Categories
ರಚನೆಗಳು

ರಾಮದಾಸರು

೨೬೦
ಕೊಡು ಕೊಡು ಕೊಡು ಹರಿಯೆ ಕೆಡದಂಥ ಪದವಿಯ
ಒಡನೆ ನಿಮ್ಮಂಘ್ರಿಯ ಕಡುದೃಢ ಭಕುತಿಯ ಪ
ನಿಜಪದದಾಯಕ ತ್ರಿಜಗ ಪರಿಪಾಲಕ
ಭಜಿಸಿಬೇಡುವೆ ನಿಮ್ಮ ಭಜನೆಸವಿಸುಖಲಾಭ ೧
ಪರಕೆ ಪರತರವೆನಿಪ ಪರಮಪಾವನ ನಿಮ್ಮ
ಚರಿತ ಪೊಗಳಿ ಬಾಳ್ವ ಪರಮಾನಂದದ ಜೋಕು ೨
ಯತಿತತಿಗಳು ಬಿಡದೆ ಅತಿ ಭಕ್ತಿಯಿಂ ಬೇಡ್ವ
ಪತಿತ ತವಸೇವೆಯಭಿರುಚಿ ಎನ್ನೊಡಲಿಗೆ ಸತತ ೩
ಪರಿಭವ ಶರಧಿಯ ಕಿರಿಯಾಗಿ ತೋರಿಪ
ಪರಮಪುರುಷ ನಿಮ್ಮ ಕರುಣ ಚರಣ ಮೊರೆ ೪
ದುಷ್ಟ ಭ್ರಷ್ಟತೆಯಳಿದು ಶಿಷ್ಟರೊಲುಮೆಯಿತ್ತು
ಅಷ್ಟಮೂರುತಿ ನಿಮ್ಮ ಶಿಷ್ಟಪಾದದ ನಿಷ್ಠೆ ೫
ಕನಸು ಮನಸಿನೊಳೆನ್ನ ಕೊನೆಯ ನಾಲಗೆ ಮೇಲೆ
ನೆನಹು ನಿಲ್ಲಿಸಿ ನಿಮ್ಮ ಕರುಣಘನ ಕೃಪೆ ೬
ನಾಶನಸಂಸಾರದಾಸೆಯಳಿದು ನಿಜ
ಧ್ಯಾಸದಿರುವ ಮಹದಾಸಸಂಗದ ಸಿರಿ ೭
ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರು
ಸೇರಿ ಭಜಿಪ ನಿಮ್ಮ ಮೂರುಕಾಲದ ನೆನಪು ೮
ಅಂತರ ಶೋಧಿಸಿ ಅಂತರಾತ್ಮನ ಕಂಡು
ಸಂತಸದ್ಹಿಗ್ಗುವ ಸಂತರ ಮತವರ್ಣ ೯
ಸರ್ವಜ್ಞರೆನಿಸಿದವರ ಶರಣರ ಸಂಗಕರುಣಿಸಿ
ಕರುಣದಿ ಪರಮ ಜ್ಞಾನೆನುವ ಪದವಿ ೧೦
ಮಿಗಿಲಾಗಿ ನಿರ್ಧರಿಸಿ ಸಿರಿವರನಂಘ್ರಿಯೇ
ಜಗಮೂರಧಿಕೆಂಬ ಸುಗುಣಗುಣಾಶ್ರಮ೧೧
ಧರೆಮೂರು ತಲೆಬಾಗಿ ಪರಮಾದರದಿ ಪಾಡ್ವ
ಹರಿನಾಮ ಕೀರ್ತನೆ ಪರಮಾದರದಿ ಪಾಡ್ವ ೧೨
ಶಮೆಶಾಂತಿದಯೆಭಕ್ತಿ ವಿಮಲಗುಣಭೂಷಣತೆ
ಸುಮನಸಸಮನಿಷ್ಠೆ ಅಮಿತಮತಿವರ ಶ್ರೀ ೧೩
ಮಿಥ್ಯೆವರ್ಜಿತವಖಿಲ ಸತ್ಯತೆ ಸದಮಲ
ನಿತ್ಯ ನಿರ್ಮಲವೆನಿಪ ತತ್ವದರ್ಥದ ವಿವರ ೧೪
ತನುನಿತ್ಯ ಸ್ವಸ್ಥತೆ ಘನಕೆ ಘನತರವಾಗಿಮಿನುಗುವ
ಘನಮುಕ್ತಿ ಮನುಮುನಿಗಳ ಪ್ರೇಮ ಶ್ರೀರಾಮ ೧೫

 

೨೬೨
ಕೊಡು ನಿನ್ನ ಧ್ಯಾನ ಒಡೆಯ ಶ್ರೀರಮಣ
ಎಡಬಿಡದಲೆ ತವಅಡಿಭಕ್ತಿಜ್ಞಾನ ಪ
ವನವಸೇರಿರಲಿ ಮತ್ತನುಗಾಲ ಬಡತನ
ವನುಭವಿಸುತಿರಲಿ ಘನಸುಖದಿರಲಿ ೧
ಸತಿಯಳೊಂದಿಗೆ ಬಿಡದೆ ರತಿಕ್ರೀಡೆಲಿರಲಿ
ಸತತದಿ ತವಭಕ್ತಿ ಹಿತಾಹಿತದ ಚಿಂತನೆಯನು ೨
ಚಳಿ ಮಳೆಯೊಳು ಬಿದ್ದು ಕಳವಳಗೊಳ್ಳುತಿರಲಿ
ಹುಲಿಯ ಬಾಯೊಳು ಸಿಲ್ಕಿ ಹಲುಬಿ ಎದೆಯೊಡೆದು ೩
ಕೊಟ್ಟ ಒಡೆಯರು ಬಂದು ಕಟ್ಟಿ ಕಾದಲಿ ಜನ
ಬೆಟ್ಟ ಬೇಸರಮಾಡಿ ಅಟ್ಟಬಡಿಯುತಿರಲಿ ೪
ಬೇನೆಯೊಳ್ ಬಿದ್ದಿರಲಿ ಹಾನಿಯಾಗಲಿ ಮಾನ
ಕಾಣದೆ ಸುಳ್ಳನೆಂದು ಹೀನನುಡಿಯಲಿ ಬಿಡದೆ ೫
ಹಗೆಗಳು ಬಂದೆನ್ನ ಬಗೆ ಬಗೆ ನಿಂದಿಸಿ
ನಗೆಗೇಡು ಮಾಡೆನ್ನ ಜಗದೆಳಡಾಡುತಿರಲಿ ೬
ಅವ ಪರಿಯಲಿರಲಿ ದೇವ ಶ್ರೀರಾಮ ನಿನ್ನ
ಸಾವಿರನಾಮ ಎನ್ನ ಭಾವದಿ ನುಡೀತಿರಲಿ ೭

 

೨೬೩
ಕೊಡು ಸುಖವ ಜಗಪಾಲಯ
ಒಡೆಯ ವೈಕುಂಠದಾಲಯ ಪ
ಕೊಡು ಸುಖ ನಿಮ್ಮಯ ಅಡಿಯದಾಸರ ಸೇವೆ
ಸಡಗರ ಸಂಪದ ಎಡೆಬಿಡದೆ ಅ.ಪ
ಜಡಮತಿಯನು ಕೆಡಿಸಿ ಜಡದೇಹಮೋಹ ಬಿಡಿಸಿ
ಜಡಭವತೊಡರನು ಕಡೆಹಾಯ್ಸಿ
ಅಡಿಗಡಿಗೆ ನಿನ್ನಡಿದೃಢ ಭಕುತಿ ೧
ಸಾಗರಸಂಸಾರಭೋಗದ ಬಲುಘೋರ
ನೀಗಿಸಿ ನಿಜಜ್ಞಾನ ಪಾಲಿಸಿ
ಬೇಗನೆ ನೀಡು ತವದರುಶನವ ೨
ಮನಸಿನ ಹರಿದಾಟ ಘನಘನ ದುಶ್ಚಟ
ವನು ಪರಿಹರಿಸಿ ದಯಮಾಡು
ಮನಶಾಂತಿ ಸದುಗುಣವ ೩
ತನುತ್ರಯದಲಿ ನಿನ್ನ ನೆನಹನು ನಿಲಿಸೆನ್ನ
ಬಿನುಗು ತ್ರಿದೋಷ ದೂರಮಾಡಿ
ಜನನ ಮರಣಂಗಳ ಗೆಲಿಸಭವ ೪
ಭೂಮಿಯೊಳಧಿಕೆನಿಪ ಸ್ವಾಮಿ ಶ್ರೀರಾಮಭೂಪ
ನೇಮದಿ ಬೇಡುವೆ ವರ ನೀಡು
ಆ ಮಹಕೈವಲ್ಯ ಪದವಿಯ ೫

 

೨೬೧
ಕೊಡುಜಡಜಾಕ್ಷ ನಿಮ್ಮಡಿ ಧ್ಯಾನಮೃತ
ಕಡುದಯದೆನ್ನಯ ಜೆಹ್ವೆಗೆ ಸತತ ಪ
ದುರುಳ ದಾನವರೊದೆದ ಸುರರನುದ್ಧರಿಸಿದ
ಪರಮಪಾವನ ಪಾದಸ್ಮರಣಸಂಜೀವನ ೧
ಅತ್ರಿಮುನಿಯ ಕಾಯ್ದ ಸತ್ರಾಜಿತನ ಪೊರೆದ
ಸತ್ಯವ್ರತೆಗೆ ವರವಿತ್ತ ಅಮಿತಪುರುಷ ೨
ಭಕ್ತರಾಪತ್ತು ಕಳೆದು ಅರ್ಥಿಯಿಂ ಕಾಯ್ವ ಪ
ವಿತ್ರ ಶ್ರೀರಾಮನಾಮ ಮುಕ್ತಿ ಸಂಪದಸಿದ್ಧಿ ೩

 

೬೦೯
ಕ್ಷಣತೋರಿ ಇಲ್ಲದಂತಾಗುವ ವಿಷಮ ಮಹ
ಕನಸಿನ ಮೋಹದಿಂ ಕೆಡಬೇಡ ಮನುಜ ಪ
ಹಲವು ಜನಮದಿ ಬಿದ್ದು ತಿಳಿಯದೆ ಇಹ್ಯಪರಕೆ
ತೊಳಲುತ ಬಳಲುತ ತಿರುತಿರುಗಿ
ಗಳಿಸಿದ ನರಜನುಮ ವಿವರಿಸಿ ನೋಡದೆ
ಕಳಕೊಂಡು ಬಳಿಕಿನ್ನು ಸುಲಭವಲ್ಲೆಲೆ ಖೋಡಿ ೧
ನೀರಮೇಲಣ ಗುರುಳೆಯಂತೆ ಕಾಂಬುವ ಈ
ನರಕ ಮೂತ್ರದ ತನುಭಾಂಡವಿದು
ಅರಿಯದೆ ಮೋಹಿಸಿ ಪರಿಪರಿ ಕುಣಿಕುಣಿದು
ಪರಮ ರೌರವ ನರಕಕ್ಹೋಗ ಬೇಡೆಲೆ ಖೋಡಿ ೨
ಜವನÀದೂತರು ಬಂದು ಕವಿದುಕೊಳ್ಳಲು ಆಗ
ಕಾಯುವರಾರಿಲ್ಲ ಕೈಪಿಡಿದು
ದಿವನಿಶೆಯೆನ್ನದೆ ಭವಹರ ಶ್ರೀರಾಮ
ದೇವನ ನೆರೆನಂಬಿ ಭವಮಾಲೆ ಗೆಲಿಯೊ ೩

 

೨೬೬
ಖಗಗಮನ ಜಗದ ಜೀವನ ರಘುವಂಶೋದ್ಧಾರಣ
ನಗಧರನೆ ನಿಗಮಗೋಚರ ನಾಗಶಯನ ಮುರಮರ್ದನ ಪ
ವನಜಸಂಭವವಿನುತ ಮನುಮುನಿವಂದಿತ
ಜನಕಜೆಯ ಪ್ರಾಣಪ್ರಿಯ ವನಮಾ
ಲನೆ ಭವಮೋಚನ ಜಯವಾಮನ ಸುಖಧಾಮನೆ
ಇನಕೋಟಿಪ್ರಭಾಮಯ ವನಜಾಕ್ಷನೆ ೧
ಸತಿಯ ಪಾಷಾಣಸ್ಥಿತಿವಿಮೋಚನ ಪತಿತಪಾವನ
ಸತ್ಯಭಾಮೆರಮೆಯ ನಾಥ ನುತಕಿಂಕರ
ಹಿತಮಂದಿರ ಜಿತದಶಶಿರ ಹತಮುಪ್ಪುರ
ನತಿಹಿತ ರತಿ ಪತಿಪಿತ ಕ್ಷಿತಿಧವ ೨
ದಾಮೋದರ ಶ್ರೀರಾಮ ಭಕುತಪ್ರೇಮ ನಿಸ್ಸೀಮ
ಸ್ವಾಮಿ ನೀಲಮೇಘಶ್ಯಾಮ
ಭೂಮಿಜ ವರಸ್ಮರಣೀಕರ
ಕಾಮಿತ ವರವೀಯುವ ಸ್ಥಿರವಿಮಲಚರಿತ ಕರುಣಾಕರ ೩

 

೫೩೫
ದು:ಖರೂಪಿನ ರೊಕ್ಕ ದಕ್ಕಗೊಡದಖಿಲರನು
ತಿಕ್ಕಾಡುತಿಹ್ಯದಕಟ ಒಕ್ಕಲಿಕ್ಕಿ ಬಿಡದೆ ಪ
ಇದ್ದರುಣಗೊಡದಿಲ್ಲದಿದ್ದರು ಸುಖಕೊಡದು
ಶುದ್ಧಪದ್ಧತಿಯವರರ ಬದ್ಧರೆನಿಸುವುದು ೧
ಮರಿಯಾದೆ ತಗಿತಿಹ್ಯದು ಮರಿಯಾದೆಲಿರಗೊಡದು
ಜರಜರಕೆ ನರರಿಗೆ ಶಿರವ ಬಾಗಿಸುವುದು ೨
ಸತಿಸುತರ ತರಿಸುವುದು ಹಿತದಿಂದ ಇರಗೊಡದು
ಮತಿಗೆಡಿಸಿ ಸತತ ದುರ್ಗತಿಗೆ ಎಳಸುವುದು ೩
ವಂದನೆಯ ಕೊಡಿಸುವುದು ಕುಂದು ನಿಂದ್ಹೊರಿಸುವುದು
ಒಂದುಸ್ಥಿರಮಿಲ್ಲದರ ಅಂದಮೇನಿಹ್ಯದು ೪
ಕಲ್ಪಿಸಿದರಾರಿದನು ಅಲ್ಪಮತಿಯಿಂ ಬಯಸಿ
ಕಲ್ಪತರುಶ್ರೀರಾಮನಾಲ್ಪರಿದು ಒಲಿಸಿ ೫

 

ಶ್ರೀರಾಮದಾಸರ ಕಥನಾತ್ಮಕ ಕೃತಿಗಳು
ಗೌರಿಶಂಕರ್ವಿವಾದ
ಈ. ಗಣೇಶ ಸ್ತುತಿ

ಗಜಮುಖ ಸಲಹೆನ್ನ ದಯದಿ ಪ
ಗಜಮುಖ ಸಲಹೆನ್ನ
ತ್ರಿಜಗದಿ ಪೂಜ್ಯನೆ ನಿಜಮತಿ ಪಾಲಿಸಿ ಅ.ಪ
ವಿಘ್ನನಾಯಕ ಎನ್ನ ಅಜ್ಞಾನ ಖಂಡ್ರಿಸಿ
ವಿಘ್ನವ ತಾರದೆ ಸುಜ್ಞಾನ ಕರುಣಿಸು ೧
ಅಮರಾದಿ ವಿನುತ ಹಿಮಸುತೆಸಂಜಾತ
ವಿಮಲಸುಚರಿತನೆ ಸುಮನಸಪ್ರೀತ ೨
ವರದ ಶ್ರೀರಾಮನ ಚರಣಸ್ಮರಣೆಯೆನ್ನ
ಹೃದಯದಿ ಸ್ಥಿರಗೈ ಕರಿಮುಖ ಸ್ಮರಿಸುವೆ ೩

 

೬೭೯
ಗಜಮುಖನೆ ನಿಮ್ಮ ಪಾದ ಭಜಿಸಿ ಬೇಡುವೆನಯ್ಯ
ಭುಜಗಭೂಷಣಸುತನೆ ಸುಜನಜನವಿನುತ
ತ್ರಿಜಗಾದಿ ಪೂಜ್ಯನೆ ನಿಜಪದದಾತನೆ
ನಿಜಮತಿಯ ಕರುಣಿಸು ಸುಜನೇಶ ಶ್ರೀರಾಮಕೃಪಾಪಾತ್ರನೆ

 

೨೬೭
ಗಟ್ಟಿ ಮನವ ಕೊಡೊ ಹರಿ ಹರಿ
ಗಟ್ಟಿ ಮನವ ಕೊಡೊ ಪ
ಸೃಷ್ಟಿಕರ್ತನೆ ನಿನ್ನ ಶಿಷ್ಟ ಪಾದದೆನಗೆ
ನಿಷ್ಠೆ ಭಕ್ತಿಯ ನೀಡು ಬಿಟ್ಟು ಅಗಲದಂತೆ ಅ.ಪ
ದುರಿತದೋಷಗಳು ಕಡಿದು ಬರುವ ಕಂಟಕವನ್ನು
ಪರಹರಿಸೆನಗೆ ಅರಿವು ನಿಲಿಸಾತ್ಮನ
ಕುರಹು ತಿಳಿಸುಸಿರಿವರನೆ ಕರುಣದಿ ೧
ಚಲನವಲನಗಳನು ಕಳೆದು ನಿಲಿಸು ಜ್ಞಾನವನ್ನು
ಹೊಲೆಯ ದೇಹದ ನೆಲೆಯ ತಿಳಿಸಿ ಎನ
ಗಳುಕಿಸು ಭವದಾಸೆ ಘಳಿಲನೆ ಒಲಿದು ೨
ತಾಪತ್ರಯಗಳನು ಛೇದಿಸಿ ಪಾಪಶೇಷಗಳನ್ನು
ಲೋಪಮಾಡಿ ಇಹದ್ವ್ಯಾಪರದೊಳಗಿಂದ
ನೀ ಪೊರೆ ಭವನಿರ್ಲೇಪನೆ ದಯದಿ ೩
ಕಟ್ಟಿ ಕಾದುತ್ತಿರುವಸಂಸಾರ ಕೆಟ್ಟಬವಣೆಜನ
ಬಟ್ಟ ಬಯಲು ಮಾಡಿಕೊಟ್ಟು ನಿಜಾನಂದ
ಶಿಷ್ಟರೊಳಾಡಿಸೆನ್ನ ಸೃಷ್ಟೀಶ ದಯದಿಂ ೪
ನೀನೆ ಕರುಣದಿಂದ ಬಿಡಿಸಯ್ಯ ಯೋನಿಮಾರ್ಗ ತಂದೆ
ಧ್ಯಾನದಿರಿಸಿ ನಿನ್ನ ಮಾಣದ ಪದ ನೀಡು
ದೀನದಯಾಳು ಶ್ರೀ ಜಾನಕಿರಾಮ ೫

 

೨೬೮
ಗತಿನೀನೆ ಭಕುತಜನಕೆ
ಪತಿತಪಾವನಾನಾಥ ಬಂಧು ಪ
ಗತಿಶೂನ್ಯನಾಗಿ ಮನದಿ ಗತಿ ಏನೆಂದಳಲಿದೆನು
ಗತಿನೀನೆ ಎಂಬಜನರ್ಯಾವತ್ತು ಭಾರವಹಿಸೀದಭವ ೧
ಸತತ ನೀನೆ ಗತಿಯು ಎಂದು ನುತಿಪಭಕ್ತಿರ್ಹಿತದಬಂಧು
ಕ್ಷಿತಿಜಾತೆಯೆಂಬುದನು ಮರೆದು ವ್ಯಥೆಯ ಬಟ್ಟೆ ವ್ಯರ್ಥ ದೇವ ೨
ತಂದೆ ನೀನೆಗತಿಯೆನ್ನಲು ಬಂದಿ ಕಂಬ ಒಡೆದು ನೀನು
ಮಂದರೋದ್ಧರ ಕರುಣಾಮಂದಿರನೆಂದು ನಂಬಿದೆ ಶ್ರೀರಾಮ ೩

 

ಮಿತ್ರವರುಣರ ವೀರ್ಯದಿಂದ ಕುಂಭದಲ್ಲಿ
೨೬೯
ಗರುವವು ನಿನಗ್ಯಾಕೆಲೋ ಎಲೋ
ಜರ ನಾಚಿಕೆ ಬಾರದೇನೆಲೋ ಎಲೋ ಪ
ಮರುಳನೆ ನಿನಗೀಪರಿ ಗರುವ್ಯಾತಕೋ
ಅರಿತು ನೋಡ್ಹಿರಿಯರನೆಲೋ ಎಲೋ ಅ.ಪ
ಘನತೆಲೊಸಿಷ್ಠನೇನೆಲೋ ಎಲೋ
ಜನಕ ಭಾಗ್ಯದೊಳೆಲೋ ಎಲೋ
ಮನುಗಳಲ್ವ್ಯಾಸನೇನೆಲೋ ಎಲೋ ನೀ
ಮುನಿಗಳೋಳ್ಯುಕನೇನೆಲೋ ಎಲೋ
ಮನೆತನದಲಿ ಘನದಶರಥನೆ
ದಿನಮಣಿಯೆ ನೀ ಪ್ರಭೆಯೋಳೆಲೋ ಎಲೋ ೧
ಧುರದಿ ಕಾರ್ತರ್ವ್ಯನೇನೆಲೋ ಎಲೋ ನೀ
ನರಿವಿನೋಳ್ಪ್ರಹ್ಲಾದನೇನೆಲೋ ಎಲೋ
ವಿರಸದಿ ರಾವಣನೇನೆಲೋ ಎಲೋ ನೀ
ಸ್ಥಿರತನದ್ವಿಭೀಷಣನೇನೆಲೋ ಎಲೋ
ಹರಿ ಒಲುಮೆಲಿವರ ಅಗಸ್ತ್ಯನೇನು
ಸುರ ಗುರುವೇ ನೀ ಮತಿಯೋಳೆಲೋ ಎಲೋ ೨
ತ್ರಾಣದಿ ವಾಲಿಯೇನಲೋ ಎಲೋ ನೀ
ಜಾಣರೋಳ್ಬಲಿಯೇನೆಲೋ ಎಲೋ
ಜ್ಞಾನದಿ ವಾಲ್ಮೀಕಿಯೇನೆಲೋ ಎಲೋ ನೀ
ಗಾನದಿ ನಾರದನೇನೆಲೋ ಎಲೋ
ದಾನದೊಳಗೆ ಹರಿಶ್ಚಂದ್ರನೇನೋ ನಿ
ಧಾನದಿ ನಳನೇನೆಲೋ ಎಲೋ ೩
ಪದವಿಯೊಳ್ಧ್ರುವನೇನೆಲೋ ಎಲೋ ನೀ
ನಿಧಿಯೋಳ್ಕುಬೇರನೆಲೋ ಎಲೋ
ಮದನನೆ ಪುರುಷರೋಳೆಲೋ ಎಲೋ ವರ
ಮದದಿ ಕಶ್ಯಪನೇನೆಲೋ ಎಲೋ
ಸದಮಲ ಕುಲದಲಿ ಗೌತಮ ಮುನಿಯೇ ನೀ
ಕದನದಿ ಕುರುಪನೇನಲೋ ಎಲೋ ೪
ನುಡಿವಲಿ ನರನೇನೆಲೋ ಎಲೋ ನೀ
ಕೊಡುವಲಿ ಕರ್ಣನೇನೆಲೋ ಎಲೋ
ಇಡುವಲಿ ಧರ್ಮನೇನಲೋ ಎಲೋ ನೀ
ಕೆಡುಕಲಿ ಶಕುನಿಯೇನೆಲೋ ಎಲೋ
ಕಡುಗಲಿತನದಲಿ ಕಲಿಭೀಮನೇ
ಸಡಗರದಿಂದ್ರನೇನೆಲೋ ಎಲೋ ೫
ಯುಕ್ತಿಲಿ ದ್ರೋಣನೇನೆಲೋ ಎಲೋ ನೀ
ಶಕ್ತಿಲಿ ನಕುಲನೇನೆಲೋ ಎಲೋ
ಭಕ್ತಿಲ್ವಿದುರನೇನೆಲೋ ಎಲೋ ನೀ
ವೃತ್ತಿಲಿ ಸಹದೇನವನೇನೆಲೋ ಎಲೋ
ಚಿತ್ತಶುದ್ಧಿಯಲಿ ವೀರ ಸುಧನ್ವನೆ
ತೃಪ್ತಿಲಿ ಭೀಷ್ಮನೇನೆಲೋ ಎಲೋ ೬
ದಿಟ್ಟರೋಳ್ಗರುಡನೇ ನೆಲೋ ಎಲೋ ನೀ
ಶಿಷ್ಟರೋಳ್ಹನುಮನೇನೆಲೋ ಎಲೋ
ಸೃಷ್ಟಿಯೋಳಾರನ್ಹೋಲ್ವೆಲೋ ಎಲೋ ನೀ
ಭ್ರಷ್ಟನಾಗುವಿ ಯಾಕೆಲೋ ಎಲೋ
ಬಿಟ್ಟುಗರ್ವಮಂ ಶಿಷ್ಟಶ್ರೀರಾಮನ
ಮುಟ್ಟಿಭಜಿಸಿ ಉಳಿಯೆಲೋ ಎಲೋ ೭

 

೫೧೮
ಗಾಳಿಗಿಟ್ಟ ದೀಪಕಾಣಿರೋ ಈ ಸಂಸಾರ
ಗಾಳಿಗಿಟ್ಟ ದೀಪಕಾಣಿರೋ ಪ
ಗಾಳಿಗಿಟ್ಟ ದೀಪಕಾಣಿರೋ ಬೀಳು ಜಗದ ಬಾಳು ಎಲ್ಲ
ನೀಲಶಾಮನ ಪಾದನಂಬಿ ಕಾಲನಾಳಿನ ದಾಳಿ ಗೆಲಿಯಿರೋ ಅ.ಪ
ಸೂತ್ರಬೊಂಬೆಯಂತೆ ಕುಣಿಯುವ ಈ ದೇಹವೆಂಬ
ಪಾತ್ರೆಯೊಳಗೆ ತುಂಬಿ ತುಳುಕುವ ಆ ಗಾಳಿ ನಿಮಗೆ
ಖಾತ್ರಿಯೇನೋ ಮೂಢ ಹೇ ಜೀವ ತಿಳಕೋ ಸತ್ಯವ
ಕ್ಷೇತ್ರ ಕ್ಷೇತ್ರಿಯೆನಿಸಿ ತನ್ನ ಸೂತ್ರದಿಂದ ನಡೆಸುವಂಥ
ಸೂತ್ರಧಾರಿಯ ಭಜಿಸಿ ಭವದ ಯಾತ್ರೆ ಜಯವ ಪೊಂದಿರಯ್ಯ ೧
ಮಾಯೆಯಿಂದ ಕಲ್ಪಿಸಿರುವ ಈ ಮಾಯಕಲ್ಪ
ಮಾಯೆಯೊಳಗೆ ಲಯಿಸುತಿರುವ ಆ ಮಾಯಗಾರ
ಮಾಯದಾಟ ಆಡುತಿರುವ ತಿಳಿರೋ ನಿಜವ
ಮಾಯತುಂಬಿ ಮಾಯಬೆಳಗಿ ಮಾಯಜಗವೆನಿಸಿ ತೋರ್ಪ
ಮಾಯಮಹಿಮನ ಮರೆಯಬಿದ್ದು ಮಾಯಮೃತ್ಯು ಗೆಲ್ಲಿರಯ್ಯ ೨
ವಿಷಮಕನಸಿನಂತೆ ತೋರುವ ಈ ಇಂದ್ರಜಾಲ
ಹಸನಗೆಡಿಸಿ ನಿಮಿಷದಡಗುವ ಈ ಹೇಯ ಮಲ
ಅಸಮಸುಖಕೆ ಬೆಂಕಿಹಚ್ಚುವ ಪಾಪಕೊಂಡವ
ಅಸಮಜ್ಞಾನದಿಂದ ದಾಂಟಿ ವಸುಧೆಗಧಿಕ ಶ್ರೀರಾಮಪಾದ
ಕುಸುಮಕ್ಹೊಂದಿ ನಿರ್ಮಲೆನಿಸಿ ಎಸೆವಮೋಕ್ಷ ಪಡೆಯಿರಯ್ಯ ೩

 

೨೫
ಗುಮಾನ ಆರದು ಇನ್ನ್ಯಾಕೆ ಹರಿ
ನಾಮದ ಬಲವೊಂದಿರಲಿಕ್ಕೆ ಪ
ಸ್ವಾಮಿಮಾಧವನ ಪ್ರೇಮಪಡೆದು ಮಹ
ನಾಮಮೃತದ ಸವಿಯುತಲಿರುವರ್ಗೆ ಅ.ಪ
ರೊಚ್ಚಿಗೆದ್ದು ಮಾಡುವುದೇನೋ ಜನ
ಸ್ವಚ್ಛದಿ ಒಡಗೂಡಿದರೇನೋ
ಮೆಚ್ಚಿ ಕೊಡುವಫಲ ಇವರೇನೋ ಅತಿ
ಹುಚ್ಚ ನೆಂದರಾಗುವುದೇನೋ
ನಿಶ್ಚಲಚಿತ್ತದಿ ಅಚ್ಯುತಾನಂತನ
ಬಚ್ಚಿಟ್ಟು ಮನದೊಳು ಉಚ್ಚರಿಸುವರಿಗೆ ೧
ಸತಿಸುತರಿವರಿಂಧಿತವೇನೊ ತನ್ನ
ಪಿತಮಾತೆ ಮುನಿದರೆ ಕೊರತೇನೋ
ಅತಿಸಂಪತ್ತಿನಿಂದ ಗತಿಯೇನೋ ಈ
ಕ್ಷಿತಿಜನ ಮೆಚ್ಚಲು ಬಂತೇನೋ
ರತಿಪತಿಪಿತನಂ ಅತಿ ಗೂಢತ್ವದಿ
ಸತತದಿ ನುತಿಸುವ ಕೃತಕೃತ್ಯರಿಗೆ ೨
ಭೂಮಿಪ ಕೋಪಿಸಲಂಜುವರೆ ಈ
ತಾಮಸರಿಗೆ ತಲೆ ಬಾಗುವರೇ
ಭೂಮಿ ದೈವಗಳ ಬೇಡಿದರೆ ಮನ
ಕಾಮಿತವನ್ನು ಪೂರೈಸುವರೇ
ಕಾಮಿತಾರ್ಥನೀಗಿ ಮಹಾಮಹಿಮನ
ನೇಮದಿ ಪಠಿಪ ಶ್ರೀರಾಮದಾಸರಿಗೆ ೩

 

೫೧೯
ಗೂಳ್ಯಾಗಿ ಮೆರೆಯಣ್ಣ ಶ್ರೀಹರಿ
ಗೂಳ್ಯಾಗಿ ಮೆರೆಯಣ್ಣ ಪ
ಗೂಳ್ಯಾಗಿ ಮೆರೆಯೆಲೊ ಮೂಳಮಾನವರ
ಆಳಾಗಿ ಕೆಡದ್ಯಮದಾಳಿಯ ಗೆಲಿದು ಅ.ಪ
ಅದ್ರಿಧರನಡಿಯ ಪ್ರೇಮವೆಂಬ
ಮುದ್ರೆಯನ್ನು ಪಡೆಯೋ
ಕ್ಷುದ್ರದಾನವ ಹರರುದ್ರಾದಿನುತ ಸ
ಮುದ್ರಶಾಯಿಧ್ಯಾನ ಭದ್ರಮಾಡಿಟ್ಟುಕೊಂಡು ೧
ಕುಜನರ ಸಂಗ ತಳ್ಳೋ ಸುಸಂಗ
ಭುಜವ ಬೆಳೆಸಿಕೊಳ್ಳೋ
ಭುಜಗಶಯನನ ನಿಜಚರಣದ ಮಹ
ಭಜನೆವೆಂದೆಂಬುವ ಝಾಲ ಧರಿಸಿಕೊಂಡು ೨
ತಾಮಸವನ್ನು ನೀಗಿ ಸುಜನರ
ಪ್ರೇಮಪಾತ್ರನಾಗಿ
ಶಾಮಸುಂದರ ಶ್ರೀರಾಮನಾಮ ತ್ರಿ
ಭೂಮಿಗಧಿಕೆಂದು ನಿಸ್ಸೀಮ ಡುರುಕಿ ಹೊಡಿ ೩

 

೨೭೦
ಗೆಲವ ನೀಡೆನಗೆ ಇಹ್ಯದ
ಗೆಲವ ನೀಡೆನಗೆ ಪ
ಗೆಲವ ನೀಡಿಯೆನ್ನ ಮಲಿನಬಿಡಿಸಿ ನಿನ್ನ
ವರ ದಿವ್ಯಪಾದನಳಿನದೊಲುಮೆಯಿತ್ತು ಅ.ಪ
ಎಡರು ಆವರಿಸಿದ ಕಾಲದಿ ದೈರ್ಯವ ದಯಮಾಡೊ
ಸಡಗರಸಿರಿ ಬಂದ ಕಾಲದಿ ಶಾಂತಿ ವಿನಯ ಕೊಡೊ
ಕಡುಜವ್ವನದಲಿ ದುಡುಕನುಕೊಡದಿರು
ಪಿಡಿದು ನೇಮವನು ಬಿಡದ ಛಲವನಿತ್ತು ೧
ಧರಣಿಯ ಸುಖಕಾಗಿ ಎನ್ನಿಂ ಪುಸಿಯ ನುಡಿಸದಿರೋ
ಹರಣಪೋದರು ಪರರಿಗೆ ದೇಹಿಯೆನಿಸದಿರೋ
ಪರಮಹರುಷದಿಂದ ಹರಿಶರಣರು ಮೆಚ್ಚಿ
ಶಿರವದೂಗುವಂಥ ನಿರುತವರ್ತನೆಯಿತ್ತು ೨
ಸತತದಿ ಕರ್ಣಕ್ಕೆ ಹರಿಕಥೆ ಕೀರ್ತನೆ ಕರುಣಿಸೊ
ಪತಿತಪಾವನವೆನಿಪ ಭಜನಾನಂದವ ಪಾಲಿಸೊ
ಕ್ಷಿತಿಯೋಳಧಿಕ ಸದುಗತಿ ಮೋಕ್ಷಾಧಿ
ಪತಿ ಶ್ರೀರಾಮ ನಿಮ್ಮ ಪಾದಭಕ್ತಿಯಿತ್ತು ೩

 

ಶನಿಮಹಾತ್ಮೆ ಕತೆಯಲ್ಲಿ ಬರುವ
೬೨೩
ಗೆಲಿಯಬಲ್ಲವರಾರು ಮೂಜಗದಿ ಪಣೆಯ ಬರಹ
ಗೆಲಿಯಬಲ್ಲವರಾರು ಮೂಜಗದಿ ಪ
ಗೆಲಿಯಬಲ್ಲವರಾರು ಮೂಜಗದೊಳಗೆ
ಬಲ್ಲಿದರೆಂಬರೆಲ್ಲರು
ಜಲಜಪೀಠನ ಲಿಪಿಗೆ ಸಿಲ್ಕಿ
ತೊಳಲಿ ಬಲಳಿದರ್ಹಲವು ಪರಿಯಲಿ ಅ.ಪ
ಒಂದೇ ಧರ್ಮದಿಗೂಡಿ ತಾ ನಡೆದ ವಿಕ್ರಮನೆಂಬುವ
ಒಂದೆ ಕೊಡೆಲಿಡೀಭುವನವಾಳಿದ ಸದ್ಧರ್ಮ ತನದಿಂ
ದೊಂದೆ ಆ ಸುಮರೂಪ ಪ್ರಜರ ಪಾಲಿಸಿದ ಉದ್ದಂಡನೆನಿಸಿದ
ಒಂದು ಪಾಪಾಚರಣೆಗೈಯದೆ
ಒಂದು ಬಿಡಿದಖಿಲ್ವಿದ್ಯವರಿದ
ಒಂದು ಅರಿಯದೆ ತನ್ನ ಕೈಕಾಲು
ಒಂದೇ ಮಾತಿಗೆ ಕಳೆದುಕೊಂಡ ೧
ಎರಡುಹೊತ್ತು ಸತ್ಯಮಂ ಬಿಡದ ಸುಚಿಂತದಿರುವ
ಎರಡನೇ ಗುಣ ಸ್ವಪ್ನದರಿಯದ ನಳಚಕ್ರವರ್ತಿ
ಎರಡು ತಿಳಿಯದೆ ಜೂಜನಾಡಿದ ಮಹವಿಪಿನಕೈದಿದ
ಎರಡು ಮಕ್ಕಳ ವನದಿ ಅಗಲಿದ
ಎರಡನರಿಯದೆ ಮಲಗಿದರಸಿಯ
ಎರಡನೆಬಗೆದಡವಿಯಲಿ ಬಿಟ್ಟು
ಎರಡನೇರಾಯನಶ್ವ ತಿರುವಿದ ೨
ಮೂರು ಜಗ ಅರೆಲವದಿ ತಿರುಗುವ ದಿನದಿನವುಬಿಡದೆ
ಮೂರುಮೂರ್ತಿದರ್ಶನವ ಪಡೆಯುವ ಆ ಪರಮಪಾವನ
ಮೂರು ಕಾಲದ ಜ್ಞಾನ ಬಲ್ಲವ ನಾರದನೆಂಬುವ
ಮೂರುಮಂದಿ ಶಕ್ತಿಯರಿಗೆ
ಮೂರು ಬಟ್ಟೆಯ ಸುದ್ದಿ ಪೇಳಿ
ಮೂರು ಮೂರ್ತಿಗಳುಪಾಯನರಿಯದೆ
ಮೂರಿಪ್ಪತ್ತು ಮಕ್ಕಳ್ಹಡದ ೩
ನಾಲ್ಕುಯುಗ ಪ್ರಮಾಣಗಳ ತಿಳಿದ ಬ್ರಹ್ಮನುಬಿಡದೆ
ನಾಲ್ಕುವೇದಗಳ್ಹಸ್ತದೋಳ್ಪಿಡಿದು ವಿಧವಿಧದಿ ಎಂಭತ್ತು
ನಾಲ್ಕುಲಕ್ಷಜೀವರಾಶಿಗಳ ಬರಿದೆ ಉತ್ಪತ್ತಿಗೈದು
ನಾಲ್ಕುಭುಜನ ಸುರನೆಂದೆನಿಸಿ
ನಾಲ್ಕು ವಿಧ ಮತಿವಂತನಾದವ
ನಾಲ್ಕು ಒಂದು ಮುಖ ಮೊದಲಿಗಿರ್ದನು
ನಾಲ್ಕೆ ಮುಖದವನೆನಿಸಿಕೊಂಡು ೪
ಐದುಬಾಣನಪಿತನಸಖನಾದ ಉರಿನೇತ್ರ ಬಿಟ್ಟು
ಐದುಬಾಣನ ಭಸ್ಮ ಮಾಡಿದ ಅಪಾರ ಶಂಭೋ
ಐದು ಒಂದು ಮುಖದವನ ತಾ ಪಡೆದ ಹರಿಕರುಣದಿಂದ
ಐದು ಒಂದು ಮುಖದವನಿಂ ತಾರಕ
ನೈದುವಂದುದಲ್ಲೆ ಸೀಳಿಸಿ
ದೈದುತತ್ವಕಾಲಯೆನಿಸಿದ
ಐದುಮುಖಸ್ಮಶಾನ ಸೇರಿದ ೫
ಆರು ಎರಡೈಶ್ವರ್ಯಗಳಲೊಳ ವೈಕುಂಠನಾಯಕ
ಆರು ಎಂಟುಲೋಕಗಳ ಪರಿಪಾಲ ಬಿಡದೇಳು ಇಪ್ಪತ್ತು
ಆರುಕೋಟಿ ಅಮರಾದಿಗಳ ಮೂಲ ಮಹಮಂತ್ರ ಜಾಲ
ಆರುನಾಲ್ಕು ಭುಜನ ಮೊರೆ ಕೇ
ಳಾರುನಾಲ್ಕು ಶಿರನ ವಧಿಸಿದ
ಆರುನಾಲ್ಕರಗಧಿಕನೆನಿಸಿ
ಆರುನಾಲ್ಕವತಾರ ತಾಳಿದ ೬
ಆರಿಗಾದರು ಬಿಡದೀ ಬರವಣಿಗೆ ಬಿದ್ದಂತೆ ಫಲಿಸಿತು
ತೀರಲಿಲ್ಲದಂತಂಥ ಹಿರಿಯರಿಗೆ ಸಾಧ್ಯದಪ್ಪಿ ಮಹ
ಘೋರ ಬಡಿಸಿತು ಸರ್ವ ಶಕ್ತರಿಗೆ ಬ್ರಹ್ಮನಸುಡಗಿ
ವಾರಿಜನು ಬರೆದ ಬರೆಹ
ಮೀರಿ ನಡೆದೇನೆಂದರಿನ್ನು
ಸಾರಮೋಕ್ಷಕ್ಕಧಿಪ ನಮ್ಮ
ಧೀರಪ್ರಭು ಶ್ರೀರಾಮ ಬಲ್ಲ ೭

 

೨೯
ಗೋವಿಂದ ನಮೋ ಗೋವಿಂದ ಪ
ಮಂದ ಮನವೇ ನೀನು
ಅಂದು ನೋಡೆಲೊ ಒಮ್ಮೆ ಅ.ಪ
ತಂದೆ ಗೋವಿಂದ ಎನ್ನೆಲೊ ಮನವೆ
ಬಂದ ಬಂಧನವೆಲ್ಲವ ಕಳೆವ
ಕುಂದುನಿಂದೆಗಳಿಲ್ಲದೆ ಕಾಯ್ವ ಹಿಂದೆ
ಮುಂದೆ ತಾನೆ ನಿಂತಿರುವ ಆಹ
ಸಿಂಧುಶಯನ ತನ್ನನ್ಹೊಂದಿ ಭಜಿಪರನ್ನು
ಕಂದರೆನ್ನುತಾನಂದದಿ ಸಲಹುವ ೧
ಎಲ್ಲಿ ಕರೆದರಲ್ಲೆಬರುವ ಸೊಲ್ಲು
ಸೊಲ್ಲಿನೊಳಗೇ ನಿಂತಿರುವ
ಅಲ್ಲಿಇಲ್ಲಿ ಎಂದೆಂಬ ಹೇವ ಇಲ್ಲ
ಮಲ್ಲಮರ್ದನ (ಉಂ) ಚಲುವ ಆಹ
ಪುಲ್ಲನಯನ ತನ್ನ ನಿಲ್ಲದೆ ಭಜಿಪರ
ಲಲ್ಲೆನಿಂತುಕೊಂಡುಲ್ಲಾಸದಿ ಕಾಯುವ ೨
ಇವರವರೆಂಬುವ ಭಾವ ದೇವ
ಮಾವ ಮರ್ದನಗಿಲ್ಲೆಲವೋ
ದಿವ್ಯಭಾವ ಭಕ್ತರ ಪಿಡಿದು ಕರೆವ
ಕಾವ ಜೀವದಿ ಬಿಡಿದನುದಿನವು ಆಹ
ಜಾವಜಾವಕೆ ಶ್ರೀರಾಮನ ಚರಣವ
ಭಾವಿಸಿ ಭಜಿಪರ ಭಾವದೋಳ್ ಬೆರೆತಿರುವ ೩

 

ವಾಮನಾವತಾರದಲ್ಲಿ ವಿಷ್ಣು ಭೂಮಿ
೨೮
ಗೋವಿಂದ ನಮೋ ಗೋವಿಂದ ಹರಿ
ಗೋವಿಂದಂ ನಮೋ ಗೋವಿಂದಪ
ಗೋವಿಂದಂ ನಮೋ ಗೋವಿಂದೆಂದೊಡೆ
ಬಂದ ಜರಾಮರಣ್ಹರಿದುಪೋಪುದು ಅ.ಪ
ಶರಧಿ ಮುಳುಗಿದ ಗೋವಿಂದಂ ನಮೋ
ಶರಧಿ ಈಸಿದ ಗೋವಿಂದ
ಕರಿಕೆಯನು ಮೆದ್ದ ಗೋವಿಂದಂ ನಮೋ
ನರಮೃಗಾಕಾರ ಗೋವಿಂದ
ಪರಶು ಧರಿಸಿದ ಗೋವಿಂದಂ ನಮೋ
ಧರೆಯ ಬೇಡಿದ ಗೋವಿಂದ
ಶರಧಿ ಹೂಳಿದ ಗಿರಿಯನೆತ್ತಿದ
ಪುರವ ಭಂಗಿಸಿದ ತುರಗವೇರಿದ ೧
ಸಿಂಧು ಕಲಕಿದ ಗೋವಿಂದಂ ನಮೋ
ಸಿಂಧುಮಂದಿರ ಗೋವಿಂದ
ಮಂದರೋದ್ಧಾರ ಗೋವಿಂದಂ ನಮೋ
ಇಂದಿರೆಯ ಪ್ರಿಯ ಗೋವಿಂದ
ಬಂದ ಭುವನಕೆ ಗೋವಿಂದಂ ನಮೋ
ನಿಂದ ಗಿರಿಯಲಿ ಗೋವಿಂದ
ಬಂದ ಭಕುತರ ಬಂಧ ಕಳೆದಾ
ನಂದ ನೀಡುತ ಚೆಂದದಾಳುವ ೨
ದನುಜ ಸಂಹರ ಗೋವಿಂದಂ ನಮೋ
ಚಿನುಮಯಾತ್ಮಕ ಗೋವಿಂದ
ಮ(ನುಮುನಿಯಾ) ನಂದಗೋವಿಂದಂ ನಮೋ
ಚಿನುಮಯಾತ್ಮಕ ಗೋವಿಂದ
ವಿನಮಿತಾಗಮ ಗೋವಿಂದಂ ನಮೋ
ಜನಕಜೆಯ ವರ ಗೋವಿಂದ
ವನಜಸಂಭವವಿನುತ ವಿಶ್ವೇಶ
ಜನಕ ಜಾಹ್ನವೀ ಸುಜನ ಶುಭಕರ ೩
ನೀಲಶ್ಯಾಮ ಹರಿ ಗೋವಿಂದಂ ನಮೋ
ಲೋಲಗಾನ ಸಿರಿಗೋವಿಂದ
ಕಾಲಕುಜ(ನ) ಕುಲ ಗೋವಿಂದಂ ನಮೋ
ಪಾಲಮೂಲೋಕ ಗೋವಿಂದ
ಮಾಲಕೌಸ್ತುಭ ಗೋವಿಂದಂ ನಮೋ
ಮೇಲು ಆಲಯ ಗೋವಿಂದ
ಕಾಳಿಮರ್ದ್ನ ಕಾಲಭಯಹರ
ಲೀಲಸಮ ವಿಶಾಲಮಹಿಮ ೪
ಸತ್ಯ ಸಂಕಲ್ಪ ಗೋವಿಂದಂ ನಮೋ
ಸತ್ಯ ಸನ್ನುತ ಗೋವಿಂದ
ಭಕ್ತವತ್ಸಲ ಗೋವಿಂದಂ ನಮೋ
ನಿತ್ಯ ನಿರ್ಮಲ ಗೋವಿಂದ
ಚಿತ್ತಜನಪಿತ ಗೋವಿಂದಂ ನಮೋ
ಮೃತ್ಯು ಸಂಹರ ಗೋವಿಂದ
ಭಕ್ತಜನರಾಪತ್ತು ಪರಿಹರ
ಮುಕ್ತಿದಾಯಕ ಕರ್ತು ಶ್ರೀರಾಮ ೫

 

೧೩೪
ಗೌರೀಶ ಮೃತ್ಯುಂಜಯನುತ ಪಾಲಯ
ಗೌರೀಶ ಮೃತ್ಯುಂಜಯ ಪ
ಸುಮಶರನಾಶ ಸುಮನರಪೋಷ
ಶಮೆಶಾಂತಿದಯಭೂತೇಶ ೧
ಶಂಕರ ಶಶಿಧರ ಕಿಂಕರ ಪ್ರಿಯಕರ
ಶಂಕರಿಮನೋಹರ ೨
ಉಮೆ ಪ್ರಿಯನಾಥ ಅಮಿತವರದಾತ
ಅಮರಾದಿಸುರಾರ್ಚಿತ ೩
ವರಮಹಲಿಂಗ ಪರಿಭವಭಂಗ
ಪರತರ ಪಾವನಾಂಗ ೪
ಗಜಚರ್ಮಾಂಬರ ಭುಜಗಾಲಂಕಾರ
ಸುಜನಾತ್ಮ ಸುಖಂಕರ ೫
ಪುರತ್ರಯ ಸಂಹರ ಪರಿಪಕ್ವರಾಧಾರ
ನಿರಂಜನ ನಿರಾಕಾರ ೬
ಕೆಂಡನಯನ ರುಂಡಮಾಲನೆ
ದಂಡಧರನ ಹರಣ ೭
ಬೇಡುವೆನಭವ ಕಾಡದೆ ಪರಶಿವ
ನೀಡು ಎನ್ನಗೆ ವರವ ೮
ಭೂಮಿತ್ರಯಕೆ ಘನಸ್ವಾಮಿ ಶ್ರೀರಾಮನ
ನಾಮ ಪಾಲಿಸು ಪಾವನ ೯

 

೨೭೧
ಘನತಾಪ ಘನತಾಪ ಘನತಾಪ ಸಂಸಾರ
ನೆನೆಸಲಳವಲ್ಲದನು ಕನಸಿನೋಳಭವ ಪ
ಕ್ಷಣಹೊತ್ತು ಮನಸನ್ನು ಸನುಮತಯಿರಗೊಡದು
ಗಣನೆಯಿಲ್ಲದ ತಾಪವನೆ ಒದಗಿಪುದಭವ ಅ.ಪ
ವನಿತೆಯರ ತಿನಿಸು ತನುಜ ಅನುಜರ ಮುನಿಸು
ಜನರನೊಲಿಸುವುದಿನಿಸು ಘನತಾಪ ಅಭವ
ತನುರೋಗ ಮನರೋಗ ಧನದ ವಿಯೋಗ
ಇನಿತೆಲ್ಲವೊಂದಾಗಿ ಘನಬಾಧಿಸುವುವಭವ ೧
ಕೊಟ್ಟ ಒಡೆಯರು ಬಂದು ನಿಷ್ಠೂರಾಡುತ ಬಲು
ಕಟ್ಟಿಕಾದುವ ಮಹಕೆಟ್ಟತಾಪಭವ
ಹೊಟ್ಟೆಬಟ್ಟೆಯ ತಾಪ ಕೊಟ್ಟವರ್ಹಂಗಿನ ತಾಪ
ಹುಟ್ಟುಸಾವಿನ ಅತಿ ಕಷ್ಟತಾಪಭವ ೨
ಮನುಜರೂಪದ ಮಹ ಘನತೆಯನು ಕೆಡಿಸಿ
ಕ್ಷಣದಿ ತೋರೆರಗುವ ಕನಿಕಷ್ಟ ಅಭವ
ಇನಿತೀ ಸಂಸಾರತಾಪ ಕನಿಕರದಿಂ ಕಡೆಹಾಯ್ಸಿ
ಮನಕೆ ಜಯನೀಡಿ ಕಾಯೋ ಎನ್ನಯ್ಯ ಶ್ರೀರಾಮ ೩

 

೨೭೨
ಘೋರವಿದು ಮಹ ಘೋರವಿದು ಸಂ
ಸಾರದ ನೆಲೆ ದಾರಿಗರಿತಿಹ್ಯದು ಪ
ತೋರದೆ ಮೂಜಗ ಹಾರೈಸಿದನು ದು:ಖ
ವಾರಿಧಿಯೊಳು ಘೋರ ಬಡುತಿಹ್ಯದು ಅ.ಪ
ಪರಮೇಷ್ಠಿ ಶಿರವಂದು ತೆಗೆಸಿಹ್ಯದು
ಮುರಹರನನು ಸುಡುಗಾಡು ಹೊಗಿಸಿಹ್ಯದು
ಸಿರಿವರ ಹರಿಯನು ಪರಿಪರಿ ಜನುಮವ
ಧರಿಸುತ ಧರೆಮೇಲೆಳೆಸಿಹ್ಯದು ೧
ಚಂದ್ರಗೆ ಕುಂದುರೋಗ್ಹಚ್ಚಿಹ್ಯದೋ ಬಲು
ಮೇಂದ್ರ ಸೂರ್ಯನ ಪೊಲ್ಲ ಕಳಚಿಹ್ಯದು
ಇಂದ್ರನ ಅಂಗಾಂಗ ಸಂದು ಬಿಡದಲತಿ
ರಂಧ್ರಗೊಳಿಸಿ ಹೇಯ ಸುರಿವುವುದು ೨
ಕಾಲನಿಗೆ ಕಾಲ ತಂದಿಹ್ಯದು ಪಾ
ತಾಳಕೆ ಬಲಿಯನು ಇಳಿಸಿಹ್ಯದು
ವಾಲಿಯ ನಿಗ್ರಹ ಮಾಡಿಸಿ ಲಂಕೆಯ
ಪಾಲದಶಕಂಠನ ವಧಿಸಿಹ್ಯದು ೩
ಪರಮ ಪಾಂಡವರನ್ವನಕೆಳಸಿಹ್ಯದು ಆ
ಕುರುಪನ ಕುಲನಾಶ ಮಾಡಿಹ್ಯದು
ಪರಮ ತ್ರಿಪುರ ಶಿರಸೆರೆ ಸೂರೆಮಾಡಿಸಿ
ಸುರನಿಕರರಿಗ್ಹಂಚಿಕೊಟ್ಟಹ್ಯದೊ ೪
ಹಿರಿಯರನೀ ಪಾಡ ಪಡಿಸಿಹ್ಯದು ಈ
ಮರುಳ ನರರ ಪಾಡೇನಿಹ್ಯದು
ಗುರುವರ ಶ್ರೀರಾಮನೋರ್ವನ ಹೊರತಾಗಿ
ಸರುವ ಜಗವ ಗೋಳಾಡಿಸಿಹ್ಯದು ೫

 

೫೨೦
ಚಂದಮ್ಮ ಬಲು ಚೆಂದಮ್ಮ ಗೋ
ವಿಂದನ ದಾಸರ ಸಂಗಮ್ಮ ಪ
ಇಂದಿರೇಶನ ಪಾದ ಪದ್ಮಮ್ಮ ನೀ
ನ್ಹೊಂದಿ ಭಜಿಸು ಸದಾನಂದಮ್ಮ ಅ.ಪ
ಸಂದೇಹ ಕಡಿಯಂತರಂಗಮ್ಮ ಮು
ಕ್ಕುಂದನತಿಳಿ ನಿಜಲಿಂಗಮ್ಮ
ನಿಂದೆ ಬಳಸದಿರು ತುಂಗಮ್ಮ ಭವ
ಬಂಧವು ನಿನಗಿಲ್ಲ ಗಂಗಮ್ಮ ೧
ಸಾಧಿಸು ನಿಜದೃಢ ತುಳಸಮ್ಮ ಸಂ
ಪಾದಿಸು ನಿಜಜ್ಞಾನ ಶರಣಮ್ಮ
ಸಾಧುಜನಕೆ ಬಾಗು ಸುಶೀಲಮ್ಮ ಪರ
ಸಾಧನೆ ನಿನ್ನಗೆ ಸರಸಮ್ಮ೨
ಕಾಮಿತಕಳಿ ಭಾಗ್ಯಲಕ್ಷಮ್ಮ ನೀ
ತಾಮಸತೊಳಿ ಮನ ಸೀತಮ್ಮ
ಸ್ವಾಮಿಧ್ಯಾನಪಿಡಿ ಸತ್ಯಮ್ಮ ಶ್ರೀ
ರಾಮನ ನಂಬುನೀ ಮುಕ್ತ್ಯಮ್ಮ ೩

 

೩೦
ಚರಣದಾಸರ ಸದುಹೃದಯ ನಿವಾಸನೆ ಸಿರಿರಾಮ
ಪರಮ ಪಾವನೆ ವರಜಾಹ್ನವೀ ಜನಕನೆ ಸಿರಿರಾಮ ಪ
ಶರಣಜನರ ಮೇಲ್ನುಡಿಯೋಳ್ಸಂಚಾರನೆ ಸಿರಿರಾಮ
ನೆರೆನಂಬಿ ಭಜಿಪರ ಭವಮಲಹರಣನೆ ಸಿರಿರಾಮ
ಕರುಣದೊದೆದು ಯುವತಿಕುಲವನುದ್ಧರಿಸದನೆ ಸಿರಿರಾಮ
ವರದ ವಾಸುಕಿಶಾಯಿ ಜಗದೇಕ ಬಂಧುವೇ ಸಿರಿರಾಮ ೧
ಧುರಧೀರವಾಲಿಯ ಗರುವನಿವಾರನೆ ಸಿರಿರಾಮ
ಮರೆಬಿದ್ದ ಸುಗ್ರೀವನ ದು:ಖಪರಿಹಾರನೆ ಸಿರಿರಾಮ
ಪರಮಭಕ್ತ್ಹನುಮಗೆ ಕರವಶನಾದನೆ ಸಿರಿರಾಮ
ಶರಣುಬಂದಸುರಗೆ ಸ್ಥಿರಪಟ್ಟವಿತ್ತನೆ ಸಿರಿರಾಮ ೨
ಶರಧಿಮಥನಮಾಡಿ ಸುರರ ರಕ್ಷಸಿದನೆ ಸಿರಿರಾಮ
ಹರನಕೊರಳ ಉರಿ ಕರುಣದ್ಹಾರಿಸಿದನೆ ಸಿರಿರಾಮ
ವರಗಿರಿನಂದನೆಮನ ಸೂರೆಗೈದನೆ ಸಿರಿರಾಮ
ಸರುವದೇವರದೇವ ಅದ್ಭುತಮಹಿಮನೆ ಸಿರಿರಾಮ ೩
ಕರಿಯ ರಕ್ಷಣೆಗಾಗಿ ಕಾಸಾರಕ್ಕಿಳಿದನೆ ಸಿರಿರಾಮ
ತರುಣಿಮೈಗಾವಗೆ ಚರನಾಗಿ ನಿಂತನೆ ಸಿರಿರಾಮ
ಚರಣದಾಸರಮನೆ ತುರಗವ ಕಾಯ್ದನೆ ಸಿರಿರಾಮ
ಪರಮಭಾಗವತರನರೆಲವ ಬಿಟ್ಟಿರನೆ ಸಿರಿರಾಮ ೪
ಅನುಪಮ ವೇದಗಳಗಣಿತಕ್ಕೆ ಮೀರಿದನೆ ಸಿರಿರಾಮ
ಸನಕಸನಂದಾದಿ ಮನುಮುನಿ ವಿನಮಿತನೆ ಸಿರಿರಾಮ
ವನರುಹ ಬ್ರಹ್ಮಾಂಡ ಬಲುದರದಿಟ್ಟಾಳ್ವನೆ ಸಿರಿರಾಮ
ಮನಮುಟ್ಟಿ ಭಜಿಪರ ಘನಮುಕ್ತಿ ಸಾಧ್ಯನೆ ಸಿರಿರಾಮ ೫

 

೨೭೩
ಚಿಂತೆ ಪರಿಹರ ಮಾಡೋ ಎನ್ನಯ್ಯ
ಸಜ್ಜನರ ಪ್ರಿಯ ಪ
ಚಿಂತೆ ಪರಿಹರ ಮಾಡೊ ಎನ್ನಯ
ಚಿಂತೆ ಪರಿಹರ ಮಾಡಿ ಎನ್ನ
ಅಂತರಂಗದಿ ನಿಮ್ಮ ನಿರ್ಮ
ಲಂತ:ಕರುಣದ ಚರಣವಿರಿಸಿ
ಸಂತಸದಿ ಪೊರೆ ಸಂತರೊಡೆಯ ಅ.ಪ
ನಿಮ್ಮ ಪಾದವ ನಂಬಿಕೊಂಡಿರುವ ಈ ಬಡವನನ್ನು
ಕಮ್ಮಿ ದೃಷ್ಟಿಯಿಂ ನೋಡದಿರು ದೇವ ನಿನ್ನ ಬಿಟ್ಟೆನ
ಗ್ಹಿಮ್ಮತನ್ಯರದಿಲ್ಲ ಜಗಜೀವ ಭಜಕಜನ ಕಾವ
ನಿಮ್ಮ ಸೂತ್ರದಿ ಕಾಂಬ ನಿಖಿಲ ಬ್ರಹ್ಮಾಂಡ
ಮೂಡಿಮುಳುಗುತಿಹ್ಯದೈ
ಸಮ್ಮತದಿ ಸಲಹೆನ್ನ ದಯಾನಿಧಿ ಬ್ರಹ್ಮಬ್ರಹ್ಮಾದಿಗಳ ವಂದ್ಯನೇ ೧
ಆರುಮೂರರಿಕ್ಕಟ್ಟಿನೊಳು ಗೆಲಿಸೋ ಘನಪಿಂಡಾಕಾರ
ಆರು ಎರಡರ ಸಂಗ ತಪ್ಪಿಸೋ ಮಹಬಂಧ ಬಡಿಪ
ಘೋರ ಸಪ್ತಶರಧಿ ದಾಂಟಿಸೋ ತವದಾಸನೆನಿಸೊ
ಗಾರುಮಾಡಿ ಕೊಲ್ಲುತಿರ್ಪ ದೂರಮಾಡೆನ್ನ ದುರಿತದುರ್ಗುಣ
ಸೇರಿಸು ತ್ವರ ದಾಸಸಂಗದಿ ನಾರಸಿಂಹ ನಾರದವಿನುತ ೨
ಪಾಮರತ್ವ ತಾಮಸವ ಬಿಡಿಸೋ ವಿಷಯಲಂಪಟ
ಪ್ರೇಮ ಮೋಹ ಕಾಮ ಖಂಡ್ರಿಸೋ ಹರಲಿರುಳು ನಿಮ್ಮ
ಭಜನಾನಂದ ಕರುಣಿಸೊ ಸುಚಿಂತದಿರಿಸೊ
ಕಾಮಿತಜನಕಾಮಪೂರಿತ ನಾಮರೂಪರಹಿತಮಹಿಮ
ಸ್ವಾಮಿ ಅಮಿತಲೀಲ ವರ ಶ್ರೀರಾಮ ಪ್ರಭು ತ್ರಿಜಗದ ಮೋಹ ೩

 

೨೭೪
ಚಿಂತೆಮಾಡಲಿ ಬೇಡೋ ಮನವೇ
ಭ್ರಾಂತಿಪಡಲಿ ಬೇಡೋ ಪ
ಚಿಂತೆಭ್ರಾಂತಿಗಳೆಲ್ಲ ಕಂತುಜನಕಗೆಂದು
ಸಂತಸವಹಿಸು ನಿನಗೆಲ್ಲಿದೆ ಕೇಡೋ ಅ.ಪ
ಮಾನವಮಾನವೆಲ್ಲ ಮನವೆ
ಹೀನಭಾಗ್ಯ ಸಕಲ
ಧ್ಯಾನದಾಯಕ ಶ್ರೀವೇಣುಗೋಪಾಲಗೆಂದು
ಆನಂದ ತಾಳುಮತ್ತ್ಹಾಳು ನಿನಗಿಲ್ಲೋ ೧
ದು:ಖ ಸಂಕಟವೆಲ್ಲ ಮನವೆ
ಮಿಕ್ಕ ಕಂಟಕವೆಲ್ಲ
ಅಖಿಲವ್ಯಾಪಕ ಶ್ರೀಭಕುತಿದಾಯಕಗೆಂದು
ಸುಖವಹೊಂದು ಮತ್ತು ದು:ಖ ನಿನಗಿಲ್ಲೋ ೨
ಕುಂದು ನಿಂದೆಯೆಲ್ಲ ಮನವೆ
ಬಂದ ತಾಪ ನಿಖಿಲ
ಸಿಂಧುನಿಲಯ ನಮ್ಮ ತಂದೆ ಶ್ರೀರಾಮನಿಗೆಂದು
ನಂಬು ಭವಬಂಧ ನಿನಗಿಲ್ಲೋ ೩

 

೨೭೫
ಚಿಂತೆಯ ನೀಗಿದೆನೊ ಸಂತಸವಹಿಸಿದೆ
ಕಂತುಪಿತ ನಿಮ್ಮ ಮಹಿಮಾಂತರಂಗದಿ ಅರಿತು ಪ
ಭಾರ ನಿನ್ನಂದೆಂಬೊ ತರಳ ಪ್ರಹ್ಲಾದನ
ಘೋರಸಂಕಟ ನಿವಾರಿಸಿದನ ಪಾದ
ವಾರಿಜ ನಂಬಿದೆ ಆರಂಜಿಕೇನೆಂದು ೧
ಕುರುಪನ ಸಭೆಯೊಳು ತರುಣೀಮಣಿಯು ತಾ
ಮೊರೆಯಿಟ್ಟು ಸ್ಮರಿಸಲು ಕರುಣದಿಂಬಂದನ
ಚರಣಭಜಿಸಲಿನ್ನು ದುರಿತವ್ಯಾತದರೆಂದು ೨
ಶಂಖಪಾಣಿಯಪಾದಪಂಕಜ ಧ್ಯಾನ ನಿ:
ಶಂಕೆಯಿಂ ಗೈವರ ಸಂಕಟಹರ ನಿಜ
ವೆಂಕಟ ಶ್ರೀರಾಮ ಕಿಂಕರರೊಡೆಯನೆಂದು ೩

 

೨೮೧
ಜಂಜಾಟ ತೊಲಗಿಸೈ ದುಷ್ಟಸಂಸಾರದ ಪ
ಜಂಜಾಟ ತೊಲಗಿಸೈ
ಕಂಜನಾಭನೆ ಕರಿರಾಜವರದ ಹರಿ ಅ.ಪ
ಚಲಿಸುವ ಎನ್ನ ಮನದ್ಹಲುಬಾಟ ಕಡೆಹಾಯ್ಸಿ
ನಿಲಿಸು ತವಚರಣದಿ ಚಲಿಸದಂತನುದಿನ ೧
ಐಹಿಕಸುಖ ಮೋಹಿಸಿ ಬಹುಭ್ರಾಂತಿಯಿಂ ಬಳಲು
ತಿಹ್ಯ ಎನ್ನ ಚಿತ್ತಕ್ಕೆ ಸಹನಶೀಲತೆ ನೀಡಿ೨
ನೀನೆಗತಿ ಎನಗಿನ್ನು ನಾನಾದೈವನರಿಯೆ
ಜ್ಞಾನದಿಂ ಪಾಲಿಸೆನ್ನ ಪ್ರಾಣಪತಿ ಶ್ರೀರಾಮ ೩

 

೩೧
ಜಗದಯ್ಯ ನಿನ್ನಪಾದ ಜಗದಖಿಲ ಜನರು
ಬಗೆ ತಿಳಿಯಲಾರರು ಸುಗುಣಿರೊಂದಲ್ಲದೆ ಪ
ಜಾರೆ ಸೇರುವಳೆ ಸುವಿಚ್ಯಾರದ ಮಾತುಗಳ
ಜಾರ ಸೇರುವನೆ ಜ್ಞಾನಸಾರ ಬೋಧಾಮೃತವ
ಚೋರ ಸೇರುವನೆ ಇನತೋರಿಸಲು ಕಿರಣಗಳ
ಕ್ಷೀರಮಂ ಸೇರುವನೆ ಸುರಪಾನಿಗೀಯಲು ೧
ವಿಧವೆಗೆ ಸೇರುವುದೆ ಒದಗುವವರ ಬಸಿರು
ಮುದುಕನಿಗೆ ಸೇರುವುದೆ ಹದದ್ಹೆಣ್ಣಿನೊನಪು
ಅಧಮರಿಗೆ ಸೇರುವುದೆ ಸದಮಲಿನ ಕಥಾಶ್ರವಣ
ಬುಧಜನಕೆ ಸೇರುವುದೆ ಕದನಿಕರ ನೆರೆಯು ೨
ಜೀನನಿಗೆ ಸೇರುವುದೆ ದಾನಿಗಳ ಗಾಂಭೀರ್ಯ
ಹೀನನಿಗೆ ಸೇರುವುದೆ ಜಾಣರೊಡನುಡಿಯು
ನಾನಾಜನ್ಮದ ಸುಕೃತ ಕಾಣದ ಪಾಪಿಗೆ ಮಮ
ಪ್ರಾಣ ಶ್ರೀರಾಮ ನಿನ್ನ ಧ್ಯಾನ ಸೇರುವುದೆ ೩

 

ಬಾಲ್ಯ, ಯೌವನ, ವೃದ್ಧಾಪ್ಯ
೧೩೫
ಜಗದಯ್ಯಾ ಜಗದಯ್ಯಾ
ಜಗತ್ರಾಣ ಜಗಜೀವನ ಪಾವನ ಪ
ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು
ನೋಯಲಾರದೆ ಬಲು ಬಾಯಬಿಡುತ ನಿಮ್ಮ
ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ
ಸೇವಕಜನರಯ್ಯಾ ಕಾಯೋ ಎನ್ನಾರ್ಯ ೧
ಪರಿಭವಶರಧೆಂಬ ಉರಿವಕಿಚ್ಚಿನೊಳು
ಪರಿಪರಿಮರುಗುತ ಕರುಣಾಂಬುಧಿ ನಿನ್ನ
ಅರಿವಿಟ್ಟರಿದೆ ವರ ಪರಮ ಬಿರುದುಗಳು
ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ ೨
ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು
ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ
ಶಿಶುವಿನ ತವಪಾದ ಅಸಮದಾಸಜನ
ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ೩
ಭವಭವದಲಿ ಬೇಡುವೆನಭವನೆ ಬಾಗಿ
ದಯಪಾಲಿಸಿ ಸ್ಥಿರಜ್ಞಾನಸುಪದವ
ಭವಗುಣಹಿಂಗಿಸಿ ದಿವನಿಶೆನ್ನುವುದಕೆ
ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ ೪
ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ
ಮೂರರ ಮೋಹನಿವಾರಿಸು ದೇವ
ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ
ಪಾರಮೋಕ್ಷಪದ ಧೀರ ಶ್ರೀರಾಮಯ್ಯ ೫

 

೨೭೬
ಜಗದಾದಿ ನಮಿತ ಆಗಮಾತೀತ
ಖಗವರಗಮಿತ ಭಾಗವತಪ್ರೀತ ಸುಚರಿತ ಪ
ಭವ ಬಾಧ್ಹರಣ ಜನನಮರಣ
ಭಯನಿವಾರಣ ದಯಸುಸದನ
ಭುವಿಜಾರಮಣ ಭಕ್ತೋದ್ಧಾರಣ
ವಿಮಲಜ್ಞಾನ ಕರುಣಿಸು ೧
ಅಮಿತಲೀಲ ಕುಜನಕಾಲ
ರಮೆಯಲೋಲ ಶರಣುಶೀಲ
ಕೌಸ್ತುಭಮಾಲ ಸುಮನಪಾಲ ಎನ್ನ
ಭ್ರಮಜಾಲ ಛೇದಿಸು ೨
ಭೃತ್ಯಲಲಾಮ ಶಕ್ತರಕಾಮ
ಪೂರ್ತಿನಿಸ್ಸೀಮ ಕರ್ತುಶ್ರೀಭೌಮ
ನಿತ್ಯನಿರಾಮ ಜಗದೋದ್ದಾಮ
ಮುಕ್ತಿಪದ ಸೋಮ ಶ್ರೀರಾಮ ೩

 

ಸಪ್ತಶರದಿ
೨೭೭
ಜಗದೀಶ ಜಗದೊಡೆಯ ಜಗಮೋಹನ
ಬಗೆ ಕೇಳು ಭಜನ ಭಯದೂರಣ ಪ
ಅಧಮ ಸಂಸಾರದ ನದಿಯದಾಂಟಿಸಿ ಎನಗೆ
ಸದಮಲದ ಪದವಿಯನು ಮುದದೀಯೋದೇವ ೧
ಮರವೆಯಿಂ ಗೈದಂಥ ದುರಿತಪರ್ವತ ತರಿದು
ಪರಮನುಪಮಸುಜ್ಞಾನವನು ಕರುಣಿಸೈ ಹರಿಯೆ ೨
ಭಕ್ತವತ್ಸಲ ನಿನ್ನ ಭಕ್ತಿಯಿಂ ಭಜಿಸುವೆನು
ಮುಕ್ತಿಯನು ಪಾಲಿಸುವ ಕರ್ತು ಶ್ರೀರಾಮ ೩

 

೫೨೧
ಜಗದೊಳು ಬಂದೀ ಜಗವೇನು ಕಂಡೀ
ಜಗದ ಮಾಯೆಗೆ ಸಿಲ್ಕಿ ಬಗೆ ತಿಳಿಯದ್ಹೋದಿ ಪ
ಉನ್ನತ ಜನುಮ ಅನ್ಯಥಾ ಕಳೆದಿ
ಉಣ್ಣೆ ಕೆಚ್ಚಲೊಳೀದ್ರ್ಹಾಲುಣ್ಣದಂತಾದಿ ೧
ವಿಮಲ ಸುಖದೆಬಂದಿ ಶ್ರಮಗೆಟ್ಟು ನಡೆದಿ
ಕಮಲದಡಿಯ ಕಪ್ಪೆ ಬಂಡು ಕುಡೀದ್ಹಾಗಾದಿ ೨
ಎಂಥ ಸಮಯ ಇದರಂತರರಿಯದ್ಹೋದಿ
ಅಂತರಾತ್ಮನ ಕಾಣದಂತಕಗೀಡಾದಿ ೩
ನಿಜವಬಯಸಿಬಂದಿ ನಿಜತಿಳಿಯದ್ಹೋದಿ
ಮಾಜುವುದುದಕೆ ಬರಿದೆ ಗಿಜಿಗಿಜಿಯಾದಿ ೪
ಕಲ್ಪದ್ರುವದಿ ನಿಂದಿ ಅಲ್ಪರಿಗಾಲ್ಪರಿದಿ
ಕಲ್ಪಿತವನು ಪೂರಮಾಳ್ಪ ರಾಮನ ಮರೆದಿ ೫

 

೨೭೮
ಜಗವ ತುಂಬಿ ಬೆಳಗುತಿರುವಿಯಂತೆ ಎ
ನಗೆ ಕಾಣದ ಬಗೆಯಾಕಂತೆ ಪ
ಜಗವನು ವ್ಯಾಪಿಸಿ ಬಗೆಬಗೆಯಿಂದಲಿ
ಝಗಿಝಗಿಕಪೆಂಬಾನಂತ ಸ್ರ‍ಮತಿಗಳಿವೆ ಅ.ಪ
ಸರಸಿಲಿ ಸ್ಮರಿಸಲು ಬಂದಂತೆ
ತರುಣಿಯ ಸಭೆಯೊಳು ಕಾಯ್ದಂತೆ
ಕರೆಯಲು ಕಂಬದಿ ಹೊರಟಂತೆ
ತರಳಗೆ ಅಡವಿಲಿ ಒಲಿದಂತೆ
ಅರಿತು ವಿಚಾರಿಸಿ ನೋಡಲಿವೆಲ್ಲ ನಿನ್ನ
ಚರಣಬಿರುದು ಖರೆ ಪರತರಮಹಿಮ ೧
ಅರಣ್ಯವಾಸಿಗಳ ಪರೀಕ್ಷಂತೆ
ಅರಿತು ಪರುಷ ಕರುಣಿಸಿದಂತೆ
ಚರಣದ್ವೊರೆಯ ತಮ್ಮನಂತೆ
ಸ್ಥಿರಪಟ್ಟವನಿಗೆ ಕಟ್ಟ್ದಂತೆ
ವರ ವೇದೋಕ್ತಿಗಳರಿತು ನೋಡಿದರೆ
ಸ್ಮರಿಸುವ ಭಕುತರ ನಿರುತ ಚಿಂತಾಮಣಿ ೨
ಪೊಡವಿಪಾಲನಿಗೆ ಶಾಪಂತೆ
ಬಿಡದೆ ಚಕ್ರದಿಂದ ಕಾಯ್ದಂತೆ
ಕಡಲ ಮಧ್ಯದಲಿ ಮನೆಯಂತೆ
ದೃಢಕರಿಗೆ ಮೈ ನೆರಳಂತೆ
ಕಡುದಯಾನಿಧಿ ಎನ್ನೊಡಲೊಳು
ಬಿಡದಂತಿರಿಸಯ್ಯ ಒಡೆಯ ಶ್ರೀರಾಮ ೩

 

೫೨೩
ಜಡಮತಿ ಮನುಜ ಡಂಭವ ತ್ಯಜಿಸೊ
ದೃಢದಿಂದ್ಹರಿಪಾದ ಸತತದಿ ಭಜಿಸೋ ಪ
ಒಡಲೊಳ್ವಂಚಕನಾಗಿ ಹೊರಗೆ ಬಹುಮಾನವ
ಪಡೆದರೆ ಹರಿ ನಿನ್ನ ಮೆಚ್ಚುವ ನೇನೋ ಅ.ಪ
ನಿರುತ ಮಾನಸದೊಳ್ ಮನೆಮಾಡಿಹ್ಯ ಪ್ರಭು
ಮರೆವೆ ಪರದೆ ತೆಗೆದಿರವಿಟ್ಟು ನೋಡೋ
ಅರಿಯದ ನರರು ನಿನ್ಹಿರಿಯನೆನಲು
ಕರಿವರದ ಕಮಲನಾಭನರಿಯನೆ ಮರುಳೆ ೧
ಮರುಳನೆ ದುರಿತವ ಸ್ಮರಿಸವನಿತರಲಿ
ಅರಿಯುವ ಹರಿ ನಿನ್ನಂತರದಲಿ ನಿಂದು
ಮರುಳುಮತಿಯ ನೀಗಿ ಹೊರಒಳಗೊಂದಾಗಿ
ಅರೆಲವನಿಲ್ಲದೆ ಪರಮನಂ ಧ್ಯಾನಿಸೋ ೨
ಧರೆಮೆಚ್ಚಿ ನಡೆದರೆ ಬರುವುದೇನೆಲೊ ನಿನ
ಗ್ಹರಿಮೆಚ್ಚಿ ನಡೆವುದೆ ಪರಮಸೌಭಾಗ್ಯ
ಹರಿಗಂಜಿ ನಡೆಯದೆ ಧರೆಗಂಜಿ ನಡೆದರೆ
ಧರೆಯಾಣ್ಮ ಶ್ರೀರಾಮ ಮರೆಯಾಗುವನೆಲೋ ೩

 

೫೨೨
ಜಡಮತಿಗಡ ಕಡಿದೀಡ್ಯಾಡಿ
ಪಡಿರೋ ಸನ್ಮಾರ್ಗವ ಹುಡುಕ್ಯಾಡಿ ಪ
ಗಡಗಡಸದೃಢದಯಿಡುತೋಡೋಡಿ
ಪಡಿರೋ ಕಡು ಅನಂದ್ವೊಯ್ಕುಂಠ ನೋಡಿ ಅ.ಪ
ಚಿಂತೆ ಭ್ರಾಂತಿಗಳ ದೂರಮಾಡಿ ನಿ
ಶ್ಚಿಂತರಾಗಿರೋ ಮನ ಮಡಿಮಾಡಿ
ಶಾಂತಿತೈಲ್ಹೊಯ್ದು ಜ್ಞಾನಜ್ಯೋತಿಕುಡಿ ಚಾಚಿ
ನಿಂತು ನೋಡಿರೋ ಹರಿಪುರದಕಡೆ
ಅಂತ್ಯ ಪಾರಿಲ್ಲದಾತ್ಯಂತ ಪ್ರಕಾಶದಿಂ
ನಿಂತು ಬೆಳಗುತಾರೋ ಆನಂತಸೂರ್ಯರು ಕೂಡಿ ೧
ಬೋಧಾದಿಮಯ ಮಹದ್ವಾರಗಳು ಮತ್ತು
ವೇದ ನಿರ್ಮಯ ಪುರಬೀದಿಗಳು
ಆದಿಅಂತಿಲ್ಲದಷ್ಟ ಭೋಗಗಳು ವಿ
ನೋದ ಮುಕ್ತಿ ಕಾಂತೇರಾಟಗಳು
ವೇದವೇದಾಂತ ಅಹ್ಲಾದದಿಂ ಪೊಗಳುವ
ಸಾಧು ಸುಜನ ಮಹದಾದಿಪದವಿಗಳು೨
ಕೇವಲ ಯತಿಋಷಿಸ್ತೋಮಗಳ ಬಲು
ಸೇವಿಪ ಸುರಮುನಿಗಣಗಳು
ಕೋವಿದ ನಾರದಾದಿ ಗಾನಗಳು ರಂಭೆ
ನಾಯಕಿಯರ ಮಹನರ್ತನಗಳು
ಸಾವಿರಮುಖಪೀಠದ್ಹೊಳೆವ ಶ್ರೀರಾಮನ
ಪಾವನಪಾದಕಂಡು ಸಾವ್ಹುಟ್ಟು ಗೆಲಿರೆಲೋ ೩

 

೨೭೯
ಜನಿಸಿ ನಾ ಬುವಿಯೊಳು ನಿನಗೆ ದುಡಿಯುವುದಾಯ್ತು
ಎನಗೇನುಫಲ ಪೇಳು ಮಾಯವೆ ಎಲೆ ಜೀವವೆ ಪ
ನಿನಗೆ ನೀ ದುಡಿಯುವಿ ಎನಗೆ ದುಡಿಯುವುದೇನು
ದಿನಸರಿಯದೆನುವುದು ನ್ಯಾಯವೆ ಎಲೆ ಕಾಯವೆ ಅ.ಪ
ಘನರೋಗ ತಾಪತ್ರವನುಭವಿಸುವುದೆಲ್ಲ
ನಿನಗಾಗಲ್ಲೇನು ಪೇಳು ಮಾಯವೆ ಎಲೆ ಜೀವವೆ
ನಿನಗೆ ಬಂದ ಕರ್ಮವನುಭವಿಪೆಯಲ್ಲದೆ
ಎನಗಾಗೆನುವುದು ನಿಜನ್ಯಾಯವೆ ಎಲೆ ಕಾಯವೆ ೧
ನಿನ್ನ ಜೋಪಾನಕ್ಕೆ ಬನ್ನ ಬಡುವೆನಲ್ಲ
ದೆನ್ನದೇನು ಕರ್ಮ ಮಾಯವೆ ಎಲೆ ಜೀವವೆ
ಎನ್ನ ಜೋಪಾನವು ನಿನ್ನಿಂದಲೆಂಬುವುದು
ಮಣ್ಣುಗೊಂಬೆ ನಿನಗೆ ನ್ಯಾಯವೆ ಎಲೆ ಕಾಯವೆ ೨
ಚಳಿಮಳೆಬಿಸಿಲಿನ ಬಲುತಾಪದಲಿ ನಿನ್ನ
ಸಲಹುವರಾರ್ಹೇಳು ಮಾಯವೆ ಎಲೆ ಜೀವವೆ
ಚಳಿಮಳೆಬಿಸಿಲಿನ ಬಲುತಾಪ ಎನಗೆಲ್ಲಿ
ಎಲುವಿನ್ಹಂದರ ನಿಂದೀನ್ಯಾಯವೆ ಎಲೆ ಕಾಯವೆ ೩
ನಿನ್ನಗಾಲಯವಾಗಿ ಉನ್ನತದಿ ಕಾಯುವಗೆ
ಭಿನ್ನ ಮಾತುಗಳೇನೋ ಮಾಯವೆ ಎಲೆ ಜೀವವೆ
ನಿನ್ನದು ದಾವೂರು ನನ್ನದು ದಾವೂರು
ಎನ್ನ ಸರಿಗಟ್ಟುವುದು ನ್ಯಾಯವೆ ಎಲೆ ಕಾಯವೆ ೪
ನಾನಿಲ್ಲದಿರೆ ನಿನ್ನ ಖೂನವರಿವರಾರು
ನೀನೆ ಪೇಳೆಲೋ ನಿಜ ಮಾಯವೆ ಎಲೆ ಜೀವವೆ
ಹೀನನೆ ನೀನೆನ್ನ ಖೂನವರಿಯದೆ ಬಿನಗು
ಶ್ವಾನನಂತೊದರುವುದು ನ್ಯಾಯವೆ ಎಲೆ ಕಾಯವೆ ೫
ಹೊನ್ನೂ ಹೆಣ್ಣು ಮಣ್ಣು ಎನ್ನಿಂದ ಪಡೆದು ನೀ
ಧನ್ಯನೆನಿಸುವೆಯಲ್ಲ ಮಾಯವೆ ಎಲೆ ಜೀವವೆ
ನಿನ್ನಗದರ ಫಲ ಎನ್ನಗೇನೆಲೆ ಪಾಪಿ
ನಿನ್ನ ಮೋಹಿಸಿ ನಾನು ಕೆಡುವೆ ಎಲೆ ಕಾಯವೆ ೬
ಎನ್ನಿಂದ ಕೆಡುವೆನೆಂಬನ್ಯವಾದವು ಬೇಡ
ನಿನ್ನದೆಲ್ಲವ ಬಲ್ಲೆ ಮಾಯವೆ ಎಲೆ ಜೀವವೆ
ನನ್ನ ನಾನರಿಯದೆ ಬನ್ನ ಬಡುವೆ ಸತತ
ಎನ್ನನರಿವುದು ನಿನ್ನಗಳವೇ ಎಲೆ ಕಾಯವೆ ೭
ಹೇವನಿನಗ್ಯಾಕಿಷ್ಟು ಸಾವುತ್ಹುಟ್ಟುತ ನೀನು
ನೋಯುವುದ ಬಲ್ಲೆ ನಾ ಮಾಯವೆ ಎಲೆ ಜೀವವೆ
ಹೇವದಮಾತಲ್ಲ ಸಾವುಹುಟ್ಟೆನಗಿಲ್ಲ
ಕೇವಲನಾದಿಕಾಲದಿರುವೆ ಎಲೆ ಕಾಯವೆ ೮
ಕೇವಲನಾದಿಯು ಜೀವ ನೀನಾದರೆ
ದೇವರೆ ನೀನಿದ್ದಿ ಮಾಯವೆ ಎಲೆ ಜೀವವೆ
ದೇವರು ನಾನಲ್ಲ ದೇವ ಶ್ರೀರಾಮನ
ಕೇವಲದಾಸ ನಾನಿರುವೆ ಎಲೆ ಕಾಯವೆ ೯

 

೩೨
ಜನುಮಪಾವನ ಹರಿನಾಮ ಭಜನೆ
ಜನುಮ ಪಾವನ ಪರಲೋಕಸಾಧನ ಪ
ದಿನದಿನದಿ ಘನವಾಗಿ ಕನಸುಮಸಿನೊಳು ಬಿಡದೆ
ವನಜನಾಭನ ನೆನೆದರಿಲ್ಲ ಜನನ ಮರಣ ೧
ಒಂದು ಸಲ ಆ ತಂದೆ ಗೋವಿಂದನಂಘ್ರಿವೊಂದಿ ಭಜಿಸ
ಲೊಂದುಭವದ ಬಂಧನಗಳ್ ಸಂಧಿಸವೆಂದಿಗು ೨
ಕಾಮಜನಕ ಸ್ವಾಮಿ ಶ್ರೀರಾಮಮಂತ್ರ ಗೂಢದಿಟ್ಟು
ನೇಮದಿಂದ ಪೊಗಳುತಿರೆ ಆ ಮಹಮೋಕ್ಷ ಸಿದ್ಧಿ ೩

 

ಒಮ್ಮೆ ಭಕ್ತ ಪುಂಡಲೀಕನನ್ನು ಪರೀಕ್ಷಿಸಲು
೩೩
ಜಯ ಜಯ ಮುರಹರ ಜಯ ಭವ ಭಯಹರ
ಜಯ ಪಾಂಡುಪಕ್ಷಕರಜಯ ಪುಂಡಲೀಕೋದ್ಧಾರ ಪ
ಜಯ ಜಯ ಯಾದವ ಜಯ ರಘುಕುಲೋದ್ಭವ
ಜಯ ದಶಶಿರಹರ ಜಯ ದಶ ಅವತಾರ ೧
ಜಯ ಜಯ ಕೇಶವ ಜಯ ಹರಿ ಮಾಧವ
ಜಯ ಶೇಷಶಾಯಿ ಈಶ ಜಯ ದೋಷಹರ ಕೇಶ ೨
ಜಯ ಜಯ ಜಗತ್ರಾಣ ಜಯ ಮಧುಸೂದನ
ಜಯ ನುತಭಕ್ತ ಪ್ರೇಮ ಜಯ ಸೀತಾ ಶ್ರೀರಾಮ ೩

 

೧೩೬
ಜಯವ ಪಾಲಿಸಿ ಸಲಹೆ ಜನನಿ
ಜಯಲಕ್ಷ್ಮಿ ಜಯಂಕರಿ ಪ
ಭಯವಿಮೋಚನೆ ಭಜಿಪೆ ನಿನ್ನ
ಜಯವ ವೊಂದಿಸಿ ಭವದಿ ಎನ್ನ
ದಯದಿ ಬೆಂಬಲಿರ್ದು ಬಿಡದೆ
ಕೈಯ ಪಿಡಿದು ಕಾಯೌ ಸುದಯೆ ೧
ಜ್ಞಾನಜ್ಯೋತಿ ಸುಪ್ರಕಾಶ
ಮಾಣದಿತ್ತು ಮಮತೆಯಿಂದ
ಧ್ಯಾನಯುತರ ನೆರೆಯೊಳಿರಿಸಿ
ಹಾನಿತಾರದೆ ಪೊರೆಯೆ ಸತತ ೨
ಕಾಮಿತಾರ್ಥ ಪೂರ್ಣೆ ಸುತಗೆ
ಭೂಮಿಯಾತ್ರೆ ವಿಜಯನೀಡು
ಶಾಮಸುಂದರ ಸ್ವಾಮಿ ಶ್ರೀ
ರಾಮನ ಪಟ್ಟದರಾಣಿ ಕರುಣಿ ೩

 

೧೩೭
ಜಾಗರ ಮಾಡಿದೆನೇ ಶಿವ ಶಿವ ಜಾಗರ ಮಾಡಿದೆನೇ ಪ
ಜಾಗರ ಮಾಡಿದೆ ಸಾಗರನಿಲಯನ
ನೀಗದಮಹಿಮೆ ಶಿವ ಯೋಗದಿ ತಿಳಿಸೆಂದು ಅ.ಪ
ಲಕ್ಷಪತ್ರರ್ಪಿಸಿ ತ್ರಿಜಗದ್ರಕ್ಷ ನಿನಗೆ ನಮಿಸಿ
ಲಕ್ಷದಿಂದ ಸತಿಗಕ್ಷಯವಿತ್ತ ಭಕ್ತ
ಪಕ್ಷನ ನಾಮ ಎನ್ನ ಕುಕ್ಷಿಗೆ ನೀಡೆಂದು ೧
ಮನವನು ಮಡಿಮಾಡಿ ಹರಹರ ನಿನಗೆ ನಾ ಎಡೆಮಾಡಿ
ಮನಸಿಜಜನಕನ ಘನಸಚ್ಚರಿತೆಯನ್ನು
ಕೊನೆಯ ನಾಲಗೆ ಮೇಲೆ ನೆನವು ಸ್ಥಾಪಿಸೆಂದು ೨
ಪ್ರೇಮ ದೃಷ್ಟಿ ತೆರೆದು ಶಂಭು ಎನ್ನ ಕಾಮಿತಗಳ ಕಡಿದು
ಭೂಮಿಗಧಿಕ ಮಮಸ್ವಾಮಿ ಶ್ರೀರಾಮನ
ಕೋಮಲ ಪಾದವೆನ್ನ ಮಂಡೆಮೇಲ್ಹೊರಿಸೆಂದು ೩

 

೫೨೪
ಜಾತಿಭ್ರಷ್ಟ ಹೊಲೆಮಾದಿಗರಿವರಲ್ಲವೇನೋ
ನೀತಿಬಾಹಿರರಾಗಿ ಆಚರಿಸುವವರು ಪ
ಪನ್ನಂಗಶಯನ ಉನ್ನತ ಕತೆ ಕೀರ್ತ
ನ್ಯನ್ನು ಕೇಳೆನೆ ಮುಖವನ್ನು ಹಿಂತಿರುವಿ
ಭಿನ್ನ ಬೇಸರಿಲ್ಲದೆ ಅನ್ಯಜನ ಸುದ್ದಿಯೊಳು
ಕುನ್ನಿಯಂದದಿ ದಿನಗಳನ್ನು ಕಳೆವವರು ೧
ಆಲಯದ ಸತಿಯಳ ತಾಳದೆ ತುಸುತಪ್ಪು
ತಾಳಿಯನ್ಹರಕೊಂಡು ದಾಳೀಯ ಹೊಡೆದು
ಮೇಲುಜಾತಿಲಿ ಹುಟ್ಟಿ ಕೀಳು ಸೂಳೇರಿಗೊಲಿದು
ಹೇಳಿದತೆರ ಕುಣಿದು ಬೀಳುಗಳೆವವರು ೨
ಸದ್ಧರ್ಮಕಾರ್ಯಕ್ಕೆ ಇದ್ದುದ ಸಲ್ಲಿಸೆನಲು
ಕದ್ದು ತಂದುಕೊಡುವೆವೆಂದಬದ್ಧ ನುಡಿಯುವವರು
ಬದ್ಧ್ದ……..ಬಂದು ಒದ್ದು ಕೂಡ್ರಿಸಲಾಗ
ಸದ್ದಿಲ್ಲದೆ ತಂದು ಬೇಡಿದ್ದು ಕೊಡುವವರು ೩
ಜ್ಞಾನಿಗಳು ಬಂದರೆ ಗೋಣೆತ್ತಿನೋಡದೆ
ಹೀನಜನರಿಗೆ ಬಹುಮಾನ ಕೊಡುವವರು
ಧ್ಯಾನ ದಾಸರ ತರದಿ ಜ್ಞಾನದ ಮಾತ್ಹೇಳಿ
ಗೇಣ್ಹೊಟ್ಟಿಗೆ ಪರರ ಗೋಣು ಮುರಿವವರು ೪
ತಾಸಿನ ಮೋಜೆಂಬ ನಾಶನ ಜಗಮಾಯ
ಮೋಸನರಿಯದೆ ಯಮಪಾಶದೊಳು ಬಿದ್ದು
ದಾಸಜನಪ್ರಿಯ ಜಗದೀಶ ಶ್ರೀರಾಮನ
ಧ್ಯಾಸಮುರಿದು ದು:ಸ್ಸಹವಾಸದಿರುವವರು ೫

 

೩೪
ಜೈ ಜೈ ವೆಂಕಟರಾಯ ಸಲಹು ಗಡ ಪ
ರಾಯಚೂರ ಒಡೆಯ ಮೊರೆಯ
ಕಾಯೊ ಕರುಣಿ ಶುಭ ಕಾಯ
ಐಹಿಕ ಮಹಮಾಯವ ಬಿಡಿಸಯ್ಯಅ.ಪ
ಪಂಕಜಾಕ್ಷ ಹರಿ ಸಂಕರುಷಣ ಭವ
ಸಂಕಟ ಪರಿಹಾರ ಶುಭಕರ
ಶಂಖಶಕ್ರಧರ ಮಂಕುದನುಜಹರ
ಕಿಂಕರಘದೂರ
ಶಂಖಸುರನ ಬಲು ಬಿಂಕಮುರಿದ
ಬಲದಂಕ ಅದಟವೀರ ಶೂರ
ಅಂಕುರಿಸೆನ್ನೊಳಾತಂಕತಾರದೆ ಪೊರೆ
ಲಂಕಾ ವಿಜಯಕಾರ ೧
ದಾತ ಮೂರುಜಗನಾಥ ಪರಮ ಅ
ದ್ಭೂತ ಮಹಿಮೆಗಾರ ಚದುರ
ಪ್ರೀತ ಭಕುತ ಭವಭೀತರಹಿತ ಮಾಯಾ
ಪೂತನಿ ಸಂಹಾರ
ನೀತಿಕೋವಿದ ವಿಧಿತಾತ ಅಸಮ ವಿ
ಖ್ಯಾತ ಕರುಣನಿಕರ ಸುಂದರ
ಘಾತಿಸಿ ಕಂಸನ ಮಾತಪಿತರ ಕಾಯ್ದ
ಪಾತಕ ನಿವಾರ ೨
ಬಾಲನಂತರಿಯದೆ ಆಲಯಗಳ ಪೊಕ್ಕು
ಪಾಲು ಮೊಸರು ಕದಿದ ಸವಿದ
ಬಾಲೆರುಡುವ ದುಕೂಲ ಕದಿದು ತಾ
ಮೇಲು ಮರವನೇರ್ದ
ಕಾಲಿಂದಿ ಧುಮಕಿದ ಕಾಳಿಯಮೆಟ್ಟಿದ
ಕಾಳರಕ್ಕಸರೊದೆದ ಸದೆದ ಲೀಲಾ
ಜಾಲ ನಂದ ಬಾಲನಾಗಿ ಬಲು
ಬಾಲಲೀಲೆಗೈದ ೩
ಪರಮ ಪರಾತ್ಪರ ಪರಮಪುರುಷ ಸಿರಿ
ಪರಮ ಪಂಚಪ್ರಾಣ ದುರಿತ
ಹರಣಜನನಮರಣ್ಹರಸುರವಿನಮಿತ
ಧರಣಿಗಧಿಕ ತ್ರಾಣ
ಕರಿಧ್ರುವರಿರ್ವರನು ಭರದಿ ನೀಡಿ ನಿಂತು
ಪೊರೆದ ಪಾಂಚಾಲೀಮಾನ ಜಾಣ
ಶರಣಜನರ ಮೈನೆರಳು ನಿಗಮಾತೀತ
ನಿರುಪಮ ನಿರಂಜನ ೪
ಸೋಮವದನ ಸತ್ಯಭಾಮಾರಮಣ ಸುಖ
ಧಾಮ ಸುಜನಹೃದಯನಿಲಯ
ಕಾಮಜನಕ ಪುಣ್ಯನಾಮ ರಕ್ಕಸಕುಲ
ಭೀಮ ಪಾಲಿಸಭಯ
ಶಾಮವರ್ಣ ಮಮಸ್ವಾಮಿ ಭಜಿಪೆ ಶ್ರೀ
ರಾಮಪಿಡಿಯೋಕಯ್ಯ ಸದಯ
ಕಾಮಿತ ವರ ಸುಪ್ರೇಮದಿ ಇತ್ತೆನ್ನ
ಪ್ರೇಮದುದ್ಧರಿಸಯ್ಯ ೫

 

೩೫
ಜೈ ತಿರುಪತಿ ವೆಂಕಟರಮಣ
ಕಿಂಕರಜನ ಮಹ ಸಂಕಟಹರ ಜೈ ಪ
ಶಂಖಚಕ್ರಧರ ಮಂಕುದಾನವಹರ
ಪಂಕಜಪಾಣಿಯಕಳಂಕ ಮಹಿಮ ಜೈ ೧
ಸೃಷ್ಟಿಮೇಲೆ ಪ್ರತಿಷ್ಠನಾಗಿ ಮಹ
ಬೆಟ್ಟವ ಭೂವೈಕುಂಠವೆನಿಸಿದಿ ಜೈ ೨
ತಪ್ಪದೆ ಭಕುತರಿಂ ಕಪ್ಪಗೊಳ್ಳುತ ನೀ
ಅಪ್ಪಿಕೊಂಡಿರಿವೀ ಅಪ್ಪ ತಿಮ್ಮಪ್ಪ ಜೈ ೩
ಕೋಟಿ ಕೋಟಿ ಮಹತ್ವ ಸಾಟಿಗಾಣದೆ ತೋರಿ
ಆಟವಾಡುವಿ ಜಗನಾಟಗಾರನೆ ಜೈ ೪
ಕಪ್ಪು ವರ್ಣದಿಂದೊಪ್ಪುವಿ ಸಿರಿಯಿಂ
ದಪ್ಪಿಕೋ ದಯದೆನ್ನಪ್ಪ ಮುರಾರಿ ಜೈ ೫
ಬೇಡಿದ ವರಗಳ ನೀಡಿದೆ ದಯದಿ ಹರಿ
ಗಾಢಮಹಿಮೆ ಇಹ್ಯನಾಡಿಗರುಹಿದಿ ಜೈ ೬
ಕೋರಿದವರ ಮನಸಾರ ವರವನೀಡಿ
ಧಾರುಣಿಯಾಳಿದ್ಯಪಾರ ಮಹಿಮ ಜೈ ೭
ಲಕ್ಷ್ಮೀಸಮೇತನಾಗಿ ಲಕ್ಷ್ಯದಿಂ ಮೂಲೋಕ
ಕುಕ್ಷಿಯೋಳ್ ಧರಿಸಿ ನೀ ರಕ್ಷಿಸಿದೆ ಜೈ ೮
ಭಕ್ತವತ್ಸಲ ನಿನ್ನ ಭಕ್ತನೆನಿಸಿ ಎನಗೆ
ಮುಕ್ತಿಸಂಪದ ದೇ ಕರ್ತು ಶ್ರೀರಾಮ ಜೈ ೯

 

೨೮೦
ಜೋಕೆ ಮಾಡೆನ್ನ ನಮ್ಮಯ್ಯ ರಂಗ
ಜೋಕೆ ಮಾಡೆನ್ನ ಪ
ಲೋಕನಾಥನೆ ಜೋಕೆ ಮಾಡೆನ್ನ ಕಾಕುಬವಣೆಯ
ಸಾಕುಮಾಡಿ ಏಕಚಿತ್ತದಿ ನಿಮ್ಮ ಭಜನೆ
ಜೋಕಿನೊಳು ಇರಿಸು ದೇವ ಅ.ಪ
ನಿಗಮಗೋಚರನೆ ಜಗದಯ್ಯ ವಿಜಯ್ಯ
ಖಗಪತ್ವಾಹನನೆ ಅಗಧರನೆ ಈರೇಳು
ಜಗವ ರಕ್ಷಿಪನೆ ರಘುಕುಲಾರ್ಯನೆ
ಮಗನಬಗೆ ಕೇಳು ಕರುಣದಿಂದಲಿ
ನಿಗಮಾತೀತನೆ ಮುಗಿವೆ ಕರಮಂ
ಹಗಲು ಇರಲು ಸುಗುಣಿ ಸಂತರ
ಸಂಗಸುಖ ಎನಗಗಲಿಸದೆ ಹರಿ ೧
ಮೆರೆವವೇದವ ವರಸ್ರ‍ಮತಿಶಾಸ್ತ್ರವ
ಕರುಣಿಸೈ ದೇವ ಪರಿಹರಿಸು ಎನ್ನ
ಮರವೆ ಮಾಯವ ವರಭಕ್ತ ಜೀವ
ಅರಿಯದ್ಹೋದೆನು ಮರವೆ ಮಾಯದಿ
ಸಿರಿಯವರ ತವಪರಮ ಚರಿತವ
ಅರಿವು ನಿಲ್ಲಿಸಿ ಕರುಣದಿಂ ತವ
ಚರಣಕುರುಹನು ಕರುಣಿಸಭವ ೨
ದೃಢದಿ ಬೇಡುವೆನು ತಡಿಯೆನೀಭವ
ಎಡರುತೊಡರನು ಗಡನೆ ಬಿಡಿಸೆನ್ನ
ಕಡೆಗೆ ಮಾಡೆನ್ನ ನಿಮ್ಮಡಿಗೆ ಬಾಗುವೆನು
ನುಡಿಸು ಎನ್ನ ಮೆಲ್ನುಡಿಯೊಳನುದಿನ
ಬಿಡದೆ ತವ ಕೊಡು ಗೂಢಮಂತ್ರವ
ಬಿಡದೆ ಕೊಡು ನಿನ್ನಡಿಯ ದಾಸರ
ಸಡಗರದ್ಯನ್ನೊಡೆಯ ಶ್ರೀರಾಮ ೩

 

೬೧೦
ಜ್ಞಾನಶೂನ್ಯಗಾತ್ಮದನುಭವವ್ಯಾಕೆ
ಹೀನ ಸಂಸಾರಿಗೆ ಪರದ ಸುದ್ದ್ಯಾಕೆ ಪ
ಕತ್ತೆಗೆ ಬೆಲೆಯುಳ್ಳ ಉತ್ತಮ ಜೀನ್ಯಾಕೆ
ಕೃತ್ರಾಮಗೆ ಸತತ ಸತ್ಪಥದ ಬೋಧ್ಯಾಕೆ
ತೊತ್ತಿಗ್ಹೋಗುವಗರಸೊತ್ತಿಗಧಿಕಾರವ್ಯಾಕೆ
ಮಿಥ್ಯೆಮತಿಗ್ಯಾತಕ್ಕೆ ಉತ್ತಮರ ನೆರೆಯು ೧
ನಂಬಿಗಿಲ್ಲದವಗ್ಯಾಕೆ ಗುಂಭದ ಮಾತುಗಳು
ಜಂಬಕೊಚ್ಚುವವಗ್ಯಾಕೆ ಗಂಭೀರತನವು
ಅಂಬುಜಾಕ್ಷನ ಚರಿತ ಡಂಭನಿಗ್ಯಾತಕ್ಕೆ
ಗೊಂಬೆಯಾಟಗಾರಗ್ಯಾಕೆ ತಂಬೂರಿ ತಬಲ ೨
ದಾನಧರ್ಮದ ಮಹಿಮೆ ಜೀನನಿಗೆ ಏತಕ್ಕೆ
ಗೋಣು ಮುರಿವವಗ್ಯಾಕೆ ದೈನ್ಯಮಾತುಗಳು
ನಾನಾ ಬಯಕೆಯುಳ್ಳ ಮಾನವಗೆ ಭಕ್ತಜನ
ಪ್ರಾಣ ಶ್ರೀರಾಮ ನಿಮ್ಮ ಧ್ಯಾನವಿನ್ಯಾಕೆ ೩

 

೬೧೧
ಜ್ಞಾನಿಗಳು ತಪ್ಪುವರೆ ಕೊಟ್ಟ ವಚನ
ಪ್ರಾಣಹೋದರೂ ಭಾಷೆ ಕೊನೆಗಾಣೋತನಕ ಪ
ಖ್ಯಾತಿವಂತ ನಳರಾಜ ಸೋತ ರಾಜ್ಯಾಕೆಂದು
ಮಾತಿಗಾಗಿಯೆ ತಾಂ ಪೋದ ವನವಾಸ
ಮಾತುಳುಹಿಕೊಳ್ಳಲ್ಕೆ ಸತ್ಯವಂತ್ಹರಿಶ್ಚಂದ್ರ
ನೀತಿಯಿಂ ತಾ ಕಾಯ್ದ ಸುಡುಗಾಡವ ೧
ವಾಮನಮೂರುತಿಗೆ ಭೂಮಿ ಮೂರಡಿಯಂ
ಭೂಮಿಪ ಬಲಿಚಕ್ರಿ ಪ್ರೇಮದಿಂದಿತ್ತಿರಲು
ಸ್ವಾಮಿ ತಾಂ ಪರಿಕಿಸಲಿ ಭೂಮಿ ಈರಡಿಗೈಯೆ
ಸ್ವಾಮಿ ಮಿಕ್ಕಾದಡಿಗೆ ಪ್ರೇಮದಿತ್ತ ಶಿರವ ೨
ನಾರಿಗೆ ಪಿತನ್ವೊಚನ ಮೀರಲಾಗದುಯೆನುತ
ನಾರಿಅನುಜರಿಂದ್ವಿಪಿನ ಸೇರಿದೆಯೊ ಶ್ರೀರಾಮ
ಆರುಳಿಯ ಬಲ್ಲರೈ ಮೀರಿ ನಿಮ್ಮಾಜ್ಞೆಯನು
ಭೂರಿ ಕರುಣದಿ ನೀನೆ ಪಾರುಮಾಡೆನ್ನ ೩

 

೫೨೫
ಟೊಳ್ಳು ಮಾನವ ನೀನು ತಿಳಿ ಮಮಕುಲವ
ಪೇಳುವೆನು ತಿಳಿದು ಭವದ ನೆಲೆ ಪ
ಒಳಹೊರಗೊಂದಾಗಿ ನಳಿನಿನಾಭನ ಪ್ರೇಮ
ಗಳಿಸುವ ಕುಲ ನಂದು ಅ.ಪ
ಅಲ್ಲಯೆಂಬುವಂಥ ಅಲ್ಲೆಂಬ ಸೊಲ್ಲು ತಿಳಿಯುವಂಥ
ಅಲ್ಲ ಅಲ್ಲಯೆಂಬ ಖುಲ್ಲ ಜನರ ಬಳಿ
ನಿಲ್ಲದಂಥ ಬಲ್ಲಿದ ಕುಲ ನಂದು ೧
ಹರಿಯ ಜರೆಯುವಂಥ ಪರಮ ದುರುಳರನೊದೆವಂಥ
ಹರಿಹರಿಯೆಂದೆಂಬ ವರಸುಧೆಯಮೃತಭರಿತ
ಪರಲೋಕದ ಅರಿವಿನ ಕುಲನಂದು ೨
ತಾಮಸವನು ತ್ಯಜಿಸಿ ದಾಸರ ಪ್ರೇಮವನು ಬಯಸಿ
ಭೂಮಿಯೊಳು ಶ್ರೀರಾಮರಹೀಮೆಂದು
ನೇಮಿಸಿಕೊಂಡ ನಿಸ್ಸೀಮಕುಲವು ನಂದು ೩

 

೫೨೭
ಡಂಕವ ಸಾರಿದನೋ ಯಮ ತನ್ನ ನಗರದಿ
ಘಂಟೆಯ ನುಡಿಸಿದನು ಪ
ಡಂಕಸಾರಿದ ತನ್ನ ತುಂಟದೂತರಿಗ್ವೊ
ಯ್ಕುಂಠನ ದಾಸರ ತಂಟೆಯು ಬೇಡೆಂದು ಅ.ಪ
ಕಾಲಕಾಲದಿ ಹರಿಯಕಥೆ ಕೀರ್ತ
ನಾಲಿಸುವರ ನೆರೆಯು
ತಾಳದಮ್ಮಡಿ ಸಮ್ಮೇಳದೊಡನೆ ಆ
ನೀಲಶ್ಯಾಮನ ಭಜಿಪರಾಳಿನಾಳನುಕಂಡು
ಕಾಲನಾಲುಗಳೆಂದ್ಹೇಳದೆ ಬನ್ನಿರೆಂದು ೧
ಮಂದಿರಂಗಳದಿ ವೃಂದಾವನ
ದಂದ ಕಂಡಾಕ್ಷಣದಿ
ಸಿಂಧುಶಯನ ಬಂಧುಭಕ್ತರ
ಮಂದಿರವಿದೆಂದು ಹಿಂದಕ್ಕೆ ನೋಡದೆ
ಸಂದ್ಹಿಡಿದೋಡಿ ಪುರ ಬಂದು ಸೇರಿರೆಂದು ೨
ಪರರಂಗನೆಯರ ಸ್ಮರಿಸುವ
ಪರಮ ನೀಚರನ್ನು
ನರಹರಿ ಸ್ಮರಣೆಯ ಅರಿಯದ ಆಧಮರ
ಕರುಣಿಸದೆ ತುಸುಮುರಿದು ಮುಸುಕಿಕಟ್ಟಿ
ದರದರನೆಳೆತಂದು ಉರಿಯೊಳ್ಪೊಯಿರೆಂದು ೩
ಪರದ್ರವ್ಯವಪಹರಿಸಿ ಲಂಚದಿಂದ
ಸರುವ ತನ್ನದೆನಿಸಿ
ನಿರುತ ಮಡದಿಮಕ್ಕಳೊರೆವ ದುರಾತ್ಮನರ
ಗುರುತಳನೆಳತಂದು ಕರಿಗಿದಸೀಸಬಾಯೊಳ್
ವೆರಸಿ ಜನಕಕೊಂಡದುರುಳಿಸಿಬಿಡಿರೆಂದು ೪
ವೇಣು ಕರದಿ ಪಿಡಿದು ಬಾಣಾರಿ
ಧ್ಯಾನದೊಳಗೆ ಬರೆದು
ಜಾನಕೀಶನ ಲೀಲೆ ಗಾನದಿಂ ಪಾಡುತ
ಆನಂದಿಪ ಮಹಜ್ಞಾನಿಗಳನು ಕಂಡು
ಕಾಣದಂತೆ ಸಿಕ್ಕ ಜಾಣ್ಣುಡಿದೋಡಿರೆಂದು ೫
ಇಂದಿರೇಶನದಿನದಿ ಅನ್ನವನು
ತಿಂದ ಮೂಢರ ಭರದಿ
ತಂದು ಒದೆದು ಮಹಗಂಧಮದು
ರ್ಗಂಧನಾರುವ ಮಲತಿಂದು ಬದುಕಿರೆಲೊ
ಎಂದು ಮನೆಹೊರಗಿನ ಮಂದಿರದಿಡಿರೆಂದು ೬
ವಿಮಲ ತುಳಸೀಮಣಿಯ ಧರಿಸಿ
ಅಮಿತ ಮಹಿಮನ ಚರಿಯ
ವಿಮಲಮನಸರಾಗಿ ಕ್ರಮದಿ ಬರುವ ಶ್ರೀ
ರಾಮದಾಸರ ಪಾದಕಮಲಗಳನು ಕಂಡು
ಯಮದೂತರೆನ್ನದೆ ನಮಿಸಿ ಬನ್ನಿರೆಂದು ೭

 

೫೨೬
ಡೌಲಿನ ಡೌಲ್ಯಾಕೆ ಮಾಡ್ತೀ
ಕಾಲತೀರದ ಮೇಲೇನೆಂದು ಹೇಳ್ತೀ ಪ
ಹೊಯ್ಮಾಲಿತನದ್ಹೊಲೆಕೆಲಸ ಮಾಡಿಕೂತಿ
ಸೈಮಾಡಿ ಬರಕೊಟ್ಟದೆಲ್ಲ ಮರೆತಿ ಅ.ಪ
ಕಾಯವೆಂಬ ಹೊಲ ಕೌಲಿಗೆ ಹಿಡಿದಿ
ಮಾಯ ಮರವೆಯೆಂಬ ಮುಳ್ಳು ಬೆಳೆಸಿದಿ
ಹೇಯವಿಷಯವೆಂಬ ಸೆದೆಯ ಕೆಡವಿದಿ
ಸಾವು ಹುಟ್ಟುಯೆಂಬ ಕೊರಡಗಿದ್ಹೋದಿ
ಕಾವಲಾದೆಲೆ ಮೂಳಿ ನಿನ್ನ ಎಡಬಲದಿ
ವಾಯಿದೆ ಸಮೀಪಬಂತು ಮುಂದೇನು ಹಾದಿ ೧
ಕ್ರೋಧ ಎಂದೆಂಬ ಅಲಬು ಕಿತ್ತದೆ
ಭೇದ ಎಂದೆಂಬುವ ಜೇಕು ತೋಡದೆ
ವಾದವೆಂಬ ಬೋರೆ ಜಡ್ಡು ಕಡಿಯದೆ
ಖೇದಯೆಂದೆಂಬ ಕರಿಕೆದಡ್ಡ ನಳಿಯದೆ
ಶೋಧವಿನಿತಿಲ್ಲದೆ ಮುಸುಕಿಟ್ಟು ಮಲಗಿದಿ
ಕಾದುವ ಒಡೆಯನಿಗೀಡೇನು ಮಾಡ್ದೀ ೨
ಚಿತ್ತಶುದ್ಧಿಯೆಂಬ ಬದುವು ಕೆಡಿಸಿದಿ
ನಿತ್ಯ ನಿರ್ಮಲತೆಯೆಂಬ ಬಾಂದು ಒಡೆಸಿದಿ
ಸತ್ಯ ಸನ್ಮಾರ್ಗೆಂಬ ಸೀಮೆಯ ಮುರಿದಿ
ತತ್ವ ವಿಚಾರವೆಂಬ ಒಡ್ಡ್ಹರೆಗಡಿದೀದಿ
ನಿತ್ಯನಿರ್ಮಲ ನಮ್ಮ ಕರ್ತು ಶ್ರೀರಾಮನ
ಅರ್ತು ಭಜಿಸಿದೆ ಯಮಗ್ವ್ಯೆರ್ಥ ತುತ್ತಾದಿ ೩

 

೨೮೨
ತಡವ ಮಾಡಲಿ ಬೇಡ ಹಡೆದವ್ವ ಎ
ನ್ನೊಡೆಯನನು ಹುಡುಕಿ ತಾರೆ ಪಿಡಿವೆ ಪಾದವ ಪ
ತಡವ ಮಾಡದೆ ಪೊಡವಿಯೊಳು ಕಡು
ಸಡಗರಾರ್ಯನ ಹುಡುಕಿ ತಂದರೆ
ಹಡೆದು ನಿನ್ನ್ಹೆಸರಿಸಿವುವೆನೆನ್ನವ್ವ ಸರಿಮಾಡ್ವೆನವ್ವ ಅ.ಪ
ಜೀವದರಸನ ಹಂಬಲೆನಗವ್ವ ಅತ್ಯಧಿಕವಾಗಿ
ಕಾಯಸೊರಗಿ ಕ್ಷೀಣವಾಯ್ತೆವ್ವ
ಪ್ರಾಯಬಂದರೆ ಸುಮ್ಮನೆ ಹೋಗುತಾದವ್ವ
ಪ್ರಾಯಕ್ಕೆ ತಕ್ಕ ಚಾಯಗಾರ ಕಂಡೇನ್ಹೇಗವ್ವ
ಕಾಯರಹಿತ ಕಾರುಣ್ಯನಿಧಿ
ಮಾಯತಿಳಿಯುವರಿಲ್ಲ ಆತನ
ದಿವ್ಯಚರಿತ ನೆನೆದು ನೆನೆದು
ಬಾಯ ಬಿಡುವೆನೆ ಆಯತಾಂಬಕಿ ೧
ವಸ್ತೊಡೆವೈಷ್ಟಿರಲು ಏನವ್ವ ಅತಿಶೋಭೆಯೆನಿಪ
ಮುತ್ತುಯಿಲ್ಲದ ಮೋರೆಯಾಕವ್ವ
ಹತ್ತಿರಕೆ ಬರಗೊಡರವ್ವಾ ಮುತ್ತೈದೆರೆಲ್ಲರು
ಅತ್ತ ಇತ್ತೆಂದೆಳೆಯುತಿಹ್ಯರವ್ವ
ಮತ್ತೆ ಬೇಡಲು ದೊರೆಯದಂಥ
ಹೊತ್ತು ಸುಮ್ಮನೆ ಹೋಗುತಿದೆ
ಕರ್ತ ತುರ್ತು ದೊರೆಯದನಕ
ಚಿತ್ತ ಸ್ವಸ್ಥವಾಗದವ್ವ ೨
ಭೂಮಿತ್ರಯದೊಳಧಿಕ ಕೇಳವ್ವ ಆತನಹೆಸರು
ಕಾಮಿತವನೀಗರಿತುಕೊಂಡೆನವ್ವ
ನೇಮದಿಂದ ಭಜಿಸುತಿಹೆನವ್ವ ಎನ್ನಕಡೆಗಾತ
ಪ್ರೇಮದಿಂದ ಸುಳಿಯದಿಹ್ಯನವ್ವ
ಭಾಮೆಬಾರೆಂದು ಬದಿಲಿಕರೆದು
ಪ್ರೇಮದಿಂದ ಅಪ್ಪಿ ನಿನ್ನಯ ಸ್ವಾಮಿ ಶ್ರೀ
ರಾಮ ನಾನೆಂದ್ಹೇಳಲು
ಕ್ಷೇಮ ಪಡೆದು ಬಾಳ್ವೆನವ್ವ ೩

 

೨೮೩
ತಡಿಯೆಲೆ ಮನವೆ ನೀ ಬಡಬಡಿಸುವುದ್ಯಾಕೋ
ಕೆಡಕುಯೋಚನೆಬಿಟ್ಟು ಕಡುಶಾಂತನಾಗೊ ಪ
ಜಡಮತಿತನನೀಗಿ ಬಿಡದೆ ದೃಢದಿ ಜಗ
ದೊಡೆಯನಡಿಯ ಭಜಿಸು ಕೊಡುವನು ನಿಜಸುಖ ಅ.ಪ
ವಂಚಕನಾಗದೆ ವಾಂಛಲ್ಯಳಿದು ಮನ
ಕಿಂಚಿತ್ತಗಲದೆ ನಿರ್ವಂಚಕ ಚಿತ್ತನಾಗೊ
ವಂಚನಿಲ್ಲದೆ ಹರವಿರಂಚಿಗಳ್ನೂತನ ಪ್ರ
ಪಂಚದೊಳಗೆ ನಿನ್ನನಚಲ ಸುಖದಿ ಕಾಯ್ವ ೧
ನಿಷ್ಠುರನುಡಿ ಬಿಡು ದುಷ್ಟತ್ವ ದೂರಮಾಡು
ಬಿಟ್ಟಗಲದೆ ಮಹ ಶಿಷ್ಟರೊಡನಾಡೊ
ಅಷ್ಟಮೂರುತಿಪಾದ ನಿಷ್ಠೆಯ ಭಜಿಸು ನಿ
ನಿನ್ನಷ್ಟದಖಿಲವರ ಕೊಟ್ಟು ರಕ್ಷಿಸಸನೆಲೊ ೨
ಹಲವು ಭ್ರಾಂತಿ ಬಿಡು ಮಲಿನಗುಣವ ದೂಡು
ಹೊಲೆಯ ಮನಸಿನ ಮಹ ಕಲ್ಮಷ್ಹಸನಮಾಡು
ಜಲಜಾಕ್ಷನಂಘ್ರಿಯಂ ನಿಲದೆ ಭಜಿಸು ನಿನ
ಗೊಲಿದು ನಿಜಸುಖವಿತ್ತು ಸಲಹುವ ಶ್ರೀರಾಮ ೩

 

೨೮೪
ತನುಮನಧವನೆಲ್ಲ ನಿನಗರ್ಪಿಸಿದೆನಿನ್ನು
ಎನಗಾವುದಾಧೀನವಿನಿತಿಲ್ಲ ದೇವ ಪ
ಜನಕ ನಾನು ಕ್ಷಣಕೆ ಕ್ಷಣಕೆ
ಉಣವುದೆಲ್ಲವು ನಿನ್ನ ಪ್ರಸಾದ
ಕನಸುಮನಸಿನೊಳಗೆ ನಾನು
ಮಣಿವುದೆಲ್ಲವು ನಿನ್ನ ಚರಣ ಅ.ಪ
ಮಡದಿಯಿಂ ಮಮತದಿ ಸಡಗರದಾಡ್ಯಾಡಿ
ಕಡು ಆನಂದಿಪುದೆಲ್ಲ ಒಡೆಯ ನಿನ್ನಾಟ
ಎಡೆಬಿಡದೆ ಅಡಿಗಡಿಗೆ ಕಡುಸಿರಿವಡೆದು ನಾ
ಪೊಡವಿಯೋಳ್ಜೀವಿಪುದು ಕಡು ನಿಮ್ಮ ಪ್ರೇಮ
ನುಡಿವುದೆಲ್ಲ ನಿನ್ನ ಮಂತ್ರವು
ಕೊಡುವುದೆಲ್ಲವು ನಿನ್ನ ಅಧಿಕಾರ
ನಡೆವುದೆಲ್ಲವು ನಾ ನಿನ್ನ ಯಾತ್ರೆಯು
ಇಡುವತೊಡುವುದು ನಿನ್ನ ಬಿರುದು ೧
ಗಳಿಸುವುದೆಲ್ಲ ನಾ ಚಲಿಸದ ತವಪಾದ
ನಳಿನದಾಸರಸಂಗೀ ಇಳೆಯೊಳು ಪ್ರಭುವೇ
ಬಳಸುವುದೆಲ್ಲ ನಾ ಅಳಕದ ತವಚರಿತ
ಕಲಿಯುವುದೆಲ್ಲ ನಿಮ್ಮ ವಿಲಸಿತನಾಮಧ್ಯಾನ
ಮಲಗುವುದೇ ನಿಮ್ಮ ಧ್ಯಾನ ಆನಂದ
ನಲಿವುದಖಿಲ ನಿಮ್ಮ ಭಜನೆಯು
ಅಳಿವುದೆಲ್ಲನುಭವದ ಗುಣಗಳು
ತಿಳಿವುದೆಲ್ಲವು ನಿಮ್ಮ ಮಹಿಮೆ ೨
ಭ್ರಮಿಸುವುದೆಲ್ಲ ನಾ ಅಮಿತ ತವಪ್ರೇಮವು
ಗಮಿಸುವುದೆಲ್ಲ ನಾ ಸುಮನರ ಸಭೆಯು
ಕ್ರಮದಿ ನಾ ಬೇಡುವುದು ವಿಮಲ ಸುಜ್ಞಾನವು
ದಮೆ ದಯ ಭಕ್ತಿ ತವ ನಿರ್ಮಲಂಘ್ರಿಯ ಅರಿವು
ನೇಮದಿಂ ನಾ ಬರುವುದೆಲ್ಲ
ಸ್ವಾಮಿ ನಿಮ್ಮಯ ಮಹಿಮೆ ಖ್ಯಾತಿಯು
ಕ್ಷೇಮನಿಧಿ ಶ್ರೀರಾಮ ನಿಮ್ಮೊಳು
ಕಾಮಿಸುವುದೇ ನಾ ಮುಕ್ತಿಪದವು ೩

 

೨೮೫
ತಪ್ಪು ಪೇಳ್ವೆ ನಿನ್ನೊಳೆನ್ನಪ್ಪಿ ಸಲಹಯ್ಯ
ಅಪ್ಪ ಸಿರಿಪತಿಯೆನ್ನ ನೆಪ್ಪಿನೊಳಗಿರ್ದು ಪ
ಅರಿವಿಟ್ಟು ತವಚರಣ ಸ್ಮರಿಸದಿರೆ ಎನ್ನ ತಪ್ಪು
ಮರೆವೆಯನು ಪರಹರಿಸದಿರೆ ನಿನ್ನ ತಪ್ಪು
ಧರೆಯ ಭೋಗವ ಮೀರಿ ನಡೆಯಿದಿರೆ ಎನ್ನ ತಪ್ಪು
ಪರಮವೈರಾಗ್ಯ ಭಕ್ತಿ ಕೊಡದಿರೆ ನಿನ್ನ ತಪ್ಪು ೧
ಅರ್ತಿಯಿಂ ತವಭಜನೆ ಮಾಡಿದಿರೆ ಎನ್ನ ತಪ್ಪು
ಚಿತ್ತ ಚಂಚಲಗೊಳಿಸಿದರೆ ನಿನ್ನ ತಪ್ಪು
ಸತ್ಯಭ್ರಷ್ಟನಾಗಾಚರಿಸಿದರೆ ಎನ್ನ ತಪ್ಪು
ಸತ್ಯಜನಸಂಗ ಕೊಡದಿರೆ ನಿನ್ನ ತಪ್ಪು ೨
ನಾಶವೊಂದೋ ಮಹಹೇಸಿಸಂಸಾರದ
ವಾಸನೆಯ ಬಿಡದಿರೆ ಎನ್ನ ಘನತಪ್ಪು
ಶ್ರೀಶ ಶ್ರೀರಾಮ ತವ ದಾಸತ್ವ ಕೊಡದಿರೆ
ಸಾಸಿರಪಾಲಿಗೆ ನಿನ್ನ ಮಹತಪ್ಪು ೩

 

೩೬
ತಪ್ಪು ಮಾಡಿದ್ದು ಸತ್ಯ ನಾನಪ್ಪ ಮಿಥ್ಯಲ್ಲ ತಿಮ್ಮಪ್ಪ
ತಪ್ಪು ಮಾಡಿದ್ದು ಸತ್ಯ ನಾನಪ್ಪ ಪ
ತಪ್ಪು ಎನ್ನದು ಗಪ್ಪು ಮಾಡಿ ಪರರೊಪ್ಪುವಂತೆ ಮಂದಿ
ತಪ್ಪು ತೋರಿಸಿ ತಪ್ಪು ಒಪ್ಪಿಸುತಿಪ್ಪ
ಮೃತ್ಯುಗೆ ಕಷ್ಟವಾಗ್ವುದ ತಪ್ಪಿಸೋ ತಪ್ಪ ಅ.ಪ
ಪರರ ದುರ್ಗಣ ಗಿರಿಯು ಪರ್ವತಪ್ಪ ಬೆಳಸಿ ಎನ್ನಯ
ಪರಮದುರ್ಗುಣ ತೃಣಕೆ ಸಮನಪ್ಪ ಮಾಡಿತೋರಿಸಿ
ಜರೆದು ಬೀಳುವೆ ನರಕಗುಂಟಪ್ಪ ದುರಿತಶೇಷಪ್ಪ
ಹರಿದುಕೊಳ್ಳದೆ ಮರವೆಲಿ ಮತ್ತು ಪರರ ಜರಿಯುತ
ದುರಿತದಿಂದೆಮಪುರವ ಸಾಧಿಪೆ ತಿರುಗಿ ನೋಡದೆ
ಅರಿವು ಕರುಣಿಸು ಶರಣರ್ಹೊನ್ನಪ್ಪ ೧
ಎಷ್ಟೋ ಎಷ್ಟೋ ಪಾಪಕೋಟೆಪ್ಪಾ ಆಚರಿಸಿ ನಾನು
ಕೆಟ್ಟು ಭ್ರಷ್ಟನಾದೆ ಕಲ್ಲಪ್ಪ ದುಷ್ಟತನದಿ
ನಷ್ಟಮಾಡಿದೆ ಪರರ ಮಾನಪ್ಪ ಮುಷ್ಟಿದಾನಪ್ಪ
ಹುಟ್ಟಿದಂದಿನಿಂದ ಕೊಟ್ಟು ಪಡಿಲಿಲ್ಲ
ಶಿಷ್ಟರೊಲುಮೆಯ ನಿಷ್ಠೆಯಿಂ ನಾ ಸೃಷ್ಟಿಕರ್ತ
ದೃಷ್ಟಿಲಿಂದಿನ್ನು ಹುಟ್ಟಿಸೆನ್ನಗೆ ನಿಷ್ಠ ಜ್ಞಾನಪ್ಪ ೨
ಎಲ್ಲ ಪಾಪಕ್ಹೆಚ್ಚು ನಂದಪ್ಪ ಜಗದಿ ಎಲ್ಲ
ಖುಲ್ಲರಿಗೆ ನಾನ್ಹಿರಿಯ ಬಾಲಪ್ಪ ಕೇಳಲೇನು
ಕಳ್ಳ ಸುಳ್ಳತನದಿ ವೀರಪ್ಪ ಕಾಲಯಮನಪ್ಪ
ಅಲ್ಲ ಅಹುದೆನ್ನುವುದನೆಲ್ಲ ಬಲ್ಲೆ ನೀ
ಇಲ್ಲವೆನಿಪ ಸಾಧ್ಯವೆಲ್ಲಿದೆ ಎನಗೆ ಪುಲ್ಲನಯನ ಕ್ಷಮೆ
ಪಾಲಿಸು ಸಿರಿಯರ ನಲ್ಲ ಶ್ರೀರಾಮ ಗೊಲ್ಲ ಕೃಷ್ಣಪ್ಪ ೩

 

೫೭೭
ಯಾತರಸುಖ ಸುನೀತಿಯಿಲ್ಲದ ಮಹ
ಪಾತಕ ಹೊಲೆಯರಿಗೆ ಪ
ಭೂತಳದಲಿ ಬಂದ ರೀತಿಯನರಿಯದೆ
ಆತುರದಲಿ ಬಿದ್ದ ನೀತಿಗಡುಕರಿಗೆ ಅ.ಪ
ಉತ್ತಮರ್ವಚನದ ಅರ್ಥವನರಿಯದೆ
ಕತ್ತೆಯಂತೆ ಕೂಗಿ ಚಿತ್ತಕ್ಕೆ ಬಂದಂತೆ
ವರ್ತಿಸಿ ಭವದಿ ಅನರ್ಥಕ್ಕೆ ಗುರಿಯಾಗಿ
ಸತ್ಯಜನಕೆ ಕುಂದುತ್ತರಗಳನ್ನಿತ್ತು
ಮೃತ್ಯು ಬಲೆಗೆ ಬೀಳ್ವ ಕತ್ತೆ ಮನುಜರಿಗೆ ೧
ನಶಿಸಿ ಪೋಗೋ ಮಾಯ ವಿಷಯಲಂಪಟವೆಂಬ
ಮುಸುಕಿನೊಳಗೆ ಸೊರಗಿ ನಿಶಿದಿವಯೆನ್ನದೆ
ಪುಸಿಯ ಸಂಸಾರವೆಂಬ ವ್ಯಸನದೊಳಗೆ ಕೊರಗಿ
ವಸುಧೆಸುಖಕೆ ಮೆಚ್ಚಿ ಮಸಣ ಬುದ್ಧಿಯಿಂದ
ಪುಸಿಯ ಬಳಸಿ ಕಾಲನೊಶವಾಗುವವರಿಗೆ ೨
ಶೋಧಿಸಿ ನಿಜಪದ ಸಾಧನೆಯೊಳಗಿರ್ದು
ವಾದವಾಂಛಲ್ಯ ನೀಗಿ ಸಾಧು ಸುಜನ ಸು
ಬೋಧ ಪಡೆದು ಭವಬಾಧೆ ರಹಿತರಾಗಿ
ಭೇದರಹಿತ ಮಹದಾದಿ ಶ್ರೀರಾಮನ
ಪಾದ ನಂಬಿ ಮುಕ್ತಿ ಸಂಪಾದಿಸದವರಿಗೆ ೩

 

೫೨೮
ತಾನೆ ದೊರೆವುದೇನೋ ಸುಖ
ನಾನಾಜನ್ಮದ ಪುಣ್ಯವಿಲ್ಲದೆ ಪ
ಮೃಷ್ಟಾನ್ನವುಂಡು ಮೆರೆವುದೀಗ
ಕೊಟ್ಟು ಅನ್ನ ಹುಟ್ಟಿದವಗಿಲ್ಲದೆ
ಇಟ್ಟುತೊಟ್ಟು ಶೃಂಗಾರದಿಂದ
ಸೃಷ್ಟಿಯಿಂದ್ವಸ್ತ್ರ ವಡವೆಗಳು
ಕೊಟ್ಟು ಹುಟ್ಟಿದ ಪುಣ್ಯರಿಗಲ್ಲದೆ ೧
ಕೋಮಲಯುವತಿ ದೊರೆವುದೀಗ
ಭೂಮಿಯೋಳ್ಕನ್ಯಾದಾನಿಗಲ್ಲದೆ
ಭೂಮಿಸೀಮೆಗಳಿಸಿ ಬಲು
ಕ್ಷೇಮದಿಂದ ಬಾಳ್ವುದೀಗ
ಭೂಮಿಸೀಮೆ ದಾನಗೈದ
ಆ ಮಹಾಪುಣ್ಯವಂತರಿಗಲ್ಲದೆ ೨
ನಿಖಿಲಸುಖದಿ ಮೆರೆವುದೀಗ
ಭಕುತಜನರಪ್ಪ ತೃಪ್ತರಿಗಲ್ಲದೆ
ಅಖಿಲಪದಕೆ ಅಧಿಕವೆನಿಪ
ಮುಕುತಿಪದವಿ ಪಡೆವುದಮಿತ
ಮುಕುತಿದಾಯಕ ಶ್ರೀರಾಮಪಾದ
ಭಕುತಾನುಭಕುತರಿಗಲ್ಲದೆ ೩

 

೧೩೮
ತಾಯಿ ಪಾಲಿಸು ಎನ್ನ ದಯದಿ
ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ
ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ
ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ
ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ
ಚಾರುಚರಿತಂಗಳು ಸಾರುವೆ ನಿಜಮಂತ್ರ
ಮೂರುಲೋಕದ ಸೂತ್ರಧಾರಿ ನೀ ನಿಜ ಓಂ
ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ
ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ
ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ
ಚಾರಿ ನಿಜಸುಖ ತೋರು ಬೇಗನೆ ೧
ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ
ವನು ಕೊಟ್ಟು ಸಲಹಿದಿ ಕನಿಕರದೊಡನೆ
ಮಿನುಗುವ ಶತಕೋಟಿದಿನ ಕರಪ್ರಭಾಮಯೆ
ಅನುಪಮುನಿಜಜ್ಞಾನವನು ನೀಡು ಬೇಗನೆ
ಚಿನುಮಯಾತ್ಮಳೆ ಘನಕೆ ಘನ ನಿನ್ನ
ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ
ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ ೨
ಪನ್ನಂಗಧರ ಸುರಸನುತ ಶ್ರೀರಾಮ
ಸುನ್ನತ ಮಹಿಮಂಗಳನ್ನು ಬಲ್ಲವಳೆ
ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ
ಮನ್ನಿಸು ಬಡವನ ಬಿನ್ನಪ ಕರುಣೆ
ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು
ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ರ‍ಹದಯೆ ೩

 

೨೬
ತಿರುಪತಿಯ ಶ್ರೀವೆಂಕಟೇಶ
ಗೋವಿಂದ ಹರಿ ಗೋವಿಂದ
ಪರತರ ಪರಮಾನಂದ ಪ
ಮಂದರಗಿರಿಧÀರ ಸುಂದರಮೂರುತಿ
ನಂದನಕಂದ ಗೋವಿಂದ ಮುಕ್ಕುಂದ ಅ.ಪ
ದುರಿತರಾಶಿ ನಾಶ ಗೋವಿಂದ
ಪರಮಪದವಿಗೀಶ ಗೋವಿಂದ
ಸುರಮುನಿಸೇವಿತ ಹರಾಜವಿನಮಿತ
ಪರಮಚರಿತ ಸಿರಿಗೋವಿಂದ ೧
ಹುಟ್ಟುಸಾವಿಲ್ಲದ ಗೋವಿಂದ
ತಟ್ಟು ಮುಟ್ಟಿಲ್ಲದ ಗೋವಿಂದ
ಸೃಷ್ಟಿ ತನ್ನಾಧೀನದಿಟ್ಟು ಆಳುವ ದಿಟ
ಸೃಷ್ಟಿಗೆ ಸಿಲುಕದ ಗೋವಿಂದ ೨
ಆದಿಅಂತಿಲ್ಲದ ಗೋವಿಂದ
ನಾದಕಲೆಯಿಲ್ಲದ ಗೋವಿಂದ
ಸಾರಿ ಪೊಗಳುವ ವೇದಕೆ ಕಾಣದ
ಆದಿಅನಾದಿ ಬ್ರಹ್ಮ ಗೋವಿಂದ ೩
ಮುಚ್ಚಲು ಮಾಜದ ಗೋವಿಂದ
ಬಿಚ್ಚಲು ಕಾಣದ ಗೋವಿಂದ
ಅಚ್ಚುತಾನಂತೆಂದು ಬಚ್ಚಿಟ್ಠೊಗಳುವರ
ಸಚ್ಚಿತ್ತಧೊಳೆಯುವ ಗೋವಿಂದ ೪
ನಶ್ವರವಿಲ್ಲದ ಗೋವಿಂದ
ಶಾಶ್ವತ ಮಹಿಮೆಯ ಗೋವಿಂದ
ವಿಶ್ವ ವಿಶ್ವರಕ್ಷ ವಿಶ್ವನಾಟಕ ಮಹ
ವಿಶ್ವ ವಿಶ್ವಾಕರ ಗೋವಿಂದ ೫
ಅಸಮ ಲೀಲಾಜಾಲ ಗೋವಿಂದ
ಅಸುರಕುಲದ ಕಾಲ ಗೋವಿಂದ
ದಶವಿಧವತಾರದಿ ವಸುಧೆಯ ಭಾರವ
ಕುಶಲದಿಂದಿಳುಹಿದ ಗೋವಿಂದ ೬
ತಿಳಿಯಲು ತಿಳಿಯದ ಗೋವಿಂದ
ತಿಳಿವಿಗೆ ಸುಲಭದ ಗೋವಿಂದ
ಬೆಳಕುಕತ್ತಲೆದೆಸೆಸುಳಿವಿಲ್ಲದಸ್ಥಾನ
ಧೊಳೆಯುವ ಅಕಳಂಕ ಗೋವಿಂದ ೭
ಭೂಷಣ ಮಣಿಮಾಲ ಗೋವಿಂದ
ಶ್ರೀಶ ಶ್ರೀನಿವಾಸ ಗೋವಿಂದ
ವಾಸುಕಿಶಯನ ಶೇಷಾರಿಗಮನ
ಸಾಸಿರನಾಮದ ಗೋವಿಂದ ೮
ನಾಮರೂಪಿಲ್ಲದ ಗೋವಿಂದ
ನೇಮನಿತ್ಯಿಲ್ಲದ ಗೋವಿಂದ
ಶಾಮಸುಂದರ ಮುಕ್ತಿ ಸೋಮಭೀಮಸುಖ
ದ್ಧಾಮ ಶ್ರೀರಾಮ ನಿಜಗೋವಿಂದ ೯

 

೬೨೪
ತಿಳಿಯದು ಆರಿಗೆ ನಳಿನಾಕ್ಷನ ಘನ
ವಿಲಸಿತಮಹಿಮೆ ಸುಲಭವಲ್ಲಮಮ ಪ
ಒಳಗು ತಾನೆ ಹೊರಗು ತಾನೆ
ಒಳಗ್ಹೊರಗೊಂದಾಗಿ ಬೆಳಗುವ ತಾನೆ
ಬಳಗ ತಾನೆ ಬಂಧು ತಾನೆ
ಹಲವು ಜೀವರ ಸಲೆರೂಪನು ತಾನೆ ೧
ಹಸಿವು ತಾನೆ ತೃಷೆಯು ತಾನೆ
ಹಸಿತೃಷೆ ತೀರಿಪ ಸೂತ್ರನು ತಾನೆ
ಎಸೆವ ತತ್ವಮಸಿ ಮಹವಾಕ್ಯವ
ಕುಶಲದಿ ನುಡಿಸುವ ಈಶನು ತಾನೆ ೨
ರಕ್ಷಕ ತಾನೆ ಶಿಕ್ಷಕ ತಾನೆ
ಸಾಕ್ಷಿಯಾಗಿ ನ್ಯಾಯ ವೀಕ್ಷಿಪ ತಾನೆ
ಸೂಕ್ಷ್ಮಜ್ಞಾನವಿತ್ತಕ್ಷಯದ್ಹೊರೆಯುವ
ಮೋಕ್ಷಕರ್ತ ಶ್ರೀರಾಮ ತಾನೆ ೩

 

೫೨೯
ತಿಳಿಯದೆ ಬೊಗಳುವದೆಲ್ಲಲ್ಲಲ್ಲ ನಿಜ
ತಿಳಿದರೆ ವಲಿತಾ ಬ್ಯಾರಿಲ್ಲ ಪ
ಮುಲ್ಲ ಶಾಸ್ತ್ರದ ಮೂಲವ ತಿಳಿಯದೆ
ಜೊಳ್ಳುಕೂಗಿಗೆ ಮುಕ್ತಿಲ್ಲಿಲ್ಲ ಅ.ಪ
ಭ್ರಷ್ಟತ್ವವಳಿಯುದೆ ಅಲ್ಲಲ್ಲ ಮುಂದೆ
ನಿಷ್ಠನಾಗಲು ಕಷ್ಟ ಇಲ್ಲಲ್ಲ
ದುಷ್ಟತನಳಿದುಳಿ ಬಿಸ್ಮಿಲ್ಲ ಸತ್ಯ
ಶಿಷ್ಟರೊಳಾಡ್ವುದೆ ಸೊಲ್ಲಲ್ಲ ೧
ಕಾಲನ ಗೆಲುವದೆ ನಿಜಮೌಲ ವನ
ಮಾಲನ ಭಜನದೆ ತಿಳಿ ಲಾಯಿಲಾ
ನೀಲಶಾಮನ ಮಹದಾಲಯದಿಟ್ಟು ಸು
ಶೀಲನಾದವನೆ ಮಹದ್ದೌಲ ೨
ಮಹಮ್ಮದನಾಗ್ವದೆ ಸೊಲ್ಲಲ್ಲ ತನ್ನ
ಅಹಮ್ಮದನಾಗ್ವದೇಕರ್ಬಲ
ಅಹಂ ವಹಂ ನೀಗಿ ರಾಮರಹೀಂ ನೆಲೆ ತಿಳಿ
ಭವಜನುಮ ಮುಂದಿಲ್ಲಲ್ಲ ೩

 

೨೧೧
ತಿಳಿಸು ದಾಸನ ನಿರುತ ನಿಲಯ ಕರುಣಾರ್ಣವ
ತಿಳಿಯದಾಡಿದ ವಚನ ಹೊಲೆಗಲಿಸದಿಳೆಯೊಳು ಪ
ಗುಪಿತದಿಂ ತವಪಾದ ಜಪಿಸಿ ಆನಂದಿಸದೆ
ಅಪರಾಧಿಯಾಗಿರುವೆ ಕೃಪೆಯಿಂದ ಕ್ಷಮಾಮಾಡಿ ೧
ಬಿನುಗುಮತಿಗೈದಂಥ ಘನತಪ್ಪುಗಣಿಸದೆ
ಚಿನುವಇಯಾತ್ಮನೆ ಬೇಗ ಕನಿಕರದಿ ಮೊರೆ ಕೇಳಿ ೨
ಒಲದುಬಾರೈ ಸ್ವಾಮಿ ಬಲಗೊಂಬೆ ತವಪಾದ
ಸುಲಭಭಜಕರಿಗತಿ ಚೆಲುವ ಶ್ರೀರಾಮಯ್ಯ ೩

 

೨೮೬
ತಿಳೀವಲ್ಲದಿದು ಎನಗೆ ತಿಳಿಸಯ್ಯ ಹರಿಯೆ
ಬಲುಪಾಪಿಜೀವಿಯ ತಪ್ಪಾರಿಗಿಹ್ಯದೋ ಪ
ಹುಟ್ಟಿಸಿದವನಿಗೋ ಹುಟ್ಟಿ ಬಂದವನಿಗೋ
ಸೃಷ್ಟಿಗೊಳಿಸಿದಂಥ ಸೃಷ್ಟಿ ಕರ್ತನಿಗೋ
ಗಟ್ಟ್ಯಾಗಿ ನನಗಿದರ ಗುಟ್ಟು ತಿಳಿಸೈ ತಂದೆ
ಮುಟ್ಟಿಭಜಿಸುವೆ ನಿನ್ನ ಶ್ರೀಕೃಷ್ಣರಾಯ ೧
ಗೋಡೆಯ ಡೊಂಕಿರಲು ಗೋಡೆಯ ತಪ್ಪಥವ
ಗೋಡೆಯನು ಕಟ್ಟಿದ ಗೌಂಡಿಯ ತಪ್ಪೋ
ಕೂಡಿಟ್ಟು ಹಣ ವೆಚ್ಚಮಾಡಿ ಕಟ್ಟಿಸಿದಂಥ
ಗೋಡೆಯೊಡೆಯನ ತಪ್ಪೋ ತಿಳಿಹೇಳೆನಗೆ ೨
ಬಂಡಿ ತಗ್ಗಿಗೆ ಬೀಳೆ ಬಂಡಿದೇ ತಪ್ಪಥವ
ಬಂದಡರಿ ಕೂತುಕೊಂಡವರದೆ ತಪ್ಪೋ
ಬಂಡಿಹೊಡೆಯುವಂಥ ದಿಂಡೆಗಾರನ ತಪ್ಪೋ
ಕಂಡು ಇದ್ದಂತ್ಹೇಳೋ ಪಂಢರಿರಾಯ ೩
ಜೀವಾಳ ಅಪಸ್ವರ ನುಡಿಯಲದರದೇ ತಪ್ಪೋ
ಜೀವಾಳ ಬಾರಿಸುವಗೋ ಜೀವಾಳ ಕರ್ತನಿಗೋ
ಆವಂಗೆ ತಪ್ಪು ಜಗಜೀವ ಜೀವೇಶನೆ ನ್ಯಾ
ಯಾವಾಗ್ಹೇಳಯ್ಯ ಭಾವಜಪಿತನೆ ೪
ಪ್ರಾಣೇಶ ಶ್ರೀರಾಮ ನೀನೆ ಬರೆದಿಹ್ಯ ಬರೆಹ
ನೀನೆ ವ್ಯಾಪಕ ಸರ್ವ ನೀನೆ ರಕ್ಷಕನೋ
ನೀನೆ ಸ್ವಾತಂತ್ರ್ಯಾಖಿಲ ಏನಿಲ್ಲ ಮನುಜನಾ
ಧೀನ ತಪ್ಪ್ಯಾಕಿವಗೆ ನೀನೆ ಪೇಳಯ್ಯ ೫

 

೫೩೦
ತುಪಾಕಿ ಬಾರೊ ಮಾಡೊ ಮನುಜ
ತುಪಾಕಿ ಬಾರೊ ಮಾಡೊ ಪ
ತುಪಾಕಿ ಬಾರೊ ಮಾಡೊ ಸೊಬಗಿನಿಂದ
ನೀ ಭುಜಗಶಯನ ಶ್ರೀಹರಿಯ ಧ್ಯಾನವೆಂಬ ಅ.ಪ
ಚಿತ್ತಶುದ್ಧಿಯೆಂಬ ಮದ್ದು ತುಂಬಿ
ಭರ್ತಿಮಾಡಿಕೊಳವೆಯ
ಸತ್ಯಗುಣವೆಂಬ ಛಡಿ ಪಿಡಿ
ದೊತ್ತಿ ಜಡಿಯೊ ಭಕ್ತಿ ಬಾಹ್ವಿನಿಂದ
ಎತ್ತಿ ಸಾಮಥ್ರ್ಯದಿ
ಮಿಥ್ಯದೇಹವನು
ಹತ್ತಿ ಬೇಂಟೆನಾಡೊ ೧
ಅಂಟಿಕೊಂಡು ಬರುವ ಬೇಗ ತಿಳಿ
ಎಂಟು ಕೋಣನ ಸುಳಿವ
ಗಂಟಲಕ್ಕೆ ಹಾರುತಿರುವ ಆರುಹುಲಿ
ಬಂಟನಾಗಿ ತರಿಯೆಲವೊ ವೈ
ಕುಂಠನ ಕೃಪೆಯೆಂಬ
ಬಂಟಬಲವು ಕೂಡಿ
ಬೇಂಟೆನಾಡೆಲೊ ೨
ಮೂರುಮಂದಿರವ ಕಟ್ಟಿಕೊಂಡು
ಧೀರನಾಗಿ ನಲಿಯೊ
ಸಾರಿಬರುವ ಏಳು ಕೊಳ್ಳಗಳ
ಹಾರಿ ಮುಂದಕೆ ನಡೆಯೊ
ಘೋರ ದುರ್ಗುಣ ಮೃಗ
ಸೂರೆಮಾಡಿ ಮಹಧೀರ
ಶ್ರೀರಾಮನ ಚಾರುಚರಣ ಸೇರು ೩

 

೧೩೯
ತುಳಸಮ್ಮ ಎನಗೊಲಿಯಮ್ಮ
ವಿಲಸಿತವಿಮಲೆ ನೀ ಕಲ್ಯಾಣಮಾಡೆನಗೆ ಪ
ನಿಲಯನಿಲಯದಲಿ ನಿಂದು ಭಕ್ತ
ಕುಲವನುದ್ಧರಿಸಿದಿ ಇಂದುಮುಖಿ
ಮಲಿನಹರಣೆ ದಯಸಿಂಧು ಅಹ
ಕುಲವನುದ್ಧರಿಸೆನ್ನ ಹೊಲೆಯ ಬವಣೆಯಲಿ
ಕಳವಳಪಡಿಸದೆ ಸಲಹು ಬೇಗೆನ್ನಮ್ಮ ೧
ಭಯದೂರೆ ಜಯಕಾರೆ ಜಗಕೆ ಲೋಕ
ತ್ರಯದ ಜನನಿ ಎನ್ನ ಮನಕೆ ಬೇಗ
ಜಯವ ನೀಡಿ ಮಾಡು ಜೋಕೆ ಅಹ ರಮೆ
ದಯಯುತೆ ನಿನ್ನ ದಯದಿ ಬೇಡುವೆನವ್ವ
ಭವಭವದಲಿ ಎನ್ನ ಜಯವ ಪೊಂದಿಸಿ ತಾಯಿ ೨
ಜಲಜನಾಭನ ಮೋಹಮಾಲೆ ನೀನು
ಬಲು ದಯಾನ್ವಿತಭಕ್ತ ಶೀಲೆ ಎನ್ನ
ಗಳವೆ ಪೊಗಳಲು ನಿನ್ನ ಲೀಲೆ ಆಹ
ಚೆಲುವ ಶ್ರೀರಾಮನ ಕೂಡಿಕೊಂಡೆನ್ನೊಳು
ನೆಲೆಗೊಳ್ಳು ಬಿಡದೆ ವರ ಫಲ ಪ್ರದಾಯಿನಿ ೩

 

೨೮೭
ತೇಲಿದೆ ಅಯ್ಯಾ ತೇಲಿದೆ ಪ
ತೇಲಿಬಾರದಂಥ ಸುಳಿಯ ಮಡುವುಮುಳುಗಿ
ನೀಲಶಾಮನ ಪಾದಕಮಲಕರುಣದಿಂದ ಅ.ಪ
ಪಾರಾವಾರಿಲ್ಲದ ಮಡುವು ಕಾಲು
ಜಾರಿ ಬಿದ್ದಿದ್ದೆ ತಪ್ಪಿದಡವು ಬಲು
ಮೇರೆದಪ್ಪಿದ ತೆರೆ ಸೆಳವು ಉಲಿ
ದ್ಹಾರಿಬರುವ ಜಲಚರವು ಆಹ
ಮೀರಿದಂಧಕಾರ ನೀರಿನ ಸುಳಿಯೊಳು
ಘೋರಬಡುತಲಿರ್ದೆ ಮುಳುಮುಳುಗೇಳುತ ೧
ತಂಡತಂಡದಿ ಒದಗುವ ಬಲು
ಗಂಡಸುಳಿಯು ತಿರುಗುವ ಒಳ
ಗೊಂಡ ಮತ್ಸ್ಯಮಕರಿಭಯವ ಆಹ
ಕಂಡು ಕಾಣದೆ ಬಿದ್ದು ಗುಂಡಿಗೊಡೆದು ನಾನು
ಬೆಂಡಾದೆ ಕಂಗೆಟ್ಟು ಮುಳುಮುಳುಗೇಳುತ ೨
ಹಿಂದಕ್ಕೆ ಏನಾದದ್ದಾಯ್ತು ಶ್ರೀಶ
ಮುಂದೆ ಎನ್ನಗೆ ಇಂಥ ಹೊತ್ತು ಈಶ
ಎಂದೆಂದು ತರದಿರು ಮತ್ತು ಕೇಶ
ಕಂದನ ಸನ್ಮಾರ್ಗಕ್ಹೊತ್ತು ಆಹ
ಸಿಂಧುಶಯನ ಎನ್ನ ತಂದೆ ಶ್ರೀರಾಮ ನಿನ್ನ
ಬಂಧುರಂಘ್ರಿಯ ಕೃಪೆಯಿಂದ ನಾ ಉಳಕೊಂಡೆ ೩

 

೨೮೮
ತೋರು ನಿಜಜ್ಞಾನ ಸುಖವ
ಮಾರನಯ್ಯ ಮರೆಯ ಬಿದ್ದೆ ಪ
ಪಾರಮಾರ್ಥ ಪರಮ ಸವಿ
ಚಾರಮೆನಿಪ ಪಾವನ ಸುಪಥ ಅ.ಪ
ತೀರದಂಥ ಅಪಾರಭವದ
ವಾರಧಿ ಈಸಿ ಘೋರಬಡುವೆ
ನೀರಜಾಕ್ಷ ನಿಗಮವಿನುತ
ಪಾರುಮಾಡು ಕಾರುಣ್ಯಶರಧಿ ೧
ವಿಷಯಲಂಪಟ ಮುಸುಕು ಮುಸುಕಿ
ವ್ಯಸನಚಿತೆಯೋಳ್ ಬಸವಳಿದೆ
ಅಸಮಹಿಮ ತವಪಾದ
ಕುಸುಮ ಮರೆದು ಕೆಟ್ಟೆನಭವ ೨
ನಾಶಮತಿಯಿಂದಾಸೆಗೈದ
ದೋಷಗಳನ್ನು ಕ್ಷಮಿಸಿ ಬೇಗ
ಪೋಷಿಸಿಭವ ಶ್ರೀಶ ಶ್ರೀರಾಮ
ದಾಸಜನರುಲ್ಲಾಸ ಪ್ರಭು ೩

 

೨೮೯
ತೋರು ನಿಮ್ಮ ಪಾದಕುಸುಮ
ಮಾರನಯ್ಯಾಪಾರಮಹಿಮ ಪ
ಧರೆಯ ಭೋಗದಾಸೆ ತೊರೆಸಿ
ನಿರುತವಾದ ಮಾರ್ಗ ಹಿಡಿಸಿ
ಕರುಣಿಸು ಎನ್ರ‍ಹದಯಕಮಲಕೆ
ಕರೆ ತತ್ತ್ವಜ್ಞಾನ ಅಮೃತ೧
ಕವಿದುಕೊಂಡಜ್ಞಾನಕತ್ತಲು
ಜವದಿಹಾರಿಸಿ ಎನ್ನಯ
ಭವದ ಬಂಧನ ದೂರಮಾಡಿ
ಜವನಭಯನಿರ್ಬೈಲು ಎನಿಸು ೨
ಮಯಾಮೋಹದೊಳಗೆ ಮುಳುಗಿ
ಪೋಯಿತೆನ್ನಯ ಅರ್ಧವಯವು
ಕಾಯಜಪಿತ ಸ್ವಾಮಿ ಶ್ರೀರಾಮ
ನೋಯಿಸದೆ ನಿಜಪಥಕೆ ಹಚ್ಚೆನ್ನ ೩

 

೫೩೧
ಥೂ ನಿನ್ನ ಮೋರೆಗೆ ಬೆಂಕ್ಯ್ಹಚ್ಚ ಮನವೆ
ಇನ್ನಾದರೂ ಇಂಥ ಕುಯುಕ್ತಿ ಬಿಡು ಮನವೆ ಪ
ಮುನ್ನ ನೀ ಪಡೆದದ್ದು ನಿನ್ನಗಿರಲಿಕ್ಕಾಗಿ
ಅನ್ಯರೊಡವೆಯ ಬಯಸಿ ಕಣ್ಣಿಕ್ಕಿ ಕುದಿವಿ
ಕುನ್ನಿಮನಸೆ ನಾಳೆ ಕಣ್ಣಿನೋಳುರಿಗೆಂಡ
ವನ್ನು ತುಂಬಿಸುವೆ ಮನಚೆನ್ನಾಗಿ ನೋಡೊ ೧
ಎತ್ತೆತ್ತಲೋ ಬೇಡಿ ಮಿಥ್ಯ ಸತಿಸುತರಿಗೆ
ತೊತ್ತಾಗಿ ದುಡಿದು ಮುದಿಕತ್ತೆ ನೀನಾದಿ
ಮೃತ್ವಿಗೆ ತುತ್ತಾಗಿ ಅತ್ತತ್ತು ಬಾಯಿಬಿಡುವ
ಹೊತ್ತಿಗಿರರಾರಾರು ಅರ್ತು ನೀ ನೋಡೊ ೨
ಚಿತ್ತಜಪಿತನಂಘ್ರಿ ಸತ್ಯಭಜನಕೆ ಕರೆಯೆ
ಸುತ್ತಿ ಮಲುಗುವಿ ಸತಿಸತ್ತಳುವನಂತೆ
ಮತ್ತೆ ಎತ್ತಕೆ ಕರೆಯೆ ವತ್ತರಿಲ್ಲ ಓಡ್ವಿ
ಮುಕ್ತಿಕೊಂಡೆಯ್ವೆ ಮನ ತೊತ್ತಾಗಬೇಡೊ ೩
ದಾಸಾನುದಾಸರ ದೂಷಣೆಯ ಮಾಡಿ ಮಹ
ಹಾಸ್ಯದಿಂ ನಗುವಿ ಭವಪಾಶದೋಳ್ಸಿಲ್ಕಿ
ನಾಶಬುದ್ಧಿಯ ಬಿಡು ಹೇಸಿಮನುಜನೆ ಯಮ
ಪಾಶ ಬರುವುದು ಮುಂದೆ ಸೋಸಿ ನೀನೋಡೊ ೪
ನೆರೆದು ತೋರುವ ಸಂತೆಪರಿಯಂತೆ ಸಂಸಾರ
ಮರೆಮೋಸದ ಉರುಲು ದುರಿತದ ತವರು
ಮರುಳತನವನು ನೀಗಿ ಪರಮ ಶ್ರೀರಾಮನ
ಚರಣಸ್ಮರಣೆಯೊಳಿರ್ದು ವರಮುಕ್ತಿ ಪಡೆಯೊ ೫

 

೩೦೪
ದಂಡವ್ಯಾತಕಯ್ಯ ಹರಿ ಹರಿ ದಂಡವ್ಯಾತಕಯ್ಯ ಪ
ದಂಡವ್ಯಾತಕಯ್ಯ ಪಾಂಡುಪಕ್ಷ ಮಹ
ಪುಂಡ ನಿನ್ನ ಪಾದ ಮರೆಯ ಬಿದ್ದವರಿಗೆ ಅ.ಪ
ಭಾರನಿನ್ನದೆಂಬ ಭಕ್ತರ ಭಾರವಹಿಸಿಕೊಂಬ
ಪಾರಕರುಣಾನಿಧಿ ಧೀರ ನಿನ್ನ ಪಾದ
ಸೇರೆ ಭಜಕರಿಗೆ ಧಾರುಣಿ ಜನರ ೧
ಅಜಾಮಿಳನಂತ್ಯದಿ ತವನಾಮ ನಿಜವಾದೊಂದಕ್ಷರದಿ
ಮಜೆದು ಗೆಲಿದು ಕಷ್ಟ ನಿಜಪದ ಪಡೆದದ್ದು
ನಿಜವನರಿತು ನಿಮ್ಮ ಭಜಿಸುವ ಜನರಿಗೆ ೨
ಸಿಂಧುಶಯನನೆನಲು ಅನ್ಯರ ಬಂಧುವೆ ಕರುಣಾಳು
ಮಂದರಪರ್ವತ ಮಂದಿರ ಶ್ರೀರಾಮ
ಬಂಧುರ ನಿಮ್ಮ ಪಾದ ವಂದಿಸಿ ಸುಖಿಪರಿಗೆ ೩

 

೨೯೦
ದಯಪಾಲಿಸೆಲೊ ರಂಗ
ಭ್ರಮಿಪ ಮನಕೆ ಶಾಂತಿ ಪ
ತನುಮನಧನಮೋಹವನು ಪರಿಹರ ಮಾಡಿ
ಅನುದಿನ ತವಧ್ಯಾನ ಆನಂದ ಕರುಣಿಸೊ ೧
ಸ್ಮರಿಸಬಾರದ ಸ್ಮರಿಸಿ ದುರಿತಕ್ಕೆ ಗುರಿಯಾಗಿ
ಪರಿಪರಿ ಮರುಗುವ ದುರ್ಮನ ದೂರಮಾಡೊ ೨
ನೀನೆ ಎನ್ನಯ ಮಹಪ್ರಾಣೇಶ ಶ್ರೀರಾಮ
ನಾನಾಕಾಮಿತ ಬಿಡಿಸಿ ಜ್ಞಾನಪದವಿ ನೀಡೊ ೩

 

೧೭೦
ದಯಮಾಡು ಬಡವಗೆ ಮಹರಾಯ
ದಯಾಕರ ವಿಜಯವಿಠಲರಾಯ ಪ
ದೃಢದಿಂದಲಿ ನಂಬಿ ಬೇಡುವೆನು
ಕೊಡುಗಡ ನಿನ್ನಡಿಭಕ್ತಿಯನು
ಕಡುಪೀಡಿಪ ಈ ಜಡಬಡತನದಿಂ
ಕಡೆಹಾಯ್ಸೆನ್ನನು ಕಡುದಯದಿಂ ಪೊರೆ ೧
ಸೆರೆಗೊಡ್ಡಿ ಬೇಡುವೆ ಮಾಧವ
ಕರುಣದಿ ಕರುಣಿಸು ವರವ
ತ್ವರಿತದಿ ಎನ್ನ ಪರಿಭವ ದು:ಖವ
ಪರಿಹರಿಸಿ ನಿಮ್ಮ ಸ್ಮರಣೆಯೊಳಿರಿಸೆನ್ನ ೨
ಸತ್ಯಭಾಮೆರಮಾಕಾಂತನೆ
ಭಕ್ತರ ಕಕ್ಕುಲಾತಿದೇವನೆ
ನಿತ್ಯನಿರಂಜನ ಮುಕ್ತಿದಾಯಕ
ಉತ್ತಮಮತಿಕೊಡು ನಿತ್ಯಾತ್ಮ ಶ್ರೀರಾಮ ೩

 

೨೯೧
ದಯವದೋರೋ ದೇವ ಭಕುತ
ಭಯನಿವಾರ ಅಭವ ಪ
ದಯವದೋರೋ ನಿನ್ನ ಪಾವನಪಾದ ಸು
ಸೇವಕ ಜನಮಹಜೀವ ಜಾನಕೀಧವ ಅ.ಪ
ಪಾಪಗೆಲಿಯ ಬಂದೆ ಸಂಸಾರ
ಕೂಪದೊಳಗೆ ನಿಂದೆ
ಕೋಪಜ್ವಾಲದಿ ಬೆಂದೆ ವಿಷಯ
ತಾಪತ್ರಯದಿನೊಂದೆ
ಆ ಪರಲೋಕದ ವ್ಯಾಪಾರ ಮರೆದಿಹ್ಯ
ದ್ವ್ಯಾಪಕನಾಗಿ ಬಲುತಾಪಬಡುವೆ ತಂದೆ ೧
ಅಂಗಮೋಹವ ಬಿಡಿಸೋ ನಿನ್ನವರ
ಸಂಗವ ಕರುಣಿಸೊ
ಭಂಗವ ಪರಹರಿಸೊ ಜಗದವ
ರ್ಹಂಗಹನು ತಪ್ಪಿಸೊ
ಮಂಗಳಾತ್ಮ ನಿನ್ನ ಮಂಗಳಾಮೂರ್ತಿ ಎನ್ನ
ಕಂಗಳೋಳ್ನಿಲ್ಲಿಸಿ ಹಿಂಗದಾನಂದ ನೀಡು ೨
ದೋಷದಾರಿದ್ರ್ಯ ಹರಿಸೊ ಮನದ
ಅಶಾಪಾಶ ಬಿಡಿಸೊ
ಹೇಸಿಪ್ರಪಂಚ ಗೆಲಿಸೊ ಸುಜನರಾ
ವಾಸ ತೀವ್ರ ಪಾಲಿಸೊ
ದೋಷನಾಶ ಜಗದೀಶ ಶ್ರೀರಾಮ ನಿನ್ನ
ದಾಸಾನುದಾಸೆನಿಸಿ ಪೋಷಿಸು ಸತತ ೩

 

೧೪೦
ದಯವು ಏತಕೆ ಬಾರದೌ ದೇವಿ
ಭಯವಿಮೋಚನೆ ಭಕ್ತ ಸಂಜೀವಿ ಪ
ಚರಣಕಮಲಕ್ಕೆ ಶಿರವ ಬಾಗಿದೆನೆ
ಸೆರಗನೊಡ್ಡಿ ಪರಮಭಕ್ತಿಲಿ ಬೇಡಿಕೊಂಡೆನೆ
ಕರುಣಭರಿತ ಮೊರೆಯ ಕೇಳ
ದಿರು ವಿಜಯವಾಣಿ
ಪರಮಕಲ್ಯಾಣಿ
ಮರೆಯಬಿದ್ದವರನ್ನು ನೀನು ಪೊರೆಯದಿರುವುದು
ಸರಿಯೆ ನಿನಗಿದು
ಶರಣಜನರ ಕರುಣಾಕರಿ ಅಂಬ
ಪರತರ ಬಿರುದು ಇದೆಯೇನೆ ೧
ಮಾರಮರ್ದನರಸಿ ಗಂಭೀರೆ
ಶಾರದಾಂಬೆಯೆ ಮೂರುಲೋಕಂಗಳಿಗೆ ಆ
ಧಾರಿ ಪಾರಮಹಿಮೆಯೆ ತೋರು
ಕರುಣವ ಬೇಗ ವರಗೌರಿ
ಮರೆಯದಿರು ಶೌರಿ
ಸಾರನಿಗಮವಿನುತೆ ನಿಮ್ಮಯ ಚಾರು ಚರಿತವ ಪಾಡಿ ಬೇಡುವೆ
ಕೋರಿದಾಕ್ಷಣ ತೋರಿ ಭಕ್ತರ
ಸಾರಮನದಿಷ್ಟ ಪೂರೈಸಿದ ರೌದ್ರಿ ೨
ಸ್ವಾಮಿ ರಾಮನನಾಮಮಹಿಮರತಿ
ನೀ ಮನವ ಸೋತಿ ಪ್ರೇಮದಿಂದಲಿ ತ್ರಿಜ
ಗನ್ಮಾತೆ ವಿಮಲಚರಿತೆ
ಪ್ರೇಮಮಂದಿರೆ ಭಕ್ತ ವರದಾತೆ ಅಮರಾದಿವಿನುತೆ
ಹೈಮವತಿ ನಿನ್ನ ನಂಬಿ ಭಜಿಸುವೆ ಕ್ಷೇಮಪಾಲಿಸೆನ್ವ್ಯಾಧಿ ಕಳೆದು
ನಾಮರೂಪರಹಿತೆ ವಿಮಲೆ
ಅಮಿತಮಹಿಮಳೆ ಮಮತೆದೋರೆ ೩