Categories
ರಚನೆಗಳು

ರಾಮದಾಸರು

೫೬೨
ಮರಗವ್ವ ತಂಗಿ ಮರಗವ್ವ
ದುರುಳ ಗುಣದ ಸವಿ ಸುರಿಯವ್ವ ಪ
ಪರಿಪರಿಯಿಂದಲಿ ಹರಿಹರಿಯೆನ್ನದೆ
ದುರಿತದುರುಲಿನೊಳು ಬಿದ್ದೆವ್ವ ಅ.ಪ
ಗುರುಹಿರಿಯರನು ಜರೆದೆವ್ವ
ಪರಿಪರಿ ಪಾಪ ಕಟ್ಟಿಕೊಂಡೆವ್ವ
ಹರಿಶರಣರ ಸೇವೆ ಅರಿಯವ್ವ
ಹರಿಹ್ಯಾಂಗೊಲಿತಾನು ನಿನಗವ್ವ ೧
ಹಿಂದಿನ ಕರ್ಮದು ನೋಡವ್ವ
ಮುಂದೆ ಚಂದಾಗಿ ತಿಳಕೊಂಡುಳಿಯವ್ವ
ಮಂದರಧರ ಗೋವಿಂದನ ಮಾನಸ
ಮಂದಿರದೊಳಗಿಟ್ಟು ಭಜಿಸವ್ವ ೨
ಗುರುವರ ಶ್ರೀರಾಮ ಚರಣವ್ವ ತಂಗಿ
ಮರೆಯದೆ ಅನುದಿನ ಸ್ಮರಿಸವ್ವ
ಶರಣ ಜನರ ಪ್ರಿಯ ಕರುಣಾಕರನು ನಿನ್ನ
ಪೊರೆಯದೆ ಎಂದಿಗೆ ಇರನವ್ವ ೩

 

೫೬೩
ಮರೀಬೇಡ ಮಾಧವನ ಅರಿವಿಟ್ಟು ಭಜಿಸೋ
ಸ್ಥಿರವಲ್ಲ ಧರೆಭೋಗ ಮೆಚ್ಚಿ ಕೇಡಬೇಡ ಪ
ಕೂಡು ನಿಸ್ಸಂಗದೊಳು ಆಡು ಸುಸಂಗದೊಳು
ಮಾಡು ನಿಜವರ್ತನಗಳು ಬೇಡು ಬಡತನದೊಳು
ದೂಡು ದುವ್ರ್ಯಸನಗಳು ತೋಡು ದುರ್ಗುಣಗಳು
ನೋಡು ನಿಜಭಕ್ತರೊಳು ನೀಡು ಮನ ಹರಿಯೊಳು ೧
ಹೀರು ಮಹಗರುವವ ತೂರು ಮದ ಮತ್ಸರವ
ತೂರು ದುಷ್ರ‍ಕತ್ಯವ ಕಾರು ಬಲುವಿಕಾರವ
ಮೀರು ಧರೆಭೋಗವ ತೋರು ನಿಜಧ್ಯಾನವ
ಏರು ಸನ್ಮಾರ್ಗವ ಸೇರು ಹರಿಪದವ ೨
ಕುಂದುಗಳನೊರೆಯದಿರು ನಿಂದೆಗಳನಾಡದಿರು
ಬಂಧನಕ್ಕೆ ಬೀಳದಿರು ಮಂದತ್ವದೂರು
ತಂದೆ ಶ್ರೀರಾಮನಡಿಗೊಂದಿ ವೈಕುಂಠಪದ
ಚಂದದಿಂ ಪಡಕೊಂಡಾನಂದದಲಿ ಸೇರು ೩

 

೫೬೪
ಮರೀಬೇಡೋ ಮರೀಬೇಡೋ
ಸಿರಿಯರಸನ ಪಾದ ಮರೀಬೇಡೋ ಮರೀಬೇಡೋ ಪ
ಮರೀಬೇಡೆಲೆ ಮನ ಜರಾಮರಣೆಂದೆಂಬ
ತಿರುಗದ ಗಣೆ ಮಡುವಿನೋಳ್ಜಾರಿಬಿದ್ದುಅ.ಪ
ಒಂದೆ ನಿಮಿಷ ಇಹ್ಯ ಚಂದಕಂಡು ಬಲು
ಅಂದಗೆಡುವ ಸುಖ ಮಂದನಾಗಿ ಮೆಚ್ಚಿ ೧
ನಿಜವನು ತಿಳಿಸದೆ ಮಜತೋರಿಸಿ ಬಲು
ಗಿಜಿಗಿಜಿಮಾಡುವ ಕುಜಮತಿಯೊಳು ಬಿದ್ದು ೨
ಅಸಮಸಂಪದಕೆ ಮಸಿಹಚ್ಚಿ ಒಂದುದಿನ
ನಶಿಸಿಪೋಗುವ ಮಾಯ ಮುಸುಕಿನೊಳಗೆ ಸಿಕ್ಕು ೩
ಸವಿಯದಾನಂದವನು ಭವಕೆ ಕಿಡಿಯನಿಟ್ಟು
ಜವನಿಗೀಡೆನಿಸುವ ಭೂಸುಖಕ್ಕೊಳಪಟ್ಟು ೪
ಪೊಡವಿಯೊಳಗೆ ತನ್ನ ದೃಢದಿ ಸ್ಮರಿಪರ
ಬೇಡಿದ ಮನದಿಷ್ಟ ಕೊಡುವ ಶ್ರೀರಾಮನ ೫

 

೪೧೧
ಮರುಳೆ ಸುಖ ನೀನೆನು ಪಡೆದಿ
ನರಜನುಮ ತಾಳಿ ಇಹ್ಯದಿ ಪ
ಪರಿಪರಿ ಜನುಮ ತಾಳಿ
ಪರಮ ಬಂಧದೊಳೊರಲ
ಉರುಳಿ ವರಮುಕ್ತಿ ದೊರೆವ ಕೀಲಿ
ಸ್ಮರಿಸಿ ಬಂದಿ ಹರಿಯ ಬಳಲಿ ೧
ಅರಿಯದೆ ಮತ್ತು ಭವಮಾಲೆ
ಕೊರಳಿಗ್ಹಾಕಿಕೊಂಡಿ ದುರುಳ
ಮರೆಯಮೋಸ ಕಾಂಬೋದೆಲ್ಲ
ಹರಿದು ಪೋಗ್ವುದು ಸ್ಥಿರವಲ್ಲ ೨
ಸಮಯ ಮಿಂಚಿಪೋದ ಬಳಿಕ
ಕ್ರಮದಿ ಮತ್ತೆ ಸಿಗುವುದೆ ಮೂರ್ಖ
ವಿಮಲ ಶ್ರೀರಾಮ ಪಾದಕಮಲ
ನಮಿಸಿ ಪಡಕೊ ಮುಕ್ತಿಮಾಲಾ ೩

 

೫೬೫
ಮರೆವಿನೊಳಗೆ ಮನೆಮಾಡಿದ್ದಿ ಮನ
ಅರಿವಿನ ಆಲಯ ಬಿಟ್ಟಿದ್ದಿ ಪ
ಹರಿದುಹೋಗುವಂಥ ಸಿರಿಗೆ ಒಲಿದು ನೀ
ಪರಮ ಹರಿಯ ಪಾದಕ್ಹೊರತಿದ್ದಿ ಅ.ಪ
ಮಂದಿಮಕ್ಕಳೆಂದು ನೆಚ್ಚಿದ್ದಿ ನಿನ್ನ
ಹಿಂದೆ ಬರುವರೇನು ಅಂತಿದ್ದಿ
ಕುಂದುವ ಜಗ ಮಾಯದಂದಗೆಟ್ಟು ಒಬ್ಬ
ನೊಂದಿನ ಹೋಗ್ವುದು ಮರೆತಿದ್ದಿ ೧
ಸಿರಿಸಂಪತ್ತಿಗೆ ಹಿಗ್ಗಿದಿ ಇದು
ಸ್ಥಿರವಲ್ಲೆಂಬುದು ಅರಿಯದ್ಹೋದಿ
ಎರೆದೆಣ್ಣಿರುವನಕುರಿವ ದೀವಿಗೆಯೋಲ್
ವರ ಪುಣ್ಯಿರುವನಕಿರುತದೆ ಸಿರಿಯದು ೨
ಹೇಳಿದಮಾತನು ಕೇಳದ್ಹೋಗಿ ಮನ
ಮೂಳನಾಗಬೇಡೆಲೆ ಗೂಗಿ
ಹಾಳುಯೋಚನೆ ಬಿಟ್ಟು ಮೇಲುಪದವಿ ಪಡಿ
ಶೀಲ ಶ್ರೀರಾಮಗೆ ತಲೆಬಾಗಿ ೩

 

೫೬೬
ಮಾಡಿದಫಲವನುಭವಿಸಣ್ಣ ನೀ ಒಲ್ಲೆಂದರೆ ಬೆನ್ನ ಬಿಡದಣ್ಣ
ನೀಡಿ ಪಡೆಯದ ಸುಖವಣ್ಣ ಸುಳ್ಳೆ ಬೇಡಲು
ದೊರಕುವುದ್ಹ್ಯಾಗಣ್ಣ ಪ
ಜತೆಯಿಲ್ಲದೆ ನೀ ಮೊದಲ್ಹುಟ್ಟಿ ಮತ್ತು
ಜತೆಯಿಲ್ಲದ್ಹೋಗ್ವುದು ಮರೆತುಬಿಟ್ಟಿ
ಸತಿಸುತರ್ಹಿತರೆಂದು ಮತಿಗೆಟ್ಟ ಮಂದ
ಮತಿಯಾಗಿ ಸಂಸಾರ ತಿಳಿದಿ ಗಟ್ಟಿ
ಗತಿಸುವ ದೇಹದ ಸ್ಥಿತಿ ವಿಚಾರಿಸದೆ
ಸತತ ಒದ್ದಾಡಿದಸತ್ಯದೊಳಗೆ ಭ್ರಷ್ಟ ೧
ಗಳಿಸಲು ತುಸು ಬೇಸರಲ್ಲದ್ಹೋಗಿ
ಕೇಳಿದಳುಕಿ ಅಳುಕಿ ಜನರಿಗೆ ಬಾಗಿ
ಅಳಿದುಪೋಗುವ ಕಾಸು ಹಣಕಾಗಿ ಕೆಟ್ಟು
ಬಳಲಿಬಳಲಿ ದುಡಿದೆಲೆ ಗೂಗಿ
ನಳಿನಾಕ್ಷನ ಪೂಜೆ ಒಮ್ಮೆ ಮಾಡೆನ್ನಲು
ಅಳುಮೋರೆ ಮಾಡಿದಿ ತಲೆಬಾಗಿ ೨
ಕೆಟ್ಟ ಕೃತ್ಯದಿ ನಿನ್ನ ವಯ ಕಳೆದಿ ಮನೆ
ಗಿಷ್ಟಮಿತ್ರರು ಬರಲತಿ ನೊಂದಿ
ಕೊಟ್ಟದ್ದು ಕೊಡಲಿಕ್ಕೆ ಸಿಟ್ಟಿಗೆದ್ದಿ ನೀ
ಶಿಷ್ಟರ ಸಂಗಕೆ ದೂರಾದಿ
ಇಷ್ಟದಾಯಕ ನಮ್ಮ ಶಿಷ್ಟ ಶ್ರೀರಾಮನಡಿ
ಗಟ್ಟ್ಯಾಗಿ ಭಜಿಸದೆ ಕೆಟ್ಟ್ಹೋದಿ ೩

 

೯೧
ಮಾಡೋ ಹರಿಭಜನೆ ಮನುಜ ನೀ ಪ
ಮಾಡೋ ಹರಿಭಜನೆ
ಕೂಡಿ ಸುಸಂಗದಿ ಕಡುದೃಢದೊಡನೆ ನೀ ಅ,ಪ
ವನಜನಾಭಧಿಕೆಂಬ ಘನಸ್ರ‍ಮತಿ ವಚನವ
ನೆನವಿಡಿದನುದಿನ ಮನದೃಢ ಬಲಿಸಿ ೧
ಮನುಮುನಿಗಳ ಕುಣಿಕುಣಿದ್ಹೊಗಳುವ ಮಾರ
ಜನಕಗೆ ತನುಮನ ಘನ ದೃಢದರ್ಪಿಸಿ ೨
ಪಿಡಿದು ಬಿಡದೆ ನೇಮ ಪಿಡಿದಡಿಗೆ ನೀ
ಒಡೆಯ ಶ್ರೀರಾಮನಾಮ ದೃಢವಿಟ್ಟು ಮರೆಯದೆ ೩

 

೫೬೭
ಮಾತಿನೋಳ್ಮಾತಿಲ್ಲದ ಪಾತಕಜನಜತೆ
ಜನ್ಮಕೆ ಮಾಡಬೇಡಿರಪ್ಪ ಪ
ನೀತಿಗಡಕ ಮಹಕೋಟಿ ಕುಹಕರ ಸಂಗ
ಪಾತಕದ ಕೊಂಡ ಕಾಣಿರಪ್ಪ ಅ.ಪ
ಕ್ಷಣಕ್ಷಣಕೆ ಬದಲಾಗ್ವ ಬಣಗು ಬಿನುಗರ ತಳ್ಳಿ
ಫಣಿಪನ ಸಹವಾಸ ಕೇಳಿರಪ್ಪ
ಅಣಕವಾಡುತ ಅನ್ಯಜನಸುದ್ದ್ಯೋಳ್ದಿನಗಳೆವ
ಶುನಕ ಜನಮಿಗಳನೊದೆಯಿರಪ್ಪ೧
ಚಲನಚಿತ್ತದ ಬಲುಹೊಲೆಮತಿಗಳ
ಸಲಿಗೇಳೇಳು ಜನ್ಮಕೆ ಬೇಡಿರಪ್ಪ
ವಿಲಸಿತ ನಡೆನುಡಿ ತಿಳಿಯದದುರುಳರ
ಗೆಳೆತನ ಕಡೆತನಕ ಬಿಡಿರಪ್ಪ ೨
ಧರ್ಮಗೆಟ್ಟು ದುಷ್ಕರ್ಮದುರುಳವ
ದುರ್ಮದ ಬಿಟ್ಟು ದೂರಾಗಿರಪ್ಪ
ನಿರ್ಮಲಸುಖ ನಿಜ ಮರ್ಮನವರಿಯದ
ಧರ್ಮಿಗಳೆದೆಯನು ತುಳಿಯಿರಪ್ಪ ೩
ಸತ್ಯಸನ್ಮಾರ್ಗವ ಮರ್ತ ಅಸತ್ಯರ
ನೆತ್ತಿಮೇಲೆ ಹೆಜ್ಜಿಡಿರಪ್ಪ
ನಿತ್ಯಮುಕ್ತಿ ಸುಖ ಗುರ್ತರಿಯದೆ ಯಮ
ಮೃತ್ಯುವಶವ ಗೋಷ್ಠಿ ಬಿಡಿರೆಪ್ಪ ೪
ಅರಿವನರಿಯದ ಮರವೆ ಮಾಯಿಗಳ
ಚರಣದಿ ಮುಟ್ಟಿದಿರಪ್ಪ
ಪರಮ ಶ್ರೀರಾಮಪಾದ ಮರೆದ ದುರಾತ್ಮರ
ದರುಶನ ಕನಸಿನೋಳ್ಬೇಡಿರಪ್ಪ ೫

 

೫೬೮
ಮಾತ್ರೆ ತಾಳ ಇವು ಯಾತಕ್ಕೋ ಹರಿ
ಖಾತ್ರಿ ತಾಳ ಶುದ್ಧಿರಬೇಕೊ ಪ
ಧಾತ್ರಿ ಈರೇಳಕ್ಕೆ ಸೂತ್ರಧಾರ ಕೃಪಾ
ಪಾತ್ರನಾಗ್ವ ತಾಳ ತಿಳೀಬೇಕೊ ಅ.ಪ
ವರ್ಣ ಕೃತಿ ಇವುಯಾತಕ್ಕೋ ಹರಿ
ಪೂರ್ಣಮಹಿಮಸ್ರ‍ಮತಿ ಅರೀಬೇಕೊ
ವರ್ಣಾಶ್ರಮ ಧರ್ಮ ಬಣ್ಣಿಪಗೂಡಾರ್ಥ
ಕರ್ಣಕ್ಕೆ ಬಲು ತಾಳಿರಬೇಕೊ ೧
ರಾಗಭೇದಗಳ ಬಲವ್ಯಾಕೋ ಹರಿ
ಜಾಗರಣದ ಫಲ ಬಲಬೇಕೊ
ಭೋಗಭಾಗ್ಯದಾಸೆ ನೀಗಿ ಸುಮನರನು
ಬಾಗಿ ಒಲಿಸುವ ತಾಳಿರಬೇಕೊ ೨
ಸಾಸಿರವಿದ್ಯದ ತಾಳ್ಯಕೋ ಹರಿ
ಧ್ಯಾಸದ ಮಹ ತಾಳಿರಬೇಕೊ
ಶ್ರೀಶ ಶ್ರೀರಾಮನದಾಸರ ಪ್ರೇಮನು
ಮೇಷ ತನಗೆ ತಾಳಿದ್ದರೆ ಸಾಕೊ ೩

 

೧೭೭
ಮಾಧವ ಗುರುವರ ಬೋಧಿಸು ಸುಖಸಾರ
ಪಾದವ ಸ್ತುತಿಪೆನು ದಯವಾಗೊ ಸುಖಕರ ಪ
ನಶಿಸಿಪೋಗುವ ಈ ವಿಷಮಸಂಸಾರದ
ವಿಷಯದಾಸ್ಹರಿಸೆನಗೆ ಅಸಮಸುಖದ ಮಾರ್ಗ ೧
ಭ್ರಮಿಸದೆ ಅನುದಿನ ತ್ರಿಮಲಮೋಹಂಗಳ
ಕ್ರಮದಿ ಖಂಡ್ರಿಸಿ ಮಹ ವಿಮಲಪದವಿ ಮಾರ್ಗ ೨
ಮರವೆ ಮಾಯವ ತರಿದು ಅರಿವಿನಾಲಯದಿರಿಸಿ
ಪರಮ ಶ್ರೀರಾಮನ ಚರಣಕಮಲಭಕ್ತಿ ೩

 

೯೨
ಮಾಧವ ನಮ್ಮ ಶ್ರೀಧವ
ಬಾಧೆಪಡಿಸದೆ ತನ್ನ ಪಾದದಾಸರ ಕಾಯ್ವ ಪ
ನಿರುತ ನೀರೊಳು ನಿಂದ ಈತ
ಚಾರು ನಿಗಮಗಳ ತಂದ ಬಲು
ಭಾರ ಪೊತ್ತನು ಬೆನ್ನಲಿಂದ ಆಹ
ಕೋರೆದಾಡೆಯಲಿಂದ ಘೋರದೈತ್ಯನ ಸಂ
ಹಾರವ ಮಾಡಿ ಭೂಭಾರವನಿಳುಹಿದ ೧
ಅರಮನೆಕಂಬದಲಿಂದ ಕಡು
ಘೋರ ರೂಪವ ತಾಳಿ ಬಂದ ಮಹ
ದುರುಳನುದರ ಬಗಿದುಕೊಂದ ಆಹ
ಧರೆಯನೀರಡಿ ಮಾಡಿವ ದನುಜನ ತುಳಿದು
ಚರಣದಾಸರ ಮನದೊರವಿತ್ತು ಸಲಹಿದ ೨
ವೀರತನದಿ ಕೊಡಲಿಪಿಡಿದ ಧರೆಯ
ಸಾರಕ್ಷತ್ರಿಯಮೂಲವಳಿದ ದೇವ
ಧಾರುಣಿಯೊಳು ನರನಾದ ಅಹ
ತೋರಿ ವಿಪಿನವಾಸ ಮೀರಿದಸುರನ ಕೊಂದು
ಮೂರುಲೋಕದ ಕಷ್ಟ ದೂರಮಾಡಿದ ಶೂರ ೩
ಗೊಲ್ಲಕುಲದಿ ಜನಿಸಿದ ಪುಂಡ
ಬಿಲ್ಲಿನಾಟವ ರಚಿಸಿದ ವೀರ
ಖುಲ್ಲ ಕಂಸನ ಮದ ಮುರಿದ ಆಹ
ನಲ್ಲೇರ್ಹದಿನಾರು ಸಹಸ್ರಬಲ್ಲಿದತನದಾಳಿ
ಎಲ್ಲ ಭಕ್ತರ ಇಷ್ಟಸಲ್ಲಿಸಿ ಪೊರೆದನು ೪
ಸಾರಿಬತ್ತಲೆ ಕದಲಿದ ಪರಮ
ನಾರಿಯರ ವ್ರತ ಭಂಗಿಸಿ ಮೆರೆದ
ಮೂರುಪುರದ ಗರ್ವಮುರಿದ ಆಹ
ಪಾರುಮಾಡಿದ ಸುರರ ಘೋರಕಂಟಕದಿಂದ
ಏರಿದ ಹಯ ನಮ್ಮ ಧೀರ ಶ್ರೀ ಗುರು ರಾಮ ೫

 

ತಾಟಕಿ ಸಾವಿರ ಆನಗೆಳ ಬಲವನ್ನು
೯೩
ಮಾಧವ ಮಧುಸೂದನ ಗೋವರ್ಧನ ಪ
ದೋಷನಿವಾರಣ ಶೇಷಾರಿಗಮನ
ವಾಸುಕಿಗಿರಿಶಯನ ೧
ಕೀಟಕ ಸಂಹರ ಹಾಟಕಾಂಬರ
ತಾಟಕಿಪ್ರಾಣಹರಣ ೨
ಕೌಸ್ತುಭಮಾಲಾ ಕುಜನರ ಕಾಲ
ಕಂಸಾಸುರಾದಿ ಮರ್ದನ ೩
ಗೋಕುಲವಾಳಿದ ಗೋಪಿಯರ್ವರದ
ಗೊಪ ಗೋಪತಿ ನಂದನ ೪
ಮಂದರ ನಿಲಯ ಸಿಂಧುಜಾಪ್ರಿಯ
ಬಂಧುವೆ ಅನಾಥಜನ ೫
ಜಗದೋದ್ಧಾರಣ ಜಗತ್ರಯಮೋಹನ
ಜಗಜೀವನ ಪಾವನ ೬
ಶಂಖಚಕ್ರಾಂಕಿತನೆ ಕಿಂಕರಜನ ಪ್ರೀತ
ಶಂಖಸುರಾದಿ ಮರ್ದನ ೭
ಯದುಕುಲಸಂಭವ ಸದಯ ಯಾದವ
ಸದಮಲಸುಖಸದನ ೮
ಹರಿಗೋವಿಂದ ಪರಮಾನಂದ
ನರಹರಿ ಸಿರಿರಮಣ ೯
ಸಿರಿನರಸಿಂಗ ಪರಿಭವಭಂಗ
ಪರತರ ಗಿರಿಧಾರಣ ೧೦
ನಿತ್ಯನಿರಾಮಯ ನಿರ್ಗುಣ ನಿರ್ಭಯ
ನಿರ್ಮಲ ನಿರಂಜನ ೧೧
ಪರಮಪುರುಷ ಹರಿ ಸರ್ವೇಶ
ಸುರಮುನಿನುತಚರಣ ೧೨
ನಿಮಗೋಚರ ಜಗದಾಧಾರ
ಅಘನಾಶ ಭಜಕಜನ ೧೩
ವೇದಾದಿನಮಿತ ವೇದವೇದಾತೀತ
ಸಾಧುಸಜ್ಜನಪ್ರಾಣ ೧೪
ವರದಶ್ರೀರಾಮ ನಿರತರ ಪ್ರೇಮ
ಪರಿತರ ಪರಿಪೂರ್ಣ೧೫

 

೪೧೨
ಮಾಧವ ಮಧುಸೂದನ ತೇರಾ
ಚರಣ ಭಜಿಪೆ ಪಾಲೋ ಮೇರಾ ಪ
ಹರಿಯೆ ತುಮ್ಹಾರೇ ಚರಣಭಜನ
ಕರುಣಾಕರ ಮುಝೇ ಸಿರಿಯರಮಣ
ದುರಿತ ಮೇರೇ ಪರಿಹಾರ ಕರ್ಕರ್ ಪಾರಕರ್
ಪರಿಭವಸೇ ದೇವ ೧
ರಕ್ಷ ಮೇರೇ ಕೋಯೀ ನಹೀ ಹೈ
ಪಕ್ಷಿಗಮನ ತೇರೇ ಶಿವಾಯ
ಲಕ್ಷಿಸಿ ಮೊಕ್ಕೆಮೇಸೇ ಪಾರಕರ್
ರಕ್ಷ ತೇರಾ ಗೋಷ್ಮೇ ಲೇಕರ್೨
ಸೀತಾಪತೇ ಶ್ರೀರಾಮ ತೂಹೀ
ಪಾತಕ ವಿಮೋಚನ ಹೈ
ಪ್ರೇಮಸೇ ದೇಖಕೇ ಮುಝಕೋ
ಪಾಪಕೂಪಸೇ ಉಠಾ ಲೀಜೀಯೇ ೩

 

ಬ್ರಹ್ಮನ ಮಾನಸಪುತ್ರರು, ಇವರು
೯೪
ಮಾಧವ ಮುರಾರಿ ಶ್ರೀಹರಿ
ಯಾದವ ಯದುಪತಿ ರತಿಪತಿಪಿತ ಪೊರಿ ಪ
ಸನಕನಂದನ ಮನುಮುನಿವಂದಿತ
ತನುಮನಧವನು ನಿನಗಿತ್ತು ಮಣಿಯುವೆ ೧
ಪರಮಕರುಣಾಕರ ಪರಮಾತ್ಮನೆ ಎನ್ನ
ಪರಿತರ ದುರಿತವ ಪರಿಹರಿಸಭವ ೨
ಹರಿಶರಣರ ಸಂಗ ಕರುಣಿಸು ಮುದದಿ
ವರಶರಣದೊಳೆನ್ನ ಪೊರೆಯೊ ಶ್ರೀರಾಮನೆ ೩

 

೪೧೩
ಮಾನವಜನುಮ ಖೂನವರಿಯದೇನು
ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ
ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ
ಹಾನಿಯಾಗಿ ಪೋಗುವಿಯೋ ಅ.ಪ
ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ
ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು
ಸವೆಯದಾಡಿ ಭುವನಸುಖವ ಸವಿಯದೆ
ಜವನ ಭವನ ಕಾಣುವಿ ೧
ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ
ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು
ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ
ಗೋಳಿನೊಳು ಬೀಳುವಿಯೊ ೨
ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ
ಪ್ರೇಮ ಮೋಹಗಳನು ತುಳಿದು ಕಾಮಜನಕ
ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ
ಆ ಮಹಾ ಮುಕ್ತಿ ಪಡೆದು ಬಾಳೊ ೩

 

೫೬೯
ಮಾನವನ್ಯಾಕದ್ಯೋ ಎಲೊ ಎಲೋ
ಮಾನವನ್ಯಾಕದ್ಯೋ ಪ
ಮಾನವನ್ಯಾಕದ್ಯೋ ಹೀನನೆ ಥೂಥೂ
ಮಾನವಜನುಮದ ಖೂನವ ತಿಳಿಯದೆ ಅ.ಪ
ನರನಾಗವತರಿಸಿಬಂದಿಹ್ಯ ಪರಿಯನು ಶೋಧಿಸಿ
ಅರುಹುಗೂಡಿ ಸಿರಿವರನ ಕಥಾಮೃತ
ಪರಮಭಕ್ತಿಯಿಂದ ಶ್ರವಣಮಾಡದ ೧
ತನುನಿಜವಲ್ಲೆನಿಸಿ ಸತತದಿ ತನುಧನರ್ಪಿಸಿ
ಘನತರಭಕುತಿಲಿ ವನಜನಾಭನ
ಘನಸತ್ವಚರಿತವನು ಮನನ ಮಾಡದ ೨
ಮಂದಮತಿಯ ಹರಿದು ಜಗಕೆ ಬಂದ ಕುರುಹು ತಿಳಿದು
ಸಿಂಧುಶಯನ ಮಮತಂದೆ ಶ್ರೀರಾಮನ
ಬಂಧುರಂಘ್ರಿ ನಿಜಧ್ಯಾಸವ ರುಚಿಸದ ೩

 

೫೭೦
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ
ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ
ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ
ಕುಣಿತಕಲಿತಿರುವವ ಮನದಿ ನಾಚುವನೆ
ಒನಪು ಕಲಿತಿರುವಗೆ ಮನಸಿಜ ದೂರನೆ
ಮನೆಮನೆ ತಿರುಗುವನು ಘನತೆಗೆ ಬಹನೆ ೧
ಚಾಡಿಕೋರನಿಗೆ ಪಾದ ತಾಡಣೆಯು ತಪ್ಪುವುದೆ
ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ
ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ
ನಾಡ ಮಾತಾಡುವಗೆ ಕೇಡು ತಪ್ಪುವುದೆ ೨
ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ
ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ
ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ
ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ ೩
ಮೋಸಕಾರಿಗೆಮಶಾಪವು ತಪ್ಪುವುದೆ
ಆಶಕಾರಿಗೆ ಮಹನಾಶ ಬಿಡುತಿಹ್ಯದೆ
ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ
ದಾಸಜನ ದೂಷಕಗೆ ಈಶನೊಲಿಮಿಹ್ಯದೆ ೪
ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ
ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ
ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ
ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ ೫
ಕಪಟತ್ವ ನೀಗದೆ ತಪವೃದ್ದಿಯಾಗುವುದೆ
ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ
ಜಪವಿಲ್ಲದೆ ವಿನಾ ಸುಫಲದೊರಕುವುದೆ
ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ ೬
ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ
ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ
ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ
ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ ೭

 

೧೫೫
ಮಾಯಕಾರಳೆ ಕಾಯೊ ಕರುಣದಿ
ಬಾಯಿ ಬಿಡುವೆನೆ ರುದ್ರಾಣಿ ಪ
ನೋಯಲಾರದೆ ದೇವಿ ಮರೆಹೊಕ್ಕೆ
ನೋವು ಕಳೆಯಮ್ಮ ಭವಾನಿ ಅ.ಪ
ಭಕ್ತಜನರಿಗೆ ಆಪ್ತಮಾತೃ ನೀ
ನಿತ್ಯೆ ನಿರ್ಮಲರೂಪಿಣೀ
ಭೃತ್ಯನೊಳು ದಯವಿತ್ತು ಪೊರೆ ಆದಿ
ಶಕ್ತಿ ದೈತ್ಯಸಂಹಾರಿಣಿ ೧
ಶುಂಭ ನಿಶುಂಭರೆಂಬ ಖಳರ
ಜಂಬ ಮುರಿದೌ ಚಂಡಿಕೆ
ಅಂಬೆನಿನ್ನನು ನಂಬಿ ಭಜಿಪೆ
ಇಂಬುಗೊಟ್ಟು ಸಲಹಂಬಿಕೆ ೨
ಸುರರ ಮೊರೆಕೇಳಿ ದುರುಳರ್ಹಾವಳಿ
ದೂರಮಾಡಿ ಶೌರಿಯೆ
ನೀ(ರಟ)ಸಿದವರಿಗೆ ವರವ ಕರುಣಿಸಿ
ಕರುಣ ದೋರಿದೌದರಿಯೆ ೩
ಅನ್ನಪೂರ್ಣೆಯೆ ನಿನ್ನ ಪಾದ
ವನ್ನು ಭಜಿಸುವೆ ಕಲ್ಯಾಣಿ
ಭಿನ್ನವಿಲ್ಲದೆ ನಿನ್ನ ಸುತಗೆ ಸುಖ
ವನ್ನು ಕೊಡೆ ನಾರಾಯಣೆ ೪
ರಾಮದಾಸರ ಪ್ರೇಮ ಜನನಿಯೆ
ನೇಮದಿಂ ನಿನ್ನ ಪಾಡುವೆ
ಹೈಮಾವತಿ ಎನ್ನ ಕಾಮಿತಾರ್ಥವ
ಪ್ರೇಮದಿಂ ನೀಡು ಕರುಣಿಯೆ ೫

 

೪೧೪
ಮಾಯದೂರನೆ ಎನ್ನ ಮಾಯ ಬಿಡಿಸಯ್ಯ
ಮಾಯದಲಿ ಸಿಲ್ಕಿ ಬಲು ಬಳಲುವೆನಭವ ಪ
ಮಾಯದಿಂ ಜನಿಸಿ ನಾ ಮಾಯದಿಂ ಬೆಳೆದಿರುವೆ
ಮಾಯವನೆ ಉಟ್ಟು ನಾ ಮಾಯ ತೊಟ್ಟಿರುವೆ
ಮಾಯವನೆ ಹಾಸಿ ನಾ ಮಾಯವನೆ ಹೊದ್ದಿರುವೆ
ಮಾಯದಲಿ ಬಿದ್ದು ಬಲು ಒದ್ದಾಡುತಿರುವೆ ೧
ಮಾಯಕ್ಕೆ ಸತಿಯೆಂದು ಮಾಯಕ್ಕೆ ಸುತರೆಂದು
ಮಾಯಕ್ಕೆ ಬಂಧೆಂದು ಮಾಯದ್ಹಿಗ್ಗಿದೆನೋ
ಮಾಯಸಂಸಾರದ ಮಾಯನರಿಯದೆ ನಾನು
ಮಾಯ ಮೋಹಿತನಾಗಿ ಬಾಯ್ಬಿಡುವೆ ಸತತ ೨
ಮಾಯವನು ಕಲ್ಪಿಸಿ ಮಾಯವನೆ ಕುಣಿಸಾಡಿ
ಮಾಯದಾಟಾಡುವಿಯೊ ಮಾಯವನು ತುಂಬಿ
ಮಾಯಮಹಿಮನೆ ನಿನ್ನ ಮಾಯ ಬಲ್ಲವರಾರು
ಮಾಯದಿಂದುಳಿಸೆನ್ನ ಕಾಯೊ ಶ್ರೀರಾಮ ೩

 

೪೧೫
ಮಾರಜನಕ ನಂಬಿದೆ ನಿನ್ನ
ಪಾರುಮಾಡೆನ್ನ ಪರಮಪಾವನ್ನ ಪ
ಮೀರಿತು ಭವಬಾಧೆ ಸೈರಿಸೆನಿನ್ನು
ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ
ದುಷ್ಟಸಂಸಾರಸಾಗರದೊಳು
ಕೆಟ್ಟ ನಿಂದೆಗಳೆಂಬ ಘನತೆರಿಗಳು
ಹುಟ್ಟಿ ಏಳುತಲಿಹವು ಸಾಲಿಗೆ ಸಾಲು
ಬೆಟ್ಟದಂತೆ ಮಹ ಭೀಕರದೊಳು
ಎಷ್ಟಂತ ಈಸಬೇಕಿನ್ನಿದರೊಳು
ಸೃಷ್ಟಿಕರ್ತ ನೀನೆ ಮೊರೆ ದಯದೊಳು ೧
ವಾಸನ್ಹಿಡಿದು ಸೆಳೆದುನುಂಗ್ವವೈದಾರು
ಮೋಸ ಜಲಚರಗಳ ಮೀರಿದ ತೊಡರು
ಆಸೆಯೆಂಬ ಮಹ ಸೆಳವಿನ ಜೋರು
ದೋಷಯೆಂಬುವ ಸುಳಿ ಮಡುವು ಸಾವಿರಾರು
ಈಸುವುದು ಮುಂದಕ್ಕೆ ಅಗದು ಮಾರು
ಶ್ರೀಶನೆ ಪಿಡಿದೆತ್ತಿ ಕರುಣವ ತೋರು ೨
ಇಂತು ಭವದ ಸಾಗರವನ್ನು
ಎಂತು ದಾಟಿ ನಾ ಪಾರಾಗುವೆನು
ನಿಂತುನೋಡಲು ಅಂಜಿ ಮನಸಿಗೆ ಇನ್ನು
ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು
ಚಿಂತಾಯಕ ಭಕ್ತ ತೀವ್ರಬಂದಿನ್ನು
ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು ೩

 

೫೭೧
ಮಾರಿ ಬೇರೆಂದೇಕೆ ಹಲುಬುವರು ಜಗದಿ
ನಾರಿಯೇ ಮಕ್ಕಮಾರ್ಯೆಂದೆನ್ನಬಾರದೆ ಪ
ಹಿತದೋರಿ ಮನಸೆಳೆದು ಮತಿಗೆಡಿಸಿ ವಿಧವಿಧ ದು
ಷ್ರ‍ಕತ ಪೇಳಿ ಬಂಧುಗಳ ಹಿತವನೆ ಮರೆಸಿ
ಸತತ ಬೆನ್ನ್ಹತ್ತಿ ಬಿಡದೆ ಕ್ಷಿತಿಮೇಲೆ ಅತಿಯಾಗಿ
ವ್ಯಥೆಬಡಿಪ ಮಾರಿ ನಿಜಸ್ಥಿತಿ ವಿಚಾರಿಸದೆ ೧
ಮನೆ ಧನ ಗುಣ ಸುಲಿದು ಘನತೆಯನು ಕೆಡಿಸಿ ಮ
ತ್ತನುಕೂಲವನು ಇತ್ತು ತನುಶಕ್ತಿ ಹೀರಿ
ಕುಣಿಕುಣಿಸಿ ಜಗದೊಳಗೆ ಬಿನಗುರಲಿ ಬಿನುಗೆನಿಸಿ
ಘನ ಬಾಧಿಸುವ ಮಾರಿದಿನಿಸು ಕಾಣದಲೆ ೨
ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರೆನಿಸಿ
ಭುವಿಯೊಳು ಮುಕ್ತಿಕಾಮಿನಿಯ ತೊರೆಸಿ
ನೇಮವಿಲ್ಲದ ಕಷ್ಟ ನೇಮಿಯೊಳಳಿಸಲಿಕೆ
ಯಮನೊಶಕೆ ಕೊಡುವಂಥ ಈ ಮಾರಿನೊದೆಯದೆ ೩

 

೧೫೪
ಮಾರುತಿ ಪ್ರಾಣ ಮೂರುತಿಪ
ಸಾರುವೆ ತವಶ್ರುತಿ ಧೀರ ಭಾರತೀಪತಿ ಅ.ಪ
ಭರದಿ ಸಾಗರ ಹಾರಿ ದುರುಳನ ಪುರ ಸೇರಿ
ವರಮಾತೆಗುಂಗುರ ತೋರಿ ವನಗೈದಿ ಸೆರೆ ಶೂರ ೧
ಸೊಕ್ಕಿನಿಂದ ಮೆರೆವಂಥ ರಕ್ಕಸರನು ಪಂಥ
ಇಕ್ಕಿ ನೀ ಗೆಲಿದಂಥ ಅಃಭಾಪುರೆ ಹನುಮಂತ ೨
ಸಿರಿಯ ರಾಮನಿಗಿತ್ತ ವರ ಸೀತಾವೃತ್ತಾಂತ
ವರ ಸದ್ಭಕ್ತರ ಪ್ರೀತ ಪಾಲಿಸೊ ವಿಖ್ಯಾತ ೩

 

ದುರುಳದಾನವನ ವರ ನಗರುರುಹಿ
೧೫೩
ಮಾರುತಿಪಾದವ ಸ್ಮರಿಸಿರೋ
ಸಾರದುರಿತ ಪರಹರಿಸ್ಪೊರೆಯುವ ಧೀರ ಪ
ದುರುಳದಾನವನ ವರನಗರುರುಹಿತಾ
ಪರತರ ವಿಭೀಷಣನೊರ ಕರುಣದಿ ಕಾಯ್ದ ೧
ಬುವಿಯಂ ಕೈಲಾಸಕ್ಕೆ ಜವದಿ ಜಿಗಿದು ವೀರ
ಭವಭಯಹರ ವರ ಶಿವನ ಚಿತ್ತರಿದಂಥ ೨
ಭಕ್ತವತ್ಸಲ ವರ ಮುಕ್ತಿಕರ್ತ ಗುರು
ದತ್ತ ಶ್ರೀರಾಮನ ಭೃತ್ಯನೆನಿಸಿಕೊಂಡ ೩

 

೯೫
ಮಾಲಕೌಸ್ತುಭ ಸತ್ಯಭಾಮಲೋಲ ನೀಲಶಾಮಸುಂದರ
ಕಾಲಕಾಲದಿ ಬಿಡದೆ ಎನ್ನ ಪಾಲಿಸಭವನೆ ಪ
ಭುವನವೀರೇಳು ಸೂತ್ರಧಾರ ಭವದರೋಗಕ್ವೈದ್ಯ
ಭಕ್ತಭಯ ಪರಿಹಾರ ಸತ್ಯ ಬುವಿಜಾಮನೋಹರ ೧
ಕೋಮಲಾಂಗ ಭಜಕಜನರ ಕಾಮಿತಾರ್ಥ ಕೊಡುವ ಸುರ
ಕಾಮಧೇನು ಕಲ್ಪವೃಕ್ಷ ಸ್ವಾಮಿ ದಯಾಕರ ೨
ಮಾರನಯ್ಯ ದುರಿತಸಂಹಾರ ವಿಷಮಘೋರ ಸಂ
ಸಾರ ಮಾಯಾಮೋಹವಿದೂರ ಕೇಶವ ೩
ಪರಕೆ ಪರಮ ಪರಾತ್ಪರ ಮರಣರಹಿತ ಮಾರಮಣ
ಉರಗಶಾಯಿ ಪರಮಪುರುಷ ಶರಣು ಸುಖಕರ ೪
ನಿಗಮವೇದ್ಯ ನಿರುಪಮಾತ್ಮ ಅಗಣಿತಗಣಿತಗಮ್ಯಚರಿತ
ಸುಗುಣ ಶಾಂತಾಕಾರ ಮೂರು ಜಗದ ಪಾಲಯಾ ೫
ಸಕಲವಿಘ್ನದೂರ ನಿನ್ನ ಭಕುತಿಯಿಂದ ಭಜಿಸಿಬೇಡ್ವೆ
ಮುಕುತಿಸಂಪದ ನೀಡಿ ಸಲಹು ಭಕ್ತವತ್ಸಲ ೬
ಕಂದಮಾಡಿದಪರಾಧಗಳ ತಂದೆ ದಯದಿ ಕ್ಷಮಿಸಿ ಬಂದ
ಬಂಧಗಳನು ಪರಿಹರಿಸಯ್ಯ ಸಿಂಧುಮಂದಿರ ೭
ನಾನಾಯೋನಿಯೊಳಗೆ ಪುಟ್ಟಿ ಜ್ಞಾನಗೆಟ್ಟು ಬಳಲುವಂಥ
ಹೀನ ಬವಣೆ ತಪ್ಪಿಸಯ್ಯ ದೀನಪಾಲ ೮
ನಿರುತ ನಿನ್ನ ಚರಣದೆಡೆಗೆ ಬರುವ ಸುಲಭಮಾರ್ಗ ಆವು
ದ್ವರವ ಪಾಲಿಸೊಲಿದು ಎನಗೆ ಕರುಣಸಾಗರ ೯
ದೋಷದಾರಿದ್ರ್ಯಗಳೆಲ್ಲ ನಾಶಗೈದು ಹರಿಯೆ ನಿಮ್ಮ
ದಾಸನೆನಿಸುದ್ಧಾರಮಾಡು ದೋಷನಾಶನ ೧೦
ಮರೆಯಬಿದ್ದ ತರಳನನ್ನು ಕರುಣದೃಷ್ಟಿಯಿಂದ ನೋಡಿ
ಸರ್ವಭಯ ಪರಿಹಾರಮಾಡು ಹರಿಸರ್ವೋತ್ತಮ ೧೧
ನಿನ್ನ ಒಲವು ಬಲವು ಎನಗೆ ಅನ್ಯಬಲವ ಒಲ್ಲೆಸ್ವಾಮಿ
ಮನ್ನಿಸಬೇಕಿನ್ನು ಮಗನ ಸನ್ನುತಾಂಗನೆ ೧೨
ನಂಬಿ ಭಜಿಪ ಬಕ್ತಜನರ ಇಂಬುದಾಯಕ ನೀನು
ಇಂಬುಗೊಟ್ಟು ಸಲಹು ಎನ್ನ ಅಂಬುಜಾಕ್ಷನೆ ೧೩
ಏನುತಪ್ಪು ಇರಲು ನೀನೆ ದಯದಿ ಕ್ಷಮಿಸಿ ಇನ್ನು
ನಾನಾಬೇನೆ ಕಳೆದು ಕಾಯೊ ಜಾನಕೀಶನೆ ೧೪
ಚಾರುವೇದ ಪೊಗಳುವಂಥಪಾರ ನಿನ್ನ ದಿವ್ಯಮೂರ್ತಿ
ತೋರಿಧನ್ಯನೆನಿಸು ಎನ್ನ ನಾರಸಿಂಹನೆ ೧೫
ಭಾರ ನಿನ್ನದಯ್ಯ ಬಂದ ಘೋರ ತಾಪತ್ರಯಂಗಳಿಂದ
ಪಾರುಮಾಡಿ ಕಾಯುವುದು ಕಾರುಣ್ಯ ನಿಧೆ ೧೬
ಪ್ರಾಣಹಾರಿ ಹೋಗಲು ನಿನ್ನ ಧ್ಯಾನವಗಲದಂತೆ ಎನಗೆ
ತ್ರಾಣಪಾಲಿಸಯ್ಯ ಮೊದಲು ಧ್ಯಾನದಾಯಕ ೧೭
ದಾಸನರಿಕೆ ದಯದಿ ಪೂರೈಸಿ ಕಾಯಬೇಕು ದೇವ
ಘಾಸಿಗೈಯದೆ ರಕ್ಷಿಸಯ್ಯ ದಾಸಪ್ರಿಯನೆ ೧೮
ಕೆಟ್ಟಶಕುನರಿಷ್ಟ ಸ್ವಪ್ನ ತಟ್ಟಬೇಕೆ ನಿನ್ನ ಪಾದ
ನಿಷ್ಠೆಯಿಂದ ಭಜಿಪರ್ಗೆ ಸೃಷ್ಟಿಕರ್ತನೆ ೧೯
ನಿತ್ಯ ನಿರ್ಮಲಾತ್ಮ ನಿನ್ನ ನಿತ್ಯಭಕ್ತಿ ಸುಖವನಿತ್ತು
ಸತ್ಯಸಂಧನೆನಿಸು ಎನ್ನ ಸತ್ಯರಾಧಾರ ೨೦
ಅರಿವು ನಿಲಿಸಿ ಮರವೆ ತರಿದು ಹರಿಯೆ ನಿಮ್ಮ ಕರುಣ ನೀಡಿ
ಮರಣ ಭಯವ ಪರಿಹರಿಸಯ್ಯ ಸಿರಿಯವಲ್ಲಭ ೨೧
ಭಾನುಕೋಟಿಪ್ರಕಾಶ ನಿನ್ನ ಧ್ಯಾನಿಸಿ ಮರೆಹೊಕ್ಕೆ
ನಾನಾಬೇನೆ ಗೆಲಿಸಿ ಕಾಯೊ ದಾನವಾಂತಕ ೨೨

 

೬೪೩
ಮಾಲೆ ಧರಿಸಿಕೊಂಡೆ ಮಾಧವನೆಂಬ ಮಣಿ
ಮಾಲೆ ಧರಿಸಿಕೊಂಡೆ ಪ
ಮಾಲೆ ಧರಿಸಿಕೊಂಡೆ ನೀಲಶಾಮನದಿವ್ಯ
ಲೀಲೆ ಮೂಲೋಕಕ್ಕೆ ಮೇಲುಮೇಲುಯೆಂಬ ಅ,ಪ
ಭವದೂರ ಪಾದವಂದನೆಂಬ ಮುಕುಟ ಧರಿಸಿಕೊಂಡೆ
ಮಾದಮರ್ದನನಂಘ್ರಿಸ್ಮರಣೆಂಬ ಕರ್ಣಕುಂಡಲಿಟ್ಟುಕೊಂಡೆ
ಭುವನತ್ರಯದ ಮೇಲೆ ಜವನ ನಿರ್ಭಯಕೇಶವನ
ದಯವು ಎಂಬ ಭವದೊಳಗೆ ಹೊಕ್ಕು ೧
ಜಡಜನಾಭನಚರಣ ದೃಢವೆಂಬ ಮಡಿಯನುಟ್ಟುಕೊಂಡೆ
ಕಡಲಶಯನನಡಿಯ ಭಕ್ತೆಂಬ ಕವಚ ತೊಟ್ಟುಕೊಂಡೆ
ಪೊಡವಿಗಧಿಕ ಓರ್ವ ಒಡೆಯ ಹರಿ ಅಹುದೆಂಬ
ದೃಢನಿಶ್ಚಯದ ಮೇಲ್ಮಾಡಿನೊಳಗೆ ಕೂತು ೨
ಅಂಗಜಪಿತನೆಂಬ ಬಂಗಾರ ಕಂಕಣಿಟ್ಟುಕೊಂಡೆ
ರಂಗ ಕೃಷ್ಣನೆಂಬ ರತ್ನದ ಉಂಗುರಿಟ್ಟುಕೊಂಡೆ
ಮಂಗಲಮಯ ನೀಲಾಂಗ ಶ್ರೀರಾಮನಾಮ
ಚಂದ್ರಹಾರ ಹಾಕಿಕೊಂಡು ಶೃಂಗಾರನಾಗಿ ನಿಂತೆ ೩

 

೯೬
ಮಾವನ ಮರ್ದನ ಜಗದ ಜೀವನ ಪ
ಸೇವಕಜನ ಭಾವದೊಳಿಹ್ಯ
ದೇವದೇವ ದೇವಕಿ ಕಂದನೋ ಅ,ಪ
ಚೋರ ನವನೀತ ಜಾರತನದಿ ಮೀರಿದವನ
ಪಾರಮಹಿಮ ಪರಮಾತ್ಮ ನೀರಜಾಕ್ಷ ನಿರಂಜನ ೧
ಅಂಗನೆಯರ ಭಂಗಿಸಿದ ಅಂಗನೆಯಾಗಿ ಸಂಗರವ ಗೆಲಿದ
ಪಿಂಗದಿವನಮಹಿಮಾರಿಂದಂಗಜಾರಿ ವಂದ್ಯನೋ ೨
ನಾಮರೂಪಿಲ್ಲದವನು ನಾಮಧಾರಿ ಎನಿಸಿದನೆ
ಸ್ವಾಮಿ ರಾಮನ ಮಹಿಮೆ ಈ ಕಾಮಿಜನಗಳು ಬಲ್ಲರೇ ೩

 

೬೪೪
ಮುಚ್ಚ್ಯಾಕೆ ಮರೆಯಾಕ್ಹೆಚ್ಚೀತನೆ
ಅಚ್ಯುತ ಸಕಲಕ್ಕೆ ಅಧಿಕಿಹ್ಯನೆ ಪ
ಬಚ್ಚಿಟ್ಟುಕೊಂಡು ವೇದ ಕುಚ್ಛಿತ ದೈತ್ಯರೊಯ್ಯೆ
ಇಚ್ಛೆಗಾರ ಪಿತ ತಂದು ನಿಶ್ಚಯಗೈದ ಸೃಷ್ಟಿ ಅ.ಪ
ಸವೆಯದ ವರವನ್ನು ಹಿರಣ್ಯಕಶ್ಯಪನಿಗೆ
ಶಿವ ತಾನುಕೊಟ್ಟ ವೈಕುಂಠನ ಉದರ ಸೀಳಿ
ಜವದಿ ತ್ರಿಭುವನವ ದಯದಿ ಸಲಹಿದ ಸಿರಿ
ಧವ ನರಸಿಂಗನೆನಿಸಿ ೧
ಕೇಳಿದ ವರವನ್ನು ದುರುಳರಾವಣನಿಗೆ
ಪಾಲಿಸಿ ವರ ಶಂಭು ಹರಿಯನ್ನು ಅರ್ಚಿಸೆ
ಕೀಳುದೈತ್ಯನ ಕುಲಮೂಲ ತರಿದು ಸುರರ
ಪಾಲಿಸಿದನು ದಿವ್ಯ ಮೇಲುರೂಪವ ತಾಳಿ ೨
ದುರುಳಗೊಲಿದು ಶಿವ ಉರಿಹಸ್ತ ಕರುಣಿಸಿ
ಮರುಗುತ ಹರಿಯೆಂದು ಕರವೆತ್ತಿಕೂಗಲು
ಭರದಿ ಒದಗಿಬಂದು ಮೆರೆವೀ ಅಸುರನನ್ನು
ಉರಿಹಸ್ತ ಹರನಿಗೆ ವರವಿತ್ತ ಶ್ರೀರಾಮ ೩

 

೬೪೫
ಮುತ್ತಿ ಎನಗೆ ಬಡಿತವ್ವ ಹರಿ
ಭಕ್ತರ ಮನಿಯನ ದೆವ್ವ ಪ
ಅತ್ತಿತ್ತಮಾಡಿ ಬೆನ್ನ್ಹತ್ತಿ ಬಿಡದೆ ಎನ್ನ
ನೆತ್ತಿಕೊಂಡು ಓಡ್ಹೋಯ್ತವ್ವ ಅ.ಪ
ಬಿದ್ದರೆ ಬೀಳಗೊಡಲಿಲ್ಲವ್ವ ಸುಮ್ಮ
ನಿದ್ದರೆ ಇರಗೊಡಲಿಲ್ಲವ್ವ
ಬುದ್ಧಿಭ್ರಮಿಸಿ ಬಲುಗದ್ದಲಮಾಡೆನ್ನ
ಮುದ್ದಿಟ್ಟೆಬ್ಬಿಸಿಕೊಂಡ್ಹೋಯ್ತವ್ವ ೧
ಉಟ್ಟದಟ್ಟಬಿಡಿಸೊಗಿತವ್ವ ಬಂದ
ಬಟ್ಟೆಯ ಎರವು ಮಾಡಿತವ್ವ
ವೊಷ್ಟು ಬಿಡಿಸಿ ಎನ್ನ ಗಟ್ಟ್ಯಪ್ಪಿ ತಿರುಗದ
ಬೆಟ್ಟಕ್ಕೆ ಎಳಕೊಂಡ್ಹೋಯ್ತವ್ವ ೨
ಭೋರಿಟ್ಟತ್ತರು ಎನ್ನ ಬಳಗವ್ವ ಸಮೀ
ಪಾರನು ಬರಗೊಡಲಿಲ್ಲವ್ವ
ಸಾರಸೌಖ್ಯಕ್ಕಾಧಾರ ಶ್ರೀರಾಮಪಾದ
ಸೇರಿಸಾನಂದಪದವೇರಿಸಿತವ್ವ ೩

 

೪೧೬
ಮೂಕನಾಗೋ ಮನವೆ ನಿನಗೆ
ಯಾಕೀ ಲೋಕ ಗೊಡವೆ ಪ
ಮೂಕನಾಗಿ ಬಹುಜೋಕೆಯಿಂದ ನಡಿ
ಏಕಾಂತ ಗುಟ್ಟೀ ಲೋಕರಿಗರುಹುದೆ ಅ.ಪ
ಹೇಳಿದರೇನಾದೋ ನೀ ಬಲು
ಕೇಳಿದರೇನಾದೊ
ಹೇಳಿಕೆ ಕೇಳಿಕೆ ಗಾಳಿಯ ಮೊಟ್ಟ್ಯೆಂದು
ನೀಲಶಾಮನ ಮನದಾಲಯದೊಳಗಿಟ್ಟು ೧
ಅವನಿ ಗೊಡವೆ ಯಾಕೋ ಹರಿಯೆಂದು
ಭವಭಯವನು ಕಳಕೋ
ದಿವನಿಶಿ ನಿಜದನುಭವದೊಳಗಾಡುತ
ಭವಗೆಲುವಿನ ಸುದ್ದಿ ಭವಿಗಳಿಗುಸುರದೆ ೨
ಶಿಷ್ಟರ ಪಾದ ಪಿಡಿಯೋ ಮುಂದಿನ್ನು
ಹುಟ್ಟು ಸಾವು ಗೆಲಿಯೊ
ದುಷ್ಟಮತಿಗಳ ಗೋಷ್ಠಿಗೆ ಹೋಗದೆ
ಬಿಟ್ಟಗಲದೆ ನಿಜಪಿಡಿದು ನೀತಿ ೩
ಮತ್ರ್ಯಜನರ ಇದಿರು ನೀ ಬಲು
ಗುಪ್ತದಿಂದಿರು ಚದುರ
ಸತ್ಯತಿಳಿದು ಹರಿ ಸರ್ವೋತ್ತಮನಂಘ್ರಿ
ಚಿತ್ತದಿ ನಿಲ್ಲಿಸಿ ಅತ್ಯಾನಂದಗೂಡಿ ೪
ನಂಬಿಗಿಲ್ಲದಲ್ಲಿ ಸುಬೋಧ
ಡಂಬವೆನಿಪುದಲ್ಲಿ
ಜಂಬವಡಿಯದೆ ಕುಂಭಿನಿಯೊಳು ನೀ
ನಂಬಿ ಶ್ರೀರಾಮನ ಗುಂಭದಿಂ ಭಜಿಸುತ ೫

 

೫೭೨
ಮೂರ್ಖ ಬಲ್ಲನೆ ಸತ್ಯಸುಜ್ಞಾನಿ ನಡೆಯ
ತಾರ್ಕಿ ಬಲ್ಲನೆ ಪರಸಾಧನದ ಬಗೆಯ ಪ
ಕತ್ತೆ ಬಲ್ಲುದೆ ಹೊತ್ತ ಮುತ್ತುರತ್ನದ ಬೆಲೆಯ
ತೊತ್ತು ಬಲ್ಲುದೆ ಮಹ ಉತ್ತಮರ ನಡೆಯ
ಮಿಥ್ಯ ಬಲ್ಲನೆ ಶರಣಸತ್ಸುಜನರ ನೆಲೆಯ
ಮೃತ್ಯು ಬಲ್ಲುದೆ ಹೊತ್ತು ಗೊತ್ತಿನ ಪರಿಯ ೧
ಸೂಶೆಬಲ್ಲಳೆ ಸತಿಯ ಶೀಲವ್ರತನೇಮಗಳ
ಕೋಳಿ ಬಲ್ಲುದೆ ಮರಿಗೆ ಮೊಲೆಹಾಲುಣಿಸಿ ಸಲಹೋದ
ಕೇಳಬಲ್ಲನೆ ಕಿವುಡ ಆಲಿಸಿ ಏಕಾಂತವನು
ಹೇಳಬಲ್ಲನೆ ಮೂಕ ಕೇಳಿ ಹರಿಚರಿತ ೨
ಭ್ರಷ್ಟಬಲ್ಲನೆ ಸುಗುಣ ಶಿಷ್ಟ ಸಂತರ ಸಂಗ
ದುಷ್ಟಬಲ್ಲನೆ ಪರರ ಕಷ್ಟನಷ್ಟಗಳ
ಹುಟ್ಟುಗುರುಡ ಬಲ್ಲನೆ ಮುಂದಿಟ್ಟ ಗಂಟಿನ ವಿವರ
ಕೆಟ್ಟಭವಿಬಲ್ಲನೆ ತತ್ತ್ವಕಟ್ಟಳೆಯ ಗುಟ್ಟು ೩
ಕುರಿಯು ಬಲ್ಲುದೆ ತನ್ನ ಕೊರಲು ಕೊಯ್ಯವರೆಂದು
ಮರುಳ ಬಲ್ಲನೆ ದೊರೆತ ನರಜನುಮ ಸಮಯ
ನರಕದ ಹುಳ ಬಲ್ಲುದೆ ಕಾಳೋರಗನ ಹರಿದಾಟ
ತಿರುಕ ಬಲ್ಲನೆ ಅರಸರ ಮನೆಯ ಸುದ್ದಿ ೪
ಕಾಮಿಗಳು ಬಲ್ಲರೆ ನೇಮನಿತ್ಯದ ನಿಜವ
ತಾಮಸರು ಬಲ್ಲರೆ ಸಾಮ ದಾನ ಗುಣವ
ಪಾಮರರು ಬಲ್ಲರೆ ಭೂಮಿಯೊಳಧಿಕ ಮಮ
ಸ್ವಾಮಿ ಶ್ರೀರಾಮನ ನಾಮಮಹಾತ್ಮೆಯನು ೫

 

೫೭೩
ಮೂಳಾ ಹರಿದ್ಹಾಕೆಲೋ ಮಾಯದ ಜಾಲ
ಹಾಳುಜಗದ ಮಾತಿಗ್ವ್ಯಾಕುಲವ್ಯಾಕೆಲೋ ಪ
ಅನ್ಯಗುಣಗಳನು ಅನ್ನಗೇಡಾಗಿ ಬಲು
ಭಿನ್ನ ಭೇದದಧೋಪಾತದುರುಳತಿರು
ಕುನ್ನಿಮಾನವರ ಭಿನ್ನಭೇದಕಂಡು
ನಿನ್ನ ಗುಣವ ಬಿಟ್ಟು ಬನ್ನಬಡಲಿಬೇಡ ೧
ಕರ್ಮಿಲೋಭಿಗಳ ಮೋಹದಿಂದ ದು
ಷ್ಕರ್ಮದಿ ಬಿದ್ದು ಕುಂಭೀಪಾಕಕ್ಕಿಳಿದರೇನು
ಧರ್ಮಕರ್ಮಗಳ ಮರ್ಮ ತಿಳಿದು ಸ
ದ್ಧರ್ಮದೊಳಾಡುತ ನಿರ್ಮಲನಾಗಿ ಬಾಳು ೨
ಶಿಷ್ಟಪದ್ಧತಿಗಳ ಬಿಟ್ಟುಕೊಟ್ಟು ಮಂದಿ
ಕೆಟ್ಟಪದ್ಧತಿ ಸುದ್ದಿಯಾಡುವುದ್ಯಾಕೆಲೋ
ಸೃಷ್ಟಿಯೊಳಗೆ ನಮ್ಮ ಶಿಷ್ಟ ಶ್ರೀರಾಮನ
ಮುಟ್ಟಿಪೂಜಿಸಿ ಮುಕ್ತಿಪಟ್ಟಕ್ಕೆ ಕೂಡ್ರೆಲೋ ೩

 

೪೧೭
ಮೆಚ್ಚಿದೇನೆಂದೀಕಾಯ ಮನವೇ
ಹೆಚ್ಚಿನ ಮಲ ದುರ್ಗಂಧಮಯ ಪ
ಮುಚ್ಚಿ ಚರ್ಮದಿಂ ಸ್ವಚ್ಛತೋರುತಿದೆ
ಹುಚ್ಚು ಹುಳುಕಿನ ದೇಹ ನೀಚೋ ನೀಚೋ ೧
ಸುತ್ತಿನರಗಳಿಂದ ಒತ್ತಿಬಿಗಿದು ಹೇಯ
ರಕ್ತಕೀವುಯುಕ್ತ ಹೊಲಸು ಹೊಲಸು ೨
ನಾಶನಸಂಗ ಜರ ಘಾಸಿಯಾಗಲದು ದು
ರ್ವಾಸನೆ ಕೊಲಕಿನ ಭಾಂಡ ಭಾಂಡ ೩
ತೊಳೆಯುತಲಿರ್ದರೆ ಒಳಿತು ಇದರ ಸ್ಥಿತಿ
ತೊಳೆಯದಿರೆ ನರಕದ ಕೊಂಡ ಕೊಂಡ ೪
ಕೆಡುವಶರೀರಮೋಹ ಕಡಿದು ದೃಢದಿ ಮಮ
ಒಡೆಯ ಶ್ರೀರಾಮನ ಪಾಡೋ ಪಾಡೋ ೫

 

೯೭
ಮೇಲ್ ಮೇಲ್ ಮೇಲ್ ಮೇಲ್ ಹರಿನಾಮ
ಮೇಲು ಮೂಜಗಸೂತ್ರ ಹರಿನಾಮ ಪ
ಕಾಲಕುಜನಕುಲ ಹರಿನಾಮ
ಪಾಲಸುಜನಗಣ ಹರಿನಾಮ
ಜಾಲಮಾಯ ದರ್ಪಣ್ಹರಿನಾಮ
ಮೂಲಮಂತ್ರ ವಿಶ್ವ ಹರಿನಾಮ ಅ.ಪ
ಶರನಿಧಿಮಂದಿರ ಹರಿನಾಮ
ಶರಧಿಮಥನ ಮುರಹರಿನಾಮ
ಪುರತ್ರಯಸಂಹರ ಹರಿನಾಮ
ಸುರಗಣಭೋಜನ ಹರಿನಾಮ
ಶರಣರ ಸಿರಿತಾನ್ಹರಿನಾಮ
ಪರತರ ಪಾವನ ಹರಿನಾಮ೧
ಪಾಪನಿವಾರಣ ಹರಿನಾಮ
ಶಾಪವಿಮೋಚನ ಹರಿನಾಮ
ತಾಪತ್ರಯಗಳ್ಹರ ಹರಿನಾಮ
ಗೋಪೇರಾನಂದ ಲೀಲ ಹರಿನಾಮ
ಕಪಾಲಧರನುತ ಹರಿನಾಮ
ಗೌಪ್ಯಕೆ ಗೌಪ್ಯದ ಹರಿನಾಮ ೨
ದುರಿತ ದಾರಿದ್ರ್ಯ ದೂರ್ಹರಿನಾಮ
ಪರಿಹರ ಜರಾಮರಣ್ಹರಿನಾಮ
ನರನ ಸಿರಿಯ ಭಾಗ್ಯ ಹರಿನಾಮ
ಸ್ಮರಿಪರ ಸುರತರು ಹರಿನಾಮ
ಅರಿವಿನ ಅರಮನೆ ಹರಿನಾಮ
ಪರಕ ಪರಮಸಿರಿ ಹರಿನಾಮ ೩
ನಿಜಮತಿ ಭಂಡಾರ ಹರಿನಾಮ
ಕುಜಮತಿ ಖಂಡನ ಹರಿನಾಮ
ಭಜಕರನಿಜಧೇನ್ಹರಿನಾಮ
ಭುಜಗಾದ್ರಿ ಪರ್ಯಂಕ ಹರಿನಾಮ
ದ್ವಿಜರಿಗಮೃತನಿಧಿ ಹರಿನಾಮ
ಅಜನಿಗುತ್ಪತ್ತಿ ಮಂತ್ರ ಹರಿನಾಮ ೪
ವೇದಗಳಾಧಾರ ಹರಿನಾಮ
ಸಾಧುಸಂತ ಪ್ರೇಮ ಹರಿನಾಮ
ಭೇದವಾದÀರಹಿತ್ಹರಿನಾಮ
ಸಾಧಿಸಲಸದಲ ಹರಿನಾಮ
ಆದಿ ಅನಾದಿವಸ್ತು ಹರಿನಾಮ
ಭೋಧ ಸ್ವಾದಸಾರ ಹರಿನಾಮ ೫
ಕಾಲನಿಗೆ ಕಾಲ ಹರಿನಾಮ
ಕೀಳರ ಎದೆಶೂಲ್ಹರಿನಾಮ
ಶೀಲರ ಜಪಮಾಲ್ಹರಿನಾಮ
ಲೋಲಗಾನಪ್ರಿಯ ಹರಿನಾಮ
ಕೀಲಿ ವೇದಾಂತದ ಹರಿನಾಮ
ಫಾಲನೇತ್ರಗೆ ಶಾಂತಿ ಹರಿನಾಮ ೬
ಪ್ರಳಯಕೆ ಅಳುಕದ ಹರಿನಾಮ
ಪ್ರಳಯ ಪ್ರಳಯಗೆಲುವ್ಹರಿನಾಮ
ಮಲಿನದಿ ಸಿಲುಕದ ಹರಿನಾಮ
ಚಲಿಸದ ನಿರ್ಮಲ ಹರಿನಾಮ
ಬೆಳಗಿನ ಬೆಳಗೀ ಹರಿನಾಮ
ಕುಲಮುನಿ ಪಾವನ ಹರಿನಾಮ ೭
ವಿಷಮಸಂಸಾರಖಡ್ಗ ಹರಿನಾಮ
ವ್ಯಸನಕಾಷ್ಠಕಗ್ನಿ ಹರಿನಾಮ
ವಿಷಕೆ ಮಹದಮೃತ ಹರಿನಾಮ
ಮಸಣಿಮಾರಿಧ್ವಂಸ ಹರಿನಾಮ
ಅಸಮಸುಖದ ಋಣಿ ಹರಿನಾಮ
ವಸುದೇಜೀವಜೀವಳ್ಹರಿನಾಮ೮
ಧರ್ಮಶಾಸ್ತ್ರದ ಗುಟ್ಟು ಹರಿನಾಮ
ಮರ್ಮ ತಿಳಿಸುವ ರಟ್ಟು ಹರಿನಾಮ
ಕರ್ಮ ಕಡಿಯುವ ಶಸ್ತ್ರ ಹರಿನಾಮ
ನಿರ್ಮಲಾನಂದ ಪದವೀ ಹರಿನಾಮ
ನಿರ್ಮಾಣ ನಿಜಜ್ಞಾನ ಹರಿನಾಮ
ಬ್ರಹ್ಮಕಿಟ್ಟಿಗುರಿ ಹರಿನಾಮ ೯
ಭವಗುಣಮರ್ದನ ಹರಿನಾಮ
ಭವನಿಧಿ ಸೇತುವೆ ಹರಿನಾಮ
ಭವನ ಭೀತಿಹರ ಹರಿನಾಮ
ರವಿಕುಲ ಪಾವನ ಹರಿನಾಮ
ಬುವಿತ್ರಯ ಪವಿತ್ರ ಹರಿನಾಮ
ಸಾಯುಜ್ಯಪದಸ್ಥಾನೀ ಹರಿನಾಮ ೧೦
ಸತ್ಯಕ್ಕೆ ಬಹು ನಿರ್ಕು ಹರಿನಾಮ
ಮಿಥ್ಯಕ್ಕೆ ಅನರ್ಥ ಹರಿನಾಮ
ನಿತ್ಯಕ್ಕೆ ಮಹಸುರ್ತು ಹರಿನಾಮ
ಚಿತ್ತಕ್ಕೆ ಚಿಜ್ಜ್ಯೋತಿ ಹರಿನಾಮ
ಅರ್ತವರಿಗೆ ಗುರ್ತು ಹರಿನಾಮ
ಭೃತ್ಯಜನರ ಮತ್ತು ಹರಿನಾಮ ೧೧
ಮಾಯಕ್ಕೆ ಪ್ರತಿಮಾಯ ಹರಿನಾಮ
ಮಾಯ ಕತ್ತಲುನಾಶ ಹರಿನಾಮ
ಕಾಯಕ್ಕೆ ಶೋಭಾಯ ಹರಿನಾಮ
ಭಾವಕ್ಕೆ ಪರಿಶುದ್ಧ ಹರಿನಾಮ
ತಾಯಿತಂದೆ ಜೀವಕ್ಹರಿನಾಮ
ಸೇವನ ಅಮೃತ ಹರಿನಾಮ ೧೨
ಪುಣ್ಯ ಶರಧಿಗೆ ಚಂದ್ರ್ಹರಿನಾಮ
ಮನ್ನಣೆ ಮೂಲೋಕದ್ಹರಿನಾಮ
ಧನ್ಯರಿಗೆ ಧನ್ಯ ಹರಿನಾಮ
ಉನ್ನತ ಸಾಮ್ರಾಜ್ಯ ಹರಿನಾಮ
ಮುನ್ನ ಕೈವಲ್ಯಪದ ಹರಿನಾಮ
ಸನ್ನಿಧಿ ವೈಕುಂಠ ಹರಿನಾಮ ೧೩
ನಿಗಮಕೆ ಸೊಬಗಿನ ಹರಿನಾಮ
ಸುಗುಣರೊಳ್ನೆಲೆಗೊಂಡು ಹರಿನಾಮ
ಅಗೋಚರ ಆಗಮಕ್ಹರಿನಾಮ
ಸೊಗಸುವ ಭಕ್ತರಲ್ಹರಿನಾಮ
ಅಗಜೇಶ ಪೊಗಳುವ ಹರಿನಾಮ
ಅಗಜೆಯು ಒಪ್ಪಿದ ಹರಿನಾಮ ೧೪
ವಿಮಲ ಗುಣಗಣ ಹರಿನಾಮ
ದಮೆ ದಯಾನ್ವಿತ ಹರಿನಾಮ
ಶಮೆ ಶಾಂತಿಮಂದಿರ ಹರಿನಾಮ
ಸುಮನಸ ಕಲ್ಪದ್ರುಮ ಹರಿನಾಮ
ನಮಿತ ಸುರಾದ್ಯರಖಿಲ ಹರಿನಾಮ
ಅಮಿತ ವಿಶ್ವರೂಪ ಹರಿನಾಮ ೧೫
ಮೂರು ಕಾಲದರಿವದ್ಹರಿನಾಮ
ಮೂರಾರಿಕ್ಕಡಿಗೈವುದ್ಹರಿನಾಮ
ಪಾರಪಂಚ ಪರುಷ್ಹರಿನಾಮ
ಸಾರಸೌಖ್ಯಾಂಬುಧಿ ಹರಿನಾಮ
ದಾರಿ ವೈಕುಂಠಕ್ಕೆ ಹರಿನಾಮ
ಸೇರಿ ದಾಸರನಗಲದ್ಹರಿನಾಮ ೧೬
ಭಕ್ತವತ್ಸಲ ಜಯ ಹರಿನಾಮ
ಮುಕ್ತಿದಾಯಕ ಜಯ ಹರಿನಾಮ
ಹತ್ತಾವತಾರ ಜಯ ಹರಿನಾಮ
ಸತ್ಯ ಶೀಲ ಜಯ ಹರಿನಾಮ
ನಿತ್ಯ ನಿರುಪಮ ಜಯ ಹರಿನಾಮ
ಕರ್ತು ಶ್ರೀರಾಮ ಜಯ ಹರಿನಾಮ ೧೭

 

೪೧೮
ಮೊರೆ ಕೇಳು ನೀನೆನ್ನ ಕರುಣದಿ ತವಪಾದ
ಪರಮಭಕ್ತಗಗೊಲಿಸದಿರು ದೇವ
ಚರಣದಾಸರ ಕಾವ ಸಿರಿಯ ಸಖಜೀವ ಪ
ಕ್ಷಿತಿಯೊಳು ಸತಿಸುತರತಿ ಮೋಹರತಿಯೊಳು
ಮತಿಶೂನ್ಯನೆನಿಸಧೋಗತಿಗೆಳೆಸದೆ
ಪತಿತಪಾವನ ನಿಮ್ಮ ಶ್ರುತಿಭೋದ್ವ್ಯಾಕ್ಯದಭಿ
ರತಿಯನೆನ್ನೊಡಲೊಳು ನೆಲೆಸೀಶಾ
ಹತಕಂಸ ಸುರತೋಷಾದ್ವಿತಿ ಪಂಚಶಿರ ನಾಶ ೧
ವಿಷಯ ವಾಸನದೇಳಸ್ವಿಷಮ ಸಂಸಾರವೆಂಬ
ಮುಸುಕಿದ ಮಡುವಿನೊಳ್ಮುಳುಗಿಸಿದೆ
ವಸುಧೆಯೊಳಸೆವ ಆ ಅಸಮಹಿಮನ ಪಾದ
ದಾಸರ ಸಂಗ ನೀಡ್ವಿಮಲಾಂಗ
ಅಸುರಕುಲ ಭಂಗ ಕುಸುಮಾಕ್ಷ ಕೃಪಾಂಗ ೨
ಮದನಕದನದಿ ಮುದಸುಖವಿಧಿಸಗ
ಲ್ಹೋದ ಸುದತಿಯಳ ನೆನೆವಂತೆ
ಪದುಮನಾಭನ ಪಾದ ಸದುಭಕ್ತಿ ಹಂಬಲ ಅಗ
ಲದಿರಿಸು ರಘುಕುಲಸೋಮ
ಸದುಭಕ್ತರ ಪ್ರೇಮ ಸುದಯನೆ ಶ್ರೀರಾಮ ೩

 

೪೧೯
ಮೊರೆ ಕೇಳು ಭಕುತಬಂಧು
ಮರೀಬೇಡ ಕರುಣಾಸಿಂಧು ಪ
ಮರೆಯಬಿದ್ದು ಸೆರಗನೊಡ್ಡಿ
ನಿರುತ ನಿಮ್ಮ ಚರಣ ಭಜಿಪೆ
ಶರಣಾಗತರ ವರಪ್ರದಾತ
ನಿರುತ ಪರಿಪಾಲಿಸಭವ ೧
ಶುದ್ಧ ನಿಮ್ಮ ಭಕ್ತನೆನಿಸೊ
ಬದ್ಧನೆನಿಸಿಬೇಡ ದೇವ
ಬಿದ್ದು ಬೇಡ್ವೆ ನಿಮ್ಮ ಪದಕೆ
ತಿದ್ದಿಕಾಯೋ ಎನ್ನ ತಪ್ಪ ೨
ತರಳನ್ಹೊರೆದಿ ಭರದಿ ಬಂದು
ನರನ ಕಾಯ್ದಿ ಧುರದಿ ನಿಂದು
ಪರಮಸಿದ್ಧಿ ನೀಡು ಈಗ
ಚರಣದಾಸಗೆ ವರ ಶ್ರೀರಾಮ ೩

 

೫೭೪
ಮೋಹಪರವಶನಾಗಿ ಬಳಲುವುದ್ಯಾತಕೊ
ಮಹದಗ್ನಿಯೊಳು ಬಿದ್ದು ದಹಿಸುವ ದೇಹಕ್ಕೆ ಪ
ರಕ್ತ ಮಜ್ಜ ಮಾಂಸ ಪಿತ್ತ ವಾತ ಶ್ಲೇಷ್ಮ
ಅಸ್ಥಿ ಚರ್ಮ ಸ್ನಾಯುವಿನಿಂದ ಯುಕ್ತಮಾದ ದೇಹಕ್ಕೆ ೧
ಮಲಮೂತ್ರ ಸೂಸಿಹರಿದ ಹೊಲಸಿನ ನವದ್ವಾರ
ಬಲು ಹೇಯ ದುರ್ಗಂಧ ಮಲಿನದ ದೇಹಕ್ಕೆ ೨
ಧಾತ್ರಿ ಈರೇಳಕ್ಕೆ ಸೂತ್ರ ಶ್ರೀರಾಮನ
ಖಾತ್ರಿಯಿಲ್ಲದ ಅಪಾತ್ರ ಈ ದೇಹಕ್ಕೆ ೩

 

ಸಿರಿಯ ರಾಮನ ಹಿರಿಯ ಸೊ
೧೫೬
ಯಕ್ಷಿಣೀ ಸರ್ವಲಕ್ಷ್ಮಿಣೀ
ರಕ್ಷಿಸು ಮಗನ ಅಪೇಕ್ಷವ ಪೂರೈಸಿ ಪ
ಬರುವಂಥ ಕಂಟಕ ಸಕಲಪೂರ್ಣ
ಕರುಣವಿಟ್ಟು ಮಾಡು ಸಫಲ ತ್ರಾಣಿ
ಕರುಣದಿ ಬಡತನವಖಿಲ ಜಾಣೆ
ಪರಿಹರಿಸಿ ಕೊಡು ಎನಗೆ ಸುಫಲನ ಆಹ
ಮೊರೆಯಿಟ್ಟು ಬೇಡುವೆ ಪರಮಪಾವನೆ ಎನ್ನ
ಇರವ ತೀರಿಸು ತಾಯಿ ಸರುವ ಸಿದ್ಧಾಂತಳೆ ೧
ಮನುಮುನಿಗಳಿಗಾದಿ ಒಲುಮೆ ನೀನು
ಘನ ಸಿದ್ಧಿನಿತ್ತು ಸದ್ಧರ್ಮಿ ಜಾಣ
ರೆನಿಸಿದಿ ದಯದಿ ಸುಪ್ರೇಮಿ ಮಾಣ
ದನುಪಮಮತಿ ನಿಜಮಹಿಮೆ ಆಹ
ವನರುಹ ಬ್ರಹ್ಮಾಂಡ ಘನ ಘನ ಎನುವಂಥ
ಅನುಪಮಪದದೆನ್ನ ಕನಿಕರದಿಂ ಕಾಯೆ ೨
ಸರುವ ಸಿಧ್ದಿಯ ನೀಡಿ ಕರುಣಿ ಎನ್ನ
ಸರುವ ಶುದ್ಧವೆನಿಸೆ ಜನನೀ ಪೂರ್ಣೆ
ಸರ್ವಜ್ಞೆ ಪಾಲಿಸೆ ನಿಪುಣೆ ವಾಣಿ
ಸರ್ವಮಂಗಲಿ ಸುಪ್ರವೀಣೆ ಆಹ
ಸರ್ವಶಕ್ತ ಜಗದಾರ್ಯ ಶ್ರೀರಾಮನ
ಭಾರ್ಯೆ ಸಕಲ ಐಶ್ಚರ್ಯದಿಂ ಪೊರೆಯೆನ್ನ ೩

 

೧೭೮
ಯತಿರಾಜ ಯತಿರಾಜ ಮಾಧವೇಂದ್ರ
ಗುರು ಸಾರ್ವಭೌಮ ಪ್ರಭು ಪ
ಧಾರುಣಿಯೊಳಗಪಾರವಾದ ವಿದ್ಯಾ
ವಾರಿಧಿಚಂದ್ರಮ ವೈರಾಗ್ಯಮೂರುತಿ೧
ಶಿಷ್ಟಶಿರೋಮಣಿ ಕಟ್ಟಳೆಯಿಂದ ಬಲು
ದಿಟ್ಟತನದಿ ಯತಿಪಟ್ಟವೇರಿದನೀತ ೨
ಭೇದದಿಂದತಿಶಯ ವಾದಿಪ ಮಹದು
ರ್ವಾದಿಗಳನು ಗೆದ್ದು ನೀ ಸಾಧಿಸಿದಧಿಕಾರ ೩
ಅಧಮರ ಉಪಟಳಕೆದೆಪೊಡೆಯದೆ ನಿಜ
ಸದಮಲ ವೈಕುಂಠಪದವಿಗೆ ನಡೆದನು ೪
ಮಧ್ವಶಾಸ್ತ್ರ ಪ್ರಸಿದ್ಧ ಪದ್ದತಿಗಳ
ಸಿದ್ಧಿಪಡೆದು ಪರಿಶುದ್ಧನೆನಿಸಿಕೊಂಡ ೫
ಗುರುವೆಂದೆನಿಸಿ ಭೂಸುರರನುದ್ಧರಿಸೀತ
ಸ್ಥಿರವಾಗಿ ನಿಂತನು ಮೆರೆವ ಬುದ್ಧಿನ್ನಿಯೊಳು ೬
ಪರಮಭಕ್ತಿಯಿಂದ ನಿರುತ ಸೇವೆಗೈದು
ವರವ ಬೇಡಿರೆಲೋ ಭರದಿ ಕೊಡುವ ಮೆಚ್ಚಿ ೭
ಆಸೆರಹಿತನನುಮೇಷ ಪೂಜಿಸಿರೊ
ದೋಷ ದಾರಿದ್ರ್ಯವ ನಾಶಮಾಡುವನು ೮
ಸ್ವಾಮಿ ಕೃಷ್ಣ ಶ್ರೀರಾಮನಾಮಾಮೃತ
ಪ್ರೇಮದಿಗರೆಯುವ ಕಾಮಧೇನು ಸತ್ಯ ೯

 

೪೨೦
ಯಾಕೆ ಕೆಡುವೆ ಖೋಡಿ ಮನವೆ ಪ
ಲೋಕದಿರವ ನೋಡಿ ನೂಕುನುಗ್ಗಾಗಿ
ಕಾಕುಗುಣದಿ ಯಮಲೋಕ ಪಡೆವುದವಲೋಕನ ಮಾಡಿ ಅ.ಪ
ಭ್ರಮಿಸಬಾರದ ಭ್ರಮಿಸಿ ಮನಸೆ
ಕ್ರಮಗೆಟ್ಟಾಚರಿಸಿ
ಶಮೆದಮೆ ಅರಿಯದೆ ಸುಮನರ ನೋಡದೆ
ಸುಮ್ಮನಳಿವೆ ಈ ಸಮಯ ಸಿಗುವುದೇ೧
ತಂತು ತಿಳಿಯದ್ಹೋದಿ ಜಗತ್ತಿನ
ಚಿಂತನೆಗೊಳಗಾದಿ
ಸಂತಸ ವಹಿಸದೆ ಸಂತರ ತಿಳಿಯದೆ
ಅಂತರವರಿಯದೆ ಅಂತ್ಯಕೀಡಾದಿ೨
ಪಾಮರ ನೀನಾದಿ ನಾಶನ
ತಾಮಸ ಅಳಿದ್ಹೋದಿ
ಸ್ವಾಮಿಯೊಳಾಡದೆ ಕ್ಷೇಮವ ಪಡೆಯದೆ
ನಾಮಭಜಿಸಿ ಶ್ರೀರಾಮನ ಕೂಡದೆ ೩

 

೪೨೧
ಯಾಕೆ ಜೀವನೆ ಒಣ ಉಸಾಬರಿ ನಿನ
ಗ್ಯಾಕೆ ಲೋಕದ ಸುಳ್ಳೆ ಕಿರಿ ಕಿರಿ ಪ
ಲೋಕನಾಥನ ಪಾದ ಬಿದ್ದು ಮೊರಿ ಪರ
ಲೋಕ ಪದವಿ ಸಂಪಾದಿಸಿ ಮೆರಿ ಅ.ಪ
ಇಷ್ಟಬಂಧು ಸತಿಸುತರೆಲ್ಲ ನೀನು
ಬಿಟ್ಟು ಹೋಗ್ವಾಗ್ಯಾರು ದಿಕ್ಕಿಲ್ಲ
ಎಷ್ಟು ಸಂಪಾದಿಸಿದ ಗಳಿಕೆಲ್ಲ ನೀನು
ಕಟ್ಟಿಕೊಂಡು ಸಂಗಡೊಯ್ಯೋಣಿಲ್ಲ
ಕುಟ್ಟಿ ಯಮದೂತರು ಕಟ್ಟಿ ಎಳೆಯುವಾಗ ನೀ
ಗಟ್ಟಿ ಮಾಡಿದ್ದು ಎಲ್ಲ ಬಟ್ಟಬೈಲೆ ೧
ಯಾರು ಮೆಚ್ಚಿದರು ಫಲವಿಲ್ಲ ನಿನ
ಗ್ಯಾರು ಮುನಿದರೇನು ಕೆಡುಕಿಲ್ಲ
ನೀರಮೇಲಿನ ಲಿಪಿಯಂತೆಲ್ಲಜಗ
ಸಾರ ಸುಳ್ಳು ಖರೆವೊಂದಿಲ್ಲ
ತೋರುವ ಬಿಸಿಲಿನ ವಾರಿಯಂತೆ ಮಾಯಾ
ಕಾರ ತಿಳಕೋ ತೋರುವುದೆಲ್ಲ ೨
ಬಂದಿ ಇಲ್ಲಿಗೆ ಬಹಳ ಲಗುಮಾಡಿ ಮತ್ತೆ
ಮುಂದೆ ಹೋಗುವುದೆಲ್ಲಿ ತಿಳಿ
ಮಂದನಾಗದೆ ಚಾಚಿ ಜ್ಞಾನಕುಡಿ ಅಲ್ಲಿ
ನಿಂದು ನೋಡು ನಿಜ ಹುಡುಕಾಡಿ
ಇಂದಿನ ಸಮಯವು ಮುಂದೆ ಸಿಗುವುದೇನೋ
ತಂದೆ ಶ್ರೀರಾಮಪಾದಕ್ಹೊಂದಿ ಮುಕ್ತಿಯ ಪಡಿ ೩

 

೫೭೫
ಯಾಕೆ ನಿನಗೆ ಲೋಕದುಸಾಬರಿ ಜಗ
ದೇಕನಾಥನಿಗೆ ಬೀಳು ಮೊರೆ ಪ
ಸಾಕುಯೆಂದು ಲೋಕೈಕನ ಬೇಡಿ ನಡಿ
ಏಕಚಿತ್ತದಿ ವೈಕುಂಠದಾರಿ ಅ.ಪ
ಸತ್ಯಸಂಗವೆಂಬ ಛತ್ತರ್ಹಿಡಿ ಪಥ
ಚಿತ್ತ ಶುದ್ಧಿಯಿಂದ ಗುರ್ತುಮಾಡಿ
ಭಕ್ತವತ್ಸಲನ ಸತ್ಯ ಬಿರುದುಗಳ
ಭಕ್ತಿಯಿಂ ಕೂಗುತ್ತ ನಿರ್ತ ತುರ್ತುನಡಿ ೧
ವನಜನಾಭನ ಕಥೆ ಶ್ರವಣಮಾಡಿ ಬಿಡ
ದನುಭವದೊಳು ನಿಜಮರ್ಮ ಹುಡುಕಾಡಿ
ಮನಸಿಜ ಜನಕನ ಚರಣದಾಸರ ಕೂಡಿ
ಘನತರ ಪರಲೋಕ ಪದವಿ ಪಡಿ ೨
ಮಾನ ಅಭಿಮಾನವೆಲ್ಲ ಸಮ ನೋಡಿ ನಿನ್ನ
ನಾನಾ ಕಲ್ಪನೆಗಳ ಕಡೆಮಾಡಿ
ಜ್ಞಾನಜ್ಯೋತಿ ಹಚ್ಚಿ ಧ್ಯಾನದೃಷ್ಟಿ ಚಾಚಿ
ಜಾಣ ಶ್ರೀರಾಮನ ಖೂನ ಹಿಡಿ ೩

 

೪೨೨
ಯಾಕೆ ನಿನ್ನವರೊಳು ದೂರದೃಷ್ಟಿ ಪ್ರಭುವೆ
ಲೋಕಬಂಧು ದಯಾಸಿಂಧು ದಾಸಜನರರಸ ಪ
ಭ್ರಷ್ಟನಿವ ನಿತ್ಯದಲಿ ಮುಟ್ಟಿ ಸ್ನಾನಗೈಯನೆಂದು
ಬಿಟ್ಟಿ ಬೇಸರ ಮಾಡಿ ಸಿಟ್ಟಗೆದ್ದಿರುವ್ಯೋ
ಪುಟ್ಟಿ ಜತೆಗೂಡಿಲ್ಲೆ ಬಿಟ್ಟು ಅಗಲುವ ದೇಹ
ಎಷ್ಟು ತೊಳೆದರೇನೆಂದು ಗಟ್ಟಿಮಾಡಿಬಿಟ್ಟೆ ೧
ಕಡುಹೀನ ಕುಲಯೋಗ್ಯ ಮಡಿ ಅರಿಯ ಇವನೆಂದು
ಕಡುಗೋಪದಿಂದೆನ್ನ ನುಡಿಕೇಳದಿರುವ್ಯೋ
ಮುಡಿಚೆಟ್ಟಿನಲಿ ಬಂದು ಕಡುಹೊಲಸು ತುಂಬಿರ್ದ
ಜಡದೇಹಕ್ಯಾತರ ಮಡಿಯೆಂದು ಬಿಟ್ಟೆ ೨
ನಿತ್ಯನೇಮವರಿಯದ ಅತ್ಯನಾಚಾರಿಯೆಂದು
ನಿತ್ತರಿಸದೆನ್ನ ಮುಖವೆತ್ತಿ ನೋಡದಿರುವ್ಯೋ
ಪಿತ್ತ ರಕ್ತ ಮಜ್ಜ ಮಾಂಸ ಮತ್ತೆ ಮಲ ಮೂತ್ರ ಕ್ರಿಮಿ
ಹೊತ್ತ ಭಾಂಡಿದೆಂದರಿತು ನಿತ್ಯನೇಮ ಬಿಟ್ಟೆ ೩
ಸತ್ಯಕರ್ಮದ ಮಹಿಮೆ ಗೊತ್ತಿಲ್ಲದಧಮ ಮಹ
ಧೂರ್ತ ಪಾತಕಿಯೆಂದು ಮರ್ತೆನ್ನಬಿಟ್ಟ್ಯೋ
ಎತ್ತನೋಡಲು ನೀನೆ ಸುತ್ತಿ ವ್ಯಾಪಿಸಿ ಜಗವ
ಹೊತ್ತು ಆಳುವುದರಿತು ಸತ್ಕರ್ಮ ಬಿಟ್ಟೆ ೪
ನೀನೆ ನಿರ್ಮಿಸಿದಭವ ನಾನಾಲೋಕ ವೇದಶರ್ಮ
ನೀನೆ ವಿಶ್ವಾತ್ಮಕನೈ ನೀನೆ ಸೂತ್ರಧಾರಿ
ಧ್ಯಾನದಾಯಕ ಮಮಪ್ರಾಣ ಶ್ರೀರಾಮ ನಿನ್ನ
ಧ್ಯಾನವೊಂದೆ ಅಧಿಕೆಂದು ನಾನಾಕರ್ಮ ಮರೆದೆ ೫

 

೬೪೬
ಯಾಕೆ ಸುಮ್ಮನೆ ಇದ್ದೆಪ್ಪ ಬಂದು
ಜೋಕೆ ಮಾಡು ಎನ್ನ್ಹಡೆದಪ್ಪ ಪ
ಸಾಕಾರವಿಲ್ಲದ ಭವಕಪ್ಪ ಎನ್ನ
ನೂಕಬಾರದಿತ್ತೆನ್ನಪ್ಪ ಅ.ಪ
ಕೇಡಿನುಗಮ ಪ್ರಪಂಚಪ್ಪ ಇದು
ಮಾಡಿಟ್ಟ ಮಹ ಕಾಡಡವ್ಯಪ್ಪ
ಮೋಡಿ ಇಂದ್ರಜಾಲ ಛಾಯಪ್ಪ ತುಂಬಿ
ಮಾಡಿದ್ಯೋ ಬಲು ಮಂಗಮಲಕಪ್ಪ
ಗಾಢಾಂಧಾಕಾರಮಯ ಕಾಳಪ್ಪ ಎನ್ನೀ
ಕೇಡಿನಿಂದುಳಿಸು ಸದಾನಂದಪ್ಪ ೧
ತುಂಬಿ ಪ್ರಪಂಚವೆಂಬ ಬೈಲಪ್ಪ ಜಡ
ಬೊಂಬೆ ಕುಣಿಸುವಿ ಬಲು ಚಂದಪ್ಪ
ನಂಬಿದವರ ಅಂತರಂಗಪ್ಪ ನಿನ್ನ
ಕಾಂಬುವರರಾರು ಮಹಿಮೆ ಮೇಲಪ್ಪ
ನಂಬಿದೆ ನಿನ್ನ ಪಾದಪದುಮಪ್ಪ ಎನ
ಗಿಂಬುಪಾಲಿಸು ನಿಜ ಧರ್ಮಪ್ಪ ೨
ಧಾತ್ರಿ ಈರೇಳಕ್ಕೆ ರಾಜಪ್ಪ ಜಗ
ಸೂತ್ರಧಾರ ನೀನೆ ಸತ್ಯಪ್ಪ
ಭ್ರಾತೃ ಬಂಧು ನೀನೆ ಶರಣಪ್ಪ ಪಿತ
ಮಾತೃ ನೀನೆ ಎನ್ನ ಪಾಲಪ್ಪ
ಪಾತ್ರನೆನಿಸು ದಾಸಸಂಗಪ್ಪ ನಿನ್ನ
ಖಾತ್ರಿ ಕೊಡೆನಗೆ ಶ್ರೀರಾಮಪ್ಪ ೩

 

೫೭೬
ಯಾಕೆ ಸುಮ್ಮನೆ ಪೇರಿ ಹೊಡೆಯುವಿ
ಕಾಕು ದುರ್ಭವ ಚಕ್ರದಿ ಪ
ಲೋಕದಿರುವು ನಿನಗೇನು ಸ್ಥಿರವೆಲೋ
ಕಾಕುಜೀವ ವಿಚಾರ ಮಾಡದೆ ಅ.ಪ
ಕಾಕುಸಿರಿಗೆ ಕೈಹಾಕಿ ಬಲು ಬಲು
ಶೋಕದಬ್ಧಿಲಿ ಮುಳುಗಿದ್ಯೊ
ನೂಕಿ ಯಮನರೊದೆದು ಎಳೆವಾಗ
ಲೋಕಸಂಪದ ನಿನ್ನ್ಹಿಂದೆ ಬರುವುದೆ ೧
ನಾನು ಯಾರೆಂದೆಂಬ ಖೂನ ಸು
ಜ್ಞಾನ ವಿಡಿದು ತಿಳಿಯದೆ
ಶ್ವಾನಸೂಕನಂದದಿ ಮಹ
ಹೀನ ಬವಣೆಯೊಳ್ಬೀಳುತ ೨
ಗೋತಗೋಜಲಕುಣಿ ಈ ಸಂಸಾರ
ರೋತಿ ಹೊಲಸಿಕ್ಕಿ ನಾರುವ
ನೀತಿಗೆಟ್ಟದರೊಳಗೆ ಬಿದ್ದೆಮ
ಭೀತಿಯಿಂ ಬಳಲುವುದೇನೆಲೊ ೩
ಪೂರ್ವಪುಣ್ಯದಿಂ ಸಿಕ್ಕ ಈ ಮಹ
ಪರ್ವಕಾಲ ಸಮಯರಿಯದೆ
ದುರ್ವಿಕಾರದಿಂ ಸರ್ವ ಕಳೆಯಲು
ದೊರೆವುದೇ ಪುನ:ಬಯಸಲು ೪
ತೋರಿ ಇಂದ್ರಜಾಲದಂದದಿ
ಹಾರಿಹೋಗುವ ಮಾಯ ನೆಚ್ಚಿ
ಸಾರತರ ಮೋಕ್ಷವನು ಕರುಣಿಪ
ಶ್ರೀರಾಮನ ನಂಬದೆ ೫

 

೬೪೭
ಯಾಕೊಲ್ಲ ಯಾಕೊಲ್ಲ ನಲ್ಲೆ ಸಂಪದ ಇವ
ಯಾಕೊಲ್ಲ ಯಾಕೊಲ್ಲ ಪ
ಅಲ್ಲಬೆಲ್ಲವನೊಲ್ಲ ನಲ್ಲೆಯಾದರವೊಲ್ಲ
ಒಲ್ಲನ್ಯಾಕವ್ವ ನಲ್ಲ ಇಲ್ಲದದಕೆ ಒಲ್ಲ ಅ.ಪ
ಮೇಲು ಮಾಲು ಒಲ್ಲ ನೀಲದುಪ್ಪರಿಗೊಲ್ಲ
ಶಾಲು ಸಕಲಾತೊಲ್ಲ ಶೀಲಮಂಚವನೊಲ್ಲ
ಹಾಲು ಅಮೃತ ಉಂಡು ವೀಳ್ಯ ಮೆಲ್ಲಲು ಒಲ್ಲ
ಬಾಲೆ ಯಾಕೊಲ್ಲ ಕೈಯೊಳಿಲ್ಲದದಕೆ ಒಲ್ಲ ೧
ರತ್ನದುಂಗುರ ಒಲ್ಲ ಮುತ್ತಿನ್ಹಾರ ಒಲ್ಲ
ಪುತ್ಥಳೀ ಚಿನ್ನ ಒಲ್ಲ ಕಸ್ತೂರಿಗಂಧ ಒಲ್ಲ
ಉತ್ತಮ ಹಯವನ್ನು ಹತ್ತಿ ಮರೆಯ ಒಲ್ಲ
ಮಿತ್ರೆ ಯಾತಕೊಲ್ಲ ಹತ್ತಿರಿಲ್ಲದದಕೊಲ್ಲ೨
ಸತಿಯ ಸುತರನೊಲ್ಲ ಅತಿಭಾಗ್ಯವನೊಲ್ಲ
ಕ್ಷಿತಿ ಅಧಿಕಾರನೊಲ್ಲ ಛತ್ರ ಚಾಮರನೊಲ್ಲ
ಸತತ ಸೌಭಾಗ್ಯನೊಲ್ಲ ಮತಿಮಾನ್ಯವನೊಲ್ಲ
ಮತಿಯುತೆ ಯಾತಕೊಲ್ಲ ಗತಿಯಿಲ್ಲದದಕೊಲ್ಲ ೩
ಭೋಗಭಾಗ್ಯ ಒಲ್ಲ ರಾಗರಚನೆಯೊಲ್ಲ
ಭೋಗದಾಸೆಗೆ ತಲೆದೂಗಿ ಒಲಿಯ ಒಲ್ಲ
ತೂಗುಮಂಚವೇರಿ ತೂಗಿಸಿಕೊಳ್ಳಲೊಲ್ಲ
ಸುಗುಣೆ ಯಾಕೊಲ್ಲ ಕೈಸಾಗದದಕೆ ಒಲ್ಲ ೪
ಜಾಣತನದಿ ಧನಧಾನ್ಯಗಳಿಸಲೊಲ್ಲ
ಜಾಣ ಜನರ ಕೂಡಿ ಮಾನ ಪಡೆಯಲೊಲ್ಲ
ಜಾಣೆ ಏನಾಶ್ಚರ್ಯ ಏನು ಯಾಕೆ ಒಲ್ಲ
ಪ್ರಾಣೇಶ ಶ್ರೀರಾಮ ತ್ರಾಣಕೊಡದದಕೊಲ್ಲ ೫

 

೬೪೮
ಯಾತ್ರಕ್ಕೆ ಬಂದಿರ್ದೆನೋ ಭುವನ
ಯಾತ್ರ ಮಾಡುವೆನು ಪ
ಧಾತ್ರಿ ಈರೇಳಕ್ಕೆ ಸೂತ್ರಧಾರನ ಕೃಪಾ
ಪಾತ್ರನಾಗಿ ಪವಿತ್ರನಾಗುವೆನು ಅ.ಪ
ದೇಶ ತಿರುಗುವೆನು ದೇಹ್ಯದ
ವಾಸನೆ ತೊಡೆಯುವೆನು
ಆಶಾಪಾಶ ನೀಗಿ ದೋಷರಹಿತನಾಗಿ
ದಾಸಜನಕೆ ಬಾಗಿ ಸಂತೋಷ ಪಡೆಯುವೆನು ೧
ಪೃಥ್ವಿ ತಿರುಗುವೆನು ಹುಡುಕಿ
ಸತ್ಯರ ಕಾಂಬುವೆನು
ನಿತ್ಯನಿರ್ಮಲ ಹರಿಭಕ್ತಿ ಕವಚ ತೊಟ್ಟು
ಮತ್ತೆ ಸಾವ್ಹುಟ್ಟುವ ಕುತ್ತ ಗೆಲಿಯುವೆನು ೨
ಕ್ಲೇಶವ ತರಿಯುವೆನು ಮಾಯ
ಮೋಸವ ಗೆಲಿಯುವೆನು
ದಾಸಜನರ ಪ್ರಾಣೇಶ ಶ್ರೀರಾಮನ
ದಾಸನಾಗಿ ಮುಕ್ತಿ ಆಸನೇರುವೆನು ೩

 

೪೨೩
ಯಾವ ಸುಖ ಇದು ದಾವ ಸುಖ ಮನುಜ ಶರೀರದ್ದು ಪ
ದಾವ ಸುಖ ಜಾವ ಜಾವಕೆ ಮಹರೋಗದೊಳಗೆ ಬಿದ್ದು
ನೋಯುತಲಿರುವುದು ಅ.ಪ
ಕೀವುರಕ್ತ ಕೊಂಡ ದಾವ ಸುಖ ಇದು
ಹೇಯವಾಲದ ಭಾಂಡದ್ದಾವ ಸುಖ
ಕಾಯವೆನಿಸಿಕೊಂಡು ಸಾವುಕುಣಿಗೆ ಬಿದ್ದು
ಮಾಯವಾಗುತಲಿಹ್ಯದಾವ ಸುಖ ೧
ಜಡಮತಿಶರೀರದ್ದು ದಾವ ಸುಖ ಇದು
ಕೆಡುವ ತನುವು ನಿಜ ದಾವ ಸುಖ
ಬುಡವು ಮೇಲಾಗಾಡಿ ಕಡೆಗೆ ಒಂದುದಿನ
ಮಡಿದು ಹೋಗುವುದುದಾವ ಸುಖ ೨
ಪಾಮರ ರೂಪಿಂದ್ಯಾವ ಸುಖ ಇದು
ನೇಮವಲ್ಲೊಂದಿನ ದಾವ ಸುಖ
ಕಾಮಿತವನು ನೀಗಿ ಸ್ವಾಮಿ ಶ್ರೀರಾಮನ
ಪ್ರೇಮ ಸಂಪಾದಿಸಲಾಗ ಸುಖ ೩

 

೫೭೮
ಯೋಗಿಯಾಗೆಲೆ ಇಲ್ಲ ತ್ಯಾಗಿಯಾಗೆಲೆ ಪ
ಹಾಗೂ ಹೀಗೂ ಆಗದೆ ಭವ
ರೋಗಿಯೆನಿಸದರೆಲೆ ಗೂಗಿ ಅ.ಪ
ಮಾತುಮಾತಿಗೆ ನೀತಿವಚನ
ಆತುರಕ್ಕಾಗಿ ಕೂಗಿ ಕೂಗಿ
ಪಾತಕದೊಳಗೆ ಬಿದ್ದು ಯಮನ
ಯಾತನಕಿಳಿಯಬೇಡ ಭವಿ ೧
ಕಾವಿಕಪನಿಲಾಂಛನ್ಹೊದ್ದು
ಸೇವೆಗೊಂಡು ಭಾವಗೆಟ್ಟು
ಸಾವುಹುಟ್ಟು ಬಲೆಗೆ ಬಿದ್ದು
ನೋಯಬೇಡೆಲೆ ನೀಚಮತಿ೨
ನಿತ್ಯ ನಿತ್ಯವೆನಿಪ ಪರ
ಮಾರ್ಥತತ್ತ್ವಗುರ್ತುಯಿಲ್ಲದೆ
ಕತ್ತೆಯಂತೆ ಒದರಿ ವ್ಯರ್ಥ
ಮೃತ್ಯುಹೊಂದ ಬೇಡ ಮೂರ್ಖ ೩
ಸೋಗುಹಾಕಿ ಸಾಧುಯೆನಿಸಿ
ಕಾಗೆಯಂದದಿ ತೀರ್ಥಮುಳುಗಿ
ಗೂಗೆಯಂತೆ ಜಾಗರ ಮಾಡಿ
ಪೋಗದಿರಲೆ ನರಕಕಧಮ ೪
ಭೂಮಿ ಪ್ರೇಮ ತಾಮಸ ನೀಗಿ
ಕಾಮ ಕ್ರೋಧ ಲೋಭ ಜೈಸಿ
ಭೂಮಿತ್ರಯಂಗಳೊಡೆಯ ಶ್ರೀ
ರಾಮನಾಮ ಭಜಿಸಿ ಮುಕ್ತನಾಗೆಲೊ ೫

 

೧೦೨
ರಂಗಧ್ಯಾನ ಶ್ರೀರಂಗನ ಧ್ಯಾನ ಮುಕ್ತಿಗೆ ಸಾಧನ
ಮಂಗಲಮೆನಿಪ ಅಂಗಕೆ ಶೋಭೆ ಪ
ಮನುಮುನಿ ಸುರಗಣ ಮನಮಂದಿರನ
ನೆನವನುದಿನದಲಿ ಮನಕಚಲಾನಂದನ ೧
ಉರಗಶಯನ ಗಿರಿಧರ ಮುರಾರಿ
ಚರಣಸ್ಮರಣ ಸ್ಥಿರ ಪರಲೋಕಕರವಶ ೨
ಆ ಮಹಾಮಹಿಮ ಸ್ವಾಮಿ ಶ್ರೀರಾಮ
ನಾಮಭಜನ ಸದಾ ಕ್ಷೇಮಸಂಪದ ಸುಖ ೩

 

೪೨೫
ರಂಗಯ್ಯ ನಿನಗಿದು ಸರಿಯೇನು ಹರಿಯೆ ಪ
ಮಂಗಳಮಹಿಮ ಕೃಪಾಂಗ ತವ ಪಾದಾಂತ
ರಂಗದಿ ಭಜಿಪರ್ಗೆ ಭಂಗವೆ ಜಗದೊಳು ಅ.ಪ
ಪರಿಪರಿ ಮೊರೆಯಿಟ್ಟು ಸೆರಗೊಡ್ಡಿ ಚರಣದಿ
ನಿರುತದಿಂ ಬೇಡಲಮರೆ ಕಾಯದಿರುವರೆ ೧
ದೀನದಯಾಳುವೆ ನೀನೆ ಗತಿಯೆನ್ನುತ
ಧ್ಯಾನಿಪ ಬಡವರ ಮಾನ ಕಾಯದಿಹ್ಯರೆ ೨
ನಿನ್ನ ಬಿಟ್ಟರೆ ಅನ್ಯಯಿನ್ನಿಲ್ಲ ಜಗದಿ
ಎನ್ನ ಪೋಷಿಪ ಭಾರ ನಿನ್ನದೇ ಶ್ರೀರಾಮ ೩

 

೪೨೪
ರಕ್ಷಿಸು ಎನ್ನನು ಪಕ್ಷಿವಾಹನ ಪಾಂಡು
ಪಕ್ಷನೆ ತವ ಭಕ್ತಿಯಗಲಿಸದೆ
ಲಕ್ಷಿಸಿ ಧ್ರುವನೊರೆದೆ ಲಕ್ಷ್ಮೀಶ ಮರೆಹೋದೆ ಪ
ಕ್ಷಿತಿಯೊಳು ನಾಂ ಬಲು ಚತುರನೆನಿಪದು
ರ್ಮತಿಯಿಂದ ಕಷ್ಟಕ್ಕೆ ಗುರಿಯಾದೆ
ರತಿಪತಿಪಿತ ಎನ್ನ ಅತಿತಪ್ಪು ಮನ್ನಿಸಿ
ಗತಿಗಾಣಿಸಿತ್ವಾಕ್ಯ ಅಖಿಲೇಶ
ಯತಿನುತ ಸುರಪೋಷ ಹತಭವ ಗುಣಕೋಶ ೧
ಮಂದಮತಿಯತನದಿಂದ ನಾ ಮಾಡಿದ
ಹಿಂದಿನ ಅವಗುಣವೆಣಿಸದೆ
ಮುಂದೆ ನಿಮ್ಮಯ ಪಾದ ಎಂದೆಂದು ಮರೆಯದೆ
ಬಂಧುರಭಕ್ತಿಯ ವರ ನೀಡೊ
ಕಂದನೊಳ್ದಯಮಾಡೊ ತಂದೆ ನೀ ಕಾಪಾಡೊ ೨
ದುರುಲನೆನಿಸಿ ಬಲು ಧರಣಿಯೊಳ್ತಿರುಗುವ
ಮರುಳುಗುಣವನೆನ್ನದೀಡ್ಯಾಡೊ
ಹರಿಯ ದಾಸರ ಸಂಗ ಕರುಣದಿ ದೊರಕಿಸಿ
ಪರಿಶುದ್ಧ ಮಾಡೆನ್ನ ಹೇಯ ಜನುಮ
ಶರಣಜನರ ಪ್ರೇಮ ಕರುಣಿಯೆ ಶ್ರೀರಾಮ ೩

 

೬೪೯
ರತುನ ಸಿಕ್ಕಿದೆ ತಮ್ಮ ಇದು ಬಹು
ಜತನೆಲೋ ನಿಸ್ಸೀಮ ರತುನ ಸಿಕ್ಕಿದೆ ಪ
ನಿನ್ನ ಸುಕೃತದ ಫಲದಿಂದ
ಪತಿತಪಾವನ ಸಿರಿಪತಿ ವಿಮಲನಾಮ ಅ.ಪ
ದುರಿತ ದಾರಿದ್ರ್ಯವಿಲ್ಲದ ಈ ರತ್ನದಿಂ
ಜರಮರಣಂಟಿಲ್ಲ
ನರಹರಿ ವರಪಾದ ಶರಣರು ಪರಕ್ಕೆ
ಪರಮ ಗೌಪ್ಯದಿಂದ ಶೋಧಿಸುತಿರುವಂಥ ೧
ತಾಪತ್ರಯಗಳಿಲ್ಲ ಈ ರತ್ನದಿಂ
ಪಾಪ ಶಾಪವಿಲ್ಲ
ಪಾಪಿಯಮದೂತರ ಲೋಪಗೈದಯ ಭಯ
ಆಪಾರ ಪರಲೋಕ ಸೋಪಾನಕ್ಹಚ್ಚುವ೨
ಧರ್ಮಕೆ ಕೊಡು ನದರ ಈ ರತ್ನದ
ಮರ್ಮ ತಿಳಿಯೆ ಚದರ
ಬ್ರಹ್ಮ ಬ್ರಹ್ಮಾದಿಗಳೊಮ್ಮನದ್ಹೊಗಳುತ
ನಿರ್ಮಲಾಗುವ ಪರಬ್ರಹ್ಮ ಶ್ರೀರಾಮನೆಂಬ ೩

 

೯೮
ರಾಮ ನಿಮ್ಮ ನಾಮಧ್ಯಾನ
ಪಾಮರನ ಜಿಹ್ವೆ ಮೇಲೆ ನಿಲಿಸು ಪ
ಜಗದಭಿಮಾನ ಬಿಡಿಸಿ
ಸುಗುಣ ಸಂತಸಂಗ ಪಾಲಿಸಿ
ಸುಗುಣಾಂತರಂಗ ನಿನ್ನ
ಸಗುಣ ಪೊಗಳಿಸೆನ್ನ ಮುಖದಿ ೧
ಮದಮತ್ಸರಗಳನು ಬಿಡಿಸಿ
ಸದಮಲ ಜ್ಞಾನಾನಂದದಿರಿಸಿ
ಸದಮಲಾತ್ಮ ನಿಮ್ಮ ಮೂರ್ತಿ
ಸದಾಯೆನ್ನ ನೇತ್ರದೊಳ್ನಿಲಿಸು ೨
ಕಾಮಿತಂಗಳ ಕಡೆಹಾಯ್ಸಿ
ಭೂಮಿ ಸೀಮೆ ಮೋಹ ತೊರೆಸಿ
ಸ್ವಾಮಿ ಮಮಪ್ರಾಣದಾರ್ಯ ಶ್ರೀ
ರಾಮದಾಸನೆನಿಸು ಒಲಿದು ೩

 

೯೯
ರಾಮ ರಾಮ ಹರಿ ರಾಮ ರಾಮ ಸೀತಾ
ರಾಮ ರಾಮ ನುತಪ್ರೇಮ ರಾಮ ಓಂ ಪ
ರಾಮ ರಾಮ ಪುಣ್ಯನಾಮ ಪಾಪವಿ
ರಾಮ ಕುಜನಕುಲ ಭೀಮ ರಾಮ ಓಂ ಅ.ಪ
ಶಾಮಸುಂದರ ಸುಖಧಾಮ ದಾಮೋದರ
ಕಾಮಿತದಾಯಕ ಸ್ವಾಮಿ ಶ್ರೀರಾಮ ಓಂ
ಸೋಮಕಸಂಹರ ಕಾಮಜನಕ ತ್ರೈ
ಭೂಮಿಪಾಲಯ ನಿಸ್ಸೀಮ ರಾಮ ಓಂ ೧
ಕಡಲಮಥನ ಪಾಲ್ಗಡಲನಿಲಯ ಮಹ
ಕಡಲಬಂಧಕ ದಯಗಡಲ ರಾಮ ಓಂ
ಜಡಜನಾಭ ಭವತೊಡರು ನಿವಾರಣ
ಕಡಲಸುತೆಯ ಪ್ರಾಣದೊಡೆಯ ರಾಮ ಓಂ೨
ದೋಷ ವಿನಾಶನ ಶೇಷಶಯನ ದಯ
ಭೂಷಣ ಕೇಶವ ರಾಮರಾಮ ಓಂ
ಭಾಸುರಕೋಟಿಪ್ರಕಾಶ ಅಪ್ರಮೇಯ
ಸಾಸಿರನಾಮಕ ರಾಮ ರಾಮ ಓಂ೩
ಭಕ್ತಾಂತರ್ಗತ ಭಕ್ತವತ್ಸಲ
ನಿತ್ಯ ನಿರ್ಮಲಾತ್ಮ ರಾಮ ರಾಮ ಓಂ
ಸತ್ಯ ಸರ್ವೋತ್ತಮ ಮೃತ್ಯು ವಿಜಯ ನಿಜ
ಸತ್ಯಸಂಕುಲಧಾಮ ರಾಮ ರಾಮ ಓಂ ೪
ಜಾನಕಿರಮಣ ದೀನ ಪಾಲನ
ದಾನವಾಂತಕ ಹರಿ ರಾಮ ಓಂ
ಧ್ಯಾನದಾಯಕ ಜಗತ್ರಾಣ ಪ್ರವೀಣ ಮಮ
ಪ್ರಾಣೇಶ ಶ್ರೀರಾಮ ನಮ:ನಮ:ಓಂ ೫

 

೧೦೦
ರಾಮಯನ್ನಮ:ಎನ್ನೋ ರಾಮಾಯನ್ನಮ:
ನಾಮವರಿತದ್ದೇ ರಾಮಾಯನ್ನಮ: ಪ
ಬಂದದ್ದು ಬಾರದ್ದು ರಾಮಾಯನ್ನಮ:
ತಂದದ್ದು ತಾರದ್ದು ರಾಮಾಯನ್ನಮ:
ಅಂದದ್ದು ಆಡದ್ದು ರಾಮಾಯನ್ನಮ:
ಮಿಂದದ್ದು ಮೀಯದ್ದು ರಾಮಾಯನ್ನಮ: ೧
ಉಂಡದ್ದು ಉಟ್ಟದ್ದು ರಾಮಾಯನ್ನಮ:
ಕೊಂಡದ್ದು ಕೊಟ್ಟದ್ದು ರಾಮಾಯನ್ನಮ:
ಕಂಡದ್ದು ಕಾಣದ್ದು ರಾಮಾಯನ್ನಮ:
ಬಂಡಾದದ್ದಾಗದ್ದು ರಾಮಾಯನ್ನಮ: ೨
ಇದ್ದದ್ದು ಇಲ್ಲದ್ದು ರಾಮಾಯನ್ನಮ:
ಮೆದ್ದದ್ದು ಮೆಲ್ಲದ್ದು ರಾಮಾಯನ್ನಮ:
ಬಿದ್ದದ್ದು ಬೀಳದ್ದು ರಾಮಾಯನ್ನಮ:
ಕದ್ದದ್ದು ಕದಿಯದ್ದು ರಾಮಾಯನ್ನಮ: ೩
ಬಿತ್ತಿದ್ದು ಬೆಳೆದದ್ದು ರಾಮಾಯನ್ನಮ:
ಎತ್ತಿದ್ದು ಎತ್ತದ್ದು ರಾಮಾಯನ್ನಮ:
ಸುತ್ತಿದ್ದು ಮುತ್ತಿದ್ದು ರಾಮಾಯನ್ನಮ:
ಅತ್ತದ್ದು ಹೊತ್ತದ್ದು ರಾಮಾಯನ್ನಮ: ೪
ಭಕ್ತಿ ಭಾವನೆಯೆಲ್ಲ ರಾಮಾಯನ್ನಮ:
ಯುಕ್ತಿ ಯೋಚನೆಯೆಲ್ಲ ರಾಮಾಯನ್ನಮ:
ಯುಕ್ತಾಯುಕ್ತವು ರಾಮಾಯನ್ನಮ:
ಮುಕ್ತಿ ಸಾಧ್ಯ ಶ್ರೀ ರಾಮಾಯನ್ನಮ: ೫

 

೧೦೧
ರಾಮಾಯನ್ನಮ:ರಾಮ ಸದಾ ಓಂ
ರಾಮಾಯನ್ನಮ:ರಾಮ ಪ
ವೇದಾದಿ ರಾಮ
ವೇದಾಂತರಾಮ
ವೇದಾಂತ ವೇದಾದಿಗಾದಿ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧
ವೇದಮಯ ರಾಮ
ವೇದ ನಿರ್ಮಯ ರಾಮ
ವೇದ ವೇದಾತೀತಕಾದಿ ರಾಮ ಮಹ
ದಾದಿಗಾದಿರಾಮ ( ಸದಾ) ಓಂ ಮಹ
ದಾದಿಗಾದಿ ರಾಮ ೨
ನಾದಯುತಾದಿ ರಾಮ
ನಾದರಹಿತಾದಿ ರಾಮ
ನಾದಾತೀತಾದ್ಯನಾದಿ ಆದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೩
ಆದಿಗಾದಿರಾಮ ಅ
ನಾದಿಗಾದಿರಾಮ
ಆದಿ ಅನಾದಿಗಾದಿ ಆದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೪
ಸತ್ಪಥದಾದಿರಾಮ ¸ À
ಚ್ಚಿತ್ತದಾದಿರಾಮ
ಉತ್ಪತ್ತಿ ಸ್ಥಿತಿಲಯಕಾದಿ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೫
ಅಘ್ರ್ಯ ಅಘ್ರ್ಯಾದಿ ರಾಮ
ಸ್ವರ್ಗ ಭೋಗಾದಿ ರಾಮ
ಧೀರ್ಘಕ್ಕೆ ದೀರ್ಘಾದಿಗಾದಿ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೬
ಜಪತಪದಾದಿ ರಾಮ
ಗುಪಿತ ಗುಪ್ತಾದಿ ರಾಮ
ಅಪರೋಕ್ಷ ಪರೋಕ್ಷಾದಿಗಾದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೭
ಮಂತ್ರಮಯಾದಿ ರಾಮ
ಮಂತ್ರ ನಿರ್ಮಯ ರಾಮ
ಮಂತ್ರ ತಂತ್ರಾದಿಗಾದಿ ಆದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೮
ಮಾಯಮಯಾದಿ ರಾಮ
ಮಾಯ ನಿರ್ಮಯ ರಾಮ
ಮಾಯ ಮಾಯಾದಿಗಾದಿ ಆದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೯
ಕಾಲಕಾಲದಿ ರಾಮ
ಕಾಲಮೂಲಾದಿ ರಾಮ
ಕಾಲಕಾಲನಿಗಾದಿ ಆದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೦
ದಶರಥರಾಮ
ದಶರಥಗಾದಿ ರಾಮ
ದಶವಿಧೌತಾರದಾದಿಗಾದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೧
ದಿವ್ಯಮಹಿಮಾದಿ ರಾಮ
ಭವ್ಯಚರಿತಾದಿ ರಾಮ
ದಿವ್ಯ ದೇವರ ದೇವರಾದಿ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೨
ಬ್ರಹ್ಮನೆಯಾದಿ ರಾಮ
ನಿರ್ಮಲಾತ್ಮಾದಿ ರಾಮ
ಬ್ರಹ್ಮ ಬ್ರಹ್ಮಾದಿಗಾದಿ ಆದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೩
ಸತ್ಯ ಸತ್ಯಾದಿ ರಾಮ
ನಿತ್ಯ ನಿತ್ಯಾದಿ ರಾಮ
ತತ್ವ ಪಂಚದಾದಿಗಾದಿ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೪
ಭುವಿತ್ರಯದಾದಿ ರಾಮ
ಭವಭವದಾದಿ ರಾಮ
ದಿವನಿಶಿಗಳಿಗಾದಿ ಆದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೫
ಬೋಧಾದಿಮಯ ರಾಮ
ಬೋಧಾದಿಗಾದಿ ರಾಮ ಸ
ಸಾಧನ ಸಿದ್ಧಿಯಾದಿಗಾದಿ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೬
ನಿರುಪಮ ರಾಮ
ನಿರ್ನಾಮ ರಾಮ
ನಿರ್ಗುಣ ನಿರಂಜನಾದಿಗಾದಿ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೭
ಭಕ್ತಭಿರಾಮ
ಮುಕ್ತೀಶ ರಾಮ
ನಿತ್ಯ ನಿರ್ಮಲ ಜಗದಾದಿರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೮
ಚಿನುಮಯ ರಾಮ
ಚಿದ್ರೂಪ ರಾಮ
ಜನನಮರಣ ಹರಣಾದಿ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೧೯
ರಮಾಧವ ರಾಮ
ಕ್ಷಮೆಯುತ ರಾಮ
ಸುಮನಸ ಭಕ್ತಾಧೀನ ರಾಮ ಮಹ
ದಾದಿಗಾದಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೨೦
ಜಯ ಜಯ ರಾಮ
ಜಯ ಶ್ರೀರಾಮ
ಜಯವೆಂದು ನೂರೆಂಟು ಪೊಗಳಲೀ ನಾಮ
ದಯದೀಯ್ವಮುಕ್ತಿ ರಾಮ ಸದಾ ಓಂ ಮಹ
ದಾದಿಗಾದಿ ರಾಮ ೨೧

 

೧೫೭
ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ
ಮಾದ್ರಿಯುದ್ಭವಿಗೆ ನಮೋ ನಮೋ ಪ
ರುದ್ರರೂಪೆ ದಾರಿದ್ರ್ಯಮರ್ದನಿ
ರುದ್ರನರ್ಧಾಂಗಿಗೆ ನಮೋ ನಮೋ ಅ.ಪ
ನಿಗಮಾತೀತೆ ಮಹದಾಗಮನುತೆ ತ್ರೈ
ಜಗದ ಮಾತೆಗೆ ನಮೋ ನಮೋ
ಸುಗುಣಸಂತಜನರಘನಾಶಿನಿ ಸುಖ
ಸ್ವರ್ಗಾಧಿಕಾರಿಗೆ ನಮೋ ನಮೋ ೧
ಮೃಡಮೃತ್ಯುಂಜನನೆಡದೊಡೆಯೊಳು
ಕಡುಸಡಗರವಾಸಿಗೆ ನಮೋ ನಮೋ
ದೃಢತರ ಭಕ್ತರ ದೃಢದ್ವಾಸಿನಿ ಜಗ
ದೊಡೆಯ ಮೃಡಾಣಿಗೆ ನಮೋ ನಮೋ ೨
ಕಮಲೆ ಕಾತ್ಯಾಯಿನಿ ಉಮೆ ಶಿವೆ ಸಾವಿತ್ರಿ
ಕಮಲನೇತ್ರೆಗೆ ನಮೋ ನಮೋ
ಸುಮನ ಸೌಭಾಗ್ಯ ಶಮೆ ದಮೆ ದಯಾನ್ವಿತೆ
ವಿಮಲ ಚರಿತ್ರೆಗೆ ನಮೋ ನಮೋ ೩
ಭಂಡದನುಜಕುಲ ರುಂಡ ಚೆಂಡಾಡಿದ
ಪುಂಡ ಉದ್ದಂಡೆಗೆ ನಮೋ ನಮೋ
ಖಂಡ ಕಿತ್ತು ಖಳರ್ಹಿಂಡು ಭೂತಕಿತ್ತ
ಚಂಡಿ ಚಾಮುಂಡಿಗೆ ನಮೋ ನಮೋ ೪
ರಕ್ತಬೀಜರೆಂಬ ದೈತ್ಯರ ಮದ ಮುರಿ
ದೊತ್ತಿದ ವೀರೆಗೆ ನಮೋ ನಮೋ
ಮತ್ತೆ ಶುಂಭರ ಶಿರ ಮುತ್ತಿ ಕತ್ತಿರಿಸಿದ
ಶಕ್ತಿ ಶಾಂಭವಿಗೆ ನಮೋ ನಮೋ ೫
ಓಂಕಾರರೂಪಿಣಿ ಹ್ರೀಂಕಾರಿ ಕಲ್ಯಾಣಿ
ಶಂಕರಿ ಶರ್ವಾಣಿಗೆ ನಮೋ ನಮೋ ಮ
ಹಂಕಾಳಿ ನತಸುಖಂಕರಿ ಪಾರ್ವತಿ
ಶಂಕರನರಸಿಗೆ ನಮೋ ನಮೋ ೬
ಶೌರಿ ಔದರಿಯ ಶಾರದೆ ಶ್ರೀಕರಿ
ಶೂರ ಪರಾಂಬೆಗೆ ನಮೋ ನಮೋ
ಪಾರಾವಾರ ದಯೆಕಾರಿ ನಿರಾಮಯೆ
ಧೀರ ಚಿದ್ರೂಪೆಗೆ ನಮೋ ನಮೋ ೭
ಉಗ್ರರೂಪಿ ಭವನಿಗ್ರಹ ದುಷ್ಟ ಸ
ಮಗ್ರ ಹರಿಣಿಗೆ ನಮೋ ನಮೋ
ಆಗ್ರಭಕ್ತರಿಷ್ಟ ಶೀಘ್ರ ಕೊಡುವ ಜೈ
ದುರ್ಗಾದೇವಿಗೆ ನಮೋ ನಮೋ ೮
ಹೈಮಾವತಿಯೆ ನಿರ್ಮಾಯೆ ಮೂರುತಿ
ಕೋಮಲ ಹೃದಯೆಗೆ ನಮೋ ನಮೋ
ಭೀಮಪರಾಕ್ರಮಿ ರಾಮದಾಸಜನ
ಪ್ರೇಮಪೂರ್ಣಿಗೆ ನಮೋ ನಮೋ ೯

 

೪೨೬
ಲಕ್ಷ್ಮೀರಮಣ ಮರೆಯ ಹೊಕ್ಕೆ
ರಕ್ಷಿಸೈ ಪಾಂಡುಪಕ್ಷನೆ ಪ
ಪಕ್ಷಿವಾಹನ ದುಷ್ಟಶಿಕ್ಷ
ಮೋಕ್ಷದಾಯಕ ಶಿಷ್ಟರಕ್ಷ ಅ.ಪ
ತರಳ ಧ್ರುವನ ಪೊರೆದೆಯೆಲೊ
ಕರಿಮೊರೆಯ ಕಾಯ್ದಯ್ಯ ಕರುಣದಿ
ಕುರುಪ ಸಭೆಯಲಿ ದ್ರೌಪದಿ
ಮೊರೆಯನಿಡಲಾಕೆಮಾನವ ಕಾಯ್ದಿ ೧
ನರಗೆ ಸಹಯನಾಗಿ ಸಾರ
ಧರೆಯ ಗೆಲಿಸಿದಿ ನಿರುತದಿ
ಚರಣದಾಸರ ಕರವ ಪಿಡಿದಿ
ಪರಮ ಪ್ರೇಮದಿ ಒರೆದೆಲೊ ೨
ಇಂದು ಎನಗೆ ಸಂಧಿಸಿದ ಮಹ
ಬಂಧನವ ನಿವಾರಿಸೈ
ತಂದೆ ನಿಮ್ಮಯ ಪಾದ ನಂಬಿದೆ
ಕಂದನನು ಪೊರೆ ಶ್ರೀರಾಮ ೩

 

೪೨೭
ಲೀಲೆಯೊಳಾಡಿಸೊ ಹರಿ ನಿನ್ನ
ಲೀಲೆಯೊಳಾಡಿಸೊ ಪ
ಲೀಲೆಯೊಳಾಡಿಸೊ ಕಾಲಕಾಲದಿ ನಿನ್ನ
ಶೀಲನಾಮವೆನ್ನ ನಾಲಗ್ಗೆ ಕರುಣಿಸು ಅ.ಪ
ಮಂದಮತಿಯ ಹರಿಸೋ ಮನ ಗೋ
ವಿಂದನೊಳೊಡಗೊಡಿಸೊ
ಎಂದೆಂದಿಗು ಆ ನಂದನ ಕಂದನ
ಸುಂದರ ಪಾದ ಮನಮಂದಿರದಿರಿಸೊ ೧
ಶೀಲಗುಣವ ಕಲಿಸೊ ಭವಗುಣ
ಜಾಲವ ಪರಹರಿಸೊ
ಪಾಲಿಸಿ ನಿಮ್ಮ ಧ್ಯಾನಲೋಲನೆನಿಸಿ ಯಮ
ದಾಳಿ ನೀಗಿಸಿ ಭವಮಾಲೆಯ ಗೆಲಿಸೊ ೨
ಮೋಸ ಮಾಯ ಹರಿಸೊ ವಿಷಯ
ದಾಸೆಯ ಪರಿಹರಿಸೊ
ಭಾಸುರಕೋಟಿಪ್ರಭೆ ಸಾಸಿರನಾಮದ
ಶ್ರೀಶ ಶ್ರೀರಾಮ ನಿಮ್ಮದಾಸೆನಿಸೊ ೩

 

೪೨೮
ಲೋಕದವರ ತಳ್ಳಿ ಕಾಲಿಗೆಸುತ್ತಿದ ಬಳ್ಳಿ
ಶೋಕಮಯಸಂಕೋಲೆ ಸಾಕು ಹರಿ ಕಡಿ ಕೀಲಿ ಪ
ದಮ್ಮನಿದ್ದರೆ ಠೊಣ್ಯನೆಂಬುವರು
ತೆಳ್ಳಗಿದ್ದರೆ ಬಡಕನೆಂಬುವರು
ರಮ್ಯನುಡಿಯೆ ಬಾಯ್ಬಡಕನೆಂಬುವರು
ಸುಮ್ಮನಿದ್ದರೆ ಗುಸುಕನೆಂಬುವರು ೧
ಜಮ್ಮಾಸಿ ಉಂಡರೆ ಜೋಗಿಯೆಂಬುವರು
ಕಮ್ಮಿ ಉಂಡರೆ ರೋಗಿಯೆಂಬುವರು
ದಿಮ್ಮಾಕೆಂಬುವರು ಜಳಜಳವಿದ್ದರೆ
ಸಮ್ಮತಬಡರು ಹೊಲಸುಕಂಡರೆ ೨
ಮಾಡಿ ಉಂಡರೆ ನೋಡಿ ಸಹಿಸರು
ಬೇಡಿ ಉಂಡರೆ ಹೇಡಿಯೆಂಬುವರು
ಗಾಢಮುಕ್ತಿಪದ ಕೊಡುವ ಶ್ರೀರಾಮನ
ಹಾಡಿ ಪಾಡಿದರೆ ನಿಂದೆ ಮಾಡುವರು ೩

 

ಸ್ಥೂಲ, ಸೂಕ್ಷ್ಮ, ಕಾರಣ
೪೨೯
ಲೋಕೈಕ ಬಂಧು ಹೇ ದಯಾಸಿಂಧು
ಜೋಕೆಮಾಡಭವ ನೀನೆನ್ನೊಳು ನಿಂದು ಪ
ಹೇಯಪ್ರಪಂಚದ ಮಾಯಾಮೋಹದಿ ಎನ್ನ
ನಾವಕಾರಣ ನೂಕಿ ನೋಯಿಸುವಿಯೋ
ದೇವ ನೀ ಮಾಡಿದ ಮಾಯ ಗೆಲಿವರಾರು
ಕಾವದೇವರು ನೀನೆ ಕೈಯ ಪಿಡಿದು ಸಲಹೊ ೧
ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ
ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ
ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ
ಜವನಿಗೀಡೆನಿಸುವ ಭವಮಾಲೆ ಗೆಲಿಸು ೨
ಘನದು:ಖಮಯವಾದ ಜನನಮರಣಬಾಧೆ
ರಿಣಭಾದೆ ತನುಭಾದೆಯನು ಪರಿಹರಿಸಿ
ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು
ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು ೩

 

೧೦೮
ವಂಚನೆಲ್ಲಿಹುದಯ್ಯ ವೈಕುಂಠಪತಿ
ಗೊಂಚನೆಲ್ಲಿಹದಯ್ಯ ಪ
ವಂಚನೆಲ್ಲಿಹ್ಯದು ವಿರಂಚಿತಾತನಿಗೆ
ಕಿಂಚಿತ್ತು ಧ್ಯಾನಕ್ಕಾಗೊಂಚನಿಲ್ಲದೆ ಬಂದ ಅ.ಪ
ಚರಣದಾಸರೆಂದು ಪಾಂಡವರ
ತುರಗಕಾಯ್ದ ನಿಂದು
ನರಗೆ ಬೆಂಬಲನಾಗಿ ತಿರುಗಿದ ಧುರದಲಿ
ಜರ ಮರೆಯಾಗದೆ ಪರಮಕರುಣಾಕರ ೧
ಜಾಗುಮಾಡುತಲಿವ ಭಕ್ತರ
ಯೋಗಕ್ಷೇಮ ತಿಳಿವ
ನೀಗದಂಥ ಮಹಾಭೋಗಭಾಗ್ಯವಿತ್ತು
ಬಾಗಿಲ ಕಾಯ್ದನು ಸಾಗರನಿಲಯ ೨
ಜಾರನೆನಿಸಿಕೊಂಡ ಒಲಿದು
ಚೋರನೆನಿಸಿಕೊಂಡ
ತೋರಿದವರ ಮನಸಾರ ವರವಿತ್ತು ಭೂ
ಭಾರವಿಳುಹಿದ ನಮ್ಮ ಧೀರ ಶ್ರೀಗುರುರಾಮ ೩

 

೪೩೦
ವನಜನಾಭ ನೀನೆ ದಯಾನಿಧಿ ಮೂರು ಜಗದೊಳಗೆ
ಮಣಿದುಬೇಡ್ವೆ ಕನಿಕರದೆನ್ನ ರಿಣಮುಕ್ತನೆನಿಸು ಬೇಗ ಪ
ಭಾವಿಗಳ ಭಾವಪೂರ್ಣ ದೇವ
ದೇವ ವಿಮಲಮಹಿಮ
ಸಾವು ಹುಟ್ಟುಯಿಲ್ಲದ ಘನ
ಸ್ವಾಮಿಯೆನ್ನ ಮಾಡೋ ಪಾವನ ೧
ವೇದವೇದ್ಯನೀತ ಅ
ನಾದಿಕಾಲದ್ವಸ್ತುವೇ ನೀ
ಸಾಧುಸುಜನೈಕ್ಯನೆನ್ನ
ಮೋದದಿಂದ ಸಲಹೋ ಮುದ ೨
ಭೂಮಿಗಧಿಕ ನಿಸ್ಸೀಮ ಸುಖಧಾಮ
ಭೀಮ ಗಂಭೀರ ಎನ್ನ
ಕಾಮಿತಾರ್ಥ ಕರುಣೆಗೈದು
ಪ್ರೇಮದಾಳೆನ್ನೊಡೆಯ ಶ್ರೀರಾಮ ೩

 

೬೫೦
ವನಜಾಕ್ಷ ಎನಗ್ಯಾಕೆ ಘನತರ ಅಪರಾಧ
ಎನಗೆ ಆಧೀನವೇನು ವಿಶ್ವವ್ಯಾಪಕ ನೀನೆ ಪ
ನಾ ನುಡಿವುದೆಲ್ಲ ನಿನ್ನ ನಿಜವಾದ ಮಂತ್ರವು
ನಾ ನಡೆವುದೆಲ್ಲ ನಿನ್ನ ಯಾತ್ರವೆಲೋ ದೇವನೆ
ನಾ ಬೇಡುವುದೆಲ್ಲ ನಿನ್ನ ವಿಮಲಾತ್ಮ ಪ್ರಸನ್ನತೆ
ನಾ ತೊಡುವುದೆಲ್ಲ ನಿನ್ನ ಪರಮಕೃಪಾಕವಚ ೧
ನಾನುಂಬುವುದೆಲ್ಲ ನಿನ್ನ ಕರುಣ ಪ್ರಸಾದವು
ನಾ ಕುಡಿವುದೆಲ್ಲ ನಿನ್ನ ಚರಣ ಉದಕವಯ್ಯ
ನಾ ಬಯಸುವುದೆಲ್ಲ ನಿನ್ನ ಪ್ರೇಮಾಮೃತವು
ನಾನಿರುವುದೆಲ್ಲ ನಿನ್ನ ಭಜನಮಂದಿರವು ೨
ನಾ ಕೇಳುವುದೆಲ್ಲ ನಿನ್ನ ಧರ್ಮಕಥಾಶ್ರವಣವು
ನಾ ಪೇಳ್ವುದೆಲ್ಲ ನಿನ್ನ ಚರಣಸುಚರಿತ
ನಾನು ಮಾಡುವುದೆಲ್ಲ ನಿನ್ನ ಪೂಜೆಯು
ನಾನನುಭವಿಪುದು ಎಲ್ಲ ಶ್ರೀರಾಮನಾಟವು ೩

 

೪೩೧
ವನಜಾಕ್ಷ ನೀನೀಗ ಘನ ಕನಿಕರದಿ ಕಾಯಭವ
ಘನತರದ ಗುಣ ಎನ್ನೊಳಿನಿತಿಲ್ಲ ದೇವ ಪ
ಮನ ತುಸು ಗಟ್ಟಿಲ್ಲ ತನುಮೋಹ ಸುಟ್ಟಿಲ್ಲ
ಧನದಾಸೆ ಬಿಟ್ಟಿಲ್ಲ ಬಿನುಗುಗುಣಟ್ಟಿಲ್ಲ ೧
ಪರಮಮದ ಮುರಿದಿಲ್ಲ ಪರನಿಂದೆ ತೊರೆದಿಲ್ಲ
ಶರಣರಿಗೆ ಎರಗಿಲ್ಲ ಹರಿಪಾದವದರಿವಿಲ್ಲ ೨
ಏನು ಅಪರಾಧವಿರೆ ನೀನೆ ಕ್ಷಮಿಸೆನಗೆ
ಜ್ಞಾನದಿಂ ಸಲಹಯ್ಯ ಪ್ರಾಣೇಶ ಶ್ರೀರಾಮ ೩

 

೧೦೩
ವನಜಾಕ್ಷನ ಪಾದ ಕಂಡೆ ನಾ ಕನಸಿನೊಳ್
ನೆನೆವ ದಾಸರ ಕಾಮಧೇನು ನೀನಹುದೊ ಪ
ಎಂದು ಕಾಂಬೆನು ನಿನ್ನ ಸುಂದರ ಮೂರುತಿಯ
ನೆಂದು ಬಯಸುತಲಿರ್ದೆ ಸಂಧಿಸಿತಿಂದಿಗೆ ೧
ಕಮಲನಾಭನೆ ನಿನ್ನಯ ಅಮರ ಮಹಿಮೆ ಕಾಣ್ವ
ಭ್ರಮೆಯಪಡುತಲಿರ್ದೆ ಕ್ರಮದಿ ಸಾಧಿಸಿತಿಂದು ೨
ಚಿನುಮಯ ಶ್ರೀರಾಮ ಘನ ಮಂದಮತಿ ನಾನು
ನೆನವು ಮರೆದೆ ಕ್ಷಮಿಸಿ ಕನಿಕರದಿ ಕಾಯೊ ೩

 

೧೫೮
ವರಲಕುಮಿ ಕರುಣಿಸೌ ಕರುಣಾಕರಳೆ ಎನ್ನೊಳು ಪ
ಮರೆಹೊಕ್ಕ ದಾಸರ ದಾರಿದ್ರ್ಯ ಖಂಡಿಸು
ಪರಮಪಾವನೆ ನಿನ್ನನರಸಿ ಬೇಡುವೆನವ್ವ ೧
ಗರುವಕ್ಕೆ ಬಾರದ ಸಿರಿಯ ಕರುಣಿಸಿ ಮತ್ತೆ
ಹರಿಸ್ಮರಣೆ ಸೌಭಾಗ್ಯ ವರ ಪಾಲಿಸೆನ್ನವ್ವ ೨
ಕ್ಷೇಮ ಪಾಲಿಸು ತಾಯಿ ಕಾಮಿತ ಜನ ಮಹ
ಪ್ರೇಮಮಂದಿರೆ ಶ್ರೀರಾಮನರ್ಧಾಂಗಿಯೆ ೩

 

೧೫೯
ವರವ ಕರುಣಿಸು ಕರುಣಿ ಸರಸ್ವತಿಯೆ
ಜಗದಾದಿಮಾತೆಯೆ ಪ
ಮೊರೆಯ ಕೇಳಮ್ಮ ಪರಮ ಪಾವನೆಯೆ
ಕರುಣ ಹಸ್ತವ ಶಿರದಿ ಇಡು ದಯೆ
ಭರಿತೆ ಜಗನ್ಮಯೆ ಅ.ಪ
ಕಮಲಜಾತನ ಪ್ರೇಮ ಸುಂದರಿಯೆ
ಅಮರ ವಿನುತೆಯೆ
ಕಮಲನೇತ್ರೆ ಸಾವಿತ್ರಿ ಶಾರದೆಯೆ
ವಿಮಲಚರಿತಳೆ ದಮೆ ದಯಾನ್ವಿತೆಯ
ಶಮೆ ಶಾಂತಿನಿಲಯೆ
ಕುಮುದಬಾಂಧವಕೋಟಿಪ್ರಭಾಮಯೆ ೧
ವರ ಸುವಿದ್ಯ ಸಂಗೀತ ಶರ್ವಾಣೆ
ಪರಮಕಲ್ಯಾಣೆ
ಶರಣ ಜನಪ್ರಿಯೆ ವೀಣಾಧರಪಾಣಿ
ಸ್ಮರಿಪ ಜನ ಮನದಿಷ್ಟ ಪರಿಪೂರ್ಣ
ದುರಿತದೂರಿಣೆ
ಪೊರೆದೆ ಮನುಗಳ ಜ್ಞಾನದಿಂ ವಾಣಿ ೨
ಸಿರಿಯರಾಮನ ಹಿರಿಯ ಸೊಸೆ ನಿನ್ನ
ಚರಣದಡಿಲೆನ್ನ
ಶಿರವನಿಕ್ಕಿ ಬೇಡಿಕೊಂಬುವೆ ನಾ
ಮರೆವ ಹರಿಸಿ ಭರದಿಂ ಕೊಡು ಜ್ಞಾನ
ಸ್ಥಿರಮತಿಯ ಮುನ್ನ
ನಿರುತದ್ಹೊಗಳುವೆ ನಿಮ್ಮ ಚರಿತವನು ೩

 

೪೩೨
ವಶವಲ್ಲದೀ ಮನದ ದೆಸೆಯಿಂದೆ ನಾ ಬಲು
ದೆಸೆಗೆಟ್ಟು ಬಳಲುವೆ ಕುಸುಮಾಕ್ಷ ಕಣ್ದೆರೆಯೊ ಪ
ನಶಿಪ ಪ್ರಪಂಚ ಭ್ರಮಿಸಿ ಹಸಗೆಡಿಸಿ ನಿಜಧ್ಯಾನ
ಪಶುವಿನಂತೆನ್ನನು ದಿಸೆದಿಸೆಗೆಳಿಪುದು ಅ.ಪ
ಭುವಿಪರನೊಲಿಸರೆಲವದಿ ಭೂಮಿಯ ಪಡೆದೆ
ಸವ ಜೋಡಿ ನೂಕಿತ್ತು ಜವದಿ ಕಟ್ಟುವುದು
ಬುವಿಯೊಳು ಮಿಗಿಲೆನಿಸುವ ತೆರೆ ಮೇಲ್ಮಾಡಿ
ಭವನ ರಚಿಸಿ ಕೋಟಿದ್ರವ್ಯಗಳಿಗಳುವುದು ೧
ಮದುವ್ಯಾಗಿ ಪದ್ಮಿನಿಯ ವದನದೊಳ್ವದನಿಕ್ಕಿ
ಮದನಕದನದಿ ಸುಖಿಸುವುದೊಂದು ಫ¼ಗಿ
ವಿಧವಿಧದಿಂ ಪರರ ಸದನ ಮುರಿದು ಸಂ
ಪದವೆಲ್ಲ ತನ್ನಗೆ ಒದಗಿಬರಲೆನ್ನುವುದು ೨
ತಡೆಯದೆ ವೈರಿಗಳ ಕಡುಕೋಪದಿಂ ತಂದು
ಪಿಡಿದು ಕಂಬಕೆ ಕಟ್ಟಿ ಸುಡಿಸುವುದೊಡನೆ
ಕಡುಗಲಿತನದಿಂದ ಪೊಡವಿಪರ ಸದೆಬಡಿದು
ಪೊಡವಿ ಗೆಲಿದು ಒಂದೇ ಕೊಡೆಯಿಂದಾಳುವುದು ೩
ಯಾತ್ರೆ ಮಾಡುವುದೊಮ್ಮೆ ಕ್ಷೇತ್ರದೊಳಗೆ ಕೂತು
ನೇತ್ರಮಂ ಬಂಧಿಸಿ ಸ್ತೋತ್ರ ಮಾಡುವುದು
ಮೂತ್ರದ್ವಾರದೆ ಬಂದ ಸೂತ್ರದ ಕಾಯಕ್ಕೆ
ಧಾತ್ರಿ ಸೊನ್ನೆಂದೊಮ್ಮೆ ಖಾತ್ರಿ ಮಾಡುವುದು ೪
ಯಾತರ್ಹಲವು ಪರಿಮಿತಿಯಿಲ್ಲದ್ಯೋಚಿಸಿ
ಗತಿಗೆಡಿಪ ಮನಸಿನ ಖತಿ ತಾಳಲಾರೆ
ಅತಿಭ್ರಷ್ಟಮನದ ದುರ್ಮತಿ ನಿವಾರಿಸು
ಗತಿ ನೀಡೆನಗೆ ಕೃಪೆಯಿಂ ಹಿತಭಕ್ತ ಶ್ರೀರಾಮ ೫

 

೬೫೧
ವಾದಿಸಿ ಗತಿಹ್ಯದೇನಣ್ಣ ನಿಜ
ಹಾದಿತಿಳಿದು ನೋಡೆಲೊ ಜಾಣ ಪ
ವಾದ ಭೇದ ನೀಗಿ ಮಾಧವನ ಮಹ
ಪಾದ ಮಹಿಮೆಯನು ಕಾಣಣ್ಣ ಅ.ಪ
ವೇದಕೆ ನಿಲುಕದ ಮಾತಣ್ಣ ನಿನ್ನ
ವಾದಕೆ ಸುಲಭರುತಿಹ್ಯದೇನ
ವೇದಸ್ರ‍ಮತಿಯ ನಿಜಬೋಧನರಿದು ಯಮ
ಬಾಧೆ ಗೆಲಿದು ಭವ ತುಳಿಯಣ್ಣ ೧
ವಾಸನೆ ಹಸನ ಮಾಡಣ್ಣ ಮನ
ದಾಸೆ ದ್ವೇಷಗಳ ಕಡಿಯಣ್ಣ
ಶ್ರೀಶನ ದಾಸರ ವಾಸದಿರ್ದು ಅನು
ಮೇಶ ಈಶನ ಪಾದ ಭಜಿಸಣ್ಣ೨
ಹಮ್ಮು ಚುಮ್ಮುಗುಣ ನೀಗಣ್ಣ ಕಾಯ
ಕರ್ಮ ಕಡಿದು ನಿರ್ಮಲಾಗಣ್ಣ
ನಿರ್ಮಲಾತ್ಮ ಪರಬ್ರಹ್ಮ ಶ್ರೀರಾಮನ
ಮರ್ಮ ತಿಳಿದು ಮುಕ್ತಿ ಕೂಡಣ್ಣ ೩

 

೧೦೪
ವಾರಿಧಿನಿಲಯನೆಂಥಾತ
ತೀರದ ಮಹಿಮಗಾರನೀತ ಪ
ಸಾರಿ ನಂಬಿ ಭಜಿಸಿ ಸತತ
ಘೋರ ದುರ್ಭವಳಿರೋ ನಿರುತಅ.ಪ
ದೇವದೇವ ದಿವ್ಯಚರಿತ
ದೇವಿದೇವಕಿ ಗರ್ಭಸಂಜಾತ
ಗೋವುಗಳನು ಕಾಯಿದಾತ
ಗೋವಳರೊಡನೆ ಆಡಿದಾತ
ಮಾವನಮರ್ದಿಸಿ ಭುವಿಗೀತ
ಕೇವಲಸೌಖ್ಯ ನೀಡಿದಾತ ೧
ಗೋವರ್ಧನಗಿರಿ ಎತ್ತಿದಾತ
ಗೋವಳರನ್ನು ಸಲಹಿದಾತ
ಮಾಯಾಪೂತನಿಯಸುವನೀತ
ಮಾಯದಿಂದ ಹೀರಿದಾತ
ತಾಯಿ ಯಶೋದಾದೇವಿಗೀತ
ಬಾಯಲಿ ವಿಶ್ವ ತೋರಿದಾತ ೨
ಅಸಮಾಯದಾಟವಾಡುತ
ಶಿಶುವಾಗಿ ತೋರಿದಾತ
ಕುಶಲಗೋಪಿಕಾಸ್ತ್ರೀಯರನೀತ
ವಸನ ಕಳೆದು ನಿಲಿಸಿದಾತ
ವಸುಧೆ ಭಾರವನಿಳುಹಿದಾತ
ನೊಸಲಗಣ್ಣನ ಸಲಹಿದಾತ ೩
ಬಾಲೆಗೋಪಿಯರಿಗೊಲಿದಾತ
ಪಾಲಮೊಸರು ಬೆಣ್ಣೆ ಮೆಲಿದಾತ
ಕೊಳಲನೂದುತ ನಲಿದಾಡಿದಾತ
ಬಾಲನಾಗಿ ಲೀಲೆ ತೋರಿದಾತ
ಕಾಳರಕ್ಕಸರ ಕುಲಭೀತ
ಕಾಳಿಯನ್ನು ಮೆಟ್ಟಿ ಸೀಳಿದಾತ ೪
ಹಿಡಿ ಅವಲಕ್ಕಿಗೆ ಒಲಿದಾತ
ಮಡದಿಯ ಮಾನವ ಕಾಯ್ದಾತ
ದೃಢ ಭಕ್ತರೋಳ್ವಾಸವಾದಾತ
ಇಡೀ ಭುವನಗಳ್ಹೊತ್ತಾಳುವಾತ
ಮೃಡ ಅಜ ಸುರಾದಿವಂದಿತ
ಒಡೆಯ ಶ್ರೀ ರಾಮಯ್ಯ ಮಮದಾತ ೫

 

೫೭೯
ವಾಸನ್ಹಿಂಗದವನ ಬಲುಮಡಿ ಮೀಸಲ್ಯಾಕೆ
ಆಸೆಬಿಡದವನ ಹರಿದಾಸತ್ವವ್ಯಾಕೆ ಪ
ಚಿತ್ತಶುದ್ಧಯಿಲ್ಲದವನ ತತ್ವ ಉಪದೇಶವ್ಯಾಕೆ
ಕುತ್ತಿಗೆಯ ಕೊಯ್ವವನ ಭಕ್ತಿಭಾವ್ಯಾಕೆ
ಹೆತ್ತವರ ಬಯ್ವವನ ಸತ್ಯರೊಡನಾಟವ್ಯಾಕೆ
ಉತ್ತಮರ ಹಳಿವವನ ನಿತ್ಯನೇಮವ್ಯಾಕೆ ೧
ಭೇದಕಡಿಯದವನ ಪರಸಾಧನೆಯು ಯಾತಕ್ಕೆ
ವಾದಬಿಡದವನ ಸುವೇದ ಓದ್ಯಾಕೆ
ಕ್ರೋಧದೊಳುರುಳುವನ ಸಾಧುತ್ವ ಯಾತಕ್ಕೆ
ಜಾದುಗಾರನ ಸುಬೋಧವದು ಯಾಕೆ ೨
ನಾನೆಂಬುದಳಿಯವ ಜ್ಞಾನಭೋದ್ಯಾಮೃತವ್ಯಾಕೆ
ಹೀನಗುಣ ಬಿಡದವನ ಮೌನತ್ವವ್ಯಾಕೆ
ದೀನರನು ಬಾಧಿಪರ ದಾನಧರ್ಮವು ಯಾಕೆ
ನಾನಾ ಬಯಕ್ಯುಳ್ಳವನ ಧ್ಯಾನವು ಯಾಕೆ ೩
ಕುಟಿಲತ್ವ ಸುಡದವನ ಜಟೆ ಕೌಪೀನ್ಯಾತಕೆ
ಸಟೆಬೊಗಳಿ ಬದುಕುವನ ಪಟ್ಟೆನಾಮವ್ಯಾಕೆ
ದಿಟವರಿಯದಧಮನ ನಿಟಿಲದಲಿ ಭಸಿತ್ಯಾಕೆ
ದಿಟ್ಟೆಯರಿಗೆ ಸೋಲುವನ ಹಠಯೋಗವ್ಯಾಕೆ ೪
ಯತಿಗಳನು ನಿಂದಿಪನ ಸ್ರ‍ಮತಿಶಾಸ್ತ್ರ ಯಾತಕ್ಕೆ
ಸತಿಗಳುಕಿ ನಡೆಯುವನ ಅತಿಜಾಣ್ಮೆ ಯಾಕೆ
ಸತತ ಖಲು ಕುಹಕನಲಿ ಅತಿಸ್ನೇಹ ಯಾತಕೆ
ಕ್ಷಿತಿಯೊಳ್ ಶ್ರೀರಾಮನ ನುತಿಸದವನ್ಯಾಕೆ ೫