Categories
ರಚನೆಗಳು

ರಾಮದಾಸರು

ಹದಿನಾಲ್ಕು ಲೋಕಂಗಳದರ
೧೬೬
ಹನುಮಂತ ನೀನೆಂಥ ಬಲವಂತ
ಘನತರಕೈಲಾಸವನು ಬಾಲದೆತ್ತಿದೆ ಪ
ಹದಿನಾಲ್ಕು ಲೋಕಂಗಳುದರದಿಟ್ಟವನನ್ನು
ಸದಮಲಭಕ್ತಿಯಿಂ ಮುದದ್ಹೊತ್ತು ಹಾರಿದಿ ೧
ಅಪರಿಮಿತ ಭುಜಬಲ ಕಪಿವರರೆಲ್ಲ ಬಿಟ್ಟು
ಕೃಪಾಕರನು ನಿನಗೆ ಗುಪಿತದುಂಗುರವಿತ್ತು ೨
ಸಾಗರ ಹಾರಲು ಆಗದೆ ಸರ್ವರು
ನೀಗದ್ಯೋಚನೆ ಗೈಯೆ ಬೇಗ ಸಾಗರ ಜಿಗಿದಿ ೩
ಲಂಕೆಯೆಲ್ಲವು ಒಂದೇ ಲಂಕಿಣ್ಯೋರ್ವಳು ಒಂದೇ
ಮಂಕುಹೆಣ್ಣೆಂದು ನೀ ಶಂಕೆಯಿಂ ಸದೆದೆಯೊ ೪
ದುರುಳನ ಪುರ ಪೊಕ್ಕು ಸರುವ ಭವನಗಳ
ಪರಿಪರಿ ಶೋಧಿಸಿದಿ ಪರಮಪಾವನೆಯಳ ೫
ಲೋಕಮಾತೆಯನು ಅಶೋಕವನದಿ ಕಂಡು
ಲೋಕವೀರನ ಅಂಗುಲೀಕವನಿತ್ತಯ್ಯ೬
ಕ್ಷಿತಿಜೆ ದರುಶನದಿಂದ ಮತಿವಂತನೆನಿಸಿ ನೀ
ಕೃತಕೃತ್ಯನಾದಯ್ಯಾ ಸತತ ಕ್ಷಿತಿಯ ಮೇಲೆ ೭
ಬಣಗು ರಕ್ಕಸಕುಲ ಕ್ಷಣದಿ ಅಳಿದು ನೀನು
ವನವ ನಾಶಗೈದು ದಿನಮಣಿಯಂತೊಪ್ಪುವಿ೮
ಶೂರ ಅಕ್ಷಯಕುಮಾರಾದಿಗಳ ಮಹ
ಮೇರೆದಪ್ಪಿದಬಲ ಸೂರೆಗೈದಾಕ್ಷಣ೯
ಮಂಕುದಶಕಂಠನ ಬಿಂಕವ ಮುರಿದಿ ಅ
ಸಂಖ್ಯ ವೀರರ ಕೊಂದು ಲಂಕಾದಹನ ಗೈದಿ ೧೦
ಅತಿಭರದಿಂ ಬಂದು ಕ್ಷಿತಿಜಪತಿ ಶ್ರೀರಾಮ
ಗತಿ ಶುಭದ್ವಾಯ ಶ್ರುತಪಡಿಸಿ ಹಿತ ಪಡೆದ್ಯೊ ೧೧

 

೧೧೬
ಹರಿ ಗೋವಿಂದ ಮುಕುಂದ ಮನುವಂದ್ಯ ಮಾಧವ
ಹರ ಅಜನುತ ಪರಮಾನಂದ ಪ
ದೇವ ಗಿರಿಧರ ಸುರನರ ಮುರಹರ ಪರತರ ಶರಧಿಜಾ
ವರ ನರಹರಿ ಕೇಶವ ಸ್ಮರಿಪರ ಸುರತರು
ಪರಮಪ್ರಕಾಶನೆ ಪುರಹರವರಸುಖ ಸುರೇಶ ೧
ಈಶ ಮುನಿಕುಲ ವಸುಕಾಲ ತನುಶೀಲ ವನಮಾಲ
ಜನಕಜೆಪತಿ ಭಕ್ತರಾನಂದ ವನಜಾಕ್ಷ ದಿನಕರ
ಘನಪ್ರಭೆತನುಶೋಭ ವಿನಮಿತ ಸನಕಾದಿಸಾನಂದ ೨
ಜಗದೀಶ ಅಘಪೋಷ ಮೃಗನಾಶ ಲಕುಮೀಶ
ಖಗಗಮನ ದಶಶತನಾಮ ಬಗೆಬಗೆ ಪೊಗಳುವ
ರಘನಾಶ ರಘುವರ ನಿಗಮ ಆಗಮನುತ ಶ್ರೀರಾಮ ೩

 

೪೬೫
ಹರಿ ದಯಮಾಡೊ ಕರುಣದಿ ನೋಡೊ
ತರಳನ್ನ ಮನ್ನಿಸಿ ಅಭಯವ ನೀಡೊ ಪ
ನೆರೆನಂಬಿ ನಿನ್ನ ಮರೆಹೊಕ್ಕೆ ಕರುಣಾ
ಭರಣನೆ ನಿಮ್ಮಯ ತೆರೆ ಕೃಪಾನಯನ೧
ಹೆಜ್ಜೆ ಹೆಜ್ಜೆಗೆ ಘೋರ ಸಜ್ಜಿಲ್ಲ ಸಂಸಾರ
ಸಜ್ಜನಸಂಪದನೆ ನಿರ್ಜರೇಶನೆ ಬಾರೊ೨
ದೇವ ತವಚರಣಸೇವಕನೆನಿಸೆನ್ನ
ಮಾಯಾಮೋಹವ ಬಿಡಿಸಿ ಕಾಯೊ ಶ್ರೀರಾಮ ೩

 

೬೬೧
ಹರಿ ನಿಮ್ಮ ಮಹಿಮೆ ಅರಿಯರಾರಾರು
ನರ ಮನುಜರ ಪಾಡೇ
ಸುರಮುನಿಗಳೆ ನಿನ್ನರಸಿ ಕೊಂಡಾಡಲು
ದೊರೆಯದಿರುವಿ ಘನ ಪರತರಮಹಿಮ ಪ
ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯುತ
ಸೃಷ್ಟಿಗೊಳಿಸುತಿರುವಿ
ಇಷ್ಟಭಕುತರ ಕಷ್ಟ ನಿವಾರಿಸಿ
ಇಷ್ಟಪೂರೈಸುತಿರುವಿ
ನಿಷ್ಠೆಯಿಂದ ಮನಮುಟ್ಟಿಭಜಿಪರನು
ಬಿಟ್ಟಗಲದೆ ದೃಷ್ಟಿಯಿಂ ನೋಡುವಿ ೧
ಬೇಸರವಿಲ್ಲದೆ ದಾಸರ ಮನದಭಿ
ಲಾಷೆಯ ನೀಡುತಲಿ
ಕೇಶವ ಗತಿಯೆನೆ ಘಾಸಿ ಮಾಡದೆ
ದೋಷರಾಶಿಯ ಕಳೆಯುತಲಿ
ಪೋಷಿಸಿ ತ್ರಿಜಗದೀಶನೆ ಈ ಭವ
ಪಾದವ ಖಂಡಿಸಿ ವಾಸುಕಿಶಯನ ೨
ಮನಸಿಜಾರಿಯಂ ಘನಸಂಕಟದಿಂದ
ಕನಿಕರದಿಂ ಕಾಯ್ದಿ
ದನುಜಕುಲವನು ಹಣಿದು ಸುರರಿಗೆ
ಘನಸೌಖ್ಯವನ್ನಿತ್ತಿ
ತನುಮನ ಧನದಿಂ ನೆನೆಯುವ ಭಕುತರ
ನೆನವಿಗೆ ಸಿಲುಕದಿ ಚಿನುಮಯ ರಾಮ ೩

 

೪೭೩
ಹರಿ ಹರಿ ತವಕೃಪೆ ಕರುಣಿಸು ದೀನನೋಳ್
ಚರಣದಾಸನ ಮೊರೆ ಆಲಿಸು ದಯದಿಂದ ಪ
ಸಂಸಾರ ನಿಧಿ ಭಯ ಧ್ವಂಸಗಾರನು ನೀ
ಕಂಸಾರಿ ಭಕುತರ ಹಿಂಸಿಸದೆ ಕಾಯ್ವ ೧
ಆಧಾರ ನೀನೆ ಭವಭಾದೆ ನಿವಾರಕ
ಪಾದದಾಸರ ಅಭಿಮಾನದ ದೇವ ನೀ ೨
ಪಾಮರನಾದೆ ಶ್ರೀರಾಮ ಮರೆದು ನಿನ್ನ
ಪ್ರೇಮದಿಂ ಸಲಹೆನ್ನ ಕ್ಷೇಮವ ಪಾಲಿಸಿ ೩

 

೧೧೭
ಹರಿ ಹರಿ ಹರಿ ಹರಿ ಹರಿ
ಪರಿಹರ ಸಂಸಾರ ಕಿರಿ ಕಿರಿ ಪ
ಸಿರಿಯರಸನ ನಾಮ ಪರಿ ಪರಿ ನಿಜ
ಸ್ಮರಿಪದಾಸರಿಗಾರು ಸರಿ ಸರಿಅ.ಪ
ಹರಿಯೆಂದು ಹೊಗಲು ಉರಿ ಉರಿ
ಪರಮ ಶೀತಲದೆಂದರಿ
ಹರಿ ಹರಿಯೆಂದು ವಿಷವನ್ನು ಸುರಿ ಸುರಿ
ಮರಣವಿಲ್ಲರಿದು ನೀ ಮೆರಿ ಮೆರಿ
ಹರಿಧ್ಯಾನಧಿಕವೆಂದು ಸಾರಿ ಸಾರಿ ನಿತ್ಯ
ಹರಿಸರ್ವೋತ್ತಮನೆಂದು ಬರಿ ಬರಿ ೧
ದುರುಳರ ಉಪಟಳ ತಾಳಿ ತಾಳಿ
ಹರಿಯೆಂದು ಕೂಗಿ ಆಗ ತಿಳಿತಿಳಿ
ಮರುಳರ ಅವಾಚ್ಯ ತುಳಿ ತುಳಿ
ಹರಿಧ್ಯಾನ ಸವಿಸವಿದು ನಲಿನಲಿ
ಹರಿಭಜನಾನಂದ ಕಲಿಕಲಿ ಅದೆ
ಮರಣ ಗೆಲಿಯುವ ನಿಜ ಕೀಲಿ ಕೀಲಿ ೨
ತರಿಯೋ ಮನದ ದುರ್ಭೇದ ಭೇದ
ಹರಿಯೆನೆ ಇಲ್ಲ ಭವ ಬಾಧೆ ಬಾಧೆ
ಹರಿನಾಮಕೀರ್ತನೆ ಸದಾಸದಾ
ಕರತಲಸ್ಥಿರ ಮುಕ್ತಿಪದ ಪದ
ತೆರಿ ತೆರಿ ಮರೆವಿನ ಕದ ಕದ ಅಲ್ಲಿ
ಅರಿತ್ಹಿಡಿ ಶ್ರೀರಾಮ ಪಾದ ಪಾದ ೩

 

೪೬೬
ಹರಿದಾಟ ನಿಲಿಸು ಮನದಘದೂರ ಸುಖಸಾರ
ಎರಗುವೆನು ತವಪದಕೆ ಸ್ಮರಿಸಿ ನಿಮ್ಮುಪಕಾರ ಪ
ಸಂತಸವ ಕೊಡು ಎನ್ನ ಅಂತರಂಗದಿ ನಿಂತು
ಕಂತುಪಿತ ಚಿಂತಿಪರ ಚಿಂತಾಮಣಿ ಪ್ರಭುವೆ ೧
ಅಲ್ಪಮನಸಿನ ಕುಕಲ್ಪನೆಯ ಪರಿಹರಿಸು
ಅಲ್ಪರಿವ ದೀನರಿಗೆ ಕಲ್ಪತರು ನೀನು ೨
ನಾಮಾಡಿದಪರಾಧ ಪ್ರೇಮದಿಂ ಕ್ಷಮಿಸು ಶ್ರೀ
ರಾಮ ಮಮಪ್ರಾಣೇಶ ಪ್ರೇಮಾಬ್ಧಿನಿಲಯ ೩

 

೪೬೭
ಹರಿದಾಸರಿಗೆ ಕಿಂಚಿತ್ತಳಿವಿಲ್ಲ ಮನವೆ
ಹರಿಯನ್ನು ನೆರೆನಂಬು ಸರಿಯಾರು ನಿನಗೆ ಪ
ದುರಿತ ಕೋಟ್ಯಾಚರಿಸಿ ನರಕಿಯಾದಜಮಿಳಗೆ
ಮರಣಕಾಲದಿ ಸಂಸ್ಮರಣ ಮಾತ್ರದಿ
ನರಕದ ಭಯತಪ್ಪಿ ಸ್ಥಿರಮುಕ್ತಿಪದವಾಯ್ತು
ಅರಿದು ನೀ ಗಟ್ಟ್ಯಾಗಿ ಸ್ಮರಿಸು ಮಾಧವನ ೧
ಹರಿಸರ್ವೋತ್ತಮನೆಂಬ ತರಳನಿಗೆ ಹಿರಣ್ಯ
ಹರಿಯೆಲ್ಲಿ ತೋರದಿರೆ ಶಿರಹಾರಿಸಿಕಪೆನೆನಲು
ನರಹರಿಯ ರೂಪದಿಂ ಭರದಿ ಕಂಬದಿ ಬಂದು
ಹಿರಣ್ಯಕನ ಶಿರತರಿದು ಪೊರೆದ ಪ್ರಹ್ಲಾದನ ೨
ಲಲನೆ ದ್ರೌಪದಿ ಲಕ್ಷ್ಮೀನಿಲಯನ ದಯದಿಂದ
ಉಳಿದಳು ಮಾನದಿಂ ಖುಲ್ಲನ ಸಭೆಯಲಿ
ಎಲೆಮರುಳೆ ಅನುದಿನ ಚಲಿಸದೆ ಮನವಂ
ತಿಳಿದು ನೀ ಭಜಿಸೆಲೊ ಸುಲಭ ಶ್ರೀರಾಮ ೩

 

೫೯೬
ಹರಿನಾಮಾಮೃತವನು ಸುರಿದು ಪರಿಪಕ್ವರಾಗಿ
ಜರೆಮರಣೆಂದೆಂಬ ಉರುಲನು ಗೆಲ್ಲಿರೊ ಪ
ತರಳತನದಿ ಸುರಿದು ಪರಮ ಪ್ರಹ್ಲಾದನು
ಪರಮಕಂಟಕ ಗೆಲಿದು ವರಮೋಕ್ಷಕೈದಿದ
ನಿರುತದಿಂ ವಿಭೀಷಣ ಸುರಿದು ಈ ಅಮೃತ
ಸ್ಥಿರಪಟ್ಟವೇರಿದ್ದು ಅರಿವಿಟ್ಟು ನೋಡಿ ೧
ಸುರಿದು ಈ ಅಮೃತ ಕರಿ ತನ್ನ ಭಾವದಿ
ಪರಮಾಪತ್ತು ಗೆಲಿದದ್ದರಿದು ಸ್ರ‍ಮತಿಯಿಂದ
ಸುರಿಯುತೀ ಅಮೃತ ನರನು ಧರೆಯನೆಲ್ಲ ತಿರುಗುತ
ಪರತರಧುರವ ಜೈಸಿದರಿದು ೨
ಸೇವಿಸಿಅಮೃತ ಪಾವನೆನಿಸಿ ಯುವತಿ
ಕೇವಲಮಾನದಿಂ ಬುವಿಯೊಳ್ಬಾಳಿದಳು
ದೇವ ಶ್ರೀರಾಮನ ಪಾವನ ನಾಮಾಮೃತ
ಭಾವದೊಳ್ಸವಿಯುತ ಕೇವಲರೆನಿಸಿರೊ ೩

 

೫೯೭
ಹರಿಪಾದ ಮರೆಹೊಕ್ಕು ಪರಿಭವವ ಗೆಲಿರೋ
ಪರಮ ಪರತರ ಕರುಣಶರಧಿ ಸಿರಿವರಗೆ ಪ
ಕುಲವನು ಗಣಿಸದೆ ಎಳೆಬಾಲನೆಂದಪ್ಪಿ
ಬಲು ಉಗ್ರರೂಪದಿಂ ಬಲವಾಗಿ ಕಾಯ್ದ
ಖಳನನುಜನೆಂಬುದನು ತಿಲಮಾತ್ರ ತಿಳಿಯದೆ
ಒಲಿದು ಸ್ಥಿರಪಟ್ಟವನು ಸುಲಭದಿಂ ಕೊಟ್ಟ ೧
ಬಡವನ್ಹಿಡಿ ಅವಲಕ್ಕಿಗೊಡನೆ ತಾ ಮೆಚ್ಚಿ ಹರಿ
ಬಡತನವ ಕಡೆಮಾಡಿ ಸಡಗರದಿ ಕಾಯ್ದ
ಕಡುಪಾಪಿ ಅಜಮಿಳನು ನುಡಿದ ಒಂದಕ್ಷರಕೆ
ಕಡುಮುಕ್ತಿಸಂಪದ ತಡೆಯದಲೆ ಕೊಟ್ಟ ೨
ದುರುಳನ ಸಭೆಯಲ್ಲಿ ಮೊರೆಯಿಟ್ಟು ಕೂಗಿದ
ತರುಣಿ ದ್ರೌಪದಿಮಾನ ಪೊರೆದಿಂಬುಗೊಟ್ಟ
ಕರುಣಾಳು ಶ್ರೀರಾಮ ಜರಹೇವ ಇಲ್ಲದಲೆ
ಚರಣದಾಸರ ಮನೆಯ ತುರಗ ತಿರುವಿದನು ೩

 

೪೬೮
ಹರಿಪಾದಕಮಲಕ್ಕೆ ಮರೆಹೊಕ್ಕ ಬಳಿಕ
ಮರಮರ ಮರುಗುವ ಪರಿಯು ಇನ್ನ್ಯಾಕೋ ಪ
ಪರಮಪಾವನ ತನ್ನ ಚರಣದಾಸರ ಸ್ಥಿತಿ
ಅರಿಯನೆನೆನ್ನುತ ಸ್ಥಿರವಾಗಿ ನಂಬಿ ಅ.ಪ
ಕಂತುಪಿತನಧ್ಯಾನ ಚಿಂತಾಮಣಿಯೆಂದು
ಚಿಂತಾದೂರನ ನಿಜಸ್ಮರಣೆಯೇ ಪರಷೆಂದು
ಸಂತರೊಡೆಯ ಶ್ರೀಕಾಂತನ ಭಜನೆಯೇ
ಭ್ರಾಂತಿನೀಗಿಸುವಂಥ ಕಲ್ಪತರುವಿದೆಂದು ೧
ಸೃಷ್ಟಿಕರ್ತನ ಕಥನ ಕಷ್ಟನಿವಾರಣ
ಅಷ್ಟಮೂರುತಿ ಕೀರ್ತನಷ್ಟಸಂಪದ ಪೂರ್ಣ
ಎಷ್ಟು ಮಾತ್ರಕೆ ತನ್ನ ಇಷ್ಟ ಭಕ್ತರಿಗಿಹ್ಯ
ಕಷ್ಟ ನಿವಾರಿಸಿದೆ ಬಿಡನೆಂದು ಗಟ್ಟ್ಯಾಗಿ ೨
ಧ್ಯಾನಮೂರುತಿ ಎನ್ನ ಮಾನಾಪಮಾನವು
ನಿನ್ನಗೆ ಕೂಡಿತು ಎನಗಿನ್ನೇನೆಂದು
ಅನ್ಯಾಯವನು ತ್ಯಜಿಸಿ ಧ್ಯಾನವ ಬಲಿಸಿ
ಜಾನಕೀಶನೆ ಭಕ್ತಧೇನು ಶ್ರೀರಾಮೆಂದು ೩

 

೫೯೮
ಹರಿಭಜನವೇ ಬಹುಮಿಗಿಲು ನರನಿಗೆ
ಧರೆಯಸುಖವೆಲ್ಲ ಸುಳ್ಳೊ ಸುಳ್ಳೋ ಪ
ತಂದೆತಾಯಿಗಳು ಮಂದಿ ಮಕ್ಕಳು
ಬಂಧುಬಳಗ ಒಂದು ಸಂಬಂಧವಿಲ್ಲ ೧
ಕೋಟಿಕೊತ್ತಲ ಕೋಟಿಧನಬಲ
ನೀಟಾದ ಮಹಲು ನಿಜವಿಲ್ಲ ಇಲ್ಲ ೨
ರಾಜ್ಯಭಂಡಾರ ಪ್ಯಾಟೆ ತೇಜಿ ಆನೆ ಒಂಟಿ
ರಾಜಿಪುದೆಲ್ಲ ಸುಳ್ಳ ಮುಷ್ಟಿಮುಷ್ಟಿ ೩
ಸೌಂದರ್ಯದ ಸಿರಿ ಅಂದಣ ಭಾರಿ
ನಂದಿಪೋಗುವುದೆಲ್ಲ ಹಾರಿ ಹಾರಿ ೪
ವರದ ಶ್ರೀರಾಮನ ಚರಣಸ್ಮರಣಿಲ್ಲದ
ನರರ ಜನುಮವೆಲ್ಲ ಹಾಳು ಹಾಳು ೫

 

೪೬೯
ಹರಿಯ ದಾಸರ ಪಾದ ಪರಮಭಕ್ತಿಲಿ ಎನ್ನ
ಶಿರದ ಮೇಲ್ಪೊತ್ತು ಬಿಡದಿರುವೆನನವರತ ಪ
ತಾಳಿ ವಿಮಲಭಕ್ತಿ ತಾಳದಂಡಿಗೆ ಸ
ಮ್ಮೇಳದೊಡನೆ ತ್ರಿಕಾಲವು ಬಿಡದೆ
ನೀಲವರ್ಣನ ಭಜನೆ ಮೇಲಾಗಿ ಮಾಡುವ
ರಾಲಯದಿ ನಲಿದಾಲಿಸಾನದಿಂದಪ ೧
ನಿಲಯದಂಗಳದೊಳು ತುಲಸಿವನವ ರಚಿಸ
ಚಲಭಕ್ತಿಯಲಿ ನಿತ್ಯ ಜಲಜನಾಭಂಗೆ
ಮಲತ್ರಯಂಗಳ ನೀಗಿ ಮಲಿನಗುಣವ ಕಳೆದು
ಸಲಿಸಿ ಶ್ರೀಪಾದಮಂ ಒಲಿಸಿ ಸುಖಿಸುತಿರ್ಪ ೨
ತಿಳಕೊಂಡು ಸಂಸಾರ ಕಳವಿನಿಂದುಳಕೊಂಡು
ಹೊಳೆವ ಜ್ಞಾನಜ್ಯೋತಿ ಬೆಳಗಿನೋಳ್ನಲಿಯುತ
ನಿಲಿಸಿ ಹರಿಪಾದದಿ ಚಲಿಸದೆ ಮನ ಹಂ
ಬಲಿಸಿ ತಪವ ಶೇಷಾಚಲಯಾತ್ರೆ ಮಾಳ್ಪಂಥ ೩
ಮರೆವು ಮಾಯವ ನೀಗಿ ಅರಿವಿನಾಲಯದೊಳು
ಸಿರಿಯರರಸನ ನಿಜ ಚರಿತಂಗಳರಸುತ
ಪರಮಸಾಲಿಗ್ರಾಮದ್ವರಮಹಿಮೆಯನರಿತು
ನಿರುತದಿಂ ಪೂಜಿಸಿ ಪರಮಪಾವನರೆನಿಪ ೪
ಕಾಮಿತಂಗಳ ನೀಗಿ ಕೋಮಲ್ರ‍ಹದಯರಾಗಿ
ಪ್ರೇಮಪಿಡಿದು ಸರ್ವಭೂಮಿ ಜೀವಂಗಳೊಳ್
ನೇಮನಿತ್ಯದಿ ನಿಸ್ಸೀಮರಾಗಿ ಸತತ
ಸ್ವಾಮಿ ಶ್ರೀರಾಮನಾಮಾಮೃತ ಸುರಿಯುವ ೫

 

೪೭೦
ಹರಿಯ ನೆನೆವಲ್ಲಿ ಮನವೆ ನೀ ಪ
ಅರಿವು ತಿಳಿವಲ್ಲಿ ಹರಿದುಹೋಗುವ
ದುರುಳ ಸಂಸಾರಕೆ ಮರುಳನಾಗಿ ನೀ
ನರಕಕ್ಹೋಗುವಿಯಲ್ಲೋ ಅ.ಪ
ಖೊಟ್ಟಿಗುಣಳಿವಲ್ಲಿ ಮನಸಿನ
ಭ್ರಷ್ಟತ್ವ ಕಳಿವಲ್ಲಿ
ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ
ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ ೧
ಮರವೆ ಮಾಯವನ್ನು ಮರುಳೆ ನೀ
ತರಿಯವಲ್ಲಿ ಇನ್ನು
ನಿರುತ ಮಾರ್ಗದ ಪರಿ ವಿಚಾರಿಸದೆ
ದುರಿತದೊಳಗೆ ಬಿದ್ದು ಮರುಗುವಿಯಲ್ಲೋ ೨
ಅಸೆ ನೀಗುವಲ್ಲಿ ಸಂಸಾರ
ದ್ವಾಸನೆ ಕಡಿವಲ್ಲಿ
ದಾಸರ ನಡೆನುಡಿ ಸೋಸಿಲಿಂ ತಿಳಿಯದೆ
ನಾಶನಾಗುವಿ ಯಮಪಾಶದೊಳಗೆ ಬಿದ್ದು ೩
ಸತಿಸುತರ ಮಾಯಮೋಹದಿ
ಗತಿಸಿ ಪೋಗ್ವುದು ವಯ
ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ
ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ ೪
ಮಂದಿ ಮಕ್ಕಳ್ಯಾರು ನಿನಗೀ
ಬಂಧು ಬಳಗ ಯಾರು
ಕುಂದುವ ಜಗಮಾಯದಂದ ತಿಳಿದು ಮಮ
ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ ೫

 

ಭಗವಂತನನ್ನು ಕುರಿತಾದ ದರ್ಶನ
೧೮೨
ಹರಿಯಶರಣರಿಗೆ ನಮೋ ನಮೋ
ಗುರುಸೇವೆ ನಿರತರಿಗೆ ನಮೋ ನಮೋ ಪ
ಅರಿವು ನಿಲ್ಲಿಸಿ ಪರಸಾಧನದಿರುತಿಹ್ಯ
ಪರಮಪಾವನರಿಗೆ ನಮೋ ನಮೋ ಅ.ಪ
ತಾಪಸಾರ್ಯರಿಗೆ ನಮೋ ನಮೋ ಮಹ
ಪಾಪ ದೂರರಿಗೆ ನಮೋ ನಮೋ
ಕೋಪಲೋಪರಿಗೆ ನಮೋ ನಮೋ ಇಹ
ವ್ಯಾಪಾರರಿತವರಿಗೆ ನಮೋ ನಮೋ
ತಾಪತ್ರಯವ ನೀಗಿ ಶ್ರೀಪತಿ ಚರಣವ
ಗೌಪ್ಯದಿ ನೆನೆವರ್ಗೆ ನಮೋ ನಮೋ ೧
ವೇದ ಸಂಪನ್ನರಿಗೆ ನಮೋ ನಮೋ ಭವ
ಬಾಧೆ ಗೆಲಿದವರಿಗೆ ನಮೋ ನಮೋ
ಸಾಧನ ಚತುಷ್ಟರಿಗೆ ನಮೋ ನಮೋ ಮಹ
ಸಾಧುಸಂತರಿಗೆ ನಮೋ ನಮೋ
ವಾದಿ ಮೂರ್ಖರೊಳು ವಾದಿಸದಂಥ ಸು
ಬೋಧ ಗುರುವರಗೆ ನಮೋ ನಮೋ ೨
ಭಾಗವತರಿಗೆ ನಮೋ ನಮೋ ಇಹ
ಭೋಗನಿರಾಸ್ಯರಿಗೆ ನಮೋ ನಮೋ
ಯೋಗಸಾಧಕರಿಗೆ ನಮೋ ನಮೋ ಮಹ
ಯೋಗಿ ಮಹಾತ್ಮರಿಗೆ ನಮೋ ನಮೋ
ಆಗಯೀಗೆನ್ನದೆ ಸಾಗರನಿಲಯನನ್ನ
ಬಾಗಿಭಜಿಪರಿಗೆ ನಮೋ ನಮೋ ೩
ಭಕ್ತಜನರಿಗೆ ನಮೋ ನಮೋ ವಿ
ರಕ್ತ ಪುರುಷರಿಗೆ ನಮೋ ನಮೋ
ಸತ್ಯಶೀಲರಿಗೆ ನಮೋ ನಮೋ ತಮ್ಮ
ಗುರ್ತು ಅರ್ತವರಿಗೆ ನಮೋ ನಮೋ
ಭಕ್ತಿಯುಕ್ತಿ ವಹಿಸೆತ್ತಗಲದಂಥ
ಚಿತ್ತಶುದ್ಧರಿಗೆ ನಮೋ ನಮೋ ೪
ನಿತ್ಯ ನಿರ್ಮಲರಿಗೆ ನಮೋ ನಮೋ ಭವ
ಮರ್ತ ನಿರ್ತರಿಗೆ ನಮೋ ನಮೋ ತ
ತ್ವರ್ಥಿಕರಿಗೆ ನಮೋ ನಮೋ ಮಹ
ಮುಕ್ತಿ ಸಾಧ್ಯರಿಗೆ ನಮೋ ನಮೋ
ಮೃತ್ಯುವ ಗೆಲಿದು ಕರ್ತ ಶ್ರೀರಾಮನ
ಅರ್ತವರಿಗೆ ಬಹು ನಮೋ ನಮೋ ೫

 

೪೭೧
ಹರಿಯೆ ನಿಮ್ಮಯ ಚರಣಕಮಲದಿ
ನಿರುತಭಕುತಲಿ ಬೇಡುವೆ ಪ
ಪರಮ ಕರುಣಾಕರನೆ ತರಳಗೀ
ವರವ ಕರುಣಿಸು ಬೇಗನೆ ಅ.ಪ
ಪರರ ಅಂಗನೆಯರನು ನೋಡಲಿಕ್ಕೆ
ನ್ನೆರಡು ಕಣ್ಣು ಕರುಡಾಗಲಿ
ಪರದ್ರವ್ಯ ಮುಟ್ಟಲಿಕ್ಕೆನ್ನ
ಎರಡುಕರ ಮುರಿದ್ಹೋಗಲಿ ೧
ಚಾಡಿಪೇಳುವ ಖೋಡಿ ಜಿವ್ಹೆಯು
ಒಡನೆ ಬಿದ್ದು ಹೋಗಲಿ
ಕೇಡು ಪರರಿಗೆ ಬಗೆವ ಮನ ಎ
ನ್ನೊಡಲೊಳಿಲ್ಲದ್ಹಾಂಗಾಗಲಿ ೨
ಮಂಗಳಾಂಗ ನಿಮ್ಮ ಚರಣ ಕಾಣಲೆನ್ನ
ಕಂಗಳೆರಡು ದೃಷ್ಟಿಬಲಿಸಲಿ
ರಂಗ ಶ್ರೀರಾಮನಂಘ್ರಿಕಮಲದ
ಧ್ಯಾನದಲಿ ಮನ ಒಲಿಯಲಿ ೩

 

೪೭೨
ಹರಿಯೆ ಪೊರೆಯೊ ಪರತರ
ಮರೆಯ ಹೊಕ್ಕೆ ಕರುಣಾಕರ ಶ್ರೀಕರ ಪ
ಸರುವತಾಪದಿಂದ ಗೆಲಿಸಿ
ಸರುವವಿಷಯದಿದ ಉಳಿಸಿ
ಪರಮ ನಿಮ್ಮ ಕರುಣ ಬರೆಸಿ
ಪೊರೆಯೊ ಸತತ ತರಳನೆಂದು ಕರವ ಪಿಡಿದು ೧
ಘೋರ ಭವಕಡಲವ
ಘೋರ ಬಟ್ಟು ಈಸಿಸಭವ
ಸೈರಿಸದೆ ನಿಮ್ಮ ಪಾದವ ಸೇರಿದೆ ಸಲಹು
ಪರಮಕರುಣ ಸಿರಿಯರಮಣ೨
ಮಾಯಮೋಹಗಳ ಬಿಡಿಸಿ
ಕಾಯಕರ್ಮಗಳನು ಕೆಡಿಸಿ
ತೋಯಜಾಕ್ಷೆನ್ನಯ್ಯ ರಾಮ
ಕಾಯೊ ದಯದಿ ಭಕುತಬಂಧು ಕರುಣಾ ಸಿಂಧು ೩

 

೫೯೯
ಹರಿಯೆನ್ನೋ ಹರಿಯೆನ್ನೋ ಹರಿಯೆನ್ನೋ ಖೋಡಿ
ಹರಿಯದಾಸರ ಸಿರಿಸಂಪದ ನೋಡಿ ಪ
ಎರವಿನ ಸಿರಿಗೆ ನೀ ಮರುಳಾದಡಿ
ಹರಿಯೆಂದು ನುಡಿಲಿಕ್ಕೆ ನೀನಗೇನು ಧಾಡಿ
ಧರೆಯೊಳಾರಿಲ್ಲ್ಹರಿದಾಸರ ಜೋಡಿ
ಮರುಳ ಯಮದೂತರಂಜಿ ಹೋಗುವರೋಡಿ ೧
ಭವಚಕ್ರದೊಳುಬಿದ್ದು ಬೆಂಡಾದೆ ಕಾಗಿ
ಅವನಿಸುಖ ನೀನಿನ್ನು ತಿಳಿವಲ್ಲಿ ಗೂಗಿ
ಭವಹರನರ್ಚಿಸಿ ನೋಡೋ ದೃಢಮಾಗಿ
ಭವತಾಪ ನಿನಗೆಂದಿಗಿರದೋ ನಿಜವಾಗಿ ೨
ಮತಿಶೂನ್ಯನಾಗಧೋಗತಿ ಕಾಣಬೇಡೋ
ಮತಿಯಿಂದ ನಿಜಸ್ಥಿತಿ ವಿಚಾರಮಾಡೋ
ಕೃತಕೃತ್ಯರೆನಿಪ ಹರಿದಾಸರೊಳಾಡೋ
ಪತಿತ ಶ್ರೀರಾಮನರಸಿ ಮುಕ್ತಿಯ ಕೂಡೋ ೩

 

೬೬೨
ಹರಿಸರ್ವೋತ್ತಮನೆಂದರಸುವರು ಪ
ಹರಿದಾಸರಿವರು ಧರೆಯೊಳಿವರಿಗೆ
ಸರಿಗಾಣೆ ಕೇಳಮ್ಮ ಜಾಣೆ ಅ.ಪ
ಸಾಧುಸಜ್ಜನರಿಗೆ ಬಾಗುವರು
ವೇದಕೆ ನಮಿಸುವರು
ವಾದವಾಂಛಲ್ಯವ ತೊಡದಿಹ್ಯರು
ಭೇದಿಲ್ಲದಿವರು ೧
ಕಾಮ ಕ್ರೋಧಾದಿಗಳು ಜೈಸಿಹ್ಯರು
ತಾಮಸಬಿಟ್ಟಿಹರು
ಭೂಮಿ ಮೋಹಾದಿಗಳನಳಿದಿಹ್ಯರು
ಸ್ವಾಮಿನ ಭಜಿಸುವರು ೨
ಕ್ಲೇಶಪಂಚಕದಿಂದುಳಿದಿಹ್ಯರು
ಮೋಸಕೆ ಒಳಪಡರು
ಅಶಪಾಶಗಳೆಲ್ಲ ತುಳಿದಿಹ್ಯರು
ವಾಸನೆ ತೊಳೆದಿಹ್ಯರು ೩
ಮೆಚ್ಚದೆ ಸಂಸಾರ ತುಚ್ಛೀಕರಿಸಿಹ್ಯರು
ಎಚ್ಚರಗೊಂಡಿಹ್ಯರು
ಅಚ್ಚುತಾನಂತನೆ ಗತಿಯೆಂಬುವರು
ಬಚ್ಚಿಟ್ಟು ನೆನೆಯುವರು ೪
ಹರಿಯೆ ಪರದೈವವೆಂದರಿತಿಹ್ಯರು
ಹರಿಯ್ಹೊರತಿಲ್ಲೆಂಬುವರು
ಸರುವ ಜಗಭರಿತನೆಂದವರು
ಸಿರಿರಾಮನ್ನ ತಿಳಿದಿಹ್ಯರು ೫

 

೧೧೮
ಹಸ್ತವ ಕರುಣಿಸು ವಿಸ್ತಾರ ಮಹಿಮದ ಪ
ಹಸ್ತವ ಕರುಣಿಸೋ ರಂಗಯ್ಯ ಹಸ್ತ ಕರುಣಿಸೆನ್ನ
ಮಸ್ತಕದ ಮೇಲೆ ಹಸ್ತವ ಕರುಣಿಸೊ ಅ.ಪ
ಸೋಮಕಾಸುರನ ವಧಿಸಿ ವೇದತಂದ
ಹಸ್ತವ ಕರುಣಿಸೋ ರಂಗಯ್ಯ
ತಾಮಸ ದೈತ್ಯನ ಉದರವ ಬಗಿದ
ಹಸ್ತವ ಕರುಣಿಸೊ ರಂಗಯ್ಯ
ಭೂಮಿಭಾರ ಶಿವಧನುವನು ಮುರಿದ
ಹಸ್ತವ ಕರುಣಿಸೊ ೧
ಎಸೆದು ಬಾಣ ವಾಲಿಗಭಯ ಪಾಲಿಸಿದ
ಹಸ್ತವ ಕರುಣಿಸೋ ರಂಗಯ್ಯ
ಅಸಮಮೂರುತಿಗೆ ಒಸೆದು ಉಂಗುರವಿತ್ತ
ಹಸ್ತವ ಕರುಣಿಸೊ
ಅಸುರನಿಗೊಲಿದು ಸ್ಥಿರ ಮುಕುಟವನಿಟ್ಟ
ಹಸ್ತವ ಕರುಣಿಸೋ ರಂಗಯ್ಯ
ವಸುಧೆ ಭಾರಿಳುಹಲು ನಿರುತದಿಂದೆತ್ತಿದ
ಹಸ್ತವ ಕರುಣಿಸೊ ೨
ಸುರಗಣಕಮೃತ ಹರುಷದಿ ನೀಡಿದ
ಹಸ್ತವ ಕರುಣಿಸೋ ರಂಗಯ್ಯ
ಪರಮಗೋವರ್ಧನ ಗಿರಿಯೆನೆತ್ತಿದ
ಹಸ್ತವ ಕರುಣಿಸೊ
ಸಾರಸ ಗಂಧಿಯರುಟ್ಟಿರ್ದ ಸೀರೆಯ ಕದ್ದ
ಹಸ್ತವ ಕರುಣಿಸೋ ರಂಗಯ್ಯ
ಮೆರೆವ ರುಗ್ಮನ ಮಹಗರುವವ ಮುರಿದ
ಹಸ್ತವ ಕರುಣಿಸೊ ೩
ಜನನಿ ಜನಕರ ಸೆರೆಯನು ಬಿಡಿಸಿದ
ಹಸ್ತವ ಕರುಣಿಸೋ ರಂಗಯ್ಯ
ಜನನಿಮುಂದಾಡುತ ಕಡಗೋಲು ಪಿಡಿದ
ಹಸ್ತವ ಕರುಣಿಸೊ
ವರರುಗ್ಮಿಣಿಕೈಯ ಸರಸದಿ ಪಿಡಿದ
ಹಸ್ತವ ಕರುಣಿಸೋ ರಂಗಯ್ಯ
ನರಗೆ ಸಾರಥಿಯಾಗಿ ಕುದುರೆ ತಿರುವಿದ
ಹಸ್ತವ ಕರುಣಿಸೊ ೪
ವಿದುರನ ಮನೆಯಲಿ ಹಾಲೆತ್ತಿ ಕುಡಿದ
ಹಸ್ತವ ಕರುಣಿಸೋ ರಂಗಯ್ಯ
ಸುದತಿಗೆ ಮೆಚ್ಚಿ ಅಕ್ಷಯಾಂಬರವಿತ್ತ
ಹಸ್ತವ ಕರುಣಿಸೊ
ಮುದದಿ ಧ್ರುವಗೆ ಮೆಚ್ಚಿ ಸದಮಲ ಪದವಿತ್ತ
ಹಸ್ತವ ಕರುಣಿಸೋ ರಂಗಯ್ಯ
ಸುದಯದಿಂದ ಅಂಬರೀಷನುದ್ಧರಿಸಿದ
ಹಸ್ತವ ಕರುಣಿಸೊ ೫
ದಿನವಿರೆ ದಿನಮಣಿಯನು ಮಾಯಮಾಡಿದ
ಹಸ್ತವ ಕರುಣಿಸೋ ರಂಗಯ್ಯ
ರಣದಿ ಭಕ್ತರ ಶಿರ ಕನಿಕರದೆತ್ತಿದ
ಹಸ್ತವ ಕರುಣಿಸೊ
ಸೆಣದಾಡಿ ಭಕ್ತನಿಂ ದಣಿದು ಕಟ್ಟಿಸಿಕೊಂಡ
ಹಸ್ತವ ಕರುಣಿಸೋ ರಂಗಯ್ಯ
ಸನಕಾದಿಗಳು ಘನ ಅನಂದದ್ಹೊಗಳಿಸುವ
ಹಸ್ತವ ಕರುಣಿಸೊ ೬
ಫಡ ಫಡ ಎನ್ನುತ ತೊಡೆಯ ಚಪ್ಪರಿಸಿದ
ಹಸ್ತವ ಕರುಣಿಸೋ ರಂಗಯ್ಯ
ಬಿಡದೆ ಸೋಳಸಹಸ್ರ ಮಡದಿಯರ್ಹಿಡಿದ
ಹಸ್ತವ ಕರುಣಿಸೊ
ಅಡಿಯ ದಾಸರ ಪಿಡಿದಪ್ಪಿ ರಕ್ಷಿಸುವ
ಹಸ್ತವ ಕರುಣಿಸೋ ರಂಗಯ್ಯ
ಒಡೆಯ ಶ್ರೀರಾಮ ನಿನ್ನಡಿ ನಂಬಿ ಬೇಡುವೆ
ಹಸ್ತವ ಕರುಣಿಸೊ ೭

 

೬೦೦
ಹಾನಿಯಾದ ಮೇಲೆ ಏನು ಬೆಂಬಲವಾದರಿನ್ನೇನಿನ್ನೇನು
ಮಾನಹೋದ ಮೇಲೆ ದಿನವೆಷ್ಟು ಬಾಳಿದರಿನ್ನೇನಿನ್ನೇನು ಪ
ಆಪತ್ತಿಗಿಲ್ಲದ ಆಪ್ತರೆಷ್ಟಿದ್ದರು ಇನ್ನೇನಿನ್ನೇನು
ತಾ ಪರರಾಳದವಗ್ಹಣವು ಎಷ್ಟಿರ್ದರಿನ್ನೇನಿನ್ನೇನು
ಕೋಪಿಷ್ಠನಾದವ ತಪವೆಷ್ಟು ಗೈಯಲು ಇನ್ನೇನಿನ್ನೇನು
ಪಾಪಕ್ಕಂಜದನೀಗಧಿಕಾರರ್ವಿರಿನ್ನೇನಿನ್ನೇನು ೧
ವನಿತೆಯ ಸೇರದ ಗಂಡ ಮನೆಯೊಳಿರ್ದರಿನ್ನೇನಿನ್ನೇನು
ಒಣಗಲು ಪೈರಿಗೆ ಬಾರದ ಮಳೆ ತಾನಿನ್ನೇನಿನ್ನೇನು
ಬನ್ನಬಡುವರ ಕÀಂಡು ಗಹಗಹಿಸಿ ನಕ್ಕರಿನ್ನೇನಿನ್ನೇನು
ಮನ್ನಣಿಲ್ಲದ ಸಭೆ ಮಾನ್ಯರು ಪೊಕ್ಕರಿನ್ನೇನಿನ್ನೇನು ೨
ಅವಮಾನ ಸಮಯಕ್ಕೆ ಒದಗದ ಗೆಳತನವಿನ್ನೇನಿನ್ನೇನು
ಧವ ಸತ್ತ ಯುವತಿಯ ಕುರುಳು ಮಾರಿದರಿನ್ನೇನಿನ್ನೇನು
ದಯದಾಕ್ಷಿಣ್ಯಲ್ಲದ ಅರಸನಾಳಿಕಿದ್ದರಿನ್ನೇನಿನ್ನೇನು
ದಿವಮಣಿ ತನ್ನಯ ಕಿರಣಂಗಳ್ತೋರದಿರಲಿನ್ನೇನಿನ್ನೇನು ೩
ಬಾಗಿ ನಡೆಯದ ಸತಿ ರೂಪಸ್ಥಳಾದರಿನ್ನೇನಿನ್ನೇನು
ರೋಗ ಕಳೆಯದ ವೈದ್ಯರಾನಂಗರಿದ್ದರಿನ್ನೇನಿನ್ನೇನು
ಆಗಿಬಾರದವರ ಬಾಗಿಲ ಕಾಯ್ದರಿನ್ನೇನಿನ್ನೇನು
ಭೋಗಿವಿಷಕೆ ಗರುಡಮಂತ್ರನುವಾಗಲು ಇನ್ನೇನಿನ್ನೇನು ೪
ಪ್ರೇಮದವರೆ ತನ್ನೊಳ್ ತಾಮಸರಾದಿರಿನ್ನೇನಿನ್ನೇನು
ನೇಮಿಸಿದ್ಯೆಲ್ಲವು ಇದಿರಾಗಿ ಕೂತಮೇಲಿನ್ನೇನಿನ್ನೇನು
ಕಾಮಧೇನುವೆ ಮನದಿ ಕಾಮಿತವೀಯದಿರೆ ಇನ್ನೇನಿನ್ನೇನು
ಸ್ವಾಮಿ ಶ್ರೀರಾಮನ ಪ್ರೇಮ ಪಡೆಯದ ನರ ಇನ್ನೇನಿನ್ನೇನು ೫

 

೬೦೬
ಹಿಂಗವ್ವ ಭವ ಹಿಂಗವ್ವ ಸುಳ್ಳೆ
ಮಂಗ್ಯಳಾಗಿ ತಿರುಗಬೇಡವ್ವ ಪ
ಪಿಂಗಟದಿಂದ ಭವಸಂಕಟದಲಿ ಬಿದ್ದು
ಭಂಗದಿಂ ಕಂಗೆಡಬೇಡವ್ವ ಅ.ಪ
ಮುಂಗಿಯ ಮನೆಯೊಳು ನಿಂತೆವ್ವ ತಂಗಿ
ಹ್ಯಾಂಗಿದ್ದದರಂತರಿಯವ್ವ
ಕಂಗಳಿನಿಕ್ಕಿ ಮಹ ಮಂಗಳಾತ್ಮನ ಕಂಡು
ಪಿಂಗದ ಸವಿಸುಖ ಸುರಿಯವ್ವ ೧
ಹಾಳು ಜಗದ ಗಾಳಿ ಬೇಡವ್ವ ನಿಜ
ಬಾಳುವ ಮಾರ್ಗವ ತಿಳಿಯವ್ವ
ನೀಲ ಶ್ಯಾಮನ ಧ್ಯಾನ ತಾಳಿಯ ಕಟ್ಟಿಕೊಂಡು
ಕಾಲನ ದಾಳಿಯ ಗೆಲಿಯವ್ವ ೨
ಮೈಲಿ ಮುಟ್ಟು ಚಟ್ಟಳಿಯವ್ವ ನೀ
ಮೇಲುಮಂಟಪ ಹತ್ತಿ ನೋಡವ್ವ
ಬೈಲಿಗೆ ಬೈಲು ನಿರ್ಬೈಲು ಶ್ರೀರಾಮನ
ಲೀಲೆಯೊಳಗೆ ನಿಂತು ನಲಿಯವ್ವ ೩

 

೪೮೨
ಹಿಂದಿಲ್ಲ ಸ್ವಾಮಿ ಮುಂದಿಲ್ಲ
ತಂದೆ ನೀನಲ್ಲದೆ ಕಾಯುವರೆನಗಾರು ಪ
ಚರಣದಾಸರಿಗೆ ಆವರಿಸಿದ ಸಂಕಟ
ಪರಿಹರಿಸಿ ಕಾಯಲು ಹರಿಯೆ ನೀನಲ್ಲದೆ ೧
ಭಕ್ತವತ್ಸಲ ನೀನು ಮುಕ್ತಿ ದಾಯಕನಯ್ಯ
ಭಕ್ತರ ವಿಪತ್ತು ಕಳೆಯುವರಾರು ನಿನ್ನ್ಹೊರತು ೨
ಶ್ರೀಶ ಶ್ರೀರಾಮ ಜಗದೀಶ ಈ ದಾಸನ
ಆಸೆಯ ಪೂರೈಸಿ ಪೋಷಿಸು ಬೇಗನೆ ೩

 

೧೨೧
ಹಿಂದೆ ನಿನ್ನಯ ದಾಸರನು ಕಂಡು
ಪೊರೆದ್ಯಾಕೋ ಸೀತಾನಾಥ
ತಂದೆ ಮಂದರಧರ ಎನ್ನೊಳ್ದಯ
ಮಾಡಲೊಲ್ಲ್ಯಾಕೋ ಸೀತಾನಾಥ ಪ
ಕರಿರಾಜ ನಿಮ್ಮಯ ಚರಣ ಸರೋಜಕ್ಕೆ ಸೀತಾನಾಥ
ಹರಿ ಬರೆದೋಲೆ ನಿನ್ನನು ಕರೆಕಳುಹಿದನೇನೊ ಸೀತಾನಾಥ
ತರುಣಿ ದ್ರೌಪದಿ ತನ್ನ ಅವಮಾನಕಾಲಕ್ಕೆ ಸೀತಾನಾಥ
ಸಿರಿವರ ನಿನ್ನ್ವೊಯ್ಕುಂಠಕೆ ತಾರು ಕೊಟ್ಟಿರ್ದಳೇ ಸೀತಾನಾಥ ೧
ನಂಬಿದ ಪ್ರಹ್ಲಾದ ಪಿತಕೇಳ್ವ ಸಮಯಕ್ಕೆ ಸೀತಾನಾಥ ನಿನ್ನ
ಕಂಬದಿ ಬಾರೆಂದಂಬುಧಿಗೆ ಬಂದ್ಹೇಳ್ದನೇ ಸೀತಾನಾಥ
ಡೊಂಬೆ ಮಾಡುವ ದೂರ್ವಾಸಮುನಿಯಂದು ಸೀತಾನಾಥ
ನಿನ್ನ ಬೆಂಬಲಿಟ್ಟು ಅಂಬರೀಷ ವ್ರತಗೈದನೇ ಸೀತಾನಾಥ ೨
ವರಧ್ರುವ ಧರೆಯೊಳು ಜನಿಸುವ ಕಾಲಕ್ಕೆ ಸೀತಾನಾಥ ದೇವ
ಕರವ ಪಿಡಿದು ನಿಮ್ಮ ಜೊತೆಲಿ ಕರೆತಂದನೇ ಸೀತಾನಾಥ
ಪರಮಪಾಪಿ ಅಜಮಿಳನಗೆ ಪದವಿಯು ಸೀತಾನಾಥ ದೇವ
ಕರುಣಿಸಿದವನಿನಗೆ ನೆರವಾಗಿರ್ದನೇನೊ ಸೀತಾನಾಥ ೩
ಛಲದ ರಾವಣನಳಿದು ವರವಿಭೀಷಣನಿಗೆ ಸೀತಾನಾಥ
ಲಂಕ ಕರುಣಿಸಿ (ದಿವೈಕುಂ) ಠ ಬಾಗಿಲೊಳಿರ್ದನೇ ಸೀತಾನಾಥ
ಬಲದ ವಾಲಿಯಕೊಂದು ಸುಗ್ರೀವನ ಕಾಯ್ದಯ್ಯ
ಸೀತಾನಾಥ ಅವ
ಇಳೆಯೊಳು ನಿಮಗೆ ಪಕ್ಷದ ಗೆಳೆಯನೆ ಸೀತಾನಾಥ ೪
ಹಿಂದಿನ ಹಿರಿಯರವರನು ದುರಿತದಿಂ ಸಲಹಿದಿ ಸೀತಾನಾಥ ಇದು
ಚೆಂದವೆ ನಿನಗೆ ಕಂದನ ಬಿಡುವುದು ಸೀತಾನಾಥ
ಇಂದು ಈ ಕಂಟಕ ಬೇಗ ಬಯಲ್ಹರಿಸಯ್ಯ ಸೀತಾನಾಥ ರಂಗ
ಸಿಂಧುಶಯನ ಮಮ ತಂದೆಯೇ ಶ್ರೀರಾಮ ಸೀತಾನಾಥ ೫

 

೬೬೩
ಹಿತವಾವುದದೆ ಪಥದಿ ಸತತದೆನ್ನಿರಿಸೊ
ಮತಿಹೀನನ್ಹಿತದ ಪಥವರಿಯೆ ಹರಿಯೆ ಪ
ಅರಿವಿಗರಿವು ನೀನು ಮರೆಯಮಾನವ ನಾನು
ಹರಿದಾಸರರಸ ನೀ ಚರಣದಾಸನು ನಾನು
ದುರಿತ ಪರಿಹರ ನೀನು ದುರಿತಕಾರಿಯು ನಾನು
ದುರಿತ ಪರಿಹರಿಸೆನ್ನ ಪೊರೆಯೊ ಸಿರಿದೊರೆಯೆ ೧
ಜೀವಜೀವೇಶ ನೀ ಜೀವನಾಧಾರ ನೀ
ಪಾವನೇಶ್ವರ ನೀ ಭಾವಿ ಭಕ್ತನು ನಾ
ಭವರೋಗದ್ವೈದ್ಯ ನೀ ಭವದ ರೋಗಿಯು ನಾನು
ಭವರೋಗ ಪರಿಹರಿಸಿ ಪಾವನನೆನಿಸಭವ ೨
ನಾಶರಹಿತನು ನೀನು ನಾಶಕಾರಿಯು ನಾನು
ನಾಶನದಿಂದುಳಿಸೆನ್ನ ಪೋಷಿಸಲಿ ಬೇಕೊ
ಧ್ಯಾನಿಪೆನು ಅನುದಿನ ಮೀಸಲಮನದಿಂದ
ಶ್ರೀಶ ಶ್ರೀರಾಮ ನಿಮ್ಮ ದಾಸನೈ ನಾನು ೩

 

೬೦೧
ಹುಚ್ಚನಾಗಬೇಕೋ ಜಗದಿ ಹುಚ್ಚನಾಗಬೇಕೋ ಪ
ಅಚ್ಚುತಾನಂತನ ನಿಶ್ಚಲ ಧ್ಯಾನದಿ
ಇಚ್ಛೆಯಿಟ್ಟು ಜಗದೆಚ್ಚರ ನೀಗಿ ಅ.ಪ
ಮರವೆ ಹರಿಯಬೇಕೋ ಪರಲೋಕ
ದರಿವಿನೊಳಿರಬೇಕೊ
ಪರಿಪರಿಯಿಂದಲಿ ಸಿರಿಯರಸನ ಪಾದ
ಸ್ಮರಿಸಿ ಇಹ್ಯದರಿವು ತೊರೆದಾನಂದದಿ ೧
ಪರನೆಲೆ ತಿಳಬೇಕೋ ಕಾಯದ
ನರನೊದೆಯ ಬೇಕೊ
ದುರಿತಾಕಾರಿಗಳ ಕಿರಿಕಿರಿಯಿಲ್ಲದೆ
ಹರಿಹರಿಯೆನ್ನುತ ಪರಮಾನಂದದಿ ೨
ಕಾಮ ಕಳೆಯಬೇಕೋ ಕಾಯದ
ಪ್ರೇಮ ತೊರೆಯಬೇಕೊ
ನೇಮದಿಂದ ಮಮಸ್ವಾಮಿ ಶ್ರೀರಾಮನ
ನಾಮ ಭಜಿಸಿ ನಿಸ್ಸೀಮನಾಗಾನಂದದಿ ೩

 

೬೦೨
ಹುಚ್ಚರಾಗಿ ಕೆಡಬೇಡಿರೆಚ್ಚರವ ಪಡಿರೋ
ಮೆಚ್ಚಿ ಸ್ತ್ರೀಯರ ಇಚ್ಛೆಗೊಳಗಾಗದಿರಲೊ ಪ
ಬಡಿವಾರತನದಿಂದ ಕಡುದೈನ್ಯದೋರುವರು
ಒಡಲೊಳಗಿನ ಹರಳು ಒಡೆದರಳುವಂತೆ
ಒಡಲೊಳೊಂಚನೆ ಬಿಡರು ಕಡೆತನಕ ಸ್ಥಿರವಲ್ಲ
ಕಡುಪಾಪಿರೂಪಿನ ಮಡದಿಯರ ಮನವು ೧
ಮನವ ಕರಗಿಸಿ ತನ್ನ ಮನೆಯ ಪುರುಷನ ಜರೆದು
ಮನಮೋಹಿಸಿನ್ನೊಬ್ಬ ಗೆಣೆಯನಂ ಕೂಡಿ
ತಿನುವಳು ಬಿಡದೊಂದುದಿನ ಪತಿಯ ಪ್ರಾಣಮಂ
ಘನಪಾಪಿ ವನಿತೆಯರ ಮನನಂಬಿಗಲ್ಲ ೨
ತನ್ನ ಪುರುಷನಮುಂದೆ ಬಣ್ಣದಮಾತಾಡಿ
ಹಣ್ಣಿಗೆತಂದವನ ತನ್ನೊಶದಲಿರಿಸಿ
ಮುನ್ನ ಜನನೀ ಜನಕರನ್ನು ಅಗಲಿಸಿ ಒಡನೆ
ತನ್ನಯ ಅನುಕೂಲವನ್ನೆ ಸಾಧಿಪಳು ೩
ಅವಗೆ ಹಿತವನೆ ತೋರಿ ಇವಗೆ ಕಾಲನೆ ಎತ್ತಿ
ಅವನಿಗೆ ಕೈಕೊಟ್ಟು ದಿವರಾತ್ರಿಯೆನದೆ ಭ
ಯವನಿತು ಇಲ್ಲದೆ ಭವ ಭವವ ತಿರುಗುವರು
ಜೀವಘಾತಕಿಯರದಾವ ಭರವಸವೊ ೪
ಹರಿದಿಯರ ಒಡನಾಟ ನರಕಕ್ಕೆ ಮೂಲವು
ದುರಿತಕ್ಕೆ ತವರಿದು ಮರೆಮೋಸದುರುಲು
ದುರುಳೆಯರ ಚರಿತಕ್ಕೆ ಮರುಳಾಗಿ ಕೆಡದೆ ಭವ
ಹರ ಶ್ರೀರಾಮನ ಪದಸ್ಮರಣೆ ಸಂಪಾದಿಸಿರೊ ೫

 

೪೭೪
ಹುಚ್ಚುಮನವೆ ನಿನ್ನ ಹುಚ್ಚಾಟವನೆ ಕಂಡು
ರೊಚ್ಚುಬರುತಿದೆ ಎನಗೆ ಎಚ್ಚರಿರೆಲೆಲೇ ಪ
ಉಚ್ಚೆಕುಣಿಯಲಿ ಬಂದು ಭವದ
ಕಿಚ್ಚಿನಲಿ ಬೆಂದು ಮಾಯಾ ಜಗವ
ನೆಚ್ಚಿ ಸಕಲ ಮರೆದು ಮುಂದಿನ
ಎಚ್ಚರವೆ ಮರೆತೆಲ್ಲೋ ಪಾಪಿ ಅ.ಪ
ಒಳಗೊಂದು ಹೊರಗೊಂದು ತಿಳಿಯುತಲಳಿಯುವಿ
ಅಳಿದುಹೋಗುವ ಇಳೆಯ ಸಲೆ ಸುಖಕೊಲಿದು
ಮಲದ ಭಾಂಡದಿ ಸಿಲುಕಿ ಅನುದಿನ
ಮಲಿನಗುಣದಿಂ ತೊಳಲಿಬಳಲುತ
ಗಳಿಸಿಕೊಂಡು ಬಂದ ಸಮಯ
ಕಳೆದುಕೊಳ್ಳುವಿಯಲ್ಲೋ ಪಾಪಿ ೧
ಹಿಂದೊಂದು ಮುಂದೊಂದು ವಂದಿಸಿ ನುಡಿಯುತ
ಬಂಧಕ್ಕೀಡಾಗುವಿ ಮಂದ ನೀನಾಗಿ
ಹಂದಿಯು ಮಲ ಮೆದ್ದತೆರದಿ
ಕುಂದಿಪೋಗುವ ಬಂಧುಬಳಗಕೆ
ನಂದುನಂದೆಂಬ ವಿಷಯಲಂಪಟ
ರಂಧ್ರೆಯಲ್ಲಿ ಬಿದ್ದು ಕೆಡುವಿ ಪಾಪಿ ೨
ನುಡಿಯೊಂದು ನಡೆಯೊಂದು ಕಡುದೃಢ ನುಡಿಯಾಡಿ
ಒಡಲಕಿಚ್ಚಿಗೆ ಬಲು ಮಿಡುಕುತಲಿ
ಕೆಡುವ ತನುವಿನ ಮೋಹ ಬಿಡದೆ
ಪೊಡವಿಗಧಿಕ ನಮ್ಮೊಡೆಯ ಶ್ರೀರಾಮ
ನಡಿಯ ನಂಬದೆ ಮಡಿದುಪೋಗುವಿ
ಕಡೆಗೆ ಹೆಡತಲೆಮೃತ್ಯುಗೆದೆಯಾಗಿ ೩

 

೬೦೩
ಹುಡುಕಿ ಕರೆತಾರೆ ಸಖಿ ಜಡಜನಯನ ಒಡೆಯನ್ಹಂಬಲ
ತಡೆಯಲಾರೆ ಪಿಡಿವೆ ಪಾದ ಗಡನೆ ಪೋಗಿ ಪ
ಧ್ಯಾನಧೃಢ ಅವನು ಇರುವ
ಸ್ಥಾನ ಪೇಳುವೆ
ಜಾಣೆ ಕೇಳೆ ಹಗಲು ಇರುಳು
ಖೂನವಿಲ್ಲವನಿಹ್ಯ ಸ್ಥಳದಿ
ತಾನೆತಾನಾಗಿ ಸೂಕ್ಷ್ಮದಿ
ಶೂನ್ಯ ಪೀಠದಿ ವಾಸಿಪ
ಜಾಣನ ಜವದಿಂ ಪೋಗಿ ೧
ಅರಿದು ಮರೆದಿರೆ ಅವನ
ಗುರುತು ಒರೆಯುವೆ
ಜರಾಮರಣಿವಲ್ಲವಗೆ
ಧರಿಸಿರುವಂತವತಾರ
ತಿರುಗಲು ಮೂಡವು ಅಡಿಗಳು
ನೆರಳೇ ಇಲ್ಲವು ನಿಲ್ಲಲು
ಶರೀರವಿಲ್ಲದೆ ತೋರುವ
ಪರಮನ ತ್ವರಿತದಿ ಹಿಡಿದು ೨
ಪ್ರೇಮ ಸುಂದರೀ ಅವನ
ನಾಮ ಪೇಳುವೆ
ನೇಮದಿಂದ ಕೂಗುತಿಹ್ಯವು
ಸಾಮಯಜುರಾದಿ ವೇದವು
ಆಮಹಮಹಿಮನ ಘನತರ
ನಾಮದ ನೆಲೆಯೇ ಸಿಗದಿದೆ
ಕಾಮಿನಿಯಂಥ ಸ್ವಾಮಿ ಶ್ರೀ
ರಾಮ ಸದ್ಗುರು ಪ್ರಭುವಿನ ೩

 

೧೧೯
ಹುಡುಕಿದಳೆಶೋದ ಕಂದನ
ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ
ಕಂಗಳನಿಕ್ಕಿ ಕಾದಿಹ್ಯದು
ಸಿಂಗರದ ಗೋಪಿರ್ಹೆಂಗಳೆಯರು
ರಂಗನ ಸುಖಕವರು
ಗುಂಗುಹಿಡಿದು ಕುಳಿತಿಹ್ಯರು
ರಂಗುಮಂಟಪದೊಳಗೆ ಎನ್ನ
ಕಂಗಳಿದರ ಕಾಣನಾವ
ಅಂಗನೆಯರಡಗಿಸಿದರೆಂದು
ಅಂಗಲಾಚಿ ಅಂತರಂಗದಿ ೧
ಉನ್ನತೋನ್ನತ ಋಷಿಗಣರು
ಪನ್ನಂಗಶಾಯಿಯ ಸನ್ನಿಧಿಲವರು
ಮುನ್ನಾವ ಕಾಲದಿಂ ಕುಳಿತಿಹರು
ಭಿನ್ನವಿಲ್ಲದೆ ತಪವ ಮಾಳ್ಪರು
ಇನ್ನು ಕಾಣಲವರು ತಮ್ಮಿಷ್ಟ
ವನ್ನು ಪೂರ ಪಡೆವನಕ
ಎನ್ನ ಕಣ್ಣಿಗೆ ಹಾಕರೆಂದು
ಬನ್ನಬಡುತ ತನ್ನೊಳ್ತಾನು ೨
ದೂಷಣೆ ಭೂಷಣಗಳನೊದೆದ
ಮೋಸ ಕ್ಲೇಶಗಳನು ತರಿದ
ಆಶಾ ಪಾಶಗಳನು ಜರಿದ
ಈಶನುನ್ನತ ನಿಜವ ತಿಳಿದ
ಶ್ರೀಶ ಶ್ರೀರಾಮ ನಿನ್ನ ಪಾದ
ದಾಸರು ಕಾಣಲು ತಮ್ಮ ಭಕ್ತಿ
ಪಾಶದಿಂದ ಬಿಗಿದು ಕಟ್ಟಿ
ನ್ನೇಸು ಕಾಲದಿ ಬಿಡರೆಂದರಿದು ೩

 

೬೦೭
ಹೆಂಡತಿ ನೋಡಣ್ಣ ಈಕಿನ
ನ್ನ್ಹೆಂಡತಿ ನೋಡಣ್ಣ ಪ
ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ
ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ
ಕಂಡದ್ದು ಬೇಡುವಳು ತರದಿರೆ
ಗಂಡನಲ್ಲೆಂಬುವಳು
ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ
ದಂಡಿಸುವಳು ಬಲು ಮಿಂಡೆ ಭಂಡ ೧
ಮಾತುಮಾತಿಗಿವಳು ಎನ್ನನು
ಕೋತ್ಯಂತೆ ಕುಣಿಸುವಳು
ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ
ನೀತಿಗೆಡಿಸುವಳು ಭೀತಿಲ್ಲದ ೨
ಒಯ್ಯಾರ ಮಾಡುವಳು ಬೈದರೆ
ಬಾಯಿ ತೆರೆದಳುವಳು
ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು
ದಾಯಾದಿಗಳು ಮುಂದೆ ಹೊಯ್ಮಾಲಿ ೩
ಎಡರು ತೊಡರು ಬಿಡಳು ಒಡಲಿನ
ಕೆಡಕುಗುಣವ ಕಡಿಯಳು
ಅಡಿಗಡಿಗೆನ್ನನು ದುಡುಕು ನುಡಿದು ಮನ
ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ ೪
ಒದಗಿಸಿ ನಾಂ ತರಲು ಅದರೊಳು
ಕದಿದರ್ಧ ತಿನ್ನುವಳು
ಪದುಮನಾಭ ನಮ್ಮ ಸದಯ ಶ್ರೀರಾಮನ
ಪಾದ ಕೃಪೆಯ ಪಡೆಯದಧಮ ೫

 

೬೦೪
ಹೆಚ್ಚಿನ ಗೋಜ್ಯಾಕೆಲೆ ಹುಚ್ಚು ತಿಳಿ
ಮುಚ್ಚಿಕೊಂಡಿದೆ ನಿನ್ನ ಭವಕಿಚ್ಚು ಪ
ಹುಚ್ಚು ಮತಿಯ ನೀಗಿ ಅಚ್ಯುತನಂಘ್ರಿಯ
ಮೆಚ್ಚಿಸಿ ಮೆಲಿ ಅನುಭವದ್ಹುಚ್ಚು ಅ.ಪ
ಕೀಳನಾಗದೆ ನೀ ನಿಜವ ತಿಳಿ ನಿನ್ನ ಕಾ
ಲೊಳು ಬಿದ್ದಾದ ಸಂಕೋಲಿ
ನಾಳೆಗೆ ಬರುತಾದ ಕಾಲನ ದಾಳಿಯು
ತಾಳದೆಳಿತಾರ ಜಡಿದ್ವಜ್ರದ ಕೀಲಿ ೧
ನಿಂದೆಯಾಡಬೇಡೆಲೆ ಖೋಡಿ ಮುಂದೆ
ಹಂದಿಯ ಜನುಮಕೆ ಬೀಳಬೇಡ ಬೇಡಿ
ಮಂದ ನೀನಾಗದೆ ಮಂದರ ನಿಲಯನ
ಹೊಂದಿ ಭಜಿಸಿ ಆನಂದಪಡಿ ೨
ದೂರದಿಂದ ಬಂದಿದ್ದಿ ಹೌಹಾರಿ ತ್ವರ ವ್ಯಾ
ಪಾರ ಮಾಡಿಕೊಳ್ಳೊ ಭರ್ಜರಿ
ಸಾರ ಮೋಕ್ಷಾಧಿಪ ಧೀರ ಶ್ರೀರಾಮನ ಪಾದ
ವಾರಿಜ ನಂಬಿ ಹೊಡಿ ಜಯಭೇರಿ ೩

 

೪೭೫
ಹೆದರಿಕೆ ಬರುತದೆಲೋ ಪದುಮಾಕ್ಷ
ನಿನ್ನ ಮುಂದೆ ಹೇಳಿಕೊಳ್ಳಲು ಎನಗೆ ಪ
ಹೆದರಿಕೆ ಬರುತಿದೆ ಜಗದ ಜನರು ನಿನಗೆ
ವಿಧವಿಧದಾಡುವ ಸುದ್ದಿಯ ಪೇಳಲು ಅ.ಪ
ಹಳಿವರು ಹೆಳವನೆಂದು ಅಂಜದೆ ನಿನಗೆ
ತಲೆಯಿಲ್ಲದವನೆನುವರು
ಇಲ್ಲದೆ ಹೊಟ್ಟಿಗೆ ಹುಲ್ಲುಮೆದ್ದವನೆಂದು
ಹಲವು ಬಗೆಯಲಿ ಹೀಯಾಳಿಪುದ್ಹೇಳಲು ೧
ದೃಢದಿ ಭಕುತಜನರು ಬೇಡಿದ ವರವು
ಕೊಡಬೇಕಾಗುವುದೆನುತ
ಓಡಿ ಹಾವಿನಮೇಲೆ ಪವಡಿಸಿದ ಮಹ
ಕಡುಲೋಭಿಯೆಂದೆಂಬ ನುಡಿನಿನ್ನೊಳ್ಪೇಳಲು ೨
ಒದೆಸಿಕೊಂಡ್ವೊಯ್ಕುಂಠದಿ ಶೇಷಾಚಲದಿ
ಸದನಗೈದನುಯೆಂಬರು
ಇದು ಅಲ್ಲದತಿ ವಿಧವಿಧ ಲೋಕ ಸುಲಿದರ್ಥ
ನಿಧಿಗಳಿಸಿದ ಚಿನಿವಾರೆಂಬದ್ಹೇಳಲು ೩
ಕುದುರೆಮಾವುತನೆಂಬರು ಎಲವೋ ರಂಗ
ಕದನಗಡಕನೆನುವರು
ಹದಿನಾರು ಸಾವಿರ ಸುದತಿಯರೊಶನಾದ
ಸುಧೆಗಳಜಾರನೆಂಬ ವಿಧಿಯನ್ನು ಪೇಳಲು ೪
ವಿಪಿನವಾಸಿಕನೆನುವರು ನಿಷ್ಕರುಣದಿ ನೀ
ಕಪಿವರನ ತರಿದೆನುವರು
ಕಪಟನಾಟಕ ನಿನ್ನ ಕಪಟ ತಿಳಿಯುವರಾರು
ಅಪರೂಪಮಹಿಮನೆ ಕೃಪಾನಿಧಿ ಶ್ರೀರಾಮ ೫

 

೪೭೬
ಹೆದರಿಕೆ ಯಾತರದೋ ತ್ರಿಜಗದಿ
ಪದುಮನಾಭನ ಪಾದ ಸದಮಲದಾಸರಿಗೆ ಪ
ಗರುಡನ ಮಂತ್ರಕೆ ಉರಗನ ಭಯವುಂಟೆ
ದುರಿತದಂಜಿಕೆಯುಂಟೆ ನರಹರಿಸ್ಮರಣೆಗೆ ೧
ಬಿರುಗಾಳಿ ಬೀಸಲು ಗಿರಿ ನಡುಗುವುದುಂಟೆ
ಪರಿಭವ ಬಂಧಮುಂಟೆ ಸಿರಿವರನರ್ಚಕರಿಗೆ ೨
ಶ್ರೀರಾಮನಡಿವಾರಿಜಭಜಕರ್ಗೆ
ಸಾರಮೋಕ್ಷಂಗಳು ದೂರವಿನ್ನುಂಟೆ ೩

 

೧೨೦
ಹೇ ದಯಾಸಾಗರ ಸ್ವಾಮಿ ವೇದ
ಮಾಧವ ಮುಕುಂದ ಮನುಮುನಿ ಪ್ರೇಮಿ ಪ
ವೇದಗೋಚರ ಸಾಧುಸನ್ನುತ
ನಾದಪ್ರಿಯ ಭವಬಾಧೆರಹಿತ ಭೇದಹರ ಜಗ
ದಾದಿ ಮೂರುತಿ ಪಾದ ಭಜಿಸುವೆ ಪಾಲಿಸೆನ್ನ ಅ.ಪ
ಮದಗಜ ಮುದದಿಂದ ಪೊರೆದಿ ಪ್ರಭುವೆ
ಮದಗಜಗಮನೆಯ ಮಾನದಿಂ ಕಾಯ್ದೆ
ಪದುಮವದನೆಶಾಪ ಕಳೆದೆ ಕರುಣಿ
ಸದಮಲಬಾಲನ ತಪಕೆ ನೀನೊಲಿದಿ
ಸುದಯಹೃದಯ ಸುಸದನಪಾಲ್ಸಿದಿ
ಸದಮಲಾಂಗನೆ ಪದುಮವದನ
ಮುದದಿ ನಿಮ್ಮಡಿ ಪದುಮಗಳು ಎ
ನ್ರ‍ಹದಯ ಮಂದಿರದಿರಿಸಿ ರಕ್ಷಿಸು ೧
ಗರುಡಂಗೆ ವರಮೋಕ್ಷ ನೀಡ್ದಿ ನಿನ್ನ
ಸ್ಮರಿಪರಿಗೆ ದರುಶನಕೊಡುತಲಿ ನಡೆದಿ
ತರುಣಿಯ ಎಂಜಲ ಸವಿದಿ ವನ
ಚರನಿಗೆ ವಶನಾಗಿ ಅಭಯ ಪಾಲಿಸಿದಿ
ಭರದಿ ದಕ್ಷಿಣಶರಧಿ ಹೂಳಿಸಿ
ಮೆರೆವ ಲಂಕಾಪುರವ ಮುತ್ತಿದಿ
ದುರುಳರ್ಹಾವಳಿ ದೂರಮಾಡಿ
ಧರೆಯ ಭಾರವ ನಿಳುಹಿದಯ್ಯ ೨
ನುಡಿಸಿದರೆನ್ನಿಂದಲಾವ ವಚನ
ನುಡಿಸಿದ ಬಳಿಕದನು ನಡೆಸಿಕೊಡಭವ
ನುಡಿಯಂತೆ ನಡೆಯೆನಗೆ ಸ್ಥಿರವ ಕೊಟ್ಟೆ
ನ್ನೊಡಲೊಳಗದಂತೆಯಿರು ಅನುದಿನವು
ಪೊಡವಿ ಮೂರನು ಒಡಲೊಳಿಟ್ಟಿಡೆ
ಬಿಡದೆ ಆಳುವ ಒಡೆಯ ಶ್ರೀರಾಮ
ದೃಢದಿ ನಿಮ್ಮಯ ಅಡಿಯ ನಂಬಿದೆ
ಬಿಡಿಸು ಎನ್ನಯ ಮಂದಜ್ಞಾನವ ೩

 

೪೮೦
ಹೇ ಪಾಪಿ ಮನಸೇ ನೀ ನಾರಾಯಣೆನೆಲೋ
ಅಪಾರ ಮಹಿಮನ ಮಹಿಮೆ ತಿಳಿದು ನೋಡೋ ಪ
‘ನಾ’ ಎಂಬೋ ಮಹದಾದಿಬೀಜದಕ್ಷರ ತುದಿ
ನಾಲಿಗೆಯಿಂದ್ಹೊರಡುವನಿತರೊ
ಳ್ಹಿಂದಿನ ನಾನಾಜನುಮದ ಪಾಪ ಪರ್ವತವೆಲ್ಲವು
ನಿವೃತ್ತಿಯಾಗಿ ಮಹ ಪಾವನನೆನಿಪುದು ೧
‘ರಾ’ ಎಂದು ಮುಖದಿಂದ ಹೊರಟ ಕೂಡಲೆ
ಸರ್ವ ರವರವನರಕದ ಯಾತನಳಿದು ಭವ
ರೋಗವೆಲ್ಲನು ನೀಗಿ ಕಾಯಕರ್ಮವ ಕಡಿದು
ರಾಜಿಪ ಪರಲೋಕ ಸದರವೆನಿಸುವುದೆಲೊ ೨
‘ಯ’ ಎಂದು ನುಡಿಯುತಲೆ ಜನುಮ ಸಫಲವಾಗಿ
ಎಷ್ಟೋ ಕೋಟ್ಯಜ್ಞದ ಪುಣ್ಯ ಫಲವು ದೊರಕಿ
ಯಮನ ಭೀತಿಯ ಗೆಲಿಸಿ ದಾಸರೊಲುಮೆ ಲಭಿಸಿ
ಎಸೆವ ತ್ರಿಕಾಲಜ್ಞಾನ ಸ್ಥಿರವಾಹುದೆಲೊ ೩
‘ಣ’ ಎಂದು ಸಂಪೂರ್ಣ ಉಚ್ಚರಿಸಿದ ಮಾತ್ರವೆ
ನಿಖಿಲ ಸಂಪದ ಸಿದ್ಧಿ ಕರತಲ ಮಾಗಿ
ನಿತ್ಯ ನಿರ್ಗುಣನಂಘ್ರಿ ಕಂಗಳೊಳ್ಹೊಳೆಯುತ
ನಿತ್ಯಾನಂದದ ಪದವಿ ಕೈವಶವಹದೆಲೊ ೪
ನಿರಾಮಯ ಶ್ರೀರಾಮ ನಿಗಮಗೋಚರ ನಿರಂಜನ
ನಿಜಗುಣನನುಪಮಮಹಿಮೆ
ನಿಜಮತಿಯಿಂದರಿತು ನಿರ್ಮಲ ಮನಸಿನಿಂ
ನೆನೆಯಲು ಘನಮುಕ್ತಿ ಸಾಮ್ರಾಜ್ಯ ಪಡೆಯುವಿ ೫

 

೪೭೭
ಹೇಗೆ ಕಳಕೋಬೇಕೋ ಹರಿಹರಿ
ನೀನೆ ಕಳೆಯಬೇಕೊ ಪ
ಹ್ಯಾಗೆ ತೊಳಕೋ ಬೇಕು ತಿಳಿಯದು ಎನಗಿದು
ನೀಗದಂಥ ಈ ಅಗಾಧ ರಿಣಮುಟ್ಟು ಅ.ಪ
ಹೆತ್ತಮುಟ್ಟು ಅಲ್ಲ ತೊಳಕೊಳ್ಳ
ಲ್ಸತ್ತ ಸೂತಕಲ್ಲ
ಮತ್ತೆ ಮತ್ತೆ ಭವ ಸುತ್ತಿಸುತ್ತಿ ಬೆ
ನ್ನ್ಹತ್ತಿ ಬಿಡದೆ ಕಾಡುತ್ತ ನೋಯಿಪ ರಿಣ೧
ನಿಶ್ಚಲಯಿರಗೊಡದು ಜಗದೊಳು
ತುಚ್ಛನ ಮಾಡುವುದು
ಮುಚ್ಚು ಮರಿಯಾದೆಯ ಬಿಚ್ಚಿಟ್ಟು ಬಯಲಿಗೆ
ಹಚ್ಚಿ ಮಾರುವಂಥ ಉಚ್ಚಿಷ್ಠ ರಿಣಮುಟ್ಟು ೨
ಭಕ್ತವತ್ಸಲರಾಮ ನೀನೆ
ಮುಕ್ತಿಪಥಕೆ ಸೋಮ
ನಿತ್ಯ ನಿರ್ಮಲಮನ ಭಕ್ತನಿಗಿತ್ತು ರಿಣ
ಮುಕ್ತನ ಮಾಡಿ ಬೇಗಂತಃಕರಣ ನೀಡೊ ೩

 

೪೭೮
ಹೇಗೆ ಕಳೆಯಬೇಕೋ ಹೊತ್ತು ಹೇಗೆ ಕಳೆಯಬೇಕೋ ಪ
ಹೇಗೆ ಕಳಿಲಿ ಭವಸಾಗರದಲಿ ಮನ
ನೀಗದು ಚಂಚಲ ಸಾಗರನಿಲಯ ಅ.ಪ
ಹುಟ್ಟಬಾರದಿತ್ತು ಇಹ್ಯದಿ ಹುಟ್ಟಿದ್ದೇ ತಪ್ಪಾಯಿತು
ನಿಷ್ಠೆಲಿರಗೊಡದೆನ್ನ ದುಷ್ಟಮನಸು ಘಳಿ
ಗಿಷ್ಟೆಲ್ಲ ಎಲ್ಲಿತ್ತು ಹುಟ್ಟದಿದ್ದರೆ ನಾನು ೧
ಕ್ಷಣಕ್ಷಣಕೊಂದು ರೀತಿ ಮನಸಿನ ಗಣನೆಯಿಲ್ಲದ ಭ್ರಾಂತಿ
ಜನಿಸಿದಂದಿನಿಂದ ಘನತರ ಕುಣಿಸ್ಯಾಡಿ
ಜನರ ಸೇವೆಯೊಳು ದಣಿಸಿತು ಪಾಪಿ ೨
ಅನುಗಾಲವು ಚಿಂತೆ ಜೀವಕೆ ಇನಿತು ಇಲ್ಲ ಸ್ವಸ್ಥ
ತನುಮನಧನ ನಿನಗರ್ಪಿಸಿ ಬೇಡುವೆ
ಘನ ಬೇಸತ್ತೆ ಪೊರೆ ಚಿನುಮಯ ಶ್ರೀರಾಮ ೩

 

೪೭೯
ಹೇಗೆಮಾಡಲು ಖರೆ ತವಧ್ಯಾನ ಹರಿ
ಬೇಗ ಮಾಡೆನ್ನಗೆ ನಿಜಮನನ ಪ
ಬಾಗಿವಂದಿಪೆ ನಾ ನಿಮ್ಮ ಚರಣ ಭವ
ರೋಗ ದಯದಿ ಮಾಡು ನಿವಾರಣ ಅ.ಪ
ಜಾಗರಮಾಡಿದರಹುದೇನು ನಿತ್ಯ
ಭಾಗವತನೋದಿದರಹುದೇನು
ಯಾಗಮಾಡಿದರಹುದೇನು ಮಹ
ಯೋಗ ಬಲಿಸಿದರಹುದೇನು
ಸೋಗು ಹಾಕಿ ಬೈರಾಗಿ ಆಗಿ ಇಳೆಯ
ಭೋಗವ ತ್ಯಜಿಸಿದರಹುದೇನು ೧
ಸ್ನಾನಮಾಡಿದರಹುದೇನು ಬಹು
ದಾನಮಾಡಿದರಹುದೇನು
ಮೌನಮಾಡಿದರಹುದೇನು ಕೌ
ಪೀಣ ಧರಿಸಿದರಹುದೇನು
ಜ್ಞಾನ ಬೋಧಿಸುತ ನಾನಾದೇಶಗಳ
ಮಾಣದೆ ತಿರಿಗಿದರಹುದೇನು ೨
ಜಪವಮಾಡಿದರಹುದೇನು ಬಲು
ಗುಪಿತ ತೋರಿದರಹುದೇನು
ತಪವ ಗೈದರಹುದೇನು ಮಹ
ವಿಪಿನ ಸೇರಿದರೆ ಅಹುದೇನು
ಚಪಲತನದಿ ಸದಾ ಅಪರೋಕ್ಷನುಡಿದು
ನಿಪುಣನೆನಿಸಿದರೆ ಅಹುದೇನು ೩
ಸಾಧುವೆನಿಸಿದರೆ ಅಹುದೇನು ಚತು
ಸ್ಸಾಧನಮಾಡಿದರಹುದೇನು
ವೇದ ಪಠಿಸಿದರೆ ಅಹುದೇನು ಅಣಿ
ಮಾದಿ ಅಷ್ಟಸಿದ್ಧಿ ಅಹುದೇನು
ಓದಿತತ್ತ್ವಪದ ಛೇದಿಸಿ ಬಿಡದೆ
ಬೋಧಕನೆನಿಸಿದರೆ ಅಹುದೇನು ೪
ಕೋಶನೋಡಿದರೆ ಅಹುದೇನು ಬಹು
ದೇಶ ನೋಡಿದರೆ ಅಹುದೇನು
ಆಸನಹಾಕಿದರಹುದೇನು ಮಂತ್ರ ಅ
ಭ್ಯಾಸ ಮಾಡಿದರೆ ಅಹುದೇನು
ದಾಸಪ್ರಿಯ ಭಯನಾಶ ಶ್ರೀರಾಮ ನಿಮ್ಮ
ಧ್ಯಾಸವೊಂದಿರೆ ಮುಕ್ತಿ ಸಿಗದೇನು ೫

 

೬೦೮
ಹೊಂದಿ ಭಜಿಸಿರೆಲೋ ಹರಿನಾಮ ದಯ
ಸಿಂಧು ಭಜಕಬಂಧು ಹರಿನಾಮ ಪ
ಬಂಧನಿವಾರಣ ಹರಿನಾಮ ಬಹ
ಕುಂದು ನಿಂದೆ ದೂರ ಹರಿನಾಮ ಅ.ಪ
ವಿಷಯಲಂಪಟಹರ ಹರಿನಾಮ ಮಹ
ವ್ಯಸನ ಕಳೆದು ಕಾಯ್ವ ಹರಿನಾಮ
ಅಸಮಸೌಖ್ಯಜ್ಞಾನ ಹರಿನಾಮ ಮಾಯಾ
ಮುಸುಕು ನಿವಾರಣ ಹರಿನಾಮ ೧
ಬೇಡಿದ್ದು ಕೊಡುವುದು ಹರಿನಾಮ ಮಹ
ಕೇಡು ತಪ್ಪಿಸುವುದು ಹರಿನಾಮ
ಗಾಢಪದವಿನೀಯ್ವ ಹರಿನಾಮ ತಾ
ಕೂಡಿ ಅಗಲದಿಹ್ಯ ಹರಿನಾಮ ೨
ಗಾನಲೋಲಾನಂದ ಹರಿನಾಮ ಮಹ
ದೀನ ದಯಾಪರ ಹರಿನಾಮ
ಧ್ಯಾನದಾಯಕ ನಿಜ ಹರಿನಾಮ ಮಮ
ಪ್ರಾಣದೊಡೆಯ ಶ್ರೀರಾಮನಾಮ ೩

 

೪೮೧
ಹೊಟ್ಟೆ ಎಲೆ ಹೊಟ್ಟೆ
ಭ್ರಷ್ಟ ನಿನಗಾಗಿ ಜಗದೊಳು ನಾ ಕೆಟ್ಟೆ ಪ
ಜನರ ಗೋಣು ಮುರಿದೆ ನಿನಗಾಗಿ
ಪರರಿಗ್ಹಾನಿ ಬಯಸಿದೆ ನಿನಗಾಗಿ
ಮಾನಹೀನಾದೆನು ನಿನಗಾಗಿ
ಮಾಣದ ಅಪವಾದ ಕ್ಷೋಣಿಯೊಳ್ಹೊತ್ತು ನಾ
ಕ್ಷೀಣಿಸುತಿರುವೆನು ಗೇಣ್ಹೊಟ್ಟೆ ನಿನಗಾಗಿ ೧
ಬಹು ಸುಳ್ಳನಾಡಿದೆ ನಿನಗಾಗಿ
ಮಹ ಕಳ್ಳನೆನಿಸಿದೆ ನಿನಗಾಗಿ
ತೊರೆದೊಳ್ಳೆಗುಣವ ನಿನಗಾಗಿ
ಗುರು ತಳ್ಳಿಬಿಟ್ಟೆನು ನಿನಗಾಗಿ
ತಿಳಿಯದೆ ಕೆಟ್ಟೆನು ಇಳೆಯೊಳು ತಿರುಗುತ
ಕಳವಳಿಸುತಲತಿಲೊಳ್ಳೊಟ್ಟಿ ನಿನಗಾಗಿ ೨
ನಿನ್ನ ನಂಬಿ ಮರೆದೆ ರಾಮನಾಮ
ನಿನ್ನ ನಂಬಿ ತೊರೆದೆ ನಿತ್ಯನೇಮ
ನಿನ್ನ ನಂಬಿ ಪಡೆಯದ್ಹೋದೆ ಕ್ಷೇಮ
ನಿನ್ನ ನಂಬಿ ಬಿಟ್ಟೆನು ಅತಿಶ್ರಮ
ನಿನ್ನಿಂದ ಮತಿಗೆಟ್ಟೆ ನಿನ್ನಿಂದ ವ್ಯಥೆಪಟ್ಟೆ
ನಿನ್ನಿಂದ ಗತಿಗೆಟ್ಟೆ ಸತತ ಭುವನದೊಳು ೩

 

೬೬೪
ಹೊಡಿ ಚೋಕ ಒಡೆಯ ಶ್ರೀ ಹರಿಪಾದ
ಪೊಡವಿತ್ರಯದಧಿಕೆಂದು ಪ
ಸಾಧು ಸಜ್ಜನರಿಗೆ ಆಧಾರವಾದ ಪಾದ
ವೇದ ಉದ್ಧರಿಸಿದ ಪಾದ ಬಹು ಮಿಗಿಲೆಂದು ೧
ಪಾರವಾರಿಧಿ ಕಡೆದು ಪೀರಿದಮೃತಪಾದ
ಘೋರರಕ್ಕಸರೊದೆದಪಾರಮಹಿಮ ಪಾದೆಂದು ೨
ಗೋವಳರಾಳಿದ ಪಾವನ ಶ್ರೀಪಾದ
ದೇವ ಶ್ರೀರಾಮಪಾದಕಾವಪಾದೀಡಿಲ್ಲೆಂದು ೩

 

೬೬೫
ಹೊತ್ತಾಗಿ ಹೊರಟಿಹೆನು ವೈಕುಂಠಕೆ
ಮುಟ್ಟಬೇಕು ನಾನು ಪ
ಹೊತ್ತಾಗಿ ಹೊರಟಿಹೆ ಹೊತ್ತುಗಳೆದು ವ್ಯರ್ಥ
ವತ್ತರದಿಂ ಪೋಗಿ ಹೊತ್ತೆ ಮುಟ್ಟಬೇಕು ಅ.ಪ
ಊರುದೂರಾದಿನ್ನು ಕೇಳದೆ
ಅರುಮಾತನಾನು
ಊರಜನರ ಮಾತು ಮೀರಿ ಆತುರದಿಂದ
ಪಾರವಾರಿಲ್ಲದ ವಾರಿಧಿಯನೀಸಿ ೧
ದಾರಿ ಅರಿಯೆ ನಾನು ಬಲ್ಲವರು
ತೋರಿರೆ ಮಾರ್ಗವನು
ಸಾರಮೋಕ್ಷಕ್ಕಾಧಾರನ ಪಟ್ಟಣ
ಸಾರಸೌಖ್ಯ ತಲೆಸೇರಿ ಸಕಲ ಮೀರಿ ೨
ಭೂಮಿಸುಖವ ನೋಡಿ ಪೂರ್ವದ
ಆ ಮಹ ಸುಕೃತಗೂಡಿ
ನಾಮಾಮೃತಮಂ ನೇಮದಿ ಸವಿಯುತ
ಸ್ವಾಮಿ ಶ್ರೀರಾಮನ ಪ್ರೇಮಯಾನವೇರಿ ೩

 

೬೦೫
ಹೋಗುತಾದೋ ಹೊತ್ತು ಹೋಗುತಾದೋ
ಸಾಗಿ ಮುಂಚೆ ಮತ್ತೆ ತಿರುಗಿ ಬಾರದಂತೆ ಪ
ಹಿಂದಿನ ಸುಕೃತದಿಂದ ಒದಗಿದಂಥ
ಸುಂದರಮಾದ್ಹೊತ್ತು ಎಂದೆಂದು ಸಿಗದಂತೆ ೧
ಅರ್ತುಕೊಂಡವರಿಗೆ ಸಾರ್ಥಕಗೊಳಿಸುತ್ತ
ಮರ್ತಕರಿಗೆ ಮತ್ತೆ ಗುರ್ತು ತೋರದಂತೆ ೨
ಎಷ್ಟೆಷ್ಟೋ ಯೋನಿಯೊಳ್ಹುಟ್ಟ್ಹುಟ್ಟಿ ಬಲಗೋ
ಳಿಟ್ಟು ಪಡೆದ ಹೊತ್ತು ನಷ್ಟವಾಗುತ ವ್ಯರ್ಥ ೩
ಅಘನಾಶಗೊಳಿಸಿ ಬಹು ಮಿಗಿಲಾದ ಪದವೀನ
ಸಿಗದಂಥ ವಸ್ತಿದು ಅಗಲಿ ತಾ ಸುಮ್ಮನೆ ೪
ನೇಮವಲ್ಲೆಲೋ ಮತ್ತೆ ಆ ಮಹ ಸಮಯವು
ಪಾಮರಾಗದೆ ಶ್ರೀರಾಮ ಪ್ರೇಮವ ಪಡಿ ೫

 

೪೮೩
ಹ್ಯಾಗೆ ಒಲಿಯುವನೊ ಎನ್ನೊಡೆಯ ರಂಗ
ಹ್ಯಾಗೆ ಒಲಿಯುವನೊ ಪ
ಹ್ಯಾಗೆ ಒಲಿಯುವ ಜಾಣೆ ಪೇಳಮ್ಮ
ನಾಗಶಾಯಿ ನಿಗಮಾಗಮೊಂದಿತ
ರಾಘವೇಶನು ಬೇಗ ಒಲಿಯದಿರೆ
ನೀಗುವೆನು ಪ್ರಾಣ ಕೇಳೆ ಸಖಿಯೆಅ.ಪ
ಧಣಿಯು ಇಲ್ಲದ ದುರ್ದೈವ ಬಾಳು
ಹೆಣನ ಸಮವಿದು ಮನ್ನಿಸೆ ಕೆಳದಿ
ಗಣನೆಯಿಲ್ಲದ ಜನಮವ್ಯಾಕಿದು
ಸನಕಸನಂದರೆಣಿಕೆಯಿಲ್ಲದೆ
ಮಣಿದು ಆತಗೆ ಧನ್ಯರಾದದ್ದು
ನೆನೆಸಿ ಮನದೊಂದು ದಿನಸುವಾಗುವುದು
ಚಿನಮಯಾತ್ಮನ ಕಾಣದಿರಲಾರೆ ೧
ನೀರೆ ಬೇಗಿನ್ನು ಕರೆತಂದು ತೋರೆ
ಸಾರಸಾಕ್ಷನ್ನ ಅಗಲಿರಲಾರೆ
ವಾರಿಧಿಶಾಯಿನ್ನ ಹರಣದೊಡೆಯನ್ನ
ಮಾರ ಸುಂದರಪಾರ ಮಹಿಮನ
ಬಾರಿಬಾರಿಗೆ ಸ್ಮರಿಸಿ ಮನ ಬಲು
ಘೋರ ಬಡುತದೆ ವಾರಿಜಾಕ್ಷಿ ಕರೆ
ತಾರೆ ಶೀಘ್ರದಿ ನಾರಸಿಂಹನ ೨
ಕಡಲೊಳಿರುವನೋ ದೃಢದಿ ಕರೆಯಲು
ಒಡನೆ ಬರುವನೋ ಜಡಜಾಕ್ಷಿ ಕೇಳೆ
ಜಡಜನಾಭನೋ ದೃಢಕರೊಡೆಯನೋ
ಬಿಡದೆ ಆತಗೆ ಮಿಡುಕಿ ಮಿಡುಕಿ
ಹಿಡಿಕಿಯಾಯಿತು ದೇಹ ಸೊರಗಿ
ಒಡೆಯ ಶ್ರೀರಾಮನಡಿಗೆ ಹೊಂದಿ ನಾ
ತೊಡರಿನೊಳಗಿಂದ ಕಡೆಗೆ ನಿಲ್ಲುವೆ ೩

 

೪೮೫
ಹ್ಯಾಗೆ ದೊರಕೀತು ನಿನ್ನ ಚರಣವು
ನಾಗಶಯನನೆನ್ನಂಥ ಪಾಪಿಗೆ ಪ
ನೀಗಿ ಹೋಯಿತು ಅರ್ಧವಯವು ಆಗಯೀಗಯಾ
ವಾಗಲೋ ಹೋಗುವುದು ದೇಹ
ಭೋಗದಾಸೆಯು ನೀಗವಲ್ಲದು ಎನಗೆ ಇನ್ನು ಅ.ಪ
ಮನದಕ್ಲೇಶವು ಕಡಿಯವಲ್ಲದು ನೀಚತನದ
ನೆನವು ಎನ್ನೊಳಳಿಯವಲ್ಲದು ಸಾಚನಾಗಿ
ನಿನ್ನ ಧ್ಯಾನದಿ ಮನವುಯೆಂಬುದು ಕ್ಷಣವು ನಿಲ್ಲದು
ಕ್ಷಣವು ಬಿಡದೆ ಅನ್ಯರೊಡವೆಯ
ಮನದೊಳನುದಿನ ನೆನೆದು ನೆನೆದು
ಘನ ಪಾಪಾತ್ಮನಾಗಿ ಚರಿಸುವೆ
ಜ್ಞಾನ ಬಾರದು ಎನಗೆ ಇನ್ನು ೧
ಒಡವೆವಸ್ತ್ರದ ಆಸೆ ಬಿಡವಲ್ಲದು ಪಾಪಿಮನವು
ಮಡದಿ ಮಕ್ಕಳ ಮಮತೆ ತೊರೀವಲ್ಲದು ಒಡನೆ ತಿಳಿದು
ಕೆಡುವ ಕಾಯದ ಮೋಹ ಮರೀವಲ್ಲದು ಜಡಮತಿಯು ಬಿಡದು
ಎಡರು ಪ್ರಪಂಚ ತೊಡರಿನೊಳು ಮನ
ವಡರಿ ಬಿಡದಲೆ ಮಿಡುಕಿ ಮಿಡುಕಿ
ಕಡೆಯುಗಾಣದೆ ಕಷ್ಟಬಡುತಿಹೆ
ಬಿಡದು ವಿಷಯದಾಸೆ ಎನಗೆ ೨
ದಾಸಜನ ವ್ಯಾಸಂಗ ಮೊದಲಿಲ್ಲ ಪಾಪಿಜನುಮ
ದೋಷಗುಣಗಳು ಒಂದುಬಿಟ್ಟಿಲ್ಲ ಒಡನೆನುಡಿದ
ಭಾಷೆಗಳನು ತಿಳಿದು ನಡೆಸಿಲ್ಲ ಆಸೆ ಹರಿದಿಲ್ಲ
ಕಾಸು ಹಣಕಾಗೇಸು ಜನರನು
ನಾಶಮಾಡಿತು ಹೇಸದಲೆ ಇನ್ನು
ಮೋಸಗಾರನ ಪೋಷಿಸುವುದು
ಶ್ರೀಶ ಶ್ರೀರಾಮ ನಿನಗೆ ಕೂಡಿತು ೩

 

೪೮೪
ಹ್ಯಾಗೆತೀರಸಲಿ ವಚನ ಸಾಗದುಯತನ ಪ
ಆಗದ ಕಾರ್ಯದಿ ಎನ್ನ ಹೀಗೆ ನೂಕಿ ನೋಡ್ವರೇನೋ
ನಾಗಶಾಯಿ ಭಕ್ತರಭಿಮಾನ ಹ್ಯಾಗೆ ನಿನಗಿಲ್ಲ ಕರುಣಾಭರಣ ೧
ಹಿಂದೆ ಕಾಣದೆ ಬಿದ್ದ ಕುಣಿಯು ಮುಂದೆ
ಕಂಡು ಬೀಳ್ವ ಭೋಗವು
ಕಂದಗೆ ಬರದಿದ್ಯಾವ ನ್ಯಾಯವು ತಂದೆ
ಮುಂದಿದಕೇನುಪಾಯವು ೨
ಭಾರವಹಿಸಿದ ಭಕ್ತಜನರ ದೂರ ನೋಡಲೀಗೆಂತು ಕೇಳ್ವರು
ಭಾರನಿನ್ನದು ಕರುಣಮಂದಿರ ಪಾರುಮಾಡೆನ್ನ
ಶ್ರೀರಾಮ ಪ್ರಭುವರ ೩

 

ಉಗಾಭೋಗಗಳು
೬೬೬
ಅಂಬ ಅಂಬಿಕೆ ಅಂಬುಜದಳಾಯತಾಕ್ಷಿ
ಶುಂಭ ನಿಶುಂಭರ ಜಂಬಮಂ ಮುರಿದ
ಗಂಭೀರೆ ಗೌರಿ
ಶಂಭುವಿನರಸಿ ತವ ಪಾದಾಂಬುಜಗಳನು
ನಂಬಿಭಜಿಪರ ಇಂಬುದಾಯಕಿ
ಅಂಬುಜಾಕ್ಷ ಶ್ರೀರಾಮಪ್ರೇಮಿ ಪರತರಿ

 

೬೬೭
ಆವವರ್ಣಗಳಲಿ ಆವಮತಗಳಲಿ
ಆವಮಾತುಗಳಲಿ ಆವದೇವರುಗಳಲಿ
ಆವಜೀವರಲಿ ದೇವ ನಿನ್ನನೆ ಕಂಡು
ಭಾವಿಸಿ ಭಜಿಪೆ ಮಮಜೀವೇಶ ಶ್ರೀರಾಮ

 

೬೬೮
ಇನ್ನು ನಿನ್ನಯ ಧ್ಯಾನವನ್ನು ಬಿಡದಂತೆನಗೆ
ಮನ್ನಿಸಿ ಕೊಡು ದೃಢ ಉನ್ನತ ಭಕುತಿ
ನಿನ್ನನೇ ನಂಬಿದೆನು ನಿನ್ನ ದಾಸತ್ವವೇ
ಎನ್ನಗೆ ಸ್ಥಿರಮಾಡು ಎನ್ನಯ್ಯ ಶ್ರೀರಾಮ

 

೬೭೦
ಎಂತಾದರು ಬಿಡೆನಯ್ಯ ಕಂತುಜನಕ ನಿಮ್ಮ ಪಾದ
ದಂತ:ಕರಣ ಪಡೆವನಕ ಕುಂತಿಸುತರ ಪಾಲ
ಚಿಂತೆಪರಿಹಾರನೆ ಭಕ್ತಾಂತರಂಗನೆ ಎನ್ನೊ
ಳಿಂತು ನಿರ್ದಯ ಬೇಡ ಸಂತರೊಡೆಯ ಶ್ರೀರಾಮ

 

೬೭೧
ಎಂಥ ಕರುಣ್ಯಯ್ಯ ನೀನು ಸಂತರಾತ್ಮಕ ಪ್ರಭು
ಕಂತುಪಿತ ಕುಜನ ಕುಠಾರ ಚಿಂತೆ ಭ್ರಾಂತಿ ವಿದೂರ
ಸಂತಸದಿಂ ನೀನೆ ಎನ್ನ ಅಂತರಂಗದಿ ನಿಂತುನುಡಿಸು
ಸಂತಸಜ್ಜನರೊಪ್ಪಿ ತಲೆದೂಗುವಂತೆ ನಿಮ್ಮ ವಿಮಲನಾಮ ಶ್ರೀರಾಮ

 

೬೬೯
ಎನ್ನ ಮನದ ಹರಿದಾಟವನು ಕಳೆಯೋ ವೈಕುಂಠ
ಧಣಿ ದಾಸರೊಡನಾಟ ಕನಿಕರದಿಂ ಕರುಣದ್ವೆಂಕಟ
ಘನವಾದ ಸಂಕಟವನು ಕಳೆದು ತವನಿಷ್ಠೆ
ಯನು ಪಾಲಿಸೈ ಶಿಷ್ಟಜನವರದ ಶ್ರೀರಾಮ

 

೬೭೨
ಏನು ತಪ್ಪಿರ್ದಡೆ ನೀನೆ ತಿದ್ದೈತಂದೆ
ನಾನೇನು ಬಲ್ಲೆನು ಏನನರಿಯದಧಮ
ನೀನೆ ಎನ್ನೊಳು ನಿಂದು ಜ್ಞಾನಮಾರ್ಗಕೆ ಹಚ್ಚಿ
ಪಾನಮಾಡಿಸು ನಿನ್ನ ಧ್ಯಾನ ಅಮೃತ ಶ್ರೀರಾಮ

 

೬೭೩
ಏನು ಮೂರ್ಖನಾದೆನು ಮಾನವನಾಗ್ಹುಟ್ಟಿ ನಾ
ಜಾನಕೀಶನ ಒಲವ ಧ್ಯಾನದಿಂ ಪಡೆಯದೆ
ನಾನಾಪರಿಯಲಿ ಭ್ರಮಿಸಿ ಶ್ವಾನನಂದದಿ ಕೂಗಿ
ಖೂನವಿಲ್ಲದೆ ಕೆಟ್ಟೆ ಪ್ರಾಣೇಶ ಶ್ರೀರಾಮನೆ

 

೬೭೪
ಏನೇನು ಅರಿಯದ ಅಜ್ಞಾನಿ ನಾನಯ್ಯ
ದೀನಜನಬಂಧು ನೀ ಧ್ಯಾನಿಪರ ಸುರತರುವೆ
ನೀನೆ ಪಾಲಿಸಿ ಜ್ಞಾನ ಜಾಣನೆನಿಸಿ ನಿನ್ನ
ಧ್ಯಾನದಮೃತ ಸುರಿಸು ಪ್ರಾಣೇಶ ಶ್ರೀರಾಮ

 

೬೭೫
ಕಮಲಾಕ್ಷ ಇಂದು ನಾ ಕ್ರಮದಪ್ಪಿ ವರ್ತಿಸಿದೆ
ಕಮಲನಾಭನೆ ನಿಮ್ಮ ವಿಮಲಪಾದ ಮರೆದು
ಕ್ಷಮೆ ಮಾಡಿ ಎನ್ನ ತಪ್ಪು ಸುಮತಿಯಿಂ ಪಾಲಿಸೈ
ಶಮೆಶಾಂತಿನಿಲಯ ಶ್ರೀರಾಮಪ್ರಭು ತಂದೆ

 

೬೭೬
ಕುರುಹು ತೋರಿದಿ ದೇವ ಅರಿವುಯಿಲ್ಲದೆ ನಾನು
ಮರೆದು ನಿಮ್ಮಯ ಸ್ಮರಣೆ ಮರುಳನಾಗಿರುವೆ
ಚರಣದಾಸನ ತಪ್ಪು ಕರುಣದಿಂ ಕ್ಷಮೆ ಮಾಡಿ
ಕರುಣದಿಂ ಪೊರೆಯೆನ್ನ ಕರುಣಿ ಶ್ರೀರಾಮ

 

೬೭೭
ಕೊಡು ನಿನ್ನವರೊಡನಾಟ
ಇಡು ನಿನ್ನವರಡಿಸೇವೆ
ಬಿಡಿಸೆನ್ನ ಕಡುಸುಳ್ಳು
ನುಡಿಸು ನಿನ್ನಯ ಮಾತು
ಬಡಿಸು ನಿನ್ನೆಂಜಲವ
ತೊಡಿಸು ನಿನ್ನಡಿಭಕ್ತಿ
ಹಿಡಿಸು ವೈಕುಂಠಪಥೆ
ನ್ನೊಡೆಯ ಶ್ರೀರಾಮ

 

೬೭೮
ಕೌಸ್ತುಭಾಂಬರಧರಂ ಹರಿ ಪರಮ ಪ್ರಕಾಶಂ
ಸುರೇಶ ಪರಮಪುರುಷಂ
ಪರಾತ್ಪರಂ
ಪರಾತ್ಮರಂ ಕರುಣಮಂದಾರಂ ರಮೇಶಂ
ವರವೇದಸ್ರ‍ಮತಿಸಾರಂ ನಿರವಯಂ ನಿರಂಜನಂ
ನಿತ್ಯಾತ್ಮನಿಖಿಲೇಶಂ
ಸರ್ವಕಂಟಕ ಪರಿಹಾರಂ ನಿಗಮಾತೀತಂ
ಗುರುಕುಲೇಶಂ ಶ್ರೀರಾಮಂ ನಮೋ ಚಿ

 

೭೫೯
ಕ್ಷಮಿಸು ನಾ ಮಾಡಿದ ಅಪರಾಧ ಕೃಪೆಯಿಂದ
ನಮಿಸಿ ಬೇಡುವೆ ಹರಿಯೆ ವಿಮಲ ತವಪದಕೆ
ಸುಮನಸರೊಳಿರಿಸೆನ್ನ ಕರುಣದಿ ಸಲಹಯ್ಯ
ಕಮಲಾಕ್ಷ ನಿನ್ನ ನಂಬಿ ಮರೆಹೊಕ್ಕೆ ಶ್ರೀರಾಮ

 

೬೮೦
ಗಜಮುಖನೆ ನಿಮ್ಮಯ ನಿಜಪದಕೆ ವಂದಿಸಿ
ಭಜಿಸಿ ಬೇಡುವೆ ನಾಂ ನಿಜಸುತನೆ ದಯದಿ
ನಿಜಮತಿಯ ಕರುಣಿಸು ಸುಜನರೊಂದಿತ ಜನ
ಕಜೆಯಪತಿ ಶ್ರೀರಾಮನ ಪೊಗಳಲ್ಕೆ

 

೬೮೧
ಗೋಪಾಲವಿಠಲ ಶ್ರೀಪಾದ ಕಮಲಮಂ
ನಾಪಾಡಿ ಬೇಡುವೆನಾಪಾರಮಹಿಮ
ಕೌಪೀನಧರ ಎನಗಾಪಾರ ದಯವಿಟ್ಟು
ಕಾಪಾಡು ಮುಕ್ತಿಪದ ಸೋಪಾನ್ಹಚ್ಚಿ ಶ್ರೀರಾಮ

 

ಶೂರ್ಪನಖಿಗೆ ಭಂಗವಿತ್ತು
೬೮೨
ಚತುರ್ದಶ ಭುವನಂಗಳುದರದಿಟ್ಟು
ಸತತನುತಿಪ ಭಕ್ತರಿಗತಿ ಸೌಖ್ಯ ಕೊಟ್ಟು
ಮಿತಿದಪ್ಪಿ ಮೆರೆವ ದೈತ್ಯರ ಚಕ್ರಕೆ ಬಲಿಗೊಟ್ಟು
ಮತಿಹೀನಳಾದ ಶೂರ್ಪನಖಿಗೆ ಭಂಗವಿತ್ತು
ಅತಿಭ್ರಷ್ಟ ರಾವಣನ ಹತ್ತು ತಲೆ ಕೊರೆದಿಟ್ಟು
ಗತಿನೀನೆನಲವನ ತಮ್ಮಗೆ ಸ್ಥಿರಪಟ್ಟವನು ಕೊಟ್ಟು
ಕೃತಕೃತ್ಯ ಮಾಡಿ ನಿಖಿಳಭುವನಗಳನು ಪೊತ್ತು
ಜತನ ಮಾಡಿದಯ್ಯ ಪತಿತಪಾವನ ಶ್ರೀರಾಮ ರಕ್ಷಿಸು

 

೬೮೩
ಜಗತ್ಕಲ್ಯಾಣ ಜಗತ್ರಾಣ ಜಗಜ್ಜೀವನ
ಜಗತ್ಪಾವನ ಜಗತ್ ಸ್ಥಾಪನ ಜಗದ್ರಕ್ಷಣ
ಜಗತ್ಸೂತ್ರ ಜಗನ್ಮೋಹ ಶ್ರೀರಾಮ

 

೬೮೪
ಜಗದೀಶ ಜಗಧಾರಿ ಜಗಸೂತ್ರ ಜಗದಾತ್ಮ
ನಿಗಮಾಗಮಂಗಳಾದಿವಿನುತ ಸತತ
ನಗಧರನೆ ಖಗಗಮನ
ಮಗನಿಂದ ರಘುರಾಮ
ಪೊಗಳಿಸು ನೀನೆ ವಿಮಲ ಸುಚರಿತ

 

೬೮೫
ಜಡಜಾಕ್ಷ ಎನ್ನಯ ಜಡಮತಿಯ ಕಡೆಹಾಯ್ಸು
ಕೊಡು ವಿಮಲ ಸುಜ್ಞಾನ
ಬಿಡಿಸು ಬಂಧನಂದಿಂದೆನ್ನನು
ಕಡುದಯದಿ ತವಧ್ಯಾನೆ
ನ್ನೊಡಲಿಗೆ ದಯಮಾಡು
ಗಡನೆ ಮೂಲೋಕಂಗಳೊಡೆಯ ಶ್ರೀರಾಮ

 

೬೮೬
ಜಪನೇಮನಿತ್ಯರಿಯೆ ಸ್ರ‍ಮತಿಶಾಸ್ತ್ರವಾಕ್ಯರಿಯೆ
ತಪಯಾಗಯಜ್ಞರಿಯೆ ವೇದಾಗಮ ಮೊದಲರಿಯೆ
ಗುಪಿತಮಂತ್ರಗಳರಿಯೆ ಮಡಿಮೈಲಿಗಿನಿತರಿಯೆ
ಅಪರೂಪ ಬಲ್ಲೆನಿದೊಂದೆ ಶ್ರೀರಾಮ ನಿನ್ನಿಂದ ಮುಕ್ತಿ ಸಂಪದವೊ

 

೬೮೭
ಜಾನಕೀಶನೆ ನಿಮ್ಮ ಮೌನದಿಂದೊಲಿಸಲು
ನಾನಾಪರಿಯ ಮನವು ಕುಣಿಯುತಿಹ್ಯನು ಕೋತಿಯಂತೆ
ಧ್ಯಾನದಿಂದೊಲಿಸಲು ಜ್ಞಾನಮೊದಲಿಲ್ಲೆನಗೆ
ಏನು ಅರಿಯದಧಮ ನಾ ನೀನೆ ಸಲಹಯ್ಯ ಶ್ರೀರಾಮ

 

೬೮೮
ತೀರದೈ ಎನಗಿದರ ಸ್ವಾರಸ್ಯ ಸಂಗತಿಯು
ಕಾರುಣ್ಯನಿಧಿ ನಿನ್ನಪಾರಚರಿತವನು
ದಾರು ಬರೆಸಲು ಬರಿದೆ ತೋರು ನಿಜಸ್ಥಿತಿಯೆನಗ
ಪಾರಮಹಿಮನೆ ಒಲಿದು ಧೀರ ಶ್ರೀರಾಮ

 

೬೮೯
ದನುಜ ಸಂಹರ ನಿಮ್ಮ ವನರುಹಂಘ್ರಿಯ ನೆನಹು
ಅನುದಿನದಿ ಬಿಡೆನಯ್ಯ ಮನುಮುನಿವಿನುತ
ಜನಕಜಾಪತಿಯೆನ್ನ ಘನಪಾಪ ಖಂಡ್ರಿಸಿ
ಅಣುಗನೆಂದೊರೆಯೆಲೊ ಮಣಿವೆ ಶ್ರೀರಾಮ

 

೬೯೦
ದಾನವಾರಿಯೆ ನಿಮಗೆ ದೈನ್ಯದಿಂ ಬೇಡುವೆನು
ಪ್ರಾಣನೀಗಲು ಪುಸಿನುಡಿವ ಪ್ರಸಂಗಬೇಡ
ನಾನು ಮಾಡಿದ ಕೃತಿಗೆ ಏನು ಶಿಕ್ಷಿಸಲು ಸರಿ
ಮಾನವೊಂದಮಾತ್ರ ರಕ್ಷಿಸು ಶ್ರೀರಾಮ

 

೬೯೨
ದುರಿತ ಪರ್ವತಕ್ಕೆ ಕುಲಿಷ ಸಿರಿರಮಣನ ನಾಮ
ಪರಮ ದಾರಿದ್ರ್ಯಕ್ಕೆ ಕುಠಾರ ನರಹರಿಯ ನಾಮ
ಪರಿಭವದ ಶರಧಿಗೆ ಹರಿಗೋಲು ವೈಕುಂಠನ ನಾಮ
ಮರವೆ ಅಂಧಕಾರಕ್ಕೆ ಪರಂಜ್ಯೋತಿ ಪಾವನ ನಾಮ
ಸ್ಮರಿಸಿದ್ದನ್ನೀವುದಕ್ಕೆ ಸುರಧೇನು ಪರಮಪುರುಷನ ನಾಮ
ವರಜ್ಞಾನನೀಡ್ವುದಕ್ಕೆ ಚಿಂತಾಮಣಿ ಕಂತುಜನಕನ ನಾಮ
ಚರಣದಾಸರಿಗೆ ಪಂಚಪರುಷ ವಿರಿಂಚಿಪಿತನ ನಾಮ
ಪರಮಮುಕ್ತಿ ಸಾಮ್ರಾಜ್ಯಕ್ಕೆ ಮೂಲ ಶ್ರೀರಾಮನಾಮ

 

೬೯೧
ದುಷ್ಟನೆಂದೆನ್ನೊಳು ಇಷ್ಟುದಯ ಬರದೇನು
ಸೃಷ್ಟಿಕರ್ತನೆ ಭಕ್ತರಿಷ್ಟಪರಿಪೂರ್ಣ
ಇಷ್ಟುಪುತ್ರರೋಳೋರ್ವ ದುಷ್ಟನಾಗಲು ತಂದೆ ಕ
ನಿಷ್ಟಗೈದು ಬಿಡುವನೆ ಶಿಷ್ಟ ಶ್ರೀರಾಮ

 

೬೯೫
ನಾನಾ ಪಾಪವ ಮಾಡಿ ಏನ ಬೇಡಲಿ ನಿನ್ನ
ದೀನದಯಾಳು ಶ್ರೀ ವೇಣುಗೋಪಾಲ
ನೀ ದಯವಂತನಾಗಿ ಮಾನದಿಂ ಕಾಯೆಂದು
ಧ್ಯಾನಿಸಿ ಬೇಡುವೆನು ಧ್ಯಾನಿಪರೊಡೆಯ ಶ್ರೀರಾಮ

 

೬೯೩
ನಾನಾಪರಿ ಯೋಚಿಸಲೇನಹುದೆಲೆ ಮನವೆ
ಹೀನಯೋಚನೆ ಬಿಟ್ಟು ಜಾನಕೀಶನ ಪಾದ
ಧ್ಯಾನದದನುದಿನ ತಾನೆ ಸುಖವಂ ಕೊಟ್ಟು
ಮಾನದಿಂ ರಕ್ಷಿಪ ಬಿಡದೆ ದೀನರಾಪ್ತ ಶ್ರೀರಾಮ

 

೬೯೪
ನಾನಾಪರಿ ಯೋಚಿಸಿದೆನಭವ
ಏನುತಿಳಿದವಲ್ಲದಿದರ ನಿಜವ
ದೀನಜನರ ಬೆಂಬ¯ಪೂರ್ಣನೆ
ನೀನೆ ಬರೆದಿರುವೆಯೊ ಪಣೆಬರಹ
ನಾನೆ ಬರಕೊಂಡಿದೆನೊ ತಿಳಿಯದೆ
ಮಾಣದರುಹು ನಿಜಸಂಗತಿ ಮಮ
ಪ್ರಾಣೇಶ ಶ್ರೀರಾಮ ಪ್ರಭುವೆ

 

೬೯೬
ನಾನು ನೀನು ಒಂದೆ ಗೂಡಿನೊಳು ಇರುತಿರಲು
ನಾನ್ಹೋಗಿ ಪರರನ್ನು ಬೇಡಲಿ ಯಾಕೋ
ನೀನೆ ಎನ್ನನು ನಿಜ ನ್ಯಾಯದಿಂ ಸಲಹಯ್ಯ
ಧ್ಯಾನದಾಯಕ ಮಮ ಪ್ರಾಣ ಶ್ರೀರಾಮ

 

೬೯೭
ನಾನೇನು ಬಲ್ಲೆನೈ ನೀನೆ ಕಾರಣ ಹರಿಯೆ
ಹೀನಬವಣೆಯ ಬರಿದು ಮಾನವಜನುಮ
ಏನುಕಾರಣಕೊಟ್ಟಿ ಜ್ಞಾನಿಗರಸೆನಗೆ
ನೀನೆ ಸಕಲ ಸ್ವತಂತ್ರನಿರ್ದು ಆವ ತಪ್ಪೆನಗೆ ಶ್ರೀರಾಮ

 

೬೯೮
ನಿಗಮಗೋಚರ ನಿನ್ನ ಅಗಲಿ ನಾನಿರಲಾರೆ
ಹಗಲಿರುಳರೆಘಳಿಗೆನ್ನ ಅಗಲದೆ ಸಲಹೊ
ಭುಗಿಲು ಗುಣವ ಬಿಡಿಸಿ ಸೊಗಯಿಪ ಧೈರ್ಯವನಿತ್ತು
ಮಗನ ಸಮಯಕ್ಕೊದಗು ಜಗದಾತ್ಮ ಶ್ರೀರಾಮ

 

೬೯೯
ನಿತ್ಯ ಗುಣಾರ್ಣವ ನಿಗಮಗೋಚರ
ನಿತ್ಯನಿರುಪಮಾತ್ಮ ನಿಜಗುಣ ನಿಖಿಲೇಶ
ನಿತ್ಯ ನಿರ್ಮಲ ನಿಜಗುಣ ಪರಿಪೂರ್ಣ
ನಿತ್ಯ ಮುಕ್ತಿ ಸುಖವನಿತ್ತು ಸಲಹು ಶ್ರೀರಾಮ

 

೭೦೦
ನಿನ್ನ ಕೃಪೆಯಿಂ ನಾನು ಜನಿಸಿ ಮಾನವನಾಗಿ
ನಿನ್ನದೇ ಉಂಡುಟ್ಟು ಬದುಕಿಹೆನು ಜಗದಿ
ಇನ್ನಾರ ಹಂಗೆನಗೆ ಕಿಂಚಿತ್ತು ಇಲ್ಲಯ್ಯ
ಭಿನ್ನವಿಲ್ಲದೆ ಪೊರೆ ಶ್ರೀರಾಮ ಪ್ರಭುತಂದೆ

 

೭೦೨
ನಿನ್ನ ಸೇವಕನೆಲೊ ನಾನು
ನಿನ್ನ ಸೇವೆಯ ನೀಡೆಲೊ ನೀನು
ಭಿನ್ನವಿಲ್ಲದಡಿಗಡಿಗೆ
ನಿನ್ನ ಚರಣಂಗಳೆನ್ನ ಹೃದಯದಿ
ಮನ್ನಿಸಿ ಸ್ಥಿರಪಡಿಸಿ
ಉನ್ನತೋನ್ನತ ಮಹಿಮ
ಪನ್ನಂಗಹರಗಮನ
ಎನ್ನಯ್ಯ ಶ್ರೀರಾಮ

 

೭೦೧
ನಿನ್ನನ್ನೆ ಕಾಡುವೆನು ನಿನ್ನನ್ನೆ ಬೇಡುವೆನು
ನಿನ್ನ್ಹೊರತು ಅನ್ಯರನ್ನು ಇನ್ನ ನಾನರಿಯೆ
ಎನ್ನಾಗಿ ಪೂರೈಸು ಭಿನ್ನವಿಲ್ಲದಲೀಗ
ನಿನ್ನದಾಸನೆಂದೆನಿಸಿ ಎನ್ನಯ್ಯ ಶ್ರೀರಾಮ

 

೭೦೩
ನಿನ್ನಿಂದ ಬೆಳಗುವುದು ನಿನ್ನಿಂದ ಮುಳುಗುವುದು
ನಿನ್ನಂದಲಳಿಯುವುದು ನಿನ್ನಿಂದ ಉಳಿಯುವುದು
ನಿನ್ನಿಂದ ಶಕ್ತರು ನಿನ್ನಿಂದ ಮುಕ್ತರು
ನಿನ್ನ್ಹೊರತುಧನ್ಯರಾರೆನ್ನೊಳಿರ್ದು ಪೊರೆ ಶ್ರೀರಾಮ

 

೭೧೧
ನೀಂ ಕೊಡುವೆ ನಾ ಪಡೆವೆ
ನೀ ನೀಡದೆ ಈ ಬಡವಗೆಲ್ಲಿರ್ಪುದು ಬೇರೆ
ನಾ ನಡೆವ ನಾನಿಡುವ ನಾ ತೋರುವ
ನಾನನುಭವಿಪುದೆಲ್ಲ ನಿನ್ನದೇ ಶ್ರೀರಾಮ

 

೭೦೪
ನೀನೆ ಎನ್ನನು ಕಾಯಬೇಕರ್ಯ
ಅನ್ಯರಾರೆನಗಿಲ್ಲ ಜಗದೊಳು
ನಿನ್ನ ಬಲವೇ ಬಲವು ಮುಕ್ಕುಂದ
ನಿನ್ನ ಬಿಟ್ಟರೆ ಗತಿಯ ನಾಕಾಣೆ
ನಿನ್ನ ದಾಸ ನಾನಲ್ಲವೇನಯ್ಯ
ನಿನ್ನ ಸ್ವಾಧೀನವಖಿಲ ಇರಲಿಕ್ಕೆ
ಎನ್ನಗೀಪರಿ ನಿಷ್ಠೂರ್ಯಾತಕ್ಕೆ
ನಿನ್ನ ನಂಬಿದೆ ಸಲಹು ಶ್ರೀರಾಮ

 

೭೦೫
ನೀನೆ ಗತಿಯೆನಗೆ ಧ್ಯಾನಿಪರ ಸುರಧೇನು
ದೀನಜನಮಂದಾರ ಜಾಹ್ನವೀಜನಕ
ನಾನಾದೈವಂಗಳನು ನಾನರಿಯೆ ನಾನರಿಯೆ
ನೀನೆ ರಕ್ಷಿಸು ಎನ್ನ ಪ್ರಾಣ ಶ್ರೀರಾಮ

 

೭೦೬
ನೀನೆ ಜಗತ್ಸೂತ್ರನು ದೀನಜನರಾಪ್ತನು
ಧ್ಯಾನಿಪರ ಜೀವನೆ ದೀನನೊಳೊಲಿದು
ಏನು ಬಂದುದನೆಲ್ಲ ನೀನೆ ನಿವಾರಿಸುತ
ಮಾನದಿಂ ಪೊರೆಯೆನ್ನ ಪ್ರಾಣೇಶ ಶ್ರೀರಾಮ

 

೭೦೭
ನೀನೆ ನಿರ್ಮಲಚಿತ್ತ ದೀನಜನ ಪ್ರಾಣದಾಪ್ತ
ಪ್ರಾಣ ಮೂಜಗನ್ನಾಥ ಜಾನಕೀ ಶ್ರೀರಾಮ ಪ್ರಮಥ

 

೭೦೮
ನೀನೆ ಮಣಿಸುವಿ ನೀನೆ ಓಡಿಸುವಿ
ನೀನೆ ನಗಿಸುವಿ ನೀನೆ ಅಳಿಸುವಿ ಜೀವಕೋಟಿಗಳ
ನೀನೆ ಕೊಡುವಿಯೊ ನಾನಾ ಸುಖದು:ಖ
ನೀನೆ ಬಿಟ್ಟಬಳಕೇನು ನರನ ಸ್ವತಂತ್ರ ಶ್ರೀರಾಮ

 

೭೦೯
ನೂಕಿ ಭವದೊಳು ಎನ್ನ ಕಾಕು ದೃಷ್ಟಿಯಿಂದವ
ಲೋಕಿಸುವೆಯೆಲೆ ದೇವ
ಏಕೆ ನಿನ್ನಯ ಮನಕೆ ಬಾರೆನು
ಶ್ರೀಕರನ ತವಪಾದ ಏಕಚಿತ್ತದಿಂ ಭಜಿಪೆ
ಜೋಕೆ ಮಾಡೈ ದಯದಿ ತ್ರಿಲೋಕೇಶ ಶ್ರೀರಾಮ

 

೭೧೦
ನೋಡಿ ಮಾಡಿಲ್ಲ ನಾ ಮಾಡಿ ಬೇಡಿಲ್ಲ ನಾ
ಬೇಡಿ ಪಡೆದಿಲ್ಲ ನಾ ರೂಢಿಯ ಮೇಲೆ
ಕೂಡಿ ಆಡಿಲ್ಲ ನಾ ಆಡಿ ಅರಿತಿಲ್ಲ ನಾ
ಕೂಡಿ ಹಿಂದಿನ ಸುಕೃತದ್ಹಿಡಿದೆ ಶ್ರೀರಾಮನ

 

೭೧೨
ಪತ್ತಿಲ್ಲದ ಮಾನವಿದನಿತ್ಯ ಭವದೊಳಗೆನ್ನ
ಕತ್ತೆಯಂತ್ಹಾರಾಡಿಸಿ ಸತ್ಯಮಂ ಮರೆಸಿ
ಮಿಥ್ಯೆಅವರ್ತನದೆಳಸಿ ಮತ್ತೆ ನಿಮ್ಮನು ಮರೆಸಿ
ವ್ಯರ್ಥ ಮಾಡುವುದೆನ್ನ ಮರ್ತಿರಬೇಡ ಶ್ರೀರಾಮ

 

೭೧೪
ಪದುಮಧರನೆ ಪದುಮನೇತ್ರನೆ
ಪದುಮ ನಾಭನೆ ಪದುಮಜಪಿತನೆ
ಪದುಮಜ ಪತಿಯೆ ಪದುಮಶರತಾತ
ಪದುಮವತಿನಾಥ ಪಾದಕೊಂದಿಪ್ಪೆ ಶ್ರೀರಾಮ

 

೭೧೩
ಪದ್ಮನಾಭನೆ ನಿಮ್ಮ ಶುದ್ಧ ಶ್ರೀಪಾದದಿ
ಬಿದ್ದು ಬೇಡವೆನಯ್ಯ ನಿರ್ಧರಿಸಿ ದೃಢವ
ಅಬ್ಧಿಶಯನನೆ ಎನ್ನಬದ್ಧ ದುರ್ಬವಣೆಯನ್ನು
ತಿದ್ದಿ ಪೊರೆ ಬೇಗನೆ ಮುದ್ದು ಶ್ರೀರಾಮ

 

೭೧೫
ಪನ್ನಂಗಶಯನ ಎನಗಾಧಾರ ನೀನೆ
ನಿನ್ನ ಬಿಟ್ಟರೆ ಎನಗೆ ಅನ್ಯಬಲವಿಲ್ಲ್ಹರಿಯೆ
ಇನ್ನು ಭವಭವದಿ ನಿನ್ನ ಪದಕೆ ಬೇಡುವೆ
ನಿನ್ನಡಿಭಕ್ತಿ ಕೊಡು ಶ್ರೀರಾಮ

 

೭೧೬
ಪನ್ನಂಗಶಯನ ನಿನ್ನದೇ ತಪ್ಪಥವ ನನ್ನದೇ ತಪ್ಪೋ
ನನಗು ನಿನಗು ನ್ಯಾಯ ಹೇಳಿತೀರಿಸುವರಾರಪ್ಪ
ನಿನ್ನನೇ ಕೇಳುವೆನು ಅನ್ಯಾಯವಿಲ್ಲದ್ಹೇಳಪ್ಪ
ಎನ್ನನೀ ದುರ್ಭವಕೆ ನೂಕಿದವರಾರಪ್ಪ
ಗನ್ನಗತಕಗುಣಗಳಿತ್ತವರಾರಪ್ಪ
ಇನ್ನು ನಾನಾ ಬೇನೆಯಲಿ ಬನ್ನಬಡಿಸುವರಾರಪ್ಪ
ಎನ್ನೊಳನೃತವಿತ್ತು ಜವಗೀಡು ಮಾಡುವರಾರಪ್ಪ
ಭಿನ್ನವಿಲ್ಲದೆ ನ್ಯಾಯ ಹೇಳಪ್ಪ
ಎನ್ನಪ್ಪ ಶ್ರೀರಾಮ ಮನ್ನಿಸು ತಪ್ಪ

 

೭೧೭
ಪರನಿಂದೆಯಲ್ಲಿ ಎನ್ನ ಸರಿಯಾರು ಧರೆಮೇಲೆ
ದುರಿತಕರ್ಮದೆನಗೆದುರಿರುವರೇ ಲೋಕದಿ
ಗುರುವ ಹಿರಿಯರ ಜರೆವಲ್ಲಿ ಮಹನಿಪುಣ
ಪರಮಪಾಪಿಗಳಿಗೆಲ್ಲ ಹಿರಿಯ ನಾ ಶ್ರೀರಾಮ

 

೭೧೯
ಪಾವನನಾಮ ಪಾಪವಿರಾಮ
ಸೇವಕಜನಪ್ರೇಮ
ಸುಜನಸುಖಧಾಮ ರಕ್ಕಸಕುಲಭೀಮ
ರಮಣೀಯ ನಾಮ
ನೀಲಮೇಘಶ್ಯಾಮ ನಮಿತಸುರಸ್ತೋಮ
ಭಜಕಜನೋದ್ದಾಮ
ಭಕ್ತ ಕಲ್ಪದ್ರುಮ ಗಿರಿಜೇಶನ್ಹಿತನಾಮ
ಗಿರಿಜೆಸನ್ನುತ ನಾಮ
ರಮೆಗೊಲಿದ ನಾಮ ರಘುಕುಲಸೋಮ
ಮುಕ್ತಿಪ್ರದಾನ ಶ್ರೀರಾಮ ನಾಮ

 

೭೨೦
ಬಡವರಾಧಾರನೆ ಬಡಭಕ್ತನ ರತಿಯನು
ಕಡುದಯದಿ ಮನ್ನಿಸಿ ಕಡೆಹಾಯ್ಸು ಚಿಂತೆಯಿಂದೆನ್ನ
ಪಿಡಿದು ನೀಂ ಬಿಡದೆನ್ನ ಒಡಲೊಳಿರ್ದೆಡೆಬಿಡದೆ
ಕೊಡು ನಿನ್ನ ದೃಢಭಕ್ತಿ ಒಡೆಯ ಶ್ರೀರಾಮ

 

೭೨೧
ಬರಿದೆ ಪರರಿಗೆ ಕುಂದು ಅರಿಯದೆ ಹೊರಿಸಿ ನಾ
ಗುರಿಯಾದೆ ದುರಿತಕ್ಕೆ ಮರವಿನೊಳು ಬೆರೆದು
ತಿರುಗಿ ಎನಗೀ ಮರೆವು ಬರದಂತೆ ದಯಮಾಡಿ
ಅರಿವು ಕರುಣಿಸಿ ಪೊರೆಯೈ ವರದಶ್ರೀರಾಮ

 

೭೨೨
ಬೇಡುವುದು ನೀಡದಿರು ರೂಢಿಯೊಳು
ಮೂಢಜನ ಸೇವೆ
ಮಾಡಿ ಮುಖ ಬಾಡಿ ಪರರ
ಬೇಡ್ವುದ ಕಡೆಮಾಡು ಶ್ರೀರಾಮ

 

೭೧೮
ಭಕ್ತವತ್ಸಲನೆಂಬ ಯುಕ್ತ ಬಿರುದುಗಳು ಕರ
ವೆತ್ತಿ ಸಾರುತಿವೆ ಯಾವತ್ತು ಭುವನದೊಳಗೆ
ಅರ್ತು ಭಜಿಸುವೆ ನಿನ್ನ ಭಕ್ತಜನರಾಪತ್ತು
ತುರ್ತು ಪರಿಹರಿಸು ಮಮ ಕರ್ತ ಶ್ರೀರಾಮ

 

೭೨೪
ಭಾರ ನಿನ್ನದಪಾರ ಮಹಿಮನೆ
ಘೋರ ದುರಿತದಿ ಪಾರು ಮಾಳ್ಪುದು
ಧೀರ ಪದಕೆ ಪರದಾರಿ ತೋರಿಸಿ
ಚಾರುವೇದ ಸುಸಾರವನು ತಿಳಿಸಿ
ಗಾರಮಾಳ್ಪ ಭವ ದೂರ ತೊಲಗಿಸಿ
ತಾರತಮ್ಯ ಸುವಿಚಾರ ಕರುಣಿಸಿ
ಸ್ವಾರಸ್ಯದ ಸುಖ ತೋರಿ ಪಾಲಿಸು
ನೀರಜಾಕ್ಷ ಸುಖಸಾರ ಶ್ರೀರಾಮ

 

೭೨೩
ಭಾರ ನಿನ್ನದು ದೇವ ಮಾರಜನಕೆ ಎನ್ನ
ಘೋರ ಸಂಕಟವನ್ನು ದೂರಮಾಡುವುದು
ಸಾರಸಾಕ್ಷನೆ ನಿಮ್ಮಪಾರಕರಣವು ಎನಗೆ
ತೋರಿ ಬೇಗನೆ ಸಲಹು ಧೀರ ಶ್ರೀರಾಮ

 

೭೨೫
ಭುಜಗಶಯನನೆ ತವ ನಿಜದಾಸರನು ಮುಂದಿಟ್ಟು
ಭಜಿಪೆ ಭಕ್ತಿಲಿ ನಿನ್ನ ನಿಜಪಾದ ಅನವರತ
ಸುಜನರೊಂದ್ಯನೆ ಎನ್ನ ಗಜಿಬಿಜಿಯ ತೊಲಗಿಸಿ
ನಿಜಮತಿಯಿತ್ತು ನಿನ್ನ ನಿಜಧ್ಯಾನ ಕರುಣಿಸು ಶ್ರೀರಾಮ

 

೭೩೩
ಮಂದಮತಿ ನಾನೊಂದು ಅರಿಯೆನು
ಕುಂದು ನಿಂದೆಗಳೊಂದು ಎನಗಿಲ್ಲ
ಕಂದನೊಡಲೊಳು ತಂದೆ ಹರಿ ಗೋ
ವಿಂದ ಶ್ರೀರಾಮ ನಿಂದು ನುಡಿಸಿದನು

 

೭೩೪
ಮಂದರಧರ ಗೋವಿಂದ ನಿಮ್ಮಯ ಪಾದ
ದ್ವಂದ್ವಕ್ಕೆ ಭಕುತಿಲಿ ವಂದಿಸಿ ಬೇಡ್ವೆ
ಕಂದನಂ ಮರೆಯದೆ ಬಂದು ಬೇಗನೆ ವರ
ತಂದೆ ಪಾಲಿಸು ದಯಾಸಿಂಧು ಶ್ರೀರಾಮ

 

೭೨೬
ಮಗನ ವಚನವ ಮಿಗಿಲಾಗಿ ಕಾಯುವ
ಬಗೆ ನಿನಗೆ ಕೂಡಿತು ಖಗಗಮನ ಶ್ರೀರಾಮ

 

೭೨೭
ಮನವು ಹರಿಯುವುದಯ್ಯ ವನಜಾಕ್ಷ ನಿಮ್ಮಪಾದ
ವನರುಹವ ಕಾಣಲು ಕನಿಕರದಿ ಎನ್ನ
ಮನಸಿನ ಭಯಹರಿಸಿ ಅನುಕೂಲ ಕರುಣಿಸು
ಮಣಿದು ಬೇಡುವೆನಯ್ಯ ಘಮನಹಿಮ ಶ್ರೀರಾಮ

 

೭೨೮
ಮಾನವ ಜನುಮಕೆ ಮಾನವೇ ರೂಪವು
ಮಾನಪೋದಬಳಿಕೇನಿರುಲು ಏನು
ಶ್ವಾನನ ಕನಸಿನಂತ್ಹೀನ ಸಂಸಾರಸುಖ
ಮಾನದಿಂ ಪೊರೆ ಭಕ್ತಧೇನು ಶ್ರೀರಾಮ

 

೭೨೯
ಮುರಹರನೆ ನೋಡೆನ್ನ ಪರಿಭವದ ದು:ಖವನು
ಮರಮರನೆ ಮರುಮರುಗಿ ಕೊರಕೊರಗಿ ಮನ ಕಾತರಿಸಿ
ತಿರುತಿರುಗಿ ಧರೆಯೊಳಗೆ ಹರಿಹರಿ ಬೇಸತ್ತೆ
ಮರೆದಿರೆನು ತವಸ್ಮರಣೆ ಪೊರೆ ಸತತ ಶ್ರೀರಾಮ

 

೭೩೦
ಮೂಢನು ನಾ ನಿನ್ನ ಗಾಢಮಹಿಮೆಯ ಕೊಂ
ಡಾಡಲೇನು ಬಲ್ಲೆ ಜಡಸಂಭವಗಸಾಧ್ಯ
ಮೂಢಭಕ್ತಿಯಿಂ ಕಾಪಾಡು ದಯಾಳೆಂದು
ಬೇಡುವೆನು ನೀಡು ವರ ರೂಢಿಪತಿ ಶ್ರೀರಾಮ

 

೭೩೧
ಮೃತ್ಯುಲೌಕಿಕದ ವರ್ತನಗೆ ಮನಗೊಟ್ಟು
ವ್ಯರ್ಥ ನಾನಾದರಪಕೀರ್ತಿ ನಿನಗಲ್ಲೇನು
ಕರ್ತು ನೀ ಗತಿಯೆಂದು ನಿರ್ತ ಮಾನಸದಿಂ
ದರ್ತು ನಾಂ ಭಜಿಸುವೆನು
ತುರ್ತು ದಯವಾಗು ಶ್ರೀರಾಮ

 

೭೩೨
ಮೊರೆ ಕೇಳಿ ಭಕ್ತಂಗೆ ಕರುಣಿಸು ಬೇಗನೆ
ಸೆರೆಗೊಡ್ಡಿ ಬೇಡುವೆ ಹರಿ ನಿಮ್ಮ ಧ್ಯಾನಮಂ
ಅರೆಘಳಿಗ್ಯಗಲಿಸದೆ ಇರಿಸೆನ್ನ ಹೃದಯದಿ
ಸುರಧೇನು ಚಿಂತಾಮಣಿ ವರಕಲ್ಪದ್ರುಮ ಶ್ರೀರಾಮ

 

೭೩೫
ಶ್ರೀಮತ್ ಚಿತ್ಕಲಾರೂಪಿಣಿ ಕಾತ್ಯಾಯಿನಿ
ಕಾಮಿತಫಲಪ್ರದಾಯಿನಿ ಕರುಣಿ
ಮಾಮನೋಹರಿ ಮಂದಹಾಸಿನಿ ಕಾಮೇಶ್ವರ
ಮಾಮಾಂಕಸಿಂಹಾಸಿನಿ ಜಗತ್ರಾಣಿ
ಸೋಮಾರ್ಕಕೋಟಿತೇಜಸ್ವಿನಿ
ತಾಮಸ ಶುಂಭ ನಿಶುಂಭ ಹರಿಣಿ ಧುರಿಣೀ
ಸೋಮಧರನ ರಾಣಿ ಎನ್ರ‍ಹತ್ಕಮಲದಿ ನಿಂದು ಶ್ರೀ
ರಾಮಧ್ಯಾನಕುತ್ತೇಜನವ ನೀಡೆ ಜನನಿ ಕಲ್ಯಾಣಿ

 

೭೩೬
ಶ್ರೀರಂಗ ಕೃಪಾಂಗ ಭವಭಂಗ ಭಕ್ತಾಂ
ತರಂಗ ಎನ್ನ ಭಂಗ ಇಲ್ಲದ್ಹಾಂಗ ಮಾ
ಡನಂಗಪಿತ ಶ್ರೀರಾಮ

 

೭೩೭
ಶ್ರೀಶ ಭಜನದೊಳ್ ಧ್ಯಾನಿಪಂ ನುಡಿನುಡಿಗೆ
ಶ್ವಾಸ ಬಿಡದ್ವಿರಲೆಂದು ಸೋಸಿ ನೂರೆಂಟುಸಾರೆನಲು
ದೋಷನಾಶನರಾಗಿ ಮೋಹಪಾಶವ ಗೆಲಿದು
ಶ್ರೀಶ ಶ್ರೀರಾಮನಂಘ್ರಿದಾಸಪದಕೈದುವರು ಸತ್ಯದಿ

 

೭೪೭
ಸಂಧಿಸಿಹ್ಯ ಸಂಕಟದಿಂದ ಗೆಲಿಸಿ ಎನಗೆ
ಮುಂದೆ ಬುದ್ಧಿಯ ಕಲಿಸಿ
ಹೊಂದಿ ನಿನ್ನಯ ಪಾದ ಎಂದೆಂದು ಬಿಡದಂಥ
ಬಂಧುರ ಭಕ್ತಿಯನು ಕಂದನಿಗೆ ಕರುಣಿಸಿ
ತಂದೆ ಕಾಪಾಡು ಶ್ರೀರಾಮ

 

೭೩೮
ಸಕಲಮಂತ್ರವು ಶ್ರೀರಾಘವೇಂದ್ರನ ನಾಮ
ನಿಖಿಲಿಸಿದ್ಧಿಯ ಜಾನಕಾರ್ಯನ ನಾಮ
ಅಖಿಲಸಂಪದವಕಳಂಕ ಮನತಪವು
ಸುಖಕರ ಸರ್ವರಿಗೆ ಶ್ರೀರಾಮನಡಿಭಕ್ತಿ

 

೭೩೯
ಸನಕಸಂದರೆಣಿಕೆಯಿಲ್ಲದೆ ನಿನ್ನ
ಇನಿತು ಪೊಗಳುವರಯ್ಯ
ಘನತರಭಕುತಿಲಿಂದ
ಅಣುರೇಣುತೃಣಕಾಷ್ಠ ಪರಿಪೂರ್ಣನಹುದು
ಕನಿಕರದಿಂ ಮನ್ನಿಸೈ ಎನ್ನ ತಪ್ಪ ಶ್ರೀರಾಮ

 

೭೪೦
ಸಾಕು ಸಾಕಯ್ಯ ಈ ಲೋಕವಾಸವು ಎನಗಿ
ನ್ಯಾಕೆ ಭ್ರಷ್ಟನಾಗಿ ಅನೇಕ ಕಾಲವಿರಲೇನು
ಲೋಕಾದಿಲೋಕಗಳ ಜೋಕೆಮಾಡುವ ಜಗ
ದೇಕನಾಥ ಶ್ರೀರಾಮ ನೀ ಮೂಕನಾದ ಬಳಿಕ

 

೭೪೧
ಸಾಧನವು ಸಾಗ್ವವೆಂತ್ವೇದ ನಿಗಮಕೆ ನಿನ್ನ
ಆಧಾರವಿಲ್ಲದೆ ಮಧುಸೂದನ ಮುರಾರಿ
ಪಾದದಾಸನು ನಿನ್ನ ಪಾದ ಮಹಿಮ್ಯರಿಯದೆ
ವಾದಿಸಿದ ತಪ್ಪು ಕ್ಷಮಿಸನಾದಿ ಶ್ರೀರಾಮ

 

೭೪೨
ಸಾಲವನು ಕೊಳುವಾಗ ಜೇನುತುಪ್ಪಮೆದ್ದಂತೆ
ಸಾಲಿಗನು ಕೇಳಲಾಗ ಹೊಟ್ಟೆಯೋಳ್ಬೆಂಕಿ ಬಿದ್ದಂತೆ
ಗೋಳು ಒದಗಿತು ತನ್ನ ಸತಿಸುತರು ಸತ್ತಂತೆ
ಹಾಳುಗುಣಗಳೆನಗೆ ಬೇಡಯ್ಯ ಶ್ರೀರಾಮ

 

೭೪೩
ಸಿರಿಯರಮಣ ದುರಿತಹರಣ
ಶರಧಿಶಯನ ಗರುಡಗಮನ
ಪರಮ ಕರುಣ ಕರುಣಾಭರಣ
ಶರಣುಸುಜನ ಕರುಣಿ ಶ್ರೀರಾಮ

 

೭೪೪
ಸಿರಿವರನೆ ಎನ್ನಯ ಮರೆವು ಮಾಯಗಳ್ಹರಿಸಿ
ಅರಿವು ಸ್ಥಿರನಿಲಿಸಿ ದುರಿತದಿಂ ಗೆಲಿಸಿ
ಕರಪಿಡಿದು ಎನ್ನನು ಕರುಣದಿಂದ ಪೊರೆಯೆಂದು
ಚರಣಕ್ಕೆ ಎರುಗುವೆ ಕರುಣಾಕರ ಶ್ರೀರಾಮ

 

೭೪೫
ಸುಖದಿಂದಿರುವರ ಕಂಡು ಜಕಜಕನೆ ಜರಿಯುತ
ದು:ಖಪಡುವ ಶರೀರಸುಖ ಸಾಕು ಅಖಿಲೇಶ
ನಿಖಿಲ ಸ್ವತಂತ್ರ ನಿನ್ನನು ಭಕ್ತಿಯಿಂ ಬೇಡುವೆನು
ಮುಕುತಿಕರುಣಿಸು ಬೇಗ ಭಕುತನಾಭ ಶ್ರೀರಾಮ

 

೭೬೦
ಸುಮಂಗಲೆ ಸುನೀತೆ ಸುಜನಸನ್ನುತೆ
ಸುರಸೇವೆ ಶಂಕರಿ ಶುಭಚರಿತೆ
ಸುಖದಾತೆ ಸುಮನವಾಸೆ ಸುವಾಣಿ ಶೌರಿ
ಶುಭಗಾತ್ರೆ ಸುಚರಿತ್ರೆ ಸರಸಿಜದಳನೇತ್ರೆ
ಸುಗುಣಿ ಶಾಂತಾಕಾರಿ ಸ್ಮರಿಪಜನ
ಸುರಚಿಂತಾಮಣಿ ಶ್ರೀರಾಮ
ನಾಮೆನ್ನ ಜಿಹ್ವೆಯೊಳ್ಬರಿ ಸುಖಕರಿ

 

೭೪೬
ಸೃಷ್ಟೀಶ ಎನ್ನತಪ್ಪು ಎಷ್ಟಿಗ್ಚಿÀಲು ನೀಂ ದಯ
ದೃಷ್ಟಿಯಿಂ ಕ್ಷಮೆಮಾಡು ಕಷ್ಟನಿವಾರ
ಗಟ್ಟ್ಯಾಗಿ ನೆರೆನಂಬಿ ನಿಷ್ಠೆಲಿ ಬೇಡ್ವೆ ಭಕ್ತ
ರಿಷ್ಟದಾಯಕನೆನ್ನ ಇಷ್ಟದೇ ಶ್ರೀರಾಮ

 

೭೪೮
ಸ್ಮರಣವಾಗದು ಮನವು ತವಧ್ಯಾನವು
ದೊರಕವಲ್ಲದು ಜಿಹ್ವೆಗೆ ನಿನ್ನ ನಾಮಾಮೃತವು
ಅರಿವಿಕೆಗೆ ಬಾರದು ನಿನ್ನ ವಿಮಲ ಸಚ್ಚರಿತವು
ಕರಕೆ ಸಿಗದಯ್ಯ ತವಚರಣ ಸೇವೆಯು
ಸ್ಥಿರವಾಗಲೊಲ್ಲದು ನಯನದಿ ತವಮೂರ್ತಿ
ಕರದಿಂ ಬರೆಯಲು ಸಾಗದು ತವಕೀರ್ತನೆ
ಚರಣದಾಸನಪರಾಧ ಗಣಿಸದೆ ಮನ್ನಿಸಿ
ಕರುಣಿಸು ನಿನ್ನ ಪ್ರಸನ್ನತೆ ವರದ ಶ್ರೀರಾಮ

 

೭೪೯
ಹರಿ ನಿಮ್ಮ ಉಪಕಾರ ಮರೆಯೆನಾವಕಾಲದಿ
ಪರಮದಯಾಕರನೆನ್ನ ದುರಿತಪರ್ವತವ
ವರಕುಣಕಟಾಕ್ಷದಿಂದರಿದು ಪೊರೆ ತವಚರಣ
ಸ್ಮರಣಾಮೃತವನಿತ್ತು ದುರಿತಹರ ಶ್ರೀರಾಮ

 

೭೫೦
ಹರಿ ನಿಮ್ಮ ಚರಣವು ದೊರಕುವುದು ಎನಗೆಂತು
ಅರಿಯೆನಿನಿತು ಸದ್ಧರ್ಮ ಪರಮಪಾಪಾತ್ಮ ನಾನು
ಗುರುಹಿರಿಯರನು ನಾನು ಪರಿಪರಿಯಿಂ ನಿಂದಿಸಿದೆ
ಪರಮತಪ್ಪೆಣಿಸದೆನ್ನ ಪೊರೆಯೊ ಶ್ರೀರಾಮ

 

೭೫೨
ಹರಿ ನಿಮ್ಮ ಶುಭಚರಿತ ನುಡಿಸೆನ್ನ ವದನದಿಂ
ಹರಿಸೆನ್ನ ಮಂದಮತಿ ಕೊಡು ವಿಮಲಸುಜ್ಞಾನ
ಸುರಿಸೆನ್ನ ಜಿಹ್ವೆಯಿಂ ಕಡುಸತ್ಯವಚನಗಳು
ಜರಾಮರಣ ಪರಿಹರಿಸು ಸ್ಮರಿಪೆ ಶ್ರೀರಾಮ

 

ಹದಿನಾಲ್ಕು ಪದಗಳಿದ್ದು
೭೫೧
ಹರಿ ನಿಮ್ಮಯ ಸ್ಮರಣೆಯೇ ಶುಭಕರಣ ನಕ್ಷತ್ರ
ಹರಿ ನಿಮ್ಮ ಭಜನೆಯೇ ಶುಭಯೋಗ ತಿಥಿ ವಾರ
ಹರಿ ನಿಮ್ಮ ಕೀರ್ತನವೇ ಪಕ್ಷಮಾಸ ಪರ್ವಕಾಲ
ಹರಿ ನಿಮ್ಮ ಸ್ತೋತ್ರವೇ ನಿತ್ಯನೇಮ ಹಬ್ಬ
ಹರಿ ನಿನ್ನ ಪೊಗಳುವುದೇ ಜಪತಪ ಸಾಧನವು
ಹರಿ ನಿನ್ನ ಚರಣವೇ ಯಾಗ ಯಜ್ಞಗಳಯ್ಯ
ಹರಿ ನಿನ್ನ ಧ್ಯಾನವೇ ಗಾಯತ್ರಿ ತಾರಕವೋ
ಸಿರಿರಾಮ ನಿನ್ನ ನಾಮವೇ ಮುಕ್ತಿ ಸಾಮ್ರಾಜ್ಯಯ್ಯ

 

೭೫೩
ಹರಿ ನೀನೆ ಬರೆದ್ಯೆನಲು ದುರಿತ ಕರ್ಮಗಳ್ಯಾಕೆ
ಬರಕೊಂಡೆ ನಾನೆನಲು ನನಗಧೀನವೇ
ಶರಣಾಗತವತ್ಸಲನೆ ತ್ವರಿತಿದರ ಪರಿ ತಿಳುಹಿ
ಪರಿಹರಿಸು ಮನಸಿನ ಮರುಳುತನ ಶ್ರೀರಾಮ

 

೭೫೪
ಹರಿ ಹರಿ ಎನ್ನೊಡನೆ ವೈರತ್ವ ಸಾಧಿಪರ
ಶಿರ ಒಂದಕ್ಹತ್ತಾಗಿ ಚಿರಕಾಲ ಸುಖದಿ
ಇರಲವ ಧರೆಮೇಲೆ
ನಿರುತಬೇಡುವೆ ನಿನಗೆ
ಕರುಣೆಸೆನಗೆ ತವಸ್ಮರಣೆ ಶ್ರೀರಾಮ

 

೭೫೬
ಹರಿ ಹರಿ ನಿಮ್ಮಯ ವರಮಹಿಮೆ ಅರಿಯಲು
ಹರಿವಿರಿಂಚಿಗಳಿಗಸದಳ ಪರಮ ಪಾಮರ ನಾನು
ಅರಿಯುವೆನೆಂತಯ್ಯ ಕರುಣಿಯೆಂದೆಂಬ ನಿಮ್ಮ
ಬಿರುದೊಂದೆ ಅರಿತ್ಹೊಗಳ್ವೆ ಕರುಣದೊರೆ ಶ್ರೀರಾಮ

 

೭೫೫
ಹರಿಹರಿ ನಿಮ್ಮಯ ಚರಣ ಸರೋಜಕ್ಕೆ
ಶಿರಬಾಗಿ ಬೇಡುವೆನು ಸ್ಮರಿಪರ ಜೀವನೆ
ಮರಣವಾದರು ಕೊಡು ಮರಿಯಾದೆ ಕಳಿಬೇಡ
ಹರಿದ್ಹೋಗ್ವ ಸಂತೆಪರಿಪ್ರಪಂಚದಿ ಶ್ರೀರಾಮ

 

೭೫೭
ಹಿಡಿಯಬಹುದು ಫಣಿವನ್ಹೆಡೆಯನು
ಕುಡಿಯಬಹುದು ಕಾಲಕೂಟವಿಷವನು
ನಡೆದು ದಾಂಟಬಹುದು ಕಡಲೇಳನು
ಪಿಡಿದು ಸುರುಳಿ ಸುತ್ತ ಬಹುದಿಡೀಭೂಮಿಯನು
ಒಡನೆ ಬೆನ್ನಟ್ಟೋಡಿಸಬಹುದ್ಯಮನನು
ಬಿಡದೆ ಕಾಯದಿಂ ಸೇರಬಹುದ್ವಯ್ಕುಂಠವನು
ಪಿಡಿದು ಕಟ್ಟಲುಬಹುದು ತ್ರಿಣಯರನು
ಕಡುಕಷ್ಟ ಈ ಮನವ ನಿಲ್ಲಿಪುದು ಶ್ರೀರಾಮ

 

೭೫೮
ಹುಟ್ಟಬಾರದಿತ್ತು ನಾ ಹುಟ್ಟಿದರೇನಾಯಿತು
ನಿಷ್ಠರೊಡೆಯ ತವನಾಮ ಗಟ್ಟಿಸಿಕ್ಕಿತೆನಗೆ
ಭ್ರಷ್ಟತ್ವವನು ಬಿಡಿಸಿ ದುಷ್ಟಗುಣಳುಕಿಸಿ
ಶಿಷ್ಟಸಂಗದಿರಿಸಿ ಇಂಬುಗೊಟ್ಟು ಪೊರೆ ಶ್ರೀರಾಮ

 

ಆವದೇವರಿಗುಂಟೀ ವೈಭವ
೧೧
ಆವದೇವರಿಗುಂಟೀ ವೈಭವ ಪ
ಸಾರ್ವಭೌಮ ನೀನೆ ಸಕಲ
ದೇವರೊಳಗೆ ಭಾವಜನಯ್ಯ ಅ.ಪ
ಸಿರಿಯರೆಂಟುಮಂದಿ ನಿನಗೆ
ಅರಸಿಯರು ಕರುಣಶರಧಿ
ಸುರರು ಮೂವತ್ತು ಮೂರು ಕೋಟಿ
ಚರಣಸೇವಕರಯ್ಯ ಹರಿಯೆ೧
ಅನುದಿನವು ಎಡೆಬಿಡದೆ ಮನು
ಮುನಿಗಳ ಸುಜನ ಸಂತತಿ
ಘನವೇದಘೋಷದಿಂದ
ನೆನೆದು ಪೂಜಿಪರಪರಿಮಿತ ಲೀಲೆ ೨
ಕೋಟಿಸೂರ್ಯಪ್ರಕಾಶ ನಿನ್ನ
ಆಟ ಬಲ್ಲವರಾರು ಜಗದಿ
ಆಟವಾಡುವಿ ಅಗಮ್ಯಚರಿತ
ಸಾಟಿಯಿಲ್ಲದೆ ಧನವ ಕಲಸಿ ೩
ಕರೆಸಿ ಅಸಮಭಕುತ ಜನರ
ವರವ ನೀಡಿ ಮುಡಿಪುಗೊಂಡು
ಮೆರೆವಿ ಪರಮ ಉತ್ಸವದೊಡನೆ
ಗಿರಿಯ ಭೂವೈಕುಂಠಮೆನಿಸಿ ೪
ಕಿಂಕರ ಜನರ ಪೊರೆಯಲೋಸುಗ
ವೆಂಕಟಾದ್ರಿಯಲ್ಲಿ ನಿಂದಿ
ವೆಂಕಟೇಶ ಕಿಂಕರಜನರ
ಸಂಕಟಹರ ಶ್ರೀರಾಮಪ್ರಭೋ ೫

 

ಹಾಡಿನ ಹೆಸರು :ಆವದೇವರಿಗುಂಟೀ ವೈಭವ
ಹಾಡಿದವರ ಹೆಸರು :ಸುಮನಾ ವೇದಾಂತ್, ಮುಕ್ತಾ ಮುರಳಿ, ನಾಗಲಕ್ಷ್ಮಿ, ಅನ್ನಪೂರ್ಣ ಕೆ. ಮೂರ್ತಿ
ರಾಗ :ರಾಗಮಾಲಿಕೆ
ತಾಳ :ಖಂಡಛಾಪು ತಾಳ
ಸಂಗೀತ ನಿರ್ದೇಶಕರು :ಸುಕನ್ಯಾ ಪ್ರಭಾಕರ್
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

 

ಇದು ಸ್ನಾನ ಇದು ಸ್ನಾನ
೪೯೩
ಇದುಸ್ನಾನ ಇದುಸ್ನಾನ ಇದುಸ್ನಾನವಯ್ಯ
ಸದಮಲಜ್ಞಾನಿಗಳು ಮನವೊಪ್ಪಿ ಮಾಡ್ವ ಪ
ಇಟ್ಟು ಹಂಗಿಸದ್ದೆ ಸ್ನಾನ ಕೊಟ್ಟು ಕುದಿಯದ್ದೆ ಸ್ನಾನ
ಕೊಟ್ಟದ್ದು ಕೊಡುವುದೇ ಶಿಷ್ಟ ತುಂಗಾಸ್ನಾನ
ನಿಷ್ಠರಾಡದ್ದೆ ಸ್ನಾನ ದುಷ್ಟಸಂಗಳಿವುದೇ ಸ್ನಾನ
ಶಿಷ್ಟಜನಸಂಗವೇ ನಿಜ ಕೃಷ್ಣಾಸ್ನಾನ ೧
ಭೋಗದಾಸ್ಯಳಿವುದೆ ಸ್ನಾನ ನೀಗಲು ಭವ ಅದು ಸ್ನಾನ
ಭಗವದ್ಭಜನೆ ಕ್ಷೀರಸಾಗರ ಸ್ನಾನ
ರಾಗನೀಗ್ವುದೆ ಸ್ನಾನ ಜಾಗರಣ ಸದಾಸ್ನಾನ
ಭಾಗವತರೊಲುಮೆ ನಿಜ ಭಾಗೀರಥೀಸ್ನಾನ ೨
ಮರೆವ ತರಿವುದೆ ಸ್ನಾನ ಅರಿವು ತಿಳಿವುದೆ ಸ್ನಾನ
ಪರಮಜ್ಞಾನ ನಿಜ ಸುರಗಂಗಾಸ್ನಾನ
ಕರುಣ ಪಡೆವುದೆ ಸ್ನಾನ ಮರಣಗೆಲಿವುದೆ ಸ್ನಾನ
ಹರಿದಾಸರೊಡನಾಟ ಸರಸ್ವತೀ ಸ್ನಾನ ೩
ವಾದನೀಗ್ವುದೆ ಸ್ನಾನ ಭೇದ ಅಳಿವುದೆ ಸ್ನಾನ
ಮಾಧವನ ಕಥಾಶ್ರವಣ ಸದಾ ಯಮುನಾ ಸ್ನಾನ
ವೇದವನರಿವುದೆ ಸ್ನಾನ ಬೋಧಪಡೆವುದೆ ಸ್ನಾನ
ಸಾಧುಸಜ್ಜನಸೇವೆ ಗೋದಾವರೀಸ್ನಾನ ೪
ನೇಮನಿತ್ಯವೆ ಸ್ನಾನ ತಾಮಸ್ಹರಣವೆ ಸ್ನಾನ
ಕಾಮತೊಳೆವುದೆ ನಿಜ ಭೀಮಾನದೀಸ್ನಾನ
ಕ್ಷೇಮಸಾಗರ ತ್ರಿಭೂಮಿಯೊಳಧಿಕ ಶ್ರೀ
ರಾಮನಡಿಭಕುತಿಮುಕ್ತಿ ಹೇಮಾನದೀಸ್ನಾನ ೫

 

ಹಾಡಿನ ಹೆಸರು :ಇದು ಸ್ನಾನ ಇದು ಸ್ನಾನ
ಹಾಡಿದವರ ಹೆಸರು :ಮುದ್ದುಮೋಹನ್
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಎಲ್ಲಮ್ಮ ದಯಮಾಡಮ್ಮ
೧೨೭
ಎಲ್ಲಮ್ಮ ದಯಮಾಡಮ್ಮ ಕಾಡಬೇಡ ಎನ್ನಮ್ಮ ಪ
ಇಲ್ಲದೆ ಪೋದರೆ ನಿಲ್ಲದೆ ಏನನು
ಬಲ್ಲಿದನ ಕರೆತಂದು ಕೊಲ್ಲಿಸಿಬಿಡುವೆನೆ ಅ.ಪ
ಕೊಡಲಿ ಹೊತ್ತು ಬರುತಾನ ತಾಯಿ
ಗಡನೆ ಹೊರಳಿ ನೋಡಿನ್ನ
ಬಡವರ ದಯಾನಿಧಿ ಕಡುಬಾಧೆ ಕಂಡರೆ
ತಡೆಯದೆ ನಿನ್ನನು ಕಡಿಯದೆ ಬಿಡನವ್ವ ೧
ತಂದೆವಚನ ಪರಿಪಾಲನು ಅವ
ಬಂದರೆ ನಿನ್ನನು ಕೊಂದಾನು
ಕಂದನ ಬಂಧನ ಚಂದದಿ ಕಳೆದಾ
ನಂದವ ಕೊಡು ಕೊಡು ಸುಂದರಮುಖಿಯೆ ೨
ಕಾರ್ತವೀರ್ಯ ತಂದಾನೇ ಈ
ವಾರ್ತೆ ಕೇಳಲು ನಿನ್ನ ಬಿಟ್ಟಾನೇ
ಅರ್ತುಭಜಿಪೆ ನಿನ್ನ ಗುರ್ತಿಟ್ಟೀಬಾಧೆ
ತುರ್ತು ಕಳೆಯೆ ತಾಯಿ ಅರ್ತು ಶ್ರೀರಾಮನ ೩

 

ಹಾಡಿನ ಹೆಸರು :ಎಲ್ಲಮ್ಮ ದಯಮಾಡಮ್ಮ
ಹಾಡಿದವರ ಹೆಸರು :ಯಶವಂತ್ ಹಳಿಬಂಡಿ
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.

ನಿರ್ಗಮನ

 

ಕೇಳವ್ವ ತಂಗಿ ಕೇಳವ್ವ
೫೧೬
ಕೇಳವ್ವ ತಂಗಿ ಕೇಳವ್ವ
ಕೇಳಿ ತಿಳಿದು ನೀ ಬಾಳವ್ವ ಪ
ನೀಲವರ್ಣನ ಕೃಪೆಯ ಪಡೆಯಲಿಕ್ಕೆ
ನಾಳೆಂದರೆ ಮನೆಹಾಳವ್ವ ಅ.ಪ
ಅಂಬುಜಾಕ್ಷನ ಪಾದಪಕಮಲವ್ವ ನೀ
ನಂಬಿದ್ದಿ ಬಿಡಬೇಡ ಸಂಗವ್ವ
ನಂಬಿದ ಭಕ್ತರ ಬೆಂಬಲಿಸಾತನು
ಇಂಬುಗೊಟ್ಟು ಕಾಯ್ವ ಸಂಭ್ರಮ ಕೀರ್ತೆವ್ವ ೧
ಒಂದೆ ಮನಸಿನ ಬಾಗವ್ವ ಗೋ
ವಿಂದನ ವರಪಡಿ ಚೆಂದವ್ವ
ಮಂದರಧರನ ಹೊಂದಿಕೊಳ್ಳಲಿಕ್ಕೆ
ಹಿಂದು ಮುಂದು ನೋಡಬೇಡ ಮುಕ್ತ್ಯವ್ಯ ೨
ಒಂದಿನ ಹೋಗ್ವುದು ಸತ್ಯವ್ವ ತಂಗಿ
ಸಂದೇಹ್ಯ ಪಡಬೇಡ ಹುಚ್ಚವ್ವ
ತಂದೆ ಶ್ರೀರಾಮ ಗತಿಯೆಂದು ನಂಬಲು ನಿನಗೆ
ಬಂಧನವೆಲ್ಲ ಬೈಲವ್ವ ೩

 

ಹಾಡಿನ ಹೆಸರು :ಕೇಳವ್ವ ತಂಗಿ ಕೇಳವ್ವ
ಹಾಡಿದವರ ಹೆಸರು :ಮುದ್ದುಕೃಷ್ಣ ವೈ. ಕೆ.
ಸಂಗೀತ ನಿರ್ದೇಶಕರು : ನಾರಾಯಣ ಹೆಚ್. ಕೆ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಿಂದೆಯಾಡಬೇಡೋ ಪರ
೩೫೨
ನಿಂದೆಯಾಡಬೇಡೋ ಪರ
ನಿಂದೆ ಮಾಡಬೇಡೋ ಪ
ಇಂದಿರೇಶನಪಾದಗ್ಹೊಂದಿ ಭಜಿಪರಿ
ಗೊಂದನೆ ಮಾಡೋ ಅ.ಪ
ಕುಂದುವರಿಯಬೇಡೋ ಮನಸೇ
ಮಂದನಾಗಬೇಡೋ
ಎಂದಿಗಾದರು ಒಂದಿನ ಈ ಜಗ
ಕುಂದಿಪೋಗುವ ಭವಬಂಧಕ್ಕೀಡಾಗಬೇಡೋ ೧
ಕೋಪಗೊಳ್ಳಬೇಡೋ ಮನಸೇ
ಪಾಪಕ್ಹೋಗಬೇಡೋ
ಗೌಪ್ಯವಳಿಯಬೇಡೋ ಶಾಪಕೊಳ್ಳಬೇಡೋ
ಆ ಪರಬ್ರಹ್ಮನ ಶ್ರೀಪಾದಪಾಡೋ ೨
ಸೊಕ್ಕು ಮಾಡಬೇಡೋ ಯಮನ
ಲೋಕಕ್ಹೋಗಬೇಡೋ
ಏಕಚಿತ್ತದಿ ಲೋಕೈಕ ಶ್ರೀರಾಮನ
ಭಕುತಿಂ ಭಜಿಸಿ ಮುಕುತಿಯ ಕೂಡೋ ೩

 

ಹಾಡಿನ ಹೆಸರು :ನಿಂದೆಯಾಡಬೇಡೋ ಪರ
ಹಾಡಿದವರ ಹೆಸರು :ರೋಹಿಣಿ ಸುಧಾಮ
ಸಂಗೀತ ನಿರ್ದೇಶಕರು :ಪ್ರವೀಣ್ ಗೋಡ್ಖಿಂಡಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಯೋಗಿಯಾಗೆಲೆ ಇಲ್ಲ ತ್ಯಾಗಿಯಾಗೆಲೆ
೫೭೮
ಯೋಗಿಯಾಗೆಲೆ ಇಲ್ಲ ತ್ಯಾಗಿಯಾಗೆಲೆ ಪ
ಹಾಗೂ ಹೀಗೂ ಆಗದೆ ಭವ
ರೋಗಿಯೆನಿಸದರೆಲೆ ಗೂಗಿ ಅ.ಪ
ಮಾತುಮಾತಿಗೆ ನೀತಿವಚನ
ಆತುರಕ್ಕಾಗಿ ಕೂಗಿ ಕೂಗಿ
ಪಾತಕದೊಳಗೆ ಬಿದ್ದು ಯಮನ
ಯಾತನಕಿಳಿಯಬೇಡ ಭವಿ ೧
ಕಾವಿಕಪನಿಲಾಂಛನ್ಹೊದ್ದು
ಸೇವೆಗೊಂಡು ಭಾವಗೆಟ್ಟು
ಸಾವುಹುಟ್ಟು ಬಲೆಗೆ ಬಿದ್ದು
ನೋಯಬೇಡೆಲೆ ನೀಚಮತಿ೨
ನಿತ್ಯ ನಿತ್ಯವೆನಿಪ ಪರ
ಮಾರ್ಥತತ್ತ್ವಗುರ್ತುಯಿಲ್ಲದೆ
ಕತ್ತೆಯಂತೆ ಒದರಿ ವ್ಯರ್ಥ
ಮೃತ್ಯುಹೊಂದ ಬೇಡ ಮೂರ್ಖ ೩
ಸೋಗುಹಾಕಿ ಸಾಧುಯೆನಿಸಿ
ಕಾಗೆಯಂದದಿ ತೀರ್ಥಮುಳುಗಿ
ಗೂಗೆಯಂತೆ ಜಾಗರ ಮಾಡಿ
ಪೋಗದಿರಲೆ ನರಕಕಧಮ ೪
ಭೂಮಿ ಪ್ರೇಮ ತಾಮಸ ನೀಗಿ
ಕಾಮ ಕ್ರೋಧ ಲೋಭ ಜೈಸಿ
ಭೂಮಿತ್ರಯಂಗಳೊಡೆಯ ಶ್ರೀ
ರಾಮನಾಮ ಭಜಿಸಿ ಮುಕ್ತನಾಗೆಲೊ ೫

 

ಹಾಡಿನ ಹೆಸರು :ಯೋಗಿಯಾಗೆಲೆ ಇಲ್ಲ ತ್ಯಾಗಿಯಾಗೆಲೆ
ಸಂಗೀತ ನಿರ್ದೇಶಕರು :ಶ್ರೀಲತಾ ಆರ್. ಎನ್.
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ