Categories
ರಚನೆಗಳು

ಯದುಗಿರಿಯಮ್ಮ

ತನ್ನ ಪರಮಪ್ರಿಯ ಭಗವಂತ ಶ್ರೀರಂಗದ ಶ್ರೀರಂಗನಾಥಸ್ವಾಮಿಯನ್ನು
ಆತ್ಮನಿವೇದನಾ ಸ್ತುತಿಗಳು
೧೧
ಅಗಲಿಸದಿರು ಎನ್ನನು ನಿನ್ನ ಬಿಟ್ಟಗಲಿಸದಿರು ಎನ್ನನು ಪ
ಅಗಲಿಸದಿರು ಎನ್ನ ಅಗಣಿತ ಮಹಿಮನೆ
ನಿಗಮಗೋಚರ ನಿನ್ನ ಪಾದವ ಬಿಟ್ಟು ಅ.ಪ
ಶೋಕಮೋಹಂಗಳಲಿ ಎನ್ನ ನೀ ಹಾಕದಿರೈ ಇನ್ನು
ವ್ಯಾಕುಲವನು ಬಿಡಿಸಿ ಅನೇಕ ಸೇವೆಗಳಿತ್ತು
ಲೋಕನಾಯಕ ಎನ್ನ ಸಾಕಿಸಲಹಿಕೊ ೧
ನಿತ್ಯ ಸಂಸಾರವನು ರಂಗಯ್ಯ ನಾ ಸತ್ಯವೆಂದು ತಿಳಿದು
ಸತ್ಯಮೂರುತಿ ನಿಮ್ಮ ಪಾದಪದ್ಮದ ಭಕ್ತಿ
ಹತ್ತದೆ ಈ ಮನಸು ವ್ಯರ್ಥವಾಯಿತು ದೇವ ೨
ತಂದೆತಾಯಿಯು ನೀನೆ ರಂಗಯ್ಯ ಬಂಧುಬಳಗವು ನೀನೆ ಆ
ನಂದದಿಂದಲೆ ರಕ್ಷಿಪ ಜಗತ್ಪತಿ ನೀನೇ
ಬಂಧನವನು ಬಿಡಿಸಿ ಮುಕ್ತಾನಂದವ ತೋರಿಸು ೩
ವಾಸವ ಮಾಡಿಸಿಲ್ಲಿ ರಂಗಯ್ಯ ಘಾಸಿಯ ಪಡಿಸದೆ ಅನಾ
ಯಾಸದ ಮರಣವನಿತ್ತು ಎನಗೆ
ವಸುದೇವನೆ ನಿಮ್ಮ ಪಾದವಾಸವ ಮಾಡಿಸು ೪
ಅಂದುಗೆ ಗೆಜ್ಜೆಗಳ ಇಟ್ಟು ನಿಮ್ಮ ಆನಂದ ಪಾದದಲಿ
ನಿಂದೆನ್ನ ಹೃದಯದೆ ವಾಸಮಾಡಿ ಆ
ನಂದದಿಂದಲೆ ರಕ್ಷಿಸು ವೆಂಕಟರಂಗ ೫

ಯದುಗಿರಿ ಅಮ್ಮನವರು ಶ್ರೀವೈಷ್ಣವ ಪರಂಪರೆಗೆ

ಅಭಯವನಿತ್ತು ಕಾಯೊ ರಂಗಯ್ಯ ನಿನ್ನಡಿಗೆರಗುವೆನು ನಾನು ಪ
ಭಾಷ್ಯಕಾರರಿಗೆರಗಿ ಶ್ರೀವೇದಾಂತ ಗುರುಗಳಿಗೆ ವಂದಿಸಿ
ಪತಿಯ ಪಾದಾರವಿಂದಕೆ ನಮಸ್ಕರಿಸಿ
ಲಕ್ಷ್ಮೀಪತಿ ನಿಮ್ಮ ಕರಗಳ ಸ್ತುತಿಸಿ ಬೇಡುವೆ ನಾನು ೧
ಮತ್ಸ್ಯಾವತಾರನಾಗಿ ವಾರಿಧಿಯೊಳಗಿರ್ಪ ದೈತ್ಯನ ಕೊಂದು
ಹೆಚ್ಚಿನ ವೇದವ ಅಜನಿಗೆ ತಂದಿತ್ತೆ
ಭಕ್ತವತ್ಸಲ ನಿಮ್ಮ ಕರಕಮಲಗಳಿಂದ ೨
ದೇವದೈತ್ಯರ ಮಧ್ಯದೀ ವಾರಿಧಿಯನ್ನು ವೇಗದಿಂದಲೆ ಮಥಿಸೇ
ಆವಸುರರು ಅಪಹರಿಸಿದ ಅಮೃತವ ಸಾಧುಜನಗಿತ್ತ
ಆ ವಿನೋದದ ಕರಗಳಿಂದ ೩
ಕ್ರೋಢರೂಪವ ಧರಿಸಿ ಹಿರಣ್ಯಾಕ್ಷನ ಕೋರೆಯಿಂದಲೆ ಕೊಂದು
ಧಾರುಣಿಯನು ತಂದು ಆದಿಮಾನವಗಿತ್ತ
ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ ೪
ತರಳನ ನುಡಿಯ ಕೇಳಿ ಭರದಿ ಕಂಭದಲಿ ಬಂದು
ಕರುಳ ಬಗೆದ ವನಮಾಲೆಯ ಧರಿಸಿದೆ
ಶ್ರೀಪರಮಪಾವನ ನಿಮ್ಮ ಕರುಣಹಸ್ತಗಳಿಂದ ೫
ಪುಟ್ಟ ಬ್ರಾಹ್ಮಣನಾಗಿ ಕಾಶ್ಯಪನುದರದಲಿ ಜನಿಸಿ ಬಂದು
ತಟ್ಟನೆ ಯಜ್ಞಶಾಲೆಗೆ ಬಂದು ದಾನವ
ಪುಟ್ಟ ಕರಗಳಿಂದ ಅರ್ತಿಯಲಿ ಬೇಡಿದ ೬
ಅಂದು ಕ್ಷತ್ರಿಯರ ಕುಲವ ಕೊಡಲಿ ಪಿಡಿದುದ್ದಂಡ
ದಿಂದಲಿ ಕಡಿದು ತಂದೆಯ ನುಡಿ ಕೇಳಿ ತಾಯಿ ಶಿರವನರಿದೆ
ಇಂದಿರಾಪತಿ ನಿಮ್ಮ ಆನಂದ ಕರದಿಂದ ೭
ದಶರಥನುದರದಲಿ ಜನಿಸಿ ಬಂದು ಅಸುರರ ಸಂಹರಿಸಿ
ಶಶಿಮುಖಿ ಸೀತೆಗೋಸ್ಕರ ಧನುವನು ಮುರಿದ
ಅಸಮಸಾಹಸ ನಿಮ್ಮ ಕುಶಲಹಸ್ತಗಳಿಂದ ೮
[ಆ] ರೋಹಿಣೀ ಗರ್ಭದಲಿ ಜನಿಸಿ ರೇವತಿ ರಮಣನಾಗಿ
ಘೋರ ಪ್ರಳಯಸುರನ ಸಂಹರಿಸಿದೆ
ವಾರಿಜಾಕ್ಷನೆ ನಿಮ್ಮ ಧೀರಹಸ್ತಗಳಿಂದ ೯
ಮಧುರೆಯೊಳಗೆ ಜನಿಸಿ ಗೋಕುಲಕೈತಂದು ಲೀಲೆಯ ತೋರಿ
ಮುದದಿಂದ ಪಾಲಬೆಣ್ಣೆ ಕದ್ದು ಗೋಪಿಯರಲ್ಲಿ ಪಿ
ಡಿದೆಳೆದೆ ಉಡುರಾಜನನು ಶ್ರೀಕರದೊಳು ೧೦
ಪತಿವ್ರತೆಯ ವ್ರತವ ಭಂಗವ ಮಾಡಿ ಚಪಳಚಾರನಾಗಿ
ಅತಿಶಯವಾದ ರಾಕ್ಷಸರ ಸಂಹರಿಸಿದೆ
ಪೃಥವಿ ಪಾಲಿಪ ನಿಮ್ಮ ಚತುರಹಸ್ತಗಳಿಂದ ೧೧
ಕಲ್ಯ್ಕಾವತಾರನಾಗಿ ಕುದುರೆ ಏರಿ ಸಂಹರಿಸುತಲೆ ಬಹು
ಬಲನಾದಂಥ ಕಲಿಯ ನಿಗ್ರಹಿಸಿದ ನಿಮ್ಮಕ
ಮಲಕರಗಳಿಂದ ದೇವ ಪರಮಪುರುಷ ೧೨
ಕಂದ ಧ್ರುವ ತಾನಡವಿಯಲಿ ನಿಂದು ತಪ ಮಾಡಲು
ಚಂದದಿ ಮಾಡಲು ಬಂದು ಸೇವೆಯನಿತ್ತು ಮತಿಗಾಗಿ
[ಅಂದು] ಶಂಖವನೊತ್ತಿದ ಕರದೊಳು ೧೩
ಅಂದು ಮಕರಿ ಕಾಲ ಪಿಡಿಯೆ ಗಜೇಂದ್ರ ನಿಮ್ಮ ಸ್ತುತಿಸೆ ಚಕ್ರ
ನಿಂದಲೇ ನಕ್ರನ ಕೊಂದು ಬೇಗದಿ ಕರಿಯ ರಕ್ಷಿಸ
ಬಂದ ಕರುಣಹಸ್ತಗಳಿಂದ ೧೪
ಅಂದು ಸುಧಾಮ ತಾನು ಶ್ರೀಹರಿಯ ಮಂದಿರಕೆ ಬರಲು
ಚಂದದಿಂದಲೆ ಆತಿಥ್ಯ ಮಾಡಿ ಅವ
ತಂದ ಅವಲಕ್ಕಿಯ ಕೊಂಡ ಕರಗಳಿಂದ ೧೫
ದುರುಳ ದುಶ್ಯಾಸನ ಸಭೆಯೊಳು ದ್ರೌಪದಿಯ ಸೀರೆಯೆಳೆಯು
ತಿರುವಾಗ ಹಾ ಕೃಷ್ಣ ದ್ವಾರಕಾವಾಸ ಯೆಂದು
ಮೊರೆಯಿಡೆ ಕೇಳಿ ಅಕ್ಷಯವೆನುತ ನೆಚ್ಚವನೆಚ್ಚ ಕರದೊಳು ೧೬
ವನದಿ ಪಾಂಡವರಿರಲು ದೂರ್ವಾಸರು ಬಂದು
ಗ್ರಾಸವ ಬೇಡಲು ಪರಮಪುರುಷ ನೀನೇ ಗತಿಯೆಂದು ದ್ರೌಪದಿ
ಮೊರೆಯಿಡೆ ಅಕ್ಷಯವ ಮಾಡಿದ ಕರದೊಳು * ೧೭
ಮಂದಮತಿಯು ಜ್ಞಾನವೂ ನಿಮ್ಮ ಮಹಿಮೆ ಒಂದು ತಿಳಿಯದು
ಇಂದಿರೆ ರಮಣ ಶ್ರೀರಂಗನ ದಯದಿಂದ
ವಂದಿಸಿ ಬೇಡಿದೆ ಆನಂದಕರಗಹಳನ್ನು ೧೮
ವೇದಶಾಸ್ತ್ರಗಳನ್ನು ಅರಿಯದ ಪಾಮರಸ್ತ್ರೀಜನ್ಮವು ಕಾಮ
ಕ್ರೋಧವು ಲೋಭ ಮೋಹದಿಂದಲೆ ಬಿಡಿಸಿ ನಿಮ್ಮ
ಪಾದದೊಳಿರಿಸೆನ್ನ ಶ್ರೀನಿವಾಸನೆ ಅಭಯವನಿತ್ತು ಕಾಯೊ ೧೯

 

ಶ್ರೀರಂಗನಾಥನ ಸ್ತುತಿಪರ ಹಾಡು
೧೫
ಅಸಾರವಾದ ಸಂಸಾರಸಾಗರವ
ಪಾರುಗಾಣವುದೆಂದಿಗೊ ರಂಗಯ್ಯ ಪ
ಘೋರಾಹಂಕಾರವ ಬಿಟ್ಟು ನಿನ್ನಯಪಾದ
ಸೇರುವುದಿನ್ನೆಂದಿಗೊ ಅ.ಪ
ಕಾಮಕ್ರೋದಲೋಭಮೋಹಂಗಳನೆಲ್ಲಾ
ದೂರಮಾಡುವದೆಂದಿಗೆ ರಂಗಯ್ಯ
ಡಂಬಾಸೂಯೆ ಅವಿದ್ಯಾಸಂಬಂಧವ
ಬಿಟ್ಟುಬಿಡುವುದೆಂದಿಗೆ ೧
ಆಶಾಪಾಶ ಬಹುಕ್ಲೇಶಂಗಳನೆ
ನಾಶ ಮಾಡುವುದೆಂದಿಗೊ ರಂಗಯ್ಯ
ವಾಸುದೇವನೆ ನಿಮ್ಮ ಪಾದಾರವಿಂದದೊಳು
ವಾಸವಾಗುವದೆಂದಿಗೊ ೨
ಸುಖದುಃಖಮಾನಾಪಮಾನಂಗಳ್ನೆಲ್ಲಾ
ನಮವ ಮಾಡುವದೆಂದಿಗೊ ರಂಗಯ್ಯ
ಲಾಭಾಲಾಭವು ಶೀತೋಷ್ಣಂಗಳ
ಸಮವ ಮಾಡುವುದೆಂದಿಗೊ ೩
ಕೆಟ್ಟನುಡಿಯು ನಿಷ್ಟುರವಾಕ್ಯಂಗಳ
ಬಿಟ್ಟುಬಿಡುವದೆಂದಿಗೊ ರಂಗಯ್ಯ
ಕೃಷ್ಣಮೂರುತಿ ನಿಮ್ಮ ಪುಟ್ಟ ಪಾದದೊಳೆನ್ನ
ತಟ್ಟನೆ ಸೇರಿಸಯ್ಯ ೪
ಘೋರಸಂಸಾರಸಾಗರವ ದಾಟುವುದಕ್ಕೆ
ದಾರಿ ತೋರಿಸೋ ಎನಗೆ ರಂಗಯ್ಯ
ಶ್ರೀ ಶ್ರೀನಿವಾಸನೇ ನಿಮ್ಮಪಾದಾರವಿಂದದಾ
ಭಕ್ತಿನಾಮವನು ಕೊಡಿಸಯ್ಯ ೫

 

ಸಾಮಾಜಿಕ ಕೀರ್ತನೆಗಳು
೧೬
ಆಸೆತ ಬಿಡು ಮನವೆ ನಿನ್ನ ದುರಾಸೆಯ ಬಿಡು ಮನವೆ ಪ
ಆಸೆಯ ಬಿಟ್ಟು ಶ್ರೀವಾಸುದೇವನ ಪಾದ
ಘಾಸಿಯಾಗದೆ ನಂಬು ಲೇಸಾಗುವುದು ನಿನಗೆ ಅ.ಪ
ಕಾಮಕ್ರೋಧಗಳ ಬಿಟ್ಟು ಮೋಹಮದಡಂಭ ಅಸೂಯೆಸುಟ್ಟು
ಎಮ್ಮದು ತಮ್ಮದು ಎಂಬ ಭ್ರಾಂತಿಯ ಬಿಟ್ಟು
[ನಮ್ಮ] ವನಜನಾಭನ ಪಾದದೊಳಗೆ ನೀ ಮನವಿಟ್ಟು ೧
ಪರದ್ರೋಹ ಪರನಿಂದನೆಯನು ಮಾಡಿ ಪಾತಕಿಯಾಗದೆ
ಬರಿದೆ ನವರತ್ನ ರಜತ ಸುವರ್ಣ ಧನಧಾನ್ಯದಾಶೆಯ ಬಿಟ್ಟು
ನಿರಾಶೆಯೊಳಿರು ನೀನು ೨
ಹಾನಿವೃದ್ಧಿ ಯಶೋಲಾಭಗಳೆಲ್ಲ ಸ್ವಾಮಿಯಧೀನವಲ್ಲದೆ
ನೀನು ಯೋಚನೆಯನ್ನು ಮಾಡಿಯೆ ಫನವೇನು
ಶ್ರೀನಿವಾಸನ ಪಾದ ನೇಮದಿಂದಲೆ ನಂಬು ೩

 


ಎಲ್ಲಿದ್ದರು ಕಾಯ್ವ ಯದುಕುಲತಿಲಕ| ಭಕ್ತ
ರೆಲ್ಲಿದ್ದರು ಕಾಯ್ವ ಯದುಕುಲತಿಲಕ ಪ
ಅಡವಿಯೊಳಿರಲು ಅರಣ್ಯದೊಳಿರಲು
ಮಡುವಿನೊಳಿರಲು ಮರದ ಮೇಲಿರಲು
ಪೊಡವಿಗೀಶ್ವರ ತಾನು ದೃಢಭಕ್ತನಂ
ಬಿಡದೆ ರಕ್ಷಿಸುವ ಯೆಂತೆಂಬೊ ಬಿರುದು ೧
ತಂದೆಯ ಬಾಧೆಗೆ ಕಂದ ನಿಮ್ಮನು ಕರೆಯೆ
ಬಂದು ಕಂಭದಲಿ ನೀ ಕಾಯ್ದೆ ಗೋವಿಂದಾ
ಅಂದು ದ್ರೌಪದಿ ಹಾಯೆಂದು ಬದರಲು ಕೇಳಿ ಆ
ನಂದದಿಂದಕ್ಷಯವನಿತ್ತ ರಂಗನು ನೀನು ೨
ಭರದೆ ಭಗದತ್ತನು ಅಸ್ತ್ರ ಬಿಡಲು
ಕೊರಳ ಚಾಚಿದನಾಗ ಕರುಣಾವಾರಿಧಿಯು
ವರುಣಗದೆಯನಾಗ ಮರುಳತನದಿ ಬಿಡೆ
ಮರಳಿ ಅವನ ಉರುಳಿಸಿತು ಶೃತಾಯುವು ೩
ಸಿಂಧುರಾಜನ ಶಿರವ ಅವನ ತಂದೆ ಕೈಯಲಿ ಹಾಕಿ
ಬಂದ ಭಾರವನೆಲ್ಲಾ ಕಾಯ್ದೆ ಗೋವಿಂದ
ಸರ್ಪಬಾಣವ ಕರ್ಣ ದರ್ಪದಿಂದಲೆ ಬಿಡೆ
ಅಪ್ರಮೇಯನು ಭೂಮಿ ಕ್ಷಿಪ್ರದಿಂ ಒತ್ತಿದಾ ೪
ಅಂದು ಅರ್ಜುನ ತನ್ನ ಕಂದನೊಡನೆ ಕಾದೆ
ಹಿಂದಿನ ವೈರದಿಂ ಶಿರವನ್ನು ಹರಿಯೆ
ಬಂದು ಮುಕುಂದ ಸಂಧಿಸಿ ಶಿರವನ್ನು ಆ
ನಂದದಿಂದಲೆ ಕಾಯ್ದ ಇಂದಿರೆ ರಮಣ೫
ಉತ್ತರೆ ಗರ್ಭವು ಬತ್ತಿ ಬೀಳಲು ಆಗ
ಉತ್ತಮ ಋಷಿಗಳೆಲ್ಲರ ನೋಡಿ
ನಿತ್ಯಬ್ರಹ್ಮಚಾರಿಗಳು ಪಾದದೀ
ಮೆಟ್ಟಿದರೆ ಬದುಕುವುದೆಂದನು ಕೃಷ್ಣ ೬
ಸನತ್ಕುಮಾರರು ಶೌನಕರು ಮೊದಲಾಗಿ ಪರುಶುರಾಮ
ಹನುಮಾದಿಗಳು ಬ್ರಹ್ಮಚರ್ಯವು
ನಮಗಿಲ್ಲವೆನುತ ಬ್ರಹ್ಮಚರ್ಯಕ್ಕೆ ಆಧಾರ ನೀನೆನ್ನಲು
ವಾಮಪಾದದಿ ತುಳಿದೆಬ್ಬಿಸಿದನು ಶಿಶುವ ೭
ಸರಸಿರುಹನಯನಾ ಫಣಿರಾಜಶಯನ
ಶರಣಾಗತದುರಿತಾಪಹರಣ
ದೈತೇಯಸಂಹರಣ ಗೋವರ್ಧನೋದ್ಧರಣ
ಪೀತಾಂಬರಾಭರಣ ಕೌಸ್ತುಭಾಭರಣ ೮
ಅಶ್ವತಾಮನ ಅಸ್ತ್ರ ವಿಶ್ವವನು ಸುಡುತಿರೆ
ವಿಶ್ವನಾಯಕ ಶಮನ ಮಾಡಿ ಕಾಯ್ದು
ಅಸಮಸಾಹಸದಿ ಚಕ್ರವ ಪಿಡಿದು ಗರ್ಭದ
ಶಿಶುವನ್ನು ಕಾಯ್ದ ಕುಶಲಿ ವೆಂಕಟಕೃಷ್ಣ ೯

 

ಆಭರಣ ಧರಿಸುವ ಬಾಲೆಯರಿಗೊಂದು ಕಿವಿಮಾತು
೧೭
ಒಡವೆಯ ನೀಡಬಾರದೆ ಬಾಲೆಯರೆಲ್ಲ ಒಡವೇಯ ನೀಡಬಾರದೆ ಪ
ಒಡವೆಯನಿಟ್ಟರೆ ವೇಳ್ಯೆಕ್ಕೊದಗುವುದು
ಒಡಲೀಗೆ ಒದಗಾದು ಕಳ್ಳರು ಕದಿವರು ಅ.ಪ
ಇದು ಬಹಳ ಬೆಲೆಯು ಬಾಳುವ
ಹನ್ನೆರಡು ಹರಳಿನ ವಾಲೆ ಹದಿನೆಂಟುಸಾವಿರಮುತ್ತಿನಸರಪಳಿ
ಚಂಪಸರಗಳುಂಟು ಚಂದದವಾಲೆಗೆ ೧
ಆಣಿಮುತ್ತುಗಳಾರಿಸಿ ಅದರಲ್ಲಿ
ಏಳು ಕಳಸ ಬಿಗಿದು ಇಪ್ಪತ್ತುನಾಲ್ಕುಸಾವಿರಮುತ್ತಿನ ಗೊಂಚಲು
ಸುತ್ತಿದೆ ಮುತ್ತಿನ ಬುಗುಡೀಗೆ ೨
ಕತ್ತರಿಬಾವುಲಿಯು ಅದರ ಬೆಲೆ ಹತ್ತು ಲಕ್ಷವು ಬಾಳುವದು ಅದಕೆ
ಸುತ್ತಿದೆ ಆಣಿಮುತ್ತುಗಳ್ಹದಿನೆಂಟು
ಎತ್ತಿ ಕಟ್ಟುವರೇ ಸರ್ಪಣಿಗಳುವುಂಟು ೩
ಮುತ್ತಿನಲಿ ಹದಿನೆಂಟು ಆರಿಸಿ ತೆಗೆದು
ಹಾರತುರಾಯನಿಟ್ಟು ಮೂರು ಮುತ್ತಿನಲಿ ಜುಳುಜುಳಿಗಳ
ಸುತ್ತಿ ಮುಕುರವನಿಟ್ಟಾರೆ ಮುದ್ದಾಗಿತೋರ್ವದು ೪
ಕೊರಳಿನೊಳಗೆ ಒಪ್ಪುವ ಹಾರದ ಬೆಲೆ
ಆರುಸಾವಿರ ಬಾಳುವುದು ಟಂಠಳ್ಳಿಸುವ ಎಂಟುರತ್ನದ ಪದಕವು
ಕಂಠದೊಳಿದ್ದರೆ ವೆಂಕಟನತೋರ್ಪುದು ೫

 

ಗಯಾಕ್ಷೇತ್ರದ ಶ್ರೀ ವಿಷ್ಣುಪಾದ
ಶ್ರೀಹರಿಸ್ತುತಿಗಳು

ಕಂಡು ನಾ ಧನ್ಯನಾದೆನೋ ಶ್ರೀ ಪುರುಷೋತ್ತಮ
ಪುಂಡರೀಕಾಕ್ಷ ವಿಷ್ಣುಪಾದವ ಪ
ಮಗಧನಾ ದೇಶದಲ್ಲಿ ಚಂಪಕಾರಣ್ಯದಲ್ಲಿ ಮಧುವನದ
ಮಧ್ಯದಿನಿಂದ ಮದನನಯ್ಯನ ಪಾದವ ೧
ಶ್ರೇಷ್ಠ ಗಯಾಸುರನ ಶಿರವ ಮೆಟ್ಟಿ ಅವನ ದರ್ಪವ
ನಷ್ಟವನ್ನು ಮಾಡಿದ ಸೃಷ್ಟಿಗೀಶ್ವರನ ಪಾದವ ೨
ಪುಂಡರೀಕಾಕ್ಷನಾಗಿ ಗದಾಧರ ಜನಾರ್ದನ ಅವನ
ಮಂಡೆಯನ್ನು ತುಳಿದ ಭೂಮಂಡಲಾಧಿಪನ ಪಾದವ ೩
ಬೇಡಿಕೊಳ್ಳಲು ಅಂದು ಗಯನು ಬಂದು ಅವನ ಶಿರದ ಮೇಲೆ
ಪಿಂಡವಿಟ್ಟವರ ಪಿತೃಗಳಿಗೆ ಆನಂದಲೋಕವೀವ ಪಾದವ ೪
ಅರುಣ ಉದಯದಲ್ಲಿ ಎದ್ದು ಪರಮಭಕ್ತರೆಲ್ಲ ಮಿಂದು
ಹರಿಗೆ ಅಭಿಷೇಕ ಮಾಡಿ ಭರದಿ ಭಜನೆ ಮಾಳ್ಪ ಪಾದವ ೫
ಸಾಸಿರನಾಮದಿಂದ ಉಲ್ಲಾಸದಿ ಪೂಜಿಸಿ ಜನರು
ಲೇಸಾಯಿತೆಂದು ಪೋಪ ಈಶನ ಪಾದವ ೬
ಸಂಧ್ಯಕಾಲದಲ್ಲಿ ಹರಿಗೆ ಗಂಧಮಾಲೆಯನ್ನು ಧರಿಸೀ ಸು
ಗಂಧವಾದ ತುಳಸಿ ಸುತ್ತಲು ಗೋವಿಂದನ ಶ್ರೀಪಾದವ ೭
ಧರಣಿಯನಾಳಿದ ಪಾದ ಘಣಿಯಮೇಲೆ ನಲಿದ ಪಾದ
[ಸಿರಿ] ದ್ಯುಮಣಿಕೋಟಿಕಾಂತಿ ಪಾದ ಫಲ್ಗುನೀತೀರದಿನಿಂದ ಪಾದ ೮
ವಜ್ರಾಂಕುಶಧ್ವಜ ಪದ್ಮರೇಖೆಗಳುಳ್ಳ ಮುದ್ದುವೇಂಕಟನ ಪಾದ
[ಸಜ್ಜನರಿಗೆ ] ಮುಕ್ತಿಯನ್ನು ಕೊಡುವ ಪಾದವ ೯

 


ಕಣ್ಣಾರೆ ನೋಡೆನ್ನ ಕರುಣಾ ಕಟಾಕ್ಷದೀ ಇಂದಿರಾರ
ಮಣಾ ಅರವಿಂದನೇತ್ರದಲಿ ಪ
ಕೌಸಲ್ಯಾದೇವಿಗೆ ಮೋಹಪಡಿಸಿದ ನೇತ್ರ
ದಶರಥನಿಗೆ ದಿವ್ಯಪ್ರಾಣನೇತ್ರಾ
ಶಶಿಮುಖಿ ಸೀತೆಯ ಬಿಡದೆ ನೋಡುವ ನೇತ್ರಾ
ಶಶಿ ರವಿ ಕಾಂತಿಗೆ ಸಮನಾದ ನೇತ್ರದೀ ೧
ಕೌಸಲ್ಯಾದೇವಿಗೆ ಮೋಹಪಡಿಸಿದ ನೇತ್ರ
ದಶರಥನಿಗೆ ದಿವ್ಯಪ್ರಾಣನೇತ್ರಾ
ಶಶಿಮುಖಿಯರನೆಲ್ಲಾ ಒಲಿಸಿದ ನೇತ್ರ[ವರ
ಸತಿ] ರುಕ್ಮಿಣಿದೇವಿಯ ಪ್ರಾಣನೇತ್ರಗಳಿಂದ ೨
ಪಾರ್ವತೀರಮಣನ ಮೋಹಪಡಿಸಿದ ನೇತ್ರ
ಅಸುರರು ಮೋಹಿಸಿ ಭ್ರಮಿಸಿದ ನೇತ್ರ
[ನಿರುತ ] ಪದ್ಮಿನೀ ರೂಪಿನಲಿ ಮಗ್ನವಾಗಿಹ ನೇತ್ರ
ಶ್ರೀನಿವಾಸನೆ ನಿಮ್ಮ ಕರುಣ ನೇತ್ರಗಳಿಂದಾ ೩

 

ಕಾಂಚೀಪುರವು ತಮಿಳುನಾಡಿನ ಯಾತ್ರಾಸ್ಥಳ
ಕ್ಷೇತ್ರದರ್ಶನ
೧೯
ಅ. ಕಂಚಿ
ಕರಿಗಿರಿವಾಸ ವರದರಾಜ ಕರಿಗಿರಿವಾಸ ಪ
ಕರಿಗಿರಿವಾಸನೆ ದುರಿತ ವಿನಾಶನೆ
ಸುರಮುನಿ ಪೋಷನೆ ಭವರೋಗ ನಾಶನೆ ಅ.ಪ
ಅಜನಯಾಗದಲಿ ಯಜ್ಞಕುಂಡದಲಿ ಉದಿಸಿ ಬಂದೆ
[ಭಜಕ] ಭಕ್ತರಿಗೆ ವರಗಳ ಕೊಡುತ್ತಲೆ ವರದ
ರಾಜನೆಂಬೊ ಬಿರುದು ಪೊತ್ತಿಹ ದೇವ ೧
ಮಾಯೆಯ ಬಿಡಿಸೊ ನಿನ್ನಲಿ ಎನಗೆ ಮೋಹವ ನಿಲಿಸೊ
ಘೋರ ಸಂಸಾರದಾಸೆಯ ಬಿಡಿಸಿ ನಿನ್ನಯ
ಪಾದಧ್ಯಾನವನಿತ್ತು ಕಾಯೊ ವರದರಾಜ ೨
ಚತುರಹಸ್ತದಲೀ ಕೈಪಿಡಿದು ದಿವ್ಯವಾದ ಶಂಖಚಕ್ರಗದೆಯಲಿ
ಮಾಯಪಾಶವನೆಲ್ಲ ಕತ್ತರಿಸಿ
ನಿಮ್ಮ ಪಾದವ ಸೇರಿಸು ಎನ್ನ ಚಿತ್ತಜಜನಕ ೩
ಹಾ ಕೃಷ್ಣ ಎಂದು ದ್ರೌಪದಿ ಕರೆಯೆ ಮನಕೆ ನೀತಂದು
ಆ ಖಳ ವಸ್ತ್ರವ ಸೆಳೆಯಲು ಅಕ್ಷಯ ಮಾಡಿದೆ
ಪಕ್ಷಿವಾಹನ ಪಾಂಡವಪಕ್ಷ ಶ್ರೀಕೃಷ್ಣ ೪
ಜನ್ಮ ಬಹಳದಲಿ ಬಳಲಿ ಬಂದೆ ಈ ಭೂಮಿಯಲಿ
ಇನ್ನು ನಾ ಜನಿಸಲಾರೆನೊ ಹೀನಜನ್ಮದಿ
ಮನ್ನಿಸಿ ರಕ್ಷಿಸೊ ಎನ್ನ ವರದರಾಜ೫
ಭವಬಿಸಲಿನಲಿ ಬಳಲಿ ಬಂದೆ ತಾಪತ್ರಯದಲ್ಲಿ
ನಿಮ್ಮ ಚರಣ ಪಂಕಜವೆಂಬೊ ಆತಪತ್ರದ ನೆರಳ
ಸೇರಿಸೆನ್ನಯ ತಾಪ ದೂರ ಮಾಡಿಸೊ ದೇವ ೬
ನಾಮಾಡಿದಂಥ ಪಾಪಗಳೆಲ್ಲ ಸಾವಿರ [ಅ]ನಂತ
ಎಣಿಸಿ ನೋಡಲು ಏನೂ ದಾರಿಯ ಕಾಣೆನು
[ಎನ್ನ] ಸರ್ವಾಪರಾಧವ ಕ್ಷಮಿಸಿ ರಕ್ಷಿಸೊ ದೇವ ೭
ವಿಂದ್ಯಾರಣ್ಯದಲಿ ಭಕ್ತರು ಕರೆಯೆ ಬಂದೆ ಬೇಗದಲಿ
ಇಂದಿರೆ ಸಹಿತಾಲೆ ತೀರ್ಥವ ಗ್ರಹಿಸಿ ಭಕ್ತರ ಕರೆ
ತಂದು ಕರಿಗಿರಿಯಲಿನಿಂದ ವರದರಾಜ ಕರಿಗಿರಿವಾಸ ೮

 

೧೨
ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ ಪ
ದುಷ್ಟಸಂಸಾರ ಬಹುಕಷ್ಟವಯ್ಯ ಇದ
ರಟ್ಟೊಳಿಗಳ ತಾಳಲಾರೆನಯ್ಯ
ಆರೆನಿದರ ಕೋಟಿಲೆಗಳಾರೆನಯ್ಯ
ವಾರಿಜಾಕ್ಷ ನಿಮ್ಮ ಪಾದ ಸೇರಿಸೈಯ್ಯ ೧
ಕಾಮಕ್ರೋಧ ಲೋಭಮೋಹ ಬಿಡಿಸಯ್ಯ
ಮದಮಾತ್ಸರ್ಯವೆಂಬ ಕಾಟ ನೀನೊತ್ತಿಸಯ್ಯ
ಅಂಬುಜನಾಭನೆ ನಿಮ್ಮ ಪಾದ ಹೊಂದಿಸಯ್ಯ
ಸರ್ವಬಂಧು [ನೀ] ಎನ್ನ ಜಿಹ್ವೆಯಲಿ ನೆಲೆಸಯ್ಯ ೨
ಆಶ ಪಾಶಕ್ಲೇಶವೆಲ್ಲ ನಾಶ ಮಾಡಿಸಯ್ಯ
ಶ್ರೀಶ ನಿನ್ನ ದಾಸರಲ್ಲಿ ಸೇರಿಸಯ್ಯ
ವಾಸುಕಿಶಯನ ಭವದಿ ನೊಂದೆನಯ್ಯ ಸ
ರ್ವೇಶಬಂಧು ಎನ್ನನುದ್ಧರಿಸಯ್ಯ ೩
ಪುತ್ರಮಿತ್ರಬಂಧುವರ್ಗದಿ ಬಿದ್ದಿಹೆನಯ್ಯ ಅ
ನಿತ್ಯಮೋಹದಲ್ಲಿ ಮುಳುಗಿ ಪೋದೆನಯ್ಯ
ವ್ಯರ್ಥನಾಗಿ ಕಾಲವನ್ನು ಕಳೆದೆನಯ್ಯ ಎನ್ನ
ಮರಣ ಕಾಲದಿ ನಿಮ್ಮ ಸ್ಮರಣೆ ಕರುಣಿಸಯ್ಯ ೪
ಜನನ ಮರಣವೆಂಬೊ ಜಾಡ್ಯ ಕ್ರೂರವಯ್ಯ
ಇದರ ವಿಧವನರಿತು ವೈದ್ಯ ಮಾಳ್ವರ ಕಾಣೆನಯ್ಯ
ಬ್ರಹ್ಮಾದಿ ದೇವತೆಗಳೂ ಅರಿಯರಯ್ಯ
ಧನ್ವಂತ್ರಿರೂಪ ಶ್ರೀನಿವಾಸ ರಕ್ಷಿಸಯ್ಯ ೫
ದೇಹವೆಲ್ಲ ಗಳಿತವಾಗಿ ಪೋಯಿತಯ್ಯ
ಇಂದ್ರೀಯ ಸ್ವಾಧೀನದಲ್ಲಿ ನಿಲ್ಲದಯ್ಯ
ವಿಷಯದಲ್ಲಿ ಮನಸು ಬಹಳ ಹರಿವುದಯ್ಯ
ಲಕ್ಷ್ಮೀಪತಿಯೆ ನಿಮ್ಮ ಭಕ್ತಿಯಿತ್ತು ಸಲಹಯ್ಯ ೬
ದೀನನಾಗಿ ನಿನ್ನ ಚರಣ ಸೇರಿದೆನಯ್ಯ
ಜ್ಞಾನವೈರಾಗ್ಯವಿತ್ತು ಪಾಲಿಸೆನ್ನಯ್ಯ ಮರಳಿ
ಜನ್ಮ ಬಾರದಂತೆ ಮಾಡಬೇಕಯ್ಯಾ ಗರುಡಗ
ಮನ ವೆಂಕಟರಮಣ ಭವಸಂಕಟ ಬಿಡಿಸಯ್ಯ ೭

 

೩೬
ಕೃತ್ತಿಕೋತ್ಸವ ಗೀತೆ
ಕೃತ್ತಿಕೋತ್ಸವ ನೋಡುವ ಬಾರೆ ನ
ಮ್ಮಾರ್ತಿಯ ಪರಿಹರಿಪನು ನೀರೆ ಪ.
ವೃಶ್ಚಿಕ ಕಾರ್ತೀಕ ಮಾಸದಿ ಕೃತ್ತಿಕೆ
ಪೋರ್ನೊಮಿ ದಿವಸದಿ ಕಂಕಣವನು
ಆನಂದದಿ ಕಟ್ಟಿ ಶಂತನುಮಂಟಪದಿ
ಬಹುಚಂದದಿ [ನಿಂದ]೧
ಮಿಂದು ಮಡಿಯ ತಾನುಟ್ಟನೆ
ಚಂದಂದಾಭರಣ ತೊಟ್ಟನೆ
ಭಕ್ತರಿಗೆ ತೀರ್ಥ ಕೊಟ್ಟನೆ ಸ್ವಾಮಿ
ಅರ್ತಿಯಿಂದಲೆ ತಾ ಪೊರಟಾನೆ ೨
ಮಾನಸದಲಿ ಮಹಾದೀವವನು
ಮಹಾಧ್ಯಾನದ ಮೇಲಿರಿಸಿ
ಬೇಗ ಉತ್ತಮ ನಂಬಿದೀಪವನಚ್ಚಿದನಾಗ
ಭಕ್ತವತ್ಸಲನಾಲಯಕೆಲ್ಲ ೩
ಹಾರ ಪುಷ್ಪದ ಕೋಳಿಕೆಯಲ್ಲಿ ವೈ
ಯಾರದಿಂದಲೆ ಶ್ರೀರಂಗನೇರಿ
ಭೇರಿದುಂದುಭಿ ವಾದ್ಯಗಳಲ್ಲಿ ಸ್ವಾಮಿ
ಚಕ್ರಮೂರುತಿಯಮಂಟಪದಲ್ಲಿ ೪
ಭಕ್ತವತ್ಸಲ ಶ್ರೀಕೃಷ್ಣನೆ ಮತ್ತೆರಡು
ಪಂದ (?)ವನಿತ್ತಾನೆ ಮುದದಿ
ಪಕ್ಕೆ ಪುರಿ (?) ಇಟ್ಟಾನೆ ಸ್ವಾಮಿ ಮಹ
ಲಕ್ಷ್ಮಿಗೆ ಸೇವೆ ಕೊಟ್ಟಾನೆ ೫
ಆಳ್ವಾರರಿಗೆ ಓಲೆ ಬರೆದಾನೆ
ಆಳುಗಳ ಕೈಲಿತ್ತು ಪೊರೆದಾನೆ
ಕರ್ಪೂರವನೆ ಸೂರೆಗೊಂಡನೆ ಸ್ವಾಮಿ
ಭಕ್ತರ ಹಸ್ತದಲಿ ಚಿತ್ತೈಸಿದನೆ ೬
ನಂದನಕಂದ ಮುಕುಂದನೆ
ಇಂದಿರೆರಮಣ ಗೋವಿಂದನೆ
ಸುಂದರ ಮಂದರೋದ್ಧಾರನೆ
ಭವಬಂಧನಂಗಳನೆಲ್ಲ ಕಳೆವನೆ ೭
ಕೃತ್ತಿಕ ದೀಪದುತ್ಸವವನ್ನು
ಅರ್ತಿಯಿಂದಲೆ ನೋಡಿದವರಿಗೆ
ಭಕ್ತವತ್ಸಲ ಶ್ರೀ ವೆಂಕಟರಂಗನು
ಮುಕ್ತಿಯ ಕೊಡುವನು ಸತ್ಯವಿದು ೮

 

೩೯
ಕೊಟ್ಟಿಗೋತ್ಸವ ಗೀತೆ
ಕೊಟ್ಟೊಗೋತ್ಸವ ನೋಡಿ ಸೃಷ್ಟಿಗೀಶ್ವರನ ಪ.
ವಾಸುದೇವನ ಸಹಸ್ರಸ್ತಂಭಮಂಟಪವ
ದಾಸರು ಬಂದು ಶೃಂಗಾರವ ಮಾಡಿ
ದೇಶದ ಮೇಲುಳ್ಳ ಬೊಂಬೆಗಳನು ರಚಿಸಿ
ಲೇಸಾದ ಮೇಲುಕಟ್ಟುಗಳ ಕಟ್ಟಿದರು ೧
ಸೃಷ್ಟಿಗೀಶ್ವರನಾದ ರಂಗನಾಥನಿಗೆ
ಕೊಟ್ಟಿಗೋತ್ಸವವನ್ನು ನಡೆಸಬೇಕೆನುತ
ಕಟ್ಟಿ ಕಂಕಣವನ್ನು ನಾಲ್ಕುವೇದಗಳಿಂದ
ಭಟ್ಟರು ಓದಿ ಪೇಳಿದರು ಸಂಭ್ರಮದಿ ೨
ವಜ್ರದ ಕಿರೀಟವಿಟ್ಟು ರತ್ನದಂಗಿಯ ತೊಟ್ಟು
ಅರ್ಜುನಸಖ ಸಂಭ್ರಮದಲಿ ಪೊರಟು
ಸ್ವರ್ಗದ ಬಾಗಿಲೊಳಗೆ ತಾ ನಿಂದು
ಮೂರ್ಜಗವೆಲ್ಲ ಮೋಹಿಸುತಲೆ ಬಂದು ೩
ಮಂದಹಾಸದಲಿ ನಿಂದು ಮಂಟಪದಲಿ
ಬಂದ ಆಳ್ವಾರರಿಗಾಸ್ಥಾನವಿತ್ತು
ಚಂದದಿಂದ ದಿವ್ಯ ಪ್ರಬಂಧವ ಕೇಳಿ
ಒಂದುಅಂಕಣ ಬಿಡದೆ ಬಂದ ಶ್ರೀರಂಗ ೪
ಸಂಕ್ರಾಂತಿಯಲಿ ಶಂಕರನ ಪ್ರಿಯನು
ಶಂಕೆ ಇಲ್ಲದೆ ಆಭರಣವನು ಧರಿಸಿ
ಪಂಕಜಮುಖಿಯರೊಡಗೊಂಡು ಹರುಷದ
ಲಂಕಾರವಾಗಿ ಬಂದನು ಮಂಟಪಕೆ ೫
ಮತ್ತೆ ಮರುದಿನದಲ್ಲಿ ಭಕ್ತವತ್ಸಲನು
ಮುತ್ತಿನಅಂಗಿ ಮುಂಡಾಸನಳವಡಿಸಿ
ಮುತ್ತಿನಛತ್ರಿ ಚಾಮರ ಸೂರೆಪಾನದಿ
ಮುತ್ತರಸಿಯ ಮಂಟಪಕೆ ನಡೆತಂದ ೬
ಅರ್ಥಿಯಿಂಬಂದು ತಾ ಅಶ್ವವನೇರಿ
ಮತ್ತೆ ಬೇಟೆಯಮೃಗವನೆ ಕೊಂದು ಸಂ
ಕ್ರಾಂತಿಯ ಪಾರ್ವೇಟೆಯನಾಡಿ
ಸಂತೋಷದಿ ಬಂದ ೭
ನಾರಿವೇಷವ ಆಳ್ವಾರರಿಗೆ ಧರಿಸಿ
ಪೇರಿಯ ತಾ ಬಿಟ್ಟು ತೇಜಿಯನೇರಿ
ಚೋರತನವ ಮಾಡಿದ ಭಕ್ತರಿಗೆ
ಮೂಲಮಂತ್ರವ ಪೇಳಿ ಮುಕ್ತಿಯನಿತ್ತ ೮
ಮಿಂದು ಮಡಿಯನುಟ್ಟು ಅಂದು ರಾತ್ರಿಯಲಿ ಹ
ನ್ನೊಂದು ವಿಧ ಭಕ್ಷ್ಯಗಳನು ತಾ ಗ್ರಹಿಸಿ
ಬಂದ ಆಳ್ವಾರರಿಗೆ ಮುಕ್ತಿಯನಿತ್ತು
ಬಂದು ಆಸ್ಥಾನದಿ ನಿಂದ ಶ್ರೀರಂಗ ೯
ಭಕ್ತರು ಮಾಡಿದ ಪ್ರಬಂಧವನೆಲ್ಲ
ಭಕ್ತಿಯಿಂದಲೆ ಪೇಳಿದ ಆಚಾರ್ಯರಿಗೆ
ಯುಕ್ತಿ ತೋರಿದ ಪರಾಶರವ್ಯಾಸರಿಗೆ ಬ್ರಹ್ಮ
ರಥವನಿತ್ತ ಬ್ರಹ್ಮಾಂಡರೂಪ ೧೦
[ಶೌ]ರಿಯು ತಾನಿರಲು ಮೇಘಮಂಡಲದಂತೆ
ತೋರುವುದು ತಾರಕೆಯಂತೆ ಮೈಯುಡುಗೆ
ವಾರಿಜನಾಭನ ಮುತ್ತಿನಂಗಿಯ ನೋಡು
ವವರಿಗೆ ತಾ ಆನಂದವಾಗಿಹುದು ೧೧
ಕ್ಷೀರಸಾಗರದಲ್ಲಿ ಪವಡಿಸಿಹ ಹರಿಗೆ
ಕ್ಷೀರಬಿಂದುಗಳು ಮೈಯೊಳಗೆ ಬಿದ್ದಂತೆ
ವಾರಿಜನೇತ್ರಗೆ ವಜ್ರದನಾಮವು
ಧರಿಸಿದರು ಹೇಮದ ಪಾದಹಸ್ತಗಳ ೧೨
ಮುತ್ತಿನಂಗಿಸೇವೆ ನೋಡಬೇಕೆನುತ
ಹತ್ತುಸಾವಿರ ಪ್ರಜೆ ಬಂದು ನಿಂತಿರಲು
ಇತ್ತು ಕಾಣಿಕೆಯನು ನೋಡಿ ವೆಂಕಟರಂಗನ
ಮುಕ್ತರಾದೆವೆಂದು ಭಕ್ತರು ನುಡಿದರು ೧೩

 

೩೧
ಕೋಲು ಉತ್ಸವಗೀತೆ
ಕೋಲುವ ನೋಡುವ ಬನ್ನಿ ಶ್ರೀರಂಗನಾಯಕಿಯ
ಕೋಲುವ ನೋಡುವ ಬನ್ನಿರೆಲ್ಲ ಪ
ಚಪ್ಪರವನು ಶÀೃಂಗರಿಸಿ ಪಟ್ಟುಪೀತಾಂಬರದ
ಮೇಲೆ ಕಟ್ಟುಗಳಿಂದ ವಿಸ್ತರಿಸಿ
ಕದಳಿಯಕೊನೆ ಕಬ್ಬು ತೆಂಗಿನ ಫಲಗಳ
ವಿಧವಿಧವಾಗಿ ಶೃಂಗಾರ ಮಾಡಿದರು ೧
ಭಾದ್ರಪದ ಕನ್ಯಾಮಾಸದಲ್ಲಿ ಶುದ್ಧಪಾಡ್ಯದಲ್ಲಿ
ಭದ್ರೆ ಶ್ರೀರಂಗನಾಯಕಿಯು
ಬಂದು ಮಜ್ಜನವನು ಮಾಡಬೇಕೆನುತಲೆ
ಮೂದ್ರ್ವಾರಮಧ್ಯದಲಿ ತಾ ನಿಂದಳು ೨
ತಂದು ಹರವಿದರು ಬತ್ತವ ವಿಸ್ತಾರವಾಗಿ
ತಂದಿಟ್ಟು ಕರ್ಪೂರಬಟ್ಟಲುಗಳು
ಗಂಧದ ತೀರ್ಥವ ತುಂಬಿ ಕಲ್ಪೋಕ್ತ
ದಿಂದಲೆ ಪೂಜೆಯ ಮಾಡಿದರು ೩
ಎಂಭತ್ತೊಂಬತ್ತು ಬಟ್ಟಲಲ್ಲಿ ಇರುವ ಉದಕವನು
ರಂಭೆಗಭಿಷೇಕವ ಮಾಡೆ ಗಂಧವ
ಅಂಬೆ ಶಿರದೊಳು ಧರಿಸಿ ಪೂಮಾಲೆಯ
[ಸಂಭ್ರಮದಿ]ಧರಿಸಿ ನಿಂದಳು ದೇವಿ ೪
ಸುಖನಿಧಿ ಪದ್ಮಾನಿಧಿಗೆ ಹಣ್ಣಿನ ಹರಿವಾಣವ
ಶಂಕೆ ಇಲ್ಲದೆ ಭಕ್ತರು ಪಿಡಿದು [ನಿಂತಿರುವ]
ಶಂಖನಾದವು ತಾಳಮೇಳ ವಾದ್ಯಗಳಿಂದ
ಪಂಕಜಮುಖಿಗಭಿಷೇಕವ ಮಾಡಿದರು ೫
ಪುಷ್ಪದ ಮಂಟಪದಲ್ಲಿ ಪುರುಷೋತ್ತಮನ
ಒಪ್ಪವಾದ ಅಶ್ವವ ತಂದಿರಿಸಿದರು ಆನಂದದಿ
ಕಲ್ಪೋಕ್ತದಿಂದಲೆ ಪೂಜೆ ನೈವೇದ್ಯವ ಮಾಡಿ
ಒಪ್ಪುವ ಕಂಕಣವನು ಕಟ್ಟಿದರಾಗ ೬
ರತ್ನದ ಕಿರೀಟವಿಟ್ಟು ಲಲಾಟದಲ್ಲಿ
ಮತ್ತೆ ತಿದ್ದಿದ ಕಸ್ತೂರಿಬಟ್ಟು
ರತ್ನದ ಪದಕವು ಇಟ್ಟು ಕೊರಳೊಳು
[ರತ್ನ] ಮಂಟಪಕೆ ಇಂದಿರೆ ವಂದಾಳು ೭
ಮಧ್ಯದ ಕೊಟ್ಟಿಗೆಯಲ್ಲಿ ವಿಪ್ರರು ಕೈಕಟ್ಟಿ
ನಿಂದು ಸೇವೆಯ ಮಾಡುತಿರಲು ಅರ್ತಿ
ಯಿಂದಲೆ ಧೂಪದೀಪ ನೈವೇದ್ಯದಿ ಲಕ್ಷ್ಮೀ
ದೇವಿಗೆ ಪೂಜೆಯ ಮಾಡಿದರು ೮
ಭೇರಿ ದುಂದುಭಿ ವಾದ್ಯಗಳಿಂದ ತಾಳಮೇಳವು
[ನಾರಿಯರ] ರ ಸಾಲುಗಳಿಂದ ಬಾಣ
ಬಿರುಸು ಮತಾಪು ಅಗರುಬತ್ತಿ [ಗಳ ನಡುವೆ]
ನಾರಾಯಣನರಾಣಿ ಕೋಲುವಿನಲ್ಲಿ ೯
ಛತ್ರಿಚಾಮರ ಸೂರೆಪಾನ ಪಿಡಿಯೆ ಮದ
ಹಸ್ತಿಗಳು ಮಾಡುವ ಸಲಾಮು
ಸುತ್ತಿ ದೀವಟಿಗೆಯು ತುತ್ತೂರಿ ನಾದವು
ಮತ್ತಧಿಕಾರಿಗಳು ಮಂಟಪದಲಿ ೧೦
ಆರುದಿವಸದಲ್ಲೊರೆಗೊಂಡು ಪಾನುಪಟ್ಟಿಯು
ಸೂರ್ಯಚಂದ್ರರು ಮುತ್ತಿನಬಟ್ಟು
[ಆ]ರಾಗಟೆಹೆರಳು ಭಂಗಾರಗೊಂಡೆಗಳಿಟ್ಟು ವ
ಯ್ಯಾರದಿಂದಲೆ ಬಂದಳು ಮಂಟಪಕೆ ೧೧
ಸಪ್ತದಿನದಲಿ ಲಕ್ಷ್ಮೀದೇವಿಗೆ ಉತ್ರಾಜಿಮಾಲೆ
ಹಸ್ತವಡಗೆ ಹರಡಿವಂಕಿ ದಕ್ಷಿಣ
ಹಸ್ತದಿ ರತ್ನದಹಂಸವು ವಾಮ
ಹಸ್ತವ ಮೊಣಕಾಲಿನೊಳಿಟ್ಟಳು ೧೨
ಅಂದುಗೆ ಗೆಜ್ಜೆ ಮುಂಗೈಮುರಾರಿ ಉಂಗುರವು
ಕುಂದಣದ ಪಾಗಡವಿಟ್ಟು
ಹಿಂದಿನತೋಳಿಗೆ ಬಂದಿ ತಾಯಿತನಿಟ್ಟು
ಕುಂದಣದ ಮಂಟಪದಲಿ ಕುಳಿತಳು ೧೩
ಅಷ್ಟಮ ದಿವಸದಲ್ಲಂದು ಸೃಷ್ಟಿಗಿರೀಶ್ವರಿಗೆ
ಕಟ್ಟಿದರು ಕಲ್ಕೀತುರಾಯಿ
ದೃಷ್ಟಿಯಬಟ್ಟು ರತ್ನದ ಕುಂಡಲ
[ಇಟ್ಟು] ಮತ್ತರಗಿಣಿಯನು ಮಾತಾಡಿಸುತ ೧೪
ಮುಕ್ತಿದಾಯಕಿಗೆ ಮೂರು ಪಾವಡೆಯನುಡಿಸಿ
ಮತ್ತೆ ವಡ್ಯಾಣವನಿ[ಡಲು]
ರತ್ನದ ಹಸ್ತದಿ ಅಭಯವ ಕೊಡುತ
[ನಿಂತಳು] ಮೊರ್ನೋಮಿಯ ಮಂಟಪದಲ್ಲಿ ೧೫
ಮುಂದೊಂಭತ್ತು ದಿನದಲ್ಲಿ ರಂಭೆರಂಗನಾಯಕಿಯು
ಮಿಂದು ಮಡಿಗಳ ತಾನುಟ್ಟು
ಚಂದದಿ ನೈವೇದ್ಯವ ಭಕ್ತರಿಗಿತ್ತು
ಬಂದು ಆಸ್ಥಾನದಿ ನಿಂದಳು ದೇವಿ ೧೬

 

೩೫
ಕೌಶಿಕೋತ್ಸವ ಗೀತೆ
ಕೌಶಿಕೋತ್ಸವ ನೋಡುವ ಜನರಿಗೆ ಕಣ್ಗಳೆರಡು ಸಾಲದು ಪ.
ಕಾರ್ತೀಕ ಶುದ್ಧ ಏಕಾದಶಿಯಲ್ಲಿ ಕಂ
ದರ್ಪಜನಕನು ಪೊರಟುಬಂದು
ಶಂತನುಮಂಟಪದಲಿ ಮಜ್ಜನ ಮಾಡಿ
ಎಂದಿನಂದದಿ ತನ್ನ ಮಂದಿರಕೆ ನಡೆದನು೧
ನಿತ್ಯಕರ್ಮವನೆಲ್ಲ ಗ್ರಹಿಸಿ ರಂಗಸ್ವಾಮಿ
ಅರ್ತಿಯಿಂದಲೆ ನೀರಾಡಿ ಎದ್ದು
ಭಕ್ತರೆಚ್ಚರಿಕೆ ಪರಾಕು ಎಂದೆನುತಿರೆ
ಅರ್ತಿಯಿಂದಲೆ ಬಂದ ಅರ್ಜುನಮಂಟಪಕೆ ೨
ಮಂಟಪದಲಿ ಶ್ರೀರಂಗನಿರೆ ವ್ಯಾಸ
ಭಟ್ಟರು ಬಂದು ಪುರಾಣ ಪೇಳೆ
ಮುನ್ನೂರುಅರವತ್ತು ವಲ್ಲಿಗಳನ್ನು ಧರಿಸಿ
ಮು[ನ್ನ]ಸೇವೆಯನಿತ್ತ ಮೋಹನರಂಗನ ೩
ಕರಿಯಕುಲಾವಿ ಕುತ್ತನಿಅಂಗಿ ವಜ್ರ
ದರಳೆಲೆ ಮುತ್ತುಗಳಲುಗಾಡುತಾ ಕರ್ಣ
ಕುಂಡಲ ಹಾರ ಪದಕಗಳ್ಹೊಳೆಯುತ
ಪಡಿಯನೇರಿ ಬಂದ ಕರ್ಪೂರಧೂಳಿಯಿಂದ ೪
ನೋಡಿದ ಅಗ್ನಿ ನಾಲ್ಕು ಕಣ್ಗಳಿಂದ ಬಂದು
ನೋಡಿದ ರುದ್ರ ಹತ್ತು ಕಣ್ಗಳಿಂದ
ನೋಡಿದ ಇಂದ್ರ ಸಹಸ್ರಕಣ್ಗಳಿಂದಲೆ ಹರಿಯ
ನೋಡಿದನೆಂಟು ಕಣ್ಗಳಿಂದ ಬ್ರಹ್ಮ ವೆಂಕಟರಂಗನ ೫

 

೪೪
ಚೈತ್ರದುತ್ಸವ ಗೀತೆ
ಚೈತ್ರಮಾಸದ ಕೃಷ್ಣಪಕ್ಷ ಷಷ್ಠಿಯಲಿ
ಕಟ್ಟಿ[ದರು] ಕಂಕಣವನು ಸೃಷ್ಟಿಗೀಶ್ವರಗೆ ಪ.
ಮೊದಲು ದಿವÀಸದಿ ಧ್ವಜಪಟವನೇರಿಸಿ
ನದಿಗಳೆಲ್ಲವ ಕರೆದು ಭೇರಿಯಿಂದ ಸುರರು ೧
ಯಾಗಶಾಲೆಯ ಪೊಕ್ಕು ಯಾತ್ರದಾನವ ಬೇಡಿ
ಯಾಗಪೂರ್ತಿಯ ಮಾಡಿ ಸೂತ್ರ ಧರಿಸಿದರು ೨
ಸರ್ಪಮೊದಲಾದ ಅಲ್ಲಿರ್ಪ ವಾಹನವೇರಿ ಕಂ
ದರ್ಪನಪಿತ ಬಂದ ಚಮತ್ಕಾರದಿಂದ ೩
ಬೆಂಡಿನ ಚಪ್ಪರ ಬೆಳ್ಳಿಕುದುರೆಯನೇರಿ
ಪಾಂಡವಪಕ್ಷ ಬಂದ ಪುಂಡರೀಕಾಕ್ಷ ೪
ರೇವತಿ ನಕ್ಷತ್ರದಲಿ ಏರಿ ರಥವನ್ನು
[ತಾ] ವೈಯ್ಯಾರದಿಂದಲೆ ಬಂದ ವಾರಿಜನಾಭ ೫
ಗೋವಿಂದ ಗೋವಿಂದಯೆಂದು ಪ್ರಜೆಗಳು
[ತಾವಾ]ನಂದದಿಂದ ನೋಡಿ ಪಾಡುತ್ತ ೬
ಗೋವುಗಾಣಿಕೆಯನ್ನು ಗೋಪಾಲರು ತಂದು ನೀ
ಲಾವರ್ಣನಿಗಿತ್ತರು ನೇಮದಿಂ ಪೂಜೆಯ ೭
ಧ್ವಜಮಂಟಪದಲ್ಲಿ ಹರಿಭಜನೆಗಳ ಮಾಡು[ತ್ತಿರೆ]
ಭುಜಗಶಯನನು ವರವಿತ್ತು ಕಳುಹಿದನು ೮
ಸಪ್ತಾವರಣವ ಸುತ್ತಿ ತೀರ್ಥವನಿತ್ತು
ಅರ್ಥಿಯಿಂದಲೆ ಬಂದ ಭಕ್ತವತ್ಸಲನು ೯
ಬೊಂಬೆ ಅಂದಣವೇರಿ[ದ] ಅಂಬುಜನಾಭ
ಕುಂಭಿಣಿಗಧಿಕವೆಂತೆಂಬ ಶ್ರೀರಂಗ ೧೦
ಚಿತ್ರರಥ[ದ] ವಿಚಿತ್ರಮೂರುತಿಯ ನೋಡಿ ಪ
ವಿತ್ರರಾದರು ಧಾತ್ರಿ[ಯ] ಉತ್ತಮರೆಲ್ಲ ೧೧
ಬಂದ ಪ್ರಜೆಗಳು ಎಲ್ಲ ಆನಂದದಿ ಪೋಗೆ
ಬಂದು ಆಸ್ಥಾನದಿ ನಿಂದ ಶ್ರೀರಂಗ ೧೨
ಸೃಷ್ಟಿಯಲಿ ಪುಟ್ಟಿದ ದುಷ್ಟಪ್ರಾಣಿಗಳ [ನೆಲ್ಲ]
ಶ್ರೇಷ್ಠ ಮಾಡಲಿ [ನಮ್ಮ] ವೆಂಕಟರಂಗ ೧೩

 

ತುಂಗಾನದಿ ತೀರದಲ್ಲಿರುವ ಗುಡ್ಡದ
೨೦
ಜಯಮಂಗಳಂ ನಿತ್ಯ ಶುಭಮಂಗಳಂ ಪ
ನಿಂದು ತುಂಗಾತೀರದಲಿ ಮಂದರಗಿರಿಯಲ್ಲಿ
ಬಂದು ಜಮದಗ್ನಿಗಳಿಗೊಲಿದು
ಬಂದು ನಿಮ್ಮಯ ಸೇವೆ ಮಾಡಿದ ಭಕ್ತರಿಗೆ ಆ
ನಂದ ಪದವಿಯನೀವ ಇಂದಿರೇಶನಿಗೆ ೧
ಅಂದು ಗೌತಮಸತಿಯ ಇಂದ್ರನು ಮೋಹಿಸಿ
ಬಂಧನಕ್ಕೊಳಗಾಗೆ ಬಂದು ನಿಮ್ಮ
ಪಾದಸೇವೆಯ ಮಾಡೆ ಪಾಪವೆಲ್ಲವ ಕಳೆದು
ಅಮರಪದವೀವ ನಿತ್ಯಪರಮಪುರಷನಿಗೆ೨
ಇಂದ್ರಗಿರಿ ಮಹೇಂದ್ರತೀರ್ಥವೆಂದೆನುತ ಆ
ನಂದದಿಂದಲೆ ಪ್ರವಾಸ ಮಾಡೀ
ಬಂದು ಸ್ನಾನ ಪಾನ ಸೇವೆ ಮಾಡಿದವರ
ಜಾರದೋಷದ ಕಳೆವ ಶ್ರೀನಿವಾಸನಿಗೆ ೩

 

೩೩
ಉಯ್ಯಾಲೆ ಉತ್ಸವಗೀತೆ
ಜೊ ಜೊ ಜೊ ಜೊ ಶ್ರೀರಂಗನಾಥ
ಜೊ ಜೊ ರಂಗನಾಯಕಿರಮಣನೆ ಭೂಮಿಕಾಂತ ಪ.
ಮಂಟಪವನು ಶೃಂಗರಿಸಿದರಂದು
ಎಂಟುದಿಕ್ಕಿಗೆ ಪುಷ್ಪಗಳಲಂಕರಿಸಿ ವೈ
ಕುಂಠವಾಸನ ಉಯ್ಯಾಲೆಮಂಟಪವನ್ನು
ಭಂಟರು ಬಂದು ಶೃಂಗಾರ ಮಾಡಿದರು ೧
ಆಶ್ವೀಜ ಮಾಸದ ಶುಕ್ಲಪಕ್ಷದಲ್ಲಿ ಆ
ತುಲಾ ಮಾಸದ ಆರುದಿವಸದಲ್ಲಿ
ವಾರಿಜಮುಖಿಯರ ಒಡಗೊಂಡು ರಂಗ ವೈ
ಯ್ಯಾರದಿಂದಲೆ ಬಂದನು ಮಂಟಪಕೆ ೨
ಮತ್ತೆ ಮರುದಿನದೊಳಗಚ್ಚುತನಂತ
ಕುತ್ತನಿಅಂಗಿ ಕುಲಾವಿ ಧರಿಸಿ
ರತ್ನದ ಪಾನುಪಟ್ಟಿಯು ಅರಳೆಲೆ ಕಟ್ಟಿ
ಭಕ್ತವತ್ಸಲನಾಡಿದನುಯ್ಯಾಲೆ ೩
ಮೂರುದಿವಸದಲಿ ಮುರವೈರಿ ತಾನು
ಭಾರಿ ವಜ್ರದ ಮಕರಕಂಠಿಯಾ ಧರಿಸಿ
ನೀರಜನೇತ್ರನು ನಿಗಮಗೋಚರನು ವೈ
ಯ್ಯಾರದಿಂದಲಿ ಆಡಿದನುಯ್ಯಾಲೆ ೪
ನಾಲ್ಕು ದಿವಸದಲಿ ನಂದನಕಂದ ನವ
ರತ್ನದ ಮಕರಕಂಠಿಯಧರಿಸಿ
ನಾನಾ ವಿಧದ ಪುಷ್ಪಮಾಲಿಕೆಯನು
ಧರಿಸಿ ನಾಗಶಯನನಾಡಿದನುಯ್ಯಾಲೆ ೫
ಐದು ದಿವಸದಲಿ ಅಕ್ರೂರವರದಗೆ ಕರಿ
ದಾದ ಕುಲಾವಿ ಕಲ್ಕಿಯ ತುರಾಯಿ
ಗಂಡಭೇರುಂಡಪಕ್ಷಿಯ ಪದಕವನಿಟ್ಟು
ಪುಂಡರಿಕಾಕ್ಪನಾಡಿದನುಯ್ಯಾಲೆ ೬
ಆರು ದಿವಸದಲಿ ಅಂಗಜನಯ್ಯಗೆ
ಕೂರೆ ಕುಲಾವಿ ವೈಯಾರದಿಂಧರಿಸಿ
ಹಾರ ಮಾಣಿಕ ರತ್ನ ಸರಗಳಳವಡಿಸಿ
ನೀರಜನೇತ್ರನಾಡಿದನುಯ್ಯಾಲೆ ೭
ಸಪ್ತದಿವಸದಲಿ ರತ್ನ ಮೌಳಿಯ ಧರಿಸಿ
ಹಸ್ತದಿ ರತ್ನಹಾರ ಗಂಧವಿರಿಸಿ
ಅರ್ತಿಯಿಂದಲೆ ತನ್ನ ಮಿತ್ರರು ಸಹಿತಲೆ
ಬತ್ತವಳಿಸಿ ಬಂದ ಭಕ್ತವತ್ಸಲನು ೮
ಓರೆಗೊಂಡೆಯ ವೈಯಾರದಿಂ ಧರಿಸಿ
ನಾರಿಯರೆಡಬಲದಲಿ ಕುಳ್ಳಿರಿಸಿ
ವಾರಿಜನೇತ್ರನು ನಡುವೆ ಕುಳ್ಳಿರಲು
ವಾರಾಂಗನೆಯರೆಲ್ಲ ಪಾಡುತಿರಲು ೯
ಅಷ್ಟಮ ದಿವಸದಿ ಅರ್ತಿಯಿಂದಲೆ
ಕೃಷ್ಣಮೂರುತಿಗೆ ರಾಜಮುಡಿಯನು ಧರಿಸಿ
ಹಿಂದಿನ ತೋಳಿಗೆ ಬಂದಿ ತಾಯಿತನಿಟ್ಟು
ಇಂದಿರೆ ರಮಣನಾಡಿದನುಯ್ಯಾಲೆ ೧೦
ಎಡಬಲದಲಿ ಭಕ್ತರು ನಿಂತಿರಲು
ಪಿಡಿದು ಚಾಮರ ವ್ಯಜನವ ಬೀಸುತಿರಲು
ಬೆಡಗಿನಿಮ್ಮ[ಡಕೆ]ಲೆ ಕರ್ಪೂರದ ಗುಳಿಗೆಯ ಎ
ನ್ನೊಡೆಯಗೆ ಭಕ್ತರು ಪಿಡಿದು ನಿಂದಿರಲು ೧೧
ದಾಸರಿಸಂದವು ಧಗಧಗನುರಿಯೆ ಸಹ
ಸ್ರ ಸೂರ್ಯನಂತೆ ಪದಕಗಳೊಳೆಯೆ
ಲೇಸಾದ ರತ್ನದ ಪಾದುಕೆಯನು ಧರಿಸಿ
ವಾಸುದೇವನು ಆಡಿದನುಯ್ಯಾಲೆ ೧೨
ಇಂದಿರೆ ರಮಣ ಒಂಭತ್ತು ದಿನದೊಳು
ಚಂದ್ರ ಪುಷ್ಕರಣೀಲಿ ತೀರ್ಥವನ್ನಿತ್ತು
ಬಂದು ಮಜ್ಜನವನ್ನು ಮಾಡಿ ವೆಂಕಟರಂಗ
ಇಂದಿರೆಸಹಿತಲೆ ನಿಂದ ಹರುಷದಲಿ ೧೩

 

ಸುಪ್ರಸಿದ್ಧ ಉಡುಪಿಯ ಶ್ರೀಕೃಷ್ಣದರ್ಶನಗೈದ
೨೧
ಉಡುಪಿ
ದೃಷ್ಟಿ ಇದ್ಯಾತಕೆ ಉಡುಪಿ ಕೃಷ್ಣನ್ನ ನೋಡದ ಪ
ಗೋಪಿಯರ ಪೂಜೆ ಗ್ರಹಿಸಿ ಗೋಪಿಚಂದನ ಸಹಿತವಾಗಿ
ವ್ಯಾಪಾರದ ಹಡಗೀಲಿ ಬಂದ ಶ್ರೀಪತಿಯ ನೋಡದ ೧
ಮಧ್ವರಾಯರಿಗೊಲಿದು ಬಂದು ಸಮುದ್ರತೀರದಲ್ಲಿ ನಿಂದು
ಪದ್ಮನಾಭನಪುರದಿ ನೆಲಸಿದ ಮುದ್ದು ಶ್ರೀಕೃಷ್ಣನ್ನ ನೋಡದ ೨
ಅಷ್ಟಮಠಧ ಯತಿಗಳಲ್ಲಿ ಶ್ರೇಷ್ಠವಾದ ಪೂಜೆಗ್ರಹಿಸಿ ಶಾಪ
ದುಷ್ಟವಾದ ದೇಶವನೆಲ್ಲಾ ಶ್ರೇಷ್ಠ ಮಾಡಿದ ಕೃಷ್ಣನ್ನ ನೊಡದ ೩
ಶುದ್ದವಾದ ಗೋವುಘೃತವು ಕ್ಷೀರ ಸಕ್ಕರೆ ಮಧುವು ದಧೀ
ನಾರಿಕೇಳ ಫಲಗಳಿಂದ ಮಿಂದ ಶ್ರೀಕೃಷ್ಣನ್ನ ನೋಡದ ೪
ಉದ್ದಂಡವಾದ ಉರನಲ್ಲಿ ಭೂಮಂಡಲನಾಳ್ವ ಶಿರವನಿಟ್ಟು
ಕೊಂಡೆ ಮಕರಿತು ಚೆಂಡು ಧರಿಸಿದ ಪುಂಡರೀಕಾಕ್ಷನ್ನ ನೋಡದ ೫
ಪಾನಪಟ್ಟಿ ಮುತ್ತಿನಬಟ್ಟು ಮೂಗುತಿಯನಳವಟ್ಟು ವಜ್ರದ
ಕರ್ಣಕುಂಡಲವನಿಟ್ಟು ಅರ್ಜುನಸಾರಥಿಯ ನೋಡದ ೬
ಪವಳದಂತೆ ಅಧರಕಾಂತೀ ಕೊರಳಿನಲ್ಲಿ ವೈಜಯಂತಿ
[ನವ] ಹಾರಪದಕ ಸರಗಳಿಟ್ಟ ವಾರಿಜನಾಭನ ನೋಡದ ೭
ಕಡೆಗೋಲ ಬಲದ ಕೈಲಿ ಎಡದ ಕೈಯ ತೊಡೆಯೊಳಿಟ್ಟು
ಉಡುದಾರ ಗೆಜ್ಜೆಯನಿಟ್ಟ ಪೊಡವಿಗೀಶ್ವರನ್ನ ನೋಡದ ೮
ಅಂದುಗೆ ಗೆಜ್ಜೆನಿಟ್ಟು ಕುಂದಣದಾವುಗೆಯ ಮೆಟ್ಟಿ ಆ
ನಂದದಿಂದ ಗಂಗೆ ಪಡೆದ ಇಂದಿರೇಶನ ಪಾದವ ನೋಡದ ೯
ಸಂಸಾರದಗ್ನಿಯಲ್ಲಿ ಬೆಂದು ನೊಂದುಬಂದ ಭಕ್ತರ ಚರಣವೆಂ
ಬೊ ಶರಧಿಯಲ್ಲಿ ಭರದಲಿರುವ ಹರಿಯ ನೋಡದ ೧೦
ಕಲ್ಲ ಸತಿಯಮಾಡಿ ಕಾಳಿಶಿರದಮೇಲೆ ನಾಟ್ಯವನಾಡಿ
ದುರುಳ ಶಕಟನನ್ನು ತುಳಿದ ವರದ ವೆಂಕಟಕೃಷ್ಣನ್ನ ನೋಡದ ೧೧

 

೩೭
ಧನುರ್ಮಾಸದ ಸೇವೆಯ ಗೀತೆ
ಧನುರ್ಮಾಸದ ಸೇವೆಯ ನೋಡುವ ಬನ್ನಿ
ದಾನವಾಂತಕ ರಂಗನ ಪ.
ಶ್ರೇಯೋನಿಧಿಗಳಿಗೆರಗಿ
ಶ್ರೀವೇದಾಂತ ಗುರುಗಳಿಗೆ ವಂದಿಸಿ
ಶ್ರೀ ಭಾಷ್ಯಕಾರ ಶಠಗೋಪರಿಗೆ ವಂದಿಸಿ
ಶ್ರೀರಂಗೋತ್ಸವವ ಸಂಕ್ಷೇಪದಿಂ ಪೇಳುವೆ ೧
ಮಾರ್ಗಶಿರ ಮಾಸದಲಿ
ಮಹಾನುಭಾವ ಶ್ರೀರಂಗನಾಥನಿಗೆ
ಮಹದುತ್ಸವವನ್ನು ನಡೆಸಬೇಕೆನುತಲೆ
ಮಹಾಪುರುಷರು ಸಂಕಲ್ಪವ ಮಾಡಿದರು ೨
ಕೇಶವ ಮಾಸದಲಿ ಎದ್ದು
ದಾಸರು ಮೂರನೆ ಜಾವದಲಿ
ಭೂಸುರರಿಗೆ ಎಚ್ಚರವಾಗಬೇಕೆಂದು ಬಾ
ರೀಸಿದರು ಭೇರಿ ದುಂದುಭಿ ವಾದ್ಯಗಳ ೩
ಕನಕಿ ಸುಜೋತಿ ಹೇಮಾವತಿಯ
ಕಪಿಲೆ ಕಾವೇರಿ ತೀರ್ಥದಲಿ
ಸ್ನಾನವ ಮಾಡಿ ತೀರ್ಥವ ತಂದು ನೇಮದಿ
ನೀಲವರ್ಣನಿಗಭಿಷೇಕವ ಮಾಡಿದರು ೪
ಛಳಿಗೆ ಕುಲಾವಿಯನಿಟ್ಟು
ಶಾಲುಗಳ ಹೊದಿಸಿ ನಳಿನನಾಭ ರಂಗಗೆ
ಪರಿಪರಿ ಪುಷ್ಪದ ಸರಗಳ ಧರಿಸಿಯೆ
ಶ್ರೀಮೂರ್ತಿಯ ಸರವನು ಧರಿಸಿದರಾಗ ೫
ತಾಪಹರವಾದ ಸೂಕ್ಷ್ಮದ ದಿವ್ಯ
ಧೂಪವನು ಬೆಳಗಿದರು
ವ್ಯಾಪಿಸುವ ತಿಮಿರವ ಪರಿಹರಿಸಿ ರಂಜಿಸುವ
ದೀಪವ ಬೆಳಗಿದರು ಶ್ರೀಪತಿಗೆ ೬
ಋಗ್ವೇದ ಯಜುರ್ವೇದವು ಸಾ
ಮವೇದ ಅಥರ್ವಣವೇದಂಗಳು
ದ್ರಾವಿಡವೇದ ಪುರಾಣಶಾಸ್ತ್ರಗಳನು ಬಾಗಿ
ಲಾ ವೊಳಗೆ ನಿಂತು ಭಕ್ತರು ಪೇಳಿದರು ೭
ವಾರಾಂಗನೆಯರಾಗ ವೈಯ್ಯಾರದಿಂದ
ಆರತಿಗಳನೆ ತಂದು
ವಾರಿಜನಾಭಗೆ ನೇಮದಿಂದಲೆ ಗುಂ
ಭಾರತಿಗಳನೆತ್ತಿ ನೈವೇದ್ಯವ ತಂದರು ೮
ಮುದ್ಗಾನ್ನ ಘಮಘಮಿಸುವ ಪಾಯಸ
ದಧ್ಯೋದನಗಳು ಪರಿಪರಿ ಶಾಕಪಾಕವು
ಆ ದಿವ್ಯ ಭಕ್ಷ್ಯನೈವೇದ್ಯವ ಪರಮಪುರುಷಗೆ
[ಆದ್ಯರು] ಆರೋಗಣೆ ಮಾಡಿದರು ೯
ಕಳಿಯಡಿಕೆ ಬಿಳಿಯೆಲೆಯು ಕರ್ಪೂರದ
ಗುಳಿಗೆಗಳನ್ನೆ ತಂದು ಸೃಷ್ಟಿಗೀಶ್ವರಗೆ
ಒಳ್ಳೆ ತಾಂಬೂಲವ ಸಮರ್ಪಿಸಿ
ಹಿಟ್ಟಿನ ಮಂಗಳಾರತಿಯನೆತ್ತಿದರಾಗ ೧೦
ಆ ಮಹಾ ಶ್ರೀನಿವಾಸ ರಂಗ ನೈವೇದ್ಯವ
ಶ್ರೀಮಧ್ರಾಮಾನುಜರ ಮತದಿ
ನೇಮದಲಿ ವಿನಿಯೋಗವ ಮಾಡಲು ಪಾವ
ನಾಮಾದೆವೆಂದೆನುತ ಪೋದರು ಎಲ್ಲ ೧೧

 

೪೯
ನಮೋ ನಮೋ ಶ್ರೀರಂಗ ಶ್ರೀನಿವಾಸ ವರದಗೆ
ನಮೋ ನರಹರಿ ನಾರಾಯಣ ಶ್ರೀಪರಮಪುರುಷಗೆ ಪ
ನಂದನಕಂದ ಮುಕುಂದ ಇಂದಿರೇಶಗೆ
ಮಂದರೋದ್ಧಾರ ಹರಿಸುಂದರಾಂಗಗೆ ಅ.ಪ
ಕಂದನ ನುಡಿಯ ಕೇಳಿ ತಾಯಿ ತಂದೆಗಳು ಆ
ನಂದ ಪಡುವ ತೆರದಿ ಮಂದಮತಿ
ಯಿಂದ ಪೇಳಿದ ಹೊಂದಿಕೆಯಿಲ್ಲದ ನುಡಿಯ
ಕುಂದ ಕ್ಷಮಿಸಿ ನಿಮ್ಮ ಪಾದದ್ವಂದ್ವದಲಿರೆಸೆನ್ನ ೨
ವಾಸುದೇವ ನಿಮ್ಮ ಪಾದದಾಶೆಯಿಂದಿದೆ ಆತ್ಮ ಇ
ನ್ನೇಸು ದಿನ ಈ ಹೇಸಿಕೆಭವದಿ
ಘಾಸಿಪಡುವುದೈ ವಾಸುಕಿಶಯನ ಶ್ರೀನಿ
ವಾಸ ರಂಗ ಶೀಘ್ರದಿಂಮುಕ್ತಿಯ ಪಾಲಿಸೋ ೩

 

೪೨
ದ್ವಾದಶನಾಮ ಸ್ತುತಿ
ನಿನ್ನ ನೋಡಿ ಧನ್ಯನಾದೆನು ಶ್ರೀರಂಗನಾಥ ಪ
ನಿನ್ನ ನೋಡಿ ಧನ್ಯನಾದೆ ಪನ್ನಗಶಯನ ರಂಗ
ಮನ್ನಿಸಿ ರಕ್ಷಿಸು ಎನ್ನ ಮುನ್ನಜನ್ಮ ಬಾರದಂತೆ ಅ.ಪ.
ಆಚಾರ್ಯರಿಗೆ ಅಭಿವಂದಿಸಿ ಅಜನರಾಣಿಯನ್ನು ಭಜಿಸಿ
ಅರ್ಚ ಶೇಷಶಯನ ಲಕ್ಷ್ಮಿಗೆರಗಿ ಕೇಶವ ನಿಮ್ಮ ಸ್ತುತಿಸುವೆ ೧
ಆದಿಸೃಷ್ಟಿಯಲ್ಲಿ ಬ್ರಹ್ಮನ ನಾಭಿಕಮಲದಲ್ಲಿ ಸೃಷ್ಟಿಸಿ
ವೇದಸಾರವಾದ ಪ್ರಣವ ಓದಿ ಪೇಳಿದ ನಾರಾಯಣ ೨
[ಆರ್ತಿ]ಯಿಂದ ಅಜನು ನಿಮ್ಮ ಮೂರ್ತಿಗಾಗಿ ತಪವ ಮಾಡೆ
ಅರ್ತಿಯಿಂದ ಒಲಿದು ಬಂದ ಮಧುವೈರಿ ಮಾಧವಾ ೩
ಪ್ರಣವಾಕಾರ ವಿಮಾನದಲ್ಲಿ ನಾಲ್ಕು ವೇದಶೃಂಗವಿರಲು
[ವಿಷ್ಣು] ಪರವಾಸುದೇವರಿಂದ ಬಂದ ಶ್ರೀಗೋವಿಂದ ೪
ಸತ್ಯಲೋಕದಲ್ಲಿ ನಿಂತು ನಿತ್ಯಪೂಜೆಯನ್ನು ಗ್ರಹಿಸಿ
ಮತ್ತೆ ಇಕ್ಷ್ವಾಕುಗೊಲಿದ ವಿಶ್ವಮೂರುತಿ ವಿಷ್ಣುವೇ ೫
ಸರಯು ತಮಸ ತೀರಮಧ್ಯದಿ ಹರಿಯೆ ನಿಮ್ಮನಿರಿಸಿ ದೊರೆಯು
ಪರಮಪುರುಷನಿಂದ ಪೂಜೆ ಗ್ರಹಿಸಿದ ಮಧುಸೂದÀನ ೬
ರಾಜ್ಯಾಭಿಷೇಕ ಕಾಲದಲ್ಲಿ ರಾಮಚಂದ್ರರು ರಾಕ್ಷಸೇಂದ್ರಗೆ ಕೊಡಲು
[ರಾಜ್ಯವ] ಕಾವೇರಿ ಮಧ್ಯದಿನಿಂದು ತ್ರಿಜಗವಳೆದ ತ್ರಿವಿಕ್ರಮ ೭
ಫಾಲ್ಗುಣ ಮೀನ ಉತ್ತರ ಫಲ್ಗುನೀ ನಕ್ಷತ್ರದಲ್ಲಿ
ಬಾಲನಾಗಿ ಚಂದ್ರಪುಷ್ಕರಿಣಿ ತೀರದಿ ನಿಂದ ವಾಮನ ೮
ಧರ್ಮವರ್ಮದೊರೆಯು ತನ್ನ ಕನ್ನಿಕೆಯನು ಕೊಡಲು
ಜಾಮಾತನೆನಿಸಿ ಗ್ರಹಿಸಿ[ದ] ಶ್ರೀದೇವಿ ಸಹಿತ ಶ್ರೀಧರ ೯
ಮಳೆಯನಿಟ್ಟು ಧ್ವಜವಕಟ್ಟಿ ಸುರರ ಕರದು ಯಾಗವ ಮಾಡಿ
ಯಾತ್ರದಾನದ [ತಳೆದ] ಹೃದಯವಾಸ ಹೃಷಿಕೇಶವ ೧೦
ವೀರ ಮರುದಿನದಿ ಜಟಾಶೋಧಕರ ಮಂಟಪದಿ ನಿಂದು (?)
[ಧೀರ] ಮುದುಕಿಗೊಲಿದು ದಧ್ಯಾನ್ನವ ಉಂಡ ಶ್ರೀಪದ್ಮನಾಭ ೧೧
ನಾಲ್ಕು ದಿವಸದಲ್ಲಿ ನಾಗವೈರಿಯನ್ನು ಏರಿಬಂದು
ಕಲ್ಪವೃಕ್ಷವು ಸರ್ಪವಾಹನ ಏರಿದ ದಾಮೋದರ ೧೨
ಆರು ದಿವಸದಲ್ಲಿ ವರಿಯೂರಿಗೆ ಹೋಗಿ ನಿಮ್ಮ
ನಾರಿಯ ಸಂತೈಸಿ ಮಾಲೆಧರಿಸಿದ ಸಂಕರ್ಷಣ ೧೩
[ಮಾರನೆ] ದಿವಸದಲಿ ಚೂರ್ಣಾಭಿಷೇಕವನು ಧರಿಸಿ
ನಾರಿಮನೆಯಲಿ ನಿಂದು ವಾಸವಾದ ವಾಸುದೇವ ೧೪
ಎಲ್ಲೇಕೆರೆಗೆ ಪೋಗಿ ಭೂಮಿಯೆಲ್ಲ ನೋಡಿ ಹರುಷದಿಂದ
ಅ[ಲ್ಲೆ] ತೇಜಿಯನೇರಿ ತೇರಿನೆದುರೆ ಪೇರಿಬಿಟ್ಟ ಪ್ರದ್ಯುಮ್ನ ೧೫
ಪಂಗುನ್ಯತ್ತರವು ಬರಲು ಉಂಗುರವನು ಬೇಡಿತಂದು
ಅಂಗನೇಯ ಬಾಗಿಲೆದುರೆ ಪ್ರಸಿದ್ಧನಾದ ಅನಿರುದ್ಧ ೧೬
ಸಿಂಧುಶಯನ[ನ] ಬರವನೋಡಿ ಇಂದುಮುಖಿಯು ಕದವಮುಚ್ಚೆ
ತಿಂದ ಪಂಜಿನಪ್ರಹಾರ ಹರುಷದಿಂದ ಪುರುಷೋತ್ತಮ ೧೭
ಪತ್ನಿಯೊಡನೆ ಪ್ರೇಮಕಲಹ ಅರ್ತಿಯಿಂದ ಮಾಡುತಿರಲು ವಿಷ್ಣು
ಚಿತ್ತರ ವಾಕ್ಯದಿಂದ ಅರಸಿಗೇರಿದಾ ಅಧೋಕ್ಷಜಾ ೧೮
ಮಂದರೋದ್ಧರ ತನ್ನ ಇಂದಿರೆಸಹಿತವಾಗಿ
ಬಂದು ಗೋರಥವನೇರಿ ನಾಲ್ಕುಬೀದಿ ಮೆರೆದ ನಾರಸಿಂಹ ೧೯
ವಾರಿಜಾಕ್ಷ ರಥವನಿಳಿದು ಕಾವೇರಿಯಲ್ಲಿ ತೀರ್ಥವಿತ್ತು
ದರ್ಪಣದ ಗೃಹದಿ ನಿಂದ ಅರ್ತಿಯಿಂದ ಅಚ್ಚುತ ೨೦
ಸಪ್ತ ಆವರಣವೆಲ್ಲ ಶಬ್ದವಿಲ್ಲದೆ ಸುತ್ತಿ ಬಂದು
ಭಕ್ತ ಭಾಷ್ಯಕಾರರಿಗೊಲಿದ ದುಷ್ಟಮರ್ದನ ಜನಾರ್ಧನ ೨೧
ಪೃಥವಿಯೊಳಗಾಶ್ಚರ್ಯವಾದ ಪ್ರತಿಯಿಲ್ಲದ ಪಲ್ಲಕ್ಕಿಯೇರಿ
ಅತಿಶಯದಿಂದ ಬಂದ ಉರಗಶಯನ ಉಪೇಂದ್ರ ೨೨
ಅಂದು ಸುರರ ಛಂದದಿಂದ ಮಂದಿರಕ್ಕೆ ಕಳುಹಿ ರಂಗ
ಬಂದು ಭಕ್ತರ ಪಾಪ[ವ] ಪರಿಹರಿಸಿದಾ ಶ್ರೀಹರಿ ೨೩
ಅಷ್ಟು ಚರಿತ್ರೆಯನ್ನು ಕೇಳಿ ಕಟ್ಟಿದ ಕಂಕಣವ ಬಿಚ್ಚಿ
ಶ್ರೇಷ್ಠವಾದ ಸ್ಥಾನದಲ್ಲಿ ಮಂತ್ರಿ ಸಹಿತನಿಂದ ಶ್ರೀಕೃಷ್ಣ ೨೪
ದಕ್ಷಿಣಗಂಗೆಯಾಗಿ ನಿಂದು ಭಕ್ತನ ದ್ವೀಪವನ್ನು ನೋಡುತ
ಮುಕ್ತಿಮಾರ್ಗವನ್ನು ತೋರಿದ ಭಕ್ತವತ್ಸಲ ವೆಂಕಟರಂಗ ೨೫

 

ಶ್ರೀವೈಷ್ಣವ ಆಳ್ವಾರ ಸಂತರ ಪರಂಪರೆಯಲ್ಲಿ
ಆಳ್ವಾರ್-ಆಚಾರ್ಯ ಸ್ತುತಿಗಳು

ನೀರಾಟವ ನೋಡಿದೆ ನೀರಜಾಕ್ಷನ ರಾಣಿ ಗೋದಾದೇವಿಯ ಪ
ಶ್ರೀವಿಲ್ಲಿಪುತ್ತೂರ ಶ್ರೀತುಳಸಿವನದಲ್ಲಿ
ಶ್ರೀವಿಷ್ಣುಚಿತ್ತರಾ ಪುತ್ರಿಯೆಂದೆನಿಸಿ ಸುಪುತ್ರಿಯೆಂದೆನಿಸಿ ಶ್ರೀ
ದೇವಿ ತಾನುದಿಸೆ ಬೇಗ
ತೀವ್ರ ಹರುಷದಿಂ ಬೆಳೆಯುತ್ತಲಿದ್ದಾಳಲು ೧
ಪುತ್ರಿಗೆ ತಕ್ಕಂಥ ವರವಿಲ್ಲವೆನುತಾಲೆ
ಚಿತ್ತದೊಳಗೆ ಯೋಚಿಸಿದ ಆಳ್ವಾರರು ಪೆರಿಯಾಳ್ವರರು
ಭಕ್ತವತ್ಸಲನಾ ವರಿಸಬೇಕೆನುತಾನೆ
ಅರ್ಥಿಯಿಂದಲೆ ನೀರಾಟವನೆನೆದಾಳು ೨
ವೇಷದಿ ಗೋಕುಲದೊಳಗಿದ್ದ
ಶ್ರೀಶವಾಸನೆಗಳ ಭಾವಿಸೀ | ಗೊಲ್ಲ ವಾಸನೆಗಳ ಭಾವಿಸೀ
ವಾಸುದೇವನಾ ವರಿಸಬೇಕೆನುತಾಲೆ ಉ
ಲ್ಲಾಸದಿಂದಲೆ ಹೆಂಗಳ ಕೂಡೆ ಪೊರಟಾಳು ೩
ಮುತ್ತು ಮಾಣಿಕದಾಭರಣವನಿಟ್ಟು
ಸುತ್ತೆಣೆ ಗಂಟನ್ಹಾಕಿ ದೇವಿ ಸುತ್ತೆಣೆ ಗಂಟನ್ಹಾಕಿ
ಉತ್ತಮನಾಗಿದ್ದ ಪುಷ್ಪಗಳನೆ ಮುಡಿದು
ಚಿತ್ತದೊಳೊಲ್ಲಭನಪ್ಪಣೆಗೊಂಡು ಪೊರಟಾಳು ೪
ಮಾರ್ಗಶಿರ ಮಾಸದಿ ಪೊತ್ತೊಂದು ದಿವಸಾದಿ
ಬೇಗ ತಾ ಪೊರಟೂ ಮಹಾಲಕ್ಷಿ ತಾ ಪೊರಟ
ಳಾಗ ಬೀದಿಯನು ಸುತ್ತಿ ಮಂಟಪದಲಿ ನಿಂದು
ಮಂಗಳಾರತಿಯನೆತ್ತೀ ಮಾರು ವಸ್ತ್ರವ ತೆಗದಾರು ೫
ದಂತಧಾವನ ಮಾಡಿ ಕಂತುಪಿತನರಸೀಗೆ
ಅಂತರಂಗದ ಭಕ್ತರು ಬೇಗ ಅಂತರಂಗದ ಭಕ್ತರು
ಸಂತೋಷದಿಂದಲೆ ಮುಖವನ್ನು ತೊಳೆದು ಶ್ರೀ
ಕಾಂತಗೆ ವಸ್ತ್ರದಿಂ ಮುಖವನೊರೆಸಿದಾರು ೬
ಭಾಪು ಛತ್ರಿಚಾಮರ ಸೂರೆಪಾನವಾ ಜನ ಬೀಸಿ
ಗೋಪಿ ಮುಕ್ತಿದಾಯಕಿಗಾಗ ಮುಕ್ತಿದಾಯಕಿಗಾಗ
ದರ್ಪಣವನು ತೋರಿ ಕಂದರ್ಪನ ಮಾತೆಗೆ
ಧೂಪ ದೀಪ ಕರ್ಪೂರದಾರತಿಯೆತ್ತಿದರು ೭
ಬೇಗಾದಿಲಕ್ಷಿಗೆ ಆಭರಣ ಸಡುಲಿಸಿ
ಆಗ ಮುಡಿಯ ಬಿಚ್ಚಿ ದೇವೀಗೆ ಆಗ ಮುಡಿಯ ಬಿಚ್ಚೀ
ಬೇಗಾದಿಂ ಕಂಮೆಣ್ಣೆ ಕಸ್ತೂರಿತೈಲ
ಮೈಗೆ ತಾಳಮೇಳದ ಗತಿಯಿಂದಲೊತ್ತಿದ್ದರೂ ೮
ಶ್ವೇತವರ್ಣದ ದಿವ್ಯ ನಾಗವಲ್ಲಿಗಳಿಂದ
ಖ್ಯಾತಿ ಪಡೆದಿರುವಾ ಕ್ರಮುಕಾ ಬೇಗ ಖ್ಯಾತಿ ಪಡೆದಿರುವಕ್ರಮುಕಾ
ನೂತನವಾದ ಕರ್ಪೂರವರ್ಣಗಳಿಂದ ಜಗ
ನ್ಮಾತೆಗೆ ತಾಂಬೂಲವ ನೀಡಿದರೂ ೯
ಚಿಣ್ಣವಾರಾಂಗನೆಯರೆಲ್ಲ ರಾಗದಿ ಪಾಡೆ
ಸಣ್ಣವಾದ್ಯದೊಳಗೆ ನುಡಿಸೇ ಬೇಗ ವಾದ್ಯದೊಳಗೆ ನುಡಿಸÉೀ
ಹಣೆಯೊಳಗೆ ಬಾಚಿ ಮಣಿಗಂಟನಿಕ್ಕಿ ಉಳಿದ
ಎಣ್ಣೆ ಭಕ್ತರಿಗೆಲ್ಲ ಯಿತ್ತಾರು ೧೦
ಮಿಂದು ಮಡಿಯನುಟ್ಟು ಚಂದದಿಂದಲೆ ದೇವಿ
ತಂದ ನೈವೇದ್ಯವುಂಡೂ ಬೇಗ ನೈವೇದ್ಯವುಂಡು
ಬಂದ ಭಕ್ತರಿಗೆಲ್ಲ ತೀರ್ಥಪ್ರಸಾದವಿತ್ತು
ಮಂದಗಮನೆ ತನ್ನ ಮಂದಿರಕೆ ನಡೆದಾಳು ೧೧
ಬೈತಲೆಗೆ ರಾಗಟೆ ಹೆರಳಿಗೆ ಭಂಗಾರಗೊಂಡೆಯವ
ನಿತ್ತು ಪಾನುಪಟ್ಟಿಯು ಮುತ್ತಿನಬಟ್ಟೆ ಕಟ್ಟಿ ಬೇಗ ಮುತ್ತಿನಬಟ್ಟೆ ಕಟ್ಟಿ
ಕತ್ತುರಿ ಬಾವುಲಿ ಕಮಲಸರಗಳೂ
ಮುತ್ತಿನ ಮೂಗುತಿ ಮುಕುರಾವನಿಟ್ಟಳೂ ೧೨
ಹಾರಪದಕ ಹಸ್ತಕಡಗ ಹರಡಿ ವಂಕಿ
ಶೀರೆಕುಪ್ಪಸ ತೊಟ್ಟೂ ಬೇಗ ಶೀರೆಕುಪ್ಪಸ ತೊಟ್ಟು
ತೋರ ಕುಂದಣದೊಡ್ಯಾಣ ಅಂದುಗೆ ಗೆಜ್ಜೆಯ
ಇಂದೀರಾದೇವಿ ತಾನಿಟ್ಟು ಬಂದಳು ಆಗಾ ೧೩
ಭಾಷ್ಯಕಾರರು ಮೊದಲಾದ ಭಕ್ತರುಯೆಲ್ಲ
ಲಕ್ಷ್ಮಿದೇವಿಗೆ ಆಗ ಭಾಗ್ಯಲಕ್ಷ್ಮಿಗೆ ಆಗಾ ಭಾರಿ
ಯಾ ಶೀರೆ ಕುಪ್ಪುಸವನಿತ್ತು
ಪುಷ್ಪ ಮರ್ಯಾದೆಗಳ ಮಾಡೀ ಕರೆತಂದರು ಬೇಗಾ ೧೪
ಮಂದಗಮನೆ ಅಂದು ಗೋವಿಂದನ ಎದುರಲ್ಲಿ ಆ
ನಂದದಿಂದಲೆ ಕುಳಿತೂ ಬೇಗ ಆನಂದದಿಂದಲೆ ಕುಳಿತು
ಚಂದದಿಂ ಮಲ್ಲಿಗೆಮಾಲೆಯ ಕಳುಹಲು
ಮಂದರೋದ್ದರ ತನ್ನಾ ಮಡಿದೀಗೆ ಕಳುಹಿದ ೧೫
ಕೂಡಾರವಲ್ಲಿಯೆಂತೆಂಬೊ ದಿವಸದಲ್ಲಿ
ಕೂಡಿ ಮನ್ನಾರುರಂಗನಾ ಬೇಗ ಮನ್ನಾರುರಂಗನಾ
ಮಾಡಿದರು ಮೃದುಳ ಕ್ಷೀರಾನ್ನ ಭೋಜನಂಗಳ
ಮಾಡಿದರು ಭೋಗಿಯ ದಿನದಿ ಕಲ್ಯಾಣವ ೧೬
ಮಕರ ಸಂಕ್ರಾಂತೀಲಿ ಮಂದರೋದ್ದಾರ ಸಹಿತ
ಚೊಕ್ಕ ಪಲ್ಲಕ್ಕಿಯೇರಿ ಬೇಗ ಚೊಕ್ಕ ಪಲ್ಲಕ್ಕಿಯೇರಿ
ಪಕ್ಕ ಮೆರವಣಿಗೆಯಲಿ ಬಂದು ಹರುಷದಿಂದ
ವೆಂಕಟಕೃಷ್ಣನ ಎಡದಲ್ಲಿ ಕುಳಿತಾಳು ೧೭

 

೪೭
ಜ್ಯೇಷ್ಠಾಭಿಷೇಕ ಗೀತೆ
ನೋಡಿದೆ ಜ್ಯೇಷ್ಠಾಭಿಷೇಕದುತ್ಸವವ ಸೃಷ್ಟಿಯೊಳಾಶ್ಚರ್ಯವಾ ಪ.
[ಒಪ್ಪುವ] ಮಿಥುನಮಾಸದ ಶುಕ್ಲಪಕ್ಷ ಚತುರ್ದಶಿಯಲ್ಲಿ
ವಿಪ್ರರು ಕೂಡಿ ಸಹ್ಯೋದ್ಭವೆಯನ್ನು ತರುವೆವೆಂದೆನುತಲೆ
ವಿಪ್ರರು ಪೋದ ವಿಚಿತ್ರ[ವ] ನೋಡಿದೆ ೧
ಅಂದು ಗಜೇಂದ್ರನ ತಂದು ಸಿಂಗಾರ ಮಾಡಿ
ಕುಂದಣದ ಕೊಡವ ಕುಂಭಸ್ಥಳದೊಳಿಟ್ಟು
ಕುಂದಣದ ಛತ್ರಿ ಚಾಮರ ಬೀಸುತ್ತ ವಿಪ್ರರು ಬರುವುದ ೨
ವೇದಘೋಷಗಳಿಂದ ವಿಪ್ರರು ಕೊಡಗಳ ವಿ
ನೋದದಿಂದಲೆ ಪೊತ್ತು ತಾ[ಳ] ತಮ್ಮಟೆ ಭೇರಿ ನಾನಾ
ವಾದ್ಯಂಗಳ ಮುಂದೆ ರಜತದಕೊಡ ಬರುವ ವೈಭೋಗವ ೩
ಕುಶಲದಿಂದಲೆ ಕರಿ ಕೊಡವನ್ನು ಇಳಿಸಲು
ಅಸಮಾನ [೨ನಿ೨]ರಿಗಳ ಬಿಚ್ಚಿ ಹೊಸಬಟ್ಟೆಗಳ ಹಾಸಿ
ಕುಶಲದಿಂದಲೆ ಹೊಲೆದು ಪೊಸದಾಗಿ ಕಟ್ಟುವತಿಶಯ[ವ] ೪
ಗರ್ಭಗೃಹವು ಗಾಯಿತ್ರಿ ಮಂಟಪವನ್ನು
ಶುಭ್ರವಾಗಿಯೆ ತೊಳೆದು ಘಮಘಮಿಸುವ ದಿವ್ಯ ಪರಿಮಳ
ವು ಬರುವಂಥ ಗಂಧವ ತಳಿದರು ಅಂದು ಆಲಯಕ್ಕೆಲ್ಲ ೫
ಭಕ್ತರಿಗೆ ತೊಟ್ಟಕವಚವ ಕಳೆದು ಅಭಯ ಹಸ್ತ ಪಾದವ
ನಿತ್ತು ಕಸ್ತೂರಿ ಕಮ್ಮೆಣ್ಣೆ ಒತ್ತಿ ಸಂಭ್ರಮದಿಂದ
ಮಿತ್ರಸಹಿತ ನಿಂದ ಭಕ್ತವತ್ಸಲ ರಂಗ ೬
ಛಂದದಿ ಇಕ್ಷುರಸವು ಚೂತ ಕದಲಿ ರಸಂಗಳು
ಮಧು ದಧಿ ತಿಂತ್ರಿಣಿ ನಿಂಬೆರಸ ಕ್ಷೀರ ಘೃತಗಳಿಂದ ಆ
ನಂದದಿ ಯೆರೆದರು ಇಂದಿರೆರಮಣಗೆ ೭
ಕಸ್ತೂರಿ ಕರ್ಪೂರ ಕೇಸರಿ ಪುನಗಿನ ತೈಲವನೆ ತೆಗೆದು
ವಾಸುಕಿಶಯನಗೆ ಲೇಪವನು ಮಾಡಿ ಸ
ಹಸ್ರಕೊಡದ ಅಭಿಷೇಕವ ಮಾಡಿದರು ೮
ಪಟ್ಟುಪೀತಾಂಬರವನುಟ್ಟು ಶ್ರೀರಂಗನು ಕಳೆದ ಕವಚ
ತೊಟ್ಟು ಹತ್ತುಸಾವಿರಸೇರಿನ ಅಕ್ಕಿ ಅನ್ನವ
ನಿಟ್ಟು ವಿಪ್ರರು ಸುರಿದರು ವಿಸ್ತಾರವಾಗಿಯೆ೯
ಛಂದದಿಂದಲೆ ದಧಿ ಚೂತ ಕದಳಿ ಫಲದಿಂದ ನೈ
ವೇದ್ಯ ಮಾಡಿ ಆನಂದದಿಂದುಂಡೆಯು ಮಾಡಿ ಭಕ್ತ
[ವೃಂದಕ್ಕೆ] ಕರೆಕರೆದು ಕೊಡುವ ಪರಿಯ ನಾ ೧೦
ರಂಗನಾಯಕಿ ಪಟ್ಟದರಸಿ [ವೆರಸಿ]ನರಹರಿ ಚಕ್ರಮೂರುತಿಗೆ
ಆಗ ಕಲ್ಪೋಕ್ತದಿಂದಭಿಷೇಕವ ಮಾಡೆ ಕರ್ಪೂರ ತೈಲವ [ಲೇ
ಸಾಗಿ]ಹಚ್ಚಿ ಮಲಗಿದ ವೆಂಕಟರಂಗ[ನ] ೧೧

 

೩೨
ಪಾರ್ವಟೆ ಉತ್ಸವಗೀತೆ
ನೋಡಿದೆ ನೋಡಿದೆ ಪಾರ್ವಟೆ ಉತ್ಸವವ
ರೂಢಿಗೊಡೆಯ ರಂಗನ ಪರಮಸಂಭ್ರಮವ ಪ.
ಮುದದಿ ವಿಜಯದಶಮಿಯಲಿ ಭುಜಗಶಯನ ರಂಗ
ವಿಧವಿಧವಾದ ಆಭರಣ ವಸ್ತ್ರಗ[ಳಿಂದ]
ಮದನನಯ್ಯನು ತಾನು ಶೃಂಗಾರವಾಗಿ
ಒದಗಿ ಪಲ್ಲಕ್ಕಿ ಏರಿ ಬರುವ ವೈಭೋಗವ ೧
ಮುತ್ತಿನಕಿರೀಟ ಮುಗುಳುನಗೆಯ ನೋಟ
ರತ್ನದ ಪದಕಗಳ ಹತ್ತುಅಳವಟ್ಟು ಬಟ್ಟಲಲಿ
ಭಕ್ತರು ಬಿಟ್ಟ ಉಭಯವನ್ನೆಲ್ಲ ಗ್ರಹಿ
ಸುತ್ತ ನರಸಿಂಹನಪುರದ ಮಂಟಪದಲ್ಲಿ ೨
ಅಂಬುಮಾಲೆ ಆನೆಮೇಲೆ ನೇಮದಿಂದಲೆ ತಂದು
ನೀಲವರ್ಣಗೆ ಕೊಡಲು ಪೂಜೆಯನು ಮಾಡಿ
ನಾಲ್ಕುದಿಕ್ಕಿಗೆ ಅಂಬು ನಾಗಶಯನ ಬಹರಿನೇರಿ
ಲೀಲೆಯಿಂದ ಬರುವ ಪರಮವೈಭೋಗವ ೩
ಶರಧಿಯಂತೆ ಪುರುಷೆ ಭೋರ್ಗರೆಯುತ ಬರುತಿರೆ
ಮುರುಜ ಮೃದಂಗ ಭೇರಿವಾದ್ಯ ಘೋಷಗಳು
ಗರುಡಮಂಟಪದಲ್ಲಿ ಗಜ ಸಿಂಹ ವೃಷಭ
ಶಾರ್ದೂಲನಡೆಯಿಂದ ಬಂದ ವಸುದೇವಪುತ್ರನ ೪
ಬಂದು ಅಶ್ವವನಿಳಿದು ಅರ್ಥಿಯಿಂದಲೆ
ನಿಂದು ಗಾಯಿತ್ರಿಮಂಟಪದಲ್ಲಿ ಮಿತ್ರರು ಸಹಿತ
ಮಿಂದು ಮಡಿಯನಟ್ಟು ಇಂದಿರೆ ಸಹಿತಲೆ
ನಿಂದ ವೆಂಕಟರಂಗ ಮಂದಿರದೊಳಗೆ ೫

 

೪೧
ನೋಡುವಾ ಬನ್ನಿರೆ ರಂಗಯ್ಯನ ನೋಡುವಾ ಬನ್ನಿರೇ ಪ.
ರೂಢಿಗೊಡೆಯ ಹರಿಯಕೂಡಿ ಇಷ್ಟಾರ್ಥವ
ಬೇಡಿಕೊಳ್ಳುವ ನಾವು ಅ.ಪ.
ಕುಂಭಮಾಸದಲಿ ಭಕ್ತರು ಬಿಟ್ಟಾನಂದಮಂಟಪದಿನಿಂದು ಪೂಜೆ
ಗೊಂ[ಬ] ಹರುಷದಿ ಮಂದಹಾಸದಿ ಬಂದ ಶ್ರೀರಂಗನ ೧
ಹಂಸ ಯಾಳಿ ಸಿಂಹ ಆನೆಯು ಮೊದಲಾದ ಗರುಡ ಹನುಮ ಕಲ್ಪ
ವೃಕ್ಷವು ಸರ್ಪವಾಹನವೇರಿ ಅರ್ಥಿಯಿಂದಲೆ ಬರುವ ಶ್ರೀರಂಗನ ೨
ಶುದ್ಧದಶಮಿಯಲಿ ರಂಗಯ್ಯ ಮುದ್ದು ಸತಿಯರ ಒಡಗೊಂಡು ಅ
ಲ್ಲಿದ್ದ ಮಂಟಪದಲಿ ಹರುಷದೀ ತಾನಿ[ದ್ದ] ಶ್ರೀರಂಗನ ೩
ತೆಪ್ಪಮಂಟಪವ ಭಕ್ತರೆಲ್ಲ ವಿಸ್ತಾರದಲಿ ಕಟ್ಟಿ ಪತ್ನಿಸಹಿತಲೆ
ತೆಪ್ಪವ ಹತ್ತಿ ಸುತ್ತಿಸುತ್ತಿ ಮೂರುಬಾರಿ ಬರುವ [ಶ್ರೀರಂಗನ] ೪
ಮಧ್ಯಮಂಟಪದಿ ತಾನಿದ್ದು ಭಕ್ತರಿತ್ತ [ಸವಿಯಾದ] ಕ್ಷೀರವು
ಉದ್ದಿನವಡೆ ಹುಗ್ಗಿ ಮೆದ್ದು ಬರುವ ಶ್ರೀಮುದ್ದುರಂಗನ ೫
ಪುಷ್ಪಬಾಣಂಗಳು ಸುತ್ತಿಬಿಡುವ ಚಕ್ರಬಾಣಂಗಳು ನಕ್ಷತ್ರಬಾಣಂಗಳ
ಲಕ್ಷ್ಮಿಯೆದುರಲರ್ತಿಯಿಂದಲೆ ನೋಡಿ ನಿಂದ ಶ್ರೀರಂಗನ ೬
ಏಕಾದಶಿಯಲಿ ಚಂದ್ರಪ್ರಭೆಯನೇರಿ ಸಹಸ್ರ[ಕಂ]ಗಳಿಂದ ಭಕ್ತರಿಗೆ
ತಾ ಕರುಣದಿಂದಲೆ ತೀರ್ಥಸ್ನಾನವನಿತ್ತು ಬರುವ ವೆಂಕಟರಂಗನ ೭

 

೩೦
ಪವಿತ್ರೋತ್ಸವ ಗೀತೆ
ಪವಿತ್ರ ಉತ್ಸವವನ್ನು ನೋಡುವ ಬನ್ನಿ ಭಕ್ತರೆಲ್ಲಾ ಪ
ವರಶುಕ್ಲಪಕ್ಷದ ಏಕಾದಶಿಯಲಿ ಅನೇಕಾ
ಭರಣವ ಬಿಟ್ಟು ರಂಗ ವೈದೀಕನಂತೆ
ಪೊರಟು ವೈಜಯಂತಿ ಜನಿವಾರ ಕೌಸ್ತುಭಮಣಿಯು
ಕೊರಳೊಳು ಹೊಳೆಯೆ ಓಲ್ಯಾಡುತಲೆ
ಅರಳಿದಪುಷ್ಪದ ಮೇಲೆ ಯಾಗಶಾಲೆಗೆ ಬಂದರಂಗನ ೧
ವೇದಘೋಷಗಳನ್ನು ವಿಪ್ರರು ಮೋದದಿಂ ಮಾಡುತಿರಲು
ವೇದಮೂರುತಿ ರಂಗನಾಥಗೆ ಆ
ರಾಧನೆ ಮಾಡಿ ಮುನ್ನೂರುಅರವತ್ತು ಪೂಜೆಯನು ಮಾಡಿ
ಮುದ್ದುರಂಗನಿಗೆ ಮಜ್ಜನವ ಮಾಡಿ
ನಿಂದು ಹರುಷದಿ ಯಾಗಪೂರ್ತಿಯ ಮಾಡಿದ ರಂಗನ ೨
ತಂದ ತಂಡುಲವರವಿಯೆ ಮಧ್ಯದಿ ಭಾಂಡಗಳ
ತಂದಿರಿಸಿ ತಂಬಿ ಪವಿತ್ರವನು ಕಲ್ಪೋಕ್ತದಿಂದ ಪ್ರತಿಷ್ಠೆ ಮಾಡಿ
ಒಂದು ಪವಿತ್ರವನು ಪ್ರದಕ್ಷಿಣೆಯಿಂದ
ತಂದು ಧರಿಸಿ ಚಂದದಿಂ ವೈಯ್ಯಾರ ನಡೆ
ಯಿಂದ ಮಂದಿರಕೆ ನಡೆತಂದ ರಂಗನ ೩
ದ್ವಾದಶಿ ದಿವಸದಲಿ ಶ್ರೀರಂಗನ ಪೊಗಳೆ
ವೇದಪಾಠಕರು ಅನಾದಿಮೂರುತಿ ರಂಗನಾಥಗೆ ಆ
ರಾಧನೆ ಮಾಡಿ ಮುನ್ನೂರು ಅರವತ್ತು ಮಂಗಳಾರತಿ ಮು
ಕ್ತಿದಾಯಕಗೆತ್ತಿ ಪೂಜೆಗೊಂಡು ಪವಿತ್ರವನು ಧರಿಸಿ ವಿ
ನೋದ ಸೇವೆಯ ತೋರಿದ ರಂಗನ ೪
ಸಂಧ್ಯಾರಾಗದಿ ಇಂದಿರಾಪತಿ ಬಂದು ಮಂಟಪದಲಿ
ಚಂದದಿಂದಲೆ ಪೂಜೆ ನೈವೇದ್ಯವ ಆ
ನಂದದಿಂದ ಗ್ರಹಿಸಿ ದಿಂಧಿಮಿತೆಂಬ ವಾದ್ಯದಿ ಗೋ
ವಿಂದ ತಾನೆ ಪೊರಟು ಚಂದದಿಂದ ಶಾರ್ದೂಲನಡೆ
ಯಿಂದ ಮಂದಹಾಸದಿ ಬಂದ ರಂಗನ ೫
ಸಪ್ತದಿವಸದಿ ಪವಿತ್ರದಾಭರಣವಿಟ್ಟು
ಭಕ್ತವತ್ಸಲ ಕರ್ಪೂರದ ಚೂರ್ಣಾಭಿಷೇಕವ
ಅರ್ಥಿಯಿಂದ ಗ್ರಹಿಸಿ ಪತ್ನಿಯರು ಸಹಜವಾಗಿ
ಭತ್ತದಕೊಟ್ಟಿಗೆ ಎದುರೆ ಭತ್ತವಳಿಸಿಯೆ ನಿಂತ
ಭಕ್ತವತ್ಸಲ ಮಿತ್ರರಎದುರಲಿ ನಿಂದ ರಂಗನ ೬
ಒಂಭತ್ತು ದಿನದಲಿ ಅಂಬುಜನಾಭ ಆನಂದ
ದಾಭರಣವಿಟ್ಟು ಕುಂದಣದ ಕೋಳಿಕೆಯನೇರಿ
[ತುಂಬು ಚೆಲ್ವನಾ] ಚಂದ್ರಪುಷ್ಕರಿಣಿಯಲಿ
ಶುಭ್ರತೀರ್ಥವ ಆನಂದದಿಂದಲಿತ್ತು ಬಂದು
ಅವಭೃತ ಮಾಡಿಯೆನಿಂದ ಶ್ರೀನಿವಾಸರಂಗನ ೭
ಉತ್ಸವದ ಮರುದಿನದಿ ಶ್ರೀರಂಗನು ತನ್ನ ಏಕಾಂತ
ಭಕ್ತರಿಗೆ ಇತ್ತು ಪವಿತ್ರದಾಭರಣ ತೀರ್ಥಪ್ರಸಾದವನ್ನು
ಮುಕ್ತಿದಾಯಕ ಮುನಿಗಳ ಮುಂದೆ ಚಂದ್ರನಂತೆ ಬ
ರುತ್ತಿರಲು ಸುತ್ತ ತಾರಕೆಯಂತೆ ವೈಷ್ಣವರು
ಒತ್ತಿ ಬರುವ ಅಂದಚಂದದ ೮

 


ಪಾಂಡವಪಕ್ಷ ಪಾರ್ಥಸಾರಥಿಗೆ
ಆಂಡಾಳ್ ಮಾಲೆಯ ಧರಿಸಿದಳು ಪ
ಸೃಷ್ಟಿಜಾತೆಯು ಶೃಂಗಾರವಾಗಿ ಬಂದು
ಕೃಷ್ಣಮೂರುತಿಯೆದುರಲ್ಲಿ ನಿಂದು
ಅಷ್ಟವಿಧದ ಪುಷ್ಟಮಾಲೆಗಳನ್ನು ತೆಗೆದು
ತಟ್ಟೆಯೊಳಗೆ ಇಟ್ಟು ಕಳುಹಿದಳು ೧
ಆದಿಮೂರುತಿ ಮಂಟಪದಲ್ಲಿ ಕುಳಿತಿರೆ
ಶ್ರೀದೇವಿ ಭೂದೇವಿ ಸಹಿತವಾಗಿ
ವೇದಮೂರುತಿಯನು ನೋಡಿ ಸಂತೋಷದಿ
ಗೋದಾದೇವಿಯು ಮಾಲೆ ಧರಿಸಿದಳು ೨
ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ
ಇರುವಂತಿಗೆ ಪಚ್ಚೆ ಮುಡಿದಾಳ
ಪರಿಪರಿ ಪುಪ್ಪದ ಸರಗಳ ಪಿಡಿದು
ಧರಣಿದೇವಿಗೆ ಸ್ವಾಮಿ ಧರಿಸಿದಳು ೩
ತಾಳೆ ಚಂಪಕ ವಕುಳಮಾಲೆ ಮಂದಾರಪುಷ್ಪ
ಮೇಲಾದ ಕಮಲ ಸುಗಂಧರಾಜ
ನೀಲವರ್ಣನ ಮುಖ ನೋಡಿ ಸಂತೋಷದಿ
ನೀಳಾದೇವಿಯು ಮಾಲೆ ಧರಿಸಿದಳು ೪
ಕಮಲವ ಕರದಲ್ಲಿ ಪಿಡಿದಿಹ ಕಾಂತೆಗೆ
ಕಮಲವದನೆಯೆಂದೆನಿಸಿದವಳಿಗೆ
ಕಮಲಾಕ್ಷಿಗೆ ಶ್ರೀವೆಂಕಟಕೃಷ್ಣನು
ಕಮಲನಾಭನು ಮಾಲೆ ಧರಿಸಿದನು ೫

 

ಶ್ರಿನಿವಾಸರ ಮಹಾತ್ಮೆಯನ್ನು ಕುರಿತು ಹಾಡಿರುವ

ಪಾದವನು ನಂಬಿದೆನೊ ಪರಮಪುರುಷಾ
ಪಾವನನ ಮಾಡೆನ್ನ ಶ್ರೀರಂಗನಾಥ ಪ
ಚಿಲುವ ವಾಮನನಾಗಿ ಬಲಿಯ ಬೇಡಿದ ಪಾದ
ಧರಣಿಯೀರಡಿಯಿಂದಲಳದ ಪಾದ ಬಲಿಯ
ಪಾತಾಳದೊಳಗಿಟ್ಟು ಕಾಯ್ದ ಪಾದ
ಸುಲಭದಲಿ ಇಂದ್ರನಿಗೆ ಪದವಿಯನಿತ್ತ ಪಾದ ೧
ಅಂಡವನು ಭೇದಿಸಿ ಗಂಗೆ ಪಡೆದ ಪಾದ
ಬ್ರಹ್ಮದೇವರು ತೊಳೆದು ಪೂಜಿಸಿದ ಪಾದ
ಇಂದ್ರಾದಿಸುರರೆಲ್ಲ ವಂದಿಸಿದ ಪಾದ
ಇಂದಿರಾ ಹೃದಯಾಕ್ಕಾನಂದ ತೋರಿದ ಪಾದ ೨
ದುರುಳತನವನು ಮಾಡೆ ಯಶೋದೆ ಕಟ್ಟಿದ ಪಾದ
ಅಸುರ ಶಕಟನ ತುಳಿದ ದಿವ್ಯ ಪಾದ
ಒರಳನೆಳೆದು ಮತ್ತಿಮರನ ಒಡೆದ ಶ್ರೀಪಾದ
ಯಮಳರಿಗೆ ಮುಕ್ತಿಯನು ಇತ್ತ ಪಾದ ೩
ಕಾಳಿಮಡುವನು ಕಲಕಿ ಫಣಿಯ ತುಳಿದ ಪಾದ
ಅಂದುಗೆ ಗೆಜ್ಜೆಯಳವಟ್ಟ ಪಾದ
ನಾಗಕನ್ನಿಕೆಯರಿಗೆ ಮಾಂಗಲ್ಯವಿತ್ತ ಪಾದ
ನಾರದಾದಿವಂದ್ಯ ಶ್ರೀಹರಿ ನಿಮ್ಮ ಪಾದ ೪
ದುರುಳ ಕಂಸಾಸುರನ ಎದೆಯ ತುಳಿದ ಪಾದ
ಮುಚುಕುಂದಗೆ ಮುಕ್ತಿಯನಿತ್ತ ಪಾದ
ಭರದಿ ಗೋಮಂತವನುಯೇರಿದ ಶ್ರೀಪಾದ
ಕಿಚ್ಚು ಬಳಸಲು ಪರ್ವತವನೆತ್ತಿದ ಪಾದ೫
ಶಿಲೆಯಾದ ಆಹಲ್ಯೆಯನು ಕಾಯ್ದ ಪಾದ
ಭರದಿಂದ ಮಿಥಿಲೆಗೆ ನಡೆದ ಪಾದ
ಹರನ ಧನುವನು ಮುರಿದು ಜಾನಕಿಯ ತಂದ ಪಾದ
ಪರಮಪಾವನ ಸೀತಾಪತಿ ನಿಮ್ಮ ಪಾದ ೬
ಮಾತೆ ನುಡಿಯನು ಕೇಳಿ ವನಕೆ ನಡೆದ ಪಾದ
ಭರತನಿಗೆ ಒಲಿದು ಪಾದುಕೆಯಿತ್ತ ಪಾದ
ಸೇತುಬಂಧನ ಮಾಡಿ ಸೀತೆಯನು ತಂದ ಪಾದ
ಭಕ್ತ ವಿಭೀಷಣಗೆ ಅಭಯವನಿತ್ತ ಪಾದ ೭
ಸೀತಾಪ್ರತಿಜ್ಞೆಯನು ಮಾಡಿಸಿದ ಶ್ರೀಪಾದ
ನಂದಿಗ್ರಾಮದಲಿ ಭರತನನು ಕಾಯ್ದ ಪಾದ
ಅನುಜರೊಡೆಗೊಂಡು ಅಯೋಧ್ಯೆಗೈದಿದ ಪಾದ
ಸೀತೆ ಸಹಿತಲೆ ಪೀಠದಲಿವೊಪ್ಪಿದ ಪಾದ ೮
ರಾಜಸೂಯಾಗದಲಿ ಪೂಜೆಗೊಂಡ ಪಾದ
ಶಿಶುಪಾಲಗೆ ಮುಕ್ತಿಯನಿತ್ತ ಪಾದ
ದಂತವಕ್ರಾದಿಗಳನು ಸೆಳೆದುಕೊಂಡ ಪಾದ
ಅಖಿಲವೇದಗಳೆಲ್ಲ ಅರಸಿ ಬಂದ ಪಾದ ೯
ಕುರುಪಾಂಡವರಿಗೆ ಸಂಧಿಗೈತಂದ ಪಾದ
ವಿದುರನಾ ಮನೆಯಲ್ಲಿ ಭೋಜನಗೈದ ಪಾದ
ಭರದಿ ಧೃತರಾಷ್ಟ್ರನರಮನೆಗೆ ನಡೆತಂದ ಪಾದ
ದುರುಳ ದುರ್ಯೋಧನನ ಉರುಳಿಸಿದ ಶ್ರೀಪಾದ ೧೦
ರಣದೊಳಗೆ ಅರ್ಜುನಗೆ ಸಾರಥಿಯಾದ ಪಾದ
ದೊರೆ ಧರ್ಮಾದಿಗಳ [ನು] ಒಲಿದ ಪಾದ
ಸರ್ಪಬಾಣವು ಬರಲು ಧರಣಿವೂತ್ತಿದ ಪಾದ
ಕರುಣದಿಂದರ್ಜುನನ ಶಿರವ ಕಾಯ್ದ ಪಾದ ೧೧
ಬ್ರಹ್ಮದೇವರ ತಪಸಿಗೊಲೆದು ಬಂದ ಪಾದ
ಇಕ್ಷ್ವಾಕು ಶ್ರೀರಾಮರಾರಾಧಿಸಿದ ಪಾದ
ಧರ್ಮವರ್ಮಾದಿ ಚೋಳೇಂದ್ರ ಪೂಜಿತ ಪಾದ
ಉಭಯ ಕಾವೇರಿ ನಿಲಯ ಶ್ರೀರಂಗ ನಿಮ್ಮ ಪಾದ ೧೨
ತೊಂಡಮಾನ್ ಚಕ್ರವರ್ತಿಗೊಲಿದು ಬಂದ ಪಾದ
ಶೇಷಾದ್ರಿಗಿರಿಯಲ್ಲಿ ನೆಲೆಸಿರ್ಪ ಪಾದ
ಆದಿವರಹಾರೊಡನೆ ಸ್ಥಳವ ಬೇಡಿದ ಪಾದ
ಸ್ವಾಮಿ ಪುಷ್ಟರಿಣಿನಿಲಯ ಶ್ರೀನಿವಾಸ ನಿಮ್ಮ ಪಾದ ೧೩
ಅಜನ ಯಜ್ಞಕುಂಡದೊಳಗುದಿಸಿ ಬಂದ ಪಾದ
ಹಸ್ತಿಗಿರಿಯಲ್ಲಿ ನೆಲೆಸಿರ್ಪ ಪಾದ
ವ್ಯಾಧರೂಪಿನಲ್ಲಿ ನಡೆತಂದ ಶ್ರೀಪಾದ
ವರವ ಪಾಲಿಸೆ ವರದಯೆಂಬೋ ಬಿರುದುಳ್ಳ ಪಾದ ೧೪
ಭಾಷ್ಯಕಾರರ ಸ್ವಪ್ನಗೊಲಿದು ಬಂದ ಪಾದ
ಯಾದವಾಗಿರಿಯಲ್ಲಿ ನೆಲೆಸಿರ್ಪ ಪಾದ
ವರಸಂಧಿಗೃಹದಲ್ಲಿ ವಾಸವಾಗಿಹ ಪಾದ
ಭಾಷ್ಯಕಾರರು ಸುತ್ತಿಸೆ ಭರದಿ ಬಂದ ಪಾದ ೧೫
ಕರುಣದಿಂದರ್ಜುನಿಗೆ ಸಾರಥಿಯಾದ ಪಾದ
ಕೈರವಿಣೀ ತೀರದಲಿ ನೆಲೆಸಿರ್ಪ ಪಾದಾ
ರುಕ್ಮಿಣೀ ಬಲಭದ್ರರೊಡನೆ ಒಪ್ಪಿದ ಪಾದ
ಕರುಣ ವೆಂಕಟಕೃಷ್ಣನೆಂಬೊ ಬಿರುದರಳ್ಳ ಪಾದಾ ೧೬

 

೧೦
ಪಾರ್ಥಸಾರಥಿ ನಿಮ್ಮ ಸೇವೆಯ ಮಾಡಿ ಸಾರ್ಥಕವಾದೆನು ಪ
ವಾರ್ಥಿಪುರುಷನೆ ನಿಮ್ಮ ಕೀರ್ತಿಯ ಕೊಂಡಾಡಲೆನಗೆ
ಶಕ್ತಿಯ ವಿಸ್ತರಿಸೆನಗೆ ಯುಕ್ತಿಯ ಅ.ಪ
ಆಚಾರ್ಯರಿಗೆ ಅಭಿವಂದನೆ ಮಾಡಿ ಅಜನರಾಣಿಯ ಭಜಿಸುವೆ
ಆದಿಮೂರುತಿ ಪಾರ್ಥಸಾರಧಿ ಸೇವೆ ಕ್ರಮವನು ಪೇಳುವೆ
ಅನಾದಿಕ್ರಮವನು ಪೇಳುವೆ ೧
ಕೈರವಿಣಿಯಲ್ಲಿ ಸ್ನಾನವಮಾಡಿ ಕೈಮುಗಿದು ಮಾರುತಿಗೆ ನಾ
ಕರುಣಿಆಚಾರ್ಯರಿಗೆ ವಂದಿಸಿ ಕರಿಯಬಳಿಗೆ ನಾ ಬಂದೆನು
ನಾ ಕರಿಯ ಬಳಿಗೆ ಬಂದೆನು ೨
ದವನೋತ್ಸವದ ಮಂಟಪಂಗಳು ಭಾಗವತರ ಭವನವು
ಬಲವಬಳಸಿ ಭಕ್ತವತ್ಸಲನ ಚೆಲುವರಥವನು ನೋಡಿದೆ
ನಾ ಶೇಷರಥವನು ಸೇವಿಸಿ ೩
ಮೂಡಬೀದಿಯ ಸುತ್ತಿಬಂದು ಮಹದಾಹ್ವಯರನು ಸೇವಿಸಿ
ಮಹಾನುಭಾವನ ವಿಮಾನವನು ನೋಡಿ ಮಾನವನ್ನು ಬಿಟ್ಯೆನೊ
ದೇಹಾಭಿಮಾನವನ್ನು ಬಿಟ್ಯೆನೊ ೪
ಕಾರಿಮಾರಿ ಪುತ್ರರಿಗೆ ಬಾರಿಬಾರಿಗೆ ವಂದಿಸಿ
ವಾರಿಜಾಕ್ಷನ ಗೋಪುರವ ನೋಡಿ ಘೋರಪಾಪವ ಕಳೆದೆನೊ
ಯನ್ನ ಘೋರಪಾಪವ ಕಳೆದೆನೊ ೫
ಗರುಡಕಂಭವ ದೀಪಸ್ತಂಭವು ವಾಹನದ ಮಂಟಪಂಗಳು
ವಾರಿಜನಾಭನ ಪಕ್ಷಿವಾಹನನ ನೋಡಿ ವಂದನೆಯ ಮಾಡಿದೆ
ಅಭಿವಂದನೆಯ ನಾ ಮಾಡಿದೆ ೬
ತೋರಣದ ಬಾಗಿಲನು ದಾಟಿ ವಾರುಣದೆದುರಲಿ ವಂದಿಸಿ
ವಾರಿಜಾಕ್ಷಿ ಶ್ರೀವೇದವಲ್ಲಿಯ ಸಾರೂಪ್ಯವನು ನಾ ಬೇಡಿದೆ
ಸಾಯುಜ್ಯವನು ನಾ ಬೇಡಿದೆ ೭
ಭಕ್ತಿಸಾರರ ಚರಣಕೆರಗಿ ಹಸ್ತಗಿರೀಶನ ವಂದಿಸಿ
ಸುತ್ತಿ ಗರುಡಕಂಬವನ್ನು ಮತ್ತೆ ಸಿಂಹನ ಸೇವಿಸಿ
ದಿವ್ಯ ನಾರಸಿಂಹನ ಸೇವೆಸಿ ೮
ವಿಷ್ಣುಚಿತ್ತರ ಪುತ್ರಿಯನ್ನು ಅರ್ಥಿಯಿಂದಲೆ ಸೇವಿಸಿ
ಮುಕ್ತಿದಾಯಕ ರಂಗನ ಪಾದಕೆ ಮುದದಿ ವಂದನೆ ಮಾಡಿದೆ
ನಾ ಮುದದಿ ವಂದನೆ ಮಾಡಿದೆ ೯
ಯಾಮುನಾಚಾರ್ಯರಿಗೆ ವಂದಿಸಿ ಕಾಂಚೀಪೂರ್ಣರಿಗೆರಗುವೆ
ವೇದಾಂತಾಚಾರ್ಯರ ವಂದನೆ ಮಾಡಿ ಅನಾದಿ ಪಾಪವ ಕಳೆದೆನೊ
ನಾ ಅನಾದಿ ಪಾಪವ ಕಳೆದೆನೊ ೧೦
ಭಾಷ್ಯಕಾರರ ಚರಣಕೆರಗಿ ವರಯೋಗಿಗಳಿಗೆ ವಂದಿಸಿ
ಕುಲೇಶ ದಾಶರಥಿಗೆ ವಂದಿಸಿ ದ್ವಾರಪಾಲಕರ ನೋಡಿದೆ
ನಾ ದ್ವಾರಪಾಲಕರ ನೋಡಿದೆ ೧೧
ಗಂಟೆಬಾಗಿಲ ದಾಟಿ ಶ್ರೀವೈಕುಂಠವಾಸನ ಭಕ್ತರು ಹದಿ
ನೆಂಟು ಆಳ್ವಾರುಗಳ ಸೇವಿಸಿ ಕಂಟಕಗಳ ಕಳೆದೆನೊ
ಭವ ಕಂಟಕಗಳ ಕಳೆದೆನೊ ೧೨
ಕೇಶವ ಮಾಧವ ಅನಂತ ಶ್ರೀಪದ್ಮನಾಭನ ಸೇವಿಸಿ ಶ್ರೀರಾಮ
ಲಕ್ಷ್ಮಣ ಭರತ ಶತ್ರುಘ್ನ ಸೀತೆಯನು ನಾ ನೋಡಿದೆ
ಲೋಕಮಾತೆಯನು ನಾ ಬೇಡಿದೆ ೧೩
ಆದಿಶೇಷನ ಮೇಲೆ ಮಲಗಿದ ಅನಾದಿರಂಗನ ಸೇವೆಗೆ ಕುಲ
ಶೇಖರರ ಸ್ಥಾನದಲಿ ನಿಂದು ಯದುಕುಲೇಶನ ನೋಡಿದೆ
ನಾನೆದುಕುಲೇಶನ ನೋಡಿದೆ ೧೪
ಬಲದಿ ರುಕ್ಮಿಣಿ ಬಲರಾಮ ಪ್ರದ್ಯುಮ್ನ ಅನಿರುದ್ಧ ಸಹಿತಲೆ
ಎಡದಿ ಸಾತ್ಯಕಿ ಪಂಚಮೂರ್ತಿಗಳ ನಡುವೆ ಪಾರ್ಥಸಾರಥಿ
ಯೆಡಬಲದಿ ಶ್ರೀದೇವಿ ಭೂದೇವಿ ೧೬
ಆದಿಶೇಷನ ಮೇಲೆ ತನ್ನಯ ಪಾದವನ್ನು ಪ್ರಸÀರಿಸಿ ವಿ
ನೋದದಿಂದಲೆ ಅಂದುಗೆ ಗೆಜ್ಜೆ ಕುಂದಣದ ಪಾಡಗಗಳು
ಆನಂದದ ಪಾಡಗಗಳು ೧೭
ಕನ್ನಡಿಯಂದದಿ ಕಣಕಾಲುಗಳು ಉನ್ನತವಾದ ಪೀತಾಂಬರವು
ಪನ್ನಗಶಯನನ ವಡ್ಯಾಣದಲಿ ಪರಮಮೂರ್ತಿಯ ಸರಗÀಳು
ಶ್ರೀಮೂರ್ತಿ ಸರವನು ಸಿಕ್ಕಿಸಿ ೧೮
ದುಷ್ಟನಿಗ್ರಹವನ್ನು ಮಾಡಿ ಶ್ರೇಷ್ಠರನ್ನು ಪರಿಪಾಲಿಪ ಶ್ರೀ
ಕೃಷ್ಣಮೂರುತಿಯ ಎಡದ ಭಾಗದಿ ಶ್ರೇಷ್ಠವಾದ ಖಡ್ಗವು
ಸರ್ವಶ್ರೇಷ್ಠವಾದ ಖಡ್ಗವು ೧೯
ಸಿಂಧುರಾಜನ ಕೊಲ್ಲುವುದಕಾಗಿ ಅಂದು ಚಕ್ರವ ಕಳುಹಿದೆ
ಒಂದು ಕೈಯಲಿ ಪಾದವ ತೋರುತ ಮತ್ತೊಂದು ಕೈಯಲಿ ಶಂಖವು
ಅನಂದದಿಂದಲೆ ಶಂಖವು ೨೦
ಸೃಷ್ಟಿಯೆಳಗ್ಹದಿನಾಲ್ಕು ಲೋಕವ ಪಕ್ಷಿವಾಹನವಂ
ಬಿಟ್ಟು ವಕ್ಷಸ್ಥಳದಲಿ ಲಕ್ಷ್ಮಿದೇವಿಯ ರತ್ನಾದ್ಹಾರದಪದಕವು
ನವರತ್ನದ್ಹಾರದ ಪದಕವು ೨೧
ಕಂಠದೊಳಗಿಟ್ಟ ಕೌಸ್ತುಭಮಣಿ ಎಂಟುಪುಷ್ಪದ ಹಾರವು ವೈ
ಕುಂಠವಾಸನ ಸೇವಿಸಿದರೆ ಕಂಟಕಂಗಳು ಕಳೆವುದು
ಭವಕಂಟಕಗಳು ಕಳೆವುದು ೨೨
ಕುಂದಕುಸುಮದಂತೆ ದಂತವು ಪವಳದಂತೆ ಅಧರಕಾಂತಿಯು
[ಚೆಂದದಿ] ಪೊಳೆವ ಕರ್ಣಕುಂಡಲ ಚೆಲುವ ನಾಸಿಕದಂದವು
ತಿಲಕುಸುಮನಾಸಿಕದಂದವು ೨೩
ದೀಪದಂದದಿ ಕರುಣನೇತ್ರವು ಚಾಪದಂದದಿ ಪುಬ್ಬುಗಳಲಿ
ತೋರ್ಪುದಾ ಲೋಕನಾಯಕನ ನಾಮದ ಬೆಳಕು ಅನೇಕವಾಗಿ
ವಿವೇಕವಾಗಿ ತೋರ್ಪುದು ೨೪
ಮುದದಲಂದುಗೆ ಗೆಜ್ಜೆಯು ಮೂರುಲೋಕವನಾಳ್ವ ಕಿರೀಟದ
ಪದುಮನಾಭನ ಸೇವಿಸಿದವರಿಗೆ ಒದಗಿ ಬರುವುದು ಮುಕ್ತಿಯು
ಎಲ್ಲರಿಗೊದಗಿ ಬರುವುದಿಷ್ಟಾರ್ಥವು ೨೫
ಪಾದದಿ ಕೇಶದ ಸೇವೆಯನು ಮಾಡಿ ಅನಾದಿಪಾಪವ ಕಳೆದೆನೊ
ವೇದಮೂರುತಿ ವೆಂಕಟಕೃಷ್ಣನೆ ಪಾದವನ್ನು ತೋರಿಸು
ನಿಮ್ಮ ಶ್ರೀ ಪಾದವನ್ನು ತೋರಿಸು ೨೬

 

೪೬
ಪುಷ್ಪಧರಿಸುವ ಉತ್ಸವಗೀತೆ
ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ
ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ.
ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ
ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ ೧
ಪೊದಿಸಿ ಪನ್ನೀರವಲ್ಲಿಯ ಪುಷ್ಪದ ಮೌಳಿಯ ಧರಿಸಿ
ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ ೨
ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ
ಪಂಕಜಪಾಣಿ ಕೀರವಾಣಿ ಸುಶೋಣೀ ೩
ಸುರರು ಅಸುರರು ಕೂಡಿ ಶರಧಿಮಥನವ ಮಾಡೆ
ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು ೪
ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ]
ರಾಯ ಜನಕನಾ ಮಗಳು ಜಾನಕೀದೇವಿಗೆ ಇಂದು ೫
ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ]
ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು೬
ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ]
ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು ೭
ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ
ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು ೮
ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ
ಪುರುಷನರಾಣಿಗೆ ಸುರರು ತಂದು ಮುಡಿಸುವರು ೯
ವಸಂತೋತ್ಸವಕೆಂದು ವಸುಧೀಶನರಸಿ ತಾನು
ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು ೧೦
ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು
ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು ೧೧
ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು
[ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ ೧೨
ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ
ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ ೧೩

 

೪೩
ಪುಷ್ಪಸೇವೆಯ ಗೀತೆ
ಪುಷ್ಪಸೇವೆಯ ನೋಡುವಾ ಬನ್ನಿರೆ ನ
ಮ್ಮಪ್ರಮೇಯ ರಂಗನಾ ಪ.
ಕ್ಷಿಪ್ರದಿಂದಲೆ ಬಂದು ಚಪ್ಪರದಲಿ ನಿಂದು
ವಿಪ್ರರೆಲ್ಲರು ತಂದು ಪುಷ್ಪ ಸಮರ್ಪಿಸುವ ಅ.ಪ.
ಮೇಷರಾಶಿಗೆ ರವಿಯು ಬರಲು
ವಾಸುದೇವ ಹರಿಯು ಆಗ
ಬೇಸಿಗೆ ತಾಪವ ಪರಿಹರಿಸುವೆನೆಂದು
ವಾಸನೆಗಂಧವ ಮೈಯೊಳು ಪೂಸಿದ ೧
ಕರ್ಪೂರದ ಕಸ್ತೂರಿ ಗಂಧವ ತಂದು
[ಒಪ್ಪದಿಂ] ವಕ್ಷಸ್ಥಳದಿ ಧರಿಸಿ ವಕುಳ
ಪುಷ್ಪಗಳಿಂದ ಮೌಳಿಯ [ಲಂಕ]ರಿಸಿದ
ರು ಪನ್ನೀರವಲ್ಲಿಯ ಚೆನ್ನಾಗಿ ಪ್ರೋಕ್ಷಿಸಿದರು೨
ಮರುಗ ಮಲ್ಲಿಗೆ ಜಾಜಿ ಮುಡಿವಾಳ
ಇರವಂತಿಗೆ ಪಚ್ಚೆ ದವನ ಕೇದಿಗೆ ಪಾ
ದರಿ ಕಮಲ ಸಂಪಿಗೆ ಪುಷ್ಪಮಾಲೆಯ
ಧರಿಸಿ ಪನ್ನೀರ ತಳಿದರಾಗ ೩
ಪುಷ್ಪದ ದುಬಟಿಯನು ತಂದು ನಮ್ಮ
ಸರ್ಪಶಯನನಿಗ್ಹೊದ್ದಿಸೆ
ಕ್ಷಿಪ್ರದಿಂದಲೇ ತೀರ್ಥಪ್ರಸಾದವನಿತ್ತು ಎ
ನ್ನಪ್ಪ ರಂಗನು ಬಂದ ಒಯ್ಯಾರ ನಡೆಯಿಂದ ೪
ಪರಿಪರಿ, ವಾದ್ಯಂಗಳು ಭೋರಿಡುತಿರೆ
ವರಾಂಗನೆಯರು ಪಾಡೆ
ಸುರರು ಭೂಸುರ ನರರೆಲ್ಲರ ಕೂಡಿ
ದೊರೆಯುಮಂಟಪಕ್ಕಾಗ ಪರಮಪುರಷ ಬಂದ ೫
ಅಲ್ಲಿ ಪೂಜೆಯ ಗ್ರಹಿಸಿ ರಂಗಯ್ಯ ತಾ
ಎಲ್ಲರೊಡನೆ ಪೊರಟಿರೆ
ವಲ್ಲಭನನು ವೀಣೆಸೊಲ್ಲಿನಿಂ ಪಾಡುತಿರೆ ಲಕ್ಷ್ಮೀ
ಮೆಲ್ಲಮೆಲ್ಲನೆ ಬಂದ ಏಕಾಂತದಿ ರಂಗ ೬
ಚಿತ್ರಪೌರ್ಣಮಿಯಲ್ಲಿ ಶ್ರೀರಂಗ ವಿ
ಚಿತ್ರದಿಂದಲೆ ಪೊರಟು
ಉತ್ತರಕಾವೇರಿ ತೀರದ ಮಂಟಪದಲಿ ನಿಂದು
ಭಕ್ತವತ್ಸಲನು ಮಜ್ಜನವ ಮಾಡಿದನಾಗ ೭
ಮಕರಿ ಕಾಲ್ಪಿಡಿಯಲಾಗ ಮತಂಗ
ವು ಕರೆಯೆ ನಿಮ್ಮನು ಅತಿ ವೇಗದಿಂದ
ಚಕ್ರದಿ ನಕ್ರನ ಕೊಂದು ಕರಿಯ
ರಕ್ಷಿಸಿ ಬಂದ ಕರುಣದಿಂದಲೇ ರಂಗ ೮
ಕಲಿಯುಗದೊಳಗಿರುವ ಕರ್ಮಿಗಳನ್ನು
ಸಲಹುವೆನೆಂದೆನುತಾ ಕರುಣದಿಂ
ದಲೆ ಅರ್ಚಾವತಾರವ ಮಾಡಿ
[ಸಲೆ] ಬಿರುದು ಧರಿಸಿ ಬಂದ ವರದವೆಂಕಟರಂಗ ೯

 

ತ್ರಿವೇಣಿ ಸಂಗಮ
೨೨
ಗಂಗಾನದಿ
ಮಂಗಳಂ ಜಯತು ಭಾಗೀರಥಿಗೆ
ಜಯ ಮಂಗಳಂ ಯಮುನೆ ಸರಸ್ವತಿಗೆ ಪ
ವಾಮನರೂಪಿಲಿ ದಾನವ ಬೇಡಿ
ಪ್ರೇಮದಿಂ ಪಾದವ ಮೇಲಕ್ಕೆ ನೀಡಲು
ನೇಮದಿಂ ತಡೆದು ಬ್ರಹ್ಮಾಂಡದಿಂದ
ಸುಮ್ಮಾನದಿಂ ಪೊರಟು ಬಂದ ದೇವಿಗೆ ೧
ಹರಿಯ ಪಾದದಲಿ ಉದ್ಭವಿಸಿದ ಗಂಗೆಗೆ
ಹರನ ಶಿರದಲ್ಲಿ ವಾಸವಾದವಳಿಗೆ
ಭರದಿ ಭಗೀರಥ ತಪವ ಮಾಡಲು
ಧರಿಣಿಗೆ ಇಳಿದು ಬಂದ ದೇವಿಗೆ ೨
ಭಗೀರಥನ ಪಥವಿಡಿದು ಬೇಡಿ ಬಂದ
ಭಾಗೀರಥಿ ಎಂಬೊ ಪೆಸರು ಪೊತ್ತು ಅವನ
ಭಾಗಿಗಳಿಗೆ ಮೋಕ್ಷವನಿತ್ತು ಹರುಷದಿ
ಯೋಗಿಗಳು ಸ್ತುತಿಪ ಗಂಗಾದೇವಿಗೆ ೩
ಜನ್ಹುಋಷಿಯು ಪವನಮಾಡಿ ಬಿಡುವಾಗ
ಜಾಹ್ನವಿ ಎನಿಸಿದೆ ಜಗದೊಳಗೆ
ಜನರಿಗೆ ಜನನ ಮರಣ ಕೊಡದೆ ಬಿಡಿಸಿ
ಜಾಣತನದಿ ಮುಕ್ತಿ ಕೊಡುವವಳಿಗೆ ೪
[ದೃಡದಿ ] ಬಲಭಾಗದಿ ಭಗೀರಥಿ ಬರುತಿರೆ
ಯೆಡದ ಭಾಗದಲಿಯಮುನೆ ಬರುತಿರಲು
ನಡುವೆ ಸರಸ್ವತಿ ತ್ರಿವೇಣಿಯೆಂದೆನಿಸಿ
ಪೊಡವಿಗಧಿಕವಾಗಿ ಮೆರೆಯುವ ದೇವಿಗೆ ೫
ಬಂದು ಭಾಗೀರಥಿಗೆ ವಂದನೆಗಳ ಮಾಡಿ
ತಂದು ಪುಷ್ಪವ ತುಳಸಿ ಕ್ಷೀರವನು
ಚಂದದಿಂ ಪೂಜೆಮಾಡಿ ವೇಣಿಮಾಧವಗೆ
ಅಂದು ವಂದಿಸಿದವರಿಗೆ ೬
ಸೃಷ್ಟಿಯ ಮೇಲುಳ್ಳ ಜನರೆಲ್ಲರು ಬಂದು
ಮುಟ್ಟಿ ಮುಳುಗಿ ಪೂಜಿಸಿದವರ
ಇಷ್ಟಾರ್ಥಗಳನು ಕೊಡುವೆನೆಂದೆನುತಲೆ
ದಿಟ್ಟ ವೆಂಕಟನ ಪಾದ ತೋರಿಸುವಳು ೭

 

೫೨
ಶ್ರೀಮದ್ರಾಮಾಯಣ ಮಂಗಳಂ
ಮಂಗಳಂ ಮಹಾನುಭಾವಗೆ ಮಂಗಳಂ ಲೋಕಮಾತೆ ಸೀತೆಗೆ
ಮಂಗಳಂ ಶತ್ರುಘ್ನ ಭರತಗೆ ಮಂಗಳಂ ಸೌಮಿತ್ರಿರಾಮಗೆ ಪ
ಸುರರು ಅಸುರರ ಬಾಧೆಗೋಸ್ಕರ
ಶರಧಿಶಯನನ ಸ್ತುತಿಯಮಾಡಲು
ದಶರಥನ ಉದರದಲಿ ಜನಿಸುವೆನೆಂದು ವರವನಿತ್ತ ರಾಮಚಂದ್ರಗೆ ೧
ಪುತ್ರಕಾಮೇಷ್ಟಿಯನು ಮಾಡಲು ಶತ್ರುಘ್ನ ಸೌಮಿತ್ರಿ
ಪತ್ನಿಯರು ಗರ್ಭವನು ಧರಿಸಲು
ಭರತಸಹವಾಗಿ ಜನಿಸಿದ ರಾಮಚಂದ್ರಗೆ ೨
ಜಾತಕರ್ಮವು ನಾಮಕರಣವು ಚೌಲ ಉಪನಯನಗಳ ಮಾಡಿ ವಿಶ್ವಾ
ಮಿತ್ರರೊಡನೆ ಸಕಲ ವಿದ್ಯವ ಕಲಿಯೆ ಪೊರಟ ರಾಮಗೆ೩
ಬಲ ಅತಿಬಲವೆಂಬ ವಿದ್ಯವ ವಿಶ್ವಾಮಿತ್ರರೊಡನೆ
ಕಲಿತು ಅಶ್ವಿನಿದೇವತೆಗಳಂದದಿ ಬಂದ ಸೌಮಿತ್ರಿರಾಮ್ರಗೆ ೪
ಭರದಲಿ ಅನಂಗನಾಶ್ರಮವನು ಪೊಕ್ಕು ಸರಯು ನದಿಯನು ದಾಟಿ
ಬರದೂಷಣಜಾ ದೇಶದೊಳಗುಳ್ಳ ತಾಟಕಾಂತಕ ರಾಮಚಂದ್ರಗೆ ೫
ಅಸ್ತ್ರವನ್ನು ಗ್ರಹಿಸಿ ಬೇಗನೆ ಸಿದ್ಧಾಶ್ರಮಕ್ಕೆ ನಡೆತಂದು ಸುಭಾಹುವ
ನು ಸಂಹರಿಸಿ ಭರದಿ ಮಾರೀಚನ ಹಾರಿಸಿದ ರಾಮಗೆ ೬
ವಿಶ್ವಾಮಿತ್ರರ ಯಜ್ಞ ಪಾಲಿಸಿ ಕುಶನ ವಂಶವಿಸ್ತಾರವ ಕೇಳಿ
ಆಸರ [ಯು]ನದಿಯ ದಾಟಿ ಭರದದಿತಿಯಾಶ್ರಮಕೆ ಬಂದ ರಾಮಗೆ ೭
ಮರುತ್ತ ಜನ್ಮವ ಕೇಳಿ ಅಹಲ್ಯೆಯನ್ನು ಪಾವನ ಮಾಡಿ
[ವರ] ಸುಮತಿಯೊಡನೆ ಮಾತನಾಡಿ ಜನಕನ ಯಜ್ಞಕೆ
ಬಂದ ರಾಮಗೆ ೮
ಜನಕ ವಂದಿಸಿ ಧನ್ಯನೆನ್ನಲು ವಿಶ್ವಾಮಿತ್ರರು ವೃತ್ತಾಂತ ಹೇಳಿ
ಧನುವ ತರಿಸಲು ನೋಡಿ ಕ್ಷಣದಿಮುರಿದಾ ರಾಮಚಂದ್ರಗೆ ೯
ಸುರರು ಜಯಜಯವೆಂದು ಸ್ತುತಿಸಲು ಧರಣಿಸುತೆಯ ಕರವ ಪಿಡಿದು
ಶ್ರುತಕೀರ್ತಿ ಮಾಂಡವಿ ಊರ್ಮಿಳೆ ಅನುಜರೊಡನೆ
ಪೊರಟ ರಾಮಗೆ ೧೦
ಮಾರ್ಗದಲಿ ಭಾರ್ಗವನ ಬಲವನು ಕಳದು ಅಯೋದ್ಯೆಗೆ ಬಂದು
[ಬೇಗ]ಮಾತಾಪಿತರ ಮಾತನಡೆಸಿ ಪ್ರೀತಿತೋರಿದ ಸೀತಾರಾಮಗೆ ೧೧
ಕಂಡವರ ಮನದಲ್ಲಿ ರಮಿಸುವ ಪುಂಡರೀಕಾಕ್ಷನಿಗೆ ರಾಜ್ಯವ
ಕೊಡುವೆನೆ[ನುತ] ದಶರಥ ವ್ರತವನಾಚರಿಸಿದ ರಾಮಚಂದ್ರಗೆ ೧೨
ಕೈಕೆ ಪೂರ್ವದ ವರವ ಸ್ಮರಿಸಿ ಭರತನಿಗೆ ರಾಜ್ಯವನು ಬೇಡಿ ರಾಮನರ
ಣ್ಯಕ್ಕೆ ಪೋಗೆನೆ ಬೇಗ ಪೊರಟ ಶ್ರೀರಾಮಚಂದ್ರಗೆ ೧೩
ಮಾತೆಯನು ಬಹುವಿಧದಿ ಮನ್ನಿಸಿ ಪಿತನ ಪ್ರತಿಜ್ಞೆಯನು ಪಾಲಿಸಿ
ಸೀತೆಲಕ್ಷ್ಮಣರೊಡನೆ ವನವಾಸಕ್ಕೆ ಪೊರಟ ರಾಮಚಂದ್ರಗೆ ೧೪
ಪುರದ ಜನರನು ಸಂತವಿಟ್ಟು ಗುಹನ ಸಖ್ಯದಿ ನದಿಯ ದಾಟಿ
ಭರದಿ ಭಾರದ್ವಾಜರ ಕಂಡು ಚಿತ್ರಕೂಟಕ್ಕೆ ಬಂದ ರಾಮಗೆ ೧೫
ಅರಸು ಸ್ವರ್ಗವನೈದೆ ಭರತನಕರಸಿ ಕರ್ಮವನೆಲ್ಲ ಕಳೆದು
[ವರ] ಮಾತೆಗೆ ಭಾಷೆ ಕೊಟ್ಟು ತಮ್ಮನಾಲಿಂಗಿಸಿದ ರಾಮಗೆ ೧೬
ಭರತನಂಕದೊಳಿಟ್ಟು ಪ್ರೇಮದಿ ಮನ್ನಸಿ ಮೃದುವಾಕ್ಯದಿಂದ
ಗುರುಗಳನುಮತದಿಂದ ಪಾದುಕೆಯಿತ್ತು ಕಳುಹಿದ ರಾಮಚಂದ್ರಗೆ ೧೭
ಬೇಗನೆ ಚಿತ್ರಕೂಟವ ಬಿಟ್ಟು ಅತ್ರಿ ಯಾಶ್ರಮಕೆ ಬಂದು
ಅಂಗರಾಗಾರ್ಪಣವನೆಲ್ಲ ಅಂಗೀಕರಿಸಿದ ರಾಮಚಂದ್ರಗೆ ೧೮
ದಂಡಕಾರಣ್ಯವನ್ನು ಪೊಕ್ಕು ಉದ್ದಂಡವಿರಾಧನ್ನ ಕೊಂದು
ಕಂಡು ಇಂದ್ರನ ಶರಭಂಗರಿಗೆ ಮುಕ್ತಿಯನಿತ್ತ ಶ್ರೀರಾಮಚಂದ್ರಗೆ ೧೯
ಋಷಿಗಳಿಗೆ ಅಭಯವನು ಇತ್ತು ಲೋಕಮಾತೆಯ ನುಡಿಯ ಕೇಳಿ
ಋಷಿಮಂಡಲವನು ಪೊಕ್ಕು ಬಂದು ಸುತೀಕ್ಷ್ಣರ ಕಂಡ ರಾಮಗೆ ೨೦
ಸುತೀಕ್ಷ್ಣರ ವಾಕ್ಯವ ಕೇಳಿ ಅಗಸ್ತ್ಯರಾಶ್ರಮಕೆ ಬಂದು
ಅಸ್ತ್ರವನು ಕೊಡಲು ಗ್ರಹಿಸಿ ಪಂಚವಟಿಗೆ ಬಂದ ರಾಮಗೆ ೨೧
ಶೂರ್ಪನಖಿ ರಘುಪತಿಯ ಮೋಹಿಸೆ ಕರ್ಣನಾಸಿಕವನ್ನು ಛೇದಿಸಿ
ದುರುಳ ಖರದೂಷಣರ ಕೊಂದು ಸತಿಯನಾಲಿಂಗಿಸಿದ ರಾಮಗೆ ೨೨
ದುರುಳ ಖಳನು ಜಾನಕಿಯ ಕದ್ದೊಯ್ಯೆ ಮಾರಿಚನ್ನ ಕೊಂದು
ಬರುತ ಮಾರ್ಗದಿ ಗೃಧ್ರರಾಜಗೆ ಮುಕ್ತಿಯಿತ್ತ ಶ್ರೀರಾಮಚಂದ್ರಗೆ ೨೩
ಕಬಂಧನಾ ವಾಕ್ಯವನು ಕೇಳಿ ಮಾರ್ಗದಲಿ ಅಯಮುಖಿಯ ಭಂಗಿಸಿ
ಶಬರಿ ಭಕ್ತಿಯೊಳಿತ್ತ ಫಲವನು ಸವಿದು ಮುಕ್ತಿಯನಿತ್ತ ರಾಮಗೆ ೨೪
ಸೀತೆಯರಸುತ ಮಾರ್ಗದಲಿ ಋಷ್ಯಮೂಕಪರ್ವತವ ಸೇರಿ ಪಂ
ಪಾತೀರದಿ ತಮ್ಮನೊ[ಂದಿ]ಗೆ ನಿಂತ ಶ್ರೀರಘುರಾಮಚಂದ್ರಗೆ ೨೫
ಪಂಪಾಪುಳಿನದ ವನವಕಂಡು ಪಂಕಜಾಕ್ಷಿಯ ನೆನೆದು ವಿರಹ
[ತಾಪದರೆ] ಬಂದ ಆಂಜನೇಯಗೆ ಸಖ್ಯ ನೀಡಿದ ರಾಮಚಂದ್ರಗೆ ೨೬
ಅಭಯವನು ಇತ್ತು ರವಿಜಗೆ ಏಳು ತಾಳೇಮರವ ಛೇದಿಸಿ ದುಂ
ದುಭಿಯ ಕಾಯವನು ಒಗೆದ ಇಂದಿರಾಪತಿ ರಾಮಚಂದ್ರಗೆ ೨೭
ಇಂದ್ರಸುತನು ರವಿಜನೊಡನೆ ದ್ವಂದ್ವಯುದ್ಧವ ಮಾಡುತಿರಲು
ಒಂದುಬಾಣದಿಂದ ವಾಲಿಯ ಕೊಂದು ಕೆಡಹಿದ ರಾಮಚಂದ್ರಗೆ ೨೮
ಸುಗ್ರೀವಗೆ ಪಟ್ಟವಕಟ್ಟಿ ಅಷ್ಟದಿಕ್ಕಿಗೆ ಕಳುಹಿಕಪಿಗಳ ಹನುಮಗೆ
ಮುದ್ರೆಯುಂಗುರವಿತ್ತು [ಅ]ಸಾಧ್ಯ ಇವನೆಂತೆಂದ ರಾಮಗೆ ೨೯
ಮಾರ್ಗದಲಿ ಸ್ವಯಂಪ್ರಭೆಯ ಕಂಡು ಪ್ರಾಯೋಪವೇಶವ ಮಾಡಿ
ಹರುಷದಿ ಅಂಗದ ಸಂಪಾತಿ ವಾಕ್ಯವಕೇಳಿ ಸಮುದ್ರತೀರದಿ
ಬೆಳೆದ ಹನುಮಗೆ ೩೦
ಶತ್ರುಪಟ್ಟಣವ ಕಂಡು ಛಾಯೆಯ ಕುಟ್ಟಿ ಸುರಚಿಯುಪಾಯದಿಮನ್ನಿ
ಸುತ್ತ ಮೈನಕನ ಭರದಲಿ ಲಂಕಿಣಿಯನಡಗಿಸಿದ ಹನುಮಗೆ ೩೧
ಲೋಕಪಾಲಕರನ್ನು ವಂದಿಸಿ ಅರಸಿ ಜಾನಕಿಯನ್ನು [ಸಂಧಿಸಿ]
ಅಶೋಕವನದಲಿ ಲೋಕಮಾತೆಗೆ ಮುದ್ರೆಯುಂಗುರವಿತ್ತ
[ವೀರ] ಹನುಮಗೆ ೩೨
ಮಣಿಯಗ್ರಹಿಸಿ ವನವಭಂಗಿಸಿ ಕೊಂದುಅಕ್ಷನ ಸಿಕ್ಕಿಅಸ್ತ್ರದಿ ದುರುಳ ರಾ
ವಣನ ನಿಂದಿಸಿ ಪುರವಸುಟ್ಟಾ ವೀರಹನುಮಗೆ ೩೩
ಸೀತೆಯೊಡನೆ ಗುರುತಕೇಳಿ ಸಮುದ್ರತೀರಕೆ ಬಂದು ಬೇಗನೆ ಜಾಂಬ
ವಂತ ಅಂಗದರ ಕೂಡಿ ಮಧುವನವ ಭಂಗಿಸಿದ ಹನುಮಗೆ ೩೪
ಕಂಡೆ ಲೋಕಮಾತೆಯನನ್ನೆನ್ನುತ ಬಂದು ಮುದದಿ ವಂದಿಸಿ ಇತ್ತ
ಚೂಡಾಮಣಿಯಲ್ಲಿ ಸೀತೆನ ನೆನದು ತಾಪದಿ
ಹನುಮನನಾಲಿಂಗಿಸಿದವಗೆ ೩೫
[ಯೋಜಿಸಿ] ಶುಭಲಗ್ನ ಶುಭವಾರ[ಲಂಕೆಗೆ] ರವಿಜ ಕಪಿಗಳ ಸಹಿತ
ಪೊರಟು ಆಂಜನೇಯನನೇರಿ ಹರುಷದಿ ಸಮುದ್ರತೀರಕೆ
ಬಂದ ರಾಮಗೆ ೩೬
[ಭಕ್ತ] ವಿಭೀಷಣಗೆ ಅಭಯವನಿತ್ತು ಶರಧಿಗೆ ಸೇತುವೆಯನ್ನು ಬಂಧಿಸಿ
ಮುತ್ತಿ ಲಂಕಾಪುರವ ಸಂಧಿಗೆ ಅಂಗದನ ಕಳುಹಿಸಿದ ರಾಮಗೆ ೩೭
ಇಂದ್ರ[ಜಿತ್ತು]ವೊಡನೆ ಕಾದಿ ಸರ್ಪಾಸ್ತ್ರದಿಂದ ಬಿಡಿಸಿಕೊಂಡು
[ಆ]ದುರುಳ ರಾವಣನ ನಡುಗಿಸಿ ಕಿರೀಟವನು ಭಂಗಿಸಿದ ರಾಮಗೆ ೩೮
ಕುಂಭಕರ್ಣನೊಡನೆ ಕಾದಿ ರವಿಜ ಕಿವಿಮೂಗನ್ನು ಕಡಿಯಲಾ
ಕುಂಭಕರ್ಣನ ತುಂಡುತುಂಡಾಗಿ ಕೊಂದುಕೆಡಹಿದ ರಾಮಚಂದ್ರಗೆ ೩೯
ಕೊಂದು ವಜ್ರದಂಷ್ಟ್ರ ಆಕಂಪ ದೇವಾಂತಕ ನರಾಂತಕರನ್ನು ಮ
ಹೋದರ ಮಹಾಪಾಶ್ರ್ವ ಅತಿಕಾಯ ತ್ರಿಶಿರಸ್ಸನ್ನು ಕೊಂದ ರಾಮಗೆ ೪೦
ಮಾಯೆಯುದ್ಧದಿ ಮೇಘನಾಥನು [ಅನುಜನ] ಬ್ರಹ್ಮಾಸ್ತ್ರದಲಿ ಕಟ್ಟಲು
ವಾಯುನಂದನನಿಂದ ಸಂಜೀವನವ ತರಿಸಿದ ರಾಮಚಂದ್ರಗೆ ೪೧
ಮಾಯಾಸೀತೆಯ ಶಿರವನರಿಯಲು ವಿಭೀಷಣನ ಉ
ಪಾಯದಿಂದ ಇಂದ್ರಜಿತ್ತು ಶಿರವಕಡಿದ ತಮ್ಮನಾಲಂಗಿಸಿದ ರಾಮಗೆ ೪೨
ಮೂಲಬಲವನು ಕಡಿದು ರಾವಣನೊಡನೆ ಯುದ್ಧವ ಯೋಚಿಸೆ
ಕೇಳಿ ಮಾತಲಿಯ ವಾಕ್ಯವನು ಬ್ರಹ್ಮಾಸ್ತ್ರದಿಂ [ಂದವನತಲೆ]
ಕಡಿದ ರಾಮಗೆ ೪೩
ರಾವಣಾನೆಂಬ ಗಂಧಹಸ್ತಿಯ ರಾಮಕೇಸರಿ ಬಂದು ಮುರಿಯಲು
ಪೂ[ವ] ಮಳೆಯನು ಸುರರು ಕರೆಯಲು
ಶಿರದಿ ಧರಿಸಿದ ರಾಮಚಂದ್ರಗೆ ೪೪
ವಿಭೀಷಣಗೆ ಪಟ್ಟವನು ಕಟ್ಟಿ ಸೀತೆಯೊಡನೆ ಪ್ರತಿಜ್ಞೆ ಮಾಡಿ
ರೆ ಬ್ರಹ್ಮರುದ್ರಾದಿಗಳು ಸ್ತುತಿಸಲು ತಂದೆಗೆರಗಿದ ರಾಮಚಂದ್ರಗೆ ೪೫
ಸೀತೆಯಂಕದೊಳಿಟ್ಟು ಕಪಿಗಳಸಹಿತ ಪುಷ್ಪಕವೇರಿ ಭರದಿ [ಬ
ರುತ್ತ] ಭಾರದ್ವಾಜರಿಗೆರಗಿ ಭರತನ ಮನ್ನಿಸಿದ ರಾಮಗೆ ೪೬
ಕೈಕೆಸುತ ಕೈಮುಗಿದು ಕಿಶೋರ ಭಾರವ ತಾಳಲಾಗದೆಂದಾ ಳುತ
[ಲಾ]ಯಿತ್ತ ರಾಜ್ಯವನ್ನು ಕೊಡಲು ಗ್ರಹಿಸಿದ ರಾಮಚಂದ್ರಗೆ ೪೭
ಉಟ್ಟ ಮಡಿಯ ಜಟೆಯನುತಾ ಶೋಧಿಸೆ ಸೀತೆ ಸಕಲಾಭರಣ
ತೊಟ್ಟು ಸುಗ್ರೀವ ಸಕಲರೊಡನೆ ರಥವನೇರಿದ ರಾಮಚಂದ್ರಗೆ ೪೮
ಸರಮೆಪತಿ ಸೌಮಿತ್ರಿ ಚಾಮರ ಪಿಡಿಯೆ ಶತ್ರುಘ್ನ ಛತ್ರಿಯನು
ಭರತ ಸಾರಥ್ಯವನು ಮಾಡಲು ಪುರಕೆತೆರಳಿದ ರಾಮಚಂದ್ರಗೆ ೪೯
ರಾಜಗೃಹವನು ತೋರಿ ರವಿಜಗೆ ಶರಧಿಯುದಕಗಳೆಲ್ಲ ತರಿಸಿ [ವಿ
ರಾಜಿಸಿ] ಪೀಠದಿ ಸೀತೆಯೊಡನೆ ವೊಪ್ಪಿದಾ ರಘುರಾಮಚಂದ್ರಗೆ ೫೦
ವಸಿಷ್ಠ ಮೊದಲಾದ ಸಪ್ತ ಋಷಿಗಳು ಲಕ್ಷ್ಮೀಪತಿಗಭಿಷೇಕ ಮಾಡಲು
[ವಿಶಿಷ್ಟ] ಕಿರೀಟವನು ಧರಿಸಿದ ಪಟ್ಟಾಭಿಮೂರುತಿ
ರಾಮಚಂದ್ರಗೆ ೫೧
ವಾಮಭಾಗದಿ ಸೀತೆ ಭರತ ಶತ್ರುಘ್ನ ದಕ್ಷಿಣದಲ್ಲಿ ಲಕ್ಷ್ಮಣ ವಾಯುನಂದನ
[ಕೈ ಮುಗಿದು] ಹರುಷದಿಂದಲೆ ಪಾದ ಪಿಡಿದಿಹ ರಾಮಚಂದ್ರಗೆ

 

ನುಡಿಗಳ ಮಂಗಳದ ಹಾಡು

ಮಂಗಳಂ ಶ್ರೀ ಪಾರ್ಥಸಾರಥಿಗೆ ಮಂಗಳಂ ಸಂಕರ್ಷಣನಿಗೆ
ಮಂಗಳಂ ಪ್ರದ್ಯುಮ್ನ ಅನಿರುದ್ಧ ಸಾತ್ಯಕೀಸಹ ಬಂದು ನಿಂದವಗೆ ಪ
ವಸುಧೆ ಭಾರವನಿಳುಹಲೆಂದು ದೇವಕೀ ವಸುದೇವರುದರದಿ
ಶಿಶುವಾಗಿ ಅಸುರ ಪೂತನಿಯಸುವ ನೀಗಿದ ಕುಸುಮನಾಭಗೆ ೧
ಪೂತನೀ ಮೊದಲಾದ ದುಷ್ಟಘಾತಕರ ಸಂಹರಿಸಿ ಬೇಗ
ವಾತಾಸುರನಕೊಂದು ಬಾಯೊಳುಮಾತೆಗೆ ಬ್ರಹ್ಮಾಂಡತೋರ್ದಗೆ ೨
ಒತ್ತಿ ಕಾಳಿಯ ಶಿರವನಾಗ ಸುತ್ತಿದಾ ಕಿಚ್ಚನ್ನು ನುಂಗಿ
ಎತ್ತಿ ಗೋವರ್ಧನಗಿರಿಯ ಹತ್ತಿ ಗೋಮಂತವನು ಹಾರ್ದಗೆ ೩
ಕೇಶಿಯನು ಸಂಹರಿಸಿ ದುಷ್ಟದ್ವೇಷಿಯಾದ ವೃಷಭನನು ಕೊಂದು
ದಾಸಿ ತಂದ ಗಂಧವನು ಪೂಸಿ ಮೆರೆದ ಕ್ಲೇಶನಾಶಗೆ ೪
ಬಿಲ್ಲು ಮುರಿದು ಬೀದಯಲ್ಲಿ ಎಲ್ಲರಿಗೆ ತಕ್ಕ ರೂಪ ತೋರಿ
ಮಲ್ಲರನು ಮರ್ಧಿಸುತ ಮಾವನ ಸೊಲ್ಲನಡಗಿಸಿದ ಪುಲ್ಲನಾಭಗೆ ೫
ರುಕ್ಮಿಣೀ ಸತ್ಯಭಾಮೆ ಕಾಳಂದಿ ಜಾಂಬವತಿಯು ಮೊದಲಾದ
ಲಕ್ಷ್ಮಣೆ ಸತ್ಯಭದ್ರೆ ಮಿತ್ರವಿಂದೆಯು ತಂದ ಲಕ್ಷ್ಮೀರಮಣಗೆ ೬
ಕೊಂದು ನರಕನ ಹದಿನಾರುಸಾವಿರ ಸ್ತ್ರೀಯರನು ಬೇಗ
ತಂದು ದ್ವಾರಕಿಯಲ್ಲಿ ಸತಿಸಹ ಆನಂದದಿಂದಲಿ ನಿಂದಕೃಷ್ಣಗೆ ೭
ಹೇಮದಾಭರಣವಿಟ್ಟು ರುಕ್ಮಿಣಿ ನೇಮದಿಂದಲೆ ಬೀಸುತಿರಲು
ಪ್ರೇಮಕಲಹದಿ ಬೀಳಲಾಕ್ಷಣ ವಿರಾಮವಿಲ್ಲದೆ ಎತ್ತಿದವಗೆ೮
ಎತ್ತಿ ಅಂಕದೊಳಿಟ್ಟು ಪ್ರೇಮದಿ ಅರ್ಥಿಯಿಂದಲೆ ಕುರುಳನೇವರಿಸಿ
ತತ್ವವಾಕ್ಯವನ್ನು ಹೇಳಿದ ಮುಕ್ತಿದಾಯಕ ಮುದ್ದು ಕೃಷ್ಣಗೆ ೯
ಬಾಣನ ಬಾಹುಗಳ ಕಡಿದು ತ್ರಾಣನಾದದಿ ವಿಧನನು ಕೊಂದು
ಜಾಣತನದಲಿ ಕಾಶಿಯನುಸುಟ್ಟು ಪೌಂಡ್ರಕನಪ್ರಣಾಪಹರಿಸಿದವಗೆ ೧೦
ಮಿಥುಳವಾಸಿಗೆ ಮುಕ್ತಿಯನಿತ್ತು ಸುತನ ತಂದು ವಿಪ್ರನಿಗಿತ್ತು
ಹತವಮಾಡಿ ವೃಕಾಸುರನ ಶ್ರುತಿಗಗೋಚರನಾದ ಸ್ವಾಮಿಗೆ ೧೧
ಆದಿಪರ್ವದಿ ಪಾಂಡವರನು ಬಾಧಿಸುತ್ತಿರೆ ಕೌರವಾದಿಗಳು
ಅರಗಿನಮನೆಯಿಂದ ರಕ್ಷಿಸಿ ದ್ರೌಪದಿ ಸುಭದ್ರೆಯ ಸಾಧಿಸಿತ್ತಗೆ ೧೨
ನೆತ್ತವಾಡಿ ಕೌರವರೊಡನೆ ಅರ್ಥವನು ಸೋಲಲು ಪಾಂಡವರು
ಭಕ್ತವತ್ಸಲನೆನ್ನೆ ದ್ರೌಪದಿಗೆ ವಸ್ತ್ರವಿತ್ತು ಕಾಯ್ದ ಕೃಷ್ಣಗೆ ೧೩
ವನವಾಸದಲ್ಲಿ ಪಾಂಡವರು ಉಲ್ಲಾಸದಿಂದಲೆ ಇರುತಿರಲು
ಪಾಶುಪತ ವನು ಪಾರ್ಥನಿಗೆ ಈಶನಲಿ ಕೊಡಿಸಿದ ಸರ್ವೇಶಗೆ ೧೪
ವೇಷವನ್ನು ಮರೆಸಿಕೊಂಡು ವಿರಾಟನಗರದಿ ವಾಸ ಮಾಡಲು
ಮೋಸದಿಂದಲೇ ಕೀಚಕಾದಿಗಳ ನಾಶಮಾಡಿಸಿದ ವಾಸುದೇವಗೆ ೧೫
ಸಂಧಿ ಮಾಡುವೆನೆಂದು ಹೊರಟು ಬಂದು ವಿದುರನ
ಮನೆಯಲುಂಡು ಅಂದು ದುರ್ಯೋಧನ ಕಟ್ಟುವೆನೆನ್ನೆ
ಆನಂದರೂಪವ ತೋರಿದವಗೆ ೧೬
ಗಂಗಾಸುತನು ಮೊದಲು ಯುದ್ಧದಿ ಅಂಗಜನಯ್ಯನ
ಹೊಡೆಯಲು ಅಂಗೀಕರಿಸಿ ಭಕ್ತನ ಬಾಣವ ಸರ್ವಾಂಗದಿಂದಲೇ
ತೋರಿದವಗೆ ೧೭
ಜಾಹ್ನವೀಸುತನ ಯುದ್ಧವನ್ನು ತಾಳಲಾರದೆ ಜನರ್ಧನಗೆ ಪೇಳೆ
ಜಾಣತನದಲಿ ಶಿಖಂಡಿಯನುತೋರಿ ಬಾಣಮಂಚದಿ
ಮಲಗಿಸಿದವಗೆ ೧೮
ಸುಭದ್ರೆ ಪುತ್ರನ ಯುದ್ಧದಲ್ಲಿ ಪದ್ಮವ್ಯೂಹವ ಪೋಗಿಸಲಾಗ
[ಲಗುಬಗೆಯ]ಲ್ಲಿದ ಷಡುರಥರೊಡನೆ ಕಾದಿಸಿ
ಮುದ್ದುಬಾಲಕನ ಕೊಲಿಸಿದವಗೆ ೧೯
ಸಿಂಧುರಾಜನ ಕೊಲ್ಲುವೆನೆಂದು ನರನು ಪ್ರತಿಜ್ಞೆಮಾಡಲು
ತಂದಚಕ್ರವ ರವಿಗೆತೋರಿಸಿ ಸೈಂಧವನ ಕೊಲ್ಲಿಸಿದಸ್ವಾಮಿಗೆ ೨೦
ಆಚಾರ್ಯ[ನ] ಯುದ್ಧವ ತಾಳಲಾರದೆ ಆಪದ್ಧ ಧರ್ಮಜನಲ್ಲಿ
ಪೇಳಿಸಿ ಆಚಾರ್ಯ ಶಸ್ತ್ರವಬಿಡಲು ನೋಡಿಬೇಗ
ದೃಪತಿಯತೋರಿದವಗೆ ೨೧
ತೊಟ್ಟ ಬಾಣವ ತೊಡೆನೆಂದೆನುತಲೆ ಬಿಡಲು ಸರ್ಪಾಸ್ತ್ರವನು
ಕರ್ಣನು ಘಟ್ಟಿಯಾಗಿ ರಥವನೊತ್ತಿ ದಿಟ್ಟತನದಲಿ ಶಿರವ ಕಾಯ್ದಗೆ ೨೨
ಮದ್ರರಾಜನ ಕೊಲ್ಲುವೆನೆಂದು ಸಮುದ್ರಶಯನನ ಸಹಾಯದಿಂದ
ಭದ್ರಗಜವನು ಏರೆ ಧರ್ಮಜ ಕಾಲರುದ್ರನಂದದಿ ಕೊಲಿಸಿದವಗೆ ೨೩
ಭೀಮ ದುರ್ಯೋಧನರು ಯುದ್ಧದಿ ಹೇಮದ ಗದೆಯನ್ನು ಪಿಡಿದು
ಪ್ರೇಮದಿಂದಲೆ ಕಾದುತಿರಲು ನಿರ್ನಾಮವನು ಮಾಡಿಸಿದ ಸ್ವಾಮಿಗೆ ೨೪
ಗೃಧ್ರ ಉಲೂಕದ ವೃತ್ತಿಯ ನೋಡಿ ಭದ್ರೆದ್ರೌಪದಿ ಪುತ್ರನನ್ನು
ನಿದ್ರೆಕಾಲದಿ ಕೊರಳಕೊಯ್ಯಲು ಶಿರದಲಿದ್ದ ಮಣಿಯ ತೆಗೆಸಿದವಗೆ ೨೫
ದ್ರೋಣಪುತ್ರನ ಬಾಣದಿಂದಲೆ ತ್ರಾಣಗೆಟ್ಟ ಶಿಶುವ ನೋಡಿ
ಜಾಣತನದಲಿ ಚಕ್ರವಪಿಡಿದು ಪ್ರಾಣವನು ರಕ್ಷಿಸಿದ ಸ್ವಾಮಿಗೆ ೨೬
ಏಳುಹನ್ನೊಂದು ಸೇನೆಗಳನೆಲ್ಲ ಹಾಳುಮಾಡಿ ಹದಿನೆಂಟುದಿವಸದಿ
ಖೂಳಕೌರವರನೆಲ್ಲ ಕೊಂದು ಧರ್ಮನಲಿ ರಾಜ್ಯವಾಳಿಸಿದಗೆ ೨೭
ಸೌಪ್ತಿಕದಲಿ ಪುತ್ರನ ಕೊಲ್ಲಿಸಿ ಸ್ತ್ರೀಪರ್ವದಿ ಭೂಮಿ ಭಾರವಡಗಿಸಿ
ಶಾಂತಿಪರ್ವದಿ ಧರ್ಮರಾಯಗೆ ಪಟ್ಟಾಭಿಷೇಕವ ಮಾಡಿಸಿದಗೆ ೨೮
ಮುಸಲದಲಿ ಯಾದವರನಡುಗಿಸಿ ಅನುಶಾಸನದಿ ಧರ್ಮಪೇಳಿಸಿ
ಅಶ್ವಮೇಧ ಮಹಾಪ್ರಸ್ಥ ಸ್ವರ್ಗಾರೋಹಣವ ಮಾಡಿಸಿದಗೆ ೨೯
ಅಂದುಪಾರ್ಥಗೆ ಸಾರಥ್ಯವಮಾಡಿ ಬಂಧುಗಳ ಸ್ವರ್ಗವಾಸಮಾಡಿಸಿ
ಬಂದು ಬೃಂದಾರಣ್ಯದಲ್ಲಿ ಇಂದಿರೇ ಸಹನಿಂದ ಸ್ವಾಮಿಗೆ ೩೦
ಶ್ರೀರಂಗ ರಾಮ ವರದ ನರಸಿಂಹ ಸಂಕರುಷಣನ ಸಹಿತವಾಗಿ
ಪ್ರದ್ಯುಮ್ನ ಅನಿರುದ್ಧ ಸಾತ್ಯಕಿ ರುಕ್ಮಿಣಿ ಸಹಿತಲೆ ಬಂದು ನಿಂದವಗೆ ೩೧
[ವರ] ಕಲಿಯುಗದೊಳಗುಳ್ಳ ದುಷ್ಟಕರ್ಮಿಗಳನೆಲ್ಲ ಸಲಹುವೆನೆಂದು
ಕೈರವಿಣಿತೀರದಲಿನಿಂದ ಕರುಣಿ ವೆಂಕಟಕೃಷ್ಣನಂಘ್ರಿಗೆ ಮಂಗಳಂ ೩೨

 

೨೩
ಮಂಗಳಂ ಶ್ರೀಕೃಷ್ಣವೇಣಿಗೆ
ಜಯ ಮಂಗಳಂ ಜಗದುದ್ಧಾರಳಿಗೆ ಪ
ರಂಗನ ಪಾದದಿ ಗಂಗೆ ಉದ್ಧವಿಸಲು
ಅಂಗದಿಂದಾಗಲೆ ತಾನುದಿಸಿ ಬಂದು
ಗಂಗಾಧರನ ದೇಹದಿ ಬಂದು ವೇಣಿಯ
ಸಂಗಮವಾಗಿ ಬಂದ ದೇವಿಗೆ ಅ.ಪ
ಮುನ್ನೂರು ಅರವತ್ತು ನದಿಗಳೆಲ್ಲ ಕೂಡಿ
ಕನ್ಯಾರಾಶಿಗೆ ಗುರು ಬಂದಿರಲು
ಒಂದುಸಂವತ್ಸರ ವಾಸವ ಮಾಡಲು
ಅವರ ಪಾಪವ ಕಳೆದ ಶ್ರೀ ಕೃಷ್ಣವೇಣಿಗೆ ೧
ಇಂದ್ರನ ಪಾಪವ ನದಿಗಳಿಗೆ ಬಿಡಲು
ನಿಂದಿತರಾಗಿ ದುಃಖಿಸುತ ಪೋಗಿ
ಇಂದಿರೆರಮಣನ ಆಜ್ಞೆಯಿಂದಲೆ
ಬಂದ ಕೃಷ್ಣವೇಣಿಗೆ ಗಂಗಾದೇವಿಗೆ ೨
ವೇಣುಶೂರ್ಪಗಳಲ್ಲಿ ನಾನಾ ಫಲಗಳ ಇಟ್ಟು
ನೇಮದಿಂ ಬಾಗಿನಂಗಳ ಕೊಡಲು
ಮಾನಿನಿಯರೆಲ್ಲ ಮೌನದಿಂ ಕೊಡಲು
ಮಾಂಗಲ್ಯವಿತ್ತು ಸಲುಹುವ ದೇವಿಗೆ ೩
ಕೃಷ್ಣತೀರದಲ್ಲಿದ್ದ ವೃಕ್ಷದೇವತೆಗಳು
ಋಷಿಗಳು ಪಾಷಾಣವಾಗಿರಲು
ನಕ್ರ ಮೊದಲಾದ ಜಂತುಗಳೆಲ್ಲ
ಯಕ್ಷರು ವಾಲೂಕ ಹರಿದ ಧೂಲಿಯಾಗಿಹರು ೪
ಇಂದ್ರದಂಡಕ ದಂತ್ರಿಪಾಲ ಸೋಮಕ ಧರ್ಮ
ನಂದನ ನಳ ಹರಿಶ್ಚಂದ್ರರೆಲ್ಲ
ಬಂದು ಸ್ನಾನವ ಮಾಡೆ ಅವರ ಪಾಪಗಳ ಆ
ನಂದದಿಂ ಕಳೆದ ಕೃಷ್ಣವೇಣಿಗೆ ೫
ಮಲಾಪಹಾರಿ ಭೀಮೆ ತುಂಗಭದ್ರೆಯು ಮೊ
ದಲಾದ ಮಹಾನದಿಗಳನು ಕೂಡಿ
[ಒಲವಿ]ಂದ ಸ್ನಾನಪಾನವ ಮಾಡಿದವರಿಗೆ
[ಲೋಲ] ಶ್ರೀನಿವಾಸನ ಪಾದತೋರ್ಪ ಕೃಷ್ಣವೇಣಿಗೆ ೬

 

ಶೃಂಗೇರಿ ಶಾರದೆಯ ವರ್ಣನೆ ಚೆನ್ನಾಗಿ
೨೮
ಶೃಂಗೇರಿ
ಮಂಗಳಂ ಸರಸ್ವತಿದೇವಿಗೆ ಜಯ
ಮಂಗಳಂ ಸರಸಿಜೋದ್ಭವನರಸಿಗೆ ಪ
ಸತ್ಯಲೋಕವ ಬಿಟ್ಟು ಅತ್ಯಂತಹರುಷದಿ
ಭಕ್ತರಿಗೆ ತಾನೊಲಿದು ಬಂದು
ಮತ್ತೆ ಶೃಂಗೇರಿಯ ರತ್ನದ ಪೀಠದಿ
ಪ್ರತ್ಯಕ್ಷಳಾದ ಶಾರದದೇವಿಗೆ ೧
ರತ್ನದಕಿರೀಟ ಮುತ್ತಿನಬಟ್ಟು ಮುಕುರವನಿಟ್ಟು ಮುತ್ತಿನವಾಲೆ
ಮೇಲಾದ ಕೇದಗೆ ರಾಗಟೆಹೆರಳು ಬಂಗಾರಗುಂಡುಗಳಿಟ್ಟ
ಶಾರದದೇವಿಗೆ ೨
ಕೆತ್ತನೆ ಅಡ್ಡಿಕೆ ಮುತ್ತಿನಕಟ್ಟಾಣಿ ಹಸ್ತಕಡಗ ಹರಡಿ ವಂಕಿನಿಟ್ಟು
ಮತ್ತೆ ಕಮಲ ಗಿಣಿ ಪುಸ್ತಕಕಂಠವು ಭಕ್ತರಿಗಭಯವ
ತೋರುವ ದೇವಿಗೆ ೩
ಚಂದದ ಪೀತಾಂಬರ ಕುಂದಣದೊಡ್ಯಾಣ ಅಂದುಗೆ ಗೆಜ್ಜೆ
ಪಾಡಗವನಿಟ್ಟ ಬಂದಭಕ್ತರಿಗೆ ಇಷ್ಟಾರ್ಥವ ಕೊಡುತಿರ್ಪ
ಇಂದಿರೆರಮಣನಸೊಸೆ ಶಾರದೆಗೆ ೪
ಯಾವಾಗಲು ಎನ್ನ ನಾಲಗೆಯಲಿ ನಿಂದು ನಾರಾಯಣನ
ನಾಮವ ನುಡಿಸಿ ಕಾಮಕ್ರೋಧಲೋಭಮೋಹ ಬಿಡಿಸಿ
ಶ್ರೀನಿವಾಸನಪಾದ ತೋರ್ಪ ಶಾರದೆಗೆ ೫

 

೪೦
ಪುಷ್ಯೋತ್ಸವ ಗೀತೆ
ಮಕರಪುಷ್ಯದ ಶುದ್ಧ ಷಷ್ಟಿಯಲಿ
ನಗರಶೋಧನೆ ಮಾಡಿ ಮಂತ್ರಿಯು ೧
ಮೊದಲು ದಿವಸದಿ ಧ್ವಜವನೇರಿಸಿ
ಭೇರಿಯಿಡೆ ಸುರರ ಕರೆದರು ೨
ಯಾಗಶಾಲೆಯ ಪೊಕ್ಕು ರಂಗನು
ಯಾಗಪೂರ್ತಿಯಾ ಮಾಡಿ ನಿಂದನು ೩
ಯಾತ್ರದಾನವ ಬೇಡಿ ಹರುಷದಿ
ಸೂತ್ರ ಧರಿಸಿದಾ ಧಾತ್ರಿಗೊಡೆಯನು ೪
ಕಂದರ್ಪನಾಪಿತ ದರ್ಪಣಾಗ್ರದಿ ಹ
ನ್ನೊಂದು ದಿನದಲಿ ನಿಂದ ಹರುಷದಿ ೫
ಸೂರ್ಯಚಂದ್ರರು ಹಂಸಯಾಳಿ[ಸಹಿತ]
ಏರಿ ಬಂದನು ಸಿಂಹ ಶರಭವ ೬
ಸರ್ಪವಾಹನ ಕಲ್ಪವೃಕ್ಷವು [ಗರು
ಡ] ಪಕ್ಷಿ ಹನುಮನ ಏರಿ ಬಂದನು ೭
ಏಳು ದಿವಸದಿ ಚೂರ್ಣಾಭಿಷೇಕವ
ಸೀಳೆಸಹಿತಲೆ ಗ್ರಹಿಸಿ ಮಿಂದನು ೮
ಎಂಟು ದಿವಸದಿ ಏರಿ ತೇಜಿಯ
ಬಿಟ್ಟನು ಪೇರಿ ತೇರಿನಿದಿರಲಿ ೯
ಒಂಬತ್ತು ದಿನದಲಿ ಶೃಂಗರಿಸಿದಾರು
ಸಂಭ್ರಮದಿಂದಲೆ ಬೊಂಬೆರಥವನು ೧೦
ಪುನರ್ವಸುವಿನಲ್ಲಿ ಪುರುಷೋತ್ತಮನು ರಥ
ವನೇರಲು ಪೊರಟುಬಂದನು೧೧
ಇಂದುಮುಖಿಯರು ಅಂದಣವೇರಿ
ಸಿಂಧುಶಯನನ ಹಿಂದೆಬಂದರು ೧೨
ಅಷ್ಟಪತಿಯನು ಅಷ್ಟು ಕೇಳುತಾ
ಸೃಷ್ಟಿಗೀಶ್ವರ ರಥವನೇರಿದ ೧೩
ಪತ್ನಿ ಸಹಿತಲೇ ಹತ್ತಿ ರಥವನು
ಉತ್ತರಬೀದಿಯ ಸುತ್ತಿಬಂದನು ೧೪
ಇಂದಿರಾಪತಿ ಇಳಿದು ರಥವನು
ಚಂದ್ರಪುಷ್ಕರಿಣಿಯಲಿ ತೀರ್ಥವಿತ್ತನು ೧೫
ಕರೆತಂದರು ಕರಿಯಮೇಲಿಟ್ಟು ಚ
ದುರಂಗಗೆ ನಜರು ಕೊಟ್ಟರು ೧೬
ಸಪ್ತಾವರಣವ ಶಬ್ದವಿಲ್ಲದೆ
ಸುತ್ತಿಬಂದನು ಭಕ್ತವತ್ಸಲ ೧೭
ಸುತ್ತಿ ಲಕ್ಷ್ಮೀಗೆ ಇತ್ತು ಸೇವೆಯ
ಭಕ್ತ ಭಾಷ್ಯಕಾರರಿಗೆ ಒಲಿದು ನಿಂದನು ೧೮
ತನ್ನ ಚರಿತೆಗಳನು ಕೇಳುತ
ಪನ್ನಗಶಯನನು ಪರಮ ಹರುಷದಿ ೧೯
ಬಂದ ಸುರರ ಆನಂದದಿಂದಲೇ
ಮಂದಿರಕ್ಕೆ ತಾ ಕಳುಹಿ ರಂಗನು ೨೦
ಬಿಚ್ಚಿ ಕಂಕಣ ನಿಂದ ಹರುಷದಿ
ಅರ್ಥಿಯಿಂದಲೆ ಅಚ್ಚುತಾನಂತ ೨೧
ಏರಿ ಆಳಂಪಲ್ಲಕ್ಕಿ ಹರುಷದಿ ಒ
ಯ್ಯಾರದಿಂದ ಬಂದ ರಂಗನು ೨೨
ಪುಷ್ಯರಥವನು ನೋಡಿದವರಿಗೆ
[ಮೋಕ್ಷ] ಕೊಡುವನು ಮುದ್ದುವೆಂಕಟರಂಗನು ೨೩

 

ಮಂಡ್ಯ ಜಿಲ್ಲೆಯ ಮೇಲುಕೋಟೆ
೨೪
ಮೇಲುಕೋಟೆ
ಯದುಗಿರಿವಾಸ ನಾರಾಯಣ ಯದುಗಿರಿವಾಸ ಪ
ಯದುಗಿರಿವಾಸನೆ ಬುಧಜನಪೋಷನೆ
ಮದಮುಖಶಿಕ್ಷನೆ ಪದುಮದಳಾಕ್ಷನೆ ಅ.ಪ
ವೇದವ ತಂದು ಅಜನಿಗಿತ್ತು ಭಾರವ ಪೊತ್ತು
ಕೃತಯುಗದೊಳಗೆ ವೇದಾದ್ರಿಯೆಂದೆನಿಸಿದೆ
ಚತುರ್ಮುಖನಲಿ ಪೂಜೆ ಗ್ರಹಿಸಿದ ನಾರಾಯಣ ೧
ನಿಗಮವ ತಂದು ಮನುವಿಗಿತ್ತು ಕಂಬದಿಂ ಬಂದು
ತ್ರೇತಾಯುಗದಲ್ಲಿ ನಾರಾಯಣಗಿರಿಯೆನಿಸಿದೆ
ಸನಕಾದಿಗಳ ಪೂಜೆ ಗ್ರಹಿಸಿದ ನಾರಾಯಣ ೨
ದಾನವ ಬೇಡಿ ಕ್ಷತ್ರಿಯರ ಕುಲವನೀಡಾಡಿ
ದ್ವಾಪರಯುಗದಲ್ಲಿ ಯದುಗಿರಿಯೆನಿಸಿದೆ
ರಾಮ ಕೃಷ್ಣರ ಪೂಜೆ ಗ್ರಹಿಸಿದ ನಾರಾಯಣ ೩
ಜಾನಕಿಯ ತಂದು ಅತಿದುರುಳ ಕಂಸನ ಕೊಂದು
ಕಲಿಯುಗದೊಳಗೆ ಶ್ರೀ ಯತಿಶೈಲವೆನಿಸಿದೆ
ಯತಿರಾಜರಿಗೆ ಒಲಿದ ಪತಿತಪಾವನ ಸ್ವಾಮಿ ೪
ಹಯವನುಹತ್ತಿ ನಾರಯಣ ದುಷ್ಟಕಲಿಯ ನೀನೊತ್ತಿ
ಸಪ್ತದ್ವೀಪವನೆಲ್ಲ ಸುತ್ತಿ ಬಂದೆಯೊ ಎನ್ನಪ್ಪ
ನಿನ್ನೆಣೆಕಾಣೆ ಕಂದರ್ಪನಪಿತ ಚೆಲ್ವಯದುಗಿರಿವಾಸ ೫

 

ಆರ್ತಭಾವ ಪ್ರಕಟಿಸುವ
೧೩
ಯಾಕೆ ನಿರ್ದಯ ಮಾಡಿದೆ ರಂಗಯ್ಯ
ನೀನ್ಯಾಕೆ ನಿರ್ದಯ ಮಾಡಿದೆ ಪ
ಯಾಕೆ ನಿರ್ದಯ ಈ ಲೋಕದೊಳಗೆ ಯಿದ್ದು
ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ
ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು
ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ
ದುಷ್ಟ ಇಂದ್ರಿಯ ಬಿಡದೆನ್ನ ೧
ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ
ಪಂಚಬಾಣನ ಪಿತ ಪರಮಪುರುಷ ರಂಗ ಅ
ಕಿಂಚನಾದೆ ನಿನ್ನಂಘ್ರಿಯ ಸೇರಿಸು ೨
ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ
ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ
ವಿಷ ತಿರುಗೆಸೋ ಶ್ರೀಹರಿ ೩
ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ
ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು
ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ ೪
ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಾಸೂಯೆಡಂಭ
ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು
ನಿಮಿಷವಾದರು ಮಾಡಲೀಸದು ೫
ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು
ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು
ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ ೬
ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ
ದಿಂದಿರುತಿದ್ದೆನೊ ಇಂದು ಈ ಸಂಸಾರ ಬಂಧನದೊಳಗೆ ನಾ
ಒಂದು ನಿಮಿಷ ಜೀವಿಸಲಾರೆನು ರಂಗ ೭
ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ
ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ
ಬಂದು ಕಾಯ್ದ ಗೋವಿಂದ ೮
ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ
ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ
ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು ೯
ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ
ಆಗಾ ಮತಿಯಿಲ್ಲದೆ ಮಾಡಿದ ಶತಾಪರಾಧವ ಹಿತದಿ ಕ್ಷಮಿಸಿ
ಬೇಗ ಮುಕ್ತಿಪಥವ ಪಾಲಿಸುವಳು ೧೦
ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ
ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು
ಗಾಡನೆ ಮುಕ್ತಿಯ ನೀಡೊ ವೆಂಕಟರಮಣ ೧೧

 

ರಂಗನಾಥ ಎನ್ನ ಕಣ್ಣಾಳಿದುರ ನಿಂತಿದ್ದಂತಿದೇ
೨೫
ಶ್ರೀರಂಗ
ರಂಗನಾಥ ಎನ್ನ ಕಣ್ಗಾಳೆದುರು ನಿಂತಿದಂತಿದೆ ಪ
ವಜ್ರಮಾಣಿಕದ ಕಿರೀಟವನಿಟ್ಟು
ಪ್ರಜ್ಜಲಿಸುವ ಹಣೆಯ ಕಸ್ತೂರಿಬಟ್ಟು
ವಜ್ರದ ಕರ್ಣಕುಂಡಲ ಅಳವಟ್ಟು
ಸಾಜದ ಅಧರಚಂದವಿನ್ನೆಷ್ಟು ೧
ಕಬ್ಬುಬಿಲ್ಲನು ಪೋಲ್ವ ಪುಬ್ಬಿನ ಚಂದ
ಅಬ್ಜದಂತೆಸೆವಾ ನಯನದಾನಂದ
ಕುಸುಮವ ಪೋಲುವ ನಾಸಿಕದಂದ
ಕನ್ನಡಿಯಂತೆ ಕದಪು ಹೊಳೆಯುತ್ತ ಬಂದ ೨
ಕಂಠದೊಳಗೆ ಇಟ್ಟ ಕೌಸ್ತುಭಮಣಿಯು
ಎಂಟು ಪದಕಗಳನಳವಡಿಸಿದ ಅಣಿಯು
ಗಂಟೆ ಗೆಜ್ಜೆವುಡಿದಾರದ ಫಣಿಯು
ಸಂಧ್ಯರಾಗವ ಪೋಲ್ವ ಪೀತಾಂಬರದಣಿಯು ೩
ಶಂಖಚಕ್ರವು ಗದೆ ಆಭಯಹಸ್ತಗಳು
ಪಂಕಜಮುಖಿ ಇರುವ ವಕ್ಷಸ್ಥಳವು
ಶಂಕರನಪಿತನ ಪಡೆದ ನಾಭಿದಳವು
ಶಂಕೆ ಇಲ್ಲದ ಕಣಕಾಲಿನ ಹೊಳವು ೪
ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು
ಕುಂದಣದ ಪಾಡಗವನಳವಟ್ಟು
ಚಂದದಿಂ ವಜ್ರದಾವುಗೆಯ ಮೆಟ್ಟು ತ
[ಬಂದ] ಗಂಗೆ ಪಡೆದನಖಾಪಂಕ್ತಿಗಳೆಷ್ಟು೫
ವಜ್ರಾಂಕುಶ ಧ್ವಜರೇಖೆಗಳಿಂದ
ಪದ್ಮಪಾದದ ಕೆಂಪುಗಳು ಬಹುಚಂದ
ಹೊದ್ದಿದ ಭಕ್ತರ ಪಾಪವನೆಲ್ಲ ಒದ್ದು
ಮುಕ್ತಿಯನೀವ ಮುದ್ದು ಶ್ರೀ ವೆಂಕಟಕೃಷ್ಣ ೬

 

೩೪
ಲಾಲಿ ರಂಗನ ರಾಣಿ ಪರಮಕಲ್ಯಾಣಿ
ಲಾಲಿ ಕೀರವಾಣಿ ಪಂಕಜಪಾಣಿ ಲಾಲಿ ಪ.
ಕ್ಷೀರಸಾಗರದಲಿ ಜನಿಸಿ ತಾ ಬಂದು
ವಾರಿಜಾಕ್ಷನ ವಕ್ಷಸ್ಥಳದಿ ತಾ ನಿಂದು
ಘೋರ ಪಾತಕಿಗಳನು ಪೊರೆವೆನೆಂತೆಂದು
ಶ್ರೀರಂಗಕ್ಷೇತ್ರದಲಿ ಬಂದು ತಾ ನಿಂದು ೧
ಶುದ್ಧ ಪಾಡ್ಯ ತುಲಾ ಕಾರ್ತೀಕದಲಿ
ಮುದ್ದು ಶ್ರೀರಂಗನ ರಾಣಿ ಹರುಷದಲಿ
ದಂತದ ಉಯ್ಯಾಲೆಮಂಟಪದಲ್ಲಿ
ಕಂತುಪಿತನರಸಿಯಾಡಿದಳೆ ಉಯ್ಯಾಲೆ ೨
ಕಸ್ತೂರಿಯನಿಟ್ಟು ಮುತ್ತಿನ ಮೂಗುಬಟ್ಟು
ಹಾರಪದಕಗಳು ಪೀತಾಂಬ್ರವನೆ ಉಟ್ಟು
ಕುಂದಣದ ಒಡ್ಯಾಣವನ್ನು ಅಳವಟ್ಟು
ಇಂದಿರಾದೇವಿ ಆಡಿದಳೆ ಉಯ್ಯಾಲೆ ೩
ರತ್ನದಾ ಕಿರೀಟವನ್ನು ತಾ ಧರಿಸಿ
ಕತ್ತರಿಯ ಬಾವುಲಿಯ ಕಮಲ ಸರಗಳಳವಡಿಸಿ
ಮುತ್ತು ಸುತ್ತಿದ ರತ್ನದಸುಲಿಯನು ಧರಿಸಿ ಅ
ಚ್ಚುತನರಾಣಿ ಆಡಿದಳೆ ಉಯ್ಯಾಲೆ ೪
ದೋಸೆ ವಡೆ ನೈವೇದ್ಯ ಮೀಸಲನು ಸವಿದು
ದಾಸರೆತ್ತಿದ ಪಿಷ್ಟದಾರತಿಯಲಿ ನಲಿದು
ಲೇಸಾದ ಕರ್ಪೂರ ವೀಳ್ಯವನು ಸವಿದು
ವಾಸುದೇವನರಾಣಿ ಆಡಿದಳೆ ಉಯ್ಯಾಲೆ ೫
ವರರಂಗವಂಶದವರು ವರದಿಂದ ಪಾಡೆ
ಕರುಣಾಕಟಾಕ್ಷದಿಂ ದೇವಿ ತಾ ನೋಡೆ
ಪ್ರಜೆಗಳೆಲ್ಲರು ಬಂದು ವರಗಳನು ಬೇಡೆ
ವಜ್ರದಭಯಹಸ್ತಗಳಿಂದ ವರಗಳನು ನೀಡೆ ೬
ಕರ್ತ ಶ್ರೀ ಶ್ರೀನಿವಾಸ ರಂಗನಾರಾಣಿ
ಸಪ್ತದಿನದುಯ್ಯಾಲೆಯನು ತಾ ರಚಿಸಿ
ಭಕ್ತರಿಗೆ ತೀರ್ಥ ಪ್ರಸಾದಗಳನಿತ್ತು
ಅರ್ಥಿಯಿಂ ತೆರಳಿದಳು ತನ್ನರಮನೆಗೆ ೭

 

೩೮
ಏಕಾದಶಿ ಉತ್ಸವಗೀತೆ
ಲೋಕನಾಯಕನ ಏಕಾದಶಿಯ ಉತ್ಸವಕೆ ಅ
ನೇಕ ವಿಧದಿಂದ ಪಟ್ಟಣವ ಸಿಂಗರಿಸಿ ೧
ಸುಣ್ಣ ಕೆಮ್ಮಣ್ಣಿಂದ ಕಾರಣೆಯನು ರಚಿಸಿ
ಚೀಣೆ ಚೀಣಾಂಬರದ ಮೇಲುಕಟ್ಟುಗಳು ೨
ಕದಳಿಯ ಕಂಬಗಳು ಗೊನೆಸಹಿತ ನಿಲ್ಲಿಸಿ
ತೆಂಗು ಕ್ರಮುಕದ ಫಲವ ತಂದು ಸಿಂಗರಿಸಿ ೩
ವಿಧ ವಿಧವಾದ ಪುಷ್ಪಗಳನು ತರಿಸಿ
ಮದನನಯ್ಯನ ಮಂಟಪವ ಸಿಂಗರಿಸಿ ೪
ಶುದ್ಧ ಪಾಡ್ಯದ ದಿವಸ ಮುದ್ದು ಶ್ರೀರಂಗ
ಅಧ್ಯಯನೋತ್ಸವಕೆಂದು ಪೊರಟು ತಾ ಬಂದ ೫
ಭಟ್ಟರು ವೇದಾಂತಿ ಜಯಿಸಿದರ್ಥವನು
[ನಟ್ಟ]ಮಾವಾಸೆರಾತ್ರಿಯಲಿ ಅರೆಯರ್ಪಾಡಿದರು ೬
ಸಂಧ್ಯಾರಾಗವ ಪೋಲ್ವ ಅಂಗಿಕುಲಾವಿ
ಛಂದ ಛಂದದ ಆಭರಣವನು ಧರಿಸಿ ೭
ಸಿಂಹನಡೆಯಿಂದ ಮೂರಡಿಯಲಿ ನಿಂದು
ಮಹಾಶ್ರೀವೈಷ್ಣವರಿಗೆ ಶ್ರೀಪಾದವಿತ್ತು ೮
ಮಂತ್ರಿ ಎದುರಲಿ ನಿಂತು ಮಾಲೆಗಳನಿತ್ತು
ಕಂತುಪಿತ ಬಂದ ನಾಗಿಣಿಯ ಮಂಟಪಕೆ ೯
ವಾಸುಕೀಶಯನಮಂಟಪದಲಿ ನಿಂತು
ದಾಸಿ ವರವನು ಸಲಿಸಿದ ಕ್ಲೇಶನಾಶಕನ ೧೦
ಸುರರಿಗೊಡೆಯನು ಸುಂದರಾಂಗ ತಾ ಬಂದು
[ವರ]ಸುಲ್ತಾನಿ ಎದುರಲಿ ನಲಿನಲಿದು ನಿಂದು ೧೧
ಕುಂದಣದ ಛತ್ರಿ ಚಾಮರಗಳಲುಗಾಡೆ
ಇಂದಿರಾರಮಣ ಸತಿಯಿದುರೆ ನಲಿದಾಡೆ ೧೨
ಆದಿಮೂರುತಿ ಮಂಟಪದೊಳು ನಿಂತು
ಆದಿ ಆಳ್ವಾರುಗಳಿಗೆಲ್ಲ ಆಸ್ಥಾನವಿತ್ತು ೧೩
ವಿಷ್ಣುಚಿತ್ತರು ಮಾಡಿದರ್ಥಂಗಳನ್ನು
[ವಿಶೇಷ]ದಭಿನಯದಿಂದ ಪೇಳಿದರು೧೪
ಅರೆಯರು ಬಂದು ತಾವೆದುರಲ್ಲಿ ಪಾಡೆ ಭೂ
ಸುರೋತ್ತಮರೆಲ್ಲ ಹರುಷದಿಂ ನೋಡೆ ೧೫
ಮಂಟಪದಲ್ಲಿ ನೇವೇದ್ಯವನ್ನು ಗ್ರಹಿಸಿ ವೈ
ಕುಂಠವಾಸನು ಬಂದ ವೈಯ್ಯಾರದಿಂದ೧೬
ದರ್ಪಣದೆದುರಲ್ಲಿ ನಿಂತು ಶ್ರೀರಂಗ ಕಂ
ದರ್ಪನಾಪಿತ ಬಂದ ಆನಂದದಿಂದ ೧೭
ಮದಗಜದಂತೆ ಮೆಲ್ಲಡಿಯಿಟ್ಟು ಬಂದು
ಒದಗಿ ಮೂರಡಿಯಲ್ಲಿ ತಿರಿಗುತಾ ನಿಂದು ೧೮
ಅಡಿಗೊಂದು ಉಭಯವನ ಗ್ರಹಿಸಿ ಶ್ರೀರಂಗ
ಬೆಡಗಿನಿಂದಲೆ ಬಂದ ಮಂಟಪಕೆ ಭವಭಂಗ ೧೯
ಶ್ರೀಧರನು ಮಂಟಪದಲ್ಲಿ ತಾ ನಿಂತು ಮ
ರ್ಯಾದೆಯನಿತ್ತು ಶ್ರೀವೈಷ್ಣವರಿಗೆ ೨೦
ವೈಯ್ಯಾರ ನಡೆಯಿಂದ ಒಲಿದೊಲಿದು ಬಂದು
[ನಯ] ಸೋಪಾನದೆದುರಲಿ ನಲಿನಲಿದು ನಿಂದು ೨೧
ಕರ್ಪೂರ ಪುಷ್ಪವನು ಬೆರೆಸಿ ತಾವ್ತಂದು
ಅಪ್ರಮೇಯನ ಶಿರದೊಳೆರೆಚಿದರು [ಅ]ಂದು ೨೨
ಇಂದಿರಾರಮಣ ಗುಂಭಾರತಿಯ ಗ್ರಹಿಸಿ
ಎಂದಿನಂದದಿ ತನ್ನ ಮಂದಿರಕೆ ನಡೆದ ೨೩
ಬಿದಿಗೆ ತದಿಗೆಯು ಚೌತಿ ಪಂಚಮಿಯಲ್ಲಿ
ವಿಧವಿಧದ ಆಭರಣಮನೆ ಧರಿಸಿ ೨೪
ಷಷ್ಠಿ ಸಪ್ತಮಿ ಅಷ್ಟಮಿ ನೌಮಿಯಲ್ಲಿ
ಸೃಷ್ಟಿಯೊಳಗುಳ್ಳ ಶೃಂಗಾರವನೆ ಮಾಡಿ ೨೫
ದಶಮಿಯ ದಿವಸದಲಿ ಕುಸುಮನಾಭನಿಗೆ
ಶಶಿಮುಖಿಯ ಅಲಂಕಾರವನ್ನು ಮಾಡಿದರು ೨೬
ಸುರರು ಅಸುರರು ಕೂಡಿ ಶರಧಿಯನು ಮಥಿಸೆ
ಭರದಿ ಅಮೃತವು ಬರಲು ಅಸುರರಪಹರಿಸೆ ೨೭
ಸುರರೆಲ್ಲರು ಬಂದು ಶ್ರೀಹರಿಗೆ ಇಡಲು
ಮೊರೆ ಸಾಧಿಸುವೆನೆಂದೆನುತ ವರಗಳನು ಕೊಡಲು ೨೮
ಎನಗೆ ತನಗೆಂದು ಹೋರಾಡುವ ಸಮಯದಿ
ವನಜನಾಭನು ಮೋಹಿನಿಯ ರೂಪಿನಲಿ ೨೯
ವಾರೆಗೊಂಡೆಯವನು ವೈಯ್ಯಾರದಿಂದ ಧರಿಸಿ
ತೋರಮುತ್ತಿನ ಕುಚ್ಚುಗಳ ಅಳವಡಿಸಿ ೩೦
ಹೆರಳು ರಾಗಟೆಯು ಬಂಗಾರಗೊಂಡ್ಯಗಳು
ಅರಳುಮಲ್ಲಿಗೆ ಹೂವ ದಂಡೆಗಳ ಮುಡಿದು ೩೧
ಪಾನಪಟ್ಟಿಯು ಸೂರ್ಯಚಂದ್ರಮರನಿಟ್ಟು
ಫಣೆಯಲ್ಲಿ ತಿದ್ದಿದ ಕಸ್ತೂರಿ ಬಟ್ಟು ೩೨
ಚಾಪವನು ಪೋಲುವಾ ಪುಬ್ಬಿನಾ ಮಾಯ
ಆಪ್ತಭಕ್ತರನು ಕರುಣದಿಂ ನೋಡುವ ನೋಟ ೩೩
ತಿಲಕುಸುಮವನು ಪೋಲ್ವ ನಾಸಿಕದ ಚಂದ
ಥಳಥಳಿಸೆ ಮುತ್ತಿನ ಮುಕುರದ ಅಂದ ೩೪
ಕುಂದಕುಸುಮವ ಪೋಲ್ವ ದಂತಪಂಕ್ತಿಗಳು
ಕೆಂ[ದ]ವಳಲತೆಯಂತಿರುವ ಅಧರಕಾಂತಿಗಳು ೩೫
ಚಳತುಂಬು ಬುಗುಡಿ ಬಾವುಲಿಗಳನಿಟ್ಟು
ಥಳಥಳಿಪ ವಜ್ರದ ಓಲೆ ಅಳವಟ್ಟು ೩೬
ಗಲ್ಲದಲಿ ಪೊಳೆಯುವ ದೃಷ್ಟಿಯ ಬೊಟ್ಟು ಮೊಗ
ದಲ್ಲಿ ಮಂದಹಾಸದ ಕಾಂತಿ ಇನ್ನಷ್ಟು ೩೭
ಕೊರಳೊಳಗೆ ಹಾರ ಪದಕವನು ತಾನಿಟ್ಟು
[ಉರದಿ] ದುಂಡುಮುತ್ತಿನ ದಿವ್ಯಸರಗಳಳವಟ್ಟು ೩೮
ಧರಿಸಿ ನಾನಾವಿಧ ಪುಷ್ಪ ಗಿಣಿಮಾಲೆಯನು
ಅರಳುಮಲ್ಲಿಗೆ ಹೂವಸರಗಳಲಂಕರಿಸಿ ೩೯
ಉಂಗುರ ವಂಕಿ ಬಾಜಿಯ ಬಂದುದ್ವಾರ್ಯ(?) ಕೈಕಟ್ಟು
ಮುಂಗೈ ಮುರಾರಿಯನ್ನು ಇಟ್ಟು ೪೦
ಬಿಳಿಯ ಪೀತಾಂಬರವ ನಿರಿಹಿಡಿದುಟ್ಟು
ಥಳಥಳಿಪ ಕುಂದಣದ ವಡ್ಯಾಣವಿಟ್ಟು ೪೧
ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು
ಕುಂದಣದ ಪಾಡಗವನ್ನು ಅಳವಟ್ಟು ೪೨
ಈ ರೂಪಿನಿಂದ ಅಸುರರನು ಮೋಹಿಸುತ
ಸುರರಿಗೆ ಅಮೃತವನು ಎರೆದು ಪಾಲಿಸುತ ೪೩
ಮೂರುಕಣ್ಣುಳ್ಳವನು ಮೋಹಿಸಿದ ರೂಪ
ಈ[ರೇಳು]ಲೋಕದವರಿಗೆ ತೋರಿದನು ಭೂಪ ೪೪
ಗರುಡಮಂಟಪದಲ್ಲಿ ನಿಂತು ಶ್ರೀರಂಗ
ಬೆರಗಿನಿಂದೆಲ್ಲರಿಗೆ ಬಿಡದೆ ಸೇವೆಯನಿತ್ತು ೪೫
ಆಳ್ವಾರುಗಳಿಗೆಲ್ಲ ವಸ್ತ್ರಗಂಧವನಿತ್ತು
ಅವರವರ ಆಸ್ಥಾನಕ್ಕವರ ಕಳುಹಿಸುತ ೪೬
ಬಂದು ಬಾಗಿಲ ಹಾಕಿ ಇಂದಿರಾರಮಣ
ನಿಂದ ವೆಂಕಟರಂಗ ಆನಂದದಿಂದ ೪೭

 

೪೫
ವೈಶಾಖದುತ್ಸವ ಗೀತೆ
ವರ್ಣಿಸಲಳವೆ ವೈಶಾಖದುತ್ಸವವಾ ಪ.
ವೃಷಭಸೇರಿದ ವೈಶಾಖಮಾಸದ ಶುಕ್ಲ
ಪಕ್ಷದ ಷಷ್ಠಿಯಲಿ ಕಂಕಣವ ಕಟ್ಟಿ ಪಟ್ಟದರಸಿ
ಯರ್ಸಹಿತ ದಿಟ್ಟತನದಲಿ ಪೊರಟು
ಶ್ರೇಷ್ಠವಾದ ಮಧ್ಯಮಂಟಪಕೆ ನಡೆತಂದ ೧
ಮುದ್ದುಮೊಖ ಮುಗುಳ್ನಗೆಯು ವಜ್ರದ ಕಿರೀಟವು
ತಿದ್ದಿದ ಕಸ್ತೂರಿತಿಲಕ ಹೊಳೆವ ವಜ್ರದ
ಪದಕಗಳು ನಾಲ್ಕು ಮೂರನೆ ಧರಿಸಿ ಪ್ರಜ್ವಲಿಸುತ
ಬಂದ ಅರ್ಜುನ ಸಾರಥಿಯು ೨
ಶಿರದಿ ಪುಷ್ಪವ ಧರಿಸಿ ಪರಮಪುರುಷನು ತಾನು
ಕೊರಳಲ್ಲಿ ವೈಜಯಂತಿಮಾಲೆಯನು ಧರಿಸಿ
ಕರದಲ್ಲಿ ಪರಿಮಳದ ಗಂಧವನು ಧರಿಸಿ ಪರಮ
ಪುರುಷನು ಬರುವ ಪರಿಯನೇನೆಂಬೆ ೩
ದಂತದ ಉಯ್ಯಾಲೆಮಂಟಪದಲಿ ನಿಂದು
ಕಂತುಪಿತ ಕರ್ಪೂರದಚೂರ್ಣದಲಿ ಮಿಂದು
ಅಂತರಂಗದಿ ಭಕ್ತರಿತ್ತ ನೈವೇದ್ಯ ಉಂಡ ಲಕ್ಷ್ಮೀ
ಕಾಂತನು ನಡೆತರುವ ಪರಿಯನೇನೆಂಬೆ ೪
ಮುಂದೆ ದ್ರಾವಿಡವೇದ ಹಿಂದೆ ವೇದಘೋಷಗಳು ಆ
ನಂದದಿಂ ಭಕ್ತರೆಲ್ಲ ಮುಂದೆ ಬರುತಿರಲು
ಛಂದದಿಂ ರಂಭೆಯರ ಕೋಲಾಟಗಳ ನೋಡಿ
ಇಂದಿರೆಯಿದಿರು ಮಂಟಪಕೆ ನಡೆತಂದ ೫
ಸೃಷ್ಟಿಪತಿ ರಂಗನಿಗೆ ದೃಷ್ಟಿ ತಾಕುವುದೆಂದು
ಹಿಟ್ಟಿನಾರತಿಯಿಂದ ದೃಷ್ಟಿಯನು ತೆಗೆದು
ಶ್ರೇಷ್ಠವಾದ ಕರ್ಪೂರದ ಆರತಿಯನೆತ್ತಲು
ಥಟ್ಟನೆ ತಿರುಗಿದನು ಕೃಷ್ಣಮೂರುತಿ ತಾನು ೬
ಸಪ್ತದಿನದಲಿ ರಂಗ ರತ್ನಮೌಳಿಯ ಧರಿಸಿ
ಮುತ್ತಿನಾ ಹಾರವನು ಹಾಕಿ
ರತ್ನದ ಉಡದಾರ ಉಡಗೆಜ್ಜೆಯನು ಧರಿಸಿ
ಪತ್ನಿ ಸಹಿತಲೆ ಬಂದು ಭತ್ತವನಳಿಸುವ ಸೊಬಗ ೭
ಮುತ್ತಿನ ಕಿರೀಟವಿಟ್ಟು ಮುದದಿ ನಿಲುವಂಗಿ ತೊಟ್ಟು
ರತ್ನದಾ ಹಸ್ತದಲಿ ಅಭಯವನು ಕೊಟ್ಟು
ಕತ್ತಿ ಈಟಿ ಗುರಾಣಿ ಬತ್ತಳಿಕೆ ಅಳವಟ್ಟು
ಹಸ್ತದಲಿ ಕಡಿವಾಣವಿಟ್ಟು ಬರುವ ಸೊಬಗ ೮
ಹತ್ತಿ ಹಯವನು ರಂಗ ಒಂಭತ್ತು ದಿನದಲಿ
ಚಿತ್ರಬೀದಿಯನೆಲ್ಲ ಸುತ್ತಿ ಬಂದು
ಮತ್ತೆ ಪುಷ್ಕರಣಿಯ ತೀರ್ಥದಲ್ಲಿ ಮಿಂದು
ಅರ್ತಿಯಿಂ ಬಂದ ನೀರಾಳಿಮಂಟಪಕೆ ೯
ಮಿಂದು ಮಡಿಯನೆ ವುಟ್ಟು ಛಂದದಿಂದಲೆ ರಂಗ
ಬಂದು ಕಂಕಣವನ್ನು ಬಿಚ್ಚಿ ಆ
ನಂದದಿಂ ಕ್ಷೀರ ಘೃತ ಚೂತಫಲಗಳ ಸವಿದು
ನಿಂದ ವೆಂಕಟರಂಗ [ಕರುಣಾಂತರಂಗ] ೧೦

 

ಶ್ರೀರಂಗಕ್ಷೇತ್ರ ಮಹಾತ್ಮ್ಯೆ. ಅಲ್ಲಿ ನಡೆಯುವ ವಿವಿಧ
ವಿಶೇಷ ಸಂದರ್ಭಗಳ ಹಾಡುಗಳು
೧. ಶ್ರೀರಂಗ ಮಹಾತ್ಮ್ಯಮ್
(ಶ್ರೀರಂಗದ ವಿವಿಧ ಉತ್ಸವಗಳನ್ನು ಕುರಿತ ಕೀರ್ತನೆಗಳು)
೨೯
ಶರಣು ಶರಣು ಶ್ರೀಪರಮಪುರುಷಗೆ ಶರಣು ವರಲಕ್ಷ್ಮೀದೇವಿಗೆ
ಶರಣು ಶಠಕೋಪಾದಿಮುನಿಗಳಿಗೆ ಶರಣು ಅಸ್ಮದ್ಗುರುವಿಗೆ ಪ
ಶರಣು ತುರಂಗಮುಖನಿಗೆ ಶರಣು ಹಂಸಾವತಾರಗೆ
ಶರಣು ಮತ್ಸ್ಯ ಕೂರ್ಮ ವರಾಹಗೆ ಶರಣು ನರಸಿಂಹರೂಪಿಗೆ ೧
ಶರಣು ವಾಮನ ಭಾರ್ಗವರಾಮಗೆ ಶರಣು ರಾಮ ಬಲರಾಮಗೆ
ಶರಣು ಶ್ರೀಕೃಷ್ಣ ಕಲ್ಕಿರೂಪಗೆ ಶರಣು ಕರುಣಾಳು ರಂಗಗೆ* ೨

 

ತಿರುಪತಿಯ ಶ್ರೀನಿವಾಸ ಸ್ತುತಿಗಳು
೨೬
ತಿರುಪತಿ
ಶೇಷಾದ್ರಿವಾಸ ಶ್ರೀನಿವಾಸ ಪ
ಶೇಷಾದ್ರಿವಾಸ ವಾಸುಕಿಶಯನನೆ
ಕೇಶಿಸಂಹಾರಕನೆ ಕ್ಲೇಶಭವದೂರನೆ ಅ.ಪ
ನಂಬಿದೆ ನಿನ್ನ ಪಾದವ ಬಂದು ಫಣಿಶಯನನೆ
ಅಂಬುಜನಾಭ ಪಾಪವಿನಾಶನೆ ಕೌಸ್ತು
ಭಾಭರಣನೇ ಕರುಣಾಸಾಗರನೆ ೧
ಪಾಂಡವಪಕ್ಷ ಶ್ರೀನಿವಾಸ ದೈತ್ಯಕುಲಶಿಕ್ಷ
ಯಾದವರಕ್ಷ ಯದುಕುಲಪಕ್ಷನೆ
ಸಜ್ಜನ ರಕ್ಷನೆ ಕರುಣಾಕಟಾಕ್ಷನೆ ೨
ಭವಭಯಭಂಗ ಶ್ರೀನಿವಾಸ ಕರುಣಾಪಾಂಗ
ಗರುಡತುರಂಗನೆ ನೀಲಮೇಘಾಂಗನೆ
ಸುಗ್ರೀವಸಂಗನೆ ವಾಲಿ ವಿಭಂಗನೆ ೩
ಕ್ಷೀರಾಬ್ಧಿಯಿಂದ ನಾರಾಯಣ ಭರದಿ ತಾ ಬಂದ
ಕಮಲದೊಳಗೆ ಬಂದ ರಮಣೀಸಹಿತ ತಾ ನಿಂದ
ಭಕ್ತರ ಪೊರೆಯುತ ನಿಂದ ಗೋವಿಂದ ೪
ಗರುಡವಾಹನನೆ ಶ್ರೀನಿವಾಸ ಪರಮಪಾವನನೆ
ಪಂಕಜನಯನನೆ ಪದ್ಮಿನೀ ಅರಸನೆ
ಶ್ರೀನಿವಾಸನೆ ಎನ್ನ ರಕ್ಷಿಸೊ ನೀನು ೫

 

೨೭
ಶ್ರೀನಿವಾಸ ಮೂರುತಿಗೆ ಜಯತು ಮಂಗಳಂ
ಶೇಷಾಚಲವಾಸನೀಗೆ ಶುಭಮಂಗಳಂ ಪ
ರಂಗಮಾಣಿಕದ ದಿವ್ಯ ಕುಂದಣದ ಕಿರೀಟಕ್ಕೆ
ಸುಗಂಧವಾದ ಕರ್ಪೂರ ಕಸ್ತೂರಿ ತಿಲಕಕೆ
ಕಂದರ್ಪನ ಬಿಲ್ಲಪೋಲ್ವ ಚಂದವಾದ ಪುಬ್ಬುಗಳಿಗೆ
ಮಂದಹಾಸದಿಂದ ನೋಳ್ಪ ಅರವಿಂದನಯನಗಳಿಗೆ ೧
ನಾಸಿಕಕೆ ಕರ್ಣಕುಂಡಲಕೆ ಸುವಾಸನೆವುಳ್ಳ ಅಧರಕ್ಕೆ
ಆಸುಂದರವಾದ ಶ್ರೀವತ್ಸ ಕೌಸ್ತುಭಮಣಿಗೆ
ಶ್ರೀಸತಿವೊಪ್ಪಿರುವ ವಿಸ್ತಾರವಾದ ವಕ್ಷಸ್ಥಳಕೆ ಕೈ
ಲಾಸವಾಸಿ ಪಿತನ ಪಡೆದ ನಾಭಿಯ ಕಮಲಕೆ ೨
ಶಂಖ ಚಕ್ರ ನಾಗ ಬಾಪುರಿ ತೋರ್ಪಹಸ್ತಪಾದಗಳಿಗ
ಲಂಕಾರವಾದ ಪೀತಾಂಬರದ ವಡ್ಯಾಣದಂದಕ್ಕೆ
ಅಂದುಗೆ ಗೆಜ್ಜೆಗಳಿಟ್ಟ ಅಂದವಾದ ಪಾದಗಳಿಗೆ
ಗಂಗೆಯ ಪಡೆದ ನಖ ಅಂಗುಷ್ಟದ ಬೆಳಕಿಗೆ ೩

 

ಶ್ರೀರಂಗನಾಥನ ಸ್ತುತಿ. ‘ಆರು ಜನ ಕಳ್ಳರೂ
೧೪
ಶ್ರೀರಂಗನಾಥ ನಂಬಿದೇ ನಿನ್ನ ನಾನೇ ಅನಾಥ ಪ
ಅನಾಥರಕ್ಷಕ ಎನ್ನಾ ಪ್ರೀತಿಯಿಂದಲೆ ಕಾಯೊ ಲೋ
ಕನಾಥನೆಂದು ಬಂದು ನಂಬಿದೆ ನಿನ್ನ ಅ.ಪ
ನಿಮ್ಮ ರಘುಪತಿ ನಿಮ್ಮ ವಿಭೀಷಣಗೆ ಕೊಡಲು
ತಾಮುನ್ನಾ ಶ್ರೀರಂಗಕ್ಷೇತ್ರದಿ ನೆಲಸಿ ಸಂತೋಷದಿ
ಧರ್ಮವರ್ಮಾದಿ ಚೋಳೇಂದ್ರ ಪೂಜಿತಪಾದ ೧
ಕಂದ ಪ್ರಹ್ಲಾದ ಕರೆಯೆ ಕಂಬದಿಂದಲೆ ಬೇಗ
ಬಂದು ಅವನ ತಂದೆಯನು ಸಂಹರಿಸಿದೆ
ಕಂದನ ಕಾಯ್ದ ಗೋವಿಂದ ರಕ್ಷಿಸೊ ಎನ್ನ ೨
ಅಜಮಿಳ ಕರೆಯೆ ಆಪತ್ತಿಗೆ ಬಂದು ನೀನೊದಗೆ
ನಿಜಸ್ಮರಣೆ ಮಾತ್ರದಲವನ ದುರಿತವೆಲ್ಲವ ಕಳೆದು
ನಿಜ ಪಾದವನಿತ್ತೆ ಕರುಣದಿಂದಲೆ ರಂಗ ೩
ಕಂದ ಧ್ರುವ ತಾನು ಅಡವಿಯಲಿ ನಿಂತು ತಪವನು
ಚಂದದಿ ಮಾಡಲು ಬಂದು ಸೇವೆಯನಿತ್ತೆ ಆ
ನಂದಪದವನಿತ್ತ ಸುಂದರಾಯನೆ ನೀನು ೪
ಅರ್ಕಸುತನಾಗ ನಿಮ್ಮನ್ನು ಸೇರಿ ಸೌಖ್ಯವ ಬೇಗ ಮಾಡೆ
ಸೊಕ್ಕಿದ ವಾಲಿಯನೊಂದು ಬಾಣದಿಂ ಕೊಂದು
ಮರ್ಕಟಗೆ ರಾಜ್ಯವನಿತ್ತ ರಂಗಯ್ಯ ನೀನು೫
ಮಕರಿ ಕಾಲ್ಪಿಡಿಯೆ ಮತಂಗಜ ನಿಮ್ಮನು ಕರೆಯೆ
ನಕ್ರವ ಕೊಂದು ಚಕ್ರದಿ ಅತಿವೇಗದಿಂ ಕರಿಯ
ರಕ್ಷಿಸೆ ಬಂದೆ ಕರುಣದಿಂದೆ ೬
ಭವಕೆ ನಾ ಬೆದರಿ ಬಂದೆನೊರಂಗ ಕಾಯೋ ನೀ
ಭವದಿ ಈಶಣತ್ರಯವನ್ನು ಬಿಡಿಸಿ ನಿನ್ನಯ ಪಾ
ದವಾಸವ ಮಾಡಿಸೊ ವಾಸುಕಿಶಯನನೆ ೭
ಆರುಜನ ಕಳ್ಳರು ಎನ್ನಲಿ ಸೇರಿ ಬಾಧಿಸುತಿಹರು
ದೂರಮಾಡವರನ್ನು ಸೇರಿಹೃದಯದಲ್ಲಿ
ಶ್ರೀನಿವಾಸನೆ ನಿಮ್ಮ ಪಾದದೊಳಿರಿಸೆನ್ನ ೮

 

೫೦
ಶ್ರೀರಂಗವಾಸಿಗಳು ಏನು ಸುಕೃತಿಗಳೊ ಪ
ಅರುಣ ಉದಯದೊಳೆದ್ದು ಮರುದ್ರ‍ವಧೆ ಸ್ನಾನವ ಮಾಡಿ
ಪರಮಪುರುಷನ ವಿಶ್ವರೂಪ ನೋಡಿ
ಪರವಾಸುದೇವರ ಪ್ರಣವವಿಮಾನದಿ ನೋಡಿ
ವರಭಿಗಮನ ಮೊದಲಾದ ಐದು ಪೂಜೆ ಸೇವಿಸುವರು ೧
ಶ್ರಾವಣಮಾಸದಿ [ರಂಗನಿಗೆ] ಪವಿತ್ರೋ
ತ್ಸವವು ಭಾದ್ರಪದದಲಿ ಲಕ್ಷ್ಮೀಕೊಲುವು
ಪಾರ್ವಟೆಯು ಆಶ್ವೀಜಮಾಸದಿ ಉಯ್ಯಾಲೆಯು
ತ್ಸವವು ಕಾರ್ತೀಕಮಾಸದಿ ಕೌಶಿಕ ಕೃತ್ತಿಕದೀಪಾ ೨
ಮಾರ್ಗಶಿರ ಮಾಸದಿ ಪವಿತ್ರ ಕೊ
ಟ್ಟಿಗೋತ್ಸವ ಪುಷ್ಯಮಾಸದಿ ಪುನರ್ವಸುರಥವೂ
ಮಾಘಮಾಸದಲಿ ತೆಪ್ಪೋತ್ಸವ ಸಂಭ್ರಮವು
ಫಾಲ್ಗುಣಮಾಸದಿ ಪಂಗುನೋತ್ಸವ ನೋಳ್ಪರು ೩
ಪುಷ್ಪಸೇವ[ಯು] ಚೈತ್ರಮಾಸದಿ ಚಿತ್ರರಥವು
ವೈಶಾಖಮಾಸದಿ ವಸಂತೋತ್ಸವವು
ಜೇಷ್ಠಮಾಸದಲಿ ಜೇಷ್ಠಾಭಿಷೇಕವು
ಆಷಾಢಮಾಸದಿ ಕಾವೇರಿ ವೈಭೋಗವು ೪
ದೇಶಾಂತ್ರದೊಳಗಿದ್ದು ವಾಸುದೇವನ ಸ್ಮರಿಸೆ
ನಾಶವಾಗುವುದವರ ಪಾಪರಾಶಿಗಳು ಆ
ದೇಶವಾಸಿಗಳನ್ನು ಇನ್ನೇನು ಪೇಳಲಿ [ಬಿಡದೆ]
ವಾಸುಕಿಶಯನ ವೆಂಕಟರಂಗನ ನೋಳ್ಪರು ೪

 

ಶ್ರೀರಂಗದ ಶ್ರೀರಂಗನಾಥಸ್ವಾಮಿಯ ದಿವ್ಯ
ಲಕ್ಷ್ಮೀ ಸ್ತುತಿ

ಶ್ರೀವೇದನಾಯಕೀ ಆಶ್ರಿತಜನ ಪಾಲಕೀ
ಶ್ರೀವೇದನಾಯಕೀ ಜಯ ಜಯಾ ಪ
ನೀನೇ ರಂಗನರಾಣೀ ನೀನೇ ಪಂಕಜಪಾಣೀ
ನೀನೇ ಪನ್ನಗವೇಣೀ ನೀನೇ ಮಧುರವಾಣೀ ೧
ನೀನೇ ಕಮಲವಾಸೇ ನೀನೇ ಸಜ್ಜನಪೋಷೇ
ನೀನೇ ಭವಭಯನಾಶೇ ನೀನೇ ಹರಿಸಂತೋಷೆ ೨
ನೀನೇ ಲೋಕಮಾತೆ ನೀನೇ ಜಗತ್ಪ್ರಖ್ಯಾತೇ
ನೀನೇ ಕಾಮಿತದಾತೇ ನೀನೇ ರಂಗಗೆ ಸೋತೆ ೩

 

೫೧
ಸೀತಾರಾಮ ಶ್ರೀರಘುರಾಮ ಕಾ
ಕುತ್ಸ್ಥರಾಮ ಕರುಣಾಳು ರಾಮ ಪ
ಉತ್ತಮ ಗುರುಗಳಿಗೆ ಭಕ್ತಿಯಿಂದಲೆ ಎರಗಿ
ಭಕ್ತವತ್ಸಲನ ಚರಿತ್ರೆ ಪೇಳುವೆನು ೧
ಆದಿಮೂರುತಿಮಹಿಮೆ ವೇದಂಗಳರಿಯದು ಎನ್ನ
ಭೇದಬುದ್ಧಿಗೆ ಇದು ಬೋಧವಾಗುವುದೆ ೨
ಪತಿತಪಾವನ ನಿಮ್ಮ ಸ್ತುತಿಯ ಮಾಡುವುದಕ್ಕೆ
ಮತಿಯ ಪಾಲಿಸಿ ಸದ್ಗತಿಯ ಕೊಡೆನೆಗೆ ೩
ಆದಿಸೃಷ್ಟಿಯಲಿ ಆದುದು ಈ ಆತ್ಮ
ಬಾಧೆಯ ಪಡುತಿಹುದು ಭವರೋಗದಲಿ ೪
ಜನನ ಮರಣವೆಂಬ ಜಾಡ್ಯವನು ಬಿಡಿಸಿ
ನಿನ್ನ ಚರಣದೊಳಿರಿಸೆನ್ನ ಕರುಣವಾರಿಧಿಯೆ ೫
ಹೃಷಿಕೇಶವ ಎನ್ನ ಹೃದಯದೊಳಗೆ ಇದ್ದು
ವಿಷಯಕೆ ಎನ್ನನು ವಶವ ಮಾಡುವರೇ ೬
ನಮ್ಮ ಮಾಯೆಯು ಬಲು ಉನ್ನತವಾಗಿ
ದೆ ಮನ್ನಿಸಿ ರಕ್ಷಿಸೊ ಪನ್ನಗಶಯನ ೭
ಪಾರ್ಥಸಾರಥಿ ನಿಮ್ಮ ಪಾದವ ನಂಬಿದೆ
[ಅರ್ಥಿಯಿಂ] ಪಾವನ ಮಾಡೆನ್ನ ಪರಮಪುರುಷನೆ ೮
ನಿಮ್ಮ ಪಾದದ ಭಕ್ತಿ ನಿಮ್ಮ ಪಾದದ ಸ್ತುತಿ
ನಿಮ್ಮ ಪೊಗಳುವ ಮತಿಗತಿಯ ಕೊಡೆನಗೆ ೯
ತಂದೆತಾಯಿಯು ನೀನೇ ಬಂಧುಬಳಗವು ನೀನೆ ಆ
ನಂದದಿಂದಲಿ ಕಾಯೊ ಇಂದಿರಾರಮಣ ೧೦
ಸುರರೆಲ್ಲ ಪೋಗಿ ಮೊರೆಯಿಡಲಾಗಿ
ಅರಿತನು ಭೋಗಿಶಯನ ತಾನಾಗಿ೧೧
ವಸುಧೆಯ ಭಾರವನಿಳುಹುವೆನೆಂದು
ದಶರಥನುದರದಿ ಜನಿಸಿ ತಾ ಬಂದು ೧೨
ಪಂಕಜನೇತ್ರ ಪರಮಪವಿತ್ರ
[ಸು]ಕೋಮಲಗಾತ್ರ ಕೌಸಲ್ಯಪುತ್ರ ೧೩
ಪುತ್ರರ ನೋಡಿ ಸಂತೋಷಗೂಡಿ
ಅರ್ತಿಯಿಂದಲೆ ಚೌಲ ಉಪನಯನ ಮಾಡಿ ೧೪
ನೋಡಿ ಕೌಶಿಕನ ಚಿಂತೆಯ ಮಾಡಿ
ಕೂಡಿ ಅನುಜನ ಮುನಿವರನೊಡನೆ ವೋಡಿ ೧೫
ಕರೂಶದೇಶಕೆ ಬಂದು ತಾಟಕಿಯನು ಕೊಂದು ಮ
ಹ ಸ್ತ್ರೀಯೆಂದು ಆನಂದದಿ ಗ್ರಹಿಸಿ ೧೬
ಮಾರೀಚನ ಹಾರಿಸಿ ಕ್ರತುವನ್ನು ಪಾಲಿಸಿ
ತೋರಿಸಿ ಗಂಗೆಯ ಆನಂದದಿಂ ಸ್ತುತಿಸಿ ೧೭
ಮಾಡಿ ಶಿಲೆಯ ಪಾವನ ಮಿಥಿಲಪುರಕೆ ವೋಡಿ
ನೋಡಿ ಧನುವ ಮುರಿದು ಜಾನಕಿ ಕೂಡಿ ೧೮
ಮಾರ್ಗದಲ್ಲಾಗ ಭಾರ್ಗವನ ಆಗ್ರಹವ
ಬೇಗ ಮುರಿದು ತಾ ಶೀಘ್ರದಿಂ ಬಂದ ೧೯
ಅಯೋ[ಧ್ಯೆಗೆ] ಬಂದು ಸತಿ ಸಹಿತನಿಂದು
ರಾಜ್ಯ ಗ್ರಹಿಸುವೆನೆಂದ ಮಾತೆಗಾನಂದ ೨೦
ಮಾತೆಗೆ ವಂದಿಸಿ ಸೀತೆಯನೊಡಗೊಂಡು ಸು
ಮಿತ್ರೆಜಾತನ ಸಹಿತ ರಘುನಾಥ ತಾ ಪೊರಟ ೨೧
ಪೋಗಿ ಜನಕನಿಗಾಗಿ ವನಕೆ ತಾ
ಸಾಗಿ ಗುಹನಿಂದ ಗಿರಿಯಲ್ಲಿ ಯೋಗಿ ೨೨
ಬೇಗ ಭರತನಿಗಾಗಿ ಪಾದುಕೆಗಳ ಅನು
ರಾಗದಿಂದಿತ್ತು ಯೋಗದಿಂ ಪೋಗಿ ೨೩
ಅತ್ರಿಮಹಾಮುನಿ ಇತ್ತ ಆಭರಣವ
ವಸ್ತ್ರವ ಗ್ರಹಿಸಿದ ಪುರುಷೋತ್ತಮನು ೨೪
ವಿರಾಧನ ಕೊಂದು ಹರುಷದಿಂ ಬಂದು
ಕರುಣದಿಂದ ನಿಂದು ಋಷಿಗಳಿಗಭಯವ[ನಿತ್ತು] ೨೫
ದನುಜೆನಾಸಿಕವರಿದು ಖರದೂಷಣರ ತರಿದು
ತಾನೊಲಿದು ಸತಿಗೆ ಗುಹೆಯಲ್ಲಿ ನಲಿದು೨೬
ಬಂದು ರಾವಣ ಜಾನಕಿಯ ಕದ್ದೊಯ್ಯಲಂದು
ಕೊಂದು ಮಾರೀಚನ ಗೃಧ್ರಗೆ ಮೋಕ್ಷಾವ [ನಿತ್ತು] ೨೭
ಕಬಂಧನ ಗೆಲಿದು ಪಂಪಾತೀರದಿ ನಲಿದು
ಶಬರಿಯಿತ್ತ ಫಲವನ್ನು ಸವಿದು ಹರಿಗೆ ತಾನೊಲಿದು ೨೮
ಕುಟ್ಟಿ ವಾಲಿಯ[ನು] ರವಿಜಗೆ ಪಟ್ಟವ ಕಟ್ಟಿ
ಸೃಷ್ಟಿಜಾತೆಯನರಸಲು ಕಪಿಗಳನಟ್ಟಿ ೨೯
[ಭರದಿವಾನರ] ಕೈಲಿ ಉಂಗುರವಿರಿಸೆ ಆ
ಮಾರುತಿ ಕಪಿಗಳುವೆರಸಿ ಜಾನಕಿ[ಯ]ನರಸೆ ೩೦
ಶರಧಿಯನ್ಹಾರಿ ಸೀತೆಯ ನೋಡಿ ಗುರುತನು ತೋರಿ
ದುರುಳನೊಡನ್ಹೋರಿ ಮಣಿಯ ತಂದನಾಧಾರಿ ೩೧
ವನವನ್ನು ಮುರಿದು ಅಕ್ಷನ ತರಿದು ಅಸ್ತ್ರಕ್ಕೆ ಅ
[ವನೊ]ಲಿದು ರಾವಣನೆದುರಲ್ಲಿ ನಲಿದು ೩೨
ಪುರವೆಲ್ಲ ಸುಟ್ಟು ವಿಭೀಷಣನ ಗುಟ್ಟು ಬಾಲ
ಶರಧಿಯೊಳಿಟ್ಟು ಕಪಿಗಳ ಸೇರಿದನಷ್ಟು ೩೩
ಭಂಗಿಸಿ ಮಧುವನವ ಭರದಿಂದ [ರಾಮನೆಡೆಗೆ]
ಲಂಘಿಸಿ ಮಾತೆಯ ಕಂಡೆವೆಂದೊಂದಿಸಿ ಮಣಿಯನಿರಿಸೆ ೩೪
[ವರರಾಮ] ತಾ ನೋಡಿ ವ್ಯಸ ಮಾಡಿ
ಹರಿಯನ್ನು ಕೂಡಿ ಆಲಿಂಗನೆ ಮಾಡಿ ೩೫
ಹರಿಗನ ಕೂಡಿ ಭರದಿಂದಲೋಡಿ
ಶರಧಿಯ ನೋಡಿ ಯೋಚನೆ ಮಾಡಿ ೩೬
ವರುಣನ ವಂದಿಸಿ ವಿಭೀಷಣನ ಮನ್ನಿಸಿ
ಶರಧಿಯ ಬಂಧಿಸಿ ಅಂಗದನ ಸಂಧಿಗೆ ಕಳುಹಿಸಿ ೩೭
ಇಂದ್ರಜಿತುವೊಡನೆ ಛಂದದಿಂದಲೆ ಕಾದಿ
ಬಂದ ಸರ್ಪಾಸ್ತ್ರವ ಖಗನಿಂದ ಬಿಡಿಸಿ ೩೮
ಹಂಗಿಸಿ ರಾವಣನಕಿರೀಟವ ಮೈಯೆಲ್ಲ ನಡುಗಿಸಿ
ಭಂಗಿಸಿ ತಾ ಜಗದೊಡೆಯನೆಂದೆನಿಸಿ ೩೯
ಕುಂಭನಿಕುಂಭ ಕುಂಭಕರ್ಣರ ಕೊಂದು
ಕುಂಭಿನಿಯೊಳು ನಿಂದನಂಬುಜನಾಭ ೪೦
ಪತಿತಪಾವನ [ನನುಜನ] ಪಿತಾಮಹಾಸ್ತ್ರದಿ ಕಟ್ಟೆ
ಹಿತದಿಂದೌಷಧಿ ತಂದ ಮಾರುತನ ಕುಮಾರ ೪೧
ಮಾಯೆ ಸೀತೆಯನರಿ[ಯದೆ] ಮೋಹಪಡು ತ ಉ
ಪಾಯದಿಂದಲೆ ಬಂದ ಮಾಯಾವಿಯೆಡೆಗೆ ೪೨
ತಮ್ಮ ಲಕ್ಷ್ಮಣ ತಾನು ಹೆಮ್ಮೆಯಿಂದಲೆ ಕಾದಿ
ಒಮ್ಮೆ [ಲೆ] ಅಸ್ತ್ರಗಳ ಸುಮ್ಮಾನದಿಂ ಬಿಟ್ಟು ೪೩
ಸತ್ಯಮೂರುತಿ ಪವಿತ್ರ ತಾನಾದರೆ ಅಸ್ತ್ರವೆ
ಶತ್ರುವ ಜಯಿಸಲೆಂದನಾಗ ೪೪
ಎಂದು ಬಾಣವಬಿಡೆ ಇಂದ್ರಜಿತುವ ಕೊಂದು ಆ
ನಂದದಿಂ ಲಕ್ಷ್ಮಣನ ಹೊಂದಿತಾ ಬಾಣ ೪೫
ವಿರೂಪಾಕ್ಷ ಯೂಪಾಕ್ಷ ಶೋಣಿತಾಕ್ಪನ ಕೊಂದು ಮ
ಕರಾಕ್ಷನ ಕೊಂದ ಮಹಾನುಭಾವರಾವಣನ ೪೬
ಮೂಲಬಲವನ್ನೆಲ್ಲ ಲೀಲೆಯಿಂದಲೆ ನಿ
ರ್ಮೂಲನ ಮಾಡಿ[ದ] ಲೀಲಾವಿನೋದದಿ ೪೭
ಬಂಧುಗಳೆಲ್ಲರು ಮರಣ ಪೋಗಲು ಕಂಡು
ಬಂದ ರಾವಣನು ತಾನು ಒಂದೆಮನಸಿನಲಿ ೪೮
ಯಾರು ಇಲ್ಲದಾಗ ಚೋರತನದಲ್ಲಿ
ನಾರಿಯ ಕದ್ದೊಯ್ದ ಧೀರ ಬಾರೆಂದ [ರಾಮ] ೪೯
ಅಸ್ತ್ರಕ್ಕೆ ಅಸ್ತ್ರವ ಒತ್ತಿ ಬಿಡಲು ಆಗ
ಮತ್ತೆ ಆಕಾಶವ ಮುತ್ತಿತು ಬಾಣ ೫೦
ರಾಮರಾವಣರ್ಯುದ್ಧ ನೋಡಿ ಮಹಾಸುರರೆಲ್ಲ
ಪ್ರೇಮದಿಂದಲೆ [ಹರಸಿದರು] ಆನಂದಗೂಡಿ ೫೧
ಕತ್ತರಿಸಿದ [ರಾವಣನ]ಶಿರ ಮತ್ತೆ ಬೆಳೆಯಲು ನೋಡಿ
ಚಿತ್ತದಿಂ ನೆನೆದು [ರಾಮ] ಬ್ರಹ್ಮಾಸ್ತ್ರದಿಂ ಕಡಿದ ೫೨
ದಶಕಂಠನೆಂತೆಂಬ ಹಸನಾದ ವೃಕ್ಷವ
ದಶರಥಸುತವಾತ ಬಂದು ಮುರಿಯಿತು ೫೩
ರಾವಣನೆಂತೆಂಬ ವಾರಣ[ದ ಕೋಡ] ವೀರ ರಾ
ಘವನೆಂಬ ಕೇಸರಿಯು ಮುರಿಯಿತು ೫೪
ಪುಲಸ್ತ್ಯಪುತ್ರನೆಂಬ ರಾಜವೃಷಭವನ್ನು ಇಕ್ಷ್ವಾಕು
[ಕುಲದ] ವ್ಯಾಘ್ರವು ಭಕ್ಷಿಸಿತಾಗ ೫೫
[ಆಮಹಾ] ರಾಕ್ಷಸೇಂದ್ರನೆಂಬ ಜ್ವಲಿಸುವ ಅಗ್ನಿಯ [ಶ್ರೀ]
ರಾಮಜೀಮೂತವು ಬಂದು ಕೆಡಿಸಿತು ೫೬
ಸುರರೆಲ್ಲ ಜಯವೆಂದು ಪುಷ್ಪಗಳರಳನ್ನು ಕರೆಯಲು
ಶಿರದಲ್ಲಿ ಧರಿಸಿದ [ತಾ] ಪರಮಪುರುಷನು ೫೭
ರಾಕ್ಷಸೇಂದ್ರ [ವಿಭೀಷಣ]ಗೆ ಮಾಡಿ ರಾಜ್ಯಾ
ಭಿಷೇಕವ ಮೂರ್ಜಗದಲಿ ಕೀರ್ತಿ ಪಡೆದ ರಾಘವ ೫೮
ತಂದೆಗೆರಗಿ ಅಗ್ನಿತಂದ ಸೀತೆಯ ನೋಡಿ ಆ
ನಂದದಿಂದಲೆ ಕೂಡಿನಿಂದ ರಾಘವನು ೫೯
ಅಜಭವಸುರರೆಲ್ಲ ಭುಜಗಶಯನನ ನೋಡಿ
ನಿಜವಾಗಿ ಸ್ತೋತ್ರ ಮಾಡಿದರು ನಿರ್ಮಲದಿ ೬೦
ವೇದವನಿತ್ತು ಅಜನಿಗೆ ಭಾರವ ಹೊತ್ತು
[ಆ] ಧಾರುಣಿಯ ತಂದು ಕಂಬದಿಂ ಬಂದು ೬೧
ದಾನವ ಬೇಡಿ ಕ್ಷತ್ರಿಯಕುಲವನೀಡಾಡಿ
ಜಾನಕಿಯ ತಂದು ಪ್ರಲಂಬನ ಕೊಂದು ೬೨
ಕಾಳಿಯ ಒತ್ತಿ ಕುದುರೆಯ ಹತ್ತಿ ಜಗ
ವೆಲ್ಲ ಸುತ್ತಿ ನಿಮ್ಮ ದರ್ಶನ ಮುಕ್ತಿ ೬೩
ಜಗದೋದ್ಧಾರ ದುರಿತಕ್ಕೆ ದೂರ
ಜಗಕೆ ಆಧಾರ ದುಷ್ಟರಿಗೆ ಕ್ರೂರ ೬೪
ಪೃಥುವಿಯ ಪಾಲ ದಿಟ್ಟಗೋಪಾಲ
ಸತ್ಯದಲಿ ಶೀಲ ರುಕ್ಮಿಣೀಲೋಲ ೬೫
ರಾಮರಘುಕುಲಭೀಮ ಅರಿ ನಿ
ಸ್ಸೀಮ ಭಕ್ತರಾಪ್ರೇಮ ೬೬
ವಿಶಾಲನೇತ್ರ ಪರಿಪೂರ್ಣಗಾತ್ರ [ವ
ರ] ಸೀತಾಕಳತ್ರ ಸುಗ್ರೀವಮಿತ್ರ ೬೭
[ರಾಜ] ದಶರಥ ಬಾಲ ಜಾನಕೀಲೋಲ
ಮೂರ್ಜಗಪಾಲ ಕೀರ್ತಿವಿಶಾಲ ೬೮
ಸತ್ಯಮೂರುತಿ ಪವಿತ್ರ ನೀನೆ ಜಗಕೆ
ಕರ್ತನೂ ಕಾರಣಮೂರ್ತಿಯೂ ನೀನೆ ೬೯
ನಂದನಕಂದ ಮುಕುಂದ ಗೋವಿಂದ
ಇಂದಿರಾರಮಣ ನೀನೆಂದು ಪೊಗಳಿದರು ೭೦
ಪುಷ್ಪಕವನು ಏರಿ ಲಕ್ಷ್ಮೀಸಹಿತವಾಗಿ [ರಾಮ]

 

೧೮
ಸುಮ್ಮನಿರಬಾರದೆ ಮನವೆ ನೀನು ಸುಮ್ಮನಿರಬಾರದೆ
ಹಮ್ಮುಅಹಂಕಾರ ಹೆಮ್ಮೆಗಳೆದು ಪನ್ನಗಾದ್ರಿಯ ಧ್ಯಾನಮಾಡುತ್ತ ಪ
ಚಿಂತೆಯನು ತೊರೆದು ಮನವೆ ಲಕ್ಷೀಕಾಂತನೊಳು ಬೆರೆದು
ಅಂತರಂಗದಿ ಕಂತುಜನಕನ ಸಂತತವಿಟ್ಟು ಪಂತವನು ಬಿಟ್ಟು ೧
ಆಸೆಯನು ತೊರೆದು ಮನವೆ ನೀ ಶ್ರೀಶನೋಳು ಬೆರೆದು
ಘಾಸಿಯಾಗದೆ ವಾಸುದೇವನ ದಾಸನಾಗಿ ಉಲ್ಲಾಸದಿಂದಲೆ ೨
ಯಾರು ಬೈದರೇನು ಈ ದೇಹ ಇನ್ಯಾರು ಕೊಯ್ದರೇನು
ಘೋರಮಾಯೆ ದೂರಮಾಡಿ ನೀ ವಾರಿಜಾಕ್ಷನ ಪಾದವನು ಸೇರಿ ೩
ಎಲ್ಲರಲ್ಲಿ ವಾಸುದೇವನಿಲ್ಲದಿಲ್ಲೆನುತ ಹುಲ್ಲು ಹುಳುವಿನೊಳು
ಎಲ್ಲ ಹರಿಯೆಂದು ಪುಲ್ಲನಾಭನ ಸೊಲ್ಲು ಪಾಡುತ್ತ ೪
ಸೃಷ್ಟಿಯೊಳಗಧಿಕ ಮೂಡಲಗಿರಿ ಬೆಟ್ಟದೊಳಗಿರುವ ದಿಟ್ಟವೆಂಕಟನ
ಮುಟ್ಟಿ ಭಜಿಸಿ ನೀ ಮಾಡಿದಷ್ಟು ಪಾಪವ ನಷ್ಟ ಮಾಡುತ್ತ ೫

 

ಸುಮ್ಮನಿರಬಾರದೆ ಮನವೆ
೧೮
ಸುಮ್ಮನಿರಬಾರದೆ ಮನವೆ ನೀನು ಸುಮ್ಮನಿರಬಾರದೆ
ಹಮ್ಮುಅಹಂಕಾರ ಹೆಮ್ಮೆಗಳೆದು ಪನ್ನಗಾದ್ರಿಯ ಧ್ಯಾನಮಾಡುತ್ತ ಪ
ಚಿಂತೆಯನು ತೊರೆದು ಮನವೆ ಲಕ್ಷೀಕಾಂತನೊಳು ಬೆರೆದು
ಅಂತರಂಗದಿ ಕಂತುಜನಕನ ಸಂತತವಿಟ್ಟು ಪಂತವನು ಬಿಟ್ಟು ೧
ಆಸೆಯನು ತೊರೆದು ಮನವೆ ನೀ ಶ್ರೀಶನೋಳು ಬೆರೆದು
ಘಾಸಿಯಾಗದೆ ವಾಸುದೇವನ ದಾಸನಾಗಿ ಉಲ್ಲಾಸದಿಂದಲೆ ೨
ಯಾರು ಬೈದರೇನು ಈ ದೇಹ ಇನ್ಯಾರು ಕೊಯ್ದರೇನು
ಘೋರಮಾಯೆ ದೂರಮಾಡಿ ನೀ ವಾರಿಜಾಕ್ಷನ ಪಾದವನು ಸೇರಿ ೩
ಎಲ್ಲರಲ್ಲಿ ವಾಸುದೇವನಿಲ್ಲದಿಲ್ಲೆನುತ ಹುಲ್ಲು ಹುಳುವಿನೊಳು
ಎಲ್ಲ ಹರಿಯೆಂದು ಪುಲ್ಲನಾಭನ ಸೊಲ್ಲು ಪಾಡುತ್ತ ೪
ಸೃಷ್ಟಿಯೊಳಗಧಿಕ ಮೂಡಲಗಿರಿ ಬೆಟ್ಟದೊಳಗಿರುವ ದಿಟ್ಟವೆಂಕಟನ
ಮುಟ್ಟಿ ಭಜಿಸಿ ನೀ ಮಾಡಿದಷ್ಟು ಪಾಪವ ನಷ್ಟ ಮಾಡುತ್ತ ೫

ಹಾಡಿನ ಹೆಸರು :ಸುಮ್ಮನಿರಬಾರದೆ ಮನವೆ
ಹಾಡಿದವರ ಹೆಸರು : ಪದ್ಮನಾಭ ಆರ್. ಕೆ.
ರಾಗ :ಮುಖಾರಿ
ತಾಳ : ಆದಿ ತಾಳ
ಸಂಗೀತ ನಿರ್ದೇಶಕರು :ರಮಾ ಟಿ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ