Categories
ವಚನಗಳು / Vachanagalu

ಅವಸರದ ರೇಕಣ್ಣನ ವಚನಗಳು

ಅಂಡ ಪಿಂಡವಾಗಿ, ಪಿಂಡಾಂಡವನೊಳಕೊಂಡು ವಿಚ್ಚಿನ್ನವಾದ ಭೇದವ ತಿಳಿದು,
ತ್ರಿಗುಣಭೇದದಲ್ಲಿ ಪಂಚಭೂತಿಕದಲ್ಲಿ ಪಂಚವಿಂಶತಿತತ್ವಂಗಳಲ್ಲಿ,
ಏಕೋತ್ತರಶತಸ್ಥಲ ಮುಂತಾದ ಭೇದಂಗಳ ತಿಳಿದು,
ಆವಾವ ಸ್ಥಲಕ್ಕೂ ಸ್ಥಲನಿರ್ವಾಹವ ಕಂಡು,
ಬಹುಜನಂಗಳು ಒಂದೆ ಗ್ರಾಮದ ಬಾಗಿಲಲ್ಲಿ ಬಂದು
ತಮ್ಮ ತಮ್ಮ ನಿಳಯಕ್ಕೆ ಸಂದು
ಗ್ರಾಮದ ಸುಖ-ದುಃಖವ ಅನುಭವಿಸುವಂತೆ,
ಇಂತೀ ಪಿಂಡಸ್ಥಲವನ್ನಾಚರಿಸಿ ಆತ್ಮ ವೃಥಾ ಹೋಹುದಕ್ಕೆ ಮೊದಲೆ
ಸದ್ಯೋಜಾತಲಿಂಗವ ಕೂಡಬೇಕು. /1
ಅಗ್ನಿಯಂತೆ ಬಾಲವೃದ್ಧತ್ವದಂತೆ ಅಪ್ಪುದಲ್ಲ ಸುರತ್ನದ ಕಳೆ.
ಅಲ್ಪನದಿಗಳ ಬಾಲವೃದ್ಧತ್ವದಂತಪ್ಪುದಲ್ಲ ಮಹಾರ್ಣವ ಸಿಂಧು.
ಆವೇಶದಿಂದ ನಡೆದು, ಆವೇಶದಿಂದ ನುಡಿದು, ಆವೇಶದಲ್ಲಿ ಪೂಜಿಸಿ,
ಆವೇಶದಿಂದ ಸರ್ವಜ್ಞಾನಿ ನಾನೆಂದು
ಆವೇಶನಿಂದು ಹಿರಣ್ಯದ ವಿಷಕ್ಕೆ ಕೈಯಾಂತು,
ದುತ್ತುರದ ಬಿತ್ತ ಮೆದ್ದವನಂತೆ, ಲಹರಿಯ ದ್ರವ್ಯವ ಕೊಂಡವನಂತೆ
ಲಹರಿ ತಿಳಿಯೆ ನಾನಲ್ಲ ಎಂಬವನಂತಾಗದೆ,
ಸ್ವಯ ನಡೆಯಾಗಿ, ಸ್ವಯ ನುಡಿಯಾಗಿ, ಸ್ವಯಜ್ಞಾನಿ ಸಂಬಂಧಿಯಾಗಿ
ಸದ್ಯೋಜಾತಲಿಂಗವ ಕೂಡಬೇಕು./2
ಅಮೃತ ಸ್ವಯಂಭುವೆಂದಡೂ ಎಂಬವರೆನ್ನಲಿ, ನಾನೆನ್ನೆ.
ಅದೆಂತೆಂದಡೆ: ಅದು ಪಾಕಪ್ರಯತ್ನದಿಂದ ಮಾಡುವ ಕ್ರಮಂಗಳಿಂದ
ಮಧುರರಸವಿಶೇಷವಾಯಿತು.
ಅಂಡಪಿಂಡಗಳಲ್ಲಿ ಜ್ಞಾನವಿದ್ದಿತ್ತೆಂದಡೆ,
ಜ್ಞಾನ ಸ್ವಯಂಭುವೆಂದು ಎಂಬವರೆನ್ನಲಿ, ನಾನೆನ್ನೆ.
ಅದೆಂತೆಂದಡೆ,
ನಾನಾ ವ್ಯಾಪಾರಕ್ಕೆ ತೊಳಲಿ ಬಳಲುವುದಾಗಿ.
ಇಂತೀ ಪರಿಭ್ರಮಣ ನಿಂದು
ಸ್ವಸ್ಥವಸ್ತು ಭಾವದಲ್ಲಿ ನಿಶ್ಚಯವಾದಲ್ಲಿ, ಜ್ಞಾನ ಸ್ವಯಂಭುವೆಂಬೆ.
ಇಂತೀ ಅಂಗಕ್ರೀಯಲ್ಲಿ ಶುದ್ಧವಾಗಿ, ಆತ್ಮನರಿವಲ್ಲಿ ಪ್ರಸಿದ್ಧಪ್ರಸನ್ನವಾಗಿ
ಸದ್ಯೋಜಾತಲಿಂಗದಲ್ಲಿ ಎರಡಳಿದ ಕೂಟ./3
ಅಮೃತದ್ರವ್ಯದಲ್ಲಿ ಅಮೃತವಿಶೇಷವ ಮಾಡಲಿಕ್ಕಪ್ಪುದಲ್ಲದೆ
ಕಹಿ ಕಟುಕಂಗಳಲ್ಲಿ ಮಧುರಸಾರಕ್ಕೆ ಕ್ರಮಗುಣವುಂಟೆ ?
ಇಂತೀ ಭಾವಕ್ರೀ ವರ್ತನಶುದ್ಧವುಳ್ಳವರಲ್ಲಿ ಅಲ್ಲದೆ
ವರ್ತನಹೀನರಲ್ಲಿ ಉಂಟೆ ಸ್ವಯಜ್ಞಾನಸಂಬಂಧ ?
ಇಂತಿವು ಕುಲವಂಶದಲ್ಲಿ ಅಲ್ಲದೆ ಸತ್ಕುಲ ತದ್ರೂಪಿಲ್ಲ.
ಇಂತೀ ಆಚರಣೆ ಆಶ್ರಿತದ ಭೇದ.
ಈ ಆತ್ಮನ ಭೇದವನರಿತು ಭೇದಿಸಬೇಕು, ಸದ್ಯೋಜಾತಲಿಂಗದಲ್ಲಿ./4
ಅರಿದರಿದು ಕೊಡುವವನು ತಾನೆ ಲಿಂಗವೊ
ತಾನೆ ಲಿಂಗವ[ಲ್ಲವೋ!]
ಬೇರೆ ಲಿಂಗಕ್ಕೆರವಿಲ್ಲ.
ಲಿಂಗದಂಗ ತಾನಾಗಿ, ಲಿಂಗಕ್ಕೆ ಲಿಂಗವನೆ ಅರ್ಪಿಸಿ,
ಸದ್ಯೋಜಾತಲಿಂಗದಲ್ಲಿ ಜಾತತ್ವವಳಿದು ಅಜಾತನಾದ. /5
ಅರಿದೆನೆಂಬುದೆ ಅಜ್ಞಾನ, ಮರೆದೆನೆಂಬುದೆ ದಿವ್ಯಜ್ಞಾನ.
ಅರಿದೆ ಮರೆದೆನೆಂಬುದ ಹರಿದಾಗಲೆ ಉಪಮಾಪಾತಕ.
ಆ ಪಾತಕದ ಫಲಂಗಳಲ್ಲಿ ಜ್ಞಾಸಜ್ಞರುಗಳ ನೋಡಿ, ನಾ ನಾಶವಾದೆ
ಸದ್ಯೋಜಾತಲಿಂಗ ವಿನಾಶವಾಯಿತ್ತು. /6
ಅರಿದೆಹೆನೆಂಬುದು, ಅರುಹಿಸಿಕೊಂಬುದಕ್ಕೆ ಕುರುಹಾವುದು?
ಜ್ಞಾತೃವೆ ಅರಿವುದು, ಜ್ಞೇಯವೇ ಅರುಹಿಸಿಕೊಂಬುದು.
ಇಂತೀ ಉಭಯದ ಭೇದದ ಮಾತು ತತ್ವಜ್ಞರ ಗೊತ್ತು.
ಅಕ್ಷಿಯಿಂದ ನಿರೀಕ್ಷಿಸಿ ನೋಡುವಲ್ಲಿ,
ಪ್ರತಿದೃಷ್ಟವ [ನೆ]ಟ್ಟು ನೋಡೆ ಕಾಬುದು
ಅಕ್ಷಿಯ ಭೇದವೊರಿ ಇದಿರಿಟ್ಟ ದೃಷ್ಟವ ಭೇದವೊ?
ಅಲ್ಲ, ಆ ಘಟದ ವಯಸ್ಸಿನ ಭೇದವೋ?
ಇಂತೀ ದೃಷ್ಟಕ್ಕೆ ಏನನಹುದೆಂಬೆ? ಏನನಲ್ಲೆಂಬೆ?
ಪ್ರತಿದೃಷ್ಟವಿಲ್ಲಾಯೆಂದಡೆ ದೃಷ್ಟಿಗೆ ಲಕ್ಷಣದಿಂದ ಲಕ್ಷಿಸುತ್ತಿಹುದು.
ಇಂತೀ ಉಭಯದಲ್ಲಿ ನಿಂದು ನೋಡುವ ಆತ್ಮನು ಅರಿವುಳ್ಳುದೆಂದಡೆ
ಪೂರ್ವಾಂಗವ ಘಟಿಸಿದಲ್ಲಿ ಯೌವನವಾಗಿ,
ಉತ್ತರಾಂಗ ಘಟಿಸಿದಲ್ಲಿ ಶಿಥಿಲವಾಗಿ
ಘಟದ ಮರೆಯಿದ್ದು ಪಲ್ಲಟಿಸುವ ಆತ್ಮನ
ಹುಸಿಯೆಂದಡೆ ದೃಷ್ಟನಿಗ್ರಹ, ದಿಟವೆಂದಡೆ ಕಪಟ ಸ್ವರೂಪ.
ಇಂತೀ ದ್ವಯದ ಭೇದಂಗಳ ತಿಳಿದು, ಇಷ್ಟತನುವಿನ ಅಭೀಷ್ಟವನರಿತು,
ಆ ಅಭೀಷ್ಟದಲ್ಲಿ ದೃಷ್ಟವಾದ ವಸ್ತುವ ಕಂಡು,
ಇಪಶ್ರುತಕ್ಕೆ ಶ್ರುತದಿಂದ, ದೃಷ್ಟಕ್ಕೆ ದೃಷ್ಟದಿಂದ,
ಅನುಮಾನಕ್ಕೆ ಅನುಮಾನದಿಂದ-
ಇಂತೀ ಗುಣಂಗಳ ವಿವರಂಗಳ ವೇಧಿಸಿ ಭೇದಿಸಿ
ಇಷ್ಟವಸ್ತುವಿನಲ್ಲಿ ಲೇಪವಾದುದ ಕಂಡು,
ವಸ್ತು ಇಷ್ಟವ ಕಬಳೀಕರಿಸಿ
ವೃಕ್ಷದೊಳಗಣ ಬೀಜ ಬೀಜದೊಳಗಣ ವೃಕ್ಷ
ಇಂತೀ ಉಭಯದ ಸಾಕಾರಕ್ಕೂ ಅಂಕುರ ನಷ್ಟವಾದಲ್ಲಿ
ಇಂದಿಗಾಹ ವೃಕ್ಷ ಮುಂದಣಕ್ಕೆ ಬೀಜ.
ಉಭಯವಡಗಿದಲ್ಲಿ ಅಂಡದ ಪಿಂಡ, ಪಿಂಡದ ಜ್ಞಾನ,
ಇಂತಿವು ಉಳಿದ ಉಳುಮೆಯನರಿದು
ಸದ್ಯೋಜಾತಲಿಂಗವ ಕೂಡಬೇಕು./7
ಅಹಿ ಕ್ರೂರಮೃಗಂಗಳೆಲ್ಲಕ್ಕೂ ಬಾಯಿಕಟ್ಟಿಂದ ಕಚ್ಚವು ಫಲಂಗಳ,
ಹೊಲದಲ್ಲಿದ್ದಡೂ ಆ ಹೊಲದ ಸೀಮೆಯ ಫಲವನೊಲ್ಲದ
ತೆರದಿಂದ ಕಡೆಯೆ ನಿಮ್ಮ ಹೊಲಬಿನ ಹೊಲ ?
ಗುರುಭಕ್ತನಾದಡೆ ಗುರು ಆಜ್ಞೆ ತಪ್ಪದೆ
ಲಿಂಗಭಕ್ತನಾದಡೆ ಅರ್ಚನೆ, ಪೂಜನೆ, ನಿತ್ಯ ನೇಮ ಕೃತ್ಯಂಗಳು ತಪ್ಪಡೆ,
ಜಂಗಮಭಕ್ತನಾದಡೆ ಆಪ್ಯಾಯನದ ಅನುವಿಷಯದ ಡಾವರ
ಆಶೆಯ ಪಾಶದ ಪರಿಭ್ರಮಣವನರಿತು
ಸುಖಿಯಲ್ಲದೆ, ದುಃಖಿಯಲ್ಲದೆ ಬಂದಂತೆ ಬಾಯಿಗರೆಯದೆ,
ಕಂಡುದ ಬೇಡದೆ, ನಿಂದೆಗೆಡೆಗೊಡದೆ ನಿಜಲಿಂಗಾಂಗಿಯನರಿದು
ಭಕ್ತಿಗೆ ಊಣಿಯವಿಲ್ಲದೆ ಅವರವರ ಒಪ್ಪಕ್ಕೆ ತಕ್ಕ ಚಿತ್ತವಿದ್ದು ಮಾಡುತ್ತಿಪ್ಪ
ಭಕ್ತನ ಬಾಗಿಲೆ ಸದ್ಯೋಜಾತಲಿಂಗವ ಕಾಬುದಕ್ಕೆ ಕಾಹಿಲ್ಲದ ಪಥ./8
ಆತ್ಮಕ್ಕೂ ಘಟಕ್ಕೂ ಶರಸಂಧಾನದಿಂದ
ಆತ್ಮ ಬ್ರಹ್ಮರಂಧ್ರಕ್ಕೆ ಎಯ್ದುವುದಕ್ಕೆ ಮುನ್ನವೆ ಶಿರಚ್ಛೇದನವಾಗಲಿಕ್ಕೆ
ಆ ಹಾಹೆ ಆತ್ಮ ಬಯಲ ಕೂಡುವುದನ್ನಕ್ಕ ಅದುವಭೇದ.
ಇಂತೀ ಭೇದ.
ಜೀವದ ಆಗುಚೇಗೆಯನರಿದು ಷಡಾಧಾರ ಮುಂತಾದ ದಶವಾಯುವ ಕಂಡು,
ನವದ್ವಾರವ ಭೇದಿಸಿ, ಷೋಡಶ ಕಳೆಯಲ್ಲಿ ಮಗ್ನನಾಗಿ ನಿಂದಲ್ಲಿ,
ತ್ರಿವಿಧಾತ್ಮದೊಳಗಾದ, ಪಂಚಭೂತಿಕದೊಳಗಾದ, ಪಂಚವಿಂಶತಿತತ್ವದೊಳಗಾದ,
ಕ್ರೀ ನಿಃಕ್ರೀ ಧರ್ಮಂಗಳಲ್ಲಿ ಅರಿದೆ ಮರದೆನೆಂಬುದ ಸಾಧನೆಗೊಂಡು,
ಪಿಂಡದಲ್ಲಿ ಅರಿದುನಿಂದುದು ಪಿಂಡಜ್ಞಾನ.
ಆ ಜ್ಞಾನದಲ್ಲಿ ಸೂಕ್ಷ್ಮಾಂಗನಾಗಿ ಕಾರಣವ ಕೂಡಿಕೊಂಡು
ಆ ಕಾರಣವಾದುದು ಜ್ಞಾನಪಿಂಡದ ಭೇದ.
ಇಂತೀ ಪಿಂಡಜ್ಞಾನ ಜ್ಞಾನಪಿಂಡದ ಕೂಟ
ಸದ್ಯೋಜಾತಲಿಂಗದ ನಿರುತದಾಟ./9
ಆವ ವಾಯು ಎತ್ತಿದಲ್ಲಿ ಆ ದಳಗೂಡಿ ಆತ್ಮ ಆಡುತಿಪ್ಪುದೆಂಬರು.
ಶರೀರದಲ್ಲಿ ಎಂಟುಕೋಟಿ ರೋಮ, ಮುನ್ನೂರರುವತ್ತು ನಾಡಿ,
ಒಂದು ನಾಡಿಗೆ ಮೂರು ಭೇದ, ಮೂರು ಭೇದಕ್ಕೆ ಐದು ಗುಣ.
ಇಂತಿವನರಿದು ಇರಬೇಕೆಂಬಲ್ಲಿ
ಇಂತೀ ಶರೀರಕ್ಕೆ ಕರಣ ನಾಲ್ಕರಿಂದ, ಮದವೆಂಟರಿಂದ, ವ್ಯಸನವೇಳರಿಂದ,
ಅರಿವರ್ಗದಿಂದ, ಐದು ಇಂದ್ರಿಯದಿಂದ, ಹದಿನಾರು ಕಳೆಯಿಂದ,
ಮೂರು ವಿಷಯದಿಂದ, ತ್ರಿವಿಧ ಆತ್ಮಗಳಿಂದ, ತ್ರಿಶಕ್ತಿಭೇದದಿಂದ.
ಇಂತೀ ವಿವರಂಗಳೆಲ್ಲವ ತಿಳಿದು ಏಕಮುಖವ ಮಾಡಿ
ವರ್ಣಕ ವಸ್ತುಕ ಉಭಯವನೊಡಗೂಡಿ ವಸ್ತುವ ಕೂಡಬೇಕೆಂಬನ್ನಕ್ಕ
ಈ ದೇಹ ಸಂಜೀ[ವಿನಿ]ಯೆರಿ ಶಿಲೆಯ ಸುರೇಖೆಯೆ ?
ತ್ರಿವಿಧಕ್ಕೆ ಅಳಿವಿಲ್ಲದ ಘಟವೆ?
ಇಂತಿವೆಲ್ಲವು ಕಥೆ ಕಾವ್ಯದ ವಿಶ್ವಮಯವಪ್ಪ ಕೀಲಿಗೆ ಕೀಲಿನ ಭಿತ್ತಿ.
ಇವ ಮರೆದು ಅರಿದವನ ಯುಕ್ತಿ,
ತರುವಿನ ಬೂರದ ಹೊರೆಯಲ್ಲಿ ಹೊತ್ತಿದ ಪಾವಕ ಮುಟ್ಟುವುದಕ್ಕೆ
ಮುನ್ನವೆ ಗ್ರಹಿಸುವಂತೆ,
ಹೇರುಂಡದ ಘಟ ಫಲವ ಗ್ರಹಿಸಿ ಫಲ ಪಕ್ವಕ್ಕೆ ಬಂದಲ್ಲಿ ಭಿನ್ನವಾಗುತಲೆ
ಬಿಣ್ಣುವ ತೆರೆದಂತೆ.
ಇಂತೀ ಶರೀರ ಘಟಂಗಳಲ್ಲಿ ಅನುಭವಿಸುವ ಆತ್ಮ ಜಡವೆಂದರಿದು
ಒಡೆದಲ್ಲಿಯೇ ನಿಜಾತ್ಮವಸ್ತುವನೊಡಗೂಡಬೇಕು
ಸದ್ಯೋಜಾತಲಿಂಗದಲ್ಲಿ. /10
ಇಂತೀ ಭೇದಂಗಳಲ್ಲಿ ಅರ್ಪಿಸಿಕೊಂಬ ವಸ್ತು
ಗುರುಲಿಂಗಕ್ಕೆ ಒಡಲಾಗಿ, ಆದಿಯಾಗಿಪ್ಪ ಶಿವಲಿಂಗವನರಿತು,
ಶಿವಲಿಂಗಕ್ಕಾದಿಯಾಗಿಪ್ಪ ಚರಲಿಂಗವನರಿತು,
ಆ ಚರಲಿಂಗಕ್ಕಾಗಿಯಪ್ಪ ಪ್ರಸಾದಲಿಂಗವನರಿತು,
ಪ್ರಸಾದಲಿಂಗಕ್ಕಾದಿಯಾಗಿಪ್ಪ ಮಹಾಲಿಂಗವನರಿತು,
ಆ ಮಹಾಲಿಂಗ ಮಹದೊಡಗೂಡುವ ಬೆಳಗಿನ ಕಳೆಯನರಿತು
ಸದ್ಯೋಜಾತಲಿಂಗದ ಜಿಹ್ವೆಯನರತಿವಂಗಲ್ಲದೆ ಅರ್ಪಿಸಬಾರದು./11
ಇಂತೀ ವರ್ಮಭೇದಂಗಳ ಸ್ಥಲವಿವರಂಗಳ, ತತ್ವಭೇದಂಗಳ
ನಿರೀಕ್ಷಿಸಿ ನೋಡಿಹೆನೆಂದಡೆ,
ಭೇದಕ್ಕೆ ವಿಭೇದವಾಗಿ ಕಾಬ ಹೊರೆಗೆ ಕಟ್ಟಣೆಯಿಲ್ಲ.
ಹಿಡಿವಲ್ಲಿ ಅಡಿಯ ಕಂಡು, ಬಿಡುವಲ್ಲಿ ಬೇರ ಕಿತ್ತು,
ಬಿಡುಮುಡಿಯನರಿದಲ್ಲಿ ಉಭಯಕಕ್ಷೆಯೆ ಲೋಪ
ಸದ್ಯೋಜಾತಲಿಂಗವನರಿದಲ್ಲಿ. /12
ಇಂದ್ರ ಕಪಾಲ, ಅಗ್ನಿ ನಯನ, ಯಮ ಬಾಯಿ,
ನೈಋತ್ಯ ಕರ, ವರುಣ ಹೃತ್ಕಮಲ,
ವಾಯವ್ಯ ನಾಭಿ, ಕುಬೇರ ಗುಹ್ಯ, ಈಶಾನ ಜಂಘೆ,
ಇಂತೀ ಅಷ್ಟತನುಮೂರ್ತಿ ರೋಹವಾಹ ಪ್ರಮಾಣು.
ಅವರೋಹವಾಗಿ ಮುಮುಕ್ಷುವಾಗಿ
ಅಷ್ಟತನುವಿನಲ್ಲಿ ಆತ್ಮನು ನಿಶ್ಚಯವಾದುದನರಿದು
ಸದ್ಯೋಜಾತಲಿಂಗವ ಹೊರೆಯಿಲ್ಲದೆ ಕೂಡಬೇಕು./13
ಇಂದ್ರಿಯಂಗಳಲ್ಲಿ ಲಿಂಗವು ಅರ್ಪಿತವ ಸಂಧಿಸಿಕೊಂಡು ಉಂ[ಬು]ದೆಂಬ
ತ್ರಿಭಂಗಿ ಗ್ರಹಿತವ ನೋಡಾ.
ಇಂದ್ರಿಯಂಗಳ ಮುಖದಲ್ಲಿ ಲಿಂಗವು ಬಂದು ಉಂಬಾಗ
ಇಂದ್ರಿಯವೆ ಲಿಂಗಕ್ಕೆ ಬೀಜವೆ?
ಅದು ಗರಿಗೋಲಿನ ಮೊನೆಯಂತೆ,
ಲಿಂಗದಿಂದ ಸರ್ವೇಂದ್ರಿಯ ನಿಶ್ಚಯ.
ಇದು ಲಿಂಗವ್ಯವಧಾನಿಯ ಅಂಗ, ಸದ್ಯೋಜಾತಲಿಂಗದ ಸಂಗ./14
ಇಷ್ಟಲಿಂಗಕ್ಕೆ ದೃಷ್ಟಾರ್ಪಿತ,
ಪ್ರಾಣಲಿಂಗಕ್ಕೆ […..ಅರ್ಪಿತ]
ಜ್ಞಾನಲಿಂಗಕ್ಕೆ ಪರಮಪರಿಣಾಮವೆ ಅರ್ಪಿತ.
ಇಂತೀ ತ್ರಿವಿಧಾರ್ಪಣದಲ್ಲಿ ಸುಚಿತ್ತನಾಗಿರಬೇಕು,
ಸದ್ಯೋಜಾತಲಿಂಗವನರಿವುದಕ್ಕೆ./15
ಉಟ್ಟುಡಿಗೆ ಸಡಿಲಿದಡೆ ಕೆಟ್ಟಾಡಿ ಬಂದು
ಬಟ್ಟೆಯ ಕಾವ ಲೊಟ್ಟಿಗೆಲ್ಲಿಯದಯ್ಯಾ ಲಿಂಗ!
ಗಂಡ ಸತ್ತ ಮುಂಡೆ[ಯವಳಿಗೆ] ಸತ್ತಿಹೆನೆಂಬ
ಭಂಡರ ಮುಖವ ನೋಡಲಾಗದು.
ಇಷ್ಟವು ನಷ್ಟವಾದಡೆ,
ಪ್ರಾಣವ ಬಿಡುವಲ್ಲಿಗೆ ಹೋಗಿ ನಿಕ್ಷೇಪವ ಮಾಡಬಲ್ಲ[ವರಿಗೆ],
ಕುಂದ ನುಡಿವ ಮಿಟ್ಟೆಯ ಭಂಡರಿಗೆ,
ಆ ಮೋಕ್ಷ ಮುಮುಕ್ಷುತ್ವವಿಲ್ಲ;
ಮುನ್ನೇನು ಕಟ್ಟಿಕೊಂಡು ಬಂದನೆ!
ಇನ್ನೇನು ಭವಿಯಾಗಿ [ನಿಲ್ಲ,
ಸದ್ಯೋ]ಜಾತಲಿಂಗವವರ ಮನವಿದ್ದಲ್ಲಿ ಬೆರೆವ./16
ಎಲ್ಲಾ ಧರೆಯಲ್ಲಿಯೂ ಹೇಮ ಹರಿದ ಮತ್ತೆ
ಅರಿದೊರೆಗಳು ಇರಿದಾಡಲೇತಕ್ಕೆ?
ಎಲ್ಲವೂ ಸತ್ಯಮಯವಾದಲ್ಲಿ
ಅವ ಕೆಟ್ಟನಿವ ಕೆಟ್ಟನೆಂದು ಹೋರಿಯಾಡಲೇತಕ್ಕೆ?
ರತ್ನ ರಜತ ಮೌಕ್ತಿಕ ಹೇಮ ಇವು ಮುಂತಾದ
ಸ್ಥಾವರ ಫಲ ಸಸಿ ವೃಕ್ಷಂಗಳು ಮೊದಲಾದುವೆಲ್ಲವೂ
ತಮ್ಮ ತಮ್ಮ ಸ್ವಸ್ಥಭೂಮಿಗಳಲ್ಲಿ ಅಲ್ಲದೆ ಹುಟ್ಟವಾಗಿ,
ಕುಲವಿಪ್ಪೆಡೆಯಲ್ಲಿ ಆಚಾರ, ಆಚಾರವಿಪ್ಪೆಡೆಯಲ್ಲಿ ನಿಷ್ಠೆ,
ನಿಷ್ಠೆ ಇಪ್ಪೆಡೆಯಲ್ಲಿ ನಿಜಲಿಂಗವಸ್ತು,
ವಸ್ತು ನಿಶ್ಚಯವಾದ ಎಡೆಯಲ್ಲಿ ಭಕ್ತಿಯ ಬೆಳಸು,
ಕೊಯ್ದು, ಒಕ್ಕಿ, ತೂರಿ, ಅಳತೆ ಸಂದಿತ್ತು
ಸದ್ಯೋಜಾತಲಿಂಗವೆಂಬ ಕಣಜಘಟದಲ್ಲಿ./17
ಏಕರೂಪವಾದ ತೆರನ ತಿಳಿದು, ಆ ಏಕರೂಪು ತ್ರಿವಿಧಸಂಬಂಧಿಯಾಗಿ,
ಆ ತ್ರಿವಿಧಸ್ಥಲದಲ್ಲಿ ಕರ್ತೃ ತ್ರಿವಿಧ ಕೂಡಲಾಗಿ
ಕಾಯ ಜೀವದಂತೆ ಉಭಯಸ್ಥಲವಾಯಿತ್ತು.
ಉಭಯಸ್ಥಲ ಪ್ರಥಮಸ್ಥಲದಲ್ಲಿ ಕೂಡಲಿಕ್ಕೆ ಏಕಸ್ಥಲ,
ಐಕ್ಯ ಸದ್ಯೋಜಾತಲಿಂಗದಲ್ಲಿ. /18
ಒಡೆಯನಂತೆ! ತುಡುಗುಣಿಯಂತೆ ಕಳಬಲ್ಲನೆ?
ಹಿರಣ್ಯಕ್ಕೆ ಒಡೆಯನಂತೆ! ಉಪಮೆಯಿಂದ ಅಪಹರಿಸಬಲ್ಲನೆ?
ಸುಚಿತ್ತನಂತೆ! ದುರ್ವಾಸನೆಯಲ್ಲಿ ಲಕ್ಷಿತನಪ್ಪನೆ?
ಇದು ಕರ್ತೃಭಾವವಲ್ಲ, ಭಕ್ತಧ್ಯಾನಭೇದ.
ಈ ಗುಣ ಸದ್ಯೋಜಾತಲಿಂಗಕ್ಕೆ ದೂರವಪ್ಪುದು./19
ಕಡೆಯಾಣಿಗೆ ಒರೆಗಲ್ಲ ಹಿಡಿದು
ಪ್ರಮಾಣಿಸಿಹೆನೆನ್ನಬಹುದೆ?
ಇಂತೀ ಕಡೆಯಾಣಿಗೆ ಒಳಗಾದುದಕ್ಕಲ್ಲದೆ
ಪಡಿಪುಚ್ಚ ಪಾಷಾಣ ಪೂರ್ವದಲ್ಲಿ ಸ್ಥಲ, ಉತ್ತರದಲ್ಲಿ ನಿಃಸ್ಥಲ,
ಇಂತೀ ಉಭಯವನರಿವುದು ಮಹಾಸ್ಥಲ.
ಸ್ಥಲವೆಂಬ ಇದಿರು ಮಹದೊಳಗಾದಲ್ಲಿ
ಸದ್ಯೋಜಾತಲಿಂಗವು ಬಟ್ಟಬಯಲಾಯಿತ್ತೆನಲಿಲ್ಲ. /20
ಕಳ್ಳನ ದೃಷ್ಟವ ದಿವ್ಯದೃಷ್ಟದಿಂದ ಅರಿವಂತೆ,
ವಂಚಕನ ಸಂಚವ ಹೆಣ್ಣು ಹೊನ್ನು ಮಣ್ಣು ತೋರಿ ಗನ್ನದಲ್ಲಿ ಅರಿ[ವಂತೆ],
ಕಾಣಿಸಿಕೊಂಬ ಆತ್ಮ ಬಿನ್ನಾಣಿಗೆ ಸೋಲದೆ,
ಬಿಟ್ಟುದ ಹಿಡಿಯದೆ, ಹಿಡಿದುದು ಬಿಟ್ಟಿಹೆನೆಂಬ ದ್ವೇಷವಿಲ್ಲದೆ,
ಅವು ಬಿಡುವಾಗ ತನ್ನಿಚ್ಛೆಗೆ ಪ್ರಮಾಣಲ್ಲ.
ತೊಟ್ಟುಬಿಟ್ಟ ಹಣ್ಣ ಇದಿರಿಕ್ಕಿ ಕರ್ಕಶದಲ್ಲಿ ಸಿಕ್ಕಿಸಲಿಕ್ಕೆ ಮತ್ತೆ
ಮುನ್ನಿನಂತೆ ಸಹಜದಲ್ಲಿಪ್ಪುದೆ?
ವಸ್ತುವ ಮುಟ್ಟಿದ ಚಿತ್ತ ತ್ರಿವಿಧಮಲವ ಲಕ್ಷಿಸಬಲ್ಲುದೆ?
ಇದು ವಿರಕ್ತನ ಮುಟ್ಟು, ಸದ್ಯೋಜಾತಲಿಂಗವ ಬಿಚ್ಚಿಹ ಭೇದ./21
ಕಾಡೆಮ್ಮೆ ಊರಗೋಣನನೀದು,
ಆ ಊರಗೋಣಂಗೆ ಮೂರು ಬಾಯಿ, ಆರು ಕಾಲು,
ಕೊಂಬು ಎಂಟು, ಕಿವಿ ಹದಿನಾರು,
ನಾಲಗೆ ಇಪ್ಪತ್ತೈದು, ಬಾಲ ಮೂವತ್ತಾರು.
ನೂರರ ಬೆಂಬಳಿಯಲ್ಲಿ ನೋಡುವ ಕಣ್ಣು ಒಂದೆಯಾಯಿತ್ತು.
ಆ ಒಂದು ಕಣ್ಣು ಇಂಗಲಾಗಿ ಕೋಣಂಗೆ ಗ್ರಾಸವಿಲ್ಲದೆ
ಅದು ಅಲ್ಲಿಯೇ ಹೊಂದಿತ್ತು,
ಸದ್ಯೋಜಾತಲಿಂಗದಲ್ಲಿ ನಾಮನಷ್ಟವಾಯಿತ್ತು./22
ಕಾಯಹೇಯಸ್ಥಲವೆಂದು, ಜೀವಹೇಯಸ್ಥಲವೆಂದು,
ಭಾವಹೇಯಸ್ಥಲವೆಂದು,
ಇಂತಿವರೊಳಗಾದ ಸರ್ವಹೇಯಸ್ಥಲವೆಂದು ನುಡಿವಾಗ
ಜ್ಞಾನವೇತರ ನೆಮ್ಮುಗೆಯಿಂದ ರೂಪಾಯಿತ್ತು?
ತೊರೆಯ ಹಾವುದಕ್ಕೆ ಹರುಗೋಲು, ಲಘು ನೆಮ್ಮುಗೆಗಳಲ್ಲಿ ಹಾಯ್ವ ತೆರದಂತೆ.
ಅವು ಹೇಯವೆಂಬುದಕ್ಕೆ ತೆರಹಿಲ್ಲ.
ಅವು ತೊರೆಯ ತಡಿಯಲ್ಲಿಯ ಲಘು ಹರುಗೋಲು ಉಳಿದ ಮತ್ತೆ
ಅಡಿವಜ್ಜೆಗುಂಟೆ ಅವರ ಹಂಗು ?
ತಾನರಿದಲ್ಲಿ ಅಹುದಲ್ಲವೆಂದು ಪಡಿಪುಚ್ಚವಿಲ್ಲ.
ತಾ ಸದ್ಯೋಜಾತಲಿಂಗದಲ್ಲಿ ನಾಶವಾಗಿ
ತನ್ನಲ್ಲಿ ವಸ್ತು ವಿನಾಶವಾದ ಕಾರಣ./23
ಕಾಲಲ್ಲಿ ಮೆಟ್ಟದೆ, ಕೈಯಲ್ಲಿ ಹಿಡಿಯದೆ
ಮರನನೇರಬೇಕು.
ಕಣ್ಣಿನಲ್ಲಿ ನೋಡದೆ, ಬೆರಳಿನಲ್ಲಿ ಹರಿಯದೆ
ಬಾಯಲ್ಲಿ ಮೆಲ್ಲದೆ, ಹಣ್ಣಿನ ರಸವ ನುಂಗಬೇಕು,
ಸದ್ಯೋಜಾತಲಿಂಗದಲ್ಲಿ. /24
ಕಾಳಮೇಘನೆಂಬ ಭೂಮಿಯಲ್ಲಿ ಕಾಳರಾತ್ರಿಯೆಂಬ ಏರಿ [ಕಟ್ಟೆ],
ಮಂಜಿನ ನೀರು ತೊರೆಗಟ್ಟಿ ಹಾಯ್ದು ತುಂಬಿತ್ತು.
ಆ ಕೆರೆಗೆ ತೂಬು ಬಿಸಿಲ ಸಂಭ್ರಮದ ಕಲ್ಲು,
ಕಂಜನಾಳದ ನೂಲಿನ ಕಂಬ ಆ ತಲಪಿಂಗೆ.
ಅಂದಿನ ಮುಚ್ಚುಳು, ಇಂದಿನ ದ್ವಾರದಲ್ಲಿ ಸೂಸುತ್ತಿರಲಾಗಿ
ಸಾಳಿವನ ಬೆಳೆಯಿತ್ತು,
ಕೊಯ್ದು ಅರಿಯ ಹಾಕಲಾಗಿ
ಒಂದಕ್ಕೆ ಎರಡಾಗಿ ಎರಡಕ್ಕೆ ಮೂರುಗೂಡಿ ಹೊರೆಗಟ್ಟಿತ್ತು.
ಹಾಕುವುದಕ್ಕೆ ಕಳನಿಲ್ಲದೆ, ನೆಡುವುದಕ್ಕೆ ಮೇಟಿಯಿಲ್ಲದೆ
ಒಕ್ಕುವುದಕ್ಕೆ ಎತ್ತಿಲ್ಲದೆ, ಹೊರೆಯೆತ್ತ ಹೋಯಿತೆಂದರಿಯೆ
ನಾ ಹೋದೆ, ಸದ್ಯೋಜಾತಲಿಂಗದಲ್ಲಿಗಾಗಿ. /25
ಕುಂಭದ ಅಪ್ಪುವಿನ ಸಂಗದಲ್ಲಿ ತಂಡುಲವ ಹಾಕಿ
ಅಗ್ನಿಘಟದಿಂದ ಬೇಯಿಸಲಿಕ್ಕಾಗಿ, ಒಂದೊಂದು ತಂಡುಲ ಹಿಂಗಿ ಬೆಂದಿತ್ತೆ?
ಆ ಅಪ್ಪು ಬೇರೆ ಬೇರೆ ಸಂಗವ ಮಾಡಿತ್ತೆ?
ಆ ಅಗ್ನಿ ತಂಡುಲಕ್ಕೊಂದೊಂದು ಬಾರಿ ಉರಿಯಿತ್ತೆ?
ಇಂತೀ ವಿವರಂಗಳ ಭೇದವನರಿತು
ಅಂಗದಲ್ಲಿ ಆರು ಸ್ಥಲವನಂಗೀಕರಿಸಿದಲ್ಲಿ
ಬೇರೊಂದೊಂದರಲ್ಲಿ ಹಿಂಗಿ ನೋಡಿಹೆನೆಂದಡೆ
ಮೂರಕ್ಕಾರು ಆರಕ್ಕೆ ಮೂವತ್ತಾರು
ಮತ್ತಿವರೊಳಗಾದ ಗುಣ ನಾಮಾತೀತಕ್ಕೆ ಅತೀತವಾಗಿಪ್ಪುದು.
ಇಂತೀ ಸ್ಥಲಂಗಳನಹುದೆಂದೊಪ್ಪದೆ, ಅಲ್ಲಾ ಎಂದು ಬಿಡದೆ,
ಅಲ್ಲಿಯ ಸ್ಥಲವಲ್ಲಿಯೆ ಏಕೀಕರಿಸಿ,
ಅಲ್ಲಿಯ ಭಾವವ ತೋರಿದಲ್ಲಿಯೆ ಲೇಪಮಾಡಿ,
ಹಿಡಿದಡೆ ಹಿಡಿತೆಗೆ ಬಾರದೆ, ಬಿಟ್ಟಡೆ ಹರವರಿಯಲ್ಲಿ ಹರಿಯದೆ,
ವಸ್ತುಕದಲ್ಲಿ ವರ್ಣಕ ತೋರಿ
ಆ ವರ್ಣಕಕ್ಕೆ ವಸ್ತುಕ ಅಧೀನವಾಗಿಪ್ಪ ಉಭಯಸ್ಥಲವನರಿದಲ್ಲಿ
ವಿಶ್ವಸ್ಥಲ ನಾಶವಾಗಿ ಸದ್ಯೋಜಾತಲಿಂಗ ವಿನಾಶನವಾಗಬೇಕು. /26
ಕೆಡದ ಒಡವೆಗೆ ಕೆಟ್ಟವ ನೋಡಿ ದೃಷ್ಟವ ಕಂಡ.
ಕಂಡುದ ಕಾಣದುದ ಒಡಗೂಡಿ ಕೆಡಿಸಿ ಮತ್ತೆ ಅರಸಿ,
ಹಿಂಡಿನಲ್ಲಿ ನೋಡಿ, ಹಿಂಡಿನ ಕುರಿ ನುಂಗಿದವೆಂದು
ಒಂದೆ ಕೊರಳಿನಲ್ಲಿ ಅಳುತ್ತಿದ್ದ,
ಸದ್ಯೋಜಾತಲಿಂಗ ಕೇಳಬೇಕೆಂದು. /27
ಕೈಲಾಸವೆಂಬುದು ಕ್ರಮಕೂಟ, ಮೋಕ್ಷವೆಂಬುದು ಭವದಾಗರ,
ಕಾಯಸಮಾಧಿಯೆಂಬುದು ಪ್ರಪಂಚಿನ ಪುತ್ಥಳಿ.
ಕಾಯ ಜೀವ ಕೂಡಿ ಬಯಲಾಗಿ ಇನ್ನಾವಠಾವಿನಲ್ಲಿ ಪೋಗಿ ನಿಲುವುದು?
ತನುವಿನ ಗಂಭೀರವೆಂಬುದ ಮರಸಿದೆ, ಸದ್ಗುರುವ ತೋರಿ.
ಸದ್ಗುರುವೆಂಬುದ ಮರಸಿದೆ ನಿಜವಸ್ತು ಶಿಲೆಯ ಮರೆಯಲ್ಲಿದ್ದು.
ಲಿಂಗವೆಂಬುದ ಕುರುಹಿಟ್ಟು ಲಿಂಗವೆಂಬುದ ಮರಸಿದೆ,
ತ್ರಿವಿಧ ಬಟ್ಟೆ ಕೆಡುವುದಕ್ಕೆ.
ಜಂಗಮವೆಂಬುದ ತೋರಿ, ಜಂಗಮವೆಂಬುದ ಮರಸಿ
ನೀನು ಎಲ್ಲಿ ಅಡಗಿದೆ? ಎಲ್ಲಿ ಉಡುಗಿದೆ?
ಎಲ್ಲಿ ಬೆಂದೆರಿ ಎಲ್ಲಿ ಬೇಕರಿಗೊಂಡೆ?
ನೀನು ಎಲ್ಲಿ ಹೋದೆ? ಹುಲ್ಲು ಹುಟ್ಟಿದ ಠಾವಿನಲ್ಲಿ ನೀನೆಲ್ಲಿ ಹೋದೆ?
ಅಲ್ಲಿ ನಿನ್ನವರೆಲ್ಲರ ಕಾಣದೆ, ಕಲ್ಲು, ಮಣ್ಣು ನೀರಿನಲ್ಲಿ ನೆರೆದಂತೆ ಬದುಕು,
ನನಗಿಲ್ಲಿಯೇ ಸಾಕು.
ನೀ ಕೊಟ್ಟ ಕುರುಹಿನಲ್ಲಿಯೆ ಬಯಲು
ಸದ್ಯೋಜಾತಲಿಂಗವೆಂಬುದು ನಿರಾಲಂಬವಾಯಿತ್ತು./28
ಕ್ರೀಯ ನುಡಿವಲ್ಲಿ ಸ್ಥಲ, ಸ್ಥಲವ ನುಡಿವಲ್ಲಿ ಆಚರಣೆ,
ಆಚರಣೆ ಆಧರಿಸಿದಲ್ಲಿ ಜ್ಞಾನ, ಜ್ಞಾನವನಾಧರಸಿದಲ್ಲಿ ದಿವ್ಯಜ್ಞಾನ,
ದಿವ್ಯಜ್ಞಾನ ಆಧರಿಸಿ ನಿಂದಲ್ಲಿ ಮಹದೊಡಲು ಅದು,
ಮಹಾಮಯ ಲೇಪವಾದಲ್ಲಿ ಅದು ಐಕ್ಯಪದ ಸದ್ಯೋಜಾತಲಿಂಗದಲ್ಲಿ./29
ಗಂಡಭೇರುಂಡನ ಪಕ್ಷಿಯಂತೆ
ಆವ ಬಾಯಲ್ಲಿ ಆಹಾರವ ಕೊಂಡಡೂಘಟವೊಂದರಲ್ಲಿ
ಆತ್ಮಸುಖವನೆಯ್ದುವಂತೆ,
ಪಿಂಡದಿಂದ ಜ್ಞಾನವನರಿದಡೂ,
ಜ್ಞಾನದಿಂದ ಪಿಂಡ ಇಪ್ಪುದಾದ ಕಾರಣ
ಜ್ಞಾನದಿಂದ ಪಿಂಡವನರಿದಡೂ,
ಉಭಯಮುಖ ಗೊತ್ತು ಒಂದಾಗಿ
ವಿಷ್ಟಿಸುವ ಪೃಷ್ಠದಂತೆ ಅರಿವುದು ನಾನಾಮುಖ
ಬಿಡುವುದು ಒಂದೆ ತೆರನಾದ ಕಾರಣ,
ಚಿತ್ರವಿಚಿತ್ರಂಗಳನರಿವ ನಯನ ಮುಚ್ಚಿದಲ್ಲಿ
ಒಂದೆ ದೃಷ್ಟ ಸದ್ಯೋಜಾತಲಿಂಗವನರಿವುದಕ್ಕೆ./30
ಗುರುಭಕ್ತ ಗುರುವಿಲ್ಲದೆ ಶಿಷ್ಯನಾಗಿ,
ಲಿಂಗಭಕ್ತ ಲಿಂಗವಿಲ್ಲದೆ ಲಿಂಗವಂತನಾಗಿ,
ಜಂಗಮಭಕ್ತ ಜಂಗಮವಿಲ್ಲದೆ ಜಂಗಮಕ್ಕಿಕ್ಕಿ ಮುಕ್ತನಾದ.
ಇಂತೀ ಮೂವರ ಮುದ್ದು ಎನಗೆ ಸತ್ತುಹೋಯಿತ್ತಲ್ಲಾ ಎಂದು,
ಬಿಕ್ಕದೆ ಕಣ್ಣನೀರಿಲ್ಲದೆ ಒಂದೆ ಸ್ವರದಲ್ಲಿ ಅಳುತ್ತಿದ್ದ
ಸದ್ಯೋಜಾತಲಿಂಗ ಕೇಳಬೇಕೆಂದು. /31
ಗುರುವಿಂಗೆ ಲಿಂಗ ಬಂದು ಗುರುವಾದುದನರಿದು
ಮತ್ತರಿಯದೆ ಕೊಟ್ಟನಲ್ಲಾ, ಶಿಷ್ಯನೆಂದು ಆ ಲಿಂಗವ.
ಗುರುವಾರೆಂಬುದನರಿಯದ ನಾ ಶಿಷ್ಯನೆಂದು ಕಟ್ಟಿದೆನಲ್ಲಾ ಆ ಲಿಂಗವ.
ಆವ ಬೀಜವ ಬಿತ್ತಿದಡೂ ಆ ಬೀಜವಪ್ಪುದಲ್ಲದೆ ಬೇರೊಂದಪ್ಪುದೆ?
ಜ್ಯೋತಿ ಜ್ಯೋತಿಯ ಮುಟ್ಟಿದಂತೆ ಇದಿರೆಡೆಯಿಲ್ಲದೆ
ಗುರುಕರಜಾತನ ಮಾಡಬೇಕು.
ನಾನು ಕರ್ತು, ಅವನು ಭೃತ್ಯನೆಂದಲ್ಲಿ ಗುರುವಾದನಲ್ಲದೆ,
ಅಘಹರ ಶ್ರೀಗುರುವಾದುದಿಲ್ಲ.
ಜ್ಞಾನದೀಕ್ಷೆ ಸಂಬಂಧ ಸದ್ಯೋಜಾತಲಿಂಗಕ್ಕೆ. /32
ಗುರುವೆಂಬುದ ಪ್ರಮಾಣಿಸಿದ ಶಿಷ್ಯನಾದಡೆ
ತನ್ನಯ ಉಭಯದ ಗುರುವ ತಿಂದು ತೇಗಬೇಕು.
ಲಿಂಗ ಭಕ್ತನಾದಡೆ ಅಂಗ ಲಿಂಗವೆಂಬ ಉಭಯವನೊಡೆದು
ಉಭಯದ ಸಂದಿಯಲ್ಲಿ ಸಿಕ್ಕದೆ ನಿಜಲಿಂಗವಂತನಾಗಬೇಕು.
ಜಂಗಮ ಅಳಿದು ವಿರಕ್ತನಾಗಬಲ್ಲಡೆ ಆ ಗುರು, ಆ ಶಿಷ್ಯ, ಆ ಲಿಂಗ, ಆ ಭಕ್ತನ,
ಈ ಜಂಗಮ, ಈ ವಿರಕ್ತನ ಕೊಂದು ತಿಂದು
ಅಂಗ ನಿರಂಗವಾಗಬಲ್ಲಡೆ ಸದ್ಭಾವಸಂಗಿ, ಷಟ್ಸ್ಥಲಬ್ರಹ್ಮಿ.
ಸರ್ವಾರ್ಪಣ ಅಂತಸ್ಥಲೇಪ, ತದ್ಭಾವ ನಾಶ.
ಈ ಸಂದನಳಿದಲ್ಲಿ ಸದ್ಯೋಜಾತಲಿಂಗದಲ್ಲಿ ವಿನಾಶವಾದ ನಿಲರ್ೆಪ/33
ಗೂಡಿನೊಳಗಿದ್ದು ಕಾಲ ವೇಳೆಯನರಿದು ಕೂಗುವ ಕುಕ್ಕುಟ
ತಾ ಸಾವುದ ಬಲ್ಲುದೆ?
ತನ್ನ ಶಿರವನರಿದು ಶಿರ ಬೇರೆ ಅಂಗ ಬೇರಾದಲ್ಲಿ,
ಆ ಅಂಗ ಪುಟನೆಗೆವಲ್ಲಿ ಆತ್ಮಸಂಗವೆಲ್ಲಿದ್ದಿತ್ತು?
ಶಿರಚ್ಛೇದವಾದಲ್ಲಿ ಮತ್ತಾವ ಘಟಕ್ಕೂ ಶಿರಬಂಧವಾಗಲಿಕ್ಕೆ
ಆ ಘಟ ಚೇತನವಡಗಿ ಅಲ್ಲಿಯೆ ಮೃತವಾಗಿಪ್ಪುದು.
ಇಂತೀ ಘಟ-ಆತ್ಮನ ಉಭಯದ ಭೇದವ ಬಲ್ಲಡೆ ಪಿಂಡಜ್ಞಾನಸಂಬಂಧಿ,
ಸದ್ಯೋಜಾತಲಿಂಗವ ಬಲ್ಲವ. /34
ಚಿತ್ರಜ್ಞ ಘಟಲಕ್ಷಣವ ಬರೆಯಬಲ್ಲನಲ್ಲದೆ
ಸಲ್ಲಕ್ಷಣವಪ್ಪ ಆತ್ಮನ ಇರಿಸಬಲ್ಲನೆ?
ಸ್ಥಲದ ಮಾತನಾಡಬಲ್ಲರಲ್ಲದೆ ಸ್ಥಲವ ನಿಧರ್ಾರವಾಗಿ ನಿಲ್ಲಿಸಿ
ಸ್ಥಲವೇದಿಸಿ ಭೇದಿಸಿ ನಿಶ್ಚಿಂತವಾದಲ್ಲಿ
ಸದ್ಯೋಜಾತಲಿಂಗ ಬಟ್ಟಬಯಲಾಯಿತ್ತೆನಲಿಲ್ಲ. /35
ಜಾತಿರತ್ನವ ಸುಟ್ಟಡೆ ಪ್ರಭೆ ಪ್ರಜ್ವಲಿಸುವುದಲ್ಲದೆ,
ವಿಜಾತಿಯ ರತ್ನ ಬೆಂಕಿಯಲ್ಲಿ ಬೆಂದಡೆ ಹೊರೆಗಳೆದು, ಪ್ರಭೆಯ ತೆರೆ ನಿಂದು,
ತಾ ಜಜ್ಜರಿಯಾಗಿ ನಷ್ಟವಾಗುತಿಪ್ಪುದು.
ನಡೆ ನುಡಿ ಶುದ್ಧಾತ್ಮಂಗೆ ಆಗುಚೇಗೆ ಸೋಂಕಿದಲ್ಲಿ,
ವಂದನೆ ನಿಂದೆ ಬಂದಲ್ಲಿ, ತನುವಿನ ಪ್ರಾಪ್ತಿ ಸಂಭವಿಸಿದಲ್ಲಿ,
ಲಿಂಗವಲ್ಲದೆ ಪೆರತೊಂದನರಿಯ.
ಆತ್ಮತೇಜಿಗೆ, ಅಹಂಕಾರಿಗೆ, ದುರ್ವಿಕಾರವಿಷಯಾಂಗಿಗೆ,
ಒಂದು ವ್ರತವ ಯತಿಯೆಂದು ಹಿಡಿದು
ಮತ್ತೊಂದು ವ್ರತದ ತ್ರಿವಿಧಮಲವೆಂದು ಬಿಟ್ಟು
ಮತ್ತೊಬ್ಬ ದಾತೃ ಇತ್ತೆಹೆನೆಂದಲ್ಲಿ ಭಕ್ಷಿಸಿ,
ತ್ರಿವಿಧವ ಹಿಡಿದು ಮತ್ತನಪ್ಪವಂಗೆ ವಿರಕ್ತಿ ಎತ್ತಣ ಸುದ್ದಿ?
ಇಂತೀ ಉಭಯಸ್ಥಲಭೇದವನರಿದಾಚರಿಸಬೇಕು,
ಸದ್ಯೋಜಾತಲಿಂಗವನರಿವುದಕ್ಕೆ. /36
ಜಿಹ್ವೆ ಅಮೃತಾನ್ನವಾದಡೆ ಇದಿರಿಟ್ಟುಕೊಳ್ಳಲೇತಕ್ಕೆ?
ನೋಡುವ ಅರ್ಪಿತ ದ್ರವ್ಯಂಗಳೆಲ್ಲವೂ ಲಿಂಗಾರ್ಪಿತವಾದ ಮತ್ತೆ
ಅರ್ಪಿತ ಆರಲ್ಲಿ ಮುಟ್ಟಿಹುದು ಹೇಳಾ?
ದೃಷ್ಟಕ್ಕೆ ದೃಷ್ಟವ ಕೊಟ್ಟು, ತೃಪ್ತಿಯ ಆತ್ಮಂಗಿತ್ತು
ಆತ್ಮನಲ್ಲಿದ್ದ ಅರ್ಪಿತವಾರಿಗೆಂದರಿಯಬೇಕು,
ಸದ್ಯೋಜಾತಲಿಂಗವ ಇದಿರಿಟ್ಟ ತೆರದಲ್ಲಿ. /37
ಜೀವ ಆತ್ಮನನರಿಯಬೇಕೆಂಬರು,
ಆತ್ಮ ಪರಮಾತ್ಮನನರಿಯಬೇಕೆಂಬರು.
ಇಂತೀ ಆತ್ಮಭೇದವನರಿವುದಕ್ಕೆ ಪದರದ ಹೊರೆಯೆ? ಅಟ್ಟಣೆಯ ಸಂದೆ ?
ಅರಿದಲ್ಲಿ ಪರಮ, ಮರೆದಲ್ಲಿ ಜೀವನೆಂಬುದು.
ಆ ಉಭಯವ ಸಂಪಾದಿಸುವುದು ಅರಿವೊ? ಮರವೆಯೊ?
ಬಯಲ ಮರೆಮಾಡಿ ತೆರೆಗಟ್ಟಲಿಕ್ಕೆ ಅವರೊಳಗಾದ ದೃಷ್ಟವ ಕಾಬುದು,
ತೆರೆಯ ತೆಗೆಯಲಿಕ್ಕೆ ಬಯಲ ಕಾಬುದು.
ದೃಕ್ಕಿಂಗೆ ದೃಶ್ಯ ಒಂದೊ ಎರಡೊ ಎಂಬುದ ತಿಳಿದಲ್ಲಿ
ಸದ್ಯೋಜಾತಲಿಂಗದ ಕೂಟ. /38
ತಡೆ ದಾಡಾಬಂಧನಗಳಿಂದ ಹೋಗ[ದ],
ಹಲುದಾಗದ ಸರ್ಪನಂತೆ,
ಕ್ರಿಯಾಧರ್ಮಂಗಳಲ್ಲಿ ಆವರ್ಚಿಸಿ ಕಟ್ಟಿಗೆ ತಪ್ಪದಿಪ್ಪುದು ಸದ್ಭಕ್ತಿಸ್ಥಲ.
ಆ ಭಕ್ತನ ಹೃತ್ಕಮಲಮಧ್ಯದಲ್ಲಿ ನಿಂದು
ತ್ರಿವಿಧ ಮಲತ್ರಯವ ನಿವಾರಿಸಿ,
ಆಗು ಚೇಗೆಯ ಮರೆದು, ವಂದನೆ ನಿಂದೆಗೆ ಮೈಗೊಡದೆ,
ಕುಸುಮ-ಗಂಧದಂತೆ, ರ[ವಿ]-ಶಿಲೆಯಂತೆ, ಸವಿ-ಸಾರದಂತೆ
ತಲೆದೋರದೆ ನಿಂದುದು ವಿರಕ್ತವೇಷ.
ಅದು ಕಾಯ-ಜೀವದಂತೆ, ಜ್ಞಾತೃ-ಜ್ಞೇಯಭೇದದಂತೆ,
ಪೂಜಕ-ಪೂಜೆಗೈತ ಉಭಯದ ಭೇದ ಐಕ್ಯ,
ಸದ್ಯೋಜಾತಲಿಂಗದಲ್ಲಿ. /39
ತತ್ವಂಗಳ ಹೊತ್ತು ವಿಸ್ತರಿಸಿ ಸ್ಥಲಂಗಳನಾಧರಿಸಿ
ನಾನಾ ಭೇದಂಗಳಲ್ಲಿ ಹೊಕ್ಕು ವೇಧಿಸಿಹೆನೆಂದಡೂ,
ಕಾಯ ಕರ್ಮವ ಅನುಭವಿಸುವುದ ಕಂಡು,
ಜೀವ ನಾನಾ ಭವಂಗಳಲ್ಲಿ ಬರುತ್ತಿಹುದ ನೋಡಿ,
ಇನ್ನಾವುದ ಶ್ರುತದಲ್ಲಿ ಕೇಳಲೇತಕ್ಕೆ ?
ಇನ್ನಾವುದ ಇದಿರಿಟ್ಟು ದೃಷ್ಟವ ನೋಡಲೇತಕ್ಕೆ ?
ಇನ್ನಾವ ಮನುವಿಂದ ಅನುಮಾನವನರಿಯಲೇತಕ್ಕೆ ?
ಹಿಡಿದುದ ಬಿಡದೆ ಬಿಟ್ಟುದ ಹಿಡಿಯದೆ
ಉಭಯದ ಒಳಗು ನಿರಿಯಾಣವಾದಲ್ಲಿ ತಾ ನಾಶನ
ಸದ್ಯೋಜಾತಲಿಂಗವು ವಿನಾಶನ./40
ಗುರುಭಕ್ತ ಗುರುವಿಲ್ಲದೆ ಶಿಷ್ಯನಾಗಿ,
ಲಿಂಗಭಕ್ತ ಲಿಂಗವಿಲ್ಲದೆ ಲಿಂಗವಂತನಾಗಿ,
ಜಂಗಮಭಕ್ತ ಜಂಗಮವಿಲ್ಲದೆ ಜಂಗಮಕ್ಕಿಕ್ಕಿ ಮುಕ್ತನಾದ.
ಇಂತೀ ಮೂವರ ಮುದ್ದು ಎನಗೆ ಸತ್ತುಹೋಯಿತ್ತಲ್ಲಾ ಎಂದು,
ಬಿಕ್ಕದೆ ಕಣ್ಣನೀರಿಲ್ಲದೆ ಒಂದೆ ಸ್ವರದಲ್ಲಿ ಅಳುತ್ತಿದ್ದ
ಸದ್ಯೋಜಾತಲಿಂಗ ಕೇಳಬೇಕೆಂದು. /31
ಗುರುವಿಂಗೆ ಲಿಂಗ ಬಂದು ಗುರುವಾದುದನರಿದು
ಮತ್ತರಿಯದೆ ಕೊಟ್ಟನಲ್ಲಾ, ಶಿಷ್ಯನೆಂದು ಆ ಲಿಂಗವ.
ಗುರುವಾರೆಂಬುದನರಿಯದ ನಾ ಶಿಷ್ಯನೆಂದು ಕಟ್ಟಿದೆನಲ್ಲಾ ಆ ಲಿಂಗವ.
ಆವ ಬೀಜವ ಬಿತ್ತಿದಡೂ ಆ ಬೀಜವಪ್ಪುದಲ್ಲದೆ ಬೇರೊಂದಪ್ಪುದೆ?
ಜ್ಯೋತಿ ಜ್ಯೋತಿಯ ಮುಟ್ಟಿದಂತೆ ಇದಿರೆಡೆಯಿಲ್ಲದೆ
ಗುರುಕರಜಾತನ ಮಾಡಬೇಕು.
ನಾನು ಕರ್ತು, ಅವನು ಭೃತ್ಯನೆಂದಲ್ಲಿ ಗುರುವಾದನಲ್ಲದೆ,
ಅಘಹರ ಶ್ರೀಗುರುವಾದುದಿಲ್ಲ.
ಜ್ಞಾನದೀಕ್ಷೆ ಸಂಬಂಧ ಸದ್ಯೋಜಾತಲಿಂಗಕ್ಕೆ. /32
ಗುರುವೆಂಬುದ ಪ್ರಮಾಣಿಸಿದ ಶಿಷ್ಯನಾದಡೆ
ತನ್ನಯ ಉಭಯದ ಗುರುವ ತಿಂದು ತೇಗಬೇಕು.
ಲಿಂಗ ಭಕ್ತನಾದಡೆ ಅಂಗ ಲಿಂಗವೆಂಬ ಉಭಯವನೊಡೆದು
ಉಭಯದ ಸಂದಿಯಲ್ಲಿ ಸಿಕ್ಕದೆ ನಿಜಲಿಂಗವಂತನಾಗಬೇಕು.
ಜಂಗಮ ಅಳಿದು ವಿರಕ್ತನಾಗಬಲ್ಲಡೆ ಆ ಗುರು, ಆ ಶಿಷ್ಯ, ಆ ಲಿಂಗ, ಆ ಭಕ್ತನ,
ಈ ಜಂಗಮ, ಈ ವಿರಕ್ತನ ಕೊಂದು ತಿಂದು
ಅಂಗ ನಿರಂಗವಾಗಬಲ್ಲಡೆ ಸದ್ಭಾವಸಂಗಿ, ಷಟ್ಸ್ಥಲಬ್ರಹ್ಮಿ.
ಸರ್ವಾರ್ಪಣ ಅಂತಸ್ಥಲೇಪ, ತದ್ಭಾವ ನಾಶ.
ಈ ಸಂದನಳಿದಲ್ಲಿ ಸದ್ಯೋಜಾತಲಿಂಗದಲ್ಲಿ ವಿನಾಶವಾದ ನಿಲರ್ೆಪ/33
ಗೂಡಿನೊಳಗಿದ್ದು ಕಾಲ ವೇಳೆಯನರಿದು ಕೂಗುವ ಕುಕ್ಕುಟ
ತಾ ಸಾವುದ ಬಲ್ಲುದೆ?
ತನ್ನ ಶಿರವನರಿದು ಶಿರ ಬೇರೆ ಅಂಗ ಬೇರಾದಲ್ಲಿ,
ಆ ಅಂಗ ಪುಟನೆಗೆವಲ್ಲಿ ಆತ್ಮಸಂಗವೆಲ್ಲಿದ್ದಿತ್ತು?
ಶಿರಚ್ಛೇದವಾದಲ್ಲಿ ಮತ್ತಾವ ಘಟಕ್ಕೂ ಶಿರಬಂಧವಾಗಲಿಕ್ಕೆ
ಆ ಘಟ ಚೇತನವಡಗಿ ಅಲ್ಲಿಯೆ ಮೃತವಾಗಿಪ್ಪುದು.
ಇಂತೀ ಘಟ-ಆತ್ಮನ ಉಭಯದ ಭೇದವ ಬಲ್ಲಡೆ ಪಿಂಡಜ್ಞಾನಸಂಬಂಧಿ,
ಸದ್ಯೋಜಾತಲಿಂಗವ ಬಲ್ಲವ. /34
ಚಿತ್ರಜ್ಞ ಘಟಲಕ್ಷಣವ ಬರೆಯಬಲ್ಲನಲ್ಲದೆ
ಸಲ್ಲಕ್ಷಣವಪ್ಪ ಆತ್ಮನ ಇರಿಸಬಲ್ಲನೆ?
ಸ್ಥಲದ ಮಾತನಾಡಬಲ್ಲರಲ್ಲದೆ ಸ್ಥಲವ ನಿಧರ್ಾರವಾಗಿ ನಿಲ್ಲಿಸಿ
ಸ್ಥಲವೇದಿಸಿ ಭೇದಿಸಿ ನಿಶ್ಚಿಂತವಾದಲ್ಲಿ
ಸದ್ಯೋಜಾತಲಿಂಗ ಬಟ್ಟಬಯಲಾಯಿತ್ತೆನಲಿಲ್ಲ. /35
ಜಾತಿರತ್ನವ ಸುಟ್ಟಡೆ ಪ್ರಭೆ ಪ್ರಜ್ವಲಿಸುವುದಲ್ಲದೆ,
ವಿಜಾತಿಯ ರತ್ನ ಬೆಂಕಿಯಲ್ಲಿ ಬೆಂದಡೆ ಹೊರೆಗಳೆದು, ಪ್ರಭೆಯ ತೆರೆ ನಿಂದು,
ತಾ ಜಜ್ಜರಿಯಾಗಿ ನಷ್ಟವಾಗುತಿಪ್ಪುದು.
ನಡೆ ನುಡಿ ಶುದ್ಧಾತ್ಮಂಗೆ ಆಗುಚೇಗೆ ಸೋಂಕಿದಲ್ಲಿ,
ವಂದನೆ ನಿಂದೆ ಬಂದಲ್ಲಿ, ತನುವಿನ ಪ್ರಾಪ್ತಿ ಸಂಭವಿಸಿದಲ್ಲಿ,
ಲಿಂಗವಲ್ಲದೆ ಪೆರತೊಂದನರಿಯ.
ಆತ್ಮತೇಜಿಗೆ, ಅಹಂಕಾರಿಗೆ, ದುರ್ವಿಕಾರವಿಷಯಾಂಗಿಗೆ,
ಒಂದು ವ್ರತವ ಯತಿಯೆಂದು ಹಿಡಿದು
ಮತ್ತೊಂದು ವ್ರತದ ತ್ರಿವಿಧಮಲವೆಂದು ಬಿಟ್ಟು
ಮತ್ತೊಬ್ಬ ದಾತೃ ಇತ್ತೆಹೆನೆಂದಲ್ಲಿ ಭಕ್ಷಿಸಿ,
ತ್ರಿವಿಧವ ಹಿಡಿದು ಮತ್ತನಪ್ಪವಂಗೆ ವಿರಕ್ತಿ ಎತ್ತಣ ಸುದ್ದಿ?
ಇಂತೀ ಉಭಯಸ್ಥಲಭೇದವನರಿದಾಚರಿಸಬೇಕು,
ಸದ್ಯೋಜಾತಲಿಂಗವನರಿವುದಕ್ಕೆ. /36
ಜಿಹ್ವೆ ಅಮೃತಾನ್ನವಾದಡೆ ಇದಿರಿಟ್ಟುಕೊಳ್ಳಲೇತಕ್ಕೆ?
ನೋಡುವ ಅರ್ಪಿತ ದ್ರವ್ಯಂಗಳೆಲ್ಲವೂ ಲಿಂಗಾರ್ಪಿತವಾದ ಮತ್ತೆ
ಅರ್ಪಿತ ಆರಲ್ಲಿ ಮುಟ್ಟಿಹುದು ಹೇಳಾ?
ದೃಷ್ಟಕ್ಕೆ ದೃಷ್ಟವ ಕೊಟ್ಟು, ತೃಪ್ತಿಯ ಆತ್ಮಂಗಿತ್ತು
ಆತ್ಮನಲ್ಲಿದ್ದ ಅರ್ಪಿತವಾರಿಗೆಂದರಿಯಬೇಕು,
ಸದ್ಯೋಜಾತಲಿಂಗವ ಇದಿರಿಟ್ಟ ತೆರದಲ್ಲಿ. /37
ಜೀವ ಆತ್ಮನನರಿಯಬೇಕೆಂಬರು,
ಆತ್ಮ ಪರಮಾತ್ಮನನರಿಯಬೇಕೆಂಬರು.
ಇಂತೀ ಆತ್ಮಭೇದವನರಿವುದಕ್ಕೆ ಪದರದ ಹೊರೆಯೆ? ಅಟ್ಟಣೆಯ ಸಂದೆ ?
ಅರಿದಲ್ಲಿ ಪರಮ, ಮರೆದಲ್ಲಿ ಜೀವನೆಂಬುದು.
ಆ ಉಭಯವ ಸಂಪಾದಿಸುವುದು ಅರಿವೊ? ಮರವೆಯೊ?
ಬಯಲ ಮರೆಮಾಡಿ ತೆರೆಗಟ್ಟಲಿಕ್ಕೆ ಅವರೊಳಗಾದ ದೃಷ್ಟವ ಕಾಬುದು,
ತೆರೆಯ ತೆಗೆಯಲಿಕ್ಕೆ ಬಯಲ ಕಾಬುದು.
ದೃಕ್ಕಿಂಗೆ ದೃಶ್ಯ ಒಂದೊ ಎರಡೊ ಎಂಬುದ ತಿಳಿದಲ್ಲಿ
ಸದ್ಯೋಜಾತಲಿಂಗದ ಕೂಟ. /38
ತಡೆ ದಾಡಾಬಂಧನಗಳಿಂದ ಹೋಗ[ದ],
ಹಲುದಾಗದ ಸರ್ಪನಂತೆ,
ಕ್ರಿಯಾಧರ್ಮಂಗಳಲ್ಲಿ ಆವರ್ಚಿಸಿ ಕಟ್ಟಿಗೆ ತಪ್ಪದಿಪ್ಪುದು ಸದ್ಭಕ್ತಿಸ್ಥಲ.
ಆ ಭಕ್ತನ ಹೃತ್ಕಮಲಮಧ್ಯದಲ್ಲಿ ನಿಂದು
ತ್ರಿವಿಧ ಮಲತ್ರಯವ ನಿವಾರಿಸಿ,
ಆಗು ಚೇಗೆಯ ಮರೆದು, ವಂದನೆ ನಿಂದೆಗೆ ಮೈಗೊಡದೆ,
ಕುಸುಮ-ಗಂಧದಂತೆ, ರ[ವಿ]-ಶಿಲೆಯಂತೆ, ಸವಿ-ಸಾರದಂತೆ
ತಲೆದೋರದೆ ನಿಂದುದು ವಿರಕ್ತವೇಷ.
ಅದು ಕಾಯ-ಜೀವದಂತೆ, ಜ್ಞಾತೃ-ಜ್ಞೇಯಭೇದದಂತೆ,
ಪೂಜಕ-ಪೂಜೆಗೈತ ಉಭಯದ ಭೇದ ಐಕ್ಯ,
ಸದ್ಯೋಜಾತಲಿಂಗದಲ್ಲಿ. /39
ತತ್ವಂಗಳ ಹೊತ್ತು ವಿಸ್ತರಿಸಿ ಸ್ಥಲಂಗಳನಾಧರಿಸಿ
ನಾನಾ ಭೇದಂಗಳಲ್ಲಿ ಹೊಕ್ಕು ವೇಧಿಸಿಹೆನೆಂದಡೂ,
ಕಾಯ ಕರ್ಮವ ಅನುಭವಿಸುವುದ ಕಂಡು,
ಜೀವ ನಾನಾ ಭವಂಗಳಲ್ಲಿ ಬರುತ್ತಿಹುದ ನೋಡಿ,
ಇನ್ನಾವುದ ಶ್ರುತದಲ್ಲಿ ಕೇಳಲೇತಕ್ಕೆ ?
ಇನ್ನಾವುದ ಇದಿರಿಟ್ಟು ದೃಷ್ಟವ ನೋಡಲೇತಕ್ಕೆ ?
ಇನ್ನಾವ ಮನುವಿಂದ ಅನುಮಾನವನರಿಯಲೇತಕ್ಕೆ ?
ಹಿಡಿದುದ ಬಿಡದೆ ಬಿಟ್ಟುದ ಹಿಡಿಯದೆ
ಉಭಯದ ಒಳಗು ನಿರಿಯಾಣವಾದಲ್ಲಿ ತಾ ನಾಶನ
ಸದ್ಯೋಜಾತಲಿಂಗವು ವಿನಾಶನ./40
ತನ್ನನರಿದು ಇದಿರನರಿಯಬೇಕೆಂಬುದು ಪ್ರಮಾಣು.
ಇದಿರ ಗುಣವನರಿತು ತನ್ನ ಗುಣವನರಿದು ಸಂಪಾದಿಸುವುದು ಅಪ್ರಮಾಣು.
ತನ್ನ ಗುಣವನರಿದು ನಡೆವವರೆಲ್ಲರನು ಕಾಣಬಹುದು.
ಇದಿರ ಗುಣವನರಿತು ತನ್ನ ಗುಣವ ಸಂಬಂಧಿಸಿ ನಡೆವರೆಲ್ಲರನೂ ಕಾಣಬಾರದು.
ಅದು ನುಡಿದು ನುಡಿಯಿಸಿಕೊಂಬ ಪ್ರತಿಶಬ್ದದಂತೆ.
ತನ್ನ ಗುಣವೇ ತನಗೆ ತಥ್ಯ, ತನ್ನ ಗುಣವೇ ತನಗೆ ಮಿಥ್ಯ.
ಇದಿರ ಗುಣವ ತಾನರಿದು ನಿಲಬಲ್ಲಡೆ ತನಗೆ ತಥ್ಯವೂ ಇಲ್ಲ ಮಿಥ್ಯವೂ ಇಲ್ಲ.
ಇದು ದ್ವೈತಾದ್ವೈತದ ಭೇದ,
ಸದ್ಯೋಜಾತಲಿಂಗಕ್ಕೆ ಉಭಯಸ್ಥಲ ನಾಶವಿನಾಶ. /41
ತ್ರಿಗುಣಾತ್ಮನೆಂದು, ಪಂಚಭೂತಿಕಾತ್ಮನೆಂದು,
ಅಷ್ಟತನುಮೂರ್ತಿಯಾತ್ಮನೆಂದು
ಇಂತಿವರೊಳಗಾದ ಮರ್ಕಟ ವಿಹಂಗ ಪಿಪೀಲಿಕ ಜ್ಞಾನಂಗಳೆಂದು,
ತ್ರಿಶಕ್ತಿಯೊಳಗಾದ ನಾನಾ ಶಕ್ತಿಭೇದಂಗಳೆಂದು,
ಇಂದ್ರಿಯ ಐದರಲ್ಲಿ ಒದಗಿದ ನಾನಾ ಇಂದ್ರಿಯಂಗಳೆಂದು,
ಷಡುವರ್ಣದೊಳಗಾದ ನಾನಾ ವರ್ಣಂಗಳೆಂದು,
ಸಪ್ತಧಾತುವಿನೊಳಗಾದ ನಾನಾ ಧಾತುಗಳೆಂದು,
ಅಷ್ಟಮದಂಗಳೊಳಗಾದ ನಾನಾ ಮದಂಗಳೆಂದು,
ಇಂತೀ ನಾನಾ ವರ್ತನಂಗಳನರಿವ ಚಿತ್ತದ ಗೊತ್ತದಾವುದು ?
ಒಂದು ಗಿಡುವಿನಲ್ಲಿ ಹುಟ್ಟಿದ ಮುಳ್ಳ ಒಂದೊಂದ ಮುರಿದು ಸುಡಲೇತಕ್ಕೆ ?
ಬುಡವ ಕಡಿದು ಒಡಗೂಡಿ ಸುಡಲಿಕ್ಕೆ ವಿಶ್ವಮಯ ಮೊನೆ ನಷ್ಟ.
ಇದು ಪಿಂಡಜ್ಞಾನ, ಶುದ್ಧಜ್ಞಾನೋದಯಭೇದ,
ಸದ್ಯೋಜಾತಲಿಂಗವ ಕೂಡುವ ಕೂಟ./42
ದಾಕ್ಷಿಣ್ಯದ ಭಕ್ತಿ, ಕಲಿಕೆಯ ವಿರಕ್ತಿ, ಮಾತಿನ ಮಾಲೆಯ ಬೋಧೆ,
ತೂತ ಜ್ಞಾನಿಗಳ ಸಂಸರ್ಗ.
ಬೀತಕುಂಭದಲ್ಲಿ ಅಮೃತವ ಹೊಯಿದಿರಿಸಲಿಕ್ಕೆ
ಅದು ಎಷ್ಟು ದಿವಸ ಇರಲಾಪುದು ?
ಇಂತಿವ ಕಳೆದುಳಿದು ನಡೆನುಡಿ ಸಿದ್ಧಾಂತವಾಗಿ ಕೂಡಬೇಕು
ಸದ್ಯೋಜಾತಲಿಂಗವ. /43
ದಾರಿಯಲ್ಲಿ ಬೀದಿಯಲ್ಲಿ ಮನೆಗಳಲ್ಲಿ
ಹೊನ್ನು ಹೆಣ್ಣು ಮಣ್ಣಿನ ಮೇಲಣ ಕಾಮವಿಕಾರ ತೋರಿದಡೆ
ಅದಕ್ಕೇನೂ ಶಂಕೆಯಿಲ್ಲ.
ಅದೇನು ಕಾರಣವೆಂದಡೆ: ಚಿತ್ರದ ಹುಲಿ, ಕನಸಿನ ಹಾವು. ಜಲಮಂಡುಕ ಕಚ್ಚಿ ಸತ್ತವರುಂಟೆ?
ಇದು ಕಾರಣ ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಕಾಮವಿಕಾರ ತೋರಿತ್ತೆಂದು
ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಗಳಿಂದ ಘಟವ ಬಿಟ್ಟಡೆ,
ಆತ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ.
ಇದು ಭಕ್ತರಾಚರಣೆ, ವಿರಕ್ತನಿರ್ಣಯ.
ಇಂತಪ್ಪವರಿಗೆ ಸದ್ಯೋಜಾತಲಿಂಗವುಂಟಿಲ್ಲವೆಂದೆನು./44
ದೃಕ್ಕಿನ ದೃಶ್ಯಕ್ಕೆ ಕಾಬತನಕ ಕಂಡು
ಅಲ್ಲಿಂದಾಚೆ ಏನೂ ಇಲ್ಲಾ ಎಂಬುದು
ದೃಷ್ಟಿಯ ಭೇದವೊ? ಜಗದ ಭೇದವೊ?
ಇಂತೀ ಭೇದವ ತಿಳಿದು ತನ್ನ ದೃಷ್ಟಕ್ಕೆ ತಕ್ಕ ಸ್ಥಲವ ಮೆಟ್ಟಿ,
ಸ್ಥಲಕ್ಕೆ ತಕ್ಕ ಆಚರಣೆಯಲ್ಲಿ ನಿಂದು, ಆ ಆಚರಣೆ ಆದಿಯಾಗಿ
ಅನಾದಿಯಿಂದತ್ತಣವನ ಭೇದಿಸಿ ಹಿಡಿದು
ಸದ್ಯೋಜಾತಲಿಂಗದಲ್ಲಿ ವೇಧಿಸಬೇಕು./45
ದ್ವೈತವೆಂದಡೆ ತಾನಿದಿರು ಎಂಬುದು ಎರಡುಂಟಾದುದು.
ಅದ್ವೈತವೆಂದಡೆ ಕಾಣಬಾರದುದ ಕಂಡೆಹೆನೆಂಬುದು.
ಇಂತು ದ್ವೈತ ಅದ್ವೈತಂಗಳಿಂದ ಕಂಡೆ ಕಾಣಿಸಿಕೊಳ್ಳೆನೆಂಬ ಬಂಧವಿಲ್ಲದೆ
ನಿಜಸಂಗವೆಂಬುದು ತಲೆದೋರದೆ,
ಉರಿಕೊಂಡ ಕರ್ಪುರದ ಗಂಧದಂತೆ
ಅಲ್ಲಿಯೆ ಸ್ಥಲಲೇಪ ಲೋಪ, ಸದ್ಯೋಜಾತಲಿಂಗ ಬಟ್ಟಬಯಲು./46
ಧರಿತ್ರಿಯಲ್ಲಿ ಹರಿವ ಜಲ
ತನಗೆ ಭೇದವಲ್ಲುದುದ ಭೇದಿಸಿ ಹರಿಯದಾಗಿ,
ಮರ್ಕಟನ ಲಂಘನ ಚಿತ್ತಕ್ಕೆ ಎಟ್ಟದುದನೊಲ್ಲದಾಗಿ,
ಮೆತ್ತದ ಹೇತುವಿನಲ್ಲಿದ್ದ ದಂಷ್ಟ್ರ ಚಿತ್ತವೆದ್ದಠಾವಿಗೆ ಜಂಘೆಯ ತೂಗಿ,
ಜಡನಾದಡೆ ಚಿತ್ತವತ್ತಬಿಟ್ಟು ಇಪ್ಪುದರಿಂದ ಕಡೆಯ ನಿಮ್ಮ ವಿರಕ್ತಿ?
ಇದು ಜ್ಞಾನಹೇಯಭಾವ,
ಇದು ದೃಷ್ಟ ಸದ್ಯೋಜಾತಲಿಂಗವನರಿವುದಕ್ಕೆ./47
ನವನೀತವ ಅರೆದು ಸಣ್ಣಿಸಬೇಕೆಂದಡೆ,
ಅದು ಉಭಯ ಪಾಷಾಣದ ಮಧ್ಯದಲ್ಲಿ
ಜ್ವಾಲೆಯ ಡಾವರಕ್ಕೆ ಕರಗುವದಲ್ಲದೆ ಅ[ರೆ]ಪುನಿಂದುಂಟೆ?
ನೆರೆ ಅರಿದು ಹರಿದವನಲಿ ಪರಿಭ್ರಮಣವ ವಿಚಾರಿಸಲಿಕ್ಕೆ
ಆ ವಿಚಾರದಲ್ಲಿಯೆ ಲೋಪವಾಯಿತ್ತು, ಸದ್ಯೋಜಾತಲಿಂಗದಲ್ಲಿ/48
ನಾನಾ ಮೂಲಿಕೆ ಪಾಷಾಣಂಗಳಲ್ಲಿ ಪರುಷರಸಸಿದ್ಧಿಯಾದುದಿಲ್ಲವೆ?
ನಾನಾ ವರ್ತನ ಸ್ಥಲಕುಳಂಗಳನರಿದಲ್ಲಿ
ನಿಜವಸ್ತುವಿನ ನಿಜವನರಿತು ಪೂಜಿಸುವಲ್ಲಿ ಕಟ್ಟುಗೊತ್ತಿಗೆ ಬಾರನೆ?
ಇದಕ್ಕೆ ದೃಷ್ಟಿ ನಿಮಿತ್ತ ಶಕುನಂಗಳು, ತಿಥಿವಾರಗಳು, ನಕ್ಷತ್ರಗ್ರಹಬಲಂಗಳು
ನಂಬುಗೆಯಿಂದ ವಿಶ್ವಾಸದ ಬಲೋತ್ತರದಿಂದ ಸಂಕಲ್ಪಸಿದ್ಧಿಯಾಯಿತ್ತು.
ಇದು ವಿಶ್ವಾಸ ಭೇದ, ಭಕ್ತಿಯ ಶ್ರದ್ಧೆ,
ಸದ್ಯೋಜಾತಲಿಂಗದ ಹೆಚ್ಚುಗೆಯ ಸಂಗ./49
ನೀತಿಭಕ್ತಿ ಕ್ರಿಯಾಭಕ್ತಿ ಭಾವಭಕ್ತಿ ಸದ್ಭಾವಭಕ್ತಿ ಜ್ಞಾನಭಕ್ತಿ
ಇಂತೀ ಭಕ್ತಿಯ ವಿವರ: ನೀತಿಭಕ್ತಿಗೆ ಸರ್ವಗುಣಪ್ರೀತಿವಂತನಾಗಿ,
ಕ್ರಿಯಾಭಕ್ತಿಗೆ ಬಿಡುಮುಡಿ ಉಭಯವನರಿದು,
ಭಾವಭಕ್ತಿಗೆ ಸಂಕಲ್ಪವಿಕಲ್ಪ ದೋಷವ ಕಂಡು
ಸದ್ಭಾವಭಕ್ತಿಗೆ ಮನ ವಚನ ಕಾಯ ತ್ರಿಕರಣವನರಿದು,
ಜ್ಞಾನಭಕ್ತಿಗೆ ಜ್ಞಾತೃ ಜ್ಞಾನ ಜ್ಞೇಯ ಮುಂತಾದ
ಮರ್ಕಟ ವಿಹಂಗ ಪಿಪೀಲಿಕ
ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ತೆರನ ತಿಳಿದು,
ವಿಷ ಚರಣಾಂಗುಲದಲ್ಲಿ ವೇಧಿಸಿ, ಕಪಾಲದಲ್ಲಿ ನಿಂದು
ಅಂಗ ಮೂಛರ್ೆಗೊಂಡಂತೆ,
ಇಂತೀ ಭಕ್ತಿಸ್ಥಲದ ವಿವರ.
ಹೆಚ್ಚು ಕುಂದನರಿದು ಕೊಡುವಲ್ಲಿ ಕೊಂಬಲ್ಲಿ ತಟ್ಟುವಲ್ಲಿ ಮುಟ್ಟುವಲ್ಲಿ,
ತಾಗುವಲ್ಲಿ ಸೋಂಕುವಲ್ಲಿ ನಾನಾಗುಣಂಗಳಲ್ಲಿ
ವಿವರವನರಿತು ವರ್ಮಜ್ಞನಾಗಿಪ್ಪ ಭಕ್ತನಂಗ,
ಆ ಸುಖದ ಸಂಗ ಸದ್ಯೋಜಾತಲಿಂಗದ ನಿರಂಗ. /50
ನೋಡುವ ಕಣ್ಣ ಕನ್ನಡಿ ನುಂಗಿದ ಮತ್ತೆ
ನೋಡಿ ನೋಡಿಸಿಕೊಂಬವರಿನ್ನಾರು ಹೇಳಾ.
ಉಂಬ ಬಾಯಿ ಆಡುವ ಮಡಕೆಯಾದಲ್ಲಿ ಬಡಿಸುವರಿನ್ನಾರು ಹೇಳಾ.
ನಿಮ್ಮೊಳಗಾದಲ್ಲಿ ಪೂಜಿಸುವರಿನ್ನಾರು ಹೇಳಾ.
ನೀನೆನ್ನೊಳಗಾದಲ್ಲಿ ನಾನಿದಿರಿಟ್ಟು ಮುಟ್ಟುವಠಾವ ತೋರಾ.
ನಾ ನಿನ್ನವನಾಗಿ ಇತ್ತ, ನೀನು ಎನ್ನವನಾಗಿ ಅತ್ತ,
ನನಗೂ ನಿನಗೂ ಮಮತೆ ಬಿಡದಾಗಿ
ನಾನು ನೀನು ತತ್ತು ಗೊತ್ತಿನ ಲಕ್ಷಿತರು.
ಇದು ಭಕ್ತಿ ವಿಶ್ವಾಸ ಭೇದ,
ಸದ್ಯೋಜಾತಲಿಂಗವ ಕೂಡಬೇಕಾದ ಕಾರಣ./51
ಪರುಷ ಲೋಹವ ಸೋಂಕಿದಲ್ಲಿ
ಆ ಗುಣವಳಿದು ಹೇಮವಾಯಿತ್ತಲ್ಲದೆ,
ಪುನರಪಿ ಶುದ್ಧಾತ್ಮವಾದುದಿಲ್ಲ.
ಗುರು ಲಿಂಗವೆಂದು ಕೊಟ್ಟಡೆ
ಅಂಗದಲ್ಲಿ ಬಂಧವಾಯಿತ್ತಲ್ಲದೆ,
ಸರ್ವಾಂಗ ಆತ್ಮನಲ್ಲಿ ಲೀಯವಾದುದಿಲ್ಲ.
ಇಂತಿದು ಕಾರಣದಲ್ಲಿ,
ಕೆಂಡದ ಮೇಲೆ ಕಟ್ಟಿಗೆಯ ಹಾಕಿದಡೆ ಪೊತ್ತುವುದಲ್ಲದೆ,
ನಂದಿದ ಪ್ರಕಾಶಕ್ಕೆ ಅರಳೆಯ ತಂದಿರಿಸಿದಡೆ ಹೊತ್ತಿದುದುಂಟೆ?
ಇದು ಕಾರಣ,
ಸಂಸಾರಪಾಶದಲ್ಲಿ ಬಿದ್ದ ಗುರು
ಇಂತೀ ಗುರುಸ್ಥಲನಿರ್ವಾಹಸಂಪಾದನೆ,
ಸದ್ಯೋಜಾತಲಿಂಗಕ್ಕೆ. /52
ಪರುಷರಸ ನಿರ್ಧರವಾದಲ್ಲಿ ಹೇಮವ ವೇಧಿಸಿ, ಹೇಮವಳಿದು
ಪರುಷ ತಾನಾಗಬಲ್ಲಡೆ ಅದು ಪರುಷರಸಿದ್ಧಿ.
ಗುರು ಮುಟ್ಟಿದ ಶಿಷ್ಯ ಗುರುವಾಗಬಲ್ಲಡೆ,
ಲಿಂಗ ಮುಟ್ಟಿದ ಆತ್ಮ ಲಿಂಗವಾಗಬಲ್ಲಡೆ,
ಆ ಅರಿವು ಅರಿವ ಭೇದಿಸಿದಂತೆ,
ದೃಗ್ದಶ್ಯಕ್ಕೆ ಒಡಲು ಏಕವಾಗಿ ಕಾಬಂತೆ.
ಆ ಗುಣ ಸದ್ಯೋಜಾತಲಿಂಗವ ಕೂಡಿದ ಭೇದ./53
ಪರುಷರಸ ಲೋಹವ ವೇಧಿಸಬಲ್ಲುದಲ್ಲದೆ
ಹೇಮವ ವೇಧಿಸಬಲ್ಲುದೆರಿ
ಅದು ಲೋಹಕ್ಕೆ ಅರಸಲ್ಲದೆ ಹೇಮಕ್ಕೆ ಅರಸಲ್ಲ.
ಇಂತೀ ಉಭಯಸ್ಥಲ.
ಅಂಗ ಲಿಂಗವಾಗಬಲ್ಲಡೆ, ಲಿಂಗ ಅಂಗವ ಗ್ರಹಿಸಬಲ್ಲಡೆ
ಅದು ಸದ್ಯೋಜಾತಲಿಂಗದ ಕೂಟ. /54
ಪಿಂಡದ ಸರ್ವಾಂಗದಲ್ಲಿ ಆತ್ಮನು ವೇದಿಸಿ ಇದ್ದಿಹಿತ್ತೆಂಬರು.
ಕರ ಚರಣ ಕರ್ಣ ನಾಸಿಕ ನಯನ ಇವನರಿದು ಕಳೆದಲ್ಲಿ ಆತ್ಮ ಘಟದಲ್ಲಿದ್ದಿತ್ತು.
ಶಿರಚ್ಛೇದನವಾದಲ್ಲಿ ಆತ್ಮ ಎಲ್ಲಿ ಅಡಗಿತ್ತು ?
ಇದನರಿತು ಆತ್ಮ ಪೂರ್ಣನೊ, ಪರಿಪೂರ್ಣನೊ ಎಂಬುದ ತಿಳಿದು
ನಿಶ್ಚಯದಲ್ಲಿ ನಿಂದುದು ಪಿಂಡಜ್ಞಾನಸಂಬಂಧ.
ಇದು ಸದ್ಯೋಜಾತಲಿಂಗವ ಕೂಡುವ ಕೂಟ./55
ಪೂರ್ವದಿಂದ ಉತ್ತರಕ್ಕೆ ಬಂದ ಸೂರ್ಯನು
ಅಸ್ತಮಯವಾಯಿತ್ತೆಂದು ಜಾಹ್ಯಗೆ ಒಡಲಾಗಿ,
ಮತ್ತಾ ವರುಣಪ್ರದಕ್ಷಿಣದಿಂದ ಬಂದು ಪೂರ್ವದಲ್ಲಿ ಹುಟ್ಟಲಿಕ್ಕೆ
ನಿನ್ನಿಂಗೆ ಇಂದಿಂಗೆಯೆಂಬುದು ಒಂದೊ ಎರಡೊ ?
ಅಂದಿಗೆ ಜ್ಞಾನ, ಇಂದಿಗೆ ಮರವೆ, ಎಂಬುದು ಒಂದೊ ಎರಡೊ ?
ಅದು ಘಟದ ಪ್ರವೇಶದಿಂದ.
ಪೂರ್ವ ಉತ್ತರಕ್ಕೆ ಬಂದಾತ್ಮನನರಿದು ಉಭಯವ ತಿಳಿದು
ಸಂದು ನಾಶನವಾದಲ್ಲಿ ಸದ್ಯೋಜಾತಲಿಂಗವು ವಿನಾಶವಾದ./56
ಪೃಥ್ವಿಯ ಗುಣ ಸೋಂಕಿದಲ್ಲಿ ಅದಾವ ಭೇದದಿಂದ ಅರ್ಪಿತ ?
ಅಪ್ಪುವಿನ ಗುಣ ಆವರ್ಚಿಸಿದಲ್ಲಿ ಅದಾವ ಭೇದದಿಂದ ಅರ್ಪಿತ ?
ತೇಜದ ಗುಣದಿಂದ ಪ್ರಕಾಶ ಅದಾವ ಭೇದದಿಂದ ಅರ್ಪಿತ ?
ವಾಯುವಿನ ಸುಗುಣ ದುರ್ಗುಣದ ಸುಳುಹಿನ ಸಂಚಾರದ ಭೇದ
ಅದಾವ ನಿಶ್ಚಯದಿಂದ ಅರ್ಪಿತ ?
ಆಕಾಶದ ಗಮ್ಯದ ಒಳಗಾದ
ಸರ್ವನಾದಮಯ-ಪರಿಪೂರ್ಣತ್ವ ತೆರಹಿಲ್ಲದ ತನ್ಮಯ
ಅದಾವ ಲಿಂಗಕ್ಕರ್ಪಿತ ?
ಇಂತೀ ಪಂಚೀರಕರಣಂಗಳಲ್ಲಿ ಭೇದಕ್ರಮದಿಂದ ಅರ್ಪಿಸಬೇಕು.
ಸದ್ಯೋಜಾತಲಿಂಗದ ಅರ್ಪಿತದ ಮುಖವನರಿತು ಕೊಡಬೇಕು /57
ಪೃಥ್ವಿಯ ವಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ
ಗುಣಗಂಭೀರದಲ್ಲಿ ಇದ್ದಿತೆಂಬರು.
ಅಪ್ಪುವಿನಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಸರ್ವಸಾರಮಯವಾಗಿದ್ದಿತ್ತೆಂಬರು.
ತೇಜದಂಶಿಕದಲ್ಲಿ ಆತ್ಮ ಬಂದಿರಲಿಕ್ಕಾಗಿ ಸರ್ವದೀಪ್ತವಾಗಿದ್ದಿತ್ತೆಂಬರು.
ವಾಯುವಿನಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ
ಸರ್ವಸಂಚಲಮಯವಾಗಿದ್ದಿತ್ತೆಂಬರು.
ಆಕಾಶದಂಶದಲ್ಲಿ ಆತ್ಮನು ಬಂದಿರಲಿಕ್ಕಾಗಿ
ಇಂತೀ ಐದು ಭೇದದಲ್ಲಿ ದಶವಾಯುವ ಕಲ್ಪಿಸಿಕೊಂಡು,
ಹೆಸರ ರೂಹಿಟ್ಟು ಅಸುನಾಥನ ಒಡಗೂಡಬೇಕೆಂಬಲ್ಲಿ
ಇದು ಸಂದಿಲ್ಲದ ಸಂಶಯ.
ನಾನಾರು ಇದೇನೆಂಬುದು ಏಕೀಕರಿಸಿದಲ್ಲಿ ಸರ್ವೇಂದ್ರಿಯ ನಾಶನ,
ಸದ್ಯೋಜಾತಲಿಂಗವನರಿವುದು ವಿನಾಶನ./58
ಪೃಥ್ವಿಯಲ್ಲಿ ಅಪ್ಪು ಕೂಡಲಿಕ್ಕೆ ಅಗ್ನಿ ಕೂಡಿ ನಾಲ್ಕು ಭೇದವಾಗಿಪ್ಪುದು.
ಆ ಅಗ್ನಿಯಲ್ಲಿ ವಾಯು ಕೂಡಿ ಏಳು ಭೇದವಾಗಿಪ್ಪುದು.
ಆ ವಾಯುವಿನಲ್ಲಿ ಆಕಾಶ ಕೂಡಿ ಹದಿನಾರು ಭೇದವಾಗಿಪ್ಪುದು.
ಇಂತೀ ಪೃಥ್ವಿಯ ಭೇದ, ಅಪ್ಪುವಿನ ಸರ್ವಸಾರ, ಅಗ್ನಿಗೆ ತನ್ಮಯ ಜಿಹ್ವೆ,
ವಾಯುವಿಗೆ ಸರ್ವಗಂಧ, ಆಕಾಶಕ್ಕೆ ಆವರಣ ಅಲಕ್ಷ,
ಇಂತೀ ಪಂಚೀಕರಣಂಗಳ ವಿಭಾಗಿಸಿ ಸೂತ್ರವಿಟ್ಟು
ಒಂದರಿಂದ ಹಲವು ಲೆಕ್ಕವ ಸಂದಣಿಸುವಂತೆ,
ಲೆಕ್ಕವ ಹಲವ ಕಂಡು ಒಂದರಿಂದ ವಿಭಾಗಿಸಿದರೆಂಬುದನರಿದು
ತಾಯ ಗರ್ಭದ ಶಿಶು ಭಿನ್ನವಾದಂತೆ ಸುಖದುಃಖವ ವಿಚಾರಿಸಬೇಕು.
ಸದ್ಯೋಜಾತಲಿಂಗವೆಂದರಿವನ್ನಕ್ಕ ಉಭಯವ ವಿಚಾರಿಸಬೇಕು/59
ಪೃಥ್ವೀತತ್ವಕ್ಕೆ ಅಪ್ಪುತತ್ವ ಸಂಘಟ್ಟವಾಗಿ
ಆಕಾಶತತ್ವ ಬೆರಸಲಿಕ್ಕಾಗಿ ಘಟರೂಪು.
ಆ ಘಟರೂಪಿನಲ್ಲಿ ವಾಯುತತ್ವ ಕೂಡಲಿಕ್ಕೆ ಆತ್ಮರೂಪು.
ಈ ನಾಲ್ಕರ ಮಧ್ಯದಲ್ಲಿ ತೇಜತತ್ವ ರೂಪವಾಗಲಿಕ್ಕೆ ಪಂಚಭೂತಿಕ ಘಟವಾಯಿತ್ತು.
ಕಠಿಣಭೇದವೆಲ್ಲವು ಪೃಥ್ವಿಯ ವಂಶಿಕ, ಸಾರಭೇದವೆಲ್ಲವು ಅಪ್ಪುವಿನ ವಂಶಿಕ,
ಜ್ವಾಲೆ ವಂಶಿಕವೆಲ್ಲವು ತೇಜವಂಶಿಕ, ವಾಯು ವಂಶಿಕವೆಲ್ಲವು ಆತ್ಮವಂಶಿಕ,
ನಾದವಂಶಿಕವೆಲ್ಲವು ಮಹದಾಕಾಶದ ಒಳಗು.
ಇಂತೀ ಪಿಂಡಭೇದಂಗಳ ಹಲವು ತೆರನನರಿತು
ಪಂಚೀಕರಣದ ನಾನಾ ಸಂಚುಗಳ ಸಂಧಿಸಿ
ಮುಮುಕ್ಷುವಾಗಿ ಕೂಡಬೇಕು ಸದ್ಯೋಜಾತಲಿಂಗವ./60
ಪ್ರಮೇಯ-ಅಪ್ರಮೇಯ, ಸುರಾಳ-ನಿರಾಳ,
ಶೂನ್ಯ-ನಿಃಶೂನ್ಯ, ವಿರಳ-ಅವಿರಳ, ಅಂಜನ-ನಿರಂಜನ, ಭಾವ-ನಿರ್ಭಾವ,
ಮಹಾಮಹಪ್ರಕಾಶ-ದಿವ್ಯದಿವ್ಯತೇಜಪ್ರಕಾಶ,
ಇಂತೀ ಉಭಯಸಂಪರ್ಕಸಂಯೋಗಿಯಾಗಿ, ತ್ರಿವಿಧಾತ್ಮಕೂಟಸ್ಥನಾಗಿ
ನಿನ್ನಾಟ ಬಟ್ಟಬಯಲಲಿ ದೃಷ್ಟವಾಯಿತ್ತು.
ಸದ್ಯೋಜಾತಲಿಂಗವೆಂಬ ಭಾವ ಶಬ್ದಮುಗ್ಧವಾಯಿತ್ತೆನಲಿಲ್ಲ. /61
ಬಂಧಿಸಿ ಘಟವ ಬಿಟ್ಟಿಹೆನೆಂದಡೆ ಅಭಿಸಂಧಿಯಲ್ಲಿ ನೋವುದು ಜೀವ.
ಕಂದದೆ ಕುಂದದೆ ನಿಜದಲ್ಲಿ ಹೊಂದಿಹೆನೆಂದಡೆ
ಸರ್ವೇಂದ್ರಿಯ ಬಂಧುವಿನೊಳಗಿದೆ ಜೀವ.
ಒಂದ ಮರೆದು ಒಂದನರಿದು ಮುಂದಣ ಅಡಿಯ ಮೆಟ್ಟಿಹೆನೆಂದಡೆ
ಸಂದೇಹದ ಸಂದಣಿಗೊಳಗಿದೆ ಜೀವ.
ಗುರುವಿಂದ ಕಂಡೆಹೆನೆಂದಡೆ
ಅದು ಧರ್ಮಬೀಜ, ನಾನು ಕರ್ಮಬೀಜ.
ಲಿಂಗದಿಂದ ಕಂಡೆಹೆನೆಂದಡೆ
ಚತುರ್ವಿಧಫಲ ಭವಬೀಜ.
ಜ್ಞಾನದಿಂದ ಕಂಡೆಹೆನೆಂದಡೆ
ನಾನು ಸಾವಯ, ಅದು ನಿರವಯ.
ಎನಗಿನ್ನೇತರಿಂದ ಕೂಟರಿ ಈ ಭಕ್ತಿಜಗದಾಟದ ಕಾಟ.
ನಿನ್ನ ಕೂಟವ ಕೂಡಿಹೆನೆಂಬ ಕೋಟಲೆಯ ಬಿಡಿಸಿ
ಎನ್ನಲ್ಲಿ ನೀನು ಅಲೇಖನಾಗು.
ಭಿನ್ನಭಾವವಿಲ್ಲದಂತೆ, ಅನ್ಯ ಅನನ್ಯವೆಂಬುದ ನಿನ್ನ ಭಾವದಲ್ಲಿಯೆ ಮರೆಸಿ
ನಾನುಗೂಡಿ ನೀನು ಬಟ್ಟಬಯಲು, ಸದ್ಯೋಜಾತಲಿಂಗವೆ. /62
ಬೆಂಕಿಯ ಬೈಕೆಗೆ ಕಲ್ಲ ಮುಚ್ಚಿದಡೆ ನಲವಿಂದ ಇರಬಲ್ಲುದೆ,
ಕಾಷ್ಠಕಲ್ಲದೆ ?
ಬಲು ಶಾಸ್ತ್ರವ ಕಲಿತು ವಾಗ್ವಾದದ ಬಲುಮೆಯಿಂದ ನುಡಿದಡೆ
ಸಲೆ ನೆಲೆಯಲ್ಲಿದ್ದವ ಅವರಿಗೊಲವರವಪ್ಪನೆ, ತನ್ನ ನಿಳಯರಿಗಲ್ಲದೆ?
ಇಂತೀ ಜಡ ಅಜಡವೆಂಬ ಉಭಯವನರಿದು ಹರಿದು ಕೂಡಬೇಕು,
ಸದ್ಯೋಜಾತಲಿಂಗವ. /63
ಬೆಳಗಿನ ತುದಿಯಲ್ಲಿ ತಮ ಸೇರಿಪ್ಪಂತೆ
ಬೆಳಗಿನ ಬುಡವು ತಮದ ಒಡಲೆಂದು ಅರಿತಲ್ಲಿ
ಅರಿವು ಮರವೆಯಲ್ಲಿಂದ ಬಂದಿತ್ತೆಂದು ಆರಡಿಗೊಳಲೇತಕ್ಕೆ ?
ಈ ದ್ವಂದ್ವವ ತಿಳಿದು ನಿಜವೊಂದರಲ್ಲಿ ನಾಶವಾಗಲಿಕ್ಕೆ
ಸದ್ಯೋಜಾತಲಿಂಗವು ತನ್ನಲ್ಲಿ ವಿನಾಶವಪ್ಪನು./64
ಬೇವಿನ ಮರದಲ್ಲಿ ಕುಳಿತು ಬೆಲ್ಲವ ಮೆದ್ದಡೆ ಕಹಿಯಪ್ಪುದೆ?
ಅಂಧಕ ಅಮೃತವನೀಂಟಿದಲ್ಲಿ ಹುಳಿಯಪ್ಪುದೆ?
ಪಂಗುಳ ಪಯಣಕ್ಕೆ ಬಟ್ಟೆ[ಯಿ]ಲ್ಲಾ ಎಂದಡೆ ಕೊಂದವರುಂಟೆ ಅವನನು?
ಇದು ಕ್ರಿಯಾಶ್ರದ್ಧೆ, ಶುಶ್ರೂಷಾಭಾವ ಸದ್ಯೋಜಾತಲಿಂಗಕ್ಕೆ./65
ಬ್ರಹ್ಮನ ಕಾಲಿನಲ್ಲಿ ಬಂದು, ವಿಷ್ಣುವಿನ ಕೈಯಲ್ಲಿ ಬೆಳೆದು,
ರುದ್ರನ ಹಣೆಗಿಚ್ಚಿನಲ್ಲಿ ಬೇವುತ್ತ ನೋವುತ್ತ
ಜೀವ ಹೋಗದೆ ನೋವವನಂತೆ,
ಈ ಗುಣ ಪ್ರಾಣಲಿಂಗಿಯ ಭೇದ
ಸದ್ಯೋಜಾತಲಿಂಗವನರಿವುದಕ್ಕೆ. /66
ಬ್ರಹ್ಮಾಂಡದಲ್ಲಿ ಪುಟ್ಟಿಹ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು.
ಆ ಬ್ರಹ್ಮಾಂಡಕ್ಕೆ ತ್ರಿಜಾತಿವರ್ಗ, ಚರಸ್ಥಾವರ ಮೂಲಾದಿಭೇದ
ಸಪ್ತಸಿಂಧು ಸವಾಲಕ್ಷ ಮುಂತಾದ ಮಹಾಮೇರುವೆ
ಅಷ್ಟಾಷಷ್ಟಿ ಗಂಗಾನದಿಗಳು ಮುಂತಾದ
ನವಪಾಷಾಣದೊಳಗಾದ ರತಿಸಂಭವ ಮುಂತಾದ
ಷಟ್ಕರ್ಮ ಆಚರಣೆ ಮುಂತಾದ
ಇಂತೀ ಬ್ರಹ್ಮಾಂಡದೊಳಗಾದ ವಸ್ತುಕ ವರ್ಣಕ
ಇವು ಎಲ್ಲವು, ಲಕ್ಷಿಸಿಕೊಂಡು ಪ್ರಮಾಣಾದವು.
ಈ ಪಿಂಡಾಂಡಕ್ಕೆ ಬ್ರಹ್ಮಾಂಡವ ಸರಿಗಾಬಲ್ಲಿ
ನಾನಾ ವರ್ಣದ ಭೇದಂಗಳೆಲ್ಲವ ವಿಚಾರಿಸಲಿಕ್ಕೆ ಉಂಟು.
ಘಟಭೇದದಲಿ ಇಲ್ಲ, ಜ್ಞಾನಭೇದದಲ್ಲಿ ಉಂಟೆಂದು ಕರ್ಮವ ವಿಚಾರಿಸಲಿಕ್ಕೆ
ಪೃಥ್ವೀತತ್ವದೊಳಗಾದುದೆಲ್ಲವೂ ವಸ್ತುಕರೂಪು.
ಅಪ್ಪುತತ್ವದೊಳಗಾದುದೆಲ್ಲವೂ ವರ್ಣಕರೂಪು.
ತೇಜತತ್ವದೊಳಗಾದುದೆಲ್ಲವೂ ದೃಶ್ಯಾಂತರಭಾವ.
ವಾಯುತತ್ವದೊಳಗಾದುದೆಲ್ಲವೂ ಖೇಚರಸಂಚಾರಭಾವ.
ಆಕಾಶತತ್ವದೊಳಗಾದುದೆಲ್ಲವೂ ಇಂತೀ ಚತುರ್ಗುಣ ಭಾವವನೊಳಗೊಂಡು
ಶಬ್ದಗಮ್ಯವಾಗಿ ಮಹದಾಕಾಶವ ಎಯ್ದುತ್ತಿಹುದಾಗಿ.
ಇಂತೀ ಅಂಡಪಿಂಡವ ವಿಸ್ತರಿಸಿ ನೋಡಿಹೆನೆಂದಡೆ
ಅಗ್ನಿಗೆ ಆಕಾಶದ ಉದ್ದ ಕಾಷ್ಠವನೊಟ್ಟಿದಡೂ
ಅಲ್ಲಿಗೆ ಹೊತ್ತುವದಲ್ಲದೆ ಸಾಕೆಂದು ಒಪ್ಪುವದಿಲ್ಲ.
ಇಂತೀ ಭೇದದಂತೆ ಸಕಲವ ನೋಡಿಹೆನೆಂದಡೆ
ನಾಲ್ಕು ವೇದ ಒಳಗಾಗಿ ಹದಿನಾರು ಶಾಸ್ತ್ರ ಮುಂತಾಗಿ
ಇಪ್ಪತ್ತೆಂಟು ದಿವ್ಯಾಗಮಂಗಳು ಕಡೆಯಾಗಿ
ಇಂತಿವರೊಳಗಾದ ಉಪಮನ್ಯು, ಶಾಂಕರಸಂಹಿತೆ,
ಚಿಂತನೆ, ಉತ್ತರ ಚಿಂತನೆ, ಪ್ರತ್ಯುತ್ತರ ಚಿಂತನೆ, ಸಂಕಲ್ಪಸಿದ್ಧಿ
ಇಂತಿವರೊಳಗೆ ತಿಳಿದೆಹೆನೆಂದಡೆ ಕಲಿಕೆಗೆ ಕಡೆಯಿಲ್ಲ
ಅರಿವಿಗೆ ತುದಿ ಮೊದಲಿಲ್ಲ.
ಇಂತಿವೆಲ್ಲವ ಕಳೆದುಳಿದು ನಿಲಬಲ್ಲಡೆ
ವರ್ಮಸ್ಥಾನ ಶುದ್ಧಾತ್ಮನಾಗಿಪ್ಪ ಭೇದವ ಹಿಡಿದು ಮಾಡುವಲ್ಲಿ ದೃಢಾತ್ಮನಾಗಿ,
ಲಿಂಗವನರ್ಚಿಸಿ ಪೂಜಿಸುವಲ್ಲಿ ನೈಷ್ಠಿಕವಂತನಾಗಿ,
ತ್ರಿವಿಧವ ಕುರಿತು ಅರಿದು ಮಾಡುವಲ್ಲಿ ನಿಶ್ಚಯವಂತನಾಗಿ,
ಅಶ್ವತ್ಥವೃಕ್ಷದ ಪರ್ಣದ ಅಗ್ರದ ತುದಿಯ ಮೊನೆಯಲ್ಲಿ
ಬಿಂದು [ಸಾ]ರಕ್ಕೆ ಮುನ್ನವೆ ಬಿದ್ದಂತೆ
ಇಂತೀ ಕರ್ಮಕಾಂಡದಲ್ಲಿದ್ದ ಆತ್ಮನು ಹಾಗಾಯಿತ್ತೆಂಬುದ ಹೀಗರಿದು
ಇಂತೀ ಉಭಯದಲ್ಲಿ ಚೋದ್ಯನಾಗಿ ಸದ್ಯೋಜಾತಲಿಂಗವ ಕೂಡಬೇಕು./67
ಭಕ್ತಂಗೆ ಗುರುಲಿಂಗಜಂಗಮದಲ್ಲಿ ಗುಣದೋಷಂಗಳನರಸದಿಪ್ಪುದು.
ಮಹೇಶ್ವರಂಗೆ ಆಚಾರಕ್ಕೆ ಅಣುಮಾತ್ರದಲ್ಲಿ ತಪ್ಪದೆ
ಕ್ಷಣಮಾತ್ರದಲ್ಲಿ ಸೈರಿಸದಿಪ್ಪುದು.
ಪ್ರಸಾದಿಗೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಸಾದವನರಿದಿಪ್ಪುದು.
ಪ್ರಾಣಲಿಂಗಿಗೆ ಅರ್ಪಿತ ಅವಧಾನಂಗಳಲ್ಲಿ, ಸುಗುಣ ದುರ್ಗಣ ಗಂಧಂಗಳಲ್ಲಿ
ಮಧುರ ಖಾರ ಲವಣ ಕಹಿ ಮೃದು ಕಠಿಣಂಗಳಲ್ಲಿ
ನಿರೀಕ್ಷಣೆಯಿಂದ ಸೋಂಕುವಲ್ಲಿಯ ಸ್ಪರ್ಶನದಲ್ಲಿಯೆ ಅರಿದರ್ಪಿತ
ಮುಂತಾಗಿ ಸ್ವಾದಿಸಬೇಕು.
ಶರಣನಾದಡೆ ಭೇದಭಾವವಿಲ್ಲದೆ ವಂದನೆ ನಿಂದನೆ ಉಭಯವೆನ್ನದೆ
ಸುಖದುಃಖಂಗಳ ಸರಿಗಂಡು ರಾಗವಿರಾಗನಾಗಿಪ್ಪುದು.
ಐಕ್ಯನಾದಡೆ ಚಿನ್ನದೊಳಗಡಗಿದ ಬಣ್ಣದಂತೆ,
ಸರ್ವವಾದ್ಯದಲ್ಲಿ ಅಡಗಿದ ನಾದದಂತೆ,
ಮಂಜಿನ ರಂಜನೆ ಬಿಸಿಲ ಅಂಗದಲ್ಲಿ ಅಡಗಿದಂತೆ.
ಸದ್ಯೋಜಾತಲಿಂಗವು ಕ್ರೀಯಲ್ಲಿಪ್ಪ ಭೇದ. /68
ಭಕ್ತಂಗೆ ಭಕ್ತಿಸ್ಥಲ, ವಿರಕ್ತಂಗೆ ಬಿಡುಗಡೆ,
ಈ ಉಭಯ ಕೂಡಿ ಏಕವಾದಲ್ಲಿ ಪರಿಪೂರ್ಣತ್ವ.
ಇಷ್ಟಲ್ಲದೆ ಕೀಳ ನೆನೆದು ಮೇಲೆ ನೋಡಲಿಲ್ಲ.
ಮೇಲೆ ನಿಂದು ಕೀಳ ನೆನೆಯಲಿಲ್ಲ.
ಅದು ಉರಿಯ ಬಾಣದಂತೆ, ಮರೀಚಿಕಾ ಜಲದಂತೆ,
ಸುರಚಾಪದಂತೆ, ಬುದ್ಬುದ ಮಣಿಯಂತೆ ತೋರಿ
ತೋರಿದಲ್ಲಿ ನಾಮನಷ್ಟವಾಗಿ
ಸ್ಥಲಗ್ರಹಿತನ ಭಾವ ಸದ್ಯೋಜಾತಲಿಂಗದ ಕೂಟ. /69
ಭಕ್ತಸ್ಥಲ ಘಟರೂಪು, ಮಾಹೇಶ್ವರಸ್ಥಲ ಆತ್ಮರೂಪು,
ಪ್ರಸಾದಿಸ್ಥಲ ಜ್ಞಾನರೂಪು,
ಇಂತೀ ತ್ರಿವಿಧಸ್ಥಲ ಭಕ್ತಿರೂಪು.
ಪ್ರಾಣಲಿಂಗಿಸ್ಥಲ ಜ್ಞಾತೃರೂಪು, ಶರಣಸ್ಥಲ ಜ್ಞೇಯರೂಪು,
ಐಕ್ಯಸ್ಥಲ ಸರ್ವಮಯಜ್ಞಾನರೂಪು.
ಇಂತೀ ತ್ರಿವಿಧಸ್ಥಲ ಏಕವಾಗಿ ನಿಂದುದು ಕರ್ತೃಸ್ವರೂಪು.
ಇಂತೀ ಷಟ್ಸ್ಥಲ ಉಭಯವಾಗಿ ಕಾಯದಲ್ಲಿ ಆತ್ಮ ಘಟಿಸಿಪ್ಪಂತೆ,
ಆತ್ಮನ ಚೇತನದಿಂದ ಘಟ ಅನುಭವಿಸುವಂತೆ,
ಇಂತೀ ದ್ವಂದ್ವವೊಂದಾಗಿ ನಿಂದರಿದಲ್ಲಿ
ಷಟ್ಸ್ಥಲ ಆರೋಪ ಸದ್ಯೋಜಾತಲಿಂಗಕ್ಕೆ./70
ಭಕ್ತಸ್ಥಲ ಪೃಥ್ವಿಯಂತೆಂದಲ್ಲಿ,
ಮಾಹೇಶ್ವರಸ್ಥಲ ಅಪ್ಪುವಿನಂತೆಂದಲ್ಲಿ,
ಪ್ರಸಾದಿಸ್ಥಲ ಅಗ್ನಿಯಂತೆಂದಲ್ಲಿ,
ಪ್ರಾಣಲಿಂಗಿಸ್ಥಲ ವಾಯುವಿನಂತೆಂದಲ್ಲಿ,
ಶರಣಸ್ಥಲ ಆಕಾಶ ಆವರಣದಂತೆಂದಲ್ಲಿ,
ಐಕ್ಯಸ್ಥಲ ಮಹದಾಕಾಶದ ಮಹಾಬೆಳಗಿನ
ಕಳೆಯ ಒಳಕೊಂಡಿಪ್ಪುದೆಂದಲ್ಲಿ,
ಇಂತೀ ಷಟ್ಸ್ಥಲಕ್ಕೆ ಒಂದ ನೆಮ್ಮಿ ಒಂದನತಿಗಳೆದೆಹೆನೆಂದಡೆ,
ಸಂಶಯಕ್ಕೆ ಸಂಬಂಧ,
ಅದು ಸದ್ಯೋಜಾತಲಿಂಗಕ್ಕೆ ಅಸಂಬಂಧವಾಗಿಹುದು./71
ಭಕ್ತಸ್ಥಲ ಪೃಥ್ವಿರೂಪೆಂದಲ್ಲಿ ಸರ್ವಮಯ ಅಧೀನನಾಗಿರಬೇಕು.
ಮಾಹೇಶ್ವರಸ್ಥಲ ಅಪ್ಪುರೂಪೆಂದಲ್ಲಿ ಚರಸ್ಥಾವರಾದಿಕಂಗಳಲ್ಲಿ
ಸರ್ವಸಾರಮಯನಾಗಿರಬೇಕು
ಪ್ರಸಾದಿಸ್ಥಲ ಅಗ್ನಿರೂಪಾದಲ್ಲಿ ತಾನೆನ್ನದೆ ಸೋಂಕಿದುದೆಲ್ಲ
ದಗ್ಧಸ್ವರೂಪವಾಗಿರಬೇಕು.
ಪ್ರಾಣಲಿಂಗಿಸ್ಥಲ ವಾಯುವಂತಾಗಬೇಕೆಂಬಲ್ಲಿ
ಸುಗುಣ ದುರ್ಗುಣ ರೋಚಕ ಅರೋಚಕವಿಲ್ಲದೆ
ಆವಾವ ರೂಪಿನಲ್ಲಿಯೂ ಸಂಚರಿಸಲಿಕ್ಕೆ ಪರಿಪೂರ್ಣವಾಗಿಪ್ಪ ತೆರದಂತೆ.
ಶರಣಸ್ಥಲ ಆಕಾಶದಂತೆ ಆಗಬೇಕೆಂದಲ್ಲಿ
ಕುಶಬ್ದ ಸುಶಬ್ದಂಗಳೆಂಬಲ್ಲಿ ಭಿನ್ನಭಾವವಿಲ್ಲದೆ
ಉಭಯ ಧೂಮ್ನಂಗಳ ಕವಳೀಕರಿಸಿಕೊಂಡು ಭಾವರಹಿತವಾಗಿಪ್ಪುದು.
ಐಕ್ಯಸ್ಥಲ ಮಹದಾಕಾಶದಂತೆ ಆಗಬೇಕೆಂಬಲ್ಲಿ
ಬೆಳಗಿನ ಕಳೆ ಆವರಣದಲ್ಲಿ ಅಳಿದಂತೆ
ಕುಂಭದ ವೆಜ್ಜದಲ್ಲಿ ನೀರು ಇಂಗಲಿಕ್ಕೆ ತನ್ನ ಬಿಂಬ ಅಲ್ಲಿಯೆ ಹಿಂಗಿದಂತೆ
ಸ್ವಪ್ನದಲ್ಲಿ ದೃಷ್ಟವ ಕಂಡು ಎಚ್ಚತ್ತಲ್ಲಿ ಅದೃಶ್ಯವಾದಂತೆ
ವಾಯು ಬೆಳಗಕೊಂಡು ಎಯ್ದೆ ವಾಯುವಿನ ಅಂಗದಲ್ಲಿಯೆ ನಿಶ್ಚಯವಾದಂತೆ,
ಇದು ಷಟ್ಸ್ಥಲನಿರ್ವಾಹ, ಸದ್ಯೋಜಾತ ಲಿಂಗಕ್ಕೆ ಏಕೀಕರಕೂಟ./72
ಭಕ್ತಸ್ಥಲಕ್ಕೆ ವಿಶ್ವಾಸ ಶ್ರದ್ಧೆ ಸನ್ಮಾರ್ಗ,
ಮಾಹೇಶ್ವರಸ್ಥಲಕ್ಕೆ ಅಪರಾಧವಂ ಮಾಡದೆ
ನಿಂದೆಗೆ ಒಡಲಲ್ಲದೆ ಅನುಸರಣೆಯ ಕಂಡು ಕೇಳಿ ತಾಳದೆ,
ಪ್ರಸಾದಿಸ್ಥಲಕ್ಕೆ ಶುದ್ಧ-ಸಿದ್ಧ-ಪ್ರಸಿದ್ಧ-ಪ್ರಸನ್ನವೆಂಬುದನರಿಯದೆ
ಮಲಿನ ಅಮಲಿನವೆಂಬುದ ಕಾಣದೆ
ಚಿಕಿತ್ಸೆ ಜಿಗುಪ್ಸೆಯೆಂಬುದ ಭಾವಕಿಲ್ಲದೆ,
ಪ್ರಾಣಲಿಂಗಿಸ್ಥಲಕ್ಕೆ ಅರ್ಪಿತ ಅನರ್ಪಿತಂಗಳನರಿದು
ರಸವನೀಂಟಿದ ಘಟದಂತೆ
ಅಸಿಯ ಮೊನೆಗೆ ಬಂದು ನಿಲುವಂತೆ,
ಶರಣಸ್ಥಲಕ್ಕೆ ತೊಟ್ಟುಬಿಟ್ಟ ಫಳ
ಮರುತ ಸಂಚಾರಿಸಿದಲ್ಲಿಯೆ ಶಾಖೆಯ ಬಿಡುವಂತೆ
ಸ್ತುತಿನಿಂದೆಗಳಲ್ಲಿ ರಾಗವಿರಾಗನಾಗಿ,
ಐಕ್ಯಸ್ಥಲಕ್ಕೆ ಉರಿಕೊಂಡ ಕರ್ಪುರದಂತೆ
ಭ್ರಮರ ಅನುಭವಿಸಿದ ಗಂಧದಂತೆ
ಭೂಸ್ಥಾಪಿತದಂತೆ, ಅನಲಕಾಷ್ಠಪಾಷಾಣದಂತೆ
ದೃಷ್ಟವ ಕಾಬನ್ನಕ್ಕ ಷಟ್ಸ್ಥಲಸಂಬಂಧ.
ಇಂತೀ ಸ್ಥಲಂಗಳನಾರೋಪಿಸಿದಲ್ಲಿ
ಸದ್ಯೋಜಾತಲಿಂಗವು ಸಂಬಂಧನಪ್ಪನು./73
ಭಕ್ತಿಯೆಂಬುದು ಅಪ್ರಮಾಣು ನೋಡಾ.
ಭಕ್ತನಾದಡೆ ಸರ್ವಗುಣಸಂಪನ್ನನಾಗಿ
ಕರ್ತೃ ಕಾಮಿಸಿದಲ್ಲಿ ಕಾಣದಂತಿರಬೇಕು.
ಕರ್ತೃ ಕ್ರೋಧಿಸಿದಲ್ಲಿ ಎನ್ನ ನಲ್ಲ ಪರಾಧೀನವೆಂದಂತಿರಬೇಕು.
ಕರ್ತೃ ಲೋಭಿಸಿದಲ್ಲಿ ತನ್ನ ಬೈಕೆಯ ತಾನೊಯ್ದನೆಂದರಿಯದಿರಬೇಕು.
ಹೀಗಲ್ಲದೆ, ಇವ ತಾಳಲರಿಯದೆ ಮಾಡುವ ಮಾಟ
ಆತ ಭಕ್ತನಲ್ಲ, ದಾತೃಸಂಬಂಧಿ.
ಇದು ಕಾರಣ ಸದ್ಯೋಜಾತಲಿಂಗವನರಿದು ಮುಟ್ಟಬೇಕು./74
ಭೂಪುಡಿ ಅಪ್ಪುವ ಕೂಡಿದಲ್ಲಿ ಮೃತ್ಪಿಂಡವಾದಂತೆ,
ಅಪ್ಪು ಆರಲಿಕ್ಕೆ ಮೃತ್ಪಿಂಡವ ಒಡೆದಲ್ಲಿ
ಅಪ್ಪು ಎಲ್ಲಿ ಅಡಗಿತ್ತೆಂಬುದನರಿದಲ್ಲಿ ಪಿಂಡಜ್ಞಾನಸಂಬಂಧಿ.
ಈ ಸಂಪುಟದಿಂದ ಆತ್ಮಘಟದ ಸಂಜ್ಞೆ.
ಈ ಸಂಚದಿಂದ ಸದ್ಯೋಜಾತಲಿಂಗದಲ್ಲಿ ಮುಂಚಬೇಕು. /75
ಮಧುರ ಚೂರ್ಣಕ್ಕೆ ಕಠಿಣದ ಪದರ ಉಂಟೆ?
ವಿಶ್ವಾಸದಲ್ಲಿ ಪೂಜಿಸುವಾತಂಗೆ
ಉತ್ತಮ ಕನಿಷ್ಠ ಮಧ್ಯಮವೆಂದು ಲಕ್ಷಿಸಲುಂಟೆ?
ಮಾಹೇಶ್ವರ ಅರ್ಚನೆಯ ಮಾಡುವಲ್ಲಿ ಮಹಾದೇವ ತಪ್ಪದೆಯಿಪ್ಪ,
ಇದು ಭಕ್ತಿವಿಶ್ವಾಸಸ್ಥಲ ಸದ್ಯೋಜಾತಲಿಂಗಕ್ಕೆ./76
ಮರನನೇರದೆ ಹಣ್ಣು ಕೊಯ್ಯಬಹುದೆ?
ಕುಸುಮವಿಲ್ಲದೆ ಗಂಧವ ಮುಡಿಯಬಹುದೆ?
ಉಪದೃಷ್ಟವಿಲ್ಲದೆ ನಿಜದೃಷ್ಟವ ಕಾಣಬಹುದೆ?
ಕ್ರೀಶ್ರದ್ಧೆಯಿಲ್ಲದೆ ತ್ರಿವಿಧಕರ್ತೃ ತನಗೆ ಸಾಧ್ಯವಪ್ಪುದೆ?
ಇದು ಕಾರಣ ಗುರುವಿನಲ್ಲಿ ಸದ್ಭಾವ, ಲಿಂಗದಲ್ಲಿ ಮೂರ್ತಿಧ್ಯಾನ,
ಜಂಗಮದಲ್ಲಿ ತ್ರಿವಿಧಮಲದೂರಸ್ಥನಾಗಿಪ್ಪುದು,
ಸದ್ಭಕ್ತನಂಗ, ಚಿದ್ಘನವಸ್ತುವಿನ ಸಂಗ, ಸದ್ಯೋಜಾತಲಿಂಗಕ್ಕೆ ಸುಸಂಗ./77
ಮುಟ್ಟಿದಲ್ಲಿ ಬ್ರಹ್ಮನ ಕೊಂದು, ಅರ್ಪಿತದಲ್ಲಿ ವಿಷ್ಣುವ ಕೊಂದು,
ತೃಪ್ತಿಯಲ್ಲಿ ರುದ್ರನ ಕೊಂದು,
ಇಂತೀ ತ್ರಿವಿಧ ಭೇದ ಸತ್ತು ತಾನುಳಿದ ಭೇದವ ಕಂಡುನಿಂದ
ನಿಜಲಿಂಗಪ್ರಾಣ ಸದ್ಯೋಜಾತಲಿಂಗದಲ್ಲಿ. /78
ಮುಟ್ಟುವುದು ತಟ್ಟುವುದು ಸೋಂಕುವುದು ಸುಳಿವುದು
ಲಿಂಗ ಮುಂತೆಂಬಲ್ಲಿ ಅಂಗ ಹಿಂಚೆಂಬಲ್ಲಿ,
ಮುಂದುಹಿಂದಣ ಉಭಯವನರಿವುದಕ್ಕೆ ಸಂದೇಹಾಸ್ಪದವಾದಲ್ಲಿ
ಅದು ಅನರ್ಪಿತಭೇದ ಸದ್ಯೋಜಾತಲಿಂಗಕ್ಕೆ./79
ಮೊನೆಯಿಲ್ಲ[ದೆ] ಮುಂಡವ ಹಿಡಿದು ಇರಿದಲ್ಲಿ
ಗಾಯಕ್ಕೆ ಕುರುಹುಂಟೆ?
ದೇವಪದನಿಷ್ಠೆಯಿಲ್ಲದಲ್ಲಿ ಅರ್ಚಿಸಿ ಪೂಜಿಸಲಿಕ್ಕೆ ದೃಷ್ಟವುಂಟೆ?
ಇದು ಕಾರಣದಲ್ಲಿ
ಕ್ಷುಧೆಗೆ ಅನ್ನ, ಸಮಯಕ್ಕೆ ಕ್ಷಮೆ, ನೆರೆ ಅರಿದವರಲ್ಲಿ ಹೊರೆಯಿಲ್ಲದ ಕೂಟ,
ಭಕ್ತಿ ಜ್ಞಾನ ಉಭಯಸ್ಥಲಲೇಪ ಸದ್ಯೋಜಾತಲಿಂಗಕ್ಕೆ. /80
ರಸದ ಸಾರ, ಗಂಧದ ಸುಗುಣ, ರೂಪಿನ ಚಿತ್ರ, ಶಬ್ದದ ಘೋಷ,
ಸ್ವರ್ಶನದ ಮೃದು ಕಠಿಣಂಗಳ ಅರಿದರ್ಪಿಸಬೇಕು.
ಅರಿದರ್ಪಿಸುವುದಕ್ಕೆ ಸಂದೇಹವ ಗಂಟನಿಕ್ಕಿ
ಒಂದೊಂದೆಡೆಯ ಅರಿದೆಹೆನೆಂದಡೆ,
ಭಿತ್ತಿ ಮೂರು, ಲಕ್ಷಣವೈದು, ಮಾರ್ಗವಾರು,
ವಿಭೇದ ಮೂವತ್ತಾರು, ತತ್ವವಿಪ್ಪತ್ತೈದು,
ಸ್ಥಲನೂರೊಂದರಲ್ಲಿ ಹೊರಳಿ ಮರಳಿ ಮತ್ತೊಂದರಲ್ಲಿಯೆ ಕೂಡುವುದಾಗಿ
ಒಂದೆ ಎಂದು ಸಂದೇಹವ ಬಿಟ್ಟಲ್ಲಿ, ಉತ್ತರಾಂಗಿಯ ಅರ್ಪಿತ.
ಉಭಯವೆಂದಲ್ಲಿ ಪೂರ್ವಾಂಗಿಯ ಉಭಯದೃಷ್ಟ
ಇವು ಅಲಕ್ಷ್ಯವಾದಲ್ಲಿ ಸದ್ಯೋಜಾತಲಿಂಗವಿಪ್ಪ ಭೇದ. /81
ರಸದಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು, ಎನಬಹುದು, ಎನಬಾರದು.
ಗಂಧದಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು, ಎನಬಹುದು, ಎನಬಾರದು.
ರೂಪಿನಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು, ಎನಬಹುದು, ಎನಬಾರದು.
ಶಬ್ದಂಗಳಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು, ಎನಬಹುದು, ಎನಬಾರದು.
ಸ್ಪರ್ಶನದಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು ಎನಬಹುದು, ಎನಬಾರದು.
ಇಂತೀ ಪಂಚೇಂದ್ರಿಯಂಗಳಲ್ಲಿ ಬಹುದು ಬಾರದು ಎಂಬ
ಉಭಯವನರಿದು ಅರ್ಪಿಸಬೇಕು, ಸದ್ಯೋಜಾತಲಿಂಗದಲ್ಲಿ./82
ರೂಪಿಲ್ಲದ ನಾಮವ ಕರೆದಡೆ
ಅದೇತರಿಂದ ಲಕ್ಷಿಸಬಹುದು?
ಇಂತೀ ಸ್ಥಲರೂಪಕನಾಗಿ ಸದ್ಯೋಜಾತಲಿಂಗವನರಿದು
ನಿಃಸ್ಥಲವಾಗಬೇಕು./83
ಲಿಂಗಪ್ರಾಣ ಪ್ರಾಣಲಿಂಗ ಎಂಬ ಉಭಯದ ಮಧ್ಯದಲ್ಲಿ ನಿಂದು
ಅರಿದರಿಹಿಸಿಕೊಂಬ ಪರಿಯಿನ್ನೆಂತೊ?
ಅದು ತತ್ತಿಯೊಳಗಿದ್ದ ಶುಕ್ಲಶೋಣಿತದಂತೆ.
ಆ ತತ್ತಿಯ ಭಿತ್ತಿಯ ಮರೆಯಲ್ಲಿ ಪಕ್ಷಿಯ ಸ್ಪರ್ಶನದಿಂದ ಬಲಿದು,
ಭಿತ್ತಿ ಒಡೆದು ಪಕ್ಷಿ ತದ್ರೂಪಾಗಿ ರಟ್ಟೆ ಬಲಿವನ್ನಕ್ಕ,
ಇಂತಪ್ಪಠಾವಿನಲ್ಲಿದ್ದು ತಾಯಿಯಿತ್ತ ಕುಟುಕ ಕೊಂಡು ಆ ಘಟ ಬಲಿದು,
ರಟ್ಟೆಯ ಲಕ್ಷಣ ಯುಕ್ತಿಗೊಂಡು ಚರಿಸಿದ ಭೇದ ಪಿಂಡಜ್ಞಾನಸಂಬಂಧ. ಆ
ಗುಣ ಅಭಿಮುಖವಾಗಿ ಚರಿಸಲಿಕ್ಕೆ ಜ್ಞಾನಪಿಂಡಸಂಬಂಧ.
ಇಂತು ಪಿಂಡಜ್ಞಾನ ಜ್ಞಾನಪಿಂಡ ಉಭಯಲೇಪ
ಸದ್ಯೋಜಾತಲಿಂಗದಲ್ಲಿ./84
ಲಿಂಗವನರಿದು ಮುಟ್ಟಬೇಕೆಂಬಲ್ಲಿ
ಅರಿವುದು ಲಿಂಗಕ್ಕೆ ಹೊರಗೆ ?
ಲಿಂಗದಿಂದ ಅರಿದ ಅರಿವು ತಾನಾಗಿ
ಬೇರೆ ದ್ವೈತವೆನಲಿಲ್ಲ, ಅದ್ವೈತವೆನಲಿಲ್ಲ.
ಅದು ತರುವಿನ ತಿಗುಡಿನ ಸಾರದಂತೆ,
ಆ ತರುವಿನ ಒಡಗೂಡಿಯೆ ಸುಖದುಃಖವ ಅನುಭವಿಸುವಂತೆ,
ಅರಿದು ಅರ್ಪಿಸುವ ಕ್ರೀ ಸದ್ಯೋಜಾತಲಿಂಗದಲ್ಲಿ ಲೇಪ./85
ಲಿಂಗವೆ ಅಂಗವಾದ ಮತ್ತೆ ಮುಟ್ಟಿಸಿಕೊಂಬುವರಿನ್ನಾರು?
ಲಿಂಗವೆ ಪ್ರಾಣವಾದ ಮತ್ತೆ ಅರ್ಪಿಸಿಕೊಂಬುವರಿನ್ನಾರು?
ಅಂಗ ಲಿಂಗವೆಂದಡೆ ತನು ಪ್ರಾಪ್ತಿಗೆ ಒಳಗು.
ಮನ ಲಿಂಗವೆಂದಡೆ ಅದು ಭವಕ್ಕೆ ಬೀಜ.
ಈ ಉಭಯದ ಅಳಿವುಳಿವ ತಿಳಿದು, ಅಂಗ ಮನಸ್ಸು ಒಂದುಗೂಡಿ,
ಪುಂಜವ ಬೆಗಡಿಸುವ ವಜ್ರದ ಮೊನೆಯಂತೆ
ಲಿಂಗದ ಭೇದಗೂಡಿಯೆ ಅಂಗ ನಿರಿಯಾಣವಾದಲ್ಲಿದ
ಅದು ಲಿಂಗಾಂಗಿಯ ಸ್ಥಲ ಸದ್ಯೋಜಾತಲಿಂಗಕ್ಕೆ. /86
ವಮನವ ಮಾಡಿದ ಅಪೇಯವ ಕ್ಷುಧೆಯಾಯಿತೆಂದು ಮುಟ್ಟುದು ಕುನ್ನಿ.
ಅಮಲವಸ್ತು ತ್ರಿವಿಧವ ಮಲವೆಂದು ಕಳೆದು, ಮತ್ತಾಗೆ ತಲೆದೋರಿ,
ಲಿಂಗ ಮುಂತಾಗಿ ಕೊಟ್ಟುಕೊಳಬಹುದೆಂದು ಸಂದೇಹವನಿಕ್ಕಬಹುದೆ?
ಬಿಟ್ಟೆನೆಂಬ ಭ್ರಾಮಕವಿಲ್ಲದೆ, ಹಿಡಿದಲ್ಲಿ ಕಲೆದೋರದೆ,
ಸುಖದುಃಖವೆಂಬುದನರಿಯದೆ,
ನೆರೆ ಅರಿದು ಹರಿದು, ಆ ಹರಿದರಿವೆ ಕರಿಗೊಂಡು ನಿಂದಲ್ಲಿ
ಆತ ಉಂಡು ಉಪವಾಸಿಯಪ್ಪ, ಬಳಸಿ ಬ್ರಹ್ಮಚಾರಿಯಪ್ಪ,
ಸದ್ಯೋಜಾತಲಿಂಗದಲ್ಲಿ ಉಭಯವಳಿದ ಶರಣ./87
ವೇದವ ಗ್ರಹಿಸಿದೆನೆಂದು ಕರ್ಮವ ಬಿಡಬಹುದೆ?
ಸಕಲಶಾಸ್ತ್ರವ ವೇದಿಸಿದೆನೆಂದು ಪಾಪಪುಣ್ಯವಿಲ್ಲಾ ಎಂದು ನಡೆಯಬಹುದೆ?
ಪುರಾಣದ ಪೂರ್ವವ ಬಲ್ಲೆನೆಂದು ನೆಲೆ ಹೊಲೆ ಕುಲ ಛಲ ಒಂದೆನ್ನಬಹುದೆ?
ಮಧುರ ಖಾರ ಕಹಿಯನರಿವನ್ನಕ್ಕ ಕ್ರೀ ಹೇಗೆ ಇದ್ದಿತ್ತು,
ವರ್ತನಶುದ್ಧ ಹಾಗಿರಬೇಕು,
ಸದ್ಯೋಜಾತಲಿಂಗವನರಿವುದಕ್ಕೆ ಭಕ್ತಿಮಾರ್ಗ. /88
ಶಬ್ದ ರೂಪಿನೊಳಗೆ ಅಡಗುವುದ ಬಲ್ಲಡೆ ದ್ವೈತಿ,
ಆ ರೂಪು ನಿಃಶಬ್ದಕ್ಕೊಡಲಾಗಿ ಮುಗ್ಧವಾದುದ ಬಲ್ಲಡೆ ಅದ್ವೈತಿ.
ಈ ಉಭಯದ ಹೊದ್ದಿಗೆಯ ಹೊದ್ದರೆ ನಿರ್ಧರವಾದಲ್ಲಿ
ಸದ್ಯೋಜಾತಲಿಂಗ ಬಟ್ಟಬಯಲು. /89
ಶರೀರಕ್ಕೆ ರುಜೆ ಬಂದು ತೊಡಕಿದಲ್ಲಿ ರುಜೆಯ ಭೇದವನರಿತು,
ಶರೀರಧರ್ಮವನರಿತು
ತನುವಿಗೆ ಚಿಕಿತ್ಸೆ, ಆತ್ಮಂಗೆ ಸುಖರೂಪು
ಉಭಯವನರಿದು ಆರೈವ ಕಾರಣ ಪಂಡಿತನಪ್ಪ.
ಇಂತೀ ಭೇದದಂತೆ ಗುರುಚಾರಿತ್ರನಾಗಿ, ಶಿವಲಿಂಗಪೂಜಕನಾಗಿ,
ಚರಸೇವೆಸನ್ನದ್ಧನಾಗಿ,
ಇಂತೀ ಸತ್ಕ್ರೀಗಳಲ್ಲಿ ನಿರ್ಧರವಪ್ಪ ಮಹಾಭಕ್ತನಿಪ್ಪುದೆ
ಸದ್ಯೋಜಾತಲಿಂಗದ ಸೆಜ್ಜಾಗೃಹ. /90
ಶಿಲೆಯ ಘಟಂಗಳಲ್ಲಿ ಪ್ರಜ್ವಲಿತದ ರ[ವಿ]
ಸ್ಥೂಲಕ್ಕೆ ಸ್ಥೂಲವಾಗಿ, ಸೂಕ್ಷ್ಮಕ್ಕೆ ಸೂಕ್ಷ್ಮವಾಗಿ ಇಪ್ಪ ಭೇದದಂತೆ,
ಅರಿದು ಕೂಡುವ ಜ್ಞಾನದ ಸತ್ವ ಜಾತಿಕುಲವಾದಡೆ ಸಾಕು, ವಿಜಾತಿಯ ಬೆರಸದೆ.
ಸತ್ವಕ್ಕೆ ತಕ್ಕ ಸಾಮಥ್ರ್ಯ ನಡೆ, ಸತ್ವಕ್ಕೆ ತಕ್ಕ ನುಡಿ,
ನುಡಿ ಸತ್ವಕ್ಕೆ ತಕ್ಕ ಜ್ಞಾನ,
ಜ್ಞಾನಸತ್ವಕ್ಕೆ ತಕ್ಕ ಏಕೀಕರ.
ಇಂತೀ ಜ್ಞಾನೋದಯಭೇದ,
ಸದ್ಯೋಜಾತಲಿಂಗವ ಭೇದಿಸಿದ ಅಂಗ./91
ಶುದ್ಧಕರ್ಮವಿಲ್ಲದ ಭಕ್ತಿ, ವರ್ಮವಿಲ್ಲದ ವಿರಕ್ತಿ,
ಸದಾಸನ್ನದ್ಧವಿಲ್ಲದ ಪೂಜೆ, ವೃಥಾಹೋಹುದಕ್ಕೆ ಇದೆ ಪಥ.
ಅನ್ನ ಉದಕ ಹೆಣ್ಣು ಹೊನ್ನು ಮಣ್ಣನಿತ್ತು
ವರ್ಮವ ಮುಟ್ಟದೆ ಸತ್ಕರ್ಮವನರಿಯದೆ
ಕುನ್ನಿ ಧ್ಯಾನಿಸಿ ಹೇಯವೆಂದರಿದು ತಲೆಗೊಡಹಿದಲ್ಲಿ ಮರೆದಂತಾಗದೆ,
ನಿಜನಿಶ್ಚಯವನರಿದು ಕುರುಹಿಡಬೇಕು,
ಸದ್ಯೋಜಾತಲಿಂಗವ. /92
ಷಟ್ಸ್ಥಲ ಮುಂತಾದ ಪಂಚವಿಂಶತಿತತ್ವ,
ಏಕೋತ್ತರಶತಸ್ಥಲ ಮುಂತಾದ ಕ್ರಿಯಾಧರ್ಮಂಗಳಲ್ಲಿ
ಆಚರಿಸುವುದು ಪೂರ್ವಕಕ್ಷೆಯ ಭೇದ.
ಉತ್ತರಕಕ್ಷೆಯಲ್ಲಿ ಲಕ್ಷಿಸಿ ನೋಡಿಹೆನೆಂದಡೆ,
ದ್ವೈತಾದ್ವೈತಂಗಳ ತಿಳಿದು, ಸಕಲ ನಿಃಕಲವ ವಿಚಾರಿಸಿ,
ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳ ಕಂಡು,
ಇಷ್ಟಕಾಮ್ಯಮೋಕ್ಷಂಗಳ ಗೊತ್ತಗೆಟ್ಟು
ತೂರ್ಯಾತುರೀಯವೆಂಬವ ಪರಿಹರಿಸಿ,
ತೀತ ಅತೀತವಪ್ಪುದನು ಕುರುಹಿಟ್ಟು,
ಸುರಾಳ ನಿರಾಳ ನಿರವಯಸ್ಥಾನವ ಭೇದಿಸಿ ವೇದಿಸಿ,
ಘೃತಪಾನವ ಸ್ವೀಕರಿಸಿದ ನಾಲಗೆಯಂತೆ ಬಂಧವಿಲ್ಲದೆ
ತತ್ವಮಸಿಯೆಂಬ ಭಿತ್ತಿಯ ಮೆಟ್ಟದೆ
ಜಲವ ಹೊಯಿದಡೆ ಆ ಜಲಕ್ಕೆ ಆಯುಧದ ಕಲೆದೋರದಂತೆ
ನಿಂದ ನಿಜದೊಳಗು ಉತ್ತರಕಕ್ಷೆಯ ಭೇದ.
ಇಂತೀ ಉಭಯಕಕ್ಷೆಯಲ್ಲಿ ರಾಗವಿರಾಗವನರಿದು,
ನಿಶ್ಶಬ್ದ ನಿರ್ಲೇಪವಾಗಿ ಸದ್ಯೋಜಾತಲಿಂಗವ ಕೊಡಬೇಕು./93
ಸಕಲಕರ್ಮಂಗಳಲ್ಲಿ ಕೂಡಿದ್ದಡೂ
ನಾನಾ ಕರ್ಮ ಧರ್ಮವನರಿದಿರಬೇಕು.
ನಾನಾ ಕರ್ಮಂಗಳನರಿದಡೂ
ಅಳಿವು ಉಳಿವು ಉಭಯದ ವರ್ಮವನರಿಯಬೇಕು.
ವರ್ಮವನರಿದಡೂ ಅಂತಿಂತೆನ್ನದೆ ಸುಮ್ಮನಿರಬೇಕು.
ಸುಳುಹು ಸೂಕ್ಷ್ಮನಾಶನವಾಗಿ
ಸದ್ಯೋಜಾತಲಿಂಗದಲ್ಲಿ ವಿನಾಶನವಾಗಬೇಕು. /94
ಸಕಲಪದಾರ್ಥ ರಸದ್ರವ್ಯಂಗಳ ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ
ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ
ತನ್ನಂಗವರಿದು ಲಿಂಗವ ಮುಟ್ಟಬೇಕು.
ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ ಮೃದು ಸವಿಸಾರ ರುಚಿಗಳನರಿದು
ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ ಅರ್ಪಿತ ಇತ್ತಲೆ ಉಳಿಯಿತ್ತು.
ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು
ಅರ್ಪಿತದ ಭೇದವನರಿಯದೆ
ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು
ಮೊದಲಿಗೆ ಮೋಸ, ಲಾಭಕ್ಕಧೀನವುಂಟೆ?
ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ?
ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರುರಿ
ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ.
ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ.
ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ ಆತ್ಮ ಅನುಭವಿಸುವಂತೆ.
ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ.
ಇಂತೀ ಉಭಯವನರಿಯಬೇಕು ಅರ್ಪಿಸಬೇಕು ಸದ್ಯೋಜಾತಲಿಂಗದಲ್ಲಿ./95
ಸತ್ತು ಜೀವನೆಂದು ಆತ್ಮ ಕುರುಹಾಗಿ
ಅರಿವು ತಲೆದೋರಿ ಅಂಗದ ಕುರುಹ ನುಂಗಿತ್ತು.
ನುಂಗಿದ ಅರಿವ ನುಂಗಿಸಿಕೊಂಡು ಕುರುಹ ಆನಂದ ನುಂಗಿತ್ತು.
ಆನಂದದ ಬೆಂಬಳಿಯಲ್ಲಿ ನಂದಿ
ಸದ್ಯೋಜಾತಲಿಂಗವ ಕೂಡಿಕೊಂಡಿತ್ತು./96
ಸದ್ಗುರುವಪ್ಪ ಅಂಡದಲ್ಲಿ ಸದಾತ್ಮವಪ್ಪ ಶಿಷ್ಯ ಪಿಂಡಿತವಾಗಿ,
ಆ ಪಿಂಡಕ್ಕೆ ದಿವ್ಯತೇಜೋಪ್ರಕಾಶವಪ್ಪ ಆತ್ಮ ಪುಟ್ಟಲಿಕ್ಕಾಗಿ,
ಗುರುವಿನ ಕರಂಡವಳಿದು ಆ ಶಿಷ್ಯನ ಪಿಂಡವಳಿದು,
ಮರದಲ್ಲಿ ಉರಿಹುಟ್ಟಿ ಮರನೆಂಬುದು ಕೆಟ್ಟು ಕೆಂಡವಾದಂತೆ,
ಕೆಂಡದ ಬೆಂಬಳಿಯಲ್ಲಿ ನಂದದ ದೀಪವ ಕಂಡು .
ಕುಂದದ ಬೆಳಗಿನಲ್ಲಿ ಕೂಡಬೇಕು ಸದ್ಯೋಜಾತಲಿಂಗವ. /97
ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ,
ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ.
ಬೀಜ ಒಳಗು, ಹಿಪ್ಪೆ ಹೊರಗು
ರಸ ಮಧ್ಯದಲ್ಲಿಪ್ಪ ಭೇದವ ನೋಡಾ.
ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು,
ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು,
ಉಭಯದ ಬಲಿಕೆಯಿಂದ ಮಧುರರಸ ನಿಂದುದ ಕಂಡು
ಹಿಪ್ಪೆ ಬೀಜ ಹೊರಗಾದುದನರಿತು
ಆ ರಸಪಾನವ ಸ್ವೀಕರಿಸುವಲ್ಲಿ ಜ್ಞಾನದಿಂದ ಒದಗಿದ ಕ್ರೀ
ಕ್ರೀಯಿಂದ ಒದಗಿದ ಜ್ಞಾನ.
ಇಂತೀ ಭೇದವಲ್ಲದೆ ಮಾತಿಗೆ ಮಾತ ಗಂಟನಿಕ್ಕಿ
ನಿಹಿತ ವರ್ತನವಿಲ್ಲದೆ ಸರ್ವತೂತಾಲಂಬರ ಮಾತು ಸಾಕಂತಿರಲಿ.
ಕ್ರೀಯಲ್ಲಿ ಮಾರ್ಗ, ಭಾವದಲ್ಲಿ ನೆಮ್ಮುಗೆ,
ದಿವ್ಯಜ್ಞಾನದಲ್ಲಿ ಕೂಟ.
ಇದು ಸದ್ಯೋಜಾತಲಿಂಗದ ಷಟ್ಸ್ಥಲ ಲೇಪದಾಟ. /98
ಸ್ಥಲವನಂಗೀಕರಿಸಿದಲ್ಲಿ ಸ್ಥಲಂಗಳ ಮೆಟ್ಟಿ ನಡೆವಲ್ಲಿ
ಮೆಟ್ಟಿದ ಹೆಜ್ಜೆಯ ಮೆಟ್ಟಿ ನಡೆವ ಗಾಣದ ಎತ್ತಿನಂತಾಗದೆ,
ಪುರೆ ಎಂದಲ್ಲಿ ಕಳಾಸ ನಿಂದಿತ್ತು,
ಸ್ಥಲಂಗಳನಾರೋಪಿಸಿ ಅಭಿಮುಖವಾದಲ್ಲಿ
ಸದ್ಯೋಜಾತಲಿಂಗವ ಕೂಡಿಕೊಂಡಿತ್ತು. /99
ಸ್ಥಲವಿವರಂಗಳ ವಿಚಾರಿಸುವಲ್ಲಿ
ಘಟಕ್ಕೆ ಕರ ಚರಣ ನಾಸಿಕ ನಯನ ಕರ್ಣ
ಮುಂತಾದ ಅವಯವಂಗಳೊಳಗಾದ ಭೇದವ
ಘಟ ಗರ್ಭಿಕರಿಸಿಕೊಂಬತೆ
ಆ ಘನವ ಚೇತನ ವಸ್ತು ಹೊತ್ತಾಡುವಂತೆ,
ಇದು ಸ್ಥಲವಿವರ ಸದ್ಯೋಜಾತಲಿಂಗವನರಿವುದಕ್ಕೆ./100
ಸ್ಥೂಲತನುವಿನಲ್ಲಿ ಸೂಕ್ಷ್ಮತನು ಆಧೀನವಾಗಿಪ್ಪುದನರಿದು
ಸೂಕ್ಷ್ಮತನುವಿನಲ್ಲಿ ಕಾರಣತನು ಆಧೀನವಾಗಿಪ್ಪುದನರಿದು ಇರಬೇಕು ಎಂಬಲ್ಲಿ
ಜಾಗ್ರದಲ್ಲಿ ಸ್ಥೂಲತನು ಕಂಡು, ಸೂಕ್ಷ್ಮತನುವಿಗೆ ಹೇಳಿತೆ ಸ್ವಪ್ನವ ?
ಆ ಸ್ವಪ್ನ ಕಾರಣತನುವಿನಲ್ಲಿ ಅಳಿಯಿತ್ತೆ ಕೂಡಿಕೊಂಡು ?
ಕಟ್ಟಿಗೆಯ ಹಿಡಿಯಬಹುದಲ್ಲದೆ ಕೆಂಡವ ಹಿಡಿಯಬಹುದೆ ?
ಕೆಂಡವ ಒಂದರಲ್ಲಿ ಬಂಧಿಸಿ ಹಿಡಿಯಬಹುದಲ್ಲದೆ
ಉರಿಯ ಬಂಧಿಸಿ ಹಿಡಿಯಬಹುದೆ ?
ಆ ಉರಿ ಕೆಂಡದಲ್ಲಿ ಅಡಗಿ, ಕೆಂಡ ಕಾಷ್ಠದಲ್ಲಿ ಅಡಗಿ,
ಆ ಕಾಷ್ಠ ಆ ಕೆಂಡ ಉರಿಯ ದೆಸೆ, ಆ ಉರಿ ಕಾಷ್ಠದ ದೆಸೆ.
ಆ ಕಾಷ್ಠದಿಂದ ಕೆಂಡವಾಗಿ,
ಆ ಕೆಂಡಕ್ಕೆ ಪ್ರತಿರೂಪಿನಿಂದ ಉರಿ ಪಲ್ಲಯಿಸುವಂತೆ
ಇಂತೀ ಸ್ಥೂಲ ಸೂಕ್ಷ್ಮ ಕಾರಣ ತನುತ್ರಯದ ಭೇದ
ಸದ್ಯೋಜಾತಲಿಂಗವನರಿವುದಕ್ಕೆ./101
ಸ್ಪರ್ಶನದಲ್ಲಿ ಇಂಬಿಟ್ಟ ಭೇದವ ಕಂಡು,
ಶಬ್ದದಲ್ಲಿ ಸಂಚಾರಲಕ್ಷಣವನರಿತು,
ರೂಪಿನಲ್ಲಿ ಚಿತ್ರವಿ ಚಿತ್ರವಪ್ಪ ಲಕ್ಷಣವ ಲಕ್ಷಿಸಿ,
ಗಂಧದಲ್ಲಿ ಸುಗುಣ ದುರ್ಗಣವನರಿವುದು ಒಂದೆ ನಾಸಿಕವಪ್ಪುದಾಗಿ
ಒಳಗಿರುವ ಸುಗುಣವ
ಹೊರಗೆ ನೇತಿಗಳೆವ ದುರ್ಗಣ[ವು]
ಮುಟ್ಟುವುದಕ್ಕೆ ಮುನ್ನವೇ ಅರಿಯಬೇಕು.
ಅರಿಯದೆ ಸೋಂಕಿದಲ್ಲಿ ಅರ್ಪಿತವಲ್ಲಾ ಎಂದು,
ಅರಿದು ಸೋಂಕಿದಲ್ಲಿ ಅರ್ಪಿತವೆಂದು
ಕುರುಹಿಟ್ಟುಕೊಂಡು ಇಪ್ಪ ಅರಿವು ಒಂದೊ, ಎರಡೊ ಎಂಬುದನರಿದು
ರಸದಲ್ಲಿ ಮಧುರ, ಕಹಿ, ಖಾರ, ಲವಣಾಮ್ರ
ಮುಂತಾದವನರಿವ ನಾಲಗೆ ಒಂದೊ? ಐದೊ?
ಇಂತೀ ಭೇದವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು,
ಅನುಮಾನದಲ್ಲಿ ಅರಿದು
ಸದ್ಯೋಜಾತಲಿಂಗದ ಜಿಹ್ವೆಯನರಿತು ಅರ್ಪಿಸಬೇಕು. /102
ಸ್ವಯದಿಂದ ಪ್ರಕಾಶ, ಪ್ರಕಾಶದಿಂದ ಲಿಂಗ, ಲಿಂಗದಿಂದ ಶಿಷ್ಯ,
ಶಿಷ್ಯನಿಂದ ಗುರು, ಗುರುವಿನಿಂದ ಗುರುತ್ವ,
ಗುರುತ್ವದಿಂದ ಸಕಲವೈಭವಂಗಳ ಸುಖ.
ಈ ಗುಣ ಅವರೋಹಾರೋಹಾಗಿ ಬಂದು,
ಆ ವಸ್ತು ವಸ್ತುಕವಾಗಿ ಬಂದುದನರಿದು
ಪಿಂಡಜ್ಞಾನಸ್ಥಲವ ಕಂಡು
ರತ್ನ ರತ್ನ ಕೂಡಿದಂತೆ, ರತಿ ರತಿ ಬೆರಸಿದಂತೆ,
ಸುಖ ಸುಖವನಾಧರಿಸಿದಂತೆ, ಬೆಳಗು ಬೆಳಗಿಂಗೆ ಇದಿರಿಟ್ಟಂತೆ,
ಅಂಡ ಪಿಂಡ ಜ್ಞಾನ ತ್ರಿವಿಧ ನೀನಲಾ,
ಸದ್ಯೋಜಾತಲಿಂಗದ ಲೀಲಾಭಾವ./103
ಹಲವು ಪಥದಿಂದ ಬಂದ ಜಲ ನಿಲುವುದೊಂದು
ಸ್ಥಾಯಿಯಾಗಿ,
ಕಟ್ಟು[ವಡೆ]ದಲ್ಲಿ ಒಂದೆ ದ್ವಾರದಿಂದ ಸೂಸಿ
ಹಲವು ಸ್ಥಲಂಗಳ ಬೆಳೆಗೆ ಹೊಲಬಾದುದಾಗಿ.
ಇಂತೀ ಗುಣದಲ್ಲಿ ನಾನಾ ವಿವರ: ಇಂದ್ರಿಯಂಗಳನೊಂದುಗೂಡಿ, ಸತ್ಕ್ರೀಮಾರ್ಗಂಗಳೆಂಬ
ಘಟತಟಾಂಕಗಳಲ್ಲಿ ವಿಶ್ರಮಿಸಿ,
ಏಕಚಿತ್ತದಲ್ಲಿ ನಾನಾ ಸ್ಥಲಂಗಳನಾರೋಪಿಸಿ,
ವಿಶ್ವಸ್ಥಲಂಗಳಲ್ಲಿ ಪರಿಪೂರ್ಣವಾಗಿ,
ವಸ್ತುವನೊಡಗೂಡಿಪ್ಪುದು ಕ್ರಿಯಾಪಿಂಡ ಜ್ಞಾನಪಿಂಡವಾದ ಭೇದ.
ಉಭಯಲೇಪವಾದಲ್ಲಿ ಪಿಂಡಜ್ಞಾನ, ಜ್ಞಾನಲೇಪವಾದಲ್ಲಿ ಶಬ್ದಮುಗ್ಧ,
ಸದ್ಯೋಜಾತಲಿಂಗದಲ್ಲಿ ಐಕ್ಯಭಾವ./104