Categories
ರಚನೆಗಳು

ರಾಮದಾಸರು

೩೭೧
ಬರಿದೆ ಬಯಸಲು ಬರುವುದೇನೆಲೆ
ಮರುಳು ಯೋಚನೆ ಬಿಡೆಲೆ ಮನಸೆ ಪ
ಹರಿಯ ಬಳಿಯಲಿ ಪಡೆದಷ್ಟಲ್ಲದೆ
ದೊರಕದೆಂದಿಗೆ ಬೇರೆ ತಾನು ಅ.ಪ
ಶಾಂತಿತಾಳತಿಭ್ರಾಂತಿ ನೀಗಿ
ಸಂತಜನ ಕೃಪಾಪಾತ್ರನಾಗಿ ಕರು
ಣಾಂತರಂಗ ಸಿರಿಕಾಂತನಂಘ್ರಿಯ
ಅಂತರಂಗದಿ ಭಜಿಸದೆ ೧
ಶಮೆಯಗೂಡಿಹ್ಯ ಭ್ರಮೆಯನಳಿದು
ಸುಮನದೋಳಿರ್ದು ಕ್ರಮದಿ ಅನುದಿನ
ವಿಮಲ ಹರಿಕಥೆ ಶ್ರವಣದಿಂ
ರಮಾರಮಣನಂಘ್ರಿಗೆ ನಮಿಸದೆ ೨
ದಮೆಯ ಪಡೆದು ದಾಸನಾಗಿ
ವಿಮಲನಾಮದ ಬಲವಗಳಿಸಿ
ಅಮಿತಮಹಿಮ ಶ್ರೀರಾಮನಂಘ್ರಿ
ಕಮಲವೊಲಿಸಿ ಭವತುಳಿಯದೆ ೩

 

೫೫೨
ಬರಿದೆ ಹಾಳು ಶರೀರ ಬಾಳು
ಅರಿದಡಿದು ಮಹ ಟೊಳ್ಳು ಟೊಳ್ಳು ಪ
ನಾರಿಪುರುಷರು ಮಾರಕದನದಿಂ
ಸೇರಿ ಸುಖಿಸಲು ಜಾರಿದಿಂದ್ರಿಯ
ಕಾರಣಾಗಿ ಮೂರುದಿನದಿ
ತೋರಿ ಪೋಗ್ವಸಾರಮಯ ೧
ಮಿಡುಮಿಡುಕಿ ಒಡಲಿಗಾಗಿ
ದುಡಿದು ಮೂಢರಡಿಯ ಪಿಡಿದು
ಬಿಡದೆ ರೋಗದೊಡನೆ ನರಳಿ
ಪಡುತಕಷ್ಟ ಕಡೆಗೆ ಸಾಯ್ವ ೨
ಪರರಸೇವೆ ನಿರುತಗೈದು
ಪರಕೆ ಇಹ್ಯಕೆ ತಿರುಗಿ ತಿರುಗಿ
ಗರುವದಿಂದ ಚರಿಸಿ ನಮ್ಮ
ಸಿರಿಯರಾಮನ ಚರಣಕ್ಹೊಂದದ ೩

 

೩೭೨
ಬರುತಾದೋ ಪದ ಬರುತಾದೋ ಪ
ಪದುಮನಾಭನ ದಿವ್ಯಸದಮಲಪಾದದ
ವಿಧವಿಧ ಮಹಿಮೆಯಯ ಪೊಗಳಿ ಬಾಳುವ ಪದ ಅ.ಪ
ಛಂದಸ್ಸು ಮೀಮಾಂಸೆ ಅಂದದ ಯತಿಗಣ
ಒಂದು ನಾನರಿಯದೆ ಸಂದೇಹಮಿಲ್ಲದೆ
ಮಂದರಧರನಡಿ ಒಂದೇ ತ್ರಿಭುವಿಗೆ ಮಿಗಿ
ಲೆಂದು ಪಾಡುತಲಾನಂದ ಪಡೆಯುವ ಪದ ೧
ಸಕಲರು ತೆಗೆದಿಟ್ಟ ಅಕತಪಚಟಯೆಂಬ
ವಖಿಲಮಂ ಗಣಸದೆ ಪ್ರಕಟಮಿನಿತಿಲ್ಲದೆ
ಅಕಟಕಟೆನ್ನುತ ನಿಖಿಲವ್ಯಾಪಕನಂಘ್ರಿ
ಭಕುತಿಯಿಂ ಭಜಿಸುತ ಮುಕುತಿ ಪಡೆಯುವ ಪದ ೨
ಅಳುಕದೆ ಲೌಕಿಕ ತಿಳೆಸುಖಕೆಳಸದೆ
ಮಲಿನದಿ ಸಿಲ್ಕದೆ ಚಲನವಲನಿಲ್ಲದೆ
ಜಲಜಾಕ್ಷ ಭಕ್ತರ ಸುಲಭ ಶ್ರೀರಾಮನಂ
ಒಲಿಸಿ ಪ್ರಾರಬ್ಧವ ಗೆಲಿದು ನಲಿಯುವ ಪದ ೩

 

೩೭೩
ಬರುವುದೆಲ್ಲವು ಬಂದು ತೀರಿ ಹೋಗಲಿ
ಹರಿ ನಿನ್ನ ಸ್ಮರಣೆಯೆ ಸ್ಥಿರವಾಗಿರಲಿ ಪ
ಕಳ್ಳನೆಂದು ಎನ್ನ ಮರಕೆ ಬಿಗಿಯಲಿ
ಸುಳ್ಳನೆಂದು ಮೋರೆ ಮೇಲೆ ಉಗುಳಲಿ
ತಳ್ಳಿಕೋರನೆಂದು ಎಳದಾಡಿ ಒದಿಲಿ
ಎಲ್ಲಿನೋಡಿದಲ್ಲಿ ಹಾಸ್ಯಮಾಡಲಿ ೧
ಡಂಭಕನಿವನೆಂದು ಬಿಡದೆ ನಿಂದಿಸಲಿ
ನಂಬದೆ ಜನರೆನಗೆ ಇಂಬುಗೊಡದಿರಲಿ
ಕುಂಭಿನಿಪರು ಎನ್ನ ಮುನಿದು ನೋಡಲಿ
ಇಂಬು ಸಿಗದೆ ನಾನು ತೊಳಲಿ ಬಳಲಲಿ ೨
ಸತಿಸುತರೆನ್ನನು ಬಿಟ್ಟು ಹೋಗಲಿ
ಕ್ಷಿತಿಯೊಳೆನ್ನನು ಯಾರು ಸೇರದಂತಿರಲಿ
ಪತಿತಪಾವನ ಸಿರಿಪತಿ ಶ್ರೀರಾಮನ ಪೂರ್ಣ
ಹಿತವೊಂದೆ ಎನ್ನ ಮೇಲೆ ಬಿಡದಂತಿರಲಿ ೩

 

ವಾಮನವತಾರ. ಬಲಿ ಚಕ್ರವರ್ತಿಯಲ್ಲಿಗೆ
೭೨
ಬಲು ಚಂದ ಮಹದಾನಂದ ಶ್ರೀಹರಿ ಭಜನೆ ಪ
ಬಲು ಚಂದ ಬಲು ಚಂದ ಮಹದಾನಂದ
ಜಲಜನಾಭನ ನಾಮ ನಲಿನಲಿದ್ಹೊಗಳ್ವುದು ಅ.ಪ
ಬಲಿಯ ಕಾಯ್ದನ ನಾಮ ಬಲು ಚಂದ
ಲಲನೆಗೊಲಿದನ ಧ್ಯಾನ ಆನಂದ
ಕಲುಷಹರಣ ಕರಿಪಾಲನೆಂದೊದರಲು
ಗಳಿಲನೆ ಪರಿಹಾರ ಭವಬಂಧ ೧
ಮಾವಮರ್ದನನಾಮ ಬಲು ಚಂದ
ಗೋವಳರೊಡೆಯನ ಧ್ಯಾನ ಆನಂದ
ಗೋವುಪಾಲನೆಂದು ಭಾವಿಸಿ ಕೂಗಲು
ಸಾವು ಹುಟ್ಟು ಇಲ್ಲ ಎಂದೆಂದು ೨
ಕಾಮಪಿತನ ನಾಮ ಬಲು ಚಂದ
ಕಾಮಿತಾರ್ಥನ ಧ್ಯಾನ ಆನಂದ
ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ ಪಾದ
ನೇಮದಿ ನುಡಿಯೆ ಮುಕ್ತಿಪದ ಆನಂದ ೩

 

೩೭೫
ಬಲು ಚೋದ್ಯ ಬಲು ಚೋದ್ಯ ಹರಿ ನಿನ್ನ ಆಟ
ಸುಲಭವಲ್ಲಾರಿಗೆ ತಿಳಿಯದೀ ಮಾಟ ಪ
ಉಣಿಸುವವರೊಳು ನೀನೆ ಉಣುತಿರುವವರಲಿ ನೀನೆ
ಉಣಿಸುಣಿಸಿ ಅಣಕಿಸುವ ಬಿನುಗರಲಿ ನೀನೆ
ಮಣಿಯುವವರೊಳು ನೀನೆ ಮಣಿಸಿಕೊಂಬರಲಿ ನೀನೆ
ಕ್ಷಣಕ್ಷಣಕೆ ಬದಲ್ವಾಗ ಬಣ್ಣಕಗರಲಿ ನೀನೆ ೧
ಹೊಡೆಯುವವರಲಿ ನೀನೆ ಹೊಡೆಸುವವರಲ್ಲಿ ನೀನೆ
ಹೊಡೆಸಿಕೊಳ್ವರಲಿ ನೀನೆ ಬಿಡಿಸುವವರಲಿ ನೀನೆ
ದುಡಿಯುವವರಲಿ ನೀನೆ ದುಡಿಸಿ ಕೊಂಬರಲಿ ನೀನೆ
ಬಡವರಲಿ ನೀನೆ ಬಲ್ಲಿದರೊಳ್ನೀನೆ ೨
ಕೊಟ್ಟೊಡೆಯರಲಿ ನೀನೆ ಬಿಟ್ಟೋಡ್ವರಲಿ ನೀನೆ
ಕೊಟ್ವೊವಚನತಪ್ಪುವ ಭ್ರಷ್ಟರಲಿ ನೀನೆ
ಶಿಷ್ಟನಿಷ್ಟರಲಿ ನೀನೆ ಬಿಟ್ಟಾಡ್ವರಲಿ ನೀನೆ
ಇಟ್ಟಿಟ್ಟು ಹಂಗಿಸುವ ದುಷ್ಟರಲಿ ನೀನೆ ೩
ಪಾಪಿಷ್ಟರಲಿ ನೀನೆ ಕೋಪಿಷ್ಟರಲಿ ನೀನೆ
ಶಾಪಿಸುವರಲಿ ನೀನೆ ಶಾಪಕೊಂಬರಲಿ ನೀನೆ
ತಾಪತ್ರದಲಿ ನೀನೆ ಭೂಪತಿಗಳೊಳು ನೀನೆ
ಅಪಾರ ಸೃಷ್ಟಿ ಸರ್ವವ್ಯಾಪಕನು ನೀನೆ ೪
ಇನ್ನರಿದು ನೋಡಲು ಅನ್ಯವೊಂದಿಲ್ಲವು
ನಿನ್ನಪ್ರಭೆಯೆ ಸಕಲ ಜಗವನ್ನು ಬೆಳಗುವುದು
ನಿನ್ನ ರೂಪವೆ ಜಗ ಎನ್ನಯ್ಯ ಶ್ರೀರಾಮ
ಭಿನ್ನಬೇದ ಬಿಡಿಸೆನ್ನ ಧನ್ಯನೆನಿಸಯ್ಯ ೫

 

೩೭೬
ಬಲು ತಿಗಡೋ ಇದು ಬಲು ತಿಗಡೋ
ಗಲಿಬಿಲಿ ಸಂಸಾರ ತಾರತಿಗಡೋ ಪ
ತಿಳಿಯದರು ಎಲ್ಲ ಅಳಿದರೊಳಗೆ ಬಿದ್ದು
ತಿಳಿದವರು ಗೆಲಿದರೀಮೊಲೆಮುಡಿಯೊ ಅ.ಪ
ಅಲಕುಮಲಕು ಇದು ಬಲುತಂಟೋ ಜರ
ಸಿಲುಕಲು ಬೀಳ್ವುದು ಕಗ್ಗಂಟೋ
ಸೆಳೆದು ಮಾಯದಿಂ ಒಳಗೆ ಹಾಕಿಕೊಂಡ
ಬಳಿಕ ಬಿಚ್ಚದಿದು ಬ್ರಹ್ಮಗಂಟೋ ೧
ಎಣಿಕೆಗೆ ಮೀರಿದ ಹಳೆ ಗುದ್ದೋ ಇದು
ಘನ ಘನ ಜನರನು ನುಂಗಿದ್ದೋ
ಗುಣಿಸಿ ನೋಡದೆ ಮರ್ತು ಹಣಿಕಿಹಾಕಲಿದು
ಕುಣಿ ಕುಣಿಸಿ ಕೊಲ್ಲುವ ಮೆಚ್ಚು ಮದ್ದೋ ೨
ಆರಿಗೆ ತಿಳಿಯದು ಇದರ್ಹೊಲಬೋ ಜಗ
ದ್ಹಾರಿಬಿದ್ದರಪ್ಪ ಸುತ್ತಿ ಮೆಚ್ಚೋ
ಧೀರ ಶ್ರೀರಾಮನ ಚಾರುಚರಣಕ್ಕೆ
ಸೇರಿದವರಿಗೊಂದೆ ಬಲು ಸುಲಭೋ ೩

 

೩೭೪
ಬಲ್ಲಿದನಲ್ಲೇನು ಶ್ರೀಹರಿ ಬಲ್ಲಿದನಲ್ಲೇನು ಪ
ಬಲ್ಲಿದನಲ್ಲೇನು ಖುಲ್ಲಮನವೆ ತಿಳಿ
ಎಲ್ಲ ಲೋಕಗಳ ನಲ್ಲನಾಗಿಹ್ಯನೀತ ಅ.ಪ
ಕಡುದಯದಿಂದಿನ್ನು ಪಿಡಿದು ಬಿಡದೆ ಪಾಂಡವರನ್ನು
ಪೊಡವಿನೆಲ್ಲ ಒಂದೆ ಕೊಡೆಯಿಂದಾಳಿಸಿದ
ಎಡರು ತಾರದಂತೆ ಒಡೆಯ ಮುಕ್ಕುಂದನೀತ ೧
ಧೂರ್ತ ಹಿರಣ್ಯಕನ ಕರದಿಂ ಭಕ್ತ ಪ್ರಹ್ಲಾದನ್ನ
ಸ್ವಸ್ಥದಿಂದ ದಯವಿತ್ತು ಕಾಯ್ದನಿಗೆ
ಮತ್ತು ದಾರು ಸರಿ ಅರ್ತುನೋಡಲೀತ ೨
ಉರಿಹಸ್ತ ಪಡೆದವನ ಕ್ಷಣದಿಂ ಉರುವಿದ ಮಾರಮಣ
ಭರದಿಂ ತ್ರಿಪುರರ ಹರಿದಿಯರ್ವ್ರತ ಕೆಡಿಸ್ಹರನ
ಮೊರೆಯ ಕೇಳಿ ಸುರರ ಸಲಹಿದೀತ ೩
ಮೀರಿದ ಅಸುರರನು ತರಿದು ಸಾರುವ ಬಿರುದನ್ನು ಅ
ಪಾರ ಶೂರ ದನುಜಾರಿ ಭಕ್ತ ಸಹಕಾರಿ
ಶೌರಿ ನಿಜ ಮೂರು ಜಗದಿ ಈತ ೪
ಜಡಮತಿ ಮಾನವರ ನುಡಿಗಳು ದೃಢಲ್ಲೆಲೊ ಪೂರ
ಪೊಡವಿಗಧೀಶ ನಮ್ಮ ಒಡೆಯ ಶ್ರೀರಾಮನಡಿ
ದೃಢದಿ ನಂಬು ಭವತೊಡರ ಕಡಿವನೀತ ೫

 

೩೭೭
ಬಾಗೋ ಬಾಗೋ ಜೀವನೇ ಸಾಗರನಿಲಯಗೆ ಪ
ಬಾಗೋ ಮನಸಿನ ನೀಗಿ ಕಲ್ಮಷ
ಬೇಗ ತಿಳಿದು ನೀಜೋಗಿವಂದ್ಯಗೆ ಅ.ಪ
ಕನಸಿದು ಜಗಮೋಹ ಕಾಣು ಕಾಣೋ
ನಿನಗೆ ವೈಕುಂಠ ಒಂದೇ ಗೇಣೋ
ಚಿನುಮಾಯಾತ್ಮನ ತ್ವರ ಕಾಣು ಕಾಣೋ
ತನುಮನವರ್ಪಿಸಿ ನೆನವು ನಿಲ್ಲಿಸಿ ನಿಜ
ಘನಮಹಾತ್ಮನ ಹಿಡಿ ಖೂನ ಖೂನೋ ೧
ಸ್ಥಿರವೇನೋ ಮಣ್ಣಿನ ಕಾಯ ಕಾಯ
ಗುರುತಿಟ್ಟರಿಯಿದರ ನೆಲೆಯ ನೆಲೆಯ
ಮರುಳನೆ ನರಕದ ಕುಣಿಯು ಕುಣಿಯೋ
ನೆರೆದು ತೋರಿ ಸಂತೆ ಹರಿದು ಹೋಗುವಂತೆ
ಧರೆ ನಿನಗೊಂದಿನ ಮಾಯ ಮಾಯ ೨
ಬಂದದ್ದು ವಿಚಾರ ಮಾಡೋ ಮಾಡೋ
ಇಂದಿನ ಸಮಯ ಕಳಿಬೇಡೋ ಬೇಡೋ
ಬಂಧುರಸುಖಕೆ ಮನ ನೀಡೋ ನೀಡೋ
ಇಂದು ನಾಳೆನ್ನದೆ ತಂದೆ ಶ್ರೀರಾಮನ
ಬಂಧುರಚರಣವ ಪಾಡೋ ಪಾಡೋ ೩

 

೩೭೮
ಬಾರದೇನೆಲೋ ಕರುಣಿ ನಿನಗೆ ಅ
ಪಾರಮಹಿಮ ಸಾರಸಾಕ್ಷ ಪ
ದುರಿತನಾಶ ಬಾ ಸರ್ವೇಶ
ಸ್ಮರಿಪಜನವಿವಾಸ ಈಶ
ಕರುಣವಿಟ್ಟು ಪೊರೆ ಪ್ರಕಾಶ ೧
ಜಯವ ನೀಡೋ ಜವದಿ ಮನಕೆ
ಭಯನಿವಾರಣ ಕರುಣಾಭರಣ
ದಯದಿ ನೋವ ಗೈ ನಿವಾರಣ ೨
ಬೇಗೀ ಬಂಧನ ನೀಗಿಸಭವ
ನಾಗಶಯನ ಶ್ರೀರಾಮ ಸ್ವಾಮಿ
ಬಾಗಿದೆನು ನಿನ್ನಡಿಯ ನಂಬಿ ೩

 

೩೭೯
ಬಾರಯ್ಯ ದಯೆದೋರಯ್ಯ
ನೀರಜನಾಭನೆ ಕರುಣಿಸು ಮಹರಾಯ ಪ
ಸಂಸಾರಸರಕಿನೊಳು ಸಿಲುಕಿ ನಾ ಬಳಲುವೆ
ಶಿಶುವಿನೊಳು ದಯವಿಟ್ಟು ಸೆರೆ ಬಿಡಿಸೆನ್ನಯ್ಯ ೧
ಪುಸಿನುಡಿ ನುಡಿದು ನಾ ದೆಸೆ ಬಾಯ ಬಿಡುವೆನು
ಕುಸುಮಾಕ್ಷ ಪಿಡಿದೆನ್ನ ಹಸನ ಮಾಡೆನ್ನಯ್ಯ೨
ಜಡಭವತೊಡರನು ಗಡನೆ ಕಡೆಹಾಯ್ಸಿ ನಿ
ನ್ನಡಿಭಕ್ತಿ ಕೊಡು ಬೇಗೆನ್ನೊಡೆಯ ಶ್ರೀರಾಮಯ್ಯ ೩

 

೩೮೦
ಬಾರಯ್ಯ ಸ್ವಾಮಿ ಬಾರಯ್ಯ ಪ
ಬಾರಯ್ಯ ಮುಖವನ್ನು ತೋರಯ್ಯ ತವಪಾದ
ವಾರಿಜನಂಬಿದೆ ಮಾರಜನಕ ಬೇಗ ಅ.ಪ
ಎಷ್ಟಂತ ಬಳಲಲಿ ನಾನು ಸಂಸಾರ
ಕಷ್ಟದ ಕಾಡಿನೊಳಿನ್ನು ಧ್ವಂಸಾಗಿ
ಭ್ರಷ್ಟತನದಿ ಬಾಳುವೆನು ಕಂಸಾರಿ
ಇಷ್ಟುದಯವು ಬರದೇನು ಆಹ
ಶಿಷ್ಟಜನುಮವೆಂದು ಅಟ್ಟಿ ಎನ್ನನು ಇಂಥ
ಕೆಟ್ಟ ಬವಣೆಗೆ ಬಲಿಗೊಟ್ಟು ಬಿಡುವರೆ ಈಶ ೧
ಜನನಿಜಠರದಲಿ ಎನ್ನ ಏನೆಂ
ದೆನುತ ನೂಕಿದಿ ಪೇಳು ಮುನ್ನ
ಸಾನಂದನುಪಮನು ತವಚರಣ
ಆನಂದನುಕೂಲವಾದಂದಿಲ್ಲೇನ ಆಹ
ಅನುಚಿತ್ತವೇನಯ್ಯ ದಿನವು ಪೋಯಿತು ಅರ್ಧ
ಮನಕೆತರದಲಿಹಿ ಜನಕನೆ ಕರುಣದಿ ೨
ಭಕ್ತವತ್ಸಲನೆಂಬ ಬಿರುದು ಮಾಜ
ದ್ಹೊತ್ತು ನಿಖಿಲ ನೀನೆ ಬೆರೆದು ತ್ರಿಜ
ಗೆತ್ತಿ ಆಳುವಿ ಮನವರಿದು ನೈಜ
ದಿತ್ತು ಪೊರೆವಿ ಭಯತರಿದು ಆಹ
ಕರ್ತನೆ ತವಪಾದ ಮರ್ತಿರಲಾರಿನ್ನು
ತುರ್ತು ದಯವಾಗೆನ್ನೊಳರ್ತಿಯಿಂ ಶ್ರೀರಾಮ ೩

 

೫೫೯
ಬಾರಿಯ ಜಿಡ್ಡಂತೆ ದುರ್ಜನ ಸಂಗ
ಬಾರಿಯ ಜಿಡ್ಡಂತೆ ಪ
ತೂರಿ ಪೋಗದಂತೆ ದಾರಿಕಟ್ಟು ಮಾಡಿ
ಊರು ಸುತ್ತ್ಹಚ್ಚಿದ ಅ.ಪ
ತಲೆಬಾಗಿ ನೆಲವನ್ನು ನೋಡದೆ
ತಿಳಿಯದಲೆ ಇದನು ತುಳಿಯಲು ಅಂಗಾಲಿ
ನೊಳಗೆ ಮುರಿದು ಖಂಡ
ಕೊಳೆಸಿ ಕೀವುಮಾಡಿ ಅಳಿಸಿ ಬಳಲಿಸುವ ೧
ಉಡಿಗೆ ತೊಡಿಗೆಗಳನ್ನು ಅಂಟಲು
ಬಿಡಿಸಲು ಬಿಡದಿನ್ನು ಅಡರಿಕೊಂಡು ಇದು
ತೊಡರಿ ತೊಡರಿ ಬಲು
ಮಿಡುಕಿಸುವ ಕಡು ತೊಡರಿನ ಅಂಟು೨
ನಿಷ್ಠೆಯಿಂದ ಜವದಿ ಶ್ರೀರಾಮ
ಪಟ್ಟಣ ಮಾರ್ಗದಿ ನೆಟ್ಟಗೆ ಪೋಗುವ
ಶಿಷ್ಟರ ಕಾಲೊಳು ನೆಟ್ಟು
ಕಷ್ಟ ಕೊಟ್ಟು ಬಿಟ್ಟು ಕಟ್ಟು ಮಾಡ್ವ ೩

 

೩೮೧
ಬಾರೋ ಸುಖಸಾರ ತೋರು ಕೃಪೆ ಮುರಹರ
ಮೀರಿದ ಸಂಸಾರವಾರಿಧಿ ಮಾಡು ಪಾರ ಪ
ಎಂಬತ್ತು ನಾಲ್ಕುಲಕ್ಷಯೋನಿಯೊಳ್ ಬಳಲುತ
ಕುಂಭಿನಿಯೊಳು ಬಂದು ನಂಬಿಗಿಲ್ಲದೆ ಕೆಟ್ಟೆ ೧
ದಯದಿ ಎನ್ನಯ ದುರ್ಬವಣಿಯ ನೀಗಿ
ದಯಮಾಡು ಸುಖಸಂತಸವನೆನ್ನೊಡಲಿಗೆ ೨
ಮಸಣಿಸದಸಮ ಸಂಪದವನೆ ಕರುಣಿಸಿ
ಶಿಶುವನು ಪೋಷಿಸು ಶ್ರೀಶ ಶ್ರೀರಾಮನೆ ೩

 

೭೩
ಬಾಲನಮ್ಮ ಬಾಲಕೃಷ್ಣ ಬಹಳ ಮಾಯಕಾರನೀತ ಪ
ಬಾಲನೀನೆ ಗೋಪಾಲ ನೀಲಶ್ಯಾಮ ವನಮಾಲ
ಬಾಲನಂತೆ ಕಣ್ಗೆತೋರಿ ಆಲಯ ಗೌಪ್ಯದಿಂದ ದೂರಿ
ಬಾಲೆರುಟ್ಟ ದುಕೂಲ ಬಿಡಿಸಿ ಬಿಗಿದಪ್ಪಿ ಅಧರ ಸುರಿವ ಅ.ಪ
ಮಿಂದು ಮಡಿಯನುಟ್ಟಾನಂದದಿ ಶೋಭಿಸುವ
ಅಂದಮಾದ ಹಂಸತಲ್ಪದಿ ಪವಡಿಸಿರುವ
ಇಂದು ಮುಖಿಯವರ ಬಳಿಗೆ ಮುದದಿ ಮಂದಹಾಸದಿ
ಬಂದು ಚೆಂದದ ತೊದಲುನುಡಿಯಿಂದ
ಮೋಹ ಮಾತನಾಡಿ
ಇಂದುಮುಖಿಯರಂ ಮೋಹಪಾಶದಿಂದ
ಬಾಧಿಸಿ ಕಂದರ್ಪನ್ಹೇವದಿ
ಕುಂದರದನೆಯರಂದಗೆಡಿಸಾನಂದ ಮನಸು
ಸುಲಿದುಕೊಂಡವ ೧
ನಲಿನಲಿದು ಬೀಳುತೇಳುತ ಲಲನೆಯರಿಗೀ
ಸುಲಿಯಪಲ್ಲು ತೋರಿನಗುತ ದಾರಿ ತರುಬಿ
ಚೆಲುವಾದಾಟಗಳನೆ ಆಡುತ ಕೊಳಲನೂದುತ
ಲಲಿತಾಂಗಿಯರೊಲುಮೆ ಮಾಡಿ ನಿಲ್ಲಿಸಿ
ಅರಿವು ಮರವೆಮಾಡಿ
ತಿಳಿಯದ್ಹಾಗೆ ಘಳಿಲಿನ್ಹಾರಿ ಎಳೆದು ಏಕಾಂತಸ್ಥಳಕ್ಕೊಯ್ದು
ಹಲವು ಕ್ರೀಡದಿಕಳೆಯ ಸೆಳೆದು ಗಲ್ಲಕಚ್ಚುವ ಜಿಗಿದು ಓಡುವ ೨
ಹಿತದಿ ಆಡುವ ಸುತರ ಕೆಣಕುವ ಬಿಡಿಸಲ್ಹೋದ
ಸತಿಯರ ಮೈಮೇಲೆ ಬರುವ ಸಣ್ಣವನೇನೇ
ಪತಿ ನಾ ನಿಮಗೆಂದ್ಯವ್ವನ ತಾಳುವ ವ್ಯಥೆಯಬಡಿಸುವ
ವ್ರತದಕನ್ನೆಯರವ್ರತವ ಕೆಡಸಿ ಹಿತದಿಹಾಕಿದ
ಮೀಸಲು ಮುರಿಸಿ
ಸತತ ಗೋಪಿಕಾ ಸತಿಯರೆಲ್ಲರಿಗ್ಹಿತದ
ದೇವರು ತಾನೆಯೆನಿಸಿ
ನುತಿಪ ಭಕ್ತರಿಗುನ್ನುತ ಮುಕ್ತಿಗತಿಯ ನೀಡುವ
ಪತಿತ ಶ್ರೀರಾಮ ೩

 

೫೫೩
ಬಿಚ್ಚದಿರು.ಬಿಚ್ಚದಿರು ಮುಚ್ಚು ಈ ಬಾಯಿ
ಬಿಚ್ಚಿದ ಬಳಿಕದಕೆ ಎಚ್ಚರವೆ ಇಲ್ಲ ಪ
ಅಲ್ಲ ಅಹುದೆಂಬುವುದು ಎಳ್ಳಷ್ಟು ಇದಕಿಲ್ಲ
ಸುಳ್ಳುಹೇಳುವುದೆಲೊ ಅಳತೆಯೆ ಇಲ್ಲ
ಜೊಳ್ಳು ಮಾತುಗಳ್ಹೇಳಿ ಮಳ್ಳು ಮಾಡಿ ಜನರಲ್ಲಿ
ಬಲ್ಲವೆನಿಸಿಕೊಂಬ ಸೊಲ್ಲೆ ಹುಡುಕುವುದು ೧
ಸಲ್ಲದೀ ಆತ್ಮದ ಇಲ್ಲದ ಸುದ್ದಿಯನು
ಎಲ್ಲಿತನಕಲು ಬೇಸರಿಲ್ಲದ್ಹೇಳುವುದು
ಅಲ್ಲ ಅಹುದೆಂಬುದನು ಎಲ್ಲಬಲ್ಲಂಥ ಸಿರಿ
ನಲ್ಲನ ಪಾದಕ್ಕೆ ಅಲ್ಲೆನಿಸುತಿಹ್ಯದು ೨
ಮುಚ್ಚುಮರೆಯಿದಕಿಲ್ಲ ಎಚ್ಚರಮೊದಲಿಲ್ಲ
ಕಿಚ್ಚಿನೋಳ್ಬಿದ್ಹೋಗ್ವ ನೆಚ್ಚಿಕಿಲ್ಲ ಕಾಯ
ನೆಚ್ಚಿಕೆಡದಲೆಮಮ ಅಚ್ಯುತ ಶ್ರೀರಾಮನಂ
ಮುಚ್ಚಿಭಜಿಸಿ ಭವದುರುಲು ಬಿಚ್ಚಿಸಿಕೊಳ್ಳೊ ೩

 

೩೮೨
ಬಿಡಬೇಡೆಲೆ ಮನಸೆ ಶ್ರೀಹರಿಪಾದ
ಹಿಡಿ ಬಿಗಿಯಲೆ ಮನಸೇ ಪ
ಹಿಡಕೋ ಕಡಕಿಂ ಕಡಲಕಡಿದಮರರ
ಪಿಡಿದು ಕಾಪಾಡಿದ್ಹಾಲ್ಗಡಲ ಒಡೆಯನ ಪಾದ ಅ.ಪ
ಗರುಡನ್ನೇರಿದಪಾದ ಅನುದಿನ ಸಿರಿಯರೊತ್ತುವ ಪಾದ
ಪರತರ ಭಕುತಿಯಿಂ ಸುರರುಪೂಜಿಪ ಪಾದ
ನೆರೆದು ಋಷಿಸ್ತೋಮರರಸಿನಲಿಯುವ ಪಾದ
ಪರಮನಾರದ ತುಂಬುರರು ಪಾಡುವ ಪಾದ
ಶರಣ ಸಂತಜನ ನಿರುತ ನಮಿಪ ಪಾದ ೧
ನೀಲಬಣ್ಣದಪಾದ ಪಿಡಿದೆತ್ತಿ ಮೂಲೋಕಾಳುವ ಪಾದ
ತಾಳಿ ವಿಲಸಿತರೂಪ ಖೂಳನ ಎದೆಮೆಟ್ಟಿ
ಸೀಳಿ ಉದರಮಂ ಬಾಲನ್ನಪ್ಪಿಕೊಂಡು
ಪಾಲಿಸಿದಂಥ ಮಹ ಮೇಲಾದಮಿತಪಾದ
ಶೀಲ ಸುಜನ ತಲೆಮೇಲೆ ಹೊತ್ತಪಾದ ೨
ಬಲಿಯತುಳಿದಪಾದ ಮುನಿಯಾಗ ಒಲಿದು ಕಾಯ್ದಪಾದ
ಶಿಲೆಯನೊದೆದಪಾದ ವನಕೆ ಪೋದಪಾದ
ಖಳರಥಳಿಸಿ ಮುನಿಕುಲವ ಸಲಹಿದಪಾದ
ಜಲಧಿದಾಂಟಿ ಸ್ಥಿರಪಟ್ಟ ಭಕ್ತನಿಗೆ
ಸುಲಭದೊದಗಿಕೊಟ್ಟ ಚೆಲುವ ಸುದಯಪಾದ ೩
ದುರಿತಸಂಹಾರ ಪಾದ ಬಹು ಜರಮರಣ ನಿವಾರ ಪಾದ
ತರಳಗೆ ಸ್ಥಿರವರ ಕರುಣದಿತ್ತ ಪಾದ
ಭರದಿಗರಡನೇರಿ ಸರಸಿಗಿಳಿದ ಪಾದ
ತರುಣಿಮಣಿಯರವ್ರತ ಹರಣಗೈದ ಪಾದ
ಪುರತ್ರಯ ಸಿರಿ ಸೆರೆ ಸೂರೆಗೊಂಡ ಪಾದ ೪
ಕರುಣಮುಳ್ಳ ಪಾದ ಭಕುತರ ಮೊರೆಯ ಕೇಳ್ವ ಪಾದ
ದುರುಳ ಕುರುಪನ ಗರುವಕಂಡ ಬುವಿ
ಬೆರಳಲೊತ್ತಿ ಮದಮುರಿದ ವಿಶ್ವ ಪಾದ
ಪರಮ ತುರಗವೇರಿ ಮೆರೆವ ವಿಮಲ ಪಾದ
ವರದ ಶ್ರೀರಾಮನ ನಿರ್ಮಲಾನಂದ ಪಾದ ೫

 

೭೪
ಬಿಡಿಸಯ್ಯಾ ಭವ ಬಿಡಿಸಯ್ಯ ಹರಿ ನಿನ್ನ ನಾಮ
ದೃಢವಾಗಿ ನುಡಿಸಯ್ಯ ಬಿಡದೆ ಸನ್ಮಾರ್ಗದಿ
ನಡೆಸಯ್ಯ ದೇವ ಗಡ ನಿನ್ನ ಕೃಪಾಕವಚ ತೊಡಿಸಯ್ಯ ಪ
ಹಾಳು ಭ್ರಾಂತಿಗಳೆಲ್ಲ ಕೆಡಿಸಯ್ಯ ಎನ್ನ
ಕೀಳುಯೋಚನೆ ಸರ್ವ ಕಡಿಸಯ್ಯ
ಜಾಳು ಪ್ರಪಂಚದಾಸೆ ತಿಳಿಸಯ್ಯ ಸ್ವಾಮಿ
ಮೂಳಮಾನವರ ಮಾತು ಮರೆಸಯ್ಯ ೧
ನಿತ್ಯ ಸುಜನರೊಳಿರಿಸಯ್ಯ ಎನ್ನ
ಸತ್ಯ ಶರಣರೊಳಾಡಿಸಯ್ಯ
ಅರ್ತಿಯಿಂ ತತ್ವರ್ಥ ತಿಳಿಸಯ್ಯ ಎನ್ನ
ಮಿಥ್ಯಗುಣಂಗಳನ್ನು ಹರಿಸಯ್ಯ ೨
ಕೋಪತಾಪಂಗಳ ವಧಿಸಯ್ಯ ಎನ್ನ
ಪಾಪ ಮಾಫಿಗೊಳಿಸೆನ್ನಯ್ಯ
ಕೋಪಿ ಪಾಪಿಗಳಿಂದುಳಿಸಯ್ಯ ನಿನ್ನ
ಗೌಪ್ಯದ ಧ್ಯಾನ ಮುನ್ನ ತಿಳಿಸಯ್ಯ ೩
ಭೂತಪ್ರೇತದಂಜಿಕ್ಹರಿಸಯ್ಯ ತಂದೆ
ಜಾತಿಭೀತಿ ಮೊದಲ್ಹಾರಿಸಯ್ಯ
ನೀತಿಶಾಂತಿ ಸ್ಥಿರ ನಿಲ್ಲಿಸಯ್ಯ ಎನ್ನ
ತಾತ ಮಾತೆ ನೀನೆ ನಿಜವಯ್ಯ ೪
ನರರಿಗೆ ಎರಗಿಸದಿರಯ್ಯ ಎನ್ನ
ಶಿರ ನಿನ್ನ ಚರಣದಿ ಇರಿಸಯ್ಯ
ಪರಲೋಕಸಾಧನ ತೋರಿಸಯ್ಯ ಎನ್ನ
ಶರಣ ನೀನಾಗು ಶ್ರೀರಾಮಯ್ಯ ೫

 

೩೮೩
ಬಿಡಿಸೊ ಕಡು ದಯಾನಿಧಿಯೆ
ಕಡುಕಷ್ಟದುರುಲನ್ನು ಗಡನೆ ಎನ್ನಯ್ಯ ಪ
ಕಡಿವಲ್ಲದೆನಗಿನ್ನು ಕಡುದು:ಖ ಜಡಮಯ
ತೊಡರು ಸಂಸಾರಭಾದೆ ತಡಿಲಾರೆನಭವ ೧
ತನುಬಾಧೆ ರಿಣಬಾಧೆ ವನಿತೆ ಮಕ್ಕಳ ಬಾಧೆ
ಜನನಮರಣದ ಹೇಯ ಘನಬಾಧೆಯಕಟ ೨
ಸೀಮೆಯಿಲ್ಲದೆ ಕಾಡ್ವ ಈ ಮಹಾಭವ ಕಳೆದು
ಕ್ಷೇಮದಿಂ ಪೊರೆಯೈ ಶ್ರೀರಾಮ ಪ್ರಭು ತಂದೆ ೩

 

೬೩೭
ಬಿದ್ದ ಹುಣ್ಣು ಮಾಯವಲ್ಲದವ್ವಾ
ಹ್ಯಾಂಗೆ ಸಹಿಸಲಸಾಧ್ಯ ಬೇನೆ
ನಿದ್ರೆ ಬರದವ್ವಾ ಪ
ಬಿದ್ದ ಹುಣ್ಣು ಮಾಯವಲ್ಲದು
ಮುದ್ದು ಮುಖ ನಿನ್ನಪಾದ ಪದ್ಮಕೆ
ಬಿದ್ದು ಬೇಡುವೆ ಸದ್ದು ಮಾಡದೆ
ಅಬ್ದಿಶಯನನೆಂಬ್ವೈದ್ಯನ್ನ್ಹಿಡಿತಾ ಅ.ಪ
ಮುತ್ಯ ಅಜ್ಜರನಳೀತು ಯೀ ಹುಣ್ಣು
ಮತ್ತು ಎನ್ನ ಹೆತ್ತ ತಾತ ಮಾತಾ ಪಿತರನು
ಹತ್ತಿಕೊಂಡು ಭ್ರಾತೃ ಬಂಧುವನು
ಗೊತ್ತಿಗ್ಹಚ್ಚಿತು ಎತ್ತಪೋದರೊ
ಪತ್ತೆಗಾಣೆನು ಅತ್ತು ಅತ್ತು ಇದರ ಬೇನೆಗೆ
ಸತ್ತು ಸತ್ತು ಹೋದರೆಲ್ಲರು ಪುತ್ರ ಮಿತ್ರ ಕ
ಳತ್ರರೆಲ್ಲರ ವ್ಯರ್ಥಕೊಲ್ಲಿ ಬೆನ್ಹತ್ತಿದೆನ್ನಗೆ ೧
ಎಷ್ಟು ಬಂಧುಬಳಗವನೀ ಹುಣ್ಣು ನುಂಗಿಬಿಟ್ಟಿದೆ
ಇಷ್ಟು ಖೂನಕ್ಕುಳಿಸಿಲ್ಲೋರ್ವರನು
ಶಿಷ್ಟಜನರಿಗೆ ಮೃತ್ಯು ಕಾಣ್ಹುಣ್ಣು ಬಿಟ್ಟಿಲ್ಲಾರನು
ಎಷ್ಟು ಪೇಳಲಿ ನಷ್ಟಸುದ್ದಿಯನು
ದುಷ್ಟಶಿಷ್ಟರೆಂಬರೆಲ್ಲರ ಕಟ್ಟಿ ಮುರಿದು
ಮುಟ್ಟಿಗಿಯಮಾಡಿ ಮೊಟ್ಟೆಕಟ್ಟಿ
ಕೊಟ್ಟು ಮೃತ್ವಿಗೆ ಕಟ್ಟಕಡಿಗೆ ಬೆನ್ನಟ್ಟಿದೆನಗೆ ೨
ಕುಂತೆನೆಂದರೆ ಕುಂದ್ರಗೊಡದಮ್ಮ ಸಂತಜನರೊಳು
ನಿಂತೆನೆಂದರೆ ನಿಂದ್ರ ಗೊಡದಮ್ಮ
ಸಂತಸೆಂಬುದು ಇನಿತು ಇಲ್ಲಮ್ಮ
ಅಂತರಂಗದಿ ನಿಂತು ಸುಡುವುದು ತಾಳಲೆಂತಮ್ಮ
ಅಂತ:ಕರಣದಿ ಪೋಗಿ ಎನ್ನಯ ಅಂತ್ಯಕ್ವೈದ್ಯನಾದಂಥ ಪ್ರಾಣದ
ಕಾಂತ ಶ್ರೀರಾಮನನ್ನು ಕರೆತಂದು
ಕಾಂತೆ ಈ ಹುಣ್ಣು ಮಾಯ್ಸೆ ಬೇಗನೆ ೩

 

೩೮೪
ಬಿನ್ನಪ ಕೇಳಯ್ಯಾ ಬಡವನ
ಮನ್ನಿಸು ಮಹರಾಯ ಪ
ಎನ್ನ ಭವಗುಣಗಳನ್ನು ಕಳೆದು ಪೊರೆ
ಸನ್ನುತಾಂಗ ಹರಿ ಉನ್ನತ ಮಹಿಮ ಅ.ಪ
ತೊಳಲಿಬಳಲಿ ಬಂದೆ ಸಂಸಾರದ್ಹೊಲಸಿ
ನೊಳಗೆ ನಿಂದೆ
ಅಳಿಯುವ ದೇಹಕೆ ಕಳವಳಿಸುವ ಮನ
ಮಲಿನತೊಳೆದು ನಿರ್ಮಲ ಮಾಡು ತಂದೆ ೧
ಹುಟ್ಟಿ ನೀ ಸಾಯ್ವುದಕೆ ಬಂದಿಲ್ಲ
ಗಟ್ಟ್ಯಾಗಿರಲಿಕ್ಕೆ
ಸಠೆ ಈ ಲೋಕವು ದಿಟವಲ್ಲೆನಗೆ
ಹುಟ್ಟಿಹುಟ್ಟಿಬಹ ಬಟ್ಟೆ ತಪ್ಪಿಸು ತಂದೆ ೨
ಇಷ್ಟುದಿನವು ಕಳೆದು ತಿಳಿಯದೆ
ಭ್ರಷ್ಟತನದಿ ಬಾಳ್ವೆ
ಇಷ್ಟು ದಿನ ದಿನಗಳ್ವ್ಯರ್ಥ ಕೆಟ್ಟಿದ್ದೆ ಸಾಕಯ್ಯ
ಶಿಷ್ಟಗುಣವಕೊಟ್ಟು ಸಲಹೊ ಶ್ರೀರಾಮ೩

 

೫೫೪
ಬೂಟಾಟಿಗನು ನಾನು ಸತ್ಯಮಾಯ ಝಾಟ
ನಾಟಕವಾಡಿ ದಾಟಿ ಬೈಲಿಗೆ ನಿಂತ ಪ
ಮಿಥ್ಯ ಪ್ರಪಂಚ ಮರೆದು ಅರ್ತು
ನಿತ್ಯಸುಖದಿ ಮನ ಬೆರೆದು
ಅರ್ತುಅರಿಯದೆ ಮತ್ರ್ಯದೊರ್ತನದೊಳಗಿರ್ದು
ಗುರ್ತಿಟ್ಟು ಪರಲೋಕ ಸುರ್ತುಮಾಡಿಕೊಂಡ ೧
ಸಾಧುವರ್ತನದ್ಹಾದಿ ತಿಳಿದು ನಿಜ
ಶೋಧಿಸಿ ಕಾಲನ ಬಾಧೆ ಗೆಲಿದು
ವಾದಿಮೂರ್ಖರ ಕೂಡಿ ವಾದಿಸದನುದಿನ
ಸಾಧಿಸಿ ಪರಸುಖಸ್ವಾದ ಸವಿಯುವಂಥ೨
ಕಾಮಕ್ರೋಧಾದಿಗಳಳಿದು ಮಹ
ಪ್ರೇಮ ಮೋಹಂಗಳ ತುಳಿದು
ಸ್ವಾಮಿ ಶ್ರೀರಾಮನ ಪ್ರೇಮ ಪಡೆದು ಮುಕ್ತಿ
ಸಾಮ್ರಾಜ್ಯಸುಖ ಸಂಪಾದಿಸಿಕೊಂಡಂಥ ೩

 

೬೩೯
ಬೆಂಕಿಗಿರುವೆಗಳ ಕಾಟುಂಟೇ ಹರಿ
ಕಿಂಕರರಿಗೆ ಭವ ಭಯಮುಂಟೆ ಪ
ಪಂಕಜಸಖನಿಗೆ ಕತ್ತಲಂಜಿಕೆಯುಂಟೆ
ಪಂಕಜಾಕ್ಷನ ಧ್ಯಾನಕ್ಕೆಣೆಯುಂಟೆ ಅ.ಪ
ವಜ್ರಾಯುಧಕೆ ಗಿರಿ ಉಳಿಯಲುಂಟೆ ಗಂಗೆ
ಮಜ್ಜನದಿಂ ಮೈಲಿಗೆಯಿರುಲುಂಟೆ
ಸಜ್ಜನರಿಂಗೂಡಿ ನಿರ್ಜರೇಶನ ಭಜ
ನ್ಹೆಜ್ಜೆಜ್ಜ್ಹಿಗಿರೆ ಜನ್ಮ ಬರಲುಂಟೆ ೧
ಮೌನಧಾರಿಗೆ ಅಭಿಮಾನ ಉಂಟೆ ನಿಜ
ಧ್ಯಾನಿಕರಿಗೆ ಹೀನ ಬವಣೆಯುಂಟೆ
ಜ್ಞಾನದೊಳೊಡಗೂಡಿ ಗಾನಲೋಲನ ಪಾದ
ಆನಂದಕರಿಗಿಹ್ಯಸ್ಮರಣುಂಟೆ ೨
ತಾಮಸ್ಹೋಗಲು ಕ್ಷೇಮ ಬೇರುಂಟೆ ದು
ಷ್ಕಾಮಿ ತಳೆಯಲು ಮುಕ್ತಿದೂರುಂಟೆ
ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ
ಪ್ರೇಮಪಡೆದ ಮೇಲೆ ಬಂಧ ಉಂಟೆ ೩

 

೩೮೫
ಬೆಸನೆ ನಿವೃತ್ತಿ ಮಾಡು ಪ
ಪರಮಪಾವನ ಸಂಸಾರದ ಘನ ಅ.ಪ
ಕರಿಯಪಾಲನ ಕರುಣ ಕಡುಕಮಲನಯನ
ಖರೆಯ ಸುಖಕೆ ತೊರಪಿಟ್ಟೆನ್ನ
ಕೊರಗಿಪ್ಪ ಕಿರಿಕಿರಿಯ ತರಿದು ೧
ಜನಕಜಾವರ ಜನಕ ಜಗದ ಜಯ ಸುಖಕರ
ಜನುಜನಮದಿ ಜನಿಸಿ ಬರುವ
ಜಡರನಳಿದು ಜಯವ ನೀಡಿ ೨
ಸುಜನ ಜೀವನ ಸುಖಶರಧಿ ಸುಮನರೊಂದನ
ಶುಭಕೆ ಶುಭವೆನಿಸುವ ಸುಮುಕ್ತಿ
ಸುದಯದಿತ್ತು ಸಲಹು ಶ್ರೀರಾಮ ೩

 

ಮೂರು ಕಳೆಯುವ ನಾನು
೭೫
ಬೇಕಿಲ್ಲ ಎನಗನ್ಯ ಏನೇನು ಸ್ವಾಮಿ
ಸಾಕು ನಿನ್ನಯ ನಾಮವೊಂದೆ ನುತ ಪ್ರೇಮಿ ಪ
ಪರಮಪಾವನನಾಮ ದುರುಳ ಸಂಹರ ನಾಮ
ದುರಿತ ಪರಿಹರ ನಾಮ ಶರಧಿಮಥನ ನಾಮ
ಸುರರ ಸಲಹಿದ ನಾಮ ಹರನ ಪ್ರೇಮದ ನಾಮ
ಪರಮೇಷ್ಟಿಯನು ಪಡೆದ ಸ್ಥಿರನಾಮದ್ಹೊರತು ೧
ಸೃಷ್ಟಿಯಾಳುವ ನಾಮ ಶಿಷ್ಟಪಾಲನ ನಾಮ
ಕಷ್ಟ ಕಳೆಯುವ ನಾಮ ಇಷ್ಟಪೂರ್ಣ ನಾಮ
ಮುಟ್ಟುಮುಡಿ ಹರನಾಮ ಅಷ್ಟಸಿರಿಪತಿನಾಮ
(ಹುಟ್ಟುಸಾವಿ)ಲ್ಲದ ಶಿಷ್ಟನಾಮದ್ಹೊರತು ೨
ವೇದ ಹೊಗಳಿದ ನಾಮ ಸಾಧುವಂದಿತನಾಮ
ಬೋಧರೂಪದ ನಾಮ ಆದಿಮಹನಾಮ
ಭೇದವಿಲ್ಲವ ನಾಮ ವೇದಗೋಚರ ನಾಮ
ಆದಿ ಅಂತಿಲ್ಲದನಾದಿ ನಾಮದ್ಹೊರತು ೩
ತರಳನ್ಪೊರೆದ ನಾಮ ಕರಿಯ ಸಲಹಿದ ನಾಮ
ತರುಣಿನುದ್ಧಾರ ನಾಮ ಧರೆಪೊತ್ತ ನಾಮ
ಕರುಣೆ ತುಂಬಿದ ನಾಮ ಶರಣಾಗತಪ್ರಿಯ ನಾಮ
ನರನ ಬೆಂಬಲನಾದ ಹರಿನಾಮದ್ಹೊರತು ೪
ಮೂರು ಕಳೆಯುವ ನಾಮ ಆರುಗೆಲಿಸುವ ನಾಮ
ಆರುನಾಲ್ಕು ಸುಲಭದಿ ಹಾರಿಸುವ ನಾಮ
ಸೇರಿದರಿಂಬು ನಾಮ ಸಾರ ಮುಕ್ತಿಯ ನಾಮ
ಧೀರ ಶ್ರೀರಾಮ ನಿಮ್ಮಪಾರನಾಮದ್ಹೊರತು ೫

 

೩೮೬
ಬೇಗ ನೀಗಿಸು ದುರ್ಭೋಗದ ಸೆರೆಯ
ನಾಗಶಯನ ಬಾಗಿ ಬೇಡುವೆ ಪ
ನೀತಿಗೆಡಿಸಿ ಮಂಗನೆನಿಸಿ
ಮಾತುಮಾತಿಗೆ ಭಂಗಬಡಿಸಿ
ಪಾತಕನೆನಿಸಿ ದಂಗು ಹಿಡಿಸಿ
ಘಾತಮಾಳ್ಪ ಹೊನ್ನಿನಾಸೆ ೧
ಕುನ್ನಿಯಂದದಿ ಕುಣಿಸಿ ಕುಣಿಸಿ
ಬನ್ನ ಬಡಿಸಿ ಬನ್ನಂಗನೆನಿಸಿ
ಉನ್ನತ ಸುಖಗೆಲಿಪ ಹೇಸಿ
ಗನ್ನಗತಕ ಹೆಣ್ಣಿನಾಸಿ ೨
ಮೋಸಪಾಶದೊಳಗೆ ಮುಳುಗಿಸಿ
ದೋಷದೆಳಸಿ ಮುತಿಯಕೆಡಸಿ
ನಾಶ ಯಮನ ಕೊಲೆಗೀಡೆನಿಸಿ
ಘಾಸಿ ಮಾಳ್ಪ ಹೆಣ್ಣಿನಾಸಿ ೩
ಇಷ್ಟೆ ಜಗದ ಸುಖವಿದನು
ಎಷ್ಟುನಂಬಿ ಫಲವೇನು
ಅಷ್ಟು ಮಾಯವೆನಿಸಿ ಎನ್ನನು
ನಷ್ಟಗೊಳಿಪ ಕೆಟ್ಟಾಸಿಯನು ೪
ಮೀರಿ ಮಹ ಘೋರಬಡಿಸಿ
ಸಾರಸುಖದ ಮಾರ್ಗ ಕೆಡಸಿ
ಧೀರ ಶ್ರೀರಾಮ ನಿನ್ನ ಮರೆಸಿ
ಗಾರುಮಾಳ್ಪ ಪಾಪರಾಸಿ ೫

 

೩೮೭
ಬೇಗನೆ ದಯಮಾಡೊ ಸಾಗರ ನಿಲಯ
ನಾಗಶಯನ ನೀನು ಹ್ಯಾಗೆ ಮಹ ಕರುಣಾಳು ಪ
ಭಕ್ತರ ದುರ್ಭವ ಕತ್ತರಿಸದೆ ಇಡೀ
ಭಕ್ತರ ಬೆಂಬಲೆಂಬೋಕ್ತಿ ಸತ್ಯವೇನು ೧
ಸತತ ನಿನ್ನಯ ಪಾದ ನುತಿಸಲು ಕಾಯದಾದಿ
ನುತ ಪೋಷನೆಂಬ ಮಹ ಸ್ರ‍ಮತಿವಾಕ್ಯ ಸರಿಯೇನೋ ೨
ಶ್ರೀಶ ಶ್ರೀರಾಮ ನಿನ್ನದಾಸರ ನೊರೆದಿಹಿ
ದಾಸರ ಪ್ರಾಣನೆಂಬುವಾಚ ಲೇಸೇನೆಲೋ ೩

 

೭೬
ಬೇಡಿಕೊಂಬುವೆನಯ್ಯ ಬೇಗ ಬಾರಯ್ಯ
ಮಾಡು ಎನ್ನೊಳೂ ದಯ ಪಂಢರಿರಾಯ ಪ
ನಾಶನ ಜಗದೊಳಗೆ ಭಾಷಗಡಕನು ಆಗಿ
ಸಾಸಿರೊರುಷಿರ್ದೇನು ಹೇ ಈ ಜನುಮ
ಶೇಷನಯನನೆ ನಿನ್ನ ದಾಸನ ಅತಿಶಯ
ದೋಷವನು ಗಣಿಸದೆ ಪೋಷಿಸೈ ಈಶ ೧
ಅರಿದರಿದು ಪತಂಗ ಉರಿಯೊಳಗೆ ಬೀಳ್ವಂತೆ
ಖರೆಯ ಈ ಸಂಸಾರ ಸ್ಥಿರವೆಂದು ನಂಬಿ
ಪರಿಪರಿಯ ಪಾಪಂಗಳಿರಯದೆ ಮಾಡಿ ನಾ
ನರಕಕ್ಕೆ ಗುರಿಯಾದೆ ಪೊರೆಯೊ ಶ್ರೀ ಹರಿಯೆ ೨
ಸಿಂಧುಶಯನನೆ ಎನ್ನ ಮಂದಮತಿಯತನದ
ಲಿಂದ ಮಾಡಿದ ಪಾಪ ಚಿಂದಿಸೈ ಬೇಗ
ಹಿಂದಕಾದದ್ದಾಯ್ತು ಮುಂದೆ ಎನ್ನಯ ಬವಣಿ
ಚಂದಾಗಿ ತಿದ್ದಯ್ಯ ತಂದೆ ಶ್ರೀರಾಮ ೩

 

೩೮೮
ಬೇಡಿಕೊಂಬೆಗೋಪಾಲ ಬೇಡುವೆನೈ ದಯ ಪ
ಮಾಡಿ ಎನ್ನೊಳು ಬೇಗ ಗಾಢ ಮಹಿಮ ವರ
ನೀಡೋ ಕೃಪಾಂಬುಧೇ ಅ.ಪ
ಮರುಳನಾಗಿ ನಾನು ತಿರುಗುವೆ ಧರೆಯೊಳು
ಸಿರಿವರ ನಿಮ್ಮಯ ಚರಣವ ಸ್ಮರಿಸದೆ
ಪರಿ ಪರಿ ನರಕಕ್ಕೆ ಗುರಿಯಾದೆ
ಮುರಹರ ಕರುಣದಿಂ ಮನ್ನಿಸಿ ಪೊರೆ ಸುರವರ ೧
ದೀನದಯಾಪರ ಜಾನಕೀ ಮನೋಹರ
ನೀನೆ ಗತಿಯೆಂದು ಧ್ಯಾನಿಸಿ ಬೇಡುವೆ
ಹೀನನ ಮಾಡದೆ ಧ್ಯಾನಿಪ ಭಕ್ತನಂ
ಮಾನದಿಂ ರಕ್ಷಿಸು ವೇಣುಧರಹರಿ೨
ಸುರುಪರೀಶ ಹರಿ ಚರಣದಾಸರ ಮೊರೆ
ಕರುಣದಿ ಆಲಿಸಿ ಕರಪಿಡಿದು ಪೊರೆ
ನೆರೆನಂಬಿದೆ ನಿಮ್ಮ ಚರಣವ ಪರಿಪರಿ
ಪರಮಪಾವನ ಮಾಡು ಸಿರಿವರ ಶ್ರೀರಾಮ ೩

 

೩೮೯
ಬೇಡಿಕೊಂಬೆನೊ ಶ್ರೀಹರಿಯೆ ನಿಮ್ಮ
ಅಡಿಯ ಮರೆಯೆನೊ ಪ
ಬೇಡಿಕೊಂಬೆನಯ್ಯ ನಿಮ್ಮ ಅಡಿಯಪಿಡಿದು ಬಿಡದೆ ನಾನು
ಗಡನೆ ಎನ್ನ ಕಡುದಾರಿದ್ರ್ಯ ಕಡಿದು ಬಯಲು ಮಾಡಿ ಹರಿಯೇ ಅ.ಪ
ದೈತ್ಯಶಿಕ್ಷಕ ಚಿತ್ತಜತಾತ ಭಕ್ತರಕ್ಷಕ ಅ
ನಾಥ ಪ್ರೀತ ಮುಕ್ತಿದಾಯಕ
ಸತ್ಯಸಂಧನನ್ನು ಮಾಡಿ ಮತ್ರ್ಯಭೋಗದಾಸೆಬಿಡಿಸಿ
ನಿತ್ಯನಿರ್ಮಲಾತ್ಮ ನಿಮ್ಮ ಭಕ್ತಿಯಿತ್ತು ಸಲಹೊ ಹರಿಯೆ ೧
ಶ್ಯಾಮಸುಂದರ ಸ್ವಾಮಿ ಭಕ್ತಪ್ರೇಮ ಮಂದಿರ
ರಮಾ ಸತ್ಯಭಾಮಾ ಮನೋಹರ
ಪಾಮರತ್ವ ತಾಮಸ ದುಷ್ಕಾಮಿತಂಗಳ್ಹರಿಸಿ ನಿಮ್ಮ
ನಾಮಜಪವು ತಪದೊಳಿರಿಸಿ ಪ್ರೇಮದಿಂದ ಸಲಹೊ ಹರಿಯೆ೨
ಪದುಮನಾಭನೆ ಸದಮಲಾಂಗ ಒದಗುಬೇಗನೆ ಈ
ವಿಧದಿ ಬೇಡ್ವೆ ಸುದಯವಂತನೆ
ಪದದ ಮಹಿಮೆಯಿಂದ ಕಲ್ಲನೊದೆದು ಸುದತಿ ಮಾಡಿದಂಥ
ಪದದ ಕೃಪೆಯನಿತ್ತು ಎನ್ನ ಮುದದಿ ಸಲಹು ಸಿರಿಯರಾಮ ೩

 

೬೩೮
ಬೇಡಿದವರಿಗೆ ದೊರೆವುದೇನೆಲೊ ಸಜ್ಜನರ ಸಂಗ
ಬೇಡಿದವರಿಗೆ ದೊರೆವುದೇನೆಲೊ ಪ
ಬೇಡಿದವರಿಗೆ ದೊರೆವುದೇನೆಲೊ
ಗಾಢಮಹಿಮನ ಭಕ್ತರಾವಾಸ
ಮಾಡಿದ್ಹಿಂದಿನ ಸುಕೃತ ಫಲವು
ಕೂಡಿಬಂದ ಕೋವಿದರಿಗಲ್ಲದೆ ಅ.ಪ
ದೃಢಕರಡಿಯಿಟ್ಟ ಭುವನವೆ ಕ್ಷೇತ್ರ
ಪುಸಿಯಲ್ಲ ಕೇಳಿರಿ
ದೃಢಕ ಜನರಡಿಯೇ ಸುಯಾತ್ರಾ
ಸಿದ್ಧ್ದಾಂತ ಮಾತಿದು
ದೃಢಕರಾಡಿದ ಮಾತೆ ನಿಜಮಂತ್ರ
ಇದೆ ಮೂಲಶಾಸ್ತ್ರ
ದೃಢಕರು ನಿಂತ ಸ್ಥಳವೆ ಬದರಿ
ದೃಢಕರು ಕೂತಸ್ಥಾನ ಮಧುರೆ
ದೃಢಕರೊಟನಾಟ ಲಭ್ಯವೆಂದರೆ
ಪಡೆದ ಪುಣ್ಯ ಮಹಭಾಗ್ಯಗಲ್ಲದೆ ೧
ಭಕ್ತ ಜನಮಿಂದದೆ ತೀರ್ಥವು
ನಿಖಿಲರರಿವುದೆ
ಭಕ್ತ ಜನರುಂಡಸ್ಥಳ ಸಿರಿಯಾವಾಸವು
ದೊರೆಯದಾರಿಗೆ
ಭಕ್ತ ದರ್ಶನ ಪರಮ ಮಂಗಲವೋ
ಶುಭಕೆ ಶುಭಕರವು
ಭಕ್ತಜನರಿಹ್ಯ ಸಭೆಯೆ ಹರಿಸಭೆ
ಭಕ್ತರೊಪ್ಪಿಗೆ ಹರಿಯ ಒಪ್ಪಿಗೆ
ಮೃತ್ಯುದೂರ ಮಾಳ್ಪ ಸರ್ವೋತ್ತಮನ
ಭಕ್ತರ ಪ್ರೇಮದೊಲುಮೆ ೨
ದಾಸರ್ವಾಸವೆ ಕಾಶಿಕೇಂದ್ರವು
ಸತ್ಯ ಸತ್ಯವಿದು
ದಾಸರಿರುವುದೆ ಪರಮ ವೈಕುಂಠವು
ಮತ್ರ್ಯರರಿವುದೆ
ದಾಸಗಿತ್ತದ್ದು ಹರಿಗೆ ಅರ್ಪಣವು
ಪರಮ ಸುಖಕರವು
ದಾಸರೊರ್ಣವು ತೀರದಾರಿಗೆ
ಶ್ರೀಶ ಶ್ರೀರಾಮನಡಿಯಕಮಲ
ದಾಸರಿಜನರಡಿ ಪಿಡಿದು ಸುಸಹ
ವಾಸದಿರುವುದೆ ಮುಕ್ತಿಸಂಪದ ೩

 

೧೭೬
ಬೇಡುವರೋ ಬೇಡುಣುತಿಹ್ಯರೋ
ಬೇಡಿ ಬೇಡದಂತೆ ನಾಡೊಳ್ಹರಿದಾಸರು ಪ
ಕೊಟ್ಟರೆ ಶ್ಲಾಘನೆ ಮಾಡರೊ ಕೊಡದಿದ್ದರೆ
ಸಿಟ್ಟಿಗೆ ಬಾರರೊ
ಕೊಟ್ಟಕೊಡವದರೆಲ್ಲ ಅಷ್ಟೆಯೆಂದೆನ್ನುತ
ಸೃಷ್ಟಿಗೀಶನ ಘಟ್ಟ ತಿಳಿದಿಹ್ಯರೂ ೧
ಸಂಚಿತದಿಂ ಜನ್ಮ ತಾಳಿಹ್ಯರೂ ವಿ
ರಂಚಿಪಿತಗೆ ಭಾರಹೊರಿಸಿಹ್ಯರೊ
ಹಂಚಿಕಿಯಿಂದ ನಿರ್ವಂಚಿತರಾಗಿ ಬಂದ
ಸಂಚಿತಾದಡಾಗಮ ಗೆಲಿಯುವರೊ ೨
ಕಾಮಿತಗಳೆಲ್ಲ ಕಡೆದಿಹ್ಯರು ಈ
ಭೂಮಿಸುಖಕೆ ಮನಮೋಹಿಸರೊ
ನೇಮದಿಂದ ಮಹ ಕ್ಷೇಮವಾರಿಧಿ
ಸ್ವಾಮಿ ಶ್ರೀರಾಮ ಪಾದಕ್ಹೊಂದಿಹ್ಯರೊ ೩

 

೩೯೧
ಬೇಡುವುದಿಲ್ಲನ್ಯ ನಾನೇನು ನಿನ್ನ
ನೋಡಿ ಕರುಣದಿ ಬಾರೋ ಭಜಕನ ತ್ರಾಣ ಪ
ಬೇಡುತಕ್ಕುದನೆ ನಾ ಬೇಡುವೆನೆಲೆ ಸ್ವಾಮಿ
ನೀಡುತಕ್ಕುದನೆ ನೀ ನೀಡಿ ಕಾಪಾಡಯ್ಯ
ಮೃಡಮಿತ್ರ ಜಡಜಾಕ್ಷ ಒಡೆಯ ವೈಕುಂಠ ಅ.ಪ
ಎನ್ನಮನೆ ಬಾಗಿಲವ ಕಾಯೆನ್ನದಿಲ್ಲ
ಎನ್ನುಳಿಸು ತಂದೆಯನು ತರಿದೆನ್ನದಿಲ್ಲ
ಅಣ್ಣನ್ನ ಕೊಲ್ಲಿರಾಜ್ಯಕೊಡು ಎನ್ನದಿಲ್ಲ
ಎನ್ನ ಮನೆಯಾಳಾಗಿ ದುಡಿಯೆನ್ನದಿಲ್ಲ
ನಿನ್ನ ದಾಸರ ಸಂಗವನ್ನು ಕರುಣಿಸಿ
ಎನ್ನನನ್ಯರಿಗೆ ಬಾಗಿಸೆ ಮನ್ನಿಸಿ ಸಲಹೆಂಬೆ
ಭಿನ್ನವೇನಿದರೊಳು ಉನ್ನತಮಹಿಮ ೧
ಲಲನೆಯಳ ಕೊಡಿಸಣ್ಣನ್ಹೊಡಿದೆನ್ನದಿಲ್ಲ
ಬಲವಾಗೆನ್ನಯ್ಯ ಬಂಧುಗಳ ನಾಶಕೆನ್ನೊದಿಲ್ಲ
ಬಲಿದೆನ್ನಿಂ ತವ ಭಕ್ತ ನೋಡಿಸೆನ್ನದಿಲ್ಲ
ಸುಲಭದೆನ್ನಿಂದ್ಹೆಡಮುರಿ ಕಟ್ಟಿಸಿಕ್ಕೆನ್ನದಿಲ್ಲ
ಎಲೆದೇವ ತವಪಾದನಳಿನ ನಿರ್ಮಲಧ್ಯಾನ
ನಿಲಿಸು ಸ್ಥಿರವಾಗೆನ್ನ ನಾಲಗೆಯೊಳನುದಿನ
ಇಳೆಭೋಗದಳಸದೆ ಸಲೆ ಸುಖದಿ ಸಲಹೆಂಬೆ ೨
ಭಿನ್ನವಿಲ್ಲದೆ ಬಾ ನೀ ಕರೆದಲ್ಲಿಗೆನೆನು
ಎನ್ನ ಹೊಡೆತದ ಪೆಟ್ಟು ಸೈರಿಸೆಂದೆನೆನು
ಉನ್ನತ ಕುಲಗೆಡು ಎನ್ನೊಳುಂಡೆನೆನು
ಅನ್ಯಮಾತೊಂದು ನಿನ್ನ ಬಯಸಿ ಬೇಡೆನು ನಾನು
ಅನ್ಯರನು ಬೇಡದಂತುನ್ನತ ಪದ ನೀಡಿ
ನಿನ್ನ ಮೂರುತಿಯೆನ್ನ ಕಣ್ಣೊಳು ನಿಲ್ಲಿಸಿ
ಬನ್ನಬಡಿಸದೆ ಕಾಯೊ ಎನ್ನಯ ಶ್ರೀರಾಮ ೩

 

೩೯೦
ಬೇಡುವುದು ಕೊಡಬೇಡ ಒಡೆಯ ಶ್ರೀರಮಣ
ಕೊಡುವುದನೆ ಕೊಡುಮತ್ತೆ ಎಷ್ಟಾದರಭವ ಪ
ಆಶನವಸನಿಲ್ಲದೆ ವ್ಯಸನದಿಂ ಬಸವಳಿದು
ವಶದಪ್ಪಿ ಬಳಲಿದರೀ ವಸುಧೆಯ ಜನಕೆ
ಅಸುವನೀಗಲು ನಾನ್ಹಸಗೆಟ್ಟು ಬೇಡದ
ಅಸಮಶುಚಿಮನ ನೀಡೊ ಕುಸುಮಾಕ್ಷ ಹರಿಯೆ ೧
ಅತಿಶಯದ ಬಡತನವು ಸತತ ಪೀಡಿಸಲೆನಗೆ
ಗತಿಯಿಲ್ಲದವವೆನುತ ಸತಿಸುತರು ಜರಿಲಿ
ಧೃತಿಗುಂದಿ ಮತಿಗೆಟ್ಟು ವ್ಯಥೆಬಡುವ ಸ್ಥಿತಿಯನ್ನು
ಹಿತದಿಂದ ತೊಲಗಿಸೈ ರತಿಪತಿಪಿತನೆ ೨
ಬಿರುಕಿನೊಳು ಬಂದು ಈ ಮುರುಕು ಕಾಯದ ಇರುವು
ಹರಕೊಂಡು ಹೋಗಲಿ ಹರಿ ಕರುಣದೋರೊ
ನರಕಿಯೆನಿಸುವ ಮಹ ತಿರಕಿ ಸಂಸಾರದ
ಮರುಕವನು ಪರಿಹರಿಸೊ ಪರಕೆ ಪರತರನೆ ೩
ಊರು ನಾ ಸೇರಿರಲಿ ಅರಣ್ಯದೊಳಗಿರಲಿ
ಮೀರಿದ ರೋಗದಿಂ ಘೋರ ಬಡುತಿರಲಿ
ಆರೈಸದಾರನ್ನು ಸಾರಸಾಕ್ಷನೆ ನಿನ್ನ
ಪಾರನಾಮದ ಸವಿ ಸುಸಾರ ಎನಗಿರಲಿ ೪
ಕೊಡೋಧರ್ಮ ನಿನ್ನದಿದೆ ಬೇಡುವುದು ನನ್ನ ಧರ್ಮ
ಕೊಡುವುದಾದರೆ ನೀನೆ ಕೊಡು ಎನಗೆ ಇದನು
ಪೊಡವಿಯವರಿಗೆ ಬಾಗಿ ಬೇಡದ ಪದವಿಯನು
ಪಿಡಿವೆ ತವಪಾದ ಎನ್ನೊಡೆಯ ಶ್ರೀರಾಮ ೫

 

೩೯೨
ಬೇಡುವೆನು ಉಡಿಯೊಡ್ಡಿ ನಾ ನಿನ್ನ ಭಜಿಸಿ
ಮಾಡುದಯ ನಿನ್ನವರ ಒಡನಾಡ ಹರಿಯೆ ಪ
ಇಡುವ್ಯೋ ಸಂಸಾರದಿ ಕೊಡು ಬಿಡದೆ ನಿರ್ಮೋಹ
ನಡೆಸುವೆಯೊ ಹಿರೇತನದಿ ನುಡಿಸದಿರು ಪಕ್ಷ
ಬಡತನದಿ ಇಡುವೆಯೋ ಕಡುಧೈರ್ಯ ಕೃಪೆಮಾಡು
ಸಡಗರದ ಸಿರಿಕೊಡುವ್ಯೋ ಕಡುಶಾಂತಿ ನೀಡು ೧
ಬೇನೆಯೊಳು ನೂಕುವೆಯೋ ತ್ರಾಣಕೊಡು ತಡೆವ ಬಹು
ಮಾನ ಕೊಡುವೆಯೋ ಮೊದಲು ನಾನೆಂಬುದ್ಹರಿಸು
ಕಾನನದಿ ತಿರುಗಿಸುವಿಯೋ ಜ್ಞಾನಪಾಲಿಸು ಅಪ
ಮಾನವಿತ್ತರೆ ನಿನ್ನ ಧ್ಯಾನದೊಳಗಿರಿಸು ೨
ತಿರಿದುಣಿಸಿ ಬದುಕಿಸುವ್ಯೋ ತೋರಿಸು ಜಗದಭಿಮಾನ
ಪರಿಪಕ್ವಾನ್ನುಣಿಸುವೆಯೋ ಪರಪಂಕ್ತಿ ಬಿಡಿಸು
ದೊರೆತನವ ಕರುಣಿಸುವ್ಯೋ ಕರುಣಗುಣ ವರ ನೀಡು
ನರರೊಳಗೆ ಆಡಿಸುವ್ಯೋ ಮರೆಸು ಅನೃತವ ೩
ಶರಣರ್ವರ್ತನದೆನ್ನ ನಿರಿಸುವೆಯೊ ಅನುಗಾಲ
ನಿರುತು ಧರ್ಮಗಲದ ಸ್ಥಿರಬುದ್ಧಿ ನೀಡು
ಮರೆವೆ ಮಾಯವ ತರಿದು ಅರಿವಿನೊಳಿರಿಸುವೆಯೊ
ಹರಿಶರಣರಹುದೆನುವ ವರ್ತನವ ನೀಡು ೪
ಹರಣಪೋದರು ನಿಮ್ಮ ಚರಣಕ್ಕೆರಗಿದ ಶಿರವ
ಪರರಿಗೆರಗಿಸದಿರು ಶರಣಾಗತಪ್ರೇಮಿ
ಜರಾಮರಣ ಪರಿಹರಿಸಿ ವರಮುಕ್ತಿ ಪಾಲಿಸಿ
ವರದ ಶ್ರೀರಾಮ ನಿಮ್ಮ ಚರಣದಾಸೆನಿಸು ೫

 

೭೭
ಬೋಲೋ ಸುನಾಮ ಕೇಶವ ಮಾಧವ
ನಾಶನ ಭವನಿಧಿಬಂಧನ ಪ
ಬೋಲೋ ರಾಧಾಕೃಷ್ಣ ಸುಲೀಲ
ಪಾಲಯ ಕುಲಕೋಟಿ ಪಾವನ ಅ.ಪ
ವೃಂದಾವನ ಮಾಲಾನಂದ ಲೀಲಾ
ಇಂದಿರೆಪ್ರಿಯ ಮಣಿಮಾಲನ
ಸಂದರಮಂದರ ಮಂದಿರ ದೇವಕಿ
ಕಂದ ಮುಕ್ಕುಂದ ಗೋಪಾಲನ೧
ನೀಲಶ್ಯಾಮ ಭವಮಾಲಹರಣ ದಯ
ಆಲಯ ಭಜನಾನಂದನ
ಕಾಲ ಕುಜನ ಕುಲಶೀಲ ಶಿಷ್ಟಪ್ರಿಯ
ಲೋಲಗಾನ ಹರಿ ಗೋವಿಂದನ ೨
ಅಮಿತಮಹಿಮ ಅಸುರಮರ್ದನ
ಕಮಲನಾಭ ಕರಿಪಾಲನ
ಕಾಮಿತದಾಯಕ ಸುಮಶರಪಿತ
ಮಮ ಸ್ವಾಮಿ ಶ್ರೀರಾಮ ಮುಕ್ತಿ ಸೋಮನ ೩

 

೪೦೩
ಭಂಡನಾದೆ ಸಂಸಾರಕೊಂಡದೊಳಗೆ ಬಿದ್ದು
ಕಂಡುಕಾಣದಂತಿರುವರೇ ಪುಂಡರೀಕನಯನ ಪ
ಅಶÀನ ವಸನಕ್ಕಾಗಿ ದೆಸೆಗೆಟ್ಟು ಬಾಯ್ಬಿಡುತ
ಅಸುವ ಕರದೊಳ್ಪಿಡಿದು ವಸುಧೆಯ ಜನರ
ಬಸವಳಿದು ಬೇಡಲು ಕಣ್ಣೆಸಿದು ಬೈಯಲು ತಲೆಬಾ
ಗಿಸಿಕೊಂಡು ನಿಂದೆ ಹರಿ ಉಸುರಲಳವಲ್ಲ ೧
ರೊಕ್ಕದ ಆಸೆಗಾಗಿಕ್ಕೆಲದ ಜನರನ್ನು
ತರ್ಕಿಸದೆ ದೈನ್ಯದಿಂ ಚಿಕ್ಕಮಗ ನಾ ಎನುತ
ಫಕ್ಕನೆ ಕೈತಾಳನಿಕ್ಕುವರು ನಗಲು ಮಹ
ದು:ಖದಿಂ ತಿರುಗಿದೆನು ಬಿಕ್ಕಿಬಿಕ್ಕಳುತ ೨
ಯರ ಮೋಹಿಸಿ ದಂಡಿಸಿದೆ ಮನೆಸತಿಯ
ಕಂಡವರು ತಿದ್ದಿದರು ಚಂಡಿತನವಿಡದೆ
ಕಂಡವರ ಅರ್ಥವನು ಮನೆಸೇರಿಸಿ
ಬಂಡೆದ್ದು ಜನರೊಳಗೆ ಮಂಡೆಯೆತ್ತದೆಹೋದೆ ೩
ತಪದಿಂದ ಹರಿಪಾದ ಜಪಿಸುವುದ ಮರೆದು ನಾ
ಕೃಪಣತ್ವಜನಸೇವೆ ಅಪರೂಪಗೈದೆ
ಚಪಲತ್ವತನದಿಂದ ಅಪಹರಿಸಿ ಪರರರ್ಥ
ಸುಪಥಕ್ಕೆ ದೂರಾಗಿ ಅಪರಾಧಿಯಾದೆ ೪
ಕದ್ದು ತಿಂದೆ ನೆರಹೊರೆಯ ಬಿದ್ದೆ ದುರ್ಬವಣೆಯೊಳು
ಬದ್ಧನಾಗಿ ಧರೆಮೇಲೆ ಹದ್ದಿನಂತೆ ಬಾಳ್ದೆ
ತಿದ್ದಿ ನೀ ಎನ್ನ ತಪ್ಪುಬುದ್ಧಿಯನು ಕಲಿಸೆನ್ನೊ
ಳಿದ್ದು ಪೊರೆ ದಯದಿಂದ ಮುದ್ದು ಶ್ರೀರಾಮ ೫

 

೭೮
ಭಕುತಜನರ ಮುಕುಟಮಾನಸ
ನಿಖಿಲಜಗತ್ರಾಣ ಮಧುಸೂದನ ಪ
ಜಗಜೀವನ ಜಗಪಾಲನ
ಜಗವಂದನ ಜಗಪಾವನ
ಜಗಭರಿತ ಜಗನ್ನಾಥ
ಜಗ ಜಯಕಾರ ಜಗದಾಧಾರ ೧
ಜಲಜಪಾಣಿ ಜಲಜನಾಭ
ಜಲಜನೇತ್ರನೆ ಜಲಜಗಾತ್ರನೆ
ಜಲಜಾಭರಣ ಜಲಧಿಶಯನ
ಜಲಜಸುತೆನಾಥ ಜಲಜಾಸನಪಿತ ೨
ಉರಗಶಯನ ಗಿರಿಧಾರಣ
ಗಿರಿಜಾವಂದಿತ ದುರಿತರಹಿತ
ಜರಾಮರಣಹರಣ ಪರಮ
ಕರುಣಿ ಶ್ರೀರಾಮ ಶರಣಪ್ರೇಮ ೩

 

೭೯
ಭಕುತಾಭಿಮಾನಿ ಸಕಲದೇವರ ಧಣಿ
ನಿಖಿಲವ್ಯಾಪಕ ವಿಮಲ ಮುಕುತಿದಾಯಕನೆ ನೀ ಪ
ವೇದವೇದಕ್ಕೆ ಸಿಲ್ಕದಾದಿಮೂರುತಿ ನಿನ್ನ
ಪಾದಧ್ಯಾನದ ಶಕ್ತಿ ಸಾಧನಕೊಡು ಹರಿಯೆ ೧
ಕಮಲಪೀಠಾದಿಸುರರು ಭ್ರಮಿಸುವ ತವಪಾದ
ಕಮಲಕೃಪೆಯಿತ್ತೆನಗೆ ವಿಮಲಪತಿಯೆ ನೀಡೊ ೨
ಭವಮಾಲೆ ಗೆಲಿಸೆನ್ನ ದಯದಿಂದ ಸಲಹಯ್ಯ
ಭವರೋಗವೈದ್ಯನೆ ದಯಾಕರ ಶ್ರೀರಾಮ ೩

 

೮೦
ಭಕುತೋದ್ಧಾರ ಪರಿಭವದ್ವೈದ್ಯ
ನಿಖಿಲಬ್ರಹ್ಮಾಂಡ ಸುಸೂತ್ರ ಸಿರಿಬಾಧ್ಯ
ನಿಖಿಲವ್ಯಾಪಕ ನಿಖಿಲರಕ್ಷ ಭಕುತರಾತ್ಮಕ
ಭಕುತಪಕ್ಷ ಪ್ರಕಟರಕ್ಕಸಕುಲ ನಿರ್ಮೂಲನೆ
ಮುಕುಟಮಾನಸ ಮನದಿ ಭಜಿಪರ
ಮುಕುತಿದಾಯಕ ಮಣಿವೆನೈ ಮಹ
ಮುಕುತಿಸಂಪದ ಕರುಣಿಸಭವ ಪ
ಕಲ್ಪನೆಯಿಂದೊಂದೆತ್ರಯವೆನಿಸಿ ಕಲ್ಪ ಕಲಿಸಿ
ಕಲ್ಪನೆಯಿಂದ ನಾಲ್ಕುಘೋಷ ರಚಿಸಿ
ಕಲ್ಪನಿಲ್ಲದೆ ಕಲ್ಪಕಲ್ಪದರರ್ಹೊಗಳಿಸಿ
ಕಲ್ಪಿತದಿ ನೆಲಸಿ ಕಲ್ಪಿತದಿ ಸಂಕಲ್ಪ ತೋರಿಸಿ
ಕಲ್ಪಿತದಿಂ ಸಂಕಲ್ಪ ಮುಳುಗಿಸಿ
ಕಲ್ಪ ಕಲ್ಪಾಂತರದಿ ಉದಿಸಿ
ಕಲ್ಪತಕೆ ನೀ ಬೇರೆಯೆನಿಸಿ
ಕಲ್ಪನದೊಳು ಕಲ್ಪ ಕೂಡಿಸಿ
ಕಲ್ಪನಕೆ ಮಹಪ್ರಳಯವೆನಿಸಿ
ಕಲ್ಪನೆಯನು ಮತ್ತು ತಿರುಗಿಸಿ
ಕಲ್ಪಿಸಿದಿ ಪುನ:ಸಫಲವೆನಿಸಿ
ಕಲ್ಪನೆಯನು ಪೊಗಳಲಿನ್ನಾವ
ಕಲ್ಪನಕೆ ತುಸು ಶಕ್ಯವಲ್ಲವು
ಕಲ್ಪ ಕಲ್ಪಾಂತರದಿ ಎನ್ನನು
ಕಲ್ಪಿಸದಿರು ಕಲ್ಪತರುವೆ ೧
ಕಲ್ಪಿಸಿದೆ ಕೋಟಿ ತ್ರಿದಶತ್ರಯೆನಿಸಿ
ಕಲ್ಪ ಕಲ್ಪಕೆ ಕಲ್ಪಿತೀಯುವ ಮಂತ್ರ ಕಲ್ಪಿಸಿ
ಕಲ್ಪಿಸಿದಿಯೊ ಕಲ್ಪ ಕಲ್ಪದಿ ಐದು ಮೇಲೆನಿಸಿ
ಕಲ್ಪಸಾರೆನಿಸಿ ಕಲ್ಪನೆ ಮಹತಾರಕೆನಿಸಿ
ಕಲ್ಪನೆ ಘನಗಾಯತ್ರೆನಿಸಿ
ಕಲ್ಪನೆಯಲಿ ಸ್ಥೂಲವೆನಿಸಿ
ಕಲ್ಪನೆ ಬಹುಸೂಕ್ಷ್ಮವೆನಿಸಿ
ಕಲ್ಪನೆಯ ಮಹಕಾರಣೆನಿಸಿ
ಕಲ್ಪನದಿ ಈ ಕಲ್ಪವಿರಿಸಿ
ಕಲ್ಪನಕೆ ನೀನೆ ಸೂತ್ರನೆನಿಸಿ
ಕಲ್ಪನಕೆ ನೀನೆ ಚೈತನ್ಯನೆನಿಸಿ
ಕಲ್ಪ ಕುಣಿಸುವಿ ಕಲ್ಪನಿಲ್ಲದ
ಕಲ್ಪದ ನೆಲೆಬುಡ ನೀನೆನ್ನಯ
ಕಲ್ಪನೆಯೊಳುದಯನಾಗಿ
ಕಲ್ಪನೆಯ ಕಡೆಗಾಣಿಸಭವ ೨
ಕಲ್ಪ ಕಲ್ಪಕೆ ಆಚೆ ನೀನೆನಿಸಿ ಕಲ್ಪ ನಿರ್ಮಿಸಿ
ಕಲ್ಪ ಕಲ್ಪದಿ ನೀನೆ ಆವರಿಸಿ ಕಲ್ಪ ನಡೆಸಿ
ಕಲ್ಪ ಕಲ್ಪದಮೂಲ ನೀನೆನಿಸಿ ಕಲ್ಪದಿಂ ನುಡಿಸಿ
ಕಲ್ಪದಲಿ ಮಿಥ್ಯಕಲ್ಪ ಪುಟ್ಟಿಸಿ
ಕಲ್ಪದಲಿ ನಿಜಕಲ್ಪ ಸೃಷ್ಟಿಸಿ
ಕಲ್ಪದಿಂ ತ್ರಿಕಲ್ಪ ರಕ್ಷಿಸಿ
ಕಲ್ಪದಿಂ ಕಲ್ಪಕ್ಕೆ ಶಿಕ್ಷಿಸಿ
ಕಲ್ಪವೇ ಮಹ ಮಾಯವೆನಿಸಿ
ಕಲ್ಪದಿಂದಲೇ ಅದನು ಗೆಲಿಸಿ
ಕಲ್ಪದಿಂ ಕಲ್ಪವನು ಬೆಳಗಿಸಿ
ಕಲ್ಪದಿಂ ಕಲ್ಪವನು ತೊಲಗಿಸಿ
ಕಲ್ಪನರಿಯುವ ಕಲ್ಪಕೆ ಮಹ
ಕಲ್ಪನಿದು ಬಹು ಸುಲಭವೆನಿಸಿ
ಕಲ್ಪಿತದಿಂ ರಕ್ಷಿಸುವ ಮಮ
ಕಲ್ಪನಿಲ್ಲದವರ ಶ್ರೀರಾಮ ೩

 

೩೯೫
ಭಕ್ತರ ಸುರಧೇನು ಶಕ್ತರ ಬಂಧು ನೀ ಪ
ಭಕ್ತರ ಮೊರೆ ಕೇಳೋ ಲಕ್ಷ್ಮೀಪ್ರಿಯ ರಮಣ ಅ.ಪ
ಪ್ರಾಚೀನ ಹಿರಿಯರ ಯೋಚಿಸಿ ನೋಡಲು
ಪಾಂಚಾಲ್ಯ ಕಂಟಕ ವಿಮೋಚಿಸಿ ಕಾಯ್ದಯ್ಯ೧
ಕರಿರಾಜ ಧ್ರುವಮುನಿ ವರ ವಿಭೀಷಣರನ್ನು
ಪರಮಪದವನಿತ್ತು ಕರುಣದಿ ಪೊರೆದಯ್ಯಾ ೨
ದೀನನೋಳ್ದಯವಾಗಿ ಹೀನಸ್ಥಿತಿ ಪರಿಹರಿಸೊ
ಧ್ಯಾನಿಸುವರಿಗತಿ ಸುಲಭನೆ ಶ್ರೀರಾಮ ೩

 

೬೪೦
ಭಕ್ತವತ್ಸಲನೆಂಬ ಬಿರುದು ನಿನಗಿರಲು
ಭಕ್ತಜನಾಪತ್ತಿಗ್ಯಾಕೆ ನೀ ಬರದಿರುವಿ ಪ
ಮುಕ್ತಿದಾಯಕನೆಂಬ ಯುಕ್ತ ಬಿರದ್ಹೊತ್ತಿರುವಿ
ಚಿತ್ತಜಪಿತ ಭಕ್ತರ್ಹೊತ್ತಿಗ್ಯಾಕಿಲ್ಲೋ
ನಿತ್ಯ ನಿರ್ಗುಣನೆಂದು ನಿತ್ಯ ಬಿಡದ್ಹೊಗಳುವ
ಸತ್ಯ ವೇದೋಕ್ತಿಗಳು ವ್ಯರ್ಥವೇನಯ್ಯಾ ೧
ದೋಷನಾಶನೆ ನಿನ್ನ ಸಾಸಿರನಾಮಗಳಿಂ
ಘೋಷಿಪರು ಮನುಮುನಿ ಬೇಸರಿಲ್ಲದಲೆ
ದಾಸಜನರಾಶಕ್ಕೆ ಬೇಸತ್ತ ಬಳಿಕ ನಿನ
ಗೀಸು ಬಿರುದುಗಳಿರ್ದು ಲೇಶವೇನಯ್ಯಾ ೨
ಪರಮ ಕರುಣಾಕರ ಶರಣಜನಮಂದಾರ
ಚರಣಸ್ಮರಿಪರ ಘೋರದುರಿತಪರಿಹಾರ
ಖರೆಯಿರ್ದರಿಗೆನ್ನ ದುರಿತಮಂ ಪರಿಹರಿಸಿ
ಕರುಣದಿಂ ರಕ್ಷಿಸೈ ಧರೆಗಧಿಕ ಶ್ರೀರಾಮ ೩

 

೩೯೬
ಭಜಿಪ ಭಕ್ತರ ಭಾವ ಪರಿಪೂರ್ಣ ಬಾಗಿ
ಭಜಿಸುವೆ ಬಾರೊ ದಯಾಸದನ ಪ
ಪಾದಸೇವೆಯ ಕರುಣಿಸಿ ಪರ
ಸಾಧನದ ಮಹದ್ಹಾದಿ ತೋರಿಸಿ
ಬಾಧಿಸುವ ಭವಬಾಧೆ ತೊಲಗಿಸಿ
ವೇದವಿದ್ಯವ ಬೋಧಿಸಭವ ೧
ಮತ್ರ್ಯಗುಣಗಳ ಮರೆಸಿ ಎನ್ನ
ಮಿಥ್ಯನೆನಿಸದೆ ನಿತ್ಯ ನಿಮ್ಮ
ಗುರ್ತುತೋರಿಪ ತತ್ವದರ್ಥವ
ತುರ್ತುಪಾಲಿಸು ಕರ್ತುವೇದ ೨
ಭಕ್ತವತ್ಸಲನೆಂಬ ಬಿರುದು
ಸತ್ಯವಾಗಿ ಹೊತ್ತುಕೊಂಡಿಹಿ
ಭಕ್ತನಿಷ್ಟವ ಚಿತ್ತೈಸೊಡನೆ
ಮುಕ್ತಿಪದ ನೀಡಾತ್ಮರಾಮ ೩

 

೮೧
ಭಜಿಸಿ ಧನ್ಯನಾದೆ ನಾನು
ಭುಜಗಶಯನನಂಘ್ರಿಯನ್ನು ಪ
ಕುಸುಮ ತರಲು ಸರಸಿಧುಮುಕಿ
ಮೊಸಳೆಬಾಯಿಗೆ ಸಿಲುಕಿ ಕರಿಯು
ಕುಶಲದಿಂದ ಕಂಟಕ ಗೆಲಿದು
ಅಸಮಸೌಖ್ಯ ಪೊಂದಿದ್ದು ಕೇಳಿ ೧
ಪಾಪಿ ಕುರುಪನೋಲಗದಲ್ಲಿ
ದ್ರೌಪದಿಗೊದಗಿಬರಲು ಭಂಗ
ಶ್ರೀಪತಿ ಮೊರೆಯನಿಟ್ಟು ಪರಮ
ಆಪತ್ತು ಗೆಲಿದಳೆಂಬುದ ಕೇಳಿ ೨
ಇಳೆಯೊಳ್ಪತಿಯ ಶಾಪದಿಂದ
ಶಿಲೆಯ ರೂಪದಿ ಬಿದ್ದ ಯುವತಿ
ಗೊಲಿದು ಪಾವನಾಂಗಿಯೆನಿಸಿ
ಕುಲಕೆ ತಂದ ಸುದ್ದಿ ಕೇಳಿ ೩
ತ್ಯಜಿಸಿ ತನ್ನ ಬ್ರಹ್ಮಕುಲವ
ಕುಜಕುಲದ ನಾರಿಗೆ ಕೆಟ್ಟ
ಅಜಮಿಳನ ಅಂತ್ಯಕ್ಕೆ ಒದಗಿ
ನಿಜಪದವಿ ನೀಡಿದ್ದು ಕೇಳಿ ೪
ಅಂಬುಧಿನಿಲಯ ಅಸಮ ಮಹಿಮ
ಕಂಬುಕಂಧರಮಿತ್ರ ಭಕುತ
ಬೆಂಬಲ ಶ್ರೀರಾಮ ಪ್ರಭುವೆ ನಿನ್ನ
ನಂಬಿದವರ ಸಂಭ್ರಮ ಕೇಳಿ ೫

 

೫೫೭
ಭಜಿಸಿ ಬದುಕೆಲೊ ಮಾನವ ಅಜಹರವಿನುತ
ನಿಜಪಾದ ಅನುದಿನವು ಭಜಸಿಬದುಕೆಲೊ ಪ
ತ್ಯಜಿಸಿ ಅವಗುಣ ಸುಜನರೊಡಗೂಡಿ ನಿಜಾನಂದದಿ
ಕುಜನಕುಠಾರ ಸುಜನ ಪರಿಪಾಲ ತ್ರಿಜಗರಕ್ಷಕ
ಭಜಗಶಯನನ ಅ.ಪ
ಹಲವು ಭ್ರಾಂತಿಗಳ್ಯಾಕೆಲೊ ಸುಳ್ಳೆ ಸುಳ್ಳೆ ಸಂಸಾರ
ಕೊಳಪಟ್ಟು ಕೆಡದಿರೆಲೊ
ಮಲಿನಮನಸಿನ ಸರ್ವ ಹೊಲೆಯ ಯೋಚನೆ ಬಿಟ್ಟು
ತಿಳಕೊಂಡು ನಿಜಸುಖ ಪದವಿಗೆ ನದರಿಟ್ಟು
ಉಳಕೋ ಸಿಕ್ಕ್ಹೊತ್ತುಗಳೆಯದಲೆ ಶುನಕೆಲುವು ಕಡಿದಂತೆ
ಅಳಿವ ಸುಖದಾಸೆಗೆಳಸಿ ಕೆಡಬೇಡ
ಜಲಜನಾಭನ ಒಲಿಸಿ ನಲಿಯೊ ೧
ಬರುವಾಗ್ಗೆ ಬೆನ್ನಿನ್ಹಿಂದೆ ಹೆಡತಲೆ ಮೃತ್ಯುವಿನ
ಕರಕೊಂಡು ಧರೆಗೆ ಬಂದಿ
ಅರಲವದ ಸುಖಕಾಗಿ ಮರೆದು ಎಲ್ಲವ ನೀನು
ಮರುಳನಾದದ್ದು ಕಂಡು ನಗುತಿಪ್ಪ ಮೃತ್ಯವ
ಹೊರಳಿನೋಡದೆ ದುರುಳತನದ ಸ್ಥಿರದ ಪ್ರಪಂಚ
ಖರೆಯೆಂದೆನ್ವುದು ಸರಿಯಲ್ಲೆಲೊ ಇದು
ನಿರುತದ್ಹರಿಪಾದ ಸ್ಮರಣಾನಂದದಿ ಮರೆಯೊ ಬಿಡದೆ ೨
ಫಣೆಯ ಬಾಯೊಳಗಿರುವಂಥ ಕಪ್ಪೆಯು ಮುಂದಾಡ್ವ
ನೊಣಕ್ಹವಣಿಸುತಿರುವಂತೆ
ಒಣಭ್ರಾಂತಿ ಪಡದಿರು ಮನಸಿಗೆ ಬಂದಂತೆ
ಕ್ಷಣತೋರಿ ಅಡಗುವ ಕನಸು ಜಗಸುಖ ಜನನ ಮ
ರಣೆಂಬ ದಣಿವು ಕಳೆವಂಥ ಜನಕಜಾತೆಯ
ಧಣಿಯ ಶ್ರೀರಾಮನೊನರುಹಂಘ್ರಿಯ ಘನವ ಪೊಗಳುತ
ಕುಣಿ ಕುಣಿದು ಧನ್ಯವಾಗೆಲೊ ೩

 


ಭಜಿಸುವೆ ಗಜಮುಖ ಸುಜನರಪಾಲ
ನಿಜಮತಿ ಕರುಣಿಸು ನೀ ಪ
ತ್ರಿಜಗದಿ ವಂದಿತ ನಿಜಪದದಾತ
ನಿಜಮತಿದಾಯಕ ದ್ವಿಜಸುರ ಸೇವಿತ ಅ.ಪ
ವಿಘ್ನಮೂರುತಿ ಎನ್ವಿಘ್ನಗಳನು ಕಡಿ
ದಜ್ಞಾನ ದೂರಮಾಡೋ
ಸುಜ್ಞಾನ ಪಾಲಿಸಿ ಶೀಘ್ರದಿ ಎನ್ನನು
ಪ್ರಾಜ್ಞರೊಳಾಡಿಸು ಪ್ರೌಢಗಣಪತೆ ೧
ಇಂದು ಎನ್ನ ಮಂದಮತಿತನ ಛಿಂದಿಸೋ
ಸುಂದರಮೂರುತಿಯೆ
ವಂದಿಸಿ ಬೇಡುವೆ ಕುಂದದ ವರಕೊಡು
ಚಂದ್ರ ಚೂಡಸುತ ಭಾನು ಕೋಟಿತೇಜ2
ವಿಮಲಗುಣಗಣ ಹಿಮಗಿರಿಜೆಯ ಕಂದ
ಸುಮನಸರೊಂದಿತನೆ
ಅಮಿತಮಹಿಮ ಶ್ರೀರಾಮ ಕರುಣಾಪಾತ್ರ
ವಿಮಲಮತಿಯ ದಯಪಾಲಿಸಭವ ೩

 

೮೨
ಭಜಿಸುವೆ ನಾ ಯಶೋದೆ ಬಾಲನ ಪ
ವಶಮಾಡಿಕೊಂಡು ರಾಧೆ
ಕುಸುಮನಾಭ ಅಸಮಲೀಲನ
ಎಸೆವ ಮೊಗದೋಳ್ಮೊಗವಿಟ್ಟು
ಅಸಮಸುಖವ ಪಡೆದಳೆಂದು ೧
ಭಾವಜನಯ್ಯ ಭಕುತೋದ್ಧಾರ
ದೇವ ದಿವ್ಯಮಹಿಮನ
ಗೋವಳರೆಲ್ಲ ಒಲಿಸಿ ಬಿಡದೆ
ಗೋವುಕಾಯಿಸಿಕೊಂಡರೆಂದು ೨
ದೀನನಾಥ ಕುಜನ ಕುಠಾರ
ಗಾನಲೋಲ ವೇಣುಗೋಪಾಲ
ಪ್ರಾಣೇಶ ಶ್ರೀರಾಮ ತನ್ನ
ಧ್ಯಾನದಾಸರರಸನೆಂದು ೩

 

೩೯೭
ಭಯ ನಿವಾರಿಸೋ ಜಯ ಶ್ರೀ ಹರಿಯೆ
ಭಯ ನಿವಾರಿಸಯ್ಯ ದಯದಿ ಭಯ ನಿವಾರನೆನ್ನ ಪ
ಮರವೆಯೆಂಬುವ ಇರುಳಿನಲ್ಲಿ ದುರಿತಯೆಂಬುವ ಗಿರಿಯಲ್ಲಿ
ಪರನಿಂದೆಂಬುವ ಶರಧಿಯಲ್ಲಿ
ಕರುಣವಿಲ್ಲದ ಕಾಯದುರ್ಗದರಣ್ಯಕಂಜಿ ಕೊರುಗುತಿರುವೆ
ಹರಿಯೆ ನಿಮ್ಮ ಸ್ಮರಣವೆಂಬ ನಿರುತ ಧೈರ್ಯ ಕರುಣಿಸಭವ ೧
ವ್ಯಸನವೆಂಬ ಮುಸುಕಿನಿಂದ ಪಿಸುಣತೆಂಬುವ ದಸಕಿನಿಂದ
ಪುಸಿಯುಯೆಂಬುವ ಮಿಸುನಿಯಿಂದ
ವಿಷಯದಾಸೆ ತಸ್ಕರಗಂಜಿ ದೆಸೆಗೆ ಬಾಯ ಬಿಡುವೆನಯ್ಯ
ಅಸಮಮಹಿಮನ್ವ ಚಶ್ರವಣೆಂಬೆಸೆವ ಧೈರ್ಯ ಕರುಣಿಸಭವ ೨
ಆರು ಹುಲಿಗಳ ಘೋರಿಸುವ ಮೂರು ಮರಿಗಳ ಹಾರುತಿರುವ
ಮೂರೇಳು ನಾಯ್ಗಳ ಘೋರತಾಪ ಸೈರಿಸದೆ
ಸಾರಸಾಕ್ಷ ಮರೆಯ ಹೊಕ್ಕೆ ಶ್ರೀರಾಮ ನಿಮ್ಮ ಚರಣ ಭಕ್ತೆಂ
ಬ್ವೀರತನವ ಕರುಣಿಸಭವ ೩

 

೧೫೦
ಭಯ ಹಾರಿಣೇ ದಯಾ ಕರುಣೀ ಪ
ಜಯಲಕ್ಷ್ಮಿ ನಿನ್ನ ಪದದಿ ಜಯವು ಕೋರಲು ನಿ
ರ್ದಯವೇನೆ ಜನನಿ ಅ.ಪ
ಏನು ನೀಡಿದಿ ತಾಯಿ ಧ್ಯಾನಿಸಿ ಬೇಡುವಗೆ
ಹೀನ ಅಪಜಯವಿದೇನು ಕಾರಣವು ೧
ಪರಮಪರತರ ಕಲ್ಪತರುವಿನೊಳ್ಸುಖ ಬಯಸೆ
ಪರಮ ಪರಿತಾಪವು ಬರುವುದೇನಮ್ಮ ೨
ಸಿರಿಯರಾಮನ ಪ್ರಿಯೆ ಪರಮಮಂಗಳೆ ನಿನ್ನ
ನೆರೆನಂಬಿ ಬೇಡುವೆ ಈ ಪರಿ ಭಂಗ ಕಳೆಯೆ ೩

 

೫೫೮
ಭಯವಿಲ್ಲೋ ಭಯವಿಲ್ಲೋ
ಭಯಹರ ನರಸಿಂಗನಡಿಯ ದಾಸರಿಗೆ ಪ
ವೃಶ್ಚಿಕ ಮುಟ್ಟಲು ಬಾಧೆಯೆ ಇಲ್ಲ ತಕ್ಷ
ಕಚ್ಚಲು ವಿಷವಂಟೋಣಿಲ್ಲ
ಅಚ್ಯುತಾನಂತನ ಹೆಚ್ಚಿನಡಿದಾವರೆ
ಮುಚ್ಚಿಭಜಿಪ ಮಹ ನಿಶ್ಚಲಚಿತ್ತರಿಗೆ ೧
ಕಳ್ಳರು ಮುತ್ತಲು ಸುಲಕೊಂಬೋಣಿಲ್ಲ
ದಳ್ಳುರಿ ಹತ್ತಲು ಸುಡುವ ಶಕ್ತಿಲ್ಲ
ಪುಲ್ಲನಾಭನ ಪಾದ ಉಲ್ಲಾಸ ಮನದಿಂದ
ನಿಲ್ಲದೆ ಭಜಿಪರ್ಗೆ ಎಳ್ಳಷ್ಟಾದರು ೨
ಹುಲಿ ಕರಡಿ ಬದು ನುಂಗುವ ತ್ರಾಣಿಲ್ಲ
ಬಲು ಭೂತ ಬೇತಾಳ ಎದುರೆ ಇಲ್ಲ
ಮಲಿನಹರಣ ಕೃಪಾನಿಲಯ ಭಕ್ತಜನ
ಸುಲಭನೆಂದೊದರುತ ನಲಿವ ನಿರ್ಮಲರಿಗೆ ೩
ಭೂಪತಿಗಳ ಭಯ ರೋಮಕೆ ಇಲ್ಲ
ಪಾಪತಾಪಗಳ ಲೇಪವೆ ಇಲ್ಲ
ಆ ಪರಬ್ರಹ್ಮ ಜಗದ್ವ್ಯಾಪಕನನುದಿನ
ಗೌಪ್ಯದಾರಾಧಿಸುವ ಪಾಪಲೋಪರಿಗೆ ೪
ಏಸು ಕಷ್ಟಬಂದರಾಯಾಸವಿಲ್ಲ
ನಾಶ ಮೃತ್ಯು ಗಾಳಿಸೊಂಕೋಣಿಲ್ಲ
ಹೇಸಿ ದುರ್ಭವದ ವಾಸನಳಿದ ಮಹ
ಶ್ರೀಶ ಶ್ರೀರಾಮನ ದಾಸದಾಸರಿಗೆ ೫

 

೩೯೮
ಭವದ ಬಂಧವಿನ್ನೆನಗೆ ಯಾಕೆ
ಭವಹರಣ ನಾಮ ಎನ್ನ ಜಿಹ್ವೆಯೊಳಗೆ ಇರುತಿರಲು ಪ
ಎನಗೆ ದುರಿತ ಭೀತಿ ಯಾಕೆ
ಎನಗೆ ಕರ್ಮದ ಲೇಪವ್ಯಾಕೆ
ಎನಗೆ ಕುಲ ಚಲಗಳ್ಯಾಕೆ
ಎನಗೆ ಮಡಿಯು ಮೈಲಿಗ್ಯಾಕೆ
ಅನುದಿನದಿ ಪಾವನಾತ್ಮಕನ ನೆನವು
ಎನ್ನ ಮನದೊಳಿರಲು ೧
ನಷ್ಟ ಪ್ರಪಂಚಂಟಿನ್ನ್ಯಾತಹೆÉ
ಬಿಟ್ಟ ಬಡತನ ತಂತಿನಗ್ಯಾಕೆ
ಹುಟ್ಟು ಸಾವು ಕಷ್ಟ ಮತ್ತ್ಯಾಕೆ
ಕೆಟ್ಟ ಯಮನ ಅಂಜಿಕಿನ್ನ್ಯಾಕೆ
ಸೃಷ್ಟಿ ಕರ್ತನ ಶಿಷ್ಟಪಾದ
ನಿಷ್ಠೆಯೆನ್ನೊಳು ಗಟ್ಟಿಯಿರಲು ೨
ನಿತ್ಯ ನೇಮ ಪೂಜೆ ಯಾಕೊ
ಮತ್ತೆ ಜಪ ತಪವು ಯಾಕೊ
ನಿತ್ಯ ನಿರ್ಮಲಾನಂದ ರೂಪಿ
ಸತ್ತು ಚಿತ್ತನಂದದಾತ
ಮುಕ್ತಿದಾಯಕ ಶ್ರೀರಾಮ ಪಾದ
ಭಕ್ತನಾಗಿ ನಾ ಮೆರೆಯುತಿರಲು ೩

 

೩೯೯
ಭವಬಾಧೆ ಕಳೆಯೊ ಭವಹರ ರಂಗ
ದಿವನಿಶಿ ತವಪಾದ ದಿವ್ಯಧ್ಯಾನವನಿತ್ತು ಪ
ವಿಷಯಲಂಟಪನಾಗಿ ವ್ಯಸನ ಕೂಪದಿ ಬಿದ್ದು
ಮಸಣ ಬುದ್ಧಿಯಿಂ ಕೆಡುವ ಶಿಶುವನುಲಕ್ಷಿಸಿ ೧
ಪುಸಿಯ ಸಂಸಾರವ ವಿಷಮವೆಂದರಿಯದೆ
ದೆಸೆಗೆಟ್ಟು ಬಳಲುವ ದಾಸನೋಳ್ದಯವಿಟ್ಟು ೨
ಸುಜನರೊಲುಮೆಯಿತ್ತು ಗಜಿಬಿಜಿ ತೊಲಗಿಸಿ
ನಿಜಜ್ಞಾನ ದಯಮಾಡು ಸುಜನಾರ್ಯ ಶ್ರೀರಾಮ ೩

 

ಪಾಂಚಜನ್ಯವೆಂಬ
೮೪
ಭವಭಯಹರ ಶ್ರೀ ಮುಕ್ಕುಂದ
ಭವರೋಗಕ್ವೈದ್ಯ ಶ್ರೀ ಗೋವಿಂದ ಪ
ಧ್ರುವ ದ್ರುಪದತನುಜಾತೆಯೊರೆದ ಹರಿ
ಶಿವನುತ ಸಚ್ಚಿತ್ತಾನಂದ ಅ.ಪ
ಪಂಕಜಾನಪಿತ ಗೋವಿಂದ
ಕಿಂಕರಾಶ್ರಿತ ಗೋವಿಂದ
ಶಂಖಧಾರಣ ಸಿರಿಗೋವಿಂದ
ಶಂಖಾಸುರನ ಹರ ಗೋವಿಂದ
ಮಂಕು ದನುಜಕುಲ
ಬಿಂಕ ಮುರಿದ ಅಕ
ಳಂಕಮಹಿಮ ಮಹ ಗೋವಿಂದ೧
ಸ್ಮರಿಪ ನೆರೆವಾಸ ಗೋವಿಂದ
ದುರುಳರ ಕುಲನಾಶ ಗೋವಿಂದ
ದುರಿತ ನಿವಾರಣ ಗೋವಿಂದ
ಶರಣಜನರಪ್ರಾಣ ಗೋವಿಂದ
ತರಳನೋದ್ಧಾರಣ
ಕರಿರಾಜವರದನ
ತರುಣೆಯ ರಕ್ಷಣ ಗೋವಿಂದ ೨
ಜಗದಾಧಾರನೆ ಗೋವಿಂದ
ಸುಗಣಗುಣಾಂತರಂಗ ಗೋವಿಂದ
ರಘುಕುಲಪಾವನ ಗೋವಿಂದ
ಖಗಪತಿವಾಹನ ಗೋವಿಂದ
ನಿಗಮಕೆ ಸಿಲುಕದ
ಅಗಾಧ ಮಹಿಮ
ಜಗತ್ರಯ ಮೋಹನ ಗೋವಿಂದ ೩
ನೀಲಮೇಘಶ್ಯಾಮ ಗೋವಿಂದ
ಕಾಲಕಾಲಹರ ಗೋವಿಂದ
ಪಾಲಸಾಗರಶಾಯಿ ಗೋವಿಂದ
ಲೋಲ ವಿಶ್ವರೂಪ ಗೋವಿಂದ
ಪಾಲಭಜಕ ಭವ
ಜಾಲಹರಣ ಸರ್ವ
ಮೂಲಮಂತ್ರ ಹರಿ ಗೋವಿಂದ ೪
ಭೂಮಿಜಾತೆಪತಿ ಗೋವಿಂದ
ಕಾಮಜನಕ ಶ್ರೀಶ ಗೋವಿಂದ
ಕೋಮಲಾಂಗ ರಂಗ ಗೋವಿಂದ
ಸ್ವಾಮಿ ಪುಣ್ಯನಾಮ ಗೋವಿಂದ
ಶಾಮವರ್ಣನುತ
ಪ್ರೇಮಮಂದಿರ ಶ್ರೀ
ರಾಮ ದಾಮೋದರ ಗೋವಿಂದ ೫

 

೮೩
ಭವಭಯಹರ ಸಿರಿಧವ ನರಹರಿ ಪೊರೆ
ಭವಭವದಲಿ ನೀಡು ತವಪಾದ ಸೇವೆಯ ಪ
ಮನುಮುನಿ ಘನಸುರ ವಿನಮಿತ ಸುಜನರ
ಅನುಪಮ ಪ್ರಿಯಕರ ಜನಕಜೆ ಮನೋಹರ ೧
ದುರಿತವಿನಾಶ ಪರಮಪ್ರಕಾಶ ಗಿರಿಧರ
ಪರಾತ್ಪರ ಪರತರ ಲಕಮೀಶ ೨
ಅಸುರಕುಲಾಂತಕ ವಸುಧೆಯುದ್ಧಾರಕ
ಅಸಮ ಶ್ರೀರಾಮ ಮಹ ಮುಕ್ತಿಪ್ರದಾಯಕ ೩

 

ಮುದಕೃಷ್ಣ ಗಿಡದಡಿಯಸು
೧೫೧
ಭಳಿಭಳಿರೆ ಶನಿರಾಜ ನೀನೆ ಬಲ್ಲಿದನೊ
ಇಳೆ ಮೂರರಲಿ ನಿನಗಿಂ ಬಲ್ಲಿದರ ಕಾಣೆ ಪ
ಧರೆಗೆಲ್ಲ ಒರ್ವನೆ ದೊರೆಯಾದ ನಳನನ್ನು
ಪರರಾಯನಾಳೆನಿಸಿ ತಿರುವಿಸಿದಿ ಅಶ್ವ
ವರ ಸತ್ಯ ಹರಿಶ್ಚಂದ್ರನ್ಹೊಲೆಯನಾಳೆನಿಸವನಿಂ
ನಿರುತದಿಂ ಕಾಯ್ಸಿದೆಯೊ ಸುಡುಗಾಡವ ೧
ಭೂಪತಿ ವಿಕ್ರಮಗೆ ಕಳ್ಳನೆಂದೆನಿಸವನ
ತಾಪಬಡಿಸೆದೆಯೊ ಕೈಕಾಲುಗಳ ಕಡಿಸಿ
ರೂಪಗೆಡಿಸಿದಿಂದ್ರಿನ ಮೈಯಲ್ಲಿ ತೂತ್ಹಾಕಿ
ಶಾಪಕೊಡಿಸಿಂದುವಿನ ಕಳೆಯುಗುಂದಿಸಿದಿ ೨
ಕುರುರಾಯನೊಂಶವಂ ನಿರ್ಮೂಲ ಮಾಡಿದೆಯೊ
ತಿರಿದುಣಿಸಿದಿ ಆ ಮಹ ಪಾಂಡುನಂದನರ
ಪರಮ ಸುಖಿಗಳ ಸುಖಕೆ ಕಿಡಿಯಿಟ್ಟು ನೋಡಿದಿ
ವರ ತಪಸ್ವಿಗಳ ತಪಸ್ಸು ಭಂಗಪಡಿಸಿದೆಯೊ ೩
ಒದಗಿ ಯಮದೇವನನ್ವಧೆ ಮಾಡಿಸಿದೆಯೊ ನೀ
ಪದುಮಪೀಠನದೊಂದು ಮಸ್ತಕವ ಕಳೆದಿ
ಎದೆಯೊಡೆಸಿ ಶಿವನನ್ನು ಸುಡುಗಾಡದಿಳಿಸಿದಿ
ಮುದ ಕೃಷ್ಣ ಗಿಡದಡಿಯಸುವ ಬಿಟ್ಟನೆನಿಸಿದಿ ೪
ಇಂತಿಂಥ ಮಹಿಮರನು ಈ ಪಾಡ ಪಡಿಸಿದಿ ನ
ಮ್ಮಂಥ ನರಜನರ ಪಾಡೇನು ನಿನಗೆ
ಕಂತುಪಿತ ಶ್ರೀರಾಮನನುಮತಿಯ ಪಡೆದು ಬಲ
ವಂತನಿನಿಸಿದೆಯೋ ನೀ ಮೂಲೋಕದೊಳಗೆ ೫

 

೮೬
ಭಾಗವತರ ಭಾಗ್ಯನಿಧಿಯೆ ಭೋಗಿಶಯನ ಭೋ ಶ್ರೀರಾಮ ಪ
ವೇದಾಗಮಕೆ ಸಿಲುಕದಂಥ ನಾದಬ್ರಹ್ಮಾಯೋಧ್ಯ ರಾಮ
ಸಾಧುಜನಸಂಪ್ರೀತ ಭವರೋಗ್ವೈದ್ಯ ಸಾಧನ ಸಾಧ್ಯ ರಾಮ ೧
ರಾಧಾಕೃಷ್ಣಾಗಾಧಮಹಿಮ ಭೇಧ ಹರಿಸು ಬೋಧ ರಾಮ
ಪೋದ ವೇದ ಸಂಪಾದಿಸಿದನೆ ನಾದಪ್ರಿಯ
ಮಹದಾದಿ ರಾಮ ೨
ಹರಿವಿರಿಂಚಾದ್ಯಖಿಲಸುರರ ಪರರ ಕಂಟಕ ದೂರ ರಾಮ
ಪರಕೆಪರಮ ಪರಮಪುರುಷ ಸರುವ ಜಗದಾಧಾರ ರಾಮ ೩
ಹತ್ತು ಅವತಾರೆತ್ತಿ ಭೂಭಾರ್ಹೊತ್ತು ಇಳುಹಿದ ಸತ್ಯ ರಾಮ
ಮತ್ರ್ಯದ ಮಹ ಕೃತ್ರಿಮರ ಮುರಿದೊತ್ತಿದೈ
ಜಗತ್ಕರ್ಮ ರಾಮ ೪
ದಾಸಜನರಭಿಲಾಷೆಯನು ಪೂರೈಸಲೋಸುಗ ಈಶ ರಾಮ
ಶೇಷಾಚಲನಿವಾಸನಾದ ದಾಸಗಣ ಸಂತೋಷ ರಾಮ ೫
ಅಸಮ ಪಾದಕುಸುಮಗಳನಿಟ್ಟೊಸುಧೆ ವೈಕುಂಠೆನಿಸಿ ರಾಮ
ಪಸರಿಸಿದ ಮಹ ಅಸಮಮಹಿಮೆಗಳ ವಸುಧೆ
ಜನರಿಂಗೊಸೆದು ರಾಮ೬
ಬ್ರಹ್ಮಾದಿಗಳ ಹಮ್ಮನಳಿದ ಕರ್ಮಚರ ಪರಬ್ರಹ್ಮ ರಾಮ
ಸುಮ್ಮನಲ್ಲ ತವ ಮರ್ಮ ತಿಳಿಯಲು ಬ್ರಹ್ಮನಯ್ಯ
ಸುಖಧಾಮ ರಾಮ ೭
ಮಾತೆ ನೀನೆ ತಾತ ನೀನೆ ನಾಥ ಬಂಧು ದಾತ ರಾಮ
ಪ್ರೀತಿಬಂಧು ವಿಖ್ಯಾತ ನೀನೆ ನೀತಿಬೋಧ
ಗುರುನಾಥ ರಾಮ ೮
ತತ್ವದರ್ಥ ಉತ್ತರಿಸೆನ್ನ ಕಟ್ಟುಮಾಡೊ ಶಿಷ್ಟರಾಮ
ಮತ್ರ್ಯದ ಸುಖ ವ್ಯರ್ಥವೆನಿಸಿ ಗುರ್ತುತೋರು
ತವ ಮೂರ್ತಿ ರಾಮ ೯
ಹುಟ್ಟಿಬರುವ ಕಷ್ಟದ್ಹಾದಿ ಕಟ್ಟುಮಾಡೊ ಶಿಷ್ಟರಾಮ
ನಿಷ್ಠೆಯಿಂ ನಿಮ್ಮ ಮುಟ್ಟಿ ಭಜಿಪ ಪಟ್ಟಗಟ್ಟೆಲೊ ದಿಟ್ಟ ರಾಮ ೧೦
ದಾಸಜನರ ವಾಸದಿರಿಸೊ ಕೇಶವ ಜಗದೀಶ ರಾಮ
ದೋಷರಾಶಿ ನಾಶಗೈದು ಪೋಷಿಸೆನ್ನನನುಮೇಷ ರಾಮ ೧೧
ವೇದ ವಿದ್ಯದ್ಹಾದಿಸಾಧನ ಭೋಧಿಸೆನಗ್ವಿನೋದ ರಾಮ
ಪಾದಭಕ್ತಿ ಮೋದದಿತ್ತು ಭವಬಾಧೆಯಳಿ ಸುಖಸ್ವಾದ ರಾಮ ೧೨
ಮಾಯವೆನಿಪ ಕಾಯಗುಣ ಸಮುದಾಯ
ಕಳಿ ಮಮಜೀವ ರಾಮ
ಬಾಯಿ ಬಿಡಿಪ ಹೇಯಸಂಸಾರ ನೋವು
ಬಿಡಿಸೆನ್ನಯ ರಾಮ ೧೩
ಮತ್ತೆ ಮತ್ತೆ ಪೃಥ್ವಿ ಮೇಲೆ ಸತ್ತು ಹುಟ್ಟಿ ಬೇಸತ್ತೆ ರಾಮ
ಕರ್ತು ನಿನ್ನ ಗುರ್ತು ಅರಿಯದನರ್ಥವಾದೆನಾತ್ಮ ರಾಮ ೧೪
ಆಸೆಯೆಂಬ ಪಾಶದಿಂದ ಘಾಸಿಯಾದೆ ಭವನಾಶ ರಾಮ
ದೋಷದೂರೆನ್ನ ಕ್ಲೇಶಗಳನು ನಾಶಿಸೈ ದಯಭೂಷ ರಾಮ ೧೫
ಅರಿದು ಅರಿದು ಉರಿವದೀಪದೆರಗುವ ಹುಳದಿರವು ರಾಮ
ಧರೆಯ ಸುಖಕೆ ಮರುಳನಾಗಿ ಮರಣಪೊಂದುವೆ
ಸಿರಿಯ ರಾಮ ೧೬
ಮರೆದು ನಾನು ಧರೆಗೆ ಬಿದ್ದು ದುರಿತದೊಳಗೆ ಬೆರೆದೆ ರಾಮ
ಮರವೆ ಹರಿಸಿ ಅರಿವು ನಿಲಿಸಿ ಕರುಣದಿಂದ
ಪೊರೆಯೊ ರಾಮ ೧೭
ಕಂದನ ಕೈ ದಯದಿಂದ ಪಿಡಿದಾನಂದ
ಕರುಣಿಸುತ ತಂದೆ ರಾಮ
ಮಂದಮತಿತನ ಛಿಂದಿಸೀಭವಬಂಧನವ
ಬಯಲ್ಹರಿಸು ರಾಮ ೧೮
ಮಾನ ಅಭಿಮಾನ ನಿನ್ನದು ಧ್ಯಾನಿಪರ ಸುರಧೇನು ರಾಮ
ಜ್ಞಾನವಿತ್ತು ಮಾನದಿಂದ ನೀನೆ ಪೊರೆ ಜಗತ್ರಾಣ ರಾಮ ೧೯
ಭಿನ್ನವಿಲ್ಲದೆ ನಿನ್ನ ನಂಬಿ ಧನ್ಯನಾದೆನಿನ್ನು ರಾಮ
ಎನ್ನ ಮನಸಿಗಿನ್ನು ಸಂತಸವನ್ನು ಕೊಡು ಪಾವನ್ನ ರಾಮ ೨೦
ಭೃತ್ಯನ ಮಹ ಚಿತ್ತಭ್ರಮೆ ಮುರಿದೊತ್ತಿ ಕರಪಿಡಿದೆತ್ತು ರಾಮ
ಭಕ್ತಿಯುಕ್ತಿ ಮುಕ್ತಿ ಸುಖವನಿತ್ತು ಪೊರೆ ಗುರುದತ್ತ ರಾಮ ೨೧
ನಿಖಿಲವ್ಯಾಪಕ ಅಖಿಲರಕ್ಷಕ ಸಕಲಬಲ ನೀನೇಕ ರಾಮ
ಮುಕುತಿಸಂಪದ ಸಿದ್ಧಿ ನೀನೆ ಭಕುತಪ್ರಿಯ ಲೋಕೈಕ ರಾಮ ೨೨
ಭಿನ್ನವಿಲ್ಲದೆ ನಿನ್ನ ನಾಮವನ್ನು ಪೊಗಳುವರಿನ್ನು ರಾಮ
ಮಾನ್ಯರಾಗನನ್ಯ ಸುಖಸಂಪನ್ನರೆನಿಪನನ್ಯ ರಾಮ ೨೩
ಉದಯದೆದ್ದು ಪದುಳದೀನಾಮ ಓದಿಕೇಳಲು ಸದಾ ರಾಮ
ಸದಮಲ ಸಮಪದನಿತ್ತು ಮುದದಿ ಕಾಯುವ
ಸದಯ ರಾಮ ೨೪
ನಿತ್ಯ ನಿತ್ಯ ಭಕ್ತಿಯಿಂ ಬರೆಯುತ್ತ ಪಠಿಸಲು ಕರ್ತುರಾಮ
ಮುಕ್ತಿಯೆಂಬ ಸಂಪತ್ತನಿತ್ತು ಬಿಡದ್ಹತ್ತಿರಿರುವನು ಸತ್ಯ ರಾಮ ೨೫

 

೮೫
ಭಾಗವತರ ಭಾಗ್ಯೋದಯ
ಭೋಗಿಶಯನ ಭಜಕ ಪ್ರಿಯ ಪ
ಪಾಲಸಾಗರ ಕನ್ಯಾರಮಣ
ನೀಲಶ್ಯಾಮ ಲೋಲಗಾನ
ಕಾಳಿಮರ್ದನ ಕಾಲಹರಣ
ಪಾಲಬಾಲೆ ಶೀಲಮಾನ ೧
ಮೂರುಲೋಕ ಸೂತ್ರಧಾರಿ
ಸಾರನಿಗಮ ವಿನುತ ಶೌರಿ
ವಾರಿಧಿಮಥನ ಮುರಸಂಹಾರಿ
ಧಾರಿಣಿ ಪಾಲಿಪ ದಶಾವಾತಾರಿ೨
ಶೂಲಪಾಣಿಸಖ ಸುನಾಮ
ಮಾಲಕೌಸ್ತುಭ ಸತ್ಯಭಾಮಾ
ಲೋಲ ಭಜಕರಘ ನಿರ್ನಾಮ
ಮೇಲುಮಂದಿರ ಶ್ರೀರಾಮ ನಮೋ ೩

 

೪೦೦
ಭಾರ ನಿನ್ನದೊ ಮಾರಜನಕ ಭಾರ ನಿನ್ನದೊ ಪ
ಭಾರ ನಿನ್ನದಯ್ಯ ಹರಿಯೆ ಘೋರ ಈ ಸಂ
ಸಾರದೊಳಗೆ ಪಾರುಮಾಡಿ ಪೊರೆವುದೆನ್ನ ಅ.ಪ
ಕರುಣಾ ನಿಲಯನೆಂದು ನಿನ್ನ
ಮೊರೆಯ ಹೊಕ್ಕು ಬೇಡಿಕೊಂಬೆ
ನರನ ಭವದಗುಣಗÀಳಳಿದು ಹರಿಯೆ ನಿಮ್ಮ
ಚರಣಸ್ಮರಣೆ ಕರುಣದಿಂದ ನೀಡಿ
ಪೊರೆಯೊ ಶರಣಜನರ ಅಸಹಾಯಕರ ೧
ಶ್ರೀಶ ಶ್ರೀನಿವಾಸ ನೀನೆ
ದಾಸನ ಮನದಾಸೆಯ ಪೂರೈಸುವ
ದಾತನೆಂದು ನಿನ್ನ ದಾಸತ್ವ ಬೇಡ್ವೆ ದೋಷದೂರ
ಘಾಸಿಮಾಡದೆ ಹೇಸಿ ಭವದಿ
ಪೋಷಿಸಯ್ಯ ಬೇಗ ಈಶ ೨
ಚಿಂತೆ ಭ್ರಾಂತಿ ದೂರಮಾಡಿ
ಸಂತಸ ಸುಖವನ್ನು ನೀಡಿ
ಕಂತುಜನಕ ನಿಮ್ಮ ಭಕ್ತಿ ಅಂತ್ಯದಲ್ಲಿ ನಿಲ್ಲಿಸಿ ಎ
ನ್ನಂತರಂಗದೊಳಗೆ ತೋರೊ
ಸಂತರೊಡೆಯ ಸೀತಾರಾಮ ೩

 

೬೪೧
ಭಾರ ನಿನ್ನದೋ ಮಾರಜನಕ
ಭಾರ ನಿನ್ನದೊ ಪ
ಭಾರ ನಿನ್ನದಯ್ಯ ಸರ್ವ
ಸಾರತರದಿ ಕಾಯುವಂಥ
ಪಾರಮಹಿಮ ನಿನ್ನ ಚರಣ
ವಾರಿಜವೇ ಗತಿ ಎನಗೆ ೧
ನಿನ್ನ ಧ್ಯಾನವೆ ಪರುವಕಾಲ
ನಿನ್ನ ನಾಮವೆ ಸೌಖ್ಯ ಸಕಲ
ನಿನ್ನ ಕೀರ್ತನೆನಗೆ ಸುಫಲ
ಪನ್ನಂಗಶಯನ ವೇಣುಗೋಪಾಲ ೨
ನಿನ್ನ ಧ್ಯಾನದಿಂ ಕರಿ ಸಂಕಟ
ವನ್ನು ನಿರುತ ಗೆಲಿದನಕಟ
ನಿನ್ನ ಭಜಿಸಿ ವಿಭೀಷಣ ಪಟ್ಟ
ವನ್ನು ಸ್ಥಿರಪಡೆದ ದಿಟ ೩
ಜಯ ನಿನ್ನ ಧ್ಯಾನವೆಂದೆ
ಜಯ ನಿನ್ನ ಚರಣವೆಂದೆ
ಜಯ ನಿಖಿಲ ನಿನ್ನದೆಂದೆ
ದಯಪಾಲಿಸು ಶ್ರೀರಾಮ ತಂದೆ ೪

 

೪೦೧
ಭಿಕ್ಷೆ ನೀಡೆನಗೆ ಪಕ್ಷಿಗಮನ ನಿಮ್ಮ ನಾಮ
ಭಿಕ್ಷೆನೀಡಿ ರಕ್ಷಿಸೆನ್ನ ಮೋಕ್ಷಪದಕಧ್ಯಕ್ಷ ನಾಮ ಪ
ಅಂಬರೀಷನ ಕಾಯ್ದ ನಾಮ
ಇಂಬು ಇವಗಿತ್ತ ನಾಮ
ಶಂಭು ಕುಣಿದು ಕುಣಿದು ಪೊಗಳ್ವ
ಕುಂಭಿನಿಯೊಳು ಮೆರೆವ ನಾಮ ೧
ಕರಿಯ ಕಷ್ಟಕ್ಕಾದ ನಾಮ
ತರಳನ್ನೆತ್ತಿ ಪೊರೆದ ನಾಮ
ಪರಮಪಾವನೆ ಪರಮೇಶ್ವರಿ
ಅರಸಿ ಶಿರವದೂಗ್ವ ನಾಮ ೨
ಯಮನ ಬಾಧೆ ಗೆಲಿಪ ನಾಮ
ಸುಮನಸರೊಳಾಡಿಸುವ ನಾಮ
ವಿಮಲರೂಪ ಅಮಿತ ಶ್ರೀರಾಮ
ನಿಮ್ಮಾನಂದ ನಾಮ ೩

 

೬೪೨
ಭಿಡೆ ಇನ್ನ್ಯಾತಕೆ ಹೊಡಿ ಹೊಡಿ ಡಂಗುರ
ಪೊಡವಿ ತ್ರಯದಿ ಹರಿ ಅಧಿಕೆಂದು ಪ
ಅಡಿಯ ದಾಸರ ಕರದ್ಹಿಡಿದು ಬಿಡದೆ ಬಲು
ಸಡಗರದಾಳುವ ನಿಜಧಣಿಯೆಂದು ಅ.ಪ
ನಂದಕಂದ ಗೋವಿಂದ ಮುಕ್ಕುಂದ ಭಕ್ತ
ಬಂಧು ಎಂದು ಕೈತಾಳವಿಕ್ಕುತ
ತಂದೆ ತನ್ನ ಪಾದನ್ಹೊಂದಿ ಭಜಿಪರ
ಬಂಧ ಛಿಂದಿಪ ಪರದೈವವೆಂದು ನಲಿಯುತ ೧
ಸ್ಮರಿಪ ಜನರ ಮಹದುರಿತಪರ್ವತವ ತರಿದು
ಪೊರೆವ ಸಿರಿದೊರೆಯೆಂದೊದರುತ
ಪರಮಪುರಷನ ಚರಿತ ಪೊಗಳ್ವರ ಮೈ
ನೆರಳುಯೆಂದು ಮೈಮರೆದು ಕೂಗುತ ೨
ಶರಣಾಗತರ ತನ್ನ ಹರಣದಂತೆ ಕಾಯ್ವ
ಕರುಣಿ ಈತನೆಂದು ಕರ ಮೇಲಕೆತ್ತಿ
ಮರೆಯ ಬಿದ್ದವರ ಪರಮ ಬಡತನವ
ಭರದಿ ಕಳೆದನೆಂದು ಒರೆದು ಸಾರುತ ೩
ಸಾಗರಶಾಯಿ ತನ್ನ ಬಾಗಿ ಬೇಡುವರ
ಬೇಗ ಕ್ಷೇಮನೀಯ್ವ ಭಾಗ್ಯದರಸನೆಂದು
ನೀಗದ ಕಷ್ಟದಿ ಕೂಗಲು ತಡೆಯದೆ
ಸಾಗಿ ಬರುವ ಭವರೋಗವೈದ್ಯನೆಂದು ೪
ಅಚ್ಯುತಗಿಂ ಭಕ್ತರಿಚ್ಛೆ ಪೂರೈಸಲು
ಹೆಚ್ಚಿನವಿರಲ್ಲೆಂದು ಬಿಚ್ಚಿ ಹೇಳುತ
ಇಚ್ಛಜಪಿತ ಮಹಸಚ್ಚಿದಾನಂದ
ಸರ್ವಕ್ಹೆಚ್ಚು ಹೆಚ್ಚು ಶ್ರೀರಾಮನೆ ಎನ್ನುತ ೫

 

ಒಬ್ಬ ರಾಕ್ಷಸ. ಏಕಚಕ್ರನಗರದಲಿ
೧೫೨
ಭೀಮ ಭುಜಬಲೋದ್ದಾಮ
ಸವರಿದಿ ಕುರುಪನ ಕುಲವ ನಿಸ್ಸೀಮ ಪ
ವಿಷದಿ ಕಜ್ಜಾಯ ತಿನಿಸಿ ಮುಸುಕಿನಿಂ ಬಂಧಿಸಿ
ಎಸೆಯಲು ನದಿಯೊಳು ಕುಶಲದಿಂ ಬಂದೆಯೊ ೧
ಜನನಿ ಗೌರಿಯ ವ್ರತವನು ಮಾಳ್ಪೆನೆಂದೆನಲು ಅಣ್ಣ
ನನುಮತಿಯಂತೆ ಘನ ಸುರಲೋಕ ಕೈದ್ಯೊ ೨
ನಿರುತದಿಂ ಸುರಧೇನು ವರ ಪರುಷಮೃಗವನ್ನು
ಕರೆತಂದು ಗಜಗೌರಿ ವ್ರತವ ಪೂರೈಸಿದಿಯೊ ೩
ಬಕನ ಮರ್ದಿಸಿ ಹಿಡಿಂಬಕನ ತರಿದು ಹಿಡಿಂ
ಬಿಕಿಯಳ ಕರಗ್ರಹಣ ಕೈಕೊಂಡ್ಯೊ ರಣಶೂರ ೪
ಬಲ್ಲಿದತನದಿ ಆ ಖುಲ್ಲಕೀಚಕನೊದೆದು
ಪುಲ್ಲನಯನೆಯ ಕಾಯ್ದೊ ಬಲ್ಲಿದ ಶ್ರೀರಾಮನ ದೂತ ೫

 

೮೭
ಭುವನವೀರೇಳ ಪರಿಪಾಲಿಸು ಕರುಣ
ಬುವಿಜಾರಮಣ ಪರಿಭವ ತಾಪಹರಣ ಪ
ದಯದಿ ಯುವತಿಯಕುಲ ಉದ್ಧಾರಣ
ಜವದಿ ಕರಿಧ್ರುವಬಂಧಮೋಚನ
ಯುವತಿಗಕ್ಷಯವಿತ್ತು ಒಲಿದು
ಹಯವ ಪಿಡಿದು ರಥವ ನಡೆಸಿದ
ಭುವನ ಬ್ರಹ್ಮಾಂಡ ಸೂತ್ರಧಾರಕ
ಶಿವಸುರಾರ್ಚಿತ ಪೊರೆ ಸುಹೃದಯ ಅ.ಪ
ಪತಿತಪಾವನ ಶ್ರೀಶಕೇಶವ ಸಹಸ್ರಾಕ್ಷಶಯನ
ಪತಿತಪಾವನ ಮಾಲ ಮಾಧವ ಭೋಗ ಗರುಡಗಮನ
ಪತಿತಪಾವನೆ ಇಂದಿರೆಂಇÀಇ ಜೀವ ಜಗದಾದಿದೇವ
ಯತಿತತಿನುತ ಪವಿತ್ರನಾಮ
ಕ್ಷಿತಿಸುತೆಪತಿ ಪವಿತ್ರ ಮಹಿಮ
ಸತಿಯರವ್ರತಹರ ಜಿತಮಹಮುಪ್ಪುರ
ಕೃತ್ರಿಮ ಮುರಹರ ಮಥನಸಾಗರ
ನುತಿಪರ್ಹಿತಕರ ಸುಪಥರಾಧಾರ
ಹಿತದಿ ಪೊರೆಯೆನ್ನ ಕರುಣಾನಿಕರ ೧
ನಿರುತ ಜನರ ಕಲ್ಪತರು ನೀನು ಭಯಭಕ್ತಿಯಿಂದ
ಸ್ಮರಿಸಿ ಬೇಡ್ವರ ಪರಮಸುರಧೇನು
ಸುರಗಂಗಾಜನಕ ಶರಣು ಸಜ್ಜನರಮಿತ ದಯಾ
ಪರನು ವಿಶ್ವರಕ್ಷಕನು ಮರಣರಹಿತ ಮದನತಾತ
ಸುರಜೇಷ್ಠೊಂದಿತ ಶುಭ ಸಚ್ಚರಿತ
ದುರಿತಪರಿಹರ ದುರುಳ ಸಂಹರ
ಶರಣುಮಂದಾರ ಸುಗುಣರೋದ್ಧಾರ
ಶರಣಭಜಕರ ವರಸುಖಕರ
ಕರಣಿಸಭವನೆ ತ್ವರಿತ ಸುವರ ೨
ಕುಸುಮನಯನ ಸ್ವತಂತ್ರ ಮಹಲೀಲ ದಿವಕೋಟಿ ಪ್ರಭಾಕರ
ಕುಸುಮಗಾತ್ರ ಮಹತಂತ್ರ ಮಾಯಜಾಲ ಗೋವರ್ಧನೋದ್ಧಾರ
ಕುಸುಮಧರ ಕುರುಕುಜನಕುಲಕಾಲ ಗೋಪಾಲಬಾಲ
ಕುಸುಮನಾಭ ಕೌಸ್ತುಭಾಂಬರ
ಅಸಮ ತುಲಸಿಮಾಲಾಲಂಕಾರ
ಒಸೆದು ದಾಸನ ಪುಸಿಯೆಂದೆನಿಸದೆ
ಹಸನುಮತಿಯಿತ್ತು ಪೋಷಿಸನುದಿನ
ಎಸೆವ ತವಪಾದ ನಂಬಿ ಮರೆಬಿದ್ದ
ಅಸಮದಯಾನಿಧಿ ಮಮ ಶ್ರೀರಾಮ ೩

 

೫೬೦
ಭೂಷಣ ಮಾಡಲು ಹಿಗ್ಗೇನೋ ಜನ
ದೂಷಣಮಾಡಲು ದು:ಖೇನೋ ಪ
ದೋಷನಾಶ ಜಗದೀಶ ಕೇಶ ತನ್ನ
ದಾಸರಭಿಮಾನ್ಯೆಂದು ಶಾಶ್ವತರಿತವರಿಗೆ ಅ.ಪ
ವಂದನೆಮಾಡಿ ಕೊಡುತಿಹ್ಯರೇನೋ ಮತ್ತು
ನಿಂದೆಯನಾಡಿ ಕಸುಕೊಳ್ಳುವರೇನೋ
ನಿಂದೆವಂದನಗಳೊಂದೇಯೆಂದು ಆ
ನಂದನಕಂದನ್ನಾನಂದದಿ ಭಜಿಪರ್ಗೆ ೧
ಸತಿಸುತರೊಲಿದರೆ ಬಂತೇನೋ ಮತ್ತು
ಹಿತದಪ್ಪಿ ನಡೆದರೆ ಹೋಯ್ತೇನೋ
ಗತಿಪ ಕ್ಷತಿಯ ಹಿತಾಹಿತಸ್ಥಿತಿ ಸಮವೆಂದು
ಪತಿತಪಾವನ ಸತತದಿ ನುತಿಪರ್ಗೆ ೨
ನೀತಿವಂತನೆನೆ ಬಂದ ಭಾಗ್ಯೇನೋ ಜಗ
ಪಾತಕನೆನೆ ಬಂದ ಕುಂದೇನೋ
ಪಾತಕಹರ ಭವಭೀತಿವಿನಾಶ ಜಗ
ನ್ನಾಥ ಶ್ರೀರಾಮನ ಪ್ರೀತಿ ಪಡೆದವರಿಗೆ ೩

 

೮೮
ಭೇದವ ಮರೆಸಿದ ನಮ್ಮಯ್ಯ ಸು
ಸಾಧನ ತಿಳಿಸಿದ ಪ
ಭೇದ ಮರೆಸುತ ವಾದನೀಗಿಸಿ ಪರ
ಸಾಧನದ ನಿಜಹಾದಿಗೆ ಹಚ್ಚಿದ ಅ.ಪ
ಮಂದಮತಿಯ ತರಿದ ಎನ್ನಯ ಭವ
ಬಂಧ ಪರಿಹರಿಸಿದ
ಕುಂದುವ ಜಗಮಾಯದಂದುಗ ಗೆಲಿಸಿದ
ಕಂದನೆಂದುದ್ಧಾರಗೈದ ತಂದೆ ಸಿಂಧುಶಾಯಿ ೧
ಜ್ಞಾನಕೆ ಹಚ್ಚಿದ ಎನ್ನದೆ ನಿಜ
ಧ್ಯಾನವ ಪಾಲಿಸಿದ
ನಾನಾಯೋನಿಯೊಳು ಜನಿಸಿ ಜನಿಸಿ ಬಹ
ಹಾನಿಯಿಂದುಳಿಸಿದ ದಾನವಕುಲಹರ ೨
ಏನೆಂದು ಬಣ್ಣಿಸಲಿ ನಮ್ಮಯ್ಯನ
ಆನಂದದ ಕೀಲಿ
ತಾನೆ ಒಲಿದಿತ್ತೆನ್ನಗಾನಂದಮಯಾಂಬುಧಿ
ದೀನಜನಾಪ್ತ ಮಮಪ್ರಾಣ ಶ್ರೀರಾಮಯ್ಯ ೩

 

೪೦೨
ಭೋ ಶುಭಕಾಯ ಕೇಶವರಾಯ
ದಾಸರ ಪ್ರಿಯ ಶೇಷಶಯ್ಯ ಪ
ಹೇಸಿಕೆ ಮಾಯ ಮೋಸದ ಬಲೆಯ
ನಾಶನಗೊಳಿಸಿ ಪೋಷಿಸೆನ್ನಯ್ಯ ಅ.ಪ
ನಶಿಪ ಸಂಸಾರ ವಿಷಯದ ಘೋರ
ಪುಸಿಯೆಂದೆನಿಸಿ ನಿಜಧ್ಯಾಸವ ಕರುಣಿಸೊ ೧
ಅಜ್ಞಾನವಳಿಕಿಸಿ ಸೂಜ್ಞರಸಂಗದಿ
ಮಗ್ನನೆನಿಸಿ ನಿರ್ವಿಘ್ನದಿ ರಕ್ಷಿಸೊ ೨
ಸಾವ ಹುಟ್ಟುವ ಮಹನೋವ ಗೆಲಿಸಿ ಜಗ
ಜೀವ ಶ್ರೀರಾಮ ತವಸೇವಕನೆನಿಸೊ೩

 

ಶ್ರೀಹರಿ ರಾಮಾವತಾರದಲ್ಲಿ
೮೯
ಭೋಗಿಶಾಯಿ ಸಲಹೋ ಭವರೋಗದೂರ
ಸಾಗರಕನ್ನಿಕೆಯ ಪ್ರಾಣಮನೋಹರ ಪ
ಶಂಖಾಸುರಮರ್ದನ ಮಂಕುಕುಲಭಂಜನ
ಕಿಂಕರೋದ್ಧಾರಣ ಜಿಂಕೆಸಂಹರಣ
ಲಂಕಾಪುರನಾಶನ ಶಂಖ ಚಕ್ರಧಾರಣ
ಶಂಕರಾದಿವಂದನ ಪಂಕಜನಯನ ೧
ತಾಪತ್ರನಿರ್ಮೂಲ ಪಾಪಮೋಚನ ಶೀಲ
ಗೋಪೇರಾನಂದ ಲೀಲ ಗೋಪಾಲಬಾಲ
ಪಾಪಿಜನಕುಲಕಾಲ ಆಪತ್ತಿನಲ್ಲನುಕೂಲ
ದ್ರೌಪದಿಯ ಪರಿಪಾಲ ಶ್ರೀಪತಿಯ ವಿಠಲ ೨
ದೀನಜನಮಂದಾರ ಧ್ಯಾನಿಪರ ಪ್ರಿಯಕರ
ಜ್ಞಾನಿಗಳ ಆಧಾರ ವನಮಾಲಧರ
ಬಾಣಾರಿ ಧುರಧೀರ ಭಾನುಕೋಟಿ ಪ್ರಭಾಕರ
ಜಾನಕೀರಮಣ ಶ್ರೀರಾಮಪ್ರಭು ಸುಂದರ ೩

 

೪೦೪
ಭ್ರಮೆ ಬೇಡಲೆ ಮನ ತಿಳಿ ಜವದಿ ಹರಿ
ವಿಮಲಚರಣಕಮಲ್ಹಿಡಿ ದೃಢದಿ ಪ
ಸುಮನಸರಗೂಡಿ ನೀ ಸುಮಶರ ಪಿತನಂ
ಸಮಯ ತಿಳಿದು ಭಜಿಸನುದಿನದಿ ಅ.ಪ
ಸಾರವಿಲ್ಲದ ಸಂಸಾರ ಇದು
ಮೇರೆನಿಲ್ಲದ ಸಾಗರ
ಆರಿಗೆ ನಿಲುಕದೆ ಮೂರುಲೋಕವದ್ದಿ
ಮೀರಿಬಡಿಸುವುದು ಬಲುಘೋರ ೧
ಹೆಂಡರು ಮಕ್ಕಳೆಂದು ನಂಬಿದಿ ನಿನ್ನ
ಹಿಂಡಿನುಂಗುವುದು ಅರಿಯದ್ಹೋದಿ
ಕಂಡಕಂಡವರಿಗೆ ಮಂಡೆಬಾಗಿಸಿ ನಿನ್ನ
ದಂಡನೆಗೆಳಪುದು ಅಂತ್ಯದಿ ೨
ಕಾಕುಜನರ ಸಂಗ್ಹಿಡಿದಿದ್ದಿ ನೀ
ಲೋಕನೆಚ್ಚಿ ನೂಕುನುಗ್ಗಾದಿ
ಲೋಕಗೆಲಿದು ಭವನೂಕಿ ನಲಿಯುವರ
ಸಾಕಾರಗಳಿಸದೆ ಕೆಟ್ಟ್ಹೋದಿ ೩
ಧರೆಯ ಭೋಗವನು ಸ್ಥಿರ ತಿಳಿದಿ ನೀ
ಹರಿದು ಹೋಗುವದಕೊಲಿತಿದ್ದಿ
ಮರೆಮೋಸದಿ ಬಿದ್ದರು ಮೈಯಮರೆದು
ಸ್ಥಿರಸುಖ ಪಡೆಯದೆ ದಿನಗಳೆದಿ ೪
ಭೂಮಿಸುಖಾರಿಗೆ ನಿಜವಲ್ಲ ಇದು
ಕಾಮಿಸಬೇಡೆಲೊ ಶೂಲ
ಕಾಮಿತಗಳನಿತ್ತು ಕ್ಷೇಮದಿ ಸಲಹುವ
ಸ್ವಾಮಿ ಶ್ರೀರಾಮನ ತಿಳಿಮಿಗಿಲ ೫

 

೪೦೫
ಮಟಮಾಯ ಮಟಮಾಯ
ದಿಟ್ಟಿಸಿ ನೋಡೆಲೊ ಪ
ದುಷ್ಟ ಸಂಸಾರವ ಕುಟ್ಟಿಕುಟ್ಟಿಕೊಂ
ದೆಷ್ಟು ಮಾಡಿದರು ಕಟ್ಟಕಡೆಗೆಯಿದು ಅ.ಪ
ಕೋಟಿಧನವ ನೀಟಾಗಿ ಗಳಿಸಲೇನು
ಸಾಟಿಯಿಲ್ಲದ ಸಂಪತ್ತು ಇರ್ದರೇನು
ಕಾಟುಮಾಡಿ ಯಮಗೂಟ ಒದಗಲಾಗ
ದಾಟಿ ಹೋಗಬೇಕು ಅಷ್ಟು ಸಂಪದ ಬಿಟ್ಟು ೧
ಆನೆಕುದುರೆ ಒಂಟೆ ವಾಹನವಿರಲು ಏನು
ನಾನಾಸಿರಿಯು ಮಾನ್ಯ ಮಿರಾಸಿಗಿರಲೇನು
ತ್ರಾಣಗುಂಡಿಸಿ ಯಮ ಪ್ರಾಣ ಸೆಳೆಯುವಾಗ
ನಾನಾಭಾಗ್ಯ ಬಿಟ್ಟು ತಾನೆ ಹೋಗಬೇಕು ೨
ಮಾನಪಾನದಿ ತಾನೆ ಹಿರಿಯನೆನಿಸಲೇನು
ನಾನಾಪೊಡವಿಗೋರ್ವ ದಣಿಯಾಗಾಳಿದರೇನು
ಪ್ರಾಣೇಶ ಶ್ರೀರಾಮಧ್ಯಾನವೊಂದಿಲ್ಲದಿರೆ
ಏನು ಗಳಿಸಿದ್ದೆಲ್ಲ ಹಾನಿಯೆನಿಪುದೆಲೋ ೩

 

೫೬೧
ಮಡಿಮಡಿಯೆಂದು ಹಾರ್ಯಾಡಿ ಸುಳ್ಳೆ
ಮಡಿಯಬೇಡಿರೋ ಭವದುರಳ್ಯಾಡಿ ಪ
ಜಡಮತಿ ಕಡಿದು ಬಿಡಲಾಸೆ ತೊಡೆದು
ನಡಿರೋ ಸನ್ಮಾರ್ಗದದು ನಿಜಮಡಿ ಅ.ಪ
ಒದ್ದೆಬಟ್ಟ್ಯುಟ್ಟದ್ದದು ದಾವಮಡಿ ನಿಮ್ಮ
ಬದ್ಧಗುಣದೊಳಿರೆ ಅದು ಶುದ್ಧಮಡಿ
ಕದ್ದು ತಿನ್ನುವ ಕ್ಷುದ್ರಬುದ್ಧಿ ನೀಗಿ ಪರಿ
ಶುದ್ಧರಾಗಲದು ನಿರ್ಧಾರ ಮಾಡಿ೧
ಕ್ಲೇಶಕಳೆವುದದು ಲೇಸುಮಾಡಿ ದು
ರ್ವಾಸನಳಿಯೆ ಅದು ಮೀಸಲು ಮಡಿ
ಮೋಸಮರವೆ ನೀಗಿ ಈಶನ ನಾಮವ
ಧ್ಯಾಸದಿರಲು ಅನುಮೇಷ ಮಡಿ ೨
ಬಿಟ್ಟದ್ದು ಉಟ್ಟರದು ಯಾವ ಮಡಿ
ಉಟ್ಟು ಮುಟ್ಟೆಂಬುದಿದಾವಮಡಿ
ಕೆಟ್ಟ ಪದ್ಧತಿಗಳ ಬಿಟ್ಟು ಸದಾಚಾರ
ನಿಷ್ಠಪರರಾಗಲದು ಶಿಷ್ಟಮಡಿ ೩
ಅರಿವುಗೂಡುವುದೆ ಸ್ಥಿರಮಡಿ ಬಹ
ಜರ ಮರಣಳಿವುದೆ ಪರಮಮಡಿ
ದುರಿತ ಗೆಲಿದು ಹರಿಶರಣರೊಳಾಡ್ವುದು
ತಿರುಗಿ ಮುಟ್ಟಿಲ್ಲದ ಪರಮಮಡಿ ೪
ಮಡಿಯಾದಮೇಲೆ ಮೈಲಿಗೆಲ್ಲಿ ಖೋಡಿ ಜ್ಞಾನ
ವಿಡಿದುನೋಡು ನಿಜ ಹುಡುಕ್ಯಾಡಿ
ಮಡಿಮುಟ್ಟಿಲ್ಲದ ನಮ್ಮೊಡೆಯ ಶ್ರೀರಾಮ
ನಡಿ ದೃಢದಿ ನಂಬಲಿದೇ ಮೂಲಮಡಿ ೫

 

೪೦೬
ಮತಿಗೆಟ್ಟೆ ಭವತಾಪವ್ಯಥೆಯಿಂದ ನಾನು
ಸುತನರಿಕೆ ಹಿತದಿಂದ ಕೇಳು ಮಮಪಿತನೆ ಪ
ವಿಧಿವಶದಿ ಸಿಲ್ಕಿ ನಾ ಉದಿಸಿ ಈ ಬುವಿಯೊಳಗೆ
ಸದಮಲನೆ ತವಸ್ಮರಣವಿಧಿಯ ತಿಳಿಯದಲೆ
ಉದಯದೇಳುತ ನಾನು ಅಧಮ ಉದರಕ್ಕಾಗಿ
ವದನತೆರೆದನ್ಯರನು ಹುದುಗಿ ಬೇಡುತಲಿ ೧
ಹಸಿತೃಷೆಯ ತಡೆಯದೆ ಪುಸಿಯಾಡಿ ದಿನಗಳೆದೆ
ನಿಶೆಯೆಲ್ಲ ಸಂಸಾರವ್ಯಸನದೊಳು ಕಳೆದೆ
ವಸನ ಒಡೆವೆಗೆ ಮೆಚ್ಚಿ ವಸುಧೆಯೊಳ್ತಿರುತಿರುಗಿ
ಪುಸಿಯ ಮಾನವರನ್ನು ರಸನೆಯಿಂದ್ಹೊಗಳಿ ೨
ವಾನರಗೆ ವಶನಾದಿ ದಾನವನ ರಕ್ಷಿಸಿದಿ
ಮಾನವಗೆ ಆಳಾದಿ ದೀನದಯಾಸಿಂಧು
ನೀನೆ ಗತಿಯೆನಗಿನ್ನು ಜ್ಞಾನಬೋಧಿಸಿ ಕಾಯೊ
ಹೀನಭವ ಗೆಲಿಸಿ ಮಮಪ್ರಾಣ ಶ್ರೀರಾಮ ೩

 

೪೦೭
ಮತ್ತೆ ಈ ಭವ ಎತ್ತಲಾರೆ ಚಿತ್ತಜಪಿತನೆ
ನಿತ್ಯ ಮುಕ್ತಿಸುಖವ ನೀಡೊ ಪ
ಮರ್ತು ಇಂದಿನತನಕ ನಿಮ್ಮ
ನಿತ್ಯನಿರ್ಮಲಪಾದ ಎಂ
ಬತ್ತುನಾಲ್ಕುಲಕ್ಷ ಜನುಮ
ಗುರ್ತಿಲ್ಲದೆ ತಾಳಿದ್ದೆ ಸಾಕೊ ೧
ಉತ್ತಮಸಂಗ ಮರೆದು ಮದೋ
ನ್ಮತ್ತನಾಗಿ ಚರಿಸಿ ಮತ್ತೆ
ಕತ್ತೆಯಂತೆ ಇಹ್ಯಕೆ ಪರಕೆ
ಸುತ್ತಿ ಸುತ್ತಿ ಬೇಸತ್ತದ್ದೆ ಸಾಕೊ ೨
ಚಿತ್ತಭ್ರಾಂತನಾಗಿ ಸತತ
ಸತ್ಯಮಾರ್ಗದಪ್ಪಿ ಕೆಡುವ
ಭಕ್ತನ ತಪ್ಪುಕ್ಷಮಿಸಿ ಕರುಣ
ದೆತ್ತಿ ಸಲಹೊ ಸಿರಿಯರಾಮ ೩

 

ನಾಯಾಗಿ ಬಂದು ನಿತ್ಯಲತ್ತೆ ತಿನುಯೆಂದೆನೆಲು
೪೦೮
ಮನಕೆ ಬೇಸರ ಬೇಡ ಮಣಿವೆ ಮಾಧವನೆ
ಕ್ಷಣಕೊಂದು ಬೇಡುವ ಈ ಪಾಮರನೆಂದೆನುತ ಪ
ತಂದೆಯನು ಕೊಲ್ಲೆನಲು ತಕ್ಕ ಶಿಕ್ಷೆಯ ಮಾಡು
ಕೊಂದು ಅಣ್ಣನ ರಾಜ್ಯ ಕೊಡು ಎನಗೆ ಎನಲು
ಕುಂದಿಟ್ಟು ಮನ್ನಿಸದಿರಲ್ಲದೆ ಎನ್ನ
ಬಂಧನದ ಬಲೆಯನ್ನು ಬಯಲೆನಿಸು ಎಂಬೆ ೧
ಹೆಣ್ಣಾಗಿ ಬಾರೆನಲು ಕಣ್ಣೆತ್ತಿ ನೋಡದಿರು
ಎನ್ನ ಮನೆಯ ಕುದುರೆಯನು ಕಾಯಲು
ಗನ್ನಗತಕನೆಂದು ಮನ್ನಿಸಿ ಸಲಹದಿರಲು
ಅನ್ಯ ಬೇಡಿದೆನೇನು ಸಂತಸ ನೀಡೆಂಬೆ ೨
ನಾಯಾಗಿ ಬಂದು ನಿನ್ನ ಲತ್ತೆತಿನುಯೆಂದೆನಲು
ಕಾಯದಿರು ಕರುಣದಿ ದೇವದೇವೇಶ
ಆವಾವ ಕಾಲದಿ ಬಾಯಬಿಡಿಸದಿರಲ್ಪ
ಮಾಯ ಮೋಹಿಗಳ ಬಳಿಯೆಂದು ಬೇಡುವೆನು ೩
ನೀರುಕೊಟ್ಟೆನ್ನ ಕರದಿಂದ್ಹೊಡಿಸಿಕೊಯೆನಲು
ಚೋರನು ಇವನೆಂದು ಬಾರದೆ ಇರೆಲೋ
ಘೋರಸಂಸಾರ ತಾಪವಾರಿಧಿಯ ಕಷ್ಟದಿಂ
ಪಾರುಮಾಡೆಂದೆನುತ ಸಾರಿ ಬೇಡುವೆನು ೪
ಸಲಿಸೆನ್ನ ನೈವೇದ್ಯ ಕುಲಗೇಡು ಎಂದೆನುತ
ಛಲದಿ ಬೇಡಲು ಎನಗೊಲಿಯದಿರು ಸ್ವಾಮಿ
ಬಲು ಹೊಲೆಯ ಪ್ರಪಂಚದ್ಹಲುಬಾಟ ಬಿಡಿಸೆನ್ನ
ಮಲಿನತ್ವಳಿಕಿಸಿ ಚೆಲುವ ಸಲಹೆಂಬೆ ೫
ತಿಳಿಯದೆ ನಿನ್ನನ್ನು ಕುಲಗೇಡಿಯೆಂದೆನುತ
ಕುಲದಿಂದ ಹೊರಹಾಕಲೊಳಿತಾಗಿ ತಳ್ಳೋ
ಮಳ್ಳತನ ಬಿಡಿಸೆನ್ನ ಮನಸಿನ ಕಿಲ್ಬಿಷವ
ತೊಳದೆ ನಿಜಜ್ಞಾನದ ಪಾಲಿಸು ಎಂಬೆ ೬
ನರನ ಭವಗುಣಗಳ ಪರಿಹರಿಸಿ ಬೇಗನೆ
ಕರುಣಿಸು ಎನಗೆ ಪರರ ಬೇಡದ್ದನು
ಕರುಣಾಳು ಶ್ರೀರಾಮ ಗುರುವೆ ನೀನಾಗೆನ್ನ
ಪರಿಭವದ ದು:ಖವನು ತ್ವರಿತದ್ಹರಿ ತಂದೆ ೭

 

೯೦
ಮನದಣಿ ನೋಡಿದೆನೊ ಸನಕಾದಿನಮಿತ
ಮನದಣಿ ನೋಡಿದೆನು ದೃಢದಿ ಪ
ನಿನಗೆ ಸರಿಯಿಲ್ಲ ಭುವನತ್ರಯದಿ
ಮನಕೆ ಬೇಸರವಿಲ್ಲದನುದಿನ
ತನುವನಪ್ಪಿಹಿಡಿದು ಭಕುತರ
ಮನದ ವರಗಳನಡೆಸಿ ಸಲಹುವ
ಕನಿಕರಾರ್ಣವ ವಿಠಲ ನಿನ್ನಡಿ ಅ.ಪ
ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ
ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ
ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ
ನಿಂದ ಋಷಿಗಳಿಗ್ಹಲವು ಪರಿಯಲಿ
ತಂದೆ ನೀ ಸಮ್ಮತವ ಪೇಳಿ
ಬಂದು ದ್ವಾಪರಾಂತ್ಯಯುಗದಲಿ
ಒಂದು ಅರಲವ ಅಗಲದಲೆ ನಿಮ್ಮ
ಪೊಂದಿ ಆಲಿಂಗನವನೀಯುವೆ
ನೆಂದು ವರವಿತ್ತ ವಿಠಲ ನಿಮ್ಮಡಿ ೧
ಅಪಾರಮಹಿಮಜಾಲ ಅವತರಿತಿಸಿದಿ
ದ್ವಾಪರಯುಗದಿ ಬಾಲಕೃಷ್ಣ ನೀನಾಗಿ
ಶ್ರೀಪತಿ ಸುಜನಪಾಲ ದನುಜಕುಲಕಾಲ
ಪಾಪಸಂಹಿತ ಅಮಿತಲೀಲ
ಶಾಪಪರಿಹಾರ ವೇಣುಲೋಲ
ತಾಪಸೋತ್ತಮರಿಷ್ಟ ನೀಡಲು
ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ
ಗೌಪ್ಯದಾಲಿಂಗನವನಿತ್ತ ಭೂಪ
ಭೂಪತಿ ವಿಠಲ ನಿಮ್ಮಡಿ ೨
ಸುಗುಣ ಸಂತರಹೃದಯಸಂಚಾರ ದಾಸಾನುದಾಸರು
ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ
ಜಗದಜೀವನ ಪಾವನಾಕಾರ ಪರಮಸುಖಕರ
ಅಗಣಿತಾಗಣಿತಮಹಿಮಭರಿತ
ಪೊಗಳಲಳವೆ ನಿಮ್ಮ ಚರಿತ ತ್ರಿ
ಜಗನಾಟಕ ಸುಲಭದಲಿ ನೀ
ಅಗಲದನವರತಸಮ ಈ ಕಲಿ
ಯುಗದಿ ಭಕ್ತರಿಗಾಲಿಂಗನೀಯುವ
ನಿಗಮಗೋಚರ ವಿಠಲ ನಿನ್ನಡಿ ೩
ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು
ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು
ಸುಂದರಾಂಗ ಸುಗುಣಗುಣಹಾರ ಬಂಧನಿವಾರ
ಸಿಂಧುಕಲಕಿದಪಾರ ಶೂರ
ಕುಂದದೆ ಮೊರೆಕಾಯ್ದ ಸುರರ
ಹೊಂದಿಭಜಿಸುವ ಭಕುತಜನಕಾ
ನಂದ ನೀಡುತ ಚಂದನೋಡುತ
ಸಿಂಧುನಿಲಯ ಮುಕ್ಕುಂದ ಮುರಹರಿ
ಅಂದಮಾದ ವಿಠಲ ನಿಮ್ಮಡಿ ೪
ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ
ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ
ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು
ಭಕ್ತಗೊಲಿದು ಭೂವೈಕುಂಠವ
ಸತ್ಯವೆನಿಸಿ ಮೀರಿ ಮೆರೆವ
ಭಕ್ತಜನರ ಕೈಯೆತ್ತಿ ಸಾರುವ
ಪೃಥ್ವಿಗಧಿಕ ಮಹ ಪಂಢರಾಪುರ
ಮುಕ್ತಿ ತವರೆಂಬ ಮಂದಿರದಲ್ಲಿ
ಕರ್ತುಶ್ರೀರಾಮ ವಿಠಲ ನಿನ್ನಡಿ ೫

 

ಭೋರ್ಗರೆವ ಸರ್ಪನ
೪೦೯
ಮನವೆ ಎಲೆ ಮನವೆ ನೀನು
ಯೋಚಿಸಿ ಕೆಡುವುದು ಅನುಚಿತವಲ್ಲೆ ಪ
ನೀ ಮನನಮಾಡಿದ ಸಂಸಾರಿರದು
ಕಾನನದ ಬೆಳದಿಂಗಳು ಇದು
ಶ್ವಾನನ ಕನಸಿನ ಪರಿ ತಿಳಿದು
ಹೀನಯೋಚನೆ ಬಿಟ್ಟು ಧ್ಯಾನಕವಚ ತೊಟ್ಟು
ಜ್ಞಾನವೆಂಬಾಯುಧಪಾಣಿಯಾಗೆಲೊ ಬೇಗ ೧
ಈ ದೇಹವೆಂಬುವ ಕಾಂತಾರ್ಹೊಕ್ಕು ಉಪಾ
ಯುದ್ಹುಲಿಗಳ ತರಿದ್ಹಾಕು
ಮಹಮಾಯ ಕೋಣಗಳೆಂಟು ನೂಕು
ದಾಯಾದ್ಯೈವರ ಕೊಂದು ಜೀವಘಾತಕರಾದ
ಮೂವರಂ ಭಂಜಿಸಿ ದ್ವಯಮಾರ್ಗ ಗೆಲಿಯೆಲೊ ೨
ಮಹಮೂರು ಕಂಟಕ ಬದಿಗಿಟ್ಟು
ಬಹ ಆರೊಂದು ನದಿಗಳ ದಾಂಟು
ಭೋರ್ಗರೆವ ಸರ್ಪನ ಹೆಡೆ ಮೆಟ್ಟು
ಮಾರಾರಿ ವಿನಮಿತ ಧೀರ ಶ್ರೀರಾಮಪಾದ
ವಾರಿಜಕ್ಕೆರಗಿ ಗಂಭೀರ ಸುಖದಿ ಮೆರಿ ೩

 

೪೧೦
ಮನ್ನಿಸಿ ಸಲಹಯ್ಯ ಎನ್ನ ತಪ್ಪು ಒಪ್ಪಿಕೊ ಮಹರಾಯ ಪ
ಮನ್ನಿಸಿ ಸಲಹಯ್ಯ ಪನ್ನಂಗಶಯನನೆ
ನಿನ್ನ ಧ್ಯಾನಾಮೃತವನ್ನು ಕರುಣದಿತ್ತು ಅ.ಪ
ನಾನಾಜನುಮ ಸುತ್ತಿ ಮತ್ತೆ ಹೀನ ಜನುಮವೆತ್ತಿ
ಜ್ಞಾನವಿನಿತಿಲ್ಲದೆ ನಾನಾಪಾಪಗೈದೆ
ದೀನಜನರ ಬಂಧು ನೀನೆ ಕ್ಷಮಿಸು ತಂದೆ ೧
ಮರವೆ ದೇಹವೊದ್ದು ಸಂಸಾರ ಮರವೆಯೊಳಗೆ ಬಿದ್ದು
ಶರಣ ಸತ್ಪುರುಷರ ನೆರವಿನಿತರಿಯದೆ
ಮರುಳನಾದೆ ಹರಿ ಮುರಹರ ಕ್ಷಮಿಸಯ್ಯ ೨
ಬರಬಾರದು ಬಂದೆ ಬಲು ವಿಧ ದುರಿತದೊಳು ಬೆಂದೆ
ಅರಿಯದೆ ಮಾಡಿದ ಪರಮದುರಿತಗಳ
ಕರುಣದಿ ಕ್ಷಮೆಮಾಡಿ ಪೊರೆಯೊ ಶ್ರೀರಾಮನೆ ೩