ | ದಯ- ದೋರೈ ಭಕುತರ ಪ್ರೀತ ಪ.
ಮಾರಪಿತ ಗುಣಹಾರ ಮಂದರ- ಧಾರ ದೈತ್ಯಸಂಹಾರ ಸುಜನೋ ದ್ಧಾರ ಮಮಹೃದಯಾರವಿಂದಕೆ ಬಾರೋ ಕೃಪೆದೋರೋ ವೆಂಕಟ ಅ.ಪ.
ವೃಷಭಾಸುರನೊಳು ಕಾದಿ ಸಾ- ಹಸವ ಮೆರೆಸಿದ ವಿನೋದಿ ವಶಗೈದು ದೈತ್ಯನ ಶಿರವ ಕತ್ತ- ರಿಸುತಲಿ ನೀನಿತ್ತೆ ವರವ ವಸುಧೆಯೊಳಗಿಹ ಸುಜನರನು ಮ- ನ್ನಿಸುತಲಿಷ್ಟವನಿತ್ತು ಕರುಣಾ- ರಸದಿ ಸಲಹುವ ಬಿಸಜನಾಭ ಶ್ರೀ- ವೃಷಭಾಚಲವೊಡೆಯ ವೆಂಕಟ ೧
ಅಂಜನೆಯೆಂಬಳ ತಪಕೆ ಭಕ್ತ- ಸಂಜೀವನೆಂಬ ಶಪಥಕೆ ರಂಜಿಪ ಪದವಿತ್ತೆ ಮುದದಿ ಖಿಲ- ಭಂಜನಮೂರ್ತಿ ಕರುಣದಿ| ಮಂಜುಳಾಂಗ ಶ್ರೀರಂಗ ಸುರವರ ಕಂಜಭವವಿನುತಾದಿ ಮಾಯಾ- ರಂಜಿತಾಂಘ್ರಿ ಸರೋರುಹದ್ವಯ ಅಂಜನಾಚಲವೊಡೆಯ ವೆಂಕಟ ೨
ಶೇಷನ ಮೊರೆಯ ತಾ ಕೇಳಿ ಬಲು ತೋಷವ ಮನಸಿನೊಳ್ತಾಳಿ ದೋಷರಹಿತನೆಂದೆನಿಸಿ ಕರು- ಣಾಶರಧಿಯ ತಾನೆ ಧರಿಸಿ ಶ್ರೀಶ ಹರಿ ಸರ್ವೇಶ ನತಜನ- ಪೋಷ ದುರ್ಜನನಾಶ ರವಿಶತ- ಭಾಸ ಕೌಸ್ತುಭಭೂಷ ವರ ಶ್ರೀ- ಶೇಷಾಚಲವಾಸ ವೆಂಕಟ ೩
ಮಾಧವವಿಪ್ರ ವಿರಹದಿ ಭ್ರಷ್ಟ ಹೊಲತಿಗಳನು ಸೇರ್ದ ಮುದದಿ ಸಾದರದಲಿ ನಿನ್ನ ಬಳಿಗೆ ಬರೆ ನೀ ದಯಾನಿಧಿ ಕಂಡು ಅವಗೆ ಶೋಧಿಸುತ ಪಾಪಗಳೆಲ್ಲವ ಛೇದಿ ಬಿಸುಡುತ ನಿಂದು ವೆಂಕಟ- ಭೂಧರದ ನೆಲೆಯಾದ ನಾದವಿ- ಭೇದಬಿಂದು ಕಲಾದಿಮೂರುತಿ ೪
ಧನಪತಿಯೊಳು ತಾನು ಸಾಲ ಕೊಂಡ ಘನಕೀರ್ತಿಯಿಂದ ಶ್ರೀಲೋಲ ವನಿತೆ ಪದ್ಮಾವತಿಪ್ರೀತ ಭಕ್ತ- ಜನಸುರಧೇನು ಶ್ರೀನಾಥ ವನಧಿಶಯನ ಮುರಾರಿ ಹರಿ ಚಿ- ಧ್ವನಿನಿಭಾಂಗ ಸುಶೀಲ ಕೋಮಲ ವನಜನಾಭ ನೀಯೆನ್ನ ಕೃಪೆಯೊಳ- ಗನುದಿನದಿ ಕಾಯೊ ಕೃಪಾಕರ ೫
ಛಪ್ಪನ್ನೈವತ್ತಾರು ದೇಶದಿಂದ ಕಪ್ಪವಗೊಂಬ ಸರ್ವೇಶ ಅಪ್ಪ ಹೋಳಿಗೆಯನ್ನು ಮಾರಿ ಹಣ- ಒಪ್ಪಿಸಿಕೊಂಬ ಉದಾರಿ ಸರ್ಪಶಯನ ಕಂದರ್ಪಪಿತ ಭಜಿ- ಸಿರ್ಪವರ ಸಲಹಿರ್ಪ ಕುಜನರ ದರ್ಪಹರಿಸುತ ಕಪ್ಪಕಾಣಿಕೆ ಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ ೬
ಚಾರುಚರಣತೀರ್ಥವೀಂಟಿ ನಿನ್ನೊ- ಳ್ಸಾರಿ ಬರುವ ಪುಣ್ಯಕೋಟಿ ಸೇರಿದೆ ಕೊಡು ಮನೋರಥವ ಲಕ್ಷ್ಮೀ- ನಾರಾಯಣನೆನ್ನೊಳ್ದಯವ ತೋರು ನಿರತ ಸಮೀರಭವ ವರ- ದಾರವಿಂದದಳಾಕ್ಷ ತಿರುಪತಿ ವೀರ ವೆಂಕಟರಮಣ ಮದ್ಬಹು- ಭಾರ ನಿನ್ನದು ಪಾಲಿಸೆನ್ನನು ೭

೩೧೭
ಬಾಲಗಜಾನನ ಬಾ ಗುಣಸದನ
ಪಾಲಿತ ತ್ರಿಭುವನ ಬಾಲ ಜಗಜ್ಜೀವನ ಪ.
ರಾಧಾದೇವಿಯಾರಾಧಿಸಿದಳು ನಿನ್ನ
ಆದಿಯೊಳ್ ಕೈಕೊಂಬೆ ಮೋದದಿಂದ ಪೂಜನ ೧
ವಿಘ್ನವಿಭಂಜನ ವಿಧಿಸುರ ರಂಜನ
ಅಗ್ನಿ ಗರ್ಭನಗ್ರಜ ಅಖುವಾಹನ ಮೋಹನ೨
ಪ್ರಿಯ ಶ್ರೀ ಲಕ್ಷುಮಿನಾರಾಯಣಶರಣ
ಕಾಯೊ ಕಾಮಿತಫಲದಾಯಕ ಸುಮನ ೩

೪೨೫
ಬಿನ್ನಪ ಲಾಲಿಸಯ್ಯ ಭಕ್ತಪರಾಧ-
ವನ್ನು ಕ್ಷಮಿಸಬೇಕಯ್ಯ ಪ.
ಅನ್ಯಾಯ ಕಲಿಕಾಲಕ್ಕಿನ್ನೇನು ಗತಿ ಸುಪ್ರ-
ಸನ್ನ ನೀನಾಗು ಸುಬ್ರಹ್ಮಣ್ಯ ಪಾವನಚರಿತ ಅ.ಪ.
ಮಕ್ಕಳ ಮಾತೆಯಂದದಿ ಕಾಯುವ ಮಹ-
ದಕ್ಕರದಿಂದ ಮುದದಿ
ಸೊಕ್ಕಿನಿಂ ನಡೆವರ್ಗೆ ತಕ್ಕ ಶಿಕ್ಷೆಯನಿತ್ತು
ರಕ್ಕಸಾರಿಯೆ ಹಿಂದಿಕ್ಕಬ್ಯಾಡೆಮ್ಮನು
ದಿಕ್ಕಿಲ್ಲದವರ ಧಿಕ್ಕಾರ ಗೈದರೆ
ಮಿಕ್ಕವರೆಮ್ಮನು ಲೆಕ್ಕಿಪರಿಲ್ಲ ದೇ-
ವರ್ಕಳಮಣಿ ನಿನಗಕ್ಕಜವಲ್ಲವು
ಕುಕ್ಕುಟಧರವರ ಮುಕ್ಕಣ್ಣತನಯ ೧
ಜಾತಿ ನೀತಿಯನು ಬಿಟ್ಟು ಡಾಂಭಿಕತನದ
ರೀತಿಗೆ ಪ್ರೀತಿಪಟ್ಟು
ಸೋತು ಹಣವ ಕೊಟ್ಟು ಖ್ಯಾತರೆಂಬುವ ಗುಟ್ಟು
ಮಾತು ಮಾತಿಗೆ ತೋರಿ ಘಾತವ ಗೈವರ್ಮೀರಿ
ಯಾತುಧಾನರ ಗುಣ ಯಾತಕ್ಕರಿಯದು
ಭೂತೇಶ್ವರಸಂಜಾತ ಸುರನರ-
ವ್ರಾತಾರ್ಚಿತ ಪುರಹೂತಸಹಾಯಕ
ನೂತನಸಗುಣವರೂಥ ಪುನೀತ ೨
ಯಾವ ಕರ್ಮದ ಫಲವೋ ಇದಕಿ-
ನ್ಯಾವ ಪ್ರಾಯಶ್ಚಿತ್ತವೋ
ಯಾವ ವಿಧವೊ ಎಂಬ ಭಾವವರಿತ ಪುರುಷ
ಈ ವಸುಧೆಯೊಳಿಲ್ಲ ಶ್ರೀವಾಸುದೇವ ಬಲ್ಲ
ದೇವ ಲಕ್ಷ್ಮೀನಾರಾಯಣನ ಪಾದ
ಸೇವಕನೀ ಮಹಾದೇವನ ಸುತ ಕರು-
ಣಾವಲಂಬಿಗಳ ಕಾವ ನಮ್ಮಯ ಕುಲ-
ದೇವ ವಲ್ಲೀಪತಿ ಪಾವಂಜಾಧಿಪ ೩

೩೪೦
ಭಕುತಸಂಸಾರಿ ಹರಿ ಶಕಟಸಂಹಾರಿ ಸಕಲಾಂತರ್ಯಾತ್ಮಕ ಗಿರಿಧಾರಿ ಪ.
ಅಂತರ್ಬಹಿವ್ರ್ಯಾಪ್ತಾನಂತಾವತಾರಿ ಸಂತಜನರ ಮನೋಭ್ರಾಂತಿನಿವಾರಿ ೧
ನಿಖಿಲ ಬ್ರಹ್ಮಾದಿ ಸುರನಿಕರಕೈವಾರಿ ಪ್ರಕೃತಿನಿಯಾಮಕ ಪ್ರಭು ಕಂಸಾರಿ ೨
ಘನಕೃಪಾಸಾಗರ ಪ್ರಣತಾರ್ತಿಹಾರಿ ಅನಘ ಲಕ್ಷ್ಮೀನಾರಾಯಣ ನಿರ್ವಿಕಾರಿ೩

೪೭೧
ಭಜಿಸೋ ಹರಿಯ ಭಜಕರ ಭಾಗ್ಯನಿಧಿಯ ಪ.
ಕಾಲವ ವ್ಯರ್ಥ ಕಳೆವೆ ಕೂಳನು ತಿಂದು ನಲಿವೆ
ಖೂಳರಿಗೆ ನೀನೊಲಿವೆ ಶೀಲವ ಕಂಡು ಪಳಿವೆ ೧
ದುಷ್ಟರ ಸಹವಾಸ ಬಿಟ್ಟರೆ ಯಾವ ದೋಷ
ಕೃಷ್ಣನ ಭಕ್ತಿ ಲೇಶ ಹುಟ್ಟದೆ ಹೋಯ್ತೆ ಮೋಸ ೨
ಕಾರಣ ಕಾರ್ಯ ದ್ವಯನ ಧಾರಣ ಜಗತ್ರಯನ
ಧಾರಣ ಕೃತ ಭಯನ ಚಾರಣ ಸುರ ಪ್ರಿಯನ ೩
ಲಕ್ಷುಮಿನಾರಾಯಣನ ಲಕ್ಷಿಸಿ ಮಾಡೋ ಧ್ಯಾನ
ಲಕ್ಷ್ಮಣನ ಪೂರ್ವಜನ ಅಕ್ಷರ ಪುರುಷೊತ್ತಮನ ೪

೩೭೭
ಭಾರತಿ ಭರತನ ರಮಣಿ
ಶಿರಬಾಗುವೆ ತ್ರಿಜಗಜ್ಜನನಿ ಪ.
ಭಾರತ ಭಾಗವತಾರ್ಥ ಬೋಧಿನಿ
ಶಾರದೇಂದುನಿಭವದನಿ ಅ.ಪ.
ಹರಿಗುರುಗಳಲಿ ಸದ್ಭಕ್ತಿ ದೃಢ
ಕರುಣಿಸು ಸರಸಿಜನೇತ್ರಿ
ಗಿರೀಶಾದಿ ಸರ್ವಸುರೌಘಪ್ರಣೇತ್ರಿ
ಶರಣು ಶರಣು ಸುಪವಿತ್ರಿ ೧
ಕಾಳಿ ದ್ರೌಪದಿ ಸುನಾಮೆ ನಮ್ಮ
ಪಾಲಿಸು ಭೀಮಪ್ರೇಮ
ಶ್ರೀ ಲಕ್ಷ್ಮೀನಾರಾಯಣನ ಭೃತ್ಯೆ
ಕಾಲತ್ರಯ ಕೃತಕೃತ್ಯೆ೨

೩೭೮
ಭಾರತಿ ಭಾಗ್ಯವತಿ ಜಯತಿ ಪ.
ಸೂರಿಜನೋದ್ಧರೆ ಸುಗುಣಾಲಂಕಾರ
ಸಾರಸದಳನೇತ್ರಿ ಜಯತಿ೧
ಚಿತ್ರಚರಿತ್ರೆ ಚಿತ್ಸುಖಗಾತ್ರೆ
ಸೂತ್ರನಾಯಕನ ಸತಿ ಜಯತಿ ೨
ಅನಘ ಲಕ್ಷ್ಮೀನಾರಾಯಣನ ಶ್ರೀಚರಣಾ-
ವನತರ್ಗೆ ನೀನೆ ಗತಿ ಜಯತಿ ೩

೪೯೪
ಮಂಗಲಂ ಜಯ ಶುಭಮಂಗಲಂ ಪ.
ಶ್ರೀಗೌರೀಸುಕುಮಾರನಿಗೆ
ಯೋಗಿವರೇಣ್ಯ ಶುಭಾಕರಗೆ
ರಾಗ ಲೋಭ ರಹಿತಗೆ ರಜತೇಶಗೆ
ಭಾಗೀರಥಿಸುತ ಭವಹರಗೆ ೧
ಪಾಶಾಂಕುಶ ವಿವಿಧಾಯುಧಗೆ
ಪಾಶದರಾರ್ಚಿತ ಪಾವನಗೆ
ವಾಸರಮಣಿಶತಭಾಸಗೆ ಈಶಗೆ
ಭಾಸುರ ತನಕ ವಿಭೂಷಣನಿಗೆ೨
ಶೀಲ ಸುಗುಣಗಣ ವಾರಿಧಿಗೆ
ನೀಲೇಂದೀವರಲೋಚನೆಗೆ
ಲೋಲ ಲಕ್ಷ್ಮೀನಾರಾಯಣ ರೂಪಗೆ
ಶಾಲಿ ಪುರೇಶ ಷಡಾನನಗೆ ೩

೫೦೦
ಮಂಗಲಂ ಜಯಜಯ ಮಾಧವ ದೇವಗೆ
ಅಂಗಜನಯ್ಯ ಪಾಂಡುರಂಗ ವಿಠಲನಿಗೆ ಪ.
ಪುಂಡರೀಕವರಗೆ ಪೂರ್ಣಾತ್ಪೂರ್ಣಗೆ
ಪಂಡರಿಪುರವರ ಪುಂಡರೀಕಾಕ್ಷಗೆ ೧
ನಾಮದೇವಾದಿ ಸಂತಸ್ತೋಮ ಪರಿಣಾಮ ಶ್ರೀ-
ರಾಮದಾಸನ ಪ್ರಿಯ ಶ್ರೀರಾಮಗೆ ೨
ಏಕನಾಥನಾಲಯ ಚಾಕರನಾದವಗೆ
ಗೋಕುಲಪಾಲಗೆ ಗೋಮಿನಿಲೋಲಗೆ ೩
ಮಂದರಧಾರಗೆ ಮಥುರಾನಾಥಗೆ
ಕಂದರ್ಪ ಶತಕೋಟಿ ಸುಂದರರೂಪಗೆ ೪
ರುಕುಮಿಣಿಕಾಂತಗೆ ರುಜುಗಣಾಧೀಶಗೆ
ಭಕ್ತವತ್ಸಲನಿಗೆ ಲಕ್ಷುಮಿನಾರಾಯಣಗೆ ೫

೫೦೧
ಮಂಗಲಂ ಮಂಗಲಂ ಭವತು ತೇ
ಮಂಗಲಂ ಮಂಗಲಂ ಪ.
ಅಂಗಜ ರೂಪಗೆ ಅಖಿಲ ಲೋಕೇಶಗೆ
ಶೃಂಗಾರಮೂರ್ತಿಗೆ ಶ್ರೀಕಾಂತಗೆ
ಸಂಗೀತ ಲೋಲಗೆ ಸಾಮಜವರದಗೆ
ಬಂಗಾರಗಿರಿವಾಸ ಭವಭವ ಹರಗೆ ೧
ಕೃತ್ರಿಮ ರಕ್ಕಸ ಮೊತ್ತ ಸಂಹರಗೆ
ಭಕ್ತರ ಹೃದಯದಿ ಬೆಳಗುವಗೆ
ಸತ್ಯಾತ್ಮಕನಿಗೆ ಸತ್ಯನೇತ್ರನಿಗೆ
ಚಿತ್ತಜಪಿತ ಚಿನುಮಯ ಮೂರ್ತಿಗೆ ೨
ಉತ್ತಮ ಗೌಡಸಾರಸ್ವತ ವಿಪ್ರರಿಂ
ನಿತ್ಯ ಪೂಜೆಯಗೊಂಬ ನೀಲಾಂಗಗೆ
ಛತ್ರಾಖ್ಯಪಟ್ಟಣ ಮಸ್ತಕ ಮಕುಟಗೆ
ಕರ್ತ ಲಕ್ಷ್ಮೀನಾರಾಯಣ ಗುಣಾಂಬುಧಿಗೆ ೩

೫೦೨
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ.
ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆ
ಸಜ್ಜನನಿವಹಾರಾದಿತಗೆ
ಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆ
ಮೂಜದೊಡೆಯ ಮನೋಜ್ಞ ಮೂರುತಿಗೆ ೧
ಚಂದ್ರಶೇಖರಸುಕುಮಾರಗೆ ಮಾರನ
ಸುಂದರರೂಪ ಪ್ರತಾಪನಿಗೆ
ನಿಂದಿತ ಖಲಜನವೃಂದವಿದಾರಗೆ
ಸ್ಕಂದರಾಜ ಕೃಪಾಸಿಂಧು ಪಾವನಗೆ ೨
ತಾರಕದೈತ್ಯಸಂಹಾರಗೆ ಧೀರಗೆ
ಶೂರಪದ್ಮಾಸುರನ ಗೆಲಿದವಗೆ
ಸೇರಿದ ಭಕ್ತರ ಸುರಮಂದಾರಗೆ
ನಾರದಾದಿ ಮುನಿವಾರವಂದಿತಗೆ ೩
ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆ
ಎಲ್ಲ ಭೂತಾಶ್ರಯ ಬಲ್ಲವಗೆ
ಖುಲ್ಲದಾನವರಣಮಲ್ಲ ಮಹೇಶಗೆ
ಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ ೪
ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆ
ಮಂಜುಳಕಾಂತಿ ವಿರಾಜನಿಗೆ
ನಂಜುಂಡನ ಕರಪಂಜರಕೀರ ಪಾ-
ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ ೫

೩೯೦
ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ.
ತುಂಗಬಲ ಭದ್ರಾಂಗ ಸದಯಾ-
ಪಾಂಗ ಭಕ್ತಜನಾಂಗರಕ್ಷಗೆ
ಅಂಗಜಾರಿ ಕುರಂಗಹಸ್ತಗೆ
ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ ೧
ವಾಮದೇವಗೆ ವಾಸವಾದಿ ಸು-
ಧಾಮ ವಿಬುಧಸ್ತೋಮ ವಿನುತಗೆ
ವ್ಯೋಮಕೇಶಗೆ ಸೋಮಚೂಡಗೆ
ಭೀಮವಿಕ್ರಮಗೆ ಹೈಮವತಿಪತಿಗೆ ೨
ಪ್ರಾಣಪತಿ ಲಕ್ಷ್ಮೀನಾರಾಯಣ-
ಧ್ಯಾನಪರಗೆ ಪಾವಂಜೆಗ್ರಾಮ ಪ್ರ-
ಧಾನಪುರುಷಗೆ ದೀನಜನಸಂ-
ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ ೩

೪೧೧
(ಬಪ್ಪನಾಡಿನ ಪಂಚದುರ್ಗೆ)
ಮಂಗಲಂ ಶ್ರೀಪಂಚದುರ್ಗೆಗೆ ಜಯ
ಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆ ಪ.
ಶಂಖಚಕ್ರಶೂಲಾಂಕುಶಪಾಣಿಗೆ
ಶಂಕರನಂಕಾಲಂಕಾರಿಗೆ
ಕುಂಕುಮಬೊಟ್ಟಕಸ್ತೂರಿ ಲಲಾಟೆಗೆ
ಪಂಕಜಗಂಧಿ ಶ್ರೀಪಾರ್ವತಿಗೆ೧
ಕೋಕಿಲಗಾನೆಗೆ ಕೋಕಪಯೋಜೆಗೆ
ಶ್ರೀಕಂಠನರ್ಧಾಂಗಿ ಶ್ರೀಗೌರಿಗೆ
ಏಕದಂತನ ಜನನಿಗೆ ಜಗದಂಬೆಗೆ
ಲೋಕನಾಯಕಿ ಶ್ರೀಮಹಾಕಾಳಿಗೆ ೨
ಕಂಜದಳಾಕ್ಷಿಗೆ ಕಲಧೌತಗಾತ್ರೆಗೆ
ಕುಂಜರಗಮನೆ ಕಂಧರಜಾತೆಗೆ
ಮಂಜೀರನೂಪುರರಣಿತಪದಾಬ್ಜೆಗೆ
ನಂಜುಂಡನ ಮನಮಂಜುಳೆಗೆ ೩
ಅಂಗಜರೂಪೆಗೆ ಮಂಗಲದಾತೆಗೆ
ಭೃಂಗಕುಂತಳೆ ಸರ್ವಮಂಗಲೆಗೆ
ಬಂಗಾರಮಕುಟೋತ್ತಮಾಂಗದಿ ಧರಿಸಿದ
ಸಂಗೀತಲೋಲೆಗೆ ಶರ್ವಾಣಿಗೆ ೪
ರೂಢಿಗಧಿಕ ಬಪ್ಪನಾಡಿಗೊಡತಿಯಾಗಿ
ಮೂಡಿತೋರಿದ ಶ್ರೀಮುಕಾಂಬಿಕೆಗೆ
ಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆ
ಬೇಡಿದಿಷ್ಟವನೀವ ಸರ್ವೇಶೆಗೆ ೫

೫೦೪
ಮಂಗಳಾರತಿಯ ಮಾಡಿರೊ ಶ್ರೀನಿವಾಸಗೆ ಪ.
ಸಂಗಸುಖದ ಭಂಗವೆಲ್ಲ
ಹಿಂಗಿತೆಂದು ಹೊಂಗಿ ಮನದಿ ಅ.ಪ.
ಘಟ್ಟಿಹೃದಯ ತಟ್ಟೆಯಲ್ಲಿ
ಕೆಟ್ಟ ವಿಷಯ ಬತ್ತಿ ಮಾಡಿ
ಶ್ರೇಷ್ಠ ಜ್ಞಾನ ತೈಲವೆರೆದು
ವಿಷ್ಣುನಾಮ ಬೆಂಕಿ ಉರಿಸಿ ೧
ಶ್ರದ್ಧೆಯಿಂದ ಎತ್ತಿ ಮನದ
ಬುದ್ಧಿಪ್ರಕಾಶಗಳು ತೋರಿ
ಎದ್ದ ಕಾಮಕ್ರೋಧಗಳನು
ಅದ್ದಿ ಪಾಪಗೆದ್ದು ಮನದಿ ೨
ತತ್ತ್ವಪ್ರಕಾಶಗಳ ತೋರಿ
ಚಿತ್ತಮಾಯಕತ್ತಲೆಯನು
ಕಿತ್ತುಹಾಕಿ ಹರಿಯ ಮೂರ್ತಿ
ಸ್ವಸ್ಥ ಚಿತ್ತದಿಂದ ನೋಡಿ೩

೪೯೫
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ
ಖಗಕುಲರನ್ನ ಮನೋರಮಣ
ಮನೋರಮಣ ಕಾಂತ ಶ್ರೀರಾಮನ
ಅಗಲದಿರು ಕಾಣೆ ಮರಿಯಾನೆ ಶೋಭಾನೆ ೧
ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ-
ಕೃತ್ಯಕೆಲ್ಲಕ್ಕನುಸರಿಸಿ
ಅನುಸರಿಸಿ ನಡೆ ನೀ ಮಗಳೆ
ಹಿತವಾಗಿ ಬಾಳು ಪತಿಯೊಳು ಶೋಭಾನೆ೨
ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ
ಗಂಡನುಣ್ಣದ ಮೊದಲು ನೀ
ಮೊದಲು ನೀನುಣ್ಣದಿರು
ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ೩
ಮುಗುಳು ನಗೆಯ ಬೀರು ಜಗಳವ ಮಾಡದಿರು
ಜಗದೊಳು ಕೀರ್ತಿಯುತಳಾಗು
ಯುತಳಾಗು ಬಂಧುಗಳಲಿ ನೀ
ಹಗೆಯ ಮಾಡದಿರು ಕೃಪೆದೋರು ಶೋಭಾನೆ ೪
ವೃದ್ಧ ಮಾವನ ಪಾದ ಹೊದ್ದಿ ಸೇವೆಯ ಮಾಡು
ಸುದ್ಧ ಭಾವದೊಳು ನಡೆ ಮಗಳೆ
ನಡೆ ಮಗಳೆ ನಿತ್ಯಸುಮಂಗಲೆ
ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ ೫
ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು
ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು
ನಿಲದಿರು ನೀರಜಗಂಧಿ
ಸತ್ಯ ವಚನವನೆ ಸವಿಮಾಡು ಶೋಭಾನೆ ೬
ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು
ಸಾಧುಭಾವದದಲಿ ನಡೆ ಮಗಳೆ
ನಡೆ ಮಗಳೆ ಪಂಕ್ತಿಯಲಿ
ಭೇದ ಮಾಡದಿರು ಕೃಪೆದೋರು ಶೋಭಾನೆ ೭
ಕಂಡರೆ ಶಿಷ್ಟರ ದಂಡ ನಮಸ್ಕರಿಸು
ಹಿಂಡು ದಾಸಿಯರ ದಣಿಸದಿರು
ದಣಿಸದಿರು ಉತ್ತಮಳೆಂದು ಭೂ-
ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ ೮
ಚಂಡಿತನವ ನಿನ್ನ ಗಂಡನೊಳ್ಮಾಡದಿರು
ಗಂಡಸರ ಮುಂದೆ ಸುಳಿಯದಿರು
ಸುಳಿಯದಿರು ಸಂತತ ಸೌಖ್ಯ-
ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ ೯
ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ
ಸಮಯದಿ ವೇಶ್ಯಾ ತರುಣಿಯಳ
ತರುಣಿಯಳ ತೆರದಿ ರಾಮನ ಸತಿಯಂ-
ತೆ ಮಾಡವ್ವ ಸುಖಂ ಜೀವಾ ಶೋಭಾನೆ೧೦
ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು
ಕುಕ್ಷಿ ಈರೇಳು ಜಗವನ್ನು
ಜಗವನ್ನು ನಮ್ಮನ್ನು ಸರ್ವರ
ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ ೧೧

೪೫೬
ಮನವು ನಿನ್ನಲಿ ನಿಲ್ಲಲಿ ಅನುದಿನ ನಿನ್ನ ನೆನೆದು
ಮನವು ನಿನ್ನಲಿ ನಿಲ್ಲಲಿ ಪ.
ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ
ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ ೧
ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ
ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ ೨
ಸಂತೋಷ ನಿರಂತರವು ಸಂತ ಜನ ಸಹವಾಸವು
ಶಾಂತತ್ವವಾಂತು ಮಹಾಂತಧೈರ್ಯದಿ ೩
ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ
ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ ೪
ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ
ಧೈರ್ಯದಂತರ್ಯ ಗಾಂಭೀರ್ಯ ಭಾವದಿ ೫

೫೦೮
ಮನವೆ ಶ್ರೀನಾರಾಯಣನನು ಸ್ಮರಿಸದೆ
ಮಾಯಾಪಾಶಕೆ ಸಿಲುಕುವರೇ ಪ.
ವನಜನಾಭನ ಪದ ವನರುಹಯುಗ್ಮವ
ಅನುದಿನ ನೆನೆಯದೆ ಒಣಗುವರೇ
ವನಿತಾಲಂಪಟನಾಗುತ ಸಂತತ
ಮನಸಿಜಯಂತ್ರಕೆ ಮನಮರಗುವರೇ ಅ.ಪ.
ತುಂಡು ಸೂಳೆಯರ ದುಂಡುಕುಚವ ಪಿಡಿದು
ಗಂಡಸುತನವನು ಕೆಡಿಸುವರೆ
ದಂಡಧರನ ಬಾಧೆ ಹೆಂಡತಿಯನು ಪಡ
ಕೊಂಡು ವೇದನೆಯನು ತಾಳುವರೆ
ಕಂಡು ಕಂಡು ನೀ ಗುಂಡಿಗೆ ಬಾಳ್ವರೆ
ಹೆಂಡಿರ ಸುಖರಸ ಉಂಡರು ಸಾಲದೆ ೧
ಬಂದ ಸುಖಕೆ ನೀ ಮುಂದುವರೆಯುತಲಿ
ಮಂದ ಅಸಮ ದುಃಖ ತಾಳುವರೇ
ಬಂದುದೆನ್ನ ಕಣ್ಣ ಮುಂದೆಯನುಭವಿಪೆ
ಎಂದಿಗೆನ್ನಾಜ್ಞೆಯು ಬಂದಪುದೋ ನಿಜ ೨
ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹ
ಪಟ್ಟ ಭಾಗ್ಯವನೆಲ್ಲ ತೋರೊ ನೀನು
ಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ-
ನಷ್ಟು ಸುಖವನ್ನು ಕಾಣೆನಿನ್ನು
ಇಷ್ಟಾರ್ಥಗಳೆಲ್ಲ ದೊರೆಕುವುದೈ ಪರ
ಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ೩
ವಿಷಯ ಪಳಂಚಿತನಾಗುವ ಸಂತತ
ಪಂಚಡಕೀರನು ಆಗುವರೇ
ಮುಂಚೆ ಮಾಡಿದ ಕರ್ಮ ಸಾಲದೆಂದೆನುತಲಿ
ಸಂಚಿತ ಪಾಪವ ಸಂಗ್ರಹಿಸುವರೇ
ಚಂಚಲಾಕ್ಷಿಯರ ಚಪಲದ ಮಾತನು
ವಂಚನೆ ಎಂಬುದು ತಿಳಿಯದೆ ಇರುವರೆ ೪
ಸಾರಿಸಾರಿ ಕೈ ಮುಗಿದು ಬೇಡುವೆನು ವಿ-
ಕಾರ ದುರ್ಬುದ್ಧಿಯ ಬಿಡು ಎಂದು
ಭಾರಿ ತಪ್ಪುಗಳ ಕ್ಷಮಿಸಿ ಕಾವ ಲಕ್ಷ್ಮೀ
ನಾರಾಯಣ ನೀನೇ ಗತಿಯೆಂದು
ಪಾರಮಾರ್ಥಿಕ ವಿಚಾರವ ಮಾಡುತ
ಶ್ರೀ ರಮೇಶನ ಚರಣಾರವಿಂದವ ಸೇರೋ ೫

೩೯೧
ಮನ್ನಿಸೆನ್ನ ಮಹಾಲಿಂಗ ದೇವೋತ್ತುಂಗ
ಪುಣ್ಯಶ್ಲೋಕ ನಿನ್ನ ವರ್ಣಿಪೆ ಮುಕ್ಕಣ್ಣ ಪ.
ಭಕ್ತಪಾರಿಜಾತ ಶಕ್ತಿದೇವಿಪ್ರೀತ
ಸತ್ಯಧರ್ಮಯೂಥ ಸ್ವಾಮಿಲೋಕನಾಥ೧
ವಂದನೀಯ ಕೃಪಾಸಿಂಧು ದಿವ್ಯರೂಪ
ಚಂದ್ರಚೂಡ ಸಾಂದ್ರಾನಂದ ವೈಷ್ಣವೇಂದ್ರ ೨
ಮಾರವೈರಿ ಲಕ್ಷ್ಮೀನಾರಾಯಣಪ್ರೇಮಿ
ಸಾರತತ್ತ್ವಬೋಧ ಸಾಧುಸುಪ್ರಸೀದ೩

೩೬೧
ಮರೆಯಲಿನ್ನೆಂತುಪಕಾರ ಮಾರುತಿ
ಮರೆಯಲಿನ್ನೆಂತುಪಕಾರ ಪ.
ವಿಧಿ ಮುಂತಾದ ತ್ರಿದಶರಿಂದೆನ್ನಯ
ಸದಮಲಪ್ರಾಣಾಧಾರ ೧
ಬ್ರಹ್ಮಚರ್ಯವ್ರತಧರ್ಮನಿಯಾಮಕ
ನಿರ್ಮಲ ವಜ್ರಶರೀರ ೨
ದಾಸವರ್ಯ ಗುಣರಾಶಿ ತ್ವದೀಯ ವಿ-
ಶ್ವಾಸವಿನ್ನೆಷ್ಟೊ ಗಭೀರ ೩
ವ್ಯಾಪ್ತಮಾದಾಪದಕಾಪ್ತ ನಿನ್ನುಪಕೃತಿ
ಸಪ್ತಸಾಗರದಿಂದಪಾರ ೪
ಶ್ರೀಲಕ್ಷ್ಮೀನಾರಾಯಣನು ಹನುಮನ
ಆಲಿಂಗಿಸಿದನುದಾರ ೫

೪೧೨
ಮಹಾಮಾಯೆ ಗೌರಿ ಮಾಹೇಶ್ವರಿ ಪ.
ವಇಹಾದೇವಮನೋಹಾರಿ ಶಂಕರಿ
ಮಹಾಪಾಪಧ್ವಂಸಕಾರಿ ಶ್ರೀಕರಿ
ಮಾಂ ಪಾಹಿ ಪಾಹಿ ಶೌರಿಸೋದರಿ ಅ.ಪ.
ಕಾಮಕೋಟಿಸುಂದರಿ ಶುಭಕರಿ ಕರಿಕುಂಭಪಯೋಧರಿ
ಕಾಮಿತಪ್ರದೆ ಕಂಬುಕಂಧರಿ
ಹೇಮಾಲಂಕಾರಿ ಹೈಮವತಿ ಕುವರಿ ೧
ಭಾನುಕೋಟಿಭಾಸ್ಕರಿ ಭವಹರಿ ಭಜಕಾಮೃತಲಹರಿ
ಸ್ಥಾಣುವಲ್ಲಭೆ ದನುಜಸಂಹಾರಿ
ಜ್ಞಾನಾಗೋಚರಿ ಜಗತ್ರಯೇಶ್ವರಿ ೨
ಪೂರ್ವದೇವಭೀಕರಿ ಭ್ರಾಮರಿ ಪುಳಿನಾಖ್ಯ ಪುರೇಶ್ವರಿ
ಸರ್ವಲಕ್ಷ್ಮೀನಾರಾಯಣೇಶ್ವರಿ
ಸರ್ವಸಹಚರಿ ಶಶಾಂಕಶೇಖರಿ ೩

೩೧೮
(ಪಡುಬಿದ್ರೆಯ ಗಣೇಶ)
ಮಾಡೆನ್ನೊಳು ಕರುಣ ಗಜಾನನ ಪ.
ಮೂರ್ಖನೆನ್ನುತಲೆನ್ನ ಧಿಕ್ಕರಿಸದಿರು
ಶಕ್ರವಿನುತ ಚರಣ ಗಜಾನನ೧
ಹರಿನಾಭೀ ಕಮಲಾಕಾಶಾತ್ಮನೆ
ಗಿರಿಜಾಂಕಾಭರಣ ಗಜಾನನ ೨
ಭಾರತಾರ್ಥ ತತ್ವಾರ್ಥ ಪ್ರಬೋಧನೆ
ಸೂರಿಜನೋದ್ಧರಣ ಗಜಾನನ ೩
ಕಡಲಶಯನ ಲಕ್ಷ್ಮೀನಾರಾಯಣ ಸಖ
ಪಡುಬಿದ್ರೆನಿಕೇತನ ಗಜಾನನ ೪

೩೭೬
ಮಾತೆ ಸರಸ್ವತಿ ಮಂಜುಳ ಮೂರುತಿ
ಚೇತನಾತ್ಮಕಿ ಭಾರತಿ ಪ.
ಪ್ರೀತಿಯಿಂದೀವುದು ಪೀತಾಂಬರಧರನ
ಸಾತಿಶಯದ ಭಕುತಿ ಅ.ಪ.
ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ
ಕರುಣಿಸೆನಗೆ ಸನ್ಮತಿ
ಪರಮಪಾವನ ವೈಷ್ಣವರ ಪಾದಾಂಬುಜ ಮಧು-
ಕರದಂತಿರಲಿ ಮದ್ರತಿ ೧
ಶ್ರೀಶನ ಮೂರ್ತಿ ತಾರೇಶನಂದದಿ ಹೃದಯಾ-
ಕಾಶದೊಳು ಕಾಣುತಿ
ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ
ಗೈಸಮ್ಮ ಹರಿಯ ಸ್ತುತಿ ೨
ಮನುಜರ ರೂಪದಿ ದನುಜರು ಭೂಮಿಯೊಳ್
ಜನಿಸಿದರ್ಜಲಜನೇತ್ರಿ
ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ
ಜನನಿಯೆ ನೀನೆ ಗತಿ ೩
ಭಾರತಿದೇವಿಯ ಸ್ತುತಿ

೪೨೬
ಮಾಮವ ಮಮ ಕುಲಸ್ವಾಮಿ ಗುಹ
ನತಜನ ದುರಿತಾಪಹ ಪ.
ಭೀಮವೀರ್ಯ ನಿಸ್ಸೀಮಪರಾಕ್ರಮ
ಧೀಮತಾಂವರ ನಿರಾಮಯ ಜಯ ಜಯ ಅ.ಪ.
ಜ್ಞಾನಶಕ್ತಿ ಶತಭಾನುಭಾಸುರ ಪ್ರಸನ್ನ ಪಾವನ್ನ
ಮೀನಕೇತನಸಮಾನ ಸಹಜ ಲಾವಣ್ಯ
ಗಾನಲೋಲ ಕರುಣಾನಿಧಿ ಸುಮನಸ-
ಸೇನಾನಾಥ ಭಾವನಿಸುತ ಸುಹಿತ ೧
ಪಟುತರಶಕ್ತಿ ಕುಕ್ಕಟ ಕುಲಿಶಾಭಯಶಯ ನಿರಪಾಯ
ನಿಟಿಲಾಕ್ಷತನಯ ನಿಗಮಜ್ಞ ಬಾಹುಲೇಯ
ಕುಟಿಲ ಹೃದಯ ಖಲಪಟಲವಿದಾರಣ
ತಟಿತ್ಸಹಸ್ರೋತ್ಕಟರುಚಿರ ಮಕುಟ ೨
ಪಾವಂಜಾಖ್ಯ ಪವಿತ್ರ ಕ್ಷೇತ್ರಾಧಿವಾಸ ಸರ್ವೇಶ
ದೇವ ಲಕ್ಷ್ಮೀನಾರಾಯಣಸ್ಮರಣೋಲ್ಲಾಸ
ಸೇವಕ ವಿಬುಧಜನಾವಳಿಪಾಲಕ
ಕೇವಲ ಸುಖಸಂಜೀವ ಜೀವನದ ೩

೪೧೩
ಮಾಯಾಮಯ ಜಗವೆಲ್ಲ ಇದ-
ರಾಯತ ತಿಳಿದವರಿಲ್ಲ ಪ.
ಕಾಯದಿಂ ಜೀವನಿಕಾಯವ ಬಂಧಿಸೆ
ನೋಯಿಸುವಳು ಸುಳ್ಳಲ್ಲ ಅ.ಪ.
ತಿಳಿದು ತಿಳಿಯದಂತೆ ಮಾಡಿ ಹೊರ-
ಒಳಗಿರುವಳು ನಲಿದಾಡಿ
ಹಲವು ಹಂಬಲವ ಮನದೊಳು ಪುಟ್ಟಿಸೆ
ನೆಲೆಗೆಡಿಸುವಳೊಡಗೂಡಿ೧
ಯೋಷಿದ್ರೂಪವೆ ಮುಖ್ಯ ಅ-
ಲ್ಪಾಸೆಗೆ ಗೈವಳು ಸಖ್ಯ
ದೋಷದಿ ಪುಣ್ಯದ ವಾಸನೆ ತೋರ್ಪಳು
ಜೈಸಲಾರಿಂದಶಕ್ಯ ೨
ಕರ್ತ ಲಕ್ಷ್ಮೀನಾರಾಯಣನ
ಭೃತ್ಯರ ಕಂಡರೆ ದೂರ
ಚಿತ್ಪ್ರಕೃತಿಯಿಂದ ಪ್ರೇರಿತಳಾಗಿ ಪ-
ರಾರ್ಥಕೆ ಕೊಡಳು ವಿಚಾರ ೩

೩೪೧
(ಅನಂತೇಶ್ವರ ದೇವರನ್ನು ನೆನೆದು)
ಯಾಕಿಲ್ಲಿ ಬಂದು ಮಲಗಿದೆಯೊ ಎಲಾ ಹರಿಯೇ ಲೋಕೋತ್ತಮಾನಂತೇಶ್ವರ ದೇವಾಲಯದಿ ಪ.
ಬಿಡದೆ ಪಾಲ್ಗಡಲೊಳಗೆ ಕಡು ವೈಭವದಿ ತಡಿಗೆ ಝಡಿದು ಬರುತಿಹುದು ಭೋರ್ಗುಡಿಪ ತೆರೆಯ ಝಡಿವ ನಾದಕೆ ಒಡಂಬಡದೇಕಾಂತದಿ ಬಂದು ಮಡದಿ ಶ್ರೀದೇವಿ ಸಹಿತೊಡನೆ ಮಲಗಿದೆಯೋ ೧
ನೀರೊಳಗೆ ಮುಳುಗಿ ವೇದವ ತಂದು ಬೆನ್ನಿನೊಳು ಭಾರವನು ಪೊತ್ತು ಬಹಳಾಲಸ್ಯವೋ ಧಾರುಣಿಯ ಸಲಹೆ ಭೋರ್ಗುಡಿಸಿ ಸ್ತಂಭದಿ ಬಂದ ಕ್ರೂರತನಕಿದುವೆ ವಿಸ್ತಾರ ಸಮಾಧಾನತೆಯೋ ೨
ರೂಢಿಗೊಡೆಯ ತಾನಾಗಿ ಮೋಡಿಯೊಳು ಭೂದಾನ- ಬೇಡಿದೆನು ಎಂಬ ನಾಚಿಕೆಯ ಮನವೋ ಖೋಡಿ ನೃಪತಿಯರ ಹೋಗಾಡಿಸುತ ಕಾಡಿನೊಳು ಕೋಡಗರ ಕೂಡಿ ರಥ ಓಡಿಸಿದ ಬೇಸರವೋ ೩
ಲೋಲಾಕ್ಷಿಯರ ವ್ರತವ ಹಾಳುಮಾಡುತ ಕಲಿಯ ಕಾಲದೊಳು ಗೈವಂತಮೇಲುಕಾರಿಯದ ಕಾಲೋಚಿತವ ಮನದೊಳಾಲೋಚಿಸುತ್ತಹಿಯ ಮೇಲೆ ಪವಡಿಸಿ ನಿದ್ರಾಲೋಲನಾಗಿಹೆಯೋ ೪
ಯುಗಯುಗದೊಳವತಿರಿಸ ಜಗದ ಭಾರವನಿಳುಹಿ ಬಗೆಬಗೆಯ ನಾಟಕದಿ ಮಿಗೆ ಪಟ್ಟ ಶ್ರಮವ ತೆಗೆಯಲೋಸುಗ ಚರಣಯುಗವ ಮೃದುಕರದಿ ಶ್ರೀ ಸೊಗಸಿನಿಂದೊತ್ತುವ ಸೊಂಪೊಗರಿತೋ ನಿನಗೆ ೫
ಲಲಿತ ವೈಕುಂಠದೊಳಗೆ ಜಲಜಭವಮುಖ್ಯಸುರ- ಗಲಭೆಯುಂಟೆಂದಲ್ಲಿ ನಿ¯ದೆ ಈಗ ಲಲನೆಯಳ ಕೂಡೆ ಸರಸಗಳನಾಡಲು ತನಗೆ ಸ್ಥಳವಿಲ್ಲವೆನುತಿಲ್ಲಿ ನೆಲಸಿಕೊಂಡಿಹೆಯೋ ೬
ಸೇರಿರ್ದ ಶರಣ ಸಂಸಾರಿ ನೀನೆಂದು ಶ್ರುತಿ ಸಾರುವುದು ಕರುಣವನು ತೋರೆನ್ನ ದೊರೆಯೇ ದಾರಿದ್ರ್ಯದೋಷವಪಹಾರಿಸುತ ಇಷ್ಟಾರ್ಥ- ಸೇರಿಸೈ ಶ್ರೀ ಲಕ್ಷ್ಮೀನಾರಾಯಣನೆ ಹರಿಯೇ ೭

೩೯೨
(ಧರ್ಮಸ್ಥಳ ಮಂಜುನಾಥನನ್ನು ನೆನೆದು)
ಯಾಕೆನ್ನ ಮೇಲೆ ನಿರ್ದಯ ಶ್ರೀಮಂಜುನಾಥ
ಲೋಕೇಶ ಮಾಡು ನಿರ್ಭಯ ಪ.
ಪಾಕಹಪ್ರಮುಖದಿವೌಕಸಮುನಿಜನಾ-
ನೀಕವಂದಿತಪದಕೋಕನದ ಕೋವಿದ ಅ.ಪ.
ಪಾಪಾತ್ಮಪಾಪಸಂಭವ ನಾನೆಂಬುವದಕಾ-
ಕ್ಷೇಪವೇನಿಲ್ಲೋ ಮಾಧವ
ಶ್ರೀಪರಮೇಶ್ವರ ಕೋಪಕಲುಷಹರ
ತಾಪತ್ರಯಶಮನಾಪದ್ಭಾಂಧವ
ಗೋಪತುರಂಗ ಮಹಾಪುರುಷ ಗಿರೀಶ ೧
ಸೋಮಸುರ್ಯಾಗ್ನಿಲೋಚನ ಸದ್ಗುಣಪುಣ್ಯ-
ನಾಮ ಪಾಪವಿಮೋಚನ
ವ್ಯೋಮಕೇಶಾಚ್ಯುತಪ್ರೇಮ ಮಹಾಮಹಿಮ
ಕಾಮಾರಿ ನಿನ್ನ ನಾ ಮರೆಹೊಕ್ಕೆನು
ಹೇ ವಇಹಾದೇವ ಸೋಮಚೂಡಾಮಣಿ ೨
ಧರ್ಮಮಾರ್ಗನಿಯಾಮಕ ಸತ್ಯಾತ್ಮ ಪರ-
ಬ್ರಹ್ಮ ಸುಜ್ಞಾನದಾಯಕ
ನಿರ್ಮಲ ನಿತ್ಯ ಸತ್ಕರ್ಮಪ್ರೇರಕ ಗಜ-
ಚರ್ಮಾಂಬರಧರ ದುರ್ಮತಿಪ್ರಹರ
ಭರ್ಮಗರ್ಭಜ ಭವಾರ್ಣವತಾರಕ೩
ಕಪ್ಪ ಕಾಣಿಕೆಗಳನು ತರಿಸುವರ-
ಣ್ಣಪ್ಪದೈವವೆ ದೂತನು
ತಪ್ಪದೆ ಚಂದಯ ಹೆಗ್ಗಡೆಯರ ಮನದೊ
ಳಿಪ್ಪ ದಧಿಮಥನ ತುಪ್ಪದಂತೆಸೆವ
ಕರ್ಪೂರಗೌರ ಸರ್ಪವಿಭೂಷಣ ೪
ಪೊಡವಿಗಧಿಕವಾಗಿಹ ಕುಡುಮಪುರ-
ಕ್ಕೊಡೆಯ ಭಕ್ತಭಯಾಪಹ
ಕಡಲಶಯನ ಲಕ್ಷ್ಮೀನಾರಾಯಣಗತಿ-
ಬಿಡೆಯದವನು ನಿನ್ನಡಿಗೆರಗುವೆ ವರ
ಮೃಡಶಂಕರ ಕೊಡು ಕೊಡು ಮನದಷ್ಟವ ೫

೪೫೭
ಯಾಕೆನ್ನೊಳು ಪಂಥಾ ಶ್ರೀಕಾಂತಾ ಪ.
ಯಾಕೆ ಪಂಥ ಲೋಕೈಕನಾಥ ದಿ-
ವಾಕರಕೋಟಿಪ್ರಭಾಕರ ತೇಜನೇ ಅ.ಪ.
ಪೂರ್ವಾರ್ಜಿತ ಕರ್ಮದಿಂದಲಿ
ಇರ್ವೆನು ನರಜನ್ಮ ಧರಿಸುತ
ಗರ್ವದಿಂದ ಗಜರಾಜನಂತೆ ಮತಿ
ಮರ್ವೆಯಾಯ್ತು ನಿನ್ನೋರ್ವನ ನಂಬದೆ
ಗರ್ವಮದೋನ್ಮತ್ತದಿ ನಡೆದೆನು
ಉರ್ವಿಯೊಳೀ ತೆರದಿ ಇದ್ದೆನಾದರೂ
ಸರ್ವಥಾ ಈಗ ನಿಗರ್ವಿಯಾದೆಯಹ
ಪರ್ವತವಾಸ ಸುಪರ್ವಾಣ ವಂದಿತ ೧
ಯಾರಿಗಳವಲ್ಲ ಮಾಯಾ
ಕಾರ ಮಮತೆ ಸಲ್ಲ ಸಂತತ
ಸಾರಸಾಕ್ಷ ಸಂಸಾರಾರ್ಣವದಿಂದ
ಪಾರಗೈದು ಕರುಣಾರಸ ಸುರಿವುದು
ಭಾರವಾಯ್ತೆ ನಿನಗೆ ನತ ಮಮ
ಕಾರ ಹೋಯ್ತೆ ಕಡೆಗೆ ಏನಿದು
ಭಾರಿ ಭಾರಿ ಶ್ರುತಿ ಸಾರುವುದೈ ದಯ
ವಾರಿಧಿ ನೀನಿರಲ್ಯಾರಿಗುಸುರುವುದು ೨
ಬಾಲತ್ವದ ಬಲೆಗೆ ದ್ರವ್ಯದ
ಶೀಲವಿತ್ತೆ ಎನಗೆ ಆದರೂ
ಪಾಲಿಸುವರೆ ನಿನಗಾಲಸ್ಯವೆ ಕರು-
ಣಾಳು ಶ್ರೀಲಕ್ಷ್ಮೀಲೋಲ ಮಮ ಮನಕೆ
ಸಾಲದೆರಡು ಮೂರು ನಿನ್ನಯ
ಮೂಲ ಸಹಿತ ತೋರು ಮುನಿಕುಲ
ಪಾಲ ಶ್ರೀಲಕ್ಷ್ಮೀನಾರಾಯಣ ಗುಣ
ಶೀಲ ಕಾರ್ಕಳ ನಗರಾಲಯವಾಸನೇ ೩

೪೫೮
ಯಾಕೊ ದಯಬಾರದು ಹರಿ ನಿನಗ್ಯಾಕೊ ದಯಬಾರದು ಪ.
ಶ್ರೀಕರ ಲೋಕೇಶ ಏಕಾನೇಕ ಸ್ವರೂಪ ಅ.ಪ.
ಕಾಮಿತಾರ್ಥದಾಯಕರ ಸ್ವಾಮಿ ಲೋಕನಾಯಕ
ಭೀಮವಿಕ್ರಮ ಶ್ರೀರಾಮ ನಿರಾಮಯ ೧
ಸುಂದರಿನಾಥ ಸುರೇಂದ್ರವಂದಿತ
ಕಂದನ ಕಂದಾರವಿಂದದಳನಯನ೨
ಅಕ್ಷರಬ್ರಹ್ಮ ಸಂರಕ್ಷಿಸು ನಮ್ಮ
ಪಕ್ಷೀಂದ್ರವಾಹನ ಲಕ್ಷ್ಮೀನಾರಾಯಣ೩

೪೮೨
ಪೂರ್ಣಿಮೆಯ ದಿನ
(ಗರುಡ ದೇವರನ್ನು ಕುರಿತು)
ರಂಭೆ : ಮಂದಗಮನೆ ಪೇಳಿದಂದವನೆಲ್ಲ ಸಾ-
ನಂದದಿ ತಿಳಿದೆನೆ ಬಾಲೆ
ಇಂದಿದು ಪೊಸತು ಮತ್ತೊಂದು ವಾಹನ ವೇರಿ
ಮಂದರಧರ ಬಹನ್ಯಾರೆ ೧
ಅಕ್ಕ ನೀ ಕೇಳಲೆ ರಕ್ಕಸವೈರಿಯ
ಪಕ್ಕದ ಮೇಲೇರಿಸುತ
ಅಕ್ಕರದಿಂದ ಕಾಲಿಕ್ಕಿ ಬರುವನೀತ
ಹಕ್ಕಿಯಂತಿಹನೆಲೆ ಜಾಣೆ೨
ಘೋರನಾಸಿಕದ ಮಹೋರಗ ಭೂಷಣ
ಧಾರಿವನ್ಯಾರೆಂದು ಪೇಳೆ
ಮಾರಜನಕಗೆ ವಾಹನನಾಗುವನೀತ
ಕಾರಣವೇನೆಂದು ಪೇಳೆ ೩
ಊರ್ವಶಿ : ಈತನೆ ಮಹಾತಿಬಲ ಕಾಣೆ ಶ್ರೀವಿಷ್ಣುವಿಂಗೆ
ಕೇತನನಾದ ಪುನೀತನೆಲೆ ಜಾಣೆ
ಭೀತಿರಹಿತವಿಖ್ಯಾತಿ ಸರ್ಪಾ-
ರಾತಿ ಸೂರ್ಯಾನ್ವಯನ ಬಲಗಳ
ಚೇರಿಸಿದ ನಿಷ್ಕಾತುರನ ಹರಿ
ಪ್ರೀತ ವಿನತಾ ಜಾತ ಕಾಣಲೆ ೪
ಗಂಡುಗಲಿ ಮಾರ್ತಾಂಡತೇಜಮಖಂಡ
ಬಲನಿವನು ಮಾತೆಯ
ಲಂಡಲೆಯ ಪರಿಖಂಡನಾರ್ಥದಿ
ಚಂಡವಿಕ್ರಮನು ನೇಮವ
ಗೊಂಡು ಬಳಿಕಾಖಂಡಲಾದ್ಯರ
ತಂಡವೆಲ್ಲವನು ಕೋಪದಿ
ಗಿಂಡುಗೆದರಿಯಜಾಂಡವೆಲ್ಲವ
ನಂಡಲೆದು ಕರದಂಡನಾಭನ
ಕಂಡು ಮೆಚ್ಚಿಸಿ ಅಮೃತಕುಂಭವ
ಕೊಂಡುಬಂದವನಂಡಜಾಧಿಪ ೫
ವಾರಿಜಾಸನೆ ವಾಸುದೇವನು
ಭೂರಿವೈಭವದಿ ಗರುಡನ
ನೇರಿ ಪೂರ್ಣಮಿವಾರದಲಿ ಸಾಕಾರವನು
ದಯದಿ ತೋರುತ
ಸ್ವಾರಿ ಬರುತ ಶೃಂಗಾರಮೂರುತಿ ಭೇರಿಗಳ
ರವದಿ ಸನಕ ಸ-
ನಾರದಾದಿಮುನೀಂದ್ರವಂದಿತ
ಚಾರುಚರಣವ ತೋರಿ ಭಕ್ತರ
ಘೋರ ದುರಿತವ ಸೊರೆಗೊಳ್ಳಲು
ಶ್ರೀರಮಾಧವ ಮಾರಜನಕನು೬

೪೮೬
ಚೌತಿಯ ದಿವಸ
ರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ-
ಮೌರಿ ರಭಸದಿ ಲಕ್ಷ್ಮೀಕಾಂತ
ಭೂರಿ ವೈಭವದಿ ಪೊರಟನೆತ್ತ ಯಾವ
ಕಾರಣವೆಂದು ಪೇಳೆಲೆ ಸತ್ಯ ೧
ಊರ್ವಶಿ :ದೇವಿ ಕೇಳೆಲೆ ಸುಮ್ಮಾನದಿಂದ ಕುಲ-
ದೇವರ ಪೂಜೆಗೋಸುಗ ಬಂದ
ಪಾವನಮೂರ್ತಿಯಾದುದರಿಂದ ನಮ್ಮ
ಕಾವನು ಕರುಣಾಕಟಾಕ್ಷದಿಂದ ೨
ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ-
ನ್ನಾಥನಿಗ್ಯಾವ ಕುಲವು ಕಾಣೆ
ರೀತಿಯನರುಹಬೇಕೆಲೆ ಬಾಲೆ ಸರ್ವ
ಚೇತನಾತ್ಮನ ನಾಟಕದ ಲೀಲೆ ೩
ಊರ್ವಶಿ :ಪಾಂಡವರಾಯುಧಗಳನ್ನೆಲ್ಲ ಪೊತ್ತು-
ಕೊಂಡ ಕಾರಣದಿ ಪೂಜೆಗಳೆಲ್ಲ
ಕಂಡು ಪೊಗಳಲು ಕವಿಗು ಸಲ್ಲ ಇನ್ನು
ಪುಂಡರೀಕಾಕ್ಷನವನೆ ಬಲ್ಲ ೪
ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ-
ಭೋಜನಾಭನು ತಾಕ್ಷ್ರ್ಯನ ಮೇಲೆ
ರಾಜಬೀದಿಯೊಳ್ ಬರುವದೇನೆ ಇಂಥ
ಸೋಜಿಗವೇನು ಪೇಳೆಲೆ ಜಾಣೆ೫
ಊರ್ವಶಿ :ಪಟಹ ಡಿಂಡಿಮವಾದ್ಯರವದಿಂದ ತಂ-
ಬಟೆನಿಸ್ಸಾಳರವದಿ ಬರುವ ಚಂದ
ಸಟೆಯಲ್ಲ ಕೇಳು ಕರುಣದಿಂದ ನಮ್ಮ
ಕಟಕ ರಕ್ಷಿಸಲು ಬರುವ ಗೋವಿಂದ ೬
ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ-
ಗಲಭೆಗಳಿಂದ ಪೋಗುವದೇನೆ
ನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ-
ಜಲಜನಾಭನ ಮಹಿಮೆಯ ಜಾಣೆ ೭
ಊರ್ವಶಿ :ಚಾಪಲನೇತ್ರೆ ಚೌತಿದಿನದಿ ಕೆರೆ-
ದೀಪವೆಂದೆನುತ ಭಕ್ತರು ಮುದದಿ
ಶ್ರೀಪರಮಾತ್ಮ ವಿಲಾಸದಿ ಭಕ್ತ-
ರಾಪೇಕ್ಷೆಗಳನು ಸಲ್ಲಿಸುವಂದದಿ ೮
ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ-
ಸ್ತೋಮ ಜೇನುಂಡೆ ಬಿರುಸು ಮಿಗಿಲು
ವ್ಯೋಮಕೇಶಗಳ ಪೊಗಳತೀರದು ಸರಿ
ಭೂಮಿಯೊಳ್ ಕಾಣೆನೆಂಬಂತಾದುದು ೯
ಅಮಮ ಇದೇನೆ ಇಂದಿನ ಲೀಲೆ ಜನ-
ರಮರಿಕೊಂಡಿಹರೇನಿದು ಬಾಲೆ
ಸಮವಿಲ್ಲ ಇಂತೀ ವೈಭೋಗಕ್ಕೆಲೆ ನ-
ಮ್ಮಮರಾವತಿಗಿಂತಧಿಕ ಬಾಲೆ ೧೦
ಊರ್ವಶಿ :ಸಾರ್ಥಕಾಗುವದು ಜನ್ಮವು ಕಾಣೆ ಸಕ-
ಲಾರ್ತಿ ಹರಣವಾಗ್ವದು ಜಾಣೆ
ಕೀರ್ತಿತರಂಗಮಾಗಿಹುದೇನೆ ಶೇಷ-
ತೀರ್ಥವೆಂದರೆ ಕೇಳಿದು ಪ್ರವೀಣೆ ೧೧
ರಂಭೆ : ಏಸು ದೊಡ್ಡಿತೆ ಕೇಳಲೆ ಬಾಲೆ ಅನಂ-
ತಾಸನದಂತೆ ಮರೆವುದಲ್ಲೇ
ನಾಸಿರ ದೀಪಸೋಪಾನದಲೆ ಮಹಾ-
ಶೇಷನಿಹನು ಮಧ್ಯದೊಳಿಲ್ಲೇ ೧೨
ಊರ್ವಶಿ :ಕರುಣಾಕರನು ನಮ್ಮೆಲ್ಲರನು ನಿತ್ಯ
ಪೊರೆಯಲೋಸುಗ ಬಂದನು ತಾನು
ಸುರುಚಿರ ಮಂಟಪವೇರಿದನು ಭೂ-
ಸುರರಿಂದ ವೇದಘೋಷವ ಕೇಳ್ವನು ೧೩
ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮ
ಸೃಷ್ಟಿಗೆ ಪೊಸತಾಗಿಹುದು ಕಾಣೆ
ಕಟ್ಟಿಸಿದವನು ಪುಣ್ಯೋತ್ತಮನು ಪರ-
ಮೇಷ್ಠಿ ಜನಕನ ಕೃಪೆಯಿನ್ನೇನು ೧೪
ಭಜಕರ ಮುಖದಿಂದೆಲ್ಲ ತಾನು ಭೂ-
ಭುಜನಾಗಿ ನಡೆಸುವನಿದನೆಲ್ಲನು
ನಿಜವಾಗಿ ನಿತ್ಯ ಸಾಕಾರವನು ತೋರಿ
ತ್ರಿಜಗವನೆಲ್ಲ ರಕ್ಷಿಸುತಿಹನು ೧೫
ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ-
ದೊಡೆಯ ಪೊರಡುವ ಕಾಲದಿ ಭಾರಿ
ಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥ
ಕಡು ಬೆಡಗನು ಉಸುರೆಲೆ ಬಾಲೆ ೧೬
ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮ
ತನುವಿಗೆ ಸೋಂಕಲದನೆಲ್ಲವ
ಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ-
ಧ್ವನಿಯೆಸಗಿದರು ಕೇಳಿದರಂದವ ೧೭
ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು-
ಬರುವನು ವೇದನಿನಾದದಲಿ
ವರರತ್ನ ಖಚಿತ ಮಂಟಪದಲ್ಲಿ ನಿಂತ
ನಿರವದಿ ಸುಖದಾಯಕನಲ್ಲಿ ೧೮
ಶರಣರ ಪಾಪ ಮನಕೆ ತಾರ ದುಡಿದ
ವರ ಭೇರಿಗೆರೆವ ಬಿಸಿನೀರ
ವರಲಕ್ಷ್ಮೀನಾರಾಯಣಧೀರ ಸುರು-
ಚಿರ ಸಿಂಹಾಸನವೇರಿದ ವೀರ ೧೯

೪೮೧
ಚತುರ್ದಶಿಯ ದಿನ
(ಹನುಮಂತನನ್ನು ಕುರಿತು)
ರಂಭೆ :ಇವನ್ಯಾರೆ ದೂರದಿ ಬರುವವ ಇವನ್ಯಾರೆ ಪ.
ಇವನ್ಯಾರೆ ಮಹಾಶಿವನಂದದಿ ಮಾ-
ಧವನ ಪೆಗಲೊಳಾಂತು ತವಕದಿ ಬರುವವ೧
ದಾಡೆದಂತಮಸಗೀಡಿರುವದು ಮಹಾ
ಕೋಡಗದಂತೆ ಸಗಾಢದಿ ಬರುವವ೨
ಕಡಲೊಡೆಯನು ಮೃದುವಡಿಯಡರಿಸಿ ಬಿಡ
ದಡಿಗಡಿಗಾಶ್ರೀತರೊಡಗೂಡಿ ಬರುವವ೩
ಊರ್ವಶಿ : ನಾರಿ ಕೇಳೆಲೆಗೆ ವೈಯಾರಿ ನೀ ಮುದದಿ
ನಾರಾಯಣನಿಗೀತ ಬಂಟನಾದಾದರಿದಿ
ವೀರ ರಾಮವತಾರದಿ ಹಿಂದೆ ಹರಿಯ
ಚಾರಕನಾಗಿ ಸೇವೆಯ ಗೈದ ಪರಿಯ
ಕ್ರೂರ ದಶಾಸ್ಯನ ಗಾರುಗೆಡಿಸಿ ನೃಪ
ವೀರನ ಪೆಗಲಿನೊಳೇರಿಸಿ ದೈತ್ಯರ
ಭೂರಿವಧೆಗೆ ತಾ ಸಾರಥಿಯಾದವ
ಕಾರುಣೀಕ ಮಹಾವೀರ್ಹನುಮಂತ ೧
ಆಮೇಲೆ ವೀರಾವೇಶದಿ ವಾರಿಧಿಯನು
ರಾಮನಪ್ಪಣೆಯಿಂದ ದಾಟಿದನಿವನು
ಭೂಮಿಜೆಗುಂಗುರ ಕೊಟ್ಟ ನಂತರದಿ
ಕಾಮುಕರನು ಸದೆಬಡಿದನಾ ಕ್ಷಣದಿ
ಹೇಮಖಚಿತ ಲಂಕಾಮಹಾನಗರವ
ಹೋಮವ ಗೈದು ಸುತ್ರಾಮಾರಿಗಳ ನಿ-
ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ-
ಡಾಮಣಿ ತಂದ ಮಹಾಮಹಿಮನು ಇವ ೨
ವಾರಿಮುಖಿ ನೀ ಕೇಳಿದರಿಂದ ಬಂದ
ವೀರ ಹನುಮಂತನನೇರಿ ಗೋವಿಂದ
ಸ್ವಾರಿಗೆ ಪೊರಟ ಚಾತುರ್ದಶಿ ದಿವಸ
ಆರತಿಯನು ಕೈಕೊಳ್ಳುವ ಶ್ರೀನಿವಾಸ
ಭೇರಿ ಮೃದಂಗ ಮಹಾರವದಿಂದ ಸ-
ರೋರುಹನಾಭ ಮುರಾರಿ ಶರಣರು
ದ್ಧಾರಣಗೈಯುವ ಕಾರಣದಿಂದ ಪಾ-
ದಾರವಿಂದಗಳ ತೋರಿಸಿ ಕೊಡುವ ೩
ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿ
ನಲವಿಂದ ವೇದಘೋಷವ ಕೇಳ್ವ ಶೌರಿ
ಜಲಜಭವಾದಿ ನಿರ್ಜರರಿಗಸಾಧ್ಯ
ಸುಲಭನಾದನು ಭಕ್ತಜನಕಿದು ಚೋದ್ಯ
ಸುಲಲಿತ ಮಂಟಪದೊಳೊ ನೆಲಸುತ ನಿ-
ಶ್ಚಲಿತಾನಂದ ಮಂಗಲದ ಮಹೋತ್ಸವ
ಗಳನೆಲ್ಲವ ಕೈಕೊಳುತಲಿ ಭಕ್ತರ
ಸಲಹುವ ನಿರುತದಿ ಮಲಯಜಗಂಧಿನಿ ೪
ಶ್ರೀಕಾಂತ ಬಳಿಕ ಭಕ್ತರ ಒಡಗೂಡಿ
ಏಕಾಂತ ಸೇವೆಯಗೊಂಡ ಕೃಪೆಮಾಡಿ
ಸಾಕಾರವಾಗಿ ತೋರುವ ಕಾಣೆ ನಮಗೆ
ಬೇಕಾದ ಇಷ್ಟವ ಕೊಡುವ ಭಕ್ತರಿಗೆ
ಶ್ರೀಕರ ನಾರಾಯಣ ಶ್ರೀನಿವಾಸ ಕೃ-
ಪಾಕರ ವಿಬುಧಾನೇಕಾರ್ಚಿತ ರ-
ತ್ನಾಕರಶಯನ ಸುಖಾಕರ ಕೋಟಿ ವಿ-
ಚಾರಕ ಭಾಸತ್ರಿಲೋಕಾಧಿಪನಿವ ೫

೪೮೩
ಪ್ರತಿಪದೆಯ ದಿನ
ರಂಭೆ :ಓಹೊ ಬಲ್ ಬಲ್ ಬಲ್ ಶ್ಯಾಣೆ ಜಾಣೆ ಪ.
ಈ ದಿವಸದಿ ನಿನ್ನೆಯ ದಿನದವನನ್ನು
ಆದರಿಸಲು ಕಾರ್ಯೋದಯವೇನೆ
ಓಹೋ ಬಲ್ ಬಲ್ ಶಾಣೆ ಜಾಣೆ ಅ.ಪ.
ಊರ್ವಶಿ : ಚಿತ್ತಜರೂಪೆ ಸರ್ವೋತ್ತಮ ಭಾಷೆಯ
ನಿತ್ತಿಹ ಕಾರಣದಿ
ಉತ್ತಮ ಶ್ರೀಪಾದ ಎತ್ತಲು ಬೇಕೆಂದು
ಒತ್ತಾಯಗೈದ ಮೋದಿ ೧
ಮತ್ತೊಂದು ಕಾರಣ ಉಂಟು ಶ್ರೀಹರಿಗಿವ
ನಿತ್ಯವಾಹನ ಕಾಣೆಲೆ
ಇತ್ತ ಪಯಣಗೈವೊಡತ್ತಬೇಕಾದರೆ
ಭೃತ್ಯನಿವನು ಹೇ ಬಾಲೆ ೨
ಆದಕಾರಣದಿಂದ ನಾದಿನಿ ಕೇಳೆ ಪ-
ಕ್ಷಾದಿಯೊಳಿವನ ಮ್ಯಾಲೆ
ಪಾದವ ನೀಡಿ ವಯೋದಯದಿಂದ ಶ್ರೀ
ಮಾಧವ ಬರುವ ಕಾಣೆ ೩
ಕೇರಿಕೇರಿಯ ಮನೆಯಾರತಿಗಳನೆಲ್ಲ
ಶ್ರೀರಮಾಧವ ಕೊಳ್ಳುತ
ಭೂರಿ ವಾದ್ಯಗಳ ಮಹಾರವದಿಂದಲಿ
ಸಾರಿ ಬರುವನು ಸುತ್ತ ೪
ಭಾವೆ ನೀ ಕೇಳೆ ನಾನಾ ವಿಧದಿಂದಲಿ
ಸೇವಕರಿಗೆ ದಯದಿ
ಪಾವನಗೈದು ಮಹಾವಿನೋದೇಕಾಂತ
ಸೇವೆಯ ಗೊಂಡ ಕಾಣೆ ೫