Categories
ರಚನೆಗಳು

ಬೇಲೂರು ವೈಕುಂಠದಾಸರು

ಇದು ದಾಸರ ಬಗ್ಗೆ
(ಈ) ಆತ್ಮನಿವೇದನಾ ಕೃತಿಗಳು
೨೭
ಅಕಟಕಟ ಬಹಳ ಬಡತನವಡಸಿದುದೆ ನಿನಗೆ
ಅಕಳಂಕ ಚರಿತ ಹರಿಯೆ ಪ
ಪ್ರಕಟತನದಿಂ ಗೋದಾನಕ್ಕೆ ಕೈನೀಡುವರೇ
ಸುಖಮಯ ಶರೀರ ಚನ್ನರಾಯಾ ಅ.ಪ
ಹಿಂದೆ ಯಜ್ಞದಲಿ ಬಲಿಯಿತ್ತ ಭೂದಾನಕ್ಕೆ
ದಂದಿಗೆ ಸಾಲದಾಯಿತೆ
ಅಂದು ಕರ್ಣನು ಕೊಟ್ಟ ದಾನವನು ನೀ ಪಿಡಿದು
ದಂದಿಗೆ ಸಾಲದಾಯಿತೆ
ಇಂದು ನಿನ್ನಯ ದಾಸಾನುದಾಸನು ಕೊಟ್ಟ ಗೋದಾನ
ದೊಂದೊಂದು ಗೋಗಳಿಗೆಛಂದದಲಿ
ಒಂದೊಂದು ಶ್ರೀವೈಷ್ಣವ ರೂಪ ನೀನಾಗಿ
ನಿಂದು ದಾನವ ಕೊಂಡೆಯಾ ಸ್ವಾಮಿ ೧
ಉರದೊಳಗೆ ಅನವರತ ವಾಸವಾಗಿರುತಿಪ್ಪ
ಶರಧಿಸುತೆ ಕೈಬಿಟ್ಟಳೇ
ಬೆರೆತು ಪೋದುದೇ ಪಾಲ್ಗಡಲು ಮುನಿಸಿಕೊಂಡು
ಬರಡಾಯಿತೇ ಕಾಮಧೇನೂ
ತಿರುಕ ಹಾರುವನಂತೆ ಪರಿಪರಿಯ ದಾನಕ್ಕೆ
ಭರದಿ ಕೈ ಒಡ್ಡುತಿಹರೆ
ಪುರುಷೋತ್ತಮನೆಂಬ ಅಭಿಮಾನವಿನಿತಿಲ್ಲದೇ
ದೂರಿಗೊಳಗಾಗಬಹುದೆ ಸ್ವಾಮಿ ೨
ಇತ್ತ ದಾನದ ಗೋವುಗಳನೆಲ್ಲ ಗುಡಿಯೊಳಗೆ
ಮೊತ್ತದಿಂ ಕೂಡಿಕೊಂಡೂ
ಒತ್ತಿ ಮುದ್ರೆಯನು ನಾಮವನಿಟ್ಟು ಬಾಲಗಳಿ
ಗೆತ್ತಿ ಘಂಟೆಗಳ ಕಟ್ಟೀ
ಅರ್ಥಿಯಿಂ ತೋರಿಸಿ ಯೆನ್ನ ಕುಲಕೋಟಿಗಳಿ
ಗಿತ್ತೆ ಸುರಪದವನು
ಕರ್ತುೃ ವೈಕುಂಠ ವೇಲಾಪುರಾಧೀಶ್ವರನೇ
ಭೃತ್ಯನ್ನ ಕಾಯೊ ಸತತ ಸ್ವಾಮಿ ೩

 

ವೈಕುಂಠದಾಸರಲ್ಲಿ
(ಇ) ಗುರುಸ್ತುತಿಗಳು
೨೨*
ಅತಿಮಧುರವದನ ಪಂಕೇಜ ದ್ವಿಜರಾಜ ಶ್ರೀ
ಪತಿ ಪದಾಂಬುಜ ಮಧುಕರವಾದಿ ವಾದಿರಾಜಾ ಪ
ಸಾರತರವಹ ವೇದಶಾಸ್ತ್ರದರ್ಥಗಳ [ನೆಲ್ಲ
ಸೋರಿ] ಕ್ಕಿ ತದರ್ಥವನೆಲ್ಲ ಕೆಡಿಸೀ
ಧಾರುಣಿಯ ಜನರಮತಿಗುಂದಿಸುವ ಖಳ ಮತ್ತ
ವಾರಣ ಮೃಗೇಂದ್ರ ಭಳಿರೇ ವಾದಿರಾಜಾ ೧
[ಚರಿತ]ವರ್ಣ ಧರ್ಮಾಶ್ರಯಗಳೆನಿಪ ಯೀ
ಪರಿ ತಾರತಮ್ಯವನೆಲ್ಲ ಕೆಡಿಸೀ
ಧರೆಯ ಸುಜನರ [ಮೋಹಿ]ಸುವ ಶೂನ್ಯ ಜನನಿಕರ
ನಿರು[ತಪಾಲಿಪ] ಭಾಪುರೇ ವಾದಿರಾಜಾ ೨
ಮೃಡಮುಖ್ಯ ಸುರನುತ ಪದಾಂಭೋಜ ನಿಖಿಳ ಜಗ
ದೊಡೆಯ ವೈಕುಂಠ ಲಕ್ಷ್ಮೀ[ಕೇಶವ]
ಉಡುಪಿಯಧಿಪತಿಕೃಷ್ಣನಂಘ್ರಿ ಪಂಕೇರುಹವ
ವಿಡಿದೆ ದೃಢವಾಗಿ ಮಝರೇ ವಾದಿರಾಜಾ ೩

 

(ಆ) ಮಹಾಲಕ್ಷ್ಮೀ ಸ್ತುತಿಗಳು
೨೦
ಅರಿತು ಸಿಂಗರಮಾಡಿ ಅರಿತು ಸಿಂಗರ ಮಾಡಿ ಪ
ಅರಿತು ಸಿಂಗರಮಾಡಿ ಈ ರಮೆಯ ನೋಡೀ
ಗರುವ ಚೆನ್ನಿಗರಾಯ ಬರುತಿಹನೆ ಬೇಗಾ ಅ.ಪ
ಅಳಿಕುಂತಳೆಗೆ ನೋಡಲಲರ್ದ ಸಂಪಿಗೆ ಯೇಕೆ
ಚೆಲುವ ಜಾಜಿಯ ಕಮ್ಮಲರ ತುರುಬಿರಮ್ಮಾ
ಹೊಳೆವ ಚಂದಿರಮುಖಿಗೆ ವಳಿನವೇತಕೆ ಕೈಗೆ
ಅಲರ್ದ ನೈದಿಲೆ ಕುಸುಮವನೆ ಕೊಡಿರೆಯಮ್ಮಾ ೧
ಕೀರವಾಣಿಗದೇಕೆ ಜವ್ವಾಜಿ ಪರಿಮಳವು
ಚಾರುಕತ್ತುರಿ ಹದನ ಮಾಡಿರಲು ಮುನ್ನಾ
ತೋರ ಕುಚಗಿರಿಗಳಿಗೆ ವಜ್ರಭೂಷಣವೇಕೆ
ಹಾರವಿದೆ ತಂದಿರಿಸಿ ಮಂಜುಳವಿದೆನಿಸೀ ೨
ಲಾವಣ್ಯನಿಧಿಯೀಕೆ ಬೇರೆ ಸಿಂಗರವೇಕೆ
ತೀವಿದಂಗದಕಾಂತಿ ನಯನ ವಿಶ್ರಾಂತೀ
ಶ್ರೀವೇಲಪುರದಲ್ಲಿ ನೆಲಸಿಹ ಕರುಣದಿಂದ
ದೇವ ವೈಕುಂಠಕೇಶವನರಸಿಯೀಕೇ ೩

 

ಅ. ಶ್ರೀಹರಿಸ್ತುತಿಗಳು

ಉಯ್ಯಾಲೆಯ ನೀರಜೋದರನಾಡಿದಾ
ನಿಗಮಾಂತ ನಾರೀಜನರು ಪಾಡಲೂ ಪ
ಕರಪಾಣಿಪಲ್ಲವಗಳೂ ವದನ
ಸರಸಿರುಹ ನುಡಿ ಶುಕಪಿಕಗಳೂ
ಮೆರೆವ ಯೌವನದ ವಸಂತಾ ನಾದ ಶ್ರೀ
ಧರಣಿಯರ ಮಧ್ಯದಲ್ಲೀ೧
ದೆಸೆದೆಸೆಗೆ ಪ್ರಜ್ವಲಿಸುವಾ ನವರತುನ
ವೆಸೆವ ಮಿಸುನಿಯ ಹಲಗೆಗೆ
ಮಿಸುನಿ ಸರಪಣಿ ತಳ್ವಕೇ ಫಣಿಪ ಶೋ
ಭಿಸುವೊಡಲ ನೀಡು ಮಾಡೀ ೨
ಉಯ್ಯಾಲೆಯುಲಹಿಗಳುಕೀ ಸತಿಯರುರೆ
ಮೈಯನುರದಾ ಲೊರಗಿಸೀ
ವೈಯಾರದಿಂದಲಿಪ್ಪೇ ಸುಖ ಪುಳಕ
ಕೈಯೊಡನೆ ತನುವ ತೀಡೇ ೩
ಎಡದ ಧರಣಿಯ ನೋಡಲೂ ಬಲದ ರಮೆ
ಕಡುಮುನಿಯೆ ಸಂತವಿಸುತಾ
ಒಡನೆ ಭೂದೇವಿ ಮುನಿಯೇ ಮನ್ನಿಸುವ
ಸಡಗರದಿ ಜಗವ ಮೋಹಿಸೀ ೪
ಎಡದ ಕೈಯಿಂದಿಂದಿರೇ ಧರಣಿ ತಾ
ಪಿಡಿದು ಬಲಗೈಯಿಂದಲೇ
ಬಿಡದೆ ತಮ್ಮತ್ತ ಸೆಳೆಯೇ ಸಮ್ಮದದ
ಕಡಲ ಮಧ್ಯದಿ ಮುಳುಗುತಾ ೫
ಅರಿ ಶಂಖ ಕೌಮೋದಕೀ ಸರಸಿರುಹ
ವರಕರ ಚತುಷ್ಟಯಗಳೂ
ಮಿರುಪ ಕುಂಡಲ ಕಿರೀಟಾ ನಗೆಮೊಗದ
ಸುರರತಾತನ ಜನಕನೂ ೬
ಅಂಬುಜಾಂಘ್ರಿಯ ತಡೆಯದಾ ಪೊಂಬಣ್ಣ
ದಂಬರದ ಸಿರಿಯ ನಡುವಿನಾ
ಇಂಬಾದುರದ ಪದಕದಾ ಮನಹಾರ
ಕಂಬುಕಂಠದ ಚೆನ್ನಿಗಾ ೭
ಹರಿಯ ಮೈಸೋಂಕಿನಿಂದಾ ಶರೀರಗಳ
ಮರೆದು ಶ್ರೀ ಭೂಸತಿಯರೂ
ಸುರತರುವ ಬಿಗಿದಪ್ಪಿದಾ ಕಲ್ಪಲತೆ
ಗೊರೆವನ್ನಲು ಪರಿಶೋಭಿಸೀ ೮
ಹೂತ ಹೊಂಬಳ್ಳಿಗಳನೇ ತೊಡಿಗೆಯಿಂ
ಜೋತೊರಗುತಿಕ್ಕೆಲದಲೀ
ಶ್ರೀತರುಣಿ ಧರಣಿ ಮೆರೆಯೇ ವೈಕುಂಠ
ಪ್ರೀತ ಚನ್ನನಾಡಿದನುಯ್ಯಲಾ ೯

 

೧೪
ಎಚ್ಚರಿಕೇ ಭುವನಪಾವನಕೀರುತೀ ಪಾದ
ವೆಚ್ಚರಿಕೇ ಚೆನ್ನಕೇಶವಮೂರುತೀ ಪ
ಸರಸಿಜಭವಾಂಡವನೊಡೆದಚರಣ ಯೆಚ್ಚರಿಕೇ
ಸುರನದಿಯ ಪಡೆದ ಪದ ಯೆಚ್ಚರಿಕೇ
ಧರಣಿಯನಳೆದ ಪದಾಂಭೋಜಾತ ಯೆಚ್ಚರಿಕೇ
ಪರಮ ಮಂಗಳ ಪಾದಪದ್ಮ ಯೆಚ್ಚರಿಕೇ ೧
ಕಿಸಲಯೋಪಮಚರಣ ಯೆಚ್ಚರಿಕೇ ಮೃದುತರದ
ಕುಸುಮಕೋಮಲಚರಣ ಯೆಚ್ಚರಿಕೇ
ಋಷಿವಧೂಶಾಪಹರಣ ಯೆಚ್ಚರಿಕೇ
ಶಶಿಸೂರ್ಯತೇಜದಮಲಾಂಘ್ರಿ ಯೆಚ್ಚರಿಕೇ ೨
ಶಕಟಪ್ರಕಟನೋದ್ರ‍ಧತ ಚರಣ ಯೆಚ್ಚರಿಕೇ
ಶುಕವಂದ್ಯ ಶ್ರೀಚರಣ ಯೆಚ್ಚರಿಕೇ
ನಿಖಿಳ ಪ್ರಮೋದಕಾರಣ ಚರಣ ಯೆಚ್ಚರಿಕೇ
ಅಕಳಂಕ ವೈಕುಂಠನಾಥಪದ ಯೆಚ್ಚರಿಕೇ ೩

 

ಇದೂ ದಾಸರ ಬಗ್ಗೆ ಇನ್ನೊಂದು
೨೮
ಏನುಕಾರಣ ಯೆನಗೆ ತಿಳಿಯದಿದೇಕೋ
ನೀನುದ್ಧರಿಸುವುದಕೋ ಕೆಡಿಸುವುದಕೋ ಕೃಷ್ಣ ಪ
ಸುರರು ಹಬ್ಬವ ಕೆಡಿಸೆ ಸುರಪತಿಯು ಕೋಪದಲಿ
ಭರದಿಂದ ಕಲ್ಲು ಮಳೆಯನು ಕರೆಯಲಾಗ
ಕಿರುವೆರಳ ತುದಿಯಲ್ಲಿ ಗಿರಿಯ ನೀನಾಂತು ಹಗ
ಲಿರುಳೇಳು ದಿನ ಬೋವಿಗಳಂತೆ ಕೊಡೆವಿಡಿದ ೧
ದುರಿತ ಭವ ತಿಮಿರ ಶರಧಿಯದಾಂಟಿಸುವ ವೋಲು
ಸುರಿವ ಮಳೆಗತ್ತಲೆಗೆ ಬೋವಿಯಾಗಿ
ಕರದಲ್ಲಿ ಕೊಡೆ ದೀವಟಿಗೆಯ ಪಿಡಿದೆನ್ನ ಮನೆ
ಪರಿಯಂತ ಕಳುಹಿ ಕ್ಷುಧೆಯಾಯಿತೆಂಬುದೇನು ೨
ಕೊಟ್ಟ ಕಜ್ಜಾಯಂಗಳಿಗೆ ನೀ ಸೆರಗೊಡ್ಡಿ
ಕಟ್ಟಿ ಕೊಂಡೊಯ್ದು ಲಕ್ಷ್ಮಿಯ ಬಳಿಯೊಳು
ಇಟ್ಟರ್ಧವನು ಎನ್ನ ಸಂತತಿಗೆ ನೀಕರುಣಿಸಿದೆ
ಇಷ್ಟರೊಳಗೆ ವೈಕುಂಠಪತಿ ಚೆನ್ನಿಗರಾಯಾ ೩

 

(ಉ) ಲೋಕನೀತಿ ಕುರಿತ ಕೀರ್ತನೆಗಳು
೫೨
ಏಳಿಸು ನಂಜನನೂ ಬೇಗದೊಳೇಳಿಸು ನಂಜನನೂ
ಬಾಳುವ ಮಗನನು ಕೋಳುವಿಡಿದುದು ಯಮನ
ನಾಳಿದೊಡೆಯ ವೇಲಾಪುರದರಸಾ ಪ
ಪತಿಯನು ನೀಗಿದ ಸತಿಮಾದಮ್ಮನು
ಸುತನಿಂ ಬದುಕುವೆನೆಂದೀ ಊರೊಳು
ಅತಿ ತಿರಿತಂದೋವುತಲಿದ್ದಳು ಸುತ
ಮೃತನಾದನು ಅಚ್ಯುತ ಸಲಹಯ್ಯಾ ೧
ಉರಿಯೊಳು ಬಿದ್ದಂತೊರಲಿ ಪೊರಲಿ ವೋ
ಹರಿ ಹರಿ ಹರಿ ಯೆಂದುರುಳಿ ಬಡಿದುಕೊಳ್ಳೇ
ದುರಿಯಶ ವೊಡೆಯಗೆ ಬರುವುದೆಂದು ನರ
ಹರಿ ರಕ್ಷಿಪನೆಂದೊರೆದೆನು ಹರಿಯೆ ೨
ಸತ್ತಮಗನ ನೀ ತಂದಿತ್ತುದಿಲ್ಲವೇ ಹೇ
ಕತರ್ುೃವೆ ಸಾಂದೀಪೋತ್ತಮನಿಗೆ ಅಂದು
ಉತ್ತರೆಯೊಡಲೊಳು ಅತ್ತು ಶಿಶುವು ಸಾ
ವುತ್ತಿರಲುಳುಹಿದೆ ಚಿತ್ತಜನಯ್ಯಾ ೩
ಇರಿದಪಮೃತ್ಯು ಪೊತ್ತಿರಿದಪವಾದವು
ಉರುಳಿದೆ ನೋಡುತ್ತಿರುವರೆ ಸುಮ್ಮನೆ
ಅರಿಯದಂತಿರ್ದಡೆ ಪರಿಪಾಲಿಪರಾರು
ವರಮೃತ್ಯುಂಜಯ ಕರುಣಾಕರನೇ ೪
ಮರಣವನೈದಿದ ತರಳ ನಂಜುಂಡನ
ಕರುಣಿಸದಿರ್ದಡೆ ಶಿರವನರಿದು ನಾ
ಚರಣದೊಳಿಡುವೆನು ದುರಿತಬಾಹುದು ನಿನ
ಗರಿಯದೆ ವೈಕುಂಠವಿಠಲ ಚೆನ್ನಿಗನೇ ೫

 

ಈ ಮೂರು ಕೃತಿಗಳು
೨೯
ಒಲವಿಲ್ಲವೆನ್ನಬಹುದೇ ನೀರೆ ನಿನ್ನಲ್ಲಿ
ಚೆಲುವ ವೇಲಾಪುರದ ಚೆನ್ನಿಗನಿರವ ನೋಡಿ ಪ
ತರಳೆ ನಿನ್ನಯ ಮೋಹ ವಿರಹದಿರವದ ಬಗೆಯ
ಸ್ಮರನರಳ ಸರಳುಗಳ ಉರವಣಿಯ ಘನವಾ
ಪರೆಯದಿಂ ಮೋದಕದಿ ಬಿಂದುಗಳು ಮೊಳಗೆ ಕ
ಸ್ತುರಿ ತಿಲಕ ಮಸುಳಿಸಲು ಬಂದ ಗುಣಮಣಿಯೇ ೧
ನೀಲಜೀಮೂತಸನ್ನಿಭದೋರೆದುರುಬಿನ
ಮೇಲೆ ಸುತ್ತಿದ ಬೆಂಮುರಿ ಜಾರೆಗುರುಳೂ
ಭಾಳದಿಂ ಪರೆಯೆ ಕಡುತವಕದಿಂದೆನ್ನ ನುಡಿ
ಗೇಳುತಲೆ ಬಂದನಿದೆ ನೋಡೆ ಗುಣಮಣಿಯೇ ೨
ಸೋಗೆ ಮುಡಿಯಳೆ ನಿನ್ನ ಕಾಂಬೆನೆಂದರ್ಥಿಯಲಿ
ರಾಗ ಮಿಗೆ ವೈಕುಂಠ ವಿಠಲನಾಥ ತಾನಾದ
ಆ ಗರುವ ವೇಲಾಪುರದ ಚೆನ್ನ ಬಂದನಿದೆ
ಬೇಗದಿಂ ನೆರೆದು ಸುಖಿಯಾಗು ಪೆಣ್ಮಣಿಯೆ ೩

 

ಈ ಮೂರು ಕೃತಿಗಳು
೩೧
ಒಲ್ಲೆ ಸಂಪದವನೆಲ್ಲವನು ತೆಗೆದುಕೊ
ಚೆಲ್ವ ವೇಲಾಪುರೀಶಾ ಸ್ವಾಮಿ ಪ
ಬಲ್ಲವರು ನಿನಗೆ ಸರಿಯಿಲ್ಲೆಂದು ಪೊಗಳುತಿಹ
ಸೊಲ್ಲ ನಾ ಕೇಳಲಾರೆ ಸ್ವಾಮಿ ಅ.ಪ
ಪೆತ್ತಯ್ಯ ತಿರುಮಲಾರ್ಯರು ವರ್ಣಕರ ಚಕ್ರ
ವರ್ತಿಯೆಂಬಾ ಬಿರುದನು
ಒತ್ತಿ ಪೊಗಳಿಸಿಕೊಂಡುದೇನಂದದಲಿ ತಿರು
ಗುತ್ತಿರ್ದಡೇನು ಭಾಗ್ಯಾ
ಮತ್ತದೆನಗಾರ್ಜಿತವೆ ಸತ್ತವರ ಸಂಪದವ-
ನತ್ತಲೇ ಕಳುಹಿಕೊಡದೆ
ಇತ್ತಪರೆ ನಿನ್ನ ದಾಸನುದಾಸರಿಗೆ ಸೇ
ವ್ಯೋತ್ತಮನೆ ಕೆಡಿಸಬೇಡಾ ಸ್ವಾಮಿ ೧
ಹರಿಯೆ ನೀ ಒಲಿದೂಳಿಗವನು ಮಾಡಲು ಬಳಿಕ
ಕಿರುನುಡಿಯ ಮೀರದಿರಲು
ಕರುಣದಿಂದಾಗಾಗ್ಯೆ ಕರೆದುಡುಗೊರೆಯ ಕೊಡಲು
ಬಿರುದುಗಳು ಮೆರೆಯುತಿರಲೂ
ಸ್ಥಿರವಿಲ್ಲದಷ್ಟ ಮಹದೈಶ್ವರ್ಯವಿರುತಿರಲು
ಪಿರಿಯರೆಲ್ಲರು ಪೊಗಳಲೂ
ಮೆರೆಯನೇ ಮಿಗೆ ಅಹಂಕರಿಸನೇ ಬೆರೆಯನೇ
ನರಕಕಿಳಿಯನೇ ಮರಳಿ ಜನಿಸನೇ ಸ್ವಾಮಿ ೨
ಸುಖವಿಲ್ಲ ಸುಖವಿಲ್ಲ ಸುಖವಿಲ್ಲ ಭಾಗ್ಯದಾ
ಸಕರೆಯನು ನಾನೊಲ್ಲೆನೂ
ಭಕತವತ್ಸಲನೆ ಭಾಗವತಲೋಲುಪನೆ ದುಃ
ಖಕೆ ಕಾರಣವಿಲ್ಲವೆ
ಅಕಳಂಕ ಚರಿತನೆ ಆದಿನಾರಾಯಣನೆ
ಮಕರಧ್ವಜನ ತಾತನೆ
ಸುಖವೀಯೊ ವೈಕುಂಠ ವೇಲಾಪುರಾಧೀಶ
ಭಕುತಿಯನು ಕೊಟ್ಟು ಸಲಹೊ ಸ್ವಾಮಿ ೩

 

ಈ ಮೂರು ಕೃತಿಗಳು
೩೦
ಒಲ್ಲೆನೀ ಕವಚ ಕುಂಡಲಗಳನ್ನು
ಒಲ್ಲೆ ನಾನು ಕಿರೀಟ ಪಾದುಕೆಗಳನ್ನು ಪ
ಹಗಲು ಹಾದರಗಿತ್ತಿಯಂತಿಪ್ಪ ಮನುಜನಿಗೆ
ಸೊಗಸುವುದು ಸೊಗಸದೆಂಬರುಹಿಲ್ಲದೇ
ಜಗದುದರ ನಿನ್ನಿಂದ ಶೋಭಿಸುವನಘ್ರ್ಯದ ವ
ಸ್ತುಗಳ ಎನಗೀಯಲೇತಕೆ ಮೆಚ್ಚಿದೆಯೋ ದೇವ ೧
ನೋಡಲೆವೆ ಸೀವುದಿದನಿಟ್ಟು ಕೈಕೊಂಡ ಪ್ರಾಣ
ಗೂಡಿನೊಳಗಿಹುದೇ ಅಕಟಕಟ ಹರಿಯೇ
ಬೇಡವೀ ಮಾಯ ಕೃಪೆಯಿಂದ ಸದ್ಭಕುತಿಯ
ಜೋಡ ತೊಡಿಸಿದನೊಲ್ಲೆ ಕಾಡಬೇಡವೋ ದೇವ ೨
ಶಿರಕೆ ಕರ್ಣಕೆ ಚರಣಗಳಿಗೆ ಕಥೆಯನ್ನು ಪೇ
ಳ್ದೆರಗುವುದನೊಲಿದು ಕುಣಿದಾಡುವುದನು
ಕರುಣಿಪುದು ಕವಚ ಕುಂಡಲ ಕಿರೀಟಗಳನು
ವರ ಪಾದುಕೆಗಳ ನಾನೊಲ್ಲೆ ಹರಿಯೇ ೩
ನಿನ್ನ ದಾಸಾನುದಾಸ ದಾಸರ ಗುಣಾರ್ಣವದೊ
ಳೆನ್ನೊಳೆಳ್ಳನಿತುಂಟೆ ಅಕಟಕಟ ಹರಿಯೇ
ಬನ್ನಬಡಿಸಲು ಬೇಡ ದಕ್ಕದೀಯುಡುಗೊರೆಯು
ಚುನ್ನವಾಡುವರು ಧಾತ್ರಿಯ ಮನುಜರೆಲೆ ದೇವ ೪
ಇದನು ಕೊಡಬೇಕಾದಡೆಯು ಮುಕ್ತ್ಯಾಂಗನೆಯ
ಮದುವೆಯನು ಮಾಡಿ ಯಾಬಳಿಕನಿತ
ವೊದವಿಸುವುದುಚಿತ ಒಪ್ಪಂದವಾಗಿಹುದು
ಚದುರ ವೈಕುಂಠ ವೇಲಾಪುರಾಧೀಶ ೫

 


ಕಂಡೆನದ್ಭುತ ಮೂರ್ತಿಯನೂ
ಹಿಂಡು ದೈವದಗಂಡ ವೇಲಾಪುರಾಧೀಶನನು ಪ
ಪರಮಪದನಾಥ ಜಯ ಪರಮಪುರುಷನೆ ಜಯ
ಮರಮೇಷ್ಠಿಜನಕಜಯ ಪರಮಪಾವನನೆ ಜಯ
ಪರಮ ಸುಖವಾರ್ಧಿಜಯ ಪರಮಸುಜ್ಞಾನಿ ಜಯ
ಪರಮ ಶುಭಗಾತ್ರಜಯ ಪರಮಸಂತೋಷಿ ಜಯತು ೧
ಪರಮಸ್ವತಂತ್ರಜಯ ಪರಮ ಕಾರಣನೆಜಯ
ಪರಮತ್ರಿಗುಣಾತ್ಮಜಯ ಪರಮಪಂಡಿತನೆ ಜಯ
ಪರಮಗುರುವರ್ಯಜಯ ಪರಮಮುನಿವಂದ್ಯಜಯ
ಪರಮ ಭಾಗವತ ಪ್ರಿಯ ಜಯಜಯತು೨
ಸರ್ವೋತ್ತಮನೆ ಜಯಜಯತು ಸ್ವಾಮಿ
ಕರಿರಾಜವರದ ಜಯಜಯತು ಹರಿಯೇ
ಅರವಿಂದನಾಭ ಜಯಜಯತು ಅಸುರ
ಶರಧಿ ಬಡಬಾನಲನೆ ಜಯಜಯತು ೩
ತರಳನ ಕಾಯ್ದವನೆ ಜಯಜಯತು ಶಿಶುವು
ಕರೆಯೆ ಬಂದವನೆ ಜಯಜಯತು ತಪವ
ಚರಿಸಿದನ ಕಾಯ್ದವನೆ ಜಯತು ನಿಜ
ಶರಣರಿಗೆ ಪದವನಿತ್ತವನೆ ಜಯಜಯತು ೪

 

೩೨
ಕಂಡೆನಯ್ಯ ಚನ್ನಕೇಶವರಾಯನ ವೇಲಾಪುರದರಸನ
ಕಂಡೆ ನಾ ಮಾಡಿದ ಸುಕೃತ ಫಲದಿಂದ ಪ
ಹೇಯ ವಿಷಯದಿ ರಂಗನಾಕನ ಮರೆದ ಪಶುವಾನು
ಹೇಯನಲ್ಲದೆ ನರಕದಲಿ ಬೀಳ್ವವನು೧
ಕಂಡೆ ಶಂಖ ಚಕ್ರ ಪದುಮಧರನ ಕಿರೀಟ
ಕುಂಡಲಧರನ ಪೀತಾಂಬರಧರನ ೨
ಸುರಸಿಂಧು ಜನನ ಕಾರಣ ಚರಣಕಮಲ ವಿಕಾಸ
ಧರನ ಕರುಣಾಪವರಧರನ ರಂಗನಾಯಕನ ೩

 

೩೩
ಕಂತುಪಿತ ಕರುಣಾಕರ ನಿನ್ನ
ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ ಪ
ಮಣ್ಣು ಮರ ಕಲ್ಲಿಂದಲಾದಡಂ ವಿರಚಿಸಿದ
ಹೆಣ್ಣು ರೂಪನೆ ಕಂಡು ಮರುಳುಗೊಂಡೂ
ಉಣ್ಣದುರಿಯುವಮನವ ನಿನ್ನಡಿದಳಿರನೆಳಲ
ತಣ್ಣಸದಲಿರಿಸಿ ಸಲಹಯ್ಯ ಜನಾರ್ದನಾ ೧
ಗೋ ವಿಪ್ರ ವಧೆಯಿಂದಲಾದಡಂ ವಿರಚಿಸಿದ
ಲಾವಿಕವೆಂದದನೆ ಬಯಸಿ ಬಯಸೀ
ದೇವ ಮನಕನವರತ ನಿನ್ನ ಪದ ತೀರ್ಥದಾ
ಜೀವನವನಿತ್ತು ಸಲಹಯ್ಯಾ ೨
ಭೂಮಿಯದು ಬುಧದಾನ ಸುರದಾನವಾದಡಂ
ಆ ಮಹಿಯ ತನ್ನತ್ತ ಸೆಳೆವೆನೆಂದೂ
ಕಾಮಿಸುವ ಮನಕೆ ನಿನ್ನಮಲಪಾದಾಂಬುಜವ
ಸೀಮೆಯೊಳಗಿರಿಸು ವೈಕುಂಠ ಜನಾರ್ದನಾ ೩

 

ಈ ಕೃತಿ ಸಾಮಾಜಿಕವಾಗಿ
೫೩
ಕಟಕಟಾ ಕಂಡೆವಲ್ಲಾ
ಕುಟಿಲವರ್ತನ ಕೆಲಕೆಲವು ಈ ಕಲಿಯುಗದೀ ಪ
ಮಳೆಯಿಲ್ಲ ಬಂದರಿಳೆ ಬೆಳೆಯದು ಬೆಳೆಯೆ ಧರಣಿ
ಹುಲಿಸಿಲ್ಲ ಹುಲಿಸಾದರಿಲ್ಲಾ ಪ್ರಜೆಗೇ
ಸಲುವಕೋರಲ್ಪವನು ಬಿಡರು ರಾಜರುಗಳ ಹಾ
ವಳಿಯಲುಳುಹಿಲ್ಲ ಇನ್ನೆಂತು ಕೃಷಿಕರಿಗೇ ೧
ಧನವಗಳಿಸಿಯೆ ಪಡುವುದನ್ಯಾಯವೇ ಮೊದಲು
ಮನವರಿತು ಪಾತಕಂಗಳ ಮಾಡುತಿಹರೂ
ಇನಿತು ಗಳಿಸಿದ ಕೃತ್ಯದರ್ಥಕ್ಕೆ ಚೋರರು
ಜನಪರೊಡೆಯರು ಬಯಲಮಮತೆಗಳ ಬಿಡರೂ ೨
ಹುಸಿ ನುಸುಳು ಕಳವು ಕಕ್ಕುಲತೆ ಪರನಿಂದೆ ರಾ
ಕ್ಷಸಕೃತ್ಯ ಹಿಂಸೆ ಮತ್ಸರ ಅನಾಚಾರಾ
ಪಿಸುಣಿತೆ ಕುಹಕ ಕುಟಿಲ ಕುಮದ ಸ್ವಾಮಿದ್ರೋಹ
ವಸುಮತಿಯ ಸುರರ ವಧೆ ಘನವಾಯಿತಲ್ಲಾ ೩
ತೊಡುವೊಡವೆಗಳ ಬೇಡಲೊಡನೆರಡು ಕಂಗಳಲಿ
ಕಿಡಿಸೂಸಿ ಬಾಯಿ ನೊರೆಸುತ್ತಿ ಘರ್ಜಿಸುತಾ
ಜಡಿವ ಕೋಪದಿ ಮಧುಪರಂತೆ ಜರೆವೀ ಬಾಯಿ
ಬಡುಕರೇ ಮೇದಿನಿಗೆ ಹೊರೆಯಾದರಲ್ಲಾ ೪
ರಸನಬಿಡುವರು ಕಸವಪಿಡಿವರೊರೆಯನು ಪಿಡಿದು
ಬಿಸುಡುವರಲಗ ಪರುಸವನು ಬಿಟ್ಟು ಕಲ್ಲಾ
ಒಸೆದು ಬಿಡುವರು ಶ್ರೀ ವೈಕುಂಠಕೇಶವನಿರಲು
ನುಸಿ ದೈವಗಳ ಭಜಿಸಿ ಹಸಗೆಡುತಲಿಹರೂ ೫

 

ಇದು ಶ್ರೀವೈಷ್ಣವ ತತ್ವವನ್ನು
೫೪
ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ ಜಗ
ದೊಡೆಯ ಶ್ರೀಕೃಷ್ಣನೊಬ್ಬನ ನಂಬು ಮರುಳೆ ಪ
ನೆಲೆಯಾದುದಿಲ್ಲ ತಾಯುದರ ಬಾಲತ್ವವಿದು
ನೆಲೆಯಾದುದಿಲ್ಲ ಜವ್ವನವೆಂಬುದೂ
ನೆಲೆಯಾದುದಿಲ್ಲ ಜರೆಯು ಚಕ್ಷುರಾಜಿಗಳು
ನೆಲೆಯಾಗಬಲ್ಲದೆ ಒಡಲು ನಿನಗೆ ಮರುಳೆ ೧
ಹುಟ್ಟಿದನಳಿದನೇಕೆ ಜೀವ ನಿಜ ಜನನಿಯಲಿ
ಹೊಟ್ಟೆಯಲಿ ಹೊತ್ತು ಹೆತ್ತುದಕೈಸಲೆ
ಕೊಟ್ಟುಕೊಂಡುದಕೆ ಪಡೆದಿತ್ತು ಸುತರೆಂದೆನಿಸಿ
ನೆಟ್ಟನೈದುವರು ನಿನಗೇನಹರು ಮರುಳೆ ೨
ನೀನಳಿದ ಬಳಿದ ಸತಿಸುತರಿಗೇನ್ಹೇಳುವೆ
ಏನಹರು ನಿನಗವರು ಮೃತವಾದ ಬಳಿಕಾ
ದೀನನಹೆ ಬಯಲಮಮತೆಗಳೆಂದು ತಿಳಿದುಕೊ
ನೀನೆತ್ತಲವರೆತ್ತಲಿಹರವರು ಮರುಳೆ ೩
ಮಗನಾವ ತಂದೆಯಾವನು ಜೀವ ಜೀವರಿಗೆ
ಮಗನು ತಂದೆಯು ಕರ್ಮವಾಸನೆಗಳಾ
ಬಗೆಯಿಂದಲೀಶ್ವರನು ಜೀವಕೋಟಿಗಳ ಸೃಜಿಸೆ
ಜಗದೊಳಾಡುವರು ನಿನಗೇನಹರು ಮರುಳೆ ೪
ಅತಿಭಕ್ತನೆಂದು ವೈಕುಂಠ ವೇಲಾಪುರದ
ಪತಿ ಅರ್ಜುನಗೆ ನಿರೂಪಿಸಿದರ್ಥವ
ಮತಿಗೆಟ್ಟು ಬಿಟ್ಟು ನಾನಾ ದೈವದಡಿಗಳಿಗಾ
ನತನಾಗಿ ಸಂಸಾರಿಯ[ಹೆ] ಇದೇಕೆ ಮರುಳೆ ೫

 


ಕಾಮಜನಕ ಸತ್ಯಕಾಮ ಜಯ ಸೌಶೀಲ್ಯ
ರಾಮನೆಯಖಿಲ ಜಗತ್ಸ್ವಾಮಿ [ಯೌ] ದಾರ್ಯ ಜಯತು ಪ
ಸಾಮಗಾನಪ್ರಿಯ ಕೋಮಲಶರೀರ ಜಯ
ತಾಮರಸನಯನ ಲಕ್ಷ್ಮೀ ಮನೋಹರನೆ ಜಯ
ಭೂಮೀಶ ಮಾಧವ ಮಹಾ ಮೂರ್ತಿ ಕೀರ್ತಿ ಜಯ
ನೇಮಿ ಜಗದಂತರ್ಯಾಮಿ ಚಾತುರ್ಯ ಜಯತು ೧
ರಾಮಕೃಷ್ಣ ಮುರಾರಿ ಜಯತು ಮೇಘ
ಶ್ಯಾಮ ಅಚ್ಯುತಾನಂತ ಜಯತು ನಿ-
ಸ್ಸೀಮ ಲೋಕಶರಣ್ಯ ಜಯತು ಸಾರ್ವ-
ಭೌಮ ವಿರಾಡ್ರೂಪ ಜಯ ಜಯತು ೨
ಶ್ರುತಿ ಸ್ತೋಮ ಸಂಸ್ತುತ ಜಯ ಜಯತು ವೈಕುಂ-
ಠೇತಿ ಸುಕ್ಷೇಮ ಲೋಕಾರಾಧ್ಯ ಜಯತು
ಸುತ್ರಾಮಾರ್ಚಿತಾಂಘ್ರಿಯುಗಳ ಜಯತು
ಜ್ಯೋತಿ ಪರಂಜ್ಯೋತಿ ನಿರಾಮಯ ವೇಲಾಪುರೀಶನೆ ಜಯತು೩

 

ವೈಕುಂಠದಾಸರ ಸೇವೆಯಲ್ಲಿದ್ದ
೫೫*
ಕೇಶವನೊಲುಮೆಯು ಆಗುವತನಕ ಹರಿ
ದಾಸರೊಳಿರು ಮನವೆ
ಆಶೆಪಾಶಂಗಳು ಬಿಟ್ಟು ವಿಲಾಸದಿ
ದಾಸರ ಸ್ತುತಿಯನು ಪೊಗಳುತ ಮನದೊಳು ಪ
ಮೋಸದಿ ಪ್ರಾಣಿಹಿಂಸೆಯನು ಮಾಡಿದ ಫಲ
ಕಾಶಿಗೆ ಪೋದರೆ ಪೋದೀತೆ
ದಾಸರು ಕರೆದು ಕಾಸುಕೊಟ್ಟ ಫಲ
ಲೇಸಾಗದೆ ಸುಮ್ಮನಿದ್ದೀತೆ
ಆಸೆಕೊಟ್ಟು ನಿರಾಸೆ ಮಾಡಿದ ಫಲ
ಮೋಸವ ಮಾಡದೆ ಬಿಟ್ಟೀತೆ
ದಶಶಿರನನುಜನು ಹರಿಯ ಒಲಿಸಿಕೊಂಡದ್ದು
ನಿಜವಲ್ಲದೆ ಪುಸಿಯಾದೀತೆ ೧
ಕನಕದ ಪಾತ್ರೆ ಘನಪ್ರಭೆಯೊಳಿರೆ
ಸೊಣಕನ ಮನಸಿಗೆ ಸೊಗಸೀತೆ
ಹೀನ ಮನುಜಗೆ ಜ್ಞಾನವ ಬೋಧಿಸೆ
ಹೀನ ವಿಷಯಗಳು ಬಿಟ್ಟೀತೆ
ಮಾನಿನಿ ಮನಸು ನಿಧಾನವಿಲ್ಲದಿರೆ
ಮಾನಾಭಿಮಾನವು ಉಳಿದೀತೆ
ಭಾನುಕೋಟಿ ಪ್ರಕಾಶನ ಭಜಿಸದ
ದೀನಗೆ ಮುಕ್ತಿಯು ದೊರಕೀತೆ ೨
ಶ್ರುತ್ಯಾರ್ಥಗಳು ನಿತ್ಯದಿ ಪೇಳಲು
ಕತ್ತೆಯ ಮನಸಿಗೆ ಬಂದೀತೆ
ಸ್ರ‍ಮತ್ಯಾರ್ಥಂಗಳು ನಿತ್ಯದಿ ಬೋಧಿಸೆ
ತೊತ್ತಿನ ಮನಸಿಗೆ ಬಂದೀತೆ
ಕಸ್ತುರಿ ಫಣೆಯಲಿ ಬತ್ತಿ ತಿಲಕವಿಡೆ
ಅರ್ಥ ತೊರೆಯದೇ ಬಿಟ್ಟೀತೆ
ಚಿತ್ರದಿ ಬೊಂಬೆ ವಿಚಿತ್ರದಿ ಬರೆದಿತ್ತ
ಮುತ್ತು ಕೊಟ್ಟರೆ ಮಾತಾಡೀತೆ ೩
ನ್ಯಾಯವ ಬಿಟ್ಟು ಅನ್ಯಾಯವ ಪೇಳ್ದವ
ನಾಯಾಗಿ ಹುಟ್ಟೋದು ಬಿಟ್ಟೀತೆ
ತಾಯಿ ತಂದೆಯ ನೋಯಿಸಿದ
ಮಾಯಾವಾದಿಗೆ ಮುಕುತಿಯು ದೊರಕೀತೆ
ಬಾಯಿಬೊಬ್ಬಿಲಿ ಬೊಗಳುವ ಮನುಜಗೆ
ಘಾಯವಾಗದೆ ಬಿಟ್ಟೀತೆ
ಛಾಯಮಾಯವಾ ಕಲಿತಾ ಮನುಜಗೆ
ಕಾಯಕ ಕಷ್ಟ ಬಿಡದಿದ್ದೀತೆ ೪
ಸಾಧು ಸಜ್ಜನರ ನಿಂದಿಸಿದ ದು
ರ್ವಾದಿಗೆ ಮುಕುತಿಯು ದೊರಕೀತೆ
[ಶುದ್ಧರಾಗಿ]ಭಜಿಸಿ ಬರುವರನನರ್ಥವ
ಗೈದವಗೆ ವ್ಯಾಧಿ ಕಾಡದೆ ಬಿಟ್ಟೀತೆ
ಕ್ಷುಧ್ರಮನುಜ ಬಹು ಕ್ಷುಧ್ರವ ನುಡಿಯಲು
ಬುದ್ಧಿಹೀನನೆಂಬೋದು ಬಿಟ್ಟೀತೆ
ಕದ್ದು ಒಡಲಹೊರುವ ಮನುಜಗೆ
ಇದ್ದದ್ದೋಗದೆ ಉಳಿದೀತೆ ೫
ಅಂಗವಿಷಯಗಳು ಹಿಂಗಿದ ಮನುಜಗೆ
ಅಂಗನೆಯರ ಬಯಸೀತೆ
ಸಂಗಸುಖಗಳು ಹಿಂಗದ ಮನುಜಗೆ
ಶೃಂಗಾರದ ಬಗೆ ತೋರೀತೆ
ಮಂಗಳ ಮಹಿಮನ ಪದಾಂಘ್ರಿಯ ಭಜಿಸದ
ಭೃಂಗಗೆ ಮುಕ್ತಿಯು ದೊರಕೀತೆ ೬
ಕರುಣಾನನಾಭರಣ ಧರಿಸಿದ ಪರಮಗೆ ಸರಳೆದುರಾದೀತೆ
ಕರುಣಾನನ ಸ್ಮರಣೆವುಳ್ಳರಿಗೆ ಪರಮ ಪದವಿ ಆಗದಿದ್ದೀತೆ
ವರದ ವೇಲಾಪುರಿ ವೈಕುಂಠ ಕೇಶವನ
ಚರಣ ಸೇವಕನಾಗಿ ಇರು ಕಂಡ್ಯ ಮನವೆ ೭

 

ವೈಕುಂಠದಾಸರು ಶ್ರೀವಾದಿರಾಜರನ್ನು
೨೩*
ಕೊಂಡಾಡಬಹುದೆ ಯತೀಂದ್ರ ಎನ್ನಾ
ಪಾಂಡವಪ್ರಿಯನಾಭಜಕ ವಾದಿರಾಜಯತಿ ಪ
ನಾನಾ ಜನುಮದಾ ಯೋನಿಮುಖದಲಿ ಬಂದು
ಮಾನವಳಿದು ಜ್ಞಾನಶೂನ್ಯನಾಗಿಹ
ಶ್ವಾನಮನದ ಮೂಢಮನುಷ್ಯನಾಗಿ
ಹೀನ ಅಹಂಕಾರಪೂರಿತ ದೋಷಿಂ
ಅರಿಷಡ್ವರ್ಗದೊಳು ಸಿಲುಕಿ ನರಗುರಿಯಾಗಿ
ಪರರವಾರ್ತೆಯ ಸವಿವ ಹಗಲು ಇರಳೂ
ದುರುಳ ದುಶ್ಚೇಷ್ಟಿಕನು ಬಹುದುರಾತ್ಮನು ನಾನು
ಗುರುಹಿರಿಯರಿಗೆ ಎರಗದ ಗೂಢಪಾಪಿಯನು ೨
ಒಡೆಯ ವೈಕುಂಠ ವಿಠಲನ ಭಜಿಸದೆ
ಪೊಡವಿಯೊಳು ಕ್ಷುದ್ರ ದೈವಗಳಿಗೆಲ್ಲ
ಪೊಡಮಡುತಿಹೆ ಸ್ವಾಮಿದ್ರೋಹಿ ಗರುವಿಯಾ
ಕಡುಪಾತಕನ್ನ ನಡತೆಯನು ನೀನರಿಯದಲೇ ೩

 

ವೈಕುಂಠದಾಸರ ಕಾಲದಲ್ಲಿ
೨೫*
ಕೊಡುವುದಿಲ್ಲದೆ ಪೋದ ಕಣ್ಣು ನಾಲಗೆಯಾ ಎ-
ನ್ನೊಡೆಯನಲ್ಲಾನು ಊಳಿಗನಲ್ಲವೆ ಚನ್ನಾ ಪ
ಒಂದೊಂದು ತಪ್ಪುಗಳ ಎಣಿಸಿಕೊಲ್ಲದಿರೋ ಯತಿಯ
ಕೊಂದು ಬಳಲಿಸುತಿರುವುದಿದು ಧರ್ಮವೇ
ಮುಂದೆ ನಂಬುವರಿಗೆ ಅದೃಢವಾಗದಿರು ದೇವ
ಕಂದರ್ಪಪಿತನೆ ಕಮನೀಯಮೂರುತಿಯೆ ೧
ನೋಡುವುದೆಂತೊ ಕಣ್ಣಿಲ್ಲದಿರೆ ನಿನ್ನ ತುತಿ
ಮಾಡುವುದೆಂತೊ ನಾಲಿಗೆಯುಡುಗಲು
ಬೇಡುವುದೆಂತೊ ಕೈವಲ್ಯಂಗನೆಯನು ದಯ
ಮಾಡೆನ್ನ ನಲ್ಲ ದಾಸರೊಳುತ್ತಮೊತ್ತಮ ನೇ ೨
ದಾಸರ ಹೃದಯ ಕಮಲ ಮಧ್ಯದೊಳಾವಾಗ
ವಾಸವಾಗಿಪ್ಪ ಸರ್ವೇಶ್ವರನೇ
ಘಾಸಿಬಡಿಸಲು ಅವರ ನೋವು ನಿನಗಲ್ಲವೇ
ಕೇಶವ ಮುರಾರಿ ಅಚ್ಚುತದಾಸನಿಗೆ ಬೇಗ ೩
ಕೇಳಿದನೆ ನಿನ್ನಿತರ ಹಲವು ಚಿಂತೆಯಲಿ
ತೊಳಲಿ ನೆಲೆಯರಿಯದಜ್ಞಾನಿಯಾಗಿ
ಬಳಲುವತಿಚಂಚಲಗೀ ಮಾರ್ಗವಿರಿಸಿದೇಕೋ
ನಳಿನಾಕ್ಷ ಭಕ್ತವತ್ಸಲ ಕೃಪಾಸಿಂಧೂ ೪
ಶರಣರಕ್ಷಕನೆಂಬ ಬಿರುದಾರದೆಲೆ ದೇವ
ಇರಿಸು ಎಂದಿನವೋಲಚ್ಚುತದಾಸನಾ
ಹರಿಯದಿದ್ದರೆನ್ನ ಕಣ್ಣು ನಾಲಿಗೆಯ ಕಿ
ತ್ತಿರಿಸುವೆನು ಮುಂದೆ ವೈಕುಂಠವಿಠಲ ಚನ್ನಿಗರಮಣ ೫

 

೨೧*
ಗಾಡಿಯೆತ್ತಲಿಂದ ಬಂದುದೆ ಮಾತ
ನಾಡಲರಿಯದಿಪ್ಪ ಹೊಚ್ಚ ಹೊಸ ಹರೆಯದ ಮುಗುದೆಗೀ ಪ
ಬಳುಕೆ ಸಿಂಹಮಧ್ಯ ಬಟ್ಟಮೊಲೆಗಳು ಮರೆ ತೋರವಾದ
ಬಳವಿ ಮುಡಿಯೊಳಲರು ಹೊಯ್ಯನಿಳೆಯಲುದುರಲು
ಜಲಜಮುಖದಿ ಬೆಮರುದೋರೆ ವಲಯಹಾರ ಉರದಿ
ಘಲಿರು ಘಲಿರೆನೆ ಆವಕಡೆಯು ಕುಲುಕಿ ಕುಲುಕಿ ನಡೆವ ಈ ೧
ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಲಜ್ಜೆ
ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸಿ
ಸಸಿನೆ ತಿದ್ದಿ ಉರದಿ ಜರಿಯ ವಸನವನ್ನು ಸಂತವಿಸುತ
ಕುಸುರಿಲಂಗ ದಂದವನ್ನು ಎಸಸಿ ಬಿಡುವ ನಡೆವ ೨
ಕರವನೊಯ್ಯಗೊಲಿದು ಉರಗಗಿರಿಯ ಮೇಲೆ ಬಾಲಚಂದ್ರ
ನಿರಲು ಸೆರಗ ಮರೆಯಮಾಡಿ ಮರಳಿ ಮರಳಿ ನೋಡುತಾ
ಸ್ಮರನತಾತ ಸುರನಗರದೆರೆಯ ವೈಕುಂಠಲಕ್ಷ್ಮಿಯರಸನೊಡನೆ
ನೆರೆದ ಪರಿಯ ಸಿರಿಯ ಗರುವ ಗಮನದಾ ೩

 

(ಊ) ಕ್ಷೇತ್ರ ವರ್ಣನೆ
೬೧*
೧. ಬೇಲೂರು
ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ
ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ
ಧ್ವಜ ವಜ್ರ ಪದುಮ ಪತಾಕಾಂಕುಶಗಳು
ನಿಜಸತಿ ಲಕುಮಿದೇವಿಯರಾ
ಭುಜ ಕುಚ ಕುಂಕುಮಾಂಕಿತ ಧರಾಂಕಿತ
ಭಜಕರ ಭಾಗ್ಯೋದಯ ಪಾದಯುಗಳದಾ ೧
ಸುರ ವೈರಿಗಳೆದೆ ಥಲ್ಲಣವೆನಿಸುವಾ
ಬಿರುದಿನ ಖಡ್ಡೆಯಪ್ಪ ಚರಣಂಗಳಾ
ಗರುಡನ ಹೆಗಲೇರಿ ಉದರದಿ ವಿರಿಂಚಿಯು
ಉದುಭವಿಸಿದ ವರನಾಭಿಯ ಚೆಲುವಿನಾ ೨
ಪೊಂಬಟ್ಟೆಯಿಂದೆಸೆವ ಪೀತಾಂಬರ
ಚೆಂಬೊನ್ನದ ಕಾಂಚಿಯದಾಮದಾ
ಅಂಬುಜ ಕೌಮೋದಕಿ ಸುದರುಶನ
ಕಂಬುವ ಧರಿಸಿಹ ಚತುರುಭುಜಂಗಳಾ ೩
ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ
ಶ್ರೀಯೋಗವ ತೋರಿಸೆನಗೊಮ್ಮೆ
ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ
ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ ೪
ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ
ಕರೆವೆನ್ನ ಕಣ್ಣುಸನ್ನೆಯಲೀ
ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ
ವರವೈಕುಂಠಕೇಶವ ಬೇಲೂರ ೫

 


ಜಯತು ಜಗದೀಶ ಇಂದಿರೇಶ
ಜಯತು ವೈಕುಂಠರಮಣಾ ಉಪ್ಪವಡಿಸಾ ಪ
ಏಕಾರ್ಣವದಲಿ ವಟದೆಲೆಯಲಿ ಸಕಲಲೋಕ
ವಾಕಾರವಳಿಯೆ ಬಾಲಕತನವನಳ ವಡಿಸಿ
ಶ್ರೀಕರಾಂಬುಜದಿಂದ ಪಾದಾಂಗುಟವ ಪಿಡಿದ ತನುಜನಂದದೀ
ಏಕಮೇವಾದ್ವಿತೀಯನೆಂಬಾಗಮದ
ವಾಕ್ಕಿಂಗೆ ದೃಷ್ಟಾಂತವಾಗಿ ಪವಡಿಸಿಹ ಲ
ಕ್ಷ್ಮೀ ಕಾಂತ ಸಕಲ ಲೋಕದ ಭಕುತರನು ಸಲಹ
ಬೇಕು ನಲಿದುಪ್ಪವಡಿಸಾ ೧
ಘಣಿರಾಜನಂತರಂಗತಲ್ಪದ ಮೇಲೆ ತತ್ಫಣಾ
ಮಣಿಯ ಬೆಳಗಿನಲಿ ಸುರನಿಕರವೆಡಬಲದಿ ಸಂ
ದಣಿಸಿ ಬರಲು ನಾರದ ತುಂಬುರರು ಭವದೀಯ
ಗುಣಗಣಂಗಳ ಪಾಡಲೂ
ಗುಣನಿಧಿಗಳೆನಿಪ ಶ್ರೀದೇವಿ ಭೂದೇವಿಯರು
ಕ್ಷಣವಗಲಲರಿಯದೇ ಪಾದಾಂಬುಜವ ಮನ
ದಣಿಯಲೊತ್ತಲು ಸುಖದೊಳೊರಗಿಹ ದಿವಿಜ ಶಿಖಾ
ಮಣಿಯೆ ಟಿಲಿದುಪ್ಪವಡಿಸಾ ೨
ಖಗರಾಜ ನವರತ್ನಮಯದ ತೊಟ್ಟಿಲುಮಾಗೆ
ನಿಗಮನಾಲಕು ಕುಂದಣದ ಸರಪಣಿಗಳಾಗೆ
ಬಗಸಿಗಂಗಳ ಭಾವಕಿಯರಾಗಿ ಉಪನಿಷ
ತ್ತುಗಳು ನೆರೆದಾನಂದದೀ
ಮುಗುದರರಸಾ ಮುಕುಂದಾಯೆನಲು ನಲಿಯೆ
ಪಾಲ್ಗಡಲಲೊಡೆಯ ವೇಲಾಪುರದ ಚೆ
ನ್ನಿಗರಾಯ ವೈಕುಂಠರಮಣ ತವಶರಣ ಜನ
ರುಗಳ ಸಲಹುಪ್ಪವಡಿಸಾ ೩

 


ಜೀವನಮಯ ಜೀವನಾ ಪ
ಜೀವನ ಮೂರುತಿ ಪಾವನ ಕೇಶವ ಅ.ಪ
ಕರ್ಮವಿಮೋಚನ ಕಂಜ ವಿಲೋಚನ
ನಿರ್ಮಲಚರಿತ್ರ ನಿಗಮ ಸ್ತೋತ್ರ ೧
ಕಾಮಿತದಾಯಕ ಕಮಲನಾಯಕ
ಕಾಮಜನಕ ಪಾದ ನಮಿತ ಚರಣ ೨
ವೇಲಾಪುರವಾಸ ವೈಕುಂಠ ಸರ್ವೇಶ
ಪಾಲಯಾಮ್ಯನವರತ ಪರಮಪುರುಷ ೩

 


ತೇನಮೋ ಜಗದೇಕನಾಥ ರಮಾ
ಮಾನಸಾಂಬುಜರಾಜಹಂಸಾಯ ವಿಷ್ಣವೇ ಪ
ಅಗಣಿತಾವತಾರ ಅಸುರಸಂಹಾರ
ಜಗದೇಕವೀರ ಜನನಾದಿ ದೂರಾ
ನಿಗಮಪ್ರಕಾರ ನಿರ್ಮಲಾಚಾರ
ಸುಗುಣ ವಿಸ್ತಾರ ಸುಖಮಯ ಶರೀರ ೧
ದಾನಗುಣಶೀಲ ಧರ್ಮಪರಿಪಾಲ
ಗಾನರಸಲೋಲ ಕನಕಮಯಚೇಲ
ದೀನಾರ್ತಿಹರಣ ತೀರ್ಥಮಯಚರಣ
ಆನತೋದ್ಧರಣ ಅಮೃತಾಬ್ಧಿಶಯನ ೨
ಚಂದ್ರಾರ್ಕನಯನ ಚಾರುತರ ಕಥನ
ಇಂದ್ರಾರಿ ಮಥನ ಇಭವೈರಿವದನ
ಇಂದ್ರ ಸಂಕ್ರಮಣ ವೇಲಾಪುರಿಸದನ
ವಂದ್ಯಾಖಿಲಜನ ವೈಕುಂಠ ರಮಣ ೩

 

ವೈಕುಂಠದಾಸರು ನಂಜನಗೂಡಿಗೆ
೬೪
೨. ನಂಜನಗೂಡು
ದೇವತಾಮಯನಾಗಿ ಸಕಲ ಪ್ರಾಣಿಗಳ ನಾ-
ನಾ ವಿಧದ ಪೂಜೆಗಳ ಕೈಗೊಂಬದೇವ ಪ
ಕಪಟಮಾತಾರೂಪವಳವಡಿಸಿ ಕೊಲಲೆಂದು
ಚಪಲಗತಿಯಿಂ ಬಂದ ಪೂತನಿಯನು
ಉಪಮೆಯಿಂದಸುವರೆಸಿ ಘನಕುಚಂಗಳನೂಡೆ
ಅಪರಿಮಿತವಾದ ನಂಜುಂಡ ಮಹದೇವ ೧
ಕಡಹದ ಮರದ ಕೊನೆಯನಡರಿ ಕಾಳಿಂದಿಯ
ಮಡುವಿನಲಿ ಧುಮುಕಿ ಪಣಿಪೆಡೆಯ ತುಳಿದು
ಮೃಡ ಮುಖ್ಯಸುರರುಘೇಯೆನೆ ಕೋಪಶಿಖಿಯಿಂದ
ಮಡುವಿಲುರುತರದ ನಂಜುಂಡ ಮಹದೇವ ೨
ರುದ್ರಾಂತರಾತ್ಮ ವೈಕುಂಠಸಂಕರ್ಷಣ ಸ-
ಮುದ್ರ ಮಥನದ ಕಡೆಯಲುದಿಸಿ ಜಗವ
ರೌದ್ರವತಾರದಿಂದುರಿಯುರುಪುತಿರೆ ಕಂತು
ಸದೃಢಮನದಿ ನಂಜುಂಡ ಮಹದೇವ ೩

 

೧೫
ದೇವನ ನೆರೆನಂಬಿರೊ
ಶ್ರೀವರ ವೇಲಾಪುರಿಯ ಚೆನ್ನಿಗನ ಪ
ಕರೆಯರಿಗೊರಳಭವನ ಕೃಪೆಯಿಂದ ದಶಗ್ರೀವ
ನೆರೆಭಾಗ್ಯಪಡೆದು ಗರ್ವದೊಳಿರಲು
ಅರೆಯಟ್ಟಿ ಶಿರಗಳ ಕುಟ್ಟಿಹಾಕಿ ತನ್ನ
ಮೊರೆಹೊಕ್ಕ ವಿಭೀಷಣಗೆ ಪಟ್ಟಗಟ್ಟಿದ ೧
ಭಾಗೀರಥಿಯ ತಾಳ್ದ ಮಹೇಶನ ತಲೆ
ವಾಗಿಲ ಕಾಯಿಸಿಕೊಂಡಿಹ ಬಾಣನ
ತಾಗಿ ತೋಳಕಡಿದ ಸುರನ ಕುಮಾರತಿಗೆ
ಭೋಗಿಸುವಂತೆ ತಮ್ಮಗೆ ಕೈವರ್ತಿಸಿ ಕೊಟ್ಟ೨
ಲೋಕದೊಳಜಭವಾದಿಗಳಿಂದ ಉಬ್ಬಿದ ಅ-
ನೇಕ ರಕ್ಕಸರನೊಟ್ಟಿಗೆ ತಾಹೆನು-
ತಾ ಕೊಟ್ಟ ವರವನೆ ಶಿರಮುಟ್ಟಿ ಕೊಂಡಾ ಕರು
ಣಾಕರ ವರ ವೇಲಾಪುರಿಯ ಚೆನ್ನಿಗನ ೩

 


ದೇವಾನಾ ಮೂರು ಲೋಕಂಗಳನುನೆರೆ
ಕಾವಾನಾ ಶರಣಾಗತ ಸಂ
ಜೀವಾನ ರೂಪ ಕಂಡೆ ಕೈಯಡಿಯಾ ಪ
ಧಗಧಗಿಸುವ ಕೋಟಿ ದಿವಾಕರ ಕಿರಣಗಳ
ನುಗುಳುವ ಮಣಿಮಕುಟದಾ ಸಿರದಾ
ಧೃಗುಳುಗಳ ಕಾಂತಿಯ ಮೊಗೆದು ಚೆಲ್ಲುತ ಪಾ
ಲೊಗುವ ಕದಪಿಲಿ ಢಾಳಿಪ ಕುಂಡಲಂಗಳಾ ೧
ತಿಲಕದ ಕುಡಿವರಿದಿಹ ಪುರ್ಬುಗಳ ಮಂ
ಜುಳ ಹೇಮ ಚಂಪಕದ ನಾಸಿಕದಾ
ಜಲಜ ಕಸ್ತೂರಿ ಕಪ್ಪುರದ ಕಂಪಿನ
ಸುಲಿಪಲ್ಲಿನ ಬಾಯಿದೆರೆಯ ಚೆಲುವನುಳ್ಳಾ ೨
ತೋರಮಂದಾರ ತುಲಸೀ ವನಮಾಲೆ ಕೊರಳ
ಹಾರ ಪೇರುರದಾ ಶ್ರೀ ಚಂದನದಾ
ವಾರಿಜಪಾಣಿಯುಗದೆ ಶಂಖಚಕ್ರ ಸ-
ರೋರುಹ ಕರದಲಭಯವಿತ್ತು ಸಲಹುವಾ ೩
ಅಂದು ಜಘನದಿ ಕರವಿಟ್ಟು ಪೊಂಬಟ್ಟೆಯನುಟ್ಟು
ಪಾದದಿ ಮಣಿ ಬಿರುಡೆಯವಿಟ್ಟು ಸ
ನ್ಮುದದಿ ವೀರಮುದ್ರಿಕೆ ಮಂಡಿಕಾಗಳನಿವಿಟ್ಟು
ಮೃದುಪಾದನಖದಿ ಮೂಜಗವ ಬೆಳಗುತಿಹ೪
ಸರೋರುಹ ಪಲ್ಲನ ಅರುಣಕಿರಣದಿ ಪಾವಕ
ವರಕಾಂತಿಯ ಗೆಲುವಾ ಜಾಜಿ ಸೇವಂತಿಗೆ
ಮೃದುವನು ಸೋಲಿಪಡಿಗಳಾ ಶ್ರೀ ವೆಲಾ
ಪುರದ ವೈಕುಂಠೇಶ ವೇಂಕಟಾದ್ರೀಶಾ ೫

 

೧. ಗಜೇಂದ್ರಮೋಕ್ಷ
೪೮೯*
ನಾರಾಯಣ ಎನ್ನಿರೊ ನಾರಾಯಣ ಎನ್ನಿ
ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ
ಕಾರುಣ್ಯಲೋಚನಾಯ ನಾಗೇಂದ್ರಶಯನಾಯ
ಘೋರ ಭವದುಃಖ ಸಂಹಾರಾಯ ಪ
ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ
ಮಂಡಲಾಧಿಪನು ವೈರಾಗ್ಯದಲಿ ಹರಿಪಾದ
ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ
ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ
ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ-
ದ್ದಂಡ ಶಾಪವನಿತ್ತು ಮುನಿ ಪೋಗಲಿತ್ತ
ತಾ ಶುಂಡಾಲನಾದನರಸ ೧
ಕ್ಷೀರಸಾಗರ ತಡದೊಳೈವತ್ತು ಯೋಜನ ವಿ-
ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ
ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ
ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ
ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ
ಬೀರಾದಿ ತರುಗುಲ್ಮ ಖಗಮೃಗಗಳೆಸೆವಲ್ಲಿ
ವಾರಣೀಂದ್ರನು ಮೆರೆದನು ೨
ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ
ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ
ತಾ ನೀರಡಿಸಿ ಬಂದೊಂದು ಸರೋವರವ
ಕಂಡಿತು ಪಾನಾಭಿಲಾಷೆಯಿಂದ
ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ
ಏನಿದೆತ್ತಣ ರಭಸವೆಂದುಗ್ರಕೋಪದಿಂ
ದಾ ನೆಗಳು ಬಾಯ್ತೆರೆದು ನುಂಗಿತೊಂದಘ್ರಿಯನು
ಏನೆಂಬೆನಾಕ್ಷಣದೊಳು ೩
ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ
ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ
ದೊತ್ತಿ ತಂದನು ಕಡೆಗೆ ಮತ್ತೆ ನಡುಮಡುವಿನೊಳಗೆ
ಸೆಳೆದುದು ಬಿಡದೆ ನೆಗಳವು
ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ
ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ
ಶಕ್ತಿ ತಗ್ಗಿತು ತನ್ನ ಮನದೊಳಗೆ
ಚಿಂತಿಸುತ ಮತ್ತ್ಯಾರು ತನಗೆನುತಲಿ ೪
ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ
ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು
ವಂದಿಸುತ ಮನದೊಳರವಿಂದನಾಭಾಚ್ಯುತ
ಮುಕುಂದ ಮುನಿವೃಂದವಂದ್ಯಾ
ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ
ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ
ನಿಂದು ಬಹುಸಿಲುಕಿದೆನು ದಂದುಗದ
ಮಾಯಾಪ್ರಬಂಧದಿ ನೆಗಳಿನಿಂ ೫
ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ
ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ
ಪರತತ್ವ ಪರಬ್ರಹ್ಮ ಪರಮಾನಂದಾ
ಪರಮೇಷ್ಠಿ ಪರಮಪುರುಷಾ
ನಿರುಪಮ ನಿಜಾನಂದ ನಿರ್ಭಯ ನಿರಾವರಣ
ನಿರವಧಿಕ ನಿರ್ಗುಣ ನಿರಂಜನ ನಿರಾಧಾರ
ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ ೬
ಇಂತೆನುತ ಮೂರ್ಛೆಯಲಿ ಗುಪಿತ ಕಂಠಧ್ವನಿಯೊ
ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ
ನಂತ ಮಹಿಮನು ಕೇಳಿ
ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು
ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ
ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ
ಕಾಂತ ಭಕ್ತನ ಬಳಿಗೆ ಬಂದೆರಡುಗೈಯಿಂ
ದಂತಿವದನನ ನೆಗಹಿದಾ ೭
ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ
ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ
ತೆಗೆದುದಾಕ್ಷಣವೆ ಮಣಿಮುಕುಟ
ಕುಂಡಲದಿಂದ ಮಿಗೆ ಶೋಭಿಸುತಲೆಸೆದನು
ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ
ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ
ನಘಹರನ ಕಂಡು ನಿಜಗತಿಗೈದು
ಅಮರರೊಲುಮೆಗೆ ನೆರೆದನೋಲೈಸುತ ೮
ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ
ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ
ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು
[ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ
ಕ್ಷಣದ ಸಿರಿ ಮೊಗದ ಪೀತಾಂಬರದಾಲಂಕೃತದ
[ಗಣಿತನು] ಜಯ ಜಯವೆಂದು
ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು ೯
ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ
ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ
ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು
ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು
ವಿಪ್ರಋಷಿದೇಶಿಗರನಾಚಂದ್ರಾರ್ಕ ವಾಗಿ
ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ ೧೦
ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ
ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ
ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ-
ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ
ತಾ ವಿಹಂಗಾಧಿಪನನೇರಿ ಬಿಜಯಂಗೈದ
ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ ೧೧

 

೩೬
ನೀನೇ ದಯಾಸಂಪನ್ನ ಭಕ್ತ ಪ್ರಸನ್ನಾ ಪ
ಕಂದನಿನ್ನಯ ದಿವ್ಯಾನಂದ ಮೂರುತಿಯ ನಾ
ಕುಂದದೇ ಭಜಿಸಲು ಮರುಗಿ ಬೇಗಾ
ಇಂದಿರೇ ಅಜಭವರೆಂದೂ ಕಾಣದ ನಿಜ
ವೆಂದೆಂಬೋ ರಾಜ್ಯದೊಳಿದ್ದ ಕಾರಣದಿಂದ ೧
ಹರಿಸರ್ವೋತ್ತಮನೆಂದು ಪಿತನಾಜ್ಞೆಯ ಮೀರಲು
ಹರಿರೂಪತಾಳ್ದು ದೈತ್ಯನ ಶಿರವಾ
ಹರಿದು ಬಾಲನನೆತ್ತಿ ಸಲಹಿದ ಬಗೆಯಿಂದ
ಕರುಣಾಕರನೆಂದು ಶ್ರುತಿಯು ಪೇಳುತ್ತಿರಲೂ ೨
ಪಾತಕದಿಂದ ಗೌತಮಸತಿ ಶಿಲೆಯಾಗೆ
ಭೂತಳದೊಳು ಪರಬೊಮ್ಮನೆಂಬೋ
ಸೀತಾರಾಮಾವತಾರರಿಂದ ಸೌಂದರ್ಯ
ನೂತನಪದ ಸೋಕಲು ನಿಜಸತಿಯಾದಳೋ ೩
ಗುರುತನೂಜನ ಮಂತ್ರಶಕ್ತಿ ವೇದನೆ ತಡೆದೆ
ಹರಿಯೆಂದು ಕರೆದ ಉತ್ತರೆಗೆ ಬೇಗಾ
ವರಚಕ್ರವನು ಮರೆಮಾಡಿ ಪರೀಕ್ಷಿತನ
ಪೊರೆಯೆ ತ್ರಿಜಗದೊಳು ಕೀರ್ತಿಯಾಹುದರಿಂದ ೪
ಹರನಿಂದ ಉರಿಯ ಹಸ್ತವ ಪಡೆದು ಭಸ್ಮಾ
ಸುರನು ಫಾಲಕ್ಷನ ಖತಿಗೊಳಿಸೆ
ಸಿರಿವೇಲಾಪುರ ಚನ್ನಕೇಶವನಾವೇಶದಿಂ
ಪರಿದಸುರನ ಕೊಂದು ಸ್ಥಿರವಾದಕಾರಣ ೫

 

ಶಿಷ್ಯಳಾದ ವೈಶ್ಯೆ ಮಾದಮ್ಮನ
೩೭
ನೀನೇ ಶ್ರಾದ್ಧದನ್ನವನುಂಡವಾ
ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ ಪ
ಬಾಣಸಿಗಾದವರು ನೀನೋ ನಾರಾಯಣಿಯೋ
ಕ್ಷೋಣಿಯೊ ರವಿಯೋ ಜಾಹ್ನವಿಯೊ ರತಿಯೋ
ವಾಣಿಯೋ ಸುರಧೇನುವೋ ಬಂದಾತಧನಂಜಯನೂ
ತಾನೆ ಎನ್ನ ಆದ್ದಾಗಾಯ ತೆಲೆದೇವಾ೧
ತಿಳಿದೆ ನಾನೀಗ ನಿನ್ನನು ಕೂಡೆ ಬಂದಿದ್ರ್ದ
ಬಿಳಿಯ ಚುಟ್ಟಿನ ಯೆಣ್ಣೆಗೆಂಪಿನವನೂ
ಕುಳಿತವನು ಕೈಯಪುಸ್ತುಕದವನು ಕಂಕುಳೊಳ
ಗಿಳಿದ ಮಡಿಗಡೆಯವರಾರು ಪೇಳೆಲೆ ದೇವಾ ೨
ಆವಾವ ಸ್ಥಾನಕಾರಾರ ನೇಮಿಸಿದೆ ನೀ
ನಾವಸ್ಥಾನಕೆ ಪೂಜ್ಯನಾದ
ದೇವಾ ಉಪಾಧ್ಯರಾರಭಿಶ್ರವಣವನು ಪೇಳ್ದ
ಕೋವಿದರಾರು ಶ್ರೀವೈಷ್ಣವರಾರೆಲೆದೇವ ೩
ಜನನ ಸ್ಥಿತಿಲಯಕೆ ಕಾರಣಭೂತನೋರ್ವ ನೀ
ನೆನುತ ವೇದಾಂತಗಳು ಪೊಗಳುತಿರಲೂ
ಇನಿತಕ್ಕೆ ಯೆಂದನ್ನದಗಳು ಕುಡಿತೇಪಾಲ್ಗೇ
ಮನವ ಸೋತುದ ಬಿಡುವೆಯಾ ನಿತ್ಯತೃಪ್ತಾ ೪
ಗುರುಗಳಂದದಲಿ ಶ್ರೀವೈಷ್ಣವ ನೀನಾಗಿ
ಶರಣನಾ ಪಿತೃಗಳಿಗೇ ಶ್ರಾಧ್ಧವನುಂಡುದದೂ
ಪಿರಿಯದಾಯ್ತು ಎನ್ನ ನೂರೂಂದು ಕುಲಕೆಲ್ಲಾ
ಪರಮಪದವಾಯ್ತು ವೈಕುಂಠಚೆನ್ನಿಗರಾಯಾ ೫

 

೩೮
ನೊಂದೆ ನಾನಾವಿಧದಲೀ ಬಂದ ಜನ್ಮಾವಧಿಯಲಿ
ತಂದೆ ತಾಯಿ ಬಂಧು ಬಳಗ ಎಲ್ಲರೂ ನೀನೇ ಪ
ಮಂದರಧರನೇ ಬೇಲೂರ ಚೆನ್ನಿಗರಾಯ
ಹಿಂದಿಟ್ಟುಕೊ ಮುರಹರ ಸ್ವಾಮೀ ಅ.ಪ
ಕುಕ್ಷಿಯೊಳೀರೇಳು ಲೋಕವನು ತಾಳ್ದನೇ
ಪಕ್ಷಿವಾಹನಮೂರ್ತಿ ಮತ್ಸ್ಯಾವತಾರನೇ
ಅಕ್ಷಯಾಗೆಂದು ದ್ರೌಪದಿಯ ಅಭಿಮಾನವನು
ರಕ್ಷಿಸಿದ ಕೃಷ್ಣ ನೀನೆ ಸ್ವಾಮಿ ೧
ಚಿಕ್ಕಂದು ಮೊದಲು ನಿನ್ನನು ನೆನೆವ ಬಾಲಕನಾ
ಕಕ್ಕಸದ ಬಾಧೆಯಲಿ ಮೂದಲಿಪ ಹಿರಣ್ಯಕನಾ
ಸೊಕ್ಕುಗಳ ಮುರಿದವನ ಕರುಳ ಮಾಲೆಯನಿಟ್ಟ
¨ಕ್ತವತ್ಸಲನು ನೀನೇ ಸ್ವಾಮಿ ೨
ಕರಿಕಂಠ ಹರನು ದಾನವನ ತಪಸಿಗೆ ಮೆಚ್ಚಿ
ಅರಿತು ಅರಿಯದ ತೆರದಿ ಉರಿಹಸ್ತವನು ಕೊಡಲು
ತರುಣಿ ರೂಪಿಲಿ ಪರಿಹರಿಸಿ ಭಸ್ಮಾಸುರನಾ
[ಉರಿಸಿ]ಗೆಲಿದ ದೇವರದೇವಾ ಸ್ವಾಮಿ೩
ಅಂದು ಮರೆಹೊಕ್ಕ ವಿಭೀಷಣಗೆ ರಾಜ್ಯವನು
ಸಂದೇಹವಿಲ್ಲದಂದದಲಿ ಪಾಲಿಸಿ ನರನಾ
ಮುಂದೆ ಸಾರಥಿಯಾಗಿ ರಥವ ನಡಸಿದ ಗೋ
ವಿಂದ ಸಲಹಯ್ಯ ಯೆನ್ನನೂ [ಸ್ವಾಮಿ] ೪
ದೇಶದೇಶದೊಳತ್ಯಧಿಕ ಕಾಶಿಗಿಂ ಮಿಗಿಲು
ಭೂಸ್ವರ್ಗವೆನಿಪ ವೇಲಾಪುರವಾಸಾ
ಕೇಶವ ಶ್ರೀವೈಕುಂಠ ಚೆನ್ನಿಗರಾಯಾ
ಶೇಷಶಯನನೇ ಕರುಣಿಸೈ ಸ್ವಾಮೀ ೫

 

ನೋಡಲೇಬೇಕು ಎನ್ನೊಡೆಯನ
೬೨
ನೋಡಲುಬೇಕೇ ಎನ್ನೊಡೆಯನನೂ
ನೋಡಿದಿರೇ ತಾಳಪಾಕಂ ಚಿಣ್ಣೈಯಾ ಪ
ದಿಕ್ಕುಗಳನು ಬೆಳಗುವ ಸುಕೀರಿಟವ
ನಿಕ್ಕಿಹ ಮಾಣಿಕದೋಲೆಯನೂ
ಚೊಕ್ಕಟ ಮೂಗುತಿಯಿಂದೊಪ್ಪುವನ್ನ ಜ
ಗಕ್ಕೆ ಪತಿಯೆನ್ನೆರೆಯ ಚೆನ್ನಿಗನಾ ೧
ಕಂಬು ಚಕ್ರಗದೆ ಪದುಮವ ಪಿಡಿದು ಪೀ
ತಾಂಬರದಂಗಿಯ ಧರಿಸಿಕೊಂಡೂ
ತುಂಬಿದ ವಕ್ಷದಿ ರಮೆ ಕೌಸ್ತುಭದಿಂ
ಗಂಭೀರಾರ್ಣವನಾದ ಚೆನ್ನಿಗನ ೨
ಸುರರೆಲ್ಲರು ಪೂಜಿಸುವ ಚರಣದೊಳು
ಕಿರುಗೆಜ್ಜೆ ಪೆಂಡೆಯವಿಟ್ಟವನಾ
ವರವೈಕುಂಠ ವೇಲಾಪುರದರಸನ
ಶರಣ ವತ್ಸಲನಾದ ಕರುಣಾಂಬುಧಿಯಾ ೩

 

ಶ್ರೀದಾಸರು ವರದನೆಂಬ
೩೯*
ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ
ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಪ
ಅಂದು ಭೃಗುಮುನಿಯೆದೆಯಲೊದೆಯಲವನಿಗೆ ಪಾಪ
ಬಂದುದೇ ಮೂದಲಿಸಿ ಬೈದವನಿಗಾ ದೋಷವು
ನಿಂದುದೇ ಹಣೆಯೊಡೆಯಲೆಸೆದ ಭೀಷ್ಮಂಗಘವು
ಹೊಂದೀತೆ ಪಾಂಡವರ್ಗೆ ಕುಂದು ಬಂದೀತೆ ದೇವಾ ೧
ವರದನಾಕಾರದೊಳಗುಷ್ಣಜಲ ಮೃತ್ತಿಕೆಯ
ತರಲು ಕೈಸುಡಲು ಹಣೆಯನು ಟೊಣದು ಬೈದೇ
ಮರಳಿ ನಾಚಿಕೆಯಿಲ್ಲದೆ ಚರಣಕ್ಕೆ ಪಾವುಗೆಯ
ನಿರಿಸಿದಪರಾಧ ನಿನ್ನದೋ ಯೆನ್ನದೋ ದೇವಾ ೨
ಕುರುಡನಿಗೆ ದಾರಿಯನು ತೋರುವಾಪ್ತನು ಮುಳಿದು
ಜರಿದು ನೂಕಿದೊಡಾತನೇನ ಮಾಡುವನೂ
ಗುರಿಯನಿಡುವವನು ತಪ್ಪೆಸೆಯೆ ಸರಳಿನದೇನು
ಅರಸಾಳಕೊಂದಡವನೇನು ಮಾಡುವನೂ ೩
ಕುಣಿಸಿದಂತಾಡುವುದು ಬೊಂಬೆಯು ಸ್ವತಂತ್ರವದ
ಕಿನಿತುಂಟೆ ಕಪಟನಾಟಕ ಸೂತ್ರಧಾರೀ
ಎನಿತಾಡಿಸಿದೊಡಾಡುವೆನು ಪಾಪಪುಣ್ಯವೆಂ
ಬೆಣಿಕೆಗಾನಲ್ಲ ನೀನಲ್ಲದೆಲೆ ದೇವಾ೪
ತಂದೆ ತಾಯ್ಗಳು ತಮ್ಮ ಕಂದನನು ಸರ್ಪಮುಖ
ದಿಂದ ಕಚ್ಚಿಸಲು ತರಳನಲಿ ತಪ್ಪೇನೂ
ಮುಂದರಿಯದಜ್ಞಾನಿಯೆಂದು ನೀಕ್ಷಮಿಸಿಕೋ
ತಂದೆ ವೈಕುಂಠ ವೇಲಾಪುರಾಧೀಶಾ ೫

 

ವೈಕುಂಠದಾಸರ ಕಾಲದಲ್ಲಿ
೨೬*
ಪಾಲಿಪುದು ನಯನಗಳ ನಾಲಿಗೆಯ ನೀನು
ಶ್ರೀಲೋಲ ಸಾರ್ವಭೌಮನೇ ಪ
ನೀಲಮೇಘಶ್ಯಾಮ ಬೇಲಾಪುರಾಧೀಶ
ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ
ಪರಮಪದನಾಥ ಇಂದಿರೆಯರಸ ಸಕಲ ನಿ
ರ್ಜರರು ಪೂಜಿಸುವಂಘ್ರಿಯಾ
ಶಿರಿಯನೀಕ್ಷಿಸಿ ಬದುಕಿ ಪದ ನಾಮಾ ಸುಳಾದಿ
[ವರ]ನೇಮದಿಂ ಪಾಡೀ ಆಡೀ
ಮೊರೆಯೊಕ್ಕು ಬದುಕಿ ಆವರಿಸಿಕೊಂಡಗಲದಿಹ
ದುರಿತಭವ ಶರಧಿಯಾ
ಪಿರಿದು ದಾಟುವೆನೆಂದು ಭರದೊಳೈದಿದವಗಾ
ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ ೧
ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು
ದಿಂದು ಊನನಲ್ಲಾ
ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು
ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ
ನಂದವಳಿದುಬ್ಬಸದೊಳು
ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ
ವೃಂದಗಳು ನಿಂದಿರುವವೆ ಸ್ವಾಮಿ ೨
ಮನುಜ ಮಾಡಿದ ಪಾತಕಗಳನು ಎಣಿಸುವಡೆ
ಘಣಿರಾಜಗಳವಡುವುದೇ
ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ
ರಣಜನರೊಳೇಂಪುರುಳಿರುವುದೇ
ಚಿನುಮಯನೆ ಭಕ್ತವತ್ಸಲನೆ ಅಚ್ಚುತಞ್
ಸನವಗುಣಗಳನೀ ಮರೆದು
ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ
ಧನ್ಯನೆಲೊ ವೈಕುಂಠರಮಣಾ ೩

 

ಇದು ಮನಸ್ಸಿನ ಸಂಸಾರವನ್ನು
೪೦
ಪೆಂಡಿರಿಬ್ಬರನಾಳ್ವಗುಂಟೆ ಸುಖ ಕರುಣಿಸೈ
ಪುಂಡರೀಕಾಕ್ಷ ತವ ಭಕ್ತಿವಧು ಒಬ್ಬಳನೆ ಪ
ನರ ಬಾ ನೀ ಯೆಂದೆಳೆವಳಾಸೆ ಹೃದಯೇಶನಂ
ಬರಸೆಳೆವಳಾ ಲಜ್ಜೆ ತನ್ನ ಕಡೆಗೆ
ಹರಿಹರಿ ಡೋಲಾಯಮಾನವಾದುದು ಚಿತ್ತ
ಸ್ಥಿರವ ಕರುಣಿಸು ಲಕ್ಷ್ಮಿಯರಸ ಶ್ರೀಕೃಷ್ಣಾ ೧
ನಾಲಿಗೆಗೆ ದೈನ್ಯಮಂ ತಹಳಾಶೆ ಆ ಲಜ್ಜೆ
ತಾಳಿಗೆಯನೊಣಗಿಸೀ ನುಡಿಯಲೀಯಳೋ
ಪೇಳಲೇನುಭಯಸಂಕಟ ಸೀಗೆಯೊಳಗಿರ್ದ
ಬಾಳೆಯಾದುದು ಚಿತ್ತ ಪರಿಹರಿಸು ಕೃಷ್ಣಾ ೨
ಆಶೆಯಾ ಸವತಿಯಂ ಕೆಡಿಸಬಗೆವಳು ಲಜ್ಜೆ
ಆ ಸವತಿಯಂ ಕೆಡಿಸಬಗೆವಳೆಂತೊ
ಗಾಸಿಯಾದುದು ಚಿತ್ತವಿಬ್ಬರಿಂ ವೈಕುಂಠ
ಕೇಶವಾ ಮನದ ಸಂಸಾರವಂ ಬಿಡಿಸಯ್ಯ ೩

 

೬೩
ಪೊಗಳಲರಿಯೆನೆ ಲೋಕಮಾತೇ ನಿನ್ನ
ಸೊಗಸಾದ ರೂಪುರೇಖೆಯ ಸಿಂಧುಜಾತೇ ನಿಗಮವಿಖ್ಯಾತೇ ಪ
ಅಳಕ ನಿಚಯವು ಇಂದ್ರನೀಲಗಳು ತುಂಬಿಗಳು
ತಳಪುಗಳು ಯೆಸೆವ ನಳಿನಗಳು ಬಾಳೆಗಳು
ಚೆಲುವಹಿ ಸುನಾಸಿಕವು ಅಲಕೆ ಸುಮವು ಚಂಪಕವು
ಅಲರ್ವಿಲ್ಲಿನ ಧನುವೋ ಪುರ್ಬುಗಳೋ
ಪೊಳೆವರದನದಸಾಲುಗಳುಕಳಸಗಳೋ ಕುಂಡಲಗಳೋ
ವಿಲಸದಧರವು ಬಿಂಬಫಲವೋ ನವವಿದ್ರುಮವೋ
ಅಳವಟ್ಟ ಸವಿನುಡಿಯು ಗಿಣಿಯ ಸೋಲಿಪ ಪರಿಯೋ
ಕಳೆ ಪೆರ್ಚಿದಾನನವೋ ಶಶಿಯೋ
ಭಳಿರೆ ಮಳಯಜಗಂಧಿನಿ ಮಹೇಶರಿಪು ಜನನೀ ೧
ಗಳವು ಶಂಖವು ಮೆರೆವ ಕದಪುಗಳು ಮುಖರಗಳು
ಬಳೆವ ಮೊಲೆಗಳು ಕನಕ ಕಲಸಗಳು ಶಿಖರಗಳು
ನಳಿದೋಳುಗಳು ಕುಸುಮ ಮಾಲೆಗಳು
ಸುಲಲಿತವಯವವೋ ಲತಾವಳಿಗಳ ತರಂಗವೋ
ತಳಿವ ಪೂಜಡೆಯೋ ಸುಲಿಪಲ್ಲವವೋ
ಬಳುಕುತಿಹ ನಡುವೋ ಅಂಬರದ ಸೂತ್ರದಲಣುವೋ
ಕಳಸವೊ ಕುಂಭವೊ ಗಿರಿಯೋ
ತೊಳಗುವ ತೊಡೆಯೆನಲೋ
ಸಲಿಲಜಾಗಾರೇ ಸಮ್ಮೋಹನಾಕಾರೇ ಸೌಂದರ್ಯಭರಿತೆ ೨
ವರಜಂಘೆಗಳು ಪಂಚಶರನ ಶರಧಿಗಳೋ
ಸರಸೀರುಹ ಕೆಂದಳಿರೋ ಚರಣಗಳು ನಖಗಳು
ಸರಸೇಂದು ಮಂಡಲದ ಸಾಲುಗಳೋ
ಸುರುಚಿರಾಂಬಕೀ ದಯಾಕಾರೇ ಶುಭಚರಿತೆ ವಿಖ್ಯಾತೆ
ಪುರಹರ ಸುರೇಶ್ವರ ಸುಪೂಜಿತಾಂಘ್ರಿಸರೋಜೇ ಭಕ್ತ ಮಂದಾರೇ
ವರವೇಲಾನಗರವಾಸಿ ವೈಕುಂಠಚನ್ನಿಗರಾಯನರಸಿ ಗುಣರಾಸಿ
ದುರಿತಾಸಿ ನಮೋ ಪರಮಪದದಾಯಕಿಯೆ ಸೌಮ್ಯನಾಯಕಿಯೆ ೩

 

ಇದು ಮನಸ್ಸಿನ ಸಂಸಾರವನ್ನು
೪೧
ಪ್ರಾಯಶ್ಚಿತ್ತವೇನುಂಟದಂ ಮಾಡು ಯೆನಗೇ ಶೇಷ
ಶಾಯಿಯೆ ನಾ ಕಾಣದೇ ಮಾಡಿದ ದುಷ್ಕರ್ಮಂಗಳಿಗೆ ಪ
ತಿರುಮಲೆಯಂತೆ ನಾ ಮಂಚದುರುಗನಿಂಬುಗೊಂಡು ಕ
ರ್ಪುರದ ವೀಳಯದ ಮಡುಪುಗಳನೇ ಕೊಟ್ಟು
ಮರಳಿ ನಿದ್ರೆಯ ಮಾಡುವಾ ಪರಿಯಂತ ಕಾಲನೊತ್ತುತ
ಲಿರುತಿರ್ದು ಪರಿದು ಎನ್ನ ನೆರೆಪಾತಕನಾಗಿ ಮಾಡಿದುದಕೇ ೧
ಕಡಲಶಯನ[ನ]ನೇಕ ಕೋಟಿ ಕಮಲಭವಾಂಡ
ಕೊಡೆಯನೆ ಕಾಮಪಿತನೇ ಸರ್ವೋತ್ತಮನೇ ನಾ
ಕುಡಿದು ಮಿಕ್ಕ ಹಾಲ ನೀ ಕುಡಿದು ಯೆನ್ನಾ ಪಾಪದೊಳು
ಕೆಡಹಿ ಬಹಳ ಯಾತನೆ ಬಡಿಸೀ ಕೆಡಿಸಿದುದಕೇ ೨
ಗುರುಶಿಷ್ಯರುಗಳು ಸ್ವಾಮಿ ಭೃತ್ಯರುಗಳು ದಂಪತಿಗಳೆಂಬೀ
ಪರಿಯ ತಾರತಮ್ಯಂಗಳೊಂದಿಲ್ಲವೇ ಹರೀ
ಶರಣವತ್ಸಲನೇ ವೇಲಾಪುರದ ವೈಕುಂಠಕೇಶವ
ನರನ ಪಾಮರನ ದುರಿತಶರಧಿಯ ದಾಂಟಿಸುವುದಕೇ ೩

 

ವೈಕುಂಠದಾಸರ ಸೇವೆಯಲ್ಲಿದ್ದ
೫೬
ಬದುಕು ಬದುಕು ನಂಜುಂಡಾ ಮ
ತ್ತೊದಗಿ ನೀ ನೂರುವರುಷ ಪರಿಯಂತ ಪ
ಜನನಿಯ ಮಾತನು ಮೀರದೆ ಪರ
ವನಿತೆಯರಿಗೆ ಮನಸೋಲದೆ
ಬಿನುಗು ದೈವಂಗಳಿಗೆರಗದೆ ದು
ರ್ಜನರ ಸಂಗಗಳ ನೀ ಮಾಡದೆ ನಂಜಾ ೧
ತಪ್ಪುದಾರಿಯಲಿ ನೀ ಪೋಗದೆ ಆರು
ಒಪ್ಪದ ಕರ್ಮವ ಮಾಡದೇ
ತಪ್ಪು ಕಥೆಗಳನು ಕೇಳದೆ ಬಲು
ಸಪ್ಪೆ ವಾಕ್ಯಂಗಳನಾಡದೆ ನಂಜಾ ೨
ಹರಿಗೆರಗುತ ಹರಿಶರಣರ್ಗೆ ನಮಿಸುತ
ಹರಿಯ ಕಥೆಗಳನ್ನು ಕೇಳುತಾ
ಹರಿಯೆ ಸರ್ವೋತ್ತಮನೆಂದು ನೀನಿರುಕಂಡ್ಯ
ಸಿರಿ ವೈಕುಂಠಕೇಶವ ರಕ್ಷಿಪ ನಂಜಾ ೩

 

ಇದು ಪ್ರಸಿದ್ಧವಾದ ಕನಕದಾಸರ
೪೨*
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ
ಕೂಗಿಡುವ ಧ್ವನಿಯು ಕೇಳುವುದಿಲ್ಲವೇ ನಿನಗೆ ಪ
ಪರಮಪದದೊಳಗೆ ವಿಷಧರನ ತಲ್ಪದೊಳು ಇಂ
ದಿರೆಯರಸಿ ಹರುಷವಾರಿಧಿಯೊಳಿರಲೂ
ಕರಿ ಗುಪ್ತಕಂಠಧ್ವನಿಯಿಂದಾದಿಮೂಲವೆಂದೊದರೆ ಆಕ್ಷಣ
ಕರಿಯ ಕಾಯ್ದೆ ಜಗವರಿಯೆ ೧
ಕಡುಮುನಿಸಿನಿಂ ಖಳನು ಖಡ್ಗವನು ಪಿಡಿದು ನಿ
ನ್ನೊಡೆಯರಾರೆಂದು ತೋರೆನುತ ಬಡಿಯೆ
ದೃಢಭಕುತ ಶಿಶುವು ಕಂಗೆಡದೆ ನಿನ್ನನು ಕರೆಯೆ
ಘುಡಿಘುಡಿಸಿಕಂಬದಿಂದೊಡೆದು ಮೂಡಿದೆ ಹರಿಯೆ ೨
ಯಮಸುತನರಾಣಿಗಕ್ಷಯ ವಸ್ತ್ರವನಿತ್ತು
ಕ್ರಮದಿಂದ ಅಜಮಿಳನ ಪೊರದೆ ಅಂದೂ
ಸಮಯಾಸಮಯ ಉಂಟೆ ಭಕುತವತ್ಸಲ ನಿನಗೆ
ಕಮಲಾಕ್ಷ ವೈಕುಂಠಚನ್ನಕೇಶವ ಬೇಗ ೩

 

ಶ್ರೀಹರಿ ಏಕನಿಷ್ಠೆಯನ್ನು
೫೭
ಬೆರಗಾದೆನಯ್ಯ ಎನ್ನೆರೆಯ ಕೇಶವನ
ಬಿಟ್ಟನ್ಯಭಜನೆಯ ಕಂಡು ಪ
ಹೊಚ್ಚಿ ಸುಳಿದಟ್ಟಿ ಸುಡುವ ಅಡವಿಗಿಚ್ಚಿನ ಭಯಕೆ
ಬೆಚ್ಚಿ ಅರಗಿನ ಮನೆಯ ಹೊಗುವವನಂತೆ
ಅಚ್ಚರಿಯೆನಿಸೆ ದಹಿಪ ತಾಪತ್ರಯಕ್ಕಳುಕಿ
ತುಚ್ಛ ದೈವಗಳ ಮರೆಯೊಗುವ ಮನುಜರಕಂಡು ೧
ಉರಿಯ ಮಳೆಗರೆಯುತಿರೆ ತೃಣಗೇಹವನು ಹೊಕ್ಕು
ಹರಣವನುಳುಹಿಕೊಂಬೆನೆಂಬಂತೇ
ಉರುಬೆ ನಾನಾ ರೋಗಗಳುಳುಹಲು ಹಲವು ದೈವಗಳಿ
ಗೆರಗಿ ಜೀವನಕೆ ಕಳಕಳಿಪ ಮನುಜರ ಕಂಡೂ ೨
ಮುಗಿಲಗಲ ಧರೆ ಜರಿಯುತಿರೆ ಹುಲ್ಲಿನಣಬೆಯೊಡ್ಡಿ
ಮಿಗೆ ಬಾಳ್ವೆನೆಂಬ ಮರುಳನಂದದೀ
ಉಗಿದಸಿಯ ಮೃತ್ಯುವಿನ ಭಯಕೆ ನಾನಾದೇವ
ತೆಗಳಮರೆಯೊಗುವ ಮನುಜರ ಕಂಡು ೩
ಘುಡು ಘುಡಿಸಿ ಸಿಡಿಲೆರಗುತಿರೆ ತನ್ನ ಕೈ
ವಿಡಿದ ಕೊಡೆಯ ಮರೆಗೊಂಡುಳಿವೆನೆಂಬಂತೇ
ಮುಡಿವಿಡಿದೆಳೆವ ಕಾಲನ ಭಯಕೆ ನಾನಾದೈವ
ದಡಿವಿಡಿದೆರಗಿ ಹಲು ಬಿಡುವ ಮನುಜರ ಕಂಡು ೪
ಯಾತಮುಳಿದರೆ ಜಗದಲುಳಿದವರಾರು ಮ
ತ್ತೀತನುಳುಹಿದನನು ಕೊಂದವನಾವ ಇ
ದೇತಕರಿಯರೋ ನರರು ಅಕಟಕಟ ವೈಕುಂಠ
ನಾಥ ಪರಿಪೂತನ ಪದಕಮಲವ ಭಜಿಸರೆಂದು ೫
ನೀರಡಿಸಿ ಜಾಹ್ನವಿಯ ತೀರದಲಿ ಭಾವಿಯಾ
ನೀರ ಕುಡಿವ ಮಾನವನ ತೆರದೀ ಹರಿಯ ಚರಣವಿರಲು
ಭೂರಿದೈವಂಗಳಿನ್ನೇಕೆ ಭಜಿಸುವೆ ಮನುಜ ಹರಿ
ಕಾರುಣ್ಯನಿಧಿ ವೈಕುಂಠವಲ್ಲಭ ಬೇಲೂರ ಚೆನ್ನಿಗರಾಯ
ಕೃಪಾನಿಧಿಯಿರಲು ೬

 

೬೫
೩. ತಿರುವಂಗೂರು
ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ
ಭೋರೆಂಬ ವಾದ್ಯರವದಿ ಪ
ಶ್ರೀರಮಣ ಚಿತ್ತಾವಧಾನ ಪರಾಕು ಕೈ
ವಾರಿಸುವ ಪಾಠಕರ ಮೇಳದಿಂ ರಾಮನೂ ಅ.ಪ
ಮುತ್ತು ನವರತ್ನ ಕೆತ್ತಿಸಿ ಬಿಗಿದಚಲ್ಲಣದ
ಇತ್ತರದ ಸಮಕಟ್ಟಿನಾ ಝಲ್ಲಿಯಾ
ಸುತ್ತ ಮುಖದಲಿ ಮಿನುಗುವರಳೆಲೆಯ ಢಾಳದಿಂ
ದೊತ್ತಿಸಿದ ಕಡಿವಾಣದಾ ಮುಖಾರಂಬದಾ
ಕತ್ತಿ ಸಿಂಗಾಡಿ ಕೆಡೆಯ ಬತ್ತಳಿಕೆ ಬಿಗಿ
ದೊತ್ತಿ ಕುಣಿಕುಣಿದು ಬರುವಾ ತೇಜಿಯಾ
ಅರ್ತಿಯಿಂ ರಾಮರಾವುತನೇರಿ
ದೈತ್ಯವಿಪಿನಕ್ಕೆ ಪೊರಮಟ್ಟೈದಿದಾ ರಾಮನೂ ೧
ಸುರರು ಫೌಜಾಗಿ ತೋರಲು ಸೋಮಸೂರಿಯರು
ವರಛತ್ರವನುವಾಗಿ ಪಿಡಿದು ನಿಲಲೂ
ಸರಸಿಜೋದ್ಭವನು ಸಾರಥಿಯಾಗಿ ನಡೆಸುತಿರೆ
ವರರಥವ ಸಿಂಗರಸಿ ಹರಿ ಸ್ಮರಿಸಿ ತನ್ನಾ
ವರವಾಹನವನೇರಿ ಚರಿಸುತುತ್ಸಾಹದಿಂ
ತ್ವರದಿಂದ ನಡೆಯುತಿರಲೂ
ಖರದೂಷಣ ತ್ರಿಶಿರ ಮಾರೀಚ ಮೃಗಕುಲವ
ತರಿದು ಬೇಟೆಯನಾಡಿದಾ ರಾಮನೂ ೨
ದುರುಳ ದಶಶಿರ ಕುಂಭಕರ್ಣ ಮೊದಲಾಗಿದ್ದ ಖ
ಳರ ಖಂಡಿಸಿ ಕದನದಲ್ಲಿ ಗೆಲಿದೂ
ಮರೆಹೊಕ್ಕ ವೀರವೈಷ್ಣವ ವಿಭೀಷಣನೆಂಬ
ಶರಣನನು ಪರಿಪಾಲಿಸಿ ಜಗದೊಳೂ
ಪರಿವುತಿಹ ಕಾವೇರಿ ಉತ್ತರದ ಭಾಗದಲಿ
ಮೆರೆವ ತಿರುವಂಗೂರಿನಲೀ ಸುಖದಲೀ
ಸ್ಮರರೂಪ ವೈಕುಂಠರಾಮ ಬೇಟೆಯನಾಡಿ
ಪರಮ ಹರುಷದಿ ಬಂದು ನಿಂದ ಸಂಭ್ರಮದಿ ೩

 

ಇದೂ ಸಹ ವಾದಿರಾಜರನ್ನು
೨೪**
ಮಗುವು ಕಾಣಯ್ಯ ಮಾಯದ ಮಗುವು ಕಾಣಯ್ಯ
ಸುಗುಣಾ ವಾದಿರಾಜರೆ ಮೂಜಗವಾನುದರದೊಳಿಟ್ಟ ಪ
ಏಕಾರ್ಣವಾಗಿ ಸಕಲ ಲೋಕವಾಕಾರವಳಿಯಲೂ
ಏಕಮೇವಾದ್ವಿತೀಯವೆಂಬಾಗಮಕೆ ಸಮವಾಗೀ
ಶ್ರೀಕರಾಂಬುಜದಿಂ ಪಾದಾಂಗುಲಿಯ ಪಿಡಿದು ಬಾಯೊಳಿಟ್ಟು
ಶ್ರೀಕಾಂತ ವಟದೆಲೆಯ ಮೇಲ್ಮಲಗಿ ಬ್ರಹ್ಮನ ಪಡೆದಾ ೧
ಮಾಯಾಪೂತನೀಯ ಕೊಂದು ಕಾಯವ ಕೆಡಹಿ ಶಕಟನನು
ಸಾಯಬಡಿದು ವತ್ಸನ ಧೇನುಕನ ವೃಷಭನ
ನೊಯ್ಯನೊದ್ದು ಯಮಳಾರ್ಜುನರಿಗೆ ಸಾಯುಜ್ಯವನಿತ್ತು ತನ್ನ
ತಾಯಿಗೆ ತಾ ಮಣ್ಣುಮೆದ್ದು ಬಾಯಿ ಬಿಚ್ಚಿ ತೋರಿಸಿದಾ ೨
ಕಡಹದಾ ಮರವನೇರಿ ಸಂಗಡಿಗರೊಂದಿಗೆ ಕಾಳಂದಿಯ
ಮಡುವಲಿ ಧುಮುಕಿ ಕಲಕಿ ಜಲವಾ ಆ ಕಾಳಿಂಗನಾ
ಪೆಡೆಯ ತುಳಿದು ಜಡಿಯಲವನಾ ಮಡದಿಯರು ಬೇಡಿಕೊಳ್ಳೆ
ಕಡಲಿಗಟ್ಟಿ ಬಂದು ಎನ್ನ ತೊಡೆಯ ಮೇಲೆ ಮಂಡಿಸಿದ ೩
ಬಳ್ಳಿಗಟ್ಟದುಡಿಯಲ್ಲಿ ಗುಲ್ಲಿಯ ಚೀಲಾವ ಸಿಕ್ಕಿಸಿ
ಕಲ್ಲಿಗಟ್ಟ್ಯೊಗರ ಕಂಬಳಿಯ ಕೋಲು ತುದಿಯೊಳು
ನಿಲ್ಲಿಸಿ ಹೆಗಲೊಳು ಕೊಂಬು ಕೊಳಲನು ಪಿಡಿದೂದುತ್ತ
ಗೊಲ್ಲರೊಡಗೂಡಿ ಆಡುತೆಲ್ಲ ಗೋವುಗಳ ಕಾಯ್ದಾ ೪
ಶ್ರುತಿತತಿಗಗೋಚರನು ಚುತಿದೂರನಾದಿಮೂರ್ತಿ
ಚತುರ್ಮುಖಾದಿಶೇಷ ದೇವಾರಾಧ್ಯ ದೇವನು
ಕ್ಷಿತಿಗಧಿಕ ಬೇಲಾಪುರದ ಪತಿ ವೈಕುಂಠಕೇಶವನು
ಯತಿಯೆ ನೀ ನೋಡಲು ಶರಣಾಗತನ ತೊಡೆಯೊಳು ೫

 

೪೩
ಮದಕರಿಯ ಕವಳವಾದೆನೆಲೆ ದೇವ
ಮದನಪಿತನುಳುಹದಿರೆ ಗತಿ ಯಾರು ಎನಗೆ ಪ
ಉತ್ತಮಸುಧನ್ವ ಧ್ರುವ ವಿಭೀಷಣನು ಮೊದಲಾಗಿ
ಪೃಥ್ವಿಯೊಳು ನೀ ಸಲಹಿದವರನನವರತ
ಮತ್ತೆ ನಾನಿಂದು ಗಜದೊಡನೆ ಕಂಗೆಡುತಿರೆ ವಿ
ಪತ್ತಕಡೆಗಾಣಿಸಲಶಕ್ಯವೇನಯ್ಯಾ ೧
ದುರುಳಖಳ ಪ್ರಹ್ಲಾದನನಲೆಬಡಿಸುತಿರಲದನು
ಪರಿಹರಿಸಲೆಲ್ಲಿಂದ ಬಂದೊದಗಿದೆ
ಮೊರೆ ಇಡಲು ಕರಿಯ ಧ್ವನಿ ನಿನಗೆಂತು ಕೇಳಿತು
ಶರಣಜನಬಂಧುವೇ ಬಂಧನವ ಪರಿಹರಿಸೋ ೨
ಆದೊಡೇನಾಯ್ತು ನಿನ್ನಂಘ್ರಿನಂಬಿರಲು
ನೀದಯದಿ ನಿನ್ನೊಳಿಂಬಿಡುವ ನೆವದೀ
ಮಾಧವನೆ ಗಜವಾಗಿ ಬಂದೊದಗಿದೆಯೋ
ನಾಧನ್ಯ ವೈಕುಂಠಪತಿ ಚೆನ್ನರಾಯ ೩

 

೪೪
ಮರೆದೆಯೇನೋ ಚನ್ನರಾಯಾ ಒಮ್ಮೆ
ಅರಿ ನೀನೆ ವೇಲಾಪುರಿ ಶ್ರೀ ಚನ್ನರಾಯಾ ಪ
ಪೊಳೆವ ನಂದನವನದಲಲರ್ದ ಮಾವಿನ ನೆಳಲ
ಲಲರುವಾ ಸಿರಿತೋಳ ತಲೆಗಿಂಬನೊರಗೀ
ಅಳಿಯ ಮೃದುಗಾನಕ್ಕೆ ತಲೆದೂಗುತಲೆ ನುಡಿದ
ವಿಲಸಿತದ ಸರಸ ವಚನವ ಚೆನ್ನರಾಯಾ ೧
ಬೆಳದಿಂಗಳೆರಕದಂದದ ಸಾರದ್ಹಂದರದಿ
ಪೊಳೆವಿಂದುಕಾಂತದ ಜಗುಲಿಯೊಳೆನ್ನ
ತಲೆಯ ಮಗ್ಗಲನೊರಗಿ ಸುಳಿವೆಲರಗಾಳಿಗಂಜಿಸುತ
ಕಲೆಯರಿತು ಮೈಮರಸಿದುದ ಚನ್ನರಾಯಾ ೨
ತನುಮಿಸುಕೆ ಬಹುವಿಧದಿ ಧ್ವನಿಗೈವ ಶಕುನಿ ಪೆಸ-
ರಿನ ಮಂಚದಲಿ ಹಂಸತೂಲ ತಲ್ಪದಲಿ
ಮನಸಿಜಾಗಮವರಿತು ಮನವ ಮೆಚ್ಚಿಸಿದೆ ಎ-
ನ್ನಿನಿಯ ಶ್ರೀ ವೈಕುಂಠಪತಿ ಚೆನ್ನರಾಯಾ ೩

 

೫೮
ಮಾಡು ದಾನಧರ್ಮ ಪರ ಉಪಕಾರ
ಮರೆಯದಿರೆಚ್ಚರಿಕೆ ನೀ
ಕೇಡ ನೆನೆಸಬೇಡ ನಂಬಿದಠಾವಿಲ್ಲ
ಕೆಡುವಿ ನೀ ಎಚ್ಚರಿಕೆ ಪ
ಮೂಢರೊಡನೆ ಕೂಡಿ ಮುಂದೆ ನೀ ಕೆಡಬೇಡ
ಮೋಸಹೋಗದಿರೆಚ್ಚರಿಕೆ
ನಾಡೊಳು ಸುಜನರ ನೋಡಿ ನಡೆಯೋ ಕಂಡ್ಯಾ
ನಟನೆ ಬ್ಯಾಡೆಚ್ಚರಿಕೆ ೧
ಚೆನ್ನಾಗಿ ಗಳಿಸಿದೆ ನಾ ಬದುಕಿದೆನೆಂಬೊ
ಚೇಷ್ಟೆ ಬ್ಯಾಡೆಚ್ಚರಿಕೆ
ಮುನ್ನ ಮಾಡಿದ ಪುಣ್ಯಫಲದಿಂದ ಬಂದದ್ದು
ಮುಂದೆ ನೋಡೆಚ್ಚರಿಕೆ ೨
ಕಾಲದೂತರು ಬಂದು ಕಾಯವ ಎಳೆವರೊ
ಕಾಣಬಾರದೆಚ್ಚರಿಕೆ ನಮ್ಮ
ವೇಲಾಪುರವಾಸ ಚನ್ನಕೇಶವನ
ಮರೆಯದಿರೆಚ್ಚರಿಕೆ ೩

 

೫೧
ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ
ತೊಟ್ಟಿಲಂ ತೂಗದಿರಿ ಕೃಷ್ಣನೆದ್ದರೆ ಕಾಡದಿರನೆನ್ನಾ ಪ
ಮಿಸುನಿದೊಟ್ಟಿಲೊಳಂತೆ ದುಪ್ಪದುಪ್ಪಳಿನ ಹಾಸಿನಲಿ ಮಂದಾರ
ಕುಸುಮಗಳ ಜಾಜಿ ಮಲ್ಲಿಗೆ ಸೇವಂತಿಗೆ ಪಂಕೇರುಹದಾ
ಎಸಳುಗಳ ಪಸರಿಸಿಯೆ ಮಲಗಿಸಿದೆ ಪಾಲೆರದು ಮೊಲೆಯೂಡಿ
ಪೀತಾಂಬರವನೆ ಹೊದ್ದಿಸೀ |
ಹಸುಳೆಯನಮಲ ಕೋಮಲಾಂಗನನಂಗಕೋಟಿಗಳ ನಾ
ಚಿಸಿ ಚಿತ್ತಿನ ಪುತ್ಥಳಿಯ ಸಚ್ಚಿದಾನಂದ ಮೂರುತಿಯಾ
ಬಿಸಜಾಕ್ಷನಂ ಕೃಷ್ಣನಂ ಬಲದೇವಸಹಜಾತನಂ
ಕುಸುಮನಾಭನಂ ಜಲದನೀಲನಂ ದಿವಿಜಪಾಲನಂ ೧
ಬಿಡದೆತ್ತಿ ಮುಂಡಾಡಿ ಮುದ್ದಿಟ್ಟು ತಕ್ಕೈಸಿ ಕುಚಂಗಳೋಳ್
ಬಿಡದೊತ್ತಿಯಪ್ಪಿ ಪರಮಾನಂದ ಜಲಧಿಯೊಳಗೋಲಾಡಿ
ವೊಡನೊಡನೆ ಸಿರಿಮೊಗವ ನೋಡಿ ನೋಡಿಯುನಿಮ್ಮ ಚಿತ್ತಕ್ಕೆ
ಸಂತುಷ್ಟಿಯಿಲ್ಲವಲ್ಲಾ
ಒಡೆಯನೋ [ಇವ]ಯೆಮ್ಮೊಡನೆ ಪೊಡವಿಗೆ ಜೀವಂಗಳಿಗೆ
ಒಡೆಯನೆಂಬಿರಿ ಪರಲೋಕದಾನಂದಕ್ಕೆ
ಒಡೆಯನೇ ನಿಮಗೆನ್ನ ಕಂದ ಮುದ್ದು ಭಾಗ್ಯದ ಬೆಳಸು
ಮಡಗಿ ತೊಟ್ಟಿಲೊಳಚ್ಯುತನನಂತನಂ ಮುಕುಂದನ ೨
ನೋಡಲಿಹೆವೆಂತು ಲಾವಣ್ಯಸಿಂಧುವನೊಲಿದು ಸರವೆತ್ತಿ
ಪಾಡದಿಹೆವೆಂತು ಶ್ರುತಿಕೋಟಿಧನ್ಯಾತೀತಲೋಲನಂ
ಬೇಡದಿಹೆವೆಂತು ಕರಚರಣಮಂ ಪಡೆದ
ಚಿಂತಾಮಣಿಯೆಂದು ಬಾಕುಳಿಯಾದಿರೀ
ನಾಡ ಹೆಂಗಳ ದೃಷ್ಟಿದೋಷದಿಂ ಪಾಲ್ಗುಡಿದು ನಲವಿಂದ
ಲಾಡಲೊಲ್ಲನು ವಸುಂಧರೆಯ ತೊಟ್ಟಿಲಶಿಶುಗಳಂದದಿ ಮೊಲೆಯ
ನೂಡಿದರೆ ಬಾಯ್ದೆರೆಯಲೊಲ್ಲ ಮಂತ್ರದಿಯಂತ್ರದಿಂದೊಮ್ಮೆ
ಯೂಡಿ ಮಲಗಿಸಿದೆ ವಿಶ್ವನಂ ತ್ರೈಜಗಪ್ರಾಜ್ಞಮೂರುತಿಯಂ೩
ರವಿಯಹುದು ಬಿಸಿಗದಿರದೆಲ್ಲಿ ಚಂದಿರನಹುದು ಹಿಮವೆಲ್ಲಿ
ಸವಿಲ್ಲದೆಲ್ಲಿ ಮನ್ಮಥನಹುದು ಸರಸಿಜನಹುದು ಕಮಲಾಸ
ನವದೆಲ್ಲಿ ಇಂದುಧರನಹುದು ಫಣೆಗಣ್ಣೆಲ್ಲಿಯೆಂದು ಬರಿದೇಕೆ ಮರುಳಾಗುವಿರಿ
ಅವಿರಳನದ್ವಯನನಾದಿಮಧ್ಯಾಂತರಹಿತನ ಧರ್ಮಸ್ಥಾಪನಾಚಾರ್ಯ
ನ[ವಂ] ಮಹೀಭಾರವ ತವಿಸಲೆಂದವತರಿಸೆ ಜನನವಂ ಪಡೆದ ತಂದೆಯಂ
ಭುವನಪಾವನ ಸುಪ್ರಗಧಾಮೂರ್ತಿಯಂ ಶ್ರವಣಮಂಗಳಸತ್ಕೀರ್ತಿಯಂ೪
ನಿಗಮವೀ ಹರಿಯ ಮಹಿಮಾ ಸಮುದ್ರದ ತಡಿಯ ತೆರೆಗಳಲಿ
ಮಿಗೆ ಸಿಲುಕಿ ಮುಳುಗಲರಿಯದೆ ಬೀಳುತೇಳುತಾಳುತಲಿವೇಕೋ
ಮೊಗನಾಲ್ಕನಯ್ಯನ ಸಾಸಿರದೈವವಂ ಪಡೆದ ತಂದೆಯಂಅದೆಂತಲೆಂದಾರರಿವರೂ
ಸುಗುಣ ಸರ್ವಜ್ಞನಂ ಸರ್ವಭೂತರಾತ್ಮಕನಂ
ಜಗದೊಳ್ ಹೊರಗೆ ಪೂರ್ಣನಾಗಿ ಭುವನವ ಜಠರದೊಳಗಿಟ್ಟ
ಅಗಣಿತನ ವೈಕುಂಠ ಪತಿಯ ಘನತೆಯನರಿತು ಪೊಗಳುವರೇ
ಮುಗುದೆಯರು ನೀವೆತ್ತ ಮಾಯೆಯ ಕುಣಿಸಿ ನಗುವ ಹರಿಯೆತ್ತಾ ೫

 

೫೯
ಯೇನು ನೆಲೆ ಯೆನುತಿಹೆ ಮನುಜಾ ನಿ
ಧಾನಿಸು ಗತಿಯಚ್ಯುತನಲ್ಲದುಂಟೇ ಪ
ಹುಲ್ಲುಹನಿಯು ಗಾಳಿಗಿಟ್ಟ ಸೊಡರು ನೀರ
ಗುಳ್ಳೆಗಳದು ತಾ ಸ್ಥಿರವೆನಿಪಾ
ಜಳ್ಳು ಜವ್ವನವ ನಿಶ್ಚಯವೆಂದು ಕಾಲನ
ಭಲ್ಲೆಯಕೆದೆಯನೊಡ್ಡುವೆಯಾತಕೆ ನೀ ೧
ಮಿಂಚಿನ ಬಲೆಯ ರಕ್ಷೆಯ ಮನ ಸುದತಿಯಾ
ಚಂಚಲತೆಯ ಜೀವರ ಗೆಲಿದೂ ಪ್ರ
ಪಂಚಿನ ಸಿರಿಯ ನಿಶ್ಚಯವೆಂದು ಬಗೆದು ನೀ
ಮುಂಚುವೆಯೇಕೆ ನರಕಪತಿ ಕರೆಗೇ ೨
ಸುರಚಾಪವೋಲೀ ದೇಹದ ಸಂ
ಗರದಿ ಸೋಲುವ ಶರೀರವ ನಂಬೀ
ನರಕಕೂಪಕ್ಕಿಳಿಯದೇ ವೇಲಾಪುರ
ದರಸ ವೈಕುಂಠ [ಕೇಶವ] ಶರಣೆನ್ನೇ ೩

 

೧೩
ಮೂರ್ತಿಧ್ಯಾನ
ರಮೆಯ ವಕ್ಷೋಜ ಕುಂಕುಮ ಪಂಕಾಂಕಿತವಹ
ಕಮಲಜ ಹೃತ್ಸರೋವರ ಕಂಜವೆಂಸಾ
ಮನುಮುನಿ ಮಾನಸಹಂಸ ತಾನಾಗಿಹ
ಮನುಜ ಹೃದ್ವ್ಯೋಮದಿ ಮಿಂಚಿನಂತೆಸೆವಾ
ಧ್ವಜವಜ್ರ ಪದುಮ ಪತಾಕಾಂಕುಶ ವಹ
ನಿಜಕಾಂತಿಯಲರುಣಾಬ್ಜದಂತೆಸೆವಾ
ಪದತಳದ ಮೇಲೆ ಥಳಥಳಿಸುತಲಿಹ
ಪದುಮಭವಾಂಡ ಭೇದನದಕ್ಷವೆನಿಸುವಾ
ಸುರವಾಹಿನಿಗೆ ತೌರುಮನೆ ತಾನಹ
ದುರುಳ ಶಕಟತನುಚೂರ್ಣೀಕೃತವಹ
ಪಾರ್ಥಶರೀರ ರಕ್ಷಣಕರ್ತೃತಾನಹ
ಗೌತಮಸತಿ ಪಾತಕ ಪರಿಹರವಹ
ಉಂಗುಟದಿಂ ಭುವನಗಳತಿಗಳ
ಹಿಂಗಿಪ ನಖಪಂಕ್ತಿಗಳ ಕಿರಣಗಳಾ
ವೀರಮುದ್ರಿಕೆಯ ಮಂಟಿಕೆಯಕಾಂತಿಗಳಾ
ವೋರಂತೆ ಪೆರ್ಚಿಹ ಪಾದಾಂಗುಲಿಗಳಾ
ತೊಳಪ ಕಡೆಯ ಪೆಂಡೆಯದ ತೊಡವು
ಗಳ ವೈಕುಂಠಗಿರಿ ವೇಂಕಟೇಶ ನಿನ್ನಾ |
ಚರಣಸೇವೆಯನೇ ಕರುಣಿಸಯ್ಯಾ

 

೧೦
ಲೋಕತ್ರಯ ಪಾಲನೇ ಶುಕ ಮುನಿವಂದ್ಯ ಹರಿ
ಮುಖ ಪೀಠದಲಿ ಕುಳಿತೂ ಪ
ವಿಕಸಿತ ವಡೆದೊಲವನಿತ್ತು ಚನ್ನರಾಯ
ಸುಖದಿ ನೀ ಪವಡಿಸಯ್ಯಾ ಅ.ಪ
ಭವ ಬೊಮ್ಮ ಮೊದಲಾದ ದಿವಿಜ ಸನ್ಮುನಿಗಳೂ
ನವವಿಧ ಭಕುತಿಯಿಂದಾ
ಭವರೋಗ ವೈದ್ಯ ನಿಂ ನವಸರದೂಳಿಗ
ದ್ಹವಣರಿತೋಲೈಸುವ ವಿವರವ ಕಂಡು
ಸವೆಯದ ಸುಖವಿತ್ತು ತವ ಮುಖ್ಯರನು ಕಳುಹಿ
ಸವಿಯಾದ ತೂಲತಲ್ಪದಿ
ನವಸುಂದರ ನಿದ್ದೆ ಪೊ
ತ್ತವನೇ ನೀ ಪವಡಿಸಯ್ಯಾ ೧
ತುಂಬುರು ನಾರದನೆಂಬರು ವೀಣೆಯ
ಸಂಭ್ರಮದಿಂ ಮೇಳೈಸಿ
ಅಂಬುಜನಾಭ ನೀನೆಂಬ ಗೀತವ ಸವಿ
ದುಂಬಿ ಪಾಡಲು ಕೇಳುತಾ
ರಂಭೆಯೂರ್ವಸಿ ಹೊನ್ನ ಬೊಂಬೆ ತಿಲೋತ್ತಮೆ
ಯೆಂಬ ಮೇನಕೆ ಸಹಿತ
ಬೆಂಬಿಡದೆ ನಾಟ್ಯವಾಡಲು ನೋಡಿ ಭಕುತ ಕು
ಟುಂಬ ನೀ ಪವಡಿಸಯ್ಯಾ ೨
ಪೆಡೆದಲೆಗನ ಮೃದುವಡೆದ ಹಾಸಿನ ಮೇ
ಲಿಡಿಕಿರಿ ವಡಸಿಸುವಾ
ಕಡು ಸೊಗಸಿನ ಗಂಧವಡಿ ಪೂವು ಕಸ್ತೂರಿ
ಯಡಕೆಲೆ ಸಂಭ್ರಮಿಸೇ
ಪೊಡವಿಗಧಿಕ ಶೇಷಗಿರಿ ಗಡಣಕೆಣೆಯೆನೇ ವೇಲಾಪುರ
ದೊಡೆಯ ವೈಕುಂಠ ಚನ್ನಿಗರಾಯ ನಿನ್ನ
ಮಡದಿ ರನ್ನಳು ಸೌಮ್ಯನಾಯಕಿ
ಯೊಡನೈಗೂಡಿ ಮೃಡನುತನೆ ಪವಡಿಸಯ್ಯಾ ೩

 

೪೫
ವರದ ನಿನ್ನ ರೂಪ ಶ್ರೀ ನಿರುತ ನೋಡುವರೆ ಶ್ರೀ
ಸರಸಿಜಭವ ಸಕಲ ಪ
ಸುರರು ಮನುಗಳು ಮುನೀಶ್ವರರು ಶ್ರುತಿತತಿ
ಯರು ದಿಗ್ವರರು ತಾಕ್ಷ್ರ್ಯಕನ ಮತ[ದವರು] ಅ.ಪ
ಪರಭಕ್ತರಿಗೆ ದುಸ್ತರವಾದೊಡೆಯು ಕಾಡುವರಿಷಡ್ವರ್ಗವನೂ
ತೊರೆದು ಹೃದಯದಿ ತೀರ್ಥ ಚರಣಾರವಿಂದಗಳಿಂ
ದರಿವೆವೆಂದಡೆ ಅಗೋಚರನಾಗಿ ಸಿಲುಕದಿಹ ವಿಶ್ವರೂಪವ
ನಿರಿಸಿ ಪೂಜಾತಪವನುರೆ ಚರಿಸಿ ವ್ರತಗಳಿಂ೧
ಧರೆಯನಳೆದಂಗವೇನಯ್ಯ ಅಂದು
ನರನಿಂಗೆ ತೋರಿದುದೆ ಜೀಯಾ
ಶರಣರುಗಳೊದೆಯುವ ಕಾಯಾ ನಿನ್ನ
ನಿರುಗೆಯನು ತೋರಿಸಲು ಒಡೆಯ ಕಾಣ ೨
ಅರಿಯಬರುವುದಿಲ್ಲೀ ಚಿತ್ರಮಯ ಅಲ್ಪ
ನರನರಿತರಿಯದವನು ನೆಲೆಯಾ ನೋಡ
ಲರಿಯೆ ಭಯವಾಗುತಿದೆ ಮಾಯಾ ವೇಲಾ
ಪುರಿವಾಸ ವೈಕುಂಠ ಚೆನ್ನಕೇಶವರಾಯಾ ೩

 

ದಾಸರ ಭಕ್ತಿಯ ಶಕ್ತಿಯನ್ನು
೧೮
ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ
ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ಪ
ಕರದಲ್ಲಿ ದಂಡ ಕೋಲು ಕಮಂಡಲನೀವ
ಪರಿ ಹೇಗೆ ದಾಸಾನುದಾಸನಲ್ಲ
ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ
ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ ೧
ಎನ್ನ ಬಿನ್ನಪವೊಂದುಂಟು ಕೇಳೆಲೊ ಸ್ವಾಮಿ
ನಿನ್ನ ಬಾಲಬ್ರಹ್ಮಚಾರಿಯೆಂದು
ಸನ್ನುತಿಸುತಿದೆ ವೇದ ಶಾಸ್ತ್ರಾಗಮಗಳೆಲ್ಲ
ಇನ್ನದಕುಪಾಯವೇನಯ್ಯ ಚೆನ್ನಿಗರಾಯ ೨
ಶೃಂಗಾರಗಳನು ತತ್ವಂಗಳನು ಪೇಳುವಡೆ
ಗುಂಗುರುಹಿನೊಳಲ್ಪ ಮನುಜನಲ್ಲ
ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ
ಭಂಗವೇಕಯ್ಯ ವೈಕುಂಠ ಚೆನ್ನಿಗರಾಯ ೩

 

೧೨
ಶ್ರೀಕರಾಂಬುಜರಂಜಿತ ಪಾದಮೆಯಾ
ನಾಕಾಧಿಪ ಮುನಿಜನವರದಾಮೆಯಾ ಪ
ಲೋಕೇಶನುತ ಕಂಜಲೋಚನಾಮೆಯಾ
ಸಾಕಾರ ಭೋಗೀಶ್ವರ ಮಂಜುಳಚರಣಾ ಅ.ಪ
ಉದಧಿ ಗಂಭೀರ ಭೀರಹಿತ ಹಿತಚಾರಿತ್ರ
ಕದನ ಕರ್ಕಶ ಭೀಮ ರತಿಜಿತಹಿತಾ
ಮದಿತಕೌರವನಾತ್ತ ಚರಣವಿಖ್ಯಾತಾ
ಉದಿತ ಭಾಸ್ಕರಹಿತನಾಥನಾಧಾರೇ ೧
ಶರಣಾಗತಜನ ಶಾಂತಿದಾಂತಿಜೀಯಾ
ಗುರುಕಾಮದ ಸರ್ವಕೋವಿದಾಯೇಮಾ
ನರಕೇಸರಿ ರೂಪ ನಾರದ ವಂದ್ಯ ಶ್ರೀ
ವರವೇಲಾಪುರವಾಸ ವೈಕುಂಠ ಸರ್ವೇಶಾ ೨

 

೨. ಶನೀಶ್ವರ ದಂಡಕ
೪೯೦
ಶ್ರೀಮನ್ಮಹಾ ಮಾರ್ತಾಂಡ ಪುತ್ರ ಮುನೀಂದ್ರಾದಿಸ್ತೋತ್ರ ಪವಿತ್ರ ವಿಚಿತ್ರಚರಿತ್ರ ಕಾಷ್ಯಪಾವತ್ಸ ಗೋತ್ರ ನಮೋ ಮಾರ್ಗ ಸಂಚಾರಿ ನೀನಾಗಿ ನಾನಾಗ್ರಹ ಸ್ಥಾನಕಂ ಬಂದು ನೀನೊಂದು ರಾಶಿಯೊಳ್ ಪೊಂದಿನಿಂದಾಕ್ಷಣಂ ಮಾಸ ಮೂವತ್ತು ಪರಿಯಂತರಂ ಸಂಧಿಸಲ್ ಜನ್ಮಾಷ್ಟ ದ್ವಾದಶ ಪಂಚಮ ಸ್ಥಾನದಿಂ ವಕ್ರಮಂ ಮಾಳ್ಪ ವೈಖರ್ಯವೇನೆಂಬೆ ಬ್ರಹ್ಮ ರುದ್ರಾದಿ ಯಕ್ಷ ಗಂಧರ್ವ ಮೌನೀಂದ್ರ ವಿದ್ಯಾಧರಾನೇಕ ಯೋ[ಗೀಂದ್ರ]ರಂ [ಪೊದ್ದು] ನಿಂದಲ್ಲಿ ನಿಲಲೀಯದೆ ದೇಶಾಂತ [ರ ಚರಿ] ಸಲಾಹಾರಮಂ ಕಾಣದೆ ತಾಪಶ್ಚಾ[ತ್ತಾಪ] ಮೋಪಾಸನಾ ಭಾಸತ್ವವೆ ಹೊಂದಿ ಮೌನತ್ವದಿಂದಷ್ಘ ಕಷ್ಟೋಪ ಕಷ್ಟಂಗಳಂ ಬಿಟ್ಟು ಈ ರೀತಿಯನು ಮಾಳ್ಪುದೆ ನಿನ್ನಯ ಚೇಷ್ಟೆ ವಿಲಾಸವೇನೆಂಬೆ ನಾ[ನೆಂ] ದೆಸೆ ಗುಂದು[ವರು] ಮಹಾಮೌನಿ ರುಂದ್ರ[ರು] ಸದಾ ಭೀತಿಯಿಂದ ಮಹಾರಾಯ ಚಕ್ರೇಶ್ವರಾನೇಕ ವೀರಾಧಿವೀರ ಗಣೇಶ್ವರರಂ ಅಹೋ ನಿನ್ನ ಕ್ರೂರಾನು ದೃಷ್ಟಿವುಂಟಾದ ಮಾರ್ಗಕ್ಕೆ ಮಹೀಪಾಲನೋ ಯೋಗಿ[ಯೋ] ಭ್ರಷ್ಟತ್ವವ ಹೊಂದಿ ಸಹಾಯಂಗಳಂ ಮಾಡದೆ ಗುಹಾರಣ್ಯ ವಾಸಸ್ತರಾಗಿ ಅಹೋರಾತ್ರಿಯೊಳ್ಮನಸ್ತಾಪಂಗಗಳಂಬಟ್ಟು ಮಾನಿನಿ ಮಕ್ಕಳಂ ಕಾಣದೆ ಮೈಮರತು ಚಂಡಾಲ ದೇಹತ್ವವ ಹೊಂದರೆ, ಶಂಭು, ಚಂಡಾಲ [ನನೋ]ಲೈಸನೆ, ಹರಿಶ್ಚಂದ್ರ ನಳನುಂ ಕಾಲಮಂ ಕಳೆಯರೆ ಭೂನಾಥರನಿಕಾರಾನಿ-ಕಾರತ್ವವ ಹೊಂದರೆ ಆ ಪಾಂಡುನಂದನರು, ನಿನ್ನದೊಂದಾಟೋಪಕಂ ಅಂಜದೆಯಿರುವರಾರಯ್ಯ ಮೂರ್ಲೋಕದೊಳ್ ಮಹಾಸ್ಥೂಲಕಾಯ ಅಹೋ ಕಷ್ಟಂಗೈಯ್ವ ಕಲಿಯುಗದ ಜನ[ತೆಗೆ] ಇನ್ನಾದ ಪಾಡೇನೆಂಬೆ ಇದ್ದವೂರೆಲ್ಲ ಕ್ಷುದ್ರ ಮಾಡಿ ಉಪದ್ರದಿಂ [ಸುಖ] ಮಂ ಹೋಗಿ ನಿಜಾನಂದವಾದಂಗಳಿಂ ತಿರುಗಿ ಗ್ರಾಸವಾಸಕ್ಕಿಲ್ಲದೆ ಸಾಲಮಂ ತೆಗೆದು ಕೊಡುವದಕ್ಕಿಲ್ಲದೆ ಕಡು ನಿಷ್ಟೂರವಂ ಪೇಳ್ದು ಚಿಂತಾದ್ರಿಯೊಳ್ಮುಳುಗಿ ನಿಜಾಶ್ರಯಮಂ ಮಾಡಿ ನಿಂದತ್ವವೆ ಹೊಂದಿ ಬಂಧುತ್ವದಿಂ ಭಜನೆಯಂಗೆಟ್ಟು ದಾರಿದ್ರವಂ ಬಿಡದೆ [ಬನ್ನಗೆಡು] ಎಂದಾರೈಸುವಿಯಲ್ಲೊ ಇದು ನಿನ್ನದಲ್ಲೊ ಸದಾನತ್ವವಲ್ಲೊ ಬೆನ್ನಟ್ಟಿ ನೀ ಬಿಡದೆ ಬಚ್ಚಿಟ್ಟ ದ್ರವ್ಯಮಂ ಕಣ್ಣಾರ ಕಾಣಿಸಿದ[ಂತೆ] ಕಳೆ ಕಳೆಸಿ ದುರ್ಬುದ್ಧಿಯೊಳ್ ಅಣ್ಣಗಂ ತಮ್ಮಗಂ ಮಗಂ[ಗಂ] ಅತಿವೈರತ್ವವಂಬೆಳೆಸಿಪುತ್ರ ಮಿತ್ರಾದಿಗಳ ಶತ್ರುತ್ವವೆನಿಸಿ ಅತಿಹೀನರಂ ಮಾಡಿ ಅನ್ಯಾಯಮಂ ಹೊರಿಸಿ ವ್ಯರ್ಥದೇಹಿಗಳೆನಿಸಿ ಊರೆಲ್ಲವೂ ಕರೆಸಿ ಸಜ್ಜನಭಯ ಚೋರ ಭಯ ರಾಷ್ಟ್ರಭಯವುಂಟಾಗಿ ವಾಜಿಯಿಂ ಕೆಟ್ಟು ಕಟ್ಟಾಳುತನ ಮಾತು ಕಟ್ಟದೆ ಸಭೆಯಲಿ [ಶಿಕ್ಷೆಕೊಂ]ಬವರು ಕೊಡುವ ಮನಸಿಲ್ಲ[ವೆಂದು] ಕೆಲವರನು ಹದಗೆಡಿಸಿ ಉಟ್ಟ [ಬಟ್ಟೆಯು]ಮಂ ಕಳೆದು ಹಿಟ್ಟಿಗು ಕಷ್ಟವಾಗಿ ಅಟ್ಟುಕೊಂಬುವ ಪಾತ್ರೆಗವಕಾಶ ತಪ್ಪಿಸಿ ಪರರ ಮನೆಯನು ಸೇರಿ ಪರಿಪಾಟು ಬಿದ್ದಲ್ಲಿ ಮಡದಿ ಸುತರೊಂದು ದೆಸೆ ತಾನೊಂದು ದೆಸೆಯಲ್ಲಿ ಒಡಲು ಹೊರೆಯುತ್ತಿರಲು ಕಡು ಮಹಾ[ಪಾ]ಪನಿಂದ್ಯ ಕ್ಕೊಡಂಬಟ್ಟು ನಡುನಡುಗಿ ಮಿಡುಕಿದುರ್ಮತಿಯೆ ಘನವಾಗಿ ಕುತ್ಸಿತರ ಬಾಗಿಲಲಿ ಸಮಯವನು ಅನುಸರಿಸಿ ಅಲ್ಪರಿಗೆ ಪಲ್ತೆರೆದು ನಮೋ ನಮೋ ಎಂದು ನಿಂದು ಲಜ್ಜೆಯಂ ತೊರೆದು ಮಾನಮಂ ಕಾಣದೆ ಹೀನ ದುಶ್ಚಿಂತೆಯಲಿ ಹಿತಗೆಟ್ಟು ಐಶ್ವರ್ಯಮಂ ಬಿಟ್ಟು ಬಟ್ಟ ಬಯಲೆ ಆಗಿ ವಿಠಲನ ಕೃಪೆಯಿಂದ ಅಟ್ಟದೊಳಿಹ ಮೂಡೆ ಕಟ್ಟಿದ್ದ ಗೋ ಹಿಂಡು ನೆಟ್ಟನೆ ಹಗೇವದಲ್ಲಿದ್ದ ನಿಜಧಾನ್ಯ ಪಟ್ಟೆಂದು ಚಲಿಪುದು ಪರಿಪರಿಯ ವಸನಗಳು ಇಟ್ಟಲ್ಲಿ ನೆಲೆಸಿಹವಾಗಿಕಾಣಿಸದು ಅಟ್ಟೀವಹುಲಿಕರಡಿಉರಿಬಿಸಿಲು ಘನವಾಗಿ ಮಟ್ಟ ಮಧ್ಯಾಹ್ನದಲಿ ನೀರಡಿಸಿ ಕುಳಿತಿರಲು ಆರಿ[ಹ] ರೈ[ಕಾ]ವರಿಲ್ಲೆಂದು ಸಾರಸಂ [ಬಡುತ] ಕಾಡಿ [ಮೊರೆ]ಯಿಡೆ ನಿನ್ನ ಮೋಡಿ [ಮೆರೆವುದು] ಜರ್ಝರಿ ಭೂತ[ಂಗಳೆಲ್ಲಂ] ಬಿಟ್ಟು ಈ ದಂಡಕಂ ಹನ್ನೊಂದು ಬಾರಿ ಶನಿವಾರವೈದರಲಿ ಪಠಿಪರ್ಗೆ ಹನ್ನೊಂದನೆ ರಾಶಿಯೊಳಿರ್ದ ಫಲವನಿತ್ತು ಚೆಲುವ ವೇಲಾಪುರದ ವೈಕುಂಠ ವಿಠಲನ ಭಕ್ತನೆಂದೆನಿಸಿ ನಿನ್ನ ಪೆತ್ತ ಮಾತೆಯ ಪೆಸರನೆನಿತ ಧನ್ಯರಂ ಮಾಡಿಸದೆ ಅನ್ಯಾಯ[ಹಂ] ಕಾರಗಳಿಗಂಜಿ ನೀ ಬಿಡದೆ ನಿನ್ನ ಮನಬಂದ ರೀತಿಯಲಿ ಬಾಧಿಸದೈಯಾ ಸನ್ಮುನಿವಂದ್ಯ ಸರ್ವೇಶ್ವರಾನಂದ ಸಂಚಾರಿರವಿಸೂನು ಯಮ ಸಹೋದರ ವೀರಧರ್ಮ ಪರಿಪಾಲನೆ ಶನೈಶ್ವರ ಮಹಾರಾಯನೆ ತ್ರಾಹಿ ತ್ರಾಹಿ ನಮಸ್ತೆ ನಮಸ್ತೆ ನಮಃ
ಶ್ರೀ ಕೃಷ್ಣಾರ್ಪಣಮಸ್ತುಃ

 

೪೬
ಶ್ರೀರಂಗ ಯಾತ್ರೆಯನು ಮಾಡಿಬಾರೆಂದೆನ್ನ
ಈ ರೀತಿಯನುವ ಮಾಡಿದೆಯ ಸ್ವಾಮಿ ಪ
ಕಾರುಣ್ಯನಿಧಿಯೆ ವೇಲಾಪುರಾಧೀಶ್ವರನೆ
ಆರುಣ್ಯದೊಳು ಕೆಡಹಿದೆಯ ಸ್ವಾಮಿ ಅ.ಪ
ದಾರಿಯನು ತೋರಲೈತಂದ ಶ್ರೀವೈಷ್ಣವನು
ಸೇರಿಸಿದ ನೀಯಡವಿಯಸ್ವಾಮಿ
ಕಾರುಗತ್ತಲೆ ಸುರಿವ ಮಳೆಯ ಸಿಡಿಲಿನ್ನೆಲ್ಲಿ
ಸೇರುವೆನು ಈ ಗಿರಿಯೊಳೂ ಸ್ವಾಮಿ ೧
ನಾರಿ ಮಕ್ಕಳು ಭೃತ್ಯರೆಲ್ಲಿ ಪೋದರೋ ಯೇನು
ಕಾರಣಬಂದೆನಯ್ಯ ಸ್ವಾಮಿ
ಭೂರಮಣ ತ್ರಿಭುವನಾಧಾರ ನೀ ನಲ್ಲದಿ
ನ್ನಾರು ಕಾವರೆನ್ನನು ಸ್ವಾಮಿ ೨
ಘುಡಿಘುಡಿಸುತಲಿವೆ ಪುಲಿ ಕರಡಿ ಸುತ್ತಲು ಭೋ
ರಿಡುತಲಿವೆ ಭಕ್ಷಿಸುವಡೇ ಸ್ವಾಮಿ
ಬಿಡದೆ ಕರಿಗಳು ಕೂಗಿ ಕಂಗೆಡಿಸುತಲಿವೆ ಇದೇ
ಕಡೆಗಾಲವಾಯಿತೆಲ್ಲೋ ಸ್ವಾಮಿ ೩
ನಡೆವರೆಡೆಗಾಣೆ ಇಲ್ಲಿರುವುದಾಗ ದಾಗದು ಕಷ್ಟ
ಬಡುವುದಕೆ ಗುರಿಯಾದೆನೇ ಸ್ವಾಮಿ
ಎಡಬಲಕ್ಕೊಲೆಯೆ ಕಪ್ಪು ಕಲ್ಲು ಮುಳ್ಳುಗಳಿದೆಕೋ
ಒಡೆಯ ಕೈವಿಡದೆ ಸಲಹು ಸಲಹೋ ಸ್ವಾಮಿ ೪
ಒಂದೆಸಗಲೇಳಡಸಿತೆಂದು ಪೇಳುವ ನುಡಿಗೆ
ಸಂದು ಬಸವಳಿದೆನೆಲೋ ಸ್ವಾಮಿ
ಇಂದು ಸಂಧ್ಯಾ ಗಾಯತ್ರಿ ಕರ್ಮವುಳಿದುದರ
ವಿಂದಾಕ್ಷ ಸುಮ್ಮನಿಹರೇ ಸ್ವಾಮೀ ೫
ಎಂದೆಂದು ಮಾತನಾಡುವನಾಥರಕ್ಷಕನೆ
ಬಂದುದೀಗೇನು ಸಿರಿಯು ನಿನಗೇ
ಬಂಧನವ ಬಿಡಿಸು ದುರ್ಮರಣದಲಿ ಕೊಲ್ಲದಿರು
ತಂದೆ ವೈಕುಂಠ ರಮಣಾ ಸ್ವಾಮೀ ೬

 

೧೯
ಸಫಲವಾಯಿತು ಜನುಮ ಸಫಲವಾಯಿತು
ಸಫಲವಾಯಿತೆನ್ನ ಜನುಮ ವಿಭು ಶ್ರೀ ವೈಕುಂಠೇಶನ ಕಂಡೇ ಪ
ಚತುರವೇದ ಸ್ರ‍ಮತಿ ಪುರಾಣ
ತತಿಗಳೊಂದಾಗಿ ನೆರೆದು ತಮ್ಮ
ಮತಿಗಳಿಂದ ನುತಿಸಿ ಮಹಿಮೋ
ನ್ನತಿಯ ಕಾಣದ ಮಹಿಮನ ಕಂಡೇ ೧
ಶಂಖ ಚಕ್ರ ಗದೆ ಪದುಮಾ
ಲಂಕೃತವಾದ ಹಾರ ಕೇಯೂರ
ಕಂಕಣಾಂಗದ ಕಟಕ ಮುಕುಟಾ
ಲಂಕೃತನಾದ ಹರಿಯ ಕಂಡೇ ೨
ಒಂದು ಕರವ ಜಘನದ ಮೇಲೆ ಮ
ತ್ತೊಂದು ಕರವ ತಾನಿದ್ದಯಿರವೆ
ಸಂದೇಹವೇಕೆ ವೈಕುಂಠ
ವೆಂದು ಅಟ್ಟೈಸುವಂದದಿ ಹರಿಯ ಕಂಡೇ ೩
ಲಕುಮಿಗುಣಗಳೆಣಿಪನೆಂದು ಪಿಡಿದು
ಅಕಳಂಕದುಂಗುಟದುಗುರುರೆ ಧ್ಯಾನಿಸಿ
ಪ್ರಕಟಿತವಾದ ಗುಣಗಳನಂತ
ನಿಕರವ ತೋರಿದ ಹರಿಯ ಕಂಡೇ ೪
ತನ್ನ ನಂಬಿದವರನೆಂದು
ಮನ್ನಿಪೆನೆಂಬ ಬಿರಿದ ತೋರ್ಪ
ಚನ್ನ ಶ್ರೀ ರಂಗನಾಥ
ಘನ್ನ ವೈಕುಂಠೇಶನ ಕಂಡೇ ೫

 

೧೭
ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾ
ವಡಗಾಡಿ ವಸಡುಗ ಪಾವುಗೆ ಸುವರ್ಣದರ್ಪಣವಾ ಪ
ಪಿಡಿದ ನಾರಿಯರು ಯಡಬಲದ ಕೈದೀವಿಗೆಯ
ಕೊಡುತ ಕೈಲಾಗಿನವರಡಿಗಳೆಚ್ಚರಿಕೇ ಅ.ಪ
ವೀಣೆ ದಂಡಿಗೆ ತಾಳ ಮೇಳ ಸನಕಾದಿ ಸುರ
ನಾರಿಯರು ಗೀತ ಪ್ರಬಂಧ ನರ್ತನದ ಪು
ರಾಣ ಕೋವಿದರು ಪಾಠಕನಿಕರ ಸಹಿತ ಗೀ
ರ್ವಾಣರೈದಿರಲು ಅವಧಾನವೆಚ್ಚರಿಕೇ ೧
ಗಂಧ ಪರಿಮಳ ಪುಷ್ಪ ತಾಂಬೂಲ ಫಲಗಳನು
ತಂದು ಉಡುಗೊರೆಯ ಕಾಣೆಕೆಯಿಟ್ಟು ಜಯವೆನುತ
ನಂದ ಮುಕುಂದ ಗೋವಿಂದ ಕೇಶವಯೆನುತ
ವಂದನೆಗಳನೆ ಮಾಡಿ ನಿಂದರೆಚ್ಚರಿಕೇ ೨
ಭಾಗವತ ಜನರು ಬಿರುದಾವಳಿಯ ಪೊಗಳೆ ಮುನಿ
ಯೋಗಿಗಳು ತತ್ವ ಪ್ರಬಂಧದಧ್ಯಾಪಕರು
ಮೇಘವಾಹನ ಪೂಮಳೆಗರೆಯೆ ಸಕಲ ವಿನಿ
ಯೋಗದವರನು ಕಳುಹುವಾಗಲೆಚ್ಚರಿಕೇ೩
ಸರಸಿಜೋದ್ಭವನು ದಿಕ್ಪಾಲನಾರದ ಧ್ರುವನು
ಗರುಡ ಗಂಧರ್ವ ವಿದ್ಯಾಧರರು ಅನಿಲಜನು
ಪರಮ ಭಕ್ತಿಯಲಿ ಊಳಿಗಕೆ ಬಂದೈದಾರೆ
ಧರೆಗಧಿಕ ವೈಕುಂಠ ಚನ್ನ ಕೇಶವ ಚಿತ್ತೈಸೋ ೪

 

೬೬
೪. ಗೊರೂರು
ಹೇಮಾವತೀ ತೀರ ನಿಲಯಾ ನಮೋ
ಶ್ರೀಮನೃಸಿಂಹ ಶರಣೆನ್ನು ಬಿಡದೆ ಮನವೇ ಪ
ಅರಸು ಮುನಿವಾಗ ಆತ್ಮರು ಮೊಗವ ತೆಗೆವಾಗ
ದುರುಳ ಮಾನವರಿಟ್ಟೆಡೆಯಲಿರುವೆಂಬಾಗ
ತರುಣಿಯರೊಲವು ಪೈಸರಿಸುವಾಗ ಸುರರು ಮ
ತ್ಸರಿಪಾಗ ನರಸಿಂಹ ಶರಣೆನ್ನು ಮನವೇ ೧
ಮುಗಿಲಗಲದಾಪತ್ತು ಕವಿವಾಗ ಕ್ರೂರಗೃಹ
ಪಗೆಗಳಿಟ್ಟುಣಿಪಾಗ ಅನಲ ಜಲಭಯದಿ
ಮಿಗೆ ಮುಳುಗುವಾಗ ರೋಗಗಳು ಪೀಡಿಸುವಾಗ
ಮೃಗರಾಜವದನ ಶರಣೆನ್ನು ಬಿಡದೆ ಮನವೇ ೨
ಸುಖವ ಪಡುವಾಗ ದು:ಖಕ್ಕೆ ಮನವ ತೆಗೆವಾಗ
ಅಖಿಲ ಪಾತಕದ ನೆರೆಕಾಲಲೊದೆವಾಗ
ಮಖಮಥನ ಕಮಲಭವಮುಖ ದಿವಿಜವಂದ್ಯಪದ
ನಖನೆ ಶ್ರೀ ವೈಕುಂಠಪತಿ ಚನ್ನರಾಯ[ನೆನುಮನವೆ] ೩

 

೫೦
ಉಗಾಭೋಗ
ಗೋವಾಳಿ ಗೋಲಿಗುಳ್ಳೆಯ ಚೀಲವ ಬಳ್ಳಿಗಟ್ಟಿದುಡೆಯಲ್ಲಿಸಿಕ್ಕಿ
ಕಲ್ಲಿ ಕಂಬಳಿ ಕೋಲ ಹೆಗಲಲ್ಲಿ ಧರಿಸಿ ತುರುಕರುವನಮ್ಮೀ
ಗೊಲ್ಲರ ಬಾಲಕರ ಮಧ್ಯದಲ್ಲಿ ಪೊಂಗೊಳಲ ಪಿಡಿದೂ
ಅ[ಲ್ಲಲೆ] ತುತ್ತುರುತುರೆನುತ ಶ್ರೀವಲ್ಲಭನು ವೇಣುನಾದವ ಮಾಡೆ
ಜಗವೆಲ್ಲ ವೇಣುಮಯವಾದುದು ಚೆಲ್ವ ಪಿಳ್ಳೆರಾಯ ಮನ್ಮನೋ
ವಲ್ಲಭ ವೈಕುಂಠವಿಠಲ [ರಾಯನ]

 

ಇದು ವೈಕುಂಠದಾಸರು ರಚಿಸಿರುವ
೧೧
ಉಗಾಭೋಗ
ಶ್ರೀದೇವಿಗೆ ಯೌವನವರೆಯಹುದೆಂದು
ರವಿಶಶಿಗಳ ನೀಪಡದೇ
ಶ್ರೀದೇವಿಗೆ ಯೌವನವರೆಯಹುದೆಂದು
ಇಂದ್ರಾಗ್ನಿಗಳ ನೀನೇ ಪಡದೇ
ಶ್ರೀದೇವಿಗೆ ಯೌವನವರೆಯಹುದೆಂದು
ವಾಯು ವಿರಿಂಚಿ ಮೊದಲಾದವರ ಪಡದೇ
ಶ್ರೀದೇವಿಯನೆದೆಗೇರಿಸಿಕೊಂಡೇ
ಶ್ರೀದೇವಿಯ ಪೇರ ಧರಿಸಿಕೊಂಡೇ
ಶ್ರೀದೇವಿಗೆ ಮಾರುವೋದೇ ವೇಲಾಪುರವಾಸ
ವೈಕುಂಠರಮಣಾ ನಿನ್ನೊಲವತಿ ಪೊಸತೈಯಾ

 

(ಈ) (೧) ಕೃಷ್ಣಲೀಲಾ ಕೃತಿಗಳು
೪೮
ಸುಳಾದಿ
ಧ್ರುವತಾಳ
ಉರಗದುರುಬಿನಲಿ ಮಲ್ಲೆಮಲ್ಲಿಗೆ
ಮರುಗ ಜಾಜಿ ಸಂಪಿಗೆಯ
ತುರುಬಿ ಮತ್ತಾಳೆಪೂ ಸಿರಿಯ ಶಿರದಲ್ಲಿ ಧರಿಸಿ
ವರನೊಸಲಲೆಸೆವೆ ಕಸ್ತೂರಿ ತಿಲಕವಿಟ್ಟು
ಸ್ಮರನ ಶಿಂಗಾಡಿ ಸೋಲಿಸುವ ಪುರ್ಬುವಿಲ್ಲಿಂದ ಸರಸಿಜನಯನ
ನಿರುಪಮ ಮುತ್ತಿನ ಮುಕುತಿಯನಿಟ್ಟು ಜಗಮೋಹಿಸುತ
ಸುರಚಿರ ವೇಣು ಅಧರದ ಮೇಲೆ ನಾನಾವಿಧ ಸುಧಾಂಬುಧಿಯಾ
[ವರಝೇಂಕಾ]ರನಾದಂಗಳು ಗಾಳಿಯಲಿ ತುಳಕಿ
ನೆರೆಲೋಕವ ಭ್ರಮಿಸುತ್ತ ನಿಂದಿರುತಿಹ ವೈಕುಂಠ ವಿಠ-
ಲರಾಯಗೆ ಮನಸೋತೆನೆಲೆಯವ್ವ್ವ ೧
ಮಟ್ಟತಾಳ
ಅಂಗಜನಯ್ಯನ ವೇಣುನಾದಕೆ ಮೈಮರೆದು ಗಜಗಳು
ಶಿಂಗಗಳು ಉರಗವಿಹಂಗಗಳು
ಇಂಗಿತ ಮಯೂರಂಗಳು ಸಂಘವ ಗೂಡಿರೆ
ಅಂಗವ ಮರೆದವು ನಲಿದು ವೈಕುಂಠವಿಠಲನ
ಮಂಗಳ ವೇಣುನಾದಕ್ಕೆ ಸುರಾಸುರರು ಮೈಮರೆದರು ೨
ರೂಪಕತಾಳ
ಹರಿಯ ವೇಣುನಾದವಮೃತಸಿಂಧುವಿನಲ್ಲಿ ಮುಳುಗಿತುಮನ
ಸ್ಮರನ ಜನಕನ ಅಂಗಕಾಂತಿ ಸುಧಾಂಬುಧಿಯಲಿ ಬೆರಸಾದುದೂ
ಸಿರಿ ವೈಕುಂಠವಿಠಲನಲೇನಾದುದೋ ೩
ಝಂಪೆತಾಳ
ಪುಳಕವುದೆಗೆದು ಶಿರಬಿಗಿದು ಮನಮುಳುಗಿ
ಕೊಳಲನೂದುತ ಮುದ್ದುಮುಖದ ವೈಕುಂಠವಿಠಲನುಬರಲು
ತಲೆಬಾಗಿ ಕರಗಳ ಮುಗಿದು ಜಯಜಯವೆನ್ನುತಿರೆ ಕಂ
ಕಂಗಳಲಿ ಒಲಿದಾನಂದವಾರಿಯಲಿ ತನುಮರೆದೆ ೪
ತ್ರಿವುಡೆ ತಾಳ
ಸುರರದಳ ಮಳೆಗರೆಯಲು ಮುನಿ
ವರರ ಜಯ ಜಯ ಜಯಕಾರದಿ ತಾ ಸರ್ವದೇವರದೇವ
ತುರುಗಳನೆ ಪಾಲಿಸಿದ ಬಹುಸಿರಿಸಂಪದರಾಗಿ
ನೆರೆದ ಗೋಪಾಲಕರ ಮಧ್ಯದಿ
ಪರಿಪರಿಯ ರಾಗಗಳನೂದುತ್ತ ಎಸೆವ ದೇವರದೇವ
ವರಮೂರ್ತಿ ವೈಕುಂಠವಿಠಲನ
ಚರಣಕಮಲಕೆ ನಮೋ ಎಂಬೆ ೫
ಅಟ್ಟತಾಳ
ನಳಿನಕ್ಕೆರಗುವ ಅಳಿಗಳಂದದಿ
ಸುಳಿಗುರುಳು ಮುಖಕಮಲದಿ ಹೊಳೆಯೆ
ಹೊಳೆವ ಕಂಗಳಿಂ ತ[ವಸಿಗಳಿಂದು]ಪಚರಿಸುತ
ಕೆಳದಿ ಕೇಳಮ್ಮ ವೈಕುಂಠವಿಠಲ ಬಂದ ೬
ಆದಿತಾಳ
ಗೋವರ್ಧನ ಧರ ಗೋಕುಲಪಾಲಕ
[ಗೋವಿಂದ] ಗೋಪಜನಮನೋರಂಜಕ
ಶ್ರೀ ವೈಕುಂಠವಿಠಲ ¸ಂಜೀವನರೂಪ೭
ಜತಿ
ಗೋಕುಲಾನಂದ ವೈಕುಂಠವಿಠಲನು ವೇಣುನಾದಾಮೃತದಿ
ಗೋಕುಲದ ಅಂಗನೆಯರಿಗೆ ಆನಂದವನಿತ್ತ

 

ಈ ಸುಳಾದಿ ಕೃಷ್ಣಲೀಲೆಯಲ್ಲಿ
೪೯
ಸುಳಾದಿ
ಧ್ರುವತಾಳ
ಎಲ್ಲಿಹ ಮಧುರಾಪುರ ಇನ್ನೆಲ್ಲಿಹ ಕಂಸಾಸುರನೆ
ಎಲ್ಲಿಂದ ಬಂದುದೆ ಬಿಲ್ಲುಹಬ್ಬ ತಾನು
ಎಲ್ಲಿಹನಕ್ರೂರನಿವ ತಾನೆಲ್ಲಿಂದ ಬಂದನೆ
ಎಲ್ಲಿ ನಮ್ಮ ಗೋವಿಂದನೊಡಗೊಂಡನೊಯ್ದನೆ
ಎಲ್ಲಿಯ ಮನೆ ನಮಗಿನ್ನೆಲ್ಲಿಯ ಮನೆವಾರತೆ
ಎಲ್ಲಿ ನಮ್ಮ ವೈಕುಂಠವಿಠ್ಠಲ
ಎಲ್ಲಿಗ್ಹೋದಡಲ್ಲಿಗೆ ಹೋಹ ನೋಡೆ ಕೆಳದಿ ೧
ಮಟ್ಟತಾಳ
ಈತಗೆಲ್ಲಿ ದೊರಕಿತೆ ಮಾತಿನ ಅಕ್ರೂರತನ ನೋಡೇ ಕೆಳದಿ
ಭೂತಳಕೆ ಪೆಸರಾದಕ್ರೂರಗೆ ಮಾತಿನ ಕ್ರೂರತನ ನೋಡೆ ಕೆಳದಿ
ಯಾತಕೆ ವೈಕುಂಠವಿಠ್ಠಲನನಗಲಿಸುವಗೆ
ಮಾತಿನ ಕ್ರೂರತನ ನೋಡೆ ಕೆಳದಿ ೨
ರೂಪಕ ತಾಳ
ಬಿಲ್ಲುಹಬ್ಬ ಮಧುರಾಪುರ ದಲ್ಲಿ ನಿನಗೆ ಕೃಷ್ಣಯ್ಯಾ ನಿನ್ನ
ಬಿಲ್ಲುಹಬ್ಬ ಸ್ಮರಣೆಯನೊಪ್ಪಿಸಿತು ನಿನ್ನ
ಬಿಲ್ಲು ವಲ್ಲಭ ವೈಕುಂಠವಿಠ್ಠಲ ನಿನ್ನ ೩
ಝಂಪೆತಾಳ
ಚರಣಸರಸಿಜವ ನಮ್ಮ ಶಿರದ ಮೇಲಿಡು ಕೃಷ್ಣ
ಮರಳಿ ನಮ್ಮ ಗೋಕುಲಕ್ಕೆ ಬಾಹುದೆಂತು
ಪರಮಪುರುಷ ಪುರುಷೋತ್ತಮ
ಮರಳಿ ನಮ್ಮ ಗೋಕುಲಕೆ ಬಾಹುದೆಂತು
ಸಿರಿರಮಣ ವೈಕುಂಠವಿಠ್ಠಲ ೪
ತ್ರಿವಿಡಿ ತಾಳ
ಮೂರುತಿ ಮನದಲ್ಲಿ ಕೀರುತಿ ಕಿವಿಯಲ್ಲಿ ಇರಿಸು ರ
ಮಾರಮಣನೆ ಅನ್ಯ ವಿಚಾರ ನಮಗ್ಯಾತಕಯ್ಯಾ
ವಾರಿಜಾಕ್ಷ ವೈಕುಂಠವಿಠ್ಠಲ ಕರುಣಾಕರ ೫
ಅಟ್ಟತಾಳ
ಹರಿಕರುಣಾಮೃತಾಂಬುಧಿಯಲೋಲಾಡಿ
ಮರಳಿ ವಿಯೋಗ ದು:ಖದಿ ಮುಳುಗಾಡಿ
ಹರಿವಿರಹದಿ ಕಳ್ಳರಾಗಿ ತಿರುಗಿದವರ ಪೊರೆದಂತೆ
ಸಿರಿರಮಣ ವೈಕುಂಠವಿಠ್ಠಲರೇಯಾ
ಪೊರೆಯಬೇಕು ನಿನ್ನ ನೆರೆ ನಂಬಿದವರ೬
ಆದಿತಾಳ
ಹರಿವಿರಹದಿ ಬೆಚ್ಚಂತರಂಗದಿ
ಸ್ಮರನರಳಂಬಿಗೊಡ್ಡಿ ಬಹಿರಂಗದಿ
ತರುಣಿಯ ಜನರತ್ತ ಹರಿದವರ ಕಳ್ಳರಾಗಿಸಿಂ
ತಿರುಗಿಸಿದಂತೆತರಣಿಯ ಜನರನ್ನ
ಸಿರಿರಮಣ ವೈಕುಂಠವಿಠಲರೇಯಾ
ಪೊರೆಯಬೇಕು ನಿನ್ನ ನೆರೆ ನಂಬಿದವರನ್ನ ೭
ಜತಿ
ಗೋಕುಲದ ಗೋಪಾಂಗನೆಯರುಗಳು
ಲೋಕೇಶ ವೈಕುಂಠವಿಠ್ಠಲನ್ನ ನೆನೆದರು ಗೋಕುಲದಿ ೮

 

೩೪
ಸುಳಾದಿ
ಧ್ರುವತಾಳ
ಚತುರಾನನನೇ ಪಂಚವದನನೇ ಭೃಗುವೇ
ಪಿತಭೀಷ್ಮನೇ ಸಹದೇವನೇ ಚರಣಾರಾಧನೆಗೆ ಸ
ನ್ನುತಿಗೈವರೆ ನಿನಗೆ ಬೇಡಿದುದ
ಸಮರ್ಪಿಸುವಡೆತನು ಅಶುಚಿ ನಾನಲ್ಪ
ಮತಿ ಚಂಚಲನು ಅಕಿಂಚನನಬಲನಾ
ನತಿಯಾ[ದ] ವಕ್ರನೂ ವೇಲಾಪುರವರಾಧಿ
ಪತಿ ಚನ್ನರಾಯ ವೈಕುಂಠರಮಣ ೧
ಮಠ್ಯತಾಳ
ಸ್ಮರಿಸಿದಾಗ ಬಂದಾನತನಾಗಿ ವಿಶ್ವೋ
ದರ ನಿನ್ನನು ಕಂಧರದಲಿಧರಿಸೀ
ಹರಿಯೆ ನಿನ್ನಿಂಗಿತದಿರವನರಿತು ಲೋಕಾಂ
ತರದಲಿ ಚರಿಸುವಗರುಡನ ವೋಲ್ ಸೇವಕನೇ
ಸಿರಿ ವೈಕುಂಠಚೆನ್ನರಾಯ ನಿನ್ನ
ಕರುಣವೇ ಯೆನ್ನಹರಣ ದಯಾಪರ ೨
ರೂಪಕತಾಳ
ನಿರುಪಾಧಿಕ ಸೇವಕ ಮರುತಂಜುವೋಲ್
ಧುರದೊಳು ತ್ರೇತಾಯುಗದಲಿ
ವಾರೂಧವಾದಂತೆ ಹರಿಯೇ ನಿನ್ನ [ದಿವ್ಯಾಸ್ತ್ರವನುಬಿ]ಟ್ಟು
ಹರಿಹರಿದಸುರರ ತುಳಿತುಳಿದೊರಸಿದ ವೊಲು ನಾ ಧನ್ಯನೇ
ಪರಮದಯಾಪರ ವೈಕುಂಠರಮಣ ಚೆನ್ನಿಗ ೩
ಝಂಪೆತಾಳ
ರಣರಂಗಭೀಮ ನಿಸ್ಸೀಮ ಮಾರುತಿಯಂತೆ
ಮಣಿಯದವನೇ ಹಲವು ದೈವಂಗಳಿಗೆ ನಾ
ಮಣಿದವನೇ ಹಲವುದೈವಂಗಳಿಗೆ ಒಂದು
ಕ್ಷಣಮಾತ್ರ ನಿನ್ನ ಘನತೆಯ ನೆನದು ಸುಖಿಸದವ
ಗುಣವಂತ ವೈಕುಂಠಚನ್ನಕೇಶವ ನಾನು ೪
ತ್ರಿವಡೆತಾಳ
ಪತಿಯಾಸುತರನು ಮನೆಯ ಮನವಾ
ರತೆಯ ನಾನಾ ಬಂಧು ವರ್ಗವ
ವಿತ್ತಗಳ ನಾನಾಧಾನ್ಯಗಳ ಪಶುಸಂತತಿ
ಯತೃಣವೆಂದೇ ವಿವರ್ಜಿಸಿ
ಗತಿನೀನೇ ಹರಿಯೆಂದು
ಅತಿನಂಬಿದ ಗೋಪಿಯರ ವೋಲು ನಾ ಕೃತಾರ್ಥನೇ
ಮತಿಗೆಡಿಸುವೀಕ್ಷಣ ಪ್ರಯಾಸವ
ಮಾಣಿಸೈ ವೈಕುಂಠಚೆನ್ನಿಗಾ ೫
ಅಟ್ಟತಾಳ
ಅತ್ಯುನ್ನತದಲಿಹ ಸಾಕಾರಫಲವ
ನತಿ ಬಯಸಿ ಬಾಯಾರಿದರೆ ನಿಲುಕಲರಿಯದಯ್ಯಾ
[ಮತ್ತದು] ಹೆಳವಂಗೆ ಕೈಗಳ ನೀಡಿ ಬೊಬ್ಬಿಟ್ಟಡೆಯೂ ನೀ
ಶ್ರುತಿತತಿಗಗೋಚರನೇ ನಿನ್ನಾ
ನತಬೇಡುವೆನಗೇಗೈಸಿ ಶರಣಾ
ಗತನ ಸಲಹು ವೈಕುಂಠಕೇಶವ ೬
ಏಕತಾಳ
ಕಪಿ ತನ್ನ ಸತ್ವವನರಿಯದೆ ನಭ
ಕುಪ್ಪರಿಸುವೆನೆಂದುದ್ಯೋಗಿಸುವೊಲು
ವೊಪ್ಪವಲ್ಲವೆ ನಿನ್ನುಡಿಗಳಿಂದ (?)
ಅಪ್ರತಿಮ ಕೈವಾರಿಸಬಗೆಯೇನು ವೊ
ತಪ್ಪಿ[?]ಹೊಂದು ಸಾಸಿರ ಕೋಟಿಯ ಮೇಲೆ
ಸರ್ಪಶಯನ ವೈಕುಂಠಚೆನ್ನಿಗಾ ೭
ಜತೆ
ಶರಣು ಶರಣು ವೇಲಾಪುರಾವಾಸ
ಶರಣು ಶರಣು ವೈಕುಂಠನಿವಾಸಾ ಶರ

 

೩೫
ಸುಳಾದಿ
ಧ್ರುವತಾಳ
ಜನನರಹಿತ ಹರಿಶರಣೆನ್ನೆ ಭವಬಂ
ಧನ ಹರಿವನಚ್ಚರಿಯದಲ್ಲವೇ
ಅನುಪಮ ಮುಕುಂದ ಶರಣೆನ್ನೆ ಸದ್ಗತಿ
ಯನು ಕೊಡುತಿಹನಚ್ಚರಿಯದಲ್ಲವೇ
ಅನಂತ ಶ್ರೀಪತಿ ಶರಣೆನ್ನೆ ಸಂಪದ
ವನು ಕೊಡುತಿಹನಚ್ಚರಿಯದಲ್ಲವೇ
ನೆನೆದ ಮಾತ್ರದಿ ಕಾಮಿತ ಫಲವಾ
ಅನಿಮಿಷರೊಳಗದಾವನೀವ
ಸನಕಾಧಿಪನುತ ಶ್ರೀ ಚೆನ್ನಕೇಶವ
ಘನ ಮಹಿಮ ವೈಕುಂಠ [ಚೆನ್ನಿಗಾ] ೧
ಮಠ್ಯತಾಳ
ಘನವಾತಾತಪ ವರ್ಷಾನೇಕವನಾಶ್ರಯನೆಂ
ದೆನಿಪ ಈ ದೇಹವ ದಂಡಿಸಿ ನೆರೆ ಭಜಿಸಲು ಬಂದು
ಕ್ಷಣಮಾತ್ರದಿ ಕೊಡುವರಲ್ಲದೇ ಅಮರರು
ಅನಂತವಾದ ಸುಖವನೀವ ಸಮರ್ಥರೇ
ನೆನೆದ ಮಾತ್ರದಿ ಪರಮಪದವಿಯನೇ ಕರುಣಿಪ
ಅನುಪಮದಾನಿ ವೈಕುಂಠಚನ್ನಿಗಾ ೨
ರೂಪಕತಾಳ
ಒಮ್ಮೆ ನೆನೆದನಜಮಿಳ ಒಮ್ಮೆ ನೆನೆದ ಕರಿವರ
ಸತುಕರ್ಮವನೇಂಗೈದರು ತಪವ ಹೇಳು
ತಮ್ಮ ಸಂಕಟಕೆ ಕರೆಯಲು
ಸ್ವಾಮಿ ನಮ್ಮವರೆಂದುದ್ಧರಿಸಿದ
ಸುಮ್ಮನೆ ಪರಮದಯಾಪರ ಅನಾಥಬಾಂಧವ ಕೃಷ್ಣನ
ಒಮ್ಮೆ ಚನ್ನಕೇಶವ ವೈಕುಂಠರಮಣ ಪರ
ಬೊಮ್ಮ ಎಂದರೆ ಸಾಲದೆ ಮುಕುತಿಗೆ ೩
ಝಂಪೆತಾಳ
ತಾನೊಂದ ಬಯಸಿ ಸಲಹುವನಲ್ಲ ಜೀವರಿಗೆ
ಏನನೀಯಲಿಯದೇ ಸುಖವಕೊಲುವವನಲ್ಲ
ಶ್ರೀನಾಥ ನಿತ್ಯಪರಮಾನಂದರೂಪ ಸು
ಜ್ಞಾನನಿಧಿ ಕೃಷ್ಣನಚ್ಯುತನನಘಚರಿತ್ರ
ಜ್ಞಾನ ಭಕುತಿಯನೆರಡನೋಡುವನು ಜಗದೇಕ
ದಾನಿ ವೈಕುಂಠಚೆನ್ನಿಗ ನೋಡ ಬೇರೊಂದ ೪
ತ್ರಿವಡೆತಾಳ
ಮನುಜಮಾಡುವ ಪಾತಕಂಗಳನೆಣಿಸುವಡೇ ಫಣಿರಾಜನಳವೇ
ಮನವವಂಚಿಪೆಯೇಕೆ ಪ್ರಾಯಶ್ಚಿತ್ತಕೆ ಹೇಮಾದ್ರಿ ತಾನಾಗಿ
ಇನನಾಗಿ ದುರಿತಾಂಧಕಾರಕೆ ವಿನತೆಯಾತ್ಮಜನಾಗಿ ಪಾತಕ
ವೆನಿಪ ಸರ್ಪಕೆ ಕೃಷ್ಣನಿರಲಾತನ ಚರಣಗಳನೆ ಭಜಿಸಿರೋ
ಅನಧಿಕಾರಿಗಳನು ಮೋಹಿಸಿ ಮನುಜನೆಂದೆನಿಸಿ ತೋರಿಸಿ
ನೆನೆಯಲೀಯನು ಶ್ರೀಪಾದವನಜಗಳನು ವೈಕುಂಠಚೆನ್ನಿಗ೫
ಅಟ್ಟತಾಳ
ದೇವರಂಗದಲಿ ವೇದಂಗಳುಸುರಲಿ ತೀ
ರ್ಥಾವಳಿ ಹರಿಪಾದಕಮಲದೊಳಡಗಿಹವು ಅ
ದಾವಂಗೀ ಮಹಿಮೆಯುಂಟು
ದಿವಿಜಾವಳಿ ಹರಿನೀನೆ ಗತಿ ಶರಣೆನುತಿಹುದಾ
ಶ್ರೀವೈಕುಂಠರಮಣ ಕೇಶವ ಸರ್ವ
ದೇವತಾರಾಧ್ಯನೆಂಬುದ ಜಗವರಿಯದೇ
ಆವಂಗೀ ಮಹಿಮೆಯುಂಟೂ ೬
ಏಕತಾಳ
ಭೂವ್ಯೋಮಗಳಂಘ್ರಿಗಳೊಳಗಿರ್ದೆಂದು (?)
ದೇವರು ಮನುಮುನಿಗಳಸುರಾಸು
ರಾವಳಿಯಡಗಿದರೈ ರಾ
ಜೀವನಯನ ಪದಕಮಲದೊಳಲ್ಲದೆಯೂ
ಶ್ರೀವೈಕುಂಠಕೇಶವ ಭುವ
ನಾವಳಿಯು[ದ]ಯ ಸ್ಥಿತಿ ಲಯಕಾರಣ ೭
ಜತಿ
ವೇಲಾಪುರಪತಿ ಕೇಶವನೇ ಸುರ
ಪಾಲಕ ವೈಕುಂಠರಮಣನೆಂದೆಯಾ

 


ಸುಳಾದಿ
ಧ್ರುವತಾಳ
ತಮಾನಕೊಂದು ವೇದಗಳನುದ್ಧರಿಸಿ
ಕಮಲಾಸನನ ಪ್ರತಿಷ್ಠಿಸಿದಾ
ಅಮೃತ ಮಥನವಂ ಮಾಡಿ ಸುರೇಶನ
ಅಮರಪದದಲಿ ಪ್ರತಿಷ್ಠಿಸಿದಾ
ಯಮ ನೈಋತಿ ವರುಣ ವಾಯು ಧನಾದ್ಯರ
ಕ್ರಮದಿಂದೇ ಪ್ರತಿಷ್ಠಿಸಿದಾ
ಹಿಮಧಾಮನ ಸೂರ್ಯನ ಗಗನದಲಂದೇ ಪ್ರತಿಷ್ಠಿಸಿದಾ
ಕಮಲಾಪತಿ ವೈಕುಂಠ ಕೇಶವನೇ
ಸುಮನಸ್ಸಂಪ್ರತಿಷ್ಠಾಚಾರ್ಯಯೆಂದರಿಯಾ ೧
ಮಟ್ಟತಾಳ
ಅಡಿಗಡಿಗಿದನೇ ಪೇಳುವೆ ಮಾನವ ಮುಕುಂದ
ಮೃಡನ ಪ್ರತಿಷ್ಠೆಯ ಮಾಡಿದನಂದು
ಬಿಡು ಮರುಳಾಟವ ಬಿಡು ಮರುಳಾಟವ
ಹನುಮಂತನ ರೋಮತಾನೇ
ಮೃಡಮೂರುತಿಯಾಗಿ ಪೂಜೆಗೊಂಡುದನೆಂದು
ವೊಡೆಯನುದಾರ ಹನುಮಂತಗೆ ವೇಲಾಪುರ
ದೊಡೆಯನು ಶ್ರೀ ವೈಕುಂಠಪತಿ ಕೇಳ್ದರಿಯಾ ೨
ರೂಪಕ ತಾಳ
ಮಾಡಿದನು ಪ್ರತಿಷ್ಠೆಯನಾ ಹನುಮನ ಬ್ರಹ್ಮತ್ವದಲೀ
ಮಾಡಿದನು ಪ್ರತಿಷ್ಠೆಯನಾ ವಿಭೀಷಣನ ಲಂಕೆಯಲಿ
ಮಾಡಿದನು ಪ್ರತಿಷ್ಠೆಯನಾ ಬಲಿಗೊಲಿದು ಪಾತಾಳದಲೀ
ಮಾಡಿದನು ಪ್ರತಿಷ್ಠೆಯನಾಧ್ರುವನಮುನ್ನತ ಲೋಕದಿ
ಮಾಡಿದನು ಪ್ರತಿಷ್ಠೆಯ ಮನುಮುನಿಗಳ ಶ್ರೀಕೇಶವ
ಮಾಡನೆ ಶಿವನ ಪ್ರತಿಷ್ಠೆಯ
ವೈಕುಂಠರಮಣನಯ್ಯನೇ ಮಾಡಿದನೂ ೩
ಝಂಪೆ ತಾಳ
ಇಳೆಯ ಪ್ರತಿಷ್ಠಿಸಿದ ಹೇಮಾಕ್ಷನಂ ಕೊಂದು
ಕಳದು ರಾವಣನಸುವ ಸುರರಲಜ್ಜಾವಧುವ
ನಳಿನಾಕ್ಷನೆ ಪ್ರತಿಷ್ಠಿಸಿದನರಿಯಾ ಲೋಕ
ದೊಳುಹಾಡು ಕಥೆಯಾದೇ ಕೋ ಕೆಳೆಯಾ
ಅಳವಹುದೇ ವೈಕುಂಠ ಕೇಶವನೇ ಲೋಕ
ದೊಳುವಾವನ ಚರಿತಚರಣಗೆ ೪
ತ್ರಿವಡೆ ತಾಳ
ಲೋಕವೆಲ್ಲ ವಿಷ್ಣುವಿನ ಮಾಯಾ ಕಲ್ಪಿತವಾಗಿ ವಿಧಿ ಭವ
ನಾಕಪತಿಗಳ ಪ್ರತಿಷ್ಠೆಯ ಮಾಡುವರೇ ಬೇರಾವ ಸಮರ್ಥನು
ಶ್ರೀಕಾಂತಗೊಲಿದವನೇ ದ್ರುಹಿಣ ಪಿನಾಕಿಯವನೆ ರವಿ ಸಸಿ
ಯಾ ಕಮಲಲೋಚನನುಳಿಯೆ ತಮ್ಮಿಂದ
ತಾವೇ ಪ್ರತಿಷ್ಠೆಯಹುದೇ
ಈ ಕಮಲ ಭವಾಂಡಗಳ ರಕ್ಷಿಸಿ ಶಿಕ್ಷಿಪನದಾವನು
ಶ್ರೀಕೇಶವ ನಮಿತಗುಣಾರ್ಣವ ವೈಕುಂಠದರಸನೊಬ್ಬನಲ್ಲದೇ ೫
ಅಟ್ಟ ತಾಳ
ಹದಿನಾಲ್ಕು ಲೋಕದರಸುತನ ಲಕ್ಷುಮಿಗೆ
ಪದುಮನಾಭನರಸಿ ಜಗನ್ಮಾತೆಗೆ
ವಿಧಿಗರಸ ದೇವ ದನುಜ ಮನುಜರಿಗೇ
ಇದು ವೇದ ಶಾಸ್ತ್ರ ಪುರಾಣಾಗಮಸಿದ್ಧ
ಅದುಭುತ ವೈಕುಂಠಕೇಶವನರಿಯಾ ೬
ಏಕತಾಳ
ಮಳಲುಗೂಡ ಮಾಡುವ ಮ
ಕ್ಕಳಾಟದವೋಲ್ ಹರಿಲೋಕಂನಳ
ಸುಳಿಸುವ ಮರಸುವ ಅಜಭವಾದಿಗಳ
ತಳದು ಬೇರೆ ಹರಿದರದ ಪ್ರತಿಷ್ಠಿಸುವ
ಸುಳಿಸುವ ಮರಸುವ ವೇಲಾಪುರದೊಡೆಯ
ನುಳರೆ ಸಮದೇವರು ಶ್ರೀವೈಕುಂಠಪತಿ ಕೇಳ್ದರಿಯಾ೭
ಜತಿ
ಅದುಭುತ ವಿಕ್ರಮ ಅದುಭುತ ಮಹಿಮ
ಅದುಭುತ ವೈಕುಂಠ ಕೇಶವನರಿಯಾ

 

೧೬
ಸುಳಾದಿ
ಧ್ರುವತಾಳ
ನೋಡೆಲೆ ಮನವೇ ಜಗದೇಕ ಲಾವಣ್ಯನಿಧಿಯನನುದಿನ
ಬೇಡು ಬೇಡಿದುದನೊಲಿದೀವ ದಾನಿಗಳರಸನ
ಕೂಡೆಲೆ ಮನವೇ ಸುಖನಿಧಿಯ ಅಜಭವೇಂದ್ರಾದಿ ಸುರೇಶರ
ಕೇಡಿಲ್ಲದನಿಜಪದವನೋಲುವರೆ ನೀನು
ಆಡಾತನ ದಾಸರೊಡನೆ ದುರಿತ ಕೋಟಿಗಳಾ
ರೂಢಿಶ್ರೀ ದಕ್ಷಿಣವಾರಣಾಸಿ ಎನಿಪ ವೇಲಾಪುರದಲಿ
ಬೇಡಿದನೀವೆನು ಭಕುತಜನರಿಗೆಂದು ಕರುಣದಲಿ
ಗಾಡಿಗಾರ ಚನ್ನಕೇಶವನಾಗಿ ಬಂದೈದಾನೆ
ಮಟ್ಟತಾಳ
ಮೆರೆವ ಮಕುಟ ಮುತ್ತಿನಮೂಗುತಿ ಕರ್ಣದಲಿ
ಮಿರುಪ ರತುನದೋಲೆ ರಾಜಿಪ ವದನದ
ಕರಚತುಷ್ಟಯದಲೀ ಶಂಖ ಚಕ್ರ ಗದೆ ಪದುಮ
ಸರಸಿಜದಂಗಿ ಪೀತಾಂಬರದ ಕರದಾ
ಸಿರಿವೈಕುಂಠವಲ್ಲಭ ವೇಲಾಪುರಾಧಿಪ
ಕರುಣಾಕರ ಚನ್ನಕೆಶವ ನಿನ್ನ ಮೂರುತಿಗೆ ನಮೊ
ರೂಪಕತಾಳ
ಕಮಲಜನಾರಾಧಿಪಾಂಘ್ರಿಕಮಲವ
ಕಮಲಾಕುಚ ಕುಂಕುಮಾಂಕಿತ ಪಾದಾಂಭೋರುಹ
ಅಮರನದಿಯ ಪಡೆದ ಚರಣಕಂಜವ
ಅಮಿತಮಹಿಮಾ ಎನ್ನೆದೆಮನೆಯೊಳನುದಿನ ನಿಲಿಸಯ್ಯ
ದ್ಯುಮಣೀಶತಕೋಟಿತೇಜ ವೈಕುಂಠವಲ್ಲಭ
ನಮೋ ವೇಲಾಪುರೀಶ ಚನ್ನಕೇಶವ
ಝಂಪೆ ತಾಳ
ನಿನ್ನ ಕೀರುತಿ ಕಿವಿಗೆ ನಾಮಾ ನಾಲಿಗೆಗೆ
ಅಯ್ಯ ಚಾರುಲಾವಣ್ಯ
ವೆನ್ನ ಕಣ್ಣಿಗೆ ಅಧಾರವಯ್ಯ ವೇಲಾಪುರ
ಚನ್ನ ವೈಕುಂಠರಮಣ
ತ್ರಿಪುಟ ತಾಳ
ಸರಸಿಜೋದ್ಭವಶೂಲಿ ಸುರಪಮುಖ್ಯ ಸುರಾಸುರರು
ಶರನಿಧಿಮಥನದಲ್ಲಿ ನೆರೆದಿರಲು
ಪರಮಪುರುಷ ಪುರುಷೋತ್ತಮ ನಿನಗೆ
ಸಿರಿ ಸರಮಾಲೆಯಿರಿಸಿಹಳಾದರು
ಸಿರಿವೈಕುಂಠನಾಯಕ ನಿನಗೆ ಚೆನ್ನಿಗರಾಯನೆಂಬ ಪೆ
ಸರು ಸಲುವುದಯ್ಯ ಸಲುವುದಯ್ಯ ವೇಲಾಪುರಾಧೀಶಾ
ಅಟ್ಟತಾಳ
ಅಲ್ಪಮತಿಯು ತಾನೆತ್ತ ನಿನ್ನ ಮಹಿಮೆಗಳೆತ್ತ
ಶ್ರೀಪತಿಯೆ ಶ್ರುತಿತತಿಗಗೋಚರವಯ್ಯ ನಿನ್ನ ಘನತೆ
ಶ್ರೀಪತಿಯೆ ಉನ್ನತ ವೈಕುಂಠಕೇಶವ ಚೆನ್ನರಾಯ
ಏಕತಾಳ
ಶರಣಾಗತ ಪರಿಪಾಲಕನೆಂಬ
ಬಿರುದನು ಕೇಳಿ ನಿನ್ನಯ ಸಿರಿಚರಣವ
ಶರಣುಹೊಕ್ಕೆನು ಎನ್ನಲಿ ಗುಣವರಸದೆ ನಿನ್ನ
ಕರುಣವನೆ ಮೆರೆಯಿಸಯ್ಯ
ಸಿರಿವೈಕುಂಠರಮಣ ವೇಲಾಪುರ-
ದರಸ ಚೆನ್ನಕೇಶವರಾಯ ನಿನ್ನ
ಜತಿ
ಮೂಲೋಕ ಮೋಹನ ಮೂರುತಿ ನಮೋ
ವೇಲಾಪುರದ ಚನ್ನ ವೈಕುಂಠರಮಣ

 


ಸುಳಾದಿ
ಧ್ರುವತಾಳ
ಲಕ್ಷುಮೀಯ ಮಸ್ತಕಕ್ಕೆ ಮಣಿಮೌಳಿಯಾದಾ
ಲಕ್ಷುಮೀಯ ಅಕ್ಷಿಮಧುಪ ಕರುಣಾಬ್ಜವಾದಾ
ಲಕ್ಷುಮೀಯ ಭುಜಗಳಿಗೆ ಭುಜಕೀರ್ತಿಯಾದಾ
ಲಕ್ಷುಮೀಯ ಕರಾಬ್ಜಕ್ಕೆ ರಾಜಹಂಸನಾದಾ
ಲಕ್ಷುಮೀಯ ಪೂಮಾಣಿಕ್ಯ ಪದಕವಾದಾ
ಲಕ್ಷುಮೀಯ ಮಹಾಹಾರ ಕೇಯೂರವಾದಾ
ಲಕ್ಷುಮೀಯಾನಂದಾಬ್ಧಿಗೆ ಪೂರ್ಣಚಂದ್ರನಾದಾ
ಲಕ್ಷುಮೀಪತಿಯೆ ನಿನ್ನ ಪಾದಸರಸಿಜವೆನ್ನ ಮ
ಸ್ತಕದಲೊಮ್ಮೆ ಅಲಂಕರಿಸು
ವೈಕುಂಠವಿಠ್ಠಲ ಅನಂತಮಹಿಮಾ ೧
ಮಟ್ಟತಾಳ
ಅಜನಿಗೊಲಿದು ದೇಹಾರವಾದಾ
ಭವನಿಗೊಲಿದು ಸಾಲಿಗ್ರಾಮದೇವರಾದಾ
ಯಜು ಸಾಮ ಮುಖ್ಯನಿಗಮ ಮೌಳಿಮಣಿಯಾದಾ
ಭಜಕ ದಿವಿಜನಿಕರಾಪಾರಬ್ರಹ್ಮವಾದಾ
ತ್ರಿಜಗವಂದಿತಪದ ವೈಕುಂಠವಿಠ್ಠಲ
ನಿಜಕರುಣದಿಂದೆನ್ನ ಮಸ್ತಕದ ಮೇಲೊಮ್ಮೆ ದಯಮಾಡೊ ೨
ರೂಪಕತಾಳ
ಮುನಿಹೃದಯನೀಕೇತನ ಜ್ಯೋತಿಯ
ತನು ಸೊಬಗಿನ ಪುಂಜನನುದಿನ
ಸನಕಾದಿಗಳಾಡುತ್ತ ಪಾಡುತ್ತ
ನೆನೆವ ಪರಮ ಕರುಣಮೂರ್ತಿಯ
ಘನಪಾದ ವೈಕುಂಠ ವಿಠ್ಠಲ
ತನುಸರಸಿಗೆ ಸರಸಿಜವಾಗಿಡೊ ೩
ಝಂಪೆತಾಳ
ದುರಿತ ತಿಮಿರವಡಗದು ಮನ
ಸರಸಿಜವರಳದೊ
ಹರಿ ನಿನ್ನ ಅರುಣಕಿರಣ ಭರಿತಚರಣ
ಸರಸಿಜ ಸಖನುದಯಿಸದಿರೇ
ಪರಮ ದಯಾನಿಧೆ
ಸಿರಿವೈಕುಂಠ ವಿಠ್ಠಲರೇಯ ಎನ್ನ ಬಿನ್ನಪವಿದು ೪
ತ್ರಿವಿಡಿತಾಳ
ಪಾದಾಂಬುಜ ಮಧುಕರ
ಪಾದಾಂಬುಜ ಭೂಮಿಯಂತೆ ಬಿಂದುವಂತೆ ವಾಮ
ಪಾದಕರ್ಣಿಕೆಯಾಕಾಶದಂತೆ ಶಿವ
ನಾದರದಿ ಧರಿಸಿದ ಗಂಗೆಯಂತೆ
ಆದಿದೇವ ಶ್ರೀ ವೈಕುಂಠವಿಠಲ ದಯಾನಿಧೆ೫
ಅಟ್ಟತಾಳ
ಕಡಹದ ಮರನನಡರಿ ಕಾಳಿಂಗನ
ಮಡುವ ಧುಮುಕಿ ಕಾಳಿಂಗನ ಶಿರದಲ್ಲಿ
ಧಡುಮನೆ ವಿಷಜಾಲ ಧಡಿಗಳ
ವೊಡಿಗೆ ಸಪ್ಪುಳಿಗೆ ಕುಣಿದಾಡಿದೆ ಗಡಾ
ಕಡುಮೃದುಪಾದ ವೈಕುಂಠವಿಠ್ಠಲಾ
ಇಡು ಎನ್ನ ಕ್ರೋಧಾಹಿ ಮದವಳಿಯಲಿ ೬
ಆದಿತಾಳ
ಕಂಬು ಕೊಳಲು ತುತ್ತುರಿ ಮಾವುರಿಗಳು
ಸಂಭ್ರಮದಲಿ ಗೋಪಾಲರು ನೆರೆದು
ಭೊಂ ಭೊಂ ತುತ್ತುರುತ್ತುರೆನೆ ಸುರ
ರಂಬರದಲಿ ಪೂಮಳೆಗರೆಯೆ
ಕಂಬುಕಂಠ ವೈಕುಂಠವಿಠ್ಠಲ ಪಾದಾ
ಇಂಬಾಗಿ ಎನ್ನ ಹೃದಯ ಮಧ್ಯದಲಿಡು ೮
ಜತಿ
ದೇವ ದೇವ ಜಗಂಗಳ ಪೊರೆವಾ
ಶ್ರೀ ವೈಕುಂಠವಿಠ್ಥಲ ಸಲಿಸೋ ಬಿನ್ನಪನಾ ೯

 

೬೦
ಸುಳಾದಿ
ಧ್ರುವತಾಳ
ಸತ್ಯಂವದ ಧರ್ಮಂಚರ ಯೆಂಬಾ
ಶ್ರುತಿವಾಕ್ಯವದೇನಲಂಘ್ಯವಲ್ಲಾ
ಮಿಥ್ಯಾವಾದಿಯಾದೆಯಲ್ಲಾ ಮನುಜಾ
ಚತುರಮುಖಾ ಪಂಚಮುಖಾ ಸುರ
ತತಿಯಲಾ ಪುರುಷರಹುದಲ್ಲಾ ಪುರು
ಷೋತ್ತಮನೆನಿಸಿಕೊಂಬನಾವನೈ ಲೋಕ
ಮಾತೆಯಾರಾರು ಸತಿಯರೊಳಗೇ ಆ ಲಕುಮಿಗೆ
ಪತಿಯಾರೆಂಬುದನರಿಯೆಯಲ್ಲಾ
ಪಿತೃ ಮಾತೃ ದ್ರೋಹವಿದಲ್ಲವೇ ಮನುಜಾ
ಶ್ರುತಿ ಮೂಲೋಕಜಗತ್ತರಿಯೆಯಲ್ಲಾ ನಿಗಮ
ತತಿಯನುದ್ಧರಿಸಿದನಾವನಯ್ಯಾ
ಕ್ರತುಭುಜಾದಿಗೆ ಮುನಿಗಳಿಗೆ ಭೂಸುರರಿಗೇ
ಹಿತವಾವದೆಂಬುದನರಿಯೆಯಲ್ಲಾ | ಅ
ಪ್ರತಿಮ ವೈಕುಂಠಕೇಶವನೆಂದರಿಯೆಯಾ ೧
ಮಠ್ಯತಾಳ
ಅಕಟ ಮನುಜ ನಾನಾದೇವತೆಗಳ ಭಜಿಸೇ
ಮುಕುತಿಯನೆಂತೀವರ್ತಮಗಿಲ್ಲದ ವಸ್ತುವ
ಸಕಲಸುರಾಸುರರು ತಮಗೊಳ್ಳಿದನೀವುದು ಸೋಜಿಗ
ಮುಕುಂದನೆಂದಾಡುವರ್ಥವೇನೆಂದರಿಯೆಯಲಾ
ವೈಕುಂಠಕೇಶವಗಾ ಪೆಸರೆಂಬುದನರಿಯೆಯಲಾ ೨
ರೂಪಕತಾಳ
ಯಾವಜ್ಜೀವನ ಮನುಜ ಬಹು ದೈವಂಗಳನ್ನೆ ಭಜಿಸಿ
ದಾವಳೀ ಹರಿಗತಿಯೆಂದೆನೆ | ಕಾವನೆ ಹರಿ ಯೆಲೆ ಮರುಳೇ
ಯಾವಜ್ಜೀವ£  ಕಾವಪರಿಯಂತ ಪರೋಕ್ಷವಾಗಿ
ಸಾವಲ್ಲಿ ಪತಿಗತಿಯೆಂದೆನೆ ಯಾವಜ್ಜೀವನಾ
ಆ ವಧೂ ಪತಿವ್ರತೆಯಹಳೇ ಯಾ ವೈಕುಂಠರಮಣನೇ ಪರ
ದೈವವೆನ್ನದೆ ನರಕಕ್ಕಿಳಿವನ್ನ ನಿನ್ನಾ ಯೆಲೆ ಮರುಳೇ ೩
ಝಂಪೆತಾಳ
ಪದವನೀಡಿದನೊಬ್ಬ ತಳೆದನೊಬ್ಬನು ಶಿರದಿ
ಮುದದಿ ಧರಿಸಿಯೆ ಪರಮ ಪಾವನನಾದನು ಒಬ್ಬ
ಉದಧಿಶಯನ ವಿರಿಂಚಿ ಗೌರೀಶರೆಂಬುವರೊ
ಳಧಿಕನಾವನು ಬರಿದೆ ಗಲಭೆಯಾತಕೆ ಮರುಳೆ
ಮೊದಲಾವುದಿದಕೆ ಕಡೆಯಾವುದು ಹರಿಯ ಮಹಿಮೆ
ಅದುಭುತ ಚರಿತ್ರ ವೈಕುಂಠ ಕೇಶವರಾಯಾ ೪
ತ್ರಿವುಡೆತಾಳ
ಬಸುರೊಳಗೆ ಬ್ರಹ್ಮಾಂಡವನು ತೋರಿಸಿದನಾವನು ತೋ
ರಿಸಿದನಾವನು ಚಕ್ರಧರ ತೋ
ರಿಸುವವೊಲು ಗೋಪಿಗೆಯದಾವನ
ಬಿಸಜಸಂಭವ ಭವ ಸುರಾಧಿಪ
ವಸುನಿಕರ ಗರುಡ ಗಂಧರ್ವರು
ಸಸಿ ರವಿಗಳಿರೆ ಕಂಡನಚ್ಯುತನಂಗದಲಿ ಕಿರೀಟಿಯರಿಯಾ
ಬಿಸುಡಸೂಯೆಯ ಮನುಜ ವೈಕುಂಠ ಕೇಶವನ್ನೊಳಹೊರಗೆ ಪರಿಣ
ಮಿಸುವುದೀ ಲೋಕಗಳೆಶೋದೆಗೆ ಸಾಕ್ಷಿಯಲ್ಲವೆ ಯಾ ಧನಂಜಗೆ ೫
ಅಟ್ಟತಾಳ
ಪರಿ ಪರಿ ಭಜನಕಂಟಕರ ದಾರಿಯಲಿ
ಸ್ಮರನೆಂಬ ಚೋರಬಾಧಕನ ದಾರಿಯಲಿ
ಹರಿಶರಣ ಸಹಾಯವಿರುತಿರಬೇಕಲ್ಲಿ ಶ್ರೀ
ಹರಿ ಪರದೈವವೆಂಬ ಜ್ಞಾನ ಪಥೆಯಲಿ
ಹರಿಶರಣ ಸಹಾಯವಿರುತಿರಬೇಕಲ್ಲಿ
ಪರಮಪದ ದಾರಿ ಸುಲಭವೇ ನಿನಗೆ
ನಿರುಪಮ ವೈಕುಂಠ ಕೇಶವ ಸುಲಭವೇ ೬
ಏಕತಾಳ
ಸುರಪುರ ಹರಗಿರಿಯಂತೆಲೆ ಮನುಜ
ಪರಿದೈದುವಡೆ ಪರಮಪದ ನಿನಗೆ
ಜರಿಯಬೇಕು ಕಾಮದಿರುವುಗಳನು
ತೊರೆಯಬೇಕು ಖಳಜನ ಸಹವಾಸವ
ಎರಗದಿರಬೇಕಿತರ ದೈವಂಗಳಿಗೆ
ಸಿರಿಗೆ ಮೆಚ್ಚುವನೆ ವೇಲಾಪುರ
ದರಸ ವೈಕುಂಠ ಚನ್ನಕೇಶವ ೭
ಜತಿ
ಮರೆಯೆ ತನುಮನ ಧನವ ಸೂರೆಯು
ಪರಮಪದಾ ವೈಕುಂಠ ಚನ್ನಕೇಶವನೆ

 

ತಂದೆ ವೈಕುಂಠ ರಮಣಾ ಸ್ವಾಮೀ೪೭*
ಸುಳಾದಿ
ಧ್ರುವತಾಳ
ಸುರನದಿಯ ಪಡೆದ ಚರಣಾಂಬುರುಹ ದಾನ
ವರೇನು ಬಲ್ಲಿರಾ ಎರಡು ಪದದ
ಬಿರುದಿನ ಖಡ್ಡೆಯವ ಮಿರುಪಿನ ಪೆಂಡೆಯದ ಚೆಲುವ
ಸುರಚಿರ ಕದಪಿನ ಭವಪರಿಭವಿತ ಉರದ ಪೀತಾಂ
ಬರದಿಂದೆಸೆವ ಊರುನಿತಂಬಗಳ
ಸಿರಿಯ ಪೇರುರದ ಹಾರ ತ್ರಿಸರದಿಂದೊಪ್ಪುವ ಕಂಧರದ
ಸರಸಿಜ ನಯನಂಗಳು ದಿನಕರ ಕಿರಣವು ಸುಳಿವ
[ವರ] ಮಕುಟವನಿಂದಿರಿಸಿದಾ [ವೇಲಾಪುರದರಸ]
ಕರುಣಾಕರ ವೈಕುಂಠ ವೆಂಕಟಗಿರಿರಮಣ ೧
ಮಟ್ಟತಾಳ
ನಿನ್ನ ನಾಮಧಾರಿಯಾಗಿ ನಿನ್ನ ಚಿನ್ಹೆಯನು ಧರಿಸಿ
ನಿನ್ನ ಹೊನ್ನ ಹರಿವಾಣದ ಪ್ರಸಾದವನುಂಡು ದಾಸನಾದೆ ನಾ
ಇನ್ನುದಾಸೀನ ಮಾಡಸಲ್ಲ ರಾಘವ ವೈಕುಂಠ ವೆಂಕಟೇಶ ೨
ರೂಪಕ ತಾಳ
ನಿನ್ನ ಬೆಳ್ನುಡಿ ಬಾಯಿದಂಬುಲದ ಕಾಳಾಂಜಿ ಎನ್ನದು
ಎನ್ನನು ನಿನ್ನ ಸಿರಿಮುಡಿಗೆ ಮುಡಿಸಿದ
ಘನ್ನ ಚಂಪಕ ಜಾಜಿ ಕುಸುಮ ಪ್ರಸಾದವು
ಎನ್ನದು ಎನ್ನದು ಘನ್ನ ವೈಕುಂಠಗಿರಿರಮಣಾ ೩
ಅಟ್ಟತಾಳ
ಒಡೆಯ ನಿನ್ನಡಿಗೆ ಹೊನ್ನಹಾವುಗೆಯ ತಂದಿಡುವ ಸೇವೆ ಎನ್ನದು
ಒಡೆಯ ನೀನಡೆದಡೆ ಪಾದಪರಾಕು ಸ್ವಾಮೀ ಜೀಯಯೆಂದು
ಘಡಿಸುವ ಊಳಿಗ ಮುನ್ನವೆ ಎನ್ನದು ಎನ್ನದು
ಒಡೆಯ ಬಿಡೆನು ವೈಕುಂಠ ವೆಂಕಟಾಚಲ ಒಡೆಯದೇವೇಶ ಮೆ-
ಲ್ಲಡಿದಾವರೆ ಮೆಟ್ಟುವ ನಡೆಮುಡಿ ಎನ್ನದು ಎನ್ನುದು೪
ಏಕತಾಳ
ಮನಕೆ ನಿನ್ನಯ ನೆನೆವುದೆ ಜೀವನ
ತನುವಿಗೆ ನಿನ್ನಡಿಗೆರಗಿ ಪುಳಕಿತವ ಸಂಧಿಸುವುದೆ ಜೀವನ
ಇನಿತು ಭುವನದಲ್ಲಿ ಧನ್ಯನ ನಾನರಿಯೆನು
[ಘನ]ವೈಕುಂಠ ವೆಂಕಟಗಿರಿರಮಣ ೫
ಜತೆ
ಕರುಣಿಸಯ್ಯ ಎನಗಿನಿತನೆ ವೈಕುಂಠ ವೆಂಕಟೇಶ
ಕರುಣಾಕರ ನಿನ್ನ ಚರಣದ ಸೇವೆಯನು ೬

 

ಮಾಡು ದಾನಧರ್ಮ ಪರ
೫೮
ಮಾಡು ದಾನಧರ್ಮ ಪರ ಉಪಕಾರ
ಮರೆಯದಿರೆಚ್ಚರಿಕೆ ನೀ
ಕೇಡ ನೆನೆಸಬೇಡ ನಂಬಿದಠಾವಿಲ್ಲ
ಕೆಡುವಿ ನೀ ಎಚ್ಚರಿಕೆ ಪ
ಮೂಢರೊಡನೆ ಕೂಡಿ ಮುಂದೆ ನೀ ಕೆಡಬೇಡ
ಮೋಸಹೋಗದಿರೆಚ್ಚರಿಕೆ
ನಾಡೊಳು ಸುಜನರ ನೋಡಿ ನಡೆಯೋ ಕಂಡ್ಯಾ
ನಟನೆ ಬ್ಯಾಡೆಚ್ಚರಿಕೆ ೧
ಚೆನ್ನಾಗಿ ಗಳಿಸಿದೆ ನಾ ಬದುಕಿದೆನೆಂಬೊ
ಚೇಷ್ಟೆ ಬ್ಯಾಡೆಚ್ಚರಿಕೆ
ಮುನ್ನ ಮಾಡಿದ ಪುಣ್ಯಫಲದಿಂದ ಬಂದದ್ದು
ಮುಂದೆ ನೋಡೆಚ್ಚರಿಕೆ ೨
ಕಾಲದೂತರು ಬಂದು ಕಾಯವ ಎಳೆವರೊ
ಕಾಣಬಾರದೆಚ್ಚರಿಕೆ ನಮ್ಮ
ವೇಲಾಪುರವಾಸ ಚನ್ನಕೇಶವನ
ಮರೆಯದಿರೆಚ್ಚರಿಕೆ ೩

 

ಹಾಡಿನ ಹೆಸರು :ಮಾಡು ದಾನಧರ್ಮ ಪರ
ಹಾಡಿದವರ ಹೆಸರು :ಸುಮನಾ ವೇದಾಂತ್, ಮುಕ್ತಾ ಮುರಳಿ, ನಾಗಲಕ್ಷ್ಮಿ, ಅನ್ನಪೂರ್ಣ ಕೆ. ಮೂರ್ತಿ
ರಾಗ :ಕಾಪಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಸುಕನ್ಯಾ ಪ್ರಭಾಕರ್
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ