Categories
ರಚನೆಗಳು

ರಾಮದಾಸರು

೨೧೨
ಎನ್ನಪಾಪವೇ ಎನ್ನ ಕಾಡುವುದು ಎನ್ನಯ್ಯ ಹರಿಯೆ
ನಿನ್ನದಿದರೊಳನ್ಯವೇನಿಹ್ಯದು ಪ
ಮುನ್ನಮಾಡಿದ ಪಾಪಕರ್ಮವು
ಬೆನ್ನಬಿಡದೆ ಕಾಡುತಿರಲು
ನಿನ್ನಗನ್ನುವುದಾವ ನ್ಯಾಯವು
ಪನ್ನಂಗಶಾಯಿ ಸನ್ನುತಾಂಗ ಅ.ಪ
ನಾನಾಜೀವಿಗಳ ಪ್ರಾಣಹಾರಿಸಿದೆ ಅನ್ಯರಿಗೆ ಬಿಡದೆ
ಜಾಣನುಡಿ ಪೇಳಿ ಹಾನಿ ಬಯಸಿದೆ ದುಗ್ಗಾಣಿ ರಿಣಕಾ
ಗೇನುಯಿಲ್ಲೆಂದಾಣೆ ಮಾಡಿದೆ ನಾ ನಿನ್ನ ಮರೆದೆ
ಏನು ತಿಳಿಯದೆ ಜ್ಞಾನ ಪೇಳಿದೆ
ಜ್ಞಾನವಂತರಿಗ್ಹೀನ ನುಡಿದೆ
ಮಾನವಂತರ ಮಾನ ಕಳೆದೆ
ಹೀನಬವಣೆಯೋಳ್ಬಿದ್ದೆನಭವ ೧
ಅಂಗನೆಯರ ಸಂಗ ಬಯಸಿದೆ ದುರಿತಕ್ಕೆ ಹೇಸದೆ
ಅಂಗನೆಯರ ಗರ್ಭ ಭಂಗಿಸಿದೆ ಅನ್ಯರ ಒಡವೆಗೆ
ಕಂಗಳಿರೆ ಭಂಗಕೊಳಗಾದೆ ಮಂಗ ನಾನಾದೆ
ಭಂಗಗೈದೆನು ನಿತ್ಯ ನೇವಹಕೆ
ಅಂಗನೆನಿಸದೆ ಬಡವರ್ವಿಮಹಕೆ
ನುಂಗಿ ಕೂತೆನು ಪರರ ದ್ರವ್ಯಿ
ನ್ನ್ಹ್ಯಾಂಗೆ ನಿನ್ನೊಲಿಮೆನಗೆ ಅಭವ ೨
ಕೊಟ್ಟ ಒಡೆಯರಿಗೆರಡನೆಯ ಬಗೆದೆ ನಂಬಿ ಎನ್ನೊ
ಳಿಟ್ಟ ಗಂಟನು ಎತ್ತಿಹಾಕಿದೆ ಪಡೆದ ಮಾತೆಯ
ಬಿಟ್ಟು ಬೇಸರ ಮಾಡಿನೋಡಿದೆ ಭ್ರಷ್ಟನಾನಾದೆ
ದುಷ್ಟಗುಣಗಳನೊಂದುಬಿಡದೆ
ಶಿಷ್ಟಪದ್ಧತಿ ಜನಕೆ ಉಸುರಿದೆ
ಕೊಟ್ಟವಚನೊಂದು ನಡೆಸದಿಂದುಳಿದು
ದಿಷ್ಟೆಂದೆನ್ನ ಕೃತಿ ಪೇಳೆನಭವ ೩
ಒಂದೆ ಮನದವನಂತೆ ತೋರಿದೆ ಮತ್ರ್ಯದವರಿಗೆ
ಮುಂದೆ ಭಲಾಯೆಂದು ಹಿಂದೆ ನಿಂದಿಸಿದೆ ದೋಷವಿನಿತು
ಹೊಂದದವರಿಗೆ ಕುಂದು ಹೊರೆಸಿದೆ ನಾನೇ ಅಹುದಾದೆ
ಸಿಂಧುಶಯನ ಭಕ್ತರನ್ನು ಕಂ
ಡೊಂದಿಸದೆ ಮುಖವೆತ್ತಿ ನಡೆದೆ
ಮುಂದುಗಾಣದೆ ದೋಷ ಮಾಡಿದೆ-
ನೊಂದು ಪುಣ್ಯವನರಿಯೆನಭವ ೪
ಕೊಡುವ ಧರ್ಮಕೆ ಕಿಡಿಯನ್ಹಾಕಿದೆ ಕೂಡಿದ್ದವರಿಗೆ
ಕೆಡಕು ಬೋಧಿಸಿ ಒಡಕು ಹುಟ್ಟಿಸಿದೆ ಅಡಿಗೆ ಬಾಗಿ
ಮಿಡುಕುವವರಿಗೆ ದುಡುಕನಾಡಿದೆ ಕಡುಪಾಮರಾದೆ
ಪಿಡಿದು ಕಾಯುವ ಒಡೆಯನ್ಹೆಸರಿನ
ಮುಡಿಪು ನುಂಗಿ ಕಡುಪಾಪಾತ್ಮಾದೆನು
ಸುಡುಸುಡೆನ್ನಯ ಜನ್ಮವ್ಯಾಕಿನ್ನು
ಒಡೆಯ ಶ್ರೀರಾಮ ಸಾಕುಮಾಡೋ ೫

 

೪೯೯
ಎನ್ನಯ್ಯ ಎಲ್ಲ ನಿನ್ನದಯ್ಯ ಹರಿ
ನಿನ್ನ ಮಾಯ ಜಗ ವಿಷ್ಣುಮಯ ಪ
ಎತ್ತನೋಡಿದರು ನಿನ್ನ ಕ್ಷೇತ್ರ ಹರಿ
ಸುತ್ತ ತಿರುಗೋದೆಲ್ಲ ನಿನ್ನ ಸೂತ್ರ
ನಿತ್ಯ ನಡೆವುದೆಲ್ಲ ನಿನ್ನ ಯಾತ್ರ ಹರಿ
ಸತ್ತು ಹುಟ್ಟುವ ಭವ ನಿನ್ನ ಚಿತ್ರ ೧
ವೇದ ನಾದವೆಲ್ಲ ನಿನ್ನ ಮಂತ್ರ ಹರಿ
ಓದು ವಾದ ಎಲ್ಲ ನಿನ್ನ ತಂತ್ರ
ಬಾಧೆ ವಿನೋದ ಎಲ್ಲ ನಿನ್ನ ಯಂತ್ರ ಹರಿ
ಆದಿ ಅನಾದಿ ಸರ್ವ ನಿನ್ನ ಸ್ವತಂತ್ರ ೨
ರೋಗ ರಾಗ ಎಲ್ಲ ನಿನ್ನ ಶೂಲ ಹರಿ
ಭೋಗ ಭಾಗ್ಯವೆಲ್ಲ ನಿನ್ನ ಜಾಲ
ಯೋಗ ಜಾಗರ ಸದಾ ನಿನ್ನ ಶೀಲ ಹರಿ
ಬೈಗುಬೆಳಗುಯೆಲ್ಲ ನಿನ್ನ ಲೀಲಾ ೩
ಆಟ ನೋಟವೆಲ್ಲ ನಿನ್ನ ಮತಿ ಹರಿ
ಝಾಟ ಮಾಟ ಎಲ್ಲ ನಿನ್ನ ಕೃತಿ
ಊಟ ಕೂಟವೆಲ್ಲ ನಿನ್ನ ರತಿ ಹರಿ
ಕೋಟಿ ಕೋಟಿ ಕಲ್ಪ ನಿನ್ನ ಸ್ರ‍ಮತಿ ೪
ಕುಂದು ನಿಂದೆಯಲ್ಲ ನಿನ್ನ ಜಪವು ಹರಿ
ಬಂದ ಬಂಧವೆಲ್ಲ ನಿನ್ನ ತಪವು
ಅಂದಿಗಿಂದಿಗು ನಿನ್ನ ನಾಮ ನೆನವು ಸ್ಥಿರ
ವೊಂದೆ ಕೊಟ್ಟು ಶ್ರೀರಾಮ ಸಲಹು ೫

 

೬೧೮
ಎನ್ನಳವೇನಯ್ಯ ಬಣ್ಣಿಸಲು ನಿನ್ನ
ಉನ್ನತ ಮಹಿಮ ಶ್ರೀ ಪನ್ನಂಗಶಯನ ಪ
ವೇದಾದಿ ಗುಪಿತ ನೀ
ವೇದಾಗಮಾತೀತ
ಆದಿಮಧ್ಯಂತಿಲ್ಲದಾ
ನಾದಿ ವಸ್ತುವೆ ಸ್ವಾಮಿ ೧
ಗಣನೆಯಿಲ್ಲದ ಕಾಲು
ಎಣಿಕೆಯಿಲ್ಲದ ಹಸ್ತ
ಗುಣಿತಕ್ಕೆ ಮೀರಿದ ಅ
ಗಣಿತಮುಖಬ್ರಹ್ಮ ೨
ಹುಟ್ಟು ಸಾವಿಲ್ಲದ
ಶಿಷ್ಟ ಶ್ರೀರಾಮ ಭಕ್ತ
ರಿಷ್ಟದಾಯಕನೆಂದು
ನಿಷ್ಠೆಯಿಂ ಪಾಡ್ವೆ ೩

 

೫೦೨
ಎಲೆ ಎಲೆ ಎಲೆ ಥೂ ಪರದೇಸಿ ನೀ
ಸುಳ್ಳೆ ಸುಳ್ಳೆ ಮಾಡಬೇಡ ಚೌಕಾಸಿ ಪ
ತಿಳಕೊಂಡು ನೋಡು ನೀನು ಸುಧಾರಿಸಿ
ಬಲವಾಗಿ ಬರದೇನು ಹಿಂಬಾಲಿಸಿ ಅ.ಪ
ಎಷ್ಟು ದುಡಿದಿ ಸತಿಸುತರಿಗಾಗಿ ಗಂಟು
ಕಟ್ಟಿಕಟ್ಹ್ಹೂಳಿಟ್ಟಿ ಇವರಿಗಾಗಿ
ಅಷ್ಟು ಬಿಟ್ಟು ನಡೀತಿದ್ದಿ ಹಾಳಾಗಿ ನಿನ್ನ
ಇಟ್ಟು ಬಂದು ಉಣುತಾರೋ ಹೋಳಿಗಿ ೧
ಕಣ್ಣು ಮುಚ್ಚ್ಯಾಟವನಾಡುತಿದ್ದಿ ನೀ
ಬಣ್ಣಗೆಟ್ಟು ಖರೆಯೆನುತಿದ್ದಿ
ಸುಣ್ಣದ್ಹರಳ್ಹೊತ್ತ ಕೋಣ ಹೋಗಿ ಭರದಿ ಕಂಡು
ತಣ್ಣೀರಿನೊಳು ಬಿದ್ದು ಸತ್ತ ಗಾದಿ೨
ವಿಷಯ ಸಂಸಾರೆಂಬುದ್ವಿಷದ ಘಟ ಇದು
ಪುಸಿಯು ಬರಿದೆ ಗಾಳಿಯ ಮಟ್ಟ
ವಸುಧೇಯೊಳಧಿಕೆಂದು ತೊಡು ನಿಷ್ಠೆ ನಮ್ಮ
ಅಸಮ ಶ್ರೀರಾಮನ ಪಾದ್ಹಿಡಿ ಗಟ್ಟಿ ೩

 

೨೧೬
ಎಲೆ ಎಲೆ ಎಲೆ ಮನ ಉಳಿ ಉಳಿ ಸಿರಿ
ವಲ್ಲಭನ ಭಜನೆಯೋಳ್ನಲಿ ನಲಿ ಪ
ಮಲಿನ ಮಲದಭಾಂಡ ತೊಳಿತೊಳಿ ಈ
ಹೊಲೆಮಯ ಸಂಸಾರ ತುಳಿ ತುಳಿ ಅ.ಪ
ಶಮೆಶಾಂತಿ ಖಡ್ಗವ ಹಿಡಿಹಿಡಿ ಕಾಲ
ಯಮನ ಭಟರ ಭೀತಿ ಕಡಿ ಕಡಿ
ಕ್ರಮದಿ ಬಿಡದೆ ಸತ್ಯ ನುಡಿ ನುಡಿಮಹ
ಸುಮನಸಜನ ಕೃಪೆ ಪಡಿ ಪಡಿ
ವಿಮಲ ಸನ್ಮಾರ್ಗದಿ ನಡಿ ನಡಿ
ರಮಾರಮಣನ ಪಾದಕಮಲ್ಹಿಡಿ ಹಿಡಿ೧
ಮಾನಾಪಮಾನ ಸಮ ತಿಳಿ ತಿಳಿ ನಿಜ
ಜ್ಞಾನ ಬೆಳಗಿನೊಳು ಸುಳಿ ಸುಳಿ
ನಾನಾ ಕಲ್ಪನೆ ಕಳಿ ಕಳಿ ಸ್ಥಿರ
ಧ್ಯಾನ ದಾಸರೊಳು ಹೊಳಿ ಹೊಳಿ
ಹೀನ ಭವಾಂಬುಧಿಬಂಧ ಗೆಲಿ ಗೆಲಿ ಹರಿ
ಧ್ಯಾನ ಅಮೃತ ಸದಾ ಮೆಲಿ ಮೆಲಿ ೨
ಗಜಿಗಜಿ ಮಾಯ ಮುಸುಕು ತೆಗಿ ತೆಗಿ ನೀ
ಕುಜನ ಕುಹಕಸಂಗ ಒಗಿ ಒಗಿ
ಸುಜನ ಸುಸಂಗವ ಬಗಿ ಬಗಿ ಬಾಳು
ಭಜನಾನಂದಕೆ ತಲೆದೂಗಿದೂಗಿ
ಭಜಿಸಿ ಶ್ರೀರಾಮಪಾದ ಲಗಿಲಗಿ ಹಿಗ್ಗಿ
ನಿಜಮುಕ್ತಿ ಸಾಮ್ರಾಜ್ಯದಿ ಜಿಗಿ ಜಿಗಿ ೩

 

೫೦೩
ಎಲೆ ಎಲೆ ಎಲೆ ಮುದಿಮೂಳಿ ನಿನ್ನ
ಕಲ್ಮಷ ಇನ್ನು ತೊಳಿವಲ್ಲಿ ಪ
ತಿಳಿಯದೆ ಸುಮ್ಮನೆ ಕಳಕೊಂಡಿ ವಯವೆಲ್ಲ
ಸುಳ್ಳೆ ಸುಳ್ಳಿಗಾಗಿ ಹೋಗಿ ಮೃತ್ಯುಕೈಲಿ ಅ.ಪ
ಹಿಡಿದಿದ್ದಿ ಸುಡುಗಾಡ ಪಥವ ಇನ್ನು
ಬಿಡವಲ್ಲಿ ಮಾಯಮತವ
ಹೆಡತಲೆಮೃತ್ಯು ನಾಳೆ ಅಡರಿ ಪಿಡಿದು ನಿನ್ನ
ಕೆಡ ಕೆಡವಿ ಒದೆವಾಗ ಬಿಡಿಸೊರಾರವ್ವ ೧
ಇನತು ನಾಚಿಕಿಲ್ಲ ರೋಗಿ ನೀನು
ತಿಣಿತಿಣಿಕಾದಿ ಮುದಿಗೂಗಿ
ಕನಿಕರಿಲ್ಲದೆ ಯಮನ ಠೊಣಪರ್ಹಿಡಿದು
ನಿನ್ನ ಹೊಗೆರ್ಹೊಣಿಕಿಲ್ಹೇರುವಾಗ ನಿನಗ್ಯಾರೆ ಕಾಗಿ ೨
ಹಣವೆಷ್ಟಿರಲು ನಿನ್ನದಲ್ಲ ನಾಳೆ
ಮನೆಮಾರು ಬರದು ಹಿಂಬಲ
ಮಣಿಕಟ್ಟೆಲವು ಮುರಿದ್ಹಣಿಯುವಾಗ
ನಿನ್ನ ತನುಜನುಜರು ಯಾರು ಹಣಿಕ್ಹಾಕುವರಿಲ್ಲ ೩
ಎಷ್ಟು ನಿನ್ನಗೆ ಬಡೆದಿದಮ್ಮಾ ನಿನ್ನ
ಖೊಟ್ಟಿ ಕಡೆಯಿಲ್ಲಮ್ಮ
ಉಟ್ಟ ಸೀರೆಯ ಬಿಡಿಸಿ ಕೊಂಡೊಯ್ದು ನಿನ್ನ
ಸುಟ್ಟು ಸುರೆಹೊಯ್ವಾಗ ಆಟ ನೋಡಮ್ಮ ೪
ಭಿನ್ನ ಭೇದಗಳನ್ನು ಕಡಿ
ನಿನ್ನ ಒಡಲೊಳು ತಿಳಕೊಂಡುನೋಡಿ
ಧನ್ಯ ಶ್ರೀರಾಮನ ಉನ್ನತ ಚರಣ
ಇನ್ನಾದರು ಮನಮುಟ್ಟಿ ನೆನೆಕಂಡ್ಯ ಖೋಡಿ ೫

 

೨೧೭
ಎಲೆ ಮನಸೆ ಎಲೆ ಮನಸೆ ಹರಿಪಾದ ನಂಬು
ಸುಲಭ ಭಕ್ತರಿಗಾತ ಕೊಡುವ ನಿನಗಿಂಬು ಪ
ಕುಲಹೀನನೆನಬೇಡ ಹಳಿದುಕೊಳ್ಳಲಿ ಬೇಡ
ತಿಳಿಗೇಡಿಯೆನಬೇಡ ಕಳವಳಿಸಬೇಡ
ಮಲಿನವೆಂದೆನಬೇಡ ಜಳಕ ಮಡಿಯೆನಬೇಡ
ತಿಳಿದು ಭಜಿಪರ ಬೆಂಬಲನು ನಾನೆಂಬ ೧
ತಪವ ಮಾಡಲಿ ಬೇಡ ವಿಪಿನ ಸೇರಲಿಬೇಡ
ಜಪವ ಮಾಡಬೇಡ ಕೌಪೀನ ಬೇಡ
ಕಪಟಬುದ್ಧಿಯ ಬಿಟ್ಟು ಸಫಲ ಮಾನಸದಿಂದ
ಆಪತ್ತು ಬಂಧುಯೆನೆ ಕೃಪೆಮಾಡ್ವ ಬಂದು ೨
ದಾನಧರ್ಮವು ಬೇಡ ನಾನಾ ಕರ್ಮವು ಬೇಡ
ಮೌನದೊಳಿರಬೇಡ ಏನುವ್ರತಬೇಡ
ಧ್ಯಾನದಾಯಕ ಎನಗೆ ನೀನೆ ಗತಿಯೆಂದೆನಲು
ದೀನದಯ ಶ್ರೀರಾಮ ಮಾಣದೆ ಕಾಯ್ವ ೩

 

೨೧೮
ಎಲೆ ಮನಸೆ ನಾಂ ಪೇಳ್ವ ಬುದ್ಧಿ ಮಾತುಗಳ
ಕಲಿತು ಜಾಣನಾಗಿ ನಿಜಸುಖದಿ ಬಾಳು ಪ
ಪರನಿಂದೆ ಬೆರೆಸದಿರು ನಿರುತರನು ಜರಿಯದಿರು
ದುರಿತದೊಳಗುರುಳದಿರು ಪರಚಿಂತೆ ಮಾಡು
ಗುರುಹಿರಿಯ್ಹರಳಿಯದಿರು ದುರುಳರೊಳಗಾಡದಿರು
ಹರಿಯಶರಣರ ಸೇವೆ ಸ್ಥಿರವಾಗಿ ಮಾಡು ೧
ಮರವೆ ಪರದೆಯ ಹರಿ ಅರಿವಿನಮೃತ ಸುರಿ
ಸ್ಥಿರಜಾನ್ಞದೊಳು ಸೇರಿ ಹರಿಚರಿತ ಬರಿ
ಹರಿದಾಟವನು ಮರಿ ಜರೆಮರಣದು:ಖ ತರಿ
ಪರಮಹರುಷದಿ ಮರೆ ದುವ್ರ್ಯಸನ ತೂರಿ ೨
ಕ್ರೋಧವನು ಕಡೆಮಾಡು ವಾದಬುದ್ಧಿಯ ದೂಡು
ಸಾಧುಜನರೊಳಗಾಡು ಶೋಧನ ಮಾಡು
ಖೇದವನು ಈಡ್ಯಾಡು ವೇದದರ್ಥವ ಮಾಡು
ಪಾದಸೇವೆಯ ಮಾಡು ಮಾಧವನ ಕೂಡು ೩
ಕಾಮಲೋಭವ ಕಡಿ ಭೂಮಿಮೋಹವ ತೊಡಿ
ಭಾಮೆಯರ ಪ್ರೇಮ ಬಿಡಿ ಕ್ಷೇಮಪಥ ಪಿಡಿ
ತಾಮಸದೂರಮಾಡಿ ಸಾವಧಾನದ್ಹಿಡಿ
ಕೋಮಲಾನಂದ ಪಡಿ ನೇಮದ್ಹುಡುಕಾಡಿ ೪
ಮೋಸಪಾಶವ ಗೆಲಿ ಕ್ಲೇಶಗುಣಗಳ ತುಳಿ
ದಾಸಜನರೊಳು ನಲಿ ಶಾಶ್ವತವ ತಿಳಿ
ಹೇಸಿಕ್ವಾಸನೆಯಳಿ ದೋಷರಾಸಿಯಿಂದುಳಿ
ಶ್ರೀಶ ಶ್ರೀರಾಮನಲಿ ದಾಸನಾಗಿ ಸೆಳಿ ೫

 

ಯತಿವರನ ಯಾಗವ ಹಿತದಿ ರಕ್ಷಿಸಿದಂಥ
೨೧೯
ಎಲೊ ರಂಗ ಎಲೋ ರಂಗನೇ
ಸಲಹೊ ಶುಭಾಂಗನೆ ಪ
ಜಯಕರ ಶ್ರೀಹರಿಯೆ ದಯವಂತನಾಗಯ್ಯ
ಭಯ ಭಕ್ತಿಯಲಿ ನಿಮ್ಮ ದಯವ ಬೇಡುವೆನಯ್ಯ ೧
ನಿನ್ನ ಭಕ್ತನು ನಾನು ಬನ್ನಬಡಿಸುವಿ ಯಾಕೋ
ಮುನ್ನಿನ ಭಕ್ತರಂತೆನ್ನನು ಸ್ಮರಿಸಯ್ಯ ೨
ಶರಣೆಂದು ವಿಭೀಷಣಗೆ ಕರುಣಿಸಿ ಲಂಕೆಯ
ಸ್ಥಿರಪಟ್ಟ ಕೊಟ್ಟಂಥ ಕರುಣಾಳು ಮೊರೆ ಕೇಳೊ ೩
ಯತಿವರನ ಯಾಗವ ಹಿತದಿ ರಕ್ಷಿಸಿದಂಥ
ಪತಿತಪಾವನ ಎನ್ನ ಹಿತದಿಂದ ಕಾಯೆಲೊ ೪
ಸತತ ನಿಮ್ಮಯ ಪಾದಸ್ತುತಿಯೊಳಿರಿಸಿ ಎನ್ನ
ಮೃತ್ಯುಬಾಧ್ಹರಿಸಯ್ಯ ಕ್ಷಿತಿವರ ಶ್ರೀರಾಮ ೫

 

೧೭
ಎಲ್ಲ ಕಾಣುವುದೆಲ್ಲ ನಿನ್ನ ಮೂರ್ತಿ ಹರಿ
ಎಲ್ಲ ಕೇಳುವುದೆಲ್ಲ ನಿನ್ನ ಕೀರ್ತಿ ಪ
ಎಲ್ಲ ಸಾರುವುದೆಲ್ಲ ನಿನ್ನ ವಾರ್ತಿ
ಎಲ್ಲೆಂದರಲ್ಲೆ ನಿನಗೆ ಶರಣಾರ್ಥಿ ಅ.ಪ
ಕಲ್ಲಿನಲ್ಲಿ ನಿನಗೆ ಶರಣಾರ್ಥಿ ನೆಟ್ಟ
ಮುಳ್ಳಿನಲ್ಲಿ ನಿನಗೆ ಶರಣಾರ್ಥಿ
ಕಳ್ಳರಲ್ಲಿ ನಿನಗೆ ಶರಣಾರ್ಥಿ ಮಹ
ಕುಳ್ಳರಲ್ಲಿ ನಿನಗೆ ಶರಣಾರ್ಥಿ
ಬಿಲ್ಲುಧರಿಸಿ ವೈರಿ ಕೊಲ್ಲಲುಬರಲವ
ರಲ್ಲೆ ನಿನಗೆ ಬಹು ಶರಣಾರ್ಥಿ ೧
ಊರೊಳು ನಿನಗೆ ಶರಣಾರ್ಥಿ ಮಹ
ದಾರಣ್ಯದಲಿ ನಿನಗೆ ಶರಣಾರ್ಥಿ
ಘೋರತಾಪದಿ ನಿನಗೆ ಶರಣಾರ್ಥಿ ಬಿಡದಾ
ಪಾರ ಸೌಖ್ಯದಿ ನಿನಗೆ ಶರಣಾರ್ಥಿ
ಸಾರವಿಲ್ಲದ ಸಂಸಾರದಿ ನಿನಗೆ
ಬಾರಿಬಾರಿಗೆ ಬಹು ಶರಣಾರ್ಥಿ ೨
ನಿನಗೆ ಜಾಗ್ರದಲಿ ಶರಣಾರ್ಥಿ ಬಿದ್ದ
ಕನಸಿನಲಿ ನಿನಗೆ ಶರಣಾರ್ಥಿ
ಘನ ನಿದ್ರದಿ ನಿನಗೆ ಶರಣಾರ್ಥಿ ಬಿಡ
ದನುದಿನದಲಿ ನಿನಗೆ ಶರಣಾರ್ಥಿ
ತನುಮನಧನದಲಿ ಜನಕ ಶ್ರೀರಾಮ
ನಿನಗೆಣಿಕಿಲ್ಲದ ನಿಜ ಶರಣಾರ್ಥಿ ೩

 

೨೧೪
ಎಲ್ಲನು ನಿನಗೆ ಕೂಡಿತಯ್ಯ ಹರಿ
ಪುಲ್ಲನಾಭ ದಯ ಮಾಡಯ್ಯ ಪ
ಖುಲ್ಲನು ನಾಬಲು ಎಲ್ಲಿಯುಸಲ್ಲದೆ
ತಲ್ಲಣಿಸುತ ನಿನ್ನ ಬಲವಂದೆ ದೇವ ದೇವ ಅ.ಪ
ಧೃಢಗುಣ ಎನ್ನೊಳಿಲ್ಲಯ್ಯ ಬಲು
ನುಡಿ ಹೀನ ನಾಕಡು ಪಾಪ್ಯಯ್ಯ
ನಡೆ ನುಡಿ ಇಲ್ಲದೆ ಕಡುನೊಂದೀಗ ನಿಮ್ಮ
ನ್ಹುಡುಕುತ ತಿರುಗುವೆ ಜಡಜಾಕ್ಷನೆ ಪೊರೆ ೧
ಪರರದ್ರವ್ಯವಪಹರಿಸಿದೆನೊ ನಾ
ಪರಮನೀಚನಾಗಿ ಚರಿಸಿದೆನೊ
ಮರವೆಲಿ ಅಗಣಿತ ದುರಿತವನುನಾ
ಜರೆಯದೆ ಪರಿಪರಿ ಮಾಡಿದೆನೊ
ಮರೆವೆಲಿ ಮಾಡಿದ ಪರಮ ಎನ್ನತಪ್ಪು
ಕರುಣಾಕರನೆ ನೀಕರುಣದಿ ಕ್ಷಮಿಸಯ್ಯ ೨
ಶರಣಾಗತ ವತ್ಸಲನೆಂದು ನಿನ್ನ
ಮರೆಯಹೊಕ್ಕೆನೆಯ್ಯ ದಯಾಸಿಂಧು
ಮೊರೆಕೇಳು ಭಕ್ತರ ಪ್ರಿಯಬಂಧು ಎನ್ನ
ದುರಿತದಿ ಕಡೆ ಹಾಯ್ಸಯ್ ಇಂದು
ಶಿರಬಾಗಿ ನಿಮಗೆ ಸೆರೆಗೊಡ್ಡಿ ಬೇಡುವೆ
ಕರಪಿಡಿ ಬಿಡಬೇಡ ಸಿರಿವರ ಶ್ರೀರಾಮ ೩

 

೧೨೭
ಎಲ್ಲಮ್ಮ ದಯಮಾಡಮ್ಮ ಕಾಡಬೇಡ ಎನ್ನಮ್ಮ ಪ
ಇಲ್ಲದೆ ಪೋದರೆ ನಿಲ್ಲದೆ ಏನನು
ಬಲ್ಲಿದನ ಕರೆತಂದು ಕೊಲ್ಲಿಸಿಬಿಡುವೆನೆ ಅ.ಪ
ಕೊಡಲಿ ಹೊತ್ತು ಬರುತಾನ ತಾಯಿ
ಗಡನೆ ಹೊರಳಿ ನೋಡಿನ್ನ
ಬಡವರ ದಯಾನಿಧಿ ಕಡುಬಾಧೆ ಕಂಡರೆ
ತಡೆಯದೆ ನಿನ್ನನು ಕಡಿಯದೆ ಬಿಡನವ್ವ ೧
ತಂದೆವಚನ ಪರಿಪಾಲನು ಅವ
ಬಂದರೆ ನಿನ್ನನು ಕೊಂದಾನು
ಕಂದನ ಬಂಧನ ಚಂದದಿ ಕಳೆದಾ
ನಂದವ ಕೊಡು ಕೊಡು ಸುಂದರಮುಖಿಯೆ ೨
ಕಾರ್ತವೀರ್ಯ ತಂದಾನೇ ಈ
ವಾರ್ತೆ ಕೇಳಲು ನಿನ್ನ ಬಿಟ್ಟಾನೇ
ಅರ್ತುಭಜಿಪೆ ನಿನ್ನ ಗುರ್ತಿಟ್ಟೀಬಾಧೆ
ತುರ್ತು ಕಳೆಯೆ ತಾಯಿ ಅರ್ತು ಶ್ರೀರಾಮನ ೩

 

೫೦೦
ಎಲ್ಲಿ ನೋಡಲು ನೀನಂತೆ ನೀ
ನಿಲ್ಲದಿಹ್ಯ ಜಗವಿಲ್ಲಂತೆ ಪ
ಅಲ್ಲಿ ನೋಡಲು ನೀನಂತೆ
ಇಲ್ಲಿ ನೋಡಲು ನೀನಂತೆ
ಅಲ್ಲಿ ಇಲ್ಲಿ ಎಲ್ಲ ತುಂಬಿ ಬೆಳಗುವ
ಬಲ್ಲಿದ ಹರಿ ಸರ್ವೋತ್ತಮನಂತೆ ೧
ಕ್ಷೇತ್ರ ತೀರ್ಥವೆಲ್ಲ ನೀನಂತೆ ಮಹಾ
ಯಾತ್ರೆ ಫಲಂಗಳು ನೀನಂತೆ
ಧಾತ್ರಿ ಈರೇಳಕ್ಕೆ ಸೂತ್ರಧಾರಕನಾದ
ಸ್ತೋತ್ರಕ್ಕೆ ಸಿಲುಕದ ಮಹಿಮನಂತೆ ೨
ಕಲ್ಲು ಮುಳ್ಳು ಎಲ್ಲ ಬಿಡದಂತೆ ದೇವ
ಎಲ್ಲದರೊಳು ಬೆರೆತಿರುವ್ಯಂತೆ
ಅಲ್ಲಿ ಮಲ್ಲ ಬೀರ ನೀನಂತೆ ಜಗ
ವೆಲ್ಲವು ಶ್ರೀರಾಮಮಯವಂತೆ ೩

 

ಶ್ವಫಲ್ಕ-ಗಾಂಧಿನಿಯರ
೬೧೯
ಎಲ್ಲಿ ನೋಡಿದರು ಹಾನಂತೆ ಹರಿ
ಎಲ್ಲ ಜಗವ ತುಂಬಿಹನಂತೆ ಪ
ಮಣ್ಣುಮುಳ್ಳು ಎಲ್ಲ ಬಿಡದೆ
ಸೋಸಿಲಿನೋಡಲಲ್ಹಾನಂತೆ ಅ.ಪ
ಸಾಗರ ನಿಲಯ ತಾನಂತೆ
ಕೂಗಲು ಕಂಬಂದಿ ಬಂದನಂತೆ
ನಾಗಶಾಯಿದ್ದ್ವೊಯ್ಕುಂಠಂತೆ
ಬೇಗನೆ ಸರಸಿಯಲ್ಲಿದ್ದನಂತೆ
ನೀಗಿ ಚಂಚಲಮನ ಬಾಗಿ ವಿಚಾರಿಸಲು
ಯೋಗಿ ವಂದ್ಯ ಎಲ್ಲಿಲ್ಲಂತೇ ೧
ದ್ವಾರಕಾಪುರದಲ್ಲಿ ಮನೆಯಂತ
ಕ್ರೂರನ ಸಭೆಗೊದಗಿದನಂತೆ
ಸಾರನಿಗಮಕಗೋಚರನಂತೆ
ಪೋರಗೆ ದೊರೆತ್ವವಿತ್ತನಂತೆ
ಸಾರಮನದ ವಿಕಾರವಳಿದು ತಿಳಿ ಅ
ಪಾರಮಹಿಮ ಯಾರೆಲ್ಲಂತೇ ೨
ಘೋರರಕ್ಕಸ ಸಂಹರನಂತೆ
ಸೇರಿಭಕ್ತರ ಸಲಹುವನಂತೆ
ಮೂರು ಲೋಕಗಳ ದೊರೆಯಂತೆ
ಸಾರಥಿತನ ಮಾಡಿದನಂತೆ
ಮೂರುಲೋಕದ ಧಣಿ ಓರ್ವ
ಶ್ರೀರಾಮನೆ ಆರಾಧಿಪರಲ್ಲಿ ಹಾನಂತೆ ೩

 

೫೦೧
ಎಲ್ಲಿಂದ ಬಂದಿದ್ದೆಲೆ ಖೋಡಿ ನೀ
ನೆಲ್ಲಿಗೆ ಹೋಗ್ತಿದ್ದಿ ತ್ವರೆಮಾಡಿ ಪ
ಕಲ್ಲುಮುಳ್ಳೆನ್ನದೆ ಮುಂದೆ ನೋಡಿ ಜರ
ನಿಲ್ಲದೆ ಹೋಗ್ತಿದ್ದಿ ಓಡೋಡಿ ಅ.ಪ
ಏಳುಗೇಣಿನ ಕುದುರೇರಿದ್ದಿ ಭವ
ಮಾಲೆ ಕೊರಳಿಗೆ ಹಾಕಿದ್ದಿ
ಮೂಲ ಲಗಾಮವೆ ತೆಗೆದಿದ್ದೀ ನೀ
ಬೀಳುವ ಎಚ್ಚರ ಮರೆತಿದ್ದಿ ೧
ಶೀಲ ಸನ್ಮಾರ್ಗವ ಬಿಟ್ಟಿದ್ದಿ ಮಹ
ಕಾಳು ಕತ್ತಲೆಹಾದ್ಹಿಡಿದಿದ್ದಿ
ಕಾಲನಾಳಿನ ಕೈಗೆ ಸಿಗುತಿದ್ದಿ ಬಹು
ಗೋಳಿನೊಳಗೆ ಹೋಗಿ ಬೀಳುತಿದ್ದಿ೨
ಅಸ್ಥಿರ ಕುದುರೆ ಹತ್ತಿದ್ದಿ ಬಲು
ಮಸ್ತಿಲಿಂದ ಕಣ್ಣು ಮುಚ್ಚಿದ್ದಿ
ಪುಸ್ತಿಯಿಲ್ಲದ ದಾರ್ಹಿಡಿದಿದ್ದಿ ಮುಂದೆ
ಸ್ವಸ್ಥತೆ ನೀ ಹ್ಯಾಂಗೆ ಪಡೀತಿದ್ದಿ ೩
ಯಾರನ್ನ ಬೇಡಿ ಬಂದಿದ್ದಿ ನೀ
ನಾರಸೇವೆ ಕೈಕೊಂಡಿದ್ದಿ
ದಾರಿ ತಪ್ಪಿದಾರ್ಹಿಡಿದಿದ್ದಿ ಸುವಿ
ಚಾರ ಪಥವ ಧಾರೆರೆದಿದ್ದಿ ೪
ಬಂದಕಾರ್ಯವನು ತೊರೆದಿದ್ದಿ ಮನ
ಬಂದಂತೆ ಕುಣಿಕುಣಿದಾಡುತಿದ್ದಿ
ತಂದೆ ಶ್ರೀರಾಮನ ಮರೆತಿದ್ದಿ ಈ
ಬಂಧುರಸಮಯ ವ್ಯರ್ಥ ಕಳೀತಿದ್ದಿ ೫

 

೨೧೫
ಎಲ್ಲಿರುವೆ ಬಾರಯ್ಯದೇವ
ಬಲ್ಲಿದ ನೀನೆ ಅನಾಥಜನಜೀವ ಪ
ಪುಲ್ಲನಾಭ ನೋಡೆನ್ನ ಪರಿಭವದ ದು:ಖವನು
ನಿಲ್ಲದೆ ದಯಮಾಡು ಬೇಗದೊಳಭವ ಅ.ಪ
ಕ್ಷಣಕ್ಷಣಕೆ ಒದಗುತಿಹ್ಯ ದಣಿವು ಬೇನ್ಯಾಪತ್ತು
ಅನುಪಮ ಬಡತನದ ಘನ ಘನ ವಿಪತ್ತು
ದಿನದಿನ ಪರರನು ಮಣಿದುಬೇಡುವ ಹೊತ್ತು
ಇನಿತೆಲ್ಲ ಕನಿಕರದಿ ನೀನೆ ಕಳೆಯಭವ ೧
ಕನಕ ವಸ್ತ್ರಾಭರಣ ವನಿತೆಗ್ಹಾಕುವ ಚಿಂತೆ
ಧನಧಾನ್ಯವಿಲ್ಲೆಂಬ ಎಣಿಕಿಲ್ಲದ ಚಿಂತೆ
ಮನಕೆ ತುಸುಗೊಡದ ರಿಣಬಾಧದ್ದತಿ ಚಿಂತೆ
ವನಜಾಕ್ಷ ಕೃಪೆಯಿತ್ತು ನೀನೆ ಬಿಡಿಸಯ್ಯ ೨
ಧರೆಯಸುಖೆನಗಿಲ್ಲೆಂಬ ಪರಿಪರಿಯು ಉರಿ ತಾಪ
ಪರರಸೇವೆಯ ಮಾಡ್ವ ಪರಮ ಪರಿತಾಪ
ಜರಜರಕೆ ಬಂದು ಆವರಿಸುವುವು ಮಹಪಾಪ
ಪರಹರಿಸೆಲವೋ ಶ್ರೀರಾಮಪ್ರಭು ಭೂಪ ೩

 

೫೦೪
ಎಷ್ಟು ದಿನದ ಪೂಜೆ ಹಿಡಿದೆಣ್ಣಾ ಸತಿಯೆಂಬ ಮಾರಿದಿ-
ನ್ನೆಷ್ಟು ದಿನ ಪೂಜೆ ಮಾಡಬೇಕಣ್ಣಾ ಪ
ಎಷ್ಟು ದಿನದ ಪೂಜೆ ಹಿಡಿದಿ
ನ್ನೆಷ್ಟುದಿನ ಮುಂದೆ ಬಾಕಿ ಉಳಿದಿದೆ
ಕಷ್ಟಕಂಜದೆ ಬಿಡದೆ ಅನುದಿನ
ನಿಷ್ಠೆಯಿಂದ ಪೂಜೆ ಮಾಡುವಿ ಅ.ಪ
ಒಬ್ಬರ ಮನೆ ಮುರಿದು ತರುವಿ ಅವಳಿಗೇನೆ
ಹಬ್ಬಮಾಡಿ ಉಣಿಸುತಿರುವಿ ಮತ್ತು ಇನ್ನು
ಒಬ್ಬರೈತರ ಬೊಬ್ಬೆ ಹೊಡೆಯುವಿ ದಬ್ಬಿ ಓಡಿಸುವಿ
ಹಬ್ಬ ಹುಣ್ಣಿಮೆ ಬರಲು ವೈಭವದುಬ್ಬಿಉಬ್ಬಿವಸ್ತ್ರ ಒಡವೆ
ಅಬ್ಬರದಿಂದುಡಿಸಿ ತೊಡಿಸಿ ಮಬ್ಬಿನಿಂದ ಹಿಗ್ಗುತಿರುವಿ ೧
ಧನವ ತಂದು ಅವಳಿಗರ್ಪಿಸಿ ಮತ್ತು ನಿನ್ನಯ
ಮನವ ಅವಳ ವಶಕೆ ಸಲ್ಲಿಸಿ ಎಂಟುಗೇಣಿನ
ತನುವು ಅವಳಾಧೀನದಲ್ಲಿರಿಸಿ ಕುಣಿವಿ ಪಶುವೆನಿಸಿ
ಕ್ಷಣವು ಬಿಡದೆ ಅವಳ ಆಜ್ಞೆಯ ಮಣಿದು
ಪಾಲಿಸಿ ದಿನಗಳೆಯುವಿ
ಶುನಗಂದದಿ ನಿನ್ನ ಸುಖದು:ಖವನ್ನು ವಿವರಿಸಿ
ನೋಡಿಕೊಳ್ಳದೆ ೨
ಬಂದಕಾರ್ಯ ಮರೆದುಬಿಟ್ಟ್ಯಲ್ಲ ಹೆಡತಲೆಮೃತ್ಯು
ಹಿಂದೆ ನಿಂತು ನಲಿಯುತಾಳಲ್ಲ ಹೇ ಪಾಪಿ ನೀನು
ಒಂದೂ ವಿಚಾರ ಮಾಡಿ ಅರೀಲಿಲ್ಲ ಮಂದನಾದೆಲ್ಲ
ತಂದೆ ಶ್ರೀರಾಮನ್ನಂತಂಘ್ರಿಗೊಂದಿ ಭಜಿಸಿ ದಾಸನಾಗಿ
ಅಂದಮಾದ ನಿತ್ಯಮುಕ್ತಿ ಪಡೆವ ಸುಸಂಧಿ
ನಡುವೆ ಹೋಗುತಾದರ್ಲ ೩

 

೨೨೦
ಎಷ್ಟು ಪೊಗಳಿದರೇನೀ ಭ್ರಷ್ಟಮಾನವರು
ಶಿಷ್ಟಪದ್ಧತಿಗಳನಗಲಿ ಸೃಷ್ಟಿಕರ್ತ ನಿನ್ನ ಪಾದ ಪ
ಸ್ವಾಭಿಮಾನ ನೀಗಿ ದೇಹಾಭಿಮಾನ ತೊರೆಯದೆ
ಪ್ರಭುನಿನ್ನ ನಿಜಲೀಲೆ ಸೊಬಗು ತಿಳಿಯುವುದೆ ೧
ಭ್ರಷ್ಟ ಭ್ರಾಂತಿಗಳಳಿದು ದುಷ್ಟನಡೆ ನೀಗದೆ
ಶಿಷ್ಟರೊಡೆಯ ನಿನ್ನ ನಿಜಗುಟ್ಟು ತಿಳಿಯುವುದೆ ೨
ವಿಷಯವಾಸನೆ ನೀಗಿ ಹಸನುಮಾಡದೆ ಮನವ
ಶ್ರೀಶ ಶ್ರೀರಾಮ ನಿನ್ನ ದಾಸತ್ವಬಹುದೆ ೩

 

೨೨೧
ಎಷ್ಟು ಮಾತ್ರ ನಿಂದಲ್ಲದ್ದು ಹರಿ
ಸೃಷ್ಟಿಯೊಳಗೆ ಎನ್ನ ಹುಟ್ಟಿಸಿದ್ದು ಪ
ನಷ್ಟದೇಹ ಕೊಟ್ಟು ದುಷ್ಟ ಬವಣೆಯಿಂದ
ಕಷ್ಟದೊಳಗೆ ಎನ್ನ ನೂಕಿದ್ದುಅ.ಪ
ಉಳಿದ ಪಾಪಶೇಷ ಕಳೆಯದಲೆ ಎನ್ನ
ಇಳೆಯವಾಸಕ್ಯಾಕೆಳೆಸಿದಲೇ
ನಳಿನನಾಭ ನಿನ್ನ ಬಳಿ ಇದೆ ನ್ಯಾಯವೆ
ಕಳವಳಪಡಲು ನಾನೊಳಿತೇನು ನಿನಗೆ ೧
ಎಷ್ಟು ರೀತಿ ಕಷ್ಟ ತಡಿಬೇಕೊ ಇ
ನ್ನೆಷ್ಟುದಿನ ಹೀಗೆ ಕಳೀಬೇಕೊ
ಇಷ್ಟು ಕರ್ಮ ಎನ್ನದಿರಲಿಕ್ಕಾಗಿನು
ಶಿಷ್ಟಜನುಮ ಮತ್ತು ಕೊಟ್ಟ್ಯಾಕೊ ೨
ಭಕ್ತವತ್ಸಲನೆಂಬ ಬಿರುದೇನೋ ನಿನ್ನ
ಭಕ್ತರ ಅಭಿಮಾನ ತೊರೆದೇನೊ
ಭಕ್ತರಿಗೀತೆರ ಮೃತ್ಯುಬಾಧೆಯೇನು
ಮುಕ್ತಿದಾಯಕ ಜಗತ್ಕರ್ತ ಶ್ರೀರಾಮನೆ ೩

 

ಸುಧನ್ವನ ಕತೆ. ಹಂಸಧ್ವಜನ ಮಗ
೧೮
ಎಸೆವ ಸಮುದ್ರವ ಮಥನ ಮಾಡಿತಯ್ಯಾ ನಿನ್ನ ನಾಮ ಹರಿ
ಶಶಿಧರ ಶಿವನಿಗೆ ಶಾಂತಿಮಂತ್ರಾಯ್ತಯ್ಯಾ ನಿನ್ನ ನಾಮ ಪ
ಚೋರನೆನಿಸಿವನ ಸೇರಿಕೊಂಡವನಿಗೆ ನಿನ್ನ ನಾಮಾ
ಪಾರ ಜ್ಞಾನವಿತ್ತು ಮುಂದಕ್ಹಾಕಿತಯ್ಯಾ ನಿನ್ನ ನಾಮ೧
ಮೀರಿದ ನಿನ್ನ ಮಾಯೆಗೆ ಸಿಲ್ಕಿದ್ಯೆತಿವರಗೆ ನಿನ್ನ ನಾಮ
ಭೂರಿಕರುಣದಿನೆರಗಿ ರಕ್ಷಿಸಿತಯ್ಯಾ ನಿನ್ನ ನಾಮ ೨
ಬಾಲಪ್ರಹ್ಲಾದಗೆ ಕಾಲಕೂಟವಿಷ ನಿನ್ನ ನಾಮ
ಮೇಲು ಅಮೃತ ಮಾಡುಣಿಸಿ ಪಾಲಿಸಿತಯ್ಯಾ ನಿನ್ನ ನಾಮ ೩
ಕಡುರೋಷದೆಸೆದ ವಜ್ರಾಯುಧದೆಚ್ಚೆ ನಿನ್ನ ನಾಮ
ಸಿಡಿ ಮುಳ್ಳಿಗಿಂತ ಕಡೆಮಾಡಿಬಿಟ್ಟಿತಯ್ಯಾ ನಿನ್ನ ನಾಮ ೪
ನೂರುಯೋಜನದ ವಿಸ್ತೀರ್ಣದ್ವಾರಿಧಿಯ ನಿನ್ನ ನಾಮ
ತೋರಿಸಿತೊಂದು ಕಿರಿ ಸರೋವರ ಸಮಮಾಡಿ ನಿನ್ನ ನಾಮ ೫
ಮೀರಿದ ದೈತ್ಯರಪಾರಂಗರುವಮಂ ನಿನ್ನ ನಾಮ
ಹೀರಿ ಕ್ಷಣದಿ ಸುರಲೋಕ ಸೇರಿಸಿತಯ್ಯಾ ನಿನ್ನ ನಾಮ ೬
ತ್ರಿಣಯರ್ಹೊಗಳಲು ಶಕ್ತಿ ಸಾಲದ ಪಟ್ಟಣ ನಿನ್ನ ನಾಮ
ಅಣುಗಿಂತ ಅಣುಮಾಡಿ ತೋರಿಸಿತ್ಹನುಮಂಗೆ ನಿನ್ನ ನಾಮ ೭
ಅಸಮಪರಾಕ್ರಮ ಅಸುರಕುಲಾಳಿಯಂ ನಿನ್ನ ನಾಮ
ನಶಿಸೆ ಶಿವಪುರ ಭಸ್ಮಮಾಡಿತಯ್ಯಾ ನಿನ್ನ ನಾಮ ೮
ಪಕ್ಷಿಗಮನ ಪಾಂಡುಪಕ್ಷನೆನಿಸಿತಯ್ಯಾ ನಿನ್ನ ನಾಮ
ಅಕ್ಷಯಾಂಬರವಿತ್ತು ಸತಿಯ ರಕ್ಷಿಸಿತಯ್ಯಾ ನಿನ್ನ ನಾಮ ೯
ಕಾದು ದಳ್ಳುರಿಹತ್ತಿದೆಣ್ಣೆ ಕೊಪ್ಪರಿಗೆಯ ನಿನ್ನ ನಾಮ
ಸುಧನ್ವಂಗನುಪಮ ಶೀತಲವೆನಿಸಿತು ನಿನ್ನ ನಾಮ ೧೦
ಅರಿತು ಭಜಿಪರ ಭವರೋಗಕ್ವೈದ್ಯೆನಿಸಿತು ನಿನ್ನ ನಾಮ
ಅರಿದು ಭಜಿಪೆ ನಿನ್ನವರ ಮುಕ್ತಿ ಕರುಣಿಸೋ ಸಿರಿರಾಮ ೧೧

 

೨೨೯
ಏಕೆ ಎನ್ನೊಳು ಮೂಕನಾದ್ಯೊತ್ರಿ
ಲೋಕ ಜೀವಾಳುಪ
ಪಿತ ಮಾತೃದ್ರೋಹಿಯೆಂದು ಅತಿಥಿಗಳನಾದರನುಯೆಂದು
ಅತಿ ಪಾತಕಿಯಿವನುಯೆಂದಹಿತದಿ ಮುಖವೆತ್ತದಿರುವ್ಯೋ ೧
ವಾಚಹೀನ ನೀಚನೆಂದು ಸಾಚಮನವಿಗಳ್ನಿಂದಕನೆಂದು
ಆಚರಿಪನನಾಚಾರವೆಂದು ನೀಚಾರಿ ದಯಸೂಚಿಸದಿರುವ್ಯೋ ೨
ಭಕ್ತರನ್ನು ಕ್ಷಮಿಸಿ ಪೊರೆದು ಭಕ್ತವತ್ಸಲನೆಂಬ ಬಿರುದು
ಹೊತ್ತದ್ದೆಲ್ಲಡಗಿಸಿದ್ಯೋ ಮುಕ್ತಿದಾತೆನ್ನಯ್ಯ ರಾಮ ೩

 

೨೩೦
ಏಕೆ ಚಿಂತಿಪೆ ನೀ ಎಲೆ ಕೋತಿಮನವೆ
ಲೋಕನಾಥನ ಪಾದ ಗಟ್ಟ್ಯಾಗಿ ನಂಬದಲೆ ಪ
ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ
ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ
ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ
ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ ೧
ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ
ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ
ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು
ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ ೨
ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ
ಕರುಣದಕ್ಷಯವಿತ್ತು ಪೊರೆದ ಪರಮಾತ್ಮ
ಕರುಣಾಳು ಶ್ರೀರಾಮ ಚರಣದಾಸರ ನೆರ
ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ ೩

 

೨೩೧
ಏಕೆ ನಿನ್ನಯ ಸುದೃಷ್ಟ್ಹ್ಯರಿಯದೀ ಕಾಕು ದೇಹದ ಮೇಲೆ ಪ
ಲೋಕೇಶ ನಿಮ್ಮಯ ಶ್ರೀಪಾದಕಮಲಕ್ಕೆ
ಜೋಕೆ ಮಾಡೆನ್ನೆಂದು ಮರೆಹೊಕ್ಕೆ ಸ್ವಾಮಿ ಅ.ಪ
ಹೀನ ಬವಣೆಯ ಕಳೆದು ಜ್ಞಾನಪಾಲಿಸೆಂದು
ದೈನ್ಯಬಡುವೆನು ನಿನಗೆ ನಾನಾ ಪರಿಯಲಿಂದ
ಏನು ಕಾರಣ ನಿನಗೆ ದಯ ಬಾರದೆನ್ನೊಳು
ದೀನಜನರ ಬಂಧು ಧ್ಯಾನಿಸುವ ಪ್ರಾಣ ೧
ರಿಣದಿ ಮುಕ್ತನ್ನ ಮಾಡೆಂದ್ವಿಧವಿಧ ಬೇಡುವೆ
ದಿನ ದಿನ ಮತ್ತಿಷ್ಟು ಘನವಾಗುತಿಹ್ಯದು
ಮನಸಿಜಪಿತ ನಿನಗಿನಿತು ಭಾರನೆ ನಾನು
ಕನಿಕರಬಡದಿಹಿ ಅನುಗನೋಳ್ವನಜಾಕ್ಷ ೨
ಇಂತು ನಿರ್ದಯನಾಗಿ ಚಿಂತೆಯೆಂದೆಂಬುವ
ಚಿಂತೆಚಿತೆಯೊಳು ನೂಕಿ ಎನ್ನ ಭ್ರಾಂತಿಪಡಿಸಬೇಡೋ
ಅಂತ:ಕರಣದ ದೇವ ಅಂತ:ಕರುಣಿಸಿ ಎನ್ನ
ಅಂತರಂಗದೊಳಿಹ್ಯ ಚಿಂತೆಯಳಿ ಶ್ರೀರಾಮ ೩

 

೫೦೫
ಏತಕೆ ಒಣಭ್ರಾಂತಿ ತಿಳಿಯದು ಮೂರುದಿನದ ಸಂತಿ
ನೀತಿಗೆಟ್ಟು ಸತಿಮೋಹದಿ ಕುಳಿತೆಮದೂತರೆಳೆಯುವಾಗೇನಂತಿ ಪ
ಬರುವಾಗೊರ್ವಬಂದಿ ಬರುತಲೆ ಮಂದಿ ಮಕ್ಕಳೆಂದಿ
ಇರು ಇರುತೆಲ್ಲ ನನ್ನದೆಂದಿ
ಮರೆವಿನ ಆಲಯದೊಳು ನಿಂದಿ
ಕರುಣವಿಲ್ಲದೆತುಸು ಹೆಡತಲೆಮೃತ್ಯು
ಮುರಿದು ತಿನ್ನುವಾಗ್ಯಾರಿಲ್ಲ ಹಿಂದೆ ೧
ತನುಜನರು ಇವರು ಧನಕನಕಿರುವತನಕ ಹಿತರು
ಜನಕಜನನಿಯರು
ಕೊನೆಗೆ ಸಂಗಡ ಬರರ್ಯಾರು
ಕನಿಕರವಿಲ್ಲದೆ ಕಾಲದೂತರು
ಘನಬಾಧೆಪಡಿಸಲು ಬಿಡಿಸರೋರ್ವರು ೨
ಭೂಮಿ ಸೀಮೆಯೆಲ್ಲ ಈ ಮಹರಾಜ್ಯ ಭಂಡಾರ ಸುಳ್ಳು
ಪಾಮರ ಸಂಸಾರ
ಕಾಮಿಸಿ ಕೆಡಬೇಡೇಲೆ ಮಳ್ಳ
ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ
ನಾಮಭಜಿಸಿ ಭವಗೆಲಿದು ನೀ ಬಾಳೋ ೩

 

೫೦೬
ಏನಂತ ನರನೆನ್ನಬೇಕೋ
ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ
ಅನಂತ ಜನ್ಮದ ಸುಕೃತ ಒಡಗೂಡಿ
ಮಾನವನಾದದ್ದು ಖೂನವಿನತಿಲ್ಲದೆ
ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ
ಹೀನಭವಕೆ ಬಿದ್ದು ನರಕಕ್ಹೋಗುವನಿಗೆ ೧
ತಾನಾರೆಂಬ ವಿಚಾರವು ಇಲ್ಲದೆ
ಏನೇನು ಸುಖವಿಲ್ಲದ್ಹೇಯಸಂಸಾರದ
ಕಾನನದೊಳು ಬಿದ್ದು ಕುನ್ನಿಯಂದದಿ ಮಹ
ಜಾಣರ ಜರೆಯುತ ಜವಗೀಡಾಗುವನಿಗೆ ೨
ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ
ಕ್ಕೇಸೇಸು ಜನಮದಿ
ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು
ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ ೩
ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ
ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು
ನಿತ್ಯ ಸುಖವನೀವ ಉತ್ತಮವಾದಂಥ
ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ ೪
ಸುಮನಸಕಲ್ಪದ್ರುಮ ತಂದೆ ಶ್ರೀರಾಮ
ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ
ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ
ಸಮಯವನರಿಯದೆ ಯಮಲೋಕ ಸೇರುವಗೆ ೫

 

೨೩೨
ಏನಬೇಡಲಿ ನಿನ್ನ ನಾ ಬಯಸಿ ಸ್ವಾಮಿ
ಕಾಣುವುದು ಐಹಿಕ ಸುಖ ನಿಖಿಲ ಪುಸಿಯಾಗಿ ಪ
ವನಿತೆಯನು ಬೇಡಲೆ ತನಗೆ ಅಲ್ಲದೆ ಮತ್ತೆ
ಮನೆತುಂಬ ಮರಿಮಾಡಿ ತಿನಿಸಿಗ್ಹಾಕೆಂದು
ಅನುಗಾಲ ಬೆನ್ನ್ಹತ್ತಿ ತಿನುತಿಹ್ಯಳು ಹರಿದ್ಹರಿದು
ಬಿನುಗರಲಿ ಬಿನುಗೆನಿಸಿ ಘನತೆಯನು ಕೆಡಿಸಿ ೧
ಘನವೆಂದು ನಂಬಿ ನಾ ಧನವನಾಪೇಕ್ಷಿಸಲೆ
ಸನುಮತದಿ ಒತ್ತಟ್ಟಕ್ಷಣ ಕೂಡ್ರಗೊಡದೆ
ದಣಿವಿಕಿಲ್ಲದೆ ದುಡಿಸಿ ಅಣುಮಾತ್ರ ಸುಖಕೊಡದೆ
ಚಿನುಮಯಾತ್ಮನೆ ನಿನ್ನ ನೆನವೆ ಮರೆಸುವುದು ೨
ಭೂಮಿಯನು ಬೇಡಲೆ ಸ್ವಾಮಿಯಂತೆ ಸೇವೆಗೊಂಡು
ತಾಮಸದಿ ನೂಕಿ ಬಲು ಪಾಮರೆನಿಸುವುದು
ಸ್ವಾಮಿಯೆನ್ನಯ ಸಕಲ ಕಾಮಿತ ಕಡಿದು ನಿಮ್ಮ
ನಾಮಬಲ ಕರುಣಿಸು ಶ್ರೀರಾಮ ಪ್ರಭುತಂದೆ ೩

 

೫೦೭
ಏನಾಗುವುದು ತಾನಾಗಿದೆ ಜಗ
ನೀನ್ಯಾಕದರೋಳ್ಪಾಲಿಡುವ್ಯೋ ಪ
ಕಾಣುಕಾಣುತಲಿ ಶೂನ್ಯವೆನಿಪುದೆಲ್ಲ
ಜಾಣನಾಗಿ ಭವಗೆಲಿಯೆಲವೋ ಅ.ಪ
ಸತತದಿ ಸತಿಸುತರ್ಹಿತಕಾಗಿ ಬಲು
ಮತಿಗೆಟ್ಟತಿಯಾಗ್ವ್ಯಥೆಬಡುವ್ಯೋ
ಪೃಥಿವಿ ಮೇಲೆ ನಿನ್ನ ಮತಿಯಲಿಂದ ಮಣ್ಣು
ಪ್ರತಿಮೆಮಾಡಿ ಸೃಷ್ಟಿಗೊಳಿಸಿದೆಯೋ ೧
ಹಲವುವಿಧದಿ ನಾನೆ ದುಡಿದು ಧಾನ್ಯಧನ
ಗಳಿಸಿದೆನೆಂದು ಬಲು ಭ್ರಮಿಸುವೆಯೋ
ತಿಳಿದುನೋಡೆಲೆ ಬೀಜದೊಳಗೆ ಮೊಳಕೆ ತಿದ್ದಿ
ಬೆಳೆಯ ಬೆಳೆಸಿ ಸ್ಥಿತಿಮಾಡಿದೆಯೋ ೨
ಎಷ್ಟುದಿನಿರ್ದರು ಬಿಟ್ಟು ಹೋಗುವುದನು
ಗಟ್ಟಿಮಾಡ್ಯಾಕೆ ಭ್ರಷ್ಟನಾಗುವೆಯೋ
ಸೃಷ್ಟಿಸ್ಥಿತಿಲಯಕರ್ತ ಶ್ರೀರಾಮನ
ನಿಷ್ಠೆಯಿಂ ಪಾಡಿ ಮುಕ್ತಿಸುಖ ಪಡೆಯೋ ೩

 

೨೩೩
ಏನಾಯ್ತು ಹರಿಪಾದ ನೆನೆವಲ್ಲಿ ಮನವೆ
ದೀನನೆ ನಿನ್ನ ಬಾಯಿಗ್ಹುಣ್ಣ್ಹುಟ್ಟಿತೇನೋ ಪ
ನಿಷ್ಠೆಯಿಂ ಕೈತಾಳವಿಟ್ಟು ಉಲ್ಲಾಸದಿ
ಕಷ್ಟಹರನಂಘ್ರಿ ಮನಮುಟ್ಟಿ ಪಾಡುವಲ್ಲಿ
ಕೆಟ್ಟಾಸೆಯಿಂ ಪರರಲ್ಹೊಟ್ಟ್ಹೊಟ್ಟ್ಹೊಡಕೊಂಡು ಬೇಡ್ದ
ಪೆಟ್ಟಿಗೆ ಕರವರೆಡು ಮುರಿದಿರುವವೇನೋ ೧
ವನಜನಾಭನ ದಿವ್ಯ ವನರುಹಂಘ್ರಿಯ ಚರಿತ
ಘನವಾಗಿ ಪೊಗಳುತ ಕುಣಿದಾಡವಲ್ಲಿ
ವನಿತೆ ಮಾತಾಲಿಸಿ ಕುಣಿಕುಣಿದು ನಿನ್ನೆರಡು
ಮೊಣಕಾಲು ಕೀಲ್ಮುರಿದು ನೆಲಕಿ ಬಿದ್ದಿಹ್ಯವೆ ೨
ನೀಲಶಾಮನ ವಿಮಲಲೀಲೆಗಳು
ಶೀಲಮನದಾಲಸಾನಂದೊಳು ಲೋಲ್ಯಾಡವಲ್ಲಿ
ಹಾಳು ಸಂಸಾರದ ಗೋಳಾಟ ಕೇಳಿ ಕೇಳಿ
ಶೂಲೆಯೆದ್ದೆರಡು ಕಿವಿ ಕಿವುಡಾದವೇನು ೩
ಸಾಗರನಿಲಯನ ನೀಗದ ಮಹಿಮೆಗಳ
ಜಾಗರದಿಂ ಪಾಡಿ ಭವರೋಗ ಗೆಲಿವಲ್ಲಿ
ಸೋಗಿನ ಸೂಳೆಸುದ್ದಿ ರಾಗದ್ಹಾಡ್ಹ್ಯಾಡಿ ಭವ
ಸಾಗರದಿ ಬಿದ್ದು ಜಿಹ್ವೆ ಕಳಕೊಂಡಿದ್ಯೇನೋ ೪
ದಾಸನುದಾಸರ ವಾಸದಿಗೂಡಿಯನು
ಮೇಷನು ವಿಚಾರದಿಂ ಶ್ರೀಶನ ಚರಣ
ಧ್ಯಾಸದೊಳಗಿರ್ದು ಯಮಪಾಶವನು ಗೆಲಿದು ದಯ
ಭೂಷ ಶ್ರೀರಾಮನ ಮುಕ್ತಿ ಪಡಿವಲ್ಲಿ ೫

 

೨೩೪
ಏನಿದು ಎಲೆ ಮನ ಏನು ಇದು
ನೆನೆಸಿದರೆದೆ ಝಲ್ಲೆನುವುದು ಪ
ನಾನು ಯಾರೆಂಬುವ ಖೂನವ ತಿಳಿಯದೆ
ಶ್ವಾನನಂದದಿ ಕೆಟ್ಟ ಹೀನಭವಕೆ ಬಿದ್ದು ಅ.ಪ
ಏತಕ ಬಂದದ್ದೀ ಜನುಮಕ್ಕೆ ತಲೆಯೆತ್ತಿ ನೋಡದೆ
ಕೂತಿಮುಂದಕೆ ನೀತಿಗೇಡಿ ಮಹಪಾತಕನು ಯಮ
ದೂತರು ನಿಂತಾರೊ ಎಳಿಲಿಕ್ಕೆ ೧
ನೆಲೆ ತಿಳಿ ಬಂದ್ಯಾವ ಕಾರ್ಯಕ್ಕೆ ಮತ್ತು
ಬೀಳಬೇಡೋ ಮಾಯದ
ಜಾಲಕ್ಕೆ ಘಳಿಲನೆ ತಿಳಿತಿಳಿ ಸುಲಭದಿ ಸಮಯವು
ಬಲಿಸಿ ಹರಿಯ ಧ್ಯಾನ ಕಾಲನ ನೂಕೋ ೨
ಹುಟ್ಟಿಬಂದಿ ಶಿಷ್ಟಪದ ಪಡಿಲಿಕ್ಕೆ ಮರ್ತುಬಿಟ್ಟಿ ನಿಂತಿ
ಬಿಟ್ಟಗಂಟ್ಹೊರಲಿಕ್ಕೆ ಭ್ರಷ್ಟಗುಣವ ಬಿಟ್ಟು ದಿಟ್ಟರಾಮನ
ಗಟ್ಟ್ಯಾಗಿ ನಂಬಿ ಮುಟ್ಟು ಮುಕ್ತಿಪದಕೆ ೩

 

೨೩೫
ಏನಿದು ಮಹದಪರಾಧ ಮಾಡಿದೆ ನಾನು
ನಿನ್ನವರನೆ ನಿಂದಿಸಿದೆ ತಿಳಿಯದಭವ ದೇವ ಪ
ಜ್ಞಾನವಿಡಿದಿ ನೋಡದೆ ತುಸು
ಏನುಕಾಣದೆ ನಾನಾಪರಿಯಲಿ
ಶ್ವಾನನಂದದಿ ಚೀರುತ್ಹಾರುತ
ಹೀನವಾಚಗಳ್ವಾಚಿಸಿದೆನೋ ಅ.ಪ
ತತ್ತ್ವದರ್ಥಕರಾಗಿ ಗುಪ್ತದಿಂದಿರ್ವವರ
ನರ್ತುನೋಡದೆ ಅನರ್ಥವಾಡಿದೆನೋ ಪ್ರಭೋ
ಮತ್ರ್ಯಗುಣಗಳ ಮರ್ತುಬಿಡದೆ
ನಿರ್ತಮಾನಿಸರ ಗುರ್ತುತಿಳಿಯದೆ
ಕತ್ತೆಯಂತೊದರುತ್ತ ಸತ್ಯರ
ಕೃತ್ತಿಮರೆಂದೆನುತ ಜರಿದೆ ೧
ಮೀನು ಜಿಹ್ವೆಯ ರುಚಿಗಾ
ಗೇನು ತಿಳಿಯದೆ ಪೋಗಿ
ಗಾಣ ಸೆಳೆದುನುಂಗಿ ಪ್ರಾಣಕೊಟ್ಟಂತೆ ಹರಿಯೆ
ಗಾನಲೋಲನ ಮನದೊಳಿಟ್ಟು
ಧ್ಯಾನಿಪ ಕೋವಿದಸುಜನರ
ಖೂನವಿಲ್ಲದೆ ಮನಕೆ ಬಂದಂತೆ
ಕಾಣದಂಧಕನಂತೆ ಜರಿದೆ ೨
ನಿನ್ನಿಂದೆ ನಾ ಬಂದೆ ನೀನೆನ್ನ ತಂದೆ ಮುಂ
ದಿನ್ನಿಂಥ ದುರ್ಮತಿಯನ್ನು ಕೊಡದಿರೊ ರಂಗ
ನಿನ್ನ ದಾಸರೊಳಿಟ್ಟು ಅನುದಿನ
ಭಿನ್ನವಿಲ್ಲದೆ ರಕ್ಷಿಸಯ್ಯ
ನಿನ್ನ ಚರಣದಾಸರ ನಾಮ
ಪನ್ನಂಗಶಾಯಿ ವರ ಶ್ರೀರಾಮ ೩

 

೨೩೬
ಏನಿದೇನಿದನ್ಯಾಯ ಕೇಳಲಾಗದಯ್ಯ
ಧ್ಯಾನದಿಂದಾನೆಂಬ ಹೀನ ಜನರ್ವಚನ ಪ
ಪರಮಪುರುಷರ ಚರಿತ ಪರಮ ಭಕ್ತಿಯಲಿಂದ
ಬರೆದೋದಿಕೇಳಿದರೆ ಪರಮಪದವೆನುತ
ವರವೇದ ಸ್ರ‍ಮತಿವಾಕ್ಯ ಅರಿದರಿದು ಸಚ್ಚರಿತ
ಬರೀಬಾರದೆನ್ನುವ ನರಗುರಿಗಳ ವಚನ ೧
ಕನಸುಮನಸಿನೊಳೊಮ್ಮೆ ಜನಕಜೆಯವರನಂಘ್ರಿ
ನೆನೆವರ್ಗೆ ಭವಬಂಧವಿನಿತಿಲ್ಲವೆನುತ
ಮನುಮುನಿಗಳ್ಬರೆದಿಟ್ಟ ಘನತರದ ವಚನಗಳನು
ಮನನ ಮಾಡಳಿವ ಬಿನಗುಜನರ್ವಚನ ೨
ಬೀಳುತೇಳುತಲೊಮ್ಮೆ ನೀಲಶ್ಯಾಮನ ದಿವ್ಯ
ಮೇಲು ಮಹಿಮೆಯ ಮನದಾಲಿಸಲು ಜವನ
ದಾಳಿ ಸೋಂಕದು ಎಂದು ಶೀಲದೊರೆದ್ವಚನಗಳ
ಕೇಳಿ ತಿಳಿಯದ ಮಹ ಕೀಳುಜನರ್ವಚನ ೩
ಹರಿನಾಮ ಕೀರ್ತನೆಯಿಂ ಜರಾಮರಣ ಕಂಟಕª À
ಕಿರಿದು ಮಾಡಿ ದಾಟಿದರು ಗುರುಹಿರಿಯರೆಲ್ಲ
ನಿರುತ ನಿಜ ತಿಳಿಯದೆ ಹರಿಸ್ಮರಣೆ ಸ್ಮರಿಸದೆ
ಬರಿದೆ ಬ್ರಹ್ಮೆಂಬ ಮಹನರಕಿಗಳ ವಚನ ೪
ಪರಮ ಶ್ರೀಗುರುರೂಪ ವರದ ಶ್ರೀರಾಮನಂ
ನೆರೆನಂಬಿ ಒಲಿಸದೆ ಗುರುವಾಗಿ ಜಗದಿ
ಅರಿವಿತ್ತು ಆತ್ಮನ ಕರುಹು ತೋರಿಸಿ ಪರಮ
ಪರತರದ ಮೋಕ್ಷಮಂ ಕರುಣಿಸುಯೆಂತು ೫

 

೨೩
ಏನಿದ್ದೀತೇನಿದ್ದೀತೋ ಈ ನಾಮದ
ಲ್ಲೇನಿದ್ದೀತೇನಿದ್ದೀತೋಪ
ಏನಿದ್ದೀತೇನಿದ್ದೀತೇನ ಪೇಳಲಿ ನಾ
ಜಾನಕೀಶನ ನಾಮ ಹಾನಿಮಾಡದೆ ಕಾಯ್ವುದೇ ಅ.ಪ
ಜ್ಞಾನ ಕೊಡುವುದಲ್ಲೋ ಅ
ಜ್ಞಾನ ಖೂನಕ್ಕುಳಿಸದಿರೆಲೋ
ಸಾನುರಾಗದಿ ನಿಜಜ್ಞಾನ ಬೋಧಿಸಿ ಮಹ
ಹೀನ ಬವಣೆಕಳೆದಾನಂದ ಕೊಡುವುದು ೧
ನರಕಖೋಗುವನನ್ನು ಭರದಿ
ಕರುಣಿಸಿ ಪದವನ್ನು
ಕರುಣದಿತ್ತು ಹರಿಶರಣರೊಳಾಡಿಸಿ
ಪರಮ ಪರತರವೆನಿಪ ಸ್ಥಿರಸುಖ ಪಾಲಿಸಿತು ೨
ಜರಮರಣಳಿಯುವುದು ಅದರೊಳ್‌
ಕರುಣವೆ ತುಂಬಿಹ್ಯದು
ದುರಿತದಿ ಸಿಲ್ಕೆಲ್ಲಿ ಕರೆದರು ಅಲ್ಲಿಗೆ
ತ್ವರಿತದೊದಗಿ ಬಂದು ನಿರುತದಿಂ ಸಲಹುವುದು ೩
ಭವಬಾಧೆ ಕಳೆಯುವುದು
ಜವನ ಭಯವೆ ತಪ್ಪಿಸುತಿಹ್ಯದು
ದಿವರಾತ್ರಿ ಎನ್ನದೆ ನಯದಿ ಭಜಿಪರೊಳು
ದಯದಿ ನಿಂತು ತಾನೆ ಜಯವ ನೀಡುವುದು ೪
ಅಂತ್ಯಪಾರಿಲ್ಲ ಕಾಣೋ ಶ್ರೀರಾಮನಾಮ
ದ್ದೆಂಥ ಶಕ್ತಿಯೇನೋ
ಚಿಂತಿಪ ಭಕ್ತರ ಅಂತರಂಗವನರಿತು
ಸಂತಸ ನೀಡಿ ಮುಕ್ತಿಸಂಪದ ಕೊಡುವುದು ೫

 

೫೦೮
ಏನಿಹ್ಯದೇನಿಹ್ಯದೇನಿಹ್ಯದೋ ಸುಳ್ಳೆ
ಉದಕ ಕಡೆದರೆ ಬೆಣ್ಣಿಲ್ಲಿಹ್ಯದೋ ಪ
ಜೀವನ ಬಳಿಗ್ಹೋಗಿ ದೈನ್ಯಬಡುತ ಬಲು
ಮಣಿದು ಬೇಡಲಲ್ಲೇನಿಹ್ಯದೋ ಅ.ಪ
ಕಾಣದೆ ಬೊಗಳಿದರೇನಾದೋ ಒಣ
ಗಾಣಾತರುವವಲಲ್ಲೇನಾದೋ
ಕೋಣನ ಬಳಿಗ್ಹೋಗಿ ಸಾನುರಾಗದಿ ಒಳ್ಳೆ
ವೀಣೆ ನುಡಿಸಲಲ್ಲೇನಾದೋ ೧
ದೀನನ ಕಾಡಲು ಏನಾದೋ ಮಹ
ಹೀನನ ಸೇರಿದರೇನಾದೋ
ಜ್ಞಾನಬೋಧಾಮೃತ ಜಾಣತನದಿ ಅ
ಜ್ಞಾನಿಗೆ ತೋರಿದರೇನಾದೋ ೨
ಭಂಡರ ದಂಡಿಸಲೇನಾದೋ ಮಿಂಡೆ
ಷಂಡನ ಕೂಡಿದರೇನಾದೋ
ಮಂಡೆಬೋಳಿ ಮುಂದೆ ಗೊಂಡೆಮುತ್ತಿನ ಮಹ
ದಂಡೆಯ ತಂದಿಡಲೇನಾದೋ ೩
ಕುರುಡಗೆ ಪಥ ಕೇಳೆಲೇನಾದೋ ಬಲು
ದುರುಳ ಧರೆಯಾಳಿದರೇನಾದೋ
ಕರುಣವಿಲ್ಲದ ಪರಮ ಪಾಪಿಗಳಿ
ಗೆರಗಿ ಬೇಡಲಲ್ಲೇನಾದೋ ೪
ಮಾನವ ಇಹ್ಯಮೆಚ್ಚಲಲ್ಲೇನಾದೋ ಮತಿ
ಹೀನರ ಜಾಣತ್ವದೇನಾದೋ
ಪ್ರಾಣೇಶ ರಾಮನ ಖೂನ ತಿಳಿಯದ
ಮಾನವನಾದಲ್ಲೇನಾದೋ ೫

 

೨೩೭
ಏನು ಕಳೆದ್ಯೋ ಮಾನವ ಜನುಮ
ನಾನು ಯಾರೆಂಬ ಖೂನವಿಲ್ಲದೆ ಪ
ಕಾಲನಾಜ್ಞೆಯನ್ನು ಪಡೆದು
ಸೂಳ ಎಣಿಸಿ ಜಗಕಿಳಿದು
ಜಾಲಹಾಕಿ ಜವನಗೊಲಿದು
ಶೂಲಕ್ಹಾಕುವ ಮಾರಿಗೊಲಿದು ೧
ತಂದ ಪುಣ್ಯವನ್ನು ಕೆಡಿಸಿ
ಮಂದಿಮಕ್ಕಳನ್ನು ಬಿಡಿಸಿ
ಮಂದನೆನಿಸಿ ಕುಂದುಹೊರೆಗೆ
ಬಂಧಕ್ಕೆಳೆವ ರಂಡೆನ್ಹೊರೆಸಿ೨
ಜನನಿಜನಕರನ್ನು ಜರೆದಿ
ಮನೆಯ ಹೆಂಡಿರ ಮಾನ ಕಳೆದಿ
ಬಿನುಗು ಸೂಳೆಗೆ ವಶನಾದಿ
ಬಿನುಗರೊಳಗೆ ಬಿನುಗನಾದಿ ೩
ನೀಗಿದಿ ಕುಲಶೀಲತೆ ಮುದಿ
ಗೂಗೆಯಂದದಿ ದಿನಗಳೆದಿ
ಭಾಗವತದ ಭಾಗ್ಯ ಮರೆದಿ
ಕಾಗೆನುಂಗಿದ ಹೊಲೆಯನಾದಿ ೪
ಸಾಧು ಸುಜನಬೋಧ ಜರೆದಿ
ವೇದವಾಕ್ಯ ಮೀರಿ ನಡೆದಿ
ಶೋಧಿಸಿ ಸಮಯ ತಿಳಿಯದ್ಹೋದಿ
ಆದಿ ಶ್ರೀರಾಮಗ್ಹೊರತಾದಿ ೫

 

೨೩೮
ಏನು ಕೆಟ್ಟೆಯಲ್ಲೋ ಮನುಜ
ಹಾನಿಯಾದೆಯಲ್ಲೋ ಪ
ಕಾಣದೆ ಏನೇನು ಗಾಣದೆತ್ತಿನಂತೆ
ನಾನಾ ಯೋನಿಗಳು ಖೂನವಿಲ್ಲದೆ ತಿರುಗಿ ಅ.ಪ
ಕಾಲ ಕಳೆದೆಯಲ್ಲ ಕಾಲದ ಮೂಲ ತಿಳಿಯಲಿಲ್ಲ
ಮೂಳನಾದೆಯಲ್ಲ ಭವದ ಮಾಲ ಗೆಲಿಯಲಿಲ್ಲ
ಕಾಳುಕತ್ತಲೆಂಬ ಹಾಳು ಸಂಸಾರ ಮಾಯಾ
ಜಾಲದಿ ಬಿದ್ದೆಮಧಾಳಿಗೀಡಾದೆಯಲ್ಲ ೧
ನಾರಿ ನಿನ್ನವಳಲ್ಲ ಹುಟ್ಟಿದ ಪೋರ ನಿನಗಿಲ್ಲ
ಯಾರಿಗೆಯಾರಿಲ್ಲ ನಿನ್ನ್ಹಿಂದೆ ಯಾರು ಬರುವುದಿಲ್ಲ
ಧಾರುಣಿಸುಖವಿದು ಸಾರಮಯ ಸುವಿ
ಚಾರದೆ ನೋಡದೆ ಘೋರನರಕಿಯಾದೆ ೨
ಮನೆಮಾರು ನಿನಗಿಲ್ಲ ಗಳಿಸಿದ ಧನವು ನಿನ್ನದಲ್ಲ
ಕ್ಷಣಿಕವಾದದ್ದೆಲ್ಲ ಜಗಸುಖ ನಿನಗೊಂದು ಸ್ಥಿರವಿಲ್ಲ
ವನಜನಾಭ ನಮ್ಮ ಜನಕ ಶ್ರೀರಾಮನ
ವನರುಹಂಘ್ರಿ ನಂಬಿ ಘನಮುಕ್ತಿ ಪಡೀಲಿಲ್ಲ ೩

 

೨೩೯
ಏನು ಖೋಡ್ಯಾದಲ್ಲೋ ಸಂಸಾರ ನಾನು ನೋಡಿದ್ದಿಲ್ಲ ಪ
ಏನು ಖೋಡಿದು ವಿಚಾರ ತಪ್ಪಿಸಿ ಎನ್ನ
ಶ್ವಾನದಂದದಿ ಖೂನವಿಲ್ಲದೆ ಕೂಗಿಸಿತೇನು ಅ.ಪ
ತಾನೆ ನಿಜವಿಲ್ಲ ಎನ್ನನು ಏನು ಕೆಡಿಸಿತಲ್ಲ
ನಾನಾಪರಿಲಿ ಮಾಯಮೋಹದಿ ಮುಳುಗಿಸಿ
ಜ್ಞಾನ ಕೆಡಿಸಿ ಹೀನಬವಣೆಗೆ ತಂದಿತ್ತು ೧
ಕನಸಿನಪರಿಯಂತೀಜಗಸುಖ ಕ್ಷಣಹೊತ್ತಿನ ಸಂತಿ
ಇನಿಸು ತಿಳಿಗೊಡದೆನ್ನ ಮನಸು ಸೆಳೆದುಕೊಂಡು
ಕುಣಿಸಿ ಕುಣಿಸಿ ಮಹ ನರಕಿಯೆನಿಸಿತ್ತು ೨
ಸತ್ಯಮಾರ್ಗ ಮರೆಸಿ ಎನ್ನನಸತ್ಯಮಾರ್ಗಕೆಳಸಿ
ನಿತ್ಯನಿರ್ಮಲನ ಸತ್ಯ ಚರಿತೆಗಳ
ಗುರ್ತು ತಿಳಿಸದೆಮಮೃತ್ಯುತೀಡೆನಿಸಿತ್ತು೩
ಮರವೆಯು ಮುಚ್ಚಿತ್ತು ಭವಪಾಶ ಕೊರಳಿಗೆ ಹಾಕಿತ್ತು
ಅರಿವಿನ ಕುರುಹನು ತೋರಿಸದೆ
ಪರದಿರವು ಮರೆಸಿ ಧರೆಭೋಗ ಅಹುದೆನಿಸಿತ್ತು ೪
ನೇಮನಿತ್ಯಕೆಡಿಸಿ ಎನಗೆ ಶ್ರೀರಾಮಪಾದಮರೆಸಿ
ಕಾಮಿಸಬಾರದ ಕಾಮಿತಗಳಿಂದ
ಪಾಮರನೆನಿಸೆನ್ನ ಕೊಲ್ಲುತಲಿತ್ತು ೫

 

೧೨೮
ಏನು ಬಲ್ಲಿದನೋ ಹನುಮಂತ ನೀನು
ಏನು ಬಲ್ಲಿದನೋ ಪ
ಏನು ಬಲ್ಲಿದನಯ್ಯ ನೀನು ಜ್ಞಾನಮೂರುತಿ
ಜಾನಕೀಶನ ಧ್ಯಾನ ಸುಖಸಾಮ್ರಾಜ್ಯದಲ್ಲಿ
ಲೀನನಾಗಿ ಸುಖಿವೆ ಬಲವಂತ ಅ.ಪ
ಶರಧಿ ಜಿಗಿದವನೋ ಭರದಿ ದುರುಳನ
ಪುರವ ಸೇರಿದನೋ ನಿರುತ ದೊರೆಮಾತೆ
ದರುಶನಾದನವನೋ ಪರಮವೀರನೋ
ಧರೆಯ ಮಾತೆ ಕೃಪಾಪಾತ್ರನಾಗಿ
ಪರಮಪಾವನ ವರವ ಪಡೆದು
ಮರಳಿ ದುರುಳನ ವನವ ಸೇರಿ
ಧುರವ ಜೈಸಿದಿ ಧೀರಮಾರುತಿ ೧
ತಿರುಗಿ ಅಂಗದನ ಬಲವನ್ನು ಸೇರಿ
ಸಾರ ಕಥನವನ್ನು ಅರುಹಿ ಮುಂದೆ
ಪರಮಪಾವನನ ಚರಣಕಂಡಿನ್ನು
ಇರಿಸಿ ಹರಿಯಾಜ್ಞಂಗೀಕರಿಸಿ
ತ್ವರದಿ ದಕ್ಷಿಣಶರಧಿ ಹೂಳಿಸಿ
ಭರದಿ ಲಂಕೆಗೆ ಮುತ್ತಿಗಿತ್ತಯ್ಯ ೨
ಬುದ್ಧದೇಹದ ಕುಂಭಕರ್ಣನ
ಕ್ಷುದ್ರ ಇಂದ್ರಜಿತುನ ಮತ್ತವನ ತಂದೆ
ಬುದ್ಧಿಹೀನನ್ನ ಹತ್ತು ತಲೆಯವನ
ಯುದ್ಧದಿಂದ ಬದ್ಧರಕ್ಕಸ
ರೊದ್ದು ಬೇಗನೆ ಛಿದ್ರ ಮಾಡಿ ಜ
ಗದ್ರಕ್ಷ ಶ್ರೀರಾಮ ಪಾದಪದ್ಮಕ್ಕೆ
ಮುದ್ದು ಮುಖಿಯನು ತಂದುಕೊಟ್ಟೆಯ್ಯ ೩

 

೨೪
ಏನು ಮಾಡಿದರೇನು ಏನು ನೋಡಿದರೇನು
ದಾನವಾಂತಕ ನಿನ್ನನರಿಯದ ಪಾಪಿ ಪ
ನಾನಾದೇಶವ ತಿರುಗಿ ಯಾತ್ರೆ ಮಾಡಿದರೇನು
ನಾನಾತೀರ್ಥವ ಮುಳುಗಿ ಸ್ನಾನ ಮಾಡಿದರೇನು
ನಾನಾಕ್ಷೇತ್ರದಿ ನಿಂದು ದಾನ ಮಾಡಿದರೇನು
ದೀನರಕ್ಷಕ ನಿನ್ನ ಒಲುಮಿಲ್ಲದವರು ೧
ನಾನಾಗುಹೆಗಳ ಪೊಕ್ಕು ತಪವ ಮಾಡಿದರೇನು
ಮೌನದಿಂ ಕುರಿತು ಬಲುಜಪ ಮಾಡಿದರೇನು
ನಾನಾಶಾಸ್ತ್ರವ ಅರ್ಥಮಾಡಿದರೇನು
ಜಾನಕೀಶನೆ ನಿನ್ನ ದಯವಿಲ್ಲದವರು ೨
ನಾನಾಗುಡಿಗಳ ಪೊಕ್ಕು ಪ್ರತಿಮೆ ನೋಡಿದರೇನು
ನಾನಾಸತ್ಯರ ಮುಖವ ನಿತ್ಯ ನೋಡಿದರೇನು
ಧ್ಯಾನಿಕರಸುಲಭ ಶ್ರೀರಾಮ ನಿನ್ನಡಿ ಕುಸುಮ
ಕಾಣದಧಮರು ಈ ಜಗದೊಳಗೆ ಪುಟ್ಟಿ ೩

 

೨೪೦
ಏನು ಮಾಡಿದರೇನು ಹೀನಮಾನವನು
ಧಿನದಯಾಸಿಂಧು ಹರಿ ನೀನೊಲಿಯದಿರಲು ಪ
ಸ್ನಾನ ಮಾಡಿದರೇನು ನಾನಾತೀರ್ಥವ ತಿರುಗಿ
ಮೌನ ಮಾಡಿದರೇನು ನಯನಗಳು ಮುಚ್ಚಿ
ದಾನ ಮಾಡಿದರೇನು ಧ್ಯಾನ ಮಾಡಿದರೇನು
ಧ್ಯಾನದಾಯಕ ನಿನ್ನ ದಯವಾಗದಿರಲು ೧
ಜಪವ ಮಾಡಿದರೇನು ಅಪರೂಪ ಮಡಿಯುಟ್ಟು
ತಪವ ಮಾಡಿದರೇನು ವಿಪಿನವನು ಸೇರಿ
ಗುಪಿತಶಾಸ್ತ್ರವ ಕಲಿತು ನಿಪುಣನೆನಿಸಿದರೇನು
ಸುಫಲದಾಯಕ ನಿನ್ನ ಕೃಪೆಯಾಗದಿರಲು ೨
ತತ್ವವನು ವಿಂಗಡಿಸಿ ಅರ್ಥಮಾಡಿದರೇನು
ಪೃಥ್ವಿಬಿಡದ್ಯಾವತ್ತು ಸುತ್ತುಗಟ್ಟಿದರೇನು
ಕುತ್ತಿಗೆಯ ಕೊಯ್ದಿಟ್ಟು ಮತ್ತೆ ಕಲೆಸಿದರೇನು
ಚಿತ್ತಜಪಿತ ನಿನ್ನ ಚಿತ್ತಕ್ಕೆ ಬರದಿರಲು ೩
ಯೋಗವನು ಕಲಿತು ಬಲುಯೋಗ ಮಾಡಿದರೇನು
ಭಾಗವತವೋದಿ ಬಲು ಯಾಗ ಮಾಡಿದರೇನು
ಭೋಗವನ್ನು ತ್ಯಜಿಸಿ ಬಲು ಜಾಗರಣ ಮಾಡಲೇನು
ನಾಗಶಯನನೆ ನಿನ್ನ ನಿಗ ಬೀಳದಿರಲು ೪
ಒಪ್ಪಿಡಿ ಅವಲಕ್ಕಿಗೊಪ್ಪಿ ಸಂಪದ ಕೊಟ್ಟು
ತಪ್ಪುಗಾರನ ಕ್ಷಮಿಸಿ ಅಪ್ಪಿ ಪದವಿತ್ತಿ
ಒಪ್ಪುಗಾರನೆ ನೀನು ಒಪ್ಪಿದ ಬಳಿಕಾವ
ತಿಪ್ಪುಳದ ಗೋಜಿಲ್ಲೆನ್ನಪ್ಪ ಶ್ರೀರಾಮ ೫

 

೬೨೦
ಏನುಧನ್ಯನೊ ಇವನು ಎಂಥ ಪುಣ್ಯನೊ
ದೀನದಯಾಳು ಜಾನಕೀಶನ ಧ್ಯಾನ ಮಾಳ್ಪ ಮಾನವನು ಪ
ಜ್ಞಾನದಿಂದ ತಿಳಿದು ಜಗ ಶೂನ್ಯವೆಂದು ಊಹಿಸಿ ಮನದಿ
ದಾನವಾಂತಕನಾದ ಹರಿಯ ಧ್ಯಾನವೊಂದೇ ಕಾರಣೆಂದು
ಜ್ಞಾನಬೆಳಗಿನೊಳಗೆ ನೋಡಿ ಆನಂದಿಸುತಲ್ಹಿಗ್ಗುವವ ೧
ಆಶಪಾಶಗಳನು ನೀಗಿ ಈ ಮೋಸಮಯ ಸಂಸಾರದೊಳು
ವಾಸನಾರಹಿತನಾಗಿ ಸದಾ ದಾಸಸಂಗಸುಖಪಡೆದು
ಈಶ ಭಜನೆಯೊಳ್ಮನವಿಟ್ಟು ಈಸಿಭವಾಂಬುಧಿ ಪಾರಾಗುವವ ೨
ನಂಬಿಗಿಲ್ಲದ ದೇಹವಿದನು ನಂಬಿನೆಚ್ಚಿ ಸಂಭ್ರಮಿಸದೆ
ಹಂಬಲಳಿದು ಅಲ್ಪಸುಖದ ಕಂಬುಕಂಧರ ಶಂಭುವಿನುತ
ಅಂಬುಜಾಕ್ಷ ಶ್ರೀರಾಮನ ನಂಬಿ ಗಂಭೀರಸುಖದೊಳಿರುವವ ೩

 

೨೪೨
ಏನೆಂದೀದೇಹ್ಯವನು ನಂಬಿದಿ ಮನವೆ ನೀ
ಏನೆಂದೀ ದೇಹ್ಯವನು ನಂಬಿದಿ ಪ
ಏನೆಂದು ನಂಬಿದ್ಯೋ ಆನಂದದ್ಹಿಗ್ಗುತ
ಕ್ಷೀಣವಾಗೊಂದುದಿನ ಮಣ್ಣು ಗೂಡುವುದರಿತು ಅ.ಪ
ತಳಕ್ಹಾಕಿ ಜೋಡಿಸಿ ಹಲವು ನರಗಳಿಂದ
ಬಲವಾಗಿಬಿಗಿದ ಈ ಎಲುವಿನ ಹಂದರ ೧
ರೋಗಕ್ಕೆ ಇದು ತವರಾಗಿ ಒಂದಿನ ನಾಶ
ವಾಗಿ ತಾ ಕೈಬಿಟ್ಟು ಪೋಗುವ ಮಂಟಪ ೨
ಹಲವು ವಿಧದಿ ಮಜ್ಜ ಮಲ ಮೂತ್ರ ಬಲುಹೇಯ
ಮಲಿನ ಭರಿತವಾದ ಹೊಲೆಮಯ ಕುಂಡಲ ೩
ಬಿಲದ್ವಾರ ಒಂಬತ್ತು ತುಳುಕಿತುಂಬ್ಹರಿಯುತ
ತೊಳೆಯದಿರಲು ನಿಮಿಷ ಹೊಲಸಿಕ್ಕಿ ನಾರುವುದು ೪
ತಂದೆ ಶ್ರೀರಾಮನಂ ಹೊಂದಿ ಭಜಿಸದೆ ಗಾಢ
ಅಂಧಕಾರದಿ ಬಿದ್ದು ನಂದಿಪೋಗುವ ತನು ೫

 

೨೪೩
ಏನೆಂದು ಕರೆದರೆ ಬರುವಿ ನಿನ್ನ
ಧ್ಯಾನಿಸಿ ಕರೆದರೆ ಬಾರದೆ ಇರುವಿ ಪ
ದೀನದಯಾಳು ಶ್ರೀ ಅನಂತ ಮಹಿಮೆಂದು
ಗಾನದಿಂ ಪಾಡಲು ಕೇಳದೆ ಇರುವಿಅ.ಪ
ಸೊಪ್ಪಮೆದ್ದವನೆಂದೆನಲೆ ನಿನ್ನ
ತಿಪ್ಪೆತಿರುಕನೆಂದು ಗೌಪ್ಯದಿಂ ಕರಿಲೇ
ಕಪ್ಪುಮೈಯವನೆನ್ನಲೊಪ್ಪಿಕೊಂಡು ಬಂದು
ಅಪ್ಪಿಕೊಂಡ್ವರವೀವ್ಯೋ ಮುಪ್ಪುರಾಂತಕನೆ ೧
ಏಸುಕಾಲದ ಮುದುಕನೆನಲೇ ನಿನ್ನ
ಆಸೆಕಾರನೆಂದು ಆಶಿಸಿ ಕರಿಲೇ
ಹಾಸಿಕೆ ಕಾಣದೆ ಶೇಷನಮೇಲೇರಿ
ವಾಸಿಸುವಿಯೆನಲು ಪೋಷಿಸುವೆಯೋ ಬಂದು ೨
ಬಲುಬಲು ಕಪಟಿಯೆಂದೆನಲೇ ನೀ
ಕಳವಿನೋಳ್ ಪ್ರವೀಣನೆಂದು ಕೂಗಲೇ
ಕುಲಗೆಟ್ಟು ಭಕ್ತರ ಕಲೆಸಿ ಗುಪ್ತದಿಂದ
ಕುಲದಿ ಬಿದ್ದವನೆನಲು ಒಲಿದು ಕಾಯುವೆಯೋ ೩
ಆಲಯ ಕಾಣದೆ ಹೋಗಿ ನೀನು
ಪಾಲಸಾಗರವಾಸನೆಂದು ಕರಿಲೇ
ಬಾಲೆಯರುಡವ ದುಕೂಲ ಚೋರನೆಂದು
ಮೇಲಾಕೂಗಲು ಪಾಲಿಸುವೆಯೋ ಒದಗಿ ೪
ಅರಣ್ಯವಾಸಿಯೆಂದೆನಲೇ ನೀನು
ನಾರಿಯಳ ಕಳಕೊಂಡನೆಂದು ಸಾರಲ್ಯೋ
ಕೋರಿದವರ ಮನಸಾರ ವರನ ನೀಡ್ವ
ಧೀರ ಶ್ರೀರಾಮನೆಂದ್ಹಾರೈಸಿ ಕರೆಯುವೆ ೫

 

೧೬೯
ಏನೆಂದು ಪೇಳಲಿ ಹರಿಶರಣರ ನಿಜ
ಆನಂದ ಸೌಭಾಗ್ಯದಲಂಕಾರ ಪ
ಆನಂದ ಪರಮ ಆನಂದ ಹರಿಧ್ಯಾ
ನಾನಂದ ಸಂಪದ ಶೃಂಗಾರ ಅ.ಪ
ಮಾಧವನ ನಾಮಮಕುಟಿಟ್ಟಹ್ಯರು ಮಧು
ಸೂದನನ ಭಕ್ತಿ ಕವಚ ತೊಟ್ಟಿಹ್ಯರು
ಯಾದವನ ಜಪಮಾಲ್ಯ್ಹಾಕಿಹ್ಯರು ಯ
ಶೋದ ಬಾಲನ ದಯ ಪಡೆದಿಹ್ಯರು ೧
ಶ್ರೀಶನ ಧ್ಯಾಸಶಸ್ತ್ರ ಧರಿಸಿಹ್ಯರು ದೋಷ
ರಾಶಿಪರ್ವತ ತರಿದೊಟ್ಟಿಹ್ಯರು
ಕೇಶವನ ದಾಸತ್ವ ವಹಿಸಿಹ್ಯರು ಯಮ
ಪಾಶ ಜೈಸಿ ನಿರ್ಭೀತಾಗಿಹ್ಯರು ೨
ಹರಿಸ್ಮರಣೆಂಬ ಸರಕು ತುಂಬಿಹ್ಯರು ನರ
ಹರಿ ಪ್ರೇಮ ನೌಕೆ ಏರಿಹ್ಯರು
ವರದ ಶ್ರೀರಾಮಮಂತ್ರ ಪಠಿಸುವರು ಭವ
ಶರಧಿ ಸುಲಭದಿಂದ ದಾಂಟುವರು ೩

 

೫೦೯
ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ
ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ
ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ
ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ
ದೂರಿಸುವಿ ಮಹನೀತಿ ಘೋರಿಸುವಿ ಬಡವರನು
ಕಾರಿಸುವಿ ತಿಂದನ್ನ ಧಾರುಣಿಯೊಳು ೧
ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ
ನರಸುವಿ ಎಡಬಲದಿ ಪರಿಪರಿಯ ಜನರ
ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್
ಮರೆಸುವಿ ಮಹಿಮರ ಸಂದರುಶನದ ಸುಖವ ೨
ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ
ಸಾಧುಸಜ್ಜನರ ನಿಜಬೋಧ ತೋರಿಸುವಿಯೋ
ಭೇದನಿಕ್ಕುತ ವೈರ ಸಾಧಿಸುತ ಪರಲೋಕ
ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ ೩
ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು
ನುಡಿಸುವಿ ಕಡೆತನಕ ಕಡುದುಗುಡ
ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ
ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ ೪
ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ
ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ
ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ
ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ ೫

 

ಹರಿಯ ದಶಾವತಾರದ ವರ್ಣನೆ
೨೪೪
ಏನೆಂದೆ ಏನೆಂದೆ ರಂಗಯ್ಯಗೆ ನಾನು
ಏನೆಂದೆ ಏನೆಂದೆ ಪ
ನಾನೇನೆಂದೆನೆ ಗಾನಲೋಲಗವ
ಮಾನದ ಮಾತಿಂಥ ಜೀನನ ಕಾಣೆನೆಂದೆ ಅ.ಪ
ಕಾಲು ಇಲ್ಲದ ಹೆಳವನೆಂದೆ
ತಲೆಯ ಕಾಣದ ಕುರೂಪಿಯೆಂದೆ
ಚೆಲುವಿಕಿಲ್ಲದ ಕಾಡು ಹೀನಮೃಗವೆಂದೆ
ಬಲಿಯ ಬಾಗಿಲ ಕಾಯ್ವ ಕೂಲಿಕಾರನೆಂದೆ೧
ನಾಲಗೆ ಚಾಚಿ ರಕ್ತ ಕುಡಿದನೆಂದೆ
ತಿಳಿದು ಜನನಿತಲೆ ಕಡಿದವನೆಂದೆ
ಲಲನೆಯೊಡನೆ ವನವಾಸಕೆ ಪೋಗಿ
ಬಳಲಿ ಬಳಲಿ ಬಾಯಾರಿದನೆಂದೆ ೨
ಗೊಲ್ಲರ ಕುಲದಲಿ ಹುಟ್ಟಿದನೆಂದೆ
ಗುಳ್ಳೆ ಗುಳ್ಳೆ ಬೆಣ್ಣೆ ಕದ್ದವನೆಂದೆ
ಗೊಲ್ಲರ ಅಕಳ ಕಾಯುವ ಚರನೆಂದೆ
ಫುಲ್ಲನಲನೆಯರ ವಸ್ತ್ರಗಳ್ಳನೆಂದೆ ೩
ಬತ್ತಲೆ ಕುಣಿಕುಣಿದಾಡಿದನೆಂದೆ
ಸತ್ಯಭ್ರಷ್ಟ ಮಹಕಲಿಯು ಈತನೆಂದೆ
ಮತ್ತೆ ವೈಕುಂಠದಿ ಒದೆಸಿಕೊಂಡು ಇವ
ವಿತ್ತದಾಸೆಗೆ ಮತ್ರ್ಯಲೋಕಕಿಳಿದವನೆಂದೆ ೪
ಕುದುರೆ ನಡೆಸಿ ಒಬ್ಬನುಳಿಸಿದನೆಂದೆ
ಕದನದ್ವೊಂಚಿಸಿ ಒಬ್ಬನಳಿದವನೆಂದೆ
ಕುದುರೆ ಕಟ್ಟಿದ ವೀರ ತಾಮ್ರಧ್ವಜಗೆ ಸೋತು
ಮುದುಕನಾಗಿ ಭಿಕ್ಷದಶ್ವ ತಂದವನೆಂದೆ ೫
ಸೋದರಮಾವನ ಕೊಂದವನೆಂದೆ
ಸೋದರಳಿಯರ ಜೀವ ಹೊಡೆಸಿದನೆಂದೆ
ಭೇದದಿಂದ ಸಾಧು ಹನುಮನ ಸೋಲಿಸಿ
ಸಾಧಿಸ್ವರೂಪಕ್ಕೆ ಪತಾಕೆನಿಸಿದನೆಂದೆ ೬
ದ್ವಾರಕಾಪುರವರ ಜಾರ ಚೋರನೆಂದೆ
ಮೂರುಪುರದ ಸಿರಿ ಸೊರೆಗೊಂಡವನೆಂದೆ
ಮೀರಿದಂಥ ಮಹಮಾಯದ ಹೆಣ್ಣೆಂದೆ
ಈರೇಳುಲೋಕದ ಕಪಟನಾಟಕನೆಂದೆ ೭
ಮೊಚ್ಚೆಗಾರ ಕೈಯೊಳುಂಡವನೆಂದೆ
ಉಚ್ಚಿಷ್ಟನಾಗಿ ಬಹಿಷ್ಕಾರ್ಹೊಂದಿದನೆಂದೆ
ವೆಚ್ಚಮಾಡಿ ಮತ್ತು ಕುಲದಿ ಬಿದ್ದವನೆಂದೆ
ನಿಶ್ಚಲ ಭಕ್ತರಿಗ್ಹುಚ್ಚ್ಹಿಡಿಸಿದನೆಂದೆ ೮
ಪುಲ್ಲನಯನ ಸಿರಿರಾಮನ ಮುಂದೆ
ಅಲ್ಲದ ಮಾತುಗಳ್ನಾನೇನೆಂದೆ
ಬಲ್ಲಿದ ಹದಿನಾಲ್ಕು ಲೋಕ ಪೊತ್ತವನೆಂದೆ
ಉಲ್ಲಾಸದಿ ನಿಮ್ಮ ಬಿರುದು ಸಾರುತ ಬಂದೆ ೯

 

೨೪೧
ಏನೆನ್ನುತ್ಹಳಿಯಲಿ ನಿನ್ನ | ನಾನಾವಿಧದಿ
ಬೆಳಗುವ ಮಹಮಹಿಮನ ಪ
ಸಾಗರ ನಿಲಯನೆಂದೆನಲೇ
ನೀಗದ್ವೊಯ್ಕುಂಠ ಮೇಲು ಮಂದಿರನ
ರಾಗದಿಂ ದ್ವಾರಕೆ ಪುರಮನೆಯವನೆನಲೇ
ಯೋಗದಿಂದಣುರೇಣುತೃಣದಿ ವ್ಯಾಪಕನ ೧
ಪನ್ನಂಗ ಹಾಸಿಗೆ ಮಾಡಿಹ್ಯನೆನಲೇ
ಉನ್ನತ್ಹಾಸಿಗೆಯ ಮೇಲೆ ಮಲಗಿಕೊಳ್ವವನ
ಭಿನ್ನವಿಲ್ಲದೆ ದರ್ಭೆಶಾಯಿಯೆಂದೆನಲೇನು
ಚಿನ್ನಮಂಚದ ಮೇಲೆ ಲೋಲ್ಯಾಡುವವನ ೨
ಹೊಟ್ಟಿಗ್ಹುಲ್ಲ ತಿಂದವನೆನಲೇ
ಶಿಷ್ಟ ದಿವಿಜರಿಟ್ಟ ಮೃಷ್ಟಾನ್ನುಣ್ವವನ
ಕೊಟ್ಟ ಹಣ್ಣಿನ ತೋಟ ಹಸಿದು ತಿಂದವನೆನೆ
ಸೃಷ್ಟಿ ಈರೇಳಕ್ಕೆ ಅನ್ನ ಕೊಡುವವನ ೩
ಅಸುಬಿಟ್ಟ ದಿಕ್ಕಿಲ್ಲದನೆನಲೇ
ಅಸಮಲಬಲವುಳ್ಳಂಥ ಯಾದವಾರ್ಯನ
ಕುಸುಮನಾಭಂಗೆ ಸಂಸಾರಿಯೆಂದೆನಲೇನು
ಎಸೆವ ಪರವಸ್ತು ನಿರ್ಬಯಲು ನಿರ್ಮಯನ ೪
ಅಳವಲ್ಲ ಎನಗೆ ನಿನ್ನ
ವೊಲಿರೆ ದಿವ್ಯ ಮಹಿಮೆ ತಿಳಿಯುವ ತ್ರಾಣ
ಒಲಿದು ಚರಣದಾಸರಾಳಾಗಾಳುವೆನೆಂದು
ಇಳೆಯೊಳು ಸಾರುವೆ ನಳಿನಾಕ್ಷ ಶ್ರೀರಾಮ ೫

 

೫೧೦
ಏಸು ರೂಪಾಯ್ಗೆ ಕೊಂಡು ಕೊಂಡೆವ್ವಾ
ಒಸರುವ ಗಡಿಗೆ ಪ
ಏಸುರೂಪಾಯ್ಗೆ ಕೊಂಡುಕೊಂಡೆವ್ವಾ
ಏಸುರಾಪಾಯ್ಗೆ ಕೊಂಡುಕೊಂಡಿ
ಹೇಸಿಕೊಳ್ಳದೆ ಇದನು ನೀನು
ಬೇಸರಿಲ್ಲದೆ ತೊಳೆಯುತಿದ್ದಿ
ವಾಸನಿಕ್ಕಿ ನಾರುತಿದೆ ಅ.ಪ
ಎಂಥ ಕುಂಬಾರಿದನು ಮಾಡಿದ ಎಷ್ಟುಕಾಲದಿ
ಕುಂತು ಇದಕೆ ಶೋಧ ಹುಡುಕಿದ ಅವನು ದಾವ
ಸಂತೆಯೊಳಗೆ ಕುಂತು ಮಾರಿದ ಕೊಂಡೇನುತಿಳಿದ
ತಂತು ತಿಳಿಯದೆ ಹೊತ್ತುಕೊಂಡು
ನಿಂತಿಯಿದರ ಖ್ಯಾಲಿನೊಳಗೆ
ಸಂತೆ ತೀರಿಹೋಗಲಾಗೇನಂತ ಹೇಳುವಿ ಕೇಳುವವರಿಗೆ ೧
ಕಷ್ಟದ್ಹೊತ್ತು ಕುದಿಯುತಿದ್ದ್ಯಲ್ಲ ಹುಚ್ಚು
ಎಷ್ಟುದುಡಿದು ತುಂಬುತಿದ್ದ್ಯಲ್ಲ ನಿಲ್ಲದಿನಿತು
ಅಷ್ಟು ಒಸರಿ ಬಸಿಯುತಾದಲ್ಲ ಖೂನ ನಿನಗಿಲ್ಲ
ನಟ್ಟನಡುವೆ ಗಂಟುಬಿದ್ದು
ಕೊಟ್ಟು ನಿನಗೆ ಕಷ್ಟ ವಿಧ ವಿಧ
ಕಟ್ಟ ಕಡೆಗೆ ಕೈಯ ಬಿಟ್ಟು ಕೆಟ್ಟು ಮಣ್ಣು ಕೂಡುತಾದೆ ೨
ಮಸಣಿಬುದ್ಧಿ ನೀಗಿ ಕೇಳಮ್ಮ ನಿಜವನಿರುತ
ಕುಶಲರ್ಹೇಳುವ ಮಾತು ತಿಳಿಯಮ್ಮ ಮುಂದೆ ಮಹಕಾಲ
ನಿಶೆಯು ಒದಗುತದೆ ತಂಗೆಮ್ಮ ಪುಸಿಯಲ್ಲವಮ್ಮ
ಮಸಿಯ ಗಡಿಗ್ಹಿಡಿದು ಹಸನಮಾಡಿ
ವಸುಧೆಗಧಿಕ ಶ್ರೀರಾಮಪಾದ
ಕುಸುಮಕರ್ಪಿಸಿ ಧನ್ಯಳಾಗಿ ಅಸಮಮೋಕ್ಷಪದವಿ ಪಡೆಯೆ ೩

 

೨೪೫
ಒಕ್ಕಲ ಮಾಡೆನ್ನ ಮುಕ್ಕುಂದ ತಂದೆ
ಒಕ್ಕಲ ಮಾಡೆನ್ನ ಪ
ಒಕ್ಕಲ ಮಾಡೆನ್ನ ದಕ್ಕಿಸಿ ಭವದೊಳು
ಅಕ್ಕರದಲಿ ನಿಮ್ಮ ಮಿಕ್ಕ ಪ್ರಸಾದ ನೀಡಿ ಅ.ಪ
ಆಸೆ ನೀಗಿಸೆನ್ನಭವದ
ಪಾಶ ತರಿಯೊ ಮುನ್ನ
ಈಶನೆ ತವ ಪಾದ ದಾಸಾನುದಾಸರ
ವಾಸದಿರಿಸಿ ಎನ್ನ ಪೋಷಿಸು ದಯದಿಂ ೧
ಸೊಕ್ಕು ಮುರಿದು ಎನ್ನ ನಿಮ್ಮಯ
ಪಕ್ಕದೆಳಕೊ ಎನ್ನ
ತಿಕ್ಕಿ ಮುಕ್ಕುವ ಘನ ಮಕ್ಕಮಾರಿ ಸತಿಯ
ರಕ್ಕರ್ಹಾರಿಸಿ ನಜರಿಕ್ಕೆ ಸಲಹುಜೀಯ ೨
ಜನನ ಮರಣ ಬಿಡಿಸೊ ಎನ್ನಯ
ಮನವ ನಿನ್ನೊಳಿರಿಸೊ
ವನರುಹ ಬ್ರಹ್ಮಾಂಡ ಜನನಿ ಜನಕನಾದ
ವನಜಾಕ್ಷ ಶ್ರೀರಾಮ ಘನಮುಕ್ತಿ ಪಾಲಿಸಿ ೩

 

೫೧೧
ಒಬ್ಬರ ಮಾತ್ಯಾಕೆ ನಾಲಗೆ ನೀನು
ಉಬ್ಬದೆ ಸುಮ್ಮನಿರು ನಾಲಗೆ ಪ
ಮಬ್ಬಿನಿಂದ ನೀ ಒಬ್ಬರ ಮಾತಾಡಿ
ಕೊಬ್ಬನಿಂ ಕೆಡಬೇಡ ನಾಲಗೆ ಅ.ಪ
ಮಂದಿ ಮಾತಾಡಲು ನಾಲಗೆ ನಿನಗೆ
ಬಂದ ಭಾಗ್ಯವೇನು ನಾಲಗೆ
ಒಂದು ಅರಿಯದೆ ಮನಬಂದಂತೆ ಮಾತಾಡಿ
ಅಂದಗೆಡಲಿ ಬ್ಯಾಡ ನಾಲಗೆ ೧
ನಿಂದೆಯಾಡಬೇಡ ನಾಲಗೆ ನೀನು
ಕುಂದುವಡೆಯ ಬೇಡ ನಾಲಗೆ
ಒಂದಿನ್ಹೋಗ್ವುದು ನಿನಗೆಂದಿಗೆ ತಪ್ಪದು
ಮುಂದಿನ ಸುಖ ನೋಡು ನಾಲಗೆ ೨
ಸತ್ಯ ತಪ್ಪಬೇಡ ನಾಲಗೆ ನೀನ
ಸತ್ಯ ನುಡಿಯ ಬೇಡ ನಾಲಗೆ
ಇತ್ತ ವಚನ ತಪ್ಪಿ ವ್ಯರ್ಥವಾಗಿ ನಾಳೆ
ಮೃತ್ಯುಗೀಡಾಗ ಬ್ಯಾಡ ನಾಲಗೆ ೩
ಸುಳ್ಳನಾಡಬೇಡ ನಾಲಗೆ ಸದಾ
ಒಳ್ಳೆ ಮಾತಾಡು ಕಂಡ್ಯ ನಾಲಗೆ
ಸುಳ್ಳು ಈ ಜಗಕೆ ಮಳ್ಳನಾಗಿ ಯಮ
ಕೊಳ್ಳಕೆ ಬೀಳ ಬ್ಯಾಡ ನಾಲಗೆ ೪
ಹಾಳುಗೋಜ್ಯಾಕೆ ಕಂಡ್ಯ ನಾಲಗೆ ಕಾಲ
ಹೇಳಿ ಬರದು ನಿನಗೆ ನಾಲಗೆ
ಶೀಲಮನಸಿನಿಂದ ಪಾಲ ಶ್ರೀರಾಮಪಾದ
ಕಾಲತ್ರಂತದಿ ನೆನೆ ನಾಲಗೆ ೫

 

೧೨೯
ಒಲಿಸಿದ್ಹ್ಯಾಗೆ ಪೇಳೆ ಜನನಿ
ತುಲಸಿ ಹರಿಯ ಮೋಹಮಾನಿನಿ ಪ
ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ
ಒಲ್ಲ ಸೇವಂತಿಗಿರವಂತಿಗೆ
ಎಲ್ಲ ಕುಸುಮಗಳನು ನೀ
ನಿಲ್ಲದೆ ತನಗೆ ಸಲ್ಲದೆನುವ ೧
ಗಂಧ ಕಸ್ತೂರಿ ಪುನುಗು ಕೇಸರಿ
ಅಂದಮಾದ ಸುಗಂಧ ಭಾರಿ
ಚಂದದಿ ಪೂಸಲಿದರೊಳ್ನೀ
ನೊಂದಿಲ್ಲದಿನಿತು ಧಿಕ್ಕಾರೆನುವ ೨
ಮಿಗಿಲಾದ ಮಣಿಮಾಲೆಯ
ಬಗೆಯದಿದನು ನಿನ್ನ ಬೇಡುವ
ನಿಗಮಾತೀತ ಶ್ರೀರಾಮ ನಿ
ನ್ನಗಲದಿರೆನೆಂಬ ಸಂತತ ೩

 

ವಿಷ್ಣುವಿನ ನಾಭಿಕಮಲದಿಂದ
೧೩೦
ಒಳಿತಲ್ಲ ನಿನ್ನ ತಳ್ಳಿ ಅಭಿಮಾನದೇವಿ
ಎಲೆ ತಾಯೆ ನಮಿಸುವೆನು ದೂರಾಗೆ ಮಾಯಿ ಪ
ಬಗೆಗೊಂಡು ಬ್ರಹ್ಮನ ತಲೆಯೊಂದು ಕಳೆದಿಟ್ಟು
ಹೆಗಲೇರಿ ಶಿವನ ಸುಡುಗಾಡದಿಳಿಸಿದಿ
ಜಗರಕ್ಷಕನನು ಹತ್ತು ಅವತಾರದೆಳಸಿದಿ
ನಿಗಯಿಟ್ಟಂದ್ರನ ಮೈ ಛಿದ್ರ ಮಾಡಿಟ್ಟಿ ೧
ಸೆರೆಹಿಡಿದು ತಾರಕನ ಆರೆದಿನದವನಿಂ ಕೊಂದಿ
ಕರಪಿಡಿದು ಹಿರಣ್ಯನ ಅಸಮವರ ಸುಟ್ಟಿ
ನೆರೆಯಾಗಿ ರಾವಣ ಆರುಕೋಟ್ಯಾಯುಷ್ಯ
ಉರುತರದ ಸಿರಿಯೆಲ್ಲ ಮಾಯ ಮಾಡಿಟ್ಟಿ ೨
ಸೆಳೆಕೊಂಡು ಕುರುಪನ ಕುಲನಾಶ ಮಾಡಿಟ್ಟಿ
ಒಲಿದು ಕಲಿಯುವಗೆಲ್ಲ ನುಂಗಲ್ಹತ್ತಿರುವಿ
ಸುಲಭದೆನ್ನನು ಬಿಟ್ಟು ಅಗಲದಿರ್ದರೆ ನಿನಗೆ
ಜಲಜಾಕ್ಷ ಶ್ರೀರಾಮನೊನರುಹಂಘ್ರ್ಯಾಣೆ ೩

 

೫೧೨
ಓಡುತ ಹೋಗುತಾದೋ ಹೊತ್ತು ನೀನು
ನೋಡೇನೆಂದರೆ ಆಗದು ಮತ್ತು ಪ
ಬೇಡಲು ಬಿಡದೆಲೊ ಹೆಡತಲೆಮೃತ್ಯು
ಹುಡುಕಾಡಿ ಪಡಕೋ ನೀ ಕೆಡದ ಸಂಪತ್ತು ಅ.ಪ
ಗಜಿಬಿಜಿಸಂಸಾರ ಸೂಡಿಗೆ ನೀನು
ಗಿಜಿಗಿಜ್ಯಾಗದೆ ನಿಲ್ಲು ಕಡೆಗೆ
ಸುಜನರಿಗೊಂದಿಸಿ ಭುಜಗಾದ್ರಿಶಯನನ
ನಿಜಪದ ಮಜದಿಂದ ಭಜಿಸಿಕೋ ತುರ್ತು ೧
ಕಾಳನಾಳಿನ ದಾಳಿಗೆಲಿದು ಸ್ಥಿರ
ಬಾಳುವ ನಿಜಪದವರಿದು
ನೀಲಶಾಮನ ಲೀಲೆ ಮೇಲೆಂದ್ಹಿಗ್ಗುವ ದಾಸ
ರ್ಹೇಳಿಕೆ ಕೇಳಿ ನೀ ಪಾಲಿಸು ತುರ್ತು ೨
ನಡೆನುಡಿ ಎರಡೊಂದೆ ಮಾಡೊ ಇನ್ನು
ಜಡಮತಿ ಗಡನೆ ಈಡ್ಯಾಡೋ
ಪೊಡವಿಗಧಿಕ ನಮ್ಮ ಒಡೆಯ ಶ್ರೀರಾಮನೆಂ
ದ್ಹೊಡಿ ಹೊಡಿ ಡಂಗುರ ದೃಢವಾಗಿ ಅರ್ತು ೩

 

೨೬೪
ಕಂತುಜನಕನ ನೆನೆಯಲೆ ಬರಿದೆ ಮನ
ಚಿಂತಿಸಿ ಫಲವಿಲ್ಲಲೇ ಪ
ಕುಂತಿಸುತರಪಾಲ ಸಂತಜನರ ಪ್ರೀಯ
ಚಿಂತೆಯಳಿದು ನಿಶ್ಚಿಂತೆ ಪಾಲಿಸುವಂಥ ಅ.ಪ
ಕೀಳುಯೋಚನೆ ಅಳಿಯೆಲೆ ವೈಕುಂಠನ
ಶೀಲತನದಿ ಭಜಿಸೆಲೆ
ಮೂಲಮಂತ್ರವ ಕೇಳೋ ನೀಲವರ್ಣನ ಜಪ
ಕಾಲನ ಬಾಧೆಯ ಗೆಲಿಸಿ ಪಾಲಿಸುವಂಥ ೧
ಕರಿಧ್ರುವರೆಂಬುವರೊ ಹರಿಹರಿಯೆಂದು
ಸ್ಥಿರಮುಕ್ತಿ ಪಡೆದಿಹ್ಯರೊ
ಹರಿಯೆಂದು ಪ್ರಹ್ಲಾದ ಪರಮಕಂಟಕ ಗೆದ್ದ
ಹರಿಯೆಂದು ವಿಭೀಷಣ ಸ್ಥಿರಪಟ್ಟ ಪಡೆದನು ೨
ವಾಸನಾದೇಹವಿದು ಶಾಶ್ವತವಲ್ಲ
ನಾಶನಹೊಂದುವುದು
ಬೇಸರಿಲ್ಲದೆ ಪಠಿಸೀಶ ಶ್ರೀರಾಮನ
ಧ್ಯಾಸವ ಮರೆಯದಿರು ಹೇಸಿಭವವ ಗೆಲಿಪ ೩

 

೨೬೫
ಕಂಸಾರಿನಿಜಪಾದ ಮರೆಯದಿರೆಲೆ ಮನವೆ
ಸಂಸಾರಸುಖ ನೆಚ್ಚಿ ಭ್ರಮೆಯೊಳಗೆ ಬಿದ್ದು ಪ
ಜನನಿಜನಕರುವನಿತೆತನುಜನುಜರಿವರೆಲ್ಲ
ನಿನಗ್ಹಿತದಶತ್ರೆಂದು ನೆನೆಸಿಕೊಳ್ಳದಲೆ
ಅನುದಿನವು ದುಡಿದುಡಿದು ತನುಮನಧನವನಿತು
ಬಿನುಗರಿಗೆ ಸಲಿಸಿ ನರಕಕುಣಿಯೊಳಗೆ ಬಿದ್ದು ೧
ಹೊಲಸುಕಿಲ್ಬಿಷಮಾಂಸ ಮೇಲೆ ಚರ್ಮದ ಹೊದಿಕೆ
ಬಲವಾಗಿ ಬಿಗಿದ ನರ ಎಲುವಿನ್ಹಂದರವು
ತೊಳೆಯದಿರ್ದರೆ ನಿಮಿಷ ಹೊಲಸುನಾರುವ ಮಹ
ಮಲಭಾಂಡಕ್ಕೊಲಿದು ಬಲು ಸಿಲುಕಿ ಬಂಧದೊಳು ೨
ಜಡದಮೇಲಣ ಲಿಪಿಯು ಒಡನೆ ಮಾಯಪ್ಪಂತೆ
ಪೊಡವಿಯ ಸುಖ ನಿಮಿಷದಡಗಿ ಪೋಗುವುದು
ಅಡಿಗಡಿಗೆ ಎಡೆಬಿಡದೆ ಒಡೆಯ ಶ್ರೀರಾಮನಲಿ
ದೃಢವಾಗಿ ನೆರೆನಂಬಿ ಪಡಕೋ ನಿಜಸುಖವ ೩

 

೧೩೧
ಕಪಾಲಧರ ತ್ರಯತಾಪರಿಹಾರ ಭ
ಜಿಪೆ ಕಾಪಾಡು ಕೃಪೆ ಪಾಲಿಸಿ ಪ
ಅಪಾರ ಪತಿವ್ರತಾಶಾಪವಿಮೋಚನ
ಗೋಪ ಗೋಪತಿ ನಮಿತ ಗೋಪಾಲನೊಲಿಸೆನಗೆ ಅ.ಪ
ಅಗಜಾವಲ್ಲಭ ಸುಗುಣರಘದೂರ
ಜಗದೊಡೆಯ ಮಗುವಿನ ಮೊರೆ ಪಾಲಿಸು
ನಿಗಮ ಆಗಮ ವಿನುತ ಅಗಣಿತಾಗಣಿತಮಹಿಮೆ
ಬಗೆದೆನ್ನ ನುಡಿಯಾಲಿಸು
ನಗಧರ ಖಗರೂಢ ಜಗರಕ್ಷ ಹರಿನಾಮ
ಅಗಲದೆ ಭಜಿಸುವ ಅಗಣಿತ ಮತಿ ನೀಡೊ ೧
ಅಜಭವಸುರ ನಮಿತ ರಜತಾದ್ರಿಮಂದಿರ
ನಿಜಜ್ಞಾನ ದಯಮಾಡೊ
ಭುಜಗಭೂಷಣ ಮೃಡ ಗಜಚರ್ಮಾಂಬರ ಜಗದ
ಗೋಜು ಮುಂದೆನಗೆ ಬೇಡೊ
ಕುಜನ ಕುಲಾಂತಕ ಸುಜನ ಸಂರಕ್ಷಕ
ಅಜನ ಪಿತನ ಪಾದ ನಿಜಧ್ಯಾನ ಸ್ಥಿರಕೊಡೋ ೨
ಮೃತ್ಯುವಿಜಯ ಸತ್ಯ ಚಿತ್ತ ನಿರ್ಮಲ
ನಿತ್ಯ ಸತ್ಯರ ಸಖ್ಯ ನೀಡೊ
ಸತ್ಯಸದ್ಭಕ್ತಿನಿತ್ತು ಮತ್ರ್ಯರಿಂದುಳಿಸೆನ್ನ
ಚಿತ್ತ ಪರಿಶುದ್ಧ ಮಾಡೊ
ಭಕ್ತವತ್ಸಲ ನಿಜಮುಕ್ತಿದಾಯಕ ಮಮ
ಕರ್ತ ಶ್ರೀರಾಮನ ಭಕ್ತನೆಂದೆನಿಸೆನ್ನ ೩

 

೨೪೬
ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ
ವಿಮಲ ಹೃದಯ ಎನ್ನ ಪಾಪ ಕ್ಷಮಿಸು ಮಾಧವ ಪ
ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ
ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ ೧
ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ
ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ ೨
ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ
ಚರಣಸೇವೆ ನೀಡಿ ಪೊರೆಯೈ ಉರಗಶಯನ ೩
ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ
ಹೀನ ಬವಣೆ ತಪ್ಪಿಸಿನ್ನು ದಾನವಾಂತಕ ೪
ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ
ಬಿನಗುಕೃತಿ ಗೆಲಿಸು ದಯದಿ ದೀನಮಂದಾರ ೫
ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ
ಮನಕೆ ತಂದು ರಕ್ಷಿಸಿನ್ನು ಜನಕಜಾವರ ೬
ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು
ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ ೭
ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ
ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ ೮
ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ
ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ ೯
ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು
ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ ೧೦
ದೋಷಹರನೆ ಯಮನ ಭೀತಿ ನಾಶಗೈದು ಸುಜನ ಸಹ
ವಾಸದಿರಿಸನುಮೇಷ ಎನ್ನ ವಾಸುದೇವನೆ ೧೧
ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ
ಧ್ಯಾನಾನಂದ ಕರುಣಿಸಯ್ಯ ಜನಾರ್ದನ೧೨
ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು
ಘೋರ ಭವದ ತಾಪಹರ ನಾರಾಯಣ ೧೩
ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ
ದೋಷ ಮನ್ನಿಸಯ್ಯ ಎನ್ನ ಈಶಕೇಶವ ೧೪
ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ
ಸಂಚಿತಾಗಮ ರಹಿತ ವಿರಂಚಿತಾತನೆ ೧೫
ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ
ಮೂರು ಲೋಕ ಸಾರ್ವಭೌಮ ನಾರಸಿಂಹ ೧೬
ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು
ಸದಮಲಾಂಗ ಸರ್ವಾಧಾರ ಮಧುಸೂದನ ೧೭
ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ
ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ ೧೮
ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ
ದುರ್ಜನಾಗಿ ದಯಾರ್ಣವ ನಿರ್ಜರೇಶನೆ ೧೯
ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು
ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ ೨೦
ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ
ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ ೨೧

 

೧೩೨
ಕರುಣದಿ ಒಲಿಯೆನಗೆ ಹೇ ಜನನಿ
ನಿರಭಿಮಾನದ ದೇವಿಯೇ ಕರುಣಿಸು ಪ
ಎನ್ನ ಬಂಧುಗಳೆಲ್ಲ ಕಣ್ಣೆತ್ತಿ ನೋಡದಿರಲಿ
ಪನ್ನಂಗಶಯನನ ನೆನೆವೊಂದೆ ಎನಗಿರಲಿ ೧
ಅವನಿಪರೆನ್ನನು ದಯೆದಪ್ಪಿ ನೋಡಲಿ
ಭವಹರನಂಘ್ರಿಯ ಭಜನೆಸವಿಯೊಂದಿರಲಿ ೨
ಭೂಷಣವಾಗಲಿ ದೂಷಣವಾಗಲಿ
ಶ್ರೀಶ ಶ್ರೀರಾಮನೆನ್ನ ಧ್ಯಾನದೊಳೊಂದಿರಲಿ ೩

 

ನಂಬಿಕೊಟ್ಟ ಕಮಲಾಂಬಿಕೆಯೆಂಜಲ
೨೪೭
ಕರುಣವ ತೋರೋ ಕರುಣಗುಣಾಂಬುಧಿ
ಕರುಣವ ತೋರೋ ರಂಗಯ್ಯ ಪ
ಕರುಣದಿ ಬಾರೋ ಬಾರೋ ಕರುಣ ತೋರಿ ಎನ್ನ
ಕರುಣದಪ್ಪಿ ಪೊರಿ ಕರುಣವ ತೋರೋ ಅ.ಪ
ಪರತರಮಹಿಮ ಹರಸುರಬ್ರಹ್ಮರ
ಮೊರೆಯ ಕೇಳಿದ ಕರುಣವ ತೋರೋ ರಂಗಯ್ಯ
ಧರೆಗೆ ಇಳಿದು ಶೇಷಗಿರಿಯಲಿ ನಿಂತು
ನರಸುರರಿಗೆ ವರವಿತ್ತ ಕರುಣವ ತೋರೋ ರಂಗಯ್ಯ
ಚರಣಭಕ್ತಗೆ ಮೆಚ್ಚಿ ಭರದಿಂ ಪಂಢರ
ಪುರದಿ ಬಂದು ನಿಂತ ಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ಬಾರೋ ಚರಣವಿಟ್ಟು ನಾರಿಕುಲವನು
ದ್ಧರಿಸಿದಿ ಕರುಣವ ತೋರೋ ೧
ಅಂಬುಜನಯನ ಕಂಬದಿ ಬಂದು ಭಕ್ತ
ಗಿಂಬುಕೊಟ್ಟು ಕಾಯ್ದ ಕರುಣವ ತೋರೋ ರಂಗಯ್ಯ
ನಂಬಿಕೊಟ್ಟ ಕಮಲಾಂಬಕಿಯೆಂಜಲ
ಸಂಭ್ರಮದಿಂ ಮೆದ್ದ ಕರುಣವ ತೋರೋ ರಂಗಯ್ಯ
ನಂಬಿದ ಅಸುರಗೆ ಬೆಂಬಲಗೊಟ್ಟು ಸ್ಥಿರ
ಕುಂಭಿನಿಪಟ್ಟವಿತ್ತ ಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ಬಾರೋ ಅಂಬರೀಷನ ಮೊರೆ ಕೇಳಿ
ಶೀಘ್ರದಿಂದ ಕರುಣವ ತೋರೋ ೨
ನಿರುತ ನಂಬಿ ನಿನ್ನ ಮರೆಹೊಕ್ಕ ಬಾಲಗೆ
ಸ್ಥಿರಪದವಿಯನಿತ್ತ ಕರುಣವ ತೋರೋ ರಂಗಯ್ಯ
ಗರುಡನೇರಿ ಬಂದು ಕರಿಯ ವಿಪತ್ತನು
ಪರಿಹರಿಸಿದ ಮಹಕರುಣವ ತೋರೋ ರಂಗಯ್ಯ
ಹರಿಹರಿ ಎಂದೊದರಿದ ತರಣಿಭಕ್ತಿಗೆ ಮೆಚ್ಚಿ
ನಿರುತ ಮೈಗಾವಲಾದ ಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ಬಾರೋ ಪರಮ ನಿರ್ಜರರಿಗೆ
ಅಮೃತವುಣಿಸಿದ ಕರುಣವ ತೋರೋ೩
ದುರುಳಕೋಟಿಯಾಚರಿಸಿದ ದುರುಳಗೆ
ಪರಮ ಕೈವಲ್ಯವಿತ್ತ ಕರುಣವ ತೋರೋ ರಂಗಯ್ಯ
ಕಿರಿಕುಲದವನ ಕರದಿಂ ಪರಮಾ
ದರದಿ ಉಂಡ ಮಹಕರುಣವ ತೋರೋ ರಂಗಯ್ಯ
ತರಳ ಕರೆಯಲು ತ್ವರಿತದಿ ನೀ ಬಂದು
ನೀರು ಕೊಟ್ಟ ನಿಜಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ಬಾರೋ ಚರಣದಾಸ
ವರ ಕನಕನಿಗೊಲಿದ ಕರುಣವ ತೋರೋ ೪
ಹಿಡಿ ಅವಲಕ್ಕಿಯ ಕೊಡಲು ಒಪ್ಪಿ ನೀ
ಕಡು ಸಂಪದವಿತ್ತ ಕರುಣವ ತೋರೋ ರಂಗಯ್ಯ
ಮಡಿದ ಬಾಲಕನಂ ಕಡುದಯದೆಬ್ಬಿಸಿ
ಪಿಡಿದು ಕಾಪಾಡಿದ ಕರುಣವ ತೋರೋ ರಂಗಯ್ಯ
ದೃಢಕರ ಬೆಂಬಲ ಬಿಡದೆಯಿರುವ ನಿನ್ನ
ಕಡುದಿವ್ಯ ಮೂರ್ತಿಯ ಕರುಣವ ತೋರೋ ರಂಗಯ್ಯ
ಕರುಣದಿ ಬಾರೋ ರಂಗ ಒಡೆಯ ಶ್ರೀರಾಮ ಎ
ನ್ನೊಡಲಗಲದೆ ನಿಂತು ಕರುಣವ ತೋರೋ ೫

 

೨೪೮
ಕರುಣಿಸು ಕರುಣಿಸು ಕರುಣಿ ಶ್ರೀ ರಂಗಯ್ಯಾ
ಹರಣ ಪೋದರು ನಿಮ್ಮ ಸ್ಮರಣೆ ಮರೆಯದಂತೆ ಪ
ಪರಿಭವ ತಾಪದಿಂ ಮರವೆ ಮಾಯದಿ ಸಿಲುಕಿ
ಮರುಳ ಮಾನವರಿಗೆ ಶಿರವ ಬಾಗದಂತೆ ೧
ಘನದು:ಖಮಯವಾದ ಜನನಮರಣವೆಂಬ
ಕುಣಿಯೊಳಗೆ ಸಿಕ್ಕಿ ಜನಿಸಿಬಾರದಂತೆ ೨
ದುರಿತ ದಾರಿದ್ರ್ಯದಿಂದ ಪರಿಪಕ್ವನೆನಿಸೆನ್ನ
ವರದ ಶ್ರೀರಾಮ ನಿಮ್ಮ ಚರಣ ಸೇವೆಯ ಘನತೆ ೩

 

೧೩೩
ಕರುಣಿಸು ದೇವದೇವ ಸೆರಗೊಡ್ಡಿ ಬೇಡುವೆನಭವ
ಪರಿಹರಿಸು ಎನ್ನ ಕರುಣಾಳು ಲಕ್ಷ್ಮಿಯ ಜೀವ ಪ
ಅಂಬುಧಿಶಾಯಿಯೆ ನಿನ್ನ ಭಜಿಪೆ ಪಾವನ್ನ
ಅಂಬುಜಸಂಭವಪಿತನೆ ಕಂಬುಕಂಧರಪ್ರಿಯಸಖನೆ
ಅಂಬುಧಿಯಸಂಜಾತೆರಮಣ ಬೆಂಬಲಿಸಿ ಕಾಯೊ ಬಡವನ್ನ ೧
ಮಂದಭಾಗ್ಯನ ಸ್ತುತಿಯ ತಂದೆ ಆಲಿಸು ದಯಮಂದಿರ
ಸುಂದರಕಾಯ ಇಂದಿರೆಯ ಪ್ರಾಣಪ್ರಿಯ
ಬಂಧನದ ಬಡತನ ಕಳಿಯೊ ವಂದಿಸಿ ಮರೆಹೊಕ್ಕೆ ಜೀಯ ೨
ಈಸೀಸಿ ಸಂಸಾರನಿಧಿಯ ಬೇಸತ್ತು ಬಿಡುವೆನೊ ಬಾಯ
ದಾಸನ ಮೊರೆ ಕೇಳಯ್ಯ ಬೇಸರಿಯ ಬೇಡ ಕ್ಷಮಾನಿಧಿಯೇ
ಶ್ರೀಶ ಶ್ರೀರಾಮ ಪಿಡಿಕೈಯ ಘಾಸಿ ಮಾಡದೆ ಸಲಹಯ್ಯ ೩

 

೨೪೯
ಕರುಣಿಸು ಪ್ರಭುತಂದೆ ತರಳಂಗೆ ದಯವ ಪ
ಹರಿ ನೀನೆ ಅವತರಿಸೀಪರಿಭವಶರಧಿಯ
ಪರಿಹಾರಗೊಳಿಸುವ ಪರಮಪಾವನರೂಪ ೧
ಅರಿವಿಟ್ಟು ಭಜಿಸುವೆ ಮರೆಯದೆ ಮಗನ್ವಚನ
ಕರುಣದಿ ಆಲಿಸಿ ವರದಹಸ್ತವ ಶಿರಕೆ ೨
ಹಿಂಸೆಬಿಡಿಸು ಮಹ ಸಂಸಾರದುರಿಯನ್ನು
ಧ್ವಂಸಗೈಯುವ ಶರಣರಾಂಶದ ಪ್ರಸನ್ನತೆ ೩
ದುರಿತ ದೂರೀಕರಿಸಿ ಪರಮಾನಂದದಲಿರುವ
ಪರಿಪಕ್ವಹೃದಯರ ನೆರೆಯವಾಸದಿ ಸಿರಿ ೪
ಮರೆಯ ನಿನ್ನಡಿಯಿನ್ನು ಸರುವೇಶ ಮೊರೆಕೇಳಿ
ಗುರುವಾಗಿ ಶ್ರೀರಾಮ ಸ್ಥಿರಮೋಕ್ಷ ಸಂಪದವ ೫

 

೨೫೦
ಕರುಣಿಸು ಹರಿಯೆ ಕರುಣನಿಕರ ಎನ್ನ
ಕರುಣದಿ ನೀನೀಗ ತರಳನ್ನ ಮೊರೆಕೇಳಿ ಪ
ಭವತಾಪಶರಧಿಯ ಬವಣೆಯ ತಡೆಯದೆ
ಭವಹರ ನೀನೆಂದು ಬಂದು ಮರೆಯಬಿದ್ದೆ ೧
ಹಿಂದಾರು ಎನಗಿಲ್ಲ ಮುಂದಾರು ಗತಿಯಿಲ್ಲ
ತಂದೆ ನೀ ಬಿಟ್ಟರೆ ಬಂಧ ಕಳೆಯುವರಿಲ್ಲ ೨
ನೀನಿಗತಿ ಎನಗಿನ್ನು ಕಾಣೆ ಮತ್ತಾರನ್ನು
ಮಾಣದೆ ಸಲಹಯ್ಯ ಪ್ರಾಣೇಶ ಶ್ರೀರಾಮ ೩

 

೫೧೩
ಕಾಣದೆ ಸುಳ್ಳೆ ಬಡಿದಾಡ್ವಿರ್ಯಾಕಣ್ಣ
ನಾನ್ಹೋಗತನ ನಿಮಗೆ ಮುಕ್ತಿಯಿಲ್ಲಣ್ಣ ಪ
ಪ್ರಾಚೀನ ಹಿರಿಯರ ಸಾಕ್ಷಿಕೊಡುವೆ ನಿಮಗೆ
ಜ್ಞಾನದಿಂ ಕೇಳಿ ತಿಳೀಬಹುದಣ್ಣ ಅ.ಪ
ಘನವಂತ ಸತ್ಯವ್ರತ ಭೃಗು ಗಾರ್ಗೆಯರು
ಇನಿಸುತಿಳಿಯದೆ ವಿಶ್ವಾಮಿತ್ರನು
ಘನಶ್ರಮಬಟ್ಟರು ಮುನಿ ವರದನಾರದರು
ದಿನದಿನ ತ್ರಿಣಿಯರು ದರ್ಶನಿದ್ದವರು
ಜನಕ ರಾಜರ್ಷಿಯು ಮುನಿ ಅತ್ರಿಮಹಿಮರು
ನಾನ್ಹೋಗತನ ಮುಕ್ತಿ ಸಿಗದೆ ಬಳಲಿದರು ೧
ಸನಕಾದಿ ಸಾನಂದ ಮಹರ್ಷಿಗಳು
ಮುನಿಶ್ರೇಷ್ಠ ಬಲ್ಲಿದ ವಾಲ್ಮೀಕಾದಿಗಳು
ಶೌನಕಶುಕಭರದ್ವಾಜಮುನಿಗಳು
ಗಣನೆಯಿಲ್ಲದ ಮಿಕ್ಕ ಪತಿತಮೋಕ್ಷಿಗಳು
ಕನಕ ಪುರಂದರ ಜ್ಞಾನಿಗಳಿವರ್ಗೆಲ್ಲ
ನಾನ್ಹೋಗತನ ಮುಕ್ತಿ ಆಗಿಲ್ಲ ಕೇಳೋ ೨
ನಾನ್ಹೋಗದದಕಜ ಕಳಕೊಂಡ ಶಿರವ
ನಾನು ಹೋಗಿದ್ದರೆ ಅಳಿತಿದ್ದಿಲ್ಲೆಲವೋ
ಖೂನವಿಲ್ಲದೆ ಕೂಗಿ ಕೆಡಬೇಡಿ ನೀವು
ಜ್ಞಾನವಿಡಿದು ಭವ ಹೊಂದಿರಿ ಗೆಲವು
ನಾನ್ಹೋದಮೇಲೆ ಜಾನಕಿ ಶ್ರೀರಾಮ
ಮಾಣದೆ ಕೊಡುವನು ಮುಕ್ತಿ ಸಂಪದವ ೩

 

೨೫೧
ಕಾಯೊ ಸುಖಸಾರ ಮಾಯಾವಿದೂರ
ಭಾವಜನಯ್ಯ ಭಕುತರ ಪ್ರಿಯಕರ ಪ
ಕಾಯಕಾಂತಾರದೊಳು ನೋಯುತ ವಿಧ ವಿಧ
ಬಾಯ ಬಿಡುವೆನಯ್ಯ ತೋಯಜಾಕ್ಷನೆ ನೋಡೊ ೧
ಸಂಸಾರತೆರೆಯೊಳು ಹಿಂಸೆ ಪಡುತ ಮತಿ
ಭ್ರಂಶನಾದೆನುಬಲು ಕಂಸಾರಿ ಕರುಣಿಸೊ ೨
ಜಡಭವತೊಡರನು ಕಡೆಹಾಯ್ಸಿ ಕೊಡುಮುಕ್ತಿ
ಕಡುದಯಾನಿಧೆ ಎನ್ನೊಡೆಯ ಶ್ರೀರಾಮನೆ ೩

 

೫೧೪
ಕಾರು ಯಾರಮನೆಗುಂಟು ಖೋಡಿ
ಚೋರತ್ವದಪಹಾರ ಮಾಡಿ ತಿಂದದ್ದೆಲ್ಲ ಪ
ಕಾಯಜನಯ್ಯನ ದಿವ್ಯ ಚರಿತಗಳನ್ನು
ಬಾಯಿಂದ ಪೊಗಳುತ ಕೈಯಿಂದ ಬರೆದು
ಮಾಯಾಮೋಹವ ಬಿಡದೆ ನ್ಯಾಯಮಾರ್ಗವತಪ್ಪ
ನ್ಯಾಯದಿಂ ಪರರೊಡವೆ ಬಾಯ್ಬಡಿದು ತಿಂದದ್ದು ೧
ನಳಿನನಾಭನ ವಿಮಲ ಸುಲಲಿತ ಮಹಿಮೆಗಳ
ತಿಳಿದು ಆನಂದದಿಂ ನಲಿನಲಿದು ಹಿಗ್ಗದೆ
ಇಳೆಯ ವಾಸನೆಯಿಂದ ಅಳಿವ ಸುಖದಾಸೆಗೆ
ಇಳೆಜನರ ಗಳಿಕೆಯನು ಕಳವಿನಿಂ ತಿಂದದ್ದು ೨
ಭೂಮಿಯೊಳಧಿಕ ಶ್ರೀರಾಮನ ದಾತೃತ್ವ
ಹೇ ಮನವೆ ನೀ ತಿಳಿದು ಪಾಮರತ್ವ ಬಿಡದೆ
ಕಾಮಿತದೊಳು ಬಿದ್ದು ಭೂಮಿ ಜನರೆದುರಿಗೆ
ಸ್ವಾಮಿಭಕ್ತಿಯ ತೋರಿ ಕಾಮಿಸಿ ತಿಂದದ್ದು ೩

 

೨೫೨
ಕಾಲ ಕಳೆಯಬೇಡ ಮನವೇ
ಮೂಳನಾಗಬೇಡ ಪ
ಕಾಳು ಕತ್ತಲೆಂಬ ಹಾಳು ಸಂಸಾರ ಮಾಯಾ
ಜಾಲ ಮೋಹಿಸಿ ಹೊತ್ತು ಹಾಳುಮಾಡಿಕೊಂಡು ಅ.ಪ
ನಿನ್ನೊಳು ಹುಡುಕಾಡಿ ಹರಿಯ
ಉನ್ನತಕೃಪೆ ಪಡಿ
ಕಣ್ಣುಮುಚ್ಚಿ ಪರರ್ಹೆಣ್ಣಿನ ಹೊಲೆಮೈ
ಬಣ್ಣಕೆ ಮನಸೋತು ಠೊಣ್ಯನೆನಿಸಿಕೊಂಡು ೧
ನೋಡಿ ತಿಳಿದು ಭವಮೂಲ ಹುಡುಕಾಡಿ
ಹಿಡಿಯೋ ನಿಜವ
ರೂಢಿಸುಖಕೆ ಮನನೀಡಿ ಸನ್ಮಾರ್ಗದ
ಜಾಡು ತಿಳಿಯದೆಮತಾಡಣೆಗೊಳಪಟ್ಟು ೨
ಅರಿತು ಶ್ರೀರಾಮಚರಣ ನಿರುತದಿ
ಗುರುತು ಹಿಡಿಯೋ ಜಾಣ
ಪರಲೋಕ ಸಾಧನ ಸುರತು ಷರತು ಮಾಡಿಕೊಂಡು
ಪರಕೆ ಪರಮ ಪರತರ ಮುಕ್ತಿ ಸುಖ ಸುರಿ ೩

 

೬೨೧
ಕಾಲವೆಂತು ಕಳೆಯಲೆನ್ನಯ್ಯ ಗಂಡನಿಲ್ಲದೆ
ಕಾಲವೆಂತು ಕಳೆಯಲೆನ್ನಯ್ಯ ಪ
ಕಾಲಕಳೆಯಲೆಂತು ನಾನು
ತಾಳಿಮೂಗುತಿ ಕಾಣದೊನಿತೆಯ
ಹಾಳುಮುಖವ ನೋಡೆವೆಂದು
ಶೀಲಮುತ್ತೈದೇರ್ಹಳಿಯುತಿಹ್ಯರು ಅ.ಪ
ಏಳುಸುತ್ತಿನಕೋಟಿ ಪಟ್ಟಣದಿ ಖೂಳರುಪಟಳ
ಹೇಳಲಳವಲ್ಲ ಸೇರಿ ವಿಧ ವಿಧದಿ
ದಾಳಿನಿಕ್ಕಿ ಹಾಳು ಮಾಡ್ವರು ಮನಕೆ ಬಂದತೆರದಿ
ಗೋಳು ಕೇಳುವರಿಲ್ಲವೋರ್ವರು ತಾಳೆನೀಬಾಧೆ
ಶೀಲದೆನ್ನ ಬಹು ಜೋಕಿಯಿಂ ಮೇಲ್ಮಾಲಿನೋಳಿಟ್ಟು
ಆಳುವಂಥ ಮೂಲಪುರಷನಿಲ್ಲದಿನ್ನು ೧
ಆರು ಕೇಳುವರಿಲ್ಲ ಇವಳಿಗೆಯೆನುತ ಕೀಳ
ಮೂರು ಮಂದಿ ಊರ ಬೀದಿಯೊಳಗೆ
ದಾರಿ ತರುಬಿ ಸಾರಿ ತರಿವರು ಮಾರಕೇಳಿಗೆ ಸೈರಿಸಲಿ ಹ್ಯಾಗೆ
ಚೋರನೋರ್ವನು ಮೀರಿ ಬಾಧಿಪ
ಆರು ಮಂದಿ ಬಿಡದೆ ಎನ್ನನು ಘೋರಿಸುವರು ನಾನ ವಿಧದಿ
ಪಾರುಗಾಣೆನು ವ್ರತದಿ ಇನ್ನು ೨
ಪತಿಯು ಇಲ್ಲದ ಜನ್ಮವ್ಯಾತಕ್ಕೆ ಕ್ಷಿತಿಯಮೇಲೆ
ಸತಿಗೆ ಪರಮ ಗತಿಯ ಕೊಡಲಿಕ್ಕೆ
ಪತಿಯೆ ಬಾಧ್ಯ ಇತರರು ಕಾರಣಲ್ಲ ಕಾಯಕ್ಕೆ ಜತನ ಗೈಲಿಕ್ಕೆ
ಪ್ರಥಮ ಮುತ್ತಿನ ಮೂಗುತಿಯನು ಹಿತದಿ ಕರುಣಿಸಿ
ಪತಿಯಾಗೆನಗೆ ಗತಿಯ ನೀಡಿ ಹಿತದಿಂ ಸಲಹು
ಪತಿತ ಪಾವನೆನ್ನ ಪ್ರಾಣ ಶ್ರೀರಾಮ ೩

 

೨೫೪
ಕಾವ ದೇವರು ನೀನೆ ಎನ್ನ ಕೈ ಪಿಡಿಯೋ
ದೇವ ಹರಿ ತವಪಾದ ಮರೆಹೊಕ್ಕೆ ಕಾಯೊ ಪ
ತರಳ ಪ್ರಹ್ಲಾದನಂ ಸಂಕಟದಿ ರಕ್ಷಿಸಿದಿ
ಮರೆ ಬಿದ್ದ ಅಸುರನಿಗೆ ಸ್ಥಿರಪಟ್ಟ ಕೊಟ್ಟಿ
ಕರಿಯ ಕಂಟಕ ಭರದಿ ನೆರವಾಗಿ ತರಿದಯ್ಯ
ತರುಣಿಯ ಮೊರೆ ಕೇಳಿ ಅಕ್ಷಯವನಿತ್ತಿ ೧
ಶಿಲೆಯರೂಪದಿ ಬಿದ್ದ ಸತಿಯನುದ್ಧರಿಸಿದಿ
ಕುಲಗೆಟ್ಟ ಅಜಮಿಳನ ಅಂತ್ಯದಲಿ ಕಾಯ್ದಿ
ಒಲಿದು ನಭೋರಾಜನಂ ಶಾಪದಿಂದುಳಿಸಿದಿ
ಅಳಿಯದ ಪದವಿ ನೀಡಿ ಧ್ರುವರಾಜನ್ಪೊರೆದಿ ೨
ಭಕ್ತವತ್ಸಲನೆಂಬ ಬಿರುದಗಳ ಪೊತ್ತಿರುವಿ
ಭಕ್ತನಿಗೆ ಬರುವ ನಿಖಿಲಾಪತ್ತುಗಳನು
ಕತ್ತರಿಸಿ ಹಿತವಾದಭಕ್ತಿಯನು ಕರುಣಿಸಿ
ನಿತ್ಯನಿರ್ಮಲಸುಖವ ನೀಡು ಶ್ರೀರಾಮ ೩

 

೨೫೩
ಕಾವದೇವ ನಿನಗೆ ನಾ ಕೈಮುಗಿದು ಬೇಡ್ವೆ
ಕಾಮಜಪಿತ ಎನ್ನ ಕಾಯಮೋಹ ಬಿಡಿಸೈ ಪ
ಮಸಣಬುದ್ದಿಯ ಮರೆಸು ಪುಸಿನುಡಿಯ ಪರಿಹರಿಸು
ವಸನ ಒಡವ್ಯೆಂದೆಂಬ ವ್ಯಸನ ಕಡೆಹಾಯ್ಸು
ದಿಸೆಗೆಡಿಸಿ ಬಳಲಿಸುವ ಹಸಿವು ತೃಷೆಯನಡಗಿಸಿ
ಹಸನಗೆಡಿಸುವ ಮಮ ರಸನೆರುಚಿ ಕೆಡಿಸು ೧
ಅಳದ್ಹೋಗ್ವ ಇಳೆಸುಖದ ಹಲುಬಾಟವನೆ ಬಿಡಿಸು
ಮಲಿನಸಂಸಾರಮಾಯ ಕಳವಳಿಕೆ ತಪ್ಪಿಸು
ಸಲೆ ಸಾಧುಸಂತತಿಯ ಬಳಗದೊಳು ಕೂಡಿಸು
ಹೊಳೆಯಮನಸಿನ ಸಕಲ ಚಲನೆ ದೂರೆನಿಸುತ ೨
ದೋಷರಾಶಿಯ ತೊಡೆದು ಮೋಸಪಾಶವ ಕಡಿದು
ಆಸೆ ನಾಶಗೈದು ನಿರ್ದೋಷನೆನಿಸಿ
ಶ್ರೀಶ ಶ್ರೀರಾಮ ನಿಮ್ಮ ಸಾಸಿರ ನಾಮವೆನ್ನ
ಧ್ಯಾಸದಲಿ ಸ್ಥಿರನಿಲಿಸಿ ಪೋಷಿಸನುದಿನದಿ ೩

 

೨೫೫
ಕೀಳು ಮನವೆ ಏನುಕೆಟ್ಟೆಲೋ
ಹಾಳು ಮಾಡಿದಿ ದಿನಗಳ ಪ
ನೀಲಮೇಘಶ್ಯಾಮ ಹರಿಪಾದ
ಶೀಲಭಕ್ತಿಲಿ ಸ್ಮರಿಸದೆ ಅ.ಪ
ಬಾಲತನದ ಸುಶೀಲ ದಿನಗಳ
ಜಾಳುಗೈದೆಲೋ ಆಟದಿ
ನಾಳೆ ಕಾಲನು ಸೀಳಿ ಕೊಲುವಾಗ
ತಾಳಿ ಬಾಳುವುದೆಂತೆಲೊ ೧
ಪ್ರಾಯದಿನಗಳ ಕಾಯಜನ ಮಹ
ಮಾಯದಾಟದಿ ನೀಗಿದ್ಯೊ
ಮಾಯಮೃತಿಯ ಬಾಯೊಳು ಸಿಲ್ಕಿ
ನೋಯುವಾಗ ಕಾಯ್ವರಾರೆಲೊ ೨
ಇಷ್ಟಕ್ಕಾದರೂ ಕೆಟ್ಟಗುಣಗಳ
ಬಿಟ್ಟು ಶ್ರೀರಾಮಪಾದವ
ನಿಷ್ಠೆಯಿಂ ಮನಮುಟ್ಟಿ ಭಜಿಸಲೆ
ದುಷ್ಟಭವದಿಂ ಗೆಲಿಸುವ ೩

 

೨೫೬
ಕೀಳುಯೋಚನೆ ಬಿಡು ಖೋಡಿಮನವೇ
ಮೇಲುಸಂಪದ ಪಡಿ ಮಾಧವನಿಂ ಬೇಡಿಪ
ಹಾಳುಯೋಚನೆ ಮಾಡಿ ಮಾಡಿ ನೀನು
ಬೀಳುಗಳೆಯ ಬೇಡ ತಿಳಿ ಹುಚ್ಚ ಖೋಡಿ
ನಾಳೆ ಬರುತಾದ ಯಮನ ಬೇಡಿ ಅವರು
ತಾಳದೆ ಜಡಿತಾರ ಒದೆದು ಎಳೆದಾಡಿ ೧
ನಾಶನ ಈ ಜಗಸುಖ ಒಂದೇ
ತಾಸಿನ ಮೋಜಿದು ಇರದು ಕಡೆತನಕ
ಮೋಸದಿ ಸಿಲ್ಕಬೇಡಿದಕೆ ಇದ
ರ್ವಾಸನಳಿದು ಬೇಗ ಕಡಕೋ ಭವತೊಡಕ ೨
ದಾಸರು ಪೇಳಿದ ಸೊಲ್ಲುಕೇಳಿ
ಧ್ಯಾಸಿಟ್ಟು ದೋಷದಿಂ ಕಡೆಗ್ಹಾರಿ ನಿಲ್ಲು
ದಾಸನಾಗಿ ಭವಗೆಲ್ಲು ತಂದೆ
ಶ್ರೀರಾಮನ ಪಾದಕೆ ಸಲ್ಲು ೩

 

೫೧೭
ಕುಂಟೆ ಹೊಡೆಯೊ ಜಾಣ ಅದನೋಡಿ
ಕುಂಟೆ ಹರಗೋ ಜಾಣ ಪ
ಕುಂಟೆ ಹೊಡ್ಸೋನಾಗಿ ಕಂಟಿಕಡಿದು ನೀ
ಎಂಟೆತ್ತುಗಳ ಹೂಡಿ ಮಂಟಪದ್ಹೊಲವನ್ನುಅ.ಪ
ಅರಿವೆಮಡಿಕೆಹೊಡೆಯೊ ಮರವ್ಯೆಂಬ
ಕರಿಕಿದಡ್ಡನಳಿಯೊ
ಶರಣೆಂಬಗುದ್ದಲ್ಹಿಡಿಯೊ ಗರುವೆಂಬ
ದುರಿತಕರುಣಗಳಗಿಯೊ
ತೆರಪಿಲ್ಲದ್ಹೇಳುತ ಜರಾಮರಣೆಂಬ ಕಸ
ಕರುಣೆಂಬ ಮಾಗಿ ಮಡಿ ಮಾಡಿ ಭರದಿ ಹಸನಮಾಡು ೧
ಧ್ಯಾನ ದಾಸರಸೇವೆಯೆಂದೆಂಬುವ
ಖೂನ ಮಾಡೆಲೊ ಬದುವ
ದಾನಧರ್ಮಯೆಂಬುವ ಸತತದಿ
ಹನಿಸು ಗೊಬ್ಬರವ
ಜ್ಞಾನಿಸಂಗವೆಂಬ ಜಾಣಬೆದೆಗಾಲದಿ
ಜ್ಞಾನಕೂರಿಗೆಯಿಂದ ಧ್ಯಾನಬೀಜವ ಬಿತ್ತು ೨
ಮನನೆಂಬಬೆಳೆ ಕಾಯೋ ನಿಜವಾದ
ನೆನೆವೆಂಬರ ಕವಣ್ಹಿಡಿಯೊ
ಮನಚಂಚಲ್ಹಕ್ಕ್ಹೊಡೆಯೊ
ಶಾಂತಿಸದ್ಗುಣವೆಂಬ ಫಲ ಪಡೆಯೊ
ಘನತರ ದೃಢವೆಂಬ ಧಾನ್ಯರಾಸಿಮಾಡಿ
ವನಜಾಕ್ಷ ಶ್ರೀರಾಮನೊನರುಹಕರ್ಪಿಸು ೩

 

೨೫೭
ಕುಲವಂತನೇ ನೀನು ಎಲೋ ಪರಮಾನಂದ
ಕುಲಹೀನನೇ ನಾನು ಪೇಳೆಲವೊ ಸ್ವಾಮಿ ಪ
ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ
ಕುಲದಿ ಮಾದಿಗರ್ಹರಳಯ್ಯನ ಮನೆಲುಂಡಿ
ಚೆಲುವ ಕೂಸಿನ ಕೊರತೆ ಸಲಿಸಿದಿ ಬಲುಹಿತದಿ
ಮಲಿನಸೀರೆಯ ನಿನ್ನ ತಲೆಗೆ ಸುತ್ತಿಕೊಂಡಿ ೧
ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ
ಶಂಭೋ ಕುಣಿದೆಲೋ ಕುಂಬಾರಗೊಲಿದು
ಬೆಂಬಲಿಸಿ ತಿರುಗಿದಿ ಸಾಂಬ ನೀ ನಡ ಪೊತ್ತು
ಇಂಬು ಸುಡುಗಾಡು ನಿನಗಂಬುಧಿಧರನೆ ೨
ಪುಲಿಚರ್ಮ ಹಾಸಿಕೊಂಡ್ಹೊಲಸು ಚರ್ಮುಟ್ಟಿರುವಿ
ತಲೆ ಬುರುಡೆ ಕೊರಲಿಗೆ ಮಾಲೆ ಧರಿಸಿರುವಿ
ಎಲೊ ದೇವ ಇನಿತಿರ್ದು ಕುಲವನೆಣಿಸುವಿ ನಿನ್ನ
ಒಲವು ಬೇಡುವರಿಗೆ ಶ್ರೀರಾಮಸಖನೆ ೩

 

೬೨೨
ಕೆಡದಿರು ಕಡುಮೋಹದಡವಿಬಿದ್ದು ಮನ
ಕೆಡುವ ಶರೀರ ಜಡದೃಶ್ಯವಿದು ಪ
ಜಲದ ಮೇಲಿನ ಗುರುಳೆಯಂತೆ ಈ ದೇಹ್ಯ
ಗಳಿಗೆ ಚಲಿಸಿ ಒಡೆದು ನೆಲಕೆ ಬೀಳುವುದು
ಬಳಿದ ಕಸದತೆರಗಳಿಗೆ ನಿಲ್ಲದೆ ಇದನು
ಎಳೆದುಹಾಕುವರಂತ್ಯ ಕಾಲದಲಿ ೧
ಕ್ಷಿತಿಯೊಳಿರುವ ತನಕ ಸತಿಸುತರೆಲ್ಲರು
ಸತತ ಹಿತದಿ ಬಲುಪೂಜೆ ಮಾಳ್ಪರು
ಸತ್ತ ಬಳಿಕ ತಮಗ್ಹತ್ತಿತ್ತು ಮುಟ್ಟೆಂದು
ಹಿತದವರೆಲ್ಲ ಮುಟ್ಟುತೊಳಕೊಂಬರು೨
ಗಳಿಸಿದ ಧನಮಾನ್ಯ ಬಲುಸಂಪದವೆಲ್ಲ
ಉಳಿವುದು ಎಲ್ಲ ಇಲ್ಲೇ ಜತೆಯಲಿ ಬರದೇನು
ತಿಳಿದು ಶ್ರೀರಾಮನ ಚರಣಕಮಲಧ್ಯಾನ
ಗಳಿಸಿ ಘನಮುಕ್ತಿ ಪಡಕೊಳ್ಳೆಲೊ ೩

 

೨೫೮
ಕೇಶವ ಪಾಲಿಸೈ ವರವ ಪ
ಕೇಶವ ಪಾಲಿಸೈ ದಾಸನ ಆಸೆ ನಿ
ರಾಸೆಯ ಮಾಡದೆಅ.ಪ
ಈರೇಳು ಲೋಕದಾಧಾರನು ನೀನೆ
ಚಾರು ನಿಗಮ ಸಂಸಾರವು ನೀನೆ ೧
ಸರ್ವಂತರಾತ್ಮ ಸರ್ವವ್ಯಾಪಕನೆ
ಸರ್ವಸ್ವತಂತ್ರನೆ ಸರ್ವದೇವ ನೀನೆ ೨
ಆಸೆ ನೀಗಿಸಿ ಎನ್ನ ಘಾಸಿಮಾಡದೆ ಪೊರೆ
ದೋಷನಿವಾರಣ ಶ್ರೀಶ ಶ್ರೀರಾಮನೆ ೩

 

೫೧೫
ಕೇಳಬಾರದೋ ಕರ್ಣದಿಂ ಕೇಳಬಾರದೋ ಪ
ಕೇಳಬಾರದು ಕೀಳರಾಡುವ
ಕೀಳುವಚನ ಕಾಲತ್ರಯದಿಅ.ಪ
ಪರರ ಗುಣವ ಜರೆದು ತಮ್ಮ
ಮರುಳಗುಣವ ಪಿರಿದೆನಿಪ
ದುರುಳರೊಚನ ಕೇಳುತ್ತೊಡನೆ
ಹರಿದು ಪೋಗ್ವುದು ಪೂರ್ವಪುಣ್ಯ ೧
ಮರವೆ ಮಾಯ ದುರ್ವರ್ತನ ಸತತ
ದುರಾಚಾರದಿ ಹೊರಳುವಂಥ
ಪರಮನೀಚರ ಮಾತಿಗ್ಹೋಗಲು
ನರಕ ತಪ್ಪದು ಕಡೆಯತನಕ ೨
ಗುರುಹಿರಿಯರನು ನಿಂದಿಪ
ನರಕಿಗಳ ಆವಾಸದಿರಲು
ಶರಣರಸ ಕರುಣಾಭರಣ
ಸಿರಿಯರಾಮ ಮರೆಯಾಗ್ವ ೩

 

೫೧೬
ಕೇಳವ್ವ ತಂಗಿ ಕೇಳವ್ವ
ಕೇಳಿ ತಿಳಿದು ನೀ ಬಾಳವ್ವ ಪ
ನೀಲವರ್ಣನ ಕೃಪೆಯ ಪಡೆಯಲಿಕ್ಕೆ
ನಾಳೆಂದರೆ ಮನೆಹಾಳವ್ವ ಅ.ಪ
ಅಂಬುಜಾಕ್ಷನ ಪಾದಪಕಮಲವ್ವ ನೀ
ನಂಬಿದ್ದಿ ಬಿಡಬೇಡ ಸಂಗವ್ವ
ನಂಬಿದ ಭಕ್ತರ ಬೆಂಬಲಿಸಾತನು
ಇಂಬುಗೊಟ್ಟು ಕಾಯ್ವ ಸಂಭ್ರಮ ಕೀರ್ತೆವ್ವ ೧
ಒಂದೆ ಮನಸಿನ ಬಾಗವ್ವ ಗೋ
ವಿಂದನ ವರಪಡಿ ಚೆಂದವ್ವ
ಮಂದರಧರನ ಹೊಂದಿಕೊಳ್ಳಲಿಕ್ಕೆ
ಹಿಂದು ಮುಂದು ನೋಡಬೇಡ ಮುಕ್ತ್ಯವ್ಯ ೨
ಒಂದಿನ ಹೋಗ್ವುದು ಸತ್ಯವ್ವ ತಂಗಿ
ಸಂದೇಹ್ಯ ಪಡಬೇಡ ಹುಚ್ಚವ್ವ
ತಂದೆ ಶ್ರೀರಾಮ ಗತಿಯೆಂದು ನಂಬಲು ನಿನಗೆ
ಬಂಧನವೆಲ್ಲ ಬೈಲವ್ವ ೩

 

೨೫೯
ಕೇಳಿದರೆನಗೇನು ಗೊತ್ತಿಲ್ಲ
ಹೇಳುವದ್ಹುಟ್ಟನಾ ಕಲಿತಿಲ್ಲ ಪ
ಹೇಳಿದ್ದೆ ಕೇಳಿ ನಾ ಮೂಲತಿಳಿದು ಭವ
ಮಾಲನ ಭಜಿಸುವೆನಲ್ಲ ಅ.ಪ
ವೇದಮೊದಲು ನಾನೋದಿಲ್ಲ
ವೇದಮಂತ್ರ ಗೊತ್ತೆನಗಿಲ್ಲ
ಮೇದಿನಿಯೊಳು ಹರಿಪಾದದಾಸರು ನಿ
ವೇದಿಸಿದ ತೆರ ಸಾಧಿಪೆನಲ್ಲ ೧
ನಿತ್ಯತತ್ತ್ವಗೊತ್ತೆನಗಿಲ್ಲ
ಮತ್ತು ಆವಶಾಸ್ತ್ರ ಗತಿಯಿಲ್ಲ
ಸತ್ಯರು ಪೇಳಿದ ನಿತ್ಯವಾಕ್ಯಗಳ
ಚಿತ್ತವಿಟ್ಟರಿಯುತ್ತ ಸತ್ಯ ನಂಬಿಹೆನಲ್ಲ ೨
ಛಂದಸ್ಸು ಲಕ್ಷಣ ನೋಡಿಲ್ಲ
ಒಂದು ಪುರಾಣದರ್ಥ ಮಾಡಿಲ್ಲ
ಬಂಧುಭಜಕರಾನಂದ ಶ್ರೀರಾಮನ
ಬಂಧುರಂಘ್ರಿ ಸ್ಮರಣೊಂದೆ ಬಲ್ಲೆನಲ್ಲ ೩