Categories
ರಚನೆಗಳು

ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ

೪೬೨
ಸ್ವಾಮಿ ಪರಾಕು ಮಹಾಸ್ವಾಮಿ ಸಜ್ಜನಪ್ರೇಮಿ ಪ.
ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯ
ಪಾರಮೇಷ್ಠಿ ಪ್ರಮುಖಾಮರಪೂಜಿತ ಚಾರು
ಪದಾಬ್ಜದ್ವಯ ದನು-
ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮ
ದೂರನು ಲಾಲಿಸು ಚಿನ್ಮಯ ಜಯ ೧
ದುಷ್ಟ ನಿಶಾಚರರಟ್ಟುಳಿ ಘನ ಕಂಗೆಟ್ಟುದು ಸುರಮುನಿಗಣ ಆ
ಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ-
ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮ
ಕಷ್ಟವು ಪದಕರ್ಪಣ ಪರಾಯಣ ೨
ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲು
ಭ್ರಾಂತಿ ವಿಜ್ಞಾನ ವಿತಾನ
ಧುರೀಣರ್ಸಂತಾಪಿಪರು ಮುರಾರಿ ನಮ್ಮ
ಸಂತೈಸೈ ಗಿರಿಧಾರಿ ಶ್ರೀಕಾಂತ ಕೃಪಾರ್ಣವ ಶೌರಿ ಜಗ-
ದಂತ ವಿಹಾರಿ ನಿರಂತ ಪರಂತಪ೩
ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮ
ಬಿನ್ನಪ ಲಾಲಿಸು ತ್ರಿಭುವನವನ್ನು ಸನ್ನುತ ಶುಭಾಂಗ ಸ-
ರ್ವೋನ್ನತ ಮಹಿಮ ತರಂಗ ದುರಿತಾನ್ವಯ
ತಿಮಿರ ಪತಂಗ ಸುಪ್ರ
ಸನ್ನ ಸದೋದಿತ ವಿಹಂಗ ತುರಂಗ ೪
ನೀಲೇಂದೀವರ ಶ್ಯಾಮಲ ಕೋಮಲ
ಕಾಲನಿಯಾಮಕ ಪ್ರಾಣ ನಿ
ನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣ ನತ
ಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ-
ಯಾಲಯಮಣಿ ಲಕ್ಷ್ಮೀನಾರಾಯಣ ೫

೫೦೯
ಶಂಕರಾಚಾರ್ಯರ ಸ್ತುತಿ
ಸ್ವಾಮಿ ಶಂಕರನೆ ಆಚಾರ್ಯ
ನಮಾಮಿ ಪಂಕಜ ಚರಣಕ್ಕೆ ಗುರುವರ್ಯ ಪ.
ಸುರ ಮುನಿಗಳ ಮೊರೆಯಾ ಕೇಳಿ
ಧರಣಿಯೊಳುದಿಸಿದ ಗಿರಿಜೆಯ ಪ್ರೀಯಾ
ವರ ಅದ್ವೈತ ಪದ್ಧತಿಯಾ ಯೋಗಿ
ವರನೆ ಬೋಧಿಸಿ ಮೋಕ್ಷ ಬೀಜ ಬಿತ್ತಿದೆಯಾ ೧
ನಿರ್ಮಲ ಜ್ಞಾನ ಸುದೀಪ ಸೋಹಂ
ಬ್ರಹ್ಮಾನೇ ಎಂಬ ಸುಜ್ಞಾನವ ತೋರ್ಪ
ಬ್ರಹ್ಮಾನಂದ ನಿಷ್ಟಾಪ ಗುರು
ಲಕ್ಷ್ಮೀನಾರಾಯಣ ರೂಡ ನಿರ್ಲೇಪ ೨

೪೩೧
ಸ್ವಾಮೀ ರಕ್ಷಿಸು ಸುಬ್ರಹ್ಮಣ್ಯ
ಕಾಮಿತಪ್ರದ ಸುರಸ್ತೋಮಾಗ್ರಗಣ್ಯ ಪ.
ಜನ್ಮ ಜನ್ಮಾಂತರದ ಕರ್ಮಾನುಸಾರದಿಂ
ದುರ್ಮತಿಗೆಳಸಿಯಹಮ್ಮಮತೆಯಲಿ
ದುರ್ಮದಾಂಧನಾದೆ ದುರಿತ ದೂರವಿರಿಸು
ನಿರ್ಮಲಜ್ಞಾನೋಪದೇಶವನಿತ್ತೆನ್ನ ೧
ಪ್ರತ್ಯಗಾತ್ಮನ ನಾಮ ಕೀರ್ತನೆ ಗೈಯುತ್ತ
ಭಕ್ತಿಸೌಭಾಗ್ಯವಿರಕ್ತಿಯ ನೀಡು
ಭೃತ್ಯವತ್ಸಲ ಭವಭಯಹರ ಗಿರಿಜಾ-
ಪುತ್ರನೆ ಪರಮಪವಿತ್ರ ಸುಚರಿತ್ರನೆ೨
ಸುರಲೋಕವನು ಕಾವ ಧುರಧೀರ ಪ್ರಭು ನಿನಗೀ
ನರಲೋಕವನು ಕಾವದುರು ಕಷ್ಟವೇನು
ಪರಿಶುದ್ಧ ಸ್ಥಾನಿಕಧರಣೀಸುರಕುಲ-
ಗುರುವೆಂದು ಚರಣಕ್ಕೆ ಶರಣಾಗತನಾದೆ ೩
ಸಾಕುವಾತನು ನೀನೆ ಸಲಹುವಾತನು ನೀನೆ
ಬೇಕು ಬೇಡೆಂಬುವರ ನಾ ಕಾಣೆ ದೊರೆಯೆ
ಲೋಕೇಶ ಸುಕುಮಾರ ಶೋಕಮೋಹವಿದೂರ
ನೀಕರಿಸದೆಯೆನ್ನ ಸ್ವೀಕಾರ ಮಾಡಯ್ಯ ೪
ಪೃಥ್ವಿಯೊಳ್ಪಾವಂಜೆ ಕ್ಷೇತ್ರಾಧಿವಾಸನೆ
ಸುತ್ರಾಮಾದಿ ಸುರಮೊತ್ತ ಪೂಜಿತನೆ
ಕರ್ತ ಲಕ್ಷ್ಮೀನಾರಾಯಣನ ಸಾರೂಪ್ಯನೇ
ದೈತ್ಯದಲ್ಲಣ ವಲ್ಲೀದೇವಿ ಮನೋಹರನೆ ೫

೩೬೫
ಹನುಮದ್ಭೀಮ ಮಧ್ವನಾಮ ಪ್ರಣತಕಲ್ಪದ್ರುಮ
ಘನಕೃಪಾಳು ಭಕ್ತಚಿಂತಾಮಣಿ ಯೋಗೀಂದ್ರಲಲಾಮ ಪ.
ಭಾರತಿಪತಿ ನಿಖಿಲವಿಶ್ವಾಧಾರ ಭಾವೀಬ್ರಹ್ಮ
ಸಾರತತ್ತ್ವ ವೇದಾರ್ಥಕೋವಿದ ಧೀರ ಜೀವೋತ್ತಮ ೧
ಭರ್ಗವಾಸವಾದಿ ದಿವಿಜವರ್ಗಸುಖಧಾಮ
ನಿರ್ಗುಣೋಪಾಸಕ ಮೋಕ್ಷಮಾರ್ಗದರ್ಶಿ ನಿಷ್ಕಾಮ ೨
ಸೂತ್ರನಾಮಕ ವಾಯುದೇವ ವಿಚಿತ್ರಕರ್ಮನಿಸ್ಸೀಮ
ಕರ್ತಲಕ್ಷ್ಮೀನಾರಾಯಣನ ಭೃತ್ಯ ಸಾರ್ವಭೌಮ ೩

೪೭೩
ಹರಿಧ್ಯಾನವೆ ಗಂಗಾಸ್ನಾನ ವಿಷ-
ಯಾನುಭವ ಜಯವೆ ಮೌನ
ಪ್ರಾಣೇಶನೆ ಸರ್ವೋತ್ತಮ ವೇದ ಪು-
ರಾಣ ಪ್ರಮಾಣವೆ ಜ್ಞಾನ ೧
ಮತ್ತರ ಸಂಗ ಪ್ರವೃತ್ತಿಯೊಳಿರದೆ ನಿ-
ವೃತ್ತಿಯೊಳಿರುವುದೆ ಮಾನ
ಸತ್ಯಾತ್ಮನ ರೂಪದೊಳು ಭೇದರಾ-
ಹಿತ್ಯವೆ ಸರ್ವಸಮಾನ ೨
ಕರ್ತ ಲಕ್ಷ್ಮೀನಾರಾಯಣನ ಪಾದ
ಭಕ್ತಿ ವಿರಹಿತನೆ ಹೀನ
ಚಿತ್ತಜೋದ್ಭವ ಪರಾತ್ಪರ ತ್ರಿಜಗವು
ಪ್ರತ್ಯಗಾತ್ಮನಾಧೀನ ೩

೪೦೦
(ಶ್ರೀಹರಿಯ ಷಣ್ಮಹಿಷಿಯರ ಸ್ತುತಿ)
ಹರಿಮಾನಿನಿಯರಾರು ಮಂದಿ
ಸುಪ್ರವೀಣೆ ಲಕ್ಷಣೆ ಕಾಳಿಂದಿ
ಜಾಣೆ ಸಖಿವಿಂದೆ ಜಾಂಬವತಿಯರಿಗೆ
ನಾ ನಮಿಸುವೆ ಮನದೊಳಗೆ ೧
ತಮ್ಮ ಪತಿಯರಿಂದೊಡಗೂಡಿ
ಮನ್ಮಾನಸಮಂ ಮನೆಮಾಡಿ
ನಿರ್ಮಲ ಬುದ್ಧಿಯ ಪ್ರೇರೇಪಿಸಲಿ
ಸುಮ್ಮಾನ ಪಾಲಿಸಲಿ ೨
ಭಕ್ತಿ ವಿರಕ್ತಿ ಜ್ಞಾನ ಮ-
ಚ್ಚಿತ್ತದೊಳಿರಲಿ ಧ್ಯಾನ
ಕರ್ತ ಲಕ್ಷ್ಮೀನಾರಾಯಣನ ನಾಮ-
ಕೀರ್ತನೆಗೈವುದೆ ನೇಮ೩
ದುರ್ಗಾದೇವಿಯ ಸ್ತುತಿ

೩೯೬
ಹರೇ ಶಂಕರ ಪಾರ್ವತೀವರ ಪಾಲಿಸು ನೀ ಎನ್ನ ಪ.
ದುರಿತರಾಶಿಗಳ ದೂರಮಾಡು ಗಿರಿ-
ವರ ಮಹಾನುಭಾವ ಶಿವಶಿವ ಅ.ಪ.
ತ್ರಿಗುಣಾತ್ಮಕ ತ್ರಿದಶಾಲಯ ಪೂಜಿತ
ನಿಗಮಾಗಮವಿನುತ
ಅಗಜಾಲಿಂಗಿತ ಆಶೀವಿಷಧರ
ಮೃಗಧರಾಂಕ ಚೂಡ ಹೃದ್ಗೂಢ೧
ಸರ್ವೋತ್ತಮ ಹರಿಯಹುದೆಂಬ ಜ್ಞಾನವ
ಸರ್ವಕಾಲಕ್ಕೀಯೊ
ದುರ್ಮತಗಳನೆಲ್ಲ ದೂರ ಮಾಡೊ ಕರಿ-
ಚರ್ಮಾಂಬರಧರ ಪ್ರವೀರ ೨
ಸಂಜೀವನ ಲಕ್ಷ್ಮೀನಾರಾಯಣ ಮಣಿ-
ರಂಜಿತ ನಿರ್ಲೇಪ
ಮಂಜುಳಕದಿರೆಯ ಮಂಜುನಾಥ ಭವ-
ಭಂಜನ ಹರಿಪ್ರಿಯ ಜಯ ಜಯ೩

೫೦೩
ಹೇಮದ ತೊಟ್ಟಿಲ ಭಾಮೆಯರ್ಹೂಡಿ
ಕೋಮಲ ಕಾಂಚನಧಾಮವ ಮಾಡಿ
ಕಾಮಜನಕನೊಳು ಕಾಮಿತ ಬೇಡಿ
ಪ್ರೇಮದಿ ತೂಗಿದರ್ನಾಮದಿ ಪಾಡಿ ಜೋ ಜೋ ೧
ಚೆನ್ನಿಗರರಸ ಮೋಹನ್ನ ಸುಶೀಲ
ಕನ್ನಡಿ ಕದಪಿನ ಕಮನೀಯ ಬಾಲ
ಪುಣ್ಯವೃಕ್ಷಗ ಫಲ ಪೂರ್ಣೇಂದು ಲೀಲ
ನಿನ್ನ ರಕ್ಷಿಸಲಿ ಪ್ರಸನ್ನ ಗೋಪಾಲ ಜೋ ಜೋ ೨
ಕೆಂದಾವರೆಯಂತೆ ಚೆಂದುಳ್ಳ ಚರಣ
ಚಂದಿರವದನ ಗೋವಿಂದನ ಶರಣ
ಮುಂದಿನ್ನು ಸೌಭಾಗ್ಯ ಹೊಂದೆನ್ನ ತರುಣ
ಕಂದ ಕಂದರ್ಪನ ಸುಂದರಾಭರಣ ಜೊ ಜೋ೩
ಶ್ರೇಯಾರೋಗ್ಯ ದೀರ್ಘಾಯು ಸಂಪೂರ್ಣ
ನ್ಯಾಯ ನೀತಿ ಸದುಪಾಯ ಸಂಪನ್ನ
ಪ್ರೀಯನೆ ಕರ್ಣಾಂತಾಯತನಯನ
ಕಾಯಲಿ ಲಕ್ಷ್ಮೀನಾರಾಯಣ ನಿನ್ನ ಜೋ ಜೋ ೪

೪೭೭
(ಧ್ರುವನು ಜನಿಸಿದಾಗಿನ ಜೋಗುಳ ಹಾಡು)
ಮುತ್ತಿನ ಸರಪಣಿ ಹಸ್ತದಿ ಪಿಡಿದು
ಮತ್ತೈದೆಯರೆಲ್ಲ ಸುತ್ತಲೂ ನೆರೆದು
ಪುತ್ರರತ್ನವ ತಂದು ತೊಟ್ಟಿಲೊಳಿಟ್ಟು
ಮತ್ತಕಾಶಿನಿಯರು ತೂಗಿದರೊಟ್ಟು ಜೋ ಜೋ ೧
ಮಾರನ ಹೋಲ್ವ ಶೃಂಗಾರನೆ ಜೋ ಜೋ
ಧಾರುಣಿಪತಿ ಸುಕುಮಾರನೆ ಜೋಜೋ
ಸಾರಸನೇತ್ರಪವಿತ್ರನೆ ಜೋ ಜೋ
ಚಾರುಮೋಹನ ಶುಭಗಾತ್ರನೆ ಜೋಜೋ ಜೋಜೋ ೨
ಜೋ ಜೋ ಮಕ್ಕಳ ಕಂಠಾಭರಣ
ಜೋ ಜೋ ಸುರತರುಪಲ್ಲವಚರಣ
ಜೋ ಜೋ ಸಜ್ಜನ ಹೃದಯಾನಂದ
ಜೋ ಜೋ ಉತ್ತಾನಪಾದನ ಕಂದ ಜೋ ಜೋ ೩
ತೃವಿ ತೃವಿ ಲಕ್ಷ್ಮೀನಾರಾಯಣ ಶರಣ
ತೃವಿ ತೃವಿ ಪರಿಪೂರ್ಣ ಸದ್ಗುಣಾಭರಣ
ತೃವಿ ತೃವಿ ಸುಸ್ಮಿತವದನವಿಲಾಸ
ತೃವಿ ತೃವಿ ಚಂದಿರಕಿರಣ ಪ್ರಕಾಶ ಜೋ ಜೋ ೪

ಪೌರಾಣಿಕ ಕಥನ
೪೭೪
ಸಂಕ್ಷಿಪ್ತ ರಾಮಾಯಣ
ಸೃಷ್ಟಿಯಲಿ ಕಡು ದುಷ್ಟ ರಾವಣ ಕಟ್ಟಳೆಯ ಕಂಗೆಡಿಸಲು
ಅಷ್ಟರೊಳು ಭಯಪಟ್ಟು ದಿವಿಜರು ಒಟ್ಟುಗೂಡುತ ಸ್ತುತಿಸಲು
ಥಟ್ಟನೆ ದಯವಿಟ್ಟು ದಶರಥಪಟ್ಟಮಹಿಷಿಯೊಳುದಿಸಲು
ದಿಟ್ಟ ಕೌಶಿಕನಿಷ್ಟಿಯನು ಕೈಗೊಟ್ಟು ಸಲಹಿದ
ಶ್ರೇಷ್ಠಧನುಜಘರಟ್ಟಗಾರತಿಯ ಬೆಳಗಿದರು ೧
ಹಾದಿಯೊಳು ಶಿಲೆಯಾದಹಲ್ಯೆಯ
ಪಾದರಜದಿಂ ಪೊರೆಯುತ
ಸಾಧಿಸಿದ ಧನು ಭೇದಿಸುತ ಹಿತಳಾದ ಸೀತೆಯ ಒಲಿಸುತ
ಕ್ರೋಧದಿಂದೆದುರಾದ ಪರಶುವನಾ ದಯಾನಿಧಿ ಗೆಲ್ಲುತ
ಸಾಧುಮಾರ್ಗವಿನೋದ ಸೀತಾಹ್ಲಾದ ಪಾಪವಿರೋಧ
ದಾನವಸೂದನಗಾರತಿಯ ಬೆಳಗಿದರು ೨
ಚಿಕ್ಕ ತಾಯಿಯ ಸೊಕ್ಕುನುಡಿಗತಿಸೌಖ್ಯವನು ಹೋಗಾಡುತ
ಘಕ್ಕನನುಜನ ನಿಜಸತಿಯತಾ ಸೌಖ್ಯದಿಂದೊಡಗೂಡುತ
ಒಕ್ಕಣಿಸುವಡಶಕ್ಯವಾದ ವನಕ್ಕೆ ತಾ ಸಂಚರಿಸುತ
ಮಿಕ್ಕಿ ಬಂದಾ ರಕ್ಕಸಿಯ ಕುಚದಿಕ್ಕೆಲವ ಖಂಡಿಸಿದ ಪ್ರಭುಗೆ
ಮಾಣಿಕ್ಯದಾರತಿಯ ಬೆಳಗಿದರು ೩
ಧೂರ್ತ ಖರತ್ರಿಶಿರಾದಿ ದಾನವ ಮೊತ್ತವನು ಸಂಹರಿಸುತ
ದೈತ್ಯಮಾಯಾವೃತ್ತಿಮೃಗವನು ಮತ್ತಕಾಶಿನಿ ಬೇಡುತ
ಸತ್ತ್ವನಿಧಿ ಬೆನ್ನಟ್ಟಿ ಸೀತೆಯ ದೈತ್ಯಪತಿ ಕೊಂಡೋಡುತ
ಮತ್ತೆ ಕಾಣದೆ ಕೋಪದಿಂದರಸುತ್ತ ಬಂದ ಮಹಾತ್ಮ ರಾಮಗೆ
ಮುತ್ತಿನಾರತಿಯ ಬೆಳಗಿದರು ೪
ತೋಯಜಾಕ್ಷಿಯ ಸುದ್ದಿ ಪೇಳ್ದ ಜಟಾಯುವಿಗೆ ಗತಿ ತೋರುತ
ವಾಯುತನುಜಸಹಾಯದಿಂ ಕಪಿರಾಯ ಸಖ್ಯವ ಮಾಡುತ
ನ್ಯಾಯಗರ್ಭಿತ ಸಾಯಕದಿ ಮಹಕಾಯ ವಾಲಿಯ ಕೊಲ್ಲುತ
ಪ್ರಾಯಶದಿ ಗಿರಿಯೊಡ್ಡಿ ಶರಧಿಗುಪಾಯದಿಂ ಬಂಧಿಸಿದ
ಜಾನಕೀಪ್ರಿಯಗಾರತಿಯ ಬೆಳಗಿದರು ೫
ಮನವಿವೇಕವ ನೆನೆದು ಬಂದಾ ಧನುಜಪತಿ ಸೋದರನಿಗೆ
ಇನಶಶಿಗಳುಳ್ಳನಕ ಲಂಕಾವನಿಯ ಪಾಲಿಸುತ ಮಿಗೆ
ರಣದಿ ರಾವಣಕುಂಭಕರ್ಣರ ಹನನಗೈಯುತ ಲೋಕಕೆ
ಸನುಮತದಿ ಪಾವಕನ ಮುಖದಿಂದನಘೆ
ಸೀತೆಯ ವಿನಯ ಗೈದಗೆ
ಕನಕದಾರತಿಯ ಬೆಳಗಿದರು ೬
ಮೇರುಗಿರಿನಿಭ ಇಂದ್ರಪುಷ್ಪಕಾವೇರಿ ತಾ ಸಾಕೇತಕೆ
ಸೇರಿ ಸಾನುಜರಿಂದ ಧರ್ಮದ ಮೇರೆದಪ್ಪದೆ ಸುಜನಕೆ
ಸಾರಸಂಪದವಿತ್ತು ಲೋಕೋದ್ಧಾರನಾಗುತ್ತಖಿಳಕೆ
ನೀರಜೇಕ್ಷಣ ಕರುಣಪಾರಾವಾರ ಶರಧೀಗಂಭೀರ ಲಕ್ಷುಮೀ
ನಾರಾಯಣ ರೂಪ ಜಯ ಜಯ ೭

ಓಡದಿರು ಓಡದಿರು ಖೋಡಿ ಮನವೆ
೪೪೦
ಓಡದಿರು ಓಡದಿರು ಖೋಡಿ ಮನವೆ
ಮೂಢತನದಲಿ ಬರುವ ಕೇಡುಗಳನರಿದರಿದು ಪ.
ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು
ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು
ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ
ಬೀಸುವನು ಬೇಡನೊಬ್ಬನು ಬಲೆಯನಿಕದಕೊ೧
ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು
ಒತ್ತಿ ಮೋಹದಿ ವಹಿಸಿಕೊಂಡಿರುವಳು
ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ
ತುತ್ತಾಗ ಎನುತ ಬಾಯ್ ತೆರೆದಿರುವಳು ೨
ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು
ಹಂಗಿಗನು ನೀನಾಗಿ ಬೇಡ ಅವರ
ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ
ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ ೩
ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ
ಏಳು ಮೆಟ್ಟಲ ದಾಂಟಿ ಲೋಲತನದಿ
ಅಲದೆಲೆ ಮಂಚದಲಿ ಲೋಲನಾಗಿಹನ ಪದ
ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ ೪
ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು
ಭೂರಿ ಮಾಯಾಭ್ರಾಂತಿಗೊಳಗಾಗದೆ
ಕಾರಣಿಕ ಲಕ್ಷ್ಮೀನಾರಾಯಣನ ಪಾದ
ವಾರಿಜದಿ ನಲಿದು ಸುಖಿಯಾಗು ನೀ ಮನವೆ ೫

ಹಾಡಿನ ಹೆಸರು :ಓಡದಿರು ಓಡದಿರು ಖೋಡಿ ಮನವೆ
ಹಾಡಿದವರ ಹೆಸರು :ಅರ್ಚನಾ ಉಡುಪ
ರಾಗ :ನಂದ ಕೌಂಸ್
ತಾಳ :ಖಂಡಛಾಪು ತಾಳ
ಸಂಗೀತ ನಿರ್ದೇಶಕರು:ರತ್ನಮಾಲಾ ಪ್ರಕಾಶ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಜಯ ಜಯ ಮೃತ್ಯುಂಜಯ ಜಗದಾಶ್ರಯ
೩೮೫
ಜಯ ಜಯ ಮೃತ್ಯುಂಜಯ ಜಗದಾಶ್ರಯ
ಭಯಹರ ವಿಗತಾಮಯ ಶಿವ ಸದಯ ಪ.
ಭಾಗವತೋತ್ತಮ ಭಾಸುರಕಾಯ
ಭಾಗೀರಥೀಧರ ಭಗವತೀಪ್ರಿಯ೧
ಅಗಜಾಲಿಂಗನ ಸುಗುಣನಿಕಾಯ
ಮೃಗಧರಚೂಡ ಮುನಿಜನಗೇಯ ೨
ಲಕ್ಷ್ಮೀನಾರಾಯಣಪರಾಯಣ
ರಕ್ಷಿಸು ತ್ರಿಜಗಾಧ್ಯಕ್ಷ ಸುಶ್ರೇಯ ೩

ಹಾಡಿನ ಹೆಸರು :ಜಯ ಜಯ ಮೃತ್ಯುಂಜಯ ಜಗದಾಶ್ರಯ
ಹಾಡಿದವರ ಹೆಸರು :ಸುನೀತಾ ಮುರಳಿ
ರಾಗ :ಬೇಹಾಗ್
ತಾಳ :ಆದಿ ತಾಳ
ಶೈಲಿ :ಸುಗಮ
ಸಂಗೀತ ನಿರ್ದೇಶಕರು :ಮನೋರಂಜನ್ ಪ್ರಭಾಕರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಡಿಂಗುಡಿಂಗಾಯ್ತು ಶ್ರೀಹರಿಸೇವೆ
೫೦೫
ಡಿಂಗುಡಿಂಗಾಯ್ತು ಶ್ರೀಹರಿಸೇವೆ ಪ.
ರಂಗರಾಯನ ಚರಣಂಗಳ ಸೇವಿಪ
ಡಿಂಗರಿಗೆಲ್ಲ ಸುಮಂಗಲವಾಯ್ತು೧
ಎಲ್ಲಿ ಪೋದರು ಭಯವಿಲ್ಲದ ತೆರನಾಯ್ತು
ಫುಲ್ಲನಾಭನ ದಯದಲ್ಲಿದ್ದ ಕಾರಣ೨
ಬದ್ಧವಾಗಿಹ ದಾರಿದ್ರಾವಸ್ಥೆಯ
ಛಿದ್ರಿಸಿ ಹರಿದಯವಿದ್ದ ಕಾರಣದಿಂದ ೩
ಏನಾರಾಗಲಿ ಎಂತಾದರಿನ್ನೇನು
ಶ್ರೀನಿವಾಸನು ದಯ ತಾನೆ ಗೈದರಿಂದ ೪
ಮಾರಜನಕ ಲಕ್ಷ್ಮೀನಾರಾಯಣನೊಳು
ತೂರಿಯಾನಂದಕೆ ಸೇರಿದ್ದ ಕಾರಣ೫

ಹಾಡಿನ ಹೆಸರು :ಡಿಂಗುಡಿಂಗಾಯ್ತು ಶ್ರೀಹರಿಸೇವೆ
ಹಾಡಿದವರ ಹೆಸರು :ರಮಾಕಾಂತ್ ಎಸ್.
ರಾಗ :ಕುಂತಲವರಾಳಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರತ್ನಮಾಲಾ ಪ್ರಕಾಶ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನಂಬಿದೆ ನಿನ್ನ ಶಾಂಭವೀಸುತ
೩೧೪
ನಂಬಿದೆ ನಿನ್ನ ಶಾಂಭವೀಸುತ
ಲಂಬೋದರ ಗುರುವರ ಧವಳಾಂಬರಾವೃತ ಪ.
ವಿಘ್ನಭಂಜನ ವಿಶ್ವರಂಜನ
ಮಗ್ನಗೈಸಬೇಡ ಭವದಿ ನಿರ್ಗತಾಂಜನ ೧
ಭಾರ ಯಾರದು ವಿಘ್ನಹಾರಿಸುವದು
ಭಾರತಾರ್ಥ ಭಾಸ್ಕರಾಚಾರ್ಯ ನಿನ್ನದು ೨
ರಕ್ಷಣೀಯನೆ ಮುಮಕ್ಷುಪ್ರಿಯನೆ
ಲಕ್ಷ್ಮೀನಾರಾಯಣಾಂಘ್ರಿ ಲಕ್ಷಿತಾತ್ಮನೆ೩

ಹಾಡಿನ ಹೆಸರು :ನಂಬಿದೆ ನಿನ್ನ ಶಾಂಭವೀಸುತ
ಹಾಡಿದವರ ಹೆಸರು:ಮಂಗಳಾ
ರಾಗ :ಹಿಂದೋಳ
ತಾಳ :ಆದಿ ತಾಳ
ಶೈಲಿ :ಸುಗಮ
ಸಂಗೀತ ನಿರ್ದೇಶಕರು:ಮನೋರಂಜನ್ ಪ್ರಭಾಕರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ನಲಿದಾಡಿದಳ್ ನಳಿನಾಂಬಕಿ
೩೭೦
ನಲಿದಾಡಿದಳ್ ನಳಿನಾಂಬಕಿ
ಒಲಿದೆಮ್ಮನು ಸಲಹಲೋಸುಗ ಪ.
ಸುಲಲಿತ ವೀಣಾಪಾಣಿ
ಜಲಜೋದ್ಭವರ ಮಣಿ ಸುಗುಣಿ ಅ.ಪ.
ಕೃತೀಶಸುತೆ ಕೃಪಾನ್ವಿತೆ
ಶ್ರುತಿಸಮ್ಮತಗೀತೆ
ಪ್ರತಿರಹಿತೆ ಸತಿಪೂಜಿತೆ
ರತಿಯಾಮಿತ ಶೋಭಿತಳೆ ಧೃತಿ ಸಂಭೃತೆ ಮತಿದಾಯಕಿ೧
ಇಭೇಂದ್ರಗಮೆ ವಿಧುಮಂಡಲ-
ನಿಭಮುಖಿ ಶಿಖಿಯಾನೆ
ಅಭಯಪ್ರದೆ ಅಖಿಳೇಶ್ವರಿ
ಸುಭಜೆ ಶುಭದೆ ವಿಬುಧೆ ಅಭವೆ ಸದ್‍ವಿಭವಾಸ್ಪದೆ ೨
ಪರಾಂಬರಿಸು ಪದಾಶ್ರಿತನ
ಪ್ರಭಾಕರಶತಾಭೆ
ಹರಿ ಲಕ್ಷ್ಮೀನಾರಾಯಣ-
ಶರಣೆ ರತುನಾಭರಣೆ ಕರುಣಾರಸವರುಣಾಲಯೆ೩

ಹಾಡಿನ ಹೆಸರು :ನಲಿದಾಡಿದಳ್ ನಳಿನಾಂಬಕಿ
ಹಾಡಿದವರ ಹೆಸರು :ಚೈತ್ರ ಹೆಚ್. ಜಿ.
ರಾಗ :ಮಧುಮಾತ್ ಸಾರಂಗ್
ತಾಳ :ದಾದ್‍ರಾ
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಪೋಗಿ ಬರುವೆನು ಎನ್ನ ಮನೆಗೆ ಜಗದೀಶ
೪೫೪
ಪೋಗಿ ಬರುವೆನು ಎನ್ನ ಮನೆಗೆ ಜಗದೀಶ
ಭಾಗವತಪ್ರಿಯ ಭಾಗೀರಥೀಜನಕ ಪ.
ವರುಷವರುಷಕೆ ನಿನ್ನ ದರುಶನವನಿತ್ತೆನ್ನ
ಕರುಣಿಸೈ ಶೇಷಾದ್ರಿವರ ಶ್ರೀನಿವಾಸ
ದುರಿತ ಕೋಟಿಗಳ ಸಂಹರಿಸಿ ನಿನ್ನಯ ಕರುಣಾ
ವರ ಪ್ರಸಾದವನೀಯೊ ಜನ ಮೆಚ್ಚುವಂತೆ೧
ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿ
ನಿಯಮತಿಯೀಯೊ ನೀರಜನಾಭನೆ
ದಯಮಾಡೊ ತವ ಪಾದಸೇವೆಯನ್ನಿತ್ತೆನಗೆ
ಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ೨
ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾ
ಧೀನ ನೀನೆಂಬ ಬಿರುದುಂಟಾದಡೆ
ಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನ
ಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ ೩

ಹಾಡಿನ ಹೆಸರು : ಪೋಗಿ ಬರುವೆನು ಎನ್ನ ಮನೆಗೆ ಜಗದೀಶ
ಹಾಡಿದವರ ಹೆಸರು :ಅನಘಾ ಭಟ್
ರಾಗ :ಭೂಪಾಲಿ
ತಾಳ :ಜಪ್‍ತಾಲ್
ಶೈಲಿ :
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಮನವು ನಿನ್ನಲಿ ನಿಲ್ಲಲಿ ಅನುದಿನ
೪೫೬
ಮನವು ನಿನ್ನಲಿ ನಿಲ್ಲಲಿ ಅನುದಿನ ನಿನ್ನ ನೆನೆದು
ಮನವು ನಿನ್ನಲಿ ನಿಲ್ಲಲಿ ಪ.
ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ
ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ ೧
ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ
ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ ೨
ಸಂತೋಷ ನಿರಂತರವು ಸಂತ ಜನ ಸಹವಾಸವು
ಶಾಂತತ್ವವಾಂತು ಮಹಾಂತಧೈರ್ಯದಿ ೩
ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ
ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ ೪
ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ
ಧೈರ್ಯದಂತರ್ಯ ಗಾಂಭೀರ್ಯ ಭಾವದಿ ೫

ಹಾಡಿನ ಹೆಸರು :ಮನವು ನಿನ್ನಲಿ ನಿಲ್ಲಲಿ ಅನುದಿನ
ಹಾಡಿದವರ ಹೆಸರು :ನಗರ ಶ್ರೀನಿವಾಸ ಉಡುಪ
ರಾಗ :ಭೀಮ್‍ಪಲಾಸ್
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರತ್ನಮಾಲಾ ಪ್ರಕಾಶ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ
೩೫೦
ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ ಪ.
ಕರುಣಾಕರ ನಿಜ ಶರಣ ರಕ್ಷಾಮಣಿ ತರಣಿಕೋಟಿಭಾಸುರ ಶ್ರೀನಾರಾಯಣನ ೧
ಕಾಲನವರ ಕಂಡು ಬಾಲನ ಕರೆದಗೆ ಸಾಲೋಕ್ಯವಿತ್ತ ಶ್ರೀನಾರಾಯಣನ ೨
ತರಳ ಪ್ರಹ್ಲಾದನು ಕರೆಯೆ ಕಂಬದಿ ಬಂದು ನರಮೃಗೇಂದ್ರನಾಗಿ ಪೊರೆದ ನಾರಾಯಣನ೩
ಮಾತೆಯ ಸವತಿಯ ಮಾತಿಗಾಗಿ ಬಂ- ದಾತನ ಕಾಯ್ದ ಶ್ರೀನಾಥ ನಾರಾಯಣನ ೪
ಮೊಸಳೆಯ ಬಾಧೆಗೆ ಹಸಿದು ಕೂಗಲಾಗಿ ಬಸವಳಿದಿಹನ ರಕ್ಷಿಸಿದ ನಾರಾಯಣನ ೫
ಕಾದೆಣ್ಣೆಯೊಳು ಕರುಣೋದಯದಿ ಸುಧನ್ವ- ಗಾದರಿಸಿ ರಕ್ಷಿಸಿದಾದಿನಾರಾಯಣನ ೬
ಮಾರಜನಕ ರಮಾರಮಣ ಲಕ್ಷ್ಮೀ- ನಾರಾಯಣನ ಪಾದಾರವಿಂದಯುಗ ೭

ಹಾಡಿನ ಹೆಸರು :ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ
ಹಾಡಿದವರ ಹೆಸರು :ವಿದ್ಯಾ ಸುಬ್ರಹ್ಮಣ್ಯಂ
ರಾಗ :ಚಾರುಕೇಶಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ನೀಲಾ ರಾಮಗೋಪಾಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಹರಿಧ್ಯಾನವೆ ಗಂಗಾಸ್ನಾನ
೪೭೩
ಹರಿಧ್ಯಾನವೆ ಗಂಗಾಸ್ನಾನ ವಿಷ-
ಯಾನುಭವ ಜಯವೆ ಮೌನ
ಪ್ರಾಣೇಶನೆ ಸರ್ವೋತ್ತಮ ವೇದ ಪು-
ರಾಣ ಪ್ರಮಾಣವೆ ಜ್ಞಾನ ೧
ಮತ್ತರ ಸಂಗ ಪ್ರವೃತ್ತಿಯೊಳಿರದೆ ನಿ-
ವೃತ್ತಿಯೊಳಿರುವುದೆ ಮಾನ
ಸತ್ಯಾತ್ಮನ ರೂಪದೊಳು ಭೇದರಾ-
ಹಿತ್ಯವೆ ಸರ್ವಸಮಾನ ೨
ಕರ್ತ ಲಕ್ಷ್ಮೀನಾರಾಯಣನ ಪಾದ
ಭಕ್ತಿ ವಿರಹಿತನೆ ಹೀನ
ಚಿತ್ತಜೋದ್ಭವ ಪರಾತ್ಪರ ತ್ರಿಜಗವು
ಪ್ರತ್ಯಗಾತ್ಮನಾಧೀನ ೩

ಹಾಡಿನ ಹೆಸರು :ಹರಿಧ್ಯಾನವೆ ಗಂಗಾಸ್ನಾನ
ಹಾಡಿದವರ ಹೆಸರು :ಕಾಸರವಳ್ಳಿ ಸಹೋದರಿಯರು (ರೂಪಾ, ದೀಪಾ)
ರಾಗ :ಸರಸ್ವತಿ
ತಾಳ :ಮಿಶ್ರ ಛಾಪು ತಾಳ
ಸಂಗೀತ ನಿರ್ದೇಶಕರು :ನೀಲಾ ರಾಮಗೋಪಾಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ