Categories
ರಚನೆಗಳು

ವರಾವಾಣಿರಾಮರಾಯದಾಸರು

೨೭೮
ಅಗಲಿರಲಾರೆನೊ ಹರಿಯೆ ನಿನ್ನನು ಪ
ಹಗಲು ಇರಳು ಸಮ್ಮೊಗದಲಿರುತಿಹ
ಮಿಗೆ ಭಾಗ್ಯವ ಕೊಡೊ ನಗೆಮೊಗದರಸನೆ ಅ.ಪ.
ಅನುದಿನ ನಿನ್ನಯ ಚರಣ ವನಜಕೆ
ಮಣಿಯುವುದೆನಗಾಭರಣ
ಅನಿಮಿಷರೊಡೆಯನೆ ಅನಿಮಿತ್ತ ಬಂಧುವೆ
ಪ್ರಣತ ಜನ ಮಂದಾರ ಮುಕುಂದನೇ ೧
ಮಾರ ಜನಕ ಎನ್ನ ಕರುಣದ
ಪಾರ ಪ್ರಭುವರೇಣ್ಯ
ಸಾರಸನಯನ ಉದಾರ ಹೃದಯ ಗಂ
ಭೀರ ಗುಣಾಂಬುಧಿ ಸಾರಸನಾಭನೇ ೨
ಮಂಗಳಾಂಗ ಹರಿಯೇ- ತವಪದ
ಭೃಂಗನೆನಿಸೊ ದೊರೆಯೆ
ತುಂಗವಿಕ್ರಮನೆ ರಥಾಂಗ ಪಾಣಿ ಭವ
ಭಂಗ ಕರಿಗಿರಿ ನೃಸಿಂಗ ಶುಭಾಂಗನೆ ೩

 

ಅಪರಾಧ ಕ್ಷಮಿಸಿ ನೀ ಕೃಪೆಯಿಂದ ಸಲಹಯ್ಯ
ಸುಪವಿತ್ರ ಗಾತ್ರ ಸಾರಸ ನೇತ್ರ ಪ
ಉಪಕಾರವಾಯಿತು ನೀ ಗೈದ ಶಿಕ್ಷೆಯು
ವಿಪರೀತ ಮತಿ ಭ್ರಾಂತಿ ಪರಿಹಾರವಾಯಿತು ಅ.ಪ.
ಜಗವ ಸೃಷ್ಟಿಪೆ ನೀನು ಜಗದ ನಿಯಾಮಕ
ಬಗೆಯಲು ಸೂತ್ರಧಾರಿಯು ನೀನೆ
ತೊಗಲು ಬೊಂಬೆಗಳಂತೆ ನೀ ಕುಣಿಸುವೆ ಜಗವ
ಬಗೆ ತಿಳಿಯದೆ ಜನರು ಬಯಲು ಭ್ರಾಂತಿಯಿಂದ
ಮಿಗೆ ಕರ್ತೃತ್ವವ ತಮ್ಮಲಿ ತಿಳಿಯುತ
ಹಗರಣ ಪೊಂದುವುದ ನೀಗಿಸುವುದು
ಬಗೆಯೆ ನಿನ್ನ ಪರಮಾನುಗ್ರಹವು
ಮುಗಿವೆ ಕರಗಳನು ಕರಿಗಿರಿನಿಲಯ ೧

ಅರಸಕೇಳಲೈ ಸರಸಿಯೊಳಗೆ ತಾ
ಸರಸವಾಡುತಾ ಕರಿವರನಿರೆ
ಪರಮ ಭೀಕರ ಪ್ರಬಲ ನಕ್ರವು
ಕರಿಯ ಕಾಲನು ಪಿಡಿದು ಸೆಳೆಯಿತು ೧
ಚಕಿತನಾಗುತ ಚತುರ ದ್ವಿಪವರ
ಮಕರಿ ವದನದಿಂ ಮುಕ್ತನಾಗಲು
ಸಕಲ ಸಾಹಸಗೈದನಕ್ಕಟ
ವಿಕಲವಾಯಿತಾ ಯತ್ನವೆಲ್ಲವು ೨
ನಕ್ರ ಸೆಳೆತವು ಪ್ರಬಲವಾಗಲು
ದಿಕ್ಕು ತೋರದೆ ಕೂಗಿಕೊಂಡನು
ಮಿಕ್ಕ ಗಜಗಳು ಕೂಡಿ ಬಿಡಿಸಲು
ಶಕ್ತಿಮೀರಿ ಸಾಹಸಗೈದುವು ೩
ಆನೆಗಳು ಒಂದೆಡೆ ಎಳೆಯಲು
ಆನೆಗಳು ಒಂದೆಡೆ ಎಳೆಯಲು
ಏನನೆಂಬೆ ಹೋರಾಟವೀ ಪರಿ
ಏನು ನಡೆದರೂ ವಿಫಲವಾಯಿತು ೪
ಹಿಂಡು ಬಳಗಗಳೆಲ್ಲ ನೋಡುತ
ದಂಡೆ ಮೇಲೆ ತಾವ್ ನಿಂತುಬಿಟ್ಟವು
ಜೊಂಡು ಹುಲ್ಲು ತಾ ಪಿಡಿದು ತನ್ನಯ
ಸೊಂಡಿಲಿಂದ ಶುಂಡಾಲ ಗೆದ್ದನು ೫
ನಕ್ರಬಾಧೆಯು ಬಿಡಿಸಲಾರಿಗೂ
ಶಕ್ಯವಾಗದೆ ಹೋಯಿತಕ್ಕಟ
ದಿಕ್ಕುಗೆಟ್ಟು ತಾ ದೈನ್ಯದಿಂದಲೇ
ದುಃಖಪಡುತ ಭೋರಿಟ್ಟು ಕೂಗಿದ ೬
ಉದಿಸಿತಾಗ ಸುಜ್ಞಾನವವನೊಳು
ಸುದತಿ ಮಕ್ಕಳು ಸಲಹರೆಂಬುದು
ಬದಲು ಬಯಸದ ಬಂಧು ಕರಿಗಿರಿ
ಸದನನೆಂದು ತಾನಂಬಿ ನೆನೆದನು ೭

 

ಆದಿಮೂಲ ಪಾಲಯಾ ಮಾಂ ಪ
ವೇದವೇದ್ಯ ಕರುಣೋದಧಿ ಎನ್ನಪ-
ರಾಧಗಳೆಣಿಸದೆ ಮೋದದಿ ಸಲಹೊ ಅ.ಪ.
ಜಗದುತ್ಪತ್ತಿ ಸ್ಥಿತಿಲಯ ಕಾರಣ
ಅಘಹರ ಅನಿಮಿಷ ಪೂಜಿತ ಚರಣ ೧
ಪರಮ ಪುರುಷ ಪರಮಾತ್ಮ ಪರಾತ್ಪರ
ಪರತರ ಪಾವನ ದುರಿತ ವಿದೂರ ೨
ಸಕಲ ವ್ಯಾಪಕ ಸುಖನಿರವಧಿಕ
ಮುಕುತಿದಾಯಕ ಮೂರ್ಜಗನಾಯಕ ೩
ಆರ್ತಬಂಧು ಲೋಕೋತ್ತರ ಮಹಿಮ ಕೃ-
ತಾರ್ಥನ ಮಾಡು ಪವಿತ್ರ ಚರಿತ್ರ ೪
ಪರಿಪರಿ ಜನ್ಮದ ಪರಿಭ್ರಮಣೆಯ ನೀ
ಪರಿಹರಿಸೈ ಶ್ರೀ ಕರಿಗಿರೀಶನೇ ೫

 

ಆನೆಂತು ವರ್ಣಿಸಲಿ ಆ ದಿವ್ಯ ಮೂರುತಿಯನ ಪ
ಆನಂದಮಯ ನಮ್ಮ ಆನಂದಕಂದನನು ಅ.ಪ.
ಆ ಪಾದ ಆ ಜಾನು ಆ ನಡುವು ಆ ನಾಭಿ
ಆ ವಕ್ಷ ಆ ಬಾಹು ಆ ಮುಖದ ಭಾವ
ಆ ನೇತ್ರ ಆ ನಿಲುವು ಆ ಮಂದಹಾಸಗಳ
ಆದ್ಯಂತ ಬಣ್ಣಿಸಲು ಆದಿಶೇಷಗೆ ವಶವೆ ೧
ಆವನಿಗೆ ಸಮರಧಿಕರಿಲ್ಲವಾತಗಿನ್ನು
ಆವಸಾಮ್ಯವ ಕೊಟ್ಟು ಬಣ್ಣಿಸುವೆನು
ಆವನೀ ಜಗಕ್ಕೆಲ್ಲ ಆಧಾರವಾಗಿಹನೊ
ಆವನಂಘ್ರಿಗಳ ಮುನಿಗಳಾವಾಗ ಚಿಂತಿಪರೊ ೨
ಆವ ಮಂಗಳ ಮೂರ್ತಿಯಾ ಲಕ್ಷಣಗಳೆಲ್ಲ
ಆವ ಶಾಸ್ತ್ರದೊಳುಂಟು ಅವನಿಯೊಳಗೆ
ಆ ವಾಸುದೇವ ತಾನಾವಾಗಲೆಲ್ಲರೊಳು
ಆವಾಸವಾಗಿಹನು ಆ ಕರಿಗಿರೀಶನು ೩

 

ಆರೋಗಣೆಯ ನೀ ಮಾಡಯ್ಯಾ ಯದುಕುಲ
ವಾರಿಧಿ ಚಂದ್ರಮನೆ ಪ
ಸಾರಸನಯನ ಅಪಾರಮಹಿಮ ಕರು
ಣಾರಸ ಪರಿಪೂರ್ಣಸಾರ ಭೋಕ್ತನೆ ಸ್ವಾಮಿ ಅ.ಪ.
ಬಡವನು ನಾ ನಿನಗೆ ಕೊಡಲರಿಯೆನೊ ಸ್ವಾಮಿ
ಪೊಡವಿಗೊಡೆಯ ನಿನ್ನ ಅಡಿಭಕ್ತ ನಾನಯ್ಯ
ಕಡಲಶಯನ ಒಂದು ಕುಡಿತೆ ಪಾಲನು ನಿನಗೆ
ಕೊಡುವೆನು ನಿತ್ಯತೃಪ್ತ ಒಡನೆ ಸ್ವೀಕರಿಸಯ್ಯಾ
ಮೃಡವಂದಿತ ಪದಜಡಜಯುಗಳದಲಿ
ದೃಢಭಕ್ತಿಯ ನೀ ಕೊಡು ಕೈ ಬಿಡದಲೆ
ನುಡಿಗೆ ನುಡಿಗೆ ನಿನ್ನ ನಾಮವ ನುಡಿಸಯ್ಯ
ಬಡವರ ಬಂಧುವೆ ಕರಿಗಿರೀಶನೆ ೧

 

ಆವಿರ್ಭವಿಸಿದಳಾಗ ಜಗನ್ಮಾತೆ | ಅಖಿಲಾಂಡ ವಿಖ್ಯಾತೆ ಪ
ದೇವದಾನವರು ತಾವೊಡಗೂಡುತ
ಲಾವುದಧಿಯಮದಿಸುತ್ತಿರಲದರೊಳು ಅ.ಪ
ಪೊಳೆವ ಬೆರಳುಂಗುರ ಶೋಭಿತಪಾದ | ಧರಿಸಿದ ಸುರುಚಿರ
ರುಳಿಯು ಅಂದಿಗೆ ಗೆಜ್ಜೆಯ ನಾದ | ಕಟಿಯಲಿ ನೋಡೆ
ಥಳಥಳವಾದ ಶೃಂಗಾರವಾದ | ಒಡ್ಯಾಣದ ಮೋದ
ದಲಿ ತಾನಿಟ್ಟಿಹ ಚಲುವಿಕೆಯಿಂದಲಿ
ಸಲೆ ಬೆಳಗುತಲಿ ನಳಿನಲೋಚನೊಳು ೧
ಕರಿರಾಜನ ಕರದಂತೆ ಒಪ್ಪುವ ಕರವು | ಬೆರಳಲಿ ನೋಡೆ
ಪರಿಶೋಭಿಸುತಿಹ ಮಾಣಿಕ್ಯದುಂಗುರವು | ರಾರಾಜಿಸುವ
ಹರಡಿ ಕಂಕಣಗಳು ಬಲು ಸುರುಚಿರವು | ಪರಿಕಿಸೆ ಸುಂದರವು
ಪರಿ ಪರಿ ಸರಗಳು ಕೊರಳೊಳು ಶೋಭಿಸೆ
ತರಣಿ ಕಾಂತಿಯನು ತಿರಸ್ಕರಿಸುತ್ತಲಿ ೨
ಮಂದಸ್ಮಿತ ಪರಿಶೋಭಿತ ಶುಭವದನ | ಆನಂದಸದನ
ಕುಂದಕುಟ್ಮಲದಂತಿಹ ಸಮರದನ | ಸಂತಾಪಾರ್ದನ
ಬಂಧುರ ಚಂಪಕ ನಾಸಿಕದ ಹದನ | ಏಂ ಪೇಳಲಿ ಅದನ
ಮಂದರಾದ್ರಿಧರ ಕರಿಗಿರೀಶನ
ಎಂದೆಂದಗಲದ ಸುಂದರಾಬ್ಜಮುಖಿ ೩

 

ಈತನೇ ಪರಾತ್ಪರನು ಖ್ಯಾತ ನಿಗಮ ಸನ್ನುತ ಪ
ವೀತ ಶೋಕ ಭಯ ವಿದೂರ
ಮಾತುಳಾಂತಕ ಮದನ ಜನಕ ಅ.ಪ.
ಆದಿಮಧ್ಯಾಂತರಹಿತ – ವೇದ ಪೀಠನ ಜನಕನೀತ
ಆದಿಮೂಲ ಅನಘ ಅಚ್ಯುತ ಅಪ್ರಮೇಯ ಅಮರವಂದಿತ ೧
ನಿತ್ಯತೃಪ್ತ ನಿಖಿಲವ್ಯಾಪ್ತ ಸತ್ಯಸಂಕಲ್ಪ ಸ್ವರತ
ಹಸ್ತಿವರದನಾದಪರ ವಸ್ತುವೆನಿಸಿದ ಖ್ಯಾತ ೨
ಸೃಷ್ಟಿಸ್ಥಿತಿಲಯಾದಿಕರ್ತ, ದುಷ್ಟದಮನ ಗೈಯುತಲೀತ
ಕೃಷ್ಣರೂಪದಿಂದಲೆಸೆವ ಶ್ರೇಷ್ಠದೈವ ಶ್ರೀ ಕರಿಗಿರೀಶ ೩

 

ಉಪಕೃತಿ ಎನ್ನದಲ್ಲ ನರಹರಿ
ಕೃಪೆ ಕಾರಣವಿದಕೆಲ್ಲ ಪ
ಅಪರಾಧಗಳನು ಮನ್ನಿಸಿ ಪೊರೆಯುವ
ವಿಪುಲ ಕೃಪಾನಿಧಿ ಹರಿಯಲ್ಲದೆಲೆ ಅ.ಪ.
ಜೀವ ಪರಾಧೀನ ಸ್ವತಂತ್ರ ರಾ
ಜೀವದಳನಯನ
ಸರ್ವೋತ್ತಮ ಪ್ರಭು ಕರಿಗಿರೀಶನೆ ಜಗ
ಜೀವನ ಪಾವನ ಪ್ರೇರಕನಲ್ಲದೆ ೧

 

ಎಂತು ಜೀವಿಪೆನಯ್ಯಾ ನಿನ್ನನಗಲಿ ನಾನು
ಶಾಂತ ಮೂರುತಿ ಕೃಷ್ಣ ಕೃಷ್ಣಯ್ಯಾ ಪ
ದಂತಿವರದ ಭಕ್ತ ಚಿಂತಾಮಣಿಯೆ ಲಕ್ಷ್ಮೀ
ಕಾಂತ ಸಕಲ ಜಗದಂತರಾತ್ಮಕ ದೇವ ಅ.ಪ.
ಅಂಗಜಪಿತ ನಿನ್ನ ಅನುಪಮ ರೂಪವ
ಕಂಗಳಿಂದಲಿ ನಿನ್ನ ನಿತ್ಯ ನೋಡಿ ನಲಿಯುತ
ತುಂಗಮಹಿಮ ನಿನ್ನ ಘನ ಕೃಪೆಯಿಂದ ಅಂತ-
ರಂಗದ ಭಕ್ತ ನಾನೆಂದೆನಿಸಿರಲಾಗಿ
ಮಂಗಳಾಂಗ ಮನೋಹರ ನಿನ್ನ
ಸಂಗ ಬಿಟ್ಟಿರಲಾರೆನೋ ಸ್ವಾಮಿ
ರಂಗ ಎನ್ನಂತರಂಗವರಿಯಯಾ
ಇಂಗಿತಜ್ಞ ನೀನಲ್ಲವೇ ಕೃಷ್ಣ ೧
ಇಂದಿರೇಶನೆ ನಿನ್ನ ಚರಿತೆಯ ಕೇಳಿ ಆ-
ನಂದದ ಸವಿ ಕಂಡೆ ಪುಣ್ಯಾತ್ಮರಿಗೆ ಬೇರೆ
ಒಂದರಲಭಿರುಚಿ ತೋರ್ಪುದೆ ಗುಣಗಣ
ಸಿಂಧು ನಿನ್ನನು ಬಿಟ್ಟೇನೊಂದ ನಾನೊಲ್ಲೆನು
ಸಿಂಧು ಮಂದಿರ ಸುಂದರ ನಿನ್ನ
ಪೊಂದಿಕೊಂಡಿಹನಲ್ಲವೇ ಕೃಷ್ಣ
ತಂದೆ ಕೈ ಬಿಡಬೇಡವೊ ಎಳ-
ಗಂದಿಯೆಂಬುದ ನೆನೆದು ಪಾಲಿಸೊ ೨
ದೋಷ ರಹಿತ ಯಾದವೇಶ ಭಕ್ತರ ಪೋಷ
ಶ್ರೀಶ ಕರಿಗಿರೀಶ ಸಕಲ ಲೋಕೇಶ
ವಾಸವಾರ್ಚಿತ ಪಾದ ಭೂಸುರ ಪ್ರಿಯ ಎನ್ನ
ದೋಷಗಳೆಣಿಸದೆ ನೀ ಸಲಹಲಿ ಬೇಕೊ
ವಾಸುದೇವ ಪರಾತ್ಪರ ಕೃಷ್ಣ
ಕ್ಲೇಶ ಪರಿಹರನಲ್ಲವೆ ಸ್ವಾಮಿ
ದಾಸ ಜನರಭೀಷ್ಟದಾಯಕ
ನಾ ಶರಣು ಹೊಕ್ಕಿಹೆನು ರಕ್ಷಿಸು ೩

 

ಎಂಥಾ ಸ್ಥಿತಿಯೆ ಶ್ರೀರಾಮಗೆ ಪ
ಚಿಂತಿತ ಫಲದಗೆ ಚಿಂತಾಪ್ರಾಪ್ತಿಯೆ ಅ.ಪ.
ಲೋಕೈಕನಾಥಗೆ ಈ ಕಪಿನಾಥನು ಸು-
ಗ್ರೀವನು ನಾಥನೆಂದೆನಿಸುವ ಪರಿಯೆ ೧
ಸಕಲ ಲೋಕ ಶರಣ್ಯಗೆ
ಕಕುಲತೆಯಿಂದನ್ಯರಲಿ ದೈನ್ಯವೆ ೨
ಯಾವನನುಗ್ರಹ ಬೇಡುವರು
ಈ ವಿಭುವಿಗೆ ಸುಗ್ರೀವನ ದಯವೆ ೩
ಎಲ್ಲರ ದುಃಖವ ಪರಿಹರಿಸುವನಿಗೆ
ಇಲ್ಲಿ ಸುಗ್ರೀವನೊಳ್ ದೈನ್ಯದ ಮೊರೆಯೆ ೪
ಕರಿಗಿರೀಶನ ಕಾರ್ಯಕೆ ಕಪಿವರ
ನೆರವಾಗುವ ಪರಿ ಮಾಡಿಸುವುದೆ ೫

 

ಎಲೆ ಮಹಾತ್ಮರೇ ನೀವು ರಾಜರ್ಷಿಗಳ ತೆರದಿ
ಬೆಳಗುವಿರಿ ನೋಡೆ ದೇವಕುವರರಂತಿಹಿರಿ
ಧೀರ ಗಂಭೀರತರ ಭಾವ ತೋರ್ಪುದು ಮುಖದಿ
ನಾರು ವಸ್ತ್ರವ ಧರಿಸಿ ತಿರುಗುವಿರಿ ವನದಿ ೧
ಕಂದರ್ಪನನು ಪೋಲ್ವ ಕಮನೀಯ ವಿಗ್ರಹರು
ಬಂದಿ ಹಿಂನಡೆಯಲಿ ವೈರಿ ನಿಗ್ರಹರು |
ಪುಟಕ್ಕಿಟ್ಟ ಚಿನ್ನದಂತೆ ಕಾಂತಿರಂಜಿತರು
ಪಟುತರಂಗರು ಗಹನವಿಟದಿ ಪರಿವ್ರಾಜಕರು ೨
ಆಜಾನುಬಾಹುಗಳು ಆಜಾನು ಜಂಘಗಳು
ಆ ಜಟ ಮಂಡಲವು ರಾಜಿಸುತಲಿಹವು
ದೃಢವಾದ ನಿಮ್ಮಡಿಗಳಿಡುವ ಧ್ವನಿಗಳ ಕೇಳಿ
ಅಡವಿಯೊಡತನ ಪಡೆದ ಸಿಂಹಗಳು ನಡುಗುವುವು ೩
ಧರೆಗಿಳಿದು ಬಂದಿರ್ಪ ರವಿ ಚಂದ್ರರಂದದಲಿ
ನೆರೆ ಪ್ರಕಾಶಿಕರಾಗಿ ಕಂಗೊಳಿಸುತಿಹಿರಿ
ಗುರುತರದ ಕಾರ್ಯತತ್ಪರರಾಗಿ ಬಂದಿರುವ
ನರೆÉಭಾವ ತೋರುವುದು ಕರಿಗಿರೀಶನ ದಯದಿ ೪

 

ಏಕ ಬಾಣ ಬಿಟ್ಟನು ಜಾಣ ಪ
ಏಕ ಬಾಣ ತಾನೇಕ ಗುರಿಯಲಿ
ಏಕ ಸಂಕಲ್ಪದಿ ಏಕ ವಾಕ್ಯವನು ಅ.ಪ.
ಏಕ ದೈವ ಲೋಕೈಕ ಮಹಿಮ ಜಗ-
ದೇಕ ಕಾರಣ ಭಕ್ತ ಶೋಕ ನಿವಾರಣ
ಶ್ರೀಕರ ಶುಭಗುಣ ಸೀತಾರಮಣ ಪೂರ್ಣ
ರಾಕೇಂದು ವದನ ದಿವಾಕರ ಕುಲಭೂಷಣ ೧
ಕಾಕುಜನರ ಬಲು ಶೋಕಕಾರಣ ಕರು
ಣಾಕರ ಶರಣಾಗತ ಜನ ರಕ್ಷಣ
ಶ್ರೀಕಮಲೇಕ್ಷಣ ಲೋಕ ವಿಲಕ್ಷಣ
ಲೋಕವಿನುತ ಶ್ರೀ ಕರಿಗಿರಿ ನಿಕೇತನ ೨

 

ಏನ ಪೇಳಲಿ ಹರಿಯ ವ್ಯಾಪಾರ ಮಹಿಮೆ ಪ
ಆನಂದ ಆಶ್ಚರ್ಯ ಆಗುವುದು ಎನಗೆ ಅ.ಪ.
ಮರಳಿಗೋಸುಗ ಪೋಗೆ ಮಾಣಿಕ್ಯ ದೊರೆಯಿತು
ಗರಳ ಪಾತ್ರೆಯು ಅಮೃತ ಕಳಶವಾಯ್ತು
ಇರುಳು ಕತ್ತಲೆಯೊಳಗೆ ಮಣಿದೀಪ ಮಿರುಗಿತು
ಕೊರಳಿಗ್ಹಾಕಿದ ಸರ್ಪ ಕಮಲ ಮಾಲಿಕೆಯಾಯ್ತು ೧
ಪಾಪ ಕಾರ್ಯವ ಕೊಳಲು ಪುಣ್ಯ ಸಾಧನವೀವ
ಪಾಪ ಸಾಧನವೀವ ಪುಣ್ಯ ಕಾರ್ಯದಲಿ
ಪಾಪ ಬೀಜದ ಪುಣ್ಯ ಪುಣ್ಯ ಬೀಜದ ಪಾಪ
ಶ್ರೀಪತಿಯ ವ್ಯಾಪಾರ ಈ ಪರಿಯಲಿಹುದು ೨
ಮೃಗಯಾ ವಿಹಾರದಲಿ ಮನವಿಟ್ಟು ನಾ ಬರಲು
ಮೃಗಲಾಂಛನವನ ಕಳೆಯ ಮೀರುವಂಥ
ಮಿಗೆ ತೇಜದೀ ಮಗುವು ಎನಗೆ ದೊರೆತುದು ನರ
ಮೃಗರೂಪಿ ಕರಿಗಿರೀಶನ ಕರುಣವಿಲ್ಲದಲೆ ೩

 

ಏನು ಕರುಣವೊ ಕೃಷ್ಣ ಎಮ್ಮ ಮೇಲೆ ಪ
ನಾನಾಪತ್ತುಗಳ ಕಳೆದು ಸಲಹಿದೆಯೊ ಅಕಳಂಕ ಅ.ಪ.
ಕೌರವ ಕೊಟ್ಟ ಪರಿಪರಿಯ ಕಷ್ಟಗಳ
ಪರಿಹರಿಸಿ ನೀ ಕಾಯ್ದೆ ಪರಮ ಕರುಣಿ
ಅರಗಿನ ಮನೆಯಲಿ ಉರಿದುಪೋಗದ ತೆರದಿ
ಭರದಿಂದ ರಕ್ಷಿಸದೆ ಭೀಮನೊಳು ನೀನಿದ್ದು ೧
ಕಾನನದಿ ನಾವ್ ನಿದ್ರೆಗೈಯುತಿರೆ ಕಡುಘೋರ
ದಾನವ ಹಿಡಿಂಬಕನು ಕೊಲ್ಲ ಬರಲು
ಪ್ರಾಣಸುತ ನಮ್ಮ ಈ ಭೀಮನಿಗೆ ಬಲಕೊಟ್ಟು
ಹೀನಖಳನನು ಸೋಲಿಸಿ ಕಾಯ್ದೆ ಸ್ವಾಮಿ ೨
ಲೋಕಕಂಟಕನಾದ ಭೀಕರ ಬಕಾಸುರನ
ನೀ ಕೊಂದು ಈ ವೃಕೋದರನಲಿ ನಿಂದು
ಏಕಚಕ್ರಪುರದ ಲೋಕವನು ನೀ ಕಳೆದೆ
ಏಕಮೇವಾದ್ವಿತೀಯ ಶ್ರೀ ಕರಿಗಿರೀಶ ೩

 

ಏನು ಕರುಣೆಗೈದೆ ನಳಿನಾಕ್ಷ ಪ
ಈ ನಿನ್ನ ಭಕ್ತನೊಳೇನು ಮಮತೆಯೋ ನಿನಗೆ ಅ.ಪ.
ಹಿಂದೆ ಬಲಿಯು ತಾ ಯಜ್ಞವ ಮಾಡಲು
ಇಂದ್ರ ಪದವು ಪ್ರಾಪ್ತಿ ನಿನ್ನಿಂದಲ್ಲದೆ
ಇಂದು ಆ ಪದವಿಯನತಿಯುಕ್ತಿಯಿಂದಲಿ
ಸಂದೇಹವಿಲ್ಲದೆ ಸೂರೆಗೈದವ ನೀನೆ ೧
ಪರಮ ವಿದ್ವಾಂಸರನು ಧೈರ್ಯಶೀಲರನು
ನೆರೆಮೋಹಗೊಳಿಸುವುದೈಹಿಕ ಭಾಗ್ಯವು
ಪರಮ ಕಾರುಣ್ಯದಿಂದೊಲಿದು ನೀನಿವನನು
ಸಿರಿಮೋಹದಿಂದಲಿ ಪಾರುಮಾಡಿದೆ ದೇವ ೨
ನೀನಿಂದು ಗೈದುದು ಪರಮೋಪಕಾರವು
ನಾನದರೊಳು ಲೇಶದೋಷವೆಣಿಸನಯ್ಯಾ
ಶ್ರೀನಿಧಿ ಕರಿಗಿರೀಶನೆ ನಿನ್ನ ಚರಣಕ್ಕೆ
ಆನಮಿಸುವೆನಿಂದು ದೀನವತ್ಸಲ ಸ್ವಾಮಿ ೩

 

ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ
ದೀನ ವತ್ಸಲ ಸ್ವಾಮಿ ಕೃಷ್ಣ ಪ
ಜ್ಞಾನಗಮ್ಯನೆ ನಿನ್ನ ಕಾಣಲು ಮನದಲ್ಲಿ
ಮೌನಿವರರು ನಿತ್ಯ ಧ್ಯಾನವ ಮಾಡುವರಯ್ಯ ಅ.ಪ.
ಶ್ರುತಿ ಶಾಸ್ತ್ರಗಳನೋದಿ ಮಥನವ ಮಾಡುವ
ಮತಿಸಾಧನದಿಂದ ನಿನ್ನರಸುವರೊ
ಪತಿತಪಾವನ ನಿನ್ನ ಕರುಣವೊಂದಿಲ್ಲದಿರೆ
ಇತರ ಸಾಧನವೆಲ್ಲ ಗತಿದೋರದೋ ಸ್ವಾಮಿ ೧
ನಿನ್ನ ಭಕ್ತರು ಮಾಳ್ಪ ಸಾಧನಂಗಳಿಗೆಲ್ಲ
ನಿನ್ನ ಕಾರುಣ್ಯವೇ ಕಾರಣವಲ್ಲವೆ
ನಿನ್ನ ನುತಿಸ ಬಂದ ನರರ ಕ್ಷೇಮದ ಭಾರ
ನಿನ್ನದೆಂದು ತಿಳಿದು ನೀನಾಗಿ ಪೊರೆಯುವೆ ೨
ಏನೊಂದು ಸಾಧನವರಿಯದ ಎನಗೀಗ
ನೀನಾಗಿ ದಯಮಾಡಿ ಮೈದೋರಿದೆ
ಏನು ಧನ್ಯನೊ ನಾನು ಆನಂದಕೆಣೆಗಾಣೆ
ದಾನವಾಂತಕ ಸ್ವಾಮಿ ಕರಿಗಿರೀಶನೆ ಕೃಷ್ಣ ೩

 

ಏನು ಸಾಹಸವಂತ ಈ ನಮ್ಮ ಹನುಮಂತ ಪ
ವಾನರರೇ ನೀವ್ ಕೇಳಿ ಇವನೆಂಥ ಧೀಮಂತ ಅ.ಪ.
ಸಾಗರವ ದಾಟುವೊಡೆ ಸಾಧ್ಯವೇ ಪರರಿಗೆ
ಹೇಗೆ ಪೊಕ್ಕನೋ ಕಾಣೆ ದೈತ್ಯಪುರವ
ಹೋಗಿ ಪುನರಪಿ ಬಂದನೆಂತು ತಾ ಜೀವದಲಿ
ಬೀಗುತಿಹ ರಾವಣನ ಗರ್ವವನು ಮುರಿದಿಹನು ೧
ಭೂಮಿಸುತೆ ಸೀತೆಯ ಕ್ಷೇಮವಾರ್ತೆಯನೆನಗೆ
ನೇಮದಲಿ ತಂದಿತ್ತ ಕುಶಲಮತಿಯು |
ಸ್ವಾಮಿಕಾರ್ಯವನಿಂತು ಸಾಧಿಸಿದ
ಈ ಮಹಾವೀರನಿಗೆ ಸಮರಾರು ಧರೆಯೊಳಗೆ ೨
ಮಿತಿಯಿಲ್ಲದುಪಕಾರ ಮಾಡಿರ್ಪನಿವಗಿನ್ನು
ಪ್ರತಿಫಲವ ನಾನೇನು ಕೊಡಬಲ್ಲೆನು |
ಪ್ರತಿಯಿಲ್ಲದೆನ್ನ ಆಲಿಂಗನವನೀವೆ ಶ್ರೀ
ಪತಿ ಕರಿಗಿರೀಶನ ಪರಮಭಕ್ತನು ಈತ ೩

 

ಏನೆಂದು ಬಣ್ಣಿಪೆನು-ಶ್ರೀಗುರುವರನ
ನಾನಾಮಹಿಮೆಗಳನು ಪ
ಸಾನುರಾಗದಿ ಸಕಲ ತೀರ್ಥಕ್ಷೇತ್ರವ ಚರಿಸಿ
ಶ್ರೀನಿವಾಸನ ದಯದಿ ದೀನರನುದ್ಧರಿಸಿದ ಅ.ಪ
ತೀರ್ಥಕ್ಷೇತ್ರದ ಮಹಿಮೆ ತೀರ್ಥಪ್ರಬಂಧದೊಳ್
ಕೀರ್ತಿಸಿ ಕವಿತಾ ಚಾತುರ್ಯವ ಪ್ರಕಟಿಸಿದ ೧
ಕುಂಡಲೀಗಿರಿಯನು ಮಂಡಿಯಿಂದಲೇರಿ ಉ
ದ್ದಂಡಗಂಡಕ ಶಿಲೆಯ ಹಾರ ಶ್ರೀಹರಿಗಿತ್ತ ೨
ಕುಂಭಕೋಣೆಯಲಿದ್ದ ಡಾಂಭಿಕ ಪಂಡಿತ
ಜಂಬೂಕಗಳ ಗೆದ್ದ ಕುಂಭಿಣೀಸುರ ಸಿಂಹ ೩
ಮಾಘಕಾವ್ಯವ ಮೀರ್ದ ಆಮೋದ ಸುಂದರವಾದ
ಶ್ಲಾಘ್ಯ ಶ್ರೀ ರುಕ್ಮಿಣೀಶ ವಿಜಯವೆಂದೆನಿಸಿದ ೪
ಘನ ಕಾವ್ಯವ ರಚಿಸಿ ಪುಣ್ಯ ಪತ್ತನದಿ ವಿ
ದ್ವನ್ಮಣಿಗಳಿಂದ ಮಾನ್ಯತೆ ಪಡೆದುದು ೫
ತುಂಗ ಕರ್ಣಾಟಕ ನೃಪನ ಸಭೆಯೊಳು ಪ್ರ
ಸಂಗಾಭರಣವೆಂಬ ಬಿರುದು ಪಡೆದ ಖ್ಯಾತಿ ೬
ಕರಿಗಿರೀಶನ ಪಾದ ಸರಸಿಜ ಭೃಂಗ ಶ್ರೀ
ಗುರುವಾದಿರಾಜರ ಪರಿಪರಿ ಚರಿತೆಯಾ ೭

 

ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ
ಕಂಡೆ ಕಂಡೆನು ಕೃಷ್ಣರಾಯನ
ಪುಂಡರೀಕ ದಳಾಯತಾಕ್ಷನ
ಪಾಂಡವಪ್ರಿಯ ಪಾರ್ಥಸಖನ ಉ
ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ.
ಕನಕ ನವಮಣಿ ಖಚಿತ | ವಾಗಿಹ ಸಿಂಹಾ
ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ
ಘನನೀಲನಿಭರಂಜಿತ | ನಿರ್ಮಲಗಾತ್ರ
ಕನಕರತ್ನ ಕಿರೀಟ ಕುಂಡಲ ಮಣಿ
ಗಣದ ಹಾರಾದಿ ಬಹು ಭೂ
ಷಣಗಳನುಪಮ ಕಾಂತಿಯಿಂದಲಿ
ಮಿನುಗುವತಿ ಲಾವಣ್ಯ ಮೂರ್ತಿಯ ೧
ಕೋಟಿ ಮನ್ಮಥರೂಪನ | ಶ್ರೀಕೃಷ್ಣನ
ಹಾಟಕಾಂಬರಧಾರನ | ಕರುಣಾಮಯ
ನೋಟದಿಂದಲಿ ನೋಳ್ಪನ | ಕಂಬು ಕಂಠನ
ಆಟಮಾತ್ರದಿ ಪ್ರಬಲ ದೈತ್ಯ ಮ
ಹಾಟವಿಯ ನಿರ್ಧೂಮಗೈದನ
ಖೇಟವಾಹನನೆನಿಪ ತ್ರಿಜಗದಿ
ಸಾಟಿಯಿಲ್ಲದ ದೇವದೇವನ ೨
ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ
ಮೊರೆ ಕೇಳಿ ಸಲಹಿದನ | ಭಜಿಪರ ಅವ
ಸರಕೊದಗುವ ದೇವನ | ಶ್ರೀ ಕೃಷ್ಣನ
ತರಳತನದಲಿ ಗೋಕುಲದಿ ತಾ
ಪರಿಪರಿಯ ಲೀಲೆಗಳ ತೋರಿದ
ಪರಮ ಪುರುಷನ ಕರಿಗಿರೀಶನ
ಸರಿಯಧಕರಿಲ್ಲದ ಸುರೇಶನ ೩

 

ಕನ್ಯಾರತ್ನವನಿತ್ತನು ಹರಿಗೆ ಸತ್ರಾಜಿತರಾಯನು ಪ
ಧನ್ಯನು ತಾನೆಂದೆನ್ನುತ ಯದುಕುಲರನ್ನ ಸುಗುಣ
ಸಂಪನ್ನಗೆ ಹರುಷದಿ ಅ.ಪ.
ಕಮಲಾಸನ ಸನ್ನುತ ಚರಣನಿಗೆ ಕಮನೀಯ ಸ್ವರೂಪಗೆ
ಕಮಲಾರಮಣಗೆ ಸ್ವರತನಿಗೆ ಕಾಮಿತ ಫಲದಾತಗೆ
ಸುಮಬಾಣನ ಪಿತ ಸುಂದರಗೆ ಸುಮದಳನೇತ್ರನಿಗೆ
ನಮಿಪ ಜನರ ಸುರದ್ರುಮನೆಂದೆನಿಸುವ
ಅಮಿತ ಮಹಿಮಯುತಸಮವಿರಹಿತನಿಗೆ ೧
ಬೃಂದಾರಕ ಬೃಂದ ಸುವಂದಿತಗೆ ಶ್ರೀ ಗೋವಿಂದಗೆ
ಬೃಂದಾವನ ವಿಹರಣ ವಿಭವಗೆ ವಿಶ್ವಂಭರನಿಗೆ
ಮಂದಾಕಿನಿ ಜನಕಗೆ ಮಾಧವಗೆ ಮರಕತಶ್ಯಾಮನಿಗೆ
ಮಂದರಧರ ಮುಚುಕುಂದವರದ ಪೂ
ರ್ಣೇಂದು ವದನಗುಣಸಾಂದ್ರ ಮುಕುಂದಗೆ ೨
ವರಲೀಲಾ ಮಾನುಷ ವೇಷನಿಗೆ ವದನಾಂಬುಜದಲಿ
ಸರಸಿಜ ಜಾಂಡವ ತೋರಿಪಗೆ ಸಾರಸನಾಭ
ಪರಮಪಾವನ ಚರಿತಗೆ ಪುರುಷೋತ್ತಮನಿಗೆ
ಗರುಡಗಮನ ಶ್ರೀ ಕರಿಗಿರೀಶ ಯದು
ವರಕುಲಮಣಿ ಮುರಹರನಿಗೆ ಮುದದಲಿ ೩

 

ಕರುಣವೇಕೆ ಬಾರದಯ್ಯಾ ಕರಿವರದನೆ ಪ
ಶರಣ ರಕ್ಷಕನೆಂದು ನಿನ್ನ ಮೊರೆಯ ಹೊಕ್ಕೆನೊ ಸರಸಿಜಾಕ್ಷ
ಮರಣ ಕಾಲದಿ ಮಗನ ಕರೆದ ಪುರುಷ ಪುಣ್ಯ ಶರಧಿಯೇನೊ ಅ.ಪ.
ತುತಿಸಸಲಿಲ್ಲವೆಂದು ಎನ್ನ ಹಿತವಗೈಯದೆ ಜರಿಪರೇನೊ
ತುತಿಸಲಾಪವೇ ಶ್ರುತಿಗಳನ್ನು ಮಿತಿಗೆ ಸಿಲ್ಕದ ನಿನ್ನ ಮಹಿಮೆ ೧
ಏನು ಸಾಧನವವ ಮಾಡಲಿಲ್ಲವೆಂದು ಕೈಬಿಡುವೆಯೇನೊ
ನೀನು ದಯಮಾಡಿದಲ್ಲದೆ ಏನು ಸಾಧನ ಮಾಡಲಾಪೆನೊ ೨
ಪಾಪಪುಣ್ಯ ಕರ್ಮಗಳಿಗೆ ನೀನೆ ಪ್ರೇರಕನಲ್ಲವೇನೊ
ಶ್ರೀ ಪರಾತ್ಪರ ನೀ ಸ್ವತಂತ್ರ ನಾ ಪರಾಧೀನನಲ್ಲವೆ ೩
ಪುಣ್ಯಗೈದವರಲಿ ಕರುಣವನು ಗೈವುದೇನು ಮಹಿಮೆ
ಘನ್ನ ಪಾಪಿಗಳಲಿ ನೀ ಪ್ರಸನ್ನನಾಗಲು ಖ್ಯಾತಿಯಲ್ಲವೆ ೪
ಪತಿತಪಾವನ ದೀನರಕ್ಷಕ ಶ್ರಿತ ಜನಮಂದಾರನೆಂಬ
ವಿತತ ಬಿರುದು ಬರಿದೆ ಪೇಳೋ ಗತಿ ಪ್ರದಾಯಕನಲ್ಲವೇನೊ ೫
ದುರಿತ ರಾಶಿ ನೋಡಿ ಬೆದರಿ ನಿಂತೆಯೇನೊ ನೀನು
ದುರಿತ ದೂರನಲ್ಲವೇ ನಿನ್ನ ಸ್ಮರಣೆ ನೋಡದ ದುರಿತವಿಹುದಿ ೬
ತರಳತನದ ಸಲಿಗೆಯಿಂದ ಪರಿಪರಿಯಲ್ಲಿ ನುಡಿದೆನಯ್ಯಾ
ಪರಮ ತತ್ವವರಿಯೆ ನಾನು ಪೊರೆಯೊ ಎನ್ನ ಕರಿಗೀರೀಶ ೭

 

ಕರುಣಾಕರ ಕೃಷ್ಣ ಪ
ಮರೆಯದೆ ಕಾಯೊ ಮೊರೆಯಿಡುವೆ ದೇವ ಅ.ಪ.
ಸರಸಿಜಾಕ್ಷಸ್ವಾಮಿ
ಮೆರೆದ ಸಭೆಯೊಳು ಕರುಣದಿ ಕಾಯ್ದೆಯೊ ೧
ಅನಿಮಿತ್ತ ಬಂಧುವೆ ಹರೆ
ಅನುದಿನ ಎನ್ನ ಮಾನ ನಿನ್ನಾಧೀನ ೨
ಕರಿಗಿರೀಶ ಶ್ರೀಶ
ದುರುಳನ ಬಾಧೆಯ ಪರಿಹರಿಸೋ ದೇವ ೩

 

ಕಳವಳಿಪುದೆನ್ನ ಮನ ಕಮಲಾಕ್ಷ ಬಾರದಿರೆ ಪ
ನಳಿನಸಂಭವ ಲಿಖಿತವೇನಿಹುದೊ ಸಖಿಯೆ ಅ.ಪ.
ಪೋದ ವಿಪ್ರನು ಬರದಿರಲು ಏನು ಕಾರಣವೊ
ಹಾದಿಯಲಿ ವಿಘ್ನ ತಾನೊದಗಿತೊ
ಮಾಧವನಿಗೆನ್ನೊಳು ಮಮತೆ ಬಾರದೆ ಹೊಯ್ತೆ
ಮೇದಿನಿಯೊಳೇಕೆ ನಾ ಪುಟ್ಟಿ ಬಂದನೆ ಸಖಿಯೆ ೧
ನಿನ್ನ ಹೊರತೆನಗಿನ್ನು ಅನ್ಯಗತಿಯಿಲ್ಲೆಂದು
ಭಿನ್ನವಿಸಿಕೊಂಡಿದ್ದೇನಾಯಿತೆ
ಮುನ್ನ ಮಾಡಿದ ಕರ್ಮ ಬಲವಂತವಾಗಿರಲು
ಬನ್ನಪಡಿಸುತಲೆನ್ನ ಬಳಲಿಪುದು ಸರಿಯೆ ೨
ವಸುದೇವ ಸುತನಾಗಿ ಶಿಶುತನದ ಕ್ರೀಡೆಯೊಳ್
ಅಸುರರನು ಸಂಹಾರ ಮಾಡಿದವಗೆ
ಶಿಶುಪಾಲನಾಕಾಲದ ವಶಮಾಡಲಸದಳವೆ
ಕುಸುಮಾಕ್ಷಿ ಕರಿಗಿರೀಶನೆ ಗತಿಯು ಸಖಿಯೆ ೩

 

ಕಾಪಾಡೆಲೊ ದೇವ ಕರುಣಾರ್ಣವ ಪ
ನಾ ಪಾಪಿಯು ಎಂದು ನೀ ಪರಿ
ಪಾಲಿಸದೀಪರಿಗೈದರೆ ಆಪದ್ಭಾಂಧವ ಅ.ಪ.
ಮೊರೆಯಿಡುವೆನು ಇನ್ಯಾರಿಗೆ | ನೀನಿಲ್ಲದೆ
ಪೊರೆವ ಪ್ರಭುವಾರೆನಗೆ | ಶರಣ ಮಂ
ದಾರನೆಂದರಿತು ನಿನ್ನಯ ಪಾದ
ನೆರೆ ನಂಬಿದೆನು ಇನ್ನು ಪೊರೆಯಬೇಕೆನ್ನನು ೧
ಕರಿರಾಜನ ಭಯ ಪರಿಹರಿಸಿದ | ವರ
ಗರುಡಗಮನ ಸಿರಿವರದ | ಜನಾದರ್ನ
ಪರಮ ಪುರುಷ ಶ್ರೀ ಕರಿಗಿರಿ ಮಂದಿರ
ನರಹರಿ ನಮಿಪೆನು ಚರಣ ಸರಸಿಜಕೆ ೨

 

ಕುಶಲವರೆ ಲಾಲಿಸಿರಿ ಕಥೆಯನೆಲ್ಲವ ಪೇಳ್ವೆ
ಕುಶಲಮತಿಗಳೇ ನಿಮ್ಮ ಕೌತುಕವು ಸಹಜವಲೆ ೧
ಬಿಸರುಹಾಕ್ಷನ ಚರಿತೆ ಚಿತ್ರತರಮಹುದಲ್ತೆ
ಉಸುರುವೆನು ಪೂರ್ವ ವೃತ್ತಾಂತವನು ನಾ ಮೊದಲೆ ೨
ಅಸುರರುಪಟಳದಿಂದ ವಸುಧೆ ಭಾರವು ಹೆಚ್ಚೆ
ಬಿಸಜಭವಮುಖ ಸುರರ ಮೊರೆ ಕೇಳಿ ಮನ ಮೆಚ್ಚೆ ೩
ಬಿಸಜನೇತ್ರನು ತಾನು ದಶರಥನ ಸುತನೆನಿಸಿ
ವಸುಮತಿಯಲುದಿಸಿ ಸಜ್ಜನರ ಸಂತಸಗೊಳಿಸಿ ೪
ಹಸುಳೆತನದಲಿ ಅಸುರೆ ತಾಟಕಿಯ ಸಂಹರಿಸಿ
ಕುಶಿಕಸುತನಧ್ವರವ ಕಡು ರಕ್ಷಣೆಯ ಮಾಡಿ ೫
ಅಶಮವಾಗಿದ್ದಹಲ್ಯೆಯ ತಾನುದ್ಧರಿಸಿ
ಅಸಮಾಕ್ಷಚಾಪವನು ಲೀಲೆಯಲಿ ತುಂಡರಿಸಿ ೬
ವಸುಮತಿಸುತೆ ಸೀತೆ ಕರ ಪದ್ಮವನು ಗ್ರಹಿಸಿ
ಎಸೆವೆರಡು ರೂಪದಲಿ ಘನಲೀಲೆ ಪ್ರಕಟಿಸಿ ೭
ಕುಶಲದಿಂ ಯುವರಾಜ ಪಟ್ಟಕ್ಕೆ ಸನ್ನಾಹ
ವೆಸೆದಿರಲು ವಿಧಿಲೀಲೆಯೇನೆಂಬನಾಹ ೮
ದಶರಥನ ಕಿರುಮಡದಿ ಪಡೆದ ವರಕನುವಾಗಿ
ಅಸಮ ಸತ್ಯಾತ್ಮಕನು ಸತಿ ಅನುಜ ಸಹಿತನಾಗಿ ೯
ವಸುಮತಿಯೊಳವತರಿಸಿ ಬಂದ ಕಾರ್ಯವ ನೆನೆದು
ಅಸಮ ನಾಟಕ ಸೂತ್ರಧಾರಿ ಅಡವಿಗೆ ನಡೆದು ೧೦
ಎಸೆವ ಗಂಗೆಯ ದಾಟಿ ಗುಹನನ ಧನ್ಯನಗೈದು
ಋಷಿ ಭರದ್ವಾಜರಿಂ ಸತ್ಕಾರವನು ಪಡೆದು ೧೧
ವಸುಮತೀಧರ ಚಿತ್ರಕೂಟದಲಿ ನಿಂತಿರಲು
ಅಸಮ ಭಕ್ತವರೇಣ್ಯ ಭರತ ತಾನೈತರಲು ೧೨
ಬಿಸಜಾಂಘ್ರಿ ಸಂಪೂತ ವರ ಪಾದುಕೆಗಳನಿತ್ತು
ಕುಶಲಮತಿ ತಾನವನ ಕಳುಹಿ ಯೋಚಿಸಿ ಮತ್ತು ೧೩
ಪೆಸರಾಂತ ದಂಡಕಾ ವನ ಪ್ರವೇಶವ ಮಾಡಿ
ಅಸುರರನೇಕರು ಅಂತಕನ ಬಳಿದೂಡಿ ೧೪
ಋಷಿವರ್ಯ ಶರಭಂಗಗೀಕ್ಷಣದಿ ಸುಗತಿಯನು
ಹಸನಾಗಿ ಕರುಣಿಸಿದ ಬಳಿಕ ಕುಂಭೋದ್ಭವನು ೧೫
ಒಸಗೆಯಿಂದಿತ್ತ ದಿವ್ಯಾಸ್ತ್ರಂಗಳ ಸಂಗ್ರಹಿಸಿ
ಪಸರಿಸಿಹ ವಿಲಸಿತದ ಪಂಚವಟಿಯಲಿ ನೆಲಸಿ ೧೬
ಒಸಗೆಯಿಂದಿರೆ ಬಂದ ಶೂರ್ಪನಖಿಗತಿಭಂಗ
ವೆಸಗಿ ಸೋದರನಿಂದ ಶೋಭಿಸೆ ಶುಭಾಂಗ ೧೭
ದಶಕಂಠ ಕಳುಹಿಸಿದ ಮಾಯಾ ಮೃಗಾಕಾರ
ದಸುರ ಮಾರೀಚನಂ ಸಂಹರಿಸಿ ರಘುವೀರ ೧೮
ಅಸಮ ಸೋದರ ಸಹಿತ ಆಶ್ರಮಕ್ಕೈತಂದು
ದೆಸೆದೆಸೆಯೊಳರಸೆ ತನ್ನರಸಿ ಕಾಣದಿರಲು ೧೯
ಹುಸಿವೇಷದಿಂ ಬಂದ ಖಳ ಕುಲಾಗ್ರಣಿಯಿಂದ
ಶಶಿಮುಖಿಯು ಹಗರಣವಾಗಿರಲು ನಿತ್ಯಾನಂದ ೨೦
ದೆಸೆಗೆಟ್ಟವನ ಪರಿಯಲತಿಶಯದಿ ಶೋಕಿಸುತ
ದೆಸೆದೆಸೆಯೊಳರಸುತ್ತಾ ಬಸವಳಿದು ತಾ ಬರುತ ೨೧
ಎಸೆವವರ ಋಷ್ಯಮೂಕಮತಂಗಾಶ್ರಮದಿ
ಬಿಸಜಾಪ್ತಸುತನ ಕಂಡವನೊಡನೆ ತಾ ಮುದದಿ ೨೨
ಉಸುರಿ ವಾಲಿಯ ವಧೆಗೈವೆನೆಂದಭಯವನು
ಎಸೆವ ವಿಲಸಿತ ಮಹಿಮ ಕರಿಗಿರೀಶನು ತಾನು ೨೩

 

ಗುರು ವಾದಿರಾಜರ ಸ್ಮರಣೆಯ ಮಾಡಿರೊ ಪ
ಗುರು ವಾದಿರಾಜರ ಸ್ಮರಣೆಯ ಮಾಡಲು
ದುರಿತ ಕಳೆದು ಮನಕೆ ಪರಮ ಹರುಷವೀವ ಅ.ಪ.

ಪೂರ್ಣಭೋಧರ ಮತ ವಾರಿನಿಧಿಗೆ ಸಂ
ಪೂರ್ಣ ಸುಧಾಕರ ಸುಗುಣ ಗಂಭೀರ
ಕ್ಷೋಣಿ ಸುರೋತ್ತಮ ಕ್ಷೋಣಿಪಾಲಕ ಮಾನ್ಯ
ಜ್ಞಾನಿವರೇಣ್ಯ ಹಯಾನನ ಪರಚರಣ ೧
ಮಾನಸದೊಳಗಿಹ ಹೀನಮತಿಯ ಕಳೆ
ದಾನಂದ ಕೊಡುವಂಥ ಜ್ಞಾನವ ಕರುಣಿಸಿ
ಪ್ರಾಣನಾಥ ಶ್ರೀ ಕರಿಗಿರೀಶನ ಪದ
ಧ್ಯಾನಿಪ ಸ್ಥಿರಮತಿ ತಾನಿತ್ತು ಪಾಲಿಪ ೨

 

ಗುರುವೆ ತವ ಚರಣ ಕಮಲ ಷಟ್ಚರಣನೆನಿಸೊ ಎನ್ನ ಪ
ಪರಮಹಂಸಕುಲ ಸುಧಾಬ್ಧಿ ಸುಧಾಕರ ಸುಧೀಂದ್ರಯತಿಕರಜ ಅ.ಪ
ಶ್ರೀವರ ಚರಣ ಸರೋರುಹ ಮಧುಕರ ಪೂತ | ಶುಭಮಚರಿತ
ಭಾವಜಾದಿ ಷಡ್ವರ್ಗಸುನಿಗ್ರಹ ಶೀಲ ಕವಿಕುಲಲೋಲ
ಕೋವಿದ ಕುಲ ಸಂಭಾವಿತ ಮಹಿಮ ಸ
ದಾ ವಿನೋದಿ ಸತ್ಸೇವಕ ಜನ ಸಂ
ಜೀವನ ಶುಭಕರ ಪಾವನರೂಪ ಪ
ರಾವರೇಶ ಪದಸೇವಕ ಯತಿವರ ೧
ಸಕಲ ಶಾಸ್ತ್ರ ಪಾರಂಗತ ಪರಿಣತ ಖ್ಯಾತ | ಗ್ರಂಥಪ್ರಣೀತ
ಸುಖತರ ಸುಖತೀರ್ಥ ಸಮಯ
ಸಂವರ್ಧಕ ಧೀರ | ಸುಜನೋದ್ಧಾರ
ಮುಕುತಿ ಸಾಧನೆಗೆ ಕುಟಿಲ ಮಾರ್ಗವ
ನಿಖಿಲ ನಿಜಾಶ್ರಿತ ನಿಕರಕೆ ತೋರುತ
ಭಕುತ ಕರೆವ ಕೋರಿಕೆಗಳ ನೀಡುತ
ಸುಖವ ಕರೆವ ಸುಂದರ ಯತೀಂದ್ರ ೨
ಪರಮಪುರುಷ ಶ್ರೀ ಬದರಿವಾಸ ಭಜಕಾಗ್ರಣಿಯೇ |
ಗುಣಮಣಿ ಖಣಿಯೇ
ಸುರವರನುತ ಶ್ರೀ ರಾಮಚಂದ್ರ ಚರಣಾಬ್ಜಾ | ರಾಧಿಕ ಸುಪೂಜ್ಯ
ದುರಿತ ಕಳೆದು ಭವಶರಧಿಯ ದಾಟುವ
ಸರಿಮಾರ್ಗವ ನಾನರಿಯೇನೋ ಗುರುವರ
ಕರಿಗಿರೀಶ ಶ್ರೀ ನರಹರಿ ಚರಣವ
ನೆರೆ ನಂಬುವ ಪರಿ ಕರುಣಿಸು ಯತಿವರ ೩

 

ತೋರಿಸೊ ತವರೂಪ ತೋಯಜ ನೇತ್ರ ಪ
ಮಾರಜನಕ ಕರುಣಾರಸಪೂರ್ಣನೆ
ನಾರಾಯಣ ಭವತಾರಕ ಮಮ ಸ್ವಾಮಿ ಅ.ಪ.
ದಶರಥ ನಂದನ ವಸುಮತಿ ರಮಣ ತ್ರಿ
ದಶವಂದಿತ ಚರಣ ಪಶುಪತಿಧನುಭೇದನ
ವಸುಧಾಸುತೆರಮಣ ಋಷಿಪತ್ನಿ ಶಾಪಹರಣ
ಅಸಮಾ ವಲ್ಕಲ ಚೀರವಸನಾ ಭೂಷಣಸ್ವಾಮಿ
ಬಿಸಜಾಪ್ತನ ಸುತಗೊಲಿದವನಗ್ರಜ
ನಸುವನು ತೊಲಗಿಸಿ ಅಸುನಾಥನ ಸುತ
ಗೊಸೆದು ಬಿಸಜಭವ ಪದವಿಯ ಕರುಣಿಸಿ
ವಿಷಧಿಯ ಬಂಧಿಸಿದಸಮ ಸಮರ್ಥ ೧
ದಿನಮಣಿವಂಶ ಮಸ್ತಕಮಣಿಯೆಂದೆನಿಸಿ
ಮುನಿ ಕೌಶಿಕನ ಯಜ್ಞಫಲವಾಗಿ ರಕ್ಷಿಸಿ
ಅನಲಾಕ್ಷಧನು ಮುರಿದು ಮುನಿಪತ್ನಿಯನು ಪೊರೆದು
ಜನಕಸುತೆಯ ಕರವನು ಪಿಡಿದ ಧೀರ
ಜನಕನಾಜ್ಞೆಯಿಂ ವನವ ಪ್ರವೇಶಿಸಿ
ಇನಸುತಗೊಲಿಯುತ ಅನಿಲಜನಿಂದಲಿ
ಘನಸೇವೆಯ ಕೊಂಡನಿಮಿಷ ವೈರಿಯ
ಹನನಗೈದ ಹೇ ಅನುಪಮ ಶೂರ ೨
ಲೀಲಾಮಾನುಷರೂಪ ಭೂಲಲನಾಧಿಪ
ಫಾಲಾಕ್ಷವಿನುತ ವಿಶಾಲಸುಕೀರ್ತಿಯು ತಾ
ಆಲಸ್ಯವಿಲ್ಲದೆ ವಿಶಾಲವನವ ಪೊಕ್ಕು
ವಾಲಿಯ ಸಂಹರಿಸಿ ಪಾಲಿಸಿ ಸುಗ್ರೀವನ
ಲೋಲಲೋಚನೆಯಿಹ ಮೂಲವ ತಿಳಿದು ಬಂ
ದ್ಹೇಳಿದ ಪವನಜಗಾಲಿಂಗನವಿತ್ತು
ಖೂಳ ದಶಾಸ್ಯನ ಕಾಲನೆಂದೆನಿಸಿದ
ಶ್ರೀಲೋಲನೆ ಶ್ರೀ ಕರಿಗಿರೀಶನೆ ೩

 

ದುರುಳ ಬುದ್ಧಿಯನು ತೋರಿಸಬೇಡವೊ ಪ
ನರವರರಿಗೆ ಇದು ಸರಿಯಲ್ಲವೋ ಕೇಳ್ ಅ.ಪ.
ತುಡುಗ ಬುದ್ಧಿಯಿದ ಕಡೆಗಾಲಕೆ ಸರಿ
ನುಡಿಗೆದುರಿಲ್ಲವೋ ನಿನಗಿಂದು
ಕಡು ಪತಿವ್ರತೆಯರು ಬಿಡುವ ನಯನಜಲ
ಉಡಿಯಲಿ ಕಟ್ಟಿದ ಉಜ್ವಲ ಶಿಖಿಯೊ ೧
ಧರ್ಮಪಥದಿ ಸಂಚರಿಸುವ ಸುಜನರ
ಮರ್ಮವ ಭೇಧಿಸೆ ಮಾತಿನಲಿ
ಒಮ್ಮೆ ಅವರು ಬಿಸಿರುಸಿರನು ಚಿಮ್ಮಿಸೆ
ಒಮ್ಮೆಗೆ ನಿನ್ನಯ ಕುಲಕ್ಷಯ ನಿಜವು ೨
ಮತ್ತನಾದ ನಿನಗೆತ್ತಣದೊ ಇನ್ನು
ಯುಕ್ತಾಯುಕ್ತ ವಿವೇಚನೆಯು
ಭಕ್ತವತ್ಸಲ ಶ್ರೀ ಕರಿಗಿರೀಶನ
ಚಿತ್ತ ಸತ್ಯವೆಂದು ತೊಳಿಯೊ ಮೂಢ ೩

 

ದೇವಾದಿ ದೇವ ನಮೋ ಶ್ರೀ ಸತ್ಯದೇವ ಪ
ದೇವಾದಿ ದೇವ ಹರಿ ಗೋವಿಂದ ಮುಕುಂದ
ಭಾವಜನಕ ಸದ್ಭಾವುಕ ಜನಪ್ರಿಯ ಅ.ಪ.
ಶ್ರೀಶಾ ಶಶಿಕೋಟಿ ಸಂಕಾಶ
ಸುಶೋಭಿತ ದರಹಾಸ
ಸಾಧು ಸುಜನ ಪರಿಪೋಷ
ಸಕಲಾಗಮ ಸನ್ನುತ ಸರ್ವೇಶ ಈಶಾ
ಈ ಸಮಸ್ತ ಜಗದೀಶನೆಂದು ನಿನ್ನ
ನಾ ಸ್ತುತಿಸುವೆ ಮನದಾಸೆಯ ಸಲ್ಲಿಸೊ
ವಾಸವಾದಿ ಸುರಮಹಿಮ ಪ
ರೇಶ ಪೂರ್ಣಗುಣ ದಾಸಜನಾವನ
ಕ್ಲೇಶವ ಕಳೆದಿನ್ನು ನೀ ಸರ್ವದ ಎನ್ನ
ಪೋಷಿಸು ಕರಿಗಿರಿ ವಾಸ ಶ್ರೀ ನರಹರಿ ೧

 

ದೇವಾದಿ ದೇವ ನೀನವಧರಿಸು ಭಿನ್ನಪವ ಪ
ಈ ವಿವಿಧ ಸುರರೊಳಗೆ ಸರಿಯಲ್ಲ ನಿನಗೆ ಅ.ಪ.
ಸರಸಿಜಾಸನ ಶಂಭು ಮೊದಲಾದ ಸುರರೆಲ್ಲಾ
ಪರತಂತ್ರರವರಲಿ ಕೊರತೆಯುಂಟು
ನಿರ್ದೋಷ ನಿರವಧಿಕ ಕಲ್ಯಾಣಗುಣಪೂರ್ಣ
ನಿರ್ದುಃಖ ನಿರತಿಶಯ ನಿರುಪಮಾನಂದಾತ್ಮ
ಸರ್ವಜ್ಞ ಸರ್ವೇಶ ಸರ್ವತಂತ್ರ ಸ್ವತಂತ್ರ
ಸರ್ವವಸ್ತುಗಳಲಿ ಸರ್ವದಾ ಪರಿಪೂರ್ಣ
ಪರಿಪೂರ್ಣಕಾಮ ನಿನ್ನುರದಲೆನಗೆ
ಸ್ಥಿರವಾಸಕೆಡೆಯ ನೀ ಕರುಣದಿಂದಿತ್ತು
ಹರುಷಪಡಿಸುವುದೆನ್ನ ಶರಧಿಮಂದಿರನೆ
ಗಿರಿಯ ಧರಿಸಿದೆ ಕರಿಗಿರೀಶನೆ

 

ದೇವೀ ಶ್ರೀ ತುಳಸೀ ದುರಿತೌಘವಿನಾಶಿ ಪ
ಶ್ರೀ ವರನಾನಂದಾಶ್ರು ಸುಜಾತೆ ಕೃ
ಪಾವ ಲೋಕೆ ಜಗಪಾವನಿ ಜನನಿ ಅ.ಪ
ತುಂಗ ಮಂಗಳರೂಪಿಣಿ ಸುಗುಣ ತ
ರಂಗೆ ಪರಮ ಕಲ್ಯಾಣಿ
ಅಂಗಜಪಿತ ನಿತ್ಯ ಮಂಗಳರೂಪ, ನೃ
ಸಿಂಗ ಕರಿಗೀಶನು ಸುಖಪೂರ್ಣನು
ಮಂಗಳಕರುಣಾಪಾಂಗದಿ ನಿನ್ನನ
ರ್ಧಾಂಗಿಯೆಂದಂಗೀಕರಿಸುತಲೆಮ್ಮಂತ
ರಂಗಕೆ ಸಂತಸ ಕಂಗಳಿಗುತ್ಸವ
ಹಿಂಗದೆ ತರಲೆಂದು ಭಿನ್ನಪಗೈವೆವು

 

ಸೀಸಪದ್ಯ
ಧರಣಿ ಮೊರೆಯನು ಕೇಳಿ ಸರಸಿಜಾಸನ ಸಕಲ
ಸುರರ ಸಹಿತದಿ ಶರಧಿಶಯನಗರುಹೆ
ವಸುದೇವ ದೇವಕಿ ಸುತನೆನಸಿ ಅಜನಯ್ಯ
ವಸುಮತಿಯಲವತರಿಸಿ ಲೀಲೆಯಿಂದ
ಧರಣಿ ಕಂಟಕರಾದ ದುರುಳ ದೈತ್ಯರ ಸದೆದು
ಪರಿಪಾಲಿಸಿದ ಸಾಧು ಸುಜನರನ್ನು
ನಿಜಭಕ್ತ ಪಾಂಡವರ ನೆಂಟನೆಂದೆನಿಸಿ ಭೂ
ಭುಜ ಸುಯೋಧನ ಮುಖ್ಯ ದುರುಳರನ್ನು
ಸದೆಬಡಿಸಿದಾ ಬಳಿಕ ಮದದಿ ಕೊಬ್ಬಿದ
ಯದು ಬಳಗವನು ವಿಪ್ರಶಾಪದಿಂದ ಕೊಲಿಸಿ
ಪದುಮಸಂಭವಜನಕ ಕರಿಗಿರೀಶನು ತನ್ನ
ಸದನಕ್ಕೈದಿದ ಸರ್ವವ್ಯಾಪ್ತ ಸರ್ವೇಶ

 

ನಂದನಂದನ ಗೋವಿಂದ ಹರಿ ಪ
ಸುಂದರವದನ ಸುರೇಂದ್ರ ಸುವಂದ್ಯ ಅ.ಪ.
ಮಂದರಾದ್ರಿಧರ ಮಾಧವ ಮುರಹರ
ಬೃಂದಾವನ ವಿಹಾರ
ಸುಂದರ ಮುರಳೀಧರ ಸುಮನೋಹರ
ಸಿಂಧುಶಯನ ಸುಖಸಾಂದ್ರ ಪರಾತ್ಪರ ೧
ಕೇಶೀ ಮಥನ ಕಂಸಾಸುರ ಮರ್ದನ
ಭೂಸುರ ಸನ್ನುತ ಶ್ರೀಚರಣ
ದಾಸ ಜನಾವನ ಕರುಣಾಭರಣ
ಕೇಶವಗುಣ ಪರಿಪೂರ್ಣ ೨
ಮುರನರಕಾಂತಕ ಮುಕ್ತಿಪ್ರದಾಯಕ
ಶರಣಾಗತ ಜನ ಪಾಲಕ
ಕರಿಗಿರೀಶ ಕಾಮಿತ ಫಲದಾಯಕ
ಗರುಡಗಮನ ಶ್ರೀ ರುಕ್ಮಿಣಿನಾಯಕ ೩

 

ನಮಿಸುವೆ ಗುರುರಾಜ – ಸುತೇಜ ಪ
ನಮಿಸುವೆ ಸುಜನರ ಕಲ್ಪಭೂಜ ಅ.ಪ
ಶರಣ ಜನಾವನ ಕರುಣಾಭರಣ
ಹರಿಚರಣಾರಾಧನ ಧುರೀಣ ೧
ಮೂರಾವತಾರವನೆತ್ತಿದ ಧೀರ
ಸಾರಿದವರ ಸಂತಾಪ ವಿದೂರ ೨
ದ್ವಿಜಕುಲದೀಪ ಭವ್ಯ ಸ್ವರೂಪ
ಅಜರಾಮರ ಸತ್ಕೀರ್ತಿ ಪ್ರತಾಪ ೩
ಜ್ಞಾನವಿರಕ್ತಿ ನಿರ್ಮಲಭಕ್ತಿ
ಮಾಣದೆ ಕೊಡುವುದು ಮನಸಿಗೆ ಶಾಂತಿ ೪
ವರ ಮಂತ್ರಾಲಯ ಸುರುಚಿರ ನಿಲಯ
ಕರಿಗಿರೀಶ ಶ್ರೀ ನರಹರಿಪ್ರಿಯ ೫

 

ನಾ ಧನ್ಯ ನಾ ಧನ್ಯ ನಾ ಧನ್ಯನಿಂದು ಪ
ಹೇ ದಯಾನಿಧೇ ನಿನ್ನ ಪಾದಾನುಗ್ರಹದಿಂದ ಅ.ಪ.
ಏತರವ ನಾನೆಂದುದಾಸೀನ ಮಾಡದೆಲೆ
ಲೇಸು ಮಮತೆಯ ಕೋರಿ ಈ ಸ್ಥಳಕೆ ಬಂದಿ
ಆಸುರೀ ಭಾವವನು ನಾಶಗೊಳಿಸಿ ಎನ್ನ
ನೀ ಸಲಹಿದೆಯೋ ಜಗದೀಶ ನಿರುಪಮ ಕರುಣಿ ೧
ಸತ್ವಗುಣ ಪ್ರಚುರರಲಿ ನೀ ತೋರುವುದಕ್ಕಿಂತ
ಅತ್ಯಧಿಕ ವಾತ್ಸಲ್ಯವೆನ್ನೊಳಗೆ ತೋರ್ಪೆ
ಕರ್ತೃ ನೀನೆಂಬ ತತ್ವ ಮನಸಿಗೆ ತಂದೆ
ಭಕ್ತವಾತ್ಸಲ್ಯಕ್ಕಿದು ಕುರುಹಲ್ಲವೇ ದೇವ ೨
ಸುರಲೋಕಕ್ಕಿಂತಧಿಕ ಪದವಿ ಎನಗಿತ್ತೆ
ನಿರುತಲೆನ್ನಯ ಬೆನ್ನು ಕಾಯುತಲಿರುವೆ
ಕರುಣಿಗೆಣೆಗಾಣೆ ಕರಿಗಿರೀಶನೇ ನಿನ್ನ
ಸ್ಮರಣೆಯನನವರತ ಇರುವಂತೆ ಕೃಪೆಮಾಡೋ ೩

 

ನಾಗವೇಣಿಯೆಂದರೆ ಹೀಗೇಕೆ ಮಾಳ್ಪಿರಿ
ಬಾಗಿಲು ಕುಟ್ಟುವುದೇಕೆ ನೀವ್ ಪ
ಬಾಗಿಲು ಬಿಡುವೊಡೆ ಹೇಗದು ಸಾಧ್ಯವೊ
ಬೇಗ ಹೇಳು ನೀನಾರು ಇನ್ನು ಅ.ಪ.
ಆಗಮ ಕದ್ದೊಯ್ದ ಅಸುರನ ಕೊಂದು ನಾ
ನಾನಾಗಲೆ ನಾಲ್ಮೊಗಗಿತ್ತೆ ಕೇಳಿ ಆಗಲೆ
ಆಗಮದಲಿ ನಿನಗರ್ತಿಯಷ್ಟಿದ್ದರೆ
ಮೂಗನ್ಹಿಡಿದು ಕೂಡೋ ಬೇಗ ೧
ಮೂಗನ್ಹಿಡಿವ ಒಣಯೋಗಿಯು ನಾನಲ್ಲ
ಆ ಗಿರಿಯನು ನಾ ಪೊತ್ತೆ ಕೇಳಿ
ಈಗ ನಾವರಿದೆವು ನೀ ಗಿರಿ ಹೊರವಡೆ
ಸೋಗಿನ ಕಳ್ಳ ನೀನೆಂದು ಇಂದು ೨
ಕಳ್ಳನಲ್ಲ ಭೂಮಿ ಕಳ್ಳನ ಕೊಂದೆನೆ
ಒಳ್ಳೆ ಸೂಕರ ನಾನಾಗಿ ಕೇಳಿ
ಘೊಳ್ಳನೆ ನಗುವರು ಕೇಳಿದವರು ಇದ
ಮೆಲ್ಲು ಹೋಗಿ ನೀ ಮಣ್ಣ ೩
ಮಣ್ಣು ಮಾತೇಕೆ ಹಿರಣ್ಯಕನನು ಕೊಂದೆ
ಚಿಣ್ಣನ ಕಾಯ್ದೆನು ಕೇಳಿ
ಚಿಣ್ಣರ ಸಾಕ್ಷಿಯ ಬಿಟ್ಟರೆ ನಿನಗಿಲ್ಲ
ಚಿಣ್ಣನಾಗು ನೀ ಹೋಗೂ ೪
ಸಣ್ಣವನಾದರೂ ಘನ್ನನು ನಾನಾದೆ
ಪುಣ್ಯನದಿಯ ನಾ ಪೆತ್ತೆ ಕೇಳಿ
ಬಿನ್ನಾಣ ಮಾತಿಗೆ ಸೋಲುವರಲ್ಲವೊ
ಬೆನ್ನು ತಿರುಗಿಸಿ ನೀ ಪೋಗೊ ೫
ತಿರುಗಿಸಿದವನಲ್ಲ ಬೆನ್ನನೊಬ್ಬರಿಗೂ ನಾ
ಪರಶುಧರನು ನಾ ಕೇಳಿ
ಅರಸರಲ್ಲ ನಾವ್ ಸರಸಿಜನೇತ್ರೆಯರು
ಕರುಣರಹಿತ ನೀ ಪೋಗೊ ೬
ಚರಣರಜದಿ ನಾ ಶಿಲೆಯನುದ್ಧರಿಸಿದೆ
ಕರುಣರಹಿತನೆ ಪೇಳಿ ನೀವು
ಸರಸ ಮಾತುಗಳನು ಮನ್ನಿಸಿ ಎಮ್ಮನು
ಕರಿಗಿರೀಶ ನೀ ಕಾಯೋ ಸ್ವಾಮಿ ೭

 

ನಾನಪರಾಧಿ ಶ್ರೀನಿಧಿ ದೇವ ಪ
ನಾನಪರಾಧಿ ನೀನದನೆಣಿಸದೆ
ದೀನವತ್ಸಲ ಎನ್ನ ಮಾನದಿಂದಲಿ ಕಾಯೊ ಅ.ಪ
ತನಯರಿಲ್ಲದೆ ಬಲು ಮನದೊಳು ಚಿಂತಿಸೆ
ಜನಪ ಪೇಳಿದ ವ್ರತವ ಅನುಸರಿಸುವೆನೆಂದು
ಮನದಿ ಸಂಕಲ್ಪಿಸೆ ವನಜನೇತ್ರನ ದಯದಿ
ತನಯಳು ಜನಿಸಲು ಧನಮದದಲಿ ಮರೆತೆ ೧
ಏನ ಪೇಳುವೆ ನಾನು ಧನದ ಮಹಿಮೆಯನ್ನು
ಹೀನ ಬುದ್ಧಿಯನಿತ್ತು ಹರಿಯ ಮರೆಸುವುದು
ದಾನವಾಂತಕ ಹರಿ ದೀನನಾಗಿಹೆನಯ್ಯ
ಸಾನುರಾಗದಿ ಸಲಹೊ ಸತ್ಯನಾರಾಯಣ ೨
ಮಂಗಳರೂಪ ಕೃಪಾಪಾಂಗದಿ ನೋಡೊ
ರಂಗ ಶ್ರೀ ಕರಿಗಿರಿಯನಿಲಯ ಶುಭಾಂಗ
ಗಂಗಾ ಜನಕನೆ ಗಜರಾಜವರನೆ
ಭಂಗ ಬಿಡಿಸಿ ಕಾಯೊ ಭಕ್ತವತ್ಸಲ ದೇವ ೩

 

ನಾರದ ಮುನಿವರರೆ | ಸದ್ಗುರುವರ
ನಾರಾಯಣ ಪ್ರಿಯಶ್ರೀ ಪ
ನಾರದ ಮುನಿವರರೆ ನಿಮ್ಮಯ
ಚಾರುಚರಣಕೆ ನಮಿಪೆನು ಆ
ದ್ವಾರಕಾಪುರನಿಲಯ ಕೃಷ್ಣನ-
ಪಾರಮಹಿಮೆಯ ಸಾರ ಪೇಳ್ದಿರಿ ಅ.ಪ.
ಪರಮ ಸುಂದರ ರೂಪನು | ಆ ಕೃಷ್ಣನು
ಪರತರ ಪರಮಾತ್ಮನು
ಶರಣಜನ ಮಂದಾರನಾತನು
ಕರುಣಶರಧಿಯು ಕಾಮಜನಕನು
ಸರಸಿಜೋದ್ಭವ ಸುರರಿಗಧಿಕನು
ಹರಿಯು ಇವನೆಂದರುಹಿದಿರಿ ಗುರು ೧
ಲೋಕಮೋಹಕನಯ್ಯನು | ಶ್ರೀಕೃಷ್ಣನು
ಲೋಕ ವಿಲಕ್ಷಣನು
ಲೋಕ ಕಂಟಕರನ್ನು ಶಿಕ್ಷಿಸಿ
ನಾಕ ನಿಲಯರ ಭರದಿ ರಕ್ಷಿಸಿ
ಲೋಕ ಕಲ್ಯಾಣವನ್ನು ಗೈದ ತ್ರಿ
ಲೋಕದೊಡೆಯನೆಂದರುಹಿದಿರಿ ಗುರು ೨
ಈ ವಿಧಿ ಶುಭರೂಪನ | ಶ್ರೀಕೃಷ್ಣನ
ದೇವಾದಿದೇವೇಶನ
ಪಾವನಾಂಘ್ರಿಗಳನ್ನು ಪೂಜಿಸಿ
ಸೇವಿಸುವ ಸೌಭಾಗ್ಯವೆಂದಿಗೆ
ದೇವ ಕರಿಗಿರಿನಿಲಯ ನರಹರಿ
ಯಿವನೆಂಬುದನೆನಗೆ ತಿಳುಹಿರಿ ೩

 

ನಿನ್ನ ಬಿಟ್ಟಿರಲಾರೆ ನೀರಜಾಕ್ಷ ಪ
ಘನ್ನ ಮಹಿಮನೆ ನಿನ್ನ ಸನ್ನಿಧಾನವನೀಯೊ ಅ.ಪ.
ಸರ್ವಧರ್ಮಗಳಿಗೆ ನೀನಿಲ್ಲದಿನ್ನಿಲ್ಲ
ಉರ್ವಿಕರಿಗೆ ನೀನೆ ಉರ್ವೀಶನೆ
ನಿರ್ವಿಕಾರ ಮಹಾತ್ಮ ನಿಖಿಲಾಂತರಾತ್ಮಕನೆ
ಸರ್ವದಾ ತವ ಪಾದ ಸೇವೆಯೆನಗೀಯೊ ೧
ತಡವ್ಯಾಕೆ ಬರಲಿನ್ನು ಪೊಡವೀಶ ಯನ್ನೊಡನೆ
ತಡೆಯಲಾರೆನು ನಿನ್ನ ವಿರಹವನ್ನು
ನುಡಿಯಬೇಡವೋ ಎನ್ನ ನೀ ಪೋಗು ಎಂದೆನುತ
ಕಡು ದಯಾನಿಧಿ ನಿನ್ನ ನಾ ಬಿಡೆನೊ ೨
ಆನಂದ ಪರಿಪೂರ್ಣ ಶ್ರೀನಾಥ ನಿನಗೇಕೆ
ಕಾನನಾ ವಾಸವು ಕಮಲನಯನ
ಜ್ಞಾನದಾಯಕ ನಿನ್ನ ಚರಣ ಶರಣನೊ ನಾನು
ದೀನರಕ್ಷಕ ಸ್ವಾಮಿ ಶ್ರೀ ಕರಿಗಿರೀಶ ೩

 

ನಿನ್ನದೇ ಸಕಲ ಸೌಭಾಗ್ಯ ಸಾಧನವು ಹರಿಯೆ ಪ
ನಿನ್ನದೆಂಬಭಿಮಾನ ಲವಲೇಶ ಸಲ್ಲದಯ್ಯಾ ಅ.ಪ.
ನಿನ್ನ ಪ್ರೇರಣೆ ಹೊರತು ತೃಣವೊಂದು ಚಲಿಸದು
ನಿನ್ನಿಚ್ಛೆಗನುಸಾರ ಸಕಲ ಜಗವು
ನಿನ್ನ ಚಿತ್ತಕೆ ಬಾರದಿಹುದೇನು ನಡೆಯುವುದೋ
ನಿನ್ನ ನಂಬಿದವರನು ನೀನಾಗೆ ಸಲಹುವೆಯೊ ೧
ಸರ್ವತಂತ್ರ ಸ್ವತಂತ್ರ ಸರ್ವಾಂತರಾತ್ಮಕನೆ
ಸರ್ವಜಗದಾಧಾರ ಸರ್ವೇಶನೆ
ಶರ್ವರೀಚರ ಗರ್ವ ಸಂಹಾರ ಅಘ ದೂರ
ಸರ್ವಕಾಲದಲೆನ್ನ ಗರ್ವರಹಿತನ ಮಾಡೊ ೨
ಸತ್ಯಚಿತ್ತನೆ ನಿನ್ನ ಚಿತ್ತವೆನ್ನಯ ಭಾಗ್ಯ
ಕರ್ತೃತ್ವದಭಿಮಾನ ಕಳೆದು ಕಾಯೊ
ಮತ್ತೇನು ಬೇಡುವೆನು ಪರತಂತ್ರ ನಾನಯ್ಯ
ಮುಕ್ತಿದಾಯಕ ಶ್ರೀಶ ಶ್ರೀ ಕರಿಗಿರೀಶ ೩

 

ನೀನಾರು ಪೇಳೆನಗೆ ನಿರುಪಮ ಬಲಪೂರ್ಣ
ಮಾನವರೊಳೀ ಪರಿಯ ಶೌರ್ಯವುಂಟೆ ಪ
ದಾನವಂತಕನೆಂದು ಮಾನಸಕೆ ತೋರುತಿದೆ
ಪ್ರಾಣಿಗಳಿಗೆಲ್ಲಾ ನೀ ತ್ರಾಣದಾಯಕನೆ ಅ.ಪ.
ಆಕಾರದಲಿ ನೋಡೆ ನರವೇಷಧಾರಿ ಪ
ರಾಕ್ರಮದಿ ಪರಿಕಿಸಲು ಪರಮಪುರುಷ
ಶ್ರೀಕಂಠಚಾಪವನು ಖಂಡಿಸಿದ ಕಡುಧೀರ
ಕಾಕುತ್ಸ್ಥ ಶ್ರೀರಾಮನೆಂದು ತೋರುವುದೆನಗೆ ೧
ಕೋದಂಡಧರ ನಿನ್ನ ಕ್ರೋಧಾಗ್ನಿಗಂಜುತ ಮ
ಹೋದಧಿಯು ಪಥ ಬಿಡಲು ಲಂಕೆಗೈದಿ
ಆ ದಶಾಸ್ಯನ ಕಂಠಪಂಕ್ತಿಯನು ಕಳಚಿಸಿದ
ಆ ದಾಶರಥಿಯು ನೀನಲ್ಲದೆ ಬೇರಿಲ್ಲ ೨
ಲೋಕಕಾರಣ ನೀನೆ ಲೋಕೇಶ ಲೋಕಧರ
ಲೋಕಾಂತರಾತ್ಮಕನು ಲೋಕಜನಕ
ಲೋಕರಕ್ಷಕ ಸಕಲ ಲೋಕನಿಯಾಮಕನು
ಏಕಮೇವಾದ್ವಿತೀಯನು ಕರಗಿರೀಶನು ನೀನೆ ೩

 

ನೀರಜಾಕ್ಷ ರಾಮ ಲೋಕಾಭಿರಾಮ ಪ
ನೀರದನಿಭಶ್ಯಾಮ ನಿತ್ಯಮಂಗಳ ನಾಮ ಅ.ಪ.
ನಿನ್ನ ಬಿಟ್ಟು ನಾನು ಅನಾಥನು
ಸನ್ನುತ ಗುಣರನ್ನ ಸತ್ಕೀರ್ತಿ ಸಂಪನ್ನ ೧
ದೇಶಕೊಡೆಯ ನೀನು ದಾಸ ನಿನಗೆ ನಾನು
ಕೌಸಲ್ಯವರಪುತ್ರ ಕೋಮಲ ಶುಭಗಾತ್ರ ೨
ನಿನ್ನ ಸನ್ನಿಧಿವಾಸ ಪುಣ್ಯಫಲವಿಶೇಷ
ಘನ್ನ ಕರಿಗಿರೀಶ ಗಂಭೀರ ಗುಣಭೂಷ ೩

 

ನೀಲ ಗಗನ ನಿಭ ನಿರ್ಮಲಗಾತ್ರನೆ ಪ
ಬಾಲಶಶಾಂಕನ ಪೋಲ್ವ ಸ್ವಾಮಿ
ಬಾಲಶಶಾಂಕನ ಪೋಲ್ವ
ನೀಲಕುಂತಳ ಪರಿಶೋಭಿತ ಫಾಲಕೆ
ಕುಂಕುಮವ ಹಚ್ಚುವೆನು ೧
ನಳಿನ ನಯನ ಕೋಮಲ ಕಮಲಾನನ
ಚಲುವ ಕರಂಗಳ ತೋರೋ ಸ್ವಾಮಿ
ನಳಿನವ ಪೋಲುವ ಚಲುವ ಕರಕೆ ನಾ
ನರಿಸಿನ ಹಚ್ಚುವೆನೀಗ ಸ್ವಾಮಿ ೨
ಅಂಬುಜನಾಭನೆ ಅಂಬುಧಿ ಗಂಭೀರ
ಶಂಬರಾರಿ ಶತತೇಜ ಸ್ವಾಮಿ
ಕಂಬುಕಂಧರ ತೋರು ಸಂಭ್ರಮದಲಿ ನಾ
ಗಂಧವ ಹಚ್ಚುವೆನೀಗ ಸ್ವಾಮಿ ೩
ಸುಮಶರ ಜನಕನೆ ಸುವಶರ ವೈರಿಯ
ಅಮಿತ ಕಾರ್ಮುಕ ಭಂಜಕ ಸ್ವಾಮಿ
ಸಮ ವಿರಹಿತ ನಿನ್ನ ಕೊರಳಿಗ್ಹಾಕುವೆನೀಗ
ಕುಸುಮ ಮಾಲೆಯ ನಾನು ಸ್ವಾಮಿ ೪
ಸಾರಸಾಪ್ತಕುಲ ವಾರಿಧಿ ಚಂದ್ರಮನೆ
ಧೀರ ವೀರ ದಿತಿಜಾರಿದೇವ
ಶ್ರೀರಘುವೀರ ಶ್ರೀ ಕರಿಗಿರೀಶನೇ ನಿಮ
ಗಾರತಿ ಎತ್ತುವೆ ಸ್ವಾಮಿ ೫

 

ಪದುಮನಾಭನ ಚರಿತೆಯು ಪರಮಾದ್ಭುತವು ಪ
ಯದುಕುಲ ಲೋಲನ ವಿಧ ವಿಧ ಲೀಲೆಯೊ
ಪದೇ ಪದೇ ನೆನೆಯಲು ಪರಮಹರುಷ ಮನಕೆ ಅ.ಪ.
ದೇವತೆಗಳ ಮೊರೆ ಲಾಲಿಸಿ ಭುವಿಯೊಳು
ದೇವಕಿ ಸುತನಾಗಿ ಜನಿಸಿದನು
ಗೋವಳರೊಡಗೂಡಿ ಗೋವ್ಗಳ ಕಾಯ್ದ ಬೃಂ
ದಾವನ ಲೋಲನು ಶ್ರೀವೇಣುಗೋಪಾಲ ೧
ಕಾಮಜನಕ ಸರ್ವಕಾಮಿತದಾಯಕ
ಕಾಮಿನಿಯರ ಕೂಡೆ ಕ್ರೀಡಿಸಿದನನಘ
ಆ ಮಹಾಭಕ್ತ ಅಕ್ರೂರನಿಗೊಲಿದನು
ತಾಮಸ ಕಂಸನ ಧ್ವಂಸಗೈದನು ದೇವ ೨
ಕರಿಗಿರೀಶ ಮುಚುಕುಂದ ವರಪ್ರದ
ಸರಸಿಜಾಕ್ಷ ಶ್ರೀರುಕ್ಮಿಣಿರಮಣ
ಸುರರಿಪು ನರಕಾಸುರ ಸಂಹಾರಕ
ಸುರಮಾತೆಗೆ ಕುಂಡಲಿಗಳನಿತ್ತನು ೩

 

ಪರಮ ಸಾಹಸವಂತ ಧೀಮಂತ ಹನುಮಂತ ಪ
ಸರಸರನೆ ತಾ ಬೆಳೆದ ತಾ ಮುಗಿಲ ಪರ್ಯಂತ ಅ.ಪ.
ಇಳೆಯಿಂದ ನಭವ ಪರಿಯಂತವೇಕಾಕೃತಿಯು
ಬೆಳಗುತಿರೆ ನೋಡಲತಿ ಚೋದ್ಯವು
ವಿಲಸಿತದ ವಿಂಧ್ಯಗಿರಿಯಂತೆ ಶೋಭಿಸಿತು
ಫಲಗುಣಾಗ್ರಜ ನೋಡಿ ಬೆರಗಾಗುತಿರಲು ೧
ಪಿಂಗಾಕ್ಷಿಗಳು ದಿಕ್ತಟಂಗಳನು ಬೆಳಗುತ್ತ
ಕಂಗೊಳಿಸುತಿರ್ದುದಾ ಸಮಯದಿ
ಶೃಂಗಾರ ಕಾಂತಿಯಿಂ ತುಂಗವಿಕ್ರಮನ ಉ
ತ್ತುಂಗ ದೇಹವು ದಿವ್ಯರಂಗು ಒಡೆದೆಸೆಯೆ ೨
ಶರಧಿಶತಯೋಜನ ನೆರೆದಾಂಟಿದಾ ದೇಹ
ಅರಿಭಯಂಕರ ದೇಹ ಗುರುತರದ ದೇಹ
ಕರಿಗಿರೀಶನ ಚರಣ ಸರಸೀರುಹ ದ್ವಂದ್ವ
ಪರಿಚರ್ಯಕ್ಕನುವಾದ ಪರಮದೇಹವಿದೆನಲು ೩

 

ಉಗಾಭೋಗ
ಪರಮಪುರುಷ ಕೇಳು ಒರೆದ ಮಾತಿಗೆ ನಾನು
ನೆರೆ ತಪ್ಪುವನಲ್ಲ ವಂಚನೆ ಲೇಶವಿಲ್ಲ
ಉರುದೈವ ವ್ಯಾಪಾರಕ್ಕೇನ ಮಾಡಲಿ ನಾನು
ಸರ್ವವು ನಿನಗೆಂದು ಒಪ್ಪಿಸಿಹೆನಲ್ಲ
ನರಕವಾಸಕೆ ನಾನು ಅಂಜುವನಲ್ಲವು
ಮರಣಪಾಶಕೆಯಿನ್ನು ಅಂಜುವ ನಾನಲ್ಲ
ಸರ್ವಸ್ವ ಹೋದರೂ ಚಿಂತೆ ಎನಗಿಲ್ಲ
ಥರಥರ ಅಂಜುವೆ ನೊಂದೆ ವಿಷಯಕ್ಕೆ
ಅರಿಯಲು ಅನೃತಕ್ಕೆ ಅಂಜುವೆ ನಾನಿನ್ನು
ಸಿರಿ ಪರಾಕ್ರಮ ಶೌರ್ಯ ಇವುಗಳಿಂದಲಿ ಕೂಡಿ
ಗರುವಪಡುತ ನಾನು ಮದಾಂಧನಾಗಿದ್ದೆ
ಉರು ಶಿಕ್ಷೆ ಎನಗಿತ್ತು ಉದ್ಧಾರ ಮಾಡಿದೆ
ಕುರುಡಗೆ ನೇತ್ರವು ದೊರೆತಂತೆ ಆಯಿತು
ಪರಮ ಭಕ್ತನು ಆತನೆ ಪ್ರಹ್ಲಾದನು
ಪರಿ ಪರಿ ಪೀಡೆಗೆ ಗುರಿಯಾಗಿದ್ದರು ನಿನ್ನ
ಸ್ಮರಿಸಿ ತಾನುತ್ತಮ ಗತಿಯನ್ನು ಪಡೆದನು
ಸಿರಿಮದ ಕಳೆದೆನ್ನುನುದ್ಧಾರ ಮಾಡಿದೆ
ಪರಮಪುರುಷ ನಿನಗೆ ಪ್ರಣಾಮ ಮಾಡುವೆ
ಕರಿಗಿರೀಶನೆ ಕರುಣಿ ಕಾಯಬೇಕೆನ್ನನು

 

ಪರಮಪುರುಷ ಯದುಕುಲೇಶ
ಶರಧಿ ಮಂದಿರವಾಸ ಶ್ರೀಶ ಪ
ಪರಮ ಹರುಷದಿಂದಲೀಗ
ಉರುಟನೆಯ ಮಾಡುವೆನು ಅ.ಪ.
ನೀಲಮೇಘ ವರ್ಣ ನಿನ್ನ ಬಾಲಶಶಿಯ ಪೋಲುವಂಥ
ಫಾಲವನ್ನು ತೋರುಬೇಗ ಕುಂಕುಮವ ಹಚ್ಚುವೆನು ೧
ವಾರಿಜಾಕ್ಷ ಮಾರಜನಕ ವಾರಿನಿಧಿ ಗಂಭೀರ ಸುಗುಣ
ತೋರು ನಿನ್ನ ಚರಣಗಳನು ಅರಿಸಿನವ ಹಚ್ಚುವೆನು ೨
ಸುಂದರಾಂಗ ಮಂದಹಾಸ ಕುಂದರನೆ ಸಿಂಧುಶಯನ
ಕಂಧರವ ತೋರು ಬೇಗ ಗಂಧವನು ಹಚ್ಚುವೆನು ೩
ಕುಸುಮನಾಭ ಕುಸುಮ ನೇತ್ರ ಕುಸುಮಪೀಠ ಸ್ತೋತ್ರ ಪಾದ
ಕುಸುಮ ಶರನ ಪಿತನೆ ನಿನಗೆ ಕುಸುಮ ಮಾಲೆ ಹಾಕುವೆನು ೪
ಧೀರ ನಿರ್ವಿಕಾರ ರೂಪ ಚಾರು ಚರಿತ ಕರಿಗಿರೀಶ
ಆರತಿಯ ಬೆಳಗುವೆನು ತೋರು ತವ ಮುಖಾರವಿಂದ ೫

 

ಪರಮಹಂಸ ಪರಿವ್ರಾಜಕ ಗುರುವರ್ಯ | ಶಿರಬಾಗುವೆ ಆರ್ಯ ಪ
ಚರಣಕಮಲ ನೆರೆನಂಬಿಹೆ ನಾನಿನ್ನು | ಭಜಕರ ಸುರಧೇನು ಅ.ಪ
ಪುರುಷೋತ್ತಮ ಯತಿಕರ ಸರಸಿಜ ಜಾತ | ಜಗದೊಳಗೆ ಪುನೀತ
ಅರಿಷಡ್ವರ್ಗವ ದೂರಗೈದ ಧೀರ | ಶರಣರಿಗಾಧಾರ
ತರಣಿ ಸದೃಶ ಸುವಿರಾಜಿತ ಶುಭಗಾತ್ರ | ಪಾವನ ಚರಿತ್ರ
ನಿರುತ ನಿಮ್ಮ ಸಂಸ್ಮರಿಸುವ ನರಧನ್ಯ | ಭುವಿಯೊಳು ಸನ್ಮಾನ್ಯ ೧
ವ್ಯಾಸರಾಯ ಕರಪೂಜಿತ ಶ್ರೀ ಚರಣ | ನಿಗಮಾಗಮ ನಿಪುಣ
ಶ್ರೀ ಸಮೀರಮತ ಸ್ಥಾಪಕ ಧುರೀಣ | ಸುಜ್ಞಾನಿವರೇಣ್ಯ
ಭೂಸಿತ ಸದ್ಗುಣ ಸುಮಲಾಭರಣ | ಶರಣ ಸಂಜೀವನ
ಭಾಸುರ ಸೂರ್ಯಾಂಶಜ ಯತಿಕುಲರತ್ನ | ಭೂಸುರ ಸನ್ಮಾನ್ಯ ೨
ಯೋಗಿವರ್ಯ ಕರುಣಾಕರ ಗುಣನಿಲಯ | ಶುಭನಾಮಧೇಯ
ನಾಗಶಯನ ಶ್ರೀ ಕರಿಗಿರಿನಿಲಯನ್ನ | ಪೂಜಿಪ ಗುರುರನ್ನ
ಭಾಗವತೋತ್ತಮ ಭಾಸುರ ಶುಭ ಚರಿತ | ದೂರೀಕೃತದುರಿತ
ಬಾಗಿ ದೈನ್ಯದಲಿ ಬೇಡುವೆ ತವಚರಣ | ಭಕ್ತಿಯನುದಿನ ೩

 

ಪಾದುಕೆಗಳ ದಯಪಾಲಿಸು ಪರಮ
ಪಾವನ ಮಹಿಮ ಸುದೇವ ಲಲಾಮ ಪ
ನೀ ದಯದಿಂ ತವಪಾದ ಪಯೋಜಗ
ಳಾದರದಲಿ ಕೊಡು ಹೇ ದಯಧಾಮ ಅ.ಪ.
ಅಜನವ್ಯಯನಪ್ರಾಕೃತ ಮಹಿಮನು
ಅಜನಪಿತನು ತನ್ನಿಚ್ಛೆಯೊಳು
ಅಜಸುತ ದಶರಥ ಸುತನೆಂದೆನಿಸಿದ
ತ್ರಿಜಗ ನೋಡೆ ಆಶ್ಚರ್ಯದೊಳು ೧
ತುಂಗಮಹಿಮ ತವ ಮಂಗಳಕರ ಚರ
ಣಂಗಳು ಈ ತ್ರಿಜಗಂಗಳ ಪಾಲಿಪುವು
ಅಂಗಜಕೋಟಿ ಶುಭಾಂಗನೆ ತವಪದ
ಭೃಂಗನೆನಿಸಿ ಕೃಪಾಪಾಂಗದಿ ಈಕ್ಷಿಸೊ
ಮಂಗಳಕರ ರಘುಪುಂಗವ ಕರಿಗಿರಿ
ರಂಗ ನೃಸಿಂಹ ಸೀತಾಂಗನೆಯರಸ ೨

 

ಪಾರ್ವತಿರಮಣ ಕರುಣಾಭರಣ
ಪಾಹಿಪುರಮಥನ ತ್ರಿಲೋಚನ ಪ
ಪಾವನವೇಷ ಫಣಿಗಣಭೂಷ
ಪಾಪನಾಶ ಭೂತೇಶ ಮಹೀಶ ೧
ಕಾಮ ಮದಹರ ಕಲುಷ ವಿದೂರ
ಸೋಮಶೇಖರ ಶಂಕರ ೨
ಕರಿಗಿರೀಶಪ್ರಿಯ ಕೈಲಾಸನಿಲಯಪರಮ ಕೃಪಾಮಯ ಸುಕಾಯ ೩

 

ಪಾಲಿಸು ಪರಮೇಶ | ಪಾಪ ವಿನಾಶ ಪ
ಫಾಲನಯನ ತ್ರಿಶೂಲಧರ ಕರು
ಣಾಲವಾಲ ವಿಶಾಲ ಮಹಿಮನೆ
ಕಾಲಕಾಲ ಕಪಾಲಧರ ಸುರ
ಜಾಲನುತ ಪದ ಶೈಲಜಾವರ ಅ.ಪ.
ಶಂಕರ ಶಶಿಶೇಖರ | ಸದಾಶಿವ
ಸಂಕಟಹರ ಈಶ್ವರ | ವರದಾನ ಶೂರ
ಶಂಕೆಯಿಲ್ಲದೆ ತ್ವತದಾಂಬುಜ
ಕಿಂಕರರ ಮನ ಪಂಕ ಕಳೆವ ಅಕ
ಳಂಕ ಮತಿಯನು ಕರುಣಿಸುವ ಮೀ
ನಾಂಕ ಮದಹರ ಮೃಡಸುರೇಶ್ವರ ೧
ಗಜ ಚರ್ಮಾಂಬರಧರನೆ | ಗೌರೀವರನೆ
ಅಜಸುತಾಧ್ವರ ಹರನೆ | ಪ್ರಣಿತಾರ್ಥಿಹರನೆ
ನಿಜಪದಾಂಬುಜ ಪೂಜೆ ಮಾಡುವ
ಸುಜನ ಮನ ಅಂಬುಜ ದಿವಾಕರ
ಕುಜನ ಭಂಜನ ಭುಜಗಭೂಷಣ
ನಿಜ ಚರಣ ಪಂಕಜವ ತೋರಿಸಿ….. ೨
ಹರಿನೀಲನಿಭಕಂಧರ | ಮುಪ್ಪುರಹರ
ಶರಣಜನ ಮಂದಾರ | ಕೈಲಾಸಮಂದಿರ
ಸುರುಚಿರಾಂಗ ಶುಭಪ್ರದಾಯಕ
ವರ ವಿನಾಯಕ ಜನಕ ಜಾಹ್ನವಿ
ಧರನೇ ಕರುಣಾಭರಣ ಪಾವನಕರಿಗಿರೀಶನ ಪರಮಪ್ರಿಯ ಹರಿ….. ೩

 

ಪುಂಡರೀಕನಯನ ಕೃಷ್ಣ ಪ
ಕಂಡೆನಿಂದು ನಿನ್ನ ಬಹುದಿನ ಬಳಿಕ ಬ್ರ
ಹ್ಮಾಂಡದೊಡೆಯ ಉದ್ದಂಡ ಮಹಿಮನೆ ಅ.ಪ
ಪುಟ್ಟಿದಂದಿನಿಂದಾ ಕಷ್ಟವಪಟ್ಟೆನು ಗೋವಿಂದ
ಸೃಷ್ಟಿಯೊಳಗೆ ನಾ ಪುಟ್ಟಿದನೇತಕೆ
ಜಿಷ್ಣುಸಖನೇ ಎನ್ನ ಕೊನೆಗಾಣೆ ೧
ಕರಿಗಿರೀಶ ನಿನ್ನ ಚರಣವ ನೆರೆ ನಂಬಿಹರನ್ನ
ಸರಿ ತೋರಿದ ಪರಿ ಪೊರೆ ಕಂಸಾರಿಯೆ
ಸ್ಥಿರ ಸಂಕಲ್ಪನೆ ಕರುಣಾಶರಧಿಯೆ ೨

 

ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ
ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ.
ಮಂಗಳಾಂಗನ ಮೂರ್ತಿ ನೋಡುವ ಕಂಗಳು
ಅಂಗನೆಯರ ರೂಪ ನೋಡಲೆಳಸಿದವು ೧
ಶ್ರೀ ರಮಣನ ಕಥೆ ಕೇಳುವ ಕರ್ಣಗಳು
ವಾರನಾರಿಯರ ವಾರ್ತೆಗೆ ಸೋತವು ೨
ಮಂಧರಧರನ ನಿರ್ಮಾಲ್ಯವನೊಲ್ಲದೆ
ಸುಂದರಿಯರ ಮೈ ಗಂಧ ಬಯಸಿತು ಘ್ರಾಣ ೩
ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು
ಪರಮ ನಿಷಿದ್ಧ ಪಾನ ಭೋಜನ ಬಯಸಿತು ೪
ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ
ಅಂಗನೆಯ ದೇಹಾಲಿಂಗನ ಬಯಸಿತು ೫
ಶ್ರೀನಿಕೇತನ ನಾಮ ನುಡಿಯುವ ನಾಲಿಗೆ
ದೀನ ಕಾಮಾತುರ ನುಡಿಯಲಿ ನಲಿಯಿತು ೬
ಕರಿಗಿರೀಶನ ಪಾದ ಸ್ಮರಣೆಯ ಬಿಟ್ಟಾ ಮನ
ತರುಣಿಯರು ಸದಾ ನೆನೆಸಿತು ಅಕಟಾ ೭

 

ಸೀಸಪದ್ಯ
ಪ್ರಳಯ ರುದ್ರನ ಕೋಪಕ್ಕೆಮ್ಮಡಿಯ ಕೋಪದಿಂ
ದ ಲಘು ಶಾಪವ ಮುನಿಯು ಕೊಟ್ಟರಂಜೆ
ಕಡುಕಷ್ಟ ಕೋಟಲೆಯು ದುಃಖ ದಾರಿದ್ರಗಳು
ಒಡನೊಡನೆ ಬಂದೊದಗೆ ನಡುಗೆ ನಾನು
ಹುಲಿ ಸಿಂಹ ಶರಭ ವೃಶ್ಚಿಕ ಸರ್ಪ ಮೊದಲಾದ
ಬಲು ಕ್ರೂರ ಪ್ರಾಣಿಗಳ ಬಾಧೆಗಂಜೆ
ಅಸಿಧಾರೆಗಂಜೆ ಇನ್ನಸು ಪೋಗುವುದಕಂಜೆ
ವಸುಧೀಶರಾಗ್ರಹಕೆ ಲವಲೇಶವಂಜೆ
ಉರಿಗಂಜೆ ಸೆರೆಗಂಜೆ ಹರಣದ ಭಯಕಂಜೆ
ಕರಿಗಿರೀಶನ ಕರುಣವೊಂದಿರಲು ಎನಗೆ
ಒರೆದ ವಚನಕೆ ಅನೃತ ಸಂಘಟಿಸಲದಕೆ
ನೆರೆ ಅಂಜುವೆನು ನಾನು ಇನ್ನೊಂದಕಂಜೆ

 

ಪ್ರಾಣನಾಥ ಪಾವನಗಾತ್ರ ಪ
ಪ್ರಾಣನಾಥ ಪವಮಾನತನಯ ಕರುಣಾನಿಧೇ
ನಿನ್ನಡಿಗಾನಮಿಸುವೆನು ಅ.ಪ
ಬನ್ನಬಡಿಪ ಖಳರನ್ನು ಮುರಿದು ಶರ
ಣನ್ನುವರನು ಕಾರುಣ್ಯದಿ ಪೊರೆಯುವ ೧
ಸೇರಿದವರ ಭವದೂರಗೈದು ಮನ
ಕೋರಿಕೆ ಸಲಿಸುವ ಧೀರ ಉದಾರ ೨
ಎನ್ನ ಮನೋರಥವನು ಸಲಿಸುವೊಡೆ
ನಿನ್ನ ಹೊರತು ನಾನನ್ಯರ ಕಾಣೆನು ೩
ಮಂಜುಳ ವೇಷ ಪ್ರಭಂಜನ ಕುವರ ಧ
ನಂಜಯ ಸೋದರ ಕುಂಜರಗಮನ ೪
ಕರಿಗಿರೀಶ ಶ್ರೀ ನರಹರಿ ಚರಣವ
ನಿರುತ ಸೇವಿಸುವ ಶರಣ ಶಿರೋಮಣಿ ೫

 

ಬಂದ ಗೋವಿಂದ ವಾರಣೇಂದ್ರನ ಬಳಿಗಾಗ
ಸಿಂಧುಶಯನ ಕೃಪ ಸಿಂಧು ವೈಕುಂಠದಿಂದ ಪ
ಇಂದಿರೆಯೊಡನೇನೊಂದನೂ ನುಡಿಯದೆ
ನಿಂದು ಕಾದಿಹ ವಿಹಗೇಂದ್ರನ ನೋಡದೆ
ಒಂದೇ ಸಡಗರದಿಂದೋಡುತೆ ನಾ
ಗೇಂದ್ರಶಯನ ನಾಗೇಂದ್ರನ ಪೊರೆಯಲು ೧
ಬಂಗಾರ ಮಕುಟೋತ್ತಮಾಂಗದಿ ಶೋಭಿಸೆ
ಶೃಂಗಾರ ಫಣಿಯೊಳು ಮಂಗಳಕರ ತಿಲಕ
ಕಂಗಳ ಕಾಂತಿ ತ್ರಿಜಗಂಗಳ ಬೆಳಗಲು
ಹಿಂಗದೆ ಶಂಖ ಚಕ್ರಾಬ್ಜಂಗಳು ಕರದಲ್ಲಿ ೨
ಅಂಗಜನಯ್ಯ ಶುಭಾಂಗ ಅಮರ ತ
ರಂಗಿಣಿ ಪಿತ ಭವ ಭಂಗ ಸುರಕುಲೋ
ತ್ತುಂಗ ರಂಗ ಉತ್ತುಂಗ ಮಹಿಮ ಮಾ
ತಂಗ ಗಿರಿಯ ನರಸಿಂಗನು ಬೇಗದಿ ೩

 

ಬಂದ ಶ್ರೀಹರಿ ದಯದಿಂದ ಆನಂದದಿಂದ ಪ
ಮಂದಗಮನೆ ನಲವಿಂದ ಕರೆಯೆ ಎಳ
ಗಂದಿಯ ಪರಿಯಲಿ ಸಿಂಧುರ ವರದನು
ಎಂದೆಂದಿಗು ನಿಜ ಬಂಧುವೆಂದೆನಿಪ ಪೂ
ರ್ಣೆಂದುವದನ ಗೋವಿಂದ ಮುಕುಂದ ಅ.ಪ.
ಭಕ್ತರ ಅವರಸಕೆ ಸಿದ್ಧ | ಭಕುತಿಗೆ ತಾ ಬದ್ಧ
ಮತ್ತನ್ಯ ಸಾಧನಕೆ ಆಗಮಬಾಧ್ಯ | ಭಕ್ತರಿಗದು ವೇದ್ಯ
ಭಕ್ತರ ಪೊರೆಯಲು ಅತ್ಯಾದರದಲಿ
ಹತ್ತವತರವ ಎತ್ತಿದ ಶ್ರೀ ಪುರು
ಷೋತ್ತಮ ಜಗದುತ್ಪತ್ತಿ ಸ್ಥಿತಿ ನಿಲಯ
ಕರ್ತೃ ಕೃಪಾಕರ ಕರಿಗಿರೀಶನು ೧

 

ಬಂದಾ ಸುಂದರವದನ ಮಂದಹಾಸದಿ ರಘು
ನಂದನ ಧನು ಬಳಿಗೆ ಪ
ವಂದಿಸಿ ಕೌಶಿಕಗೆ ತಂದೆಯ ನೆನೆದು ಆ
ನಂದ ಮನದಲಿ ಮುಂದೆ ಮುಂದಕೆ ನಡೆದು
ಚಂದದಿ ಬರುತಿಹ ಅಂದನೋಡಿ ಮುನಿ
ವೃಂದ ಮನದೊಳಾನಂದವ ಪೊಂದುತ
ಇಂದಿರೇಶನಿವನೆಂದು ತಿಳಿದು ಭೂ
ನಂದನೆ ಇವನವಳೆವಂದು ಪೇಳುತಿರೆ ಅ.ಪ.
ಸಿಂಧುಶಯನ ಭಜಕ ಮಂದಾರ ಮುನಿಜನ
ವೃಂದ ಕುಮುದ ಚಂದ್ರ ಮಂದಜಾಸನ ವಂದ್ಯ
ಸಿಂಧುಸುತಾಲೋಲ ಸಿಂಧೂರ ಪರಿಪಾಲ
ಸಿಂಧೂರ ಗಮನದಿ ಸಿಂಧೂ ಗಂಭೀರ ಬರೆ
ಇಂದುವದನೆಯರು ಚಂದವ ನೋಡುತ
ಇಂದೀವಗೇ ಜಯವೆಂದು ನುಡಿಯುತಿರೆ
ಇಂದುಧರನ ಧನು ಬಂಧನ ಮಾಡಲು
ಇಂದಿರೇಶ ಶ್ರೀ ಕರಿಗಿರಿ ಮಂದಿರ ೧

 

ಬಂದಾನು ಬಂದಾನು ಪ
ಬಂದನಾಗ ಗೋವಿಂದ ಯದುಕುಲಾ
ನಂದ ಮುಕುಂದನು ಮಂದಹಾಸದಲಿ ಅ.ಪ.
ಬೀದಿ ಬೀದಿಯೊಳು ಬಲು ಶೃಂಗಾರ
ಬಗೆ ಬಗೆ ತೋರಣದಿಂದಲಂಕಾರ
ಕಾದುನಿಂತಿಹ ಜನ ಪರಿವಾರ
ಮೋದದಿ ಮಾಡುವ ಜಯ ಜಯಕಾರ
ಮೇದಿನಿ ಸುರರಾಮ ಮಂತ್ರದ ಉಚ್ಚಾರ
ಸೌಧಗಳಲ್ಲಿಹ ಸ್ತ್ರೀಯರಪಾರ
ಸಾಧರದಿಂದೀಕ್ಷಿಸೆ ಜನನಿ ಕರವು
ಮೋದವೆ ಬೀರುತ ಯಾದವ ಕುಲಮಣಿ ೧
ಸುಂದರಿಯರು ನಲವಿಂದ ನಿಂದಿಹರು
ಗಂಧ ಪರಿಮಳದ ಜಲವೆರಚಿಹರು
ಅಂದದರಳ ಪುಷ್ಪಗಳ ವರ್ಷಿಪರು
ಕುಂದಣದಾರತಿಗಳ ಪಿಡಿದಿಹರು
ವಂದಿಮಾಗಧರು ಪೊಗಳುತಿಹರು
ಚಂದದಿ ಮಣಿಮಯ ಸ್ಯಂದನದಲಿ ಅರ
ವಿಂದ ನಯನ ಬಲು ಸುಂದರಾಗನು ೨
ಬಂಗಾರದ ರಥವೇರಿ ಬರುತಿಹನು
ಕಂಗಳಿಗುತ್ಸವ ತಾ ತರುತಿಹನು
ಮಂಗಳಕರ ತಿಲಕವನಿಟ್ಟಿಹನು
ಬಂಗಾರದ ಮಕುಟ ಧರಿಸಿಹನು
ಶೃಂಗಾರದ ಶಿಸ್ತಲಿ ಶೋಭಿಪನು
ಅಂಗಜಕೋಟಿ ನಿಭಾಂಗನಾಗಿಹನು
ಮಂಗಳಾಂಗ ಶ್ರೀರಂಗ ಕರಿಗಿರಿ ನೃಸಿಂಗನು ಕರುಣಾಪಾಂಗವ ಬೀರುತ ೩

 

ಬಂದೆಯಾ ಬಂಧುವೆ ಭಾಗ್ಯದ ನಿಧಿಯೆ
ಮಂದರದರ ನಿನ್ನ ಮಂದಿರಕ್ಕೆ ಪ
ತಂದೆಯ ಮಮ ಹೃನ್ಮಂದಿರಕಾಗಲೇ
ಬಂದೆಯೊ ಕರುಣಾಸಿಂಧುವೆ ಸ್ವಾಮಿ ಅ.ಪ
ಆಗಮನುತ ನಿನ್ನಾಗಮನದಿ ಇನ್ನು
ನೀಗಿತು ಚಿಂತೆಯು ನೀರಜನಯನ
ಯಾಗ ಸಾಫಲ್ಯಕೆ ಸೂಚನೆಯಿದು ಮಹಾ
ಭಾಗದೇವ ಹರೆ ಭಾಗವತ ಪ್ರಿಯ ೧
ಮುಂದಿನ ಕಾರ್ಯವ ನೀನೆ ವಹಿಪುದು
ಎಂದೆಂದಿಗೂ ನೀನೆ ಗತಿಯು
ನಂದನಂದನ ಗೋವಿಂದ ಮುಕುಂದನೆ
ನಿಂದಿರಿಸಯ್ಯಾ ನಿನ್ನಾಜ್ಞೆಯಲೆಮ್ಮನು ೨
ನಾಗಶಯನ ನಳಿನಾಯತ ಲೋಚನ
ಯೋಗಿನಿಲಯ ಕಮಲಾಲಯವಾಸ
ಯಾಗರಕ್ಷಕನೆ ಯಾಗ ಫಲಪ್ರದ
ಬಾಗುವೆ ಚರಣಕೆ ಕರಿಗಿರೀಶನೆ ೩

 

ಬಾರಯ್ಯ ಬಾ ಬಾ ಯದುಕುಲರಾಯ | ಹೇ ಭಾಗವತಪ್ರಿಯ ಪ
ಸಾರಸಾಕ್ಷ ಕರುಣಾರಸಪೂರಿತ
ಮಾರಜನಕ ಭವತಾರಕ ಮುರಹರ ಅ.ಪ.
ಬೃಂದಾರಕ ಬೃಂದ ಸುವಂದಿತ ಚರಣ | ಭುಜಗೇಂದ್ರಶಯನ
ಮಂದಾಕಿನಿಪಿತ ಮುಕುಂದ ದುರಿತಹರಣ |
ವಿಹಗೇಂದ್ರಗಮನ
ಮಂದಹಾಸ ಬಲುಸುಂದರವದನಾ | ಶುಭಗಣಪೂರ್ಣ
ಮಂದರಧರ ಗೋವಿಂದ ಭಜಕ ಜನ
ಮಂದಾರನೆ ಮುಚುಕುಂದವರದ ರಾ
ಕೇಂದುಕುಲಜಲಧಿ ಚಂದಮನೆನಿಸುವ
ಇಂದಿರೆಯರಸ ಶ್ರೀ ಕರಿಗಿರೀಶನೇ ೧

 

ಬಿಡೋ ಇನ್ನು ಬಿಡೋ ಇನ್ನು ಪ
ಕಡೆಗಾದರೂ ನಿನ್ನ ಹುಡುಗು ಬುದ್ಧಿಯನು ಅ.ಪ.
ಜೀರ್ಣವಾಯಿತು ದೇಹವು ನಿನಗೆ
ಜೀರ್ಣವಾಗಲಿಲ್ಲ ನೇಹವು ಕೊನೆಗೆ ೧
ಹೇಮವಸನ ವಾಹನ ಮೃಷ್ಟಾನ್ನಗ
ಳಾ ಮಹನೀಯನೊಲಿಸವೊ ಮೂಢ ೨
ಸ್ನಾನ ದಾನ ಅಧ್ಯಯನಾದಿಗಳಿಗೆ
ಶ್ರೀನಿವಾಸ ತಾನೊಲಿಯನೊ ಬರಿದೆ ೩
ತಾಳ ಮೇಳ ಸಂಗೀತಾದಿಗಳನು
ಕೇಳನು ಪ್ರೇಮದ ಭಾವವಿಲ್ಲದೊಡೆ ೪
ಚಿತ್ತ ಮಲಿನವಿದ್ದು ಸತ್ಕಾರವಗೈಯ್ಯೆ
ಆಪ್ತ ಕಾಮ ತಾ ತೃಪ್ತಿಯ ಪೊಂದನು ೫
ಶ್ರೀಧರ ತಾ ದಯದಿಂದೊಲಿದಲ್ಲದೆ
ಸಾಧನ ಮಾತ್ರಕ್ಕೆ ಒಲಿಯಲು ಸಾಧ್ಯವೆ ೬
ನಳಿನನಯನನಾಜ್ಞೆಯ ನೀ ಪಾಲಿಸೆ
ಒಲಿವನು ನಿಜವಿದು ನಲಿಯುತ ನಿನಗೆ ೭
ಮೃಡವಂದಿತ ಶ್ರೀ ಕರಿಗಿರೀಶನೊಳ್
ದೃಢ ಭಕ್ತಿಯನಿಡು ಬಿಡದೆ ಪೊರೆವನೊ ೮

 

ಭೂಷಿತ ವನಮಾಲ | ಶ್ರೀಲೋಲ ಪ
ಆಶ್ರಿತ ರಕ್ಷ ಕೃಪಾಲ ವಾಲ ಅ.ಪ.
ಮಕರ ಕುಂಡಲಧರ ಪೀತಾಂಬರ | ಧೃತ
ಅಕಳಂಕ ಸುಂದರ ಶ್ರೀಮನೋಹರ ೧
ಜಲರುಹನಯನ ಜಲನಿಧಿಶಯನ
ವನಜಭವಾದಿ ಸಂಸೇವಿತ ಚರಣ ೨
ಅನಿಮಿಷ ಪೂಜಿತ ಮುನಿಜನ ವಿನುತ
ವನರುಹ ಸಂಭವ ತಾತ ವಿಖ್ಯಾತ ೩
ಕಾಮಿತಫಲದ ಸಾಮಜವರದ
ಸಾಮನಿಗಮ ಸಂಗೀತ ವಿನೋದ ೪
ಮಂದ ಸುಹಾಸ ಮೇಘ ಸಂಕಾಶ
ಸುಂದರವದನ ಶ್ರೀ ಕರಿಗಿರೀಶ ೫

 

ಮನ್ನಿಸು ಅಪರಾಧ ಮನ್ಮಥ ಜನಕನೆ ಪ
ಸನ್ನುತ ಗುಣಸಂಪನ್ನ ಮಹಿಮ ತಾ
ರುಣ್ಯ ಪಯೋನಿಧಿ ಬಿನ್ನಪ ಲಾಲಿಸಿ ಅ.ಪ
ಅಮರ ಶಿರೋಮಣಿ | ಆಶ್ರಿತ ರಕ್ಷಾಮಣಿ
ರಮಣಿ ರುಕ್ಮಿಣಿ ಮುಖಕಮಲ ಗಗನಮಣಿ
ನಮಿಪೆ ಭಕ್ತರ ಚಿಂತಾಮಣಿ ತವ ಚರಣಕೆ
ಮಣಿಯದೆ ಮೂಢ ಶಿಖಾಮಣಿಯಾದೆನು ೧
ಕಾಮಜನಕ ಪರಿಪೂರ್ಣ ಕಾಮ | ಭಕ್ತ
ಕಾಮಧೇನು ಕೋಟಿಕಾಮ ಲಾವಣ್ಯನೆ
ಶ್ರೀ ಮನೋಹರ ಕೌಸ್ತುಭಮಣಿಹಾರ ನಿ
ನ್ನೀ ಮಹಿಮೆಗೆ ಎನ್ನೀ ಮಣಿ ಅಧಿಕವೆ ೨
ಶರಣ ಶರಣ್ಯನೆ ಶಾಶ್ವತ ಸುಖದನೆ
ಪರಮ ಪುರುಷನೆ ಪಾವನಚರಿತ
ಕರಿಗಿರೀಶನೆ ಕರುಣಾಭರಣನೆ
ಕರಿವರದನೆ ಕರುಣವ ತೋರಿಸಿ ೩

 

ಮಾಣು ಮಾಧವ ಮಾಯ ಜಾಲಗಳ್
ಜಾಣ ನೀನೆಲೈ ಮಧುರ ನುಡಿಯೊಳು
ಮಾನವಳಿದ ಮೇಲ್ ಪ್ರಾಣವೇತಕೆ
ಕಾಣಬಂದಿತು ನಿನ್ನ ಕಪಟವು ೧
ಶೋಕ ಕಾರಣವರಿಯದಂತೆ ನೀ
ನೇಕೆ ಪೇಳುವೆ ಬರಿದೆ ಎನ್ನನು
ಸಾಕು ಸಾಕು ಈ ಸರಸವಾಕ್ಕುಗಳ್
ಶೋಕವಹ್ನಿಗೆ ಆಜ್ಯ ಸುರಿವರೆ ೨
ಭಾಮೆ ಕೃಷ್ಣನ ಪ್ರೇಮ ಪುತ್ಥಳಿ
ಸಾಮ್ಯರಹಿತವೀ ಸ್ನೇಹವೆನ್ನುತ
ಭೂಮಿಯೊಳ್ ಜನ ಪೊಗಳುತ್ತಿದ್ದರು
ಈ ಮಹಾಭ್ರಮೆ ಪೋಯಿತೀಗಲೆ ೩
ಚಾರುನುಡಿಗಳಾಪಾರವೆನ್ನೊಳು
ಸಾರ ಪ್ರೇಮವು ರುಕ್ಮಿಣಿಯೊಳು
ಪಾರಿಜಾತದ ಪುಷ್ಪವವಳಿಗೆ
ನೀರಸೋಕ್ತಿಗಳೆನ್ನ ಪಾಲಿಗೆ ೪
ಅಮರ ಮುನಿಪನು ನಿನ್ನ ಸಮುಖದೊಳ್
ಅಮಿತವಾಗಿ ತಾ ಸ್ತುತಿಸೆ ಭೈಷ್ಮಿಯ
ಕುಮತಿಯಿಂದ ತಾನೆನ್ನ ತೆಗಳಲು
ಅಮಮಯೆಂದೆಯಾ ಅಪ್ರಮೇಯನೆ ೫
ಕೊರಳೊಳು ಧರಿಸಿದ ಕುಸುಮ ಮಾಲೆಯು
ಉರಗನಾದೊಡೆ ಮಾಳ್ಪುದೇನು
ಶರದ ಚಂದ್ರನ ಕಿರಣ ತಪಿಪೊಡೆ
ಹಿರಿದು ಕರ್ಮವ ಫಲವಿದೆಲ್ಲವೇ ೬
ಕರಿಗಿರೀಶನ ಚಿತ್ತವೀಪರಿ
ಇರಲು ಸುಮ್ಮನೆ ಕೊರಗಲೇತಕೆ
ಸರುವ ಸಂಗವ ತೊರೆದು ತಪದೊಳು
ನಿರತಳಾಗುವೆ ನೀರಜಾಕ್ಷ ಕೇಳ್ ೭

 

ಮಾತನಾಡಿಸೋ ತಮ್ಮ ಮೃದುವಚನದಿ ಪ
ಈತನನು ನೀನೀಗ ಸ್ನೇಹಭಾವದಲಿ ಅ.ಪ.
ಕಪಿರಾಜ ಸುಗ್ರೀವ ಸಚಿವ ಶೇಖರನೀತ
ವಿಪುಲಮತಿ ಸಂಯುತನು ವ್ಯವಹಾರ ಚತುರ
ಅಪಶಬ್ದವಿನಿತಾದರಿಲ್ಲವೀತನ ಮುಖದಿ
ಸುಪವಿತ್ರದಾಕಾರ ಶೋಭಿತ ಸುಲಕ್ಷಣನು ೧
ನಾಲ್ಕು ವೇದಾಧ್ಯಯನ ಮಾಡಿದವನಲ್ಲದೊಡೆ
ನಾಲಿಗೆಯೊಳೀರೀತಿ ನುಡಿಯಲಳವೆ
ವ್ಯಾಕರಣ ಶಾಸ್ತ್ರದಲಿ ಪಾಂಡಿತ್ಯದಿವಗಿನ್ನು
ಸಾಕಲ್ಯವಿಲ್ಲದೊಡೆ ವಾಕು ಈ ಪರಿಬಹುದೇ ೨
ಮುಖನೇತ್ರ ಭ್ರೂಮುಖ್ಯ ಅಂಗಚೇಷ್ಟೆಗಳಿಲ್ಲ
ಸುಖ ಮಧ್ಯಸ್ಥಾಯಿಯಲಿ-ಮಾತುಮಿತವು
ಅಕಳಂಕ ಶ್ರೀ ಕರಿಗಿರೀಶನ ಪದಕಿಂಕರನು
ಸಕಲಲಕ್ಷಣಯುಕ್ತನಿವನತುಳ ಶಕ್ತ ೩

 

ಮೀರಲುಬಹುದೆ ದೈವ ಸಂಕಲ್ಪವ ಪ
ಮಾರಮಣನ ಘನ ಮನಕೆ ಬಂದುದನು ನಿ
ವಾರಿಸಿ ನಡೆಯಲಾ ಆರಿಗೆ ಸಾಧ್ಯವು ಅ.ಪ.
ಪುತ್ರರÀ ಬಯಸಲು ಮತ್ತೆ ವಂದ್ಯಳು ಸತಿ
ವಿತ್ತ ಬಯಸೆ ಶುಕ್ಲ ವೃತ್ತಿಯೆ ಗತಿಯು ೧
ಆಲಯದೊಳು ಜನನ ಆಗಬೇಕೆಂದರೆ
ಕಾಲನಾಮಕನಿಚ್ಛೆ ಅನ್ಯತ್ರವಿಹುದು ೨
ಜನನ ಮರಣಗಳು ಜಗದೀಶನಾಧೀನ
ವನಜನಯನ ಶ್ರೀ ಕರಿಗಿರೀಶನ ಚಿತ್ತ ೩

 

ಮೋಹನ ನವ ಭವನ ಪರೇಶನ ಪ
ಮೋಹ ದುರಿತ ಭವ ಭಯ ವಿಮೋಚನನ
ನೇಹದ ಗೇಹವು ಸಕಲ ಭುವನ ಸನ್ ಅ.ಪ.
ನಿಲಯ ಮಧ್ಯದೊಳಗೆ ಶೋಭಿಪ ನವ ಮಣಿ ಸ್ತಂಭಗಳು
ಬಲುವಿಧದಿಂ ಮನರಂಜಕವೆನಿಸುತ
ಲಲಿತಕಾಂತಿಗಳ ಬೀರುತಲಿರ್ಪ ೧
ನಿರುಪಮಾದ್ಭುತ ಶರೀರವಾಂತಿಹ ಉರಗಾಧಿಪನಿರವು
ಶರದರತುನಕಂಗಳ ದೀಪದ ಕರಿಗೊರಳು ರಸನೆಗಳು
ಕಾಣುವ ತ್ರಿಜಗನ್ ೨
ಭೋಗಿರಾಜಶಯನೆ ವರಮೇಘಕಾಯನೆನಿಸಿ
ಯೋಗಿವಿನುತ ನಿಜ ಲೀಲೆಯ ಪಾರ್ಥನಿ
ಗಾಗಿ ತೋರಿಸಿದ ಶ್ರೀ ಕರಿಗಿರೀಶನ ೩

 

ಯಾರೆಂದು ತಿಳಿದೆಯೋ ಈತನ ನೀನು ಪ
ಯಾರೆಂದು ತಿಳಿದಿಹೆ ಯದುಕುಲೋತ್ತಮಮನ ನೀ
ಪೋರ ಮಾತುಗಳನು ಸಾಕುಮಾಡೆಲೋ ಮೂಢ ಅ.ಪ.
ಪಶುಪಾಲನಿವನೆನುತ ಜರಿದೊಡೇನಾಯ್ತು
ಪಶುಪತಿ ವಿನುತನೀತ
ಬಿಸಜ ಸಂಭವನಿತ್ತ ವರದ ಬಲುಮೆಯಿಂದ
ವಸುಧೆ ಕಂಟಕನಾದ ಅಸುರ ಹಿರಣ್ಯಕನ
ಬಸುರ ನಖದಲಿ ಬಗೆದು ಸವರಿದ
ಅಸುರರಿಪು ಶ್ರೀಕರಿಗಿರೀಶನ
ದಶಶಿರಾಂತಕ ದಶರಥಾತ್ಮಜ
ಅಸಮ ಮಹಿಮನ ಅಪ್ರಮೇಯನ ೧

 

ರಘುವೀರನ ಕಂಡನು ಕಪಿವೀರ ಕಲಿಕಲ್ಮಷದೂರ ಪ
ಅಘವರ್ಜಿತ ಪನ್ನಗಶಯನನೆಂದು
ಬಗೆದು ಮನದಿ ಕರಮುಗಿದನು ದೂರದಿ ಅ.ಪ.
ಶಿರಭಾಗದಿ ಮೆರೆವ ಜಟಾಮಕುಟ | ಚಿಕುರಾಳಿಯಿಂದ
ಪರಿಶೋಭಿಪ ಸುಂದರ ಲಲಾಟ | ಕಮಲಾಕ್ಷಗಳಲಿ
ಕರುಣಾರಸಭರಿತ ಶುಭನೋಟ | ನಾಸಿಕ ಬಲು ಮಾಟ
ಸ್ಮರಲಾವಣ್ಯ ಧಿಕ್ಕರಿಸುವ ಸುಂದರ
ನರರೂಪಾನ್ವಿತ ಶರಧಿ ಗಂಭೀರನ ೧
ಆಜಾನುಬಾಹುಗಳತಿ ಪ್ರಶಸ್ತ | ಸುರಚಾಪದಂತೆ
ರಾಜಿಪ ಧನುವ ಧರಿಸಿದ ಹಸ್ತ | ವಿಶಾಲ ವಕ್ಷಕೆ
ಈ ಜಗದೊಳಗುಪಮೇಯದೆತ್ತ | ದೋಷನಿರಸ್ತ
ಮೂಜಗದೊಳಗತಿ ಸೋಜಿಗನೆನಿಪ ಸು
ತೇಜದಿ ರಾಜಿಪ ರಾಜಕುಮಾರನ ೨
ಸುಂದರ ತ್ರಿವಳಿಗೊಪ್ಪುವ ಉದರ | ನೆರೆ ಗಂಭೀರ
ಚಂದದಿ ಶೋಭಿಪ ನಾಭಿಕುಹರ | ಚೀರಾಂಬರಧರ
ಬಂಧುರ ಕಟಿತಟ ಬಲು ರುಚಿರ | ನೋಳ್ಪರ ಚಿತ್ತಹರ
ಕುಂದಿಲ್ಲದ ಪದದ್ವಂದ್ವ ಸುಶೋಭಿತ
ಸುಂದರಾಂಗ ಶ್ರೀ ಕರಿಗಿರೀಶನ ೩

 

ರಾಮ ರಮಾರಮ ರಾಮ ಶ್ರೀರಾಮ ಪ
ರಾಮ ಸೀತಾರಾಮ ರಾಮ ಜಯರಾಮ ಅ.ಪ.
ಶ್ರೀ ರಘುವಂಶ ಲಲಾಮನೆ ರಾಮ
ತಾರಕ ಮಂಗಳ ರಾಮನೆ ರಾಮ
ನೀರದ ನಿರ್ಮಲ ಶ್ಯಾಮನೆ ರಾಮ
ಸಾರಸಲೋಚನ ಸೌಮ್ಯನೆ ರಾಮ ೧
ಕೌಸಲ್ಯದೇವಿ ಕುಮಾರಕ ರಾಮ
ಕೋಸಲ ದೇಶಾನಂದಕ ರಾಮ
ಆಸುರೀ ತಾಟಕ ಶಿಕ್ಷಕ ರಾಮ
ಕೌಶಿಕ ಯಜ್ಞ ಸಂರಕ್ಷಕ ರಾಮ ೨
ಮುನಿಪತಿ ಶಾಪ ವಿಮೋಚಕ ರಾಮ
ಅನಲಾಕ್ಷ ಕಾರ್ಮುಕ ಭಂಜಕ ರಾಮ
ಜನಕ ಸುತಾನಂದ ವರ್ಧಕ ರಾಮ
ಅನುಪಮ ಲೀಲಾದ್ಯೋತಕ ರಾಮ ೩
ಸತ್ಯಪರಾಕ್ರಮ ಸಾತ್ವಿಕ ರಾಮ
ಪಿತೃವಾಕ್ಯ ಪರಿಪಾಲಕ ರಾಮ
ಉತ್ತಮ ಚರಿತಾದರ್ಶಕ ರಾಮ
ಚಿತ್ರಕೂಟಾದ್ರಿ ನಿವಾಸಕ ರಾಮ ೪
ಕಾಕುತ್ಥವಂಶ ಸುಧಾರಕ ರಾಮ
ಲೋಕೇಶ ಲೋಕ ಮನೋಹರ ರಾಮ
ಶ್ರೀಕರಾಶ್ರಿತ ಜನ ಮಂದಾರ ರಾಮ
ಶ್ರೀ ಕರಿಗಿರೀಶ ಸುಂದರ ರಾಮ ೫

 

ರುಕ್ಮಿಣಿಯ ದಿವ್ಯತರ ರೂಪವನು ವರ್ಣಿಸಲು
ರುಕ್ಮಗರ್ಭಗೆ ವಶವೆ ರೂಢಿಯೊಳಗೆ ಪ
ಮಿಕ್ಕ ಮನುಜರ ಮಾತು ಲೆಕ್ಕವೇತರದಯ್ಯಾ
ಪಕ್ಷಿವಾಹನ ಕೇಳು ಪರಮಪುರುಷ ಅ.ಪ
ಆ ದೇವಿಯಂಘ್ರಿಗಳ ಕೋಮಲಕೆ ಕುರುಹಾಗಿ
ಭೂದೇವಿ ತರುಗಳಲಿ ತಳಿರ ತಾಳಿಹಳೊ ೧
ಆ ಪಾದ ನಖಕಾಂತಿ ತಾ ಪ್ರಕಾಶಿಪ ತೆರೆಯು
ಈ ಪುತ್ಥಳಿಯ ಗಮನವಾದರ್ಶ ಹಂಸಕೆ ೨
ಬಡನಡುವ ತಾ ನೋಡಿ ಅಡವಿ ಸೇರಿತು ಸಿಂಹ
ಚೆಲುವ ನೇತ್ರವ ನೋಡಿ ಚಪಲ ಹೊಂದಿತು ಹರಿಣ೩
ನೀಲವೇಣಿಯ ನೋಡಿ ನಾಗಗಳು ನಾಚಿದವುಶ್ರೀ ಲಕುಮಿಯಾ ಕನ್ಯೆ ಶ್ರೀ ಕರಿಗಿರೀಶನರಾಣಿ ೪

 

ಲಾಲಿಸಿ ರಘುವರನ ಚರಿತೆಯ ಸಾರ
ಪೇಳುವೆ ಸುಖನಾಥನ ಪ
ಶ್ರೀ ಲಲಾಮನು ಸುರರ ಮೊರೆಯನು
ಕೇಳಿ ಧರಣಿಯ ಭಾರ ಹರಿಸಲು
ಲೀಲೆಯಲು ದಶರಥ ನೃಪಾಲನ
ಬಾಲನೆನಿಸುತ ಅವತರಿಸಿದನು ಅ.ಪ.
ಕುಶಿಸುತನ ಯಜ್ಞವ ರಕ್ಷಿಸಿ ಪಥದಿ
ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ
ಪಶುಪತಿಯ ಕೋದಂಡ ಖಂಡಿಸಿ
ಶಶಿವದನೆ ಜಾನಕಿಯ ಕರವನು
ಕುಶಲದಲಿ ಪರಿಗ್ರಹಿಸಿ ಲೀಲೆಯ
ನಸಮ ಭಾರ್ಗವನೊಡನೆ ತೋರಿದ ೧
ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ
ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ
ತಂದು ತಾ ಮನಕಂಡು ವನಕೆ
ಬಂದು ಸತಿ ಸೋದರರ ಸಹಿತದಿ
ಮುಂದೆ ಗಂಗೆಯ ದಾಟಿ ಭರದ್ವಾಜ
ನಿಂದ ಸತ್ಕಾರವನು ಕೊಂಡನು೨
ಚಿತ್ರಕೂಟದಲಿರಲು ವಿನಯದಿ ಬಂದು
ಭಕ್ತ ಭರತನು ಬೇಡಲು ಪಾದುಕೆಯಿತು
ಮತ್ತೆ ದಂಡಕವನ ಪ್ರವೇಶಿಸಿ
ದೈತ್ಯರನು ಸಂಹರಿಸಿ ಶರಭಂಗ
ಗಿತ್ತು ಮುಕ್ತಿಯ ಕುಂಭಸಂಭವ
ನಿತ್ತ ದಿವ್ಯಾಸ್ತ್ರಗಳ ಪಡೆದನು ೩
ವರಪಂಚವಟಿಯೊಳಗೆ ಶೂರ್ಪನಖಿಯು
ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ
ಹರಿಣರೂಪದಿ ಬಂದ ದೈತ್ಯನ
ಹರಣಗೈದಾಶ್ರಮಕೆ ತಿರುಗಲು |
ಧರಣಿಸುತೆಯನು ಕಾಣದೆಲೆ ತಾ
ನರರ ಪರಿಯಲಿ ಹಂಬಲಿಸಿದನು ೪
ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ
ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ
ಅನುಜ ಸುಗ್ರೀವನಿಗೆ ಹರುಷದಿ
ವಿನುತ ವಾನರ ರಾಜ್ಯದೊಡೆತನ
ವನು ಕರುಣಿಸಿದ ಬಳಿಕ ಜಾನಕಿ
ಯನು ಪುಡುಕೆ ಕಳುಹಿದನು ಕಪಿಗಳ ೫
ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ
ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು
ಭೂಮಿಜಾತೆಯ ಕಂಡು ರಾಮನ
ಕ್ಷೇಮ ವಾರ್ತೆಯ ತಿಳುಹಿ ಬಹುಜನ
ತಾಮಸರ ಸದೆಬಡಿದು ರಾವಣ
ನಾ ಮಹಾ ನಗರಿಯನು ದಹಿಸಿದ ೬
ಮರಳಿ ರಾಮನ ಬಳಿಗೆ ಬೇಗದಿ ಬಂದು
ಮರುತ ಸುತನು ರಾಮಗೆ ಸೀತೆಯ ಕ್ಷೇಮ
ವರುಹಿ ಚೂಡಾಮಣಿಯ ನೀಡಲು
ಕರದಿ ಕೈಕೊಂಡದನು ನೋಡುತ
ನರರ ಪರಿಯಲಿ ಹರುಷಬಾಷ್ಪವ
ಸುರಿಸಿದನು ಶ್ರೀ ಕರಿಗಿರೀಶನು ೭

 

ವೃಂದಾವನ ಪ್ರವೇಶಿಸಿದಂದವ
ಚಂದದಿ ಪೇಳುವೆ ಪಾಲಿಪುದು ಪ
ಇಂದಿರೆಯರಸನ ಪ್ರೇರಣೆಯಿಂದ ಯತಿ
ವೃಂದ ತಿಲಕ ರಾಘವೇಂದ್ರರಾನಂದದಿ ಅ.ಪ
ಒಂದು ದಿನವು ಶ್ರೀ ರಾಯರು ಶಿಷ್ಯರ
ವೃಂದಕೆ ಪಾಠವ ಹೇಳುತಿರೆ
ಅಂದು ವಿಮಾನದಿ ಕೃಷ್ಣದ್ವೈಪಾಯನ ಪ
ರಂಧಾಮಕೈದಲು ನೋಡಿ ಕೈ ಮುಗಿದು ೧
ಎಷ್ಟು ದಿನವು ನಾವಿಲ್ಲಿರಬೇಕೆಂದು
ಶಿಷ್ಟ ಗುರುವರರು ಕೇಳಿದೊಡೆ
ಕೃಷ್ಣದ್ವೈಪಾಯನರೆರಡು ಬೆಳಗುಳ
ಗಟ್ಟಿಯಾಗಿ ಬೀಸಿ ತೋರಿಸಿ ಪೊರಟರು ೨
ನೆರೆದ ಶಿಷ್ಯರದರರ್ಥವೇನೆನುತ
ಗುರುಗಳನ್ನು ತಾವ್ ಕೇಳಿದೊಡೆ
ಎರೆಡು ವರ್ಷ ತಿಂಗಳು ದಿನವೆರಡೆರಡು
ಇರುವುದು ಧರೆಯೊಳಗೆಂದರು ರಾಯರು ೩
ಆದವಾನಿಗೆ ಗುರು ಸಂಚಾರ ಪೋಗಿರೆ
ಆ ದಿವಾನ ವೆಂಕಣ್ಣ ಬಲು
ಆದರಿಸಿದ ಬಳಿ ತಾ ನವಾಬನಿಂದ
ಮೋದದಿ ಕೊಡಿಸಿದ ಮಂಚಾಲೆಯನು ೪
ಹಿಂದೆ ಪ್ರಹ್ಲಾದರು ಯಾಗವ ರಚಿಸಿದ
ಸುಂದರ ಕ್ಷೇತ್ರವಿದೆಂಬುದನು
ತಂದು ಮನಕೆ ಗುರುರಾಯರೀ ಕ್ಷೇತ್ರವ
ನಂದು ಪಡೆದು ತಾವಿಲ್ಲಿಯೇ ನಿಂತರು ೫
ಉತ್ತಮ ನೀಲವರ್ಣದ ಶಿಲೆಯಪಳಿರಿಸಿ
ಕೆತ್ತಿಸಿ ವೃಂದಾವನತರಿಸಿ
ಕ್ಷೇತ್ರರಕ್ಷಣೆಯಗಷ್ಟ ದಿಕ್ಕುಗಳಲಿ ದೇವ
ಮೂರ್ತಿಗಳನು ಸ್ಥಾಪಿಸಿ ನಿಲಿಸಿದರು ೬
ವೃಂದಾವನದಲಿ ಸ್ಥಾಪಿಸಲೇಳ್ನೂರು
ಚಂದದ ಸಾಲಿಗಾಮಗಳ
ತಂದಿಟ್ಟರೆ ಸಿದ್ಧತೆಗಳು ಸಕಲವು
ಕುಂದಿಲ್ಲದಂದೆ ನಡೆದಿರಲಾಗಲೆ ೭
ಮುಂದಕೆ ತಮ್ಮ ಸಂಸ್ಥಾನವ ವಹಿಸಿ ಯೋ
ಗೀಂದ್ರರೆಂಬ ಪ್ರಿಯ ಶಿಷ್ಯರಿಗೆ
ಸಂದಿಪ ವಿರಹದಿ ನೊಂದಿದ ಶಿಷ್ಯರ
ವೃಂದವ ಬಲು ಸಂತೈಸಿದರಾಗಲೇ ೮
ನಲವತ್ತೇಳು ಸಂವತ್ಸರ ನಾಲ್ಕು ತಿಂ
ಗಳು ಇಪ್ಪತ್ತೊಂಭತ್ತು ದಿನಕಾಲ
ನಲವಿನಿಂದ ವೇದಾಂತ ಸಾಮ್ರಾಜ್ಯವ
ಸಲಹಿ ಸುಕೀರ್ತಿಯ ಗಳಿಸಿದ ಬಳಿಕ ೯
ಸಾವಿರದೈನೂರು ತೊಂಭತ್ಮೂರನೆ
ಯಾ ವಿರೋಧಿ ಕ್ರತು ಸಂವತ್ಸರದ
ಶ್ರಾವಣ ಕೃಷ್ಣ ದ್ವಿತೀಯದ ಗುರುವಾರ
ದಾ ವಾಸರ ಮುಹೂರ್ತದಿ ಗುರುವರ ೧೦
ಹಸ್ತದಿ ಜಪಮಾಲೆ ಪಿಡಿದು ಯೋಗೀಂದ್ರರ
ಹಸ್ತಲಾಘವವ ಸ್ವೀಕರಿಸಿ
ಸ್ವಸ್ತಿವಾಚನಗಳ್ ವಿಪ್ರರು ಪೇಳುತಿರೆ
ಅರ್ಥಿಯಲಿ ವೃಂದಾವನವ ಪ್ರವೇಶಿಸಿ ೧೧
ಪದ್ಮಾಸನದಲಿ ಮಂಡಿಸಿ ಎದುರಲಿ
ಮುದ್ದುಪ್ರಾಣೇಶನ ನೋಡುತಲಿ
ಪದ್ಮನಾಭನ ಧ್ಯಾನದೊಳಿರೆ ಜಪಸರ
ಬಿದ್ದು ಬಿಡಲು ಮುಚ್ಚಳಿಕೆಯನಿಡಲು ೧೨
ನೆರೆದಿಹ ವಿಪ್ರರು ಜಯ ಜಯವೆನ್ನುತ
ಪರಿಪರಿ ರಾಯರ ಪೊಗಳಿದರು
ಕರಿಗಿರೀಶನ ಕರುಣ ಪಡೆದ ನಮ್ಮ
ಗುರುಸಾರ್ವಭೌಮನ ಸರಿಯಾರಿಹರು ೧೩

 

ವೃಂದಾವನದೊಳು ಶೋಭಿಸುತಿರುವಳು
ಸುಂದರ ಶ್ರೀ ತುಳಸಿ ಪ
ನಂದನಂದನ ಗತಿ ಪ್ರಿಯಳೆಂದೆನಿಸುತ
ವಂದಿಸುವರ ಭವ ಬಂಧವ ಬಿಡಿಸುತ ಅ.ಪ
ನಿತ್ಯವು ಪ್ರಾತಃಕಾಲದೊಳೆದ್ದು
ಪವಿತ್ರ ಚಿತ್ತದಲಿ ಭಕ್ತಿಯಲಿ
ಸ್ತೋತ್ರವ ಗೈಯುತ ಸುತ್ತಿ ಪ್ರದಕ್ಷಿಣೆ
ಮತ್ತೆ ನಮಿಪರಘ ಬತ್ತಿಸಿ ಸಲಹುತ ೧
ತುಳಸಿ ವೃಂದಾವನ ಮಹಿಮೆಯ ಮನದಲಿ
ನಿಲಿಸಿ ಸೇವಿಸುವ ಸಜ್ಜನರ
ಕಲಿದೋಷಗಳನು ಕಳೆದು ಸತತ ಶ್ರೀ
ನಿಲಯನೂಳ್ ಭಕ್ತಿಯ ಕೊಡುವೆನೆಂದೆನುತ ೨
ತುಳಸಿ ದಳದಿ ಶ್ರೀ ಕರಿಗಿರೀಶನ
ವಿಲಸಿತ ಪೂಜೆಯ ಮಾಡುವರ
ಸುಲಲಿತ ಸತ್ಪಥದೊಳು ನಡೆಸುತ ನಿ
ರ್ಮಲಮತಿ ಕರುಣಿಸಿ ಸಲಹುವೆನೆನ್ನುತ ೩

 

ವೃಷಭವಾಹನ ಪಶುಪತಿ ಬಂದ ಆನಂದದಿಂದ ಪ
ಶಶಿಧರ ಶಂಕರ ಸುರಗಂಗಾಧರ
ಅಸಮ ಸುಶೋಭಿತ ಜಟಾಜೂಟಧರ ಅ.ಪ
ಕರÀದಿ ಧರಿಸಿದ ಡಮರುಗ ತ್ರಿಶೂಲ | ಸುಂದರವಾದ
ವರಸಾರಂಗ ಸರಸಿಜಭವ ಕಪಾಲ | ಕೊರಳಲಿ ನೋಡೆ
ಧರಿಸಿದ ಬಹುಪರಿ ರುಂಡಮಾಲಾ | ಕಿಡಿಗಣ್ಣಿನ ಫಾಲಾ
ಗರಳಕಂಠ ಕರಿವರ ಚರ್ಮಾಂಬರ
ಧರ ಗೌರೀವರ ಸ್ಮರ ಮದಪರಿಹರ ೧
ರಜತಾಚಲ ಮಂದಿರವಾಸ | ಮಹೇಶ ಶಿವಕೃತ್ತಿವಾಸ
ಭುಜಗಭೂಷಣ ಶೋಭಿತ ವರವೇಷ | ಭಕ್ತರ ಪೋಷ
ಗಜಮುಖ ಜನಕ ಭೂತ ಗಣೇಶ ಪಾಪೌಘ ವಿನಾಶ
ಕುಜನಾವಳಿ ಮದಗಜ ಮೃಗರಾಜನು
ಸುಜನಜಾಲ ಪಂಕಜಹಿತ ದಿನಮಣಿ ೨
ಸುರವರನಮಿತಚರಣನು ಬಂದ | ಶೋಭಿತವಾದ
ಪರಿಪರಿ ಚಿತ್ರ ಭೂಷಣನು ಬಂದ | ಕೋರಿದವರ
ಕರೆದೀವ ಕರುಣಾಭರಣನು ಬಂದ | ತಾನೊಲವಿಂದ
ಚರಣ ಶರಣರಘ ಪರಿಹರಗೈಸುವ
ಕರಿಗಿರೀಶಪ್ರಿಯ ಪುರಹರ ಶಂಕರ ೩

 

ಶರಣಾಗತ ರಕ್ಷಾಮಣಿಯೆ ಶ್ರೀ ಹರಿಯೆ ಪ
ಶರಣಾಗತ ಜನ ವರ ರಕ್ಷಾಮಣಿಯೆಂಬ
ಬಿರುದಿನಿಂದಲಿ ಮೆರೆವ ಕರುಣಾ
ಭರಣ ಕಾಮಿತ ವರಪ್ರದಾಯಕ ಅ.ಪ.
ಜನನ ಮರಣ ರಹಿತ ಜಗದ ಜನ್ಮಾದಿ ಕರ್ತ
ಜನುಮ ಜನುಮದಲ್ಲಿ ಜಗದ ಜೀವರಿಗೆಲ್ಲಾ
ಅನಿಮಿತ್ತ ಬಂಧುವೆಂದು ನಿನ್ನಯ ಪಾದ
ವನಜಗಳನು ನಾವಿಂದು ನಂಬಿಹೆವಿನ್ನು
ವನಜನಾಭನೇ ನೀ ಬಂದು ಕಾಯಬೇಕೆಂದು
ತನುಮನಂಗಳ ನಿನಗೆ ಒಪ್ಪಿಸಿ
ಅನುನಯದಿ ಶಿರ ಮಣಿದು ಬೇಡುವೆ
ಅನಘ ಅನುಪಮ ಗುಣಗಣಾಂಬುಧಿ
ಅನಿಮಿಷೋತ್ತಮ ಅಪ್ರಮೇಯನೆ ೧
ಕಾಮಜನಕ ಪೂರ್ಣಕಾಮ ಆಶ್ರಿತ ಜನ
ಕಾಮಧೇನುವೆ ಕೋಟಿ ಕಾಮಲಾವಣ್ಯನೆ
ಶ್ರೀ ಮನೋಹರ ಗಂಭೀರ ಸುರುಚಿರ ಘನ
ಶ್ಯಾಮಸುಂದರ ಶರೀರ ಸನ್ನುತ ಮಹಿಮ
ಸಾಮಜನರ ಉದ್ಧಾರ ಭಕ್ತ ಮಂದಾರ
ಸಾಮಗಾನ ಪ್ರೇಮ ಜಗದಭಿ
ರಾಮ ರಾಕ್ಷಸ ಭೀಮ ಮಂಗಳ
ನಾಮ ಸುರಮುನಿ ಸ್ತೋಮ ಸನ್ನುತ
ಸ್ವಾಮಿದೇವ ಲಲಾಮ ನಮೊ ನಮೊ ೨
ಇಂದಿರಾರಮಣ ಗೋವಿಂದ ಮಾಧವ ಅರ
ವಿಂದಲೋಚನ ಪೂರ್ಣಾನಂದ ಸ್ವರೂಪನೆ
ಎಂದೆಂದು ನೀನಲ್ಲದೆ ಗತಿ ಎಮಗಿಲ್ಲ
ವೆಂದು ನಿನ್ನನು ಬಿಡದೆ ಕರಿಗಿರೀಶನೆ
ತಂದೆ ಯೆಮ್ಮಯ ಕುಂದುಗಳ ನೀ
ನೊಂದನೆಣಿಸದೆ ಬಂದು ಸಲಹುವು
ರೆಂದು ಬೇಡುವೆ ಇಂದು ಕರುಣಾ
ಸಿಂಧು ನತಜನ ಬಂಧು ನರಹರಿ೩

 

ಶರಣು ಶರಣು ವಾದಿರಾಜ ಶರಣ ಜನಕೆ ಕಲ್ಪ ಭೂಜ ಪ
ಧರಣಿ ಸುರ ವರಾದಿ ಪೂಜಿತ ಚರಣ ಪಂಕಜ ಭವ್ಯತೇಜ ಅ.ಪ
ಯೋಗಿವರ ವಾಗೀಶ ಕುವರ
ಬಾಗಿ ನಮಿಸಿ ಮುಗಿಯುವೆ ಕರವ
ಭೋಗ ರಾಗ ದೂರ ಧೀರ
ಭಾಗವತ ಕುಲಾಬ್ಜ ಭಾಸ್ಕರ ೧
ಸರಸ ಕವಿತಾ ಸಿರಿ ವಿಲಸಿತ
ಪರಿಪರಿ ಸದ್ಗ್ರಂಥ ರಚಿತ
ವರಕವೀಂದ್ರ ಕೀರ್ತಿಸಾಂದ್ರ
ಪರಮ ಕುಲಾಂಬುಧಿ ಚಂದ್ರ ೨
ಶ್ರೀಶ ಶ್ರೀ ಹಯಾಸ್ಯ ಚರಣ
ದಾಸ ಕವಿ ಜನಾವಳಿ ಭೂಷಣ
ಭಾಸುರಾಗ ಪಾಲಿಸು ಕರಿಗಿ
ರೀಶನ ಚರಣ ಕಮಲ ಚರಣ ೩

 

ಶ್ರೀ ಚಂದ್ರಿಕಾಚಾರ್ಯ ಗುರುವೇ ಪ
ಯಾಚಿಪೆ ನಿನ್ನ ಶ್ರೀ ಚರಣ ಸೇವೆ ಅ.ಪ
ಶ್ರೀ ಪೂರ್ಣಪ್ರಜ್ಞಮತ ಜಲಧಿ ಚಂದ್ರ ಯತೀಂದ್ರ
ಭೂಪೂರ್ವ ಪ್ರಹ್ಲಾದ ಸಜ್ಜನಾಹ್ಲಾದ
ಗೋಪಾಲಕೃಷ್ಣ ಚರಣಾಂಬುರುಹ ಲೋಲ
ಶ್ರೀಪಾದರಾಜಪ್ರಿಯ ಬಾಲಸುಶೀಲ ೧
ಶ್ರೀ ಸಮೀರನ ಮತ ಸಾಧಿಸುವ ಸದ್ಗ್ರಂಥ
ರಾಶಿಯನು ರಚಿಸಿ ಸನ್ಮಾನ್ಯರೆನಿಸಿ
ದಾಸಕೂಟಕೆ ನೆಲೆಯಿತ್ತು ಪುರಂದರ
ದಾಸರನು ಕರುಣಿಸಿದೆ ಧೀರ ಉದಾರ ೨
ಕುಹುಯೋಗ ಪರಿಹಾರಗೈದ ಮಹಾಯೋಗಿವರ
ಕುಹಕ ವರ್ಜಿತ ಚಿತ್ತ ಶೋಭಿತ ಸುಖಾಂತ
ಅಹೋರಾತ್ರಿ ಕರಿಗಿರೀಶನ ಪಾದ ಧ್ಯಾನಿಪರ
ಸಹವಾಸವೆನಗಿತ್ತು ಸಲಹುವುದು ಸತತ ೩

 

ಶ್ರೀ ಮನೋಹರ ಹರಿಯಾಪಾರ ವ್ಯಾಪಾರ ಪ
ಶ್ರೀ ಮಹಾಲಕುಮಿ ಮನಕೆ ಗೋಚರಿಸಿದದರಪಾರ ಅ.ಪ.
ಕುಂಭಿಣಿ ಪರಮಾಣುಗಳನು
ಅಂಬುಕಣಗಳನ್ನು ಗಣನೆ
ಗಿಂಬುಗೈದು ತಿಳಿಯಬಹುದು
ಅಂಬುಜಾಕ್ಷನ ಗುಣವಗಣಿತ ೧
ನಿಗಮ ನಿಕರ ತೋಡಿ ಪುಡುಕಿ
ನೀರಜಾಕ್ಷನ ನೆಲೆಯ ಕಾಣದು
ಜಗದ ಜನರ ಭಾವನೆಗಿನ್ನು
ಸಿಗುವನೆ ಅಚಿಂತ್ಯಮಹಿಮ ೨
ಭಜಕ ಜನರ ಮನಕೆ ತನ್ನ
ನಿಜ ಕರ್ತೃತ್ವವನು ತೋರಿ
ನಿಜ ಸುಜ್ಞಾನವಿತ್ತು ಪೊರೆವ
ವಿಜಯಸಾರಥಿ ಕರಿಗಿರೀಶ ೩

 

ಶ್ರೀ ಲಲಾಮನೆ ನಿನ್ನ ಚರಣಾಬ್ಜಗಳಿಗೆ ನಮೊ
ನೀಲಮೇಘಶ್ಯಾಮ ನಿರುಪಮ ತ್ರಿಧಾಮ ಪ
ಮೂಲಕಾರಣ ನಿನ್ನ ಹೊರತಿನ್ನು ಕಾಯುವರು
ಮೂರ್ಲೋಕದೊಳಗಿಲ್ಲ ಮುರಹರ ಮುಕುಂದ ಅ.ಪ.
ಕಲುಷವರ್ಜಿತ ನಿತ್ಯ ಕಲ್ಯಾಣಗುಣ ಪೂರ್ಣ
ಜಲಜನಾಭನೆ ದೇವಾ ಜಲಧಿಶಯನ
ಜಲಜಜಾಂಡವ ಸೃಷ್ಟಿ ಸ್ಥಿತಿ ಪ್ರಳಯ ಕರ್ತ ನಿನ್ನ
ನೆಲೆಗಾಣೆವೋ ಸ್ವಾಮಿ ಅಪ್ರಮೇಯ ಸ್ವರೂಪ ೧
ಕುಂಭಿಣಿಯ ಪಮಾಣುಗಳನಧಿಕ ಯತ್ನದಲಿ
ಅಂಬುಧಿಯ ಕಣಗಳನು ಎಣಿಸಬಹುದು
ಅಂಬುಜಾಕ್ಷನೇ ನಿನ್ನ ಆನಂದ ಮೊದಲಾದ
ಗಂಭೀರ ಗುಣಗಳನು ಎಣಿಸಲಾರಿಗೆ ಸಾಧ್ಯ ೨
ಪರಮಾತ್ಮ ಪರಂಜ್ಯೋತಿ ಪರಮ ಪಾವನರೂಪ
ಪರಿಪೂರ್ಣ ಆನಂದ ಪುರುಷೋತ್ತಮ
ಕರಿರಾಜವರದ ಶ್ರೀ ಕರಿಗಿರೀಶನೆ ನಿನ್ನಚರಣ ಸೇವಕನೆಂದು ಕರಪಿಡಿದು ಕಾಯೊ ೩

 

ಶ್ರೀ ವರನೆ ಪರತರನೆ ಪ
ಪಾವನಕರ ಕರುಣಾರಸ ಭರಿತನೆ ಅ.ಪ.
ಅಘ ಪರಿಹಾರಕ ಹರಿಯೆ
ಬಗೆ ಬಗೆ ಅಪರಾಧಗಳನು ಕ್ಷಮಿಸಿದೆ ೧
ಸಕಲ ನಿಯಾಮಕ ವಿಭುವೆ
ಭಕುತಪರಾಧ ಸಹಿಷ್ಣುವೆ ಪ್ರಭುವೆ ೨
ಮೊರೆಯನು ಕೇಳೆಲೊ ದೊರೆಯೆ
ಗರುವ ಕೊಡದೆ ಪೊರೆ ಕರಿಗಿರಿ ನಿಲಯನೆ ೩

 

ಶ್ರೀ ಹರಿವ್ಯಾಪಾರ ಅಪಾರ ಪ
ಶ್ರೀ ಸರಸಿಜಭವ ಸುರವರ ಪ್ರಮುಖರ
ಭಾವನೆಗೊ ಅತಿ ದೂರ ಅ.ಪ.
ಪೊಂದಿದೆ ಭಕುತರಿಗೆ ಕದಾಚಿತು
ಬಂದೊಡಹಂ ಮಮತೆ
ಕುಂದಿಸಿ ಗರ್ವವ ಬಂದತಿ ಲೀಲೆಯೊಳ್
ಚಂದದಿ ಪೊರೆವ ಗಜೇಂದ್ರವರದನು ೧
ಕಷ್ಟದಿ ತೊಳಲಿಸುವ ನಿಜಭಕ್ತರ
ಶ್ರೇಷ್ಠಗತಿಯ ಕೊಡುವ
ದುಷ್ಟರಿಗೆ ಸಿರಿಕೊಟ್ಟು ಕೆಡಿಸುವನು
ಶಿಷ್ಠ ಪಾಂಡವಪ್ರಿಯನ ಗುಟ್ಟಿದು ಕಾಣಿರೊ ೨
ದೇವದಾನವರ ಸ್ವಭಾವವ
ಭಾವಿಸಿ ತಾನವರ
ಕಾವನು ಕೊಲುವನು ಕಲುಷ ವಿದೂರನುದೇವವರೇಣ್ಯ ಶ್ರೀ ಕರಿಗಿರೀಶನು ೩

 

ಸರಸಿಜಾಸನ ಮೊದಲು ಸ್ತಂಭ ಪರ್ಯಂತವು
ಚರಚರಾತ್ಮಕ ಜಗವು ಎಲ್ಲವು ಪ
ಪರತರನಾದ ಯಾವಾತನಾಧೀನವೋ ಆ
ಹರಿಯೇ ಬಲವು ನಿನಗೆ ಎನಗೆ ಮತ್ತೆಲ್ಲರಿಗೆ ಅ.ಪ.
ಈಶ್ವರನಾತನು ಕಾಲ ಉರುಕ್ರತು
ಭಾಸುರತೇಜ ಓಜಸು ಸತ್ವನೊ ಬಲು ಶಕ್ತನೊ
ಸರ್ವಜಗತ್ರ‍ಸಷ್ಟಿ ಸ್ಥಿತಿ ಲಯಕಾರನೊ
ಆ ಸರ್ವೇಶನ ಬಿಟ್ಟು ಬಲವಾವುದಿನ್ನಯ್ಯಾ ೧
ಆರು ವರ್ಗಗಳೆಂಬ ವೈರಿಗಳ್ ಕಳ್ಳರಂತೆ
ಸೇರಿಕೊಂಡಿಹರು ಶರೀರದೊಳು
ಗಾರು ಮಾಡುವರವರಗಲ್ಲದೆ ಧರೆಯಲ್ಲಿ
ಭೂರಿ ಜಯಿಸಿದೆನೆಂಬ ಗರ್ವ ಸಲ್ಲುವುದೇನೊ ೨
ನಿನ್ನ ಆಸುರೀಭಾವ ಇನ್ನಾದರೂ ಬಿಟ್ಟು
ಘನ್ನಮಹಿಮ ಕರಿಗಿರೀಶನೊಳ್ ಮನವ |
ಚೆನ್ನಾಗಿ ಕಲಿಸಿ ನೀ ಸಮಚಿತ್ತನಾದೊಡೆ
ಇನ್ನು ನಿನಗೆ ವೈರಿಗಳು ಯಾರು ಇಹರಯ್ಯಾ ೩

 

ಸೀಸಪದ್ಯ
ಸರಸಿಯೊಳಗಂದು ಮಕರ ಭಾದೆಗೆ ಸಿಲುಕಿ
ಕರಿರಾಜ ತಾ ಕರೆಯೆ ಭರದಿ ನೀ ಬಂದೆ
ತಂದೆ ಭಾಧಿಸುತಿರಲು ಕಂದ ಪ್ರಹ್ಲಾದನನು
ಸಂದೇಹವಿಲ್ಲದೆಲೆ ಬಂದು ಕಾಯ್ದೆ
ವಿಪಿನದಲಿ ಧ್ರುವರಾಯ ತಪವಗೈಯುತಲಿರಲು
ಕೃಪೆಯಿಂದ ಮೈದೊರ್ದೆ ಕೃಪಣವತ್ಸಲನೇ
ಮರಣ ಕಾಲದಿ ಮಗನ ಕರೆದಜಾಮಿಳನಂದು
ಕರುಣದಿಂದಲಿ ಪೊರೆದೆ ಕರುಣ ಶರಧೆ
ಅಂದು ಸಭೆಯಲಿ ದುರುಳ ಸೆರಗ ಸೆಳೆಯುತಿರೆ
ನೊಂದು ಚೀರಿಡಲಕ್ಷಯಾಂಬರವನಿತ್ತೆ
ಇಂದು ನೀನಲ್ಲದೆಲೆ ಕಾಯ್ವರಿನ್ನಾರಿಹರು
ತಂದೆ ನೀ ಮೈದೋರು ಶ್ರೀ ಕರಿಗಿರೀಶ

 

ಸಾರಸ ನಯನ ಶ್ರೀರಾಮಚಂದ್ರನ ಚರಿತೆ
ಸಾರ ಪೇಳುವೆ ಕೇಳಿ ಸಾರ ಹೃದಯ ಶ್ರೀ ಪ
ಸಾರಸ ಭವ ಮುಖರರ ಮೊರೆಯ ಕೇಳಿ
ಧಾರುಣಿಯೊಳಗವತಾರ ಮಾಡಿದನಮ್ಮಾ ಅ.ಪ.
ದಶರಥ ಸುತನೆನಿಸಿ ವಸುಧೆಯೊಳವತರಿಸಿ
ಕುಶಿಕಸುತನ ಯಜ್ಞವ ನೆರೆಪಾಲಿಸಿ
ಅಶಮವಾಗಿದ್ದ ಅಹಲ್ಯೆಯ ಶಾಪ ಪರಿಹರಿಸಿ
ವಸುಧೀಶ ಜನಕನಾಸ್ಥಾನ ಪ್ರವೇಶಿಸಿ
ಪಶುಪತಿಯ ಕೋದಂಡ ಖಂಡಿಸಿ
ಶಶಿವದನೆ ಜಾನಕಿಯನೊಲಿಸಿ
ಅಸಮ ಭಾರ್ಗವನೊಡನೆ ಸರಸವ
ನೆಸಗಿ ಜಗದೊಳು ಲೀಲೆ ತೋರಿದ ೧
ಜನಕನಾಜ್ಞೆಯ ತಾಳಿ ಜನಕ ಸುತೆಯ ಸಹಿತ
ಅನುಜನೊಡನೆ ಹೊರಟು ವನವಾಸಕೆ
ಘನಭಕ್ತಿ ಭರಿತ ಶ್ರೀ ಭರತಗೆ ಪಾದುಕೆ
ನೀನು ಕರುಣಿಸಿ ಮುಂದೆ ವನದಂಡಕವ ಪೊಕ್ಕು
ಅನುಜ ದುರುಳ ವಿರಾಧಮುಖರನು
ಹನನಗೈದಾ ಬಳಿಕ ಶರಭಂಗ
ಮುನಿಗೆ ಸದ್ಗತಿಯಿತ್ತಗಸ್ತ್ಯನ
ವಿನುತ ಅಸ್ತ್ರಗಳನು ಪಡೆದನಾ ೨

ಪಂಚವಟಿಯೊಳಗೆ ಸಂಚುಗೈಯುತ ಬಂದ
ಕಾಂಚನಮೃಗವನು ಪಂಚಕಗೊಳಿಸಿ
ಕುಂಚಿತ ಮತಿಯ ದ್ವಿಪಂಚಶಿರನು ಬರಲು
ವಂಚನೆಯಿಂದಪರಿಹರಿಸಲು ಸೀತೆಯ
ಸಂಚುಕಾಣದೆ ವನವನದೊಳು
ಸಂಚರಿಸುತಲಿ ಶೋಕ ತೋರುತ
ಪಂಚಶರಹತನಂತೆ ಬಳಲುತ
ಪಂಚಶರ ಪಿತ ಬಂದ ಪಂಪೆಗೆ ೩
ಮಾರುತಸುತನ ವಿನಯಭರಿತ ವಾಕ್ಯಕೆ ಮೆಚ್ಚಿ
ತರಣಿಸುತನ ಕೂಡೆ ಸಖ್ಯವ ಬೆಳೆಸಿ
ದುರಿತವಗೈದ ವಾಲಿಯ ನಿಗ್ರಹಿಸಿ ಕಪಿ
ವರ ಸುಗ್ರೀವಗೆ ರಾಜ್ಯಕರುಣಿಸಿದಾ ಬಳಿಕ
ಪರಮ ವಜ್ರಶರೀರಿ ಪವನಜ
ಶರಧಿಯ ಲಂಘಿಸಿ ಧರಣಿತನಯಳಿ
ಗರುಹಿ ಕುಶಲವ ಮುದ್ರಿಕೆಯನಿತ್ತು
ಉರುಹಿ ಲಂಕೆಯ ಬರಲು ಒಲಿದನು ೪
ಭಕ್ತ ವಿಭೀಷಣನಿಗೆ ಇತ್ತು ಅಭಯವನು
ಮೊತ್ತವಾನರ ಸಹಿತ ಶರಧಿ ಬಂಧಿಸಿ ದಾಟಿ
ಹತ್ತು ತಲೆಯವನ ಪುರವ ಪ್ರವೇಶಿಸಿ
ದೈತ್ಯಶೂರರನ್ನೆಲ್ಲ ಮೃತ್ಯು ವಶವ ಮಾಡಿ
ಮತ್ತೆ ಕುಂಭಕರ್ಣೇಂದ್ರಜಿತ್ ಮುಖ
ದೈತ್ಯರನು ಸಂಹರಿಸಿ ರಣದೊಳು
ಶತ್ರು ಭಯಂಕರನಾಗಿ ಮೆರೆದನು
ಸ್ತುತ್ಯ ಮಹಿಮ ಶ್ರೀ ಕರಿಗಿರೀಶನು ೫

 

ಸಾರಸನಯನ ನಮೋ ನಮೋ ಪ
ನಾರಾಯಣ ಗೋವಿಂದ ನಮೋ ಅ.ಪ.
ದೀನ ಜನಾವನ ದಾನವ ಮಥನ
ಶ್ರೀ ನಿಕೇತನ ಕೌಸ್ತುಭಾಭರಣ ೧
ದಾಮೋದರ ದುರಿತಾರಿ ಪರಾತ್ಪರ
ಹೇಮಾಂಬರಧರ ವನಮಾಲಾಧರ ೨
ಸಾರಸಾಪ್ತನು ಸಾರುತಿಹನು ತವ
ಸಾರಸಪಾದದ ಚಾರುದರುಶನಕೆ ೩
ಮಾರ್ತಾಂಡನ ಬಲು ಚಂಡಕಿರಣವೆಮ್ಮ
ನೇತ್ರಪಟುತ್ವ ಕುಂದಿಸುವುದು ಕೇಳ್ ೪
ತರಣಿ ಪ್ರಕಾಶದಿ ತಪಿಸುತಿಹೆವು ನಾವ್
ಪೊರೆವುದೆಮ್ಮನು ಕರಿಗಿರೀಶನೆ ೫

 

ಸಾರಿದ ಸಿರಿವರ ಸಡಗರದಿಂದಲಿ ಕೌರವಪುರಕೆ ಪ
ಧೀರ ಪಾಂಡವರ ಕೋರಿಕೆ ಸಲ್ಲಿಸಲು
ಕಾರಣಾತ್ಮಕನು ಸಾರಸ ನಯನನು ಅ.ಪ.
ಪ್ರಾತರಾಹ್ನೀಕವ ತಾ ತೀರಿಸಿ ವರ ಪೀತ ವಸನ ಧರಿಸಿ
ವೀತರಾಗ ಸಂಪ್ರೀತಿಯಲಿ ಫಾಲದಿ ತಾ ತಿಲಕವ ಧರಿಸಿ
ಖ್ಯಾತ ಮಣಿಮಯೋಪೇತ ಹೇಮ
ಮಕುಟೋತ್ತಮಾಂಗದಿ ಧರಿಸಿ
ಜ್ಯೋತಿರ್ಮಯಗತಿ ಪ್ರೀತಿಯಿಲಿ ತರುಣಿರಾ
ರುತಿ ಬೆಳಗಲು ತಾ ಸುಮುಹೂರ್ತದಿ ೧
ಅಂಡಜಾಧಿಪನು ಪ್ರಕಾಂಡ ಪೀಠನುದ್ದಂಡರಥವ ತರಿಸಿ
ಚಂಡಗದಾ ಕೋದಂಡಾದ್ಯಾಯುಧ ಬಂಡಿಗೆಯೊಳಗಿರಿಸಿ
ಮಂಡಿಸಿದನು ಬ್ರಹ್ಮಾಂಡದೊಡೆಯ
ಮಾರ್ತಾಂಡನಂತೆ ಮೆರೆಸಿ
ಹಿಂಡುಬಳಗಗಳ ಕಂಡಾದರಿಸುತ
ಪಾಂಡುಸುತರ ಬೀಳ್ಕೊಂಡು ಭರದಲಿ ೨
ಅಕಳಂಕನು ತಾ ಶಕುನವ ನೋಡಿ ಬಲು
ಸುಖದಿ ಪ್ರಯಾಣ ಬೆಳಸಿ
ಪ್ರಕಟ ಪಥದಿ ಮುನಿನಿಕರಂಗಳ ಮನವಿಕಸಿತಗೊಳಿಸಿ
ಶುಕಪಿಕಾದಿ ಖಗಪಿಕರಂಗಳರವ ಸುಖವ ಮನದಿ ನಿಲಿಸಿ
ಸಕಲಾಂತರ್ಗತ ಕರಿಗಿರೀಶ ತಾ ಯುಕುತಿಯಿಂದ ಸಂಧಾನವ ನಡೆಸಲು ೩

 

ಸಿರಿನರಸಿಂಹನೆ ಕರಿಗಿರಿ ನಿಲಯನೆ
ಶಿರಬಾಗಿ ನಮಿಸುವೆ ಭಕ್ತಿಯಲಿ ಪ
ಕರುಣಾಸಾಗರ ನಿನ್ನ ಚರಣ ಕಮಲದಲಿ
ಸ್ಥಿರ ಸ್ಮರಣೆಯ ಕೊಟ್ಟು ಸಲಹೆನ್ನನು ಅ.ಪ.
ನೆಲೆಗೆ ನಿಲ್ಲದು ಮನ ಹಲವಕ್ಕೆ ಹರಿವುದು
ಸುಲಲಿತವಲ್ಲವು ಸಾಧನವು
ನಳಿನನಾಭನೆ ಎನ್ನ ಕುಲದೈವ ನಾರಸಿಂಹ
ಒಲಿದು ನೀನಾಗಿಯೆ ಸಲಹುವುದು ೧
ಅತ್ತಿತ್ತ ಓಡುವ ಚಿತ್ತವ ನಿಲಿಸುವ
ಶಕ್ತಿಯು ಎನಗಿಲ್ಲ ಲವಲೇಶವು |
ಚಿತ್ತಜಪಿತ ಎನ್ನ ಚಿತ್ತದೊಳಗೆ ನಿಂತು
ಭಕ್ತಿಯ ಕರುಣಿಸೋ ತವ ಪಾದದಿ ೨
ನೆಲದ ಮೇಲಲೆವಾಗಯಲರುಣಿ ಗಮನವು
ಹಲವು ರೀತಿಯಲಿ ವಕ್ರವಲೆ
ಘಳಿಲನೆ ತನ್ನಯ ಬಿಲದೊಳು ಪೋಪಾಗ
ಸಲೆ ನೇರವಲ್ಲವೆ ಸಿರಿವರನೇ ೩
ಮನ ಬಲು ಮೈಲಿಗೆಯಾಗಿ ಹೃದಯ ಪಾ
ವನ ವಿಷಯಗಳಲದಲಿ ಬರಲಾರವು
ಘನಭಕ್ತಿರಸದಿಂದ ತೊಳೆದು ನಿರ್ಮಲಗೈದು
ಮನವ ನೀ ಮಡಿ ಮಾಡು ಘನಮಹಿಮ ೪
ಕಳೆಗಳೆ ಬೆಳೆದಿವೆ ಮನಕ್ಷೇತ್ರದೊಳಗೆಲ್ಲಾ
ಫಲ ಸಸ್ಯಗಳಲ್ಲಿ ಸ್ಥಳವಿಲ್ಲವು |
ಕಳೆಗಳ ಕಳೆದು ಉತ್ತಮ ಫಲ ಕೊಡುವಂಥ
ಬೆಳೆಯ ನೀನು ಬೆಳಸಯ್ಯಾ ಕರಿಗಿರೀಶ ೫

 

ಹರಿ ಹರಿ ಕೃಷ್ಣ ಗೋವಿಂದ ಪ
ನರಹರಿ ಮಾಧವ ಗೋವಿಂದ ಅ.ಪ
ಕೇಶವ ನಾರಾಯಣ ಗೋವಿಂದ
ವಾಸುದೇವ ಶ್ರೀ ಗೋವಿಂದ
ಶ್ರೀಶ ಜನಾದರ್ನ ಗೋವಿಂದ | ಹರಿ
ದಾಸ ಜನಾವನ ಗೋವಿಂದ೧
ವಾಮನ ದಾಮೋದರ ಗೋವಿಂದ
ಕಾಮಿಕದಾಯಕ ಗೋವಿಂದ
ರಾಮ ರಘೂತ್ತಮ ಗೋವಿಂದ | ಗುಣ
ಧಾಮ ದಯಾನಿಧೇ ಗೋವಿಂದ ೨
ಶ್ರೀಧರ ಭೂಧರ ಗೋವಿಂದ
ಆದಿಮೂಲ ಶ್ರೀ ಗೋವಿಂದ
ವೇದ ವೇದ್ಯ ಹರಿ ಗೋವಿಂದ | ನಿಜ
ಪಾದ ಭಜಕಪ್ರಿಯ ಗೋವಿಂದ ೩
ಪದ್ಮದಳಾಂಬಕ ಗೋವಿಂದ
ಪದ್ಮನಾಭ ಶ್ರೀ ಗೋವಿಂದ
ಪದ್ಮಿನಿ ಅರಸನೆ ಗೋವಿಂದ | ಕರ
ಪದ್ಮದಿ ಪಿಡಿ ಎನ್ನ ಗೋವಿಂದ ೪
ಕರಿಗಿರೀಶ ನರಹರಿ ಗೋವಿಂದ
ಪರತರ ಮುರಹರ ಗೋವಿಂದ
ಗರುಡಗಮನ ಶ್ರೀ ಗೋವಿಂದ | ಹರಿ
ಹರಿ ಹರಿ ಹರಿ ಹರಿ ಗೋವಿಂದ ೫

 

ಹರಿಯೆ ನಿನ್ನಯ ಗುಣ ಸರಸಿಜ ಭವ ಮುಖ್ಯ
ಸುರಗಣ ಮುನಿನಿಕರ ಸಿದ್ಧ ಪರಿವಾರವು ೧
ಸರಿತು ಪ್ರವಾಹದಂತೆ ವಾಗ್ವೈಖರಿಯಿಂದ
ನಿರುತ ತೃಪ್ತಿಪಡಿಸಲಾರರು ಇನ್ನು ೨
ಉರು ಉಗ್ರಜಾತಿ ಅಸುರ ಕುಲದಿ ಪುಟ್ಟಿದ ನಾನು
ನೆರೆ ತುತಿಸಿ ತೃಪ್ತಿಪಡಿಸಲಾಪೆನೆ ನಿನ್ನ ೩
ಆದೊಡೆ ಕುಲ ರೂಪ ವಯಸ್ಸು ವಿದ್ಯೆಗೆ ನೀನು
ಮೋದಪಡುವನಲ್ಲ ಭಕ್ತಿಯೊಂದಕೆ ನಲಿವೆ ೪
ಕರಿರಾಜನೇ ಸಾಕ್ಷಿ ಕರುಣಾಮಯನೇ ನಿನ
ಗಿರುವುದೇ ವೈಷಮ್ಯ ? ಭಕ್ತಗೆ ವಶ ನೀನು ೫
ಅರವಿಂದನಾಭ ನಿನ್ನ ಚರಣಾರವಿಂದವನು
ನಿರುತ ಭಜಿಸುವ ಉತ್ತಮನೆನಿಸುವ ೬
ಸರುವ ಸ್ವತಂತ್ರ ಪೂರ್ಣಕಾಮ ನಿನ್ನನು ನಾವು
ಹಿರಿದಾಗಿ ಆರಾಧಿಸಿ ತೃಪ್ತಿಪಡಿಸುವುದೇನೊ ೭
ನಾವು ಮಾಡುವ ಕರ್ಮಸಾಧನದಿಂದ ನಿನಗೆ
ಯಾವ ಫಲವೂ ಇಲ್ಲ ! ಫಲವೆಲ್ಲ ನಮಗಯ್ಯಾ ೮
ಬಿಂಬವನಲಂಕರಿಸೆ ಕನ್ನಡಿಯೊಳಗೆ ಪ್ರತಿ
ಬಿಂಬಕೆ ಅಲಂಕಾರ ಕಾಣುವ ಪರಿಯಲಿ ೯
ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ
ತರಳನ ಮೊರೆಯನು ಲಾಲಿಸಿ ಪಾಲಿಸೊ ೧೦
ನಮ್ಮ ಸಾಧನೆಗಾಗಿ ನಿನ್ನ ಆರಾಧಿಪೆವು
ಬೊಮ್ಮನಯ್ಯನೆ ನಿನ್ನ ಆನುಗ್ರಹದಿಂದಲಿ ೧೧
ಬ್ರಹ್ಮಾದಿ ಸುರರೆಲ್ಲ ನಿನ್ನ ಸೇವಕರಯ್ಯಾ
ಹಮ್ಮು ಮತ್ಯಾತಕಯ್ಯಾ ನಮ್ಮಂಥವರಿಗೆಲ್ಲ ೧೨
ನಿನ್ನ ಕೋಪಕೆ ಅಂಜಿ ನಡುಗದವರುಂಟೆ
ಮನ್ನಿಸಿ ಕೋಪವ ಉಪಶಮ ಮಾಡೋ ಸ್ವಾಮಿ ೧೩
ನಿನ್ನ ಈ ಉಗ್ರರೂಪ ಧ್ಯಾನವು ಜನರಿಗೆ
ಘನ ಭಯವ ಕಳೆಯೆ ಸಾಧನವಾಗಲಿ ೧೪
ದಿಗಿಲು ಪುಟ್ಟಿಸುವಂಥ ಈ ನಿನ್ನ ಮುಖ ಜಿಹ್ವೆ
ಮಿಗೆ ಜ್ವಲಿಸುವ ನೇತ್ರ ಭೃಕುಟಿ ಕರಾಳ ದಂಷ್ಟ್ರ ೧೫
ಕೊರಳಲ್ಲಿ ಧರಿಸಿಹ ಕರುಳ ಮಾಲಿಕೆ ರಕ್ತ
ಬೆರದ ಕೇಸರ ಮತ್ತೆ ನಿಗುರಿದ ಕರ್ಣಗಳು ೧೬
ಲೋಕ ಭಯಂಕರವಾಗಿವೆ ಆಂದೊಡೆ
ಶ್ರೀಕರ ನಿನ್ನ ಕೃಪೆಯಲಿ ನಾನವಕೆ ೧೭
ಅಂಜುವನಲ್ಲ ಕೇಳು ಕಂಜನಾಭನೆಯಿನ್ನು
ಅಂಜುವೆನೊಂದಕೆ ಸಂಸಾರ ಚಕ್ರಕೆ ೧೮
ತೊಳಲಿಸÀುವುದು ಜನ ದುಃಖದಿ ಸಂಸಾರ
ಬಲು ಪರಿಯಲಿ ಅದು ದುಃಖದಿ ಸಾಗರ ೧೯
ಇಷ್ಟವಾದದ್ದು ಕೊಡದೆ ಇಷ್ಟವಿಲ್ಲದ್ದುಣಿಸಿ
ಕಷ್ಟವಪಡಿಸುವುದು ಭ್ರಷ್ಟವಾದೀ ಭವ ೨೦
ಸಂಸಾರ ಸಾಗರ ದಾಟಿಸೋ ಮಹಾಮಹಿಮ
ಸಂಶಯವಿಲ್ಲದೆ ಸೇರಿಸೋ ನಿನ್ನ ಬಳಿ ೨೧
ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ
ತರಳನ ಮೊರೆಯನು ಲಾಲಿಸಿ ಪಾಲಿಸೊ ೨೨
( ಪ್ರಹ್ಲಾದ ನರಹರಿಯನ್ನು ಸ್ತುತಿಸಿದ್ದು )

 

ಹರಿಯೆ ಹದಿನಾಲ್ಕು ಲೋಕದ ದೊರೆಯೆ ಪ
ಕರುಣದಿಂದ ತವ ಚರಣ ಕಮಲ ಷಟ್
ಚರಣನೆನಿಸಿ ಎನ್ನ ಪೊರೆವುದು ಸಂತತ ಅ.ಪ
ವೀರಭಕ್ತ ಪ್ರಹ್ಲಾದ ವರದ ಕರುಣಾರಸ ಪರಿಪೂರ್ಣ
ಸಾರಸಿ ಭವ ಮುಖ ಸುರವರ ಸನ್ನುತ ಚಾರ ಚರಣನಳಿನ
ಸಾರಿದ ಪ್ರಣತ ಜನಾರ್ತಿನಿವಾರಣ
ಘೋರದುರಿತ ಮದಗಜ ಪಂಚಾನನ
ನಾರದ ಮುನಿವರ ಸೇವಿತ ಚರಣ
ಸಾರಸಾಕ್ಷಿ ಶ್ರೀ ಕರಿಗಿರಿ ನಿಕೇತನ ೧

 

ಉಗಭೋಗ
ಏಳು ನೀ ಭೋಜನಕೆ ಯದುಕುಲೋತ್ತುಂಗ
ಪೇಳಬೇಕೆ ಎನಗೆ ಕುರುವಂಶ ಸಿಂಗ
ಉಪಚಾರನುಡಿ ಸಾಕು ಕಪಟತನತರವೆ
ನಿಪುಣ ನಿನ್ನೊಳು ಕಪಟ ನಿಲ್ಲಲಳವೆ
ಕಾಲ ಮೀರುತಲಿಹುದು ತಡವ್ಯಾಕೆ ಇನ್ನು
ತಾಳು ಬಂದಿಹ ಕಾರ್ಯಪೂರ್ಣವಾಗಲಿ ಮುನ್ನು
ಬಂಧು ಭಾವವು ನಿನ್ನನಾಧರಿಸೆ ಕಾರಣವು
ಸಂದೇಹವೇನದಕೆ ಚೆನ್ನಾಗಿ ತಿಳಿದಿಹೆವು
ಮುಚ್ಚುಮರೆ ಸಾಕು ನಿನ್ನಿಚ್ಛೆ ತಿಳಿಸುವುದು
ಬಿಚ್ಚಿ ಪೇಳ್ದೊಡೆ ಹರುಷ ಕೊಚ್ಚಿಹೋಗುವುದು
ಪಾರಣೆಯ ಮಾಡದಿಹ ಕಾರಣವದೇನು
ಕ್ರೂರ ಕರ್ಮಿಗಳಲಿ ಆರೋಗಿಸೆನು ನಾನು
ಮತ್ತೆಲ್ಲಿ ಭುಂಜಿಸುವೆ ಮೃಷ್ಟಾನ್ನ ಬಿಟ್ಟು
ಭಕ್ತ ವಿದುರನಿಗಾನು ಅತಿಥಿ ತಿಳಿ ಗುಟ್ಟು
ಮುಂಚೆ ತಿಳಿಯನೆ ನಿನ್ನ ವಂಚನೆಯ ವ್ಯಾಪಾರ
ಕೊಂಚ ನಿನ್ನೊಳಗಿಲ್ಲಿ ಕುರುಕುಲಾಂಗಾರ
ಸ್ಥಿರಬುದ್ಧಿ ನಿನಗಿಹುದು ಪಾಂಡವರ ಹಿತದಿಕರಿಗಿರೀಶನ ಭಕ್ತರವರಾದ ಕತದಿ

 

ಉಗಭೋಗ

ಜಲನಿಧಿಯ ಮಧ್ಯದಿಂ ಜಗದ ಜನನಿಯು ಜನಿಸೆ
ಪೊಳೆವೊ ರತ್ನದ ಪೀಠ ದಿವಿಜಪತಿಯೊಪ್ಪಿಸಿದ
ಆ ಮಹಾನದಿಗಳಂ ಮಾನುಷಾಕೃತಿ ತಾಳಿ
ಹೇಮ ಕುಂಭಗಳಿಂದ ನಿರ್ಮಲೋದಕವೀಯೆ
ಧರಣಿತಾನಭಿಷೇಕ ವಸ್ತುಗಳನೊಪ್ಪಿಸಲು
ವರ ಗೋವುಗಳು ಪಂಚಗವ್ಯಗಳನರ್ಪಿಸಲು
ಘನ ವಸಂತನು ಪುಷ್ಪಫಲಗಳನು ತಂದೀಯೆ
ಮುನಿವರರು ಶ್ರೀ ಲಕ್ಷ್ಮಿಗಭಿಷೇಕ ನಡೆಸಿದರು
ಗಂಧರ್ವರೆಲ್ಲ ಶುಭಗಾಯನವ ಮಾಡುತಿರೆ
ಸುಂದರಾಪ್ಸರ ಸ್ತ್ರೀಯರಂದು ನರ್ತನಗೈಯೆ
ಮೇಘಗಳು ವರ ಪಟಹ ಪಣವ ಗೋಮುಖ ಶಂಖ
ಶ್ಲಾಘ್ಯತರ ಮೃದಂಗ ವೇಣುವೀಣಾದಿ
ಶ್ರೇಷ್ಠರೀತಿಯ ವಾದ್ಯಗಳ ತಾವು ನುಡಿಸುತಿರೆ
ಅಷ್ಟದಿಗ್ಗಜ ಪೂರ್ಣ ಕಲಶೋದಕವತಂದು
ಧರಣಿ ಸುರವರರು ಶ್ರುತಿಮಂತ್ರ ಪಠಿಸುತಿರೆ
ವರಲಕ್ಷ್ಮಿಗಭಿಷೇಕ ಹರುಷದಿಂ ಗೈದುವುದು
ಶರಧಿರಾಜನು ಶಾತಕುಂಭಮಯ ವಸ್ತ್ರವನು
ವರುಣದೇವನು ದಿವ್ಯ ವೈಜಯಂತಿಯ ಮಾಲೆ
ವಿಶ್ವಕರ್ಮನು ವಿವಿಧ ಚಿತ್ರ ಭೂಷಣಗಳನು
ವಿಶ್ವಾಸದಿಂ ಅಜನರಾಣಿಯೊಂದ್ಹಾರವನು
ಸರಸಿಜಾಸನ ತಾನು ಸರಸಿಜವನೊಂದನು
ಉರಗಗಳು ಕುಂಡಲದ್ವಯನರ್ಪಿಸಲಾಗ
ಶ್ರೀ ಲಕ್ಷ್ಮೀ ಭ್ರಮರ ಝಂಕಾರಯುತ ನೈದಿಲೆಯ
ಮಾಲೆಯನು ಪಿಡಿದು ತಾನಾಲೋಕಿಸಿದಳಮರ
ಸಂದಣಿಯಲಂದು ತನಗನುರೂಪ ವರನನ್ನು
ಮಂದಮತಿಗಳ ಮರುಳುಗೊಳಿಪ ಮಾಯಾವಿನಿಯು
ಕರಿಗಿರೀಶ ಬಳಿಯನರಘಳಿಗೆ ಬಿಟ್ಟಿರದಸಿರಿದೇವಿ ತಾ ಸುರರೊಳರಸಿದಳು ಪತಿಯ

 

ಉಗಾಭೋಗ
ಸುರರಾಜ ವಜ್ರಘಾತಕ್ಕಂಜುವ ನಾನಲ್ಲ
ಎರಡೊಂದು ನೇತ್ರನ ಶೂಲಕ್ಕಂಜುವನಲ್ಲ
ಮರಳಿ ಯಮನ ದಂಡಕ್ಕಂಜುವ ನಾನಲ್ಲ
ಉರಿವಾಗ್ನಿ ಸೂರ್ಯ ಸೋಮ ಅನಿಲ ಪವಿತ್ರ ಪರಾಸ್ತ್ರ
ಭರಕೆ ಲೇಶವು ನಾನು ಅಂಜುವನಲ್ಲವು
ಪರಮಪಾವನ ಬ್ರಹ್ಮ ಕುಲಾವಮಾನಕ್ಕೆ
ಪರಿಪರಿ ಅಂಜುವೆ ಥರಥರ ನಡುಗುವೆ
ಕರಿಗಿರೀಶನ ನಿಜಶರಣರಿಗಪಮಾನ
ನೆರೆ ಉಡಿಯಲಿ ಕಟ್ಟಿಕೊಂಡ ಕೆಂಡವು ದಿಟವು

 

ನಂದನಂದನ ಗೋವಿಂದ ಹರಿ
ನಂದನಂದನ ಗೋವಿಂದ ಹರಿ ಪ
ಸುಂದರವದನ ಸುರೇಂದ್ರ ಸುವಂದ್ಯ ಅ.ಪ.
ಮಂದರಾದ್ರಿಧರ ಮಾಧವ ಮುರಹರ
ಬೃಂದಾವನ ವಿಹಾರ
ಸುಂದರ ಮುರಳೀಧರ ಸುಮನೋಹರ
ಸಿಂಧುಶಯನ ಸುಖಸಾಂದ್ರ ಪರಾತ್ಪರ ೧
ಕೇಶೀ ಮಥನ ಕಂಸಾಸುರ ಮರ್ದನ
ಭೂಸುರ ಸನ್ನುತ ಶ್ರೀಚರಣ
ದಾಸ ಜನಾವನ ಕರುಣಾಭರಣ
ಕೇಶವಗುಣ ಪರಿಪೂರ್ಣ ೨
ಮುರನರಕಾಂತಕ ಮುಕ್ತಿಪ್ರದಾಯಕ
ಶರಣಾಗತ ಜನ ಪಾಲಕ
ಕರಿಗಿರೀಶ ಕಾಮಿತ ಫಲದಾಯಕ
ಗರುಡಗಮನ ಶ್ರೀ ರುಕ್ಮಿಣಿನಾಯಕ ೩

 

ಹಾಡಿನ ಹೆಸರು :ನಂದನಂದನ ಗೋವಿಂದ ಹರಿ
ಹಾಡಿದವರ ಹೆಸರು :ವಾಗೀಶ್ ಭಟ್
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಶ್ರೀ ಲಲಾಮನೆ ನಿನ್ನ
ಶ್ರೀ ಲಲಾಮನೆ ನಿನ್ನ ಚರಣಾಬ್ಜಗಳಿಗೆ ನಮೊ
ನೀಲಮೇಘಶ್ಯಾಮ ನಿರುಪಮ ತ್ರಿಧಾಮ ಪ
ಮೂಲಕಾರಣ ನಿನ್ನ ಹೊರತಿನ್ನು ಕಾಯುವರು
ಮೂರ್ಲೋಕದೊಳಗಿಲ್ಲ ಮುರಹರ ಮುಕುಂದ ಅ.ಪ.
ಕಲುಷವರ್ಜಿತ ನಿತ್ಯ ಕಲ್ಯಾಣಗುಣ ಪೂರ್ಣ
ಜಲಜನಾಭನೆ ದೇವಾ ಜಲಧಿಶಯನ
ಜಲಜಜಾಂಡವ ಸೃಷ್ಟಿ ಸ್ಥಿತಿ ಪ್ರಳಯ ಕರ್ತ ನಿನ್ನ
ನೆಲೆಗಾಣೆವೋ ಸ್ವಾಮಿ ಅಪ್ರಮೇಯ ಸ್ವರೂಪ ೧
ಕುಂಭಿಣಿಯ ಪಮಾಣುಗಳನಧಿಕ ಯತ್ನದಲಿ
ಅಂಬುಧಿಯ ಕಣಗಳನು ಎಣಿಸಬಹುದು
ಅಂಬುಜಾಕ್ಷನೇ ನಿನ್ನ ಆನಂದ ಮೊದಲಾದ
ಗಂಭೀರ ಗುಣಗಳನು ಎಣಿಸಲಾರಿಗೆ ಸಾಧ್ಯ ೨
ಪರಮಾತ್ಮ ಪರಂಜ್ಯೋತಿ ಪರಮ ಪಾವನರೂಪ
ಪರಿಪೂರ್ಣ ಆನಂದ ಪುರುಷೋತ್ತಮ
ಕರಿರಾಜವರದ ಶ್ರೀ ಕರಿಗಿರೀಶನೆ ನಿನ್ನಚರಣ ಸೇವಕನೆಂದು ಕರಪಿಡಿದು ಕಾಯೊ ೩

 

ಹಾಡಿನ ಹೆಸರು :ಶ್ರೀ ಲಲಾಮನೆ ನಿನ್ನ
ಹಾಡಿದವರ ಹೆಸರು :ಶಂಕರ ಶಾನುಭಾಗ್
ಸಂಗೀತ ನಿರ್ದೇಶಕರು :ಪ್ರಸಾದ್ ಎನ್. ಎಸ್.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *