Categories
ರಚನೆಗಳು

ಶಾಮಶರ್ಮರು

೩೬೮
(೫) ಶ್ರೀನಿವಾಸ
ಅಪ್ರತಿಮ ಹೇದೈವ ಶ್ರೀ ಶ್ರೀನಿವಾಸಾ
ವಿಪ್ರವಂದಿತ ಪಾಪಕೋಟಿ ಕುಲನಾಶಾ ಶ್ರೀವೆಂಕಟೇಶಾ ಪ
ನಿಜನುಡಿಯ ಭೃಗುನುಡಿಯೆ ಮುನಿಮಂಡಲಿಯ ನಡೆಯೆ
ತ್ರಿಜಗಾಗ್ರಪೂಜಿತ ಪರಬ್ರಹ್ಮ ನೀನೇ ೧
ಪಶುವತ್ಸಗೋಪಾಲ ಸರ್ವವೂ ನೀನಾಗೆ
ಬಿಸಜಭವ ಬೆದರುತ್ತ ಪದಕೆರಗಿದ ೨
ಮೋಹಿನಿಯವೇಶದಿಂ ರಕ್ಕಸನ ಭಸ್ಮಿಸಿ
ಪಾಹಿಮೆನಲಾ ದಕ್ಷ ವೈರಿಯ ರಕ್ಷಿಸಿದೆ ೩
ಗಿರಯನೇ ಕೊಡೆವಿಡಿದು ಗೋಕುಲವನೆ ಕಾಯ್ದೆ
ಸುರರಾಜ ಗರಿಮುದುರಿ ಶರಣೆಂದು ಬಂದ ೪
ವಿಧವರದಿ ಬೆರೆದ ಹಿರಣ್ಯಕಶಿಪುವ ಬಗೆದು
ಸದೆದೆ ಶಿವಕಾವಲಿನ ಬಾಣನಂ ಬಿಡವೇ ೫
ಸಾಸಿರಗಳರವತ್ತು ಸಗರಸುತರನು ಸುಟ್ಟು
ಘಾಸಿಹರಿಸಿದೆ ಜಗದೆ ಜೀವ ಜಂತುಳಿಗೆ ೬
ಘಾತಕಿಯ ಪೂತನಿಯ ಕಂಸಶಿಶುಪಾಲರಿಂ
ಪಾತಕಿಯ ರಾವಣನು ಕಾರವರ ಕೊಂದೇ ೭
ಶಿಲೆಯ ಸತಿಯಳಗೈದು ಯಮಳತರುಗಳ ಮುರಿದು
ಬಲಿದ ಶಾಪವ ಕಳೆದು ಕಾಯ್ವ ಬಂಧೂ ೮
ಸಾವುಂಡ ಶಿಶುವನು ಗುರುವಿಗೆ ನೀ ತಂದಿತ್ತೆ
ನೋವುಂಡ ಇಂದ್ರಂಗೆ ಲೋಕಗಳನಳೆದೆ ೯
ಅಜಕಪಾಲವ ಬಿಡಿಸಿ ಮೃತ್ಯುಂಜಯನ ಹರಸಿ
ಅಜಮಿಳನ ನೀ ಮುಕ್ತಿಸ್ಥಾನಕ್ಕೆ ತಂದೆ ೧೦
ಸರ್ವಕಾಲಗಳಲ್ಲು ಅಪರಾಧಿ ನಾನಯ್ಯ
ಗರ್ವಿಯೆನಿಸದೆ ತಪ್ಪು ಕ್ಷಮಿಸಯ್ಯ ತಂದೆ ೧೧
ಆನೆ ಅಳುವುದು ಕೇಳಿ ಮೊಸಳೆಬಾಯನು ಸೀಳ್ದೆ
ನೀನೆ ಆಪದ್ಭಂದು ಕಾರುಣ್ಯಸಿಂಧು೧೨
ಅರಗಿನ ಮನೆಯಲ್ಲಿ ಭರದಿಂದ ಬಾಂಧವರಿಗೆ
ಉರಿಭಯವ ತಪ್ಪಿಸಿ ಪೊರೆದ ಪ್ರಭುವೇ೧೩
ದ್ರುಪದ ಪುತ್ರಿಗೆ ಮಾನ ಸಂರಕ್ಷಣೆಯನು ಮಾಡಿ
ಕೃಪೆತೋರಿಪಾರ್ಥಂಗೆ ಸಾರಥಿಯು ಆದೆ ೧೪
ಕಾಲನೇಮಿಯ ಕಾಲ ವಾಲಿಪ್ರಾಣಕೆ ಶೂಲ
ಲೀಲೆಯಿಂ ಭಕ್ತರಂ ಪಾಲಿಸುವೆ ೧೫
ಪಾವನದ ಪಾದಗಳನಿಂತು ಮುಡಿಯಮೇಲೆ
ಭಾವಿಸುವೆ ಭವಕಳೆಯೆ ನಾತಾಳೆ ನಾಳೆ ೧೬
ತಾಪಗಳು ಮೂರನುಂ ಹರಿಪ ಸಂಕಟದೂರ
ಕಾಪಾಡು ಶ್ರೀಹರಿ ಬಂಧುಬೇರಿಲ್ಲ ಭಕ್ತಸತ್ರಾ ೧೭
ಶರಣಸಂರಕ್ಷಣ ಬಿರುದು ಧರಸಿಹೆ ನಿತ್ಯ
ಭರದಿ ಶಾಂತಿನೀಡೋ ಚರಣಕ್ಕೆ ಶರಣು ೧೮
ಕ್ಷಾಮಡಾಮರ ಕಳೆಯೆ ಸುವೃಷ್ಟಿಯ ಕರೆವೆ
ಕಾಮಿತಾರ್ಥದ ಕಾಮಧೇನು ಸ್ವಾಮಿ ತಾಯಿತಂದೆ ೧೯
ನಿಜದಿ ಪಾದವ ಪಿಡದೆ ಚಕ್ರಧರ ಚಕ್ರಧರ
ಭಜಿಪ ಭಕ್ತರ ಪಾಲ ನರಸಿಂಹ ನರಸಿಂಹ ೨೦
ಕ್ಷೇಮಕರಗರುಡನೇ ಧ್ವಜನು ವಾಹನನು
ಭೀಮ ಹನುಮ ಪ್ರೇಮ ಹೆಜ್ಜಾಜಿಶ್ಯಾಮ ಸ್ವಾಮಿ ೨೧

 

(ಉ) ಆತ್ಮನಿವೇದನಾ ಕೃತಿಗಳು
೩೮೨
ಅಭಯ ಪ್ರದಾಯಕ ಶ್ರೀರಮೇಶ
ಉಭಯವೇದ ಪೂಜಿತ ಪಾದಪದ್ಮ ಪ
ಅನುಮಾನಿಸದಿರೊ ಶಿಶುವಾದೆನ್ನೊಳು
ಏನತಿ ಕೋಪವೂ ಅಪ್ರಮೇಯದೇವ ಅ.ಪ
ಅನ್ನ ವಸ್ತ್ರಗಳನೀವುದೆನಗೆ ಯೆಂದು
ಅನುನಯದಿ ಬಂದು ಬೇಡಿಕೊಂಡೆನೈ
ಯನ್ನ ತಂದೆ ಜಾಜೀಶನೆಂದು ಬಂದೆನಲ್ಲದೆ ೧
ಇನ್ನು ಕಾಯ್ವರಾರಿರುವರಯ್ಯಾ
ಮನ್ನಿಸುತ್ತಾ ನೀ ನಿನ್ನಕಂದನಾ
ಬಿನ್ನಪವನು ಕೇಳು ಚೆನ್ನಕೇಶವಾ ೨

 

೩೬೪
ಅಮ್ಮನ ತೊಡೆಯ ಮೇಲೆ ನಮ್ಮ ಕೃಷ್ಣ
ಸುಮ್ಮನೆ ಮಲಗಿಹನು ಪ
ಸುಮ್ಮೊನದಿ ಸುಖದಿಂ ನಲಿದಾಡುತ ಅ.ಪ
ಮಣ್ಣ ಮೆದ್ದುದ ಕಂಡು ಗೋಪಿದೇವಿ ಚಿಣ್ಣನ ಬಾಯಿನೋಡೆ
ಕಣ್ಣಿಗೆ ಬ್ರಹ್ಮಾಂಡ ತೋರಿಸಿದಂಥ ಪರಬ್ರಹ್ಮ ೧
ತರಳ ತರಲೆ ಮಾಡೆ ತಾಯಿಯು ಹೊರಳೆಗೆ ಕಟ್ಟಲಾಗಿ
ಸುರತರುಗಳ ಮುರಿದು ನಿಜತರವ ಗೈದ ನಿತ್ಯಾತ್ಮ ೨
ಪೂತನಿಯಸುವನೀಗಿ ಶಕಟಾಸುರನ
ಕಾಲಲೊದೆದು ಕೊಂದು
ಧಾತಾ ದೇವೇಂದ್ರರ ಶಿರಬಾಗಿಸಿದ ಪೂತಗುಣ ೩
ಹಾಲುಕೊಡೆನೆ ಬಾಲ ಸಂಜೆಗೆ ಹಸುವ ಕರೆವೆನೆನಲು
ಲೀಲೆಯಿಂ ಕಣ್ಣ ಮುಚ್ಚಿ ಕತ್ತಲೆ ಕವಿಸಿದ ದೈವ ೪
ಗೋಪೀಜನಗಳೊಡನೆ ಗೋಪಾಲನು ಸ್ತ್ರೀಲೋಲನಾಗಿ ಕುಣಿದು
ನಾನಾಸ್ವರಗಳ ನುಡಿಸಿ ಕೊಳಲನ್ನೂದಿದ ರಥಾಂಗಪಾಣಿ ೫
ನವನೀತ ಚೌರ್ಯಮಾಡಿದ ನಾರೀಜನರ ವಸ್ತ್ರಾಪಹರ ಗೈದ
ಅವನೀಭಾರವ ಕಳೆದ ಮಾಯಾಮೂರ್ತಿ ದೇವಶಿಖಾಮಣಿ೬
ಕಂಸ ಶಿಶುಪಾಲ ದೈತ್ಯರ ದ್ವಂಸವಮಾಡಿ
ಭೂಮಿಪಾಲನೆ ಮಾಡಿದ
ಹಿಂಸಕರ ವಂಶವಳಿಪ ಹಂಸಲೋಲ ಜಾಜಿಶ್ರೀಶ ೭

 

(ಆ) ಲಕ್ಷ್ಮೀ ಸ್ತುತಿಗಳು
೩೭೦
ಅಮ್ಮಾ ನೀನೆಮ್ಮ ಮನೆಯಲಿಹುದಮ್ಮಾ
ನಮ್ಮಮ್ಮ ಶ್ರೀಲಕ್ಷ್ಮೀದೇವಮ್ಮ ನಿತ್ಯ ಪ
ನಮ್ಮಯ್ಯನೊಡನೆ ಸುಭಾಷಿಸುತಲಿ
ಸಮ್ಮಾನದಿ ಮುಖದಿಂ ನಲಿದಾಡುತಾ ಅ.ಪ
ಮಕ್ಕಳೆಂದೆಮ್ಮ ನಲಿಸುತ ಒಲಿಸುತ
ಸಕ್ಕರೆ ಸಮಿಗುಂಮಿಗಲಹ ಮಾತುಗ
ಳಕ್ಕರದಾಡುತ ಶುಭಸಂಪದಗಳ
ನಕ್ರೂರಾರ್ಚಿತೆ ಕೊಡುತ ಮೋದದಿಂ ೧
ನೀನಿರುವ ಮನೆಯು ಶೋಭಿಸುತಿಹುದು
ತಾನೇತಾ ಮಂಗಳ ನೆಲೆಸಿಹುದು
ಸಾನುರಾಗದಿಂ ಸರ್ವರ ಜನನಿಯೆ
ನಾನಿನ್ನಾದರದ ಪ್ರೇಮಸುಪುತ್ರನು ೨
ನಿತ್ಯಾರಾಧನೆಗನುಕೂಲಗಳಂ
ಸತ್ಯಧರ್ಮಗಳ ಬಿಡದಾಚರಿಪುದ
ಸ್ತುತ್ಪತದಿ ಸಮಾರಾಧನ ವೆಸಗುನವ
ಅತ್ಯಾನಂದದ ಸೌಭಾಗ್ಯವಿತ್ತು ೩
ಸವಿ ಸವಿಭಕ್ಷ್ಯಗಳನುಗೊಳಿಸುತ್ತ
ಸುವಿಮಲ ಮಂಗಲ ದ್ರವ್ಯಸುಪುಷ್ಪವ
ಸುವಾಸಿನಿಯರಿಗೂ ಸದಭಕ್ತರಿಗುಂ
ಸುವರ್ಣಭಾಜನದೀಯುವುದಿತ್ತು ೪
ಹಾಲು ಹಣ್ಣು ಮಧು ಮಧುರದ ಮನೆಯಂ
ಶ್ರೀಯೋಗಗಾನ ಧ್ಯಾನದ ನೆಲೆಯ
ಬಾಲರ ಲೀಲೆಯ ಲಾಲನ ಪಾಲನ
ಕಾಲವೆಲ್ಲ ಸೊಗನಗೆ ಮೊಗನೆರೆಯಲಿ ೫
ಭೃಗುಸುತೆ ಕ್ಷೀರಸಾಗರಜಾತೆ
ಭಗವತಿ ಭಾಗ್ಯದಾತೆ ಅಮೃತ
ಮಂಗಳಸುಂದರಿ ಚಂದ್ರಸಹೋದರಿ
ಅಗಲದೆ ಹರಿವಕ್ಷಸ್ಥಲಸ್ಥಿತೇ ೬
ಸುವರ್ಣವರ್ಣಿ ಕಮಲಸುಚರಣೆ
ಭುವಿಸುರ ಪೂಜಿತೆ ಕಲ್ಪಲತೆ
ಭವ ಭವಹಾರಿಣೆ ಭಕ್ತೊದ್ಧಾರಿಣೆ
ದಿವಿರಾಜವರದೆ ೭
ಶ್ರೀಕರ ಸಾತ್ವಿಕ ಸುಲಲಿತರಿಂದ
ನಾಕಿಗರೆಂಬೊ ಬಂಧುಗಳೊಡನೆ
ಜೋಕೆಯ ಮಕ್ಕಳ ವಿವಾಹಗೈದು
ಸಾಕಾರ ಸಂಸಾರ ಸುಖನಿಧಿ ಎನಿಸು ೮
ಚಪ್ಪರ ತೋರಣ ಮೇಲ್ಕಟ್ಟುಗಳಿಂ
ದೊಪ್ಪುವ ಬಗೆಬಗೆ ರಂಗವಲಿಗಳಿಂ
ದಿಪ್ಪಾಸಾಗರ ಮಂಗಳ ವಾದ್ಯಂಗ
ಳಪ್ಪ ಸದೃಹವ ಮಾಡುತ ಮಮತೆಯಿಂ೯
ಅಪ್ರತಿಮ ರತ್ನಪೀಠವನಿಟ್ಟು
ತುಪ್ಪದ ನಂದಾದೀವಿಗೆ ಹಚ್ಚಿ
ಅಪ್ರಮೇಯನೋಡನಿಪ್ಪ ನಿನ್ನ
ಸುಪ್ರೀತಿಯೊಳಾಂ ಪೂಜಿಪುದೀಯತ ೧೦
ಪರಿಮಳ ತೈಲದಭ್ಯಂಜನದಿಂ
ಸುರಭೀತೊಯ ಸ್ನಾವನಗೈದು
ಹರಿದ್ರಾಕುಂಕುಮ ರತ್ನ ಕಿರೀಟವು
ಸರಪೀತಾಂಬರ ಕಮಲವ ಧರಿಸಿ ೧೧
ನರುಗುಂಪಿನ ಶ್ರೀಗಂಧದ ಲೇಪ
ಪರಿಪರಿ ಘಮ ಘಮ ಸುಗಂಧ ಧೂಪ
ಪರಮ ಪ್ರಕಾಶದ ಮಂಗಳ ದೀಪ
ಸಿರಿಹರಿ ನಿಮ್ಮಯ ದಿವ್ಯ ಸ್ವರೂಪ ೧೨
ಬಗೆ ಬಗೆ ಭಕ್ಷ್ಯವು ಕ್ಷೀರಾಜ್ಯಗಳಂ
ಹಗಲಿರುಳುಂ ಫಲತಾಂಬೂಲಗಳಂ
ನಿಗಮ ಸ್ತುತಿಕೈಗೊಳ್ಳುತ ಪಿಯೆ ನೀ
ನಗಲದೆ ಸವಿಯುತ ಸಂತೋಷದಿಂದ ೧೩
ಜಯ ಜಯ ಕರ್ಪೂರಾರತಿಮಾತೆ
ನಯದಿಂ ಕುಸುಮಾಂಜಲಿಯಖ್ಯಾತೆ
ದಯೆಯಿಂ ಭಾವಭಯ ಹರಿಸಾಪೂತೆ
ಜಯ ಜಯ ಶ್ರೀಕೇಶವ ಸಂಪ್ರೀತೆ ೧೪
ವಿಧಿರಮಾತೇ ಶ್ರೋಣಿತ ಚರಿತೆ
ಬುಧಜನಪಾಲೆ ಕೃಪಾಲಪಾಲೆ
ಮುದದಿಂ ಪಾಲಿಸು ಬಾಳಿನಲಿಡುತೆ
ಹೃದಯನ್ನುತೆ ಜಾಜೀಶ ಸಹಿತೆ ೧೫
ಅಗಣಿತ ಸುಗುಣೆ ಕರುಣಾಭರಣೆ
ಜಗದೋದ್ಧಾರೆ ಜಯಜಯತಾರೆ
ಯುಗಪದಕೀಗಲೆ ಮುಡಿಯಿಟ್ಟಿರುವೆ
ಮಗುವಾದೆನ್ನಂ ಮಡಿಲೊಳಗಿಡು ನೀಂ ೧೬

 

೩೭೬
೧. ರಾಮಾನುಜರು
ಆಚಾರ್ಯ ಪ್ರಾಚಾರ್ಯ ಪರಮಾಚಾರ್ಯಾ
ನೀಚತೆ ನೀಗಿಸಿ ನಿನ್ನಂತೆ ಗೈದೇ ಪ
ಸರ್ವಗುರುವೇ ನಮಿಪೆ ಧ್ಯಾನಿಪೆ ಶ್ರೀನಿವಾಸಾ ಅ.ಪ
ಪಾದೋದಕದಿಂ ಪಾವನಗೈದೇ
ಸಾಧು ಸಂಗತಿಗಳ ಸಂತಸದಿ ಪೇಳ್ದೇ೧
ಭೇದವ ತೊರೆದೇ ವೇದಗಳೊರೆದೇ
ಸಾದರದಿಂ ಸದ್ಬಂಧು ನೀನಾದೇ ೨
ಪಾಪವ ಕಳೆದೇ ಗೋಪ್ಯಗಳುಸುರಿದೆ
ಶ್ರೀಪತಿಮೂರ್ತಿಯ ಹೃದಯದಿ ತೋರ್ದೆ ೩
ಕೃಪೆಯನ್ನು ತೋರ್ದೆ ಅಪಾರ ಮಹಿಮ
ಉಪಕರಿಸುತ ಎನ್ನ ಉನ್ನತಿಗೆ ತಂದೆ ೪
ಸಂಸಾರಾಂಬುಧಿ ಹಿಂಸೆ ದಾಂಟಿಸಿದೆ
ಹಂಸನೆ ಸಿಂಹ ಕಿಶೋರ ನ್ಯಾಯದಿ ೫
ವಿಪರೀತಮತಿಯನ್ನ ಪರಿಹರಿಸಿದೆ ನೀಂ
ಸುಪಥದಿ ಸುಖದಾನಂದನಿಧಿಯಿತ್ತೇ ೬
ಜಾಜೀಶನಿಗೆ ಪ್ರೇಮಪುತ್ರನು ನೀಂ
ಪೂಜಿಪೆ ಪದಯುಗ ಶರಣನೆ ಕರುಣಿಸು ೭

 

(ಏ) ಸಂಪ್ರದಾಯದ ಹಾಡುಗಳು
೪೪೨
ಆರತಿ ಬೆಳಗುವೆ ನಿನಗೆ ಶ್ರೀರಾಮ
ಸಾರಸಾಕ್ಷ ಹರಿ ಮೇಘಶ್ಯಾಮ ಪ
ಪೀತಾಂಬರಧರ ತುಲಸೀಮಾಲ
ಪಾತಕ ವಿದಳನ ಸೀತಾಲೋಲ ೧
ಕಿರೀಟ ಕುಂಡಲ ಮೃಗಮದತಿಲಕ
ನಿರುಪಮ ಸುಂದರ ಮನ್ಮಥ ಜನಕ ೨
ಭರತ ಶತ್ರುಘ್ನರ ಚಾಮರ ಸೇವ
ಹರುಷದಿ ತೋರುವ ಪರಮಪ್ರಭಾವ ೩
ಸೋದರ ಲಕ್ಷ್ಮಣ ಹನುಮ ಸಮೇತ
ಮೋದದಿ ಮಾತೆಯರನು ಪೊರೆದಾತ ೪
ನಾರದ ಶುಕ ಮುನಿನುತ ಶುಭನಾಮ
ವಾರಿಜಭವ ಪತಿ ಪೂರ್ಣಸುಕಾಮ ೫
ಶರಣಾಗತ ಪರಿಪಾಲಕ ಶೌರಿ
ಕರುಣಾಕರ ಕಲಿವೈರಿ ಮುರಾರಿ ೬
ಜಾಜೀಶ ಚನ್ನಕೇಶವ ಮೂರ್ತಿ
ರಾಜಿಸುತಿದೆ ನಿನ್ನ ಅಗಣಿತ ಕೀರ್ತಿ ೭

 

೪೪೩
ಆರತಿ ಬೆಳಗುವೆ ಶ್ಯಾಮಸುಂದರ ಶ್ರೀ
ಮಾರಜನಕನಿಗೆ ಮುದದಿಂದ ಪ
ಸಾರಸಾಕ್ಷ ಶ್ರೀ ಭೂ ನೀಳಾ ಸುಪಾವನ
ಮೂರುತಿ ಪರಮನಿಗೆ ಅ.ಪ
ಮಾರೀಚ ಭವ ಭಯಬಂಧವ ಹರಿಸಲು
ಶರಣರಿಗೊಲಿಯುವ ಶಾಂತನಿಗೆ
ತೋರಮಾಂಗಾಯ್ ಕಿರೀಟಕುಂಡಲ
ಮೃಗಮದತಿಲಕದ ಮುಖದವಗೇ೧
ಬಲಮುರಿ ಶಂಖದ ಕೊರಳೊಳು
ಒಲೆವ ಮುತ್ತು ರತ್ನದ ಮಾಲೆಗಳ
ಒಲಿದುಧರಿಸಿಹ ವೈಜಯಂತಿಯಲಿಲ
ನಲಿಯುವ ಪಂಕಜನಾಭನಿಗೆ ೨
ಕರದೊಳು ಶಂಖಚಕ್ರವು ಗದೆಯು
ಪರತರ ಪದ್ಮವ ಪಿಡಿದಿರುವ
ಸುರಪೀತಾಂಬರವಂ ಧರಿಸಿ
ಕಿರು ನಡುಗೊಡ್ಯಾಣವ ನಿಟ್ಟಿಹಗೇ ೩
ನೋಂತುಸತತ ಸದ್ಭಕ್ತ ಆ ಮಣಿವರ
ಶಿರಮಣಿ ಪಚ್ಚೆಯ ಪದಗಳಿಗೆ
ಭ್ರಾಂತಿಯತೊಲಗಿಸಿ ಶರಣರ ಪೊರೆವಾನಂತ
ಜಾಜೀಶ ಕೇಶವಗೆ ೪

 

ಆರು ಬಿಟ್ಟರೂ ನಿನ್ನ ಬಿಡದೆ ನಾ ನಂಬಿದೆ
ರಾಮರಾಮ – ಸ್ವಾಮಿ |
ನೀ ಬಿಟ್ಟರಿನ್ನು ಅದಾರ ಸೇರಲು ಬೇಕೊ –
ರಾಮರಾಮ ಪ.
ತುಂಬಿದ ನದಿಯಲಿ ಹರಿಗೋಲು ಮುಳುಗಿತೊ
ರಾಮ ರಾಮ – ಅಲ್ಲಿ
ಅಂಬಿಗನಾಶೆಯು ಅನುಗಾಲ ತಪ್ಪಿತೊ –
ರಾಮ ರಾಮ ೧
ನಂಬಿ ಹಿಡಿದರೆ ಬಲು ಕೊಂಬೆಯು ಮುರಿಯಿತೊ –
ರಾಮ ರಾಮ – ಅಲ್ಲಿ
ಹಂಬಲಿಸಿದರೆ ಕೈ ಹಿಡಿವರ ನಾ ಕಾಣೆ ರಾಮ ರಾಮ ೨

 

೩೭೪
೩. ಎಲ್ಲ ಆಳ್ವಾರರು
ಆಳ್ವಾರ್ ತಿರುವಡಿಗಳೆ ಶರಣೆನ್ನುತ
ಬಾಳ್ವರು ಭಜಿಪುದು ಬಕುತಿಯಲಿ ಪ
ಕೇಳ್ವರು ಕಥೆಗಳ ಮಮತೆಯಿಂದಲಿ
ಮಾಳ್ವರು ಮನೆ ವೈಕುಂಠದಲಿ ಅ.ಪ
ಮೊದಲಿನ ಮೂವರು ಮಾಧವನೆನುತ್ತ
ಪದುಮನಾಭನೊಡನಾಡಿದರು
ಅದುಭುತ ಮಹಿಮಾ ತಿರುಮೊಳಿಶಯ್ಯರ
ಮುದದಿಂ ಶಿವ ಕೊಂಡಾಡಿದನು ೧
ಮಧುರಕವಿಗಳು ನಮ್ಮಾಳ್ವಾರರ
ಪದಗಳ ಪೂಜಿಸಿ ಹಾಡಿದರು
ತದುಪರಿ ತಿರುವಾಯ್ಮೊಳಿಯನು ಅವರಿಂ
ದಧಿಕರಿಸುತ ಹಿತವೆಸಗಿದರು ೨
ಪೆರಿಯಾಳ್ವಾರರು ಹರಿಯನು ಪಾಡುತ
ವರವೇದಕೆ ತಾವ್ ಮೊದಲಿಗರು
ಪರಮಪಾವನೆ ಗೋದಾದೇವಿಯು
ದೊರೆ ಶ್ರೀರಂಗನ ಕೈವಿಡಿದಳ್ ೩
ಪೆರಿಯ ತಿರುಮೊಳಿಯ ತಿರುಮಂಗೈಯ್ಯರು
ತಿರುಪ್ಪಾಣ ವಿಪ್ರನಾರಾಯಣ
ತಿರುವನಂತಪುರದ ಕುಲಶೇಖರರು
ಸಿರಿಯರಸನ ತೇರ ಮಾಡಿದರು ೪
ಪರಮಾತ್ಮನ ಸನ್ನಿಧಿಯಿಂದಲ್ಲಿಗೆ
ತೆರಳುತ ಮಹಿಮೆಯ ತೋರಿದರು
ನಿರುತ ದೇವರೆಡೆ ಪೂಜೆಗೊಂಬರು
ವರಜಾಜೀಶನ ಸೇವಕರು ೫

 

೩೮೩
ಇಂದು ದಯದಿ ಸಂದರ್ಶನವಿತ್ತೆಯಾ
ಇಂದಿರಾಧವಾ ದೇವಾ ಪ
ಸುಂದರಾಂಗ ರಂಗ ಮುಂದೆ
ಬಂದುನಿಂದೆ ಬೆಳಕಿನೊಳ್ ನಭದೆ ಅ.ಪ
ವಿಭವದಿರ ರಥದಿ ಹಿತದಿ
ಶುಭದ ಶ್ರೀಭೂನೀಳಾಸಹಿತ
ಆಭಯವ ನೀಯುತಾ ನಾಥಾ ೧
ಭಕ್ತ ಬೃಂದ ಗೈವ ಸೇವೆಯಾ
ಸಕ್ತಿಯಂ ಪಡೆದು ದೃಢದಿ
ನಿತ್ಯಗಾರುಡ ಸೂರ್ಯಮಂಡಲ ಡೊಲೊತ್ಸವದಿ೨
ಮುದಗೆರೆರಂಗ ವೊರಿದಗೆನಗೆ
ಮಹಿಮೆತೋರುತಾ ನಿರುತ
ಪೊರೆವುದು ಜಾಜೀನಾಥ ೩

 

೩೮೩ ಅ
ಎನ್ನ ತಂದೆ ಕಾಯೋ ಚನ್ನಕೇಶವ ಪ
ನಿನ್ನ ಮೆಚ್ಚಿಸುವುದೆನ್ನಿಂದಾಗದೊ ಸಂ
ಪನ್ನರಾರ್ತಿಹರ ಮಾಮಾನೋಹರ ಅ.ಪ
ಶ್ರವಣ ಕೀರ್ತನಾ ಸ್ಮರಣ ಸೇವೆಯ
ಸುವಂದನಾರ್ಚನೆ ದಾಸ್ಯ ಸಖ್ಯಗಳು
ಕುವಲಯಾಕ್ಷಗಾತ್ಮಾರ್ಪಣೆಗೈ-
ವಿವನು ಕಾಣೆನೈ ಜಾಜೀಶ ಶ್ರೀಶ ೧

 

೩೮೪
ಏಕೆ ದಯ ಬಾರದೋ ಶ್ರೀಕಾಂತ ನಿನಗೆ
ಲೋಕನಾಯಕ ಎಷ್ಟು ಬೇಡಲೋ ಪ
ಜೋಕೆಯಿಂ ಸಾಕುವರದಾರೋ ಅ.ಪ
ನಿನ್ನ ಮನವಿನ್ನೆಷ್ಟು ಕಠಿಣವೋ
ಮುನ್ನ ಮಾರುತಿಯೊಡನೆ ಮಸಗಿದೆ
ಎನ್ನೊಳಗೆ ನಿರ್ದಯೆಯೊಳಿರುವುದು
ಚೆನ್ನವಲ್ಲವೊ ಇನ್ನು ಚೆನ್ನಿಗ ೧
ಕಾಣೆನೇ ಸುಧನ್ವನಂ ಕೊಲೆ
ಜಾಣ ತನವನು ತೋರ್ದನಿನ್ನನು
ಬಾಣ ತ್ರಾಣವನಣುಗನೆನ್ನೊಳು
ಮಾಣು ಶಿವಧನುಭಂಗನಿಪುಣ೨
ಮಕ್ಕಳನು ಹಡೆದವರು ಒಮ್ಮನ
ದಕ್ಕರೆಯ ಬೀರುತ್ತ ಸಲಹರೆ
ಮಕ್ಕಳಾಟಿಕೆ ಮಾಡುವೊಡೆ ನೀ
ದಕ್ಕುವರೆ ನಿನ್ನಡಿಯ ದಾಸರು ೩
ಸರ್ವಶಕ್ತನು ಆದರೇಂ ಫಲ
ಸರ್ವದಾ ಭಕ್ತರಿಗೆ ಕಷ್ಟವೆ
ನಿರ್ವಿಕಲ್ಪನೆ ಮರ್ಮವೇತಕೆ
ಧರ್ಮವ್ರತ ಪೊರೆ ಜಾಜಿಕೇಶವ ೪

 

೩೮೫
ಏನು ಧನ್ಯನೋ ನಾನೇನು ಮಾನ್ಯನೋ ಪ
ದೀನಪಾಲಗಿರಿಯಪರಮಕರುಣಾನಿಧಿಯಕನಸೊಳ ಕಂಡೆನು ಅ.ಪ
ಬಾಲನಾಗಿ ಮುದ್ದುಮುಖದೆ ಶ್ರೀಲತಾಂಗಿಯೊಡನೆಬಂದು
ಲೋಲತೆಯಿಂ ಮುಗಳುನಗೆಯ ಲೀಲೆಯನ್ನು ತೋರಿಸಿದನ ೧
ನಿನ್ನ ತಂದೆ ತಾಯ್ಗಳಾರು ಎನ್ನಲಾಗ ನೀನುಪಿತನು
ಎನ್ನ ತಾಯಿಜಗನ್ಮಾತೆ ಸನ್ನುತಕೇಳ್ ಪ್ರವರವೆಂದೆ೨
ದುರಿತದೂರ ಶ್ರೀನಿವಾಸ ಶರಣಜನರ ಪೊರೆವ ತ್ರಾಣ
ನಿರುಪಮಗುಣ ಜಾಜೀಶನಿಗೆ ಕರವ ಮುಗಿದು ಧ್ಯಾನಿಸಿದೆನು ೩

 

೩೫೮
(೨) ಶ್ರೀರಾಮ
ಕಂಡುಕೊಂಡೆನೊ ಕೋದಂಡಧಾರಿಯ ಪ
ಪುಂಡರಾದಿ ರಾಗಾದಿ ದೈತ್ಯರನ್ನು
ತುಂಡುಗೈದ ವಿಭೀಷಣ ವರದನ್ನ ಅ.ಪ
ಸೀತಾ ಸೌಮಿತ್ರಿ ಭರತರನ್ನು ಕೂಡಿ
ವಾತಾತ್ಮಜಾತ ಪಾದಪಿಡಿಯುತ
ಖ್ಯಾತರಾದ ಸುಗ್ರೀವ ಜಾಂಬುವರಿಂ
ಸ್ತೋತ್ರಗೊಳ್ಳುತ್ತಿಹ ಜಾಜೀಶನನ್ನು ೧

 

೪೩೭
(೨) ಉಡುಪಿ ಕೃಷ್ಣ
ಕಂಡೇ ಕಡೆಗೋಲ ಪಿಡಿದನ ಉಡುರಾಜ ವದನನ
ಮಂಡೆಯೊಳ್ ಮಯೂರ ಪಿಂಛವನಿಟ್ಟನ ಪ
ಪಡುಗಡಲೆಡೆ ಉಡುಪಿಯೊಳಗಿಹ ಕಡಲಣುಗಿಯ
ಒಡೆಯಕೃಷ್ಣನ ಕಂಡೇ ಅ.ಪ
ಪ್ರಮೋದಾ ಶ್ರಾವಣ ಕೃಷ್ಣ ಪ್ರಪಂಚಗುರುವ
ಸುಮಶರಪಿತ ಸುಮನೋಹರ ಶ್ಯಾಮಸುಂದರನ ಸ್ವಪ್ನದಿ ೧
ಸತ್ಯವಂತರ್ಗಾಂ ಸತ್ಯಂ ಮುಕ್ತಿನಾಥಂ
ಉತ್ತಮತರಚಿತ್ತರಾದ ಭಕ್ತರ ಕಾಯವೆನೆಂದನ ೨
ಸುಳ್ಳು ಸುಳ್ಳೆಂದು ಪೇಳುವ ಪೊಳ್ಳನ ಪಾಪಿಯ
ತಳ್ಳುವೆ ಸುಖವಿಲ್ಲದಿರುವ ಖುಲ್ಲರ ಜತೆಯೊಳಗೆಂದನ೩
ಹರಿಶ್ಚಂದ್ರ ನಳರೊಲು ಕೀರ್ತಿಯನು ಪರ್ಬಿಸಿ
ಶರಣರ ಸುಖಸರಣಿಯಲ್ಲಿ ಕರುಣದಿಂದ ಕಾವೆನೆಂದನಾ೪
ಕನಸುಮನಸಿನಲ್ಲಿಯೂ ಅನವರತ ತನ್ನಯ
ಘನಪದಯುಗವನಜ ತೋರಿ ಅನುವನೀವ ಜಾಜೀಶನ ೫

 

೩೮೬
ಕಂತುಜನಕ ನರಪಂತವೇನಿದು ಪ
ಮಂದರೋದ್ಧರ ವಂದಿಸುವೇ ಧೀರ
ಸುಂದರಾಂಗ ಗೋವಿಂದ ಪಾಲಿಸಯ್ಯ೧
ಮಾರಸುಂದರ ಘೋರ ದುರಿತದೂರ
ಸಾರನುಗುಣಪೂರ ಪೂಜಿಪೆ ಕೇಶವ ೨
ಈ ಜಗದೊಳು ರಾಜಿಸುತ್ತಿರುವ
ಜಾಜೀಶ್ವರ ದೇವ ಮಾಜದೆನ್ನ ಪೊರೆ ೩

 

೩೮೭
ಕಷ್ಟಪಡಲಾರೆನೋ ಸೃಷ್ಟೀಶ ಶ್ರೀಶಾ
ದುಷ್ಟದಮನ ದೀನವತ್ಸಲ ನಾರಾಯಣ ಪ
ಮಡದಿ ಮಕ್ಕಳುಮನೆ ಒಡಲು ಕ್ಷಣಗಳು
ಬಿಡದೆ ಬಾಧಿಸೆ ನಿನ್ನ ಅಡಿಯಕಾಣಿಸದಿವೆ
ಕೆಡಿಪ ದುರಾಶೆಯ ಸುಡುತಲಿ ನೂಕು
ದುಡುಕುವ ಮನವಂ ಸಡಲಿಸಬೇಕು
ಕಡುಮುದದಿಂದಲಿ ಕಾಯುತ ಸಾಕು
ಒಡೆಯ ಪರಾತ್ಪರ ಪರಮ ಪರಾಕು ೧
ಲೋಕಿಗರೊಳು ನಾನನೇಕದುಶ್ಚರ್ಯೆಯ ವಿ-
ವೇಕವಿಲ್ಲದೆ ಮಾಡಿ ಕಾಕುಮನುಜನಾದೆ
ಘೂಕದ ಪರಿಯೀ ಭವಸಂಸಾರ
ನಾಕವಾದರೂ ಬಹು ನಿಸ್ಸಾರ
ಜೋಕೆಯೊಳಿದಬಿಟ್ಟು ಒಟ್ಟು ಬಂದನೆ ತೋರಾ
ಶೋಕಸಾಗರವಾ ಶೋಷಿಪಶೂರ ೨
ಇಷ್ಟ ಮೂರುತಿ ನಿನ್ನ ನಿಷ್ಠೆಯಿಂ ಕಾಣುವೆ
ಎಷ್ಟು ಮೊರೆಯಿಟ್ಟರೂ ದೃಷ್ಟಿಸದಿರುವೇ
ಅಷ್ಟಮದಗಳನಿತಿಷ್ಟೂ ನಿಲ್ಲವೋ
ಭ್ರಷ್ಟಗುಣಗಳ ನಿಷ್ಠುರಗೈವುದೋ
ವಿಷ್ಣು ಶ್ರೇಷ್ಠಪದ ಕೊಟ್ಟು ಕರುಣಿಸೋ
ಕೃಷ್ಣ ಕೃಪಾಳು ಹೆಜ್ಜಾಜೀಶಾ ೩

 

೩೮೮
ಕಾಮದೇವ ನೀನೆಂದು ನಂಬಿದೆ
ಆವಾವುದೆನಗಾಗಬೇಕೊ ಕಾಣೆ ಪ
ಈವುದೆಲ್ಲವಿತ್ತು ಪದವಿ ಪಾಲಿಸಯ್ಯ ಅ.ಪ
ಶರಣೆನ್ನುವರ ದುರಿತಹರನೆ
ಹರಿಯೆ ಹಸ್ತ ನೀಡಿ ಕಾಪಾಡುವೈ
ಪರಮ ಕೃಪಾಳುವು ನೀನಲ್ಲವೆ
ನರರ ಜಾಜಿಪಟ್ಟಣವಾಸ ಶ್ರೀನಿವಾಸ ೧

 

೪೩೯
(೪) ಕೆಂಗಲ್ಲು ಆಂಜನೇಯ
ಕೆಂಗಲ್ಲ ಹನುಮಂತರಾಯ ನಮ್ಮ
ರಂಗನಾಥಗೆ ಬಹು ಪ್ರಿಯ ಪ
ಮಂಗಳಕರ ವಜ್ರಕಾಯ ಉ
ತ್ತುಂಗ ವಿಕ್ರಮ ಪೊರೆ ಜೀಯ ಅ.ಪ
ಶ್ರಾವಣ ಕಡೆ ಶನಿವಾರ ಬರೆ
ಭಾವಿಸಿ ಭಕ್ತರು ಸೇರೆ
ಆವಾವೆಡೆ ಜನ ಮೀರೆ ನಿನ್ನ
ತೀವಿದ ಮನದಿ ಪಾಡುವರೊ ದೊರೆ ೧
ಬಹುಭಜಕರು ಕುಣಿದಾಡಿ ಗುಣ
ಸಾಹಸ್ರಗಳ ಕೊಂಡಾಡೀ
ಶ್ರೀಹರಿ ವೈಭವ ನೋಡೀ
ಮಹದಾನಂದದೊಳಗೋಲಾಡಿ೨
ಪರಿ ಪರಿ ವ್ಯಾದಗಳಿಂದ ಸಿರಿ
ವರನುತ್ಸವ ಬಹುಚಂದ
ತಿರುಪತಿ ಯಾತ್ರಿಕರಿಂದ
ನೆರೆದೆಸೆವ ಕಲ್ಯಾಣ ಬೃಂದ ೩
ತಾಳ ತಂಬೂರಿ ಮದ್ದಳೆಯ
ಮೇಳ ತಮ್ಮಟೆಗಳ ಬಹು ಘೋಷ
ಭೂಲೋಕದಿಂ ಸ್ವರ್ಗಕೈದಿ ಶ್ರೀ
ಲೀಲೆಯ ತೋರ್ಪುದು ನಿಜದಿ ೪
ವರಜಾಜಿ ಕೇಶವನ ನಾಮವನು
ನಿರುತ ನೆನೆವ ಶರಣ ಪ್ರೇಮ
ಕರುಣದಿ ಪೊರೆ ಪುಣ್ಯಧಾಮ
ಸಿರಿ ಜಯಚಾಮನೃಪಸ್ತುತ್ಯ ಭೀಮ ೫

 

(ಊ) ಲೋಕನೀತಿಯ ಕೃತಿಗಳು
೪೨೪
ಕೆಟ್ಟಗುಣಗಳು ನರನ ಅಟ್ಟಿಕೆಡಹುತಲಿಹುವು
ಭ್ರಷ್ಟನೆನಿಸದೆ ಬಿಡವು ಇವನ ಪ
ಸೃಷ್ಟಿಯೊಳಗಿವುಗಳಿಂದೆಷ್ಟುಜನ ಕೆಟ್ಟಿಹರೋ
ಕಟ್ಟುತ್ತ ಮುಸಲದಿಂ ಕುಟ್ಟುತಿಹುವೂ ಅ.ಪ
ಸರಿಧರೆಯ ಸ್ತ್ರೀಯರಂ ಕಾಯಿಸಲು ನರತಾನು
ಹರಿಯಿಂದ ಹತನಾಗಿ ಹೋದಾ
ವರವಿಪ್ರನಲಿ ಕ್ರೋಧಮಾಡಿದ ಬಕಾಸುರನ
ತರಿದನಲ್ಲವೆ ಭೀಮ ತಾನು ೧
ದಾಯವನು ಲೋಭದಿಂ ಕೌರವನು ಪಾಂಡವರಿ
ಗೀಯದುದಕವನೇನು ಪಡೆದಾ
ರಾಯದಶರಥ ತನ್ನ ಸತಿಸುತರ ಮೋಹವಿರೆ
ಆಯುವಿಂ ಗತನಾಗಿ ಹೋದಾ ೨
ಜಮದಗ್ನಿಯ ಹೋಮಧೇನುವಂ ಮದದಿಂದೆ
ಕಾರ್ತಿವೀರ್ಯಾರ್ಜುನನು ಕೊಳಲು
ಅಮಿತಬಲನಾಪರಶುಧಾರಿಯು ತಾನು
ಸಮರದೊಳೆ ಸವರುತ್ತ ಅವನ ಕಳೆದ೩
ಕೃಷ್ಣನನು ಮತ್ಸರದಿ ಶಿಶುಪಾಲ ಬಯ್ಯಲು
ವಿಷ್ಣುಚಕ್ರವು ಕೊಂದಿತವನ
ಬಾಣ ತಾನೀರ್ಷೆಯಿಂ ಭವಗವಂತನಿದಿರೇಳೆ
ಪ್ರಾಣವುಳಿಯುತ ನಾಲ್ಕು ತೋಳ್ಗಳಾಯ್ತು ೪
ವಾಸುದೇವನ ಮೇಲಸೂಯೆಯಿಂ ಪೌಂಡ್ರಕ
ವಾಸುದೇವನೊಳು ಅಳಿದ ಕಂಡ್ಯಾ
ದೂಷಣೆಯು ಡಂಬಗಳು ನಾಶನವ ಗೈಯುವುವು
ಈಶ ಸುಜನರಿಗಾಗಿ ಭಾವಿಸುವ ಜಗದೀ೫
ದರ್ಪದಿಂ ದಶಶಿರನು ಮರೆಯುತ್ತಲಿರಲಾಗಿ
ಅಪಹಾರಗೈದ ಶ್ರೀರಾಮ ತಲೆಯಾ
ರಿಪುಗಳಾ ಮಧು ಕೈಟಭರ ಮಮತೆಯನು
ಉಪಮೆಯಲ್ಲಿದು ಮಾಯಿ ಮುರಿದ ನೋಡಾ ೬
ನಿರ್ವಿಕಾರನ ನೆನೆದು ಗರ್ವವರ್ಜಿತರಾಗಿ
ಸರ್ವವೂ ಹೆಜ್ಜಾಜಿ ಕೇಶವಾ ಯೆಂದು
ಪರ್ವತೋದ್ಧರನಲ್ಲಿ ಕರ್ಮಾರ್ಪಣೆಯ ಮಾಡಿ
ಒರ್ವನೇ ಜಗದೀಶನೆಂದು ನಮಿಸೀ ೭

 

೩೮೯
ಕೈಬಿಡದೆ ಕಾಪಾಡು ಕರುಣಾಳು ಹರಿಯೇ
ನಾಬಿಡದೆ ನಿನ್ನಡಿಯ ಮೊರೆಹೊಕ್ಕೆ ದೊರೆಯೇ ಪ
ಎಲ್ಲಿನೋಡಿದರಲ್ಲಿ ನಿನ್ನ ಮೂರ್ತಿಯ ತೋರಿ
ಎಲ್ಲಕಾಲಗಳೊಳಗು ಭಜನೆ ಬಲಿಸಿ
ಉಲ್ಲಸದಿ ಕಾರ್ಯಗಳೊಳೆಲ್ಲ ಸೇವೆಯಗೈಸಿ
ನಿಲ್ಲದೆಯ ನೀನಂತ್ಯಕೊದಗು ಸಂತೈಸಿ೧
ಧನ್ಯ ಭಕ್ತರೊಳಾಡಿ ಚನ್ನಚರಿತೆಯ ಪಾಡಿ
ಉನ್ನತೋತ್ಸವಗಳನು ನೋಡಿ ನೋಡಿ
ಯನ್ನ ಮನಕಿನ್ನೊಂದ ತೋರಿಸದೆಯೆ ಸಂ
ಪನ್ನ ಪದಯುಗಪೂಜೆ ಕೊಡು ಮುನ್ನ ೨
ಘನಜಾಜಿ ಪಟ್ಟಣವಾಸ ಇನಕರ ಪ್ರಭುಶ್ರೀಶ
ವನಜಸಂಭವನಯ್ಯ ವರದ ಜೀಯ
ಅನುನಯದಿ ಬೇಡುವೆನು ನಾನಂಬೆನನ್ಯರನು
ತನಯನೊಳು ಕನಿಕರಿಸು ನಿನ್ನಡಿಯೊಳಿರಿಸು ೩

 

೩೯೦
ಕೈಮುಗಿದು ಕೇಳಿಕೊಂಬೆ ಕರುಣಾಸಾಗರ ಶ್ರೀಕರ ಪ
ಶ್ರೀಮನೋಹರ ಭಾವಿಸುತ್ತ ಭಕ್ತಿಯೀವುದೈ ಶುಭಕರ ಅ.ಪ
ನಿನ್ನ ಸುಂದರ ಮೂರ್ತಿಯ ತೋರೋ
ಕಣ್ಣ ತುಂಬ ನೋಡುವೆ
ಚನ್ನ ಪಾದಯುಗಳ ನೀನಿಡುನಾ
ನನ್ನಿಯಿಂ ನಮಿಪೆ ನಾರಾಯಣ ೧
ಎನ್ನೊಳೆರಡು ಮಾತನಾಡು ಮೃದುನುಡಿ ಕೇಳುವೆ ಸಂ
ಪನ್ನ ಕೃಪಾದೃಷ್ಟಿಯ ನೀಡು ಧನ್ಯನಾಗುವೆ ದೀನಬಂಧು೨
ಬಾಲಗೋಪಾಲ ಲೀಲೆ ತೋರೋ ನಲಿಯುವೆ ಶ್ರೀಲೋಲ
ಜಾಲ ಮಾಡದೆನ್ನೊಳಾಡೊ ಎತ್ತಿ
ಮುದ್ದಾಡುವೆ ಮುದ್ದು ಕೃಷ್ಣ೩
ಎನ್ನ ಬಿನ್ನಪವ ಕೇಳು ಜನ್ಮ ಸಾರ್ಥಕವ ಮಾಡು
ಇನ್ನು ಸಾವಕಾಶವೇಕೊ ಜಾಜೀಕೇಶವ ಸುವೈಭವ ೪

 

೩೯೧
ಕೈಯ ಬಿಡದಿರೋ ನಾರಾಯಣ
ಜೀಯಾ ಕಾಯೆಂದು ಶರಣುಬಂದೆನ್ನ ಪ
ಲೋಕದಂತೆ ನಡೆಯಲೆನುತ
ಬೇಕಾದುದಿಲ್ಲವೆಂದು ತೊಳಲಿ
ಶೋಕಸಾಗರದೊಳಗೆ ಮುಳುಗಿ
ಶ್ರೀಕಾಂತ ನಿನ್ನ ಕಾಣಬೇಕೆಂಬೆನ್ನ ೧
ಹೊಟ್ಟೆ ಬಟ್ಟೆಗಳಿಗೆ ದುಡಿಯ
ಲೆಷ್ಟೆ ಕಷ್ಟಪಟ್ಟು ಬಳಲಿ
ಸೃಷ್ಟಿಪಾಲಕ ಬಾಯಬಿಡುತ
ಇಷ್ಟದೈವವ ಸೇರಬೇಕೆಂಬೆನ್ನ ೨
ಆಶೆಯೆಂಬ ಪಾಶವೆನ್ನ
ಮೋಸದಿಂದ ಬಂಧಿಸಿಹುದು
ಲೇಸಕಾಣೆನು ಜಾಜೀಕೇಶವ
ಪೋಷಿಸೆಂದು ಮರೆಯಹೊಕ್ಕೆನ್ನ ೩

 

೪೨೫
ಗತಿಯಾರೋ ಈ ಜಗದಿ ಮತಿಗೆಟ್ಟ ಮನುಜ
ಕ್ಷಿತಿನಾಥ ಹೆಜ್ಜಾಜಿ ಕೇಶವನ ಹೊರತು ಪ
ಸತಿಯ ಪರದೊಳು ನೋಡೆ ಪುಣ್ಯವರ್ಥಕೆ ಕತೆಗೆ
ಸುತರಿರುವರೆಂದೆನಲು ಋಣಮುಗಿವೊವರೆಗೇ
ಅತಿಶಯದ ಬಾಂಧವರು ಮಿತ್ರಮಂಡಲಿಯೆಲ್ಲ
ಸ್ತುತಿಯುಕ್ತ ಮರ್ಯಾದೆ ಪಡೆಕೊಳ್ಳುವನಕ ೧
ತಂದೆ ತಾಯಿಗಳೆಲ್ಲ ಮುಂದಳಿದು ಹೋಗುವರು
ಬಂದ ತನ್ನಧಿಕಾರ ಬಲುಮೆಯಿರುವಾಗ
ಬಂದಿದ್ದ ಧನಧಾನ್ಯಗಳು ನಿಲ್ಲದೋಡುವುವು
ಬಂಧನದ ಕಾಲದೊಳಗೊಬ್ಬರೂ ಬರರೂ ೨
ಕರಿ ಧ್ರುವನು ಪಾಂಚಾಲಿ ಪ್ರಹ್ಲಾದ ಪ್ರಭೃತಿಗಳ
ಪರಮಪಾವನರೆನಿಸಿ ಪೊರೆದಂಥ ಹರಿಯ
ಉರುತರದ ನೋಟದೊಳು ನಿರುತ ನೆನೆಯಲು ನಿನ್ನ
ಕರಪಿಡಿದು ಕಾಯುವನು ಸುಂದರಶ್ಯಾಮ ೩

 

೩೯೨
ಚನ್ನಕೇಶವ ಪನ್ನಗಶಯನ ಪ
ಚನ್ನಪಾದಪೂಜೆಯನ್ನು ಕರುಣಿಸಯ್ಯ ಅ.ಪ
ಸಾಕಲಾರದೆ ನೂಕುತಿರುವೆಯಾ ವಿ
ವೇತಕವೇ ಇದು ಸಾಕು ಸುತನ ಸಲಹು ೧
ದೂರನುಯೋಚಿಸು ದಾರಿಯಬಿಡದೆ
ಸಾರಿಸ್ಮರಿಸುವ ಪಾರುಗಾಣಿಸಯ್ಯ ೨
ಶ್ರೀದೇವಿಯ ಸಾಧುವೇನೊ ಕೇಳು
ಆಧಾರಿಯೇ ಭೇದ ಸರಿಯೆ ಹೇಳು ೩
ತಪ್ಪುಮಾಡದೆ ಇಪ್ಪರಾರೊ ಹರಿ
ಅಪ್ಪುತೆಮ್ಮ ಬಂದು ಒಪ್ಪಿ ಪೊರೆಯೊ ಬಂಧು೪
ಅಮ್ಮನಾನುಡಿ ಆಲಿಸಂತೆ ನಡಿ
ನೆಮ್ಮದಿಯೊಳಡಿಯಿಟ್ಟು ಯೆನ್ನ ಕೈಪಿಡಿ೫
ಸುಮನಸಗುಣಾ ಕಮಲಾಕ್ಷದಾ
ಅಮರವಾಣಿಪೇಳು ಅಮಿತಸುಖದ ಬಾಳು ೬
ಆಗಲೈಮಗು ಭೋಗ ಭಾಗ್ಯಹೊಗು
ತ್ಯಾಗಮಾಡಿ ಬಾಗಿ ಪಾದಪಿಡಿಯೊ ಯೋಗಿ ೭
ನಂಬಿನಡೆವೆ ಸಂಭ್ರಮದ ಕಣಿ
ಅಂಬುಜೋದರಾನಂದಸಾಗರಾ ನಾಂ೮
ಜಯ ಜಯ ಜಯ ಮಂಗಳಮಯ
ಭಯನಿವಾರಣ ಭಕ್ತ ಸಂರಕ್ಷಣಾ ೯
ಇದ ಪಾಡುವಾ ಮುದ ಪಡೆಯುವಾ
ಅಧಿನಾಥನೆಡೆ ಸುಧೆಸವಿಯಾವಾ ೧೦
ವಿಧಿಪಿತನ ಸೇವೆ ನಿಧಿಯೆಂದರಿತು
ಬುಧಮಂಡಲಿಯೊಳಧಿಕರಿಸುವಾಂ ೧೧
ಜಾಜೀಶ್ವರಾ ಶ್ಯಾಮಸುಂದರಾ
ರಾಜರಾಜಪೂಜ್ಯ ಸ್ವಾರಾಜ್ಯ ಸಾಮ್ರಾಜ್ಯ ಚನ್ನಕೇಶವಾ ೧೨

 

(ಅ) ಶ್ರೀಹತಿಸ್ತುತಿಗಳು
೩೪೫
ಜಗದುದರನು ಹರಿ ಸೂತ್ರಧಾರಂ
ನಗಿಸುವ ಅಳಿಸುವ ಕಾರಕನಿವ ತಾಂ ಪ
ಪರಿಪರಿ ಸೃಷ್ಟಿಸುತಾ ಸಲಹುವನು
ಅರಿವಿಂದವುಗಳ ಲಯಗೈಸುವನು
ಭರಿತನು ಸಕಲ ಚರಾಚರಂಗಳಲಿ
ನಿರುತವೆಲ್ಲ ತರತಮದಿಂದಾರಿಸಿ
ಇರುವನು ಪರಮಾತ್ಮನು ಸರ್ವೇಶಂ ೧
ನಿತ್ಯನಿರ್ಮಲನು ಸತ್ಯಸನಾತನು
ಅತ್ಯಂತನು ಗುರುವನಂತನು
ಮೃತ್ಯುನಿಯಾಮಕ ಮುಕ್ತಿಪ್ರದನು
ಭೃತ್ಯವರ್ಗ ಸಂರಕ್ಷ ಶಕ್ತನು
ಮತ್ತೊಂದಕು ಸಹ ಮೂಲನು ೨
ಅಣೋರಣೀವನು ಮಹತೋಮಹೀಮನು
ಗುಣಗಣಭರಿತನಗಣ್ಯನು
ಕ್ಷಣಮಾದಲನು ಕಂಟಕನು ಕಾಲನು
ತೃಣಮೊದಲು ಬ್ರಹ್ಮಾಂಡನು ಧೀರನು
ಘನಮಹಿಮನು ಶ್ರೀ ಜಾಜೀಶಂ ೩

 

(ಋ) ತಾತ್ತ್ವಿಕ ಕೃತಿಗಳು
೪೨೯
ಜಗವ ಪೆತ್ತಿಹ ಪ್ರಭು ನೀನಯ್ಯ ಶ್ರೀರಂಗದ ವಿಜಯ ಪ
ಸಾಸಿರ ಶೀರ್ಷನೆ ಸಾಸಿರನೇತ್ರನೆ
ಭಾಸಿಸುವಾನಂತ ಪಾದನೆ ಹಸ್ತನೆ ೧
ಆದಿಮಧ್ಯಾಂತರಹಿತ ಅಸಂಖ್ಯನಾಮನೆ
ಆಧಾರಮೂರುತಿ ಸಾಧುಸಂರಕ್ಷಕ ೨
ಆಖಿಲಾಂಡಕೋಟಿ ಬ್ರಹ್ಮಾಂಡ ನಾಯಕನೆ
ಸಕಲಚರಾಚರ ಕರ್ತೃವು ನೀನೆ ೩
ಚರಂಗಳೆಲ್ಲ ಯೀ ಭೂಮಿತಳವೋ
ಪರಮನಾಭಿಯೆ ಆಕಾಶವಯ್ಯ ೪
ಶಿರವೇ ವೈಕುಂಠ ಕವಿಗಳೆ ದಶದಿಕ್ಕು
ಉರುತರ ಮನಸೇ ಮನ್ಮಥನಹುದು ೫
ಹರಿಯ ಪಾಶ್ರ್ವಂಗಳೆ ಹಗಲು ರಾತ್ರಿಗಳು
ಪರಮವೇದಂಗಳು ಸಕಲಶರೀರವು ೬
ಮುಖ ಭುಜ ತೊಡೆ ಪಾದಗಳಲಿ ವರ್ಣಂಗಳ
ಸುಕರದಿ ಪಡೆದ ಭೂಸೂತ್ರಧಾರಿಯು ನೀಂ೭
ಇಂದ್ರ ಮೊದಲಾದ ದೇವರೆಲ್ಲ ನಿನ್ನಯ ಮುಖ
ಚಂದ್ರಸೂರ್ಯರ ಕಣ್ಣಿನಿಂದ ಪಡೆದಾತನೆ ೮
ಮಗುವಾದೆನ್ನ ಪಿಡಿ ಮೂಜಗದೊಡೆಯ
ಹಗರಣ ಹರಿಯೊ ಜಾಜಿಕೇಶವ ೯

 

೩೯೩
ಜನುಮ ಸಾರ್ಥಕವ ಮಾಡಿಸು ತಂದೇ
ನೆನೆವರ ಕಾವನು ನೀನೆಂದು ಬಂದೇ ಪ
ನಾನಿರುವುದು ಲೌಕಿಕರ ಸಮೂಹ
ಏನ ಗೈವುದೋ ಪ್ರಪಂಚದ ಮೋಹ ೧
ಅಜ್ಞನು ನಾ ನನ್ನದೆಂಬುದ ಬಿಡಿಸು
ಸುಜ್ಞಾನದೀಪ ಕೊಟ್ಟು ಪ್ರಜ್ವಲಿಸು ೨
ಅಜ್ಞನಾ ಯೆನ್ನಪರಾಧಾವ ಕ್ಷಮಿಸು
ವಿಜ್ಞಾಪಿಸಿಕೊಂಬೇ ನೀ ಮನಸ್ಕರಿಸು ೩
ಹಗಲಿರಳು ಯನ್ನ ಹೆಗಲೊಳು ಕುಳಿತು
ಮಿಗಿಲಾಗಿಸು ದಿನ್ಯ ಸೇವೆಗಳನಿತು ೪
ನಾಲಗೆ ಮಧ್ಯದಿ ನೀ ನಲಿದಾಡಿ
ಬಾಳುವೆಯೆಲ್ಲವು ಭಜಿಪುದ ಮಾಡಿ ೫
ಕಣ್ಣೆಲ್ಲಿ ಸುಳಿದರೆ ಅಲ್ಲಿನೀ ಕಂಡು
ಉನ್ನತವೈಭವ ತೋರು ಮನಗೊಂಡು ೬
ಜಾಜೀಕೇಶವ ಜಯ ಪದವಿತ್ತು
ರಾಜೀವಾಂಬಕ ಪೊರೆ ಭಾರಪೊತ್ತು ೭

೩೯೪
ಜನ್ಮತಾಳಲಾರೆ ರಾಘವಾ
ಮನ್ಮನೋಜ್ಞಾ ಮನ್ನಿಸಿಲ್ಲಿಗೇ ಪ
ಕಷ್ಟ ಪರಂಪರೆ ಕಳೆಯುವಾ
ಇಷ್ಟಮೂರ್ತಿ ನಿನ್ನ ನೋಡದಾ ೧
ಸಾಧುಗಳು ಸಾಧಿಸುತ್ತಿಹಾ
ವೇದವೇದ್ಯ ಧನ್ಯನಾಗದಾ ೨
ಪ್ರೇಮ ರೂಪಾ ಜಾಜೀಕೇಶವಾ
ಸ್ವಾಮಿನಿನ್ನ ಪಾದಸೇರದಾ ೩

 

೩೯೫
ತಂದೇ ತೋರದೆಲ್ಲಿರುವೈ ಸುಂದರಶ್ರೀ ಮಂದರಧರ
ಹಿಂದು ಮುಂದು ತೋರದೆನಗೆ
ಇಂದೆ ಕುಂದುಗಳನು ಹರಿಸು ಪ
ಕಂದನಮುಂದಕೆ ಬರುತಲಿ ಚಂದವಾದ ನಿನ್ನಯ ಮುಖ
ಚಂದ್ರಮನಂ ತೋರಿ ನೇತ್ರೇಂದ್ರಿಯಕಾನಂದ ಬೀರೈ ಅ.ಪ
ಶ್ರೀವರ ನಿನ್ನ ಭಕ್ತರ ಭಾವಿಸುತ್ತ ತಪ್ಪ ಕ್ಷಮಿಸಿ
ನೋವಕೊಡದೆ ರಕ್ಷಿಸುವ ಕೃಪಾಳುವು ನೀನೈ
ದೇವಕಿನಂದನ ನಿನ್ನಯ ಪಾವನತರ ಪದಪದ್ಮಕೆ
ನಾ ವಿನಯದಿ ನಮಿಸಿ ತಳಿವೆ ಹೆಜ್ಜಾಜಿಕೇಶವಾ
ಓ ವಿಭೀಷಣಹಿತಕರ ಸಾವಕಾಶ ಮಾಡದೆ ನೀ
ಕಾವುದೆನ್ನ ಸಮಯವರಿತು ಸಾಮಗಾನಸನ್ನುತ ೧
ಚಿಟ್ಟೆಸ್ವರಕ್ಕೆ
ಸಿರಿಶ್ರೀರಂಗ ಶೋಭಾಂಗ ಭಜಿಪರ ಭವ ಭಯ ಭಂಗ
ವರಭಕ್ತೇಷ್ಟ ದಾತಾರ ದೈತ್ಯಾರಿ ವೈಕುಂಠ
ಪುರಹರನುತ ಶುಭಗುಣಯುತ
ಪರಮಚರಿತ ನಿರುಪಮಪದ ಕು
ವರ ಧ್ರುವನಿಗೊಲಿದ ದ್ವಿಜನ ಪೊರೆದ ಕರುಣಾ
ಧರಣೀ ಭರಹರಣಾ ಪಾವನಚರಣ ಜಾಜಿಕೇಳುವ ೨

 

೪೩೮
(೩) ರಂಗನಬೆಟ್ಟ(ಸೋಲೂರು ಸಮೀಪ)ರಂಗನಾಥ
ತಟ್ಟೇಕೆರೆಯಾ ರಂಗಾ ಜಯ ಮಂಗಳಾಂಗ ಪ
ಸೃಷ್ಟೀಶ ಪಾದ ನಂಬಿದೆ ಬಿಡಿಸೆನ್ನ ಭಂಗ ಅ.ಪ
ಲಕ್ಷ್ಮೀನಾಯಕ ಭಕ್ತವೃಂದ ರಕ್ಷಕ ಶಕ್ತ
ರಕ್ಷಿಸು ಕಮಲಾಕ್ಷ ಕರುಣಾಕಟಾಕ್ಷ ೧
ಪತಿತ ಪಾವನ ಪುಣ್ಯಧಾಮ ಮಹಿತಮಾನ್ಯ
ಶ್ರುತಿನುತ ಗುಣಭೂಷಾ ಭವನಾಶಾ ೨
ಗಾಂಗೇಯನುತನಾಮ ಹಿಂಗದೆನ್ನಲಿ ಪ್ರೇಮ
ಸಾಂಗವೇದಸ್ತೋಮ ಸುತ್ರಾಮಾ ೩
ಸುರಮುನಿವಂದ್ಯ ಭಾಗವತರ ವೃಂದ
ಕರಿರಾಜ ಪರಿಪೋಷಾ ಹೆಜ್ಜಾಜೀಶ ೪

 

೪೪೪
ತಾಂಬೂಲ ಕೊಡುವೆನೀಗ ಕೈಕೊಳ್ಳೈ ಪ್ರಿಯ
ನಾಂ ಬಲು ವಿಲಾಸದಿಂದ ಬೆಳ್ಳಿತಟ್ಟಿಯೊಳ್ ನಿಮಗೆ ಪ
ಮೈಸೂರುವೀಳೆಯದೆಲೆ ಬೀರೂರುಅಡಕೆ
ವಾಸನಾಯುಕ್ತ ಚನ್ನಪಟ್ಟಣಸುಣ್ಣವು ಸಹಿತ೧
ಏಲಾಲವಂಗ ಜಾಯಿಕಾಯಿ ಪತ್ರೆಯ ಒಳ್ಳೆ
ಬಾಲಮೆಣಸು ಪಚ್ಚಕರ್ಪೂರ ಕೇಸರಿ ಬೆರೆದ ೨
ಖಂಡಸಕ್ಕರೆ ಕೊಬರಿ ಸೇರಿಸಿರುವೆನೈ ಅ
ಖಂಡಾದಿ ದೇವಸೇವ್ಯ ಜಾಜಿಕೇಶವಾ ಸವಿಯ ೩

 

೪೩೦
ತಿರುಮಣಿ ಧರಿಸಿದ ತೀರ್ಥರ ಕಂಡರೆ
ತಿರುವಡಿಗಳಿಗೇ ಮಣಿಯುವುದು ಪ
ಗುರುತರ ಶ್ರೀಪಾದತೀರ್ಥಸೇವನ
ದುರಿತ ಹರವು ತಾ ಪಾವನವು ಅ.ಪ
ದೇವರ ಕಡೆಯವರಿವರೆಂದೆನ್ನುತ
ಕಾವನ ಕತೆಗಳ ಕೇಳುವುದು
ಭಾವಿಸಿ ಭಾಗವತರ ಸಹವಾಸವು
ಶ್ರೀವರನೊಲಿಯುವ ಕಾರಣವು೧
ಇವರ ದರ್ಶನವು ಪುಣ್ಯಪ್ರದವು
ಪವಿತ್ರರಿರುವೆಡೆ ವೈಕುಂಠ
ಭುವಿಸುರಪೂಜನ ಹರಿಗಾನಂದವು
ಸುವಿಮಲ ಚರಿತರು ಶುಭಕರರು ೨
ಶಂಖ ಚಕ್ರಗಳ ಭುಜದಲಿ ಧರಿಸಿ
ಪಂಕಜ ತುಳಸೀಮಣಿ ಕೊರಳೊಳ್
ವೇಂಕಟ ಶ್ರೀರಂಗ ವರದ ನಾರಾಯಣ
ಕಿಂಕರರೈ ಜಾಜೀಶನಿಗೆ ೩

 

೩೯೬
ದೊರೆಯೆನ್ನನು ಕಾಯೈ ಶ್ರೀಚಕ್ರಪಾಣಿ ಪ
ನಿರುತವು ಶರಣೆಂದೆನ್ನುತ ಕೋರುವೆ
ಪರಿಯೊಳುಸೇರೇ ಬಂದಿಹೆ ಕರಪಿಡಿ ಅ.ಪ
ಆಯುರಾರೋಗ್ಯ ಸುಖಸಂಪದಕೊಡುವ ಸೌಭಾÀಗ್ಯ ಕರ್ತೃವು
ಶ್ರೇಯದ ವಿದ್ಯೆಯ ಕರುಣಿಸ ಪ್ರಭೆಯೊಳು ಸನ್ಮಾನವೀವಾ
ಧ್ಯೇಯನೇಭತ್ತಿಜ್ಞಾನವೈರಾಗ್ಯವನಿತ್ತುವಿಮುಕ್ತಿಕೊಡುವ ಅ
ನ್ಯಾಯದೆ ನಡೆವರ ವ್ಯರ್ಥರಗೈವನು ನೀನೈ ಶ್ರೀಶ್ಯಾಮಸುಂದರ ೧
ಮನ್ನರೋಗಕ್ಕೆ ನಿನ್ನ ಪಾದತೀರ್ಥ ಔಷಧವು ಬೇಡ
ಉನ್ನತ ಭಯಕ್ಕೆ ಸುದರ್ಶನ ಸ್ಮರಣೆ ಮಂತ್ರವೇತಕ್ಕೆ
ಇನ್ನಿತರ ಕಷ್ಟಗಳಿಗೆಲ್ಲ ನಿನ್ನ ನಾಮಮಂತ್ರ ಭಜನ
ಚೆನ್ನಪಾದಕೃಪೆ ಇನ್ನೊದಗಿಹುದೈ ನಾಂ ನಿತ್ಯಸಂತೊಷಿ ೨
ನಿರಾಯಾಸದಿಂ ದಾಸಗಂತ್ಯದಲಿ ಪ್ರಶಾಂತನಾಗಿ
ಹರಿನಾರಾಯಣ ನಾರಾಯಣಯೆಂದು ಕರೆವಂತೆ ಮಾಡಿ
ಹರುಷದಿ ನೋಹರಾಕಾರವ ತೋರಿ ವೈಕುಂಠಕೆನ್ನನು
ಕರುಣದಿ ಕರೆದೊಯ್ ಅಜಪೂಜಿತ ಹೆಜ್ಜಾಜಿಕೇಶವ ೩

 

೩೯೭
ದ್ವಂದ್ವಾತೀತನ ಮಾಡೋ ನಿದ್ರ್ವಂದ್ವನೆ ಪ
ಸರ್ವಕಾಲದಿ ನೀನೆ ಸರ್ವಸ್ವವೆನ್ನುತ
ಉರ್ವಿಯೊಳಾನಿರ್ಪ ಪರಿತೋರು ದೇವಾ ೧
ಸರ್ವೇಶ ಕರ್ಮಗಳೆಲ್ಲವ ನಿನಗಿತ್ತು
ಗರ್ವವರ್ಜಿತನಾಗಿಹುದನ್ನು ನೀಡೈ ೨
ಈಶ ನೀನೆನ್ನೊಳು ವಾಸಿಸುವವನಾಗಿ
ಭಾಸಿಪುದನು ತೋರು ಜಾಜೀಶಾಶಾ ೩

 

೩೯೮
ನಾ ಕಣ್ಣ ತುಂಬ ನೋಡಿ ನಲಿವೆನು
ಲೋಕೇಶ ಶ್ರೀ ವೈಕುಂಠನನ್ನು ಪ
ಶರಧಿ ಮಧ್ಯದಲ್ಲಿ ಉರಗಶಯನನಾಗಿ
ನಿರುತ ಲಕ್ಷ್ಮೀತಾ ಚರಣ ಪೊತ್ತುತಿರುವವನ್ನ ೧
ಸಾರಸೋದ್ಭವನಪಾರಲೀಲೆ ನೋಡಿ
ನಾರದ ತುಂಬುರರ ಸಾರಗಾವ ಕೇಳ್ವವನ್ನ ೨
ಗರುಡ ಆಂಜನೇಯರು ಮುಂಗಡೆ
ಕರವ ಮುಗಿದು ತಾ ಸೇವೆ ಗೈಸುವವನ ೩
ಬಿಡದೆ ಭಕ್ತರ ಎಡರುಗಳನು ಹರಿಸಿ
ಒಡನೆ ಕಾಯ್ದಿಹ ಒಡೆಯ ಜಾಜೀಹರಿಯ ೪

 

೪೦೦
ನಾ ಬೇಡುವೆನೋ ನಿನ್ನ ಸೌಭಾಗ್ಯಸಾಗರ
ಶ್ರೀ ಭೂ ನೀಳಾವರ ಭಾಗವತೋದ್ಧಾರ ಪ
ಯಾವಾಗಲು ನಿನ್ನ ಬಳಿಯೊಳು ನಾನಿದ್ದು
ಭಾವಿಸಿ ಕುಶಲದ ಮಾತನಾಡೀ
ದೇವ ನಿನ್ನಯ ಪಾದಯುಗಳವನೊತ್ತುತೆ
ಸೇವಿಸಿ ಸುಖಿಪಂತೆ ಕರುಣಿಸು ಮುರಹರ೧
ಮುಂಗಡೆ ಕುಣಿ ಕುಣಿದಾಡಿ ಸ್ತೋತ್ರವ ಮಾಡಿ
ಕಂಗಳೊಳಾನಂದಭಾಷ್ಪಗೂಡೀ
ಅಂಗವ ಮರೆತೆನ್ನ ಕಂಠಗದ್ಗದವಪ್ಪ
ಮಂಗಳಕರ ಭಕ್ತಿ ಕೃಪೆ ಮಾಡು ಶ್ರೀರಂಗ ೨
ಹೆಜ್ಜಾಜಿಯ ಚೆನ್ನಕೇಶವ ಮಾಧವ
ಹೆಜ್ಜೆ ಹೆಜ್ಜೆಗೆ ನಿನ್ನ ಸ್ಮರಣಿಯಿತ್ತು
ಸಜ್ಜುಗೊಳಿಸಿ ಎನ್ನ ಹೃದಯಪೀಠದಿ ಕೂಡೊ
ಅರ್ಜುನಸಾರಥಿ ಶ್ರೀಕೃಷ್ಣ ಪರಮಾತ್ಮ ೩

 

೩೯೯
ನಾನೆಂತರಿವೆನೈ ನಿನ್ನಂತರಂಗವ
ಸಾನಂದಗೋವಿಂದ ನೀನಿಂದು ದಯೆದೋರು ಪ
ಆದಿ ಮೂರುತಿಯೆ ನಾನೀದೀನ ನರ
ಭೇದರಹಿತನೇ ಅದರ ಹಾದಿಯರಿಯೆನೊ
ವೇದ ವಂದ್ಯನು ನೀನು ಓದನರಿಯದ ನಾನು
ಸಾಧುರಕ್ಷಕ ಸ್ವಾಮಿ ಬೇದಯ ತಿಳಿಸೊ ೧
ಜ್ಞಾನಪ್ರಕಾಶ ನಾ ಮಾನಾಭಿಮಾನಿ
ಮೌನಿರಕ್ಷಕನೇ ಆಂ ಹೀನನಡೆಯವ
ದಾನಿಪರಮಾತ್ಮನು ದೀನ ತಾಪತ್ರಿಯೆನು
ನೀನಮೃತದವನೈ ನಾನು ಮತ್ರ್ಯನು ೨
ಸರುವಲೋಕೇಶಾ ನಾಪರದೇಶಿಯಹುದೋ
ಸಿರಿದೇವಿಯರಸಾ ದಾಸ ತಿರಿದುಂಬೊತಿರುಕ
ಶರಣಸುಧಾರಕ ಬಿರುದಿನಿಂ ಮೆರೆಯುವ
ವರದ ಜಾಜೀಶ ಪೊರೆ ಶ್ರೀನಿವಾಸ ೩

 

೪೫೪
ನಾರಾಯಣ ಕೃಷ್ಣ ಬೆಳಗಾಯಿತೇಳಯ್ಯ
ಮೂರು ಲೋಕಂಗಳಿಗೆ ಮಂಗಳವ ಬೀರಯ್ಯ ಪ
ಹರಿಹರಿ ಶ್ರೀನಿಲಯ ಪರವಾಸುದೇವ ಅ.ಪ
ಬಂದಿರುವರೈ ಬ್ರಹ್ಮ ರುದ್ರೇಂದ್ರರು ತಂದೆ
ತಂದಿರುವರೈ ಮಹನಿಧಿ ಕನಡಿ ಧೇನುಗಳ
ನಿಂದು ಗಾನವಮಾಡುತಿರುವರಾನಂದದಿ
ಗಂಧರ್ವರಪ್ಸರೆಯರಿಂದು ಕುಣಿದಾಡಿ ಕೂಡಿ ೧
ದಾಸರೊಡೆ ತುಂಬುರರು ನಾರದರು ಜಯಜಯ
ಶ್ರೀಶನೇ ಕೇಶವ ಗಜವರದ ಎಂದು
ಆಶ್ರಯಿಸಿ ಚರಣಕ್ಕೆ ಶರಣೆಂದು ಮಣಿಯವರು
ದೋಷನಾಶನ ಲೋಕಕಲ್ಯಾಣ ತ್ರಾಣ ೨
ಪತಿವ್ರತಾ ಸ್ತ್ರೀಯರುಗಳತಿಶಯ ಮಡಿಯುಟ್ಟು
ಹಿತವಾದ ಹುಗ್ಗಿ ಸಜ್ಜಿಗೆಯ ಗೈದು
ಪತಿತಪಾವನ ನಿನಗೆ ದಧ್ಯನ್ನ ನೀಡುವರೊ
ಕ್ಷಿತಿನಾಥ ನೀನವನು ತೋಷದಿಂ ಭುಜಿಸೊ ೩
ರೋಗರುಜಿನಗಳಳಿದು ಆಯುವೃದ್ಧಿಯದಾಗಿ
ಭಾಗವತ ಸಕುಟುಂಬ ಸಂತೋಷಗೂಡಿ
ಭಾಗವತ ಭಾರತ ರಾಮಾಯಣಗಳ ಹಾಡಿ
ಆಗಲೈ ಆಗಮಾರ್ಚನೆ ಆಲಯಗಳೊಳಗೆ ೪
ಕಮಲಲೋಚನ ಕೆಟ್ಟ ಸ್ವಪ್ನ ಫಲವಳಿಸಿ
ಯಮಕಂಟವಂ ಕಳೆದು ಭ್ರಮೆಗಳನು ನೀಗಿ
ಸುಮನಸರ ಕೂಡಿ ಶ್ರೀಹರಿಯ ಗುಣಗಾನ ಮಾಡಿ
ಅಮರರಾಗಿಸಿ ಅಮಿತ ಅಮೃತವುಣಿಸೈ ೫
ಕ್ಷುಧ್ರಪಾಕೀ-ಚೀನ ಕೊಬ್ಬಿ ಛದ್ರಿಸುತು
ಭದ್ರತೆಯನಾಡೊಳಗಸ್ಥಿರತೆಗೈಯುತ್ತ
ಆದ್ರಿಅಂಬುಧಿ ಮಧ್ಯೆ ಭಾರತಿಯ ನಲಿಸುತ್ತ
ಮುದ್ರೆಯುಂ ಧ್ವಜವನುಂ ನಿನ್ನವಾಗಿರಿಸೈ ೬
ಕಾಲಕಾಲಗಳಲ್ಲಿ ಮಳೆಬಿಡದೆ ಸುರಿದು
ಶಾಲಿಸಂತರ ಧಾನ್ಯ ಎಲ್ಲೆಲ್ಲು ಬೆಳೆದು
ಪಾಲೀವ ಗೋ ಮಹಿಷಿ ಊರ್ತುಂಬ ನೆರೆದು
ಶ್ರೀಲೋಲ ಕರುಣಿಸೈ ಕನಕವೃಷ್ಟಿಯನು ೭
ಎದುರು ನೋಡುತ ನದಿಯು ಹರಿವುದು ಸಾಗರಕೆ
ಮುದದಿಂದ ತಾವರೆಯು ಸೂರ್ಯನನ್ನು
ವಿಧಿವಶದಿ ಪಾಪಿಗಳು ಯಮಲೋಕವನ್ನು
ಸುಧೆಸವಿಯೆ ಭಕ್ತರು ಪರಮಪದವನ್ನು ೮
ಮಕ್ಕಳಿಲ್ಲದ ಜನರು ಮಕ್ಕಳನು ಹಡೆದು
ಲಕ್ಷ್ಮಿಯೊಲವನು ಹಾಡಿ ಜನರೆಲ್ಲ ದುಡಿದು
ಭಕ್ತರಾಗುತ ಸರ್ವ ವಣಿಗೆಗಳು ನಡೆದು
ಮುಕ್ತರಪ್ಪಂತೆಲ್ಲರ ಮಾಡು ಜಾಜೀಶ ೯

 

೪೦೧
ನಾರಾಯಣ ನಿನ್ನ ಚರಣ ಸೇವೆಯ ಬಿಟ್ಟು
ಸಾರಸಾಕ್ಷನೆ ಪ್ರಾಣದಿರಲಾರೆ ಕ್ಷಣವೂ ಪ
ದಾರಿಯೆನಗಿದೊಂದೇ ತೊರ್ಪದು ಸುಖನಿಧಿ
ಬಾರಿಬಾರಿಗೂ ಹರಿ ದ್ಯಾನಾನಂದದೊಳಿಗೆ ಅ.ಪ
ಅನ್ನವಸ್ತ್ರಂಗಳಿಗಾಗಿ ದುಡಿವದೊಂದು
ಚೆನ್ನ ಪುತ್ರರ ರಕ್ಷಣೆಯೊಂದೆಡೆ
ತನ್ನ ಮರ್ಯಾದೆ ಕುಂದುಗಳೆಂಬೊ ವ್ಯಸನದಿ
ಭಿನ್ನಿಸಿ ತಾಪತ್ರಯ ಪಡುತಿರುವಿಲ್ಲಿ ೧
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ಪ್ರೇಮ ಬಾಂಧವರಾಗೆನ್ನನಪ್ಪಿಹರೋ
ಸ್ವಾಮಿ ನೀಯೆನ್ನನವರ ಧಾಳಿಗಿಡದಂತೆ
ಸಾಮಜವರದ ಸಲಹೆಂದು ಸಂತೋಷದಿ ೨
ಭಾಗೀರತಿಪಿತ ಭಾಗವತಪ್ರೀತ
ಯೋಗಿಜನಂಗಳೊಳತಿ ಹಿತನೇ
ಸಾಗರಶಯನನೆ ಭೋಗಿಗಳ ಪುಣ್ಯನೆ
ಬಾಗುವ ಶರಣರ ಬಹುಭಾಗ್ಯನೇ ೩
ನಾನಿಲ್ಲಿಗೆ ಬಂದ ಕಾರಣ ಕಾಣೆನೋ
ದೀನಪಾಲಕ ಕಾರ್ಯಮಾಡಿಸೋಯನ್ನಿಂ
ಏನಾದರು ಮಾಡು ತಪ್ಪಹೊರಿಸಬೇಡ
ಶ್ರೀನಿಧಿ ಹೆಜ್ಜಾಜಿಕೇಶವ ಪಾಲಿಸು ೪

 

೪೦೨
ನಿಜದಿ ಸುಖಪದ ಕೊಡುವೆಯೋ
ಭಜಕರಿಗೆ ಶುಭದಾಯಿಯೋ ಪ
ತ್ರಿಜನ ಪೂಜೆಯಗೊಂಬೆಯೋ ಅಂ-
ಗಜಜನಕ ಗೋಕಾಯ್ದೆಯೋ ಅ.ಪ
ಸುತನಕೊಂದೇ ಸತಿಯ ತೊರೆದೇ
ಅತಿಯ ದುಃಖವ ನಟಿಸಿದೇ
ಸತತ ಸರ್ವವ್ಯಾಪಿಯೆಂಬರು
ಹಿತನೆ ಕಾಣಿಸೆಯೆಲ್ಲಿಹೇ ೧
ನಾರಿಯರ ಸೆರೆ ನೀಗಿಸೀ ಹದಿ
ನಾರು ಸಾವಿರ ಸೇರ್ದೆಯೋ
ಚೋರನೆನ್ನಿಸಿ ಸೀರೆಕದ್ದು
ಮಾರಕನೆ ತಾಮಮೃತನೇ ೨
ಮತ್ಸ್ಯ ಕೂರ್ಮ ವರಾಹನೇ ನರ
ಕೇಸರೀ ವಾಮನನು ನೀ
ಹಸ್ತಪರಶು ಶ್ರೀ ರಾಮಕೃಷ್ಣನೆ
ವಿಶ್ವ ಬುದ್ಧನೆ ಕಲ್ಕಿಯೇ ೩
ಘೋರ ದೈತ್ಯ ವಿದಾರಿಯೋ ಹರಿ
ಸಾರಿ ಹಲವವತಾರದಿಂ
ತೋರಿದವ ನೀನಾದರೂ ಜಾ
ಜಾಜೀಶ ಮಾಧವ ನಂಬಿದೇ ೪

 

೪೦೩
ನಿನ್ನ ಭಕ್ತರು ಬಹಳ ಬಲವಂತರಹುದೈ
ಜನ್ಮಜನ್ಮಕೂ ಚರಣಶರಣನ್ನ ಮಾಡೈ ಪ
ಹಾರಿದನು ಹನುಮಂತ ಕಡಲ ಕಾಲುವೆಯಂತೆ
ಸಾರಿ ಸೇತುವೆಯ ಕಟ್ಟಿ ನೀ ದಾಟಿದೇ
ಮಾರುತಿಯು ಬಲ್ಲಿದನು ಎಂದು ನಾಂಪೇಳಲೇ
ಸಾರಸಾಕ್ಷನೆ ಸಾಕ್ಷಿ ಯೇತಕೈ ಬೇರೆ ೧
ಭೀಷ್ಮನನು ಬೆದರಿಸಲು ತೋರಚಾಪವ ತೊಟ್ಟ
ಸೂಕ್ಷ್ಮದಿಂಹಾರಿಸಿದ ಸಂಗರದಲವನು
ತೀಕ್ಷ್ಣಸಾಹಸಿಯಾತನೆಂದು ನೀಂತಿಳಿಯತೈ
ಶ್ರೇಷ್ಠ ಮಾರುತಿಕೈಯ ಪರಶುವಂ ಕೇಳು ೨
ಶಬರ ಶಂಕರನೊಡನೆ ಕಾದಿ ಕಡೆಯಲಿ ಗೆಲ್ದು
ಪ್ರಬಲನೆನ್ನಿಸಿ ಪಾಶುಪತವನ್ನೆ ಪಡೆದಾ
ಪ್ರಭುವೆ ನಿನ್ನು ಪದೇಶ ಪಡೆದ ಪಾರ್ಥನ ಕೇಳು
ಸುಬಲರೈ ಜಾಜೀಶ ದಾಸರೀ ಜಗದಿ ೩

 

೩೪೬
ನಿನ್ನ ಸೊಬಗಿದೇನೊ ಶ್ರೀಹರಿ
ಉನ್ನತ ವಿಭವ ಚನ್ನಕೇಶವಾ ಪ
ಸತಿ ಸಿರಿದೇವಿಯು ಅತಿ ಚಂಚಲೆಯು
ಸುತಮದನ ತಾನನಂಗನೂ
ಸುತೆ ಬಾಗೀರಥಿ ವಕ್ರಮಾರ್ಗಳೋ
ಅತಿಶಯ ಮೈದುನ ಕ್ಷಯರೋಗಿ ೧
ಇರುವ ಮಂದಿರವು ಸಾಗರ ಮಧ್ಯವು
ಉರಗನ ಮೇಲೆ ಪವಡಿಸಿಹೆ
ಗರುಡನೇರಿ ಗಗನದಿ ತಿರುಗಾಡುವೆ
ನೆರೆ ತುಲಸಿಯ ಮಾಲೆಯ ಹಾಕಿರುವೆ ೨
ದಾನಕೊಟ್ಟವನ ಭೂಮಿಗೆ ತುಳಿದೆ
ಧ್ಯಾನ ಗೈದವನ ಶಿರವರಿದೆ
ಮಾನಿನಿ ಕೊಟ್ಟ ಸವಿಫಲಭಂಜಿಸಿ
ಮೀನ ಕೂರ್ಮ ವರಹನು ನೀನಾದೆ ೩
ಹೀಗಿದ್ದರೂ ಸತ್ಸತಿಸುತ ಬಾಂಧವ
ಭೋಗ ಭವನ ಭಾಗ್ಯಗಳಿತ್ತು
ರಾಗದಿ ರಕ್ಷಿಪೆ ಶರಣರ ನಿರುತವು
ಭಾಗವತಪ್ರಿಯ ಜಾಜಿಕೇಶವಾ ೪

 

(ಏ) ವಿಶೇಷ ಸಂದರ್ಭದ ಹಾಡುಗಳು
೪೫೩
ಬರಗಾಲ ಮತ್ತು ಯುದ್ಧವನ್ನು ಕುರಿತು
ನಿರ್ದಯನಾಗಬೇಡವೋ ಭಗವಂತ
ದುರ್ದಿನ ದೂರಮಾಡೋ ದೇಶಕ್ಕೆ ಪ್ರಶಾಂತ ಪ
ಮಳೆಗಾಲ ಮರೆತುಹೋಗಿ ಬೇಸಗೆ ಬೆಳೆದು ಬಂದು
ನೆಲವೆಲ್ಲ ದುರ್ಭಿಕ್ಷ ತಾಂಡವವಾಡುತಿದೇ ೧
ಕೆರೆಕಟ್ಟೆತೊರೆಭಾವಿ ಹೊಳೆಯಲ್ಲಿ ನೀರಿಲ್ಲ
ಧರೆಯಲ್ಲಿ ತೃಣವಿಲ್ಲ ಬರಿಗಾಡಾಯ್ತೋ ೨
ಹೊಲಗದ್ದೆ ತೋಟಗಳ ಬೆಳೆಯೆಲ್ಲ ಒಣಗಿತು
ಫಲವಿಲ್ಲ ಜನವೆಲ್ಲ ಗೋಳಾಡುತಿಹರೋ ೩
ಅನ್ನಾಹಾರಗಳಿಲ್ಲ ಗೋಗಳಿಗೆ ಗ್ರಾಸವಿಲ್ಲ
ಚಿನ್ನದಂಥ ಮಕ್ಕಳೆಲ್ಲ ಉಣಿಸಿಲ್ಲದಿಹರೋ೪
ಧನಿಕರ್ಗೆ ಧನದಾಸೆ ಬಡವರ್ಗೆ ಕೂಳಿಲ್ಲ
ದಿನಕಳೆವುದು ಕಷ್ಟವಾಗಿ ಬರಗಾಲ ಬಂತೋ ೫
ಕಳವು ಕೊಲೆಯು ದಂಗೆ ದಾರಿದರೋಡೆಯು
ಉಳಿಗಾಲ ಬರಲಿಲ್ಲ ಯುದ್ಧದ ಭಯವು೬
ಒಂದೊಂಬತ್ತಾರೈದು ಹತ್ತು ಹನ್ನೊಂದರ ಮಧ್ಯೆ
ಬಂದು ಜಗದ ಕುತ್ತು ಕತ್ತಿಯಂತೆ ಕಂಡಿತು ೭
ಬೆಳಗುಪೂರ್ವ ಆಶ್ವಿಜ ಕಾರ್ತಿಕದೆ ಧೂಮಕೇತು
ಇಳೆಗಂಡಕಳೆ ಯಮದ್ವಾರವ ಮುಚ್ಚಿ ೮
ಅವಿಶ್ವಾಸದ ವಿಶ್ವವಸುವ ಪರಾಭವದಿಂ ಪ್ರೀತಿತೋರಿ
ಭುವನವೆಲ್ಲ ತಣಿಯುವಂತೆ ಭವದ ಭಂಗ ಹರಿಸೋ ೯
ಪಾಕಿ-ಚೀನಾ ಪತನಗೈದು ಜೋಕೆಯಿಂ ಭಾರತವ ರಕ್ಷಿಸಿ
ಲೋಕಕ್ಕೆ ಕ್ಷಾಮಹರಿಸಿ ಕ್ಷೇಮಕೊಟ್ಟು ಪೊರೆಯೋ೧೦
ನಗೆಯಿಲ್ಲ ಸಂತೋಷ ಸುದ್ಧಿ ಕೇಳುತಲಿಲ್ಲ
ಮಿಗಿಲಾಗಿ ಜನರೆಲ್ಲ ಸೊರಗಿ ಸುತ್ತುವರೋ೧೧
ಕನ್ನಡದ ನಾಡಿಗೆ ಹೊನ್ನಿನ ಬಿರುದಿದೆ
ಖಿನ್ನತೆ ತಾರದೆ ಉನ್ನತಿ ಕಾಪಾಡು ೧೨
ಮುಂದೆಮಗೆ ಗತಿಯೇನು ಬಾಳುವಬಗೆಯೆಂತು
ಬಂಧು ನೀನಿದ್ದುಕೊಂಡು ಅನ್ಯಾಯವಾಗಿದೆ೧೩
ತಂದೆ ತಾಯಿಯು ನೀನು ಹೊಂದಿದ ಬಳಗ ನೀನು
ಕುಂದಿಲ್ಲದೆಮ್ಮನ್ನು ಕಾವ ಪ್ರಭು ನೀನು ೧೪
ಸುವೃಷ್ಟಿ ಸಸ್ಯವೃದ್ಧಿ ಜೀವನ ಸಮೃದ್ಧಿಯು
ಸುವೃತ್ತಿ ಕರುಣಿಸಿ ಪೊರೆ ಜಾಜಿಶ್ರೀಶ ೧೫

 

೩೫೯
ನೀನೇ ಸಕಲವೆನಗೆ ಶ್ರೀರಾಮಚಂದ್ರ
ನೀನೇ ದೊರೆಯರಸನೊ ಪ
ಶ್ರೀನಿಧಿಯೆ ನಿನ್ನವರುಸತತ ಸಾನುರಾಗದ ಬಳಗವಹುದೈ
ದೀನಜನಮಂದಾರ ನೇಹಂ ಶ್ರೀನಿಕೇತನ ಸತ್ಯಸಾರ ಅ.ಪ
ರಾಮ ನೀಯೆನ್ನಾತ್ಮನು ಈ ಮಹಾಸೀತಾದೇವಿಯೆ
ತಾಮತಿಯು ಶ್ರೀ ಮನೋಹರ ಸಹಜರೆಲ್ಲ ಪ್ರೇಮ ಪಂಚ
ಪ್ರಾಣಗಳು ನಿಧಿ ಭೀಮಬಲ ಮಾರುತಿಯ ಮನಸಿಗೆ
ರಾಮರೂಪವ ತೋರ್ಪನಾಡಿಯು ೧
ಧನ್ಯ ಶರೀರವು ಮಾನ್ಯಗೆ ತಾಮಸದ ಸರೃಹವೂ
ಪುಣ್ಯಮೂರತಿ ಪೂಜೆ ಭೊಗ್ಯವು
ಕಣ್ಣನಿದ್ರೆಯು ಯೋಗಮುದ್ರೆಯು
ಚಿಣ್ಣನ ಸಂಚರಂಗಳು ಸ್ವಾಮಿ ನಿನಗೆ ಪ್ರದಕ್ಷಿಣೆ ೨
ಬಾಲನ ಮಾತುಗಳು ವೇದೊಕ್ತ ಸಶೀಲನ ಸ್ತೋತ್ರಗಳು
ಕಾಲಂಕಾಲಗಳಲ್ಲಿ ಗೈಯುವ ಕಾರ್ಯಗಳು ಪರಮಾತ್ಮ ಸೇವೆಯು
ಶ್ರೀಲತಾಂಗಿಯ ಲೋಲ ಧ್ಯಾನಿಪೆ ಪಾಲಿಸೈ ಜಾಜೀಶ ಕೇಶವ೩

 

೪೦೪
ನೆನೆಮನವೇ ನಾರಾಯಣ ನಾಮವ
ಅನುದಿನ ಧ್ಯಾನಿಸು ಗುರಮುಖದಂತೆ ಪ
ಅನುಸಂಧಿಸುತಲಿ ಅವನಡಿ ಪಿಡಿಯುತ
ಕನಿಕರದಿಂ ಕಾಯುವ ಕೈ ಹಿಡಿದು ಅ.ಪ
ಅಡಿಗಡಿಗೊಂದೊಂದು ಯೋಚನೆ ಗೈವೆವೇ
ಎಡಹಿ ಮುಗ್ಗುರಿಸುವೆ ಸುಡುಗಾಡೊಳಗೆ
ಕಡಿದೋಡಿಸುತಲಿ ಪಾಪದ ಪಡೆಯಂ
ಕಡೆಹಾಯಿಸುವನು ಕಷ್ಟದ ಕಡಲಿಂ ೧
ತಮವೇ ತಾನು ಎಂಬ ಮೋಹದಿ
ಕನವರಿಸುತ ಬಹು ಸಾಹಸ ತೋರ್ವೈ
ಮನದೊಡೆ ಜೀವನು ಶರೀರವನು ಬಿಡೆ
ಅನುಮತಿಸುತ್ತಲದ ಸುಟ್ಟು ಬಿಡುವರು ೨
ದಿನದಿನ ಹಸಿವು ತೃಷೆ ಜ್ವರ ರೋಗಗಳೊಳು
ತಣಿವಂ ಕಾಣದೆ ತೊಳಲುತ್ತಿರುವೈ
ಘನತರದಾಯುವು ಗತಿಸದ ಮೊದಲೆ
ರಿನಕರನೊಳಗಿಹ ಶ್ರೀಶನ ನೋಡೈ ೩
ಅನುಮಾನನ್ಯ ಆಶ್ರಯ ಬಿಡುಬಿಡು
ತನುಮನ ತೊರೆಯನು ಆಪದ್ಭಂದು
ಕೊನೆಗಳಿಗೆಯೊಳು ಕಡೆ ನುಡಿನುಡಿದು
ಸನುಮತದಿಂ ಸಿರಿಯರಸನ ಪದವುಗು ೪
ಸುಣ್ಣವ ತಿಂದ ತಿಮ್ಮಣನ ತೆರದಿ
ನಿನ್ನ ಸ್ಥಿತಿಯ ಅನ್ಯಾಯವು ಸಹಜ
ಮುನ್ನ ಸವಿದ ಕರ್ಮ ಬೆನ್ನನು ಬಿಡದಿದೆ
ಇನ್ನು ಹೆಜ್ಜಾಜಿ ಶ್ರೀಶನ ಮರೆಹೊಗು ೫

 

೩೪೭
ಪತಿತಪಾವನ ಕರಿವದನ ನಾರಾಯಣ
ಮತಿಗೆಮಂಗಳವೀಯೋ ಮುನಿಜನಾಭರಣ ಪ
ಇತರವ್ಯಾಕುಲಗಳ ಮಥನವು ಮನದೆ ಬಹಳ
ವ್ಯಥೆಯ ತೋರುತ್ತಲಿದೆ ಗತಿಯಾವುದೊ ಹರಿಯೆ
ಸತತ ನಿನ್ನ ಗುಣಕಥನ ಮಾಡುವ
ಅತಿಶಯ ಮಾರ್ಗದಿ ಕ್ಷತಿಯೊಳು ಪೊರೆಯ್ಯೆ ೧
ಧ್ರುವ ಪ್ರಹ್ಲಾದ ನರ ದ್ರೌಪದಿ ಅಂಬರೀಷ
ಇವರ ಕಷ್ಟಗಳಿಂದ ಪಾರುಗಾಣಿಸಿದೆ
ಅವನೀಭಾರವನಿಳುಹುವ ದೊರೆಯೇ
ಕುವಲಯನೇತ್ರ ಕುಮಾರನ ಕೈಪಿಡಿ೨
ಶ್ರೀರಮಣೀವರ ಸಾರಗುಣಾಕರ
ಮಾರಜನಕ ಸಿರಿ ಜಾಜೀಶ್ವರ
ಕೋರುತಿರುವೆಮಗೆ ತೋರಿಸು ತವಪದ
ನಾರದ ಮುನಿನುತ ಸಾರುತೆ ನಮಿಪೆ ೩

 

೩೪೮
ಪರಮಪುರುಷ ಪಾಲಿಪುದೈ ಸರಸಿಜಾಕ್ಷ ಸರ್ವರಕ್ಷ ಪ
ಮಗುವಾದ ಧ್ರುವನು ಅಗಣಿತಗುಣ ನಿನ್ನನು
ಹಗಲಿರುಳೂ ಮೃದುಪದವಂ ಬಿಗಿದಪ್ಪುತ ಧ್ಯಾನಿಸೆ ೧
ಯೋಗಿಜನಾನಂದಕನೆ ಬೇಗದಿ ಮೈದೋರುತಲಿ
ಭಾಗವತಪ್ರಿಯಪದವಂ ರಾಗದಿತ್ತೆ ಜಾಜೀಶ ೨

 

೩೬೯
ಪರಮಾತ್ಮನೆ ಪರಿಪೂರ್ಣನೆ ವರವೇಂಕಟರಮಣನೆ ರಾಮ ಪ
ಪೊರೆಯೋ ಸದಾ ಭಕ್ತ ಸುಪ್ರೇಮ ಅ.ಪ
ನಿತ್ಯತೃಪ್ತ ನಿರ್ಮಲಾತ್ಮ ಸತ್ಯಮೂರ್ತಿ ಷಡ್ಗುಣಭರಿತ
ಭೃತ್ಯವರ್ಗ ಸಂರಕ್ಷಣ ಶಕ್ತ ಪ್ರತ್ಯಕ್ಷ ಪಾವನ ಚರಿತ ೧
ನಿನ್ನ ಮಹಿಮೆಯನ್ನು ಪೊಗಳೆ ಪನ್ನಗೇಶನಿಂದಲಸದಳ
ಇನ್ನು ನಾನು ಪೊಗಳಲಪ್ಪನೆ ಸನ್ನುತಾಂಗ ಸದಯರಂಗ೨
ಮುನಿಗಳಿಂದ ಪೂಜೆಗೊಂಬ ಘನಗುಣಾತ್ಮ ನಿನ್ನ ಯಾಜಿಪೆ
ಅಣುಗನಿಂದಲಾಗಲಹುದೆ ತನುಮನ ಪೊರೆ ಆನಂದ೩
ಉಣ್ಣಲಿಡಲಿದೆಲ್ಲ ನಿನ್ನದೊ ಇನ್ನದೇನ ತಂದು ಕೊಡಲೊ
ಮನ್ನಿಸುವುದೊ ಹೆಜ್ಜಾಜಿಯ ಚನ್ನಕೇಶವ ೪

 

೪೪೦
(೫) ದೇವರಹೊಸಹಳ್ಳಿ ಆಂಜನೇಯ (ಕೆಂಗಲ್ಲು ಸಮೀಪ)
ಪರಿಪಾಹಿ ಸಂಜೀವರಾಯ ಜೀಯ
ಕರವ ಮುಗಿವೆ ವಜ್ರಕಾಯ ಪ
ವರ ಜಾಜಿ ಕೇಶವ ಪ್ರೇಮ
ವರ ದೇವರಹೊಸಹಳ್ಳಿ ಧಾಮ ಅ.ಪ
ರಾಮಾವತಾರದಿ ಹರಿಗೇ ನೀನು
ನೇಮ ಸೇವಕನಾದೆ ಭರದೇ
ಆ ಮಹೀಜಾತೆಗೆ ಮುದ್ರೆ
ಸ್ವಾಮಿ ಪೇಳ್ದಂತೆ ನೀನು ಯಿತ್ತೆ ೧
ಅಂಜನದೇವಿಕುಮಾರ ಶ್ರೀಮ
ದಾಂಜನೇಯ ಗಂಭೀರ
ಸಂಜೀವನಾದ್ರಿಯ ತಂದೆ ಪ್ರ
ಭಂಜನ ಸೌಮಿತ್ರಿಗಂದೇ ೨
ರಾಮನಾಮ ಧ್ಯಾನನಿರತ ಸುಖ
ಶ್ಯಾಮನ ಕ್ಷೇಮ ಸುವಾರ್ತ
ವ್ಯೋಮದಿ ಭಕುತಗೆ ಪೇಳ್ದೆ ಸುಪಿ
ತಾಮಹ ಪದವಿಯ ಪಡೆದೆ ೩
ವ್ಯಾಸಯತೀಂದ್ರ ಕರಪೂಜ್ಯಾ ನಿತ್ಯ
ದಾಸರಪೊರೆವ ಸಾಮ್ರಾಜ್ಯ
ದೋಷ ಶೋಷಣ ಪ್ರಭಾವ ಗುಣ
ಭೂಷಣ ಸಜ್ಜನ ಜೀವ ೪
ಭೂತ ಪ್ರೇತ ಬ್ರಹ್ಮ ಪಿಶಾಚಂಗ
ಳಾತುರದಿಂ ಬಾಧಿತರು
ಖ್ಯಾತಿಯ ಮಾರುತಿ ನಾಮಾಮೃತವ
ಪ್ರೀತಿಯಿಂ ಸವಿವರೋ ಭೀಮಾ ೪
ಹಿಂದಣ ಜನ್ಮದ ಪಾಪದಿಂದ
ನೊಂದರು ಪ್ರಾರ್ಥಿಸಿ ತಂದೆ
ಭಾವದುರಿತಂಗಳನಂದು ನಿ
ರ್ಬಂಧಿಸಿ ಕಳೆಯುವೆ ಬಂಧು ೫

 

೩೪೯
ಪಾದಗಳಂ ನಂಬಿದೆನಾಂ ಶ್ರೀಧರಾಚ್ಯುತಗೋವಿಂದ ಪ
ಸಾಧುಜನರ ಹೃದಯ
ಮಧ್ಯೆದೊಳಾದರದಿ ಕುಣಿಯುತಿರುವಅ.ಪ
ಅಳೆದು ಮೂರಡಿಯಿಂದ ಜಗವ ಬಲಿಯ ಪಾತಾಳಕ್ಕೆ ತುಳಿದು
ಲಲನೆಗಂಗೆಯ ಪೆತ್ತು ಮಂಗಳಗಳನು ಭಕ್ತರಿಗೀವ ಶುಭದಾ ೧
ಶಿಲೆಯ ಸತಿಯ ಗೈದು ನಲಿದು ಬಲಿದ
ಧನುವ ಮೆಟ್ಟಿಮುರಿದು
ಕಲಿಯ ಮಲವ ಕಳೆಯ ಗಯೆ
ಮೊಳಲಸದಾನಂದದೊಳಿರುವ ೨
ಗರಡುದೇವ ನಿತ್ಯಪೊತ್ತ ಸಿರಿಯು ಸದಾ ಒತ್ತುತಿರುವ
ಪರಮಪಾವನ ಹೆಜಾ ಜಿಯ ವರದನೆನುತ ನಾರದನೆನೆವ ೩

 

೩೭೧
ಪಾಲಿಸೆನ್ನ ಪದುಮಾ ರಮಾಮಣಿದೇವಿ ಪ
ಕ್ಷೀರಸಾಗರಾತ್ಮಜಾತೆ ಸುಪ್ರಖ್ಯಾತೆ
ನಾರದನುತಗೀತೆ ಸಮಿಜಗನ್ಮಾತೆ ಅ.ಪ
ಅಂಬುಜವಾಸಿನಿ ಅಂಬುಜೋದರ ರಾಣಿ
ಅಂಬುಜಾಸನ ಜನನಿ ಸಂಭ್ರಮದ ಕಣಿ ೧
ಅಕಳಂಕ ಮಾತೆ ಸಕಲ ಪ್ರತಾಪೆ
ನಿಖಿಲಾತ್ಮಭರಿತೆ ಜಾಜೀ ಪಟ್ಟಣವಾಸೇ ೨

 

೪೦೫
ಬಂದು ಹೃದಯಮಂದಿರದೊಳಗೆಕೂಡೋ ಕೇಶವಮಾಧವ ಪ
ತಂದೆಯೆನಾಂ ವಂದಿಪೆನೋ ಕಂದನ ಕುಂದನೆಣಿಸದೆ ಅ.ಪ
ನಾನು ನಿನ್ನವನಾಗಬಯಸುವೆ ಭ್ರಮರ ಕೀಟನ್ಯಾಯದಿ ಬೇಗದಿ
ತಾನೆ ತಾ ತನ್ಮಯತೇ ದಿವ್ಯಮಂಗಳ ವಿಗ್ರಹನೇ ೧
ನಾಲಗೆಯ ನಡೆಮುಡಿ ಹಾಸುವೆ ಪಾಲ ಸುಮೃದುಪದಾ ಶುಭದ
ಬಾಲನು ನಾಂ ಬೇಡುವೆನು ಅನುರಾಗದಿ
ನೀನೊಲಿಯುತೆ ನಲಿದು ೨
ಅಂಗುಷ್ಟ ಮಾತ್ರ ಭೃಂಗಾರು ಗಾತ್ರ
ಶೃಂಗಾರ ಮೂರ್ತಿ ಶ್ರೀಕರ
ತಂಗದಿರಾ ಬೆಂಗದಿರಾ ಶಂಕಚಕ್ರ ಚತುರ್ಭುಜ ೩
ಪಂಚೇಂದ್ರಿಯಂಗಳು ವಂಚಿಪುವೋ
ಸಂಚಿತವೆಂತೋ ಸ್ವಾಮಿ
ಮಿಂಚುವ ಮೋಹಕ ಮುದದಿಂ ಹಂಚಿ
ನಿನ್ನ ಸೇವೆಯ ಗೈಸುತ ೪
ಮುನಿಜನಗಳ ಪೊರೆವುದು ಹೆಚ್ಚೇ ಚಿನುಮಯಾತ್ಮನೇ ಚೆನ್ನಿಗ
ಅಣುಗನು ನಾನಜ್ಞಾನಿ ಕನಿಕರದೆನ್ನ ಕಾಯ್ದರೆ ಕೀರ್ತಿ ೫
ಮಾಯಮುಚ್ಚಿ ಕಾಯನೆಚ್ಚಿ ನೋಯುತ್ತಿಹೆನೋ ನರಹರಿ
ಜೀಯ ಜಾಜೀಶಹರಿ ರಾಮ ರಕ್ಷಿಸು ಶ್ರೇಯ ಕೊಟ್ಟು ೬

 

೪೦೬
ಬಡತನವೆನ್ನನು ಬಾಧಿಪುದೈ ಹರಿ
ನುಡಿಯಲೆನಗೆ ನಾಲಗೆ ಬರದೀಪರಿಪ
ಅಡಿಯೊಳು ಕೆಡೆದಿಹೆ ತಡಿಗಾಣದೆಯೆ
ಕಡಲಣುಗಿಗೊರೆದು ಕಡೆಹಾಯಿಸೊ ದೊರೆ ಅ.ಪ
ಮನುಜರು ಯೆನ್ನನು ಮಾನಿಸದಿರುವರು
ಮನೆಯೊಳು ಮಕ್ಕಳು ಮಾತನಾಲಿಸರು
ಅನುನಯದಿಂ ಸವಿ ವಚನವನುಸುರಲು
ವನಿತೆಯುತಾಂ ಕೇಳದೆ ಕೋಪಿಪಳು ೧
ಬಂದ ಭಾಗವತರ ಪೂಜೆಯ ಮಾಡಲು
ಒಂದಾದರು ಸವಿ ವಸ್ತುವಿಲ್ಲವೈ
ಸಂದಣಿ ಸೇರಲು ಮನಸು ಬಾರದು
ಕುಂದಹರಿಸು ಮನಕಂಕೆಯ ತಂದು ೨
ದಾನವ ಮಾಡಲು ದೀನತೆ ಬಿಡದು
ಕಾನನದಿರುತಿಹ ಕುರುಡನಂತಿಹೆನೆ
ಏನು ಮಾಡಲೊ ಯೆನ್ನ ಮನದೊಲುಮೆಯ ಬಲ್ಲ
ಮಾನ ಕುಚೇಲಪಾಲಕ ಸಿರಿನಲ್ಲ ೩
ಸಾಲದವರು ಗಂಟಲೊಳು ಕೋಲಿಡುವರೊ
ಶ್ರೀಲೊಲನೆ ನಾಂ ಮಾಡುವುದೇನು
ಲಾಲಿಸಿ ಹೆಜ್ಜಾಜಿಕೇಶವ ಪಾಲಿಸು
ಲೀಲೆಯಿಂ ಬಿನ್ನೈಸಿ ಯನ್ನೊಲಿಸು ೪

 

೪೦೭
( ನಿಂದಾಸ್ತುತಿ)
ಬಹುಲೋಭಿಯೋ ನೀನು ಮುರಹರ ಪ
ವರವೇನನೀವೆಯೆನಗೆ ವಿಹಿತದಿ ಪೊರೆ ಮಂದಾರ ಅ.ಪ
ಹಾಸಿಕೊಳ್ವ ವಾಸುಕಿಯ ಬೀಸಿ ಬರುವ ಗಾಳಿ ಕುಡಿವ
ವಾಸುದೇವನೆ ವಾಹನನ ಪನ್ನಗಾಸನನಾಗಿರುವನಲ್ಲವೆ ೧
ಹೆಂಡತಿಯಾಗಿರುವ ಸಿರಿಯಂ ಕಂಡಕಂಡರ ಮನೆಗೆ ಕಳುಹಿ
ಮಂಡಿಸುತ್ತ ಭಕ್ತರ ಗೃಹದೊಳುಂಡುಂಡು ತಣಿಯುತಿರುವೆ ೨
ವ್ಯಯ ಮಾಡದೆ ಕೈಯಕಾಸ ನಯದಿಂದಲೆ ನಡೆದುಕೊಂಡು
ಜಯ ಜಯ ಧಾರಾಳಿಯೆನಿಪ ಜೀಯ ಜನಾರ್ಧನ ಜಾಜಿಕೇಶವ ೩

 

೪೪೬
ಬಾರೆ ದೇವಿ ಭಾಗ್ಯವಂತೆ ಬೇಡಿಕೊಂಬೆ ಬೇಗ ಹಸೆಗೆ ಪ
ಸುತ್ತನಾಲ್ಕು ದೀಪಗಳಿಟ್ಟು ಎತ್ತಲೂ ಪ್ರಜ್ವಲಿಸುತಿರ್ಪ
ಮುತ್ತುರತ್ನ ಕೆತ್ತಿಸಿರುವ ಉತ್ತಮ ಮಣಿಪೀಠಕೆ ೧
ಜಡೆಯಬಂಗಾರವನು ಹಾಕಿ ಬಿಡದೆ ಕಮಲಮಾಲೆಧರಿಸಿ
ಮುಡಿದು ಮಲ್ಲಿಗೆ ಸಂಪಗೆಯ ಒಡನೆ ಪೀತಾಂಬರವನುಟ್ಟು ೨
ಜಾಜಿಪಟ್ಟಣನರಸಿಯೆ ನೀಂ ರಾಜಿಸು ತನುರಾಗದಿಂ
ದೀನ ಜನರಂ ಹರುಷಗೊಳಿಸು ಮಾಜದೇ ನೀ ಮಂಗಳಾಂಗಿ ೩

 

೪೪೫
ಬಾಲಗೋಪಾಲ ಹಸೆಗೆ ಲೀಲೆಯಿಂದ ಬರ್ಪುದೈ ಪ
ನೀಲಮೇಘನಿಭ ಸುರೂಪ ಕಾಲಕಾಲವಂದ್ಯ ಬೇಗ ಅ.ಪ
ಸಾರಸಾಕ್ಷ ಸರ್ವರಕ್ಷ ಘೋರದೈತ್ಯಸಂಹಾರ
ನಾರದಾದಿವಂದ್ಯ ನಮಿಸಿ ನೀರೆಯರು ಕರೆಯುವರು ೧
ಸಾಮಜ ಧ್ರುವ ಭಕ್ತ ವರದ ಸಾಮಗಾನ ಲೋಲನೇ
ಕಾಮಜನಕ ಕರುಣಪೂರ ಸ್ವಾಮಿಪ್ರೇಮ ತೋರುತ ೨
ಅಜಸುಪೂಜ್ಯ ತ್ರಿಜನರಾಜ್ಯ ಭಜಕಜನ ಮನೋಹರ
ರಜತಹೇಮಪೀಠಕೀಗ [ಬೇಗ] ಜಾಜಿ ಕೇಶವನೇ ೩

 

೪೦೮
ಬಿಡಬೇಡ ರಂಗಯ್ಯ ಬಡವನೂ ಪಿಡಿಕಯ್ಯ
ಒಡೆಯ ನಿನ್ನಡಿ ಪಿಡಿದೆ ದಯೆಮಾಡೊ ಜೀಯ ಪ
ಕಡಲಣುಗಿಯಣ್ಮನೇ ಕಡೆಹಾಯ್ಸೊ ಕಷ್ಟದಿಂ
ಕಡುಮುದದಿ ಕೊಂಡಾಡಿ ಬೇಡುವೆನೊ ದೊರೆಯೆ ಅ.ಪ
ಸಪ್ತ ಋಷಿಗಳು ಸತತ ಗುಪ್ತದಿಂ ಧ್ಯಾನಿಸುತ
ತೃಪ್ತರಪ್ಪರು ಅಪ್ತ ನಿನ್ನ ನುತಿಸಿ
ಅಪ್ಪ ನೀನವರಿಂದೆ ವಿಪ್ರತ್ವವಂ ತೋರಿ
ಅಪ್ರತಿಮ ತಾರಕ ಬ್ರಹ್ಮ ಬೋಧಿಸಿದೆ ೧
ಉತ್ತರೆಯ ಬಸುರೊಳಗೆ ಬ್ರಹ್ಮಾಸ್ತ್ರ ಬಾಧಿಸಲು
ಅತ್ಯಗತ್ಯದಿ ಪ್ರಭುವೆ ಚಕ್ರ ಪಿಡಿದು
ಸುತ್ತೆತ್ತಲಾಶಿಶುವ ಸಂರಕ್ಷಣೆಯಗೈದೆ
ಉತ್ತಮೋತ್ತಮ ದೈವ ನೀನೆ ಜಗದಯ್ಯ ೨
ಅಂಬರೀಷನ ಮೇಲೆ ಜಂಭದಿಂ ಮುನಿ ಮುನಿಯೆ
ಕಂಬುಧಾರಿಯೆನೀಂ ಸುನಾಭ ಕಳುಹಿ
ಬೆಂಬಿಡದೆ ಸುತ್ತಿಸಲು ಇಂಬಿನಿಂ ಪದಪಡಿಯೆ
ಸಂಭ್ರಮದಿ ಕಾಯ್ದಂಥ ಸದ್ಭಕ್ತ ಬಂಧು ೩
ಗಜರಾಜನಂ ಸರದಿ ಮೊಸಳೆ ಪೀಡಿಸುತಿರಲು
ನಿಜರಥಾಂಗವ ಕಳುಹಿ ನಕ್ರನಂ ಸೀಳಿ
ಅಜಪಿತನೆ ನೀನವರ ವಕ್ರ ಹರಿಸುತ ಕಾಯ್ದೆ
ತ್ರಿಜಗಾದಿ ನಾಥನೇ ಭಕ್ತಪಾಲ ೪
ಶರಣ ರಕ್ಷಣೆಗಾಗಿ ನೀಂ ಸುದರ್ಶನ ಪಿಡಿದೆ
ವರದ ವೇಂಕಟರಮಣ ವೈಷ್ಣವೋದ್ಧರಣ
ಕರುಣಿ ನನ್ನಪರಾಧವಪರಿಮಿತವಿದೆ ಕ್ಷಮಿಸು
ತರಳನಂ ಕಾಪಾಡು ಜಾಜೀಶ ನೋಡು ೫

 

೪೨೬
ಭಕ್ತನಾಗೋ ಹರಿಗೆ ಓ ಮನುಜ ಪ
ನಾಲಗೆಯಲಿ ಶ್ರೀಲೋಲನ ನಿಜಗುಣ
ಜಾಲವ ಕೊಂಡಾಡೋ ಓ ಮನುಜ ೧
ಮಾನಸದಲಿ ಸದಾ ಜಾನಕಿ ರಮಣನ
ಧ್ಯಾನವ ಮಾಡುತಿರೋ ಓ ಮನುಜ೨
ಕರಯುಗಳಗಳಿಂ ವರಗೋಪಾಲನ
ಚರಣ ಪೂಜೆಮಾಡೋ ಓ ಮನುಜ ೩
ರವಿಕುಲ ತಿಲಕನ ಸುವಿಮಲ ಚರಿತೆಯ
ಕಿವಿಯಲಿ ಕೇಳುತಿರೋ ಓ ಮನುಜ೪
ಶ್ರೀಹರಿಯ ಜಗನ್ಮೋಹನ ಮೂರ್ತಿಯ
ಊಹಿಸಿ ನೋಡುತಿರೋ ಓ ಮನುಜ ೫
ಶಾಸ್ತ್ರ ಸಿದ್ಧವಹ ಕ್ಷೇತ್ರತೀರ್ಥಗಳ
ಯಾತ್ರೆಯ ನೀಮಾಡೋ ಓ ಮನುಜ ೬
ಶ್ರೀಶಗರ್ಚಿಸಿದ ಸುವಾಸಿತ ತುಲಸಿಯ
ನಾಸಿಕದಲಿ ಮೂಸೊ ಓ ಮನುಜ೭
ಸಾಧುಜನಗಳಿಗೆ ಮೋದವೀವ ಶ್ರೀ
ಪಾದಗಳಿಗೆ ನಮಿಸೋ ಓ ಮನುಜ ೮
ಭೋಗಿಶಯನಗನುರಾಗದಿಂದ ಶಿರ
ಬಾಗಿ ಸತತ ನಡೆಯೋ ಓ ಮನುಜ ೯
ಈಜಗದಲಿ ತಾ ಜಾಜಿ ಶ್ರೀಶನು
ರಾಜಿಪುದನು ಕಾಣೋ ಓ ಮನುಜ ೧೦

 

೪೨೭
ಭಕ್ತರ ಭಾಗ್ಯಕೆ ಯೆಣೆಯಂ ನಾ ಕಾಣೆನೀಜಗದಿ
ಅತ್ಯಾನಂದದಿ ನಿತ್ಯ ವರ್ತಿಸುವ
ಸ್ತುತ್ಯದ ಮಾರ್ಗವತಿವೈಚಿತ್ರ್ಯವು ಪ
ಪ್ರಾತಸ್ನಾನವಗೈದು ನಿತ್ಯ ಕರ್ಮವನಡಸಿ
ಪ್ರೀತಿಸಿ ಪರಮಾತ್ಮನ ಪೂಜಿಸುತ
ಗೀತಾಪಾರಾಯಣ ಮಾಡುತ್ತಿಹ ೧
ಸುಂದರ ಶ್ಯಾಮನ ಕಂಡಾನಂದದಿ ಮಹಿಮೆಯ ಕೊಂಡಾಡಿ
ಮಂದಹಾಸದಿಂದಂತರ್ದೃಷ್ಟಿಯೊಳಿಂದಿರೆಯರಸನ
ಹೃದಯದಿ ನೋಡುವ೨
ನಡೆವಾಗ ನುಡಿವಾಗ ಮಡದಿ ಮಕ್ಕಳ ಕೂಡಿ
ಕಡು ಮುದದಿಂದಿರುವಾಗಲು ತಾನಡಿಗಡಿಗುಂ
ತಮ್ಮೊಡೆಯನ ನೆನೆಯುವ ೩
ಹರಿಕಥೆಯಂ ಕೇಳುವರು ಶರಣರ ಕಂಡು ನಮಿಸುವರು
ಪರಿ ಪರಿ ಜೀವಿಗಳೊಳಗೆಲ್ಲವು
ಸಿರಿಯರಸನಿರುವನೆಂದರಿತ ಮಹಾತ್ಮರ೪
ನಗಧರಲೀಲೆಗೆ ನಗುತ ಹಗರಣಹರ ಎಲ್ಲೆಂದಳುತ
ಮಿಗೆ ಯೋಚಿಸಿ ಮೂಕಾಂಧ ಬಧಿರರೋಲ್
ಒಗೆದಾಮೋದದಿ ಕುಣಿದಾಡುತ್ತಿಹ ೫
ಹೆಜ್ಜಾಜೀಶನು ಕೃಪೆಯಿಂ ಸಜ್ಜನರಂ ಪಾಲಿಸಿದ
ಬಿಜ್ಜೆಯ ಪುರಾಣಪುಣ್ಯತೀರ್ಥದೊಳ್
ಮಜ್ಜನಗೈಯುವ ಪುಣ್ಯ ಚರಿತ್ರರ ೬

 

೪೪೭
ಭರ್ರ‍ತ ಭವನದಿ ಮಗಳೆ ಚಿರಕಾಲ ಸುಖಿಸೌ
ಕರ್ತ ಶ್ರೀಹರಿ ಪದವನರ್ಥಿಯಿಂ ಭಜಿಸೌ ಪ
ಪತಿಯೆ ಸಿರಿವರನೆಂದು ಅತಿಶಯದಿ ಭಾವಿಸುತ
ಸತತ ಸೇವೆಯ ಮಾಡಿ ಗತಿಯೆ ನೀನೆನುತ
ಸತಿಶಿರೋಮಣಿಯಾಗಿ ಮಿಗಿಲು ಮೋದವ ಪಡೆದು
ಕ್ಷಿತಿಯೊಳಗೆ ನೀ ಬಾಳು ಮತಿವಂತೆಯಾಗಿ೧
ಅತ್ತೆಮಾವಂದಿರನು ತಾಯಿತಂದೆಗಳಂತೆ
ಅತ್ತಿಗೆ ನಾದಿನಿಯ ಅಕ್ಕತಂಗಿಯರೋಲ್
ಉತ್ತಮಳೆ ಭಾವನಂ ಮೈದುನನ ಸಹಜರೆಂ
ದರ್ಥಿಯಿಂದರಿಯುತ್ತ ಉಪಚರಿಸುತಿರು ನೀಂ ೨
ಬಂಧುಗಳ ನೀ ಬಹಳ ಪ್ರೇಮದಿಂ ಕಾಣುತ್ತ
ವಂದಿಸುವುದೌ ಪರಮಭಾಗವತರಡಿಗೇ
ಇಂದಿರಾದೇವಿಯೆಂದೈದೆಯ ಪೂಜಿಸೌ
ಸುಂದರ ವಿದ್ವರ ಸುತರಕೂಡ ೩
ಸರ್ವತ್ರದಲಿನೀನು ಹಿತವಚನ ಮಾಡುತ್ತ
ಸುವ್ರತದ ಶುಭಫಲವ ನಿತ್ಯ ಪಡೆಯುತ್ತ
ಗರ್ವವರ್ಜಿತೆಯಾಗಿ ಗುಣಮುಖಿಯು ಎಂದೆನಿಸಿ
ಸರ್ವಕಾಲವು ಗೌರವ ಕೀರ್ತಿಯನು ಬೀರೌ ೪
ಜಾಜಿಕೇಶವ ನಿನ್ನ ಸೌಭಾಗ್ಯವತಿಯಾಗಿ
ಸಾಜದಿಂ ಸಲಹುವನು ಸುಜನವಂದಿತನು
ಪೂಜಿಪರ ಮರೆಯದಿಹ ಶ್ರೀಹರಿಯ ಕರುಣದಿಂ
ಈ ಜಗದಿ ರಾಜಿಸೌ ಪರಮಮಂಗಳೆಯೇ ೫

 

೪೦೯
ಭಾಗವತರ ನೋಡುವಾ ಭಾಗ್ಯಸ್ವರೂಪಾ ಪ
ಯೋಗಜನಗಳನು ರಾಗದಿ ಧ್ಯಾನಿಪ
ಭೋಗಿಶಯನ ಸಂಪನ್ನ ಸದ್ಗುಣಪೂರ್ಣ
ಭಾರ್ಗವೀಸತಿ ಬಿಡದೆ ವರಿಸಿರುವಾ
ಆಗಮದೊಳರ್ಚನೆಯಂ ಪಡೆಯುತಿಹ
ತಾಂಝಂ ತಂಝಂತ ತಂತಕನಾ
ತಧಿಂಗಿಣತೋಂ ತಧಿಂಗೀಣತೋಂ ತಧಿಂಗಿಣತೋಂ ೧
ನಿನ್ನಮುಖಕೇ ಸರಿಬಾರದೆ ಚಂದ್ರಮನು
ಉನ್ನತ ಕಳಂಕಿಯಾಗಿರುತಿಹನೋ
ಕಣ್ಣು ಸಾಹಸ್ರಕ್ಕೂ ಸರಿಬರದೆ
ಬಿನ್ನಣದ ಕಮ್ಮಲರು ನೀರೊಳಿದೇ
ತಾಂಝಂ ತಂಝಂತ ೨,ತಂಝಂ…ತಂತ ೨
ಹೊಳೆವ ನಿನ್ನಯ ಕೊರಳಿಗೆ ಪಡಿಯಾಗದೆ
ನಲಿದು ನಾರಾಯಣ ಎನ್ನುತ್ತಿದೆ ಶಂಖವು
ನಳಿನಶರ ರೂಪಕ್ಕೆ ಸರಿಬರವೆ
ಒಲಿಸಲೈ ಮಮತೆಯೊಳು ಮಗನಾದ
ತಾಝಂ ತಝಂತ ೨,ತಝಂ…(ತ್ವಂತ) ೩
ಭಕ್ತರು ಪಡೆವತಿ ಸೌಖ್ಯಕ್ಕೆ ಹೋಲದ
ನಿತ್ಯವಾದ ಲೌಕಿದದಾಶೆ ಬಿಡಿಸಯ್ಯ
ಮುಕ್ತಿಕೊಡುತೆನ್ನನ್ನು ನಿನ್ನಡಿಯ
ಒತ್ತುವನಂ ಮಾಡಿಕೋ ಜಾಜೀಶ ಶ್ರೀಶಾ
ತಾಝಂ ತಂಝಂತ ತಂತಕನಾ
ತಧಿಗಿಣತೋಂ ತಧಿಗಿಣತೋಂ ತಧಿಗಿಣತೋಂ ೪

 

(ಈ) ಸರ್ವದೇವತಾಸ್ತುತಿಗಳು
೩೭೮
೧. ಶಂಕರ
ಭಾಗವತಾಗ್ರೇಸರಾ ಶಿವಶಂಕರ
ಭೋಗಿಭೂಪ ಭಾಗವತ ಪ್ರಿಯಂಕರ ಪ
ಯೋಗಿ ಹೃತ್ಪದ್ಮಸ್ಥಿತ ಆಗಮನುತ ವಿಶ್ವನಾಥ
ಶ್ರೀಗಣಪತಿ ಷಣ್ಮುಖ ಪಿತ ಭಾಗ್ಯದಾತ ಪ್ರಖ್ಯಾತ ಅ.ಪ
ಬಾಲಚಂದ್ರಶೇಖರ ಹರ ಭವಹರ
ಕಾಲಕಾಲ ಕಲ್ಮಷಹರ ಕರುಣಾಕರ
ಶೂಲಪಾಣಿ ಡಮರುಗಾಕರ ಬಾಲಗೊಲಿದ ಭಸ್ಮಧರ
ಶ್ರೀಲಲಿತಾ ಮನೋಹರ ನೀಲಕಂಠ ಮಹೇಶ್ವರ ೧
ರಾಮನಾಮ ಬೋಧಕ ಭಕ್ತಪ್ರೇರಕ
ಪ್ರೇಮರೂಪ ತ್ರ್ಯಂಬಕ ತ್ರಿಪುರಾಂತಕ
ವಾಮದೇವ ವರಗಿರೀಶ ಕಾಮವೈರಿ ಕೃತ್ತಿವಾಸ
ಶ್ರೀಮಜ್ಜಾಜಿಕೇಶವ ಸ್ವಾಮಿ ಭಜನದಾಯಕವರ ೨

 

೪೪೮
ಮಂಗಳವಾಗಲಿ ಶ್ರೀಮಾಧವನಿಗೆ
ಅಂಗಜಪಿತ ಗೋವಿಂದನಿಗೆ ಪ
ಗಂಗಾ ಜನಕಗೆ ರಂಗನಾಥನಿಗೆ ಶೃಂಗಾರಮೂರ್ತಿ ಕೇಶವಗೆ ಅ.ಪ
ಸೋಮಕ ಮದನಗೆ ಆಮೆಯಾದವಗೆ
ಭೂಮಿಯನುದ್ಧರಿಸಿದವಂಗೆ
ಆ ಮಗು ಪ್ರಹ್ಲಾದನ ಕಾಯ್ದಂಥ ಸ
ವಾಮನಮೂರ್ತಿ ಉಪೇಂದ್ರಗೆ ೧
ಪರಶುರಾಮನಿಗೆ ಸೀತಾರಾಮಗೆ ವರವೇಣುಗಾನಲೋಲನಿಗೆ
ದೊರೆ ಶುದ್ಧೋದನಸುತಗೌತಮನಿಗೆ
ಧರಣೀಭಾರ ನಿಳುಹುವಗೆ ೨
ಪಾಪನಿವಾರಿಸಿಶಿವನಂಕಾಯ್ದಾ ಶ್ರೀಪತಿಪಾವನಮೂರುತಿಗೆ
ತಾಪತ್ರಯಹರ ತುಲಸೀಮಾಲಿಗೆ ತಾಪಸನುತ ಜಾಜೀಶನಿಗೆ ೩

 

ಇದು ಶ್ರೀವೈಷ್ಣವ ದಿವ್ಯಕ್ಷೇತ್ರಗಳಾದ
(ಈೂ) ಕ್ಷೇತ್ರ ವರ್ಣನೆ
೪೩೬
(೧) ಶ್ರೀರಂಗ, ತಿರುಪತಿ, ಕಂಚಿ,ಮೇಲುಕೋಟೆ, ಹೆಜ್ಜಾಜಿ
ಮಂಗಳವು ಶ್ರೀರಂಗ
ಅಂಗನೆ ಮಣಿದೇವಿಗೆ ಪ
ಅಂಗಿಯಾದ ಆದಿಶೇಷ ಉ-
ತ್ತುಂಗ ವರ ವಿಭೀಷಣನಿಗೆ ಅ.ಪ
ಸಪ್ತಗಿರಿ ಶ್ರೀನಿವಾಸ
ಅಪ್ಪೀರ ಅಲರ್‍ಮೇಲಮ್ಮಗೆ
ಗುಪ್ತವಾಗಿ ಉಭಯ ರಕ್ಷ
ಸುಪ್ತ ಗೋವಿಂದರಾಜಗೆ ೧
ಕಂಚಿ ವರದರಾಜನಿಗೆ
ಮಂಚದ ಪೆರುನ್ದೇವಿಗೇ
ಹೊಂಚಿ ಬ್ರಹ್ಮಯಜ್ಞದಲ್ಲಿ
ಮಿಂಚುವ ದೇವರಾಜಗೇ ೨
ಯದುಶೈಲ ಚೆಲ್ವರಾಯ
ಮುದದಿ ಯದುಗಿರಿಯಮ್ಮಗೆ
ಪದುಮ ಪಾದ ಸಂಪತ್ತೆ
ಅದುಭುತರು ಯತಿರಾಜಗೆ ೩
ಹೆಜ್ಜಾಜಿ ಕೇಶವನ ಪೀಠ
ಅಜ್ಜ ಶ್ಯಾಮನ ವಿರಜೆಯಲ್ಲಿ
ಮಜ್ಜನಗೈಸಿ ಸೇವೆಗಾಗಿ
ಸಜ್ಜುಗೈದ ವೈಕುಂಠಕೆ ೪

 

೩೬೬
ಮಂಗಳಾಂಗ ಶ್ರೀರಂಗ ಪಾಲಿಪುದೈ
ರಮಾವಧು ಮನೋಹರ ಪ
ಅಂಗಜಪಿತ ಪುಂಗವಾ ವಿಹಂಗಗಮನ ರಂಗಧಾಮ ಅ.ಪ
ವಂದಿಸುವೆ ಚಂದದೊಳು ಮುಕುಂದ ಹರಿ ಮಾಧವ ಸುರ-
ಬೃಂದನುತಾ ಪದಾಬ್ಜ ಮಂದಹಾಸದಿಂದ ಬಂದು ೧
ಕೋರಿಕೆಗಳನು ನಡೆಸು ನಾರಿರುಹಲೋಚ ಹರಿ ಸುಕು
ಮಾರ ಶರೀರೋತ್ತಮ ವರ ಧೀರಶೂರ ನಾರಸಿಂಹ ೨
ಮಾವರನೆ ನಿನ್ನಡಿಯ ಸೇವಿಸುತ್ತ ಭಾವಿಸುವೆ
ಕಾವುದು ರಾಜೀವನೇತ್ರ ದೇವದೇವ ಜಾಜಿಶ್ರೀಶ ೩

 

೪೪೯
ಮಡಿಲು ತುಂಬಿದರಮ್ಮ ಮುತ್ತೈದೆಯರೆಲ್ಲ
ಕಡಲಕುಮಾರಿಗೆ ಸಡಗರದಿಂದ ಪ
ಅರಿಶಿನ ಕುಂಕುಮ ಸುಗಂಧಸೇವಂತಿಗೆ
ಪರಿಮಳ ಪಾದರಿ ಮಲ್ಲಿಗೆ ಮುಡಿಸಿ ೧
ರಸಬಾಳೆ ಖರ್ಜೂರ ಖರ್ಬೂಜ ದಾಳಿಂಬೆಯ
ಕಸಿಮಾವು ಸೇವು ಅಂಜೂರ ದ್ರಾಕ್ಷಿ ೨
ಕೊಡಗಿನ ಕಿತ್ತಳೆ ದೃಢತರ ಸಿಹಿನಿಂಬೆ
ಕಡುಸವಿ ಗಂಗಪಾಣಿ ಕಪಿತ್ಥಗಳನು ೩
ಅಡಿಕೆ ಬೆಳ್ಳೆಲೆ ದ್ರಾಕ್ಷಿ ಗೋಡಂಬಿ ಸಕ್ಕರೆ
ಒಡನೆ ಕೊಬರಿ ನಾರಿಕೇಳ ಬೆಲ್ಲದಚ್ಚು ೪
ಮುತ್ತುರತ್ನ ಮಾಣಿಕ್ಯ ಅಪರಂಜಿಯ ಸ್ವರ್ಣ
ವಿತ್ತ ಮುದ್ರೆಯ ಹಣ ಬಾದಾಮಿಬೆರಸಿ ೫
ಬೆಳ್ಳಿ ತಟ್ಟೇಲಿ ಪಂಚವಾಳ ಪನ್ನೀರುದಾನಿ
ಒಳ್ಳೆ ಗಂಧವು ಮಂಗಳ ದ್ರವ್ಯವಿಟ್ಟು೬
ಜರತಾರಿ ಸೀರೆ ಕಾಪುಕುಪ್ಪಸ ಕೊಟ್ಟು
ಹರುಷದಿ ಹರಸುತ್ತ ಅಕ್ಷತೆ ಸೂಸಿ ೭
ಜಾಜಿಕೇಶವ ಸಹ ಮೂಜಗವಾಳೆ
ರಾಜಿಪ ಮಕ್ಕಳೊಡೆ ನಿತ್ಯಸುಖಿಯಾಗು ೮

 

೪೨೮
ಮನವೇ ನೀನೆಚ್ಚರಿಕೆ ಬಿಡದಿರು
ಅನುದಿನವು ಹರಿಧ್ಯಾನದೊಳಗಿರು ಪ
ವನಿತೆ ಧನಧಾರಿಣಿಯ ನೆಚ್ಚಿ
ತನುವೆ ತಾನೆಂಬುದನುಚಿತವು ಅ.ಪ
ಬರಿಯಕೈಯಲಿ ಭೂಮಿಗಳಿಸಿದೆ
ದುರಿತಭಾರವ ಧರಿಸಿರ್ಪೆ
ನರರೆ ಹರಿಸುವರಾರೋ ಕಾಣಿರ
ಅರಿತುಕೊಂಡಿರೆ ತಿಳಿಸಿರೈ ೧
ಕಾಯವಸ್ಥಿರ ಹೇಮಸಂಸ್ರ‍ಕತಿ
ಮಾಯಾಪಾಶದ ಬಲೆಗೆ ಸಿಲ್ಕಿ
ನಾಯಿನರಿಯಂದದಲಿ ತೊಳಲಿ
ಸಾಯವರ ಕಂಡಳುವದೇಕೋ ೨
ಜಾತಿಧನವಧಿಕಾರ ಖ್ಯಾತಿಗೆ
ಆತುರದೊಳಭಿಮಾನ ಪಡುವೇ
ಪಾತಕರೆ ಹಿಂಜರಿಯದಂತೇ
ಪ್ರೀತಿಯಿಂ ಪರಪೀಡೆಗೈವೇ ೩
ಪೊಡವಿಯೊಳ್ ಪೆಣ್ ಬಾಲ ವೃದ್ಧರು
ಬಡವರಾರ್ತರು ಕುಂಟಕುರುಡರು
ಎಡೆಯ ಜೀವಿಗಳನ್ನು ಕರುಣದಿ
ಕಾಣೆಲೋ ಕಡುಜಾಣನೇ ೪
ಸತ್ತಮೇಲೇನೆಂದು ಯೋಚಿಸು
ಮುತ್ತಿ ಕತ್ತಿಯೊಳಿರಿವರೈ
[ಮ]ತ್ತಕ್ಷಣದ ಫಲಕಾಶೆಪಡದಿರು
ಸತ್ಯವಂ ಪಿಡಿ ನಿತ್ಯವೂ ೫
ಯಮುನೆ ಹೊಕ್ಕರು ಯಮನು ಬಿಡನೂ
ಅಮಮ ನರಕದೊಳಿಳಿಪರೈ
ರಮಾರಮಣನ ಒಲುಮೆಗಾಗಿ
ಶ್ರಮಿಸಿ ಪರರುಪಕಾರಿಯಾಗೋ೬
ಪತಿತಪಾವನ ಜಾಜಿಕೇಶವ
ನತಿಶಯದಿ ತಾ ಜಗವ ಪಾಲಿಪ
ಚತುರ್ವೇದ ಶ್ರುತಿ ಪ್ರಮಾಣವ
ಮತಿಯುತರು ಮೀರುವರೆ ಮರುಳೇ ೭

 

೪೧೦
ಮರೆವರೇನಯ್ಯಾ ಮಧವ ಮಮತೆ ತೋರಯ್ಯ ಪ
ತೊರೆವರೆನೋ ಕರುಣಿ ನೀನು
ನಿರುತ ಶರಣರ ಹೃದಯ ಭಾನು
ಪೊರೆಯುವ ಬಿರುದನೆ ಅಪಯಶ ಪಡೆವರೆ ೧
ದ್ರುವನಂದದಿ ನಾ ತಪವಾಚರಿಸವೆ
ಭವಸಾಗರ ದಾಟುವ ಪರಿಯರಿಯದೆ
ಸುವಿಮಲ ಮಾನಸದೊಲುಮೆ ಕೊಡೆಂಬನ ೨
ಪ್ರಹ್ಲಾದನ ವೊಲು ನಿನ್ನಿರವರಿಯದೆ
ಆಹ್ಲಾದವ ನಿತ್ಯನುವಿಂ ಕೊಳ್ಳದೆ
ಈ ಕ್ಲೇಶದಿ ತೊಳಲುತ ಹರಿಸೆಂಬನ ೩
ಬಲಿಯಂದದಿ ದಾನವ ಕೊಡಲಾರದೆ
ಛಲದಿಂ ನಿನ್ನಯ ಪದಯುಗ ಪಿಡಿಯದೆ
ಒಲಿಯುತ ತರಳನ ಸಲಹೆಂದೆಂಬನ ೪
ಎಲ್ಲವ ಪಡೆಯಲು ಪುಣ್ಯವ ಗಳಿಸಿರೆ
ಬಲ್ಲಿದ ನಿನ್ನಯ ಹಂಗಿರಲಿಲ್ಲವು
ಎಲ್ಲರ ಬಂಧು ಜಾಜೀಶಾ ಎಂಬನ ೫

 

೪೧೧
ಮಾರಕೋಟಿ ರೂಪ ಮೈದೋರು ನೀಂ ಪ
ಸೇರಿ ಸುಖಿಸಲೆಂದು ಕೋರಿ ಭಜಿಸುತಿಪರ
ಪಾರಕಾಂಕ್ಷಿಯಾದೆನ್ನ ಪಾರಗಾಣಿಸೆ ಅ.ಪ
ಮುನ್ನ ಭಕ್ತಬಾಲ ಧ್ರುವನು ಕಷ್ಟದೊಳಗೆ
ಯನ್ನ ಕಾಯೊಯೆಂದು ಬಿನ್ನಹಂಗೈಯಲ್
ಚನ್ನರೂಪತೋರಿದೆನ್ನತಾತ ನೀ
ನಿನ್ನೂ ಏಕೆ ಬಾರದಿರ್ಪೆ ಜಾಜಿಶ್ರೀಶಾ ೧

 

೪೪೧
(೬) ವೀರನಗೆರೆ (ಮೈಸೂರು) ಮೂರುತಿ
ಮಾರುತಿರಾಯನೆ ಸಾರಗುಣಾನ್ವಿತ
ಶ್ರೀರಘುರಾಮನ ಪ್ರಿಯ ಭಕ್ತ ಪ
ಅಂಜನ ಸಂಭವ ಭಂಜನ ಖಿಲಭವ
ರಂಜಿಪ ಮಾರುತಿ ಪೊರೆಯೆನ್ನ ೧
ಹರಿಪದ ಕಮಲವ ನಿರುತವು ಪೂಜಿಪ
ಉರುತರ ಪದವಿಯ ಕೊಡು ನನಗೆ ೨
ವೀರನಗೆರೆ ಗುರು ಮಹಾಶೂರದೊರೆ
ಸಾರುತ ಮಣಿವೆನು ಮರೆಯದಿರೈ ೩
ಜಾಜೀಕೇಶವ ಸನ್ನಿಧಿ ಸೇವಕ
ಮೂಜಗದೊಡೆಯಾ ಪೊರೆಯಯ್ಯಾ ೪

 

೪೫೦
ಮಾಲೆಯ ಹಾಕುವೆ ಲೀಲೆಯಿಂ ತಳೆವುದು
ಶ್ರೀಲಲನಾವರ ಪಾಲಿಸು ಕಂಠವ ಪ
ಸಂಪಿಗೆ ಮಲ್ಲಿಗೆ ಮೊಲ್ಲೆಗುಲಾಬಿಯು
ಸೊಂಪಿನ ಪಚ್ಚೆಯ ಇಂಪಿನಿಂ ಕಟ್ಟಿದ ೧
ಮರುಗ ಸೇವಂತಿಗೆ ಪಾದರಿ ಹೂವಿನ
ಮೆರೆವ ಮಂದಾರದ ಪಾರಿಜಾತದ ಸುರ ೨
ಸುರಗಿ ಸುಗಂಧರಾಜ ಸುರಹೊನ್ನೆ ದವನವು
ಪರಮಗುಣಾಕರ ವರದಹೆಜ್ಜಾಜಿಯ ೩

 

೪೧೨
ಮುಂದೆನಗೆ ಗತಿಯೇನೋ ಇಂದಿರೇಶಾ
ತಂದೆ ನೀನೆಂದೆನುತ ತಪ್ಪನೊಪ್ಪಿಸುವೇ ಪ
ಶ್ರೀಕಾಂತನೇ ನಿನಗೆ ಅಭಿಷೇಕ ಮಾಡದೆಯೆ
ನಾ ಕಂಠಪರಿಯಂತ ಕುಡಿದೆನೊ ಹಾಲ
ಬೇಕೆಂದು ಹರಿವಾಸರಂಗಳಾಚರಿಸದೆಯೆ
ಸಾಕೆಂಬವೊಲು ಸುಖವ ಸೂರೆಗೊಂಡೇ ೧
ಅತಿಶಯದಿ ನಾನಿನ್ನ ಪೂಜೆಯನು ಮಾಡದೆಯೆ
ಸತಿಸುತರೆ ಸರ್ವಸ್ವವೆಂದಿರ್ದೆನೋ
ಹಿತಮಿತ್ರ ಬಾಂಧವರೊಳತಿ ವಂಚನೆಯಮಾಡಿ
ಮತಿವಿಕಳನಾದೆನೋ ಪತಿತಪಾವನನೇ ೨
ಕಲ್ಯಾಣ ಸಮಯದಲಿ ಕಲಹಗಳ ಹೂಡುತ್ತ
ಉಲ್ಲಪದಿ ನಾಕುಳಿತು ನೋಡುತಿದ್ದೆ
ಸಲ್ಲಲಿತ ವಾಕ್ಯಗಳನಾಡದೆಯೆ ಸರ್ವತ್ರ
ಖುಲ್ಲುಮಾತುಗಳಾಡಿ ನೋಯಿಸಿದೆ ನರರ ೩
ತಾರೆಂಬುದಕೆನಾನು ತೌರುಮನೆಯಾಗಿರುವೆ
ಪಾರಮಾರ್ಥಕವಾಗಿ ಕೊಡುವುದರಿಯೆ
ವೀರವೈಷ್ಣವರಲ್ಲಿ ವಂದಿಸದೆ ದೂಷಿಸುತ
ಘೋರಪಾತಕಿಯಾಗಿ ಇರುವೆಯೀ ಜಗದಿ ೪
ನರ್ಮದಾನದಿ ಸ್ನಾನ ನಿರ್ಮಲೋದಕಪಾನ
ಧರ್ಮ ಮರ್ಮಗಳರಿತು ಮಾಡುವುದು ದಾನ
ಪೆರ್ಮೆಯಂಶ್ರೀಹರಿಯ ಧ್ಯಾನ ನಿದಾನ
ನೆಮ್ಮದಿಯ ಮಾರ್ಗದಿಂ ಪೊರೆ ನಾನು ದೀನ ೫
ಬೇಡದೆಯೆ ನಾ ನಿತ್ಯ ಜೀವಿಸುವುದನ್ನು
ಕಾಡದೆಯೆ ಕಡೆಯಲ್ಲಿ ಉಸಿರುಬಿಡುವುದನು
ನೋಡುತ್ತ ಗುರುತರದ ಶ್ರೀಪತಿಯ ಪದಯುಗಕೆ
ಗಾಢದಿಂ ಮುಡಿಯಿಕ್ಕಿ ಪಿಡಿವಂತೆ ಮಾಡು ೬
ನೀನು ಒಲಿಯುವ ಪರಿಯದಾವುದನು ಮಾಡಿಲ್ಲ
ಏನು ಮಾಡಲು ಎನಗೆ ಮನಸು ಬರದು
ದೀನ ಪಾಲಕ ನಮ್ಮ ಹೆಜ್ಜಾಜಿ ಕೇಶವನೆ
ಸಾನುರಾಗದಿ ನಿನ್ನ ಧ್ಯಾನಿಪುದ ನೀಡೈ ೭

 

೪೧೩
ಮುಖತೋರು ನೀ ಶ್ರೀಕೇಶವಾ ಪ
ಸುಖತೋರೆ ಯೇಕೈ ಅಕಳಂಕರೂಪ
ಸಕಲಾತ್ಮನೆ ಸತ್ಯಸಾರ ನಿಧಿ[ಯೆ] ಅ.ಪ
ಎಲ್ಲದರೊಳು ಹುಡುಕಿ ಎಲ್ಲವು ನೀನೆಂದು
ಬಲ್ಲನಾದೆನಯ್ಯ ಬಲವಂತ ನೀನೇ
ನಿಲ್ಲದೆನ್ನ ಮನವ ನಿಲಿಸುನಿನ್ನೊಳ್ ಶ್ರೀ
ವಲ್ಲಭಾ ಜಾಜೀಶಾ ಫುಲ್ಲಲೋಚನಾ ೧

 

೩೫೦
ಮೂಜಗ ಪೂಜಿತ ಮಾಧವ ನಮ್ಮ ಹೆ
ಜ್ಜಾಜಿಯ ಚೆನ್ನಕೇಶವಾ ಪ
ಸಾಜದಿ ಶರಣರಿಗೊಲಿವಾ ಸುರ
ಭೂಜನು ಪರವಾಸುದೇವಾ ಅ.ಪ
ಮರೆತವರಿಗೆ ಮತ್ತೂ ದೂರನು ಇವ
ಮರೆಹೊಕ್ಕವರ ಮುಂದಿರುವನು
ದುರಿತಗಳಡಗಿಸಿ ದಾಸರ ಪೊರೆವಾ
ಪರಮದಯಾಳುವು ಪ್ರಭು ಶ್ರೀನಿಭವ ೧
ನಿರ್ಜರ ಮುನಿಗಣ ಲೋಲಾ ಶೀಲಾ
ಅರ್ಜುನ ಸಾರಥಿ ಲೀಲಾ
ಪರ್ಜನ್ಯ ಪ್ರಭುಪರಿಪಾಲ ನೀಲಾ
ದುರ್ಜನ ವಂಶಕ್ಕೆ ಕಾಲಾ ೨
ನಿತ್ಯತಂದೆಯು ತಾಯಿಯು ಶ್ರೀರಂಗಾ
ಸತ್ಯಸಹೋದರನು ವೆಂಕಟರಂಗಾ
ಸ್ತುತ್ಯ ಬಂಧುವು ತಾನೆ ನರಸಿಂಗಾ ಇವ
ಪ್ರತ್ಯಕ್ಷನೊ ಅಂತರಂಗ ೩
ವೆಂಕಟವರದನೆ ಸದಯಾ ಗುರು
ಸಂಕಟಹರ ಬಹುವಿನಯಾ ರಂಗ
ಶಂಖಚಕ್ರಧರ ಅಭಯಾ ನಿನಗೆ
ಪಂಕಜಸಂಭವ ತನಯಾ ೪
ಯಾದವ ಯದುಶೈಲಶೃಂಗಾ ಸಾಂಗ
ಶ್ರೀಧರ ಮಣಿ ಉತ್ತಮಾಂಗ [ವೇದ]
ವೇದ್ಯನೆ ಗರುಡತುರಂಗಾ ಗಂಗಾ
ಬಾದರಾಯಣ ಗೀತೋತ್ತುಂಗ ೫
ಸಂಪಿಗೆ ಕಂಪಿನ ಸುಂದರ ಸಂಪೂರ್ಣ
ಸಂಪತ್ಕುಮಾರ ಶ್ರೀ ಭೂನೀಳ ರಮಣ
ತಂಪಿನ ಹೃದಯದ ಪ್ರಾಣಸೂತ್ರಾದಿ
ಪೆಂಪಿನಗುರು ಶ್ರೀನಿವಾಸ ಕಲ್ಯಾಣ೬
ರಾಘವಜಯ ಸೀತಾರಾಮಾ ಸ್ವಾಮಿ ರವಿಕುಲ ಸುಂದರಸೋಮ
ಯೋಗಿ ಜನಾನಂದ ಧಾಮಾ ಪ್ರೇಮಪ್ರಿಯ ಶ್ರೀಶ್ಯಾಮ
ಭಾಗವತಾನಂದಪ್ರಿಯ ಪುಣ್ಯನಾಮಾ ಚತು
ಸಾಗರಾಂತ ಸಾರ್ವಭೌಮ ೭
ಭಕ್ತಮಂಡಲಿ ಕಾಮಧೇನು ಜೇನು ವಿ
ರಕ್ತ ಜನರ ಹೃದಯಭಾನು
ಮುಕ್ತಿ ಬಯಸಿ ಬಂದೆ ನಾನು ಪ್ರೇಮಾ
ಸಕ್ತಿ ಸಿದ್ದಿಯ ನೀಡು ನೀನು ೮
ಸಕಲದೇವರೊಳೆಲ್ಲ ನೀನೇ ಹೆಚ್ಚು
ಅಕಳಂಕ ಸಾಧುಗಳ ಸವಿಬೆಲ್ಲದಚ್ಚು
ನಿಖಿಳಜೀವರೊಳೆಲ್ಲ ಪರಮಾತ್ಮನಚ್ಚು
ಸುಕರದಿ ನೆನೆಯುವ ನನಗೆ ನಿನ್ನಯ ಹುಚ್ಚು ೯
ಪರಿಪರಿ ಭವಸಂಸಾರಾ ಸಾರಾ
ಹೊರಲಾಲೆ ದೂಡುವೆ ದೂರಾ
ಪರಮಾತ್ಮಾ ಪದಗಳ ಸೇರಾ ಸಾರಿ
ಕರೆಯಲು ಕರಗಳ ತೋರಾ ೧೦
ರಾಜ ಜನಾರ್ಧನ ದಿವ್ಯಂ ದಿವ್ಯಂ
ಜಾಜಿ ತುಲಸೀ ಮಾಲ ಭವ್ಯಂ
ಯಾಜಿ ಕಮಂಡಲ ದ್ರವ್ಯಂ ಸ್ತವ್ಯಂ
ಜನಗಾನ ಶ್ರೋತವ್ಯಂ ೧೧
ಸರ್ವಲೋಕ ಶರಣ್ಯ ಗಣ್ಯ
ಉರ್ವಿ ದೇವ ವರೇಣ್ಯ
ಗರ್ವಮರ್ಧಿತ ಹಿರಣ್ಯ ಸ್ವರ್ಣ
ವಿರ್ವತ ದರಶ್ಯಾಮ ಪುಣ್ಯ ೧೨

 

೪೩೧
ಮೂಲಮಂತ್ರವ ಜಪಿಸು ಅರ್ಹತೆಯಿರುವಂತೆ ನೀನು ಪ
ಮೂಲ ಪ್ರಣವ ಮಧ್ಯೆ
ನಮೋನಾರಾಯಣಾಯ ಕಡೆಯಲುಳ್ಳ ಅ.ಪ
ವೇದ ಪಾಂಚರಾತ್ರಾಗಮ ಪೌರಾಣಗಳ ನಿರುತ ನುತಿಪ
ವೇದದೆ ಶ್ರೀವೈಷ್ಣವರಿಗೆ ತಾರಕಬ್ರಹ್ಮವಾದ
ಆದಿಯೊಳಾಚಾರ್ಯರಿಂದ ಪಂಚಸಂಸ್ಕಾರ ಹೊಂದಿ
ಬೋಧೆ ಪಡೆದ ಮಹಾಮಂತ್ರರಾಜವೆನಿಸಿ ಮುಕ್ತಿ ಕೊಡುವ ೧
ಅಷ್ಟಾಕ್ಷರಿಯಾದ ಮಂತ್ರ ಇಷ್ಟಸಿದ್ಧಿಮಾಳ್ಪ ಮಂತ್ರ
ನಿಷ್ಠೆಯಿಂದ ಜಪಿಸುವರಿಗನಿಷ್ಟಹಾರಿಯಾದ ಮಂತ್ರ
ಇಷ್ಟುಮಾತ್ರ ಪಠಿಸುವರಿಗೂ ಮೋಕ್ಷವನ್ನೆ ಕೊಡುವ ಮಂತ್ರ
ಸೃಷ್ಟೀಶ ಹೆಜ್ಜಾಜಿಯ ಕೇಶವನನ್ನೊಲಿಪ ಮಂತ್ರ ೨

 

೩೬೫
ರಂಗ ಬಾರ ಕುರಂಗನಯನೆ ಮಂಗಳಾಂಗನ ಕರೆದುತಾರೆ ಪ
ಅಂಗ ಸಂಗ ಸುಖವನಿತ್ತು ತಂಗೀ ಮನವ ಸೆಳೆದುಕೊಂಡ ಅ.ಪ
ಸಂಚಿನಿಂದ ಒಳಗೆಬಂದು ಮಂಚಕೆನ್ನ ಗಂಡನ ಕಟ್ಟಿ
ಹೊಂಚಿಯೆನ್ನನು ಕೂಡಿ ಬಿಗಿದು
ಮಿಂಚಿನಂತೆ ತೋರಿಪೋದ ೧
ಕಂಚುಕದೊಳಿರುವ ಪಣ್ಗಳ ವಂಚಿಸದೆ ಕೊಡುಯೆಂದೆಂಬ
ಸಂಚಿತಾರ್ಥದ ಪುಣ್ಯವೆಂದು ವಿರಿಂಚಿಪಿತನು ರೋಜಪಿಡಿದ ೨
ಲಲ್ಲೆವಾಕುಗಳಾಡಿ ಯೆನ್ನ ಗಲ್ಲಕೆ ಮುದ್ದಿಟ್ಟು ತಾನು
ಉಲ್ಲಸದೊಳಗಾಲಿಂಗಿಸುತ ಫುಲ್ಲಲೋಚನ ಪರವಶಗೈದ ೩
ಮುನಿದುನಾನು ನಿಂದಿರಲು ಕನಿಕರದಿಂದ ಕುಣಿದು ಹಾಡಿ
ಮನವನುಬ್ಬಿಸಿ ತನುವಮರೆಯಿಸಿ ಇವನತೆರದೊಳೆನ್ನನಾಳ್ದ ೪
ಮೊಸರ ಕಡೆದು ಬೆಣ್ಣೆತೆಗೆಯೆ ಮೆಲ್ಲನೆ ಬೆನ್ನಹಿಂದೆ ಬಂದು
ಅಸಮರೂಪ ತೋರುತಾಗ ಒಸೆಯುತದನು ಕದ್ದು ಮೆದ್ದ ೫
ನೀರದಾರಿಯೊಳಗೆ ನಿಂದು ಮಾರಕೇಳಿಗೆ ಬಾರೆಂದೆನುತ
ಹೋರಿಯೆನ್ನೊಡೆ ದಾರಿಬಿಡದೆ ಓರಿಗೆಯರ ಕಂಡು ಜಾರಿದ ೬
ಬಳಲಿಮನೆಯ ಕೆಲಸದಲ್ಲಿ ಕಳವಳಿಸುತ ಮಲಗಿರಲು
ಕೊಳಲನೂದಿ ಒಳಗೆ ಬಂದು ಲಲನೆಯೇಳೆ ಎಂದವನ ೭
ನೀರಮುಳಗಿ ಭಾರಹೊತ್ತು ಕೋರೆ ಮಸೆದ ನಾರಸಿಂಹ
ಧೀರವಾಮನ ಪರುಶುಧಾರಿ ರಾಮಕೃಷ್ಣ ಬುದ್ಧ ಕಲ್ಕಿ ೮
ಪಕ್ಷಿವಾಹನ ಹೆಜ್ಜಾಜಿ ಯಧ್ಯಕ್ಷ ಚನ್ನಕೇಶವದೊರೆಯೆ
ರಕ್ಷಿಸೆಂದು ನಂಬಿದವರ ಪಕ್ಷನಾಗಿ ಪಾಲನೆಗೈವ ೯

 

೩೬೦
ರಾಘವದೇವ ಬಿಡಬೇಡ ಕೈಬಿಡಬೇಡ ಪ
ಆಗಮಾರ್ಚಿತ ಪಾದಪದ್ಮಪಿಡಿದೆ
ಬಿಡಬೇಡ ಕೈಬಿಡಬೇಡ ಅ.ಪ
ಸೀತಾಕಾಂತನೆ ನಿನ್ನ ಭ್ರಾತಲಕ್ಷ್ಮಣನಂತೆ
ಪ್ರೀತಿಸುತೆನ್ನ ಸನಾಥನೆನಿಸು ೧
ನಂಬಿಬಂದ ವಿಭೀಷಣನನು ಬಲು
ಸಂಭ್ರಮದೊಳು ಲಂಕಾರಾಜನ ಗೈದ೨
ಹನುಮನಂದದಿ ಸೇವೆಮಾಡಿ ಮೆಚ್ಚಿಸಲಾರೆ
ಕನಿಕರದೆನ್ನೊಳು ಘನಮನ ಮಾಡು ೩
ದುಷ್ಟಜನಕೆ ಭಯ ಶಿಷ್ಟಜನಕೆ ಜಯ
ಕೊಟ್ಟು ಭಕ್ತರಕಾವ ದಿಟ್ಟಹೆಜ್ಜಾಜೀಶ ೪

 

೪೩೨
ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ
ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ
ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ
ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ೧
ರಾಮ ರಾಮ ಶ್ರೀರಾಮಯೆಂದು
ನೇಮದಿ ಕಾರ್ಯವನು ಬಗೆದು
ಆ ಮಹಾಸಾಗರವ ನೆಗೆದು
ಭೂಮಿಜಾತೆಯ ಕಂಡವಗೊಲಿದ ೨
ಶರಣುರಾಘವ ಶರಣುಯೆಂದು
ಕರುಣಾಮೂರುತಿಯೊಲುಮೆವಡೆದು
ಹರುಷದಿ ಲಂಕೆಯನು ಪಡೆದ
ಪರಮಪುಣ್ಯ ವಿಭೀಷಣ ಒರದ ೩
ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ
ವರ ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ ೪
ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ
ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ ೫

 

೩೬೧
ರಾಮಚಂದ್ರನು ಶೋಭಿಪನಿಂದು ಸದ್ಭಕ್ತಬಂಧು ಪ
ಸಾರಸಾಕ್ಷನು ಸಾಮಜವರದನು
ಭೂರಿಫಲಪ್ರದ ಭೂಮಿಜೆಯುತನು ಅ.ಪ
ಧರೆಯಭಾರವ ತಾಕಳೆಯಬಂದು ಕಾರುಣ್ಯಸಿಂಧು
ನರರೂಪವ ಧರಿಸುತ್ರ ನಿಂದು ಕೋದಂಡವ ಪಿಡಿದು
ದುರುಳ ದೈತ್ಯರ ಶಿರವನೆ ತರಿದು
ಪರಿಪರಿ ವಿಧದಲಿ ಶರಣರಿಗೊಲಿಯುತ
ದುರಿತ ಸಂಕುಲವ ಪರಿಹರಿಸಿ ಪೊರೆವ ಶ್ರೀ ೧
ಸೂರ್ಯಸುತನ ಸೈನ್ಯದವರ ಸುಮನಸರ
ಧೈರ್ಯದಿಂ ಸಮರಗೈದವರ ವೀರಾಧಿವೀರರ
ಕಾರ್ಯವ ಸಾಧಿಸಿದಾ ವಾನರರ
ಪಾರವಶ್ಯರನು ಪರಮೇಷ್ಠಿಯಿಂದ
ಧಾರೆಯನೆರೆದಮೃತದಿ ಬದುಕಿಸಿದ ಶ್ರೀ ೨
ಘನವಂತ ವಿಭೀಷಣಂಗೆ ಅನುವನು ತೋರಿ ಸಾರಿ
ಅನುಜಾತ ಭಕುತಂಗೆ ಅನುಗ್ರಹಬೀರಿ ಆನಂದವೇರಿ
ಜನನಿಯರಾಶೀರ್ವಚನವ ಪಡೆದು
ಸನುಮತದಿಂ ಪುರಜನರೊಲುಮೆಯೊಳು
ದಿನಕರಪ್ರಕಾಶ ಜಾನಕಿನಂದ ಜಾಜೀಶ್ರೀಶ ಶ್ರೀ ೩

 

೩೭೭
ರಾಮಾನುಜಾಚಾರ್ಯ ಮೌನಿವರ್ಯ
ನೇಮದಿಂದಲಿ ಗೈದೆ ನೀಂ ಸ್ವಾಮಿ ಕಾರ್ಯ ಪ
ಆದಿಯೊಳು ನೀನಾದಿಶೇಷನು ಹರಿಶಯ್ಯೆ
ಮೋದಕರ ಪ್ರಹ್ಲಾದ ಎಂದೆನಿಸಿದೆ
ಸೋದರದಿ ಸೌಮಿತ್ರಿ ಸಂಕರ್ಷಣನು ಆದೆ
ನಾಥ ಯಾಮಾನ ಪಥದಿ ಅರಿಗಳನು ಗೆಲ್ದೆ ೧
ಗೀತ ಸೂತ್ರಕೆ ಭಾಷ್ಯಕಾರ ನೀನಾಗಿರುವೆ
ಖ್ಯಾತಿಸಿದೆ ವ್ಯಾಸ ಪರಾಶರರ ಹೆಸರ
ಪೂತ ಆಳುವಾರುಗಳ ಶ್ರೀಸೂಕ್ತಿ ಪ್ರಕಟಿಸಿದೆ
ಮಾತೆವೊಲು ಉಭಯವೇದಗಳ ಪೊರೆದೆ ೨
ನೂರೆಂಟು ತಿರುಪತಿಯ ಯಾತ್ರೆಗಳ ಮಾಡುತ್ತ
ದಾರಿತೋರಿದೆ ಹರಿಯ ಸೇವಿಸುವ ಪರಿಯ
ಪರಮಾರ್ಥಿಕರಾಗಿ ಪರಮವೈಷ್ಣವರಿರಲು
ಸಾರಸುಖ ಪದತೋರ್ದೆ ಯತಿಸಾರ್ವಭೌಮ ೩
ಎಂದೆಂದು ಮರೆಯದ ಕೂರೇಶರಾ ಸಖ್ಯ
ಅಂದು ಬೋಧೆಯ ಕೊಟ್ಟ ಪೂರ್ಣಾರ್ಯರ
ನೊಂದಕಾಲವ ನೆನೆದು ಕಣ್ಣೀರ ಕರೆಯುವೆನು
ತಂದೆ ಗುರುವಿನ ಗುರುವೆ ದೇವಮಾನ್ಯ ೪
ಯಾದವನ ಚೋಳನ ಕೃತ್ರಿಮದ ಕೋಟೆಗಳು
ಮಾಧವನ ಡೆಲ್ಲಿಯಿಂ ಕರೆತಂದುದು
ಬಾಧಿಸದೆ ಬ್ರಹ್ಮಪೀಡೆಗಳು ಓಡಿದುದು
ಈ ಧರೆಯ ಕೀರ್ತಿಗೆ ಮೊದಲಾದವು ೫
ರಾಮಚಂದ್ರನ ಕಾಡವಾಸವಂ ನೆನಪೀವ
ಸ್ವಾಮಿಯರು ಗಿರಿಸೇರ್ದ ಗುರಿ ಎಲ್ಲವೂ
ತಾಮಸರು ಸಾವಿರರ ಒಂದೆ ವಾರದಿ ಗೆಲ್ದ
ಮಾಮೈಮೆ ಯಾರಿಗಿದೆ ಭೋಗಿರಾಜಾ ೬
ಸಿರಿರಂಗ ತಿರುಪತಿ ಕಂಚಿ ಯದುಶೈಲಗಳ
ಪರಮಪದಕೂ ಮಿಗಿಲು ವೈಭವವ ಗೈದೆ
ನಿರುತ ತಮ್ಮವರಿಂಗೆ ಸಕಲ ಪಾಪವ ಸುಟ್ಟು
ಹರಿಯ ಭರವಸೆ ಪಡೆದೆ ಮೋಕ್ಷ ಕೊಡುವಂತೆ ೭
ನಿನ್ನಂತೆ ನಡೆವ ಪ್ರಪನ್ನರೇ ಧನ್ಯರು
ಮನ್ನಣೆಯ ಪಡೆದಿರವ ಶ್ರೀಮಂತರು
ಎನ್ನ ಬಿನ್ನಪ ಕೇಳಿ ನಿನ್ನವನ ಮಾಡಿಕೋ
ಉನ್ನತೋನ್ನತ ಮೂರ್ತಿ ಜಾಜೀಶ ಕೀರ್ತಿ ೮

 

೪೫೧
ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ಪ
ಶ್ರೀಲತಾಂಗಿಯೊಡನೆ ಮೆರೆವದೊರೆಯೆ ಲಾಲಿ ಅ.ಪ
ನಂದಲಾಲಿ ಗೋವಿಂದ ಲಾಲಿ
ಕಂದನಾಗಿ ಲೋಕ ತಂದೆ ಲಾಲಿ ೧
ಬಾಲಲಾಲಿ ತುಲಸಿಮಾಲ ಲಾಲಿ
ಕಾಲಕಾಲವಂದ್ಯ ಗೋಪೀಲೀಲ ಲಾಲಿ ೨
ದೇವಲಾಲಿ ವಾಸುದೇವ ಲಾಲಿ
ದೇವಕೀತನಯ ಸದ್ಭಾವಲಾಲಿ ೩
ರಂಗಲಾಲಿ ಮಂಗಳಾಂಗಲಾಲಿ
ಗಂಗಾತಾತ ಲೋಕೋತ್ತುಂಗ ಲಾಲಿ೪
ರಾಮಲಾಲೀ ಭಕ್ತಪ್ರೇಮ ಲಾಲಿ
ಶ್ಯಾಮಸುಂದರಾಂಗ ನಮ್ಮ ಸ್ವಾಮಿ ಲಾಲಿ ೫
ಸತ್ಯ ಲಾಲಿ ಮೌನಿಸ್ತುತ್ಯ ಲಾಲಿ
ನಿತ್ಯ ನಿಗಮವೇದ್ಯ ಅನ್ಯುಕ್ತಲಾಲಿ೬
ರಾಜಲಾಲಿ ರತ್ನತೇಜ ಲಾಲಿ
ರಾಜರಾಜಪೂಜ್ಯ ಜಾಜಿಶ್ರೀಶ ಲಾಲಿ ೭

 

ಶ್ರೀವೈಷ್ಣವ ಪುರಾತನ
೨. ನಮ್ಮಾಳ್ವಾರ್
೩೭೩
ವಕುಳಾಭರಣನೆ ಶರಣೆಂಬೆ
ಸಕಲ ಬಂಧು ನೀ ಸಲಹೆಂಬ ಪ
ನಿಖಿಲ ಲೋಕಿಗರ ಶಿಶುನಡೆನೂಕಿದೆ
ಅಕಳಂಕನೆ ಶಠಗೋಪ ನೀನಾದೆ ಅ.ಪ
ನಾಥನಾಯಕಿಯೆ ಕಾರಿಕುಮಾರ
ಪೂತನೆ ಸೇನಾಪತಿಯವತಾರ
ಪಾತಕಹರ ತಾಮ್ರಪರ್ಣಿತೀರ
ಕೀರ್ತಿ ಪಡೆದ ಸುರಪೂಜ್ಯನುದಾರ ೧
ಪದುಮ ಪವಿತ್ರನಂದದ ಪ್ರಭೆನೋಡಿ
ಮಧುರಕವಿಯು ಬರೆ ಮುದಗೂಡಿ
ಅದುಭುತ ಮಂತ್ರವನೊರೆದೆ ಹರಿಯಪಾಡಿ
ಸದಮಲ ಸೇವಕನಲಿ ಮನೆಮಾಡಿ೨
ಹದಿನಾರು ವರುಷಾಹಾರವಿಲ್ಲದೆ
ಬದಿರಾಂಧ ಮೂಕನಾದ ಮುನಿ
ವಿಧಿ ಪಿತನದುಭುತಧ್ಯಾನ ಮೈಗೂಡಿ
ಸುಧೀಂದ್ರ ಶುಭದ ಅಮೃತಪದ ೩
ನಾಥಗೊಲಿದು ತಿರುವಾಯ್ಮೊಳಿಯನು
ಪ್ರೀತಿಯೊಳುಪದೇಶವ ಗೈದು
ಪಾತಕ ಹರಿಸುತ ಪರಿಸರ ಪೊರೆಯುತ
ದಾತಾರಂ ಸುಖದಾತಾರಂ ೪
ಮಧುರಾಪೀಠವು ನೀರೊಳು ಮುಳುಗಲು
ವಿಧಿಯಿಲ್ಲದೆ ಪಂಡಿತರೊರಲಿ
ಅಧಿಕರಿಸುತ ತವ ಪದಗಳಿಗೆರಗೆ
ಮಧುರವಾಣಿಯಿಂ ಹಾಡಿದ ೫
ಹತ್ತಾಳ್ವಾರರ ಶರೀರವಾಗಿ
ಪೆತ್ತಿಹ ಪರಮೌದಾರ ಮುನಿ
ಎತ್ತಲು ಹರಿಗುರು ಸರ್ವೋತ್ತಮರೆನು
ತುತ್ತುಮಪದವಿಯ ಮಾರ್ಗವತೋರಿದ೬
ಆದಿವೈಷ್ಣವ ದೀಕ್ಷಾಚಾರ್ಯ
ವೇದವ ದ್ರಾವಿಡದೊಳು ಪೇಳ್ದೆ
ಶ್ರೀಧರಸನ್ನಿಧಿಯೊಳಗಿದ ಪಠಿಸಲು
ಸಾದರದೊಲಿವಂ ಜಾಜೀಶಂ ೭

 

೩೬೭
(೪) ಚನ್ನಾಕೇಶವ
ಶರಣು ಶರಣು ಚೆನ್ನಕೇಶವರಾಯ
ಚರಣಗಳೇ ಗತಿ ನಂಬಿದೆ ಜೀಯಾ ಪ
ತರಳಧ್ರುವನಿಗಿತ್ತೆಯೊ ಬಹುಶ್ರೇಯ
ವರದ ವೇಂಕಟ ಶ್ರೀರಂಗ ಚೆಲ್ವರಾಯಾ
ಶರಣ ಶ್ರಿತನಭಯಾ ಆನಂದನಿಲಯಾಅ.ಪ
ಅಂದುಗೆ ಗೆಜ್ಜೆಯ ಘಲುಘಲು
ತುಂದಿಲನಗೆಮೊಸ ಪೀತಾಂಬರದಿಂ
ಧಿಂದಿಮಿಕಿಟ ಕುಣಿಗೋವಿಂದಾ
ನಂದನಕಂದ ನಿತ್ಯ ಮುಕುಂದ ೧
ಕವಿಕುಲಸ್ತುತ್ಯನೆ ದೇವವರೇಣ್ಯ
ಭವಸಾಗರ ತಾರಣ ಪ್ರಾವೀಣ್ಯ
ಭುವನಗಳೆಲ್ಲಕು ನೀನೇ ಗಣ್ಯ
ಪವಿತ್ರಯೋಗಿಯ ಧ್ಯಾನ ಹಿರಣ್ಯ
ಪಾವನ ಪುಣ್ಯ ಶ್ರುತಿ ಪ್ರಾಮಾಣ್ಯ ೨
ವಿದುರೋದ್ಭವ ಅಕ್ರೂರ ತ್ರಾತ
ಮಧುರ ಬಾಂಧವ ಬದರೀನಾಥ
ವಿಧಿ ಪಿತನರನಾರಾಯಣ ಪೂತ
ಮಧುಕೈಟಭಾರಿ ಬಹುಪ್ರಖ್ಯಾತ
ಬುಧಪ್ರೀತ ಭಾಗ್ಯದಾತ ೩
ಒಂದೇ ಅಳತೆಗೆ ಜಗವು ಮೂರಡಿ
ಚಂದಿರ ಮುಖಿಮಣಿ ಕೊಟ್ಟನು ಕರಡಿ
ನಿಂದೆಯಾ ಕಾಳಿಂಗನ ಮೇಲ್ಗಾರುಡಿ
ತಂದೆ ಕರೆದನ ಕರುಣದಿ ಕರಪಿಡಿ
ಇಂದೆ ಕಡೆಜನ್ಮಮಾಡಿ ಇಡು ನಿನ್ನಪದದಡಿ೪
ಹೆಜ್ಜಾಜೀಶ್ವರ ಶಿವ ಶಂಕರನೆ
ಸಜ್ಜನ ಮುನಿಗಣ ಹೃದ್ಭಾಸ್ಕರನೆ
ದುರ್ಜನಶಿರಹರ ಶಂಖಚಕ್ರಧರ
ವಜ್ರಿ ಅಜಹರಗಾಧಾರ ಧೀರ
ಸುಜಯ ಭೂಮ್ಯೋದ್ಧಾರಿ ಜಂಇು ಶ್ರೀಕರ ೫

 

೪೧೯
ಶ್ರೀ ಹರಿ ಪಾಲಿಪುದೈ ದಾಸನಾಗಿ ಸೇವೆಗೈವುದ ಪ
ನೀನು ಕೂಡುವ ಪೀಠವಾಗಿ ಮಲಗಲು ಹಾಸಿಗೆಯಾಗಿ
ನಾನು ಎದುರ ಕನ್ನಡಿಯಾಗುತ ಮಂಗಳದೀಪ ಪಿಡಿವೆನೈ ೧
ನಿನ್ನ ಮೇಲಿನ ಛತ್ರಿಯಾಗಿ ಚಾಮರಹಿಡಿದು ಬೀಸುವೆನೈ
ಚನ್ನವೈಜಯಂತಿಮಾಲೆ ಧನ್ಯ ಮುದ್ರಿಕೆಯನ್ನು ಮಾಡಿಕೊ ೨
ಭೋಜನಪಾತ್ರ ತಾಂಬೂಲಭರಣಿ ರಾಜಿಪ ಫಲತಟ್ಟೆಯು
ಶ್ರೀಜಯ ಪಾದುಕೆ ನಡೆಮುಡಿಯು
ಆಗಿ ವಿಜಯಧ್ವಜವನಾಗಿಸೈ ೩
ಬರೆದು ಓದುವ ಪತ್ರವಾಗಿ ಕೈಯ ಲೀಲಾಶುಕವಾಗೀ
ಕೊರಳ ಕೌಸ್ತುಭಮಣಿಯಮಾಡಿ ಶಂಖಚಕ್ರಗಳನು ಹೊರಿಸು ೪
ಜಾಜಿಕೇಶವ ದಿವ್ಯಸನ್ನಿಧಿ ಸಾಹ್ಯವಸ್ತುಗಳಾಗಿಸೈ
ರಾಜಾಧಿರಾಜಪೂಜ್ಯ ಮಾಜದೆ ನಾಂ ಮಣಿವೆ ಬೇಡಿ ೫

 

೩೫೧
ಶ್ರೀಕರನೇ ಕರುಣಾಕರನೇ ಶ್ರೀಕಾಂತಾ ಹರಿ ಗಿರಿಧರ ಶೌರಿ ಪ
ಸಾಕೇತಾಪುರಿಗೀಶನು ಪೂಜ್ಯ ಸಾಮ್ರಾಜ್ಯ ಭಾಸ್ಕರ ಶತತೇಜಅ.ಪ
ಸುರತರು ಧೇನು ಚಿಂತಾಮಣಿ ಸಿರಿಯನು
ಸುಖಕರ ಸುಧಾಂಬುಧೀ
ದುರಿತಘ ನಾಶನ ಸಂಪನ್ನ ಪರಮಾತ್ಮಾ
ನಿತ್ಯಪರಿಪೂರ್ಣ ಹಿರಣ್ಯವರ್ಣನೆ ೧
ಶರಣರ ಹೃದಯದಿ ವಾಸಿಸುತಾ ಮರೆಯದೆ
ಮಮತೆಯ ತೋರಿಸುತ
ಪರಿಪರಿರೂಪವ ದರ್ಶಿಸುತಾ ತನ್ನವರೆನ್ನುತ
ಪೊರೆವಾತ ಜಾಜೀನಾಥ ೨

 

೬. ಶಾಮಶರ್ಮರ ಕೇಶವನಾಮ ರಸಾಯನ
೫೦೭
ಶ್ರೀಕೇಶವ ಸುರಸೇವ್ಯ ನಮೋ
ಶ್ರೀಕರ ಜಾಜೀಶ ನಮೋ ಪ
ನಾರಾಯಣಶ್ರೀನಾಥ ನಮೋ
ನಾರದಾದಿಮುನಿವಂದ್ಯ ನಮೋ ೧
ಮಾಧವ ಮಂಗಳನಾಮ ನಮೋ
ಭೂದೇವಿ ಭಯನಾಶನಮೋ ೨
ಭೋಗಿಶಯನ ಗೋವಿಂದ ನಮೋ
ಭಾಗವತಪ್ರಿಯ ಭೋಗ ನಮೋ ೩
ಜಗ ಪರಿಪಾಲಕ ವಿಷ್ಣುನಮೋ
ಖಗವಾಹನ ಗುಣಪೂರ್ಣ ನಮೋ ೪
ಮಧುಸೂದನ ಮತ್ರ್ಪಾಣ ನಮೋ
ವಿಧಿಶಿವ ಋಷಿಗಣ ಸ್ತುತ್ಶನಮೋ ೫
ವಾಮನ ಮೂರುತಿ ಸ್ವಾಮಿನಮೋ
ಭೀಮಾನುಜಪ್ರಿಯ ನಿಗಮನಮೋ ೬
ತ್ರಿವಿಕ್ರಮಶ್ರೀವಕ್ಷನಮೋ
ಪವಿತ್ರ ಫಲದ ಶ್ಯಾಮ ನಮೋ ೭
ಶ್ರೀಧರ ದೇವಾನುತ ನಮೋ
ಆಧಾರಮೂರುತಿ ಅಮಿತನಮೋ ೮
ಹೃಷಿಕೇಶ ಹೃದ್ವಾಸಿ ನಮೋ
ಪಶುಪತಿ ಪಾವನ ಪುಣ್ಯನಮೋ ೯
ಪದ್ಮನಾಭ ಪರಮಾತ್ಮನಮೋ
ಶುದ್ಧ ಸತ್ವರುಚಿರೂಪನಮೊ ೧೦
ದಾಮೋದರ ದೈತ್ಯಾರಿನಮೋ
ಕಾಮಜನಕ ಕರಿವರದ ನಮೋ ೧೧
ಸಂಕರ್ಷಣ ಶೇಷಾಂಶ ನಮೋ
ಶಂಖ ಚಕ್ರಗದಾಪಾಣಿ ನಮೋ ೧೨
ವಾಸುದೇವ ವೈಕುಂಠನಮೋ
ಭೂಸುರ ಪೂಜಿತ ಪಾದನಮೋ ೧೩
ಪರಮಪುರುಷ ಪ್ರದ್ಯುಮ್ನ ನಮೋ
ಶರಣಾಗತ ಜನ ತೋಷ ನಮೋ೧೪
ಅಖಿಲೇಶಾನಿರುದ್ಧ ನಮೋ
ಸುಖದಾತಾ ಪರಬ್ರಹ್ಮನಮೋ ೧೫
ಪುರುಷೋತ್ತಮ ಪದ್ಮಾಕ್ಷ ನಮೋ
ಸರಸಿಜಭವಪಿತ ಸತ್ಯ ನಮೋ ೧೬
ಅಧೊಕ್ಷಜನತ ರಕ್ಷನಮೋ
ಅದ್ಭುತ ಮಹಿಮಾಧಿಕ್ಯ ನಮೋ ೧೭
ಶ್ರೀಲಕ್ಷ್ಮೀನರಸಿಂಹ ನಮೋ
ಬಾಲಕ ಭಕ್ತ ಪ್ರೀತ ನಮೋ ೧೮
ಅಚ್ಯುತ ಸಚ್ಚಾರಿತ್ರ ನಮೋ
ನಿಶ್ಚಲ ನಿರ್ಮಲ ಚಿತ್ತ ನಮೋ ೧೯
ಜನಾರ್ಧನ ಜಗದೀಶ ನಮೋ
ದಿನೇಶಕೋಟಿ ಪ್ರಕಾಶನಮೋ ೨೦
ಉಪೇಂದ್ರ ವಿಶ್ವವ್ಯಾಪ್ತನಮೋ
ಉಪಮಾರಹಿತ ಉದಾರಿನಮೋ ೨೧
ಶ್ರೀಹರಿಸಕಲ ಸ್ವರೂಪನಮೋ
ಸಾಹಸರಹಿತ ಸುಕಾರ್ಯ ನಮೋ ೨೨
ಶ್ರೀಕೃಷ್ಣ ಪರಂಧಾಮ ನಮೋ
ಸಾಕಾರ ಮೋಕ್ಷ ಪ್ರದಾತ ನಮೋ ೨೩
ಜಯಮಂಗಳಂ ಶ್ರೀರಂಗನಮೋ
ಜಯಮಂಗಳಂ ಭವಭಂಗನಮೋ ೨೪

 

೩೭೫
೪. ಆಂಡಾಳ್
ಶ್ರೀಗೋದಾದೇವಿ ಶ್ರೀಭೂ ನೀಳಾ ಅಂಡಾಳ್ ದೇವಿ
ಭೋಗಿಶಯನನ ಭಾಗ್ಯದ ರಾಣಿ ಪ
ಸರಿತುಳಸಿಯ ಮೂಲದಳುದಿಸಿದಳೆ
ಪೆರಿಯಾಳ್ವಾರರ ಪ್ರೇಮಕುಮಾರಿ
ಪರಮಾತ್ಮಗೆ ಹೂ ಮುಡಿದು ಮುಡಿಸಿದೆ
ಕರಣತ್ರಯದೊಳಗವನೊಳು ಬೆರೆದೆ ೧
ಧನುರ್ಮಾಸದವ ವ್ರತಾಚರಿಸಿದೆ ತಾಚರಿಸಿದೆ
ಅನುಮತಿಸಿದ ಗೆಳತಿಯರೊಡಗೂಡಿ
ವಿನಯದಿಂದ ತಿರುಪ್ಪಾವೈ ಪಾಡುತ
ಕನಸೊಳು ಶ್ರೀರಂಗನೊಳು ಕೂಡಿದೆ ೨
ಕಡುತ್ವರೆಯಿಂ ತಿರುಮೊಳಿಯಿಂ ತುತಿಸಿ
ಸಡಗರದಿಂದವನಂ ಕೈವಿಡಿದೇ
ಒಡೆಯನೊಡಲೊಳಗೆ ಎಡೆಯಂ ಪಡೆದೆ
ಪೊಡವೀಶ ಜಾಜಿಕೇಶವನ ಮಡದಿ ೩

 

ಆಳ್ವಾರಾಚಾರ್ಯ ಸ್ತುತಿಗಳು
೩೭೨
೧. ವಿಶ್ವಕ್ಸೇನ ಪ್ರಾರ್ಥನೆ
ಶ್ರೀನಾಥಜ್ಞಾಪ್ರಕಾರ ನಡೆಯುವ ಸೂತ್ರವತೀರಮಣ
ಮಾನಿತ ಪ್ರದಾನ ಮಂತ್ರೀ ಪೂಜಿಪೆ ವಿಘ್ನೇಶಾ ನಮಿಪೆ ಪ
ಬಿಳಿಯುಡೆ ತುಂಬಿದ ತಿಂಗಳ ಬೆಳಗಾ
ತೊಳಗುವ ನಾಲಕು ತೋಳುಗಳ
ಒಲಿದಿಹ ನಗೆಮೋಗ ವಿಷ್ಣು ನೆನೆವೆ
ಸುಲಭದಿ ಕಾರ್ಯವ ಗೈಸುವನೆ೧
ದ್ವಿರದವಕ್ತ್ರತಾ ಮೊದಲಾಗಿರುವ
ಪರಿಜನ ನೂರ್ವರಿಂದೊಪ್ಪಿರುವೇ
ಪರಿಪರಿ ತಡೆಗಳ ತರಿದೋಡಿಸುತ
ಪೊರೆ ವಿಶ್ವಕ್ಸೇನಾಶ್ರಿತ ನಾನು ೨
ಬಿಡುಗಣ್ಣರ ಬೆಡಗಿನ ಒಡಲುಳ್ಳ
ಕುಡಿನೋಟದ ತಾವರೆಗಣ್ಣ
ಪಿಡಿದಹ ಶಂಖ ಚಕ್ರ ಗದಾಯುಧ
ಒಡೆಯ ಮುಕುಂದ ದ್ವಾರನಿಲಯನೇ ೩
ಬಯಕೆಯ ಪಡೆಯಲು ಬೊಮ್ಮ ಭವಸುರರು
ನಯದಿಂ ಮೊದಲಾರಾಧಿಪರು
ಭಯ ನಿವಾರಕ ಶುಭ ಫಲದಾಯಕ
ಜಯಜಾಜೀಶ್ವರ ಸೇನಾಪತಿಯೇ

 

೪೧೪
ಶ್ರೀನಾಯಕಾ ನೀ ಕೋಪಬಿಡು ಪ
ದೀನ ಬಂಧುವೇ ನಂಬಿರುವೆನೈ ಅ.ಪ
ನಾನೇನ ಮಾಡಿದೆನಯ್ಯ ತಪ್ಪ
ನೀನು ಕಾಣದಿರುವೆಯಾ ಮನ್ನಿಸೈ ೧
ತಾಯಿ ತಂದೆ ಪ್ರೇಮಾತುರದಿ ಪುತ್ರರ್ಗೆ
ಶ್ರೇಯವೀಯದಿಹುದು ಅನ್ಯಾಯವೈ ೨
ಕಾಯಬೇಕು ನೀ ಜಾಜೀಶ ಶ್ರೀಶ
ದಾಯಕಾಣದೈ ಬಿನ್ನೈಸಿದೇ ೩

 

೪೩೩
ಶ್ರೀಪತಿ ಹಾಕಿದ ಶ್ರೀವೈಷ್ಣವ ಸುರ ಭೂಜವು ನಿತ್ಯ ಶ್ರೀಕರವು ಪ
ಭೂಪತಿಯಂದದಿ ಭೂಮಿಯಾಳುವುದು
ಕಾಪಾಡುತಿಹುದು ಲೋಕಿಗರಅ.ಪ
ಆಳುವಾರುಗಳು ಆಚಾರ್ಯರುಗಳು
ಪೇಳಿದರಿದರಾಂತರ್ಯವನು
ಕೇಳುತ ಬಾಳಿದ ಬಹು ಭಾಗವತರ
ಪಾಳಯವದು ತಾಂ ಪರಮಪದ ೧
ಅಭಿಮತದಿಂದಲಿ ಮುನಿಗಳು ಮೂವರು
ವಿಭವದಿಂದಲದ ಸಲಹಿದರು
ಉಭಯ ವೇದಗಳ ಅಮೃತವರ್ಷದಿಂ ಸು
ರಭಿತ ಕುಸುಮಗಳರಳಿದವು ೨
ಶಂಖ ಸುದರ್ಶನ ಲಾಂಛನ ಭುಜಗಳಲ
ಲಂಕಾರದ ಹನ್ನರೆಡು ನಾಮಗಳು
ಪಂಕಜ ತುಳಸೀಮಣಿ ಪವಿತ್ರಗಳು
ನಿಶ್ಶಂಕೆಯ ಮೂರು ಮಂತ್ರವೆ ಕಾಯ್ಗಳು ೩
ಶಾಸ್ತ್ರ ಸಿದ್ಧವಾದರ್ಚಾಮೂರ್ತಿಯ
ಕ್ಷೇತ್ರ ತೀರ್ಥಗಳು ಪಕ್ವಫಲ
ಶ್ರೋತೃಗಳಿಗೆ ಮಧುರಾದತಿಮಧುರವು
ಖ್ಯಾತಿಯ ವಿಜಯರಾಘವ ಕೃತಿ-ಪ್ರ-
ಖ್ಯಾತಿಯ ಅಣ್ಣಂಗಾರ್ಯ ಕೃತಿ೪
ನಿತ್ಯ ನೈಮಿತ್ತಿಕ ತಿರುವಾರಾಧದಿ
ನವ್ಯ ತದೀಯದ ಕೈಂಕರ್ಯ
ಸ್ತುತ್ಯಪ್ರಬಂಧ ಗೀತಾ ಶ್ರೀಭಾಷ್ಯ
[ದರ್ಥಿ]ಪಾರಾಯಣ ಪರಮಾನಂದ ೫
ಶ್ರೀರಂಗ ವೆಂಕಟ ವರದ ನಾರಾಯಣ
[ರಾ ಶ್ರೀ] ಪದಯುಗ ಪೂಜನ ಪ್ರಾಪ್ತಿ ಫಲ
ಓರಂತನುದಿನ ಧ್ಯಾನ ಗಾನಗಳು
[ಬೀರುವವು] ತೃಪ್ತಿಕರ ಸುಧಾನಿಧಿ ೬
ಜಾಜೀ ಕೇಶವ ಜಗವ ಪಾಲಿಸಲು
ಮಾಜದೆ ಮಾಡಿದ ಉಪಕೃತಿಯು
ರಾಜಿಪ ಚರಣಗಳಾಶ್ರಿತರಿಗೆ ಸವಿ
ಭೋಜನವೀವುದು ಹರಿಯೆಡೆಯೊಳ್ ೭

 

೩೮೧
೪. ಧನ್ವಂತರಿ
ಶ್ರೀಪತಿಯೆ ಧನ್ವಂತರಿಯ ರೂಪವಾಂತೆ
ತಾಪತ್ರಯವ ಹರಿಸೆ ಭಕ್ತರ್ಗೆ ನೋಂತೆ ಪ
ಸುರರು ದಾನವರೆಲ್ಲ ಕ್ಷೀರ ಸಾಗರವನ್ನು
ವರಗಿರಿ ಮಂದರವ ಕಡೆಗೋಲ ಮಾಡಿ
ಧರಣಿಧರ ವಾಸುಕಿಯ ಹಗ್ಗಗೈಯುತ ಮಥಿಸೆ
ಸಿರಿರತ್ನ ಧೇನು ತರು ಲಕ್ಷ್ಮಿಯರು ಬರಲು ೧
ಶ್ರೀರಮಣಿ ಕೌಸ್ತುಭಗಳನ್ನು ನೀಧರಿಸುತ್ತ
ಕಾರುಣ್ಯದಿಂ ಕಾಮಧೇನುವಂ ಮುನಿಗಳಿಗೆ
ಪಾರಿಜಾತಸ್ವರ್ಗ ಸಂಪಾದವಗೈಯುತ್ತ
ಸಾರಸೌಖ್ಯದ ಸುಧಾರಕನಾಗಿ ತೋರ್ದೆ ೨
ಅಮರರಿಗೆ ನೀನೊಲಿಯತಮೃತವನು ಕರೆದಿತ್ತು
ಕಮಲ ಸರಸಲಿಹೆ ಆಯುರ್ವೇದವನ್ನೊರೆದೆ
ಕಮಲಲೋಚನ ಕೃಪೆಯೊಳಾರೋಗ್ಯಗಳ
ನಮಗೀಯುತಾಬಾಲವೃದ್ಧರಂ ಸಲಹೊ ೩
ದೇವ ನೂತನಪುರಿಯ ದೇವ ಶ್ರೀಮೂರುತಿಯ
ಭಾವದಿಂ ಸನ್ನಿಧಿಯೊಳಾನಿನ್ನನುತಿಸೀ
ಕಾವುದೆನುತಲಿ ಸತತ ಶ್ರೀದ ನಮಿಸುವೆ ಮಹಿತ
ಜೀವ ಜೀವರಿಗೆಲ್ಲ ಸಿರಿಯೀವನಲ್ಲ ೪
ಜಯಮಕ್ಕೆ ಜಾಜೀಶ ಚನ್ನಕೇಶವನಡಿಗೆ
ಜಯಮಕ್ಕೆ ವೈದ್ಯೇಶನಾಮಾಯಕೆ
ಜಯವುತಾನಾಗಲೀ ಓಷಧೀಲತೆಗಳಿಗೆ
ಜಯ ಜಯವು ಗೋಗಳಿಗೆ ವೈದ್ಯವೃಂದಕ್ಕೆ ೫

 

೩೬೨
(೩) ಶ್ರೀಕೃಷ್ಣ
ಶ್ರೀಪಾರ್ಥಸಾರಥಿ ನಿರುಪಮಗುಣ ನಿತ್ಯಕಲ್ಯಾಣ ಪ
ಆಪದದೂರ ಮುನಿಜನಮಂದಾರ ದಾನವಭಯಂಕರ ಅ.ಪ
ಮಂಗಳಕರಮೂರ್ತಿ ಸುಗುಣಾಭರಣ ಕವಿಜನವರ್ಣನ
ಶೃಂಗಾರಸಾಗರ ಗೋವರ್ಧನೋದ್ಧಾರ ಆನತಹಿತಂಕರ ೧
ಸಾಧುಹೃದಯವಾಸಓಶ್ರೀನಿವಾಸತವದಾಸಾನುದಾಸ ಶ್ರೀ
ಆದಂಸನ್ನಂಹಿತ ಆದ್ಯಂತರಹಿತ ಸಾಮಗಾನ ಸನ್ನುತ ೨
ರಾಜಾಧಿರಾಜ ಭಾಜಕರ ಸುರಭೂತ ರವಿಕೋಟಿತೇಜ
ಜಾಜೀಶ ಕೇಶವ ಜಯಜಯವಿಭವ ಶ್ರೀ ಭೂನೀಳಾಧವ ೩

 

೪೧೫
ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು
ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ
ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ
ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ
ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ
ಪಾಪಹರ ನಿನ್ನೊಳಗೆ ಯನ್ನ ಮನವಿರಲಿ
ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ
ಕಾಪಾಡಿಕೋ ಸ್ವಾಮಿ ದಾಸಾನುದಾಸನಂ೧
ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ
ದಿನಕರಪ್ರಭು ಮೂರ್ತಿಯವತಾರ ತೋರಿ
ಅನುನಯದಿ ಪದಯುಗವ ಶರಣು ಹೊಂದುವ ಪರಿಯ
ಕನಿಕರದಿ ಕರುಣಿಸೈ ಕಮಲನಯನ ೨
ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ
ಅಪರಿಮಿತ ಸುಂದರಾನಂದ ನೀಡಿ
ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು
ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ ೩
ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ
ದೊರೆಯೆನೀ ಸೋದರನು ಸಖನು ಬಂಧೂ
ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ
ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ ೪

 

೩೫೨
ಶ್ರೀವಇನ್ಮಾಧವ ನಮಿಸುವೆನಾಂ
ನಮಿಸುವೆನಾಂ ಪಾಲಿಸು ನಾಥನೆ ಪ
ಸಾರಸಭವತಾತ ನಾರದ ಮೌನಿನುತ
ಮೂರ ಕೋಟಿ ಸುಂದರಾಂಗ ಮುರಹರ ಗೋವಿಂದ ೧
ಶಂಖಚಕ್ರ ಗಧಾ ಪಂಕಧಾರಿ ಸದಾ
ಕಿಂಕರಗಣ ಪಾವನಘನ ವೆಂಕಟರಮಣ೨
ಶ್ರೀಜನಾರ್ಧನ ರಾಜಸತನಾ
ಮೂಜಗಭರಿತ ಪರಾತ್ಪರ ಜಾಜಿಶ್ವರಾ ೩

 

೩೫೩
ಶ್ರೀಮಾಧವ ಪಾದವ ಸಂತತ ಮನದಿ
ನೇಮದಿ ಧ್ಯಾನಿಸು ನೀ ಪ
ಪ್ರೇಮಮೂರ್ತಿಯನೆನೆವರಾರಾದರೇನಯ್ಯ
ಸ್ವಾಮಿತಾನವರನು ಸರ್ವತ್ರ ಸಲಹುವನು ಅ.ಪ
ಮದಗಜವನುಸರದಿ ಮೊಸಲೆಯನು ತಾನು
ಅಧಿಕ ಕಷ್ಟವ ಗೊಳಸೆ
ಪದುಮನಾಭ ನೀನೆ ಪೊರೆಯಬೇಕೆನ್ನಲು
ಮುದದಿಂದಲೊದಗುತ್ತ ಸೌಖ್ಯವ ತೋರಿದೆ ೧
ತರಳನಾದ ಧ್ರುವನು ಪ್ರಹ್ಲಾದನು
ಶರಣೆಂದು ಮೊರೆವೋಗಲು
ಸರಸಿಜಾಕ್ಷ ಶ್ರೀಶ ತ್ವರಿತದಿಂದಲಿ ಬಂದು
ಕರುಣದಿ ಕರೆದೆತ್ತಿಕೊಂಡು ಮುದ್ದಾಡಿದ ೨
ಮಾನಿನಿ ದ್ರೌಪದಿಯು ತನ್ನಯ ಘನ
ಮಾನಭಂಗದ ಕಾಲದಿ
ದೀನರಕ್ಷಕ ಕೃಷ್ಣ ದಾನವಾರಿಯೆನೆ
ಸಾನುರಾಗದಿಂದಲಕ್ಷಯ ವರವಿತ್ತ೩
ಅಜಮಿಳ ಬಹುಪಾಪದಿ ಮೆರೆಯುತಲಿದ್ದು
ನಿಜಸುಖ ಮರೆತಂತ್ಯ ಕಾಲದಿ
ಬಜಬಜಿಸುತಮಗನನು ಹೆಸರೆತ್ತಲು
ಭಜನೆಯಾಯ್ತು ನಾರಾಯಣ ನಾಮವು ೪
ವಿದುರನುಧ್ದವನರ್ಜುನ ಕುಚೇಲನು
ಮೊದಲಾದ ಭಕ್ತರೆಲ್ಲ
ಹೃದಯದಿ ಬಚ್ಚಿಟ್ಟು ನಿರುತ ಪೂಜೆಯ ಮಾಡೆ
ಪದವಿಯಿತ್ತು ಕಾಯ್ದ ಜಾಜಿಯೀಶನ ೫

 

೩೬೩
ಶ್ರೀಯದುಕುಲತಿಲಕ ದೇವ ಕಾಯಬೇಕು ನೀ ಕರುಣಾವಾಲ ಪ
ಶ್ರೀಯಶೋಧೆಯಮಾಯೆಯತನಯ ರಾಯನೆ ದಯೆದೋರು ಅ.ಪ
ದೇವಕೀವಸುದೇವ ಜಾತ ನೀ ವಿನೋದದೆ ನಂದನೊಳಿರುತ
ಆವ ಪೂತನಿಶಕಟರಸುವದೇವಹರಿಸಿದೆಭಕ್ತಭಯಹರಶ್ರೀ
ಗೋವಕಾಯ್ದ ಗೋವಿಂದ ವಿಧಿಪುರಂದರಾದಿವಂದ್ಯ
ಪಾವನ ಯಮನಾನಂದ ಫಣಿತರ ಫಣಿಯೊಳುನಿಂದ ೧
ನಳಿನನಾಭಗೋಪಾಲ ಪುಳಿನ ಕ್ರೀಡೆಯಾಡಿಬಾಲ
ರೊಳಗೆ ಮೇಲೆನಿಪ ಸುಶೀಲ ತುಳಿದೆ
ಬಕ ಆಘಪ್ರಲಂಬಾದಿ ದೈತ್ಯಜಾಲ
ಕಳವಳಗೊಳ್ಳುತ ಸೆರೆಯೊಳ್ ಬಳಲುವ ವನಿತಾಜನದೊಳ್
ಒಲಿಯುತ್ತಲಿ ನರಕಾಸುರ ಶಿರವರದಿನೆ ದುರಿತಶಯನ ೨
ಬೃಂದಾವನ ಸಂಚಾರ ಬೆಳ್ದಿಂಗಳೊಳು ಗೋಪಿಯರ
ಬಂಧುರ ವೇಣುಗಾನತೋರಿ ಹೊಂದುತಾನಂದ ನಿಧಿ
ತೋರಿದ ಪರಾತ್ಪರ
ತಂದೆ ತಾಯ್ಗಳ ಪೊರೆಯುತ ನಿಂದು ಕಂಸನಕೊಂದು
ಅಂದುಪಾಪವ ಕಳೆದಾ ಅಪ್ರಮೇಯ ಜಾಜೀಶ್ವರ ೩

 

೪೧೬
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ
ಸಾರಸಾಕ್ಷ ಕರುಣಾರಸಪೂರ್ಣ
ಭೂರಿ ಸುವೈಭವ ಭುವನರಕ್ಷಣಅ.ಪ
ನಾನು ನಿನ್ನೊಳು ಮೊರೆಯಿಡುತಿರುವೆನೊ
ನೀನೆನ್ನೊಳು ದಯೆದೋರು ಹರಿಯೆ
ದೀನಪಾಲನಾಪರ ನೀನೆನ್ನುತ
ಲಾನು ಬಂದೆನೊ ಶ್ರೀನಿಕೇತನ ೧
ಹಿಂದೆಯನೇಕರ ಕಾಪಾಡಿರುವೆ
ಮುಂದೆಯು ಭಕ್ತರ ಬೆಂಬಿಡದಿರುವೈ
ತಂದೆ ಬಂದು ಗಜರಾಜನ ಸಲಹಿದೆ
ಯೆಂದು ನಂಬಿದೇ ಮಂದರಾದ್ರಿಧರ ೨
ಸುಧಾಮ ಅಜಮಿಳ ಅಂಬರೀಷ ದ್ರೌ
ಪದಿಯರ ಸಮಯದಿ ಕಾಯ್ದವನೇ
ವಿಧಿಪಿತ ನೀನದುಭುತಮಹಿಮನಯ್ಯ
ಸುಧಾ[ಮ] ನ ಬಂಧುವೆ ಜಾಜೀಶಾ ೩

 

೪೧೭
ಶ್ರೀರಾಮೇಶ ಪೊರೆವುದೆನ್ನ
ನೀರವ ಮುನಿವಿನುತ ಚೆನ್ನ ಪ
ಧ್ಯಾನ ಜಪತಪಗಳನರಿಯೆ
ಹೀನ ಮನುಜ ನಾನು ಹರಿಯೆ
ಧೀನಬಂಧುವಾದ ನಿನ್ನ
ನಾನು ನೋಡೆ ತೋರೊ ಮುನ್ನ ೧
ಸುಲಭನಾದ ನಿನ್ನ ಮರೆತು
ಕಲಿಯ ದೋಷದೊಳಗೆ ಬೆರೆದೆ
ಕಲುಷಹರಣ ಭಕ್ತಪ್ರಾಣ
ನಿಲುಕಿಸೆನಗೆ ನಿನ್ನ ಚರಣ ೨
ಜಾಜೀಶನೆ ನಿನ್ನಯಪದ
ರಾಜೀವದ ದಾಸನೆನಿಸಿ
ಪೂಜೆಮಾಡಿ ನಲಿಯುವಂತೆ
ರಾಜಿಪ ಪದವೀಯೋ ಶಾಂತ ೩

 

೪೩೪
ಶ್ರೀವರ ಕೀರ್ತಿಯಂ ಅರ್ಥಿಯಿಂದಾಲಿಸೈ ಚಿತ್ತಶುದ್ಧಿಯಿಂ ಪ
ಭಾವಿಸಿವಾರ್ತೆಯ ವ್ಯಾಸ ವಾಲ್ಮೀಕಿಯು
[ಆವರ]ಶುಕ ಮನುಶ್ರೇಷ್ಠರೆಲ್ಲ ನಿತ್ಯಪಠಿಪರೋ ಅ.ಪ
ಕೌರವರಿಂ ಪಾಂಡವರು ಸೋಲುತ
ಘೋರಾರಣ್ಯದಿ ತಿರುಗುತ್ತ
ಶೌರ್ಯದಿ ಗೋಗ್ರಹಣವನು ಸಾಧಿಸುತಲಿ
ಮೀರಿ ಸಂಧಿಕೇಳದ ದುರ್ಯೋಧನರ ಹತಗೈದ ೧
ರಾಮನು ಕಾಡೊಳು ಮೃಗವನು ಮರ್ದಿಸಿ
ಭೂಮಿಜೆಯಂ ತರೆ ರವಿಜನಿಂ
ಆ ಮಹಾಸಾಗರವನು ಬಂಧಿಸಿ ಲಂಕಾ
ಪ್ರೇಮಿಯನ್ನು ಕೊಂದು ಬಂದ ರಾಮಚರಿತಮಂ೨
ದೇವಕಿಸುತ ಗೋಪೀಗೃಹವರ್ಧನ
ಗೋವರ್ಧನಗಿರಿಯೆತ್ತಿದ
ಮಾವಕಂಸಾದಿ ದುರ್ದೈತ್ಯರ ಖಂಡಿಸಿ
ಸೇವಿಸುವ ಸಿಂಧುಗಳ ಸಲಹುವ ಜಾಜೀಶನು ೩

 

ಭಗವತ್ಸೇವೆ
೩೫೪
ಶ್ರೀಶ ಶ್ರೀ ಕೇಶವನೆ ಬಾ ಪರುಮ ಪುರುಷ
ಶೇಷರಾಯನ ಮುಕುಂದ ಶರಣರಾನಂದ ಪ
ಭೂಸುರರು ನಡೆಮುಡಿದು ಪೂರ್ಣಕುಂಭವು ವೇದ
ಘೋಷಿಸುವ ಓಲಗ ಛತ್ರ ಚಾಮರ ದಿಮಿಗೆ ಅ.ಪ
ಸುತ್ತಿಬರುತಿಹ ದನುಜ ವೃಂದವೆಲ್ಲವ ತರಿದು
ಮುತ್ತಿನಂಥಾ ತನುವು ಧೂಳಾಗಿರುವುದೋ
ಒತ್ತುತೆಣ್ಣೆಯ ನಿನಗೆ ಮತ್ತೆಬಿಸಿನೀರೆರೆದು
ಕತ್ತುರಿಯ ಹಣೆಗಿಟ್ಟು ನುಡಿಯನುಡಿಸುವೆನೋ ೧
ಸರಸಿ ಪೀತಾಂಬರ ಶಿರಕೆ ಮಣಿಯಳವಡಿಸಿ
ಕೊರಳಿನೊಳುಹಾಕಿ ತುಳಸೀಮಾಲೆಯ
ಕರಕೆ ಕಂಕಣ ಶಂಖ ಚಕ್ರಗಧೆಯಾ ಕಮಲ
ದೊರೆನಡುವಿಗೊಡ್ಯಾಣ ಸಿರಿಪದಕೆ ಕಡಗ ೨
ಅಂಗಕ್ಕೆ ಶ್ರೀಗಂಧ ಅಗರುಚಂದನ ಧೂಪ
ಮಂಗಳದ ದೀಪವೂ ಮಂತ್ರಪುಷ್ಪ
ಶೃಂಗಾರ ಮೂರ್ತಿಗೆ ಕನ್ನಡಿಯು ಬೀಸಣಿಗೆ
ಸಂಗೀತ ನರ್ತನವು ಸ್ತುತಿಸೇವೆಯೂ ೩
ವಸುಮತೀಪಾಲನೆಯ ಸತತ ನೀಗೈಯುತ್ತ
ಹಸಿದು ಬಳಲುತ್ತಿರುವೆ ಕೃಷ್ಣಪರಮಾತ್ಮ
ಬಿಸಿಯಹೋಳಿಗೆ ತುಪ್ಪ ಹಸುನಿನಾ ಬಿಸಿಹಾಲು
ಮೊಸರು ಶಾಲ್ಯನ್ನ ಫಲಪಾನಕದ ಸುಖಹೀರಿ ೪
ಶ್ರೀದೇವಿ ಭೂನೀಳ ಇವರೊಡನೆ ತೃಪ್ತಿಯಂ
ಶ್ರೀಧರ ಮೂರುತಿ ಹೃದಯ ಕಮಲದಲಿ ಕೂಡೋ
ಸಾದರದಿ ಕರ್ಪೂರ ತಾಂಬೂಲವನು ಸದಿಯೋ
ಮೋದದಿಂದಾರತಿಯ ಬೆಳಗುವೆನೋ ರಂಗಾ ೫
ಜಯತು ಜಗದಾಧಾರ ಪುಷ್ಪಾಂಜಲಿಯೊಧೀರ
ಜಯ ಸಾಧು ಹೃದ್ಭಾಸ ಹೆಜ್ಜಾ ಜಿವಾಸ
ಜಯತು ಮಂಗಳ ನಾಮ ಶ್ಯಾಮಂಗೆ ಪ್ರಣಾಮ
ಜಯತು ಕರುಣಾಸಿಂಧು ಜಯಭಕ್ತ ಬಂಧು ೬

 

ಇದನ್ನೊಂದು ‘ಮುಕ್ತಿ ಪ್ರಾರ್ಥನೆ’
೩೫೭
(೧) ದಶಾವತಾರ
ಶ್ರೀಹರ ನಿನ್ನ ಲೀಲೆ ಏನು ಹೇಳಲಯ್ಯ ನಾನು ಪ
ಮೋಹಗೊಳಿಸಿ ಲೋಕವನ್ನು ಪಾಲಿಸುತ್ತಿಹೆ ಅ.ಪ
ಮತ್ಸ್ಯನಾಗಿ ವೇದ ತಂದೆ ಆಮೆಯಾಗಿ ಅಮೃತ
ವಿತ್ತೆ ವರಹನಾಗಿ ನೀನು ಧರಣಿ ಹೊತ್ತೆಯೈ ೧
ನರಹರಿ ತರಳರಕ್ಷ ಬ್ರಹ್ಮಚಾರಿ ಇಂದ್ರಪಾಲ ದಾ
ಶರಥಿಯೆ ನೀನು ಧರ್ಮ ತೋರ್ದೆಯೈ ೨
ಬಾಲಕೃಷ್ಣ ಲಾಲಿಲೀಲೆ ಪರುಶುಧಾರಿ ಪಿತೃಭಕ್ತ
ಬಲ್ಲರಾಮನಾಗಿ ನೀನು ಬುದ್ಧಿ ಪೇಳ್ದೆಯೈ ೩
ಕಲ್ಕಿಯಾಗಿ ಕೆಸರ ತೊಳೆವೆ ವಿಷ್ಣು ಜಾಜಿಶ್ಯಾಮವನ್ನು
ಶುಲ್ಕವಿಲ್ಲದಂತೆ ನಿನ್ನಲ್ಲಿಗೊಯ್ವುದೈ ೪

 

೪೧೮
ಶ್ರೀಹರಿ ನಿನ್ನನ್ನೆ ಪಡೆವುದು ಭಾಗ್ಯ
ಬಾಹಿರನೆನಿಸದೆ ಸೇರಿಸು ಯೋಗ್ಯ ಪ
ಹೃದಯಾರವಿಂದದೆ ದೇವಿಯರುಸಹಿತ
ಸದಯ ಸನ್ನಿಧಿ ಮಾಡು ಅದು ನನಗೆ ವಿಹಿತ ೧
ಭಾಗವತ ಕೈಕಂರ್ಯ ಹಗಲಿರುಳು ಇರಲಿ
ಭೋಗಿಶಯನನ ಪೂಜೆ ನಿತ್ಯ ಸಿದ್ಧಿಸಲಿ ೨
ಇಡುದೇವ ಪದಕಮಲ ನನ್ನ ತಲೆಮೇಲೆ
ಕೊಡುಸ್ವಾಮಿ ಅತಿಭಕ್ತಿ ಅನುದಿನ ಲೀಲೆ ೩
ಕೊನೆಗಾಲದಲಿ ಬಂದು ನೆನೆವಂತೆ ನೀಡೈ
ಮನಕೆ ಮಂಗಳರೂಪ ಧ್ಯಾನ ದಯಮಾಡೈ ೪
ಅವತಾರಫಲಗಳ ಸ್ಮರಣೆ ಬರುತಿರಲಿ
ಭವವೆಲ್ಲ ಕರಣಗಳು ನಿನ್ನ ಸೇವಿಸಲಿ ೫
ದಾಸನ್ನ ಚರಣಾಂಬುಜದÀಡಿಯಿರಿಸು
ಶ್ರೀಶನೆ ಪ್ರೇಮದ ಸವಿಯನುಣಬಡಿಸು ೬
ಎಲ್ಲವು ನಿನ್ನದೆ ನನ್ನದೇನಿಲ್ಲ
ಬಲ್ಲವನೆ ನೀನಾಗಿ ಮುಕ್ತಿಕೊಡು ನಲ್ಲ ೭
ಹಿಂದೇಳು ಮುಂದೇಳು ತಲೆಮಾರಿನವರು
ತಂದೆ ನಿನ್ನಂಘ್ರಿ ಶೇಷಾಂಕಮುದ್ರಿತರು ೮
ಕುಲಧನವೆ ನೀನಮ್ಮಕುಲಕೋಟಿಯನ್ನ
ಒಲಿದು ಕಾಪಾಡಯ್ಯ ಕರುಣಿ ಪ್ರಸನ್ನ ೯
ಹೆಜ್ಜಾಜಿ ಕೇಶವ ಇದು ನಮ್ಮ ಮೋಕ್ಷ
ಅರ್ಜುನಸಾರಥಿ ಕಾಣು ಪ್ರತ್ಯಕ್ಷ ೧೦

 

೩೮೦
೩. ನವಗ್ರಹ
ಸಕಲಗ್ರಹಬಲವು ನೀನೆ ಶ್ರೀನಿವಾಸ
ಸುಖದಾಯಕನೇ ಅಖಿಲೇಶ್ವರ ಪ
ಆರ್ತರ ಸಲಹುವ ಮಾರ್ತಂಡ ಬಲವು
ಕೀರ್ತಿಯನೀಯುವ ಚಂದ್ರನ ಬಲವು
ಪಾರ್ಥಿವರಗೈವ ಭೂ ಪುತ್ರ ಬಲವು ೧
ವಿದ್ಯಾದಾಯಕನಾದ ಬುಧನ ಬಲ
ಅದ್ಭುತ ಭಯಹರ ಶ್ರೀಗುರುವೊಲವು
ಶುದ್ಧ ಸತ್ವದ ಶುಕ್ರನ ನಲಿವು ೨
ಅನವರತವು ಶುಭದಾಯಕ ಶನಿಫಲ
ಅನಿಷ್ಟಹಾರಕ ರಾಹುಕೇತು ಬಲ
ಅನುದಿನ ಧ್ಯಾನಿಪೆ ಜಾಜೀಕೇಶವ ೩

 

೩೭೯
೨. ಶಾರದೆ
ಸರಸ್ವತಿ ಭಾರತಿ ಭಗವತಿ ಪ
ಸಿರಿಸೊಸೆ ಪಾವನೆ ಸುರನುತ ಚರಣೆ ಅ.ಪ
ಮಧುರ ಸಂಭಾಷಿಣೆ ವಿಧಿವರರಾಣಿ
ಬುಧಜನ ತೋಷಿಣೆ ವಿಧುಮುಖಿಜನನಿ ೧
ಧವಳಸುಗಾತ್ರೆ ಕಮಲನೇತ್ರೆ
ಕವಿಜನ ಸ್ತೋತ್ರೆ ದಿವಿಜೆ ಪವಿತ್ರ ೨
ರಾಜರಾಜಾರ್ಚಿತೆ ರಾಜಿಪಸುಚರಿತೆ
ಮೂಜಗಭರಿತೆ ಜಾಜಿ ಪಟ್ಟಣವಾಸೆ ೩

 

೪೨೦
ಸೀತಾಪತಿ ಪಾಹಿಮಾಂ ಪೂತಾತ್ಮರ
ಘನನಂದನ ರಾಮಚಂದ್ರ ಪ
ತಂದೆ ತಾಯಿ ಬಂಧು ನೀನು ಸಂದ ಯೆನ್ನ ಮಿತ್ರನೀನು
ಕಂದನಿಗಾನಂದ ಬೀರಿ ಅಂದವಾದ ಪಾದತೋರು೧
ಸ್ವಾಮಿ ನಿನ್ನ ನಾಮವನ್ನು ನೇಮದಿಂದ ಧ್ಯಾನಿಪೆನ್ನ
ಪ್ರೇಮದಿಂದ ಕ್ಷೇಮ ಕೊಟ್ಟು ಸಾಮಗಾನಗೈಸು ವಿಷ್ಣು ೨
ಅಗ್ರಹಾರಪಾಲಾಧೀಶ ಅಗ್ರಪೂಜೆಗೊಂಬ ಶ್ರೀಶ
ಸುಗ್ರೀವನ್ನ ಪೊರೆದ ಉಗ್ರದೈತ್ಯನಾಶ ಹೆಜ್ಜಾಜೀಶ ೩

 

೩೫೫
ಸೌಭಾಗ್ಯ ಸಂಪನ್ನ ಸಂಪೂರ್ಣ
ಶ್ರೀ ಭೂನೀಳಾ ರಮಣ ಕಲ್ಯಾಣ ಪ
ಆಧಾರದೇವ ಭೇದ ರಹಿತ ಭಾವ
ಮೋದಕರಾ ಶ್ರೀವಾಸುದೇವ ೧
ಯಶೋದೆಯ ಸಂಗದ ಮರಿಯೆ
ದಶಾವತಾರಿ ಶೇಷಶಾಯಿಯೆ ೨
ಗರುಡವಾಹನ ಗಜವರದ ಗಮನ
ದುರಿತನಾಶನ ಜಾಜೀಜನಾರ್ಧನ ೩

 

೪೨೧
ಸ್ವಾಮಿ ನೀ ದಯಾಳುವಹುದೋ ವರಭಕ್ತೋದ್ಧಾರಕೃಷ್ಣ ಪ
ಪ್ರೇಮಾಸ್ಪದವಾದ ಕೊಳಲಗಾನದಿ ಗೋಪಿಯರಿಗೊಲಿದ ಅ.ಪ
ಸುರತರುವಿನ ಬಳಿಗೈದು ಬರಿಯ ಕೈಲಿಹೋಗುವರೆ
ಹರಿಯ ಬೆರೆದು ಭೋಗಿಪಂತೆ ವರಿಸುಜಾಜಿಕೇಶವ ೧

 

೪೨೨
ಹರಿನಿನ್ನಾಶ್ರಯ ಮಾಡಿ ಬಂದಿರುವೆನೋ
ಕರುಣದೆನ್ನ ಕರಪಿಡಿ ಕಾಯೋ ಪ
ಪರಿಪರಿ ಪೂಜಿಸಿ ಮೆಚ್ಚಿಸಲಾರೆನೊ
ಸಿರಿನಾರಾಯಣ ಶರಣೆಂಬೆ ಅ.ಪ
ವಾಲ್ಮೀಕಿ ಪರಾಶರ ವ್ಯಾಸ ಶುಕರು
ಮೇಲ್ ಮೇಲ್ ಗುಣಗಾನವ ಮಾಡೆ
ಬಾಲ್ಯಮೊದಲು ಮುದಿತನ ದೊಳಗುಂ ಸೌ
ಶೀಲ್ಯ ಸ್ತುತಿಪೆ ಶುಕನುಡಿಯಂತೆ ೧
ದಶರೂಪಗಳಂ ಧರಿಸುತ ಮರೆಸಲು
ವಿಶ್ವವ್ಯಾಪಕಗುರು ತರವೇ
ನುಸುಳುತ ಕ್ಷೀರಾಬ್ಧಿಯ ಸೇರಿದರೂ
ಕೃಷ್ಣನಾಮನಾವೆಯೊಳು ಬಹೇ ೨
ಪನ್ನಗಶಯನ ನೀನಾದರೆ ಭಯವೇಂ
ವೈನತೇಯನನೊಡಗೊಂಡು ಬಹೆ
ಉನ್ನತ ಮಾರ್ಗದಿ ಖಗವೇರಿ ಹೊರಡೆ
ನಿನ್ನ ಸೆರಗ ಪಿಡಿಯುತ ಬರುವೆ೩
ಯಮನಾಳುಗಳಿಗೆ ಸಿಕ್ಕಿಸಬೇಡೈ
ಸುಮನಸ ಪೂಜಿತ ನಮಿಸುವೆ ನಾಂ
ಭ್ರಮೆಗಳ ಬಿಡಿಸುತ ಭವಭಯ ಹರ¸
ಕಮಲನಯನ ಹೆಜ್ಜಾಜೀಶ ೪

 

೪೨೩
ಹರಿಯೆನೀನು ಒಲಿದಮೇಲೆ ಪರರ ಭಯವುಂಟೇ ಪ
ಪÀರುಷವೇದಿ ಸೋಂಕಿದ ಕಬ್ಬಿಣ ಹೊನ್ನಲ್ಲವೇ
ಸುರನದಿ ಭಾಗೀರಥಿಯೊಳು ಮಿಂದೂ ಪಾಪಿಯೇ೧
ಗರುಡದೇವನಿದಿರೊಳು ಉರಗಬಾಧೆಯಿರುವುದೇ
ಧರೆಯೊಳ್ ರವಿಯು ಉದಯನಾಗೆ ರಾತ್ರಿ ನಿಲ್ವುದೇ೨
ಗುರುವಿನ ದಯೆಯಿರುವರೇ ಕುಲದವರೇಂ ಗಯ್ಯುವರು
ಉರಿವ ಕಿಚ್ಚಿನಿದಿರೊಳಗೆ ಚಳಿಯ ಭೀತಿಯೇ ೩
ಸಂಜೀವನ ಪಿಡಿದವಂ ಮರಣಕೆ ತಾನಂಜುವನೇ
ಕಂಜನಯನ ಕಾಯ್ವನಿರಲು ಶನಿಯು ಹಿಂಸಿಪನೇ ೪
ರಾಜತನ್ನವನಾಗಿರಲ್ ವಿರಾಜಿಸುತ್ತಲಿರುವನೈ
ಜಾಜೀಶ ಕೇಶವನೇ ನಾನು ನಿನ್ನವನೈ ೫

 

೩೫೬
ಹರಿಯೇ ನಿನ್ನಯ ಸಿರಿಯನು ಬಣ್ಣಿಸೆ
ನರನಾದೆನಗಳವೇ ಪ
ಕರುಣಾಳುವೆ ನಾಂ ಕರಗಳ ಮುಗಿವೆ
ಪÀರವಾಸುದೇವ ಪರಮಾತ್ಮಾ ಅ.ಪ
ಸತಿಶ್ರೀದೇವಿಯು ನುತಚತುರಾನನ
ಪತಿತೋದ್ಧರೆ ಗಂಗೆಯು ಮಗಳು
ಸ್ತುತಿಗೈಯುವವೇದ ತತಿಯಿಂ ನಿತ್ಯ
ಭೃತ್ಯರು ಸುರಗಣ ಸರ್ವೇಶಾ ೧
ಸಾಗರ ಮಧ್ಯದಿ ಭೋಗಿಯನೊರಗಿ
ಯೋಗೀಜನರ ಹೃದಯದಿ ನೆಲಸಿ
ಆಗಮ ಪೂಜೆಯ ರಾಗದಿ ಪಡೆವ ೨
ಶಂಖಸುದರ್ಶನ ಪಂಕಜಧರಶ್ರೀ
ವೆಂಕಟವರದ ಶೀರಂಗ
ಸಂಕಟಹರನೇ ತಿರುನಾರಾಯಣ
ಕಿಂಕರ ಪಾಲಕ ಜಾಜೀಶಾ ೩

 

೪೩೫
ಹಸಿದು ನಾ ಬಳಲಲೇಕೋ ಈಸಮಯದಲ್ಲಿ
ಬಿಸಿಯೂಟ ಮಾಡುವೆನು ಪ
ಹಸನಾದ ಶೇಷಶಯನ ನಾಮದಡುಗೆಯು
ವಸುಮತೀಧವ ನಾಮರಸಾಯನವಿರೆ ಅ.ಪ
ಹರಿ ಹರಿ ಪರಮಾನ್ನವು ದುರಿತಾರಿ ಶೌರಿ
ಕರಿಗಡುಬು ಗರುಗೊಬ್ಬಟ್ಟು
ನರಸಿಂಹ ವಾಮನ ಅಂಬೊಡೆ ಹೂರಿಗೆಗಳು
ಕರಿವರದ ರವೆಯುಂಡೆ ಸಜ್ಜಿಗೆಯಿರಲು ೧
ದುಷ್ಟಮರ್ದನನೆನ್ನುವ ಇಷ್ಟವಾದ
ಹುಳಿಸಾರು ಮೊಸರುಗಳು
ಕೃಷ್ಣ ವಾಸುದೇವ ಸಣ್ಣಕ್ಕಿಯನ್ನವು
ವಿಷ್ಣು ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ ೨
ನಾರಾಯಣನೆನ್ನುವ ಸಾರವಾದ
ಹುಳಿಯನ್ನ ಮೊಸರನ್ನವು
ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು
ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ೩
ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ
ಕರಿದೆಡೆ ಮಾಡಿರಲು
ಅರಿತು ಸವಿಯನೋಡಿ ಮರೆಯದೆ ಭುಂಜಿಸಿ
ನಿರುತ ನಿಜಾನಂದ ಪಡೆಯದೆ ಬರಿದೆ ೪
ಗೋಪಾಲನೆಂದೆಂಬೊ ಸೀಪಿನ ಎಳನೀರು
ಸೀ ಪಾನಕವಿಹುವು
ತಾಪತ್ರಯಹರ ಹೆಜ್ಜಾಜಿಕೇಶವ
ಆಪದುದ್ಧಾರಕನೆಂಬಮೃತವುಣದೆ ೫

 

೪೫೨
ಹೂವಿನ ಚೆಂಡನಾಡುವ ಕಾಂತ ಭಾವಿಪರಿರುವರು ನೋಡುತ್ತ ಪ
ಈ ವಿನೋದಕೆ ಐದೆಯರಿತ್ತರೋ
ಆಹ ದುಂಡುಮಲ್ಲಿಗೆ ಸಂಪಿಗೆ ಅ.ಪ
ಅಂಬರದೊಳು ವರರಂಭೋರ್ವಶಿಯರು
ಸಂಭ್ರಮದಿಂ ಪೂಮಳೆಗರೆವರ್
ಅಂಬುಜವಾಸಿನಿ ಕೇಶವರೆಂಬೊಲು
ಕಂಬುಕಂದರಮೊಲ್ಲೆ ಹೂವಿನ ಚೆಂಡ ೧
ತಾಳಮದ್ದಳೆ ವೀಣೆಯ ನುಡಿಸಿ
ಗಾನವಗೈವರು ಗಂಧರ್ವರು
ನೀನೀಗ ಜಾಲವಮಾಡದೆ ಜಾಜಿ ಶ್ರೀಶನ
ಧ್ಯಾನಿಸಿ ಆಡು ಜಾಜಿಯ ಹೂವಿನಚೆಂಡ ೨

 

ಏಕೆ ದಯ ಬಾರದೋ
೩೮೪
ಏಕೆ ದಯ ಬಾರದೋ ಶ್ರೀಕಾಂತ ನಿನಗೆ
ಲೋಕನಾಯಕ ಎಷ್ಟು ಬೇಡಲೋ ಪ
ಜೋಕೆಯಿಂ ಸಾಕುವರದಾರೋ ಅ.ಪ
ನಿನ್ನ ಮನವಿನ್ನೆಷ್ಟು ಕಠಿಣವೋ
ಮುನ್ನ ಮಾರುತಿಯೊಡನೆ ಮಸಗಿದೆ
ಎನ್ನೊಳಗೆ ನಿರ್ದಯೆಯೊಳಿರುವುದು
ಚೆನ್ನವಲ್ಲವೊ ಇನ್ನು ಚೆನ್ನಿಗ ೧
ಕಾಣೆನೇ ಸುಧನ್ವನಂ ಕೊಲೆ
ಜಾಣ ತನವನು ತೋರ್ದನಿನ್ನನು
ಬಾಣ ತ್ರಾಣವನಣುಗನೆನ್ನೊಳು
ಮಾಣು ಶಿವಧನುಭಂಗನಿಪುಣ೨
ಮಕ್ಕಳನು ಹಡೆದವರು ಒಮ್ಮನ
ದಕ್ಕರೆಯ ಬೀರುತ್ತ ಸಲಹರೆ
ಮಕ್ಕಳಾಟಿಕೆ ಮಾಡುವೊಡೆ ನೀ
ದಕ್ಕುವರೆ ನಿನ್ನಡಿಯ ದಾಸರು ೩
ಸರ್ವಶಕ್ತನು ಆದರೇಂ ಫಲ
ಸರ್ವದಾ ಭಕ್ತರಿಗೆ ಕಷ್ಟವೆ
ನಿರ್ವಿಕಲ್ಪನೆ ಮರ್ಮವೇತಕೆ
ಧರ್ಮವ್ರತ ಪೊರೆ ಜಾಜಿಕೇಶವ ೪

 

ಹಾಡಿನ ಹೆಸರು :ಏಕೆ ದಯ ಬಾರದೋ
ಹಾಡಿದವರ ಹೆಸರು :ಪ್ರಿಯಾ ರಾಜ್
ರಾಗ :ಮೋಹನ
ತಾಳ :ಆದಿ ತಾಳ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು :ರಮಾಕಾಂತ್ ಆರ್. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಜನುಮ ಸಾರ್ಥಕವ ಮಾಡಿಸು
೩೯೩
ಜನುಮ ಸಾರ್ಥಕವ ಮಾಡಿಸು ತಂದೇ
ನೆನೆವರ ಕಾವನು ನೀನೆಂದು ಬಂದೇ ಪ
ನಾನಿರುವುದು ಲೌಕಿಕರ ಸಮೂಹ
ಏನ ಗೈವುದೋ ಪ್ರಪಂಚದ ಮೋಹ ೧
ಅಜ್ಞನು ನಾ ನನ್ನದೆಂಬುದ ಬಿಡಿಸು
ಸುಜ್ಞಾನದೀಪ ಕೊಟ್ಟು ಪ್ರಜ್ವಲಿಸು ೨
ಅಜ್ಞನಾ ಯೆನ್ನಪರಾಧಾವ ಕ್ಷಮಿಸು
ವಿಜ್ಞಾಪಿಸಿಕೊಂಬೇ ನೀ ಮನಸ್ಕರಿಸು ೩
ಹಗಲಿರಳು ಯನ್ನ ಹೆಗಲೊಳು ಕುಳಿತು
ಮಿಗಿಲಾಗಿಸು ದಿನ್ಯ ಸೇವೆಗಳನಿತು ೪
ನಾಲಗೆ ಮಧ್ಯದಿ ನೀ ನಲಿದಾಡಿ
ಬಾಳುವೆಯೆಲ್ಲವು ಭಜಿಪುದ ಮಾಡಿ ೫
ಕಣ್ಣೆಲ್ಲಿ ಸುಳಿದರೆ ಅಲ್ಲಿನೀ ಕಂಡು
ಉನ್ನತವೈಭವ ತೋರು ಮನಗೊಂಡು ೬
ಜಾಜೀಕೇಶವ ಜಯ ಪದವಿತ್ತು
ರಾಜೀವಾಂಬಕ ಪೊರೆ ಭಾರಪೊತ್ತು ೭

 

ಹಾಡಿನ ಹೆಸರು :ಜನುಮ ಸಾರ್ಥಕವ ಮಾಡಿಸು
ಹಾಡಿದವರ ಹೆಸರು :ಶ್ರೀನಾಥ್ ಎನ್.
ರಾಗ :ಮಿಶ್ರ ಗುಣಕಲಿ
ತಾಳ :ಮಿಶ್ರ ಛಾಪು ತಾಳ
ಶೈಲಿ :ಸುಗಮ
ಸಂಗೀತ ನಿರ್ದೇಶಕರು :ಲೀಲಾವತಿ ಹೆಚ್. ಆರ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಿನ್ನ ಸೊಬಗಿದೇನೊ
೩೪೬
ನಿನ್ನ ಸೊಬಗಿದೇನೊ ಶ್ರೀಹರಿ
ಉನ್ನತ ವಿಭವ ಚನ್ನಕೇಶವಾ ಪ
ಸತಿ ಸಿರಿದೇವಿಯು ಅತಿ ಚಂಚಲೆಯು
ಸುತಮದನ ತಾನನಂಗನೂ
ಸುತೆ ಬಾಗೀರಥಿ ವಕ್ರಮಾರ್ಗಳೋ
ಅತಿಶಯ ಮೈದುನ ಕ್ಷಯರೋಗಿ ೧
ಇರುವ ಮಂದಿರವು ಸಾಗರ ಮಧ್ಯವು
ಉರಗನ ಮೇಲೆ ಪವಡಿಸಿಹೆ
ಗರುಡನೇರಿ ಗಗನದಿ ತಿರುಗಾಡುವೆ
ನೆರೆ ತುಲಸಿಯ ಮಾಲೆಯ ಹಾಕಿರುವೆ ೨
ದಾನಕೊಟ್ಟವನ ಭೂಮಿಗೆ ತುಳಿದೆ
ಧ್ಯಾನ ಗೈದವನ ಶಿರವರಿದೆ
ಮಾನಿನಿ ಕೊಟ್ಟ ಸವಿಫಲಭಂಜಿಸಿ
ಮೀನ ಕೂರ್ಮ ವರಹನು ನೀನಾದೆ ೩
ಹೀಗಿದ್ದರೂ ಸತ್ಸತಿಸುತ ಬಾಂಧವ
ಭೋಗ ಭವನ ಭಾಗ್ಯಗಳಿತ್ತು
ರಾಗದಿ ರಕ್ಷಿಪೆ ಶರಣರ ನಿರುತವು
ಭಾಗವತಪ್ರಿಯ ಜಾಜಿಕೇಶವಾ ೪

 

ಹಾಡಿನ ಹೆಸರು : ನಿನ್ನ ಸೊಬಗಿದೇನೊ
ಹಾಡಿದವರ ಹೆಸರು:ಪ್ರಿಯಾ ರಾಜ್, ರಮಾಕಾಂತ್
ರಾಗ :ಆರಭಿ
ತಾಳ :ಆದಿ ತಾಳ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು :ರಮಾಕಾಂತ್ ಆರ್. ಎಸ್.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ರಾಘವದೇವ ಕೈ ಬಿಡಬೇಡ
೩೬೦
ರಾಘವದೇವ ಬಿಡಬೇಡ ಕೈಬಿಡಬೇಡ ಪ
ಆಗಮಾರ್ಚಿತ ಪಾದಪದ್ಮಪಿಡಿದೆ
ಬಿಡಬೇಡ ಕೈಬಿಡಬೇಡ ಅ.ಪ
ಸೀತಾಕಾಂತನೆ ನಿನ್ನ ಭ್ರಾತಲಕ್ಷ್ಮಣನಂತೆ
ಪ್ರೀತಿಸುತೆನ್ನ ಸನಾಥನೆನಿಸು ೧
ನಂಬಿಬಂದ ವಿಭೀಷಣನನು ಬಲು
ಸಂಭ್ರಮದೊಳು ಲಂಕಾರಾಜನ ಗೈದ೨
ಹನುಮನಂದದಿ ಸೇವೆಮಾಡಿ ಮೆಚ್ಚಿಸಲಾರೆ
ಕನಿಕರದೆನ್ನೊಳು ಘನಮನ ಮಾಡು ೩
ದುಷ್ಟಜನಕೆ ಭಯ ಶಿಷ್ಟಜನಕೆ ಜಯ
ಕೊಟ್ಟು ಭಕ್ತರಕಾವ ದಿಟ್ಟಹೆಜ್ಜಾಜೀಶ ೪

 

ಹಾಡಿನ ಹೆಸರು : ರಾಘವದೇವ ಕೈ ಬಿಡಬೇಡ
ಹಾಡಿದವರ ಹೆಸರು :ರೋಹಿಣಿ ಮೋಹನ್
ರಾಗ :ಶುಭಪಂತುವರಾಳಿ
ತಾಳ : ಏಕ ತಾಳ
ಶೈಲಿ :ಸುಗಮ
ಸಂಗೀತ ನಿರ್ದೇಶಕರು :ಲೀಲಾವತಿ ಹೆಚ್. ಆರ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹರಿಯೇ ನಿನ್ನಯ ಸಿರಿಯನು
೩೫೬
ಹರಿಯೇ ನಿನ್ನಯ ಸಿರಿಯನು ಬಣ್ಣಿಸೆ
ನರನಾದೆನಗಳವೇ ಪ
ಕರುಣಾಳುವೆ ನಾಂ ಕರಗಳ ಮುಗಿವೆ
ಪÀರವಾಸುದೇವ ಪರಮಾತ್ಮಾ ಅ.ಪ
ಸತಿಶ್ರೀದೇವಿಯು ನುತಚತುರಾನನ
ಪತಿತೋದ್ಧರೆ ಗಂಗೆಯು ಮಗಳು
ಸ್ತುತಿಗೈಯುವವೇದ ತತಿಯಿಂ ನಿತ್ಯ
ಭೃತ್ಯರು ಸುರಗಣ ಸರ್ವೇಶಾ ೧
ಸಾಗರ ಮಧ್ಯದಿ ಭೋಗಿಯನೊರಗಿ
ಯೋಗೀಜನರ ಹೃದಯದಿ ನೆಲಸಿ
ಆಗಮ ಪೂಜೆಯ ರಾಗದಿ ಪಡೆವ ೨
ಶಂಖಸುದರ್ಶನ ಪಂಕಜಧರಶ್ರೀ
ವೆಂಕಟವರದ ಶೀರಂಗ
ಸಂಕಟಹರನೇ ತಿರುನಾರಾಯಣ
ಕಿಂಕರ ಪಾಲಕ ಜಾಜೀಶಾ ೩

 

ಹಾಡಿನ ಹೆಸರು :ಹರಿಯೇ ನಿನ್ನಯ ಸಿರಿಯನು
ಹಾಡಿದವರ ಹೆಸರು :ನಳಿನಿ ಕಾಮತ್
ರಾಗ :ನಟ ಭೈರವಿ
ತಾಳ : ಆದಿ ತಾಳ
ಸಂಗೀತ ನಿರ್ದೇಶಕರು :ಕಾವೇರಿ ಶ್ರೀಧರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *