Categories
ರಚನೆಗಳು

ಶ್ರೀದವಿಠಲರು

ಆತ್ಮನಿವೇದನೆ
೫೩
ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ
ಭಂಜನ ಹರಿ ಶರಣರ ಕಾವಾ ಪ
ಮಾತ ಹೇಳುವೆ ನಿನಗೊಂದ
ಪರರಜ್ಯೋತಿ ಕಾಣುವತನಕೀ ಬಂಧ
ಭೂತ ಭೇತಾಳಗಳಿಂದ ನಿನಗೆ
ಭೀತಿ ಪುಟ್ಟಲಿಲ್ಲೋ ಮತಿಮಂದ ೧
ಛೇದ ಭೇದಗಳು ನಿನಗೆಲ್ಲಿ ನೀ ಅ-
ನಾದಿ ನಿತ್ಯವೆಂಬುದ ಬಲ್ಲಿ
ವೇದ ಬಾಹ್ಯರಾಗದೆ ಇಲ್ಲಿ ಹರಿ
ಪಾದ ಇನ್ಯಾಕೆ ಪೂಜಿಸಲೊಲ್ಲಿ ೨
ನೀನು ನಿನ್ನದು ಅಲ್ಲವೋ ನೋಡಾ ದೇಹ
ನಾನು ನನ್ನದೆಂಬರೋ ಮೂಢಾ
ಮಾನಹಾನಿ ಮಾಡಿಕೊಳಬೇಡ ಬಿಡು
ಸಾನುಬಂಧಿಗಳ ಸ್ನೇಹವ ಗಾಢ ೩
ಅಹಿತಾದಿ ವಿಭೂತಿಯ ನೋಡೋ
ಸೋಹಂ ಎಂಬರೆ ವಿಘಾತಿಯ
ನೇಹವ ಪಡೆವರೆ ಗೀತೆಯ ಕೇಳಿ
ಮೋಹವ ಕಳಕೋ ವಿಜಾತಿಯ ೪
ಮಧ್ವವಲ್ಲಭ ಮಾಡಿದ ಗ್ರಂಥ
ದೊಳಗದ್ವೈತತ್ರಯ ತಿಳಿದಂಥ
ವಿದ್ವಾಂಸರು ಚರಿಸುವ ಪಂಥವನ್ನು
ಸದ್ಭಕ್ತಿಲಿ ಸಾಧಿಸು ಭ್ರಾಂತ ೫
ಜಾಗರ ಸ್ವಪ್ನ ಸುಷುಪ್ತಿಗಳೊಳು ವರ
ಭೋಗಿಶಯನನ ರೂಪಗಳೇಳು
ಭಾಗವತ ಬಲ್ಲವರ ಕೇಳು ಬೃಹ-
ದ್ಯಾಗವ ಹರಿಗರ್ಪಿಸಿ ಬಾಳು ೬
ಪಂಚಾತುಮ ಸಿಲುಕವ ಷಟ್ ಪಂಚ
ಪಂಚಿಕೆಗಳ ಕರ್ಮವ ಮೀಟಿ
ಪಂಚಿಕೆ ತಿಳಿದುಕೊಂಡರೆ ನಿಷ್ಪ್ರ
ಪಂಚನಾಗಿ ನೀ ಕಡೆದಾಟಿ ೭
ಜ್ಞಾನೇಚ್ಛಾ ಕ್ರಿಯಾ ಶಕ್ತಿಗಳೆಂಬ ಈ ಮ-
ಹಾನುಭಾವದಿ ನಿನ್ನ ಬಿಂಬ
ತಾನೇ ಸರ್ವತ್ರದಲಿ ಕಾಂಬ ಇದ-
ಕೇನು ಸಂದೇಹವಿಲ್ಲವೋ ಶುಂಭ ೮
ತಾಪತ್ರಯಂಗಳು ನಿನಗೆಲ್ಲಿ ಪುಣ್ಯ
ಪಾಪಕ್ಕೆ ಲೇಪನಾಗೋಕೆ ಹೊಲ್ಲ
ಪ್ರಾಪಕ ಸ್ಥಾಪಕ ಹರಿಯೆಲ್ಲ ಜಗ
ದ್ವ್ಯಾಪಕನೆಂದರಿತರೆ ಕೊಲ್ಲ ೯
ಡಿಂಭದೊಳಗೆ ಚೇತನವಿಟ್ಟು ಜಗ-
ದಂಬಾರಮಣ ಮಾಡಿದ ಕಟ್ಟು
ಉಂಬುಡುವ ಕ್ರಿಯೆಗಳನಷ್ಟು ನಿನ್ನ
ಬಿಂಬನಾಧೀನನಾದರೆ ಇಷ್ಟ ೧೦
ಲಕ್ಕುಮಿ ಅವನ ಪಟ್ಟದ ರಾಣಿ ದೇ-
ವರ್ಕಳು ಪರಿಚಾರಕ ಶ್ರೇಣಿ
ವಕ್ಕಲು ನಾವೆಲ್ಲರು ಪ್ರಾಣಿ ದಶ-
ದಿಕ್ಕುನಾಳುವ ನಮ್ಮ ದೊರೆಯ ನೀ ೧೧
ಮತ್ರ್ಯಲೋಕದ ಸಂಪದ ಪೊಳ್ಳು ಜಗ
ಮಿಥ್ಯಮತವೆಂದಿಗು ಜೊಳ್ಳು
ಶ್ರುತ್ಯನ್ನರ್ಥ ಪೇಳ್ವದೇ ಸುಳ್ಳು ನೀ
ಭೃತ್ಯನು ಕರ್ತನಾಗದಿರೆಲೋ ಕೇಳು೧೨
ಮಾಧವನಲಿ ತನುಮನ ಮೆಚ್ಚು
ಕ್ರೋಧರೂಪದ ಕಲಿಮಲ ಕೊಚ್ಚು
ಮೋದತೀರ್ಥರ ವಚನವ ಮೆಚ್ಚು
ವಾದಿ ಮತಕ್ಕೆ ಬೆಂಕಿಯ ಹಚ್ಚು ೧೩
ಸವಿವುಳ್ಳರೆ ಕೇಳೆನ್ನಯ ಸೊಲ್ಲ ನಮ್ಮ
ಪವನನಯ್ಯನ ಪ್ರೇರಣೆಯಿಲ್ಲ
ಎವೆಯಿಕ್ಕಲರಿಯದೀ ಜಗವೆಲ್ಲ ಎಂದು
ಶಿವ ತನ್ನ ಸತಿಗೆ ಹೇಳಿದನಲ್ಲ ೧೪
ಧ್ರುವ ಬಲ್ಯಾದಿ ರಾಯರ ನೋಡು ನಿನ್ನ
ಅವಗುಣಗಳನೆಲ್ಲಾ ಈಡ್ಯಾಡೋ
ಅವಶ್ಯವಾಗಿ ಕರ್ಮವ ಮಾಡೋ ಮಾ-
ಧವ ನಿನ್ನವನೆಂದು ನಲಿದಾಡೋ ೧೫
ನಿಂದಾ ಸ್ತುತಿಗಳ ತಾಳಿಕೋ ಬಲು
ಸಂದೇಹ ಬಂದಲ್ಲಿ ಕೇಳಿಕೋ
ಬಂದವರಿಂದಲಿ ಬಾಳಿಕೋ ಗೋ-
ವಿಂದ ನಿನ್ನವನೆಂದು ಹೇಳಿಕೋ ೧೬
ತತ್ವವಿಚಾರವ ಮಾಡಿಕೋ ನಿನ್ನ
ಭಕ್ತಿಯ ಆಳವ ಅಳಿದುಕೋ
ಮತ್ತೆ ಮಾಯಾ ಮೋಹ ಕಳೆದುಕೋ ನಿನ್ನ
ಹತ್ತಿರ ಹರಿಯಿರುವ ನೋಡಿಕೋ ೧೭
ಹಿಂಡು ದೈವಗಳಿಂದ್ಹಿರಿಯನೀತ ತನ್ನ
ತೊಂಡನೆಂದದವರಿಗೆ ತಾ ಸೋತಾ
ದಂಡಿಸಿ ದಯಮಾಡುವ ದಾತಾ ಭೂ-
ಮಂಡಲದೊಳಗೆಲ್ಲ ಪ್ರಣ್ಯತಾ ೧೮
ನಾಡ ಖೋಡಿ ದೈವಗಳಂತೆ ತನ್ನ
ಬೇಡಲು ತಾ ಬೇಡಿಕೊಳನಂತೆ
ನೀಡುವ ನಿಖಿಳಾರ್ಥವದಂತೆ ನಿಜ
ನೋಡಿಕೋ ನಿನಗ್ಯಾತರ ಚಿಂತೆ ೧೯
ಏನು ಕೊಟ್ಟರೆ ಕೈಚಾಚುವ ತನ್ನಾ-
ಧೀನವೆಂದರೆ ನಸುನಾಚುವಾ
ದಾನವ ಕೊಡಲೂರಿ ಗೀಚುವ ತನ್ನಲಿ
ತಾನೇವೇ ಮನದೊಳು ಸೂಚುವ೨೦
ಕರಕರದಲ್ಲಿ ತಾ ಬರುವಾನು
ಮರತುಬಿಟ್ಟವರ ತಾ ಮರೆಯಾನು ನಿಜ
ಶರಣರ ಕಾದುಕೊಂಡಿರುವಾನು ತನ್ನ
ಸರಿಯಂದವರ ಹಲ್ಲು ಮುರಿದಾನು ೨೧
ಆರು ಮುನಿದು ಮಾಡುವದೇನು ಪ್ರೇರ್ಯ
ಪ್ರೇರಕರೊಳಗಿದ್ದು ಹರಿ ತಾನು
ಓರಂತೆ ಕಾರ್ಯವ ನಡೆಸೋನು ಮುಖ್ಯ
ಕಾರಣ ಶ್ರೀಹರಿ ಅಲ್ಲವೇನೋ ೨೨
ಹಲವು ಹಂಬಲಿಸಲ್ಯಾತಕೆ ಹುಚ್ಚಾ ವಿದ್ಯಾ
ಕುಲಶೀಲಧನದಿಂದ ಹರಿ ಮೆಚ್ಚಾ
ಕಲಿಯುಗದೊಳಗಾರ್ಯರ ಪೆಚ್ಚಾ ತಿಳಿ
ಸುಲಭೋಪಾಯಾದಿಗಳ ನಿಚ್ಯಾ ೨೩
ದುರ್ಜನರೊಳು ದೈನ್ಯ ಬಡದಿರು ಸಾಧು
ಸಜ್ಜನರೊಳು ವೈರ ತೊಡದಿರು
ಅರ್ಜುನಸಖನಂಘ್ರಿ ಬಿಡದಿರು ನಿ-
ರ್ಲಜ್ಜನಾಗಿ ಬಾಯ್ಬಿಡದಿರು ೨೪
ಭಯರೂಪದಿ ಒಳಹೊರಗಿದ್ದು ನಿ-
ರ್ಭಯ ನಾಮಕನು ಧೈರ್ಯವನೆ ಗೆದ್ದು
ಭಯದೋರುವನೆಂಬುದೆ ಮದ್ದು ಮಹಾ
ಭಯಕೃದ್ಭಯಹಾರಿಯನೆ ಪೊಂದು ೨೫
ಪರಸತಿಯರ ಸಂಗವ ಬಿಡು ಹರಿ
ಸರ್ವೋತ್ತಮನೆಂದು ಕೊಂಡಾಡು
ಪರಮಾತ್ಮನ ಧ್ಯಾನವ ಮಾಡು ನರ
ಹರಿದಾಸರಂಗಳ ಒಡಗೂಡು ೨೬
ಸೃಷ್ಟಿಗೊಡೆಯ ಶ್ರೀದವಿಠಲ
ವಿಷ್ಟಾವಿಷ್ಟನಾಗಿದ್ದೆಲ್ಲ
ಇಷ್ಟಾನಿಷ್ಟವ ಕೊಡಬಲ್ಲ ಮನ-
ಮುಟ್ಟಿದವರ ಬೆಂಬಿಡನಲ್ಲಾ ೨೭

 

೩೯
ಶಿವ-ಪಾರ್ವತಿ
ಅಗಜೆ ನಿನ್ನೊಗತನಕೆ ಜಗ ನಗುವುದೇ
ನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ ಪ
ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡ
ತೊಟ್ಟ ತೊಗಲುಡುಗೆ ತಲೆಯೋಡು ಕೈಯ
ಸುಟ್ಟ ಸುಡಗಾಡ ಮನೆ ಅಖಿಲ ಭೂತೇಶ ಬಲು
ಸಿಟ್ಟಿನವನಂಗಸಂಗ ಬಯಸಬಹುದೆ ೧
ಆರುಮೊಗದವನೊಬ್ಬ ಆರ್ತಜನು ಮೊಲೆಪಾಲು
ಕಾರಿ ಕಡುಮುನಿದು ಕಂಡರೆ ಸೇರರು
ಊರಿಗುಪಕಾರಿ ಒಡಲಹರಕ ಗಜಮುಖನು
ನಾರಿ ಮೇನಕೆ ಮಗಳು ಕಂಡು ಹಿಗ್ಗುವಳಯ್ಯ ೨
ಶಿವಶಕ್ತಿ ನಿನ್ನಂಥ ಸೌಭಾಗ್ಯವಂತೆಯಳ
ಭುವನದೊಳಗಾವಲ್ಲಿ ಕಾಣೆನಿನ್ನು
ಕವಿಜನಗಳೇನೆಂದು ಬಣ್ಣಿಸಿದರೊ ತಿಳಿಯೆ
ಭವದೂರ ಶ್ರೀದವಿಠಲರಾಯ ಬಲ್ಲ ೩

 

ಭಗವಂತ-ಭಕ್ತನಲ್ಲಿರುವ

ಅಯ್ಯೊ ಸಾಕಿದೇನು ಚಂದಾ ಮೈ
ಸೋಕದಿರೆಲೋ ಮುಕುಂದ ಪ
ಗಂಡನುಳ್ಳ ನಿಜ ಗರತೀ ಒಡ-
ಗೊಂಡು ಬದಿಗೆ ಕೈ ತರುತೀ ಬಲು
ಪುಂಡಾಟಗಳ ನೀನೆಸಗುತೀ೧
ಹೆಚ್ಚು ನುಡಿಯದಿರು ನಂಟು ಕಂಡು
ಹುಚ್ಚು ಮಾಡುವದುಂಟೂ ನಡೆ
ಬಿಚ್ಚದಿರೆಲೊ ಮೊಲೆಗಂಟೂ ೨
ಶ್ರೀದವಿಠಲ ಯದುರಾಯಾ ನಿನ್ನ
ಪಾದಕೆರಗುವೆನಯ್ಯಾ ನಡು-
ಬೀದಿಯೊಳಗೆ ಬಿಡು ಕೈಯ್ಯಾ ೩

 


ಅವನೆ ಧನ್ಯನೆಲಾ ಜಗದೊಳು
ಇವನೇ ಮಾನ್ಯನೆಲಾಪ
ಆವ ಪರಿಯಲಿಂದಾದರು ತನ್ನಯ
ಭಾವ ಶುದ್ಧಿಯಲಿ ಭಗವತ್ಪರನಾದವನೆ ಧನ್ಯ ೧
ಆತ್ಮೇಂತರ ಸಂಸ್ರ‍ಕತಿಯೊಳಿದ್ದು
ಸ್ವಾತ್ಮಲಾಭ ಸಿದ್ಧಿಯ ಸಾಧಿಸಿಕೊಂಡವನೆ ೨
ಶ್ರೀದವಿಠಲನ ಸಾಕ್ಷಾತ್ಕರಿಸಿ
ಸಾಧು ಸೇವ್ಯ ಚಿತ್ಸುಖಮಯವಾದುದವನೇ ಧನ್ಯನೆಲಾ ೩

 

ಆ ಬಾಲಗೋಪಾಲ ವರ್ಣನೆ
೨೧
ಆಡ ಹೋಗುವಾ ಬಾರೊ ರಂಗಾ ಪ
ಆಡ ಹೋಗುವಾ ಬಾರೊ ರಂಗಾ
ಕೂಡಿ ಕಾಳಿಂದೀ ತೀರದಲ್ಲಿ
ನಾಡ ಗೊಲ್ಲರ ಹೆಂಗಳಿಗೆಲ್ಲ
ಬೇಡಿದಿಷ್ಟಾರ್ಥಗಳ ಕೊಡುವಾ ಅ.ಪ.
ಆಣಿಕಲ್ಲು ಗೋಲಿ ಗಜ್ಜುಗ
ಚಿಣ್ಣಿಕೋಲು ಚಂಡು ಬುಗುರಿ
ಕಣ್ಣುಮುಚ್ಚಾಲೆ ಕುಂಟಹಲಿಪೆ
ಬಣ್ಣ ಬಣ್ಣದಾಟಗಳನು ೧
ಸೋಲುಗೆಲವಿಗೆಲ್ಲ ನೀನೆ
ಪಾಲುಗಾರನಾಗಿ ನಮ್ಮ
ಮೇಲೆ ಮಮತೆ ಇಟ್ಟು ಸಾನು –
ಕೂಲನಾಗಿ ಕೈಯ್ಯ ಪಿಡಿಯೋ೨
ಮೆಟ್ಟು ಮೆಟ್ಟು ಕೋಲು ಕೈಲಿ
ಕಟ್ಟು ಬುತ್ತಿ ಕೊಳಲು ಕಂಬಳಿ
ಧಿಟ್ಟ ಗೋವಳರಾಮ ಶ್ರೀದ –
ವಿಠಲಯ್ಯ ಯಾಕೆ ತಡವೋ೩

 

ಇತಿಹಾಸಪ್ರಸಿದ್ಧ ಶ್ರೀ ವ್ಯಾಸತೀರ್ಥಯತಿಗಳ
(ಈ) ಯತಿವರ್ಯರು
೪೨
ಶ್ರೀ ವ್ಯಾಸರಾಯರ ಸ್ತುತಿ
ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ
ದುರುಳ ವಾದಿಗಳನ್ನು ಮರುಳು ಮಾಡೋರನ್ನ
ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ
ಧರಣಿ ಸುರರ ಪರಿವೃಢರ ಸುನಿಕರಕೆ
ಪರಿಪರಿಯಲಿ ಉಪದೇಶಿಸುತಿಪ್ಪಗೆ ೧
ಕನಕ ಕಶಿಪುತನಯನ ಘನ ಅಂಶದಿ
ಫಣಿಗಣ ರಮಣನಾವೇಶದಿ ಪೊಳೆಯುತ
ದಿನದಿನದಲಿ ಹರಿಮನ ತಣಿಸುತಲಿಹ
ಘನ ಮಹಿಮನೆ ಶ್ರೀ ಯತಿಕುಲತಿಲಕಾ ೨
ಲಂಡವಾದಿಗಳ ಉದ್ದಂಡ ವಿತಂಡಕೆ
ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ
ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ
ಷಂಡಗಳನೆ ಖಂಡಿಸುತಿಹ ಯತಿಯೆ ೩
ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ
ಬ್ರಹ್ಮಜನಕ ನರಸಿಂಹ ಮೂರುತಿಯ ಹೃ-
ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ
ಹೃದಯಾಂಬುಧಿಯೊಳು ಮೆರೆವಗೆ ೪
ದಶದಿಶೆಯಲಿ ದಶರಥಸುತ ಮಹಿಮೆಯ
ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ
ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ
ವಸುಧಿಯೊಳಗೆ ಸುಕರ ಸುಚರಿತೆಗೆ ೫
ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು
ನಲಿಯುತ ಕುಣಿಕುಣಿದಾಡುತಲಿಪ್ಪನು
ಥಳಥಳಿಸುವ ರಾಮ ವೇದವ್ಯಾಸರು ನಿಮ-
ಗಿಳೆಯೊಳಮೂಲ್ಯ ಪ್ರಸಾದವನೀವರು ೬
ಅಡಿಗಡಿಗತಿ ದೃಢತರ ಯುಕ್ತಿಗಳಿಂದ
ಸಡಗರದಿಂದಲಿ ಬಿಡದೆ ನುಡಿಯುತ
ನಡದದ್ವೈತದಡವಿಯೊಳಗೆ ಪೊಕ್ಕು
ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ ೭
ಶ್ರೀದವಿಠಲಗತಿ ಪ್ರೀಯರಾದ ಶ್ರೀ-
ಪಾದರಾಯರಲಿ ಓದಿ ಗ್ರಂಥಗಳ
ವಾದಿರಾಜ ವಿಜಯೀಂದ್ರ ಪ್ರಮುಖರಿಗೆ
ಆದರದಲಿ ಪಾಠ ಹೇಳುತಲಿಪ್ಪಗೆ ೮

 

೫೪
ಇನ್ಯಾತಕನುಮಾನವಯ್ಯಾ ಪ
ಅನ್ಯಥಾ ಗತಿ ಕಾಣೆ ನಿನ್ನ ಚರಣಗಳಾಣೆ ಅ.ಪ.
ನಾಶರಹಿತನೆ ನಮಗೆ ಏಸೇಸು ಕಲ್ಪಕ್ಕು
ವಾಸ ಏಕತ್ರದಲ್ಲಿ
ನೀ ಸಾಕ್ಷಿಯಾಗಿದ್ದು ದಾಸನಾದವಗಪ್ರ-
ಯಾಸದಿ ಫಲಗಳುಣಿಸಿ
ಲೇಶ ಘನಮಾಡಿ ಸಂತೋಷಪಡುವಾ ನಿನ್ನ
ದ್ವೇಷಿ ನಾನಲ್ಲವಯ್ಯ
ದೇಶಕಾಲಾದಿಗಳಿಗೀಶ ನೀನೆಂದರಿದು
ದಾಸನಾಗಿರುವೆನೆಂದಾಶೆ ಪುಟ್ಟಿದ ಬಳಿಕ ೧
ನಿತ್ಯ ತೃಪ್ತನೆ ನಿನ್ನ ಕೃತ್ಯಕೇನೆಂಬೆನೋ
ಸತ್ಯಸಂಕಲ್ಪ ಹರಿಯೇ
ಮೃತ್ಯುಮಾರಿಗಳೆನಗೆ ಹತ್ತಿಕೊಂಡದರಿಂದ
ಸತ್ತುಪುಟ್ಟುವೆಯಿನ್ನು
ದತ್ತಕರ್ತೃತ್ವ ಬೆನ್ಹತ್ತಿಕೊಂಡದರಲ್ಲಿ
ಚಿತ್ತೈಸೊ ಎನ್ನ ಮಾತಾ
ಅತ್ಯಪರಾಧಿಯಂದತ್ತ ಮೊಗದಿರುಗದಿರು
ಭೃತ್ಯವತ್ಸಲನೆಂದಗತ್ಯ ಮನಸೋತ ಬಳಿಕ ೨
ವೇದವೇದ್ಯ ಸ್ವಗತ ಭೇದವರ್ಜಿತ ಪೂರ್ಣ
ಬೂೀಧರ್ತಿರ್ಥಾರ್ಯರಾಪ್ತಾ
ಯಾದವಕುಲೋತ್ತಂಸ ಮಾಧವ ಮಹಿದಾಸ
ಬೋಧಮಯ ಧನ್ವಂತ್ರೀ
ಆದಿನಾರಾಯಣ ವಿನೋದ ವಿಷ್ವಕ್ಸೇನ
ತೋದಕ ಕ್ಷೇಮಧಾಮಾ
ಶ್ರೀದವಿಠಲಾ ನಿನ್ನ ಕ್ರೋಧ ವರರೂಪ-
ವಾದ ವಾರ್ತೆಯು ಕೇಳಿ ಧೈರ್ಯಬಿಡದಾ ಬಳಿಕಿನ್ನು ೩

 

೨೨
ಉದಯಕಾಲದೊಳೆದ್ದು ಗೋಪಿಯು
ದಧಿಯ ಮಥಿಸುವ ಎಂಬ ಸಮಯದಿ
ಉದರಗಣ್ಣನು ಎದ್ದು ತೊಟ್ಟಿಲೊಳ್
ತೊದಲು ನುಡಿಗಳಿಂ ಕರೆದ ತಾಯಿಯ ೧
ನುಡಿಯ ಲಾಲಿಸಿ ನಳಿನನೇತ್ರನು
ಕರೆದ ಹಾಲನು ಕೊಡುವೆನೆಂದರೆ
ಕೊಡುವೆನೆಂದರೆ ಕಣ್ಣಮುಚ್ಚನು
ಒಡನೆ ಮಲಗುವ ಮಲಗದೇಳುವ ೨
ನಿದ್ರೆ ತೀರದೆ ನೀ ಎದ್ದ ಕಾರಣ
ಬುದ್ಧಿ ಸಾಲದು ಮುದ್ದು ಮಗುವಿಗೆ
ಒದ್ದು ಕೆಲಸವ ತಿದ್ದಿ ಉನ್ಮತ
ಅಮ್ಮ ಬಾರೆಲೆ ಎನ್ನಗಲಬೇಡವೆ ೩
ಗುಮ್ಮ ಬರುತದೆ ಗುಸುಗುಸೆನುತದೆ
ಶ್ರೀದವಿಠಲನಾ ಶ್ರೀಲತಾಂಗಿಯು
ಮೋದಪಡಿಸುವ ಮಾನವೀಯಳೇ
ವೇದಗೋಚರ ನೀ ಏಳಬೇಡವೋ
ಪಾದಕೆರಗುವೆ ಪವಡಿಸೆಂದಳು ೪

 


ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ
ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ –
ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ
ಮುಂದೆ ಗತಿ ಏನಯ್ಯ ಮುಕುತರ
ಹಿಂದುಳಿದವನಲ್ಲದಲೆ ತನು ಸಂ –
ಬಂಧಿಗಳ ವಶನಾಗಿ ದುರ್ವಿಷ –
ಯಾಂಧಕಾರದಿ ಮುಳುಗಿದೆನೊ ನಾ ಅ.ಪ.
ಹಲವು ಜನ್ಮದ ನೋವಾ ನಾ
ಹೇಳಿಕೊಳಲೇನೆಲವೊ ದೇವರ ದೇವಾ ನೀ –
ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ
ಸುಲಭರೊಳಗತಿ ಸುಲಭನೆಂಬುವ
ಅಲವಬೋಧಮತಾನುಗರು ಎನ –
ಗೊಲಿದು ಪೇಳಲು ಕೇಳಿ ನಿಶ್ಚಂ –
ಚಲದಿ ನಿನ್ನನೆ ಧೇನಿಸುವೆ ನಾ
ಕಲುಷ ಸಂಸ್ಕಾರಗಳ ವಶದಿಂ
ಹೊಲಬುಗಾಣದೆ ಹರುಷಗುಂದುವೆ
ಹೊಲೆ ಮನದ ಹರಿದಾಟ ತಪ್ಪಿಸಿ
ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು ೧
ಭಾರತೀಪತಿಪ್ರೀಯಾ ಎಂದೆಂದು ಭಕುತರ
ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ –
ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ
ತಾರಕನು ನೀನೆಂದು ತಿಳಿಯದ
ಕಾರಣದಿ ಸುಖ ದುಃಖಮಯ ಸಂ –
ಸಾರ ದುಸ್ತರ ಶರಧಿಯೊಳು ನಾ
ಪಾರಗಾಣದೆ ಪರಿದು ಪೋಪೆನೊ
ದೂರನೋಳ್ಪದು ಧರ್ಮವಲ್ಲವೊ
ದ್ವಾರಕಾಪುರನಿಲಯ ಪರಮೋ –
ದಾರ ತನುವೆಂದೆನ್ನ ಪಾಲಿಗೆ
ಬಾರದಲ್ಲದೆ ಭವವಿಮೋಚನ ೨
ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ –
ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ –
ಸುಖಗುಣಾರ್ಣವ ಶ್ರೀದವಿಠಲಪ್ರಸೀದ
ಸಕಲ ಕ್ರಿಯ ಯೋಗಗಳು ತನು ಬಂ-
ಧಕವು ನಿನಗೊಪ್ಪಿಸದಿರಲು ಎನೆ
ನಿಖಿಳ ಜೀವರ ಭಿನ್ನ ನಿನ್ನಯ
ಯುಕುತಿಗೆ ನಮೊ ಎಂಬೆನಲ್ಲದೆ
ಯುಕುತ ಯುಕ್ತಿಗಳೊಂದರಿಯದ –
ರ್ಭಕನ ಬಿನ್ನಪ ಸಲಿಸಿ ನವವಿಧ
ಭಕುತಿ ಭಾಗ್ಯವ ಕೊಟ್ಟು ತವ ಸೇ –
ವಕರ ಸೇವಕನೆನಿಸದಿರ್ದೊಡೆ ೩

 

ಭಗವಂತನಿಗೆ ಅನನ್ಯವಾಗಿ
೫೫
ಎಲೆ ಮನವೆ ಯದುಲಲಾಮನಗಲದೆ
ಭಲಾ ಭಲಾ ಎನಿಸನುಗಾಲಾ ಪ
ತನು ಮನ ಧನ ದಾರಾಪತ್ಯರ ನೀ
ನೆನಿಸದಿರಭಿಮಾನಕೆ ಮೂಲಾ ೧
ಗುರುಹಿರಿಯರ ಸತ್ಕರಿಸಿ ಬ್ಯಾಗ ಪರಿ
ಹರಿಸಿಕೊ ಜನನ ಮರಣಜಾಲಾ ೨
ಶ್ರೀದವಿಠ್ಠಲನ ಪಾದ ಸ್ಮರಣೆಯ
ಸಾಧಿಸು ಮುಕ್ತಾಮಣಿಮಾಲಾ ೩

 

೨೩
ಎಲ್ಯಾಡಿ ಬಂದ್ಯೋ ಮುದ್ದು ರಂಗಯ್ಯಾ ನೀ – *
ನೆಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ಪ
ಆಲಯದೊಳಗೆ ನೀನಾಡದೆ ಬೆಣ್ಣೆ
ಪಾಲು ಸಕ್ಕರೆಯನೊಲ್ಲದೆ ಚಿಕ್ಕ
ಬಾಲೇಯರೊಳು ನೀನಾಡದೆ
ಬಾಲಯ್ಯ ನೀಯೆನ್ನ ಕಣ್ಣ ಮುಂದಾಡದೆ ೧
ಬಿಟ್ಟ ಮುತ್ತಿನ ಬೊಗಸೆ ಕಂಗಳು
ಫಣಿಯೊಳಿಟ್ಟ ಕಸ್ತೂರಿ ತಿಲಕ ಗಂಧವು
ದಿಟ್ಟತನದಿ ಬರುವ ಅಂದವು ಮುದ್ದು
ಕೃಷ್ಣ ನೀಯೆನ್ನ ಕಣ್ಣ ಮುಂದಾಡದೆ ೨
ಅಷ್ಟದಿಕ್ಕಲಿ ಅರಸಿ ಕಾಣದೆ ಬಾಳ
ದೃಷ್ಟಿಗೆಟ್ಟೆನೊ ನಿನ್ನ ನೋಡದೆ –
ನ್ನೆಷ್ಟು ಪೇಳಲಿ ಹೇಳಬಾರದೆ ಶ್ರೀದ –
ವಿಠಲ ನೀಯೆನ್ನ ಕಣ್ಣ ಮುಂದಾಡದೆ ೩

 


ಏನಿದು ಕೌತುಕವೋ ವಿಠಲಾ
ಏನಿದು ಕೌತುಕವೋ ಪ
ಏನಿದು ಕೌತುಕ ಪಂಢರಿಯನೆ ಬಿಟ್ಟು
ನೀನಿಲ್ಲಿಗೆ ಬಂದ್ಯ ವಿಠಲಾ ಅ.ಪ.
ಮಿಥ್ಯಾವಾದಿಗಳು ನಿನ್ನ ಸುತ್ತುಮುತ್ತಿಕೊಂಡು
ಅತ್ತು ಕರೆದು ಕೂಗುತ್ತಿರೆ ಬಹು ಬ್ಯಾಸತ್ತು ಬಂದೆಯಾ ವಿಠಲ ೧
ಮಧ್ವದ್ವೇಷಿಗಳು ಮಾಡುವ ಪದ್ಧತಿಯನು ಕಂಡು
ಹೃದ್ಯವಾಗದೆ ಕದ್ದ ಕಳ್ಳನಂತೆದ್ದು ಇಲ್ಲಿಗೆ ಬಂದ್ಯಾ ವಿಠಲಾ ೨
ಶ್ರೀಞ್ವಿಠಲ ನಿಮ್ಮ ಸದ್ಗುಣ ವೇದಶಾಸ್ತ್ರದಲ್ಲಿ
ಶೋಧಿಸಿ ನೋಡುವ ಭೂದೇವರಿಗೊಲಿದಾದರಿಸಲು
ಬಂದ್ಯಾ ವಿಠಲಾ ೩

 


ಓ ಎನ್ನಬಾರದೆ ಓಂಕಾರ ಪ್ರತಿಪಾದ್ಯ ಪ
ಕರಿರಾಜ ಕರೆಯಲು ತ್ವರಿತದಿಂದಲಿ ಬಂದು
ಪೊರೆಯಲು ನಿನಗವ ಮರಿಮಗನೇನೋ ೧
ಅಂದು ಅಜಾಮಿಳ ಕಂದನ ಕರೆಯಲು
ಬಂದು ಸಲಹಿದೆ ಬಂಧು ನೀನವಗೇನೋ ೨
ಕರುಣಾಸಾಗರ ದೊರೆ ಶ್ರೀದವಿಠ್ಠಲ
ಕರವ ಮುಗಿದು ಕೂಗೆ ಬರದಿರೆ ಘನವೇನೋ ೩

 

೫೬
ಕರುಣಿಸುವುದು ಎನ್ನಾ ಕರಿವರದ ಕೇಶವ
ಕರಪಿಡಿದು ಸುಖಪೂರ್ಣಾ ನಿನ್ನಡಿಗಳಂಬುಜ
ಸ್ಮರಿಪರಲ್ಲಿಡ ಮುನ್ನಾ ಪರಿಹರಿಸು ಬನ್ನಾ ಪ
ಸರಸಿಜಾಪತಿ ಸರಸಿಜೋದ್ಭವ
ಹರಸುರಾಧಿಪ ವಂದ್ಯ ನಿನ್ನಯ
ಚರಣ ನಂಬಿದೆ ಎರವು ಮಾಡದೆ
ತ್ವರ್ಯ ಸೌಖ್ಯವುಗರದು ಕರುಣದಿ ಅ.ಪ.
ಜನನಿ ಜಠರದಿಂದ ನಿನ್ನಾಜ್ಞದಲಿ ನಾ ಜನಸಿದೆನೊ ಗೋವಿಂದಾ
ಬಾಲತ್ವ ಕೆಲದಿನ ಕಳೆದೆನೊ ಮುಕುಂದಾ ಯೌವ್ವನವು ಬರುತಲೆ
ವನಿತೆ ಮುಖ ಅರವಿಂದಾ ನೋಡುತಲೆ ಬಲು ಛಂದಾ
ಮನವು ನಿಲ್ಲದು ಮಮತೆ ವಿಷಯದಿ ಮುನಿದು ಸಜ್ಜನರ ಸೇವಿಸಿ
ಕೊನೆಯಗಾಣದೆ ಮಣಿವೆ ಅಂಘ್ರಿಗೆ ವನದಿಗಳ ವಮ್ಮನೆ (?)
ನಡಿಸು ವೆಂಕಟಾ
ಘನತೆ ನಿನಗಿದು ತಿಳಿದು ವೇಗದಿ
ಅನುದಿನದಲಿ ಸಲಹುತಿಪ್ಪನೆ ಅನಿಮಿಷರ ಆಧಾರ ಮೂರುತಿ ೧
ಮೊರೆಯ ಲಾಲಿಸು ಜೀಯಾ ಅರೆ-
ಮೊರೆಯ ಮಾಡಲು ಪೊರೆವರ್ಯಾರೆಲೊ ಕಾಯಾ ಅ-
ನ್ಯರನು ಕಾಣದೆಯರಗಿದೆನು ಸುರ ಸಹಾಯ
ಸುರಧೇನು ಮನೆಯೊಳಗಿರಲು ವಿಠ್ಠಲರೇಯಾ
ಬಿಡು ನಿನ್ನ ಮಾಯಾ ಬಲ ತಡದು
ನಿಕ್ರವ ತರಲು ಜನರೊಳು (?)
ಯರಗಿರಲು ನಿನಗೆಂದಿಗಾದರು ಅರಿದು ಅಗ್ಗಕೆ ಪೊರೆದು ಮಾನವ
ಕರಿಯು ಕರೆಯಲು ಬರುವುದುಂಟೇ
ಕರುಣಾಸಾಗರನೆಂಬೊ ನಿನ್ನಯ
ಬಿರುದು ಉಳ್ಳದಕೊಂಡು ಸಾಧನೆ
ಧರೆಯ ದುಷ್ಟರ ಬಾಧೆ ತಪ್ಪಿಸಿ
ಹರುಷವನು ಅತಿಗರೆದು ನಿರುತದಿ ೨
ಬಿಡೆನೊ ಕಡಲೊಡಗಾಡಿ ಬಿಂಕದಲಿ ಅದ್ರಿಯ
ನಿಡಲಿ ಬೆನ್ನಲಿ ನೂೀಡಿ ಪಾದಗಳ ಎಳೆಯುತ
ನಡೆದು ಕೋಪವ ಮಾಡಿಬಿಡು ದೈನ್ಯದಲಿ
ಪೊಡವಿ ದಾನವ ಬೇಡಿ ಬಿಡೆ ನೋಡಡವಿಯೊಳ್ ಕಾಡಿನ
ಮಡುವಿನೊಳು ಗಿಡವೇರಿ ಧುಮುಕಲು
ಒಡನೆ ಅಂಬರ ಬಿಟ್ಟು ಖಡ್ಗವ
ಪಿಡಿದು ವಾಜಿಯನೇರಿದನು ಜರ
ಕಡಿಯಪೋಗಲು ಕಂಡು ನಿನ್ನನು ಬಿಡೆನೊ ನಿನಗೆಂದಿಗಾದರು
ಪೊಡವಿಪತಿ ಶ್ರೀದವಿಠ್ಠಲ ವಡಿಯ ನೀನೆಂತೆಂದು ನಂಬಿದೆ ೩
(ಈ ನುಡಿಯ ಅರ್ಥ ಸ್ಪಷ್ಟವಾಗುತ್ತಿಲ್ಲ-ಅಶುದ್ಧ ಪ್ರತಿಯ ಕಾರಣದಿಂದ.)

 

೫೭
ಕಾಯೋ ಶ್ರೀಹರಿ ಪ
ಕೈ ಮುಗಿವೆ ಮುರಾರಿ ಕರುಣದಿ ಅ.ಪ.
ನೊಂದೆನೋ ಈ ಭವ
ಬಂಧನದೊಳಗೆ ಶಿಲುಕಿ
ಮುಂದಿದಕೇನೋ ದಾರಿ ೧
ತುಂಬಿದ ಭಕ್ತ ಕು-
ಟುಂಬಿ ನಾಚಿಕೆಯ
ಕೊಂಬುವದೇನಿದ ಕುಸುರೊ೨
ಎಷ್ಟು ನಿನಗೆ ಮೊರೆ-
ಯಿಟ್ಟರೂ ಶ್ರೀದ-
ವಿಠ್ಠಲ ಮನಸಿಗೆ ತಾರಿ ೩

 

೨೪
ಕೇಳಿದ್ಯಾ ಈ ಕೌತುಕ ಕೇಳಿದ್ಯಾ
ಕೇಳಿದ್ಯಾ ಕೌತುಕವನ್ನು ಈಗ ಪ
ಪೇಳುವೆ ನಾ ನಿಮಗಿನ್ನು ಆಹಾ
ಹೇಳಾದೆ ಮಧುರೆಗೆ ಜಾರ ಚೋರ ಕೃಷ್ಣ ಅ.ಪ.
ಕರೆಯೆ ಬಂದಿಹನೊಬ್ಬ ಚೋರಾ ತನ್ನ
ಕಿರಿಯಯ್ಯನಂತೆ ಅಕ್ರೂರಾ
ಊರ ಹೊರ ಹೊಳಿಯಲಿ ಬಟ್ಟ ತೇರಾ ಆಹಾ
ಹಿರಿಯನೆಂದು ಕಾಲಿಗೊರಗೋರಾ
ರಾಮಕೃಷ್ಣರ ಭರದಿ ಅಪ್ಪಿಕೊಂಡು
ಮರುಳು ಮಾಡಿದ ಸುದ್ದೀ ೧
ಸೋದರಮಾವನ ಮನೆಯೋಳ್ ಬೆಳ –
ಊ್ಫದ ನಾಳಿನ ದಿನದೋಳ್ ಕೃಷ್ಣ
ಪೋದರೆ ನೆರೆದ ಜನರೋಳ್ ಆಹಾ
ಕಾದುವ ಮಲ್ಲರ ಮೇಲ್ಹಾರ ಬಿಲ್ಹಬ್ಬ
ಸಾಧಿಸಿ ಸಮಯಕ್ಕೆ ಹೋದೆವೆಂಬ ಅರ್ತಿ ೨
ಹುಟ್ಟಿದ ಸ್ಥಳವಂತೆ ಮಧುರೀ ಕಂಸ –
ನಟ್ಟುಳಿಗಾಗಿ ತಾ ಬೆದರೀ ಇ –
ಲ್ಲಿಟ್ಟಳಾತನ ತಂಗಿ ಚದುರೀ ತೋರಿ
ಕೊಟ್ಟರೆ ತನ್ನನು ಬೆದರೀ ಆಹಾ
ಇಷ್ಟು ಸ್ನೇಹವು ಶ್ರೀದವಿಠಲ ಮಾವನ
ಭೆಟ್ಟಿಗಾಗಿ ಒಡಂಬಟ್ಟು ಹೋಗುವನಂತೆ ೩

 

೨೫
ಕೊಳಲನೂದೋ ಇನ್ನೊಮ್ಮೆ ರಂಗಯ್ಯಾ
ಕೊಳಲನೂದೋ ಇನ್ನೊಮ್ಮೆ ಕೃಷ್ಣಯ್ಯಾ ಪ
ಕೊಳಲನೂದೋ ದ್ವಾರಕಾ ಪುರನಿಲಯಾ ಅ.ಪ.
ಎಡಹೆಗಲಲ್ಲೆಡಗಲ್ಲಂವ ನೀಡೀ
ಕುಡಿ ಹುಬ್ಬುಗಳಲ್ಲಾಡಿಸುತ್ತ ೧
ಮೃದುತರ ತುದಿ ಬೆರಳಿಂದೊತ್ತುತ
ಮಧುರಾಧರದಲ್ಲಿಟ್ಟು ರಂಗಯ್ಯ೨
ನಾದ ಮೂರುತಿ ಗೋಪೀಜನಲೋಲಾಶ್ರೀದವಿಠಲ ಗೋಪಾಲಬಾಲ೩

 

ಈ ಕೀರ್ತನೆಗೆ ಭಾಗವತದ
೨೬
ಗಂಡ ಬಂದರೇನೆಲೋ ರಂಗಾ ಯನ್ನ
ಗಂಡ ಬಂದರೇನೆಲೋ ರಂಗ ಪ
ಕಂಡರೆ ಒಗೆತನ ಭಂಗಾ ಯನ ಗಂಡ ಅ.ಪ.
ಬಾಗಿಲ ತೆಗೆಯೆಂದಾರ್ಭಟದಿಂದಲಿ
ಕೂಗುವ ಧ್ವನಿ ಕೇಳೈ ಇದಕೋ
ಹ್ಯಾಗೆ ಮಾಡಲಿ ಹಾದಿಯ ಮನೆ ಯೆನ –
ಗಾಗದವರು ಬಂದೀಗ ನಗುವರೆನ್ನ೧
ನಂದಗೋಕುಲದಿ ನಾನೇ ಗರತಿ –
ಯೆಂದು ಮೆರೆಯುತ್ತರಲೀಗ
ಬಂಧು ಬಳಗದೊಳು ಬಂಡಳಾಗಿಯೆಂ-
ದೆಂದಿಗೂ ತಲೆಯೆತ್ತಿ ತಿರುಗದಂತೆ ಯನ್ನ ೨
ದಕ್ಕಲಿಲ್ಲ ಮನದೊಳಗೆ ಮಾಡಿಕೊಂ –
ಡಕ್ಕರ ತೀರಲಿಲ್ಲ ಮುನ್ನಾ
ಗಕ್ಕನೆ ಗೋವಳ ಬರಬಹುದೆ ಖಳ
ಸಿಕ್ಕಿದೇವಲ್ಲವೊ ಶ್ರೀದವಿಠಲ ಯನ್ನ ೩

 

೨೭
ಗೋಪಿ ಕೇಳ್ ನಿನ್ನ ಮಗ ಬಲು ಜಾರ
ಚೋರ ಸುಕುಮಾರ ಪ
ಮುದದಿ ಮುಕ್ಕುಂದ ಸದನಕ್ಕೆ ಬಂದ
ದಢೀಯ ಮೀಸಲು ಬೆಣ್ಣೆ ತಿಂದ ನಿನ್ನ ಕಂದಾ ೧
ಮಾರನಪಿತ ಮನೆಯೊಳು ಪೊಕ್ಕಾ
ಹಿಡಿಯ ಹೋದರೆ ಸಿಕ್ಕಾ ನೋಡಿ ನಕ್ಕ ಭಾರಿ ಠಕ್ಕ ೨
ಹರಯದ ಪೋರಿ ಜರದ ಕಂಗೋರಿ
ಭರದಿಂದ ಸೀರೆಯ ಸೆಳೆದ ಕರವ ಪಿಡಿದ ಮಾನವ ಕಳೆದ ೩
ಬಹಳ ದಿನವಾಯ್ತು ಹೇಳುವ್ಯದ್ಹಾಗೆ
ಗೋಪಾಲನ ಮನಸ್ಸೊಮ್ಮೆ ಹಾಗೆ ಹೀಗೆ ಬೆಚ್ಚಿಬೀಳುವ್ಯದ್ಯ್ಹಾಗೆ ೪
ರಾಧೆಯ ಮನದ ತಾಮೋದ ಮುಕ್ಕುಂದ
ಶ್ರೀದವಿಠ್ಠಲನಾಥ ವೃಂದ ನಯಾನಂದ ೫

 

ಶ್ರೀ ಸತ್ಯಧರ್ಮರು
೪೭
ಶ್ರೀ ಸತ್ಯಧರ್ಮರು
ಚಿತ್ತೆಸೈ ಬಿನ್ನೈಸುವೆ ಪರಾಕು ಪ
ಸತ್ಯಧರ್ಮ ಸದ್ಗುರುರಾಯಾ ಅ.ಪ.
ನಿನ್ನ ನಂಬಿದವ ಧನಮದಾಂಧರಿಗೆ
ಇನ್ಯಾತಕೆ ತೆರೆಯಲಿ ಬಾಯಾ ೧
ಕಾಲಹರಣ ಬಲು ಕಷ್ಟವಾಗುತಿದೆ
ಪಾಲಿಸುವುದು ಸತ್ಪಾಥೇಯಾ ೨
ಶ್ರೀದವಿಠಲಾಶ್ರಿತ ಜನವತ್ಸಲ
ಸಾಧು ಸೇವ್ಯ ಸತ್ಯದಿಗೇಯಾ ೩

 


ಜಯ ಜನಕಜಾಪತೇ ರಾಮಾ ಜಯ ಪ
ಜನಕಜಾಪತೇ ಜಲದಶ್ಯಾಮಾ
ಜಯರಘುವಂಶಲಲಾಮ ಅ.ಪ.
ಮದನಜನಕ ಮಧುಕೈಟಭ ಭೀಮ
ಮದನ ಬಿಂಬಾರ್ಚಿತ ಕಾಮಾ ೧
ರಾಮಚಂದ್ರ ರಘುವೀರ ಜಾನಕೀರಾಮ
ರಾವಣವೈರಿ ಶ್ರೀರಾಮಾ ೨
ಸಾಮಜವರದ ವಿನುತ ಸೋಮ
ಶ್ರೀದವಿಠಲ ಗುಣಧಾಮ ೩

 

ಮುಕ್ಕುಂದ
೨೮
ಜೋ ಜೋ ಜೋ ಮಲಗೋ | ಮುಕುಂದಾ ಪ
ಮುಸುಕು ತೆಗೆಯ ಬ್ಯಾಡೆಲೊ ಮನೆಗೆಲಸಾ
ಹಸನಾಗದು ಗೋಪಾಲ ||ಕೃಷ್ಣ|| ೧
ಮೆಲ್ಲನೆ ಮಾತನಾಡುವಿಯಾ ನೋಡುವಿಯಾ
ಸೊಲ್ಲ ಲಾಲಿಸುವಿಯ ಕಂದ ||ಕೃಷ್ಣ|| ೨
ತೊಟ್ಟಿಲ ತೂಗುತ ನಿಂತರೆ ಶ್ರೀದ –
ವಿಠಲಾ ನಿನಗಾನಂದಾ ||ಕೃಷ್ಣ|| ೩

 

ಶ್ರೀ ವಿಜಯದಾಸ ಗೋಪಾಲದಾಸರ
ಜಗನ್ನಾಥದಾಸರು
೪೮
ತಂಗಿ ನೀ ಕೇಳಿದ್ಯಾ ಅಂಗನಾಮಣಿ
ರಂಗನೊಲಿದ ಭಾಗವತರ ಮಹಿಮೆಗಳ ಪ
ಶ್ರವಣಾದಿ ನವವಿಧ ಸವಿಯ ಭಕುತಿಯಿಂದ
ಪ್ರವೀಣನೆನಿಸಿ ಮಾಧವನ ಧ್ಯಾನಿಪ ಖ್ಯಾತಿ ೧
ಅಮಲ ಸತ್ಕರ್ಮದಿ ಶಮದಮಪೂರ್ವಕ
ಅಮಿತ ಮಹಿಮನಂಘ್ರಿ ಕಮಲಾಖ್ಯಪರ ಖ್ಯಾತಿ ೨
ಶ್ರೀದವಿಠಲನ ಪಾದಭಜಕರಾದ
ಸಾಧುವರ್ಯರ ಸುಬೋಧ ಬಣ್ಣಿಪರಾರೆ ೩

 


ತಾರಕ ನೀನೇ ಹರಿ ಮುರಾರಿ ಪ
ಉದಕದಿ ನಕ್ರನು ಪದವೆಳೆಯಲು ನೊಂದು
ಮದಗಜ ಹರಿಯನ್ನೆ ಮುದದಿ ಪೊರೆದ ಕಾರಣ ೧
ತುಂಬಿದ ಸಭೆಯಲಿ ಮಾನ ಕೊಂಬುದ ಕೇಳಿ
ನಂಬಿದ ದ್ರೌಪದಿಗಂಬರವಿತ್ತ ಕಾರಣ ೨
ಶ್ರೀದವಿಠ್ಠಲ ನಿನ್ನ ಪಾದಪೂಜಿಸಲರಿಯೆ
ಆದರದಿ ಅಜಾಮಿಳನನ ಕಾಯ್ದ ಕಾರಣ ೩

 


ತಾರೆನ್ನ ಹುಂಡಿ ರಂಗ
ತಾರೆನ್ನ ಹುಂಡಿ ಪ
ಅತ್ತರೇನು ಕಂಗಳಿಂದ
ಮುತ್ತುದುರುವುದಿಲ್ಲ
ಮತ್ತೆ ನಮ್ಮ ಮೇಲೆ ಹುಂಡಿ
ಹೊತ್ತರೆ ನೀ ಬಿಟ್ಟೆಯೇನೊ ೧
ವಾರಿಜಾಕ್ಷ ನಿನ್ನ ಬಿಡು –
ವರೆಯೇನೋ ಬೆನ್ನ ಮೇಲೆ
ಹಾರಿ ಹೊತ್ತು ಕೊಂಡು ಭಾರ
ಹೇರದೆ ನೀ ಬಿಟ್ಟೆಯೇನೊ ೨
ತೊಟ್ಟಿಲ ಹೋಗೆಂದರೆ
ಸಿಟ್ಟು ಮಾಡುವಿಯೋ ಶ್ರೀದ-
ವಿಠಲನ್ನ ಕೂಡಾಡದೆ ನೀ
ಬಿಟ್ಟರೆ ನಾವು ಬಿಡುವರಲ್ಲ ೩

 

ದೇವತಾ ಸ್ತುತಿ
೩೭
ರಾಧೆ
ತಿಲಕದ ಒಲುಮೆ ಮೇಲು ರಾಧೇ
ನಿನ್ನ ತಿಲಕದೊಲುಮೆ ಪ
ತಿಲಕದೊಲುಮೆ ಹರಿ ಬಂಧ ಒಲುಮೆ
ಘಿಲುಘಿಲುಕುಲು ಗೆಜ್ಜೆ ಕಾಲು ರಾಧೇ ನಿನ್ನ ಅ.ಪ.
ಕುಂಕುಮ ಕರದು ಹಚ್ಚಿ ವಂಕಿ ಬಾಜು ಬಂದಿನಿಟ್ಟು
ಪಂಕಜಾಕ್ಷನೆತ್ತಿಕೊಂಬೊ ತೋಳು ರಾಧೆ ನಿನ್ನ ೧
ಉಟ್ಟುದು ಪೈಠಣಿ ಸೀರೆ ತೊಟ್ಟುದು ಬುಟ್ಟುದ ಕುಪ್ಪಸ
ಮುಟ್ಟಿದರೆ ಮಾಸುವದು ಶಾಲು ರಾಧೇ ನಿನ್ನ ೨
ಕೈಗೆ ಬಂಗಾರದ ಬಳೆ ಕಿವಿಗೆ ಪರಿಜನ ವಾಲೆ
ರಂಗಯ್ಯ ಕರೆದರೆ ನೀ ಹೋ ಎಂಬೊ ರಾಧೆ ನಿನ್ನ ೩
ಮಂಗಳಸೂತ್ರವು ಬೆಳದಿಂಗಳು ಪೊಳೆವಂತೆ
ತೆಂಗು ಬ್ಯಾಳೆ ಮಣಿಯೆಣ್ಣೆ ನೂಲು ರಾಧೆ ನಿನ್ನ ೪
ಪಿಲ್ಯ ಕಾಲುಂಗುರ ಕಿರು ಬಲ್ಯ ಆಣಿಮೆಂಟು
ಧೈರ್ಯದಲಿ ಮೆರೆವ ಗಿಳಿಗೇಲು ರಾಧೆ ನಿನ್ನ ೫
ಚೌರಿ ರಾಗಟಿ ಗೊಂಡೆ ಹೆರಳು ಬಂಗಾರವೂ
ಚಂದಿರ ಪ್ರಫುಲ್ಲ ಮುತ್ತಿನ ಬಟ್ಟು ರಾಧೆ ನಿನ್ನ೬
ದಿಟ್ಟ ಹಗಲೊಳು ಶ್ರೀದವಿಠಲನ್ನ ಯೇರಿಕೊಂಡು
ಬಟ್ಟ ಬಯಲೊಳಗೆ ಕೇಳೇ ರಾಧೆ ನಿನ್ನ ೭

 

೪೯
ತೆರಳಿದರು ಶ್ರೀ ಜಗನ್ನಾಥದಾಸಾರ್ಯರು
ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಪ
ವರಶುಕ್ಲವತ್ಸರದ ಭಾದ್ರಪದ ಶಿತಪಕ್ಷ
ಹರಿವಾರ ನವಮಿಯಲ್ಲಿ
ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ
ಹರಿಯೆ ಪರನೆಂದೆನುತಲಿ
ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ
ಬೆರೆದು ಸುರಸಂದಣಿಯಲಿ
ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು
ವರವಿಷ್ಣುದೂತ ವೈಮಾನಿಕರ ಒಡಗೂಡಿ ೧
ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು
ಖತಿದೂರರಿವರು ಜಗದೀ
ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ
ಅತಿಶಯದಿ ಪೇಳಿ ಇಹಕೆ
ಸತತವು ಶರಣರ್ಗೆ ಗತಿಯಾಗುವಂತೆ ಸ
ತ್ವಥವಿಡಿಸಿ ಕರುಣದಿಂದ
ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ
ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ ೨
ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು
ಖೇಚರಾರೂಢ ಹರಿಯಾ
ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ
ವೈಚಿತ್ರ್ಯವನು ತೋರಿ ಈ ಚರಾಚರದಿ ಸಂಗೀತ ಸಾಹಿತ್ಯದಲಿ
ಪ್ರಾಚಾರ್ಯವಂತರೆನಿಸೀ
ಆ ಚತುರ್ದಶಭುವನಪತಿ ಶ್ರೀದವಿಠಲನ
ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ ೩

 

೨೯
ಲಾವಣಿ ಪದ
ದಾಮ್ರ್ಯಾ ದೂರನಿಲ್ಲು ದಾರಿಕಟ್ಟಿ ಬರದಿರು
ಯಾರಿಗಾಗಿ ಮಾರಬಂದೆ ಹಾಲ್ ಮೊಸರಾ ಹೇಳ್ ನಿನ್ನ ಹೆಸರಾ
ದೂರ್ ದೂರಲ್ಲ ಕೋಲ್‍ಕಾರ ಕೃಷ್ಣ ಕೇಳು ಬಾಲೆ
ದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು ೧
ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆ
ಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋ
ಪುಂಡತನ ಬುದ್ದಿಯಿದು ಥರವೇನೆಂದರೆ
ಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ ೨
ಯಾಕೆ ಮಾತಾಡುತಿದ್ದಿ ಕಾಕು ಮಾತಾಡುತಿದ್ದಿ
ಸಾಕು ನಿನ್ನ ಮಾತೀಗ ಸಲುಗೇನೋ ನಿನ್ನ ನಗೆ ಏನೋ
ಸಾಕು ನಿನ್ನ ಮಾತೀಗ ಸಲುಗೇನೆಂದರೆ
ಬೇಕು ಬೇಡಿದ್ದು ನಾ ಕೊಡುತೇನೆ ನಿನ್ನಿಡುತೇನೇ ೩
ಕೊಂಡು ಕೊಂಡು ನಡೆಸಲಿಕ್ಕೆ ಶೆಟ್ಟಿಗಾರ ನಾನಲ್ಲ
ನೀನಿಟ್ಟುಕೊಂಡ ಸೂಳೆ ನಾನಲ್ಲ ಹೋಗೋ ನೀನಲ್ಲ ಸಾಗೋ
ಇಟ್ಟುಕೊಂಡ ಸೂಳೆ ನಾನಲ್ಲ ಹೋಗೆಂದರೆ
ಕಟ್ಟಿಕೊಂಡು ಹೋದೇನು ಒಳತನಕಾ ಬೆಳಬೆಳತನಕಾ ೪
ಒಳತನಕ್ಯಾತಕೆ ಬೆಳತನಕ್ಯಾತಕೆ
ತಾಳಿಯರಿಲ್ಲಾ ಮಾತಿನ ಬೆಡಗಾ ಅಹುದೆಲೊ ಹುಡುಗ
ತಿಳಿಯದಿದ್ದರೆ ನಾ ತಿಳಿಯ ಹೇಳಿಕೊಡುವೆನೆಂದು
ಸೆಳೆದಪ್ಪಿಕೊಂಡ ಶ್ರೀದವಿಠಲ ಬಹುಬಹು ಧಿಟಲಾ೫

 

೫೮
ದಾಶರಥೇ ದಯಮಾಡೊ ನಿನ್ನ
ದಾಸರ ದಾಸನ ನೋಡೋ ಪ
ನೀರಜಾಕ್ಷ ನಿಜಮಾಯಾ ಮಮತೆ ಸಂ-
ಸಾರಶರಧಿಯೊಳು ಬಿದ್ದು
ಪಾರಗಾಣದೆ ಪರಿದು ಪೋಗುವೆನು
ತಾರಕ ನೀನೆನಗಿದ್ದು ಹರಿ ಹರಿ ೧
ತುಂಬಿದ ಭಂಡಿಗೆ ಮೊರ ಭಾರವೆ ಎನ-
ಗಿಂಬಿಲ್ಲವೆ ನಿನ್ನಲಿ
ನಂಬಿದ ಭಕ್ತರ ಸಲಹುವ ವಿಶ್ವಕು-
ಟುಂಬಿ ಎನಿಸಿಕೊಳುವಲ್ಲಿ ಹರಿ ೨
ಬಲ್ಲಿದರೊಳು ಬಡವರಿಗಾಶ್ರಯ ನೀ
ಬಲ್ಲೆ ಮತ್ತೆ ಎನಗೀಗ
ಎಲ್ಲಿದ್ದರು ಶ್ರೀದವಿಠಲ ಬಿಡ
ದಲ್ಲೂ ನಿನ್ನ ದಯ ಬೇಗ ೩

 

೧೦
ದೀನಬಂಧೋ ಹೇ ಭಲಾ ನೀನೆ ಸೈ ಸೈಯಲಾ ಪ
ಪಾಸಲೆ ಶರಣರ ಪೊರೆವದಕಿನ್ನು ಬ್ಯಾಸರೇನಿಲ್ಲಲಾ ೧
ದುಷ್ಟರ ದಂಡಿಸಲಾ ಮನಸಿಗೆ ಹುಟ್ಟಿದೆ ಕಲಕಲಾ ೨
ಬಿಡದೆ ಶ್ರೀವಿಠಲಾ ಎನ್ನೊಳು ಮಾಡಿದೆಲೋ ಛಲಾ ೩

 

ಇಲ್ಲಿಯ ಶ್ರೀ ಸತ್ಯಬೋಧರು
೪೬
ಶ್ರೀ ಸತ್ಯಬೋಧರು
ನಂಬಿದೆ ನಿನ್ನ ಶ್ರೀ ಗುರುಪೂರ್ಣ
ಬೆಂಬಿಡದಲೆ ನೀ ಕಾಯಬೇಕೆನ್ನ ಪ
ಸತ್ಯಪ್ರಿಯರತಿ ಪ್ರೀತಕುಮಾರ
ಸತ್ಯಸನಾತನಿ ಸತ್ಯಬೋಧಗುರು ೧
ಸತ್ಯವ್ರತ ಭೃತ್ಯ ಮನೋರಥ
ಅತ್ಯಂತ್ಹರುಷದಿ ಇತ್ತ ಸನ್ಮತ ಯತಿ ೨
ಶ್ರೀದವಿಠಲನ ಪಾದ ಮಧುಪ ನಿತ್ಯ
ಸಾಧುವರ್ಯ ಕೃಪಾ ಸಾಗರ ಸತತ ೩

 

ದಶಾವತಾರ ವರ್ಣನೆ
೧೧
ನಾರಾಯಣ ಗೋವಿಂದ ಹರಿ ಹರಿ ನಾರಾಯಣ ಗೋವಿಂದ ಪ
ನಾರಾಯಣ ಗೋವಿಂದ ಮುಕುಂದ ಪರತರ ಪರಮಾನಂದಅ.ಪ.
ಮಚ್ಛರೂಪಿಲಿ ಹೆಚ್ಚಿದ ದೈತ್ಯರ ತುಚ್ಛಿಸಿ ವೇದವ ತಂದ ಹರಿ ೧
ಸ್ವಚ್ಛಮಂದರ ಯದೃಚ್ಛದಿ ಮುಣುಗಲು ಕಚ್ಛಪ
ವೇಷದಿ ನಿಂದಾ ಹರಿ ೨
ಶ್ರೀಕರ ಹರಿ ಭೀಕರ ದಿತಿಜರ ಸೂಕರ ರೂಪಿಲಿ ಕೊಂದಾ ಹರಿ ೩
ಶಂಬರಾರಿಪಿತ ಕಾಂಬು ಚಕ್ರಧರ ಕಂಬವ ಭೇದಿಸಿ ಬಂದ ಹರಿ೪
ಶ್ಯಾಮರೂಪ ಗುಣಧಾಮ ಹರಿಯು ತಾ
ವಾಮನ ರೂಪಿಲಿ ನಿಂದಾ ಹರಿ೫
ಕ್ಷತ್ರಕುಲವ ನಿಕ್ಷತ್ರಮಾಡಲು ಭೃಗು ಪುತ್ರನಾಗಿ ತಾ ನಿಂದಾ ಹರಿ ೬
ದಶರಥಸುತ ಹರಿ ದಶಮುಖನಳಿದು ಕುಶಲದಿ ಸೀತೆಯ
ತಂದಾ ಹರಿ ೭
ನಂದಗೋಪನ ಕಂದನು ಬಹು ಗೋವೃಂದದೊಳಗೆ
ತಾ ನಿಂದಾ ಹರಿ ೮
ಅಂಗನೆಯರ ವ್ರತಭಂಗ ಮಾಡಲನಂಗ ಜನಕ ತಾ ಬಂದಾ ಹರಿ ೯
ದುಷ್ಟಗ್ನಳಿದು ಶಿಷ್ಟಜನರ ಪರಮೇಷ್ಟಿ ಎನಿಸಿ ತಾ ನಿಂದಾ ಹರಿ ೧೦
ಶ್ರೀದವಿಠಲ ಕರುಣದಿಂದಲಿ ನಂದತತಿ ಸಲಹುವೆನೆಂದಾ ಹರಿ ೧೧

 

ಉತ್ತರಾದಿಮಠದ ೧೩ನೆಯ
೪೩
ಶ್ರೀ ರಘೂತ್ತಮತೀರ್ಥರು
ನೋಡಿದೆ ಗುರುಗಳ ನೋಡಿದೆ ಪ
ನೋಡಿದೆನು ಗುರುಗಳ ಪಾದಾಬ್ಜವ
ಪಾಡಿದೆನು ಸನ್ಮಹಿಮೆಗಳ ನಾ
ಬೇಡಿದೆನು ಮನದಣಿಯೆ ವರಗಳ
ಈಡು ಇಲ್ಲದೆ ಕೊಡುವ ಪ್ರಭುಗಳ ಅ.ಪ.
ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿಯ ತೀರದಲ್ಲಿ ನಿಂತು
ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು
ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ
ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ ೧
ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ
ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ
ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ
ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಳಿ ರತುನರ ೨
ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ
ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ
ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮರೆವರ
ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ ೩

 

೧೨
ನೋಡು ನೋಡು ನಾರೀಮಣಿಯೆ ಪ
ನೋಡು ನೋಡು ನಿನ್ನಾ ಕಣ್ಮನ ದಣಿಯಾ ಅ.ಪ.
ಮುದ್ದು ಸೂಸುವ ಸಲೆ ಮುಗುಳ್ನಗೆ ಮೊಗವಾ
ತಿದ್ದಿದ ಕಸ್ತೂರಿ ತಿಲಕದ ಫಣಿಯಾ ೧
ಸಾರ ಗಂಭೀರ ಶೃಂಗಾರ ವಿಹಾರಾ
ಚಾರು ಸೌಂದರ್ಯವೈಯ್ಯಾರ ಸುಗುಣಿಯಾ ೨
ಶ್ರೀದವಿಠ್ಠಲ ಸಾಕ್ಷಾತ್ತ್ರಿಜಗನ್ಮಯಾ
ಇಂದ್ರಶರಾ ಜಗನ್ಮೋಹನ ಖಣಿಯಾ ೩

 

೧೩
ನೋಡು ನೋಡೆಂಥಾ ರಘುವೀರ ದೀನೋದ್ಧಾರ ಪ
ತನು ಮನ ಧನಗಳ ತನಗೊಪ್ಪಿಸದೆ
ನೆನೆವ ಮನುಜರಿಗೆ ದೂರಾದೂರಾ ೧
ಸೇರಿದ ಸುಜನರ ದೂರುವ ದುರುಳರ
ಬೇರಿಗೆರೆವ ಬಿಸಿ ನೀರಾ ನೀರಾ ೨
ಶ್ರೀದವಿಠಲ ನಿಜಪಾದಾಶ್ರಿತರಪ-
ರಾಧವ ಮನಸಿಗೆ ತಾರಾ ತಾರಾ ೩

 

ಗಿರಿಜೇಶಗೆ ನಿನ್ನರಮೈ
೧೪
ಸುಳಾದಿ
ತಾಳ-ಝಂಪೆ
ನೋಡುವರೆ ನೀರದಶ್ಯಾಮಸುಂದರ ಮೂರ್ತಿ
ಪಾಡುವರ ಪರಮಪಾವನ್ನ ಕೀರ್ತಿ
ಕೂಡುವರೆ ಕೇವಲಾನಂದ ಚಿನ್ಮಯಗಾತ್ರ
ನೀಡುವರೆ ನಿಖಿಳಲೋಕೈಕಪಾತ್ರ
ನೋಡಿ ನಮಿಸುವರುಂಟು ಪಾಡಿಹಿಗ್ಗುವರೂಟ
ಕೂಡಿ ಸುಖಿಸುವರುಂಟು ನೀಡಿ ನಲಿವವರುಂಟು
ನೋಡಿಸುತ ಪಾಡಿಸುತ ಕೂಡಿಸುತ ಬೇಡಿಸುತ
ನಾಡದೈವಂಗಳ ಕೊಂಡಾಡಿಸದಲೆ
ಬೇಡಿದಿಷ್ಟವ ಕೊಡುತ ಶ್ರೀದವಿಠಲ ದಯ –
ಮಾಡಿ ನಮ್ಮನು ಪೊರೆವ ರೂಢಿಗೊಡೆಯ
ನಾಡದೈವಂಗಳ ಕೊಂಡಾಡಿಸದಲೆ ೧
ತಾಳ-ಮಟ್ಟ
ಸಕಲ ಶ್ರುತಿನಿಕರಸಾರಹೋ
ಶುಕಮಹಾಮುನೀಂದ್ರ ಸನ್ನುತ
ಪ್ರಕಟ ಮಾಡಲ್ಯಾಕೆ ನಿನ್ನನು ಪರಮಪುರುಷ
ಪ್ರಕಟಮಾಡಲ್ಯಾಕೆ ನಿನ್ನನು
ಭಕ್ತವತ್ಸಲನೆಂಬೆನಲ್ಲದೆ
ಮುಕುತವಂದ್ಯ ಶ್ರೀದವಿಠಲ
ಯುಕುತಾಯುಕುತವೊಂದನರಿಯದೆ
ಪ್ರಕಟಮಾಡಲ್ಯಾಕೆ ನಿನ್ನನು ೨
ತಾಳ-ತ್ರಿವಿಡಿ
ಆಯನುಭವ ಭಯ ಲಯವರ್ಜಿತ
ನಯನೋತ್ಸಹಕಾರಕ ತಾರಕ
ಜಯಮಂಗಳ ಮಂಗಳ ಮಂಗಳ
ಮಾಯಾ ಮಾಮರ ದೇವರಾಟ
ಸಯವೇ ಸೈ ಶ್ರೀದವಿಠಲ ನಿ
ನ್ನಯ ಚರಣಕೆ ನಮಿಸುವೆ ನಮಿಸುವೆ
ಜಯ ಮಂಗಳ ಮಂಗಳ ಮಂಗಳ
ಮಾಯಾ ಮಾಮರ ದೇವರಾಟ ೩
ತಾಳ-ಅಟ
ಬಾರೋ ಬಾರೋ ಭವದೂರ ದೀನಜನ
ಭಾರ ನಿನ್ನದಯ್ಯಾ ಅಯ್ಯಯ್ಯಾ
ಸಾರಿದೆನೊ ನಾ ನಿನ್ನ ಸಾರಿದೆನೊ ನಿನ್ನ ೪
ತಾಳ-ಆದಿ
ಶ್ರೀರಮಣ ಶ್ರೀದವಿಠಲ ಸಂ –
ಸಾರಕಂಜಿ ನಿಜ ಚಾರು ಚರಣಗಳ ಸಾರಿದೆನೊ ನಿನ್ನ
ಶಿರಿಗುರವಿತ್ತೆ ಪರಮನ ಪೆತ್ತೆ
ಗಿರಿಜೇಶಗೆ ನಿನ್ನ ಮೈ ಇತ್ತೆ
ಶರಣಾಗತವತ್ಸಲ ಕರುಣಾಕರ ಶ್ರೀದವಿಠಲ
ಸರಿಬಂದರೆ ಸಾಕುವದೆಮ್ಮನು
ಶರಣಾಗತವತ್ಸಲ ೫
ಜತೆ
ಸೋಲು ಶ್ರೀದವಿಠಲ ಸೋಲು ಗೆಲುವು ನಿನ್ನ
ಪಾಲಿಗೆ ಬಂದಿರೆ ಪಾಲಿಸೆಮ್ಮನು ಬಿಡದೆ

 

೩೦
ಬರುವೆಯೋ ರಂಗಯ್ಯಾ ಮನೆಗೆ
ಬಾರೋ ಹೋಗುವ ಪ
ಬೊಗರಿ ಚಂಡುಗಳ ಕೊಡುವೆನು ಬಂದರೆ
ಬಗೆ ಬಗೆ ಆಟವ ಕಲಿಸಿ ಒಲಿಸುವೆನು ೧
ರಸ ರಸಾಯನಗಳುಣ್ಣಿಸುವೆ ಬಂದರೆ
ಮುಸುಕಿನೊಳಗೆ ಬಚ್ಚಿಟ್ಟುಕೊಂಬುವೆನು ೨
ಶ್ರೀದವಿಠ್ಠಲನೆ ಬಂದರೆ ನಿನಗೆ |
ಸಾದರದಲಿ ಸವಿಮಾತನ್ಹೇಳುವೆನು ೩
( ಇದೇ ಹಾಡು ಶಬ್ದ ಪಲ್ಲಟಗಳೊಡನೆ ರಂಗಯ್ಯ ರಂಗ ಬಾರೊ…ಮುಂತಾಗಿ
ತಿರುಪತಿ…..ಪ್ರಕಟನೆಯಲ್ಲಿ ಬಂದಿದೆ.)

 

೩೧
ಬಿಡೊ ಬಿಡೊ ಬಡಿವಾರಾ ಬೀರದಿರು
ನಡಿ ನಡಿ ಹೋಗೈ ಸಾಕು ಪ
ಗಂಡನುಳ್ಳವಳೆಂದರಿಯದೆ ನೀನೆಂಥಾ
ಪುಂಡಾಟಿಕೆ ಯಾರಿಗೆ ಬೇಕೊ ೧
ತಕ್ಕ ಬುದ್ಧಿ ಹೇಳುವರಿಲ್ಲದೆ ನಿ –
ನ್ನಕ್ಕ ತಂಗಿಯರನೆ ಸೋಕೊ ೨
ಶ್ರೀದವಿಠಲ ಸುಮ್ಮನೆ ಹೋಗದೆ ನಡು
ಬೀದಿಯೊಳಗೆ ಮಾಡೊರೆ ಹೋಕು ೩

 

೫೯
ಬೇಡುವುದೂ ಬಲು ಕಷ್ಟ ಪ
ನೀಡದಿದ್ದವನೇ ನಷ್ಟ ಅ.ಪ.
ನಾಚಿಕೆ ಎಲ್ಲನು ತೊರೆದು ಮಹಾ ನೀಚರಿಗೆ ಬಾಯ್ತೆರದು ೧
ಕೊಟ್ಟಾರೆಂಬ ದುರಾಶಾ ಕ್ರಿಯಾ ಭ್ರಷ್ಟರರಿಯರೂ ಕ್ಲೇಶಾ ೨
ಚಿತ್ತವೃತ್ತಿಯನು ಕಂಡೂ ಅಧಮರ ಹೊತ್ತುಹೊತ್ತಿಗೆ ಕಾಣಿಸಿಕೊಂಡು ೩
ಗುಣಹೀನರ ಕೊಂಡಾಡೀ ಬಂದು ಕ್ಷಣಕ್ಷಣಕವರನು ನೋಡೀ ೪
ಶ್ರೀದವಿಠಲನ ಬಿಟ್ಟೂ ಅಧಮಾಧಮರಿಗೆ ದೈನಬಟ್ಟು ೫

 

೧೫
ಭಯಕೃದ್ಭಯಹಾರೀ ರಾಧಾನಯನ ಮನೋಹಾರೀ ಪ
ತಾಪತ್ರಯ ಪರಿಹಾರಕ ರಂಗಾ
ಗೋಪೀಜನ ಹೃತ್ಪದ್ಮ ಪತಂಗಾ ೧
ಸುಂದರ ಸುಸ್ಮಿತಶೋಭಿತ ವದನಾ
ಮಂದರಧರ ಮಾಧವ ಜಿತಮದನಾ ೨
ದುಷ್ಟಕುಲಾಂತಕ ಈ ಧರೆಯೊಳು ಶ್ರೀದ –
ವಿಠಲ ವಿಧಿಭವವಂದಿತ ಪಾದಾ ೩

 

ವ್ರತಗಳಲ್ಲಿ ಮೌನಗೌರಿ ಎಂಬ ವ್ರತವಿದೆ
೪೧
ಭಾಗೀರಥಿ
ಭಾಗೀರಥೀ ದೇವಿ ಭಯ ನಿವಾರಣ ಗಂಗೆ
ಸಾಗರ ನಿಜರಾಣಿ ಸಕಲ ಕಲ್ಯಾಣಿ ಪ
ಒಮ್ಮೆ ಶ್ರೀವಿಷ್ಣು ಪಾದದಲಿ ಉದ್ಭವಿಸಿದೇ
ಬ್ರಹ್ಮನ ಕರ ಪಾತ್ರೆಯಲ್ಲಿ ಬಂದೆ
ಒಮ್ಮೆ ನಾರಾಯಣನ ಪಾದ ತೀರ್ಥವಾದಿ
ಬ್ರಹ್ಮಾಂಡವೆಲ್ಲ ಪಾದನ್ನವೆಂದಿನಿಸಿದೆ ೧
ದೇವಿ ನೀ ವಿಷ್ಣು ಪಾದದಲಿ ಉದ್ಭವಿಸಿದೆ
ದೇವತೆಗಳೆಲ್ಲ ನಿಮ್ಮಾಧೀನವೊ
ಆವ ಮಹಾದೇವನು ತಲೆಬಾಗಿರಲಾಗಿ ಮಹ
ದೇವ ಶಿರಸಿನಲಿ ಉದ್ಭವಿಸಿದೆ ಜಗವರಿಯೆ ೨
ದೃಷ್ಟಿಸಿ ನೋಡಲು ನೂರು ಜನ್ಮದ ಕೃತ್ಪಾಪ
ಮುಟ್ಟಿದರೆ ಮುನ್ನೂರು ಜನ್ಮದ ಪಾಪವು
ಮುಟ್ಟಿಮಾಡಲಿ ಬಂದು ಸ್ನಾನ ಮಾತ್ರದಿಂದ
ಸುಟ್ಟುಹೋಗುವುದು ಸಹಸ್ರ ಜನ್ಮದ ಪಾಪ ೩
ಜಹ್ನು ಋಷಿಯಿಂದಲಿ ಬಿದ್ದ ಕಾರಣದಿಂದ
ಜಾಹ್ನವಿಯಂತೆಂದು ನೀ ಕರೆಸಿಕೊಂಡೇ
ಮುನ್ನ ನರಕಾಸುರನ ಸಗರ ರಾಯನ ವಂಶ
ವನ್ನು ನೀ ಪಿಂತೆ ಪಾವನ ಮಾಡಬಂದೆ ೪
ವಿಸ್ತಾರದಲಿ ಪೊಳಿವ ಮುತ್ತಿನಾ ಸರಗಳು
ಮತ್ತೆ ರಂಗಮ್ಮ ಪವಡಿಸಿದ ನೋಡೀ
ಮತ್ತೆ ಮಹಾಲಕ್ಷ್ಮಿಯೆ ಉರಸ್ಥಳದಲಿರಲಾಗಿ
ಇತ್ತ ಶ್ರೀದವಿಠಲ ನನರಸಿ ಬಂದೆ ೫

 

ಶಿವ ಪಾರಮ್ಯವನ್ನು ನಿಂದಾಸ್ತುತಿಯ
೪೦
ಗೌರೀದೇವಿ
ಮಾತಾಡೇ ಎನ್ನ ಮೌನದ ಗೌರೀ
ಯಾತಕಚಲಮನ ಸೋತವನೊಡನೆ
ಮಾತಾಡೇ ಗೌರಿ ಮಾತಾಡೇ ಪ
ನಸುನಗೆ ಮುಖವಿದು ಬಾಡಿ ಕೆಂದುಟಿಯು
ಎಸೆದಿರಲು ನಾನೋಡಿ
ವಸುಧೆಯೊಳಗೆ ನಾ ಜೀವಿಸಲಾರೆ
ಘಸಘಸವ್ಯಾತಕೆ ತುಂಬಿತು ಅರಗಿಣಿ ೧
ಕ್ಷಣ ಬಿಟ್ಟಿರಲಾರೆ ಅಮ್ಮ
ಷಣ್ಮುಖ ಗಣಪರ ತಾಯೆ ನೀ ಬಾರೇ
ವಸುಧೆಯೊಳಗೆ ನಾ ಜೀವಿಸಲಾರೆ
ಘಸಘಸವ್ಯಾತಕೆ ತುಂಬಿತು ಅರಗಿಣಿ ೨
ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ-
ರಾಧವು ಇದ್ದರು ತಾಳೇ
ಶ್ರೀದವಿಠಲನ ಪಾದ ಕಿಂಕಿಣಿಯೇ
ಆದರಿಸುವೆ ನಾ ಆದರಿಸುವೆನೇ ೩

 

೩೨
ಮುಚ್ಚದಿರೆಲೊ ಮುರಾರಿ ಕಣ್ಣ ಪ
ಮಂಗಳಕರ ಮಕರಂದ ಸೂಸುತಲಿರೆ
ಕಂಗೊಳಿಸುವರೂ ಕಯ್ಯೂರಿ ಕೃಷ್ಣ ೧
ಮುತ್ತಿನ ಹಾರಾ ಪದಕ ಮುದ್ರಿಕೆಯು
ಒತ್ತುತಲಿಹವೊ ಬೆರಳೂರಿ ೨
ಸುಲಭರರಸ ಕೇಳು ಶ್ರೀದವಿಠಲನ
ಸುಳುವು ಕಂಡೇನು ಬಿಡು ಶೌರಿ ೩

 

೩೩
ಮುಟ್ಟಿಗಿಟ್ಟಿ ನೀ ನಮ್ಮ ಎಲೊ ಎಲೊ ಮುರಾರಿ
ನೀ ನಮ್ಮ ಛೇಛುಮ್ಮ [?] ಎಲೊ ಎಲೊ ಪ
ಮಡಿಯನುಟ್ಟು ಮೈತೊಳೆದು ಬಂದಿಹೆವೊ
ಕೊಡಬ್ಯಾಡೆಂಜಲವ ನೀ ಬಹು ತುಂಟಾ ೧
ನಿಜ ಪತಿವ್ರತೆಯರು ನಾವಲ್ಲವೇನೂ
ವ್ರಜವನಿತಾಜನ ಜಾರ ನೀ ಬಲು ಚೋರ ೨
ಸೋದರತ್ತೆ ಮಗ ನೀ ನಮಗಲ್ಲ
ಶ್ರೀದವಿಠಲ ಬಿಡು ಹಾದಿ ಸುಮ್ಮನೆ ಹೋದೀ ೩

 

೧೬
ಯದುಪತಿ ನಮಗಾಗಲಿ | ನಿನ್ನಲಿ ರತಿ ಪ
ತನುಮನ ಧನ ನಿನಗೊಪ್ಪಿಸಿ ನಲಿವಾ
ಅನುಭವಿಗಳ ಸಂಗತೀ ೧
ಶರಣಾಗತ ಪರಿಪಾಲಕನೆಂದೂ
ಮರೆಯದೆ ಇಂಥಾ ಮತಿ೨
ಸ್ವಾಂತ ಧ್ವಾಂತ ಶ್ರೀದವಿಠಲಾ |
ಪ್ರಾಂತಕೆ ನೀನೇ ಗತೀ ೩

 

೫೦
ಯಾತಕಿನ್ನಾಥನೆಂಬುವದೂ ಕರುಣಾಳು ಜಗ –
ನ್ನಾಥದಾಸರ ಸೇರಿಕೊಂಬುವದೂ ಪ
ಭೀತಕರ ಬಹು ಜನ್ಮಕೃತ ಮಹಾ
ಪಾತಕಾದ್ರಿಗಳನು ಭೇದಿಸಿ
ಮಾತುಳಾಂತಕನಂಘ್ರಿ ಕುಮುದ
ನೀತ ಭಕ್ತಿಯ ನೀಡಿ ಸಲಹುವ ಅ.ಪ.
ಘೋರಸಂಸಾರ ಪಾರಾವಾರ ದಾಟಿಸುವಾ ಲಕ್ಷ್ಮೀ
ನಾರಸಿಂಹನ ನಿತ್ಯ ಪೂಜಾ ಭಾರ ವಹಿಸಿರುವಾ
ಮೂರು ಲೋಕೋದ್ಧಾರ ದುರಿತೌಘಾರಿ ಕೃಷ್ಣ ಕಥಾಮೃತಾಬ್ಧಿಯ
ಸಾರ ತೆಗೆದು ಬೀರಿ ಕರುಣವ ಬೀರಿ ಸುಜನೋದ್ಧಾರ ಮಾಡಿದ ೧
ವೇದಶಾಸ್ತ್ರ ಪುರಾಣವೆಲ್ಲವ ತೋರಲಿಟ್ಟಿಹರು ಬಹು ವಿಧ-
ವಾದ ದುರ್ಮತವಾದಿಗಳ ಮಾರ್ಗದಿ ಕಟ್ಟಿಹರೊ
ಮೋದತೀರ್ಥ ಮತಾನುಗತ ಸದ್ವಾದಪೂರ್ಣ ಪರಮಾತ್ಮದರ್ಶನ
ಶ್ರೀದನೊಲಿದು ಕೃಪಾಕಟಾಕ್ಷ ಪ್ರಸಾದ ಒಲಿವ ವಿನೋದಗೊಳಿಸುತ೨
ಶ್ರೀರಮಾಪತಿ ಸರ್ವಸುಗುಣಾಧಾರ ದಯದಿಂದಾ
ಮುರಲಾ ಸೇರಿ ಬರುವದು ಸರ್ವಸಂಪತ್ಪಾರವಾನಂದ
ಕಾರುಣಿಕತನದಿಂದಲಿಂತುಪಕಾರವ ಮಾಡಿ ದೀನ ಜನರಿಗೆ
ಧೀರ ಶ್ರೀದವಿಠಲನ ತೋರಿದರು ನಿಜಭಕ್ತಜನರಿಗೆ ೩

 

೩೪
ರಂಗಯ್ಯ ರಂಗ ಬಾರೋ
ಬರುತೀಯ ನಮ್ಮನಿಗೆ ಬಾರೋ ಪ
ಬಂದರೆ ಬುಗುರೀ ಚಂಡುಗಳನೆ ಕೊಟ್ಟು
ಬಗೆ ಬಗೆ ಆಟವ ಕಲಿಸಿ ವಲಿಸುವೇ೧
ಬಂದರೆ ರಸಾ ರಸಾಯನಗಳನುಣಿಸೀ
ಮುಸುಕಿನೊಳಗೆ ಬಚ್ಚಿಟ್ಟುಕೊಂಬೆನು ಬಾರೊ ೨
ಬಂದರೆ ಶ್ರೀದವಿಠ್ಠಲ ನಿನಗೇ
ಸುಂದರೆ ಸವಿಮಾತಾ ಹೇಳುರೊಂದು ೩

 

೬೦
ರಘುರಾಮರ ಪಾದವ ಹಿಡೀ ಹಿಡಿ ಪ
ಕಾಮ ಕ್ರೋಧ ಮದ ಮತ್ಸರಗಳೆಂಬೋ
ದುರಿತವ ಬ್ಯಾಗನೆ ಹೊಡಿ ಹೊಡಿ ೧
ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ
ಅದರೊಳಗೇನಿದೆ ಹುಡಿ ಹುಡೀ ೨
ಶ್ರೀದವಿಠಲನ ಪಾದಸ್ಮರಣೆಯ
ಮರೆಯದೆ ಬೇಗನೆ ನುಡಿ ನುಡೀ ೩

 

ಅಕ್ರೂರನು ಕಂಸನಾಣತಿಯ ಮೇರೆಗೆ
೬೧
(ಅಕ್ರೂರನ ಒಸಗೆ)
ರಥವೋಗದಾ ಮುನ್ನ ಗೋಕುಲಕೆ ಮನ್ಮನೋ-
ರಥ ಹೋಗಿರುವುದೇನೆಂಬೇ ಪ
ಅತಿ ಕೌತುಕವದಾಯ್ತು ಖಳರಾಯನೊಲಿದು ಯದು-
ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ ಅ.ಪ.
ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ-
ಪತಿ ಸೇವೆ ತಾನಾಗಿ ದೊರೆತೂ
ಶತಸಹಸ್ರಾನಂತ ಜನುಮಗಳ ಸು-
ಕೃತಕೆ ಫಲವಾಯಿತೆಂದರಿತೂ
ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ
ಪಥದೊಳಗೆ ತಾವೆ ಮುಂದುವರಿದೂ
ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ
ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ ೧
ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು-
ನಾಪುಳಿನದಲಿ ಮೆರೆವ ಚರಣಾ
ಗೋಪೀಯರ ಪೀನ ಕುಚಕುಂಕುಮಾಂಕಿತ ಚರಣಾ
ತಾಪತ್ರಯಾವಳಿವ ಚರಣಾ
ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ
ಆಪದ್ಬಾಂಧವನ ಚರಣಾ
ನಾ ಪೇಳಲೇನು ಭಕುತರ ವತ್ಸಲಾನುಕರು-
ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ ೨
ನೋಡುವೆನು ನೀರದಶ್ಯಾಮಸುಂದರನ ಕೊಂ-
ಡಾಡುವೆನು ಕವಿಗೇಯನೆಂದೂ
ಮಾಡುವೆನು ಸಾಷ್ಟಾಂಗದಂಡ ಪ್ರಣಾಮ ಕೊಂ-
ಡಾಡುವೆನು ಕೈ ಮುಗಿದು ನಿಂದೂ
ಬೇಡುವೆನು ಭುವನೈಕದಾತನೆಂದಲ್ಲಿ ಕೊಂ
ಡಾಡುವೆನು ದಾಸ್ಯ ಬೇಕೆಂದೂ
ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ-
ಗೂಡುವುದು ನಿಸ್ಸಂದೇಹ ದೈವ ಸಹಾಯ ೩
ಇರುವನೋ ಏಕಾಂತದೊಳಗಿರುವ ಕೇಳದಿರು
ಬರುವನೋ ಬಂದವನ ಕಂಡೂ
ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ
ಬೆರೆವನೋ ಬೆರಸಿಯದನುಂಡೂ
ಒರೆವನೋ ಒಡಲ ಧರ್ಮವನೆಲ್ಲ
ವರಗಿನೇ ಜರಿಯನೋ
ಜಗದೀಶ ಹಗೆಯವನೆನುತ ಬಗೆಯ ೪
ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ-
ಗಾಗಿ ಹೆಜ್ಜೆಗಳ ನೋಡಿ
ಭೂದೇವಿಗಾಭರಣವೆನುತ ತೇರಿಳಿದು ಶ್ರೀ
ಪಾದರಜದೊಳಗೆ ಪೊರಳಾಡೀ
ಗೋದೋಹನದೊಳಿದ್ದ ರಾಮಕೃಷ್ಣರ ಕಂಡು
ನಾ ಧನ್ಯ ಧನ್ಯನೆಂದಾಡೀ
ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ
ಸಾದರಿಸಿದನು ಇದೆ ಸದನದಲಿ ಸ್ವಪ್ನದಲಿ ೫

 

ಮಂತ್ರಾಲಯದ ಶ್ರೀ ರಾಘವೇಂದ್ರರನ್ನು
೪೫
ಶ್ರೀ ರಾಘವೇಂದ್ರರು
ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ
ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ.
ಆ ಸುಧೀಂದ್ರ ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ
ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ
ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ
ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ ೧
ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ
ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ
ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ
ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ ೨
ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ
ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ
ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ
ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು ೩

 

ಸೋದೆಯಲ್ಲಿ ನೆಲೆನಿಂತ
೪೪
ಶ್ರೀ ವಾದಿರಾಜರು
ರಾಜರ ಭಾಗ್ಯವಿದು ಸ್ವಾದಿರಾಜರ ಭಾಗ್ಯವಿದು
ಸೋಜಗವೆನಿಸಿ ರಾಜಿಸುತಿದಕೊ ರಾಜರ ಭಾಗ್ಯವಿದು ಪ
ಬುಧಜನಕೊಪ್ಪುವ ಪದ ಸುಳಾದಿ ಖಳ
ರೆದೆಗಿಚ್ಚೆನಿಸುವ ಚತುರತೆಯಾ
ಸದಮಲ ನಾನಾವಿಧ ಗ್ರಂಥದಿ ಹಯ-
ವದನನ ಪೂಜೆಯು ಯಜಿಸುವುದೆಲ್ಲ೧
ತಮ್ಮಯ ನೇಮವು ಒಮ್ಮಿಗು ಬಿಡದಂ-
ತಮ್ಮಯ ಬಿಡದಲೆ ಸಮ್ಮೊಗದಾ
ಅಮ್ಮಹ ಶಾಸಖಿ ಬೂಮ್ಮಭೂತವನು
ಘಮ್ಮನೆ ನಿರ್ಮಿಸಿ ರಮ್ಮಿಪುದೆಲ್ಲ೨
ಮೇದಿನಿಯೊಳಗೆ ಶುಭೋದಯಕಾರಕ
ಸ್ವಾದೀಸ್ಥಳ ಸರ್ವಾಧಿಕವೈ
ಪಾದದ್ವಯದ ಅಗಾಧ ಮಹಿಮನೇ
ಶ್ರೀದವಿಠಲನಾರಾಧಿಪುದೆಲ್ಲ ೩

 

೬೨
ರಾಮಚಂದ್ರ ನೀನೇ ಪಾಲಿಸೊ ಸರೋಜನಾಭ
ಸಾಧುಸಂಗ ಶೀಘ್ರಕೂಡಿಸೊ ಪ
ಎಷ್ಟು ದಿನ ಕಷ್ಟಪಡುವದೋಈ ಭವದೊಳು
ಈಸಲಾರೆನಯ್ಯ ಹರಿಯೇ
ಇಷ್ಟು ದಿನ ಇದ್ದಂತೆ ಇರಲಾರೆನೆಂದು ಕರವ
ಮುಟ್ಟಿ ಮುಗಿದು ಬೇಡಿಕೊಂಬೆ ಮುರಾರಿ ಕೃಷ್ಣ ನೀನೇ ಕಾಯೋ ೧
ಹರಿಹರರು ಸಮಾನರೆನ್ನದಾ ಈ ಸಜ್ಜನರಾ-
ಸಂಗದಿಂದ ಹೀನಾ ನಾನಾದೆ
ಇನ್ನುಮ್ಯಾಲೆ ಇಲ್ಲವಯ್ಯ ಸೃಷ್ಟಿಗಧಿಕ ಶ್ರೀನಿವಾಸಾ
ಇನ್ನು ನಿನ್ನ ಸ್ಮರಣೆಯಿಂದ ಇರುವೆನಯ್ಯ ಮುಕುಂದ ೨
ಪೃಥ್ವಿಯಲ್ಲಿ ಪುಟ್ಟಿದಾ ಮೊದಲು ನಿನ್ನಾ ವೃತ್ತಾಂತ
ಒಂದು ದಿನ ಮಾಡಲಿಲ್ಲವೋ
ಎಂದು ಎನ್ನ ಮ್ಯಾಲೆ ಕ್ರೂರದೃಷ್ಟಿಯಿಂದಾ ನೋಡಾದೀರು
ವಾಸುದೇವ ವೈಕುಂಠವಾಸ ಲಕ್ಷುಮಿ ರಮಣ೩
ನಿತ್ಯದಲ್ಲಿ ವಿಪ್ರರಾ ವೃಂದಾದೊಳಗೆ ನಾ ಆ-
ಸಕ್ತನಾಗಿ ಇರುವೆ ಮುಕುಂದಾ
ಎಂಥ ಪಾಪಿ ಎಂದು ಉದಾಸೀನಮಾಡಿ ನೋಡಬೇಡ
ನಿನ್ನ ಕಂದಾನೆಂದು ತಿಳಿದು ಪಾಲಿಸಯ್ಯ ನಾರಾಯಣ ೪
ಹನುಮ ಭೀಮ ಮಧ್ವೇಶಾರಿಂದಾ ಸೇವಿತ ಪ್ರಿಯಾ
ಶಾಂತಮೂರ್ತಿ ಶಾಮವರ್ಣನೇ
ಶ್ರೀದವಿಠಲೇಶಾ ನಿನ್ನಾ ದಾಸನೆಂದು ಪಾಲಿಸೆನ್ನ
ಸಾರಿ ಬೇಡಿಕೊಂಬೆನಯ್ಯ ರಾಮಚಂದ್ರ ರಾವಣಾಚಾರಿ ೫

 

ಈ ಹಾಡಿನಲ್ಲಿ ಕೆಲವು ಅಪೂರ್ವ ಪೌರಾಣಿಕ
೧೭
ರೂಪ ತೋರಿಸೊ ರಂಗ ನಿಜರೂಪ ತೋರಿಸೋ ಪ
ರೂಪ ತೋರಿಸೋ ರತಿಪತಿ ಜನಕ
ಗೋಪ ಮನೆಗೆ ಬರುವ ತನಕ ಅ.ಪ
ಕೇವಲ ಕಲ್ಪದ್ರುಮನಹುದೆಂದು
ಭಾವಿಸುವೆನೋ ನೀನಿಂದು ೧
ಅಣು ಮಹಧ್ಭಟಿನಾಘಟಿತ ಚತುರನೆ
ಪ್ರಾಣತ ಕಾಮದನು ನೀನೇ ೨
ಶ್ರೀದವಿಠಲ ಶರಣು ಎನೆ ಕೇಳೋ
ಪಾದಕ್ಕೆರಗುವೆ ಕೃಪಾಳೋ ೩

 

೧೮
ವೆಂಕಟೇಶ ನೀನೆ ಧೊರೀ ಧೊರೀ ಪ
ಸಂಕಟವೆಲ್ಲವ ಪರಿಹರಿಸುವಂಥ ಅ.ಪ.
ಎತ್ತಿನ ಪೆಸರುಳ್ಳ ಮತ್ತ ರಕ್ಕಸನ್ನ
ಕುತ್ತಿಗೆ ಕೊಡಲುತ್ತಮ ಪದವಿತ್ತೆ ೧
ಅಂಜನೆಯೆಂಬೊ ಮಂಜುಕಿಸಾಲಿಯ [?]
ಅಂಜದೆ ತಪಿಸಲು ಸಂಜೀವನವಿತ್ತೆ೨
ಸಾಸಿರ ಮುಖವುಳ್ಳ ಶೇಷನಹಂಕಾರ
ಸ್ವಸನನ ಕೈಯಿಂದ ನಾಶಮಾಡಿಸಿದಂಥ೩
ಮಾಧವ ಮಾದಿಗ ಹಾದಿಯ ಮೆಟ್ಟಲು
ಮೋದದಿಂದುದ್ಧರಿಸಿದೆ ಮಾಧವ ಅವನನ್ನು ೪
ಶ್ರೀದವಿಠಲ ನಿನ್ನ ಪಾದಾಶ್ರಿತರ
ಮೋದದಿ ಸಲಹೊ ಆದರಿಸೆನ್ನನು ೫

 

ವೈಕಾರಿಕ ತೈಜಸ ತಾಮಸ
೩೮
ರುದ್ರದೇವರು
ಶಿವನೆ ನಾ ನಿನ್ನ ಸೇವಕನಯ್ಯ ದುಮ್ಮಾನ ಬಿಡಿಸಯ್ಯ
ಕವಿಸೇವ್ಯ ಕಪರ್ದಿ ಸುಜನ ಸಹಾಯ ಸಿರಿಧರನರಮಯ್ಯ ಪ
ಭವಮೋಚನ ಭಾಗವತ ಶಾಸ್ತ್ರವನು
ಅವನೀಶಗೆ ಪೇಳ್ದವ ನೀನಲ್ಲವೆ ಅ.ಪ.
ವೈಕಾರಿಕ ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ
ಸಾಕಾರಿ ಶರ್ವಾಣೀಧವ ಸಾಂಬ ಸುರಪಾದ್ಯರ ಬಿಂಬ
ವೈಕಲ್ಯಾಸ್ಪದವನು ಕಳೆದೊಮ್ಮೆಲೆ
ವೈಕುಂಠಕೆ ಕರೆದೊಯ್ಯೊ ಕರಿಗೊರಳಾ ೧
ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳ ಕಾವ
ಸ್ತುತ್ಯಾದ್ರಿಜಾಪತಿ ಜತತೀವನದಾವ ದುರಿತಾಂಬುಧಿ ನಾವ
ಕೃತ್ತಿವಾಸ ಉನ್ನತ್ಯವರಾಧಗ –
ಳೆತ್ತಿಣಿಸದೆ ಕೃತಕೃತ್ಯನ ಮಾಡೈ ೨
ಗಂಗಾಧರ ಷಣ್ಮುಖ ಗಣಪರ ತಾತ ತ್ರೈಲೋಕ್ಯಖ್ಯಾತ
ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ
ತುಂಗ ಮಹಿಮ ನಿಸ್ಸಂಗ ಹರಿಯದ್ವತೀ
ಯಂಗ ಡಮರು ಶೂಲಂಗಳ ಧರಿಸಿಹ ೩
ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ
ಸಂಚಿಂತನ ಮಾಡುವ ಸಂತತ ನೇಮ ಶ್ರೀರಾಮನಾಮ
ಪಂಚಶರಾರಿ ವಿರಿಂಚಿಕುವರ ನಿ –
ಷ್ಕಿಂಚನರೊಡೆಯನ ಮಂಚಪದಾರ್ಹನೆ೪
ಸ್ಪಟಿಕಾಭ ಕಪಾಲಿ ಕಾಮಿತಫಲದ ಫಲ್ಗುಣಸಖ ಶ್ರೀದ –
ವಿಠಲಾಶ್ರಯವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ
ಕುಟಿಲರಹಿತ ಧೂರ್ಜಟಿ ವೈಷ¨ಸ್ಕಧ್ವಜ
ನಿಟಿಲನಯನ ಸಂಕಟವ ನಿವಾರಿಸೊ ೫

 

೫೧
ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ಪ
ಈ ಜಗದೊಳು ನಿಮಗೆಣೆಗಾಣೆ ಸತತ ನಿ –
ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ ಅ.ಪ.
ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ
ಚರಿಸುತ ಧರೆಯೊಳು ಮೆರೆವ ಮಹಾತ್ಮರ
ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ
ದುರಿತರಾಶಿಗಳಿರಗೊಡದೆ ನೆರೆ
ಪರಮಮುಕ್ತಿಯ ದಾರಿ ತೋರುತ
ಸಿರಿಸಹಿತ ಹರಿ ತೋರುವಂದದಿ
ಕರುಣ ಮಾಳ್ಪ ಸುಗಣಮಹೋದಧಿ ೧
ರವಿಯು ಸಂಚರಿಸುವಂತೆ ಭೂವಲಯದಿ
ಕವಿಶ್ರೇಷ್ಠ ಚರಿಸಿದೆಯೋ
ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ
ಭುವನೈಕ ವೇದವದ್ಯನ ಶ್ರವಣಭಕುತಿಯಿಂದ
ದಿವಸ ದಿವಸದಿ ಪ್ರೀತಿ ಬಡಿಸುತ
ಧ್ರುವವರನಂಘ್ರಿಗಳಿಗರ್ಪಿಸಿ
ಭುವನ ಪಾವನ ಮಾಡಲೋಸುಗ
ಅವನಿ ತಳದಿ ವಿಹರಿಸುತಿಹ ಗುರು ೨
ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ –
ದ್ಗುಹಾಧೀಶನನು ಬಿಡದೆ
ಸಹನ ಗುಣಗಳನ್ನು ಅನುದಿನ ಸ್ಮರಿಸುತ
ಸಹನದಿ ಶಮದಮಯತು ನಿಯಮಗಳನ್ನು
ವಹಿಸಿ ಶ್ರೀದವಿಠಲನಂಘ್ರಿಯ
ಮಹಿಮೆ ತೋರುತ ಪೂಜಿಸುತ ಬಲು
ಮಹಿತಪೂರ್ಣಾನಂದತೀರ್ಥರ
ವಿಹಿತ ಶಾಸ್ತ್ರಗಳರಿತು ಬೋಧಿಪ ೩

 

ಬಲಿ ಮೊದಲಾದವರು
೫೨
ಸಂಗಸುಖವ ಬಯಸಿ ಬದುಕಿರೋ
ರಂಗವಲಿದ ಭಾಗವತರ ಪ
ಸಂಗಸುಖವ ಬಯಸಿ ಬದುಕಿ
ಭಂಗಪಡಿಪ ಭವವ ನೂಕಿ
ಹಿಂಗದೇ ನರಸಿಂಗನನ್ನು
ಕಂಗಳಿಂದ ಕಾಣುತಿಹರ ಅ.ಪ.
ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ
ಶಿಷ್ಟ ಸದಾಚಾರದಲ್ಲಿ ನಿಷ್ಠರಾಗಿ ನಿತ್ಯ ಮುದ್ದು
ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ
ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ
ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ
ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು ೧
ಭೂತದಯಾಶೀಲರಾದ ನೀತ ಗುರು ಜಗ-
ನ್ನಾಥ ವಿಠಲಾಂಕಿತವನು ಪಡೆದು ಸಂಗೀತ
ವೃತ್ತ ಪದ ಸುಳಾದಿಯ ಪೇಳಿ ಪ್ರೇ-
ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ
ಜಾತರಾಗಿ ಜವನಬಾಧೆಯ ಬಯಲು ಮಾಡಿ
ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ ೨
ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ
ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ-
ಸಾದದಿಂದ ಹರಿಕಾಥಾಮೃತ ಸಾರತತ್ವ
ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ
ಸಾದರದಲಿ ಪೇಳಿ ದುಷ್ರ‍ಕತ ದೂರಮಾಡಿ
ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ ೩

 

೬೩
ಸಾಕಯ್ಯ ಸಾಕು ಸಾಕಯ್ಯ ನಮ-
ಗ್ಯಾಕಯ್ಯ ಇನ್ನವಿವೇಕ ಸಂಗತಿಪ
ಬುದ್ಧಿ ಶೂನ್ಯರಿಗೆ ಬುದ್ಧಿಯನು ಹೇಳಲು
ಮದ್ದಾನೆ ಮೈತೊಳೆವಂತಾಯಿತು ೧
ಮರುಳ ಜನರಿಗೆ ಧರ್ಮವನರುಹಲು
ಕುರುಡಗೆ ಕನ್ನಡಿ ತೋರಿದಂತಾದಿತು ೨
ಶ್ರೀದವಿಠಲನೆಂದಜ್ಞಾನಿಗೆ
ಬೋಧಿಸೆ ಬೋರ್ಗಲ್ಲ ಮುಂದೆ ವದರಿದಂತಾಯಿತು ೩

 

೧೯
ಸುಖಪರವಯ್ಯಾ ಶ್ರೀಹರಿಲೀಲೆ
ಆ ವೈಜಯಂತಿ ಕೌಸ್ತುಭ ವನಮಾಲಾ
ಪಾವನವಕ್ಷವಿಶಾಲ
ಶ್ರೀವತ್ಸಾಂಕನ ದಾವನಕೊರಳೊಳು
ಕೇವಲ ಗುಂಜಾಮಾಲಾ
ತ್ರಿಜಗಜ್ಜನ್ಮಾದಿಗಳಿಗೆ ಮೂಲಾ
ಜನಾರಿಗೆನಿಸುವ ಕಾಲಾ
ಭಜಿಪರ ಭಾಗ್ಯೋದಯಕಾನಂದ
ವ್ರಜದೊಳೀಗೋಪಿಯ ಕಂದಾ
ಶ್ರೀದವಿಠಲ ಕೇಳು ಸುರತಸುಶೀಲಾ
ರಾಧಾಮನೋನುಕೂಲಾ
ಸಾಧಿಸಿ ವೃಂದಾವನದಲ್ಲಿ ಪೊಂಗೊಳಲೂದುವ ಗಾನವಿಲೋಲ

 

೬೪
ಹರಿಕಥಾಮೃತಸಾರ ಫಲಸ್ತುತಿ (೩೩ನೆಯ ಸಂಧಿ)
ಹರಿಕಥಾಮೃತಸಾರ ಶ್ರೀಮ-
ದ್ಗುರುವರ ಜಗನ್ನಾಥದಾಸರ
ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ
ಪರಮಪಂಡಿತಾಭಿಮಾನಿಗಳು ಮ-
ತ್ಸರಿಸಲೆದೆಗಿಚ್ಚಾಗಿ ತೋರುವು-
ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ ೧
ಭಾಮಿನಿಯ ಷಟ್ಪದಿಯ ರೂಪದ-
ಲೀ ಮಹಾದ್ಭುತ ಕಾವ್ಯದಾದಿಯೊ-
ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ
ಯಾಮಯಾಮಕೆ ಪಠಿಸುವರ ಸು-
ಧಾಮಸಖ ಕೈಪಿಡಿಯಲೋಸುಗ
ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ ೨
ಸಾರವೆಂದರೆ ಹರಿಕಥಾಮೃತ
ಸಾರವೆಂಬುವುದೆಮ್ಮ ಗುರುವರ
ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ
ಸಾರಥಿಯ ಬಲಗೊಂಡು ಸಾರಾ-
ಸಾರಗಳ ನಿರ್ಣೈಸಿ ಪೇಳ್ದನು
ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ ೩
ದಾಸವರ್ಯರ ಮುಖದಿ ನಿಂದು ರ-
ಮೇಶನನು ಕೀರ್ತಿಸುವ ಮನದಭಿ-
ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ
ಈ ಸುಲಕ್ಷಣ ಕಾವ್ಯದೋಳ್ ಯತಿ
ಪ್ರಾಸಗಳಿಗೆ ಪ್ರಯತ್ನವಿಲ್ಲದೆ
ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ ೪
ಪ್ರಾಕೃತೋಕ್ತಿಗಳೆಂದು ಬರಿದೆ ಮ-
ಹಾಕೃತಘ್ನರು ಜರಿವರಲ್ಲದೆ
ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು
ಶ್ರೀಕೃತೀಪತಿಯಮಲಗುಣಗಳು
ಈ ಕೃತಿಯೊಳುಂಟಾದ ಬಳಿಕ
ಪ್ರಾಕೃತವೆ ಸಂಸ್ರ‍ಕತದ ಸಡಗರವೇನು ಸುಗುಣರಿಗೆ ೫
ಶ್ರುತಿಗೆ ಶೋಭನವಾಗದೊಡೆ ಜಡ
ಮತಿಗೆ ಮಂಗಳವೀಯದೊಡೆ ಶ್ರುತಿ
ಸ್ರ‍ಮತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ
ಮಥಿಸಿ ಮಧ್ವಾಗಮಪಯೋಬ್ಧಿಯ
ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ
ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು ೬
ಭಕ್ತಿವಾದದಿ ಪೇಳ್ದನೆಂಬ ಪ್ರ-
ಸಕ್ತಿ ಸಲ್ಲದು ಕಾವ್ಯದೊಳು ಪುನ-
ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ
ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ-
ಭಕ್ತಿ ವಿಷಮಗಳಿರಲು ಜೀವ-
ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ ೭
ಆಶುಕವಿಕುಲಕಲ್ಪತರು ದಿ-
ಗ್ದೇಶವರಿಯಲು ರಂಗನೊಲುಮೆಯ
ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು
ಈ ಸುಲಕ್ಷಣ ಹರಿಕಥಾಮೃತ
ಮೀಸಲಳಿಯದೆ ಸಾರ ದೀರ್ಘ
ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ ೮
ಪ್ರಾಸಗಳ ಪೊಂದಿಸದೆ ಶಬ್ದ
ಶ್ಲೇಷಗಳ ಶೋಧಿಸದೆ ದೀರ್ಘ
ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ
ದೂಷಕರು ದಿನದಿನದಿ ಮಾಡುವ
ದೂಷಣವೇ ಭೂಷಣವು ಎಂದುಪ-
ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ ೯
ಅಶ್ರುತಾಗಮಭಾವ ಇದರ ಪ-
ರಿಶ್ರಮವು ಬಲ್ಲವರಿಗಾನಂ-
ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ರ‍ಕತಿಯ
ಮಿಶ್ರರಿಗೆ ಮರೆಮಾಡಿ ದಿತಿಜರ
ಶಸ್ತ್ರದಲಿ ಕಾಯದಿಪ್ಪರಿದರೊಳು-
ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ ೧೦
ನಿಚ್ಚ ನಿಜಜನ ಮೆಚ್ಚ ಗೋಧನ
ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು
ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ
ಉಚ್ಚವಿಗಳಿಗೆ ಪೊಚ್ಚ ಪೊಸದೆನ-
ಲುಚ್ಚರಿಸಿದೀ ಸಚ್ಚರಿತ್ರೆಯ
ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು ೧೧
ಸಾಧು ಸಭೆಯೊಳು ಮೆರೆಯೆ ತತ್ವಸು-
ಬೋಧವೃಷ್ಟಿಯ ಗರೆಯೆ ಕಾಮ
ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ
ವಾದಿಗಳ ಪಲ್ಮುರಿಯೆ ಪರಮವಿ-
ನೋದಿಗಳ ಮೈ ಮರೆಯಲೋಸುಗ
ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ ೧೨
ವ್ಯಾಸತೀರ್ಥರ ಒಲವೊ ವಿಠಲೋ-
ಪಾಸಕ ಪ್ರಭುವರ್ಯ ಪುರಂದರ
ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ
ಕೇಶವನ ಗುಣಮಣಿಗಳನು ಪ್ರಾ-
ಣೇಶಗರ್ಪಿಸಿ ವಾದಿರಾಜರ
ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು ೧೩
ಹರಿಕಥಾಮೃತಸಾರ ನವರಸ
ಭರಿತ ಬಹುಗಂಭೀರ ರತ್ನಾ-
ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ
ಸರಸ ನರಕಂಠೀರವಾಚಾ-
ರ್ಯರ ಜನಿತ ಸುಕುಮಾರ ಸಾತ್ವೀ-
ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ ೧೪
ಅವನಿಯೊಳು ಜ್ಯೋತಿಷ್ಮತಿಯ ತೈ-
ಲವನು ಪಾಮರನುಂಡು ಜೀರ್ಣಿಸ-
ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ
ಶ್ರವಣಮಂಗಳ ಹರಿಕಥಾಮೃತ
ಸವಿದು ನಿರ್ಗುಣಸಾರಮಕ್ಕಿಸ-
ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು ೧೫
ಅಕ್ಕರದೊಳೀ ಕಾವ್ಯದೊಳು ಒಂ-
ದಕ್ಕರವ ಬರೆದೋದಿದವ ದೇ-
ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ
ಲೆಕ್ಕಿಸದೆ ಲೋಕೈಕನಾಥನ
ಭಕ್ತಿಭಾಗ್ಯವ ಪಡೆದ ಜೀವ
ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ೧೬
ಒತ್ತಿ ಬಹ ವಿಘ್ನಗಳ ತಡೆದಪ
ಮೃತ್ಯುವಿಗೆ ಮರೆಮಾಡಿ ಕಾಲನ
ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ
ಒತ್ತಿಗೊಳಿಸಿ ವನರುಹೇಕ್ಷಣ
ನೃತ್ಯಮಾಡುವನವನ ಮನೆಯೊಳು
ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ ೧೭
ಆಯುರಾರೋಗ್ಯೈಶ್ವರ್ಯ ಯಶ
ಧೈರ್ಯ ಬಲ ಸಮಸಹಾಯ ಶೌರ್ಯೋ
ದಾರ್ಯ ಗುಣಗಾಂಭೀರ್ಯ ಮೊದಲಾದ
ಆಯತಗಳುಂಟಾಗಲೊಂದ-
ಧ್ಯಾಯ ಪಠಿಸಿದ ಮಾತ್ರದಿಂ ಶ್ರವ-
ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ ೧೮
ಕುರುಡ ಕಂಗಳ ಪಡೆವ ಬಧಿರನಿ-
ಗೆರಡುಕಿವಿ ಕೇಳ್ವಹವು ಬೆಳೆಯದ
ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ
ಬರಡು ಹೈನಾಗುವುದು ಕೇಳ್ದರೆ
ಕೊರಡು ಪಲ್ಲವಿಸುವುದು ಪ್ರತಿದಿನ
ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ ೧೯
ನಿರ್ಜರತರಂಗಿಣಿಯೊಳನುದಿನ
ಮಜ್ಜನಾದಿ ಸಮಸ್ತ ಕರ್ಮವಿ-
ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ
ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ
ಸಜ್ಜನರು ಶಿರತೂಗುವಂದದಿ
ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ ೨೦
ಸತಿಯರಿಗೆ ಪತಿಭಕುತಿ ಪತ್ನಿ
ವ್ರತ ಪುರುಷರಿಗೆ ಹರಿಷ ನೆಲೆಗೊಂ-
ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ
ಸತತ ಮಂಗಳವೀವ ಬಹು ಸು-
ಕೃತಿಗಳೆನಿಸುತ ಸುಲಭದಿಂ ಸ
ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ ೨೧
ಎಂತು ವರ್ಣಿಸಲೆನ್ನಳವೆ ಭಗ-
ವಂತನಮಲ ಗುಣಾನುವಾದಗ-
ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ
ಚಿಂತನೆಗೆ ಬಪ್ಪಂತೆ ಬಹು ದೃ-
ಷ್ಟಾಂತಪೂರ್ವಕವಾಗಿ ಪೇಳ್ದ ಮ-
ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು ೨೨
ಮಣಿಖಚಿತ ಹರಿವಾಣದಲಿ ವಾ
ರಣಸುಭೋಜ್ಯ ಪದಾರ್ಥ ಕೃಷ್ಣಾ
ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ
ಪ್ರಣತರಿಗೆ ಪೊಂಗನಡ ವರವಾ
ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ
ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ ೨೩
ದುಷ್ಟರೆನ್ನದೆ ದುರ್ವಿಷಯದಿಂ
ಪುಷ್ಟರೆನ್ನದೆ ಪೂತಕರ್ಮ
ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ
ಕೃಷ್ಣ ಕೈಪಿಡಿಯುವನು ಸತ್ಯ ವಿ-
ಶಿಷ್ಟ ದಾಸತ್ವವನು ಪಾಲಿಸಿ
ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ ೨೪

 

೨೦
ಹರಿಯ ಸ್ಮರಣೆ ಮಾಡೋ | ನಿರಂತರ ಪ
ಮೊದಲು ತೋರುತಿದೆ ಮಧುರ ವಿಷಯ ಸುಖ
ತುದಿಗೆ ದುಃಖಾ ಅನೇಕಾ೧
ದಾನ ಮಾನ ಬಹು ದಯಾ ಧರ್ಮತೋ
ಜ್ಞಾನವೆ ಮಖ್ಖರ [?] ದೇಕೋ ೨
ತಾರಕ ಭವಭಯಹಾರ ಕೊನಿಗೇ
ಶ್ರೀದವಿಠ್ಠಲನೆ ಕೇಳೋ ೩

 

ದಶಾವತಾರದ ಇನ್ನೊಂದು
೩೫
ಹೇಳ ಬಂದೇವಮ್ಮಾ ಗೋಪಿ ನಿನಗೆ ದೂರ
ಯಾರ ಮಾತ ಕೇಳವಲ್ಲಾ ರಂಗ ಚೋರ ಪ
ದಿಕ್ಕಡದಿಮ್ಮಿಲೆ ಕೂಡಿಸುವ ಬ್ರಹ್ಮಾಂಡ ನೂರಾ
ಇವನ ಮಹಿಮಾ ತಿಳಿಯದವ್ವಾ ಮಾಯಕಾರ ಅ.ಪ.
ಕಳ್ಳನಾಗಿ ಕಂಣಮುಚ್ಚಿ ಗತಿಯವಲ್ಲನೆ
ವಳ್ಳೇಹೊತ್ತು ಬಂದಿತೆಂದು ಭಾರ ನೆಗಿವ್ಯಾನೆ ೧
ಕ್ವಾರಿಲೆ ಹಾದು ದೈತ್ಯನ ಕೊಂದಾನೆ
ತರಳಗಾಗಿ ಖಂಬದಿಂದ ವಡದು ಬಂದಾನೆ ೨
ಧಾರೂಣಿ ಅಳೆದು ಮೂರಡಿ ಮಾಡಿದ
ಅಂಬೆಯ ಮಗನಾಗಿ ಎಂಥ ಕಾಡಿದ ೩
ರಂಭೆಗಾಗಿ ರಾವಣಗೇ ಅಂಬು ಹೂಡಿದ
ನಂಬೀದ ವಿಭೀಷಣಗೆ ಪಟ್ಟಗಟ್ಟಿದ ೪
ಗೋಕುಲದೊಳಗೆ ಪುಟ್ಟಿ ಬೆಣ್ಣೆ ಮೆದ್ದಾನೆ
ವಸ್ತ್ರವಿಲ್ಲದಂತೆ ತಾ ಬತ್ತಾಲೆ ನಿಂತಾನೆ ೫
ಕುದುರೆಯೇರಿ ಹಾರುತ ಬಂದಾನೆ
ಬೆದರಬೇಡೆಂದು ಶ್ರೀದವಿಠಲ ಅಂದಾನೆ ೬

 

೩೬
ಹ್ಯಾಗಾದರು ನಾ ಬಿಡೆ ಕರೆದೊಯ್ಯೊ ರಾಧಾ ಶ್ರೀ-
ರಂಗನೆ ನೀನ್ಹ್ಯಾಗಾದರು ಪ
ಹವಣಿಸಿ ನೋಡೆ ಬಂದೆನೆಂದೊ ತವ ವದನಾಂಬುಜ ಭೃಂಗನಾ ೧
ಮುಖ ಮುಖ ನಿನ್ನನೆ ನೋಡುವನಿದಕೋ
ಪ್ರಕಟಿತ ಕರುಣಾಸಾಗರಾ ೨
ತೊಟ್ಟಿಲೊಳಗೆ ತರಹರಿಸಲು ಶ್ರೀದವಿಠಲ ದೇವೋತ್ತುಂಗನೇ

 

ಭಗವಂತನಿಗೆ ಅನನ್ಯವಾಗಿ
ಶ್ರೀ ಶ್ರೀದವಿಠಲರ ಕೀರ್ತನೆಗಳು
(ಅ) ಶ್ರೀಹರಿಯ ಸ್ತುತಿ

(ಸುಳಾದಿ)
ಧ್ರುವತಾಳ
ಅಂದು ಇಂದು ಎಂದೆಂದಿಗೂ ಗೋ-
ವಿಂದನೆ ಗತಿ ನಮಗೆಂದು
ಇಂದಿರೇಶ ವಿಧಿವಂದ್ಯ ನಮೋ ನತಬಂಧು
ಎಂದರಾನಂದವೀವ ನಮಗೆಂದೂ
ಬಂದ ಬಂದ ಭಯ ವೃಂದಗಳೋಡಿಸಿ
ಹಿಂದು ಮುಂದು ಎಡಬಲದೊಳಗಿಹ ನಿ –
ದ್ರ್ವಂದ್ವನ ದಯಕೇನೆಂಬೆ ಮು –
ಕುಂದನ ಮೊರೆಹೋಗದಿರಲು ಭವ
ಬಂಧನ ಬಿಡಿಸುವರಾರಿಳೆಯೊಳು
ನಂದನಂದನ ಶ್ರೀದವಿಠಲನ
ಪೊಂದಿ ನೋಡು ಸುಖಸಾಂದ್ರನ ಹೇ ನಮಗೆಂದು ೧
ಮಟ್ಟತಾಳ
ಪಾಪಪುರುಷ ನಮ್ಮ ಸಮೀಪಕೆ ಬರಲ್ಯಾಕೆ
ಪಾಪಪಂಕವನು ಲೇಪಿಸಿಕೊಳಲ್ಯಾಕೆ
ಪಾಪಿಮನವೆ ಲಕ್ಷ್ಮೀಪತಿಯ ವ್ಯಾಪಾರವ ನೋಡು
ಪಾಪಗಳೀಡ್ಯಾಡು ರೂಪವೆ ಅಣುಮಹ –
ದ್ರೂಪವೆ ಗುಣ ನಾಮರೂಪವೇ ಸತ್‍ಚಿತ್ಸುಖ
ರೂಪಾತ್ಮಕ ನಿತ್ಯ ಆಪನ್ನಪಾಲ ಶ್ರೀದವಿಠಲ ತ್ರಿಜಗ –
ದ್ವ್ಯಾಪಕ ಸರ್ವ ಪ್ರಾಪಕನ ನೆರೆ ನಂಬು ೨
ಝಂಪೆತಾಳ
ನವನೀಲನೀರದ ಶಾಮಸುಂದರನ
ಸವಿನೋಟ ಕೂಟ ಬ್ಯಾಟದಿ ಗೋಪಲಲನ
ನಿವಹ ತನ್ಮಯವಾಯ್ತು ನೀನಾದರವನ
ವ್ಯವಹಾರವನುಸುರಿಸುವರೆ ರಮಾಧವನ
ನವವಿಧಭಕುತಿ ಭಾಗ್ಯವ ಪಡಿಯೋ ಪಡೆದಪರೆ
ಶ್ರವಣಮಂಗಳ ಭಾಗವತ ಕೇಳು ಕೇಳುವರೆ
ಕವಿಜನರ ಕರುಣಕ್ಕೀಡಾಗು ಈಡಾಗುವರೆ
ಭುವನದೊಳಗುಳ್ಳ ಪುಣ್ಯತೀರ್ಥಕ್ಷೇತ್ರ
ಅವನಾದರು ಮಾಡು ಪವನಾಂತರಾತ್ಮ
ಶ್ರೀದವಿಠಲ ನಿನ್ನ ಸಾಕುವನು ನಿತ್ಯ ಕೃತಕೃತ್ಯ ೩
ಅಟ್ಟತಾಳ
ನಾನ್ಯಾಕವನನುಸರಿಸುವೆನೆಂಬಿಯಾ
ನೀ ಬಿಟ್ಟರೆ ಬಿಡಲರಿಯನು ಕೇಳು
ತಾನೆ ತನ್ನರ್ಚನೆಗೊಂಬ ಬಿಂಬ ಮ –
ಹಾನುಭಾವರೆಲ್ಲರು ಬಲ್ಲರು ಕೇಳು
ದೀನನಾಥ ನಮ್ಮ ಶ್ರೀದವಿಠಲನಿ –
ಗೇನೆಂದೆನವನ ಕಾರುಣ್ಯಕೆ ನಮೋ ನಮೋ ೪
ಆದಿತಾಳ
ಅಂತು ಇಂತು ಈ ಕಲಿಕಾಲದೊಳು
ಸೆಂತರ ಬೀಳದೆ ಬಹು ಕಾಲಾ
ಸಂತೈಸುವ ಸಂತರ ಕಾಲವ ಪಿಡಿ
ಅಂತಕನವರಿಗೆ ನೀ ಪಾಲಾ
ಎಂತಾಗುವಿಯೊ ಆಂತ್ವರದೆ ಬಿಡು
ಭ್ರಾಂತಿಯ ಇನ್ನಾದರು ಬರಿದೆ
ಚಿಂತಿಸದಿರು ತನು ಮನ ಧನ ವನಿತೆಯ –
ರಂತರಿಸುವರಲ್ಲದೆ ನಿನಗೇನು
ಸ್ವತಂತ್ರವಿಲ್ಲ ನಿಜಮಂತ್ರವಿದೆ ಮಾ-
ಹಂತರೊಡೆಯ ಭಗವಂತನ ಮರೆಯದೆ
ಚಿಂತಿಸು ಚಿತ್ಸುಖಮಯನ ನೀ ಚಿಂತಿಸು೫
ಜತೆ
ಆತ್ಮಾಂತರಾತ್ಮ ಸರ್ವಾತ್ಮನ ಬಿಡದೆ ಮ –
ಹಾತ್ಮರೊಡೆಯ ಶ್ರೀದವಿಠಲಾತ್ಮನ ನೆರೆನಂಬೋ

 

ಎಂದು ಕಾಂಬೆನೊ ನಿನ್ನ

ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ
ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ –
ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ
ಮುಂದೆ ಗತಿ ಏನಯ್ಯ ಮುಕುತರ
ಹಿಂದುಳಿದವನಲ್ಲದಲೆ ತನು ಸಂ –
ಬಂಧಿಗಳ ವಶನಾಗಿ ದುರ್ವಿಷ –
ಯಾಂಧಕಾರದಿ ಮುಳುಗಿದೆನೊ ನಾ ಅ.ಪ.
ಹಲವು ಜನ್ಮದ ನೋವಾ ನಾ
ಹೇಳಿಕೊಳಲೇನೆಲವೊ ದೇವರ ದೇವಾ ನೀ –
ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ
ಸುಲಭರೊಳಗತಿ ಸುಲಭನೆಂಬುವ
ಅಲವಬೋಧಮತಾನುಗರು ಎನ –
ಗೊಲಿದು ಪೇಳಲು ಕೇಳಿ ನಿಶ್ಚಂ –
ಚಲದಿ ನಿನ್ನನೆ ಧೇನಿಸುವೆ ನಾ
ಕಲುಷ ಸಂಸ್ಕಾರಗಳ ವಶದಿಂ
ಹೊಲಬುಗಾಣದೆ ಹರುಷಗುಂದುವೆ
ಹೊಲೆ ಮನದ ಹರಿದಾಟ ತಪ್ಪಿಸಿ
ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು ೧
ಭಾರತೀಪತಿಪ್ರೀಯಾ ಎಂದೆಂದು ಭಕುತರ
ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ –
ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ
ತಾರಕನು ನೀನೆಂದು ತಿಳಿಯದ
ಕಾರಣದಿ ಸುಖ ದುಃಖಮಯ ಸಂ –
ಸಾರ ದುಸ್ತರ ಶರಧಿಯೊಳು ನಾ
ಪಾರಗಾಣದೆ ಪರಿದು ಪೋಪೆನೊ
ದೂರನೋಳ್ಪದು ಧರ್ಮವಲ್ಲವೊ
ದ್ವಾರಕಾಪುರನಿಲಯ ಪರಮೋ –
ದಾರ ತನುವೆಂದೆನ್ನ ಪಾಲಿಗೆ
ಬಾರದಲ್ಲದೆ ಭವವಿಮೋಚನ ೨
ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ –
ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ –
ಸುಖಗುಣಾರ್ಣವ ಶ್ರೀದವಿಠಲಪ್ರಸೀದ
ಸಕಲ ಕ್ರಿಯ ಯೋಗಗಳು ತನು ಬಂ-
ಧಕವು ನಿನಗೊಪ್ಪಿಸದಿರಲು ಎನೆ
ನಿಖಿಳ ಜೀವರ ಭಿನ್ನ ನಿನ್ನಯ
ಯುಕುತಿಗೆ ನಮೊ ಎಂಬೆನಲ್ಲದೆ
ಯುಕುತ ಯುಕ್ತಿಗಳೊಂದರಿಯದ –
ರ್ಭಕನ ಬಿನ್ನಪ ಸಲಿಸಿ ನವವಿಧ
ಭಕುತಿ ಭಾಗ್ಯವ ಕೊಟ್ಟು ತವ ಸೇ –
ವಕರ ಸೇವಕನೆನಿಸದಿರ್ದೊಡೆ ೩

 

ಹಾಡಿನ ಹೆಸರು :ಎಂದು ಕಾಂಬೆನೊ ನಿನ್ನ
ಹಾಡಿದವರ ಹೆಸರು :ವಿಶ್ವೇಶ್ವರನ್ ಆರ್., ವರದರಂಗನ್ ಕೆ.
ರಾಗ :ರಾಗಮಾಲಿಕಾ
ತಾಳ :ತಾಳಮಾಲಿಕಾ
ಸಂಗೀತ ನಿರ್ದೇಶಕರು :ವಿಶ್ವೇಶ್ವರನ್ ಆರ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಎಲ್ಯಾಡಿ ಬಂದ್ಯೋ ಮುದ್ದು
೨೩
ಎಲ್ಯಾಡಿ ಬಂದ್ಯೋ ಮುದ್ದು ರಂಗಯ್ಯಾ ನೀ – *
ನೆಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ಪ
ಆಲಯದೊಳಗೆ ನೀನಾಡದೆ ಬೆಣ್ಣೆ
ಪಾಲು ಸಕ್ಕರೆಯನೊಲ್ಲದೆ ಚಿಕ್ಕ
ಬಾಲೇಯರೊಳು ನೀನಾಡದೆ
ಬಾಲಯ್ಯ ನೀಯೆನ್ನ ಕಣ್ಣ ಮುಂದಾಡದೆ ೧
ಬಿಟ್ಟ ಮುತ್ತಿನ ಬೊಗಸೆ ಕಂಗಳು
ಫಣಿಯೊಳಿಟ್ಟ ಕಸ್ತೂರಿ ತಿಲಕ ಗಂಧವು
ದಿಟ್ಟತನದಿ ಬರುವ ಅಂದವು ಮುದ್ದು
ಕೃಷ್ಣ ನೀಯೆನ್ನ ಕಣ್ಣ ಮುಂದಾಡದೆ ೨
ಅಷ್ಟದಿಕ್ಕಲಿ ಅರಸಿ ಕಾಣದೆ ಬಾಳ
ದೃಷ್ಟಿಗೆಟ್ಟೆನೊ ನಿನ್ನ ನೋಡದೆ –
ನ್ನೆಷ್ಟು ಪೇಳಲಿ ಹೇಳಬಾರದೆ ಶ್ರೀದ –
ವಿಠಲ ನೀಯೆನ್ನ ಕಣ್ಣ ಮುಂದಾಡದೆ ೩

 

ಹಾಡಿನ ಹೆಸರು :ಎಲ್ಯಾಡಿ ಬಂದ್ಯೋ ಮುದ್ದು
ಹಾಡಿದವರ ಹೆಸರು :ವಿಶ್ವೇಶ್ವರನ್ ಆರ್., ರಾಜಲಕ್ಷ್ಮಿ ಶ್ರೀಧರ್ ಜಿ., ಸುಧಾ. ಕೆ, ಜಮುನಾ ಶ್ರೀನಿವಾಸ್, ರಂಜಿನಿ ಪಿ. ಎಸ್.
ರಾಗ :ಆರಭಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಿಶ್ವೇಶ್ವರನ್ ಆರ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಏನಿದು ಕೌತುಕವೋ

ಏನಿದು ಕೌತುಕವೋ ವಿಠಲಾ
ಏನಿದು ಕೌತುಕವೋ ಪ
ಏನಿದು ಕೌತುಕ ಪಂಢರಿಯನೆ ಬಿಟ್ಟು
ನೀನಿಲ್ಲಿಗೆ ಬಂದ್ಯ ವಿಠಲಾ ಅ.ಪ.
ಮಿಥ್ಯಾವಾದಿಗಳು ನಿನ್ನ ಸುತ್ತುಮುತ್ತಿಕೊಂಡು
ಅತ್ತು ಕರೆದು ಕೂಗುತ್ತಿರೆ ಬಹು ಬ್ಯಾಸತ್ತು ಬಂದೆಯಾ ವಿಠಲ ೧
ಮಧ್ವದ್ವೇಷಿಗಳು ಮಾಡುವ ಪದ್ಧತಿಯನು ಕಂಡು
ಹೃದ್ಯವಾಗದೆ ಕದ್ದ ಕಳ್ಳನಂತೆದ್ದು ಇಲ್ಲಿಗೆ ಬಂದ್ಯಾ ವಿಠಲಾ ೨
ಶ್ರೀಞ್ವಿಠಲ ನಿಮ್ಮ ಸದ್ಗುಣ ವೇದಶಾಸ್ತ್ರದಲ್ಲಿ
ಶೋಧಿಸಿ ನೋಡುವ ಭೂದೇವರಿಗೊಲಿದಾದರಿಸಲು
ಬಂದ್ಯಾ ವಿಠಲಾ ೩

 

ಹಾಡಿನ ಹೆಸರು :ಏನಿದು ಕೌತುಕವೋ
ಹಾಡಿದವರ ಹೆಸರು :ಅಶೋಕ್ ಹುಗ್ಗಣ್ಣವರ್
ರಾಗ :ಸರಸ್ವತಿ
ತಾಳ :ತೀನ್ ತಾಲ್
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಕೇಳಿದ್ಯಾ ಈ ಕೌತುಕ
೨೪
ಕೇಳಿದ್ಯಾ ಈ ಕೌತುಕ ಕೇಳಿದ್ಯಾ
ಕೇಳಿದ್ಯಾ ಕೌತುಕವನ್ನು ಈಗ ಪ
ಪೇಳುವೆ ನಾ ನಿಮಗಿನ್ನು ಆಹಾ
ಹೇಳಾದೆ ಮಧುರೆಗೆ ಜಾರ ಚೋರ ಕೃಷ್ಣ ಅ.ಪ.
ಕರೆಯೆ ಬಂದಿಹನೊಬ್ಬ ಚೋರಾ ತನ್ನ
ಕಿರಿಯಯ್ಯನಂತೆ ಅಕ್ರೂರಾ
ಊರ ಹೊರ ಹೊಳಿಯಲಿ ಬಟ್ಟ ತೇರಾ ಆಹಾ
ಹಿರಿಯನೆಂದು ಕಾಲಿಗೊರಗೋರಾ
ರಾಮಕೃಷ್ಣರ ಭರದಿ ಅಪ್ಪಿಕೊಂಡು
ಮರುಳು ಮಾಡಿದ ಸುದ್ದೀ ೧
ಸೋದರಮಾವನ ಮನೆಯೋಳ್ ಬೆಳ –
ಊ್ಫದ ನಾಳಿನ ದಿನದೋಳ್ ಕೃಷ್ಣ
ಪೋದರೆ ನೆರೆದ ಜನರೋಳ್ ಆಹಾ
ಕಾದುವ ಮಲ್ಲರ ಮೇಲ್ಹಾರ ಬಿಲ್ಹಬ್ಬ
ಸಾಧಿಸಿ ಸಮಯಕ್ಕೆ ಹೋದೆವೆಂಬ ಅರ್ತಿ ೨
ಹುಟ್ಟಿದ ಸ್ಥಳವಂತೆ ಮಧುರೀ ಕಂಸ –
ನಟ್ಟುಳಿಗಾಗಿ ತಾ ಬೆದರೀ ಇ –
ಲ್ಲಿಟ್ಟಳಾತನ ತಂಗಿ ಚದುರೀ ತೋರಿ
ಕೊಟ್ಟರೆ ತನ್ನನು ಬೆದರೀ ಆಹಾ
ಇಷ್ಟು ಸ್ನೇಹವು ಶ್ರೀದವಿಠಲ ಮಾವನ
ಭೆಟ್ಟಿಗಾಗಿ ಒಡಂಬಟ್ಟು ಹೋಗುವನಂತೆ ೩

 

ಹಾಡಿನ ಹೆಸರು :ಕೇಳಿದ್ಯಾ ಈ ಕೌತುಕ
ಹಾಡಿದವರ ಹೆಸರು :ದಾಕ್ಷಾಯಿಣಿ
ಸಂಗೀತ ನಿರ್ದೇಶಕರು :ಪುತ್ತೂರು ನರಸಿಂಹ ನಾಯಕ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಗೋಪಿ ಕೇಳ್ ನಿನ್ನ ಮಗ
೨೭
ಗೋಪಿ ಕೇಳ್ ನಿನ್ನ ಮಗ ಬಲು ಜಾರ
ಚೋರ ಸುಕುಮಾರ ಪ
ಮುದದಿ ಮುಕ್ಕುಂದ ಸದನಕ್ಕೆ ಬಂದ
ದಢೀಯ ಮೀಸಲು ಬೆಣ್ಣೆ ತಿಂದ ನಿನ್ನ ಕಂದಾ ೧
ಮಾರನಪಿತ ಮನೆಯೊಳು ಪೊಕ್ಕಾ
ಹಿಡಿಯ ಹೋದರೆ ಸಿಕ್ಕಾ ನೋಡಿ ನಕ್ಕ ಭಾರಿ ಠಕ್ಕ ೨
ಹರಯದ ಪೋರಿ ಜರದ ಕಂಗೋರಿ
ಭರದಿಂದ ಸೀರೆಯ ಸೆಳೆದ ಕರವ ಪಿಡಿದ ಮಾನವ ಕಳೆದ ೩
ಬಹಳ ದಿನವಾಯ್ತು ಹೇಳುವ್ಯದ್ಹಾಗೆ
ಗೋಪಾಲನ ಮನಸ್ಸೊಮ್ಮೆ ಹಾಗೆ ಹೀಗೆ ಬೆಚ್ಚಿಬೀಳುವ್ಯದ್ಯ್ಹಾಗೆ ೪
ರಾಧೆಯ ಮನದ ತಾಮೋದ ಮುಕ್ಕುಂದ
ಶ್ರೀದವಿಠ್ಠಲನಾಥ ವೃಂದ ನಯಾನಂದ ೫

 

ಹಾಡಿನ ಹೆಸರು : ಗೋಪಿ ಕೇಳ್ ನಿನ್ನ ಮಗ
ಹಾಡಿದವರ ಹೆಸರು :ನಾಗರಾಜರಾವ್ ಹವಾಲ್ದಾರ್
ರಾಗ :ಬೇಹಾಗ್
ತಾಳ :ದಾದ್‍ರಾ
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಾರಾಯಣ ಗೋವಿಂದ ಹರಿ ಹರಿ
೧೧
ನಾರಾಯಣ ಗೋವಿಂದ ಹರಿ ಹರಿ ನಾರಾಯಣ ಗೋವಿಂದ ಪ
ನಾರಾಯಣ ಗೋವಿಂದ ಮುಕುಂದ ಪರತರ ಪರಮಾನಂದಅ.ಪ.
ಮಚ್ಛರೂಪಿಲಿ ಹೆಚ್ಚಿದ ದೈತ್ಯರ ತುಚ್ಛಿಸಿ ವೇದವ ತಂದ ಹರಿ ೧
ಸ್ವಚ್ಛಮಂದರ ಯದೃಚ್ಛದಿ ಮುಣುಗಲು ಕಚ್ಛಪ
ವೇಷದಿ ನಿಂದಾ ಹರಿ ೨
ಶ್ರೀಕರ ಹರಿ ಭೀಕರ ದಿತಿಜರ ಸೂಕರ ರೂಪಿಲಿ ಕೊಂದಾ ಹರಿ ೩
ಶಂಬರಾರಿಪಿತ ಕಾಂಬು ಚಕ್ರಧರ ಕಂಬವ ಭೇದಿಸಿ ಬಂದ ಹರಿ೪
ಶ್ಯಾಮರೂಪ ಗುಣಧಾಮ ಹರಿಯು ತಾ
ವಾಮನ ರೂಪಿಲಿ ನಿಂದಾ ಹರಿ೫
ಕ್ಷತ್ರಕುಲವ ನಿಕ್ಷತ್ರಮಾಡಲು ಭೃಗು ಪುತ್ರನಾಗಿ ತಾ ನಿಂದಾ ಹರಿ ೬
ದಶರಥಸುತ ಹರಿ ದಶಮುಖನಳಿದು ಕುಶಲದಿ ಸೀತೆಯ
ತಂದಾ ಹರಿ ೭
ನಂದಗೋಪನ ಕಂದನು ಬಹು ಗೋವೃಂದದೊಳಗೆ
ತಾ ನಿಂದಾ ಹರಿ ೮
ಅಂಗನೆಯರ ವ್ರತಭಂಗ ಮಾಡಲನಂಗ ಜನಕ ತಾ ಬಂದಾ ಹರಿ ೯
ದುಷ್ಟಗ್ನಳಿದು ಶಿಷ್ಟಜನರ ಪರಮೇಷ್ಟಿ ಎನಿಸಿ ತಾ ನಿಂದಾ ಹರಿ ೧೦
ಶ್ರೀದವಿಠಲ ಕರುಣದಿಂದಲಿ ನಂದತತಿ ಸಲಹುವೆನೆಂದಾ ಹರಿ ೧೧

 

ಹಾಡಿನ ಹೆಸರು :ನಾರಾಯಣ ಗೋವಿಂದ ಹರಿ ಹರಿ
ಹಾಡಿದವರ ಹೆಸರು :ವಿಶ್ವೇಶ್ವರನ್ ಆರ್., ವರದರಂಗನ್ ಕೆ.
ರಾಗ :ಜುಂಜೂಟಿ
ತಾಳ : ಆದಿ ತಾಳ
ಸಂಗೀತ ನಿರ್ದೇಶಕರು : ವಿಶ್ವೇಶ್ವರನ್ ಆರ್.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಮಾತಾಡೇ ಎನ್ನ ಮೌನದ ಗೌರಿ
೪೦
ಗೌರೀದೇವಿ
ಮಾತಾಡೇ ಎನ್ನ ಮೌನದ ಗೌರೀ
ಯಾತಕಚಲಮನ ಸೋತವನೊಡನೆ
ಮಾತಾಡೇ ಗೌರಿ ಮಾತಾಡೇ ಪ
ನಸುನಗೆ ಮುಖವಿದು ಬಾಡಿ ಕೆಂದುಟಿಯು
ಎಸೆದಿರಲು ನಾನೋಡಿ
ವಸುಧೆಯೊಳಗೆ ನಾ ಜೀವಿಸಲಾರೆ
ಘಸಘಸವ್ಯಾತಕೆ ತುಂಬಿತು ಅರಗಿಣಿ ೧
ಕ್ಷಣ ಬಿಟ್ಟಿರಲಾರೆ ಅಮ್ಮ
ಷಣ್ಮುಖ ಗಣಪರ ತಾಯೆ ನೀ ಬಾರೇ
ವಸುಧೆಯೊಳಗೆ ನಾ ಜೀವಿಸಲಾರೆ
ಘಸಘಸವ್ಯಾತಕೆ ತುಂಬಿತು ಅರಗಿಣಿ ೨
ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ-
ರಾಧವು ಇದ್ದರು ತಾಳೇ
ಶ್ರೀದವಿಠಲನ ಪಾದ ಕಿಂಕಿಣಿಯೇ
ಆದರಿಸುವೆ ನಾ ಆದರಿಸುವೆನೇ ೩

 

ಹಾಡಿನ ಹೆಸರು :ಮಾತಾಡೇ ಎನ್ನ ಮೌನದ ಗೌರಿ
ಹಾಡಿದವರ ಹೆಸರು :ಯಶವಂತ್ ಹಳಿಬಂಡಿ
ಶೈಲಿ :ಸುಗಮಸಂಗೀತ
ಸಂಗೀತ ನಿರ್ದೇಶಕರು :ಇಂದೂ ವಿಶ್ವನಾಥ್
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ರಾಘವೇಂದ್ರ ಗುರುರಾಯರ
೪೫
ಶ್ರೀ ರಾಘವೇಂದ್ರರು
ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ
ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ.
ಆ ಸುಧೀಂದ್ರ ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ
ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ
ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ
ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ ೧
ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ
ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ
ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ
ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ ೨
ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ
ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ
ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ
ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು ೩

 

ಹಾಡಿನ ಹೆಸರು :ರಾಘವೇಂದ್ರ ಗುರುರಾಯರ
ಹಾಡಿದವರ ಹೆಸರು :ವಿಶ್ವೇಶ್ವರನ್ ಆರ್., ವರದರಂಗನ್ ಕೆ.
ರಾಗ :ತೋಡಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು : ವಿಶ್ವೇಶ್ವರನ್ ಆರ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಸಂಗಸುಖವ ಬಯಸಿ
೫೨
ಸಂಗಸುಖವ ಬಯಸಿ ಬದುಕಿರೋ
ರಂಗವಲಿದ ಭಾಗವತರ ಪ
ಸಂಗಸುಖವ ಬಯಸಿ ಬದುಕಿ
ಭಂಗಪಡಿಪ ಭವವ ನೂಕಿ
ಹಿಂಗದೇ ನರಸಿಂಗನನ್ನು
ಕಂಗಳಿಂದ ಕಾಣುತಿಹರ ಅ.ಪ.
ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ
ಶಿಷ್ಟ ಸದಾಚಾರದಲ್ಲಿ ನಿಷ್ಠರಾಗಿ ನಿತ್ಯ ಮುದ್ದು
ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ
ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ
ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ
ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು ೧
ಭೂತದಯಾಶೀಲರಾದ ನೀತ ಗುರು ಜಗ-
ನ್ನಾಥ ವಿಠಲಾಂಕಿತವನು ಪಡೆದು ಸಂಗೀತ
ವೃತ್ತ ಪದ ಸುಳಾದಿಯ ಪೇಳಿ ಪ್ರೇ-
ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ
ಜಾತರಾಗಿ ಜವನಬಾಧೆಯ ಬಯಲು ಮಾಡಿ
ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ ೨
ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ
ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ-
ಸಾದದಿಂದ ಹರಿಕಾಥಾಮೃತ ಸಾರತತ್ವ
ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ
ಸಾದರದಲಿ ಪೇಳಿ ದುಷ್ರ‍ಕತ ದೂರಮಾಡಿ
ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ ೩

 

ಹಾಡಿನ ಹೆಸರು :ಸಂಗಸುಖವ ಬಯಸಿ
ಹಾಡಿದವರ ಹೆಸರು :ಪುತ್ತೂರು ನರಸಿಂಹ ನಾಯಕ್
ಸಂಗೀತ ನಿರ್ದೇಶಕರು : ಪುತ್ತೂರು ನರಸಿಂಹ ನಾಯಕ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *