Categories
ವಚನಗಳು / Vachanagalu

ಆದಯ್ಯನ ವಚನಗಳು

ಅಂಗ ಲಿಂಗವಾದಡದ್ಭುತಕ್ಕಾಳಪ್ಪುದೆ?
ಮನ ಲಿಂಗವಾದರೆ ನಿಚ್ಚನಿಚ್ಚ ಲಯವಪ್ಪುದೆ?
ಪ್ರಾಣ ಲಿಂಗವಾದಡೆ ಪ್ರಕೃತಿಯ ತಳೆವುದೆ?
ಅರಿವು ಲಿಂಗವಾದರೆ ಮರಹಿಂಗೊಳಗಹುದೆ?
ಭಾವ ಲಿಂಗವಾದಡೆ ಸಕಲವಿಷಯಂಗಳಿಗೆ ಭ್ರಮಿಸುವುದೆ?
ಜ್ಞಾತೃ ಜ್ಞಾನ ಜ್ಞೇಯ ಲಿಂಗವಾದರೆ
ಅರಿವುದೇನು ಅರಿಹಿಕೊಂಬುದೇನು?
ಇವು ತಾ ತಮ್ಮಂತೆ, ಸೌರಾಷ್ಟ್ರ ಸೋಮೇಶ್ವರಲಿಂಗ ಮುನ್ನಿನಂತೆ./1
ಅಂಗದ ಕಳವಳ, ಮನದ ಸಂಚಲ, ಭಾವದ ಭ್ರಾಂತು,
ಅರುವಿನ ಮರಹು, ಭಕ್ತಿಯ ಭಿನ್ನ, ಜ್ಞಾನದ ಕಳಂಕು
ಪ್ರಾಣನ ಪ್ರಕೃತಿ, ಸ್ಥಾನಮಾನವೆಂಬ ಲಕ್ಷ, ಇಹಪರಂಗಳ ತೃಷ್ಣೆ,
ಭವರೋಗಂಗಳ ಬಂಧ, ಇಂದ್ರಿಯಂಗಳಿಚ್ಛೆ,
ತಾಪತ್ರಯಂಗಳ ಸುಖದುಃಖ,
ಮಲತ್ರಯಂಗಳಾಸೆ, ಪಂಚಮಲಂಗಳ ಸಂಚ,
ಅಷ್ಟಮದಂಗಳ ಘಟ್ಟಿ, ಷಡೂರ್ಮಿಗಳ ವಿಕಾರ
ಇಂತಪ್ಪ ಅಖಿಳದೊಳು ಸಿಲುಕದ ಅಕಳಂಕರಪ್ಪ,
ಸಮ್ಯಜ್ಞಾನ, ಸಹಜಸಮಾಧಾನಯೋಗದೊಳಿರ್ಪ,
ಮಹಾಶರಣರ ತೋರಿಸಿ ಬದುಕಿಸಾ,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ ನಿಮ್ಮ ಧರ್ಮ./2
ಅಂಗದ ಕಳೆ ಲಿಂಗಸಂಗವಾಗಿ, ಅಂಗವೆಂಬ ಶಂಕೆಯ ಭಂಗವ ತೊರದು.
ಲಿಂಗಾಂಗಸಂಗವೆಂಬ ಸಂದ ಮೀರಿ
ಪರಮಪ್ರಕಾಶದಿಂದ ಬೆಳಗುವ ಸ್ವಯಂಜ್ಯೋತಿ
ನಿಜದಲ್ಲಿ ನಿಂದು ತನ್ಮಯವಾದ
ಪರಮಲಿಂಗಕಾಯರು ಸಚ್ಚರಿತ್ರ ನಿಶ್ಚಿಂತರು,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು./3
ಅಂಗದ ಮೇಲಣ ಲಿಂಗ ಅಂಗದಲ್ಲಿ ಪೂರ್ಣವಾಗಿ
ತನುಗುಣವಳಿಯಿತ್ತು.
ಮನದ ಮೇಲಣ ಲಿಂಗ ಮನದಲ್ಲಿ ಪೂರ್ಣವಾಗಿ
ನೆನಹಿನ ಸಂಕಲ್ಪ ಕೆಟ್ಟಿತ್ತು.
ಪ್ರಾಣದ ಮೇಲಣ ಲಿಂಗ ಪ್ರಾಣದಲ್ಲಿ ಪೂರ್ಣವಾಗಿ
ಪ್ರಾಣನ ಪ್ರಕೃತಿ ನಷ್ಟವಾಯಿತ್ತು.
ಭಕ್ತಿ-ಜ್ಞಾನ ಲಿಂಗಸನ್ನಿಹಿತವಾಗಿರಬಲ್ಲರಾಗಿ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು ಸ್ವತಂತ್ರರು./4
ಅಂಗದ ಮೇಲಣ ಲಿಂಗ ಹಿಂಗಿದಾತ ಭವಿ ಎಂಬರು.
ಅಂಗದ ಮೇಲಣ ಲಿಂಗ ಹಿಂಗದಾತನ ಭಕ್ತನೆಂಬರು.
ಅಂಗದೊಳಗೆ ಬೆರಸಿರ್ಪ ಲಿಂಗದ ಹೊಲಬನಾರೂ ಅರಿಯರು.
ಆ ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿವುದೆ?
ಅಂಗದೊಳಗಣ ಲಿಂಗ ಹಿಂಗದೆ ಆರಾಧಿಸಬಲ್ಲಡೆ ಹಿಂಗುವದು ಭವಮಾಲೆ
ಸೌರಾಷ್ಟ್ರ ಸೋಮೇಶ್ವರಾ./5
ಅಂಗದ ಮೇಲೆ ಶಿವಲಿಂಗಸಾಹಿತ್ಯವಿಲ್ಲದ ಅಂಗ
ಅನೇಕ ಅಘೋರಪಾಪಕ್ಕೆ ಅವಕಾಶವಾಗಿಪ್ಪುದಯ್ಯಾ.
ಇದಕ್ಕೆ ಶ್ರುತಿ: “ಯಾ ತೇ ರುದ್ರ ಶಿವಾ ತನೂರಘೋರಪಾಪಕಾಶಿನೀ
ಇದು ಕಾರಣ ಗುರುಕಾರುಣ್ಯವ ಪಡೆದು
ಲಿಂಗಾನುಗ್ರಹಕನಾದ ಪ್ರಾಣಲಿಂಗಸಂಬಂಧಿಯೇ ಶಿವೈಕ್ಯನು.
ಅಂತಪ್ಪ ಶಿವೈಕ್ಯಂಗೆ ಅಧರ್ಮವೇ ಧರ್ಮ,
ವಿಷವೇ ಪಥ್ಯ, ಅರಿಯೇ ಮಿತ್ರರು.
ಅಂದೆಂತೆದಡೆ: ಅರಿರ್ಮಿತ್ರಂ ವಿಷಂ ಪಥ್ಯಂ ಅಧರ್ಮೋ ಧರ್ಮತಾಂ ವ್ರಜೇತ್
ಪೂಜಿತೇ ಪಾರ್ವತೀನಾಥೇ ವಿಪರೀತೇ ವಿಪರ್ಯಯಃ
ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರಿಗೆ
ಸರಿಯಿಲ್ಲವಾಗಿ ಅಪ್ರತಿಮರು. /6
ಅಂಗದ ಮೇಲೆ ಸಾಕಾರವಿಡಿದು
ಮಂತ್ರಾಹ್ವಾನಂಗಳಿಂದಷ್ಟವಿಧಾರ್ಚನೆ ಷೋಡಶೋಪಚರಿಯಂಗಳಿಂ
ವ್ಯಾಪಿಸಿಕೊಂಬುದೆ ಇಷ್ಟಲಿಂಗ.
ಆ ಇಷ್ಟಲಿಂಗಕ್ಕೆ ಆಶ್ರಯವಾಗಿ
ಚತುರ್ದಶೇಂದ್ರಿಯಂಗಳಲ್ಲಿ ತನ್ಮುಖವಾಗಿ
ಸರ್ವೇಂದ್ರಿಯಂಗಳಿಗೆ ಚೈತನ್ಯವಾಗಿ
ಪ್ರಾಣನಲ್ಲಿ ಪರಿಪೂರ್ಣನಾಗಿಪ್ಪುದೇ ಪ್ರಾಣಲಿಂಗ.
ಆ ಪ್ರಾಣಲಿಂಗಕ್ಕೆ ಆದಿಯಾಗಿ
ಭಾವಭ್ರಮೆಗಳು ನಷ್ಟವಾಗಿ
ಅನುಭಾವದಲ್ಲಿ ಲೀನವಾಗಿ
ಭಾವ ಸದ್ಭಾವ ನಿರ್ಭಾವವೆಂಬ ಭಾವತ್ರಯಂಗಳಲ್ಲಿ ಭರಿತವಾಗಿ
ಭಾವ ಬ್ರಹ್ಮವೆಂಬ ಭೇದವಿಲ್ಲದೆ
ಸನ್ನಿಹಿತಭಾವದಿಂದಿಪ್ಪುದೇ ಭಾವಲಿಂಗ.
ಇಂತೀ ಮೂರು ಲಿಂಗದ ಮೂಲ, ಆರು ಲಿಂಗದ ಅಂತ್ಯವನೊಳಕೊಂಡು
ಮಾರ್ಗಕ್ರೀ ನಿಃಕ್ರೀಯಾಗಿ, ಧ್ಯಾನ ನಷ್ಟವಾಗಿ,
ಮಂತ್ರ ಗೋಪ್ಯವಾಗಿ, ಜ್ಞಾನ ಶೂನ್ಯವಾಗಿ, ಭಾವ ದಿಗಂಬರವಾಗಿ,
ಘನಕ್ಕೆ ಘನವಾದ ಪರಬ್ರಹ್ಮವು ತಾನೆ ಸೌರಾಷ್ಟ್ರ ಸೋಮೇಶ್ವರ./7
ಅಂಗದಂತೆ ಲಿಂಗವಾಗಿರ್ದ ದೇಹ,
ಲಿಂಗದಂತೆ ಅಂಗವಾಗಿರ್ದ ದೇಹ, ಈ ಕಾಯದ್ವಯಂಗಳಿಗೆ
ಅಂಗಕಳಾ ಲಿಂಗಕಳಾ ಪ್ರಭಾವ ಒಂದಾಗಿ,
ತನುವಿನ ಕೈಮುಟ್ಟಿ ಪ್ರಾಣಲಿಂಗ ಜಂಗಮದಾಸೋಹ ಮಾಡುತ್ತಿರಲು,
ಆ ಜಂಗಮದ ಸ್ಥೂಲಪ್ರಾಸಾದವೆ ಬಸವಣ್ಣನ ಸಾಕಾರ.
ಅಂತಪ್ಪ ಸಾಕಾರವನರಿವುತ್ತಿದ್ದರಿವು
ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾಗಿ
ನೆನೆವುತ್ತ ನೆನೆವುತ್ತ ನೆನೆಯದಂತಿರ್ದೆನಯ್ಯಾ/8
ಅಂಗದಲ್ಲಿ ಲಿಂಗವಿರಲು ಎನ್ನ ತನು ನಿರ್ಮಲವಾಯಿತ್ತು,
ಮನದಲ್ಲಿ ಅರಿವಿರಲು ಎನ್ನ ಮನ ನಿರ್ಮಲವಾಯಿತ್ತು,
ಪ್ರಾಣದಲ್ಲಿ ಪ್ರಸಾದವಿರಲು ಎನ್ನ ಪ್ರಾಣ ನಿರ್ಮಲವಾಯಿತ್ತು.
ಪಂಚೇಂದ್ರಿಯಂಗಳಲ್ಲಿ ಪಂಚಲಿಂಗವೆಡೆಗೊಂಡಿರಲು
ಇಂದ್ರಿಯಂಗಳು ನಿರ್ಮಲವಾದವು.
ಸೌರಾಷ್ಟ್ರ ಸೋಮೇಶ್ವರನ, ಶರಣರ ಸಂಗದಿಂದ
ಶಿವಪ್ರಸಾದ ದೊರೆಕೊಂಡಿತ್ತಾಗಿ ಸರ್ವಾಂಗಲಿಂಗವಾಯಿತ್ತು. /9
ಅಂಗದಾಸೆಯುಳ್ಳನ್ನಕ್ಕ ಭಯ ಬಿಡದು ನೋಡಾ ಅಯ್ಯಾ.
ಜೀವನ ಭ್ರಾಂತುಳ್ಳನ್ನಕ್ಕ ಪ್ರಕೃತಿ ಹಿಂಗದು ನೋಡಾ ಅಯ್ಯಾ.
ಮನದ ಸಂಚಲ ಉಳ್ಳನ್ನಕ್ಕ ಕರ್ಮವಳಿಯದು ನೋಡಾ ಅಯ್ಯಾ.
ಕಾಮಾದಿ ಭೋಗಂಗಳುಳ್ಳನ್ನಕ್ಕ ಪುಣ್ಯಪಾಪಂಗಳು ತೊಲಗವು ನೋಡಾ ಅಯ್ಯಾ.
ಇಹಪರಂಗಳ ಸಾರುವನ್ನಕ್ಕ ಭವ ಹಿಂಗದು ನೋಡಾ ಅಯ್ಯಾ.
ಆನೆಂಬುದುಳ್ಳನ್ನಕ್ಕ ನೀನೆಂಬುದು ಬಿಡದು ನೋಡಾ ಅಯ್ಯಾ.
ಸೌರಾಷ್ಟ್ರ ಸೋಮೇಶ್ವರಾ,
ತಾನೆಂಬನ್ನಕ್ಕ ಲಿಂಗಸಾಹಿತ್ಯವಿಲ್ಲ ನೋಡಾ ಅಯ್ಯಾ./10
ಅಂಗಲಿಂಗ ಮನಲಿಂಗ ಪ್ರಾಣಲಿಂಗ ಭಾವಲಿಂಗ
ಜ್ಞಾತೃ ಜ್ಞಾನ ಜ್ಞೇಯ ಲಿಂಗ
ಇದಕ್ಕೆ ಶ್ರುತಿ: ಓಮಿದಂ ದೇವಾನಾಮಿದಂ ಸರ್ವಾನಾಮಿದಂ ಆತ್ಮಮಯಂ ದೇವಾಃ
ಓಂ ಚ ಮೇ ಶರಶ್ಚ ಮೇ ಭಯಂಚ ಮೇ ವಚಶ್ಚ ಮೇ
ಶ್ವಸನಂಚ ಮೇ ಶಿಖರಂಚ ಮೇ ಶೈಲಂಚ ಮೇ ವ್ರೀಹಿಶ್ಚ ಮೇ
ತಿಲಂಚ ಮೇ ಹೇಮಚ ಮೇ ವಿದುಂಚ ಮೇ ಪೂಷಂಚ ಮೇ
ತೃಣಂಚ ಮೇ ಧಾತೃಂಚ ಮೇ ಭೋಕ್ತೃಂಚ ಮೇ ಜ್ಞಾತೃಂಚ ಮೇ ಜ್ಞೇಯಂಚ ಮೇ
ದೇಹಶ್ಚ ಮೇ ಆತ್ಮಂಚ ಮೇ ಅಖಿಲಂಚ ಮೇ
ಇತ್ಯನ್ಯೋನ್ಯಂ ಉಪಯುಕ್ತೇ ವ್ಯತಿರಿಕ್ತಂ ತಸ್ಮೈ ತೇ ನಮಃ
ಇಂತೆಂದುದಾಗಿ
ಶಿವ ಸರ್ವಾವಯವವಾದ ಸರ್ವಾಂಗಲಿಂಗಿಗಳನೆನಗೊಮ್ಮೆ ತೋರಿಸಾ
ಸೌರಾಷ್ಟ್ರ ಸೋಮೇಶ್ವರಾ./11
ಅಂಗಲಿಂಗರತಿಯಿಂದ ಆಯತವಾಯಿತ್ತು,
ಪ್ರಾಣಲಿಂಗರತಿಯಿಂದ ಸ್ವಾಯತವಾಯಿತ್ತು,
ಭಾವಲಿಂಗರತಿಯಿಂದ ಸನ್ನಿಹಿತವಾಯಿತ್ತು.
ಇಂತು ಆಯತ ಸ್ವಾಯತ ಸನ್ನಹಿತ
ಇಂತೀ ತ್ರಿವಿಧವೊಂದಾದ ಬಳಿಕ
ಕೊಟ್ಟುಕೊಂಬ ಉಪಚರಿಯಕ್ಕೆ ಇಂಬಿಲ್ಲ,
ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ./12
ಅಂಗವು ಲಿಂಗವೇಧೆಯಾದ ಬಳಿಕ
ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ
ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು. /13
ಅಂಗವೆ ಲಿಂಗ, ಲಿಂಗವೆ ಅಂಗವೆಂದೆಂಬರು.
ಅಂಗವು ಲಿಂಗವೆ? ಲಿಂಗಕ್ಕೆ ಅಂಗವುಂಟೆ?
ಅದು ತಾ ನಾಮ ರೂಪು ಕ್ರೀಯೆ ಇಲ್ಲವಾಗಿ.
ಮಾತು ಮನ ನಿಲುಕದ ಲಿಂಗವು
ಅಂಗವಪ್ಪುದು ಮಿಥ್ಯ ಕಾಣಾ, ಸೌರಾಷ್ಟ್ರ ಸೋಮೇಶ್ವರಾ./14
ಅಂಗವೆಂಬ ಅಂಗನೆ ಆತ್ಮನೆಂಬ ಪುರುಷನನಪ್ಪಿ
ಮುಂಡೆತನವಿಲ್ಲದೆಯಿಪ್ಪ ಭೇದವ ತಿಳಿದು ನೋಡಿರಣ್ಣಾ.
ಕುಂಟಣಿಯಾದ ಒಡಹುಟ್ಟಿದ ಮನ ನಪುಂಸಕನಾದ ಕಾರಣ
ಲಿಂಗಸಂಗಿಯಲ್ಲದೆ ಹೋದ ಕೇಳಿರಣ್ಣಾ.
ಆತ್ಮನು ಪುರುಷನಾದಡೂ ಲಿಂಗವ ಕೂಡುವ ಭರದಿಂದ ಸತಿಯಾಗಬಲ್ಲ.
ಶರಣಸತಿ ಲಿಂಗಪತಿಯೆಂಬುದುಂಟಾಗಿ,
ಶಿವಜ್ಞಾನವೆಂಬ ಸಖಿಯ ಕೈವಿಡಿದು
ಸೌರಾಷ್ಟ್ರ ಸೋಮೇಶ್ವರಲಿಂಗವ ಕೂಡಿ ಸುಖಿಯಾದನು./15
ಅಂಗಸುಖಿಗೆ ಲಿಂಗಸುಖವಳವಡದು,
ಲಿಂಗಸುಖಿಗೆ ಅಂಗಸುಖವಿಂಬುಗೊಳದು.
ವಾಗಾದ್ವೈತ, ಕ್ರಿಯಾದ್ವೈತ, ಭಾವಾದ್ವೈತ
ಇಂತೀ ತ್ರಿವಿಧಾದ್ವೈತ ಲಿಂಗಸುಖಸಾಹಿತ್ಯವಾದಲ್ಲಿ,
ನರಕವಿಲ್ಲ, ಸ್ವರ್ಗವಿಲ್ಲ, ಕರ್ಮವಿಲ್ಲ, ಭವವಿಲ್ಲ, ಮರಣವಿಲ್ಲ, ಫಲವಿಲ್ಲ,
ಪದವಿಲ್ಲ, ಇಹವಿಲ್ಲ, ಪರವಿಲ್ಲ.
ಸೌರಾಷ್ಟ್ರ ಸೋಮೇಶ್ವರಾ, ನೀ ಸಾಕ್ಷಿಯಾಗಿ
ಅಂಗಸುಖಿಗೆ ಲಿಂಗಸುಖ ದೊರಕೊಳ್ಳದು./16
ಅಂಗೈಯೊಳಗಣ ಹಂಸೆ ಹಾಲನೊಲ್ಲದೆ ನೀರ ಕುಡಿಯಿತ್ತು.
ನೀರು ಬಾಯಾರಿ ನೀರಡಿಸಿ ಅರಕೆಗೊಂಡಿತ್ತು.
ಅರಗಿನ ಮಾಡ ಉರಿಯುಂಡು ಗರಿಗತವಾಯಿತ್ತು.
ಕರ್ಪುರದ ಮಾಡ ಅಗ್ನಿಯನೊಳಕೊಂಡು ಉರಿಯದು ನೋಡಾ,
ಸೌರಾಷ್ಟ್ರ ಸೋಮೇಶ್ವರಾ./17
ಅಂತರಂಗದ ಆತ್ಮಜ್ಯೋತಿ ಬಹಿರಂಗವ ಮುಟ್ಟಿ
ಮುಟ್ಟದು ನೋಡಾ.
ಓದುವಾದಿಂಗೆ ನಿಲುಕದು, ಶ್ರತಿಸ್ಮೃತಿಗಳಿಗೆ ಅಳವಡದು ನೋಡಯ್ಯಾ.
ಸೌರಾಷ್ಟ್ರ ಸೋಮೇಶ್ವರಲಿಂಗದ
ಅನುಸಂಧಾನದಲ್ಲಿ ನಿಂದುದು ನೋಡಾ. /18
ಅಂದಿನವರು! ಇಂದಿನವರು! ಎಂಬ ಸಂದೇಹಿಗಳಿಗೆ
ಸಂದೇಹ ಮುಂದುಗೊಂಡಿಪ್ಪುದು ನೋಡ!
ಅಂದೊಂದು ಪರಿ, ಇಂದೊಂದು ಪರಿಯೆ?
ಗುರುಲಿಂಗಜಂಗಮ ಅಂದೊಂದು ಪರಿ, ಇಂದೊಂದು ಪರಿಯೆ?
ಪಾದೋದಕ ಪ್ರಸಾದ ಅಂದೊಂದು ಪರಿ, ಇಂದೊಂದು ಪರಿಯೆ?
ಶರಣಲಿಂಗಸಂಬಂಧ ಅಂದೊಂದು ಪರಿ, ಇಂದೊಂದು ಪರಿಯೆ?
ಅರಿವು ಆಚರಣೆ ಅಂದೊಂದು ಪರಿ, ಇಂದೊಂದು ಪರಿಯೆ?
ಸ್ಥಲಕುಲಂಗಳು ಅಂದೊಂದು ಪರಿ, ಇಂದೊಂದು ಪರಿಯೆ?
ಸೌರಾಷ್ಟ್ರ ಸೋಮೇಶ್ವರಲಿಂಗವು ಅಂದೊಂದು ಪರಿ,
ಇಂದೊಂದು ಪರಿಯೆ?
/19
ಅಕಲ್ಪಿತ ಲಿಂಗವು ಕಲ್ಪಿತಕ್ಕೆ ಬಂದು
ತ್ರಿವಿಧಭೇದದಿಂದನ್ಯವಿಲ್ಲೆನಿಸಿ, ತ್ರಿಗುಣವೆಂಬ ತ್ರಿಪಾದಮಯನಾಗಿ
ತ್ರಿಪಾದದಲ್ಲಿ ಹೊಂದದೆ ತ್ರಿವಿಧಕ್ಕತೀತವಾಗಿಹುದೆಂಬುದಕ್ಕೆ
ಶ್ರುತಿ: `ತ್ರಿಪಾದಸ್ಯಾಮೃತಂ ದಿವಿ ತ್ರಿಪಾದೂಧ್ರ್ವಮಕಲ್ಪಯೇತ್
ಎಂದುದಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗವು ಕಲ್ಪಿತಕ್ಕೆ ಅತ್ತತ್ತಲೆ. /20
ಅಖಂಡಿತನಾದ ಬ್ರಹ್ಮ ಸೂಕ್ಷ್ಮ ಸುನಾದದ ಬೆಳಗು,
ಸುಜ್ಞಾನಪ್ರಭೆಯನೊಡಗೂಡಿ ಅತಕ್ರ್ಯವಾಯಿತ್ತು.
ಕಡೆಮೊದಲಿಲ್ಲದರಿವು ಸೌರಾಷ್ಟ್ರ ಸೋಮೇಶ್ವರಲಿಂಗವ ತೋರಿ,
ಜನನಮರಣವ ಬಿಡಿಸಿತ್ತು./21
ಅಗಣಿತನದ್ವಯನನುಪಮನಪ್ಪ
ಅಭವಂಗೆ ಭವರಹಿತನಾಗಿ ಭಕ್ತಿಯ ಮಾಡಬೇಕಲ್ಲದೆ,
ತಾನು ಭವದೊಳ್ಬಿರ್ದು, ಬಂಧನಕ್ಕೊಳಗಾಗಿ, ಮತ್ರ್ಯರಿಗೆ ತೊತ್ತಾಗಿ,
ಮಾಯಾಪಾಶದ ಕಾಲಕಣ್ಣಿಯೊಳು ಸಿಕ್ಕಿ,
ಕಾಮಂಗೆ ಗುರಿಯಾಗಿ, ಕಾಲಂಗೆ ಕೈವಶವಾಗಿ,
ಮಾಡುವ ಭಕ್ತಿಗೆ ನಾಚರು ನೋಡಾ.
ಸೊಣಗನ ಹಿಂದೆ ಸೊಣಗ ಹರಿದಂತಾಯಿತ್ತಯ್ಯಾ,
ಸೌರಾಷ್ಟ್ರ ಸೋಮೇಶ್ವರಾ./22
ಅಜಕಲ್ಪನೆಗೊಳಗಾದ ಊರೊಳಗೆ
ಮುನ್ನೂರು ಅರುವತ್ತು ಮಂದಿ ಅಸಾಸುರರು
ನಿಚ್ಚ ನಿಚ್ಚ ಊರಿಗುಪಟಳ ಮಾಡುತ್ತಿರ್ದರಲ್ಲಯ್ಯಾ.
ಅಚ್ಯುತನ ಆಜ್ಞೆಯಲ್ಲಿ ಅಡಗಿದ ಕಪಿಯೊಳಗೆ ಬಾವನ್ನ ವೀರರು ಮುಳುಗಿ
ಬಂಧಮೋಕ್ಷಂಗಳ ಬಗೆವುತಿರ್ದರಲ್ಲಯ್ಯಾ.
ಮೇಲೆ ರುದ್ರನೂಳಿಗದ ದಾಳಿ ಹತ್ತಿ ಘೋಳಿಟ್ಟು ಹಾಳಾಯಿತಲ್ಲಾ,
ಮೂರು ಲೋಕವೆಲ್ಲ.
ಇಂತೀ ಮೂವರ ಮುಂದುಗೆಡಿಸಿ ಅಯಿವತ್ತಿಬ್ಬರನಣಕಿಸಿ
ಮೂನ್ನೂರ ಅರುವತ್ತು ಮಂದಿ ಅಸಾಸುರರನಡಿಗದ್ದಿದ ಸ್ವತಂತ್ರರು
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು./23
ಅಜಾಂಡ ಪಿಂಡಾಂಡ ಚಿದ್ಬ್ರಾಂಡವೆಂಬ ತ್ರಿಭಾಂಡದೊಳಗೆ
ಸುರರು ನರರು ಮುಕ್ತರೆಂಬವರೆಲ್ಲಾ ಅಡಗಿದರಾಗಿ,
ಅಖಂಡಿತ ಪರಿಪೂರ್ಣಭಾಂಡವೆ ತಾನೆಂದರಿದರಿವೇ ತಾನಾಗಿ
ಸೌರಾಷ್ಟ್ರ ಸೋಮೇಶ್ವರಲಿಂಗನೆಂಬ ಲಿಂಗ ಬೇರಿಲ್ಲ. /24
ಅತಕ್ರ್ಯ ಅಪ್ರಮಾಣ ಅನಾಮಯ ಅನುಪಮ ಸರ್ವಗತ
ಸರ್ವಜ್ಞ ಸವರ್ೇಶ್ವರನಪ್ಪ ಪರಶಿವನು
ಜಗತ್ಸೃಷ್ಟ್ಯರ್ಥವಾಗಿ ಸಮಸ್ತತತ್ವಂಗಳುತ್ಪತ್ತಿಗೆ ಮೂಲಿಗನಾಗಿ
ತನ್ನಿಚ್ಛೆಯ ನೆನಹೆಂಬ ಚಿಂತಾಶಕ್ತಿಯ ಸಹಸ್ರದೊಳೊಂದಂಶದಲ್ಲಿ
ಕುಂಡಲಿನಿಯಪ್ಪ ಪರೆ ಜನಿಸಿತ್ತು.
ಆ ಪರಶಿವನಪ್ಪ ನಿಷ್ಕಲಬ್ರಹ್ಮವು ಈ ಕುಂಡಲಿನಿಯು
[ತಾದಾತ್ಯ]ದಿಂ ಭಿನ್ನವಿಲ್ಲದಿಹುದೆ ಸಕಲ ನಿಷ್ಕಲವಪ್ಪ ಸದಾಶಿವನು.
ಆ ಸದಾಶಿವನು ತಾನೆ ಸಾದಾಖ್ಯದಿಂ ಪಂಚಬ್ರಹ್ಮಮೂರ್ತಿಯಾದುದು.
ಎಂತೆಂದೊಡೆ: ಆ ಕುಂಡಲಿನಿಯಪ್ಪ ಪರೆಯ ಸಹಸ್ರದೊಳೊಂದಂಶಂದಲ್ಲಿ ಆದಿಶಕ್ತಿ ಜನಿಸಿತ್ತು.
ಆದಿಶಕ್ತಿಯ ಸಹಸ್ರದೊಳೊಂದಂಶದಲ್ಲಿ ಇಚ್ಛಾಶಕ್ತಿ ಜನಿಸಿತ್ತು.
ಇಚ್ಛಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಜ್ಞಾನಶಕ್ತಿ ಜನಿಸಿತ್ತು.
ಜ್ಞಾನಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕ್ರಿಯಾಶಕ್ತಿ ಜನಿಸಿತ್ತು.
ಆ ನಿಷ್ಕಲವಪ್ಪ ಶಿವನ ನಿಷ್ಕಲೆಯಪ್ಪ ಕುಂಡಲಿನಿಯಪ್ಪ ಪರೆಯ
ಹತ್ತರೊಳೊಂದಂಶದಲ್ಲಿ ಶಿವಸಾದಾಖ್ಯ ಜನಿಸಿತ್ತು.
ಆದಿಶಕ್ತಿಯ ಹತ್ತರೊಳೊಂದಂಶದಲ್ಲಿ ಅಮೂರ್ತಿಸಾದಾಖ್ಯ ಜನಿಸಿತ್ತು.
ಇಚ್ಛಾಶಕ್ತಿಯ ಹತ್ತರೊಳೊಂದಂಶದಲ್ಲಿ ಮೂರ್ತಿಸಾದಾಖ್ಯ ಜನಿಸಿತ್ತು.
ಜ್ಞಾನಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ತೃಸಾದಾಖ್ಯ ಜನಿಸಿತ್ತು.
ಕ್ರಿಯಾಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ಮಸಾದಾಖ್ಯ ಜನಿಸಿತ್ತು.
ಆ ಕರ್ಮಸಾದಾಖ್ಯವಪ್ಪ ಮಾಹೇಶ್ವರನು ಸಕಲಸ್ವರೂಪದಿಂ
ಸೋಮಧರ ಮೊದಲಾದ ಲಿಂಗೋದ್ಭವ ಕಡೆಯಾದ
ಪಂಚವಿಂಶತಿಲೀಲೆಯ ತಾಳ್ದ ಸಕಲವಪ್ಪ ಮಾಹೇಶ್ವರನು
ಸಕಲನಿಷ್ಕಲವಪ್ಪ ಸದಾಶಿವನು
ನಿಷ್ಕಲವಪ್ಪ ಶಿವನೊಬ್ಬನಲ್ಲದೆ ಬೇರಲ್ಲವೆಂಬುದಕ್ಕೆ
`ತತ್ಪರಂ ಬ್ರಹ್ಮೇತಿ, ಸ ಏಕೋ ರುದ್ರಸ ಈಶಾನಸ್ಸ ಭಗವಾನ್ ಶ್ರುತಿ: ಸ ಮಹೇಶ್ವರಸ್ಸ ಮಹಾದೇವ ಇತಿ
ಇಂತೆಂದುದಾಗಿ,
ಏಕಮೇವ ಅದ್ವಿತೀಯನಪ್ಪ ಸೋಮಧರನು, ಉಮಾಸಹವಾದ
ಸೋಮನಿಂದ ವಾಯು, ಅಗ್ನಿ, ಪೃಥ್ವಿ, ರವಿ ಮೊದಲಾದ ಅಷ್ಟಮೂರ್ತಿಗಳು
ದೇವರ್ಕಳು ಸುರಪ ಹರಿವಿರಿಂಚಿಗಳು ಜನಿಸಿದುದಕ್ಕೆ
ಶ್ರುತಿ:ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ
ಪೃಥಿವ್ಯಾರ್ಜನಿತಾಗ್ನಿ ಸೂರ್ಯಸ್ಯ ಜನಿತೇಂದ್ರಸ್ಯ ಜನಿತಾಥ ವಿಷ್ಣೋಃ
ಎಂದುದಾಗಿ,
ತನ್ಮಹೇಶ್ವರಕೋಟ್ಯಂಶ ಬ್ರಹ್ಮವಿಷ್ಣುಸಮುದ್ಭವಂ
ಋಷಯಃ ಕೃತವೋ ಕೋಟಿರ್ನಿಮಿಷೇಣ ಸಮುದ್ಭವಂ
ಎಂದುದಾಗಿ,
ಅಷ್ಟತನುವಿನೊಳಗಾದ ಜಗದ ರಚನೆ ಆರಿಂದ ರಚಿಸಿತ್ತು?
ಅಧಿಕಾರ ಲಯ ಭೋಗಕ್ಕೆ ಅವನೊರ್ವ ಕರ್ತನು
ಸೃಷ್ಟಿ, ಸ್ಥಿತಿ, ಸಂಹೃತಿ ತಿರೋಧಾನಾನುಗ್ರಹವಾವನಿಂದಹುದು;
ಸರ್ವಜ್ಞತ್ವ ಕರ್ತೃತ್ವ ಅನಾದಿಬೋಧತ್ವ ಸ್ವತಂತ್ರತ್ವ
ನಿತ್ಯತ್ವ ಅಲುಪ್ತಶಕ್ತಿತ್ವವಾವಗುಂಟು,
ಆ ಶಿವನೆ ಘೃತಕಾಠಿಣ್ಯದಂತೆ, ನೀರಾಲಿಕಲ್ಲಂತೆ,
ಸಕಲ ಸಕಲನಿಷ್ಕಲ ನಿಷ್ಕಲವಾದವನು,
ಸೌರಾಷ್ಟ್ರ ಸೋಮೇಶ್ವರಲಿಂಗನೊಬ್ಬನೆ ಕಾಣಿರೆ. /25
ಅತ್ಯತಿಷ್ಠದ್ದಶಾಂಗುಲವೆಂದೆಂಬಿರಿ,
ಅತ್ಯವಾವುದು? ತಿಷ್ಠವಾವುದು? ದಶಾಂಗುಲವಾವುದು?
ಬಲ್ಲಡೆ ನೀವು ಹೇಳಿರೇ.
ವಾಙ್ಮನಾತೀತವೆಂದೆಂಬಿರಿ,
ವಾಗಾವುದು? ಮನವಾವುದು? ಅತೀತವಾವುದು?
ಬಲ್ಲಡೆ ನೀವು ಹೇಳಿರೇ.
ಲಿಂಗಸಂಗಸಯಸುಖವೆಂದೆಂಬಿರಿ,
ಲಿಂಗವಾವುದು? ಸಂಗವಾವುದು? ಸಯಸುಖವಾವುದು?
ಬಲ್ಲಡೆ ನೀವು ಹೇಳಿರೇ.
ಅನುಭಾವಗೋಷ್ಠಿಯ ಪ್ರಸಂಗದಿಂದ
ಅನುವಿದು ಭಾವವಿದು ಗೋಷ್ಠಿಯಿದು
ಪರವಿದು ಸಂಗವಿದೆಂದರಿತು,
ಶ್ರುತಿಜ್ಞಾನ ಮತಿಜ್ಞಾನ ಸಮ್ಯಜ್ಞಾನ
ಪೈಶಾಚಿಕಜ್ಞಾನಂಗಳನತಿಗಳೆದು,
ಶಿವಜ್ಞಾನ ಸಯಜ್ಞಾನ ಸಮ್ಯಜ್ಞಾನ
ಅವಧಿಜ್ಞಾನ ಪರಮಜ್ಞಾನದಿಂ ಪರವಶವಾಗಿಪ್ಪುದೆ
ಕೇವಲಜ್ಞಾನದ ನಿಲರ್ೇಪ ಕಾಣಾ, ಸೌರಾಷ್ಟ್ರ ಸೋಮೇಶ್ವರಾ./26
ಅದ್ವೈತನ ಹಸ್ತದಲ್ಲಿ ಅಪ್ರತಿಮನೆಂಬ ಲಿಂಗವಿದ್ದಿತ್ತು,
ಅಖಂಡಿತವೆಂಬ ಪೂಜೆಯಾಯಿತ್ತು,
ಅನಾಕುಳವೆಂಬ ಭಕ್ತಿ ದೊರೆಕೊಂಡು
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅಭಿನ್ನವಾಯಿತ್ತು. /27
ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ.
ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ,
ಭಾವದ ಭ್ರಾಂತು, ಅರಿವಿನ ಮರಹು,
ಇಂತೀ ಚತುರ್ವಿಧಂಗಳಲ್ಲಿ ವಿದಿನಿಷೇಧಂಗಳಳಿದು,
ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ.
ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ,
ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ.
ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ,
ಹರಿಹರಬ್ರರ್ಹದಿಗಳನರಿಯದ
ವೇದಶಾಸ್ತ್ರ ಆಗದು ಪುರಾಣ ಇತಿಹಾಸ ರಹಸ್ಯಛಂದಸ್ಸು
ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ
ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ
ಸ್ವಯಾದ್ವೈತಿ ತಾನೆ ಸೌರಾಷ್ಟ್ರ ಸೋಮೇಶ್ವರ./28
ಅಧೋಮುಖದಷ್ಟದಳಕಮಲದಲ್ಲಿ
ಹಂಸಗತಿ ಮನದ ನಡೆವಳಿಯಿಂದ ದಿಗ್ವಳಯದ ಅಷ್ಟಗುಣಯುಕ್ತವಾಗಿಹನು.
ಇದಲ್ಲದೆ ಮತ್ತೆಯು ನಿಧನ ನಿದ್ರೆ ಚಿಂತೆ ಲಜ್ಜೆ ಕ್ಷುಧೆ
ತೃಷೆ ವಿಷಯ ಆಧಿವ್ಯಾಧಿದ್ಯೂತೋದ್ಯೋಗ ದಾಹ
ಶೋಷ ರತಿ ಸ್ವೇದ ಕೋಪ ಶೋಕ ಉದ್ಬ್ರಮೆ ಭಯ ಎಂಬ
ಹದಿನೆಂಟು ದೋಷಾವರಣನಾಗಿ ಅಜ್ಞಾನದಿಂ ತಿರುಗುವ ಜೀವನು
ಶ್ರುತಗುರು ಸ್ವಾನುಭಾವದಿಂ
ಪರಮನ ಗತಿಯನರಿತು ತನ್ನ ಗತಿಯ ಮರದು,
ದಶವಾಯುವ ದೆಸೆಗೆ ಹರಿಯದೆ,
ಮಧ್ಯನಾಳದಲ್ಲಿ ನಿಂದ ಮರುವಾಳ ಮರದು
ಸೌರಾಷ್ಟ್ರ ಸೋಮೇಶ್ವರಲಿಂಗದ ಬೆಳಗಿನೊಳಗೆ
ಬೆರಸಿ ಬೇರಿಲ್ಲದ ಶಿಖಿಕರ್ಪುರದಂತಾಯಿತ್ತು./29
ಅಧೋಮುಖವಾಗಿಪ್ಪ ಹೃದಯಕಮಲವನೂಧ್ರ್ವಮುಖವ ಮಾಡಿ,
ಮೇಲಿಪ್ಪ ಚೌದಳವ ಮುಟ್ಟದೆ, ಎಂಟೆಸಳನೊಂದೆ ಎಸಳ ಮಾಡಿ,
ಅಂತರಾತ್ಮನು ಪರಮಾತ್ಮನ ಸಂಗವ ಮಾಡುವಲ್ಲಿ
ಅಷ್ಟಾದಶದೋಷವಿರಹಿತನಾಗಿ, ಒಂದೆಸಳ ಸುಜ್ಞಾನಮಧ್ಯದಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗವನರಿಸಿ ಬೆರಸಬಲ್ಲಾ. /30
ಅನವರತ ಲಿಂಗಭಾವದಲ್ಲಿ ನೆನಹು ನೆಲೆಗೊಂಡು, ಬಿಡುವಡಗಿ,
ಪಂಚಾವಸ್ಥೆಯಲ್ಲಿ, ಎಲ್ಲಾ ವೇಳೆಯಲ್ಲಿ,
ನಿಮ್ಮ ಅರಿವು ಮರೆಯದ ಘನಪರಿಣಾಮದ ಸುಯಿಧಾನಿ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ. /31
ಅನಾದಿಯ ಲಿಂಗವ ಕಂಡು, ಆದಿಯ ಪ್ರಸಾದ ಕೊಂಡು,
ಆ ಪ್ರಸಾದವಪ್ಪ ಪರಿಣಾಮದಲ್ಲಿ ಬೆಳಗುತಿರ್ಪನಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ. /32
ಅನುಭಾವ ಸಾಹಿತ್ಯವಾದ ಬಳಿಕ ಅನುಭವಿಸಲೆಲ್ಲಿಯದೊ?
ಸಂಚಿತ ಪ್ರಾರಬ್ಧ ಆಗಾಮಿಯ ಅದ್ವೈತ ಸಾಹಿತ್ಯವಾದ ಬಳಿಕ
ಸಂದೇಹ ಭ್ರಾಂತಿಯೆಲ್ಲಿಯದೊ?
ಉಂಟು ಇಲ್ಲವೆಂಬ ಪ್ರಸಾದ ಸಾಹಿತ್ಯವಾದ ಬಳಿಕ
ಭೋಗ ಉಪಭೋಗಂಗಳೆಲ್ಲಿಯವೋ?
ಅಷ್ಟಭೋಗಂಗಳು ಸೌರಾಷ್ಟ್ರ ಸೋಮೇಶ್ವರ ಸಾಹಿತ್ಯವಾದ ಬಳಿಕ
ಮಲ-ಮಾಯಾ-ಕರ್ಮ-ತಿರೋಧಾನವೆಂಬ
ಚತುರ್ವಿಧಪಾಶಂಗಳೆಲ್ಲಿಯವೊ?/33
ಅಯ್ಯಾ, ತನುವಿದ್ದಂತೆ
ಮರಣ ಶೋಕ ಭಯಂಗಳೆಂತುತ್ತಾರವಹವೆಂದರಿಯೆನಯ್ಯಾ.
ಅಯ್ಯಾ, ಮನವಿದ್ದಂತೆ
ಮಲ, ಮದ, ಮಾಯೆ, ಕರ್ಮಂಗಳೆಂತು ಹರಿವವೆಂದರಿಯೆನಯ್ಯಾ.
ಅಯ್ಯಾ, ನಿಮ್ಮ ನೋಡುವ ಜ್ಞಾನಕಂಗಳಿಗೆ
ವಿವೇಕಾಂಜನಸಿದ್ಧಿ ಎಂತಹುದೆಂದರಿಯೆನಯ್ಯಾ.
ಅಯ್ಯಾ, ನಿಮ್ಮನರುಹಿ ಎನ್ನ ಮರಹಿಸಯ್ಯಾ
ಸೌರಾಷ್ಟ್ರ ಸೋಮೇಶ್ವರಾ./34
ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ಧರಿಸಿದಡೆ
ನೀವೆನ್ನ ಮನಸ್ಥಲವನೆಡೆಗೊಂಡುದ ನಾನೇನೆಂಬೆನಯ್ಯಾ?
ಅಯ್ಯಾ, ನಿಮ್ಮನೆನ್ನ ಪಂಚಮುಖದಲ್ಲಿ ಧರಿಸಿದಡೆ
ನೀವೆನ್ನ ಸರ್ವಾಂಗವನವಗ್ರಹಿಸಿಕೊಂಡುದ ನಾನೇನೆಂಬೆನಯ್ಯಾ?
ಅಯ್ಯಾ, ನಿಮ್ಮನೆನ್ನ ಅರಿವಿನಲ್ಲಿ ಬೈಚಿಟ್ಟಡೆ
ನೀವೆನ್ನ ನಿರ್ಭಾವದಲ್ಲಿ ನೆಲೆಗೊಂಡುದ ನಾನೇಂಬೆನಯ್ಯಾ?
ಸೌರಾಷ್ಟ್ರ ಸೋಮೇಶ್ವರಾ,
ನಿಮ್ಮ ಮುಟ್ಟಿ ಹಮ್ಮುಗೆಟ್ಟುದ ನಾನೇನೆಂಬೆನಯ್ಯಾ? /35
ಅಯ್ಯಾ, ನಿಶೆಯ ಮೊತ್ತ ಸವಿತನ ಕಣ್ಗೆ ತಮವನೀಯಬಲ್ಲುದೆ?
ಅಯ್ಯಾ, ಉರಗನ ನೆರವಿ ಗರುಡಂಗೆ ವಿಷವೀಯಬಲ್ಲುದೆ?
ಅಯ್ಯಾ, ಕರಿವಿಂಡು ಕೇಸರಿಗೆ ಭಯವೀಯಬಲ್ಲುದೆ?
ಅಯ್ಯಾ, ತನುಮುಖದಿಂದ್ರಿಯಂಗಳೆಲ್ಲ
ನಿರ್ಭಾವ ಕರಿಗೊಂಡ ನಿಜನಿಷ್ಪತ್ತಿಯನು ಅಳಿಯಬಲ್ಲವೆ ಹೇಳಾ
ಸೌರಾಷ್ಟ್ರ ಸೋಮೇಶ್ವರಾರಿ /36
ಅಯ್ಯಾ, ಹುಲ್ಲುಮೊರಡಿಯೊಳಗೆ ಕಲ್ಪತರುವನರಸುವರೆ?
ಅಯ್ಯಾ, ಹಾವುಮೆಕ್ಕೆಯಲ್ಲಿ ದ್ರಾಕ್ಷಫಳವನರಸುವರೆ?
ಅಯ್ಯಾ, ಗೋರಿಕಲ್ಲುಗಳೊಳಗೆ ಚಿಂತಾಮಣಿಯನರಸುವರೆ?
ಅಯ್ಯಾ, ರೀತಿಕೆಯಲ್ಲಿ ಅಪರಂಜಿಯನರಸುವರೆ?
ಅಯ್ಯಾ, ಅಬಲಲ್ಲಿ ಅರವಿಂದವನರಸುವರೆ?
ಅಯ್ಯಾ, ಎನ್ನೊಳಗದಾವ ಗುಣವನರಸದೆ ನೀನೇ ಕರುಣಿಸಯ್ಯಾ
ಕಾರುಣ್ಯಮೂರ್ತಿಯೆ ಸೌರಾಷ್ಟ್ರ ಸೋಮೇಶ್ವರಾ.
/37
ಅರಿವರತು ಅರಿವ ತಿಳಿದು, ಮರಹ ಮರೆದು ಮರಹಳಿದು,
ಕುರುಹೆಂದು ಹೇಳಹೆಸರಿಲ್ಲದೆ
ಗುರುಲಿಂಗಜಂಗಮ ತ್ರಿವಿಧವೊಂದಾದ ಎಡೆಯ ತೋರಿಸಿ ಬದುಕಿಸಾ,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ, ನಿಮ್ಮ ಧರ್ಮ./38
ಅರಿವರತು ಅರಿವುಗೆಟ್ಟಿತ್ತು,
ಮರಹಳಿದು ಮರಹುಗೆಟ್ಟಿತ್ತು.
ಜಂಗಮವೆಂದರಿದು ಹಿಂದುಗೆಟ್ಟಿತ್ತು,
ಪ್ರಸಾದವೆಂದರಿದು ಮುಂದುಗೆಟ್ಟಿತ್ತು,
ಇಹಪರಂಗಳೆಂಬ ಇದ್ದೆಸೆಗೆಟ್ಟಿತ್ತು.
ಆನೆಂಬುದಿಲ್ಲವಾಗಿ ನೀನೆಂಬುದು ಕೆಟ್ಟಿತ್ತು,
ನೀನೆಂಬುದಿಲ್ಲವಾಗಿ ಆನೆಂಬುದು ಕೆಟ್ಟಿತ್ತು.
ಸೌರಾಷ್ಟ್ರ ಸೋಮೇಶ್ವರನೆನ್ನ ಮನವನಂಗಂಗೊಂಡನಾಗಿ
ನೆನಹುಗೆಟ್ಟಿತ್ತು. /39
ಅರಿವರತು, ಮರಹರತು, ಕುರುಹಳಿದು,
ನಿರುಗೆಗಂಡು ಬೆರಗುವಡೆದು,
ಹೃದಯಾಕಾಶದ ಬಟ್ಟಬಯಲೊಳಗೆ ಭರಿತವಾಗಿರ್ದ
ಮಹಾಶರಣರ ತೋರಿಸಿ ಬದುಕಿಸಾ,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ, ನಿಮ್ಮ ಧರ್ಮ./40
ಅರಿವಿನ ತರಹರದಿಂದ ಭಾವ ಸದ್ಭಾವವನೆಯ್ದಿದ ಶರಣನ
ಭಾವದೊಳಗೆ ಲಿಂಗದೇವ.
ಲಿಂಗದೊಳಗೆ ಸದ್ಭಾವ ಭೇದವಿಲ್ಲದೆ
ಮಾರ್ಗಕ್ರೀ ಮೀರಿದಕ್ರೀಗತೀತನಾದ ಲಿಂಗೈಕ್ಯನ
ಪ್ರಾಣನೊಳಗೆ ಲಿಂಗ, ಲಿಂಗಭಾವದೊಳಗೆ ಪ್ರಾಣ.
ಇಂತೀ ಶಿವಭಾವವೇ ಜೀವವಾಗಿಪ್ಪ ಶರಣಂಗೆ
ಲಿಂಗಮುಖವಾದ ಸತ್ಪಥವಿದೇ ಕಂಡಯ್ಯಾ,
ಸೌರಾಷ್ಟ್ರ ಸೋಮೇಶ್ವರಾ./41
ಅರಿವು ಮರಹಳಿದು ನಿಜದಲ್ಲಿ ನಿಂದ ನಿರ್ಧರಂಗೆ
ಬೇರೆ ಸಂಸಾರವುಂಟೆ? ಮತ್ತೊಂದರಲ್ಲಿ ತೊಡಕುಂಟೆ?
ಇಲ್ಲವಾಗಿ ನಿರ್ದೇಶವೆಂಬುದು ಬೇರಿಲ್ಲ.
ತಾನು ತಾನಾದ ಬಳಿಕ ಸೌರಾಷ್ಟ್ರ ಸೋಮೇಶ್ವರಲಿಂಗ ಬೇರಿಲ್ಲ./42
ಅರಿವು ಮರಹಳಿದುದಕ್ಕೇನು ದೃಷ್ಟ?
ಭಾವ ಭ್ರಮೆಯಳಿಯದೆ ದೃಷ್ಟ.
ಭಾವ ಭ್ರಮೆಯಳಿದುದಕ್ಕೇನು ದೃಷ್ಟ?
ಮನದ ಸಂಚಲವಳಿದುದೆ ದೃಷ್ಟ.
ಮನದ ಸಂಚಲವಳಿದುದಕ್ಕೇನು ದೃಷ್ಟ?
ತನುವಿಕಾರವಳಿದುದೆ ದೃಷ್ಟ.
ತನವಿಕಾರವಳಿವುದಕ್ಕೇನು ದೃಷ್ಟ?
ಪರಮಸುಖವಿಂಬುಗೊಂಡುದೆ ದೃಷ್ಟ.
ಪರಮಸುಖವಿಂಬುಗೊಂಡುದಕ್ಕೇನು ದೃಷ್ಟ?
ಸೌರಾಷ್ಟ್ರಸೋಮೇಶ್ವರನೆಂಬ ನಿಜತತ್ವವಂಗವಾದುದೆ ದೃಷ್ಟ./43
ಅರಿವುಳ್ಳವರೆಲ್ಲಾ ಎಡೆಯಲ್ಲಿ ಉಂಟು,
ನಿರಗೆಗಂಡವರಪೂರ್ವವಯ್ಯಾ.
ವಾಕುಪಾಕವಾದವರೆಲ್ಲ ಎಡೆಯೊಳು ಉಂಟು,
ಬೆರಗು ಹತ್ತಿದವರಪೂರ್ವವಯ್ಯಾ.
ಬೆರಗು ಹತ್ತಿದವರೆಲ್ಲಾ ಎಡೆಯೊಳು ಉಂಟು,
ಮನಪಾಕವಾದವರಪೂರ್ವವಯ್ಯಾ.
ಸೌರಾಷ್ಟ್ರ ಸೋಮೇಶ್ವರಲಿಂಗವೆಂಬವರೆಲ್ಲಾ ಎಡೆಯಲುಂಟು
ಎಂದೆಂದು ತಾನಾದವರಪೂರ್ವವಯ್ಯಾ./44
ಅರುವಿನ ಕ್ರಿಯೆಯಲ್ಲಿ ತೊಳತೊಳಗಿ ಬೆಳಗುವ
ಲಿಂಗೈಕ್ಯನು ಎಂತಿರ್ಪನೆಂದಡೆ: ಬಾವನ್ನದೊಳಗಿಪ್ಪ ಸುಗಂಧದಂತೆ,
ಮಾಣಿಕ್ಯದೊಳಗಿಪ್ಪ ಸುರಂಗಿನಂತೆ,
ಚಿನ್ನದೊಳಗಿಪ್ಪ ಬಣ್ಣದಂತೆ ಭೇದವಿಲ್ಲದಚಲನಯ್ಯಾ.
ಸಂಪಗೆಯ ಕಂಪುಂಡ ಭ್ರಮರನಂತೆ
ಸೌರಾಷ್ಟ್ರ ಸೋಮೇಶ್ವರಲಿಂಗದ ಪರಮಸುಖದೊಳಗೆ
ಪರವಶನಾದ ಲಿಂಗೈಕ್ಯನು. /45
ಅವಿರಳಾತ್ಮಕನಾಗಿ ನಿಃಕಲಬ್ರಹ್ಮದೊಳೊಡವೆರಸಿ
ಪರಮಜ್ಞಾನ ಇಂಬುಗೊಂಡು
ಪರಮಾಶ್ರಯ ಪರಿಪೂರ್ಣವಾದ, ನಿಜಸುಖದಾಶ್ರಯವಾದ
ಸುಜ್ಞಾನಭರಿತರ ತೋರಿ ಬದುಕಿಸಾ,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ ನಿಮ್ಮ ಧರ್ಮ./46
ಅಶ್ವತ ಕಂಬಳರ ಕರ್ಣದಲ್ಲಿ ಧರಿಸಿದೆಯಯ್ಯಾ,
ಪಂಚಮುಖದಿಂದ ಪಂಚಮಹಾವೇದಂಗಳನುಸುರಿ
ವೇದಸ್ವರೂಪನಾದೆಯಯ್ಯಾ.
ಶಕ್ತಿಯ ನೆತ್ತಿಯಲ್ಲಿ ಅಧರ್ಾಂಗನಾಲಿಂಗನಾದೆಯಯ್ಯಾ.
ಅಂಧಕಾಸುರನ ಎದೆಯ ಮೆಟ್ಟಿ ನಾಟ್ಯವನಾಡಿದೆಯಯ್ಯಾ.
ಸೌರಾಷ್ಟ್ರ ಸೋಮೇಶ್ವರಾ,
ನಿಮ್ಮ ಪರಿ ಇಂತು, ನಿಮ್ಮ ಶರಣರ ಪರಿ ಇನ್ನೆಂತೊ. /47
ಅಷ್ಟಭೋಗಂಗಳ ಕಾಮಿಸಿ,
ತನಗೆಂಬ ಜ್ಞಾನೇಂದ್ರಿಯ ಅಂತಃಕರಣಗಳ ಮುಸುಡುಗುತ್ತಲೀಯದೆ
ಸ್ವಾನುಭಾವರ ಸುಖದೊಳಗಿರಬಲ್ಲಡೆ
ಕಕ್ಷಸ್ಥಲದಲ್ಲಿ ಧರಿಸುವುದಯ್ಯಾ.
ಇಂದ್ರಿಯ ನಿರೂಢೀಯ ವಿಕಳದ ಅಪೇಕ್ಷೆಯಿಂ ಕಾಂಚಾಣಕ್ಕೆ ಕೈಯಾನದೆ
ನಿಚ್ಚಯ ದೃಡಚಿತ್ತದೊಳಿರಬಲ್ಲಡೆ
ಕರಸ್ಥಲದಲ್ಲಿ ಧರಿಸುವುದಯ್ಯಾ.
ಅಂಗನೆಯರ ಅಂಗಸುಖದ ವಿರಹಕ್ಕೆ ತನುವನೊಪ್ಪಿಸದೆ
ಲಿಂಗವನಪ್ಪಿ ಪರಮಸುಖದ ಸುಗ್ಗಿಯೊಳಿರಬಲ್ಲಡೆ
ಉರಸ್ಥಲದಲ್ಲಿ ಧರಿಸುವುದಯ್ಯಾ.
ನಿಂದೆ ನಿಷ್ಠುರ ಅನೃತ ಅಸಹ್ಯ ಕುತರ್ಕ ಕುಶಬ್ದವಳಿದು
ಶಿವಾನುಭಾವದ ಸುಖದೊಳಿರಬಲ್ಲಡೆ
ಕಂಠಸ್ಥಲದಲ್ಲಿ ಧರಿಸುವುದಯ್ಯಾ.
ಲಿಂಗವಿಹೀನರಾದ ಲೋಕದ ಜಡಮಾನವರಿಗೆ ತಲೆವಾಗದೆ
ಶಿವಲಿಂಗಕ್ಕೆರಗಿರಬಲ್ಲಡೆ ಶಿರದಲ್ಲಿ ಧರಿಸುವುದಯ್ಯಾ.
ಅಂತರ್ಮುಖವಾಗಿ ಶಿವಜ್ಞಾನದಿಂ ಪ್ರಾಣಗುಣವಳಿದು
ಸದಾ ಸನ್ನಿಹಿತದಿಂದೆರಡರಿಯದಿರಬಲ್ಲಡೆ
ಅಮಳೋಕ್ಯದಲ್ಲಿ ಧರಿಸುವುದಯ್ಯಾ.
ಶಿವತತ್ವದ ಮೂಲಜ್ಞಾನಸಂಬಂಧಿಗಳಪ್ಪ
ಶಿವಶರಣರ ಮತವಿಂತಯ್ಯಾ ಸೌರಾಷ್ಟ್ರ ಸೋಮೇಶ್ವರಾ./48
ಅಷ್ಟಭೋಗಂಗಳ ಶಕ್ತಿ ಕೆಟ್ಟಲ್ಲಿ ರೋಧಮಲ ನಷ್ಟ.
ಕರ್ಮಸಾಮ್ಯವಾಗಿ ಶಕ್ತಿಪಾಶವಾದಲ್ಲಿ ಬಿಂದುಮಲ ನಷ್ಟ.
ಅಹಂಕಾರವಳಿದಲ್ಲಿ ಕರ್ಮಮಲ ನಷ್ಟ.
ಕಾಯಭಾವವಳಿದಲ್ಲಿ ಮಾಯಾಮಲ ನಷ್ಟ.
ಪರವಸ್ತುವಿನ ಕಳೆ ತನ್ನಲ್ಲಿ ಬೆಳಗಿದ ಆಣವಮಲ ನಷ್ಟ.
ಇಂತೀ ಪಂಚಮಲಂಗಳು ನಷ್ಟವಾದಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗ ಸಮ್ಯಕ್ದೃಷ್ಟ. /49
ಅಷ್ಟಭೋಗಂಗಳಭಿಲಾಷೆಯಿಂದಿಪ್ಪ ವೇಷಧಾರಿಗಳಿಗೆ
ಶಿವಜ್ಞಾನ, ಶಿವಯೋಗ, ಶಿವಧ್ಯಾನಂಗಳಿಲ್ಲ ನೋಡಯ್ಯಾ.
ಅಂತಪ್ಪ ಶಿವಜ್ಞಾನ ಶಿವಯೋಗ ಶಿವಧ್ಯಾನಗಳಿಲ್ಲದೆ
ಲಿಂಗವ ಕಾಣಬಾರದು.
ಅದಕ್ಕೆ ಶ್ರುತಿ: `ತೇ ಧ್ಯಾನಯೋಗಾನುಗತಾ ಅಪಶ್ಯನ್ ದೇವಾತ್ಮಶಕ್ತಿಂ ಸ್ವಗುಣೈರ್ನಿಗೂಢಾಂ,
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗವನರಿವಡೆ
ಸ್ವಾನುಭಾವದಿಂದಲ್ಲದರಿಯಬಾರದು. /50
ಅಷ್ಟಾಷಷ್ಠಿ ತೀರ್ಥಂಗಳ ಮೆಟ್ಟಿದವರೆಲ್ಲಾರೂ ಭಕ್ತರಪ್ಪರೇ?
ಜಪತಪ ನೇಮನಿತ್ಯ ಮಂತ್ರಾರೂಢರೆಲ್ಲಾ ಜಂಗಮವಪ್ಪರೆ?
ವಚನ ಸುಲಕ್ಷಣವನರಿದಿರ್ದವರೆಲ್ಲಾ ಅನುಭಾವಿಗಳಪ್ಪರೆರಿ
ಅದೆಂತೆಂದಡೆ: ಕೇದಾರಸ್ಯೋದಕಂ ಪೀತ್ವಾ ವಾರಾಣಸ್ಯಾಮ್ಮತಿಧ್ರರ್ುವಂ
ಶ್ರೀಶೈಲಶಿಖರಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ
ಇಂತೆಂಬ ಶ್ರುತಿಯಂತಿರಲಿ,
ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ಗತೋ ನರಃ
ಶ್ವನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್
ಎಂದುದಾಗಿ, ಇಂತಲ್ಲವಯ್ಯಾ ನಮ್ಮ ಶಿವಭಕ್ತರು.
ಎಂತಿಹರಯ್ಯಾ ಎಂದಡೆ: ಧ್ಯಾನವೇ ಜಪ, ಮೌನವೇ ತಪ,
ನಿರ್ಭಾವವೇ ನಿಲುವು, ಸದ್ಭಾವವೇ ಪೂಜೆ.
ಇಂತಪ್ಪ ದಾಸೋಹವ ಮಾಡುವ ಸದ್ಭಕ್ತನ ದರುಶನ
ಎಂತಿಹುದಯ್ಯಾ ಎಂದಡೆ: ಉಪಪಾತಕ ಕೋಟೀನಿ ಬ್ರಹ್ಮಹತ್ಯಾ ಶತಾನಿ ಚ
ದಹ್ಯಂತ್ಯೇಶೇಷ ಪಾಪಾನಿ ಶಿವಭಕ್ತಸ್ಯ ದರ್ಶನಾತ್
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರಾ
ನೀನೊಲಿದ ಶಿವಭಕ್ತರ ಅಂಗಳವೆ ವಾರಣಾಸಿ,
ಮನವೆ ತೀರ್ಥವಯ್ಯಾ. /51
ಅಸಮಾನಾಢ್ಯರಪ್ರತಿಮಸ್ವತಂತ್ರ ಸ್ವಲೀಲರಪ್ಪ ಶರಣರೆಂತಿಪ್ಪರಯ್ಯಾ?
ಕಡವರವ ನುಂಗಿದ ಪೊಡವಿಯಂತೆ, ರತ್ನವ ನುಂಗಿದ ರತ್ನಾಕರನಂತೆ,
ಬೆಳಗ ನುಂಗಿದ ಬಯಲಂತೆ, ಬಣ್ಣವ ನುಂಗಿದ ಚಿನ್ನದಂತೆ,
ತೈಲವ ನುಂಗಿದ ತಿಲದಂತೆ, ಪ್ರಭೆಯ ನುಂಗಿದ ಪಾಷಾಣದಂತೆ,
ವೃಕ್ಷವ ನುಂಗಿದ ಬೀಜದಂತೆ, ಪ್ರತಿಬಿಂಬವ ನುಂಗಿದ ದರ್ಪಣದಂತಿಪ್ಪರಯ್ಯಾ.
ಸೌರಾಷ್ಟ್ರ ಸೋಮೇಶ್ವರಾ,
ನಿಮ್ಮ ಶರಣರಲ್ಲಿ ನೀವಿಹ ಭೇದವ
ನೀವೆ ಬಲ್ಲಿರಿ, ಆನೆತ್ತ ಬಲ್ಲೆನಯ್ಯಾ? /52
ಅಸ್ತಿ ಭಾತಿ[ಪ್ರಿ]ಯವೆಂಬ ತ್ರಿವಾಕ್ಯದಿಂದಲ್ಲವಾದುದಲ್ಲ.
ಅಪ್ರಮಾಣ ಅಗೋಚರ ಆತ್ಯತಿಷ್ಠದ್ದಶಾಂಗುಲ
ಅಭೇದ್ಯದಿಂ ನಾಮರೂಪುಗಳುಂಟಾದುದಲ್ಲ.
ಇದು ಕಾರಣ ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ
ಮೂರ್ತನಲ್ಲ ಭಾವಿಯಲ್ಲ ಪ್ರಾಣಿಯಲ್ಲ
ಇದಕ್ಕೆ ಶ್ರುತಿ: ನೈವಂಚೋವಾಚಾಸ್ತ್ರೀಯಾನ್ ಭೂಮಾನಚನಸ್ತ್ರೀ
ಪುಮಾನ್ನಪುಮಾನ್ ಪ್ರಮಾನ್ನಪ್ರಮಾನ್
ಭವಾನ್ ಯೇನೇದಂ ವದತಿ ಶತ್ವನಃ ಇತಿ ಬ್ರಹ್ಮಾ
ಎಂಬ ಉಪನಿಷದುಕ್ತಿಯನರಿದು ಅರಿವೆ ತಾನಾಗಿ
ಲಿಂಗದಲ್ಲಿ ಸಂದುಭೇದವಿಲ್ಲದೆ ಇಪ್ಪರಯ್ಯಾ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು./53
ಅಹಂಕಾರ ಮಮಕಾರಂಗಳಲ್ಲಿ ಸಂದು, ತ್ರಿಗುಣದಲ್ಲಿ ಕೂಡಿ,
ತಾಪತ್ರಯಂಗಳಲ್ಲಿ ಬೆಂದು, ಪಂಚಕ್ಲೇಶಂಗಳಿಂದ ಕುಗ್ಗಿ,
ಅರಿಷಡ್ವರ್ಗಂಗಳಲ್ಲಿ ತಗ್ಗಿ, ಸಪ್ತವ್ಯಸನಂಗಳಲ್ಲಿ ಮುಗ್ಗಿ,
ಅಷ್ಟಮದಂಗಳಲ್ಲಿ ನುಗ್ಗಿ, ಅಷ್ಟದಳದ ಗತಿಯಲ್ಲಿ
ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದರುನೂರು
ಗಂಧಸ್ವರಂಗಳ ಬಳಿವಿಡಿದು ಸುಳಿದು ತಿರು[ಗುವ] ಜೀವನ ಗತಿಗೆಡಿಸಿ
ಸದ್ಭಾವದಿಂದ ಲಿಂಗಸಂಗಿಯಾಗಿರಬಲ್ಲ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ. /54
ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ
ಪರಶಿವನಾಮದಿಂ ಪರಶಕ್ತಿಸಂಯುಕ್ತವಾಗಿ,
ಆಕಾರ ಉಕಾರ ಮಕಾರವೆಂಬ ಬೀಜಾಕ್ಷರಂಗಳಿಂ ನಾದಬಿಂದುಕಳೆಯಾಗಿ,
ದಶನಾಡಿ ದಶವಾಯು ದಶವಿಧೇಂದ್ರಿಯ
ಸಪ್ತಧಾತು ಷಡುಚಕ್ರ ಷಡುವರ್ಗ ಪಂಚಭೂತ
ಚತುರಂತಃಕರಣ, ತ್ರಿದೋಷಪ್ರಕೃತಿ,
ತ್ರಯಾವಸ್ಥೆ, ಸತ್ವ ರಜ ತಮ, ಅಂಗ ಪ್ರಾಣ, ಅರಿವು ಭಾವ ಜ್ಞಾನ,
ಮೊದಲಾದ ಬಾಹತ್ತರ ವಿನಿಯೋಗಮಂ ತಿಳಿದು
ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ ಜನಲೋಕ
ತಪೋಲೋಕ, ಸತ್ಯಲೋಕ,
ಅತಳ, ವಿತಳ, ಸುತಳ, ಮಹಾತಳ, ರಸಾತಳ, ತಳಾತಳ, ಪಾತಾಳಂಗಳೊಳಗಾದ
ಚತುರ್ದಶಭುವನಂಗಳೊಳಹೊರಗೆ ಅಂತರ್ಗತ ಬಹಿರ್ಗತವಾಗಿ,
ನಾದಮಂ ತೋರಿ ಭಗರ್ೋದೇವನೆಂಬ ನಾಮಮಂ ತಳೆದು
ಊಧ್ರ್ವರೇತುವೆನಿಸಿ,
ವಿಶ್ವತೋಮುಖ, ವಿಶ್ವತಶ್ಚಕ್ಷು, ವಿಶ್ವತೋ ಬಾಹು, ವಿಶ್ವತಃಪಾದದಿಂ
ವಿಶ್ವಗಬರ್ಿಕೃತವಾಗಿ,
ಉತ್ಪತ್ತ್ಯಸ್ಥಿತಿಲಯಂಗಳನೆಣಿಕೆಗೆಯ್ಯದೆ
ದೇವತಾಂತರದಿಂ ಮಾನಸಾಂತರವನನುಕರಿಸಿ,
ಮಾನಸದಲ್ಲಿ ರವಿಕೋಟಿತೇಜದಿಂ ಸಕಲಪಾಪಾಂಧಕೂಪಮಂ ತೊಳೆದು
ಸುರಕ್ಷಿತದಿಂ ಪ[ರಾ] ಪಶ್ಯಂತಿ ಸುಮಧ್ಯ ವೈಖರಿಯೆಂಬ ಚತುರ್ವಿಧದಿಂ
ದುರಿತ ದುರ್ಮದ ಕಾಲಮೂಲಾದಿಮೂಲಮಂ ಬಗೆಗೊಳ್ಳದೆ,
ಚಿತ್ಸುಧಾಮೃತವೆ ಅಂಗವಾಗಿ
ಚಿದರ್ಕಪ್ರಭಾಕರವೆ ಪ್ರಾಣವಾಗಿ,
ಸೌರಾಷ್ಟ್ರ ಸೋಮೇಶ್ವರನಿಂತಿಂತು ಕರ್ತನು-ಭರ್ತನು ತಾನೆ ಆಗಿ,
ಪರಮಸ್ವಯಂಭೂ ಸ್ವತಃಸಿದ್ಧದಿಂ ಸಚ್ಚಿದಾನಂದಸ್ವರೂಪದಿಂ
ನಿತ್ಯಪರಿಪೂರ್ಣತ್ವದಿಂದೆಡದೆರಹಿಲ್ಲದಿರ್ಪನಯ್ಯಾ. /55
ಆಕಾರವಿಡಿದು ಅರ್ಚನೆಯ ಮಾಡಬೇಕಲ್ಲದೆ
ನಿರಾಕಾರವ ನಂಬಲಾಗದಯ್ಯಾ,
ಅಲ್ಲಿ ಮತ್ತೊಂದಿಲ್ಲವಾಗಿ.
ನಿಧಾನ ಕೈಸಾರಿದ ಬಳಿಕ ಬಳಸಲರಿಯದೆ ಬಡತನವನನುಭವಿಸಬಹುದೆ?
ಕಂಡು ಕಂಡು ನಂಬಲರಿಯದೆ ಇದ್ದಡೆ
ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಹನಯ್ಯಾ,
ಸೌರಾಷ್ಟ್ರ ಸೋಮೇಶ್ವರನು./56
ಆಕಾಶದಲಾಡುವ ಹದ್ದನೊಂದು ಸರ್ಪನುಂಗಿತ್ತ ಕಂಡೆ.
ಆ ಸರ್ಪ ಕಿಚ್ಚಿನೊಳು ಬಿದ್ದು ನಿಂದುರಿವುದ ಕಂಡೆ.
ಷಣ್ಮುಖನ ಶಿರ ಹರಿದು ಬಯಲಾದುದ ಕಂಡೆ.
ಉರಿ ಕೆಟ್ಟಲ್ಲಿ ಕರಿಯಿಲ್ಲ, ಭಸಿತವಿಲ್ಲ.
ಈ ಪರಿಯ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರೆ ಬಲ್ಲರು/57
ಆಕಾಶದಲ್ಲಿ ಪಂಚಮಹಾನಾದಂಗಳುಂಟು,
ಆ ಪಂಚಮಹಾನಾದಂಗಳೇ ಪಂಚಮಹಾವೇದಂಗಳು ಕಂಡಿರೇ.
ಇಂತೀ ವೇದ-ನಾದಂಗಳ ಭೇದಿಸಬಲ್ಲಡೆ
ಸೌರಾಷ್ಟ್ರ ಸೋಮೇಶ್ವರಲಿಂಗವೆಂಬೆನು. /58
ಆಕೃತಿ ನಿರಾಕೃತಿಗಳೆಂಬ ಆಕೃತಿಯಳಿದು,
ವ್ಯಾಕುಳ ನೀರಾಕುಳಂಗಳಡಗಿ,
ನೀಕರಿಸುವುದು ಸ್ವೀಕರಿಸುವುದಿಲ್ಲದೆ
ಚರಾಚರನಲ್ಲದೆ ಅಖಿಲಾತೀತನಾಗಿ ನಿಂದ ನಿಲುವು,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ. /59
ಆಚಾರದನುವಳವಟ್ಟು, ಕರಣಂಗಳನುಡುಗಿ, ತನುವ ಸವೆವುದು ಗುರುವಿನಲ್ಲಿ.
ವ್ರತನೇಮಂಗಳಿಂ ಪಲ್ಲಟವಿಲ್ಲದೆ, ಮನವ ಸವೆವುದು ಲಿಂಗದಲ್ಲಿ.
ಆಶೆ ರೋಷಗಳಿಲ್ಲದೆ ಆದರಣೆಯಿಂಧನವ ಸವೆವುದು, ಜಂಗಮದಲ್ಲಿ.
ಇಂತೀ ತ್ರಿವಿಧದಲ್ಲಿ ತ್ರಿವಿಧ ಸವೆದು ಪ್ರಳಯಪ್ರಕೃತಿಗೊಳಗಾಗದೆ,
ಸುಜ್ಞಾನಮುಖದಿಂ ಪ್ರಸಾದವ ಹಿಂಗದೆ ಗ್ರಹಿಸಿಪ್ಪ
ಭಕ್ತನನೇನೆಂದುಪಮಿಸುವೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ./60
ಆಚಾರಲಿಂಗ ನಾಸ್ತಿಯಾದಲ್ಲದೆ ಭಕ್ತನಲ್ಲ.
ಗುರುಲಿಂಗ ನಾಸ್ತಿಯಾದಲ್ಲದೆ ಮಾಹೇಶ್ವರನಲ್ಲ.
ಶಿವಲಿಂಗ ನಾಸ್ತಿಯಾದಲ್ಲದೆ ಪ್ರಸಾದಿಯಲ್ಲ.
ಜಂಗಮಲಿಂಗ ನಾಸ್ತಿಯಾದಲ್ಲದೆ ಪ್ರಾಣಲಿಂಗಿಯಲ್ಲ.
ಪ್ರಸಾದಲಿಂಗ ನಾಸ್ತಿಯಾದಲ್ಲದೆ ಶರಣನಲ್ಲ,
ಇಂತೀ ಷಡಂಗಗಳು ಕೆಟ್ಟಲ್ಲದೆ
ಸೌರಾಷ್ಟ್ರ ಸೋಮೇಶ್ವರನಲ್ಲಿ ಲಿಂಗೈಕ್ಯನಲ್ಲ. /61
ಆಡಿನ ತತ್ತಿಯೊಳಗೊಂದು ಹೇರಡವಿಯಿದ್ದಿತ್ತು.
ಆ ಹೇರಡವಿಯೊಳಗೆ ಮೇರುವಿದ್ದಿತ್ತು.
ಆ ಮೇರುವಿನ ಒಡಲಲ್ಲಿ ಚತುರ್ದಶಭುವನ ಸಚರಾಚರಂಗಳೆಲ್ಲಾ ಇದ್ದಿತ್ತು.
ತತ್ತಿ ಒಡೆಯಿತ್ತು ಅಡವಿ ಅಡಗಿತ್ತು.
ಸೌರಾಷ್ಟ್ರ ಸೋಮೇಶ್ವರಲಿಂಗವಿಲ್ಲದಂತಿದ್ದಿತ್ತು./62
ಆತ್ಮ ತೇಜ, ದೇಹೋ[ಹಂ] ಹಮ್ಮು, ಮನದ ಬಿಮ್ಮು,
ತಥ್ಯ-ಮಿಥ್ಯ, ರಾಗ-ದ್ವೇಷ, ಸುಖ-ದುಃಖ
ಮೋಹಂಗಳಡಗವಯ್ಯಾ.
ಇಂತಿವನಳಿದಾತನ ನೀನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ./63
ಆತ್ಮತೇಜದಿಂ ತೋರ್ಪ ಚಿದಹಮ್ಮಿನ ಮೂಲಾಹಂಕಾರವೆ
ಕಾಯದ ಮೊದಲಿಂಗೆ ಬೀಜವೆಂಬುದನರಿತು,
ಕೋಹಂ ಕೋಹಂ ಸೋಹಂ ಅಳಿದು ಬೀಜನಷ್ಟವಾಗಿ,
ವೃಕ್ಷವಡಗಿ ಯಜ್ಞಸೂತ್ರದ ತ್ರಿನಾಡಿಯ ತ್ರಿಸರ ಹರಿದು,
ಚೈತನ್ಯ ನಿಶ್ಚ್ಯೆತನ್ಯವಾದಲ್ಲಿ, ಸೌರಾಷ್ಟ್ರ ಸೋಮೇಶ್ವರಲಿಂಗ ನಿರುತ ಭರಿತ/64
ಆತ್ಮನೆಂಬ ಅಂಬುಧಿಯಲ್ಲಿ
ನೊರೆ ತೆರೆ ತುಂತುರು ಸಾರ ಬುದ್ಬುದಂಗಳೆಂಬ
ತನು, ಮನ, ಶಬ್ದ, ಸ್ಪರ್ಶ, ರೂಪು, ರಸ, ಗಂಧ,
ಅಹಂಕಾರ, ಮಮಕಾರಂಗಳಾದವಯ್ಯಾ.
ಮನ ನೆನಹಿನಂತೆ ತೋರಿ ಅಡಗುವುದಲ್ಲ,
ಆತ್ಮನು ಶುಕ್ಲಶೋಣಿತದಿಂ ತನು ಮನವಾದಂದು,
ಆಗಿ ಅವು ಹೋದಂದು ಹೋಹುದಲ್ಲ ನೋಡಾ ಆತ್ಮನು.
ಅಂತಹ ಆತ್ಮನಿಲ್ಲದಿರ್ದಡೆ
ಅನಂತಕೋಟಿ ಬ್ರಹ್ಮಾಂಡ ಪಿಂಡವೆಂಬ ಭಾಂಡಂಗಳಾಗಬಲ್ಲವೆ?
ಅಂತಹ ಆತ್ಮನಿಲ್ಲದಿರ್ದಡೆ ವಿಶ್ವ ಬ್ರಹ್ಮವೆನಿಸುವದೆ?
ಅಂತಹ ಆತ್ಮನಿಲ್ಲದಿರ್ದಡೆ ಮನನೆನಹು ಜನಿಸಬಲ್ಲವೆ?
ಅಂತಹ ಆತ್ಮನಿಲ್ಲದಿರ್ದಡೆ ವಿಷಯವ್ಯಸನಂಗಳು ತೋರಬಲ್ಲವೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಮನದ ನೆನಹೇ ಆತ್ಮನಲ್ಲವಯ್ಯಾ ಮಲ್ಲಿಕಾರ್ಜುನಾ./65
ಆದಿ ಅನಾದಿಯಿಲ್ಲದಂದು, ನಾದ ಬಿಂದು ಕಳೆ ಮೊಳೆದೋರದಂದು,
ಶ್ರುತಿ ಸ್ಮೃತಿಗಳು ತಲೆದೋರದಂದು,
ಚತುರ್ದಶಭುವನಂಗಳ ರಚನೆ ರಚಿಸದಂದು,
ಲಯಭೋಗಾದಿ ಕರಣಂಗಳಲ್ಲಿಯ ತತ್ವಪ್ರಭಾವ ಮೂರ್ತಿಗಳೆಂಬ ಅರಿವು
ಕುರುಹಿಗೆ ಬಾರದಂದು,
ತಿಥಿ, ವಾರ, ನಕ್ಷತ್ರ, ಯೋಗ, ಕರಣಂಗಳೆಂಬ ಪಂಚಾಂಗ ಲಗ್ನವಿಲ್ಲದಂದು,
ಅನುಪಮ ಅಸಾಧ್ಯ ಅಭೇದ್ಯ ಸೌರಾಷ್ಟ್ರ ಸೋಮೇಶ್ವರಾ
ನಿಮ್ಮ ನಿಜವನಾರು ಬಲ್ಲರಯ್ಯಾ. /66
ಆದಿಬಿಂದುವಿನಲ್ಲಿ ಅಖಂಡಿತ ಬಯಲು
ನಾದ ಸುನಾದ ಮಹಾನಾದ ನಿಃಕಲನಾದತ್ರಯವ ಕೂಡಿದ
ಚಿನ್ಮೂರ್ತಿ ತಾನಾದ ಅಖಂಡಿತ ಪರಿಪೂರ್ಣನಯ್ಯಾ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ./67
ಆನೆಂಬ ಹಮ್ಮು, ನೀನೆಂಬ ಚಿದಹಮ್ಮು,
ಬೇರೆಂಬ ದಾಸೋಹಮ್ಮಳಿದ ಮತ್ತೆ ಆನೀನೆಂಬುದಿಲ್ಲ,
ಅರಿವು ಮರವೆಯಿಲ್ಲ, ಬಂಧಮೋಕ್ಷವಿಲ್ಲ, ಪುಣ್ಯಪಾಪವಿಲ್ಲ, ಇಹಪರವಿಲ್ಲ.
ಇಂತೀ ಚತುರ್ವಿಧಕ್ಕೊಳಗಲ್ಲದ ಹೊರಗಲ್ಲದ
ಸೌರಾಷ್ಟ್ರ ಸೋಮೇಶ್ವರಲಿಂಗವನೇನೆನ್ನಬಹುದು?/68
ಆಯತ ಸ್ವಾಯತ ಸನ್ನಿಹಿತವೆಂದು ನುಡಿವ
ಅನಾಯತದ ಹೇಸಿಕೆಯನೇನಂಬೆನಯ್ಯಾ?
ತನುಗುಣಂಗಳನೊರಸದೆ, ಭೋಗಭೂಷಣಂಗಳನತಿಗಳೆಯದೆ,
ಅನೃತ ಅಸತ್ಯ ಅಸಹ್ಯ ಋಣಸಂಚವಂಚನೆ
ಪರಧನಕ್ಕಳುಪದ ಆಯತ ಅಂಗಕ್ಕಿಲ್ಲ ಮತ್ತೆಂತಯ್ಯಾ?
ಆಯತವು ಮನೋವಿಕಾರವಳಿದು, ಸರ್ವೇಂದ್ರಿಯಂಗಳಲ್ಲಿ ಸಾವಧಾನಿಯಾಗಿ
ಅನ್ಯವಿಷಯ ಭಿನ್ನರುಚಿಯ ಮರೆದು
ಸಕಲಭ್ರಮೆ ನಷ್ಟವಾದ ಸ್ವಾಯತ ಮನಕ್ಕಿಲ್ಲ.
ಮತ್ತೆಂತಯ್ಯಾ ಸ್ವಾಯತವು?
ತನ್ನರಿವಿನ ಕುರುಹನರಿತು ನಿಜಸಾಧ್ಯವಾದ ಸನ್ನಹಿತ,
ಸದ್ಭಾವದಲ್ಲಿ ಅಳವಟ್ಟುದಿಲ್ಲದೆ
ಭಾಜನಕ್ಕೆ ಬರಿಯ ಮುಸುಕಿಟ್ಟು ಆಯತವೆಂದು ನುಡಿವ
ಅನಾಯತದ ನಾಚಿಕೆಯನೇನೆಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ?/69
ಆಯತಲಿಂಗ ಅಂಗದಲ್ಲಿ ವೇಧಿಸಿಕೊಂಡ ಬಳಿಕ
ಘನವೇದ್ಯವು ತಾನೆ, ಬೇರಿಲ್ಲ ಕಾಣಿರೆ.
ಸ್ವಾಯತ ಸನ್ನಿಹಿತವೆಂಬವು ಬೇರಾಗಲರಿಯವಾಗಿ
ಇಷ್ಟಲಿಂಗದಲ್ಲಿ ದೃಷ್ಟವ ಕಾಣಬಲ್ಲಡೆ,
ಸೌರಾಷ್ಟ್ರ ಸೋಮೇಶ್ವರಲಿಂಗವೊಂದೇ, ಬೇರಿಲ್ಲ ಕಾಣಿರೆ./70
ಆರು ದರುಶನಂಗಳು ತಮತಮಗೆ
ಬೇರೆ ಬೇರೊಂದರಿಕೆ ಕಲ್ಪಿಸಿಕೊಂಡ,
ಆರರಿಂ ಮೀರಿಪ್ಪ ಅಜಡಾದ್ವೈತವನಾರು ಬಲ್ಲರಯ್ಯಾ?
ಒಂದು ಪಾಷಾಣವ ಸೀಳಿ ಹೋಳುಗುಟ್ಟಿ ತರಿದು
ತೊರೆದು ಕರೆದು ಕಡೆದು ಕಂಡರಿಸಿ
ಪೂಜೆಗೈದರಲ್ಲದೆ ನಿಜಲಿಂಗೈಕ್ಯವನಾರು ಬಲ್ಲರಯ್ಯಾ?
ಸೌರಾಷ್ಟ್ರ ಸೋಮೇಶ್ವರಲಿಂಗದ ತನ್ನೈಕ್ಯ
ಬೊಮ್ಮದನುಸಂಧಾನವೆಂದಾರು ಬಲ್ಲರಯ್ಯಾ? /71
ಆರು ಬಣ್ಣದ ಆರು ಲಿಂಗದಲ್ಲಿ
ಮೂರು ಬಣ್ಣದ ಮೂರು ಲಿಂಗವ ಕೂಡಲು
ನವಲಿಂಗದ ಒಂಬತ್ತು ಬಣ್ಣದಲ್ಲಿ
ಗುರುಲಿಂಗಜಂಗಮಪ್ರಸಾದವೆಂಬ ನಾಲ್ಕು ಬಣ್ಣವ ಕೂಡಿದ
ಹದಿಮೂರು ಬಣ್ಣವ
ಕ್ರೀಯೆಂಬ ಕಮ್ಮರನ ಕೈಯಲ್ಲಿ ಕೊಟ್ಟಡೆ,
ವಾಸನೆಯೆಂಬ ಸೀಸವ ಬೆರಸಿದ ನೋಡಾ.
ಕಮ್ಮಾರನ ಬಾಯಕುಟ್ಟಿ ಸೆಳೆಯಲಾಗಿ
ಆ ವಾಸನೆ ಅಲ್ಲಿಯೇ ಅಡಗಿ,
ಅಂಗಭವಿ ಲಿಂಗಭವಿಯೆಂಬ ಅಡಗಿದ ಕಾಳಿಕೆಯಳಿದ
ಸ್ವಯಬಣ್ಣದ ಮಿಸುನಿಗೆ
ತನುವೆಂಬ ಒರೆಗಲ್ಲ ಹಂಗಿಲ್ಲ,
ಮನವೆಂಬ ಮಚ್ಚದ ಹಂಗಿಲ್ಲ.
ಭಾವವೆಂಬ ಹಸ್ತದ ಹಂಗಿಲ್ಲ,
ತಮೋಗುಣವೆಂಬ ಮಯಣದ ಹಂಗಿಲ್ಲ.
ಬೋಧವೆಂಬ ನೇತ್ರದ ಹಂಗಿಲ್ಲ.
ಇಂತಿವರ ಹಂಗು ಹರಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ
ಪರವಳಿದು ಸಯವಾಯಿತ್ತು /72
ಆಶ್ರಮಿಗಳಿದ್ದು ಅತ್ಯಾಶ್ರಮವ ತಳೆದು
ತತ್ವಜ್ಞಾನಭರಿತ[ವಾ]ಗಿ ನಿಂದುದೆನ್ನ ಇಷ್ಟ.
ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯವನುಳಿದು
ನಿರ್ಮಲಾಂಗವಾದುದೆನ್ನ ಇಷ್ಟ.
ಅರಿವರತು ಮರಹು ನಷ್ಟವಾಗಿ ಶರಣಸ್ಥಲಕ್ಕೆ ಸಂದು,
ದ್ವಿಕರ್ಮನಷ್ಟವಾಗಿ ನಿಂದುದೆನ್ನ ಇಷ್ಟ.
ಸತ್ಯಜ್ಞಾನಾನಂದ ಶಿವಲಿಂಗಾಂಗಿ
ಸೌರಾಷ್ಟ್ರ ಸೋಮೇಶ್ವರಲಿಂಗವಾದುದೆನ್ನ ಇಷ್ಟ./73
ಆಶ್ರಯನಲ್ಲ ಅನಾಶ್ರಯನಲ್ಲ,
ದ್ವೈತಿಯಲ್ಲ ಅದ್ವೈತಿಯಲ್ಲ.
ದೇಹವಿಲ್ಲದ ಲಿಂಗ, ಪ್ರಾಣವಿಲ್ಲದ ಶರಣ,
ಉಭಯವಿಲ್ಲದ ಪರಮಾತ್ಮ,
ಪರಮೈಕ್ಯ ನಿರ್ಗಮನಗಮನಿ,
ಅರಿವುದಕ್ಕೆ ಒಡಲಿಲ್ಲದ ಭರಿತ,
ಅನುಭಾವಕ್ಕೆ ಬಾರದ ಅಗಣಿತ ಸ್ವತಂತ್ರ
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಪ್ರತಿರಹಿತ. /74
ಇಂದ್ರಿಯದ ಬಾಗಿಲಲ್ಲಿ ಮನವಿಪ್ಪುದು.
ಮನದ ಮುಂಬಾಗಿಲಲ್ಲೇ ಭೋಗಲಿಂಗವಿದ್ದು,
ಅಧಿಕಾರ ಲಯಹೊದ್ದದೆ ಸಕಲಭೋಗಂಗಳ ಭೋಗಿಸಿ
ಪ್ರಸಾದವ ಕರಣಂಗಳಿಗೆ ಕೊಟ್ಟು ಅರುಹಿ
ಎನ್ನ ಮನವ ತನ್ನತ್ತ ಸೆಳೆದು ಮರಹ ಮಾಣಿಸಿ
ಕುರುಹಳಿದು ತೆರಹುಗೊಡದ
ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡೆ. /75
ಇನನ ಕರದಲ್ಲಿ ತಮವಿದ್ದು ಬದುಕಬಲ್ಲುದೆ?
ವಾಯುವಿದ ಹಸ್ತದಲ್ಲಿ ಸೊಡರಿದ್ದು ಬೆಳಗಬಲ್ಲುದೆ?
ಉರಿಯ ಮುಖದಲ್ಲಿ ಕರ್ಪುರವಿದ್ದು ಜೀವಿಸಬಲ್ಲುದೆ?
ಸೌರಾಷ್ಟ್ರ ಸೋಮೇಶ್ವರನ ಶರಣರ ಮುಂದಣ
ಕರಣಮಥನ, ಇಂದ್ರಿಯದಿಚ್ಛೆ,
ತನುಗುಣ, ಮನಗುಣ, ಪ್ರಾಣಗುಣಾದಿಗಳಿರಬಲ್ಲವೆ? /76
ಇಲ್ಲವುಂಟೆಂಬ ಶಬ್ದನಿಃಶಬ್ದವೆಲ್ಲಾ
ಮಹದಾಕಾಶದಲ್ಲಿಯೇ ಬಯಲಾಯಿತ್ತು.
ಶೂನ್ಯವೆಂಬ ನಾಮರಹಿತನು
ನಿಃಶೂನ್ಯವಾದ ಘನಕ್ಕೆ ಗಮನನಲ್ಲ.
ನಿರ್ಗಮನ ಬಯಲ ಭಜಿಸಿ
ಬಯಲ ಮೂರ್ತಿಗಳೆಲ್ಲಾ ಬಯಲಾಗಿ ಹೋದರು.
ಮಹಾಬಯಲಿನ ನಿಲವನರಿದು
ಸೌರಾಷ್ಟ್ರ ಸೋಮೇಶ್ವರಲಿಂಗ ಲಿಂಗೈಕ್ಯವಾದ ಶರಣ. /77
ಇಷ್ಟಲಿಂಗಕ್ಕೆ ರೂಪನರ್ಪಿಸಿ,
ಪರಾಣಲಿಂಗಕ್ಕೆ ರುಚಿಯನರ್ಪಿಸಿ
ತೃಪ್ತಿಲಿಂಗಕ್ಕೆ ಪರಿಣಾಮವನರ್ಪಿಸುವುದಲ್ಲದೆ
ಇಷ್ಟಲಿಂಗಕ್ಕೆ ರುಚಿಯ
ಪ್ರಾಣಲಿಂಗಕ್ಕೆ ಪರಿಣಾಮವ
ತೃಪ್ತಿಲಿಂಗಕ್ಕೆ ರೂಪವನರ್ಪಿಸುವನರಿವು
ಹೊರಸಿನೆಕ್ಕೆಯ ಶಂಖದ ಮಣಿಯ ಸರಗೊಳಿಸುವನಂತಾಯಿತ್ತು.
ಅಗ್ನಿಯ ಗಾಯವ ತೃಣದಲ್ಲಿ ಮಂತ್ರಿಸುವನಂತಾಯಿತ್ತು.
ಆಕಾಶಕ್ಕೆ ಮಂಜಿನ ಪಟವ ಹೊದಿಸುವನಂತಾಯಿತ್ತು.
ಇದರಂತುವನಾರು ಬಲ್ಲರಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರಲ್ಲದೆ./78
ಈ ತಾಮಸ ರುದ್ರತ್ವದಿಂ ಸ್ಥಿರಚಿತ್ತದಿಂ
ಸ್ವಯವಾದ ಲಿಂಗವೆಂದಡೆ
ಅಷ್ಟವಿಧಾರ್ಚನೆ ಷೋಡಶೋಪಚರಿಯ ಸಮಾಯದಿಂ ವೇಧಿಸಿ
ಬಿಡದೊಂದಿಸಿ ಚಿತ್ತಿನ ಸ್ಫುರಣೆಯ ಪ್ರಜ್ಞತ್ವದಿಂ
ಶಿವನಲ್ಲದತಃಪರವಿಲ್ಲವೆಂದರಿತುದಕ್ಕೆ ಶ್ರುತಿ: ಇಮಾಂ ರುದ್ರಾಯ ಸ್ಥಿರಧನ್ವಿನೇ ಕ್ಷಿಪ್ರ[ಪ್ರಸಾದಾಯ]
ಸ್ವಧಾಮ್ನೇ[ದಿ]ವೋಧಾಯ ಸಹಮಾನಾಯ ವೇಧಸೇ
ತಿಗ್ಮಾಯುಧಾಯ ಗಿರಃ ಭಾರತ ಶ್ರುಣೋತು ನಃ
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಅವಿನಾಭಾವದಿಂದಿಪ್ಪವರಪೂರ್ವವಯ್ಯಾ. /79
ಉಂಟಾದುದುಂಟೆ? ಉಂಟಾದುದನಿಲ್ಲವೆಂಬುದು ಮಿಥ್ಯೆ.
ಅದು ತಾ ನಾಮ ರೂಪು ಕ್ರಿಯೆ ಇಲ್ಲವಾಗಿ ಇಲ್ಲ,
ಇಲ್ಲವಾದುದನುಂಟೆಂದಡೆ ಘಟಿಸದು.
ಉಂಟು ಇಲ್ಲವೆಂಬ ಉಳುಮೆಯಿಲ್ಲದೆ ನಿಜ ತಾನೆ,
ಸೌರಾಷ್ಟ್ರ ಸೋಮೇಶ್ವರ. /80
ಊರೊಳಗೈವರು ಮಕ್ಕಳು.
ಹಲಬರು ಆಡಹೋಗಿ ಅಡವಿಯ ಹೊಕ್ಕರಲ್ಲಯ್ಯಾ.
ನೋಡಹೋದವರು ಕಣ್ಣುಗೆಟ್ಟು ಕಾಡ ಕೂಡಿದರಲ್ಲಯ್ಯಾ.
ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ವ್ಯರ್ಥರಾದರಲ್ಲಯ್ಯಾ./81
ಎಂತೆಂತು ನೋಡಿದಡಂತಂತು ತೋರ್ಪುದೆಲ್ಲಾ ಜಡದೃಶ್ಯ,
ಇದೆಲ್ಲಾ ಮಾಯೆ ಎಂದು.
ಈ ಮಾಯೆಯ ಗಾಹುಕಂಡಿಯೊಳು ನುಸುಳುವ
ಮಾಯಾವಾದಿಗಳಂತಲ್ಲ ನೋಡಾ.
ಮಾಯೆ ಅನಿರ್ವಾಚ್ಯ, ಹೇಳಬಾರದ ಮಾಯೆಯೆಂದು
ಹೇಳಿಕೊಂಬ ವೇದಾಂತಿಗಳಂತಲ್ಲ ನೋಡಾ, ಸಿದ್ಧಾಂತಿಗಳಪ್ಪ ಶಿವಶರಣರು.
ಮಾಯೆಯ ಹುಸಿ ಮಾಡಿ
ಸರ್ವಾಂಗಲಿಂಗ ಸೋಂಕಿನಲ್ಲಿ ಲೀಲೆಯಿಂ ಸುಳಿದಾಡುವ ನಿಜಲಿಂಗೈಕ್ಯರಿಗೆ
ಮಿಕ್ಕಿನ ಭವಭಾರಿಗಳನೆಂತು ಸರಿಯೆಂಬೆನಯ್ಯಾ,
ಸೌರಾಷ್ಟ್ರ ಸೋಮೇಶ್ವರಾ. /82
ಎಂಬತ್ತುನಾಲ್ಕು ಲಕ್ಷ ಜೀವಜಂತುವಿನೊಳಗಿಪ್ಪ ಆತ್ಮನು
ಏಕಾತ್ಮನೊ, ಹಲವಾತ್ಮನೊ, ಬಲ್ಲಡೆ ನೀವು ಹೇಳಿರೆ?
ಅನಂತಕೋಟಿಬ್ರಹ್ಮಾಂಡದೊಳಗಿಪ್ಪ ಬ್ರಹ್ಮವು
ಏಕಬ್ರಹ್ಮವೊ, ಅನಂತಬ್ರಹ್ಮವೊ, ಬಲ್ಲಡೆ ನೀವು ಹೇಳಿರೆ?
ಬ್ರಹ್ಮಾಂಡವೊಂದು ತತ್ತಿ ಒಡೆದು, ಬಹಿರಾವರಣವಾದಲ್ಲಿ ಆ ಬ್ರಹ್ಮವು ಹೋಗಿ
ಮತ್ತೊಂದು ಬ್ರಹ್ಮಾಂಡದಲ್ಲಿ ಹೊಕ್ಕುದ ಕಂಡಡೆ,
ಕಂಡು ಬಲ್ಲವರು ನೀವು ಹೇಳಿರೆ.
ಗಂಧರ್ವಪಟ್ಟಣದಲ್ಲಿ ಹುಟ್ಟುವ ಬಹು ಬಣ್ಣವ ಬಲ್ಲರೆ ಬಲ್ಲ.
ಆಕಾಶಕ್ಕಡರಿದ ವಿಹಂಗನ ಮಾರ್ಗವ ಬಲ್ಲರೆ ಬಲ್ಲ.
ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವ ಬಲ್ಲರೆ ಬಲ್ಲ. /83
ಎಚ್ಚರು, ಕನಸು, ನಿದ್ರೆ, ಮೂಛರ್ೆ, ಅರಿವು, ಮರವೆ,
ಸಂಕಲ್ಪ, ವಿಕಲ್ಪ, ಅಹಂಮಮತೆ ರೂಪು ರುಚಿಯನರಿವುತಿರ್ಪ
ಮನವನರಿಯಬಹುದಲ್ಲದೆ
ಅರಿವಿಂಗರಿವಾದಾತ್ಮನ ಅರಿಯಲುಂಟೆ?
ಸರ್ವಸಾಕ್ಷಿಕನಾದ ಆತ್ಮನನರಿವೊಡೆ ಶ್ರುತಿಗತೀತ,
ಬ್ರಹ್ಮವಿಷ್ಣುರುದ್ರಾದಿಗಳಿಗಳವಲ್ಲ,
ಸೌರಾಷ್ಟ್ರ ಸೋಮೇಶ್ವರಲಿಂಗ ಅಸಾಧ್ಯವಾದ ಕಾರಣ. /84
ಎತ್ತನೇರಿ ಎತ್ತನರಸುವನಂತೆ,
ತಾನಿರ್ದು ತನ್ನನರಸಿ ಕೇಳುವನಂತೆ,
ಹೊತ್ತ ನಿಜವನರಿಯದತ್ತಲಿತ್ತ ಸುತ್ತಿ ಬಳಲುವನಂತೆ,
ಹಿಡಿದಿರ್ದ ಲಿಂಗವ ಕಾಣದೆ ಮೂವಿಧಿಗಾಣ್ಬರನೇನೆಂಬೆನಯ್ಯಾ!
ಅಜ್ಞಾನಬದ್ಧರನೆನಗೆ ತೋರದಿರಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
/85
ಎನ್ನಂಗ ಮನ ಪ್ರಾಣ ತ್ರಿವಿಧದಲ್ಲಿ ತ್ರಿವಿಧಲಿಂಗ ಸನ್ನಿಹಿತವೆಂತೆಂದಡೆ:
ಗುರುಸಂಬಂಧದಿಂದಾದ ಇಷ್ಟಲಿಂಗ,
ಲಿಂಗಸಂಬಂಧದಿಂದಾದ ಪ್ರಾಣಲಿಂಗ,
ಜಂಗಮಸಂಬಂಧದಿಂದಾದ ತೃಪ್ತಿಲಿಂಗ.
ತನುವಿನ ಕೈಯಲ್ಲಿ ಇಷ್ಟಲಿಂಗ,
ಮನದ ಕೈಯಲ್ಲಿ ಪ್ರಾಣಲಿಂಗ,
ಪ್ರಾಣನ ಕೈಯಲ್ಲಿ ತೃಪ್ತಿಲಿಂಗ.
ಇಂತು ಅಂತರಂಗ ಬಹಿರಂಗ ಆತ್ಮಸಂಗದಿಂ ತೆರಹಿಲ್ಲದಿಪ್ಪ
ಗುರುಲಿಂಗಜಂಗಮ ತ್ರಿವಿಧಸಾರಾಯಸಂಪತ್ತು
ಸೌರಾಷ್ಟ್ರ ಸೋಮೇಶ್ವರಾ, ನೀನೊಲಿದ ಶರಣಂಗೆ./86
ಎಲುವಿನ ನಿಲವು ಅಮೇಧ್ಯದಾಗರ ಉಚ್ಛಿಷ್ಟದೊರತೆ
ಮಿದುಳ ಸದನ ಕೀವು ನೆಣದೋವರಿ ಜಂತಿನ ಜನ್ಮಭೂಮಿ
ಕ್ರಿಮಿಯ ಗೂಡು ಶುಕ್ಲದ ಜೀಗೊಳವೆ ರುದಿರದ ತಾಣ
ಅಡಗಿನಂತರಂಗ ತೊಗಲಬಹಿರಂಗ ರೋಮರಾಜಿಯ ಜಾಳಂದ್ರ
ನರದ ನೇಣಜಂತ್ರ ಆಧಿವ್ಯಾದಿಯ ವಾಸ
ಇಂತಿದರೊಳಗೆ ನಿನ್ನ ಕುಲಗೋತ್ರಂಗಳಾವುವು ಹೇಳಾ ಎಲೆ ಮರುಳೆ.
ಇದಕ್ಕೆ ಶ್ರುತಿ: ಅಂತ್ಯಜಾತಿದ್ರ್ವಿಜಾತಿರ್ವಾ ಏಕಯೋನಿಸಮುದ್ಭವಃ
ಸಪ್ತಧಾತುಮಯಂ ಪಿಂಡಂ ವರ್ಣಾನಾಂ ಕಿಂ ಪ್ರಯೋಜನಂ
ಇದನರಿತು ಷಡುಭ್ರಮೆಗಳಲ್ಲಿ ಭ್ರಮಿತರನೇನೆಂಬೆನಯ್ಯಾ
ಸೌರಾಷ್ಟ್ರ ಸೋಮೇಶ್ವರಾ./87
ಎಲ್ಲೆಲ್ಲಿ ಸುಳಿದಡೆ ಅಲ್ಲಲ್ಲಿ ಉಪಾಧಿ ಬಿಡದಯ್ಯಾ.
ಈ ಉಪಾಧಿಗೆ ಅಪಾಯವನಿತ್ತು, ನಿರುಪಾಧಿಯಲ್ಲಿ ನಿಲಿಸಯ್ಯಾ.
ಎಲ್ಲಾ ಬಯಕೆಯರತ ಬಟ್ಟೆಯ ತೋರಯ್ಯಾ.
ಸಹಜ ಸಮ್ಯಕ್ ಪದವನಿತ್ತು ಸಲಹಯ್ಯಾ, ಸೌರಾಷ್ಟ್ರ ಸೋಮೇಶ್ವರಾ./88
ಏಕಮುಖದ ರುದ್ರಾಕ್ಷಿಯೊಂದನೆ ಶಿಖಿಯಲ್ಲಿ ಧರಿಸುವುದಯ್ಯಾ.
ದ್ವಿತ್ರಿದ್ವಾದಶ ಮುಖದ ಮೂರು ಮಣಿಯ ಮೂದ್ರ್ನಿಯಲ್ಲಿ ಧರಿಸುವುದಯ್ಯಾ.
ಏಕಾದಶಮುಖದ ಮೂವತ್ತಾರು ಮಣಿಯ ಶಿರವ ಬಳಸಿ ಧರಿಸುವುದಯ್ಯಾ.
ಐದು ಏಳು ಹತ್ತುಮುಖದ ರುದ್ರಾಕ್ಷಿಯ
ಒಂದೊಂದು ದ್ವಿಕರ್ಣದಲ್ಲಿ ಧರಿಸುವುದಯ್ಯಾ.
ಷಡಾಷ್ಟಮುಖದ ದ್ವಾತ್ರಿಂಶತ್ ರುದ್ರಾಕ್ಷಿಯ ಕಂಠದಲ್ಲಿ ಧರಿಸುವುದಯ್ಯಾ.
ಚತುರ್ಮುಖದ ಪಂಚಾಶತ್ ರುದ್ರಾಕ್ಷಿಯ ಉರಮಾಲೆಯಾಗಿ ಧರಿಸುವುದಯ್ಯಾ.
ತ್ರಿದಶಮುಖದ ದ್ವಾತ್ರಿಂಶ ರುದ್ರಾಕ್ಷಿಯ ದ್ವಿಬಾಹುಗಳಲ್ಲಿ ಧರಿಸುವುದಯ್ಯಾ.
ನವಮುಖದ ಚತುರ್ವಿಂಶ ರುದ್ರಾಕ್ಷಿಯ ದ್ವಿಮಣಿಬಂಧದಲ್ಲಿ ಧರಿಸುವುದಯ್ಯಾ.
ಚತುರ್ದಶಮುಖದ ರುದ್ರಾಕ್ಷಿಯ ಅಷ್ಟೋತ್ತರಶತವ
ಉಪವೀತದಂತೆ ಧರಿಸುವುದಯ್ಯಾ.
ಇಂತರಿದು ಧರಿಸಿದ ಶಿವಮಾಹೇಶ್ವರನ ಹೆಜ್ಜೆಹೆಜ್ಜೆಗೆ
ಅಶ್ವಮೇಧಯಾಗದ ಫಲ ತಪ್ಪದಯ್ಯಾ ಸೌರಾಷ್ಟ್ರ ಸೋಮೇಶ್ವರಾ./89
ಏಕಾಕಾರ ಲೋಕಾಕಾರ ನೀನಾಗಿ ತೋರ್ಪೆಯಯ್ಯಾ ಸದ್ಭಾವಿಗಳಿಗೆ.
ಏಕಾಕಾರವೆ ಹುಸಿ, ಲೋಕಾಕಾರವೆ ದಿಟವಾಗಿ
ತೋರ್ಪೆಯಯ್ಯಾ ಭಾವಭ್ರಮಿತರಿಗೆ.
ಏಕಾಕಾರ ಲೋಕಾಕಾರ ಸರ್ವಾಕಾರವಾಗಿ
ತೋರ್ಪೆಯಯ್ಯಾ ನಿರ್ಭಾವರಿಗೆ.
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜದಾಕಾರ
ನೀವಾಗಿರ್ಪಿರಯ್ಯಾ ಭಾವೈಕ್ಯವಾದ ಮಹಂತರಿಗೆ./90
ಏಕೋತ್ತರದಲ್ಲಿ ಎಚ್ಚತ್ತಡೇನಯ್ಯಾ,
ಏಕೋದೇವನ ನೆನಹು ನೆಲೆಗೊಳ್ಳದನ್ನಕ್ಕ?
ಅನುಭಾವದಲ್ಲಿ ಅಭ್ಯಾಸಿಯಾದಡೇನಯ್ಯಾ,
ಸ್ವಯಾನುಭಾವ ಸನ್ನಹಿತವಾಗದನ್ನಕ್ಕ?
ತತ್ವಾರ್ಥಿಯಾದಡೇನಯ್ಯಾ, ಮಿಥ್ಯಾರ್ಥವ ದಾಂಟದನ್ನಕ್ಕ?
ಅರಿವನರಿತಡೇನಯ್ಯಾ,
ಚಿದಹಂ ಎಂಬ ಮರವೆ ಸೋಂಕುವ ತೆರನ ತಿಳಿಯದನ್ನಕ್ಕ?
ಸೌರಾಷ್ಟ್ರ ಸೋಮೇಶ್ವರಾ ಎಂದಡೇನಯ್ಯಾ
ನಿಂದ ಭೇದವ ಭೇದಿಸದನ್ನಕ್ಕ? /91
ಏಳು ನೆಲೆಯ ಕರುಮಾಡದುಪ್ಪರಿಗೆಯೊಳಗೆ,
ಒಂದೆ ಮುತ್ತಿನ ನೆಲೆಗಟ್ಟಿನ ಮೇಲೆ,
ಭಿತ್ತಿ ಇಲ್ಲದ ರತ್ನದ ಹೊದಿಕೆಯ ಮೇಲಿಪ್ಪ ಕಳಸವ ಕಂಡವರಾರನೂ ಕಾಣೆ.
ಸೌರಾಷ್ಟ್ರ ಸೋಮೇಶ್ವರಲಿಂಗವ ಹಿಡಿದು ನಿಲಲರಿಯದೇರಿದವರು
ಜಾರಿ ಬಿದ್ದು ಸೂರೆವೋದರು ಕಾಲಂಗೆ./92
ಒಂದು ಕಪಿಗೆ ಹತ್ತು ಮುಖ,
ಆ ಹತ್ತು ಮುಖದಲ್ಲಿ ಹತ್ತುಮರದ
ಹತ್ತು ಹಣ್ಣಯೆತ್ತೆತ್ತಿ ತಿನುತಿದ್ದಿತಯ್ಯಾ.
ಆ ಹಣ್ಣಿನ ವಿಷಯವು ತಲೆಗೇರಿ
ಮೂರು ಲೋಕವೆಲ್ಲಾ ಉರಿವುತ್ತಿದೆ.
ಈ ಪರಿಯ ಪರಿಹರಿಸುವಡೆ ಹರಿಬ್ರಹ್ಮಾದಿಗಳಿಗೆಳವಲ್ಲ ನೋಡಯ್ಯಾ.
ಅಗ್ನಿಯ ಘಟಿಕೆಯ ನುಂಗಲು ಉರಿಕೆಟ್ಟು
ಸೌರಾಷ್ಟ್ರ ಸೋಮೇಶ್ವರಲಿಂಗ ಸಾಧ್ಯವಾಯಿತ್ತು. /93
ಒಡಲೋಪಾದಿಯಿಂದ ತನುವ ಹೊರೆವವನಲ್ಲ.
ಶಿವಪ್ರಸಾದವಲ್ಲದನ್ಯವ ಭೋಗಿಸ.
ಗುರುಕುರುಣವಿಡಿದಿಪ್ಪನಾಗಿ ಜನ್ಮಜಾಡ್ಯ ಸೂತಕಪಾತಕಂಗಳಿಲ್ಲ.
ಜಂಗಮಲಿಂಗದ ತೃಪ್ತಿಯಿಂದ ತನ್ನ ತಾ ಹಾರಿ ಸಂಸಾರಕುಲಗಿರಿಯ ದಾಂಟಿ
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಭಾವಶುದ್ಧಿಯಿಂದಿಪ್ಪನಯ್ಯಾ./94
ಒಬ್ಬನಿಗೆ ರೂಹಿಲ್ಲ, ಒಬ್ಬನಿಗೆ ರೂಹುಂಟು,
ಒಬ್ಬನ ರೂಹು ಹೋಗುತ್ತ ಬರುತ್ತದೆ.
ಮೂವರನೊಂದೆಡೆಗೆ ತಂದಡೆ ಏನಹರೆಂಬುದ ನೋಡಿಕೊಳ್ಳಿರಣ್ಣಾ.
ಕಂಡಡೆ ಉಣಲಿಲ್ಲ, ಕಾಣದಿರ್ದಡೆ ಉಣದಿರಲಿಲ್ಲ.
ಇದೇನು ಸೋಜಿಗವಯ್ಯಾ ಸೌರಾಷ್ಟ್ರ ಸೋಮೇಶ್ವರಾ./95
ಕಂಗಳ ಬೆಳಗು ತವೆಯುಡುಗಿ ತೊಳತೊಳಗಿ ಬೆಳಗುತಿದರ್ಿತ್ತಯ್ಯಾ.
ಸುನಾದ ಮಹಾನಾದಂಗಳು ಸುಸರವಾಗಿ ಸೂಚಿಸುತಿದರ್ಿತ್ತಯ್ಯಾ.
ಸುಜ್ಞಾನಭರಿತವೆ ಚಿದಂಬರದ ಚಿತ್ತಚಿತ್ತು ತಾನಾಗಿದರ್ಿತ್ತಯ್ಯಾ.
ಸತ್ತು ಸತ್ತು ಸದಾ ಸತ್ತು ಸೌರಾಷ್ಟ್ರ ಸೋಮೇಶ್ವರಲಿಂಗ
ತಾನಾಗಿರ್ದನಯ್ಯಾ. /96
ಕಂಗಳ ಬೆಳಗು ದೃಕ್ಕಿಂಗೆ ದೃಷ್ಟವಾಗದೆ?
ಮನದ ಮಿಂಚು ಅರಿವಿಂಗೆ ವೇದ್ಯವಾಗದೆ?
ಆತ್ಮಜ್ಯೋತಿ ಭಾವಸ್ಫಟಿಕಘಟದೊಳಗೆ
ಪ್ರಜ್ವಲಿಸಿ ತೊಳತೊಳಗಿ ಬೆಳಗುತಿಪ್ಪುದನರಿಯಾ,
ಸೌರಾಷ್ಟ್ರ ಸೋಮೇಶ್ವರಲಿಂಗವ ಬಲ್ಲೆನೆಂಬುದು ಬರಿಯ ಮಾತು./97
ಕಂಡುದ ಕಂಡು ಕೈಕೊಂಬರಲ್ಲದೆ,
ಕಾಣದುದ ಕಂಡು ಕೈಕೊಂಬುವರಿಲ್ಲ ನೋಡಯ್ಯಾ.
ಹಿಡಿದವರ ಕಂಡು ಹಿಡಿವರೈಸಬಲ್ಲದೆ
ಹಿಡಿಯೊಡೆದು ಹೋದುದನಾರೂ ಹಿಡಿವರಿಲ್ಲಯ್ಯಾ.
ಪೂಜಿಸುವರ ಕಂಡು ಪೂಜೆಗೆಯ್ವರಲ್ಲದೆ
ಪೂಜೆರಹಿತವಾದ ಪೂಜ್ಯನನಾರೂ ಪೂಜಿಸುವರಿಲ್ಲ ನೋಡಯ್ಯಾ.
ರೂಪನರ್ಪಿಸುವರಲ್ಲದೆ ರುಚಿಯನರ್ಪಿಸುವರಿಲ್ಲಯ್ಯಾ.
ಇದರಂತುವನಾರು ಬಲ್ಲರಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರಲ್ಲದೆ?/98
ಕಂಡೆ ಕಾಣೆನೆಂಬುದು ಕಂಗಳ ಭ್ರಮೆ,
ಕೂಡಿದೆನಗಲಿದೆನೆಂಬುದು ಕಾಯ ಭ್ರಮೆ,
ಅರಿದೆ ಮರೆದೆನೆಂಬುದು ಚಿದೋಹಂ ಭ್ರಮೆ,
ಓದು ವೇದಂಗಳ ಜಿನುಗು ಉದುಮನದ ಭ್ರಮೆ,
ಇಹ ಪರಂಗಳನಾಸೆಗೆಯ್ವುದು ಜೀವ ಭ್ರಮೆ,
ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ.
/99
ಕಟ್ಟಣೆಯೊಳಗಣ ಕಾಂಸ್ಯಕದಂತೆ,
ಅಣಿಯೊಳಗಣ ಕೇಣದಂತೆ,
ಚಿನ್ನದೊಳಗಣ ಬಣ್ಣದಂತೆ,
ಪಟದೊಳಗಣ ತಂತುವಿನಂತೆ,
ಎನ್ನಲ್ಲಿ ಭಿನ್ನವಿಲ್ಲದಿದ್ದೆಯಲ್ಲಾ ಸೌರಾಷ್ಟ್ರ ಸೋಮೇಶ್ವರಾ./100
ಕಡಲೊಳಗಣ ವಡಬ ಹೊದ್ದಿಯೂ ಹೊದ್ದದಂತೆ,
ಇಂದುಕಾಂತದೊಳಗೆ ಬಿಂದುವಿದ್ದಿಲ್ಲದಂತೆ,
ದರ್ಪಣದೊಳಗಣ ಪ್ರತಿಬಿಂಬ ಮುಟ್ಟಿಯೂ ಮುಟ್ಟದಂತೆ,
ಸರ್ವಸಾಕ್ಷಿಕನಾದ ಸೌರಾಷ್ಟ್ರ ಸೋಮೇಶ್ವರನು
ಪಿಂಡದೊಳಗಡಗಿ ಇಲ್ಲದಂತಿಪ್ಪನಯ್ಯಾ.
/101
ಕಡವರವಿರ್ದು ಬಡತನವೇಕೊ?
ಮರುವಣಿಯಿರ್ದು ಮರಣವಾಗಲೇಕೊ?
ಅಗ್ನೀಸ್ತಂಭವಿರ್ದು ತನು ಹೊತ್ತಿ ಉರಿಯಲೇಕೊ?
ಅಮೃತಸಾಗರದಲ್ಲಿರ್ದು
ಆಪ್ಯಾಯನವೇಕೊ?
ಪರಮಜ್ಞಾನವಿರ್ದು ಪರವಿಹದ ಪರಿಭವವೇಕೊ?
ಸೌರಾಷ್ಟ್ರ ಸೋಮೇಶ್ವರಲಿಂಗವಿರ್ದು ಮುಕ್ತಿಕಾಮಿತವೇಕೊ?/102
ಕಣ್ಣು ತನ್ನ ತಾ ಕಾಣಲರಿಯದಂತೆ,
ಹಣ್ಣು ತನ್ನ ರುಚಿಯ ತಾನರಿಯದಂತೆ,
ಉರಿ ತನ್ನ ಉಷ್ಣವ ತಾನರಿಯದಂತೆ,
ಬಯಲು ತನ್ನ ತೆರಪ ತಾನರಿಯದಂತೆ,
ಲಿಂಗೈಕ್ಯ ತನ್ನೊಳಗಳ ಲಿಂಗವ ತಾನರಿಯದಂತೆ,
ನಾ ಸತ್ತನೆಂಬ ಹೆಣನಿಲ್ಲವಾಗಿ.
ತನ್ನ ಮರೆದು ಲಿಂಗವ [ಮೆ]ರೆದ ಲಿಂಗೈಕ್ಯರು
ಸೌರಾಷ್ಟ್ರ ಸೋಮೇಶ್ವರನಲ್ಲಿ, ಅನುಭಾವವ ಮಾಡಲಿಲ್ಲ;
ನುಡಿದು ಹೇಳಲಿಲ್ಲ; ನಡೆದು ತೋರಲಿಲ್ಲ. /103
ಕತ್ತೆಯ ಗರ್ಭದಿಂದ ಪ್ರಸೂತವಾದ ಎತ್ತು
ಹುಲ್ಲು ತಿನ್ನದು, ನೀರ ಕುಡಿಯದು,
ಇರ್ದಲ್ಲಿ ಇರದು, ಹೋದತ್ತ ಹೋಗದು.
ಇದೇನು ಸೋಜಿಗ ಬಲ್ಲರೆ ಹೇಳಿರಣ್ಣಾ,
ಎತ್ತ ಬಿಟ್ಟಿತ್ತು, ಸತ್ತನೊಳಕೊಂಡು
ಮುತ್ತನುಗುಳಿ ಹೋಯಿತ್ತು.
ಇದೇನು ವಿಪರೀತ, ಬಲ್ಲರೆ ಹೇಳಿರಣ್ಣಾ,
ಎತ್ತು ಕೆಟ್ಟಿತ್ತು, ಅರಸುವರ ಕಾಣೆನಣ್ಣಾ.
ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ,
ಎತ್ತೆತ್ತ ಪೋಯಿತ್ತೆಂದರಿಯೆನಣ್ಣಾ./104
ಕನಸಿಂಗೆ ಕಲ್ಪನೆಯಿಲ್ಲ. ನೆನಹಿಂಗೆ ಸೂತಕವಿಲ್ಲ,
ಮನಸಿಂಗೆ ಪಾತಕವಿಲ್ಲ, ಕಾಯಕ್ಕೆ ಬಂಧವಿಲ್ಲ,
ಜೀವಂಗೆ ಮೋಕ್ಷವಿಲ್ಲ.
ಇಲ್ಲದ ಜಗ ಇಲ್ಲವೆಯಿಂದ ತೋರುವುದು, ಅಡಗುವುದು.
ತೋರದೆ ಅಡಗದೆ ಇಪ್ಪ
ಮಹಾಘನ ಸೌರಾಷ್ಟ್ರ ಸೋಮೇಶ್ವರಲಿಂಗವದೇ ಕಂಡಾ.
/105
ಕರಸ್ಥಲದಲ್ಲಿ ಲಿಂಗವಿರಲು
ಆ ಹಸ್ತವೇ ಕೈಲಾಸ, ಈ ಲಿಂಗವೇ ಶಿವನು.
ಇದು ಕಾರಣ ಇಲ್ಲಿಯೇ ಕೈಲಾಸ.
ಇದಲ್ಲದೆ ಬೇರೆ ಬೆಳ್ಳಿಯ ಬೆಟ್ಟವೇ ಕೈಲಾಸವೆಂದು
ಅಲ್ಲಿಪ್ಪ ರುದ್ರನೇ ಶಿವನೆಂದು
ಕೈಲಾಸಕ್ಕೆ ಹೋದಹೆ ಬಂದಹೆನೆಂಬ ಭ್ರಾಂತು ಬೇಡ ಕೇಳಿರಣ್ಣಾ.
ಕಾಯದ ಅನುಗ್ರಹ ಲಿಂಗದಲ್ಲಿ ಶ್ರದ್ಧೆ ಇಲ್ಲದೆ ಇರಲು
ಇನ್ನೆಲ್ಲಿಯ ನಂಬುಗೆಯಯ್ಯಾ?
ಅಲ್ಲಲ್ಲಿಗೆ ಹರಿಹಂಚಾಗಿ ಕೆಡಬೇಡ ಕೇಳಿರಣ್ಣಾ.
ಅಂಗದೊಳಗೆ ಲಿಂಗಾಂಗ ಸಂಗವನರಿತು
ಒಳಹೊರಗು ಒಂದೇಯಾಗಿ
ಶಿಖಿಕರ್ಪುರ ಸಂಗದಲ್ಲಿ ಕರ್ಪುರ ಉರಿಯಾಗಿಪ್ಪಂತೆ,
ಸರ್ವಾಂಗದಲ್ಲಿ ಲಿಂಗಸೋಂಕಿ
ಅಂಗಭಾವವಳಿದು, ಲಿಂಗಭಾವ ತನ್ಮಯವಾಗಿಪ್ಪ
ತದ್ಗತಸುಖ ಉಪಮಾತೀತವಯ್ಯಾ, ಸೌರಾಷ್ಟ್ರ ಸೋಮೇಶ್ವರಾ. /106
ಕರ್ಮಮಲಮಾಯೆಗಳಿಲ್ಲದ, ಈಷಣತ್ರಯಂಗಳಿಗೆ ಸಲ್ಲದ,
ಷಡುಮಿತ್ರರಿಗೆ ನಿಲುಕದ, ತಾಪತ್ರಯಂಗಳಿಗೆ ತಲ್ಲಣಿಸದ,
ಆಶೆಯಾಮಿಷ ತಾಮಸಂಗಳು ಹೊದ್ದದ,
ನಿಸ್ಸೀಮಗುರುವಿನಂಘ್ರಿವಿಡಿದು ಗುರುಕಾರುಣ್ಯವ ಪಡೆದು
ಜನ್ಮಜರಾಮರಣ ವೃಂದಂಗಳ ಕಳೆದೆನಯ್ಯಾ
ಸೌರಾಷ್ಟ್ರ ಸೋಮೇಶ್ವರನೆಂಬ ಗುರುವೇಧೆಯಿಂದಯ್ಯಾ. /107
ಕರ್ಮವಶದಿಂದುದಯಿಸಿದ ಶರೀರವ
ಕರ್ಮದ್ವಯಂಗಳಲ್ಲಿ ಲೇಪವಾಗದೆ
ನೀರ ತಾವರೆಯಂತೆ ನಿಲರ್ೇಪವಾದುದಕ್ಕೆ
ಶ್ರುತಿ: ಯಥಾ ಪುಷ್ಕರಪರ್ಣಂ ಆಪೋ ನ ಶ್ಲಿಷ್ಯತಿ
ಏವಮೇನಂ ವಿಪಾಪಕರ್ಮ ನ ಶ್ಲಿಷ್ಯತಿ
ಇಂತೆಂದುದಾಗಿ,
ಜ್ಯೋತಿಷ್ಟೋಮ ಬ್ರಹ್ಮಹತ್ಯೆ ಮೊದಲಾದ
ಸಂಚಿತ ಪ್ರಾರಬ್ಧ ಆಗಾಮಿರಹಿತರು
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು/108
ಕಲ್ಲಿನಲ್ಲಿ ಕನಕ ಒಗೆದಡೆ ಕನಕ ಕಲ್ಲಿಂಗೆ ಕಿಂಕರನಪ್ಪುದೆ?
ಶುಕ್ತಿಯಲ್ಲಿ ವರಿಾಕ್ತಿಕ ಒಗೆದಡೆ ವರಿಾಕ್ತಿಕ ಶುಕ್ತಿಗೆ ಕಿಂಕರನಪ್ಪುದೆ?
ಧರೆಯಲ್ಲಿ ಸುರತರು ಒಗೆದಡೆ ಸುರತರು ಧರೆಗೆ ಕಿಂಕರನಪ್ಪುದೆ?
ಜನನಿಯುದರದಲ್ಲಿ ಘನಶರಣ ಒಗೆದಡೆ ಜನನಿ ಜನಕಂಗೆ ಕಿಂಕರನಪ್ಪ[ನೆ]?
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು
ಸ್ವತಂತ್ರಶೀಲರಗ್ರಗಣ್ಯರು. /109
ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ
ಕ್ರೋಧ,ಲೋಭ, ಚಿತ್ತದಲ್ಲಿ ಮೊಳೆಯದೆ,
ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ
ಕುಂದು ನಿಂದೆಗಳಿಂದ ಕೆಡೆನುಡಿವ ವಾಕು ಮನದಲ್ಲಿ ಪಲ್ಲವಿಸದೆ,
ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ,
ಪ್ರಕೃತಿ ವಿಕೃತಿ ಭ್ರಾಂತು ಭಾವದಲ್ಲಿ ಫಲಿಸದೆ,
ಸುಜ್ಞಾನದಿಂದ ಧರ್ಮಾಧರ್ಮಂಗಳ ವರ್ಮನರಿತು
ಮನಕ್ಕೆ ಮನಸ್ಸಾಕ್ಷಿಯಾಗಿ
ಸದ್ವರ್ತನೆ ಸಮತೆ ಸಾರಹೃದಯ ಅನಿಂದೆ ಅನುಬಂಧ ಅಕಪಟ
ಪಟುತರವಾಗಿ ಸಟೆಯುಳಿದು ದಿಟಘಟಿಸಿ ನಿಜ ನಿರುಗೆಯಾದಲ್ಲಿ
ಸೌರಾಷ್ಟ್ರ ಸೋಮೇಶ್ವರನೆಡೆಬಿಡವಿಲ್ಲದಿಪ್ಪನು./110
ಕಾಮಂಗೆ ಕೈತಲೆಗೊಟ್ಟ ಕೈವಾರಿಗಳಿಗೆಲ್ಲಿಯದೊ, ಕೈವಲ್ಯ ಪದವಿ?
ಕಾಲಂಗೆ ಕಾಯವನೊಪ್ಪಿಸಿಕೊಟ್ಟ ಕಾಮುಕರಿಗೆಲ್ಲಿಯದೊ, ಕೈಲಾಸದ ಬಟ್ಟೆ?
ಕರ್ಮಕಪಟದ ಕಮ್ಮರಿಯೊಳು ಸಿಲುಕಿ ಕಳವಳಿಸುತಿರ್ಪ
ಕರ್ಮಕಾಂಡಿಗಳಿಗೆಲ್ಲಿಯದೊ, ಸ್ವಗರ್ಾಪವರ್ಗ?
ಸೌರಾಷ್ಟ್ರ ಸೋಮೇಶ್ವ[ರ] ಲಿಂಗದ ನಿಜವನರಿಯದ
ಕುಜನರಿಗೆಲ್ಲಿಯದೊ ನಿತ್ಯಾನಂದ ನಿಜಸುಖ? /111
ಕಾಮದ ಸೀಮೆಯ ಕಳೆಯದನ್ನಕ್ಕ, ಕೋಪದ ಕೂಪ ಹೂಳದನ್ನಕ್ಕ,
ಲೋಭದ ಲಾಭ ಕ್ಷಯಿಸದನ್ನಕ್ಕ, ಮೋಹದ ಗಾಯ ನಂದದನ್ನಕ್ಕ,
ಮದದುನ್ಮದ ಕೆದರದನ್ನಕ್ಕ, ಮಚ್ಚರದ ಕೆಚ್ಚು ಬಿಚ್ಚದನ್ನಕ್ಕ,
ಅರಿಗಳಾರತವಡಗಿ ನಿರುತವಾಗದನ್ನಕ್ಕ,
ಸೌರಾಷ್ಟ್ರ ಸೋಮೇಶ್ವರಲಿಂಗವೆಂತು ಸಾಧ್ಯವಪ್ಪುದಯ್ಯಾ?/112
ಕಾಮಧೇನು ಕಾಮಿಸಿದಲ್ಲದೆ ಈಯಲರಿಯದು,
ಕಲ್ಪವೃಕ್ಷ ಕಲ್ಪಿಸಿದಲ್ಲದೆ ಈಯಲರಿಯದು,
ಚಿಂತಾಮಣಿ ಚಿಂತಿಸಿದಲ್ಲದೆ ಈಯಲರಿಯದು,
ತವನಿಧಿ ತೆಗೆದಲ್ಲದೆ ಈಯಲರಿಯದು,
ನವನಿಧಿ ಬಯಸಿದಲ್ಲದೆ ಕೊಡಲರಿಯದು,
ಕಾಮಿಸದೆ ಕಲ್ಪಿಸದೆ ಚಿಂತಿಸದೆ [ತೆಗೆಯದೆ] ಬಯಸದೆ
ಎನ್ನನೀವುದಕ್ಕೆ ಮುನ್ನವೆ ತನ್ನನಿತ್ತ
ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡೆ. /113
ಕಾಮಿತವಿಲ್ಲ ಕಲ್ಪಿತವಿಲ್ಲ ನಾಮಸೀಮೆಯೆಂಬುದಿಲ್ಲ.
ಭಾವಿಸಲಿಲ್ಲ ಲಕ್ಷಿಸಲಿಲ್ಲ ರೂಹಿಸಲಿಲ್ಲ.
ವಾಙ್ಮನಾತೀತವೆಂದಲ್ಲಿ ನೆನೆಯಲಿಲ್ಲ.
ಅತ್ಯತಿಷ್ಠದ್ದಶಾಂಗುಲವೆಂದಲ್ಲಿ ಲಕ್ಷಿಸಲಿಲ್ಲ.
ಸರ್ವಗೌಪ್ಯ ಮಹಾದೇವಾಯೆಂದಲ್ಲಿ ರೂಹಿಸಲಿಲ್ಲ.
ಇಲ್ಲ ಇಲ್ಲ ಎನಲಿಲ್ಲ ಅಲ್ಲಿಯೇ ನಿಲರ್ೆಪವಾದ
ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡಾ.
/114
ಕಾಯದ ಅವಗುಣಂಗಳ ಕಾಣದೆ ವಾಯುಕ್ಕೆ ವಾಯವ ನುಡಿವ
ವಾಯುಪ್ರಾಣಿಗಳಿಗೆ ಕಾಣಬಹುದೆ ಪರಮಾತ್ಮನಿರವು?
ಹುಲುಮೊರಡಿಯಲ್ಲಿ ಕಲ್ಪತರುವ ಕಂಡೆಹೆನೆಂದು ಕಳವಳಿಸಿ ಬಳಲುವನಂತೆ,
ಗೋರಿಕಲ್ಲೊಳಗೆ ಚಿಂತಾಮಣಿಯನರಸಿ ಬೆರಟುಗೊಂಡವನಂತೆ,
ಕಂಗಳಯ್ಯಂಗೆ ಮಣಿಮುಕುರನ ತೋರೆ ಕಾಣ್ಬನೆ ತನ್ನ ಪ್ರತ್ಯಂಗವ?
ತಮ್ಮಲ್ಲಿದರ್ಾತ್ಮನ ತಾವರಿಯದವರು
ನಿಮ್ಮನೆತ್ತ ಬಲ್ಲರಯ್ಯಾ ಸೌರಾಷ್ಟ್ರ ಸೋಮೇಶ್ವರಾ./115
ಕಾಯದ ಕೈಮುಟ್ಟದೆ, ಜೀವದ ಕೈಮುಟ್ಟದೆ,
ಮನದ ಕೈಮುಟ್ಟದೆ, ಭಾವದ ಕೈಮುಟ್ಟದೆ,
ಸಾವಧಾನದ ಕೈಮುಟ್ಟದೆ,
ಅರ್ಪಿಸಿಕೊಳ್ಳದೆ, ಅನರ್ಪಿತವ ಮುಟ್ಟದೆ,
ಲಿಂಗಮುಟ್ಟಿಬಂದ ಪ್ರಸಾದವ ಸೇವಿಸಿಪ್ಪ ಶರಣಂಗೆ ಶರಣೆಂಬೆನಯ್ಯಾ
ಸೌರಾಷ್ಟ್ರ ಸೋಮೇಶ್ವರಾ./116
ಕಾಯದ ಕೈಮುಟ್ಟಿ ಲಿಂಗಕ್ಕರ್ಪಿಸಿದೆನಂದಡೆ ಅನರ್ಪಿತ,
ಅಂಗದೊಳಗೆ ಲಿಂಗ ತನ್ಮಯನಾಗಿ ಪ್ರಾಣಾನುಪ್ರಪಂಚ ಮರೆದಿರಲು,
ಆ ಅಂಗವೇ ಲಿಂಗಕ್ಕರ್ಪಿತವಾಗಿ ಪ್ರಸಾದಕಾಯವಪ್ಪುದು.
ಇಂತಾದ ಬಳಿಕ ಅಂಗ ಸೋಂಕಿಲ್ಲದೆ ಲಿಂಗ ಸೋಂಕಾಗಿರ್ಪುದಾಗಿ
ಅರಿದು ಮರೆದು ಅರ್ಪಿತ ಅನರ್ಪಿತವೆಂಬ ಭ್ರಾಂತು ಸೂತಕವಿಲ್ಲ.
ನಿಭ್ರಾಂತ, ನಿಸ್ಸಂದೇಹಿ, ಸೌರಾಷ್ಟ್ರರ ಸೋಮೇಶ್ವರ ಲಿಂಗವಲ್ಲದನ್ನ
ಸೊಗಸದ ಪ್ರಸಾದಿ./117
ಕಾಯದ ಗತಿಯಿಲ್ಲ, ನಡೆವವನಲ್ಲ.
ಅಕಾಯಚರಿತ್ರನು, ಅನುಪಮಲಿಂಗೈಕ್ಯನು.
ಕುಲ, ಛಲ, ವಿದ್ಯಾಮದ, ಮೋಹ, ಬಲುವಿಡಿಯ.
ನಿರಹಂಕಾರವಿಡಿದು, ನಿರಂಗ ಸುಜ್ಞಾನ ಒಡಲಾ[ಗಿ]
ಭರಿತಪ್ರಸಾದವಲ್ಲದನ್ಯವನರಿಯ.
ಇದಕ್ಕೆ ಶ್ರುತಿ: ಶುಚಿರೂಪಂ ನಚಾಜ್ಞಾನಂ ಅರ್ಪಿತಾನರ್ಪಿತಂ ತಥಾ
ಯಥಾ ವತರ್ೇತ ಯಸ್ಯಾಪಿ ಶಿವೇನ ಸಹ ಮೋದತೇ
ಎಂದುದಾಗಿ
ಅಂಗರುಚಿಯ ಹಂಗು ಹಿಂಗಿ
ಲಿಂಗರುಚಿಯ ಸಂಗವಾದ ಸುಸಂಗಿ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ./118
ಕಾಯದ ಜನನಸ್ಥಾನ ಅಷ್ಟತನುವಿನ ಕೊನೆಯ ಮೊನೆಯಲ್ಲಿ,
ವಾ[ಕಿ]ನ ಜನನಸ್ಥಾನ ಮನದ ಕೊನೆಯ ಮೊನೆಯಲ್ಲಿ,
ಮನದ ಜನನಸ್ಥಾನ ಚಿತ್ತಿನ ಕೊನೆಯ ಮೊನೆಯಲ್ಲಿ,
ಚಿತ್ತಿನ ಜನನಸ್ಥಾನ ಆತ್ಮನ ಕೊನೆಯ ಮೊನೆಯಲ್ಲಿ,
ಸೌರಾಷ್ಟ್ರ ಸೋಮೇಶ್ವರನ ಜನನಸ್ಥಾನ
“ಸರ್ವಂ ಖಲ್ವಿದಂ ಬ್ರಹ್ಮ ಎಂಬಲ್ಲಿ./119
ಕಾಯದಲ್ಲಿ ಜೀವಪ್ರಚ್ಛನ್ನವೆಂದಡೆ
ಸರ್ವಾಂಗಕ್ಕೆ ಚೇತನವಾಗಿಪ್ಪುದಾಗಿ ಪ್ರಚ್ಛನ್ನವಲ್ಲ.
ಜಗದಲ್ಲಿ ಜೀವ ಪರಿಪೂರ್ಣದೆಂದಡೆ `ಯುದ್ಧೃಷ್ಟಂ ತನ್ನಷ್ಟ’ ವೆಂದುದಾಗಿ,
ಕಾಯದಿಂ ಜೀವ ತೊಲಗುವ ದೆಸೆಯಿಂ ಪರಿಪೂರ್ಣವಲ್ಲ.
ಇದಕ್ಕೆ ಶ್ರುತಿ: ಕಾಯಮಾಕಾರಯುಕ್ತಂತು ಜೀವೋ ರೂಪವಿವಜರ್ಿತಃ
ಕಾಯಜೀವದ್ವಯೈಯರ್ುಕ್ತಂ ನ ಧ್ರುವಂ ಪರಮೇಶ್ವರಿ
ಇಂತೆಂದುದಾಗಿ,
ಜೀವಂಗೆ ಜೀವವಾದಾತ್ಮನೆ ಪರಮಾತ್ಮನೆಂಬ
ಉಪಮೆಗುಪಮಾತೀತ, ಭಾವಕ್ಕೆ ಭಾವಾತೀತ,
ಅರುವಿಂಗೆ ಅಗೋಚರ, ಅತಕ್ರ್ಯನಗಣಿತನಪ್ರಮೇಯ ನಿತ್ಯನಿರಂಜನ ನೀನೆ,
ಸೌರಾಷ್ಟ್ರ ಸೋಮೇಶ್ವರಾ./120
ಕಾಯವೆ ಜೀವವೊ? ಜೀವವೆ ಕಾಯವೊ?
ಕಾಯವಳಿದಲ್ಲಿ ಜೀವವಳಿವುದೊ ಉಳಿವುದೊ?
ಬಲ್ಲವರು ನೀವು ಹೇಳಿರೆ!
ಪ್ರಾಣವು ಲಿಂಗವು ಬೇರಿಪ್ಪುದೊ? ಬೆರಸಿಪ್ಪುದೊ?
ಬಲ್ಲಡೆ ನೀವು ಹೇಳಿರೆ.
ಪ್ರಾಣಲಿಂಗ ಲಿಂಗಪ್ರಾಣವೆಂಬ ಸಂದು ಸಂಶಯವಳಿದು ಶುದ್ಧವಿದ್ಯಾತೀತ ನೀನೇ.
ನಿಜನಿರ್ಣಯ ನಿಃಪತಿಯಾಗಿ, ಕಾಯ ಜೀವದ ಭೇದವಳಿದು
ಜೀವ ಪರಮನೆಂಬುಭಯವಳಿದುಳಿದು
ಒಳ ಹೊರಗೆಂಬ ಕುಳವಳಿದಾತ ನೀನೇ
ಸೌರಾಷ್ಟ್ರ ಸೋಮೇಶ್ವರಾ./121
ಕಾಯವೆಂಬ ಕಲ್ಲಮೇಲೆ ಮನವೆಂಬ ಮಚ್ಚವ
ಸದ್ಭಾವವೆಂಬ ಹಸ್ತದಿಂ ಪಿಡಿದೊರೆದು,
ಪರಬ್ರಹ್ಮದ ಬಣ್ಣಕ್ಕೆ ಅದ್ವೈತದ ಅಣಿಯನಿಟ್ಟು,
ನಿರ್ಧರಿಸಿದ ನಿಜಬಣ್ಣವ ನಿಜದಿಂ ಕಂಡು ಇಹುದಿಲ್ಲ.
ಬಹುದು ಬಾರದೆಂಬ ಬಹು ಬಣ್ಣದ ಬಳಕೆಯಳಿದ ಸಹಜ ನೀನೆ,
ಸೌರಾಷ್ಟ್ರ ಸೋಮೇಶ್ವರಾ./122
ಕಾಲ ಕರ್ಮ ಬಿಂದು ಮಾಯೆ ಜೀವ ಪ್ರಕೃತಿ
ಮಲ ರೋಧನ ಕಳವು ಹಿಂಸೆ ತೃಷೆ ನಿದ್ರೆ ವ್ಯಸನಕ್ಕೆ
ಕ್ಲೇಶ ಕಾಮಾದಿಗಳುಳ್ಳನ್ನಕ್ಕರ ಏಕ ಭಾಜನೆವೆಲ್ಲಿಯದೊ?
ಇವೆಲ್ಲವ ಕಳೆದುಳಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗದೊಡನೆ
ಏಕಭಾಜನ, ದೊರಕೊಂಬುದು. /123
ಕಾಷ್ಠದೊಳಗೆ ಅಗ್ನಿ ಇಪ್ಪಂತೆ,
ಹಾಲೊಳಗೆ ತುಪ್ಪವಿದ್ದಂತೆ
ತನುವಿನಲ್ಲಿ ಚೇತನವಿಪ್ಪಂತೆ,
ಪಿಂಡದಲ್ಲಿ ಘನಲಿಂಗ ಪೂರ್ಣವಾಗಿಪ್ಪನಾಗಿ ಇಹಪರನಾಸ್ತಿ.
ಇಹಪರನಾಸ್ತಿಯಾಗಿ, ನಿರ್ವಯಲನೈದಿಪ್ಪನಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ. /124
ಕಾಳ ರಕ್ಕಸಿಗೆ ಮೂರು ಬೆನ್ನು, ಐದು ಬಸುರು,
ಆರು ಕಣ್ಣು, ಏಳು ಮೊಲೆ, ಎಂಟು ಭುಜ,
ಹತ್ತು ತೋಳು, ಹದಿನಾರು ಪಾದ, ಹದಿನೆಂಟು ತಲೆ,
ಮೂವತ್ತಾರು ಬಾಯಿ, ಐವತ್ತೆರಡು ನಾಲಗೆ,
ಅರುವತ್ತುನಾಲ್ಕು ಕೋರೆದಾಡೆ.
ಈ ಪರಿಯಲ್ಲಿ ಜಗವೆಲ್ಲವನಗಿದಗಿದು ಉಗುಳುತ್ತಿರ್ದಳಯ್ಯಾ,
ಸೌರಾಷ್ಟ್ರ ಸೋಮೇಶ್ವರಾ, ನೀ ಮುಟ್ಟೆ ಬಟ್ಟಬಯವಾದಳು. /125
ಕಿಗ್ಗೊಂಬಿನ ಕಪಿ ಅಗ್ಗೊಂಬಿನ ಕಪಿಯನಣಕಿಸಲು
ಕಿಗ್ಗೊಂಬಿನ ಕಪಿ ಅದೇ ಕೊಂಬಿಗೆ ಬಿದ್ದಿತ್ತು,
ಅಗ್ಗೊಂಬಿನ ಕಪಿ ಆಕಾಶಕ್ಕೆದ್ದಿತ್ತು.
ಬಿದ್ದ ಕಪಿ ಬಯಲಾಯಿತ್ತು,
ಎದ್ದ ಕಪಿ ನಿರ್ವಯಲಾಯಿತ್ತು.
ಸೌರಾಷ್ಟ್ರ ಸೋಮೇಶ್ವರನೆಂಬ ನಾಮ ನಿನರ್ಾಮವಾಯಿತ್ತು./126
ಕುಂಜರನ ಪಂಜರವೆ ಸಂಜೀವನವಾದವರೆಲ್ಲರೂ ಭಕ್ತರೆಂತಪ್ಪರಯ್ಯಾ?
ಮುಪ್ಪುರದಲ್ಲಿ ಮುಳುಗಿದವರೆಲ್ಲರೂ ಯುಕ್ತರೆಂತಪ್ಪರಯ್ಯಾ?
ಭೂತಭವಿಷದ್ವರ್ತಮಾನಕ್ಕೆ ಸಿಲುಕಿದವರೆಲ್ಲರೂ ವಿರಕ್ತರೆಂತಪ್ಪರಯ್ಯಾರಿ
ಇಂತಪ್ಪವರು ನಮ್ಮ ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ
ಸಲ್ಲದೆ ಹೋದರು. /127
ಕುಂಡಲಿಯ ಮುಖದಲ್ಲಿ ಪ್ರಾಣನಿವಾಸಿಯಾಗಿಪ್ಪ
ಪಶ್ಚಿಮದ್ವಾರದ ಬ್ರಹ್ಮವಿಷ್ಣುರುದ್ರರ
ಅಧೋನಾಳ ಮಧ್ಯನಾಳ ಊಧ್ರ್ವನಾಳಮಂ ಕಳೆದು,
ಶೂನ್ಯಸ್ಥಾನದ ಹೂವಿನ ಪರಿಮಳದ ಚಿತ್ಪದಾಂಬುವ ಧರಿಸಿ,
ಮನಮಗ್ನನಾಗಿ, ಪ್ರಾಣಲಿಂಗವೆಂಬ ಸಂದು ನಷ್ಟವಾದಿರವ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ ಬಲ್ಲ. /128
ಕುರುಹಿಲ್ಲದಠಾವ ನೋಡುವ ಪರಿಯೆಂತೊ,
ನೋಡಲಿಲ್ಲದ ಠಾವ ಹೇಳುವ ಪರಿಯೆಂತೊ,
ಹೇಳಲಿಲ್ಲದ ಠಾವ ಕೇಳುವ ಪರಿಯೆಂತೊ,
ಜೀವ ಮನಸ್ಸೆಂದೆರಡ ನುಡಿಯಬೇಡ
ನೆನೆವ ಮನವು ತಾನೆ ಜೀವ ಕಾಣಿರೇ.
ಕಾಯಜೀವದುಭಯ ಕುಳದ ಹೆಸರಿಟ್ಟು ತೋರುವುದು
ಕಾಯಕ್ಕೊ? ಜೀವಕ್ಕೊ?
ಹೆಸರಾ[ವ] ಎಡೆಯಲ್ಲಿ ಅಡಗಿತ್ತು? ಬಲ್ಲಡೆ ನೀವು ಹೇಳಿರೇ.
ಈ ಪರಿಯಲ್ಲದೆ ನಾಮಕ್ಕೆ ಸೀಮೆ ಇಲ್ಲ, ಆತ್ಮಂಗೆ ರೂಹಿಲ್ಲ.
ನಿಃಕಳಂಕಶಾಂತಮಲ್ಲಿಕಾರ್ಜುನದೇವರೆಂಬ
ನಾಮ ಕಳಂಕು ಸೌರಾಷ್ಟ್ರ ಸೋಮೇಶ್ವರಾ./129
ಕುರುಹಿಲ್ಲದಠಾವಿನಲ್ಲಿ ತೆರಹಿಲ್ಲದಾತ್ಮಂಗೆ
ಬರಿಯ ನಾಮವ ಸೈತಿಟ್ಟು ಕುರುಹದೇನು ಹೇಳಾ?
ನಾಮವುಳ್ಳೆಡೆಯಲ್ಲಿ ಸೀಮೆ, ಸೀಮೆಯುಳ್ಳೆಡೆಯಲ್ಲಿ ನಾಮ
ಹೋಹೋ, ತಿಳಿದು ನೋಡಿರೇ.
ಹಮ್ಮು ಜಡನರಿವು ಮರವೆಯನೆಯ್ದಿಪ್ಪುದು ಮನ.
ತನು, ಮನ, ಕರಣ, ಭಾವಕ್ಕಾಧಾರವಾಗಿಪ್ಪುದಾತ್ಮ.
ಇನಕಿರಣ ಇನನಪ್ಪುದೆ? ವಾಯು ತಾನೇ ಆಕಾಶವೇ?
ಧೂಮ್ರ ತಾನೇ ಅಗ್ನಿಯೆ? ನೆನೆವ ಮನವು ತಾನೇ ಜೀವನೆ?
ಇಂತಲ್ಲ ನೋಡಾ, ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಮನವೇ ಆತ್ಮನಲ್ಲವಯ್ಯಾ ಮಲ್ಲಿಕಾರ್ಜುನ. /130
ಕೂಳ ಪ್ರಸಾದವೆಂದು ನುಡಿವ ಜಾಳು ಮಾತ ಕೇಳಿ,
ಕೂಳಿಂಗೆ ಆಳಾಗಿ ಬೇಳಾದ ಬೇಳುವೆಯಲಾಳಿದವಂಗೇಕೊ
ಗುರುಲಿಂಗಜಂಗಮಪ್ರಸಾದದ ನೆನಹು?
ಪ್ರಸಾದದಲ್ಲಿ ಪ್ರಸನ್ನವಾದ
ಪ್ರಸಾದಲಿಂಗಪ್ರಸನ್ನತೆಯ ಪ್ರಸಾದದಿಂದ ಜನಿಸಿದಾತ ಜಂಗಮ.
ಆ ಜಂಗಮಮುಖದಿಂದ ತೋರಿತ್ತು ಪ್ರಸಾದ.
ಇದು ಕಾರಣ ಗುರುವಿಂಗೂ ಜಂಗಮಪ್ರಸಾದ,
ಲಿಂಗಕ್ಕೂ ಜಂಗಮಪ್ರಸಾದ,
ಚತುರ್ದಶಭುವನಕ್ಕೂ ಜಂಗಮಪ್ರಸಾದ.
ಇದಕ್ಕೆ ಶ್ರುತಿ: ಗುರುಣಾ ಲಿಂಗಸಂಬಂಧಃ ತಲ್ಲಿಂಗಂ ಜಂಗಮಸ್ಥಿತಂ
ಜಂಗಮಸ್ಯ ಪ್ರಸಾದೇನ ತ್ರೈಲೋಕ್ಯಮುಪಜೀವಿತಂ
ಇಂತೆಂದುದಾಗಿ
ಪ್ರಸಾದವನರಿತು ಪ್ರಸಾದವೆ ಪ್ರಾಣವಾಗಿರಬಲ್ಲಡೆ
ಸೌರಾಷ್ಟ್ರ ಸೋಮೇಶ್ವರಲಿಂಗವೆಂಬೆನು./131
ಕೃಶ ಮಧ್ಯ ಸ್ಥೂಲ, ಹ್ರಸ್ವ ದೀರ್ಘವಪ್ಪ ಬಹುಘಟದಂಬುವಿನಲ್ಲಿ
ಇನಬಿಂಬ ಪ್ರತಿಬಿಂಬಿಸುತ್ತಿರಲು
ಅದು ಒಂದು ಬಿಂಬವೊ, ಬಹುಬಿಂಬವೊ?
ಅಂಗ ಪ್ರತ್ಯಂಗ ನಿಚಯಂಗಳಲ್ಲಿ ಚೇತನಿಸುವ ಚೈತನ್ಯಾತ್ಮಕನು
ಏಕಾತ್ಮನೊ, ಹಲವಾತ್ಮನೊ?
ತತ್ವಪರಿಜ್ಞಾನದಿಂ ತಿಳಿದುನೋಡಲು ವಿಶ್ವಾವಕಾಶವಾಗಿಪ್ಪ
ಆತ್ಮನು ಹೋಗುವ ಹೊರಡುವಠಾನ್ನಾವುದೊ?
ಹೋಗಲಿಲ್ಲ ಬರಲಿಲ್ಲದಾತ್ಮನ ಹೋಯಿತ್ತು ಬಂದಿತ್ತೆಂಬ
ಲೀಲೆವಾತರ್ೆಯನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ./132
ಕೆಲರು ಚತುವರ್ೇದಭಾರಕರಾದರು,
ಕೆಲರು ಆಗಮಂಗಳಲ್ಲಿ ಸವೆದರು,
ಕೆಲರು ಷಟ್ತರ್ಕಂಗಳಲ್ಲಿ ಮೋಹಿಸಿದರು,
ಅಲ್ಲದೆ ತಾರಕ್ರಹ್ಮವನರಿತುದಿಲ್ಲ.
ಅದೆಂತೆಂದೊಡೆ: ಕೇಚಿದಾಗಮಜಾಲೇಷು ಕೇಚಿನ್ನಿಗಮಸಂಚಯೇ
ಕೇಚಿತ್ತಕರ್ೇಣ ಮುದ್ಯಂತಿ ನೈವ ಜಾನಂತಿ ತಾರಕಂ
ಎಂದುದಾಗಿ
ಜ್ಞಾನಾಜ್ಞಾನದ ಮಧ್ಯದಲ್ಲಿ ಕರ್ಮಬಲದಲ್ಲಿ ಹುಟ್ಟಿದ
ಚೌರಾಶಿ ಜೀವರಾಶಿಗಳಲ್ಲಿಲ್ಲ.
ಪಂಚೇಂದ್ರಿಯಪ್ರೀತಿಯಿಂದ ನಡೆವ ಪ್ರಾಣಿಗಳೆಲ್ಲರು
ಲಿಂಗವನರಿಯದೆ ಕಾಲಚಕ್ರ ಕರ್ಮಚಕ್ರ ಪ್ರಳಯಚಕ್ರಕ್ಕೊಳಗಾದರು.
ಸೌರಾಷ್ಟ್ರ ಸೋಮೇಶ್ವರಲಿಂಗವ ಪೂಜಿಸಬಂದು,
ಲಿಂಗದ ಮರೆದ ಕಾರಣ. /133
ಕೊಡಗೂಸಿಂಗೆ ಕಡುಬೇನೆಯಾದುದ ಕಂಡೆ,
ಹಡೆದಿರ್ದ ಶಿಶುವ ಕೊಡಗೂಸು ನುಂಗಿತ್ತ ಕಂಡೆ,
ಹಿಡಿದಿರ್ದ ಕೋಳಿ ಒಡನುಂಬುದ ಕಂಡೆ,
ಒಡನಿರ್ದನಿಲ ಬಿಡುಮುತ್ತಾದುದ ಕಂಡೆ,
ಕೊಡನೊಳಗೊಂದು ಕಡೆಯಿಲ್ಲದ ರತ್ನವ ಕಂಡೆ,
ಸೌರಾಷ್ಟ್ರ ಸೋಮೇಶ್ವರನನೆಡೆವಿಡಲಿಲ್ಲದಿರ್ಪ ಬೆಡಗ ಕಂಡೆ./134
ಕೋಣನೊಂದು ಕುದುರೆಯ ನುಂಗಿತ್ತು.
ಇರುಹೆ ಒಂದಾನೆಯ ನುಂಗಿತ್ತು.
ಬಲ್ಲುಕನನಲ್ಲವೆನಿಸಿತ್ತು, [ಕ]ಟ್ಟಿದ ಪಕ್ಷಿ ನೆರೆ ಪಾರಿತ್ತು ಗಗನಕ್ಕೆ.
ಚಿದಾಕಾಶವೆ ತಾನಾಗಿ, ಬಿಂದ್ವಾಕಾಶವನೊಡೆಯಿತ್ತು.
ದೃಷ್ಟಾಕಾಶವ ನಷ್ಟಂಗೈಯಿತ್ತು, ಭಿನ್ನಾಕಾಶವನೊಡಗೂಡಿತ್ತು,
ಮಹದಾಕಾಶವನೊಳಕೊಂಡಿತ್ತು.
ಸೌರಾಷ್ಟ್ರ ಸೋಮೇಶ್ವರನೆಂಬ ನಿಜದಾಕಾಶದಲ್ಲಿ ನಿಂದು
ನಾಮರೂಪು ನಷ್ಟವಾಯಿತ್ತು. /135
ಕ್ಷೀರಸಮುದ್ರದಲ್ಲಿ ಬೆರಸಿದ ಜಲವೆಲ್ಲ ಕ್ಷೀರವಾಗಿಪ್ಪುದೆಂತಂತೆ
ಮನ ನಿಮ್ಮಲ್ಲಿ ಬೆರಸಿದ ಬಳಿಕ ಅಹಂಕಾರವಿಲ್ಲ.
ಅಹಂಕಾರವಿಲ್ಲಾಗಿ ಪ್ರಾಣ ನಿಮ್ಮಲ್ಲಿ ಸಂಚಿತ.
ಇಂತಾದ ಬಳಿಕ ಅಂಗವೆಂಬುದಿಲ್ಲ,
ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲದೆ ಮತ್ತೇನೂ ಇಲ್ಲ./136
ಖಂಡಿತವಳಿದು ಇಂದ್ರಿಯಂಗಳು ಅಖಂಡಿತವಾದವಯ್ಯಾ.
ಖಂಡಿತವಳಿದು ತನ್ಮಾತ್ರೆಗಳು ಅಖಂಡಿತವಾದವಯ್ಯಾ.
ಖಂಡಿತವಳಿದು ಭಾತಿಕಂಗಳು ಅಖಂಡಿತವಾದವಯ್ಯಾ.
ಪಂಚಭೂತಮಯವಾದ ಬ್ರಹ್ಮಾಂಡ
ಶರಣನ ಅಂಗದಲ್ಲಿ ಪಂಚಬ್ರಹ್ಮವಾಯಿತ್ತಾಗಿ,
ಇಷ್ಟ ಅಖಂಡಿತವಾಗಿ
ಸೌರಾಷ್ಟ್ರ ಸೋಮೇಶ್ವರನ ಶರಣರು ಅಖಂಡಿತರಯ್ಯಾ. /137
ಖ್ಯಾತಿಗೆ ಜೋತು, ಲಾಭಕ್ಕೆ ಲೋಭಿಸಿ,
ಪೂಜೆಯ ಮಾಡದೆ ರಾಜದ್ವಾರದಲ್ಲಿ ಸುಳಿದು
ಬಳಲುವ ಹಿರಿಯರೆಲ್ಲರೂ ಇತ್ತಿತ್ತಲಲ್ಲದೆ ಅತ್ತತ್ತಲೆಲ್ಲಿಯದೋ?
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ತಲ್ಲೀಯವಾದ
ಶರಣರತ್ತತ್ತಲಲ್ಲದೆ ಇತ್ತಿತ್ತಲೆಂತಿಹರೋ. /138
ಗಂಧಘ್ರಾಣ ಆಚಾರಲಿಂಗಸಹಿತ ಲಿಂಗಾರ್ಪಿತ,
ಜಿಹ್ವೆರಸ ಗುರುಲಿಂಗಸಹಿತ ಲಿಂಗರ್ಪಿತ,
ನೇತ್ರರೂಪು ಶಿವಲಿಂಗಸಹಿತ ಲಿಂಗಾರ್ಪಿತ,
ತ್ವಕ್ಕುಸ್ವರುಶನ ಜಂಗಮಲಿಂಗಸಹಿತ ಲಿಂಗಾರ್ಪಿತ,
ಶ್ರೋತ್ರಶಬ್ದ ಪ್ರಸಾದಲಿಂಗಸಹಿತ ಲಿಂಗಾರ್ಪಿತ,
ಆತ್ಮತೃಪ್ತಿ ಮಹಾಲಿಂಗಸಹಿತ ಲಿಂಗಾರ್ಪಿತ.
ಇದಕ್ಕೆ ಶ್ರುತಿ: ಲಿಂಗದೃಷ್ಟ್ಯಾ ನಿರೀಕ್ಷರ ಸ್ಯಾತ್ ಲಿಂಗಹಸ್ತೇನ ಸ್ಪರ್ಶನಂ
ಲಿಂಗಜಿಹ್ವಾರಸಾಸ್ವಾದೋ ಲಿಂಗಘ್ರಾಣೇನ ಘ್ರಾತಿತೇ
ಲಿಂಗಶ್ರೋತ್ರೇಣ ಶ್ರವಣಂ ಲಿಂಗಾಸ್ಯೇನೋಕ್ತಿರುಚ್ಯತೇ
ಲಿಂಗೇನಾನುಗತಂ ಸರ್ವಂ ಇತ್ಯೇತತ್ಸಹ ಭಾಜನಂ
ಇಂತೆಂದುದಾಗಿ, ಷಡುಸ್ಥಲಬ್ರಹ್ಮ ಲಿಂಗಾಂಗದಿಂ
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗ [ಅ]ಗವನೊಳಕೊಂಡಿತ್ತಾಗಿ
ಅಂಗವೇ ಲಿಂಗವಾಯಿತ್ತು ನೋಡಾ./139
ಗಗನದ ಪುತ್ಥಳಿ ಬಯಲ ಬಣ್ಣವನುಟ್ಟು.
ಅಂಜನದ ತಿಲಕವನ್ನಿಟ್ಟು, ಬ್ರಹ್ಮ ವಿಷ್ಣು ರುದ್ರರನಲಂಕರಿಸಿಕೊಂಡು
ತ್ರಿಜಗದೊಳಗೆ ತನ್ಮಯವಾಗಿ ಸುಳಿಯಿತ್ತು ನೋಡಾ.
ಇಂತಿದನರಿಯದೆ ಜಗದೊಳಗಣ ಹಿರಿಯರೆಲ್ಲಾ ಬರುಸೂರೆ ಹೋದರು.
ಮಾತಿನ ಜಾಣರೆಲ್ಲಾ ನಿಜಗೆಟ್ಟರು.
ಇದನರಿತು ಉಟ್ಟುದ ಹರಿದು, ಇಟ್ಟುದ ಸುಟ್ಟು,
ತೊಟ್ಟುದ ತೊಡದು, ಉಲುಮೆಯನುಸುರಲೊಲ್ಲದೆ,
ಶಬ್ದಮುಗ್ಧವಾದ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ./140
ಗತಿಗೆಟ್ಟು, ಮತಿಯ ಹಂಗ ಮರೆದು,
ಕಾಮಿಸಿ ಕಲ್ಪಿಸಿ, ಭಾವಿಸುವ ಭಂಗಹಿಂಗಿ,
ಭಾವಕಲ್ಪನೆಯ ಮೀರಿ,
ಭಾವಭೇದವಳಿದು ನಿರ್ಭಾವಪದದಲ್ಲಿ ನಿಂದುದು
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಭೇದವಳಿದು ಅವಿರಳ ಶರಣನ ಇರವು./141
ಗರುಡನನುರಗನ ಬಾಣದಿಂ ಪರಿಹರಿಸುವೆನೆಂಬವನಂತೆ,
ಅರಗಿನ ಪುತ್ಥಳಿಯನುರಿಯ ಕರುಮಾಡದಲ್ಲಿರಿಸುವನಂತೆ,
ಮಂಜಿನ ಮನುಜಂಗೆ ಬಿಸಿಲ ಹೊದಿಕೆಯ ಹೊದಿಸುವನಂತೆ,
ಸುರತಸಂಗದಿಂದುರವಣಿಪ ಮೋಹದಜ್ಞತೆಯಿಂ
ಪರಕೆ ಪರವಾದ ಪರಬ್ರಹ್ಮವನರಿವೆನೆಂಬ ಪರಿಭವಾತ್ಮರಿಗೆಲ್ಲಿಯದೊ,
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು. /142
ಗಾಳಿಯ ನಾರಿನಲ್ಲಿ ಬೆಟ್ಟ ಕಟ್ಟುವಡೆಯಿತ್ತ ಕಂಡೆ.
ಆ ಬೆಟ್ಟವೊಂದು ಮಾನದೊಳಗಡಕವಾದುದ ಕಂಡೆ.
ಆ ಮಾನದೊಳಗೆ ಎಂಟು ಮಂದಿ ಹಿರಿಯರ ಕಂಡೆ.
ಅವರ ಗುಹ್ಯದಲ್ಲಿ ನರರು ಸುರರು ನೆರೆದಿಪ್ಪುದ ಕಂಡು,
ಬೆರಗಾದೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ. /143
ಗುರುಕರಣವೆಂಬ ಪಾದೋದಕದಲ್ಲಿ ನಾಂದು ನಾಂದು,
ನಿಃಕ್ರೀಯಾಯಿತ್ತಯ್ಯಾ.
ಇಂತು ನಿರ್ಮಲನಾಗಿ ಲಿಂಗಕ್ಕೆ ಮಜ್ಜನಕ್ಕೆರದು
ಲಿಂಗೋದಕವಾಯಿತ್ತು.
ಲಿಂಗಸೋಂಕಿನಿಂದ ಪಾದೋದಕವಾಯಿತ್ತು.
ಲಿಂಗಾರ್ಪಿತದಿಂದ ಪ್ರಸಾದೋದಕವಾಯಿತ್ತು.
ಲಿಂಗೋದಕ ಮಜ್ಜನದಲ್ಲಿ
ಪಾದೋದಕ ಕರಚರಣಮುಖ ಪ್ರಕ್ಷಾಲನದಲ್ಲಿ
ಪ್ರಸಾದೋದಕ ಲಿಂಗಭೋಗೋಪಭೋಗದಲ್ಲಿ.
ಇಂತೀ ತ್ರಿವಿಧೋದಕದ ಪರಿಯನರಿತು
ಲಿಂಗಭೋಗೋಪಭೋಗದಲ್ಲಿ ಭೋಗಿಸಬಲ್ಲರೆ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ. /144
ಗುರುಕರಾಬ್ಜದಿಂದ ಉದಯಿಸಿದ ಶಿಷ್ಯನು
ಬೀಜವೃಕ್ಷದಂತೆ ಅನ್ಯವಲ್ಲದಿಪ್ಪನಾಗಿ,
ಗುರು ತಾನಾದ ಶಿಷ್ಯನು ಗುರುತನದ ಹಮ್ಮಿಲ್ಲದೆ
ಆ ಶಿಷ್ಯನಾಗಿ ನಿಂದ ಸಹಜನಯ್ಯಾ.
ಸೌರಾಷ್ಟ್ರ ಸೋಮೇಶ್ವರಲಿಂಗದ
ಪ್ರಸಾದಸಾಧ್ಯವಾಯಿತ್ತಾಗಿ ಅಭೇದ್ಯನಯ್ಯಾ. /145
ಗುರುಕಾರುಣ್ಯ ವೇದ್ಯವಾದ ಬಳಿಕ ಜನನ ಸೂತಕವಿಲ್ಲ,
ಘನಲಿಂಗಸಂಗದಲ್ಲಿ ಮನವು ನಿವಾಸಿಯಾದ ಬಳಿಕ ಜಾತಿಸೂತಕವಿಲ್ಲ,
ತತ್ವಪರಿಜ್ಞಾನದಿಂ ತನ್ನ ತಾನರಿದ ಬಳಿಕ ಪ್ರೇತಸೂತಕವಿಲ್ಲ.
ಸರ್ವೇಂದ್ರಿಯಂಗಳಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ಮತವಾದ ಬಳಿಕ
ಜಡದುಃಖಕರ್ಮ ಸಂಕಲ್ಪವಿಕಲ್ಪಂಗಳಿನಿತು
ನಾನಾ ಸೂತಕಂಗಳೇನೂ ಇಲ್ಲ ನೋಡಯ್ಯಾ./146
ಗುರುಕಾರುಣ್ಯವ ಪಡೆದು ಲಿಂಗಾನುಗ್ರಾಹಕನಾಗಿ
ಅಂಗ ಲಿಂಗ ವೇಧೆಯಿಂದಿರಲು ಆ ಇಷ್ಟಲಿಂಗಕ್ಕೆ ಅಂಗವೇ ಅರ್ಪಿತ.
ಮತ್ತಾ ಇಷ್ಟಲಿಂಗಕ್ಕೆ ಮನಕ್ಕೆ ವೇದ್ಯವಾಗಿ
ಪ್ರಾಣನಲ್ಲಿ ಪ್ರವೇಶವಾಗಿ ಲಿಂಗವೇ ಪ್ರಾಣವಾಗಿರಲು
ಆ ಪ್ರಾಣಲಿಂಗಕ್ಕೆ ಮನವೇ ಅರ್ಪಿತ.
ಇಷ್ಟ ಪ್ರಾಣ ಸಂಗ ಸಂಯೋಗ ಸಮರಸಾನುಭಾವ ಲಿಂಗದನುವರಿತು,
ಅರಿಕೆಯರತ ಅರುವಿನ ತೃಪ್ತಿಯೇ ಭಾವಲಿಂಗಾರ್ಪಿತ.
ಇದಕ್ಕೆ ಶ್ರುತಿ: ಇಷ್ಟಲಿಂಗಾರ್ಪಿತಂ ಚಾಂಗಂ ಪ್ರಾಣಲಿಂಗಾರ್ಪಿತಂ ಮನಃ
ಭಾವಲಿಂಗಾರ್ಪಿತಾ ತೃಪ್ತಿರಿತಿ ಭೇದೋ ವರಾನನೇ
ಇಂತೆಂದುದಾಗಿ,
ಇಷ್ಟ ಪ್ರಾಣ ತೃಪ್ತಿ ಸಮರಸಾದ್ವೈತವಾದಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ. /147
ಗುರುಲಿಂಗಜಂಗಮ ಒಂದಾದ ಕ್ರಿಯೆಯಲ್ಲಿ ನಿಂದ
ಪ್ರಕಾಶಂಗೆ ಆವ ಸಂದೇಹವಿಲ್ಲ.
ಆವ ವಿಷಯಂಗಳೊಳಗೆ ಮನವಿಹುದು ಆ ರೂಪು ತಾನಾಗಿಹುದಾಗಿ
ಸೌರಾಷ್ಟ್ರ ಸೋಮೇಶ್ವರಲಿಂಗದ ವಿಷಯದೊಳಿಪ್ಪ ಮನ
ತದ್ರೂಪ ತ[ಲ್ಲೀ]ಯ. /148
ಗುರುಲಿಂಗದ ದೃಷ್ಟಿಯಲ್ಲಿ ದೃಷ್ಟಿನಟ್ಟು, ಕಂಗಳು ಕರಗಿ,
ಅವಗ್ರಹಿಸಿ ಬೆರಸಿ ಶಿವಜ್ಞಾನಾನುಭಾವದಲ್ಲಿ ಮನ ಕರಗಿ,
ಮನ, ಕಂಗಳು ಏಕರಸವಾಗಿ
ಸೌರಾಷ್ಟ್ರ ಸೋಮೇಶ್ವರನ ಕರುಣ ಪಾದೋದಕದೊಳಗೆ ಬೆರಸಿತ್ತು./149
ಗುರುವಿಡಿದು ಲಿಂಗವಾವುದೆಂದರಿಯಬೇಕು,
ಲಿಂಗವಿಡಿದು ಜಂಗಮವಾವುದೆಂದರಿಯಬೇಕು,
ಜಂಗಮವಿಡಿದು ಪ್ರಸಾದವಾವುದೆಂದರಿಯಬೇಕು,
ಪ್ರಸಾದವಿಡಿದು ಪರಮಪರಿಣಾಮವೆಡೆಗೊಳ್ಳಬೇಕು.
ಅಂತಪ್ಪ ಪರಮಪರಿಣಾಮವೆ ಪರಬ್ರಹ್ಮವೆಂದರಿತಲ್ಲಿ,
ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ. /150
ಗುರುವಿನಂತರಂಗದೊಳಗೆ ಶಿಷ್ಯ, ಶಿಷ್ಯನಂತರಂಗದೊಳಗೆ ಗುರು.
ಈ ಗುರುಶಿಷ್ಯಸಂಬಂಧ ಶರೀರಪ್ರಾಣದಂತೆ ಭಿನ್ನವಿಲ್ಲದೆ,
ಗುರುವೆಂಬ ಭಾವ ತೋರದಿರ್ದಡೆ ಆತ ಶಿಷ್ಯ.
ಶಿಷ್ಯನೆಂಬ ಭಾವ ತೋರದಿರ್ದಡೆ ಆತ ಗುರು.
ಇಂತು ಭಾವ ಭೇದಗಟ್ಟಿರಲು
ಮೌನಮುದ್ರೆಯಿಂದುಪದೇಶವ ಮಾಡಿದ ಗುರುಸೇವೆಯಿಂ
ತತ್ಶಿಷ್ಯನ ಸಂಶಯ ವಿಚ್ಛಿನ್ನವಾಗಿ, ಉಪಮಾತೀತವಾದ ಉಪದೇಶದಿಂ
ಲಿಂಗಸೇವ್ಯದಲ್ಲಿ ತನ್ನಂಗವ ಮರದಿಪ್ಪ
ಸುಖವನುಪಮಿಸಬಾರದಯ್ಯಾ, ಸೌರಾಷ್ಟ್ರ ಸೋಮೇಶ್ವರಾ./151
ಗುರುವಿನಲ್ಲಿ ಗುಣವನರಸಲಿಲ್ಲ, ಲಿಂಗದಲ್ಲಿ ಲಕ್ಷಣವನರಸಲಿಲ್ಲ,
ಜಂಗಮದಲ್ಲಿ ಕುಲವನರಸಲಿಲ್ಲ, ಪಾದೋದಕದಲ್ಲಿ ಶುದ್ಧವನರಸಲಿಲ್ಲ,
ಪ್ರಸಾದದಲ್ಲಿ ರುಚಿಯನರಸಲಿಲ್ಲ.
ಸೌರಾಷ್ಟ್ರ ಸೋಮೇಶ್ವರನ ಶರಣರಲ್ಲಿ ಮತ್ತೇನನೂ ಅರಸಲಿಲ್ಲ./152
ಗುರುವೆ ಅಂಗ, ಲಿಂಗವೆ ಮನ, ಜಂಗಮವೇ ಪ್ರಾಣವಯ್ಯಾ.
ನಾದವೆ ಗುರು, ಬಿಂದುವೆ ಲಿಂಗ, ಕಳೆಯೆ ಜಂಗಮವಯ್ಯಾ.
ಇದಕ್ಕೆ ಶ್ರುತಿ: ನಾದಂ ಗುರುಮುಖಂಚೈವ ಬಿಂದುಂ ಲಿಂಗಮುಖಂ ತಥಾ
ಕಲಾಂ ಚರಮುಖಂ ಜ್ಞಾತ್ವಾ ಗುರುಲರ್ಿಂಗಂತು ಜಂಗಮಃ
ಇಂತೆಂದುದಾಗಿ ಪ್ರಸಾದಕಿನ್ನೇವೆ?
ಗುರುವೆ ಲಿಂಗ, ಲಿಂಗವೆ ಜಂಗಮ, ಜಂಗಮವೆ ಪ್ರಸಾದ,
ಪ್ರಸಾದವೆ ಪರಿಪೂರ್ಣವಾದಡೆ
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ತಾನೆ./153
ಗೊತ್ತ ಮೆಟ್ಟಿ ದಾಂಟಿ ಹುಟ್ಟದೆ ಹೋದ ಪರಿಯ ನೋಡಾ.
ಕತ್ತಲೆ ಬೆಳಗನೊತ್ತರಿಸಿ ಹತ್ತೆ ಸಾರಿನಿಂದ ಪರಿಯ ನೋಡಾ.
ಒತ್ತಿವಿಡಿದ ಅಸುರನ ನೆತ್ತಿಯನೊಡೆದು, ಮುತ್ತ ಸರಗೋದ ಪರಿಯ ನೋಡಾ.
ಸೌರಾಷ್ಟ್ರ ಸೋಮೇಶ್ವರ ಲಿಂಗದೊಡನಾಡಿ
ಹೊಡೆಯ ಕೊಯ್ದ ಪರಿಯ ನೋಡಾ. /154
ಘಟಜಲ ಬಾಹ್ಯಾಗ್ನಿಯ ಉಷ್ಣ ಸೋಂಕಿ ಉಷ್ಣೋದಕವಾದಂತೆ,
ತಿಲಕುಸುಮಸಂಗದಿಂದ ಕುಸುಮಸಾರ ತಿಲಸಾರಕ್ಕೆ ವೇಧೀಸಿದಂತೆ.
ಅಂಗಲಿಂಗಸಂಗದಿಂದ ಪ್ರಾಣಲಿಂಗ ವೇದ್ಯವಾಯಿತ್ತು ನೋಡಾ.
ಇಷ್ಟಪ್ರಾಣ ಸಮರಸಾದ್ವೈತವಾದುದೆ ತೃಪ್ತಿ.
ಇದು ಕಾರಣ ಸಗುಣಕ್ಕೆ ಸಗುಣಬ್ರಹ್ಮವಾಗಿ,
ಎನ್ನಂಗ ಪ್ರಾಣ ಮನ ಭಾವ ಕರಣಂಗಳೊಳಹೊರಗೆ
ತೆರಹಿಲ್ಲದಿದ್ದೆಯಲ್ಲಾ, ಸೌರಾಷ್ಟ್ರ ಸೋಮೇಶ್ವರಾ./155
ಘಟವ ಮಾಡಿದ ಕುಲಲಾನು ಆ ಘಟದೊಳಿಪ್ಪುದಿಲ್ಲವೆಂತಂತೆ,
ಬೆಳಸ ಬಿತ್ತಿದವನು ಆ ಬೆಳೆಯೊಳಿಪ್ಪುದಿಲ್ಲವೆಂತಂತೆ,
ರಥವ ಮಾಡಿದ ರಥಿಕ ತಾ ಆ ರಥದೊಳಿಪ್ಪುದಿಲ್ಲವೆಂತಂತೆ,
ಸರ್ವವನಾಡಿಸುವ ಶರ್ವನು ಯಂತ್ರ ಯಂತ್ರಿಯಂತಿರ್ಪನಾಗಿ
ಸರ್ವರೂ ಶಿವನೆಂಬ ಅಜ್ಞಾನಿಗಳ ಮೆಚ್ಚುವನೆ
ನಮ್ಮ ಸೌರಾಷ್ಟ್ರ ಸೋಮೇಶ್ವರ./156
ಘಟಾಕಾಶ ಮಠಾಕಾಶ ಬಿಂದ್ವಾಕಾಶ ಭಿನ್ನಾಕಾಶ
ಮಹದಾಕಾಶ ನಿಜದಾಕಾಶ ಚೈತನ್ಯಾತ್ಮನಾತ್ಮಚೈತನ್ಯವೆಂದಡೆ
ಒಂದೆಂದರಿತರಿತು ಮರೆ ಮಾಡಿ ಹುಸಿ ಎಂಬ ಪರಿಯ ನೋಡಾ.
ಗರುಡಿ ಚೋರನಂತೆ ಘಟಾಕಾಶ ಘಟವಿದ್ದಲ್ಲಿ ಇದ್ದು,
ಘಟವಳಿದಲ್ಲಿ ಘಟಾಕಾಶವಳಿಯದಂತೆ.
ಮಠಾಕಾಶ ಮಠವಿದ್ದಲ್ಲಿ ಇದ್ದು,
ಮಠ ಬಿಚ್ಚಿದಲ್ಲಿ ಮಠಾಕಾಶ ಬಿಚ್ಚದಂತೆ.
ಬಿಂದ್ವಾಕಾಶ ಬಿಂದುವಿದ್ದಲ್ಲಿ ಇದ್ದು,
ಬಿಂದು ನಷ್ಟವಾದಲ್ಲಿ ಬಿಂದ್ವಾಕಾಶ ನಷ್ಟವಾಗದಂತೆ.
ಭೀನ್ನಾಕಾಶ ಪೃಥ್ವಿಯಿದ್ದಲ್ಲಿ ಇದ್ದು,
ಪೃಥ್ವಿ ಭಿನ್ನವಾದಲ್ಲಿ ಭಿನ್ನಾಕಾಶ ಭಿನ್ನವಾಗದಂತೆ.
ಮಹದಾಕಾಶವೇ ನಿಜದಾಕಾಶ.
ಆ ನಿಜದಾಕಾಶವೇ ನಿರ್ಧರವಹ ಹಾಂಗೆ.
ಇದೇ ಆತ್ಮನ ಮರ್ಮ ನೋಡಾ.
ಆದಿ ಅನಾದಿ ಇಲ್ಲದಂದು, ನಾದಬಿಂದುಕಳೆ ಮೊಳದೋರದಂದು,
ಇದು ಒಂದೆಂದರಿತು ಉಂಟಿಲ್ಲವೆಂಬ
ಗೆಲ್ಲಸೋಲದ ಮಾತಿನ ಮಾಲೆಯ ತೊಡಿಗೆಯಳಿದಂದು
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಆನೆಂಬುದು ನೀನೆಂಬುದೊಂದೇ ಕಾಣಾ ಮಲ್ಲಿಕಾರ್ಜುನಾ. /157
ಘಟಾಕಾಶ ಮಹದಾಕಾಶದ ಪರಿಯಲ್ಲವೆಂಬಿರಿ.
ಸಿಡಿಲು ಮಿಂಚು ಮಹದಾಕಾಶದಲ್ಲಿಯೇ ಲೀಯ.
ನಡೆವುದು ನುಡಿವುದು ಘಟಕಾಶದಲ್ಲಿಯೇ ಲೀಯ.
ಶಬ್ದ ನಿಶ್ಶಬ್ದವೆಂದೇನೋರಿ ಚೈತನ್ಯಾತ್ಮಕವೆಂದಡೂ ಆತ್ಮಚೈತನ್ಯವೆಂದಡೂ
ನಾಮವೆಂದಡೆ ರೂಪು, ರೂಪೆಂದಡೆ ನಾಮ,
ನಾಮ ಏಕಸ್ವರೂಪವೆಂದರಿಯದೆ
ಕಂಗಳಯ್ಯಗಳು ಕಂಡೆವೆಂಬ ಕಳವಳದಂತೆ
ಮರೆದೊರಗಿದವರು ಒರಗಿದಾಗ ಸುಖಿಸಿದೆವೆಂಬ ಮಾತಿನಂತೆ
ಇಲ್ಲದುದನುಂಟೆಂದು ನೆನೆವನಂತೆ,
ನಿಃಕಳಂಕ ಶಾಂತಮಲ್ಲಿಕಾರ್ಜುನದೇವಯ್ಯ ಕೇಳಿದ ಮಾತ್ರದಲ್ಲಿ
ಮಗ್ನವಾದವರಂತೆ ಸೌರಾಷ್ಟ್ರ ಸೋಮೇಶ್ವರಾ./158
ಘನಕ್ಕೆ ಘನ ಮಹಾಘನ.
ಆದಿಮಧ್ಯಾಂತರಹಿತವಾದ ನಿರಂಜನಕ್ಕೆ ಕುರುಹಿಲ್ಲ,
ಕುರುಹಿಲ್ಲಾಗಿ ಮರಹಿಲ್ಲ, ತೆರಹಿಲ್ಲಾಗಿ ಮರಹಿಲ್ಲ,
ಮರಹಿಲ್ಲಾಗಿ ಚಿದಖಂಡ ಚಿಲ್ಲಿಂಗ
ಸೌರಾಷ್ಟ್ರ ಸೋಮೇಶ್ವರನು ನಿರಾಶ್ರಯನಾಗಿ,
ಕೂಡಲಿಲ್ಲ ಅಗಲಲಿಲ್ಲದೆ ನಿಂದ, ಸಹಜ./159
ಘನಲಿಂಗದಲ್ಲಿ ಮನ ನಟ್ಟು, ಭಾವ ಬೆರಸಿ,
ಉನ್ಮಿಷ ನಿಮಿಷಂಗಳಡಗಿ ತನು ಬೆರಗುವಟ್ಟು,
ನಿಂದ ಸುಖದ ಮುದ್ರೆಯ
ಮುದ್ರಿಸಿದ ಬೆಡಗಿನ ಭೇದ,
ಸೌರಾಷ್ಟ್ರ ಸೋಮೇಶ್ವರಾ ನೀನೆ ಅಯ್ಯಾ./160
ಘೋರಘೋರವಪ್ಪ ಮುಖ್ಯನರಕ ಒಂದು ಕೋಟಿ.
ಅದರ ಕೆಳಗಣ ಪ್ರಧಾನನರಕ ಹದಿನೈದು ಕೋಟಿ.
ಅವರ ಕೆಳಗಣ ನಾಯಕನರಕ ಇಪ್ಪತ್ತೆಂಟು ಕೋಟಿ.
ಅವರ ಕೆಳಗಣ ಪರಿವಾರನರಕ ಅನಂತಕೋಟಿ.
ಇದರೊಳಗಣ ಕುಂಭಿಯ ಪಾತಕ ನಾಲ್ವತ್ತೆಂಟು ಸಾವಿರಗಾವುದು ವಿಸ್ತೀರ್ಣ.
ವೈತಾರಣಿಯೆಂಬತ್ತಾರು ಸಾವಿರಗಾವುದ,
ಕಟ್ಟಕಡೆ[ಯೆ]ಕ್ಕಲನರಕಕ್ಕೆ ಎಂದೂ ಪರಿಹಾರವಿಲ್ಲ.
ಹೊಕ್ಕವರು ಹೊರವಡಲಿಲ್ಲದ ನಿತ್ಯನರಕ,
ಇಂತಪ್ಪ ಘೋರಮಾಲೆಯ ಖಂಡಿಸುವಡೆ
ಪಂಚಾಕ್ಷರಿಯಲ್ಲದಿಲ್ಲ ಕಾಣಿರಣ್ಣಾ!
ಪಾಪವ ಪರಿಹರಿಸುವೊಡೆ ಪಂಚಾವರಣನಪ್ಪ ಪಂಚಮುಖವೆ
ಪಂಚಾಕ್ಷರವೆಂದರಿದು ಪಂಚಾಕ್ಷರವ ಜಪಿಸಿರಣ್ಣಾ.
ಮತ್ತಿಲ್ಲ ಮತ್ತಿಲ್ಲ ಸೌರಾಷ್ಟ್ರ ಸೋಮೇಶ್ವರಲಿಂಗವ
ಮೊರೆಹೊಕ್ಕು ಸುಖಿಯಾಗಿರಣ್ಣಾ. /161
ಚಕ್ರೋದ್ಧರಣದ ಬಹಿರಾವರಣದ ತಮೋಗುಣದಲ್ಲಿ ಏಕಾಕ್ಷರವದೆ,
ತೃತೀಯಾವರಣದಲ್ಲಿ ಸತ್ವಗುಣದಲ್ಲಿ ನಾಲ್ಕಕ್ಷರವವೆ,
ಇಂತೀ ಪಂಚಾಕ್ಷರವೆ ಶಿವನ ಪಂಚಮುಖದಲ್ಲಿ ಅವೆ.
ಅಂಗೋದ್ಧರಣದ ಬಹಿರಂಗದಲ್ಲಿ ಅವೆ,
ಲಿಂಗೋದ್ಧರಣದ ಅಂತರಂಗದಲ್ಲಿ ಅವೆ,
ಲಿಂಗಾಂಗಸಂಗದಿಂದೊಳಹೊರಗೆ ತೆರಹಿಲ್ಲದವೆ.
ತವರ್ಗದ ಕಡೆಯಿಲ್ಲದೆ, ಪವರ್ಗದಂತ್ಯದಲ್ಲಿದೆ,
ಶವರ್ಗದ ಮೊದಲಲ್ಲದೆ, ಯವರ್ಗದ ತುದಿಮೊದಲಲ್ಲವೆ.
ಸೌರಾಷ್ಟ್ರ ಸೋಮೇಶ್ವರಲಿಂಗವಿದೆ,
ಅರಿತು ಜಪಿಸಿರಯ್ಯಾ ಪಂಚಾಕ್ಷರವ./162
ಚತುರ್ದಶಭುವನವನಗ್ನಿ ಕೊಂಡಡೆ, ಇದ ಕಂಡು ಬೆರಗಾದೆ.
ನವಖಂಡಪೃಥ್ವಿಯನಗ್ನಿ ಕೊಂಡಡೆ, ಇದ ಕಂಡು ಬೆರಗಾದೆ.
ಪಂಚಾಶತ್ಕೋಟಿ ವಿಸ್ತೀರ್ಣವನಗ್ನಿ ಕೊಂಡಡೆ, ಇದ ಕಂಡು ಬೆರಗಾದೆ.
ಸೌರಾಷ್ಟ್ರ ಸೋಮೇಶ್ವರಲಿಂಗವನಗ್ನಿ ಕೊಂಡಡೆ
ಇದ ಕಂಡು ಬೆರಗಾದೆ. /163
ಚರಪಾದೋದಕದಿಂದ ಲಿಂಗಾಂಗಗಳಿಗೆ
ಮಜ್ಜನವ ಮಾಡುವುದೆ ಆಚಾರ,
ಆಪ್ಯಾಯನೋದಕವಾಗಿ
ಕೊಟ್ಟುದಕವನೆ ಪಾನವ ಮಾಡುವುದೆ ಆಚಾರ,
ಪ್ರಸಾದೋದಕವನು ಆಯತ ಸ್ವಾಯತ ಅವಧಾನದಿಂದ
ಅರ್ಪಿತವ ಮಾಡುವುದೆ ಆಚಾರ.
ಇಂತೀ ತ್ರಿವಿಧೋದಕದಿಂದ ಪರಮಪದವೆಂದಾಚರಿಸುವಂಗೆ
ಆ ಜಂಗಮಪ್ರಸಾದಾರ್ಪಿತದಿಂದವೆ
ನಿಜಲಿಂಗೈಕ್ಯವಪ್ಪುದು ತಪ್ಪದು ಕಾಣಾ
ಸೌರಾಷ್ಟ್ರ ಸೋಮೇಶ್ವರಾ. /164
ಚರಿಸಿ ವರ್ತಿಸುವುದೆ ಆಚಾರವಾದ ಕಾರಣ,
ಇಡಾಪಿಂಗಳನಾಡಿಯಂ ರೇಚಕಪೂರಕಂಗಳು ಚರಿಸಿ ವರ್ತಿಸುವ ದೆಸೆಯಿಂ
ನಾಸಿಕಕ್ಕೆ ಆಚಾರಲಿಂಗವಾಗಬೇಕಾಯಿತ್ತು.
ಮಂತ್ರಮೂರ್ತಿಯೆ ಗುರುವಾದ ಕಾರಣ,
ಷಡಕ್ಷರವೆ ಷಡುರುಚಿಯಾಗಿ ತೋರಿಹುದಾಗಿ
ಅಂತಪ್ಪ ಷಡುರುಚಿ ಜಿಹ್ವೆಯ ಮುಖಕ್ಕೆ ಸಲುವ ದೆಸೆಯಿಂ
ಜಿಹ್ವೆಗೆ ಗುರುಲಿಂಗವಾಗಬೇಕಾಯಿತ್ತು.
ಸ್ವಯಂಪ್ರಕಾಶವೆ ಶಿವನಾದ ಕಾರಣ,
ಆ ಮಹಾಪ್ರಕಾಶವೆ ನೇತ್ರಂಗಳೊಳು ನೆಲೆಗೊಂಡು,
ಸಕಲಪದಾರ್ಥಂಗಳ ಕಾಣಿಸಿ ತೋರ್ಪ ದೆಸೆಯಿಂ
ನೇತ್ರಕ್ಕೆ ಶಿವಲಿಂಗವಾಗಬೇಕಾಯಿತ್ತು.
ಚರವೆ ಜಂಗಮವಾದ ಕಾರಣ,
ತ್ವಕ್ಕು ಸರ್ವಾಂಗದಲ್ಲಿ ನೆಲೆಗೊಂಡು,
ಅಲ್ಲಿಗಲ್ಲಿ ಪರುಶನವನರಿವುತ್ತಿಹ ದೆಸೆಯಿಂ
ತ್ವಕ್ಕಿಂಗೆ ಜಂಗಮಲಿಂಗವಾಗಬೇಕಾಯಿತ್ತು.
ನಾದಸುನಾದಮಹಾನಾದವೆ ಪ್ರಸಾದವಾದ ಕಾರಣ,
ಪ್ರಸಾದವಪ್ಪ ಶಬ್ದಶ್ರೂತ್ರಮುಖಕ್ಕೆ ಸಲುವ ದೆಸೆಯಿಂ
ಶ್ರೂತ್ರಕ್ಕೆ ಪ್ರಸಾದಲಿಂಗವಾಗಬೇಕಾಯಿತ್ತು.
ಇಂತೀ ಪಂಚೇಂದ್ರಿಯಕ್ಕೆ ಪಂಚಲಿಂಗಂಗಳಾಗಬೇಕಾಯಿತ್ತು.
ಆತ್ಮನು ನಿರವಯ ನಿರ್ಗುಣ ನಿಃಕಲ
ನಿರ್ಭಿನ್ನ ನಿರುಪಮ್ಯನಾದ ದೆಸೆಯಿಂ
ಗೋಪ್ಯವಾದ ಆತ್ಮಂಗೆ ಘನಕ್ಕೆ ಘನತೆಯುಳ್ಳ
ಮಹಾಲಿಂಗವಾಗಬೇಕಾಯಿತ್ತು.
ಇಂತೀ ಷಡುಸ್ಥಲಂಗಳಾದ ದೆಸೆಯಿಂದ ಸೌರಾಷ್ಟ್ರ ಸೋಮೇಶ್ವರನೊರ್ವ
ಷಡುಲಿಂಗವಾಗಬೇಕಾಯಿತ್ತಯ್ಯಾ./165
ಚಿದ್ಬ್ರಹ್ಮಾಂಡವೆಂಬ ಭಾಂಡದಲ್ಲಿ
ಅನಂತ ವಿಚಿತ್ರಭುವನಂಗಳಡಗಿಪ್ಪವಯ್ಯಾ.
`ಆಲಯಃ ಸರ್ವಭೂತಾನಾಂ ಲಯನಾಲ್ಲಿಂಗಮುಚ್ಚ್ಯತೇ
ಎಂದುದಾಗಿ,
ಅನಂತಕೋಟಿ ಬ್ರಹ್ಮಾಂಡಗಳು
ನಿಮ್ಮ ರೋಮಕೂಪದೊಳಗೆ ಅಡಗಿಪ್ಪವೆಂದಡೆ
ಬ್ರಹ್ಮ ವಿಷ್ಣು ರುದ್ರ ಇವರೆಲ್ಲ ಒಂದು ಬ್ರಹ್ಮಾಂಡದೊಳಗಣ ಬಾಲಕರು. ಇವರೆತ್ತ
ಬಲ್ಲರೋ ಲಿಂಗದ ನಿಜವ!
ಅಪ್ರಮಾಣವಗೋಚರ ಮಹಾಂತ,
ನಿಮ್ಮ ನಿಜದೊಳಗನಾರು ಬಲ್ಲರಯ್ಯಾ
ಸೌರಾಷ್ಟ್ರ ಸೋಮೇಶ್ವರಾ! /166
ಚೈತನ್ಯಕ್ಕೆ ಚೈತನ್ಯ ನೀನಾಗಿ
ನಿನ್ನೊಳಗೆ ಪ್ರಾಣ, ಪ್ರಾಣದೊಳಗೆ ನೀನಿಪ್ಪ ಭೇದವ
ನಿಮ್ಮ ಜ್ಞಾನದಿಂದವೆ ಕಂಡು,
ನೀನಾನೆಂಬ ಭೇದವ ಮರೆದು
ನಿಜಲಿಂಗ ಪ್ರಾಣಸಂಗ ಸುಖಿಯಾಗಿಪ್ಪ ಶರಣರ
ನಾನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ!/167
ಚೈತನ್ಯಾತ್ಮಕವಪ್ಪ ನಾದಬಿಂದುವಿನೊಳಡಗಿಪ್ಪ
ಭೇದವ ಭೇದಿಸಲರಿಯದೆ ಭೇದವಾದದಿಂ ತಿಳಿದು
ಕಾಯಜೀವದ ಹೊಲಿಗೆಯ ಹೊಲ[ಬ]ನರಿಯದೆ
ನೆಲೆಗೆಟ್ಟಾತ್ಮನರಿವ ಅರಿವಿಂಗೆಳತಟವಾಯಿತ್ತು.
ಅದೆಂತೆಂದಡೆ, ಶ್ರುತಿ: ಅಂಗಭೇದವಿಮೂಢಜ್ಞಃ ಆತ್ಮಜ್ಞಾನವಿವಜರ್ಿತಃ
ಆತ್ಮಭೇದಮಹಾಪ್ರಾಜ್ಞಃ ಪರಮಾತ್ಮೇತ್ಯುದಾಹೃತಃ
ಇಂತೆಂದುದಾಗಿ
ಆತ್ಮದೃಕ್ಕಿಂದಾತ್ಮನ ಭೇದಿಸಬಲ್ಲಡೆ
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಮನವಾತ್ಮನ ತಿಳಿಯಬಪ್ಪುದಯ್ಯಾ ಮಲ್ಲಿಕಾರ್ಜುನಾ./168
ಚೌಷಷ್ಠಿವಿದ್ಯೆಗಳ ಕಲಿತಡೇನೊ?
ಅಷ್ಟಾಷಷ್ಠಿಕ್ಷೇತ್ರಂಗಳ ಮೆಟ್ಟಿದಡೇನೊ?
ಬಿಟ್ಟಡೇನೊ? ಕಟ್ಟಿದಡೇನೊ?
ಅರಿವಿನಾಚಾರ ಕರಿಗೊಳ್ಳದನ್ನಕ್ಕ.
ಘನಲಿಂಗದ ಬೆಳಗು ಸ್ವಯವಾದ ಶರಣಂಗಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗಸುಖವೆಡೆಗೊಳ್ಳದು. /169
ಜಗತ್ಪ್ರಪಂಚ ಮಾಡಿ,
ಆ ಜಗದಲ್ಲಿ ಜೀವರೂಪಿಂದ ಬಳಿಸಂದನೆಂದು ಹೇಳುವ ಶ್ರುತಿಯಂತಿರಲಿ,
ಜೀವನೆ ಶಿವನಾದಡೆ ಶೋಕ ಮೋಹ ಋಣ ರೋಗ ಪುಣ್ಯ ಪಾಪ
ಕಾಲ ಕಲ್ಪಿತ ಪ್ರಳಯ ಪ್ರಕೃತಿ ಸಂಸಾರಪಾಶಬದ್ಧವುಂಟೆ?
ಇವೆಲ್ಲವೂ ಜೀವಂಗಲ್ಲದೆ ಶಿವಂಗಿಲ್ಲವಾಗಿ
ತ್ರಿಗುಣರಹಿತ ಸೌರಾಷ್ಟ್ರ ಸೋಮೇಶ್ವರನು./170
ಜಗದಗಲದ ಬಲೆಯನಗಲಬಲ್ಲರ ಕಾಣೆ,
ಮುಗಿಲುದ್ದದಂಬರವನುಗಿಯಬಲ್ಲರ ಕಾಣೆ,
ಹಗಲಿರುಳ ಸೀಮೆಯ ಮಿಗೆ ಮೀರುವರ ಕಾಣೆ,
ತೆಗೆದಿಪ್ಪ ಶುನಕನ ಬಗೆಯ ಬಲ್ಲವರ ಕಾಣೆ.
ಅಗಡಾನೆ ಬಿಗಿದು ಬಲ್ಪಿಡಿಯಿತ್ತಲ್ಲಾ ಜಗವೆಲ್ಲವ.
ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ
ಮುಳುಗಿದರಲ್ಲಾ ಮುಪ್ಪುರದಲ್ಲಿ. /171
ಜಗಭರಿತಲಿಂಗ ಶರಣಭರಿತಲಿಂಗ ನಾಮರಹಿತಲಿಂಗ:
ಜಗಭರಿತಲಿಂಗವೆಂದು, `ಸರ್ವಂ ಖಲ್ವಿದಂ ಬ್ರಹ್ಮ’ ವೆಂಬ ವಿಶ್ವಬ್ರಹ್ಮ.
ಶರಣಭರಿತಲಿಂಗವೆಂದು, `ಏಕ ಏವ ದೇವೋ ನ ದ್ವಿತೀಯಃ’ ವೆಂಬ ತಾರಕಬ್ರಹ್ಮ.
ನಾಮರಹಿತಲಿಂಗವೆಂದು, `ಚಕಿತಮಭಿಧತ್ತೇ ಶ್ರುತಿರಪಿ’ ಯೆಂಬ ಪರಬ್ರಹ್ಮ.
ಇಂತೀ ತ್ರಿವಿಧಬ್ರಹ್ಮ ಏಕಬ್ರಹ್ಮ ನೀನೇ ಸೌರಾಷ್ಟ್ರ ಸೋಮೇಶ್ವರಾ./172
ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ,
ಧೂಪದೀಪಾರತಿ ನೇಮವಲ್ಲ,
ಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ.
ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ./173
ಜಿಹ್ವೆ ಗುಹ್ಯೇಂದ್ರಿಯದಿಚ್ಛೆಯುಳ್ಳನ್ನಕ್ಕ ಜಂಗಮವಲ್ಲ,
ಪುತ್ರ ಮಿತ್ರ ಕಳತ್ರದಲ್ಲಿಯ ಮೋಹವುಳ್ಳನ್ನಕ್ಕ ಭಕ್ತನಲ್ಲ,
ಮಾತಿನ ಮಾಲೆಯ ಹೆಚ್ಚು ಕುಂದಿನ ಹೋರಟೆಯುಳ್ಳನ್ನಕ್ಕ ಅದ್ವೈತಿಯಲ್ಲ,
ಅಂಗ ಪ್ರಾಣದಾಶೆಯುಳ್ಳನ್ನಕ್ಕ ನಿಸ್ಪೃಹನಲ್ಲ.
ಸೌರಾಷ್ಟ್ರ ಸೋಮೇಶ್ವರಲಿಂಗವನರಿಯದನ್ನಕ್ಕ ಸ್ವಯಾನುಭವಿಯಲ್ಲ./174
ಜೀವಂಗೆ ಜೀವವಾದಾತನೆ ಪರಮಾತ್ಮನು, ಪರಬ್ರಹ್ಮವು.
ಉಪಮೆಗೆ ಉಪಮಾತೀತ, ಭಾವಕ್ಕೆ ಭಾವಾತೀತ,
ಅರಿವಿಂಗೆ ಅಗೋಚರ ಅತಕ್ರ್ಯನಗಣಿತನ ಪ್ರಮೇಯ ನಿತ್ಯನಿರಂಜನ
ನೀನೇ ಸೌರಾಷ್ಟ್ರ ಸೋಮೇಶ್ವರಾ./175
ಜೀವಭಾವದ ಹಂಸ ಜಪದಲ್ಲಿ ದ್ವಾದಶಾಂತ ಕೂಡಿ ಶಿವಜಪವಾಯಿತ್ತು.
ಆ ಶಿವಜಪದಲ್ಲಿಯೇ ಪ್ರಣವವಡಕವಾಗಿಪ್ಪುದು.
ಇದಕ್ಕೆ ಶ್ರುತಿ: `ತದ್ಯೋ ಹಂಸಃ ಸೋಹಂ ಯೋಸೌಸೋಹಂ’
ಆ ಪ್ರಣವದ ನಿರಾಳದಾದಿಬಿಂದು,
ಆ ಬಿಂದುವಿನ ಸ್ವಯಂಪ್ರಕಾಶಲಿಂಗವೇ ತಾವಾಗಿಪ್ಪರಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು./176
ಜ್ಞಾತೃಸ್ವರೂಪದಿಂದರುಹಿಸುವ ಬುದ್ಧಿ,
ಜ್ಞಾನಸ್ವರೂಪದಿಂದರಿವ ಚಕ್ಷುರಾದಿಂದ್ರಿಯ,
[ಜ್ಞೇಯ] ಸ್ವರೂಪದಿಂದರುಹಿಸಿಕೊಂಬ
ವಿಷಯಂಗಳಿಗೊಳಗಹುದೆ ಆ ಪರಬ್ರಹ್ಮವು.
ಇಂತೀ ತ್ರಿಪುಟಿರಹಿತವಾದದರಿವನರಿತಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗವನರಿಯಬಾರದು./177
ಜ್ಞಾನಕಾಯಂಗೆ ಬಹುಕಾಯವಿಲ್ಲ,
ಅರುಹಿನ ಮುಂದಣ ಕುರುಹು ಅರುವನಗ್ರಹಿಸಿ
ಜ್ಞಾನ ನಿಃಪತ್ತಿಯಾಯಿತ್ತು.
ಸೌರಾಷ್ಟ್ರ ಸೋಮೇಶ್ವರಲಿಂಗವೆಂಬ ಕುರುಹ ಮರೆದ ಕಾರಣ,
ನಿಶ್ಶೂನ್ಯ ನಿರ್ಗಮನವಾಯಿತ್ತು. /178
ಟಿಕ್ಕೆಯಲ್ಲಿ ಮಾಣಿಕವನರಸಲುಂಟೆ?
ರೀತಿಕೆಯಲ್ಲಿ ಸುವರ್ಣವನರಸಲುಂಟೆ?
ರಾಮಠದಲ್ಲಿ ಮೃಗನಾಭಿಯನರಸಲುಂಟೆ?
ಆಬಲಲ್ಲಿ ಪದ್ಮಪತ್ರವನರಸಲುಂಟೆ?
ಹಾವುಮೆಕ್ಕೆಯಲ್ಲಿ ದ್ರಾಕ್ಷಾಫಲವನರಸಲುಂಟೆ?
ಹೆಮ್ಮರದಲ್ಲಿ ಸುಗಂಧವನರಸಲುಂಟೆ?
ಅಂಗಭೇದ ವಿಮೂಢರಲ್ಲಿ ಆತ್ಮಜ್ಞಾನವನರಸಲುಂಟೆ?
ದೂರಶ್ರವಣ ದೂರದೃಷ್ಟಿಯವರಲ್ಲಿ ಸಮ್ಯಕ್ದೃಕ್ಕನರಸಲುಂಟೆ?
ಸಮ್ಯಕ್ಜ್ಞಾನವಿಲ್ಲದವರಲ್ಲಿ ಲಿಂಗವನರಸಲುಂಟೆ?
ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದವರಲ್ಲಿ
ನಿಜಸುಖವನರಸಲುಂಟೆ?/179
ಟಿಕ್ಕೆಯೊಳಗೆ ಮಾಣಿಕ್ಯ ಉಂಟೆ ಅಯ್ಯಾ?
ರಾಮಠದಲ್ಲಿ ಮೃಗನಾಭಿಯುಂಟೆ ಅಯ್ಯಾ?
ಕಲ್ಲಮೊರಡಿಯೊಳಗೆ ಚಿಲುಮೆಯಗ್ಗವಣಿಯುಂಟೆ ಅಯ್ಯಾ?
ಸರ್ವ ದುರ್ಗುಣಿಯಾನು, ಎನ್ನಲ್ಲಿ ಆವ ಗುಣವನರಸುವಿರಿರಿ
ನೀನೇ ಕೃಪೆ ಮಾಡಯ್ಯಾ, ಸದ್ಗುರುವೆ ಸೌರಾಷ್ಟ್ರ ಸೋಮೇಶ್ವರಾ./180
ತತ್ವಮೂವತ್ತಾರ ಮೀರಿ ನಾದಬಿಂದುಕಳಾತೀತನಾದ
ಶಿವನು ಜಗನ್ಮಯನಾದ
ಆಗಿಯೂ ಜಗದ ಸ್ಥಿತಿಗತಿ ತನಗಿಲ್ಲವದೆಂತೆಂದಡೆ: ಏಕ ಏವ ಹಿ ಭೂತಾತ್ಮಾ ಭೂತೇಷು ಸುವ್ಯವಸ್ಥಿತಃ
ಏಕಧಾ ಬಹುಧಾ ಚೈವ ದೃಶ್ಯತೇ ಜಲಚಂದ್ರವತ್
ಎಂದುದಾಗಿ,
ಜಲದೊಳಗೆ ಸೂರ್ಯನ ಪ್ರತಿಬಿಂಬ ವಿಕಾರಿಸುತಿರ್ದಡೇನುರಿ
ಆ ವಿಕಾರ ಜಲಕ್ಕಲ್ಲದೆ ಸೂರ್ಯಂಗಿಲ್ಲದಂತಿಪ್ಪನಯ್ಯಾ
ಸೌರಾಷ್ಟ್ರ ಸೋಮೇಶ್ವರಾ./181
ತನಗೊಬ್ಬರು ಮುನಿದರು ತಾನಾರಿಗೂ ಮುನಿಯಲಾಗದು.
ಮನೆಯ ಕಿಚ್ಚು ಮೊದಲೊಮ್ಮೆ ಮನೆಯ ಸುಡುವಂತೆ
ತನ್ನ ಕೋಪ ತನ್ನನೆ ಸುಡುವುದು ನೋಡಯ್ಯ.
ಸವಿಮಾತುಗಳು ಬೇಗದಿಂದ ಆ ಕ್ರೋಧವ [ಗೆಲಿದಿರ್ಪುದು]
ಸಾಕ್ಷಿ: ಸಶ್ರುತಃ ಸಾತ್ವಿಕೋ ವಿದ್ವಾನ್ ಸ ತಪಸ್ವೀ ಜಿತೇಂದ್ರಿಯಃ
ಯೇನ ಶಾಂತೇನ ಖಡ್ಗೇನ ಕ್ರೋಧಶತ್ರುರ್ನಿಪಾದಿತಃ
ಇಂತೆಂದುದಾಗಿ
ಆ ಕ್ರೋಧ ದುರ್ಜನರ ಗೆಲುವುದು.
ಇಂತೀ ಸೋತುದಕ್ಕೆ ಸೋತವರ ಕೂಡೆ
ಎತ್ತಣ ವಿರೋಧವಯ್ಯ?
ಸೌರಾಷ್ಟ್ರ ಸೋಮೇಶ್ವರನ ಶರಣರು
ಸಚರಾಚರಪ್ರಾಣಿಗಳಲ್ಲಿ ವಿರೋಧವಿಲ್ಲದಿರಬೇಕು. /182
ತನು ಒದಗಿದಲ್ಲಿ ಮನವಾಯಿತ್ತು,
ಮನ ವೇಧಿಸಿ ಭಾವವಾಯಿತ್ತು,
ಭಾವ ವೇಧಿಸಿ ಜ್ಞಾನವಾಯಿತ್ತು,
ಜ್ಞಾನ ವೇಧಿಸಿ ಲಿಂಗವಾಯಿತ್ತು,
ಲಿಂಗ ವೇಧಿಸಿ ಪರಿಪೂರ್ಣವಾಯಿತ್ತು,
ಸಾರಾಷ್ಟ್ರ ಸೋಮೇಶ್ವರ ಎಂಬ ನುಡಿಗೆಡೆ ಇಲ್ಲವಾಯಿತ್ತು.
/183
ತನು ನಿರ್ವಾಣವಾದಡೇನೋ, ಆಶೆ ನಿರ್ವಾಣವಾಗದನ್ನಕ್ಕ!
ಮಂಡೆ ಬೋಳಾದಡೇನೋ, ಹುಟ್ಟು ಬೋಳಾಗದನ್ನಕ್ಕ!
ಇಂದ್ರಿಯ ನಿಗ್ರಹವಾದಡೇನೋ, ಷಡುಸ್ಥಲಾನುಗ್ರಹವಾಗದನ್ನಕ್ಕ
ಸೌರಾಷ್ಟ್ರ ಸೋಮೇಶ್ವರಲಿಂಗವು ಬರಿದೆ ಒಲಿವನೇ! /184
ತನು ಮನ ಧನದ ಲೋಭ ಎನಗೇಕೋ?
ಅರ್ಥಪ್ರಾಣ ಅಭಿಮಾನಂಗಳ ತಾತ್ಪರ್ಯ ಎನಗೇಕೋ?
ಪುತ್ರ ಮಿತ್ರ ಕಳತ್ರ ಭೃತ್ಯ ಭ್ರಾತಾದಿಗಳ ಹಂಗು ಎನಗೇಕೋ?
ಸೌರಾಷ್ಟ್ರ ಸೋಮೇಶ್ವರಾ,
ನಿನಗೆ ಎನ್ನ ಹಂಗಿಲ್ಲವಾಗಿ, ಎನಗಿವರ ಹಂಗಿಲ್ಲ. /185
ತನು ಮನ ನೆನಹು, ಹಲವು ನೆನಹಾಗಿ ಜನಿಸಬಲ್ಲವೆ ಆತ್ಮನಿಲ್ಲದಿರಲು?
ಉರಿಯಂತಲ್ಲ, ಹಿರಿದಪ್ಪ ನೆಳಲಂತಲ್ಲ, ಜಗದಂತಲ್ಲ, ಮುಗಿಲಂತಲ್ಲ.
ಇರುಹೆ ಮೊದಲಾದ ಎಂಭತ್ತುನಾಲ್ಕು ಲಕ್ಷ ಜೀವಜಂತುಗಳಂತಲ್ಲ.
ಇವ ಬಿಟ್ಟು ಬೇರೊಂದೆಡೆಯಲಿಪ್ಪುದಲ್ಲ.
ತೆರಹಿಲ್ಲದಾತ್ಮಂಗೆ ಕುರುಹೊಂದಿಲ್ಲವಾಗಿ
ತೋರಲಿಲ್ಲದಾತ್ಮನ ಬೀರಲಿಲ್ಲಾರಿಗೂ.
ನಿಶ್ಶಬ್ದದಿಂ ಶಬ್ದ ಜನಿಸಿ, ಆ ಶಬ್ದ ನಿಶ್ಶಬ್ದದಲ್ಲಿಯೇ ಲಯವಪ್ಪಂತೆ.
ಮಾನವಾತ್ಮನ ತಿಳವರಿವೆ ತಿಳಿವು.
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ತನ್ನ ತಾನೇ ತನ್ನಿಂ ತನ್ನ ಬೆ[ಳೆ]ಯಬೇಕಯ್ಯಾ ಮಲ್ಲಿಕಾರ್ಜುನ./186
ತನು ಮಾಯೆ, ತನುವಿಂಗೆ ಮನ ಮಾಯೆ,
ಮನಕ್ಕೆ ನೆನಹು ಮಾಯೆ, ನೆನಹಿಂಗೆ ಅರಿವು ಮಾಯೆ,
ಅರಿವಿಂಗೆ ಕುರುಹು ಮಾಯೆ.
ಇದನರಿಯದೆ ಹರಿಹರಬ್ರಹ್ಮಾದಿಗಳೆಲ್ಲರೂ
ಮಾಯೆಯ ಕಾಲಸರಮಾಲೆಗಳಾದರು.
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಮಾಯೆ
ದೇವದಾನವಮಾನವರಿಗೆ ದಸರಿದೊಡಕಾಗಿ ಕಾಡಿತ್ತು.
/187
ತನು ಸೋಂಕಿ ಅರ್ಪಿಸುವುದೇ ಸಂದೇಹ,
ಮನ ಸೋಂಕಿ ಅರ್ಪಿಸುವುದೇ ಸಂಕಲ್ಪ,
ಭಾವ ಸೋಂಕದ ಮುನ್ನವೆ ಲಿಂಗ ಸೋಂಕಿ ಬಂದುದೇ ಅಚ್ಚಪ್ರಸಾದವಯ್ಯಾ!
ಇಂತಪ್ಪ ಪ್ರಸಾದಗ್ರಾಹಿಗಳನೆನಗೊಮ್ಮೆ ತೋರಿಸಾ
ಸೌರಾಷ್ಟ್ರ ಸೋಮೇಶ್ವರಾ./188
ತನುಕರಣ ಭುವನಭೋಗಂಗಳ ಶಕ್ತಿಯುಳ್ಳನ್ನಕ್ಕ
ರೋಷದ ಪಾಶ ಬಿಡದು ನೋಡಯ್ಯಾ.
ಕರ್ಮಕ್ಷಯವಾಗದೆ ಜನ್ಮಜರಾಮರಣಂಗಳುಳ್ಳನ್ನಕ್ಕ
ಬಿಂದುಪಾಶ ಬಿಡದು ನೋಡಯ್ಯಾ.
ಅಭಿಮಾನವೆರಸಿ ಆನೆಂಬಹಂಕಾರವುಳ್ಳನ್ನಕ್ಕ
ಕರ್ಮಪಾಶ ಬಿಡದು ನೋಡಯ್ಯಾ.
ಕಾಯಭಾವವುಳ್ಳನ್ನಕ್ಕ ಮಾಯಾಪಾಶ ಬಿಡದು ನೋಡಯ್ಯಾ.
ಪರಮಶಿವನ ಸ್ವಯಂಪ್ರಕಾಶ ಕಾಣಿಸದನ್ನಕ್ಕ
ಮಲಪಾಶ ಬಿಡದು ನೋಡಯ್ಯಾ.
ಇಂತೀ ಪಂಚಪಾಶಪ್ರಪಂಚುಳ್ಳನ್ನಕ್ಕ
ಸಾರಾಷ್ಟ್ರ ಸೋಮೇಶ್ವರಲಿಂಗವ ಕೂಡಿ
ತಾನಾಗಬಾರದು ವಾಗದ್ವೈತಿಗಳಿಗೆ. /189
ತನುಗುಣ ಮನಗುಣ ಪ್ರಾಣಗುಣಾದಿಗಳಲ್ಲಿ ಹುದುಗಿದಡೆ,
ಪಂಚೇಂದ್ರಿಯ ಅರಿಷಡ್ವರ್ಗಂಗಳೊಳು ಮನ ಕೂರ್ತು ಬೆರಸಿದಲ್ಲಿ,
ಆ ಮನದ ಹಸ್ತದಲ್ಲಿ ಲಿಂಗವಿಲ್ಲ.
ಲಿಂಗವಿಲ್ಲವಾಗಿ ಭಕ್ತಿಯಿಲ್ಲ, ಭಕ್ತಿಯಿಲ್ಲವಾಗಿ ವಿವೇಕವಿಲ್ಲ,
ವಿವೇಕವಿಲ್ಲವಾಗಿ ಅರಿವಿಲ್ಲ, ಅರಿವಿಲ್ಲವಾಗಿ ಸುಜ್ಞಾನವಿಲ್ಲ,
ಸುಜ್ಞಾನವಿಲ್ಲವಾಗಿ ಪರಮಾರ್ಥ ಘಟಿಸದು.
ಇವೆಲ್ಲವ ಕಳೆದುಳಿದಲ್ಲಿ ಮನದ ಹಸ್ತದಲ್ಲಿ ಲಿಂಗವಿದ್ದಿತ್ತು,
ಲಿಂಗದಲ್ಲಿ ಮನ ಸಂದಿತ್ತು,
ಮನ ಸಂದಲ್ಲಿ ಸೌರಾಷ್ಟ್ರ ಸೋಮೇಶ್ವರ ಸ್ವಸ್ಥಿರವಾದನು. /190
ತನುಗುಣ ಮನಗುಣ ಪ್ರಾಣಗುಣಾದಿಗಳು ಹುಸಿಯೆಂಬ
ಜ್ಞಾನವೇ ಮೂಲದ್ರವ್ಯವಾಗಿ
`ಆತ್ಮಾವ್ಯಾರೇ ದ್ರಷ್ಟವ್ಯಃ ಶ್ರೋತವ್ಯೋ ಮಂತವ್ಯೋ ನಿದಿಧ್ಯಾಸಿತವ್ಯಃ
ಇಂತೆಂಬ ಮಂತ್ರಾರ್ಥವ ಮೀರಿ
ನಮೋ ಹಿರಣ್ಯಬಾಹವೇ ಹಿರಣ್ಯವರ್ಣಾಯ ಹಿರಣ್ಯರೂಪಾಯ
ಹಿರಣ್ಯಪತಯೇ ಅಂಬಿಕಾಪತಯೇ ಉಮಾಪತಯೇ
ಪಶುಪತಯೇ ನಮೋ ನಮಃ
ಇಂತೆಂಬ ಶ್ರುತ್ಯರ್ಥವೇ ಪರಮಾರ್ಥವಾಗಿ
ಸೌರಾಷ್ಟ್ರ ಸೋಮೇಶ್ವರಲಿಂಗದರ್ಥ ಸದರ್ಥವಾಯಿತ್ತು. /191
ತನುಗುಣವಳಿದಲ್ಲಿ ತ್ಯಾಗಾಂಗ,
ಲಿಂಗದೊಡನೆ ಸಕಲಭೋಗಂಗಳ ಭೋಗಿಸುವಲ್ಲಿ ಭೋಗಾಂಗ,
ನಿಜದಲ್ಲಿ ಬೆರಸಿದಲ್ಲಿ ಯೋಗಾಂಗ.
ಇಂತೀ ತ್ರಿವಿಧದಲ್ಲಿಯೆ ಶಿವಯೋಗಾಂಗ.
ಇದಲ್ಲದನ್ಯಯೋಗಂಗಳೆಲ್ಲಾ ವಿಯೋಗಂಗಳಯ್ಯಾ
ಸೌರಾಷ್ಟ್ರ ಸೋಮೇಶ್ವರಾ. /192
ತನುಗುಣವಳಿದಾತನಲ್ಲದೆ ಭಕ್ತನಲ್ಲ,
ಮನೋಗುಣವಳಿದಾತನಲ್ಲದೆ ಮಹೇಶ್ವರನಲ್ಲ
ಪ್ರಕೃತಿಗುಣರಹಿತನಾದಾತನಲ್ಲದೆ ಪ್ರಸಾದಿಯಲ್ಲ,
ಪ್ರಾಣಗುಣವನಳಿದಾತನಲ್ಲದೆ ಪ್ರಾಣಲಿಂಗಿಯಲ್ಲ,
ಶಬ್ದದುದ್ದೇಶವಳಿದಾತನಲ್ಲದೆ ಶರಣನಲ್ಲ,
ಆತ್ಮನ ನೆಲೆಯನರಿದಾತನಲ್ಲದೆ ಐಕ್ಯನಲ್ಲ.
ಇಂತೀ ಷಡಂಗಕ್ಕೆ ಅತೀತವಾದಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತನಲ್ಲ. /193
ತನುಗುಣವಿರಹಿತ ಗಮನರಹಿತ ಅನುಪಮಜ್ಞಾನಸನ್ನಹಿತ ಶರಣ,
ನೋಡಿದುದೆಲ್ಲವೂ ಪ್ರಸಾದ, ನುಡಿದುದೆಲ್ಲವೂ ಪ್ರಸಾದ,
ಸೋಂಕಿದುದೆಲ್ಲವೂ ಪ್ರಸಾದವಯ್ಯಾ,
ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದಿಗೆ. /194
ತನುಭಾವವಳಿದು ಲಿಂಗಾನುಭಾವದಲ್ಲಿ ನಿಲಲರಿಯದೆ ದೇಹೋಹಂ ಎಂದು
ಅಜಡವಪ್ಪ ಶಿವನನರಿಯದೆ,
ಜಡವಪ್ಪ ತನುಕರಣಭೋಗಭುವನಂಗಳನೆ ಕಂಡು ಭಾವ ಭ್ರಮೆಗೊಂಡುದಕ್ಕೆ
ಶ್ರುತಿ: ಅತೋ ದೃಶ್ಯಮಿದಂ ಭ್ರಾಂತಂ ದೇಹ್ಯೋಹಂಭಾವಜಡತಾ
ಎಂದುದಾಗಿ,
ಇಂತಪ್ಪ ಶಿವಜ್ಞಾನವಿಹೀನರು
ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಸಲ್ಲದೆ ಹೋದರು. /195
ತನುಮನಧನ ತನ್ನವೆಂಬ ಬಳಕೆಯಳಿದು,
ಹಿಡಿವಲ್ಲಿ ಬಿಡುವಲ್ಲಿ ತಾನೆಂಬ ಭಾವ ತಲೆದೋರದೆ
ಶಿವನೆ ಸ್ವಾಮಿಯೆಂದು ಒಡೆಯರೊಡವೆಯ ಒಡೆಯರಿಗೊಪ್ಪಿಸುವಾಳಿನಂತೆ
ತನುಮನಧನವ ಗುರುಲಿಂಗಜಂಗಮಕ್ಕೆ ಜ್ಞಾನದ ಕರದಲ್ಲಿ ನೀಡಿ,
ಲಿಂಗದಲ್ಲಿ ಏನೊಂದುವ ಬಯಸದೆ,
ನಿರುಪಾಧಿಕ ದಾಸೋಹಿ ತಾನಾಗಿ,
ಖ್ಯಾತಿಲಾಭದ ಪೂಜೆಯ ಹೊಗದೆ,
ಶಿವಶರಣರಲ್ಲಿ ಗೆಲ್ಲವಳಿದು ಸೋಲವಳವಟ್ಟು, ಹಮ್ಮಳಿದು ವಿನಯಗುಂದದೆ
ಅಂಗಭೀತಿ ಮಾನಭೀತಿ ಪ್ರಾಣಭೀತಿಯ ಬಿಟ್ಟು, ನಿರ್ಭಿತಿಯಳವಟ್ಟು
ಆನು ನಿಮ್ಮೊಳು ಎರಡಳಿದಿರ್ಪಂತಿರಿಸಯ್ಯಾ
ಸೌರಾಷ್ಟ್ರ ಸೋಮೇಶ್ವರಾ. /196
ತನುಮುಟ್ಟಿ ಮನಮುಟ್ಟದೆ ಒಂದೊಂದನೆ ನೆನೆದು
ಮುಟ್ಟಿಮುಟ್ಟಿ ಅರ್ಪಿಸಿ ಪ್ರಸಾದವಾಯಿತ್ತೆಂದು
ಕೊಳ್ಳಬಹುದೆ ಅನರ್ಪಿತವ?
`ಅರ್ಪಿತಾನರ್ಪಿತಂ ನಾಸ್ತಿ ಇತಿ ಭೇದಂ ಸಮರ್ಪಿತಂ’
ಎಂಬ ಈ ಸಕೀಲಸಂಬಂಧವನರಿತು ಅರ್ಪಿಸಿಕೊಳ್ಳದೆ,
ಅನರ್ಪಿತವ ಮುಟ್ಟದೆ, ರೂಪು ರುಚಿಯ ಹೊರದೆ,
ಸಂಗುಖದ ಸೋಂಕು ತನುವ ಸೋಂಕದ ಮುನ್ನವೆ,
ಷಡುರಸಾದಿಗಳು ಮನವ ಸೋಂಕದ ಮುನ್ನವೆ,
ಪರಿಪೂರ್ಣಭಾವಿ ತಾನಾಗಿ ಲಿಂಗಭಾವವಂಗವಾದಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದ ದೊರಕೊಳ್ಳದು./197
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ,
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದವೆಡೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು ಬೇರಿಲ್ಲ ಕಾಣಿರೆ.
/198
ತನುವಿನಿಂ ಮನ ಜನಿಸಿ, ಮನದಿಂ ಹಲವು ನೆನಹುಗಳು ಜನಿಸಿದವಲ್ಲದೆ,
ಅವನಿಲ್ಲದಷ್ಟಪುತ್ರರೆಂದೇನು? ನಡೆ ನುಡಿಯೊಳಗಲ್ಲವೆಯೆನುತ್ತಿಹಿ,
ಉರಿಯ ಕಾರಣವೊ? ಹಿರಿದಪ್ಪ ನೆಳಲು ಮಾತ್ರದಿಂದ ತೋರುವದೊ?
ವ್ಯೋಮದಂಥಾದಲ್ಲ, ಸೀಮೆ ಮುನ್ನಲಿಲ್ಲ. ನೇಮಿಸುವ ಪರಿಯದೆಂತೊ?
ನಾಮವಿಟ್ಟರಿಯದ ಮುನ್ನ ಅರಿಯಲಿಲ್ಲ,
ಹೇಳಲಿಲ್ಲದುದ ಮುನ್ನ ಕೇಳಲಿಲ್ಲ.
ಪಂಚಾಂಗ ಮಧ್ಯದಲ್ಲಿಪ್ಪ ಮನವಲ್ಲ.
ವಾಙ್ಮನಕ್ಕಗೋಚರವೆಂದ ಬಳಿಕ ನಾಮವಿಡಲಿಲ್ಲ ಕಾಣಾ,
ನಿಃಕಳಂಕ ಶಾಂತಮಲ್ಲಿಕಾರ್ಜುನ ದೇವರೆಂಬ ನಾಮ
ನಿಶ್ಶಬ್ದದಲ್ಲಿಯರಿ[ಯೆ] ಕಾಣಾ, ಸೌರಾಷ್ಟ್ರ ಸೋಮೇಶ್ವರಾ./199
ತನುವೆಂಬ ಮನೆಗೆ ಆಸ್ಥಿಯ ಗಳು, ನರದ ಭೀಮಗಟ್ಟು,
ಮೂರುವರೆಕೋಟಿ ರೋಮಂಗಳ ಹೊದಿಕೆ
ಮಾಂಸದ ಭಿತ್ತಿಗೆ, ಶುಕ್ಲದ ನೆಲಗಟ್ಟು
ರಕ್ತದ ಸಾರಣೆ, ಮಜ್ಜೆಯ ಕಾರಣೆ,
ನೇತ್ರ ಶ್ರೋತ್ರ ಘ್ರಾಣ ಗುದ ಗುಹ್ಯವೆಂಬವೇ ಗವಾಕ್ಷ,
ಬಾಯ ಬಾಗಿಲಿಗೆ ಅಧರದ ತಾರುಗದ, ದಂತದ ಅಗುಳಿ,
ಇಂತಪ್ಪ ಗೃಹಕ್ಕೆ ದ್ರವ್ಯವಾವದೆಂದಡೆ: ಕಫ ಪೈತ್ಯವೆಂಬ ಸಯದಾನ, ಸ್ವೇದವೆಂಬ ಅಗ್ಘವಣಿ,
ಅನ್ನಪಾನಂಗಳೆಂಬ ಕಟ್ಟಿಗೆ, ಉದರಾಗ್ನಿಯಿಂ ಪಾಕವಾಗುತ್ತಂ ಇರಲು,
ಅನುಭವಿಸುವ ಜೀವನು ಮಲಮೂತ್ರವೆಂಬ ವಿತ್ತ
ಇಪ್ಪತ್ತೆರಡು ಸಾವಿರನಾಳದಿಂ ಪ್ರಯವಪ್ಪುದು
ನಿಲಯಾಧಿಪನೆಂಬ ಜೀವಂಗೆ ಮನವೆಂಬ ಸತಿ
ತನ್ಮಾತ್ರೆಗಳೆಂಬ ಸುತರು
ಇಂತಪ್ಪ ಸಂಸಾರಸಾಮಗ್ರಿಯಿಂ ಜೀವಿಸುತ್ತಿರಲು,
ಕಾಲಚಕ್ರಂಗಳು ತಿರುಗಲೊಡನೆ ಜ್ಞಾನಾಗ್ನಿಯಿಂ ಮನೆ ಬೆಂದು,
ಎಲ್ಲರು ಪ್ರಳಯಕ್ಕೊಳಗಾದರು.
ಆನೊಬ್ಬನೆ ಲಿಂಗಸಂಗಿಯಾಗಿ ಉಳಿದೆ ನೋಡಯ್ಯಾ,
ಸೌರಾಷ್ಟ್ರ ಸೋಮೇಶ್ವರಾ./200
ತನ್ನ ತಾನರಿವುದೇನೋ, ತನ್ನ ತಾ ಮರೆವುದು ಮತ್ತದೇನೋ?
ಅರಿವುದು ಒಂದೆ, ತನ್ನನರಿಯಲುಂಟೆ?
ಅರಿವು ತಾನೆ ತನ್ನ ಮರೆಯಲುಂಟೆ?
ಆ ಅರಿವು ತಾನೆಂದರಿತಂಗೆ ಮೂರಿಲ್ಲ ಆರಿಲ್ಲ,
ಎಂಟಿಲ್ಲ ಹದಿನೆಂಟಿಲ್ಲ.
ಪುಸಿ ತನ್ನ ಭ್ರಾಮಕದಿಂದ ತೋರಿತ್ತು ನೋಡಾ.
ಸೌರಾಷ್ಟ್ರ ಸೋಮೇಶ್ವರಲಿಂಗವಿಪ್ಪುದಕ್ಕೆ ಇದು ಚಿಹ್ನ. /201
ತನ್ನನೆ ಅರ್ಪಿಸಿಹ ಶರಣಂಗೆ ಲಿಂಗವೆಂದೂ ಭಿನ್ನವಿಲ್ಲ ನೋಡಯ್ಯಾ.
ಇಂತಪ್ಪ ಶರಣನು ಎಲ್ಲಾ ಸಕಾಯ ಸಹ ಮರಳಿಯೂ
ಲಿಂಗ ಸಹಭೋಜನವ ಮಾಡುವ.
ಇದಕ್ಕೆ ಶ್ರುತಿ: ಪರಮಂ ಬ್ರಹ್ಮವೇದ ಸ್ಯೋಶ್ನುತೇ ಸರ್ವಾನ್ ಕಾಮಾನ್ ಸಹಬ್ರಹ್ಮಣಾವಿಪಶ್ಚಿತಾ,
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು
ಲಿಂಗದೊಡನೆ ಸಹಭೋಜನವಯ್ಯಾ./202
ತಮೋಗುಣವೆಂಬ ಮಯಣದಲ್ಲಿ ರಜೋಗುಣವೆಂಬ ರಜವನೆತ್ತಿ
ಸತ್ವಗುಣವೆಂಬ ಹಸ್ತದಿಂ ಪಿಡಿದು
ಬೋಧವೆಂಬ ನೇತ್ರದಿಂ ಕಂಡು
ಮಾಯಾ ಜೀವರ ಎರಡೊರೆಗೆ ಸರಿಯೆಂದು ಕಳೆದು
ತ್ರಿವಿಧಾಹಂಕಾರದಲ್ಲಿಯ ತಾಮಸಾಹಂಕಾರವಪ್ಪ ಮಯಣವ
ಶಿವಜ್ಞಾನದಿಂ ಕರಗಿಸಿ, ರಾಜಸಾಹಂಕಾರವಪ್ಪ ರಜವ ತೆಗೆದು,
ಸಾತ್ವಿಕದಲ್ಲಿ ನಿಂದ ದ್ರವ್ಯವ
ಸೌರಾಷ್ಟ್ರ ಸೋಮೇಶ್ವರಂಗಿತ್ತು, ಮೂಲಾಹಂಕಾರ ನಷ್ಟವಾಯಿತ್ತು./203
ತಲೆಯಿಲ್ಲದ ಕಾಗೆ ನೆಲದಲ್ಲಿ ನಡೆಯಿತ್ತು.
ಹುಲಿ ನಲಿದು ಗಿಲಿಗಿಸಿ ಗೆಜ್ಜೆಗಟ್ಟಿ ಒಲೆದಾಡಿತ್ತು.
ಬಲುಹೆನಿಸಿದ ಕರಡಿ ಹಾಡಿ ಹರಸಿ ಬೆಳೆಯಿತ್ತು.
ಕಾಳರಕ್ಕಸಿಯ ಮಗುವು ಚಂದ್ರಸೂರ್ಯರ ರಾಟಾಳದ
ಹುರಿಯೊಳಗೆ ತಿರಿಗಿತ್ತು.
ಕಳವಳಿಸುವ ಕಪಿಯ ಭೂತ ಹೊಡೆದು, ಚೋಳೂರೆ ಘಾಳಿಯೊಳು ಸಿಕ್ಕಿ,
ಸೌರಾಷ್ಟ್ರ ಸೋಮೇಶ್ವರನ ಕಾಣದೆ
ಕನ್ನಡಕದ ಕಣ್ಣಿನಂತೆ ಕಣ್ಣೆನಿಸಿ ಕಣ್ಣುಗೆಟ್ಟಿತ್ತು. /204
ತಳದಲೊಂದು ಕೋಲ ಕುಳಿ ಮಾಡಿ, ಮೇಲೊಂದು ಕೋಲ ಮೊನೆ ಮಾಡಿ
[ಮಥಿ]ಸಲು ಅಗ್ನಿ ದೃಷ್ಟವಾಗಿ ಕಾಣಿಸಿಕೊಂಬಂತೆ,
ಆತ್ಮನ ಸತಿಗೋಲಮಾಡಿ, ಪ್ರಣವವ [ಪ]ತಿಗೋಲ ಮಾಡಿ,
ಪ್ರಣವಾತ್ಮಕನು ಶಿವಧ್ಯಾನದಿಂ ಮಥಿಸಲು
ಆ ಧ್ಯಾನಪರ್ದಣದಲ್ಲಿ ಶಿವನು ಗೂಢವಿಲ್ಲದೆ ಕಾಣಿಸಿಕೊಂಬನು.
ಇದಕ್ಕೆ ಶ್ರುತಿ: ಆತ್ಮಾನಮರಣಿಂ ಕೃತ್ವಾ ಪ್ರಣವಂ ಚೋತ್ತರಾರಣಿಂ
ಧ್ಯಾನನಿರ್ಮಥನಾಭ್ಯಾಸಾತ್ಪಾಶಂ ದಹತಿ ಪಂಡಿತಃ
ಎಂದುದಾಗಿ
ಶಿವಧ್ಯಾನದಿಂ ಸಾರಾಷ್ಟ್ರ ಸೋಮೇಶ್ವರ ಲಿಂಗವ
ಕಾಂಬುದಕ್ಕಿದೇ ಬಟ್ಟೆ ಕಂಡಯ್ಯಾ! /205
ತಾನು ತನ್ನನರಿಯದ ಮುನ್ನ
ತನ್ಮಯವಾದರಿವು ತನ್ನನರಿವಲ್ಲಿ,
ಆ ಅರಿವು ತನ್ಮಯವೆಂದರಿತರಿವು ಮರೆಯದಂತೆ
ಮುನ್ನಿನರಿವೆ ಕರಿಗೊಂಡು
ಇನ್ನು ಅರಿಯಲಿಲ್ಲದರಿವು, ನೀನೆ, ಸಾರಾಷ್ಟ್ರ ಸೋಮೇಶ್ವರಾ./206
ತಾನೆ ಶಿವನೆಂದು ಕುರುಹ ತೋರುವ ಹಾಂಗೆ
ಮತ್ರ್ಯದಲ್ಲಿ ಸುಳಿದನಲ್ಲದೆ ಕುರುಹುಂಟೆ ಶರಣಂಗೆರಿ
ಮತ್ತೊಮ್ಮೆ ಅರಿವು ಮರಹುಂಟೆ ಶರಣಂಗೆರಿ
ಬಿಚ್ಚಿ ಬೇರಲ್ಲದ, ಬೆರಸಿ ಒಂದಲ್ಲದ ದ್ವಂದ್ವರಹಿತ
ಸಾರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ. /207
ತಿಳಿದ ತಿಳಿಗೊಳದ ತಳಿತ ತಾವರೆಯರಳ ತಂಡುಲದ ರುಚಿಯ
ಕಳಹಂಸೆ ಬಯಸುವಂತೆ,
ಸುಧಾಕಿರಣನಿಂ ಬೆಳಗಿದ ಬೆಳುದಿಂಗಳ ರುಚಿಯ
ಚಕೋರ ಬಯಸುವಂತೆ
ಆನು ನಿಮ್ಮ ಶರಣರ ಬರವ ಹಾರಿ ಹಂಬಲಿಸುತ್ತಿದ್ದೇನೆ.
ಕರುಣಿಸಯ್ಯಾ, ಎಲೆ ಸೌರಾಷ್ಟ್ರ ಸೋಮೇಶ್ವರಾ
ನಿಮ್ಮ ಧರ್ಮ, ನಿಮ್ಮ ಧರ್ಮ./208
ತಿಳಿದ ತಿಳಿಗೊಳದ ತಳಿತ ತಾವರೆಯರಳ ತಂಡುಲದ ರುಚಿಯ
ಕಳಹಂಸೆ ಬಲ್ಲುದಲ್ಲದೆ,
ಒಡನಿರ್ದ ನೀರುಗಾಗೆ ತಾನೆತ್ತ ಬಲ್ಲುದೊರಿ
ಸುಧಾಕಿರಣನಿಂ ಬೆಳಗಿದ ಬೆಳುದಿಂಗಳ ರುಚಿಯ
ಚಕೋರ ಬಲ್ಲುದಲ್ಲದೆ,
ಒಡನಿರ್ದ ಕಾಕೋಳಿ ತಾನೆತ್ತ ಬಲ್ಲುದೊರಿ
ಕಾಗರ್ಾಲ ಮುಂಬನಿಯ ಸುಖವ
ಚಾದಗೆ ಬಲ್ಲುದಲ್ಲದೆ,
ಅಡವಿಯಲ್ಲಿರ್ದ ಕೊಕರ ತಾನೆತ್ತ ಬಲ್ಲುದೊರಿ
ಸಾರಾಷ್ಟ್ರ ಸೋಮೇಶ್ವರನ ಶರಣರ ಇರವ
ಮಹಾನುಭಾವಿಗಳು ಬಲ್ಲರಲ್ಲದೆ,
ಒಡನಿರ್ದ ಜಡಮತಿಯ ಮಾನವರು ತಾವೆತ್ತ ಬಲ್ಲರೊರಿ
/209
ತೀರ್ಥಯಾತ್ರೆಯ ಮಾಡಿ ಪಾಪವ ಕಳೆದಿಹೆನೆಂಬ
ಯಾತನೆ ಬೇಡ ಕೇಳಿರಣ್ಣಾ,
ಅನಂತಕರ್ಮವೆಲ್ಲಾ ಒಬ್ಬ ಶಿವಭಕ್ತನ
ದರುಶನ ಸ್ಪರ್ಶನದಿಂದ ಕೆಡುವವು.
ಅದೆಂತೆಂದಡೆ: ಉಪಪಾತಕಕೋಟೀನಿ ಬ್ರಹ್ಮಹತ್ಯಾ ಶತಾನ್ಯಪಿ
ಮಹಾಪಾಪಶ್ಚ ನಶ್ಯಂತಿ ಲಿಂಗಭಕ್ತಸ್ಯ ದರ್ಶನಾತ್
ಎಂದುದಾಗಿ, ಅದೇನು ಕಾರಣವೆಂದಡೆ
ಆ ಭಕ್ತನಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗವಿಪ್ಪುದಾಗಿ
ಹೋಹವಯ್ಯಾ ಹುಲ್ಲಿನಲ್ಲಿ ತೊಡೆದು. /210
ತೆರಹಿಲ್ಲದ ಘನ ತನು ಮನ ಮಹವ ಮೀರಿತ್ತು,
ಭಾ[ವಾ] ಭಾವವ ಮೀರಿತ್ತು.
ಅರಿವ[ರ]ತುದಾಗಿ ನಿಜವನರಿಯದು, ನಿರ್ಣಯವನರಿಯದು.
ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜ ತಾನಾಗಿ
ಒಂದೆರಡೆಂಬ ಭಾವಾಭಾವ ನಷ್ಟವಾಯಿತ್ತು./211
ತೆರೆಯಡಗಿದ ಸಾಗರದೊಳಗೆ ಆಕಾಶ ಬಿಂಬಿಸಿ
ಅಂಬರ ಜಲವನೊಳಕೊಂಡಂತೆ,
ದಿನಮಣಿ ಮಣಿಮುಕುರದಲ್ಲಿ ಹೊಳೆಯಲು
ಮುಕುರವೇ ರವಿಯಾಗಿಪ್ಪಂತೆ,
ಗುರುಶಿಷ್ಯ ಸಂಬಂಧ ಅಭಿನ್ನಸೇವ್ಯವಾದ ಬಳಿಕ
ಗುರವೆಂದನಲುಂಟೆ ಶಿಷ್ಯಂಗೆ? ಶಿಷ್ಯನೆನಲುಂಟೆ ಗುರುವಿಂಗೆ?
ಇಂತು ಉಭಯನಾಸ್ತಿಯಾದ ಉಪದೇಶ
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಸ್ವಯವಾಯಿತ್ತು./212
ತ್ರಿಪುರಸಂಹಾರವ ಮಾಡುವಲ್ಲಿ
ಶಿವನ ಉನ್ಮಿಷೋನ್ಮೀಲದೃಷ್ಟಿಯಿಂ
ಪುಳಕಬಿಂದು ಕಾಶ್ಯಪಿಯ ಮೇಲೆ ಬೀಳಲುಣ್ಮಿದ ರುದ್ರಾಕ್ಷಿ
ಸರ್ವಕಾರಣಾಧಿಕ್ಯವೆಂಬುದನರಿತು
ರುದ್ರಾಕ್ಷಿಯ ಧರಿಸಿದಾತನೇ ಸರ್ವಥಾ ರುದ್ರನಪ್ಪುದು ತಪ್ಪದು.
ಇದಕ್ಕೆ ಶ್ರುತಿ: `ಪುರಾ ತ್ರಿಪುರವಧಾಯೋನ್ಮೀಲಿತಾಕ್ಷೊಡಿಹಂ
ತೇಭ್ಯೋ ಜಲಬಿಂದವೋ ಭೂಮೌ ಪತಿತಾಸ್ತೇ
ರುದ್ರಾಕ್ಷಾಃ ಜಾತಾಃ ಸರ್ವಾನುಗ್ರಹಾಥರ್ಾಯ
ಅತ ಏವ ರುದ್ರಾಕ್ಷಧಾರಣಾತ್ ರುದ್ರಃ
ಎಂದುದಾಗಿ, ಇಂತಪ್ಪ ರುದ್ರಾಕ್ಷಿಯಂ ಧರಿಸಿದಾತ
ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲದೆ ಬೇರೆ ಅಲ್ಲ./213
ದಕ್ಷಿಣದ್ವಾರದ ವೃಕ್ಷದ ತಂಪಿನಲ್ಲಿ ಸ್ವಯಂಜ್ಯೋತಿ ಉರಿವುದ ಕಂಡೆ.
ದೀಪ ಕೆಟ್ಟು ವೃಕ್ಷವಳಿದು ದಕ್ಷಿಣದ್ವಾರವ ದಾಂಟಿ
ಉತ್ತರದ್ವಾರದ ಬಾಗಿಲ ಬಿಯ್ಯಗ ತೆಗೆದಲ್ಲಿ
ನಾದಮೂರುತಿಲಿಂಗವ ಕಂಡೆ.
ಮುಟ್ಟಿ ಪೂಜಿಸಿ ಹೋದಾತನ ನೆಟ್ಟನೆ ನುಂಗಿ,
ತಾ ಬಟ್ಟಬಯಲಾಯಿತ್ತು ನೋಡಾ,
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು./214
ದಿವಾರಾತ್ರಿಯ ಮಧ್ಯದಲ್ಲಿ ಕತ್ತಲೆ ಬೆಳಗು ತಳೆದಿಪ್ಪ ಬಯಲು
ಶ್ವೇತವೊ ಕಪೋತವೊ, ಬಲ್ಲಡೆ ನೀವು ಹೇಳಿರೆ.
ತನುಮನದ ಮಧ್ಯದಲ್ಲಿ ಕರಣೇಂದ್ರಿಯಂಗಳ ತಳೆದಿಪ್ಪ ಆತ್ಮನು
ಶ್ವೇತವೊ ಪೀತವೊ, ಬಲ್ಲಡೆ ನೀವು ಹೇಳಿರೆ.
ಸ್ವಯ ಪರದ ಮಧ್ಯದಲ್ಲಿ ನಿಜವ ತಳೆದಿಪ್ಪ ಸೌರಾಷ್ಟ್ರ ಸೋಮೇಶ್ವರಲಿಂಗ
ಶ್ವೇತವೊ ಪೀತವೊ, ಬಲ್ಲಡೆ ನೀವು ಹೇಳಿರೆ. /215
ದೇವದೇಹಿಕ ಭಕ್ತನಾಗಿ
ಶ್ರೋತ್ರವ ಲಿಂಗಕ್ಕೆ ಕೇಳಲಿತ್ತು
ಪ್ರಸಾದಶ್ರೋತ್ರದಲ್ಲಿ ಕೇಳುವನಾ ಶರಣನು.
ತ್ವಕ್ಕು ಲಿಂಗಕ್ಕೆ ಸೋಂಕಲಿತ್ತು
ಪ್ರಸಾದತ್ವಕ್ಕಿನಲ್ಲಿ ಸೋಂಕುವನಾ ಶರಣನು.
ನೇತ್ರವ ಲಿಂಗಕ್ಕೆ ನೋಡಲಿತ್ತು
ಪ್ರಸಾದನೇತ್ರದಲ್ಲಿ ನೋಡುವನಾ ಶರಣನು.
ಜಿಹ್ವೆಯ ಲಿಂಗಕ್ಕೆ ರುಚಿಸಲಿತ್ತು
ಪ್ರಸಾದಜಿಹ್ವೆಯಲ್ಲಿ ರುಚಿಸುವನಾ ಶರಣನು.
ಪ್ರಾಣವ ಲಿಂಗಕ್ಕೆ ಘ್ರಾಣಿಸಲಿತ್ತು
ಪ್ರಸಾದಘ್ರಾಣದಲ್ಲಿ ವಾಸಿಸುವನಾ ಶರಣನು.
ಮನವ ಲಿಂಗಕ್ಕೆ ನೆನೆಯಲಿತ್ತು
ಪ್ರಸಾದಮನದಲ್ಲಿ ನೆನೆವನಾ ಶರಣನು.
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣಂಗೆ
ಪ್ರಸಾದವಲ್ಲದಿಲ್ಲವಯ್ಯಾ./216
ದೇಶ ಉಪದೇಶವಾಗದನ್ನಕ್ಕ, ಜೀವ ಉಜೀವವಾಗದನ್ನಕ್ಕ,
ಕರಣಂಗಳುಪಕರಣಂಗಳಾಗದನ್ನಕ್ಕ, ನಯನಂಗಳುಪನಯನಂಗಳಾಗದನ್ನಕ್ಕ,
ಭೋಗಂಗಳುಪಭೋಗಂಗಳಾಗದನ್ನಕ್ಕ
ಅಂಗ ಪ್ರಾಣ ಮನ ಭಾವ ಕರಣಂಗಳಲ್ಲಿ ಭರಿತವೆಂತೆಪ್ಪೆಯಯ್ಯಾ?
ಸೌರಾಷ್ಟ್ರ ಸೋಮೇಶ್ವರಾ,
ನೀನು ಒಲಿ ಒಲಿಯೆಂದರೆತೊಲಿವೆಯಯ್ಯಾ.
/217
ದೇಹ ಪ್ರಾಣದಂತೆ ಕೂಡಿದ ಭಕ್ತ ಜಂಗಮ[ದ]
ಉಭಯದನುವನೇನೆಂಬೆನಯ್ಯಾ,
ಅಂಗದೊಳಗೆ ಅನುಭಾವಸಾಹಿತ್ಯ, ಆಚಾರಲಿಂಗಸಂಬಂಧ.
ಚಿದಂಗದೊಳಗೆ ಸ್ವಾನುಭಾವ ಸಮ್ಯಕ್ಜ್ಞಾನದುದಯ, ಪ್ರಾಣಲಿಂಗಸಂಬಂಧ.
ಇಂತೀ ಉಭಯದನುವನಾನೇನೆಂಬೆನಯ್ಯಾ.
ಅರಿವಿನೊಳಗನುಭವ, ಅನುಭವದೊಳಗರಿವಿಪ್ಪಂತೆ
ಭಕ್ತನೊಳಗೆ ಜಂಗಮ, ಜಂಗಮದೊಳಗೆ ಭಕ್ತ.
ಇಂತೀ ಭಕ್ತ ಜಗಂಮದ ಸಕೀಲಸಂಬಧವ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರೇ ಬಲ್ಲರು. /218
ದೇಹಾಭಿಮಾನವಳಿದು,
ಪರಶಿವಜ್ಞಾನವು ಸ್ವಾನುಭಾವಜ್ಞಾನವು ಒಂದೆಯಾಗಿ,
ಭಿನ್ನಜ್ಞಾನದ ಬನ್ನವಳಿದು ಅವಿರಳಜ್ಞಾನವಳವಟ್ಟಲ್ಲಿ
ಮನವೆಲ್ಲೆಲ್ಲಿಗೆಯ್ದಿದರಲ್ಲಲ್ಲಿಯೇ
ಶಿವನು ಸ್ವಯವದೆಂತೆಂದಡೆ, ಇದಕ್ಕೆ ಶ್ರುತಿ: ದೇಹಾಭಿಮಾನೇ ಗಲಿತೇ ವಿಜ್ಞಾತೇಚ ಪದೇ ಶಿವೇ
ಯತ್ರ ಯತ್ರ ಮನೋ ಯಾತಿ ತತ್ರ ತತ್ರ ಶಿವಃ ಸ್ವಯಂ
ಎಂದುದಾಗಿ
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು
ಸಚ್ಚಿದಾನಂದಭರಿತರು./219
ದೇಹಾರ್ಥಪ್ರಾಣಾಭಿಮಾನಕ್ಕೆ
ಶ್ರೀಗುರು ಕರ್ತನಾಗಿ ತಾನು ಭೃತ್ಯನಾಗಿ
ಒಂದು ನಿಮಿಷ ತ್ರಿಕರಣಶುದ್ಧನಾಗಿ
ಗುರುಸೇವೆಯ ಮಾಡುವ ಶಿಷ್ಯಂಗೆ ಗುರುವುಂಟು,
ಗುರುವುಂಟಾಗಿ ಲಿಂಗವುಂಟು,
ಲಿಂಗವುಂಟಾಗಿ ಜಂಗಮವುಂಟು,
ಜಂಗಮವುಂಟಾಗಿ ಪ್ರಸಾದವುಂಟು,
ಇಂತು ಗುರುಚರಲಿಂಗಪ್ರಸಾದ ಒಂದೇಯಾಗಿ ಸೇವಿಸಬಲ್ಲನಾ[ಗೆ]
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ನಿತ್ಯಮುಕ್ತಿ./220
ದೇಹಿಯಲ್ಲ ನಿರ್ದೇಹಿಯಲ್ಲ ನಿತ್ಯ,
ಫಲಪದವ ಮೀರಿದ ಸ್ವತಂತ್ರ,
ಆಗುಹೋಗಿಲ್ಲದ ಭರಿತ,
ಅಚಲಲಿಂಗ ಸನ್ನಹಿತ,
ನಿಜನಿಂದ ಘನತೇಜ.
ಹೆಸರಿಡಬಾರದ ಹಿರಿಯನಯ್ಯಾ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ./221
ದ್ವೈತಾದ್ವೈತದ ಬಳಿವಿಡಿದರಸುವನಲ್ಲ.
ಅರಿವ ಮುಂದಿಟ್ಟುಕೊಂಡು, ಜ್ಞಾನದ ಮಾತ ಜಿನುಗಿ,
ಕುರುಹ ತೋರಿ, ತಿರುಗುವ ಉಪಾಧಿಕನಲ್ಲ.
ತ್ರಿಪುಟಿಸಂಕಲ್ಪ ಮೀರಿ “ದಾಸೋಹಂ ಸ್ಯೋಹಂ ಹಂಸಃ
ಎಂಬ ಬಳಲಿಕೆಯಳಿದು,
ತಾ ಬೈಚಿಟ್ಟ ಬಯ್ಕೆಯ ತಾನೆ ಕಂಡಂತೆ .
ತಾನೇ ತನ್ನ ನಿಜ ನಿಧಾನಗಂಡ ನಿಜಸುಖಿ,
ಸ್ವಾನುಭಾವಭರಿತ ಸ್ವತಂತ್ರ ನಿತ್ಯಮುಕ್ತ,
ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾದ ಶರಣ./222
ಧರೆಯಾಕಾಶವಿಲ್ಲದಂದು, ಅಂದೇನೊ ಅಂದೇನೊ!
ಎಂಬತ್ತುನಾಲ್ಕು ಲಕ್ಷ ಜೀವಜಂತುಗಳಿಲ್ಲದಂದು, ಅಂದೇನೊ ಅಂದೇನೊ!
ಸಚರಾಚರಂಗಳು ರಚಿಸದಂದು, ಅಂದೇನೊ ಅಂದೇನೊ!
ಇಹಪರಂಗಳಿಲ್ಲದಂದು, ಅಂದೇನೊ ಅಂದೇನೊ!
ಸ್ವರ್ಗನರಕಾದಿಗಳಿಲ್ಲದಂದು, ಅಂದೇನೊ ಅಂದೇನೊ!
ಸುರಾಳನಿರಾಳಗಳಿಲ್ಲದಂದು, ಅಂದೇನೊ ಅಂದೇನೊ!
ಸೌರಾಷ್ಟ್ರ ಸೋಮೇಶ್ವರಾ, ಆನೂ ನೀನೂ ಇಲ್ಲದಂದು
ಅಂದೇನೊ ಅಂದೇನೊ!! /223
ಧರ್ಮಾರ್ಥಕಾಮಮೋಕ್ಷಂಗಳ ಕಾಮಿಸಿ
ಗುರುಲಿಂಗಜಂಗಮಕ್ಕೆ ಹೊನ್ನು ಹೆಣ್ಣು ಮಣ್ಣು
ವಸ್ತ್ರಾಭರಣಂಗಳನಿತ್ತ ಭಕ್ತಂಗೆ
ಕಾಮಿತಫಲವಪ್ಪುದು ತಪ್ಪದಯ್ಯಾ.
ಸೌರಾಷ್ಟ್ರ ಸೋಮೇಶ್ವರನೇ ಸಾಕ್ಷಿಯಾಗಿ./224
ನಟ್ಟಡವಿಯಲ್ಲಿ ಕೆಂಡದ ಮಳೆ ಕರೆದು
ಊರಡವಿಯನೊಂದಾಗಿ ಸುಟ್ಟಿತ್ತು ನೋಡಾ.
ಊರೈವರನಾರೈವರ ಮೂಗು ಹೋಯಿತ್ತು ನೋಡಾ.
ಹೋಗದ ಊರಿನ ಬಾರದ ದಾರಿಯ ಕಂಡು ಸುಖಿಯಾದೆನಯ್ಯಾ
ಸೌರಾಷ್ಟ್ರ ಸೋಮೇಶ್ವರಾ. /225
ನಾದಬಿಂದುಕಳೆಯ ಸಂದನರಿತು
ಪಿಂಡಜ್ಞಾನಿಯಾಗಿ ಸ್ವಾನುಭಾವವುದಯಿಸಿ
ಅನಾದಿಸಿದ್ಧನಾದ ತನ್ನ ತಾನೇ ಕಂಡು,
ಚಿದ್ವಪುಷಲಿಂಗ ಆದಿಬಿಂದುವಿನೊಳು ನಿಂದು ಮೆರೆದ ಮಹಿಮನಲ್ಲಿ
ಭೇದವಿಲ್ಲದಪ್ರತಿಮರು,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು./226
ನಾದಬ್ರಹ್ಮ ನಾದಾತೀತಬ್ರಹ್ಮ ಶಬ್ದಬ್ರಹ್ಮ ನಿಶ್ಶಬ್ದಬ್ರಹ್ಮ
ವಿಶ್ವಬ್ರಹ್ಮ ಏಕಬ್ರಹ್ಮ ಸರ್ವಂ ಖಲ್ವಿದಂ ಬ್ರಹ್ಮ.
ಇದಕ್ಕೆ ಶ್ರುತಿ: ನಾದಬ್ರಹ್ಮಮಯೋ ದೇವೋ ನಾದಾತೀತಂತು ತತ್ಪದಂ
ಶಬ್ದಬ್ರಹ್ಮಮಯಂ ಸರ್ವಂ ನಿಶ್ಶಬ್ದಾ ಬ್ರಹ್ಮವೇದಿನಃ
ವಿಶ್ವಬ್ರಹ್ಮಪ್ರವರ್ತಂತೇ ಏಕಂ ಬ್ರಹ್ಮ ಚ ಸುಧ್ರುವಂ
ಸರ್ವಂ ಖಲ್ವಿದಂ ಬ್ರಹ್ಮ ಸರ್ವಾತೀತೋ ಮಹಾಪ್ರಭುಃ
ಇಂತೆಂದುದಾಗಿ ಒಂದಹುದು ಒಂದನಲ್ಲವೆಂದಡೆ,
ಶಿರ ತನ್ನದು ದೇಹ ಮತ್ತೊಬ್ಬರದೆಂದಡೆ,
ಮೆಚ್ಚುವರೆ ಶಿವಜ್ಞಾನಿಗಳು?
ಸೌರಾಷ್ಟ್ರ ಸೋಮೇಶ್ವರಲಿಂಗವನಹುದಲ್ಲವೆಂಬರೆ ಬಲ್ಲವರುರಿ /227
ನಾದವೇ ಲಿಂಗ, ಬಿಂದುವೇ ಪೀಠವಾಗಿ
ಶಿವಶಕ್ತಿಸಂಪುಟವಾದ ಪಂಚಮದ ಕರ್ಮೆಶ
ಲಿಂಗನಿರ್ವಯಲ ಪಿಂಡ, ಅಂಗವೆಂಬ ಪಿಂಡ ತದ್ರೂಪವೆನೆಯ್ದಿ
ಪರಿಪೂರ್ಣ ಪಿಂಡಾಕಾಶರೂಪ ತಾನಾಗಿ
ನುಡಿಗೆಡೆ ಇಲ್ಲ[ದೆ] ನಿಂದ ನಿರವಯ ಘನತೇಜ
ಹೋ ಜ್ಯೋತಿಯಂತೆ ಇರ್ದುಯಿಲ್ಲದ ಬೆಡಗಿನ ಭೇದವ
ನಿಮ್ಮಲ್ಲಿಯೇ ಕಂಡೆನಯ್ಯಾ, ಸೌರಾಷ್ಟ್ರ ಸೋಮೇಶ್ವರ. /228
ನಾಲ್ಕು ವೇದಂಗಳುಪಮೆ, ಹದಿನಾರು ಶಾಸ್ತ್ರಂಗಳುಪಮೆ,
ಹದಿನೆಂಟು ಪೌರಾಣ, ಇಪ್ಪತ್ತೆಂಟು ದಿವ್ಯಾಗಮಂಗಳುಪಮೆ,
ಮೂವತ್ತೆರಡುಪನಿಷತ್ತುಗಳುಪಮೆ, ಏಳುಕೋಟಿ ಮಹಾಮಂತ್ರಂಗಳುಪಮೆ,
ಅನೇಕ ಶಬ್ದ, ಅನೇಕ ಶಾಸ್ತ್ರ, ಅನೇಕ ತರ್ಕವ್ಯಾಕರಣಂಗಳೆಲ್ಲಾ ಉಪಮೆ,
ಅನೇಕ ಮಂತ್ರ ತಂತ್ರ ಯಂತ್ರಸಿದ್ಧಿ ಬದ್ಧಂಗಳೆಲ್ಲಾ ಉಪಮೆ,
ಚೌಷಷ್ಠಿ ವಿದ್ಯಂಗಳುಪಮೆ, ಕಾಣದ ಕಾಂಬುದುಪಮೆ,
ಕೇಳದ್ದ ಕೇಳುವುದುಪಮೆ, ಅಸಾಧ್ಯವ ಸಾಧಿಸುವುದುಪಮೆ,
ಅಭೇದ್ಯವ ಭೇದಿಸುವುದುಪಮೆ,
ಉಪಮೆ ನಿಸ್ಥಲವಾಗಿ ಉಪಮಾಬಂಧನ ಮೀರಿ
ಉಪಮೆ ನಿರುಪಮೆಗಳೆಂಬ ಜಿಗುಡಿನ ಜಿಡ್ಡುಗಳಚಿ
ತರಂಗ ನಿಸ್ತರಂಗಗಳೆಂಬ ಭಾವದ ಸೂತಕವಳಿದು,
ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದ ಉಪಮಾಬದ್ಧರು,
ಉಪಮೆಯಿಂದುಪಮಿಸಿ ಉಪಮೆ[ಯಿಂ]ದಿಪ್ಪರಯ್ಯಾ. /229
ನಾಲ್ಕುವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ,
ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ
ಪಂಚಾಕ್ಷರದ ಸ್ವರೂಪವನರಿಯದೆ ನಿಂದವು.
ಏಳುಕೋಟಿ ಮಹಾಮಂತ್ರಂಗಳಿಗೆ ತಾನೆ ಮೂಲಮಂತ್ರವಾಗಿ
ಸುರತಿಗೆ ಅಣಿಮಾದಿಯ ಕೊಟ್ಟು
ಶರಣರಿಗೆ ತ್ರಿಣಯನ ಕೊಟ್ಟುದು
ಈ ಪಂಚಾಕ್ಷರ ಪ್ರಣವದೊಳಡಕವಾದ ಪಂಚಾಕ್ಷರವನರಿತಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗಸಂಜ್ಞೆಯ
ವರ್ಣವೆನ್ನ ಸರ್ವಾಂಗದಲ್ಲಡಗಿದವಯ್ಯಾ./230
ನಾಸಿಕಾಗ್ರ ಭ್ರೂನಿಟಿಲ ಮಧ್ಯದೊಳ್ಪ್ರಜ್ವಲಿಸಿ ಬೆಳಗಿದ
ಸ್ವಯಂಪ್ರಕಾಶಲಿಂಗಕ್ಕೆ
ಆಕಾಶದಿಂದೊಸರ್ದ ಅಗ್ಗವಣಿಯಿಂ ಮಜ್ಜನಂ ಮಾಡಿ,
ಸ್ವಯಾನುಭಾವದಿಂ ಸವೆದ ನಿಜತತ್ವದ ಗಂಧವನಿತ್ತು,
ಪಕ್ಷಾಪಕ್ಷಂಗಳಳಿದ ಅಕ್ಷಯದ ಅಕ್ಷತೆಯಂ ಧರಿಸಿ,
ನೆನಹು ನಿರ್ವಾಣವಾದ ಮನೋಲಯವೆಂಬ ಪುಷ್ಪವನರ್ಪಿಸಿ,
ಭಾವನಿರ್ಭಾವಂಗಳ ಸುಳುಹು ನಷ್ಟವಾದ ಸದ್ಭಾವದ ಧೂಪವನಿಕ್ಕಿ,
ಸಮ್ಯಜ್ಞಾನದಿಂ ಪ್ರಕಾಶಿಸಿ ತೋರ್ಪ ದೀಪಮಂ ಬೆಳಗಿ,
ಬ್ರಹ್ಮರಂಧ್ರದಿಂದೊಸರ್ದು ಪರಿತಪ್ಪ
ಪರಮಾಮೃತವನಾರೋಗಣೆಯನವಧರಿಸಿ,
ಉಲುಹಡಗಿದ ನಿಃಶಬ್ದವೆಂಬ ತಾಂಬೂಲವನ್ನಿತ್ತು,
ಇಂತಪ್ಪ ಅಷ್ಟವಿಧಾರ್ಚನೆಯಿಂದರ್ಚಿಸಿ ಪರಮ ಪರಿಣಾಮವಿಂಬುಗೊಂಡ
ಪರಮಪ್ರಸಾದವನವಗ್ರಹಿಸಿ ಪರಮಸುಖಿಯಾಗಿಪ್ಪ
ಮಹಾಶರಣರ ತೋರಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ./231
ನಿಜಸುಖದ ಸಂಗದಿಂದ ನೆನಹಳಿದು,
ಶಿವಾನುಭಾವದ ಸುಖದಲ್ಲಿ ಪ್ರಾಣವಡಗಿ
ತೃಪ್ತಿಯಾಗಿ ನಿಂದ ನಿಲುವಿನ ನಿರ್ಣಯವೆ
ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಓಗರವಾಯಿತ್ತು./232
ನಿಮ್ಮ ನೆನಹಿನ ಪಂಚಾಕ್ಷರವೆಂಬ ಪಂಚಾಮೃತದಿಂ ಮಜ್ಜನಕ್ಕೆರದು,
ಶ್ರದ್ಧೆ ನಿಷ್ಠೆ ಅವಧಾನವೆಂಬ ಗಂಧಾಕ್ಷತೆ ಪುಷ್ಪವನಿತ್ತು,
ಮೂಲದ ಜ್ವಾಲೆಯಲ್ಲಿ ಉಸುರ ನುಂಗಿದ ಧೂಪವನಿಕ್ಕಿ,
ಸುಮನೋಜ್ಯೋತಿಯ ನಿವಾಳಿಯನೆತ್ತಿ,
ಆನಂದ ಅಮೃತದಾರೋಗಣೆ, ಸಮತೆಯ ವೀಳೆಯವಿತ್ತು,
ಪರಮೇಶ್ವರನ ಪ್ರಸನ್ನಪ್ರಸಾದಕ್ಕೆ ಮುಯ್ಯಾಂತಿರ್ದೆನಯ್ಯಾ,
ಸೌರಾಷ್ಟ್ರ ಸೋಮೇಶ್ವರಾ./233
ನಿರಿಂದ್ರಿಯನಾದ ಶಿವನು ತಾನೇ ದೇವದೇಹಿಕ ಭಕ್ತನಾಗಿ
`ಅನ್ಯಪೂಜಾವಿನಿರ್ಮುಕ್ತೋ ಭಕ್ತೋ ಜಂಗಮಪೂಜಕಃ’
ಅನ್ಯಪೂಜೆಯಂ ಬಿಟ್ಟು ಜಂಗಮಲಿಂಗವನೆ ಪೂಜಿಸುವಂಥ ಭಕ್ತ
ಲಿಂಗೇಂದ್ರಿಯ ಮುಖದಿಂದವೇ ಸಕಲಭೋಗಂಗಳ ಭೋಗಿಸುವನು.
ಅದೆಂತೆಂದಡೆ: ಜ್ಯೋತಿಯ ಮುಖದಲ್ಲಿ ರಜ್ಜು ತೈಲವನವಗ್ರಹಿಸುವಂತೆ,
ಸಕಲದ್ರವ್ಯಂಗಳ ಅಗ್ನಿಯ ಮುಖದಲ್ಲಿ ನಿರ್ಜರರು ತೃಪ್ತಿಯನೆಯ್ದುವಂತೆ,
ಸದ್ಬಕ್ತರ ಹೃದಯದಲ್ಲಿ ತೃಪ್ತಿಯನೆಯ್ದಿಪ್ಪನು ಶಿವನು.
ಇದು ಕಾರಣ ಶಿವಭಕ್ತನಿರ್ದುದೆ ಅವಿಮುಕ್ತಕ್ಷೇತ್ರ.
ಆತನ ಶಿರವೆ ಶ್ರೀಪರ್ವತ, ಭಾಳವೇ ಕೇತಾರ,
ಭ್ರೂಮಧ್ಯವೇ ವಾರಣಾಸಿ, ನೇತ್ರವೇ ಪ್ರಯಾಗ,
ಸರ್ವೇಂದ್ರಿಯಂಗಳೇ ಸರ್ವತೀರ್ಥಂಗಳು,
ಪಾದವೇ ಅಷ್ಟಾಷಷ್ಠಿ ಕ್ಷೇತ್ರಂಗಳು,
ಇಂತಪ್ಪ ಪವಿತ್ರಗಾತ್ರನ ಕಾಯವೇ ಕೈಲಾಸ.
ಇಂತಪ್ಪ ಸದ್ಭಕ್ತನನೆನಗೆ ತೋರಿಸಿ ಬದುಕಿಸಾ
ಸೌರಾಷ್ಟ್ರ ಸೋಮೇಶ್ವರಾ./234
ನಿಷ್ಕಲ ಷಟ್ಸ್ಥಲಲಿಂಗದ ಮೂಲಾಂಕುರವೆನಿಸುವ ಪರಮ ಕಳೆ,
ಆ ಪರಮ ಕಳೆಯ ಪರಬ್ರಹ್ಮ ಪರಂಜ್ಯೋತಿ
ಪರಾತ್ಪರ ಪರತತ್ವ ಪರಮಾತ್ಮ ಪರಮಜ್ಞಾನ
ಪರಮಚೈತನ್ಯ ನಿಷ್ಕಲ ಚರವೆನಿಸುವ ಪರವಸ್ತು
ಅದೆಂತೆಂದಡೆ: ವಾಚಾತೀತಂ ಮನೋತೀತಂ ಭಾವಾತೀತಂ ಚ ತತ್ಪರಂ
ಜ್ಞಾನಾತೀತಂ ನಿರಂಜನಂ ನಿಃಕಲಾಃ ಸೂಕ್ಷ್ಮಭಾವತಃ
ಎಂತೆಂದುದಾಗಿ,
ನಿರವಯವಹ ಚರಲಿಂಗದ
ಚೈತನ್ಯವೆಂಬ ಪ್ರಸನ್ನಪ್ರಸಾದಮಂ ಇಷ್ಟಲಿಂಗಕ್ಕೆ ಕಳಾಸಾನ್ನಿಧ್ಯವಂ ಮಾಡಿ
ಆ ಚರಲಿಂಗದ ಸಮರಸ ಚರಣಾಂಬುವಿಂ ಮಜ್ಜನಕ್ಕೆರೆದು
ನಿಜಲಿಂಗೈಕ್ಯವನೆಯ್ದಲರಿಯರು.
ಅದೆಂತೆಂದಡೆ: ಹಸ್ತಪೀಯೋಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನ ಮನಃ ಪ್ರಚಾರಃ
ಬಾಹ್ಯಕ್ರಿಯಾಸಂಕುಲನಿಃಸ್ಪೃಹಾತ್ಮಾ ಸಂಪೂಜಯತ್ಯಂಗ ಸ ವೀರಶೈವಃ
ಆವನಾನೋರ್ವನು ಕರಪೀಠದಲ್ಲಿ
ತನ್ನ ಶ್ರೀಗುರು ಕೊಟ್ಟ ಪ್ರಾಣಲಿಂಗವನ್ನು ಇರಿಸಿ,
ಆ ಶಿವಲಿಂಗದಲ್ಲಿ ಮನವನೆಯ್ದಿದ ಮನಃಸಂಚಾರವುಳ್ಳಾತನಾಗಿ
ಹೊರಗಣ ಕ್ರಿಯಾಸಮೂಹದಲ್ಲಿ
ಬಯಕೆಯಳಿದು ಬುದ್ಧಿಯುಳ್ಳಾತನಾಗಿ
ತನ್ನ ಪ್ರಾಣಲಿಂಗಮಂ ಪೂಜಿಸುತ್ತಿಹನು.
ಆ ಪ್ರಾಣಲಿಂಗಾರ್ಚಕನಾದ ಲಿಂಗಾಂಗಸಂಬಂಧಿಯೇ
ವೀರಶೈವನೆಂದರಿವುದು.
ಅದೆಂತೆಂದಡೆ: ಕಂಡವರ ಕಂಡು ತೀರ್ಥದಲ್ಲಿ ಮಂಡೆಯ ಬೋಳಿಸಿಕೊಂಬ ಭಂಡರ ಮೆಚ್ಚುವರೆ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು./235
ನೀರಮೇಲೆ ಒಂದು ನಟ್ಟ ಕಂಬವಿದ್ದಿತ್ತು.
ಕಂಬದ ತುದಿಯಲ್ಲಿ ದೇಗುಲವಿದ್ದಿತ್ತು.
ದೇಗುಲದ ಕೋಣೆಯಲ್ಲಿ ದೇವರಿದ್ದಿತ್ತು.
ದೇವರ ದೇಗುಲವ ಅರಿದ ತಲೆನುಂಗಿ ಅಸುಗಳೆಯಿತ್ತು.
ಸೌರಾಷ್ಟ್ರ ಸೋಮೇಶ್ವರಾ, ಇದೇನು ಚೋದ್ಯವೊ./236
ನೀರು ನೀರ ಕೂಡಿದಂತೆ, ಕ್ಷೀರಕ್ಷೀರ ಬೆರಸಿದಂತೆ
ಸುಜ್ಞಾನಗುರುಪಾದೋದಕಾನಂದದೊಳಗೆ ಪ್ರಜ್ಞಾನಶರಣ,
ಆನಂದಭಕ್ತಿಯಿಂದ ಸಮರಸವಾದ ಪರಮಸುಖದೊಳಗೆ
ಎರಡರಿಯದ ವರಿಾನಿ, ನಿಜಭರಿತ ನಿರಾಳ
ಸೌರಾಷ್ಟ್ರ ಸೋಮೇಶ್ವರನ ಶರಣ. /237
ನೆಣದ ಕೊಣ, ರಕ್ತದ ಹುತ್ತ, ಕೀವಿನ ಬಾವಿ, ರೋಮದ ಸೀಮೆ,
ತ್ವಕ್ಕಿನಿಕ್ಕೆ, ಮಾಂಸದ ವಾಸ, ಕರುಳ ತಿರುಳು, ನರದ ಕರವತಿಗೆ,
ಮಲಮೂತ್ರಂಗಳ ನೆಲೆವನೆ, ಕ್ರಿಮಿಯ ಸಮಯ,
ಕೀಟಕದ ಕೊಟಾರ, ಶುಕ್ಲದ ಸಾಕಾರ,
ಎಲುವಿನ ಬಲುಹಿಂದಿಪ್ಪ ಈ ಕಾಯ ಹೇಯ.
ತೋರಿ ಹಾರುವ ಅದೃಶ್ಯ ದೃಶ್ಯವೀ ದೇಹ
ತನ್ನದೆಂದು ನಚ್ಚಿ ಮಚ್ಚಿ ಹೆಚ್ಚಿ ಬೆಚ್ಚಿ ಕೆಚ್ಚುಗೊಂಡೊಚ್ಚತವೋದ ಮನಕ್ಕೆ
ಇನ್ನಾವುದು ಗತಿಯೊ?
ಸೌರಾಷ್ಟ್ರ ಸೋಮೇಶ್ವರಾ ಇಂತು ಭವಕ್ಕೆ ಮಾರುವೋದವರು
ನಿಮ್ಮ ನೆನೆವುದೇ ಹುಸಿಯಯ್ಯಾ./238
ನೆಲದ ಮೇಲಣ ನಿಧಾನವ ಕಂಡವರಲ್ಲದೆ
ಆಕಾಶದೊಳಗೆ ಹೂಳಿರ್ದ ನಿಕ್ಷೇಪವ ಕಂಡವರಾರನೂ ಕಾಣೆ.
ಖೇಚರಿಯ ಮುದ್ರೆಯಿಂದ ಗಗನದ ನಿದಿಯನೆ ಕಂಡು
ಆ ನಿಧಿಯೊಳಗೆ ನಿಧಾನವಾಗಿರಬಲ್ಲಡೆ
ಸೌರಾಷ್ಟ್ರ
ಸೋಮೇಶ್ವರಲಿಂಗ ಬೇರಿಲ್ಲ ಕಾಣಿರೆ, /239
ನೆಳಲ ನುಡಿಸಿಹೆನೆಂದು ಬಳಲುವನಂತೆ,
ಆಕಾಶವನಳೆತಕ್ಕೆ ತಂದಿಹೆನೆಂಬ ಪಂಡಿತನಂತೆ,
ಆತ್ಮಸ್ವರೂಪವ ವರ್ಣದಿಂ ಕಂಡಿಹೆನೆಂಬ ಯೋಗಿಯಂತೆ,
ವರ್ಣಾತೀತ ವೇದಾತೀತವೆಂಬ ಮಾತು ಹುಸಿಯಪ್ಪಡೆ
ನಿಃಕಳಂಕ ಶಾಂತಮಲ್ಲಿಕಾರ್ಜುನನೆಂಬ ಲಿಂಗದಲ್ಲಿಯೇ
ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗದಲ್ಲಿಯೇ ಕಾಣಿರೇ. /240
ನೆಳಲಂತೆ ಮಾಯಾತಂತ್ರಿಯಲ್ಲ. ಆಕಾಶದಂತೆ ಶೂನ್ಯವಾದುದಲ್ಲ.
ಯೋಗಿಗಳಂತೆ ಭ್ರೂನಿಟಿಲಮಧ್ಯದಲ್ಲಿ ಕಂಡೆನೆಂಬ ಸೊರಹಲ್ಲ.
ವರ್ಣಾತೀತ ವೇದಾತೀತ ಭಾವಾತೀತವೆಂಬುದೇ ಪರಬ್ರಹ್ಮ ನೋಡಾ.
ವ್ಯಾಪಕ ಸಗುಣನ ವಸ್ತು ಸಾಂಚಲ್ಯ ರೂಪು ರುಚಿಯ
ವಿಜ್ಞಾನಿಯ ಸುತ್ತಿಪ್ಪುದು ಮನ,
ಅಂತದಕ್ಕೆ ಸಾಕ್ಷಿಕನಾಗಿಪ್ಪುದಾತ್ಮ.
ಇದು ಕಾರಣ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಮನವಾತ್ಮನ ತಿಳಿದು ನೋಡಯ್ಯಾ. /241
ನೇತ್ರಂಗಳ ಮುಚ್ಚಿ ರೂಹಿಲ್ಲದ ನಿಲವ ಕಾಣಬೇಕು.
ಶ್ರೋತ್ರಂಗಳ ಮುಚ್ಚಿ ಶಬ್ದವಿಲ್ಲದ ನಾದವ ಕೇಳಬೇಕು.
ಜಿಹ್ವೆಯ ಮುಚ್ಚಿ ಸ್ವಾದುವಿಲ್ಲದ ರುಚಿಯನರಿಯಬೇಕು.
ನಾಸಿಕವ ಮುಚ್ಚಿ ಉಸುರ ನುಂಗಿದ ಪರಿಮಳವನರಿಯಬೇಕು.
ಅಂಗವ ಮುಚ್ಚಿ ಲಿಂಗಸಂಗ ಸಮಸುಖವನರಿಯಬೇಕು.
ಸಾರಾಷ್ಟ್ರ ಸೋಮೇಶ್ವರವಿಡಿದು, ಪಂಚೇಂದ್ರಿಯಂಗಳಳಿದು
ಲಿಂಗೇಂದ್ರಿಯಗಳಾಗಬೇಕು./242
ಪಂಚಗವ್ಯದಿಂದಾದ ಗೋಮಯವ ತಂದಾರಿಸಿ
ಪಂಚಾಮೃತದ ಸಂಪರ್ಕದಿಂ ಪಂಚಾಕ್ಷರಿಯ ಮಂತ್ರದಿಂದಭಿಮಂತ್ರಿಸಿ
ಶಿವಜ್ಞಾನವಹ್ನಿಯಲ್ಲಿ ದಹಿಸಿ
ಆ ವಿಭೂತಿಯಂ ಸುಕೃತದಿಂ ತೆಗೆದುಕೊಂಡು
ಎಡದ ಹಸ್ತದೊಳ್ವಿಡಿದುಕೊಂಡು, ಬಲದ ಹಸ್ತದಿಂ ಮುಚ್ಚಿಕೊಂಡು
ಜಲಮಿಶ್ರಮಂ ಮಾಡಿ, ಲಲಾಟ ಮೊದಲಾಗಿ ದಿವ್ಯಸ್ಥಾನಂಗಳೊಳು ಧರಿಸಿ
ಲಿಂಗರ್ಚನೆಯ ಮಾಡುವ ಶರಣ ತಾನೆ ವೇದವಿತ್ತು.
ಆತನೆ ಶಾಸ್ತ್ರಜ್ಞ, ಆತನೆ ಸದ್ಯೋನ್ಮುಕ್ತನಯ್ಯಾ
ಸೌರಾಷ್ಟ್ರ ಸೋಮೇಶ್ವರಾ. /243
ಪಂಚತತ್ವಂಗಳುವಿಡಿದಾಡುವ
ಚತುರ್ದಶೇಂದ್ರಿಯ ವಿಕಾರಂಗಳು ತಾನಲ್ಲ, ತನ್ನವಲ್ಲ.
ತನುವುಂಟೆಂದಡೆ ಅಹಮ್ಮಾದಿಗೆ ಸಂದು,
ಬಂಧಮೋಕ್ಷಂಗಳಿಗೊಳಗಾಯಿತ್ತು ನೋಡಾ.
ಕುರುಹಿಲ್ಲದ ಲಿಂಗ ಅರಿವಿನೊಳು ಬಳಿಸಂದಡೆ
ಅರಿವು ಕುರುಹು ತೆರಹಿಲ್ಲದೆ ನಿಂದ ನಿಲವು
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜ ತಾನಾದ ಶರಣ./244
ಪಂಚಬ್ರಹ್ಮದಿಂದಾದುದಲ್ಲ,
ಸಂಚಿತ, ಪ್ರಾರಬ್ಧ, ಆಗಾಮಿಯನುಳ್ಳುದಲ್ಲ.
ಸಚ್ಚಿದಾನಂದಮಯವಾದಾತ್ಮನನಿಂತೀ ಪರಿಯಲ್ಲಿ ತಿಳಿದು ನೋಡಯ್ಯಾ.
ತಾ ಹುಟ್ಟಿ ತಮ್ಮವ್ವೆಯ ಬಂಜೆ ಎಂಬವನಂತೆ,
ಹೊತ್ತುದ ಹುಸಿ ಮಾಡುವ ಪರಿಯ ನೋಡಾ.
ಅವನಿಲ್ಲದಷ್ಟಪುತ್ರರುಂಟೆ? ಸೌರಾಷ್ಟ್ರ ಸೋಮೇಶ್ವರಲಿಂಗವಿಲ್ಲದಿರಲು
ಆನೂ ನೀನೂ ಉಂಟೆ ಹೇಳಾ, ಮಲ್ಲಿಕಾರ್ಜುನಾ? /245
ಪಂಚಬ್ರಹ್ಮದಿಂದುದಯಿಸಿದ
ನಂದೆ ಭದ್ರೆ ಸುರಭಿ ಸುಶೀಲೆ ಸುಮನೆ ಎಂಬ ಪಂಚಗೋವುಗಳಿಂ
ಭೂತಿ ಭಸಿತ ಭಸ್ಮಕ್ಷಾರ ರಕ್ಷೆಯಿಂದ ಪಂಚನಾಮವಾಯಿತ್ತು.
ಅದೆಂತೆಂದಡೆ: ಶಿವಜ್ಞಾನಸುಖದ ಮಹದೈಶ್ವರ್ಯರೂಪದಿಂ ಭೂತಿಯಾಯಿತ್ತು.
ಸಕಲಕಾಮಂಗಳ ಬಯಕೆಯ ಸುಟ್ಟು ನಿಃಕಾಮರೂಪದಿಂ ಭಸಿತವಾಯಿತ್ತು.
ಪೂರ್ವಕರ್ಮಗಳನುರಪಿ ನಿಃಕರ್ಮರೂಪದಿಂ ಭಸ್ಮವಾಯಿತ್ತು.
ಮಲಮಾಯೆಯ ಕಳೆವುದರಿಂ ಕ್ಷಾರವಾಯಿತ್ತು.
ಭೂತಪ್ರೇತಪಿಶಾಚಂಗಳ ಹೊದ್ದಲೀಯದಿರ್ಪುದರಿಂ ರಕ್ಷೆಯಾಯಿತ್ತು.
ಇಂತಪ್ಪ ವಿಭೂತಿಯ ಮಹಾತ್ಮೆಯನರಿತು,
ನೀನೊಲಿದ ವಿಭೂತಿಯ ಆನು ಧರಿಸಿ ಬದುಕಿದೆನಯ್ಯಾ
ಸೌರಾಷ್ಟ್ರ ಸೋಮೇಶ್ವರಾ./246
ಪಂಚಬ್ರಹ್ಮದಿಂದೊಗೆದ ಪಂಚಭೂತಾಂಶದ
ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಂಗಳಳವಟ್ಟು,
ಪಂಚವಿಷಯಂಗಳು ಲಿಂಗಸಂಗವ ಮಾಡಿದ ಕಾರಣ
ಮಲ ಕರ್ಮ ಮೊದಲಾದ ಸರ್ವಸೂತಕ ನಿವೃತ್ತಿಯಾಗಿ
ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ತೃಪ್ತಿಯಾಯಿತ್ತು/247
ಪಂಚೇಂದ್ರಿಯಂಗಳು ಲಿಂಗಮುಖವಾಗಿ ನಿಂದು,
ಮನಸಹಿತ ಪಂಚವಿಷಯಂಗಳಂಶದ ಸಕಲಸುಖಂಗಳು
ಲಿಂಗಾರ್ಪಿತದಿಂದ ಚರಿಸುತ್ತ,
ಬೇರೆ ಮತ್ತೊಂದು ದೆಸೆಯಿಲ್ಲದೆ ನಿಂದುವು,
ಸೌರಾಷ್ಟ್ರ ಸೋಮೇಶ್ವರಲಿಂಗನಿವಾಸಿಯಾದ ಶರಣಂಗೆ. /248
ಪತಿವ್ರತೆಯಾದಡೆ ಅನ್ಯಪುರುಷರ ಸಂಗವೇತಕ್ಕೆ?
ಲಿಂಗಸಂಗಿಯಾದಡೆ ಅನ್ಯಸಂಗವೇತಕ್ಕೆ?
ಈ, ಕಂಡ ಕಂಡವರ ಹಿಂದೆ ಹರಿವ ಚಾಂಡಾಲಗಿತ್ತಿಯಂತೆ
ಒಬ್ಬರ ಕೈವಿಡಿದು, ಒಬ್ಬರಿಗೆ ಮಾತಕೊಟ್ಟು,
ಮತ್ತೊಬ್ಬರಿಗೆ ಸನ್ನೆಮಾಡುವ ಬೋಸರಗಿತ್ತಿಯಂತೆ
ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ
ಹರಿಸಿ ಹೊಡೆವಡಲೇತಕ್ಕೆ?
ಇದು ಕಾರಣ ಸೌರಾಷ್ಟ್ರ ಸೋಮೇಶ್ವರಾ,
ಇಂತಪ್ಪ ಪಾಪಿಗಳ ನುಡಿಸಿದಡೆ ಅಘೋರನರಕ ತಪ್ಪದಯ್ಯಾ./249
ಪರತತ್ವ ಪರಬ್ರಹ್ಮ ಪರಶಿವನಪ್ಪ
ಮಂತ್ರಮೂರ್ತಿ ಸದ್ಗುರು ಕಣ್ಣಮುಂದಿರಲು
ಸದಾ ಗುರುಸೇವೆಯಳವಟ್ಟು
ಗುರು ಶುಶ್ರೂಷೆಯ ಮಾಡುವ ಶಿಷ್ಯಂಗೆ
ಆ ಸದ್ಗುರು ಸೇವೆಯೇ ಚತುರ್ವಿಧ ಫಲ.
ಗುರುಸೇವೆಯೇ ಅಷ್ಟಮಹದೈಶ್ವರ್ಯ,
ಗುರುಸೇವೆಯೇ ಅಷ್ಟಭೋಗಂಗಳ ಅನು.
ಇದು ಕಾರಣ ಸದ್ಗುರುಸೇವೆಯೇ ಸದ್ಯೋನ್ಮುಕ್ತಿ
ಸೌರಾಷ್ಟ್ರ ಸೋಮೇಶ್ವರಾ. /250
ಪರದಿಂದಾದ ಅಪರಸ್ವರೂಪಂಗೆ ಉಪಾಧಿಯೆಂಬುದಿಲ್ಲ.
ಸಂಸಾರವಿಲ್ಲ ಸ್ಮೃತಿ ಮೃತಿ ಇಲ್ಲವಾಗಿ ಒಳಗಿಲ್ಲ ಹೊರಗಿಲ್ಲ.
ಸ್ವಯಭರಿತನಾಗಿ ತಾನು ತಾನಾಗಿ ನಿಂದ ಸಹಜಂಗೆ
ಸೌರಾಷ್ಟ್ರ ಸೋಮೇಶ್ವರಲಿಂಗ ಬೇರಿಲ್ಲ./251
ಪರಬ್ರಹ್ಮಸ್ವರೂಪನಾದ ಪರಾತ್ಮನೆ ಸರ್ವಾತ್ಮನು.
ಪರಮಾತ್ಮನೆ ಅಂತರಂಗಬಹಿರಂಗಭರಿತ.
ನಿಶ್ಚಿಂತ ನಿರ್ಮಾಯ ನಿರಾವರಣ ಸರ್ವಗತ ಸರ್ವಜ್ಞ
ಅಪ್ರಮಾಣ ಅಗೋಚರ ಸೌರಾಷ್ಟ್ರ ಸೋಮೇಶ್ವರಲಿಂಗವು ತಾನೆ. /252
ಪರಮಜ್ಞಾನಕ್ಕೆ ಕರ್ತೃವಾದ ಸದಾಶಿವನೆ ಜೀವಭಾವದಿಂ
ಪ್ರಪಂಚಿನ ಘಟದಿಂದೈದೆನುವಪ್ಪ
ಪಂಚೇಂದ್ರಿಯಗಳ ಪಂಚವಿಷಯಂಗಳನರಿತರ್ಪಿಸಿ ತೃಪ್ತಿಯನೆಯ್ದಿ,
ಆ ಜೀವನು ಅಂಡಜ ಸ್ವೇದಜ ಉದ್ಬಿಜ ಜರಾಯುಜಂಗಳೆಂಬ
ಚತುರ್ವಿಧವರ್ಗಂಗಳೊಳು ಚತುರ್ದಶಭುವನದೊಳುದಯಿಸಿ,
ಸ್ತ್ರೀ[ಪುಂನ]ಪುಂಸಕಾದಿಯಿಂ ಜನಿಸಿ,
ಪುತ್ರ ಪಾತ್ರಂಗಳಿಂ ದೃಶ್ಯಮಾಗಿ ಯಸ್ಯ ಏವಂ
ಆ ಮುನ್ನಿನ ಪರಮಜ್ಞಾನದಿಂದ ಜೀವನು ಸದಾಶಿವನಾದುದಕ್ಕೆ ಶ್ರುತಿ: ಯಥಾ ಖಲು ವೈ ಧೇನುಂ ತೀರ್ಥೇ ತರ್ಪಯತಿ
ಏವಮಗ್ನಿ ಹೋತ್ರೀ ಯಜಮಾನಂ ತರ್ಪಯತಿ
ಯಸ್ಯ ಪ್ರಜಯಾ ಪಶುಭಿಃ ಪ್ರತುಷ್ಯತಿ ಸುವರ್ಗಂ ಲೋಕಂ
ಪ್ರಜಾನಾತಿ ಪಶ್ಯತಿ ಪುತ್ರ ಪೌತ್ರಂ
ಪ್ರವ್ರಜಯಾ ಪಶುಭಿರ್ಮಿಥುನೈರ್ಜಾಯತೇ ಯಸ್ಯೇನಂ
ವಿದುಷೋಗ್ನಿಹೋತ್ರಂ ಯ ಏವಂ ವೇದ
ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗ
ಶಿವನಾಗಬಲ್ಲ ಜಗವಾಗಬಲ್ಲ ಜೀವವಾಗಬಲ್ಲನಯ್ಯಾ./253
ಪರಶಿವನೆ ಅಪಸ್ವರೂಪನಾಗಿ
ಗುರುಸಾಂಪ್ರದಾಯಕನಾದನಾ ಸದ್ಗುರು, ಸರ್ವಕಾರಣನು.
ಭೋಗಮೋಕ್ಷೋಪಾಯವನೀವ ನಿತ್ಯನು.
ಆ ಸದ್ಗುರುವೆ ಪಂಚಸಂಜ್ಞೆಯೆನಿಸುವ ಪರಬ್ರಹ್ಮಸ್ವರೂಪನು ತಾನೆ,
ಸೌರಾಷ್ಟ್ರ ಸೋಮೇಶ್ವರನು ಶಿಷ್ಯಕಾರಣನು. /254
ಪರಸತಿಗಳುಪುವ ಪಾರದ್ವಾರಿಯರಿವು ಪರವಕ್ಕು ಕಾಣಿಭೋ.
ಭ್ರೂಣಹತ್ಯಕರ್ಮಿಯ ಶಿವಜ್ಞಾನ ಸ್ವಯವಲ್ಲ ಕಾಣಿಭೋ.
ಸ್ತ್ರೀ ಬಾಲ ಘಾತಕಂಗೆ ನಿಜಭಾವ ತಾನೆ ಭ್ರಮೆಯಕ್ಕು ಕಾಣಿಭೋ.
ಕ್ಷಣಕ್ಕೊಂದು ಬಗೆವ ಕ್ಷಣಿಕ ಚಿತ್ತರಿಗೆ
ಬ್ರಹ್ಮಾನುಸಂಧಾನದನುವೆಯ್ದದು ಕಾಣಿಭೋ.
ಇದಕ್ಕೆ ಶ್ರುತಿ: ಪರದಾರೋ ಪರದ್ವಾರೀ ಭ್ರೂಣಹತ್ಯಾತಿ ಕರ್ಮಣಾ
ಸ್ತ್ರೀಬಾಲಘಾತಕೋ ಯಶ್ಚದೇವೋ ಗಚ್ಚನ್ನಗಚ್ಚತಿ
ಇಂತೆಂದುದಾಗಿ,
ಇಂತಿವರೊಳಗೊಂದುಳ್ಳವರು
ಸೌರಾಷ್ಟ್ರ ಸೋಮೇಶ್ವರಲಿಂಗಕ್ಕೆ ಸಲ್ಲರು ಕಾಣಿಭೋ./255
ಪರಿಪೂರ್ಣ ಪರತತ್ವದಿಂದೊದಗಿದ ಆನಂದಭರಿತ
ಪ್ರತ್ಯಕ್ಷಪರಮಾರ್ಥನಯ್ಯಾ.
ಆಗುಹೋಗಿಲ್ಲದಸಾಧ್ಯವನೇನೆಂದುಪಮಿಸಬಹುದು?
ಅಪ್ರತಿಮ ಸ್ವತಂತ್ರ ನಿರಾಳಭರಿತ ಸೌರಾಷ್ಟ್ರ ಸೋಮೇಶ್ವರನ ಶರಣ
ನಿಜನಿಂದ ಸಹಜನಯ್ಯಾ. /256
ಪರಿಯಾಣವೇ ಭಾಜನವೆಂಬರು.
ಪರಿಯಾಣ ಭಾಜನವೇರಿ ಅಲ್ಲ.
ಘನಲಿಂಗಕ್ಕೆ ಶುದ್ಧ ನಿರ್ಮಲವಾದ ಸಕಲಕರಣಂಗಳೇ ಭಾಜನ.
ನಿಜಾನಂದವೇ ಭೋಜನ. ಪರಿಣಾಮವೇ ಪ್ರಸಾದ.
ಇಂತಿವರಲ್ಲಿ ನಿರುತನಾಗಿರಬಲ್ಲ
ಸಾರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ./257
ಪಾತಾಳದಿಂ ಕೆಳಗೆ ಪಾದ, ಸತ್ಯರ್ಲೋಕದಿಂ ಮೇಲೆ ಉತ್ತಮಾಂಗ,
ಬ್ರಹ್ಮಾಂಡವೇ ಮುಕುಟ, ಗಗನವೇ ಮುಖ,
ಚಂದ್ರಾಕರ್ಾಗ್ನಿಗಳೇ ನೇತ್ರ, ದಶದಿಕ್ಕುಗಳೇ ಬಾಹುಗಳು,
ಮಹದಾಕಾಶವೇ ಶರೀರ, ತರುಗಳೇ ತನೂರುಹ,
ಶೂನ್ಯವೇ ಕರಸ್ಥಲದ ಲಿಂಗ, ನಕ್ಷತ್ರವೇ ಪುಷ್ಪ,
ನಿತ್ಯವೇ ಪೂಜೆ, ಮೇಘವೇ ಜಡೆ, ಬೆಳ್ದಿಂಗಳೇ ವಿಭೂತಿ,
ಪರ್ವತಂಗಳೇ ರುದ್ರಾಕ್ಷಿಗಳು, ಪಂಚಬ್ರಹ್ಮವೇ ಪಂಚಾಕ್ಷರ,
ತತ್ವಂಗಳೇ ಜಪಮಾಲೆ, ಮೇರುವೇ ದಂಡಕೋಲು,
ಸಮುದ್ರವೇ ಕಮಂಡಲು, ಶೇಷನೇ ಕಟಿಸೂತ್ರ, ಜಗವೇ ಕಂಥೆ.
ಅನಂತವೇ ಕೌಪೀನ, ತ್ರಿಗುಣವೊಂದಾದುದೇ ಖರ್ಪರ,
ಚತುಯರ್ುಗವೇ ಗಮನ, ಮಿಂಚೇ ಅಂಗರುಚಿ, ಸಿಡಿಲೇ ಧ್ವನಿ,
ವೇದಾಗಮವೇ ವಾಕ್ಯ, ಜ್ಞಾನಮುದ್ರೆಯೇ ಉಪದೇಶ,
ಪೃಥ್ವಿಯೇ ಸಿಂಹಾಸನ, ದಿವಾರಾತ್ರಿಯೇ ಅರಮನೆ,
ಶಿವಜ್ಞಾನವೇ ಐಶ್ವರ್ಯ, ನಿರಾಳವೇ ತೃಪ್ತಿ.
ಇಂತಪ್ಪ ಚೈತನ್ಯಜಂಗಮಕ್ಕೆ
ಆನು ನಮೋ ನಮೋ ಎನುತಿರ್ದೆನಯ್ಯಾ
ಸೌರಾಷ್ಟ್ರ ಸೋಮೇಶ್ವರಾ. /258
ಪಿಂಡಪ್ರಸಾದಿಗಳ ಕಂಡುಬಲ್ಲೆ, ಇಂದ್ರಿಯಪ್ರಸಾದಿಗಳ ಕಂಡುಬಲ್ಲೆ,
ಕರಣಪ್ರಸಾದಿಯ ಕಂಡುಬಲ್ಲೆ, ಕಾಯಪ್ರಸಾದಿಗಳ ಕಂಡುಬಲ್ಲೆ,
ಜೀವಪ್ರಸಾದಿಗಳ ಕಂಡುಬಲ್ಲೆ, ಭಾವಪ್ರಸಾದಿಗಳ ಕಂಡುಬಲ್ಲೆ,
ಲಿಂಗಪ್ರಸಾದಿಗಳಪೂರ್ವವಯ್ಯಾ.
ಭೋಗಲಿಂಗಕ್ಕೆ ಭೋಗವನಿತ್ತು ಭೋಗಿಸಬಲ್ಲನು,
ಅಚ್ಚಲಿಂಗಪ್ರಸಾದಿ ಸೌರಾಷ್ಟ್ರ ಸೋಮೇಶ್ವರಲಿಂಗವ
ಭೋಗಸಹಿತ ಬೆರೆವ ಪ್ರಸಾದಿ. /259
ಪುತ್ರೇಷಣ ವಿತ್ತೇಷಣ ದಾರೇಷಣಂಗಳೆಂಬ ಈಷಣತ್ರಯವನುಳಿದು
ಅಸಿ ಮಸಿ ಕೃಷಿ ವಾಣಿಜ್ಯಗಳೆಂಬ ವ್ಯಾಪಾರ ಪಾರಂಗತನಾಗಿ
ಸಂಸಾರ ಸ್ಪೃಹೆಯನುಳಿದು ನಿಸ್ಪೃಹನಾಗಿ,
ರಕ್ತ ಅನುರಕ್ತ ಅತಿರಕ್ತವೆಂಬ ರಕ್ತತ್ರಯಗೆಟ್ಟು ವಿರಕ್ತನಾಗಿ
ಸಗುಣದಲ್ಲಿ ಸಲ್ಲದೆ ನಿರ್ಗುಣದಲ್ಲಿ ನಿಲ್ಲದೆ ಸಗುಣ ನಿರ್ಗುಣಕ್ಕುಪಮಾತೀತವಾದ
ಶಿವಲಿಂಗಾಂಗಿ ಸೌರಾಷ್ಟ್ರ ಸೋಮೇಶ್ವರಲಿಂಗವಾದುದೆನ್ನ ಇಷ್ಟ./260
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಆತ್ಮ
ಮೊದಲಾದ ಷಡುಸ್ಥಲಂಗಳ ವಿವರವೆಂತೆಂದೆಡೆ: ಪೃಥ್ವಿ ಭಕ್ತ, ಅಪ್ಪು ಮಾಹೇಶ್ವರ, ಅಗ್ನಿ ಪ್ರಸಾದಿ,
ವಾಯು ಪ್ರಾಣಲಿಂಗಿ, ಆಕಾಶ ಶರಣ, ಆತ್ಮನೈಕ್ಯ.
ಇದಕ್ಕೆ ಶ್ರುತಿ: ಸದ್ಯೋಜಾತಂ ತಥಾ ಭಕ್ತಂ ವಾಮದೇವಂ ಮಹೇಶ್ವರಂ
ಪ್ರಸಾದಿನಮಘೋರಂಚ ಪುರುಷಂ ಪ್ರಾಣಲಿಂಗಿನಂ
ಈಶಾನಂ ಶರಣಂ ವಿಂದ್ಯಾದೈಕ್ಯಮಾತ್ಮಮಯಂ ತಥಾ
ಷಡಂಗಂ ಲಿಂಗಮೂಲಂ ಹಿ ದೇವದೈಹಿಕ ಭಕ್ತಯೋ: ಇಂತೆಂದುದಾಗಿ, ಷಡಂಗಕ್ಕೆ ಲಿಂಗಂಗಳಾವಾವೆಂದಡೆ: ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಗುರುಲಿಂಗ,
ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ,
ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ.
ಇಂತೀ ಷಡ್ವಿಧಲಿಂಗಂಗಳಿಗೆ ಕಳೆಯಾವೆಂದಡೆ: ಆಚಾರಲಿಂಗಕ್ಕೆ ನಿವೃತ್ತಿಕಳೆ, ಗುರುಲಿಂಗಕ್ಕೆ ಪ್ರತಿಷ್ಠಾಕಳೆ,
ಶಿವಲಿಂಗಕ್ಕೆ ವಿದ್ಯಾಕಳೆ, ಜಂಗಮಲಿಂಗಕ್ಕೆ ಶಾಂತಿಕಳೆ,
ಪ್ರಸಾದಲಿಂಗಕ್ಕೆ ಶಾಂತ್ಯತೀತಕಳೆ, ಮಹಾಲಿಂಗಕ್ಕೆ ಶಾಂತ್ಯತೀತೋತ್ತರ ಕಳೆ.
ಇಂತೀ ಷಡ್ವಿಧಲಿಂಗಂಗಳಿಗೆ ಮುಖಂಗಳಾವಾವೆಂದಡೆ: ಆಚಾರಲಿಂಗಕ್ಕೆ ನಾಸಿಕ ಮುಖ, ಗುರುಲಿಂಗಕ್ಕೆ ಜಿಹ್ವೆ ಮುಖ,
ಶಿವಲಿಂಗಕ್ಕೆ ನೇತ್ರ ಮುಖ, ಜಂಗಮಲಿಂಗಕ್ಕೆ ತ್ವಕ್ಕು ಮುಖ,
ಪ್ರಸಾದಲಿಂಗಕ್ಕೆ ಶ್ರೋತ್ರಮುಖ, ಮಹಾಲಿಂಗಕ್ಕೆ ಹೃನ್ಮುಖ.
ಇಂತೀ ಷಡ್ವಿಧಲಿಂಗಂಗಳಿಗೆ ಹಸ್ತಂಗಳಾವಾವೆಂದಡೆ: ಆಚಾರಲಿಂಗಕ್ಕೆ ಸುಚಿತ್ತ ಹಸ್ತ, ಗುರುಲಿಂಗಕ್ಕೆ ಸುಬುದ್ಧಿ ಹಸ್ತ,
ಶಿವಲಿಂಗಕ್ಕೆ ನಿರಹಂಕಾರ ಹಸ್ತ, ಜಂಗಮಲಿಂಗಕ್ಕೆ ಸುಮನ ಹಸ್ತ,
ಪ್ರಸಾದಲಿಂಗಕ್ಕೆ ಸುಜ್ಞಾನ ಹಸ್ತ, ಮಹಾಲಿಂಗಕ್ಕೆ ಸದ್ಭಾವ ಹಸ್ತ.
ಇಂತೀ ಷಡ್ವಿಧ ಲಿಂಗಂಗಳಿಗೆ ತೃಪ್ತಿಯಾವಾವೆಂದಡೆ: ಆಚಾರಲಿಂಗಕ್ಕೆ ಗಂಧತೃಪ್ತಿ, ಗುರುಲಿಂಗಕ್ಕೆ ರಸತೃಪ್ತಿ,
ಶಿವಲಿಂಗಕ್ಕೆ ರೂಪುತೃಪ್ತಿ, ಜಂಗಮಲಿಂಗಕ್ಕೆ ಪರುಶನ ತೃಪ್ತಿ,
ಪ್ರಸಾದಲಿಂಗಕ್ಕೆ ಶಬ್ದತೃಪ್ತಿ,
ಮಹಾಲಿಂಗಕ್ಕೆ ಪಂಚೇಂದ್ರಿಯ ಪ್ರೀತಿಯೇ ತೃಪ್ತಿ.
ಇಂತೀ ಷಡ್ವಿಧಲಿಂಗಂಗಳಿಗೆ ಶಕ್ತಿಗಳಾವಾವೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ,
ಶಿವಲಿಂಗಕ್ಕೆ ಇಚ್ಛಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ,
ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಛಕ್ತಿ.
ಇಂತೀ ಷಡ್ವಿಧಲಿಂಗಂಗಳಿಗೆ ಭಕ್ತಿ ಯಾವಾವೆಂದಡೆ: ಆಚಾರಲಿಂಗಕ್ಕೆ ಶ್ರದ್ಧಾಭಕ್ತಿ, ಗುರುಲಿಂಗಕ್ಕೆ ನಿಷ್ಠಾಭಕ್ತಿ,
ಶಿವಲಿಂಗಕ್ಕೆ ಅವಧಾನಭಕ್ತಿ, ಜಂಗಮಲಿಂಗಕ್ಕೆ ಅನುಭವಭಕ್ತಿ,
ಪ್ರಸಾದಲಿಂಗಕ್ಕೆ ಆನಂದಭಕ್ತಿ, ಮಹಾಲಿಂಗಕ್ಕೆ ಸಮರಸಭಕ್ತಿ.
ಇಂತೀ ಷಡ್ವಿಧಲಿಂಗಂಗಳಿಗೆ ವಿಷಯಂಗಳಾವಾವೆಂದಡೆ: ಎಳಸುವುದು ಆಚಾರಲಿಂಗದ ವಿಷಯ,
ಎಳಸಿ ಮೋಹಿಸುವುದು ಗುರುಲಿಂಗದ ವಿಷಯ,
ಮೋಹಿಸಿ ಕೂಡುವುದು ಶಿವಲಿಂಗದ ವಿಷಯ,
ಕೂಡಿ ಸುಖಂಬಡುವುದು ಜಂಗಮಲಿಂಗದ ವಿಷಯ,
ಸುಖಂಬಡೆದು ಪರಿಣಾಮತೆಯನೆಯಿದೂದು ಪ್ರಸಾದಲಿಂಗದ ವಿಷಯ,
ಪರಿಣಾಮತೆಯನೆಯ್ದಿ ನಿಶ್ಚಯಬಡೆವುದು ಮಹಾಲಿಂಗದ ವಿಷಯ.
ಇನ್ನು ಆಚಾರಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಬೇರು ಗೆಡ್ಡೆ ಗೆಣಸು ಮೊದಲಾದವರಲ್ಲಿಯ ಗಂಧವನರಿವುದು
ಆಚಾರಲಿಂಗದಲ್ಲಿಯ ಆಚಾರಲಿಂಗ.
ಮರ ತಿಗುಡು ಹಗಿನ ಮೊದಲಾದವರಲ್ಲಿಯ ಗಂಧವನರಿವುದು
ಆಚಾರಲಿಂಗದಲ್ಲಿಯ ಗುರುಲಿಂಗ.
ಚಿಗುರು ತಳಿರು ಪತ್ರೆ ಮೊದಲಾದವರಲ್ಲಿಯ ಗಂಧವನರಿವುದು
ಆಚಾರಲಿಂಗದಲ್ಲಿಯ ಶಿವಲಿಂಗ.
ನನೆ ಮೊಗ್ಗೆ ಅರಳು ಮೊದಲಾದವರಲ್ಲಿಯ ಗಂಧವನರಿವುದು
ಆಚಾರಲಿಂಗದಲ್ಲಿಯ ಜಂಗಮಲಿಂಗ.
ಕಾಯಿ ದೋರೆ ಹಣ್ಣು ಮೊದಲಾದವರಲ್ಲಿಯ ಗಂಧವನರಿವುದು
ಆಚಾರಲಿಂಗದಲ್ಲಿಯ ಪ್ರಸಾದಲಿಂಗ.
ಇಂತಿವರಲ್ಲಿಯ ಗಂಧತೃಪ್ತಿಯನರಿವುದು,
ಆಚಾರಲಿಂಗದಲ್ಲಿಯ ಮಹಾಲಿಂಗ.
ಇನ್ನು ಗುರುಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಮಧುರವಾದ ರುಚಿಯನರಿವುದು ಗುರುಲಿಂಗದಲ್ಲಿಯ ಆಚಾರಲಿಂಗ,
ಒಗರವಾದ ರುಚಿಯನರಿವುದು ಗುರುಲಿಂಗದಲ್ಲಿಯ ಗುರುಲಿಂಗ,
ಖಾರವಾದ ರುಚಿಯನರಿವುದು ಗುರುಲಿಂಗದಲ್ಲಿಯ ಶಿವಲಿಂಗ,
ಆಮ್ರವಾದ ರುಚಿಯನರಿವುದು ಗುರುಲಿಂಗದಲ್ಲಿಯ ಜಂಗಮಲಿಂಗ,
ಕಹಿಯಾದ ರುಚಿಯನರಿವುದು ಗುರುಲಿಂಗದಲ್ಲಿಯ ಪ್ರಸಾದಲಿಂಗ,
ಲವಣವಾದ ರುಚಿಯನರಿವುದು ಗುರುಲಿಂಗದಲ್ಲಿಯ ಮಹಾಲಿಂಗ.
ಇನ್ನು ಶಿವಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಪೀತವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಆಚಾರಲಿಂಗ,
ಶ್ವೇತವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಗುರುಲಿಂಗ,
ಹರಿತವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಶಿವಲಿಂಗ,
ಮಾಂಜಿಷ್ಟವರ್ಣವಾದ ರೂಪನರಿವುದು
ಶಿವಲಿಂಗದಲ್ಲಿಯ ಜಂಗಮಲಿಂಗ,
ಕಪೋತವರ್ಣವಾದ ರೂಪನರಿವುದು ಶಿವಲಿಂಗದಲ್ಲಿಯ ಪ್ರಸಾದಲಿಂಗ,
ಇಂತಿವರ ಸಂಪರ್ಕಸಂಯೋಗವರ್ಣವಾದ ರೂಪನರಿವುದು
ಶಿವಲಿಂಗದಲ್ಲಿಯ ಮಹಾಲಿಂಗ.
ಇನ್ನು ಜಂಗಮದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಕಠಿಣವಾದ ಪರುಶನವನರಿವುದು ಜಂಗಮಲಿಂಗದಲ್ಲಿಯ ಆಚಾರಲಿಂಗ,
ಮೃದುವಾದ ಪರುಶನವನರಿವುದು ಜಂಗಮಲಿಂಗದಲ್ಲಿಯ ಗುರುಲಿಂಗ,
ಉಷ್ಣವಾದ ಪರುಶನವನರಿವುದು ಜಂಗಮಲಿಂಗದಲ್ಲಿಯ ಶಿವಲಿಂಗ,
ಶೈತ್ಯವಾದ ಪರುಶನವನರಿವುದು ಜಂಗಮಲಿಂಗದಲ್ಲಿಯ ಜಂಗಮಲಿಂಗ, ಇಂತೀ
ಪರುಶನ ನಾಲ್ಕರ ಮಿಶ್ರಪರುಶನವನರಿವುದು
ಜಂಗಮಲಿಂಗದಲ್ಲಿಯ ಪ್ರಸಾದಲಿಂಗ,
ಪರುಶನೇಂದ್ರಿಯ ತೃಪ್ತಿಯನರಿವುದು ಜಂಗಮಲಿಂಗದಲ್ಲಿಯ ಮಹಾಲಿಂಗ.
ಇನ್ನು ಪ್ರಸಾದಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಘಂಟೆ ಜಯಘಂಟೆ ತಾಳ ಕಾಸಾಳ ಮೊದಲಾದ ವಾದ್ಯವನರಿವುದು
ಪ್ರಸಾದಲಿಂಗದಲ್ಲಿಯ ಆಚಾರಲಿಂಗ,
ವೀಣೆ ರುದ್ರವೀಣೆ ತುಂಬುರುವೀಣೆ ಕಿನ್ನರವೀಣೆ ಕೈಲಾಸವೀಣೆ
ಮೊದಲಾದ ತಂತಿಕಟ್ಟಿ ನುಡಿವ ವಾದ್ಯವನರಿವುದು
ಪ್ರಸಾದಲಿಂಗದಲ್ಲಿಯ ಗುರುಲಿಂಗ,
ಪಟಹ ಪಡಡಕ್ಕೆ ಡಿಂಡಿಮ ಆವುಜ ಪಟಾವುಜ ಮೃದಂಗ ಮುರಜ ಭೇರಿ
ಮೊದಲಾದ ವಾದ್ಯವನರಿವುದು ಪ್ರಸಾದಲಿಂಗದಲ್ಲಿಯ ಶಿವಲಿಂಗ,
ಕಹಳೆ ಹೆಗ್ಗಹಳೆ ಶಂಖ ವಾಂಸ ನಾಗಸರ ಉಪಾಂಗ ಮೊದಲಾದ
ವಾದ್ಯವನರಿವುದು ಪ್ರಸಾದಲಿಂಗದಲ್ಲಿಯ ಜಂಗಮಲಿಂಗ,
ಸಂಗೀತ ಸಾಹಿತ್ಯ ಶಬ್ದಾರ್ಥ ಮೊದಲಾದ ವಾದ್ಯವನರಿವುದು
ಪ್ರಸಾದಲಿಂಗದಲ್ಲಿಯ ಪ್ರಸಾದಲಿಂಗ,
ಪಂಚಮಹಾವಾದ್ಯಂಗಳ ತೃಪ್ತಿಯನರಿವುದು
ಪ್ರಸಾದಲಿಂಗದಲ್ಲಿಯ ಮಹಾಲಿಂಗ.
ಇನ್ನು ಮಹಾಲಿಂಗದಲ್ಲಿಯ ಮಿಶ್ರಾರ್ಪಣದ ವಿವರವೆಂತೆಂದಡೆ: ಆಚಾರಲಿಂಗದಲ್ಲಿಯ ಮಿಶ್ರಾರ್ಪಣದ ತೃಪ್ತಿಯನರಿವುದು
ಮಹಾಲಿಂಗದಲ್ಲಿಯ ಆಚಾರಲಿಂಗ,
ಗುರುಲಿಂಗದಲ್ಲಿಯ ಮಿಶ್ರಾರ್ಪಣದ ತೃಪ್ತಿಯನರಿವುದು
ಮಹಾಲಿಂಗದಲ್ಲಿಯ ಗುರುಲಿಂಗ,
ಶಿವಲಿಂಗದಲ್ಲಿಯ ಮಿಶ್ರಾರ್ಪಣದ ತೃಪ್ತಿಯನರಿವುದು
ಮಹಾಲಿಂಗದಲ್ಲಿಯ ಶಿವಲಿಂಗ,
ಜಂಗಮಲಿಂಗದಲ್ಲಿಯ ಮಿಶ್ರಾರ್ಪಣದ ತೃಪ್ತಿಯನರಿವುದು
ಮಿಶ್ರಾರ್ಪಣದ ತೃಪ್ತಿಯನರಿವುದು
ಮಹಾಲಿಂಗದಲ್ಲಿಯ ಪ್ರಸಾದಲಿಂಗ,
ಅವಿರಳಭಾವ ಭಾವೈಕ್ಯ ನಿರ್ದೆಶನತೃಪ್ತಿಯನರಿವುದು
ಮಹಾಲಿಂಗದಲ್ಲಿಯ ಮಹಾಲಿಂಗ.
ಇನ್ನು ಆಚಾರಲಿಂಗ ಮೋಹಿತನಾದಡೆ
ಸತಿ ಸುತ ಬಾಂಧವರಲ್ಲಿಯ ಮೋಹವಿಲ್ಲದಿರಬೇಕು.
ಆಚಾರಲಿಂಗ ಭಕ್ತನಾದಡೆ ಸ್ವಯ ಕಾಯಕದಲ್ಲಿರಬೇಕು.
ಆಚಾರಲಿಂಗ ವೀರನಾದಡೆ ಪೂರ್ವವನಳಿದು ಪುನರ್ಜಾತನಾಗಬೇಕು.
ಆಚಾರಲಿಂಗ ಪ್ರಾಣಿಯಾದಡೆ ಭವಿಗಳಿಗೆ ತಲೆವಾಗದಿರಬೇಕು.
ಆಚಾರಲಿಂಗ ಪ್ರಸಾದಿಯಾದಡೆ ಜಿಹ್ವೆ ಲಂಪಟವಿಲ್ಲದಿರಬೇಕು.
ಆಚಾರಲಿಂಗ ತೃಪ್ತನಾದಡೆ ಭಕ್ತಕಾಯ ಮಮಕಾಯನಾಗಿರಬೇಕು.
ಇನ್ನು ಗುರುಲಿಂಗ ಮೋಹಿತನಾದಡೆ ತನುಗುಣ ನಾಸ್ತಿಯಾಗಿರಬೇಕು.
ಗುರುಲಿಂಗ ಭಕ್ತನಾದಡೆ ತನು ಗುರುವಿನಲ್ಲಿ ಸವೆಯಬೇಕು.
ಗುರುಲಿಂಗ ವೀರನಾದಡೆ ಭವರೋಗಂಗಳಿಲ್ಲದಿರಬೇಕು.
ಗುರುಲಿಂಗ ಪ್ರಾಣಿಯಾದಡೆ ಪ್ರಕೃತಿಗುಣರಹಿತನಾಗಿರಬೇಕು.
ಗುರುಲಿಂಗ ಪ್ರಸಾದಿಯಾದಡೆ ಗುರುಪ್ರಸಾದವನಲ್ಲದೆ ಸ್ವೀಕರಿಸದಿರಬೇಕು.
ಗುರುಲಿಂಗ ತೃಪ್ತನಾದಡೆ ಅರಸುವ ಅರಕೆಯಿಲ್ಲದಿರಬೇಕು.
ಇನ್ನು ಶಿವಲಿಂಗ ಮೋಹಿತನಾದಡೆ ಮನಗುಣ ನಾಸ್ತಿಯಾಗಿರಬೇಕು.
ಶಿವಲಿಂಗ ಭಕ್ತನಾದಡೆ ಲಿಂಗದ ಏಕೋಗ್ರಾಹಕತ್ವವಳವಟ್ಟಿರಬೇಕು.
ಶಿವಲಿಂಗ ವೀರನಾದಡೆ ಕಾಲಕರ್ಮಾದಿಗಳಿಗಳುಕದಿರಬೇಕು.
ಶಿವಲಿಂಗ ಪ್ರಾಣಿಯಾದಡೆ ಜನನಮರಣಂಗಳಿಗೊಳಗಾಗದಿರಬೇಕು.
ಶಿವಲಿಂಗ ಪ್ರಸಾದಿಯಾದಡೆ ಶಿವಪ್ರಸಾದವನಲ್ಲದೆ ಸ್ವೀಕರಿಸದಿರಬೇಕು.
ಶಿವಲಿಂಗ ತೃಪ್ತನಾದಡೆ ದ್ವೈತಾದ್ವೈತವಳಿದಿರಬೇಕು.
ಇನ್ನು ಜಂಗಮಲಿಂಗ ಮೋಹಿತನಾದಡೆ ಪ್ರಾಣಗುಣನಾಸ್ತಿಯಾಗಿರಬೇಕು.
ಜಂಗಮಲಿಂಗ ಭಕ್ತನಾದಡೆ ಜಂಗಮದಲ್ಲಿ
ಧನಮನವ ಮುಟ್ಟಿ ಸವೆಯಬೇಕು.
ಜಂಗಮಲಿಂಗ ವೀರನಾದಡೆ ಭಯಭಂಗವಿಲ್ಲದಿರಬೇಕು.
ಜಂಗಮಲಿಂಗ ಪ್ರಾಣಿಯಾದಡೆ ತಥ್ಯಮಿಥ್ಯರಾಗದ್ವೇಶಂಗಳಿಲ್ಲದಿರಬೇಕು.
ಜಂಗಮಲಿಂಗ ಪ್ರಸಾದಿಯಾದಡೆ ಭೋಗಭೂಷಣಂಗಳಾಸೆಯಿಲ್ಲದಿರಬೇಕು.
ಜಂಗಮಲಿಂಗ ತ್ರಪ್ತನಾದಡೆ ದೇಹೋಹಮ್ಮಿಲ್ಲದಿರಬೇಕು.
ಇನ್ನು ಪ್ರಸಾದಲಿಂಗ ಮೋಹಿತನಾದಡೆ
ಶಬ್ದಜಾಲಂಗಳಿಗೆ ಕಿವಿಯೊಡ್ಡದಿರಬೇಕು.
ಪ್ರಸಾದಲಿಂಗ ಭಕ್ತನಾದಡೆ ದಾಸೋಹಮ್ಮಿಲ್ಲದಿರಬೇಕು.
ಪ್ರಸಾದಲಿಂಗ ವೀರನಾದಡೆ ಚಿದಹಮ್ಮಿಲ್ಲದಿರಬೇಕು.
ಪ್ರಸಾದಲಿಂಗ ಪ್ರಾಣಿಯಾದಡೆ ಪ್ರಾಣಲಿಂಗದೊಳಬಿನ್ನನಾಗಿರಬೇಕು.
ಪ್ರಸಾದಲಿಂಗ ಪ್ರಸಾದಿಯಾದಡೆ ಪ್ರಸಾದಪ್ರಸನ್ನನಾಗಿರಬೇಕು.
ಪ್ರಸಾದಲಿಂಗ ತೃಪ್ತನಾದಡೆ ಇಂದ್ರಿಯಂಗಳಿಚ್ಛೆಯಿಲ್ಲದಿರಬೇಕು.
ಇನ್ನು ಮಹಾಲಿಂಗ ಮೋಹಿತನಾದಡೆ
ಅಣಿಮಾದಿ ಅಷ್ಟಮಹದೈಶ್ವರ್ಯಂಗಳ ಬಯಸದಿರಬೇಕು.
ಮಹಾಲಿಂಗ ಭಕ್ತನಾದಡೆ ಅಷ್ಟಮಹಾಸಿದ್ಧಿಗಳ ನೆನೆಯದಿರಬೇಕು.
ಮಹಾಲಿಂಗ ವೀರನಾದಡೆ ಚತುರ್ವಿಧ ಪದವಿಯ ಹಾರದಿರಬೇಕು.
ಮಹಾಲಿಂಗ ಪ್ರಾಣಿಯಾದಡೆ ಇಹಪರಂಗಳಾಸೆ ಇಲ್ಲದಿರಬೇಕು.
ಮಹಾಲಿಂಗ ಪ್ರಸಾದಿಯಾದಡೆ
ಅರಿವು ಮರಹಳಿದು ಚಿಲ್ಲಿಂಗಸಂಗಿಯಾಗಿರಬೇಕು.
ಮಹಾಲಿಂಗ ತೃಪ್ತನಾದಡೆ ಭಾವಸದ್ಭಾವನಿರ್ಭಾವನಳಿದು ಭಾವೈಕ್ಯವಾಗಿ
ತಾನಿಃದಿರೆಂಬ ಭಿನ್ನಭಾವ ತೋರದಿರಬೇಕು.
ಇಂತೀ ನೂರೆಂಟು ಸ್ಥಲದಲ್ಲಿ ನಿಪುಣನಾಗಿ
ಮಿಶ್ರಷಡ್ವಿಧಸ್ಥಲ ಷಡುಸ್ಥಲ ತ್ರಿಸ್ಥಲ ಏಕಸ್ಥಲವಾಗಿ
ಸ್ಥಲ ನಿಃಸ್ಥಲವನೆಯ್ದಿ
ಸೌರಾಷ್ಟ್ರ ಸೋಮೇಶ್ವರಲಿಂಗ ತಾನು ತಾನಾಗಿರಬೇಕಯ್ಯಾ./261
ಪೃಥ್ವಿಯ ಕಠಿಣವಳಿದ ಭಕ್ತಂಗೆ ಜಾಗ್ರಾವಸ್ಥೆಯಿಲ್ಲ.
ಅಪ್ಪುವಿನ ಮೃದುವಳಿದ ಮಾಹೇಶ್ವರಂಗೆ ಸ್ವಪ್ನಾವಸ್ಥೆಯಿಲ್ಲ.
ಅಗ್ನಿಯ ಉಷ್ಣವಳಿದ ಪ್ರಸಾದಿಗೆ ಸುಷಪ್ತ್ಯವಸ್ಥೆಯಿಲ್ಲ.
ವಾಯುವಿನ ಗಮನವಳಿದ ಪ್ರಾಣಲಿಂಗಿಗೆ ತುರೀಯಾವಸ್ಥೆಯಿಲ್ಲ.
ಆಕಾಶದ ಶಬ್ದಗುಣವಳಿದ ಶರಣಂಗೆ ತುರೀಯಾತೀತ ನಿರವಸ್ಥೆಯಿಲ್ಲ.
ಆತ್ಮತೇಜದ ಮೂಲಾಹಂಕಾರವಳಿದ ಐಕ್ಯಂಗೆ ಇನಿತೆನಿತೇನೂ ಇಲ್ಲ.
ಸೌರಾಷ್ಟ್ರ ಸೋಮೇಶ್ವರನಂಗಂಗೊಂಡ
ಸುರಾಳ ನಿರಾಳ ನಿರವಯ ಧ್ಯಾನಾತೀತ ಮನಾತೀತ ಭಾವಾತೀತ ಜ್ಞಾನಾತೀತ
ಅಗೋಚರ ಅತ್ಯತಿಷ್ಠದ್ದಶಾಂಗುಲಂ./262
ಪೃಥ್ವಿಯ ಕೂಡಿ ನೆಲನಹನಲ್ಲ, ಅಪ್ಪುವ ಕೂಡಿ ಜಲವಹನಲ್ಲ,
ಅಗ್ನಿಯ ಕೂಡಿ ಕಿಚ್ಚಿನಹನಲ್ಲ, ವಾಯುವ ಕೂಡಿ ಗಾಳಿಯಹನಲ್ಲ,
ಆಕಾಶವ ಕೂಡಿ ಬಯಲಹನಲ್ಲ, ಆತ್ಮನ ಗೂಡಿ ಭವಕರ್ಮಿಯಹನಲ್ಲ.
ಲಿಂಗವ ಕೂಡಿ ಲಿಂಗವಹನು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಸರಣ./263
ಪೃಥ್ವಿಯ ಪೂರ್ವಾಶ್ರಯವಳಿದ ಭಕ್ತಂಗೆ ಆಚಾರಲಿಂಗಸಾಹಿತ್ಯ,
ಅಪ್ಪುವಿನ ಪೂರ್ವಾಶ್ರಯವಳಿದ ಮಾಹೇಶ್ವರಂಗೆ ಗುರುಲಿಂಗಸಾಹಿತ್ಯ,
ಅಗ್ನಿಯ ಪೂರ್ವಾಶ್ರಯವಳಿದ ಪ್ರಸಾದಿಗೆ ಶಿವಲಿಂಗಸಾಹಿತ್ಯ,
ವಾಯುವಿನ ಪೂರ್ವಾಶ್ರಯವಳಿದ ಪ್ರಾಣಲಿಂಗಿಗೆ ಜಂಗಮಲಿಂಗಸಾಹಿತ್ಯ,
ಆಕಾಶದ ಪೂರ್ವಾಶ್ರಯವಳಿದ ಶರಣಂಗೆ ಪ್ರಸಾದಲಿಂಗಸಾಹಿತ್ಯ,
ಆತ್ಮನ ಪೂರ್ವಾಶ್ರಯವಳಿದ ಐಕ್ಯಂಗೆ ಮಹಾಲಿಂಗಸಾಹಿತ್ಯ,
ಇಂತೀ ಷಡಂಗಗಳ ಪೂರ್ವಾಶ್ರಯವಳಿದ ನಿರಾಳಂಗೆ
ಸೌರಾಷ್ಟ್ರ ಸೋಮೇಶ್ವರಲಿಂಗ ಒಮ್ಮುಖ./264
ಪ್ರಣವಾಂಕುರದಿಂ ತೋರಿತ್ತು ಚಿತ್ತು,
ಆ ಚಿತ್ತುವಿಂ ಕಾಣಿಸಿತ್ತು ಮಹವು,
ಆ ಮಹವೆ ವಾಚಸ್ಪತಿಯಾಗಿ ವೇದಾಂತ ವೇದ್ಯವಾಯಿತ್ತು.
ಅದು ತಾನೆ ಪರಮಜ್ಞಾನಸ್ವಯದಿಂ
ಸಮ್ಯಕ್ ಪರಬ್ರಹ್ಮ ಸ್ವಸುಖವೆಂದುದಾಗಿ ಇದಕ್ಕೆ ಶ್ರುತಿ: ಓಂ ಅಗ್ನಯೇ ಸಮಿಧಮಾರುಹಂ ಬೃಹತೇ ಜಾತವೇದಸ್ಸೇತಯಾ
ತ್ವಮಗ್ನೇ ವರ್ಧಸ್ವ ಸಮಿಧಾ ಬ್ರಹ್ಮಣಾ ವಯಂ ಸ್ವಯಮಿತಿ
ಇಂತೆಂದುದಾಗಿ.
ಸೌರಾಷ್ಟ್ರ ಸೋಮೇಶ್ವರಲಿಂಗ, ಸಯಸುಖವಪೂರ್ವವಯ್ಯಾ./265
ಪ್ರತಿಯಿಲ್ಲದ ಲಿಂಗದಲ್ಲಿ ಪ್ರತಿರಹಿತವಾದ ಮಹಿಮನಿಗೆ
ಅತಿಶಯವೊಂದಿಲ್ಲಾಗಿ ಸಂಸ್ಮೃತಿ ವಿಸ್ಮೃತಿಗಳಿಲ್ಲ.
ಸೂಕ್ಷ್ಮಾಸೂಕ್ಷ್ಮವಿಲ್ಲ ಯೋಗವಿಯೋಗವಿಲ್ಲ.
ಅಭೇದ್ಯ ಚಿತ್ಪ್ರಕಾಶಂಗೆ ಒಳಹೊರಗಿಲ್ಲ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣಂಗೆ./266
ಪ್ರಸಾದ ಪ್ರಸಾದವೆಂಬರು, ಪ್ರಸಾದವಾವುದೆಂದರಿಯರು.
ಅನ್ನವೆ ಪ್ರಸಾದವೆಂದು ಕೊಡುವಾತ ಶರಣನಲ್ಲ.
ಅನ್ನವೆ ಪ್ರಸಾದವೆಂದು ಕೊಂಬಾತ ಭಕ್ತನಲ್ಲ.
ಅದೆಂತೆಂದಡೆ: ಅನ್ನ ಮಹಾರೇತ್ಸರ್ವಮನ್ನಮುತ್ಪತ್ತಿಹೇತವೇ
ಅನ್ನಮಾಭ್ಯಂತರಂ ಪ್ರಾಣಂ ಸರ್ವಮನ್ನಮಯಂ ಜಗತ್
ಇಂತೆಂದುದಾಗಿ,
ಅನ್ನ ಜೀವಕ್ಕೆ ಆಧಾರ, ಅನ್ನವೇ ಸರ್ವಜನಕ್ಕೆ ಸನ್ಮತ.
ಇದು ಕಾರಣ, ಅನ್ನವೆ ಪ್ರಸಾದವಲ್ಲ.
ಶರಣನಪ್ಪ ಸದ್ಗುರುಸ್ವಾಮಿ
ನೆತ್ತಿಯಲ್ಲಿರ್ದ ಉತ್ತಮ ಪ್ರಸಾದವನರು[ಹೆ]
ಬ್ರಹ್ಮರಂಧ್ರದಲ್ಲಿ ಪ್ರಕಾಶಿಸುತಿರ್ಪ
ಮಹಾಲಿಂಗದೊಳ್ಪುಟ್ಟಿದ ಪರಮಾಮೃತವೆ ಪ್ರಸಾದ.
ಅಂತಪ್ಪ ಪ್ರಸಾದಗ್ರಾಹಕತ್ವವೆಂತಪ್ಪುದೆಂದಡೆ,
ಅಂಗವ ಮರೆದು ಮನಮಗ್ನವಾಗಿ ಉಚ್ಛ್ವಾಸ ನಿಶ್ವಾಸಂಗಳಡಗಿ,
ಪ್ರಾಣನು ಪ್ರಸಾದದೊಳ್ಮುಳುಗಿ ಪರಮಕಾಷ್ಠೆಯನೆಯ್ದಿ ನಿಂದಾತನೆ,
ಸೌರಾಷ್ಟ್ರ ಸೋಮೇಶ್ವರನಲ್ಲಿ ಮಹಾಪ್ರಸಾದಿ ಎನಿಸಿಕೊಂಬನು./267
ಪ್ರಸಾದವೇ ಪರಮಜ್ಞಾನ, ಪ್ರಸಾದವೇ ಪರಾಪರ,
ಪ್ರಸಾದವೇ ಪರಬ್ರಹ್ಮ, ಪ್ರಸಾದವೇ ಪರಮಾನಂದ,
ಪ್ರಸಾದವೇ ಗುರು, ಪ್ರಸಾದವೇ ಲಿಂಗ, ಪ್ರಸಾದವೇ ಜಂಗಮ,
ಪ್ರಸಾದವೇ ಪರಿಪೂರ್ಣ,
ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸನ್ನತೆಯೆ ಪ್ರಸಾದ.
ಇಂತಪ್ಪ ಪ್ರಸಾದದ ಮಹಾತ್ಮೆಗೆ ಆನು
ನಮೋ ನಮೋಯೆನುತಿರ್ದೆನು./268
ಪ್ರಾಣದ ಮೇಲೆ ಪ್ರಾಣಲಿಂಗ ಸ್ವಾಯತವಾದ ಬಳಿಕ
ಪ್ರಾಣಗುಣವಳಿದು, ಪ್ರಕೃತಿ ಹಿಂಗಿ,
ದೇಹೇಂದ್ರಿಯ ಕರಣ ಜೀವಭಾವ ಅರಿವು
ಶಬ್ದ ಸ್ಪರ್ಶ ರೂಪು ರಸ ಗಂಧ ಸ್ರಕ್ಚಂದನ ವನಿತಾದಿ ಅಷ್ಟಭೋಗಂಗಳು
ಲಿಂಗದಲ್ಲಿ ಮನಮುಟ್ಟಿ ನಟ್ಟಿರಲು
ಅದೇ ಅರ್ಪಿತಾಂಗ ಲಿಂಗಾರ್ಪಿತವಾಗಿ,
ಪರಿಣಾಮಪ್ರಸಾದಸಾಹಿತ್ಯವಯ್ಯಾ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣಂಗೆ./269
ಪ್ರಾಣಲಿಂಗಧಾರಣದಲ್ಲಿಯಲ್ಲದೆ
ಪ್ರಾಣವಾಯುಧಾರಣದಲ್ಲಿ
ಜೀವದ ಅನಾದಿಕರ್ಮ ಕೆಡದು ನೋಡಯ್ಯಾ.
ಶಿವಾದ್ವೈತಜ್ಞಾನದಲ್ಲಿಯಲ್ಲದೆ
ಆತ್ಮಾದ್ವೈತಜ್ಞಾನದಲ್ಲಿ
ಮೂಲ ಅವಿದ್ಯೆ ಕೆಡದು ನೋಡಯ್ಯಾ.
ತನುಭಾವವಳಿದು ಬ್ರಹ್ಮಭಾವ ಕರಿಗೊಂಡಲ್ಲದೆ
ಅಷ್ಟಾದಶದೋಷಂಗಳಳಿಯವು.
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅವಿರಳನಾದಲ್ಲದೆ
ನಿತ್ಯಮುಕ್ತಿಯಿಲ್ಲ ನೋಡಯ್ಯಾ./270
ಬಂಧಮೋಕ್ಷಂಗಳ ಭ್ರಾಂತನಳಿದು
ಲಿಂಗವೇದಿಯಾದ ಶರಣಂಗೆ ಅಂಗಭಂಗವಿಲ್ಲ,
ಅಂಗಭಂಗವಿಲ್ಲವಾಗಿ ಪ್ರಸಾದಕ್ಕೆ ಹೊರಗಲ್ಲ,
ಪ್ರಸಾದಕ್ಕೆ ಹೊರಗಲ್ಲವಾಗಿ
ಒಳಗೆ ಪ್ರಾಣಲಿಂಗ, ಹೊರೆ ಪ್ರಸಾದವೆಂಬ ಭಂಗಹೊದ್ದದು.
ಷಟ್ಸ್ಥಲಜ್ಞಾನದ ವರ್ಮವ ಬಲ್ಲನಾಗಿ
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಪ್ರಸಾದಸನ್ನಹಿತ./271
ಬಟ್ಟಬಯಲ ದೃಷ್ಟಾಕಾಶದಲ್ಲಿ ನಾನೊಂದು ದೃಷ್ಟವ ಕಂಡೆ.
ಹುಟ್ಟಿಹೊಂದದ ಶಿಶುವೊಂದು ಗಟ್ಟಿಗೊಂಡು ಮುಟ್ಟಲೀಯದಿದಿರಿಟ್ಟು ತೋರಿ.
ಹೆಸರಿಟ್ಟು ಕರಸಿಕೊಂಡಿತ್ತಿದೇನೊ !
ನೋಡಬಲ್ಲುದು, ನುಡಿಯಲರಿಯದು,
ಕೊಡಬಲ್ಲುದು, ಬೇಡಲರಿಯದು,
ಕೂಡಬಲ್ಲುದು, ಅಗಲಲರಿಯದಿದೇನೊ !
ತಾನೆ ತಾನಾಗಿ ನಾನೆ ತಾನಾಗಿ ತಾನಾಗಿಬ್ಬರೊಂದಾಗಿ,
ಸೌರಾಷ್ಟ್ರ ಸೋಮೇಶ್ವರಾ, ತಾನೊ ನಾನೊ ಏನಂದರಿಯೆ./272
ಬಲ್ಲೆನೆಂಬುದು ಮಾಯೆ, ಅರಿಯೆನೆಂಬುದು ಮಾಯೆ,
ಒಲ್ಲೆನೆಂಬುದು ಮಾಯೆ, ಒಲಿವೆನೆಂಬುದು ಮಾಯೆ,
ಜೀವವೆಂಬುದು ಮಾಯೆ, ಮುಕ್ತನೆಂಬುದು ಮಾಯೆ,
ಸತಿ ಸುತ ಪಿತ ಮಾತೆಯವರೆಲ್ಲ ಮಾಯೆ,
ಭೃತ್ಯ ಭ್ರಾತಾದಿಗಳವರೆಲ್ಲ ಮಾಯೆ,
ಆನೆಂಬುದು ಮಾಯೆ, ನೀನೆಂಬುದು ಮಾಯೆ,
ಸೌರಾಷ್ಟ್ರ ಸೋಮೇಶ್ವರ ತಾನೆಂಬುದು ಮಾಯೆ./273
ಬಸವಣ್ಣನ ಭಕ್ತಿಸ್ಥಲ, ಮಡಿವಾಳ ಮಾಚಣ್ಣನ ಮಾಹೇಶ್ವರಸ್ಥಲ,
ಘಟ್ಟಿವಾಳ ಮುದ್ದಣ್ಣನ ಪ್ರಸಾದಿಸ್ಥಲ, ಚನ್ನಬಸವಣ್ಣನ ಪ್ರಾಣಲಿಂಗಿಸ್ಥಲ,
ಪ್ರಭುವಿನ ಶರಣಸ್ಥಲ, ಸೊಡ್ಡಳ ಬಾಚರಸರ ಐಕ್ಯಸ್ಥಲ,
ಅಜಗಣ್ಣನ ಆರೂಢ, ನಿಜಗುಣನ ಬೆರಗು,
ಅನುಮಿಷನ ನಿಶ್ಚಲ, ಮಹದೇವಿಯಕ್ಕನ ಜ್ಞಾನ,
ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು,
ಸತ್ಯಕ್ಕನ ಯುಕ್ತಿ, ಅಲ್ಲಾಳಿಯಕ್ಕನ ಸಮತೆ,
ರೇವಣಸಿದ್ಧಯ್ಯದೇವರ ನಿಷ್ಠೆ, ಸಿದ್ಧರಾಮತಂದೆಗಳ ಮಹಿಮೆ,
ಮರುಳಸಿದ್ಧಯ್ಯದೇವರ ಅದೃಷ್ಟ ಪ್ರಸಾದನಿಷ್ಠೆ,
ಏಕೋರಾಮಯ್ಯಗಳ ಆಚಾರನಿಷ್ಠೆ,
ಪಂಡಿತಾರಾಧ್ಯರ ಸ್ವಯಂಪಾಕ,
ಮುಗ್ಧಸಂಗಯ್ಯ, ಮೈದುನ ರಾಮಣ್ಣ, ಬೇಡರ ಕಣ್ಣಪ್ಪ,
ಕೋಳೂರ ಕೊಡಗೂಸು, ತಿರುನೀಲಕ್ಕರು,
ರುದ್ರಪಶುಪತಿಗಳು, ದೀಪದ ಕಲಿಯಾರ ಮುಗ್ಧಭಕ್ತಿ
ನಿಮ್ಮೊಳೆನಗೆಂದಪ್ಪುದೊ ಸೌರಾಷ್ಟ್ರ ಸೋಮೇಶ್ವರಾ./274
ಬಸವಣ್ಣನೆನ್ನ ಅಂಗ, ಮಡಿವಾಳನೆನ್ನ ಮನ,
ಪ್ರಭುವೆನ್ನ ಪ್ರಾಣ, ಚನ್ನಬಸವನೆನ್ನ ಕರಸ್ಥಲದ ಲಿಂಗ,
ಘಟ್ಟಿವಾಳನೆನ್ನ ಭಾವ, ಸೊಡ್ಡಳಬಾಚರಸರೆನ್ನ ಅರಿವು,
ಮಹಾದೇವಿಯಕ್ಕನೆನ್ನ ಜ್ಞಾನ, ಮುಕ್ತಾಯಕ್ಕನೆನ್ನ ಅಕ್ಕರು,
ಸತ್ಯಕ್ಕನೆನ್ನ ಯುಕ್ತಿ, ನಿಂಬಿಯಕ್ಕನೆನ್ನ ನಿಶ್ಚಯ,
ಅಲ್ಲಾಳಿಯಕ್ಕನೆನ್ನ ಸಮತೆ, ಅನುಮಿಷನೆನ್ನ ನಿಶ್ಚಲ,
ನಿಜಗುಣನೆನ್ನ ಕ್ಷಮೆ, ರೇವಣಸಿದ್ಧಯ್ಯದೇವರೆನ್ನ ನೇತ್ರ,
ಸಿದ್ಧರಾಮತಂದೆಗಳೆನ್ನ ನೇತ್ರದ ದೃಕ್ಕು,
ಮರುಳುಸಿದ್ಧಯ್ಯದೇವರೆನ್ನ ಶ್ರೋತೃ,
ಪಂಡಿತಾರಾಧ್ಯರೆನ್ನ ಜಿಹ್ವೆ, ಏಕೋರಾಮಯ್ಯಗಳೆನ್ನ ನಾಸಿಕ,
ಅಸಂಖ್ಯಾತರೆನ್ನ ಅವಯವಂಗಳು, ಪುರಾತರೆನ್ನ ಪುಣ್ಯದ ಪುಂಜ,
ಏಳುನೂರೆಪ್ಪತ್ತು ಅಮರಗಣಂಗಳೆನ್ನ ಗತಿಮತಿ ಚೈತನ್ಯ,
ಸೌರಾಷ್ಟ್ರ ಸೋಮೇಶ್ವರಾ, ಆ ನಿಮ್ಮ ಶರಣರ ಪಡಿದೊತ್ತಯ್ಯಾ./275
ಬಾಣತಿ ರಕ್ಕಸಿಯಾದಡೆ ಮಕ್ಕಳ ಕಾಯುವರಿನ್ನಾರಯ್ಯಾ ?
ಸೋಜಿಗದ ಮಾಯೆ ಸಟೆಯಪ್ಪ ಜಗವ ಪಿಡಿದಿರಲು
ಆ ಜಗವನಾ ಮಾಯಾಹಸ್ತದಿಂ ತೊಲಗಿಸುವರಿನ್ನಾರಯ್ಯಾ ?
ನಾ ಬಲ್ಲೆ, ನಾ ಹಿರಿಯನೆಂಬವರೆಲ್ಲರು ಮಾಯೆಯ ಅಣಲೊಳಗೆ ಸಿಕ್ಕಿದರು.
ಹರಿಹರಬ್ರಹ್ಮಾದಿಗಳೆಲ್ಲರೂ ಮಾಯೆಯ ಕೈಯ ಶಿಶುವಾದರಯ್ಯಾ.
ಸೌರಾಷ್ಟ್ರ ಸೋಮೇಶ್ವರಾ, ನಿನ್ನ ಮಾಯೆ
ಅಖಿಳಕ್ಕೆ ತಾನರಸಾದಳಯ್ಯಾ./276
ಬಾಹಿರವ ಕಳೆದು, ಎಡೆನಾಣ್ಯವನುಳಿದು,
ಹಲವು ನಾಣ್ಯವ ಕಳೆದು, ಸಲುವ ನಾಣ್ಯವ ಹಿಡಿದು ನೋಡುವೆನಯ್ಯಾ.
ತೂಕಗುಂದದ ನೋಟವ ನೋಡುವೆನಯ್ಯಾ.
ಪರಮಜ್ಞಾನ ಕಂಗಳಿಂದಾ ಪರಬ್ರಹ್ಮ ನಿಂದ ನೋಟವ ನೋಡುವೆನಯ್ಯಾ.
ಅದ್ವೈತದ ನಾಣ್ಯವ ಕಣ್ಮುಚ್ಚದ ನೋಟದಿಂ ನೋಡುವೆನಯ್ಯಾ.
ಅನಿಮಿಷದೃಷ್ಟಿಯಲ್ಲಿ ಆ ನಿರಾಳದಿಂದ ನೋಟವ ನೋಡುವೆನಯ್ಯಾ.
ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜ ನಿಂದ ನೋಟವ
ನೋಡಿ ನೋಡಿ ನಿಬ್ಬೆರಗಾದೆನಯ್ಯಾ./277
ಬೀಜದೊಳಗಣ ವೃಕ್ಷ, ಅಂಕುರ, ಪಲ್ಲವ, ಪತ್ರ,
ಕುಸುಮ, ಫಲ ಮೈದೋರದಂತೆ,
ಕಾಷ್ಠದೊಳಗಣ ಅಗ್ನಿ ಉರಿ ಉಷ್ಣದೋರದಂತೆ,
ಪತಂಗನ ಕರದೊಳಗಡಗಿಪ್ಪ ಮರೀಚಿ ಪ್ರವಾಹಿಸದಂತೆ,
ಬಿಂದುವಿನೊಳಡಗಿಪ್ಪ ನಾದ ದನಿದೋರದಂತೆ,
ಪಿಂಡ ಬ್ರಹ್ಮಾಂಡಗಳ ಕೂಡಿಪ್ಪ
ಸೌರಾಷ್ಟ್ರ ಸೋಮೇಶ್ವರಲಿಂಗವನಾರೂ ಬೆರಸಬಾರದಯ್ಯಾ./278
ಬೀಜವೃಕ್ಷ ಯೋಗದಂತೆ ಭಕ್ತಸ್ಥಲ,
ಜಲಮೌಕ್ತಿಕ ಯೋಗದಂತೆ ಮಾಹೇಶ್ವರಸ್ಥಲ,
ಅನಲಕಾಷ್ಠ ಯೋಗದಂತೆ ಪ್ರಸಾದಿಸ್ಥಲ,
ಕೀಟಭ್ರಮರ ಯೋಗದಂತೆ ಪ್ರಾಣಲಿಂಗಿಸ್ಥಲ,
ಕರಕವಾರಿ ಯೋಗದಂತೆ ಶರಣಸ್ಥಲ,
ಶಿಖಿಕರ್ಪುರ ಯೋಗದಂತೆ ಐಕ್ಯಸ್ಥಲ.
ಇಂತು ನಿರ್ಭಾವ ನಿಭರ್ೆದ್ಯವಾದಂಗೆ
ಸೌರಾಷ್ಟ್ರ ಸೋಮೇಶ್ವರನಲ್ಲೆ ಲಿಂಗೈಕ್ಯವು./279
ಬುದ್ಧಿಯೊಡನೆ ಸಂಬಂಧವಾದ ಪುಣ್ಯಪಾದ ರೂಪವೆ
ಸಂಚಿತ ಪ್ರಾರಬ್ಧ ಆಗಾಮಿತನದ ವಾಸನೆ ಆದುಳ್ಳನ್ನಕ್ಕ
ಹುಟ್ಟುಹೊಂದು ನಟ್ಟುನಿಂದು ಬಿಟ್ಟು ತೊಲಗದಿಪ್ಪುದು ನೋಡಯ್ಯಾ.
ಶಿವಪ್ರಸಾದ ಪ್ರಸಾದಿಸಲೊಡನೆ ಕರ್ಮಕ್ಷಯ.
ಆ ಕರ್ಮಕ್ಷಯದೊಡನೆ ಬುದ್ಧಿಯಳಿವು.
ಇಂತು ಬುದ್ಧಿ ಕರ್ಮವೆರಡರ ಅಳಿವು
ಶಿಖಿಕರ್ಪುರದಳಿವಿನಂತೆ.
ಅಳಿದ ಸಮನಂತರದಲ್ಲಿ ಮೋಕ್ಷ ಕಾಣಿಸಿಕೊಂಬುದು.
ಇದಕ್ಕೆ ಶ್ರುತಿ: “ತಸ್ಯ ಕರ್ಮಾಣಿ ತಾವದೇವ ಚಿರಂ ಏವಂ ನ ವಿಮೋಕ್ಷ್ಯ ಅಧಸ್ತ್ವಂ ಪಶ್ಯನ್
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದ ಅಪೂರ್ವವಯ್ಯಾ./280
ಬೆಚ್ಚು ಬೇರಿಲ್ಲದ ಸುಖವಚ್ಚಾದ ಪರಿಯ ನೋಡಾ ಅಯ್ಯಾ.
ಅಂಗವಿಲ್ಲದ ಕೂಟ, ಸಮರಸವಿಲ್ಲದ ಬೇಟ,
ಸಮರತಿಯಿಲ್ಲದಾನಂದ ಸನ್ನಹಿತವಾಗಿ,
ಸೌರಾಷ್ಟ್ರ ಸೋಮೇಶ್ವರಲಿಂಗದ ಸಂಗ,
ಏನೂ ಅಲ್ಲದ ನಿಸ್ಸಂಗದ ನಿಜಸುಖವನೇನೆಂಬೆನಯ್ಯಾ./281
ಬೆಟ್ಟದ ಮೇಲೊಂದು ದಳ್ಳುರಿ ನಿಮುರಿ ಬಳ್ಳಿವರಿದು
ಆಕಾಶಕ್ಕಡರಿ ಜಗದೊಳ್ಪಸರಿಸಿ ಸಪ್ತಸಮುದ್ರಂಗಳ ನುಂಗಿತ್ತು,
ಅಷ್ಟದಿಗುದಂತಿಗಳ ಸುಟ್ಟುರುಪಿತ್ತು,
ಪಂಚವಕ್ತ್ರಂಗಳ ಮುಖಗೆಡಿಸಿತ್ತು,
ನವಬ್ರಹ್ಮರ ಸುಳುಹನಾರಡಿಗೊಂಡಿತ್ತು,
ಸಮ್ಯಜ್ಞಾನವಪ್ಪ ದಳ್ಳುರಿ
ಸೌರಾಷ್ಟ್ರ ಸೋಮೇಶ್ವರನ ತೋರಿ ಭವಗೆಡಿಸಿತ್ತು./282
ಬೇರು ಮೊದಲಾಗಿ ಚರಿಸುವ ವೃಕ್ಷದೊಳಗೆ
ತ್ತು ಶಾಖೆಯಲ್ಲಿ ನಾಲ್ಕು ಹಣ್ಣಹುದ ಕಂಡೆ.
ಒಂದು ಹಣ್ಣ ಸವಿದಾತ ಯೋಗಿಯಾದ,
ಒಂದು ಹಣ್ಣ ಸವಿದಾತ ಭೋಗಿಯಾದ,
ಒಂದು ಹಣ್ಣ ಸವಿದಾತ ಧರ್ಮಿಯಾದ,
ಮತ್ತೊಂದು ಹಣ್ಣ ಸವಿದಾತ ಧರ್ಮಿಯಾದ,
ಮತ್ತೊಂದು ಹಣ್ಣ ಸವಿದಾತನ ಕುರಹ ಕಂಡು ಹೇಳಿರೆ.
ಈ ನಾಲ್ಕು ಹಣ್ಣ ಮೆದ್ದವರ ಕೊರಳಲ್ಲಿ ಬಿತ್ತು ಗಂಟಲು ಸಿಕ್ಕಿ
ಕಾನನದಲ್ಲಿ ತಿರುಗುತಿದ್ದರಯ್ಯಾ.
ಈ ಫಲವ ದಾಂಟಿದವರು ಸೌರಾಷ್ಟ್ರ ಸೋಮೇಶ್ವರ
ಹುಟ್ಟುಗೆಟ್ಟರು./283
ಬ್ರಹ್ಮಜ್ಞಾನದಿಂದ ಬ್ರಹ್ಮವನರಿತರಿವು
ಆ ಪರಬ್ರಹ್ಮದೊಡವೆರಸಿ ನಿಂದಿತ್ತು.
ಅದೆಂತೆಂದಡೆ: ಬ್ರಹ್ಮಬ್ರಹ್ಮಾಂಡ ಬೇರಿಲ್ಲದಿಪ್ಪಂತೆ, ಆಕಾಶವನಿಲ ಬೇರಿಲ್ಲದಿಪ್ಪಂತೆ,
ಹಣ್ಣುರುಚಿ ಬೇರಿಲ್ಲದಿಪ್ಪಂತೆ.
ದ್ವೈತವೆ ಅದ್ವೈತವಾದ ಬಳಿಕ ದ್ವೈತವೆಂದೆನಲುಂಟೆ ? ಇಲ್ಲವಾಗಿ.
ಅರಿವು ಮರಹಿಗೆ ತೆರಹಿಲ್ಲದ ಕರಿಗೊಂಡರಿವು ತಾನಾಗಿರಲು
ನಾನಾ ಪರಿಯ ವಿಚಿತ್ರಚಿತ್ರಂಗಳತ್ಯಾಶ್ಚರ್ಯವಪ್ಪಂತೆ ತೋರುತಿರಲು
ಅದು ವಿಪರೀತವೆಂದೆನಲುಂಟೆ ?
ಮುನ್ನ ತಾನಾಗಿರ್ದು ಇನ್ನು ಬೇರೆನಲುಂಟೆ ? ಇಲ್ಲವಾಗಿ.
ಆದಿಮಧ್ಯಾಂತ ವಿರಹಿತವಾದ ಮಹಾಘನವೆ
ಊಹಿಸಲಿಲ್ಲದ ಉಪಮೆ, ಭಾವಿಸಲಿಲ್ಲದ ಭಾವ,
ಅರಿಯಲಿಲ್ಲದರಿವು ತಾನಾಗಿ,
ಸೌರಾಷ್ಟ್ರ ಸೋಮೇಶ್ವರನೆಂಬ ನುಡಿಯನೊಳಕೊಂಡು ನಿಂದ
ಸಹಜ ಭರಿತವಾಗಿರ್ದಿಲ್ಲದಂತೆ ಇಹ ಭೇದವನೇನೆಂಬೆನಯ್ಯಾ./284
ಬ್ರಹ್ಮನೆ ಬಟ್ಟಲು ವಿಷ್ಣುವೆ ನೇಣು ರುದ್ರನೆ ತೊಲೆ.
ಈ ಮೂವರು ಕೂಡಿದ ತ್ರಾಸಿನಲ್ಲಿ ಬ್ರಹ್ಮಾಂಡವೆಂಬ ಘಟ್ಟಿಗೆ
ಪಿಂಡವೆಂಬ ಕಟ್ಟಳಿಯನಿಕ್ಕಿ ತೂಗುವೆನಯ್ಯಾ.
ಇಚ್ಛೆ ಜ್ಞಾನ ಕ್ರೀಯಂಗಳೆಂಬ ಶಕ್ತಿತ್ರಯದ
ಮುಳ್ಳು ಸರಿಸವಾಗಿ ತೂಗುವೆನಯ್ಯಾ.
ಚಂದ್ರ ಸೂರ್ಯರೊಂದಾದ ಮಚ್ಚವನೊರೆದು ಪರಾಪರದ ಬಣ್ಣಕ್ಕೆ
ಪ್ರತಿಯಿಲ್ಲದೆ ಪ್ರತಿಯಾಗಿ ನಿಂದಿತ್ತು,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರಲ್ಲಿ./285
ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ
ಸಚರಾಚರಂಗಳಷ್ಟಮೂರ್ತಿಗಳಾಗಿ
ಆಗಿ ಆಗಿ ಅಳಿವುತ್ತಿಪ್ಪವಯ್ಯಾ.
ಇದಕ್ಕೆ ಶ್ರುತಿ: ಬ್ರಹ್ಮಣೋ ವೃಕ್ಷಾನ್ಮಹತೋ ಪತ್ರಂ ಕುಸುಮಿತಂ ಫಲಂ
ಚರಾಚರಾಷ್ಟಮೂರ್ತಿಂ ಚ ಫಲಿತಂ ಫಲಶೂನ್ಯವತ್
ಇಂತೆಂದುದಾಗಿ,
ಅಷ್ಟಮೂರ್ತಿಗಳು ನಷ್ಟವಾದಲ್ಲಿ
ಸೌರಾಷ್ಟ್ರ ಸೋಮೇಶ್ವರಲಿಂಗ ನಷ್ಟವಾಯಿತ್ತೆಂಬ
ಮಿಟ್ಟಿಯ ಭಂಡರನೇನೆಂಬೆನಯ್ಯಾ./286
ಬ್ರಹ್ಮಸ್ಥಾನದಲ್ಲಿ ಜ್ಯೋತಿರ್ಲಿಂಗವಿಪ್ಪುದನರಿತು,
ಕ್ರೀವೆರಸಿ ನಿಃಕ್ರೀಯಲ್ಲಿ ನಿಂದು
ಕ್ರಮದಿಂದೂಧ್ರ್ವಕ್ಕೆಯ್ದಲು ಮಹಾಲಿಂಗದ ಬೆಳಗು,
ಪೃಥ್ವಿಯಂ ಮುಸುಕಿ, ಅಪ್ಪುವನೀಂಟಿ, ಅಗ್ನಿಯಂ ದಹಿಸಿ,
ವಾಯುವಂ ನುಂಗಿ, ಆಕಾಶಕ್ಕಳವಲ್ಲದೆ
ಸ್ಥಲನಿಸ್ಥಲವನೆಯ್ದಿ ಶೂನ್ಯಾವಸ್ಥೆಯಲ್ಲಿ ನಿಂದ ನಿಲವ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರಲ್ಲದೆ
ಅರಿವು ಮರಹನೊಳಕೊಂಡಿಪ್ಪ ಅಜ್ಞಾನಿಗಳೆತ್ತ ಬಲ್ಲರಯ್ಯಾ ?/287
ಭಕ್ತನೊಂದು ಕುಲ, ಭವಿಯೊಂದು ಕುಲವೆಂದೆಂಬರು.
ಭಕ್ತಂಗೆ ಕುಲಛಲಂಗಳುಂಟೆ ? ಭಕ್ತಂಗೆ ಯಾಚಕತ್ವವುಂಟೆ ?
ಭಕ್ತಂಗೆ ಆಶಾಪಾಶಂಗಳುಂಟೆ ?
ಭಕ್ತಂಗೆ ಶೋಕ ಮೋಹ ಭಯ ಲಜ್ಜೆ ಸೇವೆ ರೋಷ ಹರುಷ
ಆಧಿವ್ಯಾಧಿ ಆಶೆ ಆಮಿಷ ತಾಮಸಂಗಳುಂಟೆ ? ಇಲ್ಲವಾಗಿ,
ಇದಕ್ಕೆ ಶ್ರುತಿ: ಯಾಚಕೋ ಲೋಭರಹಿತಃ ಆಶಾಪಾಶಾದಿವರ್ಜಿತಃ
ಶೋಕಮೋಹಭಯತ್ಯಾಗೀ ಮದ್ಭಕ್ತಶ್ಚ ಪ್ರಕೀರ್ತಿತಃ
ಸೇವಕೋ ರೋಷಹರ್ಷಾ ಚ ಆಶಾಯಾಮಿಷತಾಮಸಾ
ಆಧಿವ್ಯಾಧಿ ಗತೋ ದೂರಂ ಮದ್ಭಕ್ತಶ್ಚ ಪ್ರಕೀರ್ತಿತಃ ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಸಹಜಭಕ್ತಿ ಅಪೂರ್ವವಯ್ಯಾ./288
ಭಕ್ತಿಯಾಚಾರದ ಪಥವಿಡಿದು ನಲಿನಲಿದುಲಿದಡೂ ಲಿಂಗಸಾಹಿತ್ಯವಿಲ್ಲ.
ಮನವೆ ಲಿಂಗದಲ್ಲಿ ನೆಲೆಗೊಳಿಸುವೆನೆಂದು ಧ್ಯಾನಮೌನದಲ್ಲಿ ನಿಂತಡೂ
ಲಿಂಗಸಾಹಿತ್ಯವಿಲ್ಲ.
ಸರ್ವಪ್ರಪಂಚುಗಳು ವಾಯುವಿಂದ ತೋರುತ್ತಿರಲು
ಆ ಪ್ರಪಂಚನಳಿದು ಲಿಂಗವನೊಡೆವೆರಸುವೆನೆಂದು
ಶ್ವಾಸ ನಿಃಶ್ವಾಸಂಗಳ ಪಿಡಿದು ನಿಲಿಸಿದರೂ ಲಿಂಗಸಾಹಿತ್ಯವಿಲ್ಲ.
ಸದ್ಭಕ್ತಿವೆತ್ತು ಭಾವಪ್ರಸಂಗದಿಂ ಕಂಗಳಂ ಕಳೆದು ಜಿಹ್ವೆಯಂ ಕೊಯಿದು
ಶಿರವನರಿದು, ಹಸ್ತವನುತ್ತರಿಸಿತ್ತಡೂ ಲಿಂಗಸಾಹಿತ್ಯವಿಲ್ಲ.
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,
ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗಯೋಗ ಘಟ್ಟಿಗೊಂಡು,
ಪ್ರಾಣ ಮನ ಪವನ ಹುರಿಗೂಡಿ,
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ
ಷಡಾಧಾರದ ಬಳಿವಿಡಿದು,
ನೆತ್ತಿಯಿಂದುತ್ತರಕ್ಕೆ ಉಚ್ಚಳಿಸಿ ಹಾಯಿದು,
ನಡುನೆತ್ತಿ ತೂತಾದಡೂ ಲಿಂಗಸಾಹಿತ್ಯವಿಲ್ಲ.
ಸತ್ಯ, ಸಮತೆ, ಸಮಾಧಾನ, ಸದ್ಭಾವ,
ಸವಿರಕ್ತಿಯಿಂದತ್ಯಾನಂದ ತೋರುತ್ತಿರಲು ಅದು ನೆಲೆಗೊಂಡು ನಿಲ್ಲದಾಗಿ
ಹೇಳದೆ ಬಂದು ಕೇಳದೆ ಹೋಯಿತ್ತು.
ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ
ಅನುಭವವ ಮಾಡಿ ಫಲವೇನಯ್ಯಾ ?/289
ಭಕ್ತಿಯೆಂಬ ಸತಿಯಲ್ಲಿ ಜ್ಞಾನವೆಂಬ ಸುತ ಹುಟ್ಟಲು
ಮಾಯೆಯೆಂಬ ವಾಯು ಮರಣವಾಗಲು
ಶರಣ ಅರಿಕೆಗೆಟ್ಟ ನೋಡಾ.
ಬೋಧಾಪ್ರಕಾಶಸ್ವರೂಪ ತನ್ನಲ್ಲೇ ತಾನು ತದ್ಗತ.
ಸ್ಫಟಿಕದ ಘಟದಂತೆ ಒಳಹೊರಗೆಂಬುದಿಲ್ಲ.
ಉಲುಹಡಗಿ ಶಬ್ದಮುಗ್ಧವಾದ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ./290
ಭದ್ದನಲ್ಲ ಮುಕ್ತನಲ್ಲ, ಎರಡಿಲ್ಲವಾಗಿ ಸಹಜಭರಿತನಯ್ಯಾ.
ಮನ ಭಾವ ಕರಣಂಗಳು ಲಿಂಗವ ಸೋಂಕಿ, ನೆನಹುಗೆಟ್ಟು,
ಸಂದು ನಷ್ಟವಾದ ಅಚಲಲಿಂಗೈಕ್ಯಂಗೆ ಮತ್ತಾವಂಗವೂ ಇಲ್ಲ.
ನಿರಂಜನ ನಿಃಪ್ರಾಣ ಶಿಖಿಕರ್ಪುರಯೋಗದಂತೆ
ಸೌರಾಷ್ಟ್ರ ಸೋಮೇಶ್ವರನಲ್ಲಿ ಲಿಂಗೈಕ್ಯವು./291
ಭವಿಯೊಂದು ಕುಲ ಭಕ್ತನೊಂದು ಕುಲವೆಂಬ
ಭಂಗದ ಮಾತ ಕೇಳಲಾಗದು.
ಅದೇನು ಕಾರಣವೆಂದಡೆ, ಭವಿಭಕ್ತಂಗೆ ಸಂಬಂಧ ಉಂಟಾದ ಕಾರಣ.
ಇದಕ್ಕೆ ಶ್ರುತಿ: ಭಕ್ತಾನಾಂ ಭವಿಸಂಪರ್ಕೊ ಭವೀನಾಂ ಭಕ್ತಸಂಶ್ರಯಃ
ಭವಿಭಕ್ತಾವುಭೌದೇವೀ ಮದ್ಭಕ್ತೌ ಚ ಪ್ರಕೀರ್ತಿತೌ
ಇಂತೆಂದುದಾಗಿ,
ಶಿವಪ್ರಸಾದ ಭವಿಗೆ, ಭವಿಯ ಪ್ರಸಾದ ಭಕ್ತಂಗೆ.
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನಲ್ಲಿ ಭಕ್ತರಾದಡೆ
ಭವಿಯಾಗಿರಬೇಕಯ್ಯಾ./292
ಭಾನುಮಂಡಲವಂಜುವದೆ ಮಂಜು ಮುಸುಕಿದಡೆ ?
ಕಾಲಾಗ್ನಿ ಅರಗಿನ ಬಾಣ [ತಾ]ಗೆ ಪ್ರಳಯವಪ್ಪುದೆ ?
ರಣರಂಗಧೀರ ತೃಣಪುರುಷನೊಡನೆ ಹೆಣಗುವನೆ ಸಮರಕ್ಕೆ ?
ಶಿವಜ್ಞಾನವಿಹೀನರ ಹೀನೋಕ್ತಿಯೊಡನೆ
ಸೌರಾಷ್ಟ್ರ ಸೋಮೇಶ್ವರನ ಶರಣರು ಪ್ರತಿಪಾದ್ಯರುಂಟೆ ?/293
ಭಾವ ದುರ್ಭಾವ ಅಳಿದು, ಸ್ವಭಾವಿಯಾದ ಸದ್ಭಾವಿಗೆ
ಅಂಗದಲ್ಲಿ ಆಯತ, ಪ್ರಾಣದಲ್ಲಿ ಸ್ವಾಯತ.
ಉಭಯವೈಕ್ಯವಾದಲ್ಲಿ ನಿರ್ಭಾವಿ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ./294
ಭಾವದ ಮುಂದೆ ತೋರುವ ಜ್ಞಾನದ ಕುರುಹಿದೇನೋ !
ಒಳಗೆನ್ನದೆ ಹೊರಗೆನ್ನದೆ ತನ್ನ ತಾನಾಗಿ ನಿಂದಿತ್ತು.
ಅದನರಿಯಲಿಲ್ಲಾಗಿ ಮರೆಯಲಿಲ್ಲ,
ಮರೆಯಲಿಲ್ಲಾಗಿ ಅಗಲಲಿಲ್ಲ, ಅಗಲಲಿಲ್ಲಾಗಿ ಭಾವಕ್ಕೆ ತೆರಹಿಲ್ಲ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣಂಗೆ./295
ಭಾವಭೇದವಿಲ್ಲದೆ ಬೆರೆಸಿ,
ಮರಳಿ ಹುಟ್ಟಿದ ಭಾವ ನಿರ್ಭಾವವಾಯಿತ್ತಯ್ಯಾ.
ಮನದ ಮುಂದಣ ಘನತೇಜ ಸದ್ಭಾವವ ನುಂಗಿ
ನಿರ್ಭಾವ ನಿಃಪತ್ತಿಯಾಗಿ ಸೌರಾಷ್ಟ್ರ ಸೋಮೇಶ್ವರಾ,
ಲಿಂಗ ಎಂಬ ನಾಮ ನಿರ್ನಾಮವಾಯಿತ್ತು./296
ಭ್ರಮರ ಸೋಂಕಿದ ಕೀಟ ಭ್ರಮರನಾಗದೆ, ಮರಳಿ ಕೀಟನಪ್ಪುದೆ ?
`ಭ್ರಮದ್ಭ್ರಮರಚಿಂತಾಯಾಂ ಕೀಟೋಡಿ ಪಿ ಭ್ರಮರಾಯತೇ
ಎಂದುದಾಗಿ.
ಅಗ್ನಿ ಸೋಂಕಿದ ಕಾಷ್ಠ ಅಗ್ನಿಯಾಗದೆ, ಮರಳಿ ಕಾಷ್ಠವಪ್ಪುದೆ ?
ಭುವನ ಸೋಂಕಿದ ಕರಕ ಭುವನವಾಗದೆ, ಮರಳಿ ಕರಕವಪ್ಪುದೆ ?
ಸೌರಾಷ್ಟ್ರ ಸೋಮೇಶ್ವರಲಿಂಗ ಸೋಂಕಿದ ಶರಣರು
ಲಿಂಗವಾಗದೆ ಮರಳಿ ಮನುಜರಪ್ಪರೆ ?
`ಯಥಾಲಿಂಗಂ ತಥಾ ಶರಣಃÙರ ಎಂದುದಾಗಿ./297
ಮಂಡೆ ಬೋಳಾದಡೇನೊ ! ಹುಟ್ಟು ಬೋಳಾಗದನ್ನಕ್ಕರ,
ತನು ನಿರ್ವಾಣವಾದಡೇನೊ ! ಆಸೆ ನಿರ್ವಾಣವಾಗದನ್ನಕ್ಕರ,
ಇಂದ್ರಿಯ ನಿಗ್ರಹಿಯಾದಡೇನೊ ! ಷಟ್ಸ್ಥಲಾನುಗ್ರಹವಾಗದನ್ನಕ್ಕರ,
ಸೌರಾಷ್ಟ್ರ ಸೋಮೇಶ್ವರಲಿಂಗವು ಬರಿದೆ ಒಲಿವನೆ ?/298
ಮಧ್ಯನಿರಾಳದಲ್ಲಿ ನಿಂದು, ಊಧ್ರ್ವ ನಿರಾಳವನೆಯ್ದಿದಲ್ಲಿ,
ಕಾಣಲಾಯಿತ್ತು ಒಂದು ಪುತ್ಥಳಿ.
ಮೂರು ಬೆಳಗಿನ ಮಧ್ಯದಲ್ಲಿ ಬೇರೊಂದು ಬೆಳಗು ಮೀರಿ
ತೋರುತ್ತಿದೆ ಈ ಪುತ್ಥಳಿ.
ವಜ್ರದ ಮೈದೊಡಗೆಯ ತೊಟ್ಟು
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅವಿರಳವಾಯಿತ್ತು./299
ಮನ ಸೋಂಕಿದ ಸುಖವನೊಂದು ಶ್ರುತಕ್ಕೆ ತಂದಡೆ
ಅದು ಬಹುವಾರ್ತೆಯಾಯಿತ್ತು ನೋಡಾ, ಅಯ್ಯಾ.
ತನುವಿನಲ್ಲಿ ಸೋಂಕಿದ ಸುಖವು ತನಗಲ್ಲದೆ
ಇದಿರಿನ ದೃಕ್ಕಿಗೆ ದೃಶ್ಯವಪ್ಪುದೆ, ಅಯ್ಯಾ ?
ತನ್ನಲ್ಲಿ ತಾನು ತದುಗತವಾದ ಶರಣನ ಇರವು ಉರಿವುಂಡ ಕರ್ಪುರದಂತೆ,
ಬಿಸಿಲುಂಡ ಅರಿಸಿನದಂತೆ, ಕಬ್ಬುನ ಉಂಡ ಉದಕದಂತೆ,
ಆರಿಗೂ ಭೇದಿಸಬಾರದು ಕೇಳಾ, ಅಯ್ಯಾ ?
ಇದಕ್ಕೆ ಶ್ರುತಿ: “ಅಗಣಿತಮಪ್ರಮೇಯಮತಕ್ರ್ಯ ನಿರುಪಾಧಿಕಂ
ಅನಾಮಯನಿರಂಜನ್ಯಂ ಅತ್ಯತಿಷ್ಠದ್ದಶಾಂಗುಲಂ’
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರಾ, ಶರಣರ ಅಂತಿತೆನಬಾರದಯ್ಯಾ./300
ಮನದ ನಯನದಿಂದ ಕಂಡು
ಕಾಯಭಾವ ಸ್ಪರ್ಶನ ಹಿಂಗಿ, ಲಿಂಗಸ್ಪರ್ಶನದ ಸಕೀಲವನರಿತು,
ಪ್ರಾಣಸ್ಪರ್ಶನ ಪ್ರಸಾದಸೇವ್ಯ ನಿರುಪಮತೃಪ್ತಿ ತ್ರಿಪುಟಿಸಂಕಲ್ಪದ
ಅರ್ಪಿತವ ಮೀರಿದಚ್ಚಪ್ರಸಾದಗ್ರಾಹಕ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ./301
ಮನಮುಕ್ತನಾದ ಶರಣ ತಾನೆ ಲಿಂಗವಾಗಿ
ಪ್ರಾಣ ಮುಕ್ತನು ನೋಡಯ್ಯಾ.
ಪ್ರಸಾದಸನ್ನಹಿತವಾಗಿ ಕಾಯಮುಕ್ತನು.
ಅದೆಂತೆಂದಡೆ: ಸ್ವಲಿಂಗೀ ಪ್ರಾಣಮುಕ್ತಸ್ಯಾತ್ ಮನೋಮುಕ್ತಸ್ತು ಜಂಗಮಃ
ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿಶ್ಚಯಃ
ಎಂದುದಾಗಿ,
ಇಂತೀ ತ್ರಿವಿಧಮುಕ್ತನಾಗಿ
ನಿರ್ಮಲ ನಿರ್ಮಾಯ ಸತ್ಯಜ್ಞಾನಾನಂದಭರಿತ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ./302
ಮನವೆ ಮಹ, ತನುವೆ ಪೃಥ್ವಿ,
ಇನಿತಾವ ಎಡೆಯಲ್ಲಿ ಆತ್ಮನಿಹುದೋ ?
ಸಾಗರದ ಹಾಗಲ್ಲ ಮೇಘದ ಪರ್ಯಾಯವಲ್ಲ
ನೀನರಿಯದ ತೆರನಲ್ಲ
ಆದ ಹಿರಿದುಮಾಡಿ ಒರೆಯಲೇಕಯ್ಯಾ ?
ನಿಃಕಳಂಕಶಾಂತಮಲ್ಲಿಕಾರ್ಜುನ ದೇವರಿಲ್ಲವೆಂಬವಂಗೆ ಆತ್ಮನಿಂದೇನು ?
ಸೌರಾಷ್ಟ್ರ ಸೋಮೇಶ್ವರಾ, ಮಾತಿಂಗೆ ಮರುಳಾದವರುಂಟೆ ?/303
ಮನೋವಾಕ್ಕಾಯದಲ್ಲಿ ಲಿಂಗವ ನಂಬಿ ನಚ್ಚಿ ಒಚ್ಚತವೋಗಿ,
ಸಚ್ಚಿದಾನಂದದಿಂ ಪರವಶನಾಗಿ
ಲಿಂಗದಂಗದೊಳು ತನ್ನಂಗ, ಲಿಂಗಭಾವದೊಳಗೆ ತನ್ನ ಮನ,
ಪರಬಿಂದು ಪರನಾದದಲ್ಲಿ ವಾಕ್ಕು.
ಇಂತು ತ್ರಿಕರಣಶುದ್ಧನಾಗಿ ಲಿಂಗವನಪ್ಪಿ ಒಪ್ಪವಳಿದು
ಭಾವಭೇದವಿಲ್ಲದಿಪ್ಪಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ./304
ಮರವೆ ಅರಿವಿನ ಮರೆಗೊಂಡು ತಲೆದೋರಿ ಅರಿವೆಂದೆನಿಸಿತ್ತು.
ಅರಿವು ಮರವೆಯ ಮರೆಗೊಂಡು ತಲೆದೋ? ಮರಹೆಂದೆನಿಸಿತ್ತು.
ಅರಿವು ಮರವೆಗಳಿಂದರಿತರಿವು ನಿಜವಪ್ಪುದೆ ?
ಅದು ಹುಸಿ, ಅದೆಂತೆಂದಡೆ: `ಪ್ರಾಣನಿಲಾಚೇಷ್ಟಮನೋಗಲಿತ್ವಂ ಮನೋಗಲಿತ್ವಾತ್ಕರಣಂ ಪ್ರಕೃತ್ಯಾ’
ಪ್ರಕೃತಿಯಿಂದಂ ಮರೆವರಿವು ತೋಕರ್ುಂ, ಮರೆವರಿವಿನಿಂ ಅನಿತ್ಯಂ.
ಇದು ಕಾರಣ, ಅರಿವಿನ ಮರಹಿನ
ಸಂಚಲದಿಂದರಿಹಿಸಿಕೊಂಡರಿವು ತಾನರಿವಲ್ಲ.
ಅರಿಯದ ಮರೆಯದ ಮರವರಿವಿಂಗೆ
ತೆರಹಿಲ್ಲದ ಬಚ್ಚಬರಿಯರಿವೆ ತಾನಾಗಿ.
ಅರಿವೆಂಬ ಕುರುಹುಗೆಟ್ಟ ಪರಮಸ್ವಯಂಭು ನೀನೆ
ಸೌರಾಷ್ಟ್ರ ಸೋಮೇಶ್ವರಾ./305
ಮರ್ಕಟ ದರ್ಪಣವ ಹಿಡಿದು ನೋಡಿ ತನ್ನ ಪ್ರತಿಬಿಂಬವ ಕಂಡು
ದರ್ಪಣವ ಮರ್ಕಟವೆಂದು ಬಗೆದೇಡಿಸಲನುಗೆಯ್ವಂತೆ,
ಮನೋವಿಕಾರದಿಂ ಪ್ರಕೃತಿವಿಡಿದು ಚರಿಸುತಿರ್ಪ ಮತ್ರ್ಯದ ಮನುಜರು
ಪ್ರಕೃತಿ ನಿಃಕಂಪನವಾದ ಪರಮಾನುಭಾವಿಗಳಪ್ಪ
ಪರಮಲಿಂಗೈಕ್ಯರ ಅನುವನರಿಯದೆ,
ಬಾಯಿಗೆ ಬಂದಂತೆ ಒಂದೊಂದ ನುಡಿವ
ಮಂದಮತಿಗಳಪ್ಪ ಸಂದೇಹಿಗಳು
ನಿಮ್ಮನೂ ತಮ್ಮನೂ ತಾವೆತ್ತ ಬಲ್ಲರಯ್ಯಾ
ಸೌರಾಷ್ಟ್ರ ಸೋಮೇಶ್ವರಾ. /306
ಮಲಜಲವ ತೊಳೆಯಲುಂಟಲ್ಲದೆ, ನಿರ್ಮಲಜಲವ ತೊಳೆಯಲುಂಟೆ ?
ತವರಾಜ ಹಗಿನಾಗಬಲ್ಲುದೆ ? ಮುತ್ತು ನೀರಾಗಬಲ್ಲುದೆ ?
ಸಹಸ್ರನಯನ ಚತುರ್ಮುಖ ಅಧೋಕ್ಷಜ ರುದ್ರ ಪದವನತಿಗಳದು,
ಭಾವ ಬ್ರಹ್ಮವಾದ ಆಕಾಯಚರಿತಂಗೆ ಪೂರ್ವಕ್ರಿಯಂಗಳುಂಟೆ ?
ತನುಗುಣ ಮನಗುಣವಳಿದ ಲಿಂಗದೇಹಿ ನಿರ್ದೆಹಿ,
ಅಪ್ರತಿಮ ನಿತ್ಯಜ್ಯೋತಿಯೊಳಗೆ ನಿಷ್ಪತ್ತಿಯಾದ,
ಸಾರಾಷ್ಟ್ರ ಸೋಮೇಶ್ವರಲಿಂಗದೊಳಿಪ್ಪ ಅಪ್ರತಿಮ ಶರಣ./307
ಮಹಿಯೆಂಬ ಕುಟ್ಟಿಮದ ದಿಗ್ಭಿತ್ತಿಯ ಮೇಲೆ ಮುಚ್ಚಿದ ಅಂಡಕಟಾಹ ?
ಅಜನ ತತ್ತಿಯೊಳಗಣ ಪಶುಜೀವರೆಲ್ಲಾ ನೆರೆದು
ಕರ್ಮವೆಂಬುದೊಂದೆ ಬಟ್ಟಲೊಳಗೆ
ಮೋಹ ಮದ ರಾಗ ವಿಷಾದ ತಾಪ ಶಾಪ ವೈಚಿಂತ್ಯವೆಂಬ
ಏಳು ಮಲಂಗಳನೊಂದಾಗಿ ಕಲಸಿ ತಿನ್ನುತ್ತ
ಮೂರು ಮಲಂಗಳ ಬೇರೆ ಬೇರೆ ಅರಿಯುತ್ತ
ವಿಷಯವೆಂಬ ರಸವ ಕುಡಿದು
ಅಜ್ಞಾನವೆಂಬುದೊಂದೆ ಹಾಸಿಕೆಯಲ್ಲಿ ಮಲಗಿ
ಮೂಛರ್ೆ ತಿಳಿಯದಿಪ್ಪುದ ಕಂಡು ನಾಚಿತ್ತಯ್ಯಾ ಎನ್ನ ಮನ.
ನಿಮ್ಮ ಅಂತರಂಗವೆಂಬ ಚಿದಂಬರದಲ್ಲಿ ನಿಃಶೂನ್ಯವಾಗಿರಿಸೆನ್ನ
ಸೌರಾಷ್ಟ್ರ ಸೋಮೇಶ್ವರಾ./308
ಮಾತ ಕಲಿತು ಮಂಡೆಯ ಬೋಳಿಸಿ ವೇಷ ಭಾಷೆಗಳಿಂ
ದೇಶ ಕೋಶ ಭವನಂಗಳ ತೊಳಲಿ ಬಳಲಿ ನಿಂದಡೇನಾಯಿತ್ತೊ,
ಜಟಾಬಂಧದಿಂ ಗಡ್ಡದ ಹಿರಿಯರಪ್ಪೆ ಭೋ !
ನಾವೆಂದು ಬಿಂದು ಬೀಸರವಾಗದಿರ್ದಡೇನಾಯಿತ್ತೊ,
ಹೆಚ್ಚು ಕುಂದು ಬಿಚ್ಚದನ್ನಕ್ಕ.
ತಥ್ಯ_ಮಿಥ್ಯ ರಾಗ_ದ್ವೇಷ ಭಯ_ಮೋಹಂಗಳುಳ್ಳನ್ನಕ್ಕ
ಸೌರಾಷ್ಟ್ರ ಸೋಮೇಶ್ವರಲಿಂಗ ಎಂತು ಸಾಧ್ಯವಪ್ಪುದಯ್ಯಾ./309
ಮಾಯೆಯಿಂದಾದ ಸಂಸಾರದಡವಿಯೊಳಗೆ ತಿರಿಗಿ ತಿರಿಗಿ ಘಾಸಿಯಾಗಿ,
ಈಷಣತ್ರಯವೆಂಬ ಮೋಹಿನಿಯ ಕೈವಶವಾಗಿ,
ಅರಿಗಳೊಡನೆ ಪುದುವಾಳಾಗಿ,
ಆಶೆಯಾಮಿಷ ತಾಮಸಂಗಳಿಂದ ನೊಂದು,
ತಾಪತ್ರಯಗಳಿಂದ ಬೆಂದು,
ಸಂಸಾರ ಸರ್ವಮುಖವಾಗಿ ನುಂಗಿ ಉಗುಳುತ್ತಿರಲೆಂತಕ್ಕೆ
ನಿಮ್ಮ ನೆನಹೆಂಬ ಕಿಚ್ಚು ಭವಾರಣ್ಯವ ಸುಡಲು,
ಕರ್ಮದ ಕೈಬೆಂದು ಮಾಯಾಪಾಶವುರಿದು,
ಮಲ ನಿರ್ಮಲವಾಗಿ, ಬಿಂದು ಭುವನವ ಹೊದ್ದದೆ,
ತೀರೋಧಾನ ನಿರೋಧಾನವೆಯ್ದಿ,
ನಿಮ್ಮಲ್ಲಿ ಅಚ್ಚೊತ್ತಿದಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ./310
ಮಾಯೆಯೆಂದೇನೊ ಮದವಳಿದಂಗೆ ?
ಕಾಯವೆಂದೇನೊ ಕಳವಳವಳಿದಂಗೆ ?
ಜೀವವೆಂದೇನೊ ಪ್ರಕೃತಿಯಳಿದಂಗೆ ?
ಭಾವವೆಂದೇನೊ ಭ್ರಮೆಯಳಿದಂಗೆ ?
ಅರಿವೆಂದೇನೋ ಮರಹಳಿದಂಗೆ ?
ತಾನೆಂದೇನೊ ಇದಿರಳಿದಂಗೆ ?
ಸೌರಾಷ್ಟ್ರ ಸೋಮೇಶ್ವರಾ,
ತಾನು ತಾನಾದ ಶರಣಂಗೆ ನೀನೆಂದೇನೊ./311
ಮುಖದಲ್ಲಿ ರುದ್ರನಿಪ್ಪನಯ್ಯಾ, ನಾಬಿಯಲ್ಲಿ ವಿಷ್ಣುವಿಪ್ಪನಯ್ಯಾ,
ಮೂಲದಲ್ಲಿ ಬ್ರಹ್ಮನಿಪ್ಪನಯ್ಯಾ, ಕೇಸರದಲ್ಲಿ ದೇವರ್ಕಳೆಲ್ಲಾ ಇಪ್ಪರಯ್ಯಾ.
ಇಂತು ಪುಣ್ಯವೆ ಪುಂಜವಾಗಿ ಸೌರಾಷ್ಟ್ರ ಸೋಮೇಶ್ವರನ ಬರಿಸುವ
ರುದ್ರಾಕ್ಷಿಯಂ ಧರಿಸಿರಿಯ್ಯಾ ಭಕ್ತರಪ್ಪವರು./312
ಮುತ್ತು ನೀರೊಳಗೆ ಹುಟ್ಟಿ ಮರಳಿ ನೀರಾಗದಂತೆ,
ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ,
ತೊಟ್ಟುಬಿಟ್ಟ ಹಣ್ಣು ಹೂಮಿಡಿಯಾಗದಂತೆ,
ಸಂಸಾರದಲ್ಲಿ ಹುಟ್ಟಿ ಅದ ಹೊದ್ದದೆ,
ಸ್ವಯಂಪ್ರಕಾಶ ಲಿಂಗದ ಬೆಳಗಿನಲ್ಲಿ ಬೆಳೆದು, ತಲ್ಲೀಯವಾಗಿರ್ದರಯ್ಯಾ
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು./313
ಮುನ್ನ ಮುನ್ನ ತಾನೆ ಸ್ವಯಂಭು.
ಸೌರಾಷ್ಟ್ರವೆಂಬ ಅಂಗಕ್ಕೆ ಪ್ರಾಣವಾಗಿ, ಸೌರಾಷ್ಟ್ರ ಪತಿಯಾದ.
ಪಂಚೇಂದ್ರಿಯಂಗಳೆಂಬ ಐಮುಖವಪ್ಪ ಹುಲಿಗೆರೆಯಲ್ಲಿ ನೆಲಸಿ
ಹುಲಿಗೆರೆಯರಸನಾದ,
ಸತ್ಯಸ್ವರೂಪನು ತಾನೆ ಆದ ಕಾರಣ
ಸತ್ಯವೆಂಬ ಸೀಮೆಯಲ್ಲಿರ್ಪನಾಗಿ.
ಇದಕ್ಕೆ ಶ್ರುತಿ: ತ್ವಂ ಸತ್ಯರೂಪಸ್ತವ ನಾಸ್ತಿ ಸತ್ಯಂ ತ್ವಂ ನಿತ್ಯರೂಪಸ್ತವ ನಾಸ್ತಿ ನಿತ್ಯಂ
ತ್ವಂ ವಿಶ್ವರೂಪಸ್ತವ ನಾಸ್ತಿ ವಿಶ್ವಂ ತ್ವಂ ವಿಶ್ವದೇವಸ್ತವ ನಾಸ್ತಿ ದೇವಃ
ಇಂತೆಂದುದಾಗಿ,
ಸತ್ಯನೂ ನಿತ್ಯನೂ ಕರ್ತನೂ ದೇವನೂ ತಾನೆಯಾಗಿ
ಸೌರಾಷ್ಟ್ರ ಸೋಮೇಶ್ವರನೆಲ್ಲೆಡೆಯಲೆಡೆದೆರಹಿಲ್ಲ./314
ಮೂರು ಪಂಚಭೂತದಿಂದ ಗಾರಪ್ಪುದು [ಬೇರೆ] ಮಾಡಿ,
ಮೂರು ಕರ್ಮ ಮೂರು ತಾಪ ಮೂರು ಮಲಂಗಳ ಹಾರ ಹೊಯ್ದು,
ಊರಿದ್ದ ಲಿಂಗವ ತಂದು, ಊರಿ ತೋರಿದನಯ್ಯಾ ಕರಸ್ಥಲದಲ್ಲಿ.
ದೀಕ್ಷಾನ್ವಯವನನ್ವಯಿಸಿದ ಶ್ರೀಗುರು ಸೌರಾಷ್ಟ್ರ ಸೋಮೇಶ್ವರಾ,
ನೀನೆನ್ನ ಉತ್ತಮಾಂಗದಲ್ಲಿ ನೆಲಸಿದೆಯಾಗಿ ಭವ ಹಿಂಗಿತ್ತು./315
ಯೋಗ ವಿಯೋಗವೆಂಬೆರಡಳಿದು,
ನಿಮ್ಮ ನೆನಹು ಎನ್ನ ಮನದಲ್ಲಿ ನಿಜಯೋಗವಾಗಿ,
ಸಮ್ಯಜ್ಞಾನದಲ್ಲಿ ಪರಮಸುಖವಿಂಬುಗೊಂಡು,
ಸದ್ಭಾವನೆಯೆ ಪ್ರಸನ್ನವಾಗಿ
ಚಿದ್ಬಿಂದುವಿನೊಳು ಪ್ರತಿಬಿಂಬಿಸುತ್ತಿಪ್ಪ ಚಿದ್ಬ್ರಹ್ಮವನೊಳಕೊಂಡ
ಮಹಾಶರಣರ ತೋರಿಸಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ,
ನಿಮ್ಮ ಧರ್ಮ ನಿಮ್ಮ ಧರ್ಮ./316
ರಸವನುಗುಳ್ದು ಕಸವನಗಿವವನಂತೆ,
ಕೈಯ ಪಿಂಡವ ಬಿಟ್ಟು ಒಣಗೈಯ್ಯ ನೆಕ್ಕುವನಂತೆ,
ತಾಯ ಮೊಲೆವಾಲನೊಲ್ಲದೆರೆವಾಲಿಂಗೆಳಸುವನಂತೆ,
ಅಮೃತಾಹಾರ ಮುಂದಿಟ್ಟಿರಲು ಮನ ಹೇವರಿಕೆಯ ಬಿಡದವನಂತೆ,
ದೀಪವ ಹಿಡಿದು ಮುಂದುಗಾಣದಿಹ ಪರಿಯ ನೋಡಾ ಅಯ್ಯಾ.
ತನ್ನಲ್ಲಿ ಗುರುಲಿಂಗಜಂಗಮವಿರಲನ್ಯವಿಟ್ಟರಸುವ ಭಿನ್ನಜ್ಞಾನವ ನೋಡಾ.
ಸೌರಾಷ್ಟ್ರ ಸೋಮೇಶ್ವರಲಿಂಗಸಂಗ ಹಿಂಗದಿರಲು
ವೇಷಭೂಷಣಂಗಳಾಸೆಯ
ನೋಡಾ./317
ರಸವುಂಡ ಅಂಗದಲ್ಲಿ
ಆ ರಸ ಅಸಿಧಾರೆ, ಎಲ್ಲೆಲ್ಲಿ ಮುಟ್ಟಿದರಲ್ಲಲ್ಲಿಗೆ ಬಂದಾನುವಂತೆ,
ಲಿಂಗಗ್ರಾಹಕನಾಗಿ ಮುಖಮುಖದಿಂದ್ರಿಯಂಗಳಲ್ಲಿ
ಲಿಂಗವೇ ಸಕಲಸುಖವನಾಂತು ಭೋಗಿಪ್ಪುದಾಗಿ
ಅರ್ಪಿಸಲಿಲ್ಲದ ಪ್ರಸಾದಿ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ. /318
ರಾಗದ್ವೇಷರಹಿತನಾಗಿ ಮೋಹಕ್ಕೆ ಕಾರಣ ಶೋಕ,
ಶೋಕಕ್ಕೆ ಕಾರಣ ಮೋಹನವೆಂದರಿದು
ಸುಖ-ದುಃಖ ಶೋಕ-ಮೋಹಂಗಳ ಸಮಾನಂಗಂಡು,
ಇದಕ್ಕೆ ಶ್ರುತಿ: `ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ |’
ಎಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು ಷಡೂರ್ಮೆರಹಿತರು./319
ರೂಪು ರುಚಿ ತೃಪ್ತಿಗಳು ಬೇಸರವಿಲ್ಲದೆ ಇರ್ಪ ಮರ್ಮವನರಿತು,
ಒಡನೊಡನೆ ಒಡಲ ಗುಣಂಗಳನಳಿದು, ಆವಲಿಂಗನಿವೇದನದಿಂದ
ವಿಧಲಿಂಗದಲ್ಲಿ ತೆರಹಿಲ್ಲದರ್ಪಿತ ಸಾವಧಾನ ಸನ್ನಹಿತ ಪ್ರಸಾದಿ,
ಸೌರಾಷ್ಟ್ರ ಸೋಮೇಶ್ವರಲಿಂಗದ ಪ್ರಸಾದಿ./320
ಲಯಭೋಗಾಧಿಕಾರವನುಳ್ಳ ಪರಶಿವನು
ತಾನೆ ತತ್ವಪ್ರಭಾವಮೂರ್ತಿಯೆನಿಸಿನದಫವ್ಯಯ ಅಪ್ರಮಾಣ
ಅಸಾಧ್ಯ ನಿಷ್ಕಲತತ್ವವೆ
ಪಂಚಸಂಜ್ಞೆಯಿಂದಿಪ್ಪುದು, ಅದೆಂತೆಂದಡೆ: ಜಗತ್ಸೃಷ್ಟಿಗಾದಿ, ಅಷ್ಟತನುಗಳಿಗಾದಿ, ತ್ರಿಮೂರ್ತಿಗಳಿಗಾದಿ,
ಷಟ್ತ್ರಿಂಶತತ್ವಕ್ಕಾದಿ, ಈಶ್ವರ ಸದಾಶಿವಗಾದಿಯಾಗಿಪ್ಪ,
ಮೇಲಣ ಪರತತ್ವವೆ ಪರ ಅನಂತಕೋಟಿ ಬ್ರಹ್ಮಾಂಡಗಳೊಳಗೆಡವಿಡದೆ
ಚರಾಚರವೆನಿಸುವ ಪ್ರಾಣಿಗಳೊಳಗೆ ಸೂಕ್ಷ್ಮವಾಗಿ,
ವಟವೃಕ್ಷದೊಳಡಗಿಪ್ಪ ಬೀಜದಂತೆ ಗೂಢವಾಗಿ,
ಆರಿಗೂ ಹಡೆಯಬಾರದೆ ವಿಶ್ವಕ್ಕೆ ಕಾರಣವಾಗಿಹುದೆ ಗೂಢ.
ತನ್ನೊಳಗೆ ಶಿವಶಕ್ತಿಗಳ ಶರೀರ ಘಟಿಸಿ
ಚರಾಚರಂಗಳು ಸ್ತ್ರೀಪುಂನನಪುಂಫಸಕವೆಂಬ ಮುದ್ರೆಯಿಂದ
ಬಹುನಾಮಂಗಳಿಂದ ತನ್ನೊಳಗಿಪ್ಪ ಕಾರಣ ಶರೀರಸ್ಥ.
ತನ್ನೊಳಗಿಹ ಮಾಯೆಯಿಂದ
ಜಗತ್ಸೃಷ್ಟಿ ಮೊದಲಾದ ಸಕಲಪ್ರಪಂಚ ತೋರಿ
ಆ ಪ್ರಪಂಚಿಂಗೆ ತಾನೆ ಭೂಮಿಯಾಗಿ ಎಲ್ಲವ ತನ್ನೊಳಗಿಂಬಿಟ್ಟು
ತಾನೆನ್ನದ ಅಭಿನ್ನದಿಂದಹುದೆ ಲಿಂಗಕ್ಷೇತ್ರ.
ಈಶ್ವರ ಸದಾಶಿವರು ಮೊದಲಾದ ಅನಂತದೇವಾತ್ಮಮೂರ್ತಿಗಳ
ಜನನಂಗಳಾದಿಯಿಂದತ್ತತ್ತಲಿಪ್ಪುದೆ ಅನಾದಿ.
ಇಂತಪ್ಪ ಪಂಚಸಂಜ್ಞೆಯನುಳ್ಳ ಲಿಂಗವನರಿತ ಲಿಂಗೈಕ್ಯಂಗೆ
ನಮೋ ನಮೋ ಎಂಬೆನಯ್ಯಾ, ಸೌರಾಷ್ಟ್ರ ಸೋಮೇಶ್ವರಾ./321
ಲಿಂಗದ ಸಂಗದಲ್ಲಿಪ್ಪ ಅಂಗ ಹಿಂಗದೆ
ಅಂಗಜನ ಸರಳಿಂಗೆ ಭಂಗವಾಗದ ಅಭಂಗಂಗೆ
ಗಂಗೆ ಗೋದಾವರಿ ತುಂಗಭದ್ರೆಯ ಸಂಗಮದ ಸಂಗದ
ಆಲಿಂಗನದ ಹಂಗು ಸಂಘಟಿಸಲುಂಟೆ ?
ಸಂಗ ನಿಸ್ಸಂಗವೆಂಬುಭಯ ಸಂಗವಳಿದ
ನಿರಂಗ ನಿರುಪಾಧಿಕ ನಿರಂಜನ ನಿರಾಶ್ರಯ ನಿರ್ಮಳ ನಿಃಕಲ ನಿಶ್ಚಲ
ನಿರವಯ ನಿರ್ಭಿನ್ನ ನಿರುಪಮ್ಯ ನಿರ್ವಿಕಲ್ಪ ನಿರಹಂಕಾರ
ನಿರಪೇಕ್ಷ ನಿರವಸ್ಥ ನಿರ್ಮೊಹಿ ನಿರ್ಮಾಯ
ನಿರಾವರಣ ನಿರಾಲಂಬ ನಿತ್ಯನಿರಾಳ ನಿಃಪ್ರಿಯ
ನೀನೆ ಸೌರಾಷ್ಟ್ರ ಸೋಮೇಶ್ವರಾ./322
ಲಿಂಗಪ್ರಸಾದ ತನಗಾಗಬೇಕೆಂಬ ಪ್ರಸಾದಿ
ಶಬ್ದ ಸ್ಪರ್ಶ ರೂಪು ರಸ ಗಂಧಂಗಳ
ತನ್ನ ತನುಕರಣಂಗಳ ಮುಟ್ಟಲೀಯದೆ,
ಅಂಗ ಮುಂದಾಗಿ ಮನ ಹಿಂದಾಗಿ ಅಂಗಭಾವವಳಿದು
ಅರ್ಪಿಸಿಕೊಳಬಲ್ಲಡೆ ಪ್ರಸಾದಿ.
ಆ ಪ್ರಸಾದಿಯ ಪರಮಪರಿಣಾಮವೆ ಪ್ರಸಾದ.
ಎಂತೆಂದಡೆ: `ಸಾಖ್ಯಾಶ್ಶತಗುಣಾಧಿಕಂ ಯತ್ಪ್ರಸಾದೀ ಚ ಪ್ರೋಚ್ಯತೇ’
ಎಂದುದಾಗಿ, ಇದೇ ಆದಿಪ್ರಸಾದವಯ್ಯಾ, ಸೌರಾಷ್ಟ್ರ ಸೋಮೇಶ್ವರಾ./323
ಲಿಂಗವೇ ಪ್ರಾಣವಾಗಿ ಪ್ರಾಣಲಿಂಗವೆಂಬ ಪ್ರಪಂಚನರಿಯನಯ್ಯಾ !
ಘನವೇ ಮನದಲ್ಲಿ ವೇಧಿಸಿ, ಮನ ಲಿಂಗಲೀಯವಾಗಿ
ನೆನಹಿನ ಸಂಕಲ್ಪ ಕ್ರೀ ನಿಃಷ್ಪತ್ತಿಯಾಗೆ,
ಅಂಗಲಿಂಗವೆಂಬ ಭಾವ ಬಗೆಗೆಟ್ಟು,
ಲಿಂಗವೇ ಸರ್ವಾಂಗಮುಖವಾದ ಸೌರಾಷ್ಟ್ರ ಸೋಮೇಶ್ವರಾ,
ನಿಮ್ಮ ಶರಣನ ಸ್ವತಂತ್ರತೆಯ ಗತಿಯ ನೋಡಾ./324
ಲಿಂಗಶರಣನ ಪಂಚೇಂದಿಂ್ರಯಂಗಳು ಲಿಂಗಮುಖವಾಗಿ ನಿಂದು,
ಮನಸಹಿತ ಪಂಚವಿಷಯಂಗಳಖಿಲಸುಖಂಗಳ ಲಿಂಗಾರ್ಪಿತದಿಂದ ಚರಿಸುತ್ತ
ಬೇರೆ ಮತ್ತೊಂದು ದೆಸೆ ಇಲ್ಲದೆ ನಿಂದಿಹವು,
ಸೌರಾಷ್ಟ್ರ ಸೋಮೇಶ್ವರಲಿಂಗ ನಿವಾಸಿಯಾದ ಶರಣಂಗೆ./325
ಲಿಂಗೋದಕ ಪಾದೋದಕ ಪ್ರಸಾದೋದಕವಾದ ತ್ರಿವಿಧೋದಕದಲ್ಲಿ
ಲಿಂಗೋದಕದಿಂದ ಸಂಚಿತಕರ್ಮವಿಲ್ಲ.
ಪಾದೋದಕದಿಂದ ಪ್ರಾರಬ್ಧಕರ್ಮವಿಲ್ಲ.
ಪ್ರಸಾದೋದಕದಿಂದ ಆಗಾಮಿಕರ್ಮವಿಲ್ಲ.
ಇಂತೀ ತ್ರಿವಿಧೋದಕದಿಂದ
ಬ್ರಹ್ಮಹತ್ಯ ಭ್ರೂಣಹತ್ಯ ಪಾಪಪಂಕಪ್ರಕ್ಷಾಲನವಯ್ಯಾ,
ಸೌರಾಷ್ಟ್ರ ಸೋಮೇಶ್ವರಾ./326
ವಾಯುವಿನ ಹಸ್ತದಲ್ಲಿ ಸೊಡರಿದ್ದು ಬೆಳಗಬಲ್ಲುದೆ ?
ಉರಿಯ ಮುಖದಲ್ಲಿ ಕರ್ಪುರವಿದ್ದು ಜೀವಿಸಬಲ್ಲುದೆ ?
ಸೌರಾಷ್ಟ್ರ ಸೋಮೇಶ್ವರನ ಶರಣರ ಮುಂದೆ
ಕರಣಮಥನ ಇಂದ್ರಿಯದಿಚ್ಛೆ ತನುಗುಣ ಮನಗುಣ
ಪ್ರಾಣಗುಣಾದಿ ಗಳಿರಬಲ್ಲವೆ ?/327
ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವಿಡಿದ
ಸ್ಥೂಲ ಸೂಕ್ಷ್ಮ ಕಾರಣ ತನುವಿನ
ಸುಬುದ್ಧಿ ಸುಮನ ಸದ್ಭಾವವೆಂಬ ಹಸ್ತದಿಂ
ಕರ್ಮ ಭಕ್ತಿ ಜ್ಞಾನ ತತ್ವದಿಂದೊದಗಿದ ಪದಾರ್ಥವ
ಇಷ್ಟ ಪ್ರಾಣ ತೃಪ್ತಿಲಿಂಗಕ್ಕೆ
ಕಾಯಾರ್ಪಣ ಕರಣಾರ್ಪಣ ಭಾವಾರ್ಪಣದಿಂದರ್ಪಿಸಿಕೊಂಬ
ಪ್ರಸಾದ ಪಿಂಡೇಂದ್ರಿಯದ್ವಾರ ಸಂಚಲಕ್ಕವಧಿಯಾಯಿತ್ತು.
ಪಿಂಡ ಬ್ರಹ್ಮಾಂಡವ ಮೀರಿ ತೋರುವ ಮಹಾಘನವೆ ನಿಜವಾಗಿ
ನಿಜವಗಣಿತ ಅನುಪಮ ಅತಕ್ರ್ಯ
ಅದ್ವಯಲಿಂಗಕ್ಕೆ ಅರ್ಪಿಸಲೊಂದಿಲ್ಲ, ಅನರ್ಪಿತ ಹೊದ್ದದಾಗಿ.
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು ಅಚ್ಚ ಪ್ರಸಾದಿಗಳು./328
ವೀರಶೈವ, ಶುದ್ಧಶೈವವೆಂಬುಭಯ ಪಕ್ಷದ
ನಿರ್ಣಯ ನಿಷ್ಪತ್ತಿಯೆಂತೆಂದಡೆ: ಮಲ ಮಾಯಾ ಮಲಿನವನು
ಶ್ರೀಗುರು ತನ್ನ ಕೃಪಾವಲೋಕನದಿಂದದನಳಿದು,
ನಿರ್ಮಲನಾದ ಶಿಷ್ಯನ ಉತ್ತಮಾಂಗದಲ್ಲಿಹ ಪರಮಚಿತ್ಕಳೆಯನು
ಹಸ್ತಮಸ್ತಕಸಂಯೋಗದ ಬೆಡಗಿನಿಂದ ತೆಗೆದು,
ಆ ಮಹಾಪರಮ ಕಳೆಯನು ಸ್ಥಲದಲ್ಲಿ ಕೂಡಿ,
ಮಹಾಲಿಂಗವೆಂದು ನಾಮಕರಣಮಂ ಮಾಡಿ,
ಶಿಷ್ಯನಂಗದ ಮೇಲೆ ಬಿಜಯಂಗೆಯಿಸಿ,
ಕರ್ಣದ್ವಾರದಲ್ಲಿ ಪ್ರಾಣಂಗೆ ಆ ಮಹಾಲಿಂಗವ ಜಪಿಸುವ
ಪ್ರಣವಪಂಚಾಕ್ಷರಿಯನು ಪ್ರವೇಶವಂ ಮಾಡಿ,
ಅಂಗಪೀಠದಲ್ಲಿರಿಸಿ,
ಅಭಿನ್ನಪ್ರಕಾಶವಾದ ಪೂಜೆಯ ಮಾಡಹೇಳಿದನು,
ಇದೀಗ ವೀರಶೈವದ ಲಕ್ಷಣವೆಂದರಿವುದು.
ಇನ್ನು ಶುದ್ಧಶೈವಂಗೆ ಗುರು ತನ್ನ ನಿರೀಕ್ಷಣ ಮಾತ್ರದಲ್ಲಿ
ಅವನ ಶುದ್ಧಾಂಗನ ಮಾಡಿ,
ಆತನ ಕರ್ಣದ್ವಾರದಲ್ಲಿ ಪಂಚಾಕ್ಷರಿಯನುಪದೇಶವಂ ಮಾಡಿ,
ಸ್ಥಾವರಲಿಂಗಪೂಜಕನಾಗಿರೆಂದು ಲಿಂಗವನು ಕೊಟ್ಟು,
ಭೂಪೀಠದಲ್ಲಿರಿಸಿ ಅರ್ಚನೆ ಪೂಜನೆಯ ಮಾಡೆಂದು ಹೇಳಿದನು.
ಹೇಳಲಿಕ್ಕಾಗಿ ಶುದ್ಧಶೈವನೆ ಪೀಠದಲ್ಲಿರಿಸಿ
ಭಿನ್ನಭಾವಿಯಾಗಿ ಅರ್ಚನೆ ಪೂಜೆನೆಯಂ ಮಾಡುವನು.
ವೀರಶೈವನು ಅಂಗದ ಮೇಲೆ ಧರಿಸಿ ಅಬಿನ್ನಭಾವದಿಂದ
ಅರ್ಚನೆ ಪೂಜನೆಯಂ ಮಾಡುವನು.
ಶುದ್ಧಶೈವಂಗೆ ನೆನಹು, ವೀರಶೈವಂಗೆ ಸಂಗವೆಂತೆಂದಡೆ: ಅತ್ಯಂತ ಮನೋರಮಣನಪ್ಪಂತಹ ಪುರುಷನ ಒಲುಮೆಯಲ್ಲಿಯ ಸ್ತ್ರೀಗೆ
ನೆನಹಿನ ಸುಖದಿಂದ ಸಂಗಸುಖವು ಅತ್ಯಧಿಕವಪ್ಪಂತೆ
ಶುದ್ಧಶೈವದ ನೆನಹಿಂಗೂ
ವೀರಶೈವದಲ್ಲಿಯ ಸಂಗಕ್ಕೂ ಇಷ್ಟಂತರ.
ಆ ಲಿಂಗದಲ್ಲಿ ಶುದ್ಧಶೈವನ ನೆನಹು
ನಿಷ್ಪತ್ತಿಯಾದಡೆ ಸಾರೂಪ್ಯನಹನು.
ಆ ಲಿಂಗದಲ್ಲಿ ವೀರಶೈವನ ನೆನಹು
ನಿಷ್ಪತ್ತಿಯಾದಡೆ ಸಾಯುಜ್ಯನಹನು
ಅದು ಕಾರಣ, ಸ್ಥಾವರಲಿಂಗದ ಧ್ಯಾನಕ್ಕೂ
ಪ್ರಾಣಲಿಂಗದ ಸಂಗಕ್ಕೂ ಇಷ್ಟಂತರ.
ಸ್ಥಾವರಲಿಂಗದ ಧ್ಯಾನದಿಂದ ಸಾರೂಪ್ಯಪದವನೈದಿದ ತೆರನೆಂತೆಂದಡೆ: ಕೀಟನು ಭ್ರಮರಧ್ಯಾನದಿಂದ ಆ ಭ್ರಮರರೂಪಾದಂತೆ
ಶೈವನು ಶಿವಧ್ಯಾನದಿಂದ ಶಿವನ ಸಾರೂಪ್ಯಪದವನೈದಿ
ಇದಿರಿಟ್ಟು ಬಿನ್ನಪದದಲ್ಲಿರುತ್ತಿಹನು.
ಮತ್ತಂ, ವೀರಶೈವನು ಜಂಗಮಾರ್ಚನೆಯಂ ಮಾಡಿ
ಪ್ರಾಲಿಂಗಸಂಬಂಧದಿಂ ಸಾಯುಜ್ಯಪದವನೆಯ್ದಿದ ತೆರನೆಂತೆಂದಡೆ: ಅಗ್ನಿಯ ಸಂಗವ ಮಾಡಿದ ಕರ್ಪುರ ನಾಸ್ತಿಯಾದ ಹಾಂಗೆ,
ಈತನು ಶಿವನಲ್ಲಿ ಸಾಯುಜ್ಯಪದವನೈಯ್ದಿ
ರೂಪುನಾಸ್ತಿಯಾಗಿ ಶಿವನೆಯಹನು.
ಇದು ಕಾರಣ ಶುದ್ಧಶೈವ ವೀರಶೈವದಂತರ ಮಹಾಂತರ,
ಈ ಪ್ರಕಾರ ಕಾಣಾ, ಸೌರಾಷ್ಟ್ರ ಸೋಮೇಶ್ವರಾ./329
ವೇದಂಗಳ ಹಿಂದೆ ಹರಿಯದಿರು ಹರಿಯದಿರು.
ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು.
ಪುರಾಣಂಗಳ ಹಿಂದೆ ಬಳಸದಿರು ಬಳಸದಿರು.
ಆಗಮಂಗಳ ಹಿಂದೆ ತೊಳಲದಿರು ತೊಳಲದಿರು.
ಸೌರಾಷ್ಟ್ರ ಸೋಮೇಶ್ವರನ ಕೈವಿಡಿದು
ಶಬ್ದಜಾಲಂಗಳಿಗೆ ಬಳಲದಿರು, ಬಳಲದಿರು./330
ವೇದವಿತ್ತುಗಳು ಅಗ್ನಿಪುರುಷನೆ ದೇವರೆಂಬರಯ್ಯಾ.
ಶಾಸ್ತ್ರವಿತ್ತುಗಳು ಪಾಷಾಣವನೆ ದೇವರೆಂಬರಯ್ಯಾ.
ಆತ್ಮವಿತ್ತುಗಳು ಆತ್ಮನೆ ದೇವರೆಂಬರಯ್ಯಾ.
ಶಬ್ದವಿತ್ತುಗಳು ಸಮಯಂಗಳನೆ ದೇವರೆಂಬರಯ್ಯಾ
ಇವರೆಲ್ಲರೂ ನಮ್ಮ ಸೌರಾಷ್ಟ್ರ ಸೋಮೇಶ್ವರಲಿಂಗದ ನಿಜವನರಿಯದೆ
ಜವನ ಜಾಡ್ಯಂಗಳಿಂ ಭವಭಾರಿಗಳಾದರಯ್ಯಾ./331
ವೇದಶಾಸ್ತ್ರಪುರಾಣಂಗಳ ಗತಿಯಲ್ಲಿ ನಡೆದು
ತಪ್ಪಿತ್ತೆಂಬವನಲ್ಲ ಶರಣ.
ಲಿಂಗದ ಹೆಸರ ಹೇಳಿ ಫಲಪದವೆಂಟತೋರಿ
ಮಾರುವನಲ್ಲ ಶರಣ.
ಅಚೇತನವ ಚೇತನಿಸುವ ಪೂರ್ವಕರ್ಮವಿಡಿದು
ಆಚರಿಸುವವನಲ್ಲ ಶರಣ.
ಆರು ಮೂರಕ್ಕೆ ತಂದು, ತ್ರಿವಿಧವನೊಂದು ಮಾಡಿ
ಬಿಚ್ಚಿ ಬೇರಿಲ್ಲದೆ ಬೆರಸಿ, ಒಂದಿಲ್ಲದಿರಬಲ್ಲನಾಗಿ
ತರ್ಕಂಗಳಿಗೆ ಅತಕ್ರ್ಯ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ./332
ವೇದಾಗಮಂಗಳ ದ್ವೈತಾದ್ವೈತದ ಬಗೆಗೆ ನಿಲುಕುವನಲ್ಲ,
ಅತಕ್ರ್ಯನು ಅಖಿಲಾತೀತನು ಚರಾಚರಕ್ಕೆ ಸಿಲುಕುವನಲ್ಲ.
ಅತ್ಯತಿಷ್ಠದ್ದಶಾಂಗುಲನು,
ಅಹಂಕಾರವೈದದ ಅನುಪಮನು.
ಸ್ಥಾವರಜಂಗಮವಲ್ಲದ ಭರಿತನು.
ಸರ್ವಜ್ಞ ಸರ್ವಕತರ್ೃ ಸೌರಾಷ್ಟ್ರ ಸೋಮೇಶ್ವರನಲ್ಲಿ
ಅವಿರಳನಾದ ಶರಣ./333
ವೇದಾಗಮಂಗಳು ಹೋದ ಸರಣಿಯಲ್ಲಿ ಹೋದರಲ್ಲದೆ
ದ್ವೈತಾದ್ವೈತಕ್ಕೆ ನಿಲುಕದ ನಿಜವ ಕಂಡವರಾರನೂ ಕಾಣೆ.
ವಾಣಿಯ ಹಂಗಿನಲ್ಲಿ ಉಲಿದುಲಿದು ಹೋದರಲ್ಲದೆ
ಉಲುಹಡಗಿದ ನಿಲವ ಕಂಡವರಾರನೂ ಕಾಣೆ.
ತನು ಕರಣ ಭುವನ ಭೋಗಂಗಳ ಕಂಡಲ್ಲದೆ
ಸೌರಾಷ್ಟ್ರ ಸೋಮೇಶ್ವರಲಿಂಗದುಳುಮೆಯ ಕಂಡು
ಸುಖಿಯಾದವರಾರನೂ ಕಾಣೆ./334
ವೈದಿಕರಪ್ಪ ವೇದವಿತ್ತುಗಳೊಂದು ಕೋಟಿಗೆ
ಅನ್ನವನಿಕ್ಕಿದ ಫಲಕ್ಕೆ ಕೋಟಿ ಮಿಗಿಲು
ಶಿವಶರಣಂಗೆ ಒಂದು ಭಿಕ್ಷವನಿಕ್ಕಿದ ಫಲ.
ಕೋಟಿ ಯಜ್ಞ ಕೋಟಿ ಕನ್ಯಾದಾನದ ಫಲಕ್ಕೆ ಮಿಗಿಲು
ಒಬ್ಬ ಭಸ್ಮಾಂಗಿಯ ಒಂದು ವೇಳೆಯ ತೃಪ್ತಿ.
ಅದೆಂತೆಂದೊಡೆ: ಕ್ಷೀರಕುಂಭಸಹಸ್ರೇಣ ಘೃತಕುಂಭಶತೇನ ಚ
ಭಸ್ಮಧಾರಿಣಿನಸುಫಭಿಕ್ಷಾತಃ ಕೋಟಿಯಜ್ಞ ಫಲಂ ಭವೇತ್
ಎಂದುದಾಗಿ,
ಚತುರ್ವೆದಿಗಳಿಗೆ ಮೃಷ್ಟಾನ್ನವನಿಕ್ಕಿ ಅಕ್ಷಪಾದಂಗೆ ಗೋವೇಧೆಯಾಯಿತ್ತು.
ಒಬ್ಬ ಶಿವಗಣನಾಥಂಗೆ ಚೋಳ ದಾಸರು ಉಣಲುಡಲಿತ್ತು,
ಯೊಡನೆ ಹೊಮ್ಮಳೆ ತವನಿಧಿಯ ಪಡೆದರು.
ಇದು ಕಾರಣ,
ನೆಮ್ಮುಗೆವಿಡಿದು ಮಾಡುವ ಭಕ್ತಂಗಿದೆ ಮಾಟವಯ್ಯಾ,
ಸೌರಾಷ್ಟ್ರ ಸೋಮೇಶ್ವರಾ./335
ವ್ಯಾಪಕಾಕ್ಷರದಲ್ಲಿ ನಾಲ್ಕಕ್ಷರ, ಸ್ಪರ್ಶನಾಕ್ಷರದಲ್ಲಿ ಏಕಾಕ್ಷರ,
ಇಂತೀ ಪಂಚಾಕ್ಷರವೆ ಪಂಚಬ್ರಹ್ಮಸ್ವರೂಪವು
ಶಿವಜ್ಞಾನಕ್ಕೆ ಮೂಲವೆಂದರಿತು,
ಮೂಲಪಂಚಾಕ್ಷರ, ಸ್ಥೂಲಪಂಚಾಕ್ಷರ, ಸೂಕ್ಷ್ಮಪಂಚಾಕ್ಷರ
ಮಾಯಾಖ್ಯಪಂಚಾಕ್ಷರ, ಪ್ರಸಾದಪಂಚಾಕ್ಷರವೆಂಬ
ಪಂಚಪಂಚಾಕ್ಷರದ ಸ್ವರೂಪನರಿತು ಪಂಚಾಕ್ಷರವ ಜಪಿಸಲು
ಸೌರಾಷ್ಟ್ರ ಸೋಮೇಶ್ವರಲಿಂಗವಪ್ಪುದು ತಪ್ಪದಯ್ಯಾ./336
ಶಬ್ದಶಾಸ್ತ್ರ ತಕರ್ಾಗಮಂಗಳ ಹೇಳಿ ಕೇಳಿ,
ಕಲಿತುಲಿದವರೆಲ್ಲಾ ವಿದ್ಯಾಗೂಡಾದರಲ್ಲದೆ,
ಲಿಂಗಗೂಡಾದುದಿಲ್ಲ ನೋಡಯ್ಯಾ.
ಕಲಿಕಲಿತು ಉಲಿವ ಅಭ್ಯಾಸದ ಮಾತಿಂಗೆ
ಮರುಳಪ್ಪರೆ ನಮ್ಮ ಶಿವಶರಣರು.
ಆದಿ ಅನಾದಿಗಭೇದ್ಯವಾದ ನಿಜವ ಭೇದಿಸಲರಿತು
ಮನ ಘನದಲ್ಲಿ ನಿವಾಸಿಯಾಗಬೇಕು.
ಮನ ಘನದಲ್ಲಿ ನಿವಾಸಿಯಾಗದೆ
ಸೌರಾಷ್ಟ್ರ ಸೋಮೇಶ್ವರಲಿಂಗವ ಬಲ್ಲೆನೆಂದು ನುಡಿವ
ಬರಿ ಮಾತಿನ ಬಾಯ ಬಣ್ಣದ ಸೊಲ್ಲು, ಸಲ್ಲದೆ ಹೋಯಿತ್ತು./337
ಶಬ್ದಶಾಸ್ತ್ರ ಶ್ರುತಿಸ್ಮೃತಿಗೆ ವಾಙ್ಮ[ಹ]ವೊ ? ಮಹವೊ ?
ಬಲ್ಲಡೆ ನೀವು ಹೇಳಿರೆ.
ಸೌರಾಷ್ಟ್ರ ಸೋಮೇಶ್ವರಲಿಂಗವೆಂಬುದು ಕಲ್ಪನೆಯಿಂ ಕಾಣ್ಬುದು
ಕನಸೊ ? ನನಸೊ ? ಬಲ್ಲಡೆ ನೀವು ಹೇಳಿರೆ.
ಸೌರಾಷ್ಟ್ರ ಸೋಮೇಶ್ವರ ಲಿಂಗವೆಂಬುದು
ಸ್ವಯವೊ ? ಪರವೊ ? ಬಲ್ಲಡೆ ನೀವು ಹೇಳಿರೆ./338
ಶರೀರಧಾರಕನಾಗಿ ಇಂದ್ರಿಯಂಗಳಿಚ್ಛೆಯಲ್ಲಿ ಸುಳಿವನಲ್ಲ.
ಲಿಂಗದಿಚ್ಛೆ ಎಂದಿಪ್ಪನಾಗಿ ಸಂಕಲ್ಪವಿಕಲ್ಪವ ಹೊದ್ದ.
ನಿಸ್ಸಂದೇಹಿಯಾಗಿ ಸಕಲದೊಡಗೂಡಿರ್ದು ಮಾಯಾಪಾಶರಹಿತ.
ಕರ್ಮದ ಕಟ್ಟ ಹರಿದಲ್ಲಿ ನಿರ್ಮುಕ್ತ.
ಅಚ್ಚ ಸುಖಿ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ./339
ಶಿವತತ್ವ ಶಿವಜ್ಞಾನ ಶಿವೈಕ್ಯವಪ್ಪ ತ್ರಿವಿಧವನರಿಯಬಲ್ಲಡೆ
ಅದು ವರ್ಮ, ಅದು ಸಂಬಂಧ.
ಶಿವಾದಿ ಪೃಥ್ವಿಯಂತವಪ್ಪ ತತ್ವಾಧ್ವವನರಿತು
ತತ್ವಜ್ಞಾನಿಯಾಗಬಲ್ಲಡೆ ಅದು ವರ್ಮ, ಅದು ಸಂಬಂಧ.
ಬ್ರಹ್ಮಾನುಸಂಧಾನದಿಂದವಿನಾಭಾವವನೆಯ್ದಿ ಶಿವೈಕ್ಯವಾಗಬಲ್ಲಡೆ
ಸಾರಾಷ್ಟ್ರ ಸೋಮೇಶ್ವರಲಿಂಗದಲ್ಲಿ
ಅದು ವರ್ಮ, ಅದು ಸಂಬಂಧ./340
ಶಿವತತ್ವದ ಮೂಲಾಧಾರದ ಜ್ಞಾನಶಕ್ತಿಯೆ ಚಿದ್ವಿಭೂತಿ.
ಈ ಚಿದ್ವಿಭೂತಿ ಎನ್ನಂತರಂಗದಲ್ಲಿ ಲೇಪವಾಗಿ
ತೊಳತೊಳಗಿ ಬೆಳಗುವ ಬೆಳಗಿನಲ್ಲಿಯೇ
ಆನು ನಿಮ್ಮ ಕಂಡು ಬದುಕಿದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ./341
ಶಿವಪಥವನರಿದು, ಲಿಂಗನಿಷ್ಠೆಯಿಂದೇಕೋಭಾವ ಬಲಿದು,
ಕರಿಗೊಂಡು, ಘನವೇದ್ಯವಾಗಿ ನಿಂದು, ನಿಜವ ನೆಮ್ಮಿ,
ಸಚ್ಚಿದಾನಂದಸುಖಮಯನಾಗಿ,
ಮಾಯೆ ಕೆಟ್ಟು, ಮರವೆ ಬಿಟ್ಟು, ಮರಣವಳಿಯಬೇಕು.
ಇದಲ್ಲದೆ ಬಿಂದುವಿಂದಾದ ತ್ರಿಬದ್ಧಕ್ರಿಯೆ ಎಂದರಿಯದೆ
ಬಾಹ್ಯಕ್ರೀಯೊಳೊಂದಿದಡೆ,
ಸುರಪ, ಹರಿ, ವಿರಿಂಚಿಗಳಾದಡೂ ಮಾಯೆ ಕೆಡದು, ಮರವೆ ಬಿಡದು.
ಮೃತ್ಯುವಗಿದು ಕಾಲನ ಬಾಯಿಗೆ ಕೆಡಹದೆ ಮಾಣದಯ್ಯಾ.
ಇದ ಬಲ್ಲೆನಾಗಿ ನಾನೊಲ್ಲೆ, ಸೌರಾಷ್ಟ್ರ ಸೋಮೇಶ್ವರಾ./342
ಶಿವಭಕ್ತಿಯೆಂಬುದು ಯುಕ್ತಿಯ ಪರಿಯಂತಲ್ಲ, ಸಾಧಕದ ಪರಿಯಂತಲ್ಲ,
ಮೂಗರು ಕಂಡ ಕನಸಿನಂತಿಪ್ಪುದು ಕಾಣಿರೆ.ಹೇಳಿ ಕೇಳಿ ಮಾಡುವುದು ಯುಕ್ತಿಭಕ್ತಿ.
ಸಾಧಕಾಂಗದಿಂದ ಮಾಡುವುದು ಅಭ್ಯಾಸಭಕ್ತಿ.
ಮನ ಕೂತರ್ು ಮಾಡುವುದು ಮುಕ್ತಿಭಕ್ತಿ.
ಕೇಡಿಲ್ಲದೆ ಮಾಡುವುದು ನಿತ್ಯಭಕ್ತಿ.
ಇದ್ದಂತಿದ್ದು ನಿಜವ ಅಪ್ಪುವುದು ನಿಜಭಕ್ತಿ.
ಈ ನಿಜಭಕ್ತಿಯಲ್ಲಿ ಭರಿತರು
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು./343
ಶಿವಭಾವದಿಂದ ಆತ್ಮ ಹುಟ್ಟಿ, ಶಿವ ತಾನೆಂಬ ಉಭಯವನಲಂಕರಿಸಿದನಾಗಿ
ಆತ್ಮಂಗೆ ಭಾವನೆಂಬ ಹೆಸರಾಯಿತ್ತು.
ಆತ್ಮ ಬಂದು ಆಕಾಶವ ಕೂಡಿದಲ್ಲಿ ಜ್ಞಾನವೆಂಬ ಹೆಸರಾಯಿತ್ತು.
ಆತ್ಮ ಬಂದು ವಾಯುವ ಕೂಡಿದಲ್ಲಿ ಅಹಂಕಾರವೆಂಬ ಹೆಸರಾಯಿತ್ತು.
ಆತ್ಮ ಬಂದು ಅಪ್ಪುವ ಕೂಡಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು.
ಆತ್ಮ ಬಂದು ಪೃಥ್ವಿಯ ಕೂಡಿದಲ್ಲಿ ಚಿತ್ತೆಂಬ ಹೆಸರಾಯಿತ್ತು.
ಚಿತ್ತು ಆಚಾರಲಿಂಗವ ಧರಿಸಿಪ್ಪುದು.
ಬುದ್ಧಿ ಗುರುಲಿಂಗವ ಧರಿಸಿಪ್ಪುದು.
ಅಹಂಕಾರ ಶಿವಲಿಂಗವ ಧರಿಸಿಪ್ಪುದು
ಮನಸ್ಸು ಜಂಗಮಲಿಂಗವ ಧರಿಸಿಪ್ಪುದು.
ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು.
ಭಾವ ಮಹಾಲಿಂಗವ ಧರಿಸಿಪ್ಪುದು.
ಸೌರಾಷ್ಟ್ರ ಸೋಮೇಶ್ವರಲಿಂಗ ತಾನು ತಾನಾಗಿರಬೇಕು./344
ಶಿವಯೋಗಿಗೆ ಕರ್ಮವಿಲ್ಲ, ಶಿವಶರಣರ ಪಥ ಲಿಂಗಾದಿನ.
ಮತ್ತಾ ಲಿಂಗವಶನಾಗಿ ಆಯತ ಸ್ವಾಯತದಲ್ಲಿ
ಲಿಂಗಮಯವಾಗಿಪ್ಪ ಶಿವಜ್ಞಾನಿಗಳಿಗೆ
ಕರ್ಮವೆಡೆವೋಗಲೆಡೆಯಿಲ್ಲ.
ಹಿಂದಣ ಕರ್ಮ ಜ್ಞಾನಾಗ್ನಿಯಿಂದ ಉರಿದು ಭಸ್ಮವಾಯಿತ್ತು.
ಮುಂದಣ ಕರ್ಮ ನಿಂದೆವಂದಕರಲ್ಲಿ ಅಳಿಯಿತ್ತು,
ಇಂದಿನ ಕರ್ಮ ನಿಸ್ಸಂದೇಹದಲ್ಲಿ ಕೆಟ್ಟಿತ್ತು.
“ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ಕುರುತೇ ಮಮÙರÙರ
ಎಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು
ನಿಃಕರ್ಮಿಗಳಾಗಿ ಲಿಂಗಸುಖಿಗಳು./345
ಶಿವಲಾಂಛನವ ಧರಿಸಿ, ಚರಲಿಂಗಮೂರ್ತಿಯಾದ ಬಳಿಕ
ತ್ರಿಲೋಕಕ್ಕೆ ಕತರ್ುಭಾವದಿಂದಿರಬೇಕಲ್ಲದೆ
ಅಶನದ ಅಪ್ಯಾಯನ ವಿಷಯಂಗಳಿಗೆ
ಕಂಡಕಂಡವನರಫ ಕಂಡ ಕಂಡಲ್ಲಿ ಕರಕರದು ಕರಕರಿಸಿ
ಕಾಂಚಾಣಕ್ಕೆ ಕೈನೀಡುವ ಕಷ್ಟವ ನೋಡಾ.
ಉಪಾದಿಯಿಂದೊಡಲ ಹೊರೆವ ಪರಿಯ ನೋಡಯ್ಯಾ.
ಇಂತಿವೆಲ್ಲ ಭಂಗವೆಂದರಿತು ಅಭಂಗನಾಗಿರಬೇಕಯ್ಯಾ
ಸೌರಾಷ್ಟ್ರ ಸೋಮೇಶ್ವರಾ./346
ಶಿವಲಿಂಗಾರ್ಚನಾಕ್ರಿಯಾಶಕ್ತಿಗೆ
ಅಭ್ಯಾಸದ ಯೋಗದ ರತಿ ಸರಿಯಲ್ಲ ನೋಡ,
ಯೋಗದ ಬಲದಿಂದ ಸೇವಿಸುವ ಶ್ಲೇಷಾಮೃತವು
ಶಿವಪ್ರಸಾದಾಮೃತಕೆ ಸರಿಯಲ್ಲ ನೋಡ,
ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು
ಪ್ರಾಣಲಿಂಗೈಕ್ಯ ಸಂಬಂಧಸಂಯೋಗಕ್ಕೆ ಸರಿಯಲ್ಲ ನೋಡ.
ಶಿವಾನುಭಾವಕ್ಕೆ ಯೋಗಕ್ಕೆ ಇನಖದ್ಯೋತದಂತರವು ನೋಡಯ್ಯ
ಸೌರಾಷ್ಟ್ರ ಸೋಮೇಶ್ವರಾ./347
ಶಿಷ್ಟೋದನವ ಲಿಂಗಕ್ಕಿತ್ತು ಪ್ರಸಾದಭೋಗ ಮಾಡುವುದಯ್ಯಾ.
ರಸಾಯನವ ಲಿಂಗಕ್ಕಿತ್ತು, ಪಾನೀಯ ಮಾಡಲಿತ್ತು,
ಪ್ರಸಾದಪಾನೀಯ ಮಾಡುವುದಯ್ಯಾ,
ಸುಗಂಧವ ಲಿಂಗಕ್ಕೆ ಘ್ರಾಣಿಸಲಿತ್ತು, ಪ್ರಸಾದಗಂಧವ ಘ್ರಾಣಿಸುವುದಯ್ಯಾ.
ಇದಕ್ಕೆ ಶ್ರುತಿ: ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ
ರುದ್ರೇಣ ಘ್ರಾತಂ ಜಿಘ್ರಂತಿ
ಇಂತೆಂದುದಾಗಿ,
ಪಂಚೇಂದ್ರಿಯಮುಖದಲ್ಲಿ ಲಿಂಗಪ್ರಸಾದವಲ್ಲದೆ ಭೋಗಿಸ,
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ./348
ಶುಕ್ಲಕಶೋಣಿತದಿಂದ ತನು ಮನ ಜನಿಸಿತ್ತು.
ತನು ಮನದಿಂದ ನಡೆ ನುಡಿ ಜನಿಸಿತ್ತು.
ನಡೆ ನುಡಿಯಿಂದ ಅಹಂಕಾರ ಮಮಕಾರ ಜನಿಸಿತ್ತು.
ಇವರ ದೆಸೆಯಿಂದ ರಸ, ಗಂಧ, ರೂಪು, ಶಬ್ದ, ಸ್ಪರ್ಶನ ಜನಿಸಿತ್ತು.
ಇವಕ್ಕಾಶ್ರಯವಾಗಿ ಮನವೊಂದಿದ್ದಿತಲ್ಲದೆ
ಆ ಮನವು ಮಹದಲ್ಲಿ ಲಯವಾದಲ್ಲಿ ಆತ್ಮನಾವೆಡೆಯಲ್ಲಿದ್ದಿತ್ತೊ ?
ಷಡುವರ್ಣದೊಳಗಲ್ಲ ನಡೆ ನುಡಿ ಚೈತನ್ಯವಲ್ಲ.
ಹಿಡಿತಕ್ಕೆ ಬರಲಿಲ್ಲ ಇನ್ನೆಂತಿಪ್ಪುದೊ ?
ದರ್ಪಣದ ಪ್ರತಿಬಿಂಬಕ್ಕೊಂದು ಚೇಷ್ಟೆಯುಂಟೆ ?
ನೆಳಲಿಗೊಂದು ಹರಿದಾಟವುಂಟೆ ?
ನಿಃಕಳಂಕ ಶಾಂತಮಲ್ಲಿಕಾರ್ಜುನಯ್ಯಾ, ಮನದ ನೆನಹೇ ಆತ್ಮನಲ್ಲದೆ
ಬೇರಾತ್ಮನಿಲ್ಲ ಕಾಣಾ, ಸೌರಾಷ್ಟ್ರ ಸೋಮೇಶ್ವರಾ./349
ಶುಕ್ಲಶೋಣಿತದಲ್ಲಿ ಬಲಿದ ಕರುಳು
ಕತ್ತಲೆಯಲ್ಲಿ ಬೆಳೆದು, ಮೂತ್ರನಾಳದಲ್ಲಿಳಿದು,
ಕರ್ಮವೆ ಕತರ್ುವಾಗಿ, ಕಪಟವೆ ಆಶ್ರಯವಾಗಿ,
ಕೇವಲಜ್ಞಾನಶೂನ್ಯವಾಗಿ,
ಬರಿಯ ಮಾತ ಬಣ್ಣಿಸಿ, ಬಯಲ ಮಾತ ಕೊಟ್ಟು, ಬಸುರ ಮಾತ ತೆಗೆದು
ಜಿಹ್ವೆ ಗುಹ್ಯಂಗಳ ಹೊರೆವ ಚೋರವಿದ್ಯಕ್ಕೆ
ನಿಜ ಸಾಧ್ಯವಪ್ಪುದೆ ?ಅದು ಹುಸಿ.
ಅದೆಂತೆಂದಡೆ: ಕರ್ಮಕಾಪಟ್ಯಮಾಶ್ರಿತ್ಯ ನಿರ್ಮಲಜ್ಞಾನವರ್ಜಿತಾಃ
ವಾಗ್ಬ್ರಹ್ಮಣಿ ಪ್ರವರ್ತಂತೇ ಶಿಶ್ನೋದರಪರಾಯಣಾಃ
ಇಂತೆಂದುದಾಗಿ,
ತ್ರಿಡಂಬಿಂದೊಡಲ ಹೊರೆದು ಕುಟಿಲ ತಮಗಿಲ್ಲೆಂಬ
ಡಂಭಕರನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ./350
ಶುದ್ಧ ಕೇವಲಜ್ಞಾನಸ್ವರೂಪನಾದಾತ ನೀನಯ್ಯಾ.
ಅಖಿಲ ಸ್ಥಾವರಜಂಗಮಂಗಳಲ್ಲಿ ಬೆರಸಿಯೂ ಬೆರಸದಿಪರ್ಾತ ನೀನಯ್ಯಾ.
ಸಕಲ ನಿಃಕಲನಾದಾತ ನೀನಯ್ಯಾ.
ಕೇವಲ ನಿಃಕಲದಂತೆ ನಿರಂಗನಾದಾತ ನೀನಯ್ಯಾ.
ಭವದಾರಣ್ಯವ ತಂದಾತ ನೀನಯ್ಯಾ.
ಭವರೋಗಕ್ಕೆ ಭೈಷಜ್ಯನಾದಾತ ನೀನಯ್ಯಾ.
ಸಕಲ ಜಗಜ್ಜನದಾಧಾರಾಧೇಯ ಕತರ್ೃವಾದಾತ ನೀನಯ್ಯಾ.
ಇದಕ್ಕೆ ಶ್ರುತಿ:
ತ್ವಮಗ್ನೇದ್ಯುಬಿಸ್ತ್ವಮಾಶುಶುಕ್ಷಣಿಸ್ತ್ವಮದ್ಭ್ಯಸ್ತ್ವಮಶ್ಮನಸ್ಪರಿ
ತ್ವಂ ವನೇಭ್ಯಸ್ತ್ವಮೋಷದಿಭ್ಯಸ್ತ್ವಂ ನೃಣಾಂ ನೃಪತೇಜಾಯಸೇ ಶುಚಿಃ
ಇಂತೆಂದುದಾಗಿ,
ಪರಮನಿರ್ಮಲನಾದಾತ ನೀನೇ ಸೌರಾಷ್ಟ್ರ ಸೋಮೇಶ್ವರಾ./351
ಶುದ್ಧ ಮಿಶ್ರ ಸಂಕೀರ್ಣ ಪೂರ್ವ ಮಾರ್ಗಶೈವಂಗಳಲ್ಲಿ
ಕರ್ಮಭಕ್ತಿಯಲ್ಲದೆ ನಿರ್ಮಳಸದ್ಭಕ್ತಿಯೆಲ್ಲಿಯದೊ ?
ಒಮ್ಮೆ ಧರಿಸಿ ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದೆನೆಂದು
ಭವಿಯಾಗುತ್ತೊಮ್ಮೆ, ಭಕ್ತನಾಗುತ್ತೊಮ್ಮೆ
ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ತೆರನರಿಯದಿಪ್ಪ
ಬರಿಯ ಶುದ್ಧಶೈವವಂ ಬಿಟ್ಟು,
ಬ್ರಹ್ಮ ವಿಷ್ಣು ರುದ್ರ ಮಾಹೇಶ್ವರರು ಒಂದೆಂದು ನುಡಿವ
ದುಃಕರ್ಮ ಮಿಶ್ರವಂ ಬಿಟ್ಟು,
ಹರನೆ ಹಿರಿಯನೆಂದು ಕಿರಿಯರೆಲ್ಲಾ ದೇವರೆಂದು ನುಡಿದು
ಕಂಡ ಕಂಡವರ್ಗೆ ಹೊಡೆಗೆಡವ ವೇಶಿಯ ಸುತನಂತೆ
ಸಂಕೀರ್ಣಕ್ಕೊಳಗಾದ ಸಂಕೀರ್ಣಶೈವಮಂ ನೋಡದೆ,
ದೂರದಿಂ ನಮಿಸಿ ಅರ್ಪಿಸಿ ಶೇಷವರುಣಕರ್ತನಲ್ಲವೆಂದು ದೂರಸ್ತನಹ
ಪೂರ್ವಶೈವಮಂ ತೊಲಗಿ,
ಅಂಗದಲನವರತ ಲಿಂಗಮಂ ಧರಿಸಿರ್ದು
ದೇಹೇಂದ್ರಿಯ ಮನಃ ಪ್ರಾಣ ಜ್ಞಾನ ಭಾವ ಒಮ್ಮುಖಮಂ ಮಾಡಿ,
ಸದ್ಗುರುಕಾರುಣ್ಯಮಂ ಪಡೆದು,
ಲಿಂಗವೇ ಪತಿ, ಗುರುವೆ ತಂದೆ, ಜಂಗಮವೇ ಲಿಂಗವೆಂದರಿದು,
ದ್ರವ್ಯವೆಂಬುದು ಭೂತರೂಪು, ಪ್ರಸಾದವೆಂಬುದು ಲಿಂಗರೂಪವೆಂದು ತಿಳಿದು,
ಲಿಂಗದ ಪಾದೋದಕವೇ ಲಿಂಗಕ್ಕೆ ಮಜ್ಜನವಾಗಿ
ಲಿಂಗದ ಪ್ರಸಾದವೇ ಲಿಂಗಕ್ಕೆ ಆರೋಗಣೆಯಾಗಿ
ಲಿಂಗದಿಂದ ನೋಡುತ್ತ ಕೇಳುತ್ತ ರುಚಿಸುತ್ತ
ಮುಟ್ಟುತ್ತ ವಾಸಿಸುತ್ತ ಕೊಡುತ್ತ ಆನಂದಿಸುತ್ತ
ಅಹಂ ಮಮತೆಗೆಟ್ಟು ಸಂದು ಸಂಶಯವರಿತು
ಹಿಂದು ಮುಂದ ಹಾರದಿಪ್ಪುದೆ ವೀರಶೈವ.
ಅದೆಂತೆಂದಡೆ: ಪಿತಾ ಗುರುಃ ಪತಿರ್ಲಿಂಗಂ, ಸ್ವಲಿಂಗಂ ಜಂಗಮಪ್ರಭುಃ
ತಸ್ಮಾತ್ಸರ್ವಪ್ರಯತ್ನೇನ ತಸ್ಯೈವಾರಾಧನಂ ಕ ರು
ಸ ಏವ ಸ್ಯಾತ್ಪ್ರಸಾದಸ್ತೇ ಭಕ್ತಿವಿತ್ತಸಮರ್ಪಿತಃ
ತತ್ಪ್ರಸಾದಸ್ತು ಭೋಕ್ತವ್ಯಃ ಭಕ್ತೋವಿಗತಕಲ್ಮಷಃ
ಎಂದುದಾಗಿ,
ಇಂತಲ್ಲದಿರ್ದುದೆ ಇತರ ಶೈವ ಕಾಣಾ, ಸೌರಾಷ್ಟ್ರ ಸೋಮೇಶ್ವರಾ./352
ಶುದ್ಧಶೈವದ ನಿರ್ಧರವನರಿವ ಬುದ್ಧಿಯನನುಕರಿ[ಸೆ]
ಆ ಶುದ್ಧಶೈವದ ಪರಿಯೆಂತೆಂದಡೆ: ಏಕಮೇವನದ್ವಿತೀಯಂ ಬ್ರಹ್ಮವೆಂಬು[ದ]
ಶ್ರುತಿಪ್ರಮಾಣಿಂದರಿದು
ಅಂತಪ್ಪ ಶಿವನಲ್ಲಿ ಏಕನಿಷ್ಠೆಯ ಪಡೆದು
ಆ ಶಿವಂಗೆ ಅರ್ಚನೆ ಪೂಜನೆಯಂ ಮಾಡುವಲ್ಲಿ
ದುರ್ಗೆ, ವಿನಾಯಕ, ಭೈರವ ಮೊದಲಾದ ಪರಿವಾರ ದೇವತೆಗಳನ್ನು
ಏಕಪೀಠದಲ್ಲಿ ಪೂಜೆಯಂ ಮಾಡುವಾತನು
ಅವಿವೇಕದ ಅಪರಾಧಿಯಲ್ಲದೆ
ವಿವೇಕವನುಳ್ಳ ಶೈವಸಂಪನ್ನನಲ್ಲ.
ಅದಕ್ಕೆ ದೃಷ್ಟಾಂತವೆಂತೆಂದಡೆ: ಅರಸು ಕುಳ್ಳಿರುವ ಸಿಂಹಾಸನದಲ್ಲಿ
ಪ್ರಧಾನ ಮೊದಲಾದ ಪರಿವಾರ ಕುಳ್ಳಿರಬಹುದೆ ?
ಬಾರದಾಗಿ, ಪರಿವಾರ ದೇವತೆಗಳಿಗೆ ಏಕ ಪೀಠ ಸಲ್ಲದು.
ಮುನ್ನ ಅರುವತ್ತುಮೂವರು ಮೊದಲಾದ ಅಸಂಖ್ಯಾತರೆನಿಪ ಭಕ್ತರುಗಳು
ಶುದ್ಧಶೈವ ವೀರಶೈವದಲ್ಲಿ ನಿಷ್ಠೆಯ ಆಚರಿಸುವಲ್ಲಿ
ಏಕಲಿಂಗದಲ್ಲಿ ನಿಷ್ಠೆ, ಶಿವಭಕ್ತರಲ್ಲಿ ಪ್ರೇಮ,
ಶಿವಲಾಂಛನವ ಧರಿಸಿಪ್ಪ ಜಂಗಮವನು ಶಿವನೆಂದು ಕಂಡು
ಅವರಿಗೆ ತೃಪ್ತಿಪಡಿಸಿದವರಾಗಿ ಚತುರ್ವಿಧವನೆಯ್ದಿದರು.
ಅದೆಂತೆಂದಡೆ: ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ
ಮಮ ತೃಪ್ತಿರುಮಾದೇವಿ ಜಂಗಮಸ್ಯಾನನಾದ್ಭವಃ
ಅಸ್ಯಾರ್ಥ,
ಮರಕ್ಕೆ ಬೇರು ಬಾಯಿ ಹೇಗೆಯಾಯಿತ್ತು
ಹಾಂಗೆ ಲಿಂಗಕ್ಕೆ ಜಂಗಮವೆ ಬಾಯಿಯೆಂದು
ಆವನಾನೊರ್ವನು ಜಂಗಮಕ್ಕೆ ತೃಪ್ತಿಪಡಿಸುತ್ತಂ ಇದ್ದಾನು,
ನಾನು ತೃಪ್ತನು ಕಾಣಾ ಉಮಾದೇವಿ
ಎಂದು ಶಿವನು ಹೇಳಿದನಾಗಿ ಮತ್ತಂ,
ಶಿವಯೋಗಿಮುಖೇನೈವ ಸಾಕ್ಷಾದ್ಭುಂಕ್ತೇ ಸದಾಶಿವಃ
ಶಿವಯೋಗಿಶರೀರಾನ್ತೇ ನಿತ್ಯಂ ಸನ್ನಿಹಿತಃ ಶಿವಃ
ಆವನೊರ್ವ ಶಿವಯೋಗಿಗೆ ಆವನೊರ್ವ ಭಕ್ತನು
ತೃಪ್ತಿ ಪಡಿಸುತ್ತಂ ಇದ್ದಾನು, ಅದೇ ಶಿವನ ತೃಪ್ತಿಯೆಂದು ಅರಿವುದು.
ಅದು ಹೇಗೆಂದಡೆ: ಶಿವಯೋಗಿಯ ಹೃದಯಕಮಲಮಧ್ಯದಲ್ಲಿ
ಶಿವನು ಆವಾಗಲೂ ತೊಲಗದಿಹನಾಗಿ,
ಮತ್ತಾ ಶಿವಂಗೆ ಲಿಂಗ ಒಂದು ಮುಖ, ಜಂಗಮ ಒಂದು ಮುಖ.
ಅದಕ್ಕೆ ಈಶ್ವರ ವಾಕ್ಯ: ಯಥಾ ಭೇರುಂಡಪಕ್ಷೀ ತು ದ್ವಿಮುಖಾತ್ ಪರಿಭುಂಜತೇ
ತಥಾ ಭುಂಜಾಮಿ ದ್ವಿಮುಖಾಲ್ಲಿಂಗಜಂಗಮಯೋರಹಂ
ಅಸ್ಯಾರ್ಥ,
ಆವುದಾನೊಂದು ಭೇರುಂಡ ಪಕ್ಷಿ ಎರಡು ಮುಖದಲ್ಲಿ ಹಾರವ ಕೊಳಲು
ಒಂದೇ ದೇಹಕ್ಕೆ ತೃಪ್ತಿಯಹ ಹಾಂಗೆ
ಎನಗುಳ್ಳವು ಲಿಂಗ ಜಂಗಮವೆರಡು ಮುಖ.
ಆ ಎರಡು ಮುಖಕ್ಕೆ ಆವನಾನೊರ್ವನು ನೈವೇದ್ಯವ ನೀಡುತ್ತಂ ಇದ್ದಾನು,
ಅದು ಎನ್ನ ತೃಪ್ತಿಯೆಂದು ಶಿವನು ದೇವಿಯರಿಗೆ ಹೇಳಿದನಾಗಿ
ಇಂತಪ್ಪ ಲಿಂಗಜಂಗಮವೆರಡು ಮುಖವೆ
ಶಿವನ ತೃಪ್ತಿಗೆ ಕಾರಣವೆಂದರಿದು ಆಚರಿಸಿದರಾಗಿ
ವೀರಶೈವಸಂಪನ್ನರುಮಪ್ಪ ಅರುವತ್ತುಮೂವರು ಅಸಂಖ್ಯಾತರು
ಶಿವನಲ್ಲಿ ಚತುರ್ವಿಧ ಪದವಿಯನೆಯ್ದಿ ಸುಖಿಯಾದರು.
ಇದೀಗ ಶುದ್ಧಶೈವದ ಮಾರ್ಗ.
ಈ ಶೈವಸಂಪತ್ತನರಿದಾಚರಿಸಿದವರೆ ಮುಕ್ತರು
ಸೌರಾಷ್ಟ್ರ ಸೋಮೇಶ್ವರಾ./353
ಶ್ರದ್ಧೆ, ನೈಷ್ಠೆ, ಅವಧಾನ, ಅನುಭಾವ, ಆನಂದ, ಸಮರಸವೆಂಬ
ಆರು ವಿಧದ ಭಕ್ತಿಯ ಆಯಾಯ ಲಿಂಗಂಗಳೊಳೊಂದಿಸಿ
ಶ್ರವಣ ಕೀರ್ತನ ಸ್ಮರಣ ಪಾದಸೇವನ ಪೂಜನ ವಂದನ
ದಾಸ್ಯ ಸಖ್ಯ ಆತ್ಮನಿವೇದನವೆಂಬ ನವವಿಧದ ಭಕ್ತಿರಸದಲ್ಲಿ ಮುಳುಗಿಪ್ಪನು.
ಅದೆಂತೆಂದಡೆ: ಶ್ರವಣಂ ಕೀರ್ತನಂ ಶಂಭೋಃ ಸ್ಮರಣಂ ಪಾದಸೇವನಂ
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಂ
ಎಂದುದಾಗಿ,
ಇಂತಪ್ಪ ಭಕ್ತಿ ಇಲ್ಲದಡೆ ಸೌರಾಷ್ಟ್ರ ಸೋಮೇಶ್ವರನೆಂತೊಲಿವನಯ್ಯಾ./354
ಶ್ರಮಿಸಿದುದೆ ಶ್ರಾದ್ಧ, ಪ್ರೇತವಾದುದೆ ಪ್ರೇದ್ಧ.
ಇಂತೀ ಪ್ರೇದ್ಧವೆಂಬುದಿಲ್ಲವಾಗಿ ಶ್ರಾದ್ಧವೆಂಬುದಿಲ್ಲ.
ಶ್ರಾದ್ಧ ಪ್ರೇದ್ಧಗಳೆಂಬುದಿಲ್ಲವಾಗಿ ತದ್ದಿನಂಗಳೆಂಬುದಿಲ್ಲ.
ತದ್ದಿನಂಗಳೆಂಬುದಿಲ್ಲವಾಗಿ ಸಂಕಲ್ಪಭುಂಜನೆ ಇಲ್ಲ.
ಅದೇನುಕಾರಣವೆಂದಡೆ,
ಪ್ರಾಣಲಿಂಗಸಂಗದಿಂ ಲಿಂಗಪ್ರಾಣವಾಯಿತ್ತಾಗಿ,
ಶಿವಪ್ರಸಾದಸೇವ್ಯದಿಂ ಪ್ರಸಾದಕಾಯವಾ[ಯಿ]ತ್ತಾಗಿ,
ಇಂತಲ್ಲದೆ, ಅಂಗೋಪಜೀವಿಗಳು ತದ್ದಿನಂಗಳ ಮಾಡುವಲ್ಲಿ
“ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿಧದೇ ಪದಂ ಸಮೂಳ್ಹಮಸ್ಯ ಪಾಂಸುರೇÙರÙರ
ಎಂಬ ಮನು ಮಂತ್ರದಿಂ ಸಂಕಲ್ಪಿಸಿಕೊಂಡು, ಸುರೆ ಮಾಂಸವ ಭುಂಜಿಸುವ
ತದ್ದಿನವೆ ದೋಷದಿನ.
ಇದಕ್ಕೆ ಶ್ರುತಿ: ತದ್ದಿನಂ ದಿನದೋಷೇಣ ಸುರಾಶೋಣಿತಮಾಂಸಯೋಃ
ಅತಿಸಂಕಲ್ಪ್ಯ ಭುಂಜೀಯಾತ್ ರಾರವಂ ನರಕಂ ವ್ರಜೇತ್
ಇಂತೆಂದುದಾಗಿ,
ತದ್ದಿನ ಸೇವ್ಯ ರೌರವನರಕ ಸೌರಾಷ್ಟ್ರ ಸೋಮೇಶ್ವರಾ./355
ಶ್ರೀಗುರು ಕರುಣದಿಂದ ಜ್ಞಾನಮೂರುತಿ ಗುರುವನರಿತ ಬಳಿಕ
ಆ ಗುರುವಿನಲ್ಲಿಯೇ ತದುಗತ ತಲ್ಲೀಯವಾದ.
ಮತ್ತೇನನೂ ಅರಿಯಲಿಲ್ಲ, ಮತ್ತೊಂದ ಮರೆಯಲಿಲ್ಲ.
ಅರಿಯಲು ಮರೆಯಲು ತೆರಹಿಲ್ಲದ ಗುರುವನರಿಯಲಿಲ್ಲವಾಗಿ
ಸೌರಾಷ್ಟ್ರ ಸೋಮೇಶ್ವರಲಿಂಗವ ನೆನೆಯಲಿಲ್ಲ./356
ಶ್ರೀಗುರುವಿನ ಕರುಣದಿಂದ ಪವಿತ್ರಗಾತ್ರನಾದೆ.
ಅದೆಂತೆಂದಡೆ: ಪೂರ್ವಕರ್ಮದ ದುರ್ಲಿಖಿತವನೊರಸಿ
ವಿಭೂತಿಯ ಪಟ್ಟವ ಕಟ್ಟಿದನಯ್ಯಾ ಶ್ರೀಗುರು.
ಎನ್ನಂಗದಲ್ಲಿ ಶಿವಲಿಂಗವ ಹಿಂಗದಂತಿರಿಸಿ
ಭೂತಕಾಯವ ಬಿಡಿಸಿ ಲಿಂಗತನುವ ಮಾಡಿದನಯ್ಯಾ ಶ್ರೀಗುರು.
ಕರ್ಣದಲ್ಲಿ ಪ್ರಣವಪಂಚಾಕ್ಷರವನೊರೆದು,
ಜಪಿಸ ಕಲಿಸಿ, ಮಂತ್ರರೂಪನ ಮಾಡಿದನಯ್ಯಾ ಶ್ರೀಗುರು.
ಸಂಸಾರದ ಅಜ್ಞಾನಜಡವ ಕೆಡಿಸಿ ಶಿವಜ್ಞಾನಾನುಗ್ರಹವ ಮಾಡಿದ,
ಆ ಶಿವಜ್ಞಾನವೆನ್ನ ಸರ್ವಕರ್ಮವನುರುಹಿತ್ತು.
ಅದೆಂತೆಂದೊಡೆ: ಜ್ಞಾನಾಗ್ನಿಸ್ಸರ್ವಕರ್ಮಾಣಿ ಭಸ್ಮಸಾತ್ಕುರುತೇರ್ಜುನ
ಎಂದುದಾಗಿ,
ಶ್ರೀಗುರುವಿನ ಪದಕಮಲದಲ್ಲಿ
ಆನು ಭೃಂಗನಾಗಿದ್ದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ./357
ಶ್ರೀಗುರುವಿನ ಶ್ರೀಚರಣದಲ್ಲಿ ಅರುವತ್ತೆಂಟು ತೀರ್ಥಗಳು
ನೆಲೆಸಿಪ್ಪವಾಗಿ ಎಲ್ಲಾ ತೀರ್ಥಗಳಿಗೆಯೂ ಗುರುಪಾದತೀರ್ಥವೆ ಅದಿಕ ನೋಡಾ.
ಗುರುಕರುಣದಿಂದ ದೀಯತೇ ಎಂಬ ಸುಜ್ಞಾನವ ಹಡದು
ಗುರುಪಾದೋದಕದಿಂದ ಕ್ಷೀಯತೇ ಎಂದು
ಮಲತ್ರಯವ ಕ್ಷಯವ ಮಾಡುವುದು.
ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನ ತೇಜಸಃ
ಗುರುಪಾದೋದಕಂ ಪೀತ್ವಾ ಭವೇತ್ ಸಂಸಾರನಾಶನಂ
ಇಂತೆಂದುದಾಗಿ,
ಗುರುಕರುಣಾಮೃತರಸಪಾದೋದಕದಲ್ಲಿ
ಸುಜ್ಞಾನಾನಂದ ರಸಮಯನಾಗಿ ಬೆರಸಿ ಬೇರಿಲ್ಲದಿರ್ದೆನಯ್ಯಾ
ಸೌರಾಷ್ಟ್ರ ಸೋಮೇಶ್ವರಾ./358
ಶ್ರೀಗುರುಸೋಂಕಿದ ಶಿಷ್ಯ ತಾನಾ ಗುರುವಾಗದೆ ಮಾಣನು.
ಅದೆಂತೆಂದಡೆ: ಜ್ಯೋತಿಯಿಂದಾದ ಜ್ಯೋತಿಯಂತೆ
ಭ್ರಮರನಿಂದ ಕೀಟ ಭ್ರಮರನಾದಂತೆ
ಶಿಷ್ಯನು ಗುರುವಿ[ಗೆ] ಭೇದವಾಗಿರನು.
ಇಂತಪ್ಪ ಶಿಷ್ಯನು ಸದ್ಗುರುವಿನ ಮೂರ್ತಿಯ ಧ್ಯಾನಿಸಿ,
ಗುರುಪದವ ಪೂಜಿಸಿ, ಗುರುವಾಕ್ಯವೇ ಮಂತ್ರವೆಂದು ನಂಬಿ,
ಗುರುವಿನ ಕೃಪೆಯೇ ಮುಕ್ತಿಯೆಂದು ಅರಿದಿಪ್ಪನು.
ಅದೆಂತೆಂದಡೆ: ಧ್ಯಾನಮೂಲಂ ಗುರೋಮರ್ೂರ್ತಿಃ ಪೂಜಾಮೂಲಂ ಗುರೋಃ ಪದಂ
ಮಂತ್ರಮೂಲಂ ಗುರೋರ್ವಾಕ್ಯಂ ಮುಕ್ತಿಮೂಲಂ ಗುರೋಃ ಕೃಪಾ
ಇಂತೆಂದುದಾಗಿ,
ಗುರುವಿನ ಕರುಣದಿಂದ ಷಟ್ತ್ರಿಂಶತ್ತತ್ವಂಗಳ ಸ್ವರೂಪವನರಿತು
ತತ್ವಾತೀತವಾದ ಪರವಸ್ತು ವಾಙ್ಮನಾತೀತವಾಗಿ
ತನ್ನ ಭಾವಾಭೀಷ್ಟಲಿಂಗದ ನೆನಹು ಸೋಂಕುಗಳಿಂದಭ
ಸೌರಾಷ್ಟ್ರ ಸೋಮೇಶ್ವರಲಿಂಗವಪ್ಪುದು ತಪ್ಪದಯ್ಯಾ./359
ಶ್ರೋತ್ರ, ತ್ವಕ್ಕು, ಚಕ್ಷು, ಜಿಹ್ವೆ, ಘ್ರಾಣವೆಂಬ ಪಂಚೇಂದ್ರಿಯಂಗಳಲ್ಲಿ
ಪ್ರಸಾದಲಿಂಗ ಜಂಗಮಲಿಂಗ ಶಿವಲಿಂಗ
ಗುರುಲಿಂಗ ಆಚಾರಲಿಂಗವೆಂಬ ಪಂಚಲಿಂಗಗಳು
ತಮ್ಮ ತಮ್ಮ ಮುಖದೊಳು ನಿಂದು,
ಸಕಲಭೋಗಂಗಳು ಲಿಂಗಭೋಗಂಗಳಾಗಿ
ಸರ್ವೆಂದ್ರಿಯಂಗಳು ಲಿಂಗವಶವಾಗಿಪ್ಪರಯ್ಯಾ
ಸಾರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು./360
ಷಟ್ತ್ರಂಶತತ್ವಂಗಳೆ ದೇಹವಾಗಿ
ಪರಶಿವನದಕರ್ೆ ದೇಹಿಯಾಗಿರ್ಪನಾಗಿ
ತತ್ವಮಯವಾದ ಭಕ್ತನಂಗದಲ್ಲಿ ಪ್ರಾಣಮಯವಾದ ಶಿವನಿಪ್ಪನಯ್ಯಾ.
ತತ್ವಂಗಳು ಆ ತತ್ವಂಗಳನೆಯ್ದುವಲ್ಲಿ ಭಕ್ತನು ಜ್ಞಾನಕಾಯವಾಗಿಪ್ಪನಯ್ಯಾ.
ಆ ಕಾಯದಲ್ಲಿ ಕಳಾಸ್ವರೂಪವಾಗಿಪ್ಪನಯ್ಯಾ ಶಿವನು.
ಇಂತು ಆವಾಗಲೂ ಅಗಲನಾಗಿ ಭಕ್ತದೇಹಿಕನಯ್ಯಾ.
ನಮ್ಮ ಸೌರಾಷ್ಟ್ರ ಸೋಮೇಶ್ವರನು./361
ಸಂಯೋಗ ವಿಯೋಗವೆಂಬೆರಡಿಲ್ಲದ ನಿಜವನ್ನಾರಯ್ಯಾ ಬಲ್ಲವರು ?
ಅದು ಕೂಡಿ ಬೆರಸದು, ಅದು ಅಗಲಿ ಹಿಂಗದು.
ತೆಗಹಕ್ಕೆ ಬಾರದು, ಮೊಗಹಕ್ಕೆ ಸಿಲುಕದು.
ಸಗುಣ ನಿರ್ಗುಣವೆಂಬ ಬಗೆಗೆಡೆಗುಡದ
ಸೌರಾಷ್ಟ್ರ ಸೋಮೇಶ್ವರಲಿಂಗವನರಿವುದೇನು, ಮರವುದೇನು ?/362
ಸಂವಿದಾತ್ಮಂಗೆ ಕ್ರಿಯಾಪಾಶ ಘಟಿಸದಾಗಿ
ಅಗ್ನಿಯ ಪುರುಷಂಗೆ ತೃಣದ ಸಂಕೋಲೆಯನಿಕ್ಕಿಹೆನೆಂಬ
ಅರೆ ಮರುಳುಗಳನೇನೆಂಬೆನಯ್ಯಾ !
ಇಟ್ಟಿಯ ಹಣ್ಣಿನಂತೆ ಹೊರಗೆ ಬಟ್ಟಿತ್ತಾದಡೇನಯ್ಯಾ,
ಒಳಗಣ ಕಹಿಯ ಕಳೆಯದನ್ನಕ್ಕ ?
ಭನಕ್ತಫಕಾಯ, ಭವಿಮನ ಬಿಡದು.
ಪ್ರಾಣಕ್ಕೆ ಜಂಗಮಲಿಂಗಸಿದ್ಧಿಯಿಲ್ಲದೆ,
ಶಿವಲಿಂಗವೆಂತು ಸಾಧ್ಯವಪ್ಪುದಯ್ಯಾ ಸೌರಾಷ್ಟ್ರ ಸೋಮೇಶ್ವರಾ./363
ಸಕಲವ್ಯಾಪಾರಂಗಳುಡುಗಿ,
ಅಭಕ್ಷಭಕ್ಷಣ ವಿಷಯತದ್ಗತಂಗಳಡಗಿ,
ತಥ್ಯ-ಮಿಥ್ಯ, ರಾಗ-ದ್ವೇಷಂಗಳಳಿದು,
ಸುಖ-ದುಃಖ ಶೋಕ-ಮೋಹಂಗಳ ಕಳೆದು,
ಶಿವಜ್ಞಾನವುಳಿದು, ಅಂಗಲಿಂಗಸಂಬಂಧವಾದುದೆ ಸಹಜ.
ಇದಲ್ಲದುವೆಲ್ಲವೂ ಭ್ರಾಂತು ಕಾಣಾ, ಸೌರಾಷ್ಟ್ರ ಸೋಮೇಶ್ವರಾ./364
ಸಕಲೇಂದ್ರಿಯಂಗಳಲ್ಲಿ ವಿಕರಿಸುವ ಮನವ ಸೆಳೆದು ನಿಂದಾತ ಸುಖಿ,
ಪಂಚೇಂದ್ರಿಯಂಗಳಿಚ್ಛೆಯೊಳು ಮನಂಗೊಂಡು ಸುಳಿವಾತ ದುಃಖಿ.
ಮನಸ್ಸು ಬಹಿರ್ಮುಖವಾಗಲು ಮಾಯಾಪ್ರಪಂಚಿ,
ಮನವಂತರ್ಮುಖವಾದಡವಿರಳ ಜ್ಞಾನಿ,
ಮನವು ಮಹದಲ್ಲಿ ನಿಂದಡಾತ ಮುಕ್ತನು.
ಮನೋಲಯವಾದಡೆ
ಸೌರಾಷ್ಟ್ರ ಸೋಮೇಶ್ವರ ಲಿಂಗದಲ್ಲಿ ಅಭೇದ್ಯನು./365
ಸಗುಣನಾಗಬಲ್ಲ ನಿರ್ಗುಣನಾಗಬಲ್ಲ,
ಸಗುಣ ನಿರ್ಗುಣವೆರಡೊಂದಾಗಬಲ್ಲ.
ಣುವಾಗಬಲ್ಲ ಮಹತ್ತಾಗಬಲ್ಲ, ಅಣುಮಹತ್ತುಗಳೆರಡೊಂದಾಗಬಲ್ಲ.
ಶಿವನಾಗಬಲ್ಲ ಜೀವವಾಗಬಲ್ಲ, ಶಿವಜೀವಂಗಳೆರಡೊಂದಾಗಬಲ್ಲ.
ಸಕಲನಾಗಬಲ್ಲ ನಿಃಕಲನಾಗಬಲ್ಲ, ಸಕಲನಿಃಕಲವೆರಡೊಂದಾಗಬಲ್ಲ.
ಶೂನ್ಯನಾಗಬಲ್ಲ ನಿಃಶೂನ್ಯನಾಗಬಲ್ಲ, ಶೂನ್ಯನಿಃಶೂನ್ಯವೆರಡೊಂದಾಗಬಲ್ಲ.
ಸೌರಾಷ್ಟ್ರ ಸೋಮೇಶ್ವರಲಿಂಗ, ಸರ್ವನಾಗಬಲ್ಲನೊರ್ವನಾಗಬಲ್ಲ
ಸರ್ವನೊರ್ವನೆರಡೊಂದಾಗಬಲ್ಲನಯ್ಯಾ./366
ಸತ್ಯವೆ ಜಲ, ಸಮತೆಯೆ ಗಂಧ, ಅರಿವೆ ಅಕ್ಷತೆ,
ಭಾವ ಕುಸುಮ, ಸ್ವತಂತ್ರ ಧೂಪ, ನಿರಾಳ ದೀಪ,
ಸ್ವಾನುಭಾವ ನೈವೇದ್ಯ, ಸಾಧನಸಾಧ್ಯ ಕರ್ಪುರವೀಳೆಯ.
ಇವೆಲ್ಲವ ನಿಮ್ಮ ಪೂಜೆಗಂದನ್ನಕರಣಂಗಳು ಪಡೆದಿರಲು
ಹೃದಯಮಧ್ಯದಲ್ಲಿದ್ದು ಗಮ್ಮನೆ ಕೈಕೊಂಡೆಯಲ್ಲಾ
ಸೌರಾಷ್ಟ್ರ ಸೋಮೇಶ್ವರಾ.
ಸೌರಾಷ್ಟ್ರ ಸೋಮೇಶ್ವರಾ./367
ಸತ್ಯಶುದ್ಧದಿಂ ಬಂದ ಪದಾರ್ಥವ ಶೀಲವ್ರತನೇಮಂಗಳಿಂ
ಗುರುಲಿಂಗಜಂಗಮಕ್ಕೆ ಅರ್ಪಿಸಿದೆವೆಂದೆಂಬಿರಿ,
ಹಾವಿಂಗೆ ಹಾಲನೆರೆದಡೆ ಸರ್ಪಂಗೆ ತೃಪ್ತಿಯಪ್ಪುದೆ ?
ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣವ ಮೀರಿ
ಅರ್ಪಿಸುವ ಅರ್ಪಣದೊಳಗಣ ತೃಪ್ತಿಭೇದ ನಿಷ್ಪತಿಯಾದಲ್ಲಿ
ತ್ರಿವಿಧಸಮರ್ಪಣ ಸಂದಿತ್ತು ಸೌರಾಷ್ಟ್ರ ಸೋಮೇಶ್ವರಾ. /368
ಸತ್ಯಶುದ್ಧದಿಂ ಬಂದ ಪದಾರ್ಥವ
ಭಯಭಕ್ತಿ ಕಿಂಕುರ್ವಾಣದಿಂ ಗುರುಲಿಂಗಕ್ಕೆ
ತನುಮುಟ್ಟಿ ಅರ್ಪಿಸಿಕೊಂಬುದೇ ಶುದ್ಧಪ್ರಸಾದ.
ನಾಮ ರೂಪ ಕ್ರಿಯೆ ಹಂಕೃತಿಯಳಿದು
ಕರಣಾರ್ಪಿತದಿಂ ಶಿವಲಿಂಗಕ್ಕೆ ಮನಮುಟ್ಟಿ ಅರ್ಪಿಸಿಕೊಂಬುದು ಸಿದ್ಧಪ್ರಸಾದ.
ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯಯೆಂಬ
ಚತುರ್ವಿಧಂಗಳಳಿದು ರಿಣಾತುರಿಯ
ಮುಕ್ತ್ಯಾತುರಿಯಂಗಳನತಿಗಳೆದು ಸ್ವಯಾತುರಿಯದಿಂ
ಜಂಗಮಲಿಂಗಕ್ಕೆ ತನುಮುಟ್ಟಿ
ಸದ್ಭಾವದಿಂದರ್ಪಿಸಿಕೊಂಬುದು ಪ್ರಸಿದ್ಧಪ್ರಸಾದ.
ಇಂತೀ ತ್ರಿವಿಧಸಂಬಂಧವಾದುದೆ ಅಚ್ಚಪ್ರಸಾದ
ಸೌರಾಷ್ಟ್ರ ಸೋಮೇಶ್ವರಾ./369
ಸತ್ಯಸಹಜವುಳ್ಳ ಶಿವಶರಣರ ಕಂಡಲ್ಲಿ
ಮನಮಚ್ಚಿ ಹರುಷವಡೆದು
ಪ್ರೇಮದಿಂದ ಗುರುಚರಲಿಂಗ ಪೂಜೆಯ ಕ್ರಿಯೆಯಲ್ಲಿ
ತನಮನವಚನ ಬೆರಗಾ[ಗಿ]
ಸನ್ಮಾರ್ಗಕ್ರಿಯೆಯಲ್ಲಿಪ್ಪವಂಗೆ ಗುರುವುಂಟು.
ಗುರು ಉಂಟಾಗಿ ಲಿಂಗ ಉಂಟು,
ಲಿಂಗ ಉಂಟಾಗಿ ಜಂಗಮ ಉಂಟು
ಜಂಗಮ ಉಂಟಾಗಿ ಪ್ರಸಾದ ಉಂಟು,
ಪ್ರಸಾದ ಉಂಟಾಗಿ ಸದ್ಯೋನ್ಮುಕ್ತಿ.
ಇಂತಲ್ಲದೆ ಭಕ್ತಿಯಿಲ್ಲದವಂಗೆ ಗುರುವಿಲ್ಲ,
ಗುರುವಿಲ್ಲದವಂಗೆ ಲಿಂಗವಿಲ್ಲ,
ಲಿಂಗವಿಲ್ಲದವಂಗೆ ಜಂಗಮವಿಲ್ಲ,
ಜಂಮವಿಲ್ಲದವಂಗೆ ಪ್ರಸಾದವಿಲ್ಲ,
ಪ್ರಸಾದವಿಲ್ಲದವಂಗೆ ನಿರ್ವಾಣವಿಲ್ಲ.
ಇಂತಾಗಿ ಗೆಲ್ಲತನಕ್ಕೆ ಬಲ್ಲೆವೆಂದು ಹೋರಿ
ಬರಿದಪ್ಪ ದುರಾಚಾರಿಗಳಿಗೆ
ಸೌರಾಷ್ಟ್ರ ಸೋಮೇಶ್ವರಲಿಂಗವಂದೇ ದೂರ./370
ಸತ್ವರಜತಮೋಗುಣಗಳೆಂಬ ಒಂದೊಂದು
ಗುಣದೊಳಗೊಂದಿ ಕೆಟ್ಟರು ಬ್ರಹ್ಮ, ವಿಷ್ಣು, ರುದ್ರಾದಿಗಳು.
ತ್ರಿಗುಣಕ್ಕೆ ಸಂದ ಮತ್ರ್ಯರ ಹವಣೇನಯ್ಯಾ ?
ಮೂಲಹಂಕಾರವನರಿದು ಶಿವದಾಸೋಹಮೆನಲು
ರಾಜಸ ತಾಮಸ ಸಾತ್ವಿಕ ಮೂಲ ಅಹಂಕಾರವಳಿದು
ಭವಹಿಂಗಿ ಸ್ವಯಲಿಂಗಿಯಾದರು
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು./371
ಸಾಕಾರ ನಿರಾಕಾರದೊಳಗೆ ಚಿದ್ರೂಪವ ತಳೆದ
ಮಹಾಮಹಿಮನ ಇರವು: ಬೆಳುದಿಂಗಳೊಳಗಣ ಅಚ್ಚ ಪಳುಕಿನ ಪರ್ವತ
ಬೆಳುದಿಂಗಳೆಂಬ[ಂ]ತಿರ್ಪಂತೆ,
ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ ಸದ್ಭಾವಪ್ರಕಾಶಿಸಲು
ಒಳಹೊರಗೆಂಬುದಿಲ್ಲ
ಸೌರಾಷ್ಟ್ರ ಸೋಮೇಶ್ವರನ ಶರಣಂಗೆ./372
ಸಾನುರಾಗ ಸುಸಂಗವಾಗಿ
ಸಾರತ ಸವೆದು ಆರತವಳಿದು ಸಾಕಾರ ಸನ್ಮೂರ್ತಿಯ ಸಂದಿತ್ತು.
ಸಂಸುಖವಾಗಿ ಸಾನಂದ ಸಂವೇದ್ಯವಾದ ಮಹಾಮಹಿಮಂಗೆ
ಇಹಲೋಕ ಪರಲೋಕ ಶಾಂಭವೀಲೋಕವೆಂಬ
ಬಹು ಲೋಕವುಂಟೆ ಹೇಳಾ, ಸೌರಾಷ್ಟ್ರ ಸೋಮೇಶ್ವರಾ ?/373
ಸುಜ್ಞಾನಾನುಭವದಿಂ ಭವಿ ಭವವಳಿದುಳಿದ ಶೇಷನು,
ನಿರ್ಮಲ ನಿರ್ಮಾಯನಾಗಿ ಸದ್ಗುರುಪರಶಿವಾನುಗ್ರಹ ಪ್ರಸಾದವ ಪಡೆದು
ನೆನಹಳಿದು ಉಳಿದ ಶೇಷನು,
ಅರಿವಿನ ಸುಖದ ಸವಿಯಲ್ಲೆ ಮೈಮರದ
ಘನಪರಿಣಾಮ ನಿಜನಿಂದ ಶೇಷನು.
ಸೌರಾಷ್ಟ್ರ ಸೋಮೇಶ್ವರಲಿಂಗ ಲಿಂಗೈಕ್ಯದನುಪಮ ಶೇಷ
ಪರತತ್ವವ ಬೆರಸಿ ನಿಂದಿತ್ತು./374
ಸುನಾದ ಮಹಾನಾದಂಗಳು ಸದ್ಭಾವದಲ್ಲಿ ಪ್ರಕಾಶಿಸಲು
ನೈ, ವೈ, ಎಂಬ ದಶನಾದಲಕ್ಷಣವ
ಅನುಭೂತ ಭಾವದಿಂದರಿತು,
ಹಂಸನಾದ ದಾಸೋಹಂ ಎಂಬುದ ಮರದು
ಸೋಹಂ ಸೋಹಂ ಸೋಹಂ ಎಂದು ಕೂಗುವ ಕೂಗನಾಲಿಸಿ
ಆ ಕೂಗಿನ ಕಡೆಯಲ್ಲಿ ಹವಣಿಲ್ಲದೆ ರೂಹಳಿಯದ ಐಕ್ಯ ತಾನೆ
ಸೌರಾಷ್ಟ್ರ ಸೋಮೇಶ್ವರ./375
ಸುರರೆಲ್ಲರೂ ಬೆಂದು ಹೋದರು.
ಅಸುರರೆಲ್ಲರೂ ಸತ್ತು ಹೋದರು.
ಉರಗಗಳೆಲ್ಲರೂ ಹರಿದು ಹೋದರು.
ನರರೆಲ್ಲರೂ ಮುಂದುಗೆಟ್ಟರು.
ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು,
ಲಿಂಗದೇಹಿಗಳಾಗಿ ಹುಟ್ಟುಗೆಟ್ಟರು./376
ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ
ನಡೆದಡೆ ಗಮನವಿಲ್ಲ ನುಡಿದಡೆ ಶಬ್ದವಿಲ್ಲ ದಗ್ಧಪಟನ್ಯಾಯವಾಗಿ.
ಉಂಡಡೆ ಉಪಾದಿಯಿಲ್ಲ ಉಣದಿದ್ದಡೆ ಕಾಂಕ್ಷೆಯಿಲ್ಲ
ಯಥಾಲಾಭಸಂತುಷ್ಟನಾಗಿ.
ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ
ಅರಿವಿಲ್ಲ ಮರಹಿಲ್ಲ ನಾನೆಂಬ ನೆನಹಿಲ್ಲವಾಗಿ.
ಇದಕ್ಕೆ ಶ್ರುತಿ: ಯತ್ಪ್ರಾಣೇ ಲಿಂಗಸಂಧಾನಂ ತಲ್ಲಿಂಗಂ ಪ್ರಾಣಸಂಯುತಂ
ಪ್ರಾಣಲಿಂಗದ್ವಯೋಭರ್ೆದೋ ನ ಭೇದಶ್ಚ ನ ಸಂಶಯಃ
ದಗ್ಧಾಂಬರಂ ಹಿ ಕರ್ಮಾಣಿ ಚೇಂದ್ರಿಯಾಣಿ ಮನೋ ವಚಃ
ಭಾವಸದ್ಭಾವನಿರ್ವಾಣಃ ಪರೇ ಯಸ್ಯ ವಿಲೀಯತೇ
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು ಲಿಂಗಪ್ರಾಣಿಗಳಾಗಿ
ಅಂಗವ ಮರೆಗೊಂಡು ಎಂತಿರ್ದಡಂ ಎಂತು ನಡೆದಡಂತೆ ಸಂತ./377
ಸೂಕರಂಗೆ ಸುಗಂಧ ಸೊಗಸುವುದೆ ?
ಶುನಕಂಗೆ ಷಡುರಸಾನ್ನ ಸಂಘಟ್ಟವೆ ?
ಕತ್ತೆಗೆ ಕರ್ಪುರ ಯೋಗ್ಯವೆ ?
ಮರ್ಕಟಂಗೆ ಮುಕುರ ಸಾಮ್ಯವೆ ?
ದುರ್ವಿಷಯಿಗಳಪ್ಪ ದುರಾತ್ಮರ್ಗೆ
ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತವೆ ?/378
ಸೂಕ್ಷನಾದದಿಂದತ್ತಣ ಆದಿಬಿಂದುವಿನಲ್ಲಿ ಅರಿವು ರೂಪಾದ
ಅಖಂಡಿತ ನಿರ್ವಯಲು
ಚಿತ್ಸ್ವರೂಪವ ತಾಳಿ, ಮಹಾಘನರೂಪವನಡಗಿಸಿದ,
ಸ್ವತಂತ್ರ ನಿಃಕಳ ನಿರಂಜನ ಪರಾ-ಪಶ್ಯಂತಿ-ಸುಮಧ್ಯಮೆ-ವೈಖರಿಗೆ ಮೂಲವಾದ
ಪ್ರಭಾವಶಕ್ತಿಯೊಳಗೆ ತೆರಹಿಲ್ಲದ ಬಯಲು ತಾನಾದ
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಭೇದವಳಿದ ಶರಣ./379
ಸೋಂಕದ ಮುನ್ನವೇ ಸುಯಿಧಾನ ಪ್ರಸಾದಿ.
ಅರ್ಪಿಸದ ಮುನ್ನವೇ ಅವಧಾನ ಪ್ರಸಾದಿ.
ಅರಿವರತು ಭವಗೆಟ್ಟ ಪರಿಣಾಮ ಪ್ರಸಾದಿ.
ನಿಜಗ್ರಾಹಕ ನಿತ್ಯಪ್ರಸಾದಿ.
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಸಮರಸಪ್ರಸಾದಿ./380
ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ,
ಒಳಹೊರಗೆ ನೋಡುವಡೆ ಕಾಣಬರುತ್ತಿದೆ.
ನುಡಿಸುವಂಥಾದಲ್ಲ,
ಸಾರಿ ಇದ್ದಿಹುದು, ಮುಟ್ಟುವೊಡೆ ಕೈಗೆ ಸಿಕ್ಕದು.
ಶಾಸ್ತ್ರಸಂಬಂಧದ ಕಲಿಕೆಯೊಳಗಲ್ಲ.
ವ್ಯಕ್ತಾವ್ಯಕ್ತವನೊಳಕೊಂಡು ಬಯಲಸಮಾದಿಯಲ್ಲಿ ಸಿಲುಕಿತ್ತು,
ಸೌರಾಷ್ಟ್ರ ಸೋಮೇಶ್ವರಲಿಂಗವು ಪ್ರಾಣವಾಗಿ./381
ಸ್ವಕಾಯದಂತರ್ಗತದಲ್ಲಿ, ಚಿದಾಕಾಶದಲ್ಲಿ
ನಿರ್ಮಲತೆಯಿಂ ಪರಮಹಂಸನು
ಶ್ರದ್ಧೆ ನಿಷ್ಠೆ ಸಾವಧಾನದಿಂದದ್ರಿಜೆಯ ಪತಿಯಪ್ಪ
ಪರಶಿವಲಿಂಗಮಂ ವೇಧಿಸಿ,
ತಿಥಿ ವಾರ ನಕ್ಷತ್ರ ಯೋಗ ಕರಣಂಗಳೆಂಬ ಶಂಕೆಗೆಟ್ಟು
ಹೃತ್ಕಮಲಮಧ್ಯದಲ್ಲಿಮಹಾಪ್ರಕಾಶ ಉದಯಿಸಲು
ಇದಕ್ಕೆ ಶ್ರುತಿ: ಹಂಸಃ ಶುಚಿಷದ್ವಸುರಂತರಿಕಅಸದ್ಧೋತಾ ವೇದಿಷದತಿಥಿರ್ದುರೋಣಸತ್
ನೃಷದ್ವರಸದೃತಸದ್ಯೋಮಸದಬ್ಜಾಗೋಜಾ ಋತಜಾ ಆದ್ರಿಜಾ ಋತಂ ಬೃಹತ್
ಇಂತೆಂದುದಾಗಿ,
ಸದಾಸದ್ವ್ಯೋಮವ್ಯಕ್ತದಿಂ
ಸೌರಾಷ್ಟ್ರ ಸೋಮೇಶ್ವರಲಿಂಗವೇ ತಾನಾಗಿಪ್ಪರಯ್ಯ
ಪರಮಸ್ವಭಾವಿಗಳು./382
ಹಠಯೋಗ ಲಂಬಿಕಾಯೋಗ ಆತ್ಮಯೋಗ
ಸಿದ್ಧಯೋಗ ಪಿಶಾಚಯೋಗ ಅಷ್ಟಾಂಗಯೋಗಂಗಳೆಂಬ
ಷಡುವಿಧ ಕರ್ಮಯೋಗಂಗಳೊಳು
ಶೋಷಣೆ, ದಾಹನೆ, ಪ್ಲಾವನೆ, ಚಾಲನೆ ಖಾಳಾಪಖಾಳಮಂ ಮಾಡಿ
ತ್ರಿದೋಷಾದಿಗಳಂ ಪ್ರವರ್ತಿಸಲೀಯದೆ ಮಲಯುಗಮಂ ನೆಲೆಗೊಳ್ಳಲೀಯದೆ
ಗಜಕರಣಂಗಳಿಂ ಪವನಧಾರಣೆಯಿಂ ಕಲ್ಪಯೋಗಂಗಳಿಂ
ಮೂಲಿಕಾಬಂಧದಿಂ ಬಂದಿಸಿ, ಘಟಮಂ ನಟಿಸುವುದು ಹಠಯೋಗ.
ಪವನಾಭ್ಯಾಸಂಗಳಿಂದಭ್ಯಾಸಯೋಗ,
ಕ್ರಮಕ್ರಮಂಗಳಿಂ ಜಿಹ್ವೆಯಂ ಬೆಳಸಿ
ಹಠಸಮ್ಮಿಶ್ರದಿಂ ಷಡಾಧಾರದ ಪಶ್ಚಿಮಪಥವಿಡಿದು
ಪ್ರಾಣಪವನನ ಮಸ್ತಕಕ್ಕೇರಿಸಿ ಜಿಹ್ವೆಯ ಸುಷುಮ್ನೆಯಲ್ಲಿಟ್ಟು
ಸೋಮಪಾನಮಂ ಸೇವಿಸಿ ಸಪ್ತಸ್ಥಾನ ನವಚಕ್ರದಲ್ಲಿ ನಿಂದು
ಮುಕ್ತ್ಯಂಬಿಕೆಯೊಡಗೂಡುನವುದು ಲಂಫಬಿಕಾಯೋಗ.
ಆತ್ಮನಂ ಭೇದಿಸಿ ಪ್ರಾಣವಾಯು ನಾಡಿಗಳನರಿತು
ಹಿಡಿವ ಭೇದಮಂ ತಿಳಿದು, ತೆಗೆವ ಬಿಗಿವ ಸಂಚಮಂ ಕಂಡು
ಒಡ್ಡಿಯಾಣಬಂಧ ಜಾಳಾಂಧರಬಂಧ
ಠಾಣಿಕಾಮುದ್ರೆ ಭ್ರೂಸಂಕೋಚ ಬ್ರಹ್ಮಸ್ಥಾನದುತ್ತರನಾಡಿಯಿಂದ
ಆತ್ಮನನಾತ್ಮಲಿಂಗದಲ್ಲಿ ಸಂಯೋಗಮಾಡುವದಾತ್ಮಯೋಗ.
ಅಂಜನಾಸಿದ್ಧಿ ಘುಟಿಕಾಸಿದ್ಧಿ ಶರೀರಸಿದ್ಧಿ ಪರಕಾಯಪ್ರವೇಶ
ತ್ರಿಕಾಲಜ್ಞಾನ ದೂರಶ್ರವಣ ದೂರದೃಷ್ಟಿಯೊಳಗಾದ
ಅಷ್ಟಮಹಾಸಿದ್ಧಿಯಂ ಪಡೆದು,
ರಸಸಿದ್ಧಿ ಪಾಷಾಣಸಿದ್ಧಿ ಲೋಹಸಿದ್ಧಿ ವಯಸ್ತಂಭ
ಸ್ವರವಂಚನೆ ಕಾಯವಂಚನೆ
ವೇದಶಾಸ್ತ್ರಸಿದ್ಧಿ
ಭರತಸಿದ್ಧಿ ಗಾಂಧರ್ವಸಿದ್ಧಿ ಕಿನ್ನರಸಿದ್ಧಿ
ವಾಚಾಸಿದ್ಧಿ ಖೇಚರತ್ವ ಮಹೇಂದ್ರಜಾಲದೊಳಗಾದ ಚಾಷಷ್ಟಿವಿದ್ಯಾಸಿದ್ಧಿ
ಅಣಿಮಾದಿ ಮಹಿಮಾ ದಿ
ಈಶಿತ್ವ ವಶಿತ್ವ ಪ್ರಾಪ್ತಿ ಪ್ರಾಕಾಮ್ಯವೆಂಬ ಅಷ್ಟೈಶ್ವರ್ಯಸಿದ್ಧಿ
ವ್ಯಾಳಿ ಚರ್ಪಟಿ ಕೋರಾಂಟ ರತ್ನಘೋಷ
ಭೂತನಾಥ ನಾಗಾರ್ಜುನ ಮಚ್ಚೇಂದ್ರ ಗೋರಕ್ಷ
ಮಂಜಿನಾಥ ನವನಾಥ ಸಿದ್ಧರೊಳಗಾದ ಸಮಸ್ತ ಸಿದ್ಧಿಬುದ್ಧಿಗಳಿಂ
ಲಿಂಗವನರಿಸಿ ಅಟ್ಟಿಮುಟ್ಟಿ ಹಿಡಿದೆಹೆನೆಂಬುದು ಸಿದ್ಧಯೋಗ.
ಪಿಶಾಚತ್ವದಿಂ ತ್ರಿಭುವನಿಯಂ ಸೇವಿಸಿ ಅಮರಿಗಳಂ ಸೇವಿಸಿ
ಅಮರೀ ಭ್ರಮರಾದೇವಿ ಅಮರೀ ತ್ರಿಪುರಾಂತಕೀ
ಅಮರೀ ಕಾಲಸಂಹಾರೀ ಅಮರೀ ತ್ರೈಲೋಕ್ಯಸಾಧನೀ
ಇಂತೆಂಬ ಶ್ರುತಿಗೇಳ್ದು,
ವಜ್ರಿ ಅಮರಿಗಳನಂಗಲೇಪಂ ಮಾಡಿ ಶುಕ್ಲಮಂ ಸೇವಿಸಿ
ಭೂತಸಂಕುಳಂಗಳೊಡನಾಡಿ ಅಜ್ಞಾನವಶದಿಂ
ಲಿಂಗವನೇನೆಂದರಿಯದ ಕ್ಷೀಣವೃತ್ತಿಯ
ಪಿಶಾಚತ್ವದಿಂದಿಪ್ಪುದು ಪಿಶಾಚಯೋಗ.
ಹಿಂಸೆಯನುಳಿದ ಶಾಚತ್ವದಿಂ ಬ್ರಹ್ಮಚರ್ಯದಿಂ
ತತ್ವಂಗಳನಾಹ್ವಾನಿಸುತ್ತಿಪ್ಪುದು ಯಮಯೋಗ.
ವಿವೇಕ ವಿಚಾರದಿಂ ತತ್ವಂಗಳನರಿತು ಆಚರಿಸಿ
ಅಡಿುಟ್ಟು ನಡೆವುದು ನಿಯಮಯೋಗ.
ಪದ್ಮಾಸನ ಸಿದ್ಧಾಸನ ಬದ್ಧಾಸನ ವಜ್ರಾಸನ ಮಯೂರಾಸನ ಕೂರ್ಮಾಸನ
ಕಕ್ಕುಟಾಸನ ಅಧರ್ಾಸನ ವೀರಾಸನ ಶ್ಮಶಾನಾಸನ ಹಸ್ತಾಸನ
ಮಸ್ತಕಾಸನ ಕುಠಾರಾಸನ ಸಿಂಹಾಸನ ಮಧ್ಯಲವಣಿ
ಶಿರೋಲವಣಿಯೊಳಗಾದ ಆಸನಬಂಧಂಗಳಿಂದಾಚರಿಸುವುದಾಸನಯೋಗ.
ತತ್ವ ಮೂವತ್ತಾರಕ್ಕೆ ಪ್ರಣವ ಮೂಲವೆಂದರಿತು
ಷಡಾಧಾರಚಕ್ರಂಗಳ ಅಕ್ಷರವರ್ಣಂಗಳಿಂ ತಿಳಿದು
ಮೇರಣ ಅಜನಾಳ ಬ್ರಹ್ಮಸ್ಥಾನ ತುರೀಯಾತೀತದ ಓಂಕಾರಮಪ್ಪ
ಪ್ರಣವವನರಿವುದು ಪ್ರಾಣಾಯಾಮಯೋಗ.
ಪ್ರತ್ಯಾಹಾರಯೋಗಕ್ರಮಗಳಿಂದ
ಸತ್ಪ್ರಣವವನಾಹಾರಿಸುವುದು ಪ್ರತ್ಯಾಹಾರಯೋಗ.
ಪ್ರಣವಕ್ಕೆ ಅತೀತವಾದ ಪರಶಿವಮೂರ್ತಿ ಮನದಲ್ಲಿ ಚಿಗುತರ್ು
ಅಂತರಂಗದಲ್ಲಿ ಧ್ಯಾನಾರೂಢನಾಗಿ ಧ್ಯಾನಿಸುವುದು ಧ್ಯಾನಯೋಗ.
ಆ ಪರಶಿವಮೂರ್ತಿಯೆ ಇಷ್ಟಲಿಂಗವೆಂಬ ಭಾವನೆಯಿಂದ
ಅಷ್ಟವಿಧಾರ್ಚನೆ ಷೋಡಶೋಪಚರ್ಯಂಗಳಿಂದಿಷ್ಟಲಿಂಗಧಾರಣದಿಂದ
ಇಪ್ಪುದು ಧಾರಣಯೋಗ.
ಅಪ್ರಶಿಖಾಸ್ಥನದಿಂದುತ್ತರವಿಭಾಗೆಯ ಅಜಪೆಯಿಂದತ್ತಣ
ಚಿತ್ಪ್ರಭೆಯಿಂದುಜ್ವಳತೇಜ ಸ್ವಯಂಪ್ರಕಾಶ
ದಿವ್ಯತೇಜದಿಂದೊಪ್ಪಿಪ್ಪ ಮಹಾಘನ ಪರವಸ್ತುವನಿದಿರಿಟ್ಟೀಕ್ಷಿಸಿ
ಆಮಹಾಪ್ರಕಾಶದಲ್ಲಿ ಒಡಗೂಡಿ ತಾನು ತಾನಾಗಿ
ಜಗದ್ವಿಹರಣೀಯನೇನೆಂದರಿಯದ ಪರಮಕಾಷ್ಠೆಯ
ಸಮಾಧಿಯಲ್ಲಿಪ್ಪುದು ಸಮಾಧಿಯೋಗ.
ಇಂತಪ್ಪ ಅಷ್ಟಾಂಗವೊಳಗಾದ ಷಡುವಿಧಕರ್ಮಯೋಗಂಗಳಂ ಮೆಟ್ಟಿ
ಚತುರ್ವಿಧಪದವಿಯಂ ಹೊದ್ದದೆ ಫಲಭೋಗಂಗಳಂ ಮುಟ್ಟದೆ
ಖ್ಯಾತಿ ಲಾಭ ಪೂಜೆಯಂ ತಟ್ಟದೆ
ಇಹಪರಂಗಳಂ ಸಾರದೆ, ಭವಬಂಧನಕ್ಕೆ ಬಾರದೆ
ಗೆಲ್ಲ ಸೋಲಕ್ಕೆ ಹೋರದೆ, ತನುವಿನಿಚ್ಛೆಯಲ್ಲಿ ಸುಳಿಯದೆ
ಮನದಿಚ್ಛೆಯಲ್ಲಿ ಹರಿಯದೆ, ಪ್ರಾಣನ ಸುಳುಹಿನಲ್ಲಿ ಸಿಕ್ಕದೆ
ಪ್ರಕೃತಿವಶಕ್ಕೊಳಗಾಗದೆ, ಇಂದ್ರಿಯಂಗಳಿಗೆ ಮೈಯೊಡ್ಡದೆ
ಸರ್ವಸಂದೇಹನಿವೃತ್ತಿಯಾಗಿ, ನಿಂದಲ್ಲಿ ನಿರಾಳ, ನಡೆದಲ್ಲಿ ನಿರ್ಗಮನಿ,
ನುಡಿದಲ್ಲಿ ನಿಶ್ಶಬ್ದಿ, ಸುಳಿದಲ್ಲಿ ಒಡಲಿಲ್ಲದುಪಾಧಿಯರತು
ಅಂಗವೆ ಲಿಂಗವಾಗಿ ಲಿಂಗವೆ ಪ್ರಾಣವಾಗಿ
ಪ್ರಾಣವೆ ಪ್ರಸಾದವಾಗಿ, ಪ್ರಸಾದವೆ ಪರಿಪೂರ್ಣವಾಗಿ
ನಿಜಲಿಂಗೈಕ್ಯವಾಗಿ ನಿಜಸುಖಸಂಬಂಧಿಯಾಗಿ
ನಿಜಯೋಗ ಸನ್ನಿಹಿತವಾಗಿ ಕಾಯವಿದ್ದಂತೆ ಬಯಲಾಗಿಪ್ಪರಯ್ಯಾ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು./383
ಹಣ ಬಂಗಾರ ವಸ್ತ್ರ ಕಪ್ಪಡ
ಬಟ್ಟೆಯಲ್ಲಿ ನೆಟ್ಟನೆ ಬಿದ್ದಿರಲು
ಕಂಡು ಕಾತರಿಸಿ ಕೈಮುಟ್ಟಿ ಎತ್ತದ ಭಾಷೆ,
ಕೊಟ್ಟಡೆ ಮುಟ್ಟದ ಭಾಷೆ,
ರಧನ ಪರಸತಿಗೆ ಅಳುಪದ ಭಾಷೆ,
ಇಂತಿದಕಳುಪಿದೆನಾದಡೆ ಸೌರಾಷ್ಟ್ರ ಸೋಮೇಶ್ವರಾ
ನಿಮ್ಮಾಣೆ ನಿಮ್ಮ ಪ್ರಮಥರಾಣೆ./384
ಹದಿನಾರಂಗುಲದುದ್ದ ಸರ್ಪನ ವಿಷ ಕೆಟ್ಟು
ಎರಡು ಕಾಲನಾಕಾಶದಲೂರಿ ನಿಂದಿತ್ತು.
ಬಹುಮುಖದ ಪಕ್ಷಿ ಏಕಮುಖವಾಗಿ
ಚಂಚುಪುಟದಲ್ಲಿರ್ದ ರತ್ನಪಕ್ಷಿಯ ನುಂಗಿ ರತ್ನ ಕೆಟ್ಟಿತ್ತು.
ಸೌರಾಷ್ಟ್ರ ಸೋಮೇಶ್ವರನಲ್ಲಿ ಅರಸುವ ಬನ್ನಿರೆ, ಸುಜ್ಞಾನಭರಿತರು./385
ಹರಣವಿರ್ದು ಹರಣವಿಲ್ಲ, ಹರಣ ಲಿಂಗದಲ್ಲಿ ನಿರ್ಯಾಣವಾಯಿತ್ತಾಗಿ.
ಮನವಿರ್ದು ಮನವಿಲ್ಲ, ಮನವು ಮಹದಲ್ಲಿ ಲಯವಾಯಿತ್ತಾಗಿ.
ಜೀವವಿರ್ದು ಜೀವವಿಲ್ಲ, ಜೀವ ಪರಮನಲ್ಲಿ ಐಕ್ಯವಾಯಿತ್ತಾಗಿ.
ಭಾವವಿದ್ದು ಭಾವವಿಲ್ಲ, ಭಾವ ನಿರ್ಭಾವದಲ್ಲಿ ನಿಂದಿತ್ತಾಗಿ.
ಕರಣಂಗಳಿದ್ದು ಕರಣಂಗಳಿಲ್ಲ, ಕರಣಂಗಳು ಲಿಂಗದ ಕಿರಣಂಗಳೆಯ್ದಿದವಾಗಿ.
ಇಂತು ಸರ್ವವಿದ್ದು ಸರ್ವವಿಲ್ಲ. ಇದು ಕಾರಣ ಸೌರಾಷ್ಟ್ರ ಸೋಮೇಶ್ವರಾ,
ನಿಮ್ಮ ಶರಣರು ಉಂಡು ಉಪವಾಸಿಗಳು, ಬಳಸಿ ಬ್ರಹ್ಮಚಾರಿಗಳು./386
ಹರಿಗೆ ಇಂದ್ರನೀಲಲಿಂಗ, ಬ್ರಹ್ಮಂಗೆ ಶೈಲಲಿಂಗ,
ಶಕ್ರಂಗೆ ಮಣಿಮಯಲಿಂಗ, ಸೂರ್ಯಂಗೆ ತಾಮ್ರಲಿಂಗ,
ಸೋಮಂಗೆ ಮೌಕ್ತಿಕಲಿಂಗ, ಕುಬೇರಂಗೆ ಹೇಮಲಿಂಗ,
ನಾಗರ್ಕಳಿಗೆ ಪವಳದ ಲಿಂಗ, ಅಷ್ಟವಸುಗಳಿಗೆ ಕಂಚಿನ ಲಿಂಗ,
ವರುಣಂಗೆ ರತ್ನದ ಲಿಂಗ, ನೈರುತ್ಯಂಗೆ ಪರುಷದ ಲಿಂಗ,
ವಾಯವ್ಯಗೆ ಹಿತ್ತಾಳಿಯ ಲಿಂಗ, ಕಾಮಂಗೆ ಕುಸುಮ ಲಿಂಗ,
ಋಷಿಗಳಿಗೆ ಪರ್ವತದ ಲಿಂಗ, ಅಸುರರಿಗೆ ಕಬ್ಬುನದ ಲಿಂಗ,
ದಶರಥಗೆ ಸುವರ್ಣದ ಲಿಂಗ, ಅಶ್ವಿನಿಗೆ ಕರಪಾತ್ರೆಯ ಲಿಂಗ,
ಅಂತಕಂಗೆ ಪರಿಪರಿಯ ಲಿಂಗ, ಗಾಯತ್ರಿಗೆ ಮರಕತದ ಲಿಂಗ,
ಚಾಮುಂಡಿಗೆ ವಜ್ರದ ಲಿಂಗ, ಭೂದೇವಿಗೆ ಪಚ್ಚದ ಲಿಂಗ,
ದುರ್ಗೆಗೆ ಕನಕದ ಲಿಂಗ, ಸಪ್ತಮಾತೃಕೆಯರಿಗೆ ಮಳಲ ಲಿಂಗ,
ಇದೆಂತೆಂದಡೆ: ಇಂದ್ರನೀಲಮಯಂ ಲಿಂಗಂ ವಿಷ್ಣುಃ ಪೂಜಯತೇ ಸದಾ
ವಿಷ್ಣುತ್ವಂ ಪ್ರಾಪ್ಯತೇ ತೇನ ಸಾದ್ಭುತೈಕಂ ಸನಾತನಂ
ಬ್ರಹ್ಮಾ ಪೂಜಯತೇ ನಿತ್ಯಂ ಲಿಂಗಂ ಶೈಲಮಯಂ ಶುಭಂ
ತಸ್ಯ ಸಂಪೂಜನಾದೇವ ಪ್ರಾಪ್ತಂ ಬ್ರಹ್ಮತ್ವಮುತ್ತಮಂ
ಶಕ್ರೋಪಿ ದೇವ ರಾಜೇಂದ್ರೋ ಲಿಂಗಂ ಮೃಣ್ಮಯಂ ಶುಭಂ
ಭಕ್ತ್ಯಾ ಪೂಜಯತೇ ನಿತ್ಯಂ ತೇನ ಶಕ್ರತ್ವಮಾಪ್ನುಯಾತ್
ತಾಮ್ರಲಿಂಗಂ ಸದಾಕಾಲಂ ಭಕ್ತ್ಯಾ ದೇವೋ ದಿವಾಕರಃ
ತ್ರಿಕಾಲಂ ಯಜತೇ ತೇನ ಪ್ರಾಪ್ತಂ ಸೂರ್ಯತ್ವಮುತ್ತಮಂ
ಮುಕ್ತಾಫಲಮಯಂ ಲಿಂಗಂ ಸೋಮಃ ಪೂಜಯತೇ ಸದಾ
ತೇನ ಸೋಮೇನ ಸಂಪ್ರಾಪ್ತಂ ಸೋಮತ್ವಂ ಸತತೋಜ್ವಲಂ
ಲಿಂಗ ಹೇಮಮಯಂ ಕಾಂತಂ ಧನದೋರ್ಚಯತೇ ಸದಾ
ತೇನ ಸಾಧನತೋ ದೇವಃ ಧನದತ್ವಮವಾಪ್ತವಾನ್
ವಸವಃ ಕಾಂಸ್ಯಕಂ ಲಿಂಗಂ ಪೂಜ್ಯ ಕಾಮಾನವಾಪ್ನುಯಾತ್
ನಾಗಾಃ ಪ್ರವಾಳಜಂ ಲಿಂಗಂ ಪೂಜ್ಯ ರಾಜ್ಯಾನಿ ಲೇಭಿರೇ
ಲಿಂಗಂ ರತ್ನಮಯಂ ಚಾರು ವರುಣೋಡಿರ್ಚಯತೇ ಸದಾ
ತೇನ ತದ್ವರುಣತ್ವಂ ಹಿ ಪ್ರಾಪ್ತಂ ಭದ್ರಸಮನ್ವಿತಂ
ಲಿಂಗಮಧ್ಯೇ ಜಗತ್ಸರ್ವಂ ಸರ್ವಂ ಲಿಂಗೇ ಪ್ರತಿಷ್ಠಿತಂ
ತಸ್ಮಾತ್ ಸಂಪೂಜಯೇಲ್ಲಿಂಗಂ ಯದಿ ಚೇತ್ಸಿದ್ಧಿಮಾತ್ಮನಃ
ಐವಂ ದೇವಾಶ್ಚ ಗಂಧರ್ವಾ ಯಕ್ಷೋರಗರಾಕ್ಷಸಾಃ
ಪೂಜಯಂತಿ ಸದಾಕಾಲಮೀಶಾನಂ ಸುರನಾಯಕಂ
ಬ್ರಹ್ಮಾವಿಷ್ಣುಸ್ತಥಾ ಶಕ್ರೋ ಲೋಕಪಾಲಾಶ್ಚ ದೇವತಾಃ
ಲಿಂಗಾರ್ಚನರತಾ ಹ್ಯೇತೇ ಮಾನುಷೇಷು ಚ ಕಾ ಕಥಾ ?
ಇಂತೆಂದುದಾಗಿ ಸುರಪ ಹರಿ ವಿರಂಚಿ ಗಂಧರ್ವ ಯಕ್ಷ ರಾಕ್ಷಸ
ಋಷಿ ದೇವತೆಗಳೆಲ್ಲರೂ ಲಿಂಗವ ಪೂಜಿಸಿ
ಇಷ್ಟಕಾಮ್ಯಸಿದ್ಧಿಯ ಪಡೆದು ಭವಭಾರಿಗಳಾದರು.
ಸೌರಾಷ್ಟ್ರ ಸೋಮೇಶ್ವರನ ಶರಣರು ಫಲಪದಂಗಳ ಮೀರಿ
ಅರಿಕೆಯರತು ಬಯಕೆ ಬರತು
ಹುಟ್ಟುಗೆಟ್ಟು ಭವಹಿಂಗಿ ಅಭಂಗರಾದರು/387
ಹರಿಹರಬ್ರಹ್ಮಾದಿಗಳ ನುಂಗಿತ್ತು ಈ ಮಾಯೆ.
ನವನಾಥಸಿದ್ಧರನಪಹರಿಸಿತ್ತು ಈ ಮಾಯೆ.
ಅರುಹಿರಿಯರನಂಗಂಗೊಂಡಿತ್ತು ಈ ಮಾಯೆ.
ನವಬ್ರಹ್ಮರನಾರಡಿಗೊಂಡಿತ್ತು ಈ ಮಾಯೆ.
ಷಡುದರುಶನಂಗಳ ಶಂಕೆಗಿಕ್ಕಿ ಕಾಡಿತ್ತು ಈ ಮಾಯೆ.
ಹೊನ್ನು ಹೆಣ್ಣು ಮಣ್ಣಾಗಿ ಮೂರು ಲೋಕಂಗಳನಣಲೊಳಗಿಕ್ಕಿ
ಅಗಿಯಿತ್ತು ಈ ಮಾಯೆ.
ಅಖಿಳ ಲೋಕಂಗಳನೊಳಗೊಂಡಿತ್ತು ಈ ಮಾಯೆ.
ಒಂದನೊಳಕೊಂಡಿತ್ತೆ ? ಸರ್ವವನೊಳಕೊಂಡಿತ್ತು,
ಸೌರಾಷ್ಟ್ರ ಸೋಮೇಶ್ವರಾ, ನಿನ್ನ ಮಾಯೆ./388
ಹಲವು ಕರಣಂಗಳೆಂಬ ಹಲವು ಬಣ್ಣದ ಚಿನ್ನವ
ಗುರುಮುಖಾಗ್ನಿಯಿಂದ ಒಮ್ಮುಖಕ್ಕೆ ತಂದು
ಜ್ಞಾನಾಗ್ನಿಯಿಂ ಪುಟವಿಟ್ಟು, ಕಾಲಕರ್ಮವೆಂಬ ಕಾಳಿಕೆಯಂ ಕಳೆದು,
ವೃತ್ತಿ ಬಗೆಗಳೆಂಬ ಅವಲೋಹವಂ ಬಿಟ್ಟು,
ಅಹಂಕಾರ ಮಮಕಾರಂಗಳೆಂಬ ತೂಕಗುಂದಿ
ಅರಿವೆಂಬ ಮೂಸೆಯೊಳಿಟ್ಟು ಪರಮಜ್ಞಾನದಿಂ ಕರಗಿಸಿ
ಸುಮನವೆಂಬ ನಿರ್ಮಲೋದಕದಲ್ಲಿ ಢಾಳಿಸಿದ
ಶುದ್ಧಸುವರ್ಣ ಸ್ವಯಂಪ್ರಕಾಶ ನಿರಾಳದ ಬೆಳಗು
ಸೌರಾಷ್ಟ್ರ ಸೋಮೇಶ್ವರನ ಶರಣರಲ್ಲಿ ಸ್ವಯವಾಯಿತ್ತು./389
ಹಾಲ ಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?
ಲಿಂಗತೀರ್ಥಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ,
ತಡೆಯದೆ ಹುಟ್ಟಿಸುವ ಶ್ವಾನನ ಗರ್ಭದಲ್ಲಿ.
ಅದೆಂತೆಂದಡೆ: ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಂ ತು ಯೋ ಭಜೇತ್
ಶುನಾಂ ಯೋನಿಃ ಶತಂ ಗತ್ವಾ ಚಂಡಾಲಗೃಹಮಾವಿಶೇತ್
ಎಂದುದಾಗಿ, ಗುರು ಕೊಟ್ಟ ಲಿಂಗದಲ್ಲಿ
ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು
ಭಾವಿಸಿ ಮುಕ್ತರಪ್ಪುದಯ್ಯಾ.
ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ,
ತೀರ್ಥಲಿಂಗವ ಹಿರಿದುಮಾಡಿ ಹೋದವಂಗೆ
ಅಘೋರನರಕ ತಪ್ಪದು ಕಾಣಾ, ಸೌರಾಷ್ಟ್ರ ಸೋಮೇಶ್ವರಾ./390
ಹಿಂದಣ ಕಥೆಯ ಮುಂದೆ ಪೇಳುವ ಕಾವ್ಯವಲ್ಲ.
ಮುಂದಣ ಕಥೆಯನಿಂದು ಹೇಳುವ ನಾಟಕವಲ್ಲ.
ಬಂದ ಶಬ್ದವ ಸಂದಿಲ್ಲದುಸುರುವೆನೆಂಬ ಅಭ್ಯಾಸಿಯಲ್ಲ.
ಛಂದ ವಿಚ್ಛಂದಯೆಂಬ ಸಂದೇಹಿಯಲ್ಲ.
ಸೌರಾಷ್ಟ್ರ ಸೋಮೇಶ್ವರಾ
ನಿಮ್ಮ ಶರಣರ ಸ್ವಯಾನುಭಾವದ ಪರಿ ಬೇರೆ./391
ಹಿಂದಣ ಭವವನೊರಸಿ, ಮುಂದಣ ಜನನಕರ್ಮವ ಸಂಹರಿಸಿ
ಮಲ ಮಾಯೆಯ ಶಿಕ್ಷಿಸಿ, ಎನ್ನ ರಕ್ಷಿಸಿದಿರಯ್ಯಾ ಗುರುವೆ.
ಕಬ್ಬುನದ ಗಿರಿಯ ಪರುಷರಸ ಸೋಂಕಿದಂತೆ
ಸೌರಾಷ್ಟ್ರ ಸೋಮೇಶ್ವರನೆಂಬ ಗುರು ಸೋಂಕಲು
ಎನ್ನ ಅವಗುಣಂಗಳರತು ಹೋದವು./392
ಹಿಡಿದ ವ್ರತವ ಬಿಡುವವನಲ್ಲ,
ಲಿಂಗವಲ್ಲದನ್ಯವನೊಲ್ಲ, ಅನ್ಯದೈವಕ್ಕೆರಗ,
ಮತ್ರ್ಯದ ಮನುಜರ ಮನ್ನಿಸ, ಪರಸತಿ ಪರದ್ರವ್ಯವ ಮುಟ್ಟ,
ಕೊಟ್ಟಡೆ ಕೈಕೊಳ್ಳ, ಲಿಂಗನಿಷ್ಠಾಭಕ್ತಿಯ ಹಿಂಗ,
ಕೊಲಬಾರದ ಅರಿಗಳ ಗೆಲುವ ಕಲಿ ತಾನಾಗಿ
ಅದೆಂತೆಂದೊಡೆ: ಪರಸ್ತ್ರಿಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್
ಲಿಂಗನಿಷ್ಠಾ ನಿಯುಕ್ತಾತ್ಮಾ ಮಾಹೇಶ್ವರ ಇತಿ ಸ್ಮೃತಃ
ಎಂದುದಾಗಿ,
ಜೀವಭಾವ ಹಿಂಗಿ, ಶಿವಭಾವದಿಂ ಜೀವಿಸಿಪ್ಪನಯ್ಯಾ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಮಾಹೇಶ್ವರನು./393
ಹಿಡಿಯದೆ, ಹಿಡಿದುದ ಬಿಡದೆ, ಬಿಟ್ಟುದನಾರೂ ಅರಿಯರಲ್ಲಾ !
ಒಡಲ ಹಮ್ಮು, ಜಾತ್ಯಾಬಿಮಾನವಡಗಿ
ತೊಡದಿರ್ದ ಭಾವವನಾರೂ ಅರಿಯರಲ್ಲಾ !
ಭಾವ ಭಾವಿಸುತ ನಿರ್ಭಾವವಳವಟ್ಟ ಭೇದವನಾರೂ ಅರಿಯರಲ್ಲಾ !
ಸೌರಾಷ್ಟ್ರ ಸೋಮೇಶ್ವರಲಿಂಗದ
ನಿಜನಿರ್ಣಯವನಾರೂ ಅರಿಯರಲ್ಲಾ !/394
ಹೀನಬುದ್ಧಿಯ ಕರ್ಮದ ಕ್ಷೀಣ ಬಣ್ಣವ ಬಿಟ್ಟು
ಪ್ರಾಣಸಂಗತವಾದ ಧಾತು ಬಣ್ಣ ವೇಳಕ್ಕೆ
ಜ್ಞಾತೃ ಬಣ್ಣದಾಣಿಯನಿಕ್ಕಿ ಕಳೆದು
ಜ್ಞಾನ ಕರ್ಮದ ಬಣ್ಣ ಹತ್ತಕ್ಕೆ ಜ್ಞೇಯ ಬಣ್ಣವ ಶಕವನಿಕ್ಕಿ ಕಳೆದು
ಕ್ರಿಯಾ ಬಣ್ಣದ ಹಲವು ಬಣ್ಣವ ಕೊಡದೆ
ಶುದ್ಧಾಶುದ್ಧ ಬಣ್ಣಕ್ಕೆ ಮುಖ್ಯ ಬಣ್ಣದಲ್ಲಿ ಚಿದ್ಬಣ್ಣವ ಕೂಡಲು
ಇದಾವ ಬಣ್ಣವೆಂದರಿಯಬಾರದೆ ವರ್ಣಾತೀತವಾಯಿತ್ತು.
ಇದಕ್ಕೆ ಶ್ರುತಿ: ವರ್ಣಾತೀತಂ ಮನೋತೀತಂ ಭಾವಾತೀತಂ ತು ತತ್ಪದಂ
ಜ್ಞಾನಾತೀತಂ ನಿರಂಜನಂ ತತ್ಕಲಾ ಸೂಕ್ಷ್ಮಭಾವತಃ
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರ ಲಿಂಗದ ಬಣ್ಣ ಅಂತಬರ್ಾಹ್ಯ
ಗಮ್ಯಾಗಮ್ಯ ಭಾವಾಭಾವತೀತಾತೀತವಲ್ಲದೆ ನಿಂದಿತ್ತು./395
ಹುಟ್ಟು ಹೊಂದುಗೆಟ್ಟುದೇ ನಿರ್ವಾಣ.
ಮಲ ಮಾಯಾ ಕರ್ಮಂಗಳಳಿದುದೇ ನಿರ್ವಾಣ.
ಶೋಕ ಮೋಹ ಹಿಂಗಿದುದೇ ನಿರ್ವಾಣ.
ಇಹ ಪರದಾಶೆ ಬಿಟ್ಟುದೇ ನಿರ್ವಾಣ.
ಇಂತಪ್ಪ ನಿರ್ವಾಣ ಸದ್ಯೋನ್ಮುಕ್ತಿ ಸೌರಾಷ್ಟ್ರ ಸೋಮೇಶ್ವರಾ./396
ಹುಟ್ಟುವುದೇ ಬಂಧ, ಸಾವುದೇ ಮೋಕ್ಷ ಎಂಬ
ಅರೆಮರುಳುಗಳನೇನೆಂಬೆನಯ್ಯಾ.
ಸಾವ ಹುಟ್ಟುವ ಬಂಧದಲ್ಲಿ ಮೋಕ್ಷ ಉಂಟೇ ?
ಸಂಚಿತ ಪ್ರಾರಬ್ಧ ಆಗಾಮಿ ಸವೆದು
ಅಷ್ಟಭೋಗಂಗಳು ತೀರಿ, ಹುಟ್ಟುಹೊಂದು ಬಿಟ್ಟುದೇ ಮೋಕ್ಷ.
ಅಂತಪ್ಪ ಮೋಕ್ಷ ಸಿದ್ಧಿಯಪ್ಪಡೆ
ಸೌರಾಷ್ಟ್ರ ಸೋಮೇಶ್ವರಲಿಂಗವ ಕೈವಿಡಿದಲ್ಲದಾಗದು./397
ಹುರಿದು ಬಿತ್ತಿದ ಬೀಜ ಮೊಳೆದೋರದಂತೆ
ಜ್ಞಾನಕಾಯಂಗೆ ಬನರುಫಕಾಯವಿಲ್ಲ.
ಅರುವಿನ ಮುಂದಣ ಕುರುಹು ಅರಿವನವಗ್ರಹಿಸಿ
ಜ್ಞಾನ ನಿಷ್ಪತ್ತಿಯಾಗಿತ್ತು.
ಸೌರಾಷ್ಟ್ರ ಸೋಮೇಶ್ವರಲಿಂಗವೆಂಬ ಕುರುಹು ಮರೆದ ಕಾರಣ
ನಿಃಶೂನ್ಯ ನಿರ್ಗಮನವಾಯಿತ್ತು./398
ಹುಸಿಯಿಂದ ಶಿವನ ಮುಕುಟವ ಕಂಡೆನೆಂದು
ಹುಸಿಯಂ ನುಡಿದು ಬ್ರಹ್ಮ ಭ್ರಷ್ಟನಾದ.
ಮುಳ್ಳಿನಲ್ಲಿ ತೊನಚಿಯನಿದು
ಜೀವಹಿಂಸೆಯ ಮಾಡಿದ ಮಾಂಡವ್ಯ ಶೂಲಕ್ಕೆ ಗುರಿಯಾದ.
ಸೋಮಸುತನ ಮಗ ಶೂದ್ರಕವೀರಂಗೆ
ಕಳವು ಹೊದ್ದಿ, ಶಿರಹರಿದು ಕಾಂಚಿಯಾಲದಲ್ಲಿ ಮೆರಯಿತ್ತು.
ಅಕ್ಷಿಪಾದನಸ್ತ್ರೀ ಅಹಲ್ಯಾದೇವಿಗೆ ಅಳುಪಿದ ಶಕ್ರನ ಅಂಗ
ಅನಂಗಮುದ್ರೆಯಾಯಿತ್ತು.
ಕಾಂಕ್ಷೆ ಮಾಡಿದ ನಾಗಾರ್ಜುನ ಚಕ್ರದಲ್ಲಿ ಹತವಾದ.
ಇಂತಿವರನಂತರು ಕೆಟ್ಟರು ನೋಡಯ್ಯಾ.
ಸೌರಾಷ್ಟ್ರ ಸೋಮೇಶ್ವರನ ಶರಣರು ದೋಷವಿರಹಿತರಾಗಿ
ಸ್ವರ್ಗ ಅಪವರ್ಗವ ಮೀರಿ ಲಿಂಗದಲ್ಲಿ ಐಕ್ಯರಾದರು./399
ಹೃದಯದೊಳಗಿಹನ್ನಕ್ಕ ಲಿಂಗಪ್ರಾಣಿ,
ಹೃದಯದಿಂದ ಹೊರಯಕ್ಕೆ ಹೊರವೊಂಟರೆ ಭವಿ.
ಆ ಭವಿಗೆ ಜೀವವೆಲ್ಲ ನಿರ್ಜಿವ, ಆ ಭವಿಗೆ ಉಪದೇಶವಿಲ್ಲ.
ಉಪದೇಶವ ಮಾಡಬಾರದು, ಸತ್ತರೆ ಹೂಣಬಾರದು.
ಹೂಣಿದಾತನ ಮನೆಯ ಹೊಕ್ಕು ಸುಯಿಧಾನವ ಕೊಂಡರೆ
ಕುಂಭೀಪಾತಕ ನಾಯಕನರಕ ತಪ್ಪದಯ್ಯಾ
ಸೌರಾಷ್ಟ್ರ ಸೋಮೇಶ್ವರಾ./400
ಹೆಚ್ಚದು-ಕುಂದದು, ಮಚ್ಚದು-ಬೆಚ್ಚದು,
ಬಾಡದು-ಬತ್ತದು, ಕಂದದು-ಕುಂದದು,
ಕರಗದು-ಕೊರಗದೆನ್ನರಿವು
ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ
ತಾನೆನ್ನದಿದಿರೆನ್ನದು./401
ಹೊಂಬಣ್ಣವ ಹಿಮ್ಮೆಟ್ಟದೆ ಕಂಡು,
ಮುಂಬಣ್ಣವ ಮುಂದರಿತು ಕಂಡು,
ನಿಂದ ಬಣ್ಣವ ನಿಂದಂದಿಗೆ ಕಂಡು,
ಹಲವು ಬಣ್ಣದ ಬಳಕೆಯ ಹೊಲಬುದಪ್ಪಿ,
ಸಂದ ಬಣ್ಣದಲ್ಲಿ ಸಂದಿಲ್ಲದೆ ನಿಂದ ನಿರಾಳ
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣರು./402
ಹೊನ್ನು ಹೆಣ್ಣು ಮಣ್ಣು ನಿಮ್ಮ ಸೊಮ್ಮು.
ತನುವೆನಗಿಲ್ಲ ತನುವಿನಲ್ಲಿ ನೀವೆಡೆಗೊಂಡಿಪ್ಪಿರಾಗಿ.
ಮನವೆನಗಿಲ್ಲ ನೆನಹಿನ ಕೊನೆಯಲ್ಲಿ ಬೆಳಗುತಿರ್ಪಿರಾಗಿ.
ಪ್ರಾಣವೆನಗಿಲ್ಲ ನೀವೇ ಪ್ರಾಣವಾಗಿಪ್ಪಿರಾಗಿ.
ಆನೆಂಬ ಭಾವಕ್ಕೆ ತೆರಹಿಲ್ಲದೆ ನಿರಹಂಕಾರದಿಂ
ಮಾಡುವ ನೀಡುವ ಸಂದಳಿದು
ದಾಸೋಹದ ನಿರಹಂಕೃತಿ ನಿಷ್ಪತ್ತಿಯಾಗಿ
[ಸ್ವಾ]ನುಭಾವದ ನಿಜಸುಖದಿಂದೆರಡರಿಯದಿರ್ಪರಯ್ಯಾ,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು./403