Categories
ರಚನೆಗಳು

ಬೆಳ್ಳೆ ದಾಸಪ್ಪಯ್ಯ

೨೨೬
ಅಂಬಿಕ ಸುತನೆ ಷಡಾನನನೆ |
ಲಂಬೋದರನ ಸಹೋದರನೆ ಪ
ಅಂಬುಜನೇತ್ರನೆ ಕಂಬುಕಂಧರನೆ |
ಶಂಭುಜಕರುಣಾಸಾಗರನೆ ಅ.ಪ
ಶೂರಪದ್ಮನ ಎದೆ ಸೀಳಿದನೆ ಮಾರನ ಪೋಲುವ ಸುಂದರನೆ ಧೀರ ಹಿರಣ್ಯಕನಾರಾಧನೆಗೆ ಮೆಚ್ಚಿ ಸೂರೆಯ ಮುಕ್ತಿಯನಿತ್ತವನೆ ೧
ವರವಜ್ರ ಶಕ್ತ್ಯಾಯುಧ ಧರನೆ ಸುರಮುನಿ ನಮಿತ ಸರ್ವೇಶ್ವರನೆ ಸುರುಚಿರ ರತ್ನಾಭರಣ ವಿಭೂಷಣನೆ ಶರಣ ರಕ್ಷ ಕುಮಾರಕನೆ೨
ದಾಸ ಜನರ ಮನತೋಷಕನೆ ವಾಸುದೇವನ ಸಖ ಷಟ್ಶಿರನೆ ದೋಷವಿನಾಶನೆ ನಾಶರಹಿತ ಪಾವಂಜೇಶನೆ ಕಾರ್ತಿಕೇಯನೆ ಸ್ಕಂದನೆ ೩

 

೨೨೨
ಆರ ಬೇಡುವೆನೂ ನಿನ್ನನು
ಬಿಟ್ಟಿನ್ನಾರ ಕಾಡುವೆನೂ ಪ
ಆರನು ಬೇಡಲಿನ್ನಾರನು ಕಾಡಲು
ಪಾರು ಮಾಳ್ವರ ಕಾಣೆನೂ | ಎನ್ನನೂ ಅ.ಪ
ಇಂದುವದನ ನಿನ್ನಾಮರೆಯ ಸಾರ್ದೆ ತಂದೆಯಂತೆ ಎನ್ನಾ – ನಂದದಿ ತಪ್ಪುಗಳೊಂದೆಣಿಸದೆ ಪೊರೆ – ಯೆಂದು ನಾ ಬೇಡುವೆನೂ ಕಾಲ್ಪಿಡಿವೆನು ೧
ತಾರಕಾರಿ ಸ್ವಾಮೀ ಸಂತತ
ಭಕ್ತೋದ್ಧಾರಿ ಸುಗುಣೆ ಪ್ರೇಮೀ | ಘೋರ ದುರಿತವೆಂಬಪಾರಮಡುವಿನೊಳು ಸೇರಿ ಮುಳುಗಿದೆನು ನಾನು | ಪಿಡಿದೆತ್ತು ನೀನು೨
ನಿತ್ಯ ಕಷ್ಟದಲಿ ಬೆಂಡಾಗಿ ಬೇ- |
ಸತ್ತೆ ಶೋಕದಲೀ ಉತ್ತಮ ಪಾವಂಜೆ | ಕ್ಷೇತ್ರ ವಾಸಿಯೆ ನಿನ್ನ | ಸ್ತುತಿಯ
ಮಾಡುವೆನೂ ದಾಸನು ನಾನು ೩

 

೨೫೮
ಆರತಿಯನು ಬೆಳಗಿ ಪಾರ್ವತಿಯ
ಕುಮಾರ ಗುಹಗೆ ಎಸಗೀ ಪ
ಮಾರನಾಕಾರಗೆ ವಾರಿಜನೇತ್ರ ಮಯೂರ
ವಾಹನನಿಗೆ ಧೀರಗೆ ಜಯವೆಂದು ಆರತಿ ಅ.ಪ
ವೇದೋಕ್ತ ಮಂತ್ರದಿಂದ ಶರ್ಕರ ಮೊದ-ಲಾದ ದ್ರವ್ಯದಿಂದ ಸಾಧು ವಂದಿತನಿಗೆ ಭೂದೇವರಭಿಷೇಕ ಸಾದರದಲಿ ಮಾಡಿ ಮೋದದಿ ಜಯವೆಂದು ||ಆರತಿ|| ೧
ಕಲಶೋದಕ ಮಂತ್ರಿಸಿ ಭೂಸುರರೆಲ್ಲ ನಲವಿಂದಲಭಿಷೇಕಿಸಿ ತಲೆಗೆ ಗಂಧಾಕ್ಷತೆ ತುಲಸಿ ಪತ್ರವು ವುಷ್ಪಗಳ ಮಾಲೆ ಇರಿಸುತ್ತ ನಲವಿಂದೆ ಜಯವೆಂದು ||ಆರತಿ|| ೨
ಧೂಪ ದೀಪಂಗಳನ್ನು ವಿರಚಿಸುತ-ಲೇ ಪರಮಾನ್ನವನು ಸೂಪಾದಿ ಓಗರ ಜಂ- ಬೂಫಲ ಭಕ್ಷ್ಯವ ಶ್ರೀಪತಿ ಸಖಗೆ ಸ-ಮಾರ್ಪಿಸಿ ಜಯವೆಂದು ||ಆರತಿ|| ೩
ಮೂರು ಪ್ರದಕ್ಷಿಣೆಯ ಭಕ್ತಿಯೊಳ್ ನಮ-ಸ್ಕಾರವ ಪ್ರಾರ್ಥನೆಯ ಮಾರಾರಿಸುತಗೆ ಅ-ಪಾರ ಮಹಿಮನಿಗೆ ಹಾರುವರೆಸೆಗುತೊ-ಯ್ಯಾರದಿ ಜಯವೆಂದು ||ಆರತಿ|| ೪
ಮಂಗಳ ಶರಜನಿಗೇ ಗುಹಗೆ ಜಯ ಮಂಗಲ ಸ್ಕಂಧನಿಗೇ ಮಂಗಲ ಪಾವಂಜೆ ವಾಸ ಷಡ್ಶಿರನಿಗೆ ಮಂಗಲದಾಸರ ಕಾವಗೆ ಜಯವೆಂದು ||ಆರತಿ|| ೫

 

೨೫೧
ಇಂಥಾ ಬಾಲನೆಲ್ಲು ಕಾಣೆನೊ ಪ
ಉದಿಸಿದೇಳನೆ ದಿನದಿ ತ್ರಿದಶರೊಡನೆ ಕೂಡಿ ಮದಮುಖತಾರಕ | ಸದನವನೇರಿ ಕದನವಗೈಯುತ | ಹದವಿಹ ಶಸ್ತ್ರದಿ ಅಧಮ ದೈತ್ಯನ ಯಮ | ಸದನಕಟ್ಟಿರುವಂಥ ೧
ಅಸಿತನ ಶಾಪದಿ | ಅಸುರೆಯಾದದಿತಿಯು ನಿಶಿಚರ ತಮನ ವರಿಸಿಕೊಂಡು ಇರಲು | ಅಸುರ ಹರನು ಖಳ | ನನು ಸೆಳೆಯಲಿಕೆನು-ತಿಸುವದಿತಿಗೆ ಪೂರ್ವ | ದೆಸೆಯನಿತ್ತಿರುವಂತಾ ೨
ದುರುಳ ರಕ್ಕಸನಾಶಿ | ಧರಣಿಯೊಳ್ತೊಳಲುವ ದೊರೆ ಸುಧರ್ಮನ ಶಾಪ | ಪರಿಹರಿಸುತಲೇ | ನಿರತ ತನ್ನಯನಾಮ | ಸ್ಮರಿಪ ದಾಸರ ಸದಾ ಪೊರೆಯೆ ಪಾವಂಜೆಯೊಳು | ಸ್ಥಿರವಾಗಿನಿಂತ ತಾ ೩

 

೨೩೬
ಇನ್ನೂ ದಯೆದೋರೆಯಾ |
ಸುಬ್ರಹ್ಮಣ್ಯ ಇನ್ನೂ ದಯೆದೋರೆಯ ಪ
ಮುನ್ನ ಮಾಡಿದ ಕರ್ಮ ಬೆನ್ನ ಪಿಡಿಯುತೀಗ-ಲೆನ್ನ ಕಾಡುತಲಿದೆ ನಿನ್ನಾಶ್ರಯವ ಗೈದೆ ಅ
ಅನುದಿನ ಕೊರಗುವೆ ಅನಪತ್ಯಕೋಸುಗ ಕೊನೆಗಾಣಿಸೆಂದು ನಾ ಮಣಿಯುತ ಬೇಡುವೆ ೧
ಬಲವೆಲ್ಲಿ ಕುಗ್ಗಿತು ಗೆಲವೆಲ್ಲಿ ನಿಂತಿತು ಛಲ ಬಿಟ್ಟು ಎನ್ನನೀ ಸಲಹೆಂದು ಬೇಡುವೆ ೨
ಲೇಶವು ಸುಖವಿಲ್ಲ ಘಾಸಿಯಾದೆನು ಪಾವಂ-ಜೇಶನೆ ತವಪದ ದಾಸರ ಮೇಲೆ ನೀ | ಇನ್ನೂ ೩

 

೨೫೦
ಈತನೇ ಕುಮಾರಸ್ವಾಮಿ ಖ್ಯಾತನಾಗಿಹಾ | ಭೂತ ಗಣದ ನಾಥ ಶಿವನ ಜಾತನಾಗಿಹಾ ಪ
ಸುಜನ ರಕ್ಷ ಕುಜನ ಶಿಕ್ಷ ದ್ವಿಜ ಕುಲಾಧಿಪಾ | ಅಜ ಸುರಾದಿ ತ್ರಿದಶ ವಂದ್ಯ ಭಜಕ ಪಾಲಕಾ ೧
ಕಾಮರೂಪ ವಾಮನ ಸಖ ನಾಮ ಸಾಸಿರ ಭೀಮ ಬಲ ನಿಷ್ಕಾಮ ಮೂರ್ತಿ ಪ್ರೇಮಸಾಗರಾ ೨
ದಾಸತತಿಯ ಕ್ಲೇಶ ಸತತ ನಾಶಗೈಯುವಾ | ಭಾಸುರಾಂಗ ಪಾವಂಜೇಯೊಳು ವಾಸಗೈದಿಹಾ ೩

 

೨೩೦
ಎನ್ನಪರಾಧವ ಮನ್ನಿಸಿ ಪೊರೆ ಸುಪ್ರ-
ಸನ್ನ ಕುಮಾರ ದೇವ ಪ
ನಿನ್ನಂಥ ಕರುಣಾಳು ಇನ್ನಿಲ್ಲ ಲೋಕದೊ-ಳೆನ್ನನುದ್ಧರಿಸು ದೇವಾಅ.ಪ
ನೀರಜನೇತ್ರ ಮಯೂರವಾಹನ ಭಕ್ತೋ-ದ್ಧಾರ ಶಂಕರನ ಸುತಾ | ಶೂರಾಖ್ಯ ಪೂರ್ವಸುರಾರಿಗಳಂತಕ ಮಾರನಾಕಾರದಾತಾ , ಪುನೀತಾ ೧
ಇಂದುವದನ ಸುರವೃಂದ ವಂದಿತ ನಿತ್ಯಾ-ನಂದಾ ಚಿನ್ಮಯರೂಪಾ | ಕುಂದರದನ ಕಂಬು ಕಂಧರಶರಜ ಮು-ಕುಂದನ ಸಖ ಚಿದ್ರೂಪ ಪ್ರತಾಪ ೨
ಈಶನ ಸುತ ಕಮಲಾಸನಾರ್ಚಿತ ರವಿ-ಭಾಸ ಸೇನಾನಿ ಧೀರಾ ದೋಷರಹಿತ ಪಾವಂಜೇಶನೆ ತವಪಾದ ದಾಸರ ಕುಲ ಉದ್ಧಾರ | ಗಂಭೀರ ೩

 

ಆ. ಕಾರ್ತಿಕೇಯ (ಸುಬ್ರಹ್ಮಣ್ಯ) ಸ್ತುತಿ
೧೯೭
ಏಳಯ್ಯ ಕಾರ್ತಿಕೇಯ | ಬೆಳಗಾಯಿತೇಳಯ್ಯ ಕಾರ್ತಿಕೇಯ ಪ
ಮೂಡದಿಕ್ಕಿನಲಿ ತಂಗಾಳಿ ಬೀಸುತ್ತಿಹುದು
ನಾಡಕೋಳಿಗಳೆಲ್ಲ ತಲೆಯೆತ್ತಿ ಸಂತಸದಿ
ಪಾಡುವವು ನಿನ್ನ ನಾಮಾವಳಿಯ ನೈದಿಲೆಯು
ಬಾಡುತಿದೆ ವಿರಹದಿಂದಾ ರೂಢಿಯನು ಬೆಳಗಿಸುತ
ಮೂಡುತಿಹ ರವಿಯನ್ನು ನೋಡಿ ಭಯದಿಂದ ಹಿಂ-
ದೋಡುವುದು ಕತ್ತಲೆಯು | ಕಾಡ ಹಕ್ಕಿಗಳೆಲ್ಲ
ಗೂಡಬಿಟ್ಟೋಡುವವು ೧
ದುರುಳ ಪದ್ಮನು ಸುರಪನರಸಿ ಶಚಿಯನು ಬಯಸಿ
ಸುರಪುರವ ಸುಲಿಯಲಿಕೆ ಬರುವ ವಾರ್ತೆಯ ಕೇಳಿ
ಸುರಪನತಿದುಗುಡದಿಂ ಕೊರಗುತ್ತ ತವಪಿತನ
ಚರಣ ಕಮಲಕ್ಕೆ ನಮಿಸಿ | ಮೊರೆಯಿಡಲ್ ಖಳನೊಡನೆ
ಧುರವನೆಸಗಲು ನಿನ್ನ ಕರೆದು ಕಳುಪುವೆನೆನುತ
ಸುರಪಗಭಯವನಿತ್ತು ಚರರನಟ್ಟಿಹನತ್ತ
ಧುರವನೆಸಗಲಿಕೆ ಬೇಗೇಳಯ್ಯ ಕಾರ್ತಿಕೇಯ ೨
ಅಸಿತ ಮುನಿಶಾಪದಿ ಅದಿತಿ ರಕ್ಕಸಿಯಾಗಿ
ಪಿಸಿ ತಾಸಿ ಪೆಸರಿಂದ ವೇದ ಚೋರನ ವರಿಸೆ
ಅಸುರಾರಿ ನಳಮತ್ಸ್ಯರೂಪಿಂದಲವಳ ಕರ
ಪಾತ್ರೆಯುದಕದಲಿ ಜನಿಸಿ |
ಅಸುರನಸುವನು ಹೀರೆ ಪತಿವಿರಹದಿಂದ ನಾಲ್
ದೆಶೆ ತಿರುಗಿ ತವಪಾದ ಬಿಸರುಹವ ಸೇರಿಪ್ಪ
ಳಸುರೆ ಮೇಲ್ ದಯೆಯಿಂದ ಪೂರ್ವಜನ್ಮವನೀಯ
ಲೇಳಯ್ಯ ಕಾರ್ತಿಕೇಯ ೩
ವರ ದೇವಲಾಮುನಿಯ ಶಾಪದಿ ಸುಧರ್ಮನೆಂ
ಬರಸುವೇತಾಳಾಗಿ ಪರಿಪರಿಯ ದುಷ್ರ‍ಕತ್ಯ
ವಿರಚಿಸುತ ತವ ಕ್ಷೇತ್ರಕೈತಂದು
ಹರಿಯುತಿಹ ಧಾರಾತೀರ್ಥದಿ ಮೀಯಲೂ |
ದುರುಳತನವಡಗುತಂಕುರಿಸಲಾತಗೆ ಜ್ಞಾನ
ಶಿರಬಾಗಿ ಕಡುಭಕ್ತಿಯಿಂದೀಗ ತವಪಾದ
ಸರಸಿರುಹವನು ಅರ್ಚಿಪಗೆ ಮೋಕ್ಷ
ಕೊಡುವುದಕ್ಕೇಳಯ್ಯ ಕಾರ್ತಿಕೇಯ ೪
ಪರಮ ಋಷಿಗಳು ಇತ್ತ ಶಾಪದಿಂ ಕುಷ್ಠವಂ –
ಕುರಿಸೆ ಕಡು ದುಗುಡದಿಂ ನರಳುತ್ತ ಬಳಲುತ್ತ
ಸಿರಿಯರಸ ಸುತಸಾಂಬ ತವಧ್ಯಾನವನು ಮಾಡೆ
ಕರುಣದಿಂ ಕಾಪಾಡಿದಾ ಪರಮಪುರುಷನೆ ನಿನ್ನ
ದರುಶನವ ಗೈಯಲಿಕೆ ನರರೆಲ್ಲರುದಯದೊಳು
ನೆರೆದು ನಿಂದಿರುತಿಹರು | ಕರುಣದಿಂದವರನೀ-
ಕ್ಷಿಸುತಭಯವೀಯಲಿಕ್ಕೇಳಯ್ಯ ಕಾರ್ತಿಕೇಯಾ ೫
ಏಳು ಮುರಹರಸಖನೆ ಏಳು ಜಗತ್ಪಾಲಕನೆ
ಏಳು ಸುರಗಣನುತನೆ ಏಳು ಜನಕಾಶ್ರಿತನೆ
ಏಳು ವಲ್ಲೀಪ್ರಿಯನೆ ಏಳು ಮುನಿಗಣಸುತನೆ
ಏಳು ಪಾರ್ವತಿಬಾಲನೆ |
ಏಳು ಜನರಕ್ಷಕನೆ ಏಳು ಖಳಶಿಕ್ಷಕನೆ
ಏಳು ನಿತ್ಯಾತ್ಮಕನೆ ಏಳು ಕಮಲೇಕ್ಷಣನೆ
ಏಳು ಸರ್ವೇಶ್ವರನೆ ಏಳ್ ತಾರಕಾಂತಕನೆ ಏಳಯ್ಯ ಕಾರ್ತಿಕೇಯಾ ೬
ಪಾವನವಾದ ಪಾವಂಜೆ ಪುರದೊಳು ನೆಲಸಿ
ಭಾವಶುದ್ಧದಲಿ ನಂಬಿದ ಭಕ್ತಜನರ ಮನೋ
ಭಾವಗಳನರಿತವರ ಬಯಕೆಯನು ಕರುಣದಿಂ-
ದೀವುತ್ತ ಮೆರೆಯುತಿರುವಾ |
ಕೋವಿದನೆ ತವಪದವನೆಡೆಬಿಡದೆ ಭಕ್ತಿಯಿಂ
ಸೇವಿಸುತ ಧ್ಯಾನಿಸುವ ದಾಸರಂತನವರತ
ಕಾವೆನೆಂದಭಯ ಹಸ್ತವನೀಯಲ್ದಯದಿಂದ-
ಲೇಳಯ್ಯ ಕಾರ್ತಿಕೇಯಾ ೭

 

೨೪೬
ಕರ ಮುಗಿವೆ ಶರಜನೇ ಸೆರಗೊಡ್ಡಿ ನಾನು ಕರ ಮುಗಿವೆ ಶರಜನೇ ಪ
ಕರಗಳ ಮುಗಿವೆನು ಕರುಣಿಗಳರಸನೇ ಕರಮುಗಿವೆ ಅ.ಪ
ಕಾಲಕಾಲನ ಪ್ರಿಯ ಬಾಲ ಕುಮಾರ | ಶೀಲ ಸುಗುಣ ರತ್ನಾಮಾಲ ಗಂಭೀರ | ಕರಮುಗಿವೆ ೧
ಬೆನಕನನುಜ ಗುಹ ದಿನಪನ ತೇಜಾ ರಣದಲಿ ಸೇನಾನಿ ಸನಕಾದಿ ಪೂಜಾ | ಕರಮುಗಿವೆ೨
ಚರಣ ದಾಸರಿಗಿಷ್ಟ ಕರುಣಿಸಿ ಕೊಡುವಾ ಸುರವರ ಪಾವಂಜೆ ಪುರದ ಶ್ರೀ ದೇವಾ | ಕರಮುಗಿವೇ ೩

 

೨೪೯
ಕರುಣದಿ ಕೊಡು ಕಾರ್ತಿಕೇಯಾ | ತವ | ಶಿರದ ಮೇಲಿಹ ಗಂಧ ಸಿಂಗಾರ ಹೂವಾ ಪ
ದುರಿತ ಕೋಟಿಗಳನು ತರಿಯೇ | ಮಹಾ | ದುರುಳರುಪದ್ರದ ಗಿರಿಯನು ಮುರಿಯೇ ಪರಮ ಕುಲಿಶದಂತೆ ಇರುವಾ | ತವ | ಶಿರದ ಮೇಲಿರುವ ಸಂಪಿಗೆ ಹೂವ | ದೇವಾ ೧
ಕೆಡುಕಿನ ತಾಮಸವಳಿದೂ | ತವ | ದೃಢಭಕ್ತಿ ಎನ್ನಯ ಮನದೊಳು ಮೊಳೆದೂದೃಢವಾಗಿ ನೆಲೆಸುವ ತೆರದೀ | ತವ | ಮುಡಿ ಮೇಲಿಹ ಮಲ್ಲಿಗೆಯನತಿ ಮುದದೀ೨
ಆಶಾದಿಗಳ ಪರಿತ್ಯಜಿಪಾ | ತವ | ದಾಸರ ಚರಣಯುಗ್ಮಕೆ ನಮಸ್ಕರಿಪಾ | ಲೇಸಿನ ತಿಳಿ ಜನಿಸಲಿಕೇ ಪಾವಂ- ಜೇಶ ನೀ ಪೊತ್ತು ಕೊಂಡಿರುವ ಅಶೋಕೇ ೩

 

೨೧೭
ಕರುಣದೋರೋ ಸ್ಕಂದ ಕರುಣದೋರೋ ಪ
ಮೃತ್ಯು ದೇವತೆಯೆನ್ನ | ನೆತ್ತಿಯಳಿಹಳೂ | ಕೃತ್ತಿವಾಸನ ಸುತ ಕಿತ್ತೊಗೆಯೋ ಸ್ಕಂದ ೧
ಕಾಲ ದಂಡವ ಪಿಡಿದು ವೇಳೆ ನೋಡುವನೂ |
ಶೂಲಪಾಣಿಯ ಪುತ್ರ ಬೀಳ ಹೊಯ್ಯೋ ೨
ದಾಸರ ಕಾಲನ ಪಾಶಕೀಯದಿರೋ | ತೋಷದೋಳೈಕ್ಯ ಪಾವಂಜೇಶ ಮಾಡೋ ೩

 

೨೪೮
ಕರುಣಾನಿಧಿ ಸುರವರ ಗುಹ ಶರಜಾ ಪರಮಪುರುಷ ಅಘಹರ ನೀನೆ ಶರಜಾ ಪ
ನಗುಮೊಗದರಸ ತ್ರಿಜಗಪತಿ ಶರಜಾ | ನಗಧರ ಪ್ರಿಯಸಖ ಸುಗುಣಿಯೆ ಶರಜಾ | ನಿಗಮ ಗೋಚರ ಖಳನಗ ವಜ್ರ ಶರಜಾ | ಅಗಜೆಯ ಮೋಹದ ಮಗ ನೀನೆ ಶರಜಾ ೧
ಇಂದುವದನ ಅರವಿಂದೇಕ್ಷಣ ಶರಜಾ |ವೃಂದಾರಕ ಕುಲ ಮಂದಾರ ಶರಜಾ |ಕಂದರ್ಪ ಶತರೂಪ ಸುಂದರ ಶರಜಾ | ನಂದಿಧ್ವಜ ಜನಪ್ರಿಯ ಕಂದನೆ ಶರಜಾ ೨
ವಾಸವ ವಂದ್ಯ ಸರ್ವೇಶನೆ ಶರಜಾ ಆಶಾದಿ ರಹಿತ ವಲ್ಲೀಶನೆ ಶರಜಾ ದಾಸ ಜನರ ಸದಾ ಪೋಷಕ ಶರಜಾ ವಾಸ ಪಾವಂಜೆ ಸೇನೇಶನೆ ಶರಜಾ ೩

 

೨೪೦
ಕಾಪಾಡೋ ಸುಬ್ರಹ್ಮಣ್ಯ ಮಹಸ್ವಾಮೀ ಪ
ಕಾಪಾಡೋ ಅನುದಿನ ಎನ್ನ
ಸರ್ವವ್ಯಾಪಕ ಸುಗುಣ ಸಂಪನ್ನ ನಿ-ರ್ಲೇಪ ಚಿನ್ಮಯ ಸುಪ್ರಸನ್ನಾ ಸ್ವಾಮಿ
ಗೋಪಾಲ ಸಖ ಅಗ್ರಗಣ್ಯಾವರ ತಾಪಸರಿಗೆ ಮುಕ್ತಿ ಸೋಪಾನ ತೋರ್ಪ
ದಯಾಪರ ದೇವ ನೀನೂ ಮಮತೆಯಿಂದ ಕಾಪಾಡು ಎಂಬೆ ನಾನು ಸುಬ್ರಹ್ಮಣ್ಯ ೧
ಸುರ ಮಾತೆಯ ಶಾಪವನು ಪರಿಹರಿಸಿದ
ಕರುಣಾಳು ನೀನು ನೃಪ ವರ ಸುಧರ್ಮನ ಪೊರೆದವನು
ಪರಿಯನೆಷ್ಟೆಂದು ವರ್ಣಿಪೆನು ಆಹಾ ಉರಗ ಪತಿಯೊಳಂಶ ವಿರಿಸುತ್ತ
ವರವಿತ್ತ ಪರಮಪುರುಷನೆ ಎ-ನ್ನಾ ರಕ್ಷಿಸು ಎಂದು ಸೆರಗೊಡ್ಡಿ
ಬೇಡ್ವೆ ನಿನ್ನ ಸುಬ್ರಹ್ಮಣ್ಯ೨
ನಿತ್ಯನಿರ್ಮಲನಾದ ದೇವಾ ಪ್ರತಿ
ನಿತ್ಯವು ನಲಿಯುತಲಿರುವಾ ಅತಿ ಉತ್ತಮ ಪಾವಂಜೆ ಪುರವಾಸ
ಪವಿತ್ರವ ಮಾಡುತ್ತ ಮೆರೆವ ಮಹಾ ಕೃತ್ತಿವಾಸನಸುತ ಚಿತ್ತಜ ರೂಪ
ಪುರುಷೋತ್ತಮ ತವ ದಾಸರ ರಕ್ಷಿಸು ನೀನೆನುತ್ತ ಬೇಡುವೆ
ಕುಮಾರಾ ಸುಬ್ರಹ್ಮಣ್ಯ೩

 

೨೩೭
ಕಾಯೊ ಕೃಪಾನಿಧಿಯೇ ಭವಾನಿಜ
ಕಾಯೊ ಸುಗುಣ ಮಣಿಯೆ ಪ
ಆಯತ ವಕ್ಷ ಸುರನಾಯಕ ಪೂಜಿತ
ಪ್ರೀಯ ಮುರಾರಿ ವಿನಾಯಕ ಸೋದರ ||ಅ||
ಸುರನರೋರಗ ವಂದ್ಯಾ ವಲ್ಲಿಯ | ವರ ಸಚ್ಚಿದಾನಂದ ಪರಮ ಪುರುಷ ಅಘ -ಹರ ಬಾಹುಲೇಯ ಸಚ್ಚರಿತ
ಪಾವನಮೂರ್ತಿ ಶರಣರ ರಕ್ಷಕ ೧
ಇಂದೀವರನಯನಾ ಶೋಭಿಪ ಕುಂದ
ಕುಂದಕುಟ್ಮಲಪದನಾನಂದಿಧ್ವಜ ಸುತ ಸುಂದರ ಮೂರುತಿ | ಇಂದುವದನ ಮುನಿವೃಂದ ವಂದಿತ ಗುಹ ೨
ಸಾಸಿರ ರವಿತೇಜಾ ಪಾವಂಜೆ ವಾಸ
ಮಯೂರ ಧ್ವಜಾ | ಕ್ಲೇಶದಿ ನರಳುವ ದಾಸರ ರಕ್ಷ ಸ-ರ್ವೇಶಕರಜ ನಿರ್ದೋಷಿ ಸುಬ್ರಹ್ಮಣ್ಯ ೩

 

೨೦೨
ಕಾರ್ತಿಕೇಯ ನಮೋ ಪಾವನ
ಮೂರ್ತಿ ಶರಜ ನಮೋ ಸಜ್ಜನ ಪ
ಸಜ್ಜನರಾರ್ತ ಕೇಳುವ ಕರ್ತಸಂತತ |
ಧೂರ್ತ ಶಿಕ್ಷ ನಮೋ ಅ.ಪ
ತಾರಕಾರಿ ನಮೋ ಚಿನ್ಮಯ |
ಮಾರರೂಪ ನಮೋ ಚೆಲ್ವ ಮ-
ಯೂರ ಧ್ವಜ ತ್ರಿಪುರಾರಿತನಯ
ಸಾರಸಾಕ್ಷ ನಮೋ ೧
ವಲ್ಲಿ ಪ್ರೀಯ ನಮೋ | ಶೋಭಿಪ |
ಫುಲ್ಲನೇತ್ರ ನಮೋ | ಶ್ರೈಜಗ
ಮಲ್ಲ ಭಕ್ತರ ನಲ್ಲ – ವಿಶ್ವ |
ವಲ್ಲಭೇಶ ನಮೋ ೨
ದಾಸರಕ್ಷ ನಮೋ ಪಾವಂ
ಜೇಶ ಸ್ಕಂದ ನಮೋ | ನಾಮಾ |
ಸಾಸಿರನೆ ಕಮಲಾಸನಾರ್ಚಿತ |
ದೋಷರಹಿತ ನಮೋ ೩

 

೨೫೫
ಕಾರ್ತಿಕೇಯನ ಮಾಡೋ ನೀ ಧ್ಯಾನ ಪ
ತಾರಕ ಮಥನನ ನೀರಜ ನಯನನ ತಾರಕ ಮಂತ್ರನ ಮಾಡೋ ನೀ ಧ್ಯಾನ ೧
ನಿಗಮಗಳಿಗೆಟಕದ | ಜಗದೇಕ ದೇವನ ಅಗಣಿತಮಹಿಮನ | ಮಾಡೋ ನೀ ಧ್ಯಾನ ೨
ನಿತ್ಯಾನಂದನ | ಭೃತ್ಯರ ಪೊರೆವನ ಸತ್ಯ ಸ್ವರೂಪನ | ಮಾಡೋ ನೀ ಧ್ಯಾನ ೩
ದುಷ್ಟ ಖಳರ ಎದೆ | ಮೆಟ್ಟಿ ಶಿಕ್ಷಿಸುವನ ಕುಷ್ಠ ವಿನಾಶನ | ಮಾಡೋ ನೀ ಧ್ಯಾನ ೪
ದಾಸರ ಕಾವ ಪಾವಂ | ಜೇಶನ ಸ್ಕಂದನ ಭೂಸುರ ಪ್ರೀಯನ | ಮಾಡೋ ನೀ ಧ್ಯಾನ ೫

 

೨೧೯
ಕಾರ್ತಿಕೇಯಾ ದೇಹಿ ಮಹ ಶೂರಾ ಧುರ
ಧೀರಾ ಉದಾರಾ ಗಂಭೀರ ಕುಮಾರ ಪ
ವೃಂದಾರಕಾದಿ ಸುರೇಂದ್ರ ಪಾಲಾ | ಕಂದರ್ಪ ರೂಪಾರ್ಧ ಚಂದ್ರಫಾಲಾ ಗುಣಮಾಲಾ ಜನಲೋಲಾ ಉಮೆ ಬಾಲಾ ಸುಶೀಲ ೧
ನಿಗಮಾಳಿ ಪೊಗಳುವ ಖಗಧ್ವಜ ಮಿತ್ರಾ | ಜಗಪಾವನ ಶಶಿಮೊಗ ಕಂಜನೇತ್ರಾ ತ್ರಿನೇತ್ರಾ ಪ್ರಿಯಮಿತ್ರಾ ಸುಚರಿತ್ರಾ ಪವಿತ್ರಾ ೨
ಪಾವನ ಮೂರುತಿ ಪಾವಂಜೆ ವಾಸಾ | ಕೋವಿದರೊಡೆಯ ರಕ್ಷಕ ದಾಸಾ ಗುಹೇಶಾ ಸರ್ವೇಶಾ ಸೇನೇಶಾ ಜಗದೀಶಾ ೩

 

೨೪೧
ಕೃತ್ತಿವಾಸನ ಪ್ರಿಯ ಪುತ್ರನಿಗೇ
ಭಕ್ತವತ್ಸಲನಿಗೇ ಭವಹರಗೇ | ನಿತ್ಯನಿರ್ಮಲ ಪುರುಷೋತ್ತಮ
ಶರಜಗೆ ನಿತ್ಯತೃಪ್ತಗೆ ನಿರ್ವಿಕಾರನಿಗೇ ಮಂಗಲಂ ೧
ದೇವಸೇನೆಯ ಮನ ಪ್ರೀಯನಗೆ
ದೇವತೆಗಳಭೀಷ್ಟದಾಯಕಗೇ | ದೇವಾದಿದೇವಗೆ ಭಾವಜ ರೂಪಗೆ
ಪಾವನ ಮೂರ್ತಿಗೆ ಕೋವಿದಗೆ ಮಂಗಲಂ ೨
ವಾಸುಕಿಗಭಯವನಿತ್ತವಗೆ
ವಾಸ ಪಾವಂಜೆಯೊಳ್‍ಗೈದನಿಗೆ | ಸಾಸಿರ ತರುಣಿ ಸಂಕಾಶಗೆ
ಈಶಗೆ ದಾಸರನನುದಿನ ಪೋಷಿಪಗೇ ||
ಮಂಗಲಂ ಜಯ ಮಂಗಲಂ ೩

 

೨೨೭
ಕೃತ್ತಿವಾಸನ ಪ್ರಿಯ ಪುತ್ರನೆ ಗುಹ ಸ- ರ್ವೋತ್ತಮ ಚಿದ್ರೂಪ ಪ
ನಿತ್ಯನಿರ್ಮಲ ಸುಚರಿತ್ರ ಪವಿತ್ರನೆ ಚಿತ್ತಜ ಪ್ರತಿರೂಪಾ ಪ್ರತಾಪಾಅ.ಪ
ದೀನತನದಿ ಕಡುಬೇನೆಯ ಪಡುತಲಿಹೀನಮನುಜನೆನ್ನಾ | ದಾನಿಯಾಗಿಹ ಕರುಣಾನಿಧಿ ಕೈಪಿಡಿ
ಧ್ಯಾನಿಪೆ ನಾ ನಿನ್ನ ಪ್ರಸನ್ನ ೧
ಸುತ್ತಮುತ್ತಿರುವ ವಿಪತ್ತುಗಳಾ ಭಯ ಮೆತ್ತಿಕೊಂಡಿದೆ ತಾನೇ ಸತ್ವಶಾಲಿಯೇ ನೀ ಕಿತ್ತೊಗೆಯದಿರೆ ಅ- ನ್ಯತ್ರ ಗತಿಯ ಕಾಣೆ ನಿನ್ನಾಣೆ ೨
ಪಾಶ ಅಂಕುಶಧರ | ನಾ ಸಹೋದರ ಪಾವಂ- ಜೇಶ ಮಹಾನುಭಾವ | ದಾಸರಿಗೊದಗುವ ತ್ರಾಸವ ಕಳೆ ಸ- ರ್ವೇಶನೆ ಮಹದೇವಾ | ದೇವರ ದೇವಾ ೩

 

೨೦೯
ಕೊಡು ಕೊಡು ಕೊಡು ಎನ್ನ ಒಡಯನೆ ದೇವಾ
ಕೊಡುವುದು ಮನದಿಷ್ಟ ತಡೆಯದೆ ದೇವ ಪ
ಕೊಡದಿರೆ ಪಾದವ ಪಿಡಿಯುತ ದೇವಾ
ಅಡಿಯಿಡೆ ಬಿಡೆ ಮುಂದೆ ನಡೆಯಲು ದೇವಾ ಅ.ಪ
ಸುರವರ ಪೂಜಿತ ಮುರಹರ ಮಿತ್ರ
ಕರುಣ ವಾರಿಧಿ ಪುಣ್ಯ ಪುರುಷ ಸುಚರಿತ್ರ |
ಶರಣ ರಕ್ಷಕ ಮುಕ್ತಾಭರಣ ಪವಿತ್ರ
ಸುರಮುನಿ ವಂದಿತ ಪರಮೇಶ ಪುತ್ರ ಕೊಡು | ೧
ವನಜಲೋಚನ ಸರ್ವ ಮನುಜರ ಪಾಲ
ದನುಜಮರ್ದನ ಕಾತ್ಯಾಯನಿ ಪ್ರಿಯ ಬಾಲ
ಮನಸಿಜರೂಪ ದಿವ್ಯ | ಮಣಿಗಣಮಾಲಾ
ಅನುಪಮ ಕ್ರೌಂಚ ವಾಹನ ವಲ್ಲೀಲೋಲಾ |ಕೊಡು | ೨
ದೇವಸೇನೆಯ ರಮಣ ದೇವೇಂದ್ರನಳಿಯ
ದೇವಾದಿದೇವಸುತ ಕೋವಿದರೊಡೆಯಾ |
ಪಾವನ ಮೂರುತಿ ಪಾವಂಜೆ ನಿಲಯ
ಸೇವಕ ದಾಸನ ಕಾವ ಕಾರ್ತಿಕೇಯ | ಕೊಡು | ೩

 

೨೪೪
ಗಿರಿಜಾತೆಯ ಸುತ ಸುರನರ ಪೂಜಿತ ಪರಮಪುರುಷ ಗುಹ ದಯದೋರೋ ಪ
ಕರುಣಿಗಳರಸಾ ಶರಣರ ರಕ್ಷಕಾ ದುರಿತ ವಿನಾಶ ಗುಹ ದಯದೋರೋ ಅ.ಪ
ಶಕ್ತಿ ವಜ್ರಾಯುಧ ಹಸ್ತದಿ ಧರಿಸಿಹ
ಮುಕ್ತಿದಾಯಕ ಗುಹ ದಯದೋರೋ | ಭಕ್ತರ ಮನಕೆ ಸಂತೃಪ್ತಿಯನೀವ
ಸರ್ವೋತ್ತಮೋತ್ತಮ ಗುಹ ದಯದೋರೋ ೧
ಇಂದಿರೆಯರಸನ ಕಂದನ ಗತರೂಪಾ-
ನಂದದೊಳಿದ್ದ ಗುಹ ದಯದೋರೋ ಇಂದ್ರನ ಮಾತೆಗೆ ಬಂದ ವಿಪತ್ತನು
ಕುಂದಿಸಿದಾ ಗುಹ ದಯದೋರೋ ೨
ಬಾಲೆ ವಲ್ಲಿಯವರ ಶೀಲ ಸುಗುಣ-
ರತ್ನಾಮಾಲ ದಾಸರಕ್ಷ ದಯದೋರೋ | ನೀಲಕಂಠನ ಧ್ವಜ ನೀಲಕಂಠಜ ಜನ
ಲೋಲ ಪಾವಂಜೆ ಗುಹ ದಯದೋರೋ ೩

 

೨೫೩
ಗಿರಿಜೆಯ ಪ್ರೀತಿಯ ಕುವರ ಪ
ಧುರ ಧೀರ ಭವದೂರ ಉದಾರ ಗಂಭೀರ ತವ ಚರಣವ ತೋರೋ ಕುಮಾರ ಅ
ತಾರಕ ದೈತ್ಯನ ವಿನಾಶ ಗುಹೇಶ ಸರ್ವೇಶಾ ಜಗ-ದೀಶಾಸೇನೇಶಾ ಗುಣವಾರಿಧಿ ಚಂಪಕನಾಸಾ ೧
ವಲ್ಲಿದೇವಿಯ ರಮಣ ಖಳದಮನ ನಿರ್ಮರಣ- ಶುಭ ಚರಣ – ಕಡುಕರುಣಾಕರ ಪಲ್ಲವ ರತ್ನಾಭರಣ೨
ಪಾವನ ಮೂರುತಿ ಈಶ ರವಿಭಾಶಾ ಅಘನಾಶಾ ಸದ್ ದಾಸಾ ಜನಪೋಷ ವರ ಪಾವಂಜೆ ಕ್ಷೇತ್ರ ನಿವಾಸ ೩

 

೧೯೫
ಗಿರಿರಾಜ ಸುಕುಮಾರಿ ಶಕ್ತಿ ವಿರಕ್ತಿ ಪ
ದೊರೆಯುವಂತೆನಗವ್ವ ತವಪಾದ ಭಕ್ತಿ ಅ.ಪ
ಅಂಬುಜವದನೆ ಮೂಕಾಂಬಾ ಜಗದಂಬಾ
ಕಂಬುಕಂಠಿನಿ ಗುಹ ಜನನಿ ದುರ್ಗಾಂಬಾ ೧
ಕೇಶವನನುಜೆ ಭವಾನಿ | ಅನ್ನಪೂರ್ಣೇ |
ನಾಸಿಕ ಚಂಪ ಪೋಲ್ವ ಶರ್ವಾಣೀ೨
ಪಾವನೆ ಸೌಖ್ಯದಾಯಕಿಯೇ ಪಾರ್ವತಿಯೇ
ಪಾವಂಜೇಶನ ದಾಸಜನರ ರಕ್ಷಕಿಯೇ ೩

 

೨೫೨
ಜಯ ಕಾರ್ತಿಕೇಯ | ದಾಮೋದರ ಪ್ರಿಯ ಪಾರ್ವತೀ ತನಯ ಪ
ಲಯ ವಿವರ್ಜಿತನೆ ದುಷ್ಟ |
ಚಯದ ನಾಶ ಇಂದೀವರ ನಯನ ಸದ್ಗುಣ ಭರಿತ ಚಿನು |
ಮಯ ಸದಾನಂದಅ
ನೀಲಕಂಠನ ಸುಧ್ವಜ ಚಂಪಕನಾಸ ಬಾಲಾರ್ಕ ಕೋಟಿ ತೇಜಾ ಕಾಲಾಂತಕ ದೇವ ಶಿವನ ಬಾಲ ಬಾಹುಲೇಯ ಜನಲೋಲ ಸಜ್ಜನ ಪಾಲ ರತ್ನಮಾಲ ಕುಮಾರ ೧
ವಲ್ಲಿ ದೇವಿಯ ರಮಣ ತಾರಕ ಪೂರ್ವ ಖುಲ್ಲ ದೈತ್ಯರ ದಮನಾ ಪುಲ್ಲಶರನ ಪೋಲ್ವರೂಪ ಪಲ್ಲವಾಧರ ನತಜನರ ನಲ್ಲಿ ತ್ರೈಜಗಮಲ್ಲ ವಿಶ್ವ | ವಲ್ಲಭ ಗುಹಾ ೨
ಪಾವಂಜೆ ಕ್ಷೇತ್ರವಾಸಾ | ರಕ್ಷಕ ದಾಸ ಕೋವಿದರೊಡೆಯ ಈಶಾ | ದೇವಸೇನೆಯಾ ರಮಣ ದೇವಾಧಿದೇವನುತ ಪಾವನ ಮೂರುತಿ | ಪಾವಕೋದ್ಭೂತಾ ೩

 

೨೧೬
ಜಯ ಜಯ ಪಾರ್ವತಿ ಬಾಲ ನಮೋ ನಮೋ ಜಯ ಜಯ ಸಜ್ಜನ ಪಾಲ ಪ
ಜಯ ಜಯಾ ನಾಥಬಂಧು ಜಯ ಕರುಣಾ ಸಿಂಧು ಜಯ ಜಯ ಶ್ರೀಧರ ಪ್ರಿಯ ಸಖ ಷಟ್ ಶಿರ ಜಯ ಅ.ಪ
ಬಾಲಾರ್ಕಶತಭಾಗ ಸು |
ಶೀಲ ಚಂಪನ ನಾಸಾ ಫಾಲಾಕ್ಷಜ
ಸುವಿಶಾಲ ವಕ್ಷ ಅಮರಾಳಿ
ಪೂಜಿತ ಬಲಶಾಲಿ ಕುಮಾರ ೧
ಕರ್ಣಾಟಾ ಶ್ರೀಪೋಲ್ವಾ ಚೆಲ್ವ |
ಕರ್ಣದ್ವಯದಿ ಮೆರೆವಾ | ವರ್ಣನಾ ತೀರ ಸುವರ್ಣಕುಂಡಲ ವಿಹ | ಚೂರ್ಣೀಕೃತ ದೈತ್ಯಾರ್ಣವ ಷಟ್ ಶಿರ ||ಜಯ|| ೨
ನಿತ್ಯ ನಿರ್ಮಲ ದೇವ ಪ್ರತಿನಿತ್ಯ ದಾಸರ ಕಾವ ಚಿತ್ತಜರೂಪ ಪ್ರಶಸ್ತ ಲಲಾಟ ಮುನಿ ಸ್ತುತ್ಯ ಪಾವಂಜೆಯ ಕರ್ತನೆನಿಪ ಗುಹ ||ಜಯ|| ೩

 

೨೧೮
ಜಯ ಜಯ ಶಂಕರ ಪ್ರಿಯಸುತ ಷಟ್ಶಿರ | ಜಯ ಜಯ ಕುಮಾರಾ ಪ
ಜಯ ಜಯ ಶ್ರೀಧರ ಪ್ರಿಯಗುಣ ಮಂದಿರ | ಜಯ ಜಯ ಧುರ ಧೀರಾ ಮಹ ಶೂರಾ ಅ.ಪ
ತಂದೆ ತಾಯೀ ಪೂರ್ವ ಬಂಧು ಬಳಗವೆಲ್ಲಾ | ಇಂದು ಎನಗೆ ನೀನೇ |
ಪೊಂದಿದೆ ತವಪದ | ದ್ವಂದ್ವವ
ಪಾಲಿಪುದಿಂದುವದನ ಗುಹನೇ ಷಟ್ಶಿರನೇ ೧
ನಿನ್ನ ಬಿಟ್ಟರೆ ಎನಗಿನ್ನಾರು ಗತಿಯಿಲ್ಲ | ಎನ್ನುತ ನಾ ಜೀಯಾ |
ಬೆನ್ನ ಪಿಡಿದೆ ಸುಪ್ರಸನ್ನ ನೀ ಪಾಲಿಸು |
ಪನ್ನಗ ಕುಲದೊಡೆಯಾ ಕಾರ್ತಿಕೇಯಾ ೨
ದಾಸರ ಅಘಕುಲ ರಾಶಿಯ ತರಿಯುತ | ಪೋಷಿಸ ಬೇಕೆಂದು ಆಶಿಸಿ ಬೇಡುವೆ | ಬೇಸರಿಸದೆ ಪಾವಂ – ಜೇಶನೆ ಬಲಬಂದೂ ದಯ ಸಿಂಧು ೩

 

೨೨೧
ಜಯ ಜಯಾ ಶಿವ ಪುತ್ರ ಶರಜ ಜಯ ಜಯಾ ಗುಹಾ ಪ
ಜಯ ಜಯ ಪಾರ್ವತಿ ಕುಮಾರ ಜಯ ಜಯಾ ದೇವಾ ||ಜಯ||
ತಾರಕಾಸುರನು ಸುರರ
ಊರಿಗೈದಿ ಆಳುತಿರಲು ಕೂರಲಗಿನಿಂದಲಸುವ ಹೀರಿ
ಸುರರ ಪೊರೆದ ದೇವಾ ೧
ಗಿರಿಯ ತುದಿಯೊಳ್ನಿಂದು |
ತವ ಬರವನಿದಿರು ನೋಡುತ್ತಿದ್ದ | ಉರಗ ಪತಿಯೊಳಂಶವಿರಿಸಿ |
ವರವನಿತ್ತ ಕರುಣಿ ದೇವಾ ೨
ದಾಸರಂತೆ ಸೇವಿಸಿದವಧ |
ನೀಶ ಸುಧರ್ಮನೆಂಬವನಾ | ಪೋಷಣೆಯ ಗೈದ ಪಾವಂ |
ಜೇಶ ಕಾರ್ತಿಕೇಯ ದೇವಾ ೩

 

೨೧೪
ಜೋಜೋ ಗಿರಿಜೆಯ ಬಾಲ ಸುಶೀಲಾ
ಜೋಜೋ ಶಂಕರ ಸುತ ಗುಣಮಾಲಾ | ಜೋಜೋ ಪ
ಕುಂದರದನ ಅರವಿಂದಾಕ್ಷ ಜೋಜೋ
ಮಂದರಧರ ಸಖ ಸ್ಕಂದನೆ ಜೋಜೋ
ಇಂದುವದನ ನಿತ್ಯಾನಂದನೆ ಜೋಜೋ |
ವೃಂದಾರಕ ಮುನಿ ವಂದಿತ ಜೋಜೋ ೧
ಕರಿವದನಾನುಜ ಶರಣ ರಕ್ಷಕ ಜೋಜೋ |
ಪರಮ ಪಾವನ ಮೂರ್ತಿ ಪರಿಶುದ್ಧ ಜೋಜೋ |
ಅರಿಗಳೆನ್ನುವ ಮದಕರಿಗೆ ಕೇಸರಿ ಜೋಜೋ
ಧರಣಿಸುರಕಲ್ಪ ತರು ಗುಹ ಜೋಜೋ ಜೋಜೋ ೨
ವಾಸವನುತ ಸರ್ವ ಪೋಷಕ ಜೋಜೋಸಾಸಿರ ಪೆಸರ ವಲ್ಲೀಶನೆ ಜೋಜೋ | ವಾಸ ಪಾವಂಜೆ ಸರ್ವೇಶನೆ ಜೋಜೋ ದಾಸ ಜನರ ಮನ ತೋಷಕಾ ಜೋಜೋ ಜೋಜೋ ೩

 

೨೦೧
ತರುಣಿ ವಲ್ಲಿಯು ತನ್ನ ಪುರುಷನ ಪಾದವ
ಕರದಿಂದ ಅಲುಗಿಸುತರುಹುವಳೂ ಪ
ಶರಣ ರಕ್ಷಕ ತವ ಚರಣ ದರ್ಶನಕಾಗಿ ನೆರೆದಾರು
ಸುರಸಿದ್ಧಸಾಧ್ಯರು ಬರುವರು |
ಮನು ಮುನಿಗಳುರಗರು
ನರರು ತವ ದ್ವಾರದಲಿ ತಮ್ಮಯ |
ಕರಗಳನು ಜೋಡಿಸಿ ಕೊಳುತ ನಿಂ
ದಿರುತಿಹರು ನೀನೇಕೆ ಮಲಗಿಹೆ |
ಭರದಿ ನಿದ್ದೆಯ ತ್ಯಜಿಸುತೇಳೆಂದು ಅ
ಸೋಕುತ್ತ ತರುಗುಲ್ಮ ನೀಕವ – ಮನೆಗಳ
ನಾಕು ದಿಕ್ಕಿಲಿ ಮುತ್ತಿಕೊಂಡಾಳುತಾ |
ಏಕಾಧಿಪತ್ಯದಿ ಮೆರೆಯುವ ತಮವನು
ನೂಕುತ್ತ ಜನಪದಕೆ ಉಷ್ಣವ |
ಹಾಕುತ್ತಲಿಲಿರುತಿರಲಿ ಬೇಕೆಂದು |
ದೇಕುತ್ತ ದಿನಮಣಿಯ ತೋಷದಿ |
ಏಕಗಾಲಿಯು ರಥಕೆ ತುರಗವಿದೂ |
ಕಟ್ಟಲಿಕೆ ಸಾಲಲಿ | ನಾಕರ ಮೇಲ್ಮೂರು
ಇರುವದು ನಡೆಸಲಿಕೆ ಸೂತಗೆ |
ವ್ಯಾಕುಲವು ಕಾಲಿಲ್ಲವೆನ್ನುವ
ನೇಕಕಷ್ಟವನೆಣಿಸಿಕೊಳ್ಳದೆ |
ಶ್ರೀ ಕುಮಾರನೆ ಪರಿಬರುತಿಹ
ನೇಕೆ ಮಲಗಿಹೆ ಏಳು ಎನ್ನುತ ೧
ಪಡುಗಡಲಿಂದಲೀ ಕಡೆಗೆ ಉಗ್ರದಿ ಬಂದು
ಎಡೆಯೆಡೆಯೊಳಗೆಲ್ಲ ತಿರುಗಾಡುತಾ
ಗಿಡ ತರು ಲತೆಗಳ ಪಿಡಿದು ಕಿತ್ತೊಗೆಯುತ
ಕುಡಿಗಳನು ದಡಬಡನೆ ಉದುರಿಸಿ |
ಮಿಡಿಗಳನು ತಾ ಬಳಸಿ ಸುತ್ತು |
ಬುಡಗಳನು ನೆರೆ ಮೀಟುತೆಸೆಯುತ
ಕಡು ಬಳಲಿ ಪಿಂತಿರುಗಿಕೊಳ್ಳುತ್ತ ಪುಷ್ಪಗಳ ಮೆಲ್ಲನೆ
ಪಿಡಿದು ಕೀಳುತ್ತಲೆತ್ತಿಕೊಳ್ಳುತ್ತ | ತವಪದಕೆ ಕಾಣಿಕೆ
ಕೊಡುತ ನಮಿಸುತ ತನ್ನ ಕಷ್ಟವ ನುಡಿದು ಮೆಲ್ಲನೆ
ಪೋಪೆನೆನುತೀ ಎಡೆಗೆ ಬೀಸುತ ಬರುವ ವಾತನ
ಸಡಗರ ನೀ ನೋಡು ಎನ್ನುತ೨
ಶೀತದ ಬಾಧೆಯ | ತಾ ತಾಳಲಾರದೆ ಸೋತು
ತಮ್ಮಯ ಗೂಡಿನೊಳಗೆ ಸೇರೀ
ಭೀತಿಯಿಂದಿಹ ಖಗವ್ರಾತವು – ಉದಯದ
ರೀತಿಯಾ ನೋಡುತ್ತ ತ್ಯಜಿಸುತ ಭೀತಿಯಾ |
ತವಪದ ಭಕ್ತಿಯಾ ಖ್ಯಾತಿಯಾ | ನರರಿಂಗೆ ತೋರ್ಪವೆಂ |
ಬಾತುರದಿ ಚಿಲಿಪಿಲಿಯ ಗುಟ್ಟುತ್ತಾ
ತವದಾಸರಂದದಿ ಪೋತಗಳ ಗೂಡಿನಲಿ ನಿಲಿಸುತ್ತಾ
ತಿನಿಸನ್ನು ತಹೆವೆಂದು | ಪ್ರೀತಿಯಿಂದಲಿ ಅರುಹಿ ಪಕ್ಕವ
ನಾತಗಳು ಬಿಡಿಸುತ್ತ ಪಾರುವ |
ರೀತಿಯನು ನೋಡೇಳು ನೀ ನಿ- |
ರ್ಭೀತ ಪಾವಂಜೇಶ ಎನ್ನುತ ೩

 

೨೫೯
ತಾರಕ ದೈತ್ಯನು ಗಾರುಗೆಡಿಸೆ
ಸುರವಾರವು ಬೊಮ್ಮನ ಕೂಡೀಶ್ರೀರಮಾಧವನ ಬಳಿ ಸೇರಿ
ದೂರಿಡಲಾತ ಮಾರಗಾಜ್ಞಾಪಿಸಿ ಕಳುಹೀಘೋರ ತಪದೊಳಿದ್ದ ಮಾರಾರಿಯ
ಬಳಿಸೇರುತ ತನ್ನಯ ನಾರಾಚವೆಸೆಯಲು ನಾರಿಯ ಮೋಹವು ತೋರೆ ಜನಿಸಿದ
ಕುಮಾರನಿಗಾರತಿಯ ಬೆಳಗಿರೇ ||ಶೋಭಾನೇ|| ೧
ಜನಿಸಿದೇಳನೆ ದಿನದಿ ವನಜಸಂಭವ
ಮುಖ್ಯ ಅನಿಮಿಷರೆಲ್ಲಾರೂ ಪಾದಾ ವನಜಕಾನತರಾಗಿ ತನುಮನ
ಧನಗಳ ಸನುಮತದಿಂದೊಪ್ಪಿಸುತ್ತಾ-ಘನಾ ಸೇನಾನಿ ಎಂಬನುಪಮ ಬಿರುದನು
ಇತ್ತು ಪೂಜಿಸಿ ದನುಜನ ಕೃತ್ಯವ ಮನವರಿಕೆಯ ಮಾಡೆ ಅನುವರಕೆದ್ದ
ಶರಜನಿಗೆ ಆರತಿಯ ಬೆಳಗಿರೇ ||ಶೋಭಾವೇ|| ೨
ಅಸುರನ ಪುರಕೆ ನಾಲ್ದೆಸೆಯಿಂದ
ಮುತ್ತುತ ಪೆಸರಾಂತ ಧೀರರ ಧುರದೀಪೆಸರಿಲ್ಲದಂತೆ ಕತ್ತರಿಸಲು ತಾರಕ ಪಲ್ಲ
ಮಸೆಯುತಲೈತರೆ ಕ್ಷಣದೀಮಸೆದಿಹ ಬಾಣದಿಂದಸುರನ ತನುವನು-
ರಸೆಯೊಳೊರಗಿಸುತ ಪುಷ್ಪಕದಲಿ ಬಂದುಪಶುಪತಿ ಪದಕೆ ವಂದಿಸಿದ ಕುಮಾರಗೆ
ಕುಶಲದಾರತಿಯ ಬೆಳಗೀರೆ ||ಶೋಭಾನೇ|| ೩
ದನುಜ ಪದ್ಮನು ಸುರಪನ ಸತಿ
ಶಚಿದೇವಿಯನು ಮೋಹಿಸುವದನು ಕೇಳಿ ಅನಿಮಿಷರೊಡೆಯ ಕಾನನದೊಳು ಸತಿಸಹ
ಮನದಿ ಧ್ಯಾನಿಸುತಿರುತಿರಲೂಅನಿಮಿಷರೊಡನೆ ಪದ್ಮನಪುರ ಸೇರಲಾ
ತನ ಸುತ ಕೊಳುಗುಳಕನುವಾಗಿ ಬರೆ ಹಿರಣ್ಯನ ಮಥಿಸುತ ಮೊಕ್ಷಯನು ಇತ್ತ
ಕಾರ್ತಿಕೇಯನಿಗೆ ಆರತಿ ಬೆಳಗಿರೇ ||ಶೋಭಾನೇ|| ೪
ಸುತನ ಮರಣ ಕಂಡು ಖಿಡಿತಿಯಿಂದ
ಬರೆ ದೈತ್ಯಪತಿಗ್ವಿಶ್ವರೂಪವ ತೋರೇಮತಿಹೀನ ದೈತ್ಯನು ನುತಿಸದೆ ಇರುತಿರೆ
ಮಥಿಸಿದನವನನು ಕೂಡೇನುತಿಸುತಿರುವ ದೇವತತಿಗಭಯವನಿತ್ತು
ಕ್ಷಿತಿಯೊಳಿರುವ ದಾಸತತಿಗಳಿಗನುದಿನಹಿತಗೈಯೆ ಪಾವಂಜೆ ಕ್ಷಿತಿಯೊಳ್ ನಿಂತಿಹ
ರಮೆಪತಿ ಸಖಗಾರತಿಯ ಬೆಳಗೀರೆ ||ಶೋಭಾನೇ|| ೫

 

೨೧೫
ತೂಗಿದಳೆ ಸ್ಕಂದನಾ ಪಾರ್ವತೀ ದೇವಿ ಆಗಮಜ್ಞನ ಗುಹನಾ ಪ
ಯೋಗಿ ವಂದ್ಯನ ನಿತ್ಯ ಭೋಗಿ ಭೂಷಣ ಜನ ಸಾಗರದಂತೆ ಗಂಭೀರನ ಜೋಯೆಂದು ||ತೂಗಿದಳೆ|| ಅ
ವನಜಲೋಚನನೆ ಜೋಜೋ ಸನಕಾದಿ
ಮುನಿವರ ವಂದಿತ ಜೋಜೋ | ಅನುಪಮ ಸದ್ಗುಣ ಚಿನುಮಯ ಸರ್ವಜ್ಞಅನಿಮಿಷ ವಂದಿಪ ಅನಘ ಜೋಜೋಯೆಂದು ೧
ತಾರಕಹಾರಿ ಜೋಜೋ ಸಂತತ
ಭಕ್ತೋದ್ಧಾರ ಕುಮಾರ ಜೋಜೋ ನಾರದಾದಿ ಮುನಿವರ ವಂದಿತ ಮಾರನಾಕಾರದ ಧೀರ ಜೋಜೋಯೆಂದು ೨
ದೇವಾಧಿದೇವ ಜೋಜೋ ನಿತ್ಯಾನಂದ |
ಪಾವನ ಮೂರ್ತಿ ಜೋಜೋ | ಪಾವಂಜೆ ವಾಸನ ಸೇವಕ ದಾಸರ ಕಾವ ಮಹಾತ್ಮನನೋವಿ ಜೋಜೋಯೆಂದು ||ತೂಗಿದಳೆ|| ೩

 

೨೪೩
ತೋರೋ ತೋರೋ ತವ ದಿವ್ಯ ಚರಣವ ಪ
ತೋರಿಸು ಕರುಣಾವಾರಿಧಿ ಶರಜ ನೀ ತೋರೋ ಅ.ಪ
ವಲ್ಲಿದೇವಿಯ ವಲ್ಲಭ ಸುರನುತ ಪಲ್ಲವಾಧರ ವಿಶ್ವದೊಲ್ಲಭ ಶರಜ ನೀ ||ತೋರೋ ೧
ತಾರಕನ ಸಂಹಾರಿ ಕಾರ್ತಿಕೇಯಾ ಶೂರಪದ್ಮನ ಅಸು ಹೀರಿದ ಶರಜ ನೀ ||ತೋರೋ೨
ಅಂಬೂಜಾಸ್ಯ ಹೇರಂಬನ ಸೋದರ ಕಂಬುಕಂಧರ ಭಕ್ತರ್ಗಿಂಬೀವ ಶರಜ ನೀ ||ತೋರೋ ೩
ಯೋಗಿವಂದಿತ ರಾಗಾದಿ ವಿರಹಿತ ಆಗಮಜ್ಞನೆ ಗುಣಸಾಗರ ಶರಜ ನೀ ||ತೋರೋ ೪
ವಾಸೀ ಪಾವಂಜೆ ಶೇಷ ಶಾಯಿಯ ಸಖ ದಾಸರ ಪೋಷ ಸರ್ವೇಶ ಶರಜ ನೀ ||ತೋರೊ ೫

 

೨೩೫
ದಯದೋರೋ ಸುಬ್ರಹ್ಮಣ್ಯ |
ದಯದೋರೋ ಪ
ದಯದೋರು ಅನುದಿನ
ಲಯ ವಿವರ್ಜಿತ ಚಿನು -ಮಯನೆ ನಿತ್ಯಾನಂದ ವಾರಿಜ
ನಯನ ಲಂಬೋದರನ ಸೋದರ ಅ
ಶರಜನೇ ಸುಧರ್ಮಭೂಪನ ಪೊರೆದನೇ ಕರುಣವಾರಿಧಿ ಪುರಹರನ ಪ್ರೀತಿಯ ಬಾಲ | ತರಣಿ ಸಾಸಿರಕಿರಣ ಪೋಲುವ |
ಪರಮತೇಜಃಪುಂಜ ಷಟ್ಶಿರ೧
ಸ್ಕಂದನೆ ಅಖಿಲ ಮುನಿವಂದ್ಯನೆ ಮಂದರಧರಸಖ ಕುಂದರದನ
ಪೂರ್ಣ ಚಂದಿರಾನನ ಸುಂದ-
ರಾಂಗಾರವಿಂದ ಚರಣ ದ್ವಂದ್ವ ಷಟ್ಶಿರ೨
ಈಶನೆ ತಾರಕ ದೈತ್ಯ ನಾಶನೆ ಸಾಸಿರ ಪೆಸರ ಪಾವಂಜೇಶನೆ ತವಪದ ದಾಸ ಜನರನು ನಿರತ ಪೊರೆವ ಸ-|
ರ್ವೇಶ ಪಾವನ ಮೂರ್ತಿ ಷಟ್ಶಿರ ೩

 

೨೫೪
ನಂದಿ ಧ್ವಜನ ಪ್ರಿಯ ಕಂದ |
ಗುಹ ಕಂದರ್ಪಾನ್ವಿತ ಮುನಿವಂದ್ಯ ಪ
ಸಿಂಧು ಗಂಭೀರ ಗುಣಸಿಂಧು
ಸದಾನತ ಬಂಧು ಶರಜ ನಿತ್ಯಾನಂದ ಅ
ಕುಕ್ಕಟವೇರು ಬಂದ | ಮಹಾ |
ರಕ್ಕಸನಿದಿರೊಳು ನಿಂದ | ಸೊಕ್ಕಿಂದ ಮಲೆತಾ ರಕ್ಕಸ ಸೈನ್ಯವ |
ಮುಕ್ಕಿ ತಾರಕನನು ಕೊಂದ ೧
ಸುರಪನ ಸತಿ ಶಚಿಯಂದಾ | ತಾನು |
ಅರಿತು ಮೋಹದಿ ಮನ ನೊಂದ | ದುರುಳ ಪದ್ಮನು ಪಡೆವೆರಸಿ ಯುದ್ಧಕೆ ಬರೆ |
ಶಿರವ ಕತ್ತರಿಸಿದ ಸ್ಕಂದ ೨
ವಾಸುಕಿಗೊಲಿಯುತ ಬಂದ | ರವಿ |
ಭಾಸನಾಶನ ಭವಬಂಧ | ದಾಸರನನುದಿನ ಪೋಷಿಸೆ ಚಂಪಕ |
ನಾಸ ಪಾವಂಜೆಯೊಳ್ನಿಂದ ೩

 

೨೫೭
ನಂಬಿದೆ ಕುಮಾರ ತವ ಪಾದಾಂಬುಜವ ಧೀರಾ ಪ
ನೀನೆನಗಿಂಬುಕೊಟ್ಟು ಪರಾಂಬರಿಸು
ಶ್ರೀ ಶಂಭು ಸುಕುಮಾರ ಅ.ಪ
ಯೋಗಿಜನವಂದ್ಯ ಸದ್ಗುಣ ಸಾಗರಾನಂದ ನಿರುಪಮ ರಾಗ ಲೋಭವ ತ್ಯಾಗಗೈದಿಹ ಶ್ರೀ ಗಿರಿಜೆಕಂದಾ ೧
ಶಕ್ತಿ ಮೊದಲಾದ ಆಯುಧ ಹಸ್ತದೊಳು ಪಿಡಿದಾ ನಿರ್ಮಲ ಚಿತ್ತ ಶ್ರೀಧರ ಮಿತ್ರ ಪರಮ ಪವಿತ್ರ ಖಳ ಛೇದಾ ೨
ವಾಸವಾರ್ಚಿತನೇ ಸರ್ವದಾ ದಾಸ ರಕ್ಷಕನೇ ರವಿಶತ ಭಾಸ ಚಂಪಕನಾಸ ಪಾವಂಜೇಶ ಷಟ್ಶಿರನೇ ೩

 

೨೨೫
ನಂಬಿದೆ ನಿನ್ನ ನಂಬಿದೆನು |
ಅಂಬಿಕಾ ಕುಮಾರನೆ ಪ
ಕಂಬುಕಂಧರ ಅಂಬುಜಾಕ್ಷ |
ಶಂಭುಪುತ್ರ ಸ್ಕಂದನೇ ಅ.ಪ
ಸುರಪುರವ ಗೆಲಿದುಕೊಂಡ ದುರುಳ ತಾರಕನಾಶನೆ ಶರಜ ವಲ್ಲಿಯರಸ ಗುಹ ಕರುಣಾ ಸಾಗರ ಸ್ಕಂದನೆ ೧
ಕಾರ್ತಿಕೇಯ ಪರಮ ಪಾವನ ಮೂರ್ತಿ ಸುಬ್ರಹ್ಮಣ್ಯನೆ ಸ್ತೋತ್ರ ಮಾಳ್ವ ಜನರ ಮನದಿ-ಷ್ಟಾರ್ಥವೀವ ಸ್ಕಂದನೆ ೨
ವಾಸವಾದಿ ದಿವಿಜನುತ ಪಾವಂ-ಜೇಶ ಪರಮ ಪೂಜ್ಯನೆ | ದಾಸ ಜನರ ಮನಕೆ ಸಂತತ ತೋಷವೀವ ಸ್ಕಂದನೆ ೩

 

೨೫೬
ನಮಿಸುತ ಹೊರಳುವೆನು | ಕಾರ್ತಿಕೇಯ ನಮಿಸುತ ಹೊರಳುವೆನು ಪ
ನಮಿಸುತ ಹೊರಳುವೆ | ರಮೆಪತಿ ಸಖ ಗುಹನಮಿಸುತಅ
ಪರಿಪರಿ ತಾಪದ | ಸೆರೆಯೊಳ್ ಸಿಲುಕಿ ಬಲು ತರ ಕಷ್ಟಪಡುತಿಹೆನು ಕುಮಾರ ನಮಿಸುತ ೧
ಹೊರಲಾರದಷ್ಟು ನಾ | ದುರಿತ ರಾಶಿಯಗೈದು ನರಳು ಬಲಿಹೆನು | ಕಾವುದು ನೀನು ನಮಿಸುತ ೨
ಈಶನ ಪುತ್ರ ಸ | ರ್ವೇಶ ಸದ್ಗುಣ ಪಾವಂ | ಜೇಶನೆ ಸ್ತುತಿಸುವೆನು | ದಾಸನು ನಾನು ನಮಿಸುತ ೩

 

೨೨೪
ನಮಿಸುವೆ ಅನುದಿನ ನಿನ್ನ | ಸುಬ್ರಹ್ಮಣ್ಯ ಪ
ಮಮ ಅಪರಾಧವ ಕ್ಷಮಿಸು ಪ್ರಸನ್ನ ಅ.ಪ
ನೀಲಲೋಹಿತನ ಸುಕುಮಾರಾ ಸದ್ವಿಚಾರ | ಬಾಲಾರ್ಕಭಾಸ ಸುಶೀಲಾ ಅಪಾರಾ ೧
ತಾರಕಾದ್ಯ ಸುರಾಳಿನಾಶಾ | ಶ್ರೀವಲ್ಲೀಶ | ಮಾರನಾಕಾರದ ಧೀರ ಗುಹೇಶ ೨
ಶ್ರೀಶನ ಸಖ ದಾಸರಕ್ಷ | ಖಳ ಶಿಕ್ಷ | ಸಾಸಿರ ಪೆಸರ ಪಾವಂ | ಜೇಶ ಸುರಪಕ್ಷ ೩

 

೨೨೦
ನಮಿಸುವೆನೋ ಪಾದಕೆ ಕಾರ್ತಿಕೇಯಾ | ನಮಿಸುವೆ ಪ
ನಮಿಸುವೆ ಪಾದಕೆ ಸುಮನಸ ವಂದ್ಯನೆ ಅ.ಪ
ಚಾರು ಚಂಪಕನಾಸ ನೀರಜನೇತ್ರಾ | ತಾರಕಾಸುರನ ಸಂಹಾರಿ ಕುಮಾರಾ ೧
ಕುಕ್ಷಿಯ ಪಾಲಿಪ ಇಕ್ಷು ಚಾಪನ ರೂಪ | ದಕ್ಷೆಯ ಪುತ್ರ ಮುಮುಕ್ಷು ಪ್ರಿಯಾ ಗುಹ ೨
ದಾಸರಿಗನುದಿನ ತೋಷವಿತ್ತು ಅಘ- ನಾಶ ಷಟ್ಶಿರ ಪಾವಂಜೇಶನೆ ಕಾಯೆಂದು ೩

 

೨೩೩
ನಲಿಯುತ ನಲಿಯುತ ಬಂದನೆ | ವಿಶ್ವಾ – ವಳಿಯ ಪಾಲಿಪ ಶಿವನ ಕಂದನೆ
ಪಾವಕನೊಳು ಬೆರೆತಿದ್ದನೆ – ದಿವಿ -ಜಾವಳಿ ನುತಿಸಲು ಎದ್ದನೆ – ನಿಗ – ಮಾವಳಿ ಪೊಗಳುವ ಸೇರಕೋದ್ಧಾರನು ನಲಿಯುತ ೧
ಸೇನಾನಿ ಪದವಿಯೊಳೆದ್ದನೆ – ಸುರರ ಸೇನೆಯ ನೊಡಗೂಡಿ ಪೋದನೆ – ಧುರದಿ ದಾನವರೆರೆಯನ ಗೋಣನು ತರಿದೊಟ್ಟಿ ನಲಿಯುತ ೨
ವಾಸವಾರ್ಚಿತ ಧರೆಗೆ ಬಂದನೆ – ಅಘ ನಾಶ ಪಾವಂಜೆಯೊಳ್ ನಿಂದನೆ – ರವಿ ಭಾಸ ಕಾರ್ತಿಕೇಯ ದಾಸರ ಪೊರೆಯಲು ನಲಿಯುತ ೩

 

೨೨೯
ನಿನ್ನ ಪಾದವ ನಂಬಿದೆನು |
ನಿನ್ನನೇನು ಮರೆಹೊಕ್ಕೆನು ಪ
ನಿನ್ನ ನಾಮವ ಜಪಿಸುತನುದಿನ |
ನಿನ್ನನೇ ನಾ ಬೇಡ್ವೆನುಅ.ಪ
ಶರಣು ಸ್ಕಂದನೆ ದುರಿತ ಭಂಜನೆ ಶರಣು ಪಾರ್ವತಿ ಕಂದನೆ | ಶರಣು ತಾರಕ ನಾಶ ಕರುಣಾ ಶರಧಿ ನಿತ್ಯಾನಂದನೆ ೧
ಕೃತ್ತಿಕೆಯೊಳುದಿಸಿದನೆ ಪರಮ ಪ-ವಿತ್ರನೇ ಸುರವಂದ್ಯನೆ ಉತ್ತಮೋತ್ತಮ ದೇವಸೇನೆಯ ಚಿತ್ತಹಾರಿಯೆ ಶರಜನೇ ೨
ಚಾರು ಚಂಪಕ ನಾಸ ಧೀರ ಕು- ಮಾರ ತ್ರೈಜಗದೊಡೆಯನೆ | ಘೋರ ಶಾಪದಿ ಗಾರುಗೆಟ್ಟಿಹ ನಾರಿರನ್ನೆಯ ಕಾಯ್ದನೆ ೩
ಮುಷ್ಟಿಕಾರಿಯ ಮಿತ್ರನೆ ಪರ- ಮೇಷ್ಟಿ ವಂದ್ಯನೆ ಪೂಜ್ಯನೆ | ದುಷ್ಟ ಪದ್ಮನ ಕುಟ್ಟಿ ಸುರಪತಿ ಇಷ್ಟವನು ಕರುಣಿಸಿದನೆ ೪
ಭಾವಜಾರಿಯ ಪುತ್ರನೆ ಸದಾ ಭಾವಜನ ಪ್ರತಿರೂಪನೆ | ಭಾವ ಭಕ್ತಿಯೊಳ್ ಭಜಿಪ ದಾಸರ ಕಾವ ಪಾವಂಜೇಶನೆ ೫

 

೨೨೩
ನಿನ್ನ ಬೇಡುವೆ ಸುಬ್ರಹ್ಮಣ್ಯ |
ನಿನ್ನ ಬೇಡುವೆ ಪ
ನಿನ್ನ ಬೇಡುವೆನು ಸುಪ್ರ |
ಸನ್ನ ಬೇಗ ದಯ ತೋರುತೆನ್ನನುದ್ಧರಿಸುತ ಪಾಲಿಸೆನ್ನುತಾ
ಸೆರಗೊಡ್ಡಿ ನಾನು ಅ.ಪ
ಮನುಜ ವರ್ಗದಲ್ಲಿ ಜನಿಸಿ
ನೆನೆಯದೇ ತವಪದವ ನಿತ್ಯ ಮನದೊಳಹಂಕಾರದಳೆದು
ಜನುಮ ಕೆಡಿಸಿಕೊಂಡ ಪಾಪಿ ೧
ಕಾಮಕ್ರೋಧಗಳಿಗೆ ಸಿಲುಕಿ |
ನೇಮ ನಿಷ್ಠೆಗಳನು ತ್ಯಜಿಸಿಪಾಮರನಂದದಲಿ ಬೆಳೆದ |
ಕಾಮುಕನ ಪಾಲಿಸೆನುತ ೨
ಕ್ಲೇಶನಾಶ ಎನ್ನ ಮನದ
ಕ್ಲೇಶಗಳನು ತರಿದು ಪಾವಂ ಜೇಶ ರಕ್ಷಿಸೆನುತ ನಿನ್ನ
ದಾಸನಾದ ನಾನು ನಮಿಸಿ ೩

೧೯೪
ಶಿವಸ್ತುತಿ
ನೀಲಕಂಠ ಶಿವ ಶಂಕರ | ಫಾಲ ನೇತ್ರ ಭವ ಪ
ರುಂಡಮಾಲ ಸರ್ವಭೂತಾಳಿ ಸೇವಿತ | ಶೂಲಪಾಣಿಹರ ಅ.ಪ
ಸಾಮಗಾನಪ್ರಿಯ ಭಕ್ತರ | ಪ್ರೇಮಿ ಗುಣವರ್ಯ ನಿರುಪಮ |
ಭೀಮಬಲ ಸುತ್ರಾಮವಂದಿತ | ಕಾಮನಾಶ ಹರ ೧
ನಾಗ ಚರ್ಮಧರ ಚಿನ್ಮಯ | ನಾಗ ಭೂಷವರ ಸರ್ವವೇ –
ದಾಗಮಾಳಿ ಸರಾಗ ಪೊಗಳುವ | ಯೋಗಿ ವಂದ್ಯ ಹರ ೨
ಈಶ ಮಹದೇವ ಅನುದಿನ | ದಾಸರನು ಕಾವ – ಪಾಂಂ
ಜೇಶನ ಪಿತ ಶ್ರೀಶ ಸಖ ಗಿ | ರೀಶ ಶರ್ವ ಹರ ೩

 

೧೯೯
ಪರಮ ಪುರುಷ ದಯಮಾಡೋ | ನಿನ್ನ |
ಸಿರಿಚರಣದಮರೆಸೇರ್ದೆ ಕಾಪಾಡೋ ಪ
ಅರಿಯದೆ ವಿಪ್ರನೆಂದಿರಿಸಿ ಕೊಂಡೆ |
ದುರುಳ ವ್ಯಾಧನ ನಾನು ಅತಿಪತಿಕರಿಸಿ
ನರಮಾಂಸ ಉಣಿಸಿದೇ ಮುನಿಗೆ – ಈ
ಪರಿಯ ಕೃತ್ಯದಿ ಬಿದ್ದೆ ನೀ ಅಧೋಗತಿಗೆ ೧
ಪಥವ ಕಾಣೆನು ನಾ ಕುಮಾರಾ- ತಕ್ಕ
ಪಥವ ತೋರಿಸು ಮಹದೇವ ಸುಕುಮಾರ |
ಹಿತಗೈಯುವರ ಕಾಣೆ ಜೀಯಾ – ನಿನ್ನ
ಸುತನಂತೆ ಕಾಯೆಂದು ಬೇಡ್ವೆ ದಮ್ಮಯ್ಯ ೨
ಬಂಧು ಬಳಗವೆಲ್ಲ ಎನ್ನಾ – ಬಿಟ್ಟು
ನಿಂದಿಸುತಿರುತಲಿ ಹರಸು ಪ್ರಸನ್ನಾ |
ತಂದೆಯೆಂದುಸುರ್ವೆನು ನಿನ್ನಾ – ಈಗ
ಬಂದ ಬವಣೆಗಳ ಕಳೆ ಅಗ್ರಗಣ್ಯಾ ೩
ಲೋಕದೂಷಿತನಾದೆ ನಾನು – ಅತಿ
ಶೋಕ ತಾಪದಿ ಬೆಂದು ಕಡುಬಳಲಿದೆನು |
ಲೋಕ ಪೂಜಿತ ದೇವ ನೀನು – ಎನ್ನ
ವ್ಯಾಕುಲ ಕಳೆಯೆಂದು ಸೆರಗನೊಡ್ಡುವೆನೂ೪
ಇಂದೆನಗಾರು ದಿಕ್ಕಿಲ್ಲಾ – ನಿನ್ನ
ಸಂದರುಶನವ ಮಾಡಿದೆ ವಲ್ಲೀನಲ್ಲಾ |
ಬಂದೀಯೋ ಮನದಿಷ್ಟವೆಲ್ಲ್ಲ – ದಾಸ
ನೆಂದೆನ್ನ ಕಾಯೊ ಪಾವಂಜೆಪುರ ನಲ್ಲ ೫

 

೨೧೧
ಪಾದಕ್ಕೆರಗುವೆ ಗುಹ | ಗಿರಿಜಾಸುತನೆ ತವ
ಪಾದಕ್ಕೆರಗುವೆ ಗುಹಾ ಪ
ಪಾದಕೆರಗುವೆ ಮೋದದಿಂದಲಿ |
ಆದರಿಸಿ ಪಿಡಿದೆತ್ತಿ ನಿನ್ನಯ
ಪಾದರೇಣುವನೀಯೊ ಶ್ರೀ ದಾ- |
ಮೋದರನ ಸಖ ಶಿವನ ಸುತ ತವ ಅ.ಪ
ದುಷ್ಟ ಪದ್ಮನ ಬಾಧೆಯಾ ಸಹಿಸಲಿಕೆ ಕೂಡದೆ
ಕಷ್ಟದಿಂದಲೆ ಸುರವರ್ಯಾ |
ಕಟ್ಟಡವಿಯನು ಸೇರಿಸುತಿಹನ
ಗುಟ್ಟಿನಲಿ ತವ ಪದವ ಧ್ಯಾನಿಸೆ
ದುಷ್ಟನನು ತರಿದೊಟ್ಟಿ ಸುರಪತಿ
ಇಷ್ಟವನು ಪಾಲಿಸಿದ ಗುಹತವ ೧
ಧರ್ಮಾಧಿರಾಜ್ಯವನು ಪಾಲಿಸುತಿಹ ಸು- |
ಧರ್ಮವೆಂಬವನೀಶನು
ಕರ್ಮವಶದಿಂ ಕ್ರೂರ ದನುಜನ
ಜನ್ಮವನು ಧರಿಸುತ್ತಲಧಿಕ ದು-
ಷ್ಕರ್ಮಗಳ ನೆಲೆಗೈಯ್ಯುತಿರೆ
ನಿರ್ಮೂಲನ ಮಾಡಿರುವ ಗುಹ ತವ ಪಾದಕ್ಕೆ|| ೨
ಇಂದಿರೇಶನ ಸುತನೂ ಮುನಿವರ |
ರಿಂದ ಬಂದಾ ಶಾಪದಲಿ ತಾನೂ
ನೊಂದು ಪೂಜಿಸಲವನ ಕುಷ್ಠವಾ |
ನಂದದಲಿ ಪರಿಹರಿಸಿ ಭಕ್ತರ
ವೃಂದವನು ಪಾಲಿಸೆ ಪಾವಂಜೆಗೆ
ಬಂದ ಶರಜಗೆ ದಾಸನನುದಿನ ೩

 

೨೧೦
ಪಾಲಿಸೆಮ್ಮನು ಗುಹನೇ | ಶ್ರೀ ಸುಬ್ರಹ್ಮಣ್ಯ ಪ
ಪಾಲಿಸೆಮ್ಮನು ಗುಹ | ನೀಲಕಂಠನ ಸುತ ಅ.ಪ
ತಾರಕಾಸುರ ಮಹಾಶೂರಪದ್ಮನ ಯಮ |
ನೂರಿಗಟ್ಟಿದ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| ೧
ಕುಷ್ಠದಿ ನರಳುವ ಕೃಷ್ಣ ಸುತನ ಮನ- |
ದಿಷ್ಟವನಿತ್ತ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| ೨
ವಲ್ಲಿ ದೇವಿಯ ಪ್ರಾಣವಲ್ಲಭನೆನಿಸುವ
ಪುಲ್ಲಂಬರೂಪ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| ೩
ವೃಂದಾರಕಮುನಿ ವೃಂದವಂದಿತ ನಿತ್ಯಾ-|
ನಂದ ಚಿನ್ಮಯ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| ೪
ನಂಬಿದ ದಾಸರಿಗಿಂಬನು ಕೊಡು ಬೇಗ |
ಅಂಬಿಕಸುತ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| ೫

 

೨೪೭
ಪಾಲಿಸೋ ಸುಬ್ರಹ್ಮಣ್ಯ ಪಾಲಿಸೋ ಪ
ಪಾಲಿಸು ದಯೆಯಿಂದ ನೀಲಲೋಹಿತ
ಪ್ರಿಯ ಲಾಲ ಸದ್ಗುಣ-ಶೀಲ ಸಜ್ಜನಪಾಲ ಮಣಿಗಣ ಮಾಲ
ಷಡ್ಶಿರ ಪಾಲಿಸೋ ಅ.ಪ
ಚಂದಿರಾವದನ ಕಂಬುಕಂಧರ ಕುಂದರದನ
ಚೆಲ್ವ ಇಂದೀವರಾಕ್ಷ ಸ-ನಂದನಾದಿ ಮುನೀಂದ್ರ ಪೂಜ್ಯಾನಂದ
ಮೂರುತಿ ಸ್ಕಂದ ಷಡ್ಶಿರ ೧
ತಾರಕಾ ಚಿನ್ಮಯ ಭಕ್ತೋದ್ಧಾರಕ ಚಾರು
ಚಂಪಕನಾಸ ಮಾರ ಸ್ವರೂಪ ಮುರಾರಿ
ಸಖ ಸುರವಾರ ವಂದ್ಯ
ಮಯೂರವಾಹನ ಧೀರ ಷಡ್ಶಿರ ೨
ದಾಸರ ರಕ್ಷಕ ರವಿ ಭಾಸುರಾ ಪಾಶ
ಅಂಕುಶಧರನಾ ಸಹೋದರ ಸರ್ವ ದೋಷ ಹರ ಕಮಲಾಸನಾರ್ಚಿತ
ಈಶ ಪಾವಂಜೆವಾಸ ಷಡ್ಶಿರ ೩

 

೨೩೧
ಪಾಹಿಮಾಂ ಕಾರ್ತಿಕೇಯಾ | ಪಾರ್ವತಿಯ ಕುವರಾ ಪಾಹಿಮಾಂ ಕಾರ್ತಿಕೇಯಾ ಪ
ಪಾಹಿ ಭಕ್ತಾವಳಿಯ ಪಾಲಕ |
ಪಾಹಿ ದುರ್ಜನ ಕುಲವಿನಾಶಕ ಪಾಹಿ ನಿರ್ಮಲ ಚಿತ್ತ ನಿರ್ಗುಣ |
ಪಾಹಿ ಕರುಣಿಯೆ ಸುಬ್ರಹ್ಮಣ್ಯ ಅ
ಸುಗುಣಾಭರಿತ ಶರಜಾ ಸಚ್ಚಿದಾನಂದ ಅಗಜೆಯ ಪ್ರಿಯ ತನುಜ ನಿಗಮ-
ಗೋಚರ ನಿತ್ಯ ನಿರ್ಮಲ ನಗಧರನ ಸಖ ವಲ್ಲಿವರ ತ್ರೈ
ಜಗೆದೊಡೆಯ ಪರಿಶುದ್ಧ ಪಾವನ ಮೃಗಧರನ ಸುತ ಸುಬ್ರಹ್ಮಣ್ಯ | ಪಾಹಿ | ೧
ಬಾಲಾರ್ಕ ಕೋಟಿ ತೇಜ ನಿತ್ಯಾನಂದ ನೀಲಗ್ರೀವನ ಸುಧ್ವಜ ಖೂಳ ತಾರಕನೆಂಬ
ದೈತ್ಯನ ಪಾಳಯಕೆ ಕಾಲ ಸ್ವರೂಪ
ಸುರಾಳಿಯಂಬುಧಿ ಚಂದ್ರ ವರಮುನಿ ಜಾಲವಂದಿತ ಸುಬ್ರಹ್ಮಣ್ಯ ೨
ವಾಸವನುತ ಚರಣ ವರಶಕ್ತಿ ಹಸ್ತ ಭಾಸುರ ರತ್ನಾಭರಣ ದಾಸಜನರನು ತೋಷದಿಂದಲಿ
ಪೋಷಿಸುವ ಗುಹ ವರದ ಪಾವಂಜೆ ವಾಸ ಚಿತ್ತಜರೂಪ ಭವಹರ |
ಭೂಸುರ ಪ್ರಿಯ ಸುಬ್ರಹ್ಮಣ್ಯ ೩

 

೨೦೬
ಬಾ ಬಾ ಬಾ ಗುಹನೇ | ಓಡುತ್ತೋಡುತ್ತ |
ಬಾ ಬಾ ಬಾ ಗುಹನೇ ಪ
ವಲ್ಲಿಯ ವಲ್ಲಭ ಮಲ್ಲಿಸಾಹಸ ಸುರ |
ವಲ್ಲಭನುತರು ಮನಕುಲ್ಲಾಸದೋರುತ ೧
ಕರದೊಳು ಕುಕ್ಕುಟ ವರವಜ್ರ ಶಕ್ತಿಯೆಂ-
ಬುರು ಆಯುಧಗಳ ಧರಿಸಿಹ ಷಣ್ಮುಖ | ಬಾ ೨
ದುಷ್ಟ ಖಳರ ತಲೆ ಕುಟ್ಟುತ ಕಾಲನ
ಪಟ್ಟಣಕಟ್ಟುವ ದಿಟ್ಟ ಕುಮಾರ ನೀ ಬಾ ೩
ಕುಂದರದನ ಅರವಿಂದ ಲೋಚನ ಕಂಬು
ಕಂಧರ ಅಷ್ಟಮಿ ಚಂದ್ರಲಲಾಟನೆ ಬಾ ೪
ಮೆರೆಯುವ ಪಾವಂಜೆಪುರದೊಡೆಯನೆ ತವ
ಚರಣದ ದಾಸರ ನಿರತದಿ ಪೊರೆಯಲು ಬಾ ೫

 

೨೩೨
ಬಾ ಶಿವಪುತ್ರನೆ ಶ್ರೀಶನ ಮಿತ್ರನೆ ಪ
ಬಾ ಸುರವಂದ್ಯನೆ ವಾಸುಕಿಗೊಲಿದನೆ | ಬಾ | ಅ
ಚಂದಿರವದನನೆ ಕುಂದಣವರ್ಣನೆ
ಕುಂದರದಾನನ ಸುಂದರ ಕಾಯನೆ ಬಾ ೧
ತಾರಕನಾಶನೆ ಧೀರಕುಮಾರನೆ ನೀರಜ ನೇತ್ರನೆ ಮಾರಸ್ವರೂಪನೆ ಬಾ ೨
ವಲ್ಲಿಯ ರಮಣನೆ ಖುಲ್ಲರ ದಮನನೆ ಬಲ್ಲಿದರೊಡೆಯನೆ | ಮಲ್ಲ ಸಾಹಸನೆ | ಬಾ | ೩
ಶಿಷ್ಟರ ರಕ್ಷನೆ ದುಷ್ಟರ ಶಿಕ್ಷನೆ | ಕುಷ್ಠ ವಿನಾಶನೆ ಇಷ್ಟವ ಕೊಡುವನೆ | ಬಾ | ೪
ದೋಷ ವಿನಾಶನೆ ನಾಶ ರಹಿತನೆ ದಾಸರ ರಕ್ಷ ಪಾವಂ | ಜೇಶನೆ ಸ್ಕಂದನೆ | ಬಾ | ೫

 

೨೦೪
ಬಾರೋ ಬಾರೋ ಗಿರಿಜಾಸುತ ಗುಹ |
ಬಾರೋ ಬಾರೋ ಶರಣೆಂಬೆನು ದೇವ ಪ
ಪಂಕಜ ನೇತ್ರ ಪಂಕಜಾಕ್ಷನ ಮಿತ್ರ
ಪಂಕಜ ವದನದ ಶಂಕರಸುತ ಗುಹ ಬಾರೋ೧
ವೃಂದಾರಕಮುನಿ ವೃಂದ ವಂದಿತಪಾದ
ಕಂದರ್ಪಾನ್ವಿತಗುಣ ವೃಂದ ನಿತ್ಯಾನಂದ ಬಾರೋ ೨
ದೋಷರಹಿತ ಪಾವಂಜೇಶ ಸಂತತ ತವ
ದಾಸರ ಭವದಘ ರಾಶಿಯ ತರಿಯುತ್ತಾ ಬಾರೋ ೩

 

೨೦೫
ಬಾರೋ ಬೇಗ ಬಾರೋ ಮ-|
ಯೂರ ವಾಹನ ದೇವ ಪ
ಬಾರೋ ಬೇಗ ಬಾರೋ ಕು- |
ಮಾರ ಬೆಟ್ಟದ ದೇವ ಅ.ಪ
ಸ್ಕಂದಾ ನಿತ್ಯಾನಂದಾ ಗುಣ |
ವೃಂದಾ ಬೇಗ ಬಾರೋ
ವೃಂದಾರ ಕೇಂದ್ರ ಮಹೇಂದ್ರ
ಪುತ್ರ ಬಾರೋ ಬಾರೋ ೧
ಧೀರಾ ಉ-ದಾರಾ ಗಂ |
ಭೀರಾ ಬೇಗ ಬಾರೋ |
ಮಾರಾನಾಕಾರಾ ಭವ- |
ದೂರ ಬೇಗ ಬಾರೋ೨
ಈಶಾ ಗುಹೇಶಾ ಪಾವಂ- |
ಜೇಶಾ ಬೇಗ ಬಾರೋ |
ದಾಸಾನು ದಾಸಾ ಜನ |
ತೋಷ ಬೇಗ ಬಾರೋ ೩

 

೨೩೮
ಬೇಡುವೆ ತವ ಪಾದವಾ ಕಾರ್ತಿಕೇಯಾ |
ಬೇಡುವೆ ತವ ಪಾದವಾ ಪ
ಬೇಡುವೆ ತವ ಪಾದ ಮಾಡಿ ದಯವನು ಹೋ-ಗಾಡಿಸು ಬವಣೆಯ ನೀಡು ಮನೋದಯ ಅ.ಪ
ನೀಲ ಲೋಹಿತನ ಪುತ್ರಾ ಶೋಭಿಸುವ ಮ- ರಾಳ ವಾಹನ ಪವಿತ್ರಾ ಖೂಳ ತಾರಕನೆಂಬ ವ್ಯಾಳ ಗರುತ್ತ್ಮ ಮರಾಳಿ ಪೂಜಿತ
ವಿಶ್ವಪಾಲ ಸದ್ಗುಣ ಮಾಲ ೧
ಅದಿತಿಯ ಕಾಯ್ದವನೇ ಸುಧರ್ಮಗೆ ಸು-ಪದವಿಯನಿತ್ತವನೇ ಮದನನ ರೂಪಾರಿ-ಮದಗಜ ಕೇಸರಿ ಪದುಮಾಕ್ಷ ಖಳಪದ್ಮ
ಮದಹರ ಶರಜನ್ಮ ೨
ದಾಸರ ನಿತ್ಯ ಕಾವ ಪಾವಂಜೆಯ ವಾಸ ಷಡ್ವದನದೇವಾ ಕೇಶವ ಮಿತ್ರ
ದಿನೇಶನ ತೇಜ ವಿಘ್ನೇಶನ ಅನುಜ
ಸರ್ವೇಶ ಭವಾನಿಜ ೩

 

೧೮೯
ಬೇಡುವೆನು ಕರ ಜೋಡಿಸುತ ನಿನ್ನಾ | ಗಣಾಧಿಪತಿ ನಾ ಪ
ಅಂಬಿಕಜ ಹೇರಂಬ ವಿಘ್ನೇಶಾ | ತವಪದವನನುದಿನ
ನಂಬಿಕೊಂಡಿಹೆ ಪಾಲಿಪುದ ಲೇಸಾ |
ಶಂಭುಕುವರನೆ ಲಂಬೋದರನೆ ಬೇಡುವೆನು ೧
ನಾಗಬಂಧನ ಉದರ ಗಣನಾಥಾ | ತವಪದಕೆ ಶಿರವನು
ಬಾಗಿಸುತ ನಾ ನಮಿಪೆ ಪ್ರಖ್ಯಾತಾ |
ಯೋಗಮೂರುತಿ ಯೋಗಿವಂದಿತ ಬೇಡುವೆನು ೨
ಪಾಶ ಅಂಕುಶಧಾರಿ ರವಿ ತೇಜಾ ವಿನಾಯಕ ಪಾವಂ-
ಜೇಶನಗ್ರಜ ಮೂಷಿಕಧ್ವಜಾ |
ದಾಸಜನರನು ಪೋಷಿಸೆನ್ನುತ ಬೇಡುವೆನು ೩

 

ಗಣಪತಿ ಸ್ತುತಿ
೧೮೮
ಭಜಿಸುವೆ ತವ ಚರಣ ಗಜಾನನ ಪ
ಸಿಂಧುವ ಮಥಿಸುವಾಗ ಸುರಾಸುರರ್
ವಂದಿಸದಿರಲು ಬೇಗಾ |
ಮಂದರ ಗಿರಿಯ ಬಲ್ಪಿಂದ ಮಳ್ಗಿಸುತವ –
ರಿಂದ ಮೊದಲ ಪೂಜೆವೊಂದಿದ ವಿಘ್ನೇಶ ೧
ಪಾಶ ಅಂಕುಶಧರನೆ ವಿನಾಯಕ
ಮೂಷಿಕ ವಾಹನನೆ |
ಈಶನಸುತವಿಘ್ನ | ನಾಶನಮಣಿಗಣ
ಭೂಷಣ ರವಿಶತಭಾಸ ಲಂಬೋದರ ೨
ಉರಗಬಂಧನ ಜಠರಾಗಣಾಧ್ಯಕ್ಷ
ವರ ದಿವ್ಯ ಧವಳಾಂಬರಾ |
ಧರಿಸುತಲನುದಿನ ಮೆರೆವನೆ ಪಾವಂಜಿ
ಪುರದಧೀಶನ ದಾಸರ್ಗುರು ಹಿತಗೈವನೆ ೩

 

೨೬೦
ಮಂಗಲಂ ಮಂಗಲಂ ಕುಮಾರಗೆ ಮಂಗಲಂ ಪ
ಮಾರಾರಿ ಪುತ್ರಗೆ ಧೀರ ಶರಜನಿಗೆ
ನಾರದಾದಿ ಮುನಿವಾರ ವಂದಿತಗೇ ಚಾರುಚಂಪಕ ನಾಸ ನೀರಜನೇತ್ರ
ಮಯೂರ ವಾಹನ ಗುಣಸಾರ ಕುಮಾರಗೆ೧
ಅಂಬುಜ ವದನಗೆ ಅಂಬರ ಮಣಿ
ಪ್ರತಿಬಿಂಬ ತೇಜನಿಗೇ ಶಂಬರಾರಿಯ ರೂಪಕಂಬು ಕಂಧರ ಭಕ್ತರ್ಗಿಂಬ ಕೊಡುವ
ಸುಗುಣಾಂಬುಧಿ ಗುಹನಿಗೆ ೨
ಪಾವನ ಮೂರುತಿ ಪಾವಂಜೆ ವಾಸಗೆ
ಪಾವಕೋದ್ಭವವಲ್ಲಿ ದೇವಿಯರಸಗೇ ಲಾವಣ್ಯ ನಿಧಿಗಮರಾವಳಿ ಪೂಜ್ಯಗೆ
ಕೋವಿದನಿಗೆ ದಾಸ ಜನರ ರಕ್ಷಕಗೇ ೩

 

೧೯೮
ಮನದ ಬಯಕೆಯನೀವ ದಿವ್ಯ ನಾಮಾ – ಭಕ್ತ
ಜನರ ಪಾಲಿಸುವ ಷಣ್ಮುಖನ ನಾಮಾ ಪ
ಧರಣಿಯನು ಪಾವನಗೈದು ಮೆರೆಯುವ ನಾಮ |
ಶರಣ ರಕ್ಷಕನೆಂಬ ಬಿರುದಾಂತನಾಮ |
ಸುರಮುನಿಗಳ ನವರತ ಶಿರವ ಬಾಗಿಪ ನಾಮ
ಪರಕೆ ಪರತತ್ವವಾಗಿಹ ದಿವ್ಯನಾಮ ೧
ತಾರಕಾಸುರನ ಅಸು ಹೀರಿ ಕಳೆದ ನಾಮ
ಹೇರಂಬನಾನುಜನೆನಿಪ ನಾಮ |
ಚಾರು ಕೇಕಿಯ ವೆಗಲ ನೇರಿ ಚರಿಪನಾಮ
ತಾರಕ ಬ್ರಹ್ಮವಾಗಿಹ ದಿವ್ಯನಾಮ ೨
ನಂಬಿದ್ದ ಸಾಂಬನಿಗೆ ಇಂಬುಗೊಟ್ಟಿಹ ನಾಮ
ಕಂಬನಿಯಗರೆವ ದನುಜೆಯ ಕಾಯ್ದ ನಾಮ |
ಹಂಬಲಿಪ ವಾಸುಕಿಯೊಳಂಶವಿರಿಸಿದ ನಾಮ
ಶಂಭುಪುತ್ರನೆ ನಿನ್ನ ದಿವ್ಯನಾಮ ೩
ನೆಚ್ಚಿಬಹ ಭಕ್ತರನು ಮೆಚ್ಚಿ ಸಲಹುವ ನಾಮ
ತುಚ್ಛರನು ದೂರೆಸೆದು ಬಿಡುವ ನಾಮ |
ಅಚ್ಚರಿಯು ಭಕ್ತರಿಗೆ ನಿಚ್ಚ ತೋರುವ ನಾಮ
ಸಚ್ಚಿದಾನಂದ ಚಿನ್ಮಯ ನಿನ್ನ ನಾಮ ೪
ವಾಸವನು ಅನುದಿನ ಸ್ತೋತ್ರ ಮಾಡುವ ನಾಮ
ವಾಸುದೇವನ ಗೆಳೆಯನೆನಿಪ ನಾಮ
ವಾಸ ಪಾವಂಜೆ ಕ್ಷೇತ್ರದಲಿಗೈದನ ನಾಮ
ದಾಸರ ಭವಾಂತರದ ಅಘ ಕಳೆವ ನಾಮ ||೫||

 

೨೨೮
ಮುನಿಜನ ಮಾನಿತ ಸ್ಕಂದ |
ಸದ್ಗುಣಮಂದಿರ ನಿತ್ಯಾನಂದ | ಸನಕನ ನಂದನ ವಂದ್ಯಾ | ಸುರ |
ಗಣರಕ್ಷ ಪರಮಾನಂದ ೧
ದಕ್ಷಜೆ ಪ್ರೀತಿಯ ಬಾಲಾ | ಖಳ |
ಶಿಕ್ಷಕ ಸಜ್ಜನ ಪಾಲ | ರಕ್ಷಕ ಜಗಜನ ಲೋಲ | ಸೇನಾ |
ಧ್ಯಕ್ಷಾರ್ಧ ಚಂದ್ರನ ಪಾಲಾ ೨
ವರಶಕ್ತಿ ಕುಕ್ಕುಟ ಹಸ್ತ | ಸದಾ |
ಶರಣರ ದುರಿತ ವಿಧ್ವಸ್ತಾ | ಅರಿಗಜಸಿಂಹ ಪವಿತ್ರ | ಲಂಬೋ- |
ದರನನುಜಾಸುಚರಿತ್ರಾ ೩
ಕಷ್ಟದಿ ನರಳುತ ಬರುವ | ಜನ |
ರಿಷ್ಟವ ಅನುದಿನ ಕೊಡುವ ಕುಷ್ಠನಾಶನ ಮಹಾದೇವ | ಜಗ |
ಜಟ್ಟೆಯೆ ಭಕ್ತರ ಕಾವಾ ೪
ವಾಸವಾರ್ಚಿತ ಶಿವತನಯ | ಅಘ |
ನಾಶವರದ ಕಾರ್ತಿಕೇಯ |
ದಾಸರ ಭಕ್ತಿಯ ಮೊರೆಯ | ಪಾವಂ-|
ಜೇಶ ಲಾಲಿಸಿ ರಕ್ಷಿಸಯ್ಯ ೫

 

೨೦೩
ರಕ್ಷಿಸು ಕುಮಾರಾ | ಸ್ವಾಮಿಯೆ |
ಪಕ್ಷಿವಾಹನ ಗೆಳೆಯಾ |
ದಕ್ಷಜೆ ಸುತ ನಿರಪೇಕ್ಷನೆ ಸಜ್ಜನ |
ರಕ್ಷಕ ದುರ್ಜನ ಶಿಕ್ಷಕ ಸಂತತ ೧
ತಾರಕ ಸಂಹಾರೀ | ಚಾರು ಮ- |
ಯೂರನ ಪೆಗಲೇರೀ |
ಮೂರು ಲೋಕದ ಸಂಚಾರವ
ಮಾಳ್ವತಿ ಧೀರನೆ ಭಕ್ತೋದ್ಧಾರನೆ ಸಂತತ ೨
ಅಂಬುಧಿ ಗಂಭೀರಾ | ದೇವ ತ್ರಿ-|
ಯಂಬಕ ಸುಕುಮಾರ |
ಕಂಬು ಕಂಧರ ಹೇರಂಬನಾನುಜ ಗುಹ
ಅಂಬುಜೇಕ್ಷಣ ಅರಿ
ಭಂಜನ ಸಂತತ ೩
ಚಿತ್ತಜಶತರೂಪ | ದುರ್ಜನ |
ಮೊತ್ತವ ಸಂಹರಿಪಾ |
ಉತ್ತಮ ಪುರುಷನೆ ನಿತ್ಯವು ತವಪದ |
ಸ್ತುತ್ಯವ ಮಾಡುವ ಭೃತ್ಯನ ಸಂತತ ೪
ಗಿರಿಜಾತೆಯ ಕುವರಾ | ಅಭಯಾ |
ವರಶಕ್ತಿ ವಜ್ರಧರಾ |
ಮೆರೆವ ಪಾವಂಜೆ ಪುರೇಶನೆ ದಾಸರ |
ಕರುಣದಿಂದೀಕ್ಷಿಸಿ ವರವಿತ್ತು ಸಂತತ ೫

 

೨೩೪
ವಂದಿಸುವೆ ಮುನಿವೃಂದ ವಂದಿತ
ಸ್ಕಂದ ದೇವನಿಗೆ – ಜಯ ಜಯ ವೆಂದು ಪಾಡುತ ವಂದಿಸುವೆ ಮು-
ಕುಂದ ಮಿತ್ರನಿಗೆ ಪ
ಭಕ್ತರ ವೃಂದ ರಕ್ಷಕ ಇಂದುವದನಾ |
ನಂದ ಮೂರುತಿ ಸುಂದರಾಂಗ ಅ.ಪ
ತಾರಕಾದಿ ಸುರಾರಿನಾಶ ಪುರಾರಿ
ಪುತ್ರನಿಗೆ – ಚೆಲ್ವ ಮ ಯೂರ ವಾಹನಗಾರುಶಿರದಾ
ಧೀರ ಶರಜನಿಗೆ – ಮೌಕ್ತಿಕ ಹಾರಧರ ಸುರವಾರ ವಂದಿತ
ಮಾರರೂಪಗಪಾರ ಮಹಿಮಗೆ ೧
ವಲ್ಲಿದೇವಿಯ ವಲ್ಲಭಗೆ ಜಗಕೆಲ್ಲ
ಪಾಲಕಗೆ – ತ್ರೈಜಗಮಲ್ಲನಿಗೆ ನವಪಲ್ಲವಾಧರಗೆ
ಪುಲ್ಲನಯನನಿಗೆ – ಆನತ ನಲ್ಲನಿಗೆ ಖಳದಲ್ಲಣಗೆ ಸುರ-
ರೊಲ್ಲಿಭಗೆ ವಿಶ್ವಕೆಲ್ಲ ಒಡೆಯನಿಗೆ ೨
ಪರಮಪಾವನ ಚರಿತ ವಿಶ್ವಂಭರನ
ಸೋದರಗೆ – ಸದ್ಗುಣ ಭರಿತ ಗುಹನಿಗೆ ವರದ ಹಸ್ತಗೆ
ಕರುಣವಾರಿಧಿಗೆ – ದಾಸರ ನಿರತ ಪೊರೆಯುವ ಪರಮ
ಪಾವಂಜೆ – ಪುರದಧೀಶಗೆ ಗಿರಿಜೆ ತನುಜಗೆ ೩

 

೨೪೨
ವಲ್ಲಿ ದೇವಿಯ ವಲ್ಲಭಗೆ ಬಲ್ಲಿದ
ಪದ್ಮನ ಸೀಳ್ದನಿಗೇ ಖುಲ್ಲ ತಾರಕನನು ಜನಿಸಿದೇಳನೆದಿನ
ಸಂಹರಿಸಿದ ಷಣ್ಮುಖಗೇ ಮಂಗಲಂ ೧
ಮಾರಾರಿಯ ಸುಕುಮಾರನಿಗೇ ಚಾರು
ಮಯೂರ ತುರಂಗಮಗೆ ಮಾರನ ಪೋಲುವ ಕಾಯಗೆ ಧೀರಗೆ
ವಾರಿಜನಾಭನ ಪ್ರೀಯನಿಗೇ ಮಂಗಲಂ ೨
ಆಶಾದಿ ಷಡ್ವೈರಿ ಸೋಕದಗೇ
ದಾಸರನನುದಿನ ಪೋಷಿಪಗೇ ಭೂಸುರ ಪ್ರೀಯಗೆ ಪಾವಂಜೆ ಕ್ಷೇತ್ರದಿ
ವಾಸವಾಗಿರುತಿಹ ಶ್ರೀ ಗುರುಗೇ ||ಮಂಗಲಂ ೩

 

೧೯೧
ಸರಸ್ವತಿ ಸ್ತುತಿ
ವಾಣಿ ಪಲ್ಲವ ಪಾಣಿ ನಾಗ-
ವೇಣಿ ಹಂಸಗಾಮಿನೀ ಪ
ವೇಣಿ ಹಂಸಗಾಮಿನೀ ಸು-
ವೀಣಾ ಪುಸ್ತಕ ಧಾರಿಣಿ ಅ.ಪ
ಶಾರದೆ ಶ್ರುತಿ ಸಾರನಿಧೇ
ವಾರಿಜಾಕ್ಷಿ ಭಾರತೀ
ವಾರಿಜಾಕ್ಷಿ ಭಾರತೀ ಮಮ-
ಕಾರ ಮೋಹಗಳಜಿತೀ ೧
ಲೋಕಮಾತೆ ಶೋಕರಹಿತೆ
ನಾಕಾಧೀಶ ಪೂಜಿತೇ
ನಾಕಾಧೀಶ ಪೂಜಿತೇ ವಿ-
ವೇಕ ಜ್ಞಾನ ಸಂಧೃತೇ ೨
ದಾಸರಿಷ್ಟವೀವ ಪಾವಂ
ಜೇಶನಗ್ರಜೆ ಸರಸ್ವತೀ ಸಂ-
ತೋಷವೀಯೇ ಸನ್ಮತಿ ವಾಣಿ೩

 

೨೧೨
ಶರಜನೆ ಬಾ ಬಾ ಪರಶಿವ ಪುತ್ರ ಭಾ-
ಸ್ಕರ ಕೋಟಿ ತೇಜನೆ ನೀ ಬಾರೋ ಪ
ಶರಣ ರಕ್ಷಕ ಬಾ ದುರಿತ ವಿನಾಶಕ
ಕರುಣಿಗಳರಸನೆ ನೀ ಬಾರೋ ಅ.ಪ
ಇಂದುವದನ ಬಾ ಸುಂದರಾಂಗನೆ – ಅರ
ವಿಂದ ಲೋಚನ ಯುಗ್ಮ ನೀ ಬಾರೋ |
ಕುಂದರದನ ಸುರ ವೃಂದ ವಂದಿತ ನಿತ್ಯಾ –
ನಂದ ಚಿನ್ಮಯ ರೂಪ ನೀ ಬಾರೋ ೧
ಜಗಪಾವನ ಬಾ ಅಘನಾಶನ ಬಾ
ನಗಧರಸಖ ಗುಹ ನೀ ಬಾರೋ |
ನಿಗಮ ವೇದ್ಯನೆ ಬಾ ಸುಗುಣಾಂಬು ನಿಧಿಯೆ ಬಾ
ಅಗಣಿತ ಮುನಿ ವಂದ್ಯ ನೀ ಬಾರೋ ೨
ಪಾವನ ಮೂರುತಿ ಪಾವಂಜೆವಾಸ ನೀಲ |
ಗ್ರೀವ ವಾಹನನೆ ನೀ ಬಾರೋ |
ಭಾವ ಶುದ್ಧದಿ ತವ ನಾಮಾವಳಿ ಜಪಿಸುವ
ಸೇವಕ ದಾಸನಿಗೊಲಿ ಬಾರೋ ಶರಣ೩

 

೧೯೬
ಶುಂಭ ದಮನಿ ದುರ್ಗೆಯೇ ಮಹಾಕಾಳಿ ಪ
ಶುಂಭ ದಮನಿ ದುರ್ಗೆ ಅಂಬುಜವದನೆಯೇ ||ಶುಂಭ ಅ.ಪ
ಕಾಳಿಕರಾಳಿಯೇ ನೀಲಕುಂತಳೆಯೇ |
ವ್ಯಾಳ ವೇಣಿಯೇ ಸು | ರಾಳಿಪೂಜಿತೆಯೆ ೧
ರಕ್ತಬೀಜನ ಹರೆ ಶಕ್ತಿ ಮಹೇಶ್ವರಿ
ಭಕ್ತರ ಪೋಷಿಣಿ ಮುಕ್ತಿದಾಯಕಿಯೆ ೨
ವಾಸವಾರ್ಚಿತೆ ಧೂವ್ರನಾಶೆಯೆ ಬೇಡುವೆ |
ಪೋಷಿಸೆನುತ ಪಾವಂಜೇಶನ ದಾಸರ ೩

 

೧೯೩
ಶ್ರೀ ಹರಿಸ್ತುತಿ
ಶ್ರೀ ರಮಾಧವ ವಾರಿಜನೇತ್ರ | ಪುರಾರಿಯ ಸಖ ಪಾಹಿಮಾಂ ಪ
ನಿಗಮ ಚೋರನ ಕೊಂದ | ನಗವನೆತ್ತುತ ಬಂದ |
ಜಗವ ದಂತದಿ ಪೊತ್ತ | ನಗುತ ಕಂಬದಿ ನಿಂತ |
ವಿಗಡ ವಿಪ್ರನಾದಾ ಕ್ಷತ್ರಿಯರುಗಳ ಶಿರವ ಕಡಿದಾ ಜಲಧಿಯ
ನಗದಿ ಬಂಧಿಸಿ ಪಾರ್ಥಗೆ ಸಾರಥಿಯಾಗಿ
ದಿಗಂಬರನೆನಿಸಿ ತುರಗವೇರಿದ ಕಲ್ಕ್ಯ ಶ್ರೀ ರಮಾಧವ ೧
ಎವೆಯಿಕ್ಕದಾಡುತ್ತ | ಜವದಿ ಭಾರವ ಪೊತ್ತ |
ಕವಲು ದಾಡೆಯ ಧರಿಸಿ | ಕುವರಗೋಸ್ಕರ ಜನಿಸಿ |
ಅವನಿಯ ದಾನವನು ಬೇಡುತ | ಶಿವನೊಳು ವಿದ್ಯೆಯನು ಪಠಿಸುತ |
ರವಿಕುಲೋದ್ಭವನಾಗಿ | ಹವದಿ ಕಂಸನ ಗೆದ್ದು |
ಜವದಿ ಬೆತ್ತಲೆಯಾಗಿ | ಹವಣಿಸುತೋಡಿದ ಶ್ರೀರಮಾಧವ ೨
ಜಲಚರ ಕೂರ್ಮಭೂವಲಯವೆತ್ತುತ ಕಂಭ |
ದೊಳಗಿಂದ ಬಂದು ಮೂರಡಿ | ನೆಲಬೇಡಿ ಭಾರ್ಗವ |
ಕುಲಜ ಶಿಲೆಯ ತುಳಿದಾನಂದನ | ನಿಳಯದೊಳಗೆ ಬೆಳೆದಾತ್ರಿಪುರರ |
ಲಲನೆಯರನು ಮೋಹ | ಗೊಳಿಸುತ ಹಯವೇರ್ದ |
ಚೆಲುವ ಪಾವಂಜೇಶ ಗೆಳೆಯದಾಸರ ರಕ್ಷ ಶ್ರೀ ರಮಾಧವ ೩

 

೨೩೯
ಶ್ರೀ ಸ್ಕಂದಾ ಜನ ವಂದ್ಯಾ
ಭೋಗೀಂದ್ರ ಭೂಷಣಾ ಪ
ಶ್ರೀ ವಾಸುದೇವನ ಮಿತ್ರಾ ದಿನೇಶ ತೇಜ ಪವಿತ್ರಾ ಸರ್ವೇಶ ಮಂಜುಳಗಾತ್ರಾ ಗುಹೇಶ ಸುಚರಿತ್ರಾ೧
ಖಳ ತಾರಕಾಸುರ ಮಥನಾ ಬಲು ಧೀರ ಪದ್ಮನ ದಮನಾ ಸುವಿಚಾರಿ ವಲ್ಲಿಯ ರಮಣಾ ಮಯೂರ ವಾಹನಾ ೨
ಪಾವಂಜೆ ಕ್ಷೇತ್ರಾಧೀಶಾ ಅರಿ ಭಂಜ ರಕ್ಷಕ ವಾಸಾ ರಂಜನಾನತ ಪೋಷಾ ಧನಂಜಯ ಭಾಸಾ ೩

 

೧೯೯
ಶ್ರೀಕುಮಾರ ನಾಕೇಶ ಪೂಜ್ಯ ಕರು | ಣಾಕರನೆ ಬೇಗಲೇಳೆನ್ನುತಾ ಪ
ಕೋಕಿಲಗಾನೆ ಶ್ರೀವಲ್ಲಿಯೆಬ್ಬಿಪಳು ಪಿ |
ನಾಕಿ ಸುತನೆ ನಿದ್ದೆ ಸಾಕೆನ್ನುತಾ ಅ.ಪ
ತರಣಿಸೂತನು ತಮದುರುವಣೆಯನು ಕಂಡು
ಭರಿತಕೋಷದಿ ರಕ್ತವಾಗಿಹನು |
ತರಣಿಯು ತನ್ನ ಸಾಸಿರ ಕಿರಣದಿ ಸುಟ್ಟು
ತರಿದೊಟ್ಟಿ ತಮವ ಮುಂದರಿಸುವನು ದೇವ ೧
ಸುತ್ತ ಸಂಚರಿಸೆ ವಿಪತ್ತೊದಗಲಿಕೆ ಬೇ –
ಸತ್ತು ಮನದಿ ಕಡು ದುಃಖಿಸುತ
ಉತ್ತಮವಾತನೀ ಕೃತ್ಯವ ದೂರೆ ಪೂ
ರ್ವೋತ್ತರದಿಂ ಬಹನೇಳೆನ್ನುತಾ ದೇವ ೨
ಹಕ್ಕಿಗಳುರೆ ತಮ್ಮ ಪಕ್ಕದೊಳ್ಮಲಗಿಹ
ಚಿಕ್ಕ ಮರಿಗಳ ಮು | ತ್ತಿಟ್ಕೊಳುತ್ತ |
ಚೊಕ್ಕಟ ಧ್ವನಿಗೈದು ಪಕ್ಕವನಲುಗಿಸಿ
ಫಕ್ಕನೋಡುವವು ನೀನೇಳೆನ್ನುತ ದೇವ ೩
ಸುರರು ಕಿನ್ನರರು ಕಿಂಪುರುಷರು ಸಾಧ್ಯರು
ಉರಗರು ನೆರೆದೆಲ್ಲ ಬಂದಿಹರೂ |
ಶರಜನೆ ತವಪಾದ ದರುಶನಾಪೇಕ್ಷೆಯಿಂ
ಕರಗಳಂ ಮುಗಿದು ನಿಂದಿರುತಿಹರು ದೇವಾ ೪
ಧರಣಿಸುರರು ಎದ್ದು ಭರದಿ ಸ್ನಾನವ ಮಾಡಿ
ಪರಿಪರಿಯಲಿ ಸ್ತೋತ್ರ ಮಾಡುವರು |
ವರದ ಪಾವಂಜೇಶ ಕರುಣದಿ ದಾಸರ
ಪರಿಕಿಸಿ ವರವೀಯಲೇಳುವುದು ದೇವ ೫

 

೧೯೨
ಸರಸ್ವತಿ ವಿಧಿಸತೀ ಸುರತತಿ ಪೂಜಿತೇ ಪ
ಶ್ರೀವಾಣಿ ಬ್ರಹ್ಮನ ರಾಣೀ | ಅಹಿವೇಣಿ ಪಲ್ಲವಪಾಣೀ |
ಶುಕವಾಣಿ ಸದ್ಗುಣ ಶ್ರೇಣೀ | ಕಲ್ಯಾಣೀ ಪದ್ಮಿನೀ ೧
ತ್ರೈಲೋಕ್ಯ ಪೂಜಿತೆ ಮಾತೇ ದಿವೌಕಸಾದ್ಯರ ಧಾತೇ |
ರಮಣಿ ಕುಲದೊಳತಿ ಖ್ಯಾತೇ ಮುನಿನೀಕಾ ಸನ್ನುತೇ ೨
ಖಳ ಶಿಕ್ಷೆ ಸಜ್ಜನಪ್ರೀತೇ ಗಾನಾಧ್ಯಕ್ಷೆ ವರದೆ ಪುನೀತೇ |
ದಾಸ ರಕ್ಷೆ ಬುಧೆ ಪುನೀತೇ ವನಜಾಕ್ಷಾ ಮಾನಿತೇ ೩

 

೧೯೦
ಸಿದ್ಧಿ ವಿನಾಯಕ ಶ್ರದ್ಧೆಯಿಂ ಭಜಿಪೆ ಸ-
ದ್ಬುದ್ಧಿಯ ಕೊಡು ಗಣನಾಯಕನೆ ಪ
ಉದ್ಧರಿಸೆನ್ನ ಪ್ರಸಿದ್ಧ ಮಹಿಮ ಯೋಗಿ
ಹೃದ್ಯಗಣಾಧ್ಯಕ್ಷ ಜಿತಕಾಮನೇ ಅ.ಪ
ನಾಗೇಂದ್ರ ಭೂಷಣ ನಾಗೇಂದ್ರಾನನ ವಿದ್ಯಾ-
ಸಾಗರ ಗಣಪ ಲಂಬೋದರನೇ
ನಾಗಬಂಧ ಉರ ಪುನ್ನಾಗ ಫಲ ಭಕ್ಷಕ
ಆಗಮಜ್ಞನೆ ಸರ್ವ ವಿಘ್ನೇಶನೆ ೧
ಏಕದಂತನೆ ಭಕ್ತಾನೇಕ ವಂದಿತನೆ ಪಿ-
ನಾಕ ಪುತ್ರನೆ ಸರ್ವ ವ್ಯಾಪಕನೆ |
ಶೋಕಾದಿ ತಾಪದ ವ್ಯಾಕುಲವಿಲ್ಲದು-
ಮಾಕುಮಾರಕ ವಿಘ್ನನಾಶಕನೇ ೨
ಪಾಶ ಅಂಕುಶಧರ ಮೂಷಿಕ ಧ್ವಜರತ್ನ-
ಭೂಷಣಾಗ್ರ ಪೂಜೆ ಪೊಂದುವನೇ
ದಾಸರಿಗನುದಿನ ತೋಷವೀಯುವ ಪಾವಂ
ಜೇಶನಗ್ರಜ ದೀರ್ಘನಾಸಿಕನೇ ೩

 

೨೦೮
ಸುಬ್ರಹ್ಮಣ್ಯನೆ ಶುಭ್ರವದನನೆ |
ಅಭ್ರರಾಜನ ತೇಜನೆ
ಪರ್ಬಿದಸುರರ ಗರ್ಭ ಸೀಳುತ |
ನಿರ್ಭಯವನುರೆ ಮಾಳ್ವನೆ | ಶರಣು ಶರಣು ೧
ಶರಣ ರಕ್ಷನೆ ದುರಿತನಾಶನೆ
ಪರಮ ತೇಜಃಪುಂಜನೆ
ವರದ ಹಸ್ತನೆ ಸರಸಿಜಾಕ್ಷನೆ
ಕರುಣಿ ನಿತ್ಯಾನಂದನೆ | ಶರಣು ೨
ವಲ್ಲೀ ಪ್ರೀಯನೆ | ಪಲ್ಲವಾಧರನೆ |
ಫುಲ್ಲಬಾಣನ ರೂಪನೆ |
ಸಲ್ಲಲಿತ ಪದ ಪಲ್ಲವವ ಭಜಿಪೆಲ್ಲ
ರಾಮನ ತೋಷನೆ | ಶರಣು ೩
ನಾಕದೊಡೆಯನನೇಕ ದೇವಾ- |
ನೀಕ ಪೂಜಿತ ಸ್ಕಂದನೇ |
ಶೋಕ ನಾಶ ಉಮಾ ಕುಮಾರಕ |
ಶ್ರೀ ಕುಮಾರ ಗಿರೀಶನೆ | ಶರಣು ೪
ಶ್ರೀಶಸಖ ಕಮಲಾಸನಾರ್ಚಿತ |
ನಾಶರಹಿತ ಕುಮಾರನೆ |
ಈಶ ಪಾವಂಜೇಶ ತವಪದ |
ದಾಸರಾ ಮನ ತೋಷನೆ ೫

 

೨೪೫
ಹರನ ಪ್ರಿಯ ಕುವರ ಸರ್ವದುರಿತ ನಾಶ ಶರಜನೇ ಪ
ದುರಿತ ನಾಶ ಶರಜನೇ ಕರುಣ ಸಾಗರ ಸ್ಕಂದನೇ ಅ.ಪ
ದಿನಪ ತೇಜ ಗಣಪನನುಜ ಮನಸಿಜನ ರೂಪನೇ ಮನಸಿಜನ ರೂಪನೆ ವನಜನಾಭನ ಪ್ರೀಯನೇ ೧
ಭಕ್ತವತ್ಸಲ ಶಕ್ತಿ ವಜ್ರ ಹಸ್ತ ಬಾಹುಲೇಯನೇ ಹಸ್ತ ಬಾಹುಲೇಯನೇ ಮುಕ್ತಿದಾಯಕ ಸ್ಕಂದನೇ ೨
ವಲ್ಲಿಯವರ ಪಲ್ಲವಾಧರ ಫುಲ್ಲನಯನ ಧೀರನೇ ಫುಲ್ಲನಯನ ಧೀರನೇ ಖುಲ್ಲ ತಾರಕ ನಾಶನೇ ೩
ಖ್ಯಾತ ಅಂಬಿಕ ಜಾತ ಪಾವಂಜೆನಾಥ ದಾಸ ರಕ್ಷನೇ ನಾಥ ದಾಸ ರಕ್ಷನೇ ಪ್ರೀತ ಕಾರ್ತಿಕೇಯನೇ ೪

 

೨೧೩
ಹೇ ನಂದಿವಾಹನ ಕಂದ ಸಚ್ಚಿದಾನಂದ
ಶರಜ ಪಾಹಿಮಾಂ ಪ
ಪೂರ್ಣೇಂದುವದನ | ಸ್ಕಂದ ನಿತ್ಯಾನಂದ
ಚಿನ್ಮಯ ಪಾಹಿಮಾಂ ಅ.ಪ
ಉಮಾ ಕುಮಾರ ಶೋಕ ಮೋಹಾ-ನೀಕದೂರ ಪಾಹಿಮಾಂ –
ಜಗದೇಕ ವೀರ ತ್ರಿಲೋಕ ಪೂಜಿತ ಶ್ರೀಕುಮಾರ ಪಾಹಿಮಾಂ ೧
ಶ್ರೀವಲ್ಲಿ ಪ್ರೀಯಾ ಫುಲ್ಲನೇತ್ರಾ |
ಪಲ್ಲವಾಧರ ಪಾಹಿಮಾಂ | ವಿಶ್ವ
ವಲ್ಲಭಾಸುರದಲ್ಲಣೂನತನಲ್ಲ
ಷಟ್‍ಶಿರ ಪಾಹಿಮಾಂ೨
ನಾಕೇಶ ಪೂಜಿತ ನಾಶರಹಿತ
ಶ್ರೀಶ ಸಖಗುಹ ಪಾಹಿಮಾಂ |
ಸರ್ವೇಶ ಪಾವಂಜೇಶ ತವಪದ |
ದಾಸ ರಕ್ಷಕ ಪಾಹಿಮಾಂ ೩

 

ಇನ್ನೂ ದಯೆದೋರೆಯಾ
೨೩೬
ಇನ್ನೂ ದಯೆದೋರೆಯಾ |
ಸುಬ್ರಹ್ಮಣ್ಯ ಇನ್ನೂ ದಯೆದೋರೆಯ ಪ
ಮುನ್ನ ಮಾಡಿದ ಕರ್ಮ ಬೆನ್ನ ಪಿಡಿಯುತೀಗ-ಲೆನ್ನ ಕಾಡುತಲಿದೆ ನಿನ್ನಾಶ್ರಯವ ಗೈದೆ ಅ
ಅನುದಿನ ಕೊರಗುವೆ ಅನಪತ್ಯಕೋಸುಗ ಕೊನೆಗಾಣಿಸೆಂದು ನಾ ಮಣಿಯುತ ಬೇಡುವೆ ೧
ಬಲವೆಲ್ಲಿ ಕುಗ್ಗಿತು ಗೆಲವೆಲ್ಲಿ ನಿಂತಿತು ಛಲ ಬಿಟ್ಟು ಎನ್ನನೀ ಸಲಹೆಂದು ಬೇಡುವೆ ೨
ಲೇಶವು ಸುಖವಿಲ್ಲ ಘಾಸಿಯಾದೆನು ಪಾವಂ-ಜೇಶನೆ ತವಪದ ದಾಸರ ಮೇಲೆ ನೀ | ಇನ್ನೂ ೩

 

ಹಾಡಿನ ಹೆಸರು :ಇನ್ನೂ ದಯೆದೋರೆಯಾ
ಹಾಡಿದವರ ಹೆಸರು :ವಿಜಯರಾಘವನ್ ಬಿ. ಎಸ್.
ರಾಗ :ಕಲಾವತಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಿಜಯರಾಘವನ್ ಬಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಂಬಿದೆ ನಿನ್ನ ನಂಬಿದೆನು
೨೨೫
ನಂಬಿದೆ ನಿನ್ನ ನಂಬಿದೆನು |
ಅಂಬಿಕಾ ಕುಮಾರನೆ ಪ
ಕಂಬುಕಂಧರ ಅಂಬುಜಾಕ್ಷ |
ಶಂಭುಪುತ್ರ ಸ್ಕಂದನೇ ಅ.ಪ
ಸುರಪುರವ ಗೆಲಿದುಕೊಂಡ ದುರುಳ ತಾರಕನಾಶನೆ ಶರಜ ವಲ್ಲಿಯರಸ ಗುಹ ಕರುಣಾ ಸಾಗರ ಸ್ಕಂದನೆ ೧
ಕಾರ್ತಿಕೇಯ ಪರಮ ಪಾವನ ಮೂರ್ತಿ ಸುಬ್ರಹ್ಮಣ್ಯನೆ ಸ್ತೋತ್ರ ಮಾಳ್ವ ಜನರ ಮನದಿ-ಷ್ಟಾರ್ಥವೀವ ಸ್ಕಂದನೆ ೨
ವಾಸವಾದಿ ದಿವಿಜನುತ ಪಾವಂ-ಜೇಶ ಪರಮ ಪೂಜ್ಯನೆ | ದಾಸ ಜನರ ಮನಕೆ ಸಂತತ ತೋಷವೀವ ಸ್ಕಂದನೆ ೩

 

ಹಾಡಿನ ಹೆಸರು :ನಂಬಿದೆ ನಿನ್ನ ನಂಬಿದೆನು
ಹಾಡಿದವರ ಹೆಸರು :ದತ್ತಾತ್ರೇಯ ವೇಲಂಕರ್
ರಾಗ :ಭೈರವಿ
ತಾಳ : ಕೆಹರವ
ಸಂಗೀತ ನಿರ್ದೇಶಕರು :ಸಂಗೀತಾ ಕಟ್ಟಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಶರಜನೆ ಬಾ ಬಾ ಪರಶಿವ
೨೧೨
ಶರಜನೆ ಬಾ ಬಾ ಪರಶಿವ ಪುತ್ರ ಭಾ-
ಸ್ಕರ ಕೋಟಿ ತೇಜನೆ ನೀ ಬಾರೋ ಪ
ಶರಣ ರಕ್ಷಕ ಬಾ ದುರಿತ ವಿನಾಶಕ
ಕರುಣಿಗಳರಸನೆ ನೀ ಬಾರೋ ಅ.ಪ
ಇಂದುವದನ ಬಾ ಸುಂದರಾಂಗನೆ – ಅರ
ವಿಂದ ಲೋಚನ ಯುಗ್ಮ ನೀ ಬಾರೋ |
ಕುಂದರದನ ಸುರ ವೃಂದ ವಂದಿತ ನಿತ್ಯಾ –
ನಂದ ಚಿನ್ಮಯ ರೂಪ ನೀ ಬಾರೋ ೧
ಜಗಪಾವನ ಬಾ ಅಘನಾಶನ ಬಾ
ನಗಧರಸಖ ಗುಹ ನೀ ಬಾರೋ |
ನಿಗಮ ವೇದ್ಯನೆ ಬಾ ಸುಗುಣಾಂಬು ನಿಧಿಯೆ ಬಾ
ಅಗಣಿತ ಮುನಿ ವಂದ್ಯ ನೀ ಬಾರೋ ೨
ಪಾವನ ಮೂರುತಿ ಪಾವಂಜೆವಾಸ ನೀಲ |
ಗ್ರೀವ ವಾಹನನೆ ನೀ ಬಾರೋ |
ಭಾವ ಶುದ್ಧದಿ ತವ ನಾಮಾವಳಿ ಜಪಿಸುವ
ಸೇವಕ ದಾಸನಿಗೊಲಿ ಬಾರೋ ಶರಣ೩

 

ಹಾಡಿನ ಹೆಸರು :ಶರಜನೆ ಬಾ ಬಾ ಪರಶಿವ
ಹಾಡಿದವರ ಹೆಸರು :ಸುಕನ್ಯಾ ಪ್ರಭಾಕರ್
ರಾಗ :ಸುರುಟಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು:ವಿಜಯರಾಘವನ್ ಬಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಶ್ರೀ ಸ್ಕಂದಾ ಜನ ವಂದ್ಯಾ
೨೩೯
ಶ್ರೀ ಸ್ಕಂದಾ ಜನ ವಂದ್ಯಾ
ಭೋಗೀಂದ್ರ ಭೂಷಣಾ ಪ
ಶ್ರೀ ವಾಸುದೇವನ ಮಿತ್ರಾ ದಿನೇಶ ತೇಜ ಪವಿತ್ರಾ ಸರ್ವೇಶ ಮಂಜುಳಗಾತ್ರಾ ಗುಹೇಶ ಸುಚರಿತ್ರಾ೧
ಖಳ ತಾರಕಾಸುರ ಮಥನಾ ಬಲು ಧೀರ ಪದ್ಮನ ದಮನಾ ಸುವಿಚಾರಿ ವಲ್ಲಿಯ ರಮಣಾ ಮಯೂರ ವಾಹನಾ ೨
ಪಾವಂಜೆ ಕ್ಷೇತ್ರಾಧೀಶಾ ಅರಿ ಭಂಜ ರಕ್ಷಕ ವಾಸಾ ರಂಜನಾನತ ಪೋಷಾ ಧನಂಜಯ ಭಾಸಾ ೩

 

ಹಾಡಿನ ಹೆಸರು :ಶ್ರೀ ಸ್ಕಂದಾ ಜನ ವಂದ್ಯಾ
ಹಾಡಿದವರ ಹೆಸರು :ಉದಯ್ ಅಂಕೋಲ
ರಾಗ :ದೇಶ್
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಗೋಡ್ಖಿಂಡಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *