Categories
ರಚನೆಗಳು

ವರಹತಿಮ್ಮಪ್ಪ

ಊ. ವಿಶಿಷ್ಟ ಹಾಡುಗಳು
೧೦೧
ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ
ಸಂಗಡಿಕ್ಕ ಬೇಡ ನೀವು ಭಂಗಬಡುವಿರಿ ಪ
ಮುಂಗಡದ ಬಡ್ಡಿಯನು ಮುಂದೆ ಕಳುಹಿಸಿ
ಅಂಗಡಿ ಗೋವಿಂದನ್ಹಣ ವಿಂಗಡಿಸಿರೊ ಅ.ಪ
ಕೋಲುಗಾರನೊಬ್ಬನಲ್ಲಿ ಹೊರಟನಂತೆ
ಬೇಳುವ ಶಂಖದ ಧ್ವನಿಯ ತೋರ್ಪನಂತೆ
ಹೀಲಿಯ ಕುಂಚವು ಕಯ್ಯೊಳಿಪ್ಪುದಂತೆ
ಮೇಲೆ ಮೂರು ನಾಮ ಧರಿಸಿ ಬಪ್ಪನಂತೆ ೧
ಮೂರುಗಡುಬ ಸುಳ್ಳನಾಡಿ ಮೀರಿ ಹೋಯಿತೀ
ಸಾರಿ ಬಂದ ದೂತರಿಂಗೆ ಲಂಚ ನಡೆಯದು
ಭಾರಿಯಿಕ್ಕಿ ಕೈಗೆ ಚಿಪ್ಪಳೇರಿಸುವರು
ಸಾರಿ ಕಂಡು ಬದುಕುವರೆ ದಾರಿವೊಳ್ಳೆದು ೨
ಮೊದಲ ಪತ್ರದ್ಹಣವ ಕೊಟ್ಟು ಬದಲು ಪತ್ರವ
ಸದರ ಬಡ್ಡಿಯಿಂದ ಬರೆದು ಚದುರತನದಲಿ
ಇದಿರು ಬಿದ್ದು ಕೈಯ ಮುಗಿದುವೊದಗಿನಿಂದಲೆ
ಗದರಬೇಡ ಬನ್ನಿ ಚಿನ್ನ ವರದನಲ್ಲಿಗೆ ೩
ದುಡ್ಡು ಕೊಟ್ಟು ಮಡ್ಡಿಯನ್ನು ತೆಗೆದು ಉಂಬೆವು
ಅಡ್ಡಕೊಂಡು ಅತಿರಸವ ತೆಗೆದುಕೊಂಬೆವು
ದೊಡ್ಡ ದೋಸೆ ವ್ಯವಹಾರವ ಮಾಡಿಕೊಂಬೆವು
ಕಡ್ಡಾಯದ ಸರಕನೆಲ್ಲ ಕಂಡು ಬಿಡುವೆವು ೪
ಗಂಧಿಕಾರನಂಗಡಿ ಗೋವಿಂದನಲ್ಲಿ
ಚಂದದ ಔಷಧವನ್ನು ತಿಂಬೆವಲ್ಲಿ
ಬಂದ ಭವದ ರೋಗ ಕೊಂದೆವಲ್ಲಿ ಆತ
ಮಿಂದ ತೀರ್ಥವನ್ನು ಊರಿಗೆಂದೆವಲ್ಲಿ ೫
ಸಾಲವನ್ನು ತಿದ್ದಿ ಮುದದ ಸಾಲವನ್ನು
ನಾಲಿಗೆಯ ಪತ್ರದಿಂದ ತಂದೆವಿನ್ನು
ನೀಲದ ಮಣಿಯನೊಂದ ಕದ್ದುದನ್ನು
ಆಲಿಯೊಳಗಿಟ್ಟುಕೊಂಡು ಬಂದುದನ್ನು ೬
ಅಂಗಡಿ ಗೋವಿಂದ ಬಹಳ ಅಂಗವುಳ್ಳವ
ಮಂಗಳವ ಮಾರುವಲ್ಲಿ ಶೃಂಗಾರವುಳ್ಳವ
ಬಂಗಾರ ವ್ಯಾಪಾರದಲ್ಲಿ ತುಂಗ ವಿಕ್ರಮ
ಮುಂಗುಡಿಯ ಜನಕೆ ಅಂತರಂಗ ಕೊಡುವವ ೭
ದಾಸರಿಗೆ ಧರ್ಮವನ್ನು ಕೊಡುವನಲ್ಲದೆ
ಕಾಸು ಹೊರತು ಮೀಸಲನ್ನ ನೀಡಲರಿಯನು
ಶೇಷಗಿರಿಯವಾಸನೆಂದು ಹಾಸಿಕೊಂಬನು
ಬೇಸರನ್ನು ಕಂಡು ಸಂತೋಷವೀವನು ೮
ಸ್ವಾಮಿಯೆಂಬ ತೀರ್ಥದೊಳಗೆ ಮಿಂದೆವಲ್ಲಿ
ಭೂಮಿ ವರಾಹತಿಮ್ಮಪ್ಪನ ಧ್ಯಾನದಿಂದಲಿ
ಕಾಮಿತ ವ್ಯಾಪಾರವನ್ನು ತಂದೆವಿಲ್ಲಿ
ಆ ಮಹಾ ಚಂದ್ರಾರ್ಕವಾಗಿ ಬಾಳುವಲ್ಲಿ ೯

 

ಅ. ಶ್ರೀಹರಿ ಲಕ್ಷ್ಮಿಯರು
೪೬
ಅನುಮಾನವೇತಕೆ ಅನುಗುಣವಾಗಿಯೇ
ಪ್ರಣವರೂಪನ ಹೋಗಿ ನೋಡಿ ಬರುವುದಕೆ ಪ
ಹೋಗುವಯೆಂದೆಂಬ ಮಾತು ನಿಶ್ಚಯವಾಗಿ
ಬೇಗದ ಪಯಣದಲಿ
ನಾಗಗಿರೀಶನ ಕಂಡು ಕಾಣಿಕೆಯಿತ್ತು
ಸಾಗಿ ಬರುವ ಊರಿಗೆ ಇವರಿಗೆ ೧
ಕೋನೇರಿನಾಸನ ನಾ ಹೋಗಿ ನೋಡಲು
ಮಾನವ ಜನುಮದಲಿ
ಹೀನ ವೃತ್ತಿಯ ಬಿಟ್ಟು ಜ್ಞಾನ ಬುತ್ತಿಯ ಕಟ್ಟಿ
ಕಾಣಲು ಇಹಪರವಾತ ತಾನೆರೆವ ೨
ರಾಮನ ಶಿಕ್ಷೆಯು ರಾಮನ ರಕ್ಷೆಯು
ರಾಮನ ನಿಜ ಮತವು
ರಾಮ ಆಂಜನೆಯನ ಗಿರಿಯೊಳು ನಿಂತಿಪ್ಪ
ಭೂಮಿ ವರಾಹ ತಿಮ್ಮಪ್ಪ ೩

 

೧೦೨
ಅರೋಗಣೆಯ ಮಾಡೊ ಅಂಜನಾದ್ರಿಯ ವಾಸ
ಆಲಸ್ಯವೇತಕೋ ಆಯಿತು ವೆಂಕಟೇಶ ಪ
ತಳಿಗೆಯ ತೊಳೆದಿಟ್ಟು ಸುಳಿಬಾಳೆ ಎಲೆಯಿಕ್ಕಿ
ನಳಿನಲೋಚನೆಯರುಗಳಿಂದ ಅಭಿಘರಿಸಿ
ಎಳೆಯ ಮಾವಿನ ಮಿಡಿಯು ಉಪ್ಪು ಬೇವಿನ ಸೊಪ್ಪು
ಹುಳಿಗೂಡಿ ಅರೆದಿಟ್ಟ ಶುಂಠಿ ಕಡಲೆ ಹಂಬೆ ೧
ಕಣಿಲೆ ಕಂಚಿನಕಾಯಿ ಅಣಿಲೆ ಅಂಬಟನೆಲ್ಲಿ
ಒಣಗಿದ ಮೆಣಸಿನ ಉರಿಯು ಉಪ್ಪಿನ ಹೆರೆಯು
ಪಣುವಾದ ಮಾದಳೆ ಗೆಣೆಯಾದ ಏಲಕ್ಕಿ
ಕಣುಮನಕ್ಕೊದಗಿಯೇ ಅಣಿಯಾಯಿತೆಡೆಯೊಳು ೨
ಹೆರೆದ ತೆಂಗಿನಕಾಯ ಅರೆದ ಸಾಸಿವೆಯಿಕ್ಕಿ
ಅರೆದು ಬೇಯ್ಸಿದ ಓಗರದೊಳು ಕಲಸಿಟ್ಟು
ತರಿದ ಗುಳ್ಳದಕಾಯಿ ಹಾಗಲು ಕುಂಬಳಕಾಯಿ
ಕೊರೆದ ಬಾಳೆಯಕಾಯಿ ಹುರಿದದೇ ತುಪ್ಪದಿ ೩
ಸಣ್ಣಕ್ಕಿಯೋಗರವು ಬೆಣ್ಣೆಕಾಸಿದ ತುಪ್ಪ
ಗಿಣ್ಣಲನೊರೆಹಾಲು ಸಣ್ಣ ಮೆಣಸು ಸಾರು
ಅನ್ನ ಚಿತ್ರಾನ್ನವು ಮೊಸರನ್ನ ಹೆಸರ್ಹುಗ್ಗಿ
ಉಣ್ಣಬಾರೆಲೋ ನೀನು ಇನ್ನು ತಡ ಬೇಡ ೪
ಕೇಸಕ್ಕಿಯೋಗರವು ದೋಸೆ ಪಾಯಸವನ್ನು
ಬೀಸು ಹಾರಿಗೆಯತಿರಸವು ಮಂಡಿಗೆಯು
ಕಾಸಿದ ಹಪ್ಪಳ ಕಡ್ಲೆ ಹೂರಣದೀಗ
ಏಸು ಹೋಳಿಗೆ ಬೇಕೈಸನೀ ಉಣಲೇಳು ೫
ಚಕ್ಕುಲಿ ಕರಜಿಯಕಾಯಿ ಮನೋಹರವು
ಚೊಕ್ಕ ಬಿಳಿಯ ಬೇಳೆಸುಕ್ಕಿನುಂಡೆಯು
ಸಕ್ಕರೆಯು ಬೆರಸಿರ್ದ ಕದಳಿ ರಸಾಯನವು
ಇಕ್ಕಿಸಿಕೊಳ್ಳೊ ನೀ ಮಕ್ಕಳಾಟಿಕೆ ಬೇಡ ೬
ಏಲಕ್ಕಿ ನಾಗರನಿಂಬೆ ಬೇವಿನಸೊಪ್ಪು
ಮೇಲೆ ಒಗ್ಗರಿಸಿದ ನೀರು ಮಜ್ಜಿಗೆಯು
ಹಾಲು ಮೊಸರು ಹಸಿಮಜ್ಜಿಗೆ ಸಹವಾಗಿ
ಜಲವು ಮುಟ್ಟದ ಹಾಗೆ ಬೇರೆ ಬೇರಿರಿಸಿದೆ ೭
ಗಾಯಿತ್ರಿ ಮಂತ್ರದಿಂ ತೋಯವ ಪ್ರೋಕ್ಷಿಸಿ
ಬಾಯೊಳು ಪ್ರಣವವನು ಜಪಿಸಲಾಕ್ಷಣದಿ
ರಾಯವೆಂಕಟಪತಿಯು ಆಪ್ಯಾಯನವ ಮಾಡಿ
ದಾಯವಾಗಿತ್ತನು ಭಕ್ತಜನರಿಗೆಲ್ಲ ೮
ಈ ರೀತಿಯಿಂದಲೆ ಆರೋಗಿಸುವುದೆಂದು
ವಾರಿಜನಾಭನ ಸಾರಿ ವರ್ಣಿಸಲು
ಮೋರೆಯ ಪ್ರಸಾದ ಕರೆದು ಇವನು ನಮ್ಮ
ವರಾಹತಿಮ್ಮಪ್ಪನೊಂದುಗೂಡಿರುವನು ೯

 

೧೦೩
ಇದಕೊ ಕಾಶಿಯನು ಮನವೇ
ಬೆದಕುಗೊಳ್ಳಲು ಬೇಡ ತೋರುವೆನು ಪ
ಬಲ್ಲವನಾದರೆ ಇಲ್ಲಿಯೆ ಕಾಶಿ
ಕಲ್ಲೆದೆಯಾದವನಲ್ಲವೆ ದೋಷಿ
ಎಲ್ಲವ ತಿಳುಹುವೆ ಚಲ್ವ ಸಂತೋಷಿ
ಸೊಲ್ಲ ಲಾಲಿಸಿ ಕೇಳು ಪೇಳ್ವೆ ನಿರ್ದೋಷಿ ೧
ಕಾಶಿಯ ದರುಶನವಿಲ್ಲದ ಜನರು ವಿ-
ಶೇಷವಾಗಿಯೆ ಇಲ್ಲಿ ನಡೆಕೊಂಬುತಿಹರು
ದೂಷಣ ಮಾಡದೆ ಪೋಷಿಸುವವರು
ಕಾಶಿಗಿಮ್ಮಡಿಯಾಗಿ ಲೇಸ ಪಡೆಯುವರು ೨
ವೇದವನೋದಿದ ವಿಪ್ರನೆ ಕಾಶಿ
ವಾದಗಳಿಲ್ಲದ ಸೋದರನೆ ಕಾಶಿ
ಆ ಧನ ಕೈಯೊಳು ಇದ್ದರೆ ಕಾಶಿ
ಮಾಧವ ಧ್ಯಾನವು ಮನದೊಳು ಕಾಶಿ ೩
ಅವ್ವೆ ತಂದೆಯ ಸೇವೆ ಮಾಳ್ಪುದೆ ಕಾಶಿ
ದೇವರ ಪೂಜೆಯ ನೋಳ್ಪುದೆ ಕಾಶಿ
ಜೀವರಕ್ಷಣ್ಯವ ಮಾಳ್ಪುದೆ ಕಾಶಿ
ಭಾವಶುದ್ಧತ್ವದಿ ಇಪ್ಪುದೆ ಕಾಶಿ ೪
ಗುರುಗಳಿಗೆರಗುವ ಪರಿಯೊಂದು ಕಾಶಿ
ಹಿರಿಯರ ಆಜ್ಞೆಯೊಳಿರುವುದು ಕಾಶಿ
ಪರವುಪಕಾರವು ಸ್ಥಿರವಾದ ಕಾಶಿ
ಕರೆದು ಮೃಷ್ಟಾನ್ನವನೆರೆವುದು ಕಾಶಿ ೫
ಅರಳಿಯ ವೃಕ್ಷವ ನೆಟ್ಟರೆ ಕಾಶಿ
ಕೆರೆ ಬಾವಿ ಕಟ್ಟಲು ಇಷ್ಟದ ಕಾಶಿ
ಅರವಟ್ಟಿ ನೀರಿರಿಸಲು ದೃಷ್ಟ ಕಾಶಿ
ಸಿರಿಲಕ್ಷ್ಮಿಯರಸನ ಕರೆವುದು ಕಾಶಿ ೬
ದುಷ್ಟರ ಸಂಗವ ಬಿಡುವುದೆ ಕಾಶಿ
ಕಷ್ಟದ ಮಾರ್ಗವ ತೊರೆವುದು ಕಾಶಿ
ಶಿಷ್ಟರ ಸೇರುವುದು ಇಷ್ಟದ ಕಾಶಿ
ಬೆಟ್ಟದ ಒಡೆಯನ ನೆನೆವುದೆ ಕಾಶಿ ೭
ಏಕಾದಶಿ ಉಪವಾಸವೆ ಕಾಶಿ
ಆಕಳ ದಾನವ ಮಾಳ್ಪುದೆ ಕಾಶಿ
ಬೇಕಾದುದಿದ್ದರೆ ಮನೆಯೆಲ್ಲ ಕಾಶಿ
ಕಾಕು ಸೇವೆಯಿಲ್ಲದ ಮನುಜನೆ ಕಾಶಿ ೮
ಉದಯದಿ ಸ್ನಾನವ ಮಾಳ್ಪುದೆ ಕಾಶಿ
ಪದುಮನಾಭನ ಧ್ಯಾನ ಮೃದುವಾದ ಕಾಶಿ
ಕದನವಿಲ್ಲದ ಊರ ನೋಡಲು ಕಾಶಿ
ಉದರವು ತುಂಬಲು ಬಡವಗೆ ಕಾಶಿ ೯
ರುದ್ರ ದೇವನ ಪೂಜೆ ಇದ್ದಲ್ಲಿ ಕಾಶಿ
ವಿಧ್ಯುಕ್ತ ಮಾರ್ಗದಿ ನಡೆವುದು ಕಾಶಿ
ಬದ್ಧವಾಗೈವರ ಕಟ್ಟಲು ಕಾಶಿ
ಶುದ್ಧವಾದ ಹೆಂಡತಿ ಮುದ್ದಿನ ಕಾಶಿ ೧೦
ಸನ್ಯಾಸ ಮಾರ್ಗವು ಚೆನ್ನಾದ ಕಾಶಿ
ಅನ್ಯಾಯವಿಲ್ಲದ ಅರಸನೆ ಕಾಶಿ
ಕನ್ಯಾದಾನವು ಮುನ್ನಿನ ಕಾಶಿ
ಮನ್ನಿಸಿಕೊಂಡರೆ ತನ್ನಲ್ಲೆ ಕಾಶಿ ೧೧
ಅಧ್ಯಾತ್ಮ ವಿದ್ಯೆಯ ಹೊದ್ದಲು ಕಾಶಿ
ಬದ್ಧ ನಡೆನುಡಿ ಇದ್ದರೆ ಕಾಶಿ
ಮಧ್ವರಾಯನು ಕುಳಿತಿದ್ದಲ್ಲಿ ಕಾಶಿ
ಪದುಮನಾಭನ ನೆನವಿದ್ದರೆ ಕಾಶಿ ೧೨
ದಾನದೊಳಗೆ ಸಮಾಧಾನವೆ ಕಾಶಿ
ಮಾನದೊಳಗೆ ಅಭಿಮಾನವೆ ಕಾಶಿ
ಸ್ನಾನದೊಳಗೆ ಭಕ್ತಿ ಸ್ನಾನವೆ ಕಾಶಿ
ಜ್ಞಾನದೊಳಗೆ ಶುದ್ಧಜ್ಞಾನವೆ ಕಾಶಿ ೧೩
ದೇವರೊಳಗೆ ಸಾಲಿಗ್ರಾಮವೆ ಕಾಶಿ
ಜೀವರೊಳಗೆ ಗೋವುಚಯವೆಲ್ಲ ಕಾಶಿ
ಭಾವಿಸಿ ನೋಡಲು ತುಳಸಿಯೆ ಕಾಶಿ
ಹೂವಿನೊಳಗೆ ಬಿಲ್ವಪತ್ರಿಯೆ ಕಾಶಿ ೧೪
ಹಲವು ಮಾತುಗಳೇನೀಪರಿ ಕಾಶಿ
ಛಲ ಭಕ್ತಿಯಿದ್ದರೆ ಜಲವೆಲ್ಲ ಕಾಶಿ
ಒಲವುಳ್ಳ ವರಾಹತಿಮ್ಮಪ್ಪನೆ ಕಾಶಿ
ಕುಲವೃಕ್ಷವೆಂಬುದು ಫಲವಾದ ಕಾಶಿ ೧೫

 

೪೭
ಎಲ್ಲಿ ಹೋಗುವೆ ಮನದಿ ನಿಲ್ಲೊಂದು ಘಳಿಗೆ
ಸೊಲ್ಲ ಲಾಲಿಸು ಲಕ್ಷ್ಮೀವಲ್ಲಭನೆ ನೀನು ಪ
ನಡುನೀರೊಳಾಡುವೆಯೊ ಅನಿಮಿಷನು ನೀನಾಗಿ
ಕಡುಭಾರದಿಂದಿಳಿವ ಗಿರಿಯನೆತ್ತುವೆಯೊ
ಅಡವಿಯೊಳು ಚರಿಸುವೆಯೊ ಬಗೆದು ಬೇರನು ತಿನ್ನ
ಲೊಡೆಯುವೆಯೊ ಕಂಭವನು ಘನ ಮಹಿಮೆಯಿಂದ ೧
ಬೇಡಿ ದೈತ್ಯನ ನೀನು ಮೂರಡಿಯ ಭೂಮಿಯನು
ಕಡು ಚೆಲ್ವ ಪಾದದಿಂದದಳೆಯ ಪೋಗುವೆಯೊ
ಕೊಡಲಿಯೊಳು ಭೂಭುಜರ ಸಂತತಿಯ ಕೋಪದಿಂ
ಕಡಿಕೊಂಬೆ ನೀನೆಂದು ಜಗವೆಲ್ಲ ಹೊಗಳುತಿದೆ ೨
ವಾರಿಧಿಯ ಕಟ್ಟುವೆಯೊ ಬೆಟ್ಟವನು ತಂದಿಕ್ಕಿ
ನಾರಿಯರ ಸೇರುವೆಯೊ ಕಡು ಮಮತೆಯಿಂದ ಶ-
ರೀರದೊಳು ನಾಚಿಕೆಯ ಹೊರಗಿಡುವೆಯೊ ನೀನು
ವಾರುವನನೇರುವೆಯೊ ಈರೈದ ತೋರುವೆಯೊ೩
ಬೆಟ್ಟದೊಳು ನಿಲ್ಲುವೆಯೊ ಕಟ್ಟುವೆಯೊ ರೊಕ್ಕವನು
ಶೆಟ್ಟಗಾರನುಯೆಂದು ಪೆಸರಿಟ್ಟೆಯೊ
ಸೃಷ್ಟಿಪಾಲಕ ವರಾಹ ತಿಮ್ಮಪ್ಪನೆಂಬುದನು
ದೃಷ್ಟಿಯಲಿ ನೋಡಿ ಕಿವಿಗೊಟ್ಟು ಮಾತಾಡು ೪

 

(ಇ) ಆತ್ಮನಿವೇದನೆ
೬೯
ಏನು ಮಾಡಲಿ ವೆಂಕಟೇಶ ಈ ಬೆಳೆಯು
ಸೋನೆಯಿಲ್ಲದೆ ಉರಿದುದು ಪ
ನಾನಾ ಪ್ರಕಾರದೊಳು ಹಾನಿಯಾಯಿತು ಇರವು
ಹೀನರಾದೆವು ನಾವು ಶ್ರೀನಿವಾಸನೆ ಕೇಳು ಅ.ಪ
ಮೂಡದೆಸೆಯಳು ಬಂದುದು, ಆ ಮಳೆಯು
ಬಡಗದೆಸೆಯಳು ಸುರಿದುದು
ಎಡಬಿಡದೆ ತೆಂಕ ಕಡೆಯಲಿ ಹೊಡೆದ ಮಳೆಯು ತಾ
ನಡುವೆ ಬಿಡುವುದು ಯಾತಕೆ ೧
ಕಟ್ಟುಕಡು ಮದಗ ಸಹಿತ, ಈ ಊರ ತಲೆ
ಗಟ್ಟಿನೊಳು ನಾ ಕಾಣೆನು
ಕೆಟ್ಟು ಹೋಯಿತು ಮಳೆಯು ಹೊಟ್ಟೆಯನು ಉರಿಸುತ್ತ
ದೃಷ್ಟಿಯಲಿ ನೋಡು ನೀನು ೨
ಮಳೆಯಿಲ್ಲದಿಳೆಯಾರಿತು, ನಟ್ಟಿರ್ದ
ಫಲವೆಲ್ಲ ಬೆಳೆ ಕೆಟ್ಟಿತು
ಸ್ಥಳದ ತೆರಿಗೆಯ ಬಿಟ್ಟು ಕಳುಹುವನೆ ದೊರೆ ತಾನು
ಎಳೆದೆಳೆದು ಕೊಲುವನಲ್ಲ ೩
ಕಷ್ಟ ಬಂದುದು ನಮ್ಮ ಕಡೆಗೆ, ಈ ವೃಷ್ಟಿ
ಬಿಟ್ಟು ಪೋದುದು ಇಳೆಯನು
ಸುಟ್ಟ ಊರೆಲ್ಲವನು ತಟ್ಟಿನಾರಿದ ಮೇಲೆ
ಮುಟ್ಟಿ ನೋಡುವರಿಲ್ಲವೊ ೪
ಹದಿನಾಲ್ಕು ಲೋಕವನು ನೀ ನಿನ್ನ
ಉದರದೊಳಗಳವಟ್ಟಿಹೆ
ಬೆದರುತಿದೆ ಈ ಲೋಕ ಒದರುವುದು ಜನರೆಲ್ಲ
ಉದುರದೇತಕೆ ಇಳೆಗೆ ಮಳೆಯು ೫
ಎಲ್ಲ ಬೇಡಿಯೆ ಕೊಂಬರು, ಈ ಹರಕೆ
ಯಲ್ಲಿ ಅಂತರಬಾರದು
ಹಲ್ಲು ಬಾಯಾರಿರ್ದ ಮಕ್ಕಳಿಗೆ ಎಳೆನೀರು
ಬೆಲ್ಲವಾಗಿಹ ಮಳೆಯನೆರೆಯೊ ೬
ನೀಲಮೇಘಶಾಮ ವರ್ಣ, ಕಾಣಲಾ
ಮೂಲೋಕದೊಡೆಯಾ ನಿನ್ನ
ಕಾಲಮೇಘವು ನಿನಗೆ ದೂರವಾಗುವುದುಂಟೆ
ಆಲಸ್ಯ ಮಾಡಬೇಡ ೭
ಬಡವರೆಲ್ಲರು ಕೂಡಿಯೇ, ಒಪ್ಪು ಕೈ
ವಿಡಿದು ಬೇಡಿಯೇ ಕೊಂಡೆವು
ಸಿಡಿಲು ಮಳೆ ಮಿಂಚುಗಳು ಹೊಡಕರಿಸಿ ಬರುವಂತೆ
ಒಡೆಯ ದಯದೋರೊ ನೀನು ೮
ಸ್ವಾಮಿ ನಿನ್ನಯ ನಾಮವು, ಜನರಿಂಗೆ
ಕಾಮಿತಾರ್ಥವನೀವುದು
ಪ್ರೇಮವಾಗಿಹ ಮಳೆಯ ಭೂಮಿಯಲಿ ಇಳಿಬಿಟ್ಟು
ನಾಮವಾಗೆವು ಸ್ವಾಮಿ ವರಾಹತಿಮ್ಮಪ್ಪ ೯

 

೭೦
ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು
ಹಾನಿಯಾಗಿಯೆ ಅವಮಾನ ತೋರುತಿದೆ ಪ
ವಾಸುದೇವನೆ ಎನ್ನ ಈಸು ದಿನ ಪರಿಯಂತ
ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ
ಈಸಾಡಿದೆನು ನಾನು ಈ ಗೃಹದೊಳೀಗೇನು-
ದಾಸಿನವು ನಿನಗಾಯಿತು ಮೋಸ ಯೋಚಿಪರೆ ೧
ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ
ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ
ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ
ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ ೨
ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ
ಪಾರಾಗಿ ನಾಚಿಕೆಯು ಬೇರೂರಿತು
ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ
ಮಾರಿದೆಯ ಚೋರರಿಗೆ ದಾರಿಗಾಣಿಸದೆ ೩
ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು
ಹರದಿಯೊಳು ನಂಬಿಗೆಯು ಕಿರಿದಾಯಿತು
ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ
ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ ೪
ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ
ಬನ್ನಬಡುವುದು ಎಲ್ಲ ನಿನ್ನ ಮನಕರುಹು
ಮುನ್ನ ಮಾಡಿದ ಕರ್ಮ ಬೆನ್ನು ಬಿಡುವಂದದಲಿ
ಪನ್ನಗಾದ್ರಿನಿವಾಸ ಪಾಲಿಸೈ ಲೇಸ ೫
ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ
ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ
ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ
ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ ೬
ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ
ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ
ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ
ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ ೭

 

೧೦೪
ಕರುಣಿಸೈ ಗುರುರಾಯ ಚರಣತೀರ್ಥವನು
ಹರಣ ಭಯದೊಳು ಲಕುಮೀರಮಣನೊಲಿವಂದದಲಿ ಪ
ದೇಶ ದೇಶವ ತಿರುಗಿ ಬೇಸರದು ಈ ಚರಣ
ಭೂಸುರವ ಪೂಜಿಸುವದು ಈ ದಿವ್ಯ ಚರಣ
ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ
ಕಾಶಿ ರಾಮೇಶ್ವರಕೆ ನಡೆದ ಚರಣ೧
ಹಾವಿಗೆಯನೊಲ್ಲದೆ ಹಾದಿ ನಡೆದಿಹ ಚರಣ
ದೇವಿ ಭಾಗೀರಥಿಗೆ ಇಳಿದ ಚರಣ
ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ
ಕೋವಿದರು ವಂದಿಸುವ ದಿವ್ಯ ಚರಣ೨
ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ
ಸೃಷ್ಟಿಗುತ್ತಮ ನದಿಯ ಮಿಂದ ಚರಣ
ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ
ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ ೩
ಶುದ್ಧ ವೈಷ್ಣವರೆಲ್ಲ ಉಜ್ಜಿ ತೊಳೆವ ಚರಣ
ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ
ಮಧ್ವರಾಯನ ಮತದಿ ಎದ್ದು ತಿರುಗುವ ಚರಣ
ವಿದ್ಯೆನಿಧಿ ಗುರುರಾಯ ಬಾಳ್ದ ಚರಣ ೪
ಧರಣಿಯನು ಬಲವಂದು ದಣಿದು ಬಂದಿಹ ಚರಣ
ಉರುತರದ ಕೈವಲ್ಯ ಪಡೆದ ಚರಣ
ವರಾಹತಿಮ್ಮಪ್ಪನಿಹ ಗಿರಿಯನೇರಿದ ಚರಣ
ಸ್ಥಿರವಾಗಿ ಉಡುಪಿಯೊಳು ನಿಂದ ಚರಣ ೫

 

೮೦
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು
ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ
ಮೂರು ಯುಗದೊಳು ತಾನು ಸೇರಿಕೊಂಡನು ವನವ
ಚೋರರಾಯರ ಸಂಗ ಬೇಡವೆನುತ
ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ
ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು ೧
ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ
ಕದನಕರ್ಕಶರನ್ನು ಕಾಮಿಸುವನು
ಒದಗಿದನ್ಯಾಯಗಳನೊಲಿಸಿಕೊಂಬನು ತಾನು
ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ ೨
ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು
ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು
ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ
ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ ೩
ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ
ಮುಪ್ಪು ಬಂದುದು ವೇದ ಕಪ್ಪಾದನಗ್ನಿ
ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು
ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ ೪
ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು
ಮೌನ ಜಪಗಳನೆಲ್ಲ ಕೃಷಿಕೊಂಡನು
ಹಾನಿಯಾದರು ಯಜ್ಞಹೀನರಾದರು ಪಿತೃಗ
ಳೇನ ಮಾಡುವರಿವರು ಅನುಮಾನ ಬೇಡೆನುತ ೫
ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ
ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು
ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ
ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ ೬
ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ
ಬವಣೆಬಡುವನು ಕಮಲಭವನು ತನ್ನೊಳಗೆ
ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ
ಕವಲು ಮನ ಬೇಡಿರಲು ಬಹುದು ಇವನೊಳಗೆ ೭
ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು
ಯತಿ ಸತತ ಮನದೊಳಗೆ ಖತಿಗೊಂಬನು
ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ
ಮತಿಯುತನು ದೃಢವೆಂದು ಕಾಯವನುಸರಿಸಿ೮
ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ
ಬಾಯ ಹೊಯ್ದರು ಕೇಳ ಬಡವರನ್ನು
ಮಾಯವಾದಿಯ ಮಾತು ಕೂಡಿಸುವ ಜೀವವನು
ರಾಯರಾಯರ ಮುಂದೆ ನಡೆಸುತ್ತಲಿಹರು ೯
ಆಡಿಗಾರರ ತಂದು ನಾಡ ಊಳಿಗಕಿಡುವ
ನೋಡಿದನ್ಯಾಯ ಮಾತುಗಳ ಹಿಡಿತರುವನು
ಕೂಡಿಸುವ ಜೀವವನು ಎಳೆನೀರು ಸಕ್ಕರೆಯು
ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು ೧೦
ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ
ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ
ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು
ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು ೧೧
ಕಾಲದರಸಿನ ನೋಡಿ ಮೂಲ ಪಡಕೊಂಬುವರು
ಆಲಸ್ಯವನು ಬಿಟ್ಟು ಸೇವಿಸುವುದು
ಶಾಲು ಸಕಲಾಭರಣ ತೋಲಾಗಿ ಬರುತಿಹುದು
ಜಾಲರೂಪವದಾಗಿ ಮನಕೆ ತೋರುವುದು ೧೨
ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ
ಬಾಯಹೊಯಿಯೆಂದೆನುತ ನೋಯನುಡಿ ಪೇಳ
ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು
ಕಾಯವನು ಬಳಸುವನು ಮೋಹವನು ತೋರಿ೧೩
ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು
ಅಗಲೇ ಎದ್ದು ಇದಿರಾಗಿ ಪರಿಜನವು
ಬೇಗದೊಳಗನುಸರಿಸಿ ಭೋಗವನು ಕೈಕೊಂಡು
ರಾಗದೊಳಗಿದ್ದರಾ ಭವಜಲದ ನಡುವೆ ೧೪
ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ
ಕಾಡಫಲವನು ಮೆದ್ದು ಕೋಡಗಲ್ಲಿನೊಳು
ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ
ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು ೧೫

 

೫೪
ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು
ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ಪ
ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ
ಕಟ್ಟಿದ ಹರಕೆಗಳೆಲ್ಲವನು
ಸಿಟ್ಟು ಮಾಡುವ ಸ್ವಾಮಿ ಇಟ್ಟುಕೊಂಡರೆ ಇನ್ನು
ಮುಟ್ಟಿಸಿಕೊಡಬೇಕಲ್ಲಿ ತಿಮ್ಮಪ್ಪನಲ್ಲಿ ೧
ಗಂಡ ಹೆಂಡತಿಯು ಮಕ್ಕಳು ಸಹವಾಗಿ
ದಂಡು ಮಾಳ್ಪೆವು ತಾವು ಎನುತಲಿ
ಉಂಡೆವು ಸ್ಥಿರವಾರ ಊಟವ ಏಕವ
ಕಂಡು ಬಹರೆ ಹೋಗುವ ದಯವಾಗುವ ೨
ಕಟ್ಟಿದ ಕಾಣಿಕೆ ಇಟ್ಟು ಚರಣದಲ್ಲಿ
ಸಾಷ್ಟಾಂಗವು ಎರಗಿದರೆ
ದೃಷ್ಟಿಯಿಂದಲೆ ನೋಡಿ ದಯಮಾಡಿ ಕಳುಹುವ
ಬೆಟ್ಟದ ವರಾಹ ನಮ್ಮಪ್ಪ ತಿಮ್ಮಪ್ಪನು ೩

 

೮೧
ಗುರುವಿನ ಚರಣವ ನೆನೆವುತಲನುದಿನ
ಪರದೊಳು ದೈವದ ನೆಲೆ ನೋಡು ಪ
ಗುರುವಿನ ಕರುಣಕಟಾಕ್ಷವದಲ್ಲದೆ
ನರರಿಗೆ ದೊರಕದು ಪರಸುಖವು
ಹಿರಿಯರ ಅಭಿಮತವಿಲ್ಲದ ಗೃಹದೊಳು
ಕರೆಕರೆಯಾಗಿದೆ ಕೌತುಕವು ೧
ಸ್ಥಿರವಾಗಿ ನಿಲ್ಲದ ಮನವು ಭ್ರಮೆಯೊಳು
ನೆರೆವುದು ತನ್ನೊಳು ಘಾತಕವು
ಸೆರೆವಿಡಿಯಲು ಹರಿವಿಡಿದಿಹನಾತನ
ತೊರೆವುದು ಭವಭಯ ಸೂತಕವು ೨
ಯೋಗಿಯ ಹೃದಯದಿ ಸಕಲಾಗಮ ಸಮ
ನಾಗಿಯೆ ತೋರ್ಪುದು ಧೃಢವಾಗಿ
ಸಾಗರ ಸುತ್ತಿದ ಭೂಭಾಗದ ಸರಿ
ಯೋಗಿಯ ದೃಷ್ಟಿಯೆ ಘನವಾಗಿ ೩
ಬಾಗಿದ ಕಬ್ಬಿನ ಕೋಲೊಳು ರುಚಿಕರ
ವಾಗಿಯೆ ತೋರುವ ಪರಿಯಾಗಿ
ರಾಗಿಯ ಶಿಲೆ ತಾ ಬಳಲಿದೆನೆನುತಲೆ
ಭಾಗೆಯ ಕೊಂಬುದೆ ಸಮವಾಗಿ ೪
ನಂಬದಿರಂಬರ ವಾದಿಯ ಅಂಶಕ
ತುಂಬಿದ ಕುಂಭ ದೃಢದಿಂದ
ಅಂಬರದೊಳಗಣ ಮೇಘಕೆ ವಾಯುವು
ಬೆಂಬಲವಾಗಿಹ ದಯದಿಂದ ೫
ಸಂಭ್ರಮದಿಂದಲಿ ಗರ್ಜಿಸಿ ನಾಲ್ದೆಸೆ
ಅಂಬಿಸಿ ಪೋಗುವ ಪರಿಯಿಂದ
ಅಂಬುಜಭವ ಬರೆದಕ್ಷರ ಮಾಸಲು
ಅಂಬರ ಬಯಲಹ ತೆರದಿಂದ ೬
ಶುದ್ಧವಶುದ್ಧವು ಆಗಿಹ ಪೃಥಿವಿಯ
ಬದ್ಧವಾಗಿಯೆ ತೊಳೆದವರಾರು
ಅಬ್ಧಿಯ ಮಧ್ಯದಿ ಎದ್ದ ವಾರಿಗಳನು
ತಿದ್ದಿಯೆ ಪಸರಿಸುವವರಾರು ೭
ಇದ್ದರೆ ಸರ್ವರ ಭವನದೊಳಗ್ನಿಯ
ಮೆದ್ದವ ಶುದ್ದವೆಂಬವರಾರು
ಹೊದ್ದಿದ ಮೂರುತಿ ನಾಲ್ದೆಸೆಯೊಳಗಿರೆ
ಬದ್ಧವಾಗಿಯೆ ಕಟ್ಟಿಕೊಳಲ್ಯಾರು ೮
ಬಯಲೊಳಗಿರುತಿಹ ಬಹು ಝೇಂಕಾರವ
ನಯದೊಳು ನೋಡಿದರೇನುಂಟು
ಬಯಲೊಳು ಮೂರಕ್ಷರವನೆ ಬಿತ್ತಲು
ಮೈಲಿಗೆ ತಳಿಸುವ ಬೆಳೆಯುಂಟು ೯
ಪಯಣದ ಮನೆ ಸಿರಿ ಸೊಬಗನು ಜಯಿಸುವ
ಹಯವನು ಏರುವ ಬಗೆಯುಂಟು
ದಯದೊಳು ಶ್ರೀ ಗುರು ವಿರಚಿಸಿಯಿತ್ತರೆ
ಕ್ರಮವಿಕ್ರಯದೊಳು ಫಲವುಂಟು ೧೦
ಬೇಡನು ಸಲಹಿದ ಆಡು ತಾ ಯಾಗಕೆ
ಬೇಡವೆಂಬವರಾರು ಶಾಸ್ತ್ರದಲಿ
ಕಾಡಿನೊಳಿರುತಿಹ ಮೃಗವಾಲದ ಸಿರಿ
ನೋಡು ನೀ ನಿತ್ಯದಿರಾಸ್ತ್ರದಲಿ ೧೧
ಕೋಡಗನಾದರು ನೋಡಿಯೆ ಭಜಿಸಲು
ಕೂಡುಗು ಹರಿಯ ಪರತ್ರದಲಿ
ಕೂಡಿಕೊಂಡರೆ ಪರಬೊಮ್ಮನ ಮನದಲಿ
ಆಡದು ಮಾಯದ ಸೂತ್ರದಲಿ ೧೨
ಕಸ್ತೂರೀ ಮೃಗ ಗೋರೋಚನ ಸಹ
ಉತ್ತಮವಾಗಿಹ ಮುತ್ತುಗಳು
ನಿತ್ಯದಿ ಕ್ರಯಗಟ್ಟಿ ಉಣ್ಣದೆ ಹುಲ್ಲನು
ಕಿತ್ತು ಮೆದ್ದಾಡುವ ಅವಸ್ಥೆಗಳು೧೩
ಮೃತ್ಯುವ ಕಾಣದೆ ಬೊಮ್ಮವನಡಗಿಸಿ
ಎತ್ತಲಾದರು ಪೋದ ವಸ್ತುಗಳು
ಭಕ್ತರಿಗಲ್ಲದೆ ಮನವಪರೋಕ್ಷದ
ವಸ್ತುವ ಕಾಣದು ನಿತ್ಯದೊಳು ೧೪
ಜ್ಯೋತಿರ್ಮಯವಾಗಿಹ ವಸ್ತುವಿನೊಳು
ಸೂತಕ ಹೊದ್ದುವುದೇನುಂಟು
ಜಾತಿವಿಜಾತಿಯೊಳೊಲಿದಿಹ ಶಿವನವ
ದೂತರ ನಂ[ಬ]೧ದರಾರುಂಟು ೧೫
ಓತು ಆಶುದ್ದವನುಂಡರು ಕವಿಲೆಯೊ
ಳ್ಮಾತಿನ ವಾಸಿಯದೇನುಂಟು
ನೀತಿ ವಿಹೀನರೊಳುದಿಸಿದ ಲವಣದ
ಧಾತು ಕೂಡದೆ ಸವಿಯೇನುಂಟು ೧೬
ಧಾರುಣಿ ಭಾರವ ಮಿತಿಗಟ್ಟಿ ತಕ್ಕಡಿ
ಗೇರಿಸಿ ತೂಗಲು ಬಹುದೀಗ
ವಾರಿಧಿಯನು ಮುಕ್ಕುಳಿಸಿಯೆ ಬತ್ತಿಸಿ
ತೋರಿಸಲಪ್ಪುದು ಬಹು ಬೇಗ ೧೭
ಧಾರುಣಿಯೊಳು ಗುರುಕರುಣದ ಅಳತೆ ಮು
ರಾರಿಗು ಸಿಲುಕದು ಅದು ಈಗ
ತೋರಿತು ಅಲ್ಲಿ ವರಾಹತಿಮ್ಮಪ್ಪ ಕು
ಮಾರರು ವಾಜಿಯ ತಡೆದಾಗ ೧೮

 

೧೦೫
ಜ್ಞಾನವಾವುದು ಅಜ್ಞಾನವಾವುದು
ಮಾನವಾವುದು ದುಮ್ಮಾನವಾವುದು ಪ
ಹರಿಯ ಸ್ಮರಣೆಯಿರಲದೊಂದು ಜ್ಞಾನವಲ್ಲವೆ
ಕೊರಳ ಸೆರೆಯ ಕಾಣದಿಪ್ಪುದಜ್ಞಾನವಲ್ಲವೆ
ಪರರ ಸತಿಯ ತೊರೆವುದೊಂದು ಮಾನವಲ್ಲವೆ
ಪರರ ಸೇವೆಗಿರುವದವಮಾನವಲ್ಲವೆ ೧
ಧನ್ಯರನ್ನು ಮನ್ನಿಸುವುದು ಜ್ಞಾನವಲ್ಲವೆ
ಹೊನ್ನ ಹುದಿದು ಅನ್ನ ತೊರೆವುದಜ್ಞಾನವಲ್ಲವೆ
ತನ್ನ ಸತಿಯ ಕೂಡಿಯಿರಲು ಮಾನವಲ್ಲವೆ
ಅನ್ಯರೊಡವೆ ಕಳುವುದವಮಾನವಲ್ಲವೆ ೨
ಹಸಿದವರನು ಕಂಡು ಯಿಕ್ಕಲು ಜ್ಞಾನವಲ್ಲವೆ
ಹುಸಿಕನಾಗಿ ಅಸತ್ಯ ಮಾಳ್ಪುದು ಅಜ್ಞಾನವಲ್ಲವೆ
ಹಸನವಾಗಿ ನಡೆವ ಕೃತ್ಯ ಮಾನವಲ್ಲವೆ
ಎಸೆವ ಜೂಜು ತಪ್ಪಲವಮಾನವಲ್ಲವೆ ೩
ಸ್ಥಿರವಿದಲ್ಲವೆಂಬ ಜೀವಿ ಜ್ಞಾನಿಯಲ್ಲವೆ
ನರಕ ಭಯವ ಮರೆವ ಜಡನಜ್ಞಾನಿಯಲ್ಲವೆ
ಹಿರಿಯರಿಂದ ಅನಿಸಿಕೊಂಬುದು ಮಾನವಲ್ಲವೆ
ಬರಿಯ ಕ್ಷುದ್ರವೆಸಗಲವಮಾನವಲ್ಲವೆ ೪
ಕ್ರೋಧವನ್ನು ತೊರೆದ ಮನುಜ ಜ್ಞಾನಿಯಲ್ಲವೆ
ವೇದವನ್ನು ಜರೆದ ನರನಜ್ಞಾನಿಯಲ್ಲವೆ
ಸೋದರರು ಕೂಡಿಯಿರಲು ಮಾನವಲ್ಲವೆ
ಮಾದಿಗರ ಸಂಗವದವಮಾನವಲ್ಲವೆ ೫
ಗುರು-ಹಿರಿಯರನುಸರಿಸೆ ಜ್ಞಾನವಲ್ಲವೆ
ಸಿರಿಯ ವೇಶ್ಯಸ್ತ್ರೀಗೆ ಕೊಡಲಜ್ಞಾನವಲ್ಲವೆ
ದೊರೆಯು ಕರೆದು ಉಚಿತವೀಯೆ ಮಾನವಲ್ಲವೆ
ತಿರುಕರಂತೆ ತಿರಿವುದು ಅವಮಾನವಲ್ಲವೆ ೬
ವರಾಹತಿಮ್ಮಪ್ಪ ಒಲಿದರದು ಜ್ಞಾನವಲ್ಲವೆ
ಮರೆದು ಕ್ಲೇಶಕೆರಗುವುದಜ್ಞಾನವಲ್ಲವೆ
ಕರೆದು ಪರರಿಗಿಕ್ಕುವುದು ಮಾನವಲ್ಲವೆ
ಕರೆಕರೆಯ ಮಾತು ಅವಮಾನವಲ್ಲವೆ ೭

 

೮೨
ತನ್ನ ಕಷ್ಟದಿ ತನಗೆ ದೊರಕುವುದು ಹಾಗ
ಉನ್ನಂತ ಭಾಗ್ಯಗಳು ಹರಿಯ ವಿನಿಯೋಗ ಪ
ಕಟ್ಟಿಗೆಯ ಹೊರೆ ತಂದು ಪಟ್ಟಣದೊಳಿಳುಹಿದರು
ಉಟ್ಟ ಬಹಿರ್ವಾಸವನು ಬಿಗಿದಿಟ್ಟರು
ಮೊಟ್ಟೆಯನು ಕೊಂಡೊಯ್ದು ಇಟ್ಟದನು ಮಾರಿದರು
ಹೊಟ್ಟೆ ತುಂಬಿಸಿ ಕಡೆಗೆ ಕಟ್ಟುವನು ಹಾಗ ೧
ಉದಯಾಸ್ತಮಾನದೊಳು ಎದೆನೀರು ಆರಿದರು
ಪದಪದ್ಯಗಳ ಹೇಳಿ ಕುಣಿದಾಡಲು
ಹದಿನಾರನೆಯ ವಿಧಿಯ ಸದನದೊಳು ಸವಿದುಣಲು
ಕದನ ಕರ್ಕಶನಾಗಿ ಕಡಿದು ಬರೆ ಹಾಗ ೨
ಸೂಜಿ ನೂಲನು ಕೊಂಡು ಬಾಜಾರದೊಳು ಕುಳಿತು
ಸೋಜಿಗದ ಹೊಲಿಗೆಯನು ಮಾಡಿಕೊಡಲು
ಕಾಜು ಬಳೆಗಳ ಹೊತ್ತು ದಣಿದು ಮಾರಿದರವಗೆ
ರೋಜು ಉಳಿವುದು ಅಸ್ತಮಯಕೆ ಒಂದ್ಹಾಗ ೩
ಭಾಗ್ಯವುಳ್ಳವನನ್ನು ಬಾಧಿಸಲು ಅವ ತನಗೆ
ಯೋಗ್ಯವಾಗುವ ವಸ್ತು ಕೊಡಲಾಪನೆ
ಕಾಗೆ ಕರಿದೆನಿಸಿ ತಾ ಕಸ್ತೂರಿ ಹೋಲುವುದೆ
ಮೊಗೆಮೊಗೆ ಮಲ್ಲಿಗೆಯು ಪರಿಮಳಿಪುದೆ ೪
ಹರಿಯ ಸೇವೆ ಮಾಡೆ ಇಹಪರದ ಸೌಖ್ಯಗಳು
ಹರನ ಸೇವೆಯ ಮಾಡೆ ಪರಮ ಪದವು
ಸಿರಿಯರಸ ವರಾಹತಿಮ್ಮಪ್ಪ ನಿನ್ನಡಿಯ
ಕರುಣರಸ ಹೊರತಾಗಿ ಸಿರಿಯು ಸೇರುವಳೆ ೫

 

೮೩
ತನ್ನ ಸ್ಮರಣೆ ತಾನರಿಯದ ಮನವು
ಚಿನುಮಯ ರೂಪನ ಬೆನ್ನವಿಡಿವುದುಂಟೆ ಪ
ಹಾವಿನ ಹೆಜ್ಜೆಯ ಹಾವರಿವಂದದಿ
ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ
ಗೋವಳನಿಲ್ಲದ ಗೋವಿನ ತೆರನಂತೆ
ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು ೧
ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ
ಚಿನ್ನವಾರಿಕೆಯನ್ನು ಮಾಡುವ ಪರಿಯು
ಧನ್ಯವಾದವರನ್ನು ಕಂಡು ನಗದ ಮನ
ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ೨
ಹೇಳಿದ ಮಾತನು ಕೇಳಿ ಮಾನಸದೊಳು
ಮೇಳವಾಗುವೆನೆಂದು ಖೂಳತನದಿ ಪೋಗಿ
ಕೇಳಿದ ಉತ್ತರಕುತ್ತರ ಹರಿಸದೆ
ಆಳು ಬಾವಿಯ ಹಾರಿ ಹೊಳಚುವ ತೆರನಂತೆ ೩
ಕಾಗೆಯು ಗರುಡನ ಸರಿಯೆಂದು ಜೂಜಾಡಿ
ಸಾಗರವನು ಹಾರಿ ನಡುವೆ ಬಿದ್ದಂದದಿ
ಯೋಗಿಯ ಪರಿಯಂತೆ ತಪವೆಂದು ತನ್ನಯ
ಮೂಗ ಮುಚ್ಚಲು ಭವರೋಗ ಹಾರುವುದಂತೆ ೪
ಮೀಸಲಿಗೊದಗುವ ಶೇಷಗಿರೀಶನ
ಆಸೆಯಗ್ರಾಸವ ಬೇಡಿಕೊಳ್ಳದ ಮನ
ಸಾಸಿರ ವೆಗಡದ ಭಾಂಡದೊಳೋಗರ
ಬೇಯಿಸಿ ಭುಂಜಿಪೆಯೆಂದು ಮೋಸ ಮಾಡುವದಿಂದು ೫
ಚಿತ್ರಿಕ ರಚಿಸಿದ ಸೇನೆ ಸೇನೆಗಳಲ್ಲ
ಪ್ರಸ್ತುತಕೊದಗುವದೆನುತಿಹ ರಾಯನ
ಮುತ್ತಿಕೊಂಡಿಹ ಪರಸೇನೆಯ ಇದಿರೊಳು
ಮೃತ್ಯುದೇವತೆ ಬಂದು ಮೂದಲಿಸುವಳೆಂದು೬
ಮೊಸರನ್ನ ತನ್ನ ಕೈಯೊಳಗಿದ್ದಂತೆ
ಹಸಿವಾದ ವೇಳ್ಯದಿ ಹಸಿಯ ಮೆಲ್ಲುವದೇಕೆ
ವಿಷಮವಾಗದೆ ಹರಿ ವರಾಹತಿಮ್ಮಪ್ಪನ
ಕುಶಲದಿ ನೆನೆಯಲು ಹಸನದಿ ಸಲುಹುವ ೭

 

೮೪
ದುರ್ಜನರ ಸಂಗವನು ತ್ಯಜಿಸು ಮನವೆ, ಸಾಧು
ಸಜ್ಜನರ ಸಂಗವನು ಭಜಿಸಿ ಸುಖಿಯಾಗೆಲವೊ ಪ
ದುಷ್ಟ ವ್ಯಾಘ್ರನ ಕೈಯ ಮುಟ್ಟಿ ಹಿಡಿ ತರಬಹುದು
ಅಟ್ಟಿಬಹ ಮದಕರಿಯ ಕಟ್ಟಬಹುದು
ಕೃಷ್ಣಸರ್ಪನ ಹುತ್ತ ಕಲಕಿ ಜೀವಿಸಬಹುದು
ದುಷ್ಟಾತ್ಮರಾದವರ ಬಿಟ್ಟು ಕಳೆ ಮನವೆ ೧
ಚೇಳಬಾಲದ ಉರಿಯ ಜ್ವಾಲೆ ತಾಳಲುಬಹುದು
ಕಾಲಮೇಘದ ಸಿಡಿಲು ಬೀಳಬಹುದು
ಶೂಲಪಾಣಿಯ ಫಣೆಯ ಆಲಿ ಕೀಳಲುಬಹುದು
ಕಾಳುಮೂಳರ ಸಂಗ ಮರೆದು ಕಳೆ ಮನವೆ ೨
ಹರಿವ ಗರಗಸಿನಲ್ಲಿ ಶಿರವನೊಡ್ಡಲುಬಹುದು
ಬೆರಸಿಬಹ ಕಾಡ್ಗಿಚ್ಚ ಧರಿಸಬಹುದು
ಸರಿಸದಲಿ ನಿಂತು ಕೇಸರಿಯ ಕೆಣಕಲುಬಹುದು
ಮರೆಸಿ ಕೊರಳನು ಕೊಯ್ವ ನರರ ಮರೆ ಮನವೆ ೩
ಒಂದು ಜಾತಿಗೆ ವಿಷವು ಪುಚ್ಚದೊಳಗಿರುತಿಹುದು ಮ-
ತ್ತೊಂದು ಜಾತಿಗೆ ದಂತದೊಳಗೆ ವಿಷವು
ಒಂದು ಜಾತಿಗೆ ಮೈಯ ಅಂದವೆಲ್ಲವು ವಿಷವು
ಹಿಂದೆಯಾಡುವ ನುಡಿಯು ಘೋರ ವಿಷ ಮನವೆ ೪
ತೇರ ಕಂಡರೆ ತೊಲಗು ಮಾರೈದನಾಕ್ಷಣದಿ
ವಾರುವಗೆ ಕಡೆ ಸಾರು ಈರೈದು ಮಾರುವನು
ದಾರಿಯನು ಬಿಡು ಗಜಕೆ ಮೂರು ಸಾವಿರವನ್ನು
ಊರ ಬಿಡು ದುರ್ಜನರ ಸೇರದಿರು ಮನವೆ ೫
ಸತ್ಯವಂತರ ಕಂಡರರ್ಥಿಯಿಂದಲೆ ಎರಗು
ನಿತ್ಯದೊಳು ಶ್ರೀಹರಿಯ ಕೀರ್ತನೆಯ ಮಾಡು
ಉತ್ತಮೋತ್ತಮ ಪದವ ಹತ್ತಿಸುವವರ ಬೇಡು
ಧೂರ್ತಮನುಜರ ಸಂಗ ಕಿತ್ತು ಕಳೆ ಮನವೆ ೬
ಶುದ್ಧಮನವೆ ಎನ್ನ ಬುದ್ಧಿಯೊಳಗಡಗಿರ್ದು
ಉದ್ಧರಿಸು ವರಾಹತಿಮ್ಮಪ್ಪನನು ನೆನೆದು
ಮದ್ದನರೆ ಜನ್ಮದೊಳು ಮರಳಿಬಾರದ ಹಾಗೆ
ಗದ್ದುಗೆಯ ಹಾಯ್ಕೆನ್ನ ಹೃದಯ ಮಧ್ಯದಲಿ ೭

 

೭೧
ದೇಹಿಯೆಂಬವನೊಡನೆ ನಾಸ್ತಿಯೆನಬೇಡ
ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ
ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ
ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ
ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ
ಬೇಡಿದಿಷ್ಟವನಿತ್ತು ಮಾತಾಡಬೇಕೆನುತ ೧
ನರನಾದ ಕುರಿಯಿದನು ಸಲಹಬೇಕೆಂದೆನುತ
ಮೊರೆಯಿಟ್ಟು ನಿನ್ನಡಿಗೆ ಶರಣಾದೆನು
ಕರುಣವಾರಿಧಿ ನಿನ್ನ ಚರಣದಾಭರಣನಿಗೆ
ಹರಣವನು ಮರೆವಾಗೆ ಸ್ಮರಣೆ ನೀಡೆನುತ ೨
ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ
ಕಣುಮನಕೆ ದೃಢವಾದ ಗುಣವ ತೋರೆನುತ
ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು
ಉಣಲಾಗದೋಗರವ ಉಣಿಸಬೇಡೆನುತ ೩
ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆಯೆನ್ನ
ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ
ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು
ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ ೪
ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು
ಭದ್ರವಾಗಿಹ ಕರ್ಮ ಒದ್ದು ಕಳೆದು
ಉದ್ದಂಡವಾಗಿ ನಡೆದಿರ್ದ ಪಾಪಂಗಳನು
ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ ೫
ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ
ಮಡದಿಯೆಂಬಡವಿಯೊಳು ಕೈದುಡುಕಿದು
ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ
ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ ೬
ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ
ತೋರಿಸುವೆ ನಿನ್ನ ಚರಣಂಗಳೆನುತ
ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ
ಏರಿದುದನಿಳುಹುವರೆ ದಾರಿ ತೋರೆನುತ ೭
ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ
ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು
ದೇಹಿಯೆನುತಿಹ ಜನಸಹಾಯನಲ್ಲವೆ ನೀನು
ಮಾಯವಾಗದೆ ಮುಂದೆ ಆಯತನ ತೋರೆನುತ ೮
ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ
ವರಲಕ್ಷ್ಮಿಕರವೆನಿಪ ಹರಿವೆಂಕಟೇಶ
ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು
ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ ೯

 

೮೫
ಧನವು ಇದ್ದರೆ ಸಾಕು ಜನರಿಗೆ
ಧನವು ಇದ್ದರೆ ಸಾಕು ಪ
ಧನದೋರದಾತಗೆ ಗುಣವಿಲ್ಲವನುದಿನ
ಧನವಿಲ್ಲದಾತನು ವನದ ಪಾಮರನು ಅ.ಪ
ತಂದೆ ತಾಯಿಗಳಿಲ್ಲ ಬಂಧುಬಾಂಧವರಿಲ್ಲ
ಹಿಂದುಮುಂದುದಿಸಿದ ತಮ್ಮಂದಿರನೊಲ್ಲ ೧
ಒಡವೆಯುಳ್ಳಾತಗೆ ನಡೆಯಬಾರದು ಕಾಲು
ನಡೆವಾಗ ಬಡವರ ಎಡವುತ್ತ ಕಾಣನು ೨
ಅರ್ಥವ ಪುಂಜಕನರ್ಥ ಯಥಾರ್ಥವು
ಧೂರ್ತನಾದರು ತಾನು ಕೀರ್ತಿಸಿಕೊಂಬನು ೩
ಸೆಡವೆಂಬ ಪುತ್ರನು ಒಡಲೊಳು ಜನಿಸುವ
ಮಡದಿ ಗರ್ವಿತೆಯಾಗಿ ಪಿಡಿದಳು ಕರವನು ೪
ಉತ್ತಮೋತ್ತಮನಾಗಿ ಅಧಮನುತ್ತಮನಪ್ಪ
ಮೃತ್ಯುಮಾನಿನಿ ವ್ಯರ್ಥ ಮಗನ ಪಡೆಯುವಳು ೫
ಉಡಿಗೆ ಆಭರಣಕ್ಕೆ ನುಡಿಯಬಾರದು ಬಾಯಿ
ಕಿಡಿಯಿಡೆ ಕಂಗಳು ಜಡದ ಕರ್ಣಗಳು ೬
ಕಟ್ಟಲು ಅರ್ಥವ ಹೊಟ್ಟೆಯೊಳು ಹಸುವಿಲ್ಲ
ಭ್ರಷ್ಟ ಅನಾಥರ ಶ್ರೇಷ್ಠ ಸೃಷ್ಟಿಯೊಳಾತ ೭
ಬಡಮನಸಾಗಿಯೆ ನುಡಿಯ ಬಂದವನೊಳು
ಸಡಗರದಿಂದಲೆ ಸೆಡಕ ತೋರುವನು ೮
ಅರಸು ಆತನ ಕಂಡು ಕರೆಸಿ ಉಚಿತವಿತ್ತು
ಸರಸವನಾಡಿ ವಿಹರಿಸುತ್ತಲಿಹನು ೯
ಫಣಿಗಿರಿಯೊಳು ನಿಂತ ವರಾಹತಿಮ್ಮಪ್ಪನು
ಹಣವನಿತ್ತವರಿಗೆ ಉಣಿಸುವಭೀಷ್ಟವ ೧೦

 

೮೬
ನಂಬಬೇಡ ನಂಬಬೇಡ
ನಂಬಲೊಜ್ರ ಕಂಬವಲ್ಲ ಪ
ತುಂಬಿದ ಅಸ್ಥಿ ಮಾಂಸ ರಕ್ತ
ಜಂಬುಕನ ಬಾಯ ತುತ್ತ ಅ.ಪ
ಎಂಬತ್ತನಾಲ್ಕು ಲಕ್ಷ
ಕುಂಭದೊಳು ಹೊಕ್ಕು ಬಳಲಿ
ನಂಬಲಾರದೊಂದು ಕ್ಷಣಕೆ
ಅಂಬರಕ್ಕೆ ಹಾರುವದ ೧
ಮಲವು ಬದ್ಧವಾದ ತನು
ಮಲೆತು ಇರುವುದೇನು
ಬಲುಹುಗುಂದಿದ ಮೇಲೆ
ಫಲವಿಲ್ಲವಿದರಿಂದ ೨
ಮಾಳಿಗೆ ಮನೆಯ ಬಿಟ್ಟು
ಮಾಡಿದ ಓಗರ ಬಿಟ್ಟು
ಜಾಳಿಗೆ ಹೊನ್ನನು ಬಿಟ್ಟು
ಜಾರುವುದು ತನುವ ಬಿಟ್ಟು ೩
ಆಸೆಯನ್ನು ನೋಡಿ ಮೃತ್ಯು
ಮೋಸವನ್ನು ಯೋಚಿಸುವುದು
ಸಾಸಿರನಾಮನ ಭಜಿಸಿ
ದಾಸನಾಗು ಅನುದಿನ ೪
ಮಡದಿ ಮಕ್ಕಳು ಇದನ
ಕಡೆಯ ಬಾಗಿಲೊಳಗಿಟ್ಟು
ಒಡವೆ ವಸ್ತುಗಳನು ನೋಡಿ
ಅಡಗಿಸಿ ಇಡುವರಂತೆ ೫
ಈಗಲೋ ಇನ್ನಾವಾಗಲೊ
ಭೋಗದಾಸೆ ತೀರಲೊಂದು
ಹಾಗಗಳಿಗೆ ನಿಲ್ಲದಯ್ಯ
ಈ ಗರುವ ಪರಮಾತ್ಮ ೬
ವಾರಕದಾಭರಣವನ್ನು
ಕೇರಿಯೊಳು ಕೊಂಬುವರಿಲ್ಲ
ವರಾಹತಿಮ್ಮಪ್ಪಗಿಟ್ಟು
ವಂದಿಸಿ ಕೈಗಳ ತಟ್ಟು ೭

 

೭೨
ನಂಬಿದೆನೆಂಬವರ ಮನದೊಳಗೆ
ಹಂಬಲ ಮರೆವುದುಂಟೆ ಪ
ಬೆಂಬಲವಾಗಿಯೆ ಇಂಬುದೋರದ ನೀನು
ಡೊಂಬಿಗಾರರ ಮುಂದೆ ಕಂಬದಂದದಿ ನಿಂದೆ ಅ.ಪ
ತೃಣವಾದ ಕಾಯಗಳು ಮನದೊಳಗೆ
ಘನವಾಗಿ ತೋರುತಿದೆ
ಗುಣವಿಲ್ಲ ಬದುಕಿನೊಳು ಅಣಿತಪ್ಪಿ ಹೋಯಿತು
ಪ್ರಣವರೂಪನೆ ಕೇಳು ಕ್ಷಣ ಜೀವ ನಿಲ್ಲದು ೧
ಆಯ ತಪ್ಪಿದ ಮಾತನು ಆಡುತ ಎನ್ನ
ಬಾಯನು ಹೊಯ್ಪವರ
ಸಾಯ ಬಡಿದು ಮುಂದೆ ನ್ಯಾಯ ತೋರದ ಹಾಗೆ
ಕಾಯಬೇಕೆನ್ನ ಉಪಾಯದಿಂದಲೆ ಜೀಯ ೨
ಊರು ಎರವು ಮಾಡಿದ ಕಾಲದೊಳಗೆ
ಸೂರೆಗೊಂಡವರನೆಲ್ಲ
ವಾರಿಜಾಕ್ಷನೆ ನೀ ವಿಚಾರವ ಮಾಡದೆ
ದೂರುಗಳೆಲ್ಲವ ಪಾರು ಮಾಡಿದೆ ನಿನ್ನ ೩
ಹಸ್ತ ಬಲಿದ ಕಾಲದಿ ಮಸ್ತಕದೊಳು
ಹಸ್ತಿಯಂದದಿ ಹೊತ್ತೆನು
ಸ್ವಸ್ಥವಿಲ್ಲದ ನರನಸ್ಥಿ ಚರ್ಮದ ಮೇಲೆ
ಕಷ್ಟಾಗಿ ಕರುಣವ ನಾಸ್ತಿ ಮಾಳ್ಪೆಯ ಎನ್ನ ೪
ಎನ್ನ ಸರ್ವಸ್ವವನು ತಿಂದವರೀಗ
ಇನ್ನೇನು ಸುಕೃತಿಗಳೊ
ನಿನ್ನ ಮನಸಿಗದು ಚನ್ನವಾದರೆ ಮೇಲೆ
ಇನ್ನಾರು ಕೇಳ್ವರು ವರಾಹತಿಮ್ಮಪ್ಪ ನಿನ್ನ ೫

 

೯೨
ನಿದ್ರೆ ಬಾರದೆ ಕನಸು ಬಿದ್ದುದನು ಕೇಳಿ
ಬದ್ಧದೊಳು ಇದರ ಫಲವಿದ್ದರೇನು ಪೇಳಿ ಪ
ಊರ ಗೆಲುವೆನು ಎಂದು ದಾರಿಯನು ಸಂವರಿಸಿ
ಈರೈದು ಸಾವಿರವ ಹೇರಿಕೊಂಡು
ಚೋರತ್ವದೊಳು ಸೇರಿ ಭಾರಿಯಗಳನು ಹಾರಿ
ಧೀರರೈವರು ವ್ಯರ್ಥ ಸೂರೆಗೊಟ್ಟುದನು ೧
ಹಸಿದ ಮಾರಿಯ ಹೊಲನ ನುಸಿವ ಕುರಿಯಂದದಲಿ
ಎಸೆವ ಮೋಹಕದಿಂದ ಭರವಸೆಯೊಳು
ಬೆಸನವನು ಮಾಡಿ ನಿಪ್ಪಸರದೊಳು ಮೈಮರೆದು
ಬಿಸಿಯಾದ ಮಂಚದೊಳು ಹಮ್ಮೈಸಿಕೊಂಡುದನು೨
ಮತಿಯಿಲ್ಲದಾತನಿಗೆ ಜೊತೆಯಾದ ಸೇವಕರು
ಹಿತವಾದ ದಾರಿಯನು ತೋರುತಿಹರು
ಮಿತಿಗಾಣೆನಿದರೊಳಗೆ ರಥಕೆ ಸಾರಥಿಯಿಲ್ಲ
ಅತಿಶಯದ ಚತುರ ಶಿತಿಲಕ್ಷ ಸುಳಿವುದನು ೩
ತೋರದಿಹ ಸೂತ್ರದೊಳು ಮೂರು ಕರಗಳ ಬಿಗಿದು
ಭಾರಿ ಶಿಲೆಯನು ಹೇರಿ ಚೋರನಂದದಲಿ
ಊರೊಳಗೆ ಮೆರೆಸುವುದು ತೋರುತಿಹ ಸ್ವಪ್ನಗಳು
ಚಾರ ಫಲವೇನಿದಕೆ ಹೇಳಿ ಬಲ್ಲವರು೪
ಮಳೆಗಾಲ ತುದಿಯೊಳಗೆ ಇಳೆಯಾರಿ ಬೆಳೆ ಕೆಡಲು
ಕೊಳಕಾಲ್ಪೆಸರ ಬತ್ತಿ ಬಳಲುತಿರಲು
ಸ್ಥಳದ ತೆರಿಗೆಗೆ ದೂತರೆಳೆದು ಕೇಳುತ್ತಿರಲು
ಹಳೆಯ ಸಂಬಳದವರು ಒಳಒಳಗೆ ಸೇರುವುದ ೫
ಬುದ್ಧಿ ತಪ್ಪಿದ ತೆರಿಗೆ ತಿದ್ದಿಕೊಳಬೇಕೆನುತ
ಹದ್ದು ಕಾಗೆಯ ಬಳಗ ಕುಳಿತಿರ್ದುದಲ್ಲಲ್ಲಿ
ಎದ್ದು ಬಹುಕ್ಲೇಶದಲಿ ಒದ್ದು ಕೈ ಕಾಲುಗಳ
ತಿದ್ದಿ ಹೋದನು ಪುರಕೆ ಸಿದ್ಧ ಮಾಡುವರೆ ೬
ಅಚ್ಚರಿಯ ಸ್ವಪ್ನಗಳು ಎಚ್ಚರದಿ ತೋರುತಿದೆ
ಹುಚ್ಚನೆಂದು ಜನರು ನಚ್ಚರಿದನು
ಮುಚ್ಚುಮರೆಯಾಕೆ ವರಾಹತಿಮ್ಮಪ್ಪನನು
ಬಚ್ಚಿಟ್ಟು ಮನದೊಳಗೆ ಸ್ವೇಚ್ಛನಾಗುವುದು ೭

 

೫೫
ನಿನಗೇನು ಘನವೇನು ವನಜಾಕ್ಷ ವೆಂಕಟೇಶ
ಮನಕೆ ಬೇಕಾದುದ ಇತ್ತು ರಕ್ಷಿಸುವರೆ ಪ
ದೇಶ ನಿನ್ನದು ಬಹುಕೋಶ ನಿನ್ನದು ಜಗ
ದೀಶ ನಿನ್ನನು ಭಾಗ್ಯಲಕುಮಿ ಸೇವಿಸುವಳು
ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ
ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ ೧
ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ
ಅಣುಮಹತ್ತಿನೊಳಗೆ ಗುಣವ ತೋರಲು ಬಲ್ಲೆ
ಕ್ಷಣಕೆ ಮುನಿಯ ಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ
ಗುಣಗಳವಗುಣಗಳ ನೋಡದೆ ಸಲಹಯ್ಯ ೨
ಹುಟ್ಟಿದೆ ನರಜನ್ಮದಿ ಬಹಳ ಬಳಲಿಯೆ ಕಷ್ಟ
ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ
ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು
ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ ೩
ತಂದೆ ತಾಯಿಗಳಿಲ್ಲ ಬಂಧು ಬಾಂಧವರಿಲ್ಲ
ಕುಂದು ಹೆಚ್ಚಿಯೆ ನಿರ್ಬಂಧ ಬಡಿಸುತಿದೆ
ಮಂದರಾದ್ರಿಯ ಗೋವಿಂದ ನಿನ್ನಯ ಪಾದ
ದ್ವಂದ್ವವ ತೋರಿಸಿ ಚಂದದಿ ಸಲಹಯ್ಯ ೪
ಮನದ ಸಂಕಲ್ಪಕೆ ಅನುಗುಣವಾಗಿಯೆ
ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ
ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ
ತನು ಮನದೊಳಗನುದಿನದಿನ ಸಲಹಯ್ಯ ೫

 

೭೩
ನಿನ್ನ ನಂಬಿದೆ ನಾನು ಎನ್ನ ನೀ ಸಲಹೋ
ಪನ್ನಗಾಶಯನ ಹರಿ ವೆಂಕಟರಮಣ ಪ
ವರ ಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ
ಕರಿಯ ಸಲಹಿದಂತೆ ಕರುಣವಿರಲಂತೆ ೧
ತರಳೆ ದ್ರೌಪದಿಯ ಅಭಿಮಾನ ಕಾಯ್ದಂತೆ
ಧುರದೊಳು ನರನ ಶಿರವ ಉಳುಹಿದಂತೆ ೨
ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ
ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ ೩
ಪರಮ ಮಂಗಳಮೂರ್ತಿ ಪಾವನ ಕೀರ್ತಿ
ಧರೆಯ ರಕ್ಷಿಪ ಅರ್ತಿ ದಯವಾಗು ಪೂರ್ತಿ ೪
ಮಕರ ಕುಂಡಲಧರ ಮಕುಟ ಕೇಯೂರ
ಸಕಲಾಭರಣ ಹಾರ ಸ್ವಾಮಿ ಉದಾರ ೫
ತಾಳಲಾರೆನು ನಾನು ಬಹಳ ದಾರಿದ್ರ್ಯ
ಕೇಳುವರಿಲ್ಲ ಬಹು ಭವಭಯ ಕ್ಷುದ್ರ ೬
ನೋಡಬೇಡೆನ್ನವಗುಣವ ದಮ್ಮಯ್ಯ
ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ ೭
ಭಕ್ತಜನ ಸಂಸಾರಿ ಬಹುದುರಿತ ಹಾರಿ
ಮುಕ್ತಿದಾಯಕ ದಾರಿ ಮುಂದೆ ನೀ ತೋರಿ೮
ವರಾಹತಿಮ್ಮಪ್ಪ ಒಲವಾಗೆನ್ನಪ್ಪ
ಸಾರಿದವರ ತಪ್ಪ ಸಲಹೊ ನೀನಪ್ಪ ೯

 

೮೭
ನೀನೆ ಗುರುವಾಗೆನಗೆ ಕೋನೇರಿವಾಸ
ಜ್ಞಾನವಿಲ್ಲದ ಮನುಜ ತಾನಿದ್ದು ಫಲವೇನು ಪ
ನಾಳವಿಲ್ಲದ ಘಂಟೆ ಭಾರವಾಗಿದ್ದರೇನು
ತೋಳ ಬಲಹಿಲ್ಲದವ ದೊರೆಯಾದರೇನು
ಹಾಳು ಭೂಮಿಯು ತನ್ನ ಮೂಲವಾದರೆಯೇನು
ಬಾಳಲೀಸದ ಮನೆಯ ಬಲವಂತವೇನು ೧
ತಿದ್ದಬಾರದ ತೇಜಿ ಉದ್ದವಾಗಿದ್ದರೇನು
ಬಿದ್ದ ಪೂಜೆಯ ಮೂರ್ತಿ ಮುದ್ದಾದರೇನು
ಕದ್ದ ಕಳ್ಳನ ಮಾತು ಬದ್ಧವಾದರೆಯೇನು
ಮದ್ದನರಿಯದೆ ಧಾತು ತಿಳಿದಿದ್ದರೇನು ೨
ಗೊಡ್ಡು ದನವಿನ ಕ್ರಯವು ಅಡ್ಡವಾದರೆಯೇನು
ಬಡ್ಡು ಅರಸಿನ ಬಂಟನೊಡ್ಡೊಕ್ಕರೇನು
ಹೆಡ್ಡನಾದವ ಬಹಳ ಗಡ್ಡವಿರಿಸಿದರೇನು
ಕಡ್ಡಾಯದಂಗಡಿಯಲಿದ್ದು ಫಲವೇನು೩
ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು
ಅಕ್ಕರಿಲ್ಲದ ತವರು ಇದ್ದು ಫಲವೇನು
ಚೊಕ್ಕ ಹೆಂಡತಿಯವಳ್ಗೆ ತಕ್ಕ ವರನಿಲ್ಲದಿರೆ
ಕುಕ್ಕೆ ತುಂಬಿದ ರೊಕ್ಕವಿದ್ದು ಫಲವೇನು ೪
ಬಡಿಗೆಯಿಲ್ಲದೆ ಚಿನ್ನ ಕಡಗವಾಗುವುದೇನೊ
ಪೊಡವಿ ಕಡಿಯದೆ ಬೆಳೆಯ ನೆಡುವುದೇನೊ
ಕಡಗೋಲು ಹೊರತಾಗಿ ಬೆಣ್ಣೆ ತೋರುವುದೇನೊ
ತುಡುಬು ಬಡಿಯದೆ ಧ್ವನಿಯ ಕೊಡುವುದೇನೊ ೫
ಅಡವಿಯೊಳಗಿಹ ವೇಣು ತಿದ್ದಿದರೆ ಮೈಗೊಟ್ಟು
ಕಡುಹುಳ್ಳ ದೊರೆಗಳನು ಹೊರವುತಿಹುದು
ಬಿಡದೆ ಶುಕ ಪಕ್ಷಿಯನು ಅಡಗಿಸಿಯೆ ಹಾಲೆರೆದು
ಒಡನೆ ಹೇಳಿದ ನುಡಿಯ ತಾ ನುಡಿವುದು ೬
ಒಡವೆಯಿದ್ದರೆ ಬಂಟ ಬಿಡದೆ ಸೇವೆಯ ಮಾಳ್ಪ
ಮಡದಿ ತಾ ಚೆಲುವಾಗಿ ಅಡಿಗೆ ಮಾಡುವಳು
ಕಡೆಯ ಕಾಲಕೆ ತನ್ನ ದೃಢ ಬುದ್ಧಿ ಹಿಂಗುವುದು
ಒಡೆಯನನು ಭಜಿಸಲಿಕೆ ಮನವಿಲ್ಲವು ೭
ಗುರುವಾಗು ಇಹಪರಕೆ ಸ್ಥಿರವಾದ ಸೌಖ್ಯವನು
ಒರೆದು ಮಾರ್ಗವ ತೋರು ಉರಗಗಿರಿವಾಸ
ಗುರುವೆಂದು ಭಾವಿಸಿಯೆ ಕರಮುಗಿದು ಶಿರಬಾಗಿ
ಸರಸಿಜಾಂಘ್ರಿಯ ನೆನೆವೆ ವರಾಹತಿಮ್ಮಪ್ಪ ೮

 

೭೪
ನೊಂದೆನಯ್ಯ ಭವದೊಳು
ಸಿಂಧುಶಯನ ವೆಂಕಟೇಶ ಪ
ಒಂದು ದಿನಸುಖವಿಲ್ಲ ಗೋ-
ವಿಂದ ಬಹಳ ಕರುಣದಿಂದ ನಿ-
ರ್ಬಂಧವನ್ನು ಕಳೆದು ಎನ್ನ
ತಂದೆ ನೀನೇ ರಕ್ಷಿಸಯ್ಯ ೧
ಕಪಟ ನಾಟಕ ಸೂತ್ರಧಾರಿ
ಅಪರಿಮಿತ ಮಹಿಮ ಎನ್ನ
ಅಪರಾಧವನು ಕ್ಷಮಿಸಿ ಮುಂದೆ
ಕಪಟವಿಲ್ಲದೆ ರಕ್ಷಿಸಯ್ಯ ೨
ಕಂದ ಪ್ರಹ್ಲಾದನಂತೆ
ತಂದೆ ಮುನಿದಾಡುವ ತೆರದಿ ಗ-
ಜೇಂದ್ರನಂತೆ ದೃಢವಿಲ್ಲ
ಮಂದಮತಿಯ ರಕ್ಷಿಸಯ್ಯ ೩
ನರ ಜನ್ಮದೊಳಗೆ ಪುಟ್ಟಿ
ನರಕ ಭಾಜನ ತಾನಾಗಿ
ದುರಿತ ಪಂಜರದೊಳಗೆ ನಾನು
ಸೆರೆಯ ಬಿದ್ದೆ ರಕ್ಷಿಸಯ್ಯ ೪
ಹಗಲು ದೃಷ್ಟಿ ಕಾಣದವಗೆ
ಮೊಗವುಗೊಂಡು ರಾತ್ರಿಯೊಳು
ಹಗೆಯ ವನದಿ ಸಿಕ್ಕಿದವನ
ಅಗಲಿ ಹೋಗದೆ ರಕ್ಷಿಸಯ್ಯ ೫
ಸಾವಿರ ಅಪರಾಧವನು
ಜೀವಿತಾತ್ಮನೆ ಕ್ಷಮಿಸಿ ಎನ್ನ
ಮೂವಿಧಿಯೊಳು ಸಿಲುಕದಂತೆ
ಭಾವಿಸಿಯೆ ರಕ್ಷಿಸಯ್ಯ ೬
ವರಾಹತಿಮ್ಮಪ್ಪ ಮನದ
ಘೋರ ದುಃಖವನ್ನು ಕಳೆದು
ಮೀರಿ ಬಂದಾಪತ್ತಿನೊಳು
ಕಾರಣಿಕನೆ ರಕ್ಷಿಸಯ್ಯ ೭

 

೫೬
ನೋಡುವ ಬನ್ನಿರೆಲ್ಲರು ಲೋಕ ನಾಯಕ ಚೆಲ್ವ
ಮೂಡಲ ಗಿರಿವಾಸ ಶ್ರೀವೆಂಕಟೇಶನ ಪ
ಭೂಮಿಗೆ ವೈಕುಂಠವೆಂದು ತೋರುತ ನಿಂತ
ಸ್ವಾಮಿ ಪುಷ್ಕರಣಿಯ ತೀರದೊಳು
ಪ್ರೇಮದಿ ಭಕ್ತರ ಸಲಹಿಕೊಂಬುವನಂತೆ
ಕಾಮಿತಾರ್ಥವನಿತ್ತು ಕಳುಹುವನಂತೆ ೧
ಬ್ರಹ್ಮಾದಿ ಸುರರಿಂದ ಪೂಜಿಸಿಕೊಂಬನಂತೆ
ನಿರ್ಮಲ ರೂಪದಿ ತೋರ್ಪನಂತೆ
ಕರ್ಮಬಂಧಗಳನ್ನು ಕಡಿದು ಕೊಡುವನಂತೆ
ಹೆಮ್ಮೆಯ ಪತಿಯೆಂದು ತೋರ್ಪನಂತೆ ೨
ಆಡಿ ತಪ್ಪುವರಿಗೆ ಕೇಡ ಬಗೆವನಂತೆ
ನೋಡಿಯೆ ನಡೆಯಲು ಕೊಡುವನಂತೆ
ಮೂಡಿದ ಆದಿತ್ಯ ಶತಕೋಟಿ ತೇಜನಂತೆ
ರೂಢಿಗೊಡೆಯ ನಮ್ಮ ವರಾಹತಿಮ್ಮಪ್ಪನಂತೆ ೩

 

೧೦೬
ನೋವುಗಳ ತಾಳಲಾರೆ ನೊಂದುಕೊಂಡು ಇರಲಾರೆ
ಕಾವುದಯ್ಯ ವೆಂಕಟೇಶ ಕರುಣದಿಂದೆನ್ನ ಪ
ಕಣ್ಣಿಗೆ ಕಾಣದ ನೋವು ಹುಣ್ಣುಗಳಿಲ್ಲದ ನೋವು
ಬಣ್ಣವು ಮಾಸಿದ ನೋವು ಬಲುಹಾದ ನೋವು
ಎಣ್ಣಿದುಯಿಲ್ಲದ ನೋವು ಎಣಿಕೆಗೊಳ್ಳದ ನೋವು
ಬಣ್ಣನೆ ನುಡಿಯ ನೋವು ಬಂದೀತು ನೋವು ೧
ದುಷ್ಟರಿಂದ ನೊಂದ ನೋವು ಹೊಟ್ಟೆಯೊಳ್ಹುಟ್ಟಿದ ನೋವು
ಕಷ್ಟಗಳ ಬಿಟ್ಟ ನೋವು ಕಡುಹಾದ ನೋವು
ನಿಷ್ಠುರದ ನುಡಿಯ ನೋವು ನಿಂದೆಯ ಮಾತಿನ ನೋವು
ಇಷ್ಟರು ಇಲ್ಲದ ನೋವು ಇಂತಾದ ನೋವು ೨
ಬಡವನಾಗಿಹ ನೋವು ಒಡೆಯರಿಲ್ಲದ ನೋವು
ಕೇಡುಗರ ನುಡಿಯ ನೋವು ಕೆಟ್ಟಿಹ ನೋವು
ಪಡೆದ ಕರ್ಮದ ನೋವು ಪಾಪವೆಂಬುದು ನೋವು
ಕಡೆಯ ಕಾಲದ ನೋವು ಕಾಳಾಹಿ ನೋವು ೩
ವಿದ್ಯೆವಿಲ್ಲದ ನೋವು ಬುದ್ಧಿ ಕೆಟ್ಟಿಹ ನೋವು
ಸಿದ್ಧಿಯಿಲ್ಲದ ನೋವು ಸಿಟ್ಟೊಂದು ನೋವು
ಇದ್ದುಯಿಲ್ಲದ ನೋವು ಇಚ್ಛೆಗೊಳ್ಳದ ನೋವು
ಬದ್ಧವಾಗಿಹ ನೋವು ಬಳಲುವ ನೋವು ೪
ಇಂತು ನೋವುಗಳೆನ್ನ ಭ್ರಾಂತಿಯನು ಬಡಿಸುತಿವೆ
ಪಂಥ ಬೇಡವೊ ಲಕ್ಷ್ಮಿಕಾಂತಯೆನ್ನಯ ಬಳಿಗೆ
ಅಂತರಂಗದಿ ಬಂದು ಚಿಂತಿತಾರ್ಥತವನೀಯೊ
ಯಂತ್ರದಾಯಕನಾದ ವರಾಹತಿಮ್ಮಪ್ಪರಾಯ ೫

 

೭೫
ಪಂಥ ಬೇಡವೊ ಲಕ್ಷ್ಮಿಕಾಂತ ಎನ್ನಯ ಮನದ
ಚಿಂತಿತಾರ್ಥವನೀಯೊ ಸಂತತಂ ಕಾಯೊ ಪ
ಚರಣ ಕಮಲವ ಕಂಡು ಶರಣು ಹೊಕ್ಕೆನು ನಾನು
ಕರುಣದಿಂದನುದಿನವು ಕಾಯಬೇಕೆನುತ
ಸ್ಮರಣೆಪೂರ್ವಕವಾಗಿ ಹರಣವನೆ ಹರಸಿಹೆನು
ಹರಿಣನೊಳು ಬಿಲುಗಾರ ಕರುಣ ಬಿಟ್ಟಂತೆ ೧
ನರಜನ್ಮವೆಂಬುದಿದು ಕರಕಷ್ಟವಾಗಿರುವ
ಉರಿಯ ಮನೆಯನು ಹೊಗುವ ತೆರನಲ್ಲವೆ
ಪರಿಪರಿಯ ದುಃಖಗಳು ಬರುವ ಸಮಯಾಂತರದಿ
ಮರೆಯಾಗದಿರು ಎನ್ನಸ್ಥಿರದಿ ಮೈದೋರು ೨
ತಪ್ಪುಗಳು ಹೊರತಾಗಿ ಅಪ್ಪ ಸೇರುವುದುಂಟೆ
ಒಪ್ಪುಗೊಂಬವರಾರು ಸರ್ಪಶಯನ
ಬೊಪ್ಪ ಬಹ ದುರಿತಗಳ ತಪ್ಪಿಸಿಯೆ ಕಳೆದೆನ್ನ
ಮುಪ್ಪುಗಳ ಪರಿಹರಿಸೊ ಅಪ್ಪಗಿರಿವಾಸ ೩
ಉರಗ ಗಿರಿವಾಸ ನಿನ್ಸೆರಗವಿಡಿವೆನು ನಾನು
ಕರಗಿ ಹೋಯಿತು ಇರವು ಕಾವರಿಲ್ಲ
ಮರುಗಿದರೆ ಧೈರ್ಯವನು ತಿರುಗಿ ಹೇಳುವರಿಲ್ಲ
ಕುರಿ(ಗಾ)ಯ್ವ ತೆರನಂತೆ ಕೈಗೆ ಸಿಲುಕಿದೆನು ೪
ಇಹಪರದ ಸೌಖ್ಯಗಳ ಕರೆದಿತ್ತು ಕರವಿಡಿದು
ಸಹವಾಸವಾಗಿರ್ದು ಸಲಹಿಕೊಂಡು
ವಹಿಲದಲಿ ವರವೀವ ವರಾಹತಿಮ್ಮಪ್ಪ
ಬಹುಭಾರವನು ತಾಳ್ದು ಸಲಹೆನಿಸೊ ನೀನು ೫

 

೫೭
ಪಾಲಿಸೈ ತಿಮ್ಮಪ್ಪ ಪರಮ ಪಾವನನಪ್ಪ
ಮೇಲು ಗಿರಿಯೊಳಿಪ್ಪ ತಿರುಪತಿ ತಿಮ್ಮಪ್ಪ ಪ
ಪ್ರಾಣದಾಸೆಗಳಿಂದ ಕಾಣ ಬರುವೆವೆಂದ
ಆಣೆ ಭಾಷೆಯನೊಂದ ಮಾಣೆನೊ ಗೋವಿಂದ
ಕಾಣಿಕೆಯ ಕರದಿಂದ ತ್ರಾಣ ಮೀರಿಯೆ ಬಂದ
ಜಾಣರಾಯನೆ ಚಂದಗಾಣಿಸೊ ಶುಭದಿಂದ ೧
ಸ್ವಾಮಿ ನೀನೇ ಹೊಣೆ ಭೂಮಿಯೊಳು ರಕ್ಷಣೆ
ಕಾಮಿತ ಸೈರಣೆ ನಾಮಕಲ್ಪನೆಯು
ಪ್ರೇಮವಾಗಿಹ (ಹಣೆ)೧ ನಾಮದ ಮನ್ನಣೆ
ಸೌಮನಸ್ಯದ ಮಾಣೆ ತಾಮಸಕ್ಕಿಡಿಗಾಣೆ ೨
ಸೇವಕ ಸಂಕಲ್ಪ ಕಾವನಾಯಕನಿಪ್ಪ
ಠಾವಿಗಾಗಿಯೇ ಪೋಪ ಭಾವದಿಯಿರುತಿಪ್ಪ
ಜೀವನ ತಾನಪ್ಪ ದೇವ ಕಾಣು ಈ ಕಪ್ಪ
ಈವೆನೆನುತ ಬಪ್ಪ ಭೂವರಾಹತಿಮ್ಮಪ್ಪ ೩

 

೪೮
ಶ್ರೀಹರಿ
ಪೂಜೆಯ ಕೈಕೊಳ್ಳೊ ಮೂಜಗದೊಡೆಯ
ಮೂಜಗದೊಳು ನೀನು ತೇಜವುಳ್ಳವನಾಗಿ ಪ
ಕಾಲದಿ ನಿನ್ನಯ ಮೇಲಿಹ ನಿರ್ಮಾಲ್ಯ
ಮಾಲೆಯನೆಲ್ಲ ವಿಸರ್ಜಿಸಿ ತೊಳೆದು
ನೀಲಮಾಣಿಕ ವಜ್ರಮಯವಾದ ಪೀಠದ
ಮೇಲೆ ವಾಲಗವಾಗಿ ಲೀಲೆಯ ತೋರುತ೧
ಮೊದಲು ಸಂಕಲ್ಪಿಸಿ ತುಳಸಿ ಶ್ರೀಗಂಧದಿ
ಉದಕ ಶುದ್ಧವ ಮಾಡಿ ಅದರೊಳು ಬಳಿಕ
ವಿಧಿಸಿಯೆ ಮತ್ತೇಳು ನದಿಯನುಚ್ಚರಿಸಲು
ಒದಗಿ ಬಾರೆಲೊ ಕರಚರಣ ಮಜ್ಜನಕೀಗ ೨
ಧ್ಯಾನ ಆಹ್ವಾನ ಆಸನ ಪಾದ್ಯವು
ಮಾನಸದಘ್ರ್ಯವು ಆಚಮನಗಳು
ನಾನಾ ಪಂಚಾಮೃತ ಫಲವಭಿಷೇಕವು
ಗಾನ ಸೂಕ್ತಗಳಿಂದ ಮಧುಪರ್ಕಾದಿಗಳು ೩
ವಸ್ತ್ರವಾಭರಣವು ಯಜ್ಞಸೂತ್ರವ ತೊಡಿಸಿ
ಚಿತ್ರವಾಗಿಹ ಗಂಧ ಅಕ್ಷತೆವಿಡಿಸಿ
ಪತ್ರಪುಷ್ಪವು ಶ್ರೀತುಳಸಿ ಮಾಲೆಗಳಿಂದ
ಸ್ತೋತ್ರವು ಸಾಹಸ್ರನಾಮಗಳಾಯಿತು ೪
ಧೂಪಮಾಧ್ರೂಪಯ ದೀಪದ ದರುಶನವು
ಆದಷ್ಟು ಸರ್ವೋಪಚಾರಗಳು
ಸೂಪ ಫಲಾದಿ ಕದಳಿ ನಾರಿಕೇಳವು
ಈ ಪರಿ ನೈವೇದ್ಯ ದಯಾಪರಮೂರ್ತಿ ೫
ಆಗರದೊಳು ಬೆಳೆದ ನಾಗವಲ್ಲಿಯ ದಳ
ಪೂಗಿಯಫಲ ಸಹ ನಾಗಶಯನಗಿಟ್ಟು
ಬೇಗದಿ ಮಂಗಳ ಪದಗಳ ಹೇಳಿ ಲೇ
ಸಾಗಿ ಎತ್ತುವ ಅಮೋಘದಾರತಿಗಳ ೬
ಮಾಡಿದ ಪೂಜೆಯ ನೋಡಿ ಕರುಣದಿಂದ
ಬೇಡಿದಿಷ್ಟವನೀಯೊ ರೂಢಿಯ ಒಡೆಯ
ಪಾಡಿ ಪೊಗಳುವೆ ನಿನ್ನ ಪಂಥ ಬೇಡೆನ್ನೊಳು
ಕೂಡಿರು ಅನುದಿನ ವರಾಹ ತಿಮ್ಮಪ್ಪ ೭

 

೭೬
ಬರಲಿಲ್ಲವೆನುತ ನೀ ಹೊರಗಿಕ್ಕಬೇಡ
ಉರಗಾದ್ರಿವಾಸ ಶ್ರೀ ವೆಂಕಟೇಶ ಪ
ಕಾಸಿಲ್ಲ ಕೈಯೊಳಗೆ ಲೇಸಿಲ್ಲ ಮನೆಯೊಳಗೆ
ವಾಸಿತಪ್ಪಿಯೆ ಬಹಳ ಬೇಸತ್ತೆನು
ಈಸು ಪ್ರಯಾಸ ನಿನ್ನ ದಾಸಗೊದಗಿದ ಮೇಲೆ
ದೋಷವೆನ್ನಲ್ಲಿಲ್ಲ ಶೇಷಾದ್ರಿವಾಸ ೧
ಗೆಲುವಿಲ್ಲ ಮನದೊಳಗೆ ಬಲವಿಲ್ಲ ಕಾಯದೊಳು
ಹೊಲಬುದಪ್ಪಿಯೆ ಬಹಳ ಸುಲಿವಾದುದು
ಫಲವೇನು ಇದರೊಳಗೆ ಕೆಲಸವೇನಿಹುದಿಲ್ಲ್ಲಿ
ಸುಲಭದೊಳು ಬೇರೊಂದು ಪರಿಯ ನೋಡಯ್ಯ ೨
ಕತ್ತಲೆಯ ರಾಜ್ಯವನು ಆದಿತ್ಯನಾಳುವ ತೆರದಿ
ಒತ್ತಿಬಹ ಮೃತ್ಯು ದಾರಿದ್ರ್ಯ ಕತ್ತಲೆಯ
ಸುತ್ತಗಳನೆಲ್ಲವನು ಕಿತ್ತು ಹಾರಿಸಿಯೆನ್ನ
ಹತ್ತಿರದಿ ಮೈದೋರು ಭಕ್ತವತ್ಸಲನೆ ೩
ಹಿರಿಯೊಳು ಆರ್ಜಿಸಿದ ಗೃಹಕೃತ್ಯವೆಂಬುದಿದು
ಕೊರಳಡಿಗೆ ಸಿಲುಕಿರ್ದ ಸೆರೆಯಾಯಿತೊ
ಹರುಷವಿಲ್ಲಿದರೊಳಗೆ ಬರುವ ಗತಿಯನು ಕಾಣೆ
ದರುಶನಕೆ ಬಗೆದೋರು ದೊರೆ ವೆಂಕಟೇಶ ೪
ಮಾತು ತಪ್ಪಿತು ಎಂದು ಭೀತಿಗಿಕ್ಕಲುಬೇಡ
ಸೋತುದೈ ಕೈಯೆನಗತೀತ ಮಹಿಮ
ಕಾತುರವು ಮನದೊಳಗೆ ಕಾಣಬೇಕೆಂದೆಂಬ
ಪ್ರೀತಿಯಾಗಿದೆ ಜಗನ್ನಾಥ ನಿನ್ನೆಡೆಗೆ ೫
ಒಂದು ಪರಿಯನು ನೀನು ತಂದು ತೋರಿದರೀಗ
ಇಂದೆ ನಾನೇಳುವೆನು ಮಂದಿವಾಳದಲಿ
ಚಂದದಲಿ ಮಡದಿ ಮಕ್ಕಳ ಸಹ ಕರಕೊಂಡು
ಬಂದು ನೋಳ್ಪೆವು ನಿನ್ನ ಆನಂದ ಮೂರುತಿಯ ೬
ಅಣಿಮಾಡಿ ನೀನೆನಗೆ ಮನದಣಿವ ತೆರನಂತೆ
ಕ್ಷಣವಾದ ಕೆಲಸಗಳು ನಿನಗೆ ಘನವಲ್ಲ
ವನಜಾಕ್ಷ ವರಾಹತಿಮ್ಮಪ್ಪ ನಿನ್ನಡಿಯ
ತನಿರಸವನೆನಗೀಯೊ ಜನ ಮೆಚ್ಚುವಂತೆ ೭

 

೮೮
ಬರಿದೆ ಚಿಂತಿಸಬೇಡ ಮನವೆ ಭಯಗೊಂಡು
ಹರಿಯೊಲುಮೆ ನಮ್ಮಲ್ಲಿ ಸ್ಥಿರವಾಗಿ ಉಂಟು ಪ
ಕೊಲ್ಲುವನೊ ಕಾವನೋ ನಿಲ್ಲುವನೊ ಪೋಗುವನೋ
ಬಲ್ಲನೊ ಅರಿಯನೋ ಇದನೆಲ್ಲವೆನುತ
ಸೊಲ್ಲುಸೊಲ್ಲಿಗೆ ಕರೆದು ಎಲ್ಲವನು ತಿಳುಹಿದರೆ
ಕಲ್ಲಾಗುವನೆ ಸ್ವಾಮಿ ಜಗದ ವಲ್ಲಭನು ೧
ಕರಿರಾಜ ಧ್ರುವನು ಪ್ರಹ್ಲಾದ ದ್ರೌಪದಿ ದೇವಿ
ಮರೆವಿನೊಳಜಾಮಿಳನು ಕರೆಯಲಾಗಿ
ಮೊರೆಯ ಲಾಲಿಸಿ ತಾಯಿ ಕರುವನರಸುವ ತೆರದಿ
ಬರಲಿಲ್ಲವೇ ಸ್ವಾಮಿ ಉರಗ ಗಿರಿವಾಸ ೨
ಗರ್ಭದೊಳಗಿರುವಾಗ ಹಬ್ಬಿರುವ ಮಾಂಸಲತೆ
ಉಬ್ಬಸವ ಬಿಡುತಿರಲು ಅಬ್ಬೆ ಸಲಹಿದಳೆ
ಉಬ್ಬರದ ನೋವಿನೊಳು ಒಬ್ಬನೇ ಬರುವಾಗ
ಹೆಬ್ಬಾಗಿಲನು ಮುಂದೆ ತೋರಿದ (ರಾ)ರೊ ನಿನಗೆ ೩
ಮಡದಿ ಮಕ್ಕಳನೆಲ್ಲ ಒಡಗೊಂಡು ಮಲಗಿರಲು
ಕಡಸಾರ ಬಂದವಳು ಕಾಲು ಸುತ್ತಿ
ನಡುವಿರುಳು ಹಿಡಿದಿರ್ದ ಹಿಡಿತಲೆಯ ಮೃತ್ಯುವನು
ಬಿಡಿಸಿ ಸಲಹಿದರಾರು ಜಡನಾದ ಮನವೆ ೪
ಹರಿಯನರಿಯದೆ ಮನದಿ ಮರುಗಿ ಕರಗಲು ಬೇಡ
ಮರೆಯಾಗುವವನಲ್ಲ ಸ್ಥಿರವಿರಲು ಮನದಿ
ಎರವು ಮಾಡದೆ ಸ್ವಾಮಿ ಪರಿಪರಿಯ ಸೌಖ್ಯವನು
ಕರೆದು ಈವನು ನಮಗೆ ವರಾಹತಿಮ್ಮಪ್ಪ ೫

 

೮೯
ಬಲ್ಲರೊಳು ಸಲ್ಲದೈ ಖುಲ್ಲ ಮಾತುಗಳು
ನಿಲ್ಲದಾಯುಷ್ಕೀರ್ತಿ ಎಲ್ಲರೊಳು ಕೇಳಿ ಪ
ಅರಸು ಸಣ್ಣವನೆಂದು ಸರಸವಾಡಲು ಸಲ್ಲ
ಕರೆಸಿ ಕೇಳದ ಮಾತು ಆಡಸಲ್ಲ
ಪರಸಖರ ಮನೆಯೊಳಗೆ ಇರಿಸಿಕೊಂಡಿರ ಸಲ್ಲ
ಬೆರೆಸಿ ಬಹ ಪಾತಕರ ಅರಸುವರೆ ಸಲ್ಲ ೧
ಹಗಲು ಕಳ್ಳನ ಕೈಯ ಜಗಳವಾಡಲು ಸಲ್ಲ
ಹಗೆಯೊಡನೆ ಸ್ನೇಹವನು ಮಾಡಸಲ್ಲ
ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ
ಅಗಲಿ ಪೋಗುವೆನೆಂಬ ಮಗ(ನು) ಸೊಗ(ಸ)ಲ್ಲ ೨
ಒಡೆಯನಿಲ್ಲದ ಊರು ಬಡವರಿಗೆ ಅಳವಲ್ಲ
ಕಡು ಚೆಲ್ವೆ ಕುರುಡನಿಗೆ ಮಡದಿಯಹ ಸಲ್ಲ
ನುಡಿಯ ತಿಳಿಯದೆ ಇಹನ ಸಾಕ್ಷಿಯನು ಇಡ ಸಲ್ಲ
ದೃಢವಾದ ಮೂರ್ಖನೊಳು ಕದನ ಮಾತಿಲ್ಲ ೩
ಹರಿದಾಸರೆನಿಸಿದರೆ ಪರಗತಿಯೊಳೆರವಿಲ್ಲ
ಗುರುಹಿರಿಯರಾದವರ ಜರೆಯ ಸಲ್ಲ
ಕರಕರೆಯ ಬದುಕಿನೊಳು ಬರುವ ಉಡುಗೊರೆಯಿಲ್ಲ
ಮರೆವಿನೊಳು ಹಗೆಯುರಗ ಗೆಲುವ ಪರಿ ಸಲ್ಲ ೪
ಹರಿಯು ಮುನಿದರೆ ಮರೆಯೊಳಿರಿಸಿ ಕೊಂಬುವರಿಲ್ಲ
ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ
ಸಿರಿಯರಸ ವರಾಹ ತಿಮ್ಮಪ್ಪನಿರಲು ಬಲ್ಲ
ನರನು ಹರಿದೂಷಕರ ಸರಿಯೊಳಗೆ ನಿಲ್ಲ ೫

 

೯೩
ಬಲ್ಲವನಾದರೀ ತಳ್ಳಿಬೇಡ
ಅಲ್ಲದ ಪಥವಿದರಾಸೆಯ ಬಿಡು ನೀನು ಪ
ಸರ್ಪನ ಪಣೆಯೊಳು ಜೇನುತುಪ್ಪವ ಕಂಡು
ಅಪ್ಪನೆ ತಾರೆಂದು ಅಳುತಿರಲು
ತುಪ್ಪದ ಸವಿಯನು ಜನರುಂಡು ತೀರಲು
ಮುಪ್ಪಾಗಿಯಿರುವುದ ಕಂಡು ಮೂದಲಿಸುವ ೧
ನಂಬಿದ ಮನುಜರ ಹಂಬಲ ಮರವದು
ಡೊಂಬಿಯವರು ಕಂಡು ತಡೆಯಲಾಗಿ
ಕುಂಭದ ರೊಕ್ಕವ ಲಂಚವನಿತ್ತಲ್ಲಿ
ಅಂಬರವನು ಕಂಡು ನಗುತಿಪ್ಪ ಮನುಜನ ೨
ಅಂಬರವಡಗಿಯೆ ಕುಂಭಿನಿ ಜಾರಿಯೆ
ನಂಬಿದ ಮನುಜರು ನಡೆವೆಡೆಯ
ಕುಂಭದ ನೀರನು ಚೆಲ್ಲುತ್ತ ಮಗುಳಲ್ಲಿ
ಕಂಭದ ಹಾಗೆಲ್ಲ ನಿಂತಿಹ ಜನರನು ೩
ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ
ದುಷ್ಟನೊಬ್ಬನು ಬಂದು ನಿಂತಿಹನು
ಇಟ್ಟಿಹ ಬಾಗಿಲ ಕಾಣದೆ ತಾ ಬಂದು
ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ ೪
ಕಡಹದ ಪಲ್ಲಕ್ಕಿ ಬೆಡಗನ್ನು ಕಾಣುತ್ತ
ಅಡವಿಯ ಮೃಗ ಬಂದು ಕುಳಿತಿರ್ದುದ
ಒಡನೆ ಕಟ್ಟಿದ ವಾಹಕರ್ಹದಿನಾರು ಮಂದಿಯು
ಕಡಿಮೆಯ ಸಂಬಳ ಕಡವಿಡುವವರನ್ನು ೫
ಅಕ್ಕಿಯ ರಾಶಿಯು ತೀರಲು ಕೊಳಗವು
ಬೆಕ್ಕನೆ ಬೆರಗಾಗಿ ಕುಳಿತಿಪ್ಪುದು
ಬಿಕ್ಕಿದ ಅಕ್ಕಿಯ ಹಕ್ಕಿಯು ಹೆಕ್ಕಿಯೆ
ಗಕ್ಕನೆ ಹಾರುವ ಪಕ್ಷಿಯ ನೋಡುತ್ತ ೬
ರವಿಶಶಿಯೊಂದಾಗಿ ಇರುತಿಹ ಗಣಿತದಿ
ಧರೆಯೊಳು ಸಾವಿರಯೆಲೆ ಬೀಳ್ವುದು
ಎರವಿನಾಭರಣವ ಅವರವರೊಯ್ಯಲು
ವರಾಹತಿಮ್ಮಪ್ಪನ ಮರೆ ಬೀಳು ಕಂಡ್ಯ ೭

 

೧೦೭
ಬೂದಿಯ ಹಚ್ಚಿರೊ ಶುದ್ಧ ವೈಷ್ಣವರಿದ-
ರಾದಿಯ ತಿಳಿಯಲು ಕೇಳಿ ಬಲ್ಲವರು ಪ
ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ
ಮೂಲ ಮಂತ್ರಂಗಳ ಜಪಿಸುವ ಬೂದಿ
ಮೂಲಾಧಾರವ ತೋರುವ ಬೂದಿ
ಕಾಲ ಕರ್ಮಂಗಳ ಕಡಿವಂಥ ಬೂದಿ ೧
ಏಳು ಸುತ್ತಿನ ಒಳಗೆ ಇರುವಂಥ ಬೂದಿ
ಏಳು ವೈರಗಳನ್ನು ಕಳೆವಂಥ ಬೂದಿ
ಏಳು ಅಗಳ ದಾಟಿ ಹಾರುವ ಬೂದಿ ಬ-
ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ ೨
ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ
ಕುಂಭಕದೊಳಗದ ಇರಿಸುವ ಬೂದಿ
ಸಂಭ್ರಮದಿ ಅರಸನ ಗೆಲುವಂಥ ಬೂದಿ
ಅಂಬರಕಾಗಿಯೆ ಲಂಬಿಪ ಬೂದಿ ೩
ಪಂಚಾಗ್ನಿಯಿಂದಲೆ ಬೆಂದಿಹ ಬೂದಿ
ಪಂಚತತ್ವಂಗಳನು ಗೆಲುವಂಥ ಬೂದಿ
ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ
ವಂಚಿಸಿಕೊಳ್ಳದೆ ಧರಿಸುವ ಬೂದಿ ೪
ಆರು ವೈರಿಗಳನ್ನು ತೂರುವ ಬೂದಿ
ಆರು ಭಾವಗಳನ್ನು ಬೇರಿಟ್ಟ ಬೂದಿ
ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ
ಆರಿಗೂ ತೋರದೆ ಹಾರುವ ಬೂದಿ ೫
ಅಷ್ಟಮದಂಗಳ ಕಟ್ಟುವ ಬೂದಿ
ದುಷ್ಟಾತ್ಮರನ್ನು ಅಟ್ಟುವ ಬೂದಿ
ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ
ಭ್ರಷ್ಟಕರ್ಮಗಳನ್ನು ಸುಟ್ಟಂಥ ಬೂದಿ ೬
ಸಕಲ ಋಷಿಗಳೆಲ್ಲ ಧರಿಸುವ ಬೂದಿ
ತ್ರಿಕರ್ಣ ಶುದ್ಧದಿ ತುಂಬಿದ ಬೂದಿ
ಮಕರಕುಂಡಲಧರ ಮರುಳಹ ಬೂದಿ
ಸಖನಹ ವರಾಹತಿಮ್ಮಪ್ಪ ಬೂದಿ ೭

 

(ಆ). ವಿವಿಧ ದೇವತಾ ಸ್ತುತಿ
೬೪
ರುದ್ರದೇವರು
ಬೇಡಿಕೊಂಬೆನು ನಾನು ರೂಢಿಗೊಡೆಯನಾಗಿ
ಆಡುವನಂತೇಶನಿದಿರೊಳು ಮೂಡಿದ ಚಂದ್ರಶೇಖರನ ಪ
ಇಪ್ಪತ್ತುಯೇಳುಳ್ಳ ತಾರೆಯ ಗಂಡನ
ಒಪ್ಪುವ ಶಿರದೊಳಗೆ
ಸರ್ಪನ ಮೇಲೊರಗಿಪ್ಪನ ಮಗಳನ್ನು
ಒಪ್ಪದಿ ಧರಿಸಿದನ ೧
ಮುಪ್ಪುರಹರನೆಂದು ಮೂರು ದೃಷ್ಟಿಗಳುಳ್ಳ
ಕಪ್ಪುಕೊರಳ ದೇವನ
ರೌಪ್ಯದ ಪುರವರಧೀಶನೆಂದೆನಿಸಿಯೆ
ಇಪ್ಪಂಥ ಪರಶಿವನ ೨
ಗಿರಿಯ ನಂದನೆಯನ್ನು ಉರದೊಳು ಧರಿಸಿಯೆ
ಕರಿಚರ್ಮ ಪೊದ್ದವನ
ಗರುಡನ ಭಯಕಂಜಿ ಮೊರೆಹೊಕ್ಕ ಶರಣನ
ಕರುಣದಿ ಕಾಯ್ದವನ ೩
ಉರಗಾಭರಣವ ಸುತ್ತಿಕೊಂಡಿರುವಂಥ
ಗರುವ ದೇವರ ದೇವನ
ಚರಣ ಸೇವಕರನ್ನು ಸ್ಥಿರವಾಗಿ ಸಲುಹುವ
ಬಿರುದುಳ್ಳ ಪರಶಿವನ ೪
ದ್ವಾರಕಿವಾಸನಾಚಾರ್ಯನ ಮುಖದಿಂದ
ಸೇರಿಸಿಕೊಂಡವನ
ಧಾರುಣಿ ಸುರರಿಗೆ ಶೈವ ವೈಷ್ಣವವೆಂಬ
ಚಾರವ ತೋರಿದನ ೫
ಮೀರಿದ ದಾರಿದ್ರ್ಯವೆಂಬ ವೃಕ್ಷದ ಬೇರ
ಹಾರಿಸಿ ತರಿದವನ
ಸಾರಿದ ಭಕ್ತರ ಸಲುಹುತ್ತ ಮುಂದಣ
ದಾರಿಯ ತೋರ್ಪವನ ೬
ಬತ್ತೀಸ ಗ್ರಾಮಕ್ಕೆ ಕರ್ತನೆಂದೆನಿಸಿಯೆ
ಅರ್ತಿಯಿಂ ನಲಿವವನ
ಪಾರ್ಥಸಂಗರದೊಳು ಮೆಚ್ಚಿಯೆ ಶರವಿತ್ತು
ಕೀರ್ತಿಯ ಪೊತ್ತವನ ೭
ಸ್ಮಾರ್ತರ ನಿಂದಿಸಿ ರಚಿಸುವ ಯಾಗಕ್ಕೆ
ಮೃತ್ಯುವನೊಟ್ಟಿದನ
ಮೃತ್ಯುಂಜಯನೆಂದು ಮೊರೆಹೊಕ್ಕ ನರರ ಕಾ-
ಯುತ್ತಲಿರ್ಪವನ ೮
ಕೊಡಲಿಯ ಪಿಡಿದವ ಪಡೆದಿಹ ಕ್ಷೇತ್ರದಿ
ಉಡುಪಿನ ಸ್ಥಳವೆಂಬುದು
ಪಡುವಲು ಮೂಡಲು ಎರಡಾಗಿ ತೋರುವ
ಒಡಲೊಂದೆ ಮೃಡನೊಬ್ಬನೆ ೯
ಕಡಗೋಲ ಪಿಡಿದಿಹ ಕೃಷ್ಣ ನಿಂತದರಿಂದ
ಪೊಡವಿಯುತ್ತಮವಾದುದು
ಬಡವರ ಬಡತನ ಉಡು (ಪಿಯ)೧ ಕಾಣಲು
ಸಡಲಿತು ಸುಲಭದಲಿ ೧೦
ಚಿಂತೆಗಳೆನ್ನನು ಭ್ರಾಂತಿ(ಬ)೨ ಡಿಸುತಿದೆ
ಅಂತಕಾಂತಕ ಲಾಲಿಸು
ಪಂಥವ ಮಾಡದೆ ಏಕಾಂತ ಭಕ್ತರಿಗೆಲ್ಲ
ಸಂತೋಷವನು ಪಾಲಿಸು ೧೧
ಪಿಂತೆನ್ನ ಕೃತ್ಯ ಬೆನ್ನಾಂತು ಬಂದರು ಇಭ-
ವಾಂತದಿ ನೀ ಹಾರಿಸು
ಸಂತತ ಎನ್ನನು ಸಲಹಯ್ಯ ಪಾರ್ವತೀ
ಕಾಂತನೆ ಕಡೆ ಸೇರಿಸು ೧೨
ಹರ ಹರ ಮಹಾದೇವ ಪರದೈವ ಶಂಕರ
ಮೆರೆವ ಆ ವೃಷಭಧ್ವಜ
ವರದ ಕೃತ್ತೀವಾಸ ಸ್ಮರನಾಶ ದೇವೇಶ
ಸಿರಿಕಂಠ ಪುರಹರನೆ ೧೩
ಗಿರಿಯ ಮಗಳ ಗಂಡ ಉರಿಗಣ್ಣ ಮಹಾರುದ್ರ
ಸ್ಥಿರವಾದ ಶಿವಬೆಳ್ಳಿಯ
ಪುರಪತಿ ಅನಂತೇಶ ವರಾಹತಿಮ್ಮಪ್ಪನ
ಸರಿಯೆಂದು ತೋರ್ಪವನ ೧೪

 

೪೯
ಭಯ ನಿವಾರಣವಾದ ಹರಿಯ ನಾಮಗಳು
ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ಪ
ವಸುದೇವಾತ್ಮಜನಾದ ಕೇಶವ ದೇವಕಿ
ಬಸುರೊಳಗುದಿಸಿದ ನಾರಾಯಣನು
ಎಸೆದು ನಿಂದನು ಗೋಕುಲದೊಳು ಮಾಧವ
ಕುಸುಮನಾಭನು ಗೋವಿಂದ ನಂದ ನಂದನಕಂದ ೧
ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು
ತೊಟ್ಟಿಲ ಶಿಶುವಾಗಿ ಮಧುಸೂದನ
ಮೆಟ್ಟಿ ಕೊಂದನು ತ್ರಿವಿಕ್ರಮ ಶಕಟನ
ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ ೨
ಬೆಣ್ಣೆಯ ಮೆದ್ದನು ಮಿಣ್ಣನೆ ಶ್ರೀಧರ
ಕಣ್ಣಿಯ ಕರುವನು ಹೃಷಿಕೇಶನು
ಉಣ್ಣಬಿಟ್ಟನು ತಾಯ ಮೊಲೆಯ ಪದ್ಮನಾಭ
ಸಣ್ಣವ ಕ್ಷಣದೊಳು ದಾಮೋದರನಾದ ೩
ವಾಸುದೇವನು ದ್ವಾರಾವತಿವಾಸನೆನಿಸಿದ
ಸಾಸಿರ ನಾಮನು ಸಂಕರುಷಣನು
ಆಸುರವಾಗಿಯೆ ಪ್ರದ್ಯುಮ್ನನೆಸೆದನು
ದೋಷರಹಿತನಾದ ಅನಿರುದ್ಧನು ೪
ಉತ್ತಮನಾಗಿ ಪುರುಷೋತ್ತಮನೆಸೆದನು
ಅರ್ಥಿಯಿಂದಲೆ ಅಧೋಕ್ಷಜ ನಾಮದಿ
ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ
ಮುಕ್ತಿದಾಯಕನಾದನಚ್ಯುತ ನಾಮದಿ ೫
ಕಡಲ ನಡುವೆ ಜನಾರ್ದನನೆನಿಸಿ ತಾನು
ಹಡಗನು ಸೇರಿಯೆ ಬಂದನುಪೇಂದ್ರನು
ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ
ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ ೬
ಇಪ್ಪತ್ತು ನಾಲ್ಕು ನಾಮದ ಸ್ವಾಮಿಯು
ತಪ್ಪದೆ ಒಂಬತ್ತು ಪೂಜೆಯಗೊಂಬನು
ಸರ್ಪಗಿರಿಯ ವರಾಹ ತಿಮ್ಮಪ್ಪರಾಯನು
ಒಪ್ಪುಗೊಂಡನು ಮಧ್ವರಾಯನಾಗಮದೊಳು ೭

 

೬೮
ಮಂಗಳ ಜಯ ಜಯ ಮಂಗಳ ತುಳಸಿಗೆ
ಮಂಗಳ ಜಯ ಜಯ ರಂಗನಾಯಕಗೆ ಪ
ವಾರಿಧಿ ಮಥನದಿ ವಾರಿಜನಾಭನ
ವಾರಿಜನೇತ್ರನ ವಾರಿಗಳಿಂದ
ತೋರಿದ ತುಳಸಿಯು ಸೇರಿದಳೆಲ್ಲ ಶ-
ರೀರವ ಪಾವನ ಮಾಡಬೇಕೆನುತ ೧
ತುಳಸಿಯ ನಾಮವ ಬೆಳೆಸಿಯೆ ಲೋಕವ
ಬಳಸಿಕೊಂಡಿರುವೆನು ಎನುತಲೆ ಬಂದು
ಕಳಸಿದ ಮನುಜರ ಉಳಿಸಬೇಕೆನುತಲೆ
ಕಳಸದ ತೆರನಂತೆ ಉದಿಸಿದಳು ತುಳಸಿ ೨
ಸಾಲಿಗ್ರಾಮವು ಇಲ್ಲದಾತನ ಮನೆಯೊಳು
ಕಾಲೂರಿ ನಿಲ್ಲಳು ಹರುಷದೊಳಿವಳು
ಪಾಲಿಪ ಹರಿಶಿಲೆಯಿರುವಂಥ ಸ್ಥಳದೊಳು
ಓಲಗವಾಗಿಯೆ ತೋರುತ್ತಲಿಹಳು೩
ಎಲ್ಲಿಯು ತುಳಸಿಯು ಅಲ್ಲಿಯೆ ಶ್ರೀಹರಿ
ವಲ್ಲಭೆ ಸಹವಾಗಿ ಇರುತಿಪ್ಪ ಬಿಡದೆ
ಫುಲ್ಲನಾಭನು ಕೃಷ್ಣ ಆಡಿದ ಪರಿಯನು
ಗೊಲ್ಲತಿಯರು ಕಂಡು ನಾಚಿ ಹಿಗ್ಗಿದರು ೪
ಬಂದಳು ಭಕ್ತರ ಮಂದಿರದೆಡಗೆ ಗೋ-
ವಿಂದನ ಕಂಡಿರೆ ಎಂದು ಕೇಳಿದಳು
ವೃಂದಾವನದೊಳು ನಿಂದಳು ತುಳಸಿಯು
ಚಂದವು ನಿಮ್ಮಯ ಭವನದೊಳೆನುತ ೫
ಗೋವಿನ ತುಪ್ಪದಿ ದೀವಿಗೆಯಿರಿಸಿಯೆ
ಭಾವ ಶುದ್ಧತ್ವದಿ ಬಲವಂದರವಳು
ಕಾವಲು ಪೋಗಿಯೆ ಕರ್ಣದ ಒಳಗಿದ್ದು
ಜೀವಿತ ಮುಕ್ತಿಯ ತೋರುವೆನೆನುತ ೬
ಸರ್ವತೀರ್ಥಗಳನ್ನು ಮೂಲದಿ ಧರಿಸಿಯೆ
ಸರ್ವ ದೇವರ್ಕಳ ಮಧ್ಯದೊಳಿರಿಸಿ
ಸರ್ವ ವೇದಂಗಳ ಶಿರದೊಳು ಧರಿಸಿಯೆ
ಸರ್ವವ ಕಾಲಗೆ ನಿರ್ವಹಿಸುತಿಹಳು ೭
ಅಂಗಳದೊಳಗಿಹ ಮಂಗಳ ಮಹಿಮಗೆ
ರಂಗುವಲ್ಲಿಯನಿಕ್ಕಿ ಶೃಂಗಾರವಾಗಿ
ಸಾಂಗ್ಯದೊಳಿಹ ಒಂದು ಮಂಗಳ ಬರೆದರೆ
ಬಂಗಾರ ಮನೆಯನ್ನು ತೋರುವಳಿವಳು ೮
ಮೂಲದ ಮೃತ್ತಿಕೆ ಮೂಲ ಪಣೆಯೊಳಿಟ್ಟು
ಕಾಲದಿ ಸ್ನಾನವ ಮಾಡಿದ ನರರು
ಭಾಳವಾಗಿಹ ಅಘರಾಶಿಯನೆಲ್ಲವ
ಚಾಳಿಸಿ ಕಳೆವರು ಕಾಲನ ಗೆಲಿದು ೯
ತನ್ನ ಕಾಷ್ಟವ ತಂದು ಚಿನ್ನದಿ ಸುತ್ತಿಸಿ
ಕರ್ಣದಿ ಧರಿಸಿದ ಮನುಜರಿಗೆಲ್ಲ
ಉನ್ನತ ಪದವಿಯ ತೋರುವೆನೆನುತಲೆ
ಪನ್ನಗಶಯನಗೆ ಪ್ರೀತಿಯಾಗಿಹಳು ೧೦
ಉತ್ತಮವಾಗಿಹ ಕಾರ್ತಿಕ ಮಾಸದಿ
ಸುತ್ತ ದೀವಿಗೆಯಿಟ್ಟು ಪೂಜಿಸಲಿವಳು
ಅರ್ತಿಯಿಂದಲೆ ನಲಿನಲಿಯುತ್ತ ದೇವಿಯ
ಕರ್ತನ ಕೀರ್ತನೆ ರಚಿಸುವ ಮನದಿ ೧೧
ಬ್ರಾಹ್ಮಿ ಮುಹೂರ್ತದಿ ಸ್ನಾನ ತರ್ಪಣವನ್ನು
ನಿರ್ಮಲ ತೀರದಿ ತಿದ್ದಿಯೆ ಕೊಂಡು
ಧರ್ಮಕ್ಕೆ ಯೋಗ್ಯಳ ಪೂಜೆಯ ಮಾಡಲು
ಕರ್ಮ ಬಂಧಗಳೆಲ್ಲ ಕಡಿದುಕೊಳುವುದು ೧೨
ಸಾಯಂಕಾಲದಿ ದೀವಿಗೆ ಹಚ್ಚಲು
ಮಾಯಗಳೆಲ್ಲವು ಮರುಗಿ ಪೋಗವುವು
ದಾಯವಾಗಿಯೆ ಸುರರಾಯನೊಳರ್ಥವ
ಬೇವಿನವರು ಕಂಡು ಹೊರಸಾರುತಿಹರು ೧೩
ಸರ್ವದಾನಗಳನ್ನು ಸರ್ವಪೂಜೆಗಳನ್ನು
ಸರ್ವರು ಋಷಿ ಪಿತೃ ತರ್ಪಣಗಳನು
ಸರ್ವಥಾ ತುಳಸಿಯ ತಪ್ಪಿಸಬೇಡೆಂದು
ನಿರ್ವಾಹವಾಗಿಯೆ ಶ್ರುತಿಯು ಪೇಳಿದುದು ೧೪
ಅಂಗದೊಳಗಿಹ ಮಂಗಳ ಮಹಿಮಗೆ
ಸಾಂಗ್ಯದೊಳಿದನು ಪಠಿಸಿ ಪೇಳಿದರೆ
ಗಂಗೆ ಗೋದಾವರಿ ತುಂಗಭದ್ರೆಯ ಮಿಂದು
ರಂಗನ ಕ್ಷೇತ್ರವ ನೋಡಿದ ಫಲವು ೧೫
ಅಂಗಳ ತುಳಸಿಯ ದಿನ ದಿನದಿ ತಾವೆದ್ದು
ಹಿಂಗದೆ ನೋಳ್ಸ ಶ್ರೀರಂಗನ ಭಕ್ತರಿಗೆ
ಬಂಗಾರಗಿರಿವಾಸ ವರಾಹತಿಮ್ಮಪ್ಪನ
ಮಂಗಳಮೂರ್ತಿಯ ನೋಡಿದ ಫಲವು ೧೬

 

೫೩
ಮಂಗಳಂ ಜಯ ಮಂಗಳಂ ಪ
ಆದಿನಾರಾಯಣನೆನಿಸಿದಗೆ
ಪಾದದಿ ಗಂಗೆಯ ಪಡೆದವಗೆ
ಸಾಧುಸಜ್ಜನರನ್ನು ಸಲುಹುವ ದೇವಗೆ ವಿ
ನೋದ ಮೂರುತಿಯಾದ ವೆಂಕಟಗೆ ೧
ಶಂಖ ಚಕ್ರಧರಿಸಿಪ್ಪವಊ
ಪಂಕಜ ಹಸ್ತವ ತೋರ್ಪವಗೆ
ಬಿಂಕದೊಳಸುರರ ಕೆಡಹಿದ ಧೀರಗೆ ಮೀ
ನಾಂಕನ ಪಿತನಾದ ವೆಂಕಟಗೆ ೨
ಪೀತಾಂಬರಧರನೆನಿಸಿದಗೆ
ನೂತನ ನಾಮದಿ ಮೆರೆವವಗೆ
ಪಾತಕನಾಶನ ಪರಮಪಾವನಗೆ ಅ
ತೀತ ಮಹಿಮನಾದ ವೆಂಕಟಗೆ ೩
ಖಗವಾಹನನೆಂದೆನಿಸಿದಗೆ
ನಗಧರನಾಗಿಹ ಅಘಹರಗೆ
ಮೃಗಧರರೂಪಗೆ ಮುಂಚಕಲಾಪಗೆ
ಜಗದಾಧಾರಕ ವೆಂಕಟಗೆ ೪
ಲೋಕನಾಯಕನಾದ ಕೇಶವಗೆ
ಶೋಕಭಂಜನನಾದ ಮಾಧವಗೆ
ಸಾಕಾರ ರೂಪಗೆ ಸರ್ವಾತ್ಮಕನಿಗೆ
ಶ್ರೀಕರನೆನಿಸುವ ವೆಂಕಟಗೆ ೫
ಆಲದ ಎಲೆಯೊಳ್ವೊರಗಿದಗೆ ಆ
ಕಾಲದಿ ಅಜನನು ಪೆತ್ತವಗೆ
ನೀಲಮೇಘಶ್ಯಾಮ ನಿಗಮ ವಿದೂರಗೆ
ಕಾಲಕಾಲಾಂತಕ ವೆಂಕಟಗೆ ೬
ಸ್ವಾಮಿ ಪುಷ್ಕರಣಿಯ ವಾಸನಿಗೆ
ಭೂಮಿ ವರಾಹತಿಮ್ಮಪ್ಪನಿಗೆ
ಪ್ರೇಮದಿ ಜಗವನು ಸಲುಹುವ ನಾಮದ
ಸೋಮ ಸನ್ನಿಭನಾದ ವೆಂಕಟಗೆ ೭

 

೬೭
ಮಂಗಳಂ ಜಯ ಮಂಗಳಂ
ಲಿಂಗಾಕಾರದ ಪರಶಿವಗೆ ಪ
ರಜತಾದ್ರಿಪುರದೊಳು ನಿಂದವಗೆ
ಭಜಕರ ಸಲುಹಲು ಬಂದವಗೆ
ನಿಜಸುರ ಸೇವಿತ ಗಜಚರ್ಮಾಂಬರ
ತ್ರಿಜಗ ವಂದಿತನಾದ ಪರಶಿವಗೆ೧
ಬಾಣನ ಬಾಗಿಲ ಕಾಯ್ದವಗೆ
ತ್ರಾಣದಿ ತ್ರಿಪುರವ ಗೆಲಿದವಗೆ
ಕಾಣದ ಅಸುರಗೆ ಪ್ರಾಣಲಿಂಗವನಿತ್ತು
ಮಾಣದೆ ಭಕ್ತರ ಸಲುಹುವಗೆ ೨
ಗಂಗೆಯ ಜಡೆಯೊಳು ಧರಿಸಿದಗೆ
ಸಿಂಗಿಯ ಕೊರಳೊಳು ನುಂಗಿದಗೆ
ತಿಂಗಳ ಸೂಡಿಯೆ ಅಂಗ ಭಸ್ಮಾಂಗದಿ
ಕಂಗಳು ಮೂರುಳ್ಳ ಕೃಪಾಂಗನಿಗೆ ೩
ಅಸ್ಥಿಯ ಮಾಲೆಯ ಧರಿಸಿದಊ É
ಹಸ್ತದಿ ಶೂಲವ ಪಿಡಿದವಗೆ
ವಿಸ್ತರವಾಗಿಯೆ ಭಸ್ಮಸುವಾಸಿಗೆ
ಸತ್ಯದಿ ವರಗಳನಿತ್ತವಗೆ ೪
ಅಂಬಿಕಪತಿಯೆಂದೆನಿಸಿದಗೆ ತ್ರಿ-
ಯಂಬಕ ಮಂತ್ರದಿ ನೆಲೆಸಿದಗೆ
ನಂಬಿದ ಸುರರಿಗೆ ಬೆಂಬಲವಾಗಿಯೆ
ಇಂಬಾದ ಪದವಿಯ ತೋರ್ಪವಗೆ ೫
ಪಂಚಾಕ್ಷರದೊಳು ಒಲಿದವಗೆ
ಪಂಚಮ ಶಿರದೊಳು ಮೆರೆವವಗೆ
ಪಂಚಮ ಪಾತಕ ಸಂಚಿತ ಕರ್ಮವ
ವಂಚಿಸಿ ಭಕ್ತರ ವಾಂಛಿತವೀವಗೆ ೬
ಪಾಶುಪತವ ನರಗಿತ್ತವಗೆ
ಶೇಷಾಭರಣವ ಹೊತ್ತವಗೆ
ಕಾಶಿಗಧಿಕವಾಗಿ ಕೈವಲ್ಯವಿತ್ತು ವಿ-
ಶೇಷದಿ ಜನರನು ಸಲುಹುವಗೆ೭
ಯಕ್ಷ ಸುರಾಸುರ ವಂದಿತಗೆ
ದಕ್ಷನ ಮಖವನು ಕೆಡಿಸಿದಗೆ
ಕುಕ್ಷಿಯೊಳೀರೇಳು ಜಗವನುದ್ಧರಿಸಿಯೆ
ರಕ್ಷಿಸಿಕೊಂಬಂಥ ದೀಕ್ಷಿತಗೆ ೮
ಕಾಮಿತ ಫಲಗಳ ಕೊಡುವವಗೆ
ಪ್ರೇಮದಿ ಭಕ್ತರ ಸಲಹುವಗೆ
ಭೂಮಿಗೆ ವರಾಹತಿಮ್ಮಪ್ಪನ ದಾಸರ
ಸ್ವಾಮಿಯೆಂದೆನಿಸುವ ಈಶನಿಗೆ ೯

 

೯೦
ಮತಿತಪ್ಪಿ ನಡೆದೆಯಲ್ಲ ಶ್ರೀಲಕುಮೀ
ಪತಿಯನು ನೆನೆಯಲಿಲ್ಲ
ಹಿತವಾದ ಪಥವು ಸಂತತ ತೋರದೆ ನೀನು
ಖತಿಗೊಂಡು ವೆಂಕಟಪತಿಯನು ನೆನೆಯದೆ ಪ
ಕೃತ ತ್ರೇತ ದ್ವಾಪರ ಕಲಿಯುಗ ಚತುರ್ವಿಧ
ಜೊತೆಯಾಗಿ ಪೋಗಲು ಸಾವಿರ ಬಾರಿಯು
ಚತುರಾಸ್ಯ ಬ್ರಹ್ಮಗೆ ಹಗಲೊಂದು ಸಲುವುದು
ಗತಿಯ ಕಾಣೆನು ಶ್ರುತಿಯ ಅಯುತ ಕಾಲದೊಳು ೧
ಹಿಂದಣ ಭವದೊಳಗೆ ಬಂದ ಭವದೊಳಗೆ ಸಂ –
ಬಂಧವಾಗಿಹ ಸತಿಯರೆಷ್ಟು ಮಂದಿಯೋ ಕಾಣೆ
ಕಂದರನು ಪಡೆದುದಕೆ ಲೆಕ್ಕ ಸಂಖ್ಯೆಗಳಿಲ್ಲ
ತಿಂದ ಅನ್ನವು ಮೇರುವಿಗಿಂತ ಇಮ್ಮಡಿಯು ೨
ನುಡಿಸಿಕೊಂಬುದು ಕಾಯ ಬಿಡಿಸಿಕೊಂಬುದು ಜೀವ
ಅಡಿಗಡಿಗೆ ಹುಟ್ಟುತ್ತ ಸಾವಾಗಯೆನ್ನುವನು
ಹಿಡಿದು ಕೇಳುವ ಕಾಲ ಮನದಿ ಬೇಸರಗೊಳಲು
ಜಡತೆಕಿಕ್ಕದೆ ಮುಂದೆ ಕಡೆ ಹಾಯು ಮನವೆ ೩
ಬಲೆಯ ಕಾಣದೆ ಪಕ್ಷಿ ಮೇವಿನಾಸೆಗೆ ಪೋಗಿ
ತಲೆ ಸಿಕ್ಕಿ ಪ್ರಾಣವನು ಕಳಕೊಂಬ ತೆರನಂತೆ
ಕುಲವೃಕ್ಷದೊಳಗಿರ್ದ ಫಲದ ಮಮತೆಗಳಿಂದ
ಜಲಜನಾಭನ ಬಿಟ್ಟು ಹೊಲಬುದಪ್ಪಿತಲ ೪
ಸ್ನಾನಕ್ಕೆ ಚಳಿ ಹುಟ್ಟಿ ಧ್ಯಾನಕ್ಕೆ ಮರವೆಯು
ಮೌನಕ್ಕೆ ಕೋಪದ ಬೀಜವಂಕುರಿಸಿತು
ದಾನಕ್ಕೆ ಲೋಭವು ಮಾನಕ್ಕೆ ಪಿಸುಣರು
ಏನ ಮಾಡಿದರಿವರು ಬಿಡರಲ್ಲೊ ಮನವೆ ೫
ಸಂಗಡದಿ ಬರುತಿಪ್ಪ ಶುಭಗಳನು ಕಡೆಗಿಟ್ಟು
ಅಂಗಸುಖವ ತಾಳ್ದು ಗೊಂಗುಡಿಯ ಹೊದ್ದು
ಕಂಗಳಿಗೆ ಚೆಲುವಾದ ಅಂಗನಾಮೋಹದಿ ಶ್ರೀ-
ರಂಗನ ನಾಮದ ಅಂಗಿಯ ಸಡಲಿಸಿದೆ ೬
ಹರಿಧ್ಯಾನ ಹರಿಪೂಜೆ ಹರಿನಾಮ ಕೀರ್ತನೆಯು
ಹರಿಭಕ್ತಿ ನರ್ತನೆಯು ಹರಿಯ ಸೇವೆಗಳು
ಎರವುದೋರದೆ ನೀನು ವರಾಹತಿಮ್ಮಪ್ಪನನು
ಸ್ಥಿರವಾಗಿ ನಿಲುವಂತೆ ಕರಕೊಳ್ಳೊ ಮನವೆ ೭

 

೧೦೮
ಮರಳುತನವು ಬಂದು ಎನ್ನ ಕೊರಳ ಕೊಯ್ವುದು
ದುರುಳನಾಗಿ ಇರುಳು ಹಗಲು ಒರಲುತಿಪ್ಪುದು ಪ
ಮಾರಿಯನ್ನು ಮನೆಗೆ ತಂದು ತೋರಿಯಿಡುವುದು
ಚೋರರನ್ನು ತಂದು ತನಗೆ ಸೇರಿ ಕೊಡುವುದು
ದೂರುಬಪ್ಪ ದಾರಿಯನ್ನು ಸೇರಿ ನಡೆವುದು
ಸಾರಿ ಪರನಾರಿಯನ್ನು ಸೂರೆಗೊಂಬುದು ೧
ಹೆಂಡತಿಯ ಸುಲಿದು ತನ್ನ ಮಿಂಡಿಗಿಡುವುದು
ಕಂಡು ಕಂಡು ಹರುಷ ತಾಳಿ ಕೊಂಡುಯಿರುವುದು
ಭಂಡತನದಿ ಕೊಂದು ದೂರ ಕೊಂಡು ಪೋಪುದು
ಉಂಡು ಉಡುವ ಹರುಷ ಸರಿಯ ಮಿಂಡಿಗಪ್ಪುದು ೨
ಸೂಳೆಯನ್ನು ಕಂಡು ಹರುಷ ತಾಳಿಯಿರುವುದು
ವೇಳೆಗವಳು ಬಾರದಿರಲು ಚೀ[ರಿ]೧ಯಳುವುದು
ಹಾಳು ಬದುಕಿನೊಳಗೆ ಬಹಳ ಚಾಳು ತೋರ್ಪುದು
ಖೂಳರನ್ನು ಕರೆದು ಅನ್ನ ಪಾಲನೆರೆವುದು ೩
ಇಲಿಯು ಹೆಚ್ಚಿತೆಂದು ಮನೆಗೆ ಉರಿಯನಿಡುವುದು
ಚಳಿಯು ಹೋಯಿತೆಂದು ಮನದಿ ನಲಿವುತಿರುವುದು
ಬಿಳಿದು ಬೂದಿಯನ್ನು ಕೊಂಡು ಹೊಳೆಗೆ ಬಿಡುವುದು
ಸ್ಥಳವ ಕೆಡಿಸಿ ಕುಲವನೆಲ್ಲ ಬಳಕೆ ತೀರ್ಪುದು ೪
ಹೆತ್ತ ಮಗನ ತೊರೆದು ತಾನು ದತ್ತ ತಪ್ಪುದು
ಸತ್ತ ಎಮ್ಮೆ ಹಾಲು ಹತ್ತು ಸೇರಿಗಳವುದು
ಕತ್ತಿಯನ್ನು ಬಿಸುಟು ಒರೆಯ ಹತ್ತಿರಿಡುವುದು
ಶತ್ರುವಾಗ ಬಂದ ತನ್ನ ಒತ್ತಿ ನಿಲುವುದು ೫
ಗಾಳವಿಲ್ಲದೆ ಮೀನುಗಳ ಮೇಲೆ ತೆಗೆವುದು
ಕೋಲುಯಿಲ್ಲದ ಕೊಲೆಗಳೆನ್ನ ಮೇಲೆ ಬೀಳ್ವುದು
ಸಾಲವನ್ನು ಕೊಟ್ಟವರು ಸಾಯಲೆಂಬುದು
ಕಾಲನೊಳು ಕೈಯ ಕಟ್ಟಿ ಶೂಲೆ ತಪ್ಪುದು ೬
ಸರ್ವತಂತ್ರವೆಲ್ಲ ಹರಿಯ ಹತ್ತಿರಿಡುವುದು
ಗರ್ವವನ್ನು ತೋರಲವನ ಸುತ್ತಿ ಬರುವುದು
ಇರುವೆಯಂತೆ ಮೈಯನೆಲ್ಲ ಕುತ್ತಿ ತರಿವುದು
ತೋರ ವರಾಹತಿಮ್ಮಪ್ಪನ ಎತ್ತಿ ನೆನೆವುದು ೭

 

೯೪
ಮಾಯೆಯೆನ್ನ ಕಾಯ ಸುತ್ತಿ ಬಾಯ ಹೊಯ್ವುದು
ಆಯ ತಪ್ಪಿ ಆಯ ಕೆಟ್ಟ ನ್ಯಾಯಬಪ್ಪುದು ಪ
ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು
ಅತ್ತೆಯನ್ನು ಕಂಡು ಹರುಷವಿತ್ತು ನಗುವುದು
ಮೃತ್ಯುವನ್ನು ತಂದು ತನ್ನ ಹತ್ತಿರಿಡುವುದು
ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು ೧
ಗುರುಗಳನ್ನು ಜರೆದು ಕರೆಕರೆಯ ತಪ್ಪುದು
ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು
ಸಿರಿಯ ತಂದು ಹೊರಗೆ ಇರಿಸಿ ಮರವೆ ತೋರ್ಪುದು
ಗರುವತನದಿ ಪರರ ಒಡವೆ ಇರುಳು ಸುಲಿವುದು ೨
ದಾನದತ್ತವಾದುದನ್ನು ತಾನು ಸೆಳೆಯುವುದು
ಮಾನವನ್ನು ಹಿಡಿದು ಮೇಲೆ ಮಾನಯಿಡುವುದು
ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು
ಅನಾಥರನ್ನು ಕಂಡು ಬಹು ಹೀನ ನುಡಿವುದು ೩
ಅನ್ನವನ್ನು ಇತ್ತವರ ಮುನ್ನ ಬೈಯ್ವುದು
ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು
ತನ್ನವರ ಮರೆತು ಪರರ ಕನ್ಯೆಗಳುವುದು
ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು ೪
ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು
ಅಪ್ಪ ವರಾಹತಿಮ್ಮಪ್ಪನ ಸೇರಿಕೊಂಬುದು
ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು
ಉಪ್ಪರದ ದಾಸ ಪೇಳ್ದ ಒಪ್ಪಿಕೊಂಬುದು ೫

 

೯೫
ಯಾರ ಕೃತಕವು ಇದು ವಿಚಾರವನು ಮಾಡಿ
ಕಾರಣೀಕದ ಸ್ವಪ್ನ ಕಾಣುತಿದೆ ನೋಡಿ ಪ
ಕಾಳ ಮೇಘಧ್ವನಿಯು ಗಾಳಿ ಮಳೆ ಮಿಂಚುಗಳು
ಧಾಳಿ ಇಡುತಿಹ ಸಿಡಿಲು ಬಹಳ ಕತ್ತಲೆಯು
ಹಾಳೂರ ಮಧ್ಯದೊಳು ಬೀಳುತಿಹ ವಾರಿಗಳು
ಬೇಳುತಿಹ ಮೃಗ ಮೈಮೇಲೆ ಬೀಳುವುದ ೧
ವೃಷ್ಟಿ ತೀರುವ ತನಕ ಇಟ್ಟೆಡೆಯೊಳಿರುತಿರ್ದು
ಕೆಟ್ಟ ಪಥದಲಿ ಚಾರುಗಟ್ಟಿವಿಳಿದು
ಗಟ್ಟಿಯಾಗಿಹ ಚಳಿಯು ಹುಟ್ಟಿ ಕೈಕಾಲುಗಳು
ಒಟ್ಟಾಗಿ ಕೂಡಿರ್ದು ದೃಷ್ಟಿ ಬಿಡುತಿಹುದು ೨
ಬಿಸಿನೀರ ಮಳೆಯೊಳಗೆ ನುಸಿತ ಗುಣೆಯಸೆಯೊಳಗೆ
ಎಸೆದು ತೋರುವ ಉರಿಯ ಹಸಿಯ ಮೆಣಸಿನೊಳು
ಗಸಣಿಯನು ಕೈಕೊಂಡು ಕಸಮುಸುರೆಯಾಗಿರ್ದು
ಉಸುರಲಾರದೆ ತೃಷೆಯ ಹಸಿದ ಬಳಲಿಕೆಯ ೩
ನಿಂದೆಯಾಗಿಹ ಮೃಗದ ಚಂದವನು ಮೈಗೊಟ್ಟು
ಬಂದುದೆನಗೈಶ್ವರ್ಯ ಎಂದು ಹರುಷಿಸುತ
ಮಂದಹಾಸದ ಒಳಗೆ ಬಂಧನದಲಿರುತಿರ್ದು
ಮುಂದುವರಿದು ವ್ಯಸನದೊಳು ಬಂದಿರ್ದ ಬಗೆಯ ೪
ಮೂರು ಮಂದಿಯು ಬಂದು ಸೇರಿದರು ದೂರಿಡುವ
ಆರು ಕರೆದರು ತಾನು ಬಾರೆನೆಂಬ
ಮೇರೆಯಾಗಿಯೆ ಬಪ್ಪ ಮೂರಾರು ತಾ ಬಿಡುವ
ಸಾರಿ ಚೋರತ್ವದಲ್ಲಿ ಪರವೂರ ಸುಲಿವ ೫
ಮೇಲು ದುರ್ಗವ ಕಂಡು ಗಾಳಿಗೋಪುರವನ್ನು
ಆಳ ಬಲುಹುಳ್ಳವನು ಅವಸರದೊಳು
ನೂಲಯೇಣಿಯನಿರಿಸಿ ಏರಿಳಿದು ಬಾಹಾಗ
ಕಾಲು ಜಾರಿಯೆ ಬಸಿದ ಶೂಲದೊಳು ಬೀಳುವುದು ೬
ಹೀಗಿರುವ ಕೃತ್ಯಗಳು ನಾಗಶಯನನಿಗರುಹು
ಬೇಗದೊಳು ಪರಿಹರಿಪ ಯೋಗವನು ಕೊಡುವ
ನಾಗಗಿರಿವಾಸನಹ ವರಾಹತಿಮ್ಮಪ್ಪ
ತೂಗುವನು ತೊಟ್ಟಿಲೊಳು ಆಗುವುದನಿತ್ತು ೭

 

೫೧
ಯಾರ ಭಯವೇನಿಹುದು ಶ್ರೀವೇಂಕಟೇಶ
ನೀನೆ ದಯವಾದ ಮೇಲ್ಯಾರ ಹಂಗೇನು ಪ
ಪೊಡವಿಯಾಳುವ ದೊರೆಯು ಒಡವೆವೊಯ್ದರೆಯೇನು
ಅಡವಿಯೊಳು ಮೃಗಬಂದು ತಡೆದರೇನು
ತೊಡೆಯನೇರುವ ಮಗನ ಅಡವಿಗಟ್ಟಿದರೇನು
ಮಡುವಿನಲಿ ನೆಗಳು ಕಾಲ್ಪಿಡಿದರೇನು ೧
ವ್ಯಾಳ ಬಹುರೋಷದಲಿ ಕಾಲು ಸುತ್ತಿದರೇನು
ಕಾಳ ರಾಕ್ಷಸ ಕೈಯ ಪಿಡಿದರೇನು
ಜ್ವಾಲೆ ನಾಲ್ದೆಸೆಯಿಂದ ಮೇಲೆ ಮುಸುಕಿದರೇನು
ಹಾಲೊಳಗೆ ಹಗೆ ತನಗೆ ವಿಷವಿಕ್ಕಲೇನು ೨
ಯಾಗಕೋಸುಗ ಮೃಗವ ಹೋಗಿ ತರುವೆನುಯೆಂದು
ರಾಗದೊಳು ಬಲವಂತ ಕರೆಯಲಾಗಿ
ಕೂಗುತಲೆ ಮೃಗ ಬಂದು ಬಾಗಿಲೊಳು ಕಾಲ್ಪಿಡಿಯೆ
ಆಗ ಬಿಡಿಸಿದವರಾರು ನಾಗಗಿರಿವಾಸ ೩
ಕಡುಗಲಿಯು ದ್ರೌಪದಿಯ ಉಡಿಮಡಿಯ ಸೆಳೆವಂದು
ಒಡೆಯ ರಕ್ಷಿಸುಯೆಂದು ನಡುಗುತಿರಲು
ಮಡದಿಗಕ್ಷಯವಿತ್ತು ನುಡಿದ ಭಾಷೆಯ ಸಲಿಸಿ
ಕೊಡಲಿಲ್ಲವೆ ನೀನು ಒಡೆಯ ಗಿರಿವಾಸ ೪
ಕೆಡೆನುಡಿದು ಬಾಲಕನ ಅಡವಿಗಟ್ಟಲು ಪಿತನು
ಸಡಗರದ ಮಡದಿಯಳ ಮಾತ ಕೇಳಿ
ಒಡೆಯ ನೀನೆಯೆಂದು ಕಡುತಪವನರ್ಚಿಸಲು
ಉಡುಗಣಕೆ ಮೇಲಾದ ಪದವ ತೋರಿದೆಲಾ ೫
ಸೊಂಡಿಲಹ ಮೃಗ ಜಲದ ಹೊಂಡದೊಳಗಾಡುತಿರೆ
ಕಂಡು ಕಡು ರೋಷದಲಿ ಕಾಲ್ಪಿಡಿಯಲು
ಪುಂಡರಿಕಾಕ್ಷನನು ಭಯಗೊಂಡು ಕರೆದರೆ
ತುಂಡಿಸಿದೆ ಚಕ್ರದೊಳು ನೆಗಳ ಗಂಟಲನು ೬
ಒಬ್ಬನೆ ಪಥದೊಳಗೆ ಸರ್ಬಬಲನೈದುತಿರೆ
ಹೆಬ್ಬಾವು ಆತನನು ಮೈಸುತ್ತಲು
ಗರ್ಭದೊಳು ನಡುನಡುಗಿ ಉಬ್ಬಸವ ಬಿಡುತಿರಲು
ಎಬ್ಬಿಸಿದರಾರಲ್ಲಿ ನಿರ್ಭಯವ ತೋರಿ ೭
ದುರುಳ ದೈತ್ಯನು ತನ್ನ ಕುವರನನು ಕೊಲುವುತಿರೆ
ಭರದಿಂದ ಕಂಬದೊಳು ಹೊರಟು ಬಂದು
ನರಹರಿಯ ರೂಪದಲಿ ಕರುಳ ಮಾಲೆಯ ಧರಿಸಿ
ತರಳನನು ಕಾಯಿದವರಾರು ಶ್ರೀಹರಿಯೆ ೮
ಉರಿಯ ಮನೆಯಂದರಿಯದರಸರೈವರ ಹೊಗಲು
ಇರಿಸಿರ್ದ ಬಾಗಿಲೊಳು ಉರಿ ಮುಸುಕಲು
ಬೆರಸಿರ್ದ ನಿದ್ರೆಯೊಳು ಇರಿಸಿ ಕಾಯಿದವರಾರು
ಕರೆಸಿ ದ್ರೌಪದಿಯನ್ನು ಕೊಡಿಸಿದವರಾರು ೯
ಚಂದ್ರಹಾಸನು ವಿಷವ ತಿಂದು ಸಾಯಲಿಯೆಂದು
ತಂದೆ ಬರೆದಿಹ ಲಿಖಿತ ನಂದನನು ನೋಡಿ
ಮಂದಗಮನೆಯ ಕೊಟ್ಟು ಚಂದ್ರಹಾಸನ ನಿಲಿಸಾ
ನಂದಳಿದ ಮಾಯವೇನೆಂದು ಹೇಳಯ್ಯ ೧೦
ಯಾರ ಭಯವೆನಗಿಲ್ಲ ಕಾಯ ಭಯ ಹೊರತಾಗಿ
ಮೀರಿದಾಪತ್ತಿನಲಿ ಕಡೆ ಸೇರಿಸೊ
ಭೂರಮಣ ವರಾಹತಿಮ್ಮಪ್ಪ ಚರಣವನು
ಸಾರಿದೆನು ಭಯಗಿರಿಗೆ ಕುಲಿಶ ನೀನಾಗು ೧೧

 

೯೬
ಯಾರಿಗೆ ದೂರುವೆನು ವೆಂಕಟರಾಯ
ಚಾರದ ಮಹಿಮೆಯನು ಪ
ಈರಾರು ಸ್ಥಳವಲ್ಲಿ ಮೂರಾರು ಸೇರಿಸಿ
ಹೋರಾಟವನಿತ್ತು ಮಾರಿದೆಯೆನ್ನನು ಅ.ಪ
ತೇಜವುಳ್ಳವನೊಬ್ಬನು ಐದನೆಯಲ್ಲಿ
ಮೋಜಾಗಿ ಒಳಹೊಕ್ಕನು
ಹೂಜಿ ತುಂಬಿದ್ದುದ ಸೋಜಿಗದೊಳು ಕದ್ದು
ಪಾಜಿ ಮಾಡಿದನೆನ್ನ ಮೂಜಗದೊಡೆಯ ೧
ಸೀತವಾದವನೊಬ್ಬನು ಅಷ್ಟಮದದಲ್ಲಿ
ಕಾತುರದೊಳು ಬಂದನು
ಘಾತಕತನ ಮಾಡಿ ಭೀತಿಗಳನು ತೋರಿ
ಧಾತುಗೆಡಿಸಿದನೆನ್ನನಾಥರ ದಾತ ೨
ಮೂರನೆಯವನೊಬ್ಬನು ಏಳನೆಯಲ್ಲಿ
ಸೇರಿಯೆ ಕಳುತಿದ್ದನು
ಏರಿ ಬಂದುದನೆಲ್ಲ ಆರಿಸಿ ಮಾರಿಸಿ
ಸೂರೆಗೊಂಡನು ಎನ್ನ ವಾರಿಜನಾಭ ೩
ಅತ್ರಿಯ ಮೊಮ್ಮಗನು ನಾಲ್ಕನೆಯಲ್ಲಿ
ಶತ್ರುವಾಗಿಯೆ ನಿಂತನು
ಗೋತ್ರದಿ ಕಲಹವ ಬೆಳಸಿಯೆಯಿದ್ದಂಥ
ಪಾತ್ರವ ತೀರಿಸಿ ಗಾತ್ರವ ಕೆಡಸಿದ ೪
ಸುರಗುರುವೆಂಬುವನು ಮೂರನೆಯಲ್ಲಿ
ಸ್ಥಿರವಾಗಿ ನಿಂತಿಹನು
ಗುರುಗಳ ಮುಖದಿಂದ ಕರಕರೆ ಹತ್ತಿಸಿ-
ದರು ಪಾಡಿ ಹರಿಯನ್ನು ತಿರುಕನಾದೆನು ನಾನು ೫
ಆರನೆ ಮನೆಯೊಳಗೆ ದೈತ್ಯರ ಆ-
ಚಾರಿಯನು ನಿಂತಿಹನು
ಹಾರುಮಾತುಗಳೇಕೆ ತೂರಿದನೆಲ್ಲವ
ಪಾರಾದೆನು ನಾನು ವಾರಿಜನೇತ್ರ ೬
ಆದಿತ್ಯ ಪುತ್ರನಾದ ಶನೈಶ್ವರ
ಬಾಧಿಪ ಮನೆಗಳಾರು
ದ್ವಾದಶ ಆದಿಯು ದ್ವಿತೀಯ ಪಂಚಮದಲ್ಲಿ
ವೇದಗಳೆಲ್ಲವು ಏಳುಯೆಂಟಿರಲಿ ೭
ನಾಡನಾಳುವ ರಾಯರ ಕೆಡಿಸಿ ಮುಂದೆ
ಕಾಡಿಗೆ ಸೇರಿಸಿದ
ಈಡಿಲ್ಲ ಈತಗೆ ಜೋಡಿಲ್ಲ ಗ್ರಹರೊಳು
ಪಾಡೆಲ್ಲ ಕೆಡಿಸಿದ ರೂಢಿಗೆ ಒಡೆಯ ೮
ವಾರಿಧಿ ಮಥನದಲಿ ಸುಧೆಯನ್ನುಂಡು
ಸೇರಿದ ಗೃಹರೊಳಗೆ
ಮೀರಿದರಿಬ್ಬರ ಪಾರುಪತ್ಯಗಳನ್ನು
ಯಾರು ತಾಳುವರಯ್ಯ ಮಾರ ಸನ್ನಿಭನೆ ೯
ಸಂಧಿ ಸಂಧಿಯಲಿವರು ಬಂದೆನ್ನನು
ದಂದುಗ ಬಡಿಸುವರು
ಇಂದ್ರಾದಿ ದೇವರಿಗಳವಲ್ಲ ಇವರೊಳು
ಹಿಂದು ಮುಂದರಿಯೆನು ಬಂದ ಬವರವನ್ನು ೧೦
ಶುಭದಲ್ಲಿ ಶುಭವಿತ್ತರು ವೆಂಕಟರಾಯ
ಶುಭದಲ್ಲಿ ಶುಭ ತೋರಿಸೊ
ಅಭಯವನಿಪ್ಪಂಥ ವರಾಹತಿಮ್ಮಪ್ಪನೆ
ಪ್ರಭುವೆಂದು ನೀ ಹೇಳಿ ವಿಭವಗಳೆನಗೀಯೊ ೧೧

 

೭೭
ಯಾರಿಗೆ ದೂರುವೆನು ಗಿರಿಯ ರಾಯ
ಯಾರೆನ್ನ ಸಲಹುವರು ಪ
ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ
ವಾರಿಜವನು ತೋರಿ ಕಾರುಣ್ಯವೆನಗೀಯೊ ಅ.ಪ
ಕಷ್ಟ ಜನ್ಮದಿ ಬಂದೆನು ಧಾರುಣಿಯೊಳು
ದುಷ್ಟರಿಂದಲೆ ನೊಂದೆನು
ನಿಷ್ಟುರ ಬೇಡವೊ ನಿನ್ನ ನಂಬಿದ ಮೇಲೆ
ಸೃಷ್ಟಿಪಾಲಕ ಎನ್ನ ಬಿಟ್ಟು ಕಳೆಯಬೇಡ ೧
ಹಿಂದೆ ಮಾಡಿದ ಕರ್ಮವು ಈ ಭವದೊಳು
ಮುಂದಾಗಿ ತೋರುತಿದೆ
ಇಂದಿಲ್ಲ ಗತಿಯದರಿಂದ ನೊಂದೆನು ನಾನು
ಮಂದರಧರ ಗೋವಿಂದ ನೀನಲ್ಲದೆ ೨
ಹಗಲುಗತ್ತಲೆ ಸುತ್ತಿಯೆ ಕಂಗೆಡಿಸುತ್ತ
ಹಗೆಯೊಳು ನಗಿಸುತಿದೆ
ಉಗುರಿನಸಿಗಿಗೆ ಮಚ್ಚುಗಳೀಗ ನಾಟ್ಯವು
ಸೊಗಸು ಹಾರಿಸಿ ಎದೆ ದಿಗಿಲುಗೊಳಿಸುತಿದೆ ೩
ಬಾಡಿದ ಅರಳಿಯನು ಕಲ್ಲೀನ ಮೇಲೆ
ಈಡಾಗಿ ನಟ್ಟಿದರೆ
ಬೇಡಿಕೊಂಡರೆ ತಳಿರ್ಮೂಡಿ ಬರುವುದುಂಟೆ
ರೂಢಿಗೊಡೆಯ ನೀನು ನೋಡದಿದ್ದರೆ ಮೇಲೆ ೪
ಹಲವು ಪರಿಯ ಕಷ್ಟವ ನಿನ್ನಯ ಪದ
ಜಲಜದ ಕರುಣದಲಿ
ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ
ಒಲವಾಗೆನ್ನೊಳು (ವರಾಹತಿಮ್ಮಪ್ಪ) ೧೫

 

೯೭
ಯಾರು ಇಕ್ಕುವರೆಂದು ಹಾರೈಸುವೈ ಆತ್ಮ
ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ
ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು
ಕಲಹ ಮಾಳ್ಪಳು ತನ್ನ ಕುಲವನಿತೆಯು
ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ
ಫಲವುಳ್ಳ ಮನೆಗಳನು ಸೇರೆಲವೊ ಆತ್ಮ ೧
ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು
ಕೂಗುವುದು ಹುಲಿ ಕರಡಿ ಇದಿರಿನೊಳಗೆ
ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು
ನಾಗಶಯನನ ಗುಡಿಯ ಸೇರೆಲವೊ ಆತ್ಮ ೨
ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು
ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು
ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ
ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ ೩
ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು
ಬೀಳುವುದು ಮೇಲೆ ಹದಿನಾರು ಭಿತ್ತಿಗಳು
ಏಳು ಇಲ್ಲಿರಬೇಡ ಕಾಳಸರ್ಪನು ಬಂದು
ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ ೪
ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ
ಆರು ಪಥದಲಿ ನೀನು ಮೀರಿ ನಡೆದೆ
ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ
ಆರ ವ್ಯಾಪಾರವನು ಕೇಳಿದೈ ಆತ್ಮ ೫
ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು
ಬತ್ತುವುದು ಕೈಕಾಲು ಬಳಲಿಕೆಯೊಳು
ಮತ್ತೇಳು ಮಂದಿ ತಾವತ್ತತ್ತ ಸಾರುವರು
ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ ೬
ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು
ಗಂಟ ಕಟ್ಟಿಯೆ ಮನದಿ ಮರುಗುತಿರಲು
ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ
ನಂಟರನು ನಾ ಕಾಣೆ ಆಲಿಸೈ ಆತ್ಮ ೭
ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ
ದಾಯವಿಲ್ಲದ ಊರು ಕರಕಷ್ಟವು
ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ-
ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ ೮
ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ
ನೀಡುವನು ಧರ್ಮವನು ಧೈರ್ಯನಾಗಿ
ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ
ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ ೯

 

೯೮
ಯಾರು ಬಲ್ಲರು ವೆಂಕಟೇಶ ನಿನ್ನೊಳಿಹ
ಚಾರು ಗುಣಶೀಲವೆಂಬ
ವಾರಿಧಿಯ ಚಿಪ್ಪಿನೊಳು ಮೊಗೆದು ಬತ್ತಿಸುವಂಥ
ವೀರನಾವನು ಜಗದೊಳು ಪ
ಹದಿನಾಲ್ಕು ಲೋಕವನ್ನು, ನೀ ನಿನ್ನ
ಉದರದೊಳಗಿರಿಸಿಕೊಂಡು
ಉದಧಿಮಯವಾಗಿರ್ದ ಕಾಲದೊಳು ನಿನಗೊಂದು
ಉದುರಿದೆಲೆಯೊಳು ನಿದ್ರೆಯಂತೆ ೧
ಮಾಯೆ ಕಮಲಾಕರದೊಳು, ನಿನ್ನುದರ-
ದಾಯತದಿ ತೋರಿ ನಿಲಲು
ಮೋಹಿಸಲು ಆ ಕ್ಷಣದಿ ಕಾಯವಾಗಲು ಮೇಲೆ
ಬಾಯಿ ನಾಲ್ಕಾಯಿತಂತೆ ೨
ಅಲ್ಲಿ ತೋರಿದ ಸೊಲ್ಲನು, ಖಳನೋರ್ವ
ನೆಲ್ಲವನು ಸೂರೆಗೊಳಲು
ಮಲ್ಲನಾಗಿಯೆ ಜಲದಿ ಘಲ್ಲಿಸಿಯೆ ದೈತ್ಯನನು
ಚೆಲ್ವಸಾರವ ಸೆಳೆದೆಯಂತೆ ೩
ಅದರ ಆಧಾರದಿಂದ, ಸನಕಾದಿ-
ಗುದಯವಾದುದುಯೆಲ್ಲವೂ
ಮೊದಲ ಕಾಣದೆ ವೃಕ್ಷವದುರಿ ಬಿದ್ದುದ ನೋಡಿ
ತುದಿಯೊಳಗೆ ಕದನವಂತೆ ೪
ಒಳ ಹೊರಗೆ ನೀನೊಬ್ಬನೆ, ಹೊಳೆ ಹೊಳೆದು
ಸುಳಿವ ಪರಿಯನು ಕಾಣದೆ
ಮಲತಾಯಿ ಮಗನೊಳಗೆ ಕಲಹವಿಕ್ಕುವ ತೆರದಿ
ಹೊಲಬುದಪ್ಪಿಯೆ ನಡೆವರಂತೆ ೫
ಒಂದಿದರಿಂದೆರಡಾದುದು, ಮೂರಾಗಿ
ಬಂದು ಇದಿರೊಳು ನಿಂದುದು
ಒಂದು ಮಾತಿನೊಳೆರಡು ಸಂದೇಹಗಳ ತೋರಿ
ಮಂದ ಬುದ್ಧಿಯ ಕೊಡುವೆಯಂತೆ ೬
ಜಡವಾದ ಅಡವಿಯನ್ನು ಸಂಚರಿಸಿ
ಒಡಲ ಹೊರೆವುದು ಕಡೆಯೊಳು
ದೃಢವನೀಯದೆ ನೀನು ಹಿಡಿದು ಕಾಲನ ಕೈಯ
ಎಡೆಯೊಳೊಪ್ಪಿಸಿ ಕೊಡುವಿಯಂತೆ ೭
ನಂಬಿ ಬಂದವರ ನೀನು, ಮನದೊಳಗೆ
ಹಂಬಲಿಸಿಕೊಂಡಿರುತಲೆ
ಇಂಬಾಗಿ ಇಹಪರದಿ ಉಂಬ ಸಂಭ್ರಮವನ್ನು
ಸಂಭವಿಸಿ ತೋರ್ಪೆಯಂತೆ ೮
ಭೂಮಿಗೆ ವೈಕುಂಠವೆಂದು, ನಿಂತಿರುವ
ಸ್ವಾಮಿಯೆನ್ನೆಡೆಗೆ ಬಂದು
ಕ್ಷೇಮವನು ವರಾಹತಿಮ್ಮಪ್ಪ ಕರುಣದಿ
ಕಾಮಿತಾರ್ಥವನೀಯೊ ಎಮಗೆ ೯

 

೫೦
ರಕ್ಷಿಸೊ ಎನ್ನ ರಕ್ಷಿಸೋ ಪ
ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ
ಲಕ್ಷುಮಿರಮಣನೆ ಪಕ್ಷಿವಾಹನನೇ ಅ.ಪ
ಪಾದವಿಲ್ಲದೆ ಜಲದೊಳು ಮುಳುಗಾಡಿ
ವೇದಚೋರಕನನ್ನು ಸೀಳಿ ಬೀಸಾಡಿ
ವೇದಾಚಲದೊಳು ನಿಂತು ಕೈ ನೀಡಿ
ಸಾಧು ಸಜ್ಜನಪಾಲ ನೀ ದಯಮಾಡಿ ೧
ವಾರಿಧಿ ಮಥನದಿ ಸುರರಿಗೆ ಒಲಿದು
ಮೇರು ಮಂದರವನ್ನು ನೀ ಹೊತ್ತೆ ಒಲಿದು
ವಾರಿಜಾಕ್ಷನೆ ವೈಕುಂಠದಿಂದಿಳಿದು
ಊರಿದೆ ಚರಣವ ಗಿರಿಯೊಳು ನಲಿದು ೨
ಧರಣಿಯ ಒಯ್ದ ದಾನವಗಾಗಿ ನೀನು
ಹರಣದ ಸೂಕರನಂತಾದುದೇನು
ಚರಣ ಸೇವಕರಿಗೆ ನೀ ಕಾಮಧೇನು
ಕರುಣದಿ ಸಲಹೆನ್ನ ನಂಬಿದೆ ನಾನು ೩
ತರಳನು ಕರೆಯೆ ಕಂಬದೊಳುದಿಸಿದೆಯೊ
ದುರುಳ ದಾನವರ ಪ್ರಾಣವ ವಧಿಸಿದೆಯೊ
ಕರಳಮಾಲೆಯ ಕೊರಳೊಳು ಧರಿಸಿದೆಯೊ
ಮರಳಿ ಬಂದವ ಫಣಿಗಿರಿಯನೇರಿದೆಯೊ ೪
ಕೋಮಲ ರೂಪದಿ ಭೂಮಿಯನಳೆದೆ
ಆ ಮಹಾಬಲಿಯ ಪಾತಾಳಕ್ಕೆ ತುಳಿದೆ
ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ
ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ ೫
ತಾತನಪ್ಪಣೆಯಿಂದ ಮಾತೆಗೆ ಮುನಿದೆ
ಜಾತಿಕ್ಷತ್ರಿಯರ ವಿಘಾತಿಸಿ ತರಿದೆ
ನೂತನವಾಗಿಹ ನಾಮದಿ ಮೆರೆದೆ
ಧಾತುಗೆಟ್ಟೆನು ಸ್ವಧೈರ್ಯಗಳಿರದೆ ೬
ದಶರಥನುದರದಿ ಶಿಶುವಾಗಿ ಬಂದೆ
ವಸುಮತಿ ತನುಜೆಯ ಕುಶಲದಿ ತಂದೆ
ಅಸುರರ ಹೆಸರನುಳಿಸದೆ ನೀ ಕೊಂದೆ
ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ ೭
ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ
ಉದಧಿಯ ಮಧ್ಯದಿ ದುರ್ಗವ ಬಲಿದೆ
ಹದಿನಾರು ಸಾವಿರ ಸತಿಯರ ನೆರೆದೆ
ಉದಯವಾದೆಯೊ ವೇದಗಿರಿಯೊಳು ನಲಿದೆ ೮
ಶಶಿಮುಖಿಯರನು ಮೋಹಿಸುವಂಥ ಬಗೆಗೆ
ವ್ಯಸನವ ಬಿಡುವುದುಚಿತವೇನೊ ನಿನಗೆ
ವಸುಧೆಗುತ್ತಮವಾಗಿ ಎಸೆವಂಥ ಗಿರಿಯೊಳು
ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು ೯
ವಾಜಿಯನೇರಿಯೆ ನೇಜಿಯ ಪಿಡಿದೆ
ಮಾಜುವ ಕಲಿಯನ್ನು ಕಡೆಯೊಳು ಕಡಿದೆ
ಮೂಜಗದೊಡೆಯನ ಮನದೊಳು ಇಡುವೆ
ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ ೧೦
ಹತ್ತವತಾರದ ವಿಸ್ತಾರದಿಂದ
ಕರ್ತು ವರಾಹತಿಮ್ಮಪ್ಪನು ನಿಂದ
ಭೃತ್ಯವತ್ಸಲನಾಗಿ ಭೂಮಿಗೆ ಬಂದ
ಅರ್ಥಿಯೋಳ್ಭಕ್ತರ ಸಲಹುವೆನೆಂದ ೧೧

 

೬೧
ಲೋಕಕ್ಕೆ ನೀ ತಾಯಿ ಲೋಕಕ್ಕೆ ನೀ ತಂದೆ
ಸಾಕುವಾಕೆಯೆ ನೀನು ಲೋಕಕ್ಕೆ ನೀ ತಾಯಿ ಪ
ಬೇಸರಿಸಿ ಧರಿಸಿದಳು ಜನನಿ ಎನ್ನನು ದಶ-
ಮಾಸ ಗರ್ಭದೊಳಿದ್ದು ಬಹಳ ಬಳಲಿದೆನು
ಹೇಸಿಕೆಯ ವಿಣ್ಮೂತ್ರ ರಾಶಿಯೊಳುಗುದಿಸಿದರೆ
ಆಸುರದಿ ಕೈಯೆತ್ತಿ ಪಿಡಿದು ರಕ್ಷಿಸಿದೆ೧
ಮಲ ಮೂತ್ರ ಮೈಲಿಗೆಯ ಮೈಯೊಳಗೆ ಧರಿಸಿದರು
ತಿಲ ಮಾತ್ರ ಹೇಸಿದೆಯ ಎನ್ನೊಳಗೆ ನೀನು
ಜಲಜಮುಖಿ ಎನ್ ತಾಯಿ ಎಲೆಯ ಓಗರವಿಟ್ಟು
ತೊಳೆದ ಹಸ್ತದಿ ಎನಗೆ ಕೊಳೆಯನಿಕ್ಕಿದಳು ೨
ಮಗುವೆಂದು ಯೋಚಿಸದೆ ಉಗುಳುತ್ತ ಎಂಜಲನು
ಒಗೆದು ಬೀಸಾಡಿದಳು ಎಡದ ಹಸ್ತದಲಿ
ಜಗಳವಾಡಲು ಪಿತನು ಮಗನ ಮೋಹದ ಮೇಲೆ
ತೆಗೆಯಬಾರದೆ ಮಲವನೆಂದು ಜರೆದಪಳು೩
ಪಡೆದ ತಾಯ್ತಂದೆಗಳು ಅಡಗಿ ಹೋದರು
ಎನ್ನ ಬಿಡದೆ ಸಲಹಿದೆ ನೀನು ಪೊಡವಿ ದೇವತೆಯೆ
ಕಡೆಗಾಲದೊಳು ಕೈಯ ಪಿಡಿದು ರಕ್ಷಿಸದೆನ್ನ
ಒಡಲ ದುಃಖವ ನೋಡಿ ನುಡಿಯದಿರಬಹುದೆ ೪
ಬಲವಾಗಿ ಕೈವಿಡಿದೆ ವರಾಹತಿಮ್ಮಪ್ಪನಿಗೆ
ಗೆಲವಿಂದ ಭೂರಮಣನೆನಿಸಿ ಮೆರೆವ
ಜಲಜನಾಭನೆ ಎನ್ನ ಪಿತನು ಮಾತೆಯು ನೀನು
ಸುಲಭದೊಳು ಮೈದೋರು ಫಲಿತವಹ ಪದವ ೫

 

೯೯
ವಂದಿಸುವೆನು ನಿತ್ಯದೊಳು ವಂದಿಸುವೆನು ಪ
ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು
ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ಅ.ಪ
ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು
ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು
ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ
ಮಾಧುರ್ಯದೊಳು ಜನರ ಪ್ರೀತಿಕರನಾದವಗೆ ೧
ಭಯವಿವರ್ಜಿತನಾಗಿ ಬಹುಲೋಭವನು ತೊರೆದು
ಕ್ಷಯ ಮಾಡಿ ಮೋಹವನು ಹಿಂದುಗಳೆದು
ನವವಿಧದ ಜ್ಞಾನವನು ದಶಲಕ್ಷಣಗಳಿಂದ
ನಿಯತವತಿ ಕೈಕೊಂಡನಕ್ಷರ ತ್ರಯದೊಳು ೨
ಏಳು ಕೋಟಿಯ ಮಹಾ ಮಂತ್ರ ಬಾಹ್ಯದ ಕೋಟೆ
ನಾಲಿಗೆ ವಶಮಾಡಿ ನವದ್ವಾರಗಳು
ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ
ಸಾಲು ನಾದಗಳೆಂಬ ಕಹಳೆವಿಡಿದವಗೆ ೩
ದಶವಿಧದ ಘೋಷಗಳ ಬಿಂದು ಪ್ರತಾಪದಿಂ
ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ
ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ
ಎಸೆವ ದುರ್ಗಾಂತರಕೆ ತಾಗಲಿಟ್ಟವಗೆ ೪
ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ
ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು
ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು
ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ ೫
ಪ್ರತ್ಯಾಹಾರದಿಂ ಮಣಿಹಾರಕದ ಮನೆಯ
ಕಿತ್ತು ಕಿಚ್ಚಂ ಹಾಕಿ ಧ್ಯಾನ ಯೋಗದಿ ಬಂದ
ಮತ್ತೆ ಸಂಶುದ್ಧ್ದವೆಂಬರಮನೆಯ ಕೋಲಾಹಲದಿ
ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು ೬
ಜ್ಞಾನ ಮಂಟಪವೆಂಬ ರಾಜ ಮನೆಯೊಳು ನಿಂತು
ಮನದೊಳು ಮೂಲ ಬಂಧದಿ ಆರು ಶಕ್ತಿಗಳ
ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ-
ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ ೭
ಖೇಚರಿಯ ಯೋಗದಿಂ ಕರಣ ಚತುಷ್ಟಯದ
ನೀಚ ಪ್ರಧಾನಿಗಳ ನೆಗಳವನಿಕ್ಕಿ
ಸೂಚನೆಯ ಕಾಲ ಕರ್ಮದ ಕಣ್ಣುಗಳ ಕಿತ್ತು
ಯೋಚನೆಯ ಮಾಡಿದನು ವೀರಾಸನದೊಳು ೮
ಮಾಯಾ ಪ್ರಪಂಚವೆಂಬನ್ಯಾಯ ನಾಯಕರ
ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು-
ಪಾಯದಿಂದಾರು ವಿಕಾರಗಳ ಕೈಗಟ್ಟಿ
ಬಾಯ ಹೊಯ್ದ ಗುರುವಿಗೆರಗುವೆನು ನಾನು ೯
ಇಪ್ಪತ್ತೊಂದು ಸಾವಿರವಾರು ನೂರಾದ
ಉತ್ಪವನ ಉಶ್ವಾಸ ನಿಶ್ವಾಸಗಳನೆಲ್ಲ
ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು
ಒಪ್ಪುವನು ಅರೆನೇತ್ರದಿಂದ ಬೆಳಗುವನು ೧೦
ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ
ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ
ವರ್ಣಾಶ್ರಮಂಗಳನು ಏಕವನು ಮಾಡಿಯೆ
ನಿರ್ಣಯಿಸಿಕೊಂಡು ತಾ ನೋಡುವವಗೆ ೧೧
ನುತಿಕರ್ಮದಿಂದಷ್ಟ ಆತ್ಮಕರ ಆಸನವ
ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ
ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ
ಕೃತಿ ಕುದುರೆಗಳ ಯುಕುತಿಯಲ್ಲಿ ಪಿಡಿದವಗೆ ೧೨
ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು
ಕಾದು ಇರುತಿಹ ಹರಿಗಳಾರು ಬಿಂದುವಿನಿಂ
ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ
ಆದಿ ಕರಣಿಕನನ್ನು ಹಿಡಿದವನಿಗೆ ೧೩
ದಾತೃತ್ವದಿಂ ಸತ್ಯಲೋಕವನು ತಾ ಕಂಡು
ಕಾತರದಿ ಆಕಾರದುರ್ಗವನು ಹತ್ತಿ
ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ
ಈ ತೆರದ ಮಹಾದುರ್ಗವನು ಕಂಡವಗೆ ೧೪
ಅಣು ಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು
ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ
ಗುಣನಿಧಿಯು ವರಾಹತಿಮ್ಮಪ್ಪರಾಯನನು
ಕಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ ೧೫

 

೫೨
ವೆಂಕಟಾಚಲನಿವಾಸ ಸಲಹಯ್ಯ
ಪಂಕಜಾಕ್ಷನೆ ಶ್ರೀನಿವಾಸ ಪ
ವಾರಿಯೊಳು ಮುಳುಗಾಡಿದೆ, ಮಂದರದ
ಮೇರು ಬೆನ್ನೊಳು ತಾಳಿದೆ
ಕಾರಡವಿಯೊಳು ಚರಿಸಿದೆ, ಕಂಬದೊಳು
ಘೋರ ರೂಪವ ತೋರಿದೆ ೧
ವಟುವಾಗಿ ಧರೆಯನಳೆದೆ, ಕೊಡಲಿಯೊಳು
ಪಟುತರದ ನೃಪರ ಗೆಲಿದೆ
ಅಟವಿ ವಾಸವ ಮಾಡಿದೆ, ರಣದೊಳಗೆ
ಚಟುಳ ವಾಜಿಯ ನಡೆಸಿದೆ ೨
ಅಂಗದಂಬರವ ಮರೆದೆ, ಕಡೆಯೊಳು, ತು
ರಂಗವನು ಏರಿ ನಲಿದೆ
ಬಂಗಾರದದ್ರಿಯೊಳು ಮೆರೆದೆ, ವರಾಹ
ರಂಗ ತಿಮ್ಮಪ್ಪ ಒಲಿದೆ ೩

 

೫೮
ವೆಂಕಟೇಶ ಎನ್ನ ಮುಂದೆ ನಿಂತಿದಂತಿದೆ ಪ
ದೆಸೆಗೆ ಪ್ರಜ್ವಲಿಸುವ ಎಸೆವ ಕಿರೀಟ
ನೊಸಲೊಳು ತಿದ್ದಿದ ನಾಮದ ಮಾಟ
ಅಸಮ ನೇತ್ರಗಳಿಂದ ನೋಡುವ ನೋಟ
ಬಿಸಜಭವನ ಪರಿಚರಿಯದ ಆಟ೧
ತಿಲಪುಷ್ಟದಂದದಿ ಚಲುವನಾಸಗಳು
ಬಿಳಿಯ ಮುಗುಳ್ನಗೆ ಸಾಲು ದಂತಗಳು
ಗಳದಿ ಮೂರೇಖೆಯು ವೈಜಯಂತಿಗಳು
ಹೊಳೆವ ಮೌಕ್ತಿಕದಂತೆ ಕಿರು ಬೆವರುಗಳು ೨
ಶ್ರೀವತ್ಸ ಕೌಸ್ತುಭ ಎಡಗೈಯ ಶಂಖ
ಕಿರು ನೇಸರಂದದಿ ಚಕ್ರದ ಬಿಂಕ
ಕರದೊಳು ಜಗವನು ತೋರುವ ವೆಂಕ
ಮುರುಕ ಕಟಿಯೊಳು ಇರಿಸಿದ ನಿಃಶಂಕ ೩
ತೋರ ಮುತ್ತಿನ ಸರ ಮಕರಕುಂಡಲವು
ತೋರುವ ಭುಜಕೀರ್ತಿ ಚಕ್ರದ ಸರವು
ಹಾರ ಹೀರಾವಳಿ ಬೆರಳುಂಗುರವು
ಚಾರು ಭಾಪುರಿ ಘಂಟೆ ಸರಪಣಿಯಿರವು ೪
ಕಿರುಡೊಳ್ಳಿಗೊಪ್ಪುವ ನಾಭಿಯ ಸಿರಿಯು
ಸರಸಿಜಮಿತ್ರನ ತೇಜದ ಪರಿಯು
ಮರುಗು ಮಲ್ಲಿಗೆ ಜಾಜಿ ಸಂಪಿಗೆ ಸರಿಯು
ಪರಿಮಳಿಸುವ ಮೈಯ ಪುಳಕದ ಸಿರಿಯು ೫
ಉಡಿಯ ಪೀತಾಂಬರ ಮೇಲುಡುದಾಗ್
ಕಡಹದಂದದಿ ಚಲ್ವ ಕಾಲ್ಗಳ ತೋರ
ಅಡಿಯಿಟ್ಟು ನಿಂದಿಹ ಬೆಡಗಿನ ವೀರ
ಮಡದಿ ಮಹಾಲಕ್ಷ್ಮೀ ಪುಡುಮಿಯುದಾರ ೬
ಸ್ವಾಮಿ ಪುಷ್ಕರಣಿಯ ತೀರ ನಿವಾಸ
ಭೂಮಿ ವರಾಹತಿಮ್ಮಪ್ಪನ ದಾಸ
ಪ್ರೇಮದಿ ರಚಿಸಿದನಿದರೊಳು ಪ್ರಾಸ
ತಾಮಸವಿದ್ದರು ತಿದ್ದಲು ಲೇಸ ೭

 

೫೯
ವೆಂಕಟೇಶ ನಿನ್ನ ನಂಬಿದೆ ಎನ್ನ
ಸಂಕಟವನು ಪರಿಹರಿಸಯ್ಯ ನೀನು ಪ
ಒಡಲೆಂಬ ಕಡಲೆಡೆಗೊಂಡಿಹ ಹಡಗು
ಕಡೆಯ ಕಾಣ ಬಹು ಜಡದಿಂದ ಗುಡುಗು
ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು
ದಡವ ಸೇರಿಸೊ ಎನ್ನ ಒಡೆಯ ನೀ ಕಡೆಗು ೧
ಅಣುರೇಣು ತೃಣಕಾಷ್ಠದೊಳಗಿದ್ದು ನೀನು
ಕ್ಷಣ ಕ್ಷಣ ಆರೈವ ಗುಣ ನಿನ್ನದೇನು
ಪ್ರಣವ ರೂಪನೇ ನಿನ್ನ ಚರಣಕ್ಕೆ ನಾನು
ಮಣಿವೆನು ಮನ್ನಿಸು ವರ ಕಾಮಧೇನು ೨
ನಾರಾಯಣ ನರಹರಿ ಜಗನ್ನಾಥ
ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ
ಸಾರಿದವರ ಸಂಸಾರದ ದಾತ
ಮಾರಿದ ಮನವಕೊಂಬರೆ ನೀನೆ ಪ್ರೀತ ೩
ಉತ್ತಮವಾದ ಶ್ರೀಶೈಲ ನಿವಾಸ
ಭಕ್ತರ ಸಲಹುವ ಬಿರುದುಳ್ಳ ಈಶ
ಚಿತ್ತವು ತಿಳಿದೆನ್ನ ಕಾಯೊ ಸರ್ವೇಶ
ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ ೪
ವರಾಹತಿಮ್ಮಪ್ಪನು ಒಲಿದೆನ್ನ ಕರೆದು
ಆರಿದ ಬÁಯೊಳು ಅಮೃತವನೆರೆದು
ದೂರವಾಗದೆ ಅಡಿಗಡಿಗೆನ್ನ ಹೊರೆದು
ಏರುಗಂಡಪರಾಧ ಎಲ್ಲವ ಮರೆದು ೫

 

೧೦೯
ವ್ಯರ್ಥದಲಿ ತೋರುವನೆ ತ್ರೈಲೋಕ್ಯಕರ್ತ
ಭಕ್ತನಾದರೆ ಪರಮ ಮುಕ್ತಿ ಸೇರುವುದು ಪ
ಉತ್ತಾನ ಭೂಪತಿಯ ಪುತ್ರನಂತಿರಬೇಕು
ಸತ್ಯವೊಂದಿರಬೇಕು ಹರಿಶ್ಚಂದ್ರನಂತೆ
ಭಕ್ತಿರಸವಿರಬೇಕು ಪ್ರಹ್ಲಾದನಂತೆ
ಹಸ್ತವಿರಬೇಕು ಶ್ರೀರಾಮ ಭಕ್ತನಂತೆ ೧
ವ್ರತವ ಮಾಡಲು ಬೇಕು ಅಂಬರೀಶನ ಪರಿಯ
ಪಥವ ನಡೆಯಲು ಬೇಕು ವಿಹಗನಂತೆ
ಶತಮುಖವ ರಚಿಸಿದರೆ ಪುರುಹೂತನಂತಿಹನು
ಯತಿಯಾಗಬೇಕು ಗುರುಮಧ್ವಪತಿಯಂತೆ ೨
ಗೀತಸೇವನೆ ಬೇಕು ನಾರದರ ತೆರನಂತೆ
ಪ್ರೀತನಾಗಲು ಬೇಕು ಪಾರ್ಥನಂತೆ
ನೀತಿಶಾಸ್ತ್ರವು ಬೇಕು ಶುಕಶೌನಕರಂತೆ
ಖ್ಯಾತಿಯಿರಬೇಕು ರವಿಜಾತನಂತೆ ೩
ಶುದ್ದನಾಗಿರಬೇಕು ಉದ್ಧವನ ತೆರನಂತೆ
ಬದ್ಧನಾಗಿರಬೇಕು ಅಕ್ರೂರನಂತೆ
ಹೊದ್ದಿಕೊಂಡಿರಬೇಕು ಫಣಿರಾಜನಂದದಲಿ
ಮುದ್ದಾಗಿಯಿರಬೇಕು ಆ ವಿದುರನಂತೆ ೪
ವೇದವೋದಲು ಬೇಕು ವ್ಯಾಸಮುನಿಯಂದದಲಿ
ಆದರಿಸಬೇಕು ತಾ ಧರ್ಮನಂದದಲಿ
ಪಾದಪೂಜೆಯು ಬೇಕು ಲಂಕಾಧಿಪತಿಯಂತೆ
ಭೇದ ನೋಡಲು ಬೇಕು ವಸಿಷ್ಠನಂತೆ ೫
ಸ್ರ‍ಮತಿಯ ನೋಡಲು ಬೇಕು ಪಾರಾಶರಂದದಲಿ
ಮಿತಿಯಿರಲು ಬೇಕು ಆ ಭೀಷ್ಮನಂದದಲಿ
ಜೊತೆಯಾಗಿಯಿರಬೇಕು ಪುಂಡರೀಕನ ತೆರದಿ
ವ್ರತವಿರಲು ಬೇಕು ರುಕುಮಾಂಗನಂದದಲಿ ೬
ದಾನ ಮಾಡಲು ಬೇಕು ಬಲಿಯ ಪ್ರೌಢಿಕೆಯಿಂದ
ಧ್ಯಾನವಿರಬೇಕು ಋಷಿ ಗಾಗ್ರ್ಯನಂದದಲಿ
ಪ್ರಾಣ ಸಂದೇಹದೊಳು ಕರಿರಾಜನಂದದಲಿ
ಕಾಣಬೇಕಾ ಹರಿಯ ಅಜಮಿಳನ ತೆರದಿ ೭
ಜಪಗಳನು ತಪಗಳನು ದಾನಧರ್ಮಂಗಳನು
ಅಪರೂಪವಾಗಿರ್ದ ಪೂಜೆಗಳನು
ಉಪವಾಸವನು ಮಾಡಿ ವ್ರತ ನೇಮ ನಿಷ್ಠೆಗಳ
ಕಪಟವಿಲ್ಲದೆ ರಚಿಸಿ ಕಂಡರೈ ನಿನ್ನ ೮
ಇವರಂತೆ ನೋಡುವರೆ ಸ್ಥಿರವಿಲ್ಲ ಬುದ್ಧಿಗಳು
ಇವರ ದಾಸರ ದಾಸ ದಾಸ ನಾನು
ಇವರ ಸ್ಮರಣೆಯು ನಿತ್ಯ ಮನದೊಳಗೆ ನಿಲುವಂತೆ
ಭಾವಿಸೈ ಕೋನೇರಿ ವರಾಹತಿಮ್ಮಪ್ಪ ೯

 

೬೫
ಸಕಲವೆಲ್ಲವು ಶಿವನ ಲಿಂಗದೊಳಗಡಗಿದುದು
ಲಿಂಗವೆ ಮಾಲಿಂಗವಾಗಿ ತೋರುವುದು ಪ
ಭಕುತಿಕರು ಮಮತೆಯೊಳು ಸ್ಥಾಪಿಸಿಯೆ ಅರ್ಚಿಸಲು
ಸುಕೃತಫಲವನು ಅಳೆವ ಕೊಳಗವನು ಕಾಣೆ ಅ.ಪ
ಆ ಮಹಾ ಸಹಸ್ರನಾಮದೊಳಗತ್ಯದಿಕ
ಸೊಮೇಶನೆಂದೆಂಬ ಸ್ವಾಮಿಯನು ಕಂಡು
ಸೋಮವಾರದ ದಿವಸ ಸಾಮರುದ್ರವ ಜಪಿಸಿ
ನೇಮದಿಂ ಪೂಜಿಸಲು ಕಾಮಿತದ ಫಲವು ೧
ಇನ್ನೇನ ವರ್ಣಿಸುವೆ ಈಶ ನಿನ್ನಯ ಮಹಿಮೆ
ಉನ್ನಂತವಾಗಿ ಜಗದೊಳು ಚರಿಸಿತು
ಪನ್ನಗೇಶನ ಬಲದ ಪಶ್ಚಿಮದ ದೆಸೆಯೊಳ್ ಪ್ರ-
ಸನ್ನವಾದನು ಸೋಮನಾಥನೆಂದೆನುತ೨
ಸ್ವಾಮಿ ನಿನ್ನಯ ಪಾದ ಪ್ರತ್ಯಕ್ಷವಾಗಿಯೆ
ಸೋಮೇಶನೆಂದೀಗ ತಾ ಮೆರೆದುದು
ಭೂಮಿಯ ಜನರಿಗೆ ಭುಕ್ತಿ ಮುಕ್ತಿಯನಿತ್ತು
ಪ್ರೇಮದಿಂ ಸಲಹುತ್ತ ಕಾಮಿತಾರ್ಥವನೀವ ೩
ಲೋಕೋಪಕಾರಕ್ಕೆ ಸೋಮೇಶ ನೀ ಬಂದೆ
ಗೋಕರ್ಣ ಶ್ರೀಶೈಲ ಕಾಶಿ ರಾಮೇಶ್ವರವು
ಬೇಕೆಂಬುದಿಲ್ಲಿನ್ನು ಎನ್ನ ಭೀತಿಯ ಗಿರಿಯ
ನೂಕುವತಿಶಯ ಕುಲಿಶ ನೀನು ಜಗದೀಶ ೪
ಜೋಕೆಯೊಳು ಮನದೊಳಗೆ ಅಡಗಿಸಿಯೆ ಭಜಿಸಿದರೆ
ರಾಕೇಂದುಧರ ತನ್ನ ಪದವನೀವ
ಯಾಕೆ ಮನದೊಳು ಬಿಡುವೆ ಶಿವನಾಮವನು ನೀನು
ಏಕೆ ಕಡೆಯಲಿ ಕೆಡುವೆ ಮರುಳು ಜೀವನವೆ ೫
ಸಡಗರದಿ ಸರ್ವವೂ ನಿನ್ನಲ್ಲಿ ಅಡಗಿದುದು
ಜಡೆಯೊಳಗೆ ಅಡಗಿದುದು ಪೊಡವಿಗುತ್ತಮ ನದಿಯು
ಉಡುಪತಿಯು ಅಡಗಿದನು ಊಧ್ರ್ವ ಫಣೆಯೊಳಗೆ
ಪಿಡಿಯೊಳಗೆ ಅಡಗಿದುದು ವೇದ ಮೃಗರೂಪಾಗಿ ೬
ಕಿಚ್ಚು ಅಡಗಿತು ಅವನ ಅಚ್ಚ ಹಣೆಗಣ್ಣಿನೊಳು
ಮುಚ್ಚಿ ತೆರೆವಕ್ಷಿಯೊಳು ಮೂಜಗದ ಬೆಳಕು
ಬಿಚ್ಚಿಟ್ಟಿ ವಿಷಕಂಠದೊಳು ಲೋಕವನು
ಎಚ್ಚರಿಪ ಮಂತ್ರಗಳು ಬಾಯೊಳಗಡಗಿದುದು ೭
ಶುದ್ಧ ಸ್ಫಟಿಕ ಥರದ ಕಾಯಕಾಂತಿಗಳುಳ್ಳ
ಬದ್ಧುಗೆಯ ದಾರದಂದದಿ ಉರಗನೊಪ್ಪುಗಳು
ಉದ್ದಿಶ್ಯವಾಗಿ ಭಜಿಸಿದ ಭಕ್ತರುಂಡಗಳು
ತಿದ್ದಿಟ್ಟಿ ಆಭರಣ ತಿರಿಶೂಲಧರಣ ೮
ಪುಲಿಕರಿಯ ಪೊಳವುಗಳು ನಳನಳಿಪ ವಸನಗಳು
ಹೊಳೆವ ಮುಖತೇಜಗಳು ನಳಿನನೇತ್ರಗಳು
ನಲಿವಗಣ ಕೋಟಿಗಳ ಮಧ್ಯದೊಳು ಕೈಲಾಸ
ಇಳಿದು ಬಂದನು ನಮ್ಮ ಬಳಿಗೆ ಸೋಮೇಶ ೯
ನಾಸಿಕದಿ ಕೌಮಾರಿಗವಧಿಯಾಗಿಹ ಸ್ಥಳ ವಿ-
ಶೇಷವಾಗಿಹ ಶುದ್ಧ ರೌಪ್ಯಪುರದೊಳಗೆ
ಭೂಸುರೋತ್ತಮಗೊಲಿದು ಭೂರಿಭಾಗ್ಯವನಳೆದು
ವಾಸವಾದೆಯೊ ಜಗದೀಶ ಸೋಮೇಶ ೧೦
ಭಾಳನೇತ್ರನೆ ನೀಲಕಂಠ ಶೂಲಾಸ್ಥಿಧರ
ಕಾಲರುದ್ರ ವ್ಯಾಳಭೂಷ ಸರ್ವೇಶ
ಲಾಲಿಸೈ ಬಿನ್ನಪವ ಪಾಲಿಸೆನ್ನನು ಬೇಗ
ಬಾಲಕನು ಅಲ್ಲವೇ ಭಕ್ತಸುರಧೇನು ೧೧
ಸಾರಿ ನೋಡಿರೊ ಮೂರು ಲಿಂಗವನು ನೀವೀಗ
ಧಾರುಣಿಯಳೊಂದು ಶಿವಲಿಂಗವನು ಬೇಗ
ಮೇರುವಿಗೆ ಸಮವಾದ ಹೇಮವನು ವಿಪ್ರರಿಗೆ
ಧಾರೆಪೂರ್ವಕವಾಗಿ ಇತ್ತ ಫಲ ಒದಗುವುದು ೧೨
ಶಿವನ ಪೂಜೆಯೆ ಭಕ್ತಿ ಶಿವನ ಪೂಜೆಯೆ ಮುಕ್ತಿ
ಶಿವಮಂತ್ರವೆ ಶಕ್ತಿ ಶಿವನೆ ಪರಶಕ್ತಿ
ಶಿವನಾಮವನು ಭಜಿಸಿ ಸಿರಿಯ ಪಡೆದನು ಹರಿಯು
ಶಿವನ ಮರೆಯದೆ ಭಜಿಸು ಇಹಪರವ ಸೃಜಿಸು೧೩
ನಿನ್ನನೇ ನಂಬಿದೆನು ಉನ್ನತಾನಂತೇಶ
ಮನ್ನಿಸಿ ದಯದೋರು ಚಂದ್ರಮೌಳೀಶ
ಇನ್ನು ಭಯವಿಲ್ಲೆನೆಗೆ ಹರಸೆನ್ನ ಸೋಮೇಶ
ಎನ್ನೊಡೆಯ ಶ್ರೀಕೃಷ್ಣ ವರಾಹತಿಮ್ಮಪ್ಪ ೧೪

 

ಸಲಹಿಕೊಂಬವರಿಲ್ಲವೋ ವೆಂಕಟರಾಯ
ಗೆಲುವ ಪರಿಯ ಕಾಣೆನು ಪ
ಛಲವೇಕೋ ನಿನಗಿಷ್ಟು ಹೊಲಬುದಪ್ಪಿದ ಮೇಲೆ
ಫಲವಿತ್ತು ಕರುಣದಿ ಕುಲವೃಕ್ಷವನು ಕಾಯೋ ಅ.ಪ
ಅರಳಿಯ ವೃಕ್ಷದೊಳು ಆನೆಯ ತಂದು
ಸ್ಥಿರವಾಗಿ ಕಟ್ಟಿದಂತೆ
ದುರುಳರು ಬಂದೆನ್ನ ಕೊರಳು ಕೊಯ್ದೀಗ
ಬರಿದೆ ನುಂಗುವ ಪರಿ ಇರವ ಕಾಣುತ ಮುಂದೆ ೧
ಮಾಡಿದ ಉಪಕಾರವ ಮರೆತು ಮುಂದೆ
ಕೇಡನು ನೆನೆವರಿಗೆ
ನೋಡಿದೆ ಯಾತಕೆ ಮಾಡದೆ ಶಿಕ್ಷೆಯ
ಆಡಿದೆ ನಿನ್ನೊಳು ಬೇಡ ಇನ್ನವರೊಳು ೨
ವಾರಿಧಿ ತೀರದಲಿ ನೆಲ್ಲನು ತಂದು
ಹಾರಿಸಿ ಬಿತ್ತಿದಂತೆ
ನೀರು ನಿಲ್ಲದ ಭವ ಘೋರ ಕಾನನದೊಳು
ಸೂರೆವೋದೆನು ನಿನ್ನ ಮಾರಿಹೋದೆನು ಎನ್ನ ೩
ಒದಗಿದ ನ್ಯಾಯದಲಿ ಇದಿರು ಬಂದು
ಕದನವ ಕಟ್ಟುತಲೆ
ಬೆದರುಗೊಳಿಸಿ ಎನ್ನ ಸದನಕ್ಕೆ ಮುನಿವುದ
ಅದನೆಲ್ಲ ಚರಣದ ಪದುಮಕ್ಕೆ ಅರುಹುವೆ ೪
ನೊಂದೆನು ಬಹಳವಾಗಿ ಈ ಭವದ
ಸಿಂಧುವ ದಾಟಿ ಹೋಗಿ
ಚಂದದಿ ನಿನ್ನಯ ಚರಣಾರವಿಂದವ
ಎಂದಿಗೆ ತೋರ್ಪೆಯೊ ವರಾಹತಿಮ್ಮಪ್ಪ ೫

 

೭೮
ರಾಗ :ಸಾರಂಗ ಅಷ್ಟತಾಳ
ಸಲಹಿಕೊಂಬವರಿಲ್ಲವೋ ವೆಂಕಟರಾಯ
ಗೆಲುವ ಪರಿಯ ಕಾಣೆನು ಪ
ಛಲವೇಕೋ ನಿನಗಿಷ್ಟು ಹೊಲಬುದಪ್ಪಿದ ಮೇಲೆ
ಫಲವಿತ್ತು ಕರುಣದಿ ಕುಲವೃಕ್ಷವನು ಕಾಯೋ ಅ.ಪ
ಅರಳಿಯ ವೃಕ್ಷದೊಳು ಆನೆಯ ತಂದು
ಸ್ಥಿರವಾಗಿ ಕಟ್ಟಿದಂತೆ
ದುರುಳರು ಬಂದೆನ್ನ ಕೊರಳು ಕೊಯ್ದೀಗ
ಬರಿದೆ ನುಂಗುವ ಪರಿ ಇರವ ಕಾಣುತ ಮುಂದೆ ೧
ಮಾಡಿದ ಉಪಕಾರವ ಮರೆತು ಮುಂದೆ
ಕೇಡನು ನೆನೆವರಿಗೆ
ನೋಡಿದೆ ಯಾತಕೆ ಮಾಡದೆ ಶಿಕ್ಷೆಯ
ಆಡಿದೆ ನಿನ್ನೊಳು ಬೇಡ ಇನ್ನವರೊಳು ೨
ವಾರಿಧಿ ತೀರದಲಿ ನೆಲ್ಲನು ತಂದು
ಹಾರಿಸಿ ಬಿತ್ತಿದಂತೆ
ನೀರು ನಿಲ್ಲದ ಭವ ಘೋರ ಕಾನನದೊಳು
ಸೂರೆವೋದೆನು ನಿನ್ನ ಮಾರಿಹೋದೆನು ಎನ್ನ ೩
ಒದಗಿದ ನ್ಯಾಯದಲಿ ಇದಿರು ಬಂದು
ಕದನವ ಕಟ್ಟುತಲೆ
ಬೆದರುಗೊಳಿಸಿ ಎನ್ನ ಸದನಕ್ಕೆ ಮುನಿವುದ
ಅದನೆಲ್ಲ ಚರಣದ ಪದುಮಕ್ಕೆ ಅರುಹುವೆ ೪
ನೊಂದೆನು ಬಹಳವಾಗಿ ಈ ಭವದ
ಸಿಂಧುವ ದಾಟಿ ಹೋಗಿ
ಚಂದದಿ ನಿನ್ನಯ ಚರಣಾರವಿಂದವ
ಎಂದಿಗೆ ತೋರ್ಪೆಯೊ ವರಾಹತಿಮ್ಮಪ್ಪ ೫

 

೬೬
ಸಾರಿದ ಭಕ್ತಸಂಸಾರಿ ಮಾಲಿಂಗ
ಕ್ಷೀರ ಗ್ರಾಮದಿ ನಿಂತ ಧೀರ ಮಾಲಿಂಗ ಪ
ಹರ ಹರ ಮಹಾದೇವ ಶಿವಮಾಲಿಂಗ
ವರ ಶಂಭೊ ಗಿರಿವಾಸ ಶಂಕರ ಮಾಲಿಂಗ
ಉರಗ ಭೂಷಣ ಗಂಗಾಧರನೆ ಮಾಲಿಂಗ
ಪರದೈವ ಶಶಿಮೌಳಿ ಗರುವ ಮಾಲಿಂಗ ೧
ಖಂಡಲಪತಿಯೆ ದೋರ್ದಂಡ ಮಾಲಿಂಗ
ತಂಡದ ಸುರರೊಳ್ ನಂಜುಂಡ ಮಾಲಿಂಗ
ರುಂಡಮಾಲೆಯ ಧರಿಸಿಕೊಂಡ ಮಾಲಿಂಗ
ಕೆಂಡಾಕ್ಷತೇಜ ಮಾರ್ತಾಂಡ ಮಾಲಿಂಗ ೨
ಮಾರಹರನೆ ಶ್ರುತಿಸಾರ ಮಾಲಿಂಗ
ಧೀರ ಬಾಣನ ದ್ವಾರ ಸಾರಿ ಮಾಲಿಂಗ
ಮೂರುಪುರ ವೀರ ಸಂಹಾರಿ ಮಾಲಿಂಗ
ಘೋರ ಸಂಸಾರ ಭವದೂರ ಮಾಲಿಂಗ ೩
ಬ್ರಹ್ಮಾದಿ ಸುರವಂದ್ಯ ಹರ್ಮಿ ಮಾಲಿಂಗ
ನಿರ್ಮಲ ರೂಪಕ ಧರ್ಮಿ ಮಾಲಿಂಗ
ಕರ್ಮಬಂಧದ ನರವರ್ಮಿ ಮಾಲಿಂಗ
ಉರ್ವಿಯೊಳು ನೀ ಬಹಳ ಪೆರ್ಮಿ ಮಾಲಿಂಗ ೪
ನೀಲಕಂಠನೆ ನಿಗಮಶೀಲ ಮಾಲಿಂಗ
ಪಾಲ ಕರಶೂಲ ಕಪಾಲಿ ಮಾಲಿಂಗ
ಕಾಲ ಕಲ್ಪಾಂತಕ ಜಾಲ ಮಾಲಿಂಗ
ಲೋಲಾಸ್ಥಿಮಾಲ ಸುರಮೂಲ ಮಾಲಿಂಗ ೫
ಪ್ರಣವ ರೂಪಕ ಪಾರ್ವತಿ ಮಾಲಿಂಗ
ತ್ರಿಣಯ ಗಣಸೇವಪರ ಧಣುರೆ ಮಾಲಿಂಗ
ಫಣಿ ಫಣ ಮಣಿ ಕರ್ಣಾಭರಣ ಮಾಲಿಂಗ
ಅಣುಮಹಾರೂಪ ಗುಣನಿಧಿಯೆ ಮಾಲಿಂಗ ೬
ಪಂಥ ಬೇಡೆನ್ನೊಳು ನಿಶ್ಚಿಂತ ಮಾಲಿಂಗ
ಸಂತತ ಸಲಹೆನ್ನ ಕಾಂತ ಮಾಲಿಂಗ
ಅಂತರಾತ್ಮಕನಾದ ಶಾಂತ ಮಾಲಿಂಗ
ಚಿಂತಿತಾರ್ಥವ ತೋರುವಂಥ ಮಾಲಿಂಗ ೭
ಬೇಡಿದ ವರಗಳ ನೀಡೊ ಮಾಲಿಂಗ
ರೂಢಿಯ ಒಡೆಯ ಮಾತಾಡೊ ಮಾಲಿಂಗ
ಮಾಡಿದ ಸೇವೆಯ ನೋಡೊ ಮಾಲಿಂಗ
ಜೋಡಾಗಿ ನಿನ್ನೊಳು ಕೂಡೊ ಮಾಲಿಂಗ ೮
ಭೂಮಿಗೆ ವರಾಹತಿಮ್ಮಪ್ಪನಂತೆ
ಗ್ರಾಮ ಮಂದಿರದೊಳು ನೆಲಸಿಹನಂತೆ
ಪ್ರೇಮದಿ ಅದನೆಲ್ಲ ಕಡಿದುಕೊಡುವಂತೆ
ಈ ಮಹಾ ಮಾಲಿಂಗ ಸ್ವಾಮಿ ದಯವಂತೆ ೯

 

೬೦
ಸುಮ್ಮನೊಲಿವನೆ ಪರಬೊಮ್ಮನಾದ
ತಿಮ್ಮರಾಯ ಸುಮ್ಮನೊಲಿವನೆ ಪ
ಮಂದವಾರ ದಿವಸದಲ್ಲಿ
ಮಿಂದು ಮಡಿಯನುಟ್ಟುಕೊಂಡು ಗೋ
ವಿಂದ ಎನುತ ನಾಮವಿಕ್ಕಿ
ವಂದನೆಯ ಮಾಡದನಕ ೧
ಗರ್ವವನು ಉಳಿದು ಮನದಿ
ಸಾರ್ವಭೌಮನನ್ನು ನೆನೆದು
ನಿರ್ವಹಿಸಿ ಶೇಷನು ಸುತ್ತಿದ
ಪರ್ವತವನ್ನು ಏರದನಕ ೨
ಕಾಸು ದುಡ್ಡು ಚಕ್ರ ನಾಣ್ಯ
ವೀಸವುಳಿಯದಂತೆ ಬಡ್ಡಿ
ವಾಸಿಯಿಕ್ಕಿ ಗಂಟ ಕಟ್ಟ
ಈಸುಕೊಂಡು ಸೂಸದನಕ ೩
ದೇಶ ದೇಶದಿಂದ ಕಪ್ಪ
ಗಾಸಿಯಾಗದಂತೆ ತರಿಸಿ
ಕೋಶಕಿಕ್ಕಿ ಕೊಂಬ ಲಕ್ಷ್ಮಿಯ
ಈಶನನ್ನು ನೆನೆಯದನಕ ೪
ಗುಡವ ಕದಡಿಕೊಂಡು
ಸಂಗಡ ಕಡಲೆಯನ್ನು ನೆನಸಿಯಿಟ್ಟು
ಒಡೆದ ನಾರಿಕೇಳವು ಸಹಿತ
ಒಡೆಯಗೆಂದು ಇಡದ ತನಕ ೫
ಆಶಾಪಾಶವನ್ನು ಬಿಟ್ಟು
ದೇಶವನ್ನು ತೊಳಲಿ ಬಳಲಿ
ಕೇಶವಾದಿ ನಾಮದೊಳಗೆ
ವಾಸುದೇವನ ನೆನೆಯದನಕ ೬
ಸೃಷ್ಟಿಪಾಲ ಮೆಟ್ಟಿದಂಥ
ಬೆಟ್ಟವನ್ನು ಏರಿ ಹೋಗಿ
ದೃಷ್ಟಿಯಲ್ಲಿ ವರಾಹ ತಿಮ್ಮ
ಶೆಟ್ಟಿಯನ್ನು ನೋಡದನಕ ೭

 

೧೦೦
ಸುಲಭದ ಮಾತಿದು ತಿಳಿದು ಪೇಳಿ
ಹೊಲಬುದಪ್ಪಲು ಬೇಡ ಸುಲಿಗೆಯಾಹುದು ಮುಂದೆ ಪ
ಅಂತರಿಕ್ಷದಲೊಂದು ನಿಂತಿಹ ವೃಕ್ಷವಾ-
ನಂತಾನಂತವಾದೆಲೆಗಳುಂಟು
ನಿಂತಿಹ ಎಲೆಗಳು ಬೀಳುವುದನು ನೋಡಿ
ಮಂತ್ರಿಯೊಬ್ಬನು ಕುಳಿತು ಎಣಿಸುವನಯ್ಯ ೧
ಭೂಮಿಯ ಮೇಲೊಂದು ಭೂಮಿಯು ಜನಿಸಲು
ತಾ ಮನಸೋತನು ದೊರೆಯೊಬ್ಬನು
ಪ್ರೇಮದಿ ರಾಜ್ಯವನಾಳುವ ಸಮಯಕ್ಕೆ
ಸೀಮೆಯ ಮೇಲೆಲ್ಲ ಗುಡಿಗಟ್ಟಿತಯ್ಯ ೨
ಕಡಗೋಲು ಮಿಡುಕಿತು ಒಡೆಯಿತು ಪಾತ್ರವು
ಪಿಡಿದ ಬೆಣ್ಣೆಯೊಳೊಂದು ಗಿಡ ಹುಟ್ಟಿತು
ಅಡವಿಯ ಮಧ್ಯದಿ ಹುಟ್ಟಿದ ಗಿಡವಿನ
ಎಡೆಯೊಳು ಗಿಣಿ ಬಂದು ಮರಿಯಿಕ್ಕಿತಯ್ಯ ೩
ಬಿಲ್ಲುಗಾರನು ಬಂದು ಬಲ್ಲಿದ ಪಕ್ಷಿಯ
ಮೆಲ್ಲನೆ ಕೆಡೆಯಲು ಬೇಕೆನುತ
ನೆಲ್ಲಿಯ ಎಲೆಯನ್ನು ಎಣಿಸಿ ಬೀಸಾಡುವ
ನಲ್ಲನೊಬ್ಬನು ಕಂಡು ಹೊರಗಿಟ್ಟನಯ್ಯ ೪
ಗುಡಿಯ ಬಾಗಿಲ ಮುಂದೆ ವೃಕ್ಷದ ಗಿಣಿಯನ್ನು
ಮಡದಿಯೋರ್ವಳು ಕಂಡು ಒಳಗಿಟ್ಟಳು
ಗಿಡುಗನ ಹಾವಸೆ ಒಡೆಯನು ಕಾಣುತ್ತ
ಒಡಲಾಳು ಸುರಭಿಯ ಕಟ್ಟಿದನಯ್ಯ ೫
ಮೂಗನು ಕಾಣುತ್ತ ಕೂಗ್ಯಾಡಿ ಕರೆಯಲು
ಆಗಲೇ ಕಿವುಡನು ಧ್ವನಿಯ ಕೇಳಿ
ಬೇಗದಿ ಕುರುಡನು ಬಂದು ಹಾಲೆರೆಯಲು
ಆಗಲೆ ಪಕ್ಷಿಯು ಉಂಡು ಹಾರಿತಯ್ಯ೬
ಬುದ್ದಿಹೀನನು ಕಂಡು ಶುದ್ಧ ಸ್ವಾಮಿಯೊಳು
ತಿದ್ದಿದ ಗುಡಿಗಳು ಬಿದ್ದಮೇಲೆ
ಎದ್ದು ಪಕ್ಷಿಯು ಹೋಗಿ ವರಾಹತಿಮ್ಮಪ್ಪನು
ಇದ್ದಲ್ಲಿಗಾಗಿಯೆ ಹಾರಿಹೋಯಿತಯ್ಯ ೭

 

೧೧೦
ಸ್ಮಾರ್ತರು ನಾಮವ ಧರಿಸಿ ಯಥಾರ್ಥವು
ಹರಿನಾಮವ ಬಹಳ ವಿಸ್ತರಿಸಿ ಪ
ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ
ಚನ್ನಕೇಶವ ರಾಯನೆಂದೆಂಬ ನಾಮ
ಉನ್ನತವಾಗಿಹ ನಾರಾಯಣ ನಾಮ
ಮನ್ಮಥನಯ್ಯನ ಮಾಧವ ನಾಮವ ೧
ಅಂತರಂಗದಿ ಗೋವಿಂದನ ನಾಮವ
ಚಿಂತಿಸಿ ವಿಷ್ಣುವ ಸಿರಿ ನಾಮವ
ಸಂತತ ಮಧುಸೂದನನೆಂಬ ನಾಮವ
ಪಂಥವಿಡಿದು ತ್ರಿವಿಕ್ರಮ ನಾಮವ ೨
ಮನದೊಳು ಅನುದಿನ ವಾಮನ ನಾಮವ
ವನಜಾಕ್ಷ ಶ್ರೀಧರ ಗುಣ ನಾಮವ
ವಿನಯದಿ ಹೃಷಿಕೇಶನೆನುತಿಹ ನಾಮವ
ತನುವಾದ ಪದುಮನಾಭನ ನಾಮವ ೩
ಅಂದದೊಳು ಧರಿಸಿರುವ ದಾಮೋದರ ನಾಮ
ಚಂದದಿ ವಾಸುದೇವನ ನಾಮವ
ಕುಂದದೆ ಸಂಕರ್ಷಣನೆಂಬ ನಾಮವ
ಬಂಧನ ಪರಿಹಾರ ಪ್ರದ್ಯುಮ್ನ ನಾಮವ ೪
ಅರ್ಥಿಯಿಂದಲೆ ಅನಿರುದ್ಧನ ನಾಮವ
ಉತ್ತಮ ಪುರುಷೋತ್ತಮ ನಾಮವ
ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ
ಮೃತ್ಯುವು ಕಾಣದ ನರಹರಿ ನಾಮವ ೫
ಆಶ್ಚರ್ಯವಾಗಿಹ ಅಚ್ಯುತ ನಾಮವ
ನಿಶ್ಚಯಿಸಿ ಜನಾರ್ದನ ನಾಮವ
ಬಚ್ಚಿಡಬೇಡ ಉಪೇಂದ್ರನ ನಾಮವ
ಹಚ್ಚಿರೊ ಹರಿಯೆಂಬ ಸಿರಿ ನಾಮವ ೬
ದುಷ್ಟನಿಗ್ರಹವಾದ ಕೃಷ್ಣನ ನಾಮವ
ಬೆಟ್ಟದ ವರಾಹತಿಮ್ಮಪ್ಪನ ನಾಮವ
ಇಟ್ಟುಕೊಂಡರೆ ಅನುದಿನ ಘನ ನಾಮವ
ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ ೭

 

೬೩
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ
ಕಾಮಿತಾರ್ಥವನೀವ ಕರುಣ ಸಂಜೀವ ಪ
ಸುರರು ಅಸುರರೆಲ್ಲ ಶರಧಿಯ ಮಥಿಸಲು
ಸಿರಿಯು ಜನಿಸಿ ಬಂದು ಹರಿಯ ಸೇರಿದಳು ೧
ಪತಿ ನೀನೇ ಗತಿಯೆಂದು ಸತಿ ಕುಸುಮಮಾಲೆಯನು
ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು ೨
ವಾರಿಧಿಯಾಕ್ಷಣ ಧಾರೆಯನೆರೆಯಲು
ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು ೩
ಫಣ್ಭಿಹ್ತ್ರ೧ಸೆಮಣಿಯೊಳು ರಮಣಿಯನೊಡಗೊಂಡು
ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ ೪
ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು
ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ ೫
ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ
ಪುಣ್ಯವಂತೆಗೆ ಕೈಗರ್ಣವ ಕೊಡಲು ೬
ಮೊದಲು ಪಾದವ ತೊಳೆದು ಜಲವನ್ನು ಸಿರಿ ತನ್ನ
ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು ೭
ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ
ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ ೮
ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ
ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ ೯
ಅಭಯ ಹಸ್ತವನಿತ್ತ ತ್ರಿಭುವನದೊಡೆಯನು
ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು ೧೦
ಅತಿ ಹರುಷವ ತಾಳಿ ಸತಿ ಕೈಯ ಅರಿಶಿಣವ
ಪತಿಯಾದಿಕೇಶವನ ನುತಿಸಿ ಊರಿದಳು ೧೧
ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು
ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ ೧೨
ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು
ವೆಂಕಟೇಶನ ಕರಪಂಕಜಕೆ ತಿಮುರೆ ೧೩
ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು
ಮಧುಸೂದನ ಶ್ರೀವತ್ಸದೆದೆಯ ತೋರೆನುತ ೧೪
ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ
ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ ೧೫
ವಾಮನನನಾಗೆ ಶ್ರಮವನು ಪಟ್ಟೆನುತ
ಭೂಮಿಯ ಅಳೆದ ಪಾದವಿತ್ತಲು ತಾರೆನುತ೧೬
ಕಾದಲನು ಕಾಣುತ್ತ ಪಾದವನಿತ್ತನು
ಶ್ರೀಧರನೆನುತಲಿ ಅರಸಿನವ ತಿಮುರೆ ೧೭
ವಾಮಪಾದವ ಕಂಡು ಭಾಮಿನಿ ತಾರೆನೆಲು
ಸೋಮಸನ್ನಿಭ ಹೃಷಿಕೇಶ ತಾನಿತ್ತ ೧೮
ಪದ್ಮಬಂಧವ ತೇಜ ಪದ್ಮಸಂಭವ ಪೂಜ
ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ ೧೯
ಆ ಮಹಾ ನಾಮದ ದಾಮೋದರನ ಕಂಡು
ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು ೨೦
ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ
ಪೂಸಿದನರಿಸಿನದ ಎಣ್ಣೆಯ ಮೊಗಕೆ ೨೧
ಪಂಕಜಾಕ್ಷನ ಕಂಡು ಕಂಕಣದ ಹಸ್ತವನು
ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ ೨೨
ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ
ಉದ್ಧರಿಸಿ ನವ ಪ್ರದ್ಯುಮ್ನ ನಗುತ ೨೩
ಮುನಿಜನ ವಂದ್ಯನು ಅನಿರುದ್ಧ ನಗುತಲೆ
ಘನಕುಚಮಂಡಲಕೆ ಅರಿಸಿನವ ತಿಮುರೆ ೨೪
ಪುರುಷರೊಳು ಉತ್ತಮನು ಹರುಷವನು ತಾಳಿಯೆ
ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ ೨೫
ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ
ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ ೨೬
ನಾರಸಿಂಹನು ಸತಿಯ ಮೋರೆಯಿಂದಾರಭ್ಯ
ಓರಣವಾಗಿಯೇ ಅರಿಸಿನವ ತಿಮುರೆ ೨೭
ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ
ಆಶ್ಚರ್ಯವಾಗಿಯೆ ಅಚ್ಯುತ ಕೊಡಲು ೨೮
ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ
ತನಗೆ ವಲ್ಲಭ ನಿಜನಾದನೆನುತ ೨೯
ಆ ಪರಮಹಿಮನು ರೂಪಸಂಪನ್ನ ದ-
ಯಾಪರನಾಗಿಯೆ ಉಪೇಂದ್ರ ತಾನೊಲಿದು ೩೦
ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ
ವರಸಿದ ಶ್ರೀಹರಿಯು ಹರದಿಯರ್ಪೊಗಳೆ೩೧
ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ
ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ ೩೨
ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ
ಅರಸಿನದೆಣ್ಣೆಯ ರಚಿಸಿದ ಪರಿಯು ೩೩

 

೬೨
ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ
ಕಾಮಿತಾರ್ಥವನೀವ ಕರುಣಿ ಭೂದೇವಿ ಪ
ಹರಿಯ ಪಾದದಲುದಿಸಿ ಹರಿಗೆ ವಧುವೆನಿಸಿ
ಹರಿಗೆ ಸುತೆಯನು ಇತ್ತು ಹಿರಿಯಳಾದೆ
ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ
ಮೊರೆಹೊಕ್ಕೆ ಮರೆಯದಿರು ಕರುಣದೋರೆನಗೆ ೧
ಕ್ಷಮೆ ದಮೆಯು ಶಾಂತ ಸದ್ಗುಣವೊಪ್ಪುವಳೆ ನಿನಗೆ
ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು
ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು
ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ ೨
ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು
ಉನ್ನಂತ ರತುನಗಳು ನಿನ್ನೊಳಡಗಿಹವು
ಅನ್ನ ಪಾನಂಗಳಿಗೆ ಬೀಜ ಮೂಲವೆ ನೀನು
ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ ೩
ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ
ಒಬ್ಬನಿಗೆ ಮೈಯ ನೀನು ಕೊಡುವೆ
ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ
ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ ೪
ಅಂಬುಧಿಯೆ ವಸನಗಳು ಕುಂಭ ಕುಚಗಳೆ ಗಿರಿಯು
ಸಂಭ್ರಮದ ನದಿ ಕಾಲುವೆ ನಿನ್ನ ಬೆವರುಗಳು
ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ
ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ ೫
ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ
ನೋಡದಿರು ಅವಗುಣವ ರೂಢಿ ದೇವತೆಯೆ
ಮಾಡು ದಯವನು ನೀನು ಮನದಭೀಷ್ಟವನೆಲ್ಲ
ಪಾಡು ಪಂಥವು ಬೇಡ ಪಡೆದ ಮಗನೊಡನೆ ೬
ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು
ಇಂಬಾದ ಪದವಿಯನು ಸಂಭ್ರಮದಿ ಕೊಡುತ
ಬೆಂಬಡದೆ ವರಾಹತಿಮ್ಮಪ್ಪ ಕರುಣದಲಿ
ಹಂಬಲಿಪ ತೆರದಿಂದ ಸಲಹುವುದು ಜಗದಿ ೭

 

ಉ. ತತ್ವ ವಿವೇಚನೆ
೯೧
ಹರಿಯಾದರೇನು ತಾ ಹರನಾದರೇನು
ಎರಕ ತಪ್ಪಿದ ಮೂರ್ತಿ ದೊರಕಿ ಫಲವೇನು ಪ
ಪಿತನೊಳಗೆ ಸೇರದಿಹ ಸುತನಿಂದ ಫಲವೇನು
ಪತಿಸೇವೆಗೊದಗದಿಹ ಸತಿ ಇದ್ದರೇನು
ಮತಿಹೀನ ಗುರು ತಾನು ಜೊತೆಯಾಗಿ ಇದ್ದರೇನು
ಮತ ಮೀರಿ ನಡೆವಾತ ಯತಿಯಾದರೇನು ೧
ಸಾಯವಿಲ್ಲದ ನ್ಯಾಯ ಸತ್ಯವಾದರೆ ಏನು
ಬಾಯಸವಿಯಿಲ್ಲದ ರಸಾಯನದಲೇನು
ಕಾಯ ಕುಂದಿದ ಮೇಲೆ ಜೀವದಾಶೆಯದೇನು
ಮಾಯವಾದಿಯ ಮಾತು ಮತ್ತೆ ದೃಢವೇನು ೨
ಋಣವ ಮಾಡಿದ ತಾತ ಗುಣವಂತನಾದರೇನು
ಭಣಿತೆ ತಪ್ಪಿದ ತಾಯಿ ರಕ್ಷಿಣಿಯು ಆದರೇನು
ಎಣಿಕೆ ಬಾರದ ಮನುಜ ಕರಣಿಕನಾದರೇನು
ಫಣಿರಾಜನೊತ್ತಿನೊಳು ಹಣವಿದ್ದರೇನು ೩
ಕ್ರೋಧನಾಗಿಹ ವಿಪ್ರ ವೇದ ಓದಿದರೇನು
ಮಾದಿಗನು ತಾ ಮಡಿಯನುಟ್ಟರೇನು
ಬೂದಿಮುಚ್ಚಿದೆ ಕೆಂಡವಾದ ಸೋದರವೇನು
ಸಾಧಿಸುವ ಊರೊಳಗೆ ಆದ ಫಲವೇನು ೪
ಹರಿಯನರ್ಚಿಸದಿರ್ದ ಕರವಿರ್ದು ಫಲವೇನು
ಹರಿಯ ಸ್ಮರಣೆಯ ಮಾಡದರಿಯದವನೇನು
ಸಿರಿಯು ನಿಲ್ಲದ ಗೃಹದ ಪರಿಯ ಸೌಖ್ಯವದೇನು
ಮರೆಯಾದ ಮನುಜನೊಳು ವ್ಯವಹಾರವೇನು ೫
ವಾರಿಯಿಲ್ಲದ ಊರ ಸೇರಿರ್ದು ಫಲವೇನು
ಚೋರನೊಡನೇ ದಾರಿ ನಡೆವುದೇನು
ಬೇರು ಇಲ್ಲದ ವೃಕ್ಷ ಏರಿ ನೋಡುವುದೇನು
ಮಾರಿ ಮನೆಯೊಳಗಿರಲು ಸಾಕಾರವೇನು ೬
ಲಕ್ಷಣದ ಮೂರ್ತಿಯಿರಲಕ್ಷಯವ ತೋರುವುದು
ಪಕ್ಷಿವಾಹನ ಲಕ್ಷ್ಮ್ಯಪೇಕ್ಷೆಯಾಗಿಹರು
ಲಕ್ಷಣವಿರಹಿತ ನರ ಪ್ರದಕ್ಷಿಣದಿ ಬಳಲಿದರು
ಭಿಕ್ಷುಕನೇ ಸರಿಯಾತನೀಕ್ಷಿಸರು ಜನರು ೭
ಬುದ್ದಿವಂತರ ಕೈಯ ಶುದ್ಧವಾದೆರಕದಲಿ
ತಿದ್ದಿರ್ದ ಮೂರ್ತಿಯನು ಕದ್ದುಕೊಂಡು
ಹೊದ್ದಿ ಬಲವಂತನೊಳು ಬದ್ದವಾಗಿರುತಿರ್ದು
ಎದ್ದು ಹೋಗದ ಸ್ಥಳದಿ ಮುದ್ದನಾಗಿಹುದು ೮
ಕಾಮಿತಾರ್ಥನೀವ ಸೀಮೆಯಲಿ ಕೌರವನು
ರಾಮರಾಜ್ಯದಿ ಬೇಡಿಕೊಳಲು ಕೊಡುತಿಹನು
ಪ್ರೇಮದೊಳು ವರಾಹತಿಮ್ಮಪ್ಪ ಮನದಣಿಯೆ
ಸೌಮನಸ್ಯವೀವ ಬರಿದೆ ಬಳಲದಿರು ೯

 

ಧನವು ಇದ್ದರೆ ಸಾಕು
೮೫
ಧನವು ಇದ್ದರೆ ಸಾಕು ಜನರಿಗೆ
ಧನವು ಇದ್ದರೆ ಸಾಕು ಪ
ಧನದೋರದಾತಗೆ ಗುಣವಿಲ್ಲವನುದಿನ
ಧನವಿಲ್ಲದಾತನು ವನದ ಪಾಮರನು ಅ.ಪ
ತಂದೆ ತಾಯಿಗಳಿಲ್ಲ ಬಂಧುಬಾಂಧವರಿಲ್ಲ
ಹಿಂದುಮುಂದುದಿಸಿದ ತಮ್ಮಂದಿರನೊಲ್ಲ ೧
ಒಡವೆಯುಳ್ಳಾತಗೆ ನಡೆಯಬಾರದು ಕಾಲು
ನಡೆವಾಗ ಬಡವರ ಎಡವುತ್ತ ಕಾಣನು ೨
ಅರ್ಥವ ಪುಂಜಕನರ್ಥ ಯಥಾರ್ಥವು
ಧೂರ್ತನಾದರು ತಾನು ಕೀರ್ತಿಸಿಕೊಂಬನು ೩
ಸೆಡವೆಂಬ ಪುತ್ರನು ಒಡಲೊಳು ಜನಿಸುವ
ಮಡದಿ ಗರ್ವಿತೆಯಾಗಿ ಪಿಡಿದಳು ಕರವನು ೪
ಉತ್ತಮೋತ್ತಮನಾಗಿ ಅಧಮನುತ್ತಮನಪ್ಪ
ಮೃತ್ಯುಮಾನಿನಿ ವ್ಯರ್ಥ ಮಗನ ಪಡೆಯುವಳು ೫
ಉಡಿಗೆ ಆಭರಣಕ್ಕೆ ನುಡಿಯಬಾರದು ಬಾಯಿ
ಕಿಡಿಯಿಡೆ ಕಂಗಳು ಜಡದ ಕರ್ಣಗಳು ೬
ಕಟ್ಟಲು ಅರ್ಥವ ಹೊಟ್ಟೆಯೊಳು ಹಸುವಿಲ್ಲ
ಭ್ರಷ್ಟ ಅನಾಥರ ಶ್ರೇಷ್ಠ ಸೃಷ್ಟಿಯೊಳಾತ ೭
ಬಡಮನಸಾಗಿಯೆ ನುಡಿಯ ಬಂದವನೊಳು
ಸಡಗರದಿಂದಲೆ ಸೆಡಕ ತೋರುವನು ೮
ಅರಸು ಆತನ ಕಂಡು ಕರೆಸಿ ಉಚಿತವಿತ್ತು
ಸರಸವನಾಡಿ ವಿಹರಿಸುತ್ತಲಿಹನು ೯
ಫಣಿಗಿರಿಯೊಳು ನಿಂತ ವರಾಹತಿಮ್ಮಪ್ಪನು
ಹಣವನಿತ್ತವರಿಗೆ ಉಣಿಸುವಭೀಷ್ಟವ ೧೦

 

ಹಾಡಿನ ಹೆಸರು :ಧನವು ಇದ್ದರೆ ಸಾಕು
ಹಾಡಿದವರ ಹೆಸರು :ಅಜಯ್ ವಾರಿಯರ್
ರಾಗ : ಶಿವರಂಜನಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಗಿರಿಧರ ದಿವಾನ್
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಿನ್ನ ನಂಬಿದೆ ನಾನು
೭೩
ನಿನ್ನ ನಂಬಿದೆ ನಾನು ಎನ್ನ ನೀ ಸಲಹೋ
ಪನ್ನಗಾಶಯನ ಹರಿ ವೆಂಕಟರಮಣ ಪ
ವರ ಧ್ರುವನ ಪೊರೆದಂತೆ ಪ್ರಹ್ಲಾದಗೊಲಿದಂತೆ
ಕರಿಯ ಸಲಹಿದಂತೆ ಕರುಣವಿರಲಂತೆ ೧
ತರಳೆ ದ್ರೌಪದಿಯ ಅಭಿಮಾನ ಕಾಯ್ದಂತೆ
ಧುರದೊಳು ನರನ ಶಿರವ ಉಳುಹಿದಂತೆ ೨
ಶೇಷಾದ್ರಿವಾಸ ಜಗದೀಶ ಲಕ್ಷ್ಮೀಶ
ಕ್ಲೇಶಪಾಶ ವಿನಾಶ ಜನಪೋಷ ವೇಂಕಟೇಶ ೩
ಪರಮ ಮಂಗಳಮೂರ್ತಿ ಪಾವನ ಕೀರ್ತಿ
ಧರೆಯ ರಕ್ಷಿಪ ಅರ್ತಿ ದಯವಾಗು ಪೂರ್ತಿ ೪
ಮಕರ ಕುಂಡಲಧರ ಮಕುಟ ಕೇಯೂರ
ಸಕಲಾಭರಣ ಹಾರ ಸ್ವಾಮಿ ಉದಾರ ೫
ತಾಳಲಾರೆನು ನಾನು ಬಹಳ ದಾರಿದ್ರ್ಯ
ಕೇಳುವರಿಲ್ಲ ಬಹು ಭವಭಯ ಕ್ಷುದ್ರ ೬
ನೋಡಬೇಡೆನ್ನವಗುಣವ ದಮ್ಮಯ್ಯ
ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ ೭
ಭಕ್ತಜನ ಸಂಸಾರಿ ಬಹುದುರಿತ ಹಾರಿ
ಮುಕ್ತಿದಾಯಕ ದಾರಿ ಮುಂದೆ ನೀ ತೋರಿ೮
ವರಾಹತಿಮ್ಮಪ್ಪ ಒಲವಾಗೆನ್ನಪ್ಪ
ಸಾರಿದವರ ತಪ್ಪ ಸಲಹೊ ನೀನಪ್ಪ ೯

 

ಹಾಡಿನ ಹೆಸರು :ನಿನ್ನ ನಂಬಿದೆ ನಾನು
ಹಾಡಿದವರ ಹೆಸರು : ಹೇಮಂತ್
ರಾಗ :ಷಣ್ಮುಖಪ್ರಿಯ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಗಿರಿಧರ ದಿವಾನ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನೀನೆ ಗುರುವಾಗೆನಗೆ
೮೭
ನೀನೆ ಗುರುವಾಗೆನಗೆ ಕೋನೇರಿವಾಸ
ಜ್ಞಾನವಿಲ್ಲದ ಮನುಜ ತಾನಿದ್ದು ಫಲವೇನು ಪ
ನಾಳವಿಲ್ಲದ ಘಂಟೆ ಭಾರವಾಗಿದ್ದರೇನು
ತೋಳ ಬಲಹಿಲ್ಲದವ ದೊರೆಯಾದರೇನು
ಹಾಳು ಭೂಮಿಯು ತನ್ನ ಮೂಲವಾದರೆಯೇನು
ಬಾಳಲೀಸದ ಮನೆಯ ಬಲವಂತವೇನು ೧
ತಿದ್ದಬಾರದ ತೇಜಿ ಉದ್ದವಾಗಿದ್ದರೇನು
ಬಿದ್ದ ಪೂಜೆಯ ಮೂರ್ತಿ ಮುದ್ದಾದರೇನು
ಕದ್ದ ಕಳ್ಳನ ಮಾತು ಬದ್ಧವಾದರೆಯೇನು
ಮದ್ದನರಿಯದೆ ಧಾತು ತಿಳಿದಿದ್ದರೇನು ೨
ಗೊಡ್ಡು ದನವಿನ ಕ್ರಯವು ಅಡ್ಡವಾದರೆಯೇನು
ಬಡ್ಡು ಅರಸಿನ ಬಂಟನೊಡ್ಡೊಕ್ಕರೇನು
ಹೆಡ್ಡನಾದವ ಬಹಳ ಗಡ್ಡವಿರಿಸಿದರೇನು
ಕಡ್ಡಾಯದಂಗಡಿಯಲಿದ್ದು ಫಲವೇನು೩
ಒಕ್ಕಲಿಲ್ಲದ ಊರು ಮಕ್ಕಳಿಲ್ಲದ ಮನೆಯು
ಅಕ್ಕರಿಲ್ಲದ ತವರು ಇದ್ದು ಫಲವೇನು
ಚೊಕ್ಕ ಹೆಂಡತಿಯವಳ್ಗೆ ತಕ್ಕ ವರನಿಲ್ಲದಿರೆ
ಕುಕ್ಕೆ ತುಂಬಿದ ರೊಕ್ಕವಿದ್ದು ಫಲವೇನು ೪
ಬಡಿಗೆಯಿಲ್ಲದೆ ಚಿನ್ನ ಕಡಗವಾಗುವುದೇನೊ
ಪೊಡವಿ ಕಡಿಯದೆ ಬೆಳೆಯ ನೆಡುವುದೇನೊ
ಕಡಗೋಲು ಹೊರತಾಗಿ ಬೆಣ್ಣೆ ತೋರುವುದೇನೊ
ತುಡುಬು ಬಡಿಯದೆ ಧ್ವನಿಯ ಕೊಡುವುದೇನೊ ೫
ಅಡವಿಯೊಳಗಿಹ ವೇಣು ತಿದ್ದಿದರೆ ಮೈಗೊಟ್ಟು
ಕಡುಹುಳ್ಳ ದೊರೆಗಳನು ಹೊರವುತಿಹುದು
ಬಿಡದೆ ಶುಕ ಪಕ್ಷಿಯನು ಅಡಗಿಸಿಯೆ ಹಾಲೆರೆದು
ಒಡನೆ ಹೇಳಿದ ನುಡಿಯ ತಾ ನುಡಿವುದು ೬
ಒಡವೆಯಿದ್ದರೆ ಬಂಟ ಬಿಡದೆ ಸೇವೆಯ ಮಾಳ್ಪ
ಮಡದಿ ತಾ ಚೆಲುವಾಗಿ ಅಡಿಗೆ ಮಾಡುವಳು
ಕಡೆಯ ಕಾಲಕೆ ತನ್ನ ದೃಢ ಬುದ್ಧಿ ಹಿಂಗುವುದು
ಒಡೆಯನನು ಭಜಿಸಲಿಕೆ ಮನವಿಲ್ಲವು ೭
ಗುರುವಾಗು ಇಹಪರಕೆ ಸ್ಥಿರವಾದ ಸೌಖ್ಯವನು
ಒರೆದು ಮಾರ್ಗವ ತೋರು ಉರಗಗಿರಿವಾಸ
ಗುರುವೆಂದು ಭಾವಿಸಿಯೆ ಕರಮುಗಿದು ಶಿರಬಾಗಿ
ಸರಸಿಜಾಂಘ್ರಿಯ ನೆನೆವೆ ವರಾಹತಿಮ್ಮಪ್ಪ ೮

 

ಹಾಡಿನ ಹೆಸರು :ನೀನೆ ಗುರುವಾಗೆನಗೆ
ಹಾಡಿದವರ ಹೆಸರು : ಹೇಮಂತ್
ರಾಗ :ಹಿಂದೋಳ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಗಿರಿಧರ ದಿವಾನ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬಲ್ಲರೊಳು ಸಲ್ಲದೈ
೮೯
ಬಲ್ಲರೊಳು ಸಲ್ಲದೈ ಖುಲ್ಲ ಮಾತುಗಳು
ನಿಲ್ಲದಾಯುಷ್ಕೀರ್ತಿ ಎಲ್ಲರೊಳು ಕೇಳಿ ಪ
ಅರಸು ಸಣ್ಣವನೆಂದು ಸರಸವಾಡಲು ಸಲ್ಲ
ಕರೆಸಿ ಕೇಳದ ಮಾತು ಆಡಸಲ್ಲ
ಪರಸಖರ ಮನೆಯೊಳಗೆ ಇರಿಸಿಕೊಂಡಿರ ಸಲ್ಲ
ಬೆರೆಸಿ ಬಹ ಪಾತಕರ ಅರಸುವರೆ ಸಲ್ಲ ೧
ಹಗಲು ಕಳ್ಳನ ಕೈಯ ಜಗಳವಾಡಲು ಸಲ್ಲ
ಹಗೆಯೊಡನೆ ಸ್ನೇಹವನು ಮಾಡಸಲ್ಲ
ಜಗಳಗಂಟಿಕ್ಕುವನ ಮೊಗದೊಳಗೆ ನಗೆಯಿಲ್ಲ
ಅಗಲಿ ಪೋಗುವೆನೆಂಬ ಮಗ(ನು) ಸೊಗ(ಸ)ಲ್ಲ ೨
ಒಡೆಯನಿಲ್ಲದ ಊರು ಬಡವರಿಗೆ ಅಳವಲ್ಲ
ಕಡು ಚೆಲ್ವೆ ಕುರುಡನಿಗೆ ಮಡದಿಯಹ ಸಲ್ಲ
ನುಡಿಯ ತಿಳಿಯದೆ ಇಹನ ಸಾಕ್ಷಿಯನು ಇಡ ಸಲ್ಲ
ದೃಢವಾದ ಮೂರ್ಖನೊಳು ಕದನ ಮಾತಿಲ್ಲ ೩
ಹರಿದಾಸರೆನಿಸಿದರೆ ಪರಗತಿಯೊಳೆರವಿಲ್ಲ
ಗುರುಹಿರಿಯರಾದವರ ಜರೆಯ ಸಲ್ಲ
ಕರಕರೆಯ ಬದುಕಿನೊಳು ಬರುವ ಉಡುಗೊರೆಯಿಲ್ಲ
ಮರೆವಿನೊಳು ಹಗೆಯುರಗ ಗೆಲುವ ಪರಿ ಸಲ್ಲ ೪
ಹರಿಯು ಮುನಿದರೆ ಮರೆಯೊಳಿರಿಸಿ ಕೊಂಬುವರಿಲ್ಲ
ಹರಿಯೊಲಿದ ನರನೊಳಗೆ ಗೆಲುವ ಪರಿಯಿಲ್ಲ
ಸಿರಿಯರಸ ವರಾಹ ತಿಮ್ಮಪ್ಪನಿರಲು ಬಲ್ಲ
ನರನು ಹರಿದೂಷಕರ ಸರಿಯೊಳಗೆ ನಿಲ್ಲ ೫

 

ಹಾಡಿನ ಹೆಸರು : ಬಲ್ಲರೊಳು ಸಲ್ಲದೈ
ಹಾಡಿದವರ ಹೆಸರು :ಶಂಕರ್ ಎಸ್.
ರಾಗ :ತಿಲಂಗ್
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಗಿರಿಧರ ದಿವಾನ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಯಾರಿಗೆ ದೂರುವೆನು ಗಿರಿಯ
೭೭
ಯಾರಿಗೆ ದೂರುವೆನು ಗಿರಿಯ ರಾಯ
ಯಾರೆನ್ನ ಸಲಹುವರು ಪ
ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ
ವಾರಿಜವನು ತೋರಿ ಕಾರುಣ್ಯವೆನಗೀಯೊ ಅ.ಪ
ಕಷ್ಟ ಜನ್ಮದಿ ಬಂದೆನು ಧಾರುಣಿಯೊಳು
ದುಷ್ಟರಿಂದಲೆ ನೊಂದೆನು
ನಿಷ್ಟುರ ಬೇಡವೊ ನಿನ್ನ ನಂಬಿದ ಮೇಲೆ
ಸೃಷ್ಟಿಪಾಲಕ ಎನ್ನ ಬಿಟ್ಟು ಕಳೆಯಬೇಡ ೧
ಹಿಂದೆ ಮಾಡಿದ ಕರ್ಮವು ಈ ಭವದೊಳು
ಮುಂದಾಗಿ ತೋರುತಿದೆ
ಇಂದಿಲ್ಲ ಗತಿಯದರಿಂದ ನೊಂದೆನು ನಾನು
ಮಂದರಧರ ಗೋವಿಂದ ನೀನಲ್ಲದೆ ೨
ಹಗಲುಗತ್ತಲೆ ಸುತ್ತಿಯೆ ಕಂಗೆಡಿಸುತ್ತ
ಹಗೆಯೊಳು ನಗಿಸುತಿದೆ
ಉಗುರಿನಸಿಗಿಗೆ ಮಚ್ಚುಗಳೀಗ ನಾಟ್ಯವು
ಸೊಗಸು ಹಾರಿಸಿ ಎದೆ ದಿಗಿಲುಗೊಳಿಸುತಿದೆ ೩
ಬಾಡಿದ ಅರಳಿಯನು ಕಲ್ಲೀನ ಮೇಲೆ
ಈಡಾಗಿ ನಟ್ಟಿದರೆ
ಬೇಡಿಕೊಂಡರೆ ತಳಿರ್ಮೂಡಿ ಬರುವುದುಂಟೆ
ರೂಢಿಗೊಡೆಯ ನೀನು ನೋಡದಿದ್ದರೆ ಮೇಲೆ ೪
ಹಲವು ಪರಿಯ ಕಷ್ಟವ ನಿನ್ನಯ ಪದ
ಜಲಜದ ಕರುಣದಲಿ
ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ
ಒಲವಾಗೆನ್ನೊಳು (ವರಾಹತಿಮ್ಮಪ್ಪ) ೧೫

 

ಹಾಡಿನ ಹೆಸರು :ಯಾರಿಗೆ ದೂರುವೆನು ಗಿರಿಯ
ಹಾಡಿದವರ ಹೆಸರು :ಶಂಕರ್ ಎಸ್.
ರಾಗ : ಸಿಂಧುಭೈರವಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಗಿರಿಧರ ದಿವಾನ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಸಲಹಿಕೊಂಬವರಿಲ್ಲ
ಸಲಹಿಕೊಂಬವರಿಲ್ಲವೋ ವೆಂಕಟರಾಯ
ಗೆಲುವ ಪರಿಯ ಕಾಣೆನು ಪ
ಛಲವೇಕೋ ನಿನಗಿಷ್ಟು ಹೊಲಬುದಪ್ಪಿದ ಮೇಲೆ
ಫಲವಿತ್ತು ಕರುಣದಿ ಕುಲವೃಕ್ಷವನು ಕಾಯೋ ಅ.ಪ
ಅರಳಿಯ ವೃಕ್ಷದೊಳು ಆನೆಯ ತಂದು
ಸ್ಥಿರವಾಗಿ ಕಟ್ಟಿದಂತೆ
ದುರುಳರು ಬಂದೆನ್ನ ಕೊರಳು ಕೊಯ್ದೀಗ
ಬರಿದೆ ನುಂಗುವ ಪರಿ ಇರವ ಕಾಣುತ ಮುಂದೆ ೧
ಮಾಡಿದ ಉಪಕಾರವ ಮರೆತು ಮುಂದೆ
ಕೇಡನು ನೆನೆವರಿಗೆ
ನೋಡಿದೆ ಯಾತಕೆ ಮಾಡದೆ ಶಿಕ್ಷೆಯ
ಆಡಿದೆ ನಿನ್ನೊಳು ಬೇಡ ಇನ್ನವರೊಳು ೨
ವಾರಿಧಿ ತೀರದಲಿ ನೆಲ್ಲನು ತಂದು
ಹಾರಿಸಿ ಬಿತ್ತಿದಂತೆ
ನೀರು ನಿಲ್ಲದ ಭವ ಘೋರ ಕಾನನದೊಳು
ಸೂರೆವೋದೆನು ನಿನ್ನ ಮಾರಿಹೋದೆನು ಎನ್ನ ೩
ಒದಗಿದ ನ್ಯಾಯದಲಿ ಇದಿರು ಬಂದು
ಕದನವ ಕಟ್ಟುತಲೆ
ಬೆದರುಗೊಳಿಸಿ ಎನ್ನ ಸದನಕ್ಕೆ ಮುನಿವುದ
ಅದನೆಲ್ಲ ಚರಣದ ಪದುಮಕ್ಕೆ ಅರುಹುವೆ ೪
ನೊಂದೆನು ಬಹಳವಾಗಿ ಈ ಭವದ
ಸಿಂಧುವ ದಾಟಿ ಹೋಗಿ
ಚಂದದಿ ನಿನ್ನಯ ಚರಣಾರವಿಂದವ
ಎಂದಿಗೆ ತೋರ್ಪೆಯೊ ವರಾಹತಿಮ್ಮಪ್ಪ ೫

 

ಹಾಡಿನ ಹೆಸರು :ಸಲಹಿಕೊಂಬವರಿಲ್ಲ
ಹಾಡಿದವರ ಹೆಸರು :ಅಜಯ್ ವಾರಿಯರ್
ರಾಗ :ಷಣ್ಮುಖಪ್ರಿಯ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :
ಗಿರಿಧರ ದಿವಾನ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *