Categories
ರಚನೆಗಳು

ಹೆಳವನಕಟ್ಟೆ ಗಿರಿಯಮ್ಮ

ಗಿರಿಯಮ್ಮ ಯಾವುದೋ
೪೨
ಭಕ್ತವತ್ಸಲನೆಂಬ ಬಿರುದು ಬಿಡದಿರು ದೇವ
ಬಹು ಪರಾಕೆಲೊ ಮುರಾರಿ ಪ.
ಶಕ್ತ ನೀನೆಂದು ನಂಬಿರುವೆ ಕೃಪಾಸಿಂಧು
ರಾಕ್ಷಸಾಂತಕ ಸಲಹೊ ರಾಜೀವದಳನೇತ್ರ ಅ.ಪ.
ಮತ್ತಗಜ ಮೈಮರೆದು ಸುತ್ತಿ ಕೆಸರೊಳು ಬಿದ್ದು
ಶಕ್ತಿ ಹೀನನಾಗಿ ಏಳದಂತಾಗಿದೆ
ಮತ್ತಾರಿಗಳವಲ್ಲ ಮಂದರಾದ್ರಿಧರನೆ
ಎತ್ತಿ ಕಡೆಹಾಯಿಸೊ ಎನ್ನೊಡೆಯ ಶ್ರೀ ಹರಿಯೆ ೧
ನಿಂದ ನೆಲ ಮುನಿಯುತಿದೆ ನಿಪುಣತನವಡಗಿತು
ಮಂದಮತಿ ವೆಗ್ಗಳಿಸಿ ನೆಲೆಗಾಣೆ ಮುಂದೆ
ತಂದೆ ನೀನಲ್ಲದಿನ್ಯಾರು ರಕ್ಷಿಪರಯ್ಯ
ಬಂಧನವ ಪರಿಹರಿಸೊ ಭಯನಿವಾರಣ ಹರಿಯೆ ೨
ಕೊಂಡೆಯರ ಕೆಡಮೆಟ್ಟಿ ಕುಹಕಿಗಳ ಮಸ್ತಕವ
ಚೆಂಡಾಡಿದ ಚಿನ್ಮಯರೂಪ ನೀನು
ದಿಂಡರಿದು ದುರಳರನು ದುರಿತಗಳ ಪರಿಹರಿಸಿ
ಪಾಂಡವರಿಗೊಲಿದು ಪಾಲಿಸಿದೆ ಪುಂಡರೀಕಾಕ್ಷ ೩
ನಾಲ್ಕು ದಿಕ್ಕಿಗೆ ನಾಲ್ಕು ಪರಿಯ ಬಂಧನದಿಂದ
ವ್ಯಾಕುಲದಿ ಕೃಷ್ಣಮೃಗವು ಎದೆಗುಂದಿರೆ
ನೀ ಕರುಣಿ ಸಮಯದಲಿ ವೃಷ್ಟಿಯ ಕರೆದು
ಜೋಕೆಯಲಿ ಪಥವೆನೇರಿಸಿದ್ಯೊ ಜಗದೀಶ ೪
ನಿನ್ನನೆ ಪೂಜಿಪೆನು ನಿನ್ನನೆ ಪಾಡಿ ಪೊಗಳುವೆನು
ನಿನ್ನನೆ ನಂಬಿದವಳಿಗಿಂತ
ಉನ್ನತವಾದ ಕಂಟಕವು ಬಂದಿದೆ ಕಾಯೊ
ಪನ್ನಗಶಯನ ಹೆಳವನಕಟ್ಟೆ ರಂಗಯ್ಯ ೫

 

೪೩
ಭಕ್ತಳ ಬನ್ನ ಪರಾಕು ಭಾಗ್ಯದ ನಿಧಿಯೆ ಪ.
ನಿನ್ನ ನಂಬಿದೆ ನೀರಜಾಕ್ಷ ಪರಾಕು
ನಿನ್ನ ರನ್ನೆಯ ಒಲುಮೆ ಬೇಕು ಪರಾಕು
ಅನ್ಯರ ಸಂಗವನೊಲ್ಲೆ ಪರಾಕು
ಎನ್ನಪೇಕ್ಷೆಯ ಸಲಿಸೊ ಪರಾಕು ೧
ಶೇಷಶಯನ ಶ್ರೀನಿವಾಸ ಪರಾಕು
ಸಾಸಿರನಾಮದ ಒಡೆಯ ಪರಾಕು
ದೋಷ ದುರಿತಹರ ಸ್ವಾಮಿ ಪರಾಕು
ಭಾಷೆ ಪಾಲಿಪುದೆನ್ನ ವಾಸುದೇವ ಪರಾಕು ೨
ರತಿಪತಿಪಿತ ಮಾಧವನೆ ಪರಾಕು
ಅತಿರೂಪ ಎನ್ನಯ್ಯನೆ ಪರಾಕು
ಹಿತ ವಿರಹಿತರ ಕಾಯೊ ಪರಾಕು
ಕರ್ತು ಹೆಳವನಕಟ್ಟೆರಂಗ ಪರಾಕು ೩

 

ಜಾನಕಿಗೆ ಮುದ್ರೆಯನಿತ್ತ
೨೭
ಭೀಮಾ ಹೋ ಭಲಾರೆ ನಿಸ್ಸೀಮ ಹೋ ಭಾಪುರೆ ಹನುಮ ಹೋ ಪ.
ನಿಜಜಿತಕಾಮ ಹೋ ಕಾರುಣ್ಯಧಾಮ ಹೋ
ರಾಮಚಂದ್ರನ ಚರಣಕಮಲಸರಾಮ ಕಾರ್ಯಧುರಂಧರನೆ ಅ.ಪ.
ಆಂಜನೇಯ ಸುಕುಮಾರ ಅದ್ಭುತಮಹಿಮ ರಾಮ[ನ] ದೂತನೆ
ಅಂಜದುದಧಿಯ ದಾಟಿ ಅಸುರನ[ವ] ನವ ಕಿತ್ತನೆ
ಕಂಜಮುಖಿ ಜಾನಕಿಗೆ ಮುದ್ರೆಯನಿತ್ತ ಬಲುಪ್ರಖ್ಯಾತನೆ
ರಂಜಿಪ ಲಂಕಾನಗರವನು ಸುಟ್ಟು ರಾಜಕಾರ್ಯವ
ಮಾಡಿಸಿದೆ ಕಲಿ ೧
ಅವನಿತನುಜೆಯ ಚೂಡಾರತ್ನವ ಅಂಬುಜಾಕ್ಷನಿಗಿತ್ತನೆ
ಸಮರಕನುಕೂಲವೆಂದು ರಾಮಗೆ ಸುಗ್ರೀವನ ಕಾಣಿಸಿದನೆ
ಕಮಲನಾಭನ ಆಜ್ಞೆಯಿಂದಲಿ ಕಪಿಬಲವ ಕೂಡಿಸಿದನೆ
ಸಮುದ್ರವನು ಕಟ್ಟಿ ಬಲವ ನಡೆಸಿದ
ಬಹುಪರಾಕ್ರಮಿಯಹುದಹುದೊ ಕಲಿ ೨
ಅಗಳುಸಾಗರ ಮಧ್ಯದಲ್ಲಿಹ ನಗರವನು ಬಂದು ಮುತ್ತಿದೆ
ಬಗೆದು ಕಲ್ಮರಗುಂಡಿನಿಂದಲಿ ವಿಗಡದೈತ್ಯರ ಮಡುಹಿದೆ
ಬಗೆಬಗೆ ಮಯಾಜಾಲವನು ಗೆದ್ದು ಭರದೊಳದ್ರಿಯ ತುಡುಕಿದೆ
ಜಗತ್ಪತಿಯ ಮೂರ್ಬಲವನೆಲ್ಲವ ಸಂಜೀವನವ ತಂದುಳುಹಿದೆ ೩
ಪೃಥ್ವಿಯೊಳಗುದ್ದಂಡ ದೈತ್ಯರ ಸುತ ಸಹೋದರರ ಮಡುಹಿದೆ
ಹತವ ಮಾಡಿ ಶ್ರೀರಾಮ ಬಾಣದಿ ಹತ್ತು ತಲೆಗಳ ಕೆಡಹಿದೆ
ಪ್ರತಿಶತೇಶ್ವರ ಶ್ರೀರಮಣಿಯನ್ನು ತಂದು ರಾಘವಗೆ ಒಡಗೂಡಿಸಿದೆ
ಅತಿಹರುಷದಿಂದ ಅಯೋಧ್ಯಾನಗರಿಗೆ ಪ್ರತಿಪ್ರವೇಶವ
ಮಾಡಿಸಿದೆ ಕಲಿ ೪
ತೋರುತ್ತಿದೆ ಶಿಖಿ [ಕೈಪ] ಕುಂಡಲ ಚಾರು ಯಜ್ಞೂೀಪವೀತನೆ
ಸೂರ್ಯಚಂದ್ರಮರುಳ್ಳನಖ ವಜ್ರಕಾಯದಲಿ ನಿರ್ಭೀತನೆ
ವೀರಕದನಕಠೋರ ರಾಣಿಬೆನ್ನೂರ ಬಯಲಾಂಜನೇಯನೆನೀರಜಾಕ್ಷನ ಹೆಳವನಕಟ್ಟೆರಂಗನ ಪ್ರಿಯದಾಸನೆ ಕಲಿ ೫

 

೨೮
ಮಂಗಳ ಮುಖ್ಯಪ್ರಾಣೇಶಗೆ ಜಯ
ಮಂಗಳ ಮೂಜಗವಂದಿತಗೆ ಪ.
ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ
ಕಂಜನಾಭನ ಕಾರ್ಯದನುಕೂಲಗೆ
ಸಂಜೀವನ ತಂದ ಸಾಹಸವಂತಗೆ ಶ್ರೀ
ರಂಜಿಪ ಹನುಮಗೆ ಮಂಗಳ ೧
ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ
ಧಮಧುಮ ಮಾಡಿ ವನವ ಕಿತ್ತು
ರಾಮ ಮುದ್ರಿಕೆ ಜಾನಕಿಗೆ ತಂದಿತ್ತ
ಹೇಮಾದ್ರಿ ಹನುಮಗೆ ಮಂಗಳ ೨
ಸುತ್ತ ಸಾಗರ ಮಧ್ಯದಲ್ಲಿ ಲಂಕೆಯ
ಮುತ್ತಿ ವನಜಾಕ್ಷಿಯ ಮುಂದೆ ಬಂದು
ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ
ಖ್ಯಾತ ಹನುಮಗೆ ಮಂಗಳ ೩
ಜಾತಿ ಬಂಧುಗಳ ಒಡಗೊಂಡು ಸಮುದ್ರದ
ಸೇತುವ ಕಟ್ಟಿ ಸಾಹಸದಿಂದಲಿ
ಸೀತಾಪತಿಯ ಬಲವ ನಡೆಸಿದ ಪ್ರ
ಖ್ಯಾತ ಹನುಮಗೆ ಮಂಗಳ ೪
ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು
ಬೇಡವೆಂದು ಸೀತೆಯ ಭಯಬಿಡಿಸಿ
ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ
ಕೊಂಡಾಡಿಸಿಕೊಂಬಗೆ ಮಂಗಳ ೫
ಬಲ್ಲಿದ ರಾವಣೇಶ್ವರನ ಮಾರ್ಬಲವನು
ಕಲ್ಲು ಮರದೊಳಿಟ್ಟು ಕೆಡಹಿದಗೆ
ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ
ಧಲ್ಲ ಹನುಮಗೆ ಮಂಗಳ ೬
ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ
ಸ್ಥಿರವಾಗಿ ನಿಂದು ಭಕ್ತರ ಹೊರೆವ
ಹೆಳವನಕಟ್ಟೆ ವೆಂಕಟೇಶನ ದೂತ
ಚಲದಂಗ ಹನುಮಗೆ ಮಂಗಳ ೭

 

ಎರಡನೆಯ ಸಂಧಿ
ಮಂತ್ರಿ ಮಚ್ಚರವನ್ನು ಮನದೊಳಗಿಟ್ಟು
ಶ್ರೀಕಾಂತನ ಕರುಣವುಳ್ಳವಗೆ
ತಂತ್ರವ ಹೂಡಿ ಕೊಲ್ಲುವೆನೆಂದು ನೇಮಿಸಿ
ಕುಂತಳಪುರಕೆ ಕಳುಹಿದನು ೧
ಅಕ್ಷರಾಭ್ಯಾಸವ ಮಾಡಬೇಕೆನುತ
ಗಂಧಾಕ್ಷತೆ ಫಲಪುಷ್ಪದಿಂದ
ಸಾಕ್ಷಾತು ಗಣಪತಿಗರ್ಪಿಸಿ ತರಳನ ಶಿಕ್ಷಾಗುರುವಿಗೆ ಒಪ್ಪಿಸಿದ೨
ಮಣ್ಣ ಹರಹಿ ಅಕ್ಷರವ ಬರೆದು ಎನ್ನಣ್ಣನೀ ತಿದ್ದು ಬಾ ಎನಲು
ಪನ್ನಗಶಯನ ನಾರಾಯಣ ಹರಿಕೃಷ್ಣ
ಎನ್ನೊಡೆಯ ಶರಣೆಂದು ಬರೆದ ೩
ಓನಾಮವ ಬರೆಯೆಂದರೆ ಬರೆಯದೆ
ಶ್ರೀನಾಥ ಶರಣೆಂದು ಬರೆದ
ನಾನೊಂದ ಹೇಳಲು ನೀನೊಂದ ಬರೆವೆ
ನಿನ್ನ ಜ್ಞಾನ ಬೇರೆ ಚಿತ್ತ ಬೇರೆ ೪
ಒಂದ ಹೇಳಿದರೊಂದ ಬರೆವೆಯಾದರೆ ನಿನ್ನ
ತಂದೆಗೆ ಒಯ್ದು ಒಪ್ಪಿಸುವೆ
ಕುಂದು ನಮ್ಮ ಮೇಲೆ ಇಡುವ ನಿಮ್ಮಯ್ಯನು
ಎಂದು ಧಿಕ್ಕರಿಸಿ ಹೇಳಿದನು ೫
ನೀತೀಲಿ ಬರೆಯೆಂದರೆ ಬರೆಯದೆ ನಿನ್ನ
ಚಾತುರ್ಯದ ಬುದ್ಧಿ ಬೇರೆ
ಈತನ ತೊಡರು ನಮಗೆ ಬೇಡವೆಂದವರ
ತಾತಗೆ ಒಯ್ದು ಒಪ್ಪಿಸಿದ ೬
ಹಿಂದಕ್ಕೆ ಹಿರಣ್ಯಕಶ್ಯಪ ತನ್ನ ತನಯ
ಮುಕುಂದನ ಭಜಕನೆಂದೆನದೆ
ಬಂಧಿಸಿ ಬಸುರ ಬಗಿಸಿಕೊಂಡಾತನ ಮನಸು
ಬಂದ ಹಾಂಗಿರಲೆಂದು ಸುತನ ೭
ಧ್ರುವ ಪ್ರಹ್ಲಾದ ಅಕ್ರೂರಾಂಬರೀಷ ಮಾಧವ
ಮುರಾರಿಯನ್ನು ಭಜಿಸಿ
ದವರಿಗಿಂತುತ್ತಮ ಕುಮಾರನು ಇನ್ನು ಭವ
ಭಯಾದಿಗಳಿಲ್ಲ ನಮಗೆ ೮
ಶ್ರೇಷ್ಠರೆಲ್ಲರು ಕೂಡಿ ಶುಭಲಗ್ನವನು
ಕಟ್ಟಿಕೊಟ್ಟರು ಕರಲೇಸು ಎನುತ
ಅಷ್ಟವರುಷದ ಕುಮಾರಗೆ ಮುಂಜಿಯ
ಕಟ್ಟೆದರ್ ವೇದೋಕ್ತದಲಿ ೯
ವೇದಶಾಸ್ತ್ರ ಧನುರ್ವಿದ್ಯಾ ಸಾಧನೆಗಳ
ಓದಿಸಿದರು ಗುರುಮುಖದಿ
ಮಾಧವನಲ್ಲದೆ ಅನ್ಯತ್ರರಿಲ್ಲವೆಂದು ಭೇದಾಭೇದವನೆಲ್ಲ ತಿಳಿದು ೧೦
ಎಳದುಳಸಿಯ ವನಮಾಲೆಯನೆ ಹಾಕಿ
ಹೊಳೆವ ಶ್ರೀ ಮುದ್ರಿಕೆಯಿಟ್ಟು
ನಳಿನನಾಭನ ಪೂಜೆಮಾಡುವ ಬನ್ನಿರೆಂದು
ಗೆಳೆಯರೆಲ್ಲರಿಗೆ ಬೋಧಿಸಿದ ೧೧
ಪತಿತರಾದಪಗತಿ ಕುಮಾರರಿಗೆಲ್ಲ ಸದ್ಗತಿಯಾಗಬೇಕೆಂದೆನುತ
ಹಿತವ ಚಿಂತಿಸಿ ನಂಬಿದವರಿಗೇಕಾದಶಿ ವ್ರತವ
ಮಾಡಿಸಿದನಾಜೆÉ್ಞಯಲಿ ೧೨
ಆ ದೇಶದೊಳಗಿರ್ದ ಜನರಿಗೆ ಪಣೆಯಲ್ಲಿ
ದ್ವಾದಶ ನಾಮವ ಹಚ್ಚಿ
ಸಾದಿ ಸಾಧಿಸಿರಿ ಏಕಾದಶಿ ವ್ರತವೆಂದು ಬೋಧಿಸಿದನು ಎಲ್ಲರಿಗೆ೧೩
ಎಲ್ಲರು ಏಕಾದಶಿಯ ಜಾಗರ ಮಾಡಿ ಫುಲ್ಲನಾಭನ ಭಜಿಸುವರು
ಸೊಲ್ಲುಸೊಲ್ಲಿಗೆ ನಾರಾಯಣ ಹರಿಯೆಂಬೋದಲ್ಲದೆ
ಪರಗೋಷ್ಠಿಯಿಲ್ಲ ೧೪
ಮಲೆತವರನು ಮುರಿದೊತ್ತಿ ಶಕ್ತಿಯಕೊನೆ
ಬೆಳೆಸುವ ಹರಿಭಕ್ತರೊಡನೆ
ಬಲವಂತ ಧರೆಯ ಗೆದ್ದು ಧರೆಯೊಳು ಬಹು
ಪರಾಕ್ರಮಿಯೆನಿಸಿದನು ೧೫
ಶೂರತ್ವದಲಿ ತಂದೆಯಾಳುವ ರಾಜ್ಯವಯೆಂದರುಹಿ
ಇಮ್ಮಡಿಯನು ಗೆದ್ದು
ಊರ ತುರುವನೆಲ್ಲ ತಿರುಹಿ ಮಾಣಿಕ ಮುತ್ತು
ಹೇರಿಸಿದನು ತನ್ನ ಪುರಕೆ ೧೬
ಕೆಂಧೂಳು ಸೂಸುತ ಬಂದ ಕುಮಾರಗೆ
ತಂದು ಆರತಿಗಳನೆತ್ತಿ
ಇಂದಿರೆ ಮಾತೆ ನಾರಾಯಣ ಪಿತನಹುದೆಂದು
ಚರಣಕ್ಕೆರಗಿದನು ೧೭
ಅಗಣಿತ ಆಯುಷ್ಯವಂತನು ನೀನಾಗು
ಜಗದಧಿಪತಿಯಾಗು ಎಂದು
ಮಗನ ತಕ್ಕೈಸಿ ಮುಂಡಾಡಿ ಸಂತೋಷದಿ ಮಿಗೆ
ಹರುಷವನೆ ತಾಳಿದಳು ೧೮
ಲೇಸಾದ ಶುಭಲಗ್ನವ ಕಟ್ಟಿ ಸುತನ ಸಿಂಹಾಸನದಲ್ಲಿ ಕುಳ್ಳಿರಿಸಿ
ಭೂಸುರ ಬಂಧುಗಳೆಲ್ಲರು ನೆರೆದಿಂದುಹಾಸಗೆ ಪಟ್ಟಗಟ್ಟಿದರು೧೯
ಮಾತೆಪಿತರ ಮಾತುಮಂ ಮೀರಿ ನಡೆಯದೆ
ಅನಾಥರ ಪರಿ ಪಾಲಿಸುತ್ತ
ಪ್ರೀತಿಯಿಂದಲಿ ದೇವಬ್ರಾಹ್ಮರೊಡನೆ
ರಾಜ್ಯನೀತಿಯಿಂದಾಳುತಲಿಹನು ೨೦
ಬಾಲಕ ಬಹುಪರಾಕ್ರಮಿ ಎನ್ನ ಮಾತ ನೀ
ಲಾಲಿಸು ಕುಂತಳೇಶ್ವರಗೆ
ಕಾಲಕಾಲಕೆ ಕಪ್ಪವ ಕೊಟ್ಟು ಬಹೆವು ಆಲಸ್ಯವಾಯಿತು ಎಂದ೨೧
ಮೀರಬಾರದು ಪಿತನಾಜ್ಞಯೆಂದೆನುತ
ಉದಾರಬುದ್ಧಿಯಲಿಂದುಹಾಸ
ಯಾರ್ಯಾರಿಗೆ ಹೋಗಿ ಕೊಡಬೇಕು ಎನುತ
ವಿಚಾರಿಸಿದನು ತನ್ನಪಿತನ ೨೨
ಕುಂತಳಪುರದರಸಗೆ ದುಷ್ಟಬುದ್ಧಿಯೆಂಬ ಮಂತ್ರಿ
ಜೋಯಿಸ ಪುರೋಹಿತಗೆ
ಕಾಂತಿಗೊಡದ ಕನಕಾಭರಣವೆಲ್ಲವ ಅಂತಸ್ಥದಿಂದ ಕಟ್ಟಿದನು೨೩
ಆನೆ ಕುದುರೆ ಅರ್ಧಸೇನೆ ದಳವ ಕೊಟ್ಟು
ಜ್ಞಾನವುಳ್ಳ ಭೃತ್ಯರೊಡನೆ
ನೀವಿದ ಕುಂತಳೇಶ್ವರಗೆ ಕೊಟ್ಟು ಬನ್ನಿರೆಂದು
ದಾನವಾಂತಕನ ಕಿಂಕರನು ೨೪
ಕರವ ಮುಗಿದು ಇಂದುಹಾಸನಪ್ಪಣೆಯಿಂದ
ತೆರಳಿದರಲ್ಲಿಂದ ಮುಂದೆ
ಭರದಿಂದ ಬಂದು ಬಿಟ್ಟುದು ದಂಡು ಕುಂತಳಪುರದ
ಹೆಬ್ಬಾಗಿಲ ಮುಂದೆ ೨೫
ಪಟ್ಟಣದೊಳು ಬಂದು ಪಾಳಯವನೆ ಬಿಟ್ಟ
ದಿಟ್ಟರಾರೆಂದು ಕೇಳಿದನು
ಕೊಟ್ಟು ಕಪ್ಪವ ಕುಂತಳೇಂದ್ರಗೆ ಕೊಡಿರೆಂದು
ಅಟ್ಟಿದೆನ್ನೊಡೆಯ ಪುಳಿಂದ ೨೬
ಎಂದ ಮಾತನು ಕೇಳಿ ಮಂತ್ರಿಗೆ ಪೇಳಲು
ಮಂದಿರಕಾಗಿ ಕರೆಸಿದ
ತಂದ ಕಪ್ಪವ ದುಷ್ಟಬುದ್ಧಿಯ ಮುಂದಿಟ್ಟು
ನಿಂದೆದ್ದು ಕರವ ಮುಗಿದರು ೨೭
ಕಡೆಗಣ್ಣಲಿ ನೋಡಲಿಲ್ಲವರೊಳು ಮಾತನುಡಿಯದೆ ಸನ್ಮಾನಿಸದೆ
ತಡೆಯೇಕಿಷ್ಟು ದಿವಸವೆಂದು ಮಂತ್ರಿಯು ಜಡಿದು
ಝೇಂಕರಿಸಿ ಕೇಳಿದನು ೨೮
ಜೀಯ ಹಸಾದ ನಿಮ್ಮಡಿಗೆ ಇಂದಿನ ವಾಯಿದ ಕಟ್ಟಿದ ಧನವು
ಆಯತವಾಗಿದೆ ಇಳುಹಿಸಿ ನೋಡಿರಿ
ದೇವರು ಕೈಕೊಂಬುದೆನಲು ೨೯
ತೆಗೆಸಿದ ಮಂತ್ರಿಯು ಕುಶಲಗತಿಗಳಿಂದ ನಗ
ನಾಣ್ಯ ದೇವಾಂಗವನು
ತೆಗೆಸಿ ನೋಡಿದನು ಬಗೆಬಗೆ ಸಪ್ತಂಗಳ ನಗ
ನಾಣ್ಯ ದೇವಾಂಗವನು ೩೦
ಮಗನ ಕರೆದು ಹೇಳಿದಿವರಿಗೆ ಭೋಜನ
ಸೊಗಸಾಗಿ ಮಾಡಿಸು ಎಂದ
ಬಗೆಬಗೆಯಿಂದಲಿ ತೃಪ್ತಾಗ ಬಡಿಸು ಎಂದು
ನಗೆಮುಖದಿಂದ ಹೇಳಿದನು ೩೧
ಸಣ್ಣ ರಾಜಾನ್ನದಕ್ಕಿಯನ್ನ ಶಾಕವು ಅಣ್ಣೆವಾಲೆರೆದ ಪಾಯಸವು
ಬೆಣ್ಣೆಕಾಸಿದ ತುಪ್ಪ ಭಕ್ಷ್ಯಂಗಳನು ಮಾಡಿ
ಉಣ್ಣೇಳಿರೆಂದು ಕರೆದರು ೩೨
ಅತಿದೈನ್ಯದಿಂದ ಹೇಳಿದರು ಏಕಾದಶಿ ವ್ರತ
ನಿರಾಹಾರವು ನಮಗೆ
ಚತುರತನವೇ ನಮ್ಮೊಡನೆ ಕಿರಾತನ ಮತವಿದು
ಎಂದು ಕೇಳಿದನು ೩೩
ಹೆಮ್ಮೆ ನಿಮ್ಮೊಡನೆ ಮಾಡುವುದೇತಕೆ ಜೀಯ
ಎಮ್ಮೊಡೆಯನ ಸುಕುಮಾರ
ತಮ್ಮ ರಾಜ್ಯದಲ್ಲಿ ಏಕಾದಶಿವ್ರತ ನಿರ್ಮಾಣವನ್ನೆ ಮಾಡಿದನು೩೪
ಎಲ್ಲಿಯ ಮಾತಿದು ಆತನ ಸತಿ ಬಂಜೆ
ಎಂದೆಲ್ಲರು ಹೇಳುತಲಿಹರು
ಅಲ್ಲದ ಮಾತಿದು ಅತಿ ಚೋದ್ಯವಾಗಿದೆ
ಎಲ್ಲಿದ್ದ ಆತಗೆ ಸುತನು ೩೫
ದುಷ್ಟಮೃಗವನೆಚ್ಚು ಕೆಡಹುವೆನೆನುತ
ಹಿಂದಟ್ಟಿ ಹೋದನು ಪುಳಿಂದ
ಪುಟ್ಟ ಬಾಲಕ ನಾರಾಯಣ ಹರಿಯೆನುತ
ಅಟ್ಟಡವಿಯೊಳಗಿರಲು ೩೬
ಆ ಶಿಶುವನೆ ತಂದು ಅತಿಶಯದಿಂದಲಿ
ಪೋಷಣೆಯನು ಮಾಡಿದರು
ವಾಸುದೇವನ ಕಿಂಕರ ಇಂದ್ರಹಾಸನು
ಭೂಸುರರನೆ ಪಾಲಿಸುವನು ೩೭
ಎಂದ ಮಾತನು ಕೇಳಿ ಎದೆಯೊಳು ಅಲಗು
ನಟ್ಟಂದದಿ ಮನದೊಳು ಮರುಗಿ
ಅಂದು ಮಾಡಿದ ಕಾರ್ಯ ಆಗಲಿಲ್ಲವು ಸಿದ್ಧ
ಎಂದು ತಾ ಮನದೊಳು ತಿಳಿದ ೩೮
ಮನುಜರೈತನದಿಂದಲೇನಹುದು ದೈವ
ಅನುಕೂಲವಾದ ಕಾರ್ಯವು
ನೆನೆದಂತೆ ಅಹುದೆನ್ನುತ ದುಷ್ಟಬುದ್ಧಿಯು
ಮನದಲ್ಲಿ ಚಿಂತೆ ಮಾಡಿದನು ೩೯
ದ್ವಾದಶಿ ದಿವಸ ಪಾರಣೆಯ ಮಾಡಿಸಿ ಅವರಿಗಾದರಿಸಿ

 

೧೫
ಮಕ್ಕಳ ಮಾಣಿಕವೆ ಮೋಹನ್ನ
ಬಾ ರಂಗೈಯ್ಯಾ ಮಕ್ಕಳ ಮಾಣಿಕವೆ ಮೋಹನ್ನ
ಎನ್ನಕ್ಕರದ ಗುಣನಿಧೆ ಬಾ ರಂಗೈಯ್ಯಾ ಪ.
ಅಪ್ಪುತಪ್ಪು ಹೆಜ್ಜೆನಿಕ್ಕುತ ಬಾಯೊಳು ಜೊಲ್ಲು
ಸುಪ್ಪಾಣಿಮುತ್ತಂತೆ ಸುರಿಯುತಾ ಬಾರಂಗೈಯ್ಯಾ
ನಿನಗೊಪ್ಪುವಾಭರಣ ನೀಡುವೆನೊ ಅದನೊಲ್ಲದಿದ್ದರೆ
ತುಪ್ಪಾಕಜ್ಜಾಯ ಕೊಡುವೆನೂ ೧
ಅಂದಿಗೆ ಕಿರುಗೆಜ್ಜೆ ಅಲಗೊತ್ತು ಕೈಯೊಳಗಿದ್ದು
ಬಿಂದುಲಿ ಬಾಜುಬಂದು ತಿರುಹೂತ ಬಾರಂಗೈಯ್ಯಾ
ಬಂದೆನ್ನ ಬಿಗಿಯಪ್ಪಿಕೊಳ್ಳಯ್ಯ ಅದನೊಲ್ಲದಿದ್ದರೆ
ಅಂದವಾದ ಒಂದು ಮುದ್ದು ತಾರಯ್ಯ ೨
ಓಡಿಓಡಿ ಬಾರೋ ವಸುದೇವನಂದನಾ ಕಂದ
ನೋಡಿ ನೋಡಿ ನಗುತ ಬಾರೊ ರಂಗಯ್ಯ
ಕಾಡ ಬೇಡ ಎನ್ನಯ್ಯಾ ಹೆಳವನಕಟ್ಟೆ
ಕೋಡಗಲ್ಲವಾಸ ವೆಂಕಟ ೩

 

೪೪
ಮನದ ಚಿಂತೆಯಬಿಡಿಸೊ ಮಾಧವ ಮುಕುಂದ ಹರಿ
ದನುಜಾರಿದಯಾವಾರಿಧಿ
ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ
ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ ಪ.
ತರುಣಿಕುಲರಾಮನೊಳು ತೊಡಕು ಬೇಡವು ಸೀತೆ(ಯ)
ಹರಿಗೆ ಒಪ್ಪಿಸು ಎನಲು
(ಮೊರೆದು) ಕೋಪದಲಿ ದಶಕಂಠ ತನ್ನನುಜನ
ಊರ ಹೊರಗೋಡಿಸಿರಲು
ಭರದಿಂದ ಬಂದು ಮರೆಹೊಗಲು ವಿಭೀಷಣನು
ಚರಣಕಮಲಕೆ ಎರಗಲು
ಕರವ ಪಿಡಿದೆತ್ತಿ ಅಭಯವನಿತ್ತು ಲಂಕೆಯ
ಸ್ಥಿರಪಟ್ಟಕಟ್ಟಿದ ಕರುಣಾಳುಗಳ ದೇವ ೧
ಒದೆದೆಳೆದು ಪತಿಗಳೈವರ ಮುಂದೆ ದ್ರೌಪದಿಯ
ನಡುಸಭೆಯೊಳು ನಿಲ್ಲಿಸಲು
ಉಡುವ ಸೀರೆಯ ಸೆಳೆವೆನೆಂದು ದುಶ್ಯಾಸ(ನ) ಕೈ
ದುಡುಕುತಿರಲಾಕ್ಷಣದಲಿ
ಕೆಡುವದಭಿಮಾನ ಶ್ರೀ ಹರಿ ನೀನೆ ಕಾಯೊ ಎನ್ನೆಂ-
ದೊದರುತಿರಲು
ನುಡಿಯಲಾಲಿಸಿ ನಾನಾಪರಿಯ ವಸ್ತ್ರವನಿತ್ತು
ಉಡಿಸಿ ಅಭಿಮಾನ ರಕ್ಷಿಸಿದಂಥ ಶ್ರೀಕಾಂತ ೨
ಉತ್ತಾನಪಾದರಾಜ (ನ)ಣುಗ ತಮ್ಮಯ್ಯನ
ಮತ್ತ ತೊಡೆಯೇರಿಇರಲು
ನಿತ್ಯದಲಿ ಸುರುಚಿ ಸುನೀತಿ ಕುಮಾರಕನ
ಎತ್ತಿ ಕಡೆಯಕ್ಕೆ ನೂಕಲು
ಪ್ರತ್ಯಕ್ಷವಾಗಿ ಪಾಲಿಸಿ ಧ್ರುವಗೆ ಪದವಿಯ –
ನಿತ್ತ ವಿಚಾರವಿಲ್ಲದಂತೆ
ಸತ್ಯಮೂರುತಿ ಹೆಳವನಕಟ್ಟೆರಂಗಯ್ಯ
ಭಕ್ತವತ್ಸಲನೆಂಬೊ ಬಿರುದು ನಿನ್ನದು ಸ್ವಾಮಿ ೩

 

ತರುಣಿಕುಲರಾಮನೊಳು—-
೪೫
ಮನ್ನಿಸ್ಯಾದವಾ ಮಮತೆಯಿಂದಾಲೆನ್ನ ಮಾಧವಾ ಪ.
ನೀರಜಾಕ್ಷನೆ ಪಾಲಿಸು ಜಗದ್ಭರಿತವಾಸನೆ
ಘೋರ ಸಂಸಾರಕ್ಕೆ ಸಿಲ್ಕಿ ಘಾಸಿಯಾಗನೆಂದಾಮೋಸವಾಗಿ
ಮೂರುದಿನದ ಬಾಳ ನೆಚ್ಚಿ ಘಾಸಿಯಾದೆನು
ನಾರಾಯಣ ನಿಮ್ಮ ನೆನೆವೆನನುದಿನಾ ೧
ಬಿಸಜನೈಯ್ಯನೆ ಶ್ರೀತುಲಸಿಮಾಲಾ ಭೂಷನೆ
ಹಸಿವು ತೃಷೆಯು ನಿದ್ರೆಯಿಂದಾ ಹೊತ್ತುಗಾಣೆನೈಯ್ಯಾ
ದೆಸೆಗೆದೆಸೆಗೆ ಇಂದ್ರಿಯಗಳು ಎಳೆದು ಕಾಡುತಾರೈಯ್ಯಾ
ವಸುಧಿಗೊಡೆಯ ನಿಮ್ಮ ನೆನೆಯದೆ ಮುಗ್ಧಳಾದೆನು ೨
ದುರಿತನಾಶನೆ ಪಾಲಿಸು ಜಗದ್ಭರಿತವಾಸನೆ
ನಿರುತ ವ್ಯಾಧಿಯಿಂದ ಮಂದಳಾದೆನು ಸರ್ವೇಶನೆ
ಮರುತನಂತೆ ಮನಸ್ಥಿರವ ಮಾಡಿಸೋ ಲಕ್ಷ್ಮೀಶ
ಕರ್ತೃ ಹೆಳವನಕಟ್ಟೆ ವೆಂಕಟೇಶನೆ ೩

 

ಒಮ್ಮೆ ಮಳೆಯಿಲ್ಲದೆ ಜನ ಕಂಗೆಟ್ಟಾಗ
೫೩
ಮಳೆಯ ದಯಮಾಡೊ ರಂಗಯ್ಯ ನಿಮ್ಮ
ಕರುಣ ತಪ್ಪಿದರೆ ಉಳಿಯದೀ ಲೋಕ ಪ.
ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ
ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು
ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು
ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ೧
ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ
ಮೊಗೆ ಮೊಗೆದು ಪಾತ್ರೆಯಲಿ ನಾರಿಯರು
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ
ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ೨
ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ
ಬಂದಿದೆ ಭಾದ್ರಪದ ಮಾಸವೀಗ
ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ
ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ೩

 

ದಶಾವತಾರದ ವರ್ಣನೆ
೧೬
ಮೂರು ಜಗವ ಕುಣಿಸುವಂಥ ಗಾರುಡಿಗ ಇವ ದಾರಕ್ಕ
ನಾರಾಯಣನಲ್ಲವೇನೆ ನಾರಿ ಕೇಳೆ ತಂಗಿ ಪ.
ವಾರಿಧಿಯೊಳಾಡುವ ವಿಚಾರ ಮಾಡೆ ಅಕ್ಕ
ಧೀರ ಬಲುಗಂಭೀರ ಮತ್ಸ್ಯವತಾರ ಕಾಣೆ ತಂಗಿ ೧
ಹತ್ತೂ ನಾಲ್ಕು ರತ್ನವ ತೆಗೆದು ಮತ್ತೆ ಇವ ದಾರಕ್ಕ
ರತ್ನ ಕುಂಚದ ಹೇಮಗಿರಿಯನೆತ್ತಿದ ಕೂರ್ಮ ಕಾಣೆ ತಂಗಿ ೨
ಧರಣಿಯ ಸುರುಳಿ ಸುತ್ತಿದಂಥ ಅರಸ ಇವ ದಾರಕ್ಕ
ಅರಿಯದ ಭಕ್ತರ ಮೊರೆಗೋಡುವ ವರಾಹ ಕಾಣೆ ತಂಗಿ ೩
ನಂಬಿದವರ ಕಂಬದೊಳು ಎಂಬೆ ಇವ ದಾರಕ್ಕ
ರಂಭೆ ಹೇಮದ ಬೊಂಬೆ ನರಸಿಂಹ ಕಾಣೆ ತಂಗಿ ೪
ಕದ್ದು ಅಡ್ಡ ಬಿದ್ದನ ಕಣ್ಣ ಇರಿದ ಇವ ದಾರಕ್ಕ
ಮುದ್ದು ಮುಖದ ಪ್ರಸನ್ನನಾದ ವಾಮನ ಕಾಣೆ ತಂಗಿ ೫
ಆ ಮಾತೃ ದ್ರೋಹವ ಮಾಡಿದವ ಇವ ದಾರಕ್ಕ
ಶಾಮ ಸಾರ್ವಭೌಮ ಪರಶುರಾಮ ಕಾಣೆ ತಂಗಿ ೬
ಕಾಮಿನಿಯ ಪೋಗಿ ತಂದ ಭೀಮ ಇವ ದಾರಕ್ಕ
ಕಾಮಿತಾರ್ಥವನೀವ ಶ್ರೀ ರಾಮ ಕಾಣೆ ತಂಗಿ ೭
ಗೊಲ್ಲತೇರ ಗಲ್ಲವ ಪಿಡಿದ ಚೆಲುವ ಇವ ದಾರಕ್ಕ
ಬಲ್ಲಿದ ಮಲ್ಲರ ಮರ್ದಿಸಿದಂಥ ಕಳ್ಳ ಕೃಷ್ಣ ಕಾಣೆ ತಂಗಿ ೮
ತ್ರಿಪುರದೊಳು ಚಪಲಾಕ್ಷಿಯರ ವಿಪರೀತವ ಮಾಡಿದನಕ್ಕ
ಅಪರಿಮಿತ ಮಹಿಮನಿವ ಚಪಲ ಬೌದ್ಧ ಕಾಣೆ ತಂಗಿ ೯
ಕುದುರೆಯೇರಿ ಎದುರಿಗೆ ಬರುವ ಚದುರ ಇವ ದಾರಕ್ಕ
ಮಧುವನಿಕ್ಕಿದ ಮಧುರಾಪುರದ ಚದುರ ಕಲ್ಕಿ ತಂಗಿ ೧೦
ಇಂದುವದನ ಮೂರ್ತಿ ಗೋವಿಂದ ಇವ ದಾರಕ್ಕ
ನಂದನ ಕಂದ ಹೆಳವನಕಟ್ಟೆ ರಂಗ ಕಾಣೆ ತಂಗಿ೧೧

 

೧೮
ಯಾಕೆ ಬಾರನಕ್ಕಯ್ಯ ಎನ್ನಯ
ಪ್ರಾಣನಾಥನ ಕರೆತಾರೆ ಸೈರಿಸಲಾರೆ ಪ.
ಸೋಗೆಗಂಗಳ ಸನ್ನೆ ಮಾಡಿ ಪೊಳೆದು ಪೋದ
ಮೇಘದ ಮಿಂಚಿನಂತೆ ಮಂದರೋದ್ಧಾರ
ಬಾಗಿದ ಮುಖವೆತ್ತಿ ಎನ್ನ ನೋಡದೆ ಪೋದ
ಈಗಲವನ ಮನಸ್ಯೆರಡಂಗವಾಗಿದೆ
ಹ್ಯಾಂಗ ಮಾಡಲಿ ಸಖಿಯೆ ಹೇಳಲಿ ಪ್ರಿಯೆ ೧
ಕರವೊಡ್ಡಿ ಬೇಡಿಕೊಂಡರೆ ಒಲ್ಲದೆ ಪೋದ
ಕರೆದರೆ ಪಿತನಾಜ್ಞೆ ತೋರುತಾನೆ
ನಿರುತದಿ ಏಕಪತ್ನಿಯ ವ್ರತನೆನುತ
ಸರಿಬಂದ ಸತಿಯರ ಒಡನಾಡುತೈದಾನೆ
ಗರುವತನವ ಬಿಡನೆ ಗೋವ ಕಾಯ್ವವನೆ ೨
ಸುಮ್ಮನೆ ಲಜ್ಜೆಭಂಗವ ಮಾಡಿ ಪೋದನೆ
ಒಮ್ಮೆ ಮನೆಗೆ ಬಾರನೆ ವಾಜಿವಾಹನನೆ
ತಮ್ಮ ಧ್ಯಾನದೊಳೆನ್ನ ಮನಸು ನಿಲ್ಲಿಸಿ ಪರ-
ಬೊಮ್ಮ ಮೂರುತಿ ಹೆಳವನಕಟ್ಟೆರಂಗನ
ಘಮ್ಮನೆ ಕರೆದುತಾರೆ ಸೈರಿಸಲಾರೆ ೩

 

೪೮
ಯಾಕೆ ಮರುಳಾದೆ ಹೀಂಗೆ ಎಲೆ ಮನವೆ
ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ.
ಧನದಾಸೆಯನು ಮರಿ ಮನುಮಥನ
ಬಾಣಕಳುಕದಿರು ತೊಳಲದಿರು
ನೆಲದಾಸೆಗೆ ನೀನದರ
ಅನುವರಿತು ಹರಿಯ ಸ್ಮರಿಸು ಮನವೆ ೧
ಅನ್ಯರಾಗುಣ ದೋಷಯಣಿಸದಲೆ
ನಿನ್ನಿರವ ನೋಡು ಕಂಡ್ಯಾ ಮನವೆ
ಬಂಣಗಾರಿಕೆಯು ಬರಿದೆ ಔದಂಬ್ರ-
ಹಣ್ಣಿನಂತೀ ಕಾಯವು ಮನವೆ ೨
ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ
ಭ್ರಮೆಗೊಂಡು ಬಳಲಾದಿರೋ
ಕಮಲಪತ್ರಕ್ಕೆ ಒಳಗಿನ ಜಲದಂತೆ
ನೆಲಕೆ ನಿರ್ಲೇಪನಾಗೋ ಮನವೆ ೩
ಈ ದೇಹ ಸ್ಥಿರವಲ್ಲವೊ ಕಾಲನಾ
ಬಾಧೆಗೋಳಗಾಗದಿರೋ ಮನವೆ
ಭೇದ ದುರ್ಗುಣವ ತ್ಯಜಿಸು ನೀ
ಗೇರುಬೀಜದಂದದಿ ತಿಳಿಯೊ ಮನವೆ ೪
ಮಾಡು ಹರಿಸೇವೆಯನ್ನು ಮನದಣಿಯೆ
ಬೇಡು ಹರಿಭಕ್ತಿಯನ್ನು
ಕೂಡು ಹೆಳವನಕಟ್ಟೆಯ ವೆಂಕಟನ
ಬೇಡಿ ಮುಕ್ತಿಯನು ಪಡೆಯೊ ಮನವೆ ೫

 

೧೭
ಯಾಕೆದೂರುವಿರೆಂಮ ಬಾಲನಾ
ಲೋಕದೊಳಿವನಂಥ ಪುಂಡು ಮಕ್ಕಳಿಲ್ಲವೆಂದು ಪ.
ಒಂದು ಹೆಜ್ಜೆಯನಿಡವಲ್ಲಿ ಬೀಳುತಲಿಹನೆ
ನಿಂದಿಹವದನ್ನು ನಾ ಕಾಣೆ ಅ.ಪ.
ಇಂದು ನಮ್ಮಯ ಮನೆವೊಕ್ಕು ಬೆಣ್ಣೆಯ ಸವಿದನೆಂಬುದು
ಛಂದವೇನೆ ಗೋಪಿ ನಿನ್ನ ಕಂದನ ಸರಿಯಲ್ಲವೆ ೧
ಅನ್ನವನುಣ್ಣಲರಿಯ ಅಮ್ಮಿಬೇಡುತಲಿಹನೆ
ಸೊನ್ನಿಮಾಡಿ ಕರದನೆಂಬೋದು ಸೊಲ್ಲು ಸರಿಯೇ ಗೋಪಿ ೨
ಬಲುಹಿಂದ ಹಾಲನೆರೆಯೆ ಬಾಯತೆಗಿಯಲೊಲ್ಲ ಒಲೆಯ
ಮೇಲಿನಹಾಲ ಒಬ್ಬನೆ ಕುಡಿದಾನೆಂದು ಹೆಳವನಕಟ್ಟೆ
ರಂಗನಾ ದೂರುವುದೊಳಿತೆ ೩

 

೧೯
ಯೇಕೋದೇವ ಶ್ರೀ ವೆಂಕಟನಾಯಕ ಯಾದವ ಕುಲ ತಿಲಕ
ಸಾಕಾರ ಮೂರುತಿ ಸುಜನ ಮಂದಾರ ಅನೇಕದಿವ್ಯರೂಪ ಪ.
ವನರುಹದಳಲೋಚನ ಮುನಿಸುತ ವೈಕುಂಠ ನಿವಾಸ
ಕನಕಕೌಸ್ತುಭಮಣಿ ಭೂಷಾ ಕಂಬುಗದಾಬ್ಜದಳ
ದಿನಕರ ಕೋಟಿ ಪ್ರಕಾಶ ದಯಾಂಬುಧಿ ದೀನಜನೋದ್ದಾರ
ಮನಸಿಜಪಿತ ಮೃದು ಮಧು ಸುಂದರ ಮಮಕಾರ
ಬಿಡಿಸೊ ನೀ ಎನ್ನ ೧
ರಮಣಿಯ ಪಂಕಜದಳನೇತ್ರಿಯ ವಿಮಲ ಕುಚಾಗ್ರದಿ
ಸುರಪತಿತನಯನು ದಿನಕರ ವಂಶೋದ್ಧಾರನ
ಸತಿಯನು ಹಿಂಸಿಸಿ
ಅಮರವಂದಿತ ಶ್ರಿತಜನ ರಕ್ಷಕ ಸಮರವಿಕ್ರಮ
ಸಕಲಾಗಮಸುತ್ತ್ಯಾ ಸಾಮಗಾನ ಲೋಲ ೨
ಶರಧಿ ಶಶಿಧರ ಸನ್ನುತ ಶಾಶ್ವತ ಗುಣಭಾಸ
ಪರಮ ಪುರುಷಹರಿವಾಕ್ಕುಠಾರ ಪುರಾಣ ಪುರುಷದೇವ
ದುರಿತಭಂಜನ ದಶರಥ ಸುಕುಮಾರ ಧಾರುಣಿಧರರಾಮ
ಕರಿದೇಹ ವಿಮೋಚನ ಹೆಳವನಕಟ್ಟೆ ವೆಂಕಟರಮಣ ೩

 

ಚಂಡಿ ಚಾಮುಂಡಿ :
೩೧
ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು
ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ.
ಶ್ರೀ ಶರ್ವಾಣಿ ಶಂಕರಿ ದುರಿತ ದುಃಖ ನಿವಾರಿ
ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ
ಗುರುಳ ಬಾಲೆ ಪಲ್ಲವಪಾಣಿ
ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ ೧
ಅಳುವಾಡುವ ರಂಗನ ಅದೇನರಿತು ಭಂಗ
ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ
ಕಾಳಗದೊಳು ಕಂಠೀರವೆ ಕರೆದಭಯವನೀವೆ
ಪೇಳಲೆನ್ನಳವೆ ಸುಕೃತ ಪಂಥಗಾರ್ತಿ ೨
ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ
ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ
ಅಂಡಪವಿತ್ರೆ ಶುಭಗಾತ್ರೆ ನಂಬಿದ ಭಕ್ತರ ಸಂಪ್ರೀತೆ
ಕಂಡು ನಮಿಸುವರ ಕಾಯ್ವೆ ಕಾಮಿತದಾತೆ ೩
ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ
ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ
ಇಂದು ಬಂದ ಬಂಧನವ ಬಿಡಿಸಿ
ಎಂದೂ ಎನ್ನ ನೀ ಕಾಯೆ ತಾಯೆ ೪
ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ
ಬಲುನೇಮವಂತೆ ಸಂತೆಹರವಿಲೆ ನಿಂತೆ
ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ
ಹೆಳವನಕಟ್ಟೆ ರಂಗನ ಸಹೋದರಿ೫

 

ಸುಮತೀಂದ್ರ (ನು-೩):
೨೦
ರಾಮ ಶ್ರೀ ರಘುನಂದನ ಶರಣು ಸಾರ್ವ-
ಭೌಮ ಭೂಸುರವಂದ್ಯ
ಸೋಮಶೇಖರಮಿತ್ರ ಕಾಮಿತ ಫಲದಾತ್ರ
ಕಾಮಧೇನು ವಿಶ್ವಭೀಮ ಸನ್ನುತ ಸೀತಾ ಪ.
ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-
ಭಾರಹರ ಭಜಕಜನೋದ್ಧಾರ ವೇದಾಂತಸಾರ
ಚಾರುವದನ ಮಣಿಹಾರ ಕುಂಡಲಧರ
ವೀರರಾಘವ ವಿಶ್ವಾಧಾರ ಕರುಣಿಸು ಸೀತಾ ೧
ಪಾಪರಹಿತ ಪಾವನ ಚರಿತ ಅಹಲ್ಯಾ
ಶಾಪ ಹರಣ ದಿವ್ಯರೂಪ ರಮಾರಮಣ
ತಾಪ ವಿಚ್ಛೇದನ ತಾಮಸ ಗುಣಹರಣ ದ-
ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ ೨
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ
ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ ೩

 

೩೦
ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ ಮನ್ಮಥರಿಪುವೆ
ವಿಸ್ತರಿಪೆನು ನಿಮ್ಮ ಮಹಿಮೆಯ ಜಗದೊಳು ಸ್ವಸ್ಥವಾಗಿ ಪ.
ಎಲ್ಲಿ ನೋಡಲು ಲಿಂಗಮಯವು ಅಲ್ಲಿಗಲ್ಲಿಗೆ ತೀರ್ಥಯಾತ್ರೆಯು
ಸೊಲ್ಲು ಸೊಲ್ಲಿಗೆ ಹರಮಹಾದೇವಂತೆಲ್ಲರು ಸ್ತುತಿಸುವರು
ಬಲ್ಲವರು ಇದು ಭಾವಿಸಿ ಕಾಶಿಗಿಂತ ಮಹಿಮೆ ವೆಗ್ಗಳವಹುದೆನುತ
ಸುಲಕ್ಷಣೆ ಶಿವಗಾತ್ರೆ ಶಿವನವಲ್ಲಭೆ ತ್ರಾಸಿನಲಿ ತೂಗುವಳು ೧
ನಾಟಕದಿ ನಾನಾಜನ್ಮದಿ ಬಂದು ದಾಟದಂತರವನಳಿದನು ಚಂದ್ರ
ಜೂಟ ಸಖನಂಘ್ರಿಗೆ ಪಾರ್ಥನು ಈ ಬಯಲಾದನು
ಸೂಟಿಯೆನಗಾಯಿತು
ಕೋಟಿತೀರ್ಥದಿ ಮಿಂದು ಮೈಯ ಕೋಟಲೆ ಸಂಸಾರಗಳೆಲ್ಲ
ದಾಟಿದೆನು ಇನ್ನು ಜನನಮರಣಗಳೆಂಬೋಪಾಯಗಳಿಲ್ಲವು ೨
ಕೂಪಾರದಲಿ ಬಂದು ಸೂಸುವ ತೆರೆಗಳು ಅಭ್ರದಿಂದಲಿ
ಅಪ್ಪಳಿಸಲು ಉನ್ನತ ಭ್ರಮೆಗೊಂಡಿದ್ದ ಕರ್ಮದ ಬಲಿಗಳು ಮಿಗಿಲಾದವು
ಉರ್ವಿಯೊಳಗುಳ್ಳ ಸಕಲನದಿಗಳನು ಗರ್ಭದಲಿ ಇಂಬಿಟ್ಟು ಮೆರೆದಂತಿಹ
ಸರ್ಬಗೂಡಿಸುವ ಸಿಂಧುರಾಜನಲಿ ಮಿಂದು ನಿರ್ಭಯಳಾದೆನು ೩
ಬಲಿದ ದನುಜನ ಭಾವಕ್ಕೆ ಮೆಚ್ಚಿ ಒಲಿದಷ್ಟವರವಿತ್ತ
ಸಿಲುಕಲು ಸುಲಭನೆಂದು ಹೇರಂಬನೊಳಿತ್ತು ನೆಲೆಗೊಳಿಸಿ
ಎಳೆದರೆ ಎಳೆಯಲೊಲ್ಲದೆ ಛಲವಿಡಿದ ಲಂಕಾಧಿಪತಿಯ ಅಹಂಕಾರ
ವಳಿದು ಇಂದ್ರಾದಿಗಳಿಗೆ ವರವಿತ್ತ ಮಹಾಬಲಲಿಂಗನ ಕಂಡೆ ೪
ಅನ್ನದಾ ಶತಶೃಂಗ ಪರ್ವತ ಪಶ್ಚಿಮದಿಂದ ಪಾತಾಳಗಂಗೆ ಸಹಿತಲಿ ಪ್ರ-
ಸನ್ನನಾಗಿ ನಿಂದ ಚೆನ್ನ ಹೆಳವನಕಟ್ಟೆರಂಗನ ಪ್ರಿಯ
ಪನ್ನಂಗಧರ ಪರಮಪವಿತ್ರ ಗೋಕರ್ಣೇಶನ ಕಂಡೆ ಪಾ-
ವನವಾಯಿತು ಎಲ್ಲಾ ಕುಲಕೋಟಿಯು ೫

 

ನಾಲ್ಕನೆಯ ಸಂಧಿ
ವಿಷಯೆ ಚಂಪಕಮಾಲಿನಿಗೆ ಪುರುಷನಾಗಿ
ಶಶಿಹಾಸ ಕಾಳಿಯನೊಲಿಸಿ
ಅಸುವ ಪಡೆದ ಮಾವಭಾವನ ಜಗಕತಿ
ಪೊಸತಾಗಿ ತೋರಿತಾಶ್ಚರ್ಯ
ಮತ್ತೆ ಕೇಳಯ್ಯ ಅರ್ಜುನ ಇಂದುಹಾಸಗೆ
ಮಿಥ್ಯದ ವಿಷವನು ಉಣಿಸಿ
ಹತ್ಯವ ಮಾಡಿ ಕೊಲ್ಲುವೆನೆಂದು ನೇಮಿಸೆ
ಕೃತ್ಯವೆ ಪಥ್ಯವಾದುದನು ೧
ಕುಂತಿಯಾತ್ಮಜ ಕೇಳು ಇಂದುಹಾಸಗೆ ಲಕ್ಷ್ಮೀಕಾಂತನ
ಕರುಣದ ಬಗೆಯ
ಕುಂತಳೇಂದ್ರನ ಸುಕುಮಾರಿ ಚಂಪಕಮಾಲೆ ಮಂತ್ರಿಯ
ತನುಜೆಯು ವಿಷಯು ೨
ಇಂದುಹಾಸನ ಸಿಂಗರಿಸಿ ಭಾವಕಿಯರು
ಬಂದರು ವಿಷಯೆ ಇದ್ದೆಡೆಗೆ
ಮಂದಗಮನೆ ಮಾತಾಡಲೊಲ್ಲಳು ಲಜ್ಜೆಯಿಂದತ್ತ
ತಲೆಯ ತಗ್ಗುವಳು ೩
ನಿನ್ನ ಮನೋಭೀಷ್ಟೆ ಆಯಿತವ್ವ ತಾಯಿ
ಪನ್ನಗಧರನ ಕೃಪೆಯಿಂದ
ಇನ್ನೇಕೆ ಮನದ ಸಂಶಯವೆಂದು ಸಖಿಯರು
ಸನ್ಮಾನವನೆ ಮಾಡಿದರು ೪
ಬಾರವ್ವ ತಾಯಿ ಮಜ್ಜನವ ಮಾಡೇಳೆಂದು
ಜಾರಿದ ಕುರುಳನೋಸರಸಿ
ವಾರಿಜಮುಖಿಯರು ಒಡಗೊಂಡು ಬಂದರು
ಚಾರುಮಾಣಿಕಖಚಿತ ಪೀಠಕ್ಕೆ ೫
ಪರುಷದ ಕಣಿಯ ತಂದಿರಿಸಿ ಕುಳ್ಳಿರಿಸೋರು
ಹರಸಿ ಅಕ್ಷತೆಗಳನಿಟ್ಟು
ಸರಸದಿ ಮುಡಿ ಬಿಚ್ಚಿ ಸಂಪಿಗೆಣ್ಣೆಯನೊತ್ತಿ
ಅರಸಿನಗಳ ತಿವರಿದರು ೬
ಕನ್ನಡಿ ಕದಪಿನಂಗನೆಗೆ ಮಜ್ಜನ ಮಾಡಿ ಪೊನ್ನ
ತಂಬಿಗೆಯ ಲೋಕುಳಿಯ
ರನ್ನದುಟಿಯರು ರಾಜೀವಮುಖಿಯರು
ಬೆನ್ನಲೋಕುಳಿಯನೆರೆದರು ೭
ಮುಡಿಮೈಗಳನೋಸರಿಸಿ ದುಕೂಲವ ಬಡನಡುವಿಗೆ ಅಳವಡಿಸಿ
ಜಡಿತದಾಭರಣಕರಡಿಗೆಯನು ತಂದಿಡುವರು ಇಕ್ಕೆಲದಲ್ಲಿ೮
ಪೀಠದ ಮೇಲೆ ಕುಳ್ಳಿರಿಸಿ ಮಂಡೆಯ ಹಿಕ್ಕ
ಪಾಟಿಸಿ ತುರುಬನೋಸರಿಸಿ
ಮೀಟಾದ ಮಾಣಿಕ್ಯ ಮುತ್ತಿನಬಟ್ಟು ಲಲಾಟ
ಮಧ್ಯದಲಿ ಇಡುವರು ೯
ಕಂಜಲೋಚನೆಗೆ ಅಂಜನ ಹಚ್ಚಿ ಕರ್ಣವ ರಂಜಿಸಿ
ಬೆಳಗುವ ಮೂಗುತಿಯ
ಪಂಜಿನೋಲೆಯ ಮುತ್ತಿನ ಕೊಪ್ಪನಿಡುವರು
ಮಂದ ಗಮನೆಯರು ಹರುಷದಲಿ ೧೦
ಅಗರುವ ಎಳೆ ಸಂಪಿಗೆಯ ನಾಸಿಕದಲ್ಲಿ ಹೊಳೆವ
ಮೂಗುತಿಯನಿಕ್ಕುವರು
ಕೋಕಿಲಗಾನೆ ಕುಟಿಲಕುಂತಳದಾನೆ ಬಾಗಿದ ಬಾವುಲಿಗಳಲಿ೧೧
ಇಟ್ಟರು ತೋಳ ಚಳರಕ್ಷೆ ಮಣಿಗಳ ಗಟ್ಟಿಕಂಕಣ ಚಳಕಗಳ
ಉಟ್ಟರೇಕೆಯ ಹಿಡಿವಾಳ ಕಡಗ ಅಳವಟ್ಟಿಹ
ಬೆರಳ ಮುದ್ರಿಕೆಯು ೧೨
ಎಡೆಯೆಡೆಗೆ ವಜ್ರದಡಿಗೆ ಕದಂಬವ
ಕಡಗ ಮುತ್ತಿನ ಹತ್ತೆ ಕಡಗ
ಎಡೆಪಣಿಚಿಂತಾಕದ ಸರಿಗೆಯ ತಂದಿಡುವರಂಗನಗೆ
ನಾರಿಯರು ೧೩
ಹೊರಹೊಮ್ಮುವ ಕುಚ ಮಧ್ಯದಲಿ ಪಚ್ಚೆಸರ
ಕಂಠೀಸರ ಬಿಲ್ಲಸರವು
ಕರಹರಿನಡುವಿಗೆ ಇಟ್ಟರು ಕಾಂಚೀದಾಮ
ಸರಸಿಜ ಗಂಧಿಯರೊಲಿದು ೧೪
ಬಾಳೆಯ ಕದಳಿಯ ಹೋಲುವ ತೊಡೆ
ಕಣಕಾಲುಗಳೆಸೆವ ಭಾವಕಿಯ
ಸಾಲುಗಂಟೆ ಗೆಜ್ಜೆ ಸರಪಳಿ ಘಲಿರೆಂಬ ಕಾಲಂದಿಗೆಯನಿಡುವರು೧೫
ಕೆಂದಾವರೆಯ ಪೋಲುವ ಪಾದಾಂಗುಲಿ
ಉಂಗುರ ಮುದ್ರಿಕೆಯಿಟ್ಟು
ಚಂದದಿಂದಲಿ ಮೀಂಟುಕಿರಿಪಿಲ್ಲಿ ಎಲ್ಲವು
ಮಂದಗಮನೆಗೆ ಒಪ್ಪಿದವು ೧೬
ಬಾವನ್ನ ಪರಿಮಳ ಪುನುಗು ಲೇಪನವು
ಸಾರಿಸಿ ಅಂಗಕ್ಕೆ ತಿಗುರಿ
ಸುವರ್ಣವಾದ ಮಾಣಿಕ ಮುತ್ತು ಖಚಿತದ
ಹಾವುಗೆಯನೆ ಮೆಟ್ಟಿಸಿದರು ೧೭
ನಾರಿಯರೆಡಬಲದಲಿ ಕರವಿಡಿಯಲು ಚಾರುವದನೆ ಚಂಚಲಾಕ್ಷಿ
ಆರüಡಿಗುರುಳಿನ ಅಲಸದೆ ಮಣಿಯ
ಬಂದೇರಿದಳೊಜ್ರದಂದಣವ ೧೮
ಮುತ್ತೈದೆಯರು ಮಂಗಳಗೀತ ಪಾಡುತ
ಹೊತ್ತರು ಕಳಸ ಕನ್ನಡಿಯ
ಇತ್ತರದಲಿ ಚಾಮರ ಢಾಳಿಸುವರು
ಹೊತ್ತಿದ ಕಾಳಂಜಿಯವರು ೧೯
ಹೆಗಲೆ ಪಂಜುಗಳು ಹಚ್ಚಿದ ದೀವಿಗೆಯು
ಜಗಜಗ ಬೆಳಕುಗಳು ತುಂಬಿ
ಜಗಜಗಿಸುವ ಜೊ‑ಂಪಿನ ಸುರೆಪಾನವು ನೆಗಪಿದವಗಣಿತವಾಗ೨೦
ಇದಿರಲಿ ನಲಿವ ನಾಲುಕು ಸಾಲೆ ಹೆಂಗಳು
ಉದುರು ಬಾಣ ಪುಷ್ಪಬಾಣ
ಮಧುರಸ್ವನದಿ ಪಾಡುವ ಭಾಗವತಜನ
ಸದನದಿ ನಡೆತಂದಳಬಲೆ ೨೧
ತಂಡತಂಡದಿ ಕದಲಾರತಿಯನು ಎತ್ತಿ
ಹೊನ್ನಂದಣವನೆ ಇಳಿಸುವರು
ಕಂದರ್ಪಕನ ಮದಕರಿಯಂತೆ ಒಲೆವುತ
ಬಂದಳು ವಿವಾಹ ಮಂಟಪಕೆ ೨೨
ಸಡಿಲಿಸಿ ಮೈಯ ಹೊದಿಕೆಯ ಮದನಗಿತ್ತು
ಮಡಿವರ್ಗದಲ್ಲಿ ಕುಳ್ಳಿರ್ದು
ತಡೆಯದೆ ಚಿನ್ನದ ಗಿಂಡಿಯಲುದಕವ
ಪಿಡಿದಳು ಮದನನರ್ಧಾಂಗಿ೨೩
ಬಂಧುವರ್ಗ ಬ್ರಹ್ಮಸಭೆಯ ಮಧ್ಯದಲಿ
ಮುಕುಂದಗರ್ಪಿತವಾಗಲೆಂದು
ಗಂಧವ ಪೂಸಿ ಅಕ್ಷತೆಯನು ಪಣೆಗಿಟ್ಟು
ಮಂದಾರಮಾಲೆ ಹಾಕಿದರು ೨೪
ತೆರೆಯ ಹಚ್ಚಡವನ್ನು ಹಿಡಿದು ದಂಪತಿಗಳ
ಪೊರೆಯಲಿ ತಂದು ನಿಲ್ಲಿಸಿದರು
ಧುರಧೀರ ಇಂದುಹಾಸನ ಕುಲಗೋತ್ರವ
ಅರುಹಬೇಕೆಂದು ಕೇಳಿದರು ೨೫
ಎನ್ನ ಪವಿತ್ರ ಮಹಾಪಿತ ಪರೇಪಿತ ಸಂಪನ್ನಶಯನ ಶ್ರೀಹರಿಯು
ಎನ್ನದು ವಾಮಗೋತ್ರವು ಪುಳಿಂದನು
ಎನ್ನ ಪರಮ ಗುರುವೆಂದ ೨೬
ಕ್ರಮದಿಂದ ಮಧುಪರ್ಕವನೆ ಮಾಡಿದರತಿ
ಸಮಯವು ಲಗ್ನವೆಂದೆನುತ
ರಮಣಿಯ ಕರೆದು ಮಂಗಳಾಷ್ಟಕವನು
ಬ್ರಾಹ್ಮಣೋತ್ತಮರು ಹೇಳಿದರು ೨೭
ಪುರೋಹಿತರು ಕನ್ಯಾರ್ಥವ ಹೇಳಲು
ಸಮಯವು ಲಗ್ನವೆಂದೆನುತ
ಪಿಡಿದ ತಂಡುಲ ಇಂದುಹಾಸನು ಶೀಘ್ರದಿ ಮಡದಿಯ
ಮೇಲೆ ಸೂಸಿದನು ೨೮
ರತ್ನಕಂಕಣವನ್ನು ಕರದಿ ಢಾಳಿಸುತ
ಶತಪತ್ರನಯನೆ ಸಮಗಾತ್ರೆ
ಚಿತ್ತದೊಲ್ಲಭನ ಮಸ್ತಕದಿ ತಂಡುಲವ
ಚಮತ್ಕಾರದಿಂದ ಸೂಸಿದಳು ೨೯
ಬಡನಡುವಿನ ಭಾವಕಿಯರು ಶಕುನದ
ಸೊಡರುಗಳನೆ ಹಚ್ಚುವರು
ಅಡರುವ ಮಿಂಚಿನಂದದ ನೋಟದ ಬಾಲೆಯರು
ಪಿಡಿದರು ಇತ್ತಂಡದಲ್ಲಿ ೩೦
ಹೆತ್ತುಪ್ಪ ಕ್ಷೀರದಲಿ ಚೆಟ್ಟನೆ ಹೊಯ್ಸಿದರು
ಮುತ್ತೈದೆಯರೆಲ್ಲ ಅಲಂಕರದಿ
ಹತ್ತುಸಾವಿರ ಹೊಸ ಮೊರದ ಬಾಗಿನವ ತಂದಿತ್ತಳು
ವಿಷಯೆ ಸಂಭ್ರಮದಿ ೩೧
ಇತ್ತ ತಾವ್ವ ಎನುತ ಮದವಳಿಗೆಯ ಎತ್ತಿ
ಕೈಯಿಂದ ತೋರುವರು
ಸುತ್ತ ನಕ್ಷತ್ರದ ಮಧ್ಯದಿ ಕಂಡಳು ಪ್ರತ್ಯಕ್ಷದಿಂದರುಂಧತಿಯ ೩೨
ಕನಕದ ಹಸೆಯ ಮೇಲೆ ಕುಳ್ಳಿರಿಸೋರು
ದಿನಕರ ಪ್ರತಿಬಿಂಬದಂತೆ
ವನಿತೆ ಸಾಜದಿ ತಂಡುಲವಿಟ್ಟು ಹೋಮಕ್ಕೆ
ಅನುಕೂಲಗಳನೆ ಮಾಡಿದರು ೩೩
ಆಜ್ಯತಂದವರಿಗೆ ಉಡುಗೊರೆ ಇತ್ತನು ಪೂಜೆ
ಮಾಡಿದನು ಶ್ರೀಪತಿಯ
ಆಜ್ಯತಂಡುಲ ಆಪೋಶನೆ ಮಾಡಿದ ನಿರ್ಜರಪತಿ ಮೆಚ್ಚುವಂತೆ೩೪
ತಡವ ಮಾಡದೆ ಠಾಣ ದೀವಿಗೆಯನು ಹಚ್ಚಿ
ಎಡೆಮಾಡಿ ಚಪ್ಪರದೊಳಗೆ
ಬಿಡಿಮುತ್ತಿನ ಹಸೆಯ ಮೇಲೆ ದಂಪತಿಗಳ ಒಡನೆ
ಭೋಜನಕೆ ಕುಳ್ಳಿರಿಸಿ ೩೫
ಉಪ್ಪಿನೆಸರುಕಾಯಿ ಪರಿಪರಿ ಶಾಕವು ಹಪ್ಪಳ ಬಾಳಕಗಳನು
ಅಪ್ಪಲು ಅತಿರಸ ಸೂಪಾಕ್ಷತಶಾಲ್ಯನ್ನ ಚಪ್ಪರದಲಿ ಬಡಿಸುವರು ೩೬
ಕಾಮಿನಿಯರು ಕನಕದ ಹರಿವಾಣದಿ ಶಾವಿಗೆ ಪರಮಾನ್ನಘೃತವ
ಭಾವಕಿಯರು ಮಂಗಳ ಧವಳವ ಪಾಡಿ
ಭೂಮಕ್ಕೆ ಬಡಿಸಿದರಾಗ ೩೭
ಆಜ್ಯದಿಂದಲಿ ಆಪೋಶನೆ ಎರೆದಳು ರಾಜೀವ
ಮುಖಿ ತನ್ನ ಪತಿಗೆ ಮ-
ಹಾಜನರೆಲ್ಲ ಉಂಡು ಕೈತೊಳೆದರು ಹೂಜಿಯಲ್ಲುದಕವ ಪಿಡಿದು೩೮
ಜಂಬುಖಾನ ರತ್ನಗಂಬಳಿಯನು ಹಾಕಿ
ತುಂಬಿದ ವಿಪ್ರರ ಕುಳ್ಳಿರಿಸಿ
ತಾಂಬೂಲ ದಕ್ಷಿಣೆ ಕೊಡಲು ಮಂತ್ರಾಕ್ಷತೆ
ಸಂಭ್ರಮದಿಂದ ಸೂಸಿದರು೩೯
ಭೂಸುರ ಬಂಧುವರ್ಗವನೆಲ್ಲ ನೇಮಿಸಿ
ವಾಸುದೇವ ಕೃಷ್ಣ ಎನುತ
ಹಾಸು ಮಂಚದ ಮೇಲೆ ಪವಡಿಸಿದ ಮದನ
ವಿಲಾಸದಿಂದಲಿ ನಿದ್ರೆಗೈದ ೪೦

 

೨೧
ಶ್ರೀ ನರಸಿಂಹದೇವ ಶರಣ ರಕ್ಷಕನೆ
ದಾನವಾರಿ ಸುಭಕ್ತಾಧೀನ ಮೂರುತಿಯೆ ಪ.
ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ
ನಿರವ ಕಾಣದೆ ದುಷ್ಟಹಿರಣ್ಯಕಾಸುರನು
ಪರಿ ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು
ತರಳಗೊಲಿದೆ ಬಹು ಕರುಣಾನಿಧಿಯೆ ೧
ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ
ಕಟಿ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ
ಕಟಿ ಕಟಿ ಕಡಿವುತುಬ್ಬಸ ತೋರಿ ನಿಂದ
ಕಠಿಣ ಮೂರುತಿಯೆ ೨
ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು
ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ
ಗರ್ಭವ ನಖದಿಂದ ಇಬ್ಭಾಗವನು ಮಾಡಿ
ಹಬ್ಬಿದ ಕರುಳನು ಹರುಷದಿ ಧರಿಸಿದೆ ೩
ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು
ಪ್ರೀತಿಯ ಭಕ್ತನ ಮಾತನು ಮನ್ನಿಸಿ ಅತಿ
ಶಾಂತನಾಗಿ ಸಂತೋಷಪಡಿಸಿದ ಅ-
ನಾಥ ರಕ್ಷಕನೆ ಕಾತರವಳಿದೆ ೪
ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ
ನಳಿನ ಸಂಭವಗೆ ಬಲು ಹರುಷವನಿತ್ತೆ
ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ ೫

 

ನಕ್ರನ ಬಾಧೆಯೊಳಗೆ
೪೬
ಶ್ರೀ ವೆಂಕಟೇಶ ಎನ್ನ ಸಲಹಲ್ಯಾಕೆ ಬಳಲುವೆ ಪ
ಬಂದ ದುರಿತ ಪರಿಹರಿಸೊ ಬಂದು ತಾಪವನ್ನು ಬಿಡಿಸೊ
ಮಂದ ಬುದ್ದಿಯನ್ನೆ ಕೆಡಿಸೊ ಮದನನಯ್ಯ ಮಮತೆ –
ಯಿಂದ ಇಂದು ಎನ್ನ ಮಾತ ಲಾಲಿಸೊ
ತಂದೆ ಕುಂದು ಎಣಿಸದೆನ್ನ ಪಾಲಿಸೊ ೧
ನಕ್ರನ ಬಾಧೆಯೊಳಗೆ ಸಿಳುಕಿ ಗಜವು ನರಳುತಿರಲು ತ್ರಿ-
ವಿಕ್ರಮನೆ ಸಲಹೊಯೆಂದು ಕರೆಯಲಾಗ ನಕ್ರನ
ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ
ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ ೨
ತರಳ ಧ್ರುವನು ತನ್ನ ಪಿತನ ತೊಡೆಯ ಮ್ಯಾಲೆ ಬಂದು ಕುಳ್ಳಿರೆ
ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ
ಭರದಿ ಬಂದು ನಿನ್ನ ಚರಣವ ಭಜಿಸಲವಗೆ
ಸ್ಥಿರಪದವಿಯಿತ್ತೆ ಕರುಣದಿ ನಾನು ನಿನ್ನ ಸ್ಮರಣೆಗೈವೆದಿವ್ಯನಾಮವ ೩
ಆರು ಸಲಹುವರು ಎನ್ನ ಪಾರುಗಾಣಿಸುವರ ಕಾಣೆ
ಸೇರಿದೆನೊ ಶೇಷಶಯನ ಶ್ರೀನಿವಾಸ ಎನ್ನನು
ದ್ಧಾರ ಮಾಡಲಾಗದೆ ಸಕಲ ಆರಭಾರ ನಿನ್ನ
ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ ೪
ದುಷ್ಟ ದನುಜರನ್ನು ಮುರಿದು ಧಾರುಣಿಯೊಳು ಇರುವೆ ಎನ್ನ
ಕಷ್ಟವ ಬಿಡಿಸಿ ಕಾಯೊ ಕಮಲನಾಭ ಹೆಳವನ
ಕಟ್ಟೆವಾಸ ವೆಂಕಟೇಶನೆ ಸಕಲ ಭಾರ
ದೃಷ್ಟಿಯಿಂದ ಪೊರೆವೊ ದೇವನೆ ಕೃಷ್ಣಾ ಸೃಷ್ಟಿಗೊಡೆಯ
ಸುಜನಪಾಲನೆ ೫

 

ಚಾಣೂರಮರ್ದನ (ನು-೧):
೨೨
ಶ್ರೀರಂಗ ಶ್ಯಾಮಲಕೋಮಲಾಂಗ
ಕ್ರೂರರಕ್ಕಸಕುಲನಿವಾರಣ ನಾರದಾದಿವಂದ್ಯನೆ ಪ.
ಮಾಣಿಕ್ಯ ಮೌಕ್ತಿಕಹಾರ ಧೀರ ವಾಣೀಪತಿಪಿತ ವನಜನೇತ್ರನೆ
ವಾಣಿಬಾಹೋತ್ತಂಡನ ಚಾಣೂರಮರ್ದನ ಚಿದಾನಂದ
ವೇಣುನಾದಪ್ರಿಯದೇವನೆ ಇನಕುಲಾಂಬುಧಿಚಂದ್ರನೆ ೧
ಅಕ್ರೂರ ಅಂಬರೀಷವರದ ನಕ್ರಬಂಧನ ನಾಗಸ್ತ್ರೀರಕ್ಷಕ
ಚಕ್ರಧರ ಮುಕುಂದನೆ ರುಕ್ಮಿಣೀವಲ್ಲಭ ವಾಸುದೇವ
ಶಕ್ರಶಶಿಧರಶೇಷಸನ್ನುತ ಸಕಲಲೋಕೋತ್ಪತ್ಯನೆ ೨
ನಿತ್ಯಾನಂದನೆ ನಿಗಮಗೋಚರನೆ
ಸತ್ಯಭಾಮೆ ಶ್ರೀಮನೋಹರ ಮದನ ಶ್ರೀಗೋಪಾಲನೆ
ಭಕ್ತವತ್ಸಲ ಭಯನಿವಾರಣ ಕರ್ತು ಹೆಳವನಟ್ಟೆರಂಗನೆ ಕೃಪಾಂಗನೆ೩

 

ವ್ಯಾಸ (ಸಂಧಿ ೧, ನು ೧೭):
ಚಂದ್ರಹಾಸನ ಕಥೆ
ಶ್ರೀರಮಣಿಯ ಮನೋಹರ ಸುಜನ ಮಂದಾರ
ತ್ರೈಭುವನೋದ್ಧಾರ
ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ ೧
ಕಡಲಶಯನ ಕಲ್ಪತರುವೆ ಇಷ್ಟಾರ್ಥವ ಕೊಡುವ
ಭಕ್ತರ ಭಾಗ್ಯನಿಧಿಯೆ
ನಡೆಸುವೆ ನಿಮ್ಮ ತಂತ್ರದಲಿ ಈ ಕೃತಿಯನು
ನುಡಿಸಯ್ಯ ಎನ್ನ ಜಿಹ್ವೆಯಲಿ ೨
ಭುಜಗನ ಹಿಡಿದು ಗರ್ಭವ ಸುತ್ತಿದಾತನೆ
ಅಜಹರಿಸುರ ವಂದಿತನೆ
ಭಜನೆಗಿಷ್ಟಾರ್ಥವ ಕೊಡುವ ವಿಘ್ನೇಶ್ವರ
ನಿಜವಾಗೊ ಮತಿಗೆ ಮಂಗಳವ ೩
ಶೃಂಗಪುರದ ನೆಲವಾಸೆ ಸಜ್ಜನಪೋಷೆ
ಸಂಗೀತಲೋಲೆ ಸುಶೀಲೆ
ಮಂಗಳಗಾತ್ರೆ ಶಾರದೆ ಎನ್ನ ಜಿಹ್ವೆಯಲಿ
ಹಿಂಗದೆ ನೆಲಸೆನ್ನ ತಾಯೆ ೪
ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ
ಹೆತ್ತೋರ ಮನೆದೈವ ಶ್ರೀ ಮೈಲಾರಗೆ ಹಸ್ತವ
ಮುಗಿದು ವಂದಿಸುವೆ ೫
ಪೃಥಿವಿ ಆಕಾಶ ಸೂರ್ಯ ಚಂದ್ರರಿಗೆರಗುವೆ
ಪತಿಯ ಚರಣವನ್ನು ನೆನೆವೆ
ಸ್ತುತಿಸುವೆ ಗುರುಹಿರಿಯರಿಗೇಕಚಿತ್ತದಿ ಮತಿಗೆ
ಮಂಗಳವಾಗಲೆಂದು ೬
ಸುರಪುರವಾಸ ಲಕ್ಷ್ಮಿಯಕಾಂತ ಭಕ್ತರ್ಗೆ
ಒರೆದಂಥ ಜೈಮಿನಿಯೊಳಗೆ
ಪರಮಭಕ್ತ ಚಂದ್ರಹಾಸನ ಕಥೆಯನು ಚರಿತೆಯ
ಮಾಡಿ ವರ್ಣಿಸುವೆ ೭
ಇಂದ್ರಜ ತುರಗವ ಕಾಣದೆ ಮನದಲ್ಲಿ
ಸಂದೇಹ ಮಾಡುತ್ತಿರಲು
ಚಂದ್ರಹಾಸನ ಕಥಾಮೃತಸಾರವನು ನಾರಂದ
ಪೇಳಿದ ಫಲುಗುಣಗೆ ೮
ಬಂದರು ಕೃಷ್ಣಾರ್ಜುನರು ತುರಂಗವ
ಮುಂದೊತ್ತಿ ರಥವ ಬೆಂಬತ್ತಿ
ಚಂದದಿ ದಿಗ್ದೇಶ ತಿರುಗಿದ ಹಯವ ತಾ
ನಿಂದಿರಿಸಿದ ಚಂದ್ರಹಾಸ ೯
ಕಟ್ಟಿದನೆರಡು ತುರಂಗವ ಲಿಖಿತವ
ಬಿಚ್ಚೋದಿಕೊಂಡು ನೋಡಿದನು
ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು ೧೦
ಪಿಡಿಕೊಂಡು ಬಂದರು ತುರಗವ ಚರರು ತ
ನ್ನೊಡೆಯಗೆ ಪೇಳಿದರಾಗ
ಪಿಡಿದು ತುರಂಗವ ಕಟ್ಟಿದರಾರೆಂದು
ಕಡುಚಿಂತೆಯಲಿ ಪಾರ್ಥನಿದ್ದ ೧೧
ಮನದಲಿ ಆಲೋಚನೆಯ ಮಾಡುತಲಿರೆ
ದಿನಕರ ಪ್ರತಿಬಿಂಬದಂತೆ
ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ೧೨
ಇಟ್ಟಿಹ ಕರ್ಣಕುಂಡಲವ ಕೃಷ್ಣಾಜಿನ
ಉಟ್ಟಿಹ ಕರದಿ ವೇಣುವನು
ಮುಟ್ಟಿ ಬಾರಿಸುತ ಶ್ರೀಹರಿನಾಮ ಸ್ಮರಿಸುತ
ಶ್ರೇಷ್ಠ ಬಂದನು ಇವರೆಡೆಗೆ ೧೩
ಏನಿದು ಬಂದ ಕಾರಣ ಎನುತಲಿ ಇಂದ್ರಸೂನು
ಕೃಷ್ಣರು ಇದಿರೆದ್ದು
ಗಾನವಿನೋದಿಯಾಗಮನವಿದೇನೆಂದು
ಆನಂದದಿಂದ ಕೇಳಿದರು ೧೪
ಕುಳ್ಳಿರಿಸಿದರು ಗದ್ದುಗೆಯಿಟ್ಟು ಮುನಿಪಗೆ
ಎಲ್ಲ ವೃತ್ತಾಂತವನರುಹಿ
ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು೧೫
ಗಮನವಾಗಿದ್ದ ತುರಂಗವ ಕಟ್ಟಿದ
ಪ್ರಮುಖರಿಲ್ಲ್ಯಾರು ಪೇಳೆನುಲು
ನಿಮಗಿದ ವಿವರಿಸಿ ಪೇಳುವೆನೆಂದರೆ
ಸಮಯವಲ್ಲವು ಪೇಳೆನಲು ೧೬
ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ
ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ೧೭
ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು
ಆಳುವ ಪ್ರಭು ಧಾರ್ಮಿಕನೆಂಬಾತನ ಬಾಳನೆಂಬರು
ಪ್ರಧಾನಿಯನು ೧೮
ನೀತೀಲಿ ರಾಜ್ಯವನಾಳುತಿರಲು ಕಂದ
ಭೂತಮೂಲದಲಿ ಪುಟ್ಟಿದನು
ಜಾತಕರ್ಮನಾಮಕರಣ ಮಾಡದೆ ಅವನ
ತಾತ ಕಾಲವಾಗಿ ಪೋದ ೧೯
ನಾಯಕರಿಲ್ಲದ ಕಾಯವಿದೇಕೆಂದು
ಸಾಯಲಾದಳು ರಾಜಪತ್ನಿ
ಮಾಯವಾಯಿತು ಸಿರಿ ಮತ್ತೆ ರಾಜ್ಯವ
ಪರರಾಯರು ಬಂದು ಕಟ್ಟಿದರು೨೦
ಪೋಷಣೆ ಮಾಡುವರಿಲ್ಲದಿರಲು ಪರದೇಶಿಯಂದದಿ
ಬಾಲನಿರಲು
ದಾಸಿಯೊಬ್ಬಳು ಕಂಡು ಮನದಲ್ಲಿ ಮರುಗುತ
ಆ ಶಿಶುವೆತ್ತಿ ನಡೆದಳು ೨೧
ಚಿಂತಿಸಿ ಹಲವು ಯೋಚನೆಯ ಮಾಡುತಲಾಗ
ಕುಂತಳಪುರಕಾಗಿ ಬಂದು
ಸಂತತ ನೆರೆಯಲಿ ಶಿಶುವನಿಟ್ಟುಕೊಂಡು ನಿಂತಳು
ಆ ಗ್ರಾಮದಲ್ಲಿ ೨೨
ತಿರಿದು ಹಾಕುವಳು ಪಾಲ್ಬೆಣ್ಣೆಯ ಶಿಶುವಿಗೆ
ಎರೆದು ಪೋಷಣೆಯ ಮಾಡುವಳು
ತರಳಗೆ ಬೇಕಾದುದಿಲ್ಲದಿರಲು ದಾಸಿ
ಮರುಗುತಿರ್ದಳು ಮನದೊಳಗೆ ೨೩
ದೇಶಾಧಿಪತಿಯ ಗರ್ಭದಿ ಬಂದು ನಿನಗೀಗ
ಹಾಸುವ ವಸ್ತ್ರಗಳಿಲ್ಲ
ಬೀಸಿ ತೂಗುವರೆ ತೊಟ್ಟಿಲು ಇಲ್ಲ ಎನುತಲಿ
ಬೇಸತ್ತು ಅಳಲುವಳೊಮ್ಮೆ ೨೪
ಪಾಲನೆ ಮಾಡುವಳು ಪರಿಪರಿಯಲಿ ಬಾಲಲೀಲೆಯ
ನೋಡಿ ಹಿಗ್ಗುವಳು
ಶ್ರೀ ಲೋಲನೆ ನೀ ಗತಿಯೆಂದು ತರಳನ
ಆಲಂಬದಲ್ಲಿರುತಿಹಳು ೨೫
ತೊಂಗಲಗುರುಳು ತೋರುತಲಿಹ ಮೊಳೆವಲ್ಲು
ಕಂಗಳ ಕುಡಿನೋಟವೆಸೆಯೆ
ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ-
ದೊಳಗಾಡುತಿಹನು ೨೬
ಇರುತಿರೆ ದಾಸಿ ಅಂತರಿಸಿ ಪೋದಳು ಬಾಲ
ಪರಪುಟ್ಟನಾದುದ ಕಂಡು
ನೆರೆಯ ನಾರಿಯರೆಲ್ಲ ತಮ್ಮ ಮಕ್ಕಳ ಕೂಡೆ ಎರೆದು
ಮಡಿಯ ಪೊದಿಸುವರು ೨೭
ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ-
ರೋಗರವನ್ನು ಉಣಿಸುವರು
ತೂಗುವರು ತೊಟ್ಟಿಲೊಳಗಿಟ್ಟು ತರಳನ
ರಾಗಗಾನದಲಿ ಪಾಡುವರು ೨೮
ಓರಗೆ ಮಕ್ಕಳು ಒಡಗೊಂಡು ಹೋಗಿ
ಎಣ್ಣೂರಿಗೆಯನು ಕೊಡಿಸುವರು
ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ೨೯
ಸೂಳೆವೆಣ್ಣುಗಳೆಲ್ಲ ಸೆಳೆದೆತ್ತಿಕೊಂಡು
ತಮ್ಮಾಲಯದೊಳು ಕರೆದೊಯ್ದು
ಕಾಲತೊಳೆದು ಕಸ್ತೂರಿಯನಿಟ್ಟು ಮಲ್ಲಿಗೆ
ಮಾಲೆಯನವಗೆ ಹಾಕುವರು ೩೦
ಕದಳಿ ಖರ್ಜೂರ ಕಿತ್ತಲೆ ಜಂಬುನೇರಿಲ ಮಧುರ
ಮಾವಿನ ಫಲಗಳನು
ಚದುರೆಯರೆಲ್ಲ ಕೊಟ್ಟು ಮನ್ನಿಸುವರು
ಮದನನಯ್ಯನ ಕಿಂಕರಗೆ ೩೧
ಬಟ್ಟೆವಿಡಿದು ಬಾಲ ಬರುತಿರೆ ಕಂಡನು ಪುಟ್ಟ
ಸಾಲಿಗ್ರಾಮ ಶಿಲೆಯ
ಗಟ್ಟುಳ್ಳ ಗೋಲಿಯು ತನಗೆ ದೊರಕಿತೆಂದು
ಅಷ್ಟು ಜನರಿಗೆ ತೋರಿಸಿದ ೩೨
ಭಯದಿಂದಲಿದ್ದ ಬಾಲಗೆ ದೊರೆಕಿತು
ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು
ಕೈಯ ದುಡುಕಿಲಿ ತೆಕ್ಕೊಂಡನು ಹರುಷದಿ
ಲಕ್ಷ್ಮಿನಾರಾಯಣ ಮೂರುತಿಯ ೩೩
ಆಡಿಗೆಲ್ಲುವ ನಾಲ್ಕುಯಿಮ್ಮಡಿ ಗಟ್ಟುಗವ
ಕೂಡಿದ ಗೆಳೆಯರ ಕೂಡೆ
ನೋಡಿ ಬಚ್ಚಿಡುವರೆ ಮನೆಯಿಲ್ಲದಿರೆ ಬಾಲ
ದೌಡೆಯೊಳಿಟ್ಟು ಕೊಂಡಿಹನು ೩೪
ಹಿಂಡುಗೆಳೆಯರ ಕೂಡಿಕೊಂಡಾಡುವ ಲಗ್ಗೆ ಚೆಂಡು
ಬುಗುರಿ ಚನ್ನಿಗಳನು
ಗಂಡುಗಲಿಯು ತಾನಾಗಿ ಅವರೆಲ್ಲರ
ಮಂಡೆಗಳನು ತಗ್ಗಿಸುವನು ೩೫
ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು
ಬಚ್ಚಿಡುವರೆ ಮನೆಯಿಲ್ಲದಿರಲು ಬಾಲ ಅರ್ಚಿಸಿ
ಬಾಯೊಳಗಿಡುವ ೩೬
ಒಂದು ದಿವಸ ಕುಂತಳೇಂದ್ರನ ಮಂತ್ರಿಯು
ಮಂದಿರದಲಿ ವಿಪ್ರರಿಗೆ ಆ-
ನಂದದಿಂದಲಿ ಭೋಜನ ಮಾಡಿಸುವೆನೆಂದ
ಬಂದರು ಬುಧಜನರೆಲ್ಲ ೩೭
ಮೃಷ್ಟಾನ್ನವನ್ನು ಭೋಜನ ಮಾಡಿಸಿ ಸಂತುಷ್ಠಿ
ಬಡಿಸಿದ ಬ್ರಾಹ್ಮರನು
ಪಟ್ಟಸಾಲೆಯೊಳೆಲ್ಲ ಹರಡಿ ಗದ್ದುಗೆಯಿಟ್ಟು
ಶ್ರೇಷ್ಠರೆಲ್ಲರ ಕುಳ್ಳಿರಿಸಿ ೩೮
ದಕ್ಷಿಣೆ ತಾಂಬೂಲವನು ತೆಕ್ಕೊಂಡು
ಮಂತ್ರಾಕ್ಷತೆಯನು ಮಂತ್ರಿಗಿತ್ತು
ಮಕ್ಕಳೊಡನೆ ಕೂಡಿ ಆಡುವ ತರಳನ
ಲಕ್ಷಣವನ್ನೆ ನೋಡಿದರು ೩೯
ಇವನಾರ ಮಗನೆಂದು ನೆರೆದಿರ್ದ ಸಭೆಯಲ್ಲಿ

 

ಬ್ರಹ್ಮಕೊರವಂಜಿ
ಸುರರು ಕಿನ್ನರರು ಸ್ಮರಣೆ ಮಾಡುವ ಪಾದ
ಕುರುಪತಿಯ ಗರ್ವವನು ಪರಿಹರಿಸುವ ಪಾದ
ಪರಮ ಯೋಗಿಗಳ ಹೃತ್ಕಮಲದಲ್ಲಿಹ ಪಾದ
ಸಿರಿ ವೆಂಕಟೇಶ್ವರನ ಪಾದ ಪದ್ಮವನು ನೆನೆವೆ ನಾನು ೧
ದಾನವಾರಿಯ ಚೆಲ್ವ ಜಾನು ಜಂಘೆಗಳೆಸೆವ
ಮೀನ ಖಂಡಗಳ ಪೆರ್ದೊಡೆಯ ಸೊಬಗಿನ
ಭಾನುಕೋಟಿ ಪ್ರಕಾಶದಂತೆ ವರಕಾಂತಿಯಲಿ
ಆನಂದದಿಂದಲಿ ಮೆರೆವ ಮೂರುತಿಯ ನೆನೆವೆ ನಾನು ೨
ಮಿಸುನಿ ಒಡ್ಯಾಣ ಕಾಂಚಿಯದಾಮ ತೆಳ್ವಸುರ
ಬಿಸಜನಾಭನ ಬಾಹುಪುರಿಯ ಸೊಬಗಿನ
ಎಸೆವ ಗದೆ ಶಂಕಚಕ್ರವು ಪದ್ಮಕರದಿ ಶೋ
ಭಿಸುತಿರುವ ಕಂಬುಕಂಧರದ ಮೂರುತಿಯ ನೆನೆವೆ ನಾನು ೩
ಕನ್ನಡಿಯ ಪಳಿದಳಿಪ ಕದಪು ಕಂಗಳು ಎಸೆಯೆ
ಕರ್ಣಕುಂಡಲದ ಸಂಪಿಗೆಯ ನಾಸಿಕದ
ರನ್ನ ತುಟಿ ಝಗಝಗಿಸೆ ಕುಡಿಹುಬ್ಬುಗಳು ಎಳೆಯ
ಮನ್ಮಥನ ಚಾಪದಂತೆಸೆವ ಮೂರುತಿಯ ನೆನೆವೆ ನಾನು ೪
ಅರೆದಿಂಗಳಂತೆಸೆವ ನೊಸಲ ಕಸ್ತೂರಿತಿಲಕ
ಹೊಳೆವ ಕಿರೀಟ ಮಸ್ತಕದಿ ಢಾಳಿಸುವ
ಅಲಸದೀರೇಳ್ಜಗವ ಕರುಣದಲಿ ರಕ್ಷಿಸುವ
ಹೆಳವನಕಟ್ಟೆ ಶ್ರೀ ವೆಂಕಟೇಶ್ವರನ ನೆನೆವೆ ನಾನು ೫
ಕಂಸಾಸುರನಿಟ್ಟ ಸೆರೆಯ ಮನೆಯೊಳು ಕಷ್ಟಪಡುತಲಿ ದೇವಕಿನಿ-
ಮಿಷ ಯುಗವಾಗಿ ಕಳೆಯುತಿದ್ದಳು ನಿತ್ಯಾನಂದನ ನೆನೆಯುತಾ
ಕಂಸರಿಪು ನಾರಾಯಣನು ಜನಿಸುವನೆಂದು ಅರುಹುವೆನೆನುತಲಿ
ಹಂಸವಾಹನ ಕೊರವಿವೇಷವ ಹರುಷದಿಂದಲಿ
ಧರಿಸಿದ ಆದನೆ ಕೊರವಿ ೬
ಮಿಂದು ಮಂಡೆಯ ಬಾಚಿ ತುರುಬಿಗೆ
ಮಲ್ಲಿಗೆಯ ವನಮಾಲೆಯ
ಚಂದ್ರಗಾವಿಯನುಟ್ಟು ಪಣೆಯೊಳು ತಿದ್ದಿತಿಲಕವನಿಟ್ಟನು
ಗಂಧ ಕಸ್ತೂರಿ ಪರಿಮಳವನು ಲೇಪಿಸಿ ಸರ್ವಾಂಗದಿ
ಇಂದ್ರಮಾಣಿಕದೋಲೆ ಹೊಳೆಯಲು ಇದಿರು
ಭಾಸ್ಕರನಂದದಿ ಆದನೆ ಕೊರವಿ ೭
ಗುಂಜಿಯ ದಂಡೆಯು ತೋಳಭಾಪುರಿ ಗಲ್ಲಕೊತ್ತಿದ ವೀಳ್ಯವು
ಮಂಜಾಡಿಯಸರ ಹವಳ ಸರ ಹತ್ತೆಸರವಾ
ಕೊರಳಲಿ ಹೊಳೆಯಲು
ಅಂಜನವನಿಟ್ಟು ಅಲರಗಣ್ಣಿಗೆ ಅತಿಹರುಷದಿಂದ ಬೇಗದಿ
ಕಂಜೋದ್ಭವ ಶೃಂಗರಿಸಿ ಬೆಳಗುವ ಕನ್ನಡಿಯನೀಕ್ಷಿಸಿದನು
ಆದನೆ ಕೊರವಿ ೮
ಮುತ್ತು ಮಾಣಿಕ ಹೊನ್ನಗೂಡೆಯ ಪಿಡಿದು
ಉತ್ತಮ ಶಿಶುವ ಬೆನ್ನಲಿ ಕಟ್ಟಿ
ಚಿತ್ತದೊಳಗೆ ನರಹರಿ ಶರಣೆನುತ
ಸತ್ಯಲೋಕದಿಂದಿಳಿದಳೆ ಕೊರವಿ ೯
ಮಧುರಾ ಪಟ್ಟಣಕಾಗಿ ಬಂದಳೆ ಕೊರವಿ
ಹದಿನಾರು ಬಾಗಿಲ ದಾಟಿ ನಡೆದಳು
ಮದಗಜದಂತೆ ಮೆಲ್ಲಡಿಗಳನಿಡುತ
ಬೆದರದೆ ಕೇರಿಕೇರಿಯಲಿ ಸ್ವರಗೈದು ೧೦
ಮನೆಮನೆ ಬಾಗಿಲಗಳ ಮುಂದೆ ನಿಂತು
ವನದ ಕೋಗಿಲೆಯಂತೆ ಯವ್ವಾ ಯವ್ವಾ ಎನುತ
ವಿನಯದಿ ಸ್ವರಗೈವ ಕೊರವಿಯ ಕಂಡು
ವನಿತೆ ದೇವಕಿ ಸನ್ನೆಮಾಡಿ ಕರೆದಳು ೧೧
ಸನ್ನೆಮಾಡಿ ಕರದರೆ ಚೆನ್ನಕೊರವಂಜಿ ಬಂದು
ಎನ್ನವ್ವ ಎನ್ನಕ್ಕ ಎನ್ನ ತಂದೆಯ ಹೆತ್ತವ್ವ
ನಿನ್ನ ಮನದಾಯತವ ಹೇಳೇನು ಬಾರವ್ವ
ಎನ್ನ ಕೂಸಿಗೆ ಒಂದಿಷ್ಟನ್ನವನಿಕ್ಕವ್ವ
ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ ೧೨
ಮಲೆಯಾಳ ಕೊಂಕಣದೇಶ ಮಹಾರಾಷ್ಟ್ರ ಗುಜ್ಜರದೇಶ
ಚೆಲುವ ಕಾಶ್ಮೀರ ಕಳಿಂಗ ಕರ್ನಾಟಕದೇಶ
ತುಳುವ ತಿಲುಗ ದೇಶವನ್ನು ತಿರುಗಿ ಸೊಲ್ಲ ಹೇಳಿ ಬಂದೆ
ಒಲುಮೆಯ ಕೊರವಂಜಿ ನಾನಲ್ಲವೆಯಮ್ಮ
ಸೊಲ್ಲ ಕೇಳೆ ಸೊಲ್ಲ ಕೇಳೆ ಸಿರಿವಂತೆ ಬಾರೆ೧೩
ಛಪ್ಪನ್ನ ದೇಶವನೆಲ್ಲ ಸುತ್ತಿ ಸೊಲ್ಲ ಹೇಳಿಬಂದೆ
ತಪ್ಪ ಹೇಳುವ ಕೊರವಿ ನಾನಲ್ಲವೆಯಮ್ಮ
ಕರ್ಪೂರ ವೀಳ್ಯವ ತಾರೆ ಕಾಂತೆ ನಿನ್ನ ಕೈಯ ತೋರೆ
ಒಪ್ಪಾದರೆ ಕೇಳುಬಾರೆ ಕೊಪ್ಪಿನ ಕಿವಿಯವ್ವ
ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ ೧೪
ವಚನ :ಇತ್ತಿತ್ತ ಬಾರವ್ವ ವಿವರಿಸಿ ಹೇಳೇನು ಮುತ್ತಿನ ಮುಡಿಯವ್ವ
ಮುದ್ದುಮುಖವ ತೋರೆ ಮತ್ತಗಜಗಮನೆ ಮಂದಹಾಸವದನೆ
ರತ್ನದ ಸೆಳೆಗೋಲ ಪಿಡಿಯೆ ರಾಜೀವನೇತ್ರೆ ನಿನ್ನ ಚಿತ್ತದೊಳಗಣ
ಮಾತ ಛಂದವಾಗಿ ಹೇಳ್ವೆನು ಕೇಳೆ ಅಮ್ಮಯ್ಯ
ಬರಿಯ ಡಂಬಕದ ಕೊರವಿ ನಾನಲ್ಲ
ಅರುಹುವೆನು ಮುಂದಣ ಕಥಾಂತ್ರವೆಲ್ಲವ
ಮೊರದ ತುಂಬ ಮುತ್ತು ತಾರೆ ಮಾನಿನಿರನ್ನಳೆ
ಕುರುಹ ಹೇಳೇನು ಇಲ್ಲಿ ಕುಳ್ಳಿರು ಬಾರೆಯವ್ವ೧೫
ಎಂದ ಮಾತ ಕೇಳಿ ಹರುಷದಿಂದ ದೇವಕಿ
ಮಿಂದು ಮಡಿಯನುಟ್ಟು ಕಾಂತೆ ಬಂದು ಕುಳಿತಳು
ಇಂದುಮುಖಿಯು ಮೊರನ ತುಂಬ ಮುತ್ತನಿಟ್ಟಳು
ತಂದು ಕೈಯತುಂಬ ಹೊನ್ನ ಕಾಣಿಕಿಟ್ಟಳು ೧೬
ಗುಣಿಸಿ ಮುತ್ತಿನ ಅಕ್ಷತೆಯಿಟ್ಟು ಗುಪಿತದಿಂದಲಿ
ನೆನೆದಳು ಮನದಭೀಷ್ಟವೀವ ಕೃಷ್ಣನ
ಜನಿಸಿದೆನು ಮಧುರಾಪುರದ ಅರಸನುದರದಿ
ಎನ್ನ ಸೋದರನೆಂಬ ಪಾಪಿ ಸೆರೆಯೊಳಿಟ್ಟನು೧೭
ಎನ್ನ ಸುತನು ತನ್ನ ಕೊಲುವನೆಂಬ ಮಾತಿಗೆ
ಎನ್ನ ಅಗ್ರಜ ಎನ್ನ ಮೇಲೆ ಖಡ್ಗವೆತ್ತಲು
ಎನ್ನ ಪತಿಯು ಎನ್ನ ಮೇಲಣ ಮಮತೆಯಿಂದಲಿ
ತನ್ನ ಸುತರ ಕೊಡುವೆನೆಂದು ಕೊಲೆಯನುಳುಹಿದ೧೮
ಒಡನೆ ಹುಟ್ಟಿದ ಅಣ್ಣ ಎನಗೆ ವೈರಿಯಾದನು
ಪಡೆದ ಪಡೆದ ಸುತರನರೆಯಲಪ್ಪಳಿಸಿದನು
ಒಡೆಯ ಕೃಷ್ಣಸಲಹೊ ಎಂದು ಸ್ತುತಿಸಿ ದೇವಕಿ
ಗಡಣದಿಂದ ಕೊರವಿ ತಾನು ಹೇಳ ಕುಳಿತಳು ೧೯
ವಚನ :ತಿರುಪತಿ ತಿಮ್ಮಪ್ಪ ಚಳ್ಳಪಿಳ್ಳೆರಾಯ
ಸುರಪುರವಾಸ ಲಕ್ಷ್ಮೀವರ ಕರುಣವಾಗು
ವಂದನೆ ಸೊಲ್ಲ ಚಂದಾಗಿ ಹೇಳೇನು ಕೇಳೆಯಮ್ಮಯ್ಯಾ
ಉರ್ಬಿಯೊಳತಿ ದಿಟ್ಟನಮ್ಮ ನಿಮ್ಮ ಮಗನು
ಗರ್ಭದೊಳಿಹನು ಕಾಣಮ್ಮ
ಕೊಬ್ಬಿದ ಕಂಸನ ಹಮ್ಮ ಮುರಿದು ನಿಮ್ಮ
ನಿರ್ಬಂಧ ಬಿಡಿಸುವನಮ್ಮ ೨೦
ಎಂಟನೆ ಗರ್ಭವಿದಮ್ಮ ನಿಮ್ಮುದರದಿ
ಅಂಟಿಹ ಮಗನು ಕಾಣಮ್ಮ
ಕಂಟಕ ಕಂಸನ ಅಮ್ಮಾ ಇವನು ಪುಟ್ಟಿ
ಗಂಟಲ ಮುರಿವ ಕಾಣಮ್ಮ ೨೧
ನಿಷ್ಕರುಣಿ ನಿಮ್ಮಣ್ಣನಮ್ಮ ನೀ ಪಡೆದಂಥ
ಮಕ್ಕಳ ಕೊಲ್ಲುವ ಕಾಣಮ್ಮ
ಚಕ್ರಧರನ ಕೈಯೊಳಮ್ಮ ಈ ಕಂಸನು
ಸಿಕ್ಕುವುದು ತಡವಿಲ್ಲವಮ್ಮ ೨೨
ವಚನ : ಈ ಮಾತು ಪುಸಿಯಲ್ಲ ಸ್ವಾಮಿಯ ಕರುಣ ಉಂಟು
ರಮಾಪತಿಯ ಕರುಣ ಉಂಟು ಕಾಮಿತಾರ್ಥವೆಲ್ಲ
ಕೈಗೂಡಿತು ಕೇಳೆಯಮ್ಮಯ್ಯಾ
ಕೈಯ ತೋರೆ ಕೈಯ ತೋರೆ ಕೈಯ ತೋರೆ ಅಮ್ಮಯ್ಯ
ಕೈಯ ತೋರೆ ನಿನ್ನ ಮನದ ಕುರುಹ ಹೇಳುವೆ
ಸೈಯೆನಿಸಿಕೊಂಬೆ ನಿನಗೆ ಸುಖವಾಕ್ಯವನು ಹೇಳಿ
ಭಯ ಬೇಡವೇ ಅಮ್ಮಯ್ಯ ನಿನಗೆ ಭಾಷೆಯ ಕೊಡುವೆ ೨೩
ಸಟೆಯ ಮಾತುಗಳಾಡಿ ಸೆಳೆದುಕೊಂಡು ಹೋಗಿ
ಹೊಟ್ಟೆಯ ಹೊರೆವ ಕೊರವಿ ನಾನಲ್ಲವಮ್ಮ
ನೆಟ್ಟನೆ ಸದಾಶಿವನ ತಟ್ಟಿ ಬಂದ ಕೊರವಿಯ ಮಾತ
ದಿಟ್ಟವೆಂದು ಸೆರಗ ಗಂಟಿಕ್ಕಿಕೊಳ್ಳಮ್ಮ ೨೪
ಅಂಗನೆ ನಿನ್ನ ಮನದ ಆಯಿತವ ಹೇಳೇನು
ಮಂಗಳ ವಾಕ್ಯವ ಕೇಳೇ ಮಾನಿನಿ ರನ್ನೆ
ಬಂಗಾರದ ಕೈಯ ತೋರೆ ಬೊಗಸೆಗಂಗಳ ನೀರೆ
ಹಿಂಗುವದು ನಿನ್ನ ಕಷ್ಟ ಹುಸಿಯಲ್ಲವಮ್ಮ ೨೫
ವಚನ :ಚಂದ್ರವದನೆಯ ಚೆಲ್ವ ವಾಮಹಸ್ತವ
ಚಂದದಿಂದಲಿ ಕೊರವಿ ವಿವರಿಸಿ ಹೇಳಿದಳು
ಹಿಂದಣ ಕಷ್ಟವೆಲ್ಲ ಪರಿಹಾರವಾಯಿತು
ಮುಂದೆ ಶುಭ ಉಂಟು ಕೇಳೆಯಮ್ಮ
ಶ್ರಾವಣ ಬಹುಳಾಷ್ಟಮಿ ರಾತ್ರೆಯ ನಡುವಿರುಳು
ರೋಹಿಣಿ ನಕ್ಷತ್ರದಲ್ಲಿ ನಿಮ್ಮುದರದಿ ಕೃಷ್ಣ
ಜನಿಸುವನು ಕಾಣೆ ಕೇಳಮ್ಮಯ್ಯ ೨೬
ಶಂಖಚಕ್ರವು ಗದೆ ಪಂಕಜ ಪೀತಾಂಬರ ಅ-
ಲಂಕಾರ ಮೂರುತಿಯಾಗಿ ಪುಟ್ಟುವ ಕೃಷ್ಣ
ಶಂಕೆಯಗೊಳದಿರೆ ಕೇಳಮ್ಮಯ್ಯ ೨೭
ಅಮ್ಮಾ ನಿಮ್ಮುದರದಿ ಬ್ರಹ್ಮನಪಿತ ಬಂದು
ನಿಮ್ಮ ನಿರ್ಬಂಧವ ಬಿಡಿಸುವನು ಕಾಣೆ
ಉಮ್ಮಯಗೊಳಬೇಡವೆ ಕೇಳಮ್ಮಯ್ಯ ೨೮
ಆದಿಮೂರುತಿ ನಿಮ್ಮುದರದೊಳವತರಿಸಿ
ಮೇದಿನಿ ಭಾರವನಿಳುಹಲು ಕಂಸನ
ಭೇದಿಸುವನು ಕಾಣೆ ಕೇಳುಮ್ಮಯ್ಯ ೨೯
ಏಳು ಮಕ್ಕಳ ಕಂಸ ಅರೆಯಲಪ್ಪಳಿಸಿದನೆ
ಚಳ್ಳೆ ಬೀಜದಂತೆ ನುಣಿಚಿ ತಪ್ಪಿಸಿಕೊಂಬ
ಕಳ್ಳಮಗನು ಪುಟ್ಟುವ ಕೇಳಮ್ಮಯ್ಯ ೩೦
ವಚನ : ಇಂಥಾ ಮಗನು ನಿಮ್ಮುದರದಿ ಜನಿಸಲು
ಕಾಂತ ವಸುದೇವರು ಗೋಕುಲಕೆ ಒಯ್ಯಲು
ನಿಂತಿದ್ದ ಯಮುನೆಯು ಮಾರ್ಗವಂ ಬಿಡಲು
ಸಂತೋಷದಿಂದಲ್ಲಿ ಬೆಳೆವನೆ ಕೃಷ್ಣ ಕೇಳಮ್ಮಯ್ಯ
ಗೋಕುಲದೊಳಗೆ ಶ್ರೀ ಕೃಷ್ಣನನಿಟ್ಟು ದುರ್ಗೆಯ
ಈ ಕಡೆಗೆ ಕೊಂಡುಬಹ ನಿಮ್ಮ ಪತಿಯು
ಕಾಕು ಕಂಸಾಸುರನು ಆಕೆಯ ಪಿಡಿಯೆ ಗಗ-
ನಾಕೆ ಹಾರಿ ಹೋಗುವಳು ಮಾಯಾಕಾರಿಯು ೩೧
ಕ್ರೂರ ರಕ್ಕಸ ಎನ್ನ ಕೊಲ್ಲುವದೇತಕೋ ನಿನ್ನ
ವೈರಿ ಕೃಷ್ಣ ಹೋಗಿ ಗೋಕುಲದೊಳಗೆ
ಧೀರನಾಗಿ ಬೆಳೆದು ಸಂಹಾರವ ಮಾಡುವನೆಂದು
ಸಾರಿ ಹಾರಿ ಹೋಗುವಳಂಬರಕೆ ದುರ್ಗಿ ೩೨
ನಂದನ ಗೋಕುಲದಿ ಆನಂದದಿ ಬೆಳೆದಾನು ಕೃಷ್ಣ
ಸಂದೇಹ ಬೇಡವವ್ವ ನಿಮ್ಮ ಮನದೊಳಗೆ
ಬಂದು ಮಞ್

 

ನು ೪೮-೫೨ರ ವರೆಗೆ ದಶಾವತಾರ ವರ್ಣನೆ
ಲವಕುಶರ ಹಾಡು
ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು
*ಗುರುಹಿರಿಯರ ಪಾದಕ್ಕೆರಗೀ |
ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು
ತೊಡಗುವೆ ರಾಮರ ಕಥೆಯಾ ೧
ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು
ವರ್ಣ ದಕ್ಷಿಣೆ ತಾಂಬೂಲಾ |
ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ
ವರ್ಣಿಪೆ ಲವಕುಶರ ಕಥೆಯಾ ೨
ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು |
ಗುರು ಮಧ್ವರಾಯರ ನೆನೆದು |
ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು
ತೊಡಗುವೆ ರಾಮರ ಕಥೆಯಾ ೩
ವೇದಪಾರಾಯಣ ಅಂತ್ಯದ ಪೀಠಕ
ಮಾಧವ ಹರಿ ಸುಗೋತ್ರ |
ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?)
ಹೇಳಿದಳುಹರಿನಾಮ ಕಥೆಯಾ ೪
ಯಾದಾಡ್ಯ(?) ಕೌರುಣ್ಯ (ಕೌಂಡಿಣ್ಯ?) ಗೋತ್ರದ ವರಸೊಸಿ
ಯಗ್ನ ಸಂತತಿಯೂ ಪೀಠಕವೂ |
ಸುಜ್ಞಾನಿಗಳು ಹೇಳಿ ತಿಳಿವೋದು ಈ ಕಥಿ
ಅಜ್ಞಾನಿ ಮೂಢಜೀವರಿಗೆ ೫
ಅರದು ಮರದು ಯಶೋಧಿ ಹೇಳಿದ ಕಥಿ
ಹರುವುಳ್ಳ ನಿರಯಾಗಿಗಳೂ |
ಹರವುಳ್ಳ ಕೈ(?)ಮುನಿವಳ್ಳೇರು ಜಾಣರು
ತಿಳಿವೂದು ಅರ್ಥಸಂದೇಶ ೬
ನಾಡನ ಕಥೆಯಲ್ಲ ಬೇಡುಂಬ ಪದನಲ್ಲ
ನಾಡೊಳಗೆ ಹರಿನಾಮ ಕೇಳಿದ ಜನರಿಗೆ |
ಆಯುರಾರೋಗ್ಯವು ದಾರಿದ್ರ್ಯ
ವಿಲ್ಲವಾಗುವುದು ೭
ಸಂದುಗೊಂದುಗಳಲ್ಲಿ ಸಂಗೀತಪದನಲ್ಲ
ಪ್ರಚಂಡರು ರಾಮಲಕ್ಷ್ಮಣರು |
ಇತ್ತಬೇಟೆಯನಾಡುವ ಕ್ರಮಗಳ
ಚಂದವಿನ್ನೆಂತು ವರ್ಣಿಸಲೆ ೮
ಅಂದು ಶ್ರೀ ರಾಮರು ಅಂಗನೆಯ ತೊಡೆಲಿಟ್ಟು
ತಾಂಬೂಲ ಶ್ರೀಮೊಗದಿಂದೆ |
ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ
ಇಂದುವದನೆ ಗರ್ಭವೆಂದ ೯
ನಳಿನನಾಭನು ತನ್ನ ಲಲನೇಯ ಮುಖನೋಡಿ
ಲಲನೆ ನಿನ್ನ ಪ್ರೇಮವೇನೆ |
ಮುನಿಯು ಆಮುನಿಗಳು ಕೂಡಿದ
ನಂತ್ರ ವನಭೋಜನ ತನಗೆಂದ್ಲೂ ೧೦
ಹಲವು ಕಾಲವು ಸೀತೆ ಅಸುರರ ವಡನಾಡಿ
ನೆನದಳು ಋಷಿಗಳಾಶ್ರಮವಾ |
ಹಸನವಲ್ಲವು ಸೀತೆ ಇನ್ನು ನೀನುಳಿವದು
ಋಷಿಗಳಾಶ್ರಮಕೆ ಹೋಗೆಂದಾ ೧೧
ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು
ಕೈಹಿಡಿದ ಪುರುಷನ ಬಿಟ್ಟು |
ಸಕಲ ಸೌಭಾಗ್ಯ ಸಂಪತ್ತು ಎಲ್ಲವ ಬಿಟ್ಟು
ನೆನದಾಳು ಋಷಿಗಳಾಶ್ರಮವ ೧೨
ಅಂದು ಶ್ರೀರಾಮರು ಬೇಟೆಗ್ಹೋದೇವೆಂದು
ಇಂದು ಡಂಗುರವ ಸಾರಿದರೂ |
ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು
ಮಂದಿ ಮಕ್ಕಳ ಕರಸಿದರೂ ೧೩
ಬಂದರು ಮಂತ್ರಿ ಮಾನ್ಯರು ಪ್ರಹಸ್ತರು
ಬಂದರು ಪ್ರಧಾನೇರು |
ಬಂದರು ರವಿಗುರಿನವಿಗುರಿಕಾರರು (?)
ಬಂದರು ವಾಲಗದೋರೊಪ್ಪಿದರು ೧೪
ಆಟಪಾಟದೋರು ನೋಟಕ್ಕೆ ದಾರಾರು
ಸೂತ್ರದವರು ಸುವ್ವಿಯವರು |
ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು
ನಾಥನೋಲಗದಲೊಪ್ಪಿದರೂ ೧೫
ಹೊನ್ನು ಹಲಗೆಯವರು ಬೆನ್ನಬತ್ತಲೆಯವರು
ಚಿನ್ನಬಿನ್ನಾಣನಾಯಕರೂ |
ಚೆನ್ನಿಗರಾಮರ ಪೊಗಳುವ ಭಂಟರು
ಬಿನ್ನಾಣದಿಂದೊಪ್ಪುತಿಹರೂ ೧೬
ಉಟ್ಟರು ಪಟ್ಟಾವಳಿ ಹೊಸಧೋತರವು
ಇಟ್ಟರು ಆಭರಣವನ್ನೂ |
ಇಟ್ಟರು ಮಕರಕುಂಡಲ ಕಿರೀಟವೂ
ಇಟ್ಟರು ನೊಸಲ ಕಸ್ತುರಿಯಾ ೧೭
ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು
ನ್ಯಾವಳದ ಉಡುದಾರನಿಟ್ಟು ಸೂರ್ಯನ
ಕುಲದ ಕುಮಾರರು ನಾಲ್ವರು
ಏರಿದರು ಹೊನ್ನ ರಥವಾ ೧೮
ವಾಯುವೇಗ ಮನೋವೇಗವೆಂಬೋ ರಥ
ಏರಿದರೆ ರಾಮಲಕ್ಷ್ಮಣರೂ |
ಜಾಣನೆಂಬೋ ಸೂರ್ಯ ತಾನೆ ರಥವ ನಡೆಸೆ
ಕೂಡ ಬೇಟೆಗೆ ತೆರಳಿದರು ೧೯
ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ
ಉತ್ತತ್ತಿ ಬೆಳಲು ದಾಳಿಂಬ
ಉತ್ತಮ ಅಶ್ವತ್ಥ ಇಪ್ಪಿಯ ವನಗಳು
ವಿಸ್ತರವನವೊಪ್ಪುತಿಹವೂ ೨೦
ಹಲಸು ನಾರಂಗ ಬೆರಸಿದ ಕಿತ್ತಳಿ
ಹರಿಸಿಣದ ತೋಪು ಎಲಿತ್ವಾಟ
ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು
ಬೆರಸಿ ಬೇಟೆಯ ನಾಡುತಿಹರೂ ೨೧
ಯಾರಾಡಿಗಿಡಗಳು ಕ್ಯಾದೀಗಿವನಗಳು
ನಾಗಸಂಪಿಗೆಯ ತೋಪುಗಳು |
ಜೋಡೀಲಿ ಭರತ ಶತ್ರುಘ್ನರೆಲ್ಲರು
ಕಾಲಾಳು ಬೇಟೆನಾಡಿದರೂ ೨೨
ಗಂಡಭೇರುಂಡ ಉದ್ದಂಡ ಕೇಕಾಪಕ್ಷಿ
ಚಂದಾದ ಬಕನ ಪಕ್ಷಿಗಳೂ |
ಅಂದಾದ ಆಲಿವಾಣ ಆಲಹಕ್ಕಿಯು ರಾಮ
ಚಂದ್ರನು ಬೇಟೆಯಾಡಿದನು ೨೩
ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ
ಒಂದುಗಳಿಗೆ ಶ್ರಮವ ಕಳೆದು
ನಂದನವನದಲ್ಲಿ ತನಿಹಣ್ಣು ಮೆಲುವೋರು
ಗಂಗೆಯ ಉದಕ ಕುಡಿಯುವೋರು ೨೪
ನಳಿನನಾಭನು ತಾನು ಬಳಲಿ ಬೇಟೆಯನಾಡಿ
ನೆರಳಲ್ಲಿ ತುರಗ ಮೇಯಿಸಿದ
ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು
ಮಲಗೀದ ಒಂದು ನಿಮಿಷವನೂ ೨೫
ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ
ಕಂಗೆಟ್ಟು ಮೈಮುರಿದೆದ್ದಾ |
ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ
ಬಂದಿಹಳೊಬ್ಬ ತಾಟಕಿಯೂ ೨೬
ಇಂದುವದನೆಮುಡಿ ಪಿಡಿದಳೆವೊ ದುಕಂಡೆ
ತುಂಡರಾವಣ ಕುಯೋದು ಕಂಡೆ |
ಇಂದು ನೀ ಸೀತೆಯ ಕರೆದೊಯಿದು ಕಾನನದಿ
ದಿಂಜಾರಿಳಿಸೋದು ಕಂಡೆ ೨೭
ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ
ಇನ್ನು ಸೀತೆಗೆ ಜಯವಿಲ್ಲಾ |
ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ
ಬಂದಾಳು ಮಾಯದ ಗರತಿ | ೨೮
ಬಂದು ಅಯೋಧ್ಯಾಪುರದ ಬೀದಿಯವಳಗೆ
ಚಂದದಿ ಕುಣಿದಾಡುತಿಹಳು |
ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ
ಚಂದುಳ್ಳ ದ್ವಾರಪಾಲಕರೂ ೨೯
ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ
ಬಂದಡರಿದಳರಮನೆಗೆ
ಕಂಡು ಜಾನಕಿ ತಾನು ಕರಸಿದಳಾಗಲೆ
ಬಂದಳು ಮಾಯದ ಗರತಿ ೩೦
ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು
ತಂದಳು ನಾಗ ಸಂಪಿಗೆಯಾ |
ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ
ಸಂದೇಹ ಬಟ್ಟಳಾ ಸೀತೆ ೩೧
ದಾವ ದೇಶ ನೀವು ಏನುಕಾರಣ ಬಂದಿ
ಈನಾಡ ಗರತಿ ನೀನಲ್ಲ |
ದಾವದು ಸ್ಥಳಕುಲ ದಾರು ಬಂಧುಗಳುಂಟು
ದಾರ ಬಳಿಗೆ ನೀ ಬಂದೀ ೩೨
ಈರೇಳು ಲೋಕವ ಸುತ್ತಿ ತಿರುಗಿ ಬಂದೆ
ನಾಗಲೋಕಕ್ಕೆ ಬಾಹೆನೆಂದು
ನಾಗಲೋಕದಿಂದ ದೇವಲೋಕಕ್ಕೆ ಬಂದೆ
ದೇವಿಗೆ ಕಾಣಿಕೆ ತಂದೇ ೩೩
ಹೊನ್ನು ಹಣವನೀವೆ ಅನ್ನವಸ್ತ್ರವನೀವೆ
ಇನ್ನು ನೀವಲಿದದ್ದು ಈವೆ |
ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು
ಬಿನ್ನವಿಸೆ ಗರತಿ ನೀ ಅಂದ್ಲೂ ೩೪
ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ
ನಿನ್ನ ಭಾಗ್ಯವು ನಾನೊಲ್ಲೆ |
ಮುನ್ನಿನ ಅಸುರರೂಪ ಇನ್ನು ನೀಬರೆದರೆ
ಚೆನ್ನಾಗಿ ಹರಣ ಹೊರುವೆನು ೩೫
ಮುನ್ನಿನ ಅಸುರರೂಪ ಇನ್ನು ನಾ ಬರೆದರೆ
ಮುನ್ನವನು ಕಂಡು ಕೇಳರಿಯ |
ಪನ್ನಂಗಧರ ರಾಮ ಬಂದರೆ ಬೈದಾರು
ಮುಂದಿನ್ನು ಗಮನ ಮಾಡಂದ್ಲೂ೩೬
ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು
ತಂದು ತೊಡೆದಳು ಭಸುಮವನು |
ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ
ಉಂಗುಷ್ಟವನು ಕಂಡುಬಲ್ಲೆ ೩೭
ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ
ಹಿಂದೆ ಹಿಂಬುಡ ಮೊಣಕಾಲು |
ಚಂದಾದ ನಡುದೊಡಿ ಎದೆ ಭುಜವ ಇದ
ಹೊಂದಿಸಿ ಬರೆ ಎಂದಳವಳು ೩೮
ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು
ಕೊಟ್ಟಳು ಸೀತೆ ಕೈಗೆ |
ಒಂದು ಕಾಯಕೆ ಹತ್ತು ಸಿರಗಳ ಬರೆದಳು
ಮುಂದೆರಡು ಪಾದವ ಬರೆದಳು ೩೯
ಒಂದರ ಹಿಂದೊಂದು ವರ್ಣಿಸಿ ಬರೆದಳು
ತಂದು ನಿಲಿಸಿದಳು ರಾವಣನಾ |
ಚಂದವಾಯಿತು ದೇವಿ ವರವಕೊಡೆನುತಲಿ
ಎಂದೆಂದಿಗೂ ಅಳಿಯದ್ಹಾಗೇ ೪೦
ಅಳಿದು ಉಳಿಯದಿರು ಉಳಿದು ನೀ ಕೆಡದಿರು
ಧರಿಯವಳಗೆ ಅಡಗದಿರು |
ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು
ವರವ ಕೊಟ್ಟಳು ಸೀತೆ ಪಠಕೆ ೪೧
ಮರೆ

 

ಹಿಂದಕ್ಕೆ ವನದಲ್ಲಿ ತಪವ ಮಾಡುತಲಿದ್ದೆ ಬಂದೊಬ್ಬ
ಮುನಿಯು ಹೇಳಿದನು
ತಂದೆತಾಯಿಗಳೆಮಲೋಕದೊಳಿಹರೆಂದು ಬಂದು
ಹೇಳಿದನೆ ಸುದ್ದಿಯನು ೩೦೨
ಆತನ ವಾಕ್ಯವ ಕೇಳಿ ನಾ ವನದಲ್ಲಿ ಆಚರಿಸಿದೆ ತಪಗಳನು
ಖೇಚರದಲಿ ಸುರಕನ್ನಿಕೆ ಸುಳಿಯಲು ಆಕ್ಷಣ
ಬಿಂದು ಸಡಿಲಿದವು ೩೦೩
ತಾವರೆ ಕಮಲದೊಳಿಟ್ಟು ನೀರೊಳು ಬಿಟ್ಟೆ
ಏನಾಯಿತೆಂದು ನಾನರಿಯೆ
ಕಾಲಾಂತರದಲಿ ತೇಲಿ ಬಂದನು ಕಂದ
ಪಾಲಿಸಿಕೊಂಡೆನು ತಂದು ೩೦೪
ಕಂದನ ತಂದು ಇಂದಿಗೆ ಏಳೊರುಷವು ರಂಭೆ
ಬಂದಳು ನಮ್ಮ ಮಠಕೆ
ಹೇಳ ಬಂದೆನು ನಿಮ್ಮ ಕೂಡೆ ಈ ವಾರ್ತ್ತೆಯ
ಮಾಡಿ ನಿಮ್ಮನಕೆ ಬಂದುದನು ೩೦೫
ಉತ್ತಮವೆನುತಲೆ ಬಂದರು ಮುನಿಗಳು
ಮತ್ಸ್ಯಲೋಚನೆ ಇಪ್ಪಯೆಡೆಗೆ
ಮತ್ತೊಬ್ಬ ಮುನಿಗಳು ಅರಸುತ್ತಲಿತ್ತ ಬಂದರು
ಅಕ್ಕಟ ವಿಧಿಯೆಂದಳಾಕೆ ೩೦೬
ಮುನಿಗಳ ಕಾಣುತ್ತ ಮುಂದಕ್ಕೆ ಬಂದಳು
ಚರಣದ ಮೇಲೆರಗಿದಳು
ಮುಡಿ ಹಿಡಿದೆತ್ತಿ ಕೊಡಹಿ ಮೈಯ ಧೂಳನು ಬಡವಾದೆ
ಮಗಳೆ ನೀನೆಂದು ೩೦೭
ಪತಿಸುತರಿಲ್ಲವೆ ಪಾಲಿಸುವರೆ ನಿನಗೆ
ಅತಿಉಗ್ರತಪವೇಕೆ ನಿನಗೆ
ಸಖಿಯರ ಸಹವಾಸಯಿಲ್ಲದೆ ಇರುವುದು ಮತವೆ
ಉತ್ತಮರಿಗ್ಹೇಳೆಂದ ೩೦೮
ಕಡುಕೋಮಲಾಂಗಿ ನೀ ಅಡವಿಯಲಿಪ್ಪರೆ
ಹಡೆದವರಿಲ್ಲ ನೀನ್ಯಾರು
ಒಡಯರೊಬ್ಬರು ಇಲ್ಲದಿರುವುದುಚಿತವಲ್ಲ ನುಡಿ
ನಿನ್ನ ಮನದ ಸಂದೇಹ ೩೦೯
ಸೂರ್ಯಕುಲದ ರಘುರಾಯ ನಮ್ಮಯ್ಯನು
ಆಳ್ವನಯೋಧ್ಯ ಪಟ್ಟಣವ
ಪೂರ್ವಾರ್ಜಿತದ ವಿಧಿ ಬಂದು ತುಡುಕಲು ಆಯಿತು
ಈ ವಿಧಿಯಾಗಿ ೩೧೦
ಭೂತಳಪತಿ ರಘುರಾಯ ನಿಮ್ಮಯ್ಯನು
ಖ್ಯಾತಿಪಡೆದ ಮೂರು ಜಗದಿ
ಕಾಂತೆ ನೀ ಮಾಡಿದ ತಪ್ಪೇನು ಮನೆಯಿಂದ
ಯಾತಕ್ಕೆ ಹೊರವಡಿಸಿದರು ೩೧೧
ಹೆತ್ತ ತಾಯಿ ತಂದೆ ಆಜೆÉ್ಞೀಲಿ ನಾನಿದ್ದೆ ಚಿತ್ತ
ಚಂಚಲವಾಗದ್ಹಾಂಗೆ
ಮತ್ತೊಂದು ದಿವಸ ನೀರಾಟಕ್ಕೆ ಬಂದೆನು
ಮಿತ್ರೆಯರನೆ ಒಡಗೊಂಡು ೩೧೨
ಗಂಗೇಲಿ ನೀರಾಟವಾಡುವ ಸಮಯದಿ
ಹಿಂದಣ ಪೂರ್ವಕಲ್ಪನೆಯೊ
ಕೆಂದಾವರೆಯಾಗಿ ಬಂದೆನ್ನ ಸೋಂಕಲು ನಿಂದವು
ಗರ್ಭ ಸ್ಥಿರವಾಗಿ ೩೧೩
ಮೇಲುಭಾಗದಿಂದ ತೇಲಿಬಂದಿತು
ಪುಷ್ಪ ನೀರಾಟವಾಡುತ್ತಿದ್ದೆಡೆಗೆ
ಪಾವನ್ನಪಂಕಜ ಪರಿಮಳ ಪುಷ್ಪವ ಆಘ್ರಾಣಿಸಿದೆನು ಶೀಘ್ರದಲಿ ೩೧೪
ಕೇಳಿ ಸೈರಿಸಲಾರದೆ ನಮ್ಮಯ್ಯನು ಊಳಿಗದವರ ಕರೆಸಿದನು
ಸೀಳಿಬನ್ನಿವಳನು ಎನುತಲೆ ಕಳುಹಿದ ಖೂಳರು ಎನ್ನುಳುಹಿದರು ೩೧೫
ಅರಣ್ಯದೊಳಗೊಬ್ಬಳಳುತ ನಿಂತಿದ್ದೆನು ದೂರದಿ
ಕಂಡನೀ ಮುನಿಯು
ಕಾರುಣ್ಯದಿಂದಲೆ ತಾನು ಕರೆದು ಕೊಂಡ್ಹೋಗಿ
ನಾರಿಯ ಕೈಯೊಳಗಿತ್ತ ೩೧೬
ತಾಯಿ ತಂದೆ ಅಂದದಿ ಪಾಲಿಸುತ್ತಿದ್ದರು ಬಾಲ
ಹುಟ್ಟಿದ ಮೂಗಿನಿಂದ
ನಾನು ಅಂಜಿ ಮಾನವರಪವಾದಕ್ಕೆ ನೀರೊಳು
ಶಿಶುವ ನೂಕಿದೆನು ೩೧೭
ಭೂತ ಹುಟ್ಟಿತೆಂದು ಭೀತಿಯ ಪಡುವರು
ಮಾತನಾಡುವರು ಮೂಜಗದಿ
ಯಾತರೇ ಶಿಶುವೆಂದು ಜಲದೊಳು ನೂಕಿದೆ ಲೋಕ
ಲೋಕವ ಚರಿಸಿದೆನು ೩೧೮
ಘಟ್ಟ ಬೆಟ್ಟವ ತಿರುಗೆ ಏಳು ವರುಷವು
ಹೊತ್ತಾರೆಬಂದೆ ಈ ಮಠಕೆ
ಪುಟ್ಟ ಬಾಲಕ ಎನ್ನ ನಿಂದಿರಗೊಡಿಸದೆ ಅಟ್ಟಿದ
ಹೋಗು ಹೋಗೆನುತ ೩೧೯
ಪರಸತಿಯಾರೆಂದು ಬೈವನು ನಮ್ಮಯ್ಯನು
ಇರಬೇಡ ಹೋಗು ಹೋಗೆನುತ
ಹೊರವಡಿಸಿದ ಎನ್ನ ಈ ವನಕೆ ಬಂದೆನು ಮರಳಿ
ಬಂದೆನ್ನ ಕರೆಯುವಿರಿ ೩೨೦
ತಾಯೆ ನೀ ಪತಿವ್ರತೆ ಈ ಮುನಿ ವೀರ್ಯವ
ತಾವರೆಕಮಲದೊಳಿಟ್ಟು
ನೀರೊಳು ಬಿಟ್ಟನು ನಿನ್ನ ಕೈಸೇರಿತು ಬಾಲ
ಹುಟ್ಟಿದ ಮೂಗಿನಿಂದ ೩೨೧
ತಪ್ಪಿಲ್ಲ ತಾಯೆ ನೀ ಕರ್ಪೂರಗಂಧಿನಿ
ಒಪ್ಪಿಕೊ ಈ ಮುನಿವರನ
ಋಷಿಗಳೆಲ್ಲರು ಕೂಡಿ ಸಕಲ ಸಂಭ್ರಮದಿಂದ ಇತ್ತರೆ
ಮುನಿಯ ಕೈಯೊಳಗೆ ೩೨೨
ಬಂದಪನಿಂದ್ಯವ ಹಿಂದುಗಳೆಯದೆ ತಂದೆತಾಯಿಗಳುಲ್ಲಂಘಿಸಿ
ಇಂದು ಈತನ ಒಡಗೂಡುವುದುಚಿತವೆ
ಧರೆಯೊಳು ಜನಕೆ ಸಮ್ಮತವೆ ೩೨೩
ಪರಿಹರಿಸಿಕೊಳ್ಳದೆ ಎನ್ನಪನಿಂದ್ಯವ
ಹಡೆದವರರಿಯದಂ[ದ]ದಲಿ
ಮರಳಿ ಈತನ ಒಡಗೂಡುವುದುಚಿತವೆ ಧರೆಯೊಳು
ಜನಕೆ ಸಮ್ಮತವೆ ೩೨೪
ಸತ್ಯವಾಡಿದಳು ಚಂದ್ರಾವತಿ ಎನುತಲೆ ಮತ್ತೆ
ಯೋಚಿಸಿ ತಮ್ಮ ಮನದಿ
ಹೆತ್ತವರರಿಕೇಲಿ ಮಾಡುವ ಮದುವೆಯ
ಕನ್ಯಾರ್ಥಿಗಳಾಗಿ ಹೋಗುವೆವು ೩೨೫
ತಾಯಿ ತಂದೆ[ಯ] ಕೇಳಿ ಬಾಹೆವು ನಾವ್ ಹೋಗಿ
ಬಾಲಕನೊಡಗೊಂಡು ಹೋಗು
ನಾರಿಯತ್ತ ಕಳುಹಿ ತಾವ್‍ಇತ್ತ ಬಂದರು
ಭೋರನಯೋಧ್ಯಾಪಟ್ಟಣಕೆ ೩೨೬
ಬಿಗಿದು ಕಟ್ಟಿದ ಜಡೆ ಕೈಲಿ ಕೃಷ್ಣಾಜಿನ
ಮೃಡನಂತೆ ಮೈಗೆ ಶ್ರೀಗಂಧ
ಗಡಿ ಮಿತಿಯಿಲ್ಲದೆ ಬಂದರು ಮುನಿಗಳು
ಒಡನೆ ಅಯೋಧ್ಯಾಪಟ್ಟಣಕೆ ೩೨೭
ಬತ್ತಿಗಟ್ಟಿದ ಜಡೆ ಬಾಡಿದ ನಯನವು ಎತ್ತಿದ
ಊಧ್ರ್ವ ಬಾಹುಗಳು
ಕೃಷ್ಣಾಜಿನವನು ಕರದಿ ಪಿಡಿದು ಮುನಿಶ್ರೇಷ್ಠರೆಲ್ಲರು
ನಡೆತರಲು ೩೨೮
ಎತ್ತಲಿಂದಲೆ ಬಂದಿತೀಋಷಿಗಳ ಸ್ತೋಮ
ನೃಪೋತ್ತಮ ನಿಮ್ಮ ಪಟ್ಟಣಕೆ
ಮುತ್ತಿಗೆ ಹಾಕುವಂದದಿ ಬಂದು ನಿಂದವೆ ಮತ್ತೇನು
ಇದಕೆ ಉಪಾಯ ೩೨೯
ಮುನಿಗಳ ಕಾಣುತ ಮುಂದಕ್ಕೆ ಬಂದನು ಚರಣದ
ಮೇಲೆ ಎರಗಿದನು
ಒಡಗೊಂಡು ಬಂದು ಗದ್ದುಗೆ ಮೇಲೆ ಕುಳ್ಳಿರಿಸಿ ಮಡದಿ
ಸಹವಾಗಿ ಪೂಜಿಸಿದ ೩೩೦
ದಾರಿತಪ್ಪಿ ದಯವಿಟ್ಟು ಬಂದಿರಿ ಎನ್ನ ಗೃಹವು
ಪಾವನವಾಯಿತೆಂದು
ಷೋಡಶೋಪಚಾರವ ಮಾಡಿದ ರಾಯನು ಬಹಳ
ಪರಿಯಿಂದಲೊಂದಿಸಿದ ೩೩೧
ಬೇಡ ಬಂದೆವು ನಿನ್ನ ಮಗಳ ಉದ್ದಾಳಿಕಗೆ
ಮಾಡದೆ ಎರಡು ಮನಸನು
ಕಾಲತೊಳೆದು ಕನ್ಯಾದಾನವ ಮಾಡಿದರೆ ಮೇಲೆ
ಬಹುದು ಪುಣ್ಯ ನಿನಗೆ ೩೩೨
ಕನ್ಯಾರ್ಥಿಯಾಗಿ ಬಂದೆವು ನಿನ್ನ ಮಗಳಿಗೆ
ಚೆನ್ನಾಗಿ ನೋಡು ಈವರನ
ಮನ್ನಿಸಿ ಕಾಲತೊಳೆದು ಧಾರೆಯೆರೆದರೆ
ನಿನ್ನ ಸುಕೃತಕೆಣೆಯುಂಟೆ ೩೩೩
ಹೆಣ್ಣೆಂಬೊ ಮಾತಿಗೆ ಮನದಲ್ಲಿ ನೊಂದನು
ಕಣ್ಣಲ್ಲಿ ಜಲವ ತುಂಬಿದನು
ಹೊನ್ನು ಹಣವು ಬೇಡಿದೊಸ್ತುವ ಕೊಡುವೆನು
ಕನ್ನಿಕಿಲ್ಲೆನ್ನ ಮನೆಯಲಿ ೩೩೪
ಹಣಹೊನ್ನು ನಮ್ಮಗೇಕೆ ಅಡವಿಯಲಿರ್ಪೆವು
ಕೊಡು ನಿನ್ನ ಮಗಳ ಶೀಘ್ರದಲಿ
ಸಿಡಿಮಿಡಿಗೊಂಡರೆ ಬಿಡುವೋರು ನಾವಲ್ಲ ತಡೆಯದೆ
ಕೊಡು ನಿನ್ನ ಮಗಳ ೩೩೫
ಹಿಂದಕ್ಕೆ ಕನ್ನಿಕಿದ್ದಳು ಎನ್ನ ಮನೆಯಲ್ಲಿ ಕೊಂದು
ಬಂದೆನು ಅಡವಿಯಲಿ
ಇಂದುಶೇಖರನಾಣೆ ಇಟ್ಟುಕೊಂಡಿದ್ದರೆ ಎಂದು
ಚರಣವನೆ ಮುಟ್ಟಿದನು ೩೩೬
ಮಗಳ ತೋರಿಸಿದರೆ ಕೊಡುವದು ಸತ್ಯವೆ
ಬಡಮುನಿಯೆಂದು ಯೋಚಿಸದೆ
ನುಡಿನಿನ್ನ ಮನದ ಸಂಕಲ್ಪವನೆಂದಿನ್ನು
ಒಡಂಬಡಿಸಿದರು ಭೂಪತಿಯ ೩೩೭
ಅರಣ್ಯದಲಿ ಕೊಂದು ಬಂದ ಕುಮಾರಿಯ
ತೋರುವದಗಣಿತಾಶ್ಚರ್ಯ
ಧಾರೆಯನೆರೆದು ಕೊಡುವೆ ಈ ಕ್ಷಣದಲಿ
ದೇವಾಬ್ರಾಹ್ಮರು ಮೆಚ್ಚುವಂತೆ ೩೩೮
ಮರೆತು ಮಲಗಿದ್ದಾಗ ಸುರರಡ್ಡ ಸುಳಿದರೊ
ಸುರರೊ ನರರೊ ಕಿನ್ನರರೊ
ಅರಿಯದೆ ಕಳುಹಿದೆ ಅಜ್ಞಾನತನದಲಿ
ಹಿರಿಯರಿಲ್ಲವೆ ನಿನ್ನ ಮನೆಯ ೩೩೯
ಪುತ್ರಿಯ ಕೊಲುವರೆ ಕ್ಷತ್ರಿಯ ಮತದಲಿ ಹತ್ಯಾ
ಮಾಡುವರೆ ಸ್ತ್ರೀಯರನು
ಅತ್ಯಂತ ಬಲ್ಲ ಮಂತ್ರಿಗಳಿಲ್ಲ್ಲ ನಿನ್ನಲ್ಲಿ
ತತ್ತ್ವಭೋಧನೆಯ ಮಾಡುವರೆ ೩೪೦
ಕೊರಳ ಕೊಯ್ಯೆಂದು ನೀ ಕಳುಹಿದೆ ಮಗಳನು
ಉಳುಹೆ ಹೋದರು ಅಡವಿಯಲಿ
ಸಮಿಧೆಗೋಸ್ಕರ ಇತ್ತ ಬಂದು ನಾಕಂಡೆನು
ಕರೆದೊಯ್ದೆ ಎನ್ನ ಆಶ್ರಮಕೆ ೩೪೧
ನಾರಿಗೆ ನವಮಾಸ ತುಂಬಲು ಆಕ್ಷಣ ಮೇಲೆ
ಬಂದಿತು ಪ್ರಸವ ಕಾಲ
ನಾಲ್ಕು ವೇದಗಳನು ಸ್ವರದಿಂದಲಳುತಲೆ ಬಾಲ
ಹುಟ್ಟಿದ ಮೂಗಿನಿಂದ ೩೪೨
ಕಾರಣಿಕದ ಶಿಶುವೆಂದು ನಾವರಿತೆವು ನೀರನೆರೆದು ಸಲಹಿದೆವು
ಬೇರೊಂದು ಪರ್ಣಶಾಲೆಯಲಿ ಇಟ್ಟಿದ್ದೆವು ನಾರಿ
ತಾನರ್ಧರಾತ್ರೆಯಲಿ ೩೪೩
ಬಾಲಸಹಿತ ಚಂದ್ರಾವತಿಯಿಲ್ಲವೆನುತಲೆ
ಚಾಲುವರಿದೆವು ಮನದೊಳಗೆ
ನೀರೊಳು ಕಂದ ಬಂದನೆ ಸೂರ್ಯೋದಯಕ್ಕೆ
ಸ್ನಾನವ ಮಾಡುತಿದ್ದೆಡೆಗೆ ೩೪೪
ತಂದೇಳುವರುಷ ಪರಿಯಂತರ ಸಲಹಿದ
ಇಂದು ಸತಿಯ ಕಂಡನೀತ
ಒಂದಾಯಿತಿದಕೇನು ಮನದ ಸಂಶಯಗಳು
ಬಂದಳು ನಿನ್ನ ಕುಮಾರಿ ೩೪೫
ಮುನಿಗಳ ಮಾತನೆಲ್ಲವ ಕೇಳಿ ರಾಯನು
ಮನದಲ್ಲಿ ಸಂತೋಷ ತಾಳಿ
ತನುಜೆಯ ಕರೆದೊಯ್ದ ದೂತರೆಲ್ಲರ ಕರೆಸಿ
ಅನುನಯದಿಂದ ಕೇಳಿದನು ೩೪೬
ಹಿಂದಕೆ ಸಿಟ್ಟಿನಿಂದಲೆ ಕೋಮಲಾಂಗಿಯ
ಕೊಂದು ಬಾರೆಂದು ಅಟ್ಟಿದೆನು
ಇಂದು ಪ್ರಸ್ತಾಪ ಬಂದರೆ ನಿಮ್ಮ ಕರೆಸಿದೆ
ಸಂದೇಹವಿಲ್ಲದುಸುರೆಂದ ೩೪೭
ಜೀಯ ಹಸಾದ ನಿಮ್ಮಪ್ಪಣೆ ಪ್ರಕಾರ ಒಯ್ದೆವು ಬಾಯಾರುತಲೆ
ನ್ಯಾಯವೊ ಅನ್ಯಾಯವೊ ಎನುತಲಿ ತಂಗಿ
ಒಡಗೊಂಡು ತೆರಳಿದೆವು ೩೪೮
ತಳಿಲ ಹಾಸಿಗೆ ಮೇಲೆ ಮಲಗಿಸಲಾಕೆಗೆ ಘಳಿಲನೆ
ನಿದ್ರೆ ಬಂದೊದಗೆ

 

ಹೆಳವನಕಟ್ಟೆಯ ರಂಗನಾಥದೇವರ ಉತ್ಸವ
೨೩
ಹೊನ್ನ ತಾ ಗುಬ್ಬಿ ಹೊನ್ನ ತಾ
ಚೆನ್ನ ಗೋಪಾಲ ಚೆಲುವ ಕೃಷ್ಣನ ಕೈಗೆ ಪ.
ಆಗಮವನು ತಂದು ಅಜಗಿತ್ತ ಕೈಗೆ
ಸಾಗರವನೊತ್ತಿಕ್ಕಿ ಸುಧೆಯಿತ್ತ ಕೈಗೆ
ತೂಗಿ ನಡೆವ ಸ್ಥೂಲಕಾಯನ ಕೈಗೆ
ನಾಗಶಯನ ನರಸಿಂಹನ ಕೈಗೆ ೧
ಬಲಿಯ ದಾನವ ಬೇಡಿ ಬಂದಂಥ ಕೈಗೆ
ಛಲದಿಂದ ಕ್ಷತ್ರಿಯರ ಕೊಂದಂಥ ಕೈಗೆ
ಕಲಿ ವಿಭೀಷಣಗಭಯವಿತ್ತಂಥ ಕೈಗೆ
ಬಲುಗಿರಿಯ ಬೆರಳಲ್ಲಿ ಆತಂಥ ಕೈಗೆ ೨
ಪತಿವ್ರತೆಯರ ವ್ರತವಳಿದಂಥ ಕೈಗೆ
ಹಿತವಾಜಿಯನೇರಿ ದುರುಳಮರ್ದನ ಕೈಗೆ
ಸತಿ ಶಿರೋಮಣಿ ಲಕ್ಷ್ಮೀಕಾಂತನ ಕೈಗೆ
ಚತುರ ಹೆಳವನಕಟ್ಟೆ ರಂಗನ ಕೈಗೆ ೩

 

೨೪
* ಹ್ಯಾಂಗಿರಲಿನ್ನು ರಂಗನ ಬಿಟ್ಟಿನ್ನಹ್ಯಾಗಿರಲಿಂನು
ಮಂಗಳಾತ್ಮಜ ಹೆಳವನಕಟ್ಟೆರಂಗನ ಬಿಟ್ಟು ಹ್ಯಾಂಗಿರಲಿಂನು ಪ.
ಸಿರಿಮನೋಹಾರಿ ಶರಣರಿಗಂತ:ಕರಣವ ತೋರಿ
ತ್ವರಿತದಿದಿವ್ಯರಥಗಳನ್ನು ನೀಡಿ
ಪರಮಾ ಸಂಭ್ರಮದಿಂದಾಯಿರುವೋನ
ಮರದು ನಾ ಹ್ಯಾಂಗಿರಲಿನ್ನೂ ೧
ಗಿರಿಮನಿ ಮಾಡಿ ಶರಣಗರಿತ:ಕರುಣವ ನೀಡಿ
ಸರಸದಿ ಮನೋರಥಗಳ ತೋರಿ
ಪರಮಾ ಸಂಭ್ರಮದಿಂದಾ ಇರುವನ
ಮರದು ನಾ ಹ್ಯಾಂಗಿರಲಿನ್ನೂ ೨
ಶರಣು ಪೊಕ್ಕಿರುವಾ ಗಿರಿಯಮ್ಮಗಾ
ತುರದಿ ವಲಿದಿರುವ ಸರಕಿರಿಗೆಜ್ಜೆ
ಧರಿಸಿ ಕುಣಿದಿರುವ ಸಿರಿನಾರಸಿಂಹನ
ಚರಣವಾ ಮರೆದು ನಾ ಹ್ಯಾಂಗಿರಲಿನ್ನೂ ೩

 

ಇಂಥಾವಗ್ಹ್ಯಾಂಗೆ ಮನಸೋತೆ ಬಲು
ಭಗವಂತನ ಸಂಕೀರ್ತನೆ

ಇಂಥಾವಗ್ಹ್ಯಾಂಗೆ ಮನಸೋತೆ ಬಲು
ಪಂಥವಾಡಿದ ಜಗನ್ಮಾತೆ ಪ.
ಆವಾಗ ನಾರುವ ಮೈಯ್ಯ ಬಿಚ್ಚಿ
ತೋರಿ ನಲಿಯುವ ಕಾಲು ಕೈಯ್ಯ
ಕೋರೆಯ ಮಸೆಯುತ ಕೊಸರಿಕೊಂಡಸುರನ
ಕರುಳನು ಬಗೆದಂಥ ಅದ್ಭುತ ಮಹಿಮಗೆ ೧
ಬಡಬ್ರಾಹ್ಮಣನಾಗಿ ತಿರಿದ ತನ್ನ
ಹಡೆದ ತಾಯಿಯ ಶಿರವರಿದ
ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ
ಬಿಡದೆ ಸ್ತ್ರೀಯರ ಗೋಕುಲದಲ್ಲಿ ಮೆರೆದ ೨
ಬತ್ತಲೆ ನಿಂತಿದ್ದನೀಗ ತೇಜಿ
ಹತ್ತಿ ಮೆರೆವದೊಂದು ಯೋಗ
ಉತ್ತಮ ಹೆಳವನಕಟ್ಟೆ ಶ್ರೀರಂಗ
ಭಕ್ತವತ್ಸಲ ಸ್ವಾಮಿ ದೇವಕೃಪಾಂಗ ೩

 

ಹಾಡಿನ ಹೆಸರು :ಇಂಥಾವಗ್ಹ್ಯಾಂಗೆ ಮನಸೋತೆ ಬಲು
ಹಾಡಿದವರ ಹೆಸರು :ಪುತ್ತೂರು ನರಸಿಂಹ ನಾಯಕ್
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ

ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ ಪ.
ಕಂಡೆನೀಗ ರಂಗಾಥನ ಭೂ-
ಮಂಡಲದೊಳುದ್ದಂಡ ಮೂರುತಿ
ಹಿಂಡು ದೈತ್ಯರ ತಂಡ ತಂಡದಿ
ತುಂಡು ತುಂಡು ಮಾಡಿದ ಸ್ವಾಮಿಯ ಅ.ಪ.
ಕಾಮಪಿತನ ಕೌಸ್ತುಭ ಹಾರನ ಕಸ್ತೂರಿ
ನಾಮವ ನೇಮದಿಂದ ಧರಿಸಿದಾತನ
ವಾಮಭಾಗಲಕ್ಷ್ಮಿ ಸಹಿತ ಹೇಮ ಮಂಟಪದೊಳಗೆ ಕುಳಿತು
ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯ ೧
ಗರುಡವಾಹನವೇರಿ ಗಗನದಿ ಚರಿಸುತ್ತ ಬಂದು
ಸರಸಿಯೊಳು ಕರಿಯ ಸಲಹಿದೆ
ಪರಮಭಕ್ತರ ಕಾವದೇವ ಕರುಣವಾರಿಧಿ ಕಮಲನಯನ
ಉರಗಶಯನ ಉದ್ಧಾರಿ ನಿನ್ನ ಮರೆಯಹೊಕ್ಕೆ ಕಾಯೊ ಎನ್ನ೨
ಇಂದುಧರನ ಸಖನೆ ಕೇಳಯ್ಯ ಬಂದಂಥ ದುರಿತ
ಹಿಂದು ಮಾಡಿ ಮುಂದೆ ಸಲಹಯ್ಯ
ತಂದೆ ಅಡಿಯ ಹೊಂದಿದೆನು ಇಂದು ಹೆಳವನಕಟ್ಟೆ ರಂಗ ಆ-ನಂದ ಪಡಿಸೊ ರಾಮಲಿಂಗ ಹೊಂದಿದೆನು ನಿನ್ನ ಚರಣ ೩

 

ಹಾಡಿನ ಹೆಸರು :ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ
ಹಾಡಿದವರ ಹೆಸರು :ಶ್ರುತಿ ಭಟ್
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ
೨೯
ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ ಪ.
ಮೂರು ಲೋಕ ಸಂಚಾರ ಕರುಣಾಸಾಗರ
ತೇಜಿಯನೇರಿ ಮೆರೆವನ ಅ.ಪ.
ಕೋಮಲಾಂಗನ ಕಂತುದಹನನ ಸೋಮಾರ್ಕ ಶಿಖಿನೇತ್ರನ
ವಾಮದೇವನ ವನಜಭವಸಂಭವ ಮುನಿಸ್ತೋಮ ವಿನುತ
ಎನ್ನ ಪ್ರೇಮನ ೧
ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ
ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯ್ವನ ೨
ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆ
ರಂಗಗತಿಸಖನಾದ ನೀಲಗಿರಿ ಲಿಂಗ ಮೂರುತಿಯ ೩

 

ಹಾಡಿನ ಹೆಸರು : ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ
ಹಾಡಿದವರ ಹೆಸರು :ಜಯಶ್ರೀ ಎಂ. ಕೆ.
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಮನದ ಚಿಂತೆಯ ಬಿಡಿಸೊ ಮಾಧವ ಮುಕುಂದ
೪೪
ಮನದ ಚಿಂತೆಯಬಿಡಿಸೊ ಮಾಧವ ಮುಕುಂದ ಹರಿ
ದನುಜಾರಿದಯಾವಾರಿಧಿ
ಅನುದಿನದಿ ನಿಮ್ಮ ಚರಣವ ನಂಬಿದವರಿಗಿಂಥ
ಬಿನುಗುದುರಿತಗಳು ಬಾಧಿಸುವುದ್ಯಾತಕೊ ಸ್ವಾಮಿ ಪ.
ತರುಣಿಕುಲರಾಮನೊಳು ತೊಡಕು ಬೇಡವು ಸೀತೆ(ಯ)
ಹರಿಗೆ ಒಪ್ಪಿಸು ಎನಲು
(ಮೊರೆದು) ಕೋಪದಲಿ ದಶಕಂಠ ತನ್ನನುಜನ
ಊರ ಹೊರಗೋಡಿಸಿರಲು
ಭರದಿಂದ ಬಂದು ಮರೆಹೊಗಲು ವಿಭೀಷಣನು
ಚರಣಕಮಲಕೆ ಎರಗಲು
ಕರವ ಪಿಡಿದೆತ್ತಿ ಅಭಯವನಿತ್ತು ಲಂಕೆಯ
ಸ್ಥಿರಪಟ್ಟಕಟ್ಟಿದ ಕರುಣಾಳುಗಳ ದೇವ ೧
ಒದೆದೆಳೆದು ಪತಿಗಳೈವರ ಮುಂದೆ ದ್ರೌಪದಿಯ
ನಡುಸಭೆಯೊಳು ನಿಲ್ಲಿಸಲು
ಉಡುವ ಸೀರೆಯ ಸೆಳೆವೆನೆಂದು ದುಶ್ಯಾಸ(ನ) ಕೈ
ದುಡುಕುತಿರಲಾಕ್ಷಣದಲಿ
ಕೆಡುವದಭಿಮಾನ ಶ್ರೀ ಹರಿ ನೀನೆ ಕಾಯೊ ಎನ್ನೆಂ-
ದೊದರುತಿರಲು
ನುಡಿಯಲಾಲಿಸಿ ನಾನಾಪರಿಯ ವಸ್ತ್ರವನಿತ್ತು
ಉಡಿಸಿ ಅಭಿಮಾನ ರಕ್ಷಿಸಿದಂಥ ಶ್ರೀಕಾಂತ ೨
ಉತ್ತಾನಪಾದರಾಜ (ನ)ಣುಗ ತಮ್ಮಯ್ಯನ
ಮತ್ತ ತೊಡೆಯೇರಿಇರಲು
ನಿತ್ಯದಲಿ ಸುರುಚಿ ಸುನೀತಿ ಕುಮಾರಕನ
ಎತ್ತಿ ಕಡೆಯಕ್ಕೆ ನೂಕಲು
ಪ್ರತ್ಯಕ್ಷವಾಗಿ ಪಾಲಿಸಿ ಧ್ರುವಗೆ ಪದವಿಯ –
ನಿತ್ತ ವಿಚಾರವಿಲ್ಲದಂತೆ
ಸತ್ಯಮೂರುತಿ ಹೆಳವನಕಟ್ಟೆರಂಗಯ್ಯ
ಭಕ್ತವತ್ಸಲನೆಂಬೊ ಬಿರುದು ನಿನ್ನದು ಸ್ವಾಮಿ ೩

 

ಹಾಡಿನ ಹೆಸರು :ಮನದ ಚಿಂತೆಯ ಬಿಡಿಸೊ ಮಾಧವ ಮುಕುಂದ
ಹಾಡಿದವರ ಹೆಸರು :ಅರ್ಚನಾ ಕುಲಕರ್ಣಿ
ಸಂಗೀತ ನಿರ್ದೇಶಕರು :ಪ್ರವೀಣ್ ಗೋಡ್ಖಿಂಡಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಮಳೆಯ ದಯಮಾಡೊ ರಂಗಯ್ಯ ನಿಮ್ಮ
೫೩
ಮಳೆಯ ದಯಮಾಡೊ ರಂಗಯ್ಯ ನಿಮ್ಮ
ಕರುಣ ತಪ್ಪಿದರೆ ಉಳಿಯದೀ ಲೋಕ ಪ.
ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ
ಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದು
ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು
ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ೧
ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ
ಮೊಗೆ ಮೊಗೆದು ಪಾತ್ರೆಯಲಿ ನಾರಿಯರು
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ
ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ೨
ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ
ಬಂದಿದೆ ಭಾದ್ರಪದ ಮಾಸವೀಗ
ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ
ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ೩

ಹಾಡಿನ ಹೆಸರು :ಮಳೆಯ ದಯಮಾಡೊ ರಂಗಯ್ಯ ನಿಮ್ಮ
ಹಾಡಿದವರ ಹೆಸರು :ರಮಾ ಪಿ, ಚಂದ್ರಿಕಾ ಆರ್.
ರಾಗ :ಕೃಷ್ಣಮಣಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಯಾಕೆ ಮರುಳಾದೆ ಹೀಂಗೆ ಎಲೆ ಮನವೆ
೪೮
ಯಾಕೆ ಮರುಳಾದೆ ಹೀಂಗೆ ಎಲೆ ಮನವೆ
ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ.
ಧನದಾಸೆಯನು ಮರಿ ಮನುಮಥನ
ಬಾಣಕಳುಕದಿರು ತೊಳಲದಿರು
ನೆಲದಾಸೆಗೆ ನೀನದರ
ಅನುವರಿತು ಹರಿಯ ಸ್ಮರಿಸು ಮನವೆ ೧
ಅನ್ಯರಾಗುಣ ದೋಷಯಣಿಸದಲೆ
ನಿನ್ನಿರವ ನೋಡು ಕಂಡ್ಯಾ ಮನವೆ
ಬಂಣಗಾರಿಕೆಯು ಬರಿದೆ ಔದಂಬ್ರ-
ಹಣ್ಣಿನಂತೀ ಕಾಯವು ಮನವೆ ೨
ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ
ಭ್ರಮೆಗೊಂಡು ಬಳಲಾದಿರೋ
ಕಮಲಪತ್ರಕ್ಕೆ ಒಳಗಿನ ಜಲದಂತೆ
ನೆಲಕೆ ನಿರ್ಲೇಪನಾಗೋ ಮನವೆ ೩
ಈ ದೇಹ ಸ್ಥಿರವಲ್ಲವೊ ಕಾಲನಾ
ಬಾಧೆಗೋಳಗಾಗದಿರೋ ಮನವೆ
ಭೇದ ದುರ್ಗುಣವ ತ್ಯಜಿಸು ನೀ
ಗೇರುಬೀಜದಂದದಿ ತಿಳಿಯೊ ಮನವೆ ೪
ಮಾಡು ಹರಿಸೇವೆಯನ್ನು ಮನದಣಿಯೆ
ಬೇಡು ಹರಿಭಕ್ತಿಯನ್ನು
ಕೂಡು ಹೆಳವನಕಟ್ಟೆಯ ವೆಂಕಟನ
ಬೇಡಿ ಮುಕ್ತಿಯನು ಪಡೆಯೊ ಮನವೆ ೫

 

ಹಾಡಿನ ಹೆಸರು :ಯಾಕೆ ಮರುಳಾದೆ ಹೀಂಗೆ ಎಲೆ ಮನವೆ
ಹಾಡಿದವರ ಹೆಸರು :ನಾಗಮಣಿ ಎಸ್., ಚಂದ್ರಿಕ ಆರ್.
ರಾಗ :ಸರಸಾಂಗಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹೊನ್ನ ತಾ ಗುಬ್ಬಿ ಹೊನ್ನ ತಾ
೨೩
ಹೊನ್ನ ತಾ ಗುಬ್ಬಿ ಹೊನ್ನ ತಾ
ಚೆನ್ನ ಗೋಪಾಲ ಚೆಲುವ ಕೃಷ್ಣನ ಕೈಗೆ ಪ.
ಆಗಮವನು ತಂದು ಅಜಗಿತ್ತ ಕೈಗೆ
ಸಾಗರವನೊತ್ತಿಕ್ಕಿ ಸುಧೆಯಿತ್ತ ಕೈಗೆ
ತೂಗಿ ನಡೆವ ಸ್ಥೂಲಕಾಯನ ಕೈಗೆ
ನಾಗಶಯನ ನರಸಿಂಹನ ಕೈಗೆ ೧
ಬಲಿಯ ದಾನವ ಬೇಡಿ ಬಂದಂಥ ಕೈಗೆ
ಛಲದಿಂದ ಕ್ಷತ್ರಿಯರ ಕೊಂದಂಥ ಕೈಗೆ
ಕಲಿ ವಿಭೀಷಣಗಭಯವಿತ್ತಂಥ ಕೈಗೆ
ಬಲುಗಿರಿಯ ಬೆರಳಲ್ಲಿ ಆತಂಥ ಕೈಗೆ ೨
ಪತಿವ್ರತೆಯರ ವ್ರತವಳಿದಂಥ ಕೈಗೆ
ಹಿತವಾಜಿಯನೇರಿ ದುರುಳಮರ್ದನ ಕೈಗೆ
ಸತಿ ಶಿರೋಮಣಿ ಲಕ್ಷ್ಮೀಕಾಂತನ ಕೈಗೆ
ಚತುರ ಹೆಳವನಕಟ್ಟೆ ರಂಗನ ಕೈಗೆ ೩

 

ಹಾಡಿನ ಹೆಸರು :ಹೊನ್ನ ತಾ ಗುಬ್ಬಿ ಹೊನ್ನ ತಾ
ಹಾಡಿದವರ ಹೆಸರು :ಚಂದನ ಬಾಲಾ, ನಂದಿನಿ
ರಾಗ :ಮಧುಕೌಂಸ್
ತಾಳ :ರೂಪಕ ತಾಳ
ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ