Categories
ರಚನೆಗಳು

ಶಾಂತಿಬಾಯಿ

ಮಾನವನ ದೇಹದಲ್ಲಿರುವ ವಿಶಿಷ್ಠ ರೀತಿಯ

ಆರತಿ ಬೆಳಗುವೆ ಕೂಟದಲಿ ಮಂಗಳಾರತಿ
ನೋಡುವೆ ನೋಟದಲಿ
ಧೀರ ಶ್ರೀಗುರು ಮಹಾ ತಾರಕ ಬ್ರಹ್ಮನ ಆರತಿ
ನೋಡುವೆ ನೋಟದಲಿ ಪ
ಗಂಗೆ ಯಮುನೆಗಳ ಸಂಗಮದೀ ಮಿಂದು
ಅಂಗ ಸಂಗ ರಹಿತಾಂಗನದೇ
ಮಂಗಳಾಂಗ ದಿವ್ಯಾಂಗಪೂಜೆಯ ಮಾಡಿ
ರಂಗ ಮಂಟಪ ಪಾಂಡುರಂಗನಿಗೆ ೧
ಈಡೆ ಪಿಂಗಳೆಗಳ ಜೋಡುಗೂಡಿ
ಮೂಡು ರವಿಶಶಿ ಸೂಡಿ ಮಧ್ಯಿರುವಾಗ್ನಿ
ಗೂಡಿನೋಳಾಡುವಜೀವನ ವಿಚಾರೋನ್ಮೂರ್ತಿಗೆ ೨
ಹೃದಯದಿ ಬೆರಿತು ಹಂಸನ ಭರದಿ
ತಿರುಗಿತಲೆರಡೊಂದೊಂಕಾರದಿ
ಎರಕವಾಗಿ ಸಸ್ವರದಿ ಮನ
ಪರಮ ಪುರುಷ ದಿವ್ಯಾಂಗನಿಗೆ ೩
ಒಳಹೊರಗೊಂದಾಗಿ ದೇವಾ
ಸುಲಭದಿ ಭಕ್ತರ ಸುಖವೀವಾ
ಥಳಥಳ ಹೊಳೆಯುವ ಕಳೆಯೊಳು
ಬೆಳಗುವ ನಲಿನಲಿದಾಡಿ೪
ಆರು ಚಕ್ರಗಳ ಮೀರಿ ಮುಂದಣ ಸಣ್ಣ
ದಾರಿಹಿಡಿದು ಹಿಂದಕೆ ನಡೆದು
ತೋರುವ ಪರಿಪೂರ್ಣ ತಾರಕ ಬ್ರಹ್ಮನ
ಸೇರಿ ನಿರ್ಬಯಲಾ ಚಿದ್ರೂಪಗೆ ೫
ಅಂತರ್ಯಾಮಿ ಪೂರ್ಣಾಂತರದಿ
ನಿಶ್ಚಿಂತ ಮೂರ್ತಿ ಹೃದಯಾಂತರದಿ
ಸಂತ ಸಾಧು ನಿಜ ಶಾಂತಿ ಪಾಲಿಪ ಗುರು
ಚಿಂತೆರಹಿತ ನಿಶ್ಚಿಂತದಲಿ ೬

 


ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ
ವಾಸವಾಗದಂತೆ ಕಾಯೋ ಮೋಹನ್ನಾ
ವಾಸುದೇವನೆ ನಿನ್ನ ಸ್ಮರಣೆಯೊಳಗೆ ಮನ
ಸೂಸದಂತೆ ಸ್ಥಿರ ನಿಜದಲ್ಲಿ ನಿಲಿಸಯ್ಯಾ ಪ
ನಂಬಿದವರ ಕಾಯುತ್ತಿರುವಾ ಅವರ
ಬೆಂಬಿಡದೆಲೆ ನಿಜದರಿವನ್ನು ಕೊಡುವಾ
ಕುಂಭಿಣಿಯೊಳಗೆಲ್ಲಾ ನೀನಲ್ಲದೆ ಎನ್ನಾ
ನಂಬಿಗೆ ಕೊಡುವವರ್ಯಾರೋ ನಾರಾಯಣಾ ೧
ಬೆಂದೆನು ನಾ ಭವದೊಳಗೆ ಎನ್ನಾ
ತಂದೆ ನೀ ಕಾಯೋ ನಿಜಪದದೊಳಗೆ
ಹಿಂದಿನ ಪ್ರಾರಬ್ಧ ಬವಣೆಯ ತೀರಿಸಿ
ಮುಂದೆ ನೀ ಸಲಹೊ ಪರಮಪುರುಷನೆ ಹರಿ ೨
ವಾಸನೆ ಬಂಧವೇ ಜೀವಾ ನಿ
ರ್ವಾಸನೆಯನು ಕೊಟ್ಟು ಸಲಹೊ ಮಾಧವಾ
ಶೇಷಶಯನನೆ ನಿಜ ಧ್ಯಾನದೊಳಿರಿಸೆನ್ನಾ
ಆಶೆಯನು ಸಲಿಸಯ್ಯಾ ಮುರಾರಿ ೩
ಅನಂತ ಮಹಿಮಾ ಮೇಘಶ್ಯಾಮಾ
ನಿಶ್ಚಿಂತ ನಿಜ ಶಾಂತಿ ಸ್ವಸುಖವೀವಾ
ನಂತಪರಾಧವ ಕ್ಷಮಿಸೆನ್ನಾ ಗುರುವೇ ೪

 

ದೇವದಾನವರು ಕ್ಷೀರಸಾಗರವನ್ನು ಕಡೆದು ಅಮೃತವನ್ನು

ಇಂದಿರೇಶಾನಂದ ಕಂದನೇ
ಮಂದರಧರ ಗೋವಿಂದ ಗೋಪತಿಯೇ ಪ
ಮುದ್ದು ಮೋಹನ ಕೃಷ್ಣಾ
ಸಿದ್ಧನಾಗಿಹೆ ನೀ
ಇದ್ದು ನೀ ಇಲ್ಲದಂತೆನ್ನಾ
ಬುದ್ಧಿವಂತನೆ ನೀನು ಕದ್ದು ಪೋಗುವೆಯೊ ೧
ಮರೆತು ನಾಬಿಟ್ಟೆನು
ಧರೆಯೊಳು ನಿನಗೆ
ಪರಮ ಪುರುಷ ಹರಿಯೇ
ಚರಾಚರವ ತುಂಬಿ ಭರಿತನಾಗಿರುವಿ ೨
ಎಡೆಬಿಡದೀಗಲೆ
ಮೃಡಸಭಾ ನಿನಗೆ
ತಡಮಾಡದೆ ಪಿಡಿದು
ದೃಢದಿಂ ಕಟ್ಟುವೆ ಕಡಲೊಡೆಯನೇ ೩
ವಾಸುದೇವನೇ ಜಗ
ದೀಶ ಗೋಪಾಲಾ
ಈಶ ಶಾಂತಿಯ ಪಾಲಿಪಾ
ಶೇಷ ಶಯನನೆ ಸರ್ವೇಶಾ ಶ್ರೀ ಗುರುವೇ ೪

 


ಕಂಗಳಿದ್ಯಾತಕೋ ಚಿನುಮಯ ರಂಗನ ನೋಡದಾ
ಕಂಗಳೊಳಗೆ ಮಂಗಳ ಮೂರುತಿ
ಸಂಗರಹಿತಾತ್ಮನ ನೋಡದಾ ಪ
ಶರೀರವೇ ತಾನೆಂದು ನಂಬಿ ಮೆರೆದು ನಿಜಾನಂದವನ್ನು
ಬೆರದು ವಿಷಯಾದಿಗಳಲ್ಲಿ ಹರಿದು
ದೃಷ್ಯಂಗಳನ್ನು ನೋಡುವಾ ೧
ತಾನಿದ್ಯಾರು ತನಗೆ ತೋರ್ಪ ತನುವಿದೇನೆಂದರಿವುತಿರ್ಪ
ಜ್ಞಾನದೃಷ್ಟಿಯಿಲ್ಲದಂಥ ಆನನಂಗಳನು ನೋಡುವ ೨
ಹಂಸ ತಾನಾಗಿ ಚರಿಪ ಹಂಸನ ಪ್ರಕಾಶವನ್ನು
ಶುಂಶುಮಾರದಿ ಬೆಳಗುತಿರ್ಪಭ್ರಂಶಿತಾಂ ತನ್ನ ನೋಡದಾ ೩
ಸಂತಸಾಧು ಚರಣಕ್ಕೆರಗಿ ಚಿಂತೆಗಳನು ಹರಿದು ಭರದಿ
ಶಾಂತಿ ಸುಖವನಿತ್ತ ಗುರು ಶಾಂತಮೂರುತಿ ನೋಡಲಾರದ ೪

 


ದೇವಾ ನಿನ್ನ ಚರಣವನ್ನು ಮರೆಯಲಾರೆನು
ಮರೆಯದಂತೆ ಕರುಣದಿ ಎನ್ನಾ ಸ್ಮರಣೆಯೊಳಿಡು ನೀನು ಪ
ಪಂಕಜಾಂಬಕಿ ಲಕ್ಞ್ಮೀರಮಣಾ ರಂಗರಕ್ಷಕಾ
ಶಂಕಾನಾಶ ಸರ್ವಾಧಾರ ಶಂಕರಸಖಾ
ಶಂಖ ಚಕ್ರಗಳ ಕರದೊಳ್ ಪಿಡಿದ ಪಂಕಜನೇತ್ರನೇ ೧
ತನ್ನವರಿಂತೆಂದೆನಿಸಿ ಕೊಂಡು ಅನ್ಯರ ಭಜಿಪುದು
ನಿನ್ನ ಮತವೇ ದೇವಾ ನಾನು ಬನ್ನ ಬಡುವುದು
ಮುನ್ನ ಎನ್ನನು ಪೊರೆವರ್ಯಾರೊ ಪನ್ನಗಶಯನನೇ ೨
ಅಂತು ಇಂತೆನಲೊಲ್ಲೆ ದೇವಾ ಅನಂತ ಮಹಿಮೆಯಾ
ಸಂತಸಾಧು ಸಾಧ್ಯನಾಗಿಹ ಅಂತರಾತ್ಮನಾ
ಚಿಂತೆ ಭ್ರಾಂತಿಗಳ ತೊರೆದು ಗುರುವರ ಶಾಂತಿ ಪಾಲಿಪನೇ ೩

 


ದೇವಾ ನಿನ್ನ ಪಾದವನ್ನು ಯಾವಾಗಲೂ ಸ್ಮರಿಸುವೆನೂ
ಭಾವ ಭಕ್ತಿ ಪ್ರೇಮವಿತ್ತು ಕಾವುವೆನ್ನ ಹರಿಯೇ ನೀನು ಪ
ದೀನನಾಥನೆಂಬ ಬಿರುದಾ ಮಾನಭಕ್ತರಿಂದ ಪೊರೆದಾ
ಹೀನ ದೀನನಾದ ಎನ್ನಾ ಜ್ಞಾನವಿತ್ತು ರಕ್ಷಿಪುದು ೧
ಇಂದಿರೇಶ ನಾರಾಯಣಾ ಬೃದದಿಂದಾ ಭಜಿಪೆ ನಿನ್ನಾ
ಮಂದಮತಿಯ ಕಳೆದು ನಿಜಾನಂದದೊಳಗಿರಿಸೊ ಯನ್ನಾ ೨
ಬೇಡಿಕೊಂಬೆನೀಗ ನಿನ್ನಾ ನೋಡುವುದು ಕೃಪೆಯೊಳೆನ್ನಾ
ಬಿಡಬ್ಯಾಡಾ ಬ್ಯಾರೆನಗೆ ಇಡೊ ಇಡೊ ನಿನ್ನೊಳೆನ್ನಾ ೩
ಚಿಂತೆಗಳನ್ನೆಲ್ಲಾ ತೊರಿಸೊ ಸಂತ ಸಂಗದೊಳಿರಿಸೊ
ಕಂತುಪಿತನೆ ಗುರುವೆ ಎನ್ನಾ ಶಾಂತಿ ಪದವ ಪಾಲಿಸೊ ೪

 


ದೇವಾ ನಿನ್ನಯ ಪಾದ ಸೇವೆಯೊಳಿರುವಂತೆ
ಕಾವುದೆನ್ನಯ ಮನ ಪಾವನ ಮೂರುತಿ ಹರಿಯೇ ಪ
ಒಲವಿನ ಸಂಸಾರ ಸ್ಥಿರವೆಂದು ನಂಬುತ್ತ
ಬರಿದೆ ಪೋಗದೆ ನಿಜದರಿಪಿನೋಳ್ ನಿಲಿಸೆನ್ನಾ ಹರಿಯೇ ೧
ಎಂದು ಕುಂದದ ನಿತ್ಯಾನಂದವಾಗಿಹ ನಿಜ
ಛಂದದೊಳಿರುವತ್ಯಾನಂದದೊಳ್ ನಿಲಿಸೆನ್ನಾ ಹರಿಯೇ ೨
ಶರಣರಕ್ಷಕ ನಿನ್ನ ಕರುಣವೆನ್ನಯ ಮೇಲೆ
ಮರೆಯವೆ ಇರುವಂತೆ ಎರಕವಾಗಿಸೆನ್ನಾ ಹರಿಯೇ ೩
ಆ ಸ್ವಪ್ರಕಾಶದಿ ಸೂಸದೆ ನಿಲುವಂತೆ
ಭಾಸುರ ಘನಸುಖವಾಸದೊಳ್ ನಿಲಿಸೆನ್ನಾ ಹರಿಯೇ ೪
ಭಾವಭಾವನೆಯಲ್ಲಿ ತೀವಿ ನಾರಾಯಣಾ
ಪಾವನ ಗುರುಮೂರ್ತಿ ಸೇವೆ ಶಾಂತಿಯನೀಯೋ ಹರಿಯೇ ೫

 

ಗಜರಾಜ ಸಶುವಾ ಹಿಂದೆ ಭಜಿಸಿದಾಗ

ದೇವಾ ಪಾಲಿಸೋ ಎನ್ನಾ ನಿಜ ಭಾವದಿ ರಕ್ಷಿಸೆನ್ನಾ
ದೇವಾ ಪದಸೇವಾ ಸುಖವೀವಾ ನಿಜಭಾವದಿ
ಕಾವುದೆನ್ನನು ನೀನೂ ಪ
ಗಜರಾಜ ಪಶುವಾ ಹಿಂದೆ ಭಜಿಪಾಗತಾ ನೀನೇ ಕಾಯ್ದೆ
ಸುಜನ ಮನವಿ ಹರಿಭಜನೆಯೊಳ್ ಗಜನೀಗೆ
ನಿಜದಾಪದವ ತೋರಿದೇ ೧
ಮಂದವಾಗಿಹೇ ನಾನು ನಿಜಾನಂದದೊಳ್ ಇಡೋ ನೀನು
ದ್ವಂದ್ವ ನಿದ್ರ್ವಂದ್ವ ಸ್ವಾನಂದ ಆನಂಧದಿ
ಛಂದದೀ ಸಲಹೊ ನೀನು ೨
ಚಿಂತೆಗಳೆಲ್ಲ ತೊರಿಸೊ ನಿಶ್ಚಿಂತ ಪದದೊಳ್ ಪಾಲಿಸೊ
ಶಾಂತ ವಿಶ್ರಾಂತ ಮಹಂತ ಅನಂತನೇ
ಶಾಂತಿ ಪದದೊಳ್ ಇರಿಸೊ ೩

 


ನಾರಾಯಣ ನರಹರಿ ಪರಬ್ರಹ್ಮನಿರ್ವಿಕಾರಿ ಪ
ದ್ರುಕ್ ದೃಶ್ಯ ಮಧ್ಯದಲ್ಲಿ ಚೊಕ್ಕಟ್ಟಾಗಿರುವನಲ್ಲಿ
ಪ್ರಕಟವಾಗಿ ತ್ರಿಕೊಟ ನಿಜ ಸ್ಥಾನದಲ್ಲಿ ತೋರುವನಲ್ಲಿ ೧
ಏನೊಂದು ತಿಳಿಯದದನೆ ತಾನೆಂದು ತಿಳಿಯಲವನೆ
ಧ್ಯಾನದರುವಿನಲ್ಲಿ ಮನ ತಾನೆ ಚಿನ್ಮೂರ್ತಿ ಘನ ೨
ತನುವಿನೊಳ ಹೊರಗಿರ್ಪ ತನ್ನ ತಾನೆ ಕಾಣುತಿರ್ಪ
ಚಿನುಮಯಾತ್ಮ ಪರಂಜ್ಯೋತಿ ಘನಪರಾತ್ಪರ ಮೂರ್ತಿ ೩
ಅಂತರಾತ್ಮ ಗುರು ಪೂರ್ಣನಂತ ಮಹಿಮ ನಾರಾಯಣ
ಸಂತ ಸಾಧು ಸಾಧ್ಯ ಜ್ಞಾನ ಶಾಂತಿ ಪಾಲಿಪ ಘನ ೪

 

ವೇದನಾಲ್ಕರ ಕದ್ದಂತಾದೈತ್ಯನ ಅಕ್ಷೌರುಷೇಯವಾದ
೧೦
ನಾರಾಯಣ ನಿನ್ನ ಸ್ಮರಣೆಯಲಿ ಮನ
ಬೇರು ವೂರಿರುವಂತೆ ಕಾರುಣ್ಯದಲಿ ಕಾಯೊ ಪ
ವೇದನಾಲ್ಕರ ಕದ್ದಂಥಾ ದೈತ್ಯನ ಕೊಲ್ವಾ
ಶದಿ ಮತ್ಯಾವತಾರ ಧರಿಸಿದೆ ಹರಿಯೇ ೧
ದೇವದಾನವರ ಮಥನದಿ ಮಂದರ ಪೊತ್ತೆ
ಭಾವಕಿಯಳ ಮೋಹಿಸಿ ಮೋಹಿನಿಯಾದೆ ೨
ವರಹರೂಪದಿ ಪೋಗಿ ಧರೆಯನು ಧರಿಸಿದೆ
ದುರುಳ ಹಿರಣ್ಯಕನಕರದಿಂದ ಸೀಳಿದೆ ೩
ಕಂದನ ನುಡಿಕೇಳಿ ಕಂಬದಿಂದುದಿಸಿದೆ
ತಂದೆಯ ಬಗೆದವನಾ ಛಂದದಿ ಸಲಹಿದೆ ೪
ಬಲಿಯ ದಾನವ ಬೇಡಿ ನೆಲನ ಈರಡಿ ಮಾಡಿ
ತುಳಿದು ಆತನ ಮನೆ ಬಾಗಿಲ ಕಾಯ್ದೆಯೊ ೫
ತಾತನ ಮಾತನು ಕೇಳಿ ಮಾತೆಯ ಕೊಂದೆ
ಖ್ಯಾತಿಯಿಂದಲಿ ಕ್ಷತ್ರಿಯರನು ಸಂಹರಿಸಿದೆ ೬
ಮಾತೆಯ ವರ ಕೇಳಿ ನೀತಿಯಿಂದಲಿ ಪೋದೆ
ಸೇತುವೆ ಕಟ್ಟಿ ನೀಖ್ಯಾತರಾವಣನಕೊಂದೆ ೭
ಪುಟ್ಟ ಶಿಶುವಾಗಿ ಗೋಪಿಗೆ ಮುದ್ದು ತೋರಿದೆ
ಬೊಟ್ಟಿಲಿ ಗಿರಿಯನು ನೆಗಹಿದೆ ಶ್ರೀ ಕೃಷ್ಣಾ ೮
ತ್ರಿಪುರರ ಸತಿಯರ ವ್ರತವಗೆಡಿಸುವಂಥಾ
ಅಪರಿಮಿತದಿ ಮೋಹಿಸುವಾ ಮೂರ್ತಿಯಾದೆ ೯
ಭಕ್ತವತ್ಸಲ ದೇವಾ ಯುಕ್ತಿಯಿಂದಲಿ ಕಾಯ್ವ
ವ್ಯಕ್ತಿ ಕಲ್ಕ್ಯಾವತಾರ ಧರಿಸಿದ ಹರಿಯೇ ೧೦
ಶಬ್ದವ ನುಡಿಸುವ ಅಬ್ದಿನಿನ್ನದೊ ದೇವಾ
ಶಬ್ದವಾಲಿಸದ ನಿಶ್ಯಬ್ದದೊಳಿರಿಸೆನ್ನಾ ೧೧
ಅಂತರದೊಳಗೆನ್ನಾ ಕಂತುನಾರಾಯಣಾ
ಸಂತಸದೊಳು ನಿಜ ಶಾಂತಿ ಪಾಲಿಪ ಗುರು ೧೨

 

೧೧
ನಾರಾಯಣಾ ಕರುಣಾ ಘನಚರಣಕ್ಕೆರಗುವೇ
ಸ್ಮರಣೆಯೊಳಗೆ ಮನ ಒಲಿಯಿಸಿ ಪ್ರೇರಣೆ ಮಾಡುವಾ ಪ
ನನ್ನ ನಿಜವನರಿಯದೆ ನಾ
ಅನ್ಯ ಯೋನಿಯೊಳಗೆ ತಿರುಗಿ
ಬನ್ನ ಬಡುವುದನ್ನು ತಿಳಿದು
ನಿನ್ನ ಬಿಡೆನೆನ್ನೆ ೧
ಭಾವಭಕ್ತಿಯಿಂದ ಪಿಡಿದು
ನೋಯದಂತರದೊಳಗಿಳಿದು
ಸಾವಧಾನದಿ ಸೇವೆಮಾಳ್ಪೆ
ಭಾವ ಬಲಿದು ನಾ ೨
ಎಲ್ಲಿಯೂ ಪರಿಪೂರ್ಣ ನೀನೆ
ಸೊಲ್ಪಗೊಡಲಶಕ್ಯ ನಾನೈ
ಬಲ್ಲಿದವರಿಂದೆಲ್ಲಾ ಅರಿಶ
ಘುಲ್ಲನಾಭನೇ ೩
ನಾದದ ಮೊದಲಿನ ಮೂಲದಿ
ಭೇದಭಾವವೆಲ್ಲ ಅಳಿದು
ಆದಿಶಾಂತಿ ಸುಖವನೀವ
ನಾದಿ ಶ್ರೀಗುರು ೪

 

೧೨
ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ
ನಿನ್ನ ಹೊರತು ಅನ್ಯನರಿಯೆನೂ
ನಿನ್ನ ಹೊರತು ಅನ್ಯರರಿಯೆ ಪನ್ನಗೇಂದ್ರವಾಸ ಹರಿಯೆ
ಸನ್ನುತಾತ್ಮ ನಿಜವನಿತ್ತು ಪ್ರಸನ್ನ ಗುರುವರೇಂದ್ರ ದೇವಾ ಪ
ಉರಗನ್ಹೆಡೆಯ ನೆರಳ ಸ್ಥಿರವೆಂದು ಕಪ್ಪೆಯು ನಿಂತ
ತೆರದಿ ವಿಷಯದೊಳಗೆ ಬೆರದು ಬೆಂದೆನು ನಾ
ದುರಿತ ದುಷ್ಟಗಣದಿ ಹರಿದೂ ಮೃತ್ಯುವನೆ ಮರೆದು
ಅರಿವು ಮಾಯವಾಗಿರುವ ಎನ್ನಾ ಸ್ತರದ ಆತ್ಮಪ್ರಭೆಯ ಮರೆತು
ಇರುವ ಎನ್ನ ಮೇಲೆ ನಿನ್ನ ಕರುಣವಿಟ್ಟು ಕಾಯ್ದ ದೇವಾ ೧
ತತ್ವವಿಂಶತಿ ನಾಲ್ಕು ಕೂಡಿದಾ ಈ ದೇಹದಲಿ ಏ
ಕತ್ವವಾಗಿ ಇದನೆ ನಂಬುತಾ ಮುನ್ನರಿಯದಲೆ ವಿ
ಚಿತ್ರವಾಸ್ತುವನ್ನು ಮರೆತು ಸತ್ತು ಹುಟ್ಟಿತೊಳಲಿ ಬಳಲಿ
ಕತ್ತೆಯಂತೆಯಿರುವ ಎನ್ನಾ ನಿತ್ಯ ನಿಜದೊಳಿಟ್ಟ ದೇವಾ ೨
ಆದಿ ಮಧ್ಯ ಅಂತರಾಂತದಿ ತುಂಬಿರುವ ವಸ್ತು
ನಾದ ಬಿಂದು ಸ್ವಪ್ರಕಾಶದಿ ಹೃದಯದಲಿ ತೋರ್ಪ
ಭೇದಾತೀತ ನಿರ್ವಿಕಾರದಿ ಸುಬೋಧದಿ
ಆದರದಿ ಶಾಂತಿ ನಿಜದಾದಿ ಸುಖವನಿತ್ತ ಗುರು
ಪಾದಪದ್ಮ ನೆನೆದು ಪೂರ್ಣನಾದ ನಾರಾಯಣ ಪ್ರಭು ೩

 

೧೩
ನೆನೆವೇ ನಾ ನಿತ್ಯ ಚರಣ ಕಮಲವನ್ನು
ಕರುಣಾಕರ ಭವ ಹರಣ ನಾರಾಯಣ ಪ
ಕನಸಿನ ಸಂಸಾರ ನೆನಸದಂತೆ ಎನ್ನಾ
ಮನಸ್ಸು ಶ್ರೀಹರಿನಿಜ ಬರಿವಿನೊಳ್ ನಿಲಿಸಯ್ಯಾ ೧
ಮಂದ ಬುದ್ಧಿಲಿ ನಿಜಾನಂದವನರಿಯದೇ
ಬಂಧನೆಗೊಳಗಾದೆ ತಂದೆ ನೀ ರಕ್ಷಿಸೊ೨
ದುರಿತಗಳೆಲ್ಲವ ಹರಣಗೊಳಿಸಿ ನಿಜ
ಸ್ಮರಣೆಯೊಳಿರುವಂತೆ ಕರುಣದಿ ನೋಡೆನ್ನಾ ೩
ಶಬರಿಯ ಕಾಯ್ದೆಯಾ ಬದರಿಯ ಫಲವುಂಡು
ವಿಭು ಪರಮಾನಂದಾ ಪ್ರಭೆಯೊಳಗಿರಿಸೆನ್ನಾ ೪
ನೆನೆವರ ಮನದಾ ಕೊನೆಯಲಿ ಮಿನುಗುವ
ಸನಕಸನಂದನ ವಂದಿತನೀದೇವಾ ೫
ವಾಸುದೇವನೇ ನಿನ್ನ ದಾಸಿ ಶಾಂತಿಘನ
ವಾಸ ಸ್ವಸುಖವೀವ ಕೇಶವಾಶ್ರಮಗುರು ೬

 

೧೪
ಪಾಲಯಮಾಂ ಶ್ರೀ ರಾಮಾ ಮೂಲ ಸುಗುಣ ಶೀಲನೆ ಪ
ನೀಳ್ಗರೆವ ಹೃದಯನಿವಾಸಾ ಕಾಲಾಂತಕ ಕರ್ಮನಾಶಾ
ಚಾಳಿಕ ಚಿನ್ಮಯ ಸುರೇಶ ಹರೀ ಲೋಲಗುಣಾತೀತನೆ ೧
ಚಂಡಕಿರಣ ಕುಲಜರಾಘವಾ ಸುಂದರಶ್ರೀ ಸೀತಾಧವಾ
ಛಂಧ ನಿಜಾನಂದ ವೀಯುವಾ ಬಂದಭಯನಿವಾರನೇ ನೀ ೨
ದಶಮುಖರಾವಣ ನಿವಾರಣಾ ಅಸುರಾಸುರ ನಿಕ್ರಂದ ನಾ
ಕುಶಲ ವಿಭೀಷಣ ಪಾಲಯಸ್ವಾಮೀ
ಋಷಿಯಾಗವ ಕಾಯ್ದ ದೇವಾ ೩
ಅಂಬುಜಾಕ್ಷಾನಂತರೂಪಾ ತುಂಬಿಹ ಸದ್ಗುರು ಸ್ವರೂಪಾ
ನಂಬಿದ ಭಕ್ತರನೆ ಪಾಲಿಪಾ ಚಿದಂಬರ ಶಾಂತಿದಾಯಕಾ ೪

 

೧೫
ಬಿಡಬ್ಯಾಡೆನಗೆ ಹರಿಯೇ ತಡಮಾಡಲ್ಯಾಕೆ ದೊರೆಯೇ
ದಯಮಾಡಿ ಪೊರೆಯೋ ಇಂದು ಭಯ
ನಿವಾರನೇ ನೀ ಬಂದು ಪ
ಗಜರಾಜ ಪಶುವ ಹಿಂದೆ ಭಜಿಪಾಗ ನೀನೆ ಬಂದೆ
ನಿಜವಾಗಿ ನಕ್ರನೊದೆದು ಸುಜನನಾಥ ನೀ ಕರೆದೊಯ್ದು ೧
ಪಾಂಚಾಳಿ ಸಭೆಯೊಳಂದು ವಂಚಕ ದುಶ್ಯಾಸನ ಬಂದು
ಮುಂಚಿತದಿ ಸೀರೆ ಎಳೆಯೆ ವಾಂಛಿತದಿ ಕಾಯ್ದ ಆ ಪರಿಯೇ ೨
ಅಂದಾಗಲೂ ಪುತ್ರನನು ಕರೆದಾಗಲಜಾಮಿಳನು ಭರ
ದಿಂದ ಕಾಯ್ದೆ ಅವನಾ ಮರದ್ಯಾತಕೀಗಲೆನ್ನಾ ೩
ಈ ಪರಿಯ ಕೀರ್ತಿ ಪಡದು ಕೋಪಿಸಲು ಬ್ಯಾಡ ಮರೆದು
ಶ್ರೀ ಪತಿಯೆ ಪದವನೀಯೋ ಉಪರಮೆ ಶಾಂತಿ ಕಾಯೋ೪

 

೨೬
ಆತ್ಮನಿವೇದನೆ
ಮನವೇ ನಿನ್ನಯ ನಿಜಮೂಲ ನೀನೋಡು
ಸಮರಸವನೆಗೂಡು || ಚಾಲ ||
ವಿಷಯವಾಸನೆಗಳ ನಿಶಿದು ಹೋಗಲಿ ಕುಳ
ಅಸಮ ಸಾಹಸಿಯಾಗಿ ನಿಜಸುಖದೊಳಗೆ ಪ
ಹಿಂದೆ ಬಹು ಜನ್ಮದೊಳು ನೀ ತೊಳಲಿ ವಾಸನೆಯೊಳು ಬಳಲಿ
ಇಂದೆ ನೀ ಬಂದೆ ನರಜನ್ಮದಲಿ ಎಚ್ಚರು ನಿನಗಿರಲಿ
ಮುಂದೆ ಸಿಕ್ಕುವ ನಿಜವಿಲ್ಲದರಲ್ಲಿ ಆ ನಿಮಿತ್ಯದಲೀ
ಸಂದೇಹಂಗಳ ಬಿಟ್ಟು ಸತ್ಪುರುಷರ ಹೊಂದಿ
ನಿಜದೊಳತಿ ಛಂದದಿ ನಿಲ್ಲೈ ೧
ಗುರುಪಾದ ಕಮಲದ ಸೇವೆಯ ಮಾಡಿ ಇಷ್ಟಾರ್ಥವ ಬೇಡಿ
ದೃಢದೀ ಅದರಲ್ಲಿ ನಲಿನಲಿಹಾಡಿ ಸತ್ ಶಬ್ದವ ಗೂಡಿ
ಬಿಡದೇ ನಡುಮಾರ್ಗದಿಂ ಮುಂದೊಡೊ
ಮೂಧ್ರ್ನಿಯಲಿ ಲೋಲ್ಯಾಡಿ
ಸದಮಲ ನಿಜಸುಖ ಅದರಲಿ ನಿಲ್ಲುತ ಚದಲದೆ
ದೃಢತರವದಗಿ ನಿರಂತರ ೨
ಭಕ್ತಿಭಾವವನೆ ದೃಢಮಾಡು ಸದ್ಧರ್ಮವಗೂಡು
ಯುಕ್ತಿಯಿಂದಲೀ ಸಾಧನೆಮಾಡು ಗುರುಪದದೊಳಗಾಡು ವಿ
ರಕ್ತಿ ನಿಜವಾಗಿ ಹುರಿಯನೆ ಮಾಡು ಸತ್ಸಂಗದೊಳಾಡು
ಸತ್ತನಾಗಿ ತೇಜೋಕ್ತ ಸದ್ಗುರು ವಚನೋಕ್ತಿಯಿಂದಲಿ
ಅನುರಕ್ತನಾಗಿ ನಿಜ ೩
ಕಾಷ್ಠದೊಳಗಿಂದಾ ಅಗ್ನಿಯ ಪುಟ್ಟು ಕಾಷ್ಠವನೆ ಸುಟ್ಟು
ಉತ್ರ‍ಕಷ್ಟ ಚಿತ್ತವನೆ ಪುಟವಿಟ್ಟು ಜಡಭಾವನೆ ಬಿಟ್ಟು
ಥಟ್ಟನೇ ಜ್ಞಾನಾಗ್ನಿ ಪುಟವಿಟ್ಟು ಕ್ಷಡ್ರಿಪುಗಳ ಸುಟ್ಟು
ಶ್ರೇಷ್ಟ ಚಿಜ್ಯೋತಿಯಿಂದೆಸೆವ ನಾರಾಯಣ ದಿಟ್ಟ
ಸದ್ಗುರುವಿನೊಳ್ ಇಟ್ಟ ಶಾಂತಿ ನಿಜ ೪

 

ಪುಂಡಲೀಕನ ಭಕ್ತಿಗೆ ಮೆಚ್ಚಿ
೨೭
ಆತ್ಮನಿವೇದನೆ
ಯಾವಾಗಲೂ ನಿನ್ನ ಸೇವೆಯೊಳಿರುವಂತೆ
ಕಾವುದೆನ್ನಯ ನಿಜದೀ ಕೃಪಾನಿಧೇ
ಈ ಪರಿಯಿಂದನಾ ಭಾರಿ ಭವದಿ ನೊಂದೆ
ತೋರೋ ನಿನ್ನಯ ಚರಣಾ ನಾರಾಯಣ ಪ
ಆಶಾಪಾಶದಲಿ ನಾ ಘಾಸಿಯಾದೆನು ದೇವಾ
ವಾಸನೆಯೊಳು ತೊಳಲಿ ಬಹು ಬಳಲಿ
ವಾಸುದೇವನೆ ನಿನ್ನ ಪಾದದೊಳಗೆನ್ನಯ
ಬೇಸರದಲೆ ರಕ್ಷಿಸೋ ನಿಜಪಾಲಿಸೋ ೧
ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ
ಸೇರಿ ನಂಬಿದೆ ಭರದಿ ಬಹು ವಿಧದಿ
ದೂರನಾದೆನು ನಿಜದರಿವುನಾನರಿಯದೇ
ಸೇರಿಸೊ ನಿಜ ಸುಖದಿ ಪ್ರಬೋಧದಿ ೨
ನಂಬಿದವರ ಕಾಯ್ವ ಸಂಭ್ರಮ ಪೊತ್ತವ
ಶಂಭು ಶಂಕರ ಪ್ರಿಯನೇ ಸರ್ವೇಶನೇ
ಇಂಬು ದೋರೆನ್ನಾ ಚಿದಂಬರ ನಿಜಪದ
ನಂಬಿ ನಿಲ್ಲುವ ತೆರದಿ ಸದೃಢದೀ ೩
ತತ್ವಮಸಿ ಮಹಾ ವಾಕ್ಯವ ಶೋಧಿಸಿ
ನಿಸ್ತರಿಸುವ ಭವವಾ ಉಪಾಯವಾ
ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ
ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ೪
ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ
ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ
ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ೫
ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ
ಶರಣ ಬಂದ ದೀನರನು ಸಲಹಿದೆಯೊ
ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ ೬
ಅನ್ಯಾಯದಲಿ ಕುರುಪತಿಯ ಮಡುಹಿದೆಯೊ
ಕರ್ಣನ ಕಂಠವ ಕತ್ತರಿಸಿದೆಯೊ
ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ ೭
ಪುಂಡಲೀಕನ ಭಕ್ತಿಗೆ ಮೆಚ್ಚಿ
ಪಂಡರಪುರದಲ್ಲಿ ನಿಂತೆನಿ ಹೆಚ್ಚಿ
ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ ೮
ಅಂತರದೊಳಗೆನ್ನಾ ಕಂತು ನಾರಾಯಣ
ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ
ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ ೯

 

ದಶರಥನುದರದಿ ಶಿಷುವಾಗಿ ಜನಿಸಿದೆ
೧೬
ರಾಮಾ ನಿನ್ನಯ ದಿವ್ಯ ನಾಮಾ ನೆನೆವೆನು
ರಾಮಾ ನಿನ್ನಯ ದಿವ್ಯ ನಾಮಾ
ಪ್ರೇಮವ ಕೊಟ್ಟನ್ನಾ ನೇಮದೊಳಿರಿಸೊ ನೀ ಕರುಣದಿ ಪ
ಚಿತ್ತ ಶುದ್ಧವ ಮಾಡಿ ಮತ್ತೆ ನಿನ್ನಯ ಪಾದ
ನಿತ್ಯದಿ ನೆನೆವಂತೆ ಭಕ್ತಿಯೊಳಿರಿಸೊ ನೀ ಎನ್ನನು ೧
ದಶರಥನುದರದಿ ಶಿಶುವಾಗಿ ಜನಿಸಿದೆ
ಹೊಸ ಆಭರಣವಿಟ್ಟು ಕುಶಲಮಾತೆಯನು ನೋಡುವ ೨
ಛಂದದಿಂದಲಿ ಆನಂದದೊಳಿಹ ರಾಮಾ
ಚಂದ್ರನ ಮೊಗ ಅತಿ ಸುಂದರವಾಗಿರುವವನೇ ೩
ಬಿಲ್ಲ ಬಾಣವಪಿಡಿದು ಎಲ್ಲಾ ದೈತ್ಯರ ಕೊಂದು
ಅಲ್ಲೇ ಕೌಶಿಕಯಾಗ ಎಲ್ಲ ಸಲಹಿದೆ ಧೀರನೇ ೪
ವಿಥುಳಾಪುರದಿ ಬಂದು ಅತುಳ ಧನುವ ಮುರಿದು
ಸತಿ ಸೀತಾ ಸಹಗೂಡಿ ಪಿತನಾ ಪಟ್ಟಣವನು ಸೇರಿದೆ ೫
ಮಾತೆಯ ವರ ಕೇಳಿ ನೀತಿಯಿಂದಲಿ ಅನು
ಜಾತನ ಒಡಗೂಡಿ ಖ್ಯಾತಿಯಿಂದಲಿ ಪೋದಂತಹ ೬
ಸರಯು ತೀರದಿ ಬಂದು ಪುರದ ಜನರ ಬಿಟ್ಟು
ಭರದಿ ನಾವೆಯನೇರಿ ತ್ವರಿತದಿಂ ದಾಟಿ ನೀ ಪೋದೆ ೭
ಭಕ್ತಿಯಿಂದಲಿ ಆ ಸಕ್ತ ಭರತನ ಕಂಡು
ಯುಕ್ತಿಯಿಂದಲಿ ತೇಜೋಯುಕ್ತಪಾದುಕವನು ಕೊಟ್ಟೆನೀ ೮
ಪುಸಿಯತಿಯಾಗಿ ಶೀತೆಯ ಅಸುರ ಕೊಂಡೊಯ್ದನೆಂದು
ವ್ಯಸನದಿಂದಲಿ ಪೋಗಿ ಪಕ್ಷಿಯುದ್ಧರಿಸಿದೆ ಘಮ್ಮನೆ ೯
ಶಾಂತಮೂರುತಿ ಹನುಮಂತರೆಲ್ಲರು ಕೂಡಿ
ಅಂತರದಲಿ ಸೇತು ನಿಂತು ನೋಡುವೆ ನೀ ಛಂದದಿ ೧೦
ಶರಣ ಬಂದ್ವಿಭೀಷಣನ ಕರುಣದಿಂದಲಿ ಕಾಯ್ದೆ
ಸ್ಥಿರದಾಪಟ್ಟವಗಟ್ಟಿ ಹರುಷದೋಳ್ ನಿಲಿಸಿದೆ ಅವನನು ೧೧
ವಾನರರೊಡಗೊಂಡು ಸೇನೆ ಸಹಿತಲೇ ದಶಾ
ನನ ರಾವಣನಕೊಂದು ಮಾನಿನೀ ಸಹಿತನೀ ಬಂದಿಹೆ ೧೨
ಪುಷ್ಪಕವನೆ ಏರಿ ಅಕಸ್ಮಾತದಲಿ ಬಂದು
ಆಕ್ಷಣದಲಿ ಭರತ ರಕ್ಷಣ ಮಾಡಿದ ದೇವನೇ ೧೩
ಪಟ್ಟಣದಲಿ ಮಾಹಾ ಪಟ್ಟವನೇರಿಸಿ
ಶಿಷ್ಟ ಅಯೋಧ್ಯೆಯ ಪಟ್ಟಣವಾಳಿದೆ ರಾಮನೆ ೧೪
ಬ್ರಹ್ಮಮೂರುತಿ ರಾಮಾಗಮನ ಚರಣದಿ
ಸುಮ್ಮಾನದಲಿ ಶಾಂತಿ ತನ್ಮಯಗೊಳಿಸಾನಂದದಿ ೧೫

 

೨೨
ಸರಸ್ವತಿ ದೇವಿ
ವಾರಿಜನೇತ್ರೆಯ ಶಾರದೆ ಶ್ರೀಮುಖ
ತೋರುವದೆನ್ನಯ ಪಾರ ಪರಾತ್ಪರೆ ಪ
ಮಯೂರ ವಾಹಿನಿ ಕಾಯುವುದೆನ್ನ
ತಾಯೆ ಚಿದ್ಛನ ನಿಜದಾಯುವ ನೀಯುವ ೧
ಬಾಲೆಯ ಭಾಗ್ಯವಿಶಾಲೆಯ ನವಕುಸುಮ
ಮಾಲೆಯ ಗಾನವಿಲೋಲೆ ವಾಗೇಶ್ವರಿ ೨
ಛಂಧದೊಳೆನ್ನ ಸಾನಂದವ ಪಾಲಿಪ
ಮಂದಮತಿಯ ತಿದ್ದಿ ಸುಂದರ ಮುಖಿಯೆ ನೀ೩
ನಂಬಿಕೆ ಹೊಂದಿಹನೆಂಬುವ ಭಕ್ತರ
ಇಂಬುಗಳನ್ನೆ ಕೊಟ್ಟು ಬೆಂಬಲಕಿರ್ಪಳೆ ೪
ಕಂತು ಬ್ರಹ್ಮನರಾಣಿ ಅಂತರಿಕ್ಷಣೆವಾಣಿ
ಶಾಂತಿ ಸದ್ಗುರುಪದ ಸಂತಸಕಾರಿಣಿ ೫

 

೧೭
ಗೋಪಿ : ವೇಣುಗೋಪಾಲ ನಿನ್ನ ಜಾಣತನವ ಬಿಡು ಬಿಡು
ಕಾಣದರ್ಮನೆಯ ಸೇರಿ ತ್ರಾಣ ಬಲಹರಣವ
ಮಾಡುವೇಜಾಣ ಪ
ಕೃಷ್ಣ : ನೀರೆ ಗೋಪಿಯೆ ನಿನ್ನ ದ್ವಾರದೊಳಿರುವೆ
ತೋರದೆನ್ನನು ನೀನು ಭಾರಿ ಬಳಲಿರುವೆ ನೀರೆ ೧
ಗೋಪಿ : ಹತ್ತಿರದಲ್ಲಿದ್ದು ನೀನು ಇತ್ತೆನಗೆ ತೋರದಂತೆ
ಚಿತ್ತ ಬೋರ್ಗರೆಳುಕೃಷ್ಣ ಮತ್ತೆನಾ ಬಿಡುವೆನೆ
ನಿನ್ನನು ”ವೇಣು ೨
ಕೃಷ್ಣ : ಅಕ್ಷಿಯೊಳಗೆ ನಿನ್ನ ಸಾಕ್ಷಿಯಾಗಿರುವೆ
ಈಕ್ಷಿಸಲರಿಯೆ ನೀ ಕುಕ್ಷಿ ತುಂಬಿರುನೆ | ನೀರೆ ೩
ಗೋಪಿ : ಆರು ಬಾಗಿಲು ನೀಗಿ ಜೋರಗಂಡಿಯೊಳ್ ಪೋಗಿ
ಏರಿ ಮೇಲಣ ತುದಿಯೋಳ್ ಸಾರಿ ಸಕಲಧ್ವನಿಗಳ
ಮಾಡುವೆ ||ವೇಣು|| ೪
ಕೃಷ್ಣ : ಮನುಮುನಿ ಜನರೆಲ್ಲಾ ವಿನಯದಿಂ ಪಿಡಿದು
ಘನಸುಖ ಪಡುವರು ಮನದೊಳಗರಿದು ||ನೀರೆ|| ೫
ಗೋಪಿ : ಆಗಮ ಸಂಚಿತ್ತ ಭೋಗ ಸಂಸಾರವನ್ನೆಲ್ಲಾ
ನೀಗಿಸುವೆ ನೀನವರಾ ಯೋಗೀ
ಜರೆನಿಸಿದೆಲ್ಲಾ ||ವೇಣು || ೬
ಕೃಷ್ಣ : ನಿಮಿಷ ಮಾತ್ರದಿ ಸುಖವ ಮನದೇಸ್ಮರಿಸಿ
ಅಮಮ ಘನಾನಂದ ರಮಿಸು ಸ್ವಸುಖವಿ ||ನೀರೆ|| ೭
ಗೋಪಿ : ಕಣ್ಣ ಸನ್ನೆಯ ಮಾಡಿ ಅನ್ಯರ್ಮನ್ಮನೆಗಳಲ್ಯೋಡಿ
ಬೆಣ್ಣೆ ಪಾಲುಮೊಸರು ಸುರಿದು ಬನ್ನಣೆ
ಮಾತುಗಳಾಡುವೆ ||ವೇಣು || ೮
ಕೃಷ್ಣ : ಧೊರೆಯಾಗಿರುವೆ ನಾನು ತಿರಿದುಣ್ಣಲರಿಯೆ
ಬೆರತು ಎನ್ನೊಳು ನೀನು
ಅರಿವಿನಿಂದರಿಯೆ || ನೀರೆ|| ೯
ಗೋಪಿ : ಕಂತು ಪಿತನೆ ನಿನ್ನ ಭ್ರಾಂತಿ ಹತ್ತಿತು ಎನಗೆ
ಸಂತಸದೊಳು ನಿಜ ಶಾಂತಿಪಾಲಿಪ
ಗುರುವರ ||ವೇಣು || ೧೦

 

ಗಜಸುರ ವರನಿತ್ತು ಗಜಚರ್ಮಧಾರಊ
೧೮
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ
ಬಾಲೆ ದ್ರೌಪದಿ ಅಭಿಮಾನವ ಕಾಯ್ದಗೆ
ಭಾಳಲೋಚನ ಭವಹಾರಕಗೆ
ಮಂಗಲಂ ಜಯ ಮಂಗಲಂ ಪ
ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ
ಭಾಸ ಸರ್ವಾಂತರ ವಾಸ ಜಗದೀಶಗೆ
ತೋಷಪಾಲಕ ವಾಸುದೇವನಿಗೆ
ಮಂಗಲಂ ಜಯ ಮಂಗಲಂ ೧
ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ
ಶರಧಿಗೆ ಸೇತು ಕಟ್ಟಿದ ಶ್ರೀರಾಮಗೆ
ಪರಮ ಪುರುಷ ವಿಶ್ವೇಶ್ವರಿಗೆ
ಮಂಗಲಂ ಜಯ ಮಂಗಲಂ ೨
ಗಜಾಸುದ ವರವಿತ್ತ ಗಜಚರ್ಮಧಾರಗೆ
ಗಜರಾಜನ ಕಾಯ್ದ ಗೋವಿಂದಗೆ
ಗಜವದನನ ಪಿತ ಗೌರೀರ ಮಣಗೆ
ಅಜಪಿತನಾದ ನಾರಾಯಣಗೆ
ಮಂಗಲಂ ಜಯ ಮಂಗಲಂ ೩
ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ
ಶಂಕರ ನಿಜಪದ ಶಾಂತಿಪಾಲಿಪಗುರು
ರಂಗರಕ್ಷಕ ಮಹಾಬಲೇಶ್ವರಗೆ
ಮಂಗಲಂ ಜಯ ಮಂಗಲಂ ೪

 

೨೩
ಶಿವಸ್ತುತಿ
ಶಂಕರನೇ ಸೌಖ್ಯದಾತ ಸಂಕಟ ನಿವಾರಣ ಶಿವ ಪ
ತನುಮನಕಾಧಾರನಾದ ಘನಪರಾನಂದಾರ್ತ
ವಿನಂಯದಿಂದ ನೋಡಲಕ್ಷ ಚಿನುಮಯಾತ್ಮನೇ ನೀ ೧
ಚಿದ್ದಿಲಾಸ ಜಗವಿದೆಲ್ಲಾ ಅದ್ವಯಾನಂದಾಖ್ಯನೇ
ಸಿದ್ಧನಾಗಿ ತೋರುತಿರುವಬಿದ್ರೂಪಾರ್ತನೇ ನೀ ೨
ವಾಗ್ಮನಗೋಚರನೇ ಸಂಗರಹಿತ ಸ್ವಪ್ರಕಾಶ
ಮಂಗಳಾತ್ಮ ಜ್ಯೋತಿರ್ಮಯ ಗಂಗಾಧರನೇ ನೀ ೩
ಅಂತರಾನಂದಾರ್ತ ಜ್ಞಾನ ಸಂತ ಸಾದು ಸಾಧ್ಯನೇ
ಶಾಂತಿ ಪದವನಿತ್ತ ಗುರು ಶಾಂತರೂಪನೇ ನೀ ೪

 

೨೪
ಶ್ರೀ ಗೌರೀವರೇಂದ್ರನೇ ನಮೋ ನಮೋ ನಮೋ
ಯೋಗಮಯನೆ ಭೋಗದಯನೆ ನಾಗಾಭರಣನೆ
ಭೋಗೀ ಭೂಷಣ ವ್ಯಾಘ್ರವಸನನೆ ಪ
ವಾಸುದೇವ ಪ್ರಿಯನೇ ಸದಾ ಶಿವಾ ಶಿವಾ
ಶಶಾಂಕಧರನೇ ಕ್ಲೇಷಹಾರನೇ ದೋಷನಾಶನೇ
ಭಾಸುರ ಪ್ರಕಾಶಾ ತೋಷದಾತನೇ ೧
ಪಂಚ ಪ್ರಾಣಧಾರನೇ ಪರಾತ್ಪರಾವರಾ
ಸಂಚಿತ ಅಘದೋಷಹರಣ ಸರ್ವಸುಖಕರಾ
ಪಂಚವದನಾ ಪಂಚಶರಹರಾ ೨
ಜ್ಞಾನಮಯ ಸುಚೇತನಾ ಕೃತಾಘನಾವನಾ
ಸ್ವಾನುಭವ ಸ್ವಶಾಂತಿದಾತ ಧ್ಯಾನಿಪಾಜನಾ
ದೀನೋದ್ಧಾರಕಾ ವಿಜ್ಞಾನಮಯನೇ ೩

 

೨೫
ಹರಹರ ವಿಶ್ವೇಶ್ವರ ಕರುಣಾಕರ
ಪರಮ ಪುರುಷ ದೇವಾ
ಚರಾಚರವ ತುಂಬಿಭರಿತವಾಗಿ
ಸ್ಮರಿಸುವ ಭಕ್ತರ ತ್ವರಿತದಿ ಪಾಲಿಪ ಪ
ಗಜಾಸುರನೆಂತೆಂಬ ದನುಜನ
ವಿಜಯನಾಗಿ ತೊಗಲನ್ನು ಪೊತ್ತೆ
ಭುಜಗ ಭೂಷಣ ನೀ ಸುಜನರ ಪಾಲಿಪ
ನಿಜಾನಂದವ ನೀವಾ ಚಿನ್ಮಯನೇ ೧
ತನುಮನದೊಳಗೆಲ್ಲಾ ಹೊಳೆಯುತಲಿರ್ಪಾ
ಜನಜನಿತಳಲ್ಲಿ ಪ್ರಣವರೂಪನಾದ
ತುಂಬುತ್ತಾ ತುಳುಕುತ್ತಾ
ಘನಪರಮಾನಂದಾ ಸಚ್ಚಿದ್ರೂಪಾ ೨
ಒಳಹೊರಗೆಂಬೀ ಭೇದಗಳೆಲ್ಲವ (ಹೊರಗೆ ಒಳಗೆ)
ಹರಣ ಮಾಡುತಿರ್ಪಾ
ಹರನೇ ನಾನೀನಾದ ಕಾರಣ
ಬೆರತು ನಿನ್ನೊಳು ಸ್ಮರಿಸುವೆ ಭರದಿ ೩
ಚಿಂತೆಗಳೆಲ್ಲವನೀಗೆ ನಿಜಾನಂದ
ಸಂತಸಗಳನೀವಾ
ಅಂತವಿಲ್ಲದಾನಂತ ಪರಾತ್ಪರ
ಶಾಂತಿ ಪದವನೀವ ಮಹಾದೇವಾ ೪

 

ಮಾನಿನಿ ದ್ರೌಪತಿಯ ಮಾನವಕಾಯ್ದೆ
೧೯
ಹರಿಗೋವಿಂದ ಗೋಪಾಲ ಮುಕುಂದನೆ ಕರವ ಮುಗಿವೆ
ಚರಣಕ್ಕೆರಗುವೆ ಭರದಿ ರಕ್ಷಿಸು ಬಿಡದೇ ಶ್ರೀ ಪ
ಮಾನಿನಿ ದ್ರೌಪದಿ ಮಾನವ ಕಾಯ್ದೆಯೊ
ಹೀನರ ಮದಗರ್ವವನೆಲ್ಲ ಅಳಿದೆಯೊ
ಧ್ಯಾನ ಮಾಡುವ ಸ್ವಾನುಭವಿಗಳ
ಸ್ಥಾನ ಹೃದಯವಾಸ ಶ್ರೀ ೧
ಧ್ಯಾನಿಸಿವಂಥಾ ಗಜರಾಜನ ಕಾಯ್ದೆ
ಮಾನಿನಿ ಅಹಲ್ಯೆಯ ಪಾದದೊಳುದ್ಧರಿಸಿದೆ
ದೀನರಕ್ಷಕ ಬಿರುದ ಪೊತ್ತ ವಿ
ಜ್ಞಾನದೊಳಗಿರಿಸೆನ್ನಾ ೨
ಶಬರಿಯ ಭಕ್ತಿಗೆ ಮೆಚ್ಚನೀ ಬಂದೆಯೊ
ಬದರಿಯ ಹಣ್ಣನೆ ಸವಿಸವಿ ದುಂಡೆಯೊ
ವಿಭು ಪರಮಾನಂದಾ ಪ್ರಭೆಯೊಳಗಿರಿಸಿದೆ ೩
ಸ್ವರ್ಣಕಶ್ಯಪನ ಸೊಕ್ಕಗಿಸಿದೆ ದೇವಾ
ಮನ್ನಿಸಿ ಪಾಂಡವರೈವರ ಸಲಹುವಾ
ಚನ್ನ ಗೋಪಿಯರ ಕೂಡಿ ಮನ್ನಣೆಕ್ರೀಡೆಯ ನಾಡಿ ೪

 

೨೦
ಹರಿಬಾಬು ರಾಮಚಂದ್ರ ಶೀತಾಪತೇ ಪ
ದಶರಥನುದರದೊಳ್ ಶಿಶುವಾಗಿ ಪುಟ್ಟಿದೆ
ದಶಕಂಠನಾಶನೇ ನೀನೆವೋಹರಿ ಶೀತಾಪತೇ ೧
ತಾಪತ್ರಯಗಳಿಂದ ಪಾಪಿಯಾಗಿಹೆ ನಾನು
ತಾಪವಿದಾರನೇ ನೀನೇವೋಹರಿ ಶೀತಾಪತೇ ೨
ವಾಸುದೇವನೇ ನೀನು ದಾಸರ ಸಲಹುವ
ಭೂಷಣ ಪೋಷಿಪ ನೀನೇವೋಹರಿ ೩
ಆಶಾಪಾಶಗಳಿಂದ ಘಾಶಿಯಾದೆನು ನಾನು
ದೋಷವಿದಾರನೇ ನೀನೇವೋಹರಿ ೪
ಶಾಂತಿಪದದಲಿ ವಿಶ್ರಾಂತಿ ಕೊಟ್ಟಿನ್ನಾ
ಭ್ರಾಂತಿಯ ತೋರಿಸುವ ನೀನೇವೋಹರಿ ಶೀತಾಪತೇ ೫

 

೨೧
ಹೃದಯ ವೃಂದಾವನದೊಳಿರುವ ಕೃಷ್ಣನ
ಸಾಧಿಸಿ ನೋಡ್ವೆನೆಂದು ಪೋದರು ಗೋಪಾಂಗನಾ ಪ
ನಾದದ ಕೊಳಲನ್ನು ಊದುವ ವೇಳ್ಯದಿ
ಸದ್ಭಕ್ತಿವೆತ್ತಿಗೋಪಾಂಗನಾ ವಿನೋದದಿ
ಆಧಾರ ಮಾರ್ಗದಿಂದಾ ಪೋದರು ಬೇಗದಿ
ಶೋಧಿಸಿ ನೋಡಲಾಗಿ ತ್ಯಾಗಿಸಿ ಕಾಮನಾ ೧
ಉಬ್ಬೇರಿ ಮೆಲ್ಭಾಗದಿಂದಾ ವಿನೋದದಿ
ಅಬ್ಬರದಿಂದಲೀ ಆ ಷಟದ್ವಾರ ಭೇದದಿ
ಗರ್ಭಿತನಾದ ರಾಜಹಂಸೊಹಂಸ್ವರದಿ
ಮುಬ್ಬರದಿಂದಲಿ ಪಾಡುತ್ತಾ ರಂಗನ ೨
ನಳಿನ ಚಂಪಕಾದಿ ನಾಗ ಪುನ್ನಾಗವು
ಪಾಟಲ ಶಾವಂತಿಗೀ ಕುಂದ ಬಕುಲವು
ಮಾಲತಿ ಜಾಜಿ ಹೂವು ಶ್ರಿಲೋಲನಾಮವೂ
ಮೇಳಿತವಾಗಿ ಪೋಗಿ ಏರಿದರು ಸುಮನಾ ೩
ಶ್ರೀ ಮನೋಹರ ಮೂರ್ತಿ ಸಂಗೀತ ಕೇಳುತಾ
ಆ ಮಹಾ ಮಕುಟದಾ ಬೆಳಕು ನೋಡುತಾ
ಶ್ರೀ ಗುರುಮಹಾದೇವನೊಳ್ ರಮಿಸಿ ಸೂಸದಾ
ಪ್ರೇಮದಿ ಶಾಂತಿ ಸುಖದೊಳ್ ಬೆರತು ಸಘನಾ ೪

 

ಕಂಗಳಿದ್ಯಾತಕೋ ಚಿನುಮಯ

ಕಂಗಳಿದ್ಯಾತಕೋ ಚಿನುಮಯ ರಂಗನ ನೋಡದಾ
ಕಂಗಳೊಳಗೆ ಮಂಗಳ ಮೂರುತಿ
ಸಂಗರಹಿತಾತ್ಮನ ನೋಡದಾ ಪ
ಶರೀರವೇ ತಾನೆಂದು ನಂಬಿ ಮೆರೆದು ನಿಜಾನಂದವನ್ನು
ಬೆರದು ವಿಷಯಾದಿಗಳಲ್ಲಿ ಹರಿದು
ದೃಷ್ಯಂಗಳನ್ನು ನೋಡುವಾ ೧
ತಾನಿದ್ಯಾರು ತನಗೆ ತೋರ್ಪ ತನುವಿದೇನೆಂದರಿವುತಿರ್ಪ
ಜ್ಞಾನದೃಷ್ಟಿಯಿಲ್ಲದಂಥ ಆನನಂಗಳನು ನೋಡುವ ೨
ಹಂಸ ತಾನಾಗಿ ಚರಿಪ ಹಂಸನ ಪ್ರಕಾಶವನ್ನು
ಶುಂಶುಮಾರದಿ ಬೆಳಗುತಿರ್ಪಭ್ರಂಶಿತಾಂ ತನ್ನ ನೋಡದಾ ೩
ಸಂತಸಾಧು ಚರಣಕ್ಕೆರಗಿ ಚಿಂತೆಗಳನು ಹರಿದು ಭರದಿ
ಶಾಂತಿ ಸುಖವನಿತ್ತ ಗುರು ಶಾಂತಮೂರುತಿ ನೋಡಲಾರದ ೪

 

ಹಾಡಿನ ಹೆಸರು :ಕಂಗಳಿದ್ಯಾತಕೋ ಚಿನುಮಯ
ಹಾಡಿದವರ ಹೆಸರು :ಸತ್ಯವತಿ ಟಿ. ಎಸ್.
ಸಂಗೀತ ನಿರ್ದೇಶಕರು :ಶ್ರೀಕಂಠನ್ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *