Categories
ರಚನೆಗಳು

ರಾಮದಾಸರು

೩೨೭
ನೀಚಮನಸೆ ನೀ ಯೋಚಿಸಿ ಕೆಡಬೇಡ ಬರಿದೆ ಪ
ಸಾರವಿಲ್ಲದ ನಿಸ್ಸಾರ ಸಂಸಾರವೆಂಬುದು ಮಾಯಾಬಜಾರ
ತೋರಿ ಅಡಗುತಿಹ್ಯದು ನಿಮಿಷ
ನೀರಮೇಲಿನ ಗುರುಳೆತೆರದಿ
ತೋರುವುದೆಲ್ಲ ಕನಸಿನ ಪರಿ ಸ್ಥಿರವಲ್ಲದನರಿದು ನೋಡೋ ೧
ಕಾರಣಲ್ಲದ ಕಾಯವಿದು ಮೂರುದಿನದಸುಖವ ಬಯಸಿ
ಮೀರಿಸಿ ಗುರುಹಿರಿಯರ್ವಚನ
ಪಾರಮಾರ್ಥವಿಚಾರ ಮರೆಸಿ
ಸೂರೆಗೈದು ಸ್ವರ್ಗಭೋಗ ಘೋರನರಕಕೆಳಸುತಿಹ್ಯದು ೨
ಆಶಾಬದ್ಧನಾಗಿ ಭವಪಾಶದೊಳಗೆ ಸಿಲುಕಬೇಡೆಲೊ
ವಾಸನಳಿದು ಐಹಿಕಸುಖದ
ಕ್ಲೇಶನೀಗಿ ಸುಶೀಲನಾಗಿ
ಬೇಸರಿಲ್ಲದೆ ಶ್ರೀಶಜಗದೀಶ ಶ್ರೀರಾಮನಂಘ್ರಿ ಭಜಿಸು ೩

 

೩೨೮
ನೀನಿಲ್ಲದ ಜಗವಿನಿತಿಲ್ಲ ನೀನಲ್ಲದೆ ಎನಗಾರಿಲ್ಲ ಪ
ನೀನೆ ನೀನೆಯಾಗಿ ಕಾಣಿಸಿ ಜಗ
ಮಾಯಮಾಣಿಸುವಿ ನಿಜ ಸುಳ್ಳಲ್ಲ ಅ.ಪ
ಹೊತ್ತುಗೊತ್ತು ಎಲ್ಲ ನಿನ್ನಿಂದೇ
ನಿತ್ಯ ಅನಿತ್ಯವೆಲ್ಲ ನಿನ್ನಿಂದೇ
ಸತುಚಿತುಚಿದ್ವಸ್ತು
ತತ್ವಸರ್ವತ್ರಸೂತ್ರವೆಲ್ಲ ನಿನ್ನಿಂದೇ ೧
ಸೃಷ್ಟಿ ಕ್ಷೇತ್ರ ತೀರ್ಥ ನಿನ್ನಿಂದೇ
ಅಷ್ಟಸ ಭುವಗಳ್ನಿನ್ನಿಂದೇ
ಹುಟ್ಟುಸಾವು ಎಲ್ಲ ಸ್ಪಷ್ಟದಿ ನೋಡಲು
ಸೃಷ್ಟಿ ಪ್ರಳಯವಷ್ಟು ನಿನ್ನಿಂದೇ ೨
ನಿಖಿಲ ವೇದ ನಿನ್ನಿಂದೇ
ಅಖಿಲದೇವರೆಲ್ಲ ನಿನ್ನಿಂದೇ
ಸಕಲಮಂತ್ರಮೂಲ ಭಕುತಾಭಿ ಶ್ರೀರಾಮ
ಮುಕುತಿಸಂಪದ ಸಿದ್ಧಿ ನಿನ್ನಿಂದೇ ೩

 

೫೫
ನೀನೆ ಕರುಣಿ ಗುರುವಾಸ
ದೀನಬಂಧು ಭಕುತಪೋಷ ಪ
ನೆರೆದು ಭಕುತಜನರು
ಸ್ಮರಿಪ ವರವ ನಡೆಸಿ
ದರುಶನಿತ್ತು ದುರಿತರಾಸಿ ಪರಿಹರಿಸಿ
ಪೊರೆವೆ ಸತತ ಪರಮ ಚರಿತ ೧
ಒಪ್ಪಿ ಕಾಸುರುವ್ವಿಬಿಡದೆ
ತಪ್ಪದೆ ಮೂರುಲೋಕದವರಿಂ
ಕಪ್ಪಕೊಳ್ಳುವಿ ಅಸಮಲೀಲ
ಅಪ್ಪ ತಿರುಪತಿ ತಿಮ್ಮಪ್ಪ ೨
ಮಾರನಯ್ಯ ಮರಣದೂರ
ಮೂರಜಗದ ಸಾರ್ವಭೌಮ
ಧೀರ ಶ್ರೀರಾಮ ನಿಮ್ಮ ಪಾದ
ವಾರಿಜದಾಸನೆನಿಸು ಎನ್ನ ೩

 

೩೨೯
ನೀನೆ ಕರುಣಿ ದೀನಪಾಲ
ದಾನವಾಂತಕನಾಥಬಂಧು ಪ
ಕಾಸಾರಕಿಳಿದು ಕರಿಯ ಕಾಯ್ದಿ
ಹೇಸದೆ ತರುಣಿ ಮೊರೆಯ ಕೇಳ್ದಿ
ಬೇಸರಿಲ್ಲದೆ ದಾಸಜನರ
ಆಸೆ ಪೂರೈಸಿ ಪೊರೆದಿ ಪ್ರಭು ೧
ಬಾಲಗೈದ ತಪಕೆ ಒಲಿದಿ
ಮೇಲುಪದವಿ ಕರುಣಿಸಿದಿ
ಕಾಲಗೆ ಕಾಲನಾಗಿ ಮೆರೆವ
ಖೂಳರಕ್ಕಸನುದರ ಸೀಳ್ದಿ ೨
ನೀರ ಮುಳುಗಿ ನಿಗಮ ತಂದಿ
ಭಾರಬೆನ್ನಲಿ ಪೊತ್ತು ನಿಂದಿ
ಹಾರೈಸಿ ಕರೆವ ಭಕುತ ಜನಕಾ
ಧಾರ ಮಮಪ್ರಾಣೇಶ ಶ್ರೀರಾಮ ೩

 

೩೩೦
ನೀನೆ ಗತಿ ಎನಗಿನ್ನು ಕರುಣಿಸು ಮಾಧವ
ದೀನನ ಮರೆಯದಿರು ಸಿರಿಯರ ಜೀವ ಪ
ನೀನೆ ಕರುಣಾಳು ಭಕ್ತಜನರಭಿಮಾನಿ
ನೀನೆನ್ನ ಬಿಟ್ಟ ಬಳಿಕ ಕಾಮಿತವ ಪೂರೈಸಿ
ಕಾಯ್ವರಕಾಣೆನಾರನು ಕಮಲನಾಭ ಅ.ಪ
ಎಡಬಿಡದೆನ್ನನು ಕಾಡುತಿರುವ ಅತಿ
ಜಡಭವ ಕಡುದು:ಖ ತಡಿಲಾರೆನಭವ
ಅಡರಿಕೊಂಡೆನ್ನ ಸುಡುತಲಿರುವ
ಒಡಲತಾಪ ಗಡನೆ ಬಿಡಿಸಿ
ಬಿಡದೆ ಎನ್ನನು ಪಿಡಿದು ರಕ್ಷಿಸು
ಮಡದಿಗಕ್ಷಯದುಡುಪು ಇತ್ತನೆ ೧
ಶರಧಿಸಂಸಾರದ ಉರುತರ ಪರಿಬಾಧೆ
ಕಿರಿಕಿರಿ ಪರಿಹರಿಸಿ ಪೊರೆಯಯ್ಯ ಜವದಿ
ಶರಣುಮಾಡುವೆ ಶರಣಜನರ
ಕರುಣಮಂದಿರ ಮರೆಯದಿರೆಲೊ
ತರಳ ನಿರುತದಿ ಚರಣಸ್ಮರಿಸಿ
ಕರೆಯೆ ಕಂಬದಿ ಭರದಿ ಬಂದನೆ ೨
ಮುಂದೆನಗೆ ಭವಬಂಧ ಎಂ
ದೆಂದಿಗಿಲ್ಲದಂತೆ ತಂದೆ ಕರುಣಿಸು ದಯಾ
ಸಿಂಧು ಶ್ರೀರಾಮ ವಂದಿ ಭಜಿಸುವೆ
ಮಂದರಾದ್ರಿ ಮಂದಿರನೆ ತ್ವರ
ಬಂದು ಕಾಯೊ ಬಂಧನದಿ ಜಗ
ತಂದೆ ನಿಮ್ಮ ಪಾದಕೆಂದು ಪೂವಗೆ (?) ಬಂದು ಪೊರೆದನೆ ೩

 

೩೩೧
ನೀನೆ ಗತಿ ಭಕುತಜನಕೆ
ಧೀನದಯಾಸಿಂಧು ಹರಿಯೆ ಪ
ವನದಿಯಿರಲು ಗುಹೆಯಪೊಗಲು
ಮನೆಯೊಳಿರಲು ಗಿರಿಯನೇರಲು
ದಣವಿನಿಂ ಬಳಲುತಿರಲು
ಪರದೇಶ ದೇಶ ತಿರುಗಲು ೧
ಒಡಲಿಗಿಲ್ಲದೆ ತೊಳಲುತಿರಲು
ಬಡತನದಿಂ ಬೇಡುತಿರಲು
ಕಡಲಧುಮುಕಿ ಘೋರಬಡಲು
ಪೊಡವಿಪರ ಕೈಯೊಳ್ಸಿಗಲು ೨
ಕಾಮಿಜನರ ಕಾಮಿತಂಗಳ
ಪ್ರೇಮದಿತ್ತು ಕಾಯ್ವ ಮಮ
ಸ್ವಾಮಿ ಶ್ರೀರಾಮ ನಂಬಿದವರ
ಕಾಮಧೇನು ಪರಮಪುರಷ ೩

 

೩೩೨
ನೀನೆ ಗತಿಯು ಎನಗೆ ಎನ್ನಯ್ಯ ಶ್ರೀ
ಪನ್ನಂಗಶಯನ ಕಾಯೋ ಪ
ಹೀನ ಸಂಸಾರದೊಳು ಇನ್ನೆಲ್ಲಿತನಕ ನಾ
ಬನ್ನಬಡಬೇಕಯ್ಯ ಜಾಹ್ನವೀಜನಕ ಅ.ಪ
ಸನುಮತಿವಿನಿತಿಲ್ಲದೆ ಮನಸಿನೊಳು
ಘನತರ ಭ್ರಮಿಪೆ ಬರಿದೇ
ಶುನಕನ ಕನಸಿದು ಅನಿತ್ಯ ಜಗತ್ಸುಖ
ಎನಗ್ಯಾಕೆ ಒಣಭ್ರಾಂತಿಯನು ತೋರ್ವೆ ಶ್ರೀಕಾಂತ ೧
ಘಳಿಗೆಸಂತಸವಿಲ್ಲದೆ ಬಳಲುವೆ ಬಲು
ಇಳೆ ಸುಖದಿ ಮನ ನಿಲ್ಲಿಸಿ
ಘಳಿಗೆ ಮೊಕ್ಕಾಮಿಗಾಗಿ ಕಳವಳಸೀಪರಿ
ಬಳಲುವೆನ್ಯಾಕೊ ತಿಳಿಯದಿದು ನಳಿನಾಕ್ಷ ೨
ಎತ್ತ ನೋಡಲು ನೀನಿರ್ದು ಮಿಥ್ಯಜಗತ್ತಿನೋಳ್
ವ್ಯರ್ಥ ಬಳಲಿಪರೆ ಎನ್ನ
ಭಕ್ತವತ್ಸಲನೆಂಬ ಹೊತ್ತಿರುವಿ ಬಿರುದುಗಳ್
ಚಿತ್ತಕ್ಕೆ ಸತ್ಸುಖವಿತ್ತು ಪೊರೆ ಶ್ರೀರಾಮ ೩

 

೫೬
ನೀನೆ ಗತಿಯೊ ಎನಗೆ ಜಾನಕೀಶನೆ ಎನ್ನ
ಮಾನದಿಂ ಕಾಯಲಿಕ್ಕೆ ಪ
ದೀನರ ಸಮಯಕ್ಕೆ ನೀನಾಗದಿರ್ದರೆ
ಜ್ಞಾನಿಗಳೊಪ್ಪುವರೇ ಜಾಹ್ನವೀಜನಕ ೧
ಮೃತ್ತಿಕೆ ಬಾಯೊಳು ತತ್ತರಬಹುತಿಹ್ಯೆ
ಭಕ್ತನ ಪಿಡಿದೆತ್ತಿ ತುರ್ತು ಸಲಹು ದೇವ ೨
ಉಗ್ರತಾಪದಿ ಸಮಗ್ರ ಪರಿಹರಿಸೆನ್ನ
ಶೀಘ್ರದಿ ಬಾ ಭಕುತಾಗ್ರಣಿ ಶ್ರೀರಾಮ ೩

 

೫೮
ನೀನೆ ದಯ ಸಂಪನ್ನನೆಲೋ
ದೀನನಾಥ ಜಾಹ್ನವೀ ತಾತ ಪ
ಕಮಲಕಿಂತ ಮೃದು ನಿನ್ನ
ವಿಮಲಹೃದಯಭಕ್ತಿ ಜನಕೆ
ನಮಿಪೆ ನಿನ್ನ ಪಾದಕಮಲ
ವಿಮಲಸುಖದ ಪಥದೋರೋ ೧
ಕೊಟ್ಟು ಎನಗೆ ಶಿಷ್ಟಸಂಗ
ಇಟ್ಟು ನಿನ್ನ ಭಜನಾನಂದ
ನಿಷ್ಠೆ ಭಕುತಿ ನಿನ್ನ ಪಾದ
ದಿಟ್ಟ ದಾಸನೆನಿಸಿ ಕಾಯೋ ೨
ರಾಕ್ಷಸಾರಿ ಎನ್ನ ಮನದ
ಪೇಕ್ಷ ಪೂರ್ತಿಮಾಡಿ ಮೆರೆವ
ಮೋಕ್ಷಪುರಿಗೆ ತಲ್ಪಿಸೆನ್ನ
ಮೋಕ್ಷದಾಯಕ ಶ್ರೀರಾಮ ಪ್ರಭೋ ೩

 

೩೩೩
ನೀನೆ ದಯಮಾಡಲು ನಾನುದ್ಧಾರಾಗುವೆನು
ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ
ಹೀನಸಂಸಾರದೊಳಗೆ ಮುಳುಗಿ
ಶ್ವಾನನಂದದಿ ಕರಗಿ ಕೊರಗಿ
ಜ್ಞಾನಶೂನ್ಯನಾಗಿ ಬಳಲುವೆ
ಜ್ಞಾನಮೂರುತಿ ಅಭಯ ಪಾಲಿಸು ಅ.ಪ
ಉದಯದಲ್ಲೇಳುತ ಸದಮಲ ತವಪಾದ
ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ
ಅಧಮಜನರ ಸುದ್ದಿ ವದನದಿಂದಾಡುತ
ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ
ಕುದಿದೆನನುದಿನ ಪರರ ಮನೆ ಸಂ
ಪದವ ನೋಡಿ ಸಹಿಸದವರ
ಸದನ ಮುರಿಯುವ ಬುದ್ಧಿ ಹುಡುಕಿದೆ
ಪದುಮನಾಭಪರಾಧ ಕ್ಷಮಿಸಿ ೧
ಒಂದು ನಾನರಿಯದೆ ಮುಂದೆ ಭಲಾಯೆಂದು
ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು
ಹಂದ್ಯಮೇದ್ಯಕಂಡಾನಂದಿಪತೆರದನ್ಯ
ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ
ಇಂದಿರೇಶನೆ ನಿಮ್ಮ ಪಾದವ
ಒಂದೆ ಮನದಿಂ ಭಜಿಸದೆ ಭವ
ದಂದುಗದಲಿ ಬಿದ್ದು ನೊಂದವ
ಕಂದನೊಳು ಕೃಪಾದೃಷ್ಟಿಯಿತ್ತು ೨
ದಾಸಜನರ ಆವಾಸ ನಾ ಬಯಸದೆ
ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ
ಆಸೆಯೆಂಬುವ ಮಹಪಾಶದಬಲೆಯೊಳು
ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ
ದಾಸ ಬುದ್ಧಿಯಿಂದ ಮಾಡಿದ ಬಲು
ದೋಷರಾಶಿಗಳೆಲ್ಲ ನಾಶಿಸಿ
ಶ್ರೀಶ ಶ್ರೀರಾಮ ನಿಮ್ಮ ಪಾದ
ದಾಸನಿಗೆ ನಿಜಧ್ಯಾಸ ನಿಲ್ಲಿಸು ೩

 

೫೭
ನೀನೆ ದಯಾಶರಧಿ ತ್ರಿಜಗದಿ
ಧ್ಯಾನದಾಯಕ ಮಮಪ್ರಾಣ ಜಾನಕೀ ಜೀವ ಪ
ದೀನರ ಪಾಲಿಪ ಜಾಣ ಮಹಿಮ ಪ್ರಭು
ಕ್ಷೋಣಿಯೋಳ್ನಿನ್ನ ಸಮಾನ ದೇವರ ಕಾಣೆ ೧
ಒಲಿದು ಕಂಬದಿ ಬಂದಿ ಬಲಿಯ ಬಾಗಿಲ ಕಾಯ್ದಿ
ಲಲನಾಮಣಿಗೆ ಒಲಿದು ಕುಲವನುದ್ಧರಿಸಿದಿ ೨
ಕರಿಯು ಕರೆಯಲು ಬಂದಿ ತರುಣಿ ಬೆಂಬಲ ನಿಂದಿ
ಚರಣದಾಸರ ಪ್ರಿಯ ಕರುಣಿ ಶ್ರೀರಾಮ ೩

 

೩೩೪
ನೀನೆ ದಯಾಸಿಂಧು ದೀನಜನರ ಬಂಧು
ಧ್ಯಾನಿಪ ಭಕುತರ ಪ್ರಾಣಪದಕನೆ ರಂಗ ಪ
ನಾನಾಪರಿ ಸಂಸಾರ ಎಂಬುವ ಕಾನನದೊಳು
ತೊಳಲಿಬಳಲುವ
ದೀನನು ಕಾಯೆಂದು ಮರೆಹೊಕ್ಕೆ
ಮಾನರಕ್ಷಿಸು ಜಾನಕೀಶ ಅ.ಪ
ಎಷ್ಟುಪರಿ ಅನೃತವನಾಡಿದೆ ಈ ಹೊಟ್ಟೆಗಾಗಿ
ಕೆಟ್ಟ ಕೃತ್ಯಮಾಡಿ ನಾ ದಣಿದೆ ಇ
ನ್ನೆಷ್ಟುದಿನ ಈ ದುಷ್ಟ ಬವಣೆ ಎನಗೆ ಸ್ಥಿರವಿದೇ
ಭ್ರಷ್ಟನಾಗುಳಿದೆ ಕೊಟ್ಟ ಒಡೆಯರು ಬಿಡದೆ
ಕಟ್ಟಿಕಾಡ್ವರು ನಿಲ್ಲಗೊಡದೆ
ಇಷ್ಟ ಸತಿಸುತರ್ಹೊಟ್ಟೆಗಿಲ್ಲೆಂದಟ್ಟಿ ಬಡಿವರು
ಬಿಟ್ಟುಬಿಡದೆ ಬಿಟ್ಟಿದುಡಿದೆಷ್ಟು ಬಳಲಲಿ
ಸೃಷ್ಟಿಗೀಶ ದಯಾದೃಷ್ಟಿಯಿಂ ನೋಡೋ ಕೃಷ್ಣ ೧
ಮೋಸಹೋದೆ ಬಲು ಭ್ರಮಿಸದ್ದನು ಭ್ರಮಿಸಿ
ತುಸು ಕರುಣವಿಲ್ಲದೆ ಘಾಸಿಯಾದೆ ಮಾತೆಪಿತರ ಮನ
ನೋಯ್ಸಿ ವ್ಯಸನಕೂಪದಿ ವಾಸಮಾಡಿದೆ
ಕಾಸುಹಣಬಯಸಿ ಅಧಮಸುಖನೆನೆಸಿ
ಆಸೆÀಯೆಂಬುವ ಪಾಶ ಎನ್ನನು ನಾಶಮಾಡಿತು
ಮುಸುರೆಯನು ಕಟ್ಟಿ ಭಾಷೆ ಕೆಡಿಸಿ ದೋಷಕೆಳಸಿತು
ಈಶ ನಿಮ್ಮ ಧ್ಯಾಸಮರೆಸಿ ದಾಸಮಾಡಿದ
ದೋಷ ಗಣಿಸದೆ ಶ್ರೀನಿವಾಸ ಜಗದೀಶ ಕೇಶ ೨
ಪಾಪಲೋಪನೆ ಶ್ರೀಶ ಶ್ರೀರಾಮ ಕೃಪೆಯಿಂದ ನೋಡೊ
ಪಾಪಿಯಿವನೆಂದು ಮರೆಯದಿರು ಪ್ರೇಮ
ಹೇ ಪರಮನೆನ್ನಯ ಪಾಪರಾಶಿಯ ಕಳೆದುಕೊಡಲಿ ಕ್ಷೇಮ
ಹೇ ಪರಬ್ರಹ್ಮ ಸ್ಥಾಪಿಸೆನ್ನಯ ಉದರಕಮಲದಿ
ಶ್ರೀಪತಿಯೆ ನಿಮ್ಮ ನಾಮ ಅಮೃತ
ತಾಪಬಿಡಿಸದೆ ಗಜವ ಸಲಹಿದೆ
ಶಾಪದಿಂ ಪೊರೆದಂಬರೀಷನ ದ್ರುಪದನುಜಳ
ಮಾನಕಾಯ್ದಾಪತ್ತು ಬಾಂಧವ ಭಕ್ತವತ್ಸಲ ದೇವ ೩

 

೩೩೫
ನೀನೆ ದಾತ ದೀನನಾಥ ಧ್ಯಾನದಾಯಕ ಜಾನಕೀ ಪ್ರೀತ ಪ
ಬಹುಕುಂದುನಿಂದೆ ಸರ್ವ ಅಹುದು ಅಲ್ಲ ನಿನ್ನದಭವ
ಅಹಿತಸುಖದ ಪ್ರೇಮಬಿಡಿಸಿ ದಹಿಪ ಭವದ ಬಾಧೆ ಗೆಲಿಸು ೧
ಬಂದ ಬಂಧ ಬಯಲುಮಾಡಿ ಕಂದನೆಂದು ಕರಪಿಡಿದು
ತಂದೆ ನಿನ್ನ ಪರಮಧ್ಯಾನಾನಂದ ಪಾಲಿಸಿ ಪೋಷಿಸೆನ್ನ ೨
ಕಾವದೇವ ನೀನೆ ಪತಿತಪಾವನ ತ್ರಿಜಗಸೂತ್ರಧಾರಿ
ಭಾವಜಪಿತ ಶ್ರೀರಾಮ ನಿಮ್ಮ ಸೇವಕನೆನಿಸಿ ಸಲಹು ಸತತ ೩

 

೫೯
ನೀನೆ ನಿಜಗುರುವಾಗುಎನಗೆ
ಪ್ರಾಣನಾಥ ಮಮದೇವ ಮಾಧವ ಪ
ಮರವೆಯೆಂಬ ಪರದೆ ಹರಿದು
ಅರಿವುಯೆಂಬಾಲಯದೊಳಿರಿಸಿ
ದುರಿತಪರ್ವತ ತರಿದು
ಪೊರೆಯುವ ಚರಣದಾಸರ ಭಾಗ್ಯನಿಧಿಯೆ ೧
ಹೀನಸಂಸಾರೆಂಬುವ ಮಹ
ಕಾನನದಿ ಬಳಲಿಸದೆ ಅನುದಿನ
ಧ್ಯಾನಮೃತ ಪಾನಗೈಸುವ
ಧ್ಯಾನಿಪರ ಮಹಪ್ರಾಣದರಸೇ ೨
ಆವಕಾಲದಿ ಬಿಡದೆ ನಿಮಿಷ
ಜೀವ ಭಕುತರ ಭಾವದ್ವಾಸಿಸಿ
ಜಾವ ಜಾವಕೆ ಬುದ್ಧಿ ಕಲಿಸುವ
ದೇವದೇವರ ದಿವ್ಯದೇವರೆ ೩
ಸಕಲಕೋಟಿಮಂತ್ರಗಳಿಗೆ
ನಿಖಿಲ ನೀನೆ ಆಧಾರನಾಗಿ
ಅಖಿಲರೂಪದಿ ಜಗವ ಬೆಳಗುವ
ಭಕುತಿದಾಯಕ ಸುಖದ ಶರಧಿಯೆ ೪
ಸಾರಿ ಭಜಕರ ಭಾರವಹಿಸಿ
ಘೋರಭವಸಾಗರವ ಗೆಲಿಸಿ
ಸಾರತರಮೋಕ್ಷವನು ಕರುಣಿಪ
ಧೀರ ಶ್ರೀಗುರುರಾಮ ಪ್ರಭುವೇ ೫

 

೩೩೬
ನೀನೆ ನಿರ್ದಯನಾಗಲಿನ್ನೇನು ಗತಿಯೋ
ದೀನಜನಮಂದಾರ ಜಾನಕೀ ಮನೋಹರ ಪ
ಪಿತ ಮಾತೆಯರ ಸುತರ ಹಿತದಿಂದ ನೋಡದಿರೆ
ಕ್ಷಿತಿಯೊಳಗಿತರರು ಹಿತದಿಂ ನೋಡುವರೊ
ಪಿತ ನೀನೆ ಮೂಜಗಕೆ ನುತಿಸುವ ಭಕ್ತರ
ಸ್ಥಿತಿ ವಿಚಾರಿಸದಿರೆ ಗತಿಯೇನು ಮುಂದೆ ೧
ಲೋಕ ಎರಡೇಳು ನೀ ಕರುಣದೊಡಲೊಳಿಟ್ಟು
ಜೋಕೆ ಮಾಡುವಿ ನಿನ್ನೊಳ್ಯಾಕೆ ದಯವಿಲ್ಲ
ಬೇಕೆಂದು ನಿನ್ನಪಾದ ಏಕಭಕ್ತಿಲಿ ನುತಿಪೆ
ಮೂಕನಾಗಲು ಬೇಡ ಶ್ರೀಕರನೆ ದಯಮಾಡೊ ೨
ನರಜನ್ಮವಿತ್ತೆನಗೀಪರಿ ಬವಣೆ ಬರಲಿಕ್ಕೆ
ಕರುಣವನಿತು ನಿನಗೆ ಬರಲಿಲ್ಲವೇನೋ
ಹರಿಯೆನ್ನ ಬರೆಹ ಹೀಗೆ ಬರೆದದ್ದೇ ತಪ್ಪು ನೀ
ಮರೆಯಾದರೆ ಬಿಡದಯ್ಯಾ ತ್ವರೆಬಾರೋ ಶ್ರೀರಾಮ ೩

 

೩೩೭
ನೀನೆ ನುಡಿಸಿದಂತೆ ನುಡಿಯುವೆನು ಮಿಕ್ಕ
ಜ್ಞಾನವಿಲ್ಲ ಎನಗೇನೇನು ಪ
ನೀನೆ ಜಗತ್ರಾಣ ಶ್ರೀಹರಿಯೆಂಬುದೊಂದೆ
ಖೂನಮಾಡಿ ಕೊಂಡಾಡುವೆನು ಅ.ಪ
ನೀ ನಡೆಸಲು ನಾ ನಡೆಯುವೆನು ಹರಿ
ನೀನಾಡಿಸಲು ನಾನಾಡುವೆನು
ನೀನೀಡದಿರೆ ಬಲು ಮಿಡುಕುತ ಬಳಲುವೆ
ನೀ ನುಣಿಸಲು ಉಂಡು ನಲಿವೆ ಪುಂಡನಾಗಿ ೧
ಕಡುಪ್ರೇಮದಿ ಚರಾಚರಗಳನು ಕಾಯ್ವಿ
ಪೊಡವಿ ಈರೇಳುವ್ಯಾಪಕ ನೀನು
ಕೊಡುವ ಕರ್ತ ನೀನೆ ಮೂಲೋಕಕೆಂಬ ನುಡಿ
ದೃಢದಿ ನಂಬಿ ಗಟ್ಟಿಮಾಡಿಹೆನು ೨
ಹೋಮ ಯಜ್ಞ ಯಾಗ ತಿಳಿಯೆ ನಾನು ಮತ್ತು
ನೇಮನಿತ್ಯದ ಗುರುತರಿಯೆನು
ಭೂಮಿಗಧಿಕ ಮಮಸ್ವಾಮಿ ಶ್ರೀ
ರಾಮನ ಪೂರ್ಣನಂಬಿಕೊಂಡಿಹೆನು ೩

 

೬೦
ನೀನೆ ಪಾಲಿಸು ಕರುಣಾವಾರಿಧಿ
ದೀನಜನರಾಧಾರ ಹರಿಯೆ ಪ
ನಿನ್ನಾಧೀನವು ತೋರ್ಪುದೆಲ್ಲ
ಮಾನವನ ಸ್ವಾಧೀನವೇನಿದೆ
ನಿನ್ನ ನೆರಳಲಿ ಮೂರು ಜಗವು
ಭಿನ್ನವಿಲ್ಲದೆ ಬದುಕಿ ಬಾಳ್ವುದು ೧
ನಿನ್ನ ಸಹಾಯವಿಲ್ಲದೀ ಭವ
ವನ್ನು ಗೆಲಿಯುವ ಸಾಧ್ಯದಾರಿಗೆ
ನಿನ್ನ ಕೃಪಾಕಟಾಕ್ಷದಿಂದಲೆ
ಮುನ್ನ ಹಿರಿಯರು ಧನ್ಯರಾದರು ೨
ಮರ್ತ್ಯಲೋಕಕ್ಕೆಳೆದು ತಂದೆನ್ನ
ಮರ್ತುಬಿಡುವುದುಚಿತವೇನಯ್ಯ
ನಿರ್ತಸುಖವಿತ್ತು ರಕ್ಷಿಸಭವ
ಕರ್ತು ಶ್ರೀಗುರು ರಾಮ ಪ್ರಭುವೆ ೩

 

೬೧
ನೀನೆ ಭಕುತಾಭಿಮಾನಿ ಕರುಣಿ ಪ
ಮರೆಬಿದ್ದ ಭಕುತರ ಪೊರೆಯಲು ತವಸಮ
ಕರುಣಿ ದೇವರ ಕಾಣೆ ಧರೆ ಎರಡೇಳರೊಳ್ ೧
ಶಿಲೆಯನು ಪೆಣ್ಣೆನಿಸಿ ಕುಲದೊಳು ಕಲೆಸಿದಿ
ಸಲಹಿದಿ ಗಜನ ಮಹ ವಿಲಸಿತಮಹಿಮ ಪ್ರಭು ೨
ಮೊರೆಯಿಟ್ಟು ಸ್ಮರಿಸುವ ಚರಣದಾಸನ ಆಸೆ
ಕರುಣದಿಂ ಪೂರೈಸು ಪರತರ ಶ್ರೀರಾಮ ೩

 

೬೨
ನೀನೆ ಸ್ವತಂತ್ರ ಸರ್ವೇಶ
ಧ್ಯಾನಮಾಳ್ಪದಾಸರ ಪ್ರಾಣ ಪ
ಭುವನ ತ್ರಯದಿ ಬಿಡದೆ ಒಂದೇ
ಸಮದೆ ದೃಢದಿ ವೇದಸ್ಮ್ರತಿ
ಭಯನಿವಾರಣನೆಂಬ ಬಿರುದು
ಜಯಭೇರಿ ನುಡಿಸುತಿಹ್ಯವು ೧
ರಂಗ ನಿನ್ನ ದಾಸಜನಕೆ
ಭಂಗವೇನು ಭುವನತ್ರಯದಿ
ಮಂಗಲಮಹಿಮ ಭಕುತಾಂತ
ರಂಗ ಭಜಿಪೆ ಭಂಗ ಗೆಲಿಸು ೨
ಮಾಯ ನಾಟಕವಾಡುವ ಮಹ
ಮಾಯಾಮಹಿಮ ಶ್ರೀರಾಮ ತಂದೆ
ಮಾಯಮೋಹಿಗಳಿಂದುಳಿಸಿ ಎನ್ನ
ಕಾಯೊ ಕೈಯ ಪಿಡಿದು ಸತತ ೩

 

೬೩೧
ನೀನೆನನ್ಹುಟ್ಟಿಸಿದ್ಯೋ ನಾನೆ ನಿನ್ನ್ಹುಟ್ಟಿಸಿದೆನೋ
ಜಾನಕೀಶ ನೀನೆನಗೆ ಸಿಟ್ಟಾಗದ್ಹೇಳೈ ಪ
ತಂದೆ ಮಗನ್ನ್ಹೆತ್ತನೋ ಮಗ ತಂದೆನ್ಹೆತ್ತನೋ
ತಂದೆ ಮಗನ್ನೀರ್ವರನು ತಾಯಿ ಹೆತ್ತಳೇನೋ
ತಂದೆತಾಯಿಮಗತ್ರಯರು ಬಿಂದಿನಲುದ್ಭವಿಸಿದರೆ
ಅಂದಮಾದ ಸಂಧಿದನು ಚೆನ್ನಾಗಿ ಬಿಡಿಸೈ ೧
ಬೀಜದಿಂದ್ರ‍ವಕ್ಷಾಯ್ತೋ ವೃಕ್ಷದಲಿ ಬೀಜಾಯ್ತೋ
ಬೀಜವ್ಯಕ್ಷಗಳೆರಡು ಹಣ್ಣಿನೋಳ್ಹುಟ್ಟಿದವೇ
ಬೀಜವೃಕ್ಷ್ಹಣ್ಣುಮೂರು ಭೂಮಿಯೋಳ್ಹುಟ್ಟಿದವೇ
ಸೋಜಿಗದ ಸಂಧಿದನು ನೈಜದಿಂ ಬಿಡಿಸೈ ೨
ಜೀವದಿಂ ಮಾಯವೋ ಮಾಯದಿಂ ಜೀವವೋ
ಜೀವಮಾಯಗಳೆರೆಡು ಭಾವದ್ಹುಟ್ಟಿಹ್ಯವೋ
ಜೀವ ಮಾಯ ಮೂರು ಕಾಯದಲಿ ಜನಿಸಿದವೋ
ನ್ಯಾಯದ ಸಂಧಿದನು ದಿವ್ಯವಾಗಿ ಬಿಡಿಸೈ ೩
ಉತ್ಪತ್ತಿಯಿಂ ಲಯವೋ ಲಯದಿಂದ ಉತ್ಪತ್ತ್ಯೋ
ಉತ್ಪತ್ತಿಲಯವೆರಡು ಸ್ಥಿತಿಯಿಂ ತೋರುವವೋ
ಉತ್ಪತ್ತಿಲಯಸ್ಥಿತಿ ತತ್ವದೊಳು ಜನಿಸಿಹ್ಯವೋ
ಗುಪ್ತದ ಸಂಧಿದನು ನಿರ್ತಾಗಿ ಬಿಡಿಸೈ ೪
ವೇದದಿಂ ಸಾಧನವೋ ಸಾಧನದಿಂ ವೇದವೋ
ವೇದಸಾಧನವೆರಡು ನಾದದ್ಹುಟ್ಟಿಹ್ಯವೋ
ವೇದಸಾಧನ ನಾದಶೋಧದಿಂ ಜನಿಸಿಹ್ಯವೋ
ಮೋದದ ಸಂಧಿದನು ಬೋಧದಿಂ ಬಿಡಿಸೈ ೫
ಪಿಂಡಾಂಡದಿಂ ಬ್ರಹ್ಮಾಂಡೋ ಬ್ರಹ್ಮಾಂಡದಿಂ ಪಿಂಡಾಂಡೋ
ಪಿಂಡಾಂಡಬ್ರಹ್ಮಾಂಡೆರಡು ಖಂಡನಿಂದ್ಹುಟ್ಟಿಹ್ಯವೋ
ಪಿಂಡಾಂಡಬ್ರಹ್ಮಾಂಡ ಖಂಡನ್ಯೋಗಿಯಲಿ ಜನಸಿಹ್ಯವೊ
ಗಂಡಾಂತರದ ಸಂಧಿದನು ಖಂಡಿತದಿಂ ಬಿಡಿಸೈ ೬
ಕಾಮದಿಂ ನೇಮವೋ ನೇಮದಿಂ ಕಾಮವೋ
ಕಾಮನೇಮಗಳೆರಡು ನಿತ್ಯದ್ಹುಟ್ಟಿಹ್ಯವೋ
ಕಾಮನೇಮ ನಿತ್ಯ ಶ್ರೀರಾಮ ನಿನ್ನಾಟವೋ
ಈ ಮಹಸಂಧ್ಯೆನಗೆ ಪ್ರೇಮದಿಂ ಬಿಡಿಸೈ ೭

 

೩೪೦
ನೆನೆನೆನೆ ಮನವೆ ನೀ
ಘನಸುಖವನೆ ಪಡೆವೆ ಪ
ಭಾರ ನಿನ್ನದೆಂಬ ಪೋರ ಪ್ರಹ್ಲಾದನ
ಘೋರಬಂಧವ ನಿವಾರಿಸಿ ಪೊರೆದವನ ೧
ಕರಿಮಕರಿಗೆ ಸಿಲ್ಕಿ ಹರಿಯೆಂದು ಕೂಗಲು
ಭರದಿ ಒದಗಿ ಮಹಕರುಣದಿ ಸಲಹಿದವನ ೨
ದುರುಳನ ಸಭೆಯೊಳು ತರುಣಿಯು ಮೊರೆಯಿಡಲು
ವರಹ ಶ್ರೀರಾಮ ನಾರಿಮರಿಯಾದೆ ಕಾಯ್ದವನ ೩

 

೩೪೧
ನೆನೆಯಲಳವಲ್ಲಗಣಿತ ಜನುಮ (ಪ)
ಕುಣಿಕೆಯೊಳಗೆ ಪೋಣಿಸಿ
ಗಣನೆಯಿಲ್ಲದೆ ಯೋನಿದ್ವಾರಕೆ ಕನಿಕರಿಲ್ಲದೆ ನೂಕಿ
ನೋಯಿಸುತ
ಬಿನಗು ಜನುಮವ ನೀನೆ ಕರುಣಿಸಿ ಕುಣಿಸಿ
ಕುಣಿಸಿ ಕೊಲ್ಲುದುಚಿತವೇ
ಮಣಿವೆ ಮಾಧವೀಬವಣೆ ತಪ್ಪಿಸಿ ನೆನಹು ನಿಲಿಸೆನ್ನ
ಪೊರೆಯೊ ಸತತದಲಿ ೧
ಆನೆಮೊದಲಾಗಿ ಹೀನ ಕಡೆ ಈ ಶ್ವಾನ
ಸೂಕರ ಕ್ರಿಮಿಯ ಕೀಟಕ
ನಾನಾಪರಿ ಎಂಬತ್ತು ನಾಲ್ಕುಲಕ್ಷಯೋನಿದ್ವಾರದಿ
ತೊಳಲಿ ಬಳಲುತ ನಾ
ಜ್ಞಾನಶೂನ್ಯನಾಗಿ ನಿಮ್ಮಯ ಧ್ಯಾನವಿಲ್ಲದೆ
ಹಾನಿಬಟ್ಟೆನ್ನದೇನು ತಪ್ಪಿರೆ
ಜಾನಕೀಶನೆ ನೀನೆ ಕ್ಷಮೆಮಾಡಿ ಪೊರೆಯೊ ಸತತದಲಿ ೨
ನಿನ್ನ ಮಾಯೆಯಿಂ ತುಂಬಿ ಈ ಜಗ ನಿನ್ನ
ಮಾಯೆಯಿಂ ನಂದಿಪೋಗ್ವುದು
ನಿನ್ನ ಮಾಯಾಮಹಿಮೆದೆಲ್ಲವು ನಿನ್ನ ಹೊರತಿನ್ನನ್ಯವೊಂದಿಲ್ಲ
ಎನ್ನನ್ಯಾತಕೆ ಬನ್ನಬಡಿಸುವಿ ಭಿನ್ನವಿಲ್ಲದೆ ನಿನ್ನ ನಂಬಿದೆ
ಉನ್ನತೋನ್ನತ ಮಹಿಮ ಶ್ರೀರಾಮ ಎನ್ನ
ರಕ್ಷಿಸು ಪಿಡಿದು ಸತತದಲಿ ೩

 

೩೪೨
ನೆನೆಯುತ್ತ ತಿರಗುವೆನಯ್ಯ ಜೀಯ
ನಿನಗ್ಯಾಕೆ ದಯಬಾರದಯ್ಯ ಪ
ಮನುಮುನಿನುತ ನಿಮ್ಮ ವನÀರುಹಂಘ್ರಿಯಧ್ಯಾನ
ತನುಮನದಿಂ ಗೆಯ್ವೆ ಅನುದಿನ ಬಿಡದೆ ಅ.ಪ
ಪೋಷಿಸಲೊಲ್ಲ್ಯಾಕೋ ನೀನು ನಿಮ್ಮಯ
ದಾಸನು ನಾನಲ್ಲವೇನು
ದೇಶದೇಶಂಗಳನ್ನು ನಾನು ಬಿಡದೆ
ಘಾಸ್ಯಾದೆ ತಿರುತಿರುಗಿನ್ನು
ಈಸು ದಿವಸ ವ್ಯರ್ಥ ಮೋಸವಾದೆನು ನಿಮ್ಮ
ಧ್ಯಾಸ ಮರೆದು ಭವಪಾಶವಿದೂರನೆ ೧
ಪರುಷವ ಶಿರದೊಳು ಪೊತ್ತು ಎ
ನ್ನಿರವ್ಹಸಿದು ಬಳಲುವಂತಿತ್ತು
ಕರದಲ್ಲೆ ಮುಕುರುವಿತ್ತು ಅರಿಯದೆ
ಹಂಚಿನೋಳ್ಹಲ್ಕಿಸಿದಂತಿತ್ತು
ಪರಮಪುರುಷ ನಿಮ್ಮ ನೆರೆನಂಬಿ ಬದುಕದೆ
ದುರಿತದಿಂ ಬಳಲಿದೆ ಪರಿಪರಿ ಹರಿಹರಿ೨
ವರಭಕ್ತರಭಿಮಾನ ನಿನಗೆ ಇಲ್ಲೇನು
ಸ್ಥಿರ ಮುಕ್ತಿ ಪದದಾಯಕನೆ
ಸ್ಥಿರವಾಗಿ ಅರಿದು ನಾ ನಿಮಗೆ ಮರೆಹೋದೆ
ಕರುಣದಿ ಕೊಡು ವರಸುತಗೆ
ಅರಘಳಿಗ್ಯಗಲದೆ ಸ್ಮರಿಪೆ ನಿಮ್ಮಯ ಪಾದ
ಶರಣಾಗತರ ಪಾಲ ಸಿರಿವಂತ ಶ್ರೀರಾಮ ೩

 

೩೪೩
ನೆನೆಯೋ ನೆನೆಯೋ ನೆನೆಯೋ ಮನವೆ
ಘನಕರ್ಮಗಳನು ಕಳೆದು ಕಾಯುವ ಪ
ನೆನೆವ ಜನರ ಕನಕಾಭರಣನ ಅ.ಪ
ಹೊತ್ತು ಯಾಕೋ ಗೊತ್ತು ಯಾಕೋ
ನಿತ್ಯ ನೇಮವೆಂದು ಹೊತ್ತು ಗಳೆಯದೆ
ನಿತ್ಯ ನಿರ್ಮಲಚಿತ್ತದ ಹರಿಪಾದ೧
ಧೂಪವ್ಯಾಕೋ ದೀಪವ್ಯಾಕೋ
ಪಾಪಿನಾನೆಂದಾಲಿಸದೆ ತ್ವರ
ಪಾಪಲೋಪ ಸಿರಿಭೂಪ ಹರಿಯ ಪಾದ ೨
ಯಾಗ ಯಾಕೋ ಯಜ್ಞ ಯಾಕೋ
ನೀಗಿ ಮನದಲಿ ಭೋಗದಾಸೆಯ
ಭೋಗಿಶಾಯಿ ಶ್ರೀರಾಮ ಪಾದವ ೩

 

೩೪೪
ನೆರೆನಂಬಿ ಬೇಡುವೆನೊ ಶ್ರೀಹರಿಯೆ ನಿನ್ನ
ಪರಮ ಪರತರ ತವಬಿರುದುಗಳರಿದು ಪ
ಪುರನಾಶಗೈದು ನೀ ಪುರಸತಿಯರ್ವ್ರತ ಕೆಡಿಸಿ
ಪುರದೊಳಗೆ ತೋರಿದೆಲೋ ಪರಿಪರಿಯ ಲೀಲೆ
ದುರುಳ ರಕ್ಕಸರೊದೆದು ಹರಸುರಮುನಿಗಳಿಗೆ
ಕರುಣಿಸದ್ಯಸಮಸುಖ ಪರಮ ದಯಾನಿಧಿಯೆ ೧
ಸತಿ ಅಹಲ್ಯಾದೇವಿಗೆ ಪತಿಯಿತ್ತ ಶಾಪವನು
ಅತಿಹಿತದಿ ಪರಿಹರಿಸಿ ಗತಿಯಿತ್ತಿ ದೇವ
ಕ್ಷಿತಿಜಾತೆಪತಿ ನಿನ್ನ ಪತಿತಪಾವನಪಾದ
ನುತಿಪ ಭಕ್ತರಿಗೆ ಜವಮೃತ್ಯುಭಯತರಿವಿ ೨
ಮೃಡಸಖ ಶ್ರೀರಾಮ ದೃಢದಿ ಭಜಿಪರ ಬೆಂ
ಬಿಡದಿರ್ದು ಕಾಯ್ವಂಥ ಕಡುದಯದ ದೇವ
ದೃಢದಿಂದ, ನಂಬಿದೆ ಒಡಲಾಸೆ ಪೂರೈಸು
ಜಡಜಾಕ್ಷ ಕಡುದಯದಿ ಪಿಡಿಯೆನ್ನ ಕೈಯ ೩

 

ಈರೇಳು ಅಂದರೆ ಹದಿನಾಲ್ಕು, ಹದಿನಾಲ್ಕು
೬೩
ನೋಡಿರೆ ಯಶೋದೆಯ ಪುಣ್ಯ
ಪಡೆದಿಹ್ಯಳೆಂಥ ಮಾನ್ಯ ಪ
ಪೊಡವಿ ಈರೇಳನ್ನು ಒಡಲೊಳಿಟ್ಟವನನ್ನು
ತೊಡೆಮೇಲಾಡಿಸುವಳು ಅ.ಪ
ವಿಲಸಿತಮಹಿಮನ ಕಳೆಯ ತಿಳಿಯಲು ವೇದ
ಬಲುವಿಧ ಪೊಗಳುತ ನೆಲೆಯುಗಾಣದ ಘನ
ಕಳವಳಗೊಳುತಿಹ್ಯವಭವನ ದೆಸೆಯಿಂ
ಸುಲಭದೆತ್ತಿ ತನ್ನ ಮೊಲೆಯನುಣಿಸುವಳೀಕೆ ೧
ಭುಜಗಭೂಷನು ತನ್ನ ನಿಜಪದವನುದಿನ
ಭಜಿಸಿ ಬೇಡಲು ಕಾಣರಜಸುರಮುನಿಗಣ
ಸುಜನಗುಣಾಂತರಂಗ ತ್ರಿಜಗವ್ಯಾಪಕನ
ನಿಜವನು ಮನದಣಿ ಕಂಡು ಹಿಗ್ಗಿದಳೀಕೆ ೨
ಸೀಮರಹಿತಮಹಿಮ ನಾಮರೂಪಿಲ್ಲದ ನಿ
ಸ್ಸೀಮ ಸುಗುಣಸುಖಧಾಮ ಭೂಮಿಜೆಪತಿ
ಸ್ವಾಮಿ ಶ್ರೀರಾಮನ ವಿಮಲದಾಟದಲಿ
ಭೂಮಿಯೊಳ್ಮಿಗಿಲಾದಾನಂದೊಳಿಹಳೀಕೆ ೩

 

ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಗಳು
೧೭೪
ನೋಡಿರೋ ನೋಡಿರೋ ನಾಡಿನೊಳಗೆ ಮಹ
ಗೂಢದಿ ಹೊಳೆಯುವ ಶ್ರೀಗಳ ಚರಣಪ
ಪಾಡಿ ಬೇಡಿ ಹುಡುಕಾಡಿ ಪಡೆಯಿರೋ ವರ
ಗಾಢ ಜ್ಞಾನದಿಗೂಡಿದ ಯತಿಗಳ ಅ.ಪ
ಮಾಧವತೀರ್ಥರ ಮತದೊಳುದಿಸಿ
ಬಾಧಕರೂಪಿನ ಭವಭಯಛೇದಿಸಿ
ವೇದಸುಸ್ವಾದವ ಬೋಧಿಸಿ ನಿಜದ
ಹಾದಿ ತೋರಿಪ ನಿಜ ಬೋಧ ಶ್ರೀಗುರುಗಳ ೧
ಭಕ್ತರ ಕೂಡಿಸಿ ಮತ್ತು ಮಮತೆಯನೆ
ಬಿತ್ತರಿಸುತ ನಿತ್ಯ ಸತ್ಯವ ಸಾಧಿಸಿ
ಚಿತ್ತನಿಲಿಸಿ ಪುರುಷೋತ್ತಮನೊಳು ಬಿಡ
ದತ್ಯಾನಂದಿಪ ಮುಕ್ತಿಗೆ ಮೂಲರ ೨
ಆಶಾಪಾಶ ಮಾಯಮೋಸವ ಗೆಲಿದು
ನಾಶ ಪ್ರಪಂಚದ ವಾಸನೆ ಅಳಿದು
ಶ್ರೀಶ ಶ್ರೀರಾಮನ ಲೀಲದಿ ಬಿಡದನು
ಮೇಷದಾಡುವ ಮಹ ಪಾವನಶೀಲರ ೩

 

೩೪೫
ನೋಡು ಎನ್ನೊಳು ಮಾಡು ದಯವನು
ಬೇಡಿಕೊಂಬುವೆ ಮುರಹರ ಪ
ರೂಢಿಯೊಳು ಎನ್ನ ಖೋಡಿಮಾಡದೆ ಕಾ
ಪಾಡು ಬೇಗ ಭಕ್ತಹಿತಕರ ಅ.ಪ
ಪಂಕಜಾಕ್ಷನೆ ಕಿಂಕರನ ಈ
ಮಂಕುಗುಣಗಳ ಬಿಡಿಸಯ್ಯ
ಶಂಖಸುರಹರ ಶಂಕೆಯಾತಕೆ
ಕಿಂಕರನು ನಾಂ ಪಿಡಿ ಕೈಯ ೧
ಹಿಂದು ಇಲ್ಲೆನ್ನ ಮುಂದು ಇಲ್ಲಯ್ಯ
ತಂದೆ ನಿನ್ಹೊರತ್ಯಾರ್ಯಾರು
ಮಂದಮತಿಯನು ಛಿಂದಿಸಿ ಬೇಗ
ಕಂದನನು ಪೊರೆ ದಯಾಕರ ೨
ತಂದೆ ನೀನೆ ತಾಯಿ ನೀನೆ
ಬಂಧು ನೀನೆ ಶ್ರೀಕರ
ಬಂದ ದುರಿತದಿಂದ ಕಾಯೊ
ಸಿಂಧು ನೀನೆ ದೇವರೊ ೩
ಉರಗನ ಬಾಯಲಿರುವ ಮಂಡೂಕ
ಸ್ಮರಿಸಿ ನೋಣಕ್ಹವಣಿಸುವ ತೆರದಿ
ಶರಧಿಸಂಸಾರ ಸ್ಥಿರವೆಂದರಿಯದೆ
ಮರವಿನಿಂ ಬಿದ್ದೆ ದುರಿತದಿ ೪
ಕಾಯಜೆಂಬುವ ಮಾಯಕೋರನು
ಪಾಯಕೆ ಒಳಪಟ್ಟೆನು
ತೋಯಜಾಕ್ಷೇರ ಮಾಯಮೋಹದಿ
ಕಾಯದಂದಿಸಿ ಕೆಟ್ಟೆನು ೫
ಕುಂಭಿನಿಯೊಳೆನಗಿಂಬುಗೊಟ್ಟು ಬಲು
ನಂಬಿದವರಾಸ್ತ್ಯಳಿದೆನೊ
ಜಂಬಬಡಿಯುತ ಶುಂಭಗುಣಗಳಿ
ಗಿಂಬುಗೊಟ್ಟು ದಿನಗಳೆದೆನೊ ೬
ಪ್ರಾಣತಗ್ಗಿಸಿ ದೀನತನದಲಿ
ದೈನ್ಯಬಡುವರಿಗ್ಹಾನಿಮಾಡಿದೆ
ದಾನಕೊಡುವರ ದಾನಕಡ್ಡಾಗಿ
ನಾನಾ ದುರ್ಬೋಧವುಸುರಿದೆ ೭
ಜಾನಕೀಶನ ಧ್ಯಾನಯುತರಿಗೆ
ಹೀನ ಹಾಸ್ಯವ ಗೈದೆನೊ
ಏನು ತಿಳಿಯದೆ ಗಾಣಕೆ ಬಿದ್ದ
ಮೀನಿನಂತೆ ನಾನಾದೆನೊ ೮
ಶ್ವಾನನಂದದಿ ಖೂನವಿಲ್ಲದೆ
ನಾನಾಪಾಪವ ಗೈದೆನೊ
ಮಾನವಜನುಮೇನು ಶ್ರೇಷ್ಠಿದ
ಜ್ಞಾನದೋಳ್ಹೊತ್ತುಗಳೆದೆನೊ೯
ಮಂಗನಂದದಿ ಹಂಗದೊರೆದು
ಅಂಗಲಾಚಿ ಪರರನ್ನು ಬೇಡಿದೆ
ಅಂಗಜಪಿತ ಮಂಗಳಾಂಗ ಶ್ರೀ
ರಂಗ ನಿಮ್ಮ ಮಹಿಮ್ಯರಿಯದೆ ೧೦
ದಾಸ ಮಾಡಿದ ದೋಷ ಮನ್ನಿಸಿ
ಪೋಷಿಸು ಶ್ರೀರಾಮನೆ
ಶ್ರೀಶ ಶ್ರೀನಿವಾಸ ಎನ್ನಂತ
ರಾಸೆ ಪೂರೈಸು ಬೇಗನೆ ೧೧

 

೩೪೬
ನೋಡು ನೋಡು ನೋಡಯ್ಯ ರಂಗ
ಮಾಡು ದಯ ಕರುಣಾಂತರಂಗ ಪ
ಖೋಡಿಸಂಸಾರದ ಪೀಡೆಯ ಕಡೆಹಾ
ಯ್ಸ್ಹಿಡಿ ಕರ ಭವಭಂಗ ಅ.ಪ
ಮಡದಿಮಕ್ಕಳುಯೆಂಬ ಕಡುತೊಡರಿನ ಬಳ್ಳಿ
ತೊಡರಿಕೊಂಡೆನ್ನನು
ಕಡುವಿಧ ನೋಯಿಸುವುದೊಡೆಯನೆ ಕಡಿ ಗಡ೧
ಸಜ್ಜಾಗಿಲ್ಲೊಲ್ಲೆ ನಾನು ಪ್ರಪಂಚವಿದು
ಹೆಜ್ಜೆ ಹೆಜ್ಜೆಗೆ ಕಷ್ಟ
ಗರ್ಜಲ್ಲೊರ್ಜಿಸು ಸುಜನರಜ್ಜನೆ ೨
ಪ್ರೇಮದಿಂ ಕಂದನ ಪಾಮರಮನಸಿನ
ಕಾಮಿತವಳುಕಿಸಿ
ಕ್ಷೇಮವ ಪಾಲಿಸು ಸ್ವಾಮಿ ಶ್ರೀ ರಾಮನೆ ೩

 

೩೪೭
ನೋಡು ಮಾಧವ ಬೇಡಿಕೊಂಬೆ ಪ
ನೋಡಿ ನೀ ದಯಮಾಡಿ ಎನ್ನಯ
ಪೀಡೆ ದೂರಮಾಡು ಬೇಗದಿಅ.ಪ
ಅದ್ರಿಧರನೆ ಪರಮದಯಾಸ
ಮುದ್ರ ಎನ್ನನು ಕೊಲ್ಲುವ ಕಡುದಾ
ರಿದ್ರ್ಯಕಳೆದು ಬಯಲುಮಾಡಿ
ಭದ್ರವಾಗಿ ಕಾಯೊ ಹರಿಯೆ ೧
ಕ್ಷುದ್ರದನುಜರ ಸದೆದು ಭರದಿ
ಅದ್ರಿಯೆತ್ತಿ ಭಕ್ತಜನರ ಸುಖ ಸ
ಮುದ್ರದಿರಿಸಿ ಪೊರೆದೆಯೊ ಭುಜ
ಗಾದ್ರಿಶಾಯಿ ಸುದೃಷ್ಟಿಲೆನ್ನ ೨
ಎನ್ನ ಮನಸಿನ ಡೊಂಕ ತಿದ್ದಿ
ನಿನ್ನ ಚರಣದಾಸನೆನಿಸಿ
ಬನ್ನಬಡಿಸದೆ ಇನ್ನು ಜಗದಿ
ಮನ್ನಿಸಿ ಪೊರೆ ವರದ ಶ್ರೀರಾಮ ೩

 

೩೪೮
ನೋಡೆಲೊ ಎನ್ನ ಕರುಣದಿ ಹರಿ
ಮಾಡೊ ಉದ್ಧಾರ ಬೇಗದಿ ಪ
ರೂಢಿಯೊಳು ಮುಖ ಮಾಡಿ ಪರರನು
ಬೇಡದಂತೆನ್ನ ಮಾಡು ಮಾಧವ ಅ.ಪ
ಸೃಷ್ಟಿಯೊಳೆನ್ನ ನೂಕಿ ಯಾತಕೆ
ಬಿಟ್ಟಿ ಬೇಸರ ಮಾಡುವಿ
ಕೆಟ್ಟಹೊಟ್ಟೆಯ ಕೊಟ್ಟು ವಿಧವಿಧ
ಭ್ರಷ್ಟನೆನಿಸುವುದೇನಿದಭವ ೧
ಜ್ಞಾನಶೂನ್ಯನ ಮಾಡೀಭವಕೆ
ನೀನೆನೂಕಿದೆ ಮತ್ತಾರೆಲೊ
ಏನುಕಾರಣ ಪಾಪಿಯೆಂದೆನ್ನ
ಹೀನದೃಷ್ಟಿಲಿ ನೋಡ್ವೆ ದೇವ ೨
ಏನು ಸ್ವಾಧೀನ ಕೊಟ್ಟದ್ದೆನ್ನಗೆ
ನೀನೆ ನ್ಯಾಯವು ಪೇಳಯ್ಯ
ನೀನೆ ಸಕಲ ಸ್ವತಂತ್ರ ಎನಗೆ
ಜ್ಞಾನ ಪಾಲಿಸಿ ಪೊರೆ ಶ್ರೀರಾಮ ೩

 

೩೧೪
ನ್ಯಾಯತಂದಿಹೆನೊ ಹರಿ ನಿನ್ನ ಸಭೆಗೆ ತೀರ್ಪುಮಾಡಿದನು
ನ್ಯಾಯತಂದಿಹೆ ಪ
ನ್ಯಾಯ ತಂದಿಹೆ ನೋಯದೆ ಉ
ಪಾಯದಿಂದ ತೀರ್ಪುಮಾಡುವ
ನ್ಯಾಯಾಧೀಶ ದಯಾಳು ಎನ್ನ
ನ್ಯಾಯ ತೀರಿಸಿ ಕಾಯ್ವನೆಂದು ಅ.ಪ
ಕೊಟ್ಟ ಒಡೆಯರೋ ಬೆನ್ನಟ್ಟಿ ಎನ್ನನು
ಕಟ್ಟಿ ಕಾದ್ವರು ಭ್ರಷ್ಟನೆ ಮುಂದಕೆ
ಕೊಟ್ಟ್ಹ್ಹೋಗೆನ್ವರು ನಿಷ್ಠುರಾಡ್ವರು
ಕೊಟ್ಟು ಮುಕ್ತನಾಗ್ವೆನೆನ್ನಲು
ಖೊಟ್ಟಿಕಾಸು ಕೈಯೊಳಿಲ್ಲವು
ಎಷ್ಟು ಭವ ಬೆನ್ನಟ್ಟಿ ಬಿಡದ ಕ
ನಿಷ್ಟರಿಣಸೂತಕವ ಕಡಿಯೆಂದು ೧
ಅನ್ನ ಕೊಟ್ಟವಗೆ ಅನ್ಯಾಯ ಯೋಚಿಸಿ
ಬನ್ನ ಬಡಿಸಿದೆನೊ ಇನ್ನುಳಿಯದೆನೆಂದು
ನಿನ್ನ ಸೇರಿದೆನೊ ಪನ್ನಂಗಶಯನ
ಮುನ್ನ ಮಾಡಿದ ಎನ್ನ ಅವಗುಣ
ಭಿನ್ನವಿಲ್ಲದೆ ನಿನ್ನೊಳ್ಪೇಳುವೆ
ಸನ್ನುತಾಂಗನೆ ಮನ್ನಿಸಿ ಇದ
ನಿನ್ನು ಎನ್ನಯ ಬನ್ನಬಿಡಿಸಿದೆಂದು ೨
ಆಸೆಗೊಳಿಸಿದೆನೋ ಪುಸಿಯನ್ಹೇಳಿನಿ
ರಾಸೆಮಾಡಿದೆನೋ ಶಾಶ್ವತದಿ ಕೊಟ್ಟ
ಭಾಷೆ ತಪ್ಪಿದೆನೋ ವಸುಧೆಯೊಳು ನಾನು
ಈಸುದಿನದಿಂ ಮೋಸಕೃತ್ಯದಿ
ಘಾಸಿಯಾದೆನು ಧ್ಯಾಸಮರದು
ಶ್ರೀಶ ಶ್ರೀನಿವಾಸ ಶ್ರೀರಾಮ
ಪೋಷಿಸೆನ್ನ ಸುಶೀಲ ಗುಣವಿತ್ತು ೩

 

೬೨೭
ನ್ಯಾಯವಾಕೊ ನ್ಯಾಯವಾಕೊ
ತೋಯಜಾಕ್ಷನಲ್ಲದಿಲ್ಲ ಪ
ಸಾವÀಧಾನ ಚಿತ್ತನಾಗಿ ಮಾಯನೀಗಿ ಜ್ಞಾನಗೂಡಿ
ಸೇವೆ ಮಾಡೆಲೊ ದಾಸಜನರ ದಿವ್ಯತತ್ವವು ತೋರುತದೆ ೧
ವೃತ್ತಿಬಲಿಸಿ ನಿತ್ಯದಿ ಹರಿ ಕೀರ್ತನದಿ ನಿನ್ನ ಚಿತ್ತನಿಲಿಸಿ
ಸತ್ಯದಿಂದರಿಯುತ್ತಲಿರ್ದರೆ ಸತ್ಯವಸ್ತುವು ಅರ್ಥವಾಗ್ವುದು ೨
ಮಹಾತ್ಮರ ನಿಜವಾಕ್ಯ ನಂಬಿ ದುರಾತ್ಮತನವಂ ದೂರಮಾಡಿ
ಆತ್ಮನೋಳ್ನೀನಿಂತು ನೋಡೆಲೋ ಆತ್ಮರಾಮನ
ಮಹಾತ್ಮೆ ಕಾಂಬುದು ೩

 

ತಾಪತ್ರಯ
೫೪೯
ಪಂಥವ್ಯಾಕೋ ಪ್ರತಿಜ್ಞೆ ಯಾಕೋ ಪ
ಸಂತಸದಿ ನಿನ್ನಂತರಂಗದಿ
ಕಂತುಪಿತ ನೀನೆನಲು ಸಾಕೊ ಅ.ಪ
ಕೋಪವ್ಯಾಕೊ ತಾಪವ್ಯಾಕೋ
ತಾಪತ್ರಯಗಳ ಲೋಪ ಸಿರಿವರ
ಕಾಪಾಡೆನಲದೊಂದೆ ಸಾಕೊ ೧
ಕುಂದು ಯಾಕೋ ನಿಂದೆ ಯಾಕೋ
ಸಿಂಧುಶಯನಗೋವಿಂದಗರ್ಪಿ
ತೆಂದು ನೋಡ್ಹೆಚ್ದಿಂದ್ಯಾಕೆ ಬೇಕೊ ೨
ಕ್ಷೇತ್ರ ಯಾಕೋ ಯಾತ್ರವ್ಯಾಕೋ
ಖಾತ್ರಿಯಿಂದ ಜಗತ್ರಯಕೆ ಸು
ಸೂತ್ರಾಧಾರಿಯೆಂದ ಮಾತ್ರ ಸಾಕೊ ೩
ಸ್ನಾನವ್ಯಾಕೋ ಸಂಧ್ಯಾನವ್ಯಾಕೋ
ಜ್ಞಾನವಿಡಿದು ಭಕ್ತಪ್ರಾಣನಾಥನ
ಧ್ಯಾನಗೈಯಲದೊಂದೆ ಸಾಕೊ ೪
ಜಪವು ಯಾಕೋ ತಪವು ಯಾಕೋ
ಕಪಟನೀಗಪರಿಮಿತ ಹರಿಯ
ಗುಪಿತದಿಂದರ್ಚಿಸಲು ಸಾಕೊ ೫
ಮಂತ್ರವ್ಯಾಕೋ ತಂತ್ರವ್ಯಾಕೋ
ಮಂತ್ರಮೂರ್ತಿ ಸರ್ವಾಂತರ್ಯಾಮಿಯ
ಅಂತರಂಗ ತಿಳಿಯೆ ಸಾಕೊ ೬
ನೇಮವ್ಯಾಕೋ ನಿತ್ಯವ್ಯಾಕೋ
ಸ್ವಾಮಿಯೆನುತ ಪ್ರೇಮಿಯ ಶ್ರೀ
ರಾಮನ ನಂಬಿಕೊಳ್ಳಲು ಸಾಕೊ ೭

 

೫೪೪
ಪಡಕೋ ನೀನ್ಹಿಡಕೋ ರಂಗ ಶಾಯಿನಾಮವ
ಕಡಕೋ ನೀ ದುಡಕೋ ನಿಖಿಲೇಶನ ಪ್ರೇಮ ಪ
ಜನಮೆಚ್ಚಿ ವಂದಿಸಲು ನಿನಗೆ ಬಂದದ್ದೇನೋ
ಜನದೂಷಿಸಳಿದರೆ ನಿನಗೆ ಕುಂದೇನೋ
ಮನಮೆಚ್ಚಿ ನಡೆದು ಬಿಡದನುದಿನದಿ ಗಳಿಸುವಿ ನೀ
ಚಿನುಮಯ ಮನುಮುನಿವಿನಮಿತರ ಧ್ಯಾನ ೧
ಅಹುದೆಂದು ಇಹ್ಯದವರು ಭವಬಂಧ ತೊಲಗಿಪರೆ
ಸಹಿಸದೆ ಅಲ್ಲೆಂದು ಭವಕೆ ನೂಕುವರೆ
ಕುಹುಕಿಗಳ ಎದೆಮೆಟ್ಟೆ ಸಹಿಸಿಬಂದ ನಿಂದೆಗಳ
ಸಹಕಾರ ಪಡಿ ದೃಢದಿ ಅಹಿಶಾಯೆ ಅಡಿಭಕ್ತಿ ೨
ದೂಷಣ ಭೂಷಣನುಮೇಷ ಸಮಭಾವಿಸಿ
ನಾಶನೆನಿಸುವ ಜಗದ ವಾಸನೆಯ ಕಡಿದು
ದಾಸಜನರೊಡೆಯ ಮಮಶ್ರೀಶ ಶ್ರೀರಾಮನಡಿ
ಧ್ಯಾಸದೊಳಗಿಟ್ಟುಪಡಿ ಲೇಸೆನಿಪ ಮುಕ್ತಿ ೩

 

೩೫೩
ಪದವ ಕಲಿಸೆನಗೆ ಶ್ರೀಹರಿ
ಪದವ ಕಲಿಸೆನಗೆ ಪ
ಪದವ ಕಲಿಸಯ್ಯ ಪದುಮನಾಭ
ಪದದ ಮಹಿಮೆಯೆಂಬ ಸುಧೆಯು ಭರಿತವಾದ ಅ.ಪ
ನಾಗಶಾಯಿಯ ವಿಮಲನಾಮವೆಂಬ
ರಾಗಕಲಿಸು ಮಿಗಿಲು
ಭೋಗ ಭಾಗ್ಯದಾಸೆ ನೀಗಿಸಿ ಈ ಭವ
ರೋಗ ಗೆಲಿದು ತಲೆದೂಗಿ ನಲಿಯುವಂಥ ೧
ದೋಷದೂರನ ಚರಿತರಸದಿಂ
ಸೂಸಿ ಹರಿವ ಕವಿತ
ಶ್ಲೇಷ ನೀಗಿಸಿ ಪ್ರಪಂಚ್ವಾಸನದುಳಕಿಸಿ
ಸಾಸಿರನಾಮ ಹುಸಿ ತಾಳದಿ ಪಾಡುವಂಥ ೨
ಯತಿತತಿಗಳು ಪೊಗಳ್ವ ಬಿಡದತಿ
ಮತಿಮಾನ್ಯರು ಪಾಡ್ವ
ರತಿಪತಿಪಿತ ಶ್ರೀರಾಮ ನಿನ್ನಡಿಭ
ಕ್ತ್ಯತಿಗಣಕೂಡಿದ ಅತಿಶಯಾನಂದಕರ ೩

 

೩೫೪
ಪನ್ನಂಗಶಯನ ನಿನ್ನ ನಾ ಬಿಡೆನಯ್ಯ ಪ
ನಿನ್ನ ಬಿಡುವೆನೆಂತು ಎನ್ನ ಮನಸಿನ ಡೊಂಕನ್ನು
ಚೆನ್ನಾಗಿ ತಿದ್ದಿ ಮನ್ನಿಸಿ ಸಲಹುವನಕ ಅ.ಪ
ಕಾಲಿಲ್ಲದವನಾಗಿ ತಲೆಯುದರದಡಗಿಸಿ
ಜಲದಿ ಮುಳುಗಲು ನಿನ್ನ ಬಲವ ಪಡೆಯದೆ ಬಿಡೆ ೧
ನೆಲವನಗೆದು ಬೇರು ಮೆಲುತ ಚರಿಸಲು ಮತ್ತೆ
ಹಲ್ಲುಕಿಸಿದು ಗರ್ಜಿಸಲು ಬಿಡೆನೊಲಿಸದೆ ೨
ತಿರುಕನೀನಾದರು ಕರದಿ ಕೊಡಲಿಪಿಡಿದು
ಶಿರ ತರಿವೆನೆನೆ ನಿನ್ನ ಚರಣಕಾಣದೆ ಬಿಡೆನು ೩
ವನವಾಸಿಯಾದರು ಘನಚೋರನಾದರು
ವನತೇರೊಳ್ಬತ್ತಲೆ ಕುಣಿದರು ಬಿಡೆ ನಿನ್ನ ೪
ಭವಭಯನಾಶನ ದಯಾಕರ ಶ್ರೀರಾಮ
ಹಯವೇರೋಡಲು ನಿನ್ನ ಸಹಾಯ ಪಡೆಯದೆ ಬಿಡೆ ೫

 

೧೪೭
ಪರಮಪಾವನ ಪ್ರಾಣದೇವ ನಂಬಿದೆ ನಿನ್ನ
ಹನುಮರಾಯ ಎನ್ನ
ದುರಿತದಾರಿದ್ರ್ಯವ ಪರಿಹರಿಸಿ ಸಲಹೋ ಹನುಮರಾಯ ಪ
ದಿನದಿನ ಘನಘನ ತನುವಿನರೋಗವು ಹನುಮರಾಯ ಇನ್ನು
ಘನವಾಯ್ತು ಕನಿಕರದಿಂದ ಕಡೆಹಾಯ್ಸಯ್ಯ ಹನುಮರಾಯ
ಕ್ಷಣಸುಖವಿಲ್ಲದೆ ಅನುಪಮ ನೋಯುವೆ ಹನುಮರಾಯ
ಎನ್ನಮನಕೆ ಸಂತಸವಿತ್ತು ಘನವಾಗಿ ಸಲಹಯ್ಯ
ಹನುಮರಾಯ೧
ಕಿರಿಕಿರಿಸಂಸಾರ ಪರಿಪರಿಬಾಧೆಯು ಹನುಮರಾಯ ಬೇಗ
ಪರಿಹರಿಸಿ ಎನಗೆ ಪರಮ ಸುಖವ ನೀಡೊ ಹನುಮರಾಯ
ಇರಬಂದೆನರಲವ ಈ ಪರಿ ಬಾಧ್ಯಾಕೊ ಹನುಮರಾಯ ಇನ್ನು
ಮರವೆಹರಿಸಿ ನಿಜಅರಿವು ಕರುಣಿಸಿ ಕಾಯೊ ಹನುಮರಾಯ ೨
ಸ್ವಾಮಿ ಶ್ರೀರಾಮನ ಪ್ರೇಮದದೂತನೆ ಹನುವಇರಾಯ ದೇವ
ನೇಮದಿ ನಿಮ್ಮಯ ಪಾದ ಭಜಿಸುವೆನಯ್ಯ ಹನುಮರಾಯ
ಈ ಮಹಕಷ್ಟದಿ ಕ್ಷೇಮ ಪಾಲಿಸಯ್ಯ ಹನುಮರಾಯ ನಿನ್ನ
ಪ್ರೇಮದಿರಿಸಿ ಎನ್ನ ಮುಕ್ತಿಗ್ಯೋಗ್ಯನ ಮಾಡೊ ಹನುಮರಾಯ ೩

 

೩೫೫
ಪರಮಾನಂದ ಕರುಣಾಸಿಂಧು
ವರವ ನೀಡಲು ಭಕುತಬಂಧು ಪ
ಪರಮಚರಿತ ದುರಿತರಹಿತ
ಪೊರೆಯೊ ಪ್ರಥಮಜನರ ಪ್ರೀತ
ಸ್ಮರಿಪೆ ನಿರುತ ಸುರಗಣನುತ
ಮೊರೆಯೊ ಕೇಳೆಲೊ ವರಪ್ರದಾತ ೧
ಉರಗಭೂಷ ಭಜಕಪೋಷ
ದುರಿತನಾಶ ಸುಜನವಾಸ
ವರಮಹೇಶ ತ್ರಿ ಜಗದೀಶ
ಪೊರೆ ಪ್ರಕಾಶ ತ್ರಿಪುರನಾಶ ೨
ನಿಗಮವಿನುತ ಭಗವದ್ಭಕ್ತ
ಸುಗುಣವಿಖ್ಯಾತ ಜಗನ್ನಾಥ
ಜಗಜೀವಿತ ಶ್ರೀರಾಮ ಪ್ರೀತ
ಈಗೆನ್ನಂತರಂಗ ಪಾಲಿಸೊ ೩

 

೬೩೨
ಪರಸುಖದಿರವನು ಕರುಣಿಸು ಎನಗೆ
ಪರಮಪಾವನ ತವಚರಣಸೇವೆಯೆಂಬ ಪ
ಅರಿಷಡ್ವರ್ಗದ ಉರುಬಾಧೆ ತಪ್ಪಿಸಿ
ಮೆರೆವೆಂಟುಕೋಣಗಳು ಶಿರತರಿದ್ಹಾರಿಸಿ
ಜರೆಮರಣೆಂದೆಂಬ ಉರುಲನು ಜೈಸಿದ
ಹರಿಶರಣರ ಮಹ ಕರುಣಕಟಾಕ್ಷವೆಂಬ ೧
ಹತ್ತು ಇಂದ್ರಿಯಗಳು ಒತ್ತಿ ಮುರಿದು ನೂಕಿ
ಸುತ್ತಿಸುಳಿವ ಕಪಿನ್ಹತ್ತಿರ ಬಂಧಿಸಿ
ಹತ್ತಿಕಾಡುವ ಭವ ಕತ್ತರಿಸೊಗೆದ
ಚಿತ್ತಜತಾತನ ಭೃತ್ಯಂ ನಡೆಯೆಂಬ ೨
ಹರಣಪೋದರು ನಿನ್ನ ಚರಣಸ್ಮರಣೆಯನ್ನು
ನೆರೆನಂಬಿ ಬಿಡದಂಥ ಪರಮದಟವ ನೀಡೋ
ಪೊರೆ ತವದಾಸರ ನೆರೆಯೊಳಿರಿಸಿ ಎನ್ನ
ಶಿರದಿ ಹಸ್ತವನಿತ್ತು ವರದ ಶ್ರೀರಾಮ ೩

 

೩೫೬
ಪರಿಪರಿ ಕೊಂಡಾಡೋ ಹರಿಯನ್ನು
ಮರೆದು ನೀ ಕೆಡಬೇಡೋ ಮನವೆ ಪ
ಮರವೆ ಮಾಯ ನೀಗಿ ಧರೆಭೋಗ ಮೆಚ್ಚದೆ
ನಿರುತ ಭಜಿಪರ ಬಿಟ್ಟು ಅರಲವಗಲ ಹರಿ ಅ.ಪ
ಕರುಣಸಾಗರನು ನರಹರಿ ಚರಣದಾಸರನ್ನು ತನ್ನಯ
ಹರಣಸಮಾನ ಮಾಡಿ ಕರುಣದಿಂದವರ
ಇರವ ಪೂರೈಸುತ ಪೊರೆವ ಪ್ರೇಮದಿಂದ ೧
ಚಿಂತೆ ಭ್ರಾಂತಿಗಳನು ಬಿಡಿಸಿ ಸಂತಸ ಕರುಣಿಸಿ ಅವರ
ಅಂತರಂಗದಿರ್ದು ಅಂತರ ತಿಳಿಯಿತು
ಚಿಂತಿಸಿದ್ದನ್ನಿತ್ತು ಸಂತಸದಿಂ ಕಾಯ್ವ ೨
ಸಾರಿಸಾರಿಗೆ ತನ್ನ ಚರಣಸೇರಿ ಭಜಿಪರನ್ನು ಬಿಡದೆ
ಆರಭಾರ ಪೊತ್ತು ಸೇರಿ ಅವರ ಬಳಿಯ
ಪಾರಸಂಭ್ರಮದಿಂ ಧೀರ ನಲೀತಿಹ್ಯ ೩
ಅಮಲರೂಪ ತನ್ನ ನಿರುತ ವಿಮಲಚರಣವನ್ನು ನಂಬಿದ
ಸುಮನಸರಹೃದಯಕಮಲದಿ ವಾಸಿಸಿ
ನಿಮಿಷಬಿಟ್ಟಗಲದೆ ಕ್ರಮದಿ ಪಾಲಿಸುವ೪
ಗೂಢದಿಂದ ಸ್ಮರಿಪ ಭಕುತರ ಗಾಢಮಹಿಮೆ ಕೃಪಾದೃಷ್ಟಿಯಿಂ
ಬೇಡಿದ ವರಗಳ ಕಾಡದೆ ನೀಡುತ
ರೂಢಿಯೋಳ್ ಬಿಡದೆ ಕಾಪಾಡುವ ಶ್ರೀರಾಮ ೫

 

೬೪
ಪಾಠವ ಕೊಡು ಹರಿಯೆ ಮುಂದೆನಗೆ
ಸಾಟಿಯಿಲ್ಲದೆ ನಿನ್ನ ಆಟಕಾಣುವ ವಿದ್ಯೆ ಪ
ಸುಜನ ಸನ್ನುತ ತವ ನಿಜಮಹಿಮೆನ್ನ ಮನದಿ
ನಿಜಪಿಡಿದನುದಿನ ಭಜಿಪ ಸುವಿದ್ಯ ೧
ನಿಪುಣತೆಯಲಿ ನಿಮ್ಮ ಸಫಲಸಚ್ಚರಿತವ
ಅಪರೋಕ್ಷಧೊಗಳುವ ಗುಪಿತ ಸುವಿದ್ಯ ೨
ಪ್ರಾಣೇಶ ಶ್ರೀರಾಮ ಮಾಣದೆ ತವಪಾದ
ಧ್ಯಾನ ಸದೃಢಭಕ್ತಿ ಜ್ಞಾನ ಸುವಿದ್ಯ ೩

 

೫೪೫
ಪಾತಕಗೆ ಪರತರದ ಗುರುಬೋಧವ್ಯಾಕೆ
ಸೂತಕವ ಬಿಡದವಗೆ ಪರತತ್ವವ್ಯಾಕೆ ಪ
ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ
ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ
ಭೂತಬಡಿದವನಿಗೆ ಭೀತಿಯು ಯಾತಕ್ಕೆ
ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ ೧
ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ
ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ
ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ
ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ ೨
ಪತಿಗಂಜದವಳಿಗೆ ವ್ರತನೇಮಗಳು ಯಾಕೆ
ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ
ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ
ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ ೩
ಮಾನಹೀನನಿಗೆ ಬೇರೆ ಮರಣಬರಲೇಕೆ ಅ
ಜ್ಞಾನಿಗ್ಯಾತಕ್ಕೆ ಜಾಣಜನಸಂಗ
ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು
ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ ೪
ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ
ಕರುಣವಿಲ್ಲದವನಿಗೆ ಗುರುಸೇವೆ ಯಾಕೆ
ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ
ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ ೫

 

೫೪೬
ಪಾತಕಮನುಜ ಯಾತಕೆ ಗರುವ
ನೀ ತಿಳಿದುಳಿ ಜಗನ್ನಾಥನನನು ಪ
ನಿಲುಕದ ಮಾತಿಗೆ ಬಲುಬಿಂಕ ಯಾತಕೊ
ಬಲು ಬಲು ಮಹಿಮರು ತಿಳಿಯದೆ ಭವ
ಬಲೆಯೊಳಗ್ಹೊಳುವರರಿದು ನಿಜ ತಿಳಕೊ ೧
ಸ್ವಾಭಿಮಾನ್ಯಾಕೋ ದೇಶಾಭಿಮಾನವ್ಯಾಕೋ
ನಭರಾಜಪಾಲ ಮಹಪ್ರಭುವಿನ ಶ್ರೀಪಾದ
ಸೊಬಗಿನಿಂ ಭಜಿಸುವ ಭವಕಡಕೊ ೨
ಕೋಪವು ಯಾಕೋ ತಾಪವು ಯಾಕೋ
ಆ ಪರಬ್ರಹ್ಮ ಜಗದ್ವ್ಯಾಪಕ ಶ್ರೀರಾಮನಪ
ರೂಪನಂಬಿ ಮುಕ್ತಿಸುಖ ಪಡಕೊ ೩

 

ಮರೀಚಿ, ಅತ್ರಿ, ಅಂಗೀರಸ
೬೭
ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನ
ಪಾದಕಂಡು ಪಾವನಾದೆನು ಪ
ಪಾದಕಂಡು ಪಾವನಾದೆನು
ಮಾಧವನ ಪ್ರಸಾದ ಪಡೆದೆನು
ಹಾದಿಗಾಣದೆ ಪರಮ ದುರ್ಭವ
ಬಾಧೆಯೊಳು ಬಿದ್ದು ತೊಳಲಿ ಬಳಲುತ
ಮೇದಿನಿಯೊಳು ಜನುಮ ತಾಳಿ
ಭೇದಮತದ ಹಾದಿಬಿಟ್ಟು ಅ.ಪ
ನೀಲಬಣ್ಣದೊಪ್ಪುವ ಸುಂದರ ಶುಭಕಾಯ ಇಂದಿರೆ
ಲೋಲ ತ್ರಿಜಗಮೋಹನಾಕಾರ ಕೊರಳಪದಕ
ಮಾಲ ಕೌಸ್ತುಭ ಮುಕುಟಮಣಿಹಾರ ರತ್ನದುಂಗುರ
ಕಾಲೊಳ್ಹೊಳೆಯುವ ಗೆಜ್ಜೆಸರಪಳಿ
ಶೀಲವೈಷ್ಣವ ನಾಮ ಪಣೆಯಲಿ
ಕಾಳರಕ್ಕಸಕುಲಸಂಹಾರನ
ಪಾಲಸಾಗರಕನ್ನೆವರನ
ಪಾಲಮೂಲೋಕಸಾರ್ವಭೌಮನ
ಮೇಲು ಭೂವೈಕುಂಠದಲ್ಲಿ ೧
ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣ
ಪಟ್ಟ ರತ್ನದ ನಡುವಿಗುಡಿದಾರ ವರ್ಣಿಸುವರಾರು
ಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರ
ಬಿಟ್ಟು ವೈಕುಂಠ ಇಹ್ಯಕೆ ಸಾಗಿ
ಬೆಟ್ಟದ ಮೇಲೆ ವಾಸನಾಗಿ
ಕೊಟ್ಟು ವರಗಳ ಮೂರು ಜಗಕೆ
ಶೆಟ್ಟಿಯಂದದಿ ಕಾಸುಕೊಳ್ಳುವ
ದುಷ್ಟಭ್ರಷ್ಟ ಶಿಷ್ಟರೆಲ್ಲರ
ಇಷ್ಟದಾಯಕದಿಟ್ಟ ದೇವನ ೨
ಒಂದೆ ಮನದಲಿ ಸಕಲ ಸೇವಕರು ಭಯಭಕುತಿಯಿಂದ
ಬಂದು ಹರಕೆಯ ತಂದು ನೀಡುವರು ತುಂಬರನಾರದ
ರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರು
ಹೊಂದಿ ಭಜಿಸುತ ಸಪ್ತಋಷಿಗಣ
ಬಂದು ಇಳಿವರು ಬಿಡದೆ ಅನುದಿನ
ವಂದ್ಯ ನಿಗಮಾದಿಬಂಧು ಭಜಿಪರ
ಕಂದುಗೊರಳಾದಿ ಬ್ರಹ್ಮಸುರರಿಂ
ಗಂಧಪರಿಮಳ ಕುಸುಮ ದ್ರವ್ಯಗ
ಳಿಂದ ಸೇವೆಯ ಗೊಂಬದೇವನ ೩
ಉದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿ
ಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿ
ಮುದುಕನಾಗಿ ಕಾಂಬ ಮನೋಹರ ಬಹುಮಹಿಮಗಾರ
ಪದುಮವದನ ಮದನನಯ್ಯ
ಪದುಮವತಿಯ ಪ್ರಾಣಪ್ರಿಯ
ಒದಗಿಬಂದ ಭಕುತಜನರನು
ಸುದಯದಿಂದ ಕರೆದು ಪ್ರಸಾದ
ಮುದದಿ ನೀಡುತ ಕೃಪೆಯದೋರಿ
ಸದಮಲಸಂಪದವನೀವನ ೪
ತೀರದೀತನ ಲೋಕಶೃಂಗಾರ ಏರಿ ನೋಡಲು
ಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲು
ದಾರಿಯಲಿ ಕೊಳ್ಳ ಏಳು ವಿಸ್ತಾರ ಪರಮಪರತರ
ತೋರುವ ಮಹ ಗುಡಿಯು ಗೋಪುರ
ದ್ವಾರ ಚಿನ್ನದ ಕಳಸ ಬಂಗಾರ
ಗಾರು ಮಾಡದೆ ದಾಸಜನರನು
ತಾರತಮ್ಯದಿ ಪೊರೆಯಲೋಸುಗು
ಸೇರಿಧಾರುಣಿ ವೈಕುಂಠವೆನಿಸಿದ
ಧೀರವೆಂಕಟ ಶ್ರೀಶ ರಾಮನ 5

 

೬೫
ಪಾದಪ್ರೇಮ ಪಾಲಿಸು ಪಾದಪ್ರೇಮ ಪ
ಪಾಪವಿರಾಮ ಪಾವನನಾಮ ಅ.ಪ
ಸ್ಮರಿಪರ ಪ್ರೇಮ ವರಬಲಭೀಮ
ವರ ನೀಲಶ್ಯಾಮ ರಘುಕುಲಸೋಮ
ಶರಣರ ಸುರತರು ಜಗದೋದ್ಧಾಮ ೧
ಗೋವುಗಳ ಪಾಲ ಗೋಕುಲಬಾಲ
ಪಾವನಮಾಲ ಗಾನವಿಲೋಲ
ಸಾವಿರನಾಮಕ ಸುಜ್ಞಾನಸಪಾಲ ೨
ಸಾಗರ ಕನ್ನಿಕಾ ಪ್ರಾಣರಮಣ
ನಾಗಾರಿಗಮನ ನಾಗಶಯನ
ಆಗಮನುತ ಮಮಪ್ರಾಣ ಶ್ರೀರಾಮ ನಿನ್ನ ೩

 

ಈ ಕೀರ್ತನೆಯಲ್ಲಿ ಹರಿಯ ಅವತಾರದ
೬೬
ಪಾದವ ತೋರೋ ಪಾವನಮಹಿಮೆ ಪ
ಪಾದವ ತೋರೋ ರಂಗಯ್ಯ
ಪಾದಕೆ ಬಿದ್ದು ಪಾವನನಾಗುವೆ ಪಾದವ ತೋರೋ ಅ.ಪ
ಥಳಥಳ ಹೊಳೆಯುತ ಜಲದಿ ಸಂಚರಿಸಿದ
ಪಾದವ ತೋರೋ ಎನ್ನಯ್ಯ
ಬಲುಗೌಪ್ಯದಿ ಒಳಗೆಳೆದು ಮುದುರಿಕೊಂಡ
ಪಾದವ ತೋರೋ
ಬಲಿಯಮೆಟ್ಟಿ ರಸಾತಳಕಿಳಿಸಿದ ಘನ
ಪಾದವ ತೋರೋ ಎನ್ನಯ್ಯ
ಇಳೆಯ ಮೇಲೆ ಬಿದ್ದ ಶಿಲೆಯ ತುಳಿದ
ಮಹಪಾದವ ತೋರೋ ೧
ಗಾಬರಿಯಿಂದ ಭರತ ಬಂದೆರಗಿದ
ಪಾದವ ತೋರೋ ಎನ್ನಯ್ಯ
ಶಬರಿ ಭಕ್ತಿಯಿಂದ ಮುಟ್ಟಿ ಪೂಜಿಸಿದ ಪಾದವ ತೋರೋ
ಪ್ರಭು ಹನುಮಂತನ ಹೃದಯದೋಳ್ಹೊಳೆಯುವ
ಪಾದವ ತೋರೋ ಎನ್ನಯ್ಯ
ನಭೋಮಾರ್ಗದಿ ನಿಂದು ವಿಭೀಷಣ ನಮಿಸಿದ
ಪಾದವ ತೋರೋ ೨
ಕರಿರಾಜ ಸ್ಮರಿಸಲು ಸರಸಿಗೆ ಇಳಿದ
ಪಾದವ ತೋರೋ ಎನ್ನಯ್ಯ
ಉರಗನ ಶಿರಮೆಟ್ಟಿ ಪರಿಪರಿನಲಿದ ಪಾದವ ತೋರೋ
ಗರುಡನ ಏರಿ ಗಮಿಸುವ ಪರತರ
ಪಾದವ ತೋರೋ ಎನ್ನಯ್ಯ
ಪರಮಪಾವನೆ ಸುರಗಂಗೆಯನು ಪೆತ್ತ ಪಾದವ ತೋರೋ ೩
ಸದಮಲ ರಾಧೆ ತನ್ನ್ವದನದಿಂ ಚುಂಬಿಸಿದ
ಪಾದವ ತೋರೋ ಎನ್ನಯ್ಯ
ವಿದುರನ ಸದನವ ಸುದಯದಿಂದ ಪೊಕ್ಕ ಪಾದವ ತೋರೋ
ಅಧಮಪೂತನಿಯ ಕೊಂದೊದೆದ
ಪಾದವ ತೋರೋ ಎನ್ನಯ್ಯ
ವಿಧವಿಧದೆಶೋದೆ ತೊಡೆಯ ಮೇಲಾಡಿದ
ಪಾದವ ತೋರೋ ೪
ಧರೆಯನು ಮೀಂಟಿ ಕುರುಪನ ಕೆಡಹಿದ
ಪಾದವ ತೋರೋ ಎನ್ನಯ್ಯ
ಧುರದಲಿ ನರನ ವರೂಥ ನೆಲಕೊತ್ತಿದ ಪಾದವ ತೋರೋ
ಚರಣದಾಸರಿಗೆ ಪರಮಮುಕ್ತಿನೀಯ್ವ
ಪಾದವ ತೋರೋ ಎನ್ನಯ್ಯ
ವರದ ಶ್ರೀರಾಮನ ಮರೆಯಬಿದ್ದ ನಿಜ ಪಾದವ ತೋರೋ ೫

 

ವಾಕ್ಕು, ಮನಸ್ಸು, ಶರೀರ
೧೪೮
ಪಾರ ಶಂಭೋ ಪಾಲಿಸಭವ
ಧೀರ ಶ್ರೀಹರಿಸಖನೆ ಪರಶಿವ ಪ
ಮೂರು ಪುರವ ಗೆಲಿದ ಮಹಿಮ
ಮೂರು ಕರಣ ಶುದ್ಧನೆನಿಸಿ
ಮೂರು ಗುಣಗಳ ಹಾರೈಸೆನಗೆ
ನಾರಸಿಂಹನ ಪಾದ ಭಕ್ತಿ ೧
ಪಂಚಮುಖನೆ ಪದಕೆ ನಮಿಪೆ
ಪಂಚಕ್ಲೇಶಗಳಳಿದು ಎನ್ನ
ಪಂಚಕತ್ವ ನೀಗಿಸಿ ವಿ
ರಂಚಿಪಿತನ ದಿವ್ಯಧ್ಯಾನ ೨
ಕಾಮದಹನ ನೀಲಕಂಠ
ಸ್ವಾಮಿ ನಿಮ್ಮನು ನಂಬಿ ಬೇಡ್ವೆ
ಕ್ಷೇಮವಿತ್ತು ಪ್ರೇಮದೆನಗೆ
ಭೂಮಿಪತಿ ಶ್ರೀರಾಮನೊಲುಮೆ ೩

 

೩೫೭
ಪಾಲಯ ಕೃಪ ಆಲಯ ಬಾಲಗೋ
ಪಾಲ ಬೇಗ ಪಾಲಿಸು ಪಿಡಿದೆನ್ನ ಪ
ನಿತ್ಯನಿರ್ಮಲ ಸತ್ಯಚರಿತ ದೇವ
ಸತ್ಯಭಾಮೆಯ ಪ್ರಿಯನಾಥ ಸ್ವಾಮಿ
ನಿತ್ಯನಿಗಮ ವೇದವಿನುತ ಜಗ
ಕರ್ತು ಕಾರುಣ್ಯರಸಭರಿತ ಆಹ
ಭಕ್ತಾಂತರ್ಗತ ಕಾಲಮೃತ್ಯುಸಂಹರ ಸ
ಚ್ಚಿತ್ತಾನಂದ ಹರಿ ಸತ್ಯ ಸರ್ವೋತ್ತಮ ೧
ದಿನಮಣಿಕೋಟಿಪ್ರಭಾಕರನುತ
ವನಜಸಂಭವ ಸುರನಿಕರ ದಿವ್ಯಗುಣ
ಘನನಿಧಿಗಂಭೀರ ಜೀಯ
ಅನುಪಮ ಭೂಗಿರಿವರ ಆಹ
ಮನಸಿಜಪಿತ ಮನುಮುನಿಮನಮಂದಿರ
ತನುತ್ರಯದಲಿ ನಿನ್ನ ನೆನಹನು ಪಾಲಿಸು ೨
ಶ್ಯಾಮಸುಂದರ ಕೋಮಲಾಂಗ ಭಕ್ತ
ಕಾಮಿತಫಲಪ್ರದಪುಂಗ ದುಷ್ಟ
ಸೋಮಕಸುರಮದಭಂಗ ಪುಣ್ಯ
ನಾಮಕ ಸುಜನತರಂಗ ಆಹ
ತಾಮಸ ಪರಿಹರ ಭೂಮಿಜನಕ ಜಯ
ಕ್ಷೇಮ ಕರುಣಿಸು ಮಮಸ್ವಾಮಿ ಶ್ರೀರಾಮಯ್ಯ ೩

 

೩೫೮
ಪಾಲಿಸಯ್ಯ ಪದುಮವದನ
ಪಾಲಸಾಗರಶಾಯಿ ನಂಬಿದೆ ಪ
ಪಾಲ ಸುಜನಶೀಲ ಸುಗುಣ
ಕಾಲಕಾಲದಿ ತವ ಭಜನ ಅ.ಪ
ನಾದಬ್ರಹ್ಮನಾದಿಕಾಲದ
ಆದಿವಸ್ತು ಭಜಿಪೆ ಸದಾ
ಮೋದದೀಯೋ ಎನಗೆ ಮುದ
ಭೇದವಾದ ಗೆಲಿದ ವಿಮಲ
ಸಾಧುಸುಜನರಮಿತವರ್ತನ
ವೇದವೇದಾಂತದೊಳು ಗೌಪ್ಯ
ವಾದ ನಿಜ ಬೀಜಮಂತ್ರ ೧
ಮಾಲತುಲಸಿ ಕೌಸ್ತುಭಾಂಬರ
ಮೇಲುನಿಲಯ ಕುಜನಕುಠಾರ
ಶೀಲ ಸುಗುಣ ಕರುಣಾಮಂದಿರ
ಕೀಳುತನದಿ ಮಾಡಿದ ಎನ್ನ
ಹಾಳು ಪಾಪಗಳನು ಸುಟ್ಟು
ಬಾಲನೆಂದು ಕರುಣವಿಟ್ಟು
ಮೂಲತತ್ತ್ವಕಿಳಿಸು ದಯದಿ ೨
ಭಾಸುರಕೋಟಿವರಪ್ರಕಾಶ
ಸಾಸಿರನಾಮ ಜಗಜೀವೇಶ
ದೋಷಹರಣ ಭವವಿನಾಶ
ದಾಸಜನರ ಪ್ರಾಣಪ್ರಿಯ
ಪೋಷಿಸೆನ್ನನುಮೇಷ ನಿಮ್ಮ
ದಾಸರ ದಾಸನೆನಿಸಿ
ಶೇಷಶಯನ ಶ್ರೀಶ ಶ್ರೀರಾಮ ೩

 

೩೫೯
ಪಾಲಿಸಯ್ಯ ವರವ ಹರಿಹರಿ
ಪಾಲಿಸಯ್ಯ ವರವ ಪ
ಪಾಲಿಸಯ್ಯ ವರ ಬಾಲಗೆ ಬೇಗನೆ
ಕಾಲಕಾಲದಿ ನಿನ್ನ ಲೀಲಾನಂದವ ಅ.ಪ
ಸತತದಿ ತವಭಜನೆ ಅಗಲಿಸ
ದತಿ ಗುಪ್ತ ತತ್ವವನು
ಯತಿತತಿ ಪೊಗಳುವ ಸ್ರ‍ಮತಿಶಾಸ್ತ್ರರ್ಥವನಿತ್ತು
ಸುತಗೆ ಮಹಗತಿಯ ಪಥಕೆ ಹಚ್ಚು ೧
ಮತಿ ಮಾನ್ಯರು ಸದಾ ಪೊಗಳುವ-
ಪತಿತ ನಿಮ್ಮ ಪಾದ ಸತತ
ನುತಿಪ ಅತಿಹಿತ ಮತಿಯಿತ್ತು
ಪತಿತ ಪಾವನ ಮಾಡು ರತಿಪತಿಪಿತನೆ ೨
ಜಡ ಬಡತನ ಕಡಿದು ಗಡನೆ
ನ್ನೊಡಲಾಶೆಯ ತೊಡೆದು
ನುಡಿನುಡಿಗಡಿಗಡಿಗೆಡಬಡದಲೆ ನಿ
ನ್ನಡಿಧ್ಯಾನ ಕೊಡು ಎನ್ನೊಡೆಯ ಶ್ರೀರಾಮ ೩

 


ಪಾಲಿಸು ಗಜವದನ ಸುಮತಿಯ
ಲೋಲ ನಿಖಿಲ ವಿದ್ಯೆ ಮೂಷಕವಾಹನ ಪ
ವರವಿದ್ಯಪ್ರದಾತ ಸುರಗಣಸೇವಿತ
ಪರಮಪಾವನೆ ಪರಮೇಶ್ವರಿವರಸುತ ೧
ವಿಮಲಗುಣಗಣ ಅಮಿತ ಜ್ಞಾನಪೂರ್ಣ
ಕ್ರಮದಿ ಲೋಕದಾದಿ ಪೂಜ್ಯಕೆ ಕಾರಣ ೨
ಮಲಿನ ಮಮ ಮನ ಕಳೆದು ನೀಡೆಲೋ ಜ್ಞಾನ
ವಲರೆ ಶ್ರೀರಾಮನಡಿ ಪ್ರೇಮಸಂಪಾದನ ೩

 

೩೬೦
ಪಾಲಿಸು ದಯಾಕರನೆ ನೀಲಮೇಘಶ್ಯಾಮ
ಪಾಲಿಸು ದಯಾಕರನೆ ಪ
ಪಾಲಿಸು ಎನ್ನ ಕರುಣಾಳು ವ್ಯಾಲಮಾಲ
ಬಾಲನ ದಯದಿಂ ಮಾಲತುಲಸೀವನ ಅ.ಪ
ಬಂದುಬಿದ್ದೆನಯ್ಯ ಸಂಸಾರ ದಂದುಗ
ವೆಂಬ ಮಾಯಬಲೆಯೊಳು ನೊಂದು
ಬೆಂದಿತು ಕಾಯ ಬಂಧನಿವಾರಿಸಯ್ಯ
ಮಂದಮತಿ ಯತನದಿಂದ ಪರರ ಬಲು
ನೊಂದಿಸಿ ಅರ್ಥವ ತಂದು ಸತಿಯು ಸುತ
ರೆಂದು ಸಲಹಿ ಯಮ ಬಂಧಕೀಡಾದೆನು
ಮುಂದೆ ಇಂಥ ಬವಣಿಂದೆ ತಾರದೆನ್ನ ೧
ರಿಣವೆಂಬ ಸೂತಕಿದು ಎನ್ನಗೆ
ಘನವಾಗಿ ಕಾಡುವುದು ಇನ್ನಿದು ಜನು
ಜನುಮದಿ ಬಿಡದು ಬೆನ್ನತ್ತಿ ಬರ್ಪುದು
ಗನ್ನಗತಕನಾಗಿನ್ನು ಭವಭವಂಗ
ಳನ್ನು ಕಾಣುತಲಿ ಬನ್ನ ಬಡಲಿಬೇಕೊ
ಮನ್ನಿಸಿ ದಯದಿಂ ನಿನ್ನ ಕೃಪೋದಕ
ವನ್ನು ತಳೆದು ಬೇಗೆನ್ನ ಶುದ್ಧಮಾಡು ೨
ಆಗಿಹೋದದ್ದ್ಹೋಯ್ತು ಮುಂದಿಹ್ಯ
ಭೋಗ ಬೇಡ ಜಗತ್ತು ಪಾಲನೆ
ಬಾಗುವೆ ಮನವರಿತು ಚರಣಕೆ ಶಿರವಿತ್ತು
ಭೋಗಭಾಗ್ಯದಾಸೆ ನೀಗಿಸಿ ಈ ಭವ
ಸಾಗರ ದಾಂಟಿಸು ಯೋಗಿಗಳರಸನೆ
ನಾಗಶಯನ ದಯಮಾಡಿ ದಾಸನ ದು
ರ್ಭೋಗ ದೂರಮಾಡು ಜಗಮೋಹ ಶ್ರೀರಾಮ ೩

 

ಹಿಮಸುತೆ ತನಯ

ಪಾಲಿಸು ನಿಜಮತಿ ಗಜವದನ ಶೀಲ ಪ
ಸುಜನ ಸುರಮುನಿಗಣ ಸನ್ನತ
ಭಜಿಸುವೆ ತವಚರಣ ಮೂಷಕವಾಹನ ಅ.ಪ
ಹಿಮಸುತೆತನಯ ಕರುಣಾಂತರಂಗ
ಸುಮನಸರೊಂದಿತ ವರಶುಭಾಂಗ
ಕೋಮಲಹೃದಯ ಸುವಿದ್ಯಪ್ರದಾಯಕ
ವಿಮಲಜ್ಞಾನ ಮಾಡೆಲೊ ಕರುಣ ೧
ಪರಮಚರಿತ ದಯ ಭೂತಗಣೇಶ
ಶರಣು ಸತ್ಯರ ಅವಿದ್ಯ ನಾಶ
ಕರುಣಗುಣಾರ್ಣವ ಪರತರ ಪಾವನ
ಸ್ಮರಿಸಿ ಬೇಡುವರ ಶೋಕವಿದೂರ ೨
ಸರಸಸಂಗೀತ ನಿಗಮಾದಿ ವೇದ
ಶರಣರೊಲಿವ ಮಹ ನಿರುತ ಸುವಾದ
ಕರುಣಿಸು ವರದ ಶ್ರೀರಾಮನ ಚರಣ
ನೆರೆನಂಬಿ ಪೊಗಳುವ ಸ್ಥಿರ ಚಿತ್ತ ಜ್ಞಾನವ ೩

 

ವಾರಿಧಿಯನು ಬಂಧಿಸಿ
೩೬೧
ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ
ಮಾಲಕೌಸ್ತುಭ ಸತ್ಯಭಾಮಾ
ಲೋಲ ಭಕ್ತಜನರ ಪ್ರೇಮ
ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ
ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ
ವಾರಿಧಿಯೊಳು ಮುಳುಗಿದ ವೇದಗಳ ತಂದು
ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು
ವಾರಿಧಿಯೊಳು ವಾರಿಧಿಯ ಕಡೆದಿ
ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ
ವಾರಿಧಿಯನು ಬಂಧಿಸಿ ಮತ್ತೆ
ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ
ಘೋರತಾಪದಿ ಬಿಡದೆ ದೇವ೧
ಮಾಯಾಜಗವ ತುಂಬಿದಿ ಮಹರಮಣ ಹರಿಯೆ
ಮಾಯದ ಮರುಣುಣಿಸಿದಿ ವೈಕುಂಠಪತಿಯೆ
ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ
ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ
ಮಾಯದ್ಹಿರಣ್ಯಕನ ಸೀಳಿದಿ
ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು
ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ ೨
ಕಪಟಕೋಟಿಗಳನ್ನಳಿದಿ ಚಪಲಸುರಪನ
ಕಪಟಗರುವವ ಮುರಿದಿ ಲಕುಮಿರಮಣ
ಕಪಟನಾಟಕ ನೆನಿಸಿದಿ ಕಪಟಹರನಾದಿ
ಕಪಟಶಕಟನ ಒದೆದು ಕೆಡುಹಿದಿ ಕಪಟ ಪೂತನಿ
ಅಸುವ ಸೆಳೆದಿ
ಕಪಟ ಕಂಸನ ಶಿರವಮೆಟ್ಟಿದಿ
ಕಪಟಿಗಳ ಮಹ ಕಪಟದಿಂ ಕೊಂದಿ
ಕಪಟ ತಿಳಿಯುವರಾರು ನಿಮ್ಮಯ ಕಪಟತನಕೆಳಸದೆ
ಶ್ರೀರಾಮ ೩

 

೬೮
ಪಾಲಿಸು ಶ್ರೀಪಾದಭಜಕೋದ್ಧಾರಣ ಪ
ಮನುಮುನಿವಿನಮಿತ ಘನಗುಣಚರಿತ
ಕನಿಕರಸದನ ೧
ದೀನಜನಾಧಾರ ದಾನವಭಂಜನ
ಜಾಹ್ನವೀಜನಕ ೨
ಕಾಮಿತದಾಯಕ ಕೋಮಲನಾಮ
ಸ್ವಾಮಿ ಶ್ರೀರಾಮ ೩

 

೩೬೨
ಪಾಲಿಸೈ ರಮಾರಮಣನೆ ಎನ್ನ
ನೀಲಮೇಘ ಶ್ಯಾಮನೆ ಪ
ಪಾಲಿಸಿ ಜಗಲೀಲೆ ತೋರಿದಿ
ಪಾಲಭಕ್ತ ಭವಮೂಲಪರಿಹರ ಅ.ಪ
ಜಾಳು ಸಂಸಾರೆಂಬೊಸಂಕೋಲೆ
ಕಾಲಿಗೆ ತೊಡರಿ ಎನ್ನನು
ಕೀಳನೆನಿಸಿತ್ತು ಶೀಲ ಕೆಡಿಸಿ
ಬಾಳಿ ಫಲವಿಲ್ಲ ತಾಳೆನಭವ ೧
ನಾಶವಾಗುವ ದೇಹಧರಿಸಿ
ನಾಶನಾಲೋಚನೆಯ ಸ್ಮರಿಸಿ
ಏಸು ರೀತಿಲಿ ಘಾಸಿಯಾದೆ ಭವ
ಪಾಶದ ಬಾಧೆ ಸಹಿಸೆನಭವ ೨
ತಂದೆ ಶ್ರೀರಾಮ ಮಂದಮತಿತನ
ದಿಂದ ಕಂದನುಮಾಡಿದ
ಒಂದು ದೋಷಗಣಿಸದಲೆ ದಯದಿಂ
ಬಂಧದಿಂದ ಮುಕ್ತಿ ಹೊಂದಿಸಭವ ೩

 

೩೬೩
ಪಾಲಿಸೋ ಹರಿ ಪಾಲಿಸೋ
ಫಾಲನಯನಸಖ ಭಕ್ತಾಂತರಾತ್ಮಕ ಪ
ಪಾಲಿಸು ಫಲ ಸುಪ್ರದಾತ ಮೊರೆ
ಪಾಲಿಸು ಸುಜನನ್ನುತ ಖರೆ
ಪಾಲಿಸು ಸತತ ವಿಖ್ಯಾತ ದೊರೆ
ಪಾಲಿಸು ನುತರ ಸಂಪ್ರೀತ ಆಹ
ಪಾಲ ಪಾವನಗಾತ್ರ ಪಾಲತ್ರಿಜಗಸ್ತೋತ್ರ
ಪಾಲಿಸು ಕೃಪಾನೇತ್ರ ಪಾಲಪಾವನಯಾತ್ರ ೧
ಕೊರಳ ಕೌಸ್ತುಭಮಣಿಮಾಲ ಬಹು
ದುರಳದನುಜಕುಲ ಕಾಲ ಮಹ
ಕರುಣದೊರದಿ ಸುರಜಾಲ ಬಹು
ಪ್ರಳಯ ಗೆಲಿದಿ ತೋರಿ ಲೀಲಾ ಆಹ
ಹರಣಜನರಮರಣ ಕರುಣ ಭರಣಪೂರ್ಣ
ಶರಣಜನರ ಪ್ರಾಣ ಮರಣ ಗೆಲಿಸುವ ತ್ರಾಣ ೨
ನಿತ್ಯ ನಿಮ್ಮಯ ನಿಜಭಕ್ತಿ ನೀಡು
ನಿತ್ಯ ನಿಮ್ಮಯ ನಿಜಸ್ತುತಿ ನೀಡು
ನಿತ್ಯ ನಿಮ್ಮಯ ನಿಜಮತಿ ನೀಡು
ನಿತ್ಯ ನಿರ್ಮಲ ನಿಜಮುಕ್ತಿ ಆಹ
ನಿತ್ಯನಿರ್ಮಲ ರಾಮ ನಿತ್ಯನಿರ್ಮಲ ನಿಮ್ಮ
ನಿತ್ಯನಿರ್ಮಲ ಪ್ರೇಮ ನಿತ್ಯನಿರ್ಮಲ ನಾಮ ೩

 

೫೫೦
ಪಿಂಗಟ ಬೇಡವ್ವಾ ಪಿಂಗಟ
ಸಂಗಟ ಬರುತಾದೆ ತಡಕೊಳ್ಳೆ ಪ
ಕಂಗೆಡಿಸಿ ಬಲುಜವನ ದೂತರು
ಭಂಗಬಡಿಪುದನು ನೀ ತಾಳೆ ಅ.ಪ
ಸುಜನರ ಕಾಲ್ಕಸ ಮಾಡಿದಿ
ಕುಜನರ ಮಾತಿಗೆ ಮರುಳಾದಿ
ನಿಜವರಿದ್ಹೇಳಲು ಮೋರೆ ಮುರುಕಿಸಿದಿ
ಅಜಾಂತಪರಿ ನೀ ಬಳಲುವಿ ನರಕದಿ ೧
ನಾಶನ ಕಾಯಕ್ಕೆ ಮೋಹಿಸಿದಿ
ಹೇಸದೆ ಪಾಪಕ್ಕೆ ಗುರಿಯಾದಿ
ಈಶನ ದಾಸರನು ದೂಷಣ ಗೈದಿ
ಸೀಸ ಕಾಸುವ ಯಮ ಯೋನಿದ್ವಾರದಿ ೨
ಉನ್ನತಧಮ ತಿಳೀಲಿಲ್ಲ
ಗನ್ನಗತಕವಯ ಕಳಕೊಂಡಿ
ಇನ್ನೆಲ್ಲಿ ಕ್ಷೇಮ ನಿನಗ್ಹುಚ್ಚು
ಇನ್ನರ ಶ್ರೀರಾಮ ಎನ್ನೂ ೩

 

೩೬೪
ಪಿಡಿದೆಲೆ ಬಿಡಬೇಡ್ಹುಡುಗಹುದು ಇದು
ಕೆಡದ ವಸ್ತು ನಿಜ ಪಿಡಿ ಬಿಗಿದು ಪ
ಎಡರುತೊಡರಿಗೆದೆಒಡೆಯದೆ ದೃಢವಿಡಿ
ಜಡಭವ ತೊಡರನು ಕಡಿಯುವುದು ಅ.ಪ
ಭಕ್ತಿಯಿಂದೆಂಬುವ ಗೂಟ ಜಡಿದು ಮಹ
ಸತ್ಯವೆಂದೆಂಬ ಹಗ್ಗ ಸುತ್ತ ಬಿಗಿದು
ಚಿತ್ತೆಂಬ ಗಂಟ್ಹಾಕು ಎತ್ತವದಲದಂತೆ
ನಿತ್ಯ ಮುಕ್ತಿಸುಖ ಕೊಡುತಿಹ್ಯನು ೧
ಸುಜನ ಸಂಗವೆಂಬ ಮಂದಿರದಿ ಮಹ
ಭಜನವೆಂದೆಂಬುವ ಗೋದಿಲದಿ
ನಿಜಧ್ಯಾನ ಮೇವು ಹಾಕಿ ಭುಜಶಾಯಿಪಾದ
ನಿಜಧೇನುವನು ಕಟ್ಟಿ ಮಜದಲಿ ನಲಿಯೊ ೨
ಆರಿಗೆ ಸಿಗದಂಥ ಒಡವೆಯಿದು ಸರ
ದಾರನೆ ನಿನಗೆ ಸಿಕ್ಕಿಹ್ಯದು
ಸಾರಸೌಖ್ಯಕ್ಕೆ ಮೂಲಧಾರನಾಗಿಹ್ಯ
ಧೀರಶ್ರೀರಾಮಪಾದ ಶೂರನೆ ಬಿಡದಿರು ೩

 

೬೯
ಪಿಡಿಯೆನ್ನ ಕೈಯ ಬಿಡಬೇಡೆನ್ನಯ್ಯ
ಮೃಡನ ಭಕ್ತರ ಒಡೆಯ ಪಂಢರಿರಾಯ ಪ
ಘೋರ ಬಡುವೆ ಸಂಸಾರಶರಧಿಯೊಳು
ಮೀರಿತು ಈ ಬಾಧೆ ಸೈರಿಸೆ ಮಹರಾಯ ೧
ಹಲವು ವಿಧದಿ ಕಷ್ಟಕ್ಕೊಳಗಾಗಿ ಅತಿಶಯ
ಬಳಲುವ ಬಾಲನ ಉಳಿಸಿಕೊ ಮಹರಾಯ ೨
ಬರುವ ಸಂಕಟದೆನ್ನ ಪಾರುಮಾಡುವಂಥ
ಭಾರನಿನ್ನದು ಸರ್ವಧೀರ ಶ್ರೀರಾಮಯ್ಯ ೩

 

೫೪೭
ಪುಣ್ಯೋದವೇ ಈ ಪುಣ್ಯಭೂಮಿಯೊಳು
ಪನ್ನಂಗಶಯನ ಸನ್ನುತಿಪ ದಾಸರಿಗೆ ಪ
ಕಡುಸಿರಿವಂತರಾದೊಡೆ ಬಡವರ ಬಾಯ್ಬಡಿಯದೆ
ಕೊಡುವಿಡುವ ಕೆಡದತಿ ಪುಣ್ಯ
ಬಡತನವಿರ್ದಡೆ ಎಡೆಬಿಡದೆ ಒಡಲೊಳು
ಜಡಜಾಕ್ಷನಡಿಧ್ಯಾನ ಹಿಡಿದ ಮಹಪುಣ್ಯ ೧
ಮಡದಿಯರೊಂದಿಗೆ ಬಿಡದೆ ಸಂಸಾರಗೈಯೆ
ದೃಢಯುತರು ಮನೆಯೊಳಗಡಿಯಿಡುವ ಪುಣ್ಯ
ಸಡಗರದಿ ಮಕ್ಕಳನ್ಹಡೆದು ಮೋಹದಿ ಜಗ
ದೊಡೆಯನ್ಹೆಸರಿಟ್ಟು ನುಡಿಯುವ ಪುಣ್ಯ ೨
ತಿರುಕರಾಗಿರ್ದಡೆ ತಿರಿದು ತಂದನ್ನವನು
ಹರಿಯಪ್ರಸಾದವೆಂದು ತಿರಿದುಣುವ ಪುಣ್ಯ
ಗಿರಿಗುಹ್ಯ ವಾಸಿಸಲು ದುರಿತಮಂ ಸ್ಮರಿಸದೆ
ಪರಮಪುರುಷನ ಚರಣ ನಿರುತ ಸ್ಮರಿಪ ಪುಣ್ಯ ೩
ಹಿಂದೆ ಮುಂದೆ ತಮಗೆ ನಿಂದೆಯಾಡಲು ಆ
ನಂದದಿ ಹಿಗ್ಗದ ಕುಂದದ ಪುಣ್ಯ
ಮಂದಿಮಕ್ಕಳು ಬಿಡದ್ಹೊಂದಿಸಲದು ಹರಿ
ಗೆಂದು ಅರ್ಪಿಸಿ ಮನಸೊಂದೆಮಾಡಿದ ಪುಣ್ಯ ೪
ನೀರಿನೊಳಿರಲೇನರಣ್ಯದೊಳರಿಲೇನು
ಘೋರತಾಪದಿರಲೇನಪಾರಜ್ಞಾನಿಗಳು
ಪಾರಮೋಕ್ಷಕ್ಕಧಿಪ ಧೀರ ಶ್ರೀರಾಮಪಾದ
ವಾರಿಜದೊಳು ಮನ ಸೇರಿಸಿದ ಪುಣ್ಯರಿಗೆ ೫

 

೫೪೮
ಪೆಣ್ಣೆಂದರಿದು ಮೆಚ್ಚಿ ಕೆಡಬೇಡ ನಿನ್ನ
ತಿನ್ನುವ ಮರಿಗಿದು ತಿಳಿ ಮೂಢ ಪ
ತಾಯಾಗಿ ಮೊದಲು ನಿನ್ನ್ಹಡೆದಿಹ್ಯದು ಪುನ:
ಮಾಯಾಗಿ ಬೆನ್ನ್ಹತ್ತಿ ಸುಡುತಿಹ್ಯದು
ಬಾಯೊಳು ಮೊಲೆಯಿಟ್ಟು ಬೆಳೆಸಿಹ್ಯದು ಮತ್ತು
ಕೈಯೊಳು ಮೊಲೆಯಿಟ್ಟು ಕೊಲುತಿಹ್ಯದು ೧
ಸುತನೆಂದು ಮುದ್ದಿಟ್ಟು ಒಲುತಿಹ್ಯದು ಮತ್ತು
ಪತಿಯೆಂದು ನಿಜಮತಿ ಸುಲಿತಿಹ್ಯದು
ರತಿಗೊಟ್ಟು ಅತಿಮೋಹದಾಡುವುದು ನಿನ್ನ
ಗತಿಗೆಡಿಸಿ ಜವಗೀಡು ಮಾಡುವುದು ೨
ಕಣ್ಣುಸನ್ನೆಯ ಮಾಡಿ ಕರಿತಿಹ್ಯದು ಬಹು
ಬಣ್ಣ ಮಾತಾಡಿ ಸೋಲಿಪುದು
ಕುನ್ನಿಯಂತೆ ನಿನ್ನ ಮಾಡುವುದು ಬಲು
ಬನ್ನಬಡಿಸಿ ಬಾಯಿ ಬಿಡಿಸುವುದು ೩
ನಾನಾ ಬಳಗ ಬಂಧು ಮರೆಸುವುದು ನಿನ್ನ
ಶ್ವಾನನಂದದಿ ಕೂಗಲ್ಹಚ್ಚುವುದು
ಮಾನಾಭಿಮಾನ ತೊರೆಸುವುದು ನಿಜ
ಜ್ಞಾನಕೆಡಿಸಿ ಪಾಪದ್ಹಾಕುವುದು ೪
ತಂದ ಪುಣ್ಯವನೆಲ್ಲ ಸೆಳೆತಿಹ್ಯದು ಬಲು
ಮಂದನೆನಿಸಿ ಕುಣಿಸ್ಯಾಡುವುದು
ತಂದೆ ಶ್ರೀರಾಮಪ್ರೇಮ ಕೆಡಿಸುವುದು ನಿಜಾ
ನಂದ ಮುಕ್ತಿಗೆ ಕಿಡಿ ಹಾಕುವುದು ೫

 

೬೩೩
ಪೇಳಲಳವಲ್ಲ ನಮ್ಮಯ್ಯನಾಟ ತಿಳಿವರಾರಿಲ್ಲ ಪ
ಪೇಳೇನೆಂದರೆ ನಿಲುಕೊ ಮಾತಲ್ಲ
ಕೇಳೇನೆಂದರೆ ತಿಳಿವ ಶಕ್ತಿಲ್ಲ
ಹೇಳಿಕೆ ಕೇಳಿಕೆಗೆ ಮೀರಿದ
ಮೇಲುಮಹಿಮನ ಲೀಲಾಜಾಲವ ಅ.ಪ
ಸಾಧ್ಯ ಮಾತಲ್ಲ ಜಗಸೂತ್ರನಾಟಕೆ
ಆದಿ ಅಂತಿಲ್ಲ ಜಗಮೂರರೊಳಗೆ
ಸಾಧನಿಕರೆಲ್ಲ ನಿಜಭೇದ ತಿಳಿದಿಲ್ಲ
ಸಾಧನಿಟ್ಟು ಆವಕಾಲದಿಂ
ನಾದ ತಡೆಯದೆ ವೇದಗಳ ಬಿಡ
ದೋದಿ ದಣಿದು ಇನ್ನು
ಆದಿಮಹಿಮನ ಪಾದಕಾಣವು ೧
ಬಾಗಿ ಅನುಗಾಲ ನಿಜತತ್ವಭೇದಿಸಿ
ನೀಗಿ ಭವಮಾಲ ಜಡವಾದ ದುರ್ಭವ
ರೋಗಗಳುಯೆಲ್ಲ ಪಾರಾಗಿ ನಿರ್ಮಲ
ರಾಗಿ ಪರಮಯೋಗ ಒಲಿಸಿ
ಯೋಗಿಗಳು ಮಹ ಉಗ್ರತಪದಿಂ
ಯೋಗಬೆಳಗಿನೊಳಗೆ ನೋಡಲು
ನಾಗಶಯನ ಮಹಿಮೆ ತಿಳಿಯದು ೨
ಸಾನಂದಾದಿಗಳು ಮಹ ಭೃಗು ಗಾರ್ಗೇಯ ಮನು
ಮುನ್ಯಾದಿಗಳು ದೇವರ್ಷಿ ನಾರದ
ಶೌನಕಾದಿಗಳು ಘನ ಸಪ್ತಋಷಿಗಳು
ಅನಂತಾನಂತ ಪ್ರಳಯದಿಂದ
ಜ್ಞಾನ ಬೆಳಗಿನೋಳ್ನಿಂತು ನೋಡಿ
ಕಾಣದೆ ಶ್ರೀರಾಮಪಾದ
ಮೌನದೋಳ್ಮುಳುಗೇಳುತಿಹರು ೩

 

೬೩೪
ಪೇಳಿದರೆ ತಿಳಿಯುವುದೆ ಮಾಯಮೋಹಿಗಳಿಗೆ
ನೀಲಶ್ಯಾಮನ ದಿವ್ಯಗೂಢದಿಹಮಹಿಮೆ ಪ
ಬಂಜೆಗ್ಹೊಳೆವುದೆ ಪ್ರಸೂತಿವೇದನೆ ಸುದ್ದಿ
ಸಂಜೀವನ ಮಹಿಮೆ ತಿಪ್ಪೆ ತೃಣಕೆ ತಿಳಿಯುವುದೆ
ಅಂಜುಬುರುಕಗ್ವೀರತ್ವ ಸಾರಸವಿದೋರುವುದೆ
ವಂಜಗೊಳುಪಾಗುವುದೆ ಹರಿಭಕ್ತಿಸಾರ ೧
ನಾಗನ್ಹೆಡೆಯೆತ್ತಾಡಲಮೇಧ್ಯಜಂತರಿಯುವುದೆ
ಕೋಗಿಲೆಯು ಕೂಗಲು ಕಾಗೆ ತಿಳಿಯುವುದೆ
ಗೂಗೆಗ್ಹೇಳಲು ಅರುಣಪ್ರಭೆ ನೋಡಬಲ್ಲುದೆ
ಭಾಗವತರ ನಡೆ ಭವರೋಗಿಗ್ಹೊಳಪಹ್ಯದೆ ೨
ರಾಜ್ಯದಾಡಳಿತವನು ಚಾಂಡಾಳ ತಿಳಿಯುವನೆ
ತೇಜಿಯ ಮಹಯೋಗ ಪಾಜಿಗ್ಹುಟ್ವುದೆ
ಭೋಜನದ ಸವಿಸಾರ ರೋಗಿಗ್ಹೇಳಲು ಫಲವೆ
ರಾಜಿಪ ಪರಲೋಕ ಕುಜನರರಿಯುವರೆ ೩
ಹೀನನಿಗತಿ ತಿಳಿಯುವುದೆ ಜ್ಞಾನಬೋಧಾಮೃತ
ಶ್ವಾನನಿಗೆ ಸೇರುವುದೆ ರಾಗ ಸುಖಸ್ವಾದ
ಕೋಣಗ್ಹೊಳೆವುದೆ ವೇಣು ಮೃದಂಗ ಸುಖವಾದ್ಯ
ಧ್ಯಾನಮಹಿಮೆಯ ಫಲವು ಭವಿಗೆ ತಿಳಿಬಲ್ಲುದೆ ೪
ನೇಮದೊರುಷವು ಸುರಿಯೆ ಕಲ್ಲು ನೀರು ಕುಡಿಯುವುದೆ
ಕಾಮಿಗಳಗನುಭವದ ಹಾದಿ ತಿಳಿ ಬಲ್ಲುದೆ
ಪಾಮರಧಮರಿಗಿಲ್ಲ ದೀನಜನನಾಥ ಶ್ರೀ
ರಾಮನಡಿ ನಿಜಭಕ್ತಿ ಸಾಧ್ಯವಾಗುವುದೆ ೫

 

೬೩೫
ಪೊಗಳಲಳವಾರಿಗೆ ಎಲೆ ದೇವ ನಿನ್ನ
ನಿಗಮ ಆಗಮಾತೀತ ಗರುವರಹಿತನ ಪ
ನೆಲೆಬುಡತುದಿ ಮೊದಲಿಲ್ಲದವನು ನೀ
ಪ್ರಳಯ ಪ್ರಳಯಕ್ಕಾದಿ ಆದಿಯಾದವನು ನೀ
ನಲಿಯುವಿ ನಲಿಯದೆ ಚಲಿಸುವಿ ಚಲಿಸದೆ
ತಿಳಿಯದೆ ತಿಳಿಯುವಿ ವಿಲಸಿತ ಮಹಿಮ ೧
ಆರಾರರಿಯದ ಮಹದಾದಿ ಅನಾದಿ ನೀನು
ಸಾರ ಚರಾಚರಕ್ಕಾಧಾರರಾದವ ನೀ
ಕೋರುವಿ ಕೋರದೆ ತೋರುವಿ ತೋರದೆ
ಬಾರದೆ ಬರುವಿಯೊ ಮೀರಿದ ಮಹಿಮ ೨
ಗುಣಿಸಿ ನೋಡಲು ತುಸುಗುಣ ತೊರೆದವ ನೀನು
ಗಣಿತಕ್ಕೆ ನಿಲುಕದಕಲಂಕ ಮಹಿಮ ನೀ
ಜನಿಸುವಿ ಜನಿಸಿದೆ ಕುಣಿಸದೆ ಕುಣಿಸುವಿ
ಮಣಿಸುವಿ ಮಣಿಸದೆ ಅನುಪಮಮಹಿಮ ೩
ತೊಡರೆಡರಿಗಡರದೆ ಕಡೆಯಲಾಡುವಿ ನೀನು
ತೊಡರಿನೊಳಗೆ ಬಿಡದೆ ತೋರುವಿ ನೀ
ನುಡಿಯಿಲ್ಲದೆ ನುಡಿಸುವಿ ನಡೆಯಿಲ್ಲದೆ ನಡೆಸುವಿ
ಮಡಿಯಿಲ್ಲದೆ ಮಡಿಯೆನಿಪ ಕಡುಚಿತ್ರ ಮಹಿಮ ೪
ಮೀಸಲು ಮಡಿರಹಿತಪಾವನ ನೀನು
ಸಾಸಿರನಾಮದಿ ಕರೆಸಿಕೊಂಬುವಿ ನೀ
ವಾಸಿಸದೆ ವಾಸಿಸುವಿ ಪೋಷಿಸದೆ ಪೋಷಿಸುವಿ
ಶ್ರೀಶ ಶ್ರೀರಾಮ ದಾಸಜನರ ಸುಲಭ ನಿನ್ನ ೫

 

೭೦
ಪೊರೆ ಸುರೇಶ ಶ್ರೀಶ ಶ್ರೀನಿವಾಸ
ದುರಿತವಿನಾಶ ಪರಮಪ್ರಕಾಶ ಪ
ಅನುದಿನ ನಿಮ್ಮಯ ನೆನವಿನಘನಸುಖ
ಕರುಣಿಸಿ ಎನ್ನ ಕನಿಕರದೊಡನೆ ೧
ಚಿಂತೆನಿವಾರಣ ಚಿಂತೆನೀಗಿಸಿ ಎನ್ನ
ಸಂತತದಿಂಪೊರೆ ಸಂತರ ಪ್ರಿಯಕರ ೨
ಹರಣಹೋದರು ನಿಮ್ಮ ಚರಣಭಕ್ತಿಯನು
ಮರೆಯದದಟ ಮಿಗೆ ಕರುಣಿ ಶ್ರೀರಾಮ ೩

 

೩೬೫
ಪೊರೆಯೊ ಪ್ರಭು ಪರಮಾತ್ಮ
ಕರುಣಾಕರನೆ ಎನ್ನೊಳ್ ಕರುಣದೃಷ್ಟಿಯನಿಟ್ಟು ಪ
ದಾರಿದ್ರ್ಯದೋಷಂಗಳ್ ಛಿದ್ರಛಿದ್ರ ಮಾಡಯ್ಯ
ಅದ್ರಿಧರನೆ ಕೃಪಾಸಮುದ್ರ ದೊರೆಯೆ ೧
ಬರುವ ಕಂಟಕದೆನ್ನ ಸೆರೆಯಬಿಡಿಸಿ ನಿನ್ನ
ಚರಣಕರುಣಾರ್ಣವದಿರಿಸೊ ಮುರಾರಿ ಹರಿ ೨
ಆವ ಭಯವು ಎನಗೀಯದೆ ತ್ರಿಜಗ
ಜೀವ ಜನಕಜೆಪತಿ ಕಾಯೊ ಶ್ರೀರಾಮ ೩

 

೩೬೬
ಪೋಗವಲ್ಲದು ಇಹ್ಯಭೋಗದಾಸೆಯು ಇನ್ನು
ನಾಗಶಯನ ನೀನೆ ನೀಗಿಸು ಇದನು ಪ
ಏಸು ಸಾರ್ಹುಟ್ಟ್ಹುಟ್ಟಿ ಆಶಪಾಶದಿ ಬಿದ್ದು
ನಾಶ ವೊಂದುತ ಬಲು ಬೇಸತ್ತೆ ಹರಿಯೆ ೧
ಹೇಯಭರಿತವಾದ ಕಾಯಸುಖಕ್ಕೆ ಮೆಚ್ಚಿ
ಪಾವನಪಥ ಮರೆದು ಬವಣೆಬಟ್ಟೆಭವ ೨
ಅರಿದು ತವಪದಕ್ಕೆ ಎರಗಿ ಬೇಡುವೆ ಸ್ಥಿರ
ವರಮುಕ್ತಿಸುಖ ನೀಡಿ ಪೊರೆಯೊ ಶ್ರೀರಾಮ ೩

 

೭೧
ಪೋಷಿಸೆನ್ನ ವೆಂಕಟೇಶ ಶ್ರೀಶ ಶ್ರೀನಿವಾಸ
ಶೇಷಗಿರಿನಿಲಯ ಶ್ರೀ ಇಂದಿರೇಶ ಈಶ ಪ
ಹೇಸಿಯಿವನೆಂದೆನುತ ದೂಷಣೆಯ ಮಾಡದಿರು
ದೋಷದೂರನೆ ನಿನ್ನ ದಾಸ ನಾನಭವ
ದಾಸಜನರ ಮನದುಲ್ಲಾಸದೇವರು ನೀನು
ದಾಸನ ಆಸೆಯನು ಪೂರೈಸಿ ಸಲಹಯ್ಯ ೧
ಕುನ್ನಿಕುಲದಲಿ ಜನಿಸಿ ಬನ್ನಬಡಲಾರದೆ
ಉನ್ನತೋನ್ನತಮಹಿಮ ನಿನ್ನ ಬೆನ್ನು ಬಿದ್ದೆ
ಭಿನ್ನತಾರದೆ ಎನಗೆ ನಿನ್ನ ದರ್ಶನವಿತ್ತು
ಉನ್ನತಮತಿ ನೀಡಿ ಮನ್ನಿಸಿ ಸಲಹು ೨
ನರರ ಹಂಗನು ಬಿಡಿಸಿ ಕರುಣಿಸೆಲೊ ನಿತ್ಯ ತವ
ಶರಣಜನರುಂಡು ಮಿಕ್ಕ ಪರಮಪ್ರಸಾದ
ಶರಣೆಂದು ಚರಣಕ್ಕೆ ಮರೆವೊಕ್ಕೆ ನೆರೆನಂಬಿ
ತಿರುಪತೀಶನೆ ಭಕ್ತ ಕರುಣಿ ಶ್ರೀರಾಮ ೩

 

೩೬೭
ಪ್ರಭು ನಿಮ್ಮ ಮರೆಹೊಕ್ಕೆ
ಅಭಿಮಾನ ಬಿಡಿಸೊ ಶುಭಕಾಯ ಸುಖಕರ ಪ
ವಿಲಸಿತವಮಹಿಮೆ ತಿಳಿದು ಉಳಿಯದೆ ನಾನು
ಕುಲಕುಲೆಂದ್ಹೋರಾಡ್ವ ಕುಲಾಭಿಮಾನ ಬಿಡಿಸೈ ೧
ಈಶ ನಿಮ್ಮಯ ಪಾದಧ್ಯಾಸ ಮರೆಸಿ ಕಡೆಗೆ
ನಾಶವೊಂದುವ ದೇಶಾಭಿಮಾನ ಬಿಡಿಸೈ ೨
ಮಹಾಮಾಯವೆನಿಪ ಧರೆಮೋಹದಿ ಮುಳುಗಿಸದೆ
ಮಹ ಶ್ರೀರಾಮ ದೇಹದಭಿಮಾನ ಬಿಡಿಸೈ ೩

 

೩೬೮
ಪ್ರಭುವರ ಮರೆದ್ಯಾ ನಟರಾಜವರದ ಪ
ಪ್ರಭುವರ ಮರೆದ್ಯಾ
ಸೊಬಗಿನ ಹರಿ ಭಕುತರಭಿಮಾನ ತೊರೆದ್ಯಾ ಅ.ಪ
ನೋಯಲಾರದೆ ಭವ ಮಾಯಾಜಾಲದಿ ನಾನು
ತೋಯಜಾಕ್ಷನೆ ನಿನ್ನ ಭಾವಿಸಿ ಮೊರೆಯಿಟ್ಟು ೧
ಘೋರಸಂಸಾರದೊಳು ಘೋರಬದೆಯಿನ್ನು
ಪಾರಮಹಿಮನೆ ನಿನ್ನ ಸಾರುತ ಮರೆಹೊಕ್ಕೆ ೨
ದಾಸರೋಳ್ನಿರ್ದಯ ಭೂಷಣವೆ ನಿನಗಿದು
ಪೋಷಿಸು ದಯದಿಂದ ಶ್ರೀಶ ಶ್ರೀರಾಮನೆ ೩

 

೩೬೯
ಪ್ರೇಮಸಾಗರ ಸ್ವಾಮಿ ಶ್ರೀಹರಿ ಬಾರೊ ಪ
ವಿಷಮಸಂಸಾರದ ವ್ಯಸನವಳುಕಿಸಿ
ಅಸಮ ನಿಮ್ಮಯ ನಿಜಧ್ಯಾಸವ ಕರುಣಿಸೊ ೧
ಮನಸಿನ ಹರಿದಾಟವನು ನಿಲಿಸಿ
ಎನಗನುದಿನ ಸುಸಂಗನೆ ದಯಪಾಲಿಸೊ ೨
ಸುಷ್ಮಮಲದಾಯಕ ಮಮ ಕೃಪಾಕರ ಶ್ರೀ
ರಾಮ ಅಪರೋಕ್ಷಜ್ಞಾನವ ಕೃಪೆಮಾಡು ಬೇಗನೆ ೩

 

ಭಗವಂತನನ್ನು ಪ್ರತ್ಯಕ್ಷವಾಗಿ ಕಂಡ
೩೭೦
ಫುಲ್ಲನಾಭ ನಿಜತತ್ವ ತಿಳಿಸು ನುತಪ್ರೇಮಿ
ಅಲ್ಲದ್ದು ಅಹುದೆನಿಸಿ ಕೊಲ್ಲದಿರು ಸ್ವಾಮಿ ಪ
ವಿಪಿನವನು ಸೇರಿ ಬಲು
ಗುಪಿತದಿಂ ಕುಳಿತು ಮಹ
ತಪವನಾಚರಿಸಲು
ಸುಪಥ ದೊರಕುವುದೆ
ಕಪಿವರದ ನಿನ್ನಡಿಯ
ಕೃಪೆಯಿಲ್ಲದಿರೆ ಇನಿತು
ಜಪತ¥ವ್ರತನೇಮ
ಸುಫಲ ನೀಡುವುದೆ ೧
ಯಾಗ ಯಜ್ಞವ ಮಾಡಿ
ತ್ಯಾಗಿಯೆಂದೆನಿಸಿ ಬಲು
ಭೋಗ ನೀಗುವುದೆ
ಭಾಗವತ ಜನಪ್ರಿಯ
ನಾಗಶಾಯಿ ತವ ದಯ
ವಾಗದಲೆ ನರನ ಭವ
ರೋಗ ತೊಲಗುವುದೆ ೨
ಇಲ್ಲದದು ಇಲ್ಲೆನಿಸು
ಅಲ್ಲದ್ದು ಅಲ್ಲೆನಿಸು
ಸಲಿಸೆನ್ನನು ತವ
ಬಲ್ಲಿದ ಶರಣರೊಳು
ಎಲ್ಲದೇವರೆಲ್ಲ ಲೋಕ
ಎಲ್ಲನಿನ್ನೊಳಗಭವ
ಇಲ್ಲ ನಿನ್ನ್ಹೊರತು ಅನ್ಯ ಸಿರಿ
ನಲ್ಲ ಶ್ರೀರಾಮ ೩

 

೫೫೫
ಬಂತವ್ವಾ ತಂಗಿ ಬಂತವ್ವಾ ಈ
ಗೊಂದು ಮಾತು ನೆನಪು ಬಂತವ್ವಾ ಪ
ಅಂತರಂಗದೊಳು ಕಂತುಜನಕ ತನ್ನ
ಚಿಂತಿಪರ್ಹಂತೆಲಿ ನಿಂತಿಹ್ಯನಂತೆ ಅ.ಪ
ಮರುಳು ಬುದ್ಧಿಯನು ನೀಗವ್ವ
ಬರೆ ತಿರುತಿರುಗಿ ಮರುಗಬೇಡವ್ವ
ಕರಿರಾಜ ದ್ವರದನು ತರುಣಿಯ ಪೊರೆದನು
ಸರಸದಿ ಪಾಂಡವರ ನೆರಳಾಗಿ ನಿಂತನು ೧
ಹಂಚಿಕೆ ಪೇಳುವೆ ನಿನಗವ್ವ ನಿನ್ನ
ವಾಂಛಲ್ಯ ಗುಣವೊಂದು ಕಳೆಯವ್ವ
ಕಿಂಚಿತ್ತು ಮನದೊಳು ವಂಚನಿಲ್ಲದೆ ವಿ
ರಂಚಿಪಿತನ ನಂಬಿ ಭಜಿಸವ್ವ ೨
ಸುಳ್ಳೆ ಕಳವಳಿಸುವುದ್ಯಾಕವ್ವ ತಿಳಿ
ನಳಿನಾಕ್ಷನ ಘನ ಮಹಿಮ್ಯವ್ವ
ಹೊಲಸು ದೇಹದಾಸೆ ನೀಗಿದ ಭಕ್ತಗೆ
ಸುಲಭನು ಶ್ರೀರಾಮ ಕೇಳವ್ವ ೩

 

೫೫೬
ಬಂತೆಂದ್ಹಿಗ್ಗ ಬೇಡೆಲೊ ಖೋಡಿ ಹೋ
ಯ್ತೆಂದಳಬೇಡೆಲೆ ಖೋಡಿ ಪ
ಬಂತುಹೋಯ್ತೆಂಬುದರಂತರ ತಿಳಕೊಂ
ಡಂದಕನನುವಿಗೆ ತ್ವರೆ ಮಾಡಿ ಅ.ಪ
ಬಂದು ನಿನಗಾಗುವುದೇನೋ ಮತ್ತು ಹೋದರೆ
ನಿಂತ್ಹೋಗುವುದೇನೋ
ಮಂದನಾಗದೆ ನೀ ಬಂದ ಖೂನ ತಿಳಿ
ದೊಂದಿ ಭಜಿಸಿ ಹರಿದಯ ಪಡಿ೧
ಎಂಥಸಮಯವನು ನೀ ಪಡೆದು ಭವ
ಸಂತೆಯೊಳಗೆ ನಿಂತಿ ಮೈಮರೆದು
ಸಂತೆಯ ತಂತ್ರಕೆ ಸೋಲದೆ
ಕಂತು ಪಿತನನೆನಿ ಲಗುಮಾಡಿ ೨
ಕ್ಷಿತಿಯ ಸುಖವು ನಿನಗೊಂದಿಲ್ಲ ನಿಜ
ಮರೆಯಿಂದರಿದು ಗೆಲಿ ಭವ ಮೂಳ
ಸತತದಿ ಭಕುತಹಿತ ಶ್ರೀರಾಮನನ್ನು
ನುತಿಸಿ ಮುಕ್ತಿ ಸುಖ ಪಡಿಬೇಡಿ ೩

 

೩೯೩
ಬಂದದ್ದನುಭವ ಮಾಡ್ವೆ ಕಂದನಾಗಿರುವೆ
ತಂದೆ ನಿನ್ನಯ ದಯವೊಂದಿರಲಿ ಹರಿಯೆ ಪ
ಮಂದಿ ಮಕ್ಕಳು ಎನ್ನ ಕುಂದಿಟ್ಟು ಜರೆಯಲಿ
ಬಂಧು ಬಾಂಧವರೆಲ್ಲ ನಿಂದಿಸಿ ನುಡಿಲಿ
ಬಂಧನವು ಬಿಡರಿರಲಿ ಎಂದೆಂದು ಮರೆಯದಂತೆ
ಇಂದಿರೇಶ ನಿಮ್ಮ ಧ್ಯಾನವೊಂದೇ ಎನಗಿರಲಿ ೧
ಭೂಪತಿಗಳೆನ್ನೊಳ್ಕೋಪಮಂ ತಾಳಲಿ
ತಾಪಬಡಿಸಲಿ ಮಹಪಾಪಿವನೆನುತ
ತಾಪತ್ರಯ ಬಿಡದಿರಲಿ ಪಾಪಲೋಪನೆ ಜಗ
ದ್ಯ್ಯಾಪಕನೆ ನಿನ್ನ ಧ್ಯಾಸಪರೂಪ ಎನಗಿರಲಿ ೨
ಕಂಡಕಂಡಂತೆ ಜನರು ಭಂಡನೆಂದೆನ್ನಲಿ
ತಂಡತಂಡದಿ ಕಷ್ಟ ಅಂಡಲೆದು ಬರಲಿ
ಹೆಂಡರು ಸೇರದೆ ಗಂಡನೆಲ್ಲೆಂದೆನಲಿ
ಪಂಢರೀಶ ನಿನ್ನ ಪದೆನ್ನ ಮಂಡೆಮೇಲಿರಲಿ ೩
ಎತ್ತ ಪೋದರು ಜನರು ಹತ್ರ ಬಡಿಯಲಿ ಎನಗೆ
ವಿತ್ತಕೊಟ್ಟೊಡೆಯರು ನಿತ್ತರಿಸದೊದಿಲಿ
ಮುತ್ತಿಕೊಂಡ್ವೈರಿಗಳು ಕುತ್ತಿಗೆ ಕೊಯ್ಯಲಿ
ಚಿತ್ತಜಪಿತನಿನ್ನ ಭಕ್ತ್ಯೊಂದೆನಗಿರಲಿ ೪
ಪೀಡಿಸಲಿ ಬಡತನವು ಕಾಡಿಸಲಿ ದಾರಿದ್ರ್ಯ
ಓಡಿಸಲಿ ಪೊಡವಿಪರು ನಾಡ ಬಿಟ್ಟೆನ್ನ
ನೋಡಲಿ ಮುನಿದೆನ್ನ ನಾಡದೈವಗಳೆಲ್ಲ
ಬೇಡೆನೆ ಶ್ರೀರಾಮ ನಿನ್ನಡಿ ಬಲೊಂದೆನಗಿರಲಿ ೫

 

೩೯೪
ಬಂದೆನೊ ರಂಗ ಬಂದೆನೊ
ಹಿಂದಿನ ಸುಕೃತದಿ ತಂದೆ ನಿನ್ನ್ಹುಡುಕುತ ಪ
ಹಲವು ಜನುಮಜನುಮಗಳಲಿ ತಿರುತಿರುಗಿ ತೊ
ಳಲಿತೊಳಲಿ ಬಂದು ಬಳಲಿ ಮರುಗಿ
ಹೊಲಸಿನ ಮಲಮೂತ್ರ ಕುಣಿಲಿ ಕೊರಗಿ
ಎಲುವೊಂದು ಗಿರಿಯೋಪಾದಿಯಲಿ ಆಹ
ಇಳೆಯೊಳು ಬಿದ್ದಿಹ್ಯವು ಬಲು ಬಲು ಹೊಲೆಬವಣೆ
ಯಲಿ ನೋಯಲಾರದೆ ಕಳವಳಗೊಳುತ ೧
ಜಡÀಸದೃಸ ಶರೀರಗಳ್ಹೊತ್ತು ಬಿಡದೆ
ಎಡರು ತೊಡರಿನೊಳಗೆ ಬೆರೆತು
ಕೆಡುವ ಪೊಡವಿಸುಖಕೆ ಮನವಿತ್ತು
ದೃಢವನ್ಹಿಡಿಯದೆ ಮರೆವಿನಿಂ ಸಂಪತ್ತು ಆಹ
ಒಡನೊಡನ್ಹುಟ್ಟ್ಹುಟ್ಟ ಕಡುಕಷ್ಟಬಡುವಂಥ
ಸುಡಗಿಯ ತಡಿಯದೆ ಗಡಗಡ ನಡುಗತ್ತ ೨
ನೋಡೆಲೊ ಕರುಣಾಂತರಂಗ ದಯವ
ಮಾಡೆಲೊ ಸುಗುಣ ಶುಭಾಂಗ ಅಭಯ
ನೀಡೆಲೊ ನಿರುತ ನೀಲಾಂಗ ದುರ್ಭವ
ಕಡಿಯೆಲೊ ಭವಭಯಭಂಗ ಆಹ
ರೂಢಿ ತೊಡರು ಕಡೆಮಾಡಿ ಎನಗೆ ಮುಕ್ತಿ
ನೀಡಿ ಸಲಹು ಎಂದು ಬೇಡುತ ಶ್ರೀರಾಮ ೩

 

೬೩೬
ಬಣ್ಣಿಪ ಪ್ರಾಣವಾರಿಗೆ ನಿಮ್ಮ
ಉನ್ನತೋನ್ನತ ಜಾಣ ಮಹಿಮ ಪ
ಸಾಧಿಸಿ ವೇದನಾದ ಬಿಡದೆ
ಓದಿ ಓದಿ ದಣಿದು ತವ
ಪಾದಕಾಣದೆ ಒರಲುತಿಹ್ಯವು
ಭೇದರಹಿತಾಗಾಧ ಮಹಾತ್ಮ ೧
ಶೇಷರಾಜ ದೃಢದಿ ತನ್ನ
ಸಾಸಿರ ಜಿಹ್ವೆಗಳಿಂದ ಅನು
ಮೇಷ ಪೊಗಳಿ ನಿನ್ನ ಕಾಣದೆ
ಬೇಸತ್ತು ಬಾಯಬಿಡುವನಭವ ೨
ಸುರಜೇಷ್ಠಸುರಾದಿಗಳು
ಅರಿಯರು ನಿನ್ನ ಪುಣ್ಯಚರಣ
ಅರಿವೆನೆಂತು ಮೂಢನು ನಾನು
ಪೊರೆ ನೀನೆ ದಯದಿ ಶ್ರೀರಾಮ ೩

 

೧೪೯
ಬನ್ನಿ ಮಹಂಕಾಳಿ ಜಯವ ನೀಡಮ್ಮ
ಮನ್ನಿಸಿ ಬಾಲಗೆ ಪ
ನಿನ್ನ ನಂಬಿಕೊಂಡು ಕೆನ್ನೆಯೋಳ್ಮುಡಿವರ
ಬನ್ನ ಕಳೆದು ಜಯವನ್ನು ಕೊಟ್ಟು ನೀ
ಭಿನ್ನವಿಲ್ಲದೆ ಮನ್ನಿಸಿ ಸಲಹು
ಪನ್ನಂಗವೇಣಿಯೆ ಉನ್ನತ ಕರುಣಿ ೧
ಪರಮ ಪವಿತ್ರಳೆಂದು ಪರಮ ಪ್ರೀತಿಯಿಂದ
ಹರನು ಬಿಡದೆ ನಿನ್ನ ಶಿರದಿ ಧರಿಸಿಕೊಂಬ
ಪರಮಮಹಿಮ ನಿನ್ನನರಿನು ಪೇಳುವೆನಾ
ತರಳನ ಮೊರೆ ಕೇಳೆ ಕರುಣಿ ಶುಭಕರಿ೨
ನೇಮದಿ ಭಜಿಪೆ ನಿಸ್ಸೀಮೆ ನಿರಾಮಯೆ
ಕ್ಷೇಮಶರಧಿ ತ್ರಿಭೂಮಿಜಯಂಕಾರಿ
ಈ ಮಹಭವನಿಧಿ ಕ್ಷೇಮದಿ ಗೆಲಿಸು ಶ್ರೀ
ರಾಮನಾಮ ಪ್ರಿಯೆ ಕೋಮಲಹೃದಯೆ ೩

 

೧೭೫
ಬಯಸಿ ಕರೆದರೆ ಬರುವರೇನಯ್ಯಾ ನರಹರಿಯ ದಾಸರು
ಬಯಸಿ ಕರೆದರೆ ಬರುವರೇನಯ್ಯಾ ಪ
ಬಯಸಿಕರೆದರೆ ಬರುವರೇನೋ
ಜಯಶ್ರೀ ಮುರಹರಿಯ ನಾಮ ಓದಿ
ಬಾಯಿಪಾಠಮಾಡಿ ಭವದ ಭಯವ
ಕಳೆದುಕೊಂಡ ಶೂರರು ಅ.ಪ
ತನುವು ಎಂಬ ಆಲಯವ ತೊಡೆದು
ಮಹ ವಿಷಯಲಂಪಟ
ಬಿನುಗು ತ್ರಿಗುಣೆಂಬ್ಹೇಸಿಕೆಯ ಬಳಿದು ಸುಸ್ಸಂಗಶ್ರವಣ
ಮನನದಿಂ ನಿಜಮೂಲ ಮರ್ಮರಿದು ಆಸನವ ಬಲಿದು
ಮನವುಯೆಂಬು ಲೇಖಣ್ಹಿಡಿದು ಘನಚಿತ್ತೆಂಬ
ಲೇಖ್ಯದಮೇಲೆ
ಚಿನುಮಯಾತ್ಮನ ನಾಮ ಬರೆದು ಘನಕೆ
ಘನ ಅನಂದದಿರುವರು ೧
ಆರು ದ್ವಯಗಜ ಇಕ್ಕಡಿಯ ಗೈದು ಬಿಡದ್ಹಾರಿಬರುವ
ಆರು ಹುಲಿಗಳ ತಾರ ಸೀಳೊಗೆದು ಬಲುಘೋರಬಡಿಪ
ಆರುನಾಲ್ಕು ಶುನಕಗಳು ತುಳಿದು ಸತ್ಪಥವ ಪಿಡಿದು
ಸಾರಾಸಾರ ಸುವಿಚಾರಪರರಾಗಿ ಮಾರನಯ್ಯನ –
ಪಾರಮಹಿಮೆಯ
ಬಾರಿಬಾರಿಗೆ ಪಠಣ ಮಾಡಿ ಸುಸಾರ ಅಮೃತ ಪೀರುವವರು ೨
ತಾಸಿನ ಜಗಮಾಯವೆಂದರಿದು ಇದು ಸತ್ಯವಲ್ಲೆಂದು
ಬೇಸರಿಲ್ಲದೆನುಭವದಿ ದಿನಗಳೆದು ಸುಚಿಂತದನುದಿನ
ದಾಸದಾಸರ ಸಾಕ್ಷಿಗಳ ತಿಳಿದು ನಿಜಧ್ಯಾಸದ್ಹುಡಿಕ್ಹಿಡಿದು
ನಾಶನಭವದ್ವಾಸನೆಯ ನೀಗಿ ಸಾಸಿರನಾಮದೊಡೆಯ ನಮ್ಮ
ಶ್ರೀಶ ಶ್ರೀರಾಮಚರಣಕಮಲದಾಸರಾಗಿ ಸಂತೋಷದಿರುವರು ೩

 

೫೫೧
ಬರಿದಿದೇಕೆಲೋ ನಿನ್ನಂತರಿರವು
ಸಿರಿಯರರಸ ಅರಿಯನೇನೆಲೋ ಪ
ಮರೆಯ ಮೋಸದಿ ಕುಕ್ಕಲು ಮೀನ
ಹರಿವ ಉದಕದಿ ಬಕನು ಮೌನ
ಧರಿಸಿದಂದದಿ
ಪರಮಮೌನ ಧರಿಸಿ ಕುಳಿತು
ಮರುಳುಗೊಳಿಸಿ ಪರರ ಕೊರಳ ಮುರಿವ
ದುರುಳತನದ ಕೃತಿಗೆ
ಹರಿಯು ಒಲಿಯುವನೇನು ಮರುಳೆ೧
ಕಪಟ ನೀಗದೆ ಹುಚ್ಚು ಬಿಡದೆ
ಗುಪಿತ ತಿಳಿಸದೆ ಮುಚ್ಚಿ ಕಣ್ಣು
ತಪಸಿಯಂದದಿ
ಕುಪಿತ ಮಾನಿಸನಾಗಿ ಕುಳಿತು
ತಪಸಿಯಂತೆ ತೋರಿ ಜನರ
ಅಪಾಯಮಾಳ್ಪ ಕಪಟವೇಷಕೆ
ಸುಫಲ ದೊರೆಯುವುದೇನು ಮರುಳೆ ೨
ಉದಯದೇಳುತ ಓಡಿ ಹೋಗಿ
ನದಿಯ ಮುಳುಗುತ ತೀಡಿಗಂಧ
ಹದದಿ ಬರೆಯುತ
ವಿಧವಿಧಮಂತ್ರೊದರಿ ಇತರರ
ಸದನ ಮುರಿದು ಸತಿಯ ಸುತರ
ಮುದದಿ ಪೊರೆವ ಅಧಮ ವ್ರತಕೆ
ಸದಮಲಾಂಗೊಲಿವನೆ ಮರುಳೆ ೩
ಕುಟಿಲಮನಸಿನ ಕಪಟ ನೀಗದೆ
ಜಟೆಯ ಬೆಳಸಿನ್ನು ಚಪಲತನದಿಂ
ದುಟ್ಟು ಕೌಪೀನ
ನಿಟಿಲದಲ್ಲಿ ಭಸ್ಮಧರಿಸಿ ನಟಿಸಿ ಸಾಧುವರ್ತನದಿಂ
ದ್ಹೊಟ್ಟೆ ಹೊರೆವ ಭ್ರಷ್ಟತನಕೆ
ಕೆಟ್ಟ ಬವಣಳಿಯುವುದೆ ಮರುಳೆ ೪
ತತ್ವದರ್ಥವ ಬೋಧಿಸುತ್ತ
ಭೃತ್ಯ ಸಮೂಹವ ಸಂಪಾದಿಸುತ್ತ
ನಿತ್ಯಸತ್ಯವ
ವಿತ್ತದಾಸೆಗುತ್ತರಿಸುವಸತ್ಯಭ್ರಷ್ಟ ವರ್ತನಕೆ
ಮುಕ್ತಿದಾಯಕ ಸಿರಿಯರಾಮ
ಮುಕ್ತಿಸುಖ ನೀಡುವನೆ ಮರುಳೆ ೫