Categories
ರಚನೆಗಳು

ಲಕ್ಷ್ಮೀನಾರಾಯಣರಾಯರು

ದುರ್ಯೋಧನನು ಮದಡನಾದನು
೨೨೦
ಅಚ್ಚರಿಯೊಳಚ್ಚರಿಯು ಅಚ್ಯುತನ ನಾಮವಿದು
ತುಚ್ಛ ಬುದ್ಧಿಯ ಬಿಟ್ಟು ಎಚ್ಚೆತ್ತು ನೋಡೊ ಪ
ನಿಧಿಯು ತನ್ನೆದುರಿಗಿರೆ ವದರಿ ದುರ್ಯೋಧನನು
ಮದಡನಾದನು ಬರಿದೆ ದಳವ ಕೊಂಡು
ಸದಮಲಾತ್ಮನ ದಿವ್ಯ ಪದವನರ್ಜುನ ಪಿಡಿದು
ಮುದದಿ ಭಾಗ್ಯವ ಪಡೆದನದ್ಭುತವ ನೋಡ ೧
ಹರಿಯ ಯೋಗದ ಸಿರಿಯು ಇರುವ ನಿಜವರಿಯದೆ
ಕುರುಡನಣುಗನು ಜರಿದು ಹಾಳಾದನು
ಉರುತರದ ಭಕ್ತಿಯಿಂದೆರಗಿ ಕರಗಳ ಮುಗಿದು
ನರ ತನ್ನ ಹೆಸರನ್ನು ಸಾರ್ಥಕವಗೈದ ೨
ನೀಚಯುಕ್ತಿಗಳಿಂದ ಗೋಚರಕೆ ಬಹನಲ್ಲ
ವಾಚಾಮಗೋಚರನು ಶ್ರೀಕಾಂತನು
ಕೀಚಕಾರಿ ಪ್ರಿಯನ ಶ್ರೀ ಚರಣ ಭಕ್ತಿ ಭವ-ಮೋಚನಕೆ ಸೂಚನೆಯು ಆಚರಿಸಿ ನೋಡೋ ೩

 

೨೫೭
ಆರತಿ ಬೆಳಗಿರೆ ಶಾರದೆಗೆ | ಗುಣ
ವಾರಿಧಿ ಕರುಣಾ ನೀರಧಿಗೆ ಪ
ವಾಣಿಗೆ ಬ್ರಹ್ಮನ ರಾಣಿಗೆ ನತ ಗೀ-
ರ್ವಾಣಿಗೆ ಪುಸ್ತಕ ವೀಣಾ ಪಾಣಿಗೆ
ಜಾಣೆಗೆ ತ್ರಿಭುವನ ತ್ರಾಣೆಗೆ ಜಪಸರ ಧಾ-
ರಿಣಿಗೆ ಶುಭ ರೂಪಿಣಿಗೆ ೧
ಶಾರದ ಚಂದ್ರನ ಕಿರಣನ ಪೋಲುವ
ಚಾರು ಶುಕ್ಲಾಂಬರದಿಂದಲಿ ಪೊಳೆವ
ಹಾರ ಮಕುಟ ಪದ ನೂಪುರ ಕಂಕಣ
ಧಾರಿಣಿಗೆ ಅಘ ಹಾರಿಣಿಗೆ ೨
ಸಕಲಾಗಮಗಳನಾಂತಿಹ ಗಣಿಗೆ
ನಿಖಿಲ ಕಲೆಗಳನು ಕಾದಿಹ ಫಣಿಗೆ
ಭಕುತರ ಪಾಲಿನ ಚಿಂತಾಮಣಿಗೆ
ಶ್ರೀಕಾಂತನಾತ್ಮಜನರಗಿಣಿಗೆ ೩

 

ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ
ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ಪ
ಶ್ರಾವಣ ಶುಕ್ರವಾರದಲಿ ಸಾವಧಾನ ಮನದಿ ನಿತ್ಯ
ಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ್ಷುಮಿಗೆ ೧
ಹೆತ್ತತಾಯಿ ತನ್ನ ಶಿಶುವನರ್ಥಿಯಿಂದ ಸಲಹುವಂತೆ
ಭೃತ್ಯವರ್ಗವನ್ನು ಪೊರೆದು ನಿತ್ಯಲೋಕ ಮಾತೆಗೀಗ ೨
ಚಿಂತಿತಾರ್ಥನೀವ ಲಕ್ಷ್ಮೀಕಾಂತನುರ ಸ್ಥಳದಿ ನಿಂತು
ದಂತಿವರದನನಂತ ಗುಣಗಳನಂತಗಾಣದಿರುವಳಿಗೆ ೩

 

ನೊಂದು ಕೌಂಡಿಣ್ಯವನು ಮುಂದೋರದಲಿರೆ
೨೨೧
ಆರತಿಯನೆತ್ತಿರಿ ಅಚ್ಯುತನಿಗೆ ಅನಂತನಿಗೆ ಗೋವಿಂದನಿಗೆ ಪ
ಕಾಲಾಂತರ್ಗತ ಕಾಲ ನಿಯಾಮಕ
ಕಾಲೋತ್ಪಾದಕ ಕಾಲಾತ್ಮನಿಗೆ ೧
ನೊಂದು ಕೌಂಡಿಣ್ಯನು ಮುಂದೋರದಲಿರೆ
ಬಂದು ಕರವ ಪಿಡಿದಾನಂದವಿತ್ತಗೆ ೨
ಸಂತತ ನಡೆಯುವರಂತರ ಬಿಡಿಸುವ-
ನಂತ ಮಹಿಮ ಜಯವಂತ ಶ್ರೀಕಾಂತಗೆ ೩

 

೨೬೩
ಆರತಿಯನೆತ್ತಿರೆ ನಾರೇರೆಲ್ಲರು ಪ
ಕಾರುಣ್ಯ ಪಾಂಗಳಿಗೆ ಗೌರಿದೇವಿಗೆಅ.ಪ.
ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ
ಜೀವಕೋಟಿಗನ್ನವಿತ್ತು ಕಾವ ದೇವಿಗೆ ೧
ಸರ್ವ ಸೌಭಾಗ್ಯವೀವ ಶರ್ವಜಾಯೆಗೆ
ಪರ್ವತೇಶ ತನಯಳಿಗೆ ಗರ್ವರಹಿತೆಗೆ ೨
ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ
ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ ೩

 

೨೨೧ (ಅ)
ಆರೈದು ಸಲಹೋ ಎನ್ನ – ಶ್ರೀ ರಾಮಚಂದ್ರ ಪ
ಆರೈದು ಸಲಹೋ ಎನ್ನ ಸಾರಿದೆ ನಿನ್ನ ಚರಣ
ವಾರಿಜಯುಗಳವನ್ನು – ಶ್ರೀ ರಾಮಚಂದ್ರ ಅ.ಪ
ಕಕ್ಕಸಭವದೊಳು ದಿಕ್ಕೆಟ್ಟು ತುಕ್ಕೆ ಬಲು
ದುಃಖಿಸುತಿಹೆನು ಕೇಳು – ಶ್ರೀರಾಮಚಂದ್ರ ೧
ತಂದೆ ತಾಯಿಯು ನೀನೆ ಬಂಧು ಬಳಗ ನೀನೇ
ಎಂದೆಂದು ಗತಿ ನೀನೆ – ಶ್ರೀ ರಾಮಚಂದ್ರ ೨
ಕರುಣಾವಲೋಕನ ಬೀರದೆ ಭವ ಬನ್ನ ಈ
ಪರಿಯರೋಷವೊ ಘನ್ನ – ಶ್ರೀ ರಾಮಚಂದ್ರ ೩
ಘೋರ ತಾಪದ ನೋವ ಪಾರಗಾಣಿಸೋ ದೇವ
ದೂರನೇ ನಾ ನಿನ್ನ – ಶ್ರೀ ರಾಮಚಂದ್ರ ೪
ಯಾಕೆ ಬಾರದೋದಯ ಶ್ರೀಕಾಂತ ಎನ್ನಯ
ವಾಕುಸೋಕದೆ ಕಿವಿಯ – ಶ್ರೀರಾಮಚಂದ್ರ ೫

 

೨೨೨
ಇಂದು ಕಂಡೆನು ಹರಿಯ | ಭವಹಾರಿಯ
ಇಂದು ಕಂಡೆನು ಕಂಬದಿಂದಲಿ ಪ
ಬಂದು ದೈತ್ಯನ ಕೊಂದು ಕಂದನಿ-
ಗಂದು ಒಲಿದಾನಂದ ಸಾಂದ್ರನ
ಇಂದಿರಾ ಮಂದಿರನ ವಂದ್ಯನ ಅ.ಪ.
ಎಂದಿನಂದದಿ ಬರುತ | ಮನದಲಿ ಶ್ರೀ ಮು-
ಕುಂದ ನಾಮವ ನೆನೆಯುತ
ಮುಂದು ಮುಂದಕೆ ನಡೆಯುತ | ಆ-
ನಂದದಿ ಹೋಗುತಲಿರೆ
ಸುಂದರಿ ಶ್ರೀ ತುಲಸಿಗೊಲಿದು
ಬೃಂದೆಯನು ಕರವಿಡಿದು ಪೊಳೆದು
ಬಂದು ಗಂಡಕಿಯಿಂದ ಭಕ್ತರ
ವೃಂದ ಪೊರೆಯಲು ಪಥದಿ ನಿಂದನ ೧
ಏಸು ಜನ್ಮದ ಸುಕೃತ | ಬಂದೊದಗಿತೊ
ಶ್ರೀಶನೆನಗೆ ದೊರೆತ | ಪ್ರಭಾವದೆ
ನಾಶವೈದಿತು ದುರಿತ | ರಾಶಿಯು ಇನ್ನು
ದಾಸರಾಯರ ಕುಲದಿ ಜನಿಸಿದ
ಕೂಸೆನುತ ದೇಸಿಗರ ಸೇವೆಗೆ
ಮೀಸಲಾಗಿಸಲೋಸುಗೆನ್ನ ಮ-
ಹಾಶಯವ ಲೇಸೆನಿಸಿ ಬಂದವ ೨
ವಿಕಳ ತತಿಗೆ ಬಾಧಕ | ಈತನ ನಾಮ
ಪ್ರಕಟಿಸಲಿನ್ನು ಸುಖ | ಪಾಲಿಸುವನು
ಯುಕುತಿಗೆಂದಿಗು ನಿಲುಕ | ಸುಕೃತರಿಂದ
ಭಕುತಿ ಸೇವೆಯನೊಂದೆ ಕೊಳ್ಳುವ
ಭಕುತಿ ಮುಕುತಿಗಳನ್ನು ಕೊಡುವ
ಸಕಲ ಕಾಲದಿ ನಿಂತು ಸಲಹುವ
ಲಕುಮಿಕಾಂತನ ಸರ್ವ ಶಕ್ತನ ೩

 

೨೬೪
ಇಂದ್ರಾಕ್ಷಿ ಸಲಹೆ ಬಂದು | ಸಂರಕ್ಷಿಸಿ
ಇಂದ್ರಾಕ್ಷಿ ಸಲಹೆ ಬಂದು ಪ
ಚಂದ್ರಶೇಖರನಂಕ ಸಂಸ್ಥಿತೆ
ಚಂದ್ರ ಬಿಂಬಾನನೆ ದಯಾನ್ವಿತೆ
ಇಂದ್ರ ಮುಖ ಸುರಗಣ ಸಮರ್ಚಿತೆ
ತಂದ್ರ ಪರಿಹೃತೆ ಭಕ್ತತತಿ ಹಿತೆ ಅ.ಪ.
ಅರಿಯದ ತರಳನಮ್ಮ | ನಿನ್ನಂಘ್ರಿ ಸೇವಿಪ
ಮೆರೆವ ಭಾಗ್ಯವ ನೀಡಮ್ಮ | ಮರೆಯದಿರಮ್ಮಾ
ಶರಣ ಜನರನು ಪೊರೆವೆನೆನ್ನುತ
ಕರದಿ ಪಿಡಿದಿಹೆ ಬಿಡದೆ ಉನ್ನತ
ದರವಿಯನು ಸಿದ್ದಾನ್ನ ಪಾತ್ರೆಯ
ಕರುಣಿ ತ್ರಿಜಗಜ್ಜನನಿ ಸುಗುಣಿಯೆ ೧
ನಿತ್ಯಾನಂದಿನಿ ಮೋಹಿನಿ | ಸುಗತಿ ಪ್ರದಾಯಿನಿ
ಭೃತ್ಯಾನುಗ್ರಹ ಕಾರಿಣಿ | ಬುಧ್ಯಾಭಿಮಾನಿ
ನಿತ್ಯಮಂಗಳೆ ಭೃತ್ಯವತ್ಸಲೆ
ಸತ್ಯರೂಪಿಣಿ ಮೃತ್ಯುನಾಶಿನಿ
ನಿತ್ಯತ್ವತ್ಪದ ಭಜಿಪ ಸಂಪದ-
ವಿತ್ತು ಪಾಲಿಸೆ ಶ್ರೀ ಕಾತ್ಯಾಯಿನಿ ೨
ಭೀಮಾ ಭೈರವನಾದಿನಿ | ಕುಮಾರ ಜನನಿ
ಕಾಮನಿಗ್ರಹನ ರಾಣಿ | ವರವರ್ಣಿನಿ
ಬ್ರಾಹ್ಮಿ ವೈಷ್ಣವಿ ಬ್ರಹ್ಮಚಾರಿಣಿ
ಚಾಮುಂಡೇಶ್ವರಿ ಕೋಲರೂಪಿಣಿ
ಭ್ರಮರಿ ಶಾಕಾಂಬರಿ ನೃಸಿಂಹಿಣಿ
ಅಮಿತರೂಪಿಣಿ ಅಹಿತ ಮಾರಿಣಿ ೩
ಸರ್ವಮಂಗಳ ಮಾಂಗಲ್ಯೆ | ಸರ್ವಾರ್ಥದೆ
ಶಿವೆ ಶರ್ವನರ್ಧಾಂಗಿಯೆ | ಪರ್ವತನ ತನಯೆ
ಶರ್ವಬ್ರಹ್ಮರ ವರದಿ ಕೊಬ್ಬಿ ಸು-
ಪರ್ವರನು ಕಂಗೆಡಿಸೆ ದನುಜರು
ಸರ್ವಶಕ್ತಳೆ ಮುರಿದು ಖಳರನು
ಉರ್ವಿಭಾರವ ನಿಳುಹಿ ಪೊರೆದೌ ೪
ಅಜಿತೆ ಭದ್ರದೆ ಆನಂದೆ | ನಿನ್ನನು ಬಿಡದೆ
ಭಜಿಪರ ಪೊರೆವಳೆಂದೆ | ನಾನಿಂದು ಬಂದೆ
ಕುಜನಮರ್ಧಿನಿ ಕುಟಿಲ ಹಾರಿಣಿ
ಗಜಗಮನೆ ಗಂಭೀರೆ ಗುಣಮಣಿ
ವೃಜಿನ ಪರಿಹರೆ ವಿಘ್ನಸಂಹರೆ
ನಿಜ ಪದಾಂಬುಜ ಭಜಕನೆನಿಸಿ ೫
ಶಿವದೂತಿ ಪರಮೇಶ್ವರಿ | ರುದ್ರಾಣಿ ಚಂಡಿಕೆ
ಶಿವೆ ಭವೆ ಜ್ಞಾನೇಶ್ವರಿ | ಸೌಂದರ್ಯಲºರಿ
ಭುವನ ಮೋಹಿನಿ ದೈತ್ಯನಾಶಿನಿ
ನವಿಪ ತಾಪ ಜ್ವರ ನಿವಾರಿಣಿ
ಕವಿಭಿರೀಡಿತೆ ದೇವ ಪೂಜಿತೆ
ವಿವಿಧ ಫಲಗಳ ಒಲಿದು ಕೊಡುವಳೆ ೬
ಶೃತಿ ಸ್ರ‍ಮತಿ ಶ್ರದ್ಧೆ ಮೇಧಾ | ವಿದ್ಯಾಸರಸ್ವತಿ
ಧೃತಿ ಶಾಂತಿ ಕಾಂತಿ ವಾದಾ | ಎನಿಸುತ್ತ ಮೆರೆವ
ವಿತತ ಮಹಿಮಳೆ ವಿಶ್ವತೋಮುಖೆ
ಅತುಳ ಭುಜಬಲೆ ಭದ್ರಕಾಳಿಯೆ
ಪತಿತ ಪಾವನಿ ಸತ್ವಶಾಲಿನಿ
ಸತಿ ಶಿವಪ್ರಿಯೆ ನೀಡಿ ಸುಮತಿಯ ೭
ಅರಿದರಾಂಕುಶ ಮುಸಲ | ಮುದ್ಗರಚಾಪ
ಸರಸಿಜ ಖಡ್ಗಹಲ | ಮಾರ್ಗಣ ಪಾಶ
ಪರಶು ಘಂಟಾ ಶಕ್ತಿ ಪಾತ್ರೆಯು
ವರಗದಾಭಯ ಕರದೊಳೊಪ್ಪುತ
ದುರುಳರನು ಸಂಹರಿಸಿ ಸಂತತ
ಸುರನರೋರಗರನ್ನು ಪೊರೆಯುವ ೮
ಮಾರಿ ಮಸಣಿ ಹೆಮ್ಮಾರಿ | ಕರೆಕರೆದುಗೊಳಿಸುವ
ಕ್ರೂರ ಶಾಕಿನಿ ಡಾಕಿನಿ | ಪೂತಣಿಯೆ ಮುಖರು
ಘೋರ ರೂಪದಿ ಬಂದು ಪೋರರ
ಗಾರುಗೊಳಿಸುತ್ತಿರಲು ತವಪದ
ಸಾರಿ ನೆನೆದರೆ ತೋರಿ ಹಿಮ್ಮಡಿ
ದೂರ ಸರಿವರು ಮುಗಿದು ಕರಗಳ ೯
ತಾಪತ್ರಿತಯ ತಪ್ತರ | ಆಹ್ಲಾದಪಡಿಸಲು
ಗೋಪತಿ ಮುಖವ ತೋರ | ಕೃಪಾಂಬುನಿಧಿಯೆ
ತಾಪಸಾರಾಧಿತ ಪದಾಂಬುಜೆ
ಶ್ರೀಪತಿಯ ಸೊದರಿಯೆ ನೀ ನಿಜ-
ರೂಪುದೋರಲು ಪಾಪತಾಪ ಪ್ರ-
ಳಾಪ ಮಾಡದೆ ರಾಪುಗೈವುದೆ ೧೦
ದುರ್ಗಮ ಸಂಕಟದಿ | ಬಿದ್ದಿಹೆನಮ್ಮಾ
ನಿರ್ಗಮ ಕಾಣೆನಮ್ಮಾ | ಉದ್ಧರಿಸಮ್ಮಾ
ದುರ್ಗದಿಂತಾರಿಸುವೆ ಭಕ್ತರ
ದುರ್ಗೆ ನಾಮಾಂಕಿತದಿ ಎಂಬರು
ಗರ್ಗವಂದಿತೆ ಮುಗಿವೆ ಕರವ ಸು-
ಮಾರ್ಗ ತೋರಿಸೆ ದುರ್ಗೆ ಜನನಿಯೆ ೧೧
ಸುರಾಸುರ ಸಂಗ್ರಾಮದಿ | ಮುರವೈರಿ ದಯದಿ
ಸುರರು ಗೆಲ್ಲರು ಮುದದಿ | ಗರ್ವಿಸಲು ಭರದಿ
ಹರಿಯ ರೂಪಾಂತರದಿ ತೃಣವನು
ಧರೆಯೊಳಿರಿಸುತ ಬಲ ಪರೀಕ್ಷಿಸಿ
ಸುರರು ಜಯಿಸದೆ ಮರುಳರಾಗಲು
ಬರದೆ ಪರತತ್ವವನು ಕರುಣದಿ ೧೨
ಕಿಂಕರ ಶಂಕರಿಯೆ | ಶತ್ರು ಭಯಂಕರೆ
ಓಂಕಾರೆ ಹೂಂಕಾರೆಯೇ | ಸ್ಮಿತ ಅಟ್ಟಹಾಸೆ
ಪಂಕಜಾಂಬಕಿ ರಕ್ತನಯನ ಕ
ಳಂಕಮುಖಿ ಅತ್ಯುಗ್ರವದನೆ ನಿ
ಶ್ಯಂಕ ಬಿಂಕದಿ ಬಂದೆ ಕಾಲದಿ
ಮಂಕುಹರೆ ಸಂಕಟದೆಯೆನಿಸುವೆ ೧೩
ರಕ್ತಬೀಜಾಸುರನ | ರಕ್ತವನು ಹೀರಿದ
ಶಕ್ತಳೆಂದೆನುತ ನಿನ್ನ | ನಂಬಿದೆನು ಎನ್ನ
ಉಕ್ತಿಲಾಲಿಸಿ ಒತ್ತಿ ವಿಘ್ನವ
ಇತ್ತು ಜ್ಞಾನ ವಿರಾಗ ಭಕ್ತಿಯ
ಮುಕ್ತಪಾವನ ಮಾಡಿ ಸಂತತ
ಮುಕ್ತಿಕಾಂತನ ಸ್ಮರಣೆ ಪಾಲಿಸಿ೧೪
ಮಹಿಷನ ಸಂಹರಿಸಿ | ಮಹಿಯನ್ನು ಪಾಲಿಸಿ
ಮಹಿಸೂರೆ ನೆಲೆಯೆನಿಸಿ | ಪತಿಸಹಿತವಸಿಸಿ
ಮಹಿಪತಿಗಳಾದಿಯಲಿ ಸರ್ವರಿಂ
ಅಹರಹರ್ ಸೇವೆಯನು ಕೊಳುತ
ಮಹಿಮೆ ತೋರುತಿರುವೆ ಪ್ರತಿದಿನ
ಅಹಹ ಬಣ್ಣಿಸಲೊರೆವೆ ನರರಿಗೆ ೧೫
ಚಂಡ ಮುಂಡರ ಮರ್ದಿಸಿ | ಚಾಮುಂಡಿಯೆನಿಸಿ
ಖಂಡೆಯವನು ಝಳಪಿಸಿ | ಪುಂಡರನು ವಧಿಸಿ
ಖಂಡ ಪರುಶುವಿನಂತೆ ಅದಟರ
ರುಂಡಮಾಲೆಯ ಕೊಂಡು ಭೂತಗ-
ಳ್ಹಿಂಡು ಡಿಂಡಿಮ ಡಂಡೆಣಿಸಲು
ತಾಂಡವಾಡಿದ ಚಂಡಕಾಳಿಯೆ ೧೬
ಶುಂಭ ನಿಶುಂಭರನು | ಕುಂಭಿಣಿಗೆ ಕೆಡಹೆ
ಅಂಬರದಲಿ ಸುರರು | ಕುಂದುಭಿಯ ಹೊಡೆಯೆ
ಡೊಂಬ ಕೊಳಾಸುರನ ಸೂಕರ
ಡಿಂಬ ತಾಳುತ ಸೀಳಿ ದೈತ್ಯ ಕ-
ದಂಬವೆಲ್ಲಕೆ ಕಂಭ ಸಂಭವ
ನಿಂಬು ರೂಪವ ನಂಬಿ ತೋರಿದೆ ೧೭
ಸಕಲ ಶಕ್ತ್ಯಾತ್ಮಕಳೆ | ಭುವಿಯಲಿ ಈ ಪರಿ
ಪ್ರಕಟಳಾಗುತ ಖಳರ | ಕಟಕವನು ತರಿದು
ಭಕುತವರ್ಗಕೆ ಬಂದ ಸಂಕಟ
ನಿಕರ ಪರ್ವತ ವಜ್ರವೆನಿಸುತ
ಮುಕುರದಂದದಿ ಪೊಳೆದು ಪೊರೆಯುವೆ
ವಿಕಟನಾಮದಿ ನಿಕಟದಿರುತ ೧೮
ಜ್ಞಾನೇಚ್ಚಾ ಕ್ರಿಯ ರೂಪಳೆ | ನಿನ್ನನು ನುತಿಸಿ
ಆನತಿಸಿದವರಿಗೆ | ಪ್ರಸನ್ನಳಾಗಿ
ಮಾನ ಸತಿಸುತ ಧ್ಯಾನ ಧನಮನೆ
ಜ್ಞಾನ ಭಕ್ತಿ ವಿರಕ್ತಿ ಮುಂತವ
ದೇನು ಬೇಡಲು ಕೊಡುವೆ
ನಿನ್ನ ಸಮಾನರಾರನು ಕಾಣೆ ಜಗದೊಳು ೧೯
ಅಂಗನಾಮಣಿಯರಿಗೆ | ಮಾಂಗಲ್ಯವೃದ್ಧಿಗೆ
ಮಂಗಳಗೌರಿಯೆಂದು | ಪ್ರಸಿದ್ಧಿಗೊಂಡು
ರಂಗುಮಾಣಿಕದ್ಹಸೆಯ ಪೀಠದಿ
ಮಂಗಳದ್ರವ್ಯಗಳಿಂದೊಪ್ಪುತ
ಭೃಂಗಿ ಒಡೆಯನ ಎಡದ ತೊಡೆಯಲಿ
ಮಂಗಳೇಕ್ಷಣದಿಂದ ಕುಳಿತಿಹೆ ೨೦
ವೈದ್ಯ ಜ್ಯೋತಿಷ ಪುರಾಣ | ವೇದಾಂತ ಮುಂತಹ-
ಗಾಧ ಗ್ರಂಥಗಳನು | ನಿಜಪತಿಯ ಮುಖದಿ
ಸಾಧಿಸಿದೆ ಸಜ್ಜನರಿಗೋಸುಗ
ಬೋಧಿಸಿದೆ ಗುಹ ಗಣಪ ಮುಖರಿಗೆ
ಆದಿದೇವನ ಒಲಿಮೆ ಪಡೆಯಲು
ಹಾದಿ ತೋರಿದೆ ಹೇ ದಯಾನಿಧೆ ೨೧
ಅಷ್ಟಬಾಹುಗಳಿಂದಲಿ | ಅಷ್ಟಾಯುಧಂಗಳ
ದಿಟ್ಟತೆಯಿಂ ಧರಿಸಿ | ಅಷ್ಟಾತ್ಮನಂವೆರಸಿ
ಶಿಷ್ಟ ನಾಲ್ಮಡಿ ಕೃಷ್ಣ ಭೂಪನ
ಇಷ್ಟದೇವತೆಯಾಗಿ ನೆಟ್ಟನೆ
ಬೆಟ್ಟದಲಿ ರಂಜಿಸುವೆ ಭಕ್ತರಿಷ್ಟ ಹರಿಸುತ
ಕೊಟ್ಟಭೀಷ್ಟವ ೨೨
ಸಂತರ ನುಡಿಗಳು | ನಾನಾಂತು ನಿನ್ನಯ
ಚಿಂತಿತಾರ್ಥದ ಪದವ | ಸ್ವಾಂತದಲಿ ತಂದು
ಇಂತು ತುತಿಸಿದೆನರಿಯೆನನ್ಯಯಥ
ಪಂಥವನು ಎನ್ನಂತರಂಗವ
ನಂತು ತಿಳಿದಿಹೆ ಜನನಿ ಕೊಡು ಶ್ರೀ-
ಕಾಂತ ಭಕ್ತಿಯ ಮುಂತೆ ಕರುಣದಿ ೨೩

 

೨೨೩
ಈ ಮಾಧವ ದೇವಾದಿ ದೇವಾ ಪ
ಪ್ರೇಮದಿಂದ ಕಾವ ಶ್ರೀ ಮಹಾನುಭಾವ ಅ.ಪ.
ಯಾರು ಇಲ್ಲದೆ ಘೋರಾಂಧಕಾರದೆ
ಸೇರಿ ಸಾಗರ ಧೀರನಾಗಿದ್ದವ ೧
ಸೃಷ್ಟಿ ಸ್ಥಿತ್ಯಾದಿ ಅಷ್ಟಕರ್ತನಾದಿ
ಇಷ್ಟದಾತನೀತ ಶಿಷ್ಟ ಕೃಪಾನ್ವಿತ ೨
ಅಚ್ಯುತಾನಂದ ಸ್ವಚ್ಛಮೂರ್ತಿನಾಥ
ನೆಚ್ಚಿದವರ ಬಿಡ ಲಕ್ಷ್ಮೀಕಾಂತ ದೃಢ ೩

 

೨೨೩ (ಅ)
ಏನೆಂದು ಪೇಳಲೋ ರಾಮ ನಿನ್ನಾ
ದೀನವತ್ಸಲತೆಯ ಆಶ್ರಿತ ಪ್ರೇಮ ಪ
ಕಲ್ಲಾಗಿ ಪಥದಲ್ಲಿ ಬಿದ್ದ | ಮುನಿ
ವಲ್ಲಭೆಯನು ಸಲಹಿದ ಸುಪ್ರಸಿದ್ಧ
ಕಲ್ಲೆದೆಯವ ನಾನು ಸಿದ್ಧ | ಎನ್ನ
ಸೊಲ್ಲುಲಾಲಿಸಿ ಪೊರೆಯಯ್ಯ ಅನಿರುದ್ಧ ೧
ಪಶುಜಾತಿ ಸುಗ್ರೀವ ಮುಖರ | ನೀ
ಹಸನಾಗಿ ಪೊರೆದದ್ದು ಕೇಳಿದೆ ವಿವರ
ವಶವಲ್ಲದಿಂದ್ರಿಯನಿಕರವುಳ್ಳ
ಪಶುಪ್ರಾಯ ನಾನಯ್ಯ ರಕ್ಷಿಸೋ ಚತುರ ೨
ಚೆಂಡಾಲನಾದ ಗುಹನ | ಕೈ
ಗೊಂಡು ಕಾಪಾಡಿದೆ ಕುರುಣದಿಂದವನ
ಖಂಡಿತ ಪೇಳುವೆ ಘನ್ನ | ಕರ್ಮ
ಚೆಂಡಾಲ ನಾನು ಶ್ರೀ ಕಾಂತ ಪ್ರಸನ್ನ ೩

 

ಕ್ಷೀರೋದಧಿಯನಿತ್ತೆ ಪೋರನಿಗೆ
೨೫೮
ಓ ದೇವ ನೀನೆಂಥ ಕರುಣಾಳೊ
ಮಾದೇವ ನೀನೆಂಥ ಕರುಣಾಳೊ ಪ
ಕಾಲನ ಕಾಲಲೊದ್ದು ಬಾಲನಿಗಾಯುಷ್ಯ
ಪಾಲಿಸಿದೆ ನೀನೆಂಥ ಕರುಣಾಳೊ ೧
ಸುರೇಂದ್ರ ಪ್ರಮುಖರ ಪೊರೆಯಲು ಗರಳವ
ಕೊರಳೊಳು ಧರಿಸಿದೆ ಕರುಣಾಳು ೨
ಘೋರ ಭವಾಂಬುಧಿ ತಾರಣೋಪಾಯವ
ಬೀರಿದೆ ಜಗಕೆಲ್ಲ ಕರುಣಾಳು ೩
ಕ್ಷೀರವ ಬೇಡಲು ಕ್ಷೀರೋದಧಿಯನಿತ್ತೆ
ಪೋರನಿಗೆ ಇನ್ನೆಂಥ ಕರುಣಾಳು ೪
ಶ್ರೀಕಾಂತ ಹಿತ ಸಖ ಶ್ರೀಕಂಠ ನಿನ್ನಂಥ
ನಾ ಕಾಣೆ ಧರೆಯೊಳು ಕರುಣಿಗಳ ೫

 

ಕಮಲಾಕ್ಷಿ ತಾಯೆ ಕಾಮಿತ ದಾಯೆ
ಕೋಮಲಕಾಯೆ ನಮಿಪೆ ನಾಂ ಪೊರೆಯೆ ಪ
ಕಮಲ ಸುಗಂಧಿನಿ ಕಮಲ ಸುಪಾಣಿ
ಭಾನುಮತಿ ವಿಮಲೆ ಕಮಲೆ ಶೀಲೆ ೧
ಕರುಣ ಕಟಾಕ್ಷದಿ ನಿರುಕಿಸೆ ನೀನು
ನೀರೇರುಹ ಭವನೆ ಅಹನೆ ಕಾಣೆ ೨
ಭ್ರಕುಟಿ ವಿಲಾಸದಿ ಸಕಲರ ಕಾಯ್ವ
ಶ್ರೀಕಾಂತನ ರಮಣಿ ಸುಮಣಿ ತ್ರಾಣಿ ೩

 

೨೨೪
ಕರುಣಕೆ ಎಣೆಗಾಣೆ ಶ್ರೀಕಾಂತನ ಪ
ಧರೆಯಿರೇಳರೊಳರಸಿ ನಾ ನೋಡಲು
ಸರಿಯಾರಿಹರಿನ್ನು ಶ್ರೀಕಾಂತಗೆ ಅ.ಪ.
ಕಚ್ಚಿದ ಕಾಳಿಯ ಕೆಚ್ಚನು ಎಣಿಸದೆ
ಮೆಚ್ಚುಕೊಟ್ಟನು ವರವ ಶ್ರೀಕಾಂತನು ೧
ಬೈದ ಚೈದ್ಯನಪರಾಧವ ನೋಡದೆ
ಸೋದರದಲಿ ಇಟ್ಟನು ಶ್ರೀಕಾಂತನು ೨
ಕೃದ್ಧನಾಗಿ ಬಂದು ಒದ್ದ ಭೃಗುಮುನಿಗೆ
ಎದ್ದುಪಚರಿಸಿದನು ಶ್ರೀಕಾಂತನು ೩

 

ಅಜಸುತನಧ್ವರ ಭಜನೆಯ ಕಿಡಿಸಿದ
೨೫೯
ಕಾಪಾಡು ಎನ್ನನು ಕೃಪಣ ವತ್ಸಲ ನಿನ್ನ
ಶ್ರೀಪಾದಾರ್ಚನೆಯನಿತ್ತು ಪ
ಅಪಾರ ಜನುಮದ ಪಾಪೌಘ ಬೆನ್ನಟ್ಟಿ
ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ.
ಪತಿತ ನಾನಾದರೂ ಪತಿತ ಪಾವನ ನೀನು
ಪಶುಪತಿ ಪಾಪಹರ
ಗತಿಹೀನರಿಗೆ ನೀನೆ ಗತಿದರ್ಶಕನೆಂದು
ತುತಿಸುತ್ತಿಹುದು ವೇದತತಿ ಸಮ್ಮತವಾಗಿ ೧
ಭವಭವದಲಿ ಬಂದು ಬವಣೆಗಳಲಿ ಬೆಂದು
ಬಳಲಿದೆ ಭಕ್ತ ಬಂಧು
ಭವಹರ ನೀನೆಂಬುದನು ಭವಿಗಳಿಂ ನಿತ್ಯ
ಶ್ರವಣದಿ ಕೇಳಿ ನಿನ್ನವರವನೆನಿಸಿದೆ ೨
ಗೌರಿ ಮನೋಹರ ಗೌರಾಂಗ ಭಕ್ತರು
ದ್ಧಾರಿಯೆ ಶೂಲಧರ
ಸಾರಿದೆ ನಿನ್ನಂಘ್ರಿವಾರಿಜಯುಗಳವ
ಕಾರುಣ್ಯದಲಿ ನೋಡು ಅಭಯವ ನೀಡು ೩
ಮುಪ್ಪುರಹರ ಮುಕ್ಕಣ್ಣ ಗಂಗಾಧರ
ಮೃತ್ಯು ಮೃತ್ಯುವೆ ಶಂಕರಾ
ಸರ್ಪಭೂಷಣ ಅಪಮೃತ್ಯು ನಿವಾರಣ
ಕಪ್ಪುಗೊರಳ ಕೃತ್ತಿವಾಸ ಸುರೇಶ ೪
ಅಜ ಸಂತನಧ್ವರ ಭಜನೆಯ ಕೆಡಿಸಿದ
ವಿಜಯ ವಿಗ್ರಹ ಶರೀರ
ಸುಜನರ ಹೃದಯಾಂಬುಜದಲ್ಲಿ ಮಿನುಗುವ
ರಜದೂರ ಶ್ರೀಕಾಂತ ನಿಜಭಕ್ತ ಗುರುವರ ೫

 

೨೨೫
ಕೋಪ ಮಾಡುವರೆ – ಕೃಪಾಳು ನೀನು
ಕೋಪ ಮಾಡುವರೆ ಪ

ಕೋಪ ಮಾಡುವರೇನೋ ಸಂರ‍ಸತಿ
ಕೂಪದೊಳು ಬಿದ್ದ್ಹೊರಳುತಿಹನ
ನೀ ಪರಾಮರಿಸಿನ್ನು ಕೀರ್ತಿ ಕ-
ಲಾಪವನು ಕಾಪಾಡಿಕೊಳ್ಳದೆ ಅ.ಪ.
ನಾಥನು ನೀನು ಎಂದೆಂದಿಗೂ
ದೂತನು ನಾನು ಸಿದ್ಧಾಂತವು | ನೀತವಿದಿನ್ನು
ಕೋತಿ ಕುಣಿವುದು ಕೊರವ ಕುಣಿಸಿದ
ರೀತಿಯಲಿ ಜಗತೀತಳದಿ – ವಿ
ಖ್ಯಾತಿಯಲ್ಲವೆ ಮಾತು ಪುಸಿಯೇ
ನೀ ತಿಳಿದು ಕರುಣಿಸದೆ ಬರಿದೆ ೧
ಅರಿತವ ನೀನು – ಷಡ್ವರ್ಗದಿ
ಬೆರತವ ನಾನು – ಚರಣಂಗಳಿಗೆರಗುವೆನಿನ್ನು
ಅರಿತು ನೆನೆಯೆ ಪ್ರಪನ್ನರೊಮ್ಮೆಗೆ
ಎರವು ಮಾಡದೆ ಪೊರೆವೆನೆಂಬುವ
ಬಿರುದನುಳಿದು ಕರುಣವಿಲ್ಲದೆ
ಮರೆಯ ಹೊಕ್ಕವರೊಡನೆ ಕೆರಳಿ ೨
ಏನಾದರೇನು – ನೀನಲ್ಲದೆ
ಕಾಣೆ ಮತ್ತೇನು – ಕೊಲ್ಲು ಕಾಯಿ ನಾನು ನಿನ್ನವನು
ಪ್ರಾಣ ಸತಿಸುತ ದ್ರವ್ಯ ಮಾನಪ-
ಮಾನ ಅಭಿಮಾನಗಳು ನಿನ್ನವು
ದೀನ ಜನ ಮಂದಾರ ಗುಣಗಳ
ಪೂರ್ಣ ಲಕ್ಷ್ಮೀಕಾಂತ ಪ್ರಭುವೆ ೩

 

೨೬೯
ಗುರು ಪುರಂದರರಾಯ ದುರಿತ ತಿಮಿರಕೆ ಸೂರ್ಯ
ಶರಣ ಜನ ಭಾಗ್ಯೋದಯ ಪ
ನರಹರಿಯ ದಾಸಾರ್ಯ ಮರುತಮತ ಪರಿಚರ್ಯ
ಶಿರಬಾಗಿ ಮುಗಿವೆ ಕೈಯ್ಯ ಅ.ಪ.
ಘೋರತರ ಸಂಸಾರ ಸಾರತರವೆಂದರಿದು
ಪಾರಮಾರ್ಥಿಕವ ತೊರೆದು
ಕ್ರೂರ ಕರ್ಮದಿ ನಿಂದು ಭೂರಿ ನರಕದಿ ಬೆಂದು
ಗಾರಾಗಿ ಪೋಪರಂದು
ನಾರದರೆ ನೀವ್ ಬಂದು ನಾರಾಯಣಾ ಎಂದು
ಚೀರಿದಾ ಧ್ವನಿಗೆ ಅಂದು
ಘೋರ ಪಾತಕವೆಲ್ಲ ದೂರಾಗಿ ಸ್ವರ್ಗವನು
ಸೇರಿ ಸುಖಿಸಿದರು ಎಂದು ೧
ಸರಸಿಜಾಕ್ಷನ ಸ್ತುತಿಸಿ ವರ ಪಡೆದು ಧರಣಿಯೊಳು
ಮೆರೆವ ಕನ್ನಡ ದೇಶದಿ
ಸಿರಿಯಿಂದಲೊಪ್ಪುತಿಹ ಪುರಂದರಗಡದೊಳಗೆ
ಇರುವ ಭೂಸುರ ವಂಶದಿ
ಹಿರಿಯ ಸಾವ್ಕಾರ ವರದಪ್ಪನಾ ಸತಿಯ
ವರಗರ್ಭದಲಿ ಜನಿಸಿದಿ
ನರರಂತೆ ಚರಿಸುತ್ತ ಲೌಕಿಕೆ ಮರುಳಾಗಿ
ಸರ್ವಭಾಗ್ಯವ ಗಳಿಸಿದಿ ೨
ಚಿನಿವಾರ ವ್ಯಾಪಾರದನುವರಿತು ನವಕೋಟಿ
ಧನಕಧಿಪನೆಂದೆನಿಸುತ
ಧನಕನಕ ವಸ್ತು ವಾಹನನಿಚಯ ಸಂಗ್ರಹದಿ
ತನುಮನಂಗಳ ಶ್ರಮಿಸುತ
ಕನಸಿಲಾದರು ದಾನಧರ್ಮಗಳ ನೆನೆಯದೆಲೆ
ದಿನಮಾನಗಳ ಕಳೆಯುತ
ಇನಿತು ಮಾಯೆಗೆ ಸಿಲುಕಿ ತನ್ನ ಮರೆದಿರಲಾಗ
ಘನ ಮಹಿಮ ಬಂದ ನಗುತ ೩
ಅಂದು ತಾನೊಲಿದಿತ್ತ ಚೆಂದದಾ ವರಗಳನು
ಇಂದು ಸಲಿಸುವೆನು ಎಂದು
ಬಂದು ಬ್ರಾಹ್ಮಣ ರೂಪದಿಂದ ನಿಮ್ಮನು ಹರಿಸಿ
ಕಂದನಿಗೆ ಮುಂಜಿಯೆಂದು
ಇಂದಿರಾಪತಿ ತಾನು ಮಂದ ಭಾಗ್ಯನ ತೆರದಿ
ಪೊಂದಿ ಯಾಚಿಸಲು ನಿಂದು
ಒಂದು ದುಡ್ಡನ್ನು ಲೋಭದಿಂ ದೆಸೆಯಲದನುಳಿದು
ಮುಂದರಿಯದ ಕರುಣ ಸಿಂಧು ೪
ಅತ್ತಣಿಂ ಶ್ರೀನಿಧಿಯು ಮತ್ತೆ ಮನೆಯೊಳು ನಿಮ್ಮ
ಪತ್ನಿಯನು ಯಾಚಿಸಿದನು
ಉತ್ತಮ ಪತಿವ್ರತೆಯೆ ಪುತ್ರನುಪನಯವೆಂದು
ಇತ್ತ ಬಂದಿಹೆನೆಂದನು
ಚಿತ್ತದೊಲ್ಲಭನ ಸಮ್ಮತಿಯಿಲ್ಲದೆಲೆ ನಾ
ನಿತ್ತು ಕಳುಹೆನು ಏನನೂ
ಅತ್ತ ಗಮಿಸಿರಿ ಎನಲು ಹೆತ್ತತಾಯ್ ನಿನಗಿತ್ತ
ನತ್ತನ್ನು ಕೊಡು ಎಂದನು ೫
ನಾಗಾರಿವಾಹನನ ನುಡಿಯು ಮನಸಿಗೆ ಹಿಡಿಯೆ
ಮೂಗುತಿಯ ತೆಗೆದಿತ್ತಳು
ಭಾಗ್ಯವಂತಳೆ ನಿನಗೆ ಲೇಸಾಗಲೆಂದ್ಹರಿಸಿ
ಸಾಗಿ ಬಂದನು ಇತ್ತಲು
ಹೋಗು ಹೋಗೆಲೊ ಮತ್ತೆ ನೀನೇಕೆ ಬಂದೆನಲು
ಮೂಗುತಿಯ ಕ್ರಯಕೆ ಕೊಡಲು
ಈಗ ಬಂದಿಹೆನೆಂದು ನಿಮಗದನು ತೋರಲು
ಹೇಗೆ ಬಂದಿತು ಎನ್ನಲು ೬
ಮನಕೆ ಸಂಶಯ ಮೂಡಿ ಚಿಂತಿಸುತಿರೆ ನೋಡಿ
ವನಜನಾಭನು ಪೇಳ್ದನು
ನನಗೀಗ ಧನಬೇಡ ನಿನ್ನಲ್ಲಿಯೇ ಇರಲಿ
ಅನುವರಿತು ಬಹೆನೆಂದನು
ಸನುಮತಿಸಿ ವಿಪ್ರನನು ಸಂತೈಸಿ ಪೊರಮಡಿಸಿ
ನಿನಗೆ ನಾಮವನಿಡುವೆನು
ಎನುತ ಹರುಷದಿ ನಗುತ ಮನೆಗೆ ಬರುತಲೆ ಕಂಡೆ
ವನಿತೆಯಾ ಬರಿ ಮೂಗನು ೭
ಮುತ್ತಿನಾ ಮೂಗುತಿಯು ಎತ್ತ ಹೋಯಿತು ಎನಲು
ಮುತ್ತೈದೆ ಮನದಿ ನೊಂದು
ಮತ್ತೆ ಮುರಿಯಿತು ಎಂದು ತತ್ತರಿಸುತಿರೆ ಕಂಡು
ಇತ್ತ ತಾರೆನಲು ನಿಂದು
ಎತ್ತ ಪೋದನೊ ವಿಪ್ರ ಮತ್ತೇನು ಮಾಡುವರೊ
ಕತ್ತಲೆಯು ಮುತ್ತಿ ತಿಂದು
ಭಕ್ತವತ್ಸಲ ನಿಂಗೆ ತೆತ್ತರೀತನುವನ್ನು
ಕುತ್ತು ಪಾರಾಹುದೆಂದು ೮
ತರುವೆನೀಗಲೆ ಎಂದು ತೆರಳಿ ವಿಷವನೆ ಅರೆದು
ಕರದಿ ಬಟ್ಟಲನು ಹಿಡಿದು
ಹರಣದಾಸೆಯ ತೊರೆದು ಸಿರಿವರನ ಪದನೆನೆದು
ಕುಡಿಯುವನಿತರೊಳು ತಿಳಿದು
ಕರುಣದಿಂ ಮೂಗುತಿಯ ಗರಳದಲು ಕೆಡಹಲಾ
ತರುಣಿ ಮಣಿ ಹರುಷದಳೆದು
ಪರಮ ಸಂಭ್ರಮದಿಂದ ಕೊಡಲದನು ನೀವ್ ಕೊಂಡು
ಭರದಿ ಅಂಗಡಿಗೆ ಬಂದು ೯
ಬೀಗ ಮುದ್ರೆಯ ತೆಗೆದು ನೋಡೆ ಭೂಸುರನಿತ್ತ
ಮೂಗುತಿಯು ಕಾಣದಿರಲು
ಹೇಗೆ ಹೋಯಿತು ಎಂದು ಮನದೊಳಚ್ಚರಿಗೊಂಡು
ಬೇಗನೆ ಮನೆಗೆ ಬರಲು
ಕೂಗಿ ಪತ್ನಿಯ ಕರೆದು ಮೂಗುತಿಯು ಬಂದ ಬಗೆ
ಹೇಗೆಂದು ತಿಳಿಸದಿರಲು
ನೀಗುವೆನು ತನುವನೆಂದು ಬೆದರಿಸಲು ಸಾಧ್ವಿಯಾ
ಬಾಗಿ ವಂದಿಸಿ ನುಡಿದಳು ೧೦
ವೃದ್ಧ ಬ್ರಾಹ್ಮಣನಾಗಿ ಹೆದ್ದೈವನೇ ಬಂದು
ಪೊದ್ದಿಯಾಚಿಸಲು ಜರಿದೆ
ಲುಬ್ಧನಾಗತಿಶಯದಿ ಬದ್ಧನಾದೆನು ದ್ರವ್ಯ
ವೃದ್ಧಿಗೋಸುಗವೆ ಬರಿದೆ
ಇದ್ದುದಕೆ ಫಲವೇನು ಸದ್ಧರ್ಮದಲಿ ಕೊಡದೆ
ಉದ್ಧಾರವಿಲ್ಲೆಂದು ತಿಳಿದೆ
ಶುದ್ಧ ಭಾವದಿ ಹರಿಯ ಪದ್ಮಪಾದವ ನೆನೆದು
ಹೆದ್ದಾರಿ ಹಿಡಿದು ನಡೆದೆ ೧೧
ಶಿಷ್ಟ ಬ್ರಾಹ್ಮಣರು ನೆಂಟರಿಷ್ಟ ಮಿತ್ರರಿಗೆ ವಿ-
ಶಿಷ್ಟವನು ದಾನಗೈದು
ನಿಷ್ಠೆಯಿಂ ಮಡದಿ ಮಕ್ಕಳನ್ನೊಡಗೊಂಡು
ವಿಠ್ಠಲನ ಪುರಕೆ ನಡೆದು
ಕಷ್ಟ ನಿಷ್ಠುರ ಸಹಿಸಿ ಕೃಷ್ಣನಂಘ್ರಿಯ ಭಜಿಸಿ
ಇಷ್ಟಾರ್ಥ ಸಿದ್ಧಿಗೈದು
ನೆಟ್ಟನೇ ಹಂಪೆ ಪಟ್ಟಣದಿ ವ್ಯಾಸಮುನಿ
ಶ್ರೇಷ್ಠರಿಂದುಪದೇಶ ಪಡೆದು ೧೨
ಮಧ್ವಮತ ಸಿದ್ಧಾಂತ ಪದ್ಧತಿಯನುದ್ಧರಿಸಿ
ಗದ್ಯಪದ್ಯಗಳಿಂದಲಿ
ಮಧ್ವಪತಿ ಪದಪದ್ಮ ಹೃದ್ಯದೊಳು ನೆನೆನೆನೆದು
ಮುದ್ದಾಗಿ ವರ್ಣಿಸುತಲಿ
ಮದ್ದಳೆಯ ತಾಳ ವೀಣೆಗಳ ಗತಿಹಿಡಿದು
ಶುದ್ಧರಾಗಗಳಿಂದಲಿ
ಉದ್ಧವನ ಸಖನೊಲಿದು ತದ್ಧಿಮಿತ ಧಿಮಿಕೆಂದು
ಪೊದ್ದಿ ಕುಣಿಯುವ ತೆರದಲಿ ೧೩
ಈರೆರೆಡು ಲಕ್ಷಗಳ ಮೇಲೆ ಎಪ್ಪತ್ತೈದು ಸಾ-
ವಿರ ಗ್ರಂಥ ರಚಿಸಿ
ಈರೆರೆಡು ದಿಕ್ಕಿನಲಿ ಚರಿಸಿ ತೀರ್ಥಕ್ಷೇತ್ರ
ಸಾರ ಮಹಿಮೆಗಳ ತುತಿಸಿ
ಶೌರಿದಿನದಲಿ ಮಾಳ್ಪ ವ್ರತನೇಮ ಉಪವಾಸ
ಪಾರಣೆಯ ವಿಧಿಯ ತಿಳಿಸಿ
ತಾರತಮ್ಯವು ಪಂಚ ಭೇದಗಳು ಸ್ಥಿರವೆಂದು
ಸಾರಿ ಡಂಗುರವ ಹೊಯಿಸಿ ೧೪
ತರುಣಿ ಮಕ್ಕಳು ಶಿಷ್ಯ ಪರಿವಾರಗಳ ಸಹಿತ
ಧರೆಯನೆಲ್ಲವ ತಿರುಗುತ
ಕರದಿ ಕಿನ್ನರಿ ಧರಿಸಿ ಸ್ವರವೆತ್ತಿ ಪಾಡುತಿರೆ
ಕೊರಳುಬ್ಬಿ ಶಿರ ಬಿಗಿಯುತ
ಎರಡು ಕಂಗಳು ಧಾರೆ ಸುರಿಯೆ ಬಾಷ್ಪೋದಕವ
ಹರಿ ಮಹಿಮೆ ಕೊಂಡಾಡುತ
ತಿರಿ ತಂದ ಧನದಿಂದ ವಿಪ್ರರಿಗೆ ಮೃಷ್ಟಾನ್ನ
ಹರುಷದಿಂದಲಿ ಉಣಿಸುತ ೧೫
ಗುಪ್ತವಾಗಿರೆ ಕಂಡು ವ್ಯಕ್ತ ಮಾಡುವೆನೆಂದು
ಶಕ್ತನಹ ದೇವ ಬಂದ
ಘೃತದ ಬಿಂದಿಗೆ ತಂದ ತಿಥಿಯ ಓಗರ ಉಂಡ
ಸುತನಾಗಿ ನೀರ ತಂದ
ಯತಿಯ ಪಂಕ್ತಿಗೆ ಭಾಗಿರಥಿಯನ್ನು ತರಿಸಿದ
ಕ್ಷಿತಿಪತಿಗೆ ದೃಢ ತೋರಿದ
ಸತಿಯೆಂದ ಮಾತಿಗೆ ಅತುಳ ಭಾಗ್ಯವನಿತ್ತು
ಪಥದಲ್ಲಿ ತಲೆಗಾಯಿದ ೧೬

 

೨೬೮
ಗುರುರಾಘವೇಂದ್ರರ ಚರಣವ ಸ್ಮರಿಸಿರೊ ಪ
ಗುರುರಾಘವೇಂದ್ರರ ಚರಣವ ಸ್ಮರಿಸಲು
ದುರಿತ ರಾಶಿಗಳೆಲ್ಲ ಕರಗಿ ಪೋಗುವುವುಅ.ಪ.
ಮಧ್ವ ಮತಾಬ್ಧಿಯೊಳುದ್ಭವಿಸಿದಂಥ
ಶುದ್ಧ ಪೂರ್ಣಿಮ ಚಂದ್ರ ಸದ್ಗುಣ ಸಾಂದ್ರ ೧
ಸುಧೀಂದ್ರ ಯತಿಕರ ಪದುಮ ಸಮುದ್ಭವ
ಸದೆಯ ಸದಾರ್ಚಿತ ಪದ ನುತ ಖ್ಯಾತ೨
ಬಂದಂಥ ಭಕುತರ ವೃಂದವ ಪೊರೆಯಲು
ಕುಂದದೆ ವರಮಂತ್ರ ಮಂದಿರದೆಸೆವ ೩
ನರಹರಿ ಮುರವೈರಿ ರಘುವರ ವ್ಯಾಸರ
ನಿರುತದಿ ಭಜಿಸುವ ವರಗಳ ಕೊಡುವ ೪
ಸಕಲಾತರ್ಯಾಮಿಯು ಲಕುಮಿಕಾಂತನೆಂದು
ಪ್ರಕಟಿಸಿ ಮೆರೆದರ್ಭಕನಂಶಜರೆಂದು ೫

 

೨೬೮ (ಅ)
ಗುರುರಾಯರ ನಂಬಿದೇ – ಶ್ರೀ ರಾಘವೇಂದ್ರ ಪ
ವರಮಂತ್ರಾಲಯದಲ್ಲಿ ಇರುತ ಸೇವೆಯಗೊಂಬ ಅ.ಪ
ಗ್ರಾಸ ಬೇಡಿದ ಮುನಿಯಾಶೆಯ ತಣಿಸಿದ
ದಾಶರಥಿಯ ಭಕ್ತ ದೇಶಿಕವರ್ಯರ ೧
ಸಂತಾನಸೌಭಾಗ್ಯ ಚಿಂತಿತಾರ್ಥವನೀವ
ಕಂತುಪಿತನ ಪಾದ ಸ್ವಾಂತದಿ ಭಜಿಸುವ ೨
ಅಜ್ಞಾನ ತಿಮಿರಕ್ಕೆ ಸುಜ್ಞಾನಪರಿಪೂರ್ಣ
ಪ್ರಜ್ಞರ ಗುರುವ್ಯಾಸರಾಜ್ಞಾಧಾರಕರಾದ ೩

 

೨೨೬ (ಅ)
ಗೋಪಾಲಕುಲ ಬಾಲ ಗೋವಿಂದ ಗುಣಶೀಲ
ನೀ ಪಾಲಿಸೆನ್ನನು ದೇವ ಪ
ಶರನಿಧಿ ಸಂಚಾರ ವರ ಮಂದರೋದ್ಧರ
ಪರಮಾತ್ಮ ಭೂಧರ ದೇವ ೧
ನರಭಕ್ತ ಭಯಹಾರ ಸುರಕಾರ್ಯಕೃತ ಧೀರ
ಧರಣೇಸುರೇಶ್ವರ ದೇವ ೨
ಸಕಲಾರ್ತಿಹರ ಶೂರ ಕುರುತೇಷ್ಟದಾತಾರ
ವಿಕಟಾರ್ತ ಶ್ರೀಕರ ದೇವ ೩
ಕಲಿದೋಷ ಪರಿಹಾರ ಸಲೆ ಧರ್ಮವಿಸ್ತಾರ
ಜಲಧೀಶ ಮಂದಿರ ದೇವ ೪
ಶ್ರೀಕಾಂತ ಶ್ರೀಮಂತ ಶ್ರೀಕೃಷ್ಣ ಜಯವಂತ
ನೀ ಪಾಲಿಸೆನ್ನನು ದೇವ ೫

 

ಶ್ರೀನಿವಾಸ ಕಲ್ಯಾಣದ ಕಥೆಯನ್ನು
೨೨೭
ಜಯ ಜಯ ರಮಾಕಾಂತ – ಜಯತು ದೈತ್ಯ ಕೃತಾಂತ
ಜಯ ಸರ್ವ ವೇದಾಂತ – ಜಯತು ನಿಶ್ಚಿಂತ ಪ
ಬೇಡ ವೇಷವ ತಾಳಿ- ಓಡಿಸುತೆ ತುರಗವನು
ಪ್ರೌಢೆ ಪದ್ಮಾವತಿಯ – ನೋಡಿ ನಸುನಗುತ
ಜೋಡಾಗು ತನಗೆಂದು – ಗಾಡಿಕಾರರ ಮಾತ
ನಾಡಿ ಕ್ರೋಢಾಲಯಕೆ – ಓಡಿಬಂದವನೆ ೧
ತಾಯೆ ಬಕುಳೆಯ ಕಳುಹಿ ಮಾಯಕದ ಕೊರವಂಜಿ
ಕಾಯದಿಂದಾಕಾಶರಾಯನರಮನೆಗೆ
ಜೋಯೆಂದು ಪೋಗಿ – ಸದುಪಾಯಗಳ ನಡೆಸಿ ತ
ನ್ನಾಯ ಕೈತಂದ ಕಮನೀಯ ಮೂರುತಿಯೆ ೨
ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ
ಸಕಲ ದೇವೋತ್ತಮರ – ನಿಕರವನು ನೆರಹಿ
ಅಕಳಂಕ ಲಗ್ನದಲಿ ಸುಕಪೋಲೆಗೊಲಿದುರಗ
ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ ೩

 

೨೨೭ (ಆ)
ಜಯ ಮಂಗಳ ನಾಮ ಶ್ರೀರಾಮ
ಜಯ ಜಯ ಸದ್ಗುಣ ಧಾಮ ನಿಸ್ಸೀಮ ಪ
ಭಾನುವಂಶಪಯೋನಿಧಿ ಚಂದ್ರ
ದೀನರಕ್ಷಣ ಪರ ಹೇ ದಯಾಸಾಂದ್ರ ೧
ದಾನವಹರ ಸುರಕಾರ್ಯ ವಿಚಾರ
ವಾನರತತಿ ಸುಮಾವೃತ ಧೀರ ೨
ಭರತ ಶತ್ರುಹನ ಲಕ್ಷ್ಮಣ ಭ್ರಾತ
ಮರುತನಯನುತ ಶ್ರೀ ಲಕ್ಷ್ಮೀಕಾಂತ ೩

 

೨೨೭ (ಅ)
ಜಯಜಯತು ಶ್ರೀರಾಮ ಜಯಜಯತು ಘನಶ್ಯಾಮ
ಜಯಜಯತು ಮುನಿಪ್ರೇಮ – ರಿಪು ಭೀಮ
ಜಯಜಯತು ಸುರಸ್ತೋಮ – ವಿನಮಿತ ಮಂಗಳ ನಾಮ
ಜಯತು ಸದ್ಗುಣಧಾಮ – ರಘುರಾಮ ೧
ಆನಂದ ಜ್ಞಾನದನೆ – ಆನಂದ ಮಾಸದನೆ
ಆನಂದ ಸಿದ್ಧಿದನೆ – ಅನಘನೇ
ಆನಂದ ಮಂದಿರನೆ – ಆನಂದ ಚಂದಿರನೆ
ಆನಂದ ಸುಂದರನೆ – ಅಘಹಾನೇ ೨
ಸುರಾರಿದರ್ಪಹರ – ಪುರಾರಿ ಮಿತ್ರವರ
ದರಾರಿ ಅಭಯಕರ-ಸುಕುಮಾರ
ಕಾರುಣ್ಯಪಾಂಗವರ-ಲಾವಣ್ಯರೂಪಧರ
ವರೇಣ್ಯನಿಕರ – ಸಿರಿಕಾಂತ ೩

 

ಜಯತೀರ್ಥರಾಯಾ ಗುರುವರ್ಯಾ
ಮುಗಿವೆನು ಕೈಯ್ಯಾ ಪ
ತೋಯಜಾಕ್ಷನಂಘ್ರಿ ಪ್ರೀಯ – ಜೀಯ
ಮಳಬೇಡ ನಿಲಯ ಅ.ಪ
ಮೋದ ತೀರ್ಥಗ್ರಂಥ ಕ್ಷೀರ ವಾರಿಧಿಯನ್ನು ಮಥಿಸಿ ಧೀರ
ಸಾಧುಗಳಿಗೆ ಸುಧೆಯನೆರದೆ – ವಾದಿಗಳೆದಯ ಮುರಿದೇ ೧
ಅದ್ವೈತಾರಣ್ಯದಹನ – ಮಧ್ವ ಪಂಥಸುಜನಸದನ
ಪೊದ್ದಿದೆನೋ ನಿನ್ನ ಚರಣ – ಉದ್ಧರಿಸೋ ದೀನೋದ್ಧರಣ ೨
ಅಕ್ಷಯಮಾಲಾ ದಂಡ ಧಾರೀ – ಭಿಕ್ಷುಶ್ರೇಷ್ಠನಧಿಕಾರಿ
ಅಕ್ಷೋಭ್ಯ ಮುನಿಪ ತನಯ – ಲಕ್ಷ್ಮೀಕಾಂತ ಭಜಕ ಸದಯ ೩

 

೨೨೮
ದಾಸರ ದಾಸರ ದಾಸನೆಂದೆನಿಸುವ
ಲೇಸು ಭಾಗ್ಯವ ಕೊಡೊ ಶಾಶ್ವತವಾಗಿ ಪ
ಆಶಾಪಾಶವ ನಾಶನಗೈಸಿ
ದೇಶಿಗರೆಲ್ಲರ ಕೂಸೆಂದೆನಿಸಿ ಅ.ಪ.
ಕಾಮಕ್ರೋಧದ ಉಪಟಳ ಬಹಳ
ನೇಮ ನಿಷ್ಠೆಯ ಸುಳಿವೆನಗಿಲ್ಲ
ತಾಮಸನಾಗಿ ಬಳಲಿದೆನಯ್ಯ
ಪ್ರೇಮದಿ ಪಿಡಿದು ಸಲಹೊ ದಮ್ಮಯ್ಯ ೧
ವದನದಿ ನಿನ್ನ ನಾಮವ ನುಡಿಸೊ
ಪದದಲಿ ನಿನ್ನ ಯಾತ್ರೆಯ ನಡೆಸೊ
ಹೃದಯದಿ ನಿನ್ನ ರೂಪವ ತೋರಿ
ಒದಗಿ ಪಾಲಿಸೊ ಅನುದಿನ ಶೌರಿ ೨
ಭಕ್ತವತ್ಸಲ ಭಾಗ್ಯಸಂಪನ್ನ
ಭಕ್ತರ ಸಂಗತಿ ಪಾಲಿಸೊ ಘನ್ನ
ಉಕ್ತಿಯ ಲಾಲಿಸೊ ನಾನು ಅನಾಥ
ಮತ್ತೇನು ಬೇಡೆನೊ ಶಕ್ತ ಶ್ರೀಕಾಂತ ೩

 

ಅನ್ಯಯರ ಬನ್ನಬಡಿಸುತ್ತಿದ್ದ
೨೨೯
ಧ್ಯಾನವ ಕೊಡು ಹರಿಯೆ | ನಿರಂತರ
ಧ್ಯಾನವ ಕೊಡು ಹರಿಯೆ ಪ
ನೀನೆ ಗತಿಯೆಂದಾನುಪೂರ್ವಕ
ಧ್ಯಾನ ಮಾಳ್ವರ ಜನ್ಮಕರ್ಮಗ
ಳೇನು ನೋಡದೆ ಪೊರೆವೆ ನಿನ್ನ
ಸುನಾಮವೆ ಸುರಧೇನುವೆಂದು ಅ.ಪ.
ನಿನ್ನ ನಾಮವ ನೆನೆದು | ಅಜಾಮಿಳನು
ಧನ್ಯನು ತಾನಾದನು ಈ ಭುವನದಿ
ತನ್ನ ದೇಹಾತುರದೊಳನ್ಯರ
ಬನ್ನ ಬಿಡಿಸುತಲಿದ್ದ ಖಳನು
ನಿನ್ನ ನಾಮಸ್ಮರಣೆ ಮಾತ್ರದಿ
ಘನ್ನ ಮುನಿಪತಿ ಎನ್ನಿಸಿದನು ೧
ದುರುಳ ದುಶ್ಯಾಸನನು | ಸಭೆಯೊಳಗಂದು
ತರಳೆ ದ್ರೌಪದಿದೇವಿಯ ಸೆರಗನ್ನು ಸೆಳೆಯೆ
ಮುರಹರನೆ ಹಾ ಕೃಷ್ಣ ದ್ವಾರಕಾ-
ಪುರನಿಲಯ ಪರಮಾತ್ಮ ಭಕ್ತರ
ಸುರತರುವೆ ಎಲ್ಲಿರುವೆ ಏತಕೆ
ಮರೆವೆ ಎನ್ನುತ ಮೊರೆಯೆ ಪೊರೆದೆಯೊ ೨
ನರಕ ಕೂಪದೊಳು ಬಿದ್ದು | ಏಳುತ್ತ ಮುಳುಗುತ
ಪರಿಪರಿ ಭಾಷೆಯಲಿ ಮುಂದೋರದೆ
ಹೊರಳುತ್ಹೊರಳುತ ಮರುಕಗೊಳುತ
ಹರಿಹರಿ ನಾರಾಯಣೆನ್ನಲು
ಸುರಲೋಕವನ್ನಿತ್ತು ಸಲಹಿದೆ
ವರದ ಲಕ್ಷ್ಮೀಕಾಂತ ಶಾಶ್ವತ ೩

 

೨೩೦
ನಾಮಕೆಣೆ ಕಾಣೆ ಮುಕುಂದನ ಪ
ಶ್ರೀ ಮನೋರಮ ಸುರಸ್ತೋಮವಿನುತ ನಾಮ
ಕಾಮಿತಪ್ರದ ನಾಮ ಮುಕುಂದನ ೧
ಕೆಟ್ಟ ಕಿರಾತನು ಮುಟ್ಟಿ ಭಜಿಸಿ ತಾನು ಉ-
ತ್ರ‍ಕಷ್ಟ ಮುನಿಯಾದನು ಮುಕುಂದನ ೨
ಘೋರ ನಾರಕಿಗಳು ನಾರಾಯಣನೆಂದು
ಸೂರೆಗೊಂಡರು ಸ್ವರ್ಗವ ಮುಕುಂದನ ೩
ನಾರಣ ಬಾರೆಂದು ಚೀರಲು ಅಜಾಮಿಳ
ಸೇರಿದನಾಪುವರ್ಗವ ಮುಕುಂದನ ೪
ಲಕ್ಷ್ಮೀಕಾಂತನ ನಾಮೋಚ್ಚಾರದಿ ದ್ರೌಪದಿ
ರಕ್ಷಿತೆಯಾದಳಿಂದು ಮುಕುಂದನ ೫

 

ನಾರಸಿಂಹನೆ ಎನ್ನ | ದುರಿತೌಘಗಳನು
ದೂರಕೈದಿಸಿ ಘನ್ನ | ಕರುಣಾವಲೋಕನ
ಬೀರಿ ಭವ ಭಯವನ್ನ | ಬಿಡಿಸಯ್ಯ ಮುನ್ನ ಪ
ಧೀರ ಸುಜನೋದ್ಧಾರ ದೈತ್ಯ ವಿ
ದೂರ ಘನಗಂಭೀರ ಶೌರ್ಯೋ
ಧಾರ ತ್ರಿಜಗಾಧಾರ ಎನ್ನಯ
ಭಾರ ನಿನ್ನದೊ ಹೇ ರಮಾವರ ಅ.ಪ.
ಏನು ಬಲ್ಲೆನೊ ನಾನು | ಸುಜ್ಞಾನ ಮೂರುತಿ
ಮಾನಸಾಬ್ಜದಿ ನೀನು | ನೆಲೆಯಾಗಿ ನಿಂತು
ಏನು ನುಡಿಸಲು ನಾನು | ಅದರಂತೆ ನುಡಿವೆನು
ಜ್ಞಾನದಾತನೆ ಇನ್ನು | ತಪ್ಪೆನ್ನೊಳೇನು
ಸ್ನಾನ ಜಪತಪ ಮೌನ ಮಂತ್ರ
ಧ್ಯಾನಧಾರಣ ದಾನ ಧರ್ಮಗ-
ಳೇನು ಮಾಡುವುದೆಲ್ಲ ನಿನ್ನಾ-
ಧೀನವಲ್ಲವೆ ಶ್ರೀನಿವಾಸನೆ
ದಾನವಾಂತಕ ದೀನರಕ್ಷಕ
ಧ್ಯಾನಿಪರ ಸುರಧೇನುವೆನ್ನುವ
ಮಾನವುಳ್ಳವರೆಂದು ನಂಬಿದೆ
ಸಾನುರಾಗದಿ ಕಾಯೊ ಬಿಡದೆ ೧
ತಂದೆತಾಯಿಯು ನೀನೆ | ಗೋವಿಂದ ಎನ್ನಯ
ಬಂಧು ಬಳಗವು ನೀನೆ | ಮು-
ಕುಂದ ಗುರುಸಖ ವಂದ್ಯದೈವವು ನೀನೆ
ಹೊಂದಿರು ವಿದ್ಯೆಯು ಚಂದದೈಸಿರಿ
ನೀನೆ | ಆನಂದ ನೀನೆ
ಹಿಂದೆ ಮುಂದೆಡಬಲದಿ ಒಳಹೊರ-
ಗೊಂದು ಕ್ಷಣವಗಲದಲೆ ತ್ರಿದಶರ
ವೃಂದ ಸಹಿತದಿ ಬಂದು ನೆಲಸಿ
ಬಂದ ಬಂದಘಗಳನು ಹರಿಸಿ
ನಂದವೀಯುತಲಿರಲು ಎನಗಿ-
ನ್ನೆಂದಿಗೂ ಭಯವಿಲ್ಲ ತ್ರಿಕರಣ-
ದಿಂದ ಮಾಡಿದ ಕರ್ಮ ನಿನ್ನರು
ಎಂದು ಅರ್ಪಿಸುವೆನು ನಿರಂತರ ೨
ಪ್ರೀಯ ನೀನೆನಗೆಂದು | ಮರೆಹೊಕ್ಕು ಬೇಡುವೆ-
ನಯ್ಯ ಗುಣಗಣಸಿಂಧು | ಮೈಮರೆಸಿ ವಿಷಯದ
ಹುಯ್ಲಿಗಿಕ್ಕದಿರೆಂದು | ಶರಣನ್ನ ಬಿನ್ನಪ
ಜೀಯ ಲಾಲಿಸಿ ಇಂದು | ಕೈಬಿಡದಿರೆಂದು
ತಾಯನಗಲಿದ ತನಯನಂದದಿ
ಬಾಯ ಬಿಡಿಸುವರೇನೊ ಚಿನ್ಮಯ
ನ್ಯಾಯ ಪೇಳುವರ್ಯಾರೊ ನೀನೊ
ಸಾಯಗೊಲುತಿರೆ ಮಾಯಗಾರನೆ
ತೋಯಜಾಸನ ಮುಖ್ಯ ಸುಮನಸ
ಧ್ಯೇಯ ಶ್ರುತಿ ಸ್ರ‍ಮತಿ ಗೇಯ ಕವಿಜನ
ಗೇಯ ಚತುರೋಪಾಯ ಭಕ್ತ ನಿ-
ಕಾಯ ಪ್ರಿಯ ಶ್ರೀಕಾಂತ ಜಯ ಜಯ

 

೨೩೩
ನೀರಧಿಶಯನ ಮುಕುಂದ
ಹರಿನಾರಾಯಣ ಗೋವಿಂದ ಪ
ಪ್ರಚಲಿತ ಲಯ ಜಲ ವಿಹರಣ ಶಾಶ್ವತ
ಅಚಲೋದ್ಧರಣ ಸಮರ್ಥ ಸದಾಶ್ರಿತ
ಕಾಂಚನ ನಯನ ವಿಘಾತ ನರ
ಪಂಚಾನನ ಪ್ರಖ್ಯಾತ ೧
ಮಂದಾಕಿನಿ ಪಿತ ದೇವ ತ್ರಿವಿಕ್ರಮ
ನಂದಿತ ಗೋಕುಲ ವೃಂದ ಪರಾಕ್ರಮ
ಸಿಂಧುನಿಬಂಧನ ರಾಮಾನಂದದ
ಸುಂದರ ಶ್ಯಾಮ ೨
ಲೋಕ ವಿಮೋಹಕ ಬುದ್ಧ ಸುವೇಶ
ಶ್ರೀಕರ ಕಲ್ಕಿ ಪಾಹಿ ನಿರ್ದೋಷ
ಕಾಕೋದರ ಗಿರಿವಾಸ ಜಯ
ಶ್ರೀಕಾಂತ ಶ್ರೀ ಶ್ರೀನಿವಾಸ ೩

 

೨೩೪
ಪಂಡರಿನಾಥ ಪಾವನ ಸುಚರಿತ ಪ
ಪಾಂಡವಪ್ರಿಯದೂತ ಶರಣರ ಕಾದುಕೊಂಡಿಹ ಖ್ಯಾತ ದಾತ ಅ.ಪ.
ಮಾತಾಪಿತನು ಭ್ರಾತನು ಹಿತನು
ನಾಥನು ಜ್ಞಾತನು ಸಂತಾರಕನು
ಮತಿಯೂ ನೀನೆ ಗತಿಯೂ ನೀನೆ
ಕಾತರ ವ್ಯಾತರದು ಬೀತುದು ದೇವ ೧
ತನುಮನಧನಗಳ ನಿನಗರ್ಪಿಸಿದೆ
ಎನಿತಾದರು ಇಡು ಅನುಮಾನಿಸಿದೆ
ಜನರ ನಿಂದನೆ ಮೇಣಾನಂದನೆ
ಮಾನ ಅವಮಾನ ನಿನ್ನದು ದೇವ ೨
ಚಿಂತೆಯ ಮರೆದೆ ಭ್ರಾಂತಿಯ ತೊರೆದೆ
ಸಂತರ ಚರಣವನಾಂತೆ ದೃಢದೆ
ಸ್ವಾಂತವು ಮೋದವಾಂತುದು ಶ್ರೀದ
ಸಂತತ ಶ್ರೀಕಾಂತ ನಿಶ್ಚಿತ ದೇವ ೩

 

೨೩೪ (ಅ)
ಪರತರ ಕರುಣಾಕರ ವಿಧಿಮುಖ
ಸುರವರ ನುತಚರಣಯುಗ ಪಾಹಿ ಪ
ಭವಭಯಸಾಗರ ತರಣಿಯೆಂದೆನಿಸಿದೆ
ತವಪದ ಧ್ಯಾನವ ಸದಾ ಕೊಟ್ಟೆನ್ನನು ೧
ತರಳನ ಬಾಧಿಪ ದುರಳನ ಸಭೆಯಲಿ
ನರಮೃಗ ರೂಪವ ತಾಳಿ ನೀ ಬಂದೆಯೋ ೨
ಸಕಲ ಚರಾಚರದೊಳಗೆ ನೀನಿರುವುದು
ಪ್ರಕಟಿಸಿ ತೋರಿದೆ ಶ್ರೀಕಾಂತ ಶಾಶ್ವತ ೩

 

೨೩೫ (ಅ)
ಪರತರ ಪಾವನ ಶ್ರೀರಾಮ ಜಯ ಪ
ಶರಣ ಜನಾವನ ಶ್ರೀರಾಮ ಜಯ ಅ.ಪ.
ಖರತರ ನಿಶಾಚರ ದಹನ ಪರಾವೃತ
ಸರಸಿಜಭವನುತ ಶ್ರೀರಾಮಜಯ ೧
ಸೀತಾಲಕ್ಷ್ಮಣ ಭರತ ಶತ್ರುಹನ
ವಾತಜ ಸೇವಿತ ಶ್ರೀರಾಮ ಜಯ ೨
ಸ್ವಾಂತ ಧ್ವಾಂತ ನಿಕೃಂತ ಲಕ್ಷ್ಮೀ-
ಕಾಂತ ನಮೋ ನಮೋ ಶ್ರೀರಾಮ ಜಯ ೩

 

೨೩೫
ಪರಮ ಕೃಪಾನಿಧೆ ಗೋಪಾಲದೇವ ಪ
ಪರಿಪಾಲಿಸೋ ಎನ್ನ ಶ್ರೀಲೋಲ ಹರಿ ಅ.ಪ.
ಪತಿತಪಾವನಾಶ್ರಿತ ಜನ ಪಾಲನ
ಗತಿ ನೀನಲ್ಲದೆ ಕಾಣೆ ನಾ೧
ಮಾನಾಭಿಮಾನ ನಿನ್ನಾಧೀನ
ದೀನ ಜನಾವನ ನಿನ್ನವ ನಾ ೨
ಅಜಭವಾರ್ಚಿತ ಆನಂದಾಚ್ಯುತ
ನಿಜಪಥ ತೋರಿಸೊ ಶ್ರೀಕಾಂತ ೩

 

೨೩೬
ಪರಿಪಾಲಿಸೈ ವರ ವೆಂಕಟೇಶ
ಚರಣಾಬ್ಜಯುಗ ಸ್ಮರಣೆಯನಿತ್ತು ಪ
ದುರಿತಾಧಿದೂರ ಪರತತ್ವಸಾರ
ಕಾರುಣ್ಯಪಾರ ವರನಿರ್ವಿಕಾರ ಅ.ಪ.
ಪರಮಾತ್ಮನೆ ಪೊರೆ ಎನ್ನುತ ಕರಿರಾಜ
ಮೊರೆಯಿಡುತಿರಲು ನೀ
ಗರುಡನ ಏರಿ ತ್ವರೆಯಿಂದ ಬಂದೆ
ಪರಮ ದಯಾಕರ ಶ್ರೀನಿವಾಸ ೧
ಪಾಪಿಷ್ಠನು ಅಜಾಮಿಳನೆಂದು
ಕೋಪದಿ ಯಮ ಭಟರೆಳೆಯುತಿರೆ
ತಾಪಕೆ ತನ್ನ ಪುತ್ರನ ಕೂಗುತಲಿರೆ
ಕೃಪೆಯಿಂದ ನಿಜಪುರಕೆ ಒಯ್ದೆ ೨
ಕನಕಾಚಲನಿಧಿ ಲಕ್ಷ್ಮೀಕಾಂತ
ಪ್ರಣತಾರ್ಥಿಹರ ಆನಂದಕರ
ವನಜಾಸನಾದಿ ಅಮಿಷಪಾಲ
ಸನಕಾದಿ ಯೋಗಿ ಮನ ಕುಮುದಲೋಲ ೩

 

೨೩೬ (ಅ)
ಪಾಲಯ ಶರಣಾಭರಣ ಹರಿ
ಪಾಲಯ ಶರಣಾಭರಣ ಪ
ನರಹರಿ ಶೌರಿ ದುರಿತ ವಿದಾರಿ
ಘೋರಧ್ವಾಂತ ಹರಿ ವೀರ ನರಸಿಂಹ
ತೇನಮೋ ಪರಾತ್ಪರ ಕೃಪಾಕೂಪಾರ ೧
ತಾತನ ಖತಿಗೆ ಭೀತಿಯ ಪಡದೆ
ನಾಥ ಬಾರೆನಲು ಆಮರಸ್ಥಂಭದಲೀ
ತಕ್ಷಣದೊಳು ಮೈದೋರ್ದೆ ೨
ತುಡುಕೀ ಖಳನಾ ಪಿಡಿದೂ ಅವನಾ
ಬಡಿದೂ ನೆಲಕೊರಿಸೇ ನೋಡಿ ಪಾಡೆ
ಭಕ್ತನಾ ಕಾಪಾಡಿದೆ ನಮೋ ಶ್ರೀಕಾಂತ ೩

 

೨೩೭
ಬಂದು ನಿಲ್ಲೊ ಕಣ್ಣ ಮುಂದೆ
ಮಂದಹಾಸ ಮುಖಾ ಹರಿ ಪ
ತಂದೆ ನೀನೆ ತಾಯಿ ನೀನೆ
ನಂದದಾಯಕನೆ ಹರಿ ಅ.ಪ.
ಬಾರೊ ಶೌರಿ ಬಾ ಮುರಾರಿ
ಬಾರೊ ಭಯಹಾರಿ ಉದಾರಿ ೧
ದುರಿತ ಹರಣ ಪರಮ ಕರುಣ
ಶರಣ ಉದ್ಧರಣ ಹರಿ ೨
ಲಕುಮಿಕಾಂತ ಸಕಲ ಶಕ್ತ
ಅಕುಟಿಲಾತ್ಮ ಹಿತ ಹರಿ ೩

 

೨೩೮
ಬಾ ಬಾ ಬಾ ಬಾ ಭಕ್ತಾಧಾರ ಬಾ ಬಾರೊ ಶ್ರೀಧರ ಪ
ಬಾ ಬಾ ಬಾರೆಂದು ಬೇಡಲು ಪ್ರಹ್ಲಾದ
ಕೋರಿದ ಕಂಬದಿ ತೋರಿ ಬಂದೆ ಹರಿ ಅ.ಪ.
ಎಲ್ಲಿಹ ನಿನ್ನ ಹರಿಯ ತೋರೊ ಕೊಲ್ಲುವೆನೆನಲಾ
ಖುಲ್ಲ ದೈತ್ಯನ ಉದರವ ಸೀಳಿ ಕರುಳನು ಚೆಲ್ಲಿ
ಎಲ್ಲೆಲ್ಲಿ ನೋಡಲು ನೀನಿಲ್ಲದಿಲ್ಲವೆಂಬ
ಸೊಲ್ಲು ನಿಜಕೆ ತಂದ ಬಲ್ಲಿದ ಹರಿಯೆ ೧
ಸರ್ವಾಧಾರನೆ ಸರ್ವೋತ್ತಮನೆ ಸರ್ವಕಾರಣನೆ
ಸರ್ವೇಶ ಬಂಧು ನೀ ಸಲಹೆಂದು ಕರಿಮೊರೆಯಿಡಲಂದು
ಸರ್ವತ್ರಿದಶರು ಬೆದರುತ ನೋಡಲು
ಸರ್ವಮೂಲ ನೀನೊರ್ವನೆ ಬಂದೈ ೨
ಪಾಪಿ ದುಶ್ಯಾಸನ ಸಭೆಯೊಳಗಂದು ನಿರಪರಾಧಿನಿ
ದ್ರೌಪದಿಯನ್ನು ಹಿಡಿದೆಳತಂದು ಹಿಂಸಿಸುತಿರಲಂದು
ಹೇ ಪರಮಾತ್ಮನೆ ನೀ ಪಾಲಿಸು ಎನೆ
ಆಪತ್ತಿಗೊದಗಿದ ಭೂಪ ಶ್ರೀಕಾಂತನೆ ೩

 

೨೩೯
ಬಾರೊ ಬಾರೊ ಬಾರೊ ಶ್ರೀಹರಿ ಭಕ್ತರಾಧಾರಿ ಪ
ನಿಗಮವನ್ನು ಅಜಗಿತ್ತೆ
ನಗವ ಬೆನ್ನಲಿ ಪೊತ್ತೆ
ನೆಗಹಿ ಧರಣಿಯನು ಇತ್ತೆ
ಮಗುವ ಪೊರೆದೆ ಸುಗುಣ ಹರಿಯೆ ೧
ಪದದಿ ಗಂಗೆಯನ್ನು ಪಡೆದೆ
ಬುಧರಿಗೊಲಿದು ಕೊಡಲಿ ಪಿಡಿದೆ
ಸುದತಿ ನೆವದಿ ಖಳರ ಬಡಿದೆ
ಒದಗಿ ಅಕ್ಷಯವಿತ್ತೆ ಹರಿಯೆ ೨
ದುರಳ ತ್ರಿಪುರರನ್ನು ಗೆಲಿದೆ
ಭರದಿ ಯವನ ಬಲವ ಮುರಿದೆ
ಗರುಡಾಚಲದಿ ನಿಂತು ಭಕ್ತರ
ಪೊರೆವ ಲಕ್ಷ್ಮೀಕಾಂತ ಹರಿಯೆ ೩

 

೨೩೯ (ಅ)
ಬಾರೋ ವರಶೂರ ಕುಮಾರ ಸುಂದರಾಕಾರ ಪ
ಪರಾತ್ಪರ ಕೃಪಾಕರ ಸುರೇಶ್ವರ ಹಿತಕರ ಅ.ಪ
ವೇದವ ತಂದಿತ್ತನೆ ಭೂಧರವೆತ್ತಿದನೆ
ಮೇದಿನೀ ಸಾಧಕನೆ ಅದ್ಭುತ ವಿಕ್ರಮನೆ ೧
ವಾಸವ ವಂದಿತನೆ ಭೂಸುರ ವರದನೆ
ಪಾಶೀನುತಮಹಿಮನೆ ಕೇಶವನೆ ದೇರ್ಶಿಕನೆ ೨
ವ್ಯಾಕುಲ ಕಳೆವನೆ ಕಾಕೋದರಶಯನನೆ
ಸಾಕುವ ಶ್ರೀಕಾಂತನೆ ಏಕಾ ಮೇವಾ ದ್ವಿತೀಯನೆ ೩

 

೨೬೫
ಬೇಡುತಿರ್ದೆನು ಕರುಣದಿ ನೋಡು
ವರವನು ನೀಡು ಪ
ಅನ್ನಪೂರ್ಣೆ ಸುಗುಣಪೂರ್ಣೆ
ನಿನ್ನನು ಹೊರತು ಅನ್ಯರ ಕಾಣೆ ೧
ಶರ್ವಜಾಯೆ ಶುಭ್ರಕಾಯೆ
ಸರ್ವಮಂಗಳೆ ಗುಹ ಗಣಪರ ತಾಯೆ ೨
ಮಾರ ಜನನಿ ಪ್ರಿಯನ ಭಗಿನಿ
ಸಾರಿದ ಶರಣರ ಪೊರೆವ ಭವಾನಿ ೩

 

ಪಾರಾಶರ ಮತ ವಿಸ್ತರಣ
೨೫೪
ಭಾರತಿ ರಮಣ ಪಾಲಿಸು ಕರುಣ
ಶ್ರೀರಾಮನ ಪದ ನಿಜ ಶರಣ ಪ
ಕೌರವಧಾರಣ ಭವ ಸಂಹಾರಣ
ಪರಾಶರ ಮತ ವಿಸ್ತರಣಅ.ಪ.
ತ್ರೇತೆಯೊಳಂಜನೆ ಉದರದಿ ಜನಿಸಿ
ಸೀತಾನಾಥನ ಪಾದಕೆ ನಮಿಸಿ
ದೌತ್ಯವ ವಹಿಸಿ ಕೀರ್ತಿಯ ಗಳಿಸಿ
ಭಕ್ತಾಗ್ರಣಿಯೆನಿಸಿದ ಗುರುವೆ ೧
ದ್ವಾಪರದಲಿ ನೃಪ ಕುಲದಲಿ ಬಂದು
ಪಾಪಿ ಮಾರ್ಗದ ಪ್ರಮುಖರ ಕೊಂದು
ದ್ರೌಪದಿ ಬೇಡಿದ ಸುಮವನು ತಂದು
ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ ೨
ಕಲಿಯೊಳು ಕುಜನರ ಮತಗಳ ಜರಿದು
ಸುಲಲಿತ ಭಕ್ತಿಯ ಮತವನು ಒರೆದು
ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ
ತುಳುವ ವಿಪ್ರನಲಿ ಉದಿಸಿದೆ ಗುರುವೆ ೩

 

ಕುಡಿಗಣ್ಣಿನ ಜಲ ಸಡಿಲಲು ಕಳಶದಿ ಒಡನೆ

ಮಂಗಳಾರತಿಯನೆತ್ತೆರೆ ನಿತ್ಯ ಸು-
ಮಂಗಳೆಗತಿಶಯದಿ ಪ
ಮಂಗಳಾರತಿ ಎತ್ತಿ ತುಂಗಮಹಿಮ ಶ್ರೀ
ರಂಗನ ರಾಣಿಗೆ ಅಂಗನೆ ತುಳಸಿಗೆ ಅ.ಪ.
ಕಡಲೊಳು ಸುಧೆ ಹಿಡಿದು | ಬಂದನು
ಕಡು ಕರುಣಿಯು ಒಲಿದು
ಕುಡಿಗಣ್ಣಿನ ಜಲ ಸಡಿಲಲು ಕಲಶದಿ
ಒಡನೆ ಜನಿಸಿದಂತ ಮಡದಿ ಶ್ರೀ ತುಲಸಿಗೆ ೧
ಸುರರು ಪೂಮಳೆಗರೆಯೆ | ಹರುಷದಿ
ಹರಿಯು ಕರವ ಪಿಡಿಯೆ
ವರವನು ಪಡೆದಳು ಶರಣರ ಪೊರೆಯಲು
ಧರೆಯೊಳು ಬಂದಿಹ ಕರುಣಿ ಶ್ರೀ ತುಳಸಿಗೆ ೨
ಭಕುತಿಯಿಂದಲಿ ನಿತ್ಯ | ಸೇವಿಪ
ಸಕಲ ಜನಕೆ ಸತ್ಯ
ಭಕುತಿ ಮುಕುತಿಯಿತ್ತು ಸುಕೃತರ ಮಾಡುವ
ಲಕುಮಿಕಾಂತನ ಪ್ರೇಮಸಕುತೆ ಶ್ರೀ ತುಳಸಿಗೆ ೩

 

೨೧೮ (ಅ)
ಮಂಗಳಾರತಿಯನ್ನು ಬೆಳಗಿರೆ – ಮಂಗಳಾಂಗಿಯರೆಲ್ಲರು ಪ
ಅಂಗನಾಮಣಿ ಗೌರಿದೇವಿ-ಶುಭಾಂಗ ಮೃದ್ಛವ ಗಣಪಗೆ ಅ.ಪ
ದಾಸರೀಪ್ಸಿತವನ್ನು ಸಲಿಸುವ ಈಶನಂದನ ಗಣಪಗೇ
ಪಾಶ ಅಂಕುಶ ಧರಿಸಿಹ ವಿಘ್ನೇಶ ವಿಘ್ನ ವಿನಾಶಗೇ ೧
ವಿದ್ಯವೀವಗೆ ಬುದ್ಧಿ ಕೊಡುವಗೆ ಸಿದ್ಧಿದಾಯಕ ಗಣಪಗೇ
ಶುದ್ಧಮನದಲಿ ಶರಣುಹೊದ್ದಲು ಉದ್ಧರಿಪ ಸದ್ದಯನಿಗೇ ೨
ಇಕ್ಷುಚಾಪನ ಲಕ್ಷ್ಯಮಾಡದೆ ದಕ್ಷನಾಗಿಹ ಗಣಪಗೇ
ಕುಕ್ಷಿಯೊಳು ಜಗವಿಟ್ಟು ರಕ್ಷಿಪ ಲಕ್ಷ್ಮೀಕಾಂತನ ಭಜಕಗೇ ೩

 

೨೭೪
ಮಧ್ವಮತವ ಪೊಂದಿ ಭಜಿಸಿರೊ | ಉದ್ಧಾರವಾಗಲು
ಮಧ್ವಮತವ ಪೊಂದಿ ಭಜಿಸಿರೊ ಪ
ಮಧ್ವಮತವ ಪೊಂದಿ ಭಜಿಸಿ
ಶುದ್ಧ ಜ್ಞಾನ ಭಕುತಿಗಳಿಸಿ
ಗೆದ್ದು ಈ ಭವಾಬ್ಧಿಯನ್ನು
ಪದ್ಮನಾಭನ ಪಾದವ ತೋರೆ ಅ.ಪ.
ನಾನೆ ವಾಸುದೇವನೆಂದು
ಹೀನ ಪೌಂಡ್ರಕನು ತಾನು
ಏನು ಗತಿಯ ಕಂಡನೆಂದು
ಜ್ಞಾನದಿಂದ ತಿಳಿದು ಮುನ್ನ ೧
ಹರಿಯೆ ಸರ್ವೋತ್ತಮನು | ವಿಶ್ವ
ವಿರುವುದಯ್ಯ ಸತ್ಯವಾಗಿ
ತಾರತಮ್ಯ ಪಂಚಭೇದ
ಸ್ಥಿರವೆಂದು ಸಾರಿಪೇಳ್ವ ೨
ಭಕುತಿಯಿಂದ ಸೇವಿಪ ಜನಕೆ
ಮುಕುತಿಯಲ್ಲಿ ನೈಜ ಸುಖವ
ಲಕುಮಿಕಾಂತನು ಪಾಲಿಪನೆಂದು
ಯುಕುತವಾಗಿ ಪ್ರಕಟಿಸಿದಂತ ೩

 

೨೪೧
ಮನ್ನಿಸೆನ್ನ ವೆಂಕಟರನ್ನ ಅನ್ಯಥಾ ಗತಿಗಾಣೆ ನಾ ಪ
ಹಲವು ಜನುಮದಿ ಬಂದೆ ಬಲು ಪರಿಯಲಿ ನೊಂದೆ
ತೊಳಲಿ ಬಳಲಿ ನಿಂದೆ ಸಲಹೊ ತಂದೆ ೧
ವಾಸವ ವಂದಿತ ಕೇಶವ ಅಚ್ಯುತ
ದಾಸರ ಮನ ಹಿತ ಬಾ ಶಾಶ್ವತ ೨
ಲಕುಮಿಕಾಂತನೆ ಎನ್ನ ಉಕುತಿ ಲಾಲಿಸಿ ಘನ್ನ
ಭಕುತಿ ಪಾಲಿಸೊ ಮುನ್ನ ಮುಕುತೀಶನೆ ೩

 

೨೪೦
ಮರೆವರೇನೊ ರಾಮ ನಿನ್ನ ಚರಣ ಸೇವಕನನ್ನು
ಪರರಿಗೊಪ್ಪಿಸಿ ಹೀಗೆ ಪ
ಪರಮ ದಯಾನಿಧಿ ಅಲ್ಲವೆ ಮುನ್ನ
ಶರಣರ ಪಾಲಿಸಲಿಲ್ಲವೆ ಇದು
ಸರಿಯೇನೊ ಜನ ನಗರೇನೊ ಇನ್ನು
ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ.
ಗತಿಹೀನರಿಗೆ ನೀ ಗತಿಯೆಂದು | ನೀನೆ
ಪತಿತರ ಪತಿಕರಿಸುವನೆಂದು
ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ
ಗತಿದೋರೆಂದು ಸಾರಿದೆ ಚೀರಿದೆ ದೂರಿದೆ ೧
ದೋಷರಾಶಿಗಳೆಲ್ಲ ಅಳಿಸಯ್ಯ
ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ
ದಾಸಾನುದಾಸ ದಾಸನು ಎನಿಸಿ | ಪರಿ-
ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ ೨
ಏನು ಸಾಧನವನ್ನು ನಾ ಕಾಣೆ | ನಿನ್ನಾ-
ಧೀನದವನು ನಾ ನಿನ್ನಾಣೆ
ದೀನ ಬಂಧುವೆ ದಯಾಸಿಂಧುವೆ
ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ ೩

 

೨೪೧ (ಅ)
ಮಾಡುವುದೋ ಕೃಪೆ ದಾಸನೊಳು ರಾಮ
ಮಾಡುವುದೋ ಕೃಪೆ ದಾಸನೊಳು ಪ
ನೋಡ ನೋಡುತ ಕೈಯ್ಯ ಬಿಡುವರೆ
ಬೇಡ ಬೇಡಿಕೊಂಬೆನು
ರೂಢಿಯೊಳು ನಿನ್ನಂಥ ಕರುಣಿಯ
ನೊಡಲಿಲ್ಲವೋ ಎಲ್ಲಿಯು ಅ
ಬಂದೆನೋ ನಾನಾ ಜನ್ಮದಲೀ | ರಾಮ
ನೊಂದೆನೋ ನಾ ಬಹು ಭವಣೆಯಲೀ
ದ್ವಂದ್ವ ದುಃಖದಿ ಕಂದಿ ಕುಂದುತ ಮುಂದುಗಾಣದೆ ಕೆಟ್ಟೆನೋ
ಕಂದನೆನ್ನುತ ಬಂದು ಪೊರೆ ಪರಮಾತ್ಮ ನಂಬಿದೆ ನಿನ್ನನು ೧
ದಾನ ಧರ್ಮಗಳ ನಾನರಿಯೆ | ರಾಮ
ಮೌನ ಮಂತ್ರಗಳ ನಾನರಿಯೆ
ಧ್ಯಾನ ಧಾರಣ ಜ್ಞಾನಸಾಧನವೇನೊಂದನು ಅರಿಯೆ
ಹಾನಿಯಿದ ನಾನೇನನೊರೆಯಲಿ ಮಾನನಿಧಿ ನಿನ್ನವನು ನಾ ೨
ಕಾಮಿನಿ ಕಾಂಚನ ಭೂಮಿಗಳ | ರಾಮ
ಕಾಮಕೆÉ ಸಿಕ್ಕಿದೆನೋ ಬಹಳ
ನೇಮ ನಿಷ್ಠೆಗಳೇನೂ ಇಲ್ಲದೇ ತಾಪದಿ ನಾ ಕೆಟ್ಟೆನೋ
ನಾಮಸುಧೆಯ ಪಾನ ಕರುಣಿಸು ಪ್ರೇಮದಲಿ ಶ್ರೀಕಾಂತನೇ ೩

 

೨೪೨
ಮುರಹರ ನಗಧರ ಪಾಹಿಮಾಂ ಕೃಷ್ಣ ಪ
ಪರಮ ದಯಾಕರ ಪಾಹಿಮಾಂ ಕೃಷ್ಣ ಅ.ಪ.
ಶರಣಾಗತ ಜನ ಪರಿಪಾಲಕ ನಿನ್ನ
ಚರಣ ಸುಸೇವೆಯ ನೀಡೋ ಕೃಷ್ಣ ೧
ಭಕ್ತವತ್ಸಲ ಭವನಾಶನ ಸರ್ವ
ಶಕ್ತ ನೀನಲ್ಲದಿನ್ಯಾರೋ ಕೃಷ್ಣ ೨
ಲೋಕನಾಥ ಜಗದೇಕ ಪರಾತ್ಪರ
ರಾಕೇಂದು ವದನ ಶ್ರೀಕಾಂತದೇವ ೩

 

೨೫೫
ಮೂರುತಿಯ ತೋರೋ ಮಾರುತಿ
ಧಾರುಣಿಯೊಳ್ ನೀನೇ ಗತಿಪ
ಅಂಜನಾ ಸುಕುಮಾರ ಕಂಜಾಕ್ಷ ಕಿಂಕರ
ಸಂಜೀವ ಗಿರಿಧರ ಅಂಜಿಕೆಯ ಕಳೆವ ಧೀರ ೧
ಎರೆಡು ದಳದವರ ಕರೆದು ಕೌರವನುರ
ಇರಿದು ಕರುಳಸರ ವರಸತಿಗಿತ್ತ ಧೀರ ೨
ಕಾಕು ಮಾಯ್ಗಳ ಮತ ನೂಕಿ ಬಿಸಾಡುತ
ಶ್ರೀಕಾಂತ ಸನ್ಮತ ಕೈಗೊಂಡು ನಿಲಿಸಿದಂಥ ೩

 

೨೫೨
ಯಾಕೆ ನಡುಗುವೆ ತಾಯಿ ಭೂಕಾಂತೆಯೆ ಪ
ಲೋಕನಾಥನ ರಾಣಿ ಪರಮ ಕಲ್ಯಾಣಿ ಅ.ಪ.
ಬುಧರು ಸನ್ಮಾರ್ಗವನು ಒದರಿ ಬಿಟ್ಟರೆ ತಾಯಿ
ಅದಟರಾದವರು ಗರ್ವದಿ ಮೆರೆವರೆ
ಮದದ ಸಂಪದವು ವೆಗ್ಗಳಿಸಿತೆ ವಣಿಜರಿಗೆ
ಕದನಕೆ ಕಾಲ್ಕೆರೆಯುತಿಹರೆ ಮಿಕ್ಕವರೆಲ್ಲ ೧
ಕುಲಶೀಲಗಳನೆಲ್ಲ ಕೆಡಿಸಿ ನೆಲಗೆಡಿಸಿದರೆ
ಕಳುವು ಹಾದರ ನುಸುಳು ಬಲವಾಯಿತೆ
ಲಲನೆಯರ ವ್ರತನೇಮಕಳಿವು ಬಂದಿತೆ ತಾಯಿ
ಹೊಲಬು ತಪ್ಪಿದೆ ಭಕ್ತಿ ಜಲಜಾಕ್ಷ ಪಥದಿ ೨
ಆವ ಕಾರಣದಿಂದುದಯಿಸಿತು ಈ ಚಿಂತೆ
ಆವನಿಂದಾಯ್ತಮ್ಮ ಈ ಉಬ್ಬಸ
ದೇವಿ ನೀ ದುಃಖಿಸುವ ಬಗೆ ನೋಡಿ ಮನ್ಮನವು
ಬೇವುದಿಗೊಳುತಿಹುದು ಶ್ರೀ ಕಾಂತನಾಣೆ ೩

 

೨೪೨ (ಅ)
ಯಾಕೆ ಬಾರದೋ ದಯವು ಶ್ರೀಹರೀ ಪ
ಲೋಕನಾಥ ನಿನಗೆ ಅಹಿತನೆ ನಾನು
ನೂಕದಿರೆನ್ನ ಭವದೀ – ಶ್ರೀ ಹರೀ ೧
ಆರು ನಿನ್ನ ಹೊರತೂ ಪೊರೆವರೋ ಶೌರೀ
ಭೂರಿ ಕರುಣಾಶರಧೀ – ಶ್ರೀ ಹರೀ ೨
ಚಿಂತಿತಾರ್ಥವನು ಕೊಡುವ ಶ್ರೀಕಾಂತ
ಅಂತು ಕೃಪೆಯಿಂ ಪೊರೆಯೋ – ಶ್ರೀ ಹರೀ ೩

 

೨೭೫ (ಅ)
ಯಾಕೆ ಮೂಕನಾದೆ ಕಾಕು ಮುನುಜಾ ಹೀಗೆ ಪ
ಯಾರಿಗೆ ಯಾರಿಲ್ಲ ಸಾರುವೆ ಕೇಳೆಲಾ
ಸ್ಥಿರವಲ್ಲ ಭಾಗ್ಯ ಯೌವ್ವನವೊ ೧
ಮಡದಿ ಮಕ್ಕಳಿಗೆಂದೇ ಒಡವೆ ವಸ್ತ್ರವ ತಂದೆ
ಒಡನೆ ಬರುವರೇ ಮಡಿದರೆ ನೀ ೨
ಅಸ್ಥಿರ ಸಂಸಾರ ನಿತ್ಯ ನರಕಕೆ ದ್ವಾರ
ಮುಕ್ತಿಯ ಪಡೆಯೆ ಶ್ರೀಕಾಂತನ ನೆನೆಯೋ ೩

 

೨೭೫
ಯಾತಕೆ ಚಿಂತಿಪೆ ಬಿಡು ನೀ | ಪರ
ಮಾತುಮ ಪೊರೆವನು ಶರಣರ ಬಿಡದೆ
ಸಂಶಯ ಬಿಡದೆ
ನಂಬು ನೀ ದೃಢದೆ ಪ
ಧರ್ಮವು ಹೊಸಗಿ ಅಧರ್ಮವು ಮುಸುಗಿರೆ
ಧರ್ಮಸ್ಥಾಪಕ ತಾನು ಒಮ್ಮೆಲೆ ಬಹನೆ
ದೀಕ್ಷೆಯಿಂದಿಹನೆ
ಕೀರ್ತಿಯತಹನೆ ೧
ದುಷ್ಟರ ಶಿಕ್ಷಿಸೆ ಶಿಷ್ಟರ ರಕ್ಷಿಸೆ
ಸೃಷ್ಟಿಗೆ ಬಹೆನೆಂದು ಕೊಟ್ಟಿಹನಭಯ
ಎಂದಿಗು ಮರೆಯ
ನಮ್ಮನು ತೊರೆಯ ೨
ಅನ್ಯ ಚಿಂತೆಯ ಬಿಟ್ಟು ತನ್ನಲೆ ಮನವಿಟ್ಟು
ಸನ್ನುತಿಪರ ಭಾರ ತನ್ನದೆಂದಾತ
ಘನ್ನ ಶ್ರೀಕಾಂತ
ಮುಕ್ತಿಪ್ರಧಾತ ೩

 

೨೪೨ (ಆ)
ಯಾದವಕುಲ ದೀಪ ಶ್ರೀಪ
ಯಾದವ ಕುಲದೀಪ ಪ
ವಿಧಿಜನಕ ಮಾಧವ ಪಾಹಿ ಅ.ಪ
ಶರಣ ರಕ್ಷಕ ಬಿರುದನು ಕೇಳಿ
ಶರಣು ಹೊಕ್ಕೆನೋ ದೇವ ೧
ಭುವನಪಾವನ ತವಪದ ಧ್ಯಾನ
ತವಕದಿ ಪಾಲಿಸೋ ದೇವ ೨
ಲಕುಮೀಕಾಂತನೆ ಸಕಲಕೆ ನೀನೆ
ಮುಕುತಿದಾತನೆ ದೇವ ೩

 

೨೪೩
ರಕ್ಷಿಸು ಕಮಲಾಕ್ಷ ಶ್ರೀ ವಕ್ಷ ಪ
ರಕ್ಷಾ ಶಿಕ್ಷಾಶ್ರಿತಜನ ಸಂರಕ್ಷ
ಅಕ್ಷಯ ಸುರಪಕ್ಷ ಅಧ್ಯಕ್ಷ ಅ.ಪ.
ಪ್ರಾಚೀನ ಕರ್ಮಾಬ್ಧಿ ವೀಚಿಯೊಳಗೆ ಸಿಕ್ಕಿ
ಪೇಚಾಡುತಲಿರೆ ತೋರದು ಯೋಚನೆ
ಶ್ರೀ ಚರಣಕೆ ಶಿರಬಾಗುವೆ ಶ್ರೀಕರ
ಸೂಚಿಸಿ ಘನ ಭಕ್ತಿ ವಿರಕ್ತಿ ೧
ಆರ್ತ ಬಾಂಧವನೆಂದು ಕೀರ್ತಿ ಪೊತ್ತವನೆಂದು
ಅರ್ತಿಯಿಂದಲಿ ಬಂದೆ ಸುತ್ತುತೆ ತಂದೆ
ಕೀರ್ತಿಯ ಉಳುಹಿಕೊ ಕೀರ್ತಿಯ ತಂದುಕೊ
ಭಕ್ತವತ್ಸಲ ಸ್ವಾಮಿ ಸುಪ್ರೇಮಿ ೨
ಜನನಿ ಜನಕರು ಅನುಜಾ ತನುಜರು
ಅನುವಾಗಿದ್ದರೆ ಎಲ್ಲ ನಮ್ಮವರೆ
ಅನುವು ತಪ್ಪಿದರಾರು ಕಣ್ಣಲಿ ನೋಡರು
ಅನಿಮಿತ್ತ ದಯವಂತ ಶ್ರೀಕಾಂತ ೩

 

೨೬೦
ರಕ್ಷಿಸು ಪರಮೇಶ್ವರ ದೇವ ಸಂ-
ರಕ್ಷಿಸು ಪರಮೇಶ್ವರ ದೇವ ಪ
ಗಂಗಾಧರ ಜಟಾಜೂಟ ಮನೋಹರ
ರಂಜಿತ ಕೇಶಾಲಂಕೃತ ಶಶಿಧರ
ಭಸ್ಮೋದ್ಧೂಳಿತ ಭವ್ಯ ಶರೀರ
ಆಬ್ಜ ಪ್ರಭಾಕರ ಅನಲ ತ್ರಿನೇತ್ರ
ಸದ್ಯೋಜಾತನೆ ಪರಮ ಪವಿತ್ರ ೧
ಮಂಡಿತ ಹಾಸೋನ್ಮುಖ ಮುಖ ಮಂಡಲ
ಕುಂಡಲಿ ಭೂಷಿತ ಕರ್ಣಕುಂಡಲ
ವಿಷಧರ ಕಂಧರ ಕಂಧರ ಮಾಲ
ಭಕ್ತಾ ಭಯಕರ ಕರಧೃತ ಶೂಲ
ವಾಮದೇವ ದೇವೋತ್ತಮ ಲೋಲ ೨
ಘೋರ ಕಪಾಲ ಖಟ್ವಾಂಗ ಡಮರುಗ
ಅಕ್ಷಮಾಲ ಪಾಶಾಂಕುಶ ಸಾರಗ
ಖಡ್ಗ ಧನುಶ್ಯರ ಖೇಟಕ ಭುಜಗ
ಮುದ್ಗರ ಮುಖ ಸಾಯಕ ಧೃತಕರ ಜಗ
ದೇಕವೀರ ಅಘೋರನೆ ಸುಭಗ ೩
ಗಜ ಶಾರ್ದೂಲಾ ಜಿನಧರ ಸದ್ಗುಣ
ಅಣಿಮಾದ್ಯಷ್ಟೈಶ್ವರ್ಯ ನಿಷೇವಣ
ಅಂಕಾರೋಹಿತ ಅಗಜಾ ವೀಕ್ಷಣ
ಸನಾಕಾದ್ಯರ್ಚಿತ ಪಾವನ ಚರಣ
ತತ್ಪುರಷನೆ ನಮೋ ಕರುಣಾಭರಣ ೪
ರುದ್ರಾದಿತ್ಯ ಮರುದ್ಗಣ ಸೇವಿತ
ನಂದೀಶಾದಿ ಪ್ರಮಥಗಣ ವಂದಿತ
ನಾರದ ಮುಖ ಸಂಗೀತ ಸುಪ್ರೀತ
ಶ್ರೀಕಾಂತಪ್ರಿಯ ನಿಗಮ ಪರಾರ್ಥ
ವಿಜ್ಞಾತ ನಮೋ ಈಶಾನನೆ ದಾತ ೫

 

೨೪೪
ರಕ್ಷಿಸೆನ್ನ ಪಕ್ಷಿವಾಹನ ಅಕ್ಷಯ ಗುಣಪೂರ್ಣ ಲಕ್ಷ್ಮೀರಮಣ ಪ
ಕುಕ್ಷಿಯೊಳಗೆ ಜಗವಿಟ್ಟು ರಕ್ಷಿಪ ಸ್ವಾಮಿ
ಈಕ್ಷಿಸಿ ಕರುಣ ಕಟಾಕ್ಷದಿ ಸತತ ಅ.ಪ.
ಏಸೇಸು ಕಲ್ಪದಲ್ಲೂ ಈಶ ನೀನಿಹುದಯ್ಯ
ದಾಸರು ಜೀವರ್ಕಳು ಕೃಪಾಳು
ಕ್ಲೇಶ ಸುಖಂಗಳಿಗೆ ನೀನೆ ಸ್ವತಂತ್ರನೆಂದು
ಸೂಸಿ ಪೇಳುತ್ತಲಿಹರು ಸಜ್ಜನರು
ವಾಸುದೇವನೆ ಸರ್ವಾಸುನಿಲಯನೆ
ಏಸೇಸು ಬಂದರು ದಾಸರ ಬಿಡದಿರು
ನೀ ಸಲಹದೆ ಉದಾಸೀನ ಮಾಡಲು
ಆಸರೆ ಯಾರಿನ್ನು ಶಾಶ್ವತ ವಿಭುವೆ ೧
ನಿನ್ನಧೀನನವನು ನಿನ್ನ ದಾಸರ ಸೂನು
ಎನ್ನುವ ಸಥೆಯಿಂದ ಮುಕುಂದ
ನಿನ್ನನೆ ಬೇಡುವೆ ನಿನ್ನನೆ ಕಾಡುವೆ
ಅನ್ಯಥಾ ಗತಿಗಾಣೆ ನಿನ್ನಾಣೆ
ನಿನ್ನ ದಾಸರ ಪದವನ್ನು ಪಿಡಿದು ನಾ
ನಿನ್ನನು ಸ್ತುತಿಸಿದೆನೆನ್ನುತ ಕೃಪೆಗೈದು
ಬಿನ್ನಪ ಲಾಲಿಸಿ ಬನ್ನವ ಕಳೆದು
ಘನ್ನ ಭಕುತಿಯಿತ್ತು ಧನ್ಯನ ಮಾಡೊ ೨
ಶರಣರ ಮಹದೇವ ಶರಣರ ಬಿಡದೆ ಕಾವ
ಶರಣರ ಉದ್ಧಾರ ಗಂಭೀರ
ಶರಣ ರಕ್ಷಾಮಣಿ ಶರಣ ತ್ರಿದಶ ತರು
ಶರಣ ಸುರಧೇನು ಎನಿಸಿನ್ನು
ನಿರುತದಿ ಪೊರೆಯುವ ಬಿರುದಗಳರಿತು
ಶರಣೆಂದು ನಿನ್ನಯ ಚರಣ ಕಮಲವನು
ಮರೆಹೊಕ್ಕೆನು ಕಾಯೊ ಪರಮ ದಯಾಕರ
ಕರಿರಾಜವರದ ಶ್ರೀಕಾಂತ ನಿಶ್ಚಿಂತ ೩

 

೨೪೫
ರಾಧಾಕೃಷ್ಣ ದಯದಿ ನೋಡೆನ್ನ ಪ
ಯದುಕುಲ ಚಂದ್ರ ಬಹುಗುಣ ಸಾಂದ್ರ ಅ.ಪ.
ಗೋಪಿ ಕುಮಾರ ಗೋಪಾಲಧೀರ
ತಾಪ ವಿದೂರ ಕೃಪಾಸಾರ ೧
ಬೃಂದಾವನಾನಂದ ಗೋವಿಂದ ಶೂರ
ಕಂದರ್ಪ ಕೋಟಿ ಸೌಂದರ್ಯಸಾರ ೨
ಏಕಾಂತ ಭಕ್ತ ಪ್ರಿಯ ಲಕ್ಷ್ಮೀಕಾಂತ
ವೈಕುಂಠನಾಥಾಶ್ರಿತ ಪಾರಿಜಾತ ೩

 

೨೪೫ (ಅ)
ರಾಮ ಸದ್ಗುಣ ಧಾಮ – ನಿಸ್ಸೀಮ
ಸುಮನೋರಮ ಪ
ಕಾಮಾರಿಸ್ತುತ ಮಂಗಳನಾಮ ಅ
ಸರಸಾಕಾರ ದುರಿತ ವಿದೂರ
ಕರುಣಾಕರ ಸುಂದರ ಗಂಭೀರ ೧
ದೀನೋದ್ಧಾರ ವಿಪಿನವಿಹಾರ
ದಾನವಹರ ಸುರಕಾವ್ಯ ವಿಚಾರ ೨
ಸೀತಾನಾಥ ವಾನರಯೂಥ
ವಾತಾತ್ಮಜ ನುತ ಶ್ರೀ ಲಕ್ಷ್ಮೀಕಾಂತ ೩

 

೨೬೭
ವಂದಿಸಿ ಬೇಡುವೆ ನವಗ್ರಹರ
ಕುಂದುಗಳೆಣಿಸದೆ ಬಂದು ರಕ್ಷಿಸಲೆಂದು ಪ
ಭಾಸುರ ಸೂರ್ಯನು ಭಾಸಿಸಲಿ ತತ್ವವನು
ಶ್ರೀ ಸಹೋದರ ಚಂದ್ರ ತೋಷವನು
ಸೂಸಿ ಕೊಡಲಿ ಮಂಗಳವನು ಮಂಗಳ
ಲೇಸಾದ ಪಾಂಡಿತ್ಯ ಪಂಡಿತನೀಯಲಿ ೧
ಹಿಂಗದ ಗೌರವ ತುಂಗ ಶ್ರೀಗುರು ಕೊಡಲಿ
ಕಂಗೊಳಿಸುವ ಕವಿತೆ ಕವಿ ಕೊಡಲಿ
ಭಂಗವಿಲ್ಲದ ಸುಖಸಂಪತ್ತು ಶನಿ ಕೊಡಲಿ
ಕಂಗೆಡಿಸುವ ರುಜೆ ರಾಹು ತಪ್ಪಿಸಲಿ ೨
ಹಿಡಿದ ಕೆಲಸದಲ್ಲಿ ಹಿಡಿಸಲಿ ಜಯಧ್ವಜವ
ಬಿಡದಲೆ ಧ್ವಜಿಯು ಸಡಗರದಿ
ಕಡು ನವಗ್ರಹಗಳು ಪಿಡಿಗ್ರಹವಾಗಲಿ
ಕೊಡಲಿ ನವನವ ಸಿರಿ ದೃಢದಿ ದಿನದಿನದಿ ೩
ಕರುಣಿ ಶನೈಶ್ಚರ ತರಣಿ ಕುಮಾರ
ವರಗುಣ ಮಣಿ ಹಾರ ದಾರಿದ್ರ್ಯದೂರ
ಹರಿಸು ಅರಿಷ್ಟವ ಸುರಿಸು ಮನೇಷ್ಟವ
ಎರಗುವೆ ಸಂಕಟಗೊಳಿಸದಿರುತ್ಕಟ ೪
ಸಿರಿ ವಾದಿರಾಜರು ಒರೆದ ಗ್ರಹಸ್ತ್ರೋತ್ರವ
ನಿರುತದಿ ಪಠಿಸಲು ಗ್ರಹ ಪೀಡೆಯು
ಸರಿದು ತಾಂ ಪೋಪುದು ಅರಿಯ ನಿಗ್ರಹವಹುದು
ತುರುಗಗ್ರೀವನ ದಯದಿ ಸರ್ವ ಸಂಪದಬಹುದು ೫
ಗೀರ್ವಾಣ ಭಾಷೆಯಲಿರುವ ಈ ಸ್ತುತಿಯನ್ನು
ಚಾರು ಕನ್ನಡ ಗೀತ ರೂಪದಿಂದ
ಸಾರಿದ ಲಕ್ಷ್ಮೀನಾರಾಯಣ ಶರ್ಮನು
ಕೋರುವ ಕೃಪೆಯನ್ನು ಸಾಧು ಸಜ್ಜನರನ್ನು ೬
ನಮೋ ರವಿ ಸೋಮನೆ ನಮೋ ಕುಜಸೌಮ್ಯನೆ
ನಮೋ ಗುರು ಭಾರ್ಗವ ನಮೋ ಶನೈಶ್ಚರನೇ
ನಮೋ ರಾಹು ಕೇತುವೇ ನಮೋ ಮೃತ್ಯುದೈವವೇ
ನಮೋ ಭೂತಗಣನಾಥ ನಮೋ ಲಕ್ಷ್ಮೀಕಾಂತ ೭

 

೨೫೩
ವಾರಿಧಿ ಸಂಭೂತೆ ಚಾರು ಗುಣಾನ್ವಿತೆ ಪ
ನಾರಾಯಣಹಿಗೆ ಪಾಲಿಸೆ ಮಾತೆ ಅ.ಪ.
ಸತ್ಯ ಸುಖಾಸ್ಪದೆ ಭೃತ್ಯರ ಬಿಡದೆ
ನಿತ್ಯದಿ ಪೊರೆವುದೆ ಅತಿಶಯ ಬಿರುದೆ ೧
ನಿನ್ನ ಕೃಪಾಶ್ರಯ ಪಡೆಯೆ ಮಹಾಶಯ
ನಿನ್ನ ನಿರಾಶ್ರಯ ತಾಪತ್ರಿತಯ ೨
ಲಕ್ಷುಮಿ ಕಾಂತನ ವಕ್ಷ ನಿವಾಸಿನಿ
ಈಕ್ಷಿಸಿ ಕರುಣದಿ ರಕ್ಷಿಸು ಜನನಿ ೩

 

೨೭೬
ವಿಧಿ ನಿಷೇಧವು ನಿನ್ನ ಸ್ಮರಣೆ ವಿಸ್ಮರಣೆಯ-
ಲ್ಲದಲರಿಯರೇನೊಂದು ಹರಿಭಕ್ತರು ಪ
ಮಿಂದದ್ದೆ ಗಂಗಾದಿ ತೀರ್ಥಗಳು ಸಾಧುಗಳು
ಬಂದದ್ದೆ ಪುಣ್ಯ ಕಾಲವುಗಳು ಅವರು
ನಿಂದದ್ದೆ ಗಯ ವಾರಣಾಸಿ ಕುರುಕ್ಷೇತ್ರಗಳು
ಬಂದು ಪೋಗಲು ಅದುವೆ ರಾಜಬೀದಿ ೧
ಕಂಡು ಕಂಡದ್ದೆಲ್ಲ ಕಮಲನಾಭನ ಮೂರ್ತಿ
ಮಂಡಿಸಿದ ಶಯನ ದಂಡಪ್ರಣಾಮ
ತಂಡತಂಡದ ಕ್ರಿಯೆಗಳೆಲ್ಲ ಹರಿ ಪೂಜೆಗಳು
ಮಂಡೆ ಬಾಗಿಸಿ ಸಮಿಪ ಶರಣ ಜನಕೆ ೨
ನಡೆವ ನಡೆಯೆಲ್ಲ ಲಕ್ಷ ಪ್ರದಕ್ಷಿಣೆ ಮತ್ತೆ
ನುಡಿವ ನುಡಿಯೆಲ್ಲ ಗಾಯಿತ್ರಿ ಮಂತ್ರ
ಒಡೆಯ ಶ್ರೀಕಾಂತನ್ನ ಅಡಿಗಡಿಗೆ ಸ್ಮರಿಸುತಿಹ
ದೃಢ ಪ್ರಜ್ಞರೇಂಗೈಯ್ಯಲದುವೆ ಮರ್ಯಾದೆ ೩

 

೨೭೦
ವ್ಯಾಸರಾಜ ಪರಿವ್ರಾಜ ಮಹಾರಾಜ |
ನಮೋ ನಮೋ ಗುರುರಾಜ ಪ
ಭಾಸುರ ಪಂಪಾ ತುಂಗಾ ತೀರವಾಸ | ಪಾಲಿಸೊ ತವದಾಸ ಅ.ಪ.
ರತಿಪತಿ ಜನಕನ ವರ ಶಯ್ಯಾಂಶದಲಿ | ವಾಯ್ವಾವೇಶದಲಿ
ಕೃತಯುಗದೊಳು ದಿತಿ ತನಯನ ಪತ್ನಿಯಲಿ |
ಜನಿಸುತ ಮೋದದಲಿ
ವಿತತನು ವಿಷ್ಣುವು ವಿಶ್ವದೊಳೆನುತಲಿ | ಅತಿಶಯ ಭಕ್ತಿಯಲಿ
ಪಿತಗೆ ತೋರ್ದ ಪ್ರಹ್ಲಾದನೆ ಹಿತದಲ್ಲಿ | ಅವತರಿಸಿದೆ ಇಲ್ಲಿ ೧
ಗುರುವರ ಬ್ರಹ್ಮಣ್ಯ ಮುನಿಕರ ಸಂಜಾತ |
ಧರೆಯೊಳಗೆ ಪ್ರಖ್ಯಾತ
ಪರಮಾತ್ಮನ ಪದಶರಣ ವ್ಯಾಸಯೋಗಿ | ಯೆನಿಸುತಲಿ ವಿರಾಗಿ
ತರತಮ ಪಂಚಕ ಪ್ರಭೇದವ ಸ್ಥಾಪಿಸಲು |
ದುರುಳರ ಖಂಡ್ರಿಸಲು
ಪರಿಪರಿ ಶಾಸ್ತ್ರವ ಶ್ರೀ ಪಾದರಾಯರಲಿ | ಓದಿದ್ಯೊ ಭಕ್ತಿಯಲಿ ೨
ವಾದಿರಾಜ ವಿಜಯೀಂದ್ರ ಮುನೀಂದ್ರರಿಗೆ |
ಪುರಂದರ ಕನಕರಿಗೆ
ಆದರದಿಂದಲಿ ಬೋಧಿಸಿ ತತ್ವವನು | ಮಾಡಿ ಪುನೀತರನು
ವೇದಶಾಸ್ತ್ರ ತರ್ಕಾದಿ ಗ್ರಂಥಗಳಲಿ | ಕೋವಿದರರಸುತಲಿ
ನೀ ದಯದಿಂದಲಿ ಸೇರಿಸಿ ಪರಿಷತ್ತು | ಭಾವಿಸಿ ವಿದ್ವತ್ತು ೩
ಅರ್ಥಿಕಲ್ಪಿತ ವರ ಕಲ್ಪವೃಕ್ಷವಾಗಿ | ನಿತ್ಯದಿ ಮಹಯೋಗಿ
ಪ್ರಥ್ಯರ್ಥಿ ಮದಕರಿ ಪಂಚವಕ್ತ್ರನಾಗಿ | ಪ್ರತ್ಯಕ್ಷದಿ ತಾಗಿ
ತುತ್ತು ಮೂರಾಗಿಸಿ ಅವರ ಗ್ರಂಥಗಳನು |
ಹೊರ ಚೆಲ್ಲುತೆ ನೀನು
ಸ್ತುತ್ಯ ಕೃಷ್ಣ ಭೂಮೀಂದ್ರನ ಕುಹುಯೋಗ | ಪರಿಹರಿಸಿದೆ ಬೇಗ ೪
ವ್ಯಾಸಾಂಬುಧಿಯನು ಕಟ್ಟಿ ಖ್ಯಾತನಾಗಿ | ದಾಸರ ಚನ್ನಾಗಿ
ಪೋಷಿಸುತಲಿ ಶ್ರೀ ಶೇಷಗಿರಿಗೆ ಬಂದು | ಶ್ರೀಶನಲ್ಲಿ ನಿಂದು
ಸಾಸಿರ ನಾಮದಿ ಪೂಜಿಸುತಲಿ ಹರುಷ |
ಪಡುತ ಹನ್ನೆರಡು ವರುಷ
ದೇಶ ದೇಶದಲಿ ಆಶುಗಿಯನು ನಿಲಿಸಿ | ಶಿಷ್ಯರಿಗನುಗ್ರಹಿಸಿ ೫
ಕಾಶಿ ಗಧಾಧರ ವಾಜಪೇಯಿ ಲಿಂಗ | ಮಿಶ್ರರು ನರಸಿಂಗ
ವಾಸುದೇವ ಪುರಿ ಈಶ್ವರ ಪಂಡಿತರ | ವಾದದಿ ಬಿಗಿವರ
ಜೈಸಿ ತಂದ ಜಯ ಪತ್ರಗಳನು ಮುದದಿ | ಶ್ರೀನಿಧಿಗರ್ಪಿಸಿದಿ
ಶ್ರೀಸತ್ಯಾ ರುಕ್ಮಿಣಿ ವೇಣುಗೋಪಾಲರನು | ಸ್ತುತಿಸಿ ಪಡೆದೆ ನೀನು ೬
ಮಾಯವಾದಿಗಳ ಬಾಯಿಗಳನು ಮುಚ್ಚಿ |
ನ್ಯಾಯಾಮೃತ ಬಿಚ್ಚಿ
ಧ್ಯೇಯನು ಸದ್ಗುಣ ಪೂರ್ಣ ಹರಿಯೆಂದೆ |
ಚಂದ್ರಿಕೆಯನು ತಂದೆ
ಆಯದಿ ಬುಧಮನ ತಾಂಡವಾಡುವಂತೆ | ತರ್ಕತಾಂಡವವಿತ್ತೆ
ಕಾಯಜಪಿತ ಶ್ರೀಕಾಂತನ ಸೇವಿಸುತ | ಸುಖಿಸುವೆ ನೀ ಸತತ ೭

 

ಅಷ್ಟಮೂರ್ತಿ ರುದ್ರ ಭವ ಶರ್ವ
೨೬೧
ಶಂಕರ ಲೋಕ ಶಂಕರ ಭವ ಭಯಂಕರ ಪ
ಶಂಕರ ತ್ವತ್ಪದ ಪಂಕಜದಲಿ ಮನ
ಶಂಕೆಯಿಲ್ಲದೆ ಕೊಟ್ಟು ಕಿಂಕರನನು ಪೊರೆ ೧
ಮೃತ್ಯುಪಾಶಕೆ ಸಿಕ್ಕಿ ತತ್ತರಿಸುತಲಿದ್ದ
ಭಕ್ತನ ಸಲಹಿದ ಮೃತ್ಯುಂಜಯ ಸಲಹೆನ್ನ ೨
ವಿಷವು ಆವರಿಸಲು ತ್ರಿದಶರು ಬೇಡಲು
ನಸುನಗುಗಲಿ ವಿಷ ಧರಿಸಿದ ಸದಾಶಿವ ೩
ಶಿವಶಿವಾವಲ್ಲಭ ಭವಾಭವ ಪ್ರಭವನೆ
ಭುವನ ಪವಿತ್ರನೆ ಭವಹರ ಸಲಹೆನ್ನ ೪
ಅಂಬಿಕನಾಥನೆ ನಂಬಿದೆ ನಿನ್ನನೆ
ಶಂಭುವೆ ಭಕ್ತನ ಬೆಂಬಿಡದೆಲೆ ಪೊರೆ ೫
ಅಷ್ಟ ವಿಭೂತದ ಅಷ್ಟಮೂರ್ತಿಯೆ ಪದ
ಮುಟ್ಟಿ ಭಜಿಪ ಮನ ಕೊಟ್ಟು ರಕ್ಷಿಸು ೬
ದಿಗಂಬರ ದಯಾಕರ ಭಗೀರಥ ಹಿತಕರ
ಅಘಹರ ಮೃಗಧರ ಹಗರಣಗೊಳಿಸಿದೆ ೭
ವಿಘ್ನಪ ಜನಕನೆ ಅಜ್ಞತೆ ಬಿಡಿಸಯ್ಯ
ಸುಜ್ಞನೆ ಭವಾಂಬುಧಿ ಮಗ್ನನನುದ್ಧರಿಸಯ್ ೮
ಲಕುಮಿಕಾಂತನ ಪ್ರಿಯಸಖನೆ ಶ್ರೀಕಂಠನೆಭಕುತಿ ಭಾಗ್ಯವನೀಯೊ ಶಕುತ ಬಿಡದೆ ಕಾಯೊ ೯

 

೨೬೧ (ಅ)
ಶಂಭೋ ಅಂಬಾಮನೋಹರ ದೇವ ಮಹದೇವ ಪ
ಘನ ಗಂಭೀರ ನಂಬಿದೆ ಕಾಯೊ ವರವೀಯೋ ಅ.ಪ
ಸುರನರ ಭುಜಂಗ ಸಂಸೇವ್ಯ ಸುಭಾವ್ಯ
ಸರ್ವಕಾಂಇರ್ಇ ಸತತ ಸಹಾಯ
ಧೀರ ಅಘೋರ ರಿಪು ಸಂಹಾರ
ಉದಾರ ದಾತಾರ ದುರಿತವಿದೂರ ೧
ವರದೇಶ ದಿನೇಶ ಪ್ರಕಾರ
ಸರ್ವೇಶ ಕೈಲಾಸ ವರ ಗಿರಿವಾಸ
ಈಶ ಮಹೇಶ ವಿಶ್ವೇಶ ಉಮೇಶ
ದುರ್ವಾಸ ಪರಮ ವಿಲಾಸ ೨
ಶರಣರ ಆಧಾರ ಪರಮಾರ್ಥ ವಿಚಾರ
ಉರಗೇಂದ್ರ ಭೂಷಿತಹಾರ
ಮಾರಸಂಹಾರ ಭವದೂರ ಉದ್ಧಾರ
ಶ್ರೀಕಾಂತ ಪ್ರಿಯ ಮಂದಾರ ೩

 

೨೭೭
ಮಾಧವ ಗೀತೆ
ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ
ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ
ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ
ಶರಣು ಶರಣ ಮಂಡಲಕ್ಕೆ ಶರಣು ಮಾಧವ ೧
ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು
ವರರ ವಚನ ಮಣಿಗಳನ್ನು ಮನದೊಳಾರಿಸಿ
ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ
ಕೊರಳಿಗರ್ಪಿಸುವೆನು ಭಕ್ತಿ ಭರದಿ ಮಾಧವ ೨
ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ-
ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು
ತೋಯಜಾಸನಾಂಡ ಗೃಹವು ಮಾಯೆ
ಮನೆಯ ದಾಸಿ ಸುರನಿ
ಕಾಯ ಸೇವೆಗೈವ ಜನರು ಜೀಯ ಮಾಧವ ೩
ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು
ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು
ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ
ಸರ್ವಸಾರ ಭೋಕ್ತ ತೃಪ್ತಗುಪ್ತ ಮಾಧವ ೪
ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ
ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು
ನೀನೆ ಧೃತಿಯು ನೀನೆ ಸ್ರ‍ಮತಿಯು ನೀನೆ ಮತಿಯು
ನೀನೆ ಗತಿಯು ನೀನೆ ವಿದ್ಯೆ ನೀನೆ ಸಿದ್ಧಿದಾನಿ ಮಾಧವ ೫
ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ
ನಿನ್ನ ಚರಿತೆ ಘನ್ನ ಚರಿತೆ ನಿನ್ನ ಪೋಲುವ
ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ
ಪನ್ನಗಾದ್ರಿವಾಸ ಶ್ರೀನಿವಾಸ ಮಾಧವ ೬
ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು
ಭಾನುಕೋಟಿ ತೇಜನೇ ಅನಾದಿ ಪುರುಷನೆ
ಏನ ಬಲ್ಲೆನೈಯ ನಾನು ಜ್ಞಾನಪೂರ್ಣನೈಯ ನೀನು
ನಾನು ನಿನ್ನಧೀನನೈಯ ಸ್ವಾಮಿ ಮಾಧವ ೭
ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ
ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ
ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ
ಸದಯನಾಗಿ ಬಿಡದೆ ಸಲಹೊ ಮುದದಿ ಮಾಧವ ೮
ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ
ನೀನೆ ಕೃಪೆಯಿನೊಲಿಯದಿರಲು ಜ್ಞಾನ ಬಾರದು
ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ
ನೀನೆ ಜನಕೆ ಸೂತ್ರಧಾರಿ ಮಾನ್ಯ ಮಾಧವ ೯
ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು
ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು
ಚಿತ್ತ ಶುದ್ಧನನ್ನ ಮಾಡು ನಿತ್ಯ ನಿನ್ನ ಭಜಿಸುತಿಪ್ಪ
ಸತ್ಯವಂತರೊಡನೆ ಬಳಕೆಯಿತ್ತು ಮಾಧವ ೧೦
ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು
ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು
ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು
ತುಂಬಿ ತುಳುಕುತಿಹುದು ಭವವ ನಂಬೆ ಮಾಧವ ೧೧
ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ
ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು
ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ
ದೆಷ್ಟು ಶಿಷ್ಟನಾಗಲವಗೆ ನಷ್ಟ ಮಾಧವ ೧೨
ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ
ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು
ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ
ದೆಷ್ಟೊ ದುಷ್ಟನಿತ್ತ ವರದಲಷ್ಟೆ ಮಾಧವ ೧೩
ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ
ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ
ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ
ಮುಪ್ಪು ಇಲ್ಲದಿಪ್ಪ ಸರ್ಪಶಯನ ಮಾಧವ ೧೪
ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ
ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು
ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ
ನರಕ ಬಾಧೆ ತಪ್ಪಲಿಲ್ಲ ವರದ ಮಾಧವ ೧೫
ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ
ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು
ಮರೆದು ತಿರಿದು ಕಾಡಿಬೇಡಿ ತರಣಿ ಮುಣಗ ದುಡಿದು ಬಡಿದು
ಕರಣ ತೃಪ್ತಿಗೆಂದು ಸುರಿದೆ ಬಂದೆ ಮಾಧವ ೧೬
ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ
ನರಕ ಭಾಗಿ ಪಾಮರಂಗೆ ನಿನ್ನ ನಾಮವು
ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ
ದುರಳ ಸಂಗ ಬಿಡಲಿಸಲ್ಲ ಕರುಣಿ ಮಾಧವ ೧೭
ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ
ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು
ಬಾರದವರಿಗೆಂದು ಕರುಣ ಘೋರತನದ ದನುಜರವರು
ನೀರ ಕಡೆದರುಂಟೆ ಬೆಣ್ಣೆ ಶೌರಿ ಮಾಧವ ೧೮
ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು
ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು
ದಾಳಿ ಮಾಳ್ಪ ವಿಷಯಗಳನು ಹೂಳಿ ಜ್ಞಾನ ಭಕ್ತಿಯನ್ನು
ತಾಳಿ ನಿನ್ನನೋಲಗಿಸಲು ಬಾಳ್ವೆ ಮಾಧವ ೧೯
ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ
ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು
ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ
ಪೆಟ್ಟಿಗೆಯನು ತುಂಬಿಸುವರೊ ದಿಟ್ಟ ಮಾಧವ ೨೦
ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ
ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು
ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ
ತರುಣಿ ನುಡಿಯ ಕೇಳಿ ನೆಚ್ಚುತಿಹರು ಮಾಧವ ೨೧
ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ
ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು
ಮುಟ್ಟಿ ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು
ಕೆಟ್ಟು ಮಾರಿಗೆರಗಿ ನಿನ್ನ ಬಿಟ್ಟು ಮಾಧವ ೨೨
ಕಂಡುದನ್ನು ಪೇಳದಿಹರು ಕೊಂಡೆಯವನು ಪೇಳುತಿಹರು
ಉಂಡ ಮನೆಗೆ ಬಗೆವರೆರಡನವರು ಭಂಡರು
ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ
ಕೊಂಡು ಪೋಗಿ ಕೊಡುತಲಿಹರು ಕಂಡ್ಯ ಮಾಧವ ೨೩
ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು
ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು
ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ
ತಳ್ಳಿ ಬಿಡುವರಿಲ್ಲದವರನೆಲ್ಲ ಮಾಧವ ೨೪
ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು
ನೋಡರೊಮ್ಮೆಗಾದರವರು ಬಡವರೆಂಬುದ
ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು
ಕೇಡು ಬರದು ನಾಡಿನೊಳಗೆ ನೋಡೆ ಮಾಧವ ೨೫
ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ
ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು
ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ
ಲೋಕನಾಥ ನಿನ್ನಲಿಡದೆ ಹೋದೆ ಮಾಧವ ೨೬
ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು
ಕಾಮಲೋಭ ಮೋಹಗಳನು ಬಿಡಲು ಬಾರದು
ತಾಮಸರನು ನೋಡೆನೆಂಬ ನೇಮವನ್ನು ನಿತ್ಯ ಪರರ
ಕಾಮಿನಿಯರ ಬಿಡದೆ ಹೋದೆ ಸ್ವಾಮಿ ಮಾಧವ ೨೭
ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ
ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು
ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ
ಸೂಸಿ ನಿನ್ನ ತೋಷಬಡಿಸಲಿಲ್ಲ ಮಾಧವ ೨೮
ಪರರ ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು-
ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು
ನರಕವಾರ್ತೆಯನ್ನು ಕೇಳಿ ದುರುಳ ವಿಷಯಗಳಿಗೆ ಮನವ
ನೆರಗಿಸುವೆನು ಮುಂದೆ ಗತಿಯದೇನೊ ಮಾಧವ ೨೯
ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ
ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ
ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ
ರಾಶಿಯನ್ನು ನಾಶ ಮಾಡೊ ಶ್ರೀಶ ಮಾಧವ ೩೦
ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು
ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು
ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ
ತಾಗು ಬಾಗುಗಳನು ತಿಳಿಯದಾದೆ ಮಾಧವ ೩೧
ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ
ಮುಂದೆ ಗತಿಯದಾವುದೈಯ ಸಿಂಧುಶಯನನೆ
ಮಂದನಾಗಿ ನೊಂದೆನಯ್ಯೋ ಹಿಂದು
ಮುಂದ ನೊಂದನರಿಯೆ
ಬಂದು ಸಲಹೊ ಕಂದನೆಂದೂ ತಂದೆ ಮಾಧವ ೩೨
ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ
ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ

 

೨೬೨
ಶಶಿಕಲಾ ಭೂಷಣನೆ ಶಂಕರನೆ ಪ
ಗಂಗಾಧರನೆ ಗೌರೀವರನೆ
ಅಂಗಜಮದಹರನೇ ಶಂಕರನೇ ೧
ಮೃತ್ಯುಂಜಯನೆ ಮುಪ್ಪುರ ಹರನೆ
ಭಕ್ತರ ಪೊರೆಯುವನೆ ಶಂಕರನೆ ೨
ಶ್ರೀಕಾಂತ ಹಿತಸಖ ಏಕಾಂತ ಹೃದಯ
ನೀ ಕರುಣಿಸೊ ಸದಯಾ ಶಂಕರನೆ ೩

 

ಶ್ರೀ ನಾಥ ಯದುನಾಥ ಖ್ಯಾತಾ
ಶ್ರೀನಾಥ ಯದುನಾಥ ಪ
ದೀನೋದ್ಧಾರಿ ದಾನವ ವೈರಿ
ಮಾನವನಿತ್ತು ಪೊರಿ ಉದಾರೀ ೧
ಜ್ಞಾನಾಜ್ಞಾನಾ ನಿನ್ನಾಧೀನಾ
ಏನೊಂದರಿಯೆ ಹರಿ ಮುರಾರೀ ೨
ಪಂಢರಿನಾಥಾ ಪಾಂಡವ ದೂತ
ತೊಂಡ ವತ್ಸಲ ದಾತಾ ಶ್ರೀಕಾಂತಾ ೩

 

ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು
೨೭೧
ಶ್ರೀ ಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪ-
ರೀ ಪೃಥುವಿಯೊಳು ಧನ್ಯರು ಪ
ಗೋಪಿನಾಥ ಪದಾಬ್ಜ ಮಧುಪ ದ-
ಯಾ ಪಯೋನಿಧಿ ಸುಜನರಂತಃ-
ಸ್ತಾಪಹಾರಕ ಗೋಪ ಸಕಲ ಕ-
ಲಾಪವಿದ ತಾಪತ್ರಯಾಪಹ ಅ.ಪ.
ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು
ಹೀರ ವರ್ಣರು ಬಂದು ಕೇಳಲು
ತೋರಿ ತುರುಗಳ ಗತಿಯ ಸೂರ್ಯನ
ತೋರಿ ತಮ್ಮಯ ಪೋರ ವಯಸನು
ಸೂರಿಗಳೇ ನೀವರಿಯರೆನ್ನುತ
ಚಾರು ಉತ್ತರವಿತ್ತ ಧೀರರ ೧
ಭೂದೇವನನು ಕೊಂದು ಬಾಧೆಗಾರದೆ ನೃಪ
ತಾ ದೈನ್ಯದಲಿ ನಿಂದು ಬೇಡಲು
ಮಾಧವನ ಶ್ರೀ ಪಾದ ಪದ್ಮಾ-
ರಾಧನೆಯ ತೀರ್ಥವನು ಪ್ರೋಕ್ಷಿಸಿ
ಆದರದಲೀಕ್ಷಿಸುತ ಭೂಪನ
ಕಾದ ಕಾಂಚನದಂತೆ ಮಾಡಿದ ೨
ಶಂಕಿಸಿ ದ್ವಿಜವೃಂದ ಆತಂಕಗೊಳ್ಳುತಲಿರೆ
ಮಂಕುಗಳಾ ಡೊಂಕು ತಿದ್ದಲು
ಬಿಂಕದಲಿ ತರಿಸಿ ಗೇರೆಣ್ಣೆ
ಪಂಕದೊಳಗದ್ದಿರುವ ವಸ್ತ್ರಕೆ
ಶಂಖೋದದಿಂ ಕಲುಷ ಹಾರಿಸಿ
ಕಿಂಕರ ಮನಶಂಕೆ ಬಿಡಿಸಿದ ೩
ಹರಿಗರ್ಪಿಸಿದ ನಾನಾ ಪರಿಯ ಶಾಖವ ಭುಂಜಿಸೆ
ನರರು ತಾವರಿಯದೆ ಜರಿಯುತ್ತಿರೆ
ಹರುಷದಿಂದಲಿ ಹಸಿಯ ವಸ್ತುಗ-
ಳಿರವ ತೋರಿಸಿ ಮರುಳ ನೀಗಿಸಿ
ಶರಣು ಶರಣೆನಲವರ ಪಾಲಿಸಿ
ಮೆರೆದ ಬಹು ಗಂಭೀರ ಗುರುವರ ೪
ಘೋರಾರಣ್ಯದಿ ದಿವ್ಯ ಕಾಸಾರ ನಿರ್ಮಿಸಿ
ನಾರಸಿಂಹನ ನೆಲಸಿ
ಊರು ಮಂದಿಯು ನೋಡುತಿರಲಾ-
ವಾರಿ ಮಧ್ಯದಿ ಬಂದ ಗಂಗೆಗೆ
ಸೀರೆ ಕುಪ್ಪಸ ಬಾಗಿನಂಗಳ
ಧಾರೆಯೆರೆದಪಾರ ಮಹಿಮರ ೫
ವ್ಯಾಸರಾಜರ ಫಣಿ ಬಂಧ ನಿವಾರಿಸಿ
ಭಾಷಿಸಿ ಫಣಿಪನ್ನ ತೋಷಿಸಿ
ಕಾಶಿ ಗಯಾ ಶ್ರೀ ಮುಷ್ಣದ್ವಾರಕ
ಶೇಷಗಿರಿ ಮೊದಲಾದ ಪುಣ್ಯ ಪ್ರ-
ದೇಶಗಳ ಸಂಚರಿಸಿ ಭಕ್ತರ
ದೋಷರಾಶಿಯ ನಾಶಗೈಸಿದ ೬
ಕಸ್ತೂರಿತಿಲಕ ಶ್ರೀಗಂಧ ಲೇಪನದಿಂದ
ನಿತ್ಯ ಮಹೋತ್ಸವಗೊಳುತ
ಮುತ್ತಿನಂಗಿಯ ಮೇಲ್ಕುಲಾವಿಯು
ರತ್ನ ಕೆತ್ತಿದ ಕರ್ಣಕುಂಡಲ
ಬಿತ್ತರದಿ ಧರಿಸುತ್ತ ರಥವನು
ಹತ್ತಿ ಬರುತಿಹ ಸ್ತುತ್ಯ ಬಿರುದಿನ ೭
ಆರ ಬೃಂದಾವನ ಸೇವೆಯ ಮಾಡಲು
ಕ್ರೂರ ಭೂತಗಳೆಲ್ಲ ದೂರವು
ಆರ ಬೃಂದಾವನದ ಮೃತ್ತಿಕೆ
ನೀರು ಕುಡಿಯಲು ಘೋರಕ್ಷಯ ಅಪ-
ಸ್ಮಾರ ಗುಲ್ಮಾದಿಗಳ ಉಪಟಳ
ಹಾರಿ ಪೋಪುದು ಆ ಮುನೀಶ್ವರ ೮
ಪರವಾದಿಗಳ ಬೆನ್ನುಮುರಿವ ವಜ್ರದ ಡಾಣೆ
ಶರಣ ರಕ್ಷಾ ಮಣಿಯೆ
ದುರಿತ ತಿಮಿರಕೆ ಮೆರೆವ ದಿನಮಣಿ
ಎನಿಸಿ ಪೂರ್ವ ಕವಾಟ ನಾಮಕ
ಪುರದ ನರಕೇಸರಿ ಕ್ಷೇತ್ರದಿ
ಸ್ಥಿರದಿ ಶ್ರೀ ಕಾಂತನನು ಭಜಿಸುವ ೯

 

೨೧೮
ಶ್ರೀ ಸಿದ್ಧಿಗಣಪ ಕೊಡು ನಿನ್ನ ನೆನಪ ಘಾಸಿ ತಿಮಿರದಿನಪ ಪ
ಈಶನ ವರಸುತ ದಾಸ ಜನರ ಹಿತ ಪಾಶಾಂಕುಶ ಹಸ್ತ ಅ.ಪ
ವಿದ್ಯೆ ಪ್ರದಾಯಕ ಬುದ್ಧಿ ಪ್ರಬೋಧಕ ಸಿದ್ಧಿದ ಶ್ರೀ ಬೆನಕ
ಹೊದ್ದಿ ನೆನೆವ ಭಕ್ತರುದ್ಧರಿಸುವ ಶಕ್ತ ಮುದ್ದು ಮುಖವ ತೋರಿತ್ತ ೧
ಗಿರಿಜೆ ಸತ್ಕುವರನೆ ದ್ವಿರದ ಸುವದನನೆ ಶರಣರ ಪಾಲಿಪನೆ
ಕರುಣ ಮಹೋಧದಿ ವರಗುಣಮಣಿ ನಿಧಿ
ಪೊರೆಯನ್ನ ಸದ್ದಯದಿ ೨
ಕಿಂಕರ ಶಂಕರ ಶತ್ರುಭಯಂಕರ ಶಂಖಚಕ್ರಾಬ್ಜಧರ
ಸಂಕಟ ಪರಿಹರ ಮಂಕು ಕಳೆವ ಧೀರ
ಪಂಕಜ ಮುಖವ ತೋರ ೩
ರಕ್ತ ವಸ್ತ್ರಾನ್ವಿತ ರಕ್ತ ಗಂಧಾಕ್ಷತ ರಕ್ತ ಮಾಲಾದಿಧೃತ
ಭಕ್ತ ಜನಾವನ ಶಕ್ತನೆ ನೀ ಎನ್ನ ಚಿತ್ತದಿ ಪೊಳೆಯೊ ಘನ್ನ ೪
ಬಾದರಾಯಣಪ್ರಿಯ ಭಾಗವತಧ್ಯೇಯ
ವೇದನಿಕರ ಸುಗೀಯ
ಆದಿ ಸಂಪೂಜಿತ ಮೋದಕ ಸುಪ್ರೀತ
ಸಾಧು ಸಜ್ಜನ ಸಮ್ಮತ ೫
ಅಂಬರಾಧಿಪ ನಿನ್ನ ಉದರದಿ ಜಗವನ್ನ
ಇಂಬಿಟ್ಟಿಯೆಂದು ನಿನ್ನ
ಲಂಬೋದರನೆಂದು ವಿಶ್ವಂಭರನೆಂದು
ಅಂಬರೊ ಸುಗುಣಸಿಂಧು ೬
ವಕ್ರವ ತುಂಡಿಪ ಕತದಿಂದಲಪ್ಪ ವಕ್ರತುಂಡನು ನೀನಪ್ಪ
ಶಕ್ರ ಪೂಜಿಸಿದನು ವೃತ್ರನ ವಧೆಗಿನ್ನುಪಕ್ರಮದಲೆ ತಾನಿನ್ನು ೭
ದುರಿಯೋಧನ ನಿನ್ನ ಮರೆತ ಕಾರಣ ತನ್ನ
ಪರಿವಾರಸಹಿತ ಘನ್ನ
ಧುರದಲ್ಲಿ ಬಿದ್ದನು ವರ ಧರ್ಮ ಗೆದ್ದನು ಎರಗಿ ಅರ್ಚಿಸಿ ನಿನ್ನನು ೮
ದುರಳ ದಶಾನನ ಸರಕುಮಾಡದೆ ನಿನ್ನ ಗರುವದಿಂದಿರಲವನ
ಪರಿಭವ ಕಾರಣವಾದುದೆಂಬರು ಕಣ ಶರಣಜನಾಭರಣ ೯
ಉರುಪರಾಕ್ರಮಿ ರಾಮ ಅರಿತು ಭಜಿಸಿ
ನೇಮದಿರುತಿದ್ದು ಹೇ ಮಹಿಮ
ಖರ ದಶಶಿರನನ್ನು ಧುರದಲ್ಲಿಗೆದ್ದನು ಕರುಣೆಯೆ ಒರೆಯಲೇನು ೧೦
ತಾರಕವಧೆಗೆಂದು ಶೂರ ಷಣ್ಮುಖ ಬಂದು
ಕೋರಲು ಸಿದ್ಧಿ ಅಂದು
ತೋರಿದೆ ಕರುಣವ ಚಾರುಕರದಿ ಅವನಾರೈಸಿ ಕರುಣಾರ್ಣವ ೧೧
ಮುಪ್ಪುರ ಗೆದ್ದನು ಮುಕ್ಕಣ್ಣ ನಿನ್ನನು ತಪ್ಪದೆ ನೆನೆದವನು
ಅಪ್ಪನೆ ನಿನ್ನಯ ಗೊಪ್ಪ ಚರಿತ್ರೆಯ ಇಪ್ಪಂತೆ ಪೇಳಿಸಯ್ಯ ೧೨
ಸೃಷ್ಟಿಕರ್ತನು ತನ್ನ ಸೃಷ್ಟಿಗೈಯ್ಯಲು ಮುನ್ನ ಮುಟ್ಟಿಭಜಿಸಿದ ನಿನ್ನ
ಎಷ್ಟೆಂತ ಪೇಳಲಿ ಶ್ರೇಷ್ಠಗುಣಾವಳಿ ಅಷ್ಟೆಲ್ಲ ನೀನೆ ಬಲ್ಲಿ ೧೩
ಬಂದಪವಾದವ ನಂದಿಸೆ ಮಾಧವ ಪೊಂದಿದ ನಿನ್ನನವ
ದಂದುಗ ಪರಿದುದು ಸಂದೆಗ ಪೋದುದು
ದ್ವಂದ ವಿವಾಹಾದುದು ೧೪
ಭಾರತ ಬರೆಯಲು ಆಕಾರ ನೋಡಲು ತೋರದೆ ಇರುತಿರಲು
ಶೂರನೆ ನಿನ್ನನು ಅರಿಸಿ ವ್ಯಾಸನು ಬೀರಿದ ಮಹಿಮೆಯನು ೧೫
ಏನು ಕರುಣವಯ್ಯ ಶ್ರೀನಿಕೇತನಿಗೈಯ್ಯಾ ತಾನೆ ಇತ್ತಿಹನಯ್ಯ
ಆನತಿಸಲು ಇಷ್ಟ ಮಾಣಲು ಸಂಕಟ ನೀನು ಕೊಡೆನುತದಟ ೧೬
ಭಜಿಪರ ಭಾಗ್ಯದ ಯಜಿಪರಭೀಷ್ಟದ ತ್ಯಜಿಪರ ಸಂಕಟದ
ಗಜಮುಖ ನಿನ್ನಡಿ ಕುಜದ ನೆಳಲ ನೀಡಿ ನಿಜ ಬಿರುದಗಳ ಪಡಿ ೧೭
ಜಯ ಜಯ ಸುಮುಖನೆ ಜಯ ಏಕದಂತನೆ ಜಯ ಜಯ ಕಾಪಿಲನೆ
ಜಯ ಗಣಾಧ್ಯಕ್ಷನೆ ಜಯ ಫಾಲ ಚಂದ್ರನೆ ಜಯ ಜಯ ಗಜಮುಖನೆ ೧೮
ದ್ವಾದಶ ನಾಮವ ಆದರದಿಂದಾವ ಓದುವ ಕೇಳುವವ
ಬಾಧಿಪ ವಿಘ್ನವ ಪಾರ್ದು ತಾಂ ಪೋಗುವ ಆದಿ ಪೂಜಿತನೊಲಿವ ೨೦
ವಿದ್ಯಾರಂಭದಿ ಮುದ್ದು ವಿವಾದದಿ ಪೊದ್ದಲ್ಲಿ ನಿರ್ಗಮದಿ
ಯುದ್ಧದಿ ನಿನ್ನನು ಬದ್ಧದಿ ನೆನೆವನು ಗೆದ್ದಪನೈ ಅವನು ೨೧
ಏಕವಿಂಶತಿಪದ ಕೋಕನಪುಷ್ಪದ ಶ್ರೀಕರ ಮಾಲೆ ಇದ
ಶ್ರೀಕಾಂತ ವರಭಕ್ತ ನೀ ಕರುಣಿಸೆಂದಿತ್ತ ಸ್ವೀಕರಿಸೈ ಮಹಂತ ೨೨
ಬೆಂಗಳೂರಿನಲಿ ತುಂಗರೂಪದಲ್ಲಿ ಕಂಗೊಳಿಸುತಲಿಲ್ಲಿ
ಮಂಗಳೇಕ್ಷಣದಿಂದ ಡಿಂಗರಿಗರ ವೃಂದ ಹಿಂಗದೆ ಪೊರೆವೆನೆಂದ ೨೩
ಬಾಲಕೃಷ್ಣಾರ್ಯರ ಬಾಲ ಲಕ್ಷ್ಮೀನಾರಾಯಣನೆಂಬ ಸತ್ಪೆಸರ
ತಾಳಿದ ಶರಣನು ಮೇಳೈಸೀನುತಿಯನು ಓಲಗಿಸಿದ ನಿನ್ನನು ೨೪
ಒಂದೊಂದು ನುಡಿಯನು ಚಂದದಿ ನುಡಿವನು ಪೊಂದುವ ಮೋದವನು
ಇಂದುಧರನ ಸುತನಂದದಿ ಸದ್ಭಕ್ತವೃಂದ ರಕ್ಷಿಪ ಸಂತತ ೨೫
ಅಖುವಾಹನ ನಮೋ ಏಕದಂತನೆ ನಮೋ ಸಾಕುವ ಮಹಿಮ ನಮೋ
ಭೀಕರ ಬಿಡಿಸೆನ್ನ ನೀ ಕರುಣಿಸು ಮುನ್ನ ಶ್ರೀಕಾಂತ ಭಕ್ತಿಘನ್ನ ೨೬
ಮಂಗಳ ಸದ್ವಿದ್ಯಾಬುದ್ಧಿದ ಜಯ ಜಯ ಮುಂಗಳ ಸಿದ್ಧದನೆ
ಮಂಗಳ ಮುದ್ದು ವಿನಾಯಕ ಜಯ ಜಯ ಮಂಗಳ ವರ್ಧಿತನೆ ೨೭

 

ಹತವೆ ಮಾಡುತಲಿದ್ದ ಕಿತ

ಶ್ರೀರಾಮ ಎನ್ನಿರೊ ಶ್ರೀರಾಮ ಎನ್ನಿರೊ ಪ
ದುರಿತ ಪರ್ವತಕೆ ವರವಜ್ರವೆನಿಪುದು ಜಗವರಿಯೆ ಅ.ಪ.
ಶರಣರ ನಿತ್ಯ ಪೊರೆಯುವ ಸತ್ಯ
ತಾರಕ ನಾಮಕೆ ಮತ್ತೊಂದು
ಸರಿಯೆ ಸಾರ ಸಹಸ್ರನಾಮಕೆ
ಶ್ರೀರಘುನಾಥನ ನಾಮವೆಂತೆಂದು
ಸಾರಿ ಮಹೇಶನು ಸುರನರ ವಂದ್ಯನು
ಗಿರಿಜೆಗೆ ಪ್ರೇಮದಿ ಪೇಳಿದನು
ಮರುತಾತ್ಮಜನು ನಿರುತದಿ ಭಜಿಪನು
ಪರಿಪರಿ ಪಾಡಿ ಸುಖಗೂಡಿ ೧
ಪತಿತ ಪಾವನ್ನ ಸತತ ಈ ನಾಮ
ಗತಿಯಿಲ್ಲದವರಿಗೆ ಗತಿ ಈವ ನಾಮ
ಹತವೆ ಮಾಡುತಲಿದ್ದ ಕಿತವನಿಗೊಲಿದು
ಕ್ಷಿತಿಯೊಳು ಮುನಿಪತಿ ಎನ್ನಿಸಿತು
ಪಥದಿ ಪಾಷಾಣವ ಪೆಣ್ಣನು ಮಾಡಿದ
ಅತುಳ ಮಹಿಮನ ಹಿತನಾಮ ೨
ಕುಲ ಶೀಲಗಳನ್ನು ಎಂದೂ ಎಣಿಸನೊ
ಸುಲಭರೊಳಗೆ ಬಲು ಸುಲಭನು ಇವನು
ಕಲುಷದಿ ದೂರನು ಶಬರಿಯ ಫಲವನು
ಮೆಲ್ಲುತೆ ಮುಕ್ತಿಯನಿತ್ತಿಹನು
ಲಲನೆಯ ಕದ್ದೊಯ್ದ ಖಳನ ತಮ್ಮನಿಗೆ
ನೆಲವಿತ್ತ ದಯವಂತ ಶ್ರೀಕಾಂತ ೩

 

ವೈರೋಚಿನಿ ದರ್ಪಹರ
೨೪೭
ಶ್ರೀಶಾ ಹೃಷಿಕೇಶ ಕೇಶವ ವಸುಧಾಧೀಶ ಪ
ಶ್ರೀಶಾ ಹೃಷಿಕೇಶ ಸರಸೀರುಹ ಭವ ಸನ್ನುತ
ಶೇಷಾಚಲ ಸನ್ನಿವಾಸ ಶಾಶ್ವತಾ ಪರಿಪಾಹಿ ಹರೇ ಅ.ಪ.
ದುರಿತ ವಿಭಂಜನ ವಾಮನ ವರ ಸಂಕರ್ಷಣ ಧರಣೀ-
ಧರ ಶ್ರೀಧರ ದೋಷದೂರ ಪರತರ ಪರಮೇಶ
ಪುರುಷೋತ್ತಮ ಅಮಿತ ಸಮ ನರನಾರಾಯಣ ಸುರಗಣ
ಪರಿಪಾಲ ಗಾನಲೋಲ ವರದ ಸುಖಾಸ್ಪದ ವಿಜಯದ ೧
ನರಹರಿ ಮಾಧವ ಮುರಹರ ಶರಣಾಗತ ಜನರಕ್ಷಕ
ವರದಾಯಕ ಭವ ಮೋಚಕ ನಿರುಪಮ ಗುಣಭರಿತ
ಅರುಣಾಂಭೋರುಹಲೋಚನ ಸುರಗಂಗೋದಿತ ಚರಣ
ಕರಿರಾಜವರದಾಚ್ಯುತ ಸ್ವರತಾ ಸ್ವತಂತ್ರ ಸುಚರಿತ ೨
ಜಯ ಜಯ ವೇದೋದ್ಧಾರಕ ಜಯ ಮಂದರ ಗಿರಿಧಾರಕ
ಜಯ ಕಾಂಚನನಯನಾಂತಕ ಜಯ ಮನುಜ ಮೃಗೇಂದ್ರ
ಜಯ ವೈರೋಚನಿ ದರ್ಪಹರ ಜಯ ಭೂಮಿ ಭುಜದಲ್ಲಣ
ಜಯರಾಮ ಕೃಷ್ಣ ನಿಪುಣ ಕಲ್ಕಿ ಹಾ ಶ್ರೀಕಾಂತ ಜಯಜಯ ೩

 

ಸಡಿಲ ಬಿಡದೆ ಕೈಯ ಪಿಡಿದು ಉದ್ಧರಿಸಯ್ಯ
ಬಡವನು ನಾನೈಯ್ಯ – ಕೊಡು ನಿನ್ನ ಸೇವೆಯ ಪ
ಒಡಲಿಗೋಸುಗ ಪರರಡಿಗಳ ಪಿಡಿಯುತೆ
ಕಡು ನೊಂದೆನೊ ಭವ ಕಡಲಿನೊಳಗೆ ಅ.ಪ.
ಪಡೆದು ವರಗಳನು ಕಡು ಖೂಳ ರಾವಣ
ನಡುಗಿಸಿ ಸುರನರ ಭುಜಗರೊಡೆಯರನ್ನು
ಹಿಡಿದು ಮುನೀಶರ ಹೊಡೆದು ಬಡಿದು ಹಿಂಸೆ –
ಪಡಿಸುತ್ತ ಯುವತೇರ ದುಡುಕು ಮಾಡುತ್ತಲಿರೆ
ಗಡಣೆಗಾರದೆ ಪಾಲ ಕಡಲ ತಡಿಗೆ ಬಂದು
ದೃಢ ಭಕ್ತಿಯಲಿ ನಿಂದು ಜಡಜ ಭವಾದ್ಯರು
ಪೊಡಮಟ್ಟು ಬೇಡಲು ಕೊಡುತೆ ಅಭಯವನು
ಮಡದಿಯನೊಡಗೂಡಿ ಪೊಡವಿಗಿಳಿದು ಬಂದೆ ೧
ದಶರಥ ನೃಪ ಸತಿ ಕೌಸಲ್ಯದೇವಿಯ
ಬಸುರೊಳು ಸಂಜನಿಸಿ ದಶದಿಶದೊಳು ಯಶ
ಪಸರಿಸಿ ಅಸುರೆಯ ಅಸುವನು ಹಾರಿಸಿ
ಕುಶಿಕ ಸುತನ ಯಜ್ಞ ಹಸನಾಗಿ ಪಾಲಿಸಿ
ನಸುನಗುತಲಿ ಪದಸರಸಿಜ ಸೋಕಿಸಿ
ಅಶಮವಾಗಿದ್ದ ಮುನಿಸತಿಯನುದ್ಧರಿಸಿ
ಪಶುಪತಿ ಧನುಭಂಗವೆಸಗಿ ಸೀತೆಯ ಕರ
ಬಿಸಜವ ನೊಶಗೈದ ಅಸಮ ಸಮರ್ಥ ೨
ಚಂದದಿಂ ಶಾಙ್ರ್ಞವನೊಂದಿ ಅಯೋಧ್ಯೆಗೆ
ಬಂದು ಪತ್ನಿಯಗೂಡಿ ನಂದದಿಂದಿರುತಿರ್ದು
ಬಂದ ಕಾರ್ಯಕೆ ನೆವ ತಂದು ವನಕೆ ಬಂದು
ನಿಂದಿರೆ ಜಾನಕಿ ಲಕ್ಷ್ಮಣರೊಡಗೊಂಡು
ನೊಂದು ನೃಪನು ದಿನವನ್ನು ಹೊಂದಲು ಕರೆ-
ತಂದು ಭರತನಿಗೆ ಅಂದು ರಾಜ್ಯವನೀಯೆ
ಬಂದೊಲ್ಲದೆ ಬೇಗ ಬಂದು ವಂದಿಸೆ ಪದ
ದ್ವಂದ್ವದ ಪಾದುಕವಂದದಿಂದೊಲಿದಿತ್ತೆ ೩
ಚಿತ್ರಕೂಟಾದ್ರಿಯಿಂದತ್ತ ನಡೆದು ನೆಲ
ಕೊತ್ತಿ ವಿರಾಧನ್ನ ವತ್ಸ ಲಕ್ಷ್ಮಣ ಸೀತಾ
ಯುಕ್ತನು ನೀನಾಗಿ ಪೊರೆಯಲು
ಇತ್ತು ಅಭಯವನ್ನು ಉತ್ತಮ ದಂಡಕದಿ
ಸ್ತುತ್ಯ ಕುಂಭಜ ಮುನಿಯಿತ್ತ ಧನುವನಾಂತು
ಕುತ್ಸಿತ ದನುಜೆಯ ಶಿಕ್ಷಿಸಿ ಖರ ಬಲ
ಕತ್ತರಿಸುತೆ ಬೆನ್ಹತ್ತಿ ಮಾರೀಚನ್ನ
ತುತ್ತು ಮೂರಾಗಿಸಿದತ್ಯಂತ ಶಕ್ತ ೪
ಮೈಥಿಲಿಯಾಡಿದ ಮಾತಿಗೆ ಸೌಮಿತ್ರಿ
ತಾ ತೆರಳಲು ಕಂಡು ಪಾತಕಿ ದಶಮುಖ
ಸಾತ್ವೀಕ ವೇಷದಿ ಸೀತೆಯ ನೊಯ್ದೆನೆಂದು
ಆರ್ತ ಸ್ವರದಿ ಪೇಳಿ ಮೃತಿಯೊಂದೆ ಖಗಪತಿ
ಆತಗೆ ಸದ್ಗತಿಯಿತ್ತು ನಡೆದು ಖಳ
ಪೋತಕ ಬಂಧನ ತೋಳ್ಗಳ ಖಂಡಿಸಿ
ಪ್ರೀತಿಲಿ ಶಬರಿಗೆ ಮುಕ್ತಿಯ ಪಾಲಿಸಿ
ವಾತಸುತನ ಮನ ಪ್ರಾರ್ಥನೆ ಸಲಿಸಿದೆ ೫
ಚರಣದಿಂದೊಗೆದು ದುಂದುಭಿಯ ಶರೀರವನ್ನು
ತರುಗಳೇಳನು ಒಂದೇ ಸರಳಿನಿಂದುರುಳಿಸಿ
ತರಣಿಸುತನ ಭಯ ಹರಿಸಿ ವಾಲಿಯ ಗರ್ವ
ಮುರಿಸಿ ವಾನರ ರಾಜ್ಯ ದೊರೆತನ ಸಖಗಿತ್ತೆ
ಅರಸಿಯನರಸಲು ಸರ್ವದೆಸೆಗೆ ಆ
ತರುಚರ ತತಿಗಳ ಕೆರಳಿಸಿ ಹರುಷದಿ
ಪರನು ಭಕುತನನ್ನು ಕರೆದು ಕುರುಹುಗಳ
ನೊರೆದು ಮುದ್ರಿಕೆಯಿತ್ತೆ ಕರುಣವಾರಿಧಿಯೆ ೬
ತಿಂಗಳು ಮೀರಿತೆಂದು ಅಂಗದ ಪ್ರಮುಖರು
ಕಂಗೆಟ್ಟು ಕುಳಿತಿರೆ ಭಂಗನ ಕಳೆದು ತ –
ರಂಗಿಣಿ ಪತಿಯನ್ನು ಲಂಘಿಸಿ ಹನುಮನು
ಕಂಗೊಳಿಸುವ ಲಂಕಾ ಪ್ರಾಂಗಣದಲಿ ನಿಂದು
ಭಂಗಿಸಿ ಲಂಕಿಣಿಯನು ಸೀತಾಂಗನೆ –
ಗುಂಗುರವಿತ್ತುತ್ತಮಾಂಗದ ಮಣಿಯಾಂತು
ಕಂಗೆಡಿಸ್ಯಸುರರ ಜಂಗುಳಿಯನು ಭಕ್ತ
ಪುಂಗವ ಬರೆ ನಿನ್ನಂಗ ಸಂಗವನಿತ್ತೆ ೭
ಹರಿವರರನು ಕೂಡಿ ಶರಧಿಗೆ ಪಯಣಮಾಡಿ
ಶರಣ ವಿಭೀಷಣನಿಗೆ ಸ್ಥಿರ ಪಟ್ಟವನು ನೀಡಿ
ಭರದಿ ಸೇತುವೆಗಟ್ಟಿ ಅರಿಯ ಪಟ್ಟಣ ಮುಟ್ಟಿ
ಧುರಕೆ ದೂತನ್ನ ಅಟ್ಟಿ ಪರಬಲವನು ಕುಟ್ಟಿ
ಪುರಕೆ ಉರಿಯನಿಕ್ಕಿ ಶರವರ್ಷಂಗಳ
ಕರೆದು ಕರಿ ರಥಾ ತುರಗ ಪದಾತಿಗ-
ಳುರುಳಿಸಿ ದಶಶಿರನುರವನು ಇರಿದು
ಪರಮ ಸಾಧ್ವಿಯ ಕರಸರಸಿಜ ಪಿಡಿದೆ ೮
ಭಕ್ತ ವಿಭೀಷಣಗೆ ದೈತ್ಯಾಧಿಪತ್ಯವಿತ್ತು
ಕೃತ್ತಿವಾಸನ್ನ ಸೇತು ಹತ್ತಿರ ಸ್ಥಾಪಿಸಿ
ಪತ್ನಿ ಸಹೋದರ ಮಿತ್ರ ಭೃತ್ಯರ ಕೂಡಿ
ಉತ್ತಮ ಪುಷ್ಪಕದಿ ಚಿತ್ರಕೂಟಕೆ ಬಂದೆ
ಭಕ್ತನ ಕಳುಹಿ ಸದ್ರ‍ವತ್ತವ ಭರತಗೆ
ಬಿತ್ತರಿಸಿ ಮಹದುತ್ಸವದಿ ಪುರ
ಮತ್ತೆ ಪ್ರವೇಶಿಸಿ ರತ್ನ ಸಿಂಹಾಸನ
ಹತ್ತಿ ಶ್ರೀಕಾಂತನೆ ನಿತ್ಯದಿ ಸಲಹುವೆ ೯

 

೨೪೬ (ಅ)
ಸರಿಯಾರೋ ಜಗದೊಳಗೆ – ಶ್ರೀ ನರಹರಿಗೇ ಪ
ಸುರ ನರೋರಗರೊಳು ಅರಸೀ ನೋಡಲು ಕಾಣೆಅ
ಹರಿಯೇ ಮೈದೋರೆಂದು – ಕರೆಯಲಾಕ್ಷಣ ಬಂದು
ತರಳನ್ನ ಸಲಹಿದ ಸರ್ವಾಂತರ್ಯಾಮಿಗೇ ೧
ಕರಿರಾಜ ಕರೆಯಲು ಸುರರೆಲ್ಲಮಿಡುಕಲು
ಗರುಡನ್ನೇರಿ ಬಂದ ಸರ್ವಕಾರ್ಯನಿಗೇ ೨
ರಕ್ಷಕ ಶಿಕ್ಷಕ ಮೋಕ್ಷದಾಯಕ
ಆಕ್ಷಯಾತ್ಮಕನಾದ ಲಕ್ಷ್ಮೀಕಾಂತನಿಗೇ ೩

 

೨೫೬
ಹನುಮಂತ ದೇವನ ನೋಡಿ
ಘನ ವಿಜ್ಞಾನ ಧನವನ್ನು ಬೇಡಿ ಪ
ಅನುಮಾನ ಸಲ್ಲ ಸುರಧೇನುವೆನಿಸುವನು
ತನ್ನ ನೆನೆವರಿಗೆ ಅ.ಪ.
ಅಂಜನದೇವಿಯೊಳ್ ಪುಟ್ಟಿ | ಪ್ರ-
ಭಂಜನ ಸುತ ಜಗಜಟ್ಟಿ | ಶ್ರೀ
ಕಂಜನಾಭನನು ಕಂಡು
ಭಜಿಸುತಲಿ ತಾನು ರಂಜಿಪನು ೧
ಪಾಥೋದಿಯನು ನೆರೆದಾಟಿ | ರಘು –
ನಾಥನ ಮಡದಿಗೆ ಭೇಟಿ | ಇತ್ತು
ಖ್ಯಾತ ಲಂಕೆಯನು ವೀತಿ-
ಹೋತ್ರನಿಗೆ ಕೊಟ್ಟ ಬಲುದಿಟ್ಟ ೨
ಸಂಜೀವನಾದ್ರಿಯ ತಂದು | ಕಪಿ
ಪುಂಜವನೆಬ್ಬಿಸಿ ನಿಂದು | ತುಸ
ಅಂಜಕಿಲ್ಲದಲೆ ಅಸುರರನು
ಭಂಜಿಸಿ ನಿಂತ ಜಯವಂತ ೩
ಶ್ರೀರಾಮಚಂದ್ರನು ಒಲಿದು | ಮಹ
ಪಾರಮೇಷ್ಠ್ಯವನೀಯೆ ನಲಿದು | ಮುಕ್ತಾ
ಹಾರ ಪಡೆದ ಗಂಭೀರ
ಶೂರ ರಣಧೀರ ಉದಾರ ೪
ಎಂತೆಂತು ಸೇವಿಪ ಜಂತು | ಗಳಿ
ಗಂತಂತೆ ಫಲವೀವನಿಂತು | ಶ್ರೀ –
ಕಾಂತ ನಾಮವನು
ಆಂತು ಭಜಿಪರಲಿ ಪ್ರೇಮ ಬಹುನೇಮ ೫

 

ಹರಿ ವಿಠಲ – ವಿಠಲ ಜಯ ವಿಠಲಾ
ಹರಿ ವಿಠಲ – ಜಯ ವಿಠಲ ಪ
ಜಯವಿಠಲಾ ನಮೋ ವಿಠಲಾ ಅ.ಪ
ಹೇ ಮುರಾರೀ ಶ್ರೀ ಹರೀ ಬಾರೈ ಕೃಪಾಶರನಿಧಿ ಶೌರೀ
ಶರಣಾಭರಣನೆಂದೆ ಬಿರುದನ್ನು ಕೇಳಿ ಬಂದೆ
ಅರಿಯೆ ಇನ್ನೊಂದ ತಂದೆ ನೀನಾಗಿ
ಪೊರೆಯೆಂದೆ ಇನ್ನು ಮುಂದೇ ೧
ಇಂದಿರಾ ಮಂದಿರಾ ಹೇ ಸುಂದರಾನಂದ ಕುವರ ವರಾ
ಇಂದೀವರಾಕ್ಷ ನಿನ್ನಾ ಸಂದರುಶನವೆನ-
ಗೆಂದಿಗಾಹುದೋ ಮನವಾ
ನಂದ ಹೊಂದುವುದು ಅಂದೇ ೨
ಸರ್ವೇಶಾ ಶಾಶ್ವತ ಸರ್ವೋತ್ತಮ ಪರಮೋದಾರವರ
ಸರ್ವಕಾರಣ ಕರ್ತಾ ಸರ್ವಸ್ವತಂತ್ರ ಶಕ್ತ
ಸರ್ವತ್ರದಲಿ ವ್ಯಾಪ್ತ
ಸರ್ವಾಂತರ್ಯಾಮಿ ಗುಪ್ತ ಶಿರಿಕಾಂತ ೩

 

೨೬೬
ಹಿಮಾಚಲೇಂದ್ರನ ಕುಮಾರಿ ಶಂಕರಿ
ಉಮಾಂಬೆ ಬಾರಮ್ಮ ಪ
ಕುಮಾರ ಶಕ್ರಾದಿ ಸಮಸ್ತ ಸುರಗಣ
ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ.
ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ
ಹೃದ್ಧ್ಯೋಮದಲಿ ಪೊಳೆದು
ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ
ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ ೧
ಘೋರ ಭವಾಬ್ಧಿಯ ತಾರಿಪ ಸುಲಭದ
ದಾರಿಯ ತೋರೆನುತ
ಮುರಾರಿಯನು ಬೇಡಿ ಶ್ರೀ ರಾಮ ನಾಮದ
ಸಾರಾಮೃತದ ರುಚಿ ಬೀರಿದೆ ಜಗದೊಳು ೨
ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ
ಧಕ್ಷನ ವರ ಜನನಿ
ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ
ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ ೩

 

೨೭೨
ಉಗಾಭೋಗ
ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು
ಕೆಟ್ಟ ಮೇಲೆ ಬುದ್ಧಿ ಬಂದಿತೀಗ
ಉದ್ದು ಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ
ಕೆದ್ದು ಬಿದ್ದೆನು ಬರಿಯ ಗರ್ವದಿಂದ
ಮರುಳಹಂಕಾರದಲಿ ಮಾಯಕ್ಕೆ ಸಿಲುಕಿನ್ನು
ಮರೆತುಬಿಟ್ಟೆನು ನಿನ್ನ ಮಹಿಮೆಯನ್ನು
ಜ್ಞಾನ ಸುಖ ಪರಿಪೂರ್ಣ ಏನು ಮಾಡಲು ಇನ್ನು
ಶ್ರೀನಿವಾಸನೆ ನಿನ್ನ ದಾಸ ನಾನು
ಸಾರಿದರ ಬಿಡನೆಂಬ ಬಿರುದನುಳುಹೊ
ಆರಿಗಾರಿಲ್ಲ ನೀನಿಲ್ಲದಿನ್ನು
ನೀರಿನೊಳಗದ್ದು ಕ್ಷೀರದೊಳಗದ್ದು
ಭಾರ ನಿನ್ನದು ಕಾಣೊ ಧೀರ ಶ್ರೀಕಾಂತ

 

೨೭೩
ಉಗಾಭೋಗ
ಎನ್ನಿಳೆಯೊಳು ನಿಂದು ಎನ್ನ ಬೆಳೆಯ ತಿಂದು
ಎನ್ನ ಕಳೆಯಿಂದ ಬಲಗೊಂಡ ಬಳಿಕ
ಎನ್ನ ಗುಣಗಳ ಮನ್ನಿಸಿ ಪೊಗಳದೆ
ತನ್ನದು ತನ್ನದು ಎಂದು ತನ್ನಲ್ಲಾರೋಪಿಸೆ
ಎನ್ನ ಭಕ್ತರದನೆಂದು ಸೈರಿಪರು
ಅನ್ಯಥಾಜ್ಞಾನಿಗಳಿಗೆ ನರಕವಾಸ-
ವನ್ನು ಮಿಥ್ಯಾಜ್ಞಾನಿಗೆ ಅಂಧತಮವ-
ನಿನ್ನು ಪೊಂದಿಸುವೆನೆಂಬ ಶ್ರೀಕಾಂತನು

 

೨೨೬
ಉಗಾಭೋಗ
ಗಂಗೆಯನು ಪಡೆದ ಉತ್ತುಂಗದುಂಗುಟನಿಂಗೆ
ಅಂಗನೆಯು ಗಡಿಗೆ ನೀರನು ಎರೆದಳು
ಹೊಂಬಣ್ಣವಾದ ಪೀತಾಂಬರಗೆ ಸೆರಗಿನಲಿ
ಇಂಬಾಗಿ ಒರೆಸಿ ವಸ್ತ್ರವನಿತ್ತಳು
ಸುರಕುಲಕೆ ತಿಲಕನಹ ನರಹರಿಯ ಪಣೆಯಲ್ಲಿ
ತರುಣಿ ಕಸ್ತುರಿಯ ತಿಲಕವನಿಟ್ಟಳು
ಸ್ಮರ ಜನಕ ಸದ್ಗುಣಾಭರಣ ಶ್ರೀಧರಗೆ ಆ-
ಭರಣಗಳಂಕರಿಸಿ ಹಿಗ್ಗುತಿಹಳು
ತ್ರಿದಶರಿಗೆ ಸುಧೆಯನೆರೆದವನಿಗುಣಬಡಿಸಿ
ಭಕ್ತಿ ಮುಕ್ತಿದಾತಂಗೆ ಬುತ್ತಿಯನಿತ್ತು
ಪರಮ ಸ್ವತಂತ್ರನಹ ಶ್ರೀಕಾಂತನಿಂಗೆ
ತುರುಗಾಹೆ ಬೆಸನಿತ್ತಳಾನಂದಗೋಪಿ

 

ಶ್ರೀಹರಿಗೂ ಶಾಂತವಾಗಿ ನಿದೆ
೨೩೨
ಉಗಾಭೋಗ
ನಿನಗೆ ನಿದ್ರೆಯು ಎಂತು ಬರುವುದೊ ಶ್ರೀಕಾಂತ
ಎನಗೇನು ತೋರದಿದೆ ಘನಮಹಿಮನೆ
ಸಿರಿದೇವಿ ಉರದಲ್ಲಿ ಸರಸವಾಡುತಲಿಹಳು
ನಿರುತ ತಾ ನೆಲಸಿದ್ದು ಎಡಬಿಡದಲೆ
ನಾಭಿ ಪದ್ಮದಿ ಬ್ರಹ್ಮ ನಾಲ್ಕು ವೇದವ ಪಠಿಸಿ
ನಾಲ್ಕು ಮುಖದಿಂದ ನಾದ ತುಂಬುತಿಹನು
ಜಗದ ಜೀವಿಗಳೆಲ್ಲ ಜಿಗಿದಾಡಿ ಒಡಲಿನಲಿ
ಬಗೆ ಬಗೆಯ ಕೂಗುಗಳ ಕೂಗುತಿಹರು
ಭಕ್ತಪಾಲಕನೆಂಬ ಬಿರುದುಳಿವ ಚಿಂತೆ
ಭಕ್ತರ್ಹಂಗಿನ ಋಣವ ತಿದ್ದಿಡುವ ಚಿಂತೆ
ಮತ್ತಾರು ಅರಿಯದೋಲ್ ನಿಜಶಕ್ತಿಯನ್ನು
ಬೈತಿಡುವ ಚಿಂತೆಯೊಳ್ ನಿನಗೆಲ್ಲಿ ನಿದ್ರೆ

 

ಅಚ್ಚರಿಯೊಳಚ್ಚರಿಯು ಅಚ್ಯುತನ
೨೨೦
ಅಚ್ಚರಿಯೊಳಚ್ಚರಿಯು ಅಚ್ಯುತನ ನಾಮವಿದು
ತುಚ್ಛ ಬುದ್ಧಿಯ ಬಿಟ್ಟು ಎಚ್ಚೆತ್ತು ನೋಡೊ ಪ
ನಿಧಿಯು ತನ್ನೆದುರಿಗಿರೆ ವದರಿ ದುರ್ಯೋಧನನು
ಮದಡನಾದನು ಬರಿದೆ ದಳವ ಕೊಂಡು
ಸದಮಲಾತ್ಮನ ದಿವ್ಯ ಪದವನರ್ಜುನ ಪಿಡಿದು
ಮುದದಿ ಭಾಗ್ಯವ ಪಡೆದನದ್ಭುತವ ನೋಡ ೧
ಹರಿಯ ಯೋಗದ ಸಿರಿಯು ಇರುವ ನಿಜವರಿಯದೆ
ಕುರುಡನಣುಗನು ಜರಿದು ಹಾಳಾದನು
ಉರುತರದ ಭಕ್ತಿಯಿಂದೆರಗಿ ಕರಗಳ ಮುಗಿದು
ನರ ತನ್ನ ಹೆಸರನ್ನು ಸಾರ್ಥಕವಗೈದ ೨
ನೀಚಯುಕ್ತಿಗಳಿಂದ ಗೋಚರಕೆ ಬಹನಲ್ಲ
ವಾಚಾಮಗೋಚರನು ಶ್ರೀಕಾಂತನು
ಕೀಚಕಾರಿ ಪ್ರಿಯನ ಶ್ರೀ ಚರಣ ಭಕ್ತಿ ಭವ-ಮೋಚನಕೆ ಸೂಚನೆಯು ಆಚರಿಸಿ ನೋಡೋ ೩

 

ಹಾಡಿನ ಹೆಸರು :ಅಚ್ಚರಿಯೊಳಚ್ಚರಿಯು ಅಚ್ಯುತನ
ಹಾಡಿದವರ ಹೆಸರು :ನಂದಿನಿ
ರಾಗ :ಸೂತ್ರಧಾರ
ತಾಳ : ಮಿಶ್ರ ಛಾಪು ತಾಳ
ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಪಂಡರಿನಾಥ ಪಾವನಚರಿತ
೨೩೪
ಪಂಡರಿನಾಥ ಪಾವನ ಸುಚರಿತ ಪ
ಪಾಂಡವಪ್ರಿಯದೂತ ಶರಣರ ಕಾದುಕೊಂಡಿಹ ಖ್ಯಾತ ದಾತಅ.ಪ.
ಮಾತಾಪಿತನು ಭ್ರಾತನು ಹಿತನು
ನಾಥನು ಜ್ಞಾತನು ಸಂತಾರಕನು
ಮತಿಯೂ ನೀನೆ ಗತಿಯೂ ನೀನೆ
ಕಾತರ ವ್ಯಾತರದು ಬೀತುದು ದೇವ ೧
ತನುಮನಧನಗಳ ನಿನಗರ್ಪಿಸಿದೆ
ಎನಿತಾದರು ಇಡು ಅನುಮಾನಿಸಿದೆ
ಜನರ ನಿಂದನೆ ಮೇಣಾನಂದನೆ
ಮಾನ ಅವಮಾನ ನಿನ್ನದು ದೇವ ೨
ಚಿಂತೆಯ ಮರೆದೆ ಭ್ರಾಂತಿಯ ತೊರೆದೆ
ಸಂತರ ಚರಣವನಾಂತೆ ದೃಢದೆ
ಸ್ವಾಂತವು ಮೋದವಾಂತುದು ಶ್ರೀದ
ಸಂತತ ಶ್ರೀಕಾಂತ ನಿಶ್ಚಿತ ದೇವ ೩

 

ಹಾಡಿನ ಹೆಸರು :ಪಂಡರಿನಾಥ ಪಾವನಚರಿತ
ಹಾಡಿದವರ ಹೆಸರು :ಮುದ್ದುಮೋಹನ್
ರಾಗ :ಮಿಶ್ರ ಭೈರವ್
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವೆಂಕಟೇಶ ಕುಮಾರ್ ಎಂ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಯಾಕೆ ನಡುಗುವೆ ತಾಯಿ
೨೫೨
ಯಾಕೆ ನಡುಗುವೆ ತಾಯಿ ಭೂಕಾಂತೆಯೆ ಪ
ಲೋಕನಾಥನ ರಾಣಿ ಪರಮ ಕಲ್ಯಾಣಿ ಅ.ಪ.
ಬುಧರು ಸನ್ಮಾರ್ಗವನು ಒದರಿ ಬಿಟ್ಟರೆ ತಾಯಿ
ಅದಟರಾದವರು ಗರ್ವದಿ ಮೆರೆವರೆ
ಮದದ ಸಂಪದವು ವೆಗ್ಗಳಿಸಿತೆ ವಣಿಜರಿಗೆ
ಕದನಕೆ ಕಾಲ್ಕೆರೆಯುತಿಹರೆ ಮಿಕ್ಕವರೆಲ್ಲ ೧
ಕುಲಶೀಲಗಳನೆಲ್ಲ ಕೆಡಿಸಿ ನೆಲಗೆಡಿಸಿದರೆ
ಕಳುವು ಹಾದರ ನುಸುಳು ಬಲವಾಯಿತೆ
ಲಲನೆಯರ ವ್ರತನೇಮಕಳಿವು ಬಂದಿತೆ ತಾಯಿ
ಹೊಲಬು ತಪ್ಪಿದೆ ಭಕ್ತಿ ಜಲಜಾಕ್ಷ ಪಥದಿ ೨
ಆವ ಕಾರಣದಿಂದುದಯಿಸಿತು ಈ ಚಿಂತೆ
ಆವನಿಂದಾಯ್ತಮ್ಮ ಈ ಉಬ್ಬಸ
ದೇವಿ ನೀ ದುಃಖಿಸುವ ಬಗೆ ನೋಡಿ ಮನ್ಮನವು
ಬೇವುದಿಗೊಳುತಿಹುದು ಶ್ರೀ ಕಾಂತನಾಣೆ ೩

 

ಹಾಡಿನ ಹೆಸರು :ಯಾಕೆ ನಡುಗುವೆ ತಾಯಿ
ಹಾಡಿದವರ ಹೆಸರು :ಪಲ್ಲವಿ ಎಂ. ಡಿ.
ಸಂಗೀತ ನಿರ್ದೇಶಕರು :ಪ್ರಸಾದ್ ಎನ್. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಹಿಮಾಚಲೇಂದ್ರನ ಕುಮಾರಿ
೨೬೬
ಹಿಮಾಚಲೇಂದ್ರನ ಕುಮಾರಿ ಶಂಕರಿ
ಉಮಾಂಬೆ ಬಾರಮ್ಮ ಪ
ಕುಮಾರ ಶಕ್ರಾದಿ ಸಮಸ್ತ ಸುರಗಣ
ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ.
ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ
ಹೃದ್ಧ್ಯೋಮದಲಿ ಪೊಳೆದು
ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ
ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ ೧
ಘೋರ ಭವಾಬ್ಧಿಯ ತಾರಿಪ ಸುಲಭದ
ದಾರಿಯ ತೋರೆನುತ
ಮುರಾರಿಯನು ಬೇಡಿ ಶ್ರೀ ರಾಮ ನಾಮದ
ಸಾರಾಮೃತದ ರುಚಿ ಬೀರಿದೆ ಜಗದೊಳು ೨
ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ
ಧಕ್ಷನ ವರ ಜನನಿ
ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ
ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ ೩

 

ಹಾಡಿನ ಹೆಸರು :ಹಿಮಾಚಲೇಂದ್ರನ ಕುಮಾರಿ
ಹಾಡಿದವರ ಹೆಸರು :ನಂದಿತಾ ಸಿ. ಎಸ್.
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ್, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *