Categories
ರಚನೆಗಳು

ಬಾಗೇಪಲ್ಲಿ ಶೇಷದಾಸರು

ರುಕ್ಮಿಣಿಯನ್ನು ಸಖಿಯರು
ಮಹಾಲಕ್ಷ್ಮೀದೇವಿ
೨೨
ಅಂಗನೆ ರುಕ್ಮಿಣಿ ಮಂಗಳ ಪೀಠಕೆ ಸಂಗ ಸಖಿಯರು ಕರೆವರಲೆ
ಮಂಗಳ ಸುವೇಣಿ ಜಾಣೆ ಬಾರಮ್ಮ ಹಸಗೆ ಕರೆದರು ಪ
ಲೋಕಮಾತೆಯು ನೀಯೆನ್ನುತ ನಿನ್ನನು ಕಮಲ
ಮುಖಿಯರು ಕರೆಯುವರೆ
ಸಾಕು ಬಾರೆ ನಿನ್ನ ಮುಖ ಕಮಲ ತೋರೆ
ಬಾರಮ್ಮ ಹಸೆಗೆ ಕರೆದರು ೧
ಆಣಿ ಮುತ್ತಿನ ಹಸೆಯ ಪೀಠಕೆ ಜಾಣೆಯರು
ಬಾರೆಂದು ಕರೆಯುವರು
ಸಾನುರಾಗದಿ ಕಾಲಾಹಿವೇಣಿ ಕಲ್ಯಾಣಿ ದಯಮಾಡು
ಹಸೆಗೆ ಕರೆದರು ೨
ವನಜನಾಭ ಶ್ರೀಪ್ರಾಣನಾಥ ವಿಠಲನು ನಿನೆನದುರು
ನೋಡುತ್ತಲಿರುವನು
ವನಜಮುಖಿಯರ ಕೂಡಿ ಸುಂದರ ಸುವದನೆ
ದಯಮಾಡು ಹಸೆಗೆ ಕರೆದರು ೩

 

ಉತ್ಸವ ಕಾಲದಲ್ಲಿ

ಭಗವನ್ನಾಮ
ಅಂಬುಜ ಮುಖಿಯರು ಕಂಬುಕಂಠೆಯರು
ಅಂಬರದಲಿ ನಾಟ್ಯವಾಡಿದರು ಪ
ಕುಂಭಿಣಿ ಪತಿ ಶ್ರೀ ಕೃಷ್ಣನರಥ ಬರೆ
ಸಂಭ್ರಮದಿಂದಲಿ ಪಾಡಿದರು ಅ.ಪ.
ಬಾಜ ಬಜಂತ್ರಿಯ ವಾದ್ಯರಭಸದೊಳು
ಮೋಜಿನಿಂದಲಿ ಹರಿ ಬರುತಿರಲು
ಸೋಜಿಗ ಪಡುತಲಿ ರಾಜ ವದನೆಯರು
ಜಾಜಿಮಲ್ಲಿಗೆ ಹೂವ ಬೀರಿದರು ೧
ವೇದ ಘೋಷಗಳಿಂದ ಮೋದಪಡುತ ಹರಿ
ಸಾಧುಜನರ ಕೂಡಿ ಸರಸದಲಿ
ಬೀದಿಯೊಳ್ ಬರುತಿರೆ ಮಾಧವರಾಯಗೆ
ಸೂಜಿಮಲ್ಲಿಗೆ ಹೂವ ಬೀರಿದರು ೨
ಕನ್ನಡಿ ಮಂಟಪ ಮಧ್ಯದೊಳಗೆ ಹರಿ
ರನ್ನೆಯರೊಡಗೊಡಿ ಬರುತಿರಲು
ಸನ್ನುತಾಂಗ ಶಿರಿ ಪ್ರಾಣನಾಥ ವಿಠಲನ
ಸಂಭ್ರಮದಿಂದಲಿ ಸಾರಿದರು ೩

 

ಇದು ಸಾಧನಪುರ

ಅಲ್ಲಿನೋಡಿ ಶ್ರೀನಿವಾಸನ ಪ
ಪುಲ್ಲಾನಾಭನು ಸಿರಿನಲ್ಲೆಯಿಂದೊಪ್ಪಿರುವುದ ನೋಡಿ ಅ.ಪ
ಶೇಷನ ಫಣೆಯೊಳು ವಾಸವ ಮಾಡುತ
ದಾಸಜನರ ಮನ ತೋಷಪಡಿಸುವುದ ನೋಡಿ ೧
ಆದರದಿಂದಲಿ ಸಾಧನಪುರದೊಳು
ಸಾಧು ಜನರ ಮನ ಮೋದಪಡಿಸುವುದ ನೋಡಿ೨
ಪ್ರಾಣನಾಥವಿಠಲನು ಸಾನುರಾಗದಲಿ ವೇಣು
ಗಾನವ ಮಾಡುತ ಸಿರಿ ಮಾನಿನಿಯಿಂದೊಪ್ಪಿರುವುದ ನೊಡಿ ೩

 

ಶ್ರೀ ಲಕ್ಷ್ಮೀದೇವಿಯು

ಆರತಿಯನೆತ್ತುವೆನು ವಾರಿಜಾಕ್ಷ ಕೃಷ್ಣ ನಿನಗೆ ಪ
ತಾಮರಸದಳಾಕ್ಷ ನಿನಗೆ ಹೇಮದ ತಟ್ಟಿಯನು ಪಿಡಿದು ಅ.ಪ
ಮಾರಸುಂದರ ಮೋಹನಾಂಗ ಸಾರಸಾಕ್ಷ ಕೃಪಾಪಾಂಗ
ನಾರಿಜನರ ಮತ್ತಭೃಂಗ ಧೀರ ಮಂಗಳಾಂಗ ನಿನಗೆ
ಕಮಲ ನಯನ ಹರಿಯೆ ನಿನಗೆ ವಿಮಲಮುತ್ತಿನ ಆರತಿಯ
ಕಮಲ ಮುಖಿಯು ಕರದಿ ಪಿಡಿದು ಕಮಲವದನ ಕೃಷ್ಣ ನಿನಗೆ ೨
ಜಾಣ ಪ್ರಾಣನಾಥ ವಿಠಲ ಆಣಿ ಮುತ್ತಿನ ಆರತಿಯ
ಜಾಣತನದಿ ಕರದಿ ಪಿಡಿದು ಪ್ರಾಣಕಾಂತ ಕೃಷ್ಣ ನಿನಗೆ ೩

 

ಭಗವಂತನಲ್ಲಿ

ಇಷ್ಟೇ ಬೇಡುವೆ ನಾ ನಿನಗೆ ಕರವ ಮುಗಿದು ಪ
ಅಷ್ಟಸೌಭಾಗ್ಯ ಕೊಟ್ಟು ನೀ ಎನ್ನ
ಕಟ್ಟುಬಿಡಿಸೆಂದು ಬೇಡೆನೊ ಕೃಷ್ಣರಾಯ ೧
ಸೃಷ್ಟಿಗೊಡೆಯ ನಿನ್ನಿಷ್ಟವಿದ್ದಂತಾಗಲಿ
ಶಿಷ್ಟಜನರ ಸಂಗ ಕೊಟ್ಟ ರಕ್ಷಿಸು ಎಂದು ೨
ಜ್ಞಾನಿಗಳರಸ ಜಾಣ ಪ್ರಾಣನಾಥ ವಿಠಲರಾಯ
ಸಾನುರಾಗದಿ ನಿನ್ನಧಾಯನಕೊಟ್ಟು ಬಹು
ಮಾನಿಯೆಂದೆನಿಸೆಂದು ೩

 

ಇದು ಉಮೆಯ ಪತಿಯಾದ
ರುದ್ರದೇವರು
೩೧
ಉಮೇಶಾ ಪರಿಪಾಲಿಸೊ ಪ
ಉಮೇಶ ಪಾಲಿಸು ರಮೇಶನ ಪಾದ
ಕಮಲಗಳಿಗೆ ಭ್ರಮರನೆನಿಸಿ೧
ಕಾಲನಿಯಾಮಕ ನೀನಾಗಿ ಜಗವನು
ಲೀಲೆಯಿಂದಲಿ ಕಾವ ಶೂಲ ಪಾಣಿಯೆ ೨
ಈಶವಂದಿತ ಸಿರಿ ಶೇಷಾವಿಠ್ಠಲನ
ದಾಸನೆನಿಸಿ ಸಂತೋಷಗೊಳಿಸೊ ೩

 

ಇದು ಶ್ರೀ ಪ್ರಾಣದೇವನ
ವಾಯುದೇವರು
೨೬
ಎಲ್ಲಿರುವೆ ತಂದೆ ಬಾರೊ ಮಾರುತಿ ಪ
ಎಲ್ಲೆಲ್ಲಿನೋಡಿದರು ಅಲ್ಲಿ ನಿನ್ನ ಕೀರುತಿ
ಅಲ್ಲಿನಿನ್ನಕೂಡಿರುವ ನಿತ್ಯಾಶ್ರೀಪತಿಅ.ಪ
ವಾರಿಧಿಯ ಹಾರಿ ನೀ ಸೇರಿ ತ್ವರದಿ ಲಂಕೆಯ
ಕ್ರೂರರನ್ನು ಕೊಂದು ಕುರುಹ ತಂದ ಮಹರಾಯ ೧
ದುರುಳ ಕುರುಪನನ್ನು ಕೊಂದು ತರಳೆಯಮಾನ
ಹರುಷದಿಂದ ಪೊರೆದು ನೀ ಮೆರೆದ್ಯೊ ಸುಮ್ಮಾನ ೨
ಯತಿಯ ರೂಪವ ಧರಿಸಿ ನೀ ಸಿರಿಪತಿಯ ಪಾದವ
ಹಿತದಿ ಸತತ ಭಜಿಸಿ ಶೇಷ ವಿಠ್ಠಲನ ಮೋದಿಸಿದಿ ೩

 

ಗಜೇಂದ್ರನ್ನು ಕಾಪಾಡಿದ

ಕರಿರಾಜ ವರದ ಕಾಯೊ ಪ
ವರ ಕರಿರಾಜ ವರದ ಕಾಯೊ
ಮರೆಯದೆ ಎನ್ನ ಕರವ ಪಿಡಿದು ೧
ವರಕರಿರಾಜವರದ ಕಾಯೊ
ಶರಣರ ಚರಣ ಸ್ಮರಣೆಯ ಕರುಣಿಸಿ ೨
ದೀನವತ್ಸಲ ಸಿರಿ ಪ್ರಾಣನಾಥ ವಿಠ್ಠಲ
ನಿನ್ನಧ್ಯಾನ ಕೊಟ್ಟೆನ್ನ ಕಾಯೊ ೩

 

ಇದು ರುಕ್ಮಿಣಿಯ ಸ್ತೋತ್ರ
೨೩
ಕಾಂತಾಮಣಿ ಶ್ರೀ ರುಕ್ಮಿಣಿ ಪ
ವದನ ಸುಶೀಲೆ ಮೃಗಮದ ಫಾಲೆ
ಸದಯೆ ನೀ ಭಕ್ತರ ಮುದದಿ ಪಾಲಿಸು ಇನ್ನು ೧
———————–
———————– ೨
ಜಗದ ಜನನಿಯೆ ನೀ ಬಗೆ ಬಗೆಯಿಂದಲಿ
ನಗೆ ಮುಖ ಪ್ರಾಣನಾಥ ವಿಠಲನ ಬದಿಯೊಳಿಪ್ಪೆ ೩
(ಸೂಚನೆ:ಈ ಪದದ ಎರಡನೇ ನುಡಿ ದೊರೆತಿಲ್ಲ _ಸಂ.)

 

ಇದು ಶ್ರೀ ವ್ಯಾಸತೀರ್ಥರ
ಯತಿಗಳು (ಶ್ರೀ ಬ್ರಹ್ಮಣ್ಯತೀರ್ಥರು)
೩೨
ಕೈಪಿಡಿದು ಪಾಲಿಸೈ ಬ್ರಹ್ಮಣ್ಯಗುರುವೇ ಪ
ಅಯ್ಯನೀನೆಂದು ನಿನ್ನಡಿಗೆ ವಂದಿಸುವೇ ಅ.ಪ
ಮೂಢವಇತಿಗಳು ಬಂದು ಬೇಡಿ ಕೊಳ್ಳಲು ಕರುಣ
ನೀಡಿ ನಿನ್ನವರನ್ನು ಕಾಯ್ದರೀತಿ
ಗಾಢದಿಂದಲಿ ಬಂದು ಮೂಢನಾದೆನ್ನನು
ಗೂಢದಿಂದಲಿ ಕಾಯೊ ಗುಣನಿಧಿಯೆ ಗುರುವೇ . . ೧
ಪುರುಷೋತ್ತಮಾರ್ಯರ ವರಪುತ್ರನೆಂದೆನಿಸಿ
ಹರುಷದಿಂದಲಿ ಬಂದ ಭಕ್ತಜನರ
ಮೊರೆಯಲಾಲಿಸಿ ಸ್ವಾಮಿ ಸ್ಮರಣೆಯ ಕೊಟ್ಟೆನ್ನ
ಹರುಷಪಡಿಸುವ ಗುರುವು ನೀನೆಂದು ನಾ ಬಂದೆ ೨
ವರಕಣ್ವನದಿ ಕೂಲದಲಿ ಕಲ್ಮಷ ತೊಳೆದು
ಪರ್ಮೆಯಿಂದಲಿ ಶಿಶುವ ಪಾಲಿಸಿದ ಗುರುವೆ
ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ
ಸರ್ವಜನರನು ಕಾವೆ ಸರ್ವಕಾಲದಲಿ ೩
ಸರ್ವಗುಣ ಪೂರ್ಣ ಬ್ರಹ್ಮಣ್ಯಪುರ ವಾಸ
ನರಹರಿಯ ಪಾದವನು ಸ್ಮರಿಸಿನಿತ್ಯ
ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ
ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ ೪
ಮಣಿದು ಬೇಡುವೆ ನಿನ್ನ ಚರಣದಾಶ್ರಯವಿತ್ತು
ಅಣುಗನೆಂದೆನಿಸೆನ್ನ ಸಲಹಬೇಕೊ
ಗುಣನಿಧಿ ಶ್ರೀ ಪ್ರಾಣನಾಥ ವಿಠ್ಠಲನ
ಘನ ಚರಣ ಸ್ಮರಣೆಯ ನೀಯೊ ಗುರುವೆ ೫

 

ಭಗವಂತನ ಅಂಗಾಂಗಗಳನ್ನು

ದಯಮಾಡೋ ದಯಾಸಾಗರ ಪ
ಕರುಣಾ ಕಟಾಕ್ಷನೆ ವರಪೀನ ವಕ್ಷನೆ
ಪರಮ ಪುರುಷ ಪವನಾತ್ಮನೇ
ಪರಮ ಪುರುಷ ಪವನಾತ್ಮನೇ ೧
ಅಂಬುಜನಾಭನೆ ಕಂಬು ಕಂದರನೆ
ಸಂಭ್ರಮದಿ ಕಾಯೊ ದೇವನೆ
ಸಂಭ್ರಮದಿ ಕಾಯೊ ದೇವನೆ ೨
ಜ್ಞಾನಿಗಳರಸನೆ ಪ್ರಾಣನಾಥವಿಠಲನೆ
ಮಾನದಿಂದ ಕಾಯೊ ದೇವನೆ
ಮಾನದಿಂದ ಕಾಯೊ ದೇವನೆ ೩

 

ಭಗವಂತನನ್ನು ಪರಿಪರಿಯಾಗಿ ಪ್ರಾರ್ಥಿಸಿ

ದೀನಬಂಧು ನೀ ದಯಾಸಿಂಧು ಪ
ನಿನ್ನನಂಬಿದ ಆಪನ್ನ ಜನರನು
ಮನ್ನಿಸಿ ಸಲಹಿ ಪ್ರಸನ್ನನಾಗುವೆ ೧
ಕಂಜಲೋಚನ ನಿನಗಂಜಲಿ ಮುಗಿಯುವೆ
ಕುಂಜರ ವರದ ಭುಜಂಗ ಶಯನ ೨
ಘನ್ನಮಹಿಮ ಪ್ರಾಣನಾಥ ವಿಠ್ಠಲರಾಯ
ಮನ್ನಿಸಿ ಪ್ರಸನ್ನನಾಗಿ ಎನ್ನಸಲಹೋ ಸ್ವಾಮಿ ೩

 

ಜೀವನವು ಸಾರ್ಥಕವಾಗಬೇಕಾದರೆ

ದೇಹವ್ಯಾಕೆ ಇಂಥ ದೇಹವ್ಯಾಕೆ ಪ
ಹಗಲು ಇರುಳು ಹರಿಯ ನೆನೆಯದ ಕಾಯವ್ಯಾಕೆ ಅ.ಪ
ಹರಿಯ ಪಾದಕೆರಗದಂಥ ಶಿರವು ಏಕೆ
ಪರಮ ಪುರುಷನ ಪಾಡದಂಥ ವದನವ್ಯಾಕೆ ೧
ಹರಿಯಸ್ಮರಣೆ ಕೇಳದಂಥ ಕರ್ಣವ್ಯಾಕೆ
ಹರಿಯಮೂರ್ತಿನೋಡದಂಥ ಕಂಗಳ್ಯಾಕೆ ೨
ಹರಿಯ ನಿರ್ಮಾಲ್ಯವಾಘ್ರಾಣಿಸದಂಥ ನಾಸವ್ಯಾಕೆ
ಹರಿಯ ನೈವೇದ್ಯ ಭುಂಜಿಸದಂಥಾ ಉದರವ್ಯಾಕೆ ೩
ಹರಿಯದಾಸರ ಕೊಡಿ ತಿರುಗದ ಚರಣವ್ಯಾಕೆ
ಶರಣಜನರ ಚರಣ ತೊಳೆಯದ ಕರವು ಏಕೆ೪
ಪ್ರಾನನಾಥವಿಠಲನ ಪಾಡದ ಜಿಹ್ವೆ ಏಕೆ
ಜಾಣರೆಲ್ಲರು ತಿಳಿದು ನೋಡಿ ಬದುಕಿ ಜೋ ೫

 

ಇದು ಬಾಗೇಪಲ್ಲಿ
೨೭
ನಡೆದು ಬಾರಯ್ಯ ಪ್ರಾಣರಾಯ ಪಿಡಿ ಎನ್ನ ಕೈಯಾ ಪ
ಕಡುಬಡಜನರಿಗೆ ಒಡೆಯನಾಗಿ ನೀ
ಸಡಗರದಲಿ ಕರ ಪಿಡಿದು ಪೊರೆವುದಕೆ ೧
ಭಾಗ್ಯಪುರಿಯೊಳಗೆ ಭಾಗವತರಿಗೆಲ್ಲ
ಯೋಗ್ಯಮಾರ್ಗವನು ಬೇಗನೆ ತೋರಲು ೨
ಅನಾಥನಾಥ ಪ್ರಾಣನಾಥ ವಿಠ್ಠಲನ ದೂತನೀ
ನೆನೆಸಿ ಭಕ್ತಜನರ ಸಂತೋಷಪಡಿಪುದಕೆ ೩

 

ಇದು ಶ್ರೀಲಕ್ಷ್ಮೀದೇವಿಯ ಮಹಿಮೆಯನ್ನು
೨೪
ನಾರಿ ನಾನರಿಯೆನೆ ನಿನ್ನಯ ಮಹಿಮ
ಕರುಣದಿ ಇಡು ಪ್ರೇಮ ಪ
ಬಾರಿ ಬಾರಿಗೆ ನಿನ್ನ ಭಜಿಸುವ ಭಕ್ತರ
ಪಾರುಗಾಣಿಸಿ ಪೊರೆ ನಾರಿ ಶಿರೋಮಣಿ ಅ.ಪ
ಕನಸು ಮನಸಿನೊಳ್ ನಿನ್ನಯ ಧ್ಯಾನ ಬಿಡದಲೆ ನಾ ಇನ್ನ
ನೆನಸಿ ನೆನಸಿ ಸುಖಿಸುವೆ ಮುನ್ನ ವನಜಾಕ್ಷಿಯೆ ನಿನ್ನ
ಅನುದಿನ ನಿನ್ನನು ಸ್ಮರಿಸುವ ಸುಜನರ
ಘನವನುಳುಹಿ ಕಾಯೆ ಮನಸಿಜನ ತಾಯೆ ೧
ಸೃಷ್ಟಿಯೊಳಗೆ ಶೆಟ್ಟಿ ಕೆರೆಯ ತಟದಲಿ ನೀ ನಿಂತು
ಶ್ರೇಷ್ಠಳೆನಿಸಿ ಭಕ್ತರ ಮೊರೆಯ ನಿತ್ಯದಿ ನೀನರಿತು
ಇಷ್ಟದಿ ಕೇಳುತ ಶಿಷ್ಟಜನರ ಅಘ
ಹಿಟ್ಟುಮಾಡಿ ಕಾಯೆ ಶ್ರೀ ಕೃಷ್ಣನ ಜಾಯೆ ೨
ಮದನನಯ್ಯನ ಮೋಹದ ರಾಣಿ ಮದಮುಖದ ಶ್ರೇಣಿ
ವಧಿಸಿದ್ಯೆಲೆ ಪರಮ ಕಲ್ಯಾಣಿ ಜಗದೊಳಗತಿ ಜಾಣೆ
ಮದಗೊಂಡನ ಪುರಿ ಸದನ ಮಾಡಿಕೊಂ
ಡೊದಗಿ ಭಕ್ತರ ಮುದವಪಡಿಸಿದ್ಯೆಲೆ ೩
ಜಗದೊಳು ನಿನಗೆ ಸರಿಯಾರೆ ಪರಿಪರಿ ವಯ್ಯಾರೆ
ಅಗಣಿತ ಗುಣಗಂಭೀರೆ ಸುಂದರ ಸುಕುಮಾರೆ
ಬಗೆಯಲಿ ಎನ್ನವಗುಣಗಣ ವೆಣಿಸದೆ
ಸೊಗದಿಂದಲಿ ಕಾಯೆ ನಗಧರನ ಪ್ರಿಯೆ ೪
ಅನುವನರಿತು ಪಾಲಿಸು ಮುನ್ನನಂಬಿದ ಮನುಜರನ
ಅನುದಿನ ನಿನ್ನ ಪಾದಧ್ಯಾನ ಮನಸಿಗೆ ಕೊಟ್ಟೆನ್ನ
ವನಜಾಕ್ಷಶ್ರೀ ಪ್ರಾಣನಾಥ ವಿಠಲನ
ಸನ್ನಿಧಾನವಿತ್ತು ಮನ್ನಿಸು ತಾಯೆ ೫

 

ಇದು ಶ್ರೀ ಮಾರುತಿಯ ಸತಿಯಾದ
ಭಾರತೀ ದೇವಿ
೩೦
ಪಾಲಿಸಮ್ಮ ಭಾರತಾದೇವಿ ಪ
ಶೀಲಮತಿಯ ಎನಗೆ ಕೊಟ್ಟು ಅ.ಪ
ಭಾರನಿಮ್ಮದಮ್ಮಕಾಯೆ ಮಾರುತಿ ಮನಪೂರ್ಣ ಪ್ರಿಯೆ
ಕೋರುವೆ ನಿನ್ನ ಪಾದವನ್ನು ತೋರಿ ನೀಡೆ ಜ್ಞಾನವನ್ನು ೧
ಪಂಚಭೇದ ತಾರತಮ್ಯ ಸಂಚಿಂತನೆಯನ್ನೆ ಕೊಟ್ಟು
ಪಂಚಬಾಣನ ಪಿತನ ಚರಿತೆ ವಂಚಿಸದಲೆ ಪೇಳಿಸಮ್ಮ ೨
ನಿನ್ನನಂಬಿದ ಭಕ್ತಜನಕೆ ಘನ್ನಸುಖವ ಕೊಟ್ಟು ಪರಕೆ
ಸನ್ನುತಾಂಗ ಶೇಷವಿಠಲನನ್ನು ತೋರಿ ಸಲಹಿದಾಪರಿ ೩

 

ಶ್ರೀ ರಾಮನ ರೂಪವನ್ನು ವರ್ಣಿಸಿ
೧೦
ಬಂದನೇನೆ ಸುಂದರ ಶ್ರೀರಾಮ ಚಂದಿರ ಪ
ಸಿರಿವತ್ಸಧಾರನು ಶ್ರೀತಜನೋದ್ಧಾರನು
ಮಾರ ಸುಂದರನು ಮಾ ಮನೋಹರನು ೧
ಕೋಮಲ ಗಾತ್ರನು ಕಮಲಕಳತ್ರನು
ಕಮಲಾಪ್ತ ತೇಜನು ವಿಮಲ ಸತ್ಪಾತ್ರನು ೨
ಸಾಸಿರನಾಮನು ಭಾಸುರವದನನು
ಈಶ ವಂದಿತನು ಶೇಷವಿಠ್ಠಲನು ೩

 

ಭಕ್ತಜನರ ಕಾಟವನ್ನು
೧೧
ಬಂದೆ ರಂಗಯ್ಯ ನಿನ್ನಬಳಿಗೆ ಪ
ನೊಂದು ಮನ ಬೇಡುವೆ ನಿನ್ನ ಶ್ರೀಪಾದಂಗಳಿಗೆ ಅ.ಪ
ಭಕ್ತಜನರು ಬಂದು ಕಾಡುವರೆಂತೆಂದು
ಯುಕ್ತಿಯಿಂದಿಲ್ಲಿ ಬಂದು
ಸಪ್ತಬೆಟ್ಟದ ಮಧ್ಯದೊಳ್ ವಿ
ರಕ್ತಿಯ ಕೈಕೊಂಡು ನಿಂತಿರೆ
ಮುಕ್ತಿದಾಯಕ ನಿನ್ನ ನಂಬಿದ
ಭಕ್ತರ ಪಾಡೇನು ಪೇಳೆಲೊ ೧
ಶ್ವೇತಾದ್ರಿಯಲಿ ಭಕ್ತವ್ರಾತ ಪಾಲಿಸಿದಂಥಾ
ಪ್ರೀತಿವಚನ ಕೇಳಿ
ಭೂತನಾಥನ ಭಯವ ಬಿಡಿಸಿ
ಖ್ಯಾತಿಯನು ಪಡೆದಂಥ ವಾರ್ತೆಯ
ರೀತಿಯನು ನಾ ಕೇಳಿ ಬಂದೆನೊ
ಮಾತುಳಾಂತಕ ಮಾರಮಣ ಹರೇ ೨
ದೀನವತ್ಸಲ ಶ್ರೀರಂಗ ನಿನ್ನಯ ಪಾದ
ಧ್ಯಾನ ಮಾಡುವರ ಸಂಗವಿತ್ತು
ಮಾನನಿಧಿ ಪ್ರಾಣನಾಥ ವಿಠಲನೆ
ಸಾನುರಾಗದಿ ಸಲಹೊ ಎನ್ನನು
ದೀನನಾದ ಗಜೇಂದ್ರನ ಬಹು
ಮಾನದಿಂದಲಿ ಕಾಯ್ದ ಪ್ರಭುವೆಂದು ಬಂದೇ ೩

 

ಇದು ಒಂದು ರಥೋತ್ಸವವನ್ನು
೧೨
ಬರುವುದು ನೋಡೆ ಶ್ರೀಹರಿ ರಥವೇರಿ ಪ
ಎಡಬಲದಲಿ ಹರಿ ಉಡುರಾಜ ಮುಖಿಯರ
ಸಡಗರದಿಂದಲಿ ಬಡವರಾಧಾರಿ ಶೌರಿ ೧
ಗುಣಮಣಿ ಶ್ರೀನಿವಾಸ ಮಣಿಯುವೋ ಭಕ್ತರ
ದಣಿವು ಆರಿಪುದಕೆ ವಿನಯ ಪೂರ್ವಕವಾಗಿ೨
ಬಗೆ ಬಗೆಯಲಿ ತನ್ನ ಭಜಿಸುವೊ ಭಕ್ತರ
ಸುಗುಣ ಶ್ರೀ ಪ್ರಾಣನಾಥ ವಿಠಲ ರಾಯನು ನಗುತ ೩

 

ಶ್ರೀನಾರಾಯಣನು ಬಳೆಗಾರನಾಗಿ
೧೩
ಬಳೆಯ ತೊಡಿಸಿದ ಭಾಗ್ಯಪುರುಷನೂ ನಳಿನಾಕ್ಷಿಕೈಗೆ ಪ
ತರುಣಿ ಮಣಿ ಕರಗಳಿಗೆ ತಕ್ಕ ಅರುಣಮಯ೧
ಬಳೆಗಳನೆ ತಂದು
ಶರಣಪಾಲಕ ತಾನೆ ಬಂದು ವನಜಮುಖಿ
ಕರಗಳನೆ ಪಿಡಿದು ೧
ಇಳೆಯಪತಿ ಬಳೆಗಾರನಾಗುತ ಪೊಳಲು ಎಲ್ಲ ಸಂಚರಿಸುತ
ನಳಿನಮುಖಿಯ೨ ಕಂಡು ನಗುತಲಿ
ಸರಳತನದಲಿ ಕರವ ಪಿಡಿದು೩ ೨
ಮಾನನಿಧಿ ಪ್ರಾಣನಾಥವಿಠಲನುಸಾನುರಾಗದಿಭಜಿಸುವರ ಸುರ
ಧೇನು ವಂದದಿ ಸಲಹುವನಂತೆ ಮಾನಿನಿಯಮನಕೆ ಒಪ್ಪುವೊ ೩

 

ಶ್ರೀ ರಾಮನ ಪರವಾದ
೧೪
ಬಾ ಬಾ ರಾಘವ ಬಾ ವೀರ ರಾಘವ ಪ
ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ
ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ ೧
ಕೂರ್ಮರೂಪನಾಗಿ ಅಮರರಿಗೊಲಿದು ನೀ
ಕಾಮಜನಕ ಸುಪ್ರೇಮಾವನಿತ್ಯಂತೆ೪ ೨
ವರಹರೂಪನಾಗಿ ಧರಣಿಯ ಚೋರನ
ಶಿರವ ತಂದು ನೀ ಜಗವ ಪೊರೆದ್ಯಂತೆ ೩
ತರಳನ ನುಡಿ ಕೇಳಿ ದುರುಳ ರಕ್ಕಸನ
ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ ೪
ಚೆಲುವತನದಿ ಪೋಗಿ ಬಲಿಯದಾನವ ಬೇಡಿ
ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ ೫
ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ
ಗಡು ಮುರಿದು ನೀ ಸಡಗರ ಪಟ್ಯಂತೆ ೬
ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ
ಭೂತ ರಾವಣನ ಖ್ಯಾತಿಯಿಂದಲಿ ಕೊಂದ ೭
ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು
ನೀರೆಯರ೧ ಮನ ಅಪಹಾರಮಾಡಿದ ಕೃಷ್ಣ ೮
ಚಿತ್ತಜಪಿತ ನೀನು ಬತ್ತಲೆಯೊಳು ಬಂದು
ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ ೯
ಸುಂದರ ವಾಜಿಯ ಚೆಂದಾದಿಂದೇರುತ
ಮಂದಗಮನೆಯರ ನಂದವಳಿದ್ಯಂತೆ ೧೦
ದೋಷರಹಿತ ನಮ್ಮ ಶೇಷವಿಠ್ಠಲನೆ
ಬ್ಯಾಸರವಿಲ್ಲದೆ ಪೋಷಿಸಿ ಸಲಹಲು ೧೧

 

ಈ ಪದವೂ ಸಹ ಬಾಗೇಪಲ್ಲಿ
೨೮
ಬಾಗಿ ಬೇಡುವೆ ಪ್ರಾಣರಾಯ ಭಕ್ತಪ್ರಿಯ ಪ
ಯೋಗಿವಂದಿತ ಭಾಗವತ ಜನಪ್ರಿಯ ಅ.ಪ
ಚಿತ್ರಾವತಿಯ ತೀರವಾಸ ಭಕ್ತಪೋಷ
ಗಾತ್ರ ಮರೆದು ನಿನ್ನ ಸ್ತೋತ್ರ ಮಾಡುತಲಿ೧
ಬಂದೆ ನೀನೇ ಗತಿಯೆಂದು ಎನ್ನ ತಂದೆ
ಮುಂದಿನಾಗಮಗಳ ಒಂದು ನಾನರಿಯೆ ೨
ಅನಾಥ ರಕ್ಷಕನೆಂದು ಎನ್ನಬಂಧು
ಪ್ರಾಣನಾಥವಿಠಲ ಸರ್ವರಿಗೆ ಬಂಧು ಎಂದು ೩

 

ಧೀರನಾದ ಕೃಷ್ಣನು
೧೫
ಬಾರನ್ಯಾತಕೆ ಕೃಷ್ಣ ಬಾರನ್ಯಾತಕೆ ಪ
ನಾರಿಯರ ಭಯವಿಂತಿಹುದೊ ಧೀರ ಕೃಷ್ಣಗೆ ಅ.ಪ
ಹರಿಯ ಮನಕೆ ಹರುಷಪಡಿಸಿ
ಹರಿಯ ಕರೆಸಿ ಮನದೊಳಿರಿಸಿ
ಹೊರಗೆ ಬಿಡರೆಂಬೊ ಭಯಕೆ
ಮರೆಯೊಳಿದ್ದುಕಾಲ ಕಳೆಯುವ ೧
ಮದಗಜಗಮನೆಯರೆಲ್ಲ
ಮದನಕದನ ದೊಳಗೆ ಸೋಲಿಸಿ
ಮುದದಿ ಎನ್ನಬಿಡದೆ ಮನೆಯೊಳು
ಸದರದಿಂದ ನೋಡುವರೆಂದು ೨
ಆಣಿ ಮುತ್ತಿನ ಮಾತನಾಡಿ
ಜಾಣ ಪ್ರಾಣನಾಥ ವಿಠಲನ
ವಿನಯದಿಂದ ಕರೆದು ತಂದರೆ
ವನಜಮುಖಿಯೆ ಹರುಷ ಪಡುವೆ ೩

 

ಏತದ ಭಾವಿಯ ಇಳಿಜಾರಿಗೆ
೧೬
ಬಾರೋ ಬೇಗ ತೋರೋ ಮುಖವನು ನಿನ್ನ
ಬಾರಿಗೆ ಬಿದ್ದೆನು ಪಾರಗಾಣಿಸೊ ಪ
ಅಂಗಜನಯ್ಯಾ ಭುಜಂಗ ಶಯನಾ ಶ್ರೀ
ರಂಗ ಎನ್ನಾ ಅಂತರಂಗಕ್ಕೆ ನೀ ೧
ಕಂಜಲೋಚನ ನಾ ನಿನಗಂಜಲಿ ಮುಗಿಯುವೆ
ಕುಂಜರೇಶ ವರದ ಭುಜಂಗ ಶಯನ೨
ಘನ್ನಮಹಿಮ ಸನ್ಮತಿಯ ಪಾಲಿಸು ಪ್ರ
ಸನ್ನ ಪ್ರಾಣನಾಥ ವಿಠಲರಾಯನೆ ೩

 

ಹೊರಗಿರುವ ಶ್ರೀ ಹರಿಯು
೧೭
ಯಾರವನು ಹೊರಗೆನಿಂತ ಬಾರಾನ್ಯಾಕವನು ಪ
ಮಾರಸುಂದರ ಸುಕುಮಾರ ಶರೀರನು ಅ.ಪ
ನೀರಮುಳುಗಿ ಬಂದು ಘೋರಪರ್ವತ ತಂದು
ಧಾರುಣಿಯನು ಕದ್ದ ದನುಜನ ಕೊಂದು
ನರಹರಿ ರೂಪದಿ ತರಳಗೊಲಿದುಪುಟ್ಟ
ಚರಣದಿಂ ಧರಣಿಯನಳೆದ ಮಹಾತ್ಮನೋ ೧
ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು
ಮಡುಹಿ ಬಂದವನಿವನೇನೋ
ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ
ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ ೨
ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ
ಚಿತ್ತಬಂದಂತೆ ತಾ ತಿರುಗುವನೋ
ಉತ್ತಮನಾದ ಶ್ರೀ ಪ್ರಾಣನಾಥವಿಠಲನು
ಎತ್ತನೋಡಿದರು ಸುತ್ತುತ್ತಲಿರುವನು ೩

 

ಶ್ರೀ ಲಕ್ಷ್ಮೀಪರವಾದ ಈ ಪದವು
೨೫
ರಮಾಸಮುದ್ರನ ಕುಮಾರಿ ನಿನ್ನಸರಿ
ಸಮಾನರ್ಯಾರಮ್ಮ ಪ
ಉಮೇಶ ಮೊದಲಾದ ಅಮರ ನಿಕರವು
ಭ್ರಮಿಸಿ ನಿನ್ನ ಪಾದ ಕಮಲ ಭಜಿಪುದು ಅ.ಪ
ಕರುಣಾವಾರಿಧಿಯೆಂದು ಶರಣ ಜನರು ನಿನ್ನ
ಸ್ಮರಣೆ ಮಾಡುತ ಲಿಪ್ಪರೆ
ಹರಿಣಾಕ್ಷಿ ಕೇಳ್ನಿನ್ನ ಕರುಣಾದಿಂದಲಿ ಅಘ
ಹರಣ ಮಾಡಿ ನಿನ್ನ ಚರಣಾವ ತೋರಿಸಮ್ಮ ೧
ಅಪಾರ ಮಹಿಮನ ವ್ಯಾಪಾರಗಳ ತಿಳಿದು
ಕಾಪಾಡುವೇ ಜಗವಾ
ಕೋಪರಹಿತಳಾಗಿ ಶ್ರೀಪತಿಯೊಳು ಎಮ್ಮ
ತಾಪತ್ರಯವ ಪೇಳಿ ಕಾಪಾಡಬೇಕಮ್ಮ ೨
ವಾಸವ ವಂದಿತ ಸಿರಿಶೇಷವಿಠ್ಠಲನೊಳು
ವಾಸವ ಮಾಡುವಳೆ
ಘಾಸೀ ಮಾಡದೆ ಎನ್ನ ಈ ಸಮಯದೊಳು
ವಾಸುದೇವಗೆ ಪೇಳಿ ಪೋಷಿಸಬೇಕಮ್ಮ ೩

 

ಗುಣರೂಪಗಳನ್ನು ವರ್ಣಿಸುವುದರ
೧೮
ರಾಧಕೃಷ್ಣಪಾಲಿಸೊ ರಾಧಕೃಷ್ಣಪಾಲಿಸೊ ಪ
ನಂದಕುಮಾರ ನವನೀತ ಚೋರ
ಸುಂದರಾಕಾರ ಅಗಣಿತ ಗುಣಗಂಭೀರ ೧
ಉದಧಿ ಶಯನ ಉಡುರಾಜವದನ
ಮದಮುಖ ಕಂಸಾಸುರನ ಮದನಿವಾರಣ ೨
ಗಾನವಿನೋದನೆ ದೀನಾಧಾರನೆ
ಪ್ರಾಣನಾಥವಿಠಲನೆ ಪವನಾತ್ಮನೇ ೩

 

೧೯
ರಾಮನ ನೋಡ ಬನ್ನಿರೆ ಭಾಮೆಯರೆಲ್ಲ ಪ
ರಾಮನ ನೀವು ನೋಡ ಬನ್ನಿರೆ ಕಾಮಿತಾರ್ಥವಬೇಡಿಸುಖಿಸಿರೆ
ಸ್ವಾಮಿ ನೀನೆ ಗತಿ ಎಂದರೆ ಕಾಮಿತಾರ್ಥವನೀವ ದೊರೆಯನ ಅ.ಪ
ಸೀತೆಗೋಸುಗ ಸೇತುವೆಯ ಕಟ್ಟಿ ಧೂರ್ತ ರಾವಣನ ವ್ಟ್ಟಿಸಿ
ಖ್ಯಾತಿಯಿಂದಲಿ ರಥವನೇರಿ ಸೀತೆಸಹಿತ ಬರುವನಂತೆ ೧
ಹರಿಯುನರನಾಗುತಲಿ ಬಂದು ವರ
ಅಯೋಧಾಯಪುರದಿ ನಿಂದು
ಮರೆವ ಸಿಂಹಾಸನವನೇರುತ ಹರುಷದಲಿ ತಾ ಕೂಡುವನಂತೆ ೨
ಮಾನನಿಧಿ ಪ್ರಾಣನಾಥವಿಠಲ ಸಾನುರಾಗದಿ ಭಜಿಸುವರಸುರ
ಧೇನುವಂದದಿ ಸಲಹುವನು ಮಾನಿನಿಯರು ಮನ್ನಿಸುತ ಬೇಗ ೩

 

ಶ್ರೀ ಬ್ರಹ್ಮನ ರಾಣಿಯಾದ
ಸರಸ್ವತಿ
೨೯
ವಾಣಿಯೆ ಬ್ರಹ್ಮನ ರಾಣಿಯೆ ನಿನ್ನ ಪಾದ
ಕಾಣದೆ ನಿಲ್ಲಲಾರೆ ಕಾಮಿನಿಯೆ ಪ
ದೇವಿಯೆ ಎನ್ನನು ಕಾವೆಯೆಂದೆನುತಲಿ ಭಾವಿಸಿ
ನಿನ್ನನು ಬಯಸಿದೆನೆ
ಭಾವವ ತಿಳಿದ್ಯೆನ್ನ ಕಾಯೆ ಕಮಲಮುಖಿ ಕಾಣದೆ
ನಿಲ್ಲಲಾರೆ ಕಾಮಿನಿಯೆ ೧
ಅಜನ ರಾಣಿಯೆ ನಿನ್ನ ನಿಜಭಕುತಿಯೊಳು
ನಾಭಜಿಸುವೆನಮ್ಮ ಭುಜಗ ವೇಣಿ
ತ್ರಿಜಗವಂದಿತೆ ನಿನ್ನನಿಜ ಪದ ಕಮಲವ ಕಾಣದೆ
ನಿಲ್ಲಲಾರೆ ಕಾಮಿನಿಯೆ ೨
ವಾಸವಮುಖ ಸುರೇಶರು ನಿನ್ನನು ಅಶಿಸುತಿರುವರೆ
ಭಾಸುರಾಂಗಿ
ಬೇಸರಿಸದೆನೀ ಶೇಷವಿಠಲನ ತೋರೆ ಕಾಣದೆ
ನಿಲ್ಲಲಾರೆ ಕಾಮಿನಿಯೆ ೩

 

ಶ್ರೀ ಹರಿಗೆ ಶ್ರೀ ಲಕ್ಷ್ಮೀ ದೇವಿಯು
೨೦
ಸ್ವೀಕರಿಸೈ ಲೋಕನಾಥನೆ ಪ್ರಖ್ಯಾತಪ್ರಿಯನೆ ತಾಂಬೂಲವ ಪ
ನೀಲವೇಣಿಯು ಜಾಲಮಾಡದೆ ಶೀಲದಿಂ ಈ ವೀಳ್ಯವ
ವೇಳೆಯರಿತು ತಂದಿಹೆನು ಗೋಪಾಲಬಾಲ ತಾಂಬೂಲವ ೧
ಕಮಲ ನಯನೆ ಕಮಲವದನೆ ವಿಮಲ ಮನದಲಿ ವೀಳ್ಯವ
ಕ್ರಮದಿ ತಂದು ನಿಂದಿರುವೆನೊ ಸುಮಧುರವಾದೀ
ತಾಂಬೂಲವ ೨
ಗಾನಲೋಲನೆ ದೀನಪಾಲನೆ ಪ್ರಾಣನಾಥವಿಠಲನೆ
ಸಾನುರಾಗದಿ ತಂದ ವೀಳ್ಯವ ಪ್ರಾಣನಾಥನೆ ಕರುಣದಿಂ೩

 

ಶ್ರೀ ಹರಿಗೆ ಶ್ರೀ ಲಕ್ಷ್ಮೀದೇವಿಯು
೨೧
ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ ಪ
ಮರುಗ ಮಲ್ಲಿಗೆ ಜಾಜಿಸಂಪಿಗೆ ಸುರಗಿಬಕುಳ ಪಾದರಿ
ಪರಿಪರಿಯಿಂದ ಹಾರ ಕಟ್ಟಿ ಹರಿನಾ ನಿನ್ನ ಕೊರಳಿಗೆ ೧
ಕಮಲ ಪುಷ್ಪದ ಹಾರವನ್ನು ವಿಮಲ ಮನದಿ ತಂದಿಹೆ
ಸುಮಶರಪಿತ ಕೊರಳ ಕೊಟ್ಟರೆ ನಮಿಸಿ ನಿಮಗೆ ಹರುಷದಿ ೨
ಮಾನಿನಿಯರ ಮೊರೆಯಕೇಳಿ ಪ್ರಾಣನಾಥವಿಠ್ಠಲ
ತಾನೆ ಕರವನೀಡಿ ಹಾರವ ಗಾನಲೋಲ ಧರಿಸಿದ ೩

 

ಸದ್ಭುದ್ಧಿ, ಭಕ್ತಿಪೂರ್ವಕ ಭಜನೆ

ಗಣೇಶ
ಹಿತಮತಿಯ ಪಾಲಿಸೊ ಪ
ಗತಿಯ ಕಲ್ಪಿಸಿ ಸಿರಿಪತಿಯ ಪಾದದಿ ಅ.ಪ
ಗಜವದನನೆ ಎನ್ನ ನಿಜಭಕುತಿಯೊಳ್ನಿನ್ನ
ಭಜನೆ ಮಾಡುವಂಥ ನಿಜವ ಪಾಲಿಸಿ ೧
ಕರುಣಾಕರ ತವ ಚರಣಾಶ್ರಿತರಘ
ಹರಣ ಮಾಡಿ ನಿನ್ನ ಸ್ಮರಣೆಯ ಕೊಟ್ಟು ೨
ದೀನನಾಗಿ ನಾ ನಿನ್ನ ಸನ್ನಿಧಾನಕೆ ಬಂದೆ
ಜ್ಞಾನವಿತ್ತು ಕಾಯೋ ಈಗ ಪ್ರಾಣನಾಥ ವಿಠಲನಲ್ಲಿ ೩

 

ಅಂಬುಜಮುಖಿಯರು

ಭಗವನ್ನಾಮ
ಅಂಬುಜ ಮುಖಿಯರು ಕಂಬುಕಂಠೆಯರು
ಅಂಬರದಲಿ ನಾಟ್ಯವಾಡಿದರು ಪ
ಕುಂಭಿಣಿ ಪತಿ ಶ್ರೀ ಕೃಷ್ಣನರಥ ಬರೆ
ಸಂಭ್ರಮದಿಂದಲಿ ಪಾಡಿದರು ಅ.ಪ.
ಬಾಜ ಬಜಂತ್ರಿಯ ವಾದ್ಯರಭಸದೊಳು
ಮೋಜಿನಿಂದಲಿ ಹರಿ ಬರುತಿರಲು
ಸೋಜಿಗ ಪಡುತಲಿ ರಾಜ ವದನೆಯರು
ಜಾಜಿಮಲ್ಲಿಗೆ ಹೂವ ಬೀರಿದರು ೧
ವೇದ ಘೋಷಗಳಿಂದ ಮೋದಪಡುತ ಹರಿ
ಸಾಧುಜನರ ಕೂಡಿ ಸರಸದಲಿ
ಬೀದಿಯೊಳ್ ಬರುತಿರೆ ಮಾಧವರಾಯಗೆ
ಸೂಜಿಮಲ್ಲಿಗೆ ಹೂವ ಬೀರಿದರು ೨
ಕನ್ನಡಿ ಮಂಟಪ ಮಧ್ಯದೊಳಗೆ ಹರಿ
ರನ್ನೆಯರೊಡಗೊಡಿ ಬರುತಿರಲು
ಸನ್ನುತಾಂಗ ಶಿರಿ ಪ್ರಾಣನಾಥ ವಿಠಲನ
ಸಂಭ್ರಮದಿಂದಲಿ ಸಾರಿದರು ೩

 

ಹಾಡಿನ ಹೆಸರು :ಅಂಬುಜಮುಖಿಯರು
ಹಾಡಿದವರ ಹೆಸರು :ಶ್ರೀಕಾಂತ ಕುಲಕರ್ಣಿ
ರಾಗ :ದೇಶಕಾರ್
ತಾಳ :ಭಜನ್‍ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಗೋಡ್ಖಿಂಡಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ದೇಹವ್ಯಾಕೆ ಇಂಥ ದೇಹವ್ಯಾಕೆ

ದೇಹವ್ಯಾಕೆ ಇಂಥ ದೇಹವ್ಯಾಕೆ ಪ
ಹಗಲು ಇರುಳು ಹರಿಯ ನೆನೆಯದ ಕಾಯವ್ಯಾಕೆ ಅ.ಪ
ಹರಿಯ ಪಾದಕೆರಗದಂಥ ಶಿರವು ಏಕೆ
ಪರಮ ಪುರುಷನ ಪಾಡದಂಥ ವದನವ್ಯಾಕೆ ೧
ಹರಿಯಸ್ಮರಣೆ ಕೇಳದಂಥ ಕರ್ಣವ್ಯಾಕೆ
ಹರಿಯಮೂರ್ತಿನೋಡದಂಥ ಕಂಗಳ್ಯಾಕೆ ೨
ಹರಿಯ ನಿರ್ಮಾಲ್ಯವಾಘ್ರಾಣಿಸದಂಥ ನಾಸವ್ಯಾಕೆ
ಹರಿಯ ನೈವೇದ್ಯ ಭುಂಜಿಸದಂಥಾ ಉದರವ್ಯಾಕೆ ೩
ಹರಿಯದಾಸರ ಕೊಡಿ ತಿರುಗದ ಚರಣವ್ಯಾಕೆ
ಶರಣಜನರ ಚರಣ ತೊಳೆಯದ ಕರವು ಏಕೆ೪
ಪ್ರಾನನಾಥವಿಠಲನ ಪಾಡದ ಜಿಹ್ವೆ ಏಕೆ
ಜಾಣರೆಲ್ಲರು ತಿಳಿದು ನೋಡಿ ಬದುಕಿ ಜೋ ೫

 

ಹಾಡಿನ ಹೆಸರು :ದೇಹವ್ಯಾಕೆ ಇಂಥ ದೇಹವ್ಯಾಕೆ
ಹಾಡಿದವರ ಹೆಸರು :ಯಶವಂತ್ ಹಳಿಬಂಡಿ, ಪಂಚಮ್ ಹಳಿಬಂಡಿ
ಸಂಗೀತ ನಿರ್ದೇಶಕರು :ಇಂದೂ ವಿಶ್ವನಾಥ್
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬರುವುದು ನೋಡೆ ಶ್ರೀಹರಿ
೧೨
ಬರುವುದು ನೋಡೆ ಶ್ರೀಹರಿ ರಥವೇರಿ ಪ
ಎಡಬಲದಲಿ ಹರಿ ಉಡುರಾಜ ಮುಖಿಯರ
ಸಡಗರದಿಂದಲಿ ಬಡವರಾಧಾರಿ ಶೌರಿ ೧
ಗುಣಮಣಿ ಶ್ರೀನಿವಾಸ ಮಣಿಯುವೋ ಭಕ್ತರ
ದಣಿವು ಆರಿಪುದಕೆ ವಿನಯ ಪೂರ್ವಕವಾಗಿ೨
ಬಗೆ ಬಗೆಯಲಿ ತನ್ನ ಭಜಿಸುವೊ ಭಕ್ತರ
ಸುಗುಣ ಶ್ರೀ ಪ್ರಾಣನಾಥ ವಿಠಲ ರಾಯನು ನಗುತ ೩

 

ಹಾಡಿನ ಹೆಸರು :ಬರುವುದು ನೋಡೆ ಶ್ರೀಹರಿ
ಹಾಡಿದವರ ಹೆಸರು :ಶ್ರೀರಕ್ಷಾ ಅರವಿಂದ್
ಶೈಲಿ :ಸುಗಮ
ಸಂಗೀತ ನಿರ್ದೇಶಕರು :ಪುತ್ತೂರು ನರಸಿಂಹ ನಾಯಕ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಯಾರಿವನು ಹೊರಗೆ ನಿಂತ
೧೭
ಯಾರವನು ಹೊರಗೆನಿಂತ ಬಾರಾನ್ಯಾಕವನು ಪ
ಮಾರಸುಂದರ ಸುಕುಮಾರ ಶರೀರನು ಅ.ಪ
ನೀರಮುಳುಗಿ ಬಂದು ಘೋರಪರ್ವತ ತಂದು
ಧಾರುಣಿಯನು ಕದ್ದ ದನುಜನ ಕೊಂದು
ನರಹರಿ ರೂಪದಿ ತರಳಗೊಲಿದುಪುಟ್ಟ
ಚರಣದಿಂ ಧರಣಿಯನಳೆದ ಮಹಾತ್ಮನೋ ೧
ಕೊಡಲಿಯ ಪಿಡಿದು ತಾ ಬಿಡದೆ ಕ್ಷತ್ರಿಯರನ್ನು
ಮಡುಹಿ ಬಂದವನಿವನೇನೋ
ಮಡದಿಗಾಗಿ ದೊಡ್ಡಅಡವಿಯೊಳು ಮನೆಕಟ್ಟಿ
ಬಿಡದೆ ಗೋಕುಲದಲ್ಲಿ ನೆಲೆಸಿರುವಾತನೋ ೨
ಬೆತ್ತಲೆ ನಿಂತ್ಹತ್ತಿ ಮತ್ತೆಕುದುರೆಯ
ಚಿತ್ತಬಂದಂತೆ ತಾ ತಿರುಗುವನೋ
ಉತ್ತಮನಾದ ಶ್ರೀ ಪ್ರಾಣನಾಥವಿಠಲನು
ಎತ್ತನೋಡಿದರು ಸುತ್ತುತ್ತಲಿರುವನು ೩

 

ಹಾಡಿನ ಹೆಸರು :ಯಾರಿವನು ಹೊರಗೆ ನಿಂತ
ಹಾಡಿದವರ ಹೆಸರು :ಕುಸುಮಾ ಕೆ. ಎಂ.
ರಾಗ :ವಾಸಂತಿ
ತಾಳ :ತ್ರಿಶ್ರ್ರ ಆದಿ
ಸಂಗೀತ ನಿರ್ದೇಶಕರು :ಮಾಲತಿ ಶರ್ಮ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *