Categories
ರಚನೆಗಳು

ರಾಮದಾಸರು

೨೯೨
ದಾತ ಹೈ ತೂಹೀ ಮೇರಾ ಹರಿಯೇ
ಕೃಪಾಕರ ಚರಣ ತುಮ್ಹಾರೇ ಪ
ಕೋಯೀ ನಹೀ ದುನಿಯಾಮೇ ಮೇರೇ ಹಿಮ್ಮತ
ಜಾನಕೀನಾಥ ತುಮ್ಹಾರೇ ಶಿವಾಯ್ ರಹಕೇ
ದೇವತಾ ಕೋಯೀ ನಹೀ ದಿಖತಾ ೧
ಹಿರಸ್ಕೇ ಚಕ್ಕರ್ಮೇ ಗಿರ್ಕರ್ ಬಹುತ್ ಮೈ
ಟಕ್ಕರ್ ಖಾಯಾ ರೇ ಮುರಾರಿ
ಜಗ್ ಲೇನ್ ದೇನ್ ಕಾ ಬಜಾರ ಹೈ ಇಜ್ಜತ್ ಬಚ್ಯಾರೇ ೨
ನ ಕೋಯೀ ಭಾಯೀ ಬಂಧು ಹೈ ನ ಕೋಯೀ
ಪ್ಯಾರೇ ಅಪ್ನಾ ಹೈ ಸಭೀ ಹೈ ಧನ್ಕೇ
ದೌಲತ್ಕೇ ರಿಷ್ತಾದಾರ ಸಂಗತ ಕೋಯೀ ನಹೀರೇ ೩
ಬಚಪನ್ ಖೇಲ್‍ಮೇ ರಖದಿಯಾ ತರುಣಪನ್
ಕಾಮಮೇ ಖೋಲಿಯಾ ಪ್ರಪಂಚ ಮಾಯಮೇ
ಮೇರಾ ಉಮರ್ ಬೇಕಾರ್ ಗಂವಾಯಾ ೪
ಗಫಲತ್ ದುನಿಯಾ ದರಿಯಾಸೇ ತೀರ್ಕರ್
ಪಾರ್ ಹೋನೇಕಾ ಸೂರತ್ ದಿಖಾದೇ ಶ್ರೀರಾಮ
ಜಲ್ದೀಸೇ ಬಚಾಲೇ ಅಫತ್ಸೇ ೫

 

೫೩೨
ದಾವಲ್ಲಿ ಕೂತಿದ್ದೀಯೊ ರೋಗಿಷ್ಠ
ನೀ ಕಾಯ ಎನ್ನನು ಕಾಯ್ಕೊಂಡು ಪ
ಜೀವಕಂಟಕನಾಗಿ ಹೇಯದಿಂದೊಡಗೂಡಿ
ಆವಕಾಲದಿ ರೋಗದ್ಹೊರಳುತ ಎಲೆ ಖೋಡಿ ಅ.ಪ
ಏನು ಕರ್ಮವ ಮಾಡಿದ್ದೋ ಪಾಪಾತ್ಮ ನೀ
ಹೀನಸ್ಥಿತಿಯ ಪೊಂದಿದಿ
ನಾನಾವಿಧದಿ ಮಹಬೇನೆಯಿಂ ನರಳುತ
ನೀನೆನ್ನ ಜತೆಗೂಡಿ ಬನ್ನಬಡಿಸುವಿ ಪಾಪಿ೧
ಹೊಲಸಿನ ದ್ವಾರದಿಂದ ಇಹ್ಯಕೆ ಬಂದಿ
ಮಲಮೂತ್ರ ತುಂಬಿಕೊಂಡು
ತೊಳೆಯದಿರಲು ನಿಮಿಷ ಹೊಲಸಿಕ್ಕಿನಾರುವಿ
ತಿಳಿದುನೋಡಲು ನಿನ್ನ ಸಲಿಗೆಯಿಂ ನಾ ಕೆಡುವೆ ೨
ಎನ್ನ ಜೊತೆಯ ಪೊಂದಿರ್ದ ಕಾರಣದಿಂ ನಾ
ನಿನ್ನ ಕ್ಷೇಮವ ಬಯಸುವೆ
ಎನ್ನಯ್ಯ ಶ್ರೀರಾಮನುನ್ನತಡಿಗಳ ನಂಬಿ
ಸನ್ನುತಿಯಿಂ ಕ್ಷಮೆಬೇಡಿ ಧನ್ಯನಾಗೆಲೋದೇಹ್ಯ ೩

 

೨೯೭
ದಾಸ ನಾನೆಲೊ ಹರಿದಾಸ ನಾನೆಲೊ
ಶ್ರೀಶ ನಿಮ್ಮ ಶ್ರೀಪಾದಕಮಲ ಪ
ಭವಭವದಿ ಜನಿಸಿ ಜನಿಸಿ
ಬವಣಿಸಿದ್ದನುಭವಕ್ಕೆ ತಂದು
ಭವಭೀತನಾಗಿ ನಿಮ್ಮ
ಪಾವನಂಘ್ರಿ ಮರೆಯಹೊಕ್ಕೆ ೧
ಪರಿಭವದ ಶರಧಿ ಈಸಿ
ಪರಲೋಕ ಪಥದಿ ನಿಂತು
ಪರಕೆ ಪರಮಪರತರನ
ಪರಮಬಿರುದುಪೊಗಳುವಂಥ ೨
ಶರಣಾಗತವತ್ಸಲ ನಿನ್ನ
ಚರಣನಂಬಿ ಶರಣು ಮಾಳ್ಪೆ
ತರಳನಾಲಾಪ ಕರುಣದಾಲಿಸಿ
ಚರಣದಾಸಸೆನಿಸಿಕೊ ಶ್ರೀರಾಮ ೩

 

೨೯೩
ದಾಸಜನಕೆ ಸಹಯನಾಗಬಾರದೆ
ಶ್ರೀಶ ನಿನ್ನಯ ಪಾದ ಪ
ಕಾಸಿನ ಋಣಕಂಜಿ ಆಶಿಸಿ ಪರರಿಂದಾ
ಯಾಸದಿ ಬೇಡುವ ಭೋಗ ತಪ್ಪಿಸಲಿಕ್ಕೆ ೧
ಎಂದಿಗಾದರಿದು ಒಂದಿನ ನಿಜವಾಗಿ
ಕುಂದುವ ಈ ಭವಬಂಧ ತಪ್ಪಿಸಲಿಕ್ಕೆ ೨
ಜ್ಞಾನಿಗಳಾಸ್ಪದ ಜ್ಞಾನಮೂರುತಿ ಮಮ
ಪ್ರಾಣ ಶ್ರೀರಾಮ ನಿನ್ನ ಧ್ಯಾನ ನಿಲ್ಲಿಸಲಿಕ್ಕೆ ೩

 

೨೯೪
ದಾಸನ ಮೇಲಿಷ್ಟು ಬೇಸರವ್ಯಾಕೋ
ಶೇಷಶಯನನೆ ನಿನ್ನ ಧ್ಯಾಸದೊಳಿರುವ ಪ
ನಶಿಸಿಹೋಗುವ ಕಾಯದ್ವ್ಯಸನವನು ಪರಿಹರಿಸಿ
ಹಸನಾದ ಮತಿಯೆನಗೆ ಒಸೆದು ನೀಡೆಂದು
ನಿಶಿದಿವದಿ ನಿನ್ನಡಿಕುಸುಮಗಳನಂಬಿ ಮಾ
ನಸದಿ ಭಜಿಸಲು ಎನಗೊಶನಾಗದಿರುವಿ೧
ಜಡತನದ ಸಂಸಾರ ತೊಡರೆಡರು ಕಡಿದು ಗಡ
ಜಡಮತಿಯ ತೊಡೆದೆನಗೆ ದೃಢ ನಿಶ್ಚಯವನು
ಕೊಡುಯೆಂದು ದೃಢದಿ ನಿನ್ನಡಿಗೆರಗಿ ಬೇಡಿದರೆ
ಒಡಲೊಳಗೆ ನಿಂದೆನ್ನ ಜಡತನಳಿವಲ್ಲಿ ೨
ಶ್ರೀಶ ಶ್ರೀರಾಮ ನಿನ್ನ ಧ್ಯಾನಮಾಡಲು ಒಮ್ಮೆ
ಸಾಸಿರಕೋಟಿ ಅಘ ನಾಶನಲ್ಲೇನು
ದಾಸಜನಕರುಣಾಬ್ಧಿ ದಾಸನೊಳ್ದಯವಾಗಿ
ಪೋಷಿಸೈ ತವಪಾದ ನಿಜಧ್ಯಾಸವಿತ್ತು ೩

 

೫೩೩
ದಾಸನಾಗೋ ಪ್ರಾಣಿ ಬರಿದೆ
ಈಶನ ನೀ ಕಾಣಿ ಪ
ದಾಸನಾಗು ರಮೇಶನ ಪಾದ
ಹೇಸಿಮನಸಿನ ಕ್ಲೇಶವ ನೀಗಿ ಅ.ಪ
ಹಮ್ಮು ಬಿಟ್ಟುಬಿಡೋ ಈಶತ್ವ
ಸುಮ್ಮನಲ್ಲ ನೋಡೋ
ಸಮ್ಮತ್ಹೇಳಬೇಡೋ ಮಹವಾಕ್ಯ
ಮರ್ಮಶೋಧ ಮಾಡೋ
ಹಮ್ಮು ಅಹಂಕಾರ ದೂಡಿ ನಿರ್ಮಲಮತಿಗೂಡಿ
ಒಮ್ಮನದಿಂ ಪರಬ್ರಹ್ಮನ ಪಾಡಿ ೧
ಶಂಕೆಯನೀಡ್ಯಾಡೋ ಚಿತ್ತದ ಕ
ಲಂಕ ದೂರ ಮಾಡೋ
ಓಂಕಾರರ್ಥ ಮಾಡೋ ಬ್ರಹ್ಮದ
ಅಂಕಿತಿಟ್ಟು ಪಾಡೋ
ಕಿಂಕರನಾಗದೆ ಶಂಕರ ನಿನಗೆಲ್ಲಿ
ಮಂಕುತವನವ ಬಿಟ್ಟು ಸಂಕರುಷಣನ ೨
ಹಾಳು ವಾಸನೆ ತೂರಿ ನಿಜವಾದ
ಶೀಲಜನರ ಸೇರಿ
ಮೂಲತತ್ತ್ವದಾರಿ ಅನುಭವ
ಕೀಲಿ ತಿಳಿದು ಭೇರಿ
ತಾಳನಿಕ್ಕುತ ಮಮಶೀಲ ಶ್ರೀರಾಮನ
ಮೇಲೆಂದು ನಂಬಿ ಭವಮಾಲೆ ಗೆಲಿದು ನಿಜ ೩

 

೬೨೫
ದಾಸನಾದ ಮೇಲೆ ಈಶ ದೂರುಂಟೆ
ಆಸೆನೀಗಲು ಸುಖದ ರಾಶಿ ಬೇರುಂಟೆ ಪ
ದೋಷಕ್ಕಂಜಿದಮೇಲೆ ಸನ್ಮಾರ್ಗ ಬೇರುಂಟೆ
ಕ್ಲೇಶ ನೀಗಿದಮೇಲೆ ಪುಣ್ಯ ಇನ್ನುಂಟೆ
ಹೇಸಲು ಪ್ರಪಂಚಕೆ ಸತ್ಸಂಗ ಬೇರುಂಟೆ
ವಾಸನ್ಹಿಂಗಿದಮೇಲೆ ವೈರಾಗ್ಯವುಂಟೆ ೧
ಜ್ಞಾನಗೂಡಿದಮೇಲೆ ಮತ್ತೆ ತೀರ್ಥಗಳುಂಟೆ
ಧ್ಯಾನವಿಡಿದಮೇಲೆ ಅನ್ಯಮೌನುಂಟೆ
ಹೀನಗುಣ ತೊಳೆದಮೇಲಿನ್ನು ಸ್ನಾನಗಳುಂಟೆ
ಮಾನಸವು ಶುದ್ಧಿರಲು ಬೇರೆ ಮಡಿಯುಂಟೆ ೨
ಕರುಣಪಡೆದಮೇಲೆ ಕೈವಲ್ಯ ಇನ್ನುಂಟೆ
ಶರಣು ಪೊಂದಿದಮೇಲೆ ಪರಮಾರ್ಥ ಬೇರುಂಟೆ
ಅರಿವನರಿತರೆ ಬೇರೆ ಪರಲೋಕ ಇರುಲುಂಟೆ
ಶರಣರೊಲಿದಮೇಲ್ಹರಿಚರಣ ಹೊರತುಂಟೆ ೩
ಸಫಲನಾದಮೇಲೆ ವ್ರತನೇಮ ಬೇರುಂಟೆ
ಗುಪಿತವರಿತಮೇಲೆ ಪರತತ್ವವುಂಟೆ
ಅಪರೂಪ ಧ್ಯಾನಿರಲು ತಪ ಬೇರೆ ಇರಲುಂಟೆ
ಅಪರೋಕ್ಷಜ್ಞಾನ್ಯಾದ ಮೇಲೆ ಮಿಕ್ಕಸಾಧನುಂಟೆ ೪
ಮಾನಹೋದಮೇಲೆ ಮರಣ ಬೇರಿರಲುಂಟೆ
ನಾನತ್ವ ಪೋದಮೇಲೆ ಸತ್ಕರ್ಮವುಂಟೇ
ಧ್ಯಾನದಾಯಕ ಮಮಪ್ರಾಣ ಶ್ರೀರಾಮನಡಿ
ಖೂನ ತಿಳಿದ ಮೇಲೆ ಮುಕ್ತಿ ಬೇರುಂಟೆ ೫

 

೨೯೫
ದಾಸನಾದಮೇಲಿ ನಿನಗಾ
ಯಾಸವ್ಯಾಕೊ ಮರುಳೆ ಪ
ಮೋಸಪಾಶಗಳ ನಾಶಮಾಡುವಂಥ
ದಾಸರ ಪ್ರಾಣ ಲಕುಮೀಶನ ಚರಣಅ.ಪ
ಚಿಂತೆಗೈವುದ್ಯಾಕೊ ಹಲವು
ಭ್ರಾಂತಿಗಳಿನ್ಯಾಕೊ
ಕಂತುಜನಕ ಅಂತರಂಗ ನಿ
ರಂತರ ಸ್ಮರಿಪರತ್ಯಂತಪ್ರಿಯನ ಪಾದ ೧
ಮಿಡುಕುವುದಿನ್ಯಾಕೊ ನಿನಗೆ
ಬಡತನಗೊಡವ್ಯಾಕೊ
ಬಡವರ ಭಾಗ್ಯನೆಂದು ದೃಢದಿ ಪಾಡ್ವರ ಬೆಂ
ಬಿಡದೆ ಕಾಪಾಡುವ ದೃಢಕರೊಡೆಯನ ಪಾದ ೨
ಹಾರೈಸುವುದ್ಯಾಕೋ ನೀ ಬಲು
ಘೋರಬಡುವುದ್ಯಾಕೊ
ಬಾರಿಬಾರಿಗೆ ಸೇರಿ ಭಜಿಪರ
ಭಾರಹೊತ್ತು ಕಾಯ್ವ ಧೀರ ಶ್ರೀರಾಮಪಾದ ೩

 

೨೯೬
ದಾಸನಾದವನಿಗೆ ಭವಭೀತಿಯುಂಟೆ
ಆಸೆಬಿಟ್ಟವನಿಗೆ ಘಾಸಿಯಿನ್ನುಂಟೆ ಪ
ವನಿತೆಯರಾಸ್ಯಳಿದವಗೆ ಮನಸಿಜನರ ಭೀತಿಯೆ
ಮಣ್ಣಿನಾಸೆ ಪೋದವಗೆ ಅವನಿಪರ ಭಯವೆ
ಧನದಾಸೆ ಪೋದವಗೆ ಬಿನುಗುಜನರಂಜಿಕೆಯೆ
ತನುಮೋಹ ಬಿಟ್ಟವಗೆ ಮರಣದ ಭಯವೆ ೧
ನಿಂದೆಯನು ಬಿಟ್ಟವಗೆ ಬಂಧಸೋಂಕುವ ಭಯವೆ
ಸಂದೇಹವಳಿದವಗೆ ಕರ್ಮಗಳ ಭಯವೆ
ಮಂದಿಗೋಷ್ಠಿಯಿಲ್ಲದವಗೆ ಅಪವಾದ ಭೀತಿಯೆ
ಸಿಂಧುಶಯನನರ್ಚಕಗೆ ಕಾಲನ ಭಯವೆ ೨
ಪರಮ ಧಾರ್ಮಿಕನಿಗೆ ಬಡತನದ ಭೀತಿಯೆ
ಪರವ ಸಾಧಿಪನಿಗೆ ಕಷ್ಟಗಳ ಭಯವೆ
ಅರಿವಿಟ್ಟು ನಡೆವವಗೆ ದುರಿತದ ಭಯವಿಹುದೆ
ಶರಣರೊಳಾಡುವಗೆ ನರಕಂದಜಿಕೆಯೆ ೩
ತತ್ವದರ್ಥಿಕನಿಗೆ ಮಿಥ್ಯಶಾಸ್ತ್ರದ ಭಯವೆ
ನಿತ್ಯನಿರ್ಮಲನಿಗೆ ಮಡಿ ಮುಟ್ಟು ಭಯವೆ
ಸತ್ಯಸನ್ಮಾರ್ಗಿಕಗೆ ಮತ್ರ್ಯದವರಂಜಿಕೆಯೆ
ಸತ್ಯರೊಳಾಡುವಗೆ ಮೃತ್ಯುವಿನ ಭಯವೆ ೪
ಕೊಟ್ಟು ಹುಟ್ಟಿದವಗೆ ಹೊಟ್ಟೆ ಬಟ್ಟೆಯ ಭಯವೆ
ಇಟ್ಟು ಹಂಗಿಸದವಗೆ ಹೊಟ್ಟೆ ಬೇನೆ ಭಯವೆ
ಸೃಷ್ಟಿಯೊಳಗೆ ನಮ್ಮ ದಿಟ್ಟ ಶ್ರೀರಾಮನಡಿ
ಮುಟ್ಟಿ ಭಜಿಪಗೆ ಮತ್ತೆ ಹುಟ್ಟುವ ಭಯವೆ ೫

 

೨೯೮
ದಾಸನೆನಿಸಿಕೊ ಎನ್ನನು ದಾಸನೆನಿಸಿಕೊ ಹರಿ ಪ
ದಾಸನೆನಿಸಿಕೊ ಶ್ರೀಶ ನಿ
ಮ್ಮ ಶ್ರೀಪಾದಕಮಲದಾಸನೆನಿಸಿಕೊ ಅ.ಪ
ದೇಶ ದೇಶ ತಿರುಗಿ ನಾನು
ಆಶಬದ್ಧನಾಗಿ ಇನ್ನು
ಏಸುಕಾಲ ಕಳೆಯಲ್ಹೀಗೆ
ಭಾಸುರಾಂಗ ದಯವನಿತ್ತು ೧
ಏಸು ಜನ್ಮ ಸುಕೃತವಡೆದು
ವಾಸನ್ಹಿಡಿದು ನಿನ್ನ ಪಾದ
ಆಸೆಯಿಂದ ಬೇಡ್ವೆ ನೆನ್ನ
ಧ್ಯಾಸದಲ್ಲಿ ವಾಸಮಾಡಿ೨
ಭಕ್ತರಿಷ್ಟಪೂರ್ಣನೆಂದು
ನಿತ್ಯ ಬಿಡದೆ ಕೂಗುವಂಥ
ಸತ್ಯವೆನಿಸು ವೇದದೋಕ್ತಿ
ನಿತ್ಯ ನಿರ್ಮಲಾತ್ಮ ರಾಮ ೩

 

೧೭೧
ದಾಸರ ಶಿಶು ನಾನು ಶ್ರೀಹರಿ
ದಾಸರು ಶಿಶು ನಾನು ಪ
ಹೇಸಿ ಪ್ರಪಂಚದ ವಾಸನಳಿದು ಜಗ
ದೀಶನ ಶ್ರೀಪಾದದಾಸಾನುದಾಸರ ಅ.ಪ
ಮರವೆ ಮಾಯ ತರಿದು ಲೋಕ
ದರಿವಿನೊಳಗೆ ಬೆರೆದು
ಪರಿಪರಿಯಿಂದಲಿ ನರಹರಿ ಚರಣವ
ಸ್ಮರಣೆಯೊಳಿಟ್ಟು ಬಲು ಹಿರಿಹಿರಿ ಹಿಗ್ಗುವ ೧
ಮೋಸಕ್ಲೇಶವನಳಿದು ಭವದ
ಆಶಾಪಾಶತುಳಿದು
ಸೋಸಿಲಿಂದ ಅನುಮೇಷ ಬಿಡದೆ ಹರಿ
ಸಾಸಿರ ನಾಮಮಂ ಬೇಸರದ್ಹೊಗಳುವ ೨
ಸತ್ಯ ಸನ್ಮಾರ್ಗಬಿಡದೆ ಮನವಂ
ಎತ್ತ ಕದಲಗೊಡದೆ
ಚಿತ್ತ ಶುದ್ಧಿಯಿಂದ ನಿತ್ಯ ನಿರ್ಮಲಾತ್ಮ
ಕರ್ತು ಶ್ರೀರಾಮನ ಅರ್ತು ಭಜಿಸುವಂಥ ೩

 

೧೭೨
ದಾಸರ ಸಖ ಮಾಡಂದೆ ಎನ್ನ
ಧ್ಯಾಸದಿರಗಲದೆ ಶ್ರೀಹರಿ ತಂದೆ ಪ
ಕನಕರಾಯನು ನಿಜದಾಸ ನಿನ್ನ
ಘನತರ ಪ್ರಸನ್ನತೆ ಪಡೆದನುಮೇಷ
ಅನುದಿನ ನಿಮ್ಮಯ ಘನಮಹಿಮೆಯನು ತೋರಿ
ಮುನಿವ್ಯಾಸರಾಯರ ಮನವ ತಣಿಸಿದಂಥ ೧
ಘನ ಸತ್ಯ ಕಬೀರದಾಸ ತನ್ನ
ತನುಮನಧನವನ್ನು ನಿನಗರ್ಪಿಸೀತ
ವನಿತೆಯನೊತ್ತಿಟ್ಟು ತನುಜಾತನನು ಕೊಂದು
ಉಣಿಸಿ ಸಂತರಿಂ ಸುತನ ಪ್ರಾಣವ ಪಡೆದಂಥ ೨
ವಾಸನಳಿದು ಪುರಂದಾಸ ತನ್ನ
ನಾಶಬುದ್ಧಿಗೆ ನಾಚಿ ನೀಗಿ ಮನದಾಸೆ
ಸೋಸಿಲಿಂ ತವಪಾದಧ್ಯಾಸ ಬಲಿಸಿ ಜಗದೀಶ
ಹೇಸದೆ ನಿಮ್ಮನು ಗಿಂಡಿಲ್ಹೊಡೆದಂಥ ೩
ವರನಾಮದೇವ ನಿಜದಾಸ ತನ್ನ
ಪರಮಸಂತರಿಗೆಲ್ಲ ಪಾಲಿಸಿ ಭಾಷ
ಸಮ ಗೌಪ್ಯದಿಂ ಪಂಪಾಪುರಿಗೈದಿರಲು ನಿನ್ನ
ತಿರುಗಿ ಕರೆದೊಯ್ದು ಇರವ ಪೂರೈಸಿದಂಥ ೪
ಬಲ್ಲಿದ ತುಕಾರಾಮದಾಸ ಬಲು
ಕ್ಷುಲ್ಲಕರುಪಟಳ ಸಹಿಸಿ ಮನದಕ್ಲೇಶ
ಎಲ್ಲವ ನೀಗಿ ಹರಿ ಪುಲ್ಲನಾಭನ ಪಾದ
ದಲ್ಲೆ ಮನ ನಿಲ್ಲಿಸಿ ಉಲ್ಲಾಸದಿರುವಂಥ ೫
ಬಗೆಯ ತಿಳಿದು ಜಗನ್ನಾಥ ನಿಮ್ಮ
ಸುಗುಣದರಿದು ವ್ಯಾಧಿ ಕಳೆದುಕೊಂಡು ಪ್ರಮಥ
ನಿಗಮಗೋಚರ ನಿನ್ನ ಬಗೆಬಗೆ ಪೊಗಳುತ
ಜಗದಮಾಯವ ಗೆಲಿದು ಸೊಗಸಿನಿಂ ನಲಿವಂಥ ೬
ಉದಧಿಜಿಗಿದ ಹನುಮಂತ ಮಹ
ಪದುಮಾಕ್ಷಿಯಳ ಕಂಡು ನಮಿಸಿದ ಬಲವಂತ
ಸದಮಲಾಂಗಿಗೆ ತನ್ನ ಹೃದಯಸೀಳಿದ್ಹಟದಿಂ
ಮುದ ಶ್ರೀರಾಮನ ಪಾದ ತೋರಿಸಿದಂಥ ೭

 

೨೯೯
ದಿಖಾದೇ ಮೂರ್ತಿ ಅಪನೇಕಾ
ಶ್ರೀಹರಿ ಭಕುತಿದಾಯಕ ಪ
ಉಡದೇ ಮಾಯಾ ಮಮತಾಕೋ
ಛುಡಾದೇ ಪ್ರೇಮಪಾಶಾಕೋ
ಮಿಟಾದೇ ನಾಶ ಹಿರಸಕೋ
ಕಟಾದೇ ವಿಷಯಲಂಪಟಕೋ ೧
ಮೋಕಾ ದೋ ಅಪನೀ ಕೀರ್ತನ ಕೋ
ಮಜಾದೋ ನಾಮಸ್ಮರಣ್ಕೇ
ಕೃಪಾದೋ ಭಜನ ಆನಂದಕೇ
ಬನಾದೋ ದೂತ ವೈಕುಂಠಕೇ ೨
ಕರಾದೋ ಸಂಗ ದಾಸೋಂಕೇ
ಭುಲಾದೋ ಪಾಪ ಕರ್ಮೌಂ ಕೋ
ಪಿಲಾದೋ ಧ್ಯಾನ ಅಮೃತಕಾ
ಶ್ರೀರಾಮ ನಾಮ ತಾರಕಾ ೩

 

೩೦೦
ದಿನದಿನದೊಳು ಬಿಡದೊನಜಾಕ್ಷ
ಘನಮಹಿಮನ ಪಾದ ಭಜಿಸಿ ನೀ ಸುಖಿಯಾಗೊ ಮನವೆ ಪ
ನಂಬುಗೆ ಕಾರಣ ಅಂಬುಜಾಕ್ಷನ ಶ್ರೀಪಾ
ದಾಂಬುಜ ಒಲಿಸಲು ಕುಂಭಿಣಿಯೊಳಗೆ
ನಂಬಿ ಪ್ರಹ್ಲಾದ ಕರೆಯೆ ಕಂಬದಿಂ ಬಂದವನ
ಬೆಂಬಿಡದಲೆ ಕಾಯ್ದನೆಂಬೋಕ್ತಿ ಕೇಳಿ ತಿಳಿದು ೧
ದುರಿತದ ತವರಿದು ನರಕಕ್ಕೆ ಬೇರೆಲೊ
ಮರವೆಸಂಸಾರ ಮಹಸರಸಿನಸರೋವರ
ಸುರಸಿನೊಳ್ ಸಿಲ್ಕಲು ತಿರುಗರೆಂಬುವ
ಹರಿಶರಣರ್ವಾಕ್ಯಗಳು ಸ್ಥಿರನಂಬೀ ಅರಿತು ೨
ಕಿರಿಕಿರಿ ಸಂಸಾರ ಪರಿಪರಿಬಾಧಿಪ
ಉರಿಕಿನ ತಿಂಡಿಯಿದು ನೆರೆನಂಬಬೇಡ
ಜರಸುಖವಿಲ್ಲದ ಎರವಿನ ಕಾಯಕ್ಕೆ
ಹಿರಿಹಿರಿ ಹಿಗ್ಗಿ ಕೆಡದಿರು ವಿವರಿಸಿನೋಡಿ ೩
ಸತಿಸುತರಿವರೆಲ್ಲ ಅತಿಭಾಗ್ಯ ಇರುವನಕ
ಸತತ ನಿನ್ನಯ ಸೇವೆ ಹಿತದಿಂ ಮಾಳ್ಪರು
ಗತಿಸಿ ಪೋಗಲು ಭಾಗ್ಯ ಸತಿಸುತರೆ ನಿನ
ಗತಿವೈರಿಗಳು ಕಾಣೊ ಮತಿಹೀನ ಮನಸೆ ೪
ಇರುಳು ಹಲವು ಪಕ್ಷಿ ನೆರೆದುಂಡು ವೃಕ್ಷದಿ
ತಿರುಗಿ ಉದಯದೊಳು ಹಾರಿಹೋಗ್ವ ತೆರದಿ
ಸರುವ ಅಸ್ಥಿರವೆಂದು ಅರಿತು ವಿಚಾರಿಸಿ
ಸ್ಥಿರಸುಖವನು ಪಡೆಯೊ ಶ್ರೀರಾಮನಡಿಗ್ಹೊಂದಿ ೫

 

೫೩೪
ದಿಮ್ಮಾಕ ನಿನಗ್ಯಾಕೆ ಎಲೆ ಎಲೆ
ಜಮ್ಮಾಸಿ ಜರ ತಿಳಿಕೊ ಪ
ದಿಮ್ಮಾಕ ನಿನಗ್ಯಾಕೆ ಛೀಮಾರಿ ನಿನ್ನ
ದಿಮ್ಮಾಕ ಮುರಿಲಿಕ್ಕೆ ಗುಮ್ಮವ್ವ ನಿಂತಾಳೆ ಅ.ಪ
ಸೊಕ್ಕಿನಿಂದ ನಡೆವಿ ಮುಂದಿಂದು
ಲೆಕ್ಕಕ್ಕೆ ತರದಿರುವಿ
ಫಕ್ಕನೊಯ್ದೆಮನವರು ಉಕ್ಕಿನ ಪ್ರತಿಮೆಯ
ತೆಕ್ಕೆಯೊಳಾನಿಸಿ ನಿನ್ನ ಒಕ್ಕಲಿಕ್ಕುವರವ್ವ ೧
ತಾರತಿಗಡಿ ತುಸು ವಿ
ಚಾರಮಾಡಿನೋಡು
ಘೋರ ಯಮದೂತರು ಹಾರೆ ಕಾಸಿ ಯೋನಿ
ದ್ವಾರದಿ ಸೇರಿಸಿ ಘೋರ ಬಡಿವರವ್ವ ೨
ಪಾಮರಳಾದಲ್ಲೆ ಮುಂದಿನ
ಕ್ಷೇಮವ ಮರೆತಲ್ಲೇ
ಭೂಮಿಸುಖಕೆ ಮೆಚ್ಚಿ ತಾಮಸದಲಿ ಬಿದ್ದು
ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರಾದಿ ೩

 

೩೭
ದೀನದಯಾಪರ ಜಾನಕೀನಾಥ
ನೀನೆ ದಯಾರ್ಣವಅನಾಥಜನಾಪ್ತ ಪ
ಘನತರ ಭವತಾಪವನು ಪರಿಹರಿಸೊ
ಕನಿಕರಯುತ ನೀನೆ ಮನುಮುನಿವಿನುತ ೧
ಲಾಖಚೌರೈಂಸಿಜನ್ಮ ಸಾಕಾದೆ ತಿರುತಿರುಗಿ
ಕಾಕುಬವಣೆ ಸಾಕೋ ಲೋಕೇಶ ಕೃಪಾ ದೇ ೨
ಭಕುತಾಭಿಮಾನಿ ನೀ ನಿಖಿಲಜಗಸೂತ್ರ
ಭಕುತನ ಮೊರೆ ಕಾಯೊ ಭಕುತಾಭಿರಾಮ ೩

 

೩೦೧
ದೀನನಾಥ ನೀನೆ ಪ್ರಭು
ಧ್ಯಾನಮಾಳ್ಪೆ ಕಾಯೊ ಕರುಣಿ ಪ
ಜಾಹ್ನವೀಜನಕ ಜನಾರ್ದನ
ಜಾನಕೀಪ್ರಿಯ ಜಗದೊಡೆಯ
ವೇಣುಗೋಪಾಲ ನಿನ್ನ
ಧ್ಯಾನಾನಂದ ಪಾಲಿಸಭವ ೧
ಕವಿದುಕೊಂಡು ದಹಿಸುತಿರುವ
ಭವದ ತಾಪ ಭಯವ ತರಿದು
ಸುವಿಚಾರ ಸುಜನಸಂಗ
ಜವದಿ ನೀಡಿ ದಯದಿ ಪೊರೆ ೨
ವಿಷಯದ್ವಾಸನೆ ಪರಿಹರಿಸಿ
ಅಸಮಜ್ಞಾನ ಸೌಖ್ಯವಿತ್ತು
ಒಸೆದು ನಿಮ್ಮ ವಿಮಲಚರಣ
ಕುಸುಮದಾಸನೆನಿಸು ಶ್ರೀರಾಮ ೩

 

ಗೋಪಿಯರೆಲ್ಲ ಒಮ್ಮೆ ಯಮುನಾ
೩೮
ದೀನಪಾಲನ ನಾರಿಮಾನರಕ್ಷಣ ಸಿರಿ
ಪ್ರಾಣರಮಣ ಹರಿ ನಾರಾಯಣ ಪ
ಸೋಮಕಾಸುರಹರ ಕಾಮಿತ ಪರಿಹರ
ಭೂಮಿಜೆಜನಕಜಯ ಜನಾರ್ದನ
ಸ್ವಾಮಿ ಗೋವಿಂದ ಮೇಘಶ್ಯಾಮ ಮುಕ್ಕುಂದ ಭಕ್ತ
ಪ್ರೇಮ ಆನಂದ ಹರಿ ನಾರಾಯಣ ೧
ಪಾಷಾಣಪಾವನ ದೋಷನಿವಾರಣ
ನಾಶರಹಿತ ಸುಪ್ರಕಾಶನೆ
ಶೇಷಶಯನ ಗಿರಿವಾಸ ದಾಸರ ಪ್ರಾಣೇಶ
ಕೇಶವ ಹರಿ ನಾರಾಯಣ ೨
ವಾರಿಧಿಮಥನ ನಾರದವಂದನ
ಕಾರುಣ್ಯನಿಧಿ ಕರುಣಾಂತರ್ಗತ
ನಾರಸಿಂಹ ದಿವ್ಯಾಪಾರಮಹಿಮ ಸುರ
ಘೋರನಿವಾರ ಹರಿ ನಾರಾಯಣ ೩
ಶಾಂತ ಶಾಂತಾಕಾರ ಶಾಂತಜನಾಧಾರ
ಶಾಂತಿ ಸದ್ಗುಣಧಾಮ ಶುಕ್ಲಾಂಬರ
ಶಾಂತಮೂರುತಿ ಭೂಕಾಂತ ಪರಮವೇ
ದಾಂತಾತೀತ ಹರಿ ನಾರಾಯಣ ೪
ನಾಥ ಜಾನಕೀಪ್ರಾಣ ಭೂತಳಪಾವನ
ದಾಥ ಜಗನ್ನಾಥ ವಿಶ್ವಾಂಬರ
ಪಾತಕಹರ ವಿಧಿತಾತನೆ ನಿಜಸುಖ
ದಾತ ಶ್ರೀರಾಮ ಹರಿ ನಾರಾಯಣ ೫

 

 

೫೩೬
ದೂರಮಾಡು ದೂರಮಾಡು ದುರ್ಜನ ನೆರೆಯ
ಸಾರಸಾಕ್ಷನೆ ಬೇಗ ದುಷ್ಟಸಂಗತಿಯ ಪ
ಸೇಂದಿ ಸೆರೆ ಕುಡಿದು ಮನಬಂದಂತೆ ಕುಣದಾಡಿ
ನಿಂದಿಸಿ ಕಂಡವರಿಂ ತಿಂದು ಲತ್ತೆಯನು
ಮಂದಿಯೋಳ್ಮುಖದೋರ್ವ ಹಂದಿಮನುಜರ ದರ್ಶ
ನೆಂದೆಂದು ಬೇಡೆನಗೆ ಮಂದರಾದ್ರಿನಿಲಯ ೧
ನೂತನದ ಮಾತಾಡಿ ಖ್ಯಾತಿಯಿಂ ತೋರ್ಪಡಿಸಿ
ಮಾತುಮಾತಿಗೆ ವಂಚಿಸಾತುರಕೆ ಪರರ
ಘಾತಗೈಯುವ ಮಹಪಾತಕರ ಸಂಗ ಮಮ
ಜಾತಿ ಜನುಮಕೆ ಬೇಡ ದಾತ ಜಗನ್ನಾಥ ೨
ಧ್ಯಾನದಾಸರ ಕಂಡು ಜ್ಞಾನವಿಲ್ಲದೆ ತುಸು
ಹೀನಮಾತುಗಳಾಡಿ ಏನುಕಾಣದಲೆ
ಶ್ವಾನನಂದದಿ ಚರಿಪ ಮಾನಹೀನರ ನೆರಳು
ಏನಿರಲುಬೇಡ ಮಮಪ್ರಾಣ ಶ್ರೀರಾಮ ೩

 

೩೦೨
ದೇವ ಏನು ಬೇಡುವುದಿಲ್ಲ ನಾನು ನಿನ್ನ
ಬೇಡುವೆ ಭವಭವದಿದನೆ ಕೊಡು ನೀನು ಪ
ಶಿರ ನಿನ್ನ ಚರಣದಿ ಎರಗಲಿ ಕರ್ಣ
ಹರಿಕಥೆಕೀರ್ತನೆ ಶ್ರವಣ ಮಾಡಲಿ
ಪರಮಾತ್ಮಮೂರ್ತೆನ್ನ ನೇತ್ರ ನೋಡಲಿ
ಶಿರಿವರಮುಡಿದ ಪರಿಮಳ ನಾಸಿಕ ಘ್ರಾಣಿಸಲಿ ೧
ವÀದನ ನಿನ್ನನು ಸ್ತುತಿಸಲಿ ನಿನ್ನ
ಸದಮಲಮಹಿಮೆಯನು ಜಿಹ್ವೆ ಕೊಂಡಾಡಲಿ
ಹೃದಯವು ತವನಾಮ ತುಂಬಿಕೊಳ್ಳಲಿ
ಮಧುಸೂದನನ ಪ್ರಸನ್ನತೆ ಮನವು ಬಯಸಲಿ ೨
ಕರ ನಿನ್ನ ಚರಣಮಂ ನಿರುತ ಪೂಜಿಸಲಿ ದ್ವಯ
ಚರಣಗಳುನುದಿನ ಯಾತ್ರೆಗೈಯಲಿ
ಪರಿಪರಿ ತವಲೀಲೆಯೊಳು ಬುದ್ಧಿ ನಿಲ್ಲಲಿ ಎನ್ನ
ಶರೀರ ಶ್ರೀರಾಮನ ಚರಣಕೊಪ್ಪಲಿ ೩

 

೧೪೧
ದೇವ ಗಿರಿಜಾಧವ ಪುರಹರ ಗೌರಿವರ
ಕರುಣಾಕರ ಕರುಣಿಸೆನ್ನ ಪ
ಫಾಲನೇತ್ರ ಪಾಲಯ ಜಗ
ನೀಲಕಂಠ ಮೇಲುಮಂದಿರ
ಶೂಲಪಾಣಿ ಕಾಲಮರ್ದನ
ಬಾಲನೆಂದು ಪಾಲಿಸೆನ್ನ ೧
ದುರಿತರಹಿತ ಕರುಣಭರಿತ
ಪರಮಚರಿತ ಸ್ಮರನ ಭಂಜಿತ
ಉರಗಭೂಷ ವರಮಹೇಶ
ಹರಿಯ ಪ್ರೇಮ ದೊರಕಿಸೆನಗೆ ೨
ಒಡೆಯ ಶ್ರೀರಾಮನಡಿಯ ಧ್ಯಾನ
ಪಿಡಿದು ಬಿಡದ ದೃಢಭಕುತಿ
ಗಡನೆಕೊಡೆಲೊ ಮೃಡನೆಯಿದನು
ದೃಢದಿ ಬೇಡ್ವೆ ಜಡಧಿಧರನೆ ೩

 

೩೦೩
ದೇವ ದೇವ ತೋರು ದಯವ ಪ
ಕಾವದೇವ ನೀನೆ ಎನ್ನ
ಕೈಯಪಿಡಿದು ಕಾಯೊ ಅಭವ ಅ.ಪ
ಧ್ಯಾನಿಪ ಭಕ್ತ ದೀನರಭಿಮಾನಿ
ನೀನೆ ಕರುಣಿಸೊ
ದೀನಸ್ವರದಿ ಬೇಡಿಕೊಂಬೆ
ಮಾನರಕ್ಷಿಸಿ ಪೊರೆಯೊ ಜೀಯ ೧
ನೀಗಿಸಲು ದುರ್ಬವಣೆಯನು
ಬಾಗಿ ನಿಮ್ಮ ಮರೆಯ ಹೊಕ್ಕೆ
ಭೋಗಿಶಯನ ಬಾಲನನ್ನು
ಬಗಲೊಳಿಟ್ಟು ಸಲಹು ಜೀಯ ೨
ಭಾಮೆಮಣಿಯ ಸಮಯಕೊದಗಿ
ಪ್ರೇಮದಿಂದ ಮಾನ ಕಾಯ್ದಿ
ಸ್ವಾಮಿ ನೀನೆ ಗತಿಯು ಎನಗೆ
ಪ್ರೇಮದಿಂದ ಕಾಯೊ ಶ್ರೀರಾಮ ೩

 

೫೩೭
ದೇವರಾಗಬಾರದೇನೆಲೇ ದೆವ್ವಿನಂಥ…….
ದೇವರಾಗಬಾರದೇನೆಲೇ ಪ
ದೇವರಾಗಬಾರದೇಕೋದೇವನ ಪಾದವನಂಬಿ
ಕಾವುಮೀರಿ ಹೋದಮೇಲೆ ಬಾಯಬಿಟ್ಟರೆ ಬರುವುದೇನೆಲೆ ಅ.ಪ
ತಂದ ಬುತ್ತಿ ಚೆನ್ನಾಗುಣ್ಣೆಲೆ ನೀನದನು ಒಲ್ಲೆ
ನೆಂದರೆ ಬಿಟ್ಟ್ಹೋಗ್ವುದೇನೆಲೆ ಹೇ ಪಾಪಿ ನೀನು
ಬಂದಹಾದಿ ನೋಡಿಕೊಳ್ಳೆಲೆ ಮುಂದಿದರಿಯೆಲೆ
ಬಿಂದುಮಾತ್ರಸುಖಕೆ ಮೋಹಿಸಿ ಪರ್ವತಾಕಾರ ಪಾಪಹೊತ್ತು
ಮಂದಮತಿಯೋಳ್ಬಿದ್ದು ಯಮನ
ಬಂಧಕ್ಕೀಡಾಗುವುದಿದೇನೆಲೆ ೧
ನಾಶನಾಗಿ ಹೋಗುತಾದೆಲೇ ಈ ಜಗವು ಒಂದಿನ
ಆಸೆಯೆಂಬ ಕುಳಿ ಧುಮುಕ ಬೇಡೆಲೆ ಮಹನೀತಿವಿಡಿದು
ನಾಶವಾಗದಪದವಿ ಗಳಿಸೆಲೇ ಸೋಸಿನೋಡೆಲೆ
ಮೋಸಮರವೆಯಿಂ ನಾಶವಾಗದೆ ಹೇಸಿಸಂಸಾರ
ದ್ವಾಸನಳಿದು ದಾಸಜನರಾವಾಸದಿರ್ದು ದೋಷದೂರನ
ನಾಮ ಭಜಿಸಿ ೨
ಉಟ್ಟ ಸೀರೆಬಿಟ್ಟು ಹೋಗಿದ್ದ್ಯಂತೆ ಹೇ ಹುಚ್ಚು…….
ಎಷ್ಟೋಸಾರಿ ಹುಟ್ಟ್ಹುಟ್ಟಿದರಂತೆ ಈ ಕಾಯಧರಿಸಿ
ಬಿಟ್ಟುಹೋಗೇದಸ್ತಿ ಪರ್ವತ್ಹೋಲ್ವಂತೆ ಕೆಟ್ಟು ಬಿದ್ದೈತೆ
ದುಷ್ಟಭ್ರಷ್ಟತೆಗಳನ್ನು ಬಿಟ್ಟು ಶಿಷ್ಟಸಂಗಕೆ ಮನವಗೊಟ್ಟು
ಸೃಷ್ಟಿ ಗೀರೇಳು ಸೂತ್ರನಾದ ದಿಟ್ಟ ಶ್ರೀರಾಮನಡಿಗೆ ಪೊಂದಿ ೩

 

ಮೃಕಂಡುಮುನಿಕಂದಗೊಲಿದ
೧೪೨
ದೋಷನಾಶ ಜಗದೀಶ ಈಶ ಕೈ
ಲಾಸವಾಸ ಸದಾನಂದ ಹರ ಜೈಜೈ ಪರಮಾನಂದ ಪ
ದಂಡಧರನೆ ಹರ ರುಂಡಮಾಲ ರುದ್ರ
ಕೆಂಡನಯನ ಸದಾನಂದ ಹರ ಜೈ ಜೈ ಪರಮಾನಂದ೧
ಗೌರಿನಾಥ ಪ್ರಭು ಮಾರಮರ್ದನ ಮೃಡ
ವಾರಿಧಿಧರ ಸದಾನಂದ ಹರ ಜೈ ಜೈ ಪರಮಾನಂದ ೨
ಅಗಜಾವಲ್ಲಭ ನಿಗಮವಂದ್ಯ ಭಕ್ತ
ರಘನಾಶನ ಸದಾನಂದ ಹರ ಜೈ ಜೈ ಪರಮಾನಂದ ೩
ಗಜಚರ್ಮಾಂಬರ ಸುಜನರ ಪರಿಪಾಲ
ತ್ರಿಜಗಪೂಜ್ಯ ಸದಾನಂದ ಹರ ಜೈ ಜೈ ಪರಮಾನಂದ ೪
ತ್ರಿಪುರಸಂಹರ ನುತ ಸುಫಲದಾಯಕ ಮಹ
ಕೃಪಾಕರ ಶಿವ ಸದಾನಂದ ಹರ ಜೈ ಜೈ ಪರಮಾನಂದ ೫
ನೀಲಕಂಠ ಭವಮಾಲನಿವಾರ ತ್ರಿ
ಶೂಲಧಾರಿ ಸದಾನಂದ ಹರ ಜೈ ಜೈ ಪರಮಾನಂದ ೬
ಚಂದ್ರಚೂಡ ಶರಣೇಂದ್ರ ಮೃಕಂಡುಮುನಿ
ಕಂದಗೊಲಿದ ಸದಾನಂದ ಹರ ಜೈ ಜೈ ಪರಮಾನಂದ ೭
ಫಾಲನಯನ ಸುಖದಾಲಯ ನುತಜನ
ಮೇಲುಮಂದಿರ ಸದಾನಂದ ಹರ ಜೈ ಜೈ ಪರಮಾನಂದ ೮
ಭೂತನಾಥ ಭವ ಭೂತಿಖ್ಯಾತ ಜಗ
ನ್ನಾಥ ದಾತ ಸದಾನಂದ ಹರ ಜೈಜೈ ಪರಮಾನಂದ ೯
ನಾದತೀತ ಅಮರಾದಿವಿನುತ ಮಹ
ದಾದಿದೇವ ಸದಾನಂದ ಹರ ಜೈ ಜೈ ಪರಮಾನಂದ ೧೦
ನತಜನ ಸುಖದಾಶ್ರಿತ ಹಿತಮತಿ ದೇ
ನುತಿಪೆ ಸತತ ಸದಾನಂದ ಹರ ಜೈಜೈ ಪರಮಾನಂದ ೧೧
ಭಾಗವತರ ಪ್ರಿಯ ಭಗವತ್ಶಿಖಾಮಣಿ
ನಾಗಭೂಷ ಸದಾನಂದ ಹರ ಜೈ ಜೈ ಪರಮಾನಂದ ೧೨
ಖೊಟ್ಟಿಲೋಹ ಸುಟ್ಟು ಕಿಟ್ಟತೆಗೆವಂತೆನ್ನ
ಭ್ರಷ್ಟತ್ವಕಳಿ ಸದಾನಂದ ಹರ ಜೈ ಜೈ ಪರಮಾನಂದ ೧೩
ಹರಣಪೋದರು ಹರಿಚರಣಸ್ಮರಣೆಬಿಡ
ದ್ವರವ ಪಾಲಿಸು ಸದಾನಂದ ಹರ ಜೈ ಜೈ ಪರಮಾನಂದ ೧೪
ಲಿಂಗಪುರೇಶ ಶಿವಲಿಂಗರೂಪ ಭವ
ಭಂಗಸಂಗ ಸದಾನಂದ ಹರ ಜೈ ಜೈ ಪರಮಾನಂದ ೧೫
ಮಂದರಧರನಡಿ ಚಂದದೊಲಿಸಿ ಎನಗಾ
ನಂದಕೊಡು ಸದಾನಂದ ಹರ ಜೈ ಜೈ ಪರಮಾನಂದ ೧೬
ಮಂಗಳಮೂರುತಿ ತುಂಗವಿಕ್ರಮ ಶ್ರೀ
ರಂಗ ರಾಮ ಭಕ್ತಾನಂದ ಹರ ಜೈ ಜೈ ಪರಮಾನಂದ ೧೭

 

೩೦೫
ಧನವಂತನಾದವನೆ ಘನವಂತ ಜಗದಿ
ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ
ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ
ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ
ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ
ಮನ್ನಿಪರು ಅವನೊಚನ ಘನಭಕುತಿಲಿಂದ ೧
ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ
ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ
ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ
ತಿರುಗುವನು ಎಂದೆನುತ ತಿರಿಸುವರು ಹೀನ ೨
ಬಂಧುಬಳಗವುಯೆಂದು ಬಂದು ಕರೆಯಲವನ
ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು
ಚಂದದಿಂದುಂಡೇವೇನೆಂದು ಜರೆವರು ಮನಕೆ
ಬಂದ ತೆರದವನ ಮನನೊಂದಳಲುವಂತೆ ೩
ಹತ್ತಿರದವರಾರು ಹತ್ತಿರಕೆ ಬಾರರು
ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು
ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು
ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು ೪
ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ
ಚರಿಸುವ ಅಧಮಜನರಿರವೇನು ಜಗದಿ
ಗರುವಿಕರ ಸಿರಿಗಿಂತ ಶರಣರ ಬಡತನವೇ
ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ ೫

 

೩೯
ಧನ್ಯನಲ್ಲವೇ ಇವನು ಧನ್ಯನಲ್ಲವೇ ಪ
ಧನ್ಯನಲ್ಲವೇ ಪನ್ನಂಗಶಯನ
ನುನ್ನತ ಮಹಿಮೆ ತನ್ನೊಳ್ತಿಳಿದವ ಅ.ಪ
ಕರಿ ಮೊಸಳಿಗೆ ಸಿಲ್ಕಿ ಪೊರೆಯೊ ಹರಿಯೆನಲು
ಕರುಣದಿಂದಲಿ ಬಂದು ಪೊರೆದನೆಂದರಿತವ ೧
ದುರುಳ ದುಶ್ಯಾಸನನು ಸೀರೆ ಸೆಳೆಯುತಿರೆ
ತರುಣಿಗ್ವರದ ಶ್ರೀಪರಮನೆಂದರಿತವ ೨
ಬಲಿಯನು ರಸಾತಳಕಿಳಿಸಿ ತಾ ಪಾದದಿ
ಒಲಿದು ಮನೆಯ ಬಾಗಿಲ ಕಾಯ್ದೆಂದರಿತವ ೩
ಮಲತಾಯಿ ಧ್ರುವನೊದೆದು ಛಲದಿ ನೂಕಲು ಕಂದ
ನಳಿನಾಕ್ಷ ಗತಿಯೆನಲು ಒಲಿದು ಸಲಹಿದ್ದರಿತವ ೪
ನೀನೆಗತಿಯೆನಗೀ ಭುವನದಾರು ಗತಿಯಿಲ್ಲ
ವೆನುತ ಶ್ರೀರಾಮನ ಪಾದ ನೆನವಿನೊಳಿರ್ದವ ೫

 

೪೦
ಧನ್ಯರಲ್ಲವೆ ಬಹು ಮಾನ್ಯರಲ್ಲವೆ ಪ
ಸನ್ನುತಾಂಗ ಹರಿಯ ಚರಣ
ಕಣ್ಣಿನೋಳ್ಕಂಡು ಹಿಗ್ಗುವರು ಅ.ಪ
ಭಿನ್ನಭೇದವಳಿದು ಪರರ
ತನ್ನ ಸ್ವರೂಪತಿಳಿದು ಪರಮ
ಪನ್ನಂಗಶಾಯಿ ಉನ್ನತಚರಿತ
ವನ್ನು ಬರೆದು ಪಾಡುವವರು ೧
ವಿಷಮಸಂಸಾರ ಕನಸೆಂದು
ವಿಷಯಸುಖಕೆ ಮೋಹಿಸದೆ
ಕುಸುಮನಾಭನ ಅಸಮನಾಮ
ರಸನೆಯಿಂದ ಪೊಗಳುವರು ೨
ಕಡುಬಂಧ ಈ ಜಡಭವದ
ಜಡರನಳಿದು ದೃಢವಹಿಸಿ
ಒಡೆಯ ಶ್ರೀರಾಮನಡಿಯ ಭಕುತಿ
ಪಡೆದು ಆನಂದದಾಡುವವರು ೩

 

ದಾಸೀಜನ, ಭೃತ್ಯವರ್ಗ
೬೨೬
ಧನ್ಯರಿಗನ್ಯರ ಪರಿವ್ಯೇ
ದೈನ್ಯಬಿಡುವರೆ ಅವರಿಗಿರುವುದೇ ಅರಿವು ಪ
ಮೇಲು ಉಪ್ಪರಿಗೆಯ ಮಾಲಿನೊಳನುದಿನ
ಶೀಲಸುಂದರಿಯರ ಲೋಲರಾಗಿರುವಂಥ ೧
ನೀಲಕೌಸ್ತುಭಮಣಿ ಮಾಲಾಲಂಕೃತರಾಗಿ
ಕಾಲಕಾಲದಿ ಮಹಲೀಲೆಯೊಳಿರುವಂಥ ೨
ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರಿಂ
ಮೂರ್ಹೊತ್ತು ಬಿಡದಂತೆ ಸಾರಿ ಪೂಜೆಯಗೊಂಬ ೩
ಎಂಟುಐಶ್ವರ್ಯಂಗಳಂಟಿಕೊಂಡು ಬಿಡದ್ವೊ
ಯ್ಕುಂಠ ಪದವಿಯೊಳು ಬಂಟರಾಗಿರುವಂಥ ೪
ಲೋಕೈಕ ಶ್ರೀರಾಮ ಲೋಕತ್ರಯಕೆ ತಾನೆ
ಏಕದೇವನು ಎಂಬ ಯಾಕಿಂಥ ಮದವಯ್ಯ ೫

 

ಪನ್ನಂಗ ಎಂದರೆ ಹಾವು, ಹಾವನ್ನೆ
೪೧
ಧ್ಯಾನಿಪೆ ನಿನ್ನ ಧ್ಯಾನಿಪರಘಹರ ಧ್ಯಾನಿಪೆ ನಿನ್ನ
ಜಾನಕೀಧವ ತವಚರಣ ಕರುಣ ಕೋರಿಪ
ಪರತರ ಮಹಿಮನೆ ಶರಣರ ಪ್ರಿಯ
ಗಿರಿಧರ ಸಿರಿವರ ಮರೆ ಕರುಣಿಸು ನರಹರಿ ೧
ಪತಿತಪಾವನ ನಿಮ್ಮ ಶ್ರುತಿಬೋಧ್ವಾಕ್ಯಗಳಭಿ
ರತಿ ಹಿಡಿದಿತ್ತು ಯತಿನುತಕ್ಪಿತಿಪತಿ ಪೊರೆ
ಪೋಷಿಸೆನ್ನನು ನಿನ್ನ ದಾಸತ್ವ ನೀಡಿ ಮುನ್ನ
ದೋಷನಾಶನೆÉ ಜಗದೀಶ ಶ್ರೀರಾಮನೆ ೩

 

೩೪೯
ನಂದು ನಂದೆಂದೇಕೆ ಬಂಧ ಪಡೆಯುವಿಯೋ ಮಂದಮನ
ತಂದೆ ಗೋವಿಂದ ತೋರುವ ಜಗಕೆ ಪ
ಚಳಿಗಾಳಿ ನಿನ್ನದೆ ಮಳೆಬೆಳೆ ನಿನ್ನದೆ
ಎಲೆಮನಸೆ ನೋಡು ನೀನೊಳಿತಾಗಿ ತಿಳಿದು ೧
ನಿಶೆದಿನ ನಿನ್ನದೆ ವಸುಧೆಸ್ಥಿತಿ ನಿನ್ನದೆ
ಪಶುವಿನಂದದಿ ಮನಸೆ ವ್ಯಸನದಲಿ ಬಿದ್ದು ೨
ಆರುಮಾಡಿದ ಸೃಷ್ಟಿಗ್ಹಾರೈಸಿ ಕೆಡುವಿಯೋ
ಮಾರಪಿತ ಶ್ರೀರಾಮ ಪಾದವಾರಿಜನಂಬದೆ ೩

 

ಶಂಬರಾಸುರ ಮಹಾ ಮಾಯಾವಿಯಾದ
೩೫೦
ನಂಬಿದೆನು ನಿನ್ನ ಅಂಬುಜನಯನ
ಬೆಂಬಿಡದೆ ಕಾಯೆನ್ನ ಶಂಬರಾರಿಪಿತನೆ ಪ
ಕಂದನ ವಚನವನು ಇಂದು ನೀ ಗೆಲಿಸಯ್ಯ
ಮಂದರಧರಗೋವಿಂದ ಎರಗುವೆ ಪದಕೆ ೧
ಜಡಜಾಕ್ಷ ನಿಮ್ಮಡಿಗೆ ದೃಢದಿಂದ ಬೇಡುವೆನು
ತಡೆಯೆನ್ನನು ಕಡೆಹಾಯ್ಸು ದುರಿತದಿಂ ೨
ಜಗದೊಳಗೆ ಎನ್ನನು ನಗೆಗೇಡು ಮಾಡದೆ
ಮಗನನ್ನ ಸಲಹಯ್ಯ ಖಗಗಮನ ಶ್ರೀರಾಮ ೩

 

೩೫೧
ನಂಬು ನಂಬೆಲೆ ಮನ ಗಿರಿಧರನ ನಿನ
ಗಿಂಬುಗೊಡುವ ಭಕ್ತ ಸಂಜೀವನ ಪ
ಕತ್ತೆಯಂತೆ ಕೂಗಿ ಕೆಡಬೇಡ ಪರ
ಮಾರ್ಥತತ್ತ್ವದ ಹಾದಿ ತಿಳಿ ಮೂಢ
ಸತ್ಯರ ಪಾದದಿ ಮನನೀಡೋ ನಿತ್ಯ
ಉತ್ತಮರೊಳಗಾಡಿ ನಿಜ ನೋಡೋ ೧
ಕೋತಿಯಂತೆ ಕುಣಿಯಲುಬೇಡೋ ಮಹ
ನೀತಿವಚನ ಮೀರಿ ನಡಿಬೇಡೋ
ಮಾತುಮಾತಿನ ಸಂಶಯಬೇಡೋ ಮುಂದೆ
ಪಾತಕದೊಳು ಬಿದ್ದು ಕೆಡಬೇಡೋ ೨
ಸಾರಸಂಸಾರ ಮಿಥ್ಯವೆಂದು ತಿಳಕೋ ನೀನು
ಪಾರುಗಾಣವ ಮಾರ್ಗ ಹುಡುಕಾಡಿಕೋ
ಧೀರ ಶ್ರೀರಾಮನ ಅಡಿಗ್ಹೊಂದಿಕೋ ಗಂ
ಭೀರ ಮೋಕ್ಷಪದವನೆ ಪಡಕೋ ೩

 

೫೩೮
ನಗಾರಿ ಗಡಗಡ ಹೊಡಿಯೋ
ಧ್ಯಾನದ ತುತೂರಿ ಹಿಡಿಯೊ
ಸಾಗರ ಶಾಯಿಯೆ ಮೂಜಗ ಧಣಿಯೆಂದು
ಜಾಗಟೆ ಡಣ್ ಡಣ್ ಬಡಿಯೊ ಪ
ಅನುದಿನ ಮನಮುಟ್ಟು ನೆನೆಯುವ ಭಕ್ತರ
ಮನದೆಣಿಕೆಯನು ನೀಡುವ
ಕನಿಕರದಿಂ ಕಾಪಾಡುವ
ಜನಕಜೆವಲ್ಲಭ ತನ್ನವರನು ಬಿಟ್ಟು
ಕ್ಷಣ ಅಗಲಿರೆನಾ ವನಜನಾಭನೆಂದು ೧
ಎಡೆಬಿಡದೊಡತೊಳ ಧೃಢದಿಂ ಭಜಿಪರ
ಕಡುದಯಾದೃಷ್ಟಿಯಿಂ ನೋಡುವ
ಸಡಗರದವರೋಳಾಡುವ
ಮೃಡವಂದಿತ ತನ್ನಡಿಯ ದಾಸರ ಕರಪಿಡಿದು
ಬಿಡದೆ ಕಾಯ್ವ ಸಡಗರದೊಡನೆಂದು ೨
ನರಹರಿ ಚರಣವ ಪರಿಪರಿ ಸ್ಮರಿಪರ
ದುರಿತರಾಸಿ ದೂರ ಮಾಡುವ
ಬರುವ ಸಂಕಟ ನಿವಾರಿಸುವ
ಜರಾಮರಣ ದೂರಮಾಡಿ ಪರಮ ಪರತರ
ಸಿರಿಸೌಭಾಗ್ಯ ಕರುಣಿಪ ಸ್ಥಿರವೆಂದು ೩
ಚಿತ್ತಜತಾಪನ ಸಚ್ಚರಿತವನು
ನಿತ್ಯ ಬಿಡದೆ ಕೊಂಡಾಡುವರ
ಭಕ್ತ ಜನರ ನೋಡಿ ಬಾಗುವರ
ಮೃತ್ಯುಬಾಧೆ ಗೆಲಿ ಸತ್ಯಾನಂದವ
ನಿತ್ತು ಪೊರೆವ ಹರಿ ಸತ್ಯ ಸತ್ಯವೆಂದು ೪
ದೀನರಾಪ್ತನಾದ ಧ್ಯಾನಮೂರುತಿ ತನ್ನ
ಧ್ಯಾನಿಸುವರ ಬೆಂಬಲಿಸುವ
ಮಾನದಿಂದ ಭವಗೆಲಿಸುವ
ಏನು ಬೇಡಲಾನಂದ ದೀಯ್ವನು
ಪ್ರಾಣೇಶ ಶ್ರೀರಾಮ ದೇವ ದೇವನೆಂದು ೫

 

೫೩೯
ನಗೆಗೇಡವ್ವಾ ತಂಗಿ ನಗೆಗೇಡು
ಹಗರಣ ಸಂಸಾರ ತಿಗಡಿ ಬುಗಡಿ ಬಲು
ಕಾಲನಾಗಿ ದ್ರವ್ಯಕೂಡಿಸಿದ ಮಹ
ಮೇಲು ಮಾಳೀಗೆ ಮನೆ ಕಟ್ಟಿಸಿದ
ಕೀಳುಸತಿಸುತರೆಂದು ನಂಬಿದ ಮತ್ತು
ಮಾಲಿನೊಳಗೆ ಇಟ್ಟು ಆಳಿದ
ಕಾಲವೊದಗಿ ಬಂದು ದಾಳಿಟ್ಟೊಯ್ಯಲು ತನ್ನ
ಆಳಿಗಿಟ್ಟುಣುತಾರ ಹೋಳಿಗೆ ೧
ಕುಂದಿಪೋಗುವಕಾಯ ಖರೆಯೆಂದ ಇದ
ರಂದ ತಿಳಿಯದೆ ಬಲುಮೋಹಿಸಿದ
ಬಂದಕಾರ್ಯದ ಬಗೆ ಮರೆದ ಸುಳ್ಳೆ
ದಂದುಗದೊಳು ಬಿದ್ದು ನಿಗರ್ಯಾಡಿದ
ಮಂದನಾಗಿ ಎಲ್ಲ ನಂದು ನಂದುಯೆಂದು
ಒಂದೂಕಾಣದೆ ಬಂದದಾರಿಹಿಡಿದ ೨
ಪರಮ ಸನ್ಮಾರ್ಗವನು ತೊರೆದ ಬರಿ
ಬರಿದೆ ದು:ಖದೊಳಗುರುಳಿದ
ಹರಿಯ ಶರಣರನು ನಿಂದಿಸಿದ ಸದಾ
ದುರುಳರಾವಾಸದೊಳಗಾಡಿದ
ಪರಮ ಕರುಣಾಕರ ವರದ ಶ್ರೀರಾಮನ
ಚರಣ ಪಿಡಿಯದೆ ಘೋರನರಕಕ್ಕೀಡಾದ ೩

 

೩೦೬
ನನಗ್ಯಾಕೆ ಬಡತನವು ಸನಕಾದಿನುತ
ನಿನ್ನ ಬೆನ್ನು ಬಲವಿರಲು ಪ
ಪುಂಡಗಂಡನು ಇರಲು ಹೆಂಡತಿಯ ಭೋಗ ಭೂ
ಮಂಡಲದೊಳಗಿನ್ನುತ್ವವ್ಯಾಕೋ
ಭಂಡರಕ್ಕಸಹರ ಪುಂಡಮಂಡಲತ್ರಯದೋ
ರ್ದಂಡನ ಪಾದೆನ್ನ ಮಂಡೆ ಮೇಲಿರಲು ೧
ಜನರಿಗೆ ಕಾಣದ ಧನವ ಕೂಡಿಟ್ಟು
ಅನುದಿನ ಹಿಗ್ಗುವವರಿಗೆ ಬಡತನವುಂಟೇನೊ
ಧಣಿಯಾಗಿ ಮೂಲೋಕವನು ಉದರದಿಟ್ಟಾಳ್ವ
ಘನಮಹಿಮನ ಪಾದ ಮನಮಂದಿರದಿರಲು ೨
ಕಲ್ಪಿತಸಂಸಾರ ಅಲ್ಪೆಂದು ನಿಜವಾಗಿ
ಕಲ್ಪಿಸಿಕೊಂಡವರು ಅಲ್ಪರೇನಯ್ಯ
ಕಲ್ಪತರು ಶ್ರೀರಾಮನ ಕಲ್ಪಾಂತರರಿಬಳಿ
ಕಲ್ಪರಲ್ಲಿಗೆ ಹೋಗಿ ಅಲ್ಪರಿವರೇನೊ ೩

 

೧೪೪
ನಮೋ ನಮೋ ಶಂಕರ ಉಮೆಪ್ರಿಯ ಶಶಿಧರ
ಕಮಲನಾಭನ ಭಕ್ತಿಕೊಡು ಸುಖಸಾರ ಪ
ಹಿಮಗಿರಿಜೇಶ ಸುಮಶರನಾಶ
ಅಮಿತಮಹಿಮ ನಿಮ್ಮ ವಿಮಲ ಪಾದದಿಬೇಡ್ವೆ ೧
ಕಾಲಮರ್ದನ ತ್ರಿಶೂಲಿಯೆ ಪುರತ್ರಯ
ಕಾಲನೊಶವಗೈದ ಫಾಲನಯನ ಕಾಯೊ ೨
ಭೂಮಿತ್ರಯಕೆ ತಾನೆ ಸ್ವಾಮಿಯೆನಿಪ ಶ್ರೀ
ರಾಮ ನಾಮಾಮೃತ ಪ್ರೇಮದಿ ಕರುಣಿಸು ೩

 

೧೪೫
ನಮೋ ಹನುಮ ಜೈ ಬಲವಂತ
ನಮೋ ಪರಾಕ್ರಮ ಧೀಮಂತ ಪ
ಹಾರಿ ಮಹಾಸಾಗರ ಸೇರಿ ದುರುಳನಪುರ
ಮೀರಿದ ಬಲು ಶೃಂಗಾರದಿ ಶೋಭಿಪ
ಸೂರಗೈದೆಲೋ ವನ ೧
ಬಿಂಕಮುರಿದು ಅಶಂಕ ದನುಜಕುಲ
ಪಂಕಜಮುಖಿಪಾದಪಂಕಜಕೆರಗಿ
ಲಂಕೆ ದಹನ ಗೈದ್ಯೋ ೨
ಸ್ವಾಮಿ ಶ್ರೀರಾಮನ ಪ್ರೇಮ ಪಡೆದು ನಿ
ಸ್ಸೀಮನೆ ಎನ್ನನು ಪ್ರೇಮದಿ ಪೊರೆಯೈ
ಸ್ವಾಮಿ ಮೂರುತಿ ೩

 

೧೪೩
ನಮ್ಮವ್ವ ಈಕಿ ನಮ್ಮವ್ವ ಒಮ್ಮನ ಕೂಲ್ಯಕಿ ನಮ್ಮವ್ವ ಪ
ಇಮ್ಮನ ಸಜ್ಜಿಗೆ ಒಮ್ಮೆಗೆ ತಿಂದು
ಸುಮ್ಮನೆ ಕೂತಳ ಗುಮ್ಮವ್ವ ಅ.ಪ
ಆರುಮೂರುಮರ ರೊಟ್ಟಿಗಳು ಒಂದೆ
ಸಾರಿಗೆ ಮುದ್ದೆ ಮಾಡಿ ನುಂಗಿದಳು
ದಾರಿಗೆ ತೋರದಂತೆ ಎಂಟು ಭಾಂಡೆ ಅನ್ನ
ವಾರೆಲಿ ಕೂತು ಸೂರೆ ಮಾಡಿದಳು ೧
ಎತ್ತಿ ತುಪ್ಪದ ಮೂರು ಡಬ್ಬಿಗಳು
ಕುತ್ತಿಗ್ಗೆ ಬೀಳಹಾಗೆ ಕುಡಿದಳು
ಹತ್ತ್ಹೆಡಿಗ್ಹೋಳಿಗೆ ಪತ್ತೆಯಿಲ್ಲದೆ ತಿಂದು
ಮೆತ್ತಗೆ ಸುತ್ತಿಕೊಂಡು ಮಲಗಿದಳು ೨
ಒಡಲನಿಲ್ಲದೆ ಕಾಯುವಳು ಇವಳು
ಇಡೀ ಬ್ರಹ್ಮಾಂಡವ ನುಂಗಿದಳು
ಪಿಡಿದೊಕ್ಕುಡಿತೆಲಿ ಕಡಲೇಳನು
ಕುಡಿದೊಡೆಯ ಶ್ರೀರಾಮನ ಕೂಡಿದಳು ೩

 

೩೦೭
ನರನಾಗಿ ಜನಿಸಿ ಫಲವೇನು ಜಗದಿ
ಹರಿಪಾದ ಸ್ಮರಣೆಯ ಅರಿಯದ ಮನುಜ ಪ
ಕಮಲಪೀಠಪಿತನ ವಿಮಲಶ್ರೀಪಾದಗಳ
ಅಮಿತ ಮಹಿಮೆ ಪೊಗಳಿ ಯಮಪಾಶ ಗೆಲಿಯುವ ೧
ಭುವನವೀರೇಳಕ್ಕೆ ಜೀವಾಳುಯೆನಿಸಿದ
ಭವದೂರನರ್ಚಿಸಿ ಭವಮಾಲೆ ಗೆಲಿಯದ ೨
ಪಕ್ಷಿಗಮನ ಪರಮಮೋಕ್ಷದಾಯಕ ಭಕ್ತ
ಪಕ್ಷ ಶ್ರೀರಾಮನೊಲಿಸಿ ಮೋಕ್ಷವ ಪಡೆಯದ ೩

 

೫೪೦
ನರನಾಗ್ಹುಟ್ಟಿದ್ದೀ ಮರುಳೆ
ಅರಿವು ಎಲ್ಲಿಟ್ಟಿದ್ದೀ ಪ
ವರವೇದಸ್ರ‍ಮತಿಶಾಸ್ತ್ರರಿದುನೋಡದೆ
ವರವರ ಒದರುವಿ ಮರೆವಿನೊಳಗೆ ಬಿದ್ದು ಅ.ಪ
ಮನಗಳು ಸ್ಥಿರಮಾಡಿ ಬರಿದ್ವಾಕ್ಕೆಣೆಸುವಿ ಸಟ್ಟೆಮಾಡಿ
ಮನಕೆ ಬಂದಂತಾಡಿ ನರಕದ ಕುಣಿಗೆ ಬೀಳುವಿ ಖೋಡಿ
ಜನನಮರಣವೆಂಬ ಕುಣಿಕೆಯೊಳಗೆ ಸಿಕ್ಕು
ಘನತರ ನೋಯ್ವುವ ನೆನೆಸಿಕೊಳ್ಳದೆ ೧
ಕುಜನ ಸಂಗೀಡ್ಯಾಡೊ ಸುಮನದಿ ಸುಜನರೊಡಗೂಡೊ
ನಿಜಮತಿಯೊಳು ಕೂಡೊ ನಿಶ್ಚಲದಿ ನಿಜವನ್ನು ಹುಡಿಕ್ಯಾಡೊ
ಗಜಿಬಿಜಿಯೊಳು ಬಿದ್ದು ಗಿಜಿಗಿಜಿಯಾಗದೆ
ತ್ಯಜಿಸೆಲೋ ಸಂಶಯ ನಿಜವು ತಿಳಿಯುತಿದೆ ೨
ಪಕ್ಷಪಾತವನ್ನು ನೀಗಿ ಜ್ಞಾನಚಕ್ಷು ತೆರೆದು ಇನ್ನು
ಸಾಕ್ಷಿಯಾಗಿ ನೀನು ಮಹದಪರೋಕ್ಷವನ್ನು ಕಾಣು
ಶಿಕ್ಷೆ ಪಡೆಯದೆ ಮಹಮೋಕ್ಷ ಪಡೆಯೊ ಜಗ
ದ್ರಕ್ಷ ಶ್ರೀರಾಮನ ಸೂಕ್ಷ್ಮದಿ ತಿಳಿದು ೩

 

೩೦೮
ನರಹರಿ ಶರಣರಸುರತರು ಶ್ರೀಕರ
ಹರಿ ನಿಮ್ಮ ಪಾದಸ್ಮರಣೆ ಮರೆಯಲಾರೆನೆಂದೆಂದು ಪ
ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರ
ಅರಲವ ಬಿಡದವರ ಸ್ಮರಣೆಯೋಳ್ನೆಲೆಗೊಂಡು
ತೆರೆದು ಕರುಣಚಕ್ಷು ಪೊರೆವೆ ಎವೆಯಿಕ್ಕದೆ ೧
ವೇದವೇದಾದಿ ನಮಿತ ಸಾಧುಸಜ್ಜನ ವಿನುತ
ಪಾದದಾಸರ ಭವಬಾಧೆಗೆಲಿಸಿ ಸು
ಹಾದಿ ತೋರಿಸಿ ಬಹು ಮೋದದಿಂ ಸಲಹುವಿ ೨
ನೀ ಮಾಡಿದುಪಕಾರ ನಾ ಮರೆಯಲಾರೆ ದೇವ
ಸ್ವಾಮಿ ಶ್ರೀರಾಮ ನಿನ್ನ ನಾಮ ಕರುಣಿಸಿ ಎನ್ನ
ಈ ಮಹಭವದು:ಖ ಕ್ಷೇಮದಿಂ ಗೆಲಿಸಿದಿ ೩

 

೫೪೧
ನಾ ನೋಡಿ ಬಂದೆ ಕೇಳಮ್ಮ ಗೆಳತಿ ಪ
ನಾನಿಲ್ಲ ನೀನಿಲ್ಲ ಏನಂದರೇನಿಲ್ಲ
ಕಾಣುವ ಮಾತಲ್ಲ ಜಾಣೆ ಸುಳ್ಳಲ್ಲ ಅ.ಪ
ಹಸುರಿಲ್ಲ ಕೆಂಪಿಲ್ಲ ಪಶುವಿಲ್ಲ ಪಕ್ಷಿಲ್ಲ
ವಸುಧಿಲ್ಲ ಉದಧಿಲ್ಲ ವ್ಯಸನಿಲ್ಲ ಬಂಧವಿಲ್ಲ
ಹಸಿವಿಲ್ಲ ತೃಷೆಯಿಲ್ಲ ದೆಸೆಯಿಲ್ಲ ದಿಕ್ಕಿಲ್ಲ
ನಿಶೆಯಿಲ್ಲ ದಿವಯಿಲ್ಲ ಕುಸುಮಾಕ್ಷಿ ಸುಳ್ಳಲ್ಲ ೧
ಜಲವಿಲ್ಲ ಗಗನಿಲ್ಲ ನೆಲವಿಲ್ಲ ಗಿರಿಯಿಲ್ಲ
ಕುಲವಿಲ್ಲ ಚಲವಿಲ್ಲ ಮಲಿನಿಲ್ಲ ಶೀಲಿಲ್ಲ
ಜಳಕಿಲ್ಲ ಊಟಿಲ್ಲ ಬೆಳಕಿಲ್ಲ ಕಾಳಿಲ್ಲ
ತಳಿಯಿಲ್ಲ ತಮಯಿಲ್ಲ ಲಲನೆ ಸುಳ್ಳಲ್ಲ ೨
ಕೃಪೆಯಿಲ್ಲ ಕಪಟಿಲ್ಲ ಜಪವಿಲ್ಲ ತಪವಿಲ್ಲ
ಗುಪಿತಿಲ್ಲ ಬೈಲಿಲ್ಲ ನೆಪ್ಪಿಲ್ಲ ಮರೆವಿಲ್ಲ
ವಿಪಿನಿಲ್ಲ ಸದನಿಲ್ಲ ರಿಪುವಿಲ್ಲ ಸ್ನೇಹವಿಲ್ಲ
ಅಪ್ಪಯಿಲ್ಲ ಅವ್ವಯಿಲ್ಲ ನಿಪುಣೆ ಸುಳ್ಳಲ್ಲ ೩
ರಾಗಿಲ್ಲ ರಚನಿಲ್ಲ ಯಾಗಿಲ್ಲ ಯಜ್ಞಿಲ್ಲ
ತ್ಯಾಗಿಲ್ಲ ತ್ಯಜನಿಲ್ಲ ಭೋಗಿಲ್ಲ ಭಾಗ್ಗ್ಯಿಲ್ಲ
ರೋಗಿಲ್ಲ ಶ್ರಮವಿಲ್ಲ ಬೈಗಿಲ್ಲ ಬೆಳಗಿಲ್ಲ
ಯಾಗಿಲ್ಲ ಪಾಪವಿಲ್ಲ ಭಗಿನಿ ಸುಳ್ಳಲ್ಲ ೪
ಹೋಮವಿಲ್ಲ ವಿಪ್ರಿಲ್ಲ ಧೂಮವಿಲ್ಲ ಧೂಳಿಲ್ಲ
ಭೂಮಿಲ್ಲ ಜನನಿಲ್ಲ ಕಾಮಿಲ್ಲ ಮರಣಿಲ್ಲ
ನೇಮಿಲ್ಲ ಕ್ರಿಯವಿಲ್ಲ ನಾಮಿಲ್ಲ ರೂಪಿಲ್ಲ
ಸ್ವಾಮಿ ಶ್ರೀರಾಮ ಬಲ್ಲ ಭಾಮೆ ಸುಳ್ಳಲ್ಲ ೫

 

೩೧೩
ನಾ ಮಾಡಿದತಿಶಯ ಅಪರಾಧ ಅಹಾ
ಸ್ವಾಮಿದ್ರೋಹವೆ ಮಾಡಿದೆ ಪ
ನೇಮವಿಲ್ಲದೆ ಪಾಪ ಕಾಮಿಸಿ ಮಾಡಿ ಹರಿ
ಪ್ರೇಮಕ್ಕೆ ದೂರಾದೆ ಪಾಮರತನದಿ ಅ.ಪ
ಗುರುನಿಂದೆ ಮಾಡಿದೆ ಸ್ಮರಿಸಿದೆನನುದಿನ
ಸ್ಮರಿಸಬಾರದ ಸ್ತ್ರೀಯರ
ಶರಣಜನರು ಕಂಡು ಶಿರವ ಬಾಗದೆ ಮಹ
ಗರುವದಿಂ ಚರಿಸಿದೆ ಪರಿಪರಿ ಜಗದಿ ೧
ಲಕ್ಷಿಸದೆ ಪರರರ್ಥ ಭಕ್ಷಿಸಿ ಇಲ್ಲೆನುತ
ಪಕ್ಷಿಗಮನನ ಸಾಕ್ಷಿಟ್ಟು
ಲಕ್ಷದಶಶತಪಾಪ ಲಕ್ಷ್ಯವಿಲ್ಲದೆ ಗೈದು
ಶಿಕ್ಷೆಗೆ ಗುರಿಯಾದೆ ಮೋಕ್ಷವನರಿಯದೆ ೨
ಪಿತಮಾತೆಯರ ನೂಕಿ ಇತರರ ಜತೆಯೊಳು
ಮತಿಗೆಟ್ಟು ಮಮತಿಟ್ಟಿಹೆ
ಮಿತಿಯಿಲ್ಲದನೃತ ಕ್ಷಿತಿಯೊಳು ಸರಿಧರ್ಮ
ಹಿತಚಿಂತನಿನಿತಿಲ್ಲದತಿಭ್ರಷ್ಟನಾದೆ ೩
ಮಣಿದು ದೈನ್ಯೆಂಬರಿಗೆ ಘನಹಾಸ್ಯಗೈಯುತ
ಮನವ ನೋಯ್ಸಿದೆ ಬೆನ್ನ್ಹಚ್ಚಿ
ಕನಿಕರೆಂಬುದು ಎನ್ನ ಕನಸಿನೊಳಿನಿತಿಲ್ಲ
ಮನಸಿನಂತ್ವರ್ತಿಸಿ ಘನಕರ್ಮಿಯಾದೆ ೪
ಇಂತು ಪಾಪಿಗೆ ಸುಖವೆಂತು ತ್ರಿಜಗದೊಳು
ಕಂತುಜನಕ ಶ್ರೀರಾಮ ಭಕ್ತವತ್ಸಲ
ನೆಂಬ ಬಿರುದು ವಹಿಸಿದಿ ಎನ್ನ
ದೆಂಥ ತಪ್ಪಿರೆ ಕ್ಷಮಿಸಿ ಸಂತಸದಿಂ ಪೊರೆ ೫

 

೪೩
ನಾ ಮಾಡಿದಪರಾಧ ನನ್ನನ್ನು ಕಾಡಲು
ನೀ ಮಾಡುವದೇನೋ ಜಾನಕೀನಾಥ ಪ
ಕಾಮಕ್ರೋಧಗಳಳಿದು ತಾಮಸಂಗಳು ನೀಗಿ
ನೇಮನಿತ್ಯದಿ ಹರಿನಾಮ ಭಜಿಸಲಿಲ್ಲ ೧
ಪರನಿಂದೆ ಪರನಾರಿಯರ ಮೋಹ ತೊರೆಯದೆ
ಗುರುಹಿರಿಯರ ಜರಿದು ನರಕಕ್ಕೆ ಗುರಿಯಾದೆ ೨
ತಂದೆ ಶ್ರೀರಾಮನೆ ಕಂದನ ತಪ್ಪು ದಯ
ದಿಂದ ಕ್ಷಮಿಸಿ ಇನ್ನು ಚೆಂದದಿಂ ಸಲಹಯ್ಯ ೩

 

೩೦೯
ನಾನಾ ಚಿಂತನೆ ಎನಗಿಲ್ಲ ಹರಿ
ನಿನ್ನ ಚಿಂತನೆ ಎನಗನುಗಾಲ ಪ
ಮಾನಾಪಮಾನದ ಭಯವಿಲ್ಲೆನಗೆ ತವ
ಧ್ಯಾನವೊಂದೆ ನೀಡು ಬಹು ಮಿಗಿಲ ಅ.ಪ
ಉಪವಾಸಬಿದ್ದರೆ ಆಡ್ಡಿಯಿಲ್ಲ ಎನ
ಗಪರೂಪ ಊಟಾದರ್ಹಿಗ್ಗಿಲ್ಲ
ಕಪಟದಿ ಬೈದರೆ ಅಹಿತಿಲ್ಲ ಜನ
ನಿಪುಣನೆಂದರೆ ಎನಗ್ಹಿತವಿಲ್ಲ
ಸುಪಥದಿ ನಡೆಸೆನ್ನ ಸಫಲನೆನಿಸಿ ನಿಮ್ಮ
ಗುಪಿತ ಮಂತ್ರ ಮಾಡನುಕೂಲ ೧
ಪರಮ ಬಡತನವಿರೆ ಪರವಿಲ್ಲ ಬಲು
ಸಿರಿ ಸಂಪದವಿರೆ ಹರುಷಿಲ್ಲ
ಮರಣಬಂದರೇನು ಕೆಡುಕಿಲ್ಲ ಮತ್ತು
ಚಿರಕಾಲವಿರಲೇನು ಸುಖವಿಲ್ಲ
ಸಿರಿವರ ನಿಮ್ಮಯ ಚರಣ ಸ್ಮರಣೆವೊಂದೆ
ಸ್ಥಿರಮಾಡು ಮರೀದಂತೆ ಗೋಪಾಲ ೨
ಕಾಮಿನಿಯರ ಪ್ರೇಮ ನಿಜವಿಲ್ಲ ಮತ್ತು
ಹೇಮ ಮುತ್ತು ರತ್ನ ಇರೋದಲ್ಲ
ಭೂಮಿಸೀಮೆಯ ಸುಖವಿಲ್ಲ ಇದು
ನೇಮವಲ್ಲೊಂದಿನ ಬಟ್ಟಬೈಲ
ಕ್ಷೇಮಮಂದಿರ ಭಕ್ರಪ್ರೇಮದಿ ಕೊಡು ಶ್ರೀರಾಮ ನಿಮ್ಮಡಿ ಭಕ್ತಿ ನುತಪಾಲ ೩

 

೩೧೦
ನಾನಿನ್ನ ಧ್ಯಾಸದೊಳಿರುವೆ ಹರಿ
ನೀನೆನ್ನ ಧ್ಯಾಸದೊಳಿರಬೇಕು ಸತತ ಪ
ಬೆಳಗು ನಿನ್ನೊಳಗಯ್ಯ ಬೆಳಗಿನೊಳಗೆ ನೀನು
ಕಳೆಯೊಳಗೆ ನೀನಯ್ಯ ಕಳೆಯು ನಿನ್ನೊಳಗೆ
ಇಳೆಮೂರು ನಿನ್ನೊಳಗೆ ಇಳೆಯೊಳು ನೀನಯ್ಯ
ಒಲಿದು ನೀ ಎನ್ನನು ಸಲಹಯ್ಯ ಸತತ ೧
ವೇದದೊಳಗೆ ನೀನು ವೇದ ನಿನ್ನೊಳಗಯ್ಯ
ನಾದ ನಿನ್ನೊಳು ದೇವ ನಾದದಿ ನೀನು
ಭೋಧದೊಳಗೆ ನೀನು ಬೋಧ ನಿನ್ನೊಳು ಪ್ರಭು
ಮೋದದಿಂ ರಕ್ಷಿಸು ಮಾಧವ ಸತತ ೨
ನೀನಿಟ್ಟ ಸೂತ್ರದಿಂ ನಾನಾ ಸೃಷ್ಟಿಗಳೆಲ್ಲ
ನಾನುತಾನೆನ್ನುತ ಕುಣೀತಿಹ್ಯವೊ
ನಾನು ನಿನ್ನೊಳು ಜೀಯಾ ನೀನು ನಿನ್ನೊಳು ತಂದೆ
ಧ್ಯಾನದಾಯಕ ಶ್ರೀರಾಮಯ್ಯ ಸತತ ೩

 

೩೧೧
ನಾನೇನು ಬೇಡಿದೆನೋ ರಂಗಯ್ಯ
ನೀನೆನ್ನ ನೋಡವಲ್ಲ್ಯಾಕೋ ಪ
ಹಾನಿ ಮಾಡೆ ಮಹಹೀನಭವಸಾಗರ
ಮಾನದಿಂ ಗೆಲಿಸೆಂದು ನಾನಿಷ್ಟೇ ಬೇಡುವೆ ಅ.ಪ
ಉಗ್ರರೂಪವ ತಾಳಿ ಶೀಘ್ರದಿಂ ಪಿತನನ್ನು
ನಿಗ್ರಹಿಸಿ ಸ್ಥಿರಪದನುಗ್ರಹಿಸಿ ಪೊರೆಯೆಂದೆನೆ
ಸುಗ್ರೀವನಂತೆನ್ನ ಆಗ್ರಜನ ಕೊಂದು ಕಪಿ
ದುರ್ಗಕ್ಕಧಿಪತಿಯೆನಿಸೆಂದಾಗ್ರಬಟ್ಟೆನೊ ನಿನಗೆ ೧
ಕುಲವ ನಿರ್ಮೂಲ ಮಾಡಿ ಇಳೆ ಪಟ್ಟಕ್ಕೆ ಸ್ಥಿರವಾಗಿ
ನಿಲಿಸು ಎನಗೆಯೆಂದು ಸುಲಭದಿಂ ಬೇಡಿದೆನೆ
ಒಲಿದು ಸಾರಥಿಯಾಗಿ ಕುಲದವರ ಸವರೆಂದು
ನಳಿನಾಕ್ಷ ತವಪಾದದೊಳು ಬೇಡಿದೆನೇನೋ ೨
ಚಿತ್ತಜಪಿತ ನಿನ್ನ ಸತ್ಯ ಬಿರುದುಗಳು
ನಿತ್ಯ ನಿತ್ಯದಿ ಬಿಡದೆ ಶಕ್ತಿಯಿಂ ಪೊಗಳುವೆ
ಭಕ್ತಿದಾಯಕ ನಿನ್ನ ಯುಕ್ತ್ಯಾರುಬಲ್ಲರು
ಮುಕ್ತಿ ದಯಮಾಡೆಂದು ಪ್ರಾರ್ಥಿಪೆ ಶ್ರೀರಾಮ ೩

 

೩೧೨
ನಾನೊಂದು ಮಾಡಲು ತಾನೊಂದಾದಮೇಲಿನ್ನೇನಿನ್ನೇನು
ಮಾನವನೆಂದೆನಿಸಿ ಮಾನಪೋದಮೇಲಿನ್ನೇನಿನ್ನೇನು ಪ
ದೇವರೆಂದು ನಮಿಸಲು ದೆವ್ವಾಗಿ ಬಡಿದ ಮೇಲಿನ್ನೇನಿನ್ನೇನು
ಜೀವದಾಪ್ತರೆ ತನ್ನ ಕೊಲ್ಲಲೆತ್ನಿಸಿದರಿನ್ನೇನಿನ್ನೇನು ೧
ತಾಯ್ತಂದೆಗಳೆ ಸುತರಿಗ್ವಿಷವನೆರೆದ ಮೇಲಿನ್ನೇನಿನ್ನೇನು
ಕೈಯೊಳು ಪಿಡಿದ ಬೆತ್ತ ಹಾವಾಗಿ ಕಚ್ಚಲು ಇನ್ನೇನಿನ್ನೇನು ೨
ಮಣ್ಣಿನ ಗಣಪತಿ ಮಂಗ್ಯನಾಗೋಡಲು ಇನ್ನೇನಿನ್ನೇನು
ಕಣ್ಣಿಲ್ಲದವನಿಗೆ ಮಾರ್ಗ ತಪ್ಪಿದ ಮೇಲೆನ್ನೇನಿನ್ನೇನು ೩
ಹಾಲೆಂದು ಸವಿದರೆ ಹಲ್ಲು ಮುರಿದಮೇಲಿನ್ನೇನಿನ್ನೇನು
ಮಾಲ್ಯೆಂದು ಧರಿಸಲು ಉರುಲು ಬಿದ್ದ ಮೇಲಿನ್ನೇನಿನ್ನೇನು ೪
ಬೇಲ್ಯೆದ್ದು ಹೊಲದ ಬೆಳೆಯ ತಾ ಮೇಯಲಿನ್ನೇನಿನ್ನೇನು
ಮಾಳಿಗೆ ಮನೆಯೆ ತಾ ಗಾಳಿಗೆ ಸಡಲಿದರರಿನ್ನೇನಿನ್ನೇನು ೫
ಭೂಪತಿಗಳತಿನೀತಿತಪ್ಪಿದ ಮೇಲಿನ್ನೇನಿನ್ನೇನು
ಪಾಪಿಗಳತಿಶಯಯಕೋಪ ತಾಳಿದ ಮೇಲಿನ್ನೇನಿನ್ನೇನು ೬
ನೋಪಿದ ಗೌರಿಯೆ ಶಾಪವಿತ್ತ ಮೇಲಿನ್ನೇನಿನ್ನೇನು
ದೀಪವೆ ಕಾಲಾಗ್ನಿಯಾಗಿ ಉರಿದಮೇಲಿನ್ನೇನಿನ್ನೇನು ೭
ಹೂಳಿಟ್ಟ ಹಣವೆಲ್ಲ ಚೇಳಾಗ್ಹರಿದ ಮೇಲಿನ್ನೇನಿನ್ನೇನು
ಅಳಿದ ಗೋವುಗಳು ಹುಲಿಯಾಗ್ಹಾರಿದ ಮೇಲಿನ್ನೇನಿನ್ನೇನು ೮
ಆಳುವ ಒಡೆಯರೆ ಅಹಿತರಾದ ಮೇಲಿನ್ನೇನಿನ್ನೇನು
ಬಾಳುವುದೆಂತಯ್ಯ ಶ್ರೀರಾಮ ನೀಮುನಿದರಿನ್ನೇನಿನ್ನೇನು ೯

 

೪೪
ನಾಮ ಭಜೇ ಹರಿನಾಮ ಭಜೇ ಹರಿ
ನಾಮ ಭಜೇ ಹರಿ ನಾಮ ಭಜೇ ಪ
ಕಾಮಿತದಾಯಕ ಕಾಮಧೇನು ಭಕ್ತ
ಪ್ರೇಮಮಂದಿರನ ನಾಮ ಭಜೇ ಅ.ಪ
ವಂದಿತ ಅಜಹರ ಮಂದರ ಗಿರಿಧರ
ಸುಂದರಮೂರುತಿಪಾದ ಭಜೇ
ಸಿಂಧುಶಯನ ಗೋಪೀಕಂದ ಮುಕ್ಕುಂದ
ಗೋವಿಂದನ ಆನಂದ ನಾಮ ಭಜೇ ೧
ಪಂಕಜಪಾಣಿಪಾದ ಕಿಂಕರಪಾಲಕ
ಳಂಕಮಹಿಮನಾಪಾದ ಭಜೇ
ಕೊಂಕಿನ ದೈತ್ಯರ ಬಿಂಕಮುರಿದ ಮಹ
ಶಂಖಪಾಣಿಯ ನಾಮ ಭಜೇ ೨
ಶೇಷಶಯನ ಜಗದೀಶ ಪರಮಪ್ರ
ಕಾಶ ನಿರಂಜನಪಾದ ಭಜೇ
ವಾಸುದೇವ ಭವನಾಶ ಜಾನಕಿಪ್ರಾ
ಣೇಶನ ವಿಮಲನಾಮ ಭಜೇ ೩
ನೀಲಮೇಘಶ್ಯಾಮ ಶೂಲಪಾಣಿಸಖ
ಬಾಲಗೋಪಾಲನ ಶ್ರೀಪಾದ ಭಜೇ
ಪಾಲ ಮೂಲೋಕನ ಮೇಲು ಮೇಲೆನ್ನುತ
ಕಾಲಕಾಲದಿ ಸುನಾಮ ಭಜೇ ೪
ಜಯ ಜಯ ಅಚ್ಯುತ ಜಯ ಜಯ ಸಚ್ಚಿತ್ತ
ಜಯ ಜಯಾನಂತನ ಪಾದ ಭಜೇ
ಜಯ ಜಯ ಸ್ಮರಪಿತ ಜಯ ಜಯ ಮುಕ್ತೀನಾಥ
ಜಯವೆಂದು ಶ್ರೀರಾಮ ನಾಮ ಭಜೇ ೫

 

ವೆಂಕಟೇಶ ಮಹಾತ್ಮೆಯ ಕತೆ
೫೪೨
ನಾಯಿ ಕಚ್ಚೀತೆಚ್ಚರಿಕೆ ಎಲೋ
ಡಾವಿಟ್ಟು ಬರುತಾದೆಚ್ಚರಿಕೆ ಪ
ನೋವು ತೀರದೀ ನಾಯಿ ಕಚ್ಚಲು
ಕೇವಲ ವಿಷವುಳ್ಳ ಹೇಯನಾಯಿ ಅ.ಪ
ಮೆಚ್ಚು ಮದ್ದಿಕ್ಕುವುದು ಅಚ್ಚರೋಗದ ನಾಯಿ
ಮುಚ್ಚುಮನೆ ಮುರಿವುದು ಲುಚ್ಚನಾಯಿ
ಸಾಚ್ಯನೆಂದು ನಂಬಿ ನೆಚ್ಚಿದವರ ಮೇಲೆ
ಕಚ್ಚಿ ಬಿಚ್ಚುವುದೊಂದ್ಹುಚ್ಚು ನಾಯಿ ೧
ಸೂಳೆನ್ನ ಹೋಗುವುದು ಮೂಳನಾಯಿ
ಶೀಲ ತೊರೆವುದೊಂದು ಜೂಲುನಾಯಿ
ಕೀಳರಿಂ ತಲೆಗೂಡಿ ಹಾಳ್ಹರಟ್ಹೊಡೆವುದು
ಕೂಳ ಕಾಣದಂಥ ಹಾಳೂರನಾಯಿ ೨
ಉಂಡುಂಡು ಮಲಗ್ವುದು ಸುಂಡಿನಾಯಿ
ಕಂಡಂತೆ ತಿರಗುವ ದಂಡನಾಯಿ
ಹೆಂಡ್ತಿನ್ನ ಬಿಟ್ಟು ಪರರ್ಹೆಂಡರಿಗೊಲಿವುದು
ಉಂಡೊಗೆದೆಂಜಲ ನೆಕ್ಕುವ ನಾಯಿ ೩
ಬಡವರ ಬಡಿವುದು ಬಡಕನಾಯಿ
ಕಡುಗರ್ವದಿರುವುದು ತುಡುಗ ನಾಯಿ
ದೃಢಯುತರನು ಕಂಡು ಬಿಡುನುಡಿಯಾಡ್ವುದು
ಸುಡುಗಾಡೋಳ್ಬಿದ್ದಸ್ತಿ ಕಡಿಯುವ ನಾಯಿ ೪
ವಿಚಾರನರಿಯದ್ದು ಬೇಬಿಟ್ಟಿನಾಯಿ
ಅಚಾರಮನವಿಲ್ಲದ್ಹರಕುನಾಯಿ
ಊಚಸ್ಥಾನದಿ ಕೂತು ನಾಚದೆ ಮೋರಿಚ್ಛೆ
ವಾಚ ಪೇಳ್ವುದೊಂದು ನೀಚನಾಯಿ ೫
ಆಸೆ ಪೇಳುವುದೊಂದು ಮೋಸದ ನಾಯಿ
ಶಾಶ್ವತ ತಿಳಿಯದ್ದು ಪಾಶದ ನಾಯಿ
ಈಶನ ದಾಸರ ದೂಷಿಪುದು ಹೊಲೆ
ದಾಸರಮನೆಮುಂದಿನ್ಹೇಸಿನಾಯಿ೬
ಕೋಪವ ತೊರೆಯದ್ದು ತಿರುಕನಾಯಿ
ಪಾಪಕ್ಕೆ ಅಂಜದ್ದೀ ನರಕಿನಾಯಿ
ಭೂಪ ಶ್ರೀರಾಮನ ಜ್ಞಾಪಕಕೆ ತರುವೆನು
ಕೂಪದಿ ಉರುಳುವ ಪಾಪಿನಾಯಿ ೭

 

‘ಅಸಮ ವಾಲಿಯ ಬಲಕೆ ಮಸಿಮಣ್ಣು
೫೪೩
ನಾರ್ಯೆಂಬ ಮಾರಿಯನು ಆರು ನಿರ್ಮಿಸಿದರೋ
ಸೂರೆಗೊಂಡು ಮೂಲೋಕ ಘೋರಿಸುವುದುದಕಟ ಪ
ಹರಿಯ ಧರೆಗಿಳಿಸಿತು ಹರನಕಾಡಿಗೆಳೆಸಿತು
ಶಿರವೊಂದನೆಗರಿತುವರಬ್ರಹ್ಮನಕಟ೧
ರಂಧ್ರಗೊಳಿಸಿತು ದೇವೇಂದ್ರನಂಗಾಂಗವನು
ಚಂದ್ರನ ಮುಖಪ್ರಭೆಗೆ ಕುಂದಿಟ್ಟಿತಕಟ ೨
ಅಸಮ ವಾಲಿಯ ಬಲಕೆ ಮಸಿ ಮಣ್ಣು ಹಾಕಿಸಿತು
ದಶಶಿರನ ವರವಖಿಲ ಪುಸಿಯೆನಿಸಿತಕಟ ೩
ಹಾರಿಸಿತು ಕೀಚಕನ ಕೌರವನ ಮನೆಮುರಿಯಿತು
ಧೀರಪಾಂಡವರನು ತಿರಿದುಣಿಸಿತಕಟ ೪
ನರಕಕ್ಕೆ ತವರಿದನು ಸ್ಮರಿಸಲಳವಲ್ಲೆನೆಗೆ
ಹರಿದರಭಯ ತ್ವರಿತ ವರದ ಶ್ರೀರಾಮ ೫

 

೩೫೨
ನಿಂದೆಯಾಡಬೇಡೋ ಪರ
ನಿಂದೆ ಮಾಡಬೇಡೋ ಪ
ಇಂದಿರೇಶನಪಾದಗ್ಹೊಂದಿ ಭಜಿಪರಿ
ಗೊಂದನೆ ಮಾಡೋ ಅ.ಪ
ಕುಂದುವರಿಯಬೇಡೋ ಮನಸೇ
ಮಂದನಾಗಬೇಡೋ
ಎಂದಿಗಾದರು ಒಂದಿನ ಈ ಜಗ
ಕುಂದಿಪೋಗುವ ಭವಬಂಧಕ್ಕೀಡಾಗಬೇಡೋ ೧
ಕೋಪಗೊಳ್ಳಬೇಡೋ ಮನಸೇ
ಪಾಪಕ್ಹೋಗಬೇಡೋ
ಗೌಪ್ಯವಳಿಯಬೇಡೋ ಶಾಪಕೊಳ್ಳಬೇಡೋ
ಆ ಪರಬ್ರಹ್ಮನ ಶ್ರೀಪಾದಪಾಡೋ ೨
ಸೊಕ್ಕು ಮಾಡಬೇಡೋ ಯಮನ
ಲೋಕಕ್ಹೋಗಬೇಡೋ
ಏಕಚಿತ್ತದಿ ಲೋಕೈಕ ಶ್ರೀರಾಮನ
ಭಕುತಿಂ ಭಜಿಸಿ ಮುಕುತಿಯ ಕೂಡೋ ೩

 

೬೨೮
ನಿಖಿಲಾತ್ಮ ನಿಖಿಲಾತ್ಮ ಅಖಿಲಬ್ರಹ್ಮಾಂಡಪತಿ
ಸಲಹು ಸರ್ವೋತ್ತಮ ಪ
ಮಂದರಧರ ಎನ್ನ ಮಂದಮತ್ಯಳಿದಾ
ನಂದ ಮತಿಯಿತ್ತು ಚೆಂದದಿಂ ರಕ್ಷಿಸು ೧
ನಿತ್ಯನಿರುಪಮ ಸತ್ತು ಚಿತ್ತ ನಿಮ್ಮ
ಭಕ್ತಿ ಭಜನೆ ಎನ್ನ ಚಿತ್ತಕ್ಕೆ ದಯಮಾಡು ೨
ಬಗೆದು ಎನ್ನಂತರಂಗಞ್ಗಲದೆ ನಿಂತು ನಿಜ
ಸುಗುಣವಿತ್ತು ಪೊರೆ ಸುಗುಣಾಂಬುಧಿ ೩
ಕಾಮಿತಜನಕಲ್ಪ ಕಾಮಧೇನು ಎನ್ನ
ಕಾಮ ಪೂರೈಸಿ ನಿನ್ನ ನಾಮವಿತ್ತು ಕಾಯೊ ೪
ಭಕ್ತಿದಾಯಕ ನಿನ್ನ ಭಕ್ತಿಯಿಂ ಭಜಿಸುವೆ
ಸತ್ಯ ಶ್ರೀರಾಮ ನಿತ್ಯಮುಕ್ತಿಯಿತ್ತು ಪೊರೆ ೫

 

೩೧೫
ನಿಗಮ ಆಗಮಗೋಚರ
ಜಗನ್ಮೋಹ ಜಗದೀಶ ಪಾಲಿಸು ಎನ್ನ ಪ
ಖಗವರಗಮನ ಜಗದ ಜೀವನ
ಪೊಗಳುವೆ ನಗಧರ ಅನಘನೆ ನಿನ್ನ
ನಗೆ ಮೊಗದೋರೆನಗಗಲದೆ ಅನುದಿನ
ನಗಜನಮಿತ ಮಿಗಿಲಗಣಿತ ಮಹಿಮ ಅ.ಪ
ಕದನಕಂಠೀರವ ಉದಧಿಸದನ ಮಹ
ಅಧಮಕುಲದ ಮದಸಂಹರ
ಹದಿನಾರುಸಾವಿರ ಸುದತಿಯರ ಮನ
ವಿಧ ವಿಧ ಸುಲಿದ ಸುಂದರ
ಸದಮಲರಾಧೇಯ ಮದನಕದನದಿಂ
ಕದಲದ ಆನಂದ ಮಂದಿರ
ಕುದುರೆ ತಿರುವಿ ಪಾದಪದುಮದಾಸನ ಘೋರ
ಕದನಗೆಲಿಸಿದ ಗಂಭೀರ
ಯುದುಕುಲಪಾವನ ಮದನನಯ್ಯ ರಮಾ
ಪದುಮಾವತಿಯ ಪಂಚಜೀವನಸದನ
ಪದುಮವದನ ಸದಸದುಗುಣಗಳ ಸದ್ರ‍ಹದಯ
ಉದಯ ಮುದ ವುದಯಾಗೆನ್ನೊದನದಿ೧
ನಲಿದು ನಲಿದು ಪೊಂಗೊಳಲುನೂದುವ
ಬಲುಚೆಲುವ ಚಿದ್ರೂಪನಾಟಕ
ಒಲದು ಭಜಕಜನರ್ಹೊಲಬು ತಿಳಿವ ಚಿ
ತ್ಕಳಾಭರಿತ ವಿಶ್ವವ್ಯಾಪಕ
ಜಲಜಮಿತ್ರ ಕೋಟಿಕಳೆಕಿರಣಗಳಿಂ
ಪೊಳೆವ ಸುಗುಣ ಶುಭದಾಯಕ
ಖಳಕುಲಭೀತ ಸುಫಲಪ್ರದ ಪರತರ
ಇಳೆಮಂಡಲತ್ರಯ ಪಾಲಕ
ಕಲಿಮಲಹರ ನಿರ್ಮಲನಿಜಚರಿತ
ಮಲಿನ ಕಳೆದು ನಿರ್ಮಲನೆನಿಸೆನ್ನ
ಒಲಿದುಪಾಲಿಸು ಸ್ಥಿರ ಚಲಿಸಿದಚಲಮನ
ಸುಲಭಭಕುತ ಬಲ ವಿಲಿಸಿತಕರುಣಿ ೨
ಸಿಡಿಲುಕೋಟಿಸಮ ಫಡಫಡಸ್ತಂಭವ
ಒಡೆದು ಮೂಡಿದ ತ್ರಿವಿಕ್ರಮ
ಕಡುರೋಷದಿ ಕೆಂಗಿಡಿಗಳನುಗುಳುವ
ಕಡುಗಲಿಗಳಗಲಿ ನಿಸ್ಸೀಮ
ಘುಡುಘುಡಿಸುತ ಆರ್ಭಟಿಸುತ ದುರುಳನ
ಒಡಲಬಗಿದ ಕಡುಪರಾಕ್ರಮ
ಗಡಗಡ ನಡುಗುವ ದೃಢತರ ಬಾಲನ
ಪಿಡಿದು ಪೊರೆದ ಭಕ್ತ ಸುಖಧಾಮ
ಉಡುಮಂಡಲ ವರಗಡರಿದ ಶಾಪವ
ತಡೆಯದೆ ಹಡೆಹಾಯ್ಸ್ಹಿಡಿದೆಲೋಕವರ
ಜಡಜಭವ ತೊಡರನು ಗಡ ಕಡಿದೆನ್ನಯ
ನುಡಿಯೊಳೊಡೆದು ಮೂಡು ಒಡೆಯ ಶ್ರೀರಾಮ ಪ್ರಭು ೩

 

೪೫
ನಿಗಮವಿನುತ ಜಗವ ಭರಿತ
ಬಗೆದು ಸಲಹೈ ವೆಂಕಟೇಶ ಪ
ಶ್ರೀನಿವಾಸ ದೀನಪೋಷ
ಧ್ಯಾನದಾಯಕ ವೆಂಕಟೇಶ
ಮಾನದಿಂ ಪೊರೆ ಜ್ಞಾನಪಾಲಿಸಿ
ನೀನೆಗತ್ಯನಗೆ ವೆಂಕಟೇಶ ೧
ಕಮಲನಾಭ ಕಮಲವದನ
ಕಮಲಜಪಿತ ವೆಂಕಟೇಶ
ಕಮಲಪಾಣಿ ಕಮಲನೇತ್ರ
ಅಮಿತಮಹಿಮ ವೆಂಕಟೇಶ ೨
ಹೇಸಿಭವನ ವಾಸನ್ಹಿಂಗಿಸು
ವಾಸುದೇವ ವೆಂಕಟೇಶ
ತಂದೆ ನಿಮ್ಮ ಹೊಂದಿ ಭಜಿಪಾ
ನಂದ ಕರುಣಿಸು ವೆಂಕಟೇಶ ೩
ಕುಂದು ನಿಂದೆ ದಂದುಗಂಗಳ
ಬಂಧ ತಪ್ಪಿಸು ವೆಂಕಟೇಶ
ತಂದೆ ನಿಮ್ಮ ಹೊಂದಿ ಭಜಿಪಾ
ನಂದ ಕರುಣಿಸು ವೆಂಕಟೇಶ ೪
ಸತ್ಯ ಸನ್ಮಾರ್ಗ್ಯಕ್ತನೆನಿಸೆನ್ನ
ಮೃತ್ಯು ಸಂಹರ ವೆಂಕಟೇಶ
ನಿತ್ಯ ನಿಮ್ಮಡಿಭಕ್ತನೆನಿಸೆನ್ನ
ಕರ್ತು ಶ್ರೀರಾಮ ವೆಂಕಟೇಶ ೫

 

೬೨೯
ನಿತ್ಯದುದಯಾಸ್ತಮಾನದಲಿ ಸ
ರ್ವೋತ್ತಮ ಹರಿನಾಮ ಬರೆದೋದಿ
ಭಕ್ತಿಯಿಂದಾಲಿಪರ ಭವತಾಪ ಜರೆ
ಮೃತ್ಯುನೀಗಿ ನಿತ್ಯಮುಕ್ತಿ ಕೈಸೇರುತಿಹ್ಯವು ಪ
ನರಿಹರಿ ಹಯವದನ ಜನಾರ್ದನ
ಗರುಡಗಮನ ವಾಸುದೇವ ವಾರಿಜಾಕ್ಷ
ಮುರಧ್ವಂಸಿ ಮುಪ್ಪುರಾಂತಕ ಮುಕ್ಕುಂದ
ಹರಿ ಸರ್ವೇಶ ಉರಗಪರ್ಯಂಕ
ನಿರವಯ ನಿರಂಜನ ನಿರ್ಜರೇಶ
ಶರಣಜನಮಂದಾರ ಸಿರಿಯರಸ
ಪರಮಪ್ರಕಾಶ ಪರತರೇಶ
ಪರಮಪುರುಷ ಪರಾತ್ಪರನೆಂದು ೧
ವನಮಾಲ ಮಾಧವ ದೇವದೇವೇಶ
ದನುಜರಸಂಹರ ಶ್ಯಾಮಸುಂದರ
ಘನಮೇಘಶ್ಯಾಮ ಸಚ್ಚಿದಾನಂದ
ಚಿನುಮಯಾತ್ಮ ತಚ್ಚೈತನ್ಯರೂಪ
ವೇಣುಧರ ಗೋಪಾಲ ಗೋವ
ರ್ಧನೋದ್ಧಾರ ಗಾನಾಂದಧೋಕ್ಷಜಪಿತ
ಧ್ಯಾನಗಮ್ಯ ತ್ರಿಭುವನೇಶ ತ್ರಿವಿಕ್ರಮನೆಂದು ೨
ನಿತ್ಯಗುಣಾರ್ಣವ ನಿಜಗುಣ ನಿಷ್ಕಲಂಕ
ನಿತ್ಯಾತ್ಮ ನಿರುಪಮ ಪರಂಜ್ಯೋತಿ
ನಿತ್ಯನಿರ್ಮಲ ಸತ್ಯಭಾಮಾಕಾಂತ ಚಿದ್ರೂಪ
ಚಿತ್ಕಳಂಕ ಕಮಲಾಕ್ಷ ಲಕುಮೀಶ
ಚಿತ್ತಜಪಿತ ಶೌರಿ ಸೂತ್ರಧಾರಿ
ಭಕ್ತವತ್ಸಲ ಭಯನಿವಾರ ನರಸಿಂಹ
ಮುಕ್ತಿದಾಯಕ ಮಧುಸೂದನ ರಮಾರಮಣ
ಮೃತ್ಯುಂಜಯ ವಿಶ್ವೇಶ ವಿಶ್ವವ್ಯಾಪಕನೆಂದು ೩
ಕಾಲಾರಿ ಚಕ್ರಿ ಚತುರ್ಭುಜ ಭವನಾಶ
ನೀಲಾಂಗ ರಂಗ ರಾಘವ ಭುವನೇಶ
ನೀಲಲೋಚನ ನಗಧರ ಜಗಮೋಹ
ಮೇಲುನಿಲಯ ನಿಗಮಾತೀತ ಪದ್ಮನಾಭ
ಕಾಲೀಮರ್ದನ ಕೌಸ್ತುಭಾಂಬರ ವಿಷ್ಣು
ಪಾಲಸಾಗರಕನ್ನಿಕಾಪ್ರಿಯನಾಥ
ಲೀಲಜಾಲ ಜಾಹ್ನವೀಜನಕ ಕೇಶವ
ಶೂಲಪಾಣಿಸಖ ಶಾಂತಾಕಾರನೆಂದು೪
ಪರಮಾನಂದ ಗೋವಿಂದ ಗಜರಕ್ಷ
ಶರಧಿಮಥನ ಕೂರ್ಮಮತ್ಸ್ಯ
ಕರುಣಾಂಗ ವಾಮನ ಧ್ರುವಪಾಲ
ದುರಿತಾರಿ ಕೃಷ್ಣ ವೆಂಕಟ ವಿಠಲ
ಶರಣಾಗತವರದ ನುತಪಾಲ
ವರದಾತ ವೇದಾಂಗ ಸುಖಧಾಮ
ವರ ಶ್ರೀರಾಮ ಪರಮ ಪುಣ್ಯನಾಮ
ಧರೆಮೂರರೊಳತ್ಯಧಿಕಮೆಂದು ೫

 

೧೪೬
ನಿತ್ಯಾತ್ಮ ನಿರಂಜನ ನಿತ್ಯ ನಿರ್ಗುಣ
ನಿತ್ಯಾತ್ಮ ನಿರಂಜನ ಪ
ಸುಗುಣ ಸಂತೃಪ್ತ ನಿಗಮಾದಿವಿನುತ
ಅಗಜೇಶ ಜಗಪಾಲಯ ೧
ಗಜಚರ್ಮಾಂಬರ ರಜತಾದ್ರಿ ಮಂದಿರ
ಭಜಿಪರ ಭಯವಿದೂರ ೨
ನಂಬಿದ ಭಕುತರ ಇಂಬುಗೊಟ್ಟು ವರ
ಗುಂಭದಿ ಕೊಡುವ ದೇವ ೩
ಮಹಿಮ ನೀ ಉದಯಾಗಿ ಮಹಿಯೊಳು ಮುಂಡರಗಿ
ಮಹಸ್ಥಲವೆನಿಸಿದಿಯೋ೪
ದೋಷವಿನಾಶನ ಶ್ರೀಶ ಶ್ರೀರಾಮನ
ದಾಸರ ದಯಸಂಪೂರ್ಣ ೫

 

ಸಾಗರವ ಮಥಿಸಿ ಪ್ರೇಮದಮೃತ ಸುರರಿಗುಣಬಡಿಸಿ
೫೩
ನಿನ್ನ ಸಮಾನ ದೇವರುಂಟೇನೋ ಎನ್ನಯ್ಯ ರಂಗ ಪ
ನಿನ್ನ ಸಮಾನ ದೇವರುಂಟೇ ಇನ್ನೀ ಭುವನಭವಾಂಡದೊಳಗೆ
ಬನ್ನ ಬಡಿಸದೆ ದಾಸಜನರ ನಿನ್ನ ಪ್ರಾಣಸಮ
ಮಾಡಿ ಪೊರೆಯುವಿ ಅ.ಪ
ಸೋಮಕಾಸುರ ದೈತ್ಯನ್ನ ವಧಿಸಿ ವೇದವನು ತಂದು
ನೇಮದಿಂ ಮತ್ತೀ ಸೃಷ್ಟಿ ನಿಲ್ಲಿಸಿ ಸಾಗರವ ಮಥಿಸಿ
ಪ್ರೇಮದಮೃತ ಸುರರಿಗುಣಬಡಿಸಿ ನಿಸ್ಸೀಮನೆನಿಸಿ
ಸೋಮಶೇಖರನಮಿತ ಕಷ್ಟವ ಪ್ರೇಮ ದೃಷ್ಟಿಯಿಂ ದೂರ ಮಾಡಿ
ಭೂಮಿತ್ರಯಕೆ ಕ್ಷೇಮ ನೀಡಿದಿ ಕಾಮಿತ ಭಕ್ತರ್ವರಪ್ರದಾತ ೧
ಎರಡೆ ಅಡಿಗಿಡಿಭುವನವನು ತುಳಿದಿ ಅಮಿತಮಹಿಮ
ಪರಮ ಉಗ್ರರೂಪ ಧರಿಸಿದಿ ಭಕುತಗಾಗಿ
ಅರಮನೆಯ ಸ್ತಂಭೊಡೆದು (ಮೂ) ಡಿದಿ ಪರಮದಯಾನಿಧಿ
ಚರಣದಾಸರ ಪೊರೆಯುಲೋಸುಗ ನರನ ರೂಪದಿ
ನಿರುತ ವಿಪಿನಕೆ ತೆರಳಿ ದಕ್ಷಿಣಶರಧಿ ಹೂಳಿಸಿ
ದುರಳರ್ಹಾವಳಿ ದೂರ ಮಾಡಿದಿ ೨
ದ್ವಾರಕೆಂಬ ಪುರವ ನಿರ್ಮಿಸಿ ಅದಕೊಡೆಯನೆನಿಸಿ
ಸಾರಭಕುತರ ಇಷ್ಟಪೂರೈಸಿ ಮಹಲೀಲೆ ನಡೆಸಿ
ಪರಮಕಂಟಕರನ್ನು ನಾಶಿಸಿ ಧರೆಭಾರಮಿಳಿಸಿ
ಪರಮಸುರಗಣಖರುಷವಿತ್ತು ಧಾರುಣಿಯನು ಪರಿಶುದ್ಧಮಾಡಿ
ಕರುಣದಾಳುವಿ ಭುವನತ್ರಯವನು ಶರಣಜನಪ್ರಿಯ
ವರದ ಶ್ರೀರಾಮ ೩

 

೩೧೬
ನಿನ್ನ ಉನ್ನತ ಮಹಿಮೆಯನ್ನು ಬಣ್ಣಿಪ ಶಕ್ತಿ
ಎನಗೆಂತು ಕರುಣಾರ್ಣವ ಪ
ಅನ್ಯಕುಲದಲಿ ಜನಿಸಿ ಅನ್ಯ ಆಹಾರಗಳುಂಡು
ಕುನ್ನಿಯಂತೆ ಕಳೆವೆ ದಿನವ ಅಭವ ಅ.ಪ
ಶೋಧಿಸಿಶಾಸ್ತ್ರಪದ ಛೇದಿಸಿ ಬಣ್ಣಿಸಲೆ
ಓದು ನಾ ಕಲಿತಿಲ್ಲವೋ
ವೇದಪೂರ್ವಕಮಾಗಿ ಸಾಧನದಿ ಬಣ್ಣಿಸಲೆ
ವೇದ ಎನಗೊಳುಪಿಲ್ಲವೋ
ಸಾಧುವರ್ತನದ ಮಹಾದಾದಿಯಿಂ ಬಣ್ಣಿಸಲೆ
ಸಾಧುಪಥ ಗುರ್ತಿಲ್ಲವೋ
ಆದಿಮೂರುತಿ ನಿನ್ನ ಪಾದಪೊಗಳಲು ಒಂದು
ಹಾದಿಗೊತ್ತೆನಗಿಲ್ಲವೋ ೧
ದೃಢಮಾಗಿ ನಿನ್ನ ಸಮದೃಢ ಮಹಿಮೆ ಬಣ್ಣಿಸಲೆ
ದೃಢಭಕ್ತಿಯೆನಗಿಲ್ಲವೋ
ಎಡಬಿಡದೆ ಬಣ್ಣಿಸಲೆ ಪೊಡವಿಯೋಳ್ನಿನ್ನವರ
ಒಡನಾಟ ಎನಗಿಲ್ಲವೋ
ಕಡು ಗೂಢವಾಗಿ ನಿನ್ನಡಿಗಳನು ಬಣ್ಣಿಸಲೆ
ಗೂಢಜ್ಞಾನೆನಗಿಲ್ಲವೋ
ಜಡಮತಿ ನಾ ಬಣ್ಣಿಪೆನೆ ಕಡೆಯಿಲ್ಲದ ತವಮಹಿಮೆ
ಮೃಡ ಅಜರಿಗಸದಳವೋ ತಿಳಿವೋ ೨
ಸುಗುಣಗುಣಾಂತ ನಿನ್ನ ಸುಗುಣಗಳ ಬಣ್ಣಿಸಲು
ಸುಗುಣಗುಣ ಎನಗಿಲ್ಲವೋ
ನಿಗಮಾತೀತನೆ ನಿನ್ನ ಗುಟ್ಟು ಬಣ್ಣಿಸಲೆ
ನಿಗಮವ ನಾನರಿತಿಲ್ಲವೋ
ಅಗಣಿತಮಹಿಮ ನಿನ್ನ ಹಗರಣದ ಮಹಿಮೆಯ
ಬಗೆಬಲ್ಲವ ನಾನಲ್ಲವೋ
ಜಗದೇಕ ಶ್ರೀರಾಮ ಜಗತ್ರಯದಿ ಬಿಡದೆ ನಿನ್ನ
ಪೊಗಳುವೆನು ಮಿಗಿಲೆನ್ನುತ ಸತತ ೩

 

೪೬
ನಿನ್ನ ಕೃಪೆಯಿರೆ ಬಲುಸುಖ ಈ ಸಂಸಾರ
ನಿನ್ನ ಕೃಪೆಯಗಲಿದರೆ ಘನಗೋಳು ಹರಿಯೆ ಪ
ಅಲ್ಲ ಅಹುದಾಗುವುದು ಸುಳ್ಳೆ ಖರೆಯಾಗುವುದು
ಎಲ್ಲಸಿರಿ ಒದಗುವುದು ಒಲ್ಲೆನಲು ಬಿಡದೆ
ಪುಲ್ಲನಾಭನ ಒಲುಮೆವುಳ್ಳ ಮಾನವರಿಗೆ
ಕಲ್ಲಿನೊಳು ಜಲಪುಟ್ಟಿ ಹೊಳೆಯಾಗಿ ಹರಿಯುವುದು ೧
ಹೀನನಾದರು ಬಹುಮಾನ ಸಿಗುವುದು ಗೊಡ್ಡು
ಧೇನುಗಳೆಲ್ಲ ಬಿಡದೆ ಹೈನಗರೆಯುವುವು
ದೀನನಾಥನು ಒಲಿಯೆ ನಾನಾ ಸಿರಿಸೌಭಾಗ್ಯ
ತಾನೆ ಬರುವುದು ತೆಂಗಿನೊಳುದಕದಂತೆ ೨
ವಿಷವೆ ಅಮೃತವಹುದು ಕಸವೆ ಕರ್ಪುರವಹುದು
ವಿಷಮ ವಿಷಯದ ಎಡರು ಹಸನಹುದು ನಿಖಿಲ
ವಸುದೆಗಧಿಕ ನಮ್ಮ ಬಿಸಜಾಕ್ಷ ಶ್ರೀರಾಮ
ನೊಶವಾದ ಬಳಿಕ ನಿಜ ಅಸಮ ಮುಕ್ತಿಹುದು ೩

 

೧೭೩
ನಿನ್ನ ದಯಾ ದೃಷ್ಟಿಯು ಎನ್ನ ಮೇಲಿರಬೇಕು
ಪನ್ನಂಗಶಯನ ಭಕ್ತ ವಿಜಯವಿಠಲಯ್ಯ ಪ
ಮುನ್ನ ಭಕ್ತನಿಗೊಲಿದು ಭಿನ್ನವಿಲ್ಲದೆ ಬಂದು
ಮಣ್ಣಿನ್ಹೆಂಟೆಯ ಮೇಲೆ ಇನ್ನು ನಿಂತುದನು
ಕಣ್ಣಿನಿಂದ ನಾ ಕಂಡು ಧನ್ಯನಾದೆನು ಜಗದಿ
ಇನ್ಯಾಕೆ ಭವದಂಜು ತನು ನಿನ್ನದಯ್ಯ೧
ಹೆತ್ತಮಕ್ಕಳ ತೆರದಿ ಅತ್ಯಧಿಕ ಪ್ರೀತಿಯಿಂ
ಭಕ್ತರನು ಬಿಗಿದಪ್ಪಿ ಮುಕ್ತಿ ಸೋಪಾನ
ಹತ್ತಿಸಿದ ನಿನ್ನಡಿ ಭಕ್ತಿಯಿಂ ಕಂಡೆ
ಮತ್ತು ಮೃತ್ಯುವಿನ ಭೀತ್ಯಾಕೆ ಮನ ನಿನ್ನದಯ್ಯ ೨
ಕಡಲನಿಲಯನೆ ನಿನ್ನ ಅಡಿ ನಂಬಿ ಮರೆಹೊಕ್ಕೆ
ದೃಢಭಕುತಿ ನೀಡೆನ್ನ ನುಡಿಯೊಳಗೆ ನೆಲಸು
ಎಡರು ತೊಡರನು ಕಡಿದು ದೃಢಕರನು ಬಿಡದಾಳ್ವ
ಒಡೆಯ ಶ್ರೀರಾಮಯ್ಯ ಧನ ನಿನ್ನದಯ್ಯ ೩

 

೪೯
ನಿನ್ನ ಧ್ಯಾನ ಶುಭಮೂಹೂರ್ತ ನಿನ್ನ ಭಜನ ಶುಭದಿನವು ಪ
ನಿನ್ನ ನಾಮ ಜಯಕಾರವು ನಿನ್ನ ಸ್ಮರಣ ಶುಭತಿಥಿಯು
ನಿನ್ನ ಸ್ತುತಿಯೆ ಶುಭಕಾಲ ಅನ್ಯ ಎಲ್ಲ ಪುಸಿ ಮಾಧವದೇವ ಅಪ
ನಿತ್ಯ ನಿರುಪಮ ನಿನ್ನ ನಿತ್ಯದಲ್ಲಿ ಪೊಗಳುವುದೆ
ಉತ್ತಮ ಶುಭವಾರವು
ಚಿತ್ತಜಪಿತ ನಿನ್ನ ಚಿತ್ತದಲಿ ನೆನೆಯುವುದೆ
ಅತ್ಯಧಿಕ ಪಕ್ಷಮಾಸವು
ಮೃತ್ಯುದೂರನೆ ನಿನ್ನ ಸತ್ಕಥೆಯನಾಲಿಪುದೆ ನ
ಕ್ಷತ್ರ ಶುಭಕರಣವು
ಭಕ್ತವತ್ಸಲ ನಿನ್ನ ಭಕ್ತಿಯಿಂ ಪಾಡುವುದೆ
ನಿತ್ಯ ಅಮೃತಯೋಗವು ನಿಜವು ೧
ದಿವನಿಶೆಯ ಇಡದೊಂದೆಸವನೆ ನಿನ್ನರಸುವುದೆ
ರವಿಚಂದ್ರ ಭೌಮ್ಯ ಒಲವು
ಭವಪರಿಹರ ಸಿರಿಧವ ನಿನ್ನ ಸಚ್ಚರಿತ
ಕವಿಗುರುಸೌಮ್ಯ ಬಲವು
ಬುವಿಯರಸ ನಿನ್ನಸಮ ಸುವಿಲಾಸ ಲೀಲೆ ಕೇ
ಳಾವುದಮಿತ ಶನಿಬಲವು
ಭುವಿಜಪತಿ ಭಕ್ತಿಯ ಭವಭವದಿ ರಾಹುಕೇತು
ನವಗ್ರಹಂಗಳ ಬಲವು ಗೆಲವು ೨
ಕರಿಧ್ರುವರ ಪೊರೆದ ತವಪರಮ ಬಿರುದುಗಳನ್ನು
ಸ್ಮರಿಸುವುದೆ ಭವದೂರವು
ಹರದಿಗಕ್ಷಯವಿತ್ತ ವರದ ನಿನ್ನಡಿ ದೃಢವು
ಸ್ಥಿರಶಾಂತಿ ಸುಖಸಾರವು
ಸುರಗಣಕೆ ಸೌಖ್ಯವನು ಕರುಣಿಸಿದ ನಿಮ್ಮ ಮೊರೆ
ಪರಲೋಕ ನಿಜಸ್ವಾದವು
ವರದ ಶ್ರೀರಾಮ ನಿಮ್ಮ ಚರಣದಾಸತ್ವದೆ
ವರಮುಕ್ತಿ ಕೈಸಾಧ್ಯವು ಸ್ಥಿರವು ೩

 

೫೦
ನಿನ್ನ ನಾಮದ ಸವಿ ಎಲ್ಲರರಿಯರಂತೆ
ಬಲ್ಲವರೆ ಬಲ್ಲರಂತೆ
ನಿನ್ನ ನಾಮದ ಸವಿ ಎಲ್ಲರರಿಯರಂತೆ ಪ
ಸ್ಥಿರಪದವನುಭವಿ ಧ್ರುವನು ಬಲ್ಲನಂತೆ
ಪರಮಕಂಟಕ ಗೆದ್ದ
ವರಪ್ರಹ್ಲಾದ ನಾಮನೆಲೆ ತಿಳಿದನಂತೆ
ಸ್ಥಿರಪಟ್ಟ ಪಡೆದಂಥ ವರವಿಭೀಷಣನು
ಸರಿಯಾಗಿ ನಾಮದ ಸವಿಯುಸುರಿದನಂತೆ1
ಅಂಬರೀಷನೆಂಬ ನೃಪನು ಬಲ್ಲನಂತೆ
ಪರಮಪಾವನಪಾದ
ಅಂಬುಜಾಕ್ಷಿಯಳಾದ ಅಹಲ್ಯೆ ಬಲ್ಲಳಂತೆ
ಅಂಬುಜಾಕ್ಷನ ಪಾದಸಂಭ್ರಮದಸವಿ
ಕುಂಭಿನಿಯೊಳು ಕರಿ ತುಂಬಬಲ್ಲನಂತೆ ೨
ಪರಮಜ್ಞಾನಿಯಾದ ವಿದುರ ಬಲ್ಲನಂತೆ
ವರನಾಮದ ಸವಿ
ತರುಣಿ ಪಾಂಚಾಲಿಯು ಅರಿತುಕೊಂಡಳಂತೆ
ಪರಿಯಲಿ ಅವರ ಧರ್ಮಜನು
ನಿರುತ ನಾಮಾಮೃತ ಅರಿತುಸುರಿದನಂತೆ ೩
ತುಂಬುರಾದಿಮುನಿಸುರರು ಬಲ್ಲರಂತೆ
ವಿಮಲನಾಮದ ಸವಿ
ಅಂಬುಜಾಸನ ಕಂಡು ಪೊಗಳುತಿರುವನಂತೆ
ಕುಂಭಿಜಾತೆ ಸಿರಿ ಅಂಬರೇಶನ ಸುತೆ
ಎಂಬುವರು ನಿನ್ನ ಅಂದ ಬಲ್ಲರಂತೆ ೪
ಚರಣದೆಡೆಯಲ್ಲಿರ್ದ ಗರುಡ ಬಲ್ಲನಂತೆ
ರಾಗರಹಿತನಾಗ
ವರಹನುಮಂತನು ಪೂರ್ಣಬಲ್ಲನಂತೆ
ಪರಿಯೇನಿರುವುದು ಅರಿತು ಭಜಿಪೆ ನಿನ್ನ
ಕರುಣದೆನತು ತೋರು ರಾಮನಾಮದ ಸವಿ ೫

 

೩೨೦
ನಿನ್ನ ಪಾದ ಬಿಡಲಾರೆ ಎನ್ನೊಡೆಯ ರಂಗ
ಎನ್ನ ಕಾಯುವ ಭಾರ ನಿನ್ನಗೆ ಕೂಡಿತು ಪ
ನೀನೆ ಚಿಂತಾಮಣಿ ನೀನೆ ಪರುಷದ ಖಣಿ
ನೀನೆ ಎನ್ನಗೆ ಧಣಿ ವೇಣುಗೋಪಾಲ ೧
ಪಕ್ಷಿವಾಹನ ಲೋಕರಕ್ಷಿಪನು ನೀನೆಲೊ
ಅಕ್ಷಯದಿ ದ್ರೌಪದಿಯ ರಕ್ಷಿಸಿದವ ನೀನೆ ೨
ಪಾರ ಮಹಿಮನೆ ಸರ್ವಭಾರ ನಿನ್ನದಯ್ಯ
ಸೇರಿದೆನು ನಿಮ್ಮ ಪದಕೆ ಮಾರಪಿತ ಶ್ರೀರಾಮ ೩

 

೩೨೧
ನಿನ್ನ ಬೆನ್ನು ಬಿದ್ದೆ ಪನ್ನಂಗಶಯನ
ಎನ್ನನ್ನು ನೀನೀಗ ಮನ್ನಿಸಿ ಸಲಹೆಂದು ಪ
ಎನ್ನನೆಲ್ಲಿಗೆ ಒಯ್ವಿ ನಿನಗೆ ಕೂಡಿತು
ನಿನ್ನ ಬಿಟ್ಟರೆ ಎನಗೆ ಅನ್ಯ ಗತಿಯಲ್ಲ ೧
ವನಜಾಕ್ಷ ನಿಮಪಾದ ನೆನೆವು ನಿಲ್ಲಿಸಿ ಎನ್ನ
ಮನದಾಸೆ ಪೂರೈಸಿ ಕನಿಕರದಿ ಕಾಯೆಂದು ೨
ಶಾಮಸುಂದರ ಶ್ರೀರಾಮ ನಿಮ್ಮಯ ಪಾದ
ಪ್ರೇಮ ಎನ್ನೊಳರಿಸಿ ಕ್ಷೇಮದಿಂ ಪೊರೆಯೆಂದು ೩

 

೫೨
ನಿನ್ನ ಬೆನ್ನುಬಿದ್ದು ಧನ್ಯನಾದೆನು ಪನ್ನಂಗಶಯನ
ನಿನ್ನ ಬೆನ್ನುಬಿದ್ದು ಧನ್ಯನಾದೆನು ಪ
ಇನ್ನು ಭವದೊಳು ಅನ್ಯರಂಜಿಕೆಯನ್ನು ತಪ್ಪಿಸಿ
ನಿನ್ನ ಕರುಣವನು ತೋರಿದಿ ಸನ್ನುತಾಂಗ
ರೂಢಿಯೊಳು ನಾನು ಮೂಢನಾದೆನು ಧೃಢದಿ ನಿನ್ನ
ಗಾಢಮಹಿಮೆಯ ಅರಿಯದಲೆ ಇನ್ನು ಬಡಬಡಿಸಿಕೊಂಡು
ಕೇಡಿಗೊಳಗಾಗಿ ಕೆಡುತಲಿರ್ದೆನು ಬಿಡದೆ ಪರರನು
ಬೇಡಿ ಆಸೆಯಿಂ ಭಂಗಮಾಡುತ ಖೋಡಿಯಪ್ಪುದ ಕಂಡು ನೀನೆ
ಮೂಢನೊಳು ದಯಮಾಡಿ ಕರುಣವ
ನೀಡಿ ಕುರುಹನು ತೋರ್ದಿ ದೇವ ೧
ಹೊಂದಿಕೊಂಡೀ ಮಾಯಾಜಾಲವನು ಒಂದನರಿಯದೆ
ಮಂದಮತಿಯಾಗಿ ಕೆಡುತಲಿ ನಾನು
ಬಂಧನದ ಭವದ ಸಿಂಧುವಿನೊಳಗಾಡುತಿರ್ದೆನು
ನೊಂದು ಬೆಂದೆನು ಮಂದ ಭಾಗ್ಯನ ಮಂದಮತಿಗಳು
ಒಂದು ಉಳಿಯದಂತೆ ಮಾಡೆನ್ನ್ಹ್ರದಯ ಮಂದಿರದೊಳು
ನಿಂದು ನೀನೆ ಮುಂದಖಾಕಿದಿ ಮಂದರೋದ್ಧಾರ2
ಮರುಳತನವನು ದೂರಮಾಡಿದಿ ಹರಿಯೆ ಎನ್ನ
ಸರುವ ದುರ್ಗುಣ ತರಿದು ಹಾಕಿದಿ ಕರುಣದೆನ್ನ
ದುರಿತಪರ್ವತಮೂಲ ಕಿತ್ತಿದಿ ಮರೆವು ಹರಿಸಿದಿ
ಪರಮ ಕರುಣಾಕರನೆ ನಿನ್ನುಪಕಾರ ಮರಿಯೆನಾವಕಾಲದಿ
ಪರರ ಬೇಡದ ಪದವಿ ನೀಡಿದಿ
ಶರಣಜನಪ್ರಿಯ ಸಿರಿಯರಾಮ ೩

 

ಕೃಷ್ಣನು ತನ್ನ ಸೋದರತ್ತೆಯ ಮಗಳಾದ
೩೨೨
ನಿನ್ನ ಮಹಿಮೆ ತಿಳಿಯುವುದೊಂದಗಾಧ ದೇವ
ಉನ್ನತೋನ್ನತಚರಿತ ನುತಸಹಜಭಾವ ಪ
ಯೋಗಿ ನೀನಾದಯ್ಯ ಜೋಗಿಯೆಂದೆನಿಸಿದಿ
ಆಗಾಧ ದೇಹ ತಾಳ್ದಿ ಬಾಗಿಲವ ಕಾಯ್ದಿ
ಮಗಗೆ ರಕ್ಷಕನಾದಿ ಮಗನ ತಂದೆಯನಳಿದಿ
ಮಿಗಿಲಾದ ರೂಪಾದಿ ಜಗವ ಪಾಲಿಸಿದಿ ೧
ಕರುಣದಿಂದಾಳಿದಿ ವರವಿತ್ತು ಕಳುಹಿದಿ
ಧರೆಗೆ ಭಾರೆನಿಸಿದಿ ತಿರುಗಿ ನೀ ಮುನಿದಿ
ಪಿರಿದಾದ ಘಟ ನೀಡ್ದಿ ಪರಮಭಟನೆನಿಸಿದಿ
ಶರಗಳನು ಪೋಣಿಸಿದಿ ಧುರದೊಳಗೆ ಕೊಂದಿ ೨
ತಮ್ಮನ ಪಕ್ಷ್ಹಿಡಿದಿ ತಮ್ಮನಣ್ಣನಕೊಂದಿ
ತಮ್ಮಗಧಿಕಾರ ಗೈದಿ ಸಮ್ಮತದಿ ಕಾಯ್ದಿ
ತಮ್ಮನಿಗೆ ಭಾವನಾದಿ ತಮ್ಮನಿಗೆ ಬೋವನಾದಿ
ತಮ್ಮನಿಂ ಕೊಲ್ಲಿಸಿದಿ ಸಮ್ಮತವ ಗೈದಿ ೩
ಮಾವಗಳಿಯನಾದಿ ಮಾವಗೆ ವೈರ್ಯಾದಿ
ಮಾವನ ಕುಲವಳಿದಿ ತಾಯನ್ನ ಕಾಯ್ದಿ
ಗೋವು ಪಾಲಕನಾದಿ ಗೋವಿಗೆ ಮಗನಾದಿ
ಗೋವುಗಳನಾಳಿದಿ ಗೋವುಕುಲ ಪೊರೆದಿ ೪
ಮೀನಾದಿ ಕೂರ್ಮಾದಿ ದಾನ ಬೇಡುವನಾದಿ
ಕಾನನ ಮೃಗನಾಗಿ ಧ್ಯಾನಿಪರಕಾಯ್ದಿ
ದೀನಪಾಲನೆ ನಿನ್ನ ಜಾಣಮಹಿಮಂಗಳನ್ನು
ಹೀನರರಿವರೆ ಮಮಪ್ರಾಣ ಶ್ರೀರಾಮ ೫

 

೩೨೩
ನಿನ್ನ ಸಂಭ್ರಮದೊಳಗೆ ನೀನೆ ಇರುತಿರುವಿ
ಎನ್ನಯ್ಯ ಮರೆದೇನು ಮುನ್ನಾದ ಬವಣೆ ಪ
ಅನ್ನವನು ಕಾಣದೆ ಅನ್ನದಿಕ್ಕಿಲ್ಲದೆ
ಬನ್ನಬಡುತಲರಣ್ಯವಸುಳಿದವಗೆ
ಉನ್ನತೋನ್ನತವಾದ ಚಿನ್ನದರಮನೆಯಲ್ಲಿ
ಬಿನ್ನವಿಲ್ಲದೆ ಸಿರಿಯರನ್ನಬಡಿಪ ಮದವೋ ೧
ಮಡದಿಯನು ಕಳಕೊಂಡು ಎಡೆಬಿಡದೆ ಅಡವ್ಯಡವಿ
ಹುಡುಹುಡುಕಿ ಬೇಸತ್ತು ಕಡುಬಾಯ ಬಿಡುವಗೆ
ಮೃಡಮಹಾದೇವತೇರು ಸಡಗರದಿ
ನಿನ್ನಡಿಯ ದೃಢದಿ ಪೂಜಿಪರೆಂಬ ಕಡುಗರವದಿರವೇ ೨
ನೀರೊಳ್ಜೀವಿಸಿ ಬಲು ನಾರುತಲಿರುವವಗೆ
ಹಾರ ಹೀರಾವಳಿ ಗಂಧ ಕಸ್ತುರಿಯ ಮದವೋ
ಸಾರಿ ಮನು ಮುನಿಗಳು ಸೇರಿ ನಿಮ್ಮಯ ಚರಣ
ವಾರಿಜ ಭಜಿಪ ಮದ ಮೀರಿಹ್ಯದೋ ನಿನಗೆ ೩
ತಿರುಕನು ತಾನಾಗಿ ಧರೆಯ ದಾನವ ಬೇಡಿ
ಧರೆವರನ ಬಾಗಿಲವ ನಿರುತ ಕಾಯ್ದವಗೆ
ಸುರರು ಗಂಧರ್ವ ತುಂಬುರರು ಸಂಗೀತದಿಂ
ಹರುಷಗೊಳಿಪುದಕೆ ನೀ ನೇತ್ರ ಮುಚ್ಚಿರುವ್ಯೋ ೪
ಭಾರಬೆನ್ನಲಿ ಪೊತ್ತು ಘೋರ ಬಡುತಿರುವವಗೆ
ಈರೇಳುಲೋಕದ ದೊರೆಯೆಂಬಹಂಕಾರವೋ
ಮಾರಪಿತ ಗತಿಯೆಂದು ಸೇರಿ ಭಜಿಸುವ ದಾಸರರಿಕೆ
ಪೂರೈಸದಿದು ತರವೆ ಶ್ರೀರಾಮ ೫

 

೪೭
ನಿನ್ನದೇ ಹಂಗೆನಗೆ ಶ್ರೀಹರಿ
ನಿನ್ನದೇ ಹಂಗೆನಗೆ ಪ
ನಿನ್ನದೇ ಹಂಗೆನಗುನ್ನತ ಸುಖವಿತ್ತು
ಮನ್ನಿಸಿ ದಯದಿಂದೆನನುದ್ಧರಿಸಯ್ಯ ಅ.ಪ
ಜಿಹ್ವೆಗೆ ನಿಮ್ಮಯ ಧ್ಯಾನದ ಸವಿಸಾರವಿತ್ತಯ್ಯಾ
ಭವಭವದಲ್ಲಿ ಪುಟ್ಟಿ ಜನಗೀಡೆನಿಸುವ
ದಯದಿ ಪಿಡಿದು ಎನ್ನ ಭವಭಯಹರಿಸಿದಿ ೧
ವಿಸ್ತಾರ ತವಚರಿತ ಪಾಮರನ್ಹಸ್ತದಿಂ ಬರೆಸುತ್ತ
ಅಸ್ತವ್ಯಸ್ತವೆಲ್ಲ ನಾಸ್ತಿ ಮಾಡಿ ನೀನೆ
ಪುಸಿಯಾಗೆನ್ನಗೆ ಸ್ವಸ್ಥಪಾಲಿಸಿದಿ ೨
ಸದಮಲ ಶ್ರೀರಾಮ ಭಕುತಾಭಿ ಸದಮಲ ತವನಾಮ
ಸುದಯದಿಂದೆನ್ನಯ ವದನದಿ ನಿಲ್ಲಿಸಿ
ಸದಮಲವೆನಿಪ ಸಂಪದವಿಯ ನೀಡಿದಿ ೩

 

೪೮
ನಿನ್ನದೋ ನಿಖಿಲ ನಿನ್ನದೋ
ಕುನ್ನಿ ಮನುಜರಾಧೀನೇನಿಲ್ಲ ಶ್ರೀಹರಿ ಪ
ನೀನಿಟ್ಟ ರವಿಶಶಿಗಳು ಹರಿ
ನೀನಿಟ್ಟ ದಶದಿಕ್ಕುಗಳು ಹರಿ
ನೀನಿಟ್ಟ ಅಗ್ನಿಜ್ಯೋತಿಗಳು ಹರಿ
ನೀನಿಟ್ಟ ನದಿತಟಗಳು ಅಹ
ನೀನಿಟ್ಟ ಚಳಿಗಾಳಿ ನೀಕೊಟ್ಟ ಮಳೆಬೆಳೆ
ನೀನಿಟ್ಟ ಉತ್ಪತ್ತಿ ಸ್ಥಿತಿಲಯ ಸಕಲವು ೧
ನಿನ್ನ ಅಡಿಯೆ ಮಹಾಕ್ಷೇತ್ರ ಹರಿ
ನಿನ್ನ ನುಡಿಯೆ ವೇದಮಂತ್ರ ಹರಿ
ನಿನ್ನ ದೃಢವೆ ಸತ್ಯಯಾತ್ರೆ ಹರಿ
ನಿನ್ನ ಬೆಡಗು ಸ್ಮ್ರತಿಶಾಸ್ತ್ರ ಅಹ
ನಿನ್ನ ಅರಿವೆ ನಿತ್ಯ ನಿನ್ನ ಮರವೆ ಮಿಥ್ಯ
ನಿನ್ನ ಕರುಣ ಎಲ್ಲ ಪ್ರಾರಬ್ಧಗಳ ಗೆಲವು ೨
ನಿನ್ನ ನಾಮವೆ ಕ್ಷೇಮಕವು ಹರಿ
ನಿನ್ನ ನಾಮವೆ ಭವಗೆಲವು ಹರಿ
ನಿನ್ನ ನಾಮವೆ ಚಾರುಪದವು ಹರಿ
ನಿನ್ನ ನಾಮದ ಬಲವೆ ಬಲವು ಹರಿ
ನಿನ್ನ ನಾಮ ಗಾಯತ್ರಿ ನಿನ್ನ ನಾಮ ತಾರಕ
ನಿನ್ನ ನಾಮ ಭಕ್ತಿ ಯುಕ್ತಿ ಎನ್ನಯ್ಯ ಶ್ರೀರಾಮ ೩

 

೩೧೭
ನಿನ್ನನೆ ನಂಬಿದೆ ನೀರಜನಯನ
ನಿನ್ನ್ಹೊರತು ಎನಗನ್ಯ ಗತಿಯಿಲ್ಲ ಹರಿಯೆ ಪ
ನಿನ್ನ ಪಾದವೆ ಎನಗೆ ಮಾತಾಪಿತೃಯೆಂಬೆ
ನಿನ್ನ ಪಾದವೆ ಎನಗೆ ಬಂಧುಬಳಗವೆಂಬೆ
ನಿನ್ನ ಪಾದವೆ ಎನಗೆ ಸಕಲಸಂಪದವೆಂಬೆ
ನಿನ್ನ ಪಾದವೆ ಎನಗೆ ನಿಖಿಲಬಲವೆಂಬೆ ೧
ನಿನ್ನ ಕರುಣವೆ ಎನಗೆ ಭವತರಿವ ಶಸ್ತ್ರೆಂಬೆ
ನಿನ್ನ ಕರುಣವೆ ಎನಗೆ ಸ್ಥಿರಸುಖವುಯೆಂಬೆ
ನಿನ್ನ ಕರುಣವೆ ಎನಗೆ ರಕ್ಷಿಸುವ ದೊರೆಯೆಂಬೆ
ನಿನ್ನ ಕರುಣವೆ ಎನಗೆ ಪರಮ ತೃಪ್ತ್ಯೆಂಬೆ ೨
ನಿನ್ನ ನಾಮವೆ ಎನಗೆ ಅಮೃತವೆಂಬೆ
ನಿನ್ನ ನಾಮವೆ ಎನ್ನ ಭವರೋಗಕ್ಕ್ವೈದ್ಯೆಂಬೆ
ನಿನ್ನನಾಮ ಸ್ಥಿರಕೊಟ್ಟು ಪ್ರೇಮದಿಂ ಸಲಹು ಶ್ರೀರಾಮ
ನೀನೆ ಎನಗೆ ಪರದೈವಯೆಂಬೆ ೩

 

೩೧೮
ನಿನ್ನನ್ನೆ ನಂಬಿದೆನೊ ಪನ್ನಂಗಶಾಯಿ
ಎನ್ನ ನೀ ಕಾಯಬೇಕೊ ಪ
ದೀನದಯಾಳು ದೇವ ನೀನೆ ಕಾಯದೆ ಬಿಟ್ಟ
ರಿನ್ನಾರು ಕಾಯ್ವರು ಎನ್ನನೀ ಜಗದೊಳುಅ.ಪ
ಉನ್ನತ ಹೃದಯನೆ ಮುನ್ನ ನಾ ಮಾಡಿದ
ಗನ್ನಗತಕತನವನ್ನು ದಯದಿ ಕ್ಷಮಿಸು
ಇನ್ನೀಭವದಿ ಎನಗೆ ನಿನ್ನಯ ಸನ್ನುತಿ
ಯನ್ನು ಪಾಲಿಸಿ ಸತತ ಬನ್ನಬಡಿಸದೆ ಕಾಯೊ ೧
ಶರಣಾಗತರಕ್ಷಣಾನಾಥಜನಬಂಧುವೇ
ಕರುಣದಿ ನಿಮ್ಮಂಥ ದೇವರನುಕಾಣೆ
ದುರಿತದೂರನೆ ಎನ್ನ ದುರಿತದುರ್ಗಣವನ್ನು
ಪರಿಹರಿಸಿ ಸಲಹಯ್ಯ ಶರಣುಜನರ ಪ್ರೀಯ ೨
ಕೈಯ ಪಿಡಿದು ಪೊರೆಯೊ ಬಿಡದೆನಮ್ಮಯ್ಯ ಜಗ
ದಯ್ಯ ಶ್ರೀರಾಮ ವಿಜಯವಿಠಲರಾಯ
ಕೈಯ ಮುಗಿದು ಮರೆಹೊಕ್ಕು ಬೇಡುವೆಯ್ಯ
ಜೀಯ ದಯದಿ ಕಾಯೊ ಪಂಢರಿರಾಯ ೩

 

೩೧೯
ನಿನ್ನಪಾದ ದೊರಕುವುದು ಎಂತೆನಗೆ ರಂಗ
ಗನ್ನಗತಕ ನಾನು ಪುಣ್ಯದ್ಹಾದ್ಯರಿಯೆ ಪ
ಕಳ್ಳನಾಗಿ ಜೀವಿಸಿದೆ ಸುಳ್ಳನಾಡಿ ನಾ ದಣಿದೆ
ತಳ್ಳಿಕೋರತನದನ್ಯರ್ಹಾಳು ಮಾಡಿದೆನೊ
ಖುಲ್ಲತನದಿಂ ಪರರ ನಲ್ಲೆಯರೋಳ್ಮನಸಿಟ್ಟು
ಕ್ಷುಲ್ಲಕನಾದೆ ನಾನೆಲ್ಲಿ ನೋಡಲವ ೧
ಅನ್ನಕೊಟ್ಟವರಿಗೆ ಅನ್ಯಾಯಯೋಚಿಸಿದೆ
ಬನ್ನ ಬಡಿಸಿದೆನಯ್ಯ ನನ್ನನಂಬಿದವರ
ಎನ್ನ ಪಡೆದವರನ್ನು ಮನ್ನಿಸಿನೋಡಿಲ್ಲ
ನಿನ್ನ ಧ್ಯಾನದ ಖೂನವನ್ನರಿಯೆ ದೇವ ೨
ಗುರುಹಿರಿಯರನು ಜರಿದೆ ಪರಿಪರಿಯಲಿ ನಾನು
ಪರರಿಗೊಂದಿಕ್ಕಿ ನಾನುಂಡಿರುವೆನೊಂದು
ಧರೆಯೊಳೆಣೆಯಿಲ್ಲದ ದುರಿತವನು ಗಳಿಸಿರುವೆ
ಕರುಣಾಳು ಶ್ರೀರಾಮ ನೀನೆ ಪೊರಿಬೇಕೊ ೩

 

೬೩೦
ನಿನ್ನಬಿಟ್ಟನ್ಯಬಲ ಮುನ್ನಿಲ್ಲಸ್ವಾಮಿ
ಎನ್ನಯ್ಯ ವಿಶ್ವೇಶ ಪನ್ನಂಗಶಾಯಿ ಪ
ಇನಚಂದ್ರ ಮಂಗಳಬುಧಗುರು ಭಾರ್ಗವ
ಶನಿರಾಹುಕೇತು ನವಮಹರ್ದಶನು ನೀನೆ
ಘನನಿಮ್ಮ ಮಹಿಮೆಯಿಂ ವಿಧವಿಧದಿ ಸೃಷ್ಟಿಗೈ
ದೊನರುಹ ಭುವನಂಗಳಾಳುವವ ನೀನೆ ೧
ನಕ್ಷತ್ರಯೋಗಾದಿಕರಣಂಗಳು ನೀನೆ
ಪಕ್ಷಮಾಸ ಸರ್ವಕಾಲ ವಾರ ತಿಥಿ ನೀನೆ
ಸುಕ್ಷೇತ್ರಯಾತ್ರ ಮಹಪುಣ್ಯತೀರ್ಥವು ನೀನೆ
ಸಾಕ್ಷಾತ ನಿಖಿಲ ಶುಭಮುಹೂರ್ತಗಳು ನೀನೆ ೨
ಪರಮವೇದ ಪುಣ್ಯಪುರಾಣಕಥೆ ನೀನೆ
ವರ ನಿಖಿಲ ಶಾಸ್ತ್ರರ್ಥ ಮೂಲವಿಧಿ ನೀನೆ
ಚರಣದಾಸರ ಪ್ರಾಣಪದಕ ಶ್ರೀರಾಮಯ್ಯ
ಸ್ಥಿರಮೋಕ್ಷ ಪಾಲಿಪ ಶ್ರೀಗುರುವು ನೀನೆ ೩

 

೫೧
ನಿನ್ನಯ ಬಲವೊಂದಿದ್ದರೆ ಸಾಕಯ್ಯ ಸೀತಾನಾಥ ಮಿಕ್ಕ
ಅನ್ಯರ ಬಲವಿನ್ನ್ಯಾಕೆ ಬೇಕಯ್ಯ ಸೀತಾನಾಥ ಪ
ತನ್ನ ಮುಖವ ಕಂಡ ಜನರಿಂ ಕೇಳ್ವುದಕಿಂತ ಸೀತಾನಾಥ
ತನು ಉನ್ನತವಾದಂಥ ಕನ್ನಡ್ಯೊಂದೇ ಸಾಕೊ ಸೀತಾನಾಥ
ತನ್ನಿಷ್ಟಗರೆವಂಥ ಸುರಧೇನೊಂದೆ ಸಾಕೊ ಸೀತಾನಾಥ ಮತ್ತು
ಇನ್ನು ಬನ್ನಬಡುತಾನಂತಾಕಳ್ಯಾಕೊ ಸೀತಾನಾಥ ೧
ವರ ಹೆಣ್ಣು ಹೊನ್ನು ಮಣ್ಣಿನಕಿಂತ ಸೀತಾನಾಥ
ಸ್ಥಿರ ಸ್ಮರಿಸಿದ್ದನ್ನೀವಂಥ ಸುರತರೊಂದೆ ಸಾಕೊ ಸೀತಾನಾಥ
ಪರಮ ಚಿಂತಾಮಣಿಯ ಸಾಧ್ಯವೊಂದೆ ಸಾಕೊ ಸೀತಾನಾಥ
ಪರಿ ಪರಿ ಮಂತ್ರ ತಂತ್ರದಿ ಸಿದ್ಧಿಗಳ್ಯಾಕೊ ಸೀತಾನಾಥ ೨
ಪಾಮರ್ಹಲವು ಬಂಧುಬಳಗ ಬಲದಕಿಂತ ಸೀತಾನಾಥ ಮಹಾ
ಸ್ವಾಮಿಪ್ರೇಮವೆಂಬ ಪರುಷವೊಂದೆ ಸಾಕೊ ಸೀತಾನಾಥ
ಕಾಮಿಶಲವು ದೈವ ಭಜಿಸಲಿನ್ಯಾತಕೊ ಸೀತಾನಾಥ ಶ್ರೀ
ರಾಮ ನಿಮ್ಮಯ ನಿಜ ಧ್ಯಾನವೊಂದೆ ಬೇಕೊ ಸೀತಾನಾಥ ೩

 

೩೨೪
ನಿನ್ನ್ಹೊರತು ನಾನಿನ್ನು ಅನ್ಯದೇವರರಿಯೆ
ಪನ್ನಂಗಶಾಯಿಯೇ ಪರಿಪಾಲಿಸಭವ ಪ
ನಿನ್ನಿಂದಜನಿಸಿ ನಾ ನಿನ್ನಿಂದ ಬೆಳೆದಿರುವೆ
ನಿನ್ನಿಂದ ಮಲಗಿ ನಾ ನಿನ್ನಿಂದ ಏಳ್ವೆ
ನಿನ್ನಿಂದ ನಡೆಯುವೆ ನಿನ್ನಿಂದ ಕೂಡುವೆನು
ನಿನ್ನಿಂದ ಸುಖಬಡುವ ನಿನ್ನಣುಗ ನಾನು೧
ನಿನ್ನದೇ ಉಣ್ಣುವೆನು ನಿನ್ನದೇ ತಿನ್ನುವೆನು
ನಿನ್ನದೇ ಉಟ್ಟು ನಾ ನಿನ್ನದೇ ತೊಡುವೆ
ನಿನ್ನದೇ ಹಾಸಿ ನಾ ನಿನ್ನದೇ ಹೊದೆಯುವೆ
ನಿನ್ನ ಸೂತ್ರದಿ ಕುಣಿವ ನಿನ್ನ ಶಿಶು ನಾನು ೨
ಎನ್ನ ಮಾತೆಯು ನೀನೆ ಎನ್ನ ತಾತನು ನೀನೆ
ಎನ್ನ ಅರಸನು ನೀನೆ ನಿನ್ನ ಪ್ರಜೆ ನಾನು
ಎನ್ನ ಬಂಧುವು ನೀನೆ ಎನ್ನ ಬಳಗವು ನೀನೆ
ಎನ್ನೊಡೆಯ ಶ್ರೀರಾಮ ನಿನ್ನ ದಾಸ ನಾನು ೩

 

೫೪
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗ
ನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪ
ವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀ
ಜನರೊಳಗೆ ಘನವಂತನೆನಿಸಿಕೊಂಬೆ ಅನುಗಾಲ ೧
ಹರಿ ನಿಮ್ಮ ವರಚರಣಕರುಣವಿರೆ ಧರೆಮೇಲೆ
ದುರುವಾದಿಗಳ ಜೈಸಿ ನಿರುತನೆನಿಪಿ ಅನವರತ ೨
ವರವೇದಸ್ಮ್ರತಿಶಾಸ್ತ್ರ ಸ್ಥಿರದರಿವು ನಿಜಜ್ಞಾನ
ವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ ೩

 

೩೩೮
ನೀ ಬಿಟ್ಟ ಬಳಿಕೆನ್ನ ಸಾಧ್ಯವೇನಿಹ್ಯದು
ನೀ ಕರುಣಗೈದರೆ ಸಕಲ ಸಾಧ್ಯ್ಹರಿಯೆ ಪ
ಯಂತ್ರವಾಹನೆ ಯಂತ್ರ ನಡೆಸದೆಯಿರಲು
ಯಂತ್ರ ನಡೆಯುವುದೆಂತು ಸ್ವಂತ ತಾನೇ
ಮಂತ್ರಗಾರಿಲ್ಲದೆ ತಂತ್ರ ತೋರ್ವುದೆ ಸ್ವ
ತಂತ್ರ ನೀನಲ್ಲದೆ ಅತಂತ್ರನಿಂದೇನಹುದು ೧
ಪಡೆದ ಮಾತೆಯು ಕೂಸಿನೊಡಲು ತಾ ನೋಡದಿರೆ
ಪಡುವುದೆಲ್ಲಿಂದ ಬೇರೆ ಕಡುತೃಪ್ತಿಯನ್ನು
ಒಡಲೊಳಿಟ್ಟ್ಹದಿನಾಲ್ಕುಪೊಡವಿಗಳನಾಳುವ
ಒಡೆಯ ಕೊಡದಿರೆ ಕೀರ್ತಿ ಪಡೆಯುವುದೆ ಜೀವಿ ೨
ನಿನ್ನಿಂದೆ ಬೆಳಗುವುದು ನಿನ್ನಿಂದೆ ಮುಳುಗುವುದು
ನಿನ್ನಿಂದಳಿಯುವುದು ನಿನ್ನಿಂದಲುಳಿಯುವುದು
ನಿನ್ನಿಬಿಟ್ಟಿನ್ನಿಲ್ಲ ಎನ್ನಯ್ಯ ಶ್ರೀರಾಮ
ಮನ್ನಿಸಿ ಕೃಪೆಮಾಡು ಎನ್ನ ನೀ ಬಿಡದೆ ೩

 

೩೩೯
ನೀ ಮಾಡಿದ ಮಾಯವು ನಾನೇನು ಬಲ್ಲೆ ಸ್ವಾಮಿ
ನೀ ಮಾಡಿದ ಮಾಯವು ಪ
ಕಣ್ಣು ಕಿವಿ ಕೈಕಾಲು ಮುನ್ನ ನಾಲಗೆ ಬಾಯಿ
ನಿನ್ನ ಸೂತ್ರದಲಾಡ್ವವೆನ್ನದೇನಪರಾಧ ೧
ಈ ಕಾಯ ಎಂಬ ಗೊಂಬೆಯಾಕಾರ ನಿರ್ಮಿಸಿ
ಬೇಕಾದಂತಾಡಿಸುವಿ ಶ್ರೀಕರ ಒಳಗಿರ್ದು ೨
ಭೂಮಿತ್ರಯವ ಸೃಷ್ಟಿ ನೀ ಮಾಡಿ ತೋರಿದಿ
ಕ್ಷೇಮದಿಂ ಸಲಹೆನ್ನ ಸ್ವಾಮಿ ಶ್ರೀರಾಮ ತಂದೆ ೩

 

೩೨೫
ನೀಚಕೃತ್ಯದ ಮನಸೇ ನಿನಗೆ ತುಸು
ನಾಚಿಕಿಲ್ಲಲೆ ಹೊಲಸೆ ಪ
ಪ್ರಾಚೀನಹಿರಿಯರ ಯೋಚಿಸಿನೋಡದೆ
ನೀಚತನದ ಆಲೋಚನೆಯೊಳು ಬಿದ್ದು ಅ.ಪ
ಕುಂತಿಸುತನ ರಥವ ನಡೆಸಿದನು ಅ
ತ್ಯಂತ ಕೃಪೆಯಿಂದ ಹರಿಯು
ಕಂತುಜನಕ ಭಕ್ತ ಚಿಂತಾಯಕನೆಂದು
ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ ೧
ಅಂಬರೀಷನೆಂಬುವ ನೃಪಗೆ ಮುನಿ
ಡೊಂಬೆಯಿಂಬ (?) ಶಾಪಿಸಲು
ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು
ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ ೨
ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ
ಪ್ರೇಮದಿಂ ರಮೆಯರಸನು
ಪ್ರೇಮದಿಂ ಭಕುತರ ಕಾಮಿತವೀಯಲು
ಕಾಮಧೇನೀತನೆಂದು ನೇಮದಿಂದರವಲ್ಲಿ ೩
ಗೌತಮ ಮುನಿಸತಿಯು ಪಾಷಾಣವಾಗಿ
ಕ್ಷಿತಿಮೇಲೆ ಎರಗಿರಲು
ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ
ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ ೪
ಹನುಮಂತನೊಡೆಯನಾದ ಜನಕಜೆಪತಿ
ವನಜಾಕ್ಷ ಶ್ರೀರಾಮನ
ಘನತರಮಹಿಮೆಯ ಅನುದಿನಕೊಂಡಾಡು
ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ ೫

 

೩೨೬
ನೀಚಮತಿ ಎಲೆ ನೀಚಮತಿ
ಊಚನೆನಿಸಿಕೊಂಬ ಯೋಚನೆ ಬಿಡುಕಂಡ್ಯ ಪ
ತರಿಯದೆ ಕುಟಿಲತ್ವ ಮರೆಯದೆ ದುಶ್ಚಟ
ಧರೆಯ ಭೋಗವ ನೆಚ್ಚಿ ಶರಣರ್ವೇಷವ ತಾಳಿ
ಮರವೆ ಮಾಯದಿ ಬಿದ್ದು ಒರಲುವ ನರರಿಗೆ
ಬರಿದೆ ಬೋಧಿಪೆನೆಂಬ ಭ್ರಮೆಯಿಂದ ಫಲವೆ ೧
ಮಾಯಮೋಹಿಗಳ ಉಪಾಯದಿ ಕೂಡಿಸಿ
ಸೇವಿಸದಾಹಾರ ಸೇವಿಸುತನುದಿನ
ಕಾಯಬಲಿಸಿ ಕುಣಿವ ಮಾಯಮೋಹಿಯ ಬರಿ
ಬಾಯ ಬ್ರಹ್ಮತ್ಯಬಂಧ ಬಯಲಪ್ಪುದೇನೆಲೆ ೨
ಧರಿಸಿದ ಲಾಂಛನ ಅರಿಯದೆ ಮೇಲೆ ನೀ
ಬರಿದೆ ಕಾವಿಯನ್ಹೊದ್ದು ಕರದಿ ಕಮಂಡಲ
ಧರಿಸಿ ಮರುಳರಿಗೆಲ್ಲ ಪರತತ್ತ್ವವರಿಯಲು
ಜರೆಮರಣದು:ಖವು ಪರಹಾರಮೆಂತೆಲೆ ೩
ಭವಭವದಲಿ ಬಟ್ಟಬವಣೆಯ ಸ್ಮರಿಸಿದೆ
ಭವಗೆಲಿಸುವ ಅನುಭವ ತಿಳಿಯದೆ ಸ
ದ್ಭವಿಗಳ ನೆರೆಯಿಸಿ ಕವಿತೆ ಬಿಡಿಸಿ ಬಹು
ಸವಿಮಾತ್ಹೇಳಲು ಮೂಲಭವಭೀಜಳಿಯುವುದೆ ೪
ತನ್ನ ತನ್ನದುಯೆಂಬ ಭಿನ್ನವಿಲ್ಲದೆಸದಾ
ತನ್ನ ಸ್ವರೂಪ ಪರರನ್ನು ಬಗೆದು ನಿತ್ಯ
ಸನ್ನುತ ಶ್ರೀರಾಮನುನ್ನತಂಘ್ರಿಗೆ ಪೊಂದಿ
ಧನ್ಯರಾಗದೆ ನರಕುನ್ನಿಯೆನಿಸುವರೇನೋ ೫