Categories
ರಚನೆಗಳು

ವ್ಯಾಸತತ್ವಜ್ಞದಾಸರು

ಲಕ್ಷ್ಮೀದೇವಿ
೫೧
ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ
ಅಂಜಿಸಿದರೆ ಲೋಕ ಅಂಜದಿರುವುದೆ ಪ
ಕುಂಜರಗಮನೆ ನಾವಂಜನದೇವಿ
ಸಂಜಾತನಾದ ಪ್ರಭಂಜನನಣುಗರು
ಕಂಜನಾಭನ ಪಾದ ಕಂಜಕ್ಕೆ ವಿಮುಖ
ಸಂಜಿಲಿ ಚಲಿಸುವ ಪುಂಜರು ಕಡಿಮೆ ೧
ನಿನ್ನನೆ ನಂಬಿ ನಾವಿನ್ನು ಸಂಸೃತಿಯ
ಬನ್ನವೆ ಕಳಕೊಂಡು ಚನ್ನಾಗಿ ಜಗದಿ
ಧನ್ಯರಾದೇವೆಂದು ಮನ್ನಾದಿ ಬಯಸೆ
ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ ೨
ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀನು
ಕರವಶ ಮಾಡಿಪ್ಪೆ ಪರವೇನೆ ನಿನಗೆ
ಪರಮೇಷ್ಠಿ ಮೊದಲಾದಮರರ ನೀ ಪೊರೆವೆ
ಸಿರಿ ವಾಸುದೇವವಿಠಲನ್ನ ತೋರಮ್ಮ ೩

 

ಆತ್ಮಶೋಧನೆ
೬೫
ಅನಂತಾನಂತ ಪಾಪ ಮಾಡುವೆ ನಾನು ಪ
ಅನಂತದಯಾನಿಧೆ ನೀನೊ ಹಯವದನ ಅ.ಪ
ಮೇರು ಮಂದರಾದಿಗಳು ದಾರು ಎನ್ನ ಪಾತಕಕ್ಕೆ
ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಿಮಾಣುಗಳಿಗೆ ೧
ಪೇಳು ಪಾಪವೆಂದಲೆನಲು ಪೇಳಲಿಕ್ಕೆ ಬಲುಲಜ್ಜೆ
ಗಳು ಅಂಡಲಿವುತಿದೆ ತಿಳಿದಾತ ನೀನಲ್ಲವೆ ೨
ಎನಗೊಂದು ಉಪಾಯವ ಅನಾಯಾಸ ಮಾಡುವಂಥ
ನಿನ್ನ ನಾಮಸುಧೆಯನ್ನು ಎನಗೀಯೊ ಮುದದಿಂದ೩
ಏಸು ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು
ವಾಸುದೇವವಿಠಲನೆ ನೀ ಸಡಲ ಬಿಡುವರೇನೊ ೪

 

೬೬
ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ಪ
ಕೃಪಣ ವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ಅ.ಪ
ಹುಡುಗರು ಮಾಡುವ ತಪ್ಪಿಗೆ ಜನನಿ ತಾ
ಬಿಡುವಳೇ ಅದರಿಂದ ದಯವ ಮಾಡದಲೆ
ನಡೆವ ಕುದರಿ ತಾನು ಮಲಗಿದಡೆ ಇನ್ನು
ಕಡೆಗೆ ಕಟ್ಟುವರೇನೊ ತಿರಗಿ ನೋಡದಲೆ ೧
ಮಾಡುಯೆಂದದರನು ಬಿಟ್ಟರೆ ಅಪರಾಧ
ಬ್ಯಾಡವೆಂದರಾನು ಮಾಡುವುದಪರಾಧ
ಈಡಿಲ್ಲ ನಿನ್ನ ದಯೆಯೆತೆಂದು ನಾ ನಿಂದು
ಮಾಡುವೆ ಬಿನ್ನಪ ನಾಚಿಕಿಲ್ಲದೆಲೆ ೨
ಬೇಡಿಕೊಂಬೆನೊ ವಾಸುದೇವವಿಠಲ ನೀನು
ನೋಡದಿದ್ದರೆ ಭಕ್ತ ಜನರು ತಮ್ಮಾ
ಬೀಡು ಸೇರಲೀಸರೊ ಕೇಡೇನೊ ಇದಕಿಂತ
ನೋಡು ನೀ ಇದರಿಂದ ಕೃಪಣ ವತ್ಸಲ ಕೃಷ್ಣ ೩

 


ಅಳಬ್ಯಾಡೆಲವೊ ರಂಗಮ್ಮ ನಿನ್ನ
ಇಳಿಯಾರ ನೋಡುತಿದೆ ಗುಮ್ಮ ಪ
ಒದರಿದರೆ ಕೇಳೆಲೆವೊ ತಮ್ಮಾ | ಅದು
ಅದರುತಿದೆ ಬೊಮ್ಮಾಂಡ ತಮ್ಮ
ಬೆದರಿ ದಿವಿಜರು ತಮತಮ್ಮ | ನಿಜ
ಸದನ ಬಿಡುತಿಹರು ನೋಡಮ್ಮ ೧
ಬೆರಳುಗುರು ಗಾಯಗಳಿಂದ | ಆ
ದುರುಳರನ್ನ ಜಠರ ತಳದಿಂದ
ಕರುಳು ಮಾಲಿಕೆ ಕಿತ್ತಿ ತಂದ | ತನ್ನ
ಕೊರಳಲಿ ಹಾಕಿಹ ಚಂದ೨
ಏಸು ದೈತ್ಯರಾಸಿಗಳನು | ತಾನು
ಮೋಸಗೊಳಿಸಿ ಕೊಲ್ಲುವನು
ದಾಸನೆಂದರೆ ಕಾಮಧೇನು ಸುಮ್ಮಗಿ | ರುವ
ವಾಸುದೇವವಿಟ್ಠಲ ನೀನು ೩

 

ವಾಯುದೇವರು
೫೪
ಆನಂದತೀರ್ಥರ ಮತ ಪರಮ
ಆನಂದ ಸಾಧನ ತಿಳಿ ಕಂಡ್ಯಾ ಮನವೆ ಪ
ಶಕುತಿಯು ಇದ್ದಷ್ಟು ತಿಳಿದು ಮತವು ಬಲು
ಯುಕುತಿಯಿಂದಲಿ ನೀ ಒಲಿಸು ಕಂಡ್ಯ
ಭಕುತಿಯು ಗುರುಗಳ ಪದದಲಿ ಮಾಡಲು
ಮುಕುತಿಯು ಕರವಶವಾಗುವದೊ ಸಿದ್ಧ ೧
ತಿಳಿಯದಿದ್ದರೆ ನೀನು ತಿಳಿದವರ ಬಳಿಯಲ್ಲಿ
ಮಿಳಿತನಾಗಿ ಪೋಗಿ ತಿಳಿದುಕೊಳ್ಳೊ
ಖಳಜನ ಸಹವಾಸ ಕುಮತಗಳಭ್ಯಾಸ
ಒಳಿತಲ್ಲವೊ ನಿನಗೆಂದಿಗನ್ನ ೨
ಪ್ರವಚನ ಮಾಡುವ ಬುಧಜನ ಪೇಳುವ
ಸುವಚನ ಕೇಳಿ ನೀ ಬದುಕು ಕಂಡ್ಯಾ
ಕವಚವು ನಿನಗಿದು ಭವ ಛಳಿ ಬಾಧಿಗೆ
ಪ್ರವಚನ ಬಾಹೋದೆಂದಿಗನ್ನ೩
ಇದ್ದವರಿಗೆ ಕೊಟ್ಟು ಅವರ ಹಿಂದೆ ಇಷ್ಟು
ಮೆದ್ದರೆ ಕೋಟಿ ಭೋಜನದ ಪುಣ್ಯ
ಗೆದ್ದರು ಇವರನ್ನ ನಂಬಿದ ಜನರು
ಬಿದ್ದರು ದೂಷಕ ಜನ ತಮದಿ ೪
ಕಾಸುವೀಸಕೆ ನೀನು ಮೋಸಗೊಳಲು ಬ್ಯಾಡ
ತಾಸು ಘಳಿಗೆ ನೆಚ್ಚಲು ಬೇಡ
ಏಸೇಸು ಸುಕೃತದಿ ದೊರಕಿತು ಈ ಮತ
ವಾಸುದೇವವಿಠಲನ್ನ ಪಾಡೊ ೫

 

ಶಿಲೆಯಾದ ತರಿದೆ

ಆರಿಗ್ಯಾತಕೆ ಮೊರೆಯಿಡಲಿ
ಸಾರಿದವರನ ಪೊರೆವ ಶ್ರೀರಮಣ ನೀನಿರಲು ಪ
ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ
ಅಳತಿಗೆ ಇನ್ನೊಬ್ಬನೆ ಹಾಗೆವೆ
ವಳತಿಗೊಬ್ಬರು ದೊರೆಗಳೆ ಮ್ಯಾಲೆನ್ನ
ಪ್ರಳಯಕೆ ಮತ್ತೊಬ್ಬನೆ ಪರಿಪರಿ
ಖಳರ ಮಾತುಗಳೇ ಸ್ವಾಮಿ ೧
ಆಕಾಲ ನೀನೆವೆ ಈ ಕಾಲದಲಿ ನೀನೆ
ಸಾಕುವನು ಇನ್ನೊಬ್ಬನೆ ಸ್ಥಿರವಾಗಿ
ತಾಕು ತಗಲಿಲ್ಲದೆಲೆ ಬೊಮ್ಮಾದಿ
ಲೋಕಪತಿಗಳ ಒಡಿಯನೇ ಈ ವ್ಯಾಳ್ಯ
ಲೋಕರನ ಕಾಯಬೇಕೊ ಸ್ವಾಮಿ ೨
ಕಾಸು ಒಬ್ಬರಿಗಿಲ್ಲ ಲೇಸು ತೋರದಲೇವೆ
ದೇಶಕೊಬ್ಬರು ಪೋದರೋ ಪೊಟ್ಟಿಗೆ
ಕೂಸುಗಳ ಮಾರುಂಡರೋ ಈ ಜನರ
ಕ್ಲೇಶಬಡಸದಲೆ ಪೊರಿಯೊ ಕರುಣದಲಿ
ವಾಸುದೇವವಿಠಲ ಸ್ವಾಮಿ ೩

 

ನುಡಿ-೧: ನಾಳೆ ನೋಡಿದಂಥ
೮೮
ಆಲವವೆ ನಮಗೆ ಸಫಲವು ಕಾಣಿರೊ
ಶ್ರೀಲಕುಮಿಯ ಪತಿಯ ನೆನೆವೆಯಾಗಿ ಪ
ಕೀಳು ಜನರಿಂದ ಆಡುವಾ ನುಡಿಗಳು
ಹಾಳು ಹರಟೆಗಳು ಬಹು ಜಾಳು ಮಾತುಗಳು
ಕಾಲ ಪರಿವುದು ಕೇಳಿ ಜನರುಗಳೆ
ನಾಳೆ ನೋಡಿದಂಥ ದಾಸರು ದೊರೆಯರು೧
ವ್ಯಾಳೆ ಬಂದಾಗ ಸಾಧಿಸದವನಾ
ಬಾಳಿವೆ ಬೋಳೆ ಅದು ಗೋಳಲ್ಲವೆ
ಗಾಳಿ ಬಂದಾ ಕೈಲೆ ತೂರಿಕೊಳ್ಳಿರೊ
ಮ್ಯಾಲೆ ತನ್ನೊಶವೇನೊ ದೇಶಕಾಲಗಳು ೨
ಸೋಲಿಸಿ ದುರ್ಮತರ ಕೀಳು ಮಳಿಗೆಗಳ ಪರಿ
ಸೀಲಿಸೊ ಪ್ರತಿ ದಿವಸದಲಿ
ಅಲವ ಬೋಧರ ಮತವ ಲೀಲೆಯಿಂ ತಿಳಿಕೊಂಬ್ಯ
ಪಾಲಿಸುವ ದಯದಿಂದ ವಾಸುದೇವವಿಠಲ ೩

 

೬೮
ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ
ಬದಲು ನಾನೊಲ್ಲೆನೊ ವಿದಿತ ವೇದ್ಯ ಪ
ಕ್ಷಣ ನಿನ್ನ ಬಿಡಲಾರೆ ನಿನ್ನವರನು ಬಿಡೆ
ಕುಣಿ ಕುಣಿವೆನು ನಿನ್ನ ಜನರೆಂದರೆ
ಗುಣತ್ರಯ ವಾರಣ ನಿನ್ನ ವಾರುತಿಯಿರೆ
ಒಣ ಹರಟೆಗಳ ನಾ ಕೇಳಲೊಲ್ಲೆ ೧
ನೀಚ ಜನರಂಗಳ ಸಂಗವ ಕೊಡದಿರು
ವಾಚದಿಗನ್ಯರಿಗಾಲ್ಪರಿಸಬೇಡ
ಸೂಚಿಸು ನಿನ್ನಯ ಗುಣಗಣಂಗಳೆನೆ ನಾ
ಯಾಚಿಪೆ ಇದನೆ ಇದನೆ ಮುರಾರೆ ೨
ಶ್ರೀಶ ನಿನ್ನಯ ಕಥೆ ಕೇಳದೆ ಬಹಳಾಯು
ಕಾಸು ಬಾಳದು ಕೇಳು ಕರುಣಾಬ್ಧಿಯೆ
ತಾಸು ಒಂದಾದರು ಅವನೆ ಸುಜೀವಿಯೊ
ವಾಸುದೇವವಿಠಲ ನಿನ್ನವರವನೊ ೩

 

೧೦
ಇವುಗಳ ಹಾವಳಿಗಂಜುವಳಲ್ಲ ಅ
ಲ್ಲವುಗಳ ಸ್ರ‍ಮತಿಗೆ ನಾನಂಜುವೆನೆ ಪ
ಚಂದ್ರ ಚಂದ್ರಿಕೆಯು ಉದಯಿಸಲ್ಯಾತಕೆ
ನಿಂದ್ರಿಸುವೆನೆ ನಾನದರನ್ನು
ಇಂದ್ರನನುಜನಾ ಶ್ರುತಿಗೆ ಸ್ರ‍ಮತಿಗೆ ಬರಲು
ನಿಂದ್ರಿಸಲಾರೆನೆ ನಿಮಿಷ ಮನ ೧
ಪಲ್ಲವಿಸವ್ಯಾತಕೆ ಚೂತ ತರುಗಳಿಗಿನ್ನು
ನಿಲ್ಲಿಸುವೆನೆ ಅದರುಲ್ಬಣವ
ಪಲ್ಲವ ಪಾದವ ಮನಸಿಗೆ ಬಂದರೆ
ತಲ್ಲಣಿಸುವೆನೆ ತಾವರೆ ನಯನೆ ೨
ಅಂಬುದಗಳೆಲ್ಲ ಅಂಬರವೇರಲಾ
ಡಂಬರಕ್ಕೆ ನಾನು ಇಂಬು ಕೊಡೆ
ಅಂಬುದ ಶ್ಯಾಮನು ಮನದಲಿ ನಿಲಲು
ಥಂಬಿಸಲಾರೆನೆ ಕಂಬು ಕಂಠಿ ೩
ಕುಂದ ಕುಸುಮಗಳು ವಿಕಸಿತವಾದರು
ಅಂದಗೆಡುವುದಿಲ್ಲ ಮನಸಿನಲಿ
ಕುಂದರದನ ಎನ್ನ ಮನಸಿಗೆ ತೋರಲು
ಕಂದಿ ಕುಂದುವೆ ಮನ ಮಂದಿರದಿ ೪
ಏವಮಾದಿಗಳೆಲ್ಲ ಏನು ಮಾಡವೋ ವಾಸು-
ದೇವವಿಟ್ಠಲ ಸ್ರ‍ಮತಿ ಬಾರದಿರೆ
ಶ್ರೀವರ ಚಿತ್ತಕ್ಕೆ ಬಂದರೆ ನಿಂದರೆ
ತಾವರೆನಯನೆ ನೀ ತಂದು ತೋರೆ ೫

 

ಹುಣಿಸೆ ಹಣ್ಣಿನ ಹಿರಿಮೆಯನ್ನು
೧೧
ಉಸರಬಹುದೆನೆಗೆ ಕೃಷ್ಣ ಬಾಗಿಲಲಿ
ನಸು ನಗುತ ನಿಂತ ಬಗೆಯು ಪ
ತಿಳಿದು ಪೂಜೆಯು ಮಾಡುವ ಭಕುತರನು
ಬಳಿಗೆ ಕರೆವುದು ತೀವ್ರವೊ
ಖಳಕುಲದ ಜನರು ಬರಲು ಹೋಗೆಂದು
ಕಳುಹುವ ಬಗೆಯ ಏನೊ ಕೃಷ್ಣ ೧
ಸುಳಿದ ಜನಗಳ ಕೂಡ ಸುಂಕವನು
ಸೆಳೆಕೊಂಬ ಬಗೆಯು ಏನೊ
ಕೆಳದಿಯರ ಬಂದವರನಾ ಮೋಹಿಸಿ
ಕೊಳಲನೂದುತಲಿ ನಿಂದಿಯೊ ಕೃಷ್ಣ ೨
ಬಲಿಯ ಕಾಯಿದ ಬಗೆಯಲಿ ದಾಸರನ
ಚಲಿಸದಲೆ ಕಾವ ಬಗಿಯೊ
ನೆಲೆ ವಾಸುದೇವವಿಠಲ ಭಕುತನ್ನ
ಸಲಿಗೆ ಬಿನ್ನಪ ಸಲಿಪುದೊ ೩

 

೧೨
ಎಂತು ರಕ್ಷಿಪೆ ಎನಗೆಂತು ಶಿಕ್ಷಕರಿಲ್ಲ ಪ
ಸಕಳ ಸಂಶಯಗಳ ವಿಕಳವ ಮಾಡಿಸಿ
ಅಕಳಂಕ ಮತಿ ಸೋಮ ಸುಕಳ ಮಾಡುವರಿಲ್ಲ ೧
ಸಂತತ ನಿನಗೇನು ಅಂತರ ಸ್ಥಿತಿಯೆಂದು
ಚಿಂತಿಪ ಬಂಧು ಆದ ಸಂತ ಜನರ ಕಾಣೆ ೨
ಪರಿಪರಿ ಬಗೆಯಿಂದ ಪರತತ್ವಗಳನು
ಅರಿದು ತಿಳಿಪದ್ಯಚ್ಚರಿಪರು ಎನಗಿಲ್ಲ ೩
ತುತಿ ಮಾಡಿ ಕೆಲರು ಸನ್ಮತಿಯಾಗೊಡಿಸುವರು
ಕ್ಷಿತಿಯೊಳಗೆನಗುಪಕೃತಿಯ ಮಾಡುವರಿಲ್ಲ ೪
ಹಲವು ಪರಿಯಲೆನ್ನ ಸಲಹುವ ಗುರುದೈವ
ಕುಲಪ ವಾಸುದೇವವಿಠಲ ನೀ ಕರುಣಿಸೊ ೫

 

೧೩
ಎಂದಿಗೆ ನಿನ್ನ ಪಾದ ಕಾಂಬೆ ಸ್ವಾಮಿ
ಎಂದಿಗೆ ನಿನ್ನ ಪಾದ ಕಾಂಬೆ ಪ
ಎಂದಿಗೆ ನಿನ್ನ ಪಾದ ಕಂಡೆ ಭಕುತಿಯಿಂದ
ಅಂದಿಗೆ ಭವಪಾಶ ತುಂಡೆ ಸ್ವಾಮಿ ಅ.ಪ
ಇಂದಿರದೇವಿ ನಿನ್ನ ಹೊಂದಿದ ಕಾರಣ
ದಂದೂಗವನು ಕಾಣಲಿಲ್ಲ ಸ್ವಾಮಿ ೧
ಬೊಮ್ಮನು ನಿನ್ನ ಪಾದ ನಮ್ಮಿ ತುತಿಸುವ ನಿನ್ನ
ಮೊಮ್ಮಗ ಕುಣಿ ಕುಣಿದಾಡುವ ೨
ನಿನ್ನಾಣೆ ವಾಸುದೇವವಿಠಲ ಎನ್ನ
ಮನ್ನಾದಿ ಭಜಿಸುವ ಬಲ್ಲೆಲಾ ಸ್ವಾಮಿ ೩

 

೧೪
ಎನ್ನ ಬಿನ್ನಪ ಸಖಿ ಚನ್ನಾಗಿ ತಿಳಿಸೆ
ಚನ್ನಿಗರರಸ ಪೋರನ್ನ ಕೃಷ್ಣನ ಮುಂದೆ ಪ
ಜನನಿ ಜನಕ ಚಿಕ್ಕತನದಿಂದ ತನಗತಿ
ಮನಮುಟ್ಟಿ ವಿನಯದಿ ವಿನಿಯೋಗಿಸಿ
ಜನರೊಳು ಘನ ಧರ್ಮ ಧನ ಗಳಿಸಿದರಂತೆ
ಅನುಸ್ರ‍ಮತಿ ಎನಗಿನ್ನು ಇನಿತಿಲ್ಲವು ಪೇಳೆ ೧
ಅಂದಿಂದಾತನ ಮೊಗ ಚಂದಾಗಿ ನೋಡಿಲ್ಲವೆ
ಒಂದು ಬಾರೆನ್ನ ತಾನು ಬಂದು ತೋರನೆ
ಮಂದಿ ಪೇಳುವದು ಕೇಳ್ಯಾನಂದಿಸುವೆನಲ್ಲದೆ
ಮುಂದೇನು ಗತಿಯೆಂದು ಇಂದುಮುಖಿಯೆ ಪೇಳೆ೨
ದಿನಗಳೊದಗಿದವೆ ಜನರೆಲ್ಲ ಕಂಡಂತೆ
ಬಿನಗು ಮಾತುಗಳನು ಎನಗಂಬರೆ
ಎನಗೇನು ಇದರಿಂದ ತನಗೆ ಆ ಕೀರುತಿ
ಮನಮುಟ್ಟಿ ನೀ ಪೇಳೆ ವನಜಾಕ್ಷಗೆ ಸಖಿ೩
ಪಿರಿಯ ಸತಿಯರಂತೆ ಪರಿ ಪರಿ ಭೂಷಣ
ಸರಿ ಬಂದರೆ ಉಪಚರಿಸುವಂತೆ
ದೊರಿಯರ ಸತಿಯರ ನರರ ದೃಷ್ಟಿಯ ಬಾಧೆ
ಪರಿಚಾರಕರಿಟ್ಟು ಪರಿಹರಿಸ ಪೇಳೆ ೪
ಆ ಸುದತಿಯರನ್ನ ಲೇಸಾಗಿ ಭೋಗಿಸೆ ನಾ
ನಸೂಯ ಅದರಿಂದ ಲೇಶ ಮಾಡೆ
ವಾಸುದೇವವಿಠಲ ಈ ಸಮಯದಲಿ ಎನ್ನ
ತಾ ಸುಮುಖದಿಂದ ನೋಡೆ ನಾ ಸುಖಿ ಸಖಿಯೆ ೫

 

೭೧
ಎನ್ನನುದ್ಧರಿಸಲು ಘನ್ನ ಬಿರುದುಗಳು ಪ
ಇನ್ನು ಉನ್ನತವಾಹವು ಕೇಳೊ ಹರಿಯೆ ಅ.ಪ
ಅನವರತದಿ ದುರ್ವಿಷಯ ಲಂಪಟದೊಳು
ಚನ್ನಾಗಿ ಪತಿತ ಎನ್ನಂತಜಾಮಿಳನೆ
ಇನ್ನಿದು ತಿಳಿದು ನೀ ಎನ್ನ ಪೂತನ ಮಾಡೆ
ನಿನ್ನನಿಮಿತ್ತ ಬಂಧುತನವೆ ವೆಗ್ಗಳವೊ ೧
ಮನ್ನಿಸಿದವನಲ್ಲ ಪೂಜಿಸಲಿಲ್ಲ
ತನ್ನ ಸಂಬಂಧಿಯು ಮೊದಲಿಗನಲ್ಲ
ಎನ್ನಂತೆ ಗಜೇಂದ್ರನೆ ಎನ್ನನುದ್ಧರಿಸಲು
ನಿನ್ನ ಪತಿತಪಾವನತೆ ಘನ್ನವೊ ೨
ಏಸಪರಾಧ ಮಾಡಿದ ಚೈದ್ಯಾದಿಗಳು
ಈಸಪರಾಧ ರಾಶಿಗಳ ಮಾಡಿದರೆ
ವಾಸುದೇವವಿಠಲ ಎನ್ನ ರಕ್ಷಿಸಲು
ಸೂಸುವುದೋ ನಿನ್ನ ಭಕುತ ವಾತ್ಸಲ್ಯತನವೊ ೩

 

೭೨
ಎನ್ನಾಗಮವ ಹೀಗಾಯಿತೊ ದೇವ
ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ
ಸಕ್ಕರಿ ತಾಯೆಂದು ಸಂತಿಗೆ ಕಳುಹಲು
ತಕ್ಕಡಿ ಲಶುನವ ತಂದ ತರಳನಂತೆ ೧
ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ
ತುರುಚಿಯನೆ ತಂದ ತರಳನಂತೆ ೨
ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ
ಕೆಸರು ಪೂಸಿಕೊಂಡು ಬಂದ ತರಳನಂತೆ೩
ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ
ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ ೪
ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು
ಜ್ಞಾಪಕಗೊಳಿಸಿದೆ ವಾಸುದೇವವಿಠಲ ೫

 

೧೬
ಏತಕೆ ಬಾರದೊ ಹರಿಯೆ
ನೀತವೆ ಇದು ಸರಿಯೆ ಪ
ಖ್ಯಾತ ನಿಗಮ ಸಂಗೀತನಾಮ ಜಲ
ಜಾತನಯನ ಬಹುಪ್ರೀತಿ ಮಾಡಿದರು ಅ.ಪ
ಕುಂದರದನ ಕುರುವಿಂದಾಧರ ಪೂ
ರ್ಣೇಂದು ವದನ ಮುನಿವಂದ್ಯ
ಎಂದಿಗೆ ಈ ಭವಬಂಧ ಬಿಡಿಸಿ ದಯ
ದಿಂದ ತೋರುವಿಯಾನಂದ
ಕುಂದುಗಳೆಣಿಸದೆ ಚಂದದಿ ಸಲಹಲು
ಎಂದೆಂದಿಗು ನೀ ಗತಿಯೆಂತೆಂದರು ೧
ಮಾರಜನಕ ಗಂಭೀರ ಹೃದಯ ಸಂ
ಚಾರ ಭಜಕ ಮಂದಾರ
ತೋರು ನಿನ್ನ ಪದ ಸಾರಸವನು ಮುನಿ
ನಾರದಾದಿ ಪರಿವಾರ
ಘೋರ ಶರಧಿಯೊಳು ಸೇರಿದವರಿಗಿ
ನ್ನಾರು ಬಂದು ಉದ್ಧಾರ ಮಾಡುವರು ೨
ಶ್ರೀಶ ಯದುಕುಲಾಧೀಶ ಮೇಘ ಸಂ
ಕಾಶ ರೂಪ ಸರ್ವೇಶ
ಘಾಸಿಪಡಿಪ ವಿಷಯಾಸೆಗಳೆಲ್ಲವ
ನಾಶಗೈಸೊ ಶ್ರೀನಿವಾಸ
ದಾಸ ಜನರಿಗುಲ್ಲಾಸವ ಕೊಡುತಿಹ
ವಾಸುದೇವವಿಠಲಯ್ಯನೆ ಎನ್ನೊಳು ೩

 

೭೩
ಏನು ಗತಿ ಎನಗಿನ್ನು ಏನು ಗತಿಯೋ ನೀನು
ಅನುಕೂಲವಾಹದನಕ ಸಿರಿ ಕೃಷ್ಣ ಪ
ಕರಣಗಳು ಕಾಯ ಮೊದಲಾದ ಬದುಕುಗಳೆಲ್ಲ
ಸ್ಥಿರತರಗಳಲ್ಲೆಂದು ತೋರಿಸಲು
ಪರಮ ಭಕುತಿಯು ಪುಟ್ಟಿ ಮೊದಲೆ ನಾ ನಿನ್ನ ಪದ
ಮರೆದು ಬಿಡುವೆನು ತಡಿಯದೇ ಕರುಣಿ ೧
ಹೀಗೆ ತೋರದೆ ಪೋದರೆ ಎನಗೆ ಹಂಬಲವು
ಆಗುವುದು ಸತ್ಯಲೋಕಗಳ ತನಕ
ಭೋಗಗಳು ಕೊಟ್ಟರೆ ಮರೆವೆ ಅದರಿಂದ ನಾ
ಕೂಗುವೆನು ಕೊಡದಿದ್ದರೆ ೨
ಪಾಮರನ ಮಾಡಲೆನ್ನನು ತಿಳಿಯದಲೇವೆ
ಸೀಮೆ ಇಲ್ಲದ ಪಾಪ ಮಾಡುವೆನೊ
ಪ್ರೇಮದಲಿ ಪಾಂಡಿತ್ಯ ನೀಡಿದರೆ ಭಕುತ ಜನ
ಸ್ತೋಮ ನಿಂದಿಸುವೆನಯ್ಯಾ ೩
ಧನದಿಂದ ಹೀನನ್ನ ಮಾಡೆ ಲೋಕದಲಿನ್ನು
ಜನರು ಕೊಡುವುದು ಎಲ್ಲ ಎನಗೆ ಕೊಡಲೆಂಬೆ
ಧನವು ನೀ ಕೊಡಲು ಬಲು ಮದದಿಂದ ಕೆಟ್ಟು ಸ-
ಜ್ಜನಕೆ ಕಾಸೊಂದು ಕೊಡಿನೊ ೪
ಏಸು ಪರಿಯಲಿ ಪೇಳಿದರು ಕೇಳೆನ್ನ ನಿಜ
ವಾಸನಿಯು ತನಗೆ ತಾನಿಟ್ಟಾಹದೈ
ವಾಸುದೇವವಿಠಲ ನೀ ಎನ್ನಯ ಮನದಲ್ಲಿ
ವಾಸವನು ಮಾಡಿ ಬೋದÉೈಸದನಕೆÀ೫

 

೭೪
ಏನು ದಾಸ ನಾನು ಹರಿಯೆ ನೀನು ಮೆಚ್ಚುವೆಯೇನೊ ಪ
ಏನು ಮಾಡಿದರೇನು ನಿನ್ನಯ
ಖೂನವರಿದೆನೇನೊ ಹರಿಯೆ ಅ.ಪ
ಲೋಕ ವಾರ್ತಿ ಎಲ್ಲ ಜರಿದು ಏಕ ಚಿತ್ತವಿಲ್ಲ
ಕಾಕು ಪೋಕರ ನೀಕರಿ ನಿನ್ನ ಸ್ವೀಕರಿಸಲಿಲ್ಲ ಬರಿದೆ ೧
ನಿನ್ನ ಮಹಿಮೆಯನ್ನು ಕೇಳಿ ನಿನ್ನ ರೂಪವಿನ್ನು ಮನದಣಿಯೆ ನೋ
ಡೆನ್ನ ಮರೆಯದೆನ್ನ ದಾಸ್ಯವಿನ್ನು ಬರಿದೆ ೨
ಭಾವ ತಿಳಿಯಲಿಲ್ಲ ಗುರುಗಳ ಸೇವೆ ಮಾಡಲಿಲ್ಲ
ಧಾವತಿಗೊಂಡೆ ಕೇವಲ ವಾಸುದೇವವಿಠಲ ಬರಿದೆ ೩

 

೭೬
ಕಾಯೊ ಕಾಯೊ ಕಾಮಿತ ಫಲದ ಕಾಯೊ ಕಾಯೊ ಪ
ಕಾಯೊ ಕಾಯೊ ಎನ್ನ ಕಾಯಜನಯ್ಯನೆ
ಕಾಯದಿದ್ದರೆನ್ನ ಕಾವವರಾರೊ ಅ.ಪ
ಎಂದೆಂದಿನ ಕರ್ಮಗಳನೆಣಿಸುತಲಿ
ಕಂದಿಸಿ ಕುಂದಿಸಿ ಬಂಧಿಪರೇನೋ ೧
ತಾಳಲಾರೆ ಈ ಕಾಲನ ಬಾಧೆಯು
ಬೇಳುವೆ ನಿನ್ನಯ ಕಾಲಿಗೆ ಸ್ವಾಮಿ ೨
ಆಲಸ ಮಾಡದೆ ಆರ್ತಿಗಳೋಡಿಸಿ
ಪಾಲಿಪುದೆನ್ನನು ಪಾವನ ಮೂರ್ತೆ೩
ಮಾಡಿದ ಪಾಪಗಳೋಡಿಸಿ ಸುಖದಿಂ
ದಾಡಿಸು ಕಣ್ಣಿಗೆ ಕಾಣಿಸಿಕೊಂಡು ೪
ವಾಸುದೇವವಿಟ್ಠಲ ನೀ ಎನಗಿನ್ನು
ವಾಸಿ ಮಾಡಿಸಿ ಕೀರ್ತಿಯ ಪಡೆಯೊ ೫

 

ಕಋಷ್ಣನ ಕೊಳಲಗಾನದ
೧೮
ಕೆಳದಿ ಕೇಳುವ ಬಾರೆ ನಳಿನಾಕ್ಷ ವನದಲ್ಲಿ
ಕೊಳಲನೂದುವ ಬಗೆಯ
ನಳಿನಜಾಂಡವು ತಾನೆ ತಲೆದೂಗುತಲಿದೆ
ಕುಳಿತಿರೆ ವಶವಲ್ಲವೆ ಪ
ಸರಸಿಜ ನಯನಾಳೆ ಧರೆಯ ಭಾಗ್ಯವ ನೋಡೆ
ತರುಗುಲ್ಮಾಲತೆ ನೆವದಿ ಭರದಿ ಪುಲಕಿತಳಾಗೆ
ಪರಿಪರಿ ಸುಮದಿಂದ ನೆರೆ ನಸುನಗುತಿಪ್ಪ
ಮರುಳೆ ಕಣ್ಣಿಲಿ ನೋಡೆ ವರ ವಿಮಾನಗಳು ಸಂ-
ಚರಿಸಿ ಮೆರೆವ ವೈಭವ ಧರೆಯೆಲ್ಲಾ ತಿಳಿಯದು
ಸುರನಿಕರಾಲಯ ಪರನಲ್ಲಿ ಎವೆ ಇಡುತ-
ಲೋಲ್ಯಾಡದೆ ಬಿಡರು ೧
ವಾಮಾಲೋಚನೆ ಸುರರ ಧಾಮಾವೆಂಬಿಯಾ ಇದು
ಕಾಮತನಯ ಕಾಮದೇವ ಸೋಮಶೇಖರ ತಾನು
ತಾಮರಸಾಸನ ಪ್ರೇಮಾದಿ ನಲಿಯುವ
ಆ ಮಹರಾದಿ ಲೋಕವೆ ಸಾಮಜಗಮನೆ ಕೇಳೆ
ನೀ ಮರುಳಾಗ ಬ್ಯಾಡಾ ಆ ಮುಕುತಿ ಸ್ಥಾನವೆ
ಶ್ರೀ ಮುಖ ವನಿತೆಯರು ಈ ಮುಕುಂದನ
ಸೇವೆ ಮಾಡುವರು ೨
ದೂರ ಜನರಿಗೆ ಸಾಲೋಕ್ಯ ಊರಲಿಪ್ಪರಿಗೆ ಸಾಮೀಪ್ಯ
ಗೋರಕ್ಷಕರಿಗೆ ಸಾರೂಪ್ಯ ಸೇರಿದ ಯುವತಿಗೆ
ಭರದಿ ಸಾಯುಜ್ಯವೆ ಮೀರಿದೆ ಮುಕುತಿಗಿದು
ಭಾರಿ ಭಾರಿಗೆ ಸಾಮಾ ಪೂರೈಸಿ ಮುಕುತರು
ತೋರುವರಿಲ್ಲಿ ಆನಂದ
ಈ ರಭಸದಿ ವೇಣು ಪೂರೈಸಿ ಸುಖವೀವ
ಧೀರ ವಾಸುದೇವವಿಠಲ ೩

 

ಗುರುಸ್ತುತಿ
೫೯
ಗುರುಗಳ ಕರುಣವಿದು
ಇರುಳು ಹಗಲು ಹರಿಸ್ಮರಣೆಯೊಳಿರುವದು ಪ
ಕಲಿಯುಗ ಒದಗಿತಲ್ಲ | ವಿಷಯದಿ
ಚಲಿಸಿತು ಮನವೆಲ್ಲ
ಇಳೆಯೊಳು ಹಿರಿಯರಿಲ್ಲ
ನೆರೆಜನ ಖಳರು ಸಜ್ಜನರಲ್ಲ ೧
ವೇದ ಓದುಗಳಿಲ್ಲ ಸುಮ್ಮನೆ
ಕಾದಿ ಕಳೆವರು ಕಂಡ್ಹಾಗೆ
ಮೋದತೀರ್ಥರ ಮತ ಇದರೊಳು
ಓದಿ ಪೇಳುವರಿಲ್ಲ ೨
ಮೋಸ ಪೋಗದ ಹಾಗೆ ಹರಿಪದ
ದಾಸ್ಯವ ಬಿಡದಾಗೆ
ವಾಸುದೇವವಿಠಲನ್ನೆ ಕರುಣದಿ
ವಾಸರ ಕಳೆಯುವನೋ | ನಮ್ಮ ೩

 

೧೯
ಗೋಪಸತಿಯರೆಲ್ಲ ಕೇಳೆರೆನ್ನಯ ಮಾತ
ಈ ಪರಿ ಕೂಸಿನ ಕಂಡೀರ್ಯಾ ಪ
ತೊಟ್ಟಿಲೊಳಗಿಟ್ಟು ವತ್ತಿ ಮಾತಾಡದೆ
ಮುಟ್ಟದೆ ಉಣಲಿಕ್ಕೆ ಕುಳಿತಿರಲು
ಚಿಟ್ಟಕ್ಕಿ ಚೀರೆದ್ದು ಭೇಟಿ ತಾನಳುತಿಹ
ಹೊಟ್ಟಿ ತುಂಬಾ ಉಣಲೀಸ ಎಷ್ಟೆಂದೇಳಲೆ ನಾನು ೧
ಬಣ್ಣಿಸಿ ಬಣ್ಣಿಸಿ ಪದವ ಪಾಡಿ ತೂಗಿ
ಥಣ್ಣಾಗೆ ಬೀಸಿ ಬೀಸಣಿಕೆಯಲಿ
ಕಣ್ಣ ಮುಚ್ಚಿಸಿದೆವೆಂದರಿತು ಸುಪ್ಪಾಣಿಸೆ
ಅಣ್ಣ ತಾನೇಳುವ ನಿದ್ರೆಗೈಯ್ಯಲೀಸ ೨
ಅನಿಮಿಷರಾದೆವೆ ಅನಶನರಾದೆವೆ
ಮನಸು ಕೂಸಿನಲ್ಲೆ ನಟ್ಟಿಹುದೆಮಗೆ
ಮನೆಕೆಲಸಗಳಲ್ಲ ಎಲ್ಲಿವೆ ನಮಗಿನ್ನು
ತನಯ ಪುಟ್ಟಿದ ಪುಣ್ಯದಿಂದಲ್ಲಿನ್ನೇನೆಂಬೆ ೩
ಚಿಕ್ಕವರೊಳು ಪೋಗಿ ಮಕ್ಕಳಾಟಿಕೆ ಆಡಿ
ಲೆಖ್ಖವಿಲ್ಲದ ದೂರು ಘಕ್ಕನೆ ತರುವ
ರಕ್ಕಸರೆನÀಲು ತಾ ಲೆಕ್ಕಿಸದವರ
ಸೊಕ್ಕು ಮುರಿವನಿವನಕ್ಕೊಜಾಕ್ಕೇನೆಂಬೆ೪
ದೇವತೆಗಳ ಮೀಸಲಾವಾಗ ಮೆಲುವನು
ಸೇವಕರಂತಲ್ಲೆ ತಾವಾ ಹೊರೆ
ದಾವಾದಿ ಭಯದಿಂದ ಕಾವಾನೀತನೆ ವಾಸು –
ದೇವಾವಿಟ್ಠಲನೆಂದು ಭಾವಿಸಿ ತಿಳಿವೆನು ೫

 

೨೩
ಚರಣವೆಂಬ ದುರ್ಗಮ ದುರ್ಗ ಸೇರಿದೆ
ಪರವೇನು ಎನಗಿನ್ನು ಅರಿಸೈನ್ಯಗಳಿಂದ ಪ
ನಿಜಭಕ್ತ ಜನರಿಗೆ ಆಭಯವ ಕೊಡುವಂಥ
ಧ್ವಜವುಳ್ಳ ಪುರವಿದು ಪರರಿಗಸಾಧ್ಯ ೧
ತನ್ನ ನಂಬಿದ ಇಂದ್ರ ಗಣಪತಿ ಇಹರೆಂದು
ಚನ್ನ ವಜ್ರಾಂಕುಶ ಧರಿಸಿದೆ ನಿಧಿ ಪೂರ್ಣ ೨
ರಜವಿಲ್ಲ ತಮವಿಲ್ಲ ನಿತ್ಯ ನಿರ್ಮಲವಿದು
ಅಜ ಮೊದಲಾದವರು ಇಲ್ಲೆ ಸೇರುವರಯ್ಯ ೩
ಕೆಳಗ ರವಿಯ ಕಾಂತಿ ಮ್ಯಾಲರ್ಧಾ ಶಶಿ ಛವಿ
ಸ್ಥಳವಿದೆ ಭಾಗ್ಯಾಭಿಮಾನಿ ದೇವತೆಗೆ ೪
ಸವಿಯಾದ ನದಿ ಇಲ್ಲಿ ಜನಿಸಿದೆ ಫಲ ಪದ್ಮ
ಯವ ಮೊದಲಾದವಿವೆ ವಾಸುದೇವವಿಠಲನ್ನ ಚರಣವೆ ೫

 

ನುಡಿ-೧:ಯುಕತಿ
೬೨
ಜಯ ಮುನಿಯ ಭಜಿಸಿ | ಸಿರಿ ಪತಿಯ
ದಯವ ಬಯಸುವ ಧೀರರು ಪ
ಒಂದೊಂದು ವಚನಗಳು ಗುರುತರಾ
ನಂದತೀರ್ಥರ ಭಾವಕೆ
ಹೊಂದಿಸುವ ಯುಕತಿ ಬಾಣ | ತೆಗೆಯಲವು
ಕುಂದಿಲ್ಲ ಧೀಷುಧಿಗಳು ೧
ವಂದಿಸುವ ಜನ ಬೇಡಿದ ಫಲಗಳಿಗೆ
ಮಂದಾರು ತರು ಸನ್ನಿಭ | ತಾವು
ವಂದಿಸುವ ಶಿಷ್ಯರಿಗೆ | ಹೃದಯದಲ್ಲಿ
ಕುಂದ ಕುಸುಮದ ಮಾಲಿಕೆ | ತಾವು ೨
ಗೆಲಿದು ಪ್ರತಿವಾದಿ ಹೃದಯ | ಗಿರಿಗಳಿಗೆ
ಕುಲಿಶಗಳಂತಿಹವೆ ಅವರ ವಚನ
ಫಲಿಸುವ ಶ್ರೀ ವಾಸುದೇವ | ವಿಠಲನ
ಸಲೆ ಕೃಪೆಯೆಂದು ತಿಳಿಯೊ | ಪ್ರಾಣಿ ೩

 

೨೫
ತಮ್ಮ ಕೇಳಿದ್ಯಾ ಪರಬೊಮ್ಮ ನೀನಂತೊ
ಸುಮ್ಮನೆ ಪುಸಿ ಸುದ್ದ್ಯಾರಮ್ಮ ಪೇಳಿದರೆ ಪ
ನಿತ್ಯ ತೃಪಿತನು ನೀನಂತಲ್ಲೊ ಕೃಷ್ಣಯ್ಯ
ಸುತ್ತಿ ಬಂದೆನೆ ನಾಲಿಗಾರಿದೆ ಅಮ್ಮ
ಹತ್ತು ಸಾವಿರ ಭಾನುಪ್ರಭೆಯುಳ್ಳವನಂತೊ
ಕತ್ತಲೆಮನೆ ಪೋಗಲೊಬ್ಬನಂಜುವೆನೆ ೧
ಪುರಾಣಪುರುಷ ನೀನಂತಲ್ಲೊ ಕೃಷ್ಣಯ್ಯ
ಆರು ತಿಂಗಳು ಪೋದಾವಂದೆಲ್ಲ ಎನಗೆ
ನಿರತಿಶಯ ಮಹಾ ಮಹಿಮೆ ಉಳ್ಳವನಂತೊ
ಪೂರತಿ ಮನೆಯೊಳು ನಡೆಯಲಾರೆ ೨
ಅಣ್ಣಾ ನೀ ಸರ್ವಜ್ಞನೆಂಬೋರೊ ಜಗವೆಲ್ಲ
ಬೆಣ್ಣೆಯು ಸಿಗದಲ್ಲೆ ಪುಡುಕಿದರೆ
ಸಣ್ಣವ ನೀನಲ್ಲವೆಂಬರೊ ಪಿರಿಯಾರು
ಮಣ್ಣು ನಾ ಮೆದ್ದಾರೆ ಟೊಣದೆಲ್ಲವಮ್ಮ ೩
ಜಗದುದರನು ನೀನಂತಲ್ಲೊ ಕೃಷ್ಣಯ್ಯ
ನಗುಚಾಟಲು ಸಣ್ಣ ಪೊಟ್ಟಿ ನೋಡೆ
ನಿಗಮಗಳು ನಿನ್ನ ತುತಿಯಂತೊ ಗೋವಿಂದ
ನಗುವರಲ್ಲವೆ ಗೋಪ ನಾರಿಯರು ೪
ಮೂಢ ದೈತ್ಯರಿಗೆಲ್ಲದಲ್ಲಣ ನೀನಂತೊ
ಜಾಡ ಮೈಯನ ನೋಡಿ ಅಂಜುವೆನೆ
ಬೇಡಿದ ಪುರುಷಾರ್ಥ ಕೊಡುವನು ನೀನಂತೊ
ಬೇಡಿದೆ ನಮ್ಮಮ್ಮ ಅಮ್ಮೆ ಕೊಡೆಂದು ೫
ಬೆಟ್ಟವ ನೀನೆತ್ತಿದಂತಲ್ಲೊ ಕೃಷ್ಣಯ್ಯ
ಬಟ್ಟು ನಿನ್ನದು ನೋಡೆ ಎತ್ತಲಾರೆ
ಘಟ್ಯಾಗಿ ವಿಪ್ರರು ಪೇಳೋದು ಪುಸಿ ಏನೊ
ಹೊಟ್ಟಿಗೋಸುಗ ಸುಳ್ಳು ಪೇಳುವರೆ ೬
ಏಸು ಲಕ್ಷ್ಮಣವಿವೆ ನೋಡಬೇಕೆಂದರೆ
ಪುಸಿದ್ಯಾಕುಸರಾನು ನೋಡೆಂದನು
ವಾಸುದೇವವಿಠಲಾ ಈ ಪರಿ ಗೋಪಿಯ
ಮೋಸಗೊಳಿಪ ಕೃಷ್ಣ ನಮ್ಮ ಸಲಹಲಿ ೭

 

ಪಲ್ಲವಿ: ದಶಮತಿ ಗುರುಗಳು
೫೫
ತಾವಲ್ಲಿ ನೆನೆಯಲು ದಶಮತಿ ಗುರುಗಳು
ನಾವಿಲ್ಲಿ ಸುಖಿಗಳು ಸುಲಭದಿಂದ ಪ
ತುರು ಮಾಮರ ಮಣಿಯ ನೆನೆಯೆ ಕೂಸುಗಳಿನ್ನು
ಪೂರತಿ ಮನದೊಳಗಾಗುವಂತೆ
ತಾರಾ ರಮಣನು ತಾ ಮ್ಯಾಲೆ ಉದಿಸಲು
ವಾರಿಧಿ ಹರುಷದಿ ಉಕ್ಕುವಂತೆ ೧
ತರಣಿ ಕಿರಣ ಪಸರಿಸೆ ಸರೋವರದಲ್ಲಿ
ಸರಸಿಜ ವಿಕಸಿತವಾಗುವಂತೆ
ವಾರಿದ ಮ್ಯಾಲಿರೆ ತಾ ನೋಡಿ ಮಯೂರ
ಮೀರಿ ಹರುಷದಿ ಕುಣಿ ಕುಣಿದಾಡುವಂತೆ೨
ವ್ಯಾಸ ದೇವರ ಕೂಡ ಮಾತುಗಳಾಡುವಾಗ
ಲೇಸು ಶಿಷ್ಯರಿಗಿಂಥ ಶುಭ ನಮಗೆ
ವಾಸುದೇವವಿಠಲ ಪಾಶದಿಂದಾಡುವಾಗ
ವಾಸ ಅಕ್ಷಯವೆನ್ನಿ ಕೃಷ್ಣೆಯಂತೆ ೩

 

೨೬
ತೋರೆಲೆ ಪ್ರಾಣಕಾಂತನ ಮಾರ ಎನ್ನ ಸಂ
ಹಾರ ಮಾಡಲು ದಂಡು ತಂದನೆ ಪ
ಮಂದ ಮಾರುತಗಳು ಚಂದ್ರಕಿರಣಗಳು
ಮುಂದಾಗಿ ಬಂದೊದಗಿದವು ೧
ಅಂತರಂಗದಿ ಮನೋಭ್ರಾಂತಿ ಬಿಡಿಸುವವ
ಸಂತನೀಗಲೆ ಬಂದಿರುವನೆ ೨
ಭೃಂಗಗಳೇ ರಣರಂಗದಿ ಕೂಗುವ
ಸಂಗತಿಗೆ ಬೆದರಿದೆನೆ ೩
ಶುಕವೇರಿ ಧನುವಿನೋಳ್ ವಿಕಸಿತ ಸಮಬಾಣ
ಮುಖದೊಳು ಗುರಿಯನ್ನೆ ನೋಡುವ ೪
ಆವಾಗಲೂ ವಾಸುದೇವವಿಠಲನ ಪಾದವೆ ಗತಿಯೆಂದಿರುವೆನೆ ೫

 

ನುಡಿ-೧: ಅವಸರಕ್ಕೊದಗಿ
೭೭
ದೇವ ನೀನುಪಕಾರ ಅಪಾರ ಮಾಡಿದೆ
ಕಾವ ಕರುಣಾ ಸ್ವಭಾವ ಕೇಳು ಪೇಳುವೆ ಪ
ನವಯುವತಿ ಶಿಲೆ ಕೊರಳಿಗೆ ಕಟ್ಟಿಕೊಂಡು
ಭವ ಸಾಗರದೊಳು ಮುಳುಗಿ ಪೋಗುವ ನಾ
ಅವಸರಕೊದಗಿ ಪಿಡಿದು ದಡ ಸೇರಿಸಿ
ದವನಾಗಿ ಎಚ್ಚರಿಕೆ ತಂದಿತ್ತೆ ದಯಾಳೊ ೧
ಭಾರ ತಾಳದು ಎಂದು ಸೂತ್ರವೂ ಶಿಖಿಯೊ ನಿ
ವಾರಿಸಿ ತನುವಿಗೆ ಲಘುವು ಮಾಡಿದೇಯೆ
ಭಾರಮಯತಾ ರಜ್ಜು ಮನಕೆ ಸುತ್ತಿದೆ ಆಶಾಂ-
ಕುರ ಕೇಶಗಳು ಬೆಳದಿವೆ ಪರಿಹರಿಸು ೨
ಲಕ್ಷ್ಯವಿಲ್ಲದೆ ಅನ್ನ ಮೊದಲಾಗಿ ಕೊಡುವಂಗೆ
ಶಿಕ್ಷಿಸಿ ಗರ್ವವು ಕಳೆದು ಈಗ
ಭಿಕ್ಷುಕನ ಮಾಡಿದೆ ನಿನ್ನದೆ ಬೇಡುವೆ
ಲಕ್ಷ್ಮೀಪತಿಯೆ ಅಂತರಂಗದ ಗೃಹಸ್ಥ ೩
ಏಳು ಮನೆಗಳನ್ನು ಕೇಳೋದು ಯತಿಧರ್ಮ
ಏಳಲಾರಿನೊ ವೃದ್ಧ ಕೇಳಲಾರೆ
ಕೇಳುವೆ ನಿನ್ನನೇ ಏಳು ಭಿಕ್ಷವ ನೀಡು
ಬಾಳುವೆ ಬಹುಕಾಲ ನಿನ್ನ ಕೊಂಡಾಡುತ ೪
ಶ್ರೋತ್ರಕ್ಕೆ ನಿನ್ನ ಕಥೆ ನಾಸಕೆ ನಿನ್ನ ಗಂಧ
ನೇತ್ರಕ್ಕೆ ನಿನ್ನ ರೂಪ ರಸನಿಗೆ ನಾಮಾಮೃತ
ಗಾತ್ರಕ್ಕೆ ನಿನ್ನ ಪಾದಸ್ಪರುಷ ಮನೋಬುದ್ಧಿ
ಮಾತ್ರಕ್ಕೆ ಗುಣಕರ್ಮ ಕೊಡು ವಾಸುದೇವವಿಠಲ ೫

 

ರುದ್ರದೇವರು
೫೮
ದೇವತೆಗಳ ದೇವ ಮಹದೇವ ದೇವ
ಆವ ನಿಮಗೆ ಸರಿಯು ಕಾವುದೆಮ್ಮನು ಸರ್ವ ಪ
ಮೂರನೆ ತತ್ವದ ಒಡೆಯನು ನೀನಯ್ಯ
ಕಾರುಣಿಕ ಜನರಿಗಾರ್ಹ ಭಾವಕೆ
ಮಾರಮಣನಾ ನೆನೆದು ಮೈಮರೆದು ನೀ
ತಾರಕಾ ಉಪದೇಶಿ ಕಾಸಿ ವಾಸಿ ೧
ಗಂಗೆಯ ಧರಿಸಿ ನೀ
ಭಂಗಬಡುವ ಜನರ ಪೂತನ ಮಾಡಿದ್ಯೊ
ಅಂಗಜನಯ್ಯನ ಭಕುತ ಶಿಖಾಮಣಿಯೆ ನಿ
ಸ್ಸಂಗ ಜನರ ಪ್ರಿಯ ಸನಕಾÀದಿ ವಂದ್ಯ ೨
ಮೋಸಗೊಳಿಸುವಿಯೊ ದುರ್ಜನರ ನಾನೀಶನೆಂದು
ವಾಸುದೇವವಿಠಲಗಲ್ಲದವರ
ಲೇಸು ಬೋಧಿಸುವಿಯೊ ಯೋಗ್ಯರನು ನೋಡಿ
ಎನ್ನಲಿ ವಾಸ ಮಾಡೊ ಎನ್ನ ಮನದೊಡೆಯ ೩

 

ನುಡಿ-೧: ನಾರಿಯ ಮೊರೆ ಕೇಳಿ
೨೮
ನಂಬೋದ ಖರಿಯಾ ಶ್ರೀಹರಿಯಾ ಪಾದ ನಾ
ನಂಬೋದೆ ಖರಿಯಾ ಅಂಬುಜಾಂಬಕ ತನ್ನ
ನಂಬಿದ ಭಕುತರ
ಇಂಬಾಗಿ ಪೊರೆದೆನೆಂತೆಂಬ ವಾರುತಿ ಕೇಳಿ ಪ
ದೂರವಾದರೆ ತಾನು ನಾರಿಯ ಮೊರೆ ಕೇಳಿ
ಚೀರಿ ಕರೆದಳೆಂದು ಶೀರಿಗಳನೆ ಇತ್ತು
ಮೀರಿ ಪೊರೆದನೆಂಬೊ ವಾರುತಿ ಜಗದೊಳು
ಬೀರಿದನರಿಯಾ
ಬಿಂಕವ ಬಿಟ್ಟು ಸೇರಿಕೊ ಹರಿಯ
ದಾರಿ ಕಾಣದೆ ವನ ಸೇರಿದ ಕುವರನ್ನ
ಸಾರೆಗರೆದು ಸೌಖ್ಯ ಪೂರೈಸಿದನೆಂದು ೧
ಕಾಡಾನೆ ವ್ರಜದೊಳು ಕೂಡಿದ್ದ ಗಜರಾಜ
ಗಾಡಾಹ ತಾಪದಿಂದ ಬಾಡಿ ನೀರಡಿಸಲು
ಗೂಢ ಸರೋವರ ನೋಡಿ ನೀರನೆ ಪೊಕ್ಕು
ಆಡಾಲು ಮದದಿ ನಕ್ರನು ಬಂದು ಪೀಡಿಸೆ ಭರದಿ
ಮೂಢ ನಾನೆಲೊ ಕೃಷ್ಣ ಮಾಡೊ ರಕ್ಷಣೆಯನ್ನು
ಓಡಿಬಂದಭಯವ ನೀಡಿದ ಪರಿ ನೋಡಿ ೨
ಭೂಸುರ ವರನೊಬ್ಬನು ದೇಶ ದೇಶವ ತಿರುಗಿ
ಕಾಸು ಬಾಳದ ಸ್ತ್ರೀಯಳಿಗೆ ಆತನೆ ವಶವಾಗಿ
ಹೇಸಿಕಿಲ್ಲದೆ ಅಲ್ಲಿ ತಾ ಸೂನುಗಳ ಪಡಿಯೆ ಸಹ
ವಾಸರ ಕಳಿಯೆ ಕಾಲನು ಘೋರ ಪಾಶದಿ ಶಳಿಯೆ
ಆ ಸಮಯದಿ ಕೊನೆ ಕೂಸನ್ನೆ ಕೂಗಲುವಾಸುದೇವವಿಠಲ ತಾ ಸಲಹಿದನೆಂದು ೩

 

ನುಡಿ-೪: ನಖಮುಖಶಿಖಿ
೨೯
ನರಸಿಂಹ ನರಸಿಂಹ ನಮಿಸುವೆನೊ ಘೋರ
ದುರಿತ ಬೆನ್ನ ಬಿದ್ದಿದೆ ಪರಿಹರಿಸೋ ಶ್ರೀ ನರಸಿಂಹ ಪ
ಪರಮೇಷ್ಠಿ ಹರ ಸುರಪತಿ ಮುಖರಾ
ಸುರನಿಕರ ಪೊರೆವ ಪ್ರಭೊ ಪ್ರವರ
ದುರಿತವು ಅವರನ್ನ ಬಾಧಿಸದಂತೆ
ಪೊರೆದ ಪರಿಯಿಂದ ಎನ್ನ ಪೊರೆಯೊ ೧
ಕಾಯ್ದು ತನ್ನಯ ತನ್ನ ತಂದೆಯ ಬಾಧೆ
ಭಯದಿಂದ ಮನದಲ್ಲಿ ನಿನ್ನ ನೆನಿಯೆ
ದಯದಿಂದ ನೀ ಕಂಭದಲಿ ಬಂದು ಪೊರೆದಂತೆ ಎನ್ನ
ಭಯ ಪರಿಯೆ ಪೊರೆ ಶ್ರೀ ನರಸಿಂಹ ೨
ನಿನ್ನ ಪೆಸರೆಂದರೆ ದುರಿತಂಗಳು
ತನ್ನಿಂದ ತಾನೆ ಜರಿಯುವವು
ಚನ್ನಾಗಿ ಶರಣರ ಪೊರೆದದಕೆ
ನಿನ್ನವರೆಂದು ಕೇಳಿ ಬಲ್ಲೆ ಶ್ರೀ ನರಸಿಂಹ ೩
ನಖ ಮುಖ ಶಿಖಿ ತನ್ನ ನೆನೆಯೆ
ಸುಖಿತರವಾಹೋದು ಶರಣರಿಗೆ
ಮಖಭುಜ ರವಿ ಸಾಕ್ಷಿ ಇದಕಾಗಿರೆ
ವಿಖನಸಾರ್ಚಿತ ಪಾದ
ಸುಖಮಯನೆ ಶ್ರೀ ನರಸಿಂಹ ಕಾಯೊ ೪
ಅರಿದರೀಧರ ವರ ಕರಯುಗನೆ
ಕರಯುಗ ಜಾನು ಶಿರದಲ್ಲಿಪ್ಪನೆ
ಶಿರದಿಂದೊಪ್ಪುವ ಕರತಳನೆ
ವರ ವಾಸುದೇವವಿಠಲ ಪೊರೆಯೊ ಶ್ರೀ ನರಸಿಂಹ ಕಾಯೊ ೫

 

ನುಡಿ-೧: ಪೋರತನದವನು
೬೦
ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀರಾಘವೇಂದ್ರಯತಿ ಒಲಿದ ಪ
ಪೋರತನದವನು ಎರೆಡು ತೆರೆಗಳಲ್ಲಿ
ದೂರಾಗಿ ಮೊರೆಯು ಅಲ್ಲವೆಂದು
ಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿ
ಧೀರ ತಾ ಕರವನು ಪಿಡಿದ ಬಳಿಕ ೧
ಜಗದೊಳಗೆ ಪದಾರ್ಥಗಳು ಗುಣದಿ ಭುಂಜಿಸುವಂಗೆ
ಅಗದಂಕರನು ತಾನು ಬಳಿಗೆ ಬಂದು
ಬಗೆಬಗೆಯಿಂದಲಿ ಸುರಸ ಪದಾರ್ಥಗಳು
ಸೊಗಸಾಗಿ ಉಣಿಸಲು ಚಿಂತೆಯುಂಟೆ ೨
ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆ
ಕರ್ಣಧಾರನು ತಾನೆ ಬಂದು ನಿಂದು
ತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟು
ಫೂರ್ಣಿಸಲು ಅವನಿಗೆ ಚಿಂತೆಯುಂಟೆ ೩
ತನ್ನಯ ಹಿತವು ತಾ ವಿಚಾರಿಸಲವಂಗೆ
ಚನ್ನಾಗಿ ಪರಮ ಗುರು ತಾನೆ ಬಂದು
ಸನ್ಮಾರ್ಗವನು ತಾನೆ ಪೇಳುವೆನೆನಲು
ಇನ್ನು ಆಯಾಸವುಂಟೆ ಅವನಿಗೆ ೪
ಏಸು ಜನ್ಮದಲಿ ಅರ್ಚಿಸಿದೆನೊ ನಾ ಇನ್ನು
ವಾಸುದೇವವಿಠಲ ಪಾದ ಪದುಮ
ಲೇಸಾಗಿ ಈ ಸುಕೃತದಿಂದೆನ್ನ ಹರಿದಾಸ
ಈ ಸುಗುಣ ಗುರುರಾಯ ಎನಗೆ ಒಲಿದ ೫

 

೮೯
ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ
ವ್ಯಾಳಿಗೆ ಒದಗಿಸೋ ಹರಿಯೆ ಮರಿಯೆ ಪ
ಕಾಲನ ದೂತರು ಕಠಿಣರೆ ಸರಿ
ವ್ಯಾಳಿಯು ಹೇಳಿ ಕೇಳಿ ಬರುವದಲ್ಲ
ಆಲಯದವರ ಶಕುತಿಯಲ್ಲೇನೋ
ಲಾಲಿಸಬೇಕೇನೊ ಎನ್ನ ಬಿನ್ನಪ ೧
ಕಾಲನ ಸ್ಥಿತಿಯೆಂತು ಮೇಷದ ಗುಂಪಿಗೆ
ತೋಳದ ಪರಿಯೆಂದು ನಾ ಕೇಳಿ ಬಲ್ಲೆ
ಕಾಳು ಕಪಟೆ ತಿಂಬ ಮೂಷಕಗಳಿನ್ನು
ಕಾಲ ಭುಜಂಗದಂತೆ ಕಂಡು ಬಲ್ಲೆನೊ೨
ಹೇಸಿ ವಿµಯವೆಂಬಾ ಮಡಿವಿನೊಳಗೆ ವೈದು
ಮೋಸಗೊಳಿಸುವ ಸ್ಥಿತಿಯು ಮನಸಿನ
ವಾಸುದೇವವಿಠಲ ಈ ಪರಿ ತಿಳಿದಿನ್ನು
ಈ ಸಮಯಕ್ಕೆ ನಾಮ ಒದಗಿಸಯ್ಯ ೩

 

ನುಡಿ-೧: ಹತ್ತು
೩೦
ನಿನಗಿಂತ ಮಿಗಿಲಾಗಿ ಕರುಣ ನಿನ್ನದಿರೆ
ನಿನಗೇನು ಶರಣೆಂಬೆ ಕರುಣಕ್ಕೆ ಹರಿಯೆ ಪ
ನಿತ್ಯ ಮುಕ್ತ ಪೂರ್ಣ ಕಾಮ ಒಂದಕು ಸಿಲುಕದ
ಮತ್ತೆ ಇದ್ದ ನಿನ್ನ ತನು ದೀನರ ತೋರಿ
ಹತ್ತು ಜನುಮವ ಕೊಟ್ಟು ಭಕ್ತ ಜನರ ಬಲು
ಕೃತ್ಯ ನಿಮಿತ್ಯ ಕೊಡಿಸ್ಯಾಡಿಸಿದನರಿಯ ೧
ಒಂದಕೂ ಸಿಲುಕದಾ ನಿನ್ನ ವತ್ಸದ ದಾವು
ಬಂಧದಿ ಬಿಗಿಸಿತೀ ಗೋಪಿಯ ಕೈಯ
ವೃಂದಾರಕರ ಸ್ತುತಿಗೊಶವಲ್ಲದವನ ಗೋಪ
ಮಂದಿಯ ದೂರಿನ ಪಾತ್ರನ್ನ ಮಾಡಿತು ೨
ಪೇಳಿಕೊಂಬಿಯೊ ಲೋಕದೊಡೆಯನು ನಾನೆಂದು
ಊಳಿಗತನ ನಿನ್ನ ಕೈಯ ಮಾಡಿಸಿತಯ್ಯ
ಕೇಳೊ ಭಕುತರಿನ್ನು ಏನಾಡಿದರನ್ನ
ತಾಳಬೇಕಾಯಿತೋ ವಾಸುದೇವವಿಠಲ ೩

 

೩೧
ನಿನ್ನ ಮನ ಬಂದಂತೆ ವಿಹರಿಸೊ ಸಿರಿಕೃಷ್ಣ
ಎನ್ನ ಸ್ವಾಮಿ ನೀ ಎಂದು ಮರುಳಾದೆನಲ್ಲದೆ ಪ
ಬೊಮ್ಮ ಮೊದಲು ಸುರೋತ್ತಮದ ಪಾದ
ಧುಮ್ಮಿನೊಳು ಮುಳುಗಿಹೆ ಎಮ್ಮಯ್ಯ ಕೇಳು ೧
ಸರ್ವಜ್ಞನೆಂಬಿಯಾ ಉರ್ವಿಯ ಪತಿಗಳು
ಸರ್ವ ಜನಗಳಾ ಪೆÀೂರ್ವರೆ ಕಂಡೀಗ೨
ಅಕ್ಷೀಣ ಶಕುತೆಂಬ ದಾಕ್ಷಿಣ್ಯವಿಲ್ಲದೆ
ಸುಕ್ಷೀಣ ಜನರನ್ನು ರಕ್ಷಿಪರಯ್ಯ ೩
ಭಕುತ ವತ್ಸಲನೆಂಬೊ ಭಕುತಿಯು ಎನ್ನಲ್ಲೆ
ಯುಕುತವಾಗಿಹವು ವ್ಯಕತ ನಿನಗಲ್ಲವೆ ೪
ಶರಣರ ದೊರೆಯೆಂದು ಕರುಣ ಮಾಡುವೆನೆಂಬ
ಸಿರಿ ವಾಸುದೇವವಿಠಲ ಕರುಣಿಸಾಲಸ್ಯವ್ಯಾಕೊ ೫

 

ನುಡಿ-೧: ಸುಧಾ ನಿರ್ಮಾಣ
೬೩
ನೋಡು ನೋಡು ಟೀಕಾಚಾರ್ಯರ
ಮಾಡು ವಂದನೆಗಳ ಬೇಡು ವರಗಳನ್ನು ಪ
ದುರ್ಮಾಯಿ ಮತಗಳ ಮರ್ಮ ಭೇದಿಸಿ ಸುಧಾ
ನಿರ್ಮಾಣ ಮಾಡಿದ ಆರ್ಯರ ೧
ಲಲಿತೋಧ್ರ್ವ ಪುಂಡ್ರ ಶ್ರೀ ತುಲಸೀಭೂಷಿತ ಕರ್ನ
ವಿಲಸಿತ ಕಾಪಾಯಧಾರ್ಯರ ೨
ಯಾವಾಗಲೂ ವಾಸುದೇವವಿಠಲನ್ನಸೇವಿಸುವರ ಭಜಿಸುವರ ೩

 

೭೮
ನ್ಯಾಯವೇನೈ ಇದು ಮೂಢ
ಜಯ ಬೇಡುವೆ ಗಾಢ ಪ
ಜನರನೆರಹಿಕೊಂಡು ಕಪಟ
ವಿನಯಗಳನೆ ತೋರುತಲಿ
ವನಜನಾಭನ ಗುಣಗಳ ಹೇಳಿ
ಧನವ ತರುವುದಿದು ಮೂಢ ೧
ಪರಮಪದನರುಹಿದ
ಗುರು ಸಮೀರ ಶಾಸ್ತ್ರವನು
ಪರಧನ ಬಯಸಿ ಅವರಿ
ಗರುಹಿಸುವುದಿದು ಮೂಢ ೨
ಈಶನುತನಾದ ನಮ್ಮ
ವಾಸುದೇವವಿಠ್ಠಲನ
ದಾಸರ ದಾಸ್ಯವ ಬಿಟ್ಟು ನರರ
ದಾಸನೆನಿಸೋದಿದು ಮೂಢ ೩

 

೭೯
ಪಕ್ಕಿವಾಹನ ದಯಸಿಂದು ನೀ ಎನ್ನ
ಚಿಕ್ಕ ಮನತುರಗವನ್ನು ನೀನೆ ತಿದ್ದೊ ಪ
ಕತ್ತಲೆಯೊಳು ಬಲು ಕಾಲಕಳದೆಯಾಗಿ
ಮತ್ತೆ ಬೆಳಕು ಕಂಡು ಬೆದರುತಿದೆ
ಕತ್ತಲಂಜಿಕೆ ತೋರಿ ಬೆಳಕಿನ ರುಚಿಯನು
ಇತ್ತು ಕುಶಲಗತಿ ಕಲಿಸಯ್ಯ ೧
ಹಿಂದಕ್ಕೆ ತಿರಗದೆ ತಾನಾಗಿ ಬ್ಯಾಗನೆ
ಮುಂದಕೆ ನಡೆದು ಪರರ ಬೆಳಸುಗಳ
ಒಂದನ್ನ ಬಯಸದೆ ಪದ್ಧತಿ ಬಿಡದಂತೆ
ಒಂದಾಗಿ ಗಮ್ಯಸ್ಥಾನವ ಸೇರಿಸಯ್ಯ ೨
ವಿಧಿನಿಷೇಧಗಳೆಂಬ ಗಿಲಕಿಯ ದನಿಗೈಸಿ
ಹೆದರಿಸೊ ಸನ್ಯಾಯ ಕಶದಿಂದಲೀ
ಮುದದಿ ಭಕುತಿ ಗುಣವ ಕೊರಳು ಕಟ್ಟಿ ಬಿಗಿದು
ಪದುಮಾಕ್ಷ ನಿನ್ನ ಪಾದವ ಸ್ತುತಿಸಯ್ಯ ೩
ಉತ್ತಮ ಗುಣವುಳ್ಳ ವಾಜಿಯಿದನೆ ಮಾಡಿ
ವಸ್ತು ಎನ್ನದು ಮಾತ್ರವೆಂದೆನಿಸಿ
ಚಿತ್ತಕೆ ಬಂದಂತೆ ಇದಿರಾರು ನೀ ನಿತ್ಯ
ಹತ್ತಿ ಹರಿಸುವನು ಸನ್ಮತವೆನಗೆ ೪
ಲೇಸಾದಾ ಹಯಗಳೊಳು ನೀನೆವೆ ಜಗದೊಳು
ಲೇಸು ಮಾಡಿದೆಯೆಂಬ ವಾರ್ತಿ ಕೇಳಿ
ವಾಸುದೇವವಿಠಲ ನಿನಗೆ ಬಿನ್ನೈಸಿದೆ
ದಾಸನ ಮಾತು ಲಾಲಿಸೆ ಕಾಯೋ ಸರ್ವೇಶ ೫

 

೫೨
ಪರಿಪೂರ್ಣಕಾಮೆ ಶ್ರೀ ರಮೆ ಪ
ಕಮಲದಳ ಸಮ ವಿಮಲ ಚರಣಯುಗೆ
ಅಮಲ ಜಂಘಾನ್ವಿತೆ ಶುಭಗೆ ೧
ಇಭ ಕರ ಸದ್ಯೋರು ಇಭರಿಪು ಸಮಕಟೆ
ಶುಭತಮ ಶುಭತಮ ನಾಭಿ ಸುತ್ರಿವಳೆ೨
ಗುರು ವಾಸುದೇವವಿಠಲ
ಪರಮಪ್ರಿಯೆ ಭವ-
ಶರಧಿ ತಾರಕೆ ಚಂದ್ರಫಲಕೆ ೩

 

ನುಡಿ-೧: ಗುರುವಾದಿ ವಾಯು
ತತ್ವಚಿಂತನೆ
೯೦
ಪೇಳಬಹುದೊಬ್ಬರಿಗೆ ವ್ಯಾಸನೆ
ಪೇಳಲು ನಿಮಗೆ ಮಾಡಲಶಕ್ಯವಲ್ಲ ಪ
ಶ್ರವಣ ಕ್ಷಣಬಿಡದೆ ಮಾಡು ನೀಯೆಂಬಿ
ಶ್ರವಣ ಬವಣೆಯು ಬಲ್ಲರೇ ಬಲ್ಲರೊ
ಶ್ರವಣ ಮತಿಯೆಂದು ವಾಕ್ಯದಿಂದಲಿ ನಿಮಗಿ
ಲ್ಲವರ ಗುರುವಾದಿ ವಾಯು ವಿರಂಚಿಗೆ ೧
ಮನನ ಮಾಡೆಂದು ಮಂದಿಗೆ ನೀ ಬೋಧಿಸುವೆ
ಮನನ ನಿಮಗೆ ಎಂದಿಗೆ ಇಲ್ಲವೊ
ಮನನ ಶಾಸ್ತ್ರಗಳ ಮಾಡಿ ಹ್ಯಾಗ ತಿಳಿಯದೊ
ಮನವೆ ಬಲ್ಲುದು ನಿನ್ನ ಮಹಿಮೆ ಎಲ್ಲ ೨
ಧ್ಯಾನ ಮಾಡೆಂಬಿ ತಾ ಒಂದೆರೆಡು ವಿಷಯಗಳ
ಜ್ಞಾನ ಬಿಡಲಾರೆನೊ ಬಹಳ ಬಿಡುವೆ
ನೀನು ಒಂದನ್ನ ಒಮ್ಮೆನ್ನ ಬಿಡಲಾರಿಯೊ
ಏನೊ ನೀ ಮಾಡುವುದು ಮಾತ್ರ ೩
ನಿನ್ನ ಖಳಗುಣಗಳ ಪರೋಕ್ಷ ನಿಗಮನುದಿನ
ಅನ್ಯ ಸಾಧನಗಳಿಂದಲ್ಲದಾಗಿ
ಚನ್ನಾಯಿತೋ ನಿಮ್ಮ ನಿತ್ಯ ಮುಕುತಿ ಪೂರ್ಣ ತಾ
ಅನ್ಯ ಜನರಿಗೆ ಬಂದ ದಣುವು ತಿಳಿಯೊ ೪
ಏಸು ತಾನಂದರು ಖರಿಯ ಪುಸಿವೊಂದಿಲ್ಲ
ಲೇಸು ಕೊಡುವವನೊಬ್ಬನಿಲ್ಲ
ವಾಸುದೇವವಿಟ್ಠಲ ಒಲಿದು ಸಜ್ಜನರಿಂದ
ಈಸು ಸಾಧನೆಗಳಿಂದ ನೀ ಮಾಡಿಸೊ ೫

 

ನುಡಿ-೧ : ಸುಖರೂಪ ಪುರುಷನಿಗೆ
೫೬
ಪ್ರಾಣನಾಥನೆ ನಿನ್ನ ತುತಿಯ ಮಾಡಲು ಇನ್ನು
ತ್ರಾಣ ಎನಗುಂಟೆ ಗುರುವೆ ಪ
ದಾನಿ ಸಿರಪತಿಯ ಭಕುತರ ಶಿಖಾಮಣಿಯೆ ಗುಣಶ್ರೇಣಿ
ಎಣೆಗಾಣೆ ಶ್ರುತಿಧಿ ಸ್ರ‍ಮತಿಧಿ ಅ.ಪ
ನಿಖಿಳ ಜೀವರಿಗೆ ಮಾನಿ ಪುರುಷ ನೀ
ಸಕಲ ಮಹದಾಭಿಮಾನೀ
ಸುಖರೂಪ ಪುರುಷನಿಗೆ ವಾಯು ಅಗ್ನಿ ಆದಿತ್ಯ
ತ್ವಕುರೂಪ ಪುತ್ರನಾದೀ ಮೋದಿ ೧
ಕಮಠರೂಪದಿ ಲೋಕಕಾಧಾರ
ಸಮನೋ ಆಖಣಾಶ್ಮನೆ
ಸಮಯ ಬಿಡದಾಗೆ ಹೃದಯದಲಿ ಎಚ್ಚತ್ತಿರುವೆ
ಸುಮನಸರನ್ನ ಪೊರೆವೆ ಬೆರೆವೆ ೨
ವಾಸುದೇವವಿಠಲನ್ನ ಸಂತತವು
ಶ್ವಾಸಮಂತ್ರದಿ ಸೇವನ
ಲೇಸಾಗಿ ಮಾಡುವ ಜೀವರೊಳು ನೀನೇವೆ
ದಾಸನ್ನ ಪೊರೆಯೊ ಧೀರ ವೀರ ೩

 

೩೩
ಬಂದ ಕೃಷ್ಣ ಛಂದದಿಂದ ಬಂದ ನೋಡೆ ಗೋಪ
ವೃಂದದಿಂದ ನಂದಸುತ ಬಂದ ನೋಡೆ ಪ
ಗೋವ ಮೇವನೀವ ದೇವ ಬಂದ ನೋಡೆ
ದೇವತಾ ವಾದ್ಯಗಳಿಂದ ಬಂದ ನೋಡೆ ೧
ಪಾಪ ಪೋಪ ಗೋಪ ರೂಪ ಬಂದ ನೋಡೆ
ತಾಪ ಲೋಪ ಲೇಪ ಲೋಪ ಬಂದ ನೋಡೆ ೨
ಭಾಸುರ ಸುಖ ಸೂಸುತ ಬಂದ ನೋಡೆ
ವಾಸುದೇವವಿಟ್ಠಲ ತಾ ಬಂದ ನೋಡೆ ೩

 

ಪಂಚೇಂದ್ರಿಯಗಳಿಂದ ಲೌಕಿಕ ಸುಖಗಳನ್ನು
೩೪
ಬಡವನ ಮನೋರಥ ಪೂರೈಸು ಸಿರಿಕೃಷ್ಣ
ಒಡೆಯ ನೀನಲ್ಲದೆ ಪೂರೈಸುವರಿಲ್ಲ ಪ
ಕಿವಿಯು ನೀಡಿದುದಕೆ ಎನಗೊಮ್ಯಾದರು ಮನೋ
ಕುವರಿಯ ಭೃತ್ಯತನ ಕೊಡು ಕಂಡ್ಯ
ಸುವಿಮಲತರ ಮತಿಯಾದ ವಿಷ್ಣುರಾತೋ
ದ್ಭವನ ಬಳಿಯಲೊಮ್ಮೆ ನಿಲಿಸಯ್ಯಾ ಹರಿಯೆ ೧
ನಯನವು ಕೊಟ್ಟದಕೆ ಎನ್ನೊಮ್ಮೆ ರಣದಿ ವಿ
ಜಯನ ಬಳಿಯಲೊಮ್ಮೆ ನಿಲಿಸಯ್ಯಾ
ಭಯದಿ ಸೂತರ ಸುಮ್ಮನಿಹ ಭೀಷ್ಮಕ ಕುರುಪ
ತಿಯರ ಸಭೆಯಲೊಮ್ಮೆ ನಿಲಿಸಯ್ಯ ಹರಿಯೆ ೨
ರಸನವು ಎನಗಿನ್ನು ಕೃಪೆಮಾಡಿದುದಕೆ ಗೋ
ರಸವ ಕದ್ದು ಮೆಲುವ ಕಾಲದಲ್ಲಿ
ಇಸಕೊಂಬ ಗೋವಳರ ಒಳಗೆ ಎನ್ನನು ಒಬ್ಬ
ಶಿಶುವಿನ ಮಾಡಿ ಪುಟ್ಟಿಸು ಕಂಡ್ಯ ಹರಿಯೆ ೩
ಎನಗೆ ತ್ವಗೇಂದ್ರಿಯವ ದಯಮಾಡಿದದಕಿನ್ನು
ಜನಕ ಭೀಷ್ಮಕ ಸುತೆಯ ಕರ ಕಂಜರದಿ
ಅನುವಾದಿಷ್ಟಕ ಭಾವ ಸರಯು ಯಮುನಾ ತೀರ
ಜನಿತವಾಳುಕ ಭಾವವನು ಕೊಡು ಹರಿಯೆ ೪
ನಾಶಿಕವು ಇತ್ತದಕೆ ಗೋಪಿಯ ವಿಹಾರದಿ
ವಾಸುದೇವವಿಠಲ ನಿನ್ನ ಕೊರಳೊಳಿದ್ದ
ಸೂಸಿ ಬಿದ್ದ ಮಾಲಿಕೆಯ ಕುಸುಮಂಗಳ ಬಲು
ವಾಸನ ಲೂೀಲುಪ ಮಧುಕರ ಭಾವ ನೀಡೊ ೫

 

೩೫
ಬಾರೋ ಬಾರೋ ಪ್ರಾಣಕಾಂತ
ತೋರೊ ಮುಖವ ನೋಡುವೆ
ತೋರಿ ತೋರಿ ನಿನ್ನ ಪದವಾರಿಜವ ನಂಬಿದೆ ಪ
ಭಾರಿ ಭಾರಿಗು ಮಾರ ಎನ್ನ ಘೋರಿಸುತಿರುವನು
ಗಾರು ಮಾಡಬೇಡ ಎನ್ನ ಸೇರಿ ಆನಂದ ನೀಡೊ ೧
ಪಂಥ ಮಾಡಬೇಡ ಎನ್ನ ಕಂತು ಜನಕ ಲಾಲಿಸೊ
ಅಂತರಂಗದ ಬಾಧಿಗೆ ನಾ ಚಿಂತೆ ಪಡುತಿರುವೆ ೨
ವಾಸುದೇವವಿಠಲ ನಿನ್ನ ದಾಸಿಯಲ್ಲವೆ ನಾನು
ಆಶೆಯಿಂದ ಬಂದೆ ಪರಿಹಾಸ ಮಾಡಬೇಡ ೩

 

೩೬
ಬಾರೋ ಬಾರೋ ಬಾರೋ ಹರಿ
ತೋರೋ ತೋರೋ ಮುಖವ ದೊರಿ ಪ
ಧೀರನೆ ಬಹುಗಂಭೀರನೆ ಗೋರಸ
ಚೋರನೆ ಗೋಪಿ ಜಾರನೆ ಬ್ಯಾಗನೆ
ವೀರಾಧಿವೀರನೆ ಎನ್ನ ವಾರೆ ನೋಟ ನೋಡುವರೆ
ಗಾರು ಮಾಡದಲೆ ಮನ ಸೇರಿ ಸುಖಬಡಿಸಲು ಅ.ಪ.
ಭೃಂಗಗಳ್ಯಾತಕೆ ಕೂಗಿದವೊ ಅಂಗಜ ಶರಗಳು ಸೇರಿದವೊ
ರಂಗನೆ ಗರುಡ ತುರಂಗನೆ ವಿಧೃತ ರಥಾಂಗನೆ ಸಜ್ಜನ ಸಂಗನೆ
ಬ್ಯಾಗನೆ ಮಂಗಳರೂಪನೆ ಬೆಳುದಿಂಗಳೊಳು ನೀನು
ಪಿಳಂಗೊಳವಿನೂದಲು ಆ ರಂಗ ಎನ್ನ ಬಿಡಿಸಿದ ೧
ಕಾವರೆ ನಿನ್ಹೊರತಿನಾರೊ
ಭಾವಜಪಿತ ಮಂದಿರ ಸೇರೊ
ದೇವನೆ ಭಕುತರ ಕಾವನೆ ವರಗಳ
ನೀವನೆ ರಿಪುವನದಾವನೆ ಬ್ಯಾಗನೆ
ದೇವಾದಿ ದೇವನೆ ಎನ್ನ
ಕಾವನು ನೀನಲ್ಲದೆ ಇ
ನ್ಯಾವನು ಈ ಭೂಮಿಯೊಳ
ಗೀವನು ಕಾಣಿನೊ ನಾನೊಬ್ಬ ೨
ಈ ಸಮಯದಿ ಪರಿಪಾಲಿಪರ್ಯಾರೋ
ವಾಸುದೇವವಿಟ್ಠಲ ನೀ ತೋರೋ
ಶ್ರೀಶನೆ ಸುಂದರಹಾಸನೆ ಮುನಿ ಮನ
ವಾಸನೆ ಶತರವಿ ಭಾಸನೆ ಬ್ಯಾಗನೆ
ಹಾಸುಮಂಚದೊಳು ಹುವ್ವಿನ
ಹಾಸಿಕಿಯೊಳು ಮಲಗಿ
ಬ್ಯಾಸರಗೊಂಡೆನು ಪರಿ
ಹಾಸವ ಮಾಡದೆ ಬ್ಯಾಗ ೩

 

೩೭
ಬಾರೋ ಬಾರೋ ಸುಂದರನೆ
ಬರ ಹೇಳಿದಳೊ ನಿನ್ನ ರಮಣಿ ಪ
ಶುಕಪಿಕರವದಿಂದ ವಿಕಳಿತಳಾಗಿ ಧೈರ್ಯ
ಕಕವಿಕಳಾಗಿಹಳಿವಳು ನೀ ಬೇಗನೆ ೧
ಸಾರ ಸುಗುಣೆ ನಿನ್ನ ದಾರಿಯ ನೋಡಿ ನೋಡಿ
ಸರಸಿಜಮುಖಿ ನೀ ಪೋಗಿ ಬಾರೆಂದಳು ೨
ಶ್ರೀ ವಾಸುದೇವವಿಠಲ ನಿನ್ನಯ ಸಖಿ
ಭಾವಜನ ರೂಪವ ತೋರು ತೋರಿಸೆಂದಳು ೩

 

೩೮
ಬಿಡಬಾರದೋ ಶ್ರೀನಾಥನ ನಾಥನ ಪ್ರಖ್ಯಾತನ ಪ
ಕಡು ದುಃಖದಿ ಮೊರೆಯಿಡಲು ಗಜೇಂದ್ರನು
ತಡಮಾದೆÀ ಬಂದಾತನ ಆತನ ಪೊರೆದಾತನ೧
ಮೊರೆಯನು ಲಾಲಿಸಿ ತರುಣಿ ದ್ರೌಪದಿಗೆ
ವರ ವಸವನನಿತ್ತಾತನ ಆತನ ಪೊರೆದಾತನ ೨
ಶೇಷಶಯನ ನಮ್ಮ ವಾಸುದೇವವಿಠಲ
ದೋಷರಹಿತನೆಂಬಾತನ ಆತನ ಪರಮಾತ್ಮನ ೩

 

ನುಡಿ-೧: ಭಕುತಿಗೆ
೩೯
ಸುಳಾದಿ
ರಾಗ :ಸಾರಂಗ ಧ್ರುವತಾಳ
ಬಿನ್ನಪವ ಮಾಡುವೆ ಯಜ್ಞ ಶ್ರೀನಿವಾಸ
ನಿನ್ನ ಶರಣಗೆ ಹಲವು ಹಂಬಲ ಸಲ್ಲ
ಇನ್ನು ತಾನೊಮೊಮ್ಮೆ ಬಯಸಿದೇ ಭಕುತಿಗೆ
ಅನ್ಯಥಾವಾಗದಂತೆ ಬಯಸಿಕೊಳಲಿ ಮನ
ಚಿನ್ನರ್ಗೆ ಫಲವಿತ್ತೆ ಓದು ಪೇಳುವ ತೆರ
ಚನ್ನಾಗಿ ನೀನೆವೇ ಫಲವನ್ನು ಒಲಿದಿತ್ತ
ಮನ್ನೆ ವಾಕು ಆದರಿಸೊ ವಾಸುದೇವವಿಠಲ ೧
ಮಟ್ಟತಾಳ
ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ
ದಿಂಡೇರ ಕೈಯಿಂದ ನೋಯಗೊಳಿಸದಿರೊ
ಅಂಡಜವಾಹನ ಬಿರುದು ನಿನ್ನದು ನೋಡು
ಕೊಂಡಾಡುವೆ ವಾಸುದೇವವಿಠಲರೇಯ
ತೋಂಡರ ಮಾತುಗಳ ಪುಸಿಗೊಳಿಸಲಿ ಬೇಡ ೨
ತ್ರಿವಿಡಿ ತಾಳ
ಆವಾವ ಆಶ್ರಮವನ್ನು ಒಲಿದಿತ್ತು ನೀನೇವೆ
ಆವಾವ ಬಗೆಯಲ್ಲಿ ಸಾಧನ ಮಾಡಿಸೊ
ಆವಾವ ಬಗೆಯಲ್ಲಿ ಬಲ್ಲ ಸರ್ವಜ್ಞನೆ
ಆವಾವ ವಿಧದಿಂದ ಬಿನ್ನೈಪುದೇನೆಲೊ
ಕಾವ ಕರುಣಿ ವಾಸುದೇವವಿಠಲರೇಯಾ
ಆವಾವ ಬಗೆಗಳ ಬಿನ್ನೈಪುದೇನಯ್ಯಾ ೩
ಅಟ್ಟತಾಳ
ಕೊಡಗೈಯ್ಯ ದೊರೆ ಎಂದು ನಂಬಿಲ್ಲಿಗೆ ಬಂದ
ಬಡನಡವಳ ನೀನು ಕಡೆಗೆ ನೋಡುವರೇನೊ
ತೊಡರುಗಳಿದ್ದರು ಬಿಡಿಸುವ ಬಗೆ ಬಲ್ಲ್ಯೋ
ತಡೆಕೊಡುವ ದೋಷ ಒಡೆಯ ನಿನ್ನೆದುರಿಗೆ
ಅಡರಿ ನಿಲ್ಲುವದುಂಟೆ ಆವಾವ ಕಾಲಕ್ಕೆ
ಪೊಡವಿಯ ತಳದಲ್ಲಿ ಪುಟ್ಟಿ ಸಾಧನಗಳು
ಪಡಿಯಲಿಬೇಕೆಂಬ ಭಕುತ ಜನರುಗಳು
ಕಡಿಮೇನೊ ಅವರೊಶ ಮಾಡಿಸೊ ಭಕ್ತರ
ಬಿಡಿಯ ಬಿರುದಿನ ವಾಸುದೇವವಿಟ್ಠಲ ೪
ಆದಿತಾಳ
ಒಂದೊಂದು ಕೊಡಲು ಮತ್ತೊಂದು ಕೊಡಲಿ ಎಂದು
ಸಂದಣಿಸುತಲಿವೆ ವಿಷಯಗಳೊಂದು
ತಂದೆ ತಡಮಾಡಬೇಡವೊ ಅದರಿಂದ
ಒಂದೆ ಸಾಧನ ಬಹಳಾಗುವದೊ
ಇಂದಿರೇಶ ಬಯಸಿದೆ ನಿನ್ನಲ್ಲಿ
ಬಂದು ಒದಗಿಸೊ ವಾಸುದೇವವಿಠಲ ೫
ಜತೆ
ಕರುಣಾಳು ಸ್ವಾತಂತ್ರ ವಾಸುದೇವವಿಠಲ
ಸರ್ವಜ್ಞ ನಿನಗೆ ಮೊರೆ ಇಡೊದಿದೆ ಚಿತ್ರ ೬

 

೮೧
ಬೋಧಕರಾರೊ ಲೋಕದೀ ದಾಸಗೆ
ಬಾಧಿಪ ದುರಿತಗಳ ದೂರ ಮಾಡಿ
ಮಾಧವ ನೀನೆ ದಯವು ಮಾಡಲಿ ಬೇಕೊ
ಸಾಧಕ ಸಾಧ್ಯನೊ ನೀನು ಸ್ವಾಮಿ ಪ
ಓದಲು ಮೊದಲಿಲ್ಲ ಕೇಳಿ ಶಾಸ್ತ್ರಗಳಿಲ್ಲ
ಮೋದಿಸುವ ಮಾತ್ರ ಭಕ್ತರ ಕಡು
ಮೋದತೀರ್ಥರ ಮತ ಇವನಿಗೆ ತಿಳುವಂತೆ
ನೀ ದಯವನು ಮಾಡಿ ಕರವ ಪಿಡಿಯೊ ೧
ಆಲಸಬಟ್ಟನು ಇವ ನಿನ್ನ ಪೂಜಿಗೆ ತಕ್ಕ
ಕೆಲಸವ ಮಾಡಲು ಮೊದಲರಿಯ
ಒಲಿಸಬೇಕೆಂದು ಮನದಿ ಹಂಬಲಿಸು
ಚಲಿಸದ ಮನ ಮಾತ್ರಕೆ ಕೊಡಲಿಬೇಕು ೨
ದಾಸರ ಸಾಧನದ ಭಾರ ನಿನ್ನದು ಸ್ವಾಮಿ
ಆಸರಾಗಲಿ ಬೇಕು ಒಬ್ಬರಿಗೆ
ದಾಸ ಮತ್ತೊಬ್ಬ ಎಂದು ನಿನ್ನಯ ಕ್ಲಪ್ತ
ವಾಸುದೇವವಿಠಲ ನೀನರಿಯದೇನೊ ೩

 

ನುಡಿ-೧: ಪ್ರತಿ ಸಂಚರಕಾಲದಿ
೫೭
ಮನವೆ ಮಾನ್ಯನ ಮನ್ನಿಸು ಶ್ರೀವ್ಯಾಸ
ಮುನಿಗೆ ಒಲಿದಿಹ ವಾಯು ನಾ ಪ
ಪ್ರತಿ ಸಂಚರ ಕಾಲದಿ ಅವಿಲೀನ
ಮತಿಯುಳ್ಳ ದೇವನಿವನು
ಸುತ ಜಯಾದೇವಿಗೀತ ತನ್ನ ಸರಿ
ಚತುರಾಸ್ಯ ದೇಹದೊಳಿಹ ೧
ಚತುರವಿಂಶತಿ ತತ್ವಕೆ ಅಭಿಮಾನಿ
ಶ್ರುತಿಗಳರಿಯದ ಗುಣಗಳ
ಮತಿಯುಳ್ಳ ಸೂತ್ರನಾಮ ಹರಿರೂಪ
ಮಿತಿ ಇಲ್ಲದಲೆ ಕಾಂಬನೊ ೨
ಯತಿಯಾಗಿ ಬಂದು ಹರಿಯ ಕಾರ್ಯಗಳ
ಕೃತಿಸಿ ತಾ ನಿಂದು ವ್ಯಾಸ
ವ್ರತಿಯಿಂದ ಮಾಡಿಸಿದ ಈತಗೆ
ಪತಿ ವಾಸುದೇವವಿಠಲ ೩

 

೪೧
ಮನಸಿಗೆ ಬಂದ ಧನ್ವಂತ್ರಿ ವೈದ್ಯನೇ
ಮನಸಿನ ರೋಗವ ಪರಿಹರಿಸೊ ಪ
ಧನ ಲೇಶ ಕೇಳಾ ಬಡವರ ಪೊರೆಯೊ ನೀ
ಮನೆಗೆ ಬಂದರೆ ತನು ರೋಗಗಳೋಡೋವು
ನೆನಹ ಮಾರ್ಗಕೆ ಬೇಗ ತಡಿಯದೆ ಈ ಮನ
ಕುನರ ಸೂಲಿವುಳ್ಳ ವಾತವ ಹರಿಸೊ ೧
ನಾಮವ ನುಡಿವಲ್ಲಿ ಅರುಚಿ ಇದಕಿದೆ
ಭಾಮೆಯ ಕಂಡರೆ ತಲ್ಲಣವಾಹದೊ
ಶ್ರೀ ಮನೋಹರನ ಸ್ಮರಣೆ ಹಾರುತಿದೆ
ಈ ಮಹಾದೋಷವುಳ್ಳ ಪಿತ್ತವ ಬಿಡಿಸೊ ೨
ಪಿರಿಯರು ನೋಡಲು ಗುರುಗುರುಯೆನುತಿದೆ
ಪರಿಪರಿ ವಿಷಯದ ನಂಜಿಲಿಂದ
ಪರಿಹರಿಸೊ ಶ್ಲೇಷ್ಮ ಮೊರೆಹೊಕ್ಕೆನು ನಾನು
ಪರಿಹರಿಸೊ ವಾಸುದೇವವಿಠಲರೇಯ ೩

 

೪೨
ಮರೆಯ ಮಾಡುವರೆ ರಂಗಯ್ಯ ತೆರೆಯ ಹಾಕುವರೆ
ವರದನು ಜಗಕೆಂದು ಎನಿಸಿದ ಬಳಿಕ ಪ
ಕುರುಹ ನಾನರಿಯೆ ನಿನ್ನಯ ರಂಗಯ್ಯ ಸುರತವ ಬಲ್ಲೆ
ಗುರುತು ಬಲ್ಲವಗೆ ಈ ಪರಿ ಮಾಡಿ ತೋರಿದೆ ೧
ಗುರುತುಯೆಂದರಿಯಾ ಸರ್ವದಾ ಎನ್ನ ದೊರೆಯು ನೀನಲ್ಲೆ
ತೆರೆಯು ನಿನ್ನದು ಲೋಕ ಪರಿಪಂಥಿಯಾಹುದೆ ೨
ದುರಿತವು ಮೊದಲೆ ಪೋದವು ವಾಸುದೇವವಿಠಲನೆ
ಪೊರೆಯೊ ದಯವು ನಿನ್ನ ಸಹಜ ಪೋಗುವುದೇ ೩

 

ನುಡಿ-೫: ನಿನ್ನಯ ಗುಣಸ್ಪೂರ್ತಿ
೬೧
ಮರೆವಾರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ
ಕರೆದು ಕಾಮಿತಗಳ ಕರವೆ ನಾ ನಿನಗೆಂದು ಪ
ದಾರಿಯ ತಪ್ಪಿ ಪೋಗುವ ಧೀರ ಫೋರನ್ನ
ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ
ಊರಿನವೊಳಗೆ ಅವನ ಆಗಾ
ದೂರ ನೋಡುವರೆ ದೋಷಗಳ ವಿಚಾರಮಾಡುವರೆ
ಧೀರರು ಆವ ಪರಿಯಲವನ ಪಾರಗಾಣಿಪರಲ್ಲದೆ ೧
ಹಸಿದು ಪರರ ಕೇಳದ ದ್ವಿಜವರಿಯನ್ನ
ಶಿಶುವಿನ ನೋಡಿ ದಯದಿಂದ ಕರದಿನ್ನು
ಹಸಿದ್ಯಾಕೊ ಎಂದು ಪಾಕವ ಮಾಡಿ
ಹಸನಾಗಿ ತಂದು ಬಡಿಸುವ ಅವಸರದಿ ನಿಂದು,ಅವನ ದೋಷ
ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು ೨
ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ-
ಕುಲ ತರಳನನು ನೋಡಿ ಕೃಪೆಯಿಂದ ಸುರನದಿ
ಜಲವನೀವೆನೆಂದು ಬ್ಯಾಗನೆ ದಿವ್ಯ
ಕಲಶವ ತಂದು ಬಾರೆಲೊ
ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ
ತೊಳಿಯ ಕೊಡುವೆನೆಂದು ತಡವ ಮಾಡುವರೆ ೩
ಸುಶರೀರ ತನುವನು ಮನದಲಿ ಬಯಸಿ ತಾ
ಉಸರದ ಮುನಿತನಯನ ಕಂಡು ತಾವಾಗಿ
ಕುಶಲವ ಕೇಳಿ, ದೇವತ ವೈದ್ಯ
ಅಸಮರೆಂದೇಳಿ, ರಸ ಮಾಡೆಂದೇಳಿ, ಅವಗೆ ದಿವ್ಯ
ರಸವನು ಪೇಳಿ, ಪಸಿ ನಿನ್ನಲಿದ್ದಾ
ಕಿಸರು ಪೋದರೆ ಕೊಡುವೆವೆಂದು ನಿಲುವರೆ ೪
ಅರ್ತಿಯ ಭಕುತನ್ನ ನೋಡೀಗ ನಿನ ದಿವ್ಯ
ಕೀರ್ತಿಯ ನೋಡಿಕೊ, ವಾಸುದೇವವಿಠಲನ
ಮೂರ್ತಿಯ ಭಜಕ ಭಕ್ತರಾಭೀಷ್ಟ
ಪೂರ್ತಿಗೆ ಜನಕ ನಿನ್ನಯ ಗುಣ
ಸ್ಫೂರ್ತಿಗೆ ಜನಕ, ನಿನ್ನಯ ಗುಣ
ಸ್ಫೂರ್ತಿ ಉಳ್ಳನಕ ಪಾಪದ ಲೇಶ
ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ ೫

 

೮೨
ಯಾತವರ ನಾನಲ್ಲವೊ ಹರಿ ಬರಿದೆ
ಖ್ಯಾತಿಯನು ತಂದಿತ್ತಿಯ ಪ
ಮಾತುಗಳು ನಾಲುಕಾಡಿ ಸಭೆಯೊಳಗೆ
ಪ್ರೀತಿ ಬಡಿಸುವೆನೊ ನರರ
ರೀತಿಯಲಿ ಶ್ರುತಿ ಸ್ರ‍ಮತಿಗಳ ಪಠಿಸಿ ಶ್ರೀ-
ನಾಥ ನಿನ್ನ ತೋಷಿಸಿದೆನೆ ೧
ಜಪಮಣಿಗಳನು ತಿರುಹಿಸಿ | ಲೋಕರನ
ಕಪಟಗೊಳಿಸುವೆನಲ್ಲದೆ
ತಪ ಮಾಡಿದೆನೆ ಮನದಲಿ | ನಿನ್ನಯ
ಕೃಪೆಯು ಉದಿಸುವ ತೆರದಲಿ ೨
ದಾಸ ವೇಷವ ಧರಿಸಿದೆ ಕನಕದಾ-
ವಾಸನೆಯಿಂದಲ್ಲದೆ
ವಾಸುದೇವವಿಠಲ ಶರಣ ತಾ
ಲೇಶವರಿಯೆನು ಕರುಣಿಸೊ ೩

 

ವಿದ್ಯಾಕಾಂತಯತಿಗಳ ಕೀರ್ತನೆ
೯೪
ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ
ನೀ ಪೇಳಬಾರದೆ ರುಕುಮಿಣಿ ನೀ ಪೇಳಬಾರದೆ ಸತ್ಯಭಾಮ ಪ
ಪಾಪ ಮಾಡುವನೆಂದು ಕೋಪ ಮಾಡಿದಿರೆಂದು
ನಾ ಪಾದಪದುಮಕ್ಕೆ ಶರಣೆಂಬೆ ತಾಯೆ ೧
ನಿಮ್ಮ ನುಡಿಗಳಿಂದ ಸಮ್ಮತಿಸುವ ದೇವ
ಸುಮ್ಮನೆ ತಿಳಿಸೆನ್ನ ಹಡದಮ್ಮ ತಾಯೆ ೨
ಏನೊ ಪೇಳಿದನೆಂದು ನೀನೂಪೇಕ್ಷಿಸದಲೆ
ಜಾನಕಿದೇವಿ ಪೇಳೆ ರಘೂಪತಿಗೆ ತಾಯೆ ೩
ಪಾದ ನಂಬಿದವರಿಗೆ ಮೋದವ ಕೊಡುವಂಥ
ವೇದವ್ಯಾಸಗೆ ರಮೆ ತಿಳಿ ಹೇಳೆ ತಾಯೆ ೪
ವಿದ್ಯಾಕಾಂತನ ಮನವಿದ್ದಂತೆ ಒಲಿಯುವ
ಸದ್ದಯಾನಿಧಿ ನಮ್ಮ ನರಸಿಂಹ ತಾಯೆ ೫
(ವಿದ್ಯಾಕಾಂತತೀರ್ಥರು (೧೮೨೪)
ವ್ಯಾಸರಾಜ ಮಠದ ೧೬ ನೇ ಯತಿಗಳು)

 

ನುಡಿ-೨: ದಶಮತಿಯರಾಗಮ
ವಿಶೇಷಸಂದರ್ಭಗಳ ಹಾಡುಗಳು
೯೨
ತಿಳುಪಿದೆನು ಪರಮ ದಯದಿಂದ
ತಿಳುಪಿದೆನು ಪರಮ ದಯದಿಂದ ಮುಂದಣ ಕಾರ್ಯ
ಒಳಿತು ಬಿನ್ನಪವ ಲಾಲಿಸಲಿಬಹುದಯ್ಯ ಪ
ಸಕಲ ದೇಶ ಕಾಲದಲ್ಲಿಪ್ಪ ಸಜ್ಜನರ
ಸಕಲ ಪರಿಯಲಿಂದ ಪೊರೆವ ದಾತ
ಅಕಳಂಕ ನರಸಿಂಹ ಹೊರತಿಲ್ಲೆಂದು
ಸಕಲರೂ ಪೇಳಲು ಕೇಳ ಬಲ್ಲೆ ೧
ಇನ್ನಾರು ತರುವಾಯ ದಶಮತಿಯ ರಾಗಮವ
ಚನ್ನಾಗಿ ಪೇಳುವೆನೆಂಬುದೊಂದು
ನಿನ್ನ ವಚನಂಗಳು ಪುಸಿಯಾಗಬಾರದು
ಮನ್ನದಲ್ಲಿ ನೋಡಿಕೋ ಕರುಣ ಸಿಂಧೋ ೨
ಬಡವಗೆ ಮಾತುಗಳು ಕೊಟ್ಟಿನ್ನು ತಾವಾಗಿ
ಒಡೆಯರೇ ತಪ್ಪಿದರೆ ಏನಂಬರೊ
ಮಡಿಯ ಹೊರಳುವೆ ನಿನ್ನ ಅಡಿಗೆ ಬೀಳುವೆ ಸ್ವಾಮಿ
ಕಡೆ ಹಾಯಿಸೊ ರಂಗ ಎನ್ನಂತರಂಗ ೩
ಜನನಿ ಕಾಣಳು ಕಣ್ಣು ಕಿವಿಯು ಕೇಳದು ಅಣ್ಣ
ತನಯರು ಇಂದಿಗೂ ಜನಿಸಲಿಲ್ಲ
ಮನದಲ್ಲಿ ಹಲವು ಹಂಬಲಗಳೋಲ್ಯಾಡುತಿವೆ
ಜನಕ ಜನನೀ ತನಯ ನೀ ಎನಗೆ ೪
ಆಸು ಲೋಕಗಳೆಲ್ಲ ನಿನ್ನವೆ ಸರಿ ಸ್ವಾಮಿ
ವಾಸುದೇವವಿಠಲ ಬಹುಕಾಲದಿ
ಭೂಸುರನ ಮಾಡಿ ಪುಟ್ಟಿಸಿದರೆ ಚಿರಕಾಲಈ ಸುಧಾಪಾನ ನೀ ಮಾಡಿಸೆನಗೆ

 

ನುಡಿ-೨: ಸಾಮಭಿ ಸೇವಿತ
೪೩
ಶರಣಾಗ್ರಣಿ ರಾಮ ಚರಣಾಂಬುಜ ಬಿಡೆ
ತರುಳ ನಳಿನ ಷಟ್ ಚರಣ ಬಿಡ ಬಲ್ಲದೆ ಪ
ಹನುಮನ ಭಜನೆಂಬ ಘನವಾರಿ ಪೂರಿತ
ಮನ ಸರೋವರ ಅಯನವಾಗಿಪ್ಪಾ
ಜನಕಸುತೆ ಹಂಸಿ ಮನಸಾಪ ಹಾರಿ
ದಿನಕರನ್ವಯದಿಂದ ವಿನುತವಾಗಿಪ್ಪ ೧
ಅಮರರೋತ್ತಮರೆಂಬ ಭ್ರಮರರಾ ರವಗಳ
ಸಮಯೋಚಿತ ಸಾಮಭಿ ಸೇವಿತ
ವಿಮಲಾತಮದಿಂದ ಸಾಂದ್ರ ಶಮಲಾತಿ ದೂರ
ಕಮಲಾಸನ ಪ್ರಿಯ ಕಮಲೋತ್ತುಮ ಪಾದ ೨
ಶಿಲೆಯ ಬಾಲೆಯ ಮಾಡಿ ಮಲವಳಿದು ಮುನಿ
ಕುಲವಗೆಡಿಸಿ ಸತ್ಕುಲನೆನಿಸಿದೆ
ಜಲಧಿಯೊಳಗೆ ಸೇತು ನಿಲಿಸಿ ಸಜ್ಜನರಿಗೆ
ನೆಲೆ ವಾಸುದೇವವಿಠಲದೇವ ಪಾದಪದುಮ ೩

 

ಮನಸ್ಸು ಕೋಡಗದಂತೆ ಚಂಚಲ
೪೪
ಸಣ್ಣವನ ಬಿನ್ನಪವ ಸಲಿಸಬಹುದಯ್ಯ
ಬಣ್ಣಿಸಲೊಶವಲ್ಲ ದಯವುಳ್ಳ ದೊರೆಯೆ ಪ
ನಿನ್ನ ಗುಣ ಸುರ ತರುವು ವನದಿ ಶುಕಾದಿಗ
ಳುನ್ನತವಾಗಿಹವು ಉಚಿತವೇ ಸರಿಯು
ಎನ್ನ ಮನ ಕೋಡಗವು ಅಡವಿಯನು ಬಿದ್ದದೆ ಇ
ದನ್ನ ಅದರೊಳಗೆ ಇಡಬಹುದಯ್ಯ ಹರಿಯೆ ೧
ಕಮಲಭವ ವಾಣಿ ಮುಖ ನಯನಗಳು ಎಂಬ ಮಹ
ಕಮಲೋತ್ಪಲಗಳಿಂದ ಶೋಭಿಸುತಿಹ
ವಿಮಲ ಲಾವಣ್ಯ ಸುಧಾಂಬುಧಿಯೊಳಿಡಿಸಯ್ಯ
ಮಮ ನೇತ್ರ ಮೀನಗಳ ವಿಷಯ ಪಂಕದಿ ತೆಗಿಸು ೨
ನಿಮ್ಮ ನಾಮಾಮೃತದ ಸೂರೆಯನು ಬಿಟ್ಟು ಶ್ರೀ
ಬೊಮ್ಮ ಭವ ಮುಖರ ಕೆರೆ ಕೋಡೇರಿಸುವಿ
ಇಮ್ಮನುಜ ತುತಿ ಚೂರ್ಣ ತೆಗೆದು ತೊಳೆದು ತುಂಬೊ
ನಮ್ಮ ವದನ ಕರಡಗೆಯ ವಾಸುದೇವವಿಠಲ ೩

 

ನುಡಿ-೫: ಋಷುಗಣರು
೬೪
ಸರಿಯಾರೈ ಜಯಮುನಿ ಸಮರಾರೈ
ಗುರುಮಧ್ವಕೃತಿ ವಿವೃತಿ ರಚಿಸುವಲ್ಲಿ ಪ
ವರ್ಣವಂದಾರು ಬಿಡದಲೆ ಬಹುಫಲ
ವರ್ಣಿಪೆ ಲೋಭದಿ ಶರಣ ಜನರಿಗೆ
ಕರ್ಣಸುಧಾರಸ ಬೆರೆದು ನೀ ಬಲುಗೂಢ
ಪೂರ್ಣಮತಿ ಭಾವವ ತೆಗೆವತಿ ಶೂರ ೧
ಒಂದೊಂದು ವಚನವ ಹಿಂದಾಗಿ ಮುಂದಾಗಿ
ಛಂದಾಗಿ ತಿರಿಗಿಸಿ ತಿರೆಯ ಸಿಂಧುರದಂತೆ
ಬಂದಿಸಿ ಮುಂದಾಗಿ ಬಂದು ದುರ್ವಾದಿಯ
ಸಂದುಗಳನೆ ಸೀಳಿ ಮೆರೆದತಿ ಶೂರ ೨
ಕತ್ತಿಯ ಒಂದೇ ಹಿಡದೆ ಬಿಡದಲೆವೆ
ಹತ್ತು ದಿಕ್ಕಿಗೆ ತಿರಿಗಿಪ್ಪ ವೀರನ ತೆರೆ
ಅತ್ಯರ್ಥ ಮೂಲದ ಹಿಡಿದು ಅದನ್ನು
ಸುತ್ತಿಸಿ ವಿಮತರ ತತ್ತರಿಸುವ ಧೀರ ೩
ಮೂಲ ವಚನಗಳ ಕಲ್ಪಲತೆಯ ಮಾಡಿ
ಮೇಲಾದ ತತ್ವಗಳೆಂಬೊ ಫಲಗಳು
ಶೀಲಮತಿಗಳುಳ್ಳ ಶಿಷ್ಯ ಶಿಶುವಿಗಳಿ
ಗಾಲಿಸಿ ಮೇಳಿಸುತ ಒಲಿಸುವ ಧೀರ ೪
ಅಕ್ಷೋಭ್ಯ ಮುನಿಗಳ ಪುಣ್ಯಫಲಗಳೆಂತೊ
ಋಕ್ಷುಗಣರ ಕರ್ಮ ಕಷ್ಟವೆ ಒದಗಿತು
ಈ ಕ್ಷೋಣಿತಳದಲ್ಲಿ ವಾಸುದೇವವಿಠಲನಕಕ್ಷವ ವೊಹಿಸಿ ಪುಟ್ಟಿದ್ಯೊ ಜಯರಾಯ ೫

 

೫೩
ಸಿರಿದೇವಿ ಹರಿಯ ದಯವು | ಆವಾವ
ಪರಿಯೆ ಆ ಪರಿ ಪಾಲಿಸೆ ಪ
ಆಲದೆಲೆಯಲಿ ಅಂದು | ನಿನ್ನಯ
ಮ್ಯಾಲೆ ಮಲಗಿಪ್ಪ ಹರಿಯ
ತೋಳು ಬಿಗಿದಾಲಂಗಿಸಿ | ಸೃಷ್ಟಿಯ
ಲೀಲೆಯನು ಮಾಡಿಸಿದ ತಾಯೆ ೧
ವಕ್ಷವಾಲಯವ ಮಾಡಿದೆ | ಆವಾಗ
ದಕ್ಷಣಾದೇವ್ಯೆನಿಸಿದೆ
ಲಕ್ಷ್ಯವಿಲ್ಲದೆ ಭಾಗ್ಯವ | ಭಕ್ತರಿಗೆ
ವೀಕ್ಷೆಯಿಂದಲ್ಲಿ ಈವೆ ೨
ದೇವತಾಜನ ಸ್ತುತಿಸೆ | ನೀ ಎನ್ನ
ಭಾವ ಹರಿಯಲಿ ನಿಲ್ಲಿಸೆ
ಕಾವ ಭಾರವು ನಿನ್ನದೆ | ಶ್ರೀ ವಾಸು
ದೇವವಿಠಲನ್ನ ರಾಣಿ ೩

 

೮೫
ಸಿಲುಕಿದೆನು ಭವ ಪಾಶದಲಿ ನಾನು ಹರಿಯೆ
ಕಿಲಿಕಿಲಿ ನಗುವರೆ ಸಲಹುವದು ದೊರೆಯೆ ಪ
ಕೆಲರ ಮಾತಿಗೆ ಪೋಗಿ ಬಲವಾಗಿ ಅವರ
ಕೆಲಸ ಮಾಡುವೆ ನಿಜ ಕೆಲಸವ ಮರೆದೆ ನಾ ೧
ಧರಣಿಯ ಪತಿಯೇವೆ ಶರಣೆಂದು ತಿಳಿದು
ಮರೆದೆನೊ ನಿನ್ನ ಪಾದ ಸಿರಿಯ ರಮಣನೆ೨
ಉದರಗೋಸುವಾಗಿ ಮರೆದವರ ವಶದಿ
ಹದನವ ಕಳಕೊಂಡು ಮದಡ ನಾನಾದೆನೊ ೩
ಉಣವೆನೊ ಪರರನ್ನ ದಣಿವೆನೊ ಅದಕ್ಕೆ
ಕುಣಿವೆನೊ ಅವರಂತೆ ಗುಣವೇನು ಎನಗೆ ೪
ಈಸು ಪರಿಯಲೆನ್ನ ಶ್ರೀಶ ದಾಸರ ವಶದಿ
ವಾಸವಿತ್ತು ಬದುಕಿಸೊ ವಾಸುದೇವವಿಠಲ ೫

 

೪೮
ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ
ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ ಪ
ಇಷ್ಟವರನ ಬಂಧದೋಳೆನ್ನ ಸಿಲುಕಿಸಿ
ದುಷ್ಟರೂ ಒಂದಾಗಿ ತಾವೆಲ್ಲ ಎನ್ನನೂ
ಕಷ್ಟಬಡಿಸೇವಂತ ದ್ವೇಷದಿ ಹವಣಿಸ
ಲಿಷ್ಟರೊಳು ನೀ ಕೇಳುವಂತೆ ಕೂಗಿದೆನಲ್ಲ ೧
ನಿನ್ನ ಮಾತುಗಳಾಡಧ್ಹಾಂಗೆನ್ನ ಮಾಡಿಸಿ
ಅನ್ಯವಾರುತಿಗಳು ಚನ್ನಾಗಿ ನುಡಿಸಲು
ಅನ್ಯಾಯ ಬಂತೆಂದು ಅವರಂತೆ ನುಡಿದು ನಾ
ಮನ್ನದೊಳಗೆ ಮೊರೆ ಇಟ್ಟದನರಿಯಾ ೨
ಒಳಗೆ ಹೊರಗೆ ತುಂಬಿಕೊಂಡಿಹರು ಬಹಳ
ಖಳರು ಅವರು ದೇಶ ಕಾಲವಯ್ಯ
ಬಳಿಯಲಿ ನಿನ್ನವರು ಗೂಢ ವೇಷದಿ ತಾವು
ಸುಳಿಯಲು ಅವರನ್ನು ಗುರುತು ಮಾಡಿದೆನಯ್ಯ ೩
ಈಗಲೂ ನಿನ್ನ ಬಲಪವನನಾಗಮದಿಂದ
ಬ್ಯಾಗನೆ ಖಳರನ್ನ ವರದು ಸವರಿಸೊ
ಜಾಗರೂಕನಾಗಿ ಅದೇ ಪದ್ಧತಿ ಪಿಡಿದು
ಸಾಗಿ ಬಂದೆನು ಕೇಳು ಎನ್ನಿಂದೇನಪರಾಧ ೪
ಲೇಸಾಗಿ ಬಲವಿತ್ತು ಎನ್ನನು ಕಳಿಸಲು
ಆಸು ಅಸುರರನ್ನು ತರದೊಟ್ಟುವೆಯಾ
ವಾಸುದೇವವಿಠಲ ನೀ ಕೈಯ್ಯ ಪಿಡಿದರೆ
ಆ ಸುಕಾರ್ಯಕೆ ಬಾಹೆ ನೋಡೆನ್ನ ಶಕುತಿ ೫

 

ಪಲ್ಲವಿ: ಅಚ್ಯುತ
೯೧
ಹುಚ್ಚುಗೊಳಿಸುವರೆ ಮರುಳೆ ತರುಳಾರ
ಅಚ್ಚುತ ಪರಮ ಗಂಭೀರ ಪುರುಷನೆ ಪ
ಎಲ್ಲವು ಬಯಸುವ ಹಟದಿ ಶಿಸುವಿಗೆ
ಬೆಲ್ಲವ ತೋರಿಸಿ ನಿಲುದಿಪ್ಪೋದು೧
ಮಿನುಗುವ ಮಣಿತೋರೆ ತನು ಬೆವರೆ ಪೋಗೆ
ಕನಡಿಭಾನಿಂದುದಕ ಕೆಳಗೊಳಿಸುವರೆ ೨
ಕಪ್ಪು ವಸ್ತ್ರವ ಕಂಡು ನಡುಗುವಂಗೆ
ಕಪ್ಪ ಕಲ್ಪಿಸೆ ಅಪ್ಪಾ ಎನ್ನೆ ಅಪ್ಪಿ ನಗಿಸುವರೆ ೩
ನಗುವ ಕೂಸಿನ ಅಳಿಸಿ ಮುದ್ದಾಡಿ
ನಗುಸುವೀ ನೀನು ಬಗೆ ಬಗೆಯಿಂದ ೪
ಜೀವರ ಈ ಪರಿ ಮಾಡದಿದ್ದರೆ ವಾಸು
ದೇವವಿಠಲ ನೀ ಕಾಲ ಕಳೆವದೆಂತೊ ೫

 

೫೦
ಹೇಳುತಿ ಕೇಳುತಿ ಏನಿಲ್ಲವೊ
ಆಳಿದಾ ಊಳಿಗನ ಬಾಳಿವಿನ್ನೇನೊ ಪ
ನೀರೊಳಗೆ ತಿರುಗಿ ನೀ ಭಾರ ಬೆನ್ನಲಿ ಪೊತ್ತು
ದೂರದೊಳು ಮುಳುಗಿ ಭೂಭಾರ ನೆಗಹಿ
ಧೀರ ಕರ್ಣವು ಮಂದವೊ ಹ್ಯಾಗೊ ತಿಳಿಯದು
ಘೋರ ದೈತ್ಯನ ಕೊಲ್ಲೊ ಚೀರಾಟವೊ ೧

ಮೇದಿನಿ ಪತಿಯ ತುತಿಸುವ ಭರದಿ
ನೀ ಧನುರ್ವೇದಗಳನೋದಿಸುವ ನಿರ್ಭರವೊ
ಕಾದÀುವ ರಾಕ್ಷಸರ ಕುಲದ ಕೂಗ್ಯಾಟವೊ
ಮೋದದಿ ಗೋಪಿಯರ ಕೋಲಾಟವೊ ೨
ಬತ್ತಲೆ ನಿಂತು ನುಡಿಯಲಿ ಬಾರದೊಯೆಂತೊ
ಹತ್ತಿದ ವಾಜಿಯು ನಿಲ್ಲದೇನೊ
ಇತ್ತ ಬಾರೊ ವಾಸುದೇವವಿಟ್ಠಲರೇಯ
ಮತ್ತೆ ಹೇಳೊ ನಿಲ್ಲೊ ಬಾಯೆಂತಲೆನ್ನ ೩

 

ಬೆಳಗು – ಕಾಡುಕತ್ತಲೆ
೬೯
ಉಗಾಭೋಗ
ಎಂದಿಗೆ ಕಾಂಬೆ ನಾ ಬೆಳಗು ಮುಂದಿನ್ನು
ಸಂದಿಸಿದೆ ಕಾಳುಗತ್ತಲೆ ಸುತ್ತಲು
ಮಂದಿ ಸಂಗತಿಯು ಈ ಮಾರ್ಗದಲಿ ದೊರಿಲಿಲ್ಲ
ಒಂದು ಗ್ರಾಮಕೆವೈದು ಸೇರಿಸದೊ
ದಂದಶೂಕಾದಿ ಭೀಷಣ ಜಂತುಗಳ ಭಯದಿಂದಲೂ ದಣಿದೆ
ಮುಂದೇನು ಗತಿಯೊ ಹಿಂದೆ ಕಾಯಿದ ಕೃಷ್ಣ
ಇಂದಿಗೂ ಒದಗಲ್ಯಾಕೆ ಬಂದೆನ್ನನೊಂದು ಓ ಎನ್ನಲಿ ವಲ್ಲಿ
ಮುಂದಿನ ಕೇಳಕೆ ದೇವ ಓಡ್ಯಾಕೆ ಬರವಲ್ಲಿ
ಪೊಂದಲ್ಲಿ ಕಾವ ನರಸಿಂಗನೆಲ್ಯೊ
ನಿಂದು ದಿಟ್ಟಿಸಿ ನೋಡೆ ಇಲ್ಲವೆ
ಅಂದವೇನಯ್ಯಾ ಇದು ನಿನ್ನ ಮನಕೆ
ತಂದೆ ವಾಸುದೇವವಿಠಲ ಕೈಪಿಡಿದು
ಮುಂದೆ ಸನ್ಮಾರ್ಗದಿ ನಡಿಸಿ ಕಾಯೊ

 

ಕೌತುಕ ನೋಡಬೇಕೆಂಬುವುದೆ
೧೭
ಉಗಾಭೋಗ
ಕೌತುಕ ನೋಡಬೇಕೆಂಬುವುದೆ ನಿನಗಿತ್ತ
ಭೂತಳವನು ಬರಿದೆ ತಿರುಗಲ್ಯಾಕೆ
ಅತಿಚಿತ್ರ ನಿನಗೊಂದು ಪೇಳುವೆ ಇದರಿಂದ
ಗತಿ ಮುಕುತಿ ಸಕಲ ಸಂಪದವೀವುದು
ಹುತವಹ ಮಂಡಲ ಅದರಲ್ಲಿ ನೆಲಸಿಹ
ಶಶಿರಶ್ಮಿ ಮಂಡಲ ಅದರಲಿ ಉದಿಸುವ
ದ್ಯುತಿ ಭಾನುಮಂಡಲದ್ವಯ ತೋರುತಲಿದೆ
ಅತಿಭದ್ರಿಕೆಯಿದ್ದ ಹೊಳೆವದು ಅದು ನೋಡಿ
ಸತತ ಶ್ರೀ ವಾಸುದೇವವಿಟ್ಠಲ ಇದರಿಂದ
ಅತಿ ಸುಲಭ ಅತಿ ಸುಲಭ ಅತಿ ಸುಲಭ ಕಾಣೊ

 

ಚಿಣ್ಣವತ್ಸನು ……ಕಣ್ಣು ತಪ್ಪಿಸು
೨೧
ಉಗಾಭೋಗ
ಘನ್ನ ಕರುಣಿ ಗೋಪಾಲ ಬಾಲ
ಚಿನ್ನ ವತ್ಸನು ನಾನು ನೋಡ
ಎನ್ನ ಬಿನ್ನಪವ ಲಾಲಿಸಿ ಕೇಳಿ ನೀ
ಮನ್ನಕೆ ತರಲಿ ಬಹುದೆಲವೊ ರಂಗ
ಉನ್ನತ ಫೂಳಿಗಳು ಕೇಳುವವರೆ ಇಲ್ಲ
ಇನ್ನು ವೃಷಭಗಳ ಕೊರಳುಳು ಸಡಲೈಯ್ಯ
ಚನ್ನಾಗಿ ಮೇವುವವು ಬಣವಿಗಳನೆ ಅವು
ಅನ್ಯಾಯ ನೋಡಯ್ಯಾ ತೃಣವು ಮೆಲುವ
ಎನಗೆ ಬಂದಿದ್ದೇನೋ ಮಮತೆಯೆಂಬಾ ಹೆಬ್ಬಾ
ಕಣ್ಣಿಯ ಭಾರವ ಕೊರಳೊಳಗೆ
ಇನ್ನಿದು ಮುಪ್ಪುರಿ ಉರಲು ಬೀಳುವದಾಗ
ನಿನ್ನ ಕಿವಿ ಕೇಳಿಪದೆ ಅದರ ಧ್ವನಿಯು
ಉಣ್ಣಿಸೊ ಉಡಿಸೊ ಇಲ್ಲವೆ ಆಡಿಸೊ
ಕಣ್ಣಿ ತಪ್ಪಿಸು ವಾಸುದೇವವಿಠಲರೇಯ

 

ಇದೊಂದು ನಿಂದಾಸ್ತುತಿ
೨೨
ಉಗಾಭೋಗ
ಜ್ಞಾನಾನಂದ ಬಲದಿ ಎನಗಿಂತ ಕೃಷ್ಣಯ್ಯ
ನಿನಗೇನು ಮಿಗಿಲಿದೆ ಎನಗೆ ಪೇಳೊ
ನೀನಿದ್ದ ಮಾತ್ರವನು ಬಲ್ಲೆಯೋ ನೀನಿತ್ಯ
ನಾನಿದ್ದದಿಲ್ಲವನ್ನು ಕೂಡಬಲ್ಲೆ
ನಿನಗಧಿಕ ಶಕುತಿ ಬಲವುಂಟೊ ವೈಕುಂಠ
ಎನಗಧಿಕ ಭಕುತಿ ಬಲವೊ ಬಲವೊ
ನೀನಧಿಕಸ್ವಾಮ್ಯ ಸೌಖ್ಯವ ಬಲ್ಲೆಯೊ
ನಾನಧಿಕ ದಾಸ್ಯಸೌಖ್ಯ ಬಲ್ಲೆ
ಎನ್ನಯ ಗರ್ವವರಿದೆನೆಂಬದಿತ್ತೆ
ಎನ್ನಲಿದ್ದ ವಿಪರ್ಯವ ಸರಿಯೆ
ನಾನಿಷ್ಟರಿಂದಲೇ ನಮ್ರನಾಗುವೆನು
ನೀನಿತ್ತ ಬಲ ಸೌಖ್ಯ ಅಧಿಕವಾಗಿರಲಿ
ನೀನೆ ಬಲ್ಲೆಯೊ ಭಾವ ವಾಸುದೇವವಿಠಲ
ಆನೇನಂದರು ದಯೆ ಪಾಶದ ವಶನೊ

 

೨೪
ಉಗಾಭೋಗ
ತಂಗಿ ನೋಡುವ ಬಾರೆ ಎನ್ನ ಮನೆಯೊಳ
ಅಂಗಣದೊಳಗೊಬ್ಬ ಶಾಮಲ ಪುರುಷ
ತಿಂಗಳ ಮೊಗದವ ಐದಾನೆ ತನ್ನ ಪಾ
ದಂಗಳಲ್ಲೆ ಎನ್ನ ಪ್ರಾಣ ಮುಖ್ಯ
ಅಂಗಸೋಕಲು ತಾನಿತರ ವಿಷಯಂಗಳ
ಸಂಗವ ಬಿಡಿಸುವ ಎನ್ನ ಪುಣ್ಯ ಆ
ತಂಗೆ ಸಮರ್ಪಿಸಿ ಸುಖಿಸುವ ನಮ್ಮನು
ಹ್ಯಾಂಗಾದರು ಮಾಡಲಿ ವಾಸುದೇವವಿಠಲ

 

೩೨
ಉಗಾಭೋಗ
ಪರಮ ಪಾವನಮೂರ್ತಿ ಹರಿಯೆ ನೀನಯ್ಯ
ಪರಮ ಪಾತಕಿಯೊ ನಾ ಧರೆಯೊಳೆಲ್ಲ
ಪರಮಕೆ ಪರಮಕೆ ಸರಿಹೋದ ಮೇಲಿನ್ನು
ಮರೆವರೇನಯ್ಯ ಪೂತನ ಮಾಡದೆ
ಪರಮ ಪಾವನ ಪರನೊಬ್ಬಿದ್ದರೆಯಿನ್ನು
ತೋರಬಹುದು ಚರಾಚರದೊಳಗೆ
ಪರಮ ಪಾತಕಿಯು ನಾನಾಗದಿದ್ದಡೆ ನಿನ್ನ
ಶರಣರಿಂದೆನ್ನ ಪೂತನ್ನ ಮಾಡಿಸೊ
ಪರಮ ರತುನ ನೀ ಪೊರೆಯದಿದ್ದರೆ ನಿನ್ನ
ಬಿರುದುಪೊಂದೆನ್ನ ಸೆಳೆದು ವೈವೆನೊ
ಕರದು ವಾಸುದೇವವಿಠಲಾರೇಯ
ಮರೆಯು ಸಲ್ಲದಿನ್ನು ಅರಿದ ಮೇಲೆ

 

೪೦
ಉಗಾಭೋಗ
ಮನ ಮನೋಭವನ ಪಿತನ ನೆನೆದನುಸಾರಿಯಾಗಿರೆ
ತನು ಮನೋ ಅನುಕೂಲವಾಗಿ ಅನುಸರಿಸುತಲಿರುತಿರೆ
ತನುಜ ಸತಿ ತನುಸಂಬಂಧಿಗಳನುಸಾರಿಯಾಗಿರುತಿರೆ
ಅನುಚರರ ವಿರೋಧದಿಂದ ತಾ ಉಪಚರಿಸುತಲಿರುತಿರೆ
ಅನುಪಮ ದೇಶಕಾಲದಲ್ಲಿ ವಿಹತಿಗಳು ಮಾಡುತಲಿರೆ
ಅನಿಮಿಷರೊಡೆಯ ವಾಸುದೇವವಿಠಲರೇಯನು
ದನುಜಮರ್ಧನ ಅವನ ಪಾಣಿವನಜಕೆ ಬಂದು ಸಿಲುಕುವ

 

ದಾಶರಾಯನ ಮಗಳಿಗೆ ಮಗನಾಗಿ :
೮೪
ಉಗಾಭೋಗ
ಸಂಸೃತಿ ತೆರೆಯಲ್ಲಿ ಬಿದ್ದು ಮುಳುಗುವೆ ಕೈ
ಸೋತಿತೊ ರಂಗ ಇತ್ತ ನೋಡೊ
ಲೇಸಾಗಿ ಮೊದಲಿಗೆ ದಾಟಿದ ಜನರಂತು
ಈಸರಿತು ಮುಟ್ಟಲಂಜುವರೊ
ಈ ಸಮಯದಲ್ಲಿ ಈಸು ಜನರು ತಮ್ಮ
ಈಸೊ ಭರದಿ ತಿರುಗಿ ನೋಡರಿತ್ತ
ದಾಶರಾಯನ ಮಗಳಿಗೆ ಮಗನಾಗಿ ನೀ
ಕಾಸು ಬೇಡದಲೆ ದಾಟಿಸುವದಕೆ
ನೀ ಸುಕೃತದ ಗುತ್ತಿಗನಂಬಿನಾಗೆ
ವ್ಯಾಸ ನಿನಗಿನ್ನು ಇದು ತಪ್ಪದೊ
ದಾಸರ ಶಿಶುವಿನ ಉಸಿರು ಮನಕೆ ತಂದು
ವಾಸುದೇವವಿಠಲ ಒಡೆಯೊ ಕೈ ಪಿಡಿಯೊ

 

೪೫
ಉಗಾಭೋಗ
ಸಿರಿಬೊಮ್ಮಾದಿಗಳೊಡೆಯ ನೀನು ಎನ್ನ
ಹರಣದೊಡೆಯನೆಂದು ತುತಿಪೆನಯ್ಯ
ವೇದ ಮೊದಲಾದಾಗಮಕಾಗೋಚರನೆ
ತೊದಲು ನುಡಿಗಳಿಂದ ತುತಿಪೆನಯ್ಯ ವಿ-
ವಿಧ ರಸಂಗಳಸುರರಿಗೆ ಸೇವಿಪಂಗೆ ಹವಿ
ರುದಕವನಿಟ್ಟು ಸಲಿಸೆಂಬೊನೊ ಬೊಮ್ಮ
ಮೊದಲಾದ ಭಕುತ ಮುಕುಟವಿರೆ
ಸುಮ್ಮನೆ ನಾನೊಬ್ಬ ಭಕುತನೆಂದೋಡುವೆ
ಈಸಪರಾಧವು ಸಹಿಸದೆ ಪೋದರೆ
ವಾಸುದೇವವಿಟ್ಠಲ ಎನಗಾವ ಗತಿಯೋ

 

ಹರಿ ನಿನ್ನ ಮೂರುತಿ ಕಾಮಧೇನು
೪೭
ಉಗಾಭೋಗ
ಸುರರನುಳಿಸಬಲ್ಲಿ ದುರುಳರಳಿಸಬಲ್ಲಿ
ಸಿರಿ ವಶ ಮಾಡಬಲ್ಲಿ ವೈದ್ಯರಾಜ
ದೊರೆಯೆ ಧನ್ವಂತ್ರಿಯೆ ತರಳ ನಾನೆಂದು ಬೇಡುವೆ ಬಲ್ಲಿಯಾ
ಮರುಳು ಮಾಡುವ ಔಷಧವ
ಹರಿ ನಿನ್ನ ಮೂರುತಿ ಕಾಮಧೇನು ತೋರಿ
ಸರಿವುತಿದೆ ಹೃದಯ ಗೋಷ್ಟದಿಂದ
ಕರುವು ಆದ ಮನ ಚಿಗದಾಡುತಲಿದೆ
ಕರದುಕೊಂಬೆನೊ ನಾ ಇನ್ಹ್ಯಾಂಗೆ ಸುಧಿಯ
ಸ್ಥಿರ ದಯಪಾಶವ ಕೊರಳಲ್ಲಿ ಕೊಟ್ಟಿಟ್ಟಿ
ಪರಮ ಭಕುತಿಪಾಶ ಚರಣಕ್ಕೆ ತಳೆಹಾಕಿ
ಗುರುದಯ ರಸ ಬೆರೆತ ಪುಣ್ಯ ಮುರವನಿಕ್ಕಿ
ವರ ಲವಲವಿಕೆಯೆಂಬದಾವಿನಿಂದ
ಕರು ಕರವಶಮಾಡಿ ಚಿತ್ತ ಪಾತ್ರಿಯಲ್ಲಿ
ಭರದಿ ಸುಧೆಯ ಕರೆದುಕೊಂಬಂತೆ ಮಾಡಯ್ಯ
ಮರುಳ ಮೆಚ್ಚುದಿ ಕರುವಿಗೆ ತುರುವಿಗೆ
ಸುರರಲ್ಲಿ ಈ ಪರಿ ಮಾಡಿದದನು ಬಲ್ಲೆ
ಕರೆದುದಷ್ಟು ಮೀಸಲು ಹಾಕುವೆ ನಿನಗೆ
ಸಿರಿ ವಾಸುದೇವವಿಠಲರೇಯ
ಮರೆಯಾದೆ ಮಾಡಯ್ಯ ಪರಮಪೂತನನೆ

 

ಭಗವಂತನ ಸಂಕೀರ್ತನೆ

ಸುಳಾದಿರಾಗ – ನೀಲಾಂಬರಿ ಧ್ರುವ ತಾಳ
ಅಕ್ಕಾ ಎನ್ನಯ ಸ್ಥಿತಿ ಕೇಳೆ ಆರಿಗೆ ಪೇಳ-
ತಕ್ಕದ್ದಲ್ಲವೆ ಇದು ನಗುಪಾಟಲೆ
ಚೊಕ್ಕ ಸತಿಯರಲ್ಲಿ ಒಲಿದಿತ್ತಾ ಬಲುಸುಖ
ಚಕ್ರಧರನು ಎಂದು ಕೇಳುತಲಿ
ಚಿಕ್ಕವಳೆ ನಾನು ಏನು ಅರಿಯೆ ತಾಯಿ
ಘಕ್ಕನೆ ಒಳಗಂಟು ಸಡಿಲಿತವ್ವ
ಮಕ್ಕಳು ನಗುವುದು ಎಚ್ಚರಿಲ್ಲವೆ ದೇಹ
ಮಿಕ್ಕಾದ ಪರವಿಲ್ಲ ಮರುಳಾದೆನೆ
ಅಕ್ಕಟಕ್ಕಟ ವಾಸುದೇವವಿಠಲರೇಯ ಹ್ಯಾಗೆ
ಅಕ್ಕರವನೆ ಮಾಡಿ ಎನ್ನ ಸಂತೈಸುವ ೧
ಮಟ್ಟತಾಳ
ತರಳೆ ತಂಗಿಯೆ ಕೇಳು ಎದಿ ಹಾರಲಿ ಬೇಡ
ಮರಳು ಪರಿಯುವುದೊಂದೇ ತರುಣೇರಿಗೆಲ್ಲ
ಮರಿಯದೆ ರಹಸ್ಯ ಸರಣಿಯು ಪೊಂದಿರೆ
ಪರತರ ವಾಸುದೇವವಿಠಲ ದೊರಕುವ ೨
ತ್ರಿವಿಡಿ ತಾಳ
ಆನು ಹುಡುಗಿ ಇನ್ನು ಹೃದಯ ವಿಸ್ತ್ರತವಿಲ್ಲ
ಜ್ಞಾನವು ರತಿಯಲ್ಲಿ ಮೊದಲಿಗಿಲ್ಲ
ಹೀನಳು ಗುಣದಲ್ಲಿ ರೂಪದಲಿ ಚಲುವಿಕೆ
ಏನಾದರೂ ಇಲ್ಲ ಹ್ಯಾಗೆ ತಾಯಿ
ಭಾನುಕೋಟಿ ಸನ್ನಿಭ ವಾಸುದೇವವಿಠಲ
ತಾನು ಮೆಚ್ಚುವ ಎನ್ನ ಸುಗುಣೋತ್ತಮ ೩
ಅಟ್ಟತಾಳ
ಗುಣವ್ಯಾಕೆ ರೂಪ್ಯಾಕೆ ದೋಷಗಳಿರಲ್ಯಾಕೆ
ಮನ ಮೆಚ್ಚಿಕೆವೊಂದೆ ಆತಂಗೆ ಮುಖ್ಯ
ಅನುಮಾನಿಸಬೇಡ ಆತನ್ನ ಮೊರೆಹೋಗು
ಮನದಾಶೆ ನೀಡುವ ವಾಸುದೇವವಿಟ್ಠಲ ೪
ಆದಿತಾಳ
ಧ್ವನಿ ಕೇಳಿಸುತಿದೆ ಕೇಳೆ ಕೊಳಲಿನ ಹರಿಯ
ಮನಿ ಸೇರುತಲಿವೆ ಗೋವುಗಳು ನಿಶ್ಚಿತ
ಮನ ನಿಶ್ಚಿತ ಮಾಡಿ ಎದುರಿಗೆ ತೆರಳುವೆ
ಮನ ಮೆಚ್ಚಲಿಹನೆ ಹರಿಯನು ನೀನು
ಬಿನುಗು ವಿಷಯ ಬಿಡು ಮನಸು ಏಕವ ಮಾಡು
ವನಜಾಕ್ಷ ವಾಸುದೇವವಿಠಲ ಬಂದ ೫
ಜತೆ
ಆನು ಧನ್ಯಳಾದಿನೆ ಆನು ಕೃತಾರ್ಥಳು
ತಾ ನಿಂದ ವಾಸುದೇವವಿಠಲರೇಯ ೬

 

ಕಂಚಿ ವರದರಾಜ

ಸುಳಾದಿ
ರಾಗ-ವರಾಳಿ ಧ್ರುವ ತಾಳ
ಅನೇಕ ಶಕುತಿಯುಳ್ಳವನೆಂದು
ಅನೇಕ ಯುಕುತಿಯುಳ್ಳವನೆಂದು
ಅನೇಕ ಆಗಮ ಕೇಳಿ ಬಲ್ಲೆನಯ್ಯ
ಅನೇಕ ಕಾರ್ಯದಿ ಅನುಮೇಯಿಸುವೆ
ಅನೇಕ ಬೇಡುವೆ ನೀಡೊ ಹಯವದನ
ಅನುಭವ ವೆನÀಗಿನ್ನು ಎನಿತು ಬಾಹುದೈಯ್ಯ
ಅನುಭವ ಮಾತುರ ಎನಗೆ ಪಾಲಿಸು ದೇವ
ನೀನೇಕನಾಗಿ ಮನಸು ಶಳವಿಲಿ
ಅನೇಕ ತಾವಾಗಿ ವಿಷಯಂಗಳು
ಅನವರತದಿ ಶಳಿಯೆ ಮಿಗಿಲಿನ್ನು
ಅನುಭವ ಎನಗಿನ್ನು ಎನಿತು ಬಾಹುದಯ್ಯ
ಅನುಭವ ಮಾತುರ ಎನಗೆ ಪಾಲಿಸೊ ದೇವ
ನೀನೆ ವಾಸುದೇವವಿಠ್ಠಲೆನ್ನ ಶಣಿಸದಂತಲೆ ಮಾಡು ೧
ಮಟ್ಟತಾಳ
ಮೊದಲಿನ ಭಕುತರು ನಿನಗೆ ಕೊಡುವದೇನು
ಹೃದಯದ ಸಾಕ್ಷಿಯೆ ಅನುಬಿಡುವದೇನೊ
ಮದನ ಜನಕನೆ ಅವರಿಂದ ನಿನಗೇನೊ
ಸದಯ ವಾಸುದೇವವಿಠಲ ಪೂರ್ಣಕಾಮ ೨
ತ್ರಿವಿಡಿ ತಾಳ
ನಿನ್ನ ಪ್ರೇರಣೆ ಹೊರತು ಆರನ್ನ ತಾವೇ ಸಾ-
ಧನ್ನ ಮಾಡುವರುಂಟೆ ನೀ ಪಿಡಿ ಕೈಯ್ಯ
ಎನ್ನ ಪ್ರೇರಿಸಲು ಸಾಧನ ಮಾಡಲಾರೆನೆ
ಘನ್ನ ವಾಸುದೇವವಿಠಲ ಕರುಣಿಯೆ೩
ಅನ್ಯ ಸಾಧನೆಗಳು ಕೊಡುಕೊಡದಲೆ ಬಿಡು
ಉಣಿಸೆನ್ನಯ ಕರ್ಮ ಪಣ್ಣಾದರೆ
ಘನ್ನ ವಾಸುದೇವವಿಠಲರೇಯ
ನಿನ್ನ ಚರಣಸ್ರ‍ಮತಿ ಅನವರತವೀಯೊ ೪
ಆದಿತಾಳ
ಬೊಮ್ಮನಂತೆಲೇನು ಜಗವ ಸೃಜಿಸುವೆನೆ
ಉಮ್ಮೆಯರಸನಂತೆ ಜಗವ ಸೀಳುವೆನೆ
ಸುಮ್ಮನಸರ ಓಲ್ ಜಗವನಾಳುವೆನೆ
ಸನ್ಮುನಿಗಳ ಪಾದಸೇವೆಯ ಬೇಡುವೆ
ನಮ್ಮ ವಾಸುದೇವವಿಠಲರೇಯಾ
ಎಮ್ಮಾತುರಕೆ ನೀ ತಡ ಮಾಡುವರೆ ೫
ಜತೆ
ಆನೇನರಿಯೆ ವಾಸುದೇವವಿಠಲರೇಯನೀನೇವೆ ಒಲಿದೆನ್ನ ದಯದಿಂದ ಸಲಹೊ ೬

 

೬೭
ಸುಳಾದಿ
ರಾಗ ಭೈರವಿ ಧ್ರುವ ತಾಳ
ಆರಿಗೆ ಉಸರಲಿ ಆರಿಗೆ ಮೊರೆ ಇಡಲಿ
ಆರೆನ್ನ ಮನದಳಲು ನಿವಾರಿಸುವರ ಕಾಣೆ
ಮೇರೆ ಇಲ್ಲದೆ ಪೋದ ವಿಷಯ ಶಳವುತಿದೆ
ಭಾರೊಮ್ಮೆ ಮುಂದಣಾಶಾ ತೋರಿ ಎಳವುತಿದೆ
ತೋರಿ ನೀ ತೋರಿಸು ತೋರದೆ ಪೋದರೆ ಎನ್ನ ಎದೆ ಮನ
ಹಾರಿ ಬೀಳುತಲಿದೆ ಗತಿ ಏನೊ ಎಲೊ ಕೃಷ್ಣ
ಸಾರಿ ಸಾರಿಗೆ ಇದನೆ ಬೇಡುವೆನೇ ಅನ್ಯನ್ನ
ದಾರಿ ತಪ್ಪಿಸಿ ನಿನ್ನ ದಾರಿಯ ಪಿಡಿಸೆನ್ನ
ಕಾರುಣಿಕ ರಂಗ ಮೊರೆಯೊಕ್ಕ ಭಕತನ್ನ
ಮಾರಿಗೆ ಒಪ್ಪಿಸದೆ ಸಾರೆ ಗರಿಯೊ ದೇವ
ವಾರಿಜಾಕ್ಷ ವಾಸುದೇವವಿಠಲರೇಯ
ದೂರ ನೋಡದೆ ದಯವಾರಿಧೆ ಪೊರೆಯೆನ್ನ ಪೊರೆಯೊ ೧
ಮಟ್ಟತಾಳ
ಧನದಲ್ಲಿ ಬಡತನ ಸಹಿಸಲಿ ಬಹುದೈಯ್ಯಾ
ಜನಪತಿ ಕೋಪವ ತಡೆಯಲಿ ಬಹುದೈಯ್ಯಾ
ವನಿತೆಯರ ಕಟಾಕ್ಷವ ಕ್ಷಮಿಸಲಿ ಬಹುದಯ್ಯಾ
ಮನೆಯೊಳು ಕಲಹವ ತಾವರಿಸ ಬಹುದಯ್ಯಾ
ಜನಗಳ ದೂರನ್ನ ಸೈರಿಸ ಬಹುದಯ್ಯಾ
ವನಜ ನಯನ ವಾಸುದೇವವಿಠಲ ನಿನ್ನ
ಮನದಲಿ ಯೋಚಿಸಿನ್ನು ಸಹಿಸಲಿ ವಶವಲ್ಲ ೨
ತ್ರಿವಿಡಿ ತಾಳ
ಏನು ಬಿಟ್ಟರಿ ಬಿಡೊ ಏನು ಕೊಟ್ಟರೆ ಕೊಡೊ
ಆನೇ ನಂಬುವುದಿಲ್ಲ ಮನದೊಳು ಇನಿತನ್ನ
ನೀನೇವೆ ಕೇಳ್ ಕಾಂತಾ ಮನಸಿನ ಬಯಕಿದೆ
ಮಾನದೊಡೆಯ ವಾಸುದೇವವಿಠಲರೇಯ
ದೀನ ವತ್ಸಲದೇವ ಮುನಿಸಿನ್ನು ಬಿಡೊ ಕೃಷ್ಣ ೩
ಅಟ್ಟತಾಳ
ಒಲಿಸಿ ವನಿತೆ ಎನ್ನ ತಿಳಿಸಿ ಸೌಖ್ಯಗಳೆಲ್ಲ
ಛಲಿಸಿ ಅವಳ ಕೂಡ ಒಳಿತಲ್ಲ ಮುನಿಸೀಗ
ಬಲುದೋಷ ಇದರಿಂದ ತಿಳಿದಾತ ನೀನಲ್ಲೆ
ಸುಳಿಯೊ ವಾಸುದೇವವಿಟ್ಠಲ ದಯಾನಿಧೆ ೪
ಆದಿತಾಳ
ಮುನಿಗಳು ಬಹು ವ್ಯಾಪ್ತಿ ನಿನಗೆ ಪೇಳುವದೆಲ್ಲ
ಎನಗೊಂದಾದರು ಅದು ಮನಕೆ ಬಾಹುದಲ್ಲೊ
ಘನ್ನ ವ್ಯಾಪ್ತಿಯು ನಿನಗಿದೆ ಅಣುವಾದ ಎನ್ನ
ಮನವನು ಪೋಗದೆಲಿಹ್ಯದಿನೆ ಲೇಶ ನಿನಗಿದೆ
ಬಿನುಗು ವಿಷಯಗಳು ದಣಿಸೊವೆ ಅದರನ್ನ
ಘನ ಮಹಿಮನೆ ವಾಸುದೇವವಿಠಲರೇಯಾ
ಅನುಭವ ಕೊಡು ಕಂಡ್ಯಾ ದನುಜಮರ್ದನ ಕೃಷ್ಣ ೫
ಜತೆ
ಭಕತರ ದೂರಿಗಂಜ್ವ ವಾಸುದೇವವಿಟ್ಠಲ
ಶಕತಾಳೆ ಮಿಗಿಲಾಗಿ ಬಿನ್ನೈಸುವದಕೆ ೬

 

೭೦
ಸುಳಾದಿ
ರಾಗ ಭೈರವಿ ಧ್ರುವ ತಾಳ
ಎಂದಿಗೆ ದುರ್ವಿಷಯ ಹೇಯತಿ ಮತಿಯಿನ್ನು
ಇಂದಿರೇಶ ಎನಗೆ ಪುಟ್ಟುವದೊ
ಇಂದಿಗೂ ಪುಟ್ಟಲಿಲ್ಲ ಮುಂದೆನ್ನ ಗತಿಯೇನೊ ಮುಕುಂದನೆ
ಮಂದಿಗೆ ಮಾತುರ ಉಪದೇಶ ಮಾಡುವೆ
ಒಂದು ಬಾರಿ ನಿನ್ನ ಧ್ಯಾನ ಮಾಡೆ
ಸುಂದರಿಯರ ಕಂಡು ಕುಂದಿದೆ ಮನದಲ್ಲಿ
ಸಂದು ಸಿಕ್ಕಲು ಸಾಂಕೇತವನು ಮಾಡದೆ ಬಿಡೆ ಬಿಡೆ
ಮುಂದೆನ್ನ ಚರಿಯವನ್ನು ವೃಂದಾರಕರು ಕಂಡು
ಛಂದದಿ ಕೈ ಹೊಡದು ನಗುತಿಹರೊ
ಮಂದರಧರ ಗೋವಿಂದ ಎನ್ನಯ ಬುದ್ಧಿ
ಅಂದದಿಂದಲಿ ತಿದ್ದೊ ವಂದಿಸುವೆ
ಕಂದರ್ಪನಯ್ಯನೆ ನೀನು ನಗಲಿ ಬೇಡ
ಎಂದಿಗಾದರು ಗತಿಯಾಗದಿನ್ನು
ಮುಂದಕೆ ಬರಲಿ ಬಡವ ಇವನೆಂತೆಂದು
ತಂದೆ ಶ್ರೀ ವಾಸುದೇವವಿಟ್ಠಲ ದಯ ಮಾಡೊ ೧
ಮಟ್ಟತಾಳ
ತನ್ನ ಶಿಶುವಿನ್ನು ತಪ್ಪು ಹೆಜ್ಜಿಗಳಿಡೆ
ಜನರು ನಗುವರೊ ಕೈಗಳ ಹೊಡೆದು
ಜನನಿಯು ತಾ ಕಂಡು ಚಿನ್ನರು ಹೋ ಎಂದು
ಬಣ್ಣಿಸಿ ತನಯನ ಉಣ್ಣಿಸಿ ನಡಿಸುವಳೋ
ಘನ್ನ ವಾಸುದೇವವಿಟ್ಠಲರೇಯ
ಎನ್ನ ಮನದ ನಡತಿಯನು ನೀನೆ ತಿದ್ದಲಿ ಬೇಕು ೨
ತ್ರಿವಿಡಿತಾಳ
ಧಾನ್ಯಂಗಳು ಸಂಗ್ರಹಿಸುವ ಜನರೆಲ್ಲ
ಚನ್ನಾಗಿ ಬಿಡುವರೊ ಜೊಳ್ಳು ಮಾತ್ರ
ಸಣ್ಣವು ಇವುಯೆಂದು ಧಾನ್ಯವು ಬಿಡುವುದೆ
ಚಿನ್ನಿವಾರನು ತನ್ನ ಬಳಿಗೆ ಬಂದ
ಹೊನ್ನುಗಳೊಳಗೆ ಹಿತ್ತಾಳೆ ಬಿಡುವನು
ಬಣ್ಣದ ಕಡಿಮೆ ಹೊನ್ನುಗಳ ತಾ ಬಿಡುವನೆ
ಇನ್ನಿದು ನೀ ತಿಳಿದು ಶ್ರೀದೇವಾ ನೀ
ಎನ್ನನು ಪ್ರಲ್ಹಾದಾದಿಕ ಭಕ್ತ ಜೀವರೊಳಗೆ
ಎನ್ನ ಗಣನೆ ಮಾಡಿ ತಕ್ಕದಾದರು ಸಾ
ಧನ ಮಾಡಿಸಬೇಕು ಬಿಡಸಲ್ಲದೊ
ಸನ್ನ್ಯಾಯ ಮೂರುತಿ ವಾಸುದೇವವಿಠಲ
ನಿನ್ನವನಿವನೆಂದು ಎನ್ನ ಸಲಹೊ ೩
ಅಟ್ಟತಾಳ
ತರಳನ್ನ ಬಿನ್ನಪ ಮನಕೆ ತರಲಿ ಬೇಕು
ಶರಣೆಂದ ಜನರನ್ನ ಪೊರೆವಿಯೊ ನಿಶ್ಚಯ
ಪರಿಚಾರಕ ಜನರವರಿಗೆ ಬೇಕು
ಸುರರೊಡಿಯನೆ ದೇವ ನೀನು ಎನಗೆ ಈ ಪರಿ ಇನ್ನು
ಥರವಲ್ಲದಿದ್ದರೆ ಅವರವರ ಪಾದ
ಚರಣ ಸೇವಕ ಪಾದದಲ್ಲ್ಯಾದರು ಎನ್ನ
ಸ್ಥಿರ ಮಾಡೊ ಶ್ರೀ ವಾಸುದೇವವಿಠಲರೇಯ ೪
ಆದಿತಾಳ
ತನುವಿನ ಮನಸಿನ ಒಡೆಯನು ನೀನೆಂದು
ಮನಸಿಗೆ ಬಂದಂತೆ ವಚನಗಳಾಡುವೆ
ಮುನಿಸು ಮಾಡದೆ ನೀ ಕ್ಷಮೆ ಮಾಡಲಿ ಬೇಕು
ಕನಸಿನಲಿ ಮನಸಿನಲಿ ತನುವಿನಲಿ ನಾ ಅನ್ಯ –
ಜನರ ಸಂಗತಿ ಒಲ್ಲೆ ವಾಸುದೇವವಿಟ್ಠಲ ೫
ಜತೆ
ದುರ್ವಿಷಯ ಬಿಡಿಸಿನ್ನು ವಾಸುದೇವವಿಟ್ಠಲ
ಸರ್ವಬಗೆಯಲಿ ಪೊರೆಯೊ ನಿನ್ನವನು ನಾನು ೬

 

ಕೃಷ್ಣನನ್ನು ಕಂಡ ಕೂಡಲೆ
೧೫
ಸುಳಾದಿ
ರಾಗ-ನಾಟಿ ಧ್ರುವತಾಳ
ಎನ್ನಯ ನಾಯಕಿಯ ಸ್ವಾಮಿಯ ಕಂಡಂತೆ
ನಿನ್ನ ನೋಡಲಾಯಿತೊ ಪ್ರಾಣಪ್ರಿಯ ದೂತನೆ
ಚನ್ನಾಗಿ ನೋಡೊ ಇವಳ ಪರಿಯನ್ನು
ಬಿನ್ನಪ ಮಾಡುವೆ ಅಪರಾಧಗಳ
ನಿನ್ನಂತ ಘಟಕರ ಇನ್ನೊಬ್ಬರ ಕಾಣೆ
ಮನವಿಟ್ಟು ನೀವೆನೆ ವಾಸುದೇವವಿಠಲಂಗೆ
ಬಿನ್ನೈಸಿ ಕೊಡಿಸೊ ಘನ್ನ ದಯಾನಿಧೆ ೧
ಮಟ್ಟತಾಳ
ಪತಿಯ ಬಳಿಯಲಿದ್ದು ಪತಿಯ ಮನವರಿಯಳೊ
ಅತಿಶಯ ಸುಖವಿತ್ತು ವಿಭವ ತೋರಿಸಲಾಗ
ಮತಿಯಲಿ ಸುಖ ರತಿಯಲಿ ಮನ ಉಬ್ಬಿ
ಸ್ರ‍ಮತಿಯನು ಕಳಕೊಂಡ-
ಡತುಳಜ್ಞವ ಮೀರಿ ಹಿತ ಗೆಳತಿಯ ಮುಂದೆ
ರತಿಯ ಸುಖವ ಪೇಳಿ ಪತಿ ವಾಸುದೇವವಿಠಲ
ಪತಿತಳು ಇವಳೆಂದು ಅತಿ ವ್ಯವಹಿತನಾದ ೨
ತ್ರಿವಿಡಿತಾಳ
ಸತಿಯರೊಳಗಿವಳು ಅತಿಮುಗ್ಧ ವಧುವಳು
ಗತ ಅಗತೆವೊಂದೂ ಮತಿಯಲ್ಲಿ ಅರಿಯಳೊ
ಖತಿಯನ್ನು ತನಗೆ ತಾ ಕೃತಿಸಿ ಕಂಡವರಲಿ
ಅತಿ ಬಾಯಿ ಬಿಡುವಳೊ ಗತಿಯೇನು ಇದಕಿನ್ನು
ರತಿಪತಿಪಿತ ವಾಸುದೇವವಿಠಲರೇಯ
ಹಿತವಾಗುವಂತೆ ಉಪಕೃತಿ ಮಾಡೊ ಹಿತನೆ ೩
ಅಟ್ಟತಾಳ
ಧವಬಿಟ್ಟ ವಿರಹದ ಭವಣಿಯಿಂದ ಅವಳಿಗೆ
ನವಗಂಧಗಳೆ ಬಂಧ ಸುವಸ್ತ್ರವೇ ಶಸ್ತ್ರ
ಭವನವೆಂಬೊಂದೆ ಬಲು ಕುವನವಾಗಿವಳಿಗೆ
ನವಚೂತ ಪಲ್ಲವ ಸವಿಧಾವಿ ಪಲ್ಲವ
ವಿವಿಧ ತಾಪಗಳನುಭವಿಸುವ ಇವಳನ್ನು
ಭುವನೇಶ ಶ್ರೀ ವಾಸುದೇವವಿಠಲ ಪಾದ
ಸುವಿಮಲತರ ನಖಶಿಶಿ ಛವಿಯಿಂದ ಪಾಲಿಸೊ
ಪ್ರವಣ ನಾ ಮರಿಯೆನೊ ಭುವನದೊಳಗೆ ನಿನ್ನ
ಆದಿತಾಳ
ಅನಲಿ ಬಹುದುವೊಂದು ಅನಲಿಕ್ಕೆ ಬಾರದು
ಇನಿತಪರಾಧದಿ ದಣಿವುದೆ ಸಾಕು ಕನಿಸಿಲಿ ಬೇಡೆಂದು
ಮುನಿಸಿನಲಿ ಹೇಳೆಂಬನು ಬ್ಯಾರಿದ್ದಾನೆ
ಅನುದಿನ ನೀಬಲ್ಲಿ ವನಜಾಕ್ಷಿಯ ತನು
ಮನ ಅಸು ಉಳಿಸೆಂದು ವಿನಯದಿ
ವಾಸುದೇವ ವಿಟ್ಠಲಗೆ ಪೇಳೊ ೫
ಜತೆ
ಒಲಿದು ವಾಸುದೇವವಿಠಲನು ಬಾಲಿಗೆ
ಸುಳಿದು ಪೊರೆ ಎಂದು ತಿಳಿಸೋ ಏ ಪ್ರಿಯಾ ೬

 

ನುಡಿ-೪: ಕರ್ದಮ ಸೌಬರಿ
೭೫
ಸುಳಾದಿ
ರಾಗ ಭೈರವಿ ಧ್ರುವ ತಾಳ
ಒಲ್ಲೆ ವಿಷಯಗಳೆಂದವರಿಗೆ ಬಂ-
ದಲ್ಲದೆ ದ್ವಿಗುಣಿತ ವಿಷಯವೆಂಬ
ಫಲ್ಲಿಸುತಿಪ್ಪ ಅದರಲ್ಲಿ ನೀನೆವೆ
ಬಲ್ಲಿದನೆಂಬನುಭವಸಿದ್ಧ
ಒಳ್ಳಿತು ನಾವೊಂದು ಮಾಡುವೆ ಬಿನ್ನಪ
ಸಲ್ಲಿಸಬೇಕಲ್ಲದಿದ್ದರುಪೇಕ್ಷ
ಸಲ್ಲದೊ ಕೃಷ್ಣಯ್ಯಾ ವಿಷಯದೊಳಿದ್ದದ್ದು
ಸಿಲುಕದ ಜನರು ಇಪ್ಪರಂತೆ
ವಲ್ಲಭ ನೀನಿದು ತೋರಿಸೊ ಎನ್ನಲಿ
ಇಲ್ಲದಿದ್ದರೆ ಮಹಾ ಶಕುತಿ ಏನೊ
ಮಿಳ್ಳಿತಯೇ ನೀನಾಗಿ ವಾಸುದೇವವಿಟ್ಠಲ
ಒಲ್ಲಯೊ ವಿಷಯದ ಸಾರಭೋಕ್ತ ೧
ಮಟ್ಟತಾಳ
ಬಡತನ ಹಿಂಗದಿರೆ ದೊರೆಗಳು ತಾವಾಗಿ
ಪಿಡಿದು ಅವಗೆ ಮೇಟಿ ಪೊಲಗಳು ಕಟ್ಟೀಗ
ತಡಿಯದೆ ಬೇಕಾದ ಸಕಲ ಸಾಧನ ನೀಡಿ
ನಡಸುತ ಬರುವಂಥ ದೊರೆಗಳ ಅಭಿಮಾನ
ಪೊಡವಿಗೆ ಪತಿ ವಾಸುದೇವವಿಟ್ಠಲ ನೀನೆ
ಒಡೆಯ ಎನ್ನ ಭಾರ ನಿನಗಲ್ಲದೆನಗೇನೊ ೨
ತ್ರಿವಿಡಿತಾಳ
ನೀನೆ ಗುಣಾಕರನೊ ನಿಖಿಳ ಲೋಕದಲ್ಲಿ
ಆನೆ ಅನೇಕಾನೇಕ ದೋಷಾಕರನೊ
ನೀನೆ ಪರಮ ಶಕುತಿ ಉಳ್ಳಮರನಿಕರದೊಳು
ಆನೇವೆ ದುರ್ಬಲರೊಳು ಮೊದಲೀಗ
ನೀನೆ ಸ್ವಾತಂತ್ರ ತ್ರಿವಿಧ ಸತ್ವಗಳಲ್ಲಿ
ಆನೆ ಪರಾಧೀನ ಅಖಿಳರೊಳಗೆ
ನೀನೆವೆ ಭಾಗ್ಯದೇವತೆಯ ವಲ್ಲಭನೊ
ಆನೇವೆ ಕೃಪಣರೊಳು ಕೃಪಣನಯ್ಯ
ಏನೆಂಬೆ ಹೀಗಿರಲು ಎನ್ನಯ ಬಿನ್ನಪ
ನೀನೇಕ ಚಿತ್ತದಿ ಕೇಳುವುದು
ಆನೆವೇ ನಿನಗೆ ಮರುಳಾದನೇನಯ್ಯ
ಶ್ರೀನಾಥ ನಿನ್ನ ಪ್ರೇರಣೆಯಲ್ಲದೆ
ಅನಾಥ ಬಂಧು ವಾಸುದೇವವಿಟ್ಠಲರೇಯಾ
ನೀನಾದರದಿ ಕೇಳೊ ದುರಿತ ಕೀಳೊ ೩
ಅಟ್ಟತಾಳ
ಕರ್ದಮ ಸೌಭರಿ ಕಶ್ಯಪ ಮೊದಲಾದ
ದುರ್ದಮ ಮುನಿಗಳು ನಿನಗೆ ಮಾಡಿದುದೇನೊ
ನಿರ್ದಯ ಎನ್ನಲ್ಲಿ ಮಾಡುವರೆ ದೋಷ
ಮರ್ದನ ಶ್ರೀ ವಾಸುದೇವವಿಟ್ಠಲರೇಯ ೪
ಆದಿತಾಳ
ಬಲು ವಿಧ ಸಾಧನ ಜಗದೊಳು ನೀ ಬಲ್ಲಿ
ಛಲವ್ಯಾತಕೊ ಬಡವಗೆ ಇದರಲ್ಲಿ
ತಿಳಿದ ಸಾಧನವಿತ್ತು ವಾಸುದೇವವಿಟ್ಠಲ
ಫಲವಾಗುವಂತೆ ನಿನ್ನ ಭಕುತೀಯ ನೀಡೊ ೫
ಜತೆ
ಸಾಧನದೊಳಗಿದ್ದು ವಾಸುದೇವವಿಟ್ಠಲಾ-
ರಾಧನೆ ಮಾಡಿಸೊ ಸಾಧ್ಯ ನೀನಾಗಿ ೬

 

೨೦
ಸುಳಾದಿ
ರಾಗ-ನಾಟಿ ಧ್ರುವತಾಳ
ಖಳಕುಲ ಮರ್ದನ ದೇವನೆಇಳಿಯ ಭಾರವ ಇಳಿಸುವ ಸ್ವಾಮಿಯೆತಿಳಿಸಿ ಸದ್ಧರ್ಮಗಳ ಸಾಧು ಜನರಲ್ಲಿಉಳಿಸಿ ಸಲಹುವ ದೊರೆಯು ನೀನಾಗಿರೆತಿಳಿಸುವೆ ಈ ಕಾಲಸ್ಥಿತಿಯ ಮನಕೆ ತಂದುಉಳಿಸೊ ವಾಸುದೇವವಿಟ್ಠಲ ಧರ್ಮಗಳ ೧

ಮಟ್ಟತಾಳ
ದುರಳರು ಮೊದಲೀಗಧರಣಿಯನೊಬ್ಬ ತೆರಳಿ ದೇಶವು ತಿರುಗಿಪುರಗಳಳಿಸುವ ಉರಳಿಸುತ ಲೋಕಶಿರಗಳ ಬಾಹನ್ನ ಮರಳಿ ಶ್ರೀ ವಾಸುದೇವವಿಟ್ಠಲ ವೀರನೆ ೨

ತ್ರಿವಿಡಿತಾಳ
ಒಂದಿಷ್ಟು ದಯವಿಲ್ಲ ಹೆಣ್ಣುಮಕ್ಕಳ ತನ್ನಮಂದಿಗೆ ಕೊಟ್ಟಿನ್ನು ಜಾತಿಯ ಕೆಡಿಸುವವಂದಿತ ಜನರನ್ನು ನಿಂದಿತರನು ಮಾಡಿಕುಂದಿಸುವವನ ಕೂಡಿ ಇಂದೆಮ್ಮ ಪೊರೆಯೈಯ್ಯತಂದೆ ವಾಸುದೇವವಿಟ್ಠಲರೇಯನೆಎಂದೆಂದಿಗೆ ನಮ್ಮ ಪೊರೆವ ದೊರಿಯೆ ನೀನು ೩

ಅಟ್ಟತಾಳ
ಶಿಶುವಿನ್ನ ಸ್ಥವಿರನ್ನ ಎನ್ನ ದ್ವಿಜರನ್ನಪಶುವಿನ್ನ ಮೊದಲು ನೀ ಪೊರೆದೆ ಒಬ್ಬಿಬ್ಬರವಸುಮತಿ ತುತಿ ಇಷ್ಟು ಮೊರೆ ಇಡುತಿದೆ ಈಗೆವಶರಾಗರೆ ದೇವ ಕಿವಿಯು ಕೇಳುವದಿಲ್ಲೆಪುಸಿಯಾದರೆ ನಿನ್ನ ಬರಿದು ಯಾದವರನ್ನಬಿಸಿಜ ನಯನ ವಾಸುದೇವವಿಟ್ಠಲ ಕಾಯೊ ೪

ಆದಿತಾಳ
ಕಾಲ ಕಾಮ ಕರ್ಮಗಳ ಬಿಡವೊಪಾಲಿನ ನಿನಗೆ ಸಾಧಾರಣವೊಪಾಲಿಪ ಜನರನ್ನ ಕಾಣದೆ ಜನರುಆಲಿವರಿವರು ಕರುಣಿಸೆ ನಿನ್ನಪಾಲಿಗೆ ಕೀರುತಿ ವಾಸುದೇವವಿಠಲ ೫

ಜತೆ
ಕಲಿಕಾಲವು ಒತ್ತಿಸೆಲೊ ಭಕ್ತರ ನೋಡಿಒಲಿದು ಪಾಲಿಸು ವಾಸುದೇವವಿಟ್ಠಲ ದೇವ ೬

 

ಭೂಮಿಯಲ್ಲಿ ಶ್ರೀಹರಿಯ
೨೭
ಸುಳಾದಿ
ರಾಗ – ನೀಲಾಂಬರಿ ಧ್ರುವ ತಾಳ
ನಂಬಿದವಳೀಪರಿ ಮಾಡಿದರೆ ಮುಂದೆ
ನಂಬುವರೆಂತೊ ನಿನ್ನಂಬುವರೈಯ್ಯ
ಅಂಬುಜನಾಭನೆ ಯೋಗ್ಯತೆ ಮೀರಿ ನಾನು
ಹಂಬಲಿಸಿದವಳ ಒಮ್ಮಿಗನ್ನ
ಅಂಬುಜವ ಸೋಲಿಪ ಪದಯುಗಳನ್ನು
ಕಾಂಬುವ ಬಯಕೆ ಒಂದೆ ಎನ್ನೊಳಗೆ
ಉಂಬುಡುವುದಕ್ಕೆ ಲೇಶ ಕೊರತೆಗಳಿಲ್ಲ
ಕಂಬು ಕಂಠ ನಿನ್ನ ಪಾದವೆ ಸಾಕ್ಷಿ
ಸಂಭ್ರಮಗಳಾದರು ಕರಸದೆ ಪೋದೆ ಮೇಲೆ
ಸಂಬಂಧವೇನುಂಟು ಪೇಳಿಕೊಳಲು
ನೀ ಬಂಧುಗಳ ನೋಡಿ ವಿನಯದ ನುಡಿಗ
ಳೆಂಬಂತೆ ಮಾಡಿಸಲಿಲ್ಲ ದೊರಿಯೆ
ಬೆಂಬಿದ್ದಲ್ಲಿ ಒಳ್ಳೇದು ಕರೆಸಿಕೊ ಮುಂದೆನ್ನ
ಅಂಬುಜಾಕ್ಷ ವಾಸುದೇವವಿಟ್ಠಲರೇಯ ೧
ಮಟ್ಟತಾಳ
ನಂದಿದರೋ ಕುಂದಿದರೋ ತಾ ಬಂಧಿಸಲೊ
ನಿಂದಿಸಲೊ ತಮ್ಮಂದಿ ಆವ ಪರಿಯಲಿದ್ದರು
ಒಂದೇ ಪರಿ ನೀನಿಲ್ಲಿರುವೆ
ನಂದಿಸುವೆ ನಗುತಲೀವೆ ನೀ
ಒಂದು ಚಿತ್ತದಿಲ್ಲದಿಲ್ಲವೊ
ಎಂದು ವಾಸುದೇವವಿಟ್ಠಲ ನಿನ್ನ
ನಿಂದೆ ನಾನು ತಾಳಲರಿಯೆನೊ ೨
ತ್ರಿವಿಡಿತಾಳ
ವೇಳೆಗೆ ನೀ ಕೇಳಿ ಮನಕೆ ತೋರದಿರ್ದಡೆ
ಕಾಲ ನಿಲ್ಲುವುದಿಲ್ಲ ಸಾಗುತಿದೆ
ಶ್ರೀ ಲೋಲ ವಿರಹದಿ ಬಹಳ ಬಡವಾದ
ಕಾಲದಿ ಗುರುತಿನ್ನು ಸಿಗಬಲ್ಲದೆ
ಕಾಲಿಗೆ ಎರಗುವೆ ಒಳಗೆ ವಿಚಾರಿಸಿ
ಪಾಲಿಗೆ ಕರಸಯ್ಯಾ ವಾಸುದೇವವಿಟ್ಠಲ ೩
ಅಟ್ಟತಾಳ
ನಡತೆ ನುಡತೆಗಳು ಬಹುಕಾಲ ಬಿಟ್ಟರೆ
ಕೊಡುತಿವೆ ಪಾಮರ ಜನ ಸಂಗದಿ
ಒಡೆಯ ತಿರುಗಿ ತಿದ್ದಿಕೊಂಬುವುದಾಯಾಸಾ
ಹಿಡತೆ ಹಿಡಿಯಬೇಕೊ ಬಿಟ್ಟುದಂತಲೆ
ಒಡತಿ ಆಡುವ ಮಾತು ಒಂದಲ್ಲದೆ ಇದರೊಳು
ಒಡಯಗೆ ಇರಬೇಕೊ ಮನಸಿನಲ್ಲಿ
ಕಡಿÀಗು ಬಿಟ್ಟವಳಲ್ಲ ಇನ್ನಾದರೂ ಮುಂದೆ
ತಡಿಯದೆ ಕರೆಸಿಕೊ ವಾಸುದೇವವಿಟ್ಠಲ ೪
ಆದಿತಾಳ
ಪುರದಲ್ಲಿದ್ದವಳ ಬಳಿಗೆ ಬಂದೊಮ್ಮೆ
ಆರು ವಿಚಾರಿಸುವವರನ ಕಾಣೆ
ಕಾರುಣಿಕ ಜನ ಇಲ್ಲದಾಯಿತು
ಕಾರಣವಿಲ್ಲದೆ ಮುನಿವರೆ
ಧಾರುಣಿಯೊಳು ನಿನ್ನ ಕೋಶವು ಕೊಡಲು
ತೋರುವ ಕೆಲವು ಗೋಪ್ಯಗಳು
ಶ್ರೀ ಮಾರಮಣ ವಾಸುದೇವವಿಟ್ಠಲ ನಿನ್ನ
ಚಾರು ಚರಣಯುಗಳವ ತೋರಯ್ಯ ೫
ಜತೆ
ಎಷ್ಟು ಬಿನ್ನಪವೆಂದು ಸಿಟ್ಟು ಮಾಡಲಾಗದು
ಶ್ರಿಷ್ಟೇಶ ಗತಿ ಏನು ವಾಸುದೇವವಿಟ್ಠಲ ೬

 

೮೦
ಸುಳಾದಿ
ರಾಗ :ಸಾರಂಗ
ಧ್ರುವತಾಳ
ಬಾರದ ಮೊದಲಿನ್ನು ವಿಷಯ ಬಾರದ ಚಿಂತೆ
ಭರದಿಂದ ಮರೆದೆನೊ ಹರಿಯೆ ನಿನ್ನ
ಬೆರೆದೆ ವಿಷಯದ ಕಾಲದಲ್ಲಿ ಸಂಭೋಗ ಪರನಾಗಿ
ಮರದೆನೊ ಹರಿಯೆ ನಾ ನಿನ್ನ ಜರಿಯು ಆದ ಬಳಿಕ
ನಿರುತ ಅದರ ಶೋಕಾತುರನಾಗಿ ಮರೆದೆನೊ ಹರಿಯೆ ನಿನ್ನ
ಮೂರು ಸಮಯದಲ್ಲಿ ಹೀಗೆನ್ನ ಮರಿಸಲು
ಆರು ತೋರಿಸಬೇಕು ಖರೆ ಸ್ರ‍ಮತಿ ಸಮಯ
ತರಳನ್ನ ಆಲಾಪ ಮನಕೆ ತಂದೀಗಲು
ಕರುಣಿಸೊ ವಾಸುದೇವ ವಿಠ್ಠಲಸ್ವಾಮಿ ೧
ಮಟ್ಟತಾಳ
ಸ್ರ‍ಮತಿಯಿಲ್ಲ ಸ್ರ‍ಮತಿಯಿಲ್ಲ ಇನಿತೆಂಬ
ಸ್ರ‍ಮತಿಮಾತ್ರ ಮತಿಯಲ್ಲಿ ನಟ್ಟಿದೆ ಇದಲ್ಲದಿನ್ನೊಂದು
ಗತಿಯಿಲ್ಲದೆನಗಿನ್ನು ಇದನೆ ಸಾಧನ ಮಾಡಿ
ಪತಿ ವಸುದೇವವಿಟ್ಠಲ ಸ್ರ‍ಮತಿ ಕೊಡು ಎನಗೀಗ ೨
ತ್ರಿವಿಡಿತಾಳ
ಹನಿ ಲಾಭಗಳಿಗೆ ಚಪಲ ಚಿತ್ತನಾಗಿ
ಆನು ಮತ್ತವುಗಳ ಕಾರಣ ತಿಳಿವೆ
ನೀ ನಿದಾನ ನಿಖಿಳಕೆ ಎಂದು ಮರದಿನೊ
ಏನೊ ಮೋಹನ ಶಕುತಿ ನಿನಗೆ ಎನ್ನಲ್ಲಿ
ಆನು ಬೇಡಿಕೊಂಬೆ ಎಂದಿಗಾದರು ಇಂಥ
ಹೀನ ವಿಸ್ರ‍ಮತಿ ಒಲ್ಲೆ ವಾಸುದೇವವಿಟ್ಠಲ೩
ಅಟ್ಟತಾಳ
ಮರಹುವ ವೈರಾಗ್ಯ ಮರಹುವ ಸೌಭಾಗ್ಯ
ಮರಹುವ ಭೋಗ ಮರಹುವ ತ್ಯಾಗ
ಪರಿಪರಿ ಇತ್ತರು ಹರಿಯೆ ನಾನೊಲ್ಲೆ ನಿನ್ನ
ಚರಣದ ಸ್ರ‍ಮತಿಯಿಂದ ಚಿರದ ಸಾಧನ ಕೊಡು
ಪರವಿಲ್ಲ ಎನಗಿನ್ನು ವಾಸುದೇವವಿಠಲ ೪
ಆದಿತಾಳ
ನೀ ಕೊಟ್ಟದ್ದದೆ ಲಾಭ ನೀನಿತ್ತದ್ದದೆ ಸೌಖ್ಯ
ನೀ ಮಾಡಿದದೆ ಶಿಕ್ಷ ನೀ ಕೂಡಿದದೆ ರಕ್ಷ
ನೀನೆ ಪರಗತಿ ನೀನೆ ಪರಮಾತ್ಮ
ನಿನಗಿಂದಾರಿಂದಾರೊ ವಾಸುದೇವವಿಠಲ ೫
ಜತೆ
ಆನೊಂದನರಿಯೆನು ದೀನರ ಪಾಲಕ
ನೀನೆಂದು ಮೊರೆಹೊಕ್ಕೆ ವಾಸುದೇವವಿಠಲ ೬

 

ನುಡಿ-೧ : ಸಾರಹೃದಯ
೮೩
ಸುಳಾದಿ
ರಾಗ-ನಾಟಿ ಧ್ರುವ ತಾಳ
ಶ್ರೀ ನಾರಸಿಂಹ ದೇವ ನೀನೆ ಸಾರ ಹೃದಯ
ಕಾರಣ ಕಾರಣಕನಿಮಿತ್ಯ ಬಂಧೊ
ತೋರದೊ ಮುಂದಿನ ಮಾರಿ ಎನಗೆ ಇನ್ನು
ತೋರಿಸೊ ಪರಿಹಾರದುಪಾಯವ
ತೋರಿಪ ದೇವ ನೀ ಇನ್ನೊಂದು ಎನಗಿಲ್ಲ
ಕಾರುಣಿಕ ದೇವತೆ ನೀನೆ ಸ್ವಾಮಿ
ಮಾರಿಗೆ ಮಾರಿಗೂ ನಿನ್ನ ಹೊರತಿನ್ನಿಲ್ಲ
ಸಾರಿದೆ ನಿನ್ನಂಘ್ರಿ ದುರ್ಗಾ ದುರ್ಗಾ
ಶ್ರೀ ರಮಣನೆ ನಿನ್ನ ಚರಣಕ್ಕೆ ಎನ್ನಯ
ಕೊರಳ ಕಟ್ಟಿದೆನೊ ಬಿಡಸಲ್ಲದೊ
ತೋರಿದ ಮೇಲಿನ್ನು ವಾಸುದೇವವಿಠಲ
ಭಾರ ಕರ್ತೃವೆ ಎನ್ನ ಕೈಪಿಡಿಯೊ ೧
ಮಟ್ಟತಾಳ
ನಿನಗಾರೆದರಿಲ್ಲ ಎನಗನ್ಯ ಗತಿಯಿಲ್ಲ
ಮನವಂಜಿಸುತಿದೆ ಹರಕು ದುರಿತವೊ
ಮನದಲ್ಲಿ ತನುವಿಲಿ ನೀನೇವೆ ಚೆನ್ನಾಗಿ
ಘನ್ನ ಧೈರ್ಯವನೀಯೋ ವಾಸುದೇವವಿಠಲ ೨
ರೂಪಕತಾಳ
ಎನ್ನಪರಾಧಗಳಿಣಿಸೆನೆಂದರೆ ಅದರ
ಕೊನೆಯಿಲ್ಲ ಮೊದಲಿಲ್ಲ ಹುರುಳಿಲ್ಲವೊ
ಕ್ಷಣ ಕ್ಷಣಕ್ಕ್ಹೊಸ ಪರಿ ಮಾಡುವೆನಲ್ಲಿದೆ
ಅನುತಾಪ ಇನಿತಿನ್ನ ಬಡಬಲ್ಲಿನೆ
ನಾನು ನಿನ್ನಯ ಪಾದ ನೆನಿಯದೆ ಪೋದೆನೊ
ಮನುಜ ಪಶು ಎಂದು ಎನ್ನಲ್ಲಿ ದಯ ಮಾಡೊ
ಅನಿಮಿತ್ಯ ಬಂಧು ವಾಸುದೇವವಿಠಲರೇಯಾ ೩
ಝಂಪಿ ತಾಳ
ಎನ್ನಯ ಸಾಧನ ಕಾಲ ನಾ ಬಲ್ಲೆನೆ
ಉನ್ನತ ಫಲವು ತಿಳಿಯಲೀ ಬಲ್ಲೆನೆ
ಮುನ್ನೆ ಬಾಹುವ ಮಾರಿ ಹಾರ್ಹೊಡಿಯ ಬಲ್ಲೆನೆ
ಪೂರ್ಣಮತ್ತ್ಯಾಗಮವ ಮತ್ತೊಮ್ಮೆ ಮತ್ತೊಮ್ಮೆ
ಚನ್ನಾಗಿ ಪೇಳುವೆನೆಂಬೊದೊಂದೂ
ಮನದಾಸೆಯು ವಾಸುದೇವವಿಠಲರೇಯ
ಬಿನ್ನಪವ ಲಾಲಿಸೊ ಕರುಣ ಸಿಂಧು ೪
ತ್ರಿವಿಡಿತಾಳ
ಎನ್ನಯ ಆಯುಷ್ಯ ಬೆಳಸಲಿ ಬಲ್ಲಿನೆ
ಉನ್ನತ ಸಾಧನ ಮಾಡುವೆನೆ
ಘನ್ನ ದಯಾನಿಧೆ ನೀನೆವೆ ಎನ್ನಲ್ಲಿ
ಸನ್ನದ್ಧನಾಗೆನ್ನ ಸಲಹಬೇಕೊ
ಚಿನ್ನರ ಛಲವನ್ನು ಗೆಲಿಪರೊ ಪಿರಿಯರು
ಚಿನ್ನರೊಳಗೆ ಮೊದಲಿಗನೊ ನಾನು
ನಿನ್ನ ಮನಕ ತಂದು ಛಲವಗೆ ಲಿಸಬೇಕು
ಅನ್ಯನೆ ನಾ ವಾಸುದೇವವಿಟ್ಠಲರೇಯ ೫
ಅಟ್ಟತಾಳ
ಮೊದಲು ಮೃಕಂಡು ಸುತ ತನ್ನಾಯುವಿಗೆ ನಿನ್ನ
ಪದಕ್ಕೆ ಬೀಳಲು ಆತನ್ನ ಬಹುಕಾಲ
ಬದುಕಿಸಲಿಲ್ಲವೆ ಗುರುಸುತ ಯಮಪುರಕೆ
ಪೋದನ್ನ ತರಲಿಲ್ಲೆ ಕಸಿಪುಸುತ ನಿಮಿತ್ತ
ಕ್ಕೊದಗಿ ಬರಲಿಲ್ಲೆ ವಿಧಿ ಅಸ್ತ್ರವನು ನೀ
ಒದೆದು ಪೊರಿಯಲಿಲ್ಲೆ ಪರಿಕ್ಷಿತುವಿನ ಸ್ವಾಮಿ
ಎದಿರಾರೊ ನಿನಗಿನ್ನು ಎನಗೆ ನುಡಿದ ಮಾತು
ಬದಲಾಡದಿರೊ ವಾಸುದೇವವಿಠಲರೇಯಾ೬
ಆದಿತಾಳ
ಕಾಲ ಕಲಿಯುಗ ಕೇಳುವರೆ ಇಲ್ಲ
ಕೀಳು ಜನರುಗಳು ತಾಳರೊ ಧರ್ಮವ
ಬಾಳುವೆನೆನಿತೊ ನೀ ಕೇಳದಿದ್ದರೆ ಕೃಷ್ಣ
ವೇಳ್ಯೆ ವೇಳ್ಯೆಗೆ ದಯಾಳೆ ನಂಬಿದೆ ನಿನ್ನ
ಧಾಳಿಯ ಮಾರಿಯನು ಸೀಳಿ ಮೊರೆಯನ್ನು
ಕೇಳಿ ನಿನ್ನಯ ಪದ ಧೂಳಿ ಆ ಎನ್ನಯ ಮನ ಭೂ
ಷಣ ಮಾಡಿ ಬಾಳಿಸು ಬಹುಕಾಲ ವಾಸುದೇವವಿಠಲ ೭
ಜತೆ
ನೀನೆ ದಯಾಸಿಂಧೊ ಆನೇನು ಬೇಡೋದುದಾನಿಗಳರಸ ವಾಸುದೇವವಿಠಲರೇಯಾ ೮

 

೪೬
ಸುಳಾದಿ
ರಾಗ ಭೈರವಿ ಧ್ರುವ ತಾಳ
ಸಿರಿಯ ಪತಿಯೆ ನೀನು ಅಜನ ಪಿತನೊ ನೀನು
ಸುರರೊಡೆಯನು ನೀನು ದೊರೆಗಳ ದೊರೆ ನೀನು
ನರ ಭಕುತರೊಳು ಮರುಳ ಭಕುತ ನಾನು
ಪರಿಪಾಲಿಪದೆಂತೊ ಎನ್ನಾಳುತನವನು
ಸುರರಾಳಿದ ಎನ್ನ ತಪ್ಪುಗಳೆಣಿಸಲು
ಕುರುಬನ ಮಡ್ಡತನ ಚತುರರೆಣಿಸಿದಂತೆ
ಮರುಳರಾದರು ಎಮ್ಮ ಡಿಂಗರಿಗರೆಂದು
ಪರಿಪಾಲಿಸಬೇಕೊ ವಾಸುದೇವವಿಠಲ ೧
ಮಟ್ಟತಾಳ
ಒಡೆಯ ಕ್ಷಮಿಸಿ ನೀ ಕೇಳಿದರಾಯಿತೆ
ನುಡಿಯ ಭಕುತನ್ನ ಅಪರಾಧಗಳು
ಒಡೆಯನು ಪಿಡಿದರೆ ನಡೆನುಡಿಗಳು ತಪ್ಪೆ
ಕಡೆ ಹಾಯುವದೆಂತೊ ಬಡ ಭಕುತರುಗಳು
ಜಡಮತಿ ಜನರನ್ನ ಕಡು ದಯದಿಂದಲ್ಲಿ
ಪಡಿಯಬೇಕು ವಾಸುದೇವವಿಠಲ ೨
ತ್ರಿವಿಡಿ ತಾಳ
ನಿನ್ನ ಭಕುತರ್ಗೆ ಬನ್ನ ಬರಲು ಉದಾ-
ಸಿನ್ನ ಮಾಡಿದರೆಂಬಿ ಎನ್ನ ನಿರ್ದಯನೆಂದು
ಮುನ್ನಿದಾರೋ ಎಂಬಿ ನಿನ್ನಾರೊ ಬಾ ಎಂದರು
ಎನ್ನ ಗೊಡಿವಿ ಏನೆ ಎನ್ನ ಎನ್ನವನೆಂದೆ
ನಿನ್ನವರವರಲ್ಲಿ ಭಿಡೆಯು ಎನಗೆ
ಮುನ್ನೆ ಬೇಕಾದರೆ ಜನರ ವಿಷಯದಲ್ಲಿ
ಸನ್ನೆ ಮಾಡಿದರೆ ಅಂದಕೆ ನಾ ಪಿಡಿವೆನೊ
ನಿನ್ನ ಶರಣರಲ್ಲೆ ಬಿನ್ನಪ ಬಿಡಲೊಲ್ಲೆ
ಘನ್ನ ವಾಸುದೇವವಿಠಲ ತಿಳಿದುಕೊ ೩
ಅಟ್ಟತಾಳ
ಚಲಿಸಲು ತೃಣ ಸಹ ಶಕುತಿ ಎನಗಿಲ್ಲ
ಕಲಿಸಲು ಬಲ್ಲನೆ ವೇದಶಾಸ್ತ್ರಗಳನು
ಒಲಿಸಿ ನಿಲಿಪೆನೆ ವಾದಿಗಳ ಸಭೆಗಳಲ್ಲಿ
ಒಲಿಯಲಾರಿಯೆ ನಿನ್ನ ಗುಣಗಳ ನಿಲಯನೆ
ನಿಲಿಸಿ ನಿನ್ನಯ ರೂಪ ನೀನೇವೆ ಮಾಡಿಪಿ
ಒಲಿಯೆ ಮಾತ್ರವನ್ನು ನೀನೇವೆ ವಿಧಿ ನಿಷೇಧಂಗಳ
ತಲಿಗೆ ಕಟ್ಟುವೆ ಎನ್ನ ನಿನಗಿದು ಉಚಿತವೆ
ಬಲಿಯ ಪಾಶದಿಂದ ಬಿಡಿಸಿದ ತ್ವರ ಎನ್ನ
ಕಲಿ ಬಾಧೆ ಪರಿಯಯ್ಯಾ ವಾಸುದೇವವಿಠಲ ೪
ಆದಿತಾಳ
ಸೂಚಿಸಿದೆ ನೀ ಮೊದಲೆನಗೆ
ಯೋಚಿಸಿ ನಿನ್ನಯ ವಿಸ್ರ‍ಮತಿ ಮೊದಲಾದ
ನೀಚ ಗುಣಂಗಳ ಗಣಗಳು ಅದರೊಳು
ಚಾಚಲು ಕಾಮ್ಯಕೆ ಹಾನಿಯು ಇನಿತಿಲ್ಲ
ನೀ ಚಿತ್ತದಲ್ಲಿಡು ವಾಸುದೇವವಿಠಲ ೫
ಜತೆ
ನಿನ್ನ ಮರಹೆ ಮೃತ್ಯು ನಿನ್ನ ನೆನಹೆ ಜೀವ
ಧನ್ಯರಿಗೆ ತತ್ವ ವಾಸುದೇವವಿಠಲ ೬

 

ನುಡಿ-೧: ಯತಿ ಮಾಡಿ ಕೂಡಿಸಿದಿ
೮೬
ಸುಳಾದಿ
ರಾಗ-ನೀಲಾಂಬರಿ ಧ್ರುವತಾಳ
ಸೃತಿ ವಾರಾಧಿಯೊಳಗೆ ಶಳವಿಗೆ ಪೋವಂಗೆ
ಗತಿಯಾಗಿ ದಡಕೆ ಸೇರಿಸಿದ್ಯೋ ಸ್ವಾಮಿ
ಯತಿ ಮಾಡಿ ಕೂಡಿಸಿದಿ ನಿನ್ನ ಪಾದಾಂಬುಜದಲ್ಲಿ
ರತಿ ಕೊಟ್ಟು ಉದ್ಧರಿಸೊ ವಾಸುದೇವವಿಠಲ ೧
ಮಟ್ಟತಾಳ
ಮುದುಕಿಯ ಕೈಯಲ್ಲಿ ಪುಲಿವಶವಾದಂತೆ
ಮದಡನ ಕೈಯಲ್ಲಿ ಸಿಕ್ಕಿದ್ಯೊ ನರಹರಿಯೆ
ಒದಗಿ ಸೇವೆಯ ಮಾಡಲಾರೆ ಜರೆಯು ಬಂತು
ಮುದದಿ ತುತಿಯ ಮಾಡಲಾಪನೆ ಸಹಸ್ರ
ವದನಗೆ ವಶವಲ್ಲ ವಾಸುದೇವವಿಠ್ಠಲ ೨
ತ್ರಿವಿಡಿತಾಳ
ದಾನವಿಲ್ಲದಾಶ್ರಮ ಯಜನವು ಮೊದಲಿಲ್ಲ
ಸ್ನಾನ ಮಾತ್ರವು ಮಾಡಿ ನಿನ್ನ ಮೂರುತಿಗಳನು
ಧ್ಯಾನವ ಮಾಡಿಸೊ ಅನುದಿನ ತಪ್ಪದೆ
ಹೀನರ ಕೃತಿಯನ್ನೆ ಖಂಡನೆ ಮಾಡಿಸೊ
ಜ್ಞಾನ ಪುಟ್ಟುವಂತೆ ಪ್ರವಚನ ಮಾಡಿಸೊ
ದೀನ ವತ್ಸಲ ವಾಸುದೇವವಿಠಲರೇಯ ೩
ಅಟ್ಟತಾಳ
ಪಾಮರ ಜನರೊಳು ಸಿಕ್ಕಿದೆ ನಿನ್ನಯ
ನಾಮವ ಪೇಳೂವ ಜನರನ್ನ ಕಾಣೆನೊ
ಸ್ವಾಮಿ ಏನುಗತಿ ಎನ್ನ ಹೃದಯವೆಂಬ
ಧಾಮದಿ ಪೊಳಿಯೊ ವಾಸುದೇವವಿಟ್ಠಲ್ಲ ೪
ಏಕತಾಳ
ಕಾಕ ಕುಲದೊಳು ಕೋಕಿಲ ದಣಿವಂತೆ
ಕೂಕ ಜನರೊಳು ಸಿಕ್ಕಿದೆ ನರಹರೆ
ಲೋಕ ಹರಟೆಗಳಲ್ಲದೆ ಉತ್ತಮ
ಶ್ಲೋಕನ ವಾರ್ತೆ ನುಡಿವವರಿಲ್ಲವೊ
ಪಾಕಶಾಸನನುಜ ಪೊರಿಯೊ ಕೇಳೆನ್ನ
ವಾಕು ಹೇ ವಾಸುದೇವವಿಟ್ಠಲ ೫
ಜತೆ
ಯಾತಕ್ಕೆ ನರಸಿಂಹ ನೀನೆವೇ ಎನ್ನ ಬೆ-
ನ್ನಾತು ರಕ್ಷಿಸೊ ವಾಸುದೇವವಿಠಲರೇಯ ೬

 

ನುಡಿ-೩: ಊಟಿ ನೀರನು ಮಾಡೆ
೪೯
ವರಹದೇವರ ಸುಳಾದಿ
ರಾಗ ಭೈರವಿ ಧ್ರುವ ತಾಳ
ಹರಿಯ ಆಜ್ಞದಿಂದ ಈರೇಳು ಲೋಕವ
ಸೃಜಿಸಿ ತಾ ಮನದಿಂದ ಕೆಲವು ಜನರುಗಳ
ಥರವಲ್ಲ ಇದರಿಂದ ತನುವಿಂದ ಸೃಜಿಸುವ ಜ
ನರು ಬಹಳವಾಗಿ ಅಹರೆಂದು
ಹಿರಣ್ಯಗರ್ಭನು ಮನು ಮೊದಲಾದವರ ಸೃಜಿಸಿ
ವರ ಬಹು ಸಂತತಿಂದ ಜಗವ ಪೂರೈಸೆನ್ನ
ಧರಿಯು ನೀರೊಳು ಮುಣಗಿ ಪೋ ಯಿತೊ ನಾ ಹ್ಯಾಗೆ
ಸೃಜಿಸು ಬಗೆ ಎನ್ನೆ ಬ್ರಹ್ಮನು ಚಿಂತಿಸೆ
ವರಹ ರೂಪದಿ ನಾಸಾಪುಟದಿಂದ ಪುಟ್ಟಿದಂಥ
ಪರ ವಾಸುದೇವವಿಠಲ ಪರಗತಿ ಎನಗೆ೧
ಮಟ್ಟತಾಳ
ಸುರರು ನೋಡಲು ನೋಡೆ ವರಗಿರಿ ಎಂತಾಗೆ
ತರಲು ಧರೆಯ ಪೋದ ನೀರೊಳು ಪಾತಾಳ
ಧರಿಯಲ್ಲಿ ಇದ್ದಂಥ ಧರೆಯನು ತರುತಿರಲು
ದುರುಳ ಹಿರಣ್ಯಾಕ್ಷ ಕರೆಕರೆ ಮಡಿದ್ದು
ಸರಕು ಮಾಡದೆ ದೇವ ಧರೆಯ ತಡೆಯುತಲಿದ್ದ
ತಿರುಗಿ ಎದುರಾಗಿ ದುರುಳನ ಶಿರವನ್ನು
ವರಿಸಿದ ಕೋರ್ದಾಡೆ ಕ್ಷುರದಿ ದಿತಿಜವೈರಿ
ವರ ವಾಸುದೇವ ವಿಠಲಪರನೆಂದು ಸಾರಿಕೊ೨
ತ್ರಿವಿಡಿ ತಾಳ
ನೀಟಾದ ಮೊನೆಯುಳ್ಳ ಸೆಟೆಯದಟಿತಗ್ರೀವ
ಹಾಟಕ ನಯನನ ರಕುತಯುಕುತ
ಮಾಟಾದ ದಾಡೇಲಿ ನೀರೊಳು ವಿಹರಿಸಿ
ಊಟಿ ನೀರನು ಮಾಡೆ ಮ್ಯಾಲುಗಳೆ ತೊಯಿದು
ಈಟಿ ಮೊನಿಗಳೆಮ್ಮ ತಗಲವೊ ಎಂತೆಂದು
ಕೂಟ ಕಟ್ಟಿದರ್ಜನ ಜನೋ ಲೋಕದಿ ಜನರು
ಆಟದಿ ಪುಚ್ಛವನು ನೆಗಹಿ ನೀರನು ಬಡದು
ಓಟ ಓಡುವ ರಭಸÀ ತಾಳದೆ ಜಲಧಿಯು
ಚಾಟೆಂದು ಲಯದ ಕೃಪೀಠಯೋನಿಯು ಬಂತು
ಮೂಟಿ ಕಟ್ಟಿಕೊಂಡು ಮೊರೆಯೊಕ್ಕ ಕಿಟಗೆ
ನೀಟಿಸಿ ಸಮಯವ ಕುಸುಮ ವೃಷ್ಟಿಗಳಿನ್ನು
ಪಾಟಿಸಿದರು ಸುರರು ವಾಸುದೇವವಿಟ್ಠಲಂಗೆ೩
ಅಟ್ಟತಾಳ
ಕಿರಿ ಕಿರಿ ಕಿರಿ ಎಂದು ಧರೆಯ ಮೊಗವ ನೋಡಿ
ಅರಿದರ ಧರನಾಗಿ ಸುರರಿಗೆ ಅಭಯವ
ವರವ ಕೊಡುವೆನೆಂದು ಸ್ಥಿರವಾಗಿ ನಿಂತನ್ನ
ಚರಣ ಸಮೀಪಕೆ ಸುರರು ಸುಖದಿ ಬಂದು
ಪರಿಪರಿ ಕೊಂಡಾಡೆ ವರ ವಾಸುದೇವವಿಟ್ಠಲವೊಲಿವನಾಗೆ ೪
ಆದಿತಾಳ
ಹಿರಣ್ಯಕ ನಯನನ ಮಶ್ರುಣ ಪೂಸಿದ ದಾಡೆ
ವರಿಸಿತೊ ಅಂಜುವೆ ಮುದ್ದಾಡಲಿ ಬೇಡ
ಪರಮ ಕೃಪೆಯಿಂದ ನೋಡಿದರೆ ಸಾಕೊ
ವರವೀವೊ ಅವರೆಲ್ಲ ಸತಿಯ ಕೇಳುವರೇನೊ
ಧರೆಯು ನಗುತಾಳೆ ಕರದು ಬಿಡಸಲ್ಲ
ವರವೀಯೊ ವಾಸುದೇವವಿಠಲ ಕೋಲ ೫
ಜತೆ
ಮರಿಯದ್ಹಾಗೆ ಮಾಡೊ ವಾಸುದೇವವಿಠಲ
ಮೊರೆ ಇಡುವೆ ಇದೆ ಒಡೆಯ ಕೋಲ ೬

 

ಪುತ್ರಸಂತಾನ ಬೇಡಿ ಮಾಡಿದ ಪ್ರಾರ್ಥನೆ
೯೩
ವಿನಯದಲಿ ವಿಜ್ಞಾಪನವ ಮಾಡುವೆ ಈ
ತನಯನ್ನ ಪರಿಪಾಲಿಸುವುದೆಂದು ನಾನು ಪ

ನಿನ್ನವನು ಮೊದಲಿಗೂ ಇವನೆಂದು ಬಲ್ಲೆಲ್ಲ
ಜನ್ನಿಸಿ ಇಹನು ಎನ್ನಲ್ಲಿ ಮತ್ತೂ
ಧನ್ಯನಾಗುವ ಮಧ್ವ ತಂತ್ರಗಳನೋದಿನ್ನು
ಅನ್ಯನಲ್ಲವೊ ಇವನು ನಿನಗೆ ಎಂದೆಂದು ೧
ಕೇಳಿದಾಗಿವ ತನ್ನ ಶಿಷ್ಯರಿಗೆ ಶಾಸ್ತ್ರಗಳ
ಪೇಳಿ ಪೆಸರೆತ್ತಿಹ ಲೋಕದೊಳಗೆ
ಆಳಿದಾ ನೀನೆಂದು ನಾಮಗಳು ರಚಿಸುವ
ಬಾಳಲಿ ಬಹುಕಾಲ ಗೋಪಾಲದಾಸ ೨
ಏಸು ಜನರಿಗೆ ಎನ್ನಿಂದ ನೀ ಪೇಳಿಸಿದೆ
ಲೇಸು ಲೇಸೆಂದು ಲೋಕದಿ ಮೆರೆಸಿದ್ಯೊ
ಈಸು ತನಯ ಎನ್ನತೆರ ನಿನ್ನವನೆಂದರಿತು
ವಾಸುದೇವವಿಠಲ ಕಾಪಾಡೊ ಕರುಣಿ ೩
(ತಮ್ಮ ಮಗ ಗೋಪಾಲಕೃಷ್ಣಾಚಾರ್ಯನ ಅಪಮೃತ್ಯು ಪರಿಹರಿಸುವಂತೆ ಮಾಡಿದ ಪ್ರಾರ್ಥನೆ)

 

ಇದನೆ ಬೇಡುವೆನಯ್ಯ ಒದಗಿ
೬೮
ಇದನೆ ಬೇಡುವೆನಯ್ಯ ಒದಗಿ ಪಾಲಿಸೊ ಜೀಯ
ಬದಲು ನಾನೊಲ್ಲೆನೊ ವಿದಿತ ವೇದ್ಯ ಪ
ಕ್ಷಣ ನಿನ್ನ ಬಿಡಲಾರೆ ನಿನ್ನವರನು ಬಿಡೆ
ಕುಣಿ ಕುಣಿವೆನು ನಿನ್ನ ಜನರೆಂದರೆ
ಗುಣತ್ರಯ ವಾರಣ ನಿನ್ನ ವಾರುತಿಯಿರೆ
ಒಣ ಹರಟೆಗಳ ನಾ ಕೇಳಲೊಲ್ಲೆ ೧
ನೀಚ ಜನರಂಗಳ ಸಂಗವ ಕೊಡದಿರು
ವಾಚದಿಗನ್ಯರಿಗಾಲ್ಪರಿಸಬೇಡ
ಸೂಚಿಸು ನಿನ್ನಯ ಗುಣಗಣಂಗಳೆನೆ ನಾ
ಯಾಚಿಪೆ ಇದನೆ ಇದನೆ ಮುರಾರೆ ೨
ಶ್ರೀಶ ನಿನ್ನಯ ಕಥೆ ಕೇಳದೆ ಬಹಳಾಯು
ಕಾಸು ಬಾಳದು ಕೇಳು ಕರುಣಾಬ್ಧಿಯೆ
ತಾಸು ಒಂದಾದರು ಅವನೆ ಸುಜೀವಿಯೊ
ವಾಸುದೇವವಿಠಲ ನಿನ್ನವರವನೊ ೩

 

ಹಾಡಿನ ಹೆಸರು :ಇದನೆ ಬೇಡುವೆನಯ್ಯ ಒದಗಿ
ಹಾಡಿದವರ ಹೆಸರು : ರುದ್ರಪಟ್ಣಂ ಸಹೋದರರು
ರಾಗ : ಜನರಂಜನಿ
ತಾಳ :ಖಂಡಛಾಪು ತಾಳ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು : ಸತ್ಯವತಿ ಟಿ. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಎನ್ನಾಗಮವ ಹೀಗಾಯಿತೊ
೭೨
ಎನ್ನಾಗಮವ ಹೀಗಾಯಿತೊ ದೇವ
ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ
ಸಕ್ಕರಿ ತಾಯೆಂದು ಸಂತಿಗೆ ಕಳುಹಲು
ತಕ್ಕಡಿ ಲಶುನವ ತಂದ ತರಳನಂತೆ ೧
ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ
ತುರುಚಿಯನೆ ತಂದ ತರಳನಂತೆ ೨
ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ
ಕೆಸರು ಪೂಸಿಕೊಂಡು ಬಂದ ತರಳನಂತೆ೩
ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ
ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ ೪
ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು
ಜ್ಞಾಪಕಗೊಳಿಸಿದೆ ವಾಸುದೇವವಿಠಲ ೫

 

ಹಾಡಿನ ಹೆಸರು :ಎನ್ನಾಗಮವ ಹೀಗಾಯಿತೊ
ಹಾಡಿದವರ ಹೆಸರು :ರುದ್ರಪಟ್ಣಂ ಸಹೋದರರು
ರಾಗ :ಸಾವೇರಿ
ತಾಳ : ಆದಿ ತಾಳ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು :ಸತ್ಯವತಿ ಟಿ. ಎಸ್.
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಾಲಿಗೆ ತುದಿಯಲ್ಲಿ ರಾಮ
೮೯
ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ
ವ್ಯಾಳಿಗೆ ಒದಗಿಸೋ ಹರಿಯೆ ಮರಿಯೆ ಪ
ಕಾಲನ ದೂತರು ಕಠಿಣರೆ ಸರಿ
ವ್ಯಾಳಿಯು ಹೇಳಿ ಕೇಳಿ ಬರುವದಲ್ಲ
ಆಲಯದವರ ಶಕುತಿಯಲ್ಲೇನೋ
ಲಾಲಿಸಬೇಕೇನೊ ಎನ್ನ ಬಿನ್ನಪ ೧
ಕಾಲನ ಸ್ಥಿತಿಯೆಂತು ಮೇಷದ ಗುಂಪಿಗೆ
ತೋಳದ ಪರಿಯೆಂದು ನಾ ಕೇಳಿ ಬಲ್ಲೆ
ಕಾಳು ಕಪಟೆ ತಿಂಬ ಮೂಷಕಗಳಿನ್ನು
ಕಾಲ ಭುಜಂಗದಂತೆ ಕಂಡು ಬಲ್ಲೆನೊ೨
ಹೇಸಿ ವಿµಯವೆಂಬಾ ಮಡಿವಿನೊಳಗೆ ವೈದು
ಮೋಸಗೊಳಿಸುವ ಸ್ಥಿತಿಯು ಮನಸಿನ
ವಾಸುದೇವವಿಠಲ ಈ ಪರಿ ತಿಳಿದಿನ್ನು
ಈ ಸಮಯಕ್ಕೆ ನಾಮ ಒದಗಿಸಯ್ಯ ೩

 

ಹಾಡಿನ ಹೆಸರು :ನಾಲಿಗೆ ತುದಿಯಲ್ಲಿ ರಾಮ
ಹಾಡಿದವರ ಹೆಸರು :ಶಮಿತಾ ಮಲ್ನಾಡ್
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.

ನಿರ್ಗಮನ

 

ಬಂದ ಕೃಷ್ಣ ಚಂದದಿಂದ
೩೩
ಬಂದ ಕೃಷ್ಣ ಛಂದದಿಂದ ಬಂದ ನೋಡೆ ಗೋಪ
ವೃಂದದಿಂದ ನಂದಸುತ ಬಂದ ನೋಡೆ ಪ
ಗೋವ ಮೇವನೀವ ದೇವ ಬಂದ ನೋಡೆ
ದೇವತಾ ವಾದ್ಯಗಳಿಂದ ಬಂದ ನೋಡೆ ೧
ಪಾಪ ಪೋಪ ಗೋಪ ರೂಪ ಬಂದ ನೋಡೆ
ತಾಪ ಲೋಪ ಲೇಪ ಲೋಪ ಬಂದ ನೋಡೆ ೨
ಭಾಸುರ ಸುಖ ಸೂಸುತ ಬಂದ ನೋಡೆ
ವಾಸುದೇವವಿಟ್ಠಲ ತಾ ಬಂದ ನೋಡೆ ೩

 

ಹಾಡಿನ ಹೆಸರು :ಬಂದ ಕೃಷ್ಣ ಚಂದದಿಂದ
ಹಾಡಿದವರ ಹೆಸರು : ನಗರ ಶ್ರೀನಿವಾಸ ಉಡುಪ
ರಾಗ :ದೇಶ್
ತಾಳ : ತ್ರಿಶ್ರನಡೆ ಏಕ ತಾಳ
ಸಂಗೀತ ನಿರ್ದೇಶಕರು :ರಾಜು ಅನಂತಸ್ವಾಮಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬಡವನ ಮನೋರಥ ಪೂರೈಸು
೩೪
ಬಡವನ ಮನೋರಥ ಪೂರೈಸು ಸಿರಿಕೃಷ್ಣ
ಒಡೆಯ ನೀನಲ್ಲದೆ ಪೂರೈಸುವರಿಲ್ಲ ಪ
ಕಿವಿಯು ನೀಡಿದುದಕೆ ಎನಗೊಮ್ಯಾದರು ಮನೋ
ಕುವರಿಯ ಭೃತ್ಯತನ ಕೊಡು ಕಂಡ್ಯ
ಸುವಿಮಲತರ ಮತಿಯಾದ ವಿಷ್ಣುರಾತೋ
ದ್ಭವನ ಬಳಿಯಲೊಮ್ಮೆ ನಿಲಿಸಯ್ಯಾ ಹರಿಯೆ ೧
ನಯನವು ಕೊಟ್ಟದಕೆ ಎನ್ನೊಮ್ಮೆ ರಣದಿ ವಿ
ಜಯನ ಬಳಿಯಲೊಮ್ಮೆ ನಿಲಿಸಯ್ಯಾ
ಭಯದಿ ಸೂತರ ಸುಮ್ಮನಿಹ ಭೀಷ್ಮಕ ಕುರುಪ
ತಿಯರ ಸಭೆಯಲೊಮ್ಮೆ ನಿಲಿಸಯ್ಯ ಹರಿಯೆ ೨
ರಸನವು ಎನಗಿನ್ನು ಕೃಪೆಮಾಡಿದುದಕೆ ಗೋ
ರಸವ ಕದ್ದು ಮೆಲುವ ಕಾಲದಲ್ಲಿ
ಇಸಕೊಂಬ ಗೋವಳರ ಒಳಗೆ ಎನ್ನನು ಒಬ್ಬ
ಶಿಶುವಿನ ಮಾಡಿ ಪುಟ್ಟಿಸು ಕಂಡ್ಯ ಹರಿಯೆ ೩
ಎನಗೆ ತ್ವಗೇಂದ್ರಿಯವ ದಯಮಾಡಿದದಕಿನ್ನು
ಜನಕ ಭೀಷ್ಮಕ ಸುತೆಯ ಕರ ಕಂಜರದಿ
ಅನುವಾದಿಷ್ಟಕ ಭಾವ ಸರಯು ಯಮುನಾ ತೀರ
ಜನಿತವಾಳುಕ ಭಾವವನು ಕೊಡು ಹರಿಯೆ ೪
ನಾಶಿಕವು ಇತ್ತದಕೆ ಗೋಪಿಯ ವಿಹಾರದಿ
ವಾಸುದೇವವಿಠಲ ನಿನ್ನ ಕೊರಳೊಳಿದ್ದ
ಸೂಸಿ ಬಿದ್ದ ಮಾಲಿಕೆಯ ಕುಸುಮಂಗಳ ಬಲು
ವಾಸನ ಲೂೀಲುಪ ಮಧುಕರ ಭಾವ ನೀಡೊ ೫

 

ಹಾಡಿನ ಹೆಸರು :ಬಡವನ ಮನೋರಥ ಪೂರೈಸು
ಹಾಡಿದವರ ಹೆಸರು :ಹಂಸಿನಿ ಚಂದ್ರಶೇಖರ್
ರಾಗ : ರಾಗಮಾಲಿಕೆ
ತಾಳ : ಖಂಡಛಾಪು ತಾಳ

ಸಂಗೀತ ನಿರ್ದೇಶಕರು :ವಸಂತ ಮಾಧವಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *