Categories
ರಚನೆಗಳು

ರಾಮದಾಸರು

ದೇವತಾಸ್ತುತಿ
೧೨೨
ಅಂಜಿಕೆ ಬರುತಾದವ್ವ ನಿನ್ನನು ನೋಡ
ಲಂಜಿಕೆ ಬರುತಾದವ್ವ ಪ
ಅಂಜಿಕೆ ಬರುತಿದೆ ಮಂಜುಳಾಂಗಿಯೆ ನಿನ್ನ
ಮಂಜುಳ್ವಾಕ್ಯಕೆ ತಪಭಂಗವಾದದ್ದು ಕೇಳಿ ಅ.ಪ
ಪತಿಗೆ ನೀ ಮೃತ್ಯುವಾದೆವ್ವ ಮತ್ತು ನೀನು
ಸುತರಿಗೆ ಕಷ್ಟಕೊಟ್ಟೆವ್ವ
ಸತಿಯಾಗಿ ತಮ್ಮಗೆ ಭಾವನ್ನ ಕೊಲ್ಲಿಸಿದಿ
ಮತಿಗೇಡಿ ಅಣ್ಣನ ಸತ್ಯನಾಶನ ಗೈದಿ ೧
ಶಾಪಕೊಡಿಸಿದೆವ್ವ ಪತಿಯಿಂದ
ಶಾಪವ ಪಡಕೊಂಡೆವ್ವ
ಶಾಪಕೊಡಿಸಿ ಮುಖ ಕಪ್ಪು ಮಾಡಿಟ್ಟೆವ್ವ
ಕೋಪದಿಂದೊಬ್ಬನ ಬಸಿರು ಮಾಡಿಟ್ಟೆವ್ವ ೨
ಪತಿಗೆ ವಂದಕಳಾದೆವ್ವ ಮೀರಿದ ತಾಯಿ
ಪತಿ ಪ್ರೀತಿ ಕಳಕೊಂಡೆವ್ವ
ಸುತನ ಕತ್ತಿಯಿಂದ ಕುತ್ತಿಗೆ ಕೊಯ್ಸಿಕೊಂಡು
ಪತಿತಪಾವನಳಾಗಿ ಮತ್ತೆ ಮುಂದಕೆ ಬಂದಿ ೩
ಗರಡಿಯ ಮನೆ ಹೊಕ್ಕೆವ್ವ ಪತಿಯಕೈಲೆ
ದುರುಳನ್ನ ವಧಿಸಿದವ್ವ
ಧುರಕೆ ನಿಲ್ಲನೆ ಮತ್ತೆ ಕುರುಪನ ಕುಲಮೂಲ
ತರಿಸಿದಂಥ ಮಹಮರಗಿ ನೀನವ್ವ ೪
ಮಾತ್ಯಾಗಿ ಪಡೆದ್ಹಡದವ್ವ ಮತ್ತು ನೀನು
ಸತಿಯಾಗಿ ನಡೆದೆ ಅವ್ವ
ರೀತಿ ತಿಳಿಯಿತು ನಿನ್ನದ್ಯಾತರ ಭೀತಿನ್ನು
ದಾತ ಶ್ರೀರಾಮನ ಪ್ರೀತಿ ದಾಸರಿಗೆ ೫

 

೧೮೫
ಅಂಜ್ಯಾಕೆ ಎಲೆ ಮನುಜ ಭಯವಿಲ್ಲ ನಿನಗೆ
ಕಂಜನಾಭನ ಧ್ಯಾನವಿರಲಿ ಮನದೊಳಗೆ ಪ
ತಾಪತ್ರ ಬಂದೊದಗೆ ಪಾಂಡುಪ್ರಿಯನೆಂದೆನ್ನು
ಶಾಪವೊದಗಲು ಅಂಬರೀಷನ್ವರದೆನಲೋ
ಭೂಪತಿಗಳು ಮುನಿಯೆ ಪಾಂಚಾಲಿಪಾಲಕನೆನ್ನು
ಆಪಾರ ಕಷ್ಟದಲಿ ಕರಿವರದೆನೆನಲೋ ೧
ಪಿತೃ ವೈರ್ಯಾಗಲು ಪ್ರಹ್ಲಾದರಕ್ಷಕನೆನ್ನು
ಮಾತೃ ವೈರ್ಯಾದರೆ ಧ್ರುವಪಾಲನೆನಲೋ
ಭ್ರಾತೃವೈರ್ಯಾದರೆ ಸುಗ್ರೀವಸಖನೆನ್ನು
ಖಾತ್ರಿಯಿಂ ಸತತದಿ ಸೂತ್ರಧಾರೆನಲೋ ೨
ಸೆರೆಮನೆಯು ಒದಗಿರಲು ಪಿತಮಾತೆರ್ವರದೆನ್ನು
ಧುರದೊಳಗೆ ಪೊಕ್ಕಿರಲು ನರಸಹಾಯನೆನಲೋ
ಬರಿ ಮಳೆಯೊಳ್ಸಿಕ್ಕಿರಲು ಗಿರಿಯೆತ್ತಿದವನೆನ್ನು
ದುರುಳರ್ಹಾವಳಿಯೊಳಗೆ ದನುಜಹರನೆನಲೋ ೩
ಕವಿಯಲು ವೈರಿಗಳು ಕಂಸಮರ್ದನನೆನ್ನು
ಶಿವನ ಕಾಯ್ದವನೆನ್ನು ಉರಿಹತ್ತಿಸುಡಲು
ಭವಿಜನುಮ ಬಂದಿರಲು ಭವರೋಗಹರನೆನ್ನು
ದಿವನಿಶೆಯು ಎಡೆಬಿಡದೆ ಭಯದೂರನೆನಲೋ ೪
ಸ್ಥೂಲಭ್ರಷ್ಟನಾದರೆ ಬಲಿದ್ವಾರಪಾಲಕನೆನ್ನು
ಕುಲಭ್ರಷ್ಟನಾದರಜಮಿಳನ್ವರದನೆನಲೋ
ಇಳೆಮೂರು ಸಂರಕ್ಷ ಚೆಲುವ ಶ್ರೀರಾಮನಂ
ಹಲವು ವಿಧದಲಿ ಭಜಿಸಿ ಫಲಗಳಿಸು ಬಿಡದೆ ೫

 

ತಾತ್ವಿಕ ಹಿನ್ನೆಲೆ
೬೧೨
ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ
ಬಗೆ ತಿಳಿಯುವರಾರಮಮ ಪ
ಮಗನ ಮಗನಿಗೆ ಒಲಿದು ಮಗಳಧಾರೆಯನೆರದಿ
ಮಗಳಮಗನ್ವೈರಿಯ ನಿಗಯಿಟ್ಟು ಸಲಹಿದಿ ಅ.ಪ
ಓಂಕಾರದಾಚೆಗಿರ್ದ ಅಮಲರೂಪ
ಓಂಕಾರದೊಳು ನೆಲೆಸಿದಿ
ಅಂಕುರಿಸಕ್ಷರ ತ್ರಯಲಂಕಾರದಿಂ ಸೃಷ್ಟಿ
ಸಂಕಲ್ಪಗೈದು ನಿಷ್ಕಲಂಕನೆಂದೆನಿಸಿದಿ ೧
ಸೃಷ್ಟಿ ಉತ್ಪತ್ತಿಗೈದಿ ಉದರದಿ
ಇಟ್ಟು ರಕ್ಷಕನೆಂದೆನಿಸಿದಿ
ಶಿಕ್ಷಕೆನಿಸಿ ಸರ್ವಸಾಕ್ಷಿನೀನೆಯಾಗಿ
ಮೋಕ್ಷ ನೀಡುವ ಮದಧ್ಯಕ್ಷನೆಂದೆನಿಸಿದಿ ೨
ಮೇದಿನಿಗೆ ಪತಿಯೆನಿಸಿದಿ ದಾಸರ ಪ್ರಿಯ
ಮೇದಿನಿಸುತೆ ಮದುವ್ಯಾದಿ
ವೇದಸಮ್ಮತಗೈದಿ ಸಾಧುಜನಕಹುದಾದಿ
ಆದಿಶ್ರೀರಾಮ ಮಮ ಬೌದ್ಧದೇವನಾದಿ ೩

 

ಆತ್ಮನಿವೇದನೆ
೧೮೩
ಅಗಲದಿರೆಲೋ ನೀನೆನ್ನ ಬಿಟ್ಟು ಅಗಲದಿರೆಲೋ
ನಿಗಮಾತೀತ ನಿರ್ಜರೇಶ ಪ
ಹಗಲು ಇರುಳು ನಿನ್ನ ಬಿಟ್ಟು
ಅಗಲಿ ಇರಲಾರೆ ನಾನು
ಸುಗುಣ ಸಂತರಾತ್ಮನೆನ್ನ
ಬಗೆಗೊಂಡು ರಕ್ಷಿಸಭವ ೧
ಮುಟ್ಟಿಭಜಿಪೆ ನಿನ್ನ ಚರಣ
ಕೆಟ್ಟಗುಣಗಳೆಣಿಸದೆನ್ನ
ನಿಷ್ಠೆಯೊಳಗೆ ನಿಂತು ಸಲಹೋ
ಕಷ್ಟಹರಣ ಕರುಣಾಶರಧಿ ೨
ಶ್ರೀಶರಾಮ ನಿನ್ನ ಚರಣ
ದಾಸ ನಾನು ಮನ್ನಿಸೆನ್ನ
ಧ್ಯಾನದಲ್ಲಿ ನೀ ವಾಸನಾಗಿ
ಪೋಷಿಸನುಮೇಷ ಬಿಡದೆ ೩

 

ಶ್ರೀಹರಿಸಂಕೀರ್ತನೆ

ಅಚ್ಯುತ ಅಮರಾರ್ಚಿತ ಮುನಿವಂದಿತ
ಅಚ್ಯುತ ಅಮರಾರ್ಚಿತ ಪ
ದಾಸರವಿಜಯ ಭೂಸುರಗಣಪ್ರಿಯ
ಶೇಷಾದ್ರಿಗಿರಿನಿಲಯ ೧
ಪರಮಪುರುಷ ಪರಮ ಪ್ರಕಾಶ
ಕರುಣಾಬ್ಧಿಶಶಿ ರಮೇಶ ೨
ದುರಿತವಿದೂರ ಶರಣು ಸುಖಂಕರ
ಪುರಂದರ ಪರಾತ್ಪರ ೩
ಸುಜನ ಸಂಜಾತ ಕುಜನಕುಠಾರ
ಭಜಿಪರ ಭಯವಿದೂರ ೪
ಭಕ್ತ ನಿಸ್ಸೀಮ ಮುಕ್ತಿಗೆ ಸೋಮ
ಭಕ್ತಾಂತರಾತ್ಮ ಶ್ರೀರಾಮ ೫

 

೬೧೩
ಅಮೃತ ನೀಡೆನಗೆ ಶ್ರೀಹರಿ ಅಮೃತ ನೀಡೆನಗೆ ಪ
ಅಮೃತ ನೀಡಪಮೃತ್ಯುಕಳೆದು ಧ್ಯಾ
ನಾಮೃತವೆಂಬ ಸಾಮ್ರಾಜ್ಯ ಸಂಪದವಿತ್ತು ಅ.ಪ
ಜರಾ ಮರಣವ ಗೆಲಿಪ ಅಮೃತ
ದುರಿತ ಪರ್ವತಲೋಪ
ಭರದಿಗೈದು ಮಾಯಮರವೆ ಹರಿಗೆ
ಸ್ಥಿರ ಪರಮಪಾವನ ಮಾಳ್ಪ ಹರಿಸ್ಮರಣಾನಂದ ೧
ಭವಬಾಧೆಯ ಗೆಲಿಪ ಅಮೃತ
ಜವನ ಭಯವ ಲೋಪ
ಜವದಿಗೈದು ತ್ರಯ ಭುವನದೊಳ್ಮಿಗಿಲಾಗಿ
ಧ್ರುವನು ನಿರುತಮಾಗಿ ಸವಿದ ಮಹದಾನಂದ೨
ತಾಮಸಗಳನಳಿವ ಅಮೃತ
ಪಾಮರತನ ತುಳಿವ
ಆ ಮಹ ವೈಕುಂಠದ ವಿಮಲ ಪದವಿಯನು
ಕ್ಷೇಮದೀಯುವ ಶ್ರೀರಾಮ ಪ್ರೇಮಾನಂದ ೩

 

ಈ. ಲೋಕ ನೀತಿ
೪೮೬
ಅಮೃತ ಸುರಿದಂತೆ ಸಜ್ಜನರ ಸಂಗ
ಅಮೃತ ಸುರಿದಂತೆ ಪ
ಅಮೃತುಂಡಿತಿಹ್ಯ ಸಾಮ್ರಾಜ್ಯದಲಿ ಬಂದು
ನಮ್ರತೆಯಿಂದಪಮೃತ್ಯು ಗೆಲಿಸುವಂಥ ಅ.ಪ
ಮಾಯ ಮುಸುಕು ತೆಗೆಸಿ ನಿರುತ
ಕಾಯಕರ್ಮ ಕೆಡಿಸಿ
ಭಾವಶುದ್ಧಮಾಡಿ ಸಾವಧಾನವಿತ್ತು
ಸಾವು ಹುಟ್ಟಳುಕಿಸಿ ಪಾವನವೆನಿಸುವ ದಿವ್ಯ ೧
ಆಶಪಾಶಕಡಿದು ವಿಷಯ
ದ್ವಾಸನೆಯನು ತೊಡೆದು
ದೋಷರಾಶಿಗಳ ನಾಶಮಾಡಿ ಭವ
ಘಾಸಿ ತಪ್ಪಿಸಿ ಮಹ ಶಾಶ್ವತಪದವೀವ೨
ಅಡರಿಕೊಂಡು ಬರುವ ಸಂಸಾರ
ದೆಡರು ತೊಡರು ಕಡಿವ
ಪೊಡವಿತ್ರಯಂಗಳ ಒಡೆಯ ಶ್ರೀರಾಮನ
ಅಡಿದೃಢವಿತ್ತು ಮುಕ್ತಿಗೊಡೆಯನೆನಿಸುವಂಥ ೩

 

೬೧೪
ಅರಿವರಾರೆಲೋ ನಿನ್ನ ಅಗಮ್ಯ ಚರಿತ
ಚರಣದಾಸರ ಪರಮ ಆನಂದಭರಿತ ಪ
ದೇವರುಂಟೆಂಬ ಕೆಲವಾಧಾರಪುಟ್ಟಿಸಿದಿ
ದೇವರಿಲ್ಲೆಂಬ ಹಲವು ಆಧಾರ ತೋರಿಸಿದಿ
ಜೀವಬ್ರಹ್ವೈಕ್ಯೆಂಬುಪಾಯಗಳ ಸ್ಥಾಪಿಸಿದಿ
ಆವರೀತಿಗು ಕಾವದೇವ ನಾನೆಂದಿ ೧
ಜೀವವೆ ಮಾಯೆಯೆಂದು ಕಾಯವೆ ಕರ್ಮವೆಂದು
ಭಾವಿಗಳ ಕೈಯಿಂದ ಬರೆಸಿದೆಯೋ ನಿಂದು
ಜೀವಜೀವರಲಿ ಜಡ ಜೀವ ಬೇರೆನಿಸಿದಿ
ಜೀವಜೀವರ ಜೀವ ಚೈತನ್ಯರೂಪ ೨
ವೇದ ಸುಳ್ಳೆಂಬ್ಹಲವು ವಾದಿಗಳ ನಿರ್ಮಿಸಿದಿ
ವೇದ ಅಹುದೆಂಬ ನಿಜವಾದಿಗಳ ಪುಟ್ಟಿಸಿದಿ
ನಾದಬ್ರಹ್ಮವುಯೆಂಬ ಹಾದಿ ರಚಿಸಿದಿ
ಸರ್ವಸಾಧನಕೆ ಒಲಿದು ಪ್ರಸನ್ನ ನೀನಾದಿ ೩
ಬಗೆಬಗೆಯ ವಚನದಿಂ ಬಗೆಬಗೆಯ ನಿಗಮದಿಂ
ಬಗೆಬಗೆಯ ಸ್ರ‍ಮತಿಯಿಂದ ಜಗದಯ್ಯ ನೀನೆ
ಬಗೆಬಗೆಯ ರೂಪದಿಂ ನಿಗವಿಟ್ಟು ಸರ್ವರನು
ಬಗೆಗೊಂಡು ಬೆಳಗುವೆಯೊ ಜಗಭರಿತನಾಗಿ ೪
ಅವಸಾಧನವೊಲ್ಲೆ ಜಾವಜಾವಕೆ ನಿಮ್ಮ
ದಿವ್ಯಸ್ಮರಣೆಯ ಎನ್ನ ಭಾವದೊಳು ನಿಲಿಸಿ
ದೇವದೇವರ ದೇವ ದೇವ ಶ್ರೀರಾಮ ತವ
ಸೇವಕನೆನಿಸೆನ್ನ ಕಾಯೊ ಕೈಪಿಡಿದು ೫

 

೬೧೫
ಅರಿವೆ ಮಹದ್ವರವೆ ನೀನೆ
ಪರಕೆಪರಮ ಪರಮಸೂತ್ರನು ಪ
ತ್ರಿಕಾಲ ಬಲ್ಲಿ ನೀ ತ್ರಿಲೋಕವನು ಬಲ್ಲಿ
ತ್ರಿದ್ವಿಶಾಸ್ತ್ರವ ಬಲ್ಲಿ ತ್ರಿಯೊಂದ್ವೇದವ ಬಲ್ಲಿ ೧
ತ್ರಿವರ್ಗರಳಿಬಲ್ಲಿ ತ್ರಿದ್ವಿಗುಣ ಕಳಿಬಲ್ಲಿ
ತ್ರಿನಾಲ್ಕು ಗೆಲ್ಲಬಲ್ಲಿ ತ್ರಿಸಪ್ತರೊದಿಬಲ್ಲಿ ೨
ತ್ರಿಸದ್ವಾರಬಲ್ಲಿ ತ್ರಿಣಯರಸ್ಥಲಬಲ್ಲಿ
ತ್ರಿತ್ರೀಯಬಂಧನ ಬಲ್ಲಿ ತ್ರಿವಿಧದಿ ಹರಿಬಲ್ಲಿ ೪
ತ್ರಿದ್ವಯ ಮೂಲವ ಬಲ್ಲಿ ತ್ರಿದಶಸ ಭೇದವ ಬಲ್ಲಿ
ತ್ರಿಕೂಟಕಳೆ ತ್ರಿಪಂಚದುಳಿ ಬಲ್ಲಿ ೫
ವರದ ಶ್ರೀರಾಮ ಚರಿತ ಪೊಗಳಬಲಿ ್ಲ
ಕರುಣದಿಂದೆನ್ನೊಳು ಬೆರದೇಕನಾಗೆಲೊ ೬

 

೧೮೪
ಅಸೂಯೆ ಬಿಡಿಸೆನ್ನ ಮನಸಿನ
ಅಸೂಯೆ ಬಿಡಿಸೆನ್ನ ಪ
ಅಸೂಯೆ ಬಿಡಿಸೆನ್ನ ಹೇಸಿಮನಸಿನ
ಈಶ ನಿನ್ನಪಾದ ದಾಸಾನುದಾಸೆನಿಸೋ ಅ.ಪ
ಕೊಟ್ಟರು ಅಷ್ಟೆಯೆನಿಸೋ ಕೊಡದೊದ್ದು
ಅಟ್ಟಿದರಷ್ಟೆನಿಸೋ
ಕೊಟ್ಟು ಕೊಡದವರೆಲ್ಲ ಅಷ್ಟೆನಿಸೆನ್ನಗೆ
ಶಿಷ್ಟಗುಣಿತ್ತು ಪೊರೆ ಸೃಷ್ಟಿಮೇಲೆ ಹರಿ ೧
ಕಡುಸಿರಿ ಅಷ್ಟೆನಿಸೋ ಎನಗೆ ಬಂದ
ಬಡತನ ಅಷ್ಟೆನಿಸೋ
ಕಡುಸಿರಿ ಬಡತನ ಅಷ್ಟೇಯೆನಿಸಿ ನಿನ್ನ
ಅಡಿದೃಢವಿತ್ತು ಪೊರೆ ಪೊಡವಿ ಮೇಲೆ ಹರಿ೨
ದೂಷಣ ಅಷ್ಟೆಯೆನಿಸೋ ಜಗದೊಳು
ಭೂಷಣ ಅಷ್ಟೆನಿಸೋ
ದೂಷಣ ಭೂಷಣ ಅಷ್ಟೇಯೆನಿಸಿ ನಿನ್ನ
ಧ್ಯಾಸದಿಟ್ಟು ಪೊರೆ ಶ್ರೀಶ ಶ್ರೀರಾಮ ತಂದೆ ೩

 

೬೧೬
ಅಹುದಹುದೊ ಭಕುತಭಮಾನಿ ನೀನಹುದೋ ಪ
ಮಹ ಭಕ್ತಿಯಿಂ ನಿಮ್ಮ ಭಜಿಪ ಜನರಿಗೊದಗಿ
ಬಹ ದು:ಖ ಪರಿಹರಿಸಿ ಸಹಾಯದಿಂ ಕಾಯುವಿ ಅ.ಪ
ಮೂರು ಜಗಕೆ ಆಧಾರ ಮಾಧವನೆಂದು
ಸಾರಿಭಜಿಪರ ಕಷ್ಟ ದೂರಮಾಡುವಿ ನೀ೧
ಹರಿಸರ್ವೋತ್ತಮನೆಂದು ಸ್ಮರಿಪರ ಜರಾಮರಣ
ತರಿದು ಪರಿಭವಶರಧಿ ಕರುಣದಿಂ ಗೆಲಿಸುವ ೨
ಭಕ್ತರ ಸೌಭಾಗ್ಯ ಸತ್ಯ ಶ್ರೀರಾಮನೆಂದು
ನಿತ್ಯದಿ ನೆನೆವರ್ಗೆ ಮುಕ್ತಿ ನೀಡುವಿ ನೀ ೩

 

೧೮೬
ಆಗಿದ್ದ ಹರಿ ಈಗಿಲ್ಲವೇನು
ಸಾಗರಶಾಯಿ ಭಕ್ತರಭಿಮಾನ್ಯಲ್ಲೇನು ಪ
ಖುಲ್ಲರ್ಹಾವಳಿಯಿಂದ ಝಲ್ಲು ಬಿಡಿಸಿ ಮುನಿಯ
ಕಲ್ಲನ್ನು ಸತಿಮಾಡ್ದ ಬಿಲ್ಲು ಇಕ್ಕಡಿಗೈದ
ಕೊಲ್ಲಿ ದಶಮುಖನನ್ನು ನಲ್ಲೆಯಳ ಕರೆತಂದ
ಒಲ್ಲಿದು ರಾಜ್ಯವನಿತ್ತ ಸುಲಭದ್ವಿಭೀಷಣಗೆ೧
ಅರಮನೆಕಂಬದಿ ಅರಿಯದಂತಡಗಿ ತಾ
ದುರುಳನ ಸದೆಬಡಿದು ತರಳ ಸಲಹಿದ
ಬರುವ ಮುನಿಶಾಪವಂ ವರಚಕ್ರದಿಂ ತಡೆದು
ಕರುಣದಿ ನೃಪನನ್ನು ಪೊರೆದ ಪರಮಾತ್ಮ ೨
ಕರುಣಾಳು ಶ್ರೀರಾಮ ಚರಣದಾಸರ ಮನಕೆ
ಕೊರತೆಯ ತರದಂತಿರುವ ಬೆಂಬಿಡದೆ
ಮರುಗಿ ಸೊರುಗುವುದ್ಯಾಕೊ ಸರುವ ಭಾರವನ ಮೇ
ಲ್ಹೊರೆಸಿ ಮೊರೆಯಿಟ್ಟ ಬಳಿಕರಿಯನೇನೀಶ ೩

 

೪೮೭
ಆಡಣ್ಣ ನೀನಾಡಣ್ಣ ಅನುಭವದಾಟ ಆಡಣ್ಣ ಪ
ರೂಢಿಯೋಳ್ಹರಿಯ ಗಾಢಮಹಿಮೆ
ಕೊಂಡಾಡುವರೊಡನಾಟ ಅ.ಪ
ಅಳುವರ ಕಂಡರೆ ಅತ್ತಂತೆ ಕಾಣೋ
ನಗುವರ ಕಂಡರೆ ನಕ್ಕಂತೆ ಕಾಣೋ
ಅಳುವ ನಗುವರಲಿ ಸಿಲುಕಿ ಸಿಲುಕದೆ ನಿ
ನ್ನೊಳಗೆ ಮಾಧವನ ತಿಳಿದು ಆನಂದದಿ ೧
ಅವರನು ಕಂಡರೆ ಅವರಂತೆ
ಇವರನು ಕಂಡರೆ ಇವರಂತೆ
ಅವರಿವರಿಗೊಂದೆಸವನೆತೋರಿ ಸಿರಿ
ಧವನ ಪಾದ ಮನಭವನದಿಟ್ಟ್ಹಿಗ್ಗುತ ೨
ವಾಸನೆ ಪ್ರಥಮ ನಾಶನ ಮಾಡೊ
ದಾಸರ ಕಂಡರೆ ಸೇವೆಯ ಮಾಡೋ
ಆಶಪಾಶ ನೀಗಿ ಶ್ರೀಶ ಶ್ರೀರಾಮನ
ದಾಸನಾಗಿ ನಿಜ ಮುಕ್ತಿಯ ಕೂಡೊ ೩

 


ಆನಂದಂ ಮಹದಾನಂದಂ
ಹರಿಯ ಭಜನ ಬ್ರಹ್ಮಾನಂದಂ ಪ
ಸತ್ಯ ನುಡಿಯುವುದೆ ಆನಂದಂ ತನ್ನ
ಗುರ್ತ ತಿಳಿಯುವುದೆ ಆನಂದಂ
ನಿತ್ಯ ನಿರ್ಮಲನ ಸತ್ಯ ಗುಣಂಗಳನು
ಭಕ್ತಿಯಿಂ ಭಜಿಸೆ ನಿತ್ಯಾನಂದಂ
ಸತ್ಯ ಸತ್ಯ ಸರ್ವೋತ್ತಮ ಹರಿಯೆಂದು
ಅರ್ತಿಯಿಂ ಭಜಿಸೆ ಅತ್ಯಾನಂದಂ ೧
ಆಶ ನೀಗುವುದೆ ಆನಂದಂ ಭವ
ಪಾಶ ಗೆಲಿಯುವುದೆ ಆನಂದಂ
ಶ್ರೀಶ ಕೇಶವನ ಸಾಸಿರ ನಾಮದ
ಧ್ಯಾಸದಿರುವುದೆ ಲೇಸಾನಂದಂ
ದೋಷದೂರ ಭವಪಾಶಹರನ ಅನು
ಮೇಷ ಪÀಠಿಸೆ ಸ್ಥಿರದಾನಂದಂ ೨
ಹಮ್ಮನಳಿವುದೇ ಆನಂದಂ ತಾ
ಸುಮ್ಮನಿರುವುದೆ ಆನಂದಂ
ಕರ್ಮರಹಿತನಾಗಿ ಬ್ರಹ್ಮಪಿತನ ಪಾದ
ಒಮ್ಮನದೊಳಗಸಮಾನಂದಂ
ಧರ್ಮವಿಡಿದು ಪರಬ್ರಹ್ಮ ಶ್ರೀರಾಮನ
ಮರ್ಮ ತಿಳಿಯೆ ನಿರ್ಮಲಾನಂದಂ ೩

 

೧೮೭
ಆನಂದಕರಮಾದ ಇಂದಿರಾರ್ಯ ತವ
ಧ್ಯಾನಾನಂದೆನಗೆ ದಯಪಾಲಿಸು ಪ
ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ
ಅಂದಮಾದ ತವ ಮಹಿಮೆಯ ದೇವ ಅ.ಪ
ಕಾಣುವ ಜಗವೆಲ್ಲ ಏನೆಂಬ ನಿಜತವನು
ನಾನರಿಯದೊರಲುತಿಹೆನು
ನಾನಿಲ್ಲದಮೊದಲು ಏನಿತ್ತು ಎಂಬುದನು
ನಾನೆಂತು ತಿಳಿಯುವೆನು
ನಾನು ಯಾರೆಂಬ ನಿಜ ಖೂನವರಿಯದೆ ಬಲು
ಹೀನತೆಗೆ ಬಂದಿದ್ದೆನು
ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ
ಜ್ಞಾನದಿಂ ಪೊರೆ ದಯದಿ ಜವದಿ ೧
ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ
ತ್ತೆಲ್ಲಿಗೆ ಪೋಗುವೆನು
ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು
ಎಲ್ಲಿಗೆ ಕೊಡುವೆನು
ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ
ಎಲ್ಲಿಂದ ಕಾಂಬುವೆನು
ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು
ಪುಲ್ಲನಾಭ ದಯಪಾಲಿಸು ತಿಳಿಸು ೨
ಆರೊಂದುಗೇಣಿನಾಪಾರ ಸೂತ್ರದಗೊಂಬೆ
ಆರಿಂದಲಾಗಿಹ್ಯದು
ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ
ಕಾರಣವೇನಿಹ್ಯದು
ತೋರುವುವು ಇದರೊಳಗೆ ಮೂರುವಿಧಮಾಗಿ
ಆರಸಾಕ್ಷದಕ್ಕಿಹ್ಯದು
ತೋರದೇನೇನಿದರ ತಾರತಮ್ಯಜ್ಞಾನ ಸುವಿ
ಚಾರ ಎನಗೊಲಿದು ತಿಳುಹು ಸಲಹು ೩
ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ
ಕೀಲಿಯೆಲ್ಲಿರುತಿಹ್ಯದು
ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ
ಗಾಳ್ಯೆಂತುನಿಂತಿಹ್ಯದು
ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ
ಜಾಲವೇ ತುಂಬಿಹ್ಯದು
ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ
ಲೀಲೆಯೊಳೆನ್ನಾಡಿಸು ಪಾಲಿಸು ೪
ಬಂಧರೂಪಕಮಾದ ದಂದುಗದ ಭವವು ದಾ
ರಿಂದಲುತ್ಪತ್ತಿ ಯಾಯ್ತು
ತಂದೆ ತಾಯಿ ಸತಿ ಸುತರು ಬಂಧಬಳಗ ಎ
ಲ್ಲಿಂದ ಬಂದಿವಗೆ ಜೊತೆಗೂಡಿತು
ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ
ಬಂಧ ಮತ್ತೆಲ್ಲೊದಗಿತು
ನಿಂದುನೋಡಲು ಸಕಲ ತಂದೆ ಶ್ರೀರಾಮ
ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ ೫

 

೪೮೮
ಆನಂದಮೆಂದಿದಕೆ ಹೆಸರಿಟ್ಟೀ ಪಾಪಿ ಪ
ಮನಬಂದತೆರ ಸೇಂದಿ ಸೆರೆಕುಡಿದು ಉಬ್ಬಿ ಅ.ಪ
ಕೊಡ ಪಡಗ ಹೆಂಡವನು ಕುಡಿದು ಎಚ್ಚರದಪ್ಪಿ
ತಡೆಯದಲೆ ಮಲಮೂತ್ರ ಬಿಡುತದರೋಳುರುಳಿ
ಬಡಿಸಿಕೊಂಡಟ್ಟೆಯಿಂ ಒಡನೆ ಎಚ್ಚರವೊಂದಿ
ಕೆಡಿಸಿದಾನಂದಮ್ಹಿಡಿ ಕೊಡುವೆ ಶಾಪೆನುವಿ ೧
ಅವಸರದಿಂ ಜಿಹ್ವೆಯ ಸವಿರುಚಿ ಲವಲವಿಕೆಯಿಂ
ಭವಿಜನುಮಿಗಳು ಎಲ್ಲ ಕವಿದುಬಂದಿಳಿದು
ಸವಿಯಬಾರದ್ದು ಸವಿದು ಶಿವನೆನಾವೆಂದೆನುವ
ಭವಿಗಳೆಲ್ಲರು ಜಗದಿ ಶಿವನ ಪೋಲುವರೆ೨
ಕದ್ದು ಮುಚ್ಚಿಲ್ಲದಲೆ ಮುದ್ದೆ ಮುದ್ದೆ ಗಾಂಜವನು
ಸಿದ್ಧಪತ್ರೆಂದೆನುತ ಶುದ್ಧಮತಿಗೆಟ್ಟು
ಬದ್ಧರೆಲ್ಲ ಸೇದಿ ನಿಜ ಪದ್ಧಿತಿಯನ್ಹದಗೆಡಿಸಿ
ಶುದ್ಧಾತ್ಮರೆನಲು ಪರಿಶುದ್ಧರಾಗುವರೆ ೩
ನಾನುನೀನೆಂದೆಂಬ ಖೂನಡಗಿ ಎತ್ತ ತಾನೆ
ತಾನೆಂದು ಹೊಳೆವ ಬ್ರಹ್ಮ ಆನಂದ ಸೊಬಗು
ಏನೊಂದು ತಿಳಿಯದೆ ಆನಂದವೆಂದೆನುತ
ಶ್ವಾನನಂದದಿ ಕೂಗ್ವಿ ಜ್ಞಾನಾಂಧ ಅಧಮ ೪
ಹುಚ್ಚುಮನುಜನೆ ನಿನಗೆ ಹೆಚ್ಚಿನ ಗೋಜ್ಯಾಕೆ
ನಿಶ್ಚಲಭಕುತಿಂ ಬಚ್ಚಿಟ್ಟು ಮನದಿ
ಅಚ್ಯುತ ಶ್ರೀರಾಮನ ಹೆಚ್ಚೆಂದು ದೃಢವಹಿಸಿ
ಎಚ್ಚರದಿ ಭಜಿಸಿ ಭವಕಿಚ್ಚಿನಿಂದುಳಿಯೊ ೫

 

೧೮೯
ಆರ ನಂಬುಗೆ ಜಗದೆನಗಿಲ್ಲ ಹರಿಯೆ
ಕಾರುಣ್ಯನಿಧಿ ನೀನೆ ಗತಿಯೆನಗೆ ಪೊರೆಯೈ ಪ
ತಿಂಡಿಗ್ಹಾಕುವತನಕ ಹೆಂಡತಿಯು ನುಡಿಯುವಳು
ಗಂಡನೇ ಗತಿಯೆಂದು ಮಂಡೆಯನು ಬಾಗಿ
ತಿಂಡಿತಪ್ಪಿದ ಕ್ಷಣದಿ ಕಂಡಕಂಡತೆ ಕೂಗಿ
ಬಂಡುಮಾಡುವಳಿಹ್ಯದಿ ಷಂಡನೆಂದಭವ ೧
ಬಂಧುಬಾಂಧವರೆಲ್ಲ ಸಂದುಬಿಡಿದಡಿಗಡಿಗೆ
ವಂದಿಸಿ ನುಡಿಯುವರು ತಿಂದುಡುವನತಕ
ಸಂಧಿಸಲು ಬಡತನವು ವಂದಿಸಿದವರೆ ಮನ
ಬಂದಂತೆ ನಿಂದಿಪರು ಕುಂದ್ಹೊರಿಸಿ ದೇವ ೨
ಭೂಮಿಯ ಜನರೆಲ್ಲ ಕ್ಷೇಮ ನೀ ಕೊಟ್ಟಿರಲು
ತಾಮಸವ ಬಿಟ್ಟು ಬಲು ಪ್ರೇಮ ಬಳಸುವರು
ಸ್ವಾಮಿ ಶ್ರೀರಾಮ ನಿಮ್ಮ ಪ್ರೇಮ ತುಸು ತಪ್ಪಿದರೆ
ಭೂಮಿಯೊಳಗಿನ ಕೇಡು ನಾ ಸ್ಮರಿಸಲಾರೆ ೩

 

೧೮೮
ಆರಗೊಡವೆ ನಮಗಿನ್ಯಾಕೊ ಹರಿ ಅ
ಪಾರ ಮಹಿಮನ ದಯವೊಂದೆ ಸಾಕೊ ಪ
ಮಾರಿಗೀರಾಗಲಿ ದೂರಿ ಸಕಲರೆನ್ನ
ಸಾರಸಾಕ್ಷನ ಬಲವೊಂದೆ ಬೇಕೊ ಅ.ಪ
ಜಗಜನ ಕಂಡಂತೆ ಬೊಗಳಲಿ
ಬೊಗಳಿ ಬೊಗಳಿ ನಮ್ಮ ಶಪ್ಪರಿಯಲಿ
ನಿಗಮಾಗಮನುತ ಜಗಜೀವೇಶನ
ಸೊಗಸಿನ ಕೃಪೆಯೊಂದೆ ನಮಗಿರಲಿ ೧
ದುರುಳ ಕೃತ್ತಿಮನೆಂದು ಜರಿಯಲಿ
ಜರಿಜರಿದು ಮರೆದ್ಹೋಗಲಿ
ಚರಣದಂತಿ ಪರಮ ಪಾವನಂಘ್ರಿ
ಕರುಣಾಮೃತವೊಂದೆ ನಮಗಿರಲಿ ೨
ಪ್ರೇಮದಪ್ಪಿ ಎನ್ನ ಬಳಲಿಸಲಿ ಅವರು
ಕ್ಷೇಮ ತುಸು ಕಾಣದಳಿದ್ಹೋಗಲಿ
ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ
ನಾಮಧ್ಯಾನವೊಂದೇ ನಮಗಿರಲಿ ೩

 


ಆರಿಗೂ ಕೊಟ್ಟು ನಾನ್ಹುಟ್ಟಿಲ್ಲ ಸ್ವಾಮಿ
ಹಾರೈಸಲೆಂತೀಯ್ವಿ ಭಕ್ತಜನ ಪ್ರೇಮಿ ಪ
ವಸನಕಾಣದೆ ಪೋಗಿ ದೆಸೆ ಬತ್ತಲೆ ಬಂದು
ಬಸವಳಿದು ಬಾಯಾರಿ ದೆಸೆಗೆಟ್ಟು ಬೇಡುವರ
ಕುಶಲಂಗಳರಿಯದೆ ಹಾಸ್ಯಗೈಯುತ ನಕ್ಕೆ
ವಸನ ನಾಂ ಬಯಸಲೆಂತೊಸೆದು ನೀಂ ಕೊಡುವಿ ೧
ಧನವಂತನಾಗಿ ನಾ ಧನವಿಲ್ಲದವರಿಗೆ
ಶುನಕನಂದದಿ ಕೂಗುತಣಕವಾಡಿದೆನು
ಕನಸು ಮನಸಿನಲಿ ವಿನುತಧರ್ಮವನರಿಯೆ
ರಿಣಕಳೆದು ಹರಿಯೆನೆ ನಿನಗೆ ಕರುಣೆಂತು ೨
ಮೂರುದಿನವಾಯಿತು ಘೋರಬಡುವೆನು ತುಸು ಆ
ಹಾರ ಹಾಣದೆ ಕೃಪೆ ದಾರಿಗೆ ಬರದೆನುತ
ಭೋರಿಟ್ಟು ಕೂಗ್ವುದ ಸಾರಿ ಕೇಳುತ ನಾನು
ದೂರ್ಹೋದೆ ಎನ್ನ ತಪ್ಪು ಕ್ಷಮಿಸು ಶ್ರೀರಾಮ ೩

 


ಆರಿತ್ತರಭವನೇ ಈ ಮನವನೆನಗೆ
ವಾರಿಜೋದ್ಭವಪಿತನೆ ನೀನಲ್ಲದೆ ಬೇರೆ ಪ
ಪರಮಪಾವನ ನಿನ್ನ ಪರಮ ಪರತರ ಚರಿತೆ
ಸ್ಥಿರವೆಂದು ನೆರೆನಂಬಿ ಅರಿವ ಬುದ್ಧಿಯನು
ಮೆರೆವ ನಿಮ್ಮಯ ಬಿರುದ ಹರುಷದಿಂ ಸ್ಮರಿಸ್ಮರಿಸಿ
ಹಿರಿ ಹಿರಿ ಹಿಗ್ಗುತ ಬರೆವ ಈ ಕರವ ೧
ನಿನ್ನ ದಾಸರ ಪಾದ ಭಿನ್ನವಿಲ್ಲದೆ ನೋಡಿ
ಉನ್ನತ ಸುಖಪಡೆವ ಧನ್ಯದ್ವಯನಯನ
ಮುನ್ನ ನಾ ಮಾಡಿದ ಪುಣ್ಯಫಲವೆಂದರಿದು
ನಿನ್ನ ಚರಣಕೆ ನಮಿಪ ಮಹಪುಣ್ಯಶಿರವ ೨
ಗಾಢಮಹಿಮನೆ ನಿಮ್ಮ ಈಡಿಲ್ಲದ ಲೀಲೆ
ರೂಢಿಯೊಳಧಿಕೆಂದು ಆಡ್ಯಾಡಿ ಕುಣಿದು
ಕಾಡಿ ಬೇಡುವ ಮಹಗಾಢ ನಿಮ್ಮಡಿಭಕ್ತಿ
ನೀಡಿದವರೆನಗಾರು ನೋಡು ಶ್ರೀರಾಮ ೩

 

೬೧೭
ಆರು ಸಂಗಡ ಬಾಹೊರೆಲೆ ಮನುಜ ನಿನಗೆ
ಹಾರೈಸಿ ಬಳಲುವೆ ಬರಿದೆ ಭವದೊಳಗೆ ಪ
ಗುರುಹಿರಿಯರಗ್ನಿಯ ಪರಿಮುಖದಿ ನಿನ್ನಯ
ಕರಪಿಡಿದು ಮಾಂಗಲ್ಯ ಧರಿಸಿಕೊಂಡರ್ಧ
ಶರೀರವೆನಿಸುವ ಸತಿಯು ಮರಣ ಕಾಲದಿ ನಯನ
ತಿರುಗುವುದ ಕಂಡಂಜಿ ತಿರಿಗಿನಿಂತಳುತಿಹ್ಯಳು ೧
ತನುಜಮನುಜರಿವರೆಲ್ಲ ನಿನಗತಿಹಿತ ಬಂಧು
ಮಣಿದು ಸೇವಿಪರು ನಿನ್ನನುದಿನವು ಬಿಡದೆ
ತನುಬಿಟ್ಟ ಕ್ಷಣದಿ ನನನಿನಗೆನುತ ಮನೆಕೀಲಿ
ಘನ ಜಗಳ ಕಾಣು ಬಿದ್ದ್ಹೆಣದ ಪರಿವಿಲ್ಲದೆ ೨
ಕುಲವಿದ್ಯವ್ಯವಹಾರ ಕಳವುಕೊಲೆ ನೃಪಸೇವೆ
ತಲೆ ಬಾಗಿ ಜನರಲ್ಲಿ ಬಲುದೈನ್ಯ ಬಟ್ಟು
ಗಳಿಸಿ ಹೂಳಿದ ದ್ರವ್ಯ ಎಳೆದೊಯ್ಯಲ್ಯಮ ನಿನ್ನ
ತಲೆಯೆತ್ತಿ ನೋಡದಲೆ ನೆಲದಿ ನಿಲ್ಲುವುದು ೩
ಭೂಮಿ ನಿನ್ನದು ಎಂದು ನೇಮವನು ಬರಕೊಂಡು
ಕೋಮಲ ಮನೆಕಟ್ಟಿ ತಾಮಸದಿ ನಲಿವಿ
ಭೂಮಿಯ ರಿಣತೀರಿ ನೀ ಮಡಿದಾಕ್ಷಣ ಬಹಿ
ರ್ಭೂಮಿಯೋಳ್ಹುತಿವರೆಲೆ ಪಾಮರ ಮನುಜ ೪
ಮಂದಮನುಜನೆ ಧನವು ಮಂದಿರದಿ ನಿಲ್ಲುವುದು
ಬಂಧುಬಾಂಧವರೆಲ್ಲ ಹಿಂದೆ ಉಳಿಯುವರು
ಮಂದನಾಗದೆ ತಂದೆ ಶ್ರೀರಾಮ ಪಾದಾರವಿಂದಮಂ
ನಂಬಿ ಭವಬಂಧವನು ಗೆಲಿಯೊ ೫

 

೧೦
ಆರುಮುನಿದರು ಮುನಿಯಲಿ ಎನ್ನ
ಪಾರು ಮಾಡುವ ಹರಿ ನಿನ್ನ ದಯವಿರಲಿ ಪ
ವಾರಿಜಾಕ್ಷನೆ ನಿನ್ನ ಕರುಣವೆಂಬಾಲಯ
ಸೇರಿ ಕೊಂಡವರಿಗೆ ಆರಂಜಿಕಿನ್ನೇನು ಅ.ಪ
ಬಿರುಗಾಳಿ ಭರದಿಂದ ಬೀಸೆ ಮಹ
ಗಿರಿಯು ನಡುಗಿ ಅದರಿಂದಾಗ್ವುದೆ ಘಾಸಿ
ನರಿಗಂಜಿ ಹುಲಿ ಸ್ಥಳ ತ್ಯಜಿಸಿ
ಮರೆಯಾಗೋಡುವದೇ
ನರಹರಿ ತವಪಾದ ಸ್ಮರಿಪ ದಾಸರು
ನರಗುರಿಗಳಿಘೆದರುವರೇನು ೧
ದಿನಕರನಿಗೆ ಕುಂಧೊರಿಸಿ ಇಂಥ
ಬಿನುಗರು ಜರೆದರೆ ಆಗುವನೆ ಮಸಿ
ವನಜಾಕ್ಷನೊಳು ಮನ ನಿಲಿಸಿ
ದಿನ ದಿನ ಘನವಾಗಿ ನೆನೆವ ಭಕ್ತರ
ಮನ ಮಣಿಯುವುದೇನಯ್ಯ
ಬಿನುಗರ ಕೃತಿಗಿನ್ನು ೨
ಬರುವುದೆಲ್ಲವು ಬಂದು ಬಿಡಲಿ ಎನ್ನ
ಸರುವರು ಪರಿಪರಿ ಜರಿದುನೋಡಲಿ
ಸಿರಿವರ ನಿನ್ನ ದಯವಿರಲಿ
ಮರಿಯಾಧಾಳಾಗಲಿ ಸ್ಥಿರಸುಖ ಪ್ರಾಪ್ತಿಸಲಿ
ವರದ ಶ್ರೀರಾಮ ನಿನ್ನ
ಸ್ಮರಣೆಯೊಂದೆನಗಿರಲಿ ೩

 

೧೨೩
ಆರುಸರಿ ಮಾರುತಿಯೆ ನಿನಗೆ
ಆರುಯೆಂಟು ಭುವನದೊಳಗೆ ಪ
ಎತ್ತಿ ತೂಗಿದಿ ಶಿವನಪುರಿ
ಕಿತ್ತು ತಂದಿ ಸಂಜೀವನ ಗಿರಿ
ಮತ್ತೆರಕ್ಕಸಬಲವ ತೂರಿ
ಮುತ್ತಿ ತರಿದೋ ಹಾರಿ ಹಾರಿ೧
ಲಂಘಿಸಿ ಬಲವಂತ ಭರದಿ
ಲಿಂಗ ತಂದು ಸಮರ್ಪಿಸಿದಿ
ಮಂಗಳಾತ್ಮನಿಂದ ಪಡೆದಿ
ಲಿಂಗಕೋಟಿ ರೋಮರೋಮದಿ ೨
ನಾಮಬಲವ ಗಳಿಸಿದಿ
ಈ ಮಹಭವಸಾಗರ ತುಳಿದಿ
ಭೂಮಿಗಧಿಕ ಸ್ವಾಮಿ ಶ್ರೀ
ರಾಮನೊಲಿಸಿ ಧನ್ಯನಾದಿ ೩

 

೧೯೦
ಆವ ತ್ರಾಣವು ಎನ್ನೊಳಿನಿತಿಲ್ಲವಯ್ಯ
ಭಾವಜಪಿತ ನೀನೆ ದಯಮಾಡಬೇಕೊ ಪ
ಗುಡಿಯ ಕಟ್ಟಿಸಲೆ ನಾ ಒಡುಕುಕವಡೆನಗಿಲ್ಲ
ಬಡವರಿಗೆ ಅನ್ನಿಟ್ಟಿಲೆ ಹಿಡಿಧಾನ್ಯವಿಲ್ಲ
ಕೊಡುವೆನೆನೆ ಧರ್ಮವ ಪಡೆದು ನಾ ಬಂದಿಲ್ಲ
ಬಿಡುವೆನೇ ದು:ಸ್ಸಂಗ ಅಡರಿಹ್ಯರು ರಿಣವು ೧
ದೃಢಧ್ಯಾತ್ಮಗೈವೆನೆನೆ ನಡೆವ ಶಕ್ತ್ಯೆನಗಿಲ್ಲ
ಮಡಿಮಾಡ್ವೆನೆನೆ ಮನವು ತಡೆವಶಕ್ತಿಲ್ಲ
ಸುಡಲೆ ಕಾಮಾದಿಗಳು ತೊಡರಿಹ್ಯದು ಸಂಸಾರ
ನುಡಿಯಲೆ ಸತ್ಯ ಸದಾ ಬಡವನಾಗಿಹೆನು ೨
ಒಡೆಯ ಶ್ರೀರಾಮ ನಿನ್ನಡಿಯ ಗುರುತರಿಯೆ
ಕಡುಮೂರ್ಖ ಜನ್ಮವನು ಪಡೆದಿಹೆನು ಜಗದಿ
ಒಡೆಯ ಸರ್ವಕೆ ನೀನೆ ಜಡಮತಿಯು ಗಡ
ಕಡಿದು ದೃಢಭಕ್ತಿ ಸುಖವಿತ್ತು ಪಿಡಿದು ಸಲಹಯ್ಯ ೩

 

೧೯೧
ಆವ ನ್ಯಾಯವೋ ಭಾವಜರಿಪುವಿನುತ ನಿಂದು
ದಾವ ನ್ಯಾಯವೊ ಪ
ಆವ ನ್ಯಾಯವೋ ದೇವ ದೇವ
ಮಾವಕಂಸಜೀವಘಾತಕ ಅ.ಪ
ಕಪ್ಪು ವರ್ಣನು ಭಕ್ತಜನರ
ಲ್ಲಿರ್ಪೆ ಸದಾ ನೀನು ನಿ
ನ್ನ ಪಾದದಿ ತಪ್ಪು ಎಲ್ಲನು
ಒಪ್ಪಿಬಂದಿಹ್ಯ ಭಕ್ತಜನರ
ತಪ್ಪು ಒಪ್ಪಿ ಕ್ಷಮಿಸಿ ದಯದಿ
ಬಪ್ಪ ದುರಿತ ನಿವೃತ್ತಿಗೈದು
ಅಪ್ಪಿಕೊಂಡು ಸಲಹದಿರುವಿ ೧
ತಂದೆ ತಾಯಿ ನೀನು ಎಂದು ನಂಬಿ
ಬಂದು ಬಿದ್ದೆನು ನಿನ್ನ ಪಾದಕೆ
ಮಂದಭಾಗ್ಯನು ನೊಂದು
ಬೆಂದು ಸಂಸಾರವೆಂಬ
ಸಿಂಧುವಿನೊಳು ತಾಪಬಡುತ
ಬಂದು ಮೊರೆಯಬಿದ್ದ ಕಂದನ
ಮಂದರಮಂದಿರ ಸಲಹದಿರುವಿ ೨
ನಿನ್ನನರಿಯದ ಅಜಮಿಳನು
ಬಿನುಗನೆನಿಸಿದ ಪಾಪಗೈದವ
ಗಣನೆಯಿಲ್ಲದ ಕನಿಕರದಿಂದ
ವನಿಗೊಲಿದು
ಘನಪದವನಿತ್ತು ಪೊರೆದೆ
ಎನ್ನನ್ಯಾಕೆ ರಕ್ಷಿಸದಿರುವಿ
ಚಿನುಮಯಾತ್ಮ ಸಿರಿಯರಾಮ ೩

 

೧೯೬
ಆವ ಸಾಧನದ ಗೋಜ್ಯಾಕೆ ನಿನ್ನ
ಭಾವದೊಳಗೆ ಹರಿಯಿರಲಿಕ್ಕೆ ಪ
ಜಾವಜಾವಕೆ ಗೋವಳರೊಡೆಯನ
ಕೇವಲಭಕ್ತಿಯಿಂ ಕೂಗಲು ಸಾಲದೆ ಅ.ಪ
ಎಷ್ಟು ಆಸನ್ಹಾಕಿದರೇನೋ ಬಲು
ಕಷ್ಟದಿ ದೇಹದಂಡಿಸಲೇನೋ
ಬೆಟ್ಟವೇರಿ ಕೂತರೆ ಏನೋ ಅನ್ನ
ಬಿಟ್ಟು ಉಪವಾಸ ಮಲಗಿದರೇನೋ
ಕಷ್ಟಹರಣ ಮಹ ಶಿಷ್ಟಪಾಲನೆಂದು
ನಿಷ್ಠೆಯಿಂ ಭಜಿಸಲಿ ಸಾಕಾಗದೇನೋ ೧
ತೊಪ್ಪಲ ತಿಂದು ಬಾಳಿದರೇನೋ ಮತ್ತು
ತಿಪ್ಪೆಯೊಳಗೆ ಉಣಕೂತರೇನೊ
ಕಪ್ಪೆಯಂತೆ ಜಲ ಮುಳುಗಿದರೇನೋ ಎಲೊ
ಮುಪ್ಪಿನ್ಹದ್ದಿನಂತೆ ಮೇಲಕ್ಹೋದರೇನೋ
ತಪ್ಪದೆ ಅನುದಿನ ಮುಪ್ಪುರಾಂತಕನ
ಗೌಪ್ಯದಿಂ ನೆನೆಯಲು ಸಾಕಾಗದೇನೊ ೨
ಸೊಟ್ಟಿ ಹಾಕಿಕೊಂಡು ಪೋದರೇನೋ ಚರ್ಮ
ಉಟ್ಟುಕೊಂಡು ತಿರುಗಿದರೇನೋ
ಬಟ್ಟಿ ನುಂಗಿ ದೇಹ್ಯ ತೊಳೆದರೇನೋ ಬಲು
ಕಷ್ಟದೆಷ್ಟು ಸಾಧಿಸಲೇನೋ
ಕೆಟ್ಟಗುಣವ ಬಿಟ್ಟು ದಿಟ್ಟ ಶ್ರೀರಾಮನ
ಗಟ್ಟ್ಯಾಗಿ ನಂಬಲು ಮುಕ್ತಿಕಾಣೊ ೩

 

ಸಿರಿಯರೆಂಟುಮಂದಿ
೧೧
ಆವದೇವರಿಗುಂಟೀ ವೈಭವ ಪ
ಸಾರ್ವಭೌಮ ನೀನೆ ಸಕಲ
ದೇವರೊಳಗೆ ಭಾವಜನಯ್ಯ ಅ.ಪ
ಸಿರಿಯರೆಂಟುಮಂದಿ ನಿನಗೆ
ಅರಸಿಯರು ಕರುಣಶರಧಿ
ಸುರರು ಮೂವತ್ತು ಮೂರು ಕೋಟಿ
ಚರಣಸೇವಕರಯ್ಯ ಹರಿಯೆ೧
ಅನುದಿನವು ಎಡೆಬಿಡದೆ ಮನು
ಮುನಿಗಳ ಸುಜನ ಸಂತತಿ
ಘನವೇದಘೋಷದಿಂದ
ನೆನೆದು ಪೂಜಿಪರಪರಿಮಿತ ಲೀಲೆ ೨
ಕೋಟಿಸೂರ್ಯಪ್ರಕಾಶ ನಿನ್ನ
ಆಟ ಬಲ್ಲವರಾರು ಜಗದಿ
ಆಟವಾಡುವಿ ಅಗಮ್ಯಚರಿತ
ಸಾಟಿಯಿಲ್ಲದೆ ಧನವ ಕಲಸಿ ೩
ಕರೆಸಿ ಅಸಮಭಕುತ ಜನರ
ವರವ ನೀಡಿ ಮುಡಿಪುಗೊಂಡು
ಮೆರೆವಿ ಪರಮ ಉತ್ಸವದೊಡನೆ
ಗಿರಿಯ ಭೂವೈಕುಂಠಮೆನಿಸಿ ೪
ಕಿಂಕರ ಜನರ ಪೊರೆಯಲೋಸುಗ
ವೆಂಕಟಾದ್ರಿಯಲ್ಲಿ ನಿಂದಿ
ವೆಂಕಟೇಶ ಕಿಂಕರಜನರ
ಸಂಕಟಹರ ಶ್ರೀರಾಮಪ್ರಭೋ ೫

 

೧೯೩
ಆವಬಂಧುಗಳೆಲೋ ಜೀವ ವಿಚಾರಿಸೋ
ಕಾವ ಸಮರ್ಥದೇವ ಹರಿಯಲ್ಲದೆ ಪ
ಮಾಯಮೋಹವ ನೀಗಿ ಕಾಯಶುದ್ಧಲಿ ಮನ
ತೋಯಜಾಕ್ಷನ ಪಾದ ದಿವ್ಯಭಕ್ತಿಲಿ ಭಜಿಸೊ ಅ.ಪ
ಜನನಿ ಬಂದಹಳೆಂಬೆ ಜನನಿರ್ದಳಾಧ್ರುವಗೆ
ಜನಕನ ತೊಡೆಯಿಂದ ಕನಿಕರಿಲ್ಲದೆ ಮಲ-
ಜನನಿ ನೂಕಲು ಕಂದ ವನಕ್ಹೊರಟು ಪೋಗಲು
ಜನನಿ ಸಲಹಿದಳೆನೋ ವನಜಾಕ್ಷನಲ್ಲದೆ ೧
ಸತಿಹಿತದವಳೆನುವೆ ಸತಿಯಿರ್ದು ಸುಗ್ರೀವ
ಖತಿಪಟ್ಟಾಗ್ರಜನಿಂ ವ್ಯಥೆಯಿಂದುಸುರ ಬಿಡಲು
ಸತಿಬಂದು ಪತಿಯನ್ನು ಹಿತದಿ ಕರೆದೊಯ್ದಳೆ
ಹಿತದ ಬಂಧುಗಳಿವರೇ ಕ್ಷಿತಿಪತಿಯಲ್ಲದೆ ೨
ಸುತರ ಬಲವಿಹುದೆನುವೆ ಸುತರತಿ ಬಲಾನ್ವಿತರು
ಜಿತಮಾರನಿಗಿರೆ ಉರಿಹಸ್ತ ವರವಿತ್ತು
ಗತಿದೋರದಿರುತಿರೆ ಸುತರು ನೆರವಾದರೆ
ಗತಿ ರಮಾಪತಿಯೆನೆ ಹಿತದಿಂ ಮೊರೆಕಾಯ್ದ ೩
ಬಂಧುಗಳತಿಶಯದ ವೃಂದನೆರೆದು ಇರ
ಲಂದು ಕರಿಮಕರಿಕೆಯಿಂದ ಬಂಧನ ಪಡಲ
ವಂದು ಬೆಂಬಲಗೊಟ್ಟು ಬಂಧನವ ಬಿಡಿಸಿದುವೆ
ತಂದೆಯಾ ಶ್ರಿ ಮುಕ್ಕುಂದನಲ್ಲದಲೆ ೪
ಹರಿಯೆ ಪರದೈವವೋ ಹರಿಯೆ ಪರಲೋಕವು
ಹರಿಯೇ ಸ್ಥಿರಸುಖವು ಹರಿಯೆ ವರ ಮುಕ್ತಿಯೋ
ಹರಿಯೆಂದು ಅಜಮಿಳ ನರಕಯಾತನೆ ಗೆದ್ದ
ನೆರೆನಂಬಿ ಸುಖಿಯಾಗೋ ವರ ಶ್ರೀರಾಮನ ಪಾದ ೫

 

೧೯೨
ಆವಬಲವಿರಲೇನು ದೇವ ಹರಿಬಲ
ಸಹಾಯವಿಲ್ಲ ಪಾಪಿಜೀವಿಗೆ ಜಗದಿ ಪ
ಶಶಿಧರ ಶಿವನ್ವರವು ದಶಶತಭುಜಬಲವು
ಅಸುರಬಾಣಗೆ ಒಲಿದು ಪಶುಪತಿ ಕದವ
ಕುಶಲದಿಂ ಕಾಯುವ ಅಸಮಬಲವಿರಲವನು
ಕುಸುಮಾಕ್ಷಗ್ವೈರೈನಿಸಿ ಅಸುವ ಕಳೆದುಕೊಂಡ ೧
ಆರಿಂದ ಮರಣವು ಬಾರದಂತ್ಹಿರಣ್ಯ
ಕೋರಿಕೊಂಡ್ಹರನಿಂದ ಮೀರಿ ಮೆರೆಯುತಲಿ
ಮೂರುಲೋಕಗಳನ್ನು ಘೋರಿಸಲತಿಶಯ
ಮಾರಜನಕ ಮುನಿದು ಸೇರಿಸಿದೆಮಪುರ ೨
ಹರನು ಭಸ್ಮಗೆ ಬಲಪರಿಪೂರ್ಣವಾಗಿ ತ
ನ್ನುರಿಹಸ್ತ ವರವನ್ನು ಕರುಣಿಸಿಯಿರಲು
ದುರುಳಂಗೆ ಘನತರ ಹರನ ಕರುಣವಿರಲು
ನರಹರಿ ತಡೆಯದೆ ಉರುವಿದ್ಯರಲವದಿ ೩
ನೂರುಯೋಜನ ಮಹ ವಾರಿಧಿಯೊಳು ಮನೆ
ಆರು ಕೋಟ್ಯಾಯುಷ್ಯ ಶೂರತಮ್ಮನ ಬಲವು
ಮೀರಿದವರ ಬಲ ಮೇರಿಲ್ಲದೈಶ್ವರ್ಯ
ಸಾರಸಾಕ್ಷನು ಮುನಿಯೆ ಹಾರಿತು ನಿಮಿಷದಿ ೪
ಈ ಪರಿ ಬಲವಿರ್ದು ಸಾಫಲ್ಯಹೊಂದದೆ
ಲೋಪಾಯಿತು ಸರ್ವರಾಪಾರ ಬಲವು
ವ್ಯಾಪಿಸಿ ತ್ರೈಜಗ ಕಾಪಾಡ್ವ ಶ್ರೀರಾಮನಪ
ರೂಪಪಾದಕೃಪೆ ನೋಂಪಿ ಸಂಪಾದಿಸದೆ ೫

 

೧೯೪
ಆವಭೂತ ಬಡಕೊಂಡಿತೆಲೊ ನಿನಗೆ
ದೇವ ಕೇಶವನಂಘ್ರಿಧ್ಯಾಸವೆ ಮರೆದಿ ಪ
ಸತಿಸುತರ ಮಮತೆಂಬ ವ್ಯಥೆ ಭೂತ ಬಡಿಯಿತೆ
ಅತಿ ವಿಷಯಲಂಪಟದ ದುರ್ಮತಿಭೂತ ಹಿಡಿಯಿತೆ
ಅತಿ ಸಿರಿಯಭೂತ ನಿನ್ನ ಮತಿಗೆಡಿಸಿತೇನೆಲೊ
ರತಿಪತಿಪಿತನಂಘ್ರಿಸ್ತುತಿಯನೆ ಮರೆತಿ ೧
ಸೂಳೆಯರ ಗಾಳ್ಯೆಂಬ ಹಾಳುಬವ್ವ ತಾಕಿತೇ
ಕೀಳು ಸಂಸಾರದ ಮಹ ಗೋಳು ಭೂತ್ಹಿಡೀತೇ
ಸಾಲಿಗರ ಭಯಭೂತ ನಾಲಿಗೆಯ ಸೆಳೆಯಿತೇ
ನೀಲಶಾಮನ ಭಜನಫಲವೆ ಮರೆತೆಲ್ಲೊ ೨
ಪೋದವಯ ಪೋಯಿತು ಆದದ್ದಾಗ್ಹೋಯಿತು
ಪಾದದಾಸರಕೂಡಿ ಶೋಧಮಾಡಿನ್ನು
ಭೂಧವ ಶ್ರೀರಾಮನ ಪಾದವನು ನಂಬಿ ಭವ
ಬಾಧೆ ಗೆಲಿದಿನ್ನು ಮುಕ್ತಿ ಹಾದಿಯ ಕಾಣೊ ೩

 

೪೮೯
ಆವಭೇಧವಿಲ್ಲದವನೆ ನಿಜಜ್ಞಾನಿಯು ತನು
ಭಾವವರಿತು ನಡೆಯುವನೆ ನಿಜ ಭಾಗವತನು ಪ
ಮಾನ ಅಪಮಾನ ಸಮಕಾಣುವನೆ ಸಜ್ಜನನು
ತಾನು ತನ್ನದೆಂಬ ಮಾಯವಳಿದವನೆ ಸಾಧು
ಏನು ಕೊಟ್ಟರು ಒಲ್ಲೆನೆಂಬುವನೆ ಸನ್ಯಾಸಿ
ದೀನರನು ಕಂಡು ಮನಮರುಗುವನೆ ಭಕ್ತ ೧
ನಿಜಧರ್ಮವರಿಯದ ಪಾಮರನೆ ಶೂದ್ರನು
ನಿಜವಾಕ್ಯಗಳ ಕೇಳಿ ಅಳಿವವನೆ ಭವಿಯು
ಸುಜನರಿಗೆ ತಲೆಬಾಗಿ ನಡೆವವನೆ ಸಿದ್ಧಾಂತಿ
ಕುಜನರ ಮಾತಿಗೊಳಪಡುವವನೆ ನರಕಿ ೨
ಪಿಡಿದ ವ್ರತನೇಮಗಳ ಬಿಡದವನೆ ಕಡುಗಲಿ
ಜಡದೇಹ್ಯಮೋಹವನು ತೊಡೆದವನೆ ಸತ್ಯ
ಬಡತನಕೆ ಮಿಡುಕದವ ಕಡು ಬಂಟ ಜಗದೊಳಗೆ
ಒಡೆಯ ಶ್ರೀರಾಮನಡಿ ದೃಢಯುತನೆ ಮುಕ್ತ ೩

 

೧೯೫
ಆವರೀತಿಲಿ ಎನ್ನ ಕಾವದೇವರು ನೀನಿ
ನ್ನಾವ ದೈವದ ಬಲವು ನಾನೊಲ್ಲೆ ಸ್ವಾಮಿ ಪ
ಆವರೀತಿಲಿ ಬಿಡದೆ ನೀ ಎನ್ನ ಕಾಯೊ ಭಕ್ತರ
ಜೀವದರಸನೆ ಭಾವಜಪಿತ ನಿನ್ನ ಬಿಟ್ಟ
ನ್ನ್ಯಾವ ದೇವರು ಇಲ್ಲ ಎನಗೆ ಅ.ಪ
ಕುಸುಮಾಕ್ಷ ತವಧ್ಯಾನ ನಿಶಿದಿವದೊಳು ಬಿಡದೆ
ಹಸನಾಗಿ ಭಜಿಪಂಥ ಕುಶಲಮತಿ ನೀಡಿ
ಪುಸಿಯ ಸಂಸಾರದ್ವೆಸನವಳುಕಿಸಿ
ಅಸಮ ಸಂತಸಸುಖವ ಕರುಣಿಸಿ
ಅಸುವುಪೋದರು ಪುಸಿಯನಾಡದ
ಸುಶೀಲ ಮನವಿತ್ತು ಪೋಷಿಸಭವ ೧
ಬಿಡದೆಕಾಡುವ ಎನ್ನ ಕಡು ಜಡಮತಿಯನ್ನು
ಕಡಿದೊಡನೆ ನುಡಿಯಂತೆ ನಡೆಯನೆನ್ನೊಡಲಿಗೆ
ಗಡನೆ ಸ್ಥಿರಮಾಡಿ ಎಡರು ತೊಡರಿನ
ಜಡರಿನೊಳಗಿಂದ ಕಡೆಗೆ ನಿಲ್ಲಿಸಿ
ಒಡೆಯ ನಿನ್ನ ಅಡಿದೃಢವನಿತ್ತು
ಪಿಡಿದು ನೀ ಎನ್ನ ಬಿಡದೆ ಸಲಹೊ ೨
ರತಿಪತಿಪಿತ ನೀನೆ ಗತಿಯೆಂಬ ಸಿದ್ಧಾಂತ
ನುತಿಯ ಮಂತ್ರವನೆನಗೆ ಹಿತದಿಂ ಪಾಲಿಸು
ಸತತ ನಿನ್ನನು ಸ್ತುತಿಪ ಭಕ್ತರ
ಹಿತದ ದರುಶನ ಪ್ರಥಮವಿತ್ತೆನ್ನ
ಗತಿಸದಂಥ ನಿಜಸ್ಥಿತಿಯ ಸಂಪದ
ವಿತ್ತು ರಕ್ಷಿಸೋ ಶ್ರೀರಾಮ ಪ್ರಭುವೆ ೩

 

ಕಳ್ಳನರಿಸಿಯೆಂದೆನಿಸಿದ ಪಾದ
೪೯೦
ಆವಳಿಗೆ ಪೆಣ್ಣೆಂದು ನುಡಿಯುವರೊ ನರರು
ಅವಳೆ ಮುರಿದುತಿನ್ವ ರಕ್ಕಸ್ಯೆಂದೆನ್ನಿರೊ ಪ
ಮುದ್ದು ಮುಖವನೆ ತೋರಿ ಬುದ್ಧಿನಾಶನ ಗೈದು
ಶುದ್ಧಪದ್ಧತಿ ಕೆಡಿಸಿ ಇದ್ದಾಸ್ತಿಯಳಿದು
ಬದ್ಧನೆನಿಸಿ ಮುಂದೆ ಬೇಡಿದ್ದು ಕೊಡದಿರೆ ಬಿಡದೆ
ಒದ್ದು ನೂಕ್ವದರಿಯದೆ ಶುದ್ಧ ಮೂರ್ಖರಾಗಿ೧
ತಂದೆ ತಾಯಿನಗಲಿಸಿ ಬಂಧುಬಳಗ ದೂರೆನಿಸಿ
ಮಂದಿ ಮಕ್ಕಳೊಂದುಗಳಿಗೆ ಹೊಂದಿಇರಗೊಡದೆ
ತಂದದ್ದೆಲ್ಲ ತಿಂದು ನಿಂದೆಯಾಡುತ ಯಮನ
ಬಂಧಕ್ಕಟ್ಟುವುದರಿಯದೆ ಮಂದಮತಿಗಳಾಗಿ ೨
ತನುಮನಧನ ಸೆಳೆದು ಘನತೆನಾಶಿಸಿ ಮುಂದೆ
ಬಿನುಗರಲಿ ಬಿನುಗೆನಿಸಿ ತಿನುವುದೊಂದಿನದಿ
ಮನದರಿತು ನೋಡದಿರು ಘನಮುಕ್ತಿಯನ್ನು ಕೊಡುವ
ವನಜಾಕ್ಷ ಶ್ರೀರಾಮನಂ ಘನನೆಂದರಿಯದಲೆ ೩

 

೪೯೧
ಆವುದು ಖರೆಯೆಲೊ ಜೀವನೆ ಆವುದು ನಿಜವೆಲೊ ಪ
ಆವುದು ಖರೆಯಲೋ ಜೀವ ಜಗದ ಸುಖ
ಮಾಯದೆಲ್ಲನು ಭಾವಿಸಿ ನೋಡೋಅ.ಪ
ಬಡತನ ನಿಜವೇನೋ ನಿನಗೀ ಕಡುಸಿರಿ ಸ್ಥಿರವೇನು
ಮಡದಿ ಮಕ್ಕಳು ನಿನ್ನ ಸಂಗಡ ಕಡೆತನಕಿಹ್ಯರೇನೊ
ಹೆಡತಲೆ ಮೃತ್ಯು ಬಂದು ಪಿಡಿದು ಎಳೆಯುವಾಗ
ಅಡರಿಕೊಂಡು ನಿನ್ನ ಬಿಡಿಸಿಕೊಂಬುರೇನು ೧
ರಾಜ್ಯ ಭಂಡಾರವೆಲ್ಲ ನಿನಗೆ ಸಹಜವಾದದ್ದಲ್ಲ
ಗೋಜುಪ್ರಪಂಚ ನಿಖಿಲವಂ ದಿನಮಾಜಿಹೋಗುವುದೆಲೊ
ಸೋಜಿಗವಾಗಿ ಮಿಂಚು ತೇಜದಡಗುವಂತೆ
ಈ ಜಗ ಸಮಾಜ ನಿಜವಿನಿತಿಲ್ಲೆಲೊ ೨
ಕತ್ತೆಯಂತೆ ಕೂಗಿ ಜನ್ಮವ್ಯರ್ಥ ಕಳೆಯಬೇಡೊ
ಉತ್ತಮರಿಗೆ ಬಾಗಿ ಸತ್ಯಪಥಕೆ ಹೊಂದು ಪಾಡೊ
ನಿತ್ಯ ನಿರ್ಮಲ ಸರ್ವೋತ್ತಮ ಶ್ರೀರಾಮಪಾದ
ಭಕ್ತಿಯಿಂ ಪಾಡಿ ಮುಕ್ತಿಯ ಪಡೆಯೊ ೩

 

೧೯೭
ಆವುದು ಸ್ಥಿರವೆಲೋ ಮನವೆ ಇದು ಮಾಯವು ಕಾಣೆಲೊ ಪ
ಆವದು ಸ್ಥಿರವೆಲೋ ಮಾಯವಿದೆಲ್ಲವು
ಭಾವದಿ ಕುದಿಯುತ ನೋಯುವಿ ಯಾಕೆಲೊ ಅ.ಪ
ಅರ್ಥವೆಂಬುವುದೆಲ್ಲ ವ್ಯರ್ಥವು ಮೃತ್ಯು ತಿಳಿಯೆ ನಿಖಿಲ
ಅರ್ತುವಿಚಾರಿಸು ಸಾರ್ಥಕವಾವುದು
ಮರ್ತುಕೆಡದೆ ಭವನಿರ್ತದಿಂ ಗೆಲೆಯೆಲೊ ೧
ಸತಿಸುತರಿವರೆಲ್ಲ ಹಿತವಿರಲತಿ ಸೇವಿಪರೆಲ್ಲ
ಗತಿಸಲು ಭಾಗ್ಯವು ಹಿತದೋರಿದವರೇ
ಅತಿಜರೆಯುತ ನಿನ್ನ ವ್ಯಥೆಯ ಬಡಿಪರೆಲೊ ೨
ಒಂದಿನ್ಹೋಗ್ವುದಂತು ತಪ್ಪದು ನೋಯುವುದ್ಯಾಕಿಂತು
ಇಂದು ನಾಳೆನ್ನದೆ ತಂದೆ ಶ್ರೀರಾಮನ
ಬಂಧುರಂಘ್ರಿಗಳಿಗ್ಹೊಂದಿ ನೀ ಸುಖಿಯಾಗೊ ೩

 

೧೯೯
ಆಸೆ ತೋರಿಸಿ ಈಶ ನಿರಾಸೆಮಾಳ್ಪರೆ
ಲೇಸೋ ನಿನಗೆ ಶೇಷಶಾಯಿ ಶ್ರೀಶ ಅಭಿಲಾಷಿಗಳಿಗೆ ಪ
ಬಡಜನರ ಪರ್ವತ ಒಡಲ ಆಸೆಯ
ಕೊಡುವೆನೆಂದು ನುಡಿಯಲವರು
ಎಡೆಬಿಡದೆ ಬೇಡಿ ಬೇಡಿ ಕಾಡಿ ಕಾಡಿ
ಕಡೆಗೆ ನೋಯ್ವರು ೧
ಆಡಿದ್ಯಾತಕೊ ವಾಕ್ಯ ಸುಳ್ಳು ಮಾಡಿದ್ಯಾತಕೊ
ಖೋಡಿದೈವಿನಾ ಬೇಡುವಂತೆ ನಿನ್ನ
ಬೇಡಿಕೊಂಬೆ ಗಾಢಮಹಿಮ
ನೋಡದಿರೊಳಿತಿತ್ತಾಡಿದ್ಯಾಕ ೨
ರೂಢಿಗಧಿಕನೆ ದಯವ ಮಾಡು ಎನ್ನೊಳು
ಮೂಢತನದಿ ನಾ ಮಾಡಿದಂಥ
ಕೇಡುಗುಣಗಳೆಣೆಸದೆನ್ನೊ
ಳಾಡಿದ್ವಾಕ್ಯ ನೀಡು ಶ್ರೀರಾಮ ೩

 

ಯತಿಗಳು, ದಾಸರು
೧೬೭
ಆಸೆಗಾರ ನಾನು ದಾಸಯ್ಯ ನಿನ್ನ ಧ್ಯಾ
ನಿಸಿ ಬಂದೆನು ದಾಸಯ್ಯ ಪ
ದೋಷದೂರನೆ ಎನ್ನ ಆಸೆಯ ತೀರಿಸಿ
ಪೋಷಿಸು ಬೇಗನೆ ದಾಸಯ್ಯ ಅ.ಪ
ಬಡತನಗಳು ಎನ್ನ ದಾಸಯ್ಯ ಇನ್ನು
ಕಡೆತನಕಳಿಯಲೋ ದಾಸಯ್ಯ
ಗಡಕಡಿ ಜಡಭವದೆಡರು ತೊಡರುಗಳು
ಕೆಡದಪದವಿ ನೀಡು ದಾಸಯ್ಯ ೧
ನುಡಿಯಂತೆ ನಡೆಕೊಡು ದಾಸಯ್ಯೆನ್ನ
ಒಡಲ ಜಡರುತೊಳಿ ದಾಸಯ್ಯ
ಕಡಿದು ಹಾಕಲು ಎನ್ನ ಪಿಡಿದು ನಿನ್ನಡಿಭಕ್ತಿ
ಬಿಡದ ಮನವು ಕೊಡು ದಾಸಯ್ಯ ೨
ಸುಂದರ ಶ್ರೀರಾಮ ದಾಸಯ್ಯ ಎನ್ನ
ತಂದೆ ತಾಯಿ ನೀನೆ ದಾಸಯ್ಯ
ಕುಂದುವ ಜಗದೊಳು ಬಂಧನಪಡಿಸದೆ
ಕುಂದದ ಸುಖ ನೀಡು ದಾಸಯ್ಯ ೩

 

೧೯೮
ಆಸೆಗೆ ಮೇರೆಯನು ನಿರ್ಮಿಸಿದಿಯಿಲ್ಲವೋ
ಬೇಸರವೆ ಇಲ್ಲಿದಕೆ ಎಷ್ಟಾದರಕಟ ಪ
ಅನ್ನ ಸಿಗದ್ಹೊತ್ತಿನಲಿ ಅನ್ನ ಸಿಕ್ಕರೆ ಸಾಕು
ಅನ್ಯಮೇನೊಲ್ಲೆಂದು ನಿನ್ನ ಕೋರುವುದು
ಅನ್ನ ಚೆನ್ನಾಗಿ ಸಿಗಲು ತಣ್ಣಗಿರದುಂಡುಟ್ಟು
ಹೊನ್ನು ಚಿನ್ನಕೆ ಸೋತು ಬನ್ನಬಡಿವುದಭವ ೧
ಕಡುಕ್ಷೇತ್ರ ಮಾನ್ಯತನಗಡವಿ ತುಂಬಿರ್ದರು
ಮಿಡುಕುವುದು ತಡೆಯದೆ ಎಡಬಲದಲಿರುವ
ಬಡವರಾಸೆಗೆ ಕಂಡು ಪಡೆವ ಲವಲವಿಕೆಯಿಂ
ಬಿಡದೆ ಅವರಿಗೆ ಕೆಡುಕು ಹುಡುಕುವುದು ಹರಿಯೆ ೨
ಪೊಡವಿಯೆಲ್ಲನು ಒಂದೇ ಕೊಡೆಯಿಂದಾಳಲು ಮತ್ತು
ಪಡೆಯಲಿಚ್ಛಿಪುದಿತರ ಪೊಡವಿಪರ ರಾಜ್ಯ
ಸುಡುಗಾಡು ಕಡೆತನಕ ಸುಡುಸುಡೀ ಆಸೆಯನು
ಬಿಡಿಸೆನ್ನ ರಕ್ಷಿಸೈ ಒಡೆಯ ಶ್ರೀರಾಮ ೩

 

೨೦೦
ಆಸೆನೀಗೋ ಹೇಸಿಮನವೆ
ಕೇಶವನಂಘ್ರಿ ದಾಸನಾಗೊ ಪ
ಸಕಲಭೋಗಭಾಗ್ಯ ಬರುವ
ಅಖಿಲ ಸುಖದು:ಖಂಗಳೆಲ್ಲ
ಭಕುತಿದಾರ್ಯಗರ್ಪಿಸಿ ಹರಿ
ಭಕುತಿಯಿಂದಪಮೃತ್ಯು ಗೆಲಿಯೊ ೧
ವಂದನೆ ಸ್ತುತಿ ಮಾನ ಮನ್ನಣೆ
ಬಂದು ಕುಂದು ನಿಂದೆಯೆಲ್ಲ
ಮಂದರಾದ್ರಿಯ ನಿಲಯಗೆಂದಾ
ನಂದದಿಂ ಭವಬಂಧ ಗೆಲಿಯೊ ೨
ಪೊಡವಿಸುಖಕೆ ಮೋಹಿಸದೆ ನೀ
ಕೆಡುವಕಾಯಮೋಹ ತೊಡೆದು
ಒಡೆಯ ಶ್ರೀರಾಮನಂಘ್ರಿ ಕಮಲ
ಧೃಢದಿ ಭಜಿಸಿ ಮುಕ್ತಿ ಪಿಡಿಯೊ ೩

 

೨೦೭
ಇಂದಿಗೆ ಕಡೆಮಾಡು ಎನ್ನ ಮಂದಬುದ್ದಿ
ತಂದೆ ಕೇಳಿ ಮರೆಬಿದ್ದೆ ನಿನ್ನವರ ಸುದ್ದಿ ಪ
ಒಪ್ಪಿಡ್ಯವಲಕ್ಕಿಗೆ ಒಪ್ಪಿ ಘನ ಬಡತನವ
ತಪ್ಪಿಸಷ್ಟೈಶ್ವರ್ಯ ಅಪ್ಪಿಕೊಂಡಿತ್ತೀ
ಕಪ್ಪುಕುಲದವನಿಂಗೆ ತುಪ್ಪ ಸಕ್ಕರೆಯನ್ನು
ಗಪ್ಪತ್ತಿಲುಂಡು ಮುಕ್ತಿ ಸಂಪದ೧
ವಿದುರನರ್ಧಾಂಗಿಯ ಸದಮಲದ ತವಪಾದ
ಸದನಕೈಯಲು ಪದುಮವದನೆ ಮೈ ಮರೆದು
ಕದಳಿಫಲ ಮೇಲ್ಭಾಗ ವದನದಿಕ್ಕಲು ಸವಿದು
ಸದುಯಾಂಬುಧೊಲಿದಸಮಪದವಿ ದಯಮಾಡ್ದಿ೨
ಅಧಮಾಧಮಾಗಿ ದುರ್ಮದದಿಂದ ಮತಿಗೆಟ್ಟು
ಸದಮಲ ಕುಲಪದ್ಧತಿ ವಿಧಿಯನ್ನು ಮರೆತು
ಅಧಮಕುಲಜಳಿಗೊಲಿದು ಮದುವ್ಯಾದ ಅಜಮಿಳಗೆ
ಒದಗಿ ಬಂದಂತ್ಯಕೆ ನಿಜಪದವಿ ಕರುಣಿಸಿದಿ೩
ವರಧರ್ಮ ಹಿತಭಕ್ತ ನರನಿವರ ಲೆಕ್ಕಿಸದೆ
ಕರುಣದ್ವಿದುರನ ಮನೆಗೆ ಭರದಿ ಬಂದಿಳಿದಿ
ಪರಮಪಾವನ ನಿಮ್ಮ ಚರಣಭಕ್ತ್ಯೊಂದೆನಗೆ
ಕರುಣಿಸು ಮತ್ತಾವ ಸಿರಿಯ ನಾನೊಲ್ಲೆ ೪
ನಿನ್ನ ಎಂಜಲು ಉಣಿಸಿ ನಿನ್ನವರೊಳಾಡಿಸಿ
ನಿನ್ನ ಉನ್ನತ ಧ್ಯಾನವನ್ನೆ ದಯಮಾಡಿ
ಮನ್ನಿಸಿ ಸಲಹಯ್ಯ ನಿನ್ನ ದಾಸನೆಂದೆನಿಸಿ
ಎನ್ನಯ್ಯ ಶ್ರೀರಾಮ ನಿನ್ಹ್ನೊರತನ್ಯರಿಯೆ ೫

 

೧೨
ಇಂದಿರೆ ಮನೋಹರ ಭಕ್ತಲಲಾಮ
ಸಿಂಧುಸದನ ತ್ರಿಜಗದೋದ್ದಾಮ ಪ
ಮಂದರಮಂದಿರ ಮೇಘ ಶ್ಯಾಮ
ವಂದಿಪೆ ಸುಂದರಪಾದ ಕುಸುಮ ಅ.ಪ
ನಿಗಮಗೋಚರ ಅಮಿತ ಲೀಲ
ಸಗುಣನಿರ್ಗುಣ ಮಹಿಮಜಾಲ
ರಘುವರ ನಗಧರ ಸುಜನ ಪಾಲ
ಅಘಹರ ಜಗಮೋಹ ಕುಜನ ಕಾಲ ೧
ಪರತರಪಾವನ ಕರುಣಾಂತರಂಗ
ಮುರಹರ ಮಾಧವ ಪರಿಭವ ಭಂಗ
ದುರುಳಗರುವ ಹರಿ ಸಿರಿ ನರಸಿಂಗ
ಮರಣರಹಿತ ಪ್ರಭುವರ ನೀಲಾಂಗ೨
ಗೋಕುಲಪತಿ ಗೋಪಾಲಶೀಲ
ವ್ಯಾಕುಲಪರಿಹರ ವೇಣುಲೋಲ
ಕಾಕುದನುಜ ಸಂಹಾರ ವಿಶಾಲ
ಲೋಕಪಾವನೆ ವರ ದೇವಕಿ ಬಾಲ ೩
ಸನಕ ಸನಂದನ ಯೋಗಿ ವಂದಿತ
ವನಜ ಸಂಭವಾದಿ ಸುರಮುನಿವಿನುತ
ಚಿನುಮಯ ಚಿದ್ರೂಪ ಚಿತ್ಕಳಾಭರಿತ
ಜನಕತನುಜೆಪತಿ ವಿಮಲಚರಿತ ೪
ಗೋಕುಲನಾಯಕ ಶ್ರೀಕೃಷ್ಣನಮೋ
ವೈಕುಂಠನಾಯಕ ಶ್ರೀ ವಿಷ್ಣು ನಮೋ
ಲೋಕನಾಯಕ ಶ್ರೀನಿವಾಸ ನಮೋ
ಭಕುತಿದಾಯಕ ಶ್ರೀರಾಮ ನಮೋ ೫

 

೨೦೮
ಇಂದಿರೇಶನ ಭಜಿಸೋ ಹೇ ಮನಸೆ ನೀ
ಕುಂದುವ ಜಗಮಾಯದಂದಕ್ಕೆ ಮೋಹಿಸದೆ ಪ
ಅರಿವಿನೀಸಮಯವ ಅರಲವ ಕಳೆಯದೆ
ಹರಿಶರಣರವಚನ ಶ್ರವಣ ಮಾಡುತ ನೀ ೧
ಮನುಷ್ಯ ಜನುಮದ ಫಲವ ನೆನೆಸೀನಿಜಜ್ಞಾನದಿ
ವನಜನಾಭನ ಕತೆ ಮನನಮಾಡನುದಿನ ೨
ಹೇಸಿಕೆಸಂಸಾರ ನಾಶನೆಂದರಿದು ನೀ
ಶ್ರೀಶ ಶ್ರೀರಾಮನ ನಿಜಧ್ಯಾಸದಿಟ್ಟೆಡೆಬಿಡದೆ ೩

 

೪೯೨
ಇದಕು ಸಮ್ಮತನಾಗೆಲೋ ನೀ
ನದಕುನು ಸಮ್ಮತನಾಗೆಲೊ ಪ
ಇದು ಅದು ಎಂಬುದರ್ವಿಧವ ತಿಳಿದು ನೀ
ನೆದಕುನು ಸಮ್ಮತನಾಗೆಲೊ ಅ.ಪ
ಕಡುಸಿರಿಯೆಂಬುದು ಮರವೆಕುಣಿ
ಬಡತನವೆಂಬುದು ಅರಿವಿನಮನೆ
ಒಡೆತನವೆಂಬುದು ಪಾಪದ ಗೋಣು
ದುಡಿತವೆಂಬುವುದು ಜ್ಞಾನದ ಖನಿ
ದೃಢದಿಂದರಿದು ಹುಡುಕಾಡಿದರೋ
ಳ್ಹಿಡಕೋ ನಿನಗೆ ಹಿತವಾವುದು ನೋಡಿ೧
ಕೆಟ್ಟ ಸಂಸಾರ ಹೇಯಮೂತ್ರ ಕುಣಿ
ನಿಷ್ಠೆ ಭಕ್ತಿ ಆನಂದಾಮೃತ ಖಣಿ
ದುಷ್ಟಜನರ ಸಂಗ ನರಕಕುಣಿ
ಶಿಷ್ಟ ಸಜ್ಜನಸಂಗ ಮುಕ್ತಿಮನೆ
ನಿಷ್ಠೆಯಿಂದರಿತು ಇಷ್ಟರೊಳಗೆ ನೀ
ಇಷ್ಟಕೆ ಬಂದದ್ದು ಹಿಡಕೋ ನೋಡಿ ೨
ನರರ ಸೇವೆ ಮಹ ದುರಿತಬೇರು
ಶರಣರ ಸೇವೆ ಸ್ಥಿರಸುಖದ ತವರು
ಬರಿದೆ ಕೆಡದೆ ಹರಿಚರಣ ಕೋರು
ಮರುಳು ಗುಣಗಳೆಲ್ಲ ತರಿದು ತೂರು
ಧೀರ ಶ್ರೀರಾಮನ ಚಾರುಚರಣ ಸೇರಿ
ಪರಮಪದವಿಯೊಳು ಲೋಲ್ಯಾಡು ೩

 

೨೦೧
ಇದನೆ ಪಾಲಿಸೆನಗೆ ದೇವ
ಸುದಯದೇನುಕೊಟ್ಟರು ಒಲ್ಲೆ ಪ
ಸದಾ ಎಡೆಬಿಡದೆ ನಿಮ್ಮ
ಸದಮಲ ನಾಮೆನ್ನೊದನಕೆ ಅ.ಪ
ಹಲವು ಚಿಂತನೆಯೊಳಗಿರಲಿ
ನಲಿಯುತಿರಲು ಮಲಗಿರಲಿ
ಚಲಿಸದೆ ತವ ಚೆಲುವಮೂರ್ತೆ
ನ್ನೊಳನೇತ್ರದ್ಹೊಳೆಯುತಿರಲಿ ೧
ಘನತರದ ದುಃಖದೊಳಗೆ
ಅನುಪಮ ಆನಂದದೊಳಗೆ
ಕನಸುಮನಸಿನೊಳಗೆ ನಿಮ್ಮ
ನೆನವು ಕ್ಷಣ ಮರೆಯದಂತೆ ೨
ಕ್ಷೇತ್ರದಿರಲಿ ಯಾತ್ರದಿರಲಿ
ಧಾತ್ರಿ ತಿರುಗುತ್ತಿರಲಿ ಜಗ
ತ್ಸೂತ್ರ ಶ್ರೀರಾಮ ನಿಮ್ಮ ಪಾದ
ಮಾತ್ರೆನ್ನ ಮಂಡೆಮೇಲೆ ಇರಲಿ ೩

 

೨೦೨
ಇದು ಎಂಥ ಸವಿ ಇಹ್ಯದು ಶ್ರೀಹರಿ ನಾಮ
ಮಧುಗಿಂತ ಮಧುವಿಹ್ಯದು ಪ
ಅಧಮ ಮನಸೇ ನೀನು ಸ್ವಾದ ಸವಿದುನೋಡೋ
ಅಧಿಕ ಅಮೃತಕಿಂತ ಮಾಧುರ್ಯ ತುಂಬಿಹ್ಯದು ಅ.ಪ
ಸುಧೆಗಿಂತ ಸುಧೆಯಿಹ್ಯದು ಮೃಷ್ಟಾನ್ನದ
ಮೃದುಗಿಂತ ಮೃದುವಿಹ್ಯದು
ವದನದೊಳಿಟ್ಟರೆ ವಿಧವಿಧದ್ಹಸುತೃಷೆ ಸದೆದು
ಸದಮಲಸುಖ ಒದಗಿಸಿ ಕೊಡುವುದು ೧
ಶುಚಿಗಿಂತ ಶುಚಿಯಿಹ್ಯದು ಹೆಚ್ಚಿಗೆ ಹೆಚ್ಚು
ರುಚಿಗಿಂತ ರುಚಿಯಿದ್ಯದೋ
ಉಚ್ಚಿಷ್ಟರಾಗದೆ ಬಚ್ಚಿಟ್ಟು ಸುರಿವರ್ಗೆ
ನಿಶ್ಚಲಸುಖಪದ ಮೆಚ್ಚಿ ತಾ ಕೊಡುವುದು ೨
ಶಾಶ್ವತಸುಖವೀಯ್ವುದೋ ಭವರೋಗ
ಕೌಷಧ ಮಾಗಿಹ್ಯದೋ
ದಾಸಜನರಿಗನುಮೇಷ ಸವಿಯುದೋರಿ
ಪೋಷಿಸುತಿರುವುದು ಶ್ರೀಶ ಶ್ರೀರಾಮನಾಮ ೩

 

೪೯೩
ಇದುಸ್ನಾನ ಇದುಸ್ನಾನ ಇದುಸ್ನಾನವಯ್ಯ
ಸದಮಲಜ್ಞಾನಿಗಳು ಮನವೊಪ್ಪಿ ಮಾಡ್ವ ಪ
ಇಟ್ಟು ಹಂಗಿಸದ್ದೆ ಸ್ನಾನ ಕೊಟ್ಟು ಕುದಿಯದ್ದೆ ಸ್ನಾನ
ಕೊಟ್ಟದ್ದು ಕೊಡುವುದೇ ಶಿಷ್ಟ ತುಂಗಾಸ್ನಾನ
ನಿಷ್ಠರಾಡದ್ದೆ ಸ್ನಾನ ದುಷ್ಟಸಂಗಳಿವುದೇ ಸ್ನಾನ
ಶಿಷ್ಟಜನಸಂಗವೇ ನಿಜ ಕೃಷ್ಣಾಸ್ನಾನ ೧
ಭೋಗದಾಸ್ಯಳಿವುದೆ ಸ್ನಾನ ನೀಗಲು ಭವ ಅದು ಸ್ನಾನ
ಭಗವದ್ಭಜನೆ ಕ್ಷೀರಸಾಗರ ಸ್ನಾನ
ರಾಗನೀಗ್ವುದೆ ಸ್ನಾನ ಜಾಗರಣ ಸದಾಸ್ನಾನ
ಭಾಗವತರೊಲುಮೆ ನಿಜ ಭಾಗೀರಥೀಸ್ನಾನ ೨
ಮರೆವ ತರಿವುದೆ ಸ್ನಾನ ಅರಿವು ತಿಳಿವುದೆ ಸ್ನಾನ
ಪರಮಜ್ಞಾನ ನಿಜ ಸುರಗಂಗಾಸ್ನಾನ
ಕರುಣ ಪಡೆವುದೆ ಸ್ನಾನ ಮರಣಗೆಲಿವುದೆ ಸ್ನಾನ
ಹರಿದಾಸರೊಡನಾಟ ಸರಸ್ವತೀ ಸ್ನಾನ ೩
ವಾದನೀಗ್ವುದೆ ಸ್ನಾನ ಭೇದ ಅಳಿವುದೆ ಸ್ನಾನ
ಮಾಧವನ ಕಥಾಶ್ರವಣ ಸದಾ ಯಮುನಾ ಸ್ನಾನ
ವೇದವನರಿವುದೆ ಸ್ನಾನ ಬೋಧಪಡೆವುದೆ ಸ್ನಾನ
ಸಾಧುಸಜ್ಜನಸೇವೆ ಗೋದಾವರೀಸ್ನಾನ ೪
ನೇಮನಿತ್ಯವೆ ಸ್ನಾನ ತಾಮಸ್ಹರಣವೆ ಸ್ನಾನ
ಕಾಮತೊಳೆವುದೆ ನಿಜ ಭೀಮಾನದೀಸ್ನಾನ
ಕ್ಷೇಮಸಾಗರ ತ್ರಿಭೂಮಿಯೊಳಧಿಕ ಶ್ರೀ
ರಾಮನಡಿಭಕುತಿಮುಕ್ತಿ ಹೇಮಾನದೀಸ್ನಾನ ೫

 

೪೯೪
ಇದೇ ಹೌದು ಭವತರಿಯುವ ಶಸ್ತ್ರ
ಪದೇ ಪದೇ ಸಿರಿವರನ ಸ್ತೋತ್ರ ಪ
ಅಧಮಮತಿಯ ಬಿಟ್ಟು ಸದಮಲ ಮನದಿಂ
ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ
ದಾನಧರ್ಮಯಜ್ಞ ಇವು ಯಾಕೊ
ಸ್ನಾನ ಮೌನ ಜಪ ಮತ್ತ್ಯಾಕೊ
ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ
ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ
ನಾನಾಪರಿಯಲಿಂದ ದೀನದಯಾಪರ
ಗಾನಲೋಲನ ಭಜನಾನಂದ ಪಡೆವುದೆ೧
ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ
ಸಾಧನಸಿದ್ಧಿಗಳ ಬಲವ್ಯಾಕೋ
ಭೇಧಯೋಗದ ಬಹು ಬೋಧಗಳ್ಯಾತಕೊ
ಓದಿಓದಿ ದಿನಗಳಿಲ್ಯಾಕೊ
ವೇದಗಮ್ಯದಾದಿ ಮೂರುತಿ ಶ್ರೀ
ಪಾದವರಿತು ಆರಾಧಿಸುತಿರುವುದೆ ೨
ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ
ಸಾಸಿರದೈವಕೆ ಬಾಗುವುದ್ಯಾಕೊ
ಮಾಸಪಕ್ಷ ವ್ರತ ನೇಮಗಳ್ಯಾತಕೊ
ಘಾಸಿಯಾಗಿ ದೇಹ ದಂಡಿಸಲ್ಯಾಕೊ
ಶೇಷಶಯನ ನಮ್ಮ ಶ್ರೀಶ ಶ್ರೀರಾಮನ
ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ ೩

 

೪೯೫
ಇನ್ನೆಲ್ಲಿ ಪರಮುಕ್ತಿ ಸಾಧನವು ನಿಮಗೆ
ಭಿನ್ನ ಭೇದವಳಿಯದ ಕುನ್ನಿಮನುಜರಿಗೆ ಪ
ಆಸೆಮೊದಲಳಿದಿಲ್ಲ ಮೋಸಕೃತಿನೀಗಿಲ್ಲ
ಹೇಸಿ ಸಂಸಾರದ ವಾಸನ್ಹಿಂಗಿಲ್ಲ
ದೋಷಕೊಂಡದಿ ನೂಕ್ವ ಕಾಸಿನಾಸ್ಹೋಗಿಲ್ಲ
ದಾಸಜನ ವ್ಯಾಸಂಗ ಕನಸಿನೊಳಗಿಲ್ಲ ೧
ಸತಿಮೋಹ ಕಡಿದಿಲ್ಲ ಸುತರಾಸೆ ಬಿಟ್ಟಿಲ್ಲ
ಅತಿಭ್ರಮೆ ಸುಟ್ಟಿಲ್ಲ ಹಿತಚಿಂತನಿಲ್ಲ
ಸ್ರ‍ಮತಿವಾಕ್ಯ ಅರಿತಿಲ್ಲ ಅತ್ಹಿತಪಥಗೊತ್ತಿಲ್ಲ
ಗತಿಮೋಕ್ಷ ಕೊಡುವಂಥ ಪವಿತ್ರರೊಲಿಮಿಲ್ಲ ೨
ಹಮ್ಮು ದೂರಾಗಿಲ್ಲ ಹೆಮ್ಮೆಯನು ತುಳಿದಿಲ್ಲ
ಬ್ರಹ್ಮತ್ವ ತಿಳಿದಿಲ್ಲ ಚುಮ್ಮನದಳಿಕಿಲ್ಲ
ಕರ್ಮ ತುಸು ತೊಳೆದಿಲ್ಲ ಧರ್ಮಗುಣ ಹೊಳಪಿಲ್ಲ
ನಿರ್ಮಲಾನಂದ ಪದವಿ ಮರ್ಮ ಗುರುತಿಲ್ಲ ೩
ಸತ್ಯಸನ್ಮಾರ್ಗವಿಲ್ಲ ಭೃತ್ಯನಾಗಿ ನಡೆದಿಲ್ಲ
ತತ್ವರ್ಥಮಾಡಿಲ್ಲ ಚಿತ್ತಶುದ್ಧಿಯಿಲ್ಲ
ಉತ್ತಮರೊಳಾಡಿಲ್ಲ ಮತ್ರ್ಯಗುಣ ತೊಡೆದಿಲ್ಲ
ನಿತ್ಯಸುಖ ದೊರೆವಂಥ ಸತ್ಸೇವೆಯಿಲ್ಲ ೪
ಮೂರಾರು ಕೆಡಿಸಿಲ್ಲ ಈರೈದು ತರಿಸಿಲ್ಲ
ಆರೆರಡು ಮುರಿದಿಲ್ಲ ತಾರತಮ್ಯವಿಲ್ಲ
ಸಾರಮೋಕ್ಷದೀಪ ಧೀರ ಶ್ರೀರಾಮನಡಿ ಗಂ
ಭೀರ ದಾಸತ್ವ ಸವಿಸಾರ ಕಂಡಿಲ್ಲ ೫

 

೨೦೪
ಇನ್ನೆಲ್ಲಿತನಕ ಇವಗೆ ದುರ್ಬವಣೆ ಹರಿಯೆ ನಿನ್ನ
ಉನ್ನತವಾದ ಮರೆಬಿದ್ದ ಬಳಿಕ ಪ
ಮಂದಮತಿ ತೊಲಗದು ಕುಂದು ನಿಂದೆ ಅಳಿವಲ್ಲದು
ಮಂದಿಮಕ್ಕಳ ಮೋಹವೊಂದು ಕಡಿವಲ್ಲದು
ಸಿಂಧುಶಯನನೆ ಗೋವಿಂದ ನಿಮ್ಮ ಚರಣ
ವೊಂದೆ ಮನದಲಿ ಭಜಿಸಾನಂದಪಡಿವಲ್ಲದು ೧
ಮೋಸಮರವೆ ಹರಿವಲ್ಲದು ಆಶಪಾಶ ಬಿಡವಲ್ಲದು
ಹೇಸಿ ಸಂಸಾರದ ದುರ್ವಾಸನೆಯು ಹಿಂಗದು
ದೂಷಣೆಗೆ ನೋಯುವುದು ಭೂಷಣೆಗೆ ಹಿಗ್ಗುವುದು
ದೋಷದೂರನೆ ನಿನ್ನ ಧ್ಯಾಸನಿಲ್ಲವಲ್ಲದು ೨
ಕೃಪಣತ್ವ ಮದಮೋಹ ಕಪಟ ಮತ್ಸರಬುದ್ಧಿ
ಚಪಲತನ ಅತಿಕ್ರೋಧ ಕಪಿಮನದ ಚೇಷ್ಟೆ
ಈಪರ್ಯೊಂದೂ ಅಳಿವಲ್ಲದು ಅಪರೋಕ್ಷ ನಿಲ್ಲವಲ್ಲದು
ಅಪ್ಪ ಶ್ರೀರಾಮ ನಿಮ್ಮ ಜಪತಪ ಸಿದ್ಧಿಸವಲ್ಲದು ೩

 

೪೯೬
ಇನ್ನೆಷ್ಟು ಹರಿಮಹಿಮೆ ಬಣ್ಣಿಸ್ಹೇಳಲಿ ನಿನಗೆ
ನಿನ್ನೊಳು ನೀ ತಿಳಿದು ಧನ್ಯಾನಾಗೆಲೊ ಮನಸೆ ಪ
ತನ್ನನ್ನು ಭಜಿಪರ ತನ್ನಂತೆ ನೋಡುವ
ಉನ್ನತ ಕರುಣ್ಯೆಂದು ಚೆನ್ನಾಗಿ ನೆರೆನಂಬಿ ೧
ಮೊರೆಯಿಟ್ಟು ಬೇಡುವ ಚರಣದಾಸರನಗಲಿ
ಅರೆಗಳಿಗೆಯಿರ ಹರಿ ಚರಣಕ್ಕೆ ಮರೆಬೀಳು ೨
ನಂಬಿದ ಭಕುತರ ಚರಣದಾಸರನಗಲಿ
ನಂಬಿ ನೀ ನಗಲದೆ ಗುಂಭದಿಂ ಸ್ಮರಿಸೆಲೊ ೩
ಮಾನವು ಪೋದರೇನು ಹಾನಿಯೊದಗಿದರೇನು
ಪ್ರಾಣಪೋದರು ಹರಿಧ್ಯಾನ ಮರೆಯದಿರು ೪
ನಾಶವಿಲ್ಲದೆ ತನ್ನ ದಾಸರ ಕಾಯ್ವನನು
ಮೇಷ ಶ್ರೀರಾಮಪಾದ ಧ್ಯಾಸದೊಳಿಡು ಗಟ್ಟಿ ೫

 

೨೦೫
ಇನ್ನೇನು ಬಲ್ಲವನು ನಾನಲ್ಲ ಹರಿಯೆ
ನಿನ್ನ ಧ್ಯಾನಧಿಕೆಂಬುದೊಂದೆ ನಾ ಬಲ್ಲೆ ಪ
ನಿನ್ನ ಧ್ಯಾನವೆ ಮರೆವ ತರಿದ್ಹಾಕುವುದೆಂಬೆ
ನಿನ್ನ ಧ್ಯಾನವೆ ಅರಿವ ಸ್ಥಿರ ಮಾಳ್ಪುದೆಂಬೆ
ನಿನ್ನ ಧ್ಯಾನವೆ ಭವದ ಶರಧಿ ಹೀರುವುದೆಂಬೆ
ನಿನ್ನ ಧ್ಯಾನವೆ ಪರಮ ಸಿರಿ ನೀಡ್ವುದೆಂಬೆ ೧
ನಿನ್ನ ಧ್ಯಾನವೆ ದು:ಖದೂರ ಮಾಡುವುದೆಂಬೆ
ನಿನ್ನ ಧ್ಯಾನವೆ ಸುಖದ ವಾರಿಧಿಯೆಂಬೆ
ನಿನ್ನ ಧ್ಯಾನವೆ ಮುಖ್ಯ ಚಾರುವೇದಗಳೆಂಬೆ
ನಿನ್ನ ಧ್ಯಾನವೆ ಜ್ಞಾನಮೂಲಸಾರೆಂಬೆ ೨
ನಿನ್ನ ಧ್ಯಾನವೆ ತತ್ವರೂಪವಾಗಿಹ್ಯದೆಂಬೆ
ನಿನ್ನ ಧ್ಯಾನವೆ ಮುಕ್ತಿಮೂಲಾಧಾರೆಂಬೆ
ನಿನ್ನ ಧ್ಯಾನವೆ ಭಕ್ತ ಜನಪ್ರಾಣಪದಕೆಂಬೆ
ಎನ್ನಯ್ಯ ಶ್ರೀರಾಮ ನಿನ್ನಿಂದೆ ನಾನೆಂಬೆ ೩

 

೨೦೩
ಇನ್ಯಾಕೆ ಭವಬಾಧೆ ಇವಗೆ
ಪನ್ನಂಗಶಯನನಡಿ ಚೆನ್ನಾಗಿ ಭಜಿಪವಗೆ ಪ
ದುರಿತ ದುರ್ಗುಣಗಳನು ತರಿದೊಟ್ಟಿ ನ
ಶ್ವರದ ಸಿರಿಯನಾಪೇಕ್ಷಿಸಿದೆ ನಿರುತ ಮಾನಸದಿ
ಪರಕೆ ಪರತರವೆನಿಪ ಹರಿಯಂಘ್ರಿ ಎಡೆಬಿಡದೆ
ಸ್ಮರಿಸುತ ಮನದೊಳಗೆ ಹರುಷಬರುವವಗೆ ೧
ಹೀನಸಂಸಾರದ ನಾನಾ ಸಂಪದವೆಲ್ಲ
ಶ್ವಾನನ ಕನಸಿನಂತೇನಿಲ್ಲವೆನುತ
ಜ್ಞಾನದೊಳಳವಟ್ಟು ಜಾನಕೀಶನ ಧ್ಯಾನ
ಮಾನಸದಿ ಒಲಿಸಿಕೊಂಡಾನಂದಿಸುವವಗೆ ೨
ಹೇಸಿಯ ಪ್ರಪಂಚದ್ವಾಸನವನಳುಕಿಸಿ
ದಾಸಜನ ಸಂಪದವೆ ಶಾಶ್ವತವೆನುತ
ಶ್ರೀಶ ಶ್ರೀರಾಮನ ಸಾಸರನಾಮಗಳ
ಧ್ಯಾಸದ್ಹೊಗಳುತ ಸಂತೋಷದಿರುವವಗೆ ೩

 

೨೦೬
ಇರಲಯ್ಯಾ ಶ್ರೀಹರಿ
ಇರಲಯ್ಯಾ ದಾಸನ ಮೇಲೆ ದಯೆ ಪ
ಮರಿಯಾದೆ ಹೋಗಲಿ ಮರಿಯಾದೆ ಇರಲಿ
ಧರೆಯಮೇಲೆ ಇವ ಇರುವತನಕ ದಯೆ ೧
ದು:ಖದಿಂದಿರಲಿ ನಾ ಸುಖದಿಂದಿರಲಿ
ನಿಖಿಲರು ಜರಿಯಲಿ ಭಕುತನಮೇಲೆ ದಯೆ ೨
ಬಂದದು ಬರಲಿ ಮಮ ತಂದೆ ಶ್ರೀರಾಮ ನಿಮ್ಮ
ಬಂಧುರಧ್ಯಾನಮಾತ್ರವೊಂದೆನ್ನಗಲದಂತೆ ೩

 

೪೯೭
ಇಲ್ಲೆಂದೆ ಇಲ್ಲೆಂದೆ ಭಕ್ತಜನಕೆ ಭಯ
ಇಲ್ಲೆಂದೆ ಇಲ್ಲೆಂದೆ ಪ
ಪುಲ್ಲನಾಭನ ಪಾದ ಎಲ್ಲ ಸಂಪದವೆಂದು
ಬಲ್ಲಂಥ ಭಕ್ತರಿಗೆಲ್ಲರೀತಿಲಿ ಭಯಅ.ಪ
ವಂದಿಸಿ ನುಡಿದರೆ ಬಂತೇನೆಂದೆ
ನಿಂದಿಸಿ ನುಡಿಯಲು ಕುಂದೇನೆಂದೆ
ಸಿಂಧುಶಯನನ ತಂದು ಮಾನಸವೆಂಬ
ಮಂದಿರದಿಟ್ಟವರಿಗೆಂದೆಂದಿರದು ಭಯ ೧
ಬಡತನ ಬಂದರೆ ಮಿಡುಕೇನೆಂದೆ
ಕಡುಸಿರಿಯಿರ್ದರೆ ನಿಜವೇನೆಂದೆ
ಜಡಭವ ಕನಸೆಂದು ದೃಢವಹಿಸೊಡಲೊಳು
ಮೃಡಸಿಧರನೆ ನಿಮ್ಮ ಆಡುವರಿಗೆ ಭಯ ೨
ಪೊಡವಿಪ ಮೆಚ್ಚಲು ಕೊಡುವುದೇನೆಂದೆ
ಕಡುಕೋಪಗೊಂಡರೆ ಕೆಡುವುದೇನೆಂದೆ
ಪೊಡವೀರೇಳನು ಒಡಲೊಳಗಿಟ್ಟವನಡಿ
ಬಿಡುದಿರುವರಿಗಿಡಿ ಭುವನದ ಭಯ ೩
ಸತಿಸುತರಿದ್ದರೆ ಹಿತವೇನೆಂದೆ
ಸತಿಸುತರಿಲ್ಲದಿರೆ ಅಹಿತವೇನೆಂದೆ
ರತಿಪತಿಪಿತನಡಿ ಸತತದಿ ಗೂಡಿಟ್ಟು
ನುತಿಪ ಭಕ್ತರಿಗೆ ಕ್ಷಿತಿಮೇಲೇತರ ಭಯ ೪
ಭೂಷಣ ಮಾಡಲದೊಂದೇ ಅಂದೆ
ದೂಷಣ ಮಾಡಲದೊಂದೇ ಅಂದೆ
ಶ್ರೀಶ ಶ್ರೀರಾಮನ ಸಾಸಿರ ನಾಮದ
ಧ್ಯಾಸದಿಟ್ಟವರಿಗೇಸು ಕಾಲದಿ ಭಯ ೫

 

೨೦೯
ಈ ನೀಚಮನಸಿಗೆ ಮಾಡಲಿನ್ನೇನು
ಥೂ ನಾಚಿಕಿಲ್ಲದಕೆ ಉಪಾಯವೇನು ಪ
ಹರಿಚರಣ ಸ್ಮರಿಸುವುದು ಹರಿದಾಟ ಮರಿವಲ್ಲದು
ಪಿರಿದುನುಡಿಯಾಡುವುದು ಕಿರಿಗುಣವ ಬಿಡದು
ಪರಲೋಕ ಬಯಸುವುದು ನಿರುತದಿಂ ನಡಿವಲ್ಲದು
ಶರಣರೊಡನೆನದಿಹ್ಯದು ಪರನಿಂದೆ ಬಿಡದು ೧
ಜ್ಞಾನನುಡಿ ಪೇಳುವುದು ನಾನೆಂಬುದಳಿವಲ್ಲದು
ಧ್ಯಾನದೊಳಗಿರುತಿಹ್ಯದು ಶ್ವಾನಕಲ್ಪನ್ಹಿಂಗದು
ದಾನಗುಣ ಬೋಧಿಪುದು ಜೀನತ್ವ ತೊರಿವಲ್ಲದು
ಆನಂದ ಬೇಡುವುದು ಹೀನಭ್ರ್ರಾಂತಿ ಬಿಡದು ೨
ವೇದಸುದ್ದ್ಹೇಳುವುದು ವಾದಬುದ್ಧಿಯ ಬಿಡದು
ಸಾದುಪಥದಾಡುವುದು ಭೇದ ಕಡಿವಲ್ಲದು
ವೇದಾಂತ ಕೇಳುವುದು ಸಾಧನಕೆ ಒಲ್ಲದು
ಪಾದಭಕ್ತಿ ಬೇಡುವುದು ಕ್ರೋಧ ತೊಡಿವಲ್ಲದು ೩
ನಾಮಭಜನೆ ಮಾಡುವುದು ತಾಮಸವ ತುಳಿವಲ್ಲದು
ಸ್ವಾಮಿಯೊಲುಮೆ ಕೋರುವುದು ಪಾರತ್ವ ಬಿಡದು
ಕಾಮಿತೊಲ್ಲೆನೆನ್ನುವುದು ಭಾಮೆ ಭೂಮಿಪ್ರೇಮ ಬಿಡದು
ಕ್ಷೇಮ ಸದಾ ಬೇಡುವುದು ನೇಮನಿತ್ಯ ಒಲ್ಲದು ೪
ಶಾಸನವ ಪೇಳುವುದು ತಾಸು ಸ್ಥಿರ ನಿಲ್ಲದು
ನಾಶಜಗವೆನುತಿಹ್ಯದು ಕಾಸು ಒಲ್ಲೆನ್ನದು
ದೋಷನಾಶನ ಜಗದೀಶ ಶ್ರೀರಾಮನಡಿ
ದಾಸನಾನೆಂಬುವುದು ವಾಸನೆಯ ಬಿಡದು ೫

 

ಹೊಲೆಯರಮನಯಲ್ಲುಂಡನೆ
೧೩
ಈತನೆ ಗತಿಯೆಂದು ನಂಬಿದೆನೆ ನಾ
ನೀತನಂಥ ನಿಷ್ಕರುಣನ ಕಾಣೆ ಪಾತಕಹರ ಅ
ನಾಥರಕ್ಷಕ ಮಹದಾತ ಪರಮಭಕ್ತ
ಪ್ರೀತನೆಂಬುದ ಕೇಳಿ ಪ
ಮರುಳಾಗಿವನ ಬೆನ್ಹತ್ತಿದೆನೆ ಮನೆ
ಮಾರುಗಳೆಲ್ಲವ ತೊರೆದೆನೆ
ಕರುಣವಿಲ್ಲ ತುಸು ಹೊರಳಿ ನೋಡುವಲ್ಲ
ತಿರುತಿರುಗಿ ಮನಕರಗಿ ಸಾಕಾಯಿತು ೧
ಜಾತಿಹೀನನೆಂಬುವೆನೇನೆ ಲೋಕ
ನಾಥನಿಗೆ ಕುಲ ಅದೇನೆ
ಈತನ ಹೊರ್ತು ಮತ್ತಾರಾಸೆನಗಿಲ್ಲ
ನೀತಿಯೆ ಈತಗೆ ಜಾತಿಭೇದವೆಂಬ ೨
ಹೊಲೆಯರ ಮನೆಯಲ್ಲುಂಡನೆ ಇವ
ಗೊಲ್ಲರ ಕುಲದಲ್ಹುಟ್ಟಿದನೆ
ಗೊಲ್ಲರ ನಲ್ಲೆಯರಲ್ಲಿ ಹೋಗಿ ಈತ
ಗುಲ್ಲುಮಾಡಿ ಬೆಣ್ಣೆಗಳ್ಳನೆನಿಸಿಕೊಂಡ ೩
ಪಾತರದವಳಲ್ಲಿಗ್ಹೋದನೆ ತಾ
ನೀತಿವಂತನ ಕಟ್ಟೊಡ್ಹೆಸಿದನೆ
ನೀತಿವಂತರು ಕೇಳಿರೀತನ ರೀತಿಯ
ಯಾತರ ಕರುಣಿ ಇವ ದಾತ ಜಗನ್ನಾಥ ೪
ನಿಲ್ಲದು ಮನ ಘಳಿಗಿವನಲಿ ನಾ
ಸಲ್ಲದ್ಹಾಂಗ್ಹೋದೆ ಮತ್ತೆಲ್ಲ್ಹೋಗಲಿ
ಬಲ್ಲಿದ ಶ್ರೀರಾಮನೆಲ್ಲ್ಹೋದರು ಬಿಡೆ
ಕಲ್ಲೆದೆಯವಗಾಗಿ ಪ್ರಾಣಹೋಗಲಿನ್ನು ೫

 

ಓರ್ವ ಮಾತೆಯುದರದಿ ಜನಿಸಿ
೧೪
ಈತನೆಂಥಮಹಿಮೆ ನೊಡಿರೆ ರಂಗಯ್ಯ ರಂಗ
ಈತನೆಂಥ ಮಹಿಮ ನೋಡಿರೆ ಪ
ಈತನೆಂಥ ಮಹಿಮ ಓರ್ವ ಮಾತೆಯುದರದಿ ಜನಿಸಿ
ಮತ್ತೊಬ್ಬ ಮಾತೆಕೈಯಿಂದ ಬೆಳೆದು ಗೋಕುಲ
ನಾಥ ನವನೀತಚೋರನೆನಿಸಿದ ಅ.ಪ
ಕಾಳಕೂಟ ವಿಷವ ಕುಡಿಸಿದ ಆ ಮಾಯದೈತ್ಯಳ
ಕಾಲನ ಆಲಯಕೆ ಕಳುಹಿದ ಮಡುವನ್ನು ಧುಮುಕಿ
ಕಾಳಿ ಹೆಡೆಮೆಟ್ಟಿ ನಾಟ್ಯವಾಡಿದ ಗೋವುಗಳ ಕಾಯ್ದ
ಬಾಲನೆಂದೆತ್ತೊಯ್ಯಲು ಬಂದ ಖೂಳ ಶಕಟನ ಸೀಳಿ ಒಗೆದು
ಕಾಳಗದಿ ಧೇನುಕನ ತುಳಿದು ಬಾಲಲೀಲೆಯ ತೋರಿ ಮೆರೆದ ೧
ಪರಿಪರಿಯ ಮಾಯದಿಂ ಕಾಡ್ವ ಭೂಭಾರಿಯಾಗಿ
ಧರಣಿಜನರತಿಶಯದಿ ಬಳಲಿಸುವ ಪರಮಕಂಟಕ
ದುರುಳ ಕಂಸನೆಂಬುವನ ಶಿರವ ತರಿದ ಮಾಧವ
ಧರಣಿತಾಪವನ್ನೆ ಕಳೆದು ಸೆರೆಯ ಬಿಡಿಸಿದ ಜನನಿ ಜನಕರ
ಕಿರಿಯ ಬೆರಳಲಿ ಗಿರಿಯಧರಿಸಿ ಪರಮ ಪರತರ
ಮಹಿಮೆ ತೋರ್ದ ೨
ಗೊಲ್ಲ ಬಾಲರ ಸಮೂಹವನು ನೆರೆಸಿ ಮನೆಯಲ್ಲಿ ಯಾರು
ಇಲ್ಲದ ಸಮಯವನೆ ಸಾಧಿಸಿ ಮೆಲ್ಲಮೆಲ್ಲನೆ
ಎಲ್ಲ ಬಾಲರ ಒಳಗೆ ತಾ ಹೊಗಿಸಿ ಪಾಲ್ಮೊಸರು ಸವಿಸಿ
ಕಳ್ಳ ಕೃಷ್ಣೆಮ್ಮ ನಿಲ್ಲಗೊಡನೆಂದು ಗೊಲ್ಲಸ್ತ್ರೀಯರು ಗುಲ್ಲುಮಾಡಲು
ನಿಲ್ಲದೋಡಿ ತಾ ಪುಲ್ಲನಾಭನು ಎಲ್ಲಿ ನೋಡಿದರಲ್ಲೆ ತೋರುವ ೩
ಶಿಶುವು ಈತನೆಂದು ಮುದ್ದಿಸುವಾಗ ಕುಶಲದಿಂದಪ್ಪಿ
ಶಶಿಮುಖಿಯರ ಅಧರ ಸವಿಯುವ ಎಂಥ ಶಿಶುವನೆ
ಹಸುಮಗಾಗೆಳೆದೊಯ್ದು ರಮಿಸುವ ಮಿಸುಗಗೊಡನಿವ
ಮೊಸರು ಮಾರಲು ಕುಶಲದಿಂ ಪೋಪ ಹಸನ್ಮುಖಿಯರ
ಕಸಿದು ಭಾಂಡ
ದೆಸೆದೆಸೆಗೆ ಎಳೆದು ವಸುಧೆಯೊಳು ತನ್ನ
ಅಸಮ ಮಹಿಮೆಯ ಪಸರಿಸಿದ ಹರಿ೪
ಮಣ್ಣು ತಿಂದು ತಾಯ ಬಳಿಗೈದಕಂದ ಏನಿದು
ಮಣ್ಣು ತಿನ್ವರೆ ಉಗುಳೆಂದೆಶೋದೆ ಕಣ್ಣು ತಿರುವಲು
ತನ್ನ ಬಾಯೊಳ್ಬ್ರಹಾಂಡ ತೋರಿದ ಭಿನ್ನವಿಲ್ಲದ
ತನ್ನ ತಾನು ಅರಿಯದೆಶೋದಿನ್ನು ಈರೂಪವಡಗಿಸೆನ್ನಲು
ಸಣ್ಣಮಗುವಾಗಿ ಚಿಣುಫಣುವಿಡಿದುನ್ನ –
ತೋನ್ನತ ಆಟವಾಡಿದ ೫
ಪರಿಪರಿಯಲಿ ಕಾಡ್ವ ಕೃಷ್ಣನ್ನ ವರದೇವಿ ತಡೆಯದೆ
ಸರವೆನಡುವಿಗ್ಹಚ್ಚಿ ತರಳನ್ನ ಸರಸರನೆ ಬಿಗಿದು
ಒರಳಿಗ್ಹಾಕಿ ಕಟ್ಟಿ ಮುರಹರನ ಮರೆಯಾಗಲಾಕ್ಷಣ
ಊರುತಂಬೆಗಾಲು ಊರಬೀದಿಲಿ ಒರಳನೆಳೆಯುತ
ಹೊರಗೆ ಹೋಗಿ ತರಗುಳಿರಕಿಲದೊರಳ ಸೇರಿಸಿ
ಮುರಿದು ಶಾಪದಿಂ ಮುಕ್ತಮಾಡಿದ ೬
ಪುಂಡತನದಿಂ ಸೊಕ್ಕಿಮರೆಯುವ ಆ ರುಗ್ಮನಿಡಿಕೈಯ
ಬಂಡಿಗಾಲಿಗೆ ಕಟ್ಟಿ ಶ್ರೀಧರ ರುಗ್ಮಿಣಿಯನ್ನು
ಕೊಂಡು ಗೋಕುಲ ಸೇರಿ ವೈಭವ ನಡೆಸಿ ಯಾದವ
ರ್ಹಿಂಡಲಿಗೂಡಿಸಿ ಪುಂಡದೇವಿಯುದ್ದಂಡತನದಿ ಕೈ
ಕೊಂಡ ಕಲ್ಯಾಣ ಗಂಡುಗಲಿಗಳ ಗಂಡನೆನಿಸಿದ
ಹಿಂಡುದೇವರ ಸಾರ್ವಭೌಮ ೭
ಚರಣದಾಸರ ಒಡೆಯ ತಾನಾದ ವರ್ಣಿಸಲಳವಲ್ಲ
ಚರಣದಾಸರ ದಾಸನೆನಿಸಿದ ಪುಸಿಯಲ್ಲ ಕೇಳಿರಿ
ನರನ ಕುದುರೆಯ ವಾಘೆಯನು ಪಿಡುದು ರಥವ ನಡೆಸಿದ
ಕರೆಯಲೋಡಿದ ಸರಸಿಯಲ್ಲಿಗೆ ಭರದಿ ಒದಗಿದ
ಕುರುಪಸಭೆಯಲ್ಲಿ ಪರಮ ನಿಗಮಗಳ್ಗಿರುವನಗೋಚರ
ಸ್ಮರಿಸಿದವರಿಗೆ ಭರದಿ ನೆರವಾದ ೮
ತಾಳಿಬಂದ ನಾರಾಯಣಾವತಾರ ಪಾಲಿಸಲು ಜಗವಂ
ಬಾಲಗೋಪಾಲ ಭಕ್ತರಾಧಾರ ಗೊಲ್ಲನೆನಿಸಿ
ಲೀಲೆನಡೆಸಿದ ಶಾಮಸುಂದರ ಭವಜಾಲಪರಿಹರ
ಕಾಳರಕ್ಕಸರೊಳು ಕಾದಿ ನಿರ್ಮೂಲಮಾಡಿ ಜಗಪಾಲಿಸಿದ ತ್ರಿ
ಶೂಲಧರ ಪ್ರಿಯ ನೀಲವರ್ಣ ವನಮಾಲ
ಜಾನಕಿಲೋಲ ಶ್ರೀರಾಮ ೯

 

೧೨೫
ಈಶ ಕೇಶವ ಶ್ರೀಶ ಈಶ ಕೇಶವ
ದೋಷನಾಶ ಜಗದೀಶ ಪೋಷನುತ ಪ
ವಿಮಲ ಸುಚರಿತ ಕಮಲ ಸಂಭವನುತ
ಅಮಿತಮಹಿಮ ಹರಿ ಸುಮಶರ ವರಪಿತ ೧
ದನುಜಕುಲಾಂತಕ ಜನಕಜಾನಾಯಕ
ಮನುಮುನಿಜನರತಿ ಕನಿಕರದಾಯಕ ೨
ಲಕ್ಷ್ಮಿಯರಮಣ ಪಕ್ಷಿಯವಾಹನ
ರಕ್ಷಿಸು ಶ್ರೀರಾಮ ಮೋಕ್ಷಪದವನಿತ್ತು ೩

 

೧೨೬
ಈಶ ಬಾರೋ ಭಯನಾಶ ಬಾರೋ
ದಾಸಜನರ ಪ್ರಾಣೇಶ ಬಾರೋ ಪ
ಉರಗಶಯನ ಬಾರೋ ಗರುಡಗಮನ ಬಾರೋ
ಶರಧಿಸುತೆಯ ಪ್ರಾಣದರಸ ಬಾರೋ ೧
ಕಲುಷಹರಣ ಬಾರೋ ವಿಲಸಿತಮಹಿಮ ಬಾರೋ
ತುಲಸೀಮಾಲನೇ ಸಿರಿಲೋಲ ಬಾರೋ ೨
ತರಳನುದ್ಧರ ಬಾರೋ ಕರಿಯಪಾಲನೆ ಬಾರೋ
ತರುಣಿ ಮಾನವ ಕಾಯ್ದ ಕರುಣಿ ಬಾರೋ ೩
ದೇವರದೇವ ಬಾರೋ ಭಾವಜನಯ್ಯ ಬಾರೋ
ಸೇವಕಜನ ಜೀವದಾಪ್ತ ಬಾರೋ ೪
ಭಕ್ತವತ್ಸಲ ಬಾರೋ ಮುಕ್ತಿದಾಯಕ ಬಾರೋ
ಭಕ್ತಾಂತರಂಗ ಶ್ರೀರಾಮ ಬಾರೋ ೫

 

೧೨೪
ಈಶನೀನೆ ದಯಾಸಿಂಧು
ದಾಸಜನರ ಪ್ರೇಮಬಂಧು ಪ
ಹೇವವಿಲ್ಲದೆ ಕಾಸಾರಕೈದಿ
ಬೋವನಾಗಿ ಬಂಡಿ ಹೊಡಿದಿ
ಕೇವಲ ಮಾನಕಾಯ್ದಿ ಸತಿಯ
ಸೇವಕಜನರ ಬೆಂಬಲನೆ ೧
ನಿನ್ನ ಭಜಿಸಿ ಬೇಡುವವರ
ಭಿನ್ನವಿಲ್ಲದೆ ದಯದಿ ಒದಗಿ
ಸಾವುಹುಟ್ಟು ಬಂಧಗೆಲ್ಲಿಸಿ
ಧನ್ಯರೆನಿಸಿ ಸಲಹುವಿ ೨
ಕಾಮಿತಾರ್ಥಪೂರ್ಣ ಭಕ್ತ
ಕಾಮಧೇನು ಕಲ್ಪತರು
ಸ್ವಾಮಿ ಶ್ರೀರಾಮ ನಿಮ್ಮ ವಿಮಲ
ನಾಮ ಎನ್ನ ಜಿಹ್ವೆಗೆ ನೀಡೊ ೩

 

ಕ್ಷೀರಸಾಗರ ಕನ್ಯವರ
೧೫
ಉದಯ ಕಾಲವಿದು ನಮ್ಮ ಪದುಮನಾಭನ
ಉದಯಕಾಲವಿದು ಪ
ಉದಯಕಾಲವಿದು ಪದುಮನಾಭನ ದಿವ್ಯ
ವಿಧವಿಧ ಸೃಷ್ಟಿಯ ಮುದದಿ ಸಾಗಿಸುವಂಥ ಅ.ಪ
ಪರಮ ಕರುಣಿ ದೇವ ತನ್ನ ಚರಣದಾಸರ ಕಾವ
ಮರವೆ ಮಾಯದೊಳು ಹೊರಳುತ ಒರಲುವ
ನರರಿಗರಿವನಿತ್ತು ವರವ ಪಾಲಿಸುವ ೧
ಅನ್ನ ಆಹಾರವಿತ್ತು ಸೃಷ್ಟಿಯ ಭಿನ್ನವಿಲ್ಲದೆ ಪೊತ್ತು
ಬನ್ನಬಡುತ ಬಲು ಕುನ್ನಿಪ್ರಾಣಿಗಳ್ಗೆ
ಉನ್ನತ ಸುಖವಿತ್ತು ತನ್ನಂತೆ ನೋಡುವ ೨
ಕುಜನರ ಶಿಕ್ಷಿಸುವ ಮಾಧವ ಸುಜನರ ಪಾಲಿಸುವ
ನಿಜಮನದೊಳು ತನ್ನ ಭಜಿಸುವ ಜನರಿಗೆ
ನಿಜಜ್ಞಾನ ಕರುಣಿಸಿ ಸಾಯುಜ್ಯ ನೀಡುವ ೩
ಯೋಗಿ ಜನರ ಪ್ರಿಯ ಕ್ಷೀರಸಾಗರಕನ್ಯೆಯೊಡೆಯ
ಬಾಗಿ ಸದೃಢದಿ ಸುರಾಗದಿ ಪಾಡುವ
ಭಾಗವತರ ನಿಜ ಯೋಗಕ್ಷೇಮ ಕೇಳ್ವ ೪
ಶಾಮಸುಂದರಾಂಗ ಪುಣ್ಯನಾಮ ಕೋಮಲಾಂಗ
ಕಾಮಿತಜನಪೂರ್ಣ ಕಾಮಜನಕ ತ್ರಿ
ಭೂಮಿಗಧಿಕ ಮಮಸ್ವಾಮಿ ಶ್ರೀರಾಮ ೫

 

೨೧೦
ಉದ್ಧರಿಸೆನ್ನಯ್ಯ ಮುದ್ದು ಶ್ರೀಹರಿಯೆ
ಬಿದ್ದು ಬೇಡುವೆ ನಿಮ್ಮ ಪಾದಪದ್ಮದೊಳು ಪ
ಬದ್ಧಗುಣ ಬಚ್ಚಿಟ್ಟು ಶುದ್ಧ ಮನದವನಂತೆ
ಪದ್ಮನಾಭ ವಿಮಲ ಸುದ್ದಿಯು ಜನಕೆ
ಸುದ್ದಿ ಹೇಳುತ ಸತತ ಕದ್ದು ತಿನ್ನುವ ಎನ್ನ
ಬದ್ಧ ಮನಸಿನ ಡೊಂಕ ತಿದ್ದು ಬೇಗದೊಳು ೧
ನಂಬಿಗುಳ್ಳವನಂತೆ ಹೇಳುವ ಪರರ
ಅಂಬುಜಾಕ್ಷಯರೊಲುಮೆ ಹಂಬಲವ ಮನದಿ
ತುಂಬಿಕೊಂಡಿಹ್ಯ ಎನ್ನಡೊಂಕ
ಶಂಭುವಿನುತನೆ ತಿದ್ದಿ ಇಂಬುಗೊಡು ಜವದಿ ೨
ಸಫಲಮಾನಿಸನಂತೆ ಜಪಮಾತುಗಳಾಡಿ
ಕಪಟತ್ವದಿಂದಿತರ ಅಪಹರಿಸುವ
ಕುಪಿತ ಮನಸಿನ ಡೊಂಕ ಅಪರೂಪತಿದ್ದಿ ನುತ
ಸುಫಲದಾಯಕ ಹರಿ ಕೃಪೆಮಾಡು ಜವದಿ ೩
ಹಸುತೃಷಳಿದವನಂತೆ ವಸುಧೆಜನರಿಗೆ ತೋರಿ
ಬಸವಳಿದು ಬಾಯಾರಿ ದೆಸೆಗೆಟ್ಟು ಪರರ
ಅಶನ ಬೇಡುಂಬ ಪುಸಿಯ ಮನಸಿನ ಡೊಂಕ
ಹಸನಾಗಿ ತಿದ್ದಿ ಲಕುಮೀಶ ಒಲಿ ದಯದಿ ೪
ಪಾಮರಮನದ ದುಷ್ಕಾಮಿತಗಳನೆಲ್ಲ
ಕ್ಷೇಮದಿಂ ಕಡೆಹಾಯ್ಸಿ ಸ್ವಾಮಿಯೇ ನಿಮ್ಮ
ನಾಮಧ್ಯಾನದ ನಿತ್ಯನೇಮವನು ಪಾಲಿಸಿ
ಪ್ರೇಮದ್ಹಿಡಿಕರ ಶ್ರೀರಾಮಪ್ರಭುತಂದೆ ೫

 

೨೨೨
ಎಂತು ದೊರೆವುದೋ ಸಂತಸವೆಂತು ದೊರೆವುದೋ
ಕಂತುಪಿತನ ಕರುಣವಿಲ್ಲದೆ ಪ
ರಣಜಯವು ಹಣಪ್ರಾಪ್ತಿ ವನಿತೆಲಾಭವಿನಿತು ಎಲ್ಲ
ವನಜನಾಭನೊಲಿಮೆಯಾಗೋತನಕ ಮಂದಮನುಜನಿಗೆ ೧
ಕ್ಷೋಣಿಗೆಲುವ ತ್ರಾಣ ಬಲವು ಮಾಣದಿಹ್ಯ ನಾನಾ ಸೌಖ್ಯ
ಜಾನಕೀಶ ಮೆಚ್ಚುವನಕ ಹೀನಭಾಗ್ಯ ಮಾನವನಿಗೆ ೨
ಭೂಮಿಜನಕೆ ಬಾಗದಂಥ ಆ ಮಹ ಸುಕ್ಷೇಮ ಲಾಭ
ಸ್ವಾಮಿ ಶ್ರೀರಾಮ ಪ್ರೇಮಸದನ ಪ್ರೇಮದೀಯದೆ ಪಾಮರರಿಗೆ ೩

 

೨೨೩
ಎಂತೊಲಿವನೋ ತನಗಿನ್ನೆಂತೊಲಿವನೋ
ಕಂತುಪಿತ ಶ್ರೀಕಾಂತ ಹರಿ ಪ
ಜಡಮನದ ಜಡರು ತೊಡೆದು
ಪಿಡಿದು ಸತ್ಯ ನುಡಿಯ
ಬಿಡದೆ ಅಡರಿಬರುವ ಎಡರಿಗೆದೆ
ಒಡೆಯದೆ ಧೃಢಬಲಿಸುವನಕ ೧
ದೋಷದೆಳಿಪ ಹೇಸಿ ಭವದ
ವಾಸನಳಿದು ಕ್ಲೇಶನೀಗಿ
ದಾಸಜನರ ವಾಸದಿರ್ದು
ಈಶಭಜನೆ ಬಲಿಸುವನಕ ೨
ಕಾಮಿತಾರ್ಥನೀಗಿ ನಿತ್ಯ
ನೇಮಬಿಡದೆ ತಪವ ಮಾಡಿ
ಸ್ವಾಮಿದಾಸನಾಗಿ ಶ್ರೀ
ರಾಮಮಂತ್ರ ಪಡೆಯುವನಕ ೩

 

ಈಶ್ವರನ ವರದಿಂದ ಭಸ್ಮಾಸುರನು
೧೯
ಎಂಥ ಆಟವಿದು ಕ್ಷಿತಿಜಪತಿದೆಂಥ ಆಟವಿದು ಪ
ಎಂಥ ಆಟ ಶ್ರೀ ಕಂತುಜನಕ ಭ
ಕ್ತಾಂತರಂಗ ಸುರಚಿಂತಾಮಣಿಯೇ ನಿನ್ನದೆಂಥ ಅ.ಪ
ಮಡುವಿನೊಳಡಗಿರುವ ಉರಗನ
ಹೆಡೆಮೆಟ್ಟಿ ನಾಟ್ಯಮಾಡುವ ಸಡಗರದಲಿ ಗೊಲ್ಲ
ರ್ಹುಡುಗರ ಕೂಡಿಸಿ ಒಡನೆ ಬಿಲ್ಲಿನಾಟ ರಚಿಸಿ ಮಧುರಪುರ
ಬಿಡದೆ ಸೇರಿ ಗಡಕಡಿದು ಮಾವನ ಶಿರ
ತಡೆಯದೆಮನಪುರಪಥವ ಪಿಡಿಸಿದ್ದು ೧
ಗೋವಳರೊಡಗೂಡಿ ಗೋವುಗಳ ಕಾಯಲ
ಡವಿಸೇರಿ ಮಾಯವೃಷ್ಟಿ ಅತಿಭರದಿ ಗೈಯಲಾಗ
ಗೋವರ್ಧನ ಗಿರಿಯೆತ್ತೆ ಏಳುದಿನ
ಗೋವುಗಳನು ಮತ್ತು ಗೋವಳರೆಲ್ಲರ
ಜೀವ ಸಮಾನಮಾಡಿ ಪ್ರೇಮದಿ ಸಲಹಿದ್ದು ೨
ಎಷ್ಟು ಕ್ಷೀರ ನೀಡೆ ಜನನಿಗಿನ್ನಿಷ್ಟೆಂದ್ಹಟ ಮಾಡೆ
ಸಿಟ್ಟಿನಿಂದ ತಾಯಿ ಕಟ್ಟಲು ಒರಳಿಗೆ
ಅಟ್ಟಹಾಸದಿ ಡುರುಕಿಟ್ಟು ನಡೆದು ಶಾಪ
ಪಟ್ಟು ಪಟ್ಟಣಮುಂದೆಷ್ಟೋಕಾಲದಿಂದ
ಕಷ್ಟಪಡುವರ ದಯದೃಷ್ಟಿಯಿಂ ಸಲಹಿದ್ದು ೩
ದುರುಳ ಭಸ್ಮನಂದು ಹರನಿಂ ಉರಿಹಸ್ತವನು ಪಡೆದು
ಪರಮಪಾಪಿ ವರ ಕರುಣಿಸಿದವನಿಗೆ
ಗರುವದಿ ಬೆನ್ನಟ್ಟಿರುವ ದುರಾತ್ಮನ
ಮರುಳಮಾಡವನ ಕರವೆ ಅವನ ಮೇ
ಲ್ಹೊರೆಸಿ ಉರುವಿಸಿ ಹರನ ರಕ್ಷಿಸಿದ್ದು ೪
ಬತ್ತಲೆ ಪುರಗಳನ್ನು ಪೊಕ್ಕು ನೀ ಸತಿಯರ
ವ್ರತಗಳನು ಹತಗೈದು ತ್ರಿಪುರದ
ಪಥಪಿಡಿಸೆಮಪುರ ಹಿತದಿಂ ಸುರಗಣಕತಿಸೌಖ್ಯವ
ನಿತ್ತು ಜತನಗೈದಿ ಸಿರಿಪತಿಯ ಶ್ರೀರಾಮನೆ
ಸತತದಿಂಥ ಮಹಪತಿತ ಮಹಿಮದಿಹ ೫

 

೨೦
ಎಂಥಾತ ಎಂಥಾತನೋ ನಮ್ಮಯ ರಂಗ
ಎಂಥಾತ ಎಂಥಾತನೋ ಪ
ಎಂಥಾತ ಎಂಥಾತ ಚಿಂತಾಯಕ ಭಕ್ತ
ರಂತರಾತ್ಮಕ ಲಕ್ಷ್ಮೀಕಾಂತ ತ್ರಿಲೋಕ ಕರ್ತ ಅ.ಪ
ದಿವನಿಶಿಯಾಗಿಹ್ಯನೋ ತಾನೆ ತ್ರಿ
ಭುವನವ ಬೆಳಗುವನೋ
ಸವಿಯದ ಮಹಿಮರಲವಬಿಡದ್ವೇದ ಒಂದೇ
ಸಮನೆ ಪೊಗಳುತಿರೆ ಇವನು ಕಾಣದಲಿಹ್ಯ ೧
ತಿಥಿ ವಾರ ಪಕ್ಷ ತಾನೇ ತಾನೆ ಮಾಸ
ಋತುಕಾಲ ನಿತ್ಯ ತಾನೇ
ಶ್ರುತಿತತಿ ಯತಿಗಳು ಸತತ ಪೊಗಳುತಿರೆ
ಮತಿಗೆ ನಿಲುಕದಂಥ ಅತಿ ಚರಿತ್ರನಿವ ೨
ನಗುವಳುವರಲಿ ಈತನೇ ನಿಂತುಕೊಂಡು
ಸಿಗಿವ ಬಗಿವರಲೀತನೇ
ನಿಗಮಾತೀತನ ಮಹಿಮದ್ಹಗರಣ ತಿಳಿಯದು
ಸುಗುಣ ಸಂತರೊಶ ಜಗದಯ್ಯ ಶ್ರೀರಾಮ ೩

 

೨೧
ಎಂದಿಗೀಪದ ಕರುಣಮಾಡುವೆಯೋ ನಿಮ್ಮ ಧ್ಯಾನಾ
ನಂದ ಅಮೃತಪಾರ ನವಿನುಡಿಯ ಪ
ಎಂದಿಗೀಪದ ಕರುಣಮಾಡಿ
ಕಂದನೆಂದು ಕರವ ಪಿಡಿದು
ಮಂದಮತಿಯ ತರಿದು ಪೊರೆಯುವೆ
ಸಿಂಧುಶಯನ ತಂದೆ ಶ್ರೀಹರಿ ಅ.ಪ
ವಿಷಮಸಂಸಾರ ಮೋಹವನು ಬಿಡಿಸಿ ನಿಮ್ಮ ಭಜನ
ಅಸಮ ಸುಖದೆನ್ನ ಮನವ ನಿಲ್ಲಿಸಿ
ವ್ಯಸನ ಏಳರ ಕಾಟ ತಪ್ಪಿಸಿ ಬಿಡದೆ ಎನ್ನ
ರಸನೆಮೇಲ್ನಿಮ್ಮ ನಾಮ ಸ್ಥಾಪಿಸಿ
ವಸುಧೆ ಜನರ ಸುದ್ದಿ ಮರೆಸಿ
ನಶಿಪ ಲೌಕಿಕದಾಸೆ ಕೆಡಿಸಿ
ಕುಶಲಮತಿಯಿತ್ತು ಪಾಲಿಸುವ ಮಹ
ಅಸಮಶುಭದಿನ ಕುಸುಮನಾಭ ೧
ಹತ್ತು ಇಂದ್ರಿಯ ಮೂರು ಬಾಧೆ ತೊಲಗಿಸಿಬಿಡದೆ ಎನ್ನ
ನೇತ್ರದೊಳು ತವಮೂರ್ತಿ ನಿಲ್ಲಿಸಿ
ಸುತ್ತಿ ಕೊಲುವ ಮಾಯ ಮುಸುಕು ಹಾರಿಸಿ
ನಿತ್ಯದೆನ್ನ ಚಿತ್ತದೊಳು ನಿಜಜ್ಞಾನ ಸ್ಥಿರಪಡಿಸಿ
ಸತ್ಯ ಸನ್ಮಾನ್ಯಕ್ತನೆನಿಸಿ
ನಿತ್ಯ ನಿರ್ಮಲ ನಿಮ್ಮ ಭಕ್ತರ
ಉತ್ತಮ ಸಂದರುಶನವಿತ್ತು ತವ
ಭೃತ್ಯನೆನಿಸೆನ್ನ ಸಲಹುವಂಥ ೨
ಕ್ಲೇಶ ಪಂಚಕದುರುಲು ಪರಿಹರಿಸಿ ಅನುಮೇಷ ನಿಮ್ಮ
ದಾಸಜನರಾವಾಸದೆನ್ನಿರಿಸಿ
ಮೋಸಮರವೆಯ ಜಾಲ ಛೇದಿಸಿ
ನಿಶಿದಿವದಿ ನಿಮ್ಮ ಧ್ಯಾನದೊಳೆನ್ನ ಮನವಐಕ್ಯೆನಿಸಿ
ಮೋಸ ಪಾಶಗಳೆಲ್ಲನಾಶಿಸಿ
ದೋಷರಾಶಿಯಿಂ ಮುಕ್ತನೆನಿಸಿ
ಶ್ರೀಶ ಶ್ರೀರಾಮ ನಿಮ್ಮ ಚರಣ
ದಾಸನೆನಿಸಿ ಪೋಷಿಸುವಂಥ ೩

 

೨೨೪
ಎಂದಿಗೆ ಕಾಂಬುವೆ ಇಂದಿರೇಶನೆ ನಿನ್ನ
ಸುಂದರ ಪಾದ ಕೃಪೆಯ ಪ
ಒಂದರಲವ ನಿಂದು ಒಂದೇ ಮನದಿ ನಿನ್ನ
ಚಂದದಿಂ ಭಜಿಸದ ಮಂದ ಭಾಗ್ಯನು ನಾನು ಅ.ಪ
ಎನ್ನ ಮನಸಿನ ಚೇಷ್ಟೆ ವರ್ಣಿಸಲಳವಲ್ಲ
ಕ್ಷಣಕೊಂದು ಪರಿಯಪ್ಪುದು
ಘನದೃಢ ಹರಿಪಾದ ನೆನೆಯುವುದು ನಿಮಿಷದಿ
ಎಣಿಯಿಲ್ಲದೈಶ್ವರ್ಯವನು ಭೋಗಿಸುವುದು ೧
ಗಳಿಗೆಯೊಳ್ದಶಲಕ್ಷ ಸುಲಭದಿಂ ಗಳಿಸರ್ಥ
ಬಲವಾಗಿ ನಿಲಯದಿಟ್ಟು
ಲಲನೆಯೊಳೊಡಗೂಡಿ ಬಲುಸೌಖ್ಯ ಬಡುಕೊಂಡು
ಗಳಿಗೆಯೊಳ್ ದೇಶಾಂತರಕೆಳಸುವುದಭವ ೨
ಅರಿಗಳಂ ಬಂಧಿಸಿ ಸೆರೆಯೊಳಿಟ್ಟರಲವದಿ
ಶಿರವರಿಪೆನೆನುತಿಹ್ಯದು
ಪರಮ ವೈರಾಗ್ಯದಿಂ ಚರಿಸುವುದರಲವದಿ
ಪರಲೋಕ ಸಾಧನದಿರುತಿಹ್ಯದಕಟ೩
ದೃಢದಿ ನಡೆವುದು ನಿಮಿಷ ಪೊಡವಿಜನಕೆ ಸತ್ಯ
ನುಡಿಯು ಬೋಧಿಸುತಿಹ್ಯದು
ದೃಢತರಬಲದಿ ತಾ ಕಡುಗಲಿಯೆನಿಸೊಂದೇ
ಕೊಡೆಯಿಂದಲಾಳುವುದು ಪೊಡವಿಯಂ ಸಕಲ ೪
ಕಾಮಿಸುತೀಪರಿ ಕಾಮಕೊಳಪಡಿಸೆನ್ನ
ಪಾಮರನೆನಿಸುವುದು
ಸ್ವಾಮಿ ಶ್ರೀರಾಮ ಎನ್ನ ಪಾಮರಮನಸಿನ
ಕಾಮಿತವಳುಕಿಸಿ ಪ್ರೇಮದಿಂ ಸಲಹಯ್ಯ ೫

 

೨೨೫
ಎಂದಿಗ್ಹ್ಯೋದೀತಯ್ಯಾ ಹರಿ ಹರೀ
ಎಂದು ಮುಳುಗೀತಯ್ಯಾ ಪ
ಎಂದಿಗ್ಹೋದೀತು ಸುಖ ಅಂದಗೆಡಿಪ ಮಹ
ಮಂದಮತಿಯು ಎನ್ನಿಂದ ಬಿಟ್ಟು ದೂರ ಅ.ಪ
ಕತ್ತಲ ಕಾಳಿದು ಎನ್ನನು
ಸುತ್ತಿಕೊಂಡು ಸೆಳೆದು
ಸತ್ಯಮರೆಸಿ ಸ್ಥಿರಚಿತ್ತ ಕೆಡಿಸಿ ಪಿಡಿ
ದೆತ್ತಿ ಹಾಕುತಿದೆ ಮತ್ತೆ ಭವಬಂಧದಿ ೧
ಮುಂದರಿಗೊಡದಿದು ನಿರುತದ
ಅಂದವ ತಿಳಿಗೊಡದು
ಬಂಧಿಸಿ ಬಲುಘೋರಾಂಧಕಾರ ಮುಚ್ಚಿ
ಸಂದಿನೊಳ್ನೂಕೆನ್ನ ಕೊಂದು ತಿನ್ನುತಿದೆ ೨
ತೆರೆದು ನೋಡಲೀಯದು ಕಣ್ಣಿಗೆ
ಪರದೆಯ ಹಾಕುವುದು
ನರಹರಿಶರಣರ ಕರುಣಮಂ ತಪ್ಪಿಸಿ
ಪರಮ ಶ್ರೀರಾಮ ನಿಮ್ಮ ಚರಣ ದೂರೆನಿಪುದು ೩

 

೧೬೮
ಎಂದು ಕಾಂಬುವೆ ಮಾಧವತೀರ್ಥರ
ಸುಂದರ ಮಂದಿರ ಪ
ಚಾರುಚಿತ್ರ ಕಲಶಕನ್ನಡಿ
ಆರೊಂದು ನೆಲೆಗೋಪುರವ ಸವಿ
ಸ್ತಾರಮಾಗಿ ತೋರುವ ಮಹಾ
ದ್ವಾರದಮುಂದೆ ಬಿದ್ದು ನಮಿಸಿ ೧
ತೊಲೆತುಂಡು ಕಂಭ ಬೋದುಗೆ
ಶಿಲೆಯಿಂದ ನಿರ್ಮಿತವಾಗಿ
ಹೊಳೆವ ಮಂಟಪ ರಂಗು ಮಧ್ಯ
ದೊಳಗೆಚೆಲುವ ವೃಂದಾವನವ ೨
ಮೂಲ ಪ್ರತಿಮೆ ಸಾಲು ಸಾಲು ವಿ
ಶಾಲ ಜ್ಯೋತಿ ದಿವ್ಯಪ್ರಕಾಶ
ಮೂಲಪೀಠದ ಪವಿತ್ರಶಾಲೆ
ಕಾಲತ್ರಯದಿ ವೇದಘೋಷ ೩
ಧಾತ್ರಿಜನರು ಬಂದು ಕೂಡಿ
ಯಾತ್ರೆಗೈದು ಜನುಮ ನಿತ್ಯ
ಸಾರ್ಥಮಾಡಿಕೊಂಡು ಸತತ
ಅರ್ಥಿಯಿಂದ ಪೋಪ ಸಮಯ ೪
ಧರೆಯೊಳಧಿಕ ಬುದ್ಧಿನ್ನಿಪುರದಿ
ಮೆರೆವ ಶ್ರೀಗುರು ಮಾಧವೇಂದ್ರ
ವರಮಂದಿರದಮಿತ ವೈಭವ
ಕರುಣಿ ಶ್ರೀರಾಮ ನಿಂತು ನಡೆಸುವ ೫

 

೨೨೬
ಎಂದು ಕಾಣಬೇಕೋ ಹೀಂಗಾದ ಮೇ
ಲೆಂದು ಕಾಣಬೇಕೋ ಪ
ಎಂದು ಕಾಣಬೇಕು ಮಂದಮನವೇ ನೀ
ಹೊಂದಿ ಭಜಿಸವಲ್ಲ್ಯಾಮಂದರಧರನಡಿ ಅ.ಪ
ದುರಾಸೆ ತೊರಿವಲ್ಲಿ ನಿನ್ನ ದುರ್ಗುಣ ಬಿಡವಲ್ಲಿ
ಅರಿವು ನಿಲ್ಲಿಸವಲ್ಲಿ ಮರುಳುಗುಣಳಿವಲ್ಲಿ
ನಿರುತ ಭಜಿಸುವಲ್ಲಿ ನರಹರಿ ಚರಣ ೧
ಸಂಶಯ ಬಿಡವಲ್ಲಿ ಮನದ ಹಿಂಸಗುಣಳಿವಲ್ಲಿ
ಧ್ವಂಸ ಮಾಡುವಲ್ಲಿ ಸಂಸಾರದ ಬಲೆ
ಹಿಂಸನೆ ನೆನೆವಲ್ಲಿ ಕಂಸಾರಿಯಪಾದ ೨
ಕ್ಲೇಶ ನೀಗುವಲ್ಲಿ ವಿಷಯದಾಸೆ ತೊರೆಯವಲ್ಲಿ
ವಾಸನಳಿಯುವಲ್ಲಿ ಮೋಸಬಿಡವಲ್ಲಿ
ದಾಸನಾಗವಲ್ಲಿ ಈಶ ಶ್ರೀರಾಮ ಪಾದ ೩

 

ಅಗಸ್ತ್ಯರ ಶಾಪದಿಂದ ಆನೆಯ
೨೨
ಎಂದು ಕಾಣ್ವೆನೊ ಇಂದಿರೇಶನ ದಿವ್ಯಚರಣ
ಎಂದು ಕಾಣ್ವೆನು ಪ
ಎಂದು ಕಂಡಾನಂದಿಸುವೆನು ಮಂದರೋದ್ಧರ
ಸಿಂಧುಶಾಯಿಯ ಸುಂದರ ಪಾದಾರವಿದಂಗಳನು
ನಿಂದು ಮನದಣಿ ನೇತ್ರದಿಂದ ಅ.ಪ
ದನುಜಾರಿಯ ಘನಮಹಿಮೆ ಜನಕಜೆಯ ಪ್ರಾಣಪ್ರಿಯನ
ಮಿನುಗುವ ದಿನಮಣಿಕೋಟಿತೇಜೋಮಯನ
ಘನಕೋಮಲ ನಿಜರೂಪ ಕಣ್ಣಿಲಿಂ ನೋಡ್ಹಿಗ್ಗುವ ದಿನ ೧
ಕರಿಯ ಕಾಯ್ದನ ಕರುಣದಿಂದ ತರುಣಿಗ್ವಂದನ
ಶರಣೆನುತ ಮರೆಬಿದ್ದವಗೆ ಸ್ಥಿರಪಟ್ಟವ ಕರುಣಿಸಿದನ
ಪರಮಪಾವನ ವರ ನೀಲಾಂಗ ನಿರುತ ಕಂಡು
ಹರುಷಿಪ ಕಾಲ ೨
ಪಕ್ಷಿಗಮನನ ಲಕ್ಷ್ಮೀನಾಥ ಸಹಸ್ರಾಕ್ಷಶಯನನ
ಲಕ್ಷವಿಟ್ಟು ಭಕ್ತರನ್ನು ರಕ್ಷಿಸಿ ಭಕ್ತವತ್ಸಲನೆಂಬ
ಅಕ್ಷಯ ಬಿರುದುಳ್ಳ ಶ್ರೀರಾಮನ ಅಕ್ಷಿಯಿಂದ
ನೋಡುವ ಪದವಿ ೩

 

೨೨೭
ಎಂದು ದೂರಮಾಡುವಿ ಎನ್ನ ಬಂಧನವನು
ಸಿಂಧುಶಯನ ತಂದೆ ಈ ಭವದಂದುಗವನು ಸಹಿಸಲಾರೆ ಪ
ಸತಿಪತಿಯ ರತಿಯ ಕಲಹದಿ
ಪತನಾದಿಂದ್ರಿಯಿಂದೆ ನಾನು
ಪೃಥಿವಿಮೇಲೆ ಬಿದ್ದು ಘನ
ವ್ಯಥೆಯಬಡುವ ತಾಪತ್ರಯವ ೧
ಮಂದಭಾಗ್ಯನಾಗಿ ಆಗಿ ನಾನಾ
ಸಂದಿನೊಳಗೆ ಬಂದು ಬಂದು
ಮಂದಿಸೇವೆಗೈದು ನರಕ
ಬಂಧರುರುಳವಂಥ ಕೆಡುಕು ೨
ಆಸೆದೆಳಸಿ ಪರರಾಸ್ತಿ
ಮೋಸತನದಿ ಕದಿಸಿ ಯಮನ
ಪಾಶದೊಳಗೆ ನೂಕುವಂಥ
ಹೇಸಿ ಎನ್ನ ನಾಶಬುದ್ಧಿ ೩
ಅವನಿಯೊಳು ಜನಿಸಿಬಿಟ್ಟ
ಬವಣೆ ನೆನೆಸಿ ನೆನೆಸಿ ಎನಗೆ
ಸವೆಯದಯ್ಯೋ ದು:ಖ ಈ ದು
ರ್ಭವ ಪಾಪ ಸಂಕಟ ೪
ದಾಸಜನರ ಪ್ರಾಣಪ್ರಿಯ
ಶ್ರೀಶ ಶ್ರೀರಾಮ ನಿಮ್ಮ ಚರಣ
ಧ್ಯಾಸ ಮರೆಗೆ ಬಳಲಿಸುವ
ಹೇಸಿಭವದ ವಾಸನವ ೫

 

೨೨೮
ಎಂದು ಪೇಳಯ್ಯ ಕಂದಗೆಂದು ಪೇಳಯ್ಯ ಹರಿ
ಯೆಂದು ಪೇಳಯ್ಯ ಮಂದಮತಿ ನಿವಾರಣೋದಯ ಪ
ಜಡಭವದ ಜಡರು ಕಡಿದು
ದೃಢತರದ ಜ್ಞಾನ ಕೊಡುವ
ಒಡೆಯ ನಿಮ್ಮ ಪುಣ್ಯ ನಾಮ
ಕಡು ಪಾಪಿ ಜಿಹ್ವೆಗುದಯ ೧
ಸೂತ್ರಧಾರ ನಿನ್ನ ಪಾದ
ಖಾತ್ರಿಗೊಳಿಸಿ ನಿಜ ಸುಖದ
ಪಾತ್ರನೆನಿಪ ಸತತ ಎನ್ನ
ನೇತ್ರಕೆ ನಿನ್ನ ದರ್ಶನೋದಯ ೨
ಅಧಮತನ ದೂರಮಾಡಿ
ಸದಮಲ ಮತಿಯಿತ್ತು
ವಿಧ ವಿಧದಿ ಕಾಯ್ವ ಸದಾಯೆನ್ನ
ಹೃದಯದಿ ಶ್ರೀರಾಮೋದಯ ೩

 

೪೯೮
ಎಚ್ಚರಿಕ್ಹೇಳುತಾನೋ ಅಚ್ಯುತ ಅಡಿಗಡಿ
ಗೆಚ್ಚರಿಕ್ಹೇಳುತಾನೋ ಪ
ಮೆಚ್ಚಿ ಬಿಡದೆ ಎನಗೆಚ್ಚರಿಕ್ಹೇಳುತಾನೋ
ಹುಚ್ಚರಾಗಿ ಇಹ್ಯಮೆಚ್ಚಲು ಮುಂದೆಮ
ಕಿಚ್ಚುಕಾಣೆನುತಾನೋಅ.ಪ
ನಿಂದೆ ಬಿಡೆನ್ನುತಾನೋ ಜಗವಿದು
ಕುಂದುವುದೆನುತಾನೋ ನಿನಗಿದು
ಒಂದು ಇಲ್ಲೆನುತಾನೋ ಬಂದದ್ದು ತಿಳೀದಿರೆ
ಮುಂದೆ ನಿನಗೆ ಭವಬಂಧ ಬಿಡದೆನುತಾನೋ ೧
ನಿಶ್ಚಲಾಗೆನ್ನುತಾನೋ ಮನ ಬಹು
ಸ್ವಚ್ಛಮಾಡೆನ್ನುತಾನೋ ತನು
ಮುಚ್ಚಿ ಭಜಿಸೆನ್ನುತಾನೋ ಬಚ್ಚಿಟ್ಟು ಭಜಿಸಲು
ಇಚ್ಛೆಯಂತಿರ್ದು ನಿನ್ನ ಮೆಚ್ಚಿಕೊಂಬೆನ್ನುತಾನೋ ೨
ಮರೆವು ತಾರೆನುತಾನೊ ನಿಚ್ಚವಾ
ದರಿವು ತಿಳಿಯೆನುತಾನೋ
ಅರಿವಿನ ಕುರಹು ಕಾಣೆನುತಾನೋ ಪರಮ ಶ್ರೀರಾಮನ
ಮೆರೆವ ತರಣಿ ಕಂಡು ಹರಷದ್ಹಾಡೆನುತಾನೋ ೩

 

೧೬
ಎನಗಳವೆ ನಿನ್ನ ಮಹಿಮೆಯನು ಪೊಗಳಲು
ಹೀನಮತಿ ನಾ ಪನ್ನಂಗಶಯನ ಪ
ನೀಲಶಾಮನೆ ನಿಮ್ಮ ಲೀಲೆ ಪೊಗಳಲ್ಕೆ ಬ್ರಹ್ಮ
ಸಾಲವು ನಾಲ್ಕುವೇದವೆಂದು
ನಾಲಿಗೆಯೋಳ್ವಾಣಿನಿಟ್ಟಿರುವನಂತೆ ೧
ಸಾಸಿರ ಜಿಹ್ವೆಗಳಿಂದ್ಹೊಗಳಲ್
ಈಶಭಜನೆ ತೀರದೆಂದು
ಶೇಷ ಇನ್ನು ಸಾಸಿರಜಿಹ್ವೆ ಆಶಿಸಿ ಬೇಡುವನಂತೆ೨
ಪ್ರಾರ್ಥಿಸಲು ನಿಮ್ಮ ಚರಿತ ಶಕ್ತಿ ಸಾಲದಂಥವರಿಗೆ
ಭಕ್ತಿಯಿಂ ಪೊಗಳುವೆನಿಷ್ಟೆ
ಮುಕ್ತಿದಾಯಕ ಶ್ರೀರಾಮಯೆನುತ ೩

 

೨೧೩
ಎನ್ನ ಪೂರ್ವದ ಕರ್ಮ ಬೆನ್ನ್ಹತ್ತಿ ಕಾಡಲು
ನೀ ಮಾಡುವುದೇನೊ ರಂಗ ಪ
ಕೊಟ್ಟು ಕುದಿದೆನು ಮನದಿ ಇಟ್ಟ್ಹಂಗಿಸಿದೆ ಜವÀದಿ
ಬಿಟ್ಟುಂಡೆನತಿಥಿಗಳೆಷ್ಟೆಷ್ಟೋ ನಾನು
ಕೆಟ್ಟ ಕೃತ್ಯವ ಮಾಡಿ ಕೊಟ್ಟೆ ಪರರಿಗನಿಷ್ಟ
ನಿಷ್ಠವಂತರ ಕಂಡು ನಿಷ್ಠೂರವಾಡಿದೆ ೧
ಮತಿಭ್ರಷ್ಟನಾಗಿ ಪರಸತಿಯರಿಗೆ ಮನಸೋತೆ
ಇತರ ವನಿತೆಯ ಗರ್ಭ ಪತನಗೈಸಿದೆನೊ
ಕೃತಿಮಥನದಿ ಬಲುಹಿತಬೋಧವನೆ ಬೋಧಿ
ಸುತ ನಾಶಗೈದೆನ್ನಹಿತಕಾಗಿ ಪರರ ೨
ಕೊಡುವರಿಗೆ ಕಿಡಿಯಿಟ್ಟೆ ಬಡವರನು ಬಳಲಿಸಿದೆ
ಒಡನುಡಿದ ಭಾಷೆಯ ನಡೆಸಲಿಲ್ಲೊಂದು
ಒಡಗೂಡಿರ್ದರರೊಳು ಕೆಡಕುಹುಟ್ಟಿಸಿ ನಾನು
ಜಡತನದಿ ದಿನಗಳೆದೆ ಕಡುಭ್ರಷ್ಟನಾಗಿ ೩
ಪರಧನಪಹರಿಸಿದೆ ಪರರ ಗೃಹ ಮುರಿದೆನು
ವರ ಮಾತಾಪಿತರ ಬಲ್ಪರಿಯಿಂ ನೋಯಿಸಿದೆ
ಗುರುಹಿರಿಯರ ಜರೆದೆ ಪರನಿಂದೆಗೆಳಿಸಿದೆ
ಗರುವದಿಂ ಚರಿಸಿದೆ ಶರಣಜನರೊಂದಿಸದೆ ೪
ಕೃಪಣತ್ವ ಕಳಿಲಿಲ್ಲ ಚಪಲ ಚೇಷ್ಟಳಿಲಿಲ್ಲ
ಚಪಲಾಕ್ಷನ ದಿನದಿ ಉಪವಾಸ ಗೈಯಲಿಲ್ಲ
ಸುಪಥದಿ ಮನವಿಟ್ಟು ಶಪಿಸುತಲೆಡೆವಿಡದೆ
ಜಪಿಸಿ ಶ್ರೀರಾಮಪಾದ ಕೃಪೆಯ ಪಡೆದವನಲ್ಲ ೫