Categories
ರಚನೆಗಳು

ಬೇಟೆರಾಯ ದೀಕ್ಷಿತರು

ದೇವದೇವತಾಸ್ತುತಿ
೨೪೪
ಅಜಸುರಸನ್ನುತ ಸುಜನವಂದಿತ ಹರೇ
ಭಜಿಸುವೆ ನಿನ್ನನು ಭುಜಗ ಭೂಷಣ ಪ್ರಿಯ ಪ
ಅತಿಶಯ ಕಾಮದಿ ಸತಿಯನಪಹರಿಸಿದ
ಪತಿತ ರಾವಣನನು ಖತಿಯಲಿ ಕೊಂದೆ ನೀಂ ೧
ತರಳ ಭಾವದ ಪರಿ ತರಳನ ಭಾರ್ಯೆಯ
ಪರಿಸಲು ವಾಲಿಯ ತರಿದೆಯೊ ಶರದಿಂದ ೨
ದಶರಥನುದರದಿ ದಶರಥನಾಗಿಯು
ಪಶುಪತಿ ಮಿತ್ರನೆ ಜನಿಸಿದೆ ಕರುಣದಿ ೩
ಮಾನವ ರೂಪನೆ ಮಾನವ ಜಿತಾಸುರ
ಮಾನವ ವಂಶಜ ಮಾನವ ರೂಪನೆ ಪೊರೆ ೪
ಧೇನುನಗರಪತಿ ದಾನವಖಂಡನ
ಧ್ಯಾನ ಸ್ವರೂಪನೆ ಜ್ಞಾನವ ಪಾಲಿಸು ೫

 

ಇಂದಿರಾ ಕಾಂತನೆ ಪೊರೆ ಶ್ರೀ ಹರೇ ಪ
ನಂದ ನಂದನ ದಿವ್ಯ ಸುಂದರ ಮಂದಾರ ಅ.ಪ.
ವಲ್ಲವೀ ಕುಚತಟ ಪಲ್ಲವ ಕುಂಕುಮ
ಚೆಲ್ವಕಪೋಲನೆ ಸಲ್ಲಲಿತಾಂಗನೆ ೧
ಈಶ ಹೃದಯನಿವಾಸ ಕೇಶವ ಹರೆ ದಾಸನ
ಮನ್ನಿಸು ಭಾಸುರ ರೂಪನೆ ೨
ಬಾಲಕ ಧ್ರುವನುತ ಲೀಲಾವಾಮನ ರೂಪ
ಬಾಲ ಗೋಪಾಲ ಭೂಲೀಲಾ ವಿಹಾರಿಯೆ ೩
ಗೋಪಾಲ ಬಾಲಕ ತಮೋದೀಪಾ ಶಾರ್ಙ
ಚಾಪಾ ಪಾಪಾಳಿ ಖಂಡನ ಭೂಪ ನಿರ್ಲೇಪನೆ ೪
ಕಂಸವಂಶಾಂತಕ ವಂಶವಿನೋದಿಯೆ
ಅಂಶುಕ ಭಾಸುರ ಧೇನುಪುರಾಧೀಪಾ ೫

 

ಮಂಗಳ ಪದ್ಯಗಳು
೨೯೮
ಇಂದಿರಾ ಮನೋವಿಹಾರಿ ಮಂಗಳಂ
ಸುಂದರಾಂಗ ಸುಜನಪೋಷ ವೇಂಕಟೇಶನೆ
ಸಕಲೋದ್ಧಾರ ಕಾರ ನರಹರೆ ಪ
ಪಾಪಹಾರಿ ದೀಪಸುಜನ ತಾಪಹಾರಕ
ಶ್ರೀಪತೇ ಶುಭಂಕರಾರಿತಾಪನಾಶಕ
ವನಮಾಲಾಧಾರಿ ಶ್ರೀಹರೀ ೧
ವಿಮಲ ಸುಗುಣ ಕಮಲನೇತ್ರ ಪಾಲಿಸೈ ಹರೆ
ಸುಮನಸಾಳಿ ಗೀಯಮಾನ ಪಾದಪಂಕಜಾ ಸನಕಾದಿ
ಸೇವ್ಯವಿನುತ ಭೂಪತೆ ೨
ದುಷ್ಟ ಹೃದಯ ದೂರಭಾವ ಕಷ್ಟನಾಶಕ
ಸೃಷ್ಟಿಪಾಲದನುಜವೈರಿ ಧೇನುಪುರಪತೆ
ವಿಹಿತ ಪಾಲ ಕಮಲಲೋಚನ ೩

 

ಇಂದಿರೆ ವಿಜಯೆ ಜಯಮಂಗಳಂ ಪ
ಸಾರಸಭವನುತೆ ಸಾರಸಶರಮಾತೆ
ಸಾರಸದಳಹಿತೆ ಸಾರಸಮಹಿತೆ ಮಂಗಳಂ೧
ಇಂದು ಬಿಂಬಾಧರೆ ಇಂದು ಸುಮಾಕರೆ
ಇಂದು ಸಹೋದರಿ ಸುಂದರ ಕಬರಿ ಮಂಗಳಂ ೨
ರಾಜರಾಜಾರ್ಚಿತೆ ರಾಜಮುಖಾಂಚಿತೆ
ರಾಜಗೃಹಾರ್ಚಿತೆ ರಾಜಿತ ವನಿತೆ ಮಂಗಳಂ ೩
ಮೌನಿಕುಲಾರ್ಚಿತೆ ಮಾನವ ವಂದಿತೆ
ಧೇನುನಗರ ಹರಿಮಾನಿನಿ ಜನನಿ ಮಂಗಳಂ ೪

 

ಇದು ಈಗ ಸಮಯ ಸೀತಾರಾಮ ಪ
ಇದು ಈಗ ಸಮಯವು ಪದುಮದಳಾಕ್ಷನೆ
ಸದಯದಿ ನಿಂದೆನ್ನ ಒದಗಿ ಕಾಯ್ವ ಶ್ರೀರಾಮ ಅ.ಪ.
ಖಾಸವು ತುಂಬೆ ಕಂಠದಿ ಶ್ವಾಸವು ನಿಲ್ಲೆ
ಘಾಸಿಯಾಗಲು ಘುರುಘುರುಕೆಂದು ಬೂೀರಿಡೆ
ಸಾಸಿರ ಚೇಳು ಕಡಿದಂತಾಗುವಾಗ ೧
ಕಾಲವು ಸಲ್ಲೆ ಪಂಚೇಂದ್ರಿಯಂಗಳು ಸಡಿಲೆ ಈ ದೇಹದಿ
ಲಾಲಾ ಮೂತ್ರವು ಮಲ ಜೋಲಿ ಬೀಳುತಲಿರೆ
ಕಾಲನ ದೂತರು ಬಂದು ಬಿಡದೆಳೆಯುತಿರುವಾಗ ೨
ನಂದನಾದಿಗಳು ನಿಂದು ಗೋಳಿಡುತಿರೆ ಬಂಧು ಬಳಗಗಳು
ಒಂದನು ನೋಡಿದೆ ಕುಂದುತ್ತ ಚಿತ್ತದಿ ನಿಂದಿರಲು
ತಂದೆ ಧೇನುಪುರಿನಾಥ ಬಂದೆನ್ನ ಕಾಯೊ ಹೋಗುವಾಗ ೩

 

ಈ ಸೊಬಗನಿನ್ನ್ಯಾವ ದೇವರೊಳು ಕಾಣೆ
ಈಶ ಪರಮೇಶ ಜಗದೀಶ ಶ್ರೀ ಶಿವನ ಪ
ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ
ಬಂಧುತ್ವದಲಿ ವಿಷ್ಣು ಸೋದರಿಯ ರಮಣ
ಅಂದ ಚಂದದಿ ನೋಡೆ ಸುಂದರೇಶ್ವರನಿವನು
ಚಂದ್ರ ನಾಗಾಭರಣ ಲೋಕ ಶಂಕರನು ೧
ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು
ಯೋಗದಲಿ ಯೋಗೇಶ ಯೋಗ ಭಾವಿತನು
ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ
ನೈಗಮದಿ ತಿಳಿಯೆ ತಾಂ ನಿಗಮ ಗೋಚರನು ೨
ವೀರತನದೊಳಗಿವನು ತ್ರಿಪುರ ಸಂಹಾರಕನು
ಧೀರತನದೊಳಗಿವನು ಮದನವಿಧ್ವಂಸಿ
ಸಾರತನದೊಳಗಿವನು ಶ್ರೀ ಮಹಾದೇವನು
ಕಾರಣಕೆ ಕಾರಣನು ಜಗದಾದಿ ಗುರುವು ೩
ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು
ಪಟ್ಟಣವು ರತ್ನ ರಜತಾದ್ರಿಯಾಗಿಹುದು
ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ
ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು ೪
ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು
ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು
ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು
ಎಲ್ಲಿ ನೋಡಲು ಧೇನುಪುರನಾಥ ಶಿವನು ೫

 

ಏಕೆ ನಿರ್ಧಯವೊ ಓ ರಾಮ ಶ್ರೀ ರಘುರಾಮ ಪ

ಸ್ಮರಿಸಿ ಸ್ಮರಿಸಿ ನಾನು ಕರಗಿ ಬೆಂಡಾದೆನೊ
ಕರುಣವಿಲ್ಲವೆ ನಿನಗೆ ಶ್ರೀ ರಘುರಾಮ
ಕರುಣವಿಲ್ಲವೆ ನಿನಗೆ ೧
ಪಾವನ ಚರಿತನೆ ಪಾವನ ಮಹಿಮನೆ
ಪಾವನ ರೂಪನೆ ಬಾ ಶ್ರೀ ರಘುರಾಮ
ಪಾವನ ರೂಪನೆ ಬಾ ೨
ಮೌನೀಶ ವಂದ್ಯನೆ ಮಾನವ ಸೇವ್ಯನೆ
ಧೇನುಪುರೀಶನೆ ಬಾ ಶ್ರೀ ರಘುರಾಮ ಧೇನುಪುರೀಶನೆ ೩

 

ಕಂದರ್ಪಕೋಟಿ ಸುಂದರಾಂಗ ರಾಮ ತೇ ಸುಮಂಗಳಂ ಪ
ಮಂದಾರು ಹೃದಯ ಕುಮುದ ಚಂದ್ರ
ರಾಮ ತೇ ಸುಮಂಗಳಂ
ಬೃಂದಾರಕೇಂದ್ರ ವಂದ್ಯಪಾದ ರಾಮ ತೇ ಸುಮಂಗಳಂ ೧
ದಿವ್ಯರೂಪ ಕಾಂತಿಮಹಿತ ರಾಮ ತೇ ಸುಮಂಗಳಂ
ಸರ್ವಸುಗುಣ ಪೂರ್ಣಮಹಿತ ರಾಮ ತೇ ಸುಮಂಗಳಂ ೨
ಸುರಾಸುರಾಳಿ ಗೀಯಮಾನ ರಾಮ ತೇ ಸುಮಂಗಳಂ
ಪುರಾರಿ ಚಿತ್ತ ಕಮಲ ಮಿತ್ರ ರಾಮ ತೇ ಸುಮಂಗಳಂ ೩
ಭಕ್ತ ಹೃದಯ ಕಮಲಹಂಸ ರಾಮ ತೇ ಸುಮಂಗಳಂ
ಸತ್ವನಿರ್ಜಿತ ದೈತ್ಯ ಮಂಡಲ ರಾಮ ತೇ ಸುಮಂಗಳಂ ೪
ದೀನಮಾನವಾಳಿ ಪಾಲಕ ರಾಮ ತೇ ಸುಮಂಗಳಂ
ಧೇನುನಗರ ದೇವ ದೇವ ಶ್ರೀ ರಾಮ ತೇ ಸುಮಂಗಳಂ ೫

 

ಕರುಣಿಸು ಕಮಲಾಸನ ಮಾತಯೆ ನೀಂ ಕರಧೃತ ವರ ಕಮಲೆ ಪ
ಶರಣವ ಪಂದಿಹೆ ಕರುಣದೊಳೀಕ್ಷಿಸು ವರದೆ ವರಲಕ್ಷ್ಮಿ ಅ.ಪ.
ಗಂಧ ಕುಸುಮ ಧೂಪಾವಳಿಯಿಂದಲಿ ಸುಂದರಿ ಪೂಜಿಪೆನು
ಬಂಧುರಗಾತ್ರಿಯೆ ಅಂದದೊಳೆನ್ನಯ ಮಂದಿರದೊಳಗಿಹುದು ೧
ಶ್ರಾವಣ ಮಾಸದಿ ಭಾವಕಿ ನಿನ್ನನು ಭಾವದಿ ಭಾವಿಸುತ
ತಾವಕ ಪಾದವ ಪ್ರೇಮದಿ ಪೂಜಿಪೆ ದೇವಿಯೆ ಒಲಿಯುವುದು ೨
ಚಂದನಭೂಷಿತೆ ಸುಂದರ ಗಾತ್ರೆಯ ಮಂದಹಾಸಮೊಲಿಯೆ
ಚಂದದ ಕಿಂಕಿಣಿಯಂದದರವದೊಳ್ ಬಂದು ದಯಂಗೆಯ್ಯೆ೩
ಹರಿಮಾನಸ ಮೋಹದ ಪ್ರಾಣೇಶ್ವರಿ ಹರಸುತ ವರಗಳಿಂದ
ವರಧೇನುನಗರ ವರಜನ ಪೋಷಿಣಿ ಕರುಣಾಕರೆ ವರದೆ೪

 

ಕಾಮವೈರಿಜಾಯೆ ಪಾಹಿ ಕೋಮಲಾಂಗಿಯೇ ಶಿವೆ ಪ
ಹೇಮಕನಕ ದಾಮಭೂಷೆ ಕಾಮಿನೀಪ್ರಿಯೆ ಶಿವೆ ಅ.ಪ.
ಅಷ್ಟಬಾಹು ಶೋಭಿತಾಂಗಿ ದುಷ್ಟನಾಶಿನಿ ಶಿವೆ
ಅಷ್ಟಮೂರ್ತಿ ವಾಮರೂಪೆ ಇಷ್ಟದಾಯಕಿ ಶಿವೆ೧
ಬಾಲಚಂದ್ರ ಭಾಸಮಾನ ಫಾಲಶೋಭಿತೆ ಶಿವೆ
ನೀಲವೇಣಿ ವಿಮಲವಾಣಿ ಕಾಲರೂಪಿಣಿ ಶಿವೆ ೨
ಚಕ್ರರಾಜ ಮಧ್ಯವರ್ತಿ ಶಕ್ತಿಕಾರಿಣಿ ಶಿವೆ
ವಕ್ರಕೇಶಿ ಮುಖ್ಯದನುಜ ಶಕ್ತಿಹಾರಿಣಿ ಶಿವೆ೩
ಕರುಣಿಸಿಂದು ವರವ ದೇವಿ ಚರಣಕೊಂದಿಪೆ ಶಿವೆ
ಸುರನರಾದಿ ಗೀಯಮಾನ ಪಾದಪಲ್ಲವೆ ಶಿವೆ ೪
ನಾಗವೇಣಿ ಧೇನುನಗರ ಸರ್ವಮಂಗಳ ಶಿವೆ
ಭೋಗ ಭಾಗ್ಯ ಸುಖಗಳಿತ್ತು ಪೊರೆಯೆ ಪಾರ್ವತಿ ಶಿವೆ ೫

 

ಕಾಲ ಚಕ್ರವನೇರಿ ಭಾಸಿಪ ಬಾಲ ಸೂರ್ಯನ ವಂದಿಪೆ ಪ
ನೀಲ ಮೃಗಧರ ಕಾಲ ರೂಪನೆ ಬಾಲ ಚಂದ್ರನೆ ಪೂಜಿಪೆ ಅ.ಪ.
ಸೃಷ್ಟಿ ರೂಪನೆ ವೃಷ್ಟಿದಾಯಕ ಶ್ರೇಷ್ಠ ಭೂಮಿಯ ಪುತ್ರನೆ
ಕಷ್ಟಹರ ಸುಜ್ಞಾನ ಮೂರುತಿ ಇಷ್ಟದಾಯಕ ಸೌಮ್ಯನೆ ೧
ದೇವಗಣಗುರು ಕ್ಷೇಮದಾಯಕ ಜೀವವರ ಗುರು ಪಾಲಿಸೈ
ದೇವಶುಕ್ರನೆ ಕಾವ್ಯರೂಪನೆ ಕಾವ್ಯ ಸೇವನೆ ಪೋಷಿಸೈ ೨
ಪುಂಗವರ ಮಹಿಮಾಂಗ ಶನಿ ಸನ್ಮಂಗಳಾತ್ಮಕ ದೇವನೆ
ಮಂಗಳವನೆಸಗೆಂದು ವಂದಿಪೆ ರಾಹುವೆ ವರಕೇತುವೆ ೩
ಶ್ರೀನಿವಾಸನೆ ಪಾಲಿಸುವುದೆಂದೀ ನವಗ್ರಹ ಭಕ್ತಿಯಿಂಧೇನು
ನಗರ ಜನೇಶನೇವರ ವೇಂಕಟೇಶನೆ ಪೋಷಿಸೈ ೪

 

ಕಾಲ ಭುಜಗವೇಣಿಯೆ ಪೊರೆಯೆ ಲೋಲೆ ಶ್ರೀ ವರಲಕ್ಷ್ಮಿಯೆ ಪ
ಕಾಲಕಾಲ ವರ ಮೋಹದ ಸೋದರಿ
ಬಾಲಚಂದ್ರಸಮ ಫಾಲ ವಿರಾಜಿತೆ ಅ.ಪ
ಇಂದು ಸುಂದರ ಭಾಸಿತೆ ವಿನುತೆ ಬಂಧುರಾಲಕ ಭೂಷಿತೆ
ಕುಂದ ಕುಸುಮಸಮ ಮಂದಹಾಸದಿ ಬಂದು
ಸಲಹು ವರ ಇಂದಿರೆ ವಿಮಲೆ ೧
ಅಂಬುಜಾನನೆ ಕಾಮಿನಿ ವಿಮಲೆ ಬಿಂಬರದನ ವಾಸೆಯೆ
ಬಿಂಬವಿಡಂಬಿನಿ ಕುಂಭಸಮಸ್ತನಿ
ಶಂಬರವೈರಿ ಶುಭಂಕರಿ ಮಹಿತೆ ೨
ಪೊಳೆವ ಲೋಚನ ಥಳಕು ದೇವಿ ಬೆಳೆವ ಮಿಂಚಿನ ಬೆಳಕು
ಅಳಿಕುಲ ಕುಂತಳ ದಳರುಚಿ ಬಿಂಬಿತ
ದಳಿತ ಕುಸುಮಾವಳಿ ಕಲಿತ ಮುಖಾಮಲೆ ೩
ಭೃಂಗವೇಣಿಯೆ ಭಜಿಪೆ ತಾಯೆ ಶೃಂಗಾರ ಭೂಷೆ ಮಂಗಳೆ
ತುಂಗ ಕುಚಭರ ಭಂಗಿತ ಮಧ್ಯೆಯೆ
ಅಂಗಜ ಮಾಧವ ಮಂಗಳರೂಪೆ ೪
ಮಾನಿನಿ ಗುಣಭೂಷಿತೆ ಸತತಂ ಸಾನುರಾಗದೆ ಸಲಹು
ಧೇನುನಗರ ಪರಿಪಾಲನ ಚತುರೆ ವಿನೋದೆ
ಸರ್ವಸುಖ ಸಂಪದೆ ವರದೆ ೫

 

ಕೈಲಾಸವಾಸ ಶ್ರೀತಜನ ಶುಭಕರ ಗಿರಿಜಾ ಹೃದಯ ವಿಲಾಸ
ಹಿಮ ಹಿಮಕರ ಧವಳ ಸುಭಾವ ದೇವ ದೇವ ಪ
ದೇವ ಸರಸಿಜಭವ ವಿನುತಪ್ರಭಾವ ಜಲಧರ
ಸಮಸುರುಚಿರಗ್ರೀವ ವರ ಮೇರುಶರಾಸನ
ದೇವ ದೇವ ಪರಮೇಶ ನಿರಂಜನ
ಪಾರ್ವತೀರಮಣ ಪಾಹಿ ಜಗನ್ಮಯ ೧
ಸಾಂಬ ನುತಮುನಿಜನ ದಿವಿಜಕದಂಬ
ಹರಿಶರಜಿತ ಪುರ ನಿಕುರುಂಬ
ಜಿತಧೃತ ಮನಸಿಜ ಶಶಿಬಿಂಬ ರವಿ ಸೋಮ ವಿಲೋಚನ
ಫಾಲನೇತ್ರ ಗಂಗಾಧರ ಮೃಡಹರ ಕಾಲಕಾಲ
ತ್ರಿಪುರಾಂತಕ ಶಂಕರ ೨
ಈಶ ವಿಲಸಿತ ಮೃದು ಮಧುರಸುಹಾಸ ಭವ
ವಿದಳನ ವರದ ಗಿರೀಶ
ಪರತರ ಶಿವ ಪರಮ ಮಹೇಶ ನಿಗಮಾಗಮ ಗೋಚರ
ವ್ಯೋಮಕೇಶ ಶಶಿಶೇಖರ ಭಾಸುರ ಭೋಗಿ ಭೂಷ
ವರ ಧೇನು ಪುರೀಶ್ವರ ೩

 

ಕೌಮಾರಿಮಿತ್ರೆ ಕೋಮಲಗಾತ್ರೆ ಪ್ರೇಮದಿ
ಪಾಲಿಸು ಸೋಮಸುಭಾಸೆ ಪ
ಮಂದಾರವಾಸೆ ಸುಂದರಹಾಸೆ
ಇಂದೀವರಾಕ್ಷಿಯೆ ವಂದಿತ ಜಾಯೆ ೧
ಭೃಂಗಾಲಕಾಂತೆ ಅಂಗಜಾಕ್ರಾಂತೆ
ಶೃಂಗಾರಶೋಭಿತೆ ಮಂಗಳಮಾತೆ ೨
ಹೇಮಾಂಬರಾಂಗಿ ಶ್ಯಾಮಲಾಪಾಂಗಿ
ಧೇನುಪುರಾಧಿಪೆ ಕೋಮಲಾಲಾಪೆ ೩

 

ಕ್ಷೀರ ಜಲಧಿ ಜಾತೆ ಬಾಲೆ ಸಾರಸಾಕ್ಷಿ ಮಂಗಳೆ
ಹಾರನೂಪುರಾದಿ ಲೋಲೆ ಬಾರೆ ಕಮಲೆ ನಿರ್ಮಲೆ ಪ
ರಾಜ ರಾಜ ಪೂಜಿತಾಂಘ್ರಿ ರಾಜಗೃಹ ನಿವಾಸಿನಿ
ರಾಜಕಾಂತಿ ಕೋಮಲಾಂಗಿ ರಜಿಸೌ ಮಹಾತ್ಮಳೆ ೧
ಮಂಗಳಾಂಗಿ ಭೃಂಗವೇಣಿ ಅಂಗನಾ ಶಿರೋಮಣಿ
ಅಂಗಭವ ಸುಮಾತೆ ಪೊರೆಯೆ ಸಂಗತಾರ್ತಿಹಾರಿಣಿ ೨
ದೀನನನ್ನು ನೋಡು ದಯದಿಂ ಸಾನುರಾಗದಿಂದಲಿ
ಧೇನುನಗರ ಪಾಲಿನಿ ಶ್ರೀ ಮಾನಿನೀ ಹರಿಪ್ರಿಯೆ ೩

 

ಕ್ಷೀರಸಾಗರ ಸಂಭವೆ ರಮೆ ಪಾಲಯಾಶು ಮಾಂ ದೇವಿ ಪ
ಮಾರಜನಕ ಮೋಹನಾಂಗಿಯೆ ಸಾರಸಾಕ್ಷಿಯೆ ವರಲಕ್ಷ್ಮಿಯೆ ಅ.ಪ.
ಪದ್ಮಗಂಧಿಯೆ ಪದ್ಮ ವದನೆಯೆ ಪದ್ಮನೇತ್ರೆಯೆ ಪದ್ಮಹಸ್ತಯೆ
ಪದ್ಮನಾಭಿಯೆ ಪದ್ಮ ಚರಣೆಯೆ
ಪದ್ಮನಾಭ ಸುಪದ್ಮಿನೀ ಭಾಮೆಯೆ ೧
ಇಂದು ಸೋದರಿ ಸುಂದರೀ ಮಣಿ
ಚಂದ್ರಮಂಡಲೆ ಮಧ್ಯಭಾಸುರೆ
ಇಂದು ಪೂಜಿಸಿ ವಂದಿಸುವೆನು ಇಂದಿರೇಯೇ
ಶ್ರೀ ಸಿಂಧುರಗಮನೆಯೆ ೨
ನಾಗವೇಣಿಯೆ ಬೇಡಿಕೊಂಬೆನು
ಭೋಗಭಾಗ್ಯವನಿತ್ತು ನೀ ಪಾಲಿಸು
ನಾಗಲಾಲಿತೆ ಶ್ರೀ ಜಯಲಕ್ಷ್ಮಿಯೆ ಬೋಗಿನಿಯೆ
ಶ್ರೀ ಧೇನುಪುರೀಶ್ವರಿ ೩

 

ಗೌರಿಗೆ ಶುಭದಾರತಿಯನು ರಚಿಪೆ ಪ
ವನಿತಾ ರಮಣಿಗೆ ವನಶಂಕರಿಗೆ ಮನಸಿಜ
ಜೀವನದಾಯಕಿಗೆ ಶುಭದಾರತಿಯನು ರಚಿಪೆ ೧
ಸುಂದರ ರೂಪೆಗೆ ಚಂದ್ರಧರಾಂಬೆಗೆ ಸುಂದರೇಶ್ವರ
ಪ್ರಿಯಭಾಮಿನಿಗೆ ಶುಭದಾರತಿಯನು ರಚಿಪೆ ೨
ವರದಾಯಕಿಗೆ ಪರಮಕಲ್ಯಾಣಿಗೆ ನರಹರಿಸುಪ್ರಿಯ ಸೋದರಿಗೆ
ಶುಭದಾರತಿಯನು ರಚಿಪೆ ೩
ಹೈಮವತೀಶೆಗೆ ತಾಮರಸಾಕ್ಷಿಗೆ
ಶ್ಯಾಮಕಲಾಂಬಿಕೆ ಶಿವಸುಂದರಿಗೆ
ಶುಭದಾರತಿಯನು ರಚಿಪೆ ೪
ಧೇನಪುರೀಶೆಗೆ ಮೌನಿ ಸನ್ನುತೆಗೆ ಮಾನಿನಿ
ಮಾಘದ ಮಂಗಳೆಗೆಶುಭದಾರತಿಯನು ರಚಿಪೆ ೫

 

ಚಂಡನಾಡಿದ ರಘುಕುಲ ನಂದನಾಶ್ರಿತವತ್ಸಲ ಪ
ಇಂದುಮುಖಿ ಸೀತಾದೇವಿ ಸುಂದರ ಕರಕಮಲಾರ್ಪಿತಮಾದ ಅ.ಪ.
ಮರುಗ ಮಲ್ಲಿಕಾ ಜಾಜಿ ವರ ಪಾರಿಜಾತ ತತಿ ಸುರಗಿ
ಸೇವಂತಿ ಪರಿಚಿತಮಾದ
ಸುರಸುಗುಂಭಿತ ಪರಮ ಶೋಭಾನ್ವಿತ ಸುರುಚಿರ
ಮಾಲ ವಿರಚಿತ ಮಾದ ೧
ಕಿಂಕಿಣಿ ಝಣರಲು ಕಂಕಣವಲುಗಲು
ಪಂಕಜನೇತ್ರಿಯು ಶಂಕಿಸದಿರಲು
ಅಂಕದೊಳುರೆಯೊಗೆದ ಪಂಕಜಾಕಾರದ ಶಂಕರ
ಪೊಗಳಲು ಚಂಪಕ ದರಳಿನ ೨
ಮಾನಿನಿಯರು ಪಾಡೆ ಮೌನೀಶರಾಗ ನೋಡೆ ಗಾನದಿ
ಸುರಜಾಲ ಜಯ ಜಯವೆನ್ನಲು
ಸಾನುರಾಗದಿ ಸೀತಾ ಮಾನಿನಿಯೊಡಗೂಡಿ
ಧೇನುನಗರ ಶ್ರೀ ರಾಮನು ಮುದದಿ ೩

 

ಚಂಡನಾಡಿದ ಹರಿ ಚಂಡನಾಡಿದ ಪ
ಪುಂಡರೀಕ ಜಾತೆಯೊಡನೆ ಪುಂಡರೀಕ ಕುಸುಮಮಯದ ಅ.ಪ.
ನೀರೆ ಲಕ್ಷ್ಮಿಯಿಂದ ಕೂಡಿ ಸಾರ ಸೊಬಗಿನಿಂದ ನೋಡಿ
ವಾರಿಜಾಕ್ಷಿ ಕರವ ನೀಡಿ ಪಾರಿಜಾತ ಕುಸುಮಮಯದ ೧
ಸೊಂಪಿನಿಂದ ಮಂದಹಾಸ ಪೆಂಪುದೋರೆ ಸಿರಿಯಮ್ಮೆ
ಗಂಪಿನಿಂದ ರಮೆಯು ಸಹಿತ ಚಂಪಕದ ಕುಸುಮಮಯದ ೨
ಪುಲ್ಲನಯನ ಪರಿಮಳವ ಚೆಲ್ವ ಚಂದ್ರ ಕಿರಣದಂತೆ
ಚೆಲ್ವನಾಂತ ಸರಸಮಾನ ಮಲ್ಲಿಗೆಯ ಕುಸುಮಮಯದ ೩
ದಿವ್ಯ ಮಾಧುಪ ಝೇಂಕೃತಿಯು ಭವ್ಯಮಾಗೆ ದಿವಿಜರೆಲ್ಲ
ದಿವ್ಯಮೆಂದು ಪೊಗಳೆ ಸುಖದಿ ನವ್ಯ ಜಾಜಿ ಕುಸುಮಮಯದ ೪
ಶ್ರೀನಿವಾಸ ಸಕಲ ಹೃದಯ ಶ್ರೀನಿವಾಸ ಧೇನುನಗರಶ್ರೀನಿವಾಸ ವೆಂಕಟೇಶ ಶ್ರೀನಿವಾಸ ಕುಸುಮಮಯದ ೫

 

ಜಾನಕೀಪತೆ ಪೊರೆ ಸೂನಭಾಣ ಕೋಟಿ ರೂಪ
ಮಾನವಾಗ್ರಗಣ್ಯ ಭೂಪ ಪ
ರಾವಣಾದಿ ದನುಜ ಹೃದಯ ಜೀವಮಕರ ಧೀವರೇಶ
ಪಾವಮಾನಿ ಚಿತ್ತಕಮಲ ಭಾವ ಸೂರ್ಯ ರಾಮಚಂದ್ರ ೧
ಸೂರ್ಯಕೋಟಿ ಭಾಸಮಾನ ಧೈರ್ಯ ಜಲಧಿ ದನುಜ ಸಂಘ
ಶೌರ್ಯ ವಾರಿವಾಹವಾತ ಸೂರ್ಯವಂಶ ಸುಪ್ರಕಾಶ೨
ಇಂದುಕಾಂತಿ ಕೋಮಲಾಸ್ಯ ಕುಂದರದನ ಮಂದಹಾಸ
ದಿಂದ ಧೇನುನಗರಪತಿಯೆ ಬಂದು ಪಾಲಿಸೈ ಶ್ರೀಹರಿಯೆ ೩

 

ದಿವ್ಯ ಸುಂದರ ವಿಗ್ರಹ ಜಯ ಜಯ
ಸರ್ವಮಂಗಳಸಾರ ಜಯ ಜಯ
ಭವ್ಯ ಸಚ್ಚಿದಾನಂದ ಜಯ ಜಯ ಶ್ರೀರಾಮ ೧
ವೇದ ವೇದಾಂತವೇದ್ಯ ಜಯ ಜಯ
ಬೋಧನೈಕ ಸುಖ ಜಯ ಜಯ
ವಾದ ದೂರವರ ಜಯ ಜಯ ಶ್ರೀರಾಮ ೨
ಸತ್ಯ ಸಂಕಲ್ಪೇಶ್ವರ ಜಯ ಜಯ ನಿತ್ಯ ನಿರ್ಗುಣ
ನಿರಂಜನ ಜಯ ಜಯ
ತತ್ತ್ವ ತಾರಕ ಮಂತ್ರ ಜಯ ಜಯ ಶ್ರೀರಾಮ ೩
ಸೃಷ್ಟಿರಕ್ಷಣ ಸುದಕ್ಷ ಜಯ ಜಯ ಅಷ್ಟಮೂರ್ತಿ
ವಿಶ್ವರೂಪ ಜಯ ಜಯ
ಕೃಷ್ಣ ವಿಷ್ಣು ವಾಸುದೇವ ಜಯ ಜಯ ಶ್ರೀರಾಮ ೪
ಪುಂಡರೀಕ ಶುಭನೇತ್ರ ಜಯ ಜಯ
ಚಂಡಕೋದಂಡಧರ ಜಯ ಜಯ
ಚಂಡಕಿರಣ ಕುಲತಿಲಕ ಜಯ ಜಯ ಶ್ರೀರಾಮ ೫
ಭಕ್ತ ಮಾನಸ ಹಂಸ ಜಯ ಜಯ
ಮುಕ್ತಿದಾಯಕ ರಾಮ ಜಯ ಜಯ
ಮಿತ್ರ ಪಾಲನ ಲೋಲ ಜಯ ಜಯ ಶ್ರೀರಾಮ ೬
ಕಾಮಕೋಟಿ ಸಮಾನ ಜಯ ಜಯ
ಕಾಮಿತ ಫಲದಾತ ಜಯ ಜಯ
ಸೋಮವಂಶಜ ದೇವ ಜಯ ಜಯ ಶ್ರೀರಾಮ ೭
ಮತ್ಸ್ಯ ಕೂರ್ಮ ವರಾಹ ಜಯ ಜಯ
ಮತ್ರ್ಯಸಿಂಹ ವಾಮನ ಜಯ ಜಯ
ಶಕ್ತ ಭಾರ್ಗವ ಕಲ್ಕಿ ಜಯ ಜಯ ಶ್ರೀರಾಮ ೮
ಭಾನುಮಂಡಲ ಭಾಸುರ ಜಯ ಜಯ
ಮೌನಿಮಂಡಲ ಮಧ್ಯಗ ಜಯ ಜಯ
ಧೇನುಪುರಾವನಶೀಲ ಜಯ ಜಯ ಶ್ರೀರಾಮ ೯

 

ದೃಷ್ಟಿ ತಾಕಿತೆ ನಿನಗೆ ಶ್ರೀರಾಮ
ಸುಂದರತರ ಮುಖ ಚಂದ್ರನ ನೋಡುತಲಿ
ಸುಂದರಿಯರೆಲ್ಲ ಬಂದು ಕಂದ ನಿನ್ನ ಮುದ್ದಿಡಲು ೧
ಬಾಲನೆ ನಿನ್ನವರ ನೀಲ ಶುಭಕುಂತಲವ
ನೀಲ ವೇಣಿಯರು ತಿದ್ದಿ ಲಾಲಿಸಿದ ಕಾರಣದಿಂ ೨
ಮಂಗಳವಾದ ನಿನ್ನ ಕಂಗಳ ಢಾಳವನ್ನು
ಅಂಗನೆಯರೆಲ್ಲ ನೋಡಿ ಹೆಂಗಿಸಿದ ಕಾರಣದಿಂ ೩
ಮಾರಸುಂದರ ಸುಕು ಮಾರವರ ರೂಪವನು
ಸಾರಸಾಕ್ಷಿಯರು ಕೂಡಿ ಮೀರಿಮಾತನಾಡಿದರಿಂ ೪
ಮಾನವ ವಂದಿತನೆ ಮೌನಿಕುಲ ಸೇವಿತನೆ
ಧೇನುಪುರ ವೆಂಕಟೇಶ ಶ್ರೀನಿವಾಸ ಪಾಲಿಸಲಿ ೫

 

ನಮಾಮಿ ದಿವ್ಯ ತರಂಗೆ ಶಿವೆಗಂಗೆ ಕೃಪಾಪಾಂಗೆ ನಮಾಮಿ ಪ
ದಯಾಸಾರೆ ಸುಧಾಕಾರೆ ಧಿಯಾದೊರೆ ಗುಣಾಕರೆ
ತ್ರಯೀವಾಣಿ ಮಹಾವೇಣಿ ಸುರೂಪಿಣಿ ನಮಾಮಿ ೧
ಶುಭಂ ದೇಹಿ ಕೃಪೆ ಪಾಹಿ ಶುಭೇ ಭಾಗೀರಥೀ ಸತೀ
ಪರಂಪಾರೇ ಜಲಾಧಾರೆ ಜಿತಕ್ಷೀರೆ ನತಾಮರೆ ನಮಾಮಿ ೨
ಗಿರೀಶಾಂಕಾತ್ ಪರಂಶೈಲಾತ್ ಧರಾಂ ಪ್ರಾಪ್ತೇ ಪುನೀಹಿಮಾಂ
ಮಹಾಭೂತೆ ಸುವಿಖ್ಯಾತೇ ಧರಾನಾಥೇ ಸತಾಂಗತೇ ನಮಾಮಿ ೩
ವರಂಧೇನುಪುರಸ್ತೋಹಂ ಭಜೆ ದೇವೀಂ ಭವಾಪಹಾಂ
ಮಹಾವಿಷ್ಣೋಸ್ಸುತಾಂ ಪುಣ್ಯಾಂ ಮುನೇಃ
ಕನ್ಯಾಂ ಸುಪಾವನಾಂ ನಮಾಮಿ ೪

 

ನರಸಿಂಹ ಮಂತ್ರವೊಂದಿದು ಸಾಲದೆ
ದುರಿತಕೋಟಿಗಳ ತಾಂ ಪರಿಹರಿಸುವುದಕೆ ಪ
ಭೂತ ಬೇತಾಳಗಳ ನಿಗ್ರಹಿಸುವೀ ಮಂತ್ರ ಪಾತಕ
ಗೃಹ ಬೃಂದ ಬಂಧನದ ಮಂತ್ರ
ಕಾತರವ ವಿಧ್ವಂಸ ಗೈಯುತಿಹ ವರ ಮಂತ್ರ
ಮಾತೆಯಂದದಿ ಪಾಲಿಸುತ್ತಲಿಹ ಮಂತ್ರ೧
ನಿತ್ಯ ಸಂಪದವಿತ್ತು ರಕ್ಷಿಸುವುದೀ ಮಂತ್ರ ಶಕ್ತಿ ಸೌಖ್ಯವ
ಮುದವ ಕರುಣಿಸುವ ಮಂತ್ರ
ಭಕ್ತಿ ಸೌಭಾಗ್ಯ ಪರಮಾಯವೀಯುವ ಮಂತ್ರ ಸತ್ಯ
ನಿರ್ಮಲ ಮನವನಾಗಿಸುವ ಮಂತ್ರ ೨
ಮೃತ್ಯು ಮುಖದಿಂದತ್ತಿ ಮುದ್ದಿಸುವುದೀ ಮಂತ್ರ
ಸತ್ವಗುಣವನು ಪೆರ್ಚಿಸುತ್ತಲಿಹ ಮಂತ್ರ
ಭಕ್ತರನು ವಾತ್ಸಲ್ಯದಿಂದ ಸಲಹುವ ಮಂತ್ರ ಅತ್ಮಾದರದಿ
ಬಿಡದೆ ಜೊತೆಯೊಳಿಹ ಮಂತ್ರ ೩
ಈ ಮಂತ್ರ ಮಹಿಮೆಯನು ಪ್ರಹ್ಲಾದ ತಾ ಬಲ್ಲ ಸ್ವಾಮಿ
ಶಂಕರ ಪದ್ಮಪಾದ ಲಕ್ಷ್ಮೀಯರು
ಪ್ರೇಮದಿಂ ಜಪಗೈವ ವರದೀಕ್ಷಿತಂ ಗರಿವು ಭೂಮಿಯೊಳಗೀ
ಮಂತ್ರ ಸರ್ವ ಸಾಧನವು ೪
ಮಂಗಳಂ ಲಕ್ಷ್ಮೀಶ ನರಸಿಂಹ ದೇವರಿಗೆ ಮಂಗಳಂ ಭಕ್ತಾರ್ತಿ
ನಾಶ ಮುರಹರಗೆ
ಮಂಗಳಂ ಯೋಗೀಶ ಪುಂಡರೀಕಾಕ್ಷನಿಗೆ ಮಂಗಳಂ
ಧೇನುಪುರ ಕೃಷ್ಣ ವಿಷ್ಣುವಿಗೆ ೫

 

ನೀರೆಯರು ಸಾರುತ್ತ ಮುದದಿ ನೀರಜದಾರತಿ ಬೆಳಗಿದರು ಪ
ಸೇರಿ ಸೀತಾ ನಾರೀಮಣಿಯಿಂ ರಾರಾಜಿಪ ಶ್ರೀರಾಮಗೆ ಅ.ಪ.
ಕಂದರ್ಪಕೋಟಿ ಸುಂದರಾಂಗನಿಗೆ
ಕಂದರ್ಪಸತಿ ಸುಂದರಾಂಗಿಗೆ
ಇಂದು ಮಿತ್ರಕುಲ ನಂದನ ರಾಮಗೆ
ಇಂದುವಂಶ ನಂದಿನಿ ಸೀತೆಗೆ ೧
ವ್ಯಾಕಶಾಸನನಾದಿ ಲೋಕ ವಂದಿತೆಗೆ ಶ್ರೀ
ಕರಾಂಬಕಿ ಲೋಕ ವಂದ್ಯೆಗೆ
ಲೋಕನಾಥ ಶ್ರೀಕರ ರಾಮನಿಗೆ ಲೋಕ
ಮಾತೃ ಮಾತೆಗೆ ಸೀತೆಗೆ ೨
ಮಾನವೇಮದ್ರ ವಂಶ ಮಾನಿತ ರತ್ನಗೆ ಮೌನಿ
ಚಿತ್ತ ಮಿತ್ರೆ ಮೀನನೇತ್ರೆಗೆ
ದಾನವಾಂಧಕಾರ ಭಾನುರಾಮನಿಗೆ
ಧೇನುನಗರ ನಾಥೆಗೆ ಸೀತೆಗೆ ೩

 

ಪರಿಭಾವಿಪೆ ತಾವಕರೂಪಂ
ಕರುಣಾರಸಮಾರ್ಜಿತ ಸಂತಾಪಂ ಪ
ವನಮಾಲಿಕಾ ಭಾಸಿತದೇಹಂ
ಮುನಿಮಾನಸ ಪೂಜಿತ ನಿರ್ಲೇಪಂ
ವನರುಹಾಸನ ಮುಖ್ಯ ವಂದಿತ ಗೌರವಂ ನರ ಪುಂಗವಂ
ಮನುಕುಲಾರ್ಚಿತ ಪಾದಪಂಕಜ ರಾಘವಂ ಸುರಧೇನುವಂ ೧
ದಶಕಂಧರ ಕಂಧರ ವಾತಂ ದಿಶಿ
ಶೋಭಿತ ಪಾವನ ಕೀರ್ತಿಯುತಂ
ಪಶುಪತಿ ಪ್ರಿಯಮವ್ಯಯಂ ಸುರಪೂಜಿತ ಗುಣಭೂಷಿತಂ
ಶಶಧರಾನನೆ ಜಾನಕೀ ಪ್ರಿಯ ಭಾಸುರಂ ಕರುಣಾಕರಂ ೨
ಖರದೂಷಣ ಶಾಸಕ ದೇವಂ ಶರಣಾಗತ ಸಂರಕ್ಷಣ ನಿರತಂ
ಚರಣಪಲ್ಲವನುನ್ನ ದುಂದುಭಿಕಾಯಂ ಅಕ್ಷಯಂ ಅದ್ವಯಂ
ಸುರವರಂ ವರಧೇನುನಾಮಕ ನಗರನಾಯಕಂ ಹಾಯಕಂ ೩

 

ಪಾಲಯ ನರಕೇಸರಿ ಸತತಂ ಪರಿಪೂರ್ಣ ಗುಣಾಕರ ಪ
ಬಾಲಕನುತಿಹಿತ ದೇವ ವಿನುತ ಸಂಜೀವ ದೇವ
ಲೀಲಾ ಖೇಲನ ಸ್ತಂಭ ವಿದಾರಣ ೧
ರಾಕ್ಷಸ ಗರ್ಭ ನಿರ್ಭೇದನ ನಿಪುಣ ಸಿಂಹನಾದ ಶ್ರೀದ
ದಕ್ಷೀ ವಿಪಕ್ಷಸು ಶಿಕ್ಷಣ ದಕ್ಷನೆ ೨
ಶೂರ ಹಿರಣ್ಯಕ ಹೃದಯ ದಳನಸಂಹಾರ ವೀರ
ಹಾರ ವಿರಾಜಿತ ಸಾರ ಪೊರ ಹರೆ ೩
ಸರ್ವದನುಜ ಕುಲ ಗರ್ವ ವಿದಾರಣ ಕಾಲ ಲೋಲ
ಸರ್ವಭುವನ ಭಯ ಭಂಜನ ರಂಜನ ೪
ಶ್ರೀ ಲಕ್ಷ್ಮೀ ಕುಚ ಕುಂಕುಮ ಪಂಕಿಲ ದೇಹ ದೇವ
ನೀಲ ನಿಭಾಕೃತಿ ಧೇನುನಗರ ಪತೇ ೫

 

ಪಾಲಿಸು ಪಾಲಿಸು ಪಾರ್ವತಿ ತನಯನೆ ಫಾಲಚಂದ್ರಯುತನೆ
ಕಾಲ ಕಾಲ ಸಂಭಾವನಲೋಲುಪ ವಾರಿಜಾಸ್ಯನುತನೆ ಪ
ಅಜ ಸುರಪತಿನುತ ಭಜಿಸುವೆ ದೇವನೆ ಸುಜನ ವಂದಿತ ಚರಣ
ಗಜವದನಾ ಸುರಕುವಲಯ ದಿನಕರ ಧೂರ್ಜಟಿಸುತ ಗಣಪ ೧
ಕಾಮಿತ ಫಲಗಳ ಪಡೆಯಲು ಸುಜನರು ನೇಮದಿ ಪೂಜಿಪರು
ಸಾಮಜ ವದನನೆ ಭಕ್ತರಭೀಷ್ಟವ ಪ್ರೇಮದಿ ಕರುಣಿಸುತ ೨
ಗಾನಲೋಲ ವರತಾಂಡವ ಪ್ರೀತನೆ ಕೋಮಲಾಂಗ ಸತತಂ
ಧೇನುನಗರ ಸಂರಕ್ಷಣ ದಕ್ಷನೆ ಸಾನುರಾಗದಲನಿಶಂ ೩
ಇಂದ್ರಾದಿ ದಿವಿಜರೆಲ್ಲ ಕುಂದುತ್ತ ದೈತ್ಯ ಭಯದಿಂ
ಸುಂದರಿ ನಿನ್ನ ಭಜಿಸೆ ನಿಂದೆಲ್ಲರನ್ನು ಪೊರೆದೆ ೪
ಕಮಲಾಕ್ಷಿ ವಿಮಲಪಾಣಿ ಕಮಲಾಪ್ತ ಮುಖ್ಯರಮಣೆ
ಸುಮಶೋಭಮಾನವೇಣಿ ಕಮನೀಯ ದಿವ್ಯಪಾಣಿ ೫
ಶಾಕಿನಿರೂಪೆ ದೇವಿ ಲೋಕೈಕ ವೀರ್ಯ ಧೈರ್ಯ
ಬೇಕಾದ ವರಗಳಿತ್ತು ಶ್ರೀಕಾರ ಶಕ್ತಿಯೆನ್ನ ೬
ಜ್ಞಾನವು ಮೌನ ಜಯವುಂ ಧ್ಯಾನ ಸುಮಂಗಲತ್ವಂಮಾನ
ಸುಪುತ್ರ ಹಿತಮಂ ಧೇನು ಪುರೀಶೆ ಕೊಟ್ಟು ೭

 

ಪಾಲಿಸು ಪಾಲಿಸು ಪಾರ್ವತಿಪತಿಯೆ ಪಾಲಿಸು
ಪಾಲಿಸು ಪನ್ನಗಧರನೆ ಪ
ಅಂಧಕ ಮಥನನೆ ಗಂಗಾಧರನೆ
ಕುಂದೇಂದು ನಿರ್ಮಲ ಭೂತಿ ಭೂಷಿತನೆ ೧
ಶಂಕರ ಭವಭಯ ಶಂಕಾವಿನಾಶ
ನ್ಯಂಕುಭಾಸಿತ ಕರಪಂಕಜ ಭೂಷ ೨
ಕೈಲಾಸ ವಾಸನೆ ಕಾಲಕಂಧರನೆ
ಶೈಲಜಾ ಕುಚತಟ ಕುಂಕುಮ ಭಾಸ೩
ಗಂಗಾಜನಕ ಪ್ರಿಯ ಅಂಗಜ ಹರಣ
ತುಂಗಭುಜಗ ಚಂದ್ರ ಸಂಗಮಹಿಮ ೪
ಲೀಲಾತಾಂಡವ ಗೌರೀ ಲಾಲಿತ ಹೃದಯ
ಬಾಲಕ ನುತಿಪ್ರೀತ ಧೇನು ಪುರೀಶಾ ೫

 

ಪಾಲಿಸು ಯದುಪತಿಯೆ ಶ್ರೀಹರಿಯೆ ಹರಿಯೆ ಹರಿಯೆ ಪ
ನಾನಾಯೋನಿಗಳಲ್ಲಿ ಶ್ವಾನನಂದದೆ ಸುತ್ತಿ
ದೀನನಾಗಿಯೆ ಮುಕ್ತಿ ಕಾಣದೆ ಸುಳಿವೆ
ಶ್ರೀಹರಿಯೆ ಹರಿಯೆ ಹರಿಯೆ ೧
ದೇಶಕೋಶವು ಬಂಧು ಪಾಶದೊಳಗೆ ಸಿಕ್ಕಿ
ದೋಷಗೈವೆ ಆಶೆಯಬಿಡೆನಾ ಶ್ರೀಹರಿಯೆ ಹರಿಯೆ ಹರಿಯೆ ೨
ಅಂಗವು ಕುಂದಿತು ಭಂಗವ ಪೊಂದುವೆ
ಮಂಗಳ ಕಾಣದೆ ಹಿಂಗುತ್ತಲಿರುವೆ
ಶ್ರೀಹರಿಯೆ ಹರಿಯೆ ಹರಿಯೆ ೩
ಧೇನುನಗರ ದೊರೆ ಭಾನುಸನ್ನಿಭ ಶೌರೆ
ದೀನನಾಗಿಯೆ ನಾಂ ಧ್ಯಾನವ ಗೈವೆ
ಶ್ರೀಹರಿಯೆ ಹರಿಯೆ ಹರಿಯೆ ೪

 

ಪಾಲಿಸು ಶ್ರೀಹರಿಯೆ ಯದುಭೂಮಿಪತಿಯೆ ಪ
ಬಾಲಾರ್ಕ ಸಮಮುಖ ಲೋಲ ಮುರಳೀಧರ ಅ.ಪ.
ನಂದ ನಂದನ ದಿವ್ಯ ಸುಂದರ ರೂಪನೆ
ಬಂಧುರಾಲಕ ವರ ಮಂದಹಾಸನೆ ೧
ಗೋಪ ಸುಂದರೀಗಣ ದೀಪವಿರಾಜಿತ
ತಾಪಿಂಛ ಪಲ್ಲವ ನೂಪುರ ಶೋಭಿತ೨
ಕಾಳೀಯ ಮರ್ದನ ನೀಲಾಂಬುದ ಪ್ರಭ
ನಾಳೀಕಾನನ ಚಿತ ಲೋಲಾಕ್ಷಿ ಚಿತ್ತನೆ೩
ಅಂಗಜಪಿತ ಭವ ಭಂಗ ಮಾನುಷ ವೇಷ
ಶೃಂಗಾರ ಶೋಭಿತ ಭೃಂಗಾಲಕಾರ್ಚಿತ ೪
ಧೇನುನಗರ ದೊರೆ ಸಾನುರಾಗದಿ ಪೊರೆ
ಗಾನ ವಿನೋದ ಹರೆ ಭಾನುಸನ್ನಿಭ ಶೌರೆ ೫

 

ಪಾಲಿಸೆನ್ನ ಪಾರ್ವತೀಶ ಫಾಲಲೋಚನ
ಲಾಲಿಸೆನ್ನ ನುತಿಯ ದೇವ ಕಾಲಕಂಧರ ಪ
ಪುಲ್ಲನಯನ ಚಲ್ವವದನ ಮಲ್ಲಿಕಾರ್ಚಿತ
ಬಿಲ್ವ ಪಲ್ಲವಾದಿಪ್ರಿಯನೆ ಶೈಲಜಾಪತೆ ೧
ಶಂಕರೇಂದುಮೌಳಿ ವಿನುತ ಪಂಕಜಪ್ರಿಯ
ಸಂಕಟಾದ್ರಿ ದೇವರಾಜ ಲೋಕಪಾಲಕ ೨
ಪಾಹಿ ಪಾಹಿ ಕಾಲಕಾಲ ಮೋಹನಾಶಕ
ಸ್ನೇಹದಿಂದಲೆನ್ನ ಬಿಡದೆ ವಾಮದೇವನೆ ೩
ಧಾನವಾಂತಕಾದಿ ಹೃದಯ ಜೀವ ರೂಪನೆ
ಧೇನುನಗರ ದಿವ್ಯ ಕಮಲ ಭಾನುರೂಪನೆ ೪

 

ಪಾಹಿ ಕಾಳಿಕೆ ಪಾಹಿ ದಿವ್ಯ ಚೂಳಿಕೆ ಪ
ಪಾಹಿ ಲೋಕ ಸನ್ನುತೆ ಪಾಹಿ ಪುರಂದರ ವಂದಿತೆ ಅ.ಪ.
ರಕ್ತಬೀಜ ಶಿಕ್ಷಿಣಿ ಭಕ್ತವೃಂದ ರಕ್ಷಿಣಿ
ಶಕ್ತಿವಿಜಿತ ರಾಕ್ಷಸೆ ನಿತ್ಯಮಂಗಲ ಸಾಹಸೆ ೧
ಕ್ರೂರ ಭಂಡ ಭಂಜಿನಿ ಶೂರ ಪದ್ಮಮರ್ಧಿನಿ
ನರಸಿಂಹ ಸೋದರಿ ಪಾಲಯಮಾಂ ವನ ಶಂಕರಿ ೨
ಮೌನಿಹೃದಯ ರಂಜಿನಿ ಮಾನವೇಂದ್ರ ಪೋಷಿಣಿ
ಧೇನುನಗರ ಪಾಲಿನಿ ಮಾನಿನಿ ಶ್ರೀ ಶಿವ ಭಾಮಿನಿ ೩

 

ಪೂಜಿಸುವೆನು ದೇವಿಯ ಶ್ರೀನಿತ್ಯ ಗೌರಿಯ ಪ
ಪರಶಕ್ತಿರೂಪೆಯ ಪರತತ್ವಮೂರ್ತಿಯ
ಪರಮಮಂಗಳ ದೇವಿಯ ಪರಮಾನುರಾಗದಿ ೧
ಮೃಗಧರಮೌಳಿಯ ಜಗದುದ್ಧಾರಾಂಬೆಯ
ಮಿಗೆ ಮನದಲಿ ಧ್ಯಾನಿಸಿ ಅವಾಹಿಸುತ್ತಲಿ ೨
ಸರ್ವಲೋಕೇಶ್ವರಿಯ ಸರ್ವಾಲಂಕಾರೆಯ
ಸರ್ವಾಂಗ ಸುಂದರಿಯ ಆಸನವನಿತ್ತು ೩
ವಿದ್ಯಾಧಿದೇವಿಯ ಶುದ್ಧಚಿದ್ರೂಪೆಯ
ಪಾದ್ಯಾಘ್ರ್ಯಾಚ ಮನದಿಂದ ಪರಿಶುದ್ಧ ಹೃದಯದಿ ೪
ಪಂಚಮವಾಣಿಯ ಚಂಚರಿಕಾಂಬೆಯ
ಪಂಚಾಮೃತವ ಜಲವ ಮುದದಿಂದ ತಳಿಯುತ ೫
ಸುಂದರ ಹಾಸೆಯ ಸೌಂದರ್ಯ ಶರದಿಯ
ಚಂದ್ರಗಾವಿಯ ನುಡಿಸಿ ಕಂಚುಕವ ಗೊಡಿಸಿ ೬
ಚಂದ್ರ ಬಿಂಬಾಸ್ಯೆಯ ಸಿಂಧುರ ಗಮನೆಯ
ಇಂದು ತಿಲಕವ ತಿದ್ದುತ ಗಂಧವನೆ ತೊಡೆದು ೭
ಮಂಗಳ ಮಾತೆಯ ಮಂಗಳ ಮೂರ್ತಿಯ
ಮಂಗಳ ದ್ರವ್ಯದಿಂದ ಶೃಂಗಾರ ವೆಸಗಿ ೮
ಲೀಲಾವಿನೋದೆಯ ಬಾಲ ಕುಚಾಂಬೆಯ
ಮಾಲೆಯ ನರ್ಪಿಸುತ ಕುಸುಮಗಳ ನಿಚಯದಿ ೯
ಪಾಪನಿಹಂಶ್ರಿಯ ಶ್ರೀಪತಿ ಸೋದರಿಯ
ಧೂಪ ದೀಪವ ಕಲ್ಪಿಸಿ ಅಚಮನವಿತ್ತು ೧೦
ಸತ್ಯಸಂಕಲ್ಪೆಯ ನಿತ್ಯಸಂತುಷ್ಟೆಯ
ಉತ್ತಮ ಫಲಭಕ್ಷ್ಯದಿಂ ನೈವೇದ್ಯ ವೆಸಗಿ ೧೧
ಕಂಬುಸುಕಂಠಿಯ ಬಿಂಬಫಲಾಧರೆಯ
ತಾಂಬೂಲ ದಕ್ಷಿಣೆಯಂ ಭಕ್ತಿಯೊಳಗರ್ಪಿಸಿ ೧೨
ಮಂಗಳ ಮೂರ್ತಿಯ ಮಂಗಳ ಗೌರಿಯ
ಮಂಗಳಾರತಿಯ ಗೈದು ಆಚಮನವಿತ್ತು ೧೩
ಕಲಕೀರವಾಣಿಯ ಕಲಹಂಸಗಮನೆಯ
ಲಲನಾಶಿರೋಮಣಿಯ ಬಲವಂದುನಮಿಸಿ ೧೪
ಜಯ ಜಯ ಗೌರಿಯೆ ಜಯ ಜಯ ಮಾತೆಯೆ
ಜಯದೇವಿ ಕರುಣಿಸು ನೀಂ ವರ ಸುಪ್ರಸಾದವ ೧೫
ಮಾನಿನಿ ದೇವಿಯು ಮೌನಿ ಸುವಂದ್ಯೆಯು
ಧೇನುಪುರೀಶ್ವರಿಯು ಸುಪ್ರೀತೆಯಾಗಲಿ ೧೬

 

ಪೊರೆ ದೇವ ನಿನ್ನ ಪಾದಾರವಿಂದವ ನಂಬಿದೆ ಸದಯದೆ
ಕರುಣಾಕರ ಭಕ್ತ ಪಾರಾಯಣ ಸತ್ಯನಾರಾಯಣ ಪ
ಭಕ್ತಿ ಭಾವದೆ ನಿನ್ನ ಸೇರಿದೆನು ವ್ರತ ಮಾಡಿದೆನು ಸತ್ಯ ದೇವನೆ
ಕೃಪೆ ತೋರುವುದು ವರ ನೀಡುವುದು ಸತ್ಯ ದೇವೇಶನೆ
ನಿತ್ಯ ನಿರ್ಮಲ ವರ ಲಕ್ಷ್ಮೀನಾರಾಯಣ
ಬೇಡುವೆನು ನುತಿ ಮಾಡುವೆನು ೧
ಗಂಧ ಪುಷ್ಪಾಕ್ಷತೆ ದೀಪಗಳಿಂ ಪಂಚಫಲಂಗಳಿಂ ಇಂದಿರೇಶನೆ
ನಿನ್ನ ಪೂಜಿಸಿದೆ ನಿತ್ಯ ಭಾವಿಸಿದೆ ವಂದಾರು ಮಂದಾರ
ಮಂದರ ಗಿರಿಧರ ಸಿಂಧುಶಯನ
ಪಾಲಿಸೆನ್ನನು ಬೇಡಿಕೊಂಬೆನು ೨
ಮೌನೀಶ ವಂದ್ಯನೆ ಸರ್ವೇಶನೆ ದೀನಪಾಲಕನೆ ಸುಜ್ಞಾನ
ಸುಖವಿತ್ತು ಪಾಲಿಪುದು ಯನ್ನ
ಭಾವಿಪುದು ನಿಜತೋರುವುದು
ಧೇನುಪುರೀಶನೆ ಸತ್ಯದೇವೇಶನೆ ಮೌನೀಶ ರಕ್ಷಿಸು
ದಯೆಯಿಂದ ಬಹು ವಿಧದಿಂದ ೩

 

ಪೊರೇ ಶೈಲಜಾಪತೇ ಶಿವಶಂಕರ ಶರಣಾಗತ ಕ್ಷೇಮಂಕರ ಪ
ದುರಿತ ಸಾಗರದಲ್ಲಿ ಕರೆಕರೆ ಪೊಂದುತ
ಕರಗುವೆ ಹಿತರನ್ನು ಕಾಣೆನು ೧
ಭವಭಯ ಮೃತ್ಯುವು ಭವಿಸುತ್ತಲಿರ್ಪುದು
ಭವಸಾಗರ ಸಂತಾರಕ ೨
ಭೂತಿ ಭಾಸಿತ ದೇಹ ಭೀತಿ ಭಯ
ಭಂಜಿಪ ನಾಥರ ಕಾಣೆ ಭೂತೇಶನೆ ೩
ಕಮಲ ರಂಜಿತ ಕರ ಕಮಲ ಭೂಷಿತ ಶಿರ
ಕಮಲಾನುಜ ಕಮಲಾಂಚಿತ ೪
ಧೇನುನಾಯಕವಾಹ ಧೇನುಕಾಪತಿ
ವರಧೇನುನಗರ ಸನ್ನಿವಾಸನೆ ೫

 

ಬಹು ವೈಭವಮಾದುದು ಇಂದಿರಾದೇವಿ
ಪರಿಣಯ ಮಹೋತ್ಸವವು ಪ
ಮಂಗಳ ಮಂಟಪವು ಚಪ್ಪರದಲ್ಲಿ .ಶೃಂಗಾರ ವರ ಪೀಠವು
ರಂಗುರಂಗಿನ ರಂಗವಲ್ಲಿಯು
ಕಂಗೊಳಿಪ ರುಚಿರಾಂಬರಾಳಿಯು
ಅಂಗಜನ ರಥದಂತೆ ತೋರ್ಪುದು
ಮಂಗಳ ಸುವಾದ್ಯಂಗಳಿಂದಲಿ ೧
ಸುತ್ತ ದೀಪಾವಳಿಯು ಸುವರ್ಣದ ಮುತ್ತಿನ ತೋರಣವು
ಕೆತ್ತಿಸಿದ ವರ ವಜ್ರ ಪದ್ಮವು ಸುತ್ತು ವೀಳೆಯ ಪುಷ್ಪ ನಿಚಯವು
ಸುತ್ತೆ ಜವ್ವಾಜಿಗಳ ಪರಿಮಳ ಸುತ್ತಿ ಸುಳಿವ ಸುಗಂಧ ಲಹರಿಯು ೨
ಬೀಗರು ಹಸೆಯೊಳಿರೆ ಆ ಮಧ್ಯದಿ ಬೀಗಿತ್ತಿಯರು ಕುಳ್ಳಿರೆ
ಆಗ ನಿಶ್ಚಿತ ಲಗ್ನದಲ್ಲಿ ವಧೂವರರ ಪೂಜಿಯನು ಗೈಯಲು
ಆಗಮನ ದೀಕ್ಷಿತರ ಮಂತ್ರ ಸರಾಗದಿಂ
ತುಂಬಿರಲು ಸಭೆಯೊಳು ೩
ದಾರಾ ಮಹೊತ್ಸವವು ಅಕ್ಷತೆಗಳ ಸೇರೆಯೊಳೆರೆಯುವುದು
ನಾರಿಯರ ವರದೇವತಾಸ್ತುತಿ ಸಾರೆ ಭೂಸುರರಾಶಿಷಂಗಳು
ಸೇರೆ ಸಂಗೀತಗಳ ವೈಖರಿ ಸಾರಿ ಸುರಗಣ ಜಯಜಯನ್ನಲು ೪
ಮಾನಿನಿಯರು ಮೋದದೆ ಆರತಿ
ಮಾಡೆ ದಾನದಕ್ಷಿಣೆಯಾಗಲು
ಬಾನುರಾಗದೆ ಸರ್ವರನ್ನು ವಿನೋದದಿಂದುಪಚರಿಸುತಿರಲು
ಧೇನುಪುರವರ ವೆಂಕಟೇಶನು ಶ್ರೀನಿವಾಸನು
ಹರಸೆ ಸಂತೋಷದಿ ೫

 

ಬಾರೋ ನೀರದ ನೀಲ ಸುಂದರ ಲೀಲವಿಗ್ರಹನೆ ಪ
ವೀರ ದಾನವಶೂರ ಭಂಜನ ಬಾರೈ ಉರುಟಣೆಗೆ ಅ.ಪ.
ದಿವ್ಯ ಸಾರಸ ರೇಖರಂಜಿತ ಪಾದಪಂಕಜಕೆ
ನವ್ಯಮಾದ ಸುಗಂಧ ಚೂರ್ಣವ ನಿಂದು ಲೇಪಿಸುವೆ ೧
ಇಂದು ಸುಂದರ ಫಾಲ ನಿನ್ನಯ ಫಾಲ ದೇಶದಿ ನಾಂ
ಇಂದು ತಿಲಕವ ತಿದ್ದಿ ನಿಲವೆನು ಪ್ರಾಣ ನಾಯಕನೆ ೨
ಸಾಧು ರಕ್ಷಣ ದಕ್ಷ ರಾಕ್ಷಸ ಶಿಕ್ಷ ಭುಜಯುಗಕೆ
ಶ್ರೀಧರಿತ್ರೀಫಾಲ ಲೋಲನೆ ಗಂಧವ ಲೇಪಿಸುವೆ ೩
ಕಂಬುಕಂಠ ಶ್ರೀಕಂಠ ಮಿತ್ರನೆ ನಿನ್ನಯ ಕಂಠಕೆ ನಾಂ
ಅಂಬುಜೋಪಮ ಹಸ್ತದಿ ಗಂಧವ ನಿಂದು ಲೇಪಿಸುವೆ ೪
ಮೌನಿ ಹೃದಯ ಚಕೋರ ಚಂದ್ರನೆ ಮಾಲೆಯನರ್ಪಿಸುವೆ
ಧೇನುನಗರ ಶ್ರೀರಾಮಚಂದ್ರನೆ ವೀಟಿಯ ಸ್ವೀಕರಿಸೈ ೫

 

ಬಾರೋ ಯಾದವ ಕುಲಚಂದ್ರ ತೋರೊ ಮುಖಾಂಬುಜವ
ಕಾರುಣ್ಯ ಪೂರ್ಣನೆ ಬಾರೊ ಯಾದವ ಕುಲಚಂದ್ರ ಪ
ಮಾರಾರಿ ದಾನವ ಭೀತಿಯ ಪೊಂದಿರೆ
ನಾರೀರೂಪದಿಂದೈದಿ ಪಾಲಿಸಲಿಲ್ಲವೆ ೧
ದುರುಳ ದುಶ್ಯಾಸನ ತರಳೆ ದ್ರೌಪದಿ ಸೀರೆ
ಸೆರಗನು ಸೆಳೆಯಲು ಕರುಣಿಸಲಿಲ್ಲವೆ ೨
ಪಾಲಿಸು ದೇವನೆ ಕಾಲಕಂಧರಪ್ರಿಯ
ಬಾಲ ಪ್ರಹ್ಲಾದ ವರದ ಲೀಲಾ ನರಹರಿ ರೂಪ ೩
ಮೌನಿ ಮಾನಸಪ್ರಿಯ ಗಾನರೂಪನೆ ಹರೆ
ಧೇನುನಗರ ದೊರೆ ಧ್ಯಾನಿಸುವೆನೊ ಶೌರೆ ೪

 

ಬಾಳು ಸೌಖ್ಯದಿಂ ತನಯನೆ ಬಾಳು ಸೌಖ್ಯದಿಂ ಪ
ಲೀಲೆಯೊಳನುದಿನ ಸಂತಸವಾಂತು ನೀಂ ಅ.ಪ.
ಮುರಹರ ಪರಮಾಯುಷ್ಯವ ನೀಯಲಿ
ಪುರಹರ ನಾರೋಗ್ಯವ ಕೊಡಲಿ ಪರಿಪರಿ ವಿಭವವ
ಪೊಂದುತ ನಲಿಯುತ ೧
ಇಂದ್ರನಂತೆ ವರ ಭೋಗವ ಪೊಂದುತ
ಚಂದ್ರನಂತೆ ಲೀಲೆಯ ಪಡುತ ಸುಂದರ
ಮಂದಿರಕಾನಂದವನಿತ್ತು ೨
ಧರ್ಮ ಕಾರ್ಯವನ್ನಾಚರಿಸುತ ನೀಂ
ಕರ್ಮಮಾರ್ಗವಂ ಸೇವಿಸುತ ಶರ್ಮವ
ಪೊಂದುತ ಸುಜನರ ಸೇವಿಸಿ ೩
ಕೀರ್ತಿವಂತ ನೀನಾಗಿರು ಸರ್ವದ
ಧೂರ್ತರನ್ನು ವರ್ಜಿಸು ದೂರಂ
ಆರ್ತರನ್ನು ರಕ್ಷಣೆಯ ಗೈಯುತ ೪
ಶಾರದೆ ನಿನ್ನಯ ಸೇರಲಿ ಸತತಂ
ಶ್ರೀರಮಣಿಯು ನಿನ್ನ ಪೊಂದಿರಲಿ ಪಾರ್ವತಿ
ನಿತ್ಯವು ಸಲಹಲಿ ನಿನ್ನನು ೫
ಅನ್ನಧಾನ ಧೇನುದಾನವ ಗೈಯುತ
ಕನ್ಯಾದಾನವ ವಿರಚಿಸುತ ಮನ್ನಿಸಿ ಹಿರಿಯರ ಗುರುಗಳ ಸೇವಿಸಿ ೬
ಮಾನವಂತ ನೀನಾಗಿರು ಸರ್ವದ
ಜ್ಞಾನವಂತನಾಗಿರು ನಿರತಂ ಧೇನುಪುರೀಶನ ಶ್ರೀಶನ ಸ್ಮರಿಸುತ ೭

 

ಬಾಳು ಸೌಖ್ಯದಿಂ ತನುಜೆಯೆ ಬಾಳು ಸೌಖ್ಯದಿಂ ಪ
ಲೀಲೆಯೊಳನು ದಿನ ಸಂತಸವಾಂತು ನೀಂ ಅ.ಪ.
ಸರಸಿಜ ತನಯೆ ತಾ ನಾಯುವ ನೀಯಲಿ ಗಿರಿಜೆಯು
ಸೌಭಾಗ್ಯವ ಕೊಡಲಿ ಸುರಪಿತ ರಮಣಿಯು ಸಲಹಲಿ ನಿನ್ನನು ೧
ಇಂದ್ರನ ಸತಿಯಂದದಿ ಸುಖದಿಂದಿರು
ಚಂದ್ರ ರಮಣಿಯಂದದಿ ಸುಖಿಸು ಸುಂದರ
ಮಂದಿರಕಾನಂದವನಿತ್ತು ೨
ಪುಟ್ಟಿದ ಮನೆಗೆ ನೀಂ ಕೀರ್ತಿಯ ತರುವುದು
ಕೊಟ್ಟ ಮನೆಯ ರಕ್ಷಿಸುತಿಹುದು ಇಷ್ಟಮಾದ
ಭೋಗ ಭಾಗ್ಯವ ಪೊಂದುತ ೩
ಸುಂದರ ಪತಿಯಿಂದ ನೀಂ ಕೂಡುತ
ನಂದನರನ ನೀಂ ಪಡೆಯುತಲೀ ಚಂದದಿಂದ
ಪತಿಸೇವೆಯ ಗೈಯುತ ೪
ಅತ್ತೆ ಮಾವಂದಿರ ಸೇವೆಯ ಗೈಯುತ
ಭೃತ್ಯರನ್ನು ನೀಂ ಪೋಷಿಸುತ ನಿತ್ಯ
ದಾನಧರ್ಮವ ನೀಂ ಗೈಯುತ ೫
ದೇವದ್ವಿಜರನು ಭಾವನೆ ಗೈಯುತ
ಭಾವಿಸುತಲಿ ಗೃಹ ಕಾರ್ಯವನು ಸೇವಿಸುತಲಿ
ಗುರುಹಿರಿಯರ ನಿತ್ಯವು ೬
ಮೌನಿಜನಂಗಳು ನಿನ್ನನು ಹರಸಲಿ
ಮಾನವತಿಯು ನೀನಾಗಿರುತ
ಧೇನುಪುರೀಶನ ಸೇವಿಸಿ ಸಂತತ ೭

 

ಬ್ರಹ್ಮನ ರಾಣಿ ಮಂಗಳಂ ಶಾರದೆ ಸಕಲಾರ್ಥದೆ ಪ
ನಿನ್ನನು ನಂಬಿದೆ ಸನ್ಮತಿಯಿತ್ತು ಜಿಹ್ವೆಯೊಳೀಗಲೆ ನಲಿಯೆ
ಶಾರದೆ ಸಕಲಾರ್ಥದೆ ೧
ವರ್ಣ ಸುಂದರಾಕೃತಿ ಪೂರ್ಣ ಫಲಪ್ರದೆ
ಪೂರ್ಣದಯದಿ ಪೊರೆಯೆ
ಶಾರದೆ ಸಕಲಾರ್ಥದೆ ೨
ಸುಂದರ ಶಾರದ ಚಂದ್ರ ಪ್ರಭಾನ್ವಿತೆ ಮಂದಹಾಸದಿ ನಟಿಸೆ
ಶಾರದೆ ಸಕಲಾರ್ಥದೆ ೩
ವೀಣಾ ಸಂಗೀತ ಶುಭೆ ವಾಣೀ ಸಂಪೂರ್ಣ ಕಲೆ
ಶೋಣಾಧರ ಪಲ್ಲವೆ ಶಾರದೆ ಸಕಲಾರ್ಥದೆ ೪
ಧೇನುನಗರಹಿತೆ ಮಾನಸ ಸಂಗತೆ ಮಾನಿನಿ ವಾಗ್ವಿಜೃಂಬಿಣಿಶಾರದೆ ಸಕಲಾರ್ಥದೆ ೫

 

ಭಜನಗೈವ ನಿನ್ನ ದೀವಿ ಭುಜಗಭೂಷರಾಣಿಯ ಪ
ಭುಜಗಭೂಷರಾಣಿಯೆ ಭೂಜಗತಾಲವೇಣಿಯೆ ಅ.ಪ.
ಕಾಲಕಾಲ ಚಿತ್ತ ಕುಮುದ ಬಾಲ ಚಂದ್ರಮಂಡಲೆ
ಬಾಲ ಚಂದ್ರಮಂಡಲೆ ವಿಲೋಲ ನೀಲಕುಂಡಲೆ ೧
ಚಂಡಶೂಲ ಖಂಡನೈಕ ಚಂಡಶೂಲಧಾರಿಣಿ
ಚಂಡಶೂಲಧಾರಿಣಿ ಪ್ರಚಂಡ ಪ್ರಾಣಹಾರಿಣಿ ೨
ದೇವಿ ದೇವಿ ಸುಪ್ರಸನ್ನೇ ಭಾವನೈಕ ಗೋಚರೆ
ಭಾವನೈಕೆ ಗೋಚರೆ ಸ್ವಭಾವ ಭಾವಿ ಭಾಸುರೆ ೩
ಪಂಕಸಕ್ತ ಭಕ್ತಚಿತ್ತ ಸಂಕಟ ಪ್ರಮಾಥಿನೀ
ಸಂಕಟ ಪ್ರಮಾಥಿನೀ ಶುಭಕರಾರ್ತಿ ನಾಶಿನೀ೪

ಸಾನಾರಾಗದಿಂದ ಪೊರೆಯೆ ಗಾನಲೋಲೆ ಮಾನಿನಿಗಾನಲೋಲೆ ಮಾನಿನಿ ಧೇಪುರ ನಿವಾಸಿನೀ ೫

 

ಭುಜಗಭೂಷ ಹರ ಪಾಹಿ ಶಿವ ತ್ರಿಜಗವಂದ್ಯ ಪರಿ ಪಾಹಿ ಶಿವ ಪ
ಪರಮಪುರುಷ ಹರ ಪಾಹಿ ಶಿವ ಕರುಣಾಕರ ಭವ ಪಾಹಿ ಶಿವ
ಶರಣಾಗತ ಪರಿಪಾಲ ಶಿವ ಗಿರಿಜಾ ಹೃದಯವಿಲೋಲ ಶಿವ ೧
ಖಂಡಚಂದ್ರಧರ ಪಾಹಿ ಶಿವ ಕುಂಡಲೀಂದ್ರಧರ ಪಾಹಿ ಶಿವ
ಚಂಡದನುಜ ಸಂಹಾರ ಶಿವ ತಾಂಡವೇಶ ಜಿತಮಾರ ಶಿವ ೨
ಭಾನು ಸೋಮ ಶಿಖಿ ನೇತ್ರ ಶೀವ ಧೇನುನಾಥ ವರವಾಹ ಶಿವ
ಸ್ವಾನುಭೂತಿ ಪರಿಪೂರ್ಣ ಶಿವ ಧೇನುನಗರ ಸುವಿಲಾಸ ಶಿವ ೩

 

ಭೂಮಿ ನಂದಿನಿ ಬಾರೌ ಹಸೆಗೆ
ಕಾಮಿನೀಮಣಿ ರಾಮಭಾಮಿನಿ ಪ
ರಾಮಕಾಮಿನಿ ಕೋಟಿ ಕಾಂತಿಯುತೆ
ಸೋಮಬಿಂಬ ವದನೆಯೆ ಸೀತೆಯೆ ಅ.ಪ.
ರಾವಣಾದಿ ಸುರವೈರಿ ಸಂಹಾರಿಣಿ
ಪಾವಮಾನಿ ಮನೋವಾರಿಜಾಶ್ರಿತೆ
ದೇವತಾವಳೀ ದೇವಸನ್ನುತೆ ದೇವಬೃಂದ ವಂದಿತೆ ಸನ್ನುತೆ ೧
ಸತ್ಯ ಸಂಕಲ್ಪೆಯೆ ಸತ್ಯ ಸ್ವರೂಪೆಯೆ
ಭಕ್ತವತ್ಸಲೆಯೆ ಶಕ್ತಿರೂಪೆಯೆ
ನಿತ್ಯ ಕಲ್ಯಾಣಿಯೆ ತತ್ವಭಾವನೆಯೆ ಸತ್ಯ
ಮಾರ್ಗವಿಶದೆಯೆ ಮಾತೆಯೆ ೨
ವರಧೇನುಪುರಿ ಪರಮೇಶ್ವರಿ ವರದಾಯಿನಿ ವರಲೋಕಪಾಲೆ
ಕರುಣಾಕರೆ ವರರಾಮ ಜಾಯೆ ಪರಿಪಾಲಿತಾಶ್ರಿತೆ ಸುರನುತೆ ೩

 

ಮಂಗಳಂ ದಯಾನಿಧೆ ಮಂಗಳಂ ಗುಣನಿಧೆ ಪ
ಶ್ರೀ ರಂಜಿತಾಂಗನೆ ಪಾರಂಗ ತಾಖಿಲ ಸುರೇಂದ್ರ ಸುನ್ನುತನೆ ೧
ಕಾಮಾರಿಚಿತ್ತದೊಳ್ ಪ್ರೇಮದಿ ನಿಂತಿಹೆ ರಾಮ
ನಿಖಿಲಸುರದಾಮ ಸುಗುಣನೆ೨
ನಿತ್ಯ ನಿರಂಜನ ಭಕ್ತತಮೋಪಹ ಸತ್ವ
ನಿರ್ಜಿತ ಸುರವೈರಿಹರೆ ೩
ಧೇನುಪುರಾಧಿಪ ಸೂನಾಸ್ಯವಂದಿತ ಗಾನವಿನೋದ ಶ್ರೀಹರಿಯೆ ೪

 

ಮಂಗಳಂ ಮಾರುತಿಯೆ ಸತತಮಸ್ತು ಮಂಗಳಂ ಶ್ರೀಮತಿಯೆ
ಮಂಗಳಂ ದುರಿತನಾಶಕ ವಿರಾಜಿತ ಮಂಗಳಂ
ಶರಣರಕ್ಷಕ ರಾಮದೂತನೆ ಪ
ವಾರಿಧಿಲಂಘನ ಶೂರವಿದಾರಣ ವೀರ
ಲಂಕಾದಹನ ಭಾರ ನಿವೃತ ದೇವ ೧
ಜ್ಞಾನಜ್ಞೀಯ ರೂಪ ದಾನವಿವರ್ಜಿತ
ಕಾನನಸಂಪ್ರಿಯ ಮಾನಿರಾಮದೂತ ೨
ದಶಶತಕಂಧರ ದಶನವಿದಾರಣ ಮಶಕರಾಕ್ಷಸ
ಮೃತ್ಯು ಪಶುಪತಿರೂಪನೆ ೩
ಧೇನುನಗರ ಪರಿಪಾಲ ಶ್ರೀನಿವಾಸ ಲೋಲ
ಶ್ರೀ ಹನುಮಂತ ಜ್ಞಾನಿ ಸುಗುಣವಂತ ೪

ಮಂಗಳಂ ಶ್ರೀರಾಮಚಂದ್ರ ಭಂಗಿತಾಸುರೇಂದ್ರನೆ ವೀರ ಪ
ರಾಜಕಾಂತಿ ಕೋಮಲಾಸ್ಯ ರಾಜರಾಜ ಪೂಜಿತ
ರಾಜವಂಶಜಾ ಸಮೇತ ರಾಜ ಹೃದಯ ಮಿತ್ರನೆ ೧
ಶಂಕರಾದಿ ಹೃದಯವಾಸ ಪಂಕಜಾನನ
ಲಂಕಾನಗರ ಸಂಕಟಾರ್ತಿ ಶಂಕರಾಯ ಮಾಣ ದೇವ ೨
ಧೇನುನಗರ ಪಾಲವೀರ ದಾನವಂತಕ
ಕಾನನಾ ವಿನೋದ ಶ್ರೀದ ವಾನರಾದಿ ಗೀಯಮಾನ ೩

 

ಮಂಗಳಂ ಶ್ರೀರಾಮಚಂದ್ರಗೆ ಮಂಗಳಾಂಗಗೆ ಪ
ಭೃಂಗವೇಣಿ ಜನಕಜಾಂತರಂಗ ಲೋಲಗೆಅ.ಪ.
ರಾವಣಾದಿ ದನುಜಮಥನ ಕಾಲರೂಪಗೆ
ಪಾವಮಾನಿ ಹೃದಯ ಕಾಮುದ ಪೂರ್ಣ ಚಂದ್ರಗೆ ೧
ದೇವತಾಳಿ ಗೀಯಮಾನ ದಿವ್ಯ ಚರಿತೆಗೆ
ಭೂ ವಧೂ ಪರಿಪಾಲನೈಕ ದರ್ಮನಿರತಗೆ೨

ಮೌನಿ ಹೃದಯದಿವ್ಯ ಕಮಲ ಹಂಸ ರೂಪಗೆ
ಧೇನುನಗರ ನಾಥ ವೇಂಕಟೇಶ ರೂಪಗೆ ೩

 

ಮಂಗಳಂ ಸುಗುಣಾಭಿರಾಮಗೆ ಮಂಗಳಂ ಶ್ರೀರಾಮಗೆ ಪ
ಮಂಗಳಂ ಲೋಕಾಭಿರಾಮಗೆ ಮಂಗಳಂ ಗುಣಧಾಮಗೆ ಅ.ಪ.
ದಶರಥನ ಸುತನಾಗಿ ಮುನಿವರ ಕುಶಿಕಯಜ್ಞವ ಪಾಲಿಸಿ
ಶಶಿಮುಖಿಯ ಸೀತೆಯನು ಒಲಿಸಿದ ದಿಶಿಸುಭಾಸುರ ನಾಮಗೆ ೧
ತಂದೆಯಾಜÉ್ಞಯ ಪೊಂದುತಾಗಲೆ ಬಂದು ವನದಲಿ ನೆಲಸಿದ
ಛಂದದಿಂದಲಿ ಕಂದಭರತನಿಗಂದು ಪಾದುಕೆ ಇತ್ತಗೆ ೨
ದಂಡಕಾವನದಲ್ಲಿ ನೆಲಸುತ ಖಂಡಿಸುತ ರಾಕ್ಷಸರನು
ಭಂಡರಾವಣ ಹರಿಸೆ ಸೀತೆಯ ಚಂಡ ಹನುಮನ ಕಂಡಗೆ ೩
ವೀರ ವಾಲಿಯ ಕೊಂದು ರಾಜ್ಯವ ಸೂರ್ಯಸುತನಿಗೆ ಪಾಲಿಸಿ
ವಾರಿಜಾಕ್ಷಿಯ ಪುಡುಕಲೋಸುಗ ವೀರರನು ಕಳುಹಿಸಿದಗೆ ೪
ಮಾರುತಾತ್ಮಜನಿಂದ ಸೀತಾ ನೀರಜಾಕ್ಷಿಯ ವಾರ್ತೆಯಂ
ಸಾರಿ ಮದನು ಪೊಂದಿ ದಯದಿಂ ವೀರ ಕಪಿವರಗೊಲಿದಗೆ ೫
ಧೀರರಾವಣನನ್ನು ಕೊಂದು ನಾರಿ ಸೀತೆಯನೊಲಿಸುತ
ಸಾರಿ ಸಾಕೇತವನು ಮುದದಿಂ ವೀರ ಪಟ್ಟವನಾಳ್ದಗೆ ೬
ಜಾನಕೀ ಲಕ್ಷ್ಮೀ ಸಮೇತಗೆ ಮೌನಿವರಗಣ ಸೇವ್ಯಗೆ
ಮಾನವಾಂಬುಧಿ ಪೂರ್ಣ ಚಂದ್ರಗೆ ಧೇನುಪುರ ಶ್ರೀರಾಮಗೆ ೭

 

ಮಂಗಳಾಂಗ ಕರುಣಾಪಾಂಗ ಅಂಗಜಾರಿಪ್ರಿಯತುರಂಗ
ಸಂಗ ರೂಪಜಿತ ಭವಭಂಗ ಗಂಗಾ ಜನಕ ಜಯ ಶ್ರೀರಂಗ ಪ
ದೇವ ದೇವ ದಿವ್ಯ ಪ್ರಭಾವ ಭಾವನಾದಿ ದೂರ ಭಾವ
ಪಾವನೈಕ ರೂಪ ನಿರ್ಲೇಪ ಶ್ರಿವಧೂಕುಚ ಕುಂಕುಮ ದೀಪ ೧
ಇಂದಿರಾ ಮುಖ ಪಂಕಜಸೂರ್ಯ ಮಂದಹಾಸ ಪೂರಿತಾಸ್ಯ
ಕುಂದರದನ ದಿವ್ಯಹಾರ ಬೃಂದಾವನ ವಿಹಾರಶೂರ ೨
ಮುರಳೀಧರ ಗೋವಿಂದ ಮುರಾರೆ ಶರಣಜನ ಸಂರಕ್ಷಕ ಶೌರೆ
ದುರಿತ ದೂರ ವರಧೇನುನಗರ ಪುರವಿಹಾರ ಪಾಲಿಸು ವೀರ ೩

 

ಮಂಗಳಾಂಬಕೀ ವರಲಕ್ಷ್ಮೀ ಮಂಗಳಂ ಜಯ ಪ
ಅಂಗಜಾದಿ ಪ್ರೇಮಜನನಿ ಭೃಂಗವೇಣಿಯೆ ಜಯ ಅ.ಪ.
ಬಿಂಬರದನವಸನ ಭೂಷ್ಯೆ ಅಂಬುಜಾಂಬಕಿ
ಕುಂಭಸದೃಶ ಕುಚವಿವಾರಿ ಅಂಬ ಪಾಹಿಮಾಂ ಜಯ ೧
ಕುಂಕುಮಾಕ್ತ ಫಾಲಶೋಭೆ ಕಿಂಕಿಣೀರವೆ
ಪಂಕಜಾತ ಶೋಭಮಾನ ಹಸ್ತಪಲ್ಲವೆ ಜಯ ೨
ರತ್ನನಿಚಯ ಭಾಸಮಾನ ರತ್ನಕಿಂಕಿಣೀ
ರತ್ನರಾಜಪುತ್ರಿ ಕಮಲೆ ಭಕ್ತವತ್ಸಲೆ ಜಯ ೩
ಚಿತ್ತದಲ್ಲಿ ಭಾವಿಸುವೆನೆ ನಿತ್ಯ ನಿನ್ನನು
ಯತ್ನದಿಂದ ಧೇನುನಗರ ವಾಸೆ ಪಾಲಿಸು ೪

 

ಮದಗಜಗಾಮಿನಿ ವಿಧುಮುಖಿ ಬಾ ಸೀತೆ
ಸದಮಲ ಸುಂದರ ಪೀಠಕೆ ಪ
ಇಂದು ಸುಂದರಮುಖಿ ಮಂದಗಮನೆ ಸಖಿ
ಚಂದ್ರ ಬಿಂಬಾಧರೆ ಸುಂದರಿ ವೈಯಾರಿ ಮಂದಾರ ಮಾಲೆಯೆ ೧
ನೀರಜನೇತ್ರೆಯೆ ಚಾರುದಸುಗಾತ್ರಿಯೆ
ಮಾರಹರನ ಸಖ ಮೋಹನ ಮಿತ್ರೆಯೆ ಕೀರವಾಣಿಯೆ ೨
ಸುರವರ ಪೂಜಿತೆ ನರವರ ವಂದಿತೆ
ಶರಣಾಗತ ಪರಿಪಾಲಿನಿ ಭಾಮಿನಿ ರಾಮ ವಲ್ಲಭೆ ೩
ದಿವ್ಯ ಮಂಗಳರೂಪೆ ಭವ್ಯ ಕಲಾಲಾಪೆ
ಸರ್ವ ಸುಗುಣಮಣಿ ಹಾರಿಣಿ ರಮಣಿ ಭೂಮಿ ನಂದಿನಿ ೪
ಧೇನುನಗರ ರಾಮ ಮಾನಿನಿ ಕಾಮಿನಿ
ಜ್ಞಾನ ಸಂವರ್ಧಿನಿ ಜಾನಕಿ ಜನನಿ ಮಾನವೇಶ್ವರಿ ೫

 

ಮನುವಂಶ ಜಲಧಿಜಾತೆ ಸೀತೆ ಪೊರೆಯೆ ಜಾನಕಿ
ಘನ ಪುಣ್ಯವಿನಯೆ ದಿವ್ಯರೂಪೆ ಜನನಿ ಭಾಮಿನಿ ಪ
ರಾಮಚಂದ್ರ ಭಾಸಮಾನ ಹೃದಯ ಕುವಲಯೆ
ಕಾಮದಗ್ಧ ದನುಜನಯನ ಕಾಲರೂಪಿಣಿ ೧
ಲಕ್ಷ್ಮಣಾದಿ ಭಕ್ತಪಾಲೆ ನಿತ್ಯರೂಪಿಣಿ
ಚಿತ್ತದಲ್ಲಿ ನೆಲಸು ದೇವಿ ತತ್ವಭೂಷಿಣೆ ೨

ಆದಿಶಕ್ತಿ ಭೇದರಹಿತೆ ಮೋದದಾಯಕಿ
ಮಾಧವಾಂಘ್ರಿ ಯುಗಳ ಸೇವೆಯನ್ನು ಕರುಣಿಸು ೩
ಭೂಮಿತನಯೆ ಭೂಮ ಮಹಿಮೆ ಕಾಮಿನೀ ರಮೆ
ಸಾಮಜಾಕರೋರು ಯುಗಳೆ ರಾಮ ಸುಂದರಿ ೪
ಪಂಕಜಾದಿ ಕುಸುಮಲೋಲೆ ಶಂಕರೀಪ್ರಿಯೆ
ಅಂಕದಲ್ಲಿ ಪೊರೆಯೆ ಮಾತೆ ಪಂಕಜಾನನೆ ೫

 

ಗಣೇಶಸ್ತುತಿ
ಮಾರವೈರಿ ತನುಜನೆ ಭೂರಿ ಸುಂದರಾಂಗನೆ
ಚಾರುಹಾಸ ಪಾಲಿಸೆನ್ನ ನೀರಜಭವ ಮಾಧವನುತ ಪ
ಅಜಮುಖಾಮರೇಂದ್ರರು ಭಜಿಸಿ ಸಿದ್ಧಿಗೊಂಬರು
ಸುಜನ ಕಮಲ ದಿನಕರಾಭ ಭುಜಗೆ
ವಿಧೃತ ತ್ರಿಜಗವಿನುತ ೧
ತ್ರಿಪುರ ದಹನಕಾಲದಿ ರಿಪುದವಾಗ್ನಿ ನಿಮ್ಮನು
ತಪವಗೈದು ಹರನು ಭಜಿಸೆ ಸುಪಥನ
ಕರುಣಿದೆಯೊ ವಿಭು ೨
ಧೇನುನಗರಧಾಮನೆ ಸ್ವಾಮಿ ವಿಘ್ನರಾಜನೆ
ಸಾಮಜಾಸೈ ಪಾಲಿಸೆನ್ನ ಕಾಮಿತಗಳ ಕರುಣಿಸುತಲಿ೩

 

ಮಾರುತಿಯೆ ಕೃಪೆ ಮಾಡೈ ವರ ಪ
ವೀರ ಮಹೋದಧಿ ಪಾರ ವಿಲಂಘನ ಧೀರದಾನವ
ಪ್ರಾಣ ಹರ ಗಂಭೀರನೆ ಅ.ಪ.
ಅಕ್ಷಪ್ರಾಣೋರಗ ಪಕ್ಷೀಶ ರಾವಣ ಪಕ್ಷರಾಕ್ಷಸ ಕಾಲ
ವಕ್ಷ ವಿಮಲ ಪಕ್ಷ ೧
ಸೀತಾ ಹೃದಯ ಪ್ರೇಮ ದಾತಾ ಸಿಂಹಿಕಾಮೇಘ
ವಾತ ಲಂಕೇಶ ಮುಖ ಭೀತಿಸಂದಾಯಕ೨
ರಾಮ ಪ್ರಿಯಂಕರ ದಾಮ ವಿಭೂಷಿತ ಕಾಮ
ವಿವರ್ಜಿತ ಭೀಮ ನಿತ್ಮಾತ್ಮಕ ೩
ಕಾನನ ಗೋಚರ ವಾನರ ಪುಂಗವ ಜನಕೀ ಪ್ರಾಣದ ಧೇನುನಗರಹಿತ ೪

 

ಯಾದವೇಂದ್ರ ಪಾಲಿಸೆನ್ನ ಓ ದಯಾನಿಧೇ ಪ
ಶಂಕರಾದಿ ದಿವಿಜರು ಪಂಕಜಾದಿ ಪೊಗಳಿಂ
ಪಂಕಜೋಪಮಾನ ಪಾದ ಪೂಜೆಗೈವರು ೧
ಶಾರಧೇಂದು ಭಾಸಮಾನ ಹಾರರಾಜೆ ಶೋಭಿತ
ನಾರದಾದಿ ಗಾನ ಲೋಲ ವಾರಿಜಾಸ್ಯನ ೨
ನಾಮರೂಪ ರಹಿತನೆ ಸಾಮಜಾದಿ ಪಾಲಕ
ಧೇನು ನಗರಾಭಿವಂದ್ಯ ನಾಮಲೋಲನೆ ೩

 

ರಂಗ ಮಂಗಳಂ ಸದಾ ಬೃಂದಾವನ ವಿಹಾರಿ ಪ
ಸುಂದರಾಂಗನೆ ಕುಂದ ಕೋಮಲ
ದಂದದಂತಿಹ ದಂತ ಭಾಸಿತ ೧
ತುಳಸಿ ರೂಪದ ಅಲಕಭಾಸಿತಾಮಲಕ ಸನ್ನಿಭ ತಿಲಕ ಭಾಸುರ ೨
ಕುಂಡಲೋಜ್ವಲಾ ಖಂಡಸೋದರ ಜಂಡರಾಕ್ಷಸ ಖಂಡನಶೀಲ ೩
ಧೇನುನಾಮಕ ನಗರನಾಯಕ ಮಾನಿನೀ ಪ್ರಿಯ ಶ್ರೀನರಹರೆ ೪

 

ರಂಗನಾಥ ಪಾಲಿಸೆನ್ನ ಮಂಗಳಾಂಗ ಶ್ರೀಶ ಬೇಗ ಪ
ನಿನ್ನ ಭಜನೆಯನ್ನು ಗೈವೆ ಪನ್ನಗಾರಿವಾಹ ಹರೆ
ಸ್ವರ್ಣವಸನ ಭೂಷಿತಾಂಗ ಸನ್ನುತಾಂಗ ಧೀರಶೂರ ೧
ದುಷ್ಟರನ್ನು ಶಿಕ್ಷಿಸುತ್ತ ಸೃಷ್ಟಿಗೊಡೆಯನೆನಿಸಿ ನೀನು
ಇಷ್ಟ ವರಗಳನ್ನು ಕೊಟ್ಟು ಶ್ರೇಷ್ಟನೆನಿಸು ನಂಬಿದೆನು ೨
ಕಾಮಿತಾರ್ಥ ಫಲಗಳೀವ ಕಾಮ ಜನಕ ದೇವನೆ
ಧೇನುನಗರದಲ್ಲಿ ನೆಲಸಿ ನೇಮದಿಂದ ಪೂಜೆಗೊಂಬೆ ೩

 

ರಘುಕುಲಾಂಬುಧಿ ಚಂದ್ರನೆ ಪೊರೆ ನೀಂ
ಅಘಹರ ಧರಣೀಂದ್ರನೆ ಪ
ಜಾನಕೀ ಮುಖಪಂಕಜ ಭಾಸ್ಕರ ದೀನ ಹೃದಯ
ಕುಮುದಾಳಿ ಸುಧಾಕರ ಅಘಹರ ಧರಣೀಂದ್ರನೆ ೧
ರಾವಣಾಂತಕ ಪಾವನರೂಪನೆ ಪಾವಮಾನಿ ಸಂಪೂಜಿತ
ರಾಮನೆ ಅಘಹರ ಧರಣೀಂದ್ರನೆ ೨
ನೀಲಮೇಘ ಸಮಾನ ಸುಂದರ ದೇಹ ವಾಲೀ
ಪ್ರಾಣಾವಳಿ ಕಾಲಹವ್ಯವಾಹ ಅಘಹರ ಧರಣೀಂದ್ರನೆ ೩
ಭಂಡರಾಕ್ಷಸ ಖಂಡನನಿರ್ಮಲ ಚಂಡ ಪರಾಕ್ರಮಿ
ಚಾಪವಿಲೋಲ ಅಘಹರ ಧರಣೀಂದ್ರನೆ ೪
ರಾಮರಘುಪತಿ ಲಕ್ಷ್ಮಣವಂದಿತ ಶ್ಯಾಮಸುಂದರೂಪ
ಧೇನುಪುರಾಧಿಪ ಅಘಹರ ಧರಣೀಂದ್ರನೆ ೫

 

ರಘುನಂದನ ಬಾರೈ ಹಸೆಗೆ ನಿಗಮಾಗಮಾ ವಳಿಸನ್ನುತ ಪ
ಸುಗುಣಾಭಿರಾಮನೆ ರಾಮನೆ ಶ್ರೀ ಮೃಗಲೋಚನೆ
ಶ್ರೀ ಜಾನಕಿ ಸಹಿತ ಅ.ಪ.
ಸುರವೈರಿ ವೈರಿ ಕುಲಭಂಜನ ಪರಮೇಶವರ ಚಾಪಖಂಡನ
ಕರುಣಾಕರ ಖರದೂಷಣಾದಿ ಹರನಾಶ್ರಿತ ವರ ಲೋಕಪಾಲ ೧
ನವ ಕೋಟಿಕಾಮ ನವ ಮೋಹನಾಂಗ
ನವನೀರದಾಭ ನವಸುಂದರ
ನವಶಕ್ತಿಸಂಯುತ ಭಾವನೈಕ ನವಗೋಚರ
ನವಮೀ ಸಂಜಾತ ೨
ವರಧೇನುಪುರಿ ಪರಿಪಾಲ ಲೋಲ
ಶರಣಾಗತ ಭರಣಾಧೃತ
ಚರಣಾರವಿಂದ ಸುರಲೋಕಬೃಂದ ಪರಿವಾರಿತ
ವರ ರಾಮಚಂದ್ರ ೩

 

ರಘುರಾಮಚಂದ್ರ ಬಾರೈ ಹರೆ ದಿವ್ಯ ರತ್ನಪೀಠಕೆ ಪ
ದೇವತಾಳಿ ನುತಿಯ ಕೇಳಿ ಭಾವದಲ್ಲಿ ಮುದವ ತಾಳಿ
ರಾವಣಾದಿ ದನುಜ ವೃಂದವ ಸೀಳಿ ಜಗವ ಪೊರೆದ ವಿಭುವೆ ೧
ಮಂದಹಾಸ ಮುಖವಿಲಾಸ ಇಂದು ಸುಂದರ ಫಾಲರಾಮ
ಇಂದು ವಂಶಜಲೋಲ ದಶರಥನಂದನಾಶ್ರಿತ ವತ್ಸಲ ವಿಭುವೆ ೨
ಪಲ್ಲವಾರುಣ ಪಾಣಿ ಪಂಕಜ ಮಲ್ಲಿಕಾಕುಸುಮಾಳಿ ಭಾಸುರ
ಪುಲ್ಲ ಚಂಪಕ ಮಾಲಕ ರಂಜಿತ ಉಲ್ಲಸನ್ರ‍ಮದುವಾಣಿ ವಿಭುವೆ ೩
ಭಕ್ತ ಹೃದಯ ಕುಮುದ ಚಂದ್ರ ಶಕ್ತಿವಿಜಿತ ರಾಕ್ಷಸೇಂದ್ರ
ಭಕ್ತಿಯಿಂದ ಭಾವಿಸುವೆನು ಭುಕ್ತಿ ಮುಕ್ತಿದಾಯಕ ವಿಭುವೆ ೪
ಮಾನವೇಂದ್ರ ಸುರೇಂದ್ರ ವಂದಿತ ಸೂನ ಶರ ಸಹಸ್ರ ಸುಂದರ
ಮೌನಿ ಹೃದಯ ಚಕೋರ ಚಂದ್ರನೆ
ಧೇನುನಗರ ಶ್ರೀರಾಮ ವಿಭುವೆ ೫

 

ರಜತಗಿರೀಶ್ವರ ಪಾಲಯದಂ ಪಾಲಯೇದಂ
ಶ್ರೀದಂಪತಿ ಯುಗಳು ಪ
ತನು ಮನೋವಾಕ್ಕರ್ಮ ಪರಮಪವಿತ್ರಂ
ಮನುರಘು ಜನಕ ಸಮಾನ ಚರಿತ್ರಂ
ಅನುಪಮ ಕೀರ್ತಿ ಸುಧಾಕರ ಮಿತ್ರಂ
ಮನಸಿಜ ಲೋಭ ಮೋಹಾದಿ ಲವಿತ್ರಂ ೧
ಇಂದ್ರ ಸಮಾನ ಸುವೈಭವ ಯುಕ್ತಂ
ಚಂದ್ರಶೇಖರ ಸ್ರ‍ಮತಿದತ್ತ ಸುಚಿತ್ತಂ
ಇಂದಿರೇಶ ಶ್ರೀರಾಮ ಸುಭಕ್ತಂ ಸುಂದರ
ಮಂದಿರ ಕೌಸ್ತುಭರತ್ನಂ ೨
ಮಾನವ ಶುಭಕರ ಸದ್ಗುಣ ಸಹಿತಂ ಮಾನವ ಧರ್ಮ
ಸುಪಾಲನ ಮಾಹಿತಂ
ದಾನಧರ್ಮ ಗುರು ಸೇವನನಿರತಂ ಧೇನುಪುರೀಶ್ವರ
ಭಾವನ ಮುದಿತಂ ೩

 

ರವಿ ಕುಲಾಂಬುಧಿ ಪೂರ್ಣಚಂದ್ರ
ಕರುಣಾಕರ ಧರಣೀಧರೇಂದ್ರ ಪ
ದಶರಥಸುಪುತ್ರ ಶಶಧರ ಸುವಕ್ತ್ರ
ಪಶುಪತಿಮಿತ್ರನೆ ಪೊರೆಯೊ ಎನ್ನನು ೧
ವನರುಹದಳಾಕ್ಷ ದನುಭುಜವಿಪಕ್ಷ
ಮುನಿಜನ ಸುರಕ್ಷ ರಕ್ಷಿಸೆನ್ನನು ದೇವನೆ ೨
ಸುರಜನ ಸುಪೋಷ ಖರಹರ ಸುರೇಶ
ನಿರತವು ನಾ ನಿನ್ನ ನಮಿಸುವೆನೈ ಹರೇ ೩
ದಾನವಖಂಡನ ಧೇನುಪುರೀಶನೆ
ಮಾನವ ಪುಂಗವ ದೇವನೆ ಪೊರೆಯೈ ೪

 

ರವಿಕುಲಾಂಬುಧಿ ಸೋಮನೆ ಭುವನ ಪಾವನ ರಾಮನೆ ಪ
ಕವಿವರಾರ್ಚಿತ ಭೂಮನೆ ದಿವಿಜಸನ್ನುತ ನಾಮನೆ ಅ.ಪ.
ಕಂಡೆನು ದೇವಿಯ ಲಂಕೆಯೊಳು
ಚಂಡ ರಾವಣನುಪವನದೊಳು
ಚಂಡರಕ್ಕಸಿಯರ ಮಧ್ಯದೊಳು
ಚಂದ್ರ ಮಂಡಲಾಸ್ಯೆ ಇರುವಳು ೧
ಸುಂದರಿ ನಿನ್ನನು ಧ್ಯಾನಿಪಳು ಕುಂದುತ್ತ ಚಿತ್ತದಿ ಶೋಕಿಪಳು
ಮಂದ ಮಂದಮಾಗಿ ಕಣ್ಣೀರ
ಬಿಡುವಳು ಬಂಧನ ದೊಳಿರುವಳು೨
ಮಾಸಿದ ಸೀರೆಯನುಟ್ಟಿಹಳು ದೂಸರ ವೇಣಿಯ ಸುತ್ತಿಹಳು
ಭೂಷ ವಿಶೇಷದೊಳಾಸೆಯನಿಡಳುಪವಾಸವನೆ ಗೈವಳು ೩
ಕಾಮಿನಿ ತಾಪವ ಪೊಂದಿಹಳು
ತಾಮರಸಾಕ್ಷಿಯು ನೊಂದಿಹಳು
ಭಾಮೆಯು ಶ್ರೀರಾಮ ಭಾವದೊಳಿರುವಳು
ರಾಮ ರಾಮೆನ್ನುವಳು ೪
ಮಾನಿನಿ ಯೋಗಿನಿಯಾಗಿಹಳು
ಜ್ಞಾನ ವಿಜ್ಞಾನವ ಪೊಂದಿಹಳು
ಜಾನಕಿ ಪತಿ ಭಕ್ತಿದೇವಿಯಾಗಿರುವಳು ಧೇನುಪುರೀಶ ಕೇಳು ೫

 

ರಾಜ ಶಿರೋಮಣಿ ದಯಮಾಡೈ ಪ
ಕಾಲವಿಭೀತಿಯಿಂ ಬಾಲನು ಗೋಳಿಡೆ
ಶೂಲದೆ ಕಾಲನ ಸಂಹರಿಸಿದೆ ೧
ಕ್ಷೀರಾಭ್ದಿ ಮಧ್ಯದೊಳ್ ಹಲವು ಪುಟ್ಟಲು
ಲೀಲೆಯೊಳೆಲ್ಲವ ನೀಂಟಿದೆ ೨
ಕೈಲಾಸವಾಸ ಶೈಲಾಪ್ತ ಬಂಧುವೆ
ಬಾಲರಾಜಾಂಚಿತ ಭೂಷಣ ೩
ನಿರ್ಮಲರೂಪ ನಿಷ್ಕಲ ಸ್ವರೂಪ
ಬ್ರಹ್ಮಮಸ್ತಕ ಕಾಲರೂಪ ೪
ಫಾಲಾಕ್ಷದೇವ ಮಾಲಾ ಮನೋಹರ
ನೀಲಲೋಹಿತ ಧೇನುಭೂಪತೆ ೫

 

ರಾಮ ನಿನ್ನ ಭಜನೆಗೈಯುವೆ ಕಾಮಾರಿಮಿತ್ರ
ರಾಮ ನಿನ್ನ ಭಜನೆಗೈಯುವೆ ಪ
ರಾಮ ನಿನ್ನ ಭಜನೆಯನ್ನು ಪ್ರೇಮದಿಂದ ಮಾಳ್ಪ ಜನಕೆ
ಕಾಮಿತಾರ್ಥವಿತ್ತು ಸುಖವ ಪ್ರೇಮದಿಂದಕರುಣಿಸುವವನೆ ೧
ಜಾನಕಿಯರಮಣ ನಿನ್ನ ಧ್ಯಾನಮಾಳ್ಪೆನಯ್ಯ ಸತತ
ಸಾನುರಾಗದಿಂದ ಸಲಹು ಭಾನುವಂಶ ಜಲಧಿಚಂದ್ರ ೨
ಇಂದಿರೇಶ ನಿನ್ನ ಪಾದವಿಂದು ಪೂಜೆಗೈವೆ ನಾನು
ತಂದೆ ಸಲಹೊ ರಾಗದಿಂದ ಸುಂದರಾಂಗ ಸುಪ್ರಸನ್ನ ೩
ಹಾರ ಕುಂಡಲಾದಿಭೂಷ ಚಾರುಮಕುಟಧರಸುಶೋಭ
ಸಾರಸಾಕ್ಷ ರವಿಜವರದ ತೋರೋ ಮುಖವ ರಾಘವೇಂದ್ರ ೪
ರಾವಣಾದಿ ಸಕಲದನುಜ ಜೀವಹರಣ ರಘುಕುಲೇಶ
ಪಾವಮಾನಿ ಪೂಜಿತಾಂಘ್ರಿ ಧೇನುಪುರನಿವಾಸ ದೇವ ೫

 

ರಾಮ ಪೀಠಮಾಶ್ರಯ ಕಾಮಕೋಟಿ ಮೋಹನಾಂಗಕ ಶ್ರೀ ಪ
ಸೂರ್ಯಕುಲ ಮಾಲಿಕಾಮಣಿ ಆರ್ಯವಂಶ ದಿವ್ಯ ಮೌಕ್ತಿಕ ಶ್ರೀ ೧
ಇಂದು ವಂಶ ನಂದಿನೀಯುತ ಇಂದು
ಸುಂದರಾಸ್ಯ ರಾಘವ ಶ್ರೀ ೨
ವೈರಿವನ ದಾವಪಾವಕ ವೀರ ವರರಘು ನಂದನ ಶ್ರೀ ೩
ಭೂಮಿಸುತ ಪ್ರಾಣನಾಯಕ, ಮಾಮಿತಾರ್ಥ ಫಲದಾಯಕ ೪
ಭಾನು ಶತಕೋಟಿಭಾಸುರ ಧೇನುಪುರನಾಥ ಶ್ರೀಕರ ೫

 

ರಾಮರಘುಕುಲ ಲಕ್ಷ್ಮಣಾಗ್ರಜ ಸೋಮವಂಶಜಾಸಮೇಶ
ಪೊರೆಯೇ ಕರುಣದಿ ಪ
ಬ್ರಹ್ಮರುದ್ರರು ಹರಿಸುರೇಂದ್ರರು ಕರ್ಮವಶದಿ ನಿನ್ನ
ರೂಪಿನಿಂದ ಶೋಭಿಪರು ೧
ಸತ್ವಮೂರ್ತಿಯೆ ತತ್ವರೂಪಿಯೆ ನಿತ್ಯಹೃದಯ
ಕಮಲದಲ್ಲಿ ನಿನ್ನ ಭಾವಿಪೆ ೨
ತಾಟಕಾಂತಕ ಕೋಟಿಭಾಸ್ಕರ ಕೋಟಿರೂಪ ನಿನ್ನ
ಪಾದವನ್ನು ನಂಬಿದೆ ೩
ಕಮಲನೇತ್ರನೆ ವಿಮಲಗಾತ್ರನೆ ಕಮಲಮುಖವನು
ನೋಡಿ ನಾನು ಧನ್ಯನಾಗುವೆ ೪
ಪ್ರೀತಿವಚನದಿ ನೀತಿಯಿಂ ಭವಭೀತಿಯನ್ನು
ಧೇನುನಗರ ಪತಿಯೆ ಭಂಜಿಸೈ ೫

 

ಲಕ್ಷ್ಮೀಯುತ ನಾರಾಯಣ ಪಕ್ಷೀಶ ವಾಹನ
ಈಕ್ಷಿಸು ಪ್ರೇಮದೊಳೆನ್ನ ನೀಂ ಪ
ನಾರದ ಗಾನ ಭೂರಿ ವಿನೋದ ಸಾರಸ ಸನ್ನಿಭ
ಲೋಚನ ಶ್ರೀಶ ಶಾರದ ಚಂದ್ರಸಮ ಹಾರ ವಿಹಾರ ೧
ಸುಂದರ ಭುಜದಿಂ ಇಂದಿರೆ ತನುಮಂ ಅಂದದೊಳಪ್ಪುತ
ಮೋದವ ಪೊಂದಿ ವಂದಿತ ಜನ ಮನೋನಂದ ವಿನೋದ ೨
ಶ್ರೀವನಮಾಲಾ ಭಾವಿತಭಾವ ದೇವಚಿದಾತ್ಮ
ಜೀವಪ್ರಭಾವ ಶ್ರೀ ವಿಭವಾನ್ವಿತ ಪಾವನರೂಪ ೩
ದಾನವ ವೈರಿ ಜ್ಞಾನ ಸ್ವರೂಪ ಭಾನುಕರಾರ್ಪಿತ
ಭಾಮ ಯಶೋಧ ಧೇನುಕಪುರಪ್ರಿಯ ಗಾನ ಸ್ವರೂಪ ೪

 

ಲಾಲಿ ರವಿಕುಲಕಲಶಜಲಧಿವರ ಚಂದ್ರ ಲಾಲಿ ದಶರಥ
ತನಯ ರಘುರಾಮ ಚಂದ್ರ ಲಾಲಿ ಪ
ಕುಶಿಕಸುತವರ ಯಾಗರಕ್ಷಣ ಸುದೀಕ್ಷಾ ಪಶುಪತಿಸು
ಕೋದಂಡ ಖಂಡನ ಸುದೀಕ್ಷಾ
ಶಶಿವಂಶಜಾಹೃದಯ ಕಮಲ ಸುಮ ಮಿತ್ರಾ ಋಷಿ
ಪರಶುರಾಮ ಬಲವಿದಳನ ಚರಿತ್ರಾ ೧
ಸಾಕೇತನಗರಜನಸನ್ನುತ ಸುಮೂರ್ತೆ
ಕೈಕೆಯೀವರ ಯುಗಳ ಸಾರ್ಥಕ ಸುಕೀರ್ತೆ
ಲೋಕ ರಕ್ಷಣ ದಿವ್ಯ ಶರಚಾಪ ಸಾಕೇತ
ಮುಖ್ಯನುತವರ ಸುಪ್ರತಾಪ ಲಾಲಿ ೨
ದಂಡಕಾವನ ನಿವಹ ಸಂಚಾರಶೀಲ ಖಂಡಿತಾಮರ
ವೈರಿ ದುಷ್ಟ ಜನಜಾಲ
ಚಂಡಕಿರಣ ತನೂಜ ಮಂಗಳ ವಿನೋದ
ಪುಂಡರೀಕಾಕ್ಷ ಮುನಿ ಮಂಡಲಾ ಭಯದ ೩
ವಾತಾತ್ಮ ಜಾತ ಬಹು ವಿಕ್ರಮ ವಿಶೇಷ ಸೀತಾ
ಶಿರೋರತ್ನ ದರ್ಶನ ಸುತೋಷ
ಭೀತ ಸಾಗರ ಸೇತುಬಂಧನ ಸುಯತ್ನ ಧೂರ್ತ
ರಾಕ್ಷಸನಾಗ ಗಾರುಡ ಸುರತ್ನಾ ೪
ಧೃತ ವೈರಿ ದಶಕಂಠ ಕಂಠ ವಿಚ್ಛೇದ ಧೃತ
ಮೈಥಿಲೀನಯನ ವೀಕ್ಷಣ ವಿನೋದ
ವಿತತ ಶೌರ್ಯಾದಿ ಗುಣ ದಿವ್ಯ ಮಣಿ ಹಾರ
ನುತದೇವತಾ ನಿಚಯ ತಾಮರಸ ಮಿಹಿರ೫
ಮೌನಿಗಣವಿನುತ ಶ್ರೀ ಪಟ್ಟಾಭಿರಾಮ ಜ್ಞಾನದಾಯಕ
ದೇವ ಲೋಕಾಭಿರಾಮ
ಜಾನಕೀ ಸಹಿತ ಜಯ ಜಯ ವೀರರಾಮ ಧೇನುಪುರ
ದೇವಮಾಂ ಪಾಹಿ ಶ್ರೀರಾಮ ೬
ಜಯ ಮಂಗಳಂ ರಾಮ ಸುಗುಣಾಭಿರಾಮ ಜಯ
ಮಂಗಳಂ ರಾಮ ಲೋಕಾಭಿರಾಮ
ಜಯ ಮಂಗಳಂ ರಾಮ ಶ್ರೀರಾಮ ರಾಮ ಜಯ ಮಂಗಳಂ ರಾಮ ಧೇನುಪುರ ರಾಮ ೭

 

ವಂದಿಸುವೆ ನಂದಪುತ್ರ ಇಂದಿರಾಮನೋಹರ
ಇಂದಿರಾ ಮನೋಹರ ಪೂರ್ಣೇಂದು ಕೋಟಿ ಸುಂದರ ಪ
ನೀಲವಾರಿವಾಹಗಾತ್ರ ಲೋಲಚೇಲ ಭಾಸುರ
ಲೋಲ ಚೇಲಭಾಸುರ ವಿಲೋಲ ನೀಲಕುಂತಲ ೧
ದೇವ ದೇವಾಧೀಶ ಶೂರ ದೇವಕೀ ಪ್ರಿಯಂಕರ
ದೇವಕೀ ಪ್ರಿಯಂಕರ ವಿಭಾವನೈಕ ಗೋಚರ ೨
ಧೇನುಪುರ ವರವಿಹಾರಿ ಸೂನಭಾಣ ಜನಕನೆ
ಸೂನ ಭಾಣ ಜನಕನೆ ವಿನೋದ ವೇಂಕಟೇಶನೆ ೩

 

ವಂದಿಸುವೆ ಭಾರ್ಗವೀಶ ಸುಂದರಾಂಗ ಲೋಕಾಧೀಶ ಪ
ವಂದ್ಯಮಾನ ಪಾದಕಮಲ ಇಂದಿರಾ ಮನೋವಿಹಾರ ಅ ಪ.
ಅಷ್ಟಮೂರ್ತಿ ಕಷ್ಟಹರಣ ಕೃಷ್ಣಮೂರ್ತಿ ಶ್ರೀ ಕೇಶವ
ದುಷ್ಟದನುಜ ಕುಲವಿನಾಶ ಸೃಷ್ಟಿಪಾಲದೇವಾಧೀಶ ೧
ನಿನ್ನ ಪಾದವನ್ನು ಭಜಿಪೆ ಚೆನ್ನಕೇಶವ ಪಾಲಿಸೆನ್ನ
ಇನ್ನೂ ಭವದಿ ಶೋಕಗೊಂಬೆ ನಿನ್ನ ಹೊರತಿನ್ಯಾರ ಕಾಣೆ ೨

ಪುಟ್ಟ ಧ್ರುವಗೆ ಪಟ್ಟಗಟ್ಟಿ ದಿಟ್ಟತನದಿ ಪೊರೆದ ನೀನು
ಕಷ್ಟದಿಂದಜಾಮಿಳನು ಕೂಗೆ ಇಷ್ಟವರವ ನಿತ್ತೆ ದೇವ ೩
ಕಾನನದಿ ಸ್ನಾನಗೈದು ಜಪವ ಮಾಡಲಾರೆ ನಾನು
ಧೇನುನಗರ ಪತಿಯೆ ನಿನ್ನ ಧ್ಯಾನದಿಂದ ಜ್ಞಾನವೆಂದು ೪

 

ವಂದಿಸುವೆ ಸುಂದರಾಂಗ ನಿಜಸೌಂದರ್ಯಜಿತಾನಂಗ
ಬೃಂದಾರಕಾದಿ ಮುನಿ ಬೃಂದವಂದಿತ ಮುಕುಂದ
ಗೋವಿಂದ ನಂದ ಮೂರುತಿ ಹರೆ ಪ
ದೇವಾದಿ ಜೀವ ಸುಪ್ರಭಾವ ಭಾಸಿತ ಮುಖ
ದೇವಕೀ ವಸುದೇವ ಭಾವನಾ ಗೋಚರ ೧
ಹಾರಕುಂಡಲ ಮನ ಮಾಲಾವಿರಾಜಿತ
ಕ್ಷೀರಾಬ್ದಿ ಕನ್ಯಕಾ ಲೋಲಾ ಮುರಾಂತಕ೨
ಧೇನುನಗರ ಪರಿಪಾಲಕ ವೇಂಕಟೇಶ
ಸಾನುರಾಗದಿ ಪೊರೆ ಗಾನವಿನೋದ ಹರೆ ೩

 

ವರ ಹಿಮಧರ ತನುಜಾತೆಯ ಮಾತೆಯೆ
ಪರಮಶಿವಶಂಕರಿಯೆ ಪ
ತುರುಬಿನೊಳಿಹ ಸುರತರುಸುಮದರಳಂ
ಕರುಣಿಸು ಮಂಗಳೆಯೆ ಅ.ಪ.
ಪಂಕಜನಾಭಿಯೆ ಪಂಕಜಪಾಣಿಯೆ ಪಂಕಜಲೋಚನೆಯೆ
ಪಂಕಜಗಂಧಿಯೆ ಪಂಕಜವದನೆಯೆ ಶಂಕರಸುಂದರಿಯೆ ೧
ಗೌರಿಯೆ ಗಿರಿಜೆಯೆ ಕಾತ್ಯಾಯನಿಯೆ ಹೈಮವತೀಶ್ವರಿಯೆ
ಪಾರ್ವತಿ ಶಿವೆ ಪರಮೇಶ್ವರಿ ಶಂಕರಿ ಕಾಳಿಯೆ ಶಾಂಭವಿಯೆ ೨
ವಾದ ವಿದೂರೆಯೆ ಬೋಧನ ರೂಪೆಯೆ
ಮಾಧವ ಸೋದರಿಯೆ
ಭೂಧರವಾಸೆಯೆ ಶ್ರೀ ಲಲಿತಾಂಬೆಯೆ ರಾಜರಾಜೇಶ್ವರಿಯೆ ೩
ಸತ್ಯ ಚರಿತ್ರೆಯೆ ನಿತ್ಯ ಕಲ್ಯಾಣಿಯೆ ಭಕ್ತವತ್ಸಲೆ ವಿಜಯೆ
ಸತ್ಯ ಸಂಕಲ್ಪೆಯೆ ಸತ್ಯ ಚಿದ್ರೊಪೆಯೆ ನಿತ್ಯ ಸುಮಂಗಳೆಯೆ ೪
ದಾನವ ಭಂಜಿನಿ ಮೌನಿಸುರಂಜಿನಿ ಭಾನುಮಂಡಲ ರುಚಿರೆ
ಗಾನವಿನೋದಿನಿ ಧೇನುಪುರೀಶ್ವರಿ ಮಾನಿನಿ ಪಾಲಯಮಾಂ ೫

 

ವಾಣಿ ಮಂಗಳಂ ದೇವಿ ಪ
ಗೀರ್ವಾಣಿ ಕಮಲಪಾಣಿ ಭ್ರಮರವೇಣಿ ಕೀರವಾಣಿ ಅ.ಪ.
ಇಂದುವದನೆ ದೇವಿ ಚಂದ್ರಧವಳ ಸುಂದರಾಂಗಿ
ಕುಂದರದನೆ ಮಂದಗಮನೆ ೧
ವೀಣಾ ಪಾಣಿ ದೇವಿ ಶೋಣ ಬಿಂದು ದಶನ ವಸನೆ
ಏಣನಯನೆ ಧವಳ ವಸನೆ ೨
ಅಂಬುಜಾಕ್ಷಿ ದೇವಿ ಕುಂಭ ಸಂಭವಾದಿ ವಿನುತೆ
ಕಂಬುಕಂಠಿ ಶಂಭು ಸೋದರಿ ೩
ಶಾರದಾಂಬೆ ದೇವಿ ಅಂಬರೋಪಮಾನ ಮಧ್ಯೆ
ಜಂಭವೈರಿ ಗೀಯಮಾನೆ ೪
ಜ್ಞಾನರೂಪೆ ದೇವಿ ಮೌನಿ ಹೃದಯ ಕಮಲಹಂಸೆ
ಧೇನುನಗರ ಸನ್ನಿವಾಸೆ ೫

 

ಶಾಂಭವಿ ಶೈಲಜೆ ಅಂಬಿಕೆ ದೇವಿ
ಅಂಬುರು ಹಾಸನೆ ಪಾಲಿಸು ಪ್ರೇಮದಿ ಪ
ದಕ್ಷಸುಪುತ್ರಿ ಅಕ್ಷಯ ಪೂರ್ಣೆ
ರಾಕ್ಷಸನಾಶಿನಿ ಯಕ್ಷಸುಪೋಷಿಣೆ ೧
ದಿವ್ಯಸ್ವರೂಪೆ ಭವ್ಯಕಲಾಪೆ ಸ್ತವ್ಯ ಸ್ವರೂಪಿಣಿ ಗರ್ವ ವಿದಾರಿಣೆ ೨
ಕುಂಕುಮಶೋಭೆ ಸಂಕಟಹಾರಿಣಿ ಅಂಕದಿ
ಪಾಲಿಸು ಶಂಕರಿ ಗೌರಿ ೩
ನಿನ್ನನು ನಂಬಿದೆ ನೀರಜನೇತ್ರೆ ಮನ್ನಿಸು
ಪ್ರೇಮದಿ ಸ್ವರ್ನಸುಗಾತ್ರಿ ೪
ಮಾನಿನಿವಂದಿತೆ ಗಾನವಿಲೋಲೆ
ಧ್ಯಾನವಗೈಯುವೆ ಧೇನುಪುರೀಶೆ ೫

 

ಶ್ಯಾಮಸುಂದರಿ ಭೂಮಿನಂದಿನಿ ರಾಮಸುಂದರಿ ಸೀತೆಯೆ ಪ
ಪ್ರೇಮದಿಂದ ದಿವ್ಯ ಪೀಠಕೆ ಭಾಮಿನಿಯೆ ಬಾ ಪ್ರಿಯೆ ಅ.ಪ.
ದೇವ ಸುಂದರಿಯರು ಸೇರಿ ದೇವಿ ನಿನ್ನ ಕರೆವರು
ದೇವ ವೃಂದವು ನಿನ್ನ ಸ್ಮರಿಸಿ ಭಾವಿಸುತ್ತಲಿರುವರು ೧
ಮಂದಗಮನೆ ಸುಂದರಾಂಗಿ ಮಂದಹಾಸ ಶೋಭಿತೆ
ಚಂದ್ರಬಿಂಬ ಸದೃಶವದನೆ ಚಂದ್ರವಂಶ ನಂದಿನಿ ೨
ಕಮಲಪಾಣಿ ಭ್ರಮರ ವೇಣಿ ಸುಮ ಸುಮಾಲಿ ಕಾಯುತೆ
ವಿಮಲ ವಾಣಿ ರಮಣಿ ತರುಣಿ, ಸುಮನ ಕೀರವಾಣಿಯೆ ೩
ಮಾನಿನಿ ಶಿರೋಮಣಿಯೆ ಧೇನುನಗರ ವಲ್ಲಭೆ
ಜಾನಕಿಯೆ ಸನ್ನುತೆಯೆ ಮೌನಿ ಬೃಂದವಂದಿತೆ ೪

 

ಶ್ರೀ ಕಂಠಕಾಮಿನಿ ಲೋಕೇಶಪಾಲಿನಿ ನಾಕೇಶವಂದಿತೆ
ಭೂಕಾಂತ ಸೋದರಿ ಪ
ರಾಜಮರಾಳೀ ಸೋಜಿಗಗಮನೇ
ರಾಜೀವನೇತ್ರೇ ರಾಜರಾಜಾರ್ಚಿತೆ ೧
ಶ್ಯಾಮಲರೂಪಿಣೆ ಕೋಮಲಾಲಾಪಿನಿ
ಕಾಮಸುಂದರಿ ಕೋಟಿ ಭಾಸಿತ ಗಾತ್ರೆ ೨
ನಿತ್ಯವು ವಂದಿಪೆ ನಿತ್ಯದಾಯಕಿ ದೇವಿ
ಸತ್ವವಿಜಿತ ದೈತ್ಯ ಸರ್ವಸಂಹಾರಿಣಿ ೩
ಮಂಗಳದಾಯಕಿ ಮಂಗಳ ಮಹಿಮೆಯೆ
ಮಂಗಳಂ ಜಯ ಗೌರಿ ಮಂಗಳಂ ಪಾರ್ವತಿ ೪
ಈಶ ಹೃದಯ ರೂಪೆ ಪಾಶವಿದಾರಿಣಿ
ಶ್ರೀಶ ಸಹೋದರಿ ಧೇನುಪುರೀಶ್ವರಿ ೫

 

ಶ್ರೀ ರಾಮಭಕ್ತಾಯ ಶುಭ ಮಂಗಳಂ
ವೀರಾಂಜನೇಯಾಯ ಜಯ ಮಂಗಳಂ ಪ
ಅಂಜನಾತನಯಾಯ ಕಂಜದಳನೇತ್ರಾಯ
ಮಂಜೀರ ಮಣಿ ಪುಂಜ ರಂಜಿತಾಯ
ಸಂಜೀವನಾಹರಣ ಸಂಜನಿತ ಹರ್ಷಾಯ ಮಂಜುಳ
ಶುಭಾಂಗಯ ಮಂಜುಳಾಯ ೧
ಅಕ್ಷಾದಿ ದೈತ್ಯಕುಲ ಶಿಕ್ಷಣ ಸುದಕ್ಷಾಯ
ಲಕ್ಷ್ಮಣ ಪ್ರಾಣ ಸಂರಕ್ಷಣಾಯ
ಋಕ್ಷವಾನರ ಪಕ್ಷರಕ್ಷಣ ಸುದೀಕ್ಷಾಯ ಪಕ್ಷೀಂದ್ರ
ಗಂಧವಹ ಗತಿ ಲಕ್ಷಿತಾಯ ೨
ಪಂಚ ಭೃಂಗಾವಳಿ ಪಂಚತಾಕರಣದೈತ
ಪಂಚಾನನಾದಿ ಮುಖ ಪಂಚಕಾಯ
ಪಂಚ ಪಂಚ ಭುಜಾಯ ಪಂಚಯುಗ ನಯನಾಯ
ಪಂಚತಾಪ ಹರಾಯ ಪಂಚಾಕ್ಷರಾಯ ೩
ನವಕೋಟಿ ಕಂದರ್ಪ ನವಮೋಹನಾಂಗಾಯ
ನವವರವ್ಯಾಕರಣ ನವಪಂಡಿತಾಯ
ನವಪಂಚ ಮಂತ್ರಗತ ನವಪಂಚವರ್ಣಾಯ
ನವಪಂಚಕೋಟಿ ಯೂಧಪ ಸೇವಿತಾಯ ೪
ಸುಂದರಾಕಾರಾಯ ಸುಂದರ ಸುಭಾಷಾಯ ಸುಂದರ
ಮಹಾಕಾಂಡ ಬೃಂದಾರಕಾಯ
ಗಂಧರ್ವ ಗರ್ವಹರ ಗಂಧರ್ವ ಗಾನಾಯ
ಗಂಧರ್ವವೇದೇಷು ಘನ ಪಂಡಿತಾಯ ೫
ಸರ್ವದೇವ ಮಯಾಯ ಸರ್ವಲೋಕ ಹಿತಾಯ
ಸರ್ವಮಂತ್ರಾವಳೀ ಸನ್ನುತಾಯ
ಸರ್ವಮಂತ್ರ ಗತಾಯ ಸರ್ವಜನ ಪೂಜ್ಯಾಯ
ಸರ್ವಭೀತಿ ಹರಾಯ ಸರ್ವಾತ್ಮಕಾಯ ೬
ಕೋಟಿ ರವಿ ಸಂಕಾಶವರ ಕೋಟೀರಹಾರಾಯ ಕೋಟಿ
ಶತಕೋಟಿ ಭಯವರ್ಜಿತಾಯ
ಪಾಟಿತಾಶ್ರಿತ ಕೋಟಿ ಕೋಟಿಸಂಕಷ್ಟಾಯ
ಬೇಟೆರಾಯಾಖ್ಯ ದೀಕ್ಷಿತ ರಕ್ಷರಾಯ ೭
ವರಧೇನುಪುರಮಧ್ಯ ವಿದ್ಯೋತಮಾನಾಯ ಸುರಧೇನು
ದ್ವಿಜವೃಂದ ಪಾಲನಾಯ
ಪರಮಾವತಾರಾಯ ಪರಶಕ್ತಿ ರೂಪಾಯ ಪರಮಂತ್ರ
ಪರಯಂತ್ರ ವಿದ್ವಂಸಕಾಯ ೮

 

ಶ್ರೀ ವಿಷ್ಣು ಮೋಹಿನಿ ರೂಪ ತಾಳಿದನು ಸುಕಲಾಲಾಪ ಪ
ಸುರದಾನವಗಣ ಸುಧೆಯನು ಕಡೆಯಲ್
ದುರುಳ ರಕ್ಕಸರು ಸುಧೆಯನು ಬಯಸೆ
ಕರೆಕರೆಗೊಳ್ಳುತ್ತಮರರು ನಿಲ್ಲೆ ಕರೆದವು
ಮಿಂಚಿನ ಥರ ಥರ ರಾಶಿ ೧
ಥಳುಕುತಬಂದಳ್ ಕಮಲಾಂಬಿಕೆಯು
ನಳಿದೋಳ್ಗಳ ಕಂಕಣ ರವಮಿಳ್ಳೆ
ಚಳಕಿನ ಸೀರೆಯ ನೂಲಿಸುತ ರಮಣಿ ಚಲುವಿಂದಲ್
ಬಂದಳು ಸುಂದರಿಯು ೨
ಕುಂಕುಮ ರಂಜಿತ ಫಾಲವಿಶಾಲ ಅಂಕ
ದೊಳೊಪ್ಪಿದ ಕದಳೀಸಾರ
ಪಂಕಜದಂತಿಹ ಮುಖ ಸುವಿಲಾಸ
ಸಂಕರ್ಷಣ ಶ್ರೀಹರಿಯ ವಿಲಾಸ ೩
ಶಿರದೊಳ್ಮೆರೆಯುವ ರತ್ನಾಭರಣ ವರ ಕಂಧರದೊಳ್ಮುಕ್ತಾಭರಣ
ನೆರೆ ಬಾಹುಗಳೊಳ್ ಭುಜಕೀರ್ತಿಗಳು
ಸುರುಚಿರ ಹಸ್ತದಿ ಕಂಕಣ ಧಾಟಿ೪
ವಿರಚಿತ ಜಘನದಿ ಕಾಂಚಿಕಲಾಪ ಕರಧೃತ
ಚಾಮರ ಬೆರಳಿನೊಳೊಪ್ಪುತ
ಕರೆದಳು ಮನ್ಮಥ ಮೋಹದ ಮಳೆಯಂ ೫
ನೋಡುತ ರಕ್ಕಸ ಪಾಳಿಗಳಾಗ ಕೂಡಿದ
ಮೋಹವ ಪೊಂದಲು ಬೇಗ
ಸುಂದರಿ ಬೆಳಕಿನ ಮಿಂಚುಗಳ್ಕೆದರೆ ಅಂದದ
ಕಂಗಳ ಢಾಳವು ಪೊಳೆಯೆ ೬
ಚಂದ್ರ ಕಿರಣ ಸೂಸಿದವೊಲ್ಮೆರೆಯೆ ಕುಂದ
ಸುಮಾಳಿಯ ಗುಂಪುಗಳೊರೆಯೆ
ಓಹೋ ಮೋಹ ವರ್ಷಾದಕಾಲ ಅಹವದೊಳ್ಮಾರನ ಕಡುಬಿಂಕ
ಊಹೆಗಳವೆ ಮೋಹಿನಿ ಸುಳಿದಾಟ ಸಾಹಸಿಗರು
ನೊಂದರು ಮನದೊಳಗೆ ೭
ಅಂಗನೆ ಲಾವಣ್ಯಾಂಬುಧಿಯೊಳಗೆ
ಭಂಗಿತರಾದರು ನೀಚರು ಭರದಿಂ
ಅಂಗಜ ಬಾಣದಿ ಮೋಹವಗೊಳ್ಳೆ
ಪೊಂಗೊಡದಲಿ ಸುಧೆಯನು
ನೋಡುತ ಕಂಗಳ ನಲವಿಂದೊಪ್ಪಿಸಿ ಪಿಡಿಯೆ ಶೃಂಗಾರದ
ಬೆಡಗಿನ ಸೈವರಿಯೆ ೮
ದೇವನೆ ಪಾಲಿಸು ಭಾವಜ ಜನಕ ಕಾವವ
ನಿರ್ಜರ ಜೀವವನೆಲ್ಲ
ಗೋವಿಂದಾಚ್ಯುತ ಪಾಹಿ ಮುರಾರೆ ರಾವಣಹರಣ
ರಕ್ಷಿಸು ಎಂದೆನಲು ೯
ಧೇನುನಗರ ಪತಿ ಶ್ರೀಪತಿಯಾಗ ಮಾನಸಹಿತ
ನೀ ದೇವತೆಗಳಿಗೆ
ದಾನವಗೈದು ಪೀಯೂಷವನೆಲ್ಲ
ಮಾನವಗೈದನು ನಿರ್ಜರರ್ಗೆಲ್ಲ ೧೦

 

ಶ್ರೀಕಾಂತ ನಿನ್ನ ನಂಬಿದೆ ನಾಕೇಶವಂದ್ಯ ಪ
ಸಾಕೇತಪುರ ನಿವಾಸ ಲೋಕಕಂಟಕ ಹರಣ ಅ.ಪ.
ಪಂಕ್ತಿಸ್ಯಂದನ ಚಿತ್ತ ಪಂಕೇರುಹಾರ್ಕರೂಪ
ಪಂಕ್ತಿಕಂಧರ ಹರಣ ನಾಕೇಶವಂದ್ಯ ೧
ಸೀತಾ ಹೃದಯಪ್ರಿಯ ವಾತತನಯ ಸೇವ್ಯ
ಭೀತಾರ್ತಿ ವೀತಿಹೋತ್ರನೆ ನಾಕೇಶ ವಂದ್ಯ ೨
ಮಂಗಳ ರೂಪನೆ ಅಂಗಜಪಿತ ಹರೇ
ತುಂಗದಾನವ ಭಂಜನ ನಾಕೇಶವಂದ್ಯ ೩
ಕೋದಂಡ ಖಂಡಿತಾರೇ ಭೇದ ವಿವರ್ಜಿತ
ನಾದ ವಿನೋದ ಸುಖದ ನಾಕೇಶ ವಂದ್ಯ ೪
ಭಾನುವಂಶಜ ದಿವ್ಯ ಜಾನಕೀ ವಲ್ಲಭ
ಧೇನುನಗರಪತಿಯೆ ನಾಕೇಶವಂದ್ಯ ೫

 

ಶ್ರೀತುಳಸಿ ಜಯ ತುಳಸಿ ಜಯ ಜಯ ತುಳಸಿ
ಶ್ರೀರಾಮ ತುಳಸಿವರ ಶ್ರೀಕೃಷ್ಣ ತುಳಸಿ ಪ
ನಿನ್ನ ಪಾದವು ಚತುರ್ಮುಖನ ಭಾಗವು ದೇವಿ
ನಿನ್ನ ಮಧ್ಯವು ಹರಿಯ ಭಾಗವಾಗಿಹುದು
ನಿನ್ನ ತುದಿ ಕೈಲಾಸನಾಥ ಶಿವ ಭಾಗವು
ನಿನ್ನ ಮೈಯೊಳು ಸಕಲ ದೇವತೆಗಳಿಹರು ೧
ಗಂಗೆ ಗೋದಾವರಿಯು ತುಂಗಭದ್ರೆಯು ಯಮುನೆ
ಮಂಗಳ ತರಂಗಿಣಿಯು ಶ್ರೀ ಕೃಷ್ಣವೇಣಿ
ರಂಗನಾಥ ಸಮೇತ ದಿವ್ಯ ಕಾವೇರಿಯು
ಮಂಗಳೆಯೆ ನಿನ್ನಾವಾಸವಾಗಿಹರು ೨
ಕಾಶಿ ಕಂಚಿಯು ಮಧುರೆ ನೈಮಿಷ ಹರಿದ್ವಾರ
ಭಾಸುರದ ಗೋಕರ್ಣ ದ್ವಾರಕಾವತಿಯು
ಶ್ರೀಶೈಲ ಹಿಮವಂತ ಸರ್ವ ಸುಕ್ಷೇತ್ರಗಳು
ಭಾಸಮಾಗಿರುತಿಹವು ನಿನ್ನ ನೆರಳಿನಲಿ ೩
ನಿನ್ನ ಬೃಂದಾವನವೆ ವೈಕುಂಠ ಕೈಲಾಸ
ನಿನ್ನ ತೀರ್ಥವೆ ಸಕಲ ಪುಣ್ಯತೀರ್ಥ
ನಿನ್ನ ದರ್ಶನವೆಲ್ಲ ದೇವತಾ ದರ್ಶನವು
ನಿನ್ನ ಪೂಜೆಯೆ ಸಕಲ ದೇವತಾ ಪೂಜೆ ೪
ನೀನಿರುವ ದೇಶದಲಿ ರೋಗಗಳ ಭಯವಿಲ್ಲ
ನೀನಿರುವ ದೇಶದಲಿ ಪಾಪ ಭಯವಿಲ್ಲ
ನೀನಿರುವ ದೇಶದಲಿ ಯಮನ ಭಯವಿಂತಿಲ್ಲ
ನೀನಿರುವ ದೇಶದಲಿ ಭೂತ ಭಯವಿಲ್ಲ ೫
ಗಂಧ ಪುಷ್ಪವು ಧೂಪ ದೀಪ ನೈವೇದ್ಯದಿಂ
ವಂದಿಸುತ ನಿನ್ನ ನಾಂ ಪೂಜೆಗೈಯುವೆನು
ಇಂದಿರೆಯ ಸೌಭಾಗ್ಯ ಸಂತತಿಯ ನೀನಿತ್ತು
ಮುಂದೆ ಪಾಲಿಸು ಭಕ್ತಿ ಮುಕ್ತಿ ಸಂಪದವಂ೬
ಜಯ ಮಂಗಳಂ ತುಳಸಿ ಸರ್ವಮಂಗಳೆ ದೇವಿ
ಜಯ ಮಂಗಳಂ ತುಳಸಿ ಮುರಹರನ ರಮಣಿ
ಜಯ ಮಂಗಳಂ ತುಳಸಿ ಲೋಕಪಾವನೆ ಮೂರ್ತಿಜಯ ಮಂಗಳಂ ತುಳಸಿ ಧೇನುಪುರ ದೇವಿ ೭

 

ಶ್ರೀಶ ಪಾಲಿಸೊ ಹರೆ ಶ್ರೀಶ ಪಾಲಿಸೊ ಕೇಶವ
ಚಿತ್ತದ ಕ್ಲೇಶವ ಭಂಜಿಸಿ ವಾಸುದೇವನೆ ದಯದಿ ಹರೆ ಪ
ಇಂದಿರಾವದನಾರವಿಂದ ಭಾಸ್ಕರ ಕುಂದರದನ ವದನ ಹರೆ ೧
ರಾವಣ ಖಂಡನ ಭಾವಜ ಜನಕನೆ
ಪಾವನ ಮೂರುತಿಯೆ ಹರೆ ೨
ಚಿನ್ಮಯ ರೂಪನೆ ಬ್ರಹ್ಮಕಾರಣಗುಣ ನಿರ್ಮಲ ನಿರ್ಗುಣನೆ ಹರೆ ೩
ಯೋಗಿ ಹೃತ್ಕಮಲ ವಿಯೋಗರಹಿತ ಹರಿ
ಭೋಗಿ ಭೂಷ ನುತನೆ ಹರೆ ೪
ಧೇನುನಗರ ಪತೆ ಜ್ಞಾನಿ ವೇಂಕಟಪತೆ
ಧ್ಯಾನವ ಗೈಯುವೆನೈ ಹರೆ ೫

 

ಸರಸೀರುಹಾಕ್ಷಿಯ ಕರೆದರಾ ಸೀತೆಯ ಪ
ಪರಶಕ್ತಿ ರೂಪೆಯ ಪರತತ್ವ ಮೂರ್ತಿಯ
ಪರಮಕಲ್ಯಾಣಿಯ ಕರೆದರಾ ಸೀತೆಯ ೧
ಭೂಮಿನಂದಿನಿಯ ರಾಮ ಸುಂದರಿಯ
ಭಾಮಿನಿ ದೇವಿಯ ಕರೆದರಾ ಸೀತೆಯ೨
ಮೌನೀಶ ವಂದ್ಯೆಯ ಜ್ಞಾನ ಸುಂದರೀಯ
ಧೇನುಪುರೀಶೆಯ ಕರೆದರಾ ಸೀತೆಯ ೩

 

ಸಲಹೈ ಸೀತಾಪತೆ ಲೋಲ ಮುಕ್ತಾಫಲ
ಹಾರಶೋಭಿತ ಮುಖ
ತೋರೋ ಗುಣಾಕರ ಸಾರಸ ಲೋಚನ ಪ
ಇಂದು ವಂಶಜಾ ದಿವ್ಯ ಕಂಧರದಲಿ
ತೋರ್ಪ ಸುಂದರ ಬಾಹುಯುಗ
ಕಂದರ್ಪ ಶತಕೋಟಿ ಸುಂದರ ವಿಗ್ರಹ ಮಂದಹಾಸದಿ
ಬಂದು ಕಂದನ ಪೊರೆಯೈ ೧
ಪಂಕಜಾಸನ ಮುಖ್ಯ ಶಂಕರಪೂಜಿತ ಸಂಕಟ ಪರಿಹರಿಸೈ
ಲಂಕಾಪತಿಯ ತಮ್ಮ ನಂಕವ ಪೊಂದಲು
ಶಂಕೆಯಿಲ್ಲದೆ ಸ್ಥಿರ ಲಂಕಾ ರಾಜ್ಯವನಿತ್ತೆ ೨
ಜನನ ಮರಣಗಳ ಘನಪರಿವಾಹದಿ ನೆನೆದು ಶೋಕಿಪೆ ದೇವನೆ
ವನರುಹ ಲೋಚನ ತವತಾರಕ ಮಂತ್ರವ
ವಿನಯದೊಳೀವುದೈ ಧೇನು ಪುರಪತೆ ೩

 

ಸುಂದರಿಯರು ಅಂದದಾರತಿ ಬೆಳಗಿ
ಕುಂದರದನ ದಿವ್ಯ ಮಂದಸುಹಾಸೆಗೆ ಇಂದಿರಾಪತಿ ಹರಿಗೆ ಪ
ಅಂಗಜಪಿತಭವ ಭಂಗ ನಿರ್ಮಲ ಗುಣ ಸಂಗರಹಿತ ಹರಿಗೆ ೧
ವೇದಗೋಚರ ಬಹು ವಾದ ದುರ್ಲಭ
ಮಹಿಮ ನಾದ ವಿನೋದ ಹರಿಗೆ ೨
ಪೀತಾಂಬರಾಚ್ಯುತ ಧಾತೃಕಾರಣ ನಿಜ ವಾತ್ಸಲ್ಯ ಭಕ್ತ ಹರಿಗೆ ೩
ಜಂಭಾರಿ ಸೋದರ ಗಂಭೀರದಾಕಾರ ಸ್ತಂಭ ತನುಜ ಹರಿಗೆ ೪
ಮಾನವಿವರ್ಜಿತ ಮಾನವಪೂಜಿತ ಧೇನುನಗರ ಹರಿಗೆ ೫

 

ಹಸಗೆ ಬಾ ಬಿಸಜಾಕ್ಷಿಯೆ ಕುಸುಮ ಗಂಧಿನಿ ಸೀತೆಯೆ ಪ
ಮಂಜೀರ ಭೂಷೆಯೆ ಮಂಜುಸುವಾಣಿಯೆ
ಕಂಜನಾಭ ರಾಮ ಭಾಮೆಯೆ ಮಂಜುಳಾಂಗಿಯೆ ೧
ಅಂಬುಜಪಾಣಿಯೆ ಅಂಬುಜನಾಭಿಯೆ
ಬಿಂಬಫಲ ಸದೃಶಾನನೆ ಕಂಬುಕಂಧರೆ ೨
ಕ್ಷೋಣೀಷ ಸನ್ನುತೆ ವಾಣೀಶ ವಂದಿತೆ
ಏಣ ನೇತ್ರೆ ಶ್ರೀರಾಮ ಸುಪ್ರಾಣನಾಯಕಿ ೩
ಸುರರಚಿರ ಕುಂತಲೆ ಪರಿಜನ ವತ್ಸಲೆ
ನಿರುಪಮ ವಾಣಿಸುನ್ನುತೆ ಪ್ರಣವಾಂಚಿತೆ ೪
ಮೌನೀಶ ವಂದ್ಯೆಯ ಮಾನವ ಸೇವ್ಯಯೆ
ಧೇನುಪುರಿಕಾಂತ ಸುಪ್ರಿಯೆ ರಾಮವಲ್ಲಭ ೫

 

ಈ ಸೊಬಗನಿನ್ನ್ಯಾವ ದೇವರೊಳು
ಈ ಸೊಬಗನಿನ್ನ್ಯಾವ ದೇವರೊಳು ಕಾಣೆ
ಈಶ ಪರಮೇಶ ಜಗದೀಶ ಶ್ರೀ ಶಿವನ ಪ
ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ
ಬಂಧುತ್ವದಲಿ ವಿಷ್ಣು ಸೋದರಿಯ ರಮಣ
ಅಂದ ಚಂದದಿ ನೋಡೆ ಸುಂದರೇಶ್ವರನಿವನು
ಚಂದ್ರ ನಾಗಾಭರಣ ಲೋಕ ಶಂಕರನು ೧
ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು
ಯೋಗದಲಿ ಯೋಗೇಶ ಯೋಗ ಭಾವಿತನು
ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ
ನೈಗಮದಿ ತಿಳಿಯೆ ತಾಂ ನಿಗಮ ಗೋಚರನು ೨
ವೀರತನದೊಳಗಿವನು ತ್ರಿಪುರ ಸಂಹಾರಕನು
ಧೀರತನದೊಳಗಿವನು ಮದನವಿಧ್ವಂಸಿ
ಸಾರತನದೊಳಗಿವನು ಶ್ರೀ ಮಹಾದೇವನು
ಕಾರಣಕೆ ಕಾರಣನು ಜಗದಾದಿ ಗುರುವು ೩
ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು
ಪಟ್ಟಣವು ರತ್ನ ರಜತಾದ್ರಿಯಾಗಿಹುದು
ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ
ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು ೪
ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು
ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು
ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು
ಎಲ್ಲಿ ನೋಡಲು ಧೇನುಪುರನಾಥ ಶಿವನು ೫

 

ಹಾಡಿನ ಹೆಸರು :ಈ ಸೊಬಗನಿನ್ನ್ಯಾವ ದೇವರೊಳು
ಹಾಡಿದವರ ಹೆಸರು :ಶೀಲಾ ಎಂ. ಎಸ್.
ಸಂಗೀತ ನಿರ್ದೇಶಕರು:ಶಂಕರ ಶಾನುಭೋಗ
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಏಕೆ ನಿದರ್ಯವೊ ಓ ರಾಮ
ಏಕೆ ನಿರ್ಧಯವೊ ಓ ರಾಮ ಶ್ರೀ ರಘುರಾಮ ಪ
ಸ್ಮರಿಸಿ ಸ್ಮರಿಸಿ ನಾನು ಕರಗಿ ಬೆಂಡಾದೆನೊ
ಕರುಣವಿಲ್ಲವೆ ನಿನಗೆ ಶ್ರೀ ರಘುರಾಮ
ಕರುಣವಿಲ್ಲವೆ ನಿನಗೆ ೧
ಪಾವನ ಚರಿತನೆ ಪಾವನ ಮಹಿಮನೆ
ಪಾವನ ರೂಪನೆ ಬಾ ಶ್ರೀ ರಘುರಾಮ
ಪಾವನ ರೂಪನೆ ಬಾ ೨
ಮೌನೀಶ ವಂದ್ಯನೆ ಮಾನವ ಸೇವ್ಯನೆ
ಧೇನುಪುರೀಶನೆ ಬಾ ಶ್ರೀ ರಘುರಾಮ ಧೇನುಪುರೀಶನೆ ೩

 

ಹಾಡಿನ ಹೆಸರು :ಏಕೆ ನಿದರ್ಯವೊ ಓ ರಾಮ
ಹಾಡಿದವರ ಹೆಸರು :ಶೀಲಾ ಎಂ. ಎಸ್.
ಸಂಗೀತ ನಿರ್ದೇಶಕರು :ಶೀಲಾ ಎಂ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನರಸಿಂಹ ಮಂತ್ರವೊಂದಿದು ಸಾಲದೆ
ನರಸಿಂಹ ಮಂತ್ರವೊಂದಿದು ಸಾಲದೆ
ದುರಿತಕೋಟಿಗಳ ತಾಂ ಪರಿಹರಿಸುವುದಕೆ ಪ
ಭೂತ ಬೇತಾಳಗಳ ನಿಗ್ರಹಿಸುವೀ ಮಂತ್ರ ಪಾತಕ
ಗೃಹ ಬೃಂದ ಬಂಧನದ ಮಂತ್ರ
ಕಾತರವ ವಿಧ್ವಂಸ ಗೈಯುತಿಹ ವರ ಮಂತ್ರ
ಮಾತೆಯಂದದಿ ಪಾಲಿಸುತ್ತಲಿಹ ಮಂತ್ರ ೧
ನಿತ್ಯ ಸಂಪದವಿತ್ತು ರಕ್ಷಿಸುವುದೀ ಮಂತ್ರ ಶಕ್ತಿ ಸೌಖ್ಯವ
ಮುದವ ಕರುಣಿಸುವ ಮಂತ್ರ
ಭಕ್ತಿ ಸೌಭಾಗ್ಯ ಪರಮಾಯವೀಯುವ ಮಂತ್ರ ಸತ್ಯ
ನಿರ್ಮಲ ಮನವನಾಗಿಸುವ ಮಂತ್ರ ೨
ಮೃತ್ಯು ಮುಖದಿಂದತ್ತಿ ಮುದ್ದಿಸುವುದೀ ಮಂತ್ರ
ಸತ್ವಗುಣವನು ಪೆರ್ಚಿಸುತ್ತಲಿಹ ಮಂತ್ರ
ಭಕ್ತರನು ವಾತ್ಸಲ್ಯದಿಂದ ಸಲಹುವ ಮಂತ್ರ ಅತ್ಮಾದರದಿ
ಬಿಡದೆ ಜೊತೆಯೊಳಿಹ ಮಂತ್ರ ೩
ಈ ಮಂತ್ರ ಮಹಿಮೆಯನು ಪ್ರಹ್ಲಾದ ತಾ ಬಲ್ಲ ಸ್ವಾಮಿ
ಶಂಕರ ಪದ್ಮಪಾದ ಲಕ್ಷ್ಮೀಯರು
ಪ್ರೇಮದಿಂ ಜಪಗೈವ ವರದೀಕ್ಷಿತಂ ಗರಿವು ಭೂಮಿಯೊಳಗೀ
ಮಂತ್ರ ಸರ್ವ ಸಾಧನವು ೪
ಮಂಗಳಂ ಲಕ್ಷ್ಮೀಶ ನರಸಿಂಹ ದೇವರಿಗೆ ಮಂಗಳಂ ಭಕ್ತಾರ್ತಿ
ನಾಶ ಮುರಹರಗೆ
ಮಂಗಳಂ ಯೋಗೀಶ ಪುಂಡರೀಕಾಕ್ಷನಿಗೆ ಮಂಗಳಂ
ಧೇನುಪುರ ಕೃಷ್ಣ ವಿಷ್ಣುವಿಗೆ ೫

 

ಹಾಡಿನ ಹೆಸರು :ನರಸಿಂಹ ಮಂತ್ರವೊಂದಿದು ಸಾಲದೆ
ಹಾಡಿದವರ ಹೆಸರು :ರವಿಕಿರಣ್ ಜಿ.
ಸಂಗೀತ ನಿರ್ದೇಶಕರು :ಶೀಲಾ ಎಂ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *