Categories
ವಚನಗಳು / Vachanagalu

ಅರಿವಿನ ಮಾರಿತಂದೆಯ ವಚನಗಳು

ಅಂಗದ ಆಪ್ಯಾಯನವ ಆತ್ಮನರಿವಂತೆ,
ಆತ್ಮನ ಸುಖದುಃಖವ ಅಂಗ ತಾಳುವಂತೆ,
ಅಂಗಕ್ಕೂ ಆತ್ಮಕ್ಕೂ ಅನ್ಯಭಿನ್ನವಿಲ್ಲ.
ಪೂಜಿಸುವ ಭಕ್ತ, ಪೂಜಿಸಿಕೊಂಬ ವಸ್ತು ಉಭಯವು
ಸದಾಶಿವಮೂರ್ತಿಲಿಂಗವು ತಾನೆ./1
ಅಂಗದ ಮೇಲೆ ಲಿಂಗವಿಲ್ಲದೆ ವಿಭೂತಿ ರುದ್ರಾಕ್ಷಿಯ ಧರಿಸಲಾಗದು.
ಅದೆಂತೆಂದಡೆ: ಸತಿಪುರುಷರಿಗೆ ಸಂಯೋಗವಲ್ಲದೆ,
ಅಂಗಹೀನಂಗೆ ಹಿಂಗದ ನವರಸವುಂಟೆ ಅಯ್ಯಾ?
ಇಂತೀ ಲಿಂಗಬಾಹ್ಯಂಗೆ ವಿಭೂತಿಯ ಪಟ್ಟವೆಂದು ಕಟ್ಟಿದ ಗುರು
ಕುಂಭೀಘೋರಕ್ಕೆ ಒಳಗು, ಸದಾಶಿವಮೂರ್ತಿಲಿಂಗಕ್ಕೆ ದೂರ./2
ಅಂಗವ ಮರೆದು ಲಿಂಗವನರಿಯಬೇಕೆಂಬರು,
ಕರಣಂಗಳರತು ಘನಲಿಂಗವನರಿಯಬೇಕೆಂಬರು.
ಅದು ನಾನಿಕ್ಕಿದ ತಡೆ ಕೇಳಿರಣ್ಣಾ.
ಆಕಾಶ ಬಯಲಾದಡೆ ಮುಗಿಲು ರೂಪ ತೋರಿ ಅಳಿವ ಪರಿಯಿನ್ನೆಂತೊ?
ನಕ್ಷತ್ರ ಚಂದ್ರ ಸೂರ್ಯಾದಿಗಳು ಗ್ರಹ ಪ್ರವರ್ತನವಹ ಪರಿಯಿನ್ನೆಂತೊ?
ಅವು ವಾಯುಮಯ ಆಧಾರವಾಗಿ ತೋರುತ್ತಿಹ ನೆಮ್ಮುಗೆಯ ಇರವು.
ಅದು ಕಾರಣದಲ್ಲಿ ಅಂಗವಿದ್ದಂತೆ ಲಿಂಗವನರಿಯಬೇಕು,
ಕರಣಂಗಳಿದ್ದಂತೆ ಘನಲಿಂಗವ ಭೇದಿಸಬೇಕು.
ಹೀಗಲ್ಲದೆ ಮರೆದರಿಯಲಿಲ್ಲ, ಅರಿದು ಮರೆಯಲಿಲ್ಲ
ಉಭಯದ ಅಭಿಸಂಧಿಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ./3
ಅಂಗವರಿಯದೆ ಲಿಂಗವಿದ್ದಲ್ಲಿಯೆ ಸಂಗವ ಮಾಡಿ,
ಹಿಂದು ಮುಂದಳ ಸಂದೇಹವ ಮರೆಯಬೇಕು.
ಅಂಗವರತಲ್ಲಿಯೆ ಲಿಂಗವ ಮರೆಯಿತ್ತು.
ಸೆಲೆಯಿಲ್ಲದ ಬಾವಿಯ ತೋಡಿ ಸಂದೇಹಕ್ಕೊಳಗಾಹನಂತಾಗಬೇಡ.
ಉಭಯವು ರೂಪಾಗಿದ್ದಲ್ಲಿ ಅರಿ ಸದಾಶಿವಮೂರ್ತಿಲಿಂಗವ./4
ಅಂಧಕಾರವೆಂಬ ಮನೆಯ ಬಾಗಿಲಲ್ಲಿ ಆರಂಗದ ಕರಡಿ ಕಟ್ಟಿ
ಮೂರಂಗದ ಕೋಡಗ ಏಡಿಸಿ ಕಾಡುತ್ತಿದೆ.
ಮೀರಿದೆನೆಂಬವರೆಲ್ಲರು ಕರಡಿಯ ಗಿಲಗಿನಲ್ಲಿ ಸತ್ತು, ಕೋಡಗದ ಚೇಷ್ಟೆಯಲ್ಲಿ ಸಿಕ್ಕಿ,
ಬೇಡ ನಿಮಗೆ ಆರೂಢದ ಮಾತು.
ಇಂತಿವ ಮೀರಿ ಅರಿದವಂಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ./5
ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ
ಕುಂಭಿನಿಯ ಜಲದಲ್ಲಿ ತೋರುತ್ತಿರೆ ಉಭಯದಲ್ಲಿಯೂ ಬಯಲು.
ಆ ರಂಜನೆಯಂತೆ ಚಿತ್ತದ ಕಲೆ ಚಿತ್ಶಕ್ತಿಯ ಅರಿವು ಮತ್ರ್ಯರಿಗೆ ಅಗೋಚರ.
ಚಿತ್ತಜನ ಬಿಲ್ಲನೆತ್ತುವಾತ ಅನಿತ್ಯದ ಗೊತ್ತಿನಲೈದಾನೆ.
ನಿತ್ಯದ ಗೊತ್ತ ಮುಟ್ಟಿ, ಉಭಯದ ಗೊತ್ತ ಬಚ್ಚಬಯಲಾಯಿತ್ತು.
ಬಯಲ ಬೆಳಗಿನಲ್ಲಿ ಹೊಳಹುದೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ./6
ಅಂಬು ಅಂಬುಜದು[ಭ]ಯ[ದ] ಸಂಗದಲ್ಲಿ
ನಿಃಸಂಗ ಬೆಳಗು ತೋರುತ್ತಿದೆ,
ಸದಾಶಿವಮೂರ್ತಿಲಿಂಗದಲ್ಲಿ. /7
ಅಕ್ಷಿಯ ಮಧ್ಯದ ಕಾಳಿಕೆಯ ನಟ್ಟನಡುವಳ
ಸೂತ್ರ[ದೋ]ರುವ ಚಿನ್ನ ಉಡುಗಿದ ಮತ್ತೆ
ಅಕ್ಷಿಯ ತೆರಪು ಎಷ್ಟಾದಡೇನು?
ಆ ತೆರದಂತೆ, ಲಾಕಿಕದಲ್ಲಿ ಮಾಡುವ ವರ್ತಕ ವಸ್ತುವನರಿಯದ ಜ್ಞಾನ ಧನಕನಕ
ವಾಜಿವಾಹನಂಗಳಿಂದ ಲೇಪನ ಅಂಬರ
ತಸ್ಯಾಂತರ ನಿಳಯಂಗಳಿಂದ
ಕೀರ್ತಿಭೂಷಣಕ್ಕೆ ಮಾಡಿದಡೇನು?
ಇದನಳಿದು ಅದನರಿತು ಉಭಯ ತನ್ಮಯ ನಷ್ಟವಾಗಿ
ಅದರ ಮರೆಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ./8
ಅಗ್ನಿ ಅಂಗವಾಗಿ, ವಾಯು ಪ್ರಾಣವಾಗಿ,
ಉಭಯ ಸಂಗದಂತಿರಬೇಕು, ಅಂಗಲಿಂಗ ಪ್ರಾಣಯೋಗ ಸಂಬಂಧ.
ಅಗ್ನಿ ಮರೆದರೆ ವಾಯುವೆಚ್ಚರಿಕೆಯ ಮಾಡುವಂತೆ,
ಅಗ್ನಿ ಮುಟ್ಟಿದ ಕಾಷ್ಟದೊಳಗಾದ ದ್ರವ್ಯಂಗಳು,ಹಿಂದಳ ನಾಮವುಂಟೆ?
ವಸ್ತುಲೇಪವಾದ ಅಂಗಪ್ರಾಣ ಬೇರೊಂದಿದಿರಿಡಲಿಲ್ಲ.
ಅಂಗಭಾವ ನಿಶ್ಚಯವಾಯಿತ್ತು,
ಸದಾಶಿವಮೂರ್ತಿಲಿಂಗದಲ್ಲಿ ಲೀಯವಾಗಲಿಕ್ಕೆ./9
ಅಜ ಕೊಂಡ ಗ್ರಾಸದ ಮಲವ
ಕುಕ್ಷಿಯಲ್ಲಿ ಹೊಕ್ಕು ಉರುಳಿಸಿದವರುಂಟೆ ಅಯ್ಯಾ?
ಚೂರ್ಣಶಿಲೆಗೆ ಶ್ವೇತವ ಹೂಸಿದವರುಂಟೆ ಅಯ್ಯಾ?
ಮುಳ್ಳಿಗೆ ಮೊನೆಯ, ಎಳ್ಳಿಗೆ ಎಣ್ಣೆಯ ತಂದಿರಿಸಿದವರುಂಟೆ ಅಯ್ಯಾರಿ
ಅವು ತಮ್ಮ ಗೋತ್ರದ ವರ್ತನದ ಇರವು.
ಇವಕ್ಕಿಂದವು ಕಡೆಯೆ?
ಗುರುವಾದಡೆ ಗುರುಸ್ಥಲಕ್ಕೆ ತಪ್ಪದಂತಿರಬೇಕು.
ಜಂಗಮವಾದಡೆ ತನ್ನಯ ಇರವು ಇದಿರಿನ ಇಂಗಿತವನರಿದು,
ಅಂಬುಜಪತ್ರದಲ್ಲಿದ್ದ ಬಿಂದುವಿನಂತೆ ಅಲೇಪವಾಗಿರಬೇಕು.
ಭಕ್ತನಾಗಿದ್ದಲ್ಲಿ ಉಭಯದ ಮಾರ್ಗವ,
ಗುರುವಿನ ಚೊಕ್ಕೆಯವ, ಆ ಜಂಗಮದ ಅಪೇಕ್ಷೆಯ
ಇದಿರಿಟ್ಟು ಕಾಣಿಸಿಕೊಂಡು, ಅವ ತಾನರಿಯದಂತಿರಬೇಕು.
ಅದು ಭಕ್ತಿಮಾರ್ಗಕ್ಕೆ ತಲೆದೋರದ ಇರವು.
ಆ ಗುಣ ಸದ್ಗತಿಯ ಸಾಧನ, ಸದಾಶಿವಮೂರ್ತಿಲಿಂಗದ ಅರಿಕೆ ತಾನೆ./10
ಅನಲ ನಂದಿದ್ದಲ್ಲಿ ವಾಯು ಸಂಗವಲ್ಲದೆ,
ದೀಪದ ಅಂಗಕ್ಕೆ ಬಂದು ನಿಂದಲ್ಲಿ ವಾಯುಸಂಗ ನಾಸ್ತಿಯಾಗಿರಬೇಕು.
ಹಿಡಿವಲ್ಲಿ ಆ ಭೇದ, ಒಡಗೂಡುವಲ್ಲಿ ಈ ಭೇದ.
ಇಂತೀ ತೊಡಿಗೆಯನರಿಯಬೇಕು ಸದಾಶಿವಮೂರ್ತಿಲಿಂಗವನರಿವುದಕ್ಕೆ./11
ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ,
ನಿಜಸ್ವರೂಪ ನಿಃಕಲ[ವಸ್ತು ಜಗಲೀ]ಲಾಭಾವಿಯಾಗಿ
ತ್ರಿಗುಣಾತ್ಮಕವಾದ ಭೇದಪೂರ್ವಕ ಮುಂತಾದ
ಷಡ್ದರ್ಶನದಲ್ಲಿ ವಿವರಂಗಳಿಗೆ,
ಶೈವ ವೈಷ್ಣವ ಉಭಯಂಗಳಲ್ಲಿ ಶೈ[ವರಾರು], ವೈಷ್ಣವರಾರು,
ಇಂತೀ ಉಭಯರಲ್ಲಿ ಅಡಗುವ ಗುಣ ವಿವರ: ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು,
ಉಭಯನಾಮ ಕುಲಲಯ[ವಹಲ್ಲಿ]
ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ
ಶರೀರದಹನ ಮುಖವೆಲ್ಲವೂ ರುದ್ರತತ್ವಾಧೀನವಾಗಿಹುದು.
ಶರೀರ ಮುಖ ಸಮಾನಧಿ ಆಧೀನಫವಾಗಿಹುದೆಲ್ಲವೂ ವಿಷ್ಣುಪಕ್ಷವಾಗಿಹುದು.
ಇಂತೀ ಉಭಯಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು.
ಇಂತೀ ಉಭಯವ ಮರೆತಲ್ಲಿ ಉತ್ತ[ರಕಕ್ಷೆಯಾಗಿ]ಹುದು.
ಇಂತೀ ಭೇದಂಗಳರಿತು
ಹೊರಗಾಗಿ ನಿಂದಲ್ಲಿ,
ಸದಾಶಿವಮೂರ್ತಿಲಿಂಗದರಿವು ಒಳಗಾಯಿತ್ತಾಗಿಹುದು./12
ಅನುವನರಿವನ್ನಕ್ಕ ಅರ್ಚನೆ, ಪುಣ್ಯವನರಿವನ್ನಕ್ಕ ಪೂಜೆ,
ಶರೀರವುಳ್ಳನ್ನಕ್ಕ ಸುಖದುಃಖವ ಸಂತಾಪಿಸಬೇಕು.
ತೆಪ್ಪದಲ್ಲಿ ನಿಂದು ಒತ್ತಿ ಹೊಳೆಯ ದಾಟುವಂತೆ.
ಕ್ರೀಶುದ್ಧವಾದಲ್ಲಿ ಜ್ಞಾನದ ಗೊತ್ತು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./13
ಅಪ್ಪು ಆಧಾರವಾಗಿ, ಕಮಠ ಶೇಷ ನೆಮ್ಮುಗೆಯಿಂದ
ಪೃಥ್ವಿ ಆ[ಧೇಯ]ವಾಗಿ ನಿಂದು ತೋರುವಂತೆ,
ವಸ್ತುವಿನ ಹಾಹೆಯಿಂದ ಕಾಯ ನಿಂದು ತೋರುತ್ತಿಹುದೇ ದೃಷ್ಟ.
ಒಂದಕ್ಕೊಂದು ನೆಮ್ಮಿ ಕಾಣುವ ಅರಿವಿಂಗೆ ಕುರುಹು ಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /14
ಅಪ್ಪು ಚಿಪ್ಪಿನಲ್ಲಿ ನಿಂದು [ಚಿಪ್ಪ]ವ ಬೆರಸದಂತೆ,
ಮೃತ್ತಿಕೆ ತೇಜದಲ್ಲಿ ಬೆಂದು ಪೃಥ್ವಿಯ ಕೂಡದಂತೆ,
ಹಾಗಿರಬೇಕು ಭಕ್ತವಿರಕ್ತನ ಭೇದ, ಇಷ್ಟ ಪ್ರಾಣದಿರವು.
ಇದು ನಿಶ್ಚಯ ಲಿಂಗಾಂಗ.
ಕಾಯ ಭಕ್ತ, ಪ್ರಾಣ ಜಂಗಮವಾದ ಸ್ವಾನುಭಾವಸಿದ್ಧಿ.
ಈ ತೆರ ತಾನೆ ಸದಾಶಿವಮೂರ್ತಿಲಿಂಗವು. /15
ಅಪ್ಪು ಮಣ್ಣು ಕೂಡಿ ಘಟವಾದಂತೆ,
ಚಿತ್ತು ಶಕ್ತಿ ಕೂಡಿ ಎನಗೆ ಇಷ್ಟವಾಗಿ ಬಂದು ನಿಂದೆಯಲ್ಲಾ!
ಚಿತ್ತ ನಿಲುವುದಕ್ಕೆ ಗೊತ್ತಾಗಿ,
ಗೊತ್ತಿನ ಮರೆಯಲ್ಲಿ ನಾ ಹೊತ್ತ ಸಕಲೇಂದ್ರಿಯವನೀಸೂವುದಕ್ಕೆ ತೆಪ್ಪವಾಗಿ
ಭವಸಾಗರವ ದಾಂಟಿಸಿದೆಯಲ್ಲಾ!
ಭಕ್ತಿಪ್ರಿಯ ಸತ್ಯಕರಂಡಮೂರ್ತಿ
ಸದಾಶಿವಮೂರ್ತಿಲಿಂಗವೆ ಎನ್ನಂಗದಲ್ಲಿ ಹಿಂಗದಿರು./16
ಅರಸು ಆಲಯವ ಹಲವ ಕಟ್ಟಿಸಿದಂತೆ,
ಶರೀರದಲ್ಲಿ ಆತ್ಮನು ಹಲವು ನೆಲೆವುಂಟೆಂದು
ತಿರುಗುತ್ತಿಹ ಭೇದವಾವುದು ಹೇಳಿರಯ್ಯಾ?
ಆ ಘಟದೊಳಗಳ ಭೇದ: ಅಸು ಹಿಂಗಿದಾಗ ಘಟವಡಗಿತ್ತು,
ಅರಸಿಲ್ಲದಾಗ ಆಲಯ ದೆಸೆಗೆಟ್ಟಿತ್ತು.
ಅಳಿವುದೊಂದು, ಉಳಿದಿಹಲ್ಲಿ ಕಾಬುದೊಂದೆ ಭೇದ,
ಸದಾಶಿವಮೂರ್ತಿಲಿಂಗವನರಿತಲ್ಲಿ./17
ಅರಿದು ಮಾಡುವುದು ಗುರುಭಕ್ತಿ,
ಅರಿದು ಮಾಡುವುದು ಲಿಂಗಭಕ್ತಿ,
ಅರಿದು ಮಾಡುವುದು ಜಂಗಮಭಕ್ತಿ.
ಅರಿಕೆಯಿಂದ ಕಾಬುದು, ಸದಾಶಿವಮೂರ್ತಿಲಿಂಗವನರಿವುದಕ್ಕೆ. /18
ಅರಿವ ಮರೆದ ಪೂಜೆ ಸ್ಥಾವರಲಿಂಗಕ್ಕೆ ಸರಿ
ಅರಿಯದೆ ಮರೆಯದೆ ಕರಿಗೊಂಡ ನೆನಹು,
ಅದು ಪರಿಪೂರ್ಣ ಪ್ರಾಣಲಿಂಗ ಸಂಬಂಧ.
ಇಂತಿವರಲ್ಲಿ ಭೇದಂಗಳನರಿತು
ಪರತತ್ವ ಕೊಡುವ ಪರಮಗುರುವಾಗಬೇಕು,
ಸದಾಶಿವಮೂರ್ತಿಲಿಂಗವು ತಾನಾಗಬೇಕು./19
ಅರಿವಾಗ ಆ ತನುವಿನಲ್ಲಿದ್ದೆ ಅರಿಯಿತ್ತು,
ಮರೆವಾಗ ಆ ತನುವಿನಲ್ಲಿದ್ದೆ ಮರೆಯಿತ್ತು.
ಅರಿವು ಮರವೆ ಎರಡಾಯಿತ್ತು,
ಉಭಯವ ತಾಳಿದ ಘಟವೊಂದಾಯಿತ್ತು,
ಇಂತೀ ಭೇದ.
ವಿಷಬೇರಿನಂತೆ ಸಂಚಾರಕ್ಕೆ ಒಳಗಾದುದು ವಿಷಮಯವಾಯಿತ್ತು.
ಗೌಪ್ಯಕೊಳಗಾದುದು ಅಮೃತಮಯವಾಯಿತ್ತು .
ಇಂತೀ ಸಂಚಾರವುಳ್ಳನ್ನಕ್ಕ ಸಂಚಿತ ಕರ್ಮ,
ಸಂಚಾರ ನಿಲೆ ಆತ್ಮ ನಿರ್ಮುಕ್ತವಾದಲ್ಲಿಯೆ
ಸದಾಶಿವಮೂರ್ತಿಲಿಂಗವು ತಾನೆ. /20
ಅರಿವು ಘಟದಲ್ಲಿ ನಿಂದು ನುಡಿವನ್ನಕ್ಕ
ಗುರುಲಿಂಗಜಂಗಮದ ಪೂಜೆಯ ಮಾಡಬೇಕು.
ನಾಮರೂಪು ಎಂಬನ್ನಕ್ಕ ಉಭಯವನರಿಯಬೇಕು.
ಸದಾಶಿವಮೂರ್ತಿಲಿಂಗವನರಿವುದಕ್ಕೆ. /21
ಅರುಣಕಿರಣ ಮಂದಿರದ ಕಂಡಿಯಲ್ಲಿ ತೋರುತ್ತದೆ,
ಆ ಘಟದಲ್ಲಿ ಎಡೆಯಾಡುವ “ಅಣೋರಣೀಯಾನ್ ಎಂಬಂತೆ,
ಅಂಗಮಧ್ಯದ ಚಿತ್ತದ ದ್ವಾರದಲ್ಲಿ ಅರಿದಡೆ ತಾಕುವ ಜ್ಞಾನ.
“ಅಣೋರಣಿಯಾನ್ ಎಂಬುದರಿದ ತನ್ನಯ ಅರಿವು
ನಿಂದ ಘಟದಲ್ಲಿ ಬೆಳಗುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ. /22
ಅಸಿಯ ಮೊನೆಯು ಮುರಿದಡೆ ಮಸೆದಡೆ ಮೊನೆಯಾಗದೆ ಅಯ್ಯಾ?
ಅಸು ಮರೆದಡೆ ಆತ್ಮನನರಿದಡೆ ಕೇಡುಂಟೆ ಅಯ್ಯಾ?
ಮರೆವುದು ಅರಿವುದು ಎರಡುಳ್ಳನ್ನಕ್ಕ,
ಮರೆಯದೆ ಪೂಜಿಸು ಸದಾಶಿವಮೂರ್ತಿಲಿಂಗವ. /23
ಆ ದುರ್ಗದಲ್ಲಿದ್ದ ದೊರೆಗಳ ವಿರೋಧವನರಿದು,
ಇದೆ ದುರ್ಗಕ್ಕೆ ಸಾಧ್ಯ ವೇಳೆಯೆಂಬುದನರಿತು,
ಮಾಯಾಮಲಂ ನಾಸ್ತಿಯೆಂಬ ಮನ್ನೆಯ ಕಾಳಗವ ಹಿಡಿದು, ದುರ್ಗವ ಮುತ್ತಿ,
ಕೈಯೊಳಗಾದರು ಮೂವರು ದೊರೆಗಳು.
ನರಪತಿಯ ಅಂಡವ ಕಿತ್ತು, ಸುರಪತಿಯ ಕೈಯ್ಯ ಕಡಿದು,
ಸಿರಿವುರಿಯೊಡೆಯನ ಕಣ್ಣ ಕಳೆದು,
ಅರಿಗಳಿಲ್ಲಾ ಎಂದು ಅಭಿಮುಖವ ನಷ್ಟವ ಮಾಡಿ,
ಊಧ್ರ್ವಮುಖವಾದ ಮಾಯಾಕೋಳಾಹಳಮಲಂ ನಾಸ್ತಿ,
ಮನೆಯ ಭಾವರಹಿತ, ಅನುಪಮಭರಿತ
ಸದಾಶಿವಮೂರ್ತಿಗಳಿಲ್ಲದೆ ನಿರಾಳವಾಯಿತ್ತು./24
ಆಕಾಶದಲ್ಲಿ ತೋರುವ ಮೋಡದ ಮುಗಿಲಿನಂತೆ,
ಶಶಾಂಕನ ಕಾಬ ಅಂಬುಧಿಯಂತೆ,
ವಿಷಧರನ ಕಾಬ ವಿಷಜದಂತೆ ಹೆಚ್ಚುಗೆಯಾಗಿ
ಆತ್ಮಭೇದದಲ್ಲಿ ಕುರುಹಿಟ್ಟುದ ಕಂಡು
ಮನವುಣ್ಮಿ ತನುಕರಗಿ ನಿಶ್ಚಯ ನಿಜತತ್ತ್ವದಲ್ಲಿ ಬೆಳಗುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ, /25
ಆಗಮಂಗಳ ಶೋಧಿಸಿ ಮಾತಿನ ನೀತಿಯ ಹೇಳುವರೆಲ್ಲರು ಹಿರಿಯರೆ?
ಖ್ಯಾತಿಯ ಘಟಧರ್ಮಕ್ಕೆ ಮಾಡುವರೆಲ್ಲರು ಭಕ್ತರೆ?
ವೇಷವ ಬಿಟ್ಟು ಮೈವಾಸನವನೊಲ್ಲದೆ ವೇಷದಲ್ಲಿ ತಿರುಗುವ ವಿರಕ್ತರೆಂದು ಮತ್ತೆ,
ಭವಪಾಶದಲ್ಲಿ ಬೀಳುತ್ತಿಹ ಪಾಷಂಡಿಗಳಿಗೇಕೆ ಸತ್ಪಥನೀತಿ?
ಇಂತೀ ತ್ರಿವಿಧವ ನೇತಿಗಳೆದಲ್ಲದೆ
ಸದಾಶಿವಮೂರ್ತಿಲಿಂಗವನರಿಯಬಾರದು./26
ಆಚಾರವೆಂಬ ಭಕ್ತ ಘಟವಾಗಿ, ಅರಿವೆಂಬ ಮೂರ್ತಿಜಂಗಮ ಪ್ರಾಣವಾಗಿ,
ಉಭಯವು ಕೂಡಿ ಕಾಯಜೀವನಾಗಿ ನಡೆವಂತೆ,
ಆಚಾರಕ್ಕೊಡಲಾಗಿ, ಅರಿವಿಂಗೆ ಆಶ್ಯವಾಗಿ,
ಈ ಉಭಯಗೂಡಿಪ್ಪ ಅಂಗವು ಸದಾಶಿವಮೂರ್ತಿಲಿಂಗವು ತಾನಾಗಿ./27
ಆಡಿನ ಮೊಲೆವಾಲ ಕೋಡಗವುಂಡು, ಹಾಲ ಸಿಹಿ ತಲೆಗೇರಿ,
ಬಂದವರ ಏಡುಸುತ್ತ, ನಿಂದವರ ಕಚ್ಚುತ್ತ
ಹಿಂಗದು ನೋಡಾ, ಕೋಡಗದಂದ.
ಕೋಡಗವ ತಿಂದು ಆಡುವನೆ ಆರೂಢವಸ್ತು,
ಸದಾಶಿವಮೂರ್ತಿಲಿಂಗಕ್ಕೆ ಎರವಿಲ್ಲದಂಗ./28
ಆತ್ಮ ಘಟಮಧ್ಯದಲ್ಲಿ ನಿಂದು,
ಕೈಯ್ಯಲ್ಲಿ ಮುಟ್ಟಿ, ಕಿವಿಯಲ್ಲಿ ಕೇಳಿ, ನಾಸಿಕದಲ್ಲಿ ವಾಸಿಸಿ,
ಕಣ್ಣಿನಲ್ಲಿ ನೋಡಿ, ಬಾಯಲ್ಲಿ ಉಂಬಂತೆ,
ಪಂಚೇಂದ್ರಿಯಕ್ಕೆ ತತ್ತಾಗಿ ಹಂಚಿಕೊಂಡಿಹುದು ಒಂದೆ ಆತ್ಮ.
ಅವರವರ ಮುಖಂಗಳಿಂದ ಗುಣವನರಿವನ್ನಕ್ಕ,
ಇಷ್ಟದ ಮರೆಯಲ್ಲಿ ಚಿತ್ತ ನಿಂದು, ವಸ್ತುನಾಮವಾಗಬೇಕು.
ಸದಾಶಿವಮೂರ್ತಿಲಿಂಗವನರಿವುದಕ್ಕೆ./29
ಆತ್ಮ ವಸ್ತುವೆಂದು ಅರಿತಲ್ಲಿ ಆತ್ಮನ ಅಳಿವ ಉಳಿವನರಿತು,
ತಾನಿದಿರಿಟ್ಟು ಕಾಬುದಕ್ಕೆ ದೃಷ್ಟವರತು ಸರ್ವಸಂಪದನಾಗಿ,
ಮಿಥ್ಯ ತಥ್ಯ ತಲೆದೋರದೆ ಹಿಂದೆ ಬಂದ ಸಂದೇಹವನರಿತು,
ತಾ ನಿಂದ ನೆಲೆಯ ನೆಮ್ಮುಗೆಯ ಕಂಡು
ಮುಂದಕ್ಕೆ ಬಹ ಸುಖದುಃಖವ ಇಂದೆ ಕಂಡು
ಸಂದೇಹವಳಿದು ಸದಾ ಅಮಲಿನನಾಗಿ,
ಮತ್ತೆ ಮುಂದಕ್ಕೊಂದುಂಟೆಂದು ಕಲ್ಪನೆಯ ಸಂಕಲ್ಪ ಹರಿದು ನಿಂದು,
ಮತ್ತೊಂದರಲ್ಲಿ ನಿಂದು ಅಳಿಯಬೇಕು.
ಅಳಿವ ಕಾಯವುಳ್ಳನ್ನಕ್ಕ ಅರಿವಿಂಗೆ ಕುರುಹು ಇರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./30
ಆತ್ಮಗುಣ ವಿವರದ ಪರಿಯೆಂತುಟೆಂದಡೆ: ತರುವಿನ ಪರಿಭೇದದಂತೆ,
ಮರ ಬಲಿದು ಋತುಕಾಲಕ್ಕೆ ಪಲ್ಲವದ ಮಧ್ಯದಲ್ಲಿ,
ಹೂ ಮಿಡಿ ಬಲಿದು ರಸನಿಂದು ಫಳವಾದಂತೆ
ಆತ್ಮನ ವಿವೇಕ ಸ್ವಸ್ಥದಲ್ಲಿ ನಿಂದು ತನ್ನಿರವ ತಾ ವಿಚಾರಿಸಿ,
ಮಹವನೊಡಗೂಡಿ, ಮಲತ್ರಯ ದೂರವಾಗಿ,
ಚಿಚ್ಛಕ್ತಿಯ ಹೃದಯದಲ್ಲಿ ಚಿದ್ಘನ ಬಲಿದು ಸ್ವರೂಪವಾಗಿ ನಿಂದು,
ಆತ್ಮನ ಅಳಿವನರಿದು ಅಧ್ಯಾತ್ಮಯೋಗಸಂಬಂಧ,
ಸದಾಶಿವಮೂರ್ತಿಲಿಂಗವನರಿದುದು./31
ಆದಿ ಮಧ್ಯ ಅವಸಾನವರಿಯಬೇಕೆಂಬರು,
ಆದಿಯಲ್ಲಿ ನಿಂದು, ಮಧ್ಯದಲ್ಲಿ ಕಂಡು, ಅವಸಾನದಲ್ಲಿ ಅರಿದು ಇರಬೇಕೆಂಬರು.
ಅರಿವುದು ಒಂದೊ ಮೂರೊ ಎಂದಲ್ಲಿ ನಿಂದಿತ್ತು.
ನಿಂದುದ ಕಳೆದು ಸಂದ ಹರಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ./32
ಆದಿಯೆಂಬ ಅಂತರಾದಿಯಲ್ಲಿ ಅನಾದಿಯ ವಸ್ತುವನರಿತು,
ಆದಿಯ ಬ್ರಹ್ಮಂಗೆ ಕೊಟ್ಟು, ಅಂತರಾದಿಯ ವಿಷ್ಣುವಿಂಗೆ ಕೊಟ್ಟು,
ಅನಾದಿಯ ರುದ್ರನ ಗೊತ್ತ ಮಾಡಿ,
ಗೊತ್ತನರಿದವರಲ್ಲಿ ಇಚ್ಛೆಗೆ ತಪ್ಪದೆ ಬೆಚ್ಚಂತಿರಬೇಕು.
ಸದಾಶಿವಮೂರ್ತಿಲಿಂಗವನರಿವುದಕ್ಕೆ. /33
ಇನ್ನೇವೆ ? ನಾ ತಂದ ಬೆಂಕಿಯಲ್ಲಿ
ಸರ್ವಾಂಗವಿಷದ ಚೇಳು ಬಿದ್ದು ಬೇವುತ್ತಿದೆ.
ಹಿಡಿದು ತೆಗೆದೆಹೆನೆಂದಡೆ ಉರಿ ತಾಗಿದ ಚೇಳು ಎನ್ನ ಹೊಯ್ದಿತ್ತು.
ಸತ್ತಿತ್ತೆಂಬ ನೋವು ಬಿಡದು, ಎನಗೆ ವಿಷ ತಾಗಿತ್ತೆಂಬ ಆಸೆ ಬಿಡದು.
ಬಿಟ್ಟಡೆ ಸಮಯಕ್ಕೆ ದೂರ, ಹಿಡಿದಡೆ ಜ್ಞಾನಕ್ಕೆ ದೂರ,
ಉಭಯದ ಬೇನೆಯಲ್ಲಿ ಬೇವುದು ಸದಾಶಿವಮೂರ್ತಿಲಿಂಗಕ್ಕೆ ದೂರ./34
ಇರು[ಹೆ] ಕಡೆ ಎಂಭತ್ತನಾಲ್ಕು ಲಕ್ಷ ಜೀವ
ಅವು ಹುಟ್ಟುವಾಗಲೆ ಸುಖದುಃಖ ಭೋಗಂಗಳ ಕೊಂಡು ಹುಟ್ಟಿದವು.
ಇದು ತಪ್ಪದ ದೃಷ್ಟ.
ಅರುಹಿರಿಯರೆಲ್ಲರು ಮರೆಯಬೇಡಿ. ಅರಿವಿನ ಹೊನಲ ನೋಡಿಕೊಳ್ಳಿ.
ವೇಷಕ್ಕೆ ತಪ್ಪದಂತಾಡಿ ಹೋಗಿ,
ಪುರುಷ ಸತ್ತಡೆ ಸತಿ ಮುಂಡೆತನದಂತೆನಿಸಲಾರೆ,
ಕಳ್ಳನ ಹೆಂಡತಿಯಂತೆ ತಲ್ಲಳಿಸಲಾರೆ.
ನಿಮ್ಮ ಅರಿವಿನ ಹಾನಿ ಎನ್ನ ಇಹಪರದ ಕೇಡು.
ಈ ಪದಕ್ಕೆ ನೋಯಬೇಡ,
ನೊಂದಡೆ ಸದಾಶಿವಮೂರ್ತಿಲಿಂಗಕ್ಕೆ ಹೊರಗು/35
ಇರುಹೆ ಅಂಜದೆ ಮದ ಸೊಕ್ಕಿದ ಐದಾನೆಯ ತನ್ನ ಕಡೆಗಾಲಿನಲ್ಲಿ ಕಟ್ಟಿ
ಸದಮದದಲ್ಲಿ ಎಳೆವುತ್ತದೆ.
ಆನೆಯ ಕೊಂಬು ಮುರಿದು, ಸುಂಡಿಲುಡುಗಿ,
ಮದ ಸೋರಿ, ಗಜಘಟವಳಿದು ಹೋಯಿತ್ತು.
ಇರುಹಿನ ಕಾಲು ಐಗಜವ ಕೊಂದು, ಮೂರು ಹುಲಿಯ ಮುರಿದು,
ನನಗಿನ್ನಾರೂ ಅಡಹಿಲ್ಲಾಯೆಂದು ಹೋಯಿತ್ತು,
ಸದಾಶಿವಮೂರ್ತಿಲಿಂಗದಲ್ಲಿಗೆ ಎಯ್ದಿತ್ತು. /36
ಇಷ್ಟಲಿಂಗ ಪ್ರಾಣಲಿಂಗವೆಂದು ಬೇರೊಂದು ಕಟ್ಟಳೆಯ ಮಾಡಬಹುದೆ ಅಯ್ಯಾ?
ಬೀಜವೊಡೆದು ಮೊಳೆ ತಲೆದೋರುವಂತೆ,
ಬೀಜಕ್ಕೂ ಅಂಕುರಕ್ಕೂ ಬಿನ್ನವುಂಟೆ ಅಯ್ಯಾ?
ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳನರಿಯಬೇಕು.
ಇದೆ ನಿಶ್ಚಯ ಸದಾಶಿವಮೂರ್ತಿಲಿಂಗವು ತಾನಾಗಿ./37
ಉಂಟು ಇಲ್ಲಾ ಎಂಬುದನರಿತು ನುಡಿವುದು ಕ್ರೀಯೊ? ನಿಃಕ್ರೀಯೊ?
ಇವೆಲ್ಲವನರಿತು ನುಡಿವುದು
ಘಟದೊಳಗಳ ಮಾತಲ್ಲದೆ ಅದು ಮಾಯಾವಾದದ ಇರವು.
ಭಾವ ಕಾಯವಲ್ಲಿ ಸಿಕ್ಕಿ ಸಕಲವನೊಡಗೂಡಿ ಭೋಗಂಗಳನುಣುತ
ನಾನಲ್ಲ ಎಂಬ ಮಾಯಾವಾದಿಗಳ ಮಾತು,
ಕನ್ನದ ಬಾಯಲ್ಲಿ ಸಿಕ್ಕಿದ ಕಳ್ಳನ ಬಾಯಾಲಿನಂತೆ ಬಲ್ಲವರು ಮೆಚ್ಚುವರೆ?
ಶರೀರವುಳ್ಳನ್ನಕ್ಕ ಇಷ್ಟಪ್ರಾಣ ಮುಕ್ತನಾಗಬೇಕು.
ಇದೆ ನಿಶ್ಚಯ, ಸದಾಶಿವಮೂರ್ತಿಲಿಂಗವನರಿವುದಕ್ಕೆ./38
ಉಂಟೆಂಬ ದೃಢ, ಇಲ್ಲಾ ಎಂಬ ಸಂದೇಹ ತಾನಲ್ಲಿಯೇ ತೋರಿ
ಅಳಿವುತ್ತಿಪ್ಪ ಭೇದವನರಿತಾಗ ಮಲತ್ರಯ ನಾಸ್ತಿ,
ಸದಾಶಿವಮೂರ್ತಿಲಿಂಗವನರಿತುದು. /39
ಉತ್ಪತ್ಯಕ್ಕೆ ಬ್ರಹ್ಮಂಗೆ ಸೃಷ್ಟಿಯ ಕೊಟ್ಟು,
ಸ್ಥಿತಿಗೆ ವಿಷ್ಣುವಿಂಗೆ ಅವತಾರಲಕ್ಷ್ಮಿಯ ಕೊಟ್ಟು,
ಲಯಕ್ಕೆ ರುದ್ರಂಗೆ ಉರಿಗಣ್ಣು, ಹತಕ್ಕೆ ಕರದಲ್ಲಿ ಕಂಡೆಹವ ಕೊಟ್ಟು,
ತ್ರೈಮೂರ್ತಿಗೆ ನಿನ್ನ ವರ ಶಕ್ತಿಯನಿತ್ತು, ನೀ ತ್ರಿವಿಧ ನಾಸ್ತಿಯಾದೆಯಲ್ಲಾ.
ಅನಾದಿಶಕ್ತಿಯ ಭಾವವನೊಡೆದು
ಸದಾಶಿವಮೂರ್ತಿಲಿಂಗ ನೀನಾದೆಯಲ್ಲಾ./40
ಉದಕ ನಿಂದಲ್ಲಿ ಪ್ರತಿಬಿಂಬ ನಿಶ್ಚಯವಾಯಿತ್ತು.
ಆ ಜಲ ಸಂಚಾರದಿಂದ ಕದಲೆ ಮತ್ತೆ
ಪ್ರತಿರೂಪಿಂಗೆ ಎಡೆಯುಂಟೆ? ಚಿತ್ತ ಸಂಚಾರಿಸುವಲ್ಲಿ ಕುರುಹಿನ ಗೊತ್ತಿಗೆ
ಒಡೆತನವುಂಟೆ?
ಇಂತೀ ಉಭಯದ ಸಕೀಲ ನಿಂದು, ಕಳೆ ಬೆಳಗುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ /41
ಉಪಾಧಿ ಉಳ್ಳನ್ನಕ್ಕ ಗುರುವಲ್ಲ,
ವೇಷವ ಹೊತ್ತು ಬಾಗಿಲ ಕಾಯುವನ್ನಕ್ಕ ಜಂಗಮವಲ್ಲ,
ಶಕ್ತಿಸಮೇತವುಳ್ಳನ್ನಕ್ಕ ಲಿಂಗವಸ್ತುವಲ್ಲ.
ಅದೆಂತೆಂದಡೆ: ಏತರಲ್ಲಿದ್ದಡೂ ಅಹಿಶರೀರವ ಬಲಿದು ತದ್ರೂಪ ಹಾಕಿದಂತಿರಬೇಕು.
ಇದು ಅರಿವಿನ ಒಡಲು, ಸದಾಶಿವಮೂರ್ತಿಲಿಂಗದ ಇರವು./42
ಉಪ್ಪಿನ ನೀರು ಹೆಪ್ಪ ಬಲಿದು ಘಟ್ಟಿಯಾದಂತೆ
ಮತ್ತೆ ಅಪ್ಪುವ ಬೆರಸಿ ತನ್ನಂಗ ತಪ್ಪದಂತೆ,
ಸಕಲ ಶಾಕಂಗಳಲ್ಲಿ ತನ್ನಯ ಇರವ ತೋರಿ ಕುರುಹಿಂಗೆ ಬಾರದಂತೆ
ವಸ್ತು ಅಂಗದಲ್ಲಿ ತನ್ಮಯವಾಗಿ ವೇಧಿಸಿ ಉಭಯ ನಾಮವಳಿದು,
ಸದಾಶಿವಮೂರ್ತಿಲಿಂಗದಲ್ಲಿ ಕೂಟಸ್ಥವಾಗಿರಬೇಕು./43
ಉಭಯಚಕ್ಷು ಗುರುಚರವಾದಲ್ಲಿ ಹಿಡಿವ ಬಿಡುವ ಕರ ಸದ್ಭಕ್ತ.
ವರ್ತನ ಶುದ್ಧವಾದಲ್ಲಿ ಕಣ್ಣಿನಲ್ಲಿ ಕಸ ಹೊಕ್ಕಡೆ
ಕರ ಆರೈದು ಕಸನ ತೆಗೆವಡೆ ದೋಷವುಂಟೆ?
ಕಾಯ ಜೀವ ಉಭಯವು ಕೂಡಿದಲ್ಲಿ ಒಂದಕ್ಕೊಂದು ಪ್ರಳಯವಿಲ್ಲ.
ಒಂದಳಿದು ಒಂದುಳಿದಲ್ಲಿ ಉಭಯದ ಕೇಡು.
ಇಂತೀ ಅಭಿಸಂಧಿಯಲ್ಲಿ ಸಂದೇಹದಲ್ಲಿ ಹೊಂದಬೇಡ.
ಸದಾಶಿವಮೂರ್ತಿಲಿಂಗ
ನೊಂದಡೂ ನೋಯಲಿ, ಅರಿವಿನ ಮಾರನ ಅಂಗ ಹಿಂಗದ ಭಾವ./44
ಉರಿಯ ಮಡುವಿನಲ್ಲಿ ಒಂದು ಜಲದ ಕುಸುಮ ಹುಟ್ಟಿ,
ಹರಿಹರಛಜಿಡಿಹ್ಮಾದಿಗಳಿಗೆ ವಶವಲ್ಲ ನೋಡಾ.
ಕುಸುಮದ ಎಸಳಿನ ಕೂಟಸ್ಥಲದಲ್ಲಿ ಕಪ್ಪು,
ನಡುಮಧ್ಯದಲ್ಲಿ ತಮ ಕಪೋತವರ್ಣ,
ಅದರ ತುದಿಯಲ್ಲಿ ನಾನಾ ವರ್ಣದ ಛಾಯೆ ಕೂಡಿ ಅಳಿವುತ್ತಿಹುದು.
ಆ ಹೂವ ಒಂದೆ ಭೇದದಲ್ಲಿ ಕಿತ್ತು
ಸದಾಶಿವಲಿಂಗದ ಪಾದದಲ್ಲಿರಿಸಲಾಗಿ,
ಪದಕ್ಕೆ ಹೊರಗೆಂದು ಮಕುಟದ ಮೇಲೇರಿತ್ತು.
ಇದು ಬಲ್ಲವರಾರು ಚೋದ್ಯವ ಹೇಳಿರಣ್ಣಾ!/45
ಉರಿಯ ಸಿರಿಯ ನಡುವೆ ಒಂದು ಸರೋವರದಲ್ಲಿ ನರಿ ತಿರುಗಾಡುತ್ತದೆ.
ಬಾಲ ಉಡುವಿನಂದ, ನಡು ಬಳ್ಳುವಿನ ಚೊಲ್ಲೆಹದಂದ, ತಲೆ ಕೋಡಗದಂದ.
ರೂಪು ನರಿಯಾಗಿ, ಆತ್ಮ ಕುಕ್ಕುರನಾಗಿ
ಏತಕ್ಕೂ ಸಿಕ್ಕದೆ ಸರೋವರದಲ್ಲಿ ಹರಿದಾಡುತ್ತದೆ.
ಅದು ಸದಾಶಿವಮೂರ್ತಿಲಿಂಗವನರಿದವರಿಗಲ್ಲದೆ ಸಿಕ್ಕದು ಜೀವ./46
ಉರಿಯಂಗವೆಲ್ಲ ಅಪೋಷನಕ್ಕೊಡಲು,
ಒಡಲುಗೊಂಡವರೆಲ್ಲರು ಅಪೇಕ್ಷೆಗೆ ಮೊದಲು.
ಇಂತೀ ಬಿಡುಮುಡಿಯ ಬಲ್ಲವರಾರೊ?
ತನುಧರ್ಮವನರಿತು ಚರಿಸಬಲ್ಲಡೆ ಜಂಗಮ,
ಮನಧರ್ಮವನರಿತು ಅಡಗಬಲ್ಲಡೆ ಗುರುಮೂರ್ತಿ.
ಇಂತೀ ಉಭಯದ ಭೇದವ ವೇದಿಸಬಲ್ಲಡೆ ಸದ್ಭಕ್ತ
ಇಂತೀ ತ್ರಿವಿಧಭಾವ ಚಿನ್ನ ಬಣ್ಣ ವಾಸನೆಯಂತೆ,
ಸದಾಶಿವಮೂರ್ತಿಲಿಂಗವು ತಾನೆ /47
ಊರ ಬಾಗಿಲ ಕಂಬದಲ್ಲಿ ಮೂರು ಮುಖದ ಕೋಡಗ
ಬಂದವನಿವನಾರೆಂದು ನೋಡುತ್ತ,
ಮತ್ತೊಂದು ಮುಖ ನಿಂದವನ ಏಡಿಸುತ್ತ
ಮತ್ತೊಂದು ಮುಖ ಹಿಂದೆ ಒಂದಿದವನ ನೆನೆವುತ್ತ,
ಇಂತೀ ಮೂರು ಚಂದ,
ಹಿಂದಳ ಅಧೋಮುಖಕ್ಕೆ, ನಡುವಳ ಅಭಿಮುಖಕ್ಕೆ, ಕಡೆಯ ಊಧ್ರ್ವಮುಖಕ್ಕೆ
ಕುಂಡಲಿಯ ಹಾವೆದ್ದು ಕೋಡಗವ ಒಂದೆ ಬಾರಿ ನುಂಗಿತ್ತು.
ಸದಾಶಿವಮೂರ್ತಿಲಿಂಗವನರಿತಲ್ಲಿ./48
ಊರ ಹೊರಗಳ ಹೊಲತಿಯ ಹಾರುವ ನೆರೆದು
ತನ್ನಯ ಸೂತಕ ಹೋಯಿತ್ತು.
ಹೊಲತಿಯ ಕುಲ ಹರಿದು ಹಾರುವ ಹೊಲೆಯನಾಗಿ,
ಆ ಹಾರುವ ಹಾರದೆ ಸದಾಶಿವಮೂರ್ತಿಲಿಂಗಕ್ಕೆ ಒಳಗಾದ. /49
ಎನಗೆ ಗುರುವಾಗಬೇಡ ಹೆಣ್ಣು ಹೊನ್ನು ಮಣ್ಣಿನ ಆಸೆ ಉಳ್ಳನ್ನಕ್ಕ,
ಎನಗೆ ಲಿಂಗವಾಗಬೇಡ ಶಕ್ತಿಸಂಪರ್ಕವುಳ್ಳನ್ನಕ್ಕ,
ಎನಗೆ ಜಂಗಮವಾಗಬೇಡ ಕಂಡಕಂಡವರ ಮಂದಿರದಲ್ಲಿ ಹೊಕ್ಕು
ಅಶನ ವಿಷಯಕ್ಕಾಗಿ ಹುಸಿವೇಷವ ತೊಟ್ಟು ಗಸಣಿಗೊಳಬೇಡ,
ಎಂದು ಹೇಳಿದ ಮಾತಿಗೆ ನೊಂದ ನೋವು,
ನಿಮ್ಮ ದೇವತ್ವದ ಹಾನಿ ಎನ್ನ ಸಜ್ಜನದ ಕೇಡು.
ಎನ್ನ ಹೊದ್ದಡೆ ಮಾಣೆ, ಇದ್ದುದ ಹೇಳಿದೆ, ನೊಂದಡೆ ನೋಯೆ,
ಸದಾಶಿವಮೂರ್ತಿಲಿಂಗವೆ ನಿನ್ನ ನಾ ಹಿಂಗದ ತೊಡಕು. /50
ಎನಗೆ ಭರಿತಾರ್ಪಣವೆಂದು ಹೇಳಿದಾಗವೆ,
ಲಿಂಗಕ್ಕೊ? ನಿನಗೊ? ಎಂಬುದ ನಿನ್ನ ನೀನರಿ,
ಅನ್ಯರ ಕೈಯಿಂದ ಹೇಳಿಸಿ ಚೆನ್ನಾಗಿ ಇಕ್ಕಿಸಿಕೊಂಡು ಉಂಬುದು
ಲಿಂಗಕ್ಕೊ? ನಿನಗೊ? ಎಂಬುದು ನಿನ್ನ ನೀನರಿ
ಸಂದುದನೆ ಪರಿಣಾಮಿಸಿ ಬಾರದುದಕ್ಕೆ ಸಂದೇಹವಿಲ್ಲದೆ
ಸಂದನಳಿದುದು ಭರಿತಾರ್ಪಣ,
ಸದಾಶಿವಮೂರ್ತಿಲಿಂಗಕ್ಕೆ ತೃಪ್ತಿ./51
ಎನ್ನ ಮಡದಿ ಹಾಲ ಕಾಸುವಾಗ,
ಹಾಲಿನ ಕುಡಿಕೆಯಲ್ಲಿ ಹಾವು ಬಿದ್ದು ಸತ್ತಿತ್ತು.
ಮಡದಿಯ ಬಿಡಬಾರದು, ಹಾಲ ಚೆಲ್ಲಬಾರದು.
ಹಾವಿನ ವಿಷ ಹಾಲಿನಲ್ಲಿ ಸೋರಿತ್ತು, ಇದಕಿನ್ನಾವುದು ತೆರ?
ಕ್ರೀಯ ಬಿಡಬಾರದು, ಅರಿವಿಂಗೆ ಆಶ್ರಯ ಬೇಕು.
ಅರಿವನರಿದೆಹೆನೆಂದಡೆ ಪ್ರಪಂಚಕ್ಕೆ ಒಡಲಾಯಿತ್ತು.
ಹುಲಿ ಬಾವಿ ಹಾವಿನ ಎಡೆಯಲ್ಲಿ ಸಿಕ್ಕಿದ ತೆರ ಎನಗಾಯಿತ್ತು.
ಈ ಸಂದೇಹವ ಬಿಡಿಸು, ಸದಾಶಿವಮೂರ್ತಿಲಿಂಗವೆ, ನಿನ್ನ ಧರ್ಮ./52
ಎರಳೆಯ ಕೊಂಬಿನ ನುಲಿಯ ಬಳಸಿನಲ್ಲಿ
ಅರುಹಿರಿಯರೆಲ್ಲರು ಬಳಸಿ ಆಡುತ್ತೈಧಾರೆ.
ಎರಳೆ ಸತ್ತು ಕೋಡಳಿದು ಕೊಂಬಿನ ನುಲುಹು ನೇರಿತವಾಗಿ,
ಬಳಸುವ ಅರು ಹಿರಿಯರೆಲ್ಲರು ಒಬ್ಬುಳಿತವಾಗಿ
ಸುಳುಹು ನಿಂದಾಗವೆ, ಸದಾಶಿವಮೂರ್ತಿಲಿಂಗದ ಅಂಗದಲ್ಲಿ ಲೀಯವಾಯಿತ್ತು./53
ಎಲ್ಲವು ಲಿಂಗಕ್ಕೆ ಸಲ್ವುದೆಂಬುದನದು, ಸಂಕಲ್ಪಸೂತಕವಳಿದು.
ಬಂದ ಪದಾರ್ಥವ ಲಿಂಗಭಾಜನದಲ್ಲಿ
ಸಹಭೋಜನವ ಮಾಡುವುದು ಲಿಂಗಭರಿತಾರ್ಪಣ.
ಲಿಂಗಕ್ಕೂ ತನಗೂ ಭಿನ್ನಭಾವವಿಲ್ಲದೆ
ಲಿಂಗದೊಳಗೆ ಸಲೆ ಸಂದು ಒಂದಾಗಿ ಕೂಡಿದುದು ಶರಣಭರಿತಾರ್ಪಣ,
ಸದಾಶಿವಮೂರ್ತಿಲಿಂಗಕ್ಕೆ ತೃಪ್ತಿ. /54
ಏಕಮೂರ್ತಿತ್ರಯೋಭಾಗವಾದುದ ತಾನರಿತ ಮತ್ತೆ
ತಾನಾರಾಧಿಸುವ ವಸ್ತು ಶುದ್ಧತೆ ಆದಾಗ ತಾ ಶುದ್ಧವಾಯಿತ್ತೆಂಬುದಕ್ಕೆ ಪ್ರಸಿದ್ಧ.
ತ್ರಿವಿಧ ತನ್ನಯ ಭಾವಮೂರ್ತಿ ಆದ ಕಾರಣ,
ಹೇಳಿದೆ ಕೇಳಿದೆನೆಂಬುದಿಲ್ಲ, ಆ ಅಂಗ ಸದಾಶಿವಮೂರ್ತಿಲಿಂಗವು ತಾನೆ./55
ಐದು ಬಹಲ್ಲಿ ಒಂದಾಗಿ ಬಂದ ಮಾಯೆಯ,
ಮೂರು ಬಹಾಗ ಮುಂದೆ ಬಂದ ಮಾಯೆಯ,
ಆರೂ ಹಿಂಗಬಾರದು.
ಒಂದು ಎಂಬನ್ನಕ್ಕ ಸಂದೇಹದ ಮಾಯೆ ಕೊಂದು ಕೂಗುತ್ತಿದೆ.
ಇನ್ನೆಂದಿಂಗೆ ನೀನಳಿವೆ? ಇನ್ನೆಂದಿಂಗೆ ನಾನುಳಿವೆ?
ಎಂಬ ಸಂದೇಹ ಸದಾಶಿವಮೂರ್ತಿಲಿಂಗದಲ್ಲಿಯೆ ಅಳಿಯಿತ್ತು. /56
ಒಂದಂಗಕ್ಕೆ ಮೂರು ಯುಕ್ತಿ ಭಿನ್ನವಾದಂತೆ,
ಭಿನ್ನವೊಂದಂಗದಲ್ಲಿ ಕೂಡಿ ಚಕ್ಷುವಿನಲ್ಲಿ ಕಂಡು ನಡೆವಂತೆ,
ಅದೆಂತೆಂದಡೆ: ನಡೆವ ಚರಣ ಗುರುಮಾರ್ಗವಾಗಿ, ಕೊಡುವ ಕರ ಚರಮಾರ್ಗವಾಗಿ,
ಕೊಂಬ ಜಿಹ್ವೆ ಲಿಂಗದ ಒಡಲಾಗಿ,
ನೋಡುವ ಚಕ್ಷು ತ್ರಿವಿಧವ ಕೂಡಿದ ಪರಮಪ್ರಕಾಶವಾಗಿ,
ಇಂತಿವನೊಡಗೂಡಿ ಕಾಬ ಸದ್ಭಕ್ತನಂಗ
ಸದಾಶಿವಮೂರ್ತಿಲಿಂಗವು ತಾನೆ. /57
ಒಂದನಹುದು ಒಂದನಲ್ಲಾ ಎಂಬುದಕ್ಕೆ
ಎಲ್ಲಕ್ಕೂ ಸಂದೇಹ ಪದವಾದಿಹಿತು.
ನಿಂದ ನಿಂದ ಸ್ಥಲಕ್ಕೆ ಕುಂದಿಲ್ಲದೆ ಸಂದಿಲ್ಲದೆ,
ಸದಾಶಿವಮೂರ್ತಿಲಿಂಗವನರಿಯಬೇಕು./58
ಒಂದಾಸೆಯ ಕುರಿತು ಸರ್ವಮಾತಿಂಗೆ ಒಡಲಾಯಿತ್ತು,
ಒಂದಾಸೆ ಅರತು ನಿಂದಡೆ ಈಶಮೂರ್ತಿ ತಾನಾಗಿಪ್ಪ.
ಇಂತೀ ಉಭಯದ ಆಸೆಯಲ್ಲಿ ಘಾಸಿಯಾಗುತ್ತ, ಮಾತಿನ ಮಾಲೆ ಬೇಡ.
ಆಸೆಯ ಪಾಶವ ಹರಿದು ಈಷಣತ್ರಯವ ಕಿತ್ತು,
ನಿರ್ಜಾತನಾಗಿದ್ದಲ್ಲಿ ಸದಾಶಿವಮೂರ್ತಿಲಿಂಗವು ತಾನೆ./59
ಒಂದು ಶರೀರ ನಾನಾ ಲಾಗ ಕಲಿತು, ಆಡುವ ಭೇದ ಬೇರಾದಂತೆ,
ಆಡುವವ ತಾನೊಬ್ಬನೆಯಾಗಿ, ಆದುದ ಕಂಡು
ಅನ್ಯರ ಕೇಳಲೇಕೆ? ಇದಿರಿಗೆ ಹೇಳಲೇಕೆ?
ವಸ್ತುವಾಟ ಒಂದು, ವರ್ತನ ಬೇರೆ,
ಉಭಯವೂ ತಾನೆ ಸದಾಶಿವಮೂರ್ತಿಲಿಂಗದ ಅಂಗ./60
ಒಂದು ಹರಿವ ಹಾವು, ಒಂದು ದನಿ ಸರಕ್ಕೆ ನಿಂದ ಹಾವು,
ಒಂದು ಉರಿವ ಹಾವು.
ಮೂವರ ನಡುವೆ ನಿಂದು ಆಡುವ ಕೋಡಗದಿರವು ಎಂತೆಂದಡೆ: ಹರಿವ ಹಾವ ಮೆಟ್ಟಿ, ನಿಂದ ಹಾವ ಕೈಯ್ಯಲ್ಲಿ ಹಿಡಿದು,
ಉರಿವ ಹಾವ ಬಾಯಲ್ಲಿ ಕಚ್ಚಿ ಆಡುತ್ತಿರಲಾಗಿ,
ಕೋಡಗನೊಡೆಯ ಬಂದು ನೋಡಿ, ಕೋಲ ಹಿಡಿದು ಕುಟ್ಟೆ,
ಮೂರು ಹಾವ ಬಿಟ್ಟು, ಕುಟ್ಟಿದ ಕೋಲ ನುಂಗಿತ್ತು.
ಆ ಕೋಲು ಕೋಡಗದ ಒಡಲೊಳಗೊಡೆದು ಕೋಡಗ ಸತ್ತಿತ್ತು.
ದಡಿ ಒಡೆಯನ ನುಂಗಿ ಒಡೆಯನಡಗಿ,
ಸದಾಶಿವಮೂರ್ತಿಲಿಂಗವ ಒಡಗೂಡಿ ಬಚ್ಚಬಯಲಾಯಿತ್ತು./61
ಒಡೆಯ ನೋಡುತ್ತಿದ್ದಲ್ಲಿ ಅಸುವಿನಾಸೆಯಿಲ್ಲದೆ ಅವಸರಕ್ಕೊದಗಬೇಕು.
ಭಕ್ತನಾದಲ್ಲಿ ತಾ ಮಾಡುವ ಕೃತ್ಯಕ್ಕೆ ನಿಶ್ಚಯನಾಗಿರಬೇಕು.
ಬಂಟಂಗಾ ಗುಣ ಭಕ್ತಂಗೀ ಗುಣ.
ಇದು ಸತ್ಯವೆಂದು ಅರಿತು ಸದಾಶಿವಮೂರ್ತಿಲಿಂಗವನರಿಯಬೇಕು./62
ಓಗರ ಹಸಿಯಿತ್ತೆಂದು ಉಂಬವರಿಲ್ಲ,
ನೀರು ಬಾಯಾರಿತ್ತೆಂದು ಕುಡಿವರಿಲ್ಲ,
ಭೂಮಿಗೆ ಬಡತನವೆಂದು ಬಿತ್ತುವರಿಲ್ಲ.
ತಮ್ಮ ಒಲವರಕ್ಕೆ ತಾವು ಮಾಡುವಲ್ಲಿ ಗನ್ನದ ಆಸೆ ಬೇಡ,
ಸದಾಶಿವಮೂರ್ತಿಲಿಂಗವನರಿವುದಕ್ಕೆ./63
ಕಂಗಳ ದೃಷ್ಟಿ ಪುರುಷನಾಗಿ, ಕೈಯ ದೃಷ್ಟಿ ಸತಿಯಾಗಿ,
ಕೂಡಿಹೆನೆಂಬ ತವಕ ಉಭಯದ ಬಿಂದುವಾಗಿ ನಿಂದುದು
ಸದಾಶಿವಮೂರ್ತಿಲಿಂಗದ ತದ್ರೂಪು./64
ಕಂಗಳಲ್ಲಿ ನೋಡಿ, ಕೈಯ್ಯಲ್ಲಿ ಮುಟ್ಟಿ, ನಾಸಿಕ ವಾಸನೆಯನರಿದು
ಜಿಹ್ವೆಗೆ ರುಚಿ ಮುಟ್ಟುವುದಕ್ಕೆ ಮುನ್ನವೆ
ಮೃದು ರಿಠಣ ಕರಿಣ[ತರ] ತಾನರಿವುದಕ್ಕೆ ಮೊದಲೆ,
ಲಿಂಗ ಮುಂತಾಗಿ ಅರ್ಪಿಸಿಕೊಂಬುದು ಅರ್ಪಿತ ಅವಧಾನಿಯ ಯುಕ್ತಿ.
ರಸಘಟಿಕೆಯ ಮಣಿ ಅಸಿಯ ಮೊನೆಗೆ ನಿಲುವಂತೆ,
ಲಿಂಗ ಅರ್ಪಿತಕ್ಕೂ ಅರಿವ ಚಿತ್ತಕ್ಕೂ ಎಡೆಬಿಡುವಿಲ್ಲದ
ಪರಿಪೂರ್ಣವಾಗಿ ನಿಂದುದು ಭರಿತಾರ್ಪಣ,
ಸದಾಶಿವಮೂರ್ತಿಲಿಂಗವು ತಾನಾಗಿ./65
ಕಂಚುಕೆಖಚಿತ ಆಭರಣ ವಿಲಾಸಿತಂಗಳಿಂದ
ಸತಿ ಪತಿಯ ಮುಂದೆ ಬಂದು ನಿಂದಿರೆ,
ಕಂಗಳು ತುಂಬಿ ನೋಡಿ ಮನಸಿಜ ಮುಯ್ಯಾಂತಂತೆ
ಕೂಟದ ಉಚಿತಕ್ಕೆ
ತೊಟ್ಟ ತೊಡಿಗೆ ಹೊರಗಾಗಿ ಉಭಯವು ನಿರ್ವಾಣವಾಯಿತ್ತು.
ಮಾಡುವ ಕ್ರೀಭಾವ ಹೊರಗಳ ವರ್ತನಶುದ್ಧ ಹೊರಗೆ ನಿಂದಿತ್ತು.
ಕೂಡಿಕೊಂಬ ವಸ್ತು, ಕೂಡುವ ಚಿತ್ತ, ಉಭಯ ಕಲೆಯಿಲ್ಲದಿರಬೇಕು
ಸದಾಶಿವಮೂರ್ತಿಲಿಂಗವನರಿವುದಕ್ಕೆ. /66
ಕಣ್ಣಿನ ಮನೆಯಲ್ಲಿ ಗನ್ನದ ಗರತಿ ಹಡದುಂಬುತ್ತೈದಾಳೆ.
ಅವಳ ಕೂಟವ ಕೂಡುವುದಕ್ಕೆ,
ತಲೆ ಕೆಳಗಾಗಿ, ಕಾಲು ಮೇಲಾಗಿ, ಕೈ ಅಪ್ರದಕ್ಷಿಣವಾಗಿ ತಕ್ಕೈಸಿಕೊಂಡು,
ಹಿಂದುಮುಂದಾಗಿ ಮುತ್ತನಿಕ್ಕೆ,
ಶಕ್ತಿಯ ಸುಖ ಲೇಸಾಯಿತ್ತು.
ಸದಾಶಿವಮೂರ್ತಿಲಿಂಗ ಬಚ್ಚಬಯಲು. /67
ಕಣ್ಣಿಲ್ಲದ ಕುರುಡ ಕನ್ನಡಿಯ ನೋಡಿ ಮೂರು ಕಣ್ಣ ಕಂಡ.
ಒಂದು ಧರೆಯ ಕಣ್ಣು, ಒಂದು ಸಿರಿಯ ಕಣ್ಣು,
ಒಂದು ಉರಿಯ ಕಣ್ಣು.
ಉರಿ ಸಿರಿಯ ನುಂಗಿ, ಸಿರಿ ಧರೆಯ ನುಂಗಿ,
ಧರೆ ಅರುಹಿರಿಯರ ನುಂಗಿತ್ತು.
ಆ ಗುಣವನರಿಯಬೇಕು, ಸದಾಶಿವಮೂರ್ತಿಲಿಂಗವ ಭೇದಿಸಬೇಕು/68
ಕನ್ನಡಿಯಲ್ಲಿ ಕಪ್ಪು ಹುಟ್ಟಿದಾಗ ಕಪ್ಪ ಕಳೆದಲ್ಲದೆ ಒಪ್ಪವ ಕಾಣಬಾರದು.
ತನ್ನ ಭಾವಶುದ್ಧಕ್ಕೆ ದರ್ಪಣದ ಒಪ್ಪವನರಸಬೇಕು.
ಎನ್ನಯ ಮನದ ಕಪಟಕ್ಕೆ ನಿಮ್ಮಯ ಚಿತ್ತಶುದ್ಧವನರಸಬೇಕು.
ನಿಮ್ಮಯ ನಿರ್ಮಲ ಎನ್ನಯ ಮಲದೇಹವ ತೊಳೆಯಬೇಕು ಎಂಬುದಕ್ಕೆ
ಅರಿವಿನ ಮಾರನ ಬಿನ್ನಹ,
ಸದಾಶಿವಮೂರ್ತಿಲಿಂಗಕ್ಕೆ ತೆರಹಿಲ್ಲದ ಭಾವ. /69
ಕಯ್ಯೊಳಗಳ ಸಂಚ ಕಣ್ಣಿಗೆ ಮರೆಯಾದಂತೆ,
ಎಲ್ಲರಿಗೆ ಚೋದ್ಯವಾಗಿ ತೋರುತ್ತಿಹುದು.
ಆ ಪರಿಯಲ್ಲಿ ಅಸು ಘಟದ ಸಂಚವನರಿವ ಸಂಚಿತಾರ್ಥಿಗಳಂಗ,
ಮಿಕ್ಕಾದ ಅಸು ಲೆಂಕರಿಗಿಲ್ಲ,
ನಿಸ್ಸೀಮರಿಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ./70
ಕರೆವ ಪಶುವಿಂಗೆ ತೃಣ ದವಸ ಎಯ್ದಾದಲ್ಲಿ
ಹಾಲ ವೆಗ್ಗಳವ ಕಾಬಂತೆ,
ಕ್ರೀಶುದ್ಧತೆಯಾಗಿ ಮನ ವಚನ ಕಾಯ ತ್ರಿಕರಣ ಶುದ್ಧವಾಗಿ ಇದ್ದಲ್ಲಿಯೆ
ವಸ್ತುವಿನ ಹೆಚ್ಚುಗೆಯ ಒದಗು, ಅನಿತ್ಯವ ನೀಗಿ ನಿಂದ ಬೆಳಗು,
ಸದಾಶಿವಮೂರ್ತಿಲಿಂಗದ ಸಂಗದ ಸಂತೋಷದ ಇರವು./71
ಕಲ್ಪತರುವಿಂಗೆ ಅಪ್ಪು ಎಯ್ದುವಂತೆ
ಇಕ್ಷುದಂಡಕ್ಕೆ ಮಧುರರಸ ಬೆಚ್ಚಂತೆ,
ಕ್ಷೀರವಿರೋಧಿಗೆ ಹಗೆ ಸ್ನೇಹವಾದಂತೆ, ಆ ಉಭಯದ ಭೇದ.
ಇದಿರಿಟ್ಟು ಕುರುಹು ಅರಿವ ಮನ ಎರಡಳಿದಲ್ಲಿಯೇ
ಕುರುಹಳಿದು ನಿಂದುಳುಮೆ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ./72
ಕಲ್ಲ ಗಿರಿಯ ಹುಲ್ಲಿನ ಮೊನೆಯಲ್ಲಿ ಕುಕ್ಕಿ
ಹುಲ್ಲೆಯ ಮರಿ ಹುಲಿ ಒಂದಾಗಿ ಚಲ್ಲವಾಡುತ್ತಿದ್ದಿತ್ತು.
ಬಲ್ಲವನ ಬಲುಹ ಏನೂ ಇಲ್ಲದವ ಮುರಿದ.
ಈ ಸೊಲ್ಲಿನ ವಿವರವ ಕೇಳುವ ಬನ್ನಿ,
ಸದಾಶಿವಮೂರ್ತಿಲಿಂಗದಲ್ಲಿಗೆ./73
ಕಲ್ಲಿನೊಳಗಳ ಜ್ಯೋತಿ, ಉರಿಯೊಳಗಳ ಉಷ್ಣ,
ಹಣ್ಣಿನೊಳಗಳ ಸಾರದ ಸವಿಯಂತೆ,
ಸವಿಲೇಪವಾದ ಚಿತ್ತದ ವಿಲಾಸಿತದಂತೆ
ನಿಜಲಿಂಗದಲ್ಲಿ ಘನಬೆಳಗು ತೋರುತ್ತಲಿದೆ,
ಸದಾಶಿವಮೂರ್ತಿಲಿಂಗದಲ್ಲಿ. /74
ಕಲ್ಲು ಕಲ್ಲು ತಾಕಿದಲ್ಲಿ ಕಿಚ್ಚಿನ ಕಿಡಿಯಲ್ಲದೆ, ಹೆಂಟೆ ಶಿಲೆ ಹೋರಿದಲ್ಲಿವುಂಟೆ?
ಅರಿದವನಲ್ಲಿ ಒಡಗೂಡುವ ಸುಖವಲ್ಲದೆ,
ಬರಿಯನಲ್ಲಿ, ಅರಿವು ಹೀನನಲ್ಲಿ, ಅರಿವಿನ ಕುರುಹ ಮರೆದಾಡುವನಲ್ಲಿ,
ಸುರೆಯ ಮಡಕೆಯ ಪೂಜಿಸಿ ಕುಡಿವವನಂತಾಗಬೇಡ.
ಬರಿಯ ವಾಚಾಸಿದ್ಧಿಯಲ್ಲಿ ಅರಿದೆಹೆನೆಂದು
ಅವ ಕೊಟ್ಟರಿವಿನ ಕುರುಹ ಮರೆಯಬೇಡ.
ಆ ಮರೆಯಲ್ಲಿ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ ಅದೆ./75
ಕಲ್ಲು ಮರ ಮಣ್ಣಿನ ಮರೆಯಲ್ಲಿ ಪೂಜಿಸಿಕೊಂಬುದು ವಸ್ತುವೇರಿ
ತನ್ನ ಮನಸ್ಸಿನ ಗೊತ್ತಲ್ಲದೆ.
ಅಲ್ಲಿಪ್ಪುದನರಿವ ಅರಿವು ತಾನೆ ನಿಜವಸ್ತುವಾಗಿ ಬೆಳಗುತ್ತದೆ
ಸದಾಶಿವಮೂರ್ತಿಲಿಂಗವೆಯಾಗಿ. /76
ಕಸುಗಾಯಲ್ಲಿ ಹಣ್ಣಿನ ರಸವನರಸಿದರುಂಟೆ, ಅಯ್ಯಾ?
ಶಿಶು ಗರ್ಭದಲ್ಲಿ ಬಲಿವುದಕ್ಕೆ ಮೊದಲೆ ಅಸು ಘಟಿಸಿದುದುಂಟೆ, ಅಯ್ಯಾ?
ಮಾಡುವ ಆಚರಣೆಮಾರ್ಗ ಭಾವಶುದ್ಧವಾಗಿ ನೆಲೆಗೊಳ್ಳದೆ
ಕಾಮ್ಯದಲ್ಲಿ ಕಾಮ್ಯಾರ್ಥ ನೆಲೆಗೊಂಬ ಪರಿಯಿನ್ನೆಂತೊ?
ಸೂಜಿಕಲ್ಲು ಸೂಜಿಯನರಸುವಂತೆ,
ಉಭಯಕ್ಕೆ ಬಾಯಿಲ್ಲದೆ ಕಚ್ಚುವ ತೆರನ ನೋಡಾ, ಅಯ್ಯಾ!
ಶಿಲೆ ಲೋಹದಿಂದ ಕಡೆಯೆ ನಿಮ್ಮಯ ಅರಿವಿನ ಭೇದ?
ಅದರ ಮರೆಯ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ./77
ಕಾದ ಕಬ್ಬುನವ ಕಾಯದ ಕಬ್ಬುನದಲ್ಲಿ ಹಿಡಿದು,
ಅಡಿಯಲ್ಲಿಯೂ ತಾನಾಗಿ, ಮೇಲೆತ್ತಿ ಹೊಡೆವುದೂ ತಾನಾಗಿ,
ಹಿಡಿವುದೂ ತಾನಾಗಿ,
ಮೂರರ ಭೇದದಿಂದ ತನ್ನಂಗಕ್ಕೆ ತಾನಂಜಿ,
ಅವರ ಚಿತ್ತದ ಬಿನ್ನಾಣಕ್ಕೆ ಬಂದ ತೆರ, ಲಿಂಗಮಯ.
ಸರ್ವಾಂಗದಲ್ಲಿ ನಿಂದು, ಚಿತ್ತದ ಗೊತ್ತಿಗೆ ಸಿಕ್ಕಿ,
ಅವರಿಚ್ಚೆಯಲ್ಲಿ ತನ್ಮಯನಾದೆಯಲ್ಲಾ,
ಸದಾಶಿವಮೂರ್ತಿಲಿಂಗವೆ ತಾನು ತಾನಾದ ಕಾರಣ. /78
ಕಾಮಧೇನುವೆಂದಡೆ ಇಹುದಕ್ಕೆ ನೆಲೆ ಬೇಕು,
ಕಲ್ಪತರುವೆಂದಡೆ ಹುಟ್ಟೂದಕ್ಕೆ ಭೂಮಿ ಬೇಕು,
ಚಿಂತಾಮಣಿಯೆಂದಡೆ ತಾನೊಂದ ಚಿಂತಿಸಿ ಬೇಡಿಯಲ್ಲದೆ ಕೊಡದೊಂದುವ.
ಇವಕ್ಕೆಲ್ಲಕ್ಕೂ ಒಂದೊಂದು ನಿಂದ ನೆಲೆ ವಾಸವಾಯಿತ್ತು.
ಮನದರಿವಿಂಗೆ, ಕೈಯ ಕುರುಹಿಂಗೆ,
ವಿಚಾರದಿಂದ ಒಳಹೊಕ್ಕು ನಿಂದು ನೋಡಲಾಗಿ,
ಹಿಂದಳ ಕತ್ತಲೆಯ ಮುಂದಳ ಬೆಳಗಿನ ಉಭಯದ ಸಂಧಿಯಲ್ಲಿ
ಸಲೆ ಸಂದು ತೋರುತ್ತದೆ, ನಿಜದ ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ. /79
ಕಾಮನ ಅಂಬಿನ ಕಣೆಯಲ್ಲಿ ಮೂವರು ಬಾಲೆಯರು ಹುಟ್ಟಿದ ವಿವರ :
ಹಿಳಿಕಿನಲ್ಲಿ ತಾಯಿ ಹುಟ್ಟಿದಳು, ಮಧ್ಯದಲ್ಲಿ ಮಗಳು ಹುಟ್ಟಿದಳು,
ಮೊನೆಯಲ್ಲಿ ಮೊಮ್ಮಗಳು ಹುಟ್ಟಿ
ಹೆತ್ತಾಯ ತಿಂದು ತಾಯಿಗೆ ಎಸರನೆತ್ತುತೈದಾಳೆ.
ಅವಳ ಕೊಲುವ ಧೀರರ ಇನ್ನಾರನು ಕಾಣೆ.
ಎನಗೆ ಗಂಡ ಎಮ್ಮವ್ವೆಯ ಮಗನೆಂದು ಸಂದಣಿಗೊಳುತ್ತವಳೆ.
ನಾವೆಲ್ಲರೂ ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ./80
ಕಾಯಕ್ಕೆ ಕರ್ಮ ಗುರುವಾಗಬೇಕು,
ಉಭಯ ವೇಧಿಸಿ ನಿಂದಲ್ಲಿ ಸ್ವಾನುಭಾವ ಸನ್ನದ್ಧನಾಗಿ ಗುರುವಾಗಬೇಕು.
ಆತನನುಜ್ಞೆಯಿಂದ ಬಂದ ಚಿತ್ತದ ಗೊತ್ತಿನ ಕುರುಹು,
ಅದೆ ವಸ್ತು ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ./81
ಕಾಯದ ಕಕ್ಕುಲತೆಗಾಗಿ ಜೀವಿಗಳ ಬಾಗಿಲ ಕಾಯದೆ,
ಈಷಣತ್ರಯಕ್ಕಾಗಿ ಭವದುಃಖಿಗಳ ಬಾಗಿಲಲ್ಲಿ ನಿಂದು
ವೇಳೆಯ ಕಾವಂಗೆ ಭಾವರಹಿತ ಬ್ರಹ್ಮವೇಕೆ?
ಅದು ನಾಣ್ನುಡಿಗಳೊಳಗು, ಸದಾಶಿವಮೂರ್ತಿಲಿಂಗಕ್ಕೆ ಹೊರಗು./82
ಕಾಯವಳಿಯಲಾಗಿ ಜೀವನ ಚೇತನಕ್ಕೆ ಸ್ಥಾಪ್ಯವಿಲ್ಲ.
ಜೀವ ಹಿಂಗೆ ಘಟವೊಂದು ದಿನಕ್ಕೆ ಆಶ್ರಯಿಸಿ ನಿಲಲರಿಯದು.
ಒಂದ ಬಿಟ್ಟೊಂದ ಹಿಡಿವುದಕ್ಕೆ ಎಡೆತೆರಪಿಲ್ಲ.
ಇದು ಕಾರಣದಲ್ಲಿ, ಇಷ್ಟಕ್ಕೂ ಪ್ರಾಣಕ್ಕೂ ಬೆಚ್ಚಂತಿರಬೇಕು.
ನಿಂದ ಇರವಿನಲ್ಲಿ ಸಂದು, ಮತ್ತೊಂದು ವಿಚಾರಿಸಿಹೆನೆಂಬ ಸಂದೇಹವಳಿದಲ್ಲಿ
ತೋರುತ್ತದೆ ಬೆಳಗು ಸದಾಶಿವಮೂರ್ತಿಲಿಂಗದಲ್ಲಿ. /83
ಕಾಯವಿದ್ದಲ್ಲಿಯೇ ಸಕಲಕರ್ಮಂಗಳ ಮಾಡು,
ಜೀವವಿದ್ದಲ್ಲಿಯೇ ಅಳಿವ ಉಳಿವನರಿ.
ಉಭಯವು ಕೂಡಿದಲ್ಲಿ ಹಿಡಿವುದ ಹಿಡಿದು, ಬಿಡುವುದ ಬಿಟ್ಟು
ಸದಮಲಾಂಗನಾಗಿ ಒಡಗೂಡು, ಸದಾಶಿವಮೂರ್ತಿಲಿಂಗವನರಿ./84
ಕಾಯವಿದ್ದು ಕಾಬುದು ವಿಜ್ಞಾನ,
ಜೀವವಿದ್ದು ಕಾಬುದು ಸುಜ್ಞಾನ,
ಎರಡಳಿದು ತೋರಿಕೆಯಲ್ಲಿ ಕಾಬುದು ಪರಂಜ್ಯೋತಿಜ್ಞಾನ,
ಇಂತೀ ಮೂರು ಮುಖವ ಏಕವ ಮಾಡಿ
ಬೇರೊಂದು ಕಾಬುದು ಪರಮಪ್ರಕಾಶಜ್ಞಾನ.
ಇಂತೀ ಅಂತರ ಪಟಂತರದಲ್ಲಿ ನಿಂದು ನೋಡುವ ಸಂದೇಹವ ಹರಿದ ಸಂದಿನಲ್ಲಿ
ಕುಂದದ ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ./85
ಕಾಯವುಳ್ಳನ್ನಕ್ಕ ಮಾಡುವುದು ಲಿಂಗಪೂಜೆಯ,
ಜೀವವುಳ್ಳನ್ನಕ್ಕ ಅರಿವುದು ಅಭೇದ್ಯ ವಸ್ತುವ,
ಉಭಯವ ಕಡೆಗಾಣಿಸಿ ನಿಂದಲ್ಲಿ
ಸದಾಶಿವಮೂರ್ತಿಲಿಂಗವೆಂದು ಕುರುಹಿಡಲಿಲ್ಲ. /86
ಕಾಲವನರಿತು ನೇಮವ ಮಾಡಲಿಲ್ಲ,
ಉಚಿತವನರಿತು ಕೃತ್ಯವ ಮಾಡಲಿಲ್ಲ,
ಮನ ನೆನೆದಂತೆ ತನು ಆಡಲಿಲ್ಲ,
ಆ ನೆನಹೆ ಘನಲಿಂಗಮೂರ್ತಿ[ಯ ಕುರುಹು].
ಆ ಕುರುಹು ಅರಿವಿನಲ್ಲಿ ನಿಂದಿತ್ತು,
ಆ ಅರಿವೇ ಕುರುಹಾಗಿ ಬೆಳಗುತ್ತದೆ,
ಸದಾಶಿವಮೂರ್ತಿನಿಷ್ಕಲಲಿಂಗವು ತಾನಾಗಿ. /87
ಕಾಳಿಯ ಕಡೆಗಣ್ಣ ಕಿತ್ತು, ಏಡಿಯ ಸರ್ವಾಂಗವ ಸೀಳಿ,
ಅಚ್ಚ ಬೆಳ್ಳಿಗೆಯ ಹಾಲ ನಿಶ್ಚಯದಲ್ಲಿ ತೆಗೆದು
ತೃಪ್ತಿಯಾಗಿ ಕೊಳ್ಳಬಲ್ಲಡೆ, ಆತನೆ ಸದಾಶಿವಮೂರ್ತಿಲಿಂಗವು. /88
ಕಾಳೋಗರನ ಹೆಡೆಯ ಮೇಲೆ ಮಧ್ಯದಲ್ಲಿ ಒಂದು ಕೋಳು ಸಿಕ್ಕದ ಹೆಣ್ಣು
ಕಾಲು ಮೇಲಾಗಿ ತಲೆ ಕೆಳಕಾಗಿ
ಅಳುವರನೆಲ್ಲರ ಕಾಲ ಸಂದಿಯಲ್ಲಿರಿಸಿ,
ಭಾಳಾಂಬಕನ ಲೀಲೆಯ ಹೊತ್ತು ಆಡುವರನೆಲ್ಲರ
ತನ್ನ ಶುಕ್ಲದ ಪದರದಲ್ಲಿ ಬೈಚಿಟ್ಟೈದಾಳೆ.
ಆ ಹೊರೆಯ ಹರಿದಲ್ಲದಾಗದು, ಸದಾಶಿವಮೂರ್ತಿಲಿಂಗಕ್ಕೆ./89
ಕುಂಭಕ್ಕೆ ಜಲವ ತುಂಬುವಲ್ಲಿ ಶೋಧಿಸಿದಲ್ಲದೆ ಶುದ್ಧವಿಲ್ಲ.
ತಾ ಭುಂಜಿಸುವ ದ್ರವ್ಯಕ್ಕೆ ಕಲ್ಲು ಕಡ್ಡಿ ಮುಳ್ಳು ಮೊದಲಾಗಿ
ಶೋಧಿಸಿಕೊಂಡಲ್ಲದೆ, ಶುದ್ಧವಿಲ್ಲ[ದೆ] ಕಂಡುಕೊಳಬಹುದೆ?
ಇಂತಿವನರಿತು ಸಂದೇಹದಲ್ಲಿ ಮಾಡುವ ಭಕ್ತಿ
ಅಂಧಕ ಕಣ್ಣಿಯ ಹೊಸದಂದವಾಯಿತ್ತು.
ಸಂದೇಹವ ಬಿಟ್ಟಿರು,
ಅದು ನಿನ್ನಂಗ, ಸದಾಶಿವಮೂರ್ತಿಲಿಂಗದ ಸಂಗ./90
ಕುರಿಯೊಡೆಯ ಹಲಬರ ನಡುವೆ ನಿಂದಿರೆ ತನ್ನ ಒಡೆಯನನರಿವಂತೆ,
ಸಕಲೇಂದ್ರಿಯ ಬಹುದುಃಖದಲ್ಲಿದ್ದಡೂ
ತತ್ಕಾಲಕ್ಕೆ ಅರ್ಚನೆ ನೇಮ ಕೃತ್ಯ ತಪ್ಪದೆ ಮಾಡಬೇಕು.
ಇದು ನಿಶ್ಚಯದ ಇರವು,
ಸದಾಶಿವಮೂರ್ತಿ ಲಿಂಗವನರಿವುದಕ್ಕೆ ಕಟ್ಟಿದ ಗೊತ್ತು. /91
ಕೂಂಬಿನ ಮೇರಳ ಹಕ್ಕಿಯ ಆಕಾಶದ ಮೇರಳ ಗಿಡುಗ ಹಿಡಿಯಿತ್ತು.
ಕೊಂಬು ಹಕ್ಕಿಯ ಕುಡದೆ ಗಿಡುಗನ ಕಡಿಯಿತ್ತು.
ಹಕ್ಕಿಯ ಗಿಡುಗನ ಕೂಡಿ ಕಡಿವ ಕೊಂಬ ಚಿಟ್ಟೆಯ ಮರಿ ನುಂಗಿತ್ತು,
ಸದಾಶಿವಮೂರ್ತಿಲಿಂಗವನರಿತು. /92
ಕೆಚ್ಚಲೊಳಗೆ ಕ್ಷೀರವಿಪ್ಪಂತೆ
ಚಿತ್ತದೊಳಗೆ ವಸ್ತುವಿಪ್ಪ ಭೇದವನರಿಯಬೇಕು.
ಕೆಚ್ಚಲ ಹೆರೆ ಹಿಂಗಿಯಲ್ಲದೆ ಹಾಲಿಗೊಪ್ಪವಿಲ್ಲ.
ಚಿತ್ತದ ಕಲೆಯ ಬಿಟ್ಟು ವಸ್ತುಮಯ ತಾನಾಗಿ
ಉಭಯ ರೂಪಿನಲ್ಲಿ ಅಡಗಿದ ವಸ್ತುವ ಹೆರೆ ಹಿಂಗಿದಲ್ಲಿ
ಸದಾಶಿವಮೂರ್ತಿಲಿಂಗವನರಿತುದು./93
ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ ಅಯ್ಯಾ?
ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ
ಅರಿವಿಗೆ ಮುನಿವರುಂಟೆ ಅಯ್ಯಾ?
ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ ಮೊಲೆಯ ಕಟ್ಟಿದರುಂಟೆ ಅಯ್ಯಾ?
ಗುರುವಾದಡೂ ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ
ಅರಿವಿಂಗೆ ಶರಣು ಮರವಿಂಗೆ ಮಥನವ ಮಾಡಿದಲ್ಲದೆ ಇರೆ.
ಇದು ನೀವು ಕೊಟ್ಟ ಅರಿವಿನ ಮಾರನ ಇರವು,
ಸದಾಶಿವಮೂರ್ತಿಲಿಂಗದ ಬರವು. /94
ಕೈ ಕಲಸಿ ಬಾಯಿ ಉಂಡಲ್ಲಿ ಅದಾವ ಹಂಗೆಂದೆನಬಹುದೆ?
ಪೂಜಿಸಿಕೊಂಬಲ್ಲಿ ಕರ್ತು, ಪೂಜಿಸುವಾತ ಭೃತ್ಯನೆ?
ಅದು ಜಗದ ಆಗುಚೇಗೆಯನರಿವುದಕ್ಕೆ ಉಭಯ ನಾಮವಾಯಿತ್ತು.
ಹಣ್ಣು ರಸದಂತೆ ಭಿನ್ನವಿಲ್ಲ. ಸದಾಶಿವಮೂರ್ತಿಲಿಂಗ ತಾನೆ. /95
ಕೊಟ್ಟ ಕೂಗಿತ್ತು, ಹಾಲುವಕ್ಕಿ ಬಳಿಯಿತ್ತು, ಹಂಗ ಕಟ್ಟಿತ್ತು;
ಅವನ ಅವಳ ಮದುವೆ ನಿಂದಿತ್ತು, ಇವನಿಗಾಯಿತ್ತು.
ತಂದ ಮರುದಿನಕ್ಕೆ ಸತ್ತಳವಳು.
ಮದುವಳಿಗ ಮಂಡೆಯ ಮೇಲೆ ಸೀರೆಯ ಹಾಕಿಕೊಂಡು,
ಕೆಟ್ಟೆ ಕೆಟ್ಟೆ ಕೆಟ್ಟೆನೆಂದು ಹೋಗುತ್ತಿದ್ದನು,
ಸದಾಶಿವಮೂರ್ತಿಲಿಂಗದಲ್ಲಿಗೆ. /96
ಕೋಟಿ ಗುರುವಾಗಬಹುದು, ಭಕ್ತನಾಗಬಾರದು.
ಕೋಟಿ ಚರವಾಗಬಹುದು, ಭಕ್ತನಾಗಬಾರದು.
ಕೋಟಿ ಲಿಂಗವಾಗಬಹುದು, ಭಕ್ತನಾಗಬಾರದು.
ತ್ರಿವಿಧಕ್ಕಾಧಾರ ಭಕ್ತನ ವಿಶ್ವಾಸ, ತ್ರಿವಿಧದ ಪ್ರಾಣ ಭಕ್ತನ ಚಿತ್ತ.
ಭಕ್ತನ ಬಾಗಿಲಲ್ಲಿ ಈಶ್ವರನಿಪ್ಪ, ಭಕ್ತನ ಅಂಗಳದಲ್ಲಿ ಮಹಾಲಿಂಗವಿಪ್ಪುದು.
ಭಕ್ತನ ಆಶ್ರಯದಲ್ಲಿ ಪ್ರಸಾದಕ್ಕೆ
ಸದಾಶಿವಮೂರ್ತಿಲಿಂಗವು ಕಾಯಿದುಕೊಂಡಿಪ್ಪನು. /97
ಕೋಡುಗದ ಚೇಷ್ಟೆ ಉಡುಗಿ, ಹಾವಿನ ಹಲ್ಲು ಮುರಿದು,
ಆಡಿಸುವ ಜೋಗಿಯ ನಾಮ ನಷ್ಟವಾಗಿ,
ಸದಾಶಿವಮೂರ್ತಿಯ ಲಿಂಗದ ಇರವು ನಿರಾಳವಾಯಿತ್ತು./98
ಕೋಣೆಯೊಳಗಳ ಮಿಂಡ, ನಡುಮನೆಯೊಳಗಳ ಗಂಡ,
ಇವರಿಬ್ಬರ ಒಡಗೂಡವಳ ಚಂದವ ನೋಡಾ.
ಕೈಯ್ಯಲ್ಲಿ ಕಣ್ಣು ಹುಟ್ಟಿ, ಬಾಯಲ್ಲಿ ಬಸುರು ಹುಟ್ಟಿ,
ಮೊಲೆ ತಲೆಯಲ್ಲಿ, ಭಗ ಬೆನ್ನಿನಲ್ಲಿ
ಈ ಹಾದರಗಿತ್ತಿಯ ಅಂದವ ಸದಾಶಿವಲಿಂಗವೆ ಬಲ್ಲ. /99
ಕ್ರೀಯಲ್ಲಿ ಕಾಬುದಕ್ರೀಯಲ್ಲಿ ಕಂಡು,
ಅರಿಕೆಯಲ್ಲಿ ಕಾಬುದ ಅರಿವಿನಲ್ಲಿ ಕಂಡು,
ಮುಳ್ಳು ತಾಗಿದಡೆ ಮೊನೆಯಿಂದ ಕಳೆವಂತೆ,
ತನ್ನಯ ಮರವೆಯ ತನ್ನ ಅರಿವಿನಿಂದ ಅರಿದು,
ಸದಾಶಿವಮೂರ್ತಿಲಿಂಗದ ಕುರುಹಡಗಿತ್ತು. /100
ಕ್ಷೀರಕ್ಕೆ ವಾರಿ ಅರತಲ್ಲದೆ ಮಧುರಗುಣವಿಲ್ಲ.
ಶರೀರವಿಡಿದಿದ್ದಲ್ಲಿ ಅಂಗಕ್ಕೆ ಆಸೆ ಅರತು, ರೋಷ ಹಿಂಗಿ,
ಈಷಣತ್ರಯದ ಲೇಸು ಕಷ್ಟವನರಿತು,
ಈಶನ ವೇಷದ ಭಾಷೆಗೆ ತಪ್ಪದೆ ಇಪ್ಪುದು ಗುರುಚರಮತ,
ಸದಾಶಿವಮೂರ್ತಿಲಿಂಗವನರಿವುದಕ್ಕೆ./101
ಗಂಡ ತಪ್ಪಿ ನಡೆದಲ್ಲಿ ಹೆಂಡತಿ ಬಾಯಾಲುವುದೆ ಕಾರಣ.
ಅದೆಂತೆಂದಡೆ: ಪುರುಷನ ಬಾಧೆಗೆ ಸತಿ ಸೆರೆಯೊಳಗಾದ ಕಾರಣ.
ಗುರುಚರದ ಆಗು ಚೇಗೆಯನರಿವುದೆ ಲಕ್ಷಣ, ಸದ್ಭಕ್ತಿಯ ಭಾವ,
ಸದಾಶಿವಮೂರ್ತಿಲಿಂಗದ ಪ್ರಾಣ./102
ಗಂಡನಿಲ್ಲದ ಸತಿ ಯೋನಿಯಿಲ್ಲದೆ ಮಕ್ಕಳ ಹಡೆದು
ನಾಲಗೆಯಲ್ಲದ ಬಾಯಲ್ಲಿ ಜೋಗುಳವಾಡುತ್ತೈದಾಳೆ.
ತೊಟ್ಟಿಲಿಲ್ಲದೆ ನೇಣು ಹೊರತೆಯಾಗಿ ಗಂಟಕಟ್ಟಿ,
[ಮೊಗ]ವಿಲ್ಲದೆ ಶಿಶು ಅಳುತ್ತದೆ.
ಅದಕ್ಕೆ ಮೊಲೆಯಿಲ್ಲದ ಹಾಲು ಬೇಕು,
ಸದಾಶಿವಮೂರ್ತಿಲಿಂಗವನರಿತಲ್ಲದಾಗದು. /103
ಗಂಧವನೊಳಕೊಂಡ ಕುಸುಮವ ಕೊಯ್ಯಬಹುದಲ್ಲದೆ
ಗಂಧವನೊಳಕೊಂಡ ವಾಯುವ ಕೊಯ್ಯಬಹುದೆ?
ಘಟವಕೊಳಕೊಂಡಿದ್ದಾತ್ಮನನರಿಯಬಹುದೆ,
ಆತ್ಮನನೊಳಕೊಂಡಿದ್ದ ಘಟವನರಿಯಬಹುದಲ್ಲದೆ
ವಸ್ತು ಅಂಗವಾದಲ್ಲಿ ಅರಿಯಬಹುದಲ್ಲದೆ
ಅಂಗ ವಸ್ತುವಾದಲ್ಲಿ ಹಿಂಗಿ ಅರಿವಠಾವಿನ್ನಾವುದು?
ಕುಸುಮಕ್ಕೆ ಕಡೆ ನಡು ಮೊದಲಲ್ಲದೆ ಗಂಧಕ್ಕೆ ಕಡೆ ನಡು ಮೊದಲುಂಟೆ?
ಅರಿವುದಕ್ಕೆ, ಅರುಹಿಸಿಕೊಂಬುದಕ್ಕೆ, ಕುರುಹನರಿತಲ್ಲಿಯೆ
ಸದಾಶಿವಮೂರ್ತಿಲಿಂಗವೆಂಬ ರೂಪು ನಿಂದಿತ್ತು./104
ಗಂಧವೊಂದೆಂದಡೆ ಹಲವು ವಾಸನೆಯ ಕುಸುಮದಲ್ಲಿ ಸಿಕ್ಕಿ,
ವಾಸನೆ ಭಿನ್ನವಾಗಿ ತೋರುವಂತೆ,
ಆತ್ಮನೊಂದೆಂದಡೆ, ಹಲವು ಘಟದಲ್ಲಿ ಸಿಕ್ಕಿ, ಅವರವರ ನೆಲಹೊಲಂಗಳಲ್ಲಿ ಸಿಕ್ಕಿ,
ಫಲಭೋಗಂಗಳಿಗೆ ಒಳಗಾಯಿತ್ತು.
ಆತ್ಮನ ಒಲವರವೊಂದೆನಬಹುದೆ?
ಸುಗಂಧಕ್ಕೂ ದುರ್ಗಂಧಕ್ಕೂ ಒಂದೆ ವಾಯು.
ಅರಿವಾತ್ಮವೊಂದೆಂದಡೆ,
ಉಭಯವನರಿಯಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ. /105
ಗುರುಚರದಲ್ಲಿ ಸೇವೆಯ ಮಾಡುವನ್ನಕ್ಕ ಮೂರಕ್ಕೆ ಹೊರಗಾಗಿರಬೇಕು,
ಮೂರಕ್ಕೆ ಒಳಗಾಗಿರಬೇಕು.
ಮೂರರ ಒಳಗೆ ಕಂಡು ಮೂರರ ಹೊರಗನರಿತು,
ನೆರೆ ನೀರನಾಗಿರಬೇಕು, ಸದಾಶಿವಮೂರ್ತಿಲಿಂಗವ ಮೀರಬೇಕು./106
ಗುರುಚರಪರದ ಇರವು ಹೇಗಿರಬೇಕೆಂದಡೆ: ಉರಿಯನೊಳಕೊಂಡ ಕಲ್ಲಿನಂತಿಬೇಕು,
ತೈಲವನೊಳಕೊಂಡ ತಿಲದಂತಿರಬೇಕು,
ದ್ರವವನೊಳಕೊಂಡ ಅರಗಿನಂತಿರಬೇಕು,
ಬಯಲನೊಳಕೊಂಡ ಕರ್ಪುರದಂತಿರಬೇಕು.
ನೋಡಿದಡಂಗವಾಗಿ, ಮಥನಕ್ಕೆ ಬಯಲಾಗಿ ತೋರುತ್ತಿಹ ಮೂರ್ತಿ ತಾನೆ,
ನಿರಂಗ ಸದಾಶಿವಮೂರ್ತಿಲಿಂಗವು ತಾನೆ. /107
ಗುರುಚರಮೂರ್ತಿ ಪೂಜಿಸಿಕೊಂಬಲ್ಲಿ ತಮ್ಮ ವಿವರವ ತಾವರಿಯಬೇಕು.
ಹೆಣ್ಣು ಹೊನ್ನು ಮಣ್ಣು ಹೊರಗೆಂದು ಕೆಲವರಿಗೆ ಹೇಳಿ
ಗನ್ನದಿಂದ ತಾವು ಗಳಿಸಿ ಕೂಡುವುದು, ಅದು ತಾನೆ ಅನ್ಯಾಯವಲ್ಲವೆ?
ಬಿರಿದ ಕಟ್ಟಿದ ಬಂಟ ಭಾಷೆಗೆ ತಪ್ಪಿದಡೆ, ರಾಜನ ಮುಖಕ್ಕೆ ಏರಿದಡೆ, ಅದೆ ಭಂಗ.
ಇಂತಿವನರಿಯದೆ ಮೂಗ ಕೊಯಿದು ಮಾರಿ, ಹಣ್ಣ ಮೆಲುವ
ಅಣ್ಣಗಳಿಗೇಕೆ ಗುರುಚರಸ್ಥಲ?
ಇಂತಿವರೆಲ್ಲರು ಸದಾಶಿವಮೂರ್ತಿಲಿಂಗಕ್ಕೆ ಹೊರಗು. /108
ಗುರುಜಂಗಮಲಿಂಗ ಭಕ್ತಿಮಾರ್ಗಸ್ಥಲ ಸಮರ್ಪಣ:
ಪೃಥ್ವಿಜ್ಞಾನ, ಅಪ್ಪುಜ್ಞಾನ, ತೇಜಜ್ಞಾನ, ವಾಯುಜ್ಞಾನ,
ಆಕಾಶಜ್ಞಾನ, ತಮಜ್ಞಾನ, ಪರಿಪೂರ್ಣಜ್ಞಾನ, ದಿವ್ಯಜ್ಞಾನ,
ಇಂತೀ ಜ್ಞಾನಂಗಳಲ್ಲಿ ಕಂಡು ದೇಹಧರ್ಮಗಳನರಿತು,
ಪಿಂಡಪ್ರಾಣ ಅಂಗಲಿಂಗ ಸಂಯೋಗಸಂಪದದಲ್ಲಿ ನಿಂದು ನೋಡು,
ಸದಾಶಿವಮೂರ್ತಿಲಿಂಗದಲ್ಲಿ ಕಳೆ ಬೆಳಗುತ್ತದೆ/109
ಗುರುಭಕ್ತನಾಗಿದ್ದಲ್ಲಿ ಆ ಗುರುವಿನ ಗುಣವ ವಿಚಾರಿಸಬೇಕು,
ಲಿಂಗಭಕ್ತನಾಗಿದ್ದಲ್ಲಿ ಲಿಂಗದ ಮುಖವನರಿತು ಅರ್ಪಿತ ಅವಧಾನವರಿತಿರಬೇಕು.
ಜಂಗಮಭಕ್ತನಾದಲ್ಲಿ ವಿರಕ್ತಭಾವವನರಸಬೇಕು.
ಇಂತೀ ತ್ರಿವಿಧಗುಣವನರಿದು ಮಾಡುವ ಸದ್ಭಕ್ತನಂಗವೆ
ಸದಾಶಿವಮೂರ್ತಿಲಿಂಗದ ಅಂಗ. /110
ಗುರುಮಾರ್ಗವನರಿಯದೆ ಆತ್ಮತೇಜದಿಂದ ಪೀಳಿಗೆ ಶುದ್ಧವೆಂದು,
ಆಗುಚೇಗೆಯನರಿಯದೆ ಉಪದೇಶವ ಮಾಡೂದಕ್ಕೊಡಲಾಹ,
ಕಂಬಳಕ್ಕೆ [ಅಪೇಯವ] ತಿಂಬ, ದುರ್ಗುಣ ಕಾಯ ವಿಕಾರಿಗಳನೊಲ್ಲರು
ಸದಾಶಿವಮೂರ್ತಿಲಿಂಗವನರಿದ ಶರಣರು. /111
ಗುರುಮೂರ್ತಿಯ ಕಳೆ ಜಂಗಮದಲ್ಲಿಪ್ಪುದು,
ಜಂಗಮಮೂರ್ತಿಯ ಕಳೆ ಲಿಂಗದಲ್ಲಿಪ್ಪುದು,
ಆ ಲಿಂಗದ ಕಳೆ ಅರಿದು ಮಾಡುವ ಭಕ್ತನಲ್ಲಿ
ನಿತ್ಯನಿರಂಜನವಾಗಿ ಬೆಳಗುತ್ತಿಪ್ಪುದು
ಸದಾಶಿವಮೂರ್ತಿಲಿಂಗದ ಹೃದಯವು ತಾನಾಗಿ. /112
ಗುರುಲಿಂಗಜಂಗಮವೆಂಬ ತ್ರಿವಿಧಮೂರ್ತಿ ಕೂಡಿ
ಭಕ್ತನಂಗದಲ್ಲಿ ನಿಂದು
ತಮ್ಮ ಸಂದನಳಿವುದಕ್ಕೆ ಮಂದಿರವ ಕಟ್ಟಿದ ಅಂದವನರಿಯದೆ,
ಕರ್ತೃಭೃತ್ಯರೆಂದು ಕೊಂಡಾಡಲೇತಕೆ?
ಕಾಯ ಜೀವಕ್ಕೆ ಹಂಗುಂಟೆ ಪ್ರಭುವೇ?
ಭಕ್ತನ ಸತ್ಯಸದಾಚಾರವೆ
ಸದಾಶಿವಮೂರ್ತಿಲಿಂಗದ ಕೃತ್ಯವಾಚರಣೆಯಯ್ಯಾ ಪ್ರಭುವೆ./113
ಗುರುವಾದಡೂ ಮಲತ್ರಯದಾಸೆ ಉಳ್ಳನ್ನಕ್ಕ ಮಲದೇಹಿ.
ಲಿಂಗವಾದಡೂ ಶಕ್ತಿಸಂಪುಟವುಳ್ಳನ್ನಕ್ಕ ಭವಕ್ಕೊಳಗು.
ಜಂಗಮವಾದಡೂ ತನ್ನಿರವ ತಾನರಿಯದನ್ನಕ್ಕ ಪ್ರಸಿದ್ಧಭಾವಿಯಲ್ಲ.
ಇಂತೀ ಇದನರಿತು ಪೂಜಿಸಬೇಕು,
ತನ್ನಯ ಜನ್ಮವ ನಿವೃತ್ತಿಯ ಮಾಡಿಕೊಳಬಲ್ಲಡೆ.
ಇದೆ ಸದ್ಭಕ್ತನಿರವು, ಸದಾಶಿವಮೂರ್ತಿಲಿಂಗವನರಿವುದಕ್ಕೆ./114
ಗುರುವಾದಲ್ಲಿ ಭವಂ ನಾಸ್ತಿಯಾಗಬೇಕು,
ಚರವಾದಲ್ಲಿ ಆಚಾರ ಮೂರ್ತಿಯಾಗಬೇಕು,
ಲಿಂಗವಾದಲ್ಲಿ ನಿರಂಗಮಯ ಅವಿರಳ ತತ್ವಸ್ವರೂಪವಾಗಬೇಕು.
ಇಂತಿ ಮೂರು ಗುಣ ಭಾವಶುದ್ಧವಾದಲ್ಲಿ ಭಾವಿಸಿ ಅರಿವ ಸದ್ಭಕ್ತನಾಗಬೇಕು
ಆತನಂಗದಿರವು ಸದಾಶಿವಮೂರ್ತಿಲಿಂಗವು ತಾನೆ./115
ಗುರುವಾದಲ್ಲಿ, ಶಿಷ್ಯನ ಅಂಗದಲ್ಲಿ
ಶಿಲೆಯಲ್ಲಿ ಉರಿಯಡಗಿದಂತಿರಬೇಕು.
ಜಂಗಮವಾದಡೆ, ಭಕ್ತನಂಗದಲ್ಲಿ
ಬಂಗಾರದಲ್ಲಿ ಬಣ್ಣವಡಗಿದಂತೆ ಅಡಗಿರಬೇಕು.
ಲಿಂಗವಾದಡೆ, ಭಕ್ತನ ಚಿತ್ತದಲ್ಲಿ
ಅರಗಿನಲ್ಲಿ ಅಪ್ಪುವಡಗಿ ಉರಿಯ ತೋರಿದಡೆ
ಕರಗಿ ಉರಿಯಡಗಿ ಅಪ್ಪುವಲ್ಲಿಯೆ ಅರತಂತಿರಬೇಕು.
ಇಂತೀ ಭೇದಂಗಳಲ್ಲಿ ಭೇದಿಸಿ ವರ್ಮವ ವರ್ಮದಿಂದರಿದು,
ಕರ್ಮವ ಕರ್ಮದಲ್ಲಿ ಮಾಡಿ, ಕ್ರೀಯ ಕ್ರೀಯಲ್ಲಿ ಕಂಡು,
ಭಾವಶುದ್ಧವಾಗಿ ನಿಂದ ಸದ್ಭಕ್ತನಂಗವೆ
ಸದಾಶಿವಮೂರ್ತಿಲಿಂಗವು ತಾನೆ./116
ಗುರುವಿಂಗಾಸೆಯ ಕಲಿಸದೆ,
ಲಿಂಗವ ಬಿಂದುವಿನಲ್ಲಿ ಸಂದೇಹವ ಮಾಡಿಸದೆ,
ಜಂಗಮವ ಸಕಲಸಂಕಲ್ಪದಲ್ಲಿ ಸಂದೇಹವ ಮಾಡಿಸದೆ ನಿಂದುದು
ಪರಮವಿರಕ್ತ ಭಕ್ತನ ಸ್ಥಲ.
ಅದು ತನ್ನಯ ಅಂಗ ಕಾಯ ಜೀವಜ್ಞಾನ ತ್ರಾಣದ ಭೇದ,
ಸದಾಶಿವಮೂರ್ತಿಲಿಂಗಸಂಗದ ಸುಖ. /117
ಗುರುವಿಂಗೂ ಲಿಂಗಕ್ಕೂ ಜಂಗಮಕ್ಕೂ ಭಕ್ತನಂಗವೆ ಮಂದಿರವಾಗಿ,
ಮನದ ವಿಶ್ರಾಂತಿಯೆ ಸುಖಭೋಜನ ಭೋಗಂಗಳಾಗಿ ತಾಳುವ ಕಾರಣ,
ಭಕ್ತನಂಗವೆ ಸದಾಶಿವಮೂರ್ತಿಲಿಂಗದ ಅಂಗ./118
ಗುರುವಿಂಗೆ ಗುರುವಿಲ್ಲದೆ ಅರಿದ ಪರಿಯಿನ್ನೆಂತೊ?
ಲಿಂಗಕ್ಕೆ ಕಳೆ ಶಕ್ತಿಸಂಪುಟವು ಇಲ್ಲದೆ ಅರಿದ ಪರಿಯಿನ್ನೆಂತೊ?
ಜಂಗಮಕ್ಕೆ ಪದಫಲನಾಸ್ತಿಯಾಗಿಲ್ಲದೆ ಪ್ರಸಿದ್ಧನಹ ಪರಿಯಿನ್ನೆಂತೊ?
ಇಂತಿ ಅರಿವನರಿದಲ್ಲಿ ಸದಾಶಿವಮೂರ್ತಿಲಿಂಗವನರಿತುದು. /119
ಗುರುವಿನ ಉಪಾಧಿಕೆಯ ಶಿಷ್ಯನರಿತಲ್ಲಿ
ಆ ಗುರುವಿಂಗೆ ಹೇಳದೆ ಸುಮ್ಮನಿದ್ದಲ್ಲಿ ಗುರುದ್ರೋಹ ತನಗಾಯಿತ್ತು.
ಹೇಳಿದ ಮಾತ ಕೇಳಿ ಆ ಸ್ಥಲಕ್ಕೆ ಭಿನ್ನಭಾವಿಯಾಗಲಾಗಿ,
ಲಿಂಗಜಂಗಮದ ದ್ರೋಹ ಆ ಗುರುವಿಂಗಾಯಿತ್ತು.
ಆ ಭಕ್ತಂಗೆ ಚಿತ್ತ ಮುಟ್ಟಿದಲ್ಲಿ ಗುರುವೆಂದು ಪ್ರಮಾಳಿಸಲಿಲ್ಲ.
ಪ್ರಮಾಳಿಸದಿದ್ದಲ್ಲಿ ಆಚರಣೆಯ ತೊಡಕು.
ಇಂತೀ ಉಭಯದ ಏರಿನಲ್ಲಿ ನೋವುತ್ತಿದೇನೆರಿ
ಭಾವದ ಭ್ರಮೆಯ ಬಿಡಿಸು, ಸದಾಶಿವಮೂರ್ತಿಲಿಂಗವೆ. /120
ಗುರುವೆಂದು ಅನುಸರಣೆಯ ಮಾಡಿದಲ್ಲಿ ಲಿಂಗವಿಲ್ಲ,
ಲಿಂಗವೆಂದು ಅನುಸರಣೆಯ ಮಾಡಿದಲ್ಲಿ ಜಂಗಮವಿಲ್ಲ,
ಜಂಗಮವೆಂದು ಅನುಸರಣೆಯ ಮಾಡಿದಲ್ಲಿ ಪಂಚಾಚಾರಶುದ್ಧಕ್ಕೆ ಹೊರಗು.
ತಾ ಮಾಡುವ ಭಕ್ತಿ ತನಗೆ ಹಾನಿಯಾದ ಕಾರಣ,
ತ್ರಿವಿಧಕ್ಕೆ ಅನುಸರಣೆಯ ಮಾಡಲಿಲ್ಲ,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /121
ಗುರುಶಿಷ್ಯನ ಇರವಿನ ಸ್ಥಲವೆಂತುಟೆಂದಡೆ:
ಮಣಿ ದಾರವ ನುಂಗಿ ಸರವಾಗಿ ನಿಂದು ಕಾಣಿಸಿಕೊಂಡಂತಿರಬೇಕು,
ರತ್ನಪುಂಜ ಕುಂದಣದ ಮೇಲೆ ನಿಂದು ಚಂದವ ಕಾಣಿಸಿಕೊಂಡಂತಿರಬೇಕು,
ಶಂಖದ ಮೇಲೆ ಸಂಭ್ರಮದ ಜಾತಿ ಉತ್ತರ ನಿಂದು ತೋರಿದಂತಿರಬೇಕು,
ಇಂತೀ ಭೇದ.
ಘಟ ಗುರು, ಆತ್ಮ ಶಿಷ್ಯನಾಗಿ ತೋರುವ ಬೆಳಗು ತಾನೆ,
ಸದಾಶಿವಮೂರ್ತಿಲಿಂಗವು./122
ಚಕ್ಷುಮಯನಾಗಿ, ಚಕ್ಷುರೂಪನಾಗಿ,
ಚಕ್ಷುವಿಮುಕ್ಷನಾಗಿ, ವಿಮುಕ್ಷ ಸುಕ್ಷೇತ್ರವಾಗಿ,
ವಾಸಮಧ್ಯದಲ್ಲಿ ಆ ಮೂರ್ತಿಯ ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ. /123
ಚಿತ್ತ ನೆನೆದು ವಸ್ತುವೆಂದು ಪ್ರಮಾಳಿಸುವಲ್ಲಿ
ವಸ್ತುವಿಗೂ ಚಿತ್ತಕ್ಕೂ ಬಿಟ್ಟಿಹಠಾವಾವುದಯ್ಯಾ?
ಉರಿಕಾಷ್ಠದ ಇರವಿನಂತೆ, ಒಡಲಿಂಗೆ ಎಡೆಯಿಲ್ಲ.
ಸದಾಶಿವಮೂರ್ತಿಲಿಂಗಕ್ಕೆ ಉಭಯ ನಾಮವಿಲ್ಲ. /124
ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು.
ಅರಿವು ಘನದಲ್ಲಿ ನಿಂದೆನೆಂದಡೆ ದೃಷ್ಟವಾದ ಲಿಂಗದಲ್ಲಿ ನಿಂದಲ್ಲದೆ ಕಾಣಬಾರದು.
ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ ಬದ್ಧರ ಮಾತ
ಹೊದ್ದದಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ. /125
ಜಂಗಮಲಿಂಗವಾದಲ್ಲಿ ಜಂಗುಳಿಗಳ ಬಾಗಿಲ ಕಾಯದಿರಬೇಕು.
ಒಡೆಯನ ಓಲಗವ ಬಂಟ ಕಾಯಬೇಕಲ್ಲದೆ,
ಬಂಟನ ನಿಳಯವ ಒಡೆಯ ಕಾಯಬಲ್ಲನೆ?
ಇಂತಿವನರಿದು ರಾಜಮಂದಿರದಲ್ಲಿ ಗೃಹಸ್ಥ ಆಶ್ರಮದಲ್ಲಿ
ವೇಳೆಯನರಿದು ಭುಂಜಿಸಿಹೆನೆಂಬ
ದರಿಸಿನ ಜಂಗುಳಿಗೆ ಜಂಗಮಸ್ಥಲವಿಲ್ಲಾ ಎಂದೆ.
ಸದಾಶಿವಮೂರ್ತಿಲಿಂಗವು ಅವರಂಗಕ್ಕೆ ಮುನ್ನವೆ ಇಲ್ಲಾ ಎಂದೆ./126
ಜಗದ ವರ್ತಕದ ಇರವು ಎಂತೆಂದಡೆ:
ಶೈವ ನೇಮಸ್ಥ ಎರಡೆ ಭೇದ. ದಿವಾರಾತ್ರಿ ಉಭಯ ಕೂಡಿ ದಿನ ಲೆಕ್ಕಕ್ಕೆ ಬಂದಂತೆ,
ಶಕ್ತಿ ಸಾಕಾರವಾಗಿ, ನಿಶ್ಶಕ್ತಿ ವಸ್ತುರೂಪಾಗಿ,
ಉಭಯವು ಕೂಡಿ ಘಟ ನಡೆವಂತೆ ನಡೆವುದು ಜಗ ಸಂಬಂಧ,
ಭಯಕ್ಕೆ ಹೊರಗಾದುದು,
ಸದಾಶಿವಮೂರ್ತಿಲಿಂಗದ ಭಾವಸಂಬಂಧ. /127
ಜಲದೊಳಗಳ ಮತ್ಸ್ಯದ ನೆಲೆಯ, ಮುಗಿಲೊಳಗಳ ಮಿಂಚಿನ ನೆಲೆಯ,
ವಾರಿಯ ಸರಲೆಕ್ಕವ ಭೇದಿಸಬಹುದೆ?
ಆ ತೆರದಲ್ಲಿ ನಿಂದಾತ್ಮನ ಒದಗನರಿವ ಭೇದವೆಂತುಟಯ್ಯಾ?
ವಾಯು ಬಯಲಲ್ಲಿ ಅಡಗಿ ಆವಠಾವಿನಲ್ಲಿ ಬೀಸಿದಡೆ ಕಲೆದೋರುವಂತೆ,
ಆತ್ಮನ ಭೇದವ ಭೇದಿಸುವ ಪರಿ ತನ್ನನರಿತಲ್ಲದಾಗದು,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /128
ಜೀವಜ್ಞಾನ ಭಾವಜ್ಞಾನ ಯುಕ್ತಿಜ್ಞಾನ ಚಿತ್ತಜ್ಞಾನ ಶಕ್ತಿಜ್ಞಾನ
ಪರಶಕ್ತಿಜ್ಞಾನ ಪರಮಜ್ಞಾನ ಪ್ರಕಾಶಜ್ಞಾನ ಪ್ರಜ್ವಲಿತಜ್ಞಾನ
ಪ್ರಭಾವಜ್ಞಾನ ತೇಜೋಮಯಜ್ಞಾನ ಪರಂಜ್ಯೋತಿಜ್ಞಾನ ದಿವ್ಯಜ್ಞಾನ
ಸರ್ವಮಯ ಸಂಪೂರ್ಣಂಗಳಲ್ಲಿ ತೋರುತ್ತಿಹ ತೋರಿಕೆ,
ಆಕಾಶಮಂಡಲದಲ್ಲಿ ತೋರುವ [ಅ]ರುಣನ ಕಿರಣ,
ಸರ್ವಜೀವಜ್ಞಾನ ಪರಿಪೂರ್ಣ ದೃಷ್ಟಿಯಾಗಿ ಕಾಬ ತೆರದಂತೆ,
ಎನ್ನ ಪಿಂಡಮಂಡಲದಲ್ಲಿ ದಿವ್ಯತೇಜೋವರುಣ ಕಿರಣಮಯವಾಗಿ,
ಒಂದರಲ್ಲಿ ನಿಂದು ಕಾಬುದು ಹಲವಾದಂತೆ,
ಎನ್ನ ಮನದ ಮಂದಿರದಲ್ಲಿ ನಿಂದವ ನೀನೊಬ್ಬ ವಿಶ್ವರೂಪಾದೆಯಲ್ಲಾ!
ಭೇದಕ್ಕೆ ಅಭೇದ್ಯನಾದೆಯಲ್ಲಾ!
ನಿನ್ನನೇನೆಂಬುದಕ್ಕೆಡೆದೆರಪಿಲ್ಲ.
ಭಾಗೀರಥಿಯಂತೆ ಆರು ನಿಂದಡೂ ಪ್ರಮಾಳಾದೆಯಲ್ಲಾ!
ಎನ್ನ ಮನಕ್ಕೆ ಕಟ್ಟಾಗಿ ನಿಂದೆಯಲ್ಲಾ ಸದಾಶಿವಮೂರ್ತಿಲಿಂಗವೇ!/129
ಜೇನುತುಪ್ಪವ ಹೊತ್ತು ಮಾರುವವಳ ಮಡಕೆಯ ಮೇಲೆ
ಮೂರು ತುಂಬಿ ಕುಳಿತೈಧಾವೆ.
ಒಂದು ತುಂಬಿ ಇದ್ದಿತ್ತು, ಒಂದು ತುಂಬಿ ಹಾರಿತ್ತು, ಒಂದು ತುಂಬಿ ಸತ್ತಿತ್ತು.
ಮೂರು ತುಂಬಿ ಅಂದವ ಕಂಡುದಿಲ್ಲ.
ಮಡಕೆ ಒಡೆಯಿತ್ತು, ತುಪ್ಪವೊಕ್ಕಿತ್ತು, ಹೊತ್ತವ[ಳು] ಸತ್ತ[ಳು].
ಇದೇನು ಕೃತ್ರಿಮವೆಂದು
ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ./130
ತನುಸಂಬಂಧ ಬ್ರಹ್ಮನ ತೊಡಕಾದಲ್ಲಿ,
ವಿಕಾರಸಂಬಂಧ ವಿಷ್ಣುವಿನ ತೊಡಕಾದಲ್ಲಿ,
ಜೀವಸಂಬಂಧ ರುದ್ರನ ತೊಡಕಾದಲ್ಲಿ,
ಇಂತೀ ಮೂರ ಹಿಂಗುವ ಹಿರಿಯರ ಆರನೂ ಕಾಣೆ.
ಇಂತೀ ತ್ರಿವಿಧಕ್ಕೆ ಹೊರಗಾದಲ್ಲಿ ಮೀರಿ ಕಾಬ ತೆರ ಸಮಯಕ್ಕೆ ಹೊರಗು,
ಸದಾಶಿವಮೂರ್ತಿಲಿಂಗವೆ ಅಂಗವಾದವನ ಇರವು./131
ತನ್ನ ಅಂಗದ ಮಲಿನವ ತಾನರಿದಂತೆ, ತನ್ನ ಕಂಗಳ ಕಸನ ತಾ ಕಳೆದಂತೆ,
ಗುರುಲಿಂಗಜಂಗಮದ ಅಂಗವೆಂದು ತಾನೆಂದು ಭಿನ್ನಭಾವವ ಮಾಡಲಿಲ್ಲ.
ಅದು ತಾ ಗಳಿಸಿದ ಧನ.
ಈ ಮೂರು ತನ್ನಯ ಪ್ರಾಣ,
ಈ ಗುಣ ಸದಾಶಿವಮೂರ್ತಿಲಿಂಗವು ತಾನೆ./132
ತನ್ನ ಕುರಿತು ಪರಿಹರವ ಮಾಡಿಕೊಂಬಲ್ಲಿ
ಅನ್ಯರ ಗುಣದೋಷವ ಸಂಪಾದಿಸಲಿಲ್ಲ.
ಅದು ಒಡೆದಠಾವಿನಲ್ಲಿ ಒಸರುವುದಲ್ಲದೆ ಬೇರೊಂದೆಡೆಯಲ್ಲಿಲ್ಲ.
ಇದು ಕಾರಣ, ಉಭಯವ ಅಲ್ಲ-ಅಹುದೆಂದೆನಲಿಲ್ಲ.
ಸದ್ಭಕ್ತ ಮಾಡುವ ಸನ್ನದ್ಧ ಭಕ್ತಿ
ಸದಾಶಿವಮೂರ್ತಿಲಿಂಗದ ಕೈಲೆಡೆಯ ಪ್ರಾಣ./133
ತನ್ನ ಕೈಯಲ್ಲಿ ಲಿಂಗವಿದ್ದು
ತಾನಿದಿರಿಗೆ ಸ್ಮಶಾನದೀಕ್ಷೆಯ ಮಾಡಬಹುದೆ ಅಯ್ಯಾ?
ಇಂತೀ ಉದರಘಾತಕ ಗುರು, ಶರೀರದಹನ ಶಿಷ್ಯ
ಇಂತೀ ಉಭಯ ಪಾತಕರು,
ಸದಾಶಿವಮೂರ್ತಿಲಿಂಗಕ್ಕೆ ಸ್ವಪ್ನದಲ್ಲಿ ದೂರ. /134
ತನ್ನ ತಾನರಿತು ಮಾಡುವಲ್ಲಿ
ತಾ ಬೇಡದೆ ಅನ್ಯರಿಗೆ ಹೇಳಿ ಈಸಿಕೊಂಬ ಡಾಳಕತನವೇಕೆ?
ಅದು ಗುರುಚರಕ್ಕೆ ಅರಿವಿನ ಮತವಲ್ಲ.
ಇಂತಿವನರಿದು ಮರಳಿ ಕಾಡುವ ಶಬರವೇಷಿಗಳು
ಸದಾಶಿವಮೂರ್ತಿಲಿಂಗಕ್ಕೆ ಹೊರಗು. /135
ತನ್ನ ಶರೀರದ ಗುಣವನಳಿದು, ಕರಣೇಂದ್ರಿಯದ ಗುನ್ಮದ ಗಲಗ ಕಿತ್ತು,
ಉಚ್ಚೆಯ ಬಚ್ಚಲ ಕೊಚ್ಚೆಯ ಕೊಳಕ ತೊಡೆದು,
ತ್ರಿಸಂಧಿಯಲ್ಲಿ ತ್ರಿಗುಣದ ತ್ರಿಕಾಲವ ಭೇದಿಸುತ್ತ,
ತನ್ನಯ ಕರಕಮಲದಲ್ಲಿ ಒದಗಿದ ಶಿಷ್ಯವರ್ಗದ
ಅಸ್ತಿ ನಾಸ್ತಿಯನರಿತು ಬಿಡುಮುಡಿಯಲ್ಲಿ ಇರಬೇಕು.
ಹೀಗಲ್ಲದೆ, ತೆಂಗನೇರಿದ ಲಂಡನಂತೆ ಎಲ್ಲವು ತನಗೆ ಸರಿಯೆಂದಡೆ,
ಬಲ್ಲವರೊಪ್ಪುವರೆ ಅಯ್ಯಾ ಅವನ ಗುರುತನದ ಇರವು?
ಬಟ್ಟೆಯ ಬಡಿದು ಉಂಬವಂಗೆ ಸತ್ಕರ್ಮದ ಜೀವದ ದಯವುಂಟೆ ಅಯ್ಯಾ?
ಇದು ಕಾರಣದಲ್ಲಿ, ಸದ್ಭಾವ ಗುರುವಾಗಬೇಕು, ನಿರ್ಮಲಾತ್ಮಕ ಶಿಷ್ಯನಾಗಬೇಕು.
ಇಂತೀ ಉಭಯವನರಿತಲ್ಲಿ ಉರಿ ಕರ್ಪುರದಿರವಿನಂತಾಗಬೇಕು,
ಸದಾಶಿವಮೂರ್ತಿಲಿಂಗವನರಿವ ಭೇದಕ್ಕೆ. /136
ತನ್ನಯ ಬಾಯ ಶೇಷವ ಲಿಂಗಕ್ಕೆ ತೋರಿ,
ಲಿಂಗದ ಶೇಷವ ತಾ ಕೊಂಡೆನೆಂದು ಕೊಂಡುದು ಪ್ರಸಾದ.
ಇದ್ದುದು ಸಯಿದಾನವೆಂದು ಉಂಡು ಉಂಡು ಲಿಂಗಕ್ಕೆ ಕೊಡಬಹುದೆ ಅಯ್ಯಾ?
ಅದು ಮುನ್ನವೆ ಲಿಂಗಾರ್ಪಿತ.
ತನ್ನಯ ಸಂದೇಹಕ್ಕೆ ಕೊಟ್ಟುಕೊಂಡೆನೆಂಬ ಭೇದವಲ್ಲದೆ,
ಇಂತೀ ಗುಣ ಸದಾಶಿವಮೂರ್ತಿಲಿಂಗಕ್ಕೆ ಹೊರಗು. /137
ತನ್ನಯ ವಿಶ್ವಾಸದಿಂದ ಗುರುವ ಮುಕ್ತನ ಮಾಡಿದ ಭಕ್ತನು,
ತನ್ನಯ ವಿಶ್ವಾಸದಿಂದ ಚರವ ವಿರಕ್ತನ ಮಾಡಿದ ಭಕ್ತನು,
ತನ್ನಯ ವಿಶ್ವಾಸದಿಂದ ಶಿಲೆಯ ಕುಲವನಳಿದು
ಸದಮಲದ ಬೆಳಗ ತಂದಿಟ್ಟ ಸದ್ಭಕ್ತನು,
ಆ ಭಕ್ತನಂಗವೆ ಸದಾಶಿವಮೂರ್ತಿಲಿಂಗವು ತಾನೆ./138
ತನ್ನಾಸೆಯ ಹರಿದು ಶಿಷ್ಯಂಗೆ ಅನುಜ್ಞೆಯ ಮಾಡಿದಾಗವೆ
ಬ್ರಹ್ಮಪಾಶ ಹರಿದುದು.
ವೇಷಧಾರಿಗಳಲ್ಲಿ ಹೊಗದೆ ಈಷಣತ್ರಯವ ಬಿಟ್ಟು
ನೆರೆ ಈಶನನರಿತುದೆ ಆ ಭಕ್ತಂಗೆ ವಾಸವನ ಲೇಸಕಿತ್ತುದು.
ಇಂತೀ ಗುರುಚರದ ಉಭಯವನರಿತ ಸದ್ಭಕ್ತನ ಶರೀರವು
ಸದಾಶಿವಮೂರ್ತಿಲಿಂಗವು ತಾನೆ./139
ತಲೆಯೊಳಗಳ ಬಾಯಲ್ಲಿ ಹಲವು ರುಚಿಯಿಲ್ಲದೆ
ಕೆಳಗಳ ದ್ವಾರದಲ್ಲಿ ಉಣಬಹುದೆ ಅಯ್ಯಾ?
ಹಿಡಿವುದನರಿತು, ಹಿಡಿದು ಬಿಡುವುದನರಿತು,
ಬಿಟ್ಟು ಇಷ್ಟಪ್ರಾಣವನೊಡಗೂಡಬೇಕಲ್ಲದೆ,
ಇಷ್ಟವಿಲ್ಲದ ಪ್ರಾಣ ವಸ್ತುವೆಂಬ ಮಿಟ್ಟೆಯ ಭಂಡರ ಮೆಚ್ಚುವನೆ,
ಎನ್ನ ಸದಾಶಿವಮೂರ್ತಿಯನರಿತ ನಿರಂಗ?/140
ತಾವರೆಯ ನಾಳದ ತೆರಪಿನಲ್ಲಿ,
ಮೂರು ಲೋಕವನೊಳಕೊಂಡ ಗಾತ್ರದಾನೆ ಎಡತಾಕುತ್ತದೆ.
ನಾಳ ಹರಿಯದು ಆನೆಯಂಗಕ್ಕೆ ನೋವಿಲ್ಲ.
ಇದೇನು ಚೋದ್ಯವೆಂದು ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ./141
ತೆಪ್ಪದ ಮೇಲೆ ನಿಂದು
ಒತ್ತುವ ಕ್ರೀಯೇ ಲಿಂಗವಾಗಿ, ಹಿಡಿವ ಕಣೆಯೇ ಅರಿವ ಮುಖವಾಗಿ,
ವ್ಯಾಪಕವೆಂಬ ಹೊಳೆ ದಾಂಟುವುದಕ್ಕೆ ಇದೆ ಪಥ,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /142
ತ್ರಿವಿಧಮೂರ್ತಿಯು ಕೂಡಿ ಭಕ್ತನ ಅಂಗದಲ್ಲಿ ನಿಂದು,
ತಮ್ಮ ಸಂದನಳಿವುದಕ್ಕೆ ಮಂದಿರವ ಕಟ್ಟಿದ ಅಂದವನರಿಯದೆ,
ಕರ್ತೃ ಭೃತ್ಯನೆಂದು ಕೊಂಡಾಡಲೇತಕ್ಕೆ?
ಕಾಯ ಜೀವಕ್ಕೆ ಹಂಗುಂಟೆ ಅಯ್ಯಾ?
ಭಕ್ತನ ಸತ್ಯ ಸದಾಶಿವಮೂರ್ತಿಲಿಂಗದ ಕೃತ್ಯ. /143
ದತ್ತೂರದ ಬಿತ್ತಿನಲ್ಲಿ ಕಲ್ಪತರು ಹುಟ್ಟಿ,
ಕಲ್ಪತರುವಿನ ಅಗ್ರದಲ್ಲಿ ಇಟ್ಟೆಯ ಹಣ್ಣಾಯಿತ್ತು.
ಇಟ್ಟೆಯ ಹಣ್ಣು ತೊಟ್ಟುಬಿಟ್ಟು ಬಿದ್ದಲ್ಲಿ ಅಮೃತಮಯವಾಯಿತ್ತು,
ಸದಾಶಿವಮೂರ್ತಿಲಿಂಗವನರಿತಲ್ಲಿ. /144
ದರ್ಪಣದ ಒಪ್ಪ ಅತ್ತರೆ ಅತ್ತು, ನಕ್ಕರೆ ನಕ್ಕು
ತಾನಾಡಿದಂತೆ ಆಡುವುದು.
ಅದು ಒಂದೊ ಎರಡೊ ಎಂಬುದನರಿತಲ್ಲಿ
ಸದಾಶಿವಮೂರ್ತಿಲಿಂಗವೊಂದೆ. /145
ದಾತ ಗುಣ ವರ್ತಕ ಮಾಟ, ಅರಿವ ಗುಣ ವಿಚಾರ ಮಾಟ.
ಇಂತೀ ದ್ವಯವನರಿತು,
ಕ್ರೀಗೆ ಪದವಾಗಿ ಅರಿವಿಂಗೆ ಆಶ್ರಯವಾಗಿ ಮಾಡುವ ಭಕ್ತನ ಅಂಗ
ಸದಾಶಿವಮೂರ್ತಿಲಿಂಗವು ತಾನೆ. /146
ದಿನದಿನಕ್ಕೆ ಫಲರಸ ಬಲಿವಂತೆ ಮಾಡುವ ಕ್ರೀ ಸನ್ನದ್ಧನಾಗಿ,
ಅರಿವ ಅರಿವು ಫಲರಸ ಬಲಿದು ಫಳವಾದಂತೆ
ಕ್ರೀ ಜ್ಞಾನದಲ್ಲಿ ನಿಂದು, ಜ್ಞಾನ ಕ್ರೀಯನವಗವಿಸಿದಲ್ಲಿ,
ಉಭಯನಾಮ ನಷ್ಟವಾಯಿತ್ತು,
ಸದಾಶಿವಮೂರ್ತಿಲಿಂಗವನರಿತಲ್ಲಿ./147
ದಿವರಾತ್ರಿ ಕೂಡಿ ದಿನ ಲೆಕ್ಕಕ್ಕೆ ಸಂದಂತೆ,
ಭಕ್ತಜಂಗಮದ ಯೋಗ ಸಂಭವವಾಗಿ ವಸ್ತುವ ಮುಟ್ಟಿದಲ್ಲಿ,
ಕರ್ತೃ ಭೃತ್ಯ ಸಂಬಂಧವಡಗಿತ್ತು ಸದಾಶಿವಮೂರ್ತಿಲಿಂಗದಲ್ಲಿ. /148
ದೀಕ್ಷಾಗುರುವಾದಲ್ಲಿ ತ್ರಿವಿಧದ ಆಸೆಯಿಲ್ಲದಿರಬೇಕು.
ಶಿಕ್ಷಾಗುರುವಾದಲ್ಲಿ ಅರಿಗಳಿಗಂಜದೆ ಪ್ರಾಣತ್ಯಾಗನಿಶ್ಚಯನಾಗಿರಬೇಕು.
ಮೋಕ್ಷಗುರುವಾದಲ್ಲಿ ಸರ್ವದೋಷ ಸರ್ವೇಂದ್ರಿಯ ನಾಶನಾಗಿರಬೇಕು.
ಇಂತೀ ಮೂರು ಮೀರಿ ಬೇರೊಂದರಲ್ಲಿ ನಿಂದು
ತ್ಯಾಗಾಂಗ ಭೋಗಾಂಗ ಯೋಗಾಂಗ
ತ್ರಿವಿಧಲೇಪವಾಗಿ ನಿಂದುದು ನಿಜಗುರುಸ್ಥಲ.
ಆ ಗುರುವಿನ ಕೈಯ ಅನುಜ್ಞೆ ಪರಂಜ್ಯೋತಿ ಪ್ರಕಾಶ.
ಅದು ನಿರವಯತತ್ವ, ಸದಾಶಿವಮೂರ್ತಿಲಿಂಗವು ತಾನೇ./149
ಧರೆಯ ಹಾವು ಆಕಾಶದೊಳಗಳ ಕಪ್ಪೆ ಒಳಗೂಡಿ ಒರುಮೆಯಾಗಿ,
ಹಾವು ಗಾರುಡನ ನುಂಗಿ, ಕಪ್ಪೆ ಹಿಡಿವ ಜೋಗಿಯ ನುಂಗಿ,
ಮತ್ತೆ ಕಪ್ಪೆಗೆ ಸರ್ಪಗೆ ವಿರೋಧವಾಗಿ,
ಕಪ್ಪೆ ಜೋಗಿಯನುಗುಳಿ, ಸರ್ಪನ ನುಂಗಿತ್ತು.
ಕಪ್ಪೆಯ ವಿಷ ತಾಗಿ ಜೋಗಿ ಮತ್ತನಾದ.
ಇಂತೀ ಭೇದದಿಂದ ಅರಿವು ತಾನೆ;
ಸದಾಶಿವಮೂರ್ತಿಲಿಂಗವು ತಾನು ತಾನೆ. /150
ಧ್ಯಾನದಿಂದ ಕಾಬುದು ಬ್ರಹ್ಮನ ಕಲ್ಪಾಂತರಕ್ಕೊಳಗು.
ಧಾರಣದಿಂದ ಕಾಬುದು ವಿಷ್ಣುವಿನ ಭೋಗಾಂತರಕ್ಕೊಳಗು.
ಸಮಾಧಿಯಿಂದ ಕಾಬುದು ರುದ್ರನ ಕರಪಾಶಕ್ಕೊಳಗು.
ಇಂತೀ ತ್ರಿವಿಧನಾಸ್ತಿಯಾದಲ್ಲದೆ
ಸದಾಶಿವಮೂರ್ತಿಲಿಂಗವನರಿಯಬಾರದು. /151
ನಂಜಿನ ಭೂಮಿಯ ಮೇಲೆ ಸಂದೇಹದ ಕವರವ ನೆಟ್ಟು,
ಮಂಜುಳದ ಮೂರಂಗದ ಮುಂಡಿಗೆಯ ನೆಟ್ಟು,
ಸರಂಗದ ಸುಮನದ ಡೊಂಕರತ ಬೆಮ್ಮರನ ಹಾಕಿ,
ಗತಿಮತಿಯೆಂಬ ಇಕ್ಕೆಲದ ಸೂರಿಗೆ
ನಿಶ್ಚಯವೆಂಬ ಹುಲುಬಡುವ ಹಾಕಿ ಏರಿಸಿದ ಗಳು
ಚಿತ್ತಶುದ್ಧವೆಂಬ ಮೂಗುತಿ ಕೋಲಿನಲ್ಲಿ ನಿಂದಿತ್ತು.
ಗಳು ತೊಲಗದ ಕಟ್ಟು ವಿಶ್ವಾಸ ನಿಶ್ಚಯದಲ್ಲಿ ನಿಂದಿತ್ತು.
ಸಂದೇಹ ನಿಂದು ಹಂಜರವೇರಿತ್ತು.
ಕಡೆ ನಡು ಮೊದಲೆನ್ನದ ತ್ರಿಗುಣದ ಕಂಥೆ ಕಟ್ಟಿ,
ಅರಿದು ಮರೆಯದ ಹುಲ್ಲು ಕವಿಸಿತ್ತು.
ಮನೆಯಾಯಿತ್ತು, ಮನದ ಕೊನೆಯ ಬಾಗಿಲು ಬಯಲಾಯಿತ್ತು,
ಸದಾಶಿವಮೂರ್ತಿಲಿಂಗವು ನಿರಾಳವಾಯಿತ್ತು. /152
ನಾ ತೋಡಿದ ಬಾವಿಯಲ್ಲಿ ಡುಂಡುಕ ಭೇಕವೊಂದಾಗಿ ಇದ್ದವು.
ಡುಂಡುಕ ಹಸಿದು ಭೇಕನ ನುಂಗಿತ್ತು.
ಭೇಕ ಸಾಯದೆ ಡುಂಡುಕನ ಕರುಳ ತಿಂದು,
ಡುಂಡುಕ ಸತ್ತು ಒಣಗಲಾಗಿ, ಅಂಗ ಬಿಗಿದು ಭೇಕನಲ್ಲಿಯೆ ಸತ್ತಿತ್ತು.
ಎನ್ನ ಬಾವಿ ಕೆಟ್ಟಿತ್ತು, ಸದಾಶಿವಮೂರ್ತಿಲಿಂಗದ ಕುರುಹಡಗಿತ್ತು./153
ನಾದ ಬ್ರಹ್ಮಶಕ್ತಿಯಾಗಿ, ಬಿಂದು ವಿಷ್ಣುಶಕ್ತಿಯಾಗಿ, ಕಳೆ ರುದ್ರಶಕ್ತಿಯಾಗಿ,
ತ್ರಿವಿಧ ಪ್ರಾಣ ಅತೀತ ಭೇದ ಚೇತನನಾಗಿ,
ಉಮಾಪತಿ ನಿರಸನ ಸ್ವಯಂಭು ಸದಾಶಿವಮೂರ್ತಿಲಿಂಗವು,
ತ್ರಿವಿಧನಾಮ ನಷ್ಟವಾಯಿತ್ತು. /154
ನಾರಿಯಲ್ಲಿ ಕೋಲ ಹೂಡಿ, ಆರೈಕೆಯ ಮಾಡಿ ಎಸೆಯಲಿಕ್ಕೆ
ತಾಗಿತು ಮನ ಸಂದ ಗುರಿಯ.
ಅದೇತರ ಗುಣದಿಂದ?
ಮರ ಬಾಗಿ ನಾರಿಯೈದಿ ಬಾಣ ಶರಸಂಧಾನವಾಗಿ ತಾಗಿದಂತೆ
ಚಿತ್ತ ಹಸ್ತದ ಲಿಂಗದ ದೃಷ್ಟ.
ಮನ ವಚನ ಕಾಯ ತ್ರಿಕರಣದಲ್ಲಿ ಕರಣಂಗಳಿಂದ ಅರಿತು
ಕಾಯದ ನೆಮ್ಮುಗೆಯಲ್ಲಿ ಕಾಣಬೇಕು.
ಕಾಬ ತೆರದ ಮರೆಯಲ್ಲಿ ಕಳೆ ತೋರುತ್ತದೆ
ಕುಡಿವೆಳಗು ಕಳೆಕಳಿಸುತ್ತದೆ ಸದಾಶಿವ[ಮೂರ್ತಿ]ಲಿಂಗದಲ್ಲಿ./155
ನಿಕ್ಷೇಪವ ನೀಕ್ಷೆಪಿಸುವಲ್ಲಿ ಮತ್ತಾರೂ ಅರಿಯದಂತೆ
ಇರಿಸಬೇಕೆಂಬುದಕ್ಕಿಂದವು ಕಡೆಯೆ
ಶಿವತತ್ವಪರಮಜ್ಞಾನ ?
ಇಂತಿದನರಿತು ಲಿಂಗಬಾಹಿರರಲ್ಲಿ, ಕಂಡ ನಿಂದಠಾವಿನಲ್ಲಿ,
ಬಂದಂತೆ ಬಾಯ ಬಡಿವರಲ್ಲಿ
ಶಿವಪ್ರಸಂಗವನೊಂದನೂ ನುಡಿಯಲಾಗದು.
ಮೀರಿ ನುಡಿದಡೆ ಸದಾಶಿವಮೂರ್ತಿಲಿಂಗಕ್ಕೆ ದೂರ. /156
ನಿಜಗುರುವಿನ ಇರವು ಹೇಗಿರಬೇಕೆಂದಡೆ: ನಿರ್ಮಲ ಸುಚಿತ್ತನಾಗಿ ತನ್ನ ಸೋಂಕುವ
ಸುಖದುಃಖಗಳು ಬಂದಲ್ಲಿ ಆಗುಚೇಗೆಯನರಿಯದೆ,
ಫಲವ ಹೊತ್ತ ತರುವಿನಂತೆ, ಕೆಚ್ಚಲ ಕ್ಷೀರದಂತೆ, ಕಪಿತ್ಥದ ಪಳ ಘಟ್ಟಿಗೊಂಡಂತೆ.
ಹೊರಗಳ ಇರವು, ಒಳಗಳ ನಿಜ.
ಲೌಕಿಕಕ್ಕೆ ಗುರುವಾಗಿ ಪರಮಾರ್ಥಕ್ಕೆ ಸದ್ಗುರುವಾಗಿ
ಡುಂಡುಫಳದಂತೆ ಹೊರಗಳ ಬಿರುಬು, ಒಳಗಳ ಮಧುರಸಾರದಂತಿರಬೇಕು.
ಕರು[ಣಿ] ಕಾರುಣ್ಯಾಂಬುಧಿ ಸದ್ಗುರುವಿನ ಇರವು
ಸದಾಶಿವಮೂರ್ತಿಲಿಂಗವು ತಾನೆ./157
ನಿರಾಳದಲ್ಲಿ ನೀರಕೋಟೆಯನಿಕ್ಕಿ, ಬಯಲ ಅಗಳ ತೆಗೆದು,
ವಾಯುವ ತೆನೆ ಹೂಡಿ,
ಅಶ್ವರಾಜನೆಂಬ ಅರಸು ಪಟ್ಟಣಕ್ಕೊಡೆಯನಾಗಿ,
ಸೋಮಸೂರ್ಯವೀಧಿಗಳಲ್ಲಿ ಪಶ್ಚಿಮ ಕೇರಿಯ ಪೊಕ್ಕು,
ದಕ್ಷಿಣದಲ್ಲಿ ನಿಂದು, ಪೂರ್ವದಲ್ಲಿ ಪರಸ್ಥಾನವ ಮಾಡಿ,
ಉತ್ತರದ ಮಧ್ಯದಲ್ಲಿ ಸಿಂಹಾಸನಂ ಗೆಯಿದು,
ಸಕಲೇಂದ್ರಿಯ ನಾನಾ ವಿಷಯ ಪರಿವಾರದಲ್ಲಿ,
ಅರಿಗಳಿಗೆ ವಶವಲ್ಲದೆ ಸುಖಮಯನಾಗಿದ್ದ.
ಸದಾಶಿವಮೂರ್ತಿಲಿಂಗವು ನಿರಾಳವಾಯಿತ್ತು. /158
ನೀತಿ ಲಿಂಗವಾಗಿ, ಸದ್ಗುಣ ಕಳೆಯಾಗಿ,
ಆಚಾರವಿಡಿದು ತೋರುವ ಬೆಳಗು ವಸ್ತುವಾಗಿ,
ಸ್ಫಟಿಕದ ಘಟವ ಹೊಳಚಿದಂತೆ, ಒಳಹೊರಗೆನ್ನದೆ ನಿರ್ಮಲ ತೋರುವಂತೆ,
ಅದರಿರವು ಸುಚಿತ್ತನಾಗಿ ನಿಂದುದು ನಿರ್ಮಾಯ.
ಸದಾಶಿವಮೂರ್ತಿಲಿಂಗವು ನಿರಂಜನಮಯಸ್ವರೂಪ./159
ನೋಡಿಹೆನೆಂದಡೆ ನೋಡಲಿಲ್ಲ, ಕೂಡಿಹೆನೆಂದಡೆ ಕೂಡಲಿಲ್ಲ.
ಮುಂದೆ ಬೇಡಿಹೆನೆಂದಡೆ ಮೂರ್ತಿಯಲ್ಲದ ಕಾರಣ,
ಸದಾಶಿವಮೂರ್ತಿಲಿಂಗವು ತಾನೆ. /160
ಪಂಚತತ್ವದಲ್ಲಿದ್ದು ಪರತತ್ವವನರಿಬೇಕು.
ಅದಕ್ಕೆ ದೃಷ್ಟ;
ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ ?
ಅದು ಭಿನ್ನಭಾವವಾಗಿ ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು.
ಆ ತೆರನನರಿದಲ್ಲಿ ಅರಿವುದಕ್ಕೊಂದು ಕುರುಹು ಬೇಕು.
ಬಲ್ಲಿದ ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ ?
ಆ ಅರಿವ ಚಿತ್ತ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ ಕಾರಣ.
ಇದನರಿತು ಆತ್ಮವಾದವೆಂದು ಎನಲಿಲ್ಲ.
ಸದಾಶಿವಮೂರ್ತಿಲಿಂಗವನರಿವುದಕ್ಕೆ ಇದಿರಿಟ್ಟು ಕ[ಳೆ]ದುಳಿಯಬೇಕು./161
ಪಂಚವಿಷಯಂಗಳೆಂದು, ಅಷ್ಟಮದಂಗಳೆಂದು,
ಚತುಷ್ಟಯಭಾವಂಗಳೆಂದು, ಷೋಡಶಭೇದಂಗಳೆಂದು,
ಸದ್ಗುಣಸಾಧಕಂಗಳೆಂದು, ತ್ರಿಗುಣಭೇದ ಆತ್ಮಂಗಳೆಂದು
ಕಲ್ಪಿಸಿಕೊಂಡಿಪ್ಪ ಆತ್ಮನೊಂದೆ ಭೇದ.
ಅದ ವಿಚಾರಿಸಿದಲ್ಲಿ ಅರಿದಡೆ ತಾ, ಮರೆದಡೆ ಜಗವಾಯಿತ್ತು.
ಉಭಯವನಳಿದು ನಿಂದಲ್ಲಿ ಸದಾಶಿವಮೂರ್ತಿಲಿಂಗವಾಯಿತ್ತು./162
ಪಂಚಾಕ್ಷರಿಯ ಮಣಿಮಾಲೆಯಲ್ಲಿ
ಸಂಚಿತ ಪ್ರಾರಬ್ಧ ಕರ್ಮವೆಂಬ ದಾರ ನಡುವೆ ಸಿಕ್ಕಿ,
ಮಣಿಯ ತಿರುಗಾಡಿಸುತ್ತದೆ.
ದಾರವ ಹರಿದು ಮಣಿಯ ದ್ವಾರವ ಮುಚ್ಚಿ ಉಲುಹಡಗಿ ನಿಲಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./163
ಪಾತಾಳದ ನೀರ ಹುರಿ ಸಂಚದಿಂದ ಧರೆಗೆ ತಾಹಂತೆ
ಅರಿವು ಆತ್ಮನಲ್ಲಿ ಅಡಗಿದ್ದುದ ತಂದೆಯಲ್ಲಾ!
ಕರದಿ ಕುರುಹಾಗಿ, ಅಡಗಿದೆಯಲ್ಲಾ!
ಶೃಂಗಾರದ ನಿಳಯದ ಮುಚ್ಚುಳು
ಕೀಲಿನಿಂದ ಕಡೆಗಾಣಿಸಿದಂತೆ ಅಡಗಿದೆಯಲ್ಲಾ!
ಕುರುಹು ಬಿನ್ನವಿಲ್ಲದೆ ಎನ್ನಡಗೂಡು, ಸದಾಶಿವಮೂರ್ತಿಲಿಂಗವೆ./164
ಪಾದಪ ಗುರುಭಾವ, ಶಾಖೆ ಚರಭಾವ, ಲಿಂಗ ಫಲಭಾವ,
ರಸ ವಸ್ತುಭಾವ, ಭುಂಜಿಸುವಾತ ಭಕ್ತಿಭಾವ,
ಭಕ್ತನಂಗ ಸದಾಶಿವಮೂರ್ತಿಲಿಂಗಭಾವ./165
ಪಾದವ ಕೊಡುವಲ್ಲಿ ಪದಂ ನಾಸ್ತಿಯಾಗಿರಬೇಕು.
ಪೂಜಿಸುವಲ್ಲಿ ಮೂರರತು, ಮೂರನರಿದು,
ಆರರಲ್ಲಿ ಆಶ್ರಯಿಸಿ, ತೋರಿಕೆ ಒಂದರಲ್ಲಿ ನಿಂದು,
ಆ ಒಡಲಳಿದು ಸದಾಶಿವಮೂರ್ತಿಲಿಂಗದ ಒಡಲಾಗಬೇಕು/166
ಪಾಶವರತು ಗುರುವಾಗಬೇಕು, ವೇಷವರತು ಚರವಾಗಬೇಕು,
ಭ್ರಾಮಕವರತು ಲಿಂಗವಾಗಬೇಕು, ಸಕಲಕೃತಭೇದವರತು ವಿರಕ್ತನಾಗಬೇಕು.
ಇಂತೀ ಸಕಲಭ್ರಮೆ ಅಡಗಿ ನಿಂದಲ್ಲಿ
ಸದಾಶಿವಮೂರ್ತಿಲಿಂಗವನರಿತುದು./167
ಪಾಷಾಣದ ಘಟದಲ್ಲಿ, ರತ್ನದ ಜ್ಯೋತಿಯ ಬೆಳಗು ತೋರುವಂತೆ,
ಆ ಬೆಳಗಿನ ಕುರುಹು ಘಟದಲ್ಲಿ ನಿಂದು ಇದಿರಿಂಗೆ ಕುರುಹಿಟ್ಟಿತ್ತು.
ಆ ಬೆಳಗನೊಳಕೊಂಡ ಕಾರಣ ಪಾಷಾಣವೆಂಬ ಕುಲ ಹರಿದು,
ರತ್ನವೆಂಬ ನಾಮವಾಯಿತ್ತು.
ಇಂತೀ ಭೇದವನರಿದು ಉಭಯನಾಮ ನಷ್ಟವಾಹನ್ನಕ್ಕ
ಸದಾಶಿವಮೂರ್ತಿಲಿಂಗವನರಿಯಬೇಕು./168
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕಕ್ಕೆ
ಮುನ್ನವೆ ವಿಷ್ಣುಮಯ ಹುಟ್ಟಿದ ಠಾವುದು
ಕಾಲಾಂಧರ ಕಲ್ಪಿತಕ್ಕೆ ಮುನ್ನವೆ ಬ್ರಹ್ಮನ ಉತ್ಪತ್ಯದ ನೆಲೆ ಯಾವುದು?
ರೂಪು ನಿರೂಪಿಗೆ ಮುನ್ನವೆ ರುದ್ರನ ಲೀಲಾಭಾವವಾದಠಾವಾವುದು?
ಇಂತಿವೆಲ್ಲವು ಅನಾದಿ ವಸ್ತು ಆದಿಶಕ್ತಿಯ ಈ ಈಚೆಯಿಂದಾದ ದೇವವರ್ಗ ಸಂತತಿ.
ಯುಗಜುಗಂಗಳಲ್ಲಿ ಪರಿಭ್ರಮಣಕ್ಕೆ ತಿರುಗುವುದಕ್ಕೆ ಒಡಲಾಯಿತ್ತು.
ಇಂತೀ ಭೇದಂಗಳನರಿತು ಘನಕಿರಿದಿಂಗೆ ತೆರಪುಂಟೆ ಅಯ್ಯಾ?
ಸೂರಾಳ ವಿರಾಳ ನಿರಾಳಕ್ಕೆ ಮುನ್ನವೆ
ಅಭೇದ್ಯ ಅಗೋಚರಮಯ ಲೋಕಕ್ಕೆ
ಸದಾಶಿವಮೂರ್ತಿಲಿಂಗವೊಂದೆಯಲ್ಲದೆ ಹಲವು ಇಲ್ಲಾ ಎಂದೆ./169
ಪೃಥ್ವಿಜ್ಞಾನ ಪಿಪೀಲಿಕಾಸಂಬಂಧವಾಗಿಹುದು,
ಅಪ್ಪುಜ್ಞಾನ ಮರ್ಕಟಸಂಬಂಧವಾಗಿಹುದು,
ತೇಜಜ್ಞಾನ ಅಗ್ನಿಸಂಬಂಧವಾಗಿಹುದು,
ವಾಯುಜ್ಞಾನ ಗಂಧಸಂಬಂಧವಾಗಿಹುದು,
ಆಕಾಶಜ್ಞಾನ ವಿಹಂಗಸಂಬಂಧವಾಗಿಹುದು,
ತಮಜ್ಞಾನ ಮಾರ್ಜಾಲಸಂಬಂಧವಾಗಿಹುದು,
ಪರಿಪೂರ್ಣಜ್ಞಾನ ಕೂರ್ಮಸಂಬಂಧವಾಗಿಹುದು,
ದಿವ್ಯಜ್ಞಾನ ಸರ್ವಮಯವಾಗಿ ನಾನಾಭೇದಂಗಳ ಭೇದಿಸುತ್ತಿಹುದು.
ಇಂತೀ ಮನಜ್ಞಾನಭರಿತನಾಗಿ ದಶಗುಣಮರ್ಕಟನ ಮೆಟ್ಟಿನಿಂದು,
ಬಟ್ಟಬಯಲ ತುಟ್ಟತುದಿಯ ಸದಾಶಿವಮೂರ್ತಿಲಿಂಗದ ಕಳೆ
ಕಳಕಳಿಸುತ್ತದೆ ಚಿತ್ತದ ನೆನಹಿನಲ್ಲಿ. /170
ಪೃಥ್ವಿಯ ಅಪ್ಪುವಿನ ಆಧಾರದಿಂದ ಬೀಜವೊಡೆದು ಬೆಳೆವಂತೆ
ಅರಿದು ಅರಿಹಿಸಿಕೊಂಬ ಉಭಯದ ಮಧ್ಯದಲ್ಲಿ
ಜ್ಞಾನಶಕ್ತಿ ಕುರುಹಾಗಿ ಚಿದ್ಘನವಸ್ತು ಪತಿಯಾಗಿ.
ಉಭಯದಿಂದ ಕೂಡಿ ಮೇಲನರಿತಲ್ಲಿ
ಸದಾಶಿವಮೂರ್ತಿಲಿಂಗ ಬಚ್ಚಬಯಲು. /171
ಪ್ರಥಮದೀಕ್ಷೆ, ಪರಬ್ರಹ್ಮದೀಕ್ಷೆ, ಅಂಗಲಿಂಗದೀಕ್ಷೆ, ಪುನರ್ದೀಕ್ಷೆ:
ಇಂತೀ ದೀಕ್ಷೆಗಳಲ್ಲಿ ತಿಳಿಯಬೇಕು.
ಪ್ರಥಮದೀಕ್ಷೆಯ ಮಾಡುವಲ್ಲಿ ಬ್ರಹ್ಮನ ಪಾಶವ ಹರಿಯಬೇಕು.
ಪರಬ್ರಹ್ಮದೀಕ್ಷೆಯ ಮಾಡುವಲ್ಲಿ ವಿಷ್ಣುವಿನ ಪಾಶವ ಹರಿಯಬೇಕು;
ಅಂಗಲಿಂಗದೀಕ್ಷೆಯ ಮಾಡುವಲ್ಲಿ ರುದ್ರನ ಪಾಶವ ಹರಿಯಬೇಕು;
ಪುನರ್ದೀಕ್ಷೆಯ ಮಾಡುವಲ್ಲಿ ಆ ಘಟದಲ್ಲಿದ್ದ ಆತ್ಮನ ಕಳೆದು
ಪುನರಪಿಯ ಮಾಡಿ ಪುನರ್ದಿಕ್ಷೆಯ ಮಾಡಬೇಕು.
ಅದೆಂತೆಂದಡೆ, ಅದಕ್ಕೆ ದೃಷ್ಟ: ದ್ವಿಜರ ಗರ್ಭದಲ್ಲಿ ಜನಿಸಿದ ಪಿಂಡಕ್ಕೆ
ಮಂತ್ರೋಚ್ಚರಣೆ ಮುಂಜಿಯಿಂದಲ್ಲದೆ ಭೂಸುರಕುಲವಿಲ್ಲ.
ಇದನರಿತು ವಿಚಾರವ ಮಾಡಿ ಕೇಳಿ ಕಂಡು ಉಪದೇಶ ಗುರುವಾಗಬೇಕು.
ಸದಾಶಿವಮೂರ್ತಿಲಿಂಗವನರಿವುದಕ್ಕೆ./172
ಪ್ರಾಣಕ್ಕೆ ಉಪದೇಶವ ಮಾಡಿ ಕಾಯಕ್ಕೆ ಲಿಂಗವ ಕೊಡಬೇಕು
ಕಾಯಶುದ್ಧವ ಮಾಡಿ ಪ್ರಾಣಕ್ಕೆ ಅರಿವ ತೋರಬೇಕು.
ಇಷ್ಟನರಿಯದೆ ದೀಕ್ಷೆಯ ಮಾಡಬಾರದು.
ಕುರುಡನ ಕೈಯ್ಯಲ್ಲಿ ಕೂಳಕಲಸಿ, ಪ್ರತಿ ಕುರುಡಂಗೆ ಊಡಿಸಿದಂತಾಯಿತ್ತು.
ಮಲಭಾಂಡ ಜೀವಿಯ ಕೈಯಲ್ಲಿ ಅನುಜ್ಞೆಯಾದ ಶಿಷ್ಯಂಗೆ
ಉಭಯದ ಕೇಡಾಯಿತ್ತು, ಇದನರಿತು ನಡೆಯಿರಣ್ಣಾ,
ಸದಾಶಿವಮೂರ್ತಿಲಿಂಗವನರಿವುದಕ್ಕೆ./173
ಬಂಟ ಒಡೆಯನೊಡನೆ ಉಂಡಲ್ಲಿ ದಾಸತನವಳಿಯಿತ್ತು.
ನೀ ಮರೆದು ಮಲಗಿದ್ದಲ್ಲಿ, ಸ್ವಪ್ನವ ಕಾಬಲ್ಲಿ, ಲಿಂಗದ ಕೂಟವೆಲ್ಲಿದ್ದಿತ್ತು?
ನೀ ಸ್ತ್ರೀಸಂಭೋಗವ ಮಾಡುವಲ್ಲಿ ಲಿಂಗ ನಿನ್ನಲ್ಲಿ ಸಹಕೂಟದಿ ಇದ್ದಠಾವಾವುದು?
ಸಾಕು, ಅರ್ತಿಕಾರರ ಹೊತ್ತುಹೋಕನ ಅರ್ಪಿತ!
ಲಿಂಗ ಅಂಗದಿಂದ ಹಿಂಗಿದಾಗವೆ ಸ್ವಪ್ನದ ಮರವೆ, ಮುಟ್ಟದ ಅರ್ಪಿತ.
ಇದು ನಿಶ್ಚಯವಲ್ಲ, ಸದಾಶಿವಮೂರ್ತಿಲಿಂಗಕ್ಕೆ ಹೊರಗು./174
ಬಂದಿತ್ತು ಬಾರದೆಂಬ ಸಂದೇಹವನಳಿದು ನಿಂದುದು, ಲಿಂಗಕ್ಕೆ ಭರಿತಾರ್ಪಣ.
ಶರಣರ ಮುಖದಿಂದ ಸಂದುದು, ಲಿಂಗಕ್ಕೆ ಭರಿತಾರ್ಪಣ.
ತನ್ನಂಗಕ್ಕೆ ಕೊರತೆಯಾಗಿ ಶರಣರ ಪಂತಿಯಲ್ಲಿ ಸಮಗ್ರವಾಗಿ ಸಂದುದು,
ಲಿಂಗಕ್ಕೆ ಭರಿತಾರ್ಪಣ, ಜಗಭರಿತನ ತೃಪ್ತಿ ಇಹಪರದ ಮುಕ್ತಿ,
ಸದಾಶಿವಮೂರ್ತಿಲಿಂಗದ ಅರ್ಪಿತದ ಗೊತ್ತು. /175
ಬಯಲು ಬಯಲ ನೋಡಿ ಕಾಬುದಿನ್ನೇನು?
ರೂಪ ರೂಪ ನೋಡಿ ಕಾಬುದಿನ್ನೇನು?
ರೂಪ ಹಿಡಿಯಬಾರದು, ಬಯಲನರಿಯಬಾರದು.
ಬಯಲು ರೂಪಿಂಗೆ ಹೊರಗು, ರೂಪು ಬಯಲಿಂಗೆ ಹೊರಗು.
ಉಭಯವನರಿತಲ್ಲಿ ಸದಾಶಿವಮೂರ್ತಿಲಿಂಗಕ್ಕೆ ಒಳಗು./176
ಬಯ್ಚಿಟ್ಟ ಬಯ್ಕೆಯ ಒಡೆಯ ಕೊಂಡುಹೋದಲ್ಲಿ
ನೆಲ ಉಮ್ಮಳಿಸಿದರುಂಟೆ ಅಯ್ಯಾ?
ತನ್ನ ವಿಶ್ವಾಸಕ್ಕೆ ಗುರುವೆಂದು ಕಂಡಡೆ,
ನಿನ್ನಯ ಗುರುತನದ ಹರವರಿಯೆಂತಯ್ಯಾ?
ಅಮೃತವ ಹೊಯಿದಿದ್ದ ಕುಡಿಕೆಯಂತಾಗಬೇಡ
ಗುರುತನವಳಿದು ಸ್ವಯಗುರುವಾಗು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./177
ಬಯ್ಚಿಟ್ಟ ಬಯ್ಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ
ಸ್ವಾಮಿದ್ರೋಹಿಕೆಯಲ್ಲವೆ?
ಅಟ್ಟ ಅಡಿಗೆಯ ಪತಿಗಿಕ್ಕದ ಸತಿ ಉಂಡಡೆ ನೆಟ್ಟನೆ ಕಳ್ಳೆಯಲ್ಲವೆ?
ಕೊಟ್ಟಾತ ಒಡವೆಯ ಬೇಡಿದಡೆ
ಕಟ್ಟಿ ಹೋರುವ ಕಷ್ಟಜೀವಿಗೇಕೆ ತ್ರಿವಿಧಭಕ್ತಿ, ಸಜ್ಜನಯುಕ್ತಿ?
ಇಂತೀ ಸಜ್ಜನಗಳ್ಳರ ಬಲ್ಲನಾಗಿ ಸದಾಶಿವಮೂರ್ತಿಲಿಂಗವು ಒಲ್ಲನು./178
ಬಾಗಿಲಲ್ಲಿ ತಡೆವಾತನ ಮನೆಯ ಬಾಗಿಲ ಹೊಕ್ಕು ಉಂಡ ಜಂಗಮದ
ಪಾದೋದಕ ಪ್ರಸಾದವೆಂದು ಕೊಂಡಾತಂಗೆ ಅಘೋರ ಪಾತಕವೆಂದೆ.
ಅದೆಂತೆಂದಡೆ: ತಾ ಸರ್ವಸಂಗವನರಿತು ಭಕ್ತಿವಿರಕ್ತಿಯ ಕಂಡು
ಇಂತೀ ಗುಣಂಗಳಲ್ಲಿ ಸನ್ನದ್ಧನಾಗಿ ಅರಿತು
ಮತ್ತೆ ಉದರದ ಕಕ್ಕುಲಿತೆಗೆ ಸದನದ ಹೊಗಬಾರದು ಇಂತೀ ವಿವರ,
ದರ್ಶನದ ಮರೆಯಲ್ಲಿ ಆಡುವ ಪರಮವಿರಕ್ತನ ಸ್ಥಲ.
ಸದಾಶಿವಮೂರ್ತಿಲಿಂಗದಲ್ಲಿ ಆಗುಚೇಗೆಯನರಿಯಬೇಕು./179
ಬಾರದಿರು ಬ್ರಹ್ಮನ ಅಂಡದಲ್ಲಿ,
ಬೆಳೆಯದಿರು ವಿಷ್ಣುವಿನ ಕುಕ್ಷಿಯಲ್ಲಿ,
ಸಾಯದಿರು ರುದ್ರನ ಹೊಡೆಗಿಚ್ಚಿನಲ್ಲಿ.
ಹುಟ್ಟಿದ ಅಂಡವನೊಡೆ,
ಬೆಳೆದ ಕುಕ್ಷಿಯ ಕುಕ್ಕು,
ಹೊಯ್ವ ಹೊಡೆಗಿಚ್ಚ ಕೆಡಿಸು.
ಮೂರುಬಟ್ಟೆಯ ಮುದಿಡು,
ಒಂದರಲ್ಲಿ ನಿಂದು ನೋಡು.
ಆ ಒಂದರಲ್ಲಿ ಸಂದಿಲ್ಲದ ಅಂಗವೇ ನೀನಾಗು
ಸದಾಶಿವಮೂರ್ತಿಲಿಂಗಕ್ಕೆ. /180
ಬಿಟ್ಟು ಕಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಕೊಂಡು,
ಲಿಂಗದಿಚ್ಚೆಯನರಿಯದೆ ತನ್ನಂಗದ ಆರಜಕ್ಕಾಗಿ
ಗಂಗಳ ತುಂಬಿ ಸುರಿಸಿಕೊಂಬ
ಲೆಂಗಿಗಳನೊಲ್ಲ ಸದಾಶಿವಮೂರ್ತಿಲಿಂಗ./181
ಬೀಜ ಹುಟ್ಟುವ ತಿರುಳು ಒಳಗಿದ್ದಲ್ಲಿ,
ಮೇರಳ ಸಿಪ್ಪೆ ಮುಚ್ಚಿಯಲ್ಲದೆ ಅಂಕುರದ ತಿರುಳಿಗೆ ಆದಿಯಿಲ್ಲ.
ತಿರುಳು ಅಂಕುರ ನಾಸ್ತಿಯಾದಲ್ಲಿ
ಸಿಪ್ಪೆ ಹುಟ್ಟುವುದಕ್ಕೆ ಉಭಯದ ತತ್ತಿಲ್ಲದಾಗದು.
ಅಲ್ಲಾ ಎಂದಡೆ ಕ್ರೀವಂತರೊಪ್ಪರು, ಅಹುದೆಂದಡೆ ಅಮಲಿನ ಮಲಿನವಾಗದು.
ದಗ್ಧವಾದ ಪಟ ಸಾಭ್ರಕ್ಕೊದಗದು.
ಒಂದೆಂದು ಎರಡ ಕೂಡಿ ಸಂದನಳಿದಲ್ಲಿ ಲೆಕ್ಕ ನಿಂದಿತ್ತು.
ಸದಾಶಿವಮೂರ್ತಿಲಿಂಗವೆಂದಲ್ಲಿ ಉಭಯನಾಮ ಲೀಯವಾಯಿತ್ತು./182
ಬೀಜದ ನೆಲೆಯಲ್ಲಿ ಹಲವು ತೋರುವವೊಲು,
ಮೂಡಿ ಮೊಳೆತಲ್ಲಿ ಉಲುಹಿಗೆ ಅಲರಾಯಿತ್ತು.
ನಾನೆಂಬಲ್ಲಿ ನೀನಾದೆ, ನೀನಾನೆಂಬಲ್ಲಿ ಉಲುಹಾದೆಯಲ್ಲಾ!
ಉಲುಹಿನ ನೆಲೆಯ ಕಡಿದು, ಗಲಭೆಯ ಗ್ರಾಮವ ಬಿಟ್ಟು,
ನೆಲೆಯಾಗು ಮನದ ಕೊನೆಯಲ್ಲಿ.
ಒಲವರ ಬೇಡ, ಸದಾಶಿವಮೂರ್ತಿಲಿಂಗವೆ. /183
ಬೀಜವಿಲ್ಲದೆ ಬೆಳೆವುಂಟೆ, ಅಯ್ಯಾ ? ನಾದವಿಲ್ಲದೆ ಶಬ್ದವುಂಟೆ, ಅಯ್ಯಾ?
ದೃಷ್ಟಿಯಿಲ್ಲ[ದೆ] ಕಳೆ ಉಂಟೆ, ಅಯ್ಯಾ ?
ಅಂಗಸಹಿತವಾಗಿ ಸರ್ವಸಂಗವನರಿಯಬೇಕಲ್ಲದೆ,
ನಿರಂಗ ಅಂಗದಲ್ಲಿ ಹೊಕ್ಕು ಸರ್ವಭೋಗಂಗಳ ಕಾಬುದಕ್ಕೆ ಇದೇ ದೃಷ್ಟ.
ಬಂಗಾರದ ಒಡಲಿನಲ್ಲಿ ಬಣ್ಣ ನಿಂದು ಲೆಕ್ಕವಟ್ಟಂತೆ ಬಾಹಂತೆ,
ಆತ್ಮನ ದೃಷ್ಟನ ಕಂಡು ಮತ್ತೆ ಆಧ್ಯಾತ್ಮವೆನಲೇಕೆ ?
ಘಟದ ಮಧ್ಯದಲ್ಲಿ ನಿಂದು ನುಡಿವುದೆ ಕ್ರೀಯೆಂದೆ,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /184
ಬೇರಿಗೆ ನೀರನೆರೆದಲ್ಲಿ
ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ
ಸರ್ವಾಂಗವ ವೇಧಿಸಿ ಸಂಪನ್ನಿಕೆಯ ದೃಕ್ಕಿಂಗೆ ತೋರುವಂತೆ
ಚಿತ್ತುವಿನ ಎರಕ ನಿಜತತ್ವದ ಕುರುಹಿನಲ್ಲಿ ಪರಿಪೂರ್ಣವಾಗಿ ಸಂಪದ ತೋರುತ್ತದೆ.
ಕುರಿತ ಕುರುಹಿನ ಮರೆಯಲ್ಲಿ ಅರಿವು ನಿಂದು
ಕುರುಹು ನಿಷ್ಪತ್ತಿಯಾಗುತ್ತದೆ ಎಂಬ ಸಂದೇಹ ನಿಂದಿತ್ತು.
ಎಂಬುದನರಿತಾಗ ಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ. /185
ಬೇರಿನ ಬಣ್ಣ ಇಂದುವಿನ ಕಳೆಕೊಂಡಂತಿರಬೇಕು.
ಶುಭ್ರದ ಪಟ ಷಡುವರ್ಣಕ್ಕೆ ಬಂದಂತೆ,
ಘಟದ ಸಂಗದಿಂದ ಸುವಸ್ತು ಇಂದ್ರಿಯಂಗಳಿಗೆ ಮುಖವಾಗಿ,
ಅರ್ಪಿಸಿಕೊಂಬವ ನೀನಾದೆಯಲ್ಲಾ ಸದಾಶಿವಮೂರ್ತಿಲಿಂಗವೆ./186
ಬ್ರಹ್ಮ ಸೋರೆಯಾಗಿ, ವಿಷ್ಣು ದಂಡವಾಗಿ, ಸಕಲದೇವತಾಕುಲ ದಾರವಾಗಿ,
ಶ್ರುತಿನಾದ ವಸ್ತುವಾಗಿ ತೋರುತ್ತಿರೆ,
ತನ್ನ ಲೀಲೆಯಿಂದ, ಜಗಕ್ರೀಡಾಭಾವದಿಂದ ಒಂದಕ್ಕೊಂದು ಸೇರಿಸಿ,
ಉತ್ತಮ ಕನಿಷ್ಠ ಮಧ್ಯಮವೆಂಬ ತ್ರಿವಿಧಮೂರ್ತಿಯಾಗಿ,
ಕಲ್ಪಿಸಿದ ಜಗ ಹಾಹೆಯಿಂದ ಎಂಬುದನರಿಯದೆ,
ಮಲಕ್ಕೂ ನಿರ್ಮಲಕ್ಕೂ ಸರಿಯೆನಬಹುದೆ?
ವಾದಕ್ಕೆ ಈ ತೆರ ಅರಿದಡೆ ಆ ತೆರ.
ಸದಾಶಿವಮೂರ್ತಿಲಿಂಗವು ಅತ್ಯತಿಷ್ಠದ್ದಶಾಂಗುಲವು./187
ಬ್ರಹ್ಮಂಗೆ ಸರಸ್ವತಿಯಾಗಿ ಕಾಡಿತ್ತು ಮಾಯೆ.
ವಿಷ್ಣುವಿಂಗೆ ಲಕ್ಷ್ಮಿಯಾಗಿ ಕಾಡಿತ್ತು ಮಾಯೆ.
ರುದ್ರಂಗೆ ಉಮಾದೇವಿಯಾಗಿ ಕಾಡಿತ್ತು ಮಾಯೆ.
ಎನಗೆ ನಿಮ್ಮನರಿವ ಬಯಕೆ ಭವಮಾಯೆಯಾಗಿ ಕಾಡುತ್ತದೆ.
ನೀನಾನುಳ್ಳನ್ನಕ್ಕ ಉಭಯವು ಮಾಯೆಯಾಗಿದೆ,
ಸದಾಶಿವಮೂರ್ತಿಲಿಂಗವು ನಾ ನೀನೆಂಬುದೆ ಮಾಯೆ./188
ಬ್ರಹ್ಮವನರಿತ ಮತ್ತೆ ಸುಮ್ಮನೆ ಇರಬೇಕು.
ಬ್ರಹ್ಮಪ್ರಸಂಗವ ಮಾಡುವಲ್ಲಿ ಪರಬ್ರಹ್ಮಿಗಳಲ್ಲಿ ಪ್ರಸಂಗವ ಮಾಡಬೇಕು.
ತನ್ನ ಅಗಮ್ಯವ [ಮೆ]ರೆಯಬೇಕೆಂದು
ಬೀದಿಯ ಪಸರದಂತೆ, ಲಾಗನಾಡುವ ವಿಧಾತನಂತೆ ಆಗಬೇಡ.
ಕಳ್ಳನ ಚೇಳೂರಿದಂತಿರು, ಸದಾಶಿವಮೂರ್ತಿಲಿಂಗವನರಿವುದಕ್ಕೆ. /189
ಬ್ರಹ್ಮಾಂಡದ ಧರೆಯ ಮೇಲೆ ಅರಿಬಿರಿದಿನ ಮಂತಣದ ಗಿರಿ ಹುಟ್ಟಿತ್ತು.
ಆ ದುರ್ಗಕ್ಕೆ ಮೂವರು ದೊರೆಗಳು ಹುಟ್ಟಿದರು.
ಒಬ್ಬ ನರಪತಿ, ಒಬ್ಬ ಸುರಪತಿ, ಒಬ್ಬ ಸಿರಿವುರಿಗೊಡೆಯ,
ಮೂವರ ದುರ್ಗವೊಂದೆಯಾಗಿ ಸಂದೇಹಕ್ಕೆ ಈಡಾಗುತ್ತದೆ.
ಸದಾಶಿವಮೂರ್ತಿಲಿಂಗ ಸಂಗವಾಗಿಯಲ್ಲದೆ ಆಗದು. /190
ಭಕ್ತ ಗುರುಚರವ ನುಡಿದಲ್ಲಿ ನೋವುಂಟೆ ಅಯ್ಯಾ?
ಪುರುಷ ಕಳ್ಳನಾದಲ್ಲಿ ಸತಿಗೆ ಸೆರೆ ಉಂಟು,
ಸೂಳೆಯ ಮಿಂಡ ಸತ್ತಡೆ ಅವಳನಾರು ಸೆರೆಯ ತೆಗೆವರುಂಟೆ?
ಸಜ್ಜನಭಕ್ತ ಏನೆಂದಡೂ ಸದಾಶಿವಮೂರ್ತಿಲಿಂಗಕ್ಕೆ ಒಳಗು/191
ಭಕ್ತ ತನ್ನಯ ಪಾಶವ ಗುರುವಿನ ಮುಖದಿಂದ ಕಳೆವ,
ಆ ಗುರು ತನ್ನಯ ಪಾಶವ ಏತರಿಂದ ಕಳೆಯಬೇಕೆಂಬುದನರಿಯಬೇಕು.
ಹಾಗರಿಯದೆ ಶಾಸ್ತ್ರಪಾಠಕನಾಗಿ ಮಾತಿನ ಮಾಲೆಯ ನುಡಿ[ವ]
ಜ್ಞಾತೃ ಜ್ಞಾನ ಜ್ಞೇಯವನರಿಯ[ದ]
ಭಾವಶುದ್ಧವಿಲ್ಲದ ಆಚಾರ್ಯನ ಕೈಯಿಂದ ಬಂದ ಪಾಷಾಣದ ಕುರುಹು
ಅದೇತಕ್ಕೂ ಯೋಗ್ಯವಲ್ಲಾ ಎಂದೆ.
ಅದು ಪುನಃ ಪ್ರತಿಷ್ಠೆಯಿಂದಲ್ಲದೆ ಲಿಂಗಚೇತನವಿಲ್ಲಾ ಎಂದೆ,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /192
ಭಕ್ತ ಭೂಮಿಯಾಗಿ, ಜಂಗಮ ಬೀಜವಾಗಿ,
ಆ ಜಂಗಮದರಿವು ಅಪ್ಪುವಾಗಿ, ಆ ಸುಭೂಮಿಯ ಬೀಜದ ಮೇಲೆ ಸುರಿಯೆ,
ಆ ಭೂಮಿ ಶೈತ್ಯವಾಗಿ, ಆ ಬೀಜದ ಒಳಗು ಒಡೆದು ಅಂಕುರ ತಲೆದೋರಿ,
ಭಕ್ತಿ ಜ್ಞಾನ ವೈರಾಗ್ಯವೆಂಬ ಮರ ಶಾಖೆ
ಫಲ ಬಲಿದು ತುರೀಯ ನಿಂದು ಹಣ್ಣಾಯಿತ್ತು.
ಆ ಹಣ್ಣ ಮೇಲಣ ಜಡವ ಕಳೆದು ಒಳಗಳ ಬಿತ್ತ ಮುಂದಕ್ಕೆ ಹುಟ್ಟದಂತೆ ಹಾಕಿ
ಉಭಯದ ಮಧ್ಯದಲ್ಲಿ ನಿಂದ ಸವಿಸಾರವ
ಸದಾಶಿವಮೂರ್ತಿಲಿಂಗಕ್ಕೆ ಅರ್ಪಿತವ ಮಾಡು./193
ಭಕ್ತಂಗೆ ಕ್ರೀ, ಜಂಗಮಕ್ಕೆ ನಿಃಕ್ರೀಯೆಂದೆನಬಾರದು.
ಜಂಗಮಕ್ಕೆ ಸದ್ಭಕ್ತಿ, ಸದಾಚಾರ, ಸಕ್ರೀ ಇಂತೀ ಆಚಾರದಲ್ಲಿ ಇರಬೇಕು.
ಅದೆಂತೆಂದಡೆ:ಪುರುಷನ ಆಚಾರ ಸತಿಗೆ ಕಟ್ಟು,
ಜಂಗಮದ ಆಚಾರ ಭಕ್ತಂಗೆ ಸಂಪದದ ಬೆಳೆ.
ಅವತಾರಕ್ಕೆ ವೇಷ, ಅರಿವಿಂಗೆ ಆಚಾರ.
ಆ ಜಂಗಮಭಕ್ತನ ಇರವು ಘಟಪ್ರಾಣದಂತೆ.
ಸದಾಶಿವಮೂರ್ತಿಲಿಂಗವು ತಾನೆ. /194
ಭಕ್ತಂಗೆ ವಿಶ್ವಾಸ, ಗುರುಚರಕ್ಕೆ ವಿರಕ್ತಿ,
ಭಕ್ತಂಗೆ ತ್ರಿವಿಧ ಕೂಡಿದ ಮಾಟ, ವಿರಕ್ತಂಗೆ ತ್ರಿವಿಧ ಹೊರಗಾಗಿ ಆಟ,
ಭಕ್ತನ ನೆಮ್ಮುಗೆ ಗುರುಲಿಂಗಜಂಗಮದಲ್ಲಿ.
ಗುರುಚರವಿರಕ್ತನ ನೆಮ್ಮುಗೆ
ಸದಾಶಿವಮೂರ್ತಿಲಿಂಗದಲ್ಲಿ ಬೆಚ್ಚಂತಿರಬೇಕು./195
ಭಕ್ತಂಗೆ ವಿಶ್ವಾಸ, ಗುರುವಿಂಗೆ ಅರಿವು,
ಉಭಯದ ಭೇದವೊಂದೆಯಾದ ಕಾರಣ.
ಕಾಯಜೀವದ ತೆರದಂತೆ, ಕಾಯದ ರುಜೆಯ ಜೀವ ಅನುಭವಿಸುವಂತೆ,
ಉಭಯ ನಿಧರ್ಾರವಾಗಿಯಲ್ಲದೆ,
ಸದಾಶಿವಮೂರ್ತಿಲಿಂಗವನರಿಯಬಾರದು./196
ಭಕ್ತನಾದಲ್ಲಿ ಅರ್ಥಪ್ರಾಣ ಅಭಿಮಾನವೆನ್ನದೆ,
ಮಾಡಿ ನೀಡಿ ಸಂದೇಹವ ಮಾಡಿದಲ್ಲಿಯೆ ಸಿಕ್ಕಿತ್ತು ಭಕ್ತಿಗೆ ಹಾನಿ,
ಸತ್ಯದ ಬಾಗಿಲು ಮುಚ್ಚಿತ್ತು.
ಆರೇನಾದಡೂ ಆಗಲಿ ಭಕ್ತಂಗೆ ಸತ್ಯವೆ ನಿತ್ಯದ ಬೆಳಗು.
ಆ ಭಕ್ತನಂಗ ಸದಾಶಿವಮೂರ್ತಿಲಿಂಗದ ಘಟಸಂಭವ ಪ್ರಾಣ./197
ಭಕ್ತಿಯ ನುಡಿವಲ್ಲಿ ಬಾಹ್ಯವಾಗಿರಬೇಕು, ಸತ್ಯವ ನುಡಿವಲ್ಲಿ ಮರೆಯಾಗಿರಬೇಕು.
ವೇಶಿ ತಿರುಗಾಡುವಲ್ಲಿ ತನ್ನಯ ವೇಷವ ತೋರಬೇಕು,
ಗರತಿಯಿಹಲ್ಲಿ ತನ್ನ ಪುರುಷನ ಅಡಕದಲ್ಲಿ ಅಡಗಬೇಕು.
ದಿವ್ಯಜ್ಞಾನವ ದಿವಜರಲ್ಲಿ ಹೇಳುವ ತ್ರಿವಿಧ ಗುಡಿಹಿಗಳಿಗೆ ಅರುಹಿನ ಪಥವಿಲ್ಲ,
ಸದಾಶಿವಮೂರ್ತಿಲಿಂಗಕ್ಕೆ ದೂರವಾಗಿಹರು. /198
ಭಕ್ತಿಹೀನ ಭಕ್ತಿಯ ಮಾಡುವಲ್ಲಿ
ಗುರುಲಿಂಗಜಂಗಮದ ಇರವ ಸಂಪಾದಿಸಲಿಲ್ಲ.
ಭಕ್ತಿಯುಳ್ಳವ ಅರಿತು ಭಕ್ತಿಯ ಮಾಡುವಲ್ಲಿ
ಗುರುವಿನಲ್ಲಿ ಗುಣವನರಸಬೇಕು, ಲಿಂಗದಲ್ಲಿ ಲಕ್ಷಣವನರಸಬೇಕು,
ಜಂಗಮದಲ್ಲಿ ವಿರಕ್ತಿಯನರಸಬೇಕು
ಅದೆಂತೆಂದಡೆ: ಈ ತ್ರಿವಿಧವು ತನ್ನಯ ಪ್ರಾಣವಾದ ಕಾರಣ.
ಪರುಷ ಶುದ್ದವಾಗಿಯಲ್ಲದೆ ಲೋಹದ ಕುಲವ ಕೆಡಿಸದು.
ತಾ ಹಿಡಿದು ಆರಾಧಿಸುವ ವಸ್ತು ಶುದ್ಧವಾಗಿಯಲ್ಲದೆ
ಪೂಜಿಸುವ ಭಕ್ತನ ಚಿತ್ತಶುದ್ಧವಿಲ್ಲ.
ಸದಾಶಿವಮೂರ್ತಿಲಿಂಗ ಶುದ್ಧವಾಗಿಯಲ್ಲದೆ ಎನ್ನಂಗ ಶುದ್ಧವಿಲ್ಲ./199
ಭರಿತಾರ್ಪಣವ ನೈವೇದ್ಯವ ಮಾಡಿದಲ್ಲಿ
ಲಿಂಗಪ್ರಸಾದವ ಮಿಗಿಸಬಹುದೆ ಅಯ್ಯಾ?
ಲಿಂಗಕ್ಕೂ ತನಗೂ ಭರಿತವಾದಲ್ಲಿ
ಶರಣರ ನಡುವೆ ಸುರಿಸಿಕೊಂಡು ಸೂಸಿದಡೆ
ಸದಾಶಿವಮೂರ್ತಿಲಿಂಗಕ್ಕೆ ಹೊರಗು. /200
ಭರಿತಾರ್ಪಣವೆಂಬುದು ಲಿಂಗಕ್ಕೊ ನಿನಗೊ?
ಲಿಂಗಕ್ಕೆ ಸಂಕಲ್ಪ, ನಿನಗೆ ಮನೋಹರ.
ಈ ಗುಣ ಓಗರ ಮೇಲೋಗರದ ಅಪೇಕ್ಷೆಯಲ್ಲದೆ,
ಲಿಂಗದ ಒಡಲಲ್ಲ, ಸದಾಶಿವಮೂರ್ತಿಲಿಂಗಕ್ಕೆ ಸಲ್ಲ./201
ಭೂಮಿಯ ಬಡತನಕ್ಕೆ ಗೆಯ್ದರುಂಟೆ? ತಳಿಗೆ ಹಸಿಯಿತ್ತೆಂದು ಇಕ್ಕಿದರುಂಟೆ?
ಲಿಂಗಕ್ಕೆ ಉಪಚಾರವ ಮಾಡುವಾಗ ಆ ಅಂಗ ಏತರಿಂದವೊದಗಿತ್ತೆಂಬುದನ?.
ತನ್ನ ಕುರಿತು ಮಾಡುವ ಸುಖಭೋಗಂಗಳಿಗೆ ಲಿಂಗಕ್ಕೆಂದು ಪ್ರಮಾಳಿಸಲಿಲ್ಲ
ಅದೆಂತೆಂದಡೆ: ಬಯಲರಿಯದ ಜಗವುಂಟೆ? ವಾಯುವರಿಯದ ಗಂಧವುಂಟೆ?
ಅಪ್ಪುವರತ ಸಕಲ ಚೇತನವುಂಟೆ?
ದೃಷ್ಟವನೆ ಕಂಡು, ಇದಿರಿಟ್ಟು ಶ್ರೋತ್ರದಲ್ಲಿ ಕೇಳಿ,
ಇಷ್ಟನರಿಯದೆ ನಾ ಕೊಟ್ಟೆ-ವಸ್ತು ಕೊಂಡಿತ್ತೆಂಬ ಭಾವವಳಿದು,
ಅರಿದ ಮರೆಯಲ್ಲಿ ಬೆಳಗು ದೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ./202
ಮಂಜಿನ ಉದಕ ವಾಯುಸಂಚಾರ ಮೋಡವಿಲ್ಲದೆ ಕರೆವಂತೆ
ಮನಪ್ರಕೃತಿ ಸಂಚಾರ ಹಿಂಗಿ
ಕಲೆದೋರದ ಕುರುಹಿನಲ್ಲಿ ಸಲೆ ನಿಂದು ಉಭಯವಳಿದು
ಉಳುಮೆ ತಲೆದೋರಿ ಕಲೆ ಅಳಿದು ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ./203
ಮಠದಲ್ಲಿ ತೋರುವ ಜ್ಯೋತಿ ಅಂಗ ಚಿಕ್ಕಿತ್ತಾಗಿ,
ಬೆಳಗು ಪರಿಪೂರ್ಣವಾಗಿ ನಿಳಯವ ತುಂಬಿದಂತೆ
ಘಟದೊಳಗಳ ಸ್ವಯಂಜ್ಯೋತಿ ಸರ್ವಾಂಗ ಪರಿಪೂರ್ಣವಾಗಿ ಬೆಳಗುತ್ತಿಹ
ಅರಿವಾತ್ಮನ ಭೇದವ ಅರಿತಲ್ಲಿಯೆ
ಸದಾಶಿವಮೂರ್ತಿಲಿಂಗ ನೆಲೆಗೊಂಡುದು./204
ಮಣಿಯ ವೆಜ್ಜದಲ್ಲಿ ಎಯ್ದುವ ರಜ್ಜು, ಮೊನೆ ಮಣಿದಲ್ಲಿ ನಿಂದಿತ್ತು.
ಅದರಿರವು ಲಕ್ಷಿಸುವ ಲಕ್ಷ್ಯದಲ್ಲಿ ಅಲಕ್ಷ್ಯಮಯ ಅಭಿಮುಖವಾಗಲಾಗಿಸಿಕ್ಕಿತ್ತು,
ಮಾಡುವ ಸತ್ಕ್ರೀ ವಸ್ತುವ ಮುಟ್ಟಲಿಲ್ಲದೆ
ಇಂತೀ ಯುಗಳ ನಾಮವಳಿದು ಲಕ್ಷ್ಯಅಲಕ್ಷ್ಯಕ್ಕೆ ಬೆಚ್ಚಂತಿರಬೇಕು.
ಬೆಸುಗೆಯ ನಡುವೆ ಬೆಳಗುತ್ತದೆ,
ಸದಾಶಿವಮೂರ್ತಿಲಿಂಗ./205
ಮಣ್ಣಿನೊಳಗೆ ಚಿನ್ನ ಹುಟ್ಟಿ ಮಣ್ಣ ಬಿಟ್ಟಂತಿರಬೇಕು,
ಕಲ್ಲಿನೊಳಗೆ ಕಾಂತಿ ಹುಟ್ಟಿ [ಕಲ್ಲ] ಬಿಟ್ಟಂತಿರಬೇಕು,
ಕ್ರೀ ಭಾವದಲ್ಲಿ ಅರಿವು ನೆಲೆಗೊಂಡು.
ಸಾಳಿಸಸಿಯ ತುದಿಯಲ್ಲಿ
ತುಷ ಮೇಲುಗಳೆದು ನಿಂದಂತೆ, ಕ್ರೀ ನಿಂದು ಅರಿವು ತಲೆದೋರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./206
ಮತಿಯಿಂದ ಕಾಬುದು ಚಿತ್ತದ ಹಂಗು,
ಪೂಜೆಯಿಂದ ಕಾಬುದು ಪುಣ್ಯದ ಹಂಗು.
ಉಭಯವನಳಿದು ಕಾಬುದಕ್ಕೆ, ಚಿತ್ತ ನೆಮ್ಮುವುದಕ್ಕೆ ಗೊತ್ತಿಲ್ಲ.
ಏನೂ ಎನಬಾರದುದಕ್ಕೆ,
ಸದಾಶಿವಮೂರ್ತಿಲಿಂಗವನರಿವುದಕ್ಕೆಠಾವ ಕೇಳಾರಿ/207
ಮದ್ದ ಕೂಡಿ ತುಂಬಿದ ನಾಳಿಯಲ್ಲಿದ್ದ ಕಲ್ಲು
ಆ ನಾಳಿಯ ಹೊದ್ದದೆ ಹೋದ ಪರಿಯ ನೋಡಾ.
ಕಾಯ ಜೀವದ ಭೇದ,
ಕಾಯವ ಬಿಟ್ಟು ಜೀವ ಎಯ್ದುವಾಗ ಆತ್ಮನ ಹೊರಡಿಸಿದ ಒಡೆಯನನ?
ಸದಾಶಿವಮೂರ್ತಿಲಿಂಗವನೊಡಗೂಡು./208
ಮರನ ತಾಳೂದಕ್ಕೆ ಪೃಥ್ವಿ ಆಧಾರವಾಗಿ,
ಶಾಖೆಯ ತಾಳೂದಕ್ಕೆ ಮರನಾಧಾರವಾಗಿ,
ಲತೆಯ ತಾಳೂದಕ್ಕೆ ಶಾಖೆ ಆಧಾರವಾಗಿ,
ಲತೆಯ ಬಿಡುಮುಡಿಯಲ್ಲಿ ಕುಸುಮತೋರಿ
ಕುಸುಮದ ತೊಟ್ಟಿನಲ್ಲಿ ಕುಸುಮವಳಿದು,
ಕಾಯಿ ಬಲಿದು ರಸ ಬಲಿದು ಹಣ್ಣಾದಂತೆ,
ತೊಟ್ಟು ಬಿಡುವನ್ನಕ್ಕ ಕಾಯ ಶಿಲೆಯ ಪೂಜೆ, ಆತ್ಮ ಅರಿವಿನ ಪೂಜೆ.
ಉಭಯಸ್ಥಲ ನಿರುತವಾಗಿ ಬಿಟ್ಟು ನಿಂದುದು ವಸ್ತುವಿನ ಉಳುಮೆ.
ಆ ಉಳುಮೆ ಲೇಪವಾಗಿ ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ. /209
ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ,
ಮರವೆಯಿಂದ ನಾರಸಿಂಹ ಶರೀರವ ಸೀಳಿಸಿಕೊಂಡ,
ಮರವೆಯಿಂದ ರುದ್ರ ಅರ್ಧನಾರೀಶ್ವರನಾದ,
ಮರವೆಯಿಂದ ನರಸುರಾದಿಗಳೆಲ್ಲರು ಮರಣಕ್ಕೊಳಗಾದರು.
ಇದು ಕಾರಣ,
ಅರಿದು ಉತ್ಪತ್ಯಕ್ಕೊಳಗಾಗದೆ, ಅರಿದು ಸ್ಥಿತಿಯ ಸುಖಕ್ಕೆ ಸಿಕ್ಕದೆ,
ಅರಿದು ಮರಣಕ್ಕೊಳಗಾಗದೆ,
ಅರಿವನರಿವರನರಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ. /210
ಮಲಯಜದ ಮಧ್ಯದಲ್ಲಿ ವಂಶ ಪುದಿದಿರೆ
ಮುಟ್ಟದು ಗಂಧ ಅದೇಕೆ?
ಮಧ್ಯದ ದ್ವಾರದ ಲಕ್ಷಣದಿಂದ, ಪಾದಪದ ಜಾತಿಭಿನ್ನದಿಂದ.
ಆ ತೆರನನರಿದಲ್ಲಿ ಇದಿರಿಟ್ಟು ಕುರುಹು ಭಿನ್ನವಾಯಿತ್ತು.
ಆತ್ಮಂಗೆ ಅರಿವು ಸೂಜಿಯ ಮೊನೆಯಂತೆ
ಕುರುಹು ಹಿಂಗಿದ ದ್ವಾರದಂತೆ
ಉಭಯವ ಭೇದಿಸಿ ಆ ದ್ವಾರದಲ್ಲಿ ಎಯ್ದುವ
ನೂಲು ಮುಂದಳ ಹರಿಯ ಮುಚ್ಚುವಂತೆ
ಕರುಹಿನ ಭಿನ್ನ ನಾಮನಷ್ಟವಾಗುತ್ತದೆ,
ನಿಜತತ್ವದ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ,/211
ಮಹದಾಕಾಶದ ಮನೆಯಲ್ಲಿ ಪಂಚಕಾಲಿನ ನೆಲಹು ಕಟ್ಟಿರಲಾಗಿ,
ಅದಕ್ಕೆ, ಜಲತ್ಕಾರನೆಂಬ ಗಡಿಗೆ ಇದ್ದಿತ್ತು.
ಅದರೊಳಗೆ ಮಧುರ ಮಾಂದಿರ ವಿಮಲ ಜಲತುಂಬಿ.
ಒಂದಕ್ಕೊಂದು ಹೊದ್ದದೆ ಕುಂಭವೊಂದರಲ್ಲಿ ನಿಂದ ಭೇದವ ನೋಡಾ.
ಆ ಗಡಿಗೆಯ ತೆಗೆವುದಕ್ಕೆ ಮಹದಾಕಾಶವನೇರುವುದಕ್ಕೆ ನೆಲೆಯಿಲ್ಲ.
ನೆಲಹಿಂಗೆ ಮೊದಲಿಲ್ಲ, ಕುಂಭಕ್ಕಂಗವಿಲ್ಲ, ಒಳಗಳ ಭೇದವ ವಿವರಿಸಬಾರದು.
ಇಂತೀ ಘಟಮಠ ಆಧಾರದಲ್ಲಿ ಪರಿಪೂರ್ಣನಾದೆಯಲ್ಲಾ,
ಸದಾಶಿವಮೂರ್ತಿಲಿಂಗವೆ ಅವಿರಳನಾಗಿ. /212
ಮಹಾಧರೆಯಲ್ಲಿ ಮನೆಯ ಕಟ್ಟುವುದಕ್ಕೆ,
ಕಾವಿಲ್ಲದ ಕೊಡಲಿಯಲ್ಲಿ, ಹುಟ್ಟದ ಮರನ ತರಿದು,
ಎತ್ತಿಲ್ಲ[ದೆ] ಏರಿನಲ್ಲಿ ಹೂಡಿ ತಂದವನಿವನಾರಣ್ಣಾ?
ನಾನೆಂಬುದಕ್ಕೆ ಮೊದಲೆ ನಾಮ ನಷ್ಟವಾಯಿತ್ತು.
ಸದಾಶಿವಮೂರ್ತಿಲಿಂಗ ಅಲ್ಲಿ ಸತ್ತು ಇಲ್ಲಿ ಹೆಣನಾಯಿತ್ತು./213
ಮಹಾಪರಂಜ್ಯೋತಿಪ್ರಕಾಶವ ಕಂಡನಿಂದವರಲ್ಲಿ ಹೇಳಬಹುದೆ ?
ಸ್ವಸ್ತ್ರೀಯ ವಿಷಯಸುಖಕ್ಕಿಂದವು ಕಡೆಯೆ ವಚನಾನುಭಾವ, ಸಮ್ಯಜ್ಞಾನ
ತನ್ನ ತಾನರಿದವರಲ್ಲಿ ತಾನರಿದು, ಉಭಯವಲ್ಲದೆ ತ್ರಿವಿಧಭಿನ್ನವಿಲ್ಲದೆ ಇರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /214
ಮಹಾಮನೆಯೊಳಗೊಂದು ಮಂದಿರವಾಡ: ಅದರೊಳಗೆ ಹದಿನಾರು ಕೋಣೆ,
ಒಂಬತ್ತು ಬಾಗಿಲು ಮುಚ್ಚಿ, ಒಂದು ಬಾಗಿಲು ತೆಗೆದಿಹುದು.
ತೆಗೆದ ಬಾಗಿಲಲ್ಲಿ ಮೂರು ಮುಖದ ಸರ್ಪ,
ಊಧ್ರ್ವಮುಖವಾಗಿ ತಿರುಗಾಡುತ್ತಿಹುದು.
ಮಿಕ್ಕ ಆರು ಬಾಗಿಲಲ್ಲಿ ಮೂರು ಬಾಗಿಲು ಕೀಳಾಗಿ,
ಕೀಳಿನೊಳಗೆ ಅಧೋಮುಖದ ಸರ್ಪವುಡುಗಿಹುದು.
ಮೇಲಣ ಮೂರು ಬಾಗಿಲು ಊಧ್ರ್ವದ ತ್ರಿಗುಣದ ಸರ್ಪ
ಬಾಲ ಮೊದಲು ತಲೆ ಕಡೆಯಾಗಿ ಎದ್ದು ನಿಂದಾಡುತ್ತಿರಲಾಗಿ,
ವಿಶ್ವಮಯವೆಂಬ ಆಕಾಶದ ಹದ್ದು ಹೊಯಿದು ಎತ್ತಿತ್ತು,
ಅದರೊಳಗೆ ಎರಡು ತಲೆಯ ಮರೆದು, ಒಂದು ತಲೆಯೆಚ್ಚತ್ತು,
ಹದ್ದಿನ ಕೊಕ್ಕ ತಪ್ಪಿ, ಕಾಲುಗುರ ಹೆಜ್ಜೆಯ ಘಾಯವ ತಪ್ಪಿ
ಗರಿಯ ಅಡುಹ ತೊಲಗಿಸಿ ಹಿಡಿಯಿತ್ತು.
ಅಡಿಹೊಟ್ಟೆಯ ನೋಡಿಯೇರಿತ್ತು, ವಿಷ ಹದ್ದಿನ ಅಸುವ ಬಿಡಿಸಿತ್ತು,
ಹದ್ದು ಹಾವು ಕೂಡಿ ಘಟಕರ್ಮಕ್ಕೊಳಗಾಯಿತ್ತು.
ಕರ್ಮದ ಒಳಗಾದ ಜ್ಞಾನ
ಸದಾಶಿವಮೂರ್ತಿಲಿಂಗವ ಮುಟ್ಟಿದುದಿಲ್ಲ. /215
ಮಹಾಮಾಯವೆಂಬ ಶಕ್ತಿರೂಪಿನಲ್ಲಿ
ತ್ರಿವಿಧಮೂರ್ತಿ ಜನಿಸಿದವು ಎಂಬುದ ತಾನರಿತಲ್ಲಿ,
ತಾ ಪಿತನಾಗಿ ತ್ರಿವಿಧಮೂರ್ತಿ ಸುತರಾಗಿ
ಬ್ರಹ್ಮನ ಉತ್ಪತ್ಯವ ಕೆಡಿಸಿ,
ವಿಷ್ಣುವಿನ ಸ್ಥಿತಿಗೊಳಗಾಗದೆ, ರುದ್ರನ ಲಯದ ಬಾಯಲ್ಲಿ ಸಿಕ್ಕದೆ,
ಮೀರಿದ ಘನವಸ್ತು ತಾನೆ, ಸದಾಶಿವಮೂರ್ತಿಲಿಂಗವು ತಾನೆ./216
ಮಹಾವಾರಿಧಿಯ ತೆರೆಯ ಮಧ್ಯದಲ್ಲಿ
ಹುಟ್ಟುವ ಹೊಂದುವ ದಿನಮಣಿಯ ಭೇದದಂತೆ,
ತನ್ನ ಚಿತ್ತದ ಅರಿವು ಮರವೆ
ಕುರುಹೆಂದು ಪ್ರಮಾಳಿಸದೆ, ಅರಿವೆಂದು ನಿರ್ಧರಿಸದೆ
ಎರಡರ ಭೇದದಲ್ಲಿ ಕಂಡು ನಿಂದ ಉಳುಮೆ ಬೆಳಗುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ, /217
ಮಹಾವಿಕಾರ ರಣಮಯವಾದಲ್ಲಿ
ಹರಿವ ಶೋಣಿತದಲ್ಲಿ ಒಂದು ನೊಣ ಹುಟ್ಟಿತ್ತು.
ಕಾಲೊಂದು, ಅಂಗ ಮೂರು, ಹಾರುವ ರಟ್ಟೆ ಒಂದೆ.
ಅದರ ನಾಲಗೆಯಲ್ಲಿ ನಾರಾಯಣ ಹುಟ್ಟಿ, ನೊಣ ಸತ್ತಿತ್ತು.
ಬ್ರಹ್ಮನ ಇರವಾಯಿತ್ತು,
ವಿಷ್ಣುವಿನ ಲೋಕವಾಯಿತ್ತು.
ರುದ್ರನ ಕಪಾಲ ತುಂಬಿ ,
ಬುದ್ಧಿವಂತರೆಲ್ಲರು ಕಪಾಲದ ಕೂಳನುಂಡು ಬುದ್ಧಿವಂತರಾಗಿರಿ.
ಎನಗಾ ಹೊದ್ದಿಗೆ ಬೇಡ,
ಸದಾಶಿವಮೂರ್ತಿಲಿಂಗವಿದ್ದಂತೆಯೆ ಸಾಕು. /218
ಮಾಡುವ ಭಕ್ತನ ವಿವರ: ತ್ರಾಸಿನ ನಾಲಗೆಯಂತೆ ಹೆಚ್ಚು ಕುಂದನೊಳಕೊಳ್ಳದೆ,
ಗುರುಲಿಂಗಜಂಗಮ ತ್ರಿವಿಧಮುಖವು ಒಂದೆಯೆಂದು ಪ್ರಮಾಳಿಸಿ,
ಮಾಡುವ ದ್ರವ್ಯ ಕೇಡಿಲ್ಲದಂತೆ ಮಾಡುವುದು ಸದ್ಭಕ್ತಿಸ್ಥಲ.
ಹೀಗಲ್ಲದೆ ಗುರುವಿನ ಆಢ್ಯಕ್ಕಂಜಿ,
ಜಂಗಮದ ಸಮೂಹದ ವೆಗ್ಗಳವ ಕಂಡು ಅಂಜಿ ಮಾಡಿದಡೆ,
ಭಕ್ತಿಗೂಣೆಯ, ದ್ರವ್ಯದ ಕೇಡು, ಸತ್ಯಕ್ಕೆ ಹೊರಗು
ಸದಾಶಿವಮೂರ್ತಿಲಿಂಗಕ್ಕೆ ದೂರ. /219
ಮಾಡುವ ಸೇವೆಯನರಿತು ಮಾಡಿಸಿಕೊಂಬುದು ಗುರುಸ್ಥಲ.
ನೆಮ್ಮಿದ ನೆಮ್ಮುಗೆಯನರಿತು ಚರಿಸುವುದು ಜಂಗಮಸ್ಥಲ.
ಇಂತೀ ಉಭಯದ ಒಡಲನರಿತು ಮಾಡುವುದು ಸದ್ಭಕ್ತಿಸ್ಥಲ.
ಆ ಸದ್ಭಕ್ತನಂಗವೆ ಸದಾಶಿವಮೂರ್ತಿಲಿಂಗದ ಒಡಲು./220
ಮಾಡುವಂಗೆ ಅರಿವೆ ಕಾರಣ, ಮಾಡಿಸಿಕೊಂಬವಂಗೆ ಅರಿವೆ ಕಾರಣ,
ಸರ್ವಮಯವೆಲ್ಲಕ್ಕು ಅರಿವೆ ಮುಖ್ಯ,
ಸದಾಶಿವಮೂರ್ತಿಲಿಂಗಕ್ಕು ಅರಿವೆ ಕಾರಣ. /221
ಮಾತಿಗೆ ಸಿಕ್ಕೆ, ಅವರ ನೀತಿಯ ಬಲ್ಲೆಯಾಗಿ,
ಭಾವಕ್ಕೆ ಸಿಕ್ಕೆ, ಅವರ ಭ್ರಮೆಯ ಬಲ್ಲೆಯಾಗಿ,
ಜಿಡ್ಡಿಗೆ ಸಿಕ್ಕೆ, ಅವರ ಬುದ್ಧಿಯ ಬಲ್ಲೆಯಾಗಿ.
ಇಂತೀ ಭಾವಂಗಳಲ್ಲಿ ಅಭಾವಿಯಾಗಿ
ಅವರು ಮಾಡುವ ಕಳವಿಂಗೆ ಮೈದೋರದೆ.
ಮೀರಿ ನಿಂದೆಯಲ್ಲಾ, ಸದಾಶಿವಮೂರ್ತಿಲಿಂಗವಾಗಿ. /222
ಮಾತಿನ ಮಾಲೆಯ ಕಲಿತು ಹೋರುವಾತ ಗುರುವಲ್ಲ;
ಘಾತಕತನದಿಂದ ಮಾಡುವಾತ ಶಿಷ್ಯನಲ್ಲ.
ಅಂಗದ ತಿಮಿರವ ಆತ್ಮನರಿದು ಕರದಲ್ಲಿ ಪರಿಹರಿಸುವಂತೆ,
ಆರಿಂದ ಬಂದಡೂ ಉಭಯದ ಕೇಡು.
ಗುರುಶಿಷ್ಯ ಶುದ್ಧತೆಯಾಗಿಲ್ಲದೆ
ಸದಾಶಿವಮೂರ್ತಿಲಿಂಗವನರಿಯಬಾರದು./223
ಮುನ್ನ ಬಯಲೆಂಬುದೇನೋ?
ತನ್ನಲ್ಲಿ ತಾನಾದವಂಗೆ ಮುಂದು ಹಿಂದೆಂಬುದಿಲ್ಲ.
ಸಂಗ ನಿಸ್ಸಂಗವೆಂಬುದು ನಿಂದಲ್ಲಿ,
ಸದಾಶಿವಮೂರ್ತಿಲಿಂಗವು ತಾನೆ. /224
ಮುನ್ನವೆ ಮೂರ ಹರಿದು ಗುರುಚರವಾಗಿ ಬಂದಲ್ಲಿ ಇನ್ನು ಮೂರರಾಸೆಯೇಕೆ?
ಆವ ಜೀವವು ತಮ್ಮ ಮಲವ ತಾವು ಮುಟ್ಟವಾಗಿ.
ಬಿಟ್ಟುದ ಹಿಡಿವ ಮಿಟ್ಟೆಯ ಭಂಡರನೊಪ್ಪ,
ಸದಾಶಿವಮೂರ್ತಿಲಿಂಗವು ನಿರ್ಧರವಿಲ್ಲದವರನೊಲ್ಲ. /225
ಮೂರು ಲೋಕವನೆಲ್ಲವ
ಗಾಳಿಯಲ್ಲಿ ತೂರಿ ಬಂದ ಗುಂಗುರು ನುಂಗಿತ್ತು.
ಮೂರು ಲೋಕದ ರಾಯರು ಕೂಡಿ
ಗುಂಗುರ ಕೊಂದಹೆನೆಂದಡೆ, ಆರಿಗೂ ಅಸಾಧ್ಯ.
ಆ ಗುಂಗುರ ಬಾಯಲ್ಲಿ ಕತ್ತರಿವಾಣಿ, ಕಾಲಿನಲ್ಲಿ ಕಂಡೆಹ,
ಅಂಡೆದಲ್ಲಿ ಕಾಳಕೂಟ, ಪಿಂಡವೆಲ್ಲವೂ ಅಸಿಯ ಬಳಗ.
ಅದ ಕೊಂದು ನಿಂದವಗಲ್ಲದೆ ಸದಾಶಿವಮೂರ್ತಿಲಿಂಗದ ಬೆಳಗಿಲ್ಲ./226
ಮೂಲದ ಜ್ವಾಲೆಯೆತ್ತಿ, ಕಮಲವ ತಾಳಿ, ಮೇಲೊಂದು ಕೊಡನಿಪ್ಪುದು.
ಆ ಕೊಡನುಕ್ಕಿ ಅಮೃತವನುಣ್ಣಬೇಕೆಂಬ ಯೋಗಿಗಳು ಕೇಳಿರೋ,
ಅದು ಶರೀರದ ಮಾತಲ್ಲ.
ಮೂಲದ ದ್ವಾರವೆಂಬುದು ಬಂದ ಬಟ್ಟೆ, ಕೊಡನೆಂಬುದು ಶರೀರ,
ಆ ಶರೀರವನುಂಟು ಮಾಡದೆ ಮೇಲಿಪ್ಪ ರಂಧ್ರಪದವನೊದೆದು
ಭಾವಕ್ಕೆ ಬಾರದ ಪರಿಯಲ್ಲಿ ನಿಂದುದು ಅಮೃತಸೇವನೆ.
ಆ ಭಾವದಲ್ಲಿ ಅರಿದು ನಿಂದು ತನ್ನಯ ಕುರುಹಿನ ಸುಖವ ವೇಧಿಸಿ
ಪರಿಭ್ರಮಣಕ್ಕೆ ಸಿಕ್ಕದೆ ನಿಂದ ನಿಜವು
ಸದಾಶಿವಮೂರ್ತಿಲಿಂಗವು ತಾನೆ. /227
ಮೂವರ ಹಂಗಿಂದ ಬಂದುದು ಲಿಂಗವಲ್ಲಾ ಎಂದು,
ಸರ್ವಭವದಲ್ಲಿ ಬಂದ ಆತ್ಮ ವಸ್ತುವಲ್ಲಾ ಎಂದು,
ಮತ್ತಿನ್ನೇನನರಿವಿರಣ್ಣಾ?
ಭಾವ ಬಯಲೆಂದಲ್ಲಿ, ಕುರುಹು ಶಿಲೆಯೆಂದಲ್ಲಿ,
ಸಿಕ್ಕಿತ್ತು ಮನ ಸಂಕಲ್ಪದಲ್ಲಿ,
ಸದಾಶಿವಮೂರ್ತಿಲಿಂಗವನರಿವ ಬಟ್ಟೆಯ ಕಾಣೆ./228
ಮೂಷಕ ಮಾರ್ಜಾಲ ಕೂಡಿ ಭೇಕನ ಕಂಡು ನೀತಿಯ ಕೇಳಿ,
ಮೂಷಕನ ನೆರೆದಲ್ಲಿ ಅಳಿಯಿತ್ತು,
ಮಾರ್ಜಾಲ ಮನೆಗೆ ಹೋಯಿತ್ತು.
ನಾನೀನೆಂಬುದು ನಿಂದಿತ್ತು, ಸದಾಶಿವಮೂರ್ತಿಲಿಂಗವರಿತಲ್ಲಿ./229
ಮೂಳಿಯ ಮೊದಲಿನಲ್ಲಿ ಮೂವರು ಮಕ್ಕಳು ಹುಟ್ಟಿ.
ಒಬ್ಬ ಕಾಲಿನಲ್ಲಿ ಬಲ್ಲಿದ, ಒಬ್ಬ ಕೈಯ್ಯಲ್ಲಿ ಬಲ್ಲಿದ, ಒಬ್ಬ ಬಾಯಲ್ಲಿಬಲ್ಲಿದ.
ಇಂತೀ ಮೂವರು ಮಕ್ಕಳು ಹೆತ್ತ ತಂದೆಯ ಆಳವಾಡುತ್ತಿರಲಾಗಿ,
ಇವರು ಎನಗೆ ಮಕ್ಕಳಲ್ಲಾಯೆಂದು ಹಗೆಯೆಂಬುದನರಿದು,
ಹಿರಿಯ ಮಗನ ಕಾಲ ಮುರಿದು, ನಡುವಳ ಮಗನ ಕೈಯ್ಯ ಮುರಿದು,
ಕಿರಿಯ ಮಗನ ಬಾಯ ಮುಚ್ಚಿ ಗೋಣ ಮುರಿದು,
ಅವರು ಹಿಂಗಿ ನಾ ಬದುಕಿದೆನೆಂದು ತ್ರಿವಿಧದ ಸಂದ ಬಿಟ್ಟು,
ಸದಾಶಿವಮೂರ್ತಿಲಿಂಗದಲ್ಲಿಗೆ ಸಂದಿತ್ತು ಚಿತ್ತ./230
ಮೊನೆ ತಪ್ಪಿದಲ್ಲಿ ಅಲಗಿನ ಘನವೇನ ಮಾಡುವುದು?
ವರ್ತನ ಶುದ್ದವಿಲ್ಲದೆ ಲಾಂಛನದ ಉತ್ಕೃಷ್ಟವೇನ ಮಾಡುವುದು?
ತ್ರಿಕರಣ ಶುದ್ಧವಿಲ್ಲದ ಮಾಟ ದ್ರವ್ಯದ ಕೇಡು, ಭಕ್ತಿಗೆ ಹಾನಿ.
ಇಂತೀ ಗುಣಾದಿಗುಣಂಗಳಲ್ಲಿ ಅರಿಯಬೇಕು,
ಸದಾಶಿವಮೂರ್ತಿಲಿಂಗವನರಿಯಬೇಕು./231
ಯತಿಗುಣದ್ವೇಷ, ಸಮಯಗುಣದ್ವೇಷ, ಆಚಾರಗುಣದ್ವೇಷ,
ಸಕಲಶಾಸ್ತ್ರಯುಕ್ತಿಗುಣದ್ವೇಷ,
ಸಮತೆಗುಣ ಶಾಂತಿಯಲ್ಲಿ ನಿಂದು ವಿರಕ್ತಿದ್ವೇಷ.
ಇಂತೀ ದ್ವೇಷನಾಮನಷ್ಟವಾಗಿ ಸ್ವಯಂಭುವಾಗಿ ನಿಂದುದು,
ಸದಾಶಿವಮೂರ್ತಿಲಿಂಗವು ತಾನೆ. /232
ಯೋಗದಲ್ಲಿ ಕಾಬುದು ಶರೀರಕ್ಕೆ ಹೊರಗು.
ಕರ್ಮದಲ್ಲಿ ಕಾಬುದು ಸಂಕಲ್ಪಕ್ಕೆ ಹೊರಗು.
ಬಟ್ಟಬಯಲಲ್ಲಿ ಕಾಬುದು ಲಕ್ಷಕ್ಕೆ ಹೊರಗು
ಉಭಯದ ಸಂದನಳಿದು ನಿಂದಲ್ಲಿ ಸದಾಶಿವಮೂರ್ತಿಲಿಂಗಕ್ಕೆ ಒಳಗು./233
ಯೋಗಿ ಜೋಗಿ ಶ್ರಾವಕ ಸನ್ಯಾಸಿ ಪಾಶುಪತಿ ಕಾಳಾಮುಖಿ
ಆರು ಭೇದ ಮೂರರಲ್ಲಿ ಅಡಗಿ ಎರಡು ಅಳಿವಿಂಗೆ ಒಳಗಾಯಿತ್ತು.
ಒಂದು ನಿಂದು ಸಮಯ ರೂಪಾಯಿತ್ತು.
ಸಮಯಕ್ಕೆ ಹೊರಗಾದುದು,
ಸದಾಶಿವಮೂರ್ತಿಲಿಂಗಕ್ಕೆ ಶಕ್ತಿನಾಮವಿಲ್ಲ. /234
ಯೋಗಿ ಪಾಶುಪತಿ ಕಾಳಾಮುಖಿ ಈ ಮೂರು ಶೈವಪಕ್ಷವಾಗಿಹವು.
ಜೋಗಿ ತ್ರಿದಂಡಿ ಭೌದ್ಧ ಈ ಮೂರು ವಿಷ್ಣುಪಕ್ಷವಾಗಿಹುದು.
ಇಂತೀ ಆರು ಅವತಾರಕ್ಕೆ ಸಂಬಂಧವಾಗಿಹವು.
ಆರರಿಂದ ಮೀರಿದ ದರ್ಶನಕ್ಕೆ ತೋರಲಿಲ್ಲದ ಸುವಸ್ತು ತಾನಾಗಿ,
ರೂಪಿಂಗೆಡೆಯಿಲ್ಲ ಸದಾಶಿವಮೂರ್ತಿಲಿಂಗವು ತಾನಾಗಿ./235
ಯೋನಿಜನಾಗಿ ದಶ ಅವತಾರಕ್ಕೆ ಒಳಗಾದಲ್ಲಿ ದೇವಪದ ಹಿಂಗಿತ್ತು.
ನಾಭಿ ಅಂಬುಜದಲ್ಲಿ ಹುಟ್ಟಿ ಪಿತಭವಕ್ಕೆ ಬಾಹಾಗ
ಸುತಂಗೆ ಸುಖವಿಲ್ಲವಾಗಿ ಬ್ರಹ್ಮಪದ ನಿಂದಿತ್ತು.
ಸಂಹಾರಕಾರಣನಾಗಿ ಕಪಾಲಶೂಲನಾಟ್ಯಾಡಂಬರನಾಗಿ ಇದ್ದುದರಿಂದ,
ಈಶ್ವರಪದ ನಿಂದು ರ್ರಪದವಾಯಿತ್ತು.
ಇಂತೀ ತ್ರಿವಿಧವನರಿದು ತೊಲಗಿ ನಿಂದಲ್ಲಿ
ಸದಾಶಿವಮೂರ್ತಿಲಿಂಗದ ನೆಲೆಯಾಯಿತ್ತು. /236
ರಸದ ಬಾವಿಯ ಚೆಲ್ಲಿ, ಅಸಿಯ ಮಡುವ ಕಲಕಿ,
ಕತ್ತರಿವಾಣಿಯ ಗೊತ್ತ ಕೊಯಿದು,
ಕರೋತಿಯ ಕಣ್ಣ ಕುತ್ತಿ, ಅಶ್ವನ ಚಿತ್ತವ ಕಿತ್ತು,
ನಿಶ್ಚಯದಲ್ಲಿ ಆಡುವವ ತಾನೆ, ನಿಜವಸ್ತು ಸದಾಶಿವಮೂರ್ತಿಲಿಂಗ/237
ರಾಜಸ ತಾಮಸ ಸಾತ್ವಿಕವನರಿದು ಪೂಜಿಸಿಕೊಂಬುದು ಗುರುಚರದ ಇರವು.
ಕೊಟ್ಟಿಹರೆಂದು ಬೇಡದೆ, ಇಕ್ಕಿಹರೆಂದು ಉಣ್ಣದೆ,
ಭಕ್ತನಲ್ಲಿ ಅರಿದು ಬಂದುದ ಅನುಕರಿಸಿ
ಮರವೆಯಿಂದ ಬಂದುದ ತೆರದರಿಸಿನವ ಮಾಡಿ,
ಉಭಯಕ್ಕೆ ಕೇಡಿಲ್ಲದಂತೆ ಇಪ್ಪುದು ಗುರುಚರದ ಇರವು,
ಸದಾಶಿವಮೂರ್ತಿಲಿಂಗದ ಅರಿವು. /238
ರೂಪಿಗೆ ನಿರೂಪೆಂದು ಕುರುಹಿಟ್ಟುಕೊಂಡಿಪ್ಪರು,
ರೂಪಿನೊಳಗೆ ತಿರುಗಾಡುವ ನಿರೂಪೆಂದರಿಯದೆ,
ರೂಪಡಗಿದಲ್ಲಿ ಹಿಡಿದೆ ಬಿಟ್ಟೆನೆಂಬ ಸಂದೇಹವಡಗಿತ್ತು.
ಅಡಗುವನ್ನಬರ ತಾನೆ ಕುರುಹೆ?
ಬೇವಿಂಗೆ ಕಹಿ, ಬೆಲ್ಲಕೆ ಸಿಹಿ ಇವ ಎರಡಳಿದಲ್ಲಿ
ನಾನೀನೆಂಬನ್ನಕ್ಕ ಏನೂ ಎನಲಿಲ್ಲ.
ಅದು ನಾಮ ನಷ್ಟವಾಗೆ, ಆದಲ್ಲಿ ಅದೆ ಕಳೆಬೆಳಗು ತೋರುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ./239
ಲಿಂಗ ಹೊರತೆಯಾಗಿ, ವಿಭೂತಿ ರುದ್ರಾಕ್ಷಿಯ ಕೊಟ್ಟು,
ಗುರುವಾಗಬಹುದೆ ಅಯ್ಯಾ?
ಬೀಜವಿಲ್ಲದೆ ಅಂಕುರವಾಗಬಲ್ಲುದೆ?
ಗಂಡನಿಲ್ಲದ ಮುಂಡೆಗೆ ಗರ್ಭನಿಂದಡೆ ಅವಳಾರಿಗೆ ಯೋಗ್ಯ?
ಉಭಯವು ಕೇಡಾಯಿತ್ತು.
ಇದನರಿತು ಮಾಡಿ, ಸದಾಶಿವಮೂರ್ತಿಲಿಂಗವನರಿವುದಕ್ಕೆ./240
ಲಿಂಗಕ್ಕೆ ಅರ್ಪಿತವ ಮಾಡುವಲ್ಲಿ ಸಕಲಪದಾರ್ಥದ ಗುಣ ವಿವರನರಿದು,
ತನ್ನಯ ಕ್ಷುಧೆಯ ಮರೆದು, ಲಿಂಗದ ಆಪ್ಯಾಯನದ ಮುಖವಾಗಿ,
ರೂಪುರುಚಿಯಿಂದ, ಅರ್ಪಿತಭೇದಮುಖದಿಂದ
ನಿಶ್ಚಯವಾಗಿ ನಿಂದುದು, ಲಿಂಗಭರಿತಾರ್ಪಣ,
ಸದಾಶಿವಮೂರ್ತಿಲಿಂಗಕ್ಕೆ ಭಾವವಳಿದ ಭರಿತಾರ್ಪಣ./241
ಲಿಂಗಕ್ಕೆ ಜಂಗಮಪ್ರಸಾದವ ಕೊಡುವಲ್ಲಿ
ಹೆಣ್ಣು ಹೊನ್ನು ಮಣ್ಣಿನ ಹಂಗಿಲ್ಲದಂತಿರಬೇಕು.
ಗುರುವಿಂಗೆ ತನುವ ಸವೆದು ಮಾಡುವಲ್ಲಿ
ಕೇಣಸರ ಆತ್ಮತೇಜವಿಲ್ಲದಿರಬೇಕು.
ಲಿಂಗಕ್ಕೆ ಮನವ ಮುಟ್ಟಿಸುವಾಗ
ಸರ್ವಮಯದಾಸೆಯ ಪಾಶ ತಲೆದೋರದಿರಬೇಕು.
ಇಂತೀ ನಿಶ್ಚಯವನರಿತವಂಗೆ ಸದಾಶಿವಮೂರ್ತಿಲಿಂಗದಂಗವೆ ಆಶ್ರಯ./242
ಲಿಂಗಕ್ಕೆ ಸಹಭೋಜನವಾದಲ್ಲಿ
ಕೂರ್ಮನ ಶಿಶುವಿನ ಸ್ನೇಹದಂತಿರಬೇಕು,
ಅಯಸ್ಕಾಂತದ ಶಿಲೆ ಲೋಹದಂತಿರಬೇಕು,
ಶಶಿಶಿಲೆಯಂತೆ ಒಸರುವ ಅರ್ಪಿತ, ಕೂಡುವ ಕೂಟ.
ಭ್ರಮರ ಚಂಪಕದಂತೆ ಒಡಗೂಡಿ ಲಿಂಗವ
ಎಡೆ ತೆರಪಿಲ್ಲದ ಸಹಭೋಜನಕ್ಕೆ ಕೊಡುವಾತನ ಅಡಿಗೆ
ಕಡೆ ನಡು ಮೊದಲಿಲ್ಲದೆರಗುವೆ.
ಆತ ಸದಾಶಿವಲಿಂಗವು ತಾನೆ. /243
ವಂದಿಸಿ ನಿಂದಿಸಬಾರದೆಂಬುದೆ ಕ್ರೀವಂತನ ಇರವು.
ವಂದಿಸುವುದಕ್ಕೆ ಮುನ್ನವೆ ನಿಂದೆಗೊಡಲು ಮಾಡದೆ
ಆ ಗುಣವ ಹಿಂಗಿಸಿ ವಂದಿಸುವುದೆ ಸದ್ಭಕ್ತನ ಇರವು, ಸನ್ಮತಿಯ ಪದವು.
ಸದಾಶಿವಮೂರ್ತಿಲಿಂಗದ ಇರವು./244
ವಂದಿಸಿ ನಿಂದಿಸಲಿಲ್ಲ, ನಿಂದಿಸಿ ವಂದಿಸಲಿಲ್ಲ.
ಮಡಿಲೊಳಗಳ ಸರ್ಪನಂತೆ ಸಂದೇಹಕ್ಕೊಡಲಾಯಿತ್ತೆನ್ನ ಮನ.
ಅನುಸರಣೆಗೊಳಗಾಗದು, ವರ್ತಕವ ಬಿಡಲಾರದು.
ಇನ್ನೆಂದಿಗೆ ಗುರುಶಿಷ್ಯನೆಂಬ ನಾಮ ನಷ್ಟವಹುದು?
ಸದಾಶಿವಮೂರ್ತಿಲಿಂಗವು ನಿರೂಪಾಗಿಯಲ್ಲದೆ ಆಗದು. /245
ವಚನರಚನೆಯ ಬಲ್ಲ ಅರುಹಿರಿಯರೆಲ್ಲರು
ಮೂರುಳ್ಳವನ ಬಾಗಿಲ ಕಾಯಿದೈಧಾರೆ.
ಹೇಳಿ ಕೇಳಿ ಬಲ್ಲತನವಾದೆಹೆನೆಂಬವರೆಲ್ಲರು ಬಾಗಿಲಲ್ಲಿಯೆ ಸಿಕ್ಕಿದರು.
ಸ್ಥಾವರಾದಿಗಳು ಮೊದಲಾಗಿ ಇದಿರಿಟ್ಟ ಕುರುಹೆಲ್ಲವು
ತಾವಿದ್ದಠಾವಿಗೆ ತಂದುಕೊಂಬವರಿಂದ ಕಡೆಯೆ
ಅರಿವುಳ್ಳ ಜ್ಞಾನಿಗಳೆಂಬವರು ?
ಇದು ಕಾರಣ, ಸಂಚಿತ ಅಗಾಮಿ ಪ್ರಾರಬ್ಧ ಎಲ್ಲಿದ್ದಡೂ ತಪ್ಪದು.
ಹಲುಬಿ ಹರಿದಾಡಬೇಡ,
ಸದಾಶಿವಮೂರ್ತಿಲಿಂಗವ ಒಲವರವಿಲ್ಲದೆ ನೆರೆ ನಂಬು./246
ವರ್ತಕದಲ್ಲಿ ವರ್ತಿಸುವನ್ನಕ್ಕ ಸತ್ಕ್ರೀಯ ಮಾಡಬೇಕು,
ಅದು ಲೇಪವಾಗಿ ನಿಂದಲ್ಲಿ ಆತ್ಮನ ಅಳಿವ ಉಳಿವನರಿಯಬೇಕು.
ಅದನರಿತು ನಿಂದು ಸ್ವಸ್ಥವಾದಲ್ಲಿ ತುರೀಯ.
ಆ ತುರೀಯ ಸಮೇತ ಸಂತೋಷದಲ್ಲಿ ನಿಂದು ಸುಖನಿಶ್ಚಯವಾದುದೆ
ಪರಮನಿರ್ವಾಣ, ಸದಾಶಿವಮೂರ್ತಿಲಿಂಗದ ಬೆಳಗಿನ ಕಳೆ. /247
ವಸ್ತು ತ್ರಿವಿಧರೂಪಾದ ಪರಿ ಎಂತೆಂದಡೆ:
ಕಾಯದ ಕರ್ಮವ ಕಳೆವುದಕ್ಕೆ ಗುರುರೂಪಾಗಿ,
ಭಾವದ ಪ್ರಕೃತಿಯ ಕಳೆವುದಕ್ಕೆ ಚರರೂಪಾಗಿ,
ಜೀವನ ಭಾವವ ಕಳೆವುದಕ್ಕೆ ಲಿಂಗರೂಪಾಗಿ,
ಇಂತೀ ಮೂರರ ಗುಣವನರಿದು ಆಶ್ರಯಿಸುವ ಸದ್ಭಕ್ತನೆ,
ಸದಾಶಿವಮೂರ್ತಿಲಿಂಗವು ತಾನೆ./248
ವಸ್ತು ಸ್ವಯಂಭುವಾಗಿದ್ದಲ್ಲಿ ನಾಮರೂಪುಕ್ರೀಗೆ ಹೊರಗಾಗಿದ್ದಿತ್ತು.
ತನ್ನಯ ಸುಲೀಲೆ ಹಿಂಗಿ ಜಗಹಿತಾರ್ಥವಾಗಿ ಉಮಾಪತಿಯ ಧರಿಸಿದಲ್ಲಿ
ತ್ರಿವಿಧಮೂರ್ತಿಯ ಭಾವ ಕಲ್ಪಿಸಿದಲ್ಲಿ,
ಕ್ರಿಯಾಸಂಪದಕ್ಕೆ ಒಳಗಾಗಿ,
ಅಷ್ಟವಿಧಾರ್ಚನೆ ಷೋಡಶ ಉಪಚರ್ಯವ ಮಾಡಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /249
ವಸ್ತುಲೀಲಾಲೋಲನಾಗಿ ಅವತಾರಮೂರ್ತಿಯಾದಲ್ಲಿ
ತ್ರಿಗುಣ ಸಂಭವವಾಯಿತ್ತು.
ಪಂಚಭೌತಿಕ ಬಲಿದು ಪಂಚವಿಂಶತಿತತ್ವವಾಯಿತ್ತು.
ಈ ಭೇದವ ಜಗಕ್ಕೆ ತೋರಿ, ತಾ ಹೊರಗಾದ
ಸದಾಶಿವಮೂರ್ತಿಲಿಂಗದ ಬೆಡಗು. /250
ವಸ್ತುವಿನ ಪಾದಮಂಡಲ ಬ್ರಹ್ಮಲೋಕವಾಯಿತ್ತು,
ವಸ್ತುವಿನ ದೇಹಮಂಡಲ ಶಕ್ತಿಲೋಕವಾಯಿತ್ತು,
ವಸ್ತುವಿನ ಶಿರಮಂಡಲ ರುದ್ರಲೋಕವಾಯಿತ್ತು.
ತ್ರಿವಿಧಾಂಗ ತ್ರಿಕೂಟವಾಗಿ ತಿರುಗುವುದಕ್ಕೆ ಹೊರಗು,
ಸ್ವಸ್ಥವಾಗಿ ನಿಂದಲ್ಲಿ ಸದಾಶಿವಮೂರ್ತಿಲಿಂಗಕ್ಕೆ ಒಳಗು./251
ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು.
ಊರೊಳಗೆ ಪಂಥ ರಣದೊಳಗೆ ಓಟವೆ?
ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೆ?
ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವನ ಭಕ್ತಿ,
ಅಲಗಿನ ಘೃತವ ಶ್ವಾನ ನೆಕ್ಕಿ ನಾಲಗೆ ಹರಿದು
ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು.
ಇಂತೀ ಭೇದಂಗಳಲ್ಲಿ ಅರಿತು ನಿರತನಾಗಿರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./252
ವಾಯು ಬಯಲೆಂದಡೆ ತಿರುಗುವ ಆಲವಟ್ಟದಲ್ಲಿ ಸಿಕ್ಕಿ
ಕುರುಹುಗೊಂಬುತಿದ್ದಿತ್ತು.
ಇಂತೀ ಕುರುಹಿಲ್ಲದೆ ಅರಿವ ಪರಿಯಿನ್ನೆಂತೊ ?
ಅರಿವ ಆತ್ಮ, ನಿಂದು ನುಡಿವಂಗದ ಕುರುಹಿನಲ್ಲಿದ್ದು
ಮತ್ತೆ ತತ್ವವಾದ ಪರಿಯಿನ್ನೆಂತೊ ?
ತೋರುವ ತೋರಿಕೆ ಅಂಗಮಯವಾದ
ಮತ್ತೆ ಕುರುಹ ಹಿಂಗಿ ಅರಿವ ಪರಿಯಿನ್ನೆಂತೊ ?
ಮೀರಿ ಕಾಬುದು ಮೂರು ತತ್ವದಿಂದ ಆಚೆಯಲ್ಲಿ.
ಅಷ್ಟನರಿವ ತನಕ ಇಷ್ಟನರಿಯಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./253
ವಾರಿಯ ಸಾರದ ಶೈತ್ಯದ ಇರವು.
ವಹ್ನಿಯ ಜ್ವಾಲೆಯ [ಆ]ಟೋಪದ ಅಗ್ರದ ಲಯಭೇದದ ಧೂಮದಂತೆ.
ಅರಿಕೆ ಒಡಲಾದ ಅಂಗ ಅರಿದು ಭೇದಿಸುವನ ಚಿತ್ತದ ಯೋಗ.
ಇಂತೀ ಉಭಯವನರಿತಲ್ಲಿ ಇಷ್ಟ ಪ್ರಾಣ ಸಂಬಂಧ,
ಸದಾಶಿವಮೂರ್ತಿಲಿಂಗ ಉಭಯವು ತಾನಾದ ಕಾರಣ. /254
ವಿಷ್ಣು ಆದಿಶಕ್ತಿಯ ಕಂದನಾಗಿ ಬಂದುದನಾರೂ ಅರಿಯರು.
ಆ ಕಂದನ ಬೆಂಬಳಿಯಲ್ಲಿ
ಕ್ರಿಯಾಶಕ್ತಿಗೆ ಬ್ರಹ್ಮ ಕಂದನಾಗಿ ಬಂದುದನಾರೂ ಅರಿಯರು.
ಈ ಉಭಯದ ಆಧಾರವಾಗಿ ಜ್ಞಾನಶಕ್ತಿಯ ಬೆಂಬಳಿಯಲ್ಲಿ ಬಂದ
ರುದ್ರನ ಆರೂ ಅರಿಯರು.
ಇಂತೀ ತ್ರಿವಿಧಭೇದ ಪ್ರಳಯಕ್ಕೆ ಹೊರಗಾದ
ಸದಾಶಿವಮೂರ್ತಿಲಿಂಗವನಾರೂ ಅರಿಯರು./255
ವಿಷ್ಣು ದೈವವೆಂದಡೆ ಪಾಂಡವರ ಬಂಡಿಯ ಬೋವನಾದ,
ಬ್ರಹ್ಮದೈವವೆಂದಡೆ ಆ ಬೋವಂಗೆ ಕಂದನಾದ,
ಜಿನ ದೈವವೆಂದಡೆ ಆ ಬೋವನ ಅವತಾರವಾದ,
ಮುಪ್ಪುರವ ಕೆಡಿಸುವಲ್ಲಿ ಕುಟ್ಟಿಲ ಭೌದ್ಧನಾದ,
ರುದ್ರ ದೈವವೆಂದಡೆ ಅರ್ಧನಾರಿಗೆ ಸಿಕ್ಕಿದ.
ಇಂತೀ ಸಮಯ ಕುಲಕ್ಕೆ ಹೊರಗಾಗಿ, ಶಕ್ತಿ ಸಮಯ ನಿರಸನವಾಗಿ ನಿಂದುದ
ಸದಾಶಿವಮೂರ್ತಿಲಿಂಗವೊಂದಲ್ಲದಿಲ್ಲಾ ಎಂದೆ./256
ವಿಷ್ಣುಮಯ ಜಗವೆಂದಡೆ ಮಹಾಪ್ರಳಯದಲ್ಲಿ ವಟಪತ್ರಶಯನನಾದ.
ಸೃಷ್ಟಿಗೆ ಅಜನೆಂದಡೆ ಹುಟ್ಟಿದುದಿಲ್ಲ ಶಿರ.
ಲಯಕ್ಕೆ ರುದ್ರನಾದಡೆ ಕರದ ಕಪಾಲ ಬಿಟ್ಟುದಿಲ್ಲ,
ಇಂತೀ ಮೂರು ಭೇದವನರಿತು ಮೀರಿದ ತತ್ವ,
ಸದಾಶಿವಮೂರ್ತಿಲಿಂಗವೊಂದೆ ಭಾವ./257
ವೀರಶೈವ ಗುರುವಾಗಿ ಶುದ್ಧಶೈವಕ್ಕೆ ಹೊರಗಾಗಬೇಕು,
ಶುದ್ಧಶೈವ ಗುರುವಾಗಿ ಮಾರ್ಗಶೈವಕ್ಕೆ ಹೊರಗಾಗಬೇಕು,
ಮಾರ್ಗಶೈವ ಗುರುವಾಗಿ ಪೂರ್ವಶೈವಕ್ಕೆ ಹೊರಗಾಗಬೇಕು.
ಇಂತೀ ಶೈವಂಗಳಲ್ಲಿ ಸನ್ನದ್ಧನಾಗಿ ತಿಳಿದು,
ಅಂಗಲಿಂಗ ಆತ್ಮನಲ್ಲಿ ನಿಂದು ಸಂಯೋಗವ ಮಾಡಬೇಕು.
ಮಾಡಿದಲ್ಲಿ ಕೂಡಿದ ಕಾರಣ ವೀರಶೈವವೆಂಬ ಹೆಸರಾಯಿತ್ತು.
ಸದಾಶಿವಮೂರ್ತಿಲಿಂಗವನರಿತಲ್ಲಿ./258
ವೇದ ಪ್ರಣವದ ಮೂಲ, ಶಾಸ್ತ್ರ ಪ್ರಣವದ ಶಾಖೆ,
ಪುರಾಣ ಪ್ರಣವದ ಪರ್ಣ,
ಎನ್ನಂಗಕ್ಕೆ ಕುರುಹಾಗಿ, ಮನಕ್ಕೆ ಅರಿವಾಗಿ, ಬೆಳಗಿಂಗೆ ಕಳೆಯಾಗಿ,
ನಿಂದು ತೋರುತ್ತಿದ್ದವ ನೀನೆ,
ಸದಾಶಿವಮೂರ್ತಿಲಿಂಗವು ನಾಮರೂಪಾಗಿ. /259
ವೇದಪಾಠಕ ಶಾಸ್ತ್ರವಿತ್ತು ಪುರಾಣಬಹುಶ್ರುತಿವಂತ ವಾಚಕ
ಆಡಂಬರಭೇದಕ ಸಂಸ್ಕೃತ ಪ್ರಾಕೃತ ಅಪಭ್ರಂಶಿಕ ದೇಶಿಕ
ಇವು ಮೊದಲಾದ ವಾಚಕ ಚಾರ್ವಾಕ ಮುಖಂಗಳಿಂದ
ಹೋರುವ ಮಾಯಾವಾದದ ತೆರದವನಲ್ಲ.
ಮೂಲಸಿದ್ಧಿ ರಸಸಿದ್ಧಿ ಅಂಜನಸಿದ್ಧಿ ಅದೃಶ್ಯೀಕರಣ ಕಾಯಸಿದ್ಧಿ
ಇಂತೀ ಕುಟಿಲಂಗಳ ತೆರಕ್ಕಗೋಚರ, ಅಪ್ರಮಾಳ,
ಅಂಗಲಿಂಗಸಂಬಂಧವಾದ ಶರಣನ ಇರವು ಎಂತೆಂದಡೆ: ಶಬ್ದ ಹತ್ತದ ಅಲೇಖದಂತೆ, ಅನಿಲ ಮುಟ್ಟದ ಕುಂಪಟೆಯಂತೆ,
ಶ್ರುತಿ ಮುಟ್ಟದ ಕಡ್ಡಿಯಂತೆ, ಕೈಮುಟ್ಟದ ಗತಿಯಂತೆ,
ನೆಯಿ ಮುಟ್ಟದ ದುಗ್ಧದಂತೆ, ಪವನ ಮುಟ್ಟದ ಪರ್ಣದಂತೆ
ಭಾವ ಭ್ರಮೆಯೊಳಗಿದ್ದು ಇಲ್ಲದ ಶರಣನ ಇರವು,
ಸದಾಶಿವಮೂರ್ತಿಲಿಂಗದ ಅಂಗವು ತಾನೆ./260
ವೇದವ ನುಡಿವಲ್ಲಿ ವಿಪ್ರರು
ಮತ್ತಾರೂ ಶೂದ್ರಜಾತಿ ಕೇಳದಂತೆ ನುಡಿವರದೇತಕ್ಕೆ ?
ಅದು ಈಚೆಯ ಮಾತು.
ಕಂಡಕಂಡವರೊಡನೆ ಹೇಳಿಕೊಂಡಾಡುತ್ತಿಪ್ಪ
ದಿವ್ಯಜ್ಞಾನ ಪರಮಪ್ರಕಾಶವ
ಭಂಡರಿಗೇಕೆ ಸದಾಶಿವಮೂರ್ತಿಲಿಂಗದ ಅರಿವು ? /261
ವೇದವನೋದಿದಲ್ಲಿ ಪ್ರಣವವನರಿಯಬೇಕು.
ಶಾಸ್ತ್ರವ ಹೇಳಿದಲ್ಲಿ ಸಂಚಿತ ಕರ್ಮವನರಿಯಬೇಕು
ಪುರಾಣವನೋದಿದಲ್ಲಿ ಪುಣ್ಯತಮಭೇದಂಗಳಲ್ಲಿ ಸನ್ನದ್ಧವ ತಿಳಿಯಬೇಕು.
ಪನ್ನಗಫಲದಂತಾಗದೆ ಉಭಯಶುದ್ಧವಾಗಿರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./262
ವೇದವೇದಾಂತಂಗಳಿಂದ ಸಿದ್ಧಸಿದ್ಧಾಂತಂಗಳಿಂದ
ಎಲ್ಲಿ ನೋಡಿದಡೂ ವಿಚಾರವೊಂದೆ ಭೇದ.
ಅರಿದಲ್ಲಿ ಮಲಕ್ಕೆ ಹೊರಗು, ಮರೆದಲ್ಲಿ ಮಲಕ್ಕೆ ಒಳಗು.
ಅರಿವು ಮರವೆ ನಿಂದಲ್ಲಿ ಸದಾಶಿವಮೂರ್ತಿಲಿಂಗದ ಬೆಳಗು./263
ವೇಷದಲ್ಲಿ ತಿರುಗುವುದು ಸಮಯದ ಹಂಗು.
ಮಾತಿನಲ್ಲಿ ತಿರುಗುವರೆಲ್ಲರು ಶಾಸ್ತ್ರದ ಹಂಗು.
ಯತಿಭೇದದಲ್ಲಿ ತಿರುಗುವರೆಲ್ಲರು ಮನಸಿಜನ ಹಂಗು.
ಆಸೆ ಅರತು ನಿಬ್ಬೆರಗಾಗಿ ತಿರುಗುವರೆಲ್ಲರು ಶರೀರದ ಹಂಗು.
ಹಿಂದ ಮರೆದು ಮುಂದಳ ಮೋಕ್ಷವನರಸುವರೆಲ್ಲರು ರುದ್ರನ ಹಂಗು.
ಇಷ್ಟಾರ್ಥ ಕಾಮ್ಯಾರ್ಥ ಮೋಕ್ಷಾರ್ಥವೆಂಬ ಬಟ್ಟೆಯ ಮೆಟ್ಟದೆ,
ಹಿಂದಳ ಇರವು ಮುಂದಳ ಸಂಶಯವೆಂಬುದ ಏನೆಂದರಿಯದೆ ನಿಂದುದು,
ಸದಾಶಿವಮೂರ್ತಿಲಿಂಗದಲ್ಲಿ ಸಂದ ಮನ./264
ವೇಷವ ತೊಟ್ಟಡೆ ಜಗಕ್ಕಳುಕಲ್ಲದೆ ಎನಗಳುಕಿಲ್ಲ.
ನೀ ಲಿಂಗವ ಕೊಟ್ಟಡೆ ನೀ ನಿನ್ನನರಿದು ನೀ ಭವಪಾಶಕ್ಕೆ ಹೊರಗಾಗಿ
ಎನ್ನ ಹೊರಗು ಮಾಡಬೇಕಲ್ಲದೆ,
ಕುರುಡನ ಕಯ್ಯ ಕೋಲ ಕುರುಡಹಿಡಿದಂತೆ
ನೀ ಕರ್ತನಲ್ಲ ನಾ ಭೃತ್ಯನಲ್ಲ, ನೀ ಮುಕ್ತನಲ್ಲ ನಾ ಸತ್ಯನಲ್ಲ,
ನಿಮ್ಮಯ ಚಿತ್ತ ನೊಂದಡೆ ನಿಮ್ಮಲ್ಲಿಯೆ ಇರಲಿ ಎನಗಾ ನೋವಿಲ್ಲ.
ನೀನರಿದು ಬದುಕು ಸದಾಶಿವಮೂರ್ತಿಲಿಂಗವಾಗಬಲ್ಲಡೆ. /265
ವೇಷವರಿತು ಗುರುವಾಗಬೇಕು,
ವೇಷವರಿತು ಚರವಾಗಬೇಕು,
ಬ್ರಹ್ಮವರಿತು ಲಿಂಗವಾಗಬೇಕು,
ಸಕಲಕೃತ ಭೇದವರಿತು ವಿರಕ್ತನಾಗಬೇಕು.
ಇಂತೀ ಸಕಲಭ್ರಮೆಯನಡಗಿಸಿ ನಿಂದಲ್ಲಿ
ಸದಾಶಿವಮೂರ್ತಿಲಿಂಗವನರಿದುದು. /266
ಶಕ್ತಿರೂಪು ವಿಷ್ಣುವಿನ ಅವತಾರವಾಯಿತ್ತು.
ಅಸ್ಥಿಮಯ ರುದ್ರನ ವಂಶೀಭೂತವಾಯಿತ್ತು.
ಆತ್ಮಮಯ ವಸ್ತ್ರಸಂಬಂಧವಾದಲ್ಲಿ
ಮಾಯೆಯ ಮರೆದು ಕಲ್ಪಿತವ ಹರಿದು ಏಕಮಯವಾಗಿ,
ಖಂಡನಪತ್ರದಲ್ಲಿ ತೋರುವ ಚಂಡಿಕಾಕಿರಣದಂತೆ.
ಒಂದು ಹಲವಾದ ವಸ್ತುವನರಿತಲ್ಲಿ ಹಿಂಗಿತು ಮಲ ಈಚೆಯಲ್ಲಿ,
ಆ ಮಲದ ಆಚೆಯಲ್ಲಿ ನಿಂದು ನೋಡಲಾಗಿ,
ಸದಾಶಿವಮೂರ್ತಿಲಿಂಗದ ಕಳೆ ಕಾಣಬಂದಿತ್ತು. /267
ಶರೀರ ದಹನ ಮುಖವೆಲ್ಲವು ರುದ್ರತತ್ವ ಆಧೀನವಾಗಿಹುದು.
ಶರೀರಮುಖ ಸಮಾಧಿ ಆಧೀನವಾಗಿಹುದೆಲ್ಲವು ವಿಷ್ಣುಪಕ್ಷವಾಗಿಹವು.
ಇಂತೀ ಉಭಯ ಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು.
ಇಂತೀ ಭೇದಂಗಳನರಿತು ಹೊರಗಾಗಿ ನಿಂದಲ್ಲಿ
ಸದಾಶಿವಮೂರ್ತಿಲಿಂಗದ ಅರಿವು ಒಳಗಾಗಿಹುದು./268
ಶರೀರಘಟಕ್ಕೆ ಶಿಲೆಮೂರ್ತಿ ವಸ್ತುವಾಯಿತ್ತು,
ಆತ್ಮಘಟಕ್ಕೆ ಅರಿವುಮೂರ್ತಿ ವಸ್ತುವಾಯಿತ್ತು.
ನೇಮಘಟ ನಿತ್ಯಲಿಂಗವನರಿತು, ನಿತ್ಯಲಿಂಗ ಅನಿತ್ಯಲಿಂಗವನರಿತು,
ಅನಿತ್ಯ ಚಿತ್ಪ್ರಕಾಶವನೆಯ್ದಿ
ಅದರ ಮರೆಯಲ್ಲಿ ಕುಡಿವೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ./269
ಶರೀರದಲ್ಲಿ ಷಡಾಧಾರಚಕ್ರವುಂಟೆಂಬರು.
ಆಧಾರವೊಂದರಿಂದ ಆದುದನರಿಯದೆ ಆರುಂಟೆಂದು ಬೇರೆ ಕಲ್ಪಿಸಬಹುದೆ?
ಅದಕ್ಕೆ ದೃಷ್ಟ: ಹುತ್ತದ ಬಾಯಿ ಹಲವಾದಡೆ ಒಡಲೊಂದೆ ಘಟಭೇದ.
ಆಧಾರ ನಾನೆಂಬುದನರಿತಲ್ಲಿ ಷಡಾಧಾರ ನಿಂದಿತ್ತು.
ಅದು ತನ್ನಯ ಚಿತ್ತದ ಭೇದವಲ್ಲದೆ ವಸ್ತುವನರಿವ ಭೇದವಲ್ಲ.
ಹಲವು ಓಹರಿಯಲ್ಲಿ ತಿಳಿದು ನೋಡುವ ಒಬ್ಬನೆ ಮನೆಯೊಡೆಯ.
ಆ ಹೊಲಬನರಿತಲ್ಲಿಯೆ ನಿಂದುದು, ಸದಾಶಿವಮೂರ್ತಿಲಿಂಗದ ಅಂಗ./270
ಶರೀರವ ಕುರಿತಲ್ಲಿ ಸಾಧಕಾಂಗವ ನುಡಿಯಬೇಕು.
ಆತ್ಮನ ಕುರಿತಲ್ಲಿ ಚಿದ್ಘನದಲ್ಲಿ ನಿಂದು ಒದಗಿ ಅಡಗಿರುವಠಾವ ನುಡಿಯಬೇಕು.
ಇಂತೀ ಉಭಯದಿರವ ತಾನರಿತು ಅಂಗಕ್ಕೆ ಶಿಲೆ, ಆತ್ಮಂಗೆ ಓಗರವಾದಂತೆ,
ಲೌಕಿಕಕ್ಕೆ ಆಚರಣೆ ಪರಮಾರ್ಥಕ್ಕೆ ಪರಂಜ್ಯೋತಿ ಪ್ರಕಾಶವಾಗಿರಬೇಕು,
ಸದಾಶಿವಮೂರ್ತಿಲಿಂಗಕ್ಕೆ ಅಂಗವಾಗಿ ನಿರಂಗಕ್ಕೆ ಸಂಗವನೆಯ್ದಬೇಕು./271
ಶಶಿಕಾಂತದ ಶಿಲೆ ಒಸರುವಂತೆ, ಕುಸುಮ ಋತುಕಾಲಕ್ಕೆ ದೆಸೆಗೆ ಪಸರಿಸುವಂತೆ,
ಅಂಗ ಸಂಬಂಧಕ್ಕೆ, ಆತ್ಮನ ಅರಿವಿಂಗೆ, ಮಾಡುವ ತತ್ಕಾಲಕ್ಕೆ,
ಆ ಭಾವದಲ್ಲಿ ಭಾವಿಸಿ ನಾನೆಂಬುದನಳಿದು
ನೀನೆಂಬುದಕೆಠಾವಿಲ್ಲದೆ, ಆ ಭಾವವೆ ಬೆಳಗುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ./272
ಶಿರಪಾದದೊಳಗಾದ ಅಂಗದ ಸುಖದುಃಖವ ಆತ್ಮನರಿವಂತೆ,
ಅರಿವೇ ಕುರುಹಾಗಿ ನಿಂದಲ್ಲಿ ಆ ಉಭಯದ ಅಳಿವುಳಿವನರಿಯಬೇಕು.
ಆ ಭೇದವನರಿದಲ್ಲಿ ಆ ಅರಿವಿನ ಕುರುಹು ಚಿದ್ಘನದಲ್ಲಿ ನೆಲೆನಿಂದು
ಉಳಿದ ಬೆಳಗು ಕಳೆದೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ. /273
ಶಿವ ಭಕ್ತನಾಗಿ ಮುಂದೆ ಬಂದು ಮಂದಿರವ ಕಟ್ಟಿದ,
ಶಿವ ಜಂಗಮವಾಗಿ ಕರ್ತುರೂಪ ತಾಳಿ ಹಿಂದುಳಿದು ಬಂದ,
ಉಭಯವು ಒಂದಾಗಿ ಜಗಹಿತಾರ್ಥವಾಗಿ ಬಂದ ಅಂದ,
ಸದಾಶಿವಮೂರ್ತಿಲಿಂಗವು ತಾನೆ. /274
ಶಿವನಿಂದಲುದಯಿಸಿತ್ತು ವಿಶ್ವ,
ವಿಶ್ವದಿಂದಲುದಯಿಸಿತ್ತು ಸಂಸಾರ,
ಸಂಸಾರದಿಂದಲುದಯಿಸಿತ್ತಜ್ಞಾನ,
ಅಜ್ಞಾನದಿಂದಲುದಯಿಸಿತ್ತು ಮರವೆ,
ಮರವೆಯಿಂದಲುದಯಿಸಿತ್ತು ಆಸೆ,
ಆಸೆಯಿಂದಲುದಯಿಸಿತ್ತು ರೋಷ,
ರೋಷದಿಂದಲುದಯಿಸಿತ್ತು ದುಃಖ,
ದುಃಖದಿಂದ ಮೂರೂ ಲೋಕವೆಲ್ಲವು ಮೂಛರ್ೆಯಾಗಿ
ಭವಬಂಧನಕ್ಕೊಳಗಾದರು,
ಅಲ್ಲಿ ನಮ್ಮ ಸದಾಶಿವಮೂರ್ತಿಲಿಂಗವನರಿಯದ ಕಾರಣ./275
ಶೇಷ ಲಂಪಟಕೆಯ್ದುವ ಮುಖದಂತಿರಬೇಕು,
ವ್ಯಾಘ್ರನ ಗತಿ ನಖದಂತಿರಬೇಕು,
ಪುಳಿಂದನ ಚಿತ್ತದ ಗೊತ್ತಿನಂತಿರಬೇಕು.
ಹಿಡಿವಲ್ಲಿ ಬಿಡುವಲ್ಲಿ ವಾಯುವಿನ ತೆರಪಿನಿಂದ ಕಡೆಯಾಗದೆ,
ಅರಿಯಬೇಕು ಸದಾಶಿವಮೂರ್ತಿಲಿಂಗವ. /276
ಶೈವಕ್ಕೆ ಕೈಲಾಸ, ವೈಷ್ಣವಕ್ಕೆ ವೈಕುಂಠ,
ಚೌದ್ಧಂಗೆ ಮೋಕ್ಷಗಾಮಿನಿಯೆಂಬ ಗೊತ್ತುಗಳು ಬೇರಾದಲ್ಲಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಬೇರಾದುದಿಲ್ಲ.
ಸುವರ್ಣ ಒಂದು ಆಭರಣ ಹಲವಾದಂತೆ.
ಪರಬ್ರಹ್ಮವಸ್ತುವೊಂದೆಂಬುದಕ್ಕೆ ಇದೆ ದೃಷ್ಟ.
ಮತ್ತಿದಿರು ದೈವವುಂಟೆಂದು ಗದಿಯಬೇಡ.
ನೆರೆ ನಂಬಿ, ಸದಾಶಿವಮೂರ್ತಿಲಿಂಗವಲ್ಲದಿಲ್ಲಾಯೆಂದೆ. /277
ಶೈವವಾದ, ತತ್ತ್ವವಾದ, ಮಾಯಾವಾದ
ಇಂತೀ ವಾದಂಗಳಲ್ಲಿ ಹೋರುವಾಗ ವೇದ ಹೇಳುತ್ತದೆ : ಓಂ ಎಂಬಲ್ಲಿ ಎರಡಳಿದು ಒಂದೇ ಉಳಿಯಿತ್ತು.
ಕೆಲವಸ್ತು ದೇವಂಗೆ ಸರಿಯೆಂದಡೆ
ಅದು ನಿಮ್ಮ ಒಲುಮೆಯ ಒಲವರವೈಸಲ್ಲದೆ ಬಲುಹಿನ ಮಾತು ಬೇಡ.
ಕಾಲಾಂತಕನ ಕರದಲ್ಲಿ ಕಪಾಲವದೆ, ಪಾದಯುಗಳದಲ್ಲಿ ಅಕ್ಷಿಯದೆ.
ಮಿಕ್ಕಾದ ಅರಿಕುಲ ದೈವಂಗಳ ಶಿರಮಾಲೆಯಲ್ಲಿ ಸಿಕ್ಕಿ ಅದೆ.
ಮತ್ತಿನ್ನು ಒರಲಲೇಕೆ? ಸದಾಶಿವಮೂರ್ತಿಲಿಂಗವಲ್ಲದಿಲ್ಲಾ ಎಂದೆ./278
ಶ್ರೀಶೈಲದ ಮಧ್ಯದಲ್ಲಿ ಒಂದು ಪರುಷರಸದ ಬಾವಿ ಹುಟ್ಟಿತ್ತು,
ಆ ಬಾವಿಯೊಳಗೆ ಕಬ್ಬುನದ ಅದಿರು ಹುಟ್ಟಿ ಸಿದ್ಧರಸವ ನುಂಗಿತ್ತು.
ಇದ್ದವನ ಸುದ್ದಿಯ ಸತ್ತವ ಹೇಳಿ, ಕಾಣದವ ಕೇಳಿ ಹೋದ,
ಸದಾಶಿವಮೂರ್ತಿಲಿಂಗ ಬಚ್ಚಬರಿಯ ಬಯಲು./279
ಸಕಲಜ್ಞಾನಸಂಪನ್ನ ಕಲೆಯನರಿತೆನೆಂಬ ಅರುಹಿರಿಯರು ಹೇಳಿರಣ್ಣಾ.
ಸಕಲ ಅರ್ಪಿತದಲ್ಲಿ ಲಿಂಗಮುಖವಾಗಿ ಇರಬೇಕೆಂಬ ಸಂದೇಹಿಗಳು ಹೇಳಿರಣ್ಣಾ.
ಇಂದ್ರಿಯಂಗಳ ಮುಖದಿಂದ ಲಿಂಗವನರಿಯಬೇಕೋ?
ಲಿಂಗದ ಮುಖದಿಂದ ಇಂದ್ರಿಯಂಗಳನರಿಯಬೇಕೊ?
ಒಂದ ಬಿಟ್ಟು ಒಂದನರಿತಲ್ಲಿ ಹಿಂಗಬಾರದ ತೊಡಕು.
ಉಭಯದ ಸಂದೇಹ ನಿಂದಲ್ಲಿ ಸದಾಶಿವಮೂರ್ತಿಲಿಂಗವನರಿತುದು./280
ಸಕಲಬ್ರಹ್ಮಾಂಡ ವಿಷ್ಣುಮಯ, ಉಭಯದ ಆತ್ಮಮಯ ಮಹಾಪ್ರಳಯ,
ಕಾಲಾಂತಕ ರುದ್ರನು ಅನಾದಿವಸ್ತುವ ಅಂಶೀಭೂತವಾಗಿ,
ತ್ರಿವಿಧಮಾರ್ಗಂಗಳಲ್ಲಿ ಜಗದ ಆಗುಚೇಗೆಯನರಿವುದಕ್ಕೆ
ಸದಾಶಿವಮೂರ್ತಿ ಉಮಾಪತಿಯಾದ ಗುಣ ವಿವರ: ಭಕ್ತಿಭಾವದೇಹಿಕನಾಗಿ ಸಚ್ಚಿದಾನಂದ ನಿಃಕಲಬ್ರಹ್ಮಮೂರ್ತಿ
ಸದಾಶಿವಮೂರ್ತಿಯಲ್ಲದಿಲ್ಲ. /281
ಸಕಲವನರಿದಡೂ ಮಲತ್ರಯ ನಾಸ್ತಿಯಾಗಿರಬೇಕು.
ಅರಿತು ನಿಂದುದಕ್ಕೆ ಅದೆ ಮುಖ್ಯ.
ಮೃತ್ತಿಕೆಯ ಕೂಡಿದ ಜಲ ಆರದಿದ್ದಡೆ ಅದೆ ಪಂಕದೋರುವಂತೆ.
ಏನನರಿತು ನುಡಿದಡೂ ಕುಲಛಲ ಮಲಂ ನಾಸ್ತಿಯಾಗಿರಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ./282
ಸಕಲವೆಂಬನ್ನಕ್ಕ ನಿಃಕಲವುಂಟು, ನಿಃಕಲವೆಂಬುದು ನಾಮರೂಪು.
ಅದೆಂತೆಂದಡೆ: ತ್ರಿವಿಧವ ಕೂಡಿ ಬೆಳಗುವ ಜ್ಯೋತಿಯ ಒಡಲೆ ಘಟವಾಗಿ ಬೆಳಗೆ,
ಪ್ರಾಣವಾಗಿ ತೋರುವನ್ನಕ್ಕ ಮಾಯೆ ಸಂಗಲೇಪವಾಗಿಹುದು.
ಅದರ ಬೆಡಗಡಗೆ ಸದಾಶಿವಮೂರ್ತಿಲಿಂಗವು ನಿರ್ಮಾಯ. /283
ಸದ್ಭಕ್ತನ ಆಚರಣೆಯ ಕ್ರೀಯೆಂತುಂಟೆಂದಡೆ:
ಜಂಗಮದ ಪಾದೋದಕ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ
ಜಂಗಮದ ಕುಂದು ನಿಂದೆಯ ಕೇಳಬಾರದು.
ಜಂಗಮಪ್ರಸಾದವ ಲಿಂಗಕ್ಕೆ ಕೊಡುವಲ್ಲಿ
ಅರ್ಥ ಪ್ರಾಣ ಅಭಿಮಾನವ ಮುಟ್ಟಿದಲ್ಲಿ
ಚಿತ್ತದಲ್ಲಿ ಹೆಚ್ಚು ಕುಂದು ತೋರಿದಾಗಲೆ ಪ್ರಸಾದಕ್ಕೆ ದೂರ.
ಇದು ಕಾರಣ, ದೇಹಭಾವವಳಿದವಂಗಲ್ಲದೆ ಪಾದೋದಕ ಪ್ರಸಾದವಿಲ್ಲಾ ಎಂದೆ.
ವಿಶ್ವಾಸವುಂಟಾದಲ್ಲಿ ಕುರುಹಿನ ಮುದ್ರೆಯ ಬಯಕೆ ಉಂಟೆ ಅಯ್ಯಾ?
ಅವಿಶ್ವಾಸವುಳ್ಳವಂಗೆ ಗುರುಚರದ ಮಾರ್ಗವಿಲ್ಲಾಯೆಂದೆ.
ಸದಾಶಿವಮೂರ್ತಿಲಿಂಗವ ಹೀಗರಿವುದಕ್ಕೆಠಾವ ಕಾಣೆ./284
ಸದ್ಯೋಜಾತಮುಖವೆ ಎನಗೆ ಬಸವಣ್ಣನಯ್ಯಾ,
ವಾಮದೇವಮುಖವೆ ಎನಗೆ ಚೆನ್ನಬಸವಣ್ಣನಯ್ಯಾ,
ಅಘೋರಮುಖವೆ ಎನಗೆ ಮಡಿವಾಳಯ್ಯನಯ್ಯಾ,
ತತ್ಪುರುಷಮುಖವೆ ಎನಗೆ ಸಿದ್ಧರಾಮಯ್ಯನಯ್ಯಾ,
ಈಶಾನಮುಖವೆ ಎನಗೆ ಪ್ರಭುದೇವರಯ್ಯಾ,
ಹೃದಯದ ಮುಖವೆ ಎನಗೆ ಗಣಂಗಳಯ್ಯಾ.
ಇಂತಿವರ ಶ್ರೀಚರಣದಲ್ಲಿ ಉರಿಯುಂಡ ಕರ್ಪುರದಂತೆ ಬೆರಸಿದೆನಯ್ಯಾ
ಸದಾಶಿವಮೂರ್ತಿಲಿಂಗದಲ್ಲಿ. /285
ಸಹಪಂತಿಯಲ್ಲಿ ತನ್ನ ಗುರುವೆಂದು ವಿಶೇಷವ ಮಾಡಲಾಗದು.
ಅದೆಂತೆಂದಡೆ: ಆ ಗುರುವಿಂಗೂ ಆ ಶಿಷ್ಯಂಗೂ ಎರಡಿಟ್ಟು ಮಾಡೂದಕ್ಕೆ
ದೃಷ್ಟವ ತೋರಿದ ಮತ್ತೆ,
ದ್ರವ್ಯಂಗಳಲ್ಲಿ ವಿಶೇಷವಾಗಿ ಕೈದುಡುಕಿದಡೆ ಮನ ಕೂರ್ತಡೆ
ಅದೆ ಕಿಲ್ವಿಷ, ಸದಾಶಿವಮೂರ್ತಿಲಿಂಗಕ್ಕೆ ಹೊರಗು. /286
ಸಹಭೋಜನವ ಮಾಡುವನ ಇರವು ಹೇಗೆಂದಡೆ:
ದಗ್ಧಪಟದಂತೆ, ಮಂಜಿನ ರಂಜನೆಯ ವಾರಿಯ ಧೂಮದಂತೆ,
ಒಡಲಿನ ಆತ್ಮನ ಭೇದದಂತಿರಬೇಕು.
ಆಕಾಶದ ಸಾಕಾರದಲ್ಲಿ ತೋರುವ ನಾನಾ ಛಾಯದಂತೆ,
ಒಂದು ವರ್ಣದಲ್ಲಿ ನಿಲ್ಲದೆ ತೋರುವ ತೋರಿಕೆಯಂತೆ,
ಕಾಯದ ಛಾಯವ ತೊಟ್ಟಿದ್ದಲ್ಲಿ ಲಿಂಗಕ್ಕೂ ತನಗೂ ಸಹಭೋಜನ ಸಲವುದೆಂದೆ.
ಅದು ಉರಿಯೊಳಗಳ ಕರ್ಪುರದಂತೆ, ಕರ್ಪುರದೊಳಗಳ ಉರಿಯಂತೆ.
ಅನ್ಯಭಿನ್ನವಿಲ್ಲದಿರಬೇಕು, ಸದಾಶಿವಮೂರ್ತಿಲಿಂಗದಲ್ಲಿ./287
ಸಿದ್ಧರಸ ಲೇಸೆಂದಡೆ ತಾನಿದ್ದ ಕುಡುಕೆ ಹೇಮವಾದುದಿಲ್ಲ.
ಲೋಹಕ್ಕಲ್ಲದೆ ವೇಧಿಸುವುದಿಲ್ಲ.
ವಸ್ತು ಸರ್ವಮಯದಲ್ಲಿ ಸಂಪೂರ್ಣವಾಗಿದ್ದಡೇನು,
ತನ್ನ ಅರಿವವರ ಹೃದಯದಲ್ಲಿಯಲ್ಲದೆ ಇರ,
ಸದಾಶಿವಮೂರ್ತಿಲಿಂಗದಿರವು. /288
ಸೀತೆ ಸೆರೆಹೋಹಾಗ, ವಾಣಿಯ ನಾಸಿಕ ಅರಿವಾಗ,
ಉಮಾದೇವಿಯ ಅಸುರನರಸುವಾಗ,
ಉತ್ಪತ್ಯದಾತ, ಸ್ಥಿತಿಗೆ ಕರ್ತ, ಲಯಕ್ಕೊಡೆಯ ಎಲ್ಲಿ ಹೋದ[ರೆ]ಂದರಿ[ಯೆ]
ಇಂತಿವ ಬಲ್ಲವ ಕಲ್ಲಿಗೆ ಹೊರಗಾದ ಸದಾಶಿವಮೂರ್ತಿಲಿಂಗವಲ್ಲದಿಲ್ಲ./289
ಸುಖದುಃಖದ ನಡುವೆ ಒಂದು ಅತಿರೇಕದ ಕೂಸು ಹುಟ್ಟಿ,
ಹಾಲನೊಲ್ಲದೆ ಮೂರು ಕೂಳ ಬೇಡುತ್ತದೆ.
ಕೂಳು ಕುದಿಯುವುದಕ್ಕೆ ಮೊದಲೆ ಗಂಜಿಯ ಕುಡಿದು
ಕೂಸು ಹೇಳದೆ ಹೋಯಿತ್ತು,
ಸದಾಶಿವಮೂರ್ತಿಲಿಂಗವನರಿದು. /290
ಸೂಜಿಯ ಮೊನೆಯಲ್ಲಿ ದಾರವೇರಿ ಹಿನ್ನೆಯ ಹಂಗ ಬಿಡಿಸಿತ್ತು.
ಉಂಬ ಹಂಗ ಕಣ್ಣುಕಂಡು ಬಾಯ ಹಂಗ ಬಿಡಿಸಿತ್ತು.
ಮನ ಕಂಡು ಕೈಯ್ಯ ಸಂದೇಹವ ಬಿಡಿಸಿತ್ತು,
ಮನ ಘನದಲ್ಲಿ ನಿಂದು ಸದಾಶಿವಮೂರ್ತಿಲಿಂಗದ ಕುರುಹಳಿಯಿತ್ತು./291
ಸ್ಥಾವರಲಿಂಗಪೂಜೆ ಶುದ್ಧಶೈವ, ಮಾರ್ಗಶೈವ ಲಿಂಗಪೂಜೆ ಸಿಂಹಾಸನ.
ಪೂರ್ವಶೈವಪೂಜೆ ಸಂಕಲ್ಪನಿರಾವರಣ,
ವೀರಶೈವ ಲಿಂಗಪೂಜೆ ಅಂಗದ ಮೇಲೆ ಹಿಂಗದೆ ಧರಿಸಿಹುದು.
ಇವೆಲ್ಲವು ಸರಿ, ಶೈವಪೂಜೆ ಅದೆಂತೆಂದಡೆ: ಇಷ್ಟಲಿಂಗ ಜೀವನ ಅಂಗ ಉಭಯವ ಕೂಡಿ ಲೀಯವಾಗಿದ್ದುದು
ಶೈವಭೇದಂಗಳಿಗೆ ಹೊರಗು
ಸದಾಶಿವಮೂರ್ತಿಲಿಂಗಕ್ಕೆ ಒಳಗು. /292
ಸ್ಥೂಲದಲ್ಲಿ ಸಿಕ್ಕಿ, ಸೂಕ್ಷ್ಮದಲ್ಲಿ ಕಂಡು, ಕಾರಣದಲ್ಲಿ ಅರಿವುದು
ಒಂದೊ ಮೂರೊ ಎಂಬುದನರಿತಲ್ಲಿ
ಸದಾಶಿವಮೂರ್ತಿಲಿಂಗಸಂಗವಾದುದು./293
ಸ್ವಪ್ನದ ಮಂದಿರದಲ್ಲಿ ನಿಃಕಲದ ಕೊಡಗೂಸು
ಬಚ್ಚಬಯಲ ಕೊಡನ ಹೊತ್ತು ಕೈಬಿಟ್ಟಾಡುತ್ತೈದಾಳೆ.
ಆ ಆಟ ದೇಹಿಕರಿಗೆ ಅಸಾಧ್ಯ.
ಭಾವಭ್ರಮೆಯಳಿಲ್ಲದೆ ವಿರಕ್ತಿಭಾವವಿಲ್ಲ.
ಸದಾಶಿವಮೂರ್ತಿಲಿಂಗವನರಿವುದಕ್ಕೆ. /294
ಹಭೋಜನ ಮಾಡುವ ಸಾಧನೆವಂತರು ಕೇಳಿರೊ:
ಲಿಂಗ ಕರ್ತೃವಾಗಿ ನೀ ಭೃತ್ಯನಾಗಿದ್ದಲ್ಲಿ
ಲಿಂಗ ಅಮಲ, ನೀ ಮಲದೇಹಿ,
ನಿನಗೆ ಪ್ರಪಂಚು, ಲಿಂಗವು ನಿಃಪ್ರಪಂಚು,
ನೀ ಅಂಗ, ಲಿಂಗವು ನಿರಂಗ. ಲಿಂಗಕ್ಕೂ ನಿನಗೂ ಸಹಭೋಜನವೆಂತುಟಯ್ಯಾ?
ಜಾಗ್ರದಲ್ಲಿ ತೋರಿ, ಸ್ವಪ್ನದಲ್ಲಿ ಕಂಡುದ
ಲಿಂಗಕ್ಕೆ ಸಹಭೋಜನವ ಮಾಡುವ ಪರಿಯಿನ್ನೆಂತೊ?
ಸಾಕು ಕುಟಿಲದ ಊಟ, ಸದಾಶಿವಮೂರ್ತಿಲಿಂಗವು ಮುಟ್ಟದ ಅರ್ಪಿತ./295
ಹರಿವ ಸಕಟಿಂಗೆ ಕಡೆಗೀಲು ಕಡೆಯಾದಲ್ಲಿ ಆ ಗಾಲಿ ಅಡಿಯಿಡಬಲ್ಲುದೆ?
ಕುರುಹಿನ ಮೂರ್ತಿಯಲ್ಲಿ ಅರಿವು ಒಡಗೂಡದಿರೆ
ಆ ಜ್ಞಾನ ಹಿಂದ ಮರೆದು ಮುಂದಕ್ಕಡಿಯಿಡಲಿಲ್ಲ.
ತಡಿಯಲ್ಲಿ ನಿಂದು ಮಡುವಿನಲ್ಲಿದ್ದ ಹರುಗೋಲಕ್ಕೆ ಅಡಿಯಿಟ್ಟು
ಅದುವೊಡಗೂಡಿ ಎಯ್ದುವಂತೆ
ಕುರುಹಿನ ತಡಿ, ಮರವೆಯ ಮಡು, ಮಾಡುವ ವರ್ತಕ ಹರುಗೋಲಾಗಿ,
ಅರಿಕೆ ಅಂಬಿಗನಾಗಿ ಸಂಸಾರ ಸಾಗರವ ದಾಂಟಿ,
ಆ ತಡಿಯ ಮರೆಯಲದೆ ನಿಜನೆಮ್ಮುಗೆಯ ಕಳೆಬೆಳಗು ಬೆಳಗುತ್ತದೆ
ಸದಾಶಿವಮೂರ್ತಿಲಿಂಗದಲ್ಲಿ. /296
ಹರಿವ ಹಾವಿಂಗೆ ಕಾಲ ಕೊಟ್ಟು, ಉರಿವ ಕಿಚ್ಚಿಗೆ ಕಯ್ಯನಿಕ್ಕಿ,
ಅರಿವ ಆಯುಧಕ್ಕೆ ಕೊರಳ ಕೊಟ್ಟು,
ಮತ್ತೆಂತೊ, ಅರುಹಿರಿಯರಾದಿರಿರಿ
ಮುಂದಕ್ಕಾತನನರಿಯಬಲ್ಲಡೆ, ಹರಿವ ಚಿತ್ತವ ನಿಲಿಸಿ ಕುದಿವ ಆಸೆಯ ಕೆಡಿಸಿ,
ಸರ್ವವ್ಯಾಪಾರವೆಂಬ ಗೊತ್ತಿಗೆ ಚಿತ್ತವನಿಕ್ಕದೆ ನಿಶ್ಚಯನಾಗಿ ನಿಂದುದು
ಆತನಿರವೆ ಸದಾಶಿವಮೂರ್ತಿಲಿಂಗವು ತಾನೆ./297
ಹರಿವ ಹಾವು ಕೊಂಬಿನ ಕೋಡಗ ಸಂಧಿಸಿ, ಒಂದಕ್ಕೊಂದಂಜಿ ನಿಂದೈದಾವೆ.
ಕೋಡಗ ನೋಡಲಮ್ಮದು, ಹಾವು ಹೋಗಲಮ್ಮದು.
ಎರಡು ನಿಂದು ಜೋಗಿಗೆ ಲೇಸಾಯಿತ್ತು.
ಸದಾಶಿವಮೂರ್ತಿಲಿಂಗವನರಿತು./298
ಹಸಿದ ಹಾವಿನ ಹೆಡೆಯಲ್ಲಿ ಇಲಿ ಬಿಲನ ತೋಡುತ್ತದೆ.
ಹೆಡೆಯಲ್ಲಿ ಹೆಬ್ಬಿಲ, ಕಣ್ಣಿನ ಓಹರಿಯಲ್ಲಿ ಹುಲ್ಲಿನ ಹಾಸಿಕೆಯ ಶಯನದ ಮನೆ,
ಮೂಗಿನ ವಾಸದಲ್ಲಿ ತಪ್ಪು ದಾರಿ, ಬಾಲದ ತುದಿಯಲ್ಲಿ ಹುಡುಪ.
ಹಾವ ಹಿಡಿದಲ್ಲಿಯೇ ಸಿಕ್ಕಿತ್ತು.
ಸದಾಶಿವಮೂರ್ತಿಲಿಂಗವನರಿದಲ್ಲಿ ಚಿತ್ತ ನಿಂದಿತ್ತು./299
ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ ಒದೆಯುವುದಲ್ಲದೆ ಉಣಲೀಸುವುದೆ?
ಅರಿವು ನಷ್ಟವಾದವ ಕ್ರೀಯ ಬಲ್ಲನೆ?
ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು.
ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ./300
ಹಾವಿನ ಹುತ್ತದಲ್ಲಿ ಹದ್ದು ತತ್ತಿಯನಿಕ್ಕಿ,
ಹಾವು ಹಸಿದು ತತ್ತಿಯ ಮುಟ್ಟದು ನೋಡಾ.
ಹಾವಿನ ವಿವರ, ಹದ್ದಿನ ಭೇದ, ತತ್ತಿಯ ಗುಣ ಆವುದೆಂದರಿತಲ್ಲಿ,
ಜೀವ ಪರಮ ಸ್ವಯಜ್ಞಾನ ಭೇದವನರಿಯಬೇಕು,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /301
ಹಾವು ಹುಲಿ ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ?
ನೋವಾದಡಾಗಲಿ, ಇದರಿಂದ ಎನಗೆ ಕೇಡಿಲ್ಲ.
ಕಂಡು ಸುಮ್ಮನಿದ್ದಡೆ, ಆ ಗುರುವಿನ ಸುಖದುಃಖ ಎನ್ನದಾಗಿ,
ಸಮಯಕ್ಕಂಜಿದಡೆ ಎನ್ನ ಮಾಡುವ ಮಾಟ ಎನ್ನ ಕೇಡು,
ಎನ್ನ ಅರಿವು ಮರವೆಯಲ್ಲಿದ್ದಡೆ, ಭವದುಃಖಕ್ಕೆ ಬೀಜ.
ಎನ್ನ ಕೈಯಲ್ಲಿ ಎನ್ನಂಗವ ತೊಳೆಯಬೇಕಲ್ಲದೆ ಅನ್ಯರಿಗೆ ಹೇಳಲೇಕಯ್ಯಾ?
ಇಂತೀ ಮೂರರೊದಗ ನಾ ಮಾಡಿ ಹಾನಿಯ ಪಡೆವುದಕ್ಕೇನು?
ಅಂದಿಗೇನಾದಡಾಗಲಿ ಇಂದಿಗೆ ಶುದ್ಧ, ಸದಾಶಿವಮೂರ್ತಿಲಿಂಗದಲ್ಲಿ./302
ಹುತ್ತದೊಳಗಳ ಉಡು, ಹೊಳೆಯೊಳಗಳ ಮೊಸಳೆಯ ನುಂಗಿತ್ತು.
ನುಂಗಿ ಹೋಹಾಗ ಅಂಗನೆಯೆಂಬ ಹೆಂಗೂಸು ಆ ಉಡುವ ಕಂಡು,
ತಾ ಹೊತ್ತಿದ್ದ ಕೊಡನ ಕೂಡಿ ಮಂಡೆಯ ಮೇಲೆ ಇರಿಸಲಾಗಿ,
ತಾ ಸತ್ತು, ಕೊಡನೊಡೆದು, ಉಡುವಡಗಿತ್ತು.
ಹಿಡಿಯಲಿಲ್ಲ, ಬಿಡಲಿಲ್ಲ, ಬೇರೊಂದಡಿಯಿಡಲಿಲ್ಲ,
ಸದಾಶಿವಮೂರ್ತಿಲಿಂಗವನರಿತಲ್ಲಿ. /303
ಹುತ್ತದೊಳಗಳ ಹಾವು ಹದ್ದಿನ ಹೊಟ್ಟೆಯೊಳಗಳ ತತ್ತಿ ನುಂಗಿತ್ತು.
ಗಿಡುಗನ ಉಡು ನುಂಗಿ, ಹೊಡೆವವನ ದಡಿ ನುಂಗಿತ್ತು.
ಹಾವನು ಹದ್ದಿನ ತತ್ತಿಯ, ಗಿಡುಗನ ಉಡುವ, ಹೊಡೆವವನ ಡೊಣ್ಣೆಯ
ಬಾಯಿಲ್ಲದ ಇರುಹೆ ನುಂಗಿತ್ತು ಕಂಡೆ.
ಸದಾಶಿವಮೂರ್ತಿಲಿಂಗವು ಬಚ್ಚಬಯವಾಯಿತ್ತು. /304
ಹುಲಿ ಹುತ್ತವ ಹೊಕ್ಕು ಹಾವಾದ ಭೇದವನಾರು ಬಲ್ಲರು?
ಹಾವು ಹುತ್ತವ ಬಿಟ್ಟು ಹದ್ದಾದ ಭೇದವನಾರು ಬಲ್ಲರು?
ಹುಲಿ ಹಾವು ಹದ್ದು ಕೂಡಿ ಕುಲವ ಹೊರಗಿಟ್ಟು ಒಳಗಾದ ಭೇದವನಾರು ಬಲ್ಲರು?
ಇಂತೀ ಸ್ಥೂಲ ಸೂಕ್ಷ್ಮ ಕಾರಣತ್ರಯ ಕೂಡಿ ತತ್ವದಲ್ಲಿ ನಿಂದು,
ಬಚ್ಚಬಯಲಾಯಿತ್ತು ಸದಾಶಿವಮೂರ್ತಿಲಿಂಗದಲ್ಲಿ./305
ಹುಲ್ಲು ಕೆಂಡವ ಮುಟ್ಟಿ ಹೊತ್ತದ ಪರಿಯ ನೋಡಾ,
ಹಸಿದ ಸರ್ಪನ ಹೆಡೆಯ ನೆಳಲಲ್ಲಿ ಮಂಡುಕ ನಿಂದ ತೆರನ ನೋಡಾ.
ಜೀವ ಪರಮನಲ್ಲಿ ಬಂದುನಿಂದು ಒಂದಾಗದ ಸಂದೇಹವ ನೋಡಾ,
ಇಂತೀ ಸಂದನರಿದಲ್ಲದೆ ಅಂಗ-ಲಿಂಗ ಪ್ರಾಣ-ಪರಮವೊಂದಾಗಲಿಲ್ಲ,
ಸದಾಶಿವಮೂರ್ತಿಲಿಂಗವನರಿವುದಕ್ಕೆ. /306
ಹುವ್ವಿನ ಮೇರಳ ತುಂಬಿ ಹುವ್ವ ತಿಂದು ಗಂಧವನುಳುಹಿತ್ತು.
ಉಳುಹಿದ ಗಂಧ ತುಂಬಿಯ ತಿಂದು, ತುಂಬಿ ಗಂಧವೊಂದೆಯಾಯಿತ್ತು.
ಅದು ನಿರಂಗದರವು, ಸದಾಶಿವಮೂರ್ತಿಲಿಂಗವು ತಾನೆ./307
ಹೃದಯದಲ್ಲಿ ತೋರುವ ಅರಿವು ತನ್ಮಯವಾಗಿ,
ಇದಿರಿಟ್ಟ ಭಾವಕ್ಕೆ ನೆಲೆಗೊಂಡು, ಭಾವ ತುಂಬಿ
ಕಂಗಳ ಮಧ್ಯದಲ್ಲಿ ಹಿಂಗದೆ ನಿಶ್ಚೈಸಿ,
ಅನಿಮಿಷನಂಗದಂತೆ, ಕೂರ್ಮನ ಸ್ನೇಹದಂತೆ, ಅಂಬು ಅಂಬುಜದಂತೆ,
ಉಭಯ ಸಂಗದಲ್ಲಿ ನಿಸ್ಸಂಗನ ಬೆಳಗು ತೋರುತ್ತದೆ,
ಸದಾಶಿವಮೂರ್ತಿಲಿಂಗದಲ್ಲಿ./308
ಹೊಲದೊಳಗಳ ಹುಲ್ಲೆ, ಗವಿಯೊಳಗಳ ಹುಲಿ,
ಕೊಂಬಿನ ಮೇಲಣ ಕೋಡಗ, ಅಂಬರದಲಾಡುವ ಹಾವು,
ನಾಲ್ಕರ ಅತಿಮಥನ ಬಿಟ್ಟು ಒಂದೆ ಗೂಡಿನಲ್ಲಿ ಅಡಗಿದವು.
ಆ ಚತುಷ್ಟಯದ ಅಂಗದ ಭೇದವನರಿತಲ್ಲಿ
ಸದಾಶಿವಮೂರ್ತಿಲಿಂಗವು ತಾನೆ. /309