Categories
ರಚನೆಗಳು

ವೆಂಕಟ್‍ರಾವ್

ಮಂಗಳೂರಿನ ಬಳಿ ಕಟೀಲಿನಲ್ಲಿ ನಂದಿನಿ
ದುರ್ಗಾಪರಮೇಶ್ವರಿ
೧೯
ಇಡು ಪ್ರೇಮವೆನ್ನೊಳತಿ | ಹೈಮಾವತಿ |
ಇಡುಪ್ರೇಮವೆನ್ನೊಳತಿ ಪ
ಅಡಿಗೆರಗುವೆ ತಾಯೆ | ಉಡುರಾಜವದನೆಯೆ ||
ಜಡರುಹದಳ ನೇತ್ರೆ | ಉಡುಪತಿಧರಜಾಯೆ ಅ.ಪ
ಸಿರಿಯರಸನ ಸಹೋ | ದರಿ ನಿನ್ನ ನಂಬಿದೆ ||
ಪರಮಪಾವನೆ ಗೌರಿ | ಪರಮೇಶ್ವರಿ ದೇವಿ ೧
ಆದಿಶಕ್ತಿಯು ನೀನೆ | ಆದಿ ಮಾಯೆಯು ನೀನೆ ||
ಮೋದದಾಯಕಿ ಜಗ | ದಾದಿ ನಾರಾಯಣಿ ೨
ತನು ಮನ ಧನ ನಿನ್ನ | ಘನ ಪಾದ ಸೇವೆಗೆ ||
ವಿನಯದಿಂದರ್ಪಣೆ | ಯನುದಿನ ಗೈವಂತೆ ೩

 

೨೦
ಇನ್ನಾದರು ದಯಬಾರದು ನಿನಗೇಕೆ |
ಸನ್ನುತೆ ಶಂಕರಿ ದೇವಿ ಪ
ನಿನ್ನ ಪಾದಂಗಳನು ಭಜಿಸುವೆ |
ನಿನ್ನ ನಾಮಂಗಳನು ನುತಿಸುವೆ ||
ಎನ್ನ ಮನದಿಷ್ಟಾರ್ಥವನು ಕೊಡು |
ಎನ್ನುತೆರಗುವ ದೀನನೆನ್ನೊಳುಅ.ಪ.
ಆದಿಮೊದಲು ಮಧು ಕೈಟಭರನು ಸೀಳಿ |
ಮೇದಿನಿಯನು ಪೊರೆದವಳು |
ದೇವಿ ಮೇದಿನಿಯನು ಪೊರೆದವಳು ||
ಕ್ರೋಧದಿಂದಲಿ ಮಹಿಷ ವದನನ |
ಭೇದಿಸಿದೆ ನೀ ಧೂಮ್ರಲೋಚನ
ಸಾಧಿಸುತೆ ನೀ ಚಂಡ ಮುಂಡರ |
ಕಾದಿ ಗೆಲಿದಿಹ ದೇವಿ ಎನ್ನೊಳು ೧
ಮದ ಮುಖ ನಾಗಿರ್ದ ರುಧಿರ ಬೀಜಾಖ್ಯನ |
ರುಧಿರವ ಹೀರುತಲಿ ||
ದೇವಿ | ರುಧಿರವ ಹೀರುತಲಿ ||
ಅಧಮ ದೈತ್ಯನ ಮದವನಿಳಿಸುವ |
ಸದೆದು ಮಹಿಯೊಳು ಕೆಡುಹುತವನನು |
ಮುದದಿ ಭಕ್ತರ ಕಷ್ಟಕೊದಗಿದ |
ಪದುಮಲೋಚನೆ ದೇವಿ ಎನ್ನೊಳು ೨
ಶಂಭುಮನೋಹರೆ ಕುಂಭಪಯೋಧರಿ |
ಶುಂಭದೈತ್ಯರ ಮರ್ದಿಸಿದೆ ನೀ |
ನಂಬುಜಾಂಬಕಿ ನಿನ್ನ ಪಾದಾಂಬುಜಕೆ
ಮಣಿಯುವ ದೀನನೆನ್ನೊಳು ೩
ಕರುಣವಾರಿಧಿ ನೀನು ಸ್ಮರಣಮಾತ್ರದಿ ನಿನ್ನ |
ಶರಣರ ಭ್ರಮರ ರೂಪದಿ |
ಶರಣರಿಷ್ಟವ ನೀವೆ ನಿನ್ನಯ |
ಚರಣ ಸ್ಮರಿಸುವನಾಥನೆನ್ನೊಳು೪
ಸೃಷ್ಟಿಯೊಳಗೆ ಅತಿ ಕಷ್ಟಪರಂಪರೆಯ |
ನೆಷ್ಟೆಂದು ಸಹಿಸಲಿ ದೇವಿ |
ನಾನಿ | ನ್ನೆಷ್ಟೆಂದು ಸಹಿಸಲಿ ದೇವಿ ||
ದುಷ್ಟನಾಶಿನಿ ಶಿಷ್ಟ ಪಾಲಿನಿ || ಅಷ್ಟವಿಧ ಸೌಭಾಗ್ಯದಾಯಿನಿ |
ಇಷ್ಟದಾಯಕಿ ದೇವಿ ಎನ್ನಾ |
ಭೀಷ್ಟವನುಕೊಡು ಎಂದು ಬೇಡುವೆ ೫

 

೨೧
ಒಲಿಯುತ ಬಾರಮ್ಮ |
ನೀ ಮನಒಲಿಯುತೆ ಬಾರಮ್ಮ ಪ
ನಲಿನಲಿದಾಡುತ | ಒಲುಮೆಯದೋರುತ |
ನಲವಿನಿಂದ ಸ | ಜ್ಜನರಿಗೊಲಿವಳೇ ಅ.ಪ
ಖಳಕುಲವಳಿಸುತಲಿ | ಶರಣರಿಗೊಲಿಯುತ ಹರುಷದಲಿ ||
ಇಳೆಯೊಳು ಮೆರೆಯುವ | ನಂದಿನಿ ನದಿಯೊಳು |
ನೆಲೆಯಾಗಿರುತಿಹ | ಜಲದುರ್ಗಾಂಬಿಕೆ೧
ಕರುಣವ ಬೀರುತಲಿ | ತವ ಪದ | ಶರಣರ ಪೊರೆಯುತಲಿ ||
ಪರಿಪರಿವಿಧದಲಿ | ಧರಣಿಯ ಭಾರವ |
ಪರಿಹರಿಸಿದ ಶ್ರೀ | ಪರಮೇಶ್ವರಿಯೆ೨
ಅಂಬುಜದಳನಯನೆ | ನಿನ್ನನು | ನಂಬಿದೆ ಗುಣಸದನೆ ||
ಶಂಭುಮನೋಹರೆ | ಶಾಂಭವಿ ಶಂಕರಿ |
ನಂಬಿದ ಭಕುತರಿ | ಗಿಂಬು ಗೊಡಲು ನೀ ೩
ದೇಶ ದೇಶದೆಲ್ಲ | ನಿನ್ನಾ | ಶ್ರೈಸುವ ಜನಕೆಲ್ಲ ||
ತೋಷವ ಪಡಿಸುತ | ಆಸೆಯ ನೀವೆ |
ನ್ನಾಸೆಯ ಸಲ್ಲಿಸು | ಕಟಿಲಪುರೇಶ್ವರಿ೪

 

೨೨
ದೇವಿ ಭಜನೆ
ಓಂ ನಮೋ ಓಂ ನಮೋ ಓ ನಮೋ ದೇವಿ ||
ಓಂ ನಮೋ ಓಂ ನಮೋ ಭಕ್ತ ಸಂಜೀವಿ ಪ.
ಶಂಭು ಮನೋಹರೆ | ಶಾಂಭವಿ ದೆೀವಿ ||
ಜಂಭಾರಿ ಸುರನರ | ವಂದಿತೆ ದೇವಿ ಅ.ಪ.
ಮಧುಕೈಟಭಾಖ್ಯರ ವಧಿಸಿದ ದೇವಿ ||
ಮುದದೊಳೀ ಮಹಿಯ | ನುದ್ಧರಿಸಿದ ದೇವಿ ೧
ಮಹಿಷಾಖ್ಯ ದಾನವ ಮರ್ದಿನಿ ದೇವಿ ||
ದಹಿಸಿದೆ ಧೂಮ್ರಾಕ್ಷ | ನನು ಮಹಾದೇವಿ ೨
ಚಂಡಮುಂಡಾಖ್ಯರ | ಖಂಡಿಸಿ ಶಿರಗಳ ||
ಚೆಂಡಾಡಿದ ಶ್ರೀ ಚಾಮುಂಡಿ ದೇವಿ ೩
ರುಧಿರಬೀಜಾಖ್ಯನ | ರುಧಿರವ ಹೀರಿ ||
ವಧಿಸಿದೆ ಅದ್ಭುತ | ಮಹಿಮೆಯದೋರಿ ೪
ಶುಂಭ ನಿಶುಂಭ ನಿ | ಷೂದಿನಿ ದೇವಿ ||
ಕುಂಭಿನಿ ಭಾರವ | ಹರಿಸಿದ ದೇವಿ ೫
ಅರುಣಾಸುರ ಸಂ | ಹಾರಿಣಿ ದೇವಿ ||
ಶರಣರಿಗೊಲಿದ ಶ್ರೀ | ಭ್ರಾಮರಿ ದೇವಿ೬
ನಂದಿನಿ ನದಿಯೊಳು | ನೆಲೆಸಿದ ದೇವಿ ||
ಕಂದರಂತೆಮ್ಮನು | ಸಲಹುವ ದೇವಿ೭
ನಂಬಿದ ಭಕ್ತರ | ವೃಂದವ ದೇವಿ ||
ಅಂಬಿಕೆ ಪಾಲಿಸು | ಜಗದಂಬ ದೇವಿ ೮
ಜಟಾಧರೇಶನ | ರ್ಧಾಂಗಿನೀ ದೇವಿ ||
ಕಟಿಲೊಳು ಮೆರೆದ | ಭ್ರಮರಾಂಬ ದೇವಿ ೯

 

ಇದು ಶ್ರೀ ಗಣೇಶನ
ಗಣೇಶ ಪ್ರಾರ್ಥನೆ

ಕರಿವರವದನ| ದುರಿತಸೂದನ|
ಸ್ಮರಿಸುವೆ ನಿನ್ನ ಚರಣ ಪ
ಸುರುಚಿರ ಸುಮನ| ಕರುಣಾಭರಣ|
ಪರಮಪಾವನ|ಸುರವರ ಸುಗುಣ||
ಕರುಣದೊಳನುದಿನ| ಶರಣನ ಪೊರೆಯಲು|
ಸ್ಮರಿಸುವೆ ನಿನ್ನ ಚರಣಅ.ಪ
ಸುರವರ ಖ್ಯಾತ | ಕರುಣಿ ವಿಖ್ಯಾತ |
ಚರಣವ ಸ್ಮರಿಸುವೆ | ಅನವರತ
ಶರಣನ ಮೊರೆಯನು|ಕರುಣದೊಳಾಲಾಲಿಸು
|ಗೌರಿಜಾತ ಪ್ರೀತ ೧
ಮೂಷಿಕ ವಾಹನ | ಮೋದಕ ಹಸ್ತ |
ಪಾಶಾಂಕುಶಧರ | ಪಾವನ ಚರಿತ ||
ಆಶ್ರಿತ ಜನರಭಿ | ಲಾಷೆಯ ಸಲಿಸುವ |
ಈಶಜಾತ ಖ್ಯಾತ ೨
ರಕ್ತಾಂಬರಧರ | ರಕ್ತಶರೀರ
| ರಕ್ತವಸ್ತ್ರ ತವ| ಭಕ್ತರ ಪೊರೆವ ||
ಶಕ್ತನೆ ನೀ ಶಿವ | ಶಕ್ತಿ ಕುಮಾರನೆ | ಭಕ್ತದಾತ ಪ್ರೀತ ೩
ಪ್ರಥಮದಿ ನಿನ್ನ | ಸ್ತುತಿಯನು ಗೈವೆ |
ಮತಿಯನು ನೀಡೈ| ಹಿತದಾಯಕನೆ||
ಸತತವು ವಿಜಯದ | ಪಥವನು
ಕಾಣಿಸು ಭೂತನಾಥ ಜಾತ ೪

 

ಶ್ರೀ ಹರಿಯ ಅನೇಕ ಮಹಿಮೆಗಳನ್ನು
ಆತ್ಮನಿವೇದನೆ
೪೦
ಕರುಣದಿಂದಲಿ ಪೊರೆಯೊ ನೀ ಎನ್ನ|
ನರಹರಿಯೆ ಮುನ್ನ | ಚರಣಕಮಲವ ಸ್ಮರಿಸುವೆನು ನಿನ್ನ ಪ
ಶರಣಜನಪರಿಪಾಲನೆಂಬೀ |
ಬಿರುದ ಧರಿಸುತ ಮೆರೆವೆಯಾದರೆ|
ಕರುಣವಿರಿಸುತ ಭರದಿ ಬಂದು ನೀ|
ಪೊರೆಯಬಾರದೆ ಶರಣು ಶ್ರೀಹರಿಅ.ಪ
ಗೋಪವೃಂದವ ಬಿಡದೆ ನೀ ಪೊರೆದೆ|
ಗೋಪಾಲಕೃಷ್ಣ| ಗೋಪಸ್ತ್ರೀಯರ ಹರುಷಗೊಳಿಸಿದೆ||
ಪಾಪಿ ಕಂಸಾಸುರನ ಕೆಡಹುತ| ಗೋಪ
ವೃಂದದಿ ನಲಿದು ಮೆರೆದೆ|
ರೂಪುದೋರದೆ ಸೀರೆಗಕ್ಷಯ|
ದ್ರುಪದ ಸುತೆಯಳಿಗಿತ್ತ ಶ್ರೀಹರಿ ೧
ಭಾವದಿಂದನವರತ ನೀ ಬಿಡದೆ|
ಗೋವೃಂದ ಸಲಹಿ| ಗೋವಿಂದಾಭಿಧಾನವನು ಪಡೆದೆ||
ಭಾವಜಾರಿ ಸ್ವಯಂಭುವಿಬುಧರ|ಭಾವವರಿಯುತ ಭರದಿ ನಾನಾ|
ಭಾವದಿಂದವತರಿಸಿ ಭೂ ಭಾ |
ರವನು ಹೀರಿದ ಕರುಣಿ ಶ್ರೀಹರಿ ೨
ಹಿಂದು ಮುಂದೆನಗಾರು ದಿಕ್ಕಿಲ್ಲ|
ಇಂದೀವರಾಭನೆ| ಬಂಧುಬಾಂಧವರಾರು ಹಿತರಲ್ಲ||
ಇಂದಿರೇಶನೆ ನಿನ್ನ ಚರಣ| ದ್ವಂದ್ವದೊಳು ಮನವಿತ್ತೆನಾಪ |
ದ್ಬಂಧುವಾದರೆ ಪ್ರೇಮವಿರಿಸುತ || ಬಂಧಗಳ ಪರಿಹರಿಸುತೆನ್ನನು ೩
ಪತಿತಪಾವನ ಈಶ ಸರ್ವೇಶ|
ಮಹಶೇಷಶಯನ | ಹಿತವಿಧಾಯಕ ಸರ್ವಭೂತೇಶ||
ಪಿತನ ತೆರದಲಿ ಹಿತವ ಬಯಸುತ |
ಮಾತೆಯಂದದಿ ಮಮತೆ ಬೀರುತ|
ಪಥವ ಕಾಣಿಸು ಎನಗೆ ನೀ ಸ| ದ್ಗತಿಯು
ದೊರಕುವ ತೆರದೊಳನುದಿನ ೪
ಶೋಕವನು ಎನಗೇತಕೀಯುವೆ|
ಶ್ರೀಕಾಂತ ಸಲಹೈ| ಲೋಕಭರಿತನೆ ಸುಖವಿಧಾಯಕನೆ||
ಲೋಕಪೂಜಿತ ಲೋಕಪಾಲಕ |
ಲೋಕವಂದಿತ ಲೋಕನಾಥಾ |
ನೇಕಚರಿತನೇ ಮುಕುತಿದಾತ ಪಿ|
ನಾಕಿವಂದಿತ ಭಕ್ತವತ್ಸಲ ೫
ನಿನ್ನ ಪಾದವ ನಂಬಿ ನಾನಿಹೆನು|
ದೇವಾದಿದೇವಾ| ನಿನ್ನ ನಾಮಾವಲಿಯ ಸ್ಮರಿಸುವೆನು||
ಮುನ್ನ ಮಾಡಿದ ಪಾಪವೆಲ್ಲವ| ನಿನ್ನ ನಾಮ ಸ್ಮರಣದಲಿ ಸಂ|
ಪೂರ್ಣ ಪರಿಹರಗೊಳಿಸಿ ನಿನ್ನಯ| ಸನ್ನುತಾಂಘ್ರಿಯ
ಸೇವೆಗಿರಿಸುತ ೬

 

ಶ್ರೀಹರಿಯ ದಶವತಾರಗಳನ್ನು
ಶ್ರೀಹರಿಸ್ತುತಿ

ಕರುಣವಿತ್ತು ಪೊರೆದನು ದೇವ ನಾರಾಯಣ
ಈ ಮಹಾಮಹಿಯ ಪ
ಆದಿ ಮೊದಲಿನೊಳು | ಭೇದಿಸಿ ತಮನನು |
ವೇದವನು ಸಾಧಿಸುತ ೧
ಸುರಾಸುರರು ಕೂಡಿ | ಶರಧಿಯ ಮಥಿಸಲು |
ಹರುಷದೊಳಾ ಗಿರಿಯನೆತ್ತಿ ೨
ಧರಣಿಯಚೋರನ | ವರಾಹವತಾರದಿ|
ಹರಣವನು ಹೀರುತಲಿ ೩
ನರಹರಿ ರೂಪದೊ | ಳುದರವ ಬಗಿಯುತ |
ವರ ಪ್ರಹ್ಲಾದನಿಗೊಲಿದು ೪
ಮೂರಡಿ ಭೂಮಿಯ |ಕೋರುತ ಬಲಿಯೊಳು |
ಈರಡಿಯ ಮಾಡುತಲಿ ೫
ಛಸ್Àಲವನು ಪಿಡಿಯುತ | ಇಳೆಯೊಳು ಕ್ಷತ್ರಿಯ |
ಕುಲವನು ತಾನಳಿಸುತಲಿ ೬
ತರುಣಿಯನೊಯ್ದಾ | ದುರುಳನ ಛೇದಿಸಿ |
ಶರಣಶಿಖಾಮಣಿಗೊಲಿದು೭
ಗಿರಿಯನು ತಾನೆತ್ತಿ| ಕಿರುಬೆರಳಿಂದಲಿ|
ಸರಸದೊಳಾತುರುಗಳನು ೮
ಅದ್ಭುತ ಮಹಿಮೆಯ | ತೋರುತಲೀತನು |
ವಧಿಸುತಲಾ ತ್ರಿಪುರರನು ೯
ಕಲಿಯುಗದೀತನು | ಕಲ್ಕಿಸ್ವರೂಪನು |
ಕಳೆವನು ಭೂಭಾರವನು ೧೦
ಪಂಕಜನಾಭನು | ಪರಮ ಪವಿತ್ರನು
ಕಿಂಕರರಿ ಗೊಲಿದವನು ೧೧

 

ತಮ್ಮಲ್ಲಿರುವ ದೋಷಗಳನ್ನು ಹೇಳಿಕೊಂಡು
೪೧
ಕೃಷ್ಣರಾಯನೆ ಎನ್ನಯ | ಕಷ್ಟವ ನೀಗಿ|
ಇಷ್ಟಾರ್ಥ ಪಾಲಿಸಯ್ಯ ಪ
ಭೃಷ್ಟನಾದೆನು| ಧರಣಿಯೊಳಗತಿ|
ದುಷ್ಟಜನ ಸಂಸರ್ಗದಿಂದಲಿ|
ಕೃಷ್ಣನಿನ್ನಯ| ದಾಸರಾಗಿಹ| ಶ್ರೇಷ್ಠ ಜನರನು| ಪೊರೆವ ತೆರದಿ ೧
ಮತಿಹೀನನಾದೆನಯ್ಯ| ಭೂತಳದೊಳು|
ಗತಿಹೀನನಾದೆನಯ್ಯ||
ಮತಿಯ ಪಾಲಿಸಿ | ಕರುಣದಿ ಸ|
ದ್ಗತಿಯು ದೊರಕುವ| ತೆರದಿ ನಿನ್ನನು|
ಸತತ ಸ್ಮರಿಪಾ| ನಾಥಾ ಶರಣರ |
ಪತಿಕರಿಸಿ ಪಿತ| ನಂತೆ ಪೊರೆವ ೨
ಪಂಕಜನಾಭ ದೇವ| ವೆಂಕಟರಾಯ| ಕಿಂಕರರನು ಪೊರೆವ|
ವೆಂಕಟೇಶನೆ| ನಿನ್ನ ಚರಣದ |
ಕಿಂಕರಗೆ ಮತಿ| ದೋರಿ ಪೊರೆಯೈ|
ಶಂಕರಾದಿ ಸು | ರೇಂದ್ರ ವಂದಿತ|
ಪಂಕಜಾಂಬಕ | ಪರಮಪಾವನ ೩

 

ಆರತಿ
೨೩
ಚಿತ್ರಜನಯ್ಯನ ಸಹಭವೆಗೆ | ನಿತ್ಯ ಕಲ್ಯಾಣಿ ಪರಶಿವೆಗೆ ||
ಅತ್ಯುತ್ತಮ ನವರತ್ನದಿ ಕೆತ್ತಿದ | ಮುತ್ತಿನ ಆರತಿ ಬೆಳಗುವೆನು ||
ದೇವಿಗಾರತಿಯ ಬೆಳಗುವೆನು ೧
ಚಂದನ ಕುಂಕುಮ ಪುನುಗು ಜವಾಜೀ |
ಗಂಧ ಕತ್ತುರಿ ಪರಿಮಳದಿ ||
ಚಂದ್ರಚೂಡನರ್ಧಾಂಗಿಯ ಪಾದಕೆ |
ಕುಂದಣದಾರತಿ ಬೆಳಗುವೆನು ||
ದೇವಿಗಾರತಿಯ ಬೆಳಗುವೆನು ೨
ಮರುಗ ಮಲ್ಲಿಗೆ ಸುರಗಿ ಸೇವಂತಿಗೆ |
ಪರಿಪರಿ ಸುಮದಲಿ ಶೃಂಗರಿಸಿ ||
ಚರಣದೊಳೆರಗುತ ಕರಗಳ ಜೋಡಿಸಿ |
ವರ ಸುಮದಾರತಿ ಬೆಳಗುವೆನು ||
ದೇವಿಗಾರತಿಯ ಬೆಳಗುವೆನು ೩
ಮಂಗಳ ಗೌರಿ ಕೃಪಾಕರಿಗೆ | ಮಂಗಳದಾಯಕಿ ಶಂಕರಿಗೆ ||
ಮಂಗಳ ವಾದ್ಯದ ಘೋಷದಿ ಪಾದಕೆ |
ಮಂಗಳಾರತಿಯ ಬೆಳಗುವೆನು ||
ದೇವಿಗಾರತಿಯ ಬೆಳಗುವೆನು ೪

 

೨೪
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ |
ಲೋಕೈಕ ಮಾತೆ ಪ.
ಪರಮ ಪಾವನೆ | ಗೌರಿ ಮನೋಹರೆ ||
ಪರಮೇಶ್ವರಿ | ಕರುಣಾಕರೆ ಶ್ರೀಅ.ಪ.
ಚಂದಿರಾನನೆ | ಸ್ಕಂದಮಾತೆಯೆ | ವಿಂಧ್ಯವಾಸಿನಿ |
ಸುಂದರಾಂಗಿಯೆ ||
ವಂದಿಸುವೆ ನಿನ್ನ | ಕಂದರಂತೆಯೆನ್ನ |
ಚಂದದೀ ಪೊರೆ | ಚಂದ್ರಚೂಡಪ್ರಿಯೆ೧
ವೇದವಿನುತೆ | ಮೇದಿನಿವಿಖ್ಯಾತೆ |
ಆದಿಶಕ್ತಿ ದೇವಿ ಆದಿನಾರಾಯಣಿ |
ಸಾಧುಪ್ರಿಯೆ ತವ | ಪಾದಸೇವೆ ಗೈವೆ |
ಮೋದದೀ ಪೊರೆ | ಮೋದದಾಯಕಿಯೆ೨
ಪಂಕಜಾಂಬಕಿ | ಅಖಿಳಾಂಕ ಮಹಿಮೆ |
ಶಂಖಚಕ್ರಧರೆ | ಕಿಂಕರಪ್ರಿಯಕರೆ ||
ಬಿಂಕದಾಸುರರ | ಸಂಕುಲವಳಿಸಿದ |
ವೆಂಕಟೇಶನಾ | ಸೋದರಿ ಶಂಕರಿ ೩

 

೨೫
ಜನನಿ ಪೊರೆಯೆ ರುದ್ರಾಣಿ | ಜಗ |
ಜ್ಜನನಿ ಪೊರೆಯೆ ರುದ್ರಾಣಿ ಪ.
ಅಘಸಂಹಾರಿಣಿ | ಮೃಗಪತಿವಾಹಿನಿ ||
ಅಗಣಿತಗುಣಮಣಿ | ಭಗವತಿ ಶ್ರೀ ಜಗ ಅ.ಪ.
ಸಿರಿ ಕಾತ್ಯಾಯಿನಿ | ಗೌರಿ ಭವಾನಿ ||
ಪರಮಪಾವನೆ | ಪರಮೇಶ್ವರಿ ಜಗ ೧
ಶುಂಭಧ್ವಂಸಿ | ನಿಶುಂಭನಿಷೂದಿನಿ ||
ಅಂಬುಜಮುಖಿ ಮೂ | ಕಾಂಬಿಕೆ ಶ್ರೀ ಜಗ ೨
ಗಾನವಿನೋದಿನಿ | ದಾನವ ಮಥಿನಿ ||
ದೀನಜನಾವಳಿ | ಪಾಲಿನಿ ಶ್ರೀ ಜಗ ೩
ಜಟಾಮುಕುಟಸುರ|ತಟನೀಧರಸತಿ ||
ನಿಟಿಲಾಂಬಕಿ ಶ್ರೀ | ಕಟಿಲೇಶ್ವರಿ ಜಗ ೪

 

ಇವು ಶ್ರೀ ಸರಸ್ವತಿಯ ಸ್ತೋತ್ರಗಳು
ಲಕ್ಷ್ಮೀದೇವಿ
೧೪
ಜನನಿ ಬ್ರಹ್ಮನ ರಾಣಿ | ಪುಸ್ತಕಪಾಣಿ ಪ.
ಫಣಿರಾಜನಿಭವೇಣಿ | ವರವೀಣಾಪಾಣಿ ||
ಘನವಿದ್ಯಾದಾಯಿನಿ | ಪರಮಕಲ್ಯಾಣಿ ೧
ಶರದಿಂದುನಿಭವಕ್ತ್ರೆ | ಅರವಿಂದದಳನೇತ್ರೆ ||
ಪರಮಕೋಮಲಗಾತ್ರೆ | ಸುರಮುನಿನುತಿಪಾತ್ರೆ ೨
ನೃತ್ಯವಿನೋದಿನಿ | ಸ್ತೋತ್ರ ಸುಪ್ರೀತೆ ನೀ
ಭೃತ್ಯೌಘಪಾಲಿನಿ | ನಿತ್ಯಕಲ್ಯಾಣೀ ೩

 

೧೫
ಜನನಿ ಬ್ರಹ್ಮಾಣಿಯೆ |
ವರ ವೀಣಾಪಾಣಿಯೆ || ಜನನಿ ಬ್ರಹ್ಮಾಣಿಯೆ ಪ.
ವಾಣಿಯೆ | ವಿಧಿರಾಣಿಯೆ ಘನ |
ಕರುಣಿಯೆ | ಫಣಿವೇಣಿಯೆ ||
ಬಾ ಬಾ ಶುಕವಾಣೀ | ಜನನೀ ಬ್ರಹ್ಮಾಣಿಯೆ ೧
ಶಾರದೆ | ಸಲಹು ಸನ್ನುತೆ | ದಯವ
ದೋರುತೆ ವರಗಳೀಯುತೆ |
ಬಾ ಬಾ ಗೀರ್ವಾಣೀ ಜನನಿ ಬ್ರಹ್ಮಾಣಿಯೆ ೨
ಶರಣರ ಪೊರೆವ ಪ್ರೀತೆಯೆ | ಸುಖವಿದಾತೆಯೆ |
ವಿಮಲಚರಿತೆಯೆ ||
ಬಾ ಬಾ ವಾಗ್ವಾಣೀ | ಜನನಿ ಬ್ರಹ್ಮಾಣಿಯೆ ೩

 

೨೬
ಜಯ ಜಯ ಜಗನ್ಮಾತೆ | ನಮಸ್ತೆ |
ಜಯ ಜಯ ಜಗನ್ಮಾತೆ ಪ.
ಜಯ ಜಯ ಸುಲಲಿತೆ | ಜಯ ಜಯ
ಸನ್ನುತೆ | ಜಯ ಜಯ ಸುಖದಾತೆ |
ನಮಸ್ತೆ | ಜಯ ಜಯ ಸುಖದಾತೆ ಅ.ಪ.
ರಾಕಾಶೋಭಿತೆ | ಲೋಕ ಸುಪೂಜಿತೆ |
ನಾಕಾಧಿಪವಿನುತೆ | ನಮಸ್ತೆ |
ನಾಕಾಧಿಪ ವಿನುತೆ ೧
ಅಜಭವ ಸುರನುತೆ | ತ್ರಿಜಗದ್ವಂದಿತೆ |
ಭಜಕಾವಳಿ ಪ್ರೀತೆ ನಮಸ್ತೆ ||
ಭಜಕಾವಳಿ ಪ್ರೀತೆ ೨
ಕೋಮಲ ಚರಿತೆ | ಘನ ಗುಣ ಭರಿತೆ |
ಕಾಮಿತ ಫಲದಾತೆ ನಮಸ್ತೆ |
ಕಾಮಿತ ಫಲದಾತೆ ೩
ತ್ರಿಭುವನ ಮಾತೆ | ವಿನಮಿತ ದಾತೆ |
ನತಜನ ಸಂಪ್ರೀತೆ | ನಮಸ್ತೆ |
ನತಜನ ಸಂಪ್ರೀತೆ ೪
ಶಂಖಚಕ್ರಾಂಕಿತೆ | ಕಿಂಕರ ಪಾಲಯೆ |
ಶಂಕರಿ ಜಗನ್ಮಾತೆ | ನಮಸ್ತೆ |
ಶಂಕರಿ ಜಗನ್ಮಾತೆ ೫

 

ಶ್ರೀಹರಿಯ ದಶವತಾರಗಳನ್ನು

ತೋರುವನೂ | ದಯ ದೋರುವನೂ||
ಭಕ್ತರಿಗೆ | ದಯ| ದೋರುವನು ಪ
ತೋರುತಲವರನು | ಪರಿಪರಿವಿಧದೊಳು
ಪೊರೆಯುವನೂ | ಹರಿ | ಮೆರೆಯುವನೂಅ. ಪ
ಆದಿಯೊಳಾ| ತಮನೆಂಬಾಸುರನನು ||
ಭೇದಿಸಿ ವೇದವ ತಂದವನು ||
ಮೋದದಿ ಗಿರಿಯನು | ಕೂರ್ಮವತಾರದಿ |
ಸಾಧಿಸಿ ಬೆನ್ನೊಳು ಪೊತ್ತವನು ೧
ಧರಣಿಯ ಕದ್ದೊಯ್ದಸುರನ ಬಗಿಯಲು |
ವರಾಹವತಾರವ ತಳೆದವನು||
ನರಮೃಗರೂಪದೊ| ಳುದಿಸುತ ಕಂಬದಿ|
ವರ ಪ್ರಹ್ಲಾದನ ಪೊರೆದವನು ೨
ಬಲಿಯೊಳು ದಾನವ |ಬೇಡುತ ಮೂರಡಿ|
ಯೊಳಗಿಳೆಯನು ತಾನಳೆದವನು||
ಛಲದೊಳು ಕ್ಷತ್ರಿಯ | ಕುಲವನು ಅಳಿಸಿದ |
ಭಾರ್ಗವನೂ ಭೃಗು ಮೊಮ್ಮಗನು| ೩
ಶರಣಗೆ ಲಂಕಾ| ಪುರದೊಡೆತನವನು|
ಸ್ಥಿರವಾಗಿತ್ತಿಹ ರಾಘವನು||
ಕಿರುಬೆರಳಿಂದಲೇ|ಗಿರಿಯನು ಎತ್ತುತ|
ತುರುಗಳ ನಿಕರವ ಪೊರೆದವನು ೪
ಬೌದ್ದವತಾರವ | ಧರಿಸಿದ ಮಹಿಮನು|
ಕಲ್ಕಿಸ್ವರೂಪದಿ ಮೆರೆಯುವನು||
ಶ್ರಧ್ದೆಯೋಳವನನು | ಭಜಿಸಲು ಮುದದಲಿ |
ಅಬ್ಧಿವಾಸ ಮೈದೋರುವನು ೫
ಮಧುವನದಲಿ ಧ್ರುವ | ತಪವಾಚರಿಸಲು |
ಮುದದೊಳು ಧ್ರುವಪದವಿತ್ತವನು |
ಸುದತಿಯು ಮೊರೆಯಿಡ | ಲಕ್ಷಯ ಸೀರೆಯ |
ಇತ್ತವನೂ ದಯವಿತ್ತವನು೬
ಶೇಷಗಿರೀಶನು | ದಾಸರಿಗೊಲಿದವ |
ರಾಸೆಯ ಸಲಿಸಿದ | ಶ್ರೀವರನು ||
ಶೇಷಶಯನ ಹರಿ | ದಾಸದಾಸನೆ |
ನ್ನಾಸೆಯನೂ ತಾನೀಯುವನು ೭
ಪಂಕಜನಾಭನು | ಪರಮಪವಿತ್ರನು |
ಕಿಂಕರಜನಪರಿಪಾಲಕನು ||
ಶಂಕಚಕ್ರಂಗಳ ಧರಿಸಿದ ಶ್ರೀಪತಿ |
ವೆಂಕಟೇಶ ದಯದೋರುವನು ೮

 

೨೭
ದಯದೋರು| ದಯದೋರು | ದಯದೋರು | ಜನನಿ ಪ
ಜಯ ಜಗನ್ಮಾತೆ ನೀ | ದಯದೋರಿ ಪೊರೆ ನೀ ಅ.ಪ
ಆದಿ ನಾರಾಯಣಿ | ಮಾಧವಭಗಿನಿ ||
ಸಾಧುಸುಪ್ರೀತೆ ನೀ| ವೇದವಂದಿತೆ ನೀ ೧
ಭುವನಪಾಲಿನಿ ದೇವಿ | ಭುವನವಂದಿತೆ ನೀ ||
ಭವಭಯಹಾರಿಣಿ | ಭುವನೇಶ್ವರಿ ನೀ ೨
ಶಂಖಚಕ್ರಾಂಕಿತೆ | ಶಂಕರಿ ಸುಗುಣಿ |
ವೆಂಕಟರಮಣನ | ಪ್ರೇಮದ ಭಗಿನಿ ೩

 

೨೮
ದೇವಿ ಪಾಲಿಸು| ಅಂಬ| ದೇವಿ ಪಾಲಿಸು ಪ
ದೇವಿ ಅಂಬುಜವದನೆ ಗೌರಿ |
ದೇವಿ ಪರಮಪಾವನೆ ಶಂಕರಿ ಅ.ಪ
ಸುರರ ಮೊರೆಯನಾಲಿಸುತಲಿ| ದುರುಳನಾದ ಅರುಣಾಸುರನ
ಹರಣ ಹೀರಿ ಮೆರೆವನುಪಮ| ಚರಿತೆ ಎನ್ನಿಷ್ಟಾರ್ಥವೀಯುತ ೧
ನಂದಿನಿನದಿಯ ಮಧ್ಯದಿ ನೆಲೆಸಿ | ಬಂಧುಭಾವದಿಂದ ಶರಣ||
ವೃಂದವನ್ನಾನಂದದಿಂದ | ಕಂದರಂತೆ ಸಲಹುತಿರುವೆ ೨
ವಿಮಲಚರಿತೆ ಸುಗುಣಭರಿತೆ| ಅಮರವಿನುತೆ ಲೋಕಮಾತೆ||
ಕ್ಷಮಿಸುತೆನ್ನಪರಾಧಗಳನು| ಕಮಲನೇತ್ರೆ ಪರಮಮಂಗಳೆ೩
ನಿನ್ನ ಹೊರತು ಪೊರೆವರಿಲ್ಲ| ನಿನ್ನ ಭಜಿಸುತಿರುವೆನಲ್ಲ||
ಎನ್ನನು ಪೊರೆವ ಭಾರವೆಲ್ಲ| ನಿನ್ನ ಪದಕೊಪ್ಪಿಸಿದೆನಲ್ಲ ೪
ಪಂಕಜಾಕ್ಷಿ ಪಾಪರಹಿತೆ| ಕಿಂಕರಜನನಿ ಶಂಕರಪ್ರಿಯೆ||
ಶಂಖಚಕ್ರಧಾರಿಣಿ ದೇವಿ| ವೆಂಕಟರಮಣನ ಸೋದರಿ ಶಂಕರಿ ೫

 

ರಾಮಧ್ಯಾನ ಮಾಡಬೇಕೆಂದಿದ್ದಾರೆ

ನಾಮಧ್ಯಾನವ ಮಾಡಿರೋ| ಶ್ರೀ ರಾಮನ
ನಾಮಧ್ಯಾನವ ಮಾಡಿರೋಪ
ನಾಮಧ್ಯಾನವ ಮಾಡಿ | ಕಾಮಿತಾರ್ಥವ ಬೇಡಿ ||
ಶ್ಯಾಮಸುಂದರ ಸು | ಪ್ರೇಮಿ ಶ್ರೀರಾಮನ ಅ.ಪ
ಕಾಮಹರನ ಸತಿ | ಹೈಮಾವತಿಯು ಸದಾ||
ಪ್ರೇಮದಿ ಜಪಿಸುವ | ರಾಮಚಂದ್ರನ ಗುಣ ೧
ಶಿವನ ಧನುವ ಮುರಿ| ದವನಿಜೆ ಗೊಲಿದಾ||
ರವಿವಂಶಾಬುಧಿ ಸೋಮ| ಭುವನ ವಿಖ್ಯಾತನ ೨
ಕಡುಭಕ್ತಿಯಿಂದಿತ್ತ | ಶಬರಿಯುಚ್ಛಿಷ್ಟವ||
ಬಿಡದೆ ಸ್ವೀಕರಿಸಿದ | ಪ್ರಭು ರಾಮಚಂದ್ರನ ೩
ಕರಗಳ ಕಡಿದು ಕ| ಬಂಧನ ಶಾಪವÀ||
ಪರಿಹಾರ ಗೈದ ವ| ಸುಂಧರಪಾಲನ೪
ಬ್ರಹ್ಮಪದವಿಯನ್ನು | ಅಂಜನೆಸುತಗಿತ್ತ
ಬ್ರಹ್ಮಾಂಡನಾಯಕ | ಕಂಜಾಕ್ಷ ರಾಮನ ೫

 

ಶ್ರೀ ಹರಿಯ ಸ್ತುತಿ ಎರಡೇ

ನಾರಾಯಣ ನಿನ್ನ | ಚಾರು ದರುಶನವನ್ನ |
ಕೋರಿ ಸ್ಮರಿಸುವೆನು ಹರಿಯೆ ಪ
ಕಾರುಣ್ಯ ಸಾಗರ | ಪರಮಕೃಪಾಕರ |
ಸಾರಸುಗುಣ ಗಂ | ಭೀರ ರಮಾವರ||
ಮಾರಜನಕಾ | ಪಾರಮಹಿಮ |
ಘೋರದುರಿತ ಸಂ | ಹಾರ ಕುಜನಕು |
ಠಾರ ಭುವನೋ | ದ್ಧಾರ ದೀನೋ |
ದ್ಧಾರ ಹತ್ತವ | ತಾರ ಶ್ರೀಹರಿ೧
ಇಂದಿರೇಶನೆ ನಿನ್ನ | ದ್ವಂದ್ವಪಾದಗಳನ್ನ |
ಚಂದದಿ ಪೂಜಿಸಿ ದೇವ ||
ಕಂದರ್ಪನಯ್ಯನೆ | ಮಂಧರಧರನೆ ಮು |
ಕುಂದ ಗೋವಿಂದ | ಬೃಂದಾರಕ ವಂದ್ಯ ||
ಕುಂದರದನನೇ | ಸುಂದರಾಂಗನೆ |
ನಂದಕಂದನೆ | ಸಿಂಧುಶಯನನೆ |
ಬಂಧಭವಭಯ | ಹರಣ ಜಗದಾ |
ನಂದಮೂರುತಿ | ವೆಂಕಟೇಶನೆ ೨

 

೨೯
ಪರಮ ಸಂತೋಷವಿದು| ದುರ್ಗಾ| ಪರಮೇಶ್ವರಿಯನು|
ಸೇವಿಸುತಿರುವುದು ಪ
ಶರಣರ ಪೊರೆಯುವ| ಪರತರ ಪಾವನೆ|
ಪರಮ ಕಲ್ಯಾಣಿಯ ಸ್ಮರಿಸುತಲಿ||
ಪರಮಾನಂದದಿ| ಚರಣವ ಸ್ಮರಿಸುತ| ದುರಿತಗಳನು ಪರಿ|
ಹರಿಸುತಲಿರುವುದು ೧
ವಿನಯದಿ ಭಜಿಸಲು| ಘನಗುಣ ಮಣಿಯು|
ಮನವೊಲಿದೆಮ್ಮನು| ಸಲಹುವಳು||
ವಿನಮಿತಶರಣರ | ಜನನಿಯಂತಿರಲು|
ತನುಮನಧನವನ್ನರ್ಪಿಸುತಿರುವುದು೨
ಚಂದನ ಕುಂಕುಮ| ಗಂಧ ಕತ್ತ್ತುರಿ ಅರ|
ವಿಂದ ಸಂದೋಹವ | ಚಂದದಲಿ||
ಚಂದಿರಮುಖಿಪದ|ದ್ವಂದ್ವದೊಳರ್ಪಿಸಿ| ವಂದಿಸಿ ದೇವಿಯ|
ಪೂಜಿಸುತಿರುವುದು೩
ಶಂಖಚಕ್ರಾಂಕಿತೆ| ಪಂಕಜನೇತ್ರೆಯ|
ಮಹಿಮೆಯ ಸ್ಮರಿಸುತ | ಭಕುತಿಯಲಿ ||
ಶಂಕರಿ ದೇವಿಯ | ಕಿಂಕರರಾಗುತ| ಇಹಪರ ಸುಖವನು |
ಸಾಧಿಸುತಿರುವುದು ೪

 

೩೦
ಪರಿಪಾಲಿಸು ಎನ್ನನು| ಶ್ರೀ ಜಗದಂಬ|
ಪರಿಪಾಲಿಸು ಎನ್ನನು ಪ
ಪರಮಪಾವನೆ ಶಿವಮನೋಹರೆ|ಪರಮ
ಕರುಣಾಶರಧಿ ಶಂಕರಿ|
ಶರಣರಕ್ಷಾಮಣಿಯೆ ನಿನ್ನಯ|ಚರಣ
ಕಮಲವ ಸ್ಮರಿಸಿ ಬೇಡುವೆ ಅ.ಪ
ಮಧುಕೈಟಭನಾಶಿನಿ| ಶ್ರೀ ಜಗದಂಬ|
ರುಧಿರಬೀಜಸಂಹಾರಿಣಿ||
ಮುದದಿ ತರಿಯುತ ಚಂಡ ಮುಂಡರ|
ವಧಿಸಿ ಶುಂಭ ನಿಶುಂಭ ದೈತ್ಯರ||
ಕದನದಲಿ ಆಮಹಿಷ ವದನನ|ಸದೆದು
ಮಹಿಯನು ಪೊರೆದ ಮಾತೆ೧
ಲಂಬೋದರ ಜನನಿ| ಶ್ರೀ ಜಗದಂಬ|
ಕÀಂಬುಕಂಧರೆ ಸುಗುಣಿ||
ಅಂಬುಜಾಂಬಕಿ ಜಂಭಭೇದಿ ಸ್ವ | ಯಂಭು
ರುದ್ರಾದ್ಯಮರ ವಂದಿತೆ||
ನಂಬಿದವರಿಗಿಷ್ಟಾರ್ಥವೀಯುವ | ಶಂಭು
ಸುಮನೋಹರೆಯೆ ಶಂಕರಿ೨
ಸುರರ ಮೊರೆಯನಾಲಿಸಿ|ಶ್ರೀ ಜಗದಂಬ|
ಅರುಣಾಸುರನ ವಧಿಸಿ|
ಧರಣಿಯೊಳು ಕಟಿಲೆಂಬ ಪುರದಲಿ |
ಮೆರೆವ ನಂದಿನಿನದಿಯ ಮಧ್ಯದಿ
ಸ್ಥಿರದಿ ನೆಲೆಯಾಗುತ್ತ ಶರಣರ|ಮೊರೆಯ
ಲಾಲಿಸಿ ಪೊರೆವ ಜನನಿ ೩
ಸೃಷ್ಟಿಸ್ಥಿತಿಲಯಕಾರಿಣಿ| ಶ್ರೀ ಜಗದಂಬ|
ದುಷ್ಟದಾನವ ಮರ್ದಿನಿ||
ಸೃಷ್ಟಿಯೊಳು ತವ ಬಿರುದುಗಳ ನಾ|
ನೆಷ್ಟು ಪೊಗಳಿದರೆನಗಸಾಧ್ಯವು||
ದುಷ್ಟನಾಶಿನಿ ಶಿಷ್ಟಪಾಲಿನಿ|ಅಷ್ಟವಿಧ
ಸೌಭಾಗ್ಯದಾಯಿನಿ ೪
ಕಿಂಕರಪ್ರಿಯಜನನಿ| ಶ್ರೀ ಜಗದಂಬ|
ಶಂಕರಿ ಘನಸುಗುಣಿ||
ಶಂಖಚಕ್ರವ ಕರದಿ ಧರಿಸುತ| ಬಿಂಕದಸುರರ
ಗೆಲಿದು ಮೆರೆಯುವ||
ಪಂಕಜಾಂಬಕಿ ಪರಮಪಾವನೆ|
ಕಿಂಕರನ ಮನದಿಷ್ಟವೀಯುತ ೫

 

೩೧
ಪರಿಪಾಲಿಸು ಶ್ರೀ ಪರಮೇಶ್ವರಿಯೆ|
ಕರುಣದೊಳೆನ್ನನು ನೀ ಪ
ಪರಿಪರಿ ಕಷ್ಟವ| ಪರಿಹರಿಸುತ ಘನ| ಬಿರುದನು
ಪಡೆದ|ಜಗದೀಶ್ವರಿಯೆ ಅ ಪ
ದುರುಳರ ಬಾಧೆಯೊ| ಳಮರರ ಪಾಲಿಸಿ|
ಧರಣಿಯ ಭಾರವನು||
ಪರಿಹರಿಸುತ ಪದ| ಶರಣಗೊಲಿದ ಕರುಣಾಕರಿ|
ಶ್ರೀ| ಸರ್ವೇಶ್ವರಿಯೆ ೧
ಅಂಬಿಕೆ ತವ ಪಾ| ದಾಂಬುಜ ಯುಗವನು|
ನಂಬಿಹೆ ಶಂಕರಿಯೆ ||
ಶಂಭುಮನೋಹರೆ| ಶಾಂಭವಿ ಶಂಕರಿ|
ಇಂಬುಗೊಡುತ ನೀ| ಬೆಂಬಿಡದೆನ್ನನು ೨
ಪಂಕಜಮುಖಿ ಶ್ರೀ| ಶಂಕರಿ ಶುಭಕರಿ| ಕಿಂಕರಪಾಲಿನಿಯೆ ||
ಬಿಂಕದ ದಾನವ| ಸಂಕುಲವಳಿಸಿದ| ಶಂಖಚಕ್ರಾಂಕಿತೆ
| ಶ್ರೀ ದುರ್ಗಾಂಬಿಕೆ ೩

 

೩೨
ಪಾದವ ನುತಿಸುವೆ| ದೇವಿ ಜಯ ಜಯ ಪ
ಸಾಧು ಪ್ರೀತೆ ಮಹಾ| ಮಾತೆ ಘನಸುಖ |
ದಾತೆ ಜಯ ಜಯ ಅ.ಪ
ರವಿಶಶಿಶೋಭಿತೆ| ಪಾವನಚರಿತೆ ||
ಕುವಲಯದಳ ಸು| ಶ್ಯಾಮಲೆ ಕೋಮಲೆ ೧
ಗಾನವಿಲೋಲೆ| ಘನಗುಣಶೀಲೆ||
ದೀನಜನಾವಳಿ| ಪಾಲಯೆ ಸದಯೆ೨
ಭಕ್ತವಶಂಕರೆ| ಭಜಕಸುಖಂಕರೆ||
ಮುಕ್ತಿದಾತೆ ಶಿವ| ಶಕ್ತಿಸ್ವರೂಪೆ ೩

 

೩೩
ಪಾಲಿಸಮ್ಮ ಶ್ರೀ| ಮೂಕಾಂಬಿಕೆಯೆ|| ಹಿಮಶೈಲಸಂಭವೆ||
ಪಾಲಿಸಮ್ಮ ಶ್ರೀ| ಮೂಕಾಂಬಿಕೆಯೇ|| ಪ
ಕಾಳಿಕರುಣಿಕ|ಪಾಲಿಲೋಚನ| ಲೋಲೆ
ಸುಲಲಿತೆ| ದೇವಿ ಮಂಗಳೆ||
ಬಾಲೆಯನುಪಮ| ಲೀಲೆ ಶುಭಚರಿತೆ|ಭೂಲೋಕಪಾಲೆ
ಸುಶೀಲೆ ಕಾತ್ಯಾಯಿನಿ ೧
ಅಂಬುಜಾಕ್ಷಿ ಸ್ವ| ಯಂಭುಮುನಿ ನಿಕು|
ರುಂಬನುತೆ ಜಗ|ದಂಬೆ ಶಂಕರಿ||
ಶುಂಭಧ್ವಂಸಿ ನಿ|ಶುಂಭಮರ್ದಿನಿಯೆ|ನಂಬಿದೆ ನಿನ್ನ
ಹೇರಂಬನ ಮಾತೆಯೆ ೨
ದೇವಿ ನಿನ್ನಡಿ| ದಾವರೆಯ ಬಡ|ಸೇವಕರಿಗ್ವರ|
ವೀವುದನುದಿನ||
ಭಾವವಿರಿಸುತ | ಪಾವನಾತ್ಮಕಿಯೆ|
ದೇವಿ|ಮೃಡಾನಿ|ಭವಾನಿ|ಶರ್ವಾಣಿಯೆ ೩

 

೩೪
ಪಾಲಿಸು ಪರತರ| ಪಾವನೆ ಮಾತೆ|| ಲಾಲಿಸು ನುಡಿಗಳ|
ಭುವನವಿಖ್ಯಾತೆ||
ಪಾಲಿಸು ಪರತರ| ಪಾವನೆ ಮಾತೆ ಪ
ಕಾಳಿಯೆ ಕರುಣಿಯೆ| ಶೀಲಸಂಪನ್ನೆಯೆ||
ಖಳಕುಲನಾಶಿನಿ | ಜಲಜಾಂಬಿಕೆಯೆ ಅ.ಪ
ಸುರ ನರ ಕಿನ್ನರ| ಉರಗರು ಸೇವೆಯ||
ನಿರುತವು ಸಲಿಸುವ| ಪರಮೇಶ್ವರಿಯೆ ೧
ಚರಣವ ಭಜಿಸುವ| ಶರಣರ ಪೊರೆವ||
ಬಿರುದನು ಪಡೆದ| ಕರುಣಾಕರೆಯೆ೨
ಶಂಕರಿ ಶುಭಕರಿ|| ಶಂಕರಪ್ರಿಯಕರಿ||
ಕಿಂಕರಪಾಲಯೆ| ಪಂಕಜಮುಖಿಯೆ ೩
ಕರಿವರಗಮನೆಯೆ| ಕರಿಮುಖಜನನಿಯೆ||
ಕರುಣದಿ ಪಾಲಿಸು| ಕಟಿಲೇಶ್ವರಿಯೆ ೪

 

ಶ್ರೀಕೃಷ್ಣನ ಅನೇಕ ಲೀಲೆಗಳನ್ನು

ಪಾಲಿಸು ಶ್ರೀಕೃಷ್ಣ | ಬಾಲ ಮುಕುಂದ ಗೋ|
ಪಾಲಬಾಲಕ ಸುಂದರ ಪ
ಕಾಳೀಯ ಮರ್ದನ | ಲೀಲಾವಿನೋದ ಭೂ |
ಲೋಲ ಶ್ರೀವರ ಶ್ರೀಕರ
ಬಾಲಭಾಸ್ಕರತೇಜ ವರ ವನ|ಮಾಲ
ಶೋಭಿತ ಕೋಮಲಾಕರ|
ನೀಲವರ್ಣ ಶುಭಾಂಗ ಮುನಿಜನ |
ಪಾಲ ನೀ ಕರುಣಾಲವಾಲನೆ ೧
ನವನೀತದಧಿಚೋರ | ಭುವನಮೋಹನಾಕಾರ |
ಭುವನೋದ್ಧಾರಕ ಶ್ರೀಧರ||
ಪವಮಾನಸುತ ಸೇವ್ಯ | ಭುವನವಂದಿತ ದಿವ್ಯ |
ವಿವಿಧಮಾನುಷವಿಗ್ರಹ ||
ಅವನಿಯೊಳಗವತರಿಸಿ ದೇವಕಿ|
ಕುವರ ನೀನೆನಿಸುತ್ತ ಯಾದವ |
ನಿವಹದೊಳು ನೀನಿರ್ದು ಗೋವ್ಗಳ |
ಭುವನದಲಿ ಪಾಲಿಸಿದ ಶ್ರೀಹರಿ೨
ಕಂಕಣ ಕೇಯೂರ| ಕಡಗಾದ್ಯಲಂಕಾರಿ
| ಕಿಂಕರಜನಪ್ರಿಯ ಶËರಿ ||
ಮಂಕು ಮೂಡಿದ ಸತೀ | ಸಂಕುಲವನು ಅತಿ |
ಬಿಂಕದ ಗೋವಳರಾಯ
ಶಂಖಚಕ್ರವ ಕರದಿ ಧರಿಸುತ |
ಸಂಖ್ಯೆಯಿಲ್ಲದ ದುಷ್ಟದಾನವ |
ಸಂಕುಲವ ನಳಿಸಿರ್ದ ನೀನಖಿ |
ಳಾಂಕ ಮಹಿಮಾನಂತ ರೂಪನೆ ೩
ಅಂಬುಜೋದ್ಭವತಾತ | ಜಂಭಾರಿ ಸುರನುತ |
ಶಂಭುಸುಪ್ರೀತ ಖ್ಯಾತ||
ಅಂಬುಧಿವಾಸನೆ ಅಂಬುಜನಾಭನೆ|
ಕಂಬುಕಂಧರ ದೇವ ಕುಂಭಿನಿನಾಥ ||
ಅಂಬುಜಾಕ್ಷನೆ ಜಂಭಭೇದಿಸ್ವ |
ಯಂಭು ತ್ರಿದಶರಿಗಿಂಬುದೋರಲು |
ಕುಂಭಿನಿಯ ಭಾರಹರಿಸುತ |
ಬೆಂಬಿಡದೆ ಪಾಲಿಸಿದ ಶ್ರೀಹರಿ ೪

 

೩೫
ಪಾವನಾತ್ಮಕಿಯೆ | ಪಾಲಿಸು | ಪಾವನಾತ್ಮಕಿಯೆ ಪ
ಪಾವನಾತ್ಮಕಿ ಪಾವನಚರಿತೆ|
ಭಾವಜಾರಿಹಿತೆ ಸುಪ್ರೀತೆ||
ದೇವಿ ಭುವನಭರಿತೆ ವಿನುತೆ|
ದೇವಿಪಾವನೆ ಪಾಲಿಸು ಮಾತೆ ಅ ಪ
ಸೃಷ್ಟಿ ಭಾರರಾಗುತಿರ್ದ| ದುಷ್ಟ ದನುಜರಸುವ ಹೀರ್ದ||
ಶಿಷ್ಟರಿಂಗೆ ದಯವದೋರ್ದ| ಸೃಷ್ಟವಿನುತೆ ಶಿಷ್ಟದಾತೆ ೧
ವೇದವಿನುತೆ ಭೇದರಹಿತೆ| ಸಾಧುಸುಜನಮೋದದಾತೆ||
ಆದಿಮಧ್ಯಾಂತರಹಿತೆ| ಮಾಧವನ ಸಹಜಾತೆ ೨
ಶಂಖಚಕ್ರಗಳನು ಧರಿಸಿ| ಬಿಂಕದ ಸುರರನ್ನು ವಧಿಸಿ||
ಕಿಂಕರರೊಳು ದಯವಿರಿಸಿದ ವೆಂಕಟರಮಣನ
ಸೋದರಿ ಶಂಕರಿ ೩

 

೩೬
ಪೊರೆಯುವಳು ದೇವಿ ಪೊರೆಯುವಳು||
ಕರುಣದಿಂದ ನಮ್ಮ ಪೊರೆಯುವಳು ಪ
ಶರಣರಿಗೊಲಿದವರಿಷ್ಟವ ಸಲಿಸುವ|
ಪರಮಪಾವನೆ ದೇವಿ ಪೊರೆಯುವಳು ಅ ಪ
ತೋಷದಿಂದಲವಳಾಶ್ರಿತ ಜನರಭಿ|
ಲಾಷೆಯ ಸಲಿಸುತ ಪೊರೆಯುವಳು||
ವಾಸವಾದಿ ಸುರವಂದಿತೆ ಶ್ರೀ ಪರ|
ಮೇಶ್ವರಿದೇವಿಯು ಪೊರೆಯುವಳು ೧
ಮಹಿಷಾಸುರನನು ಮಹಿಯೊಳು ಕೆಡಹಿದ|
ಮಹಿಷಮರ್ದಿನಿದೇವಿ ಪೊರೆಯುವಳು||
ಮಹಿಮೆಯದೋರುತ ಖಳ ಧೂಮ್ರಾಕ್ಷನ|
ದಹಿಸುತ ಮಹಿಯನು ಪೊರೆದವಳು ೨
ಚಂಡ ಮುಂಡ ಖಳ ತಂಡವಳಿಸಿ ಬ್ರ |
ಹ್ಮಾಂಡದ ಭಾರವ ಕಳೆದವಳು||
ರುಂಡವ ತರಿಯುತ ಚೆಂಡಾಡಿದ ಶ್ರೀ|
ಚಾಮುಂಡೇಶ್ವರಿ ಪೊರೆಯುವಳು ೩
ಭಕ್ತರ ಪೊರೆಯಲು ರಕ್ತಬೀಜಾಖ್ಯನ|
ರಕ್ತ ಪಾನÀವನು ಗೈದವಳು||
ಯುಕ್ತಿಯಿಂದಲಾ ನಕ್ತಂಚರನನು|
ಶಕ್ತಿಸ್ವರೂಪಿಣಿ ತರಿದವಳು ೪
ಶುಂಭ ನಿಶುಂಭರ ವಧಿಸಿದ ಶ್ರೀ ಜಗ|
ದಂಬಾದೇವಿಯು ಪೊರೆಯುವಳು||
ಅಂಬುಜಲೋಚನೆ ಶಂಭುಮನೋಹರೆ |
ಇಂಬುಗೊಡುತ ನಮ್ಮ ಪೊರೆಯುವಳು ೫
ದುರುಳರ ಬಾಧೆಗೆ ಬೆದರುತ ಸುರತತಿ |
ಮೊರೆಯಿಡಲಭಯವನಿತ್ತವಳು||
ಅರುಣಾಸುರನ ಸಂಹರಿಸುತ ನಂದಿನಿ|
ನದಿಯೊಳು ಶರಣರಿಗೊಲಿದವಳು ೬
ಪರಿಪರಿ ವಿಧದಲಿ ಧರಣಿಯ ಭಾರವ
ಪರಿಹರಿಸುತಲಿ ಪೊರೆದವಳು||
ಪರಮಕೃಪಾಕರಿ ಶ್ರೀ ಜಗದೀಶ್ವರಿ
ಶರಣರಾದ ನಮ್ಮ ಪೊರೆಯುವಳು ೭
ಶಂಕರಿ ಶುಭಕರಿ ಕಿಂಕರಪ್ರಿಯಕರಿ||
ಪಂಕಜಲೋಚನೆ ಪೊರೆಯುವಳು||
ಶಂಖಚಕ್ರಾಂಕಿತೆ ಶ್ರೀ ದುರ್ಗಾಂಬಿಕೆ|
ಕಿಂಕರರೆಮ್ಮನು ಪೊರೆಯುವಳು ೮
ಕೈಟಭಾದಿ ಖಳಸಂಕುಲವಳಿಸಿದ|
ನಿಟಿಲಾಂಬಕಿ ಶಿವೆ ಪೊರೆಯುವಳು||
ಜಟಾಮಕುಟ ಸುರತಟನೀಧರಸತಿ|
ಕಟಿಲಪುರೇಶ್ವರಿ ಪೊರೆಯುವಳು ೯

 

೩೭
ಬಾ ಕೃಪಾಕರೆ| ಮೋದದಿ| ಬಾ ಕೃಪಾಕರೆ ಪ
ತವ ಪಾದವ ನÀುತಿಸುವೆ| ಪೊರೆಯಲು ಮೋದದಿ|
ಬಾ ಕೃಪಾಕರೆ ಅ ಪ
ಕಮಲದಳಾಂಬಕಿ| ಕಮಲಾನನೆಯೆ|
ಕಮಲಜಪಿತನ| ಸಹಭವೆಯೆ||
ಕಾಮಿತವೀಯುತ|ಪೊರೆಯಲು ಮೋದದಿ ೧
ನೃತ್ಯ ಗೀತ ಸು| ಪ್ರೀತೆಯೆ ಸುಗುಣಿ|
ನಿತ್ಯಕಲ್ಯಾಣಿ|ಭೃತ್ಯರ ಜನನಿ||
ನಿತ್ಯವು ನುತಿಸುವೆ| ಪೊರೆಯಲು ಮೋದದಿ ೨
ಭುವನ ಪಾಲಿನಿ| ಭುವನೇಶ್ವರಿ ನೀ|
ಭುವನ ಮೋಹಿನಿ| ತ್ರಿಭುವನಜನನಿ||
ಭವಭಯಹಾರಿಣಿ| ಪೊರೆಯಲು ಮೋದದಿ ೩

 

ಭಗವನ್ನಾಮಸ್ಮರಣೆಯನ್ನು ಮಾಡಿ

ಭಗವನ್ನಾಮವನಾಡು ಅಡಿಗಡಿ|
ಗಾಡು ಅಡಿಗಡಿಗಾಡು ಅಡಿಗಡಿ ಪ
ಭಗವನ್ನಾಮದ ಸುಧೆಯನು ಸೇವಿಸಿ |
ಸೊಗದಿಂ ನಲಿನಲಿದಾಡು ಅಡಿಗಡಿ ಅ.ಪ
ಪಾಪವ ನೀಗಿ ಪಾವನನಾಗಿ|
ಶ್ರೀಪತಿಯನು ಕೂಡ್ಯಾಡು ಅಡಿಗಡಿ ೧
ಪಾಮರಗೋಲಿದಾ ರಾಮನ ನಾಮವ |
ಪ್ರೇಮದಿ ಮನದೊಳಗಾಡು ಅಡಿಗಡಿ ೨
ತರುಣಿಯ ಸೀರೆಗೆ ಅಕ್ಷಯವಿತ್ತ |
ಕೃಷ್ಣನ ನಾಮವನಾಡು ಅಡಿಗಡಿ ೩
ದಾಸಜನರ ಮನದಾಸೆಯ ಸಲಿಸುವ |
ವಾಸುದೇವನ ಕೂಡ್ಯಾಡು ಅಡಿಗಡಿ ೪
ಇಂಗಿತವೀಯುವ ಮಂಗಳಮಹಿಮ |
ರಂಗನ ನಾಮವ ನಾಡು ಅಡಿಗಡಿ ೫
ಮರಣಕಾಲದೊಳಜಾಮಿಳಗೊಲಿದಾ |
ನಾರಾಯಣ ನೊಡನಾಡು ಅಡಿಗಡಿ ೬
ವೆಂಕಟರಮಣನ ಸಂಕಟಹರಣನ |
ಕಿಂಕರನಾಗಿ ನೀನಾಡು ಅಡಿಗಡಿ ೭

 

ಇದು ಶ್ರೀ ಲಕ್ಷ್ಮೀ ಸ್ತುತಿ
ಲಕ್ಷ್ಮೀದೇವಿ
೧೩
ಭಾಗ್ಯವ ಕೊಡು ತಾಯೆ| ನೀ ಸೌ|
ಭಾಗ್ಯವ ಕೊಡು ತಾಯೆ ಪ
ಭಾರ್ಗವಿ ನಿನ್ನಯ| ಪದಯುಗಕೆರಗುವೆ|
ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ
ಸಾಗರಸಂಜಾತೆ| ದೇವಿ| ನಾಗವರದಪ್ರೀತೆ ||
ಯೋಗಿಜನಾವಳಿ| ಮಾನಸಪೂಜಿತೆ |
ಅಗಣಿತಗುಣಮಣಿ| ತ್ರಿಜಗದ್ವಂದಿತೆ ೧
ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ ||
ಸುರನರ ಕಿನ್ನರ | ಸುರಮುನಿ ಪೂಜಿತೆ |
ಕಾಮಿತವೀಯುವ || ಕರುಣಾಕರೆಯೆ ೨
ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ |
ಕನಕದ ವೃಷ್ಟಿಯ | ಕರೆಯುತಲನುದಿನ |
ಮನ್ಮನದಿಷ್ಟವು | ಸಿದ್ಧಿಸುವಂದದ ೩
ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ ||
ಮಹಿಮಾಕರೆ ನೀ | ಮಹಿಯೊಳಗನಿಶವು |
ಇಹಪರ ಸುಖವನು | ಭವಿಸುವ ತೆರದಾ ೪
ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ ||
ಗಜವಾಹಿನಿ ವರ | ಮದಗಜಗಮನೆಯೆ |
ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ ೫
ಮಂಗಳಕರವಕ್ತ್ರೆ | ನೀ ಶುಭ | ಮಂಗಳೆ ಸುಪವಿತ್ರೆ ||
ಮಂಗಳಾಂಗಿ ನರ | ಸಿಂಗನ ರಮಣಿಯೆ |
ಮಂಗಳಕಾರ್ಯಗ | ಳನುದಿನವೆಸಗುವ ೬
ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ ||
ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ ೭

 

ಮಂಗಳಾರತಿ ಪದ. ದೇವಿಗೆ, ಗಣಪತಿಗೆ
ಮಂಗಳ
೪೩
ಮಂಗಳಾರತಿ| ಬೆಳಗುವೆನೀಗ|
ಶೃಂಗರಿಸುತ ಸುಮ| ಸಂದೋಹದಿ ಪ
ಮಂಗಲವನು ಹಾಡಿ| ಇಂಗಿತವನು ಬೇಡಿ|
ಮಂಗಳಾತ್ಮಕಿ ದೇವಿಯ ಪಾದಕೆ ಅ.ಪ
ಅಜಭವ ಸುರನರ| ತ್ರಿಜಗಪೂಜಿತ ಪಾದ|
ಭಜಿಸುತ ಮನದೊಳು| ಮೊದಲೊಂದಿಸಿ||
ಗಜಮುಖ ನಿನ್ನಯ| ಪಾದ ಪೂಜೆಯ ಮಾಡಿ|
ನಿಜಭಕ್ತಿಯಿಂದಲಿ| ಜಯ ಜಯವೆನ್ನುತ ೧
ಮಂದರಧರ ನಿನ್ನ| ದ್ವಂದ್ವಪಾದಗಳನ್ನ|
ಚಂದದಿ ಪೂಜಿಸಿ| ಭಜಿಸುತಲಿ||
ಕಂದರ್ಪನಯ್ಯನೆ| ಸಿಂಧುಶಯನನೆ|
ಇಂದಿರೇಶನಿಗಾ| ನಂದದಿಂದಲಿ ೨
ಮತ್ಸ್ಯವ ತಾರಿಗೆ| ಕೂರ್ಮಗೆ ವರಾಹಗೆ|
ನರಹರಿ ರೂಪಗೆ| ವಾಮನಗೆ||
ಭಾರ್ಗವ ರಾಮಗೆ| ಜಾನಕಿರಮಣಗೆ|
ಯಾದವಕುಲದೀಪ| ಮುರಲಿ ಕೃಷ್ಣಗೆ೩
ಬೌದ್ಧವತಾರವ| ಧರಿಸಿದ ಮಹಿಮಗೆ|
ಕಲ್ಕಿಸ್ವರೂಪದಿ| ಮೆರೆವವಗೆ||
ದಶವಿಧರೂಪದಿ| ಧರೆಯನು ಪೊರೆದ|
ವಿಜಯವಿಠಲ ನಮ್ಮ| ಗುರುವೆಂಕಟೇಶಗೆ ೪

 

೧೬
ಮನ ಒಲಿದೆನ್ನನು | ಪಾಲಿಸು ಜನನಿ ಪ.
ಘನ ವಿದ್ಯಾದಾಯಿನಿ | ಜಲಜಾಂಬಕಿ ನೀ ಅ.ಪ
ವಿದ್ಯಾವಿದಾತೆ ಬುದ್ಧಿಪ್ರದಾತೆ ||
ಶ್ರದ್ಧೆಯ ಬೇಡುವೆ | ಸದ್ಗುಣಭರಿತೆ ೧
ಗಾನವಿಲೋಲೆ | ವಿನಮಿತಪಾಲೆ ||
ಜ್ಞಾನಪ್ರದಾಯಿನಿ | ಘನಗುಣಶೀಲೆ ೨
ಆಡುವ ನುಡಿ ಕೈ | ಗೂಡುವ ತೆರದಲಿ ||
ಮಾಡೌ ಬೇಡುವೆ | ನಡಿಗಳಿಗೆರಗಿ ೩
ಮನ್ಮನದಿಷ್ಟವ | ನಿತ್ತೆನ್ನ ಪೊರೆ ನೀ ||
ಬೊಮ್ಮನ ರಾಣಿ | ನಿತ್ಯಕಲ್ಯಾಣಿ ೪

 

ಮುಕ್ತಿ ಸಾಧನವಾದ
ಲೋಕನೀತಿ
೪೨
ಮನವೇ ನೀ ಭಜಿಸು| ರಾಮನಾಮವನು
ಘನ ಮುಕ್ತಿಸಾಧನೆ | ಪಾದನಾಮವನು ಪ
ಅಂದದ ನಾಮ| ಚಂದದ ನಾಮ||
ವಂದಿಸೆ ಮನಕಾ| ನಂದದ ನಾಮ ೧
ಕೋಮಲ ನಾಮ| ನಿರ್ಮಲ ನಾಮ|
ಕಾಮಿತವೀವ ಸು| ಪ್ರೇಮದ ನಾಮ ೨
ಪಾವನ ನಾಮ| ಶ್ರೀವರ ನಾಮ||
ಪವನಸಂಜಾತನು ಸ್ಮರಿಸುವ | ನಾಮ ೩
ಅಘಹರ ನಾಮ| ಅಗಣಿತ ಮಹಿಮ||
ಜಗದಭಿರಾಮನ | ಘನಗುಣ ನಾಮ ೪
ಭಕ್ತಾದಿ ಜನರು| ಭಜಿಸುವ ನಾಮ|
ಮುಕ್ತಿಸಾಧನವಾದ| ಭಕ್ತಿಯ ನಾಮ ೫

 

೩೮
ಮಾತೆ ದಾತೆ ಹಿತೆ| ಘನ ಸುಚರಿತೆ| ಮಾತೆ ದಾತೆ ಹಿತೆ ಪ
ಮಾತೆ ಸದ್ಗುಣ ಭರಿತೆ ಘನ ವಿ| ಖ್ಯಾತೆ ಭುವನ ವಿರಾಜಿತೆ||
ದಾತೆ ದೀನಾನಾಥ ಜನಸಂ|ಪ್ರೀತಿಯುತೆ ಪರಿಪೋಷಿತೆಅ.ಪ
ಶಿರವ ಬಾಗಿಸಿ ಕರವ ಜೋಡಿಸಿ| ವಿನಯದಿಂದಲಿ ಬೇಡುವ||
ಶರಣನನು ಅನವರತ ಪಾಲಿಸು| ಅಖಿಳ ಸಂಪದವೀಯುತ ೧
ಆದಿಶಕ್ತಿಸ್ವರೂಪಿಣಿ ತವ| ಪಾದ ಸೇವೆಯ ಗೈಯುವೆ||
ಆದರಿಸಿ ಪೊರೆಯೆನ್ನ ಸರ್ವಪ| ರಾಧಗಳನು ಕ್ಷಮಿಸುತ ೨
ಜನನಿ ನೀನತಿಕರುಣೆಯಿಂದಲಿ| ಸುರರಿಗಭಯವನೀಯುತ||
ದುರುಳ ದೈತ್ಯನ ವಧಿಸಿ ನಂದಿನಿ| ನದಿಯ ಮಧ್ಯದಿ ನೆಲೆಸಿದ೩
ಪಂಕಜಾಂಬಕಿ ಪರಮಪಾವನೆ| ಶಂಕರಿ ಸರ್ವೇಶ್ವರಿ||
ವೆಂಕಟಾಚಲನಿಲಯ ಶ್ರೀವರ| ವೆಂಕಟೇಶನ ಸೋದರಿ ೪

 

ಇದು ಬಾಲಕೃಷ್ಣನ ಸ್ತೋತ್ರ

ಮುರಲಿ ನಾದವ ಮಾಡಿ | ಕುಣಿದಾಡಿ ಬಾರೊ|
ಕೃಷ್ಣ | ಕುಣಿದಾಡಿ ಬಾರೋ ಪ
ಕಿರುನಗೆ ಸೂಸುತ| ನಲಿದಾಡಿ ಬಾರೋಅ.ಪ
ರಂಗಯ್ಯ ಬಾರೋ | ಕೃಷ್ಣಯ್ಯ ಬಾರೋ
ಮಂಗಳಾತ್ಮಕ ಮುದ್ದು | ಕಂದಯ್ಯ ಬಾರೋ೧
ನೊರೆಹಾಲ ನೀವÉ | ಸರಸದಿ ಬಾರೋ |
ನವನೀತವೀಯುವೆ | ನಲಿದೋಡಿ ಬಾರೋ ೨
ಕಜ್ಜಾಯ ಕೊಡುವೆ| ಮುದ್ದು ನೀ ಬಾರೋ ||
ಗೆಜ್ಜೆನಾದವ ಮಾಡಿ | ಎದ್ದೋಡಿ ಬಾರೋ೩

 

ಇದು ರಾಮದೇವರ ಸ್ತೋತ್ರ

ವೈದೇಹೀಧವ ರಾಮ ನಿನ್ನ | ಪಾದವ
ಬೇಡುವೆ ಪರಿಪಾಲಿಸೆನ್ನ ಪ
ಜಗದಭಿರಾಮ | ಅಗಣಿತ ಮಹಿಮ
ಜಗವನುದ್ಧರಿಸುವ | ಘನ ಗುಣಧಾಮ ೧
ಕೌಸಲ್ಯ ರಾಮ | ಪಶುಪತಿ ಪ್ರೇಮ ||
ಕೌಶಿಕ ಮಖಪರಿ | ಪಾಲಕ ರಾಮ ೨
ಪಾವನ ರಾಮ | ಶ್ರೀವರ ರಾಮ ||
ಪವನಜಸೇವಿತ| ರವಿಕುಲಸೋಮ ೩
ದಶರಥರಾಮ | ವಸುಧೀಶ ರಾಮ ||
ಋಷಿಪತ್ನಿಯಹಲ್ಯೋ| ದ್ಧಾರಕ ರಾಮ ೪
ಅಸುರಾರಿ ರಾಮ | ಬಿಸಜಾಕ್ಷ ರಾಮ ||
ದಶಮುಖಭಂಜನ | ಕೋದಂಡರಾಮ ೫

 

೩೯
ಶರತ್ಕಾಲ ಶಶಿ|
ಪೂರ್ಣನಿಭಾನನೆ|
ಜಗದಂಬ, ಜಗದಂಬ ಪ
ನಿರುತವು ನಿನ್ನಯ|
ಚರಣವ ಸ್ಮರಿಸುವ|
ಶರಣಾಮರತರು|
ಕರುಣಿ ಭವಾನಿ|
ಜಗದಂಬ, ಜಗದಂಬ|| ೧
ನೀ ಕರುಣಿಸದೆ ನಿ|
ರಾಕರಿಸಲು ಎನ್ನ|
ಸಾಕುವರಾರು ಪ|
ರಾತ್ಪರ ಜನನಿ|
ಜಗದಂಬ, ಜಗದಂಬ||೨
ಶರಣಾಗತರನು|
ಪೊರೆವಳೆಂಬ ಘನ|
ಬಿರುದನಾಂತ ಶ್ರೀ|
ಪರಮೇಶ್ವರಿಯೆ|
ಜಗದಂಬ, ಜಗದಂಬ||೩
ಪಂಕಜಾಕ್ಷಿ ಅಖಿ|
ಲಾಂಕಮಹಿಮೆ ತವ|
ಕಿಂಕರರನು ಪೊರೆ|
ಶಂಕರಿ ದೇವಿ|
ಜಗದಂಬ, ಜಗದಂಬ||೪
ಜಟಾಮಕುಟಸುರ|
ತಟನೀಧರಸತಿ|
ನಿಟಿಲಾಂಬಕಿ ಶ್ರೀ|
ಕಟಿಲಪುರೇಶ್ವರಿ|
ಜಗದಂಬ, ಜಗದಂಬ||೫

 

೧೭
ಶಾರದಾಂಬೆ | ಜಯ ಜಯ | ಶಾರದಾಂಬೆಪ.
ತವ ಚರಣವ ಸ್ಮರಿಸುವ | ಶರಣರ ಪೊರೆವುದು |
ಶಾರದಾಂಬೆ ಅ.ಪ
ನಿರತವು ನೀ ಮನ| ವೊಲಿಯುತಲೆನ್ನಯ |
ಜಿಂಹ್ವೆಯೊಳಿರುವುದು | ನಲಿನಲಿದು
ಕರುಣಿಯೆ ನೀ ದಯ | ದೋರುತ ಪೊರೆವುದು | ಶಾರದಾಂಬೆ ೧
ಹರಿನಾಮಾಮೃತ | ವನುದಿನವೆನ್ನಯ |
ರಸನೆಯು ಸೇವಿಸು | ವಂದದಿ ನೀ ||
ವರಗಳ ನೀ ವಾ| ಗ್ದೇವಿಯೆ ಕರುಣಿಸು | ಶಾರದಾಂಬೆ೨
ಮರಣದ ಕಾಲದಿ | ಹರಿಯನು ಬಾಯೊಳು |
ಸ್ಮರಿಸುವ ಜ್ಞಾನವ | ನೀಯುತಲಿ ||
ಶರಣನ ಪೊರೆವುದು | ಪರಮ ಕೃಪಾಕರಿ | ಶಾರದಾಂಬೆ ೩
ಆಡುವ ನುಡಿ ಕೈ | ಗೂಡುವ ತೆರದಲಿ |
ಮಾಡು ನೀ ಕೃಪೆಯ | ನ್ನನವರತ ||
ಜೋಡಿಸಿ ಕೈಗಳ | ವಿನಯದಿ ಬೇಡುವೆ | ಶಾರದಾಂಬೆ ೪
ವೀಣಾಪಾಣಿ | ಕೋಕಿಲ ವಾಣಿ |
ಪನ್ನಗವೇಣಿ | ಬೊಮ್ಮನ ರಾಣಿ ||
ದೀನನ ನುಡಿಗಭಿ | ಮಾನವನೀವುದು | ಶಾರದಾಂಬೆ ೫

 

ಇದು ಶಿವ ಭಜನೆ. ಪ್ರಾಸ ಅನುಪ್ರಾಸಗಳು
ರುದ್ರದೇವರು
೧೮
ಸಾಂಬ ಸದಾಶಿವ | ಸಾಂಬ ಸದಾಶಿವ |
ಸಾಂಬ ಸದಾಶಿವ | ಸಾಂಬ ಶಿವ ಪ
ಶಂಭೋಶಂಕರ | ಶಶಾಂಕಶೇಖರ |
ಶಾಂಭವಿಪ್ರಿಯವರ | ಸಾಂಬ ಶಿವ ಅ. ಪ.
ಗಂಗಾಧರ ವರ | ಅಂಗಜ ಮದಹರ |
ತುಂಗಕೃಪಾಕರ | ಸಾಂಬ ಶಿವ ||
ಸಂಗರಹಿತನೇ ಭು| ಜಗಭೂಷ ವರ |
ಮಂಗಳಮಹಿಮನೆ | ಸಾಂಬ ಶಿವ ೧
ವ್ಯೋಮಕೇಶಭವ | ಭಕ್ತಪರಾಯಣ |
ಭೀಮ ಪರಾತ್ಮರ | ಸಾಂಬ ಶಿವ ||
ವಾಮದೇವ ಪ್ರಮ | ಥಾಧಿಪ ಶಂಕರ |
ಸಾಮಗಾನಪ್ರಿಯ | ಸಾಂಬ ಶಿವ೨
ಖಂಡ ಪರಶು ಮಾ | ರ್ತಾಂಡಸಮಪ್ರಭ |
ರುಂಡಮಾಲಧರ | ಸಾಂಬ ಶಿವ ||
ದಂಡಧರ ಹರ | ಮೃತ್ಯುಂಜಯ ಭೂ |
ಮಂಡಲನಾಯಕ | ಸಾಂಬ ಶಿವ೩
ಜಟಾ ಮಕುಟ ಸುರ | ತಟನೀ ಧರ ವರ |
ಕುಠಾರಧರ ಹರ | ಸಾಂಬ ಶಿವ ||
ಸ್ಫಟಿಕಸನ್ನಿಭ | ಖಲತ್ರಿಪುರಾಂತಕ |
ನಿಟಿಲಾಂಬಕ ಮೃಡ | ಸಾಂಬ ಶಿವ ೪
ನಕ್ತಂಚರ ಹರ | ಶತ್ರುಭಯಂಕರ |
ಕಿಂಕರಪ್ರಿಯಕರ | ಸಾಂಬ ಶಿವ ||
ಭಕ್ತವಶಂಕರ | ಭಜಕಸುಖಂಕರ |
ಮುಕ್ತಿಪ್ರದಾಯಕ | ಸಾಂಬ ಶಿವ ೫

 

೧೧
ಹರಿ ನಿನ್ನ ನಾಮದ | ಸ್ಮರಣೆಯ ನಾನು ||
ನಿರುತವು ಮಾಡುವೆ | ಪೊರೆಯೆನ್ನ ನೀನು ಪ
ಶರಣರ ಪೊರೆವ| ಪರಮ ಪಾವನನು |
ಕರುಣಾಳು ನಿನ್ನಯ | ಶರಣನಾಗಿಹೆನುಅ.ಪ
ಕರಿರಾಜಗಿತ್ತೆ ನೀ | ವರ ಮುಕ್ತಿಪಥವ ||
ತರಳನಿಗೊಲಿದಿತ್ತೆ | ವರಧ್ರುವಪದವ ೧
ಹರಿಯನು ತೋರೆಂದು | ಗರ್ಜಿಸಿ ಜರೆದ||
ದುರುಳನ ಬಗಿಯುತ್ತ| ತರಳನಿಗೊಲಿದ ೨
ನಾಮವನರಿಯದ | ಪಾಮರಗೊಲಿದು ||
ಕಾಮಿತಾರ್ಥವನಿತ್ತೆ| ಪ್ರೇಮದೊಳನಿಶ ೩
ಮರಣದ ಸಮಯದಿ | ಕರೆದಜಾಮಿಳಗೆ||
ಪರಮಪದವನಿತ್ತು | ಕರುಣದಿ ಪೊರೆದ ೪
ಅರಿತಾದರು ಮನ| ಕ್ಕರಿಯದೆ ಗೈದ ||
ದುರಿತಂಗಳಿರೆ ಪರಿ| ಹರಿಸೆಂದು ಸತತ ೫
ನೀನಲ್ಲದೆನ್ನನು | ಪೊರೆಯುವರಿಲ್ಲ ||
ನಿನ್ನ ಸೇವೆಯ ಮಾಡ | ಲರಿಯೆ ನಾನಲ್ಲ೬
ಇಹಪರಸುಖವಿತ್ತು | ಮುಕ್ತಿಯನೀವ ||
ಮಹಿಮನೆಂದರಿತಿಹೆ | ಭಕ್ತಸಂಜೀವ ೭

 

ದಶವತಾರಗಳನ್ನು ವರ್ಣಿಸಿದ್ದಾರೆ.
೧೦
ಹರಿಯೆ ನಿನ್ನಯ ಮಹಿಮೆ| ಏನನ್ನುವೆ |
ನರಿಯುವುದಸದಳವು ಪ
ಪರಿಪರಿವಿಧದೊಳು| ರೂಪವ ಧರಿಸುತ್ತ ||
ಧರಣಿ ಭಾರವನ್ನೆಲ್ಲ| ಪರಿಹಾರ ಮಾಡುವ ಅ.ಪ
ನೀರೊಳು ಮತ್ಸ್ಯನಾದೆ | ಏನನ್ನುವೆ |
ಕೂರ್ಮರೂಪವ ತಳೆದೆ ||
ವರಹನು ನೀನಾದೆ | ನರಹರಿಯಾದೆ ನೀ||
ಮೂರಡಿ ಭೂಮಿಯ | ವಟುವಾಗಿ ಬೇಡಿದೆ ೧
ಭಾರ್ಗವ ರಾಮನಾದೆ | ಏನನ್ನುವೆ |
ಕಾಕುಸ್ಥ ರಾಮನಾದೆ ||
ಯಾದವಪತಿಯಾದೆ | ಬೌದ್ಧನು ನೀನಾದೆ |
ಕಲ್ಕಿರೂಪದಿ ಬಂದು | ಧರೆಂಇÀಇನುದ್ಧರಿಸಿದೆ ೨
ಜಗದಾದಿ ದೇವ ನೀನು | ಏನನ್ನುವೆ |
ಜಗದೇಕನಾಯಕನು ||
ಜಗವನುದ್ಧರಿಸುವ | ಜಗನ್ನಿಯಾಮಕ ನೀನು ||
ನಿಗಮಕೆ ಸಿಲುಕದ | ಅಗಣಿತ ಮಹಿಮನು ೩
ಚಿನ್ಮಯಾತ್ಮಕನು ನೀನು | ಏನನ್ನುವೆ |
ಪ್ರಣವ ಸ್ವರೂಪ ನೀನು ||
ಅಣುರೇಣು ತೃಣಕಾಷ್ಠ | ಭರಿತನಾಗಿಹ ನೀನು ||
ಜನನಮರಣವಿರ | ಹಿತನಾದ ದೇವನು ೪

 

ಶ್ರೀಹರಿಯ ಮಹಿಮೆಗಳನ್ನು
೧೨
ಹರಿಯೇ ನಿನ್ನಯ | ಅಪಾರ ಮಹಿಮೆಯ |
ನರಿತಿಹರಾರಿಹರು ||
ಪರಿಕಿಸಿ ನೋಡಲು | ಪರಮಪೂಜ್ಯನು |
ಪರತರಪಾವನನು ಪ
ಭಗವದ್ರೂಪನು| ತ್ರಿಗುಣಾತ್ಮಕನು| ಜಗದಾಧಾರಕನು ||
ಜಗನ್ನಿವಾಸನು| ಜಗದಾನಂದನು| ಜಗದೀಶನು ನೀನು ೧
ಜಗನಿಯಾಮಕ | ಜಗದುದ್ಧಾರಕ | ತ್ರಿಜಗವಿರಾಜಿತನು||
ಅಗಣಿತಮಹಿಮನು| ನಿಗಮಗೋಚರ | ತ್ರಿಜಗದ್ವಂದಿತನು೨
ಭಕ್ತದಾತನು | ಮುಕ್ತಿದಾತನು | ಭಕ್ತೋದ್ಧಾರಕನು ||
ಭಕ್ತಾನಂದನು| ಭಕ್ತಾಧೀನನು| ಭಕ್ತಪರಾಯಣನು ೩
ಶರಣಾಗತಪರಿ | ಪಾಲಕ | ನೀನು| ಕರುಣಾಸಾಗರನು||
ಪರಬ್ರಹ್ಮನು | ಪರಂಜ್ಯೋತಿಯು | ಪರಮಾತ್ಮನು ನೀನು೪
ನಿನ್ನಯ ನಾಮೋ| ಚ್ಚರಿಸಿದ ಪಾಮರ | ಪಾವನನಾಗುವನು||
ನಾಮಾಮೃತವನು | ಸೇವಿಸೆ ಬ್ರಹ್ಮಾ| ನಂದವ ಪೊಂದುವನು ೫

 

ಕೃಷ್ಣರಾಯನೆ ಎನ್ನಯ
೪೧
ಕೃಷ್ಣರಾಯನೆ ಎನ್ನಯ | ಕಷ್ಟವ ನೀಗಿ|
ಇಷ್ಟಾರ್ಥ ಪಾಲಿಸಯ್ಯ ಪ
ಭೃಷ್ಟನಾದೆನು| ಧರಣಿಯೊಳಗತಿ|
ದುಷ್ಟಜನ ಸಂಸರ್ಗದಿಂದಲಿ|
ಕೃಷ್ಣನಿನ್ನಯ| ದಾಸರಾಗಿಹ| ಶ್ರೇಷ್ಠ ಜನರನು| ಪೊರೆವ ತೆರದಿ ೧
ಮತಿಹೀನನಾದೆನಯ್ಯ| ಭೂತಳದೊಳು|
ಗತಿಹೀನನಾದೆನಯ್ಯ||
ಮತಿಯ ಪಾಲಿಸಿ | ಕರುಣದಿ ಸ|
ದ್ಗತಿಯು ದೊರಕುವ| ತೆರದಿ ನಿನ್ನನು|
ಸತತ ಸ್ಮರಿಪಾ| ನಾಥಾ ಶರಣರ |
ಪತಿಕರಿಸಿ ಪಿತ| ನಂತೆ ಪೊರೆವ ೨
ಪಂಕಜನಾಭ ದೇವ| ವೆಂಕಟರಾಯ| ಕಿಂಕರರನು ಪೊರೆವ|
ವೆಂಕಟೇಶನೆ| ನಿನ್ನ ಚರಣದ |
ಕಿಂಕರಗೆ ಮತಿ| ದೋರಿ ಪೊರೆಯೈ|
ಶಂಕರಾದಿ ಸು | ರೇಂದ್ರ ವಂದಿತ|
ಪಂಕಜಾಂಬಕ | ಪರಮಪಾವನ ೩

 

ಹಾಡಿನ ಹೆಸರು : ಕೃಷ್ಣರಾಯನೆ ಎನ್ನಯ
ಹಾಡಿದವರ ಹೆಸರು :ಮುರಳಿಕೃಷ್ಣ
ರಾಗ :ಅಭೋಗಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಸಂತ ಮಾಧವಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಮನ ಒಲಿದೆನ್ನನು ಪಾಲಿಸು
೧೬
ಮನ ಒಲಿದೆನ್ನನು | ಪಾಲಿಸು ಜನನಿ ಪ.
ಘನ ವಿದ್ಯಾದಾಯಿನಿ | ಜಲಜಾಂಬಕಿ ನೀ ಅ.ಪ
ವಿದ್ಯಾವಿದಾತೆ ಬುದ್ಧಿಪ್ರದಾತೆ ||
ಶ್ರದ್ಧೆಯ ಬೇಡುವೆ | ಸದ್ಗುಣಭರಿತೆ ೧
ಗಾನವಿಲೋಲೆ | ವಿನಮಿತಪಾಲೆ ||
ಜ್ಞಾನಪ್ರದಾಯಿನಿ | ಘನಗುಣಶೀಲೆ ೨
ಆಡುವ ನುಡಿ ಕೈ | ಗೂಡುವ ತೆರದಲಿ ||
ಮಾಡೌ ಬೇಡುವೆ | ನಡಿಗಳಿಗೆರಗಿ ೩
ಮನ್ಮನದಿಷ್ಟವ | ನಿತ್ತೆನ್ನ ಪೊರೆ ನೀ ||
ಬೊಮ್ಮನ ರಾಣಿ | ನಿತ್ಯಕಲ್ಯಾಣಿ ೪

 

ಹಾಡಿನ ಹೆಸರು : ಮನ ಒಲಿದೆನ್ನನು ಪಾಲಿಸು
ಹಾಡಿದವರ ಹೆಸರು : ಸುರೇಖಾ ಕೆ. ಎಸ್.
ರಾಗ :ಸರಸ್ವತಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು : ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *